Tuesday, December 8, 2015

ನೆನಪು ತೂಗುಯ್ಯಾಲೆ

ಇತ್ತೀಚೆಗೆ ನವೆಂಬರ್ 29 ರಂದು ಕುಂದಾಪುರ ಎಂಬ ನಮ್ಮೂರಿನಲ್ಲಿ ಸುತ್ತಾಡಿ ಬಂದೆ. ನಾನು ಕುಂದಾಪುರ ಬಿಟ್ಟ ಈ 39 ವರ್ಷಗಳಲ್ಲಿ ಕುಂದಾಪುರದ ಅಂಚಿನ ಹೊಳೆಯಲ್ಲಿ ಹಳೆಯ ನೀರೆಲ್ಲ ಸರಿದು ಹೋಗಿದೆ. ಆಕಾಶದ ಸೂರ್ಯ ಚಂದ್ರರನ್ನು ಬಿಟ್ಟರೆ ಕುಂದಾಪುರ ಪರಿಸರದ ಮತ್ತೆಲ್ಲವೂ ಬದಲಾಗಿ ಹೋಗಿದೆ. ಈಗೀಗ ಅಲ್ಲಿಗೆ ಹೋದಾಗೆಲ್ಲ ನನ್ನ "ಅಂದಿನ ಕುಂದಾಪುರ" ವನ್ನು ಅಲ್ಲಿ ಇಲ್ಲಿ ಹುಡುಕುತ್ತೇನೆ. (ಬಹುಶಃ ನನ್ನ ಜನರನ್ನೂ ಹುಡುಕುತ್ತೇನೆ !) "ಇದು ಬೇರೆ ಕುಂದಾಪುರ" ಅನ್ನಿಸಿ ಒಮ್ಮೊಮ್ಮೆ ವಿಷಾದವಾದರೂ - ಅದೇಕೋ ಆ ಕುಂದಾಪುರಕ್ಕೆ ಹೋದರೆ ನಾನು ಮತ್ತದೇ ಕಲ್ಪನೆಯ ಹದಿಹರೆಯದ ಭಾವ ಲಹರಿಯ ಮನಃಸ್ಥಿತಿಗೆ ಬರುತ್ತೇನೆ ! ಒಮ್ಮೊಮ್ಮೆ ಹೋದ ಕೆಲಸವನ್ನೂ ಮರೆತು ನೆನಪಿನಾಳಕ್ಕೆ ಇಳಿಯುತ್ತೇನೆ.

" ಒಬ್ಬ ಮನುಷ್ಯ ತನ್ನ ನೆಲವನ್ನು ಯಾಕೆ ಪ್ರೀತಿಸುತ್ತಾನೆ ?...ಯಾಕೆಂದರೆ - ಅಲ್ಲಿ ರೊಟ್ಟಿಯು ಹೆಚ್ಚು ರುಚಿಯಾಗಿರುತ್ತದೆ; ಗಾಳಿಯು ಸುಗಂಧಮಯವಾಗಿರುತ್ತದೆ. ದನಿಗಳು ಹೆಚ್ಚು ಸಶಕ್ತವಾಗಿರುತ್ತವೆ; ಆಕಾಶವು ಬೇರೆಡೆಗಿಂತ ಎತ್ತರವಾಗಿರುತ್ತದೆ. ನೆಲದ ಮೇಲೆ ನಡೆಯುವುದು ಇನ್ನೂ ಸುಲಭವಾಗಿರುತ್ತದೆ..."   ಎನ್ನುತ್ತದೆ ಪಾಶ್ಚಾತ್ಯ ನಾಟಕಕಾರ ಬರ್ಟೊಲ್ಟ್ ಬ್ರೆಕ್ಟ್ ನ ನಾಟಕದ ಪಾತ್ರ !

ಈ ಮಾತುಗಳು ತರ್ಕಬದ್ಧವಲ್ಲ ಎಂದು ನಮ್ಮ ಮಿದುಳು ಹೇಳುತ್ತಿದ್ದರೂ ಹೃದಯವು ಮಾತ್ರ ಅದನ್ನು ಒಪ್ಪುವುದಿಲ್ಲ. ಯಾಕೆಂದರೆ ಮನುಷ್ಯನೆಂದರೆ ತರ್ಕ ನುರಿಯುವ ಯಂತ್ರವಲ್ಲ. ಯಾವುದೇ "   ಜೀವಂತ ಮಾನವನ ಬದುಕು "    ಎಂಬುದು ಘಟನಾವಳಿಗಳ ದೊಡ್ಡ ಮೂಟೆ ! ಭಾವನೆಗಳ ತೂಗುಯ್ಯಾಲೆ ! ನಮ್ಮ ಭಾವ ಸಾಮ್ರಾಜ್ಯದಲ್ಲಿ ಯಾವುದೇ ಬುದ್ಧಿಗತ ತರ್ಕಕ್ಕೆ  ಯಾವತ್ತೂ  ಸ್ಥಳವಿರುವುದಿಲ್ಲ.

ಭಾವನೆಗಳು ಅಂದರೆ - ಒಂದು ರೀತಿಯ ಹುಳಿ ಸಿಹಿ ಒಗರಿನ ವಿಚಿತ್ರ ಕಡಲು. ಸಾಮಾನ್ಯವಾಗಿ ಭಾವ ಜೀವಿಗಳು ಹೆಚ್ಚು ಸ್ಪಂದನಶೀಲರಾಗಿರುತ್ತಾರೆ. ಬದುಕಿನ ಕ್ಷಣಕ್ಷಣದ ಅನುಭವಗಳಿಗೂ ಸ್ಪಂದಿಸುತ್ತಲೇ ಇರುವ ಅವರ ಭಾವದಲೆಗಳ ಸಂಚಾರದ ಸ್ಥಾಯಿಯೇ ಬೇರೆ. ಅವರ ವಿಷಾದದ ನಿಷಾದದಲ್ಲೂ ಏನೋ ಮಾಧುರ್ಯದ ಹಸನಾದ ಅನುರಣನೆಯಿರುತ್ತದೆ. ತನ್ನ ಸ್ವಂತದ್ದು ಮಾತ್ರವಲ್ಲದೆ ತನ್ನ ಸುತ್ತಲಿನ ಎಲ್ಲ ಆಗುಹೋಗುಗಳನ್ನೂ ಆತ್ಮಿಕವಾಗಿ ಅನುಭವಿಸುವ ಭಾವುಕರು ಸಾಮಾನ್ಯವಾಗಿ ಸೂಕ್ಷ್ಮ ಪ್ರವೃತ್ತಿಯವರಾಗಿರುತ್ತಾರೆ. ಅವರು ತಮ್ಮ ಸ್ವಂತದ ಕಷ್ಟ ಸುಖಗಳಿಗೆ ಎಲ್ಲರಂತೆಯೇ ನಗುವ - ಮರುಗುವ ಜೊತೆಗೆ ಸಮಾಜದ ಇತರರ ಕಷ್ಟ ಸುಖಗಳಿಗೂ ಸ್ಪಂದಿಸುತ್ತಿರುತ್ತಾರೆ. ಇಂತಹ ಸ್ವಭಾವದಿಂದಾಗಿ ಭಾವುಕ ವ್ಯಕ್ತಿಗಳ ಸ್ವ-ಭಾಗಕ್ಕೆ ಆತಂಕ ಉಮ್ಮಳಗಳೇ ಹೆಚ್ಚು ಎದುರಾದರೂ ಇಂತಹ ಭಾವುಕರಿಂದ ಯಾವುದೇ ಊರಿಗಾಗಲೀ ದೇಶಕ್ಕಾಗಲೀ ದ್ರೋಹ ಚಿಂತನೆಯಂತೂ ಎಂದಿಗೂ ನಡೆಯಲಾರದು.

ಇಂತಹ ಸದ್ಭಾವ ಪ್ರೇರಿತರಿಂದ ಯಾವುದೇ ಸಮಾಜಕ್ಕೆ ಉಪಕಾರವಲ್ಲದೆ ಯಾವುದೇ ಅಪಾಯವಿಲ್ಲ. "ಸದ್ಭಾವ ಅಂದರೇನು ? " ಎಂದು ಕುತ್ಸಿತವಾಗಿ ಹೆಗಲು ಹಾರಿಸುವವರು ತುರ್ತಾಗಿ ನಮ್ಮ ಭಾರತದ ಹಳ್ಳಿಗಳನ್ನು ನೋಡಬೇಕು. ನಮ್ಮ ಭಾರತದ ಹಳ್ಳಿಗಳಲ್ಲಿ ಇಂದಿಗೂ ಸದ್ಭಾವಗಳು ಜೀವಂತವಾಗಿ ಉಳಿದುಕೊಂಡಿವೆ. ಜೀವನವನ್ನು ಸರಳ ಭಯಭಕ್ತಿಯಿಂದ ಅನುಭವಿಸುವ "ಸುಲಭ" ರನ್ನು ಅಲ್ಲಿ ಕಣ್ತುಂಬಿಕೊಳ್ಳಬಹುದು. ತರ್ಕದಿಂದ ಬದುಕುಗಳನ್ನು ಪುಡಿಗುಟ್ಟುವ ನಾಸ್ತಿಕ ಅಥವ ಆಸ್ತಿಕ ವಿಪರೀತಗಳು ಅಲ್ಲಿರುವುದಿಲ್ಲ. ಸಾಮಾನ್ಯವಾಗಿ, ನಾಸ್ತಿಕತೆಯನ್ನು ಪ್ರತಿಪಾದಿಸುವವರಿಗಿಂತ ಆಸ್ತಿಕರು ಹೆಚ್ಚು ಸಹನಶೀಲರು (ಸಹಿಷ್ಣುಗಳು) ಎಂಬುದಕ್ಕೂ - ಹಳ್ಳಿಯ ಬದುಕುಗಳಿಗಿಂತ ಬೇರೆಯಾದ ಹೊಸ ಸಾಕ್ಷಿಗಳು ಬೇಕಾಗಿಲ್ಲ. (ಆದರೆ ಇಂದಿನ ಹಳ್ಳಿಗಳೂ ಭರದಿಂದ ಕಲುಷಿತಗೊಳ್ಳುತ್ತಿವೆ !) ಆದರೆ ನಮ್ಮ ಸುತ್ತಲೂ ನೋಡಿದರೆ, ದೈವ ನಿಂದಕರಿಗಿಂತ ದೈವ ಭೀರುಗಳು ಕಡಿಮೆ ಕ್ರೂರಿಗಳು ಮತ್ತು ಸುಭಗರಾಗಿರುವುದು ಕಾಣುತ್ತದೆ. ಮುಚ್ಚಿದ ಬಾಗಿಲ ಒಳಗೆ ಗುಟ್ಟು ಗುಟ್ಟಾಗಿ ಸಂಪ್ರದಾಯಗಳನ್ನು ಅಚ್ಚುಕಟ್ಟಾಗಿ ಆಚರಿಸುತ್ತ - ಅನುಸರಿಸುತ್ತ, ಬಹಿರಂಗವಾಗಿ - ಎಲ್ಲರ ಸ್ವೀಕಾರಾರ್ಹತೆ ಗಳಿಸುವ ತಿಕಲಿಗೆ ಒಳಗಾಗಿ  - "ತಲೆ ತಿರುಗಿದ ಗುಂಪಿನ LEADER" ಎಂಬ ತೋರಿಕೆಯ ಆಟವಾಡುವ ಆಷಾಢಭೂತಿಗಳಿಗಿಂತ ತಾನು ಇರುವುದನ್ನು ಇರುವಂತೆ, ವಂಚನೆಯಿಲ್ಲದೆ ಬದುಕುವ ಹಳ್ಳಿಯ ಅಶಿಕ್ಷಿತರು ಹೆಚ್ಚು ನಿರಾಳವಾಗಿರುತ್ತಾರೆ. 

ತಮ್ಮ ಮಕ್ಕಳಿಗೆ "ನಮ್ಮ ದೇಶ, ನಮ್ಮ ಸಂಸ್ಕೃತಿ, ತಮ್ಮ ಕುಟುಂಬದ ಸಂಪ್ರದಾಯಗಳು..." ಇತ್ಯಾದಿ ತಿಳಿ ಹೇಳುತ್ತಿದ್ದ ಒಂದು ಕುಟುಂಬಕ್ಕೆ ನನ್ನ ಪರಿಚಿತ Public Figure ಒಬ್ಬರು ಒಮ್ಮೆ ಉಪದೇಶಿಸಿದ್ದನ್ನು ನಾನು ನೋಡಿದ್ದೇನೆ. "  ನೋಡಿ ಮಕ್ಕಳಿಗೆ ನಿಮ್ಮ ವಿಚಾರಗಳನ್ನೆಲ್ಲ ಹೇಳಿ ಅವರನ್ನು ದಾರಿ ತಪ್ಪಿಸಬೇಡಿ; ಅವರು ಅವರಾಗಿಯೇ ಬೆಳೆಯಲಿ..."   ಎಂದಿದ್ದರು ಆ ಮಹಾ ಪುರುಷ ! ಅವರು ಶಿಕ್ಷಕರು ಬೇರೆ !!! ಅಂದರೆ ನಮ್ಮ ಮಕ್ಕಳು ಏನನ್ನು ಕೇಳುತ್ತಾರೋ ಏನನ್ನು ನೋಡುತ್ತಾರೋ ಅದನ್ನೇ ಆಧರಿಸಿಕೊಂಡು ತಮ್ಮ ತಮ್ಮ ಬದುಕನ್ನು ಇಷ್ಟಬಂದಂತೆ (?) ಕಟ್ಟಿಕೊಳ್ಳಬೇಕೆಂದಾಯ್ತು ! ಅಂದರೆ - ಬದುಕಿನ ಏರುತಗ್ಗು, ತಿರುವು ಮುರುವುಗಳ ಬಗೆಗೆ ಮನೆಯಲ್ಲಿರುವ ಕುಟುಂಬದ ಅನುಭವಸ್ಥರು ತುಟಿಪಿಟಕ್ಕೆನ್ನುವಂತಿಲ್ಲ ಎಂದಾಯಿತು ! ಆದರೆ ಇದೇ ಶಿಕ್ಷಕರು ಊರಿನ ಸಭೆಗಳಲ್ಲೆಲ್ಲ ಭಾಗವಹಿಸುತ್ತ  ಊರಿನ ಮಕ್ಕಳಿಗೆ " ದಾರಿ - ದಿಕ್ಕು " ಗಳ ಬಗೆಗೆ ಪ್ರವಚನ ನೀಡುವುದನ್ನೂ ನಾನು ನೋಡಿದ್ದೇನೆ; ಹೊಂದಿಕೆಯ ಮಂತ್ರ ಜಪಿಸುತ್ತ  "  ಸೇವೆಯ ಆಟ "   ಆಡುವುದನ್ನೂ ನೋಡಿದ್ದೇನೆ. ಇಂತಹ ಕಪಟತನವು ನಮ್ಮ ಸುತ್ತಲೂ ನಡೆಯುತ್ತಲೇ ಬಂದಿದೆ ಮತ್ತು ಹಾಗೇ ಇರುತ್ತದೆ. ಇಂತಹ ವಿರೋಧಾಭಾಸದ  ವ್ಯವಹಾರ ಚತುರ ಜಡ ಶಿಕ್ಷಕರಿಂದ ಸಮಾಜಕ್ಕೆ ಯಾವುದೇ ಉಪಕಾರವಾಗದು.

"ಮಕ್ಕಳಿಸ್ಕೂಲ್ ಮನೇಲಲ್ವೆ ?" ಎಂದಿದ್ದರು ಕೈಲಾಸಂ. ಅಪ್ಪ ಅಮ್ಮಂದಿರು ಮಕ್ಕಳನ್ನು ರೂಪಿಸುವುದರಲ್ಲಿ ಬಹು ಮುಖ್ಯ ಪಾತ್ರವನ್ನು ವಹಿಸುವುದು ಅಪೇಕ್ಷಣೀಯ ಎಂಬುದು ಅನುಭವ ಸಿದ್ಧಾಂತ. ಮೂಲ ಶಿಕ್ಷಣ ಸಿಗಬೇಕಾದದ್ದು ಮನೆಯಲ್ಲಿಯೇ. ಊರಿನ ಭಾಷಣಗಳಿಂದ ಮಕ್ಕಳು ಪ್ರೇರಿತರಾಗಲು ಬೇಕಾದ ಪೂರ್ವ ತಯಾರಿಯು ಮನೆಯಲ್ಲಿಯೇ ನಡೆದಿರಬೇಕಲ್ಲವೆ ? ಅಂತಹ ಗಟ್ಟಿಯಾದ ತಳಪಾಯ ಬೀಳಬೇಕಾದ್ದೂ ಮನೆಯಲ್ಲಿಯೇ. ಆದರೆ ಇಂದು ಒಡಕು ಚಿಂತನೆಯ ಕುಟುಂಬಗಳು, ದಾರಿ ತಪ್ಪಿಸುವ ಶಿಕ್ಷಕರು ಮತ್ತು ಶೈಕ್ಷಣಿಕ ಪರಿಸರದಿಂದಾಗಿ ನಮ್ಮ ಮಕ್ಕಳನ್ನು ಅಶಾಂತಿಯ ದಾರಿಯಲ್ಲಿ ನಡೆಸಲಾಗುತ್ತಿದೆ. ನೇತಿ ನೇತಿ ಎನ್ನುತ್ತ ಸದಾ ಒಣ ಚಿಂತನೆಗಳನ್ನು ವೈಭವೀಕರಿಸುತ್ತ ಒಣ ಭವಿಷ್ಯತ್ತನ್ನು ನಿರ್ಮಿಸಲು ಕೆಲವರು ಹಗಲಿರುಳೂ ಕಾರ್ಯೋನ್ಮುಖರಾಗಿದ್ದಾರೆ. ಆದ್ದರಿಂದಲೇ ಇಂದು "ಅಪ್ಪ ಲೂಸಾ ? ಅಮ್ಮ ಲೂಸಾ ?" ಎಂಬ ಸಂತತಿಯು ಓಡಾಡುತ್ತಿದೆ. ವೃದ್ಧಾಶ್ರಮದ ಬಿಸಿನೆಸ್ ಜೋರಾಗಿದೆ. ಸೇವಾ ತತ್ಪರರ ಸಂಖ್ಯೆ ಬೆಳೆಯುತ್ತಿದೆ; ಬಹಿರಂಗ ಪ್ರೀತಿಯ ನಾಟಕವೂ ನಡೆಯುತ್ತಿದೆ ! ಅಂತೂ ಸ್ವಕಾರ್ಯ ಸಿದ್ಧಿ - ವೃದ್ಧಿಯಾಗುತ್ತಿದೆ. ಆದ್ದರಿಂದಲೇ ಸದ್ಭಾವಗಳೇ ಇಲ್ಲದ - ಎಲ್ಲವನ್ನೂ "ಲಾಭ - ನಷ್ಟ" ದ ಮೇಲೆಯೇ ತೂಗಿ ನೋಡುವ ನಿರ್ಭಾವದ ಸಂತತಿಯು ಹೆಗಲು ಕುಣಿಸುತ್ತಿದೆ.

ತಮ್ಮ ಮಕ್ಕಳ ಆರಂಭದ 10 ವರ್ಷಗಳ ಕಾಲ ಮನೆಯ ಮಕ್ಕಳೊಡನೆ ಅತ್ಯಂತ ನಿಕಟ ಸಂಪರ್ಕವಿರಿಸಿಕೊಳ್ಳುವುದು ಪ್ರತೀ ಕುಟುಂಬದ ಕರ್ತವ್ಯ ಎಂಬುದು ನನ್ನ ಭಾವನೆ. ಮಕ್ಕಳಿರುವ ಮನೆಯಲ್ಲಿ ನಿಶ್ಶಬ್ದವಿದ್ದರೆ ಮಕ್ಕಳ ದೈಹಿಕ ಅಥವ ಮಾನಸಿಕ ಆರೋಗ್ಯವು ಸರಿಯಿಲ್ಲವೆಂದೇ ಅರ್ಥ. ತಂಟೆ ತಕರಾರು ಕುಣಿತಗಳಿಂದ ಮನೆಯು ಕುಪ್ಪಳಿಸುತ್ತಿರಬೇಕು. ಮಕ್ಕಳ ದೇಹ ಮನಸ್ಸು ಅರಳುವ ಆ ಕಾಲದಲ್ಲಿ ಅವರನ್ನು ಮತ್ತೆಮತ್ತೆ ಮುಟ್ಟಿ ತಟ್ಟಿ - ಬಾಡುವಂತೆ ಮಾಡಬಾರದು. ಮಕ್ಕಳ ತಪ್ಪು ಕಂಡಲ್ಲಿ ಮಿತವಾಗಿ ಶಿಕ್ಷಿಸಿ, ಮೆಚ್ಚುಗೆಯ ವರ್ತನೆಗೆ ಸಂತೋಷವನ್ನೂ ವ್ಯಕ್ತಪಡಿಸುತ್ತಿರಬೇಕು. ನಮ್ಮ ಎಲ್ಲೆಲ್ಲಿಯದೋ ಸಿಟ್ಟು ಅಸಹನೆಗಳನ್ನು ಮಕ್ಕಳ ಮೇಲೆ ಎರಚದೆ - ಒಟ್ಟಿನಲ್ಲಿ ಅವರ ಚಟುವಟಿಕೆಯು ಸಹಜವಾಗಿ ಅರಳುವಂತೆ - ಆದರೆ ಯಾವುದೂ ಅತಿ ಬುದ್ಧಿವಂತಿಕೆಯಾಗದಂತೆ ಮಕ್ಕಳನ್ನು ಸದಾ ಗಮನಿಸುತ್ತಲೇ ಇರಬೇಕು. ಮನೆಯ ಹಿರಿಯರ ಮಾತು ಮತ್ತು ವರ್ತನೆಗಳನ್ನು ಮಕ್ಕಳು ತುಂಬ ಗಮನಿಸುತ್ತಾರೆ - ಕೊನೆಗೆ ಅನುಕರಿಸುತ್ತಾರೆ ಎಂಬ ಎಚ್ಚರದಿಂದ ಹಿರಿಯರೂ ತಮ್ಮನ್ನು ತಾವೇ ನಿಯಂತ್ರಿಸಿಕೊಳ್ಳಬೇಕು. ನೆನಪಿಡಿ. ಬಾಲ್ಯವೆಂದರೆ - ಹೊಸ ಕತೆಯ ಮುನ್ನುಡಿ.

                                                         ****----****----****



ಮಕ್ಕಳಾಟಿಕೆಯ ವಯಸ್ಸು. ಆಗ ನಾವು ಕುಂದಾಪುರದಲ್ಲಿದ್ದೆವು. ನಮ್ಮ ಇಬ್ಬರು ತಮ್ಮಂದಿರೂ ತುಂಬ ಚಿಕ್ಕವರು. ಬಹುಶಃ 6 - 8 ನೇ ತರಗತಿಯಲ್ಲಿದ್ದರು. ಇಬ್ಬರಿಗೂ ಕ್ರಿಕೆಟ್ಟಿನ ಹುಚ್ಚು. ತಮ್ಮ ಗೆಳೆಯರ ಜತೆಗೆ ಪ್ರತೀ ದಿನವೂ ಕ್ರಿಕೆಟ್ ಆಡುತ್ತಿದ್ದರು. ಅದೊಂದು ದಿನ ಬ್ಯಾಟಿಂಗ್ ಮಾಡುತ್ತಿದ್ದವನ ಹತ್ತಿರದಲ್ಲಿಯೇ ಕ್ಷೇತ್ರ ರಕ್ಷಣೆಗೆ ನಿಂತಿದ್ದ ನನ್ನ ತಮ್ಮನಿಗೆ ಬ್ಯಾಟ್ ಬೀಸಿದವನ BAT ತಾಗಿ ತಲೆ ಒಡೆದು ರಕ್ತ ಸುರಿಯತೊಡಗಿತು. ಎಲ್ಲ ಮಕ್ಕಳೂ ರಕ್ತ ನೋಡಿದ ಕೂಡಲೇ ಪರಾರಿಯಾಗಿ ಬಿಟ್ಟರು. ಅಲ್ಲೇ ಇದ್ದ ನನ್ನ ಇನ್ನೊಬ್ಬ ತಮ್ಮನು ಗಾಯಗೊಂಡ ತನ್ನ ತಮ್ಮನನ್ನು ಎಬ್ಬಿಸಿಕೊಂಡು ಮನೆಗೆ ಕರೆತಂದಿದ್ದ. ಮಗನ ಹಣೆಯಿಂದ ರಕ್ತ ಸುರಿಯುವುದನ್ನು ಕಂಡ ಅಮ್ಮನ ಗೋಳು ತುದಿ ಮುಟ್ಟಿತ್ತು. ಅವಳು ತಡ ಮಾಡದೆ ಅವನನ್ನು ಎತ್ತಿಕೊಂಡು ಸರಕಾರೀ ಆಸ್ಪತ್ರೆಗೆ ಓಡಿದಳು. ಅಲ್ಲಿ ನಾಲ್ಕೈದು ಹೊಲಿಗೆ ಹಾಕಿ ಅವನನ್ನು ರಿಪೇರಿ ಮಾಡಿ ಕಳಿಸಿದರು. ಮುಂದಿನ ಕೆಲವು ದಿನ ಇಬ್ಬರು ತಮ್ಮಂದಿರೂ ಮನೆಯಲ್ಲೇ ಆಡಿಕೊಂಡಿದ್ದರು. ಆಮೇಲೆ ಅಮ್ಮನು ಹೋಗಿ ಸ್ಥಳ ಪರಿಶೀಲನೆ ಮಾಡಿ ಬಂದಿದ್ದಳು. ಮಕ್ಕಳು ಆಡುತ್ತಿದ್ದ BAT ನ್ನೂ ಪರೀಕ್ಷಿಸಿ ನೋಡಿ ಬಂದಿದ್ದಳು. ಅದು ಯಾರದೋ ಮನೆಯ ಹಳೆ ಸಾಮಾನಿನ ಶಿಲ್ಕಿನಲ್ಲಿದ್ದ ಒಂದು ಪರಟು ! ಅಂದರೆ ಒಂದು ತೆಳ್ಳಗಿನ ಹಲಗೆ. ಅದರಲ್ಲಿ ಕೆಲವು ಮೊಳೆಗಳೂ ಇದ್ದವು. ಆ ಮೊಳೆ ಬಡಿದುದರಿಂದಾಗಿಯೇ ಅವನಿಗೆ ವಿಪರೀತ ರಕ್ತಸ್ರಾವವಾಗಿತ್ತು. ಆಮೇಲೆ ತನ್ನ ಮಕ್ಕಳ ಆಟದ ಗೆಳೆಯರನ್ನು ಮುಖತಃ ಭೇಟಿಯಾದ ಅಮ್ಮನು ಅವರನ್ನೆಲ್ಲ ಮಾತನಾಡಿಸಿಕೊಂಡು ಬಂದಿದ್ದಳು. "ಆಡುವಾಗ ಜೊತೆಗಾರರಿಗೆ ಗಾಯವಾದರೆ ಅವರನ್ನು ಬಿಟ್ಟು ಓಡಿ ಹೋಗಬಾರದು; ಒಂದೋ ಅವರನ್ನು ಡಾಕ್ಟರ್ ಬಳಿಗೆ ಒಯ್ಯಬೇಕು; ಇಲ್ಲವಾದರೆ ಅವರವರ ಮನೆಗಾದರೂ ಅವರನ್ನು ತಲುಪಿಸಬೇಕು. ದಿನವೂ ಒಟ್ಟಿಗೆ ಆಡುವವರಲ್ಲಿ ಅಂತಹ ಸ್ನೇಹ ಇರಬೇಕು..." ಎಂದೆಲ್ಲ ಆ ಮಕ್ಕಳಿಗೆ ತಿಳಿಹೇಳಿ ಬಂದಿದ್ದಳು. ಆದರೆ ಅವರೆಲ್ಲರೂ ಬರೇ ಹುಡುಗಾಟಿಕೆಯ ಮಕ್ಕಳು. ತಮ್ಮಿಂದಲೇ ಏನೋ ತಪ್ಪಾಗಿದೆಯೆಂದು ಹೆದರಿ ಅಂದು ಓಡಿ ಹೋಗಿದ್ದರು. ಆದರೆ ನನ್ನ ಅಮ್ಮನು ಅವರನ್ನು ಗದರಿಸಲಿಲ್ಲ ಎಂಬುದೇ ಅವರಿಗೆ ಸಮಾಧಾನ ತಂದಿತ್ತು. ಗಾಯ ಮಾಸುತ್ತ ಬಂದಂತೆ ನನ್ನ ತಮ್ಮಂದಿರಿಗೆ ಮತ್ತೆ ಕ್ರಿಕೆಟ್ಟಿನ ಸೆಳೆತ ಶುರುವಾಯಿತು. ಅಮ್ಮ ತಡೆಯಲಿಲ್ಲ. ಎಚ್ಚರದ ಪಾಠ ಹೇಳಿದ್ದಳು - ಅಷ್ಟೆ. ಬಾಲ್ಯದಲ್ಲಿ ಬೆವರು ಸುರಿಯುವಷ್ಟು ಆಡಬೇಕು. ಆಟದ ಹೊತ್ತಿನಲ್ಲಿ ಆಡಲೇಬೇಕು. ಮಕ್ಕಳ ಬಾಲ್ಯ ಅಂದರೆ - ಹಿರಿಯರ ತಾಳ್ಮೆಯ ಪರೀಕ್ಷೆಯ ಕಾಲ ! ಮಕ್ಕಳಿಗೆ -  ಎಚ್ಚರದ ಪಾಠ ಸಿಗುವ ಕಾಲ !

ಕುಂದಾಪುರದ ನಮ್ಮ ಮನೆಯ ಹಿಂದೆ - ಚಕ್ಕುಲಿ ತಯಾರಿಸಿ ಮಾರಿ, ಅದರಿಂದಲೇ ಜೀವನ ನಡೆಸುತ್ತಿದ್ದ ಒಂದು ಕುಟುಂಬವಿತ್ತು. ಅಂದು - ನಮ್ಮ ಕುಟುಂಬವು ಶಿವರಾತ್ರಿಯಾದರೆ ಆ ಗೆಳತಿಯ ಕುಟುಂಬವು ಏಕಾದಶಿಯಾಗಿತ್ತು. ಆ ಮನೆಯ ಒಬ್ಬಳು ಹುಡುಗಿಯು ನಮ್ಮ ಸಮವಯಸ್ಕಳಾಗಿದ್ದಳು. ಒಮ್ಮೆ ಆಕೆಯು ತಾನು ಪರೀಕ್ಷೆಗೆ ಓದಿಕೊಳ್ಳುವ ಕಷ್ಟವನ್ನು ಹೇಳುತ್ತ "ನಿದ್ದೆ ಓಡಿಸಲಿಕ್ಕೆ ರಾತ್ರಿ ಒಂದು ಕಾಫಿ ಕುಡಿದರೆ ಸ್ವಲ್ಪ ಹೆಚ್ಚು ಹೊತ್ತು ಓದಿಕೊಳ್ಳಬಹುದಿತ್ತು. ಆದರೆ ಮನೆಯಲ್ಲಿ ಕಾಫಿ ಹುಡಿಯೇ ಇಲ್ಲ ಮಾರಾಯ್ತಿ..." ಅಂದಾಗ ನಮ್ಮ ಮನೆಯಲ್ಲಿದ್ದ ಕಾಫಿ ಹುಡಿಯನ್ನು ನಾವು ಅವಳಿಗೆ ಕಟ್ಟಿ ಕೊಟ್ಟದ್ದು ನೆನಪಾಗುತ್ತದೆ. ಅದನ್ನು ನೋಡಿದ ಅಮ್ಮನು ಅಂದು ನಮ್ಮನ್ನು ತಡೆದಿರಲಿಲ್ಲ. ಆದರೆ - "ಯಾರಾದರೂ ಇನ್ನೊಬ್ಬರಿಗೆ ಎಷ್ಟು ಕೊಡಲು ಸಾಧ್ಯ ಮಗೂ ? ಈಗ ಕೊಡು..." ಎಂದಷ್ಟೇ ಹೇಳಿದ್ದಳು. ಕೊಡದಂತೆ ನಮ್ಮನ್ನು ತಡೆದಿರಲಿಲ್ಲ. ಮಕ್ಕಳ ಸಹಜ ಭಾವನೆಗಳನ್ನು ಸವರಿ ಹಾಕಿರಲಿಲ್ಲ. ಅಂದು ನಮ್ಮ ಗೆಳತಿಯ ಮುಖ ಅರಳಿತ್ತು. ನಮಗೂ ಖುಶಿಯಾಗಿತ್ತು. ಆದರೆ ಅನಂತರದ ಕೆಲವು ದಿನ ನಮ್ಮ ಮನೆಯ ಕಾಫಿಯು ಮಾತ್ರ ತೆಳುವಾಗಿತ್ತು ! ನಮ್ಮ ವಾಸ್ತವ ಸ್ಥಿತಿ, ನಾವು ನಡೆಸಿದ ಕ್ರಿಯೆ ಮತ್ತು ಅದರ ಪರಿಣಾಮವು ನಮ್ಮ ಅನುಭವಕ್ಕೇ ಬರಬೇಕು. ಆಗ ಬದುಕುಗಳ ಇತಿಮಿತಿಯ ದರ್ಶನವಾಗುತ್ತದೆ.    

ಸುಮಾರು 1983 -87 ರ ಅವಧಿ. ಮಂಗಳೂರಿನ ಒಂದು ಪುಟ್ಟ ಗೂಡಿನಲ್ಲಿ ನಮ್ಮ ಸಂಸಾರ ಅರಳುತ್ತಿತ್ತು. ಆಗ ನಮ್ಮ ಮಗನಿಗೆ ಮೂರು ವರ್ಷ. ನನ್ನ ಅಕ್ಕಂದಿರ ಮಕ್ಕಳೆಲ್ಲರೂ ಅವನಿಗಿಂತ ನಾಲ್ಕಾರು ವರ್ಷ ದೊಡ್ಡವರು; ತಂಗಿಯ ಮಗಳು ಒಂದು ವರ್ಷ ಚಿಕ್ಕವಳು. ವಾರ್ಷಿಕ ರಜೆ ಬಂತೆಂದರೆ ಈ ಮಕ್ಕಳು ಮಂಗಳೂರಿನ ಕುಲಶೇಖರದಲ್ಲಿದ್ದ ನಮ್ಮ ಬಾಡಿಗೆ ಮನೆಗೆ ಖುಶಿಯಿಂದ ಬರುತ್ತಿದ್ದರು. ಆಗ ನನ್ನಮ್ಮನೂ ನನ್ನ ಮಗನನ್ನು ಬೆಳೆಸುತ್ತ ನನ್ನ ಜೊತೆಗೇ ಇದ್ದಳು. ಆದ್ದರಿಂದ ಮಕ್ಕಳೆಲ್ಲರೂ ಅಜ್ಜಿಯ ಮನೆಗೆ ಬಂದ ಹುರುಪಿನಲ್ಲಿರುತ್ತಿದ್ದರು. ಚಿಕ್ಕಮ್ಮ ದೊಡ್ಡಮ್ಮ ಎನ್ನುತ್ತ ನನ್ನ ಸುತ್ತ - ಅಮ್ಮಮ್ಮ ಅಮ್ಮಮ್ಮ ಎನ್ನುತ್ತ ನನ್ನ  ಅಮ್ಮನ ಸುತ್ತ - ಮನೆತುಂಬ ಮಕ್ಕಳು ಸುತ್ತುತ್ತಿದ್ದರೆ ನನಗೆ ಸ್ವರ್ಗ ಸುಖ; ಇನ್ನಿಲ್ಲದ ಹಿಗ್ಗು. ಮಕ್ಕಳು ಇರುವಷ್ಟು ದಿನವೂ ಮನೆಯಲ್ಲಿ ದಿನಕ್ಕೊಂದು ತಿಂಡಿ, ಊಟದ ಸಂಭ್ರಮ. ಅದೊಂದು ದಿನ, ಗಾಂಧೀಜಿಯ ಮೇಜಿನ ಮೇಲೆ ಇರುತ್ತಿದ್ದ ಮೂರು ಮಂಗಗಳ ಚಿತ್ರದ ಕತೆಯನ್ನು ಮಕ್ಕಳಿಗೆ ಹೇಳಿ, ಆ ಪಾಪದ ಮಕ್ಕಳನ್ನೇ ನಾಲ್ಕು ಮಂಗಗಳಾಗಿಸಿ ನಾವೆಲ್ಲ ಖುಶಿ ಪಟ್ಟದ್ದೂ ಇತ್ತು ! ಮಕ್ಕಳೊಡನೆ ಮಕ್ಕಳಾಗುವ ಹುಡುಗಾಟ ! ಸಣ್ಣಾಟ - ದೊಡ್ಡಾಟ !



 ಮಧ್ಯಾಹ್ನದ ಊಟವಾದ ಮೇಲೆ ನಾನು ಆಗಾಗ ಮಕ್ಕಳಿಗೆ ಕತೆ ಹೇಳುತ್ತಿದ್ದುದೂ ಇತ್ತು. ಒಂದು ಕತೆ ಮುಗಿದ ಮೇಲೆ "ಇನ್ನೊಂದು ಕಥೆ ಮತ್ತೊಂದು ಕತೆ" ಎಂದು ನನ್ನ ಮಗನು ಒತ್ತಾಯಿಸಲು ಹೊರಟರೆ ಆಗ ನಾನು ಹಕ್ಕಲು ಕತೆಗಳನ್ನು ಹೇಳಿ ಅವರ ತಾಳ್ಮೆಯನ್ನು ಕೆಣಕುತ್ತ ಅವರ ಮುಖಭಾವವನ್ನು ಪರೀಕ್ಷಿಸುತ್ತಿದ್ದುದೂ ಇತ್ತು. "ಇನ್ನು ಕತೆ ಸಾಕು" - ಅಂತ ಮಕ್ಕಳೇ ಎದ್ದುಹೋಗುವ ಸನ್ನಿವೇಶ ಸೃಷ್ಟಿಸುತ್ತಿದ್ದುದೂ ಇತ್ತು. "ಹೇಳುವುದು ಶಾಸ್ತ್ರ - ತಿನ್ನುವುದು ಬದನೇ ಕಾಯಿ" ಅನ್ನುವ ಕತೆ ಗೊತ್ತಾ ? - ಅಂತ ಕೇಳುತ್ತ " ಅಂತೆ ಕಂತೆ " ಯ  ಕತೆ ಹೇಳಿದ್ದೂ ಇತ್ತು.

ಬಹಳ ಹಿಂದೆ ನಮ್ಮ ನೆಲದಲ್ಲಿ ಬದನೇ ಕಾಯಿ ಎಂಬುದು ಬೆಳೆಯುತ್ತಿರಲಿಲ್ಲವಂತೆ. ಅದು ಎಲ್ಲಿಂದ ಬಂತೋ - ಅದು ನನಗೆ ಗೊತ್ತಿಲ್ಲ ಮಕ್ಳೇ...ಬೀಜಗಳ ಸಂತೆಯೇ ತುಂಬಿಕೊಂಡಿರುವ ಬದನೇ ಕಾಯಿಯನ್ನು ಸಮಾಜದ ಒಂದು ವರ್ಗವಂತೂ ಆಗ ಉಪಯೋಗಿಸುತ್ತಲೇ ಇರಲಿಲ್ಲ. ಯಾಕೆ ? ಅಂತೀರಾ? ಯಾಕೆಂದರೆ ಅವರ ಪ್ರಕಾರ, ಅದು ತಾಮಸ ಆಹಾರ; ಮನಸ್ಸಿನ ಸ್ಥಿರತೆಗೆ ಅದು ಉಪಕಾರಿಯಲ್ಲ; ಅದನ್ನು ಸೇವಿಸಿದರೆ ಬುದ್ಧಿಗೆ ಯಾವ ಪ್ರಯೋಜನವೂ ಇಲ್ಲ...ಅಂತೆಲ್ಲ ಕೇಳಿದವರಿಗೆ ಕೆಲವು ಉತ್ತರವೂ ಸಿಕ್ಕುತ್ತಿತ್ತು.

ಪ್ರತೀ ಕತ್ತೆ ನಾಯಿಗೂ ಒಂದೊಂದು ಕಾಲ ಅಂತ ಬರ್ತದೆ ಅಂತಾರಲ್ಲ ? ಹಾಗಾಯ್ತು ನೋಡಿ...ಒಂದು ವರ್ಷ ಮಳೆ ಇಲ್ಲದೆ ಭಯಂಕರ ಬರಗಾಲ ಬಂತು. ಊರಲ್ಲಿ ನೀರೇ ಇಲ್ಲ. ನೀರಿಲ್ಲದೆ ಏನಾದರೂ ಬೆಳೆ ಬೆಳೆಸಲು ಸಾಧ್ಯವುಂಟಾ ? ಗದ್ದೆಯೆಲ್ಲ ಒಣಗಿ ಬಿರುಕು ಬಿಟ್ಟುಕೊಂಡಿತ್ತು. ಅಂದಿನ ಕಾಲದಲ್ಲಿ ಆಯಾ ಊರಲ್ಲಿ ಬೆಳೆದದ್ದನ್ನು ಮಾತ್ರ ಅಲ್ಲಲ್ಲಿನ ಜನರು ತಿನ್ನುತ್ತಿದ್ದರು. ತರಕಾರಿ ಹಣ್ಣು ಅಕ್ಕಿ ಬೇಳೆ ಎಲ್ಲವೂ ಇಂದಿನ ಹಾಗೆ ಎಲ್ಲೆಲ್ಲಿಂದಲೋ ಲಾರಿಯಲ್ಲಿ ಬರುತ್ತಿರಲಿಲ್ಲ. ಆದರೆ ಬರ ಬಂದ ಊರಲ್ಲಿ ಕುಡಿಯುವ ನೀರಿಗೂ ಹಾಹಾಕಾರವಿರುವಾಗ ಇನ್ನು ತರಕಾರಿ ಬೆಳೆಯುವುದಾದರೂ ಹೇಗೆ ? ಒಟ್ಟಿನಲ್ಲಿ ಆಹಾರಕ್ಕೇ ತತ್ವಾರ ಅನ್ನುವ ಸ್ಥಿತಿ.

ಆದರೆ...ಹುಟ್ಟಿಸಿದ ದೇವರು ಹುಲ್ಲು ಮೇಯಿಸ್ತಾನಾ ? ಅಂತಾರಲ್ಲ ? ಹಾಗೆ...ಒಮ್ಮೆ ಒಂದು ಸುದ್ದಿ ಬಂತು. ಪಕ್ಕದ ಒಂದು ಹಳ್ಳಿಯಲ್ಲಿ ಮೂಟೆಗಟ್ಟಲೆ ಬದನೇ ಕಾಯಿ ಬೆಳೆಯಾಗಿದೆ...ಅಂತ. ಆಗ ಬಹಳ ಜನರು ಓಡಿಹೋಗಿ ಆ ಬದನೇ ಕಾಯಿಯನ್ನೇ ಕೊಂಡು ತಂದು ಅಡುಗೆ ಮಾಡಿ, ಸುರಿಸುರಿದು ಉಂಡರು. ಆದರೆ ಊರಿನ ಒಂದು ಸಣ್ಣ ವರ್ಗವು ಮಾತ್ರ ಸರಿತಪ್ಪುಗಳ ಚಿಂತೆ ಮಾಡುತ್ತ ತಮ್ಮ ಹೊಟ್ಟೆ ಕಾಯಿಸಿಕೊಂಡು ಕೂತಿತ್ತು. ಯಾಕೆಂದರೆ ಅದುವರೆಗೆ ಅವರೆಲ್ಲ ಬದನೇ ಕಾಯನ್ನು ತಿಂದವರಲ್ಲ. ಅದನ್ನು ತಿನ್ನಬಾರದು ಅನ್ನುವ ನಿಷೇಧವನ್ನು ತಮಗೆ ತಾವೇ ಅವರೆಲ್ಲರೂ ಹಾಕಿಕೊಂಡಿದ್ದರು. ಈಗ ಬದುಕಿನ ಕಠಿಣ ಪ್ರಸಂಗವು ಎದುರಾದಾಗ ಪರಿಹಾರಕ್ಕಾಗಿ ಅವರೆಲ್ಲರೂ ತಮ್ಮ ಗುರುಗಳ ಹತ್ತಿರ ಓಡಿದರು. ಆ ಗುರುಗಳು ಜನರ ಕಷ್ಟವನ್ನು ಕಂಡು ಒಂದು ಪರಿಹಾರ ಸೂಚಿಸಿದರು. "ನೋಡೀ, ಈ  ಬದುಕಿನಲ್ಲಿ ಆಪದ್ಧರ್ಮ ಎಂಬುದೊಂದಿದೆ. ಯಾಕೆಂದರೆ - ಜೀವ ಉಳಿಸಿಕೊಂಡು ಬದುಕುವುದು ಎಲ್ಲ ಶಾಸ್ತ್ರಗಳಿಗಿಂತಲೂ ಬಹಳ ಮುಖ್ಯ" ಎನ್ನುತ್ತ - "ನಮ್ಮೂರಿನಲ್ಲಿ ನಿರ್ದಿಷ್ಟ ಜಾಗದಲ್ಲಿ ಬೆಳೆಯುವ ಬದನೆಯನ್ನು ತೀರ್ಥ ಪ್ರೋಕ್ಷಣೆ ಮಾಡಿ ಪವಿತ್ರಗೊಳಿಸುತ್ತೇನೆ. ಗೋಲಾಕಾರವಾಗಿರುವ ಆ ಬದನೆಯನ್ನು ಇನ್ನು ಮುಂದೆ ಗುಳ್ಳ ಎಂದು ಕರೆಯಿರಿ. ಅದರ ವ್ಯಂಜನವನ್ನು ಮೊದಲು ಇಷ್ಟದೈವಕ್ಕೆ ಸಮರ್ಪಿಸಿದ ಅನಂತರ ಎಲ್ಲರೂ ಉಪಯೋಗಿಸಬಹುದು; ಚಿಂತಿಸಬೇಡಿ." ಎಂದು ಸಮಾಧಾನ ಪಡಿಸಿದರು.

ಮುಂದೆ ಹಾಗೆ ಗುರುಗಳಿಂದ ಪವಿತ್ರಗೊಂಡು ನಮ್ಮ ಎಲ್ಲ ಜನರ ಬಳಕೆಗೆ ಒದಗಿದ ಆ " ಪರಮ ಪವಿತ್ರ ಗುಳ್ಳ "   ವು ಪಲ್ಯ, ಹುಳಿ, ಬೋಳು ಹುಳಿ, ಎಣ್ಣೆಗಾಯಿ - ಮುಂತಾದ ಬಗೆಬಗೆಯ ಅವತಾರಗಳನ್ನು ತಳೆದು ಮಳ್ಳ ಜನರನ್ನು ಬಗೆಬಗೆಯಿಂದ ತೃಪ್ತಿಪಡಿಸಿತು...." ಎಂದು ರಾಗವಾಗಿ ಹೇಳಿ ಅಂದಿನ ಕಥಾ ಪ್ರಸಂಗವನ್ನು ಮುಗಿಸಿದ್ದೆ.

"ಪವಿತ್ರ ಅಂದರೇನು ? ಬದನೆಯ ಮೇಲೆ ತೀರ್ಥ ಹಾಕಿದರೆ ಏನಾಗುತ್ತದೆ ?" ಇತ್ಯಾದಿ ಉತ್ತರವೇ ಇಲ್ಲದ ಪ್ರಶ್ನೆಗಳನ್ನೆಲ್ಲ ಮಕ್ಕಳು ಕೇಳದೆ ಬಿಟ್ಟಾರೆಯೆ ? ಅದೇ ಪ್ರಶ್ನೆ ಕೇಳಿದರು. " ಅದೆಲ್ಲ ನನಗೆ ಗೊತ್ತಿಲ್ಲ ಮಕ್ಕಳೇ. ನೀವು ದೊಡ್ಡವರಾದ ಮೇಲೆ ನಿಮ್ಮ ಚೂಪು ಬುದ್ಧಿಗೆ ಹೊಳೆದರೆ, ನನಗೂ ಹೇಳಿ; ಆಯ್ತಾ ?" ಎಂದು ಮಕ್ಕಳ ತಲೆ ತಟ್ಟಿ ನಾನು ಸುಮ್ಮನಾಗಿದ್ದೆ. ಈಗ ಉದ್ದಕ್ಕೆ ಬೆಳೆದಿರುವ ಆ ಮಕ್ಕಳಲ್ಲಿ "ಬದನೇ ಉತ್ತರ ಸಿಕ್ಕಿತಾ ?" ಅಂತ ಅಲುಗಿಸಿ ಕೇಳಿದರೆ - "ಬದನೇಕಾಯೈ ನಮಃ" ಎನ್ನುತ್ತ ಮುಖ ತಿರುಗಿಸುತ್ತಿದ್ದಾರೆ ! ಮಕ್ಕಳು ಪ್ರಬುದ್ಧರಾಗಿದ್ದಾರೆ. ಹಿರಿಯರಿಗೆ ಗೊತ್ತಿಲ್ಲದ ವಿಷಯಗಳನ್ನು ಮಕ್ಕಳು ಕೇಳಿದಾಗ ಸುಳ್ಳುಪಳ್ಳು ಹೇಳುವುದಕ್ಕಿಂತ ಅಥವ ಬಡಿದು ಅವರ ಬಾಯಿ ಮುಚ್ಚಿಸುವುದಕ್ಕಿಂತ - " ಗೊತ್ತಿಲ್ಲ " ಎಂದು ಪ್ರಾಂಜಲವಾಗಿ ಒಪ್ಪಿಕೊಳ್ಳುವುದು ಅತೀ ಅಗತ್ಯ.

ಇನ್ನು ಬದನೇ ಕಾಯಿಯ ವಿಷಯಕ್ಕೆ ಬಂದರೆ, ಈ ಬದನೇ ಕಾಯಿಯಲ್ಲಿ ಕಬ್ಬಿಣದ ಅಂಶವಿದೆ. ಒಮ್ಮೊಮ್ಮೆ ತಿಂದರೆ ಅದರಿಂದ ತೊಂದರೆಯೇನಿಲ್ಲ. ಆದರೆ ಕೆಲವರಿಗೆ ಅದು ಅಲರ್ಜಿ ಆಗುವುದಿದೆ. ಅವರು ಮಾತ್ರ ತಿನ್ನಬಾರದು. ಉದಾಹರಣೆಗೆ ನಾನು ತಿನ್ನಬಾರದು. ಬದನೆ ಅಂದರೆ ನನಗಂತೂ ಅಲರ್ಜಿ. ಆದ್ದರಿಂದ ಬದನೆಯ ಆಟ - ನನ್ನಲ್ಲಿ ನಡೆಯುವುದಿಲ್ಲ ! ಇನ್ನು, "ಬಾಣಂತಿಗೆ ಬದನೆಯ ಖಾದ್ಯಗಳನ್ನು ಹಾಕಬಾರದು. ಅದು ನಂಜು.." ಅಂತ ಅಮ್ಮ ಹೇಳುತ್ತಿದ್ದುದನ್ನು ನಾನು ಕೇಳಿದ್ದೇನೆ. ಆದರೆ ನನ್ನ ಅಮ್ಮನ ಸಾಮಾನ್ಯ ನಿರ್ದೇಶನವೇನಿತ್ತೆಂದರೆ "ಊಟ ತಿಂಡಿಯ ಹೊತ್ತಿನಲ್ಲಿ ಯಾರಿಗೂ "  ಷಡ "   ಇರಬಾರದು; ಕೇವಲ ಬಾಯಿರುಚಿಗಾಗಿ - ಅದು ಬೇಡ, ಇದು ಬೇಡ ಎಂಬ ಹೇವರಿಕೆಯೂ ಇರಬಾರದು" ಎಂಬುದು ಆ ಶಬ್ದದ ಭಾವಾರ್ಥ. ನನ್ನ ಅಮ್ಮ ಮತ್ತು ಅವಳ ಸಮವಯಸ್ಕರು ಉಪಯೋಗಿಸುತ್ತಿದ್ದ ಗ್ರಾಮ್ಯ ಶಬ್ದ ಅದು !

ತಾತ್ಪರ್ಯವೇನೆಂದರೆ ಒಂದು ಮಾಡಿನ ಕೆಳಗೆ ಒಟ್ಟಿಗೆ ಬದುಕುವವರು ಒಮ್ಮನಸ್ಸಿನಿಂದ ಕೂಡಿಬಾಳಲು ಊಟ ವ್ಯವಹಾರಗಳಲ್ಲಿಯೂ ಹೊಂದಾಣಿಕೆ ಮುಖ್ಯವಾಗುತ್ತದೆ. ಅಲ್ಲವೇ ? ಮನೆಯಲ್ಲಿ ಅಡುಗೆ ಸಿದ್ಧಪಡಿಸುವವರಿಗೂ ಆಗ ಸುಖವಾಗುತ್ತದೆ. ಮನೆಯ ಒಬ್ಬೊಬ್ಬರಿಗೆ ಒಂದೊಂದು ಬಗೆಯ ಅಡುಗೆ ತಯಾರಿಸುವುದೆಂದರೆ ಅದು ತುಂಬ ಬಳಲಿಕೆಯ ಕೆಲಸ. ಆದ್ದರಿಂದ ನಿತ್ಯವೂ ತಯಾರಿಸುವ ಅಡುಗೆಯನ್ನು ಎಲ್ಲರೂ ಜೊತೆಯಲ್ಲಿ ಕೂತು ಸಂತೋಷದಿಂದ ಭುಜಿಸಬೇಕು ಎಂಬ ಪ್ರಾಯೋಗಿಕ ಅಗತ್ಯವೂ ಈ ಭಾವದ ಹಿಂದೆ ಅಡಗಿರಬಹುದು. ಹೀಗೆ ಮನೆಯ ಇತರ ಸದಸ್ಯರ ಸುಖ ದುಃಖವನ್ನು ಪರಸ್ಪರ  ಗಮನಿಸುವ ಪ್ರಜ್ಞೆಯೂ ಬಾಲ್ಯದಲ್ಲಿಯೇ ಬೆಳೆಯಬೇಕು. ಈ ಬಗೆಯ ಪಾಠವೂ ಬಾಲ್ಯದಲ್ಲಿಯೇ ಸಿಗಬೇಕು.

ಆದರೆ ನಾನು ಹೇಳಿದ ಬದನೆಯ ಕತೆಯನ್ನು ಕೇಳಿದ ಅಂದಿನ ಮಕ್ಕಳ ಪ್ರಶ್ನೆಗಳು ಮಾತ್ರ ಅಮೂಲ್ಯವಾಗಿದ್ದವು ! ಈ ಕತೆಯನ್ನು ಮೊದಲು ನಾನು ಇನ್ನೊಬ್ಬರಿಂದ ಕೇಳಿಸಿಕೊಂಡಾಗ - "ಗುರುಗಳು ಇಡೀ ಗದ್ದೆಗೆ ತೀರ್ಥ ಹಾಕಿದ್ರಾ ಅಥವ ಒಂದು ಬದನೆಗೆ ಮಾತ್ರ ತೀರ್ಥ ಚಿಮುಕಿಸಿದ್ರಾ ?" ಅಂತ ನಾನೂ ಯೋಚನೆ ಮಾಡಿದ್ದಿದೆ. ಆದರೆ ನಿರಪಾಯಕಾರಿಯಾದ ಇಂತಹ ಕೆಲವು ವಿಷಯಗಳನ್ನು ಸುಮ್ಮನೆ ಕೇಳಿ ನಕ್ಕು, ಅಲ್ಲಿಗೇ ಬಿಟ್ಟುಬಿಡಬೇಕು ಅನ್ನುವುದು ನನ್ನ ಭಾವನೆ. ಅಂಥವನ್ನು ಕೆದಕುತ್ತ ಹೋಗುವುದಕ್ಕಿಂತ ಸುಮ್ಮನಿದ್ದು ಬಿಡುವುದೂ ಒಂದು ಜಾಣ ನಡೆಯೇ ಆಗುತ್ತದೆ. ಇವೆಲ್ಲವೂ ನಮ್ಮ ರೂಢಿ ಮತ್ತು ರುಚಿಗ್ರಹಣದ ಮಿತಿಯಿಂದ ಸ್ಥಾಪನೆಯಾಗುವ ಅವಲಂಬನೆ - ಅಷ್ಟೆ. ಉದಾಹರಣೆಗೆ : ನಮ್ಮ ಅಪ್ಪಯ್ಯ ಅನ್ನಿಸಿಕೊಂಡ ಮನೆಯ ಹಿರಿಯರು ಯಾವುದೋ ಹೊಸ ಆಹಾರವನ್ನು ನಮಗೆ ತಂದು ಕೊಟ್ಟಾಗ ನಾವು ನಿಶ್ಚಿಂತೆಯಿಂದ ಅದನ್ನು ತಿನ್ನುವುದಿಲ್ಲವಾ ? ಹಾಗೆ - ನಾವು ವಿಶ್ವಾಸವಿಟ್ಟ, ಸಜ್ಜನ ತಪಸ್ವೀ ವ್ಯಕ್ತಿಯೊಬ್ಬರು ನೀಡುವ ಆಶ್ವಾಸನೆ, ತೋರಿಸುವ ದಾರಿಯನ್ನು ಸಾಮಾನ್ಯರು ಮಾತಿಲ್ಲದೆ ಅನುಸರಿಸುತ್ತಾರೆ. ಅಂದರೆ ಅನುಸರಿಸುವವರೆಲ್ಲರೂ ಮೂಢರು ಎಂದರ್ಥವಲ್ಲ. ಅವರೆಲ್ಲರೂ ಕೂಡಿ ಬಾಳುವ ಸಭ್ಯತೆಗೆ ಮನ್ನಣೆ ಕೊಡುವವರು - ಅಂದುಕೊಳ್ಳಬೇಕು. ಈ ಪ್ರಪಂಚದಲ್ಲಿ ಬದುಕುವುದಕ್ಕೆ ಕೆಲವರಲ್ಲಾದರೂ ನಾವು ಸಹಭಾವ ವನ್ನು ಹೊಂದಿರಬೇಕಲ್ಲವೆ ? ಸಂಸಾರದಿಂದ ದೂರವಿದ್ದು ನಿಸ್ವಾರ್ಥ ತ್ಯಾಗವನ್ನು ಜೀವನ ಕ್ರಮವಾಗಿಸಿಕೊಂಡು, ಒಟ್ಟಾರೆ ಸಮಾಜದ ಒಳಿತಿಗಾಗಿ ದುಡಿಯುವವರನ್ನು - ಆಪದ್ಧರ್ಮದ ಅವಲಂಬನೆಯು ಅನಿವಾರ್ಯವಾದಾಗ, ನಿರಪಾಯಕಾರಿಯಾದ ವಿಷಯಗಳಲ್ಲಿ ಒಮ್ಮೊಮ್ಮೆ ಅನುಸರಿಸುವುದೆಂದರೆ - ಅದು ಒಂದರ್ಥದಲ್ಲಿ - ಆಯಾ ಕಾಲದ ಅಗತ್ಯಕ್ಕೆ ತಕ್ಕಂತೆ ನಮ್ಮ ಮನಸ್ಸನ್ನು ಪಳಗಿಸುವ ಸುರಕ್ಷಿತ ವ್ಯಾಯಾಮ - ಅಂದುಕೊಳ್ಳಬಹುದು. ಈ ಬದುಕಿನಲ್ಲಿ, ದೊಡ್ಡ ಅಥವ ಸಣ್ಣ ಟೋಪಿಗಳಲ್ಲಿ ಒಂದನ್ನು ಆರಿಸಿಕೊಳ್ಳುವುದು ನಮಗೆ ಅನಿವಾರ್ಯ ! ಸಾಮಾನ್ಯವಾಗಿ ಅವರದೇ ಕೌಟುಂಬಿಕ ಟೋಪಿಯು ಅವರವರ ತಲೆಗೆ ಹೊಂದುವಂತಿರುವುದರಿಂದ ಪ್ರಥಮ ಆಯ್ಕೆಯು ಅದೇ ಇರಲಿ. ಅಂದಿನಿಂದ ಇಂದಿನವರೆಗೂ - ನೆಮ್ಮದಿಯ ಬದುಕನ್ನು ಅರಸುವವರೆಲ್ಲರೂ ಹೀಗೆ - ಅವರವರ ನೆಲೆಬೆಲೆಯಲ್ಲಿ "   ಸುರಕ್ಷಿತ  "    ದಾರಿಗಳನ್ನು ಕಂಡುಕೊಳ್ಳುತ್ತಲೇ ಬಂದಿದ್ದಾರೆ.

ಆದರೆ ನಮ್ಮ ಸಮಸ್ಯೆಯೇನು ಗೊತ್ತಾ ? ವಿಶ್ವದ ಎಲ್ಲ ಆಗುಹೋಗುಗಳೂ ನಮ್ಮ ಕಣ್ಣೆದುರಿಗೇ ನಡೆಯಬೇಕು, ಎಲ್ಲದಕ್ಕೂ ಸಾಕ್ಷಿ ಬೇಕು  ಎಂದು ನಾವು ಅಪೇಕ್ಷಿಸುತ್ತೇವೆ. ಕಣ್ಣಿಗೆ ಕಾಣದ್ದನ್ನು ಒಪ್ಪಲು ನಮ್ಮ " ಅಹಂ " ಎಂಬುದು ಅಡ್ಡ ಬರುತ್ತದೆ. ಆದರೆ ನಮ್ಮ ಬದುಕಿನಲ್ಲಿ ನಮ್ಮ ಯಾವುದೇ ಅಪೇಕ್ಷೆಗೆ ಕವಡೆಯ ಕಿಮ್ಮತ್ತೂ ಸಿಗುವುದಿಲ್ಲ ಎಂಬುದು ಕಹಿಯಾದ ಸತ್ಯ. ಈ ಬದುಕಿನುದ್ದಕ್ಕೂ ನಮ್ಮ ಕಣ್ಣೆದುರಿನಲ್ಲಿ ನಡೆಯುವುದಕ್ಕಿಂತ ನಮ್ಮ ಬೆನ್ನ ಹಿಂದೆ ನಡೆಯುವ, ನಡೆಸುವ ವ್ಯಾಪಾರಗಳೇ ಹೆಚ್ಚು. ಎಲ್ಲವನ್ನೂ ಪರಾಂಬರಿಸಿ ನೋಡುವ ನಮ್ಮ ಚಟದ - ಆಚೆಗೂ ಈಚೆಗೂ - ಒಂದಷ್ಟು ಸತ್ಯವು ನಮಗೆ ಕಾಣದಂತೆ ಅಡಗಿಕೊಂಡು ಇದ್ದೇ ಇರುತ್ತದೆ. ಸತ್ಯವೆಂದು ಕಾಣುವ ಎಷ್ಟೋ ಪ್ರಸಂಗಗಳು ಲೋಕದ ಸಾಕ್ಷಿಯಿಲ್ಲದೆ ಸತ್ತು ಬೀಳುವುದು ನಮ್ಮ ನಿತ್ಯದ ಅನುಭವವಲ್ಲವೆ ? ಸುಳ್ಳು ಎಂದು ಖಾತ್ರಿಯಾಗಿ ಗೊತ್ತಿರುವ ಘಟನೆಗಳು ಸಾಕ್ಷಿಯ ಕಾಪಟ್ಯದಿಂದ ಸತ್ಯವಾಗಿ ಬಿಡುವುದನ್ನೂ ಕಾಣುತ್ತಿಲ್ಲವೆ ?

ಆದ್ದರಿಂದ ಯೋಚಿಸಬೇಕು. ನಾವು ಮನುಷ್ಯರು ಪರಾಂಬರಿಸುವುದಕ್ಕೂ ಒಂದು ಮಿತಿಯಿದೆ. ಯಾವುದೇ ತರ್ಕಕ್ಕೆ - ಸತ್ಯವು ಸಿಗುವುದಿಲ್ಲ. ಆದರೆ ಅನುಭವವನ್ನು ನಂಬಿ ನಡೆದರೆ ನಮ್ಮ ನಡಿಗೆಯು ಸುಲಭವಾಗುತ್ತದೆ; ಬದುಕು ಹಗುರವಾಗುತ್ತದೆ. ಸಂಶಯ ಪಡುತ್ತಲೇ ಇದ್ದಲ್ಲಿಂದ ಕದಲದೇ ಇದ್ದರೆ, ಮಣ ಭಾರ ಹೊತ್ತುಕೊಂಡು, ನಾವು ನಿಂತಲ್ಲೇ ನಿಲ್ಲಬೇಕು. ಆದ್ದರಿಂದ ಅನುಭವವನ್ನು ಗೌರವಿಸುವ ಶಿಕ್ಷಣವೂ ಬಾಲ್ಯದಲ್ಲಿಯೇ ಸಿಗಬೇಕು.

ಈ ಬದನೇ ಕತೆಯನ್ನು ಮೊದಲು ಕೇಳಿದಾಗ ನಾನೂ ಹೀಗೇ - ಮಕ್ಕಳಂತೇ ಪ್ರತಿಕ್ರಿಯಿಸಿದ್ದೆ. ನೂರು ಪ್ರಶ್ನೆಗಳು ಎದ್ದಿದ್ದವು. ಹಾಗೆ ನೋಡಿದರೆ, ಯಾವ ಮಕ್ಕಳೂ ಹೆಡ್ಡರಾಗಿರುವುದಿಲ್ಲ. ಪೂರ್ಣತೆಯನ್ನು ಹೊತ್ತ ಪುಟ್ಟ ರೂಪಗಳವು. ಬಾಲ್ಯದಲ್ಲಿ ಬಗೆಬಗೆಯ ಸಂಶಯ ಮೂಡುತ್ತ ಅವುಗಳನ್ನು ಸವರಿಕೊಳ್ಳುತ್ತ ಹೆಜ್ಜೆ ಹಾಕುವುದು ಆರೋಗ್ಯದ ಲಕ್ಷಣವೂ ಹೌದು. ಮಕ್ಕಳಿಗೆ ಸಂಶಯಗಳು ಬರಲಿ. ಬರುತ್ತಲೇ ಇರಲಿ. ಆದರೆ ವಿವೇಕ ಪ್ರಜ್ಞೆಯನ್ನು ಜಾಗ್ರತವಾಗಿರಿಸಿಕೊಂಡು ಯಾವುದೇ ಸಂಶಯದ ಹುಚ್ಚಿಗೆ - ಸಂದೇಹವೆಂಬ ಅಮಲಿಗೆ ಸಿಲುಕದಿದ್ದರೆ ಒಳ್ಳೆಯದು. ಸಂಶಯವನ್ನೇ ಬಂಡವಾಳವನ್ನಾಗಿಸಿಕೊಂಡು ತಮ್ಮ ವಕ್ರ ತರ್ಕಗಳಿಂದಲೇ ಎಲ್ಲರ ಶಿಫಾರಸ್ಸು ಪಡೆಯುವ ಗೀಳಿಗೆ ಮಾತ್ರ ನಮ್ಮ ಮಕ್ಕಳು ಒಳಗಾಗಲೇಬಾರದು. ತಮ್ಮ ಅಹಂ ತೃಪ್ತಿಗಾಗಿ ಮಕ್ಕಳು ನಡೆಸುವ ವಕ್ರವಾದಗಳನ್ನು ಮನೆಯವರೇ ಸೇರಿಕೊಂಡು - ಗಿಡವಾಗಿರುವಾಗಲೇ ಸೋಲಿಸಬೇಕು. ಮನೆಯ ಒಳಗೇ ಮಕ್ಕಳು ನೆಟ್ಟಗಾಗಬೇಕು. ದಿನವಿಡೀ ಶೀರ್ಷಾಸನ ಹಾಕಿ ನಿಲ್ಲುವುದು ಬದುಕಿನ ರೀತಿಯಲ್ಲ; ಬದುಕುವ ರೀತಿಯೂ ಅಲ್ಲ. ಅದು ಬದುಕನ್ನು ಅವಮಾನಿಸಿದಂತೆ ಎಂದು ಮಕ್ಕಳ ಅರಿವಿಗೆ ಬರಬೇಕಾದ್ದು - ಮನೆಯಲ್ಲಿಯೇ.

ನಿಜವಾಗಿಯೂ ತರ್ಕ ಅಂದರೆ ಏನು ? ಕ್ರಮಬದ್ಧವಾದ ವಿಶ್ಲೇಷಣೆ - ಅಷ್ಟೆ. ವಿಶ್ಲೇಷಣೆ ಅಂದರೆ ತರಿದು ಹರಿದು ನೋಡುವುದು. ಯಾವುದೇ ವಿಷಯವನ್ನು ಕಟಕಟ ತುಂಡರಿಸುತ್ತ ಹೋದರೆ ಕೊನೆಗೆ "ಅಣು" ಮಾತ್ರ ಉಳಿಯುತ್ತದೆ. ಅಣುವನ್ನು ವಿಭಜಿಸಲು ಆಗುವುದಿಲ್ಲ. ಅಲ್ಲಿಗೆ ತರ್ಕ ನಿಲ್ಲುತ್ತದೆ; ಆದರೆ ಅತೃಪ್ತಿ ಮಾತ್ರ ಉಳಿಯುತ್ತದೆ. ಕೊನೆಗೆ ಸಿಗುವುದೇನೂ ಇಲ್ಲ. ಇಂದಿಗೂ ನಾವು - " ಸನ್ ರೈಸ್ " " ಸನ್ ಸೆಟ್ " ಅನ್ನುತ್ತೇವಲ್ಲವೆ ? ಆದರೆ ಸೂರ್ಯನು ಉದಯಿಸುವುದೂ ಇಲ್ಲ; ಅಸ್ತಮಿಸುವುದೂ ಇಲ್ಲ; ಸೂರ್ಯನು ಇದ್ದಲ್ಲೇ ಇದ್ದಾನೆ; ನಾವೇ ಸುತ್ತುತ್ತಿದ್ದೇವೆ...ಎಂಬುದು ನಮಗೆ ಗೊತ್ತಿಲ್ಲವೆ ? ನಮಗೆ ಕಾಣುವುದೆಲ್ಲವೂ ಸತ್ಯವೆ ? ಅಂದಮೇಲೆ ಗದ್ದಲವೆಬ್ಬಿಸಿ ನಮಗೆ ಆಗಬೇಕಾದುದಾದರೂ ಏನು ? ಕೆಲವು ಸುಂದರವಾದ ಅಸತ್ಯಗಳೂ ಪ್ರಿಯವಾಗುತ್ತವೆ ಮತ್ತು ಹಿತ ನೀಡುತ್ತವೆ - ಅಲ್ಲವೆ ? ಆದ್ದರಿಂದ ತರ್ಕಕ್ಕಾಗಿ ಯಾರೂ ಸಾಯಬಾರದು. ವಾದವಿವಾದಕ್ಕೆ ಬಲಿಯಾಗಬಾರದು.  ಅಂದು ಗೆಲಿಲಿಯೋ ತೋರಿಸಿದ ವಿವೇಕವು ನಮಗೆ ಅನುಕರಣೀಯವಾಗಬೇಕು. ಯಾಕೆಂದರೆ ತರ್ಕದ ಕರ್ಕಶ ಅಂತ್ಯಕ್ಕಿಂತ - ಜೀವನವು ಅಮೂಲ್ಯ. ಆದ್ದರಿಂದ ಅನೇಕವಾಗುವ ತರ್ಕಕ್ಕಿಂತ - ಸಾಮರಸ್ಯದಿಂದ ಏಕವಾಗುವ ವಿಶ್ವಾಸವೇ ಹೆಚ್ಚು ಜೀವನ ಸ್ನೇಹಿಯಾಗಬಲ್ಲದು.

ನಮ್ಮ ಬಾಲ್ಯವೆಂದರೆ ಕೇವಲ ಕೇಳುವ ಕಾಲ. ಅನಂತರ ಬರುವುದು ಚಿಂತನೆಯ ಕಾಲ. ಯಾವುದೇ ದಿಕ್ಕುದೆಸೆಯಿರುವ ಗಟ್ಟಿ ಚಿಂತನೆಗಳು ಮಾತ್ರ ನಮ್ಮ ಮುಂದಿನ ಆಯುಸ್ಸಿನಲ್ಲಿ ತಾನಾಗಿಯೇ ಪ್ರಕಟವಾಗುವುದಾದರೆ ಆಗಲಿ. ಆದ್ದರಿಂದ ಮನೆಯ ಒಳಗಾಗಲೀ ಹೊರಗಾಗಲೀ ಯಾರಾದರೂ ಸ್ವತಃ ದೃಷ್ಟಾಂತವಾಗುತ್ತ - ಗುರಿಯಿಟ್ಟು ವಿಶಿಷ್ಟ ಮಾದರಿಗಳ ಸೃಷ್ಟಿಗೆ ತೊಡಗಿದರೆ ಅದು ಸಾಕಾಗುತ್ತದೆ.

ಹಳ್ಳಿಯ ಹೆಂಗಸರು ನೀರಿನ ಕೊಡಗಳನ್ನು ತಲೆಯ ಮೇಲೆ ಇಟ್ಟುಕೊಂಡು ಮಾತನಾಡುತ್ತ ನಗುತ್ತ ಲೀಲಾಜಾಲವಾಗಿ ನಡೆಯುವಂತೆ ಬದುಕಿನ ಸ್ಥಿರತೆ ಇರಬೇಕು. ಎಷ್ಟೇ ಹೊರ ಚಿಂತನೆಗಳು ನಡೆಯುತ್ತಿದ್ದರೂ ಆಂತರಿಕ ಸ್ಥಿರತೆಯು ಭದ್ರವಾಗಿರಬೇಕು. ಅಂತಹ ಸಮತೋಲನವು ಮೂಡುವ ವರೆಗೂ ವಿಶ್ವಾಸದ ಬಾಹ್ಯ ಅವಲಂಬನೆಯನ್ನು ಬಿಡಬಾರದು. ಬಿಟ್ಟರೆ -  ಕೊಡವೆಲ್ಲೋ ನಾವೆಲ್ಲೋ - ಹೆಜ್ಜೆಯೆಲ್ಲೋ ಗಮ್ಯವೆಲ್ಲೋ... ಎಂದಾದೀತು. ಬಾಲ್ಯದ ಅಡಿಪಾಯವು ಭದ್ರವಾಗಿದ್ದಾಗ  ಮಾತ್ರ ಭವಿಷ್ಯದಲ್ಲಿ ಎದುರಾಗುವ ಯಾವುದೇ ಸಮಸ್ಯೆಗಳನ್ನೂ ನುಂಗಿ ಜೀರ್ಣಿಸಿಕೊಳ್ಳುವ ಸಾಮರ್ಥ್ಯ - ಸ್ಥಿರತೆ ಮೂಡುತ್ತದೆ. ಆದ್ದರಿಂದ ನಮ್ಮ ಮಕ್ಕಳ ಮುಂದೆ ಅಪಾರ ವಿಷಯವನ್ನು ಹರವಿ ಇಡುವುದಷ್ಟೇ ನಮ್ಮ ಕೆಲಸ. ಯಾವುದೇ ತೀರ್ಪು ಕೊಡುವುದು ಬೇಡ. ನಮ್ಮನ್ನು ಕೇಳುತ್ತ, ನೋಡುತ್ತ, ಮಾಡುತ್ತ, ಬೀಳುತ್ತ ಏಳುತ್ತ ಮಕ್ಕಳು ಎಲ್ಲವನ್ನೂ ಕಲಿತು ಬಿಡುತ್ತಾರೆ. ತಮಗೆ ಎದುರಾಗುವ ವಿಷಯ ವಿಚಾರಗಳನ್ನು ಹಂಸಕ್ಷೀರ ನ್ಯಾಯದಂತೆ ಸ್ವೀಕರಿಸುವ ಶಕ್ತಿಯನ್ನು ಆಯಾ ಮಕ್ಕಳೇ ಬೆಳೆಸಿಕೊಳ್ಳುವ ವಿಪುಲ ಅವಕಾಶವನ್ನು ಮಾತ್ರ ನಾವು ಒದಗಿಸುತ್ತ ಹೋಗುವ. ನಮ್ಮ ಮೌಲಿಕ ಸಮಯವನ್ನು ಮಕ್ಕಳಿಗಾಗಿ ಮೀಸಲಿಡುವ. ಯಾವ ಕ್ಷಣದಲ್ಲಿಯೂ ತಾನು ಅಸಹಾಯಕ, ನಿಕೃಷ್ಟ ಎಂದು ಮಗುವಿಗೆ ಅನ್ನಿಸಲೇಬಾರದು. ಅದರಿಂದ ಮಕ್ಕಳಲ್ಲಿ ಭಯ ಹುಟ್ಟುತ್ತದೆ. ಭಯವು ಮಗುವಿನ ಬೆಳವಣಿಗೆಯನ್ನು ತೀವ್ರವಾಗಿ ಕುಂಠಿಸುವುದು. ಆದ್ದರಿಂದ ಪ್ರೀತಿ ಮತ್ತು ಶಿಕ್ಷೆಯಲ್ಲಿ ಸಮತೋಲನವನ್ನು ಕಾಯ್ದುಕೊಳ್ಳಬೇಕಾಗುತ್ತದೆ. ನಿಮಗೆ ಗೊತ್ತಿದೆ. ಈ ಪ್ರಕೃತಿಯಲ್ಲಿರುವುದು ಕೇವಲ ಶಿಸ್ತು. ಅಲ್ಲಿ ಪ್ರೇಮವಿಲ್ಲ. ಆದರೂ ಪ್ರಕೃತಿಯು ಮನುಷ್ಯನ ವೈರಿಯೇನಲ್ಲ. ಆದ್ದರಿಂದಲೇ ಪ್ರಕೃತಿಯ ಮಡಿಲಿನಲ್ಲಿ ಬೆಳೆದ ಮಕ್ಕಳ ಬುದ್ಧಿಯು ಆರೋಗ್ಯಕರವಾಗಿ ವಿಕಸಿಸುತ್ತದೆ. ಆಟ ಪಾಠ ಊಟ ಓಟ - ಎಲ್ಲವೂ ಸಮತೋಲನದಲ್ಲಿರಲಿ. ಬಾಲ್ಯದಲ್ಲಿ ಮಕ್ಕಳಿಗೆ ಸಿಗಬೇಕಾದ್ದು - ಇಂತಹ ನಿಷ್ಪಕ್ಷ ಆರೈಕೆ; ಬುದ್ಧಿಯನ್ನು ಉದ್ದೀಪನಗೊಳಿಸುವ ಪರಿಚಾರಿಕೆ ! ಸ್ವನಿರೀಕ್ಷಣೆಯ ಸಾಮರ್ಥ್ಯವನ್ನು ಹೆಚ್ಚಿಸುವ ಮನೆಪಾಠ ! ಹದಿಹರೆಯಕ್ಕೆ ಬರುವ ಮೊದಲೇ ನಮ್ಮ ಮಕ್ಕಳನ್ನು ಸರಿಯಾದ ಅಚ್ಚಿನಲ್ಲಿ ಎರಕ ಹೊಯ್ಯುವುದು ಕುಟುಂಬ ಮತ್ತು ಶಿಕ್ಷಕ ರ ಹೊಣೆ. "   ಪ್ರಳಯ - ಪ್ರಗತಿ ಎರಡೂ ಶಿಕ್ಷಕನ ಮಡಿಲಲ್ಲಿ ರೂಪುಗೊಳ್ಳುತ್ತದೆ ! "   ಎಂದ ಚಾಣಕ್ಯನ ಮಾತು ಇಂದಿಗೂ ಸ್ಮರಣೀಯ.

ನಮ್ಮ ಊರು, ಬಾಲ್ಯದ ಪೋಷಣೆ ಮತ್ತು ಮನೆಯ ವಾತಾವರಣವು ಆರೋಗ್ಯಪೂರ್ಣ ಮಕ್ಕಳನ್ನು ರೂಪಿಸುವ ಶಕ್ತಿಗಳು. ಅದಕ್ಕಾಗಿ - ಉತ್ತಮ ಕೌಟುಂಬಿಕ ಪರಿಸರವು ಬಹಳ ಮುಖ್ಯ. ಮಕ್ಕಳ ಜೊತೆಗೆ ಪ್ರತೀ ದಿನವೂ ಅವರ ಹೆತ್ತವರು ಮುಕ್ತ  ಸಂವಹನವನ್ನು ನಡೆಸಬೇಕು. ಕುಟುಂಬದ ಸದಸ್ಯರ ಮಧ್ಯೆ "SPACE" ಅನ್ನುವ " ಗುಟ್ಟು ಚಟ್ಟು " ಇರಲೇಬಾರದು. ಕೌಟುಂಬಿಕ ಸಂವಹನವು ಗಟ್ಟಿಯಾಗಿರಲೇಬೇಕು. ಮಕ್ಕಳ ಎಲ್ಲ ಚಟುವಟಿಕೆಗಳನ್ನೂ ಕುಟುಂಬದ ಹಿರಿಯರು ಕಂಡಂತೆಯೂ ಇರಬೇಕು; ಕಾಣದಂತೆಯೂ ಇರಬೇಕು ! ನನ್ನ ಅಮ್ಮನ ಭಾಷೆಯಲ್ಲಿ " ಒಂದು ಕಣ್ಣನ್ನು ಯಾವಾಗಲೂ ಮಕ್ಕಳ ಮೇಲೆ ಇಡಬೇಕು." (ಒಂದೇ ಕಣ್ಣು !) ಇಂದಿನ ದ್ವೀಪದಂತಾಗಿರುವ ಕುಟುಂಬಗಳಲ್ಲಿಯಂತೂ ಈಗ ವಿಶೇಷ ಕಾಳಜಿಯ ಅಗತ್ಯವಿದೆ. ಕೂಡಿ ಬಾಳುವ ಮನೆಯ ಪರಿಸರದಲ್ಲಿ, "ಸಮಾಜದ ವಿಶ್ವರೂಪ ದರ್ಶನ"ವು - ಮಕ್ಕಳಿಗೆ ಪರಿಚಿತವಾದರೆ ಅದಕ್ಕಿಂತ ದೊಡ್ಡ ನಿಧಿಯು ಇನ್ನೊಂದಿಲ್ಲ. ಜತೆಜತೆಗೆ ಮಕ್ಕಳ ಹಸಿ ಭಾವನೆಗಳು ಜಡವಾಗದಂತೆ ಎಚ್ಚರ ವಹಿಸುವುದೂ ಬಹಳ ಮುಖ್ಯ. ಸ್ನೇಹ ಪ್ರೀತಿ ಕರುಣೆ - ಮುಂತಾದ ಎಲ್ಲ ಸ್ನಿಗ್ಧ ಭಾವನೆಗಳೂ ನಮ್ಮ ಮಕ್ಕಳಲ್ಲಿ ಹಸಿಯಾಗಿರುವಂತೆ ಆಯಾ ಕುಟುಂಬವೇ ಕಾಯ್ದುಕೊಳ್ಳಬೇಕಾಗುತ್ತದೆ. ಮಕ್ಕಳಿಗೆ ಶಿಕ್ಷಾರೂಪದಲ್ಲಿ ನೀಡುವ ಪೆಟ್ಟುಗಳು ಅವರನ್ನು ದೈಹಿಕವಾಗಿ ಗಾಯಗೊಳಿಸದೆ ಕೇವಲ ಎಚ್ಚರಿಸುವಂತಿರಲಿ. ಹಾಗಾದಾಗ ಮಕ್ಕಳು ಬೆಳೆದಂತೆ ಅವರೊಳಗೆ ಒಂದೊಂದಾಗಿ ಬಂದು ಸೇರುವ ಸಣ್ಣಪುಟ್ಟ ಏರುಪೇರುಗಳನ್ನು ತಾವೇ ಸರಿಪಡಿಸಿಕೊಳ್ಳಲು ಮಕ್ಕಳಿಗೆ ಅನುಕೂಲವಾಗುತ್ತದೆ. ಜೊತೆಯಲ್ಲಿ ಲೋಕ ಸಂಚಾರ ಮತ್ತು ಉತ್ತಮ ಓದಿನ ಹವ್ಯಾಸವಿದ್ದರೆ ಮಕ್ಕಳ ಉತ್ತಮ ಬದುಕಿಗೆ ಅಷ್ಟೇ ಸಾಕಾಗುತ್ತದೆ - ಅಲ್ಲವೆ ?

ನಮ್ಮೂರಿಗೆ ಹೋಗಿ ಬಂದ ಮೇಲೆ - ತೂಗಿತ್ತು ನೆನಪುಗಳ ಜೋಕಾಲಿ ! ಮಕ್ಕಳ ರಾಜ್ಯದ ಖಯಾಲಿ ! ನಾವು ಎಷ್ಟೇ ದೊಡ್ಡ ಕುಂಬಳಕಾಯಿ ಅನ್ನಿಸಿಕೊಂಡರೂ ಬಾಲ್ಯ ಕಾಲವು ನಮ್ಮ ಬದುಕಿಗೆ ಅಂಟಿಕೊಂಡೇ ಇರುತ್ತದೆ. ಜನನ - ಜೀವನ - ಮರಣವೆಂಬ ಬದುಕಿನ ಪೂರ್ಣ ವೃತ್ತದಲ್ಲಿ ಬಾಲ್ಯವು ಮಾತ್ರ - ನಮ್ಮ ಬೆಂಬಿಡದ ಸಂಗಾತಿ. ಎಲ್ಲರ ಪ್ರಜ್ಞೆಗೂ ನಿಲುಕದ - ಕೆಲವೊಮ್ಮೆ ನಿಲುಕಿದರೂ ಅಭಿವ್ಯಕ್ತಗೊಳಿಸಲಾಗದ ಅನುಭವ ಅದು. ಮಕ್ಕಳ ಮುಗ್ಧತೆಯನ್ನು ಕಳೆದುಕೊಳ್ಳದಿರುವವರು ಬದುಕನ್ನು ಸವಿಯುತ್ತಾರೆ. ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀ...ಎಂದ ಶ್ರೀರಾಮನಿಗೂ ಅಯೋಧ್ಯೆಯ ಸೆಳೆತವಿತ್ತು. ಪ್ರತೀ ಬದುಕಿನ ಅಂತಿಮ ಭಾಗದಲ್ಲಿ ಅದು ಹೆಚ್ಚು ಕಾಡುತ್ತದೆ. ದೇವಭೂಮಿಯಲ್ಲಿ ಜನಿಸಿದ್ದ ಮಹಾಭಾರತದ ಪಂಚ ಪಾಂಡವರು ತಮ್ಮ ದೇಹತ್ಯಾಗ ಮಾಡಲು ತಾವು ಬಾಲ್ಯವನ್ನು ಕಳೆದ ಅದೇ ದೇವಭೂಮಿಯನ್ನು ಆಯ್ದುಕೊಂಡದ್ದು ನೆನಪಾಗುವುದಿಲ್ಲವೆ ? ಬದುಕಿಗೆ ಬೆನ್ನು ತಿರುಗಿಸಿದ ನಡಿಗೆಯದು. ಆದರೂ ಸ್ವರ್ಗಾರೋಹಣವೆನ್ನಿಸುವ, ಮಹಾನವಮಿ ಅನ್ನಿಸುವ - ಬಾಲ್ಯ ಕಾಲದ ಮಧುರ ಸೆಳೆತವದು.....

                                                                                                                      ನಾರಾಯಣೀ ದಾಮೋದರ್


No comments:

Post a Comment