Tuesday, February 23, 2016

ಯಾಕೆ ಹೀಗೆ ?

"ನಾನು" ಒಳ್ಳೆಯದಿದ್ದರೆ ಜಗತ್ತೇ ಒಳ್ಳೆಯದು, ದೃಷ್ಟಿಯಂತೆ ಸೃಷ್ಟಿ, ತನ್ನಂತೆ ಪರರ ಬಗೆದೊಡೆ ಕೈಲಾಸ ಬಿನ್ನಾಣವಕ್ಕು - ಮುಂತಾದ ಮಾತುಗಳೆಲ್ಲವೂ ಮಾತು ಬಲ್ಲವರ ಬತ್ತಳಿಕೆಯಿಂದ - ಆಗಾಗ ಸಮಯೋಚಿತ ಮತ್ತು ಒಮ್ಮೊಮ್ಮೆ ಅನುಚಿತವಾಗಿಯೂ ಚಿಮ್ಮುವುದಿದೆ. ಇಂತಹ ಮಾತು ಬರಹಗಳನ್ನೆಲ್ಲ ಇಂದಿನ ಬುದ್ಧಿವಂತರು - ಪ್ರಾಯೋಗಿಕ ಎನ್ನುವ ಗೋಜಿಗೆ ಹೋಗದೆ, "ಸಕಾರಾತ್ಮಕ" ಎಂಬ ಆದರ್ಶದ ವರ್ಗಕ್ಕೆ ಸೇರಿಸಿ ಕೈಬಾಯಿ ತೊಳೆದುಕೊಳ್ಳುವುದಿದೆ. ಸಹಸ್ರಾರು ವರ್ಷಗಳಿಂದಲೂ ಹೊರಳಾಡುತ್ತ ಬಂದಿರುವ ಇಂತಹ ಹಲವು ಉದ್ಧರಣೆಗಳ ಬಹುಪಾಲು - ಅವರವರ ಖರ್ಚಿಗೆ ತಕ್ಕಂತೆ ಬಳಸಲ್ಪಡುತ್ತ ಇಂದಿಗೂ ನಿತ್ಯನೂತನವೆಂಬಂತೆ ಚಾಲ್ತಿಯಲ್ಲಂತೂ ಇವೆ; ತನ್ಮೂಲಕ ನಮ್ಮ ಮಾತು ಬರಹಗಳು ಮಾತ್ರವೇ ಪುಷ್ಟಿಗೊಳ್ಳುತ್ತ ಬಂದಿವೆ. ಆದರೆ - ಬದುಕು ?

ವಿದ್ವತ್ತಿನ ತಾಕತ್ತಿನ ಪ್ರದರ್ಶನಕ್ಕೆ ಇದು ಸಮಯವಲ್ಲ; ಅಂತಃಕರಣದ ಸಾತ್ವಿಕ ದನಿಗೆ ಕಿವಿಗೊಡುವ ಸಂದರ್ಭವು ನಮ್ಮ ಮುಂದಿದೆ. ಮನಸ್ಸಾಕ್ಷಿಯನ್ನು ಅಲುಗಿಸಿ ಕೇಳಿದರೆ ನಮ್ಮ ಎಲ್ಲ ಪ್ರಶ್ನೆಗಳಿಗೂ ಸರಿಯಾದ ಉತ್ತರವೇ ಸಿಗುತ್ತದೆ ಎನ್ನುವ ಅನುಭವಿಗಳು ಈಗಲೂ ಇದ್ದಾರೆ. ಆದರೆ "ಬುದ್ಧಿವಂತ ಸುಳ್ಳರ ಬುದ್ಬುದ ಮನಸ್ಸು" ಎಂಬ ಕಳ್ಳ ಮಾರ್ಜಾಲವನ್ನು ಕಟ್ಟಿ, ಆ ಬುದ್ಬುದದ ಒಳಗಿನ ಸಾಕ್ಷಿ ಎಂಬ ಅಮೂರ್ತದ ವರೆಗೆ ಕ್ರಮಿಸಿ ಕುತ್ತಿಗೆ ಪಟ್ಟಿ ಹಿಡಿದು ಗಲಗಲಿಸುವ ತುರ್ತು ಯಾರಿಗಿದೆ ? "ಮಿಥ್ಯ ತೋರಿಕೆ " ಯ ಪದವಿಕೋರ ಜಾದೂಗಾರರು ತೋರಿಸುವ "ಸಕಾರ" ಎಂಬ ಕಣ್ಕಟ್ಟಿನ ಮಂತ್ರವೇ - ಈ ಬದುಕಿನ ಚಾಲನಶಕ್ತಿಯೆ ? "ಸಾಕ್ಷಿ ಪ್ರಜ್ಞಾವಂತರು" ಎಂಬ ಕೋಳಿಪಡೆಗಳು ಪಟಪಟ ಪಠಿಸುವ ಅದೇ ಅಥರ್ವಣ - ಕೊಕ್ಕೊಕ್ಕೋ ಮಂತ್ರದಿಂದಲೇ ಯಾವುದಾದರೂ ಬದುಕನ್ನು ಕಟ್ಟಲು ಸಾಧ್ಯವೆ ? ಈ ಭೂಮಿಯ ಇತಿಹಾಸವನ್ನು ನೋಡಿದರೆ - ಪುರಾಣ ಕಾವ್ಯಗಳನ್ನು ಹೊರತಾಗಿ - "ಸಕಾರಾತ್ಮಕ ಅಪರಂಜಿ ಚಿನ್ನ"ದಂತಹ ಯಾವುದಾದರೂ ಬದುಕು - ಪಾತ್ರಗಳು ನಿಜಬದುಕಿನಲ್ಲಿ ಕಾಣಲು ಸಿಗಬಹುದೆ ? ಹಾಗಾದರೆ - "ಒಳ್ಳೆಯದಾಗಿರುವುದು" ಅನ್ನುವ ನಿತ್ಯ ಪಲ್ಲವಿಯ ಆವರ್ತಗಳಿಂದ ಇದುವರೆಗೆ ಆಗಿರುವ ಸಾಧನೆಯಾದರೂ ಏನು ? ಯಾವುದೇ ರಾಗಗಳಿಗೆ ಹೇಗೆ ವಾದಿಯೂ ಬೇಕು; ಸಂವಾದಿಯೂ ಅವಶ್ಯವೋ - ಹಾಗೇ ಬದುಕಿನ ಸಂಗೀತದಲ್ಲಿ ಸಕಾರ, ನಕಾರ, ವಿಕಾರ, ಮಮಕಾರಗಳೆಲ್ಲವೂ ಇರುತ್ತದೆ; ಹದವರಿತು ಇರಲೂಬೇಕು. ಆದರೆ ಯಾವುದೂ ಹದತಪ್ಪಿದ ರೋಗವಾಗಬಾರದು. ಮನುಷ್ಯನೆಂಬ ಪ್ರಾಣಿಯು ಯಾವತ್ತೂ ಅಪರಂಜಿಯಲ್ಲ; ಸಹಜವಾಗಿಯೇ ಒಳಿತು ಕೆಡುಕುಗಳ ಮಿಶ್ರಣ. ನಿರಪಾಯಕಾರಿಯಾದ ಮತ್ತು ಉಪಕಾರಿಯಾದ ಯಾವ ಅಂಶವನ್ನು ನಮ್ಮ ಬದುಕಿನ ಶಕ್ತಿಯಾಗಿ ಪರಿವರ್ತಿಸಿಕೊಳ್ಳಬೇಕು ಅನ್ನುವುದು ಅವರವರ ಹಿನ್ನೆಲೆ, ಸಂಸ್ಕಾರ, ಪರಿಸರ, ಶಿಕ್ಷಣ, ಸ್ವಪ್ರಯತ್ನಗಳನ್ನು ಹೊಂದಿಕೊಂಡಿದೆ. "ನಿಯಂತ್ರಣದಿಂದಲೇ ಜಾಗ್ರತಿ; ಸ್ವಚ್ಛಂದದಿಂದಲ್ಲ" ಎಂಬ ಮೂಲ ಶಿಕ್ಷಣದಿಂದ ಮಾತ್ರ ಇದು ಸಾಧ್ಯ..

ಇವತ್ತು ಸಕಾರಾತ್ಮಕ ಜಾಗ್ರತಿ ಮೂಡಿಸುವ ಶೈಕ್ಷಣಿಕ ಸನ್ನಿವೇಶ ಇದೆಯೆ ? ಇಂದಿನ ಅಕ್ಷರ ವ್ಯಾಪಾರದ ಸಂತೆಯಲ್ಲಿ ತಥಾಕಥಿತ "ಒಳ್ಳೆಯದು" ಎಂಬುದನ್ನು -  ಹೇಗೆ ಹುಡುಕಲಿ ? ಆಯಾ ಪತ್ರಿಕೆಗಳ ವಿಚಾರಧಾರೆಗೆ ಹೊಂದುವಂತೆ ಬರೆಯುವ, ಆಯಾ ಸಂದರ್ಭಕ್ಕೆ ತಕ್ಕಂತೆ ಮಾತನಾಡುವ, ಆಯಾ ಗುಂಪಿನ - ಜಾತಿಯ ಕೋವಿದರು ಅನ್ನಿಸಿಕೊಂಡು ಒಟ್ಟಿನಲ್ಲಿ  ಒಳ್ಳೆಯದಾಗುವ ಉಮೇದಿನಲ್ಲಿ ಸಂದರ್ಭಕ್ಕೆ ತಕ್ಕಂತೆ ಜೈಕಾರ - ಧಿಕ್ಕಾರ ಕೂಗುವ - "ಒಳ್ಳೆಯವರು" ಎಂಬ ಹಣೆಪಟ್ಟಿ ಹೊತ್ತಿರುವವರ ಮಧ್ಯದಲ್ಲಿ "ಉತ್ತಮರ ಸಂಗವನು ಎನಗಿತ್ತು ಸಲಹೋ" ಎಂಬ ವಿನಂತಿಯೇ ಅಪ್ರಸ್ತುತವಾಗುತ್ತದೆ. ಇಂದಿನ "ಒಳ್ಳೆಯ ಮುಳ್ಳು ಮಳ್ಳು"ಗಳಿಂದ ಪಾರಾಗುವ ಕುಸ್ತಿಯಲ್ಲಿಯೇ ಕೆಲವು ಬದುಕುಗಳು ಮುಗಿದುಹೋಗುವುದೂ ಇದೆ. ಸದ್ದಿನ ಗದ್ದಲದಲ್ಲಿ ಮೆದ್ದು ಮೇಯುತ್ತ "ಒಳ್ಳೆಯತನದ PATENT" ಗಿಟ್ಟಿಸಿಕೊಂಡು ಸರಿದಾಡುತ್ತಿರುವ ಇಂದಿನ "ಒಳ್ಳೇ ಹಾಂವುಗಳು" - ಪ್ರಕೃತಿಸಿದ್ಧ ಒಳ್ಳೆಯತನದ ಮಧುರ ಮುಖವಾಣಿಗಳು ಎಂಬಂತೆ ವರ್ತಿಸುತ್ತಿರುವುದು ಮತ್ತು ಗುಪ್ತ ಕಾರಣಗಳಿಂದ ಅಂತಹ "ಸುಳ್ಳು ಒಳ್ಳೆ"ಗಳ ಮೆರವಣಿಗೆ ನಡೆಸುತ್ತಿರುವುದು ಇಂದಿನ ನಿತ್ಯದ ವ್ಯಾಪಾರವಾಗಿದೆ. ಹೀಗೆ ತಮಗೆ ತಾವೇ "ಉತ್ತಮ ಸ್ವಯಂಭೂಗಳು" ಎಂದುಕೊಳ್ಳುವವರಿಗೆ ಮತ್ತು "ಒಳ್ಳೆಯ ರೋಗ" ಹಿಡಿದ ಅಕ್ಷರವಂತರಿಗೆ ಕಾಲವೊಂದನ್ನು ಬಿಟ್ಟು ಇತರೆಡೆಗಳಲ್ಲಿ ಅನುಮತಿ ಮುದ್ರೆ, ಪ್ರಶಸ್ತಿಪತ್ರವೂ ದೊರಕುತ್ತಿದೆ. "ಒಳ್ಳೆ ಗರ" ಬಡಿಯುವುದೆಂದರೆ ಹೀಗೇ. ಒಳ್ಳೆಯತನ, ಒಳ್ಳೆಯ ಬದುಕು ಎಂಬುದಕ್ಕೆ ಪುರಾಣ ಕಾವ್ಯಗಳಲ್ಲಿ ಉತ್ತರ ರೂಪದ ಅನೇಕ ದೃಷ್ಟಾಂತಗಳು ಸಿಕ್ಕಿದರೂ ವರ್ತಮಾನದ ಓಟವು ಅವನ್ನೆಲ್ಲ ಒಳ್ಳೆಯದೆಂದು ಯಥಾವತ್ ಒಪ್ಪುವ ಹಂತದಲ್ಲಿಲ್ಲ. ಆದರೆ ನಡು ಬಗ್ಗಿ, ತನು ಕುಗ್ಗಿ ಕೊನೆಯುಸಿರೆಳೆಯುವ ಹಂತದಲ್ಲಿ ಕೆಲವರಿಗೆ "ಒಳ್ಳೆ" ಜ್ಞಾನೋದಯವಾದ ಘಟನೆಗಳು "ಜನಪ್ರಿಯ ಸಾಕ್ಷೀ ಪ್ರಜ್ಞೆ" ಗಳನ್ನು ಅಣಕಿಸುವಂತೆ ಆಗಾಗ ಘಟಿಸುತ್ತಲೇ ಇರುತ್ತವೆ. ಆದರೆ ಮುಖವೇ ಮುಖವಾಡ ಆಗಿಹೋದ ಹಂತದಲ್ಲಿ - ಅಂತಹ ಮುಖಗಳಿಂದ ಮುಖವಾಡವನ್ನು ಕಳಚಲು "ಶಯ್ಯಾಗ್ರಸ್ತ ಪ್ರಜ್ಞೆ"ಯು ಕೂಡ ಹಿಂಜರಿಯುತ್ತದೆ. ಆದರೆ ಮಾತಿನ ಪಟಾಕಿ ಹಾರಿಸುತ್ತ ನಿಂತು - ಹೆಣ ನೋಡುವ ಯಃಕಶ್ಚಿತ್ ಹಳವಂಡಗಳ ಎಂದಿನ ನಾಟಕವು ನಡೆಯುತ್ತಿರುತ್ತದೆ. ಹೊಗಳಿಕೆಗಾಗಿ ಜನ ಮೆಚ್ಚುವಂತೆ ನಡೆಯುವಂತಹ ಯಾವುದೇ Time Pass ಒಳ್ಳೆಯತನದ ನಿಕ್ಷೇಪದಿಂದ ಯಾವುದೇ ಬದುಕಿಗೆ ಪುಷ್ಟಿ ದೊರೆತ ದೃಷ್ಟಾಂತವುಂಟೆ ?

"ಸತ್ತರೂ ಬುದ್ಧಿ ಬರಲಾರದು" ಎನ್ನುವ ಮಾತು ಬದುಕಿನಿಂದಲೇ ಹುಟ್ಟಿದ ಅನುಭವೋಕ್ತಿ. ಗುಣಪಡಿಸಲಾಗದ ರೋಗ ಎಂಬ ಅರ್ಥದಲ್ಲಿ ಈ ನುಡಿಗಟ್ಟಿನ ಉಪಯೋಗವಾಗುತ್ತದೆ. ಒಳ್ಳೆಯದು - ಆಗುವುದು, ಒಳ್ಳೆಯದು - ಅನ್ನಿಸಿಕೊಳ್ಳುವುದು, ಒಳ್ಳೆಯದು ಎಂದು ತೋರಿಸಿಕೊಳ್ಳುವುದು ಎಂಬ ಮೂರು ವಿಧಗಳಿವೆ. ಅದರಲ್ಲಿ ಮೊದಲನೇ "ಒಳ್ಳೆಯದಾಗುವ" ವರ್ಗಕ್ಕೆ ಬಹುಶಃ ಈಗ ವಿದ್ಯಾರ್ಥಿಗಳಿಲ್ಲ; ಶಿಕ್ಷಕರೂ ಇಲ್ಲ. ಆದರಿಂದ ಆ ಶಾಲೆಯನ್ನು ಮುಚ್ಚಲಾಗಿದೆ. ಇನ್ನುಳಿದ "ಒಳ್ಳೆಯದು ಅನ್ನಿಸಿಕೊಳ್ಳುವುದು ಮತ್ತು ತೋರಿಸಿಕೊಳ್ಳುವುದು" ಎಂಬ ಎರಡು ವರ್ಗಗಳಲ್ಲಿ "ತಿರುಚು ಸಂಶೋಧನಾ ಪ್ರಬಂಧ" ಮಂಡಿಸುತ್ತ - ತಿರುಚು ಪ್ರಾವೀಣ್ಯತೆ ಹೊಂದಿ ಶತಾಯಗತಾಯ ಸ್ವೀಕಾರಾರ್ಹತೆ ಪಡೆಯಲು ನೂಕುನುಗ್ಗಲು ಹೆಚ್ಚಿದೆ. ಅಂತಹ "ಹುಚ್ಚು ಸಂತೆಯ ಮೆಚ್ಚಿನ ಪದಬಂಧ"ಗಳಿಗೆ ಮತ್ತು ಪ್ರಬಂಧಕಾರರಿಗೆ ಅವರವರೇ ಸೇರಿಕೊಂಡು "ಉಘೇ ಉಘೇ" ಎನ್ನುತ್ತಿರುವ ಪ್ರಹಸನಗಳೂ ನಡೆಯುತ್ತಿರುತ್ತವೆ.

ಒಳ್ಳೆಯ ವ್ಯಕ್ತಿಯಾಗುವುದು ಒಂದು ಆದರ್ಶ. ಆದರೆ ಯಾವುದೇ ಆದರ್ಶದಿಂದ ಹೊಟ್ಟೆ ತುಂಬುವುದಿಲ್ಲ. ಆದ್ದರಿಂದ ಒಳ್ಳೆಯ ವ್ಯಕ್ತಿ "ಅನ್ನಿಸಿಕೊಳ್ಳುವುದು" ಪ್ರತಿಯೊಂದು ಬದುಕಿಗೆ ಅವಶ್ಯ...ಅಧಿಕಾರ, ಸ್ವಾತಂತ್ರ್ಯ, ಹಕ್ಕುಗಳೆಲ್ಲವೂ ಬದುಕಲಿಕ್ಕೆಂದೇ ಇರುವುದು. ಅಪ್ಪಟ ಒಳ್ಳೆಯ ಬದುಕನ್ನು ಪಾಲಿಸುವುದರಿಂದ ಯಾರದೇ ಪ್ರಕೃತಿದತ್ತ ಅಧಿಕಾರವು ಕುಸಿಯುವುದಾದರೆ, ಸ್ವಾತಂತ್ರ್ಯವು ಕಡಿತವಾದರೆ, ಹಕ್ಕುಗಳು ಮಿತಗೊಂಡರೆ...ಅಂತಹ ಒಳ್ಳೆಯ ಬದುಕಿನ ಮಾರ್ಗವು ಜೀವವಿರೋಧಿ ಆಗುತ್ತದೆ. ಯಾವುದೇ ವ್ಯಕ್ತಿಯ ಕರ್ತವ್ಯಕ್ಕೂ ಇತಿಮಿತಿಯಿರಲೇಬೇಕು; ಯಾವುದೇ ಕರ್ತವ್ಯವು ಹೇರಿಕೆಯಾಗಬಾರದು. ಪ್ರಕೃತಿದತ್ತ ಕರ್ತವ್ಯಗಳನ್ನು ಧಿಕ್ಕರಿಸುವ ಹಕ್ಕು ಜನ್ಮಸಿದ್ಧವಾಗಿ ಹೊಂದದಿದ್ದರೆ ಸೃಜನಶೀಲ ಕ್ರಿಯೆಗಳಿಗೆ ಅಡ್ಡಿಯುಂಟುಮಾಡಿದಂತೆ ಆದೀತು. ಆದ್ದರಿಂದ ಹಕ್ಕುಗಳನ್ನು ಕತ್ತರಿಸುವ ಯಾವುದೇ ಕರ್ತವ್ಯಗಳನ್ನು ನಿರ್ದಾಕ್ಷಿಣ್ಯವಾಗಿ ಧಿಕ್ಕರಿಸುವುದು ತಪ್ಪಲ್ಲ. ಬದುಕಲು ಒಳ್ಳೆಯ ವ್ಯಕ್ತಿ ಆಗಲೇ ಬೇಕೆಂದಿಲ್ಲ. ಒಳ್ಳೆಯತನವನ್ನು "ತೋರಿಸಿ"ಕೊಂಡರೂ ಸಾಕಾಗುತ್ತದೆ. ಯಾಕೆಂದರೆ ಬದುಕಿನ ಯಶಸ್ಸು ಎಲ್ಲಕ್ಕಿಂತ ದೊಡ್ಡದು. ಒಳ್ಳೆಯ ವ್ಯಕ್ತಿಯಾಗುವ ವ್ಯರ್ಥ ಭ್ರಮೆಯಲ್ಲಿ ಯಾವುದೇ ಬದುಕು ನಷ್ಟವಾಗಬಾರದು... ತಮಗೆ ಸರಿ ಕಂಡಂತೆ - ಜನ ಮೆಚ್ಚುವಂತೆ ಬದುಕಲು ಎಲ್ಲರಿಗೂ ಹಕ್ಕಿದೆ... ಆದ್ದರಿಂದ ಶಕ್ತಿಯಿಂದಲೋ ಯುಕ್ತಿಯಿಂದಲೋ - ಹೇಗಾದರೂ ಮಿಣಮಿಣ ಮಿಂಚಲು ಯತ್ನಿಸುವುದೇ ಯಾವುದೇ ಬದುಕಿಗೆ ಸೂಕ್ತವಾದ ದಾರಿ. ಒಳ್ಳೆಯದು ಅನ್ನಿಸಿಕೊಳ್ಳುವಾಗ ಅಥವ ತೋರಿಸಿಕೊಳ್ಳುವಾಗಲೂ ಕ್ಷಣಿಕವಾಗಿ ಒಳ್ಳೆಯತನದ ಆವಾಹನೆಯು ತಾನಾಗಿಯೇ ಆಗುವುದರಿಂದ ಒಳ್ಳೆಯ ವ್ಯಕ್ತಿಯಾಗುವ ಪೂರ್ಣ ಆದರ್ಶದ ಭ್ರಮೆಯಿಂದ ನಾವು ಪಾರಾಗುವುದೇ ಒಳ್ಳೆಯದು.... ತಮ್ಮ  ಸ್ವಂತ  ಕ್ಷೇಮ ಮತ್ತು ಸ್ವಂತ ಲಾಭವನ್ನೇ ಗುರಿಯಾಗಿಸಿಕೊಂಡ ಸಮಾಜಗಳು ಅನಾದಿಯಿಂದಲೂ "ಯಶಸ್ಸು" ಗಳಿಸುತ್ತ ಒಳ್ಳೆಯದಾಗುತ್ತಲೇ ಬಂದಿವೆ; ಉಪಾಯದಿಂದಲೇ ತಮ್ಮ ಬದುಕುಗಳನ್ನು ಸವಿಸವಿದು ಮೆದ್ದು ಹೋಗಿವೆ. ಹಣ್ಣುಗಳ ಮಧ್ಯದಲ್ಲಿ ಒಂದೆರಡು ಕೊಳೆತ ಹಣ್ಣುಗಳನ್ನೂ ಸೇರಿಸಿ ಮಾರುವುದು ವ್ಯಾಪಾರೀ ಧರ್ಮ; ದಿನವೂ ಭಜನೆ ಮಾಡಿ ನಿತ್ಯವ್ಯಾಪಾರದ ತಮ್ಮ ಕೆಡುಕನ್ನು ಒರೆಸಬಲ್ಲೆವು ಎನ್ನುವ ಮಾಂತ್ರಿಕ ಶಕ್ತಿಗಳಿಗೆ ಸಹಜವಾಗಿಯೇ ಹೆಚ್ಚು ಜನಧನ ಬಲ ಸಿಗುತ್ತದೆ. ಅದು ಬದುಕುವ - ಟೋಪೀ ಮಾರ್ಗವೂ ಹೌದು. ಆದರೆ ಒಳ್ಳೆಯದನ್ನು ಯಥಾವತ್ ಆಚರಿಸಲು ಪ್ರಯತ್ನಿಸುತ್ತಿದ್ದವರು ಗರಿಕೆ ಹುಲ್ಲಿನಂತೆ ಒಮ್ಮೆ ಒಣಗುತ್ತ ಒಮ್ಮೆ ಚಿಗುರುತ್ತ - ಯಥಾಸ್ಥಿತಿಯಲ್ಲಿ ಇರುವುದಕ್ಕೆ ಉಪಾಯದ ಕೊರತೆಯೇ ಕಾರಣ. ಒಳ್ಳೆಯತನವನ್ನು ಬಿಟ್ಟಲ್ಲದೆ ಉದ್ಧಾರವಿಲ್ಲ ಎಂಬ ಹಂತಕ್ಕೆ ಈಗ ಅವರೂ ಬರತೊಡಗಿದ್ದಾರೆ. ಒಳ್ಳೆಯತನ ಅನ್ನುವುದೇ ಸೋಲಿನ ಕತೆ. ಆದ್ದರಿಂದ ಒಳ್ಳೆಯ ಹುಟ್ಟಿಗಾಗಲೀ ಚಿಂತನೆಗಾಗಲೀ ಪ್ರಸ್ತುತದಲ್ಲಿ ಯಾವುದೇ ಸ್ಥಾನವಿಲ್ಲ. ಶೀಘ್ರ ಯಶಸ್ಸು ಪಡೆಯಲು ತೋರಿಕೆಯು ಬೇಕು. ಸಾಂದರ್ಭಿಕವಾಗಿ ವಾಗ್ಬಾಣ, ತೋಳ್ಬಾಣಗಳು ಬತ್ತಳಿಕೆಯಲ್ಲಿದ್ದರೆ ಸಾಕಾಗುತ್ತದೆ....  ಇಂತಹ - ಎಡಮಿದುಳಿನ ಪಾರಮ್ಯದ ಭಾವರಹಿತ ಚಿಂತನೆಗಳ ಮೋಡ ಕವಿದ ಸಮಾಜದಲ್ಲಿ ಈಗ ನಾವಿದ್ದೇವೆ.

"ಬ್ರಹ್ಮನೊಬ್ಬನೇ ಸತ್ಯ; ಕಾಣುವ ಈ ಜಗತ್ತು ಮಿಥ್ಯ" ಎಂದು ನಂಬಿಕೊಂಡ ಜನ - ಸಂಪ್ರದಾಯಸ್ಥ ಭಾರತೀಯರು. ಆದ್ದರಿಂದ ಈ ಮಿಥ್ಯ ಜಗತ್ತಿನಲ್ಲಿ ಆದರ್ಶ ಸತ್ಯಗಳಿಗೆ ನೆಲೆ ಸಿಗದು... "ಒಳ್ಳೆಯದು" ಎಂಬ ಅಪರಂಜಿಯಿಂದ ಬದುಕಿನ ಆಭರಣವನ್ನು ದೃಢವಾಗಿ ಕಟ್ಟಲಾಗದು..." ಇತ್ಯಾದಿ ಆಕ್ರಮಣಕಾರೀ - "ತಿರುಚು" ಸಂಶೋಧನೆಗಳಿಂದಾಗಿ, ಸದ್ಭಾವದ ಹೆದ್ದಾರಿಗಿಂತ ಸಂಕುಚಿತ ಕಿರುದಾರಿಯಲ್ಲಿಯೇ ಇಂದು ಯುವಜನರ ನೂಕುನುಗ್ಗಲು ಹೆಚ್ಚಿದೆ; ಅಟ್ಟಹಾಸಗಳು ವೇದಿಕೆ ಹಂಚಿಕೊಳ್ಳುತ್ತಿವೆ ಅಥವ ಪುರಭವನಗಳ ಎದುರಿನಲ್ಲಿ ಅಟಕಾಯಿಸುತ್ತವೆ. ಇದರಿಂದ, ಅಂತಹ ವಾತಾವರಣವನ್ನು ವೈಭವೀಕರಿಸುವ - ಪುನರಪಿ ಪ್ರದರ್ಶಿಸುವ ವ್ಯಾಪಾರೀ ಮಾಧ್ಯಮಗಳ ನಿತ್ಯದ ಬುತ್ತಿಯಂತೂ ತುಂಬುತ್ತಿದೆ.

ಒಂದು ದೇಶವು ಯುವಜನರಿಂದ ತುಂಬಿ ತುಳುಕುವ ದೇಶವಾದರೆ ದೇಶೋದ್ಧಾರವಾದೀತೆ ? ಎಂತಹ ಯುವಜನ ಎಂದೂ ಗಮನಿಸಬೇಕಲ್ಲವೆ ? ಇಂದಿನ ಯುವಜನರ ನಡುವೆ ಆಗಾಗ ಸಿಡಿಯುತ್ತಿರುವ "ಒಳ್ಳೇ ಬೆಂಕಿ"ಯ ಕಿಡಿಗಳು ಈ ದೇಶದ ಸಂಪತ್ತನ್ನು ಉಳಿಸಬಹುದೆ ? ದೇಶಪ್ರೇಮ ಎನ್ನುವ ಮಾತು - ಭಾವವನ್ನೇ "ಹುಚ್ಚು ಅಮಲು" ಎನ್ನುವ - ಧೀರ ಶಿಕ್ಷಕ ಯೋಧರು ಬಹಳ ಕಾಲದಿಂದಲೂ ನಮ್ಮ ಜೊತೆಗಿದ್ದಾರೆ. ವಿಶ್ವವಿದ್ಯಾಲಯಗಳೆಂಬ ಹಟ್ಟಿಗಳು ಅಂದು ಹುಟ್ಟಿದಾಗಲೇ ಕೆಟ್ಟೆಯಾಗಿದ್ದವು. ಈಗ ಗಬ್ಬು ನಾರುತ್ತಿದೆ - ಅಷ್ಟೆ. ಬುದ್ಧಿ ತಿರುಗಿಸಿಕೊಂಡೇ ಹುಟ್ಟಿದ ಮತ್ತು ಹುಟ್ಟಿದ ನಂತರ ತಾವಾಗಿಯೇ ಗುದ್ದಿ ತಿರುಗಿಸಿಕೊಂಡಿರುವ ಬುದ್ಧಿಯ "ತಿರುಪೋಕಿ ಶಿಕ್ಷಕ"ರು - "ಒಳ್ಳೆ" ಆಗುವ ಹುಮ್ಮಸ್ಸಿನಲ್ಲಿ ನಡೆಸುತ್ತಿರುವ ಹದ್ದು ಮೀರಿದ ಸೇವೆಯಾಟದ ಪರಿಣಾಮವು ಈಗ ನಮ್ಮ ಎದುರಿಗೇ ಇದೆ. ಭಾರತದ ಕೆಲವು ಸಂಸ್ಥೆಗಳಲ್ಲಿರುವಂತಹ ಇಂತಹ ಯುವಜನ ಸಂಪತ್ತು ಯಾವ DEMOCRACY ಯಲ್ಲೂ ಕಾಣಸಿಗದು. ಬೊಗಳುವವರನ್ನು ಕೆನೆಯಲು, ಕೆನೆಯುವವರನ್ನು ಊಳಿಡಲು ನೇಮಿಸಿದರೆ ಅಂತಹ ಅಪಾತ್ರರಿಂದ ಯಾವ ಕಾರ್ಯವೂ ಎಣಿಕೆಯಂತೆ ನಡೆಯಲಾರದು; ಯಾವ ಸಂಸ್ಥೆಯೂ ತಲೆ ಎತ್ತಿ ನಿಲ್ಲಲಾಗದು. ಸ್ವಸ್ಥ ಚಿಂತನೆ ಮತ್ತು ಸ್ವಸ್ಥ ಕರ್ಮದಿಂದ ಮಾತ್ರ ಸ್ವಸ್ಥ ಸಮಾಜವು ಅಸ್ತಿತ್ವ ಪಡೆದೀತು. ಉಪಕಾರ ಸ್ಮರಣೆಯ ಪರಿಚಯವಿಲ್ಲದ ಯಾವುದೇ ಅಸ್ವಸ್ಥ ಶಿಕ್ಷಣವು - ಗೋರ್ಕಲ್ಲ ಮೇಲೆ ಮಳೆಗರೆದಂತೆ ವ್ಯರ್ಥ.


ಕುಸಂಸ್ಕೃತ, ಲೆಕ್ಕಭರ್ತಿ ಖಾಲಿ ಬುರುಡೆಗಳ ಯಜಮಾನಿಕೆಯ ಕಾಲವಿದು. ಇಂದಿನ ನಮ್ಮ DEMOCRACY ಯಲ್ಲಿ ಕೋಟು ವಾಚುಗಳೂ ಹಾಸಿಗೆ ದಿಂಬುಗಳೂ ರಾಜಕೀಕರಣಗೊಳ್ಳುತ್ತಿಲ್ಲವೆ ? ಅಬ್ಬರಿಸಿ ಬೊಬ್ಬಿರಿಯುವವನೇ ಜಯಶಾಲಿ ಎನ್ನಿಸಿಕೊಳ್ಳುತ್ತಿಲ್ಲವೆ ?  ಗಂಡ ಬಿಟ್ಟವಳಿಗೆ ಇಷ್ಟು - ಬಿಡಿಸಿಕೊಂಡವಳಿಗೆ ಇಷ್ಟು, ರೇಪ್ ಮಾಡಿಸಿಕೊಂಡವಳಿಗೆ ಇಷ್ಟು (ಅದರಲ್ಲೂ ಸಣ್ಣ ರೇಪಾದರೆ ಸ್ವಲ್ಪ - ಗುಂಪು ರೇಪಾದ Braveheart ಗಳಿಗೆ ಸ್ವಲ್ಪ ಹೆಚ್ಚು), ಕೆಲವು ಜಾತಿಯ ಮಂದಿ ಸತ್ತರೆ ಇಷ್ಟು, ಕೆಲವು ಜಾತಿಗೆ ದರ ಕಡಿಮೆ, ಕೆಲವು ಜಾತಿಗೆ ಹೆಚ್ಚು, ಕೆಲವು ಜಾತಿಯು ಮಾರುಕಟ್ಟೆಯಲ್ಲಿ ಆವುಕವಿಲ್ಲ...ಜಾತಿಗೊಂದು ರೇಟು, ರೈತ ಸತ್ತರೆ ಇಷ್ಟು, ಬಗೆಬಗೆಯ ಕಿರುಕುಳಗಳಿಗೆ ಇಷ್ಟಿಷ್ಟು, ಪಕ್ಷದವರಾದರೆ ಇಷ್ಟು - ನಿಷ್ಪಕ್ಷವಾದರೆ ಚಿಪ್ಪು - - ಎಂದು ನಿಗದಿ ಪಡಿಸುತ್ತ, --- ತನ್ಮೂಲಕ ಯಾರದೋ ಕೊಪ್ಪರಿಗೆಯನ್ನು ಎತ್ತೆತ್ತಿ ಕೊಡುವವರಿಗೆ ಸಿಗುವ ಪ್ರತಿಫಲ ಲಾಭವನ್ನನುಸರಿಸಿ ದರ ಚೀಟಿ ಹಚ್ಚಿ ವ್ಯಾಪಾರ ನಡೆಯುತ್ತಿರುವಾಗ ಸಮಾಜದ ನಿರ್ದಿಷ್ಟ ಮನುಷ್ಯ ಪ್ರಾಣಿಗಳು "ತೂಕಕ್ಕಿಟ್ಟ ವಸ್ತು"ಗಳಾಗುತ್ತಿಲ್ಲವೆ ? ನಾವು ಕಳೆದುಕೊಳ್ಳುವ ಎಲ್ಲ ಸುಖಗಳಿಗೂ - ಒಳಗಾಗುವ ಎಲ್ಲ ದುಃಖಗಳಿಗೂ ದುಡ್ಡೊಂದೇ ಪರಿಹಾರವೆ ? ದೇಶವಾಸಿಗಳ ಕ್ಷೇಮಚಿಂತನೆಗೆ ಇದೊಂದೇ ಪರ್ಯಾಯ ಮಾರ್ಗವೆ ? ಅನ್ಯ ಸಭ್ಯ ಮಾರ್ಗಗಳಿಲ್ಲವೆ ? ಯುವಜನರ ಯರ್ರಾಬಿರ್ರಿ ಘೋಷಣೆಗಳಿಂದ ರೋಮಾಂಚನಗೊಂಡು ಕುಪ್ಪಳಿಸುತ್ತಿರುವ ಈ ದೇಶದ ತಲೆ ತಿರುಗಿದ ಒಂದು ವರ್ಗದಿಂದ - "ಹೊಸ ಹೊಸ ಉದ್ಯೋಗ ಸೃಷ್ಟಿಸಿಕೊಳ್ಳಲು ಇಂತಹ ಆಮಿಷಗಳಿಂದ ಏನಾದರೂ ಕುಪ್ರೇರಣೆ ದೊರೆಯುತ್ತಿದೆಯೇ" ಎಂಬ ಸಮೀಕ್ಷೆಯನ್ನು ಎಲ್ಲಾದರೂ ನಡೆಸಲಾಗಿದೆಯೆ ? ಒಂದಿಷ್ಟು ನಂಬಿಕಾರ್ಹತೆಯನ್ನು ಯಾವುದೇ ಸಮೀಕ್ಷೆಗಳಾದರೂ ಈಗ ಉಳಿಸಿಕೊಂಡಿವೆಯೆ ? ದೇಶಹಿತದ ಮುಂದಾಲೋಚನೆಯಿಂದ ಉತ್ತಮ ಕಾರ್ಯಕ್ಕೆಳಸಲು ಪ್ರಯತ್ನಿಸುವ "ಬಹುಮತ ಸಭೆ"ಗಳನ್ನು ತಮ್ಮ ದೊಂಡೆಯಿಂದಲೇ (ದೊಂಡಾಸ್ತ್ರ) ಅಡಗಿಸುವ - ಪಶುಬಲ ತೋಳ್ಬಲಕ್ಕೂ ಮುಂದಾಗುತ್ತಿರುವ ರೌಡಿ (ಅಧಿಕ) ಪ್ರಸಂಗಗಳಿಗೆ ಈ ದೇಶವು ಈಗ ಮೂಕಸಾಕ್ಷಿಯಾಗುತ್ತಿಲ್ಲವೆ ? ಕೇವಲ ಪಕ್ಷ ಕಾಳಜಿಯೊಂದಲ್ಲದೆ ಯಾವುದೇ ಜನಪರ ಕಾಳಜಿಯಿಂದ ಯಾವುದಾದರೂ ದೇಶಹಿತ ಕಾರ್ಯವನ್ನು ನಡೆಸಲು ಈಗ ಸಾಧ್ಯವಾಗುತ್ತಿದೆಯೆ ? ಹೀಗೆ ಸ್ವಪಕ್ಷದ ಮತ ಬೇಟೆಗಾಗಿ ಜನರ ದುಡ್ಡನ್ನು ಬೇಕಾಬಿಟ್ಟಿಯಾಗಿ ಹಂಚುವ ದೊಂಬರಾಟವು ಯಾವ - ಯಾರ ಪುರುಷಾರ್ಥಕ್ಕಾಗಿ ? ಮಾತಿನ ರಂಗಪೂಜೆಯ ನಿತ್ಯದ ತೆಗಲೆ ವಿನೋದಾವಳಿಗಳಿಂದ ಬಿಡುವು ದೊರೆತರಲ್ಲವೇ ಯಾರಾದರೂ ಯೋಚಿಸುವುದು ? ಜನರು ಎಚ್ಚರಗೊಳ್ಳದೆ ಇಂತಹ ಯಾವ ಆಟಗಳೂ ನಿಲ್ಲಲಾರವು.

America ದ ಪ್ರಜಾಪ್ರಭುತ್ವದ ಯಶಸ್ಸಿಗೆ ಅವರ ರಾಷ್ಟ್ರಪ್ರೇಮವೇ ಮುಖ್ಯ ಕಾರಣ. America ದವರ ಚಲನಚಿತ್ರಗಳೂ ಅಭಿವ್ಯಕ್ತಿ ಸ್ವಾತಂತ್ರ್ಯದ ದುರುಪಯೋಗ ಮಾಡಿಕೊಳ್ಳುವುದಿಲ್ಲ ಎಂಬುದು ಗಮನಿಸಬೇಕಾದ ಅಂಶ. ಅವರ ಸೈನ್ಯ ಮತ್ತು ಪೋಲೀಸರನ್ನು ಆರಾಧಿಸುವ ಮತ್ತು ಅದನ್ನು ಸೂಕ್ತವಾಗಿ ಬಿಂಬಿಸುವ ಮನೋಭಾವ ಪ್ರತೀ ಅಮೇರಿಕನ್ನರಲ್ಲಿದೆ. ಕೆಲವೊಮ್ಮೆ ಅತಿಶಯೋಕ್ತಿ - ಅತಿವಿಜೃಂಭಣೆ ಅನ್ನಿಸಿದರೂ ಅಮೇರಿಕನ್ನರ ಆಂತರ್ಯದಲ್ಲಿರುವ ಸ್ವಾಭಿಮಾನವೇ ಅಂತಹ ನಿರ್ಮಾಣಗಳಿಗೆ ಕಾರಣ. ಆದರೆ, ಭಾರತದ ಸ್ಥಿತಿ - ಗತಿ ಇದಕ್ಕೆ ವಿಪರೀತವಾಗಿದೆ. ಇಂದಿನ ಬಹುತೇಕ ಭಾರತೀಯ ಚಲನಚಿತ್ರಗಳು ಅನುಕರಣೆ, ಅಣಕವಾಡು, ನಿರ್ಭಾವ, ಅಸಂಬದ್ಧಗಳ ಸಂತೆಯಾಗಿದೆ. ಯುವಜನತೆಗೆ ಸ್ಫೂರ್ತಿ ನೀಡಿ ದಾರಿ ತೋರಿಸಬಲ್ಲ ಯಾವುದೇ ಚಲನಚಿತ್ರಗಳು ಈಗ ಕಾಣಿಸುವುದಿಲ್ಲ. ಆದ್ದರಿಂದಲೇ ಭಾವಕ್ಕಿಂತ ದೇಹ ನೋಡುವ ಜನರೇ ಹೆಚ್ಚುತ್ತಿದ್ದಾರೆ. ಇಂತಹ Fashion ಗೆ ಒಳಗಾದ ಭಾರತೀಯ ಜಾನಪದವೂ ನವ್ಯದ ಹೆಸರಿನಲ್ಲಿ, Big Boss ಎಂಬ ಅಪಭ್ರಂಶದ ಪ್ರತಿರೂಪವಾಗುತ್ತ ಮನೆಹಾಳಿಗೆ ಹೊಸ ಹೊಸ ಕಾಣಿಕೆ ನೀಡುತ್ತಿದೆ. ಇಂದಿನ ಭಾರತೀಯ ಅಬದ್ಧ ಸಂತತಿಗಳಿಗೆ ಮತದಾನಕ್ಕಾಗಿ - ಉದ್ಯೋಗಿಗಳಿಗೆ ರಜೆ ಕೊಟ್ಟರೆ ಅವರು ಮತದಾನದಲ್ಲಿ ಭಾಗವಹಿಸದೆ Trekking, Picnic - ಎಂದು ತಿರುಗುತ್ತಾರೆ. ಅದೇ ಕರ್ತವ್ಯ ಮರೆತ ಸಂತತಿಗಳು ಗಲ್ಲಿ ಗಲ್ಲಿಗಳಲ್ಲಿ ನಿಂತು ಅಷಡ್ಡಾಳ ಮಾಡುತ್ತ ಹಕ್ಕುಗಳಿಗಾಗಿ ಗೋಳಿಡುವುದರಲ್ಲಿ ಮಾತ್ರ ಮೊದಲಿಗರಾಗುತ್ತಾರೆ.

ಅಂದರೆ...ಅಮೇರಿಕವು ಸ್ವರ್ಗವೆಂದೇನಲ್ಲ. ಆದರೆ, ಅವರ ರಾಷ್ಟ್ರೀಯ ಶಿಸ್ತು, ಕರ್ತವ್ಯ ಶ್ರದ್ಧೆಯು ಅನುಕರಣೀಯ. ಒಳ್ಳೆಯದನ್ನು ಅನುಕರಿಸಲು ಯಾವ ಮಡಿವಂತಿಕೆಯೂ ಬೇಕಾಗಿಲ್ಲ. ಲೌಕಿಕ ಭೋಗದ ಚರಮತಾಣವಾಗಿರುವ ಅಮೇರಿಕವನ್ನು ಮತ್ಸರಿಸುವ ಯೋಗ್ಯತೆಯು ನಮಗೆ ಸದ್ಯಕ್ಕಂತೂ ಇಲ್ಲ. ಯಾಕೆಂದರೆ ನಮ್ಮಲ್ಲಿ ಸದ್ಯಕ್ಕೆ- ಅಲೌಕಿಕದಲ್ಲಿ ನಂಬಿಕೆಯಿಲ್ಲ; ಲೌಕಿಕ ಪಾರಮ್ಯ ಸಾಧಿಸುವ ಯೋಗ್ಯತೆಯೂ ಇಲ್ಲ. ಭಾರತವು ಮೂಲತಃ ಆಧ್ಯಾತ್ಮಿಕದ ಗಟ್ಟಿ ನೆಲೆ. ವಿದೇಶೀಯರು ಭಾರತದತ್ತ ತಿರುಗಿ ನೋಡುವುದೂ ಇದೇ ಕಾರಣಕ್ಕೆ. ಅವರಿಗೆ OLIVE OIL ಹಿತವಾದರೆ ನಮ್ಮ ಪ್ರಕೃತಿಗೆ ತೆಂಗಿನೆಣ್ಣೆ / ಎಳ್ಳೆಣ್ಣೆ / ಸಾಸಿವೆ ಎಣ್ಣೆಯೇ ಸೂಕ್ತ. ಯಾರದ್ದೋ ವ್ಯಾಪಾರಕ್ಕಾಗಿ ಗಂಡಸು ಸೀರೆ ತೊಡಬೇಕಾಗಿಲ್ಲ; ಹೆಂಗಸು ಮೀಸೆ ಅಂಟಿಸಿಕೊಳ್ಳಬೇಕಾಗಿಲ್ಲ. ಅವರಿಗೆ PIZZA ವೇ ಬದುಕಾದರೆ, ನಮಗೆ ರೊಟ್ಟಿಯೇ ಬದುಕು. ಆಯಾ ನೆಲದ ಪ್ರಕೃತಿಗೆ ಹೊಂದುವ ಕ್ರಿಯೆಗಳಿಂದಲೇ ನಾವು ಔನ್ನತ್ಯವನ್ನು ಸಾಧಿಸಬೇಕೇ ವಿನಃ ಅಲ್ಲಿ ಇಲ್ಲಿಂದ ಪಡೆದ ಎರವಲು ಕೃತ್ಯ - ಚಿಂತನೆಗಳಿಂದಲ್ಲ.

"ಯಾವ ಅಂಗವೈಕಲ್ಯವೂ ಇಲ್ಲದ ನನ್ನ ದೇಹವನ್ನು ನಾನೇ ಶುಚಿಗೊಳಿಸಿಕೊಳ್ಳುತ್ತೇನೆ; ಅದಕ್ಕೆ ಯಾವ ಅಂಡೆಪಿರ್ಕಿಗಳ ಸಹಾಯವೂ ಬೇಡ" ಎನ್ನುವ ಜನಸಮೂಹವಿರುವಲ್ಲಿ ಮಾತ್ರ DEMOCRACY ಎಂಬುದು ಯಶಸ್ವಿಯಾಗುತ್ತದೆ. ವಿಕೃತ ಚಿಂತನೆ ನಡೆಸುತ್ತ ಕೈಕಾಲುಚಾಚಿ ಸದಾ ಮಲಗಿಕೊಂಡೇ ಇರುವ ಜನರಿಗೆ ಈ ವ್ಯವಸ್ಥೆಯು ನಿಶ್ಚಯವಾಗಿ ಹೇಳಿಸಿದ್ದಲ್ಲ. ಸರ್ವರಿಗೂ ಸಮಪಾಲು, ಸಮ ಬಾಳು ನೀಡಲಾಗದ DEMOCRACY ಯು DEMOCRACY ಯೇ ಅಲ್ಲ. ಅದು DEMOCRACY ಯ ಕರಾಳ ವಿಡಂಬನೆ.

"ಒಳ್ಳೆಯದು ಅನ್ನುವುದೇ ಒಂದು ಆದರ್ಶ; ಅದು ಪ್ರಾಯೋಗಿಕವಲ್ಲ" ಅನ್ನುವವರು ಯೋಚಿಸಲಿ. DEMOCRACY ಅನ್ನುವುದೇ ಒಂದು ಆದರ್ಶ - ಅಲ್ಲವೆ ? ಪೂರ್ಣ ಸ್ವಾತಂತ್ರ್ಯ ಅನ್ನುವುದು ಇನ್ನೊಂದು ಆದರ್ಶ. ಅಭಿವ್ಯಕ್ತಿ ಸ್ವಾತಂತ್ರ್ಯ ಎನ್ನುವುದೂ ಆದರ್ಶವೇ. "ಬಹುಮತ" ಎಂಬ ನಿರ್ದೇಶಕರ ಪಾರುಪತ್ಯದಲ್ಲಿ ಸಾಗುವ "ಪ್ರಜಾಪ್ರಭುತ್ವ" ಎಂಬ ಅಮೂರ್ತವು ಆದರ್ಶದ ಪರಮಾವಧಿ. ಆದರೆ... ಇಂದಿನ ತಿರುಚು ಆದರ್ಶಗಳ ಪ್ರತಿಪಾದಕರಾದ ಬುದ್ಧಿ ತಿರುಕರು ಒಮ್ಮೊಮ್ಮೆ ತಮ್ಮ ಅನುಕೂಲವೆಂಬ ಶಾಸ್ತ್ರದ ಹಾದಿ ಹಿಡಿದರೆ ಇನ್ನೊಮ್ಮೆ ಹಿಟ್ಲರನ ಪೂಜಕರಂತೆ ವರ್ತಿಸುತ್ತ ತಮ್ಮ ಬೇಳೆಕಾಳು ಬೇಯಿಸಿಕೊಳ್ಳುತ್ತಿಲ್ಲವೆ ? ಈ ಬಳಗದವರದ್ದು - ತಮಗೆ "ಲಾಭ ತರುವ - ಒಪ್ಪುವ ಆದರ್ಶ"ಗಳು ಮಾತ್ರ ಬರುತ್ತಿರಲಿ; ತಮ್ಮನ್ನು "ನಿಯಂತ್ರಿಸುವ - ಒಪ್ಪದ ಆದರ್ಶ"ಗಳು ಬೇಡವೇ ಬೇಡ - ಅನ್ನುವ ಕಾ(ಕಾ)ಜಾಣ ನಿಲುವೆ ? ಇಂತಹ ಸೋಜಿಗ ಮೋಜಿಗರಿಗೆ - ಸ್ವಾನುಕೂಲಿಗರಿಗೆ DEMOCRACY ಯ ತುರಿಕೆ ಯಾಕೆ ? ಅರಾಜಕತೆ ಮತ್ತು ಪ್ರಜಾಪ್ರಭುತ್ವದ ನಡುವೆ ಇರುವುದು ಅತೀ ತೆಳ್ಳಗಿನ ಗೆರೆ. ಜವಾಬ್ದಾರಿ ಮರೆತ ಪ್ರಜಾಪ್ರಭುತ್ವವು "ಅರಾಜಕ"ವಾಗಲು ಹೆಚ್ಚು ಸಮಯ ಬೇಕಿಲ್ಲ. ಇಂದಿನ ಭಾರತವನ್ನು ನೋಡಿದರೆ ಪ್ಲೇಟೋ, ಅರಿಸ್ಟಾಟಲ್ ಗಳೂ "ತಪ್ಪಾಯ್ತು ತಪ್ಪಾಯ್ತು" ಅನ್ನುತ್ತ ತಲೆತಲೆ ಹೊಡೆದುಕೊಳ್ಳುವಂತಿದೆ.  

ಭಾರತದ ಶೈಕ್ಷಣಿಕ ವಲಯಗಳಲ್ಲಿ "ಎಡ - ಬಿಡಂಗಿ ಒಳ್ಳೆಯತನ" ಎಂಬ ಭಾವನೆರಳಿನ ಶಿಕ್ಷಣವು ಬಹಳ ವರ್ಷಗಳಿಂದ ಪಸರಿಸಿದೆ. ನಮ್ಮ ತೆರಿಗೆಯ ದುಡ್ಡಿನಿಂದಲೇ ಪರಮಸ್ವಾರ್ಥಿಗಳಾದ ಪಿತೂರಿಕೋರರು ಸೇರಿಕೊಂಡು ನಡೆಸುತ್ತಿರುವ ಭಯಂಕರ ದ್ರೋಹ ಚಿಂತನೆಯ ಇಂತಹ ಪಿತ್ತ ಮಹಾಕಾಮಾಲಯಗಳು - ಈಗ ಬಯಲು ಬೆತ್ತಲಾಗುತ್ತಿವೆ. ಆದರೆ ನಮ್ಮ ಪ್ರಜಾಪ್ರಭುತ್ವದ ಗಟ್ಟಿ ಕಂಬ ಎಂದು ಬೆನ್ನು ಚಪ್ಪರಿಸಿಕೊಳ್ಳುವ ಕೆಲವು ಮಾಧ್ಯಮಗಳು ಈಗಲೂ ಕಣ್ಣಿಗೆ ಧೂಳಡರಿದಂತೆ "ಅಡ್ಡ ಗೋಡೆಯ ಮೇಲೆ ದೀಪವಿಟ್ಟಂತೆ" ಪ್ರತಿಕ್ರಿಯಿಸುತ್ತಿವೆ. ಪಾಪ.....ಹೊಟ್ಟೇ ಪಾಡು !

ದುಷ್ಟತನವನ್ನು ಒಳ್ಳೆಯತನದ ಆಕುಂಠನದಿಂದ ಮರೆಯಾಗಿಸಿ ವೈಭವೀಕರಿಸುವ ವಿದ್ಯಾಲಯಗಳು, ಯಾವುದೇ ಕೆಲಸಕ್ಕೆ ಬಾರದ - ಕಿಂಚಿತ್ ಜೀವನೋಪಯೋಗಿಯೂ ಆಗದ ಸಂಶೋಧನಾ ಶಬ್ದ ಸಂತೆಯ ವ್ಯರ್ಥ Cut - Paste ಪ್ರಬಂಧಗಳು, ಅವುಗಳಿಗೆ ಚಿನ್ನದ ಪದಕಗಳು... ನಿಜ ವಿದೂಷಕ ವೇಷ ಧರಿಸುವ ಅನುಕರಣೆಯ - ಘಟಿಕೋತ್ಸವ ಪದವಿ ಪ್ರದಾನ ಸಮಾರಂಭಗಳ ಅಟ್ಟಹಾಸ, ಅದರ ನೇರ ಪ್ರಸಾರ... ಇವೆಲ್ಲವುಗಳ ಅತ್ತ ಇತ್ತಿನ ಖರ್ಚು ವೆಚ್ಚಗಳ ಕಾಗೆ ಲೆಕ್ಕ... ಅವನ್ನೆಲ್ಲ ಮಾತಿಲ್ಲದೆ ಒಪ್ಪಿ, ಅಂತಹ "ಒಳ್ಳೆ ಗುಳ್ಳೆ"ಗಳ ಛದ್ಮವೇಷದ ಸ್ಪರ್ಧೆಯಲ್ಲಿ ಭಾಗವಹಿಸುವ - "ತಿಂಗಳ ಮುಟ್ಟಿನಂತೆ ಬಂದು ಹೋಗುವ ಆಡಳಿತ ವ್ಯವಸ್ಥೆಗಳು"...  ಹೀಗೆ, ಎಲ್ಲರಿಂದಲೂ "ಒಳ್ಳೆ" ಅನ್ನಿಸಿಕೊಳ್ಳುವ, ತೋರಿಸಿಕೊಳ್ಳುವ ನಾಟಕದಲ್ಲಿ ಎಲ್ಲರೂ ಸಹಪಾತ್ರಧಾರಿಗಳು. ಭಾರತದ ಸ್ವಾತಂತ್ರ್ಯಾ ನಂತರ ಹುಟ್ಟಿಕೊಂಡ ಸಾಮಾಜಿಕ ಶಿಕ್ಷಣವೆಂಬ ನಾಟಕ ಕಂಪೆನಿಗೆ - ಮರು ಕಾಯಕಲ್ಪ ಮಾಡುವ ಘಳಿಗೆಯು ಈಗಲಾದರೂ ಬರಬಹುದು ಅಂದುಕೊಳ್ಳಲು ಸುತರಾಂ ವಿಶ್ವಾಸ ಮೂಡಲಾರದು. ಯಾಕೆಂದರೆ ನಾನು ಈಗ ಚಾಲ್ತಿಯಲ್ಲಿರುವ "ಒಳ್ಳೆ" ಅನ್ನುವ ಶಬ್ದ ಮತ್ತು "ಒಳ್ಳೆ ಗುಂಪಿನ" ಅನುಯಾಯಿಯಲ್ಲ.

ಕೆಲವೇ ದಶಕಗಳ ಅವಧಿಯಲ್ಲಿ ವಿವೇಚನೆಯಿಲ್ಲದೆ - ಅಂಕೆಯಿಲ್ಲದೆ ನಾವು ಗೀಚಿದ ಮಿತಿಮೀರಿದ ಚಿತ್ತುಗಳನ್ನು ಈಗ ತಿದ್ದಿ ಬರೆಯುವುದು ಅಸಾಧ್ಯವೇ ಆಗಿಹೋಗಿದೆ. ಇಂದಿನ ಕೇಂದ್ರ ಸರಕಾರವು ನಡೆಸುತ್ತಿರುವ ಪ್ರಯತ್ನಗಳನ್ನೆಲ್ಲ ಕಾಮಾಲೆ ಬಣ್ಣದಿಂದಲೇ ಗುರುತಿಸುವ ಪ್ರಯತ್ನವನ್ನೂ ನಡೆಸಲಾಗುತ್ತಿದೆ. ಅದಕ್ಕೆ ಪೂರ್ವ ಕವಿಗಳ ಯಾವುದೋ ಕವನದ ಯಾವುದೋ ನಡುವಿನ ಒಂದು ಸಾಲನ್ನು ಎತ್ತಿ ತೋರಿಸುವ ಬುದ್ಧಿಯ ಚೇಷ್ಟೆಯೂ ನಡೆಯುತ್ತಿದೆ. ಅತೀತವನ್ನು ನೋಡಿ ತಮ್ಮ ಯಶಸ್ಸಿನ ದಾರಿಯನ್ನು ಹುಡುಕಿ ಕಲಿತು ಅನುಸರಿಸುವವರಿಗೆ ಯಾವುದೋ ಬಣ್ಣ ಬಳಿದು ಮೂದಲಿಸುವ ಮೂಲಕ ತಮ್ಮನ್ನು ತಾವೇ "ಭವಿಷ್ಯದ ಕನಸು ಕಾಣುವ ವರ್ಗ" ಎಂದು ಸ್ಥಾಪಿಸಿಕೊಳ್ಳುವ ಹುನ್ನಾರವೂ ಆರಂಭವಾಗಿದೆ. ಕೆಲವರಿಗೆ ಗತದ ದುರ್ವಾಸನೆ - ಸುವಾಸನೆಗಳು ಅಗತ್ಯಕ್ಕೆ ಬೇಕಾದಂತೆ ಹೊಳೆದುಬಿಡುತ್ತವೆ. "ಸತ್ತ ಎಮ್ಮೆಗೆ ಹಾಲು ಹೆಚ್ಚು" ಎನ್ನುವ ಯಾವ ಸೋಗೂ ಅನಪೇಕ್ಷಿತ. ಆದರೆ ಮತಬೇಟೆಗೆ ದಿನಕ್ಕೊಂದು ಕಿಂಡಿಯು ತೆರೆದುಕೊಳ್ಳುತ್ತಲೇ ಇರುವುದು ವಾಸ್ತವ. ಅಸ್ತಿ - ಆಸ್ತಿಯ ವಿಲೇವಾರಿ ನಡೆಸುವ ಫಲಾನುಭವಿ ಸಂತಾನಗಳಿಗೆ ತಮ್ಮ ಅತೀತವನ್ನು ಧಿಕ್ಕರಿಸುವ ಮೌಢ್ಯವು ಇರಲೇಬಾರದು. ಹಿಂದೂ ಇಲ್ಲದ ಮುಂದೂ ಇಲ್ಲದ ಇವರನ್ನೆಲ್ಲ ಪೂರ್ತಿಯಾಗಿ ನಿಷ್ಪಕ್ಷ ದೃಷ್ಟಿಯಿಂದ ನೋಡಲು ಸೋತರೆ ಸ್ಪಷ್ಟತೆಯಿಲ್ಲದ ಅಯೋಮಯವೇ ಮುಂದುವರಿದೀತು. ಪಾರದರ್ಶಕತೆಯೊಂದಿಗೆ ಅಭಿವೃದ್ಧಿಯ ಸಾಕ್ಷ್ಯಗಳು ಸಾಕಾರಗೊಳ್ಳುತ್ತಿರುವ ಈ ಹಂತದಲ್ಲಿ ದೇಶದ ಬೆಳವಣಿಗೆಯ ವೇಗವನ್ನು ತಡೆಯುವ ಹುನ್ನಾರದಿಂದಲೇ "ಬೆಂಕಿ -  ತುಪ್ಪ"ದ ಆಟದಲ್ಲಿ ಸಂಪೂರ್ಣ ಮುಳುಗಿರುವ ನಮ್ಮ "Shouting Sqaud" ನ್ನು ಎಲ್ಲರೂ ಪೂರ್ವಾಗ್ರಹವಿಲ್ಲದೆ ಗಮನಿಸಬೇಕಾಗಿದೆ. "ಚುನಾವಣಾ ಸ್ಪರ್ಧಿಯ ಧ್ವನಿಯ ತೀವ್ರತೆ - ಬಡಿದು ತಿನ್ನುವ ವ್ಯಾಘ್ರಶಕ್ತಿಯೇ ಭಾರತದ ಸಂಸದರಿಗೆ ಇರಬೇಕಾದ ಮುಖ್ಯ ಅರ್ಹತೆ" ಎಂದು ಭವಿಷ್ಯದಲ್ಲಿ ಪರಿಗಣಿಸಬೇಕಾದೀತೆ ? ಎಂದೂ ಯೋಚಿಸುವಂತಾಗಿದೆ. ಜನಪ್ರತಿನಿಧಿಗಳ ಕುತ್ಸಿತ ಚೇಷ್ಟೆಗಳಿಂದಾಗಿ ಸಂಸತ್ತಿನ ಗಾಂಭೀರ್ಯವು ಸಾರ್ವಕಾಲಿಕ ತಳ ಹಿಡಿದಿದೆ. ಲೋಕಸಭೆ, ರಾಜ್ಯಸಭೆಗಳ ನೇರ ಪ್ರಸಾರವನ್ನು ನೋಡುವ ಜನಸಾಮಾನ್ಯರು ಹತಾಶರಾಗುತ್ತಿದ್ದಾರೆ. ಹೀಗಿದ್ದರೂ... ಇವನ್ನೆಲ್ಲ "ಸಕಾರಾತ್ಮಕ"ವಾಗಿ ನೋಡಬೇಕು ಎನ್ನುವ ಸರ್ಕಸ್ ಗಳು ಈಗಲೂ ನಡೆಯುತ್ತಿವೆ. ಎಲ್ಲ ಬಗೆಯ ಸರ್ಕಸ್ ಗಳಿಗೂ ಈಗ ಪ್ರಾಯೋಜಕರು ಸಿಗುತ್ತಾರೆ!

ಭಾರತದ ಭೌಗೋಳಿಕ ಸ್ಥಿತಿ - ಗತಿಯ ಅಸ್ಥಿರತೆಗೆ ಮಹಾಭಾರತಕ್ಕೂ ಪೂರ್ವದ ದೀರ್ಘ ಹಿನ್ನೆಲೆಯೂ ಇದೆ. ಅದು ಇಂದಿಗೂ ಭಿನ್ನವಾಗಿಲ್ಲ. ಮೇಲಿನ ಉತ್ತರದಿಂದ ಆಗಾಗ ಮುನಿಸಿಕೊಳ್ಳುವ ಹಿಮಾಲಯವು ಲತ್ತೆ ನೀಡುತ್ತಿದ್ದರೆ, ಪಶ್ಚಿಮ ಬದಿಯಿಂದ  ಅರಬ್ಬೀ ಅಲೆ, ಪೂರ್ವ ಬಲದಿಂದ - ಕೊಲ್ಲಿ ಬಂಗಾಳ. ಸುತ್ತಲೂ ದೈತ್ಯ ನೃತ್ಯ. ಇವುಗಳ ಕಾಲಬುಡದಲ್ಲಿ ಸಿಕ್ಕಿಕೊಂಡಿರುವ ಹಿಂದೂ ಮಹಾಸಮುದ್ರವು ನಿರಂತರ ಚಡಪಡಿಸುತ್ತಿದೆ, ತಳಮಳಿಸುತ್ತಿದೆ - ಅಂದಿನಿಂದಲೂ. ಶಕ್ತಿಯಾಗಬಹುದಾಗಿದ್ದ ನಮ್ಮ ಸಹಜ ಸಂಪತ್ತೇ ನಮಗೆ ತಿರುಗಿ ನಿಂತಿರುವುದಾದರೂ ಏಕೆ ? ನಮಗೆ ಪ್ರಜ್ಞೆ ಬೇಡವೆ ? ಈ ಭಾರತದ ನೂರಾರು ದೇಶಭಕ್ತರನ್ನು ಬೆರಳೆಣಿಕೆಯ ದ್ರೋಹಿಗಳು ನೆಲ ಕಚ್ಚಿಸಿದ ಸಾಕ್ಷ್ಯಗಳಿಲ್ಲವೆ ? ಬೇಜವಾಬ್ದಾರಿ ಸ್ವಾರ್ಥದ ಒಳ್ಳೆಯತನವು ಯಾರಿಗೂ ಎಂದಿಗೂ ಮಿತ್ರನಲ್ಲ; ಅದು ವಿನಾಶದ ಮಾರ್ಗದರ್ಶಿ.


ಕೇವಲ ಪೊಗರು ತುಂಬುವ, ಬದ್ಧತೆಗಳ ಅರಿವು ಮೂಡಿಸಲಾಗದ ಇಂದಿನ ಎರವಲು ಶಿಕ್ಷಣದಿಂದಾಗಿ, ತಮಗೆ ಅನ್ನಿಸಿದ್ದನ್ನೆಲ್ಲ ಅವಿವೇಕಿಗಳಂತೆ ಮಾಡುವ ದಿಟ್ಟತನವು ಇಂದಿನ ಮಕ್ಕಳಿಗೆ ಹಿಂದೆಂದಿಗಿಂತಲೂ ಹೆಚ್ಚಾಗಿದೆ. "ತಪ್ಪುಗಳನ್ನು ಮಾಡಲು ಆಕ್ಷೇಪವಿಲ್ಲ; ಆದರೆ ಸಿಕ್ಕಿಬೀಳಬೇಡಿ.." ಎಂಬ ಕಳ್ಳ ನೀತಿಪಾಠವು ಇಂದಿನ ಮಕ್ಕಳನ್ನು ಆತಂಕಗೊಳಿಸುತ್ತ ಕ್ರಮೇಣ ಭಯೋತ್ಪಾದಕರನ್ನಾಗಿಸುತ್ತಿದೆ. ಸಾಮಾನ್ಯ ಕಳ್ಳರನ್ನು ಪ್ರಚಂಡ ಕಳ್ಳರನ್ನಾಗಿಸುವ ಇಂದಿನ ಪಂಚತಾರಾ ವಿದ್ಯಾಲಯಗಳಿಗಾಗಿ ಸಾಮಾನ್ಯ ಪ್ರಜೆಗಳು ತಮ್ಮ ಹೊಟ್ಟೆಬಟ್ಟೆ ಕಟ್ಟಿ ತೆತ್ತ ತೆರಿಗೆಯ ಹಣದ ದುರ್ವ್ಯಯವಾಗುತ್ತಿದೆ. ಚುನಾಯಿತ ಸರಕಾರಗಳು ಹೀಗೆ ನೀಡುತ್ತಿರುವ ಬಿಟ್ಟಿ ಕೂಳು, ಬಿಟ್ಟಿ ಶಿಕ್ಷಣದ ತೆಗಲೆಯಿಂದಾಗಿ ಉಂಡಾಡಿಗುಂಡರ ಅವಿವೇಕಿ ಪಡೆಯು ಈಗ ಬಾಯ್ತೆರೆದು ನಿಂತಿದೆ. ದ್ರೋಹ ಚಿಂತನೆಯ ಅಂತಹ ಸೈನ್ಯಕ್ಕೆ ಪರೋಕ್ಷ ಸಹಾನುಭೂತಿ ತೋರುತ್ತ ಅವರನ್ನು ಜಾಣ್ಮೆಯಿಂದ ಬೆಳೆಸುತ್ತಿದ್ದ ಮಿದುಳುಜ್ವರದ ಖದೀಮರು, ಈಗ ಪ್ರತ್ಯಕ್ಷವಾಗಿ ಬೆಂಬಲ ನೀಡುವ ಸೊಕ್ಕನ್ನೂ ಪ್ರದರ್ಶಿಸುತ್ತಿದ್ದಾರೆ. ಒಟ್ಟಿನಲ್ಲಿ "ಒಳ್ಳೆಯ ಪಕ್ಷ" ಅನ್ನಿಸಿಕೊಳ್ಳಲು ವ್ಯಾಪಕವಾಗಿ ಆಂಗಿಕ ವ್ಯಾಯಾಮ - ಮೇಲಾಟ ನಡೆಯುತ್ತಿದೆ. ಭಾರತದ "ಪಕ್ಷ ರಾಜಕಾರಣ" ಎಂಬುದು ಸಾರ್ವಕಾಲಿಕ ನಿಕೃಷ್ಟ ಮಟ್ಟಕ್ಕೆ ಕುಸಿದಿದೆ. ಬುಗುಟು ಬುದ್ಧಿಯ ಪ್ರಶಸ್ತಿಗುಟುಕ ಅವಕಾಶವಾದಿ ಬುಕ್ಕಿಗಳು, ಸ್ವಯಂಘೋಷಿತ "ದೊಡ್ಡ ಮನುಷ್ಯರು"ಗಳು - ಬಂದ ಬಂದ ಗಂಗೆಯ ತೆರೆಯಲ್ಲಿ ತಾವೂ ಮುಳುಗಿ ಎದ್ದು - ತಮ್ಮ "ಒಳ್ಳೆಯ ವೇಷ"ವನ್ನು ಪ್ರದರ್ಶಿಸಲು ಸಾಲುಗಟ್ಟಿ ನಿಂತಿದ್ದಾರೆ. ಕೆಲವರು ಶತಶತಮಾನ ಪೂರ್ವದ ದೃಷ್ಟಾಂತ ತಿರುಚುಗಳ ಸುರಿಮಳೆಗರೆಯುತ್ತ ಒಳ್ಳೆಯ ಸಾಲಿನಲ್ಲಿ ಮುಂಚೂಣಿಯಲ್ಲಿರಲು ನರ್ತಿಸುತ್ತಿದ್ದಾರೆ. ಹಾಗಿದ್ದರೆ, ಇವರಲ್ಲಿ ಒಳ್ಳೆಯವರು ಯಾರು ? ತೋರಿಕೆಯವರು ಯಾರು ? ಒಳ್ಳೆಯದು ಯಾವುದು ? ತೋರಿಕೆ ಯಾವುದು ? ಎಂಬುದು ಅರ್ಥವಾಗದಷ್ಟು ಇಂದಿನ ಜನರು ಮುಗ್ಧರೆ ? ಆದರೆ ಭಾರತೀಯರು ಅತ್ಯಂತ ಸಹನಶೀಲರು ಎಂಬುದರಲ್ಲಿ ಸಂಶಯವಿಲ್ಲ. ತೀರ ತಮ್ಮ ಹಿತ್ತಲಿಗೇ ಯಾವುದೇ ಸಮಸ್ಯೆಯು ಬರುವ ವರೆಗೂ - ನಮ್ಮ ಜನರು ತಟಸ್ಥರಾಗಿರುವುದೂ ಕೂಡ "ಒಳ್ಳೆಯದು ಅನ್ನಿಸಿಕೊಳ್ಳುವ" - ಸ್ವಾರ್ಥ ಕೇಂದ್ರಿತ ಭಾರತೀಯ ರೀತಿಯೂ ಹೌದು. ಅದಕ್ಕೇ ಈ ಸನಾತನ ಭಾರತವು - ಅಂದಿನಿಂದಲೂ ಹೀಗೇ ಇದೆ. ನಮ್ಮ ಜನರ ಇಂತಹ ಉದಾಸೀನ ಭಾವದಿಂದಲೇ - ಪೂರ್ವದಲ್ಲಿ ಘಟಿಸಿದ ಅನೇಕ ಅನಾಹುತಗಳು, ಅನಂತರದ ನರಳಾಟಗಳು - ಇತಿಹಾಸದ ಪುಟಗಳಲ್ಲಿ ಎಲ್ಲೋ ಅಲ್ಪಸ್ವಲ್ಪ ಮಾತ್ರ ದಾಖಲಾಗಿವೆ. ಆದರೆ ಇಂದಿಗೂ - ನಾವು ಅಲ್ಲೇ ಇದ್ದೇವೆ. ಏಕೆಂದರೆ ನಾವಿರೋದು ಹೀಗೇ...!

ನಂಬಿಕೆ, ದೇವರು ಎಂಬ ವಿಷಯದಲ್ಲಿಯೂ - ಇಂದು ನಮಗೆ ಇಂಥದ್ದೇ ದೇವರು, ನಂಬಿಕೆ ಎಂಬುದು ಬೇಕೆಂದಿಲ್ಲ; ಯಾವುದೂ ನಡೆಯುತ್ತದೆ. ಬಗೆಬಗೆಯ "ಭಾಗ್ಯ" ದೇವರುಗಳನ್ನು ಪಕ್ಷ ಮಾಸಗಳಿಗೊಮ್ಮೆ ನಾವೇ ಉದುರಿಸಬಲ್ಲೆವು ಎನ್ನುವ ರಾಜಕೀಯೋದ್ಭವ ಮಾಲಿಂಗಿಗಳಿಗೂ ಇಲ್ಲಿ ಬರವಿಲ್ಲ. ಸಮಾಜದಲ್ಲಿ ಪುರುಷವಾದಿ ಮಹಿಳೆಯರು ಹೆಚ್ಚುತ್ತಿದ್ದಾರೆ ಎಂದು ಗೋಳಿಡುವ ಕೂದಲು ನೆರೆತ ಮಹಿಳೆಯರು ಇರುವುದೂ ನಮ್ಮ - ಉಚಿತ ಭಾಗ್ಯವೇ. ಇಂತಹ ಪರಿಸರದಲ್ಲಿ ಉಸಿರು ಬಿಗಿಹಿಡಿದಿರುವ - "ಒಳ್ಳೆಯತನ" ಎಂಬ - "ಮಿಣಕಲಾಡಿ ವಿದ್ಯಾ ಭಾಗ್ಯ"ವನ್ನು ಗಿಟ್ಟಿಸಿಕೊಳ್ಳಲಾಗದ ಪಾಪದ (ಪಾಪಿ) ಜನರು ಬಸವಳಿದಂತೆ ಕಾಣುತ್ತಿರುವುದೂ ಸುಳ್ಳಲ್ಲ. ಆದ್ದರಿಂದಲೇ ನಮ್ಮ DEMOCRACY ಯ ಇಂದಿನ ಸ್ಥಿತಿಯು "Operation success, Patient died" ಎಂಬಂತಿದೆ. ಯಾವುದೇ ಮಾತು ಕೃತಿಗೆ ಇಳಿದಾಗ ಮಾತ್ರ ಯಶಸ್ಸು; ಅದಿಲ್ಲವಾದರೆ ಕಪ್ಪೆಗಳ ಗುಟುಗುಟುರು.

ವರಮೇಕೋ ಗುಣೀಪುತ್ರೋ ನ ಚ ಮೂರ್ಖ ಶತೈರಪಿ
ಏಕಶ್ಚಂದ್ರಃ ತಮೋಹಂತಿ ನ ಚ ತಾರಾಗಣೈರಪಿ

"ಗುಣವಂತನಾದ ಒಬ್ಬ ಪುತ್ರನಿದ್ದರೆ ಸಾಕು; ನೂರಾರು ಮಕ್ಕಳಿಂದ ಏನು ಪ್ರಯೋಜನ ? ಅನೇಕ ನಕ್ಷತ್ರಗಳಿಂದ ಹೋಗಲಾಡಿಸಲಾಗದ ಕತ್ತಲೆಯು ಒಬ್ಬ ಚಂದ್ರನಿಂದ ಪರಿಹಾರವಾಗುವುದು". ಅಂತಹ ಚಂದ್ರನಿಗಾಗಿ ಈ ದೇಶವು ತಹತಹಿಸುತ್ತಿದೆ. ರವಿಯಿಲ್ಲದ ನಭ, ನವಿಲಿಲ್ಲದ ವನ, ಸರೋಜವಿಲ್ಲದ ಕೊಳವು ಬರಡು. ದೇಶಭಾವವಿಲ್ಲದ ದೇಶವಾಸಿಗಳು ಕೋಟಿಯಿದ್ದರೂ ವ್ಯರ್ಥ. "ನೂರು ಜನ ಸಶಕ್ತ ಸುಸಂಸ್ಕೃತ ಯುವ ಬಲದಿಂದ ಜಗತ್ತನ್ನೇ ಕಟ್ಟಬಲ್ಲೆ" ಎನ್ನಬಲ್ಲ ಇನ್ನೊಂದು ವಿವೇಕಾನಂದ ಶಕ್ತಿಗೆ ಜೀವತುಂಬಬೇಕಾಗಿದೆ. ಗುಲಾಮತನ ಅಥವ ದುಂಡಾವರ್ತಿ ಮನೋಭಾವದ ಕ್ಷುಲ್ಲಕ ವರ್ತನೆಗಳು ಇಲ್ಲದಂತಾಗಿ ಪ್ರಜೆಗಳು ಸರಕಾರದ ಭಾಗದಂತೆ ನಡೆದುಕೊಳ್ಳುವ ಪ್ರದೇಶದಲ್ಲಿ ಮಾತ್ರ ಪ್ರಜಾಪ್ರಭುತ್ವವು ಯಶಸ್ಸು ಕಾಣಬಹುದು. ವಿತಂಡವಾದದ ಬುದ್ಧಿ ಹೆಗ್ಗಣಗಳಿರುವಲ್ಲಿ ಯಾವ ಪ್ರಭುತ್ವವೂ ಚಿಗುರಲಾರದು. Abnormal ಗಳನ್ನುNormal ಮಾಡುವ ಸಡಿಲು ಸಡಗರದಲ್ಲಿ ತೊಡಗಿಕೊಂಡು, Normal ಗಳನ್ನು Abnormal ಆಗಿ ಪರಿವರ್ತಿಸುತ್ತಿದ್ದೇವೆಯೆ ? ಎಂಬುದೂ ಯೋಚಿಸಬೇಕಾದ ವಿಷಯ. ಅತೀತವನ್ನು ಧಿಕ್ಕರಿಸಿ ಭೋರ್ಗರೆಯುವುದೇ ಆಧುನಿಕತೆಯ ಲಕ್ಷಣವೆಂಬಂತೆಯೂ ತೋರುತ್ತದೆ. ಆದರೆ ಸುವ್ಯವಸ್ಥೆಗಾಗಿ - "ಅತೀತ"ದ ಔಷಧವನ್ನೇ "ಭವಿಷ್ಯ"ದಲ್ಲೂ ಅವಲಂಬಿಸುವುದು ಅನಿವಾರ್ಯ. ದೇಶಭಾವದ ಜೊತೆಗೆ ಚೆಲ್ಲಾಟವಾಡುತ್ತ ತೋಳು ತೊಡೆ ತಟ್ಟುವವರಿಗೆ - "ದಂಡಂ ಪರಮೌಷಧಂ". 

ಇಂತಹ ಕುಪುತ್ರರನ್ನು ಹಿಡಿದು ಕಟ್ಟಿ, ಖೊಟ್ಟಿ ಮನುಷ್ಯರ ಅಡೆತಡೆಗಳನ್ನು ಎದುರಿಸಿ - ಹದ್ದುಬಸ್ತಿನಲ್ಲಿರಿಸಿ, ಪುಂಡ ಪೋಕರಿಗಳ ಅಮಿತ ಗಂಡಾಗುಂಡಿಗಳನ್ನೆಲ್ಲ ಸಮೂಲವಾಗಿ ತೊಳೆದು, ಅಸೀಮ ಸ್ವಾರ್ಥದಿಂದ ಕೊಚ್ಚೆಯಾಗಿಸಿದ ಭಾರತವನ್ನು ಈಗ ಸ್ವಚ್ಛ ಭಾರತವಾಗಿಸುವುದು ಸುಲಭಸಾಧ್ಯವೆ ? ಆದರೆ ಪ್ರಯತ್ನಕ್ಕೆ ಒಲಿಯದ ದೈವವಿಲ್ಲ; ಭಾಗ್ಯವಿಲ್ಲ. ಹತಾಶೆಗಿಂತ - ಪ್ರಯತ್ನವೆಂಬ ಆಶಾವಾದವು "ಒಳ್ಳೆಯದು"; ಭರವಸೆಯ ಪ್ರವಾದಿಗಳಾಗದೆ ನಮಗೆ ಬೇರೆ ದಾರಿಯೂ ಇಲ್ಲ.           

Sunday, February 14, 2016

ಹೊಸ ದುರ್ಮುಖ



ನಮ್ಮೊಳಗಿನ ಕಿಲುಬು ನುರಿದು
ಹೊಸ "ದುರ್ಮುಖ" ಬರುತಿದೆ
ನಿಮಿಷ ಉರುಳಿ ವರುಷ ಹೊರಳಿ
ಹೊಸದು ಅರಸು ಎನುತಿದೆ.


ಆಶಯಗಳು ಮಾತು ದಾಟಿ
ನಿಜ ಅರ್ಥವ ಧರಿಸಲಿ
ತೋರಿಕೆಗಳ ಬಿಮ್ಮಿನೊಳಗು
ತನ್ನ ತಾನು ಅರಿಯಲಿ.


ಮನೋವಾಕ್ಕಾಯದಲ್ಲಿ
ನಮ್ರತೆಯು ನೆಲೆಸಲಿ
ಪರರ ಒಳಿತು ತರಲಿ ಹಿಗ್ಗು
ನಂಜನೆಲ್ಲ ತೊಳೆಯಲಿ.


ನೂರು ಮಾತು ನೂರು ಆಸೆ
ನೂರು ನೆನಪಿನುಬ್ಬರ
ಸ್ನೇಹ ಪ್ರೀತಿ ಜೀವ ಭಾವ
ಅಚ್ಚು ಮೆಚ್ಚು ಸಂಭ್ರಮ.


ಬಾನು ಭೂಮಿ ಮೌನ ಮೊಗ್ಗೆ
ಪ್ರಕೃತಿಯೇ ಗುರು ದೈವವು
ಸಾಕ್ಷಿ , ಪ್ರಜ್ಞೆ - ಎಲ್ಲ ಮಾತು
ಸ್ವಚ್ಛತೆ ನೈವೇದ್ಯವು.


ಶುಭಾಶಯದ ಸಂತೆಯಲ್ಲಿ
ಸ್ವನಿರೀಕ್ಷೆಗೆ ತೊಡಗಲಿ
ವರುಷದಲ್ಲಿ ಹೊಸದೇನಿದೆ ?
ಹೊಸತು ಸ್ವಾಂತವಾಗಲಿ

ಚಿದಾನಂದ ಹೊಮ್ಮಲಿ.

ದುರ್ಮುಖವೋ ದುರ್ಮುಖಿಯೋ
ದೋಣಿ ಮುಂದೆ ಸಾಗಲಿ ;
ಕಾಲದೋಟದ ಕ್ಷಣಿಕಗಳಲಿ
ಸುಮುಖ ಸುಮುಖ ಎನಿಸಲಿ.

**
ಕಾಲು - ಎಂದೂ ನಿಲ್ಲದಿರಲಿ
ಕಾಲದ ಜೊತೆ ಸಾಗಲಿ
ನಾಳೆ ಏನೋ ತಿಳಿಯದೋಟ

ಹೆಜ್ಜೆ ಸ್ಥಿರತೆ ಕಾಣಲಿ
 ಕಾಲದ ಜೊತೆ ಏಗಲಿ;
ಕಾಲಕೆ ಶಿರ ಬಾಗಲಿ.
*** 

ಸುಮ್ಮನೆ ಕಥಾಮನೆ 4 - ಮಾಡಿಲ್ಲದ ಗೂಡು


                                                                        

ಮಠದ ಪಾರುಪತ್ಯದವರೆಲ್ಲರೂ ತಲೆಗೆ ಕೈ ಕೊಟ್ಟು ಕೂತಿದ್ದರು.....

"ಛೆ....ಇವತ್ತೇ ಹೊರಟು ನಾಳೆಯೊಳಗೆ ಭೈರವಪುರ ತಲುಪುತ್ತಿದ್ದೆವು. ಇವತ್ತೇ ಉಸಿರು ಚೆಲ್ಲಿದರಲ್ಲ ? ಈಗ ಏನು ಮಾಡುವ ?"

"ನಮ್ಮ ಸಮಾಜದ ಹಿರಿಯರು; ನಮಗೆ ಮಾರ್ಗದರ್ಶಕರಾಗಿ ಬದುಕಿದವರು; ಅವರು ಎಲ್ಲರಂತೆ ಸಾಯುವುದಾ ?"

"ಗುರುಗಳು  ಸುಮ್ಮನೆ ಸತ್ತಂತೆ ಆಗಬಾರದು..."

ಎಲ್ಲರೂ ಮುಖ ಮುಖ ನೋಡಿಕೊಂಡರು.

"ಹೌದು; ಹೌದು..."
                                                                       

ಅಲ್ಲೆಲ್ಲ ಓಡಾಡುತ್ತ, ಅವರಿವರ ಕಿವಿಯೊಳಗೆ ತನ್ನ ಬಾಯಿ ತೂರಿಸಿ ಸೂಚನೆ ಕೊಡುತ್ತಿದ್ದ ಕಿರಿಯ ಮಾಧವ - ದೂರದಲ್ಲಿ ನಿಂತಿದ್ದ ನನ್ನತ್ತ ತಿರುಗಿ

"ಏನು ಬಂದದ್ದು ರವಿರಾಯರು ?" ಅಂದ.

"ಅಲ್ಲ...ಗುರುಗಳನ್ನು ನೋಡಿಹೋಗುವ ಅಂತ......" ಅನ್ನುತ್ತ ನಿಲ್ಲಿಸಿದೆ.

"ಏನೂ ತೊಂದರೆಯಿಲ್ಲ. ನಿದ್ದೆ ಮಾಡಿದ್ದಾರೆ. ಈಗ ಅವರನ್ನು ಎಬ್ಬಿಸಿ ತೊಂದರೆ ಕೊಡುವುದು ಬೇಡ....ಆಯ್ತಾ ? ನೀವು ನಾಳೆ ಬನ್ನಿ" ಅನ್ನುತ್ತ ಮುಂಡನ್ನು ಮಡಚಿ ಕಟ್ಟುತ್ತ ಹೊರಟುಹೋದರು.

ನಾನು ಅಲ್ಲೇ ಕೂತೆ. "ಗಂಟೆ 9 ಆಗಿದೆ; ಗುರುಗಳು ಇನ್ನೂ ನಿದ್ದೆ ಮಾಡುತ್ತಿದ್ದಾರಾ ? ಹಾಗೆ ಮಲಗುವವರಲ್ಲವಲ್ಲ ?" ಅಂದುಕೊಂಡರೂ ಕೇಳುವ ಅವಕಾಶವೇ ಸಿಗಲಿಲ್ಲ. ತನ್ನ ಗುರುಗಳ ವಯಸ್ಸಿನವರು ಅನ್ನುವ ಗೌರವವೂ ಇಲ್ಲದಂತೆ "ಹೊರಡಿ" ಎನ್ನುವ ಧಾಟಿಯಲ್ಲಿಯೇ ಮಾಧವ ನನಗೆ ಉತ್ತರಿಸಿದ್ದ. ಮಠದಲ್ಲಿ ಯಾಕೋ ವಿಚಿತ್ರ ಮೌನ ಇದ್ದಂತೆಯೂ ಅನ್ನಿಸಿತ್ತು. ಸುತ್ತಲೂ ನೋಡಿದೆ. ಊದುಬತ್ತಿಯ ಪರಿಮಳವು ತುಂಬಿ ಹೋಗಿತ್ತು. "ಇನ್ನೂ ಪೂಜೆ ಆದಂತಿಲ್ಲ. ಆದರೂ..." ಅಂದುಕೊಂಡ ನಾನು ಮಠಕ್ಕೆ ಒಂದು ಸುತ್ತು ಬಂದೆ. ಮನಸ್ಸಿನ ಕಳವಳವನ್ನು ತಣಿಸಿಕೊಳ್ಳುವ ಉಪದ್ವ್ಯಾಪಕ್ಕೆ ಎಳಸದೆ, ನಾನು ತಂದಿದ್ದ ನಾಲ್ಕು ತುಳಸಿ, ಹೂವಿನ ಕಟ್ಟನ್ನು ಜಗಲಿಯ ಮೇಲೆ ಇಟ್ಟೆ. ಆಗೊಮ್ಮೆ ಈಗೊಮ್ಮೆ ಹಜಾರದಲ್ಲಿ ಇಣುಕಿ ಹೋಗುತ್ತಿದ್ದ ಮುಖಗಳು ಅಂದು ನನ್ನತ್ತ ತಿರುಗಿಯೂ ನೋಡುತ್ತಿರಲಿಲ್ಲ; ಕಣ್ಣು ತಪ್ಪಿಸಿ ಜಾರಿಕೊಳ್ಳುವಂತೆ ಕಾಣುತ್ತಿತ್ತು. ಯಾಕೋ ಅಲ್ಲಿಂದ ಹೊರಡಲೂ ಆಗದೆ ಕೂರಲೂ ಆಗದಂತಹ ಒದ್ದಾಟವು ಅಸಹನೀಯ ಅನ್ನಿಸಿದ ನಾನು ಅಲ್ಲಿಂದ ಎದ್ದು ಹೊರಬಂದು ಬಿರಬಿರನೆ ನನ್ನ ಮನೆಯತ್ತ ನಡೆದೆ.


                                                                        ೩

"ಪಪ್ಪಾ, ಇವತ್ತಿನ ಪತ್ರಿಕೆ ನೋಡಿದಿರಾ ? ನಿಮ್ಮ ಶಾಸ್ತ್ರಿಗಳು - ಅಂದರೆ ಗುರುಗಳು ಸತ್ತರಂತೆ." ಅನ್ನುತ್ತ ಓಡಿಬಂದ ಮಗ ವಿಶ್ವನ ಕೈಯ್ಯಿಂದ ಪತ್ರಿಕೆಯನ್ನು ಎಳೆದುಕೊಂಡ ರವಿರಾಯರು "ಯಾವಾಗಂತೆ ? ಅಯ್ಯೋ..ಮೊನ್ನೆ ಮಠಕ್ಕೆ ಹೋಗಿದ್ದರೂ ನೋಡಲಾಗಲಿಲ್ಲವಲ್ಲ..." ಅನ್ನುತ್ತ  ಓದತೊಡಗಿದರು.

"ಸಾವಿರಾರು ಶಿಷ್ಯರಿಗೆ ವಿದ್ಯಾದಾನ, ಅನ್ನ ದಾನ ಮಾಡಿ ಬದುಕನ್ನು ಸಾರ್ಥಕಗೊಳಿಸಿಕೊಂಡ ಗುರು ಶ್ರೀ ಶ್ರೀ ಸಿಂಗಾರಣ್ಯರು ಇಂದು ಬೆಳಿಗ್ಗೆ 9 ಗಂಟೆ, 13  ನಿಮಿಷ, 28 ಸೆಕೆಂಡಿಗೆ ನಿಧನರಾದರು. ಗುರುಗಳ ಇಚ್ಛೆಯಂತೆ ಶಿಷ್ಯರೆಲ್ಲರೂ ಮೊನ್ನೆಯೇ ಅವರನ್ನು ಭೈರವಪುರಕ್ಕೆ ಕರೆದೊಯ್ದಿದ್ದರು. ಅವರ ಕೊನೆಯ ಇಚ್ಛೆಯಂತೆ ಭೈರವನ ದರ್ಶನವನ್ನೂ ಮಾಡಿಸಿದ್ದರು. ಮರುದಿನ ಬೆಳಗಿನ ನಿತ್ಯದ ಪೂಜೆಯನ್ನು ಹಿರಿಯರೇ ಮಾಡಿದ್ದರು. ಪೂಜೆ ಮುಗಿಸಿ ಶಿಷ್ಯರಿಗೆ ತೀರ್ಥ ಕೊಡುವಾಗ "ಯಾಕೋ ಆಯಾಸವಾಗುತ್ತಿದೆ..." ಅಂದಿದ್ದರು. ಪೂಜೆಯ ನಂತರ ಅವರ ಪಟ್ಟ ಶಿಷ್ಯರಾಗಿದ್ದ ಶ್ರೀ ಶ್ರೀ ಮಾಧವಾರಣ್ಯರಿಗೆ ತೀರ್ಥ ಕೊಟ್ಟು ತಲೆ ಮುಟ್ಟಿ ಆಶೀರ್ವದಿಸುವಾಗಲೇ ನಿಧಾನವಾಗಿ ಕುಸಿದು ಒರಗಿದ್ದರು. "ಶರಣನ ಜೀವನವನ್ನು ಮರಣದಲ್ಲಿ ನೋಡು" ಎಂಬಂತೆ ಗುರುಗಳು ತಮ್ಮ ಕೊನೆಯ ಕ್ಷಣದ ವರೆಗೂ ಕರ್ತವ್ಯಕರ್ಮಗಳನ್ನು ನಿಷ್ಠೆಯಿಂದ ನಿರ್ವಹಿಸುತ್ತಲೇ ದೈವಾಧೀನರಾದರು. ತಾವು ಇಚ್ಛೆಪಟ್ಟಂತೆಯೇ ಶಿಷ್ಯನಿಗೆ ಜವಾಬ್ದಾರಿಯನ್ನು ನೀಡಿ ಅನಾಯಾಸವಾಗಿ ದೇಹ ತ್ಯಜಿಸಿದರು..." ಪತ್ರಿಕೆಯಿಂದ ತಲೆಯೆತ್ತಿ ನಿಟ್ಟುಸಿರುಬಿಟ್ಟ ರವಿರಾಯರು ಮುಂದಿನ ಸುದ್ದಿ ಓದತೊಡಗಿದರು.

"ಗುರುಗಳ ಇಚ್ಛೆಯಂತೆ ಭೈರವಪುರದಲ್ಲೇ ಅವರ ಉತ್ತರಕ್ರಿಯೆಗಳು ನಡೆಯಲಿವೆ. ಅವರ ಪಟ್ಟ ಶಿಷ್ಯ ಶ್ರೀ ಶ್ರೀ ಮಾಧವಾರಣ್ಯರು ಗುರು ಮಠದ ಜವಾಬ್ದಾರಿ ಹೊತ್ತಿದ್ದು ಅವರ ನಿರ್ದೇಶನದಂತೆ ಮುಂದಿನ ಕಾರ್ಯಗಳು ನಡೆಯಲಿವೆ. ಪೀಠದ ಭಕ್ತಾದಿಗಳೆಲ್ಲರೂ ಸಂಯಮದಿಂದ ಗುರು ಕಾರ್ಯದಲ್ಲಿ ಭಾಗವಹಿಸಬೇಕೆಂದು ನೂತನ ಪೀಠಾಧಿಪತಿಗಳಾಗಲಿರುವ ಶ್ರೀ ಶ್ರೀ ಮಾಧವಾರಣ್ಯರು ಅಪ್ಪಣೆ ಕೊಡಿಸಿದ್ದಾರೆ."

"ಛೆ...." ಅನ್ನುತ್ತ ಪತ್ರಿಕೆಯನ್ನು ಮಡಿಸಿಟ್ಟ ಪಪ್ಪನನ್ನು ನೋಡಿದ ವಿಶ್ವನಿಗೂ ಬೇಸರವಾಗಿತ್ತು. "ಪಪ್ಪಾ, ಗುರುಗಳಿಗೆ ಅಂಥ ವಯಸ್ಸೇನೂ ಆಗಿರಲಿಲ್ಲ. ಆದರೆ ಮರಣವು ನಮ್ಮ ಕೈಯ್ಯಲ್ಲುಂಟಾ ? ಸುಖ ಮರಣ ಅಂತೆ. ನೀವು ಸಮಾಧಾನ ಮಾಡಿಕೊಳ್ಳಿ. ಆರೋಗ್ಯ ಹಾಳು ಮಾಡಿಕೊಳ್ಳಬೇಡಿ. ನಿಮಗೆ ಅಲ್ಲಿಗೆ ಹೋಗಿ ಗುರುಗಳ ಅಪರಕಾರ್ಯದಲ್ಲಿ ಭಾಗವಹಿಸಬೇಕು ಅಂತಿದ್ದರೆ ನಾನೇ ಕರೆದುಕೊಂಡು ಹೋಗುತ್ತೇನೆ..." ಅಂದ ಮಗನನ್ನು ನೋಡಿದ ರವಿರಾಯರು "ಬೇಡ ಮಗೂ...ನನಗೆ ಇದೇ ಭೈರವಪುರ; ನನ್ನ ಕುಟುಂಬವೇ ವೃಂದಾವನ. ಇಲ್ಲಿ ಇಲ್ಲದ್ದನ್ನು ಎಲ್ಲೆಲ್ಲೋ ಹುಡುಕುವುದು ಬೇಡ. ಏನೋ... ಒಂದಷ್ಟು ದಿನ ಆ ಗುರುಗಳ ಜತೆಯಲ್ಲಿ ನಾನೂ ಇದ್ದೆನಲ್ಲ ? ಹಳೆಯ ಸಂಬಂಧ... ಅದಕ್ಕೇ ಕೊಂಡಿ ಮುರಿದ ಹಾಗೆ ಭಾಸವಾಯಿತು... ಇವೆಲ್ಲ ಕ್ಷಣಿಕ... ಏಳು. ನಿನ್ನ ಕೆಲಸಕ್ಕೆ ಹೊರಡು..." ಅನ್ನುತ್ತ ರವಿರಾಯರು ಪತ್ರಿಕೆ ಮಡಿಸಿಟ್ಟು, ತಾವು ಕೂತಲ್ಲಿಂದ ಎದ್ದರು. ಕಾಲಿಗೆ ಚಪ್ಪಲಿ ಸಿಕ್ಕಿಸಿಕೊಂಡು ಊರಿನ ಮಠದತ್ತ ಹೆಜ್ಜೆ ಹಾಕಿದರು. ಮನಸ್ಸಿನಲ್ಲಿ ಒಂದೇ ಯೋಚನೆ..."ಮೊನ್ನೆ ನಾನು ಮಠಕ್ಕೆ ಹೋದಾಗ ಎಲ್ಲರೂ ಸೇರಿಕೊಂಡು ನನ್ನಿಂದ ಏನನ್ನು ಬಚ್ಚಿಟ್ಟಿರಬಹುದು ?"

                                                                       

ಆಗ ನಾವಿಬ್ಬರೂ ಶಾಲೆಯ ಗೆಳೆಯರು. ಓದುವುದರಲ್ಲಿ ಜಾಣನಾಗಿದ್ದ ಶಾಸ್ತ್ರಿಯು ನನಗಿಂತ ನಾಲ್ಕು ವರ್ಷ ದೊಡ್ಡವನು. ಹತ್ತಿರದ ಮನೆಯವರಾದ್ದರಿಂದ ಒಟ್ಟಿಗೆ ಶಾಲೆಗೆ ಹೋಗಿ ಬರುತ್ತಿದ್ದೆವು. ಆರನೇ ತರಗತಿಯಲ್ಲಿರುವಾಗಲೇ ಶಾಸ್ತ್ರಿಯನ್ನು ವೇದಾಭ್ಯಾಸಕ್ಕೆಂದು ಮಠಕ್ಕೆ ಸೇರಿಸಿದ್ದರು. ಆದರೆ ನಾನು ನನ್ನ ಶಾಲಾ ವಿದ್ಯಾಭ್ಯಾಸ ಮುಂದುವರಿಸಿದ್ದೆ. ಆಮೇಲೆ ನನಗೂ ಶಾಸ್ತ್ರಿಗೂ ಸಂಪರ್ಕವೇ ಇರಲಿಲ್ಲ. ಪರವೂರಿನಲ್ಲಿದ್ದು ನನ್ನ ಕಾಲೇಜಿನ ತಿರುಗಾಟವೆಲ್ಲ ಮುಗಿದ ಮೇಲೆ ಊರಿಗೇ ಬಂದು ಅಣ್ಣನ ವ್ಯಾಪಾರದ ಮಂಡಿಯಲ್ಲಿ ನಾನೂ ಜವಾಬ್ದಾರಿ ವಹಿಸಿಕೊಂಡೆ. ಅದೇ ವರ್ಷ ಊರಿನ ಮಠದ ಗುರುಗಳಾಗಿ ಸಿಂಗಾರಣ್ಯರು ಬಂದದ್ದು. ಒಂದು ದಿನ ಮಠಕ್ಕೆ ಹೋಗಿದ್ದ ನನಗೆ ಅವರ ಭೇಟಿಯಾಯಿತು. ಮಂತ್ರಾಕ್ಷತೆ ನೀಡಿ, ನನ್ನ ಬಗ್ಗೆ ತಿಳಿದುಕೊಂಡ ಸ್ವಾಮಿಗಳು "ಏನಪ್ಪ ? ಶಾಸ್ತ್ರಿಯನ್ನು ಮರೆತೇ ಬಿಟ್ಟದ್ದಾ ?" ಅಂದರು. ಪೂರ್ತಿಯಾಗಿ ರೂಪ ಬದಲಾಗಿದ್ದ ಅವರನ್ನು ಕಣ್ಣು ಬಿಟ್ಟು ಕಂಡ ನನಗೆ ಚಕ್ಕೆಂದು ನೆನಪಾಗಿತ್ತು. "ಕ್ಷಮಿಸಿ. ತುಂಬ ವರ್ಷವಾಯಿತಲ್ಲ ? ಅದೂ ನಿಮ್ಮ ಈ ರೂಪದಲ್ಲಿ ಗುರುತಿಸುವುದು ಕಷ್ಟ." ಅನ್ನುತ್ತ ನಕ್ಕಿದ್ದೆ. ಸ್ವಲ್ಪ ಹೊತ್ತು ಪೂರ್ವಾಶ್ರಮದ ನೆನಪು, ನನ್ನ ಬದುಕು ವಹಿವಾಟಿನ ವಿಷಯ ಮಾತಾಡಿ, "ರವಿ, ನೀನು ಆಗಾಗ ಬಿಡುವು ಮಾಡಿಕೊಂಡು ಬರುತ್ತಿರು. ಮಠದ ಲೆಕ್ಕಪತ್ರವನ್ನೆಲ್ಲ ನೋಡುವುದರಲ್ಲಿ ನನಗೆ ಸಹಾಯಕನಾಗಿರು.." ಎಂದು ಹೇಳಿ ಅಂದು ಕಳಿಸಿಕೊಟ್ಟಿದ್ದರು. ಅಂದಿನಿಂದ ನಾನು ನಿಯಮಿತವಾಗಿ ಮಠಕ್ಕೆ ಹೋಗುತ್ತಿದ್ದೆ. ಬರಬರುತ್ತ ಸ್ವಾಮಿಗಳ ಬಲಗೈ ಬಂಟನಂತಾಗಿದ್ದೆ.

ಸುಮಾರು 20 ವರ್ಷ ಹೀಗೇ ನಡೆಯಿತು. ಮಠದ ಭಕ್ತರ ಸಂಖ್ಯೆ, ಆದಾಯವೂ ಹೆಚ್ಚುತ್ತ ಹೋಯಿತು. ಆದರೆ ಅದೇ ಹೊತ್ತಿನಲ್ಲಿ - ಗುರುಗಳನ್ನು ಆಗಾಗ ಅನಾರೋಗ್ಯವೊಂದು ಪೀಡಿಸತೊಡಗಿತು. ಅವರಿಗೆ ಸ್ವಯಂ ನಿಯಂತ್ರಣದ ಪಾಠ ಹೇಳುವುದಕ್ಕೆ ನಾನೂ ಮುಂದಾಗಲಿಲ್ಲ. ಅದು ನನ್ನ ಸ್ವಭಾವವೂ ಆಗಿರಲಿಲ್ಲ. ಇಂತಹ ದಿನಗಳಲ್ಲಿ ಸ್ವಾಮಿಗಳಿಗೆ ಮಠದ ಚಿಂತೆಯೂ ಕಾಡುತ್ತಿತ್ತು. ತನ್ನ ನಂತರ ಮಠದ ಜವಾಬ್ದಾರಿ ವಹಿಸಬಲ್ಲ ಯೋಗ್ಯ ವ್ಯಕ್ತಿಯನ್ನು ಆರಿಸಿ, ಸನ್ಯಾಸ ದೀಕ್ಷೆ ಕೊಟ್ಟು, ಕಿರಿಯನೊಬ್ಬನನ್ನು ಉತ್ತರಾಧಿಕಾರಿಯಾಗಿಸಿಕೊಳ್ಳಬೇಕು ಅಂದುಕೊಂಡರು. ಅದೇ ಊರಿನವನೇ ಆದ - ಕಾಲೇಜಿನ ಮುಖ ಕಂಡಿದ್ದ ಒಬ್ಬ ಯುವಕನನ್ನು ಆರಿಸಿಕೊಂಡು ಆಮೇಲೆ ನನ್ನ ಅಭಿಪ್ರಾಯವನ್ನೂ ಕೇಳಿದ್ದರು. ಆಗ ಆ ಹುಡುಗನ ಹಿನ್ನೆಲೆಯನ್ನೆಲ್ಲ ವಿಚಾರಿಸಿದ ನಾನು "ಸ್ವಲ್ಪ ನಿಧಾನಿಸಿ. ಇನ್ನೂ ಒಳ್ಳೆಯ - ಸೂಕ್ತನಾದ ವ್ಯಕ್ತಿ ಸಿಗಬಹುದು..." ಎಂದಷ್ಟೇ ಹೇಳಿದ್ದೆ. ಆದರೆ ಅದು ಎಂತಹ ಒತ್ತಡ ಬಂದಿತ್ತೋ... ಗುರುಗಳು ಅದೇ ಹುಡುಗನನ್ನು ಕಿರಿಯ ಸ್ವಾಮಿಯಾಗಿ ಆರಿಸಿ ಸ್ವೀಕರಿಸಿಯೂ ಬಿಟ್ಟರು. ಮಾಧವನು ಕಿರಿಯ ಸ್ವಾಮಿಯಾದ ಎರಡು ವರ್ಷದಲ್ಲೇ - ನನ್ನನ್ನು ಮಠದ ಜವಾಬ್ದಾರಿಯಿಂದ ಒಂದೊಂದಾಗಿ ಬಿಡುಗಡೆಗೊಳಿಸುತ್ತ ಬಂದರು. ಒಂದು ಸಂದರ್ಭದಲ್ಲಿ, ಹಿರಿಯರೊಂದಿಗೆ ಕೂತಿದ್ದ ಆ ಕಿರಿಯ ಸ್ವಾಮಿಗಳಿಗೆ ನಾನು ನಮಸ್ಕರಿಸಿದಾಗ "ನನ್ನನ್ನು ಅಯೋಗ್ಯ ಎಂದಿದ್ದ ನೀವು ನನಗೆ ನಮಸ್ಕರಿಸಬೇಡಿ...ನಾವು ನಿಮ್ಮ ಯೋಗ್ಯತೆಯವರಲ್ಲ..." ಅಂದಿದ್ದರು. ಆಗ ಅಲ್ಲೇ ಇದ್ದ ಗುರುಗಳು ತಟಸ್ಥವಾಗಿದ್ದರು. ಅವರ ಆಯ್ಕೆಯ ಸಂದರ್ಭದಲ್ಲಿ ನನಗೂ ಹಿರಿಯ ಗುರುಗಳಿಗೂ ನಡೆದಿದ್ದ ಅಂದಿನ ಸಂಭಾಷಣೆಯನ್ನು ಕಿರಿಯರ ಕಿವಿಗೂ ಬೀಳುವಂತೆ ಮಾಡಿದ ಪುಣ್ಯಾತ್ಮ ಯಾರಿರಬಹುದು ? ಎಂದು ಎರಡು ಮೂರು ದಿನ ನಾನೂ ತಲೆ ಕೆಡಿಸಿಕೊಂಡಿದ್ದೆ. ಬರಬರುತ್ತ ಮಠಕ್ಕೆ ನಾನು ಹೊರಗಿನವನಾಗತೊಡಗಿದ್ದೆ. ಹಿರಿಯ ಗುರುಗಳನ್ನು ನಾನು ಕಾಣಬೇಕಾದರೂ ಕಿರಿಯರ ಅಪ್ಪಣೆ ಪಡೆಯುವಂತಾಯ್ತು.

                                                                         ೫ 

ಬಹುಶಃ ಒಂದು ತಿಂಗಳ ಹಿಂದೆ, ಅಕಸ್ಮಾತ್ ಮಠಕ್ಕೆ ಹೋಗಿದ್ದ ನಾನು ಹಿರಿಯರನ್ನು ಭೇಟಿಯಾಗಿದ್ದೆ. ಕಿರಿಯ ಸ್ವಾಮಿಗಳು ಅಂದು ಮಠದಲ್ಲಿ ಇರಲಿಲ್ಲ. ಖಿನ್ನರಾಗಿ ಒಬ್ಬರೇ ಕೂತಿದ್ದ ಗುರುಗಳು ಅಂದು ನನ್ನೊಂದಿಗೆ ಮನಬಿಚ್ಚಿ ಮಾತಾಡಿದ್ದರು. "ಯಾಕೋ...ಎಲ್ಲವನ್ನೂ ಬಿಟ್ಟು ದೂರ ಹೋಗುವ ಅನ್ನಿಸುತ್ತಿದೆ ರವೀ...ಅವತ್ತು ನೀನು ಹೇಳಿದ ಮಾತನ್ನು ನಾನು ಕೇಳಬೇಕಿತ್ತು...ಆಗ ಅದೊಂದು ಸಂಕಟ ಇತ್ತು. ಅವಳು ಎಲ್ಲಿ ಬಾಯಿ ಬಿಡುತ್ತಾಳೋ ಅಂತ ಹೆದರಿ ಅವಳು ತೋರಿಸಿದವರನ್ನೇ ಒಪ್ಪಿಕೊಂಡುಬಿಟ್ಟೆ. ರವೀ, ಅಂದಿನಿಂದ ನಾನು ಬರೀ ಸೂತ್ರದ ಬೊಂಬೆ ಆಗಿಬಿಟ್ಟೆ. ನಿನ್ನಲ್ಲಾದರೂ ಏನಾದರೂ ಹೇಳಿಕೊಳ್ಳುವ ಅಂತಂದರೆ ನೀನು ಮಠಕ್ಕೆ ಬರುವುದನ್ನೇ ಕಡಿಮೆ ಮಾಡಿದೆ. ಒಮ್ಮೊಮ್ಮೆ ಬಂದಾಗಲೂ ಮಾತಾಡುವ ಸನ್ನಿವೇಶವೂ ಇರುತ್ತಿರಲಿಲ್ಲ. ಒಟ್ಟಿನಲ್ಲಿ ನಾನು ತಪ್ಪು ಮಾಡಿದೆ ರವೀ.. ಈ ಸ್ವಾಮಿತನವೇ ನನಗೆ ಬೇಡವಾಗಿತ್ತು. ನಿನ್ನ ಹಾಗೇ ಓದಿಕೊಂಡು ಸಂಸಾರವಂದಿಗನಾಗಿ ಎಲ್ಲರಂತೆ ನಾನೂ ಇರಬಹುದಿತ್ತು. ಈಗ ನೋಡು...ತ್ರಿಶಂಕು ಸ್ಥಿತಿ. ಈಗ ಇದೇ ಮಠದಲ್ಲಿ ನನ್ನ ಕಣ್ಣೆದುರಿನಲ್ಲೇ ಆಗಬಾರದ್ದೆಲ್ಲ ಆಗುತ್ತಿದೆ. ಏನೊಂದು ಮಾತನಾಡುವ ನೈತಿಕ ಶಕ್ತಿಯೂ ನನಗೀಗ ಉಳಿದಿಲ್ಲ. ಉಳಿದದ್ದು ಒಂದೇ. ನನ್ನ ಈ ದೇಹ; ತಟಕು ಉಸಿರು. ಅಷ್ಟೆ. ನಾನು ಸಾಯಬೇಕು ರವೀ. ಆದರೆ ಹೇಗೆ ?.."

ಗುರುಗಳು ಅಷ್ಟು ಹತಾಶರಾದುದನ್ನು - ನಾನು ಅದುವರೆಗೆ ಕಂಡಿರಲಿಲ್ಲ. "ಗುರುಗಳೇ, ಎಂದೋ ಆಗಿಹೋದ ಘಟನೆಯನ್ನೇ ನೆನಪಿಸಿಕೊಂಡು ದುಃಖಿಸಬೇಡಿ. ನೀವು ತುಂಬ ಒಳ್ಳೆಯ ಕೆಲಸಗಳನ್ನೂ ಮಾಡಿದ್ದೀರಿ. ಇಲ್ಲಿ ಅನ್ನದಾನ, ವಿದ್ಯಾದಾನ ಬೇಕಾದಷ್ಟು ನಡೆದಿದೆ. ಈಗಲೂ ನೀವು ಅವನ್ನೆಲ್ಲ ಮಾಡಬಲ್ಲಿರಿ. ನಿಮ್ಮ ಮನಸ್ಸನ್ನು ನಿಮಗೆ ತೃಪ್ತಿ ಕೊಡುವ ಆಧ್ಯಾತ್ಮಿಕತೆಯಲ್ಲಿ, ದುಃಖಿಗಳ ಸೇವೆಯಲ್ಲಿ ತೊಡಗಿಸಿಕೊಂಡರೆ ನೆಮ್ಮದಿ ಸಿಗುತ್ತದೆ..." ಅಂತ ಕಷ್ಟದಿಂದ ಹೇಳಿದೆ.

"ಆದರೆ ಯಾವುದೇ ಒಳ್ಳೆಯ ಕೆಲಸ ಮಾಡುವುದಕ್ಕೂ ಸ್ವಸ್ಥ ಮನಸ್ಸು ಬೇಕಲ್ಲ ? ದಿನ ಬೆಳಗಾದರೆ ಕಂಡಕಂಡಲ್ಲಿ ನನ್ನಿಂದ ದಸ್ಕತ್ತು ಹಾಕಿಸಿಕೊಳ್ಳುವ ನನ್ನ ಶಿಷ್ಯನೆಂಬ ಈ ಭೂತದಿಂದ ಬಿಡುಗಡೆಯಾಗುವುದು ಹೇಗೆ ? ಅದಕ್ಕೇ.. ಅವನು ಮೊದಲಿಗೆ ನಿನ್ನನ್ನು ಈ ಮಠದಿಂದ ಓಡಿಸಿ ಹಾಕಿದ್ದಾನೆ...ನನ್ನ ಶಕ್ತಿಯನ್ನೇ ಮುರಿದು ಹಾಕಿದ್ದಾನೆ..."

"ನೀವು ದಸ್ಕತ್ತು ಹಾಕಬೇಡಿ.." ಅಂದೆ.

"ದಸ್ಕತ್ತು ಹಾಕದಿದ್ದರೆ "ನಾನು ನಿಮ್ಮ ಮಗ" ಅಂತ ಊರಿಗೆಲ್ಲ ಹೇಳುತ್ತೇನೆ ಅನ್ನುವ ಧಮಕಿ ಹಾಕುತ್ತಾನೆ...ಅವನಿಗೆ ಅವನ ಅಮ್ಮನ ಬೆಂಬಲವೂ ಇದೆ...ಎಂದೋ ಮಾಡಿದ ಒಂದು ತಪ್ಪಿಗೆ ನನ್ನ ಜೊತೆಗೆ ಈ ಮಠವೂ ದಣಿಯುವಂತಾಯಿತಲ್ಲ ರವೀ ?  ನನ್ನನ್ನು ನಂಬಿ ಮಂತ್ರೋಪದೇಶ ಮಾಡಿ ಜವಾಬ್ದಾರಿ ಕೊಟ್ಟು ನಡೆದ ಆ ನನ್ನ ಗುರುಗಳಿಗೆ ನನ್ನಿಂದ ಇಂತಹ ದ್ರೋಹವಾಯ್ತಲ್ಲ.. " ಗುರುಗಳು ಶಲ್ಯದಿಂದ ಮುಖ ಒರೆಸಿಕೊಂಡರು.

"ಗುರುಗಳೇ, ಈಗ ಮಠದ ಪಾರುಪತ್ಯದಿಂದ ನಿಮ್ಮ ಹಾಗೆ ನನ್ನನ್ನೂ ಹೊರಗಿಟ್ಟಿದ್ದಾರೆ. ಕಿರಿಯ ಸ್ವಾಮಿಗಳಿಗೆ ನನ್ನ ಬಗ್ಗೆ ಬಹುಶಃ ವಿಶ್ವಾಸವಿಲ್ಲ. ಆದರೂ ನಿಮ್ಮನ್ನು ನೋಡಿ ಹೋಗುವ ಮನಸ್ಸಾದರೆ ಒಮ್ಮೊಮ್ಮೆ ನಾನು ಬರುವುದಿದೆ. ಆದರೆ ಬಂದಾಗೆಲ್ಲ ನಿಮ್ಮ ದರ್ಶನದ ಅವಕಾಶ ಸಿಗುವುದಿಲ್ಲ. ನಿಮ್ಮ ಸುತ್ತ ಎತ್ತರದ ಗೋಡೆ ಕಟ್ಟಿ ಇಟ್ಟಿದ್ದಾರೆ ಅಂತ ನನಗೂ ಅನ್ನಿಸಿದೆ. ಆದರೆ ನಾನು ಅಸಹಾಯಕ. ಯಾವ ದೂರುದುಮ್ಮಾನವಿಲ್ಲದೆ ಈಗಲೂ ನಾನು ನನ್ನ ಶ್ರದ್ಧೆ ಉಳಿಸಿಕೊಂಡಿದ್ದೇನೆ. ಇವತ್ತು ಯಾಕೋ ನಾನು ಬಂದಾಗ ಯಾರೂ ನನ್ನನ್ನು ತಡೆಯಲಿಲ್ಲ. ಅದಕ್ಕೇ..ನಿಮ್ಮ ವರೆಗೆ ಬರಲಿಕ್ಕಾಯಿತು. ಆದರೆ ನಿಮ್ಮನ್ನು ಈ ಬಂಧನದಿಂದ ನಾನಾದರೂ ಹೇಗೆ ಬಿಡಿಸುವುದು ? ಭಕ್ತರನ್ನೆಲ್ಲ ಒಟ್ಟು ಸೇರಿಸಿ ಬಲಪ್ರಯೋಗಕ್ಕೆ ಹೊರಟರೆ ಒಳಗಿನ ಸಂಗತಿಯು ಊರಿಗೆಲ್ಲ ಗೊತ್ತಾಗಿ ಮಠದ ಹೆಸರು ಹಾಳಾಗುವುದಲ್ಲ ? ನನಗೇನೂ ತೋಚುವುದಿಲ್ಲ..."

ಸ್ವಾಮಿಗಳು ನಕ್ಕರು. "ಇರಲಿ. ಅವರವರ ಕರ್ಮ ಅವರವರೇ ಅನುಭವಿಸಬೇಕು...ದುಡ್ಡುಕಾಸಿನ ಯಜಮಾನಿಕೆಯನ್ನು ಅವನು  ನನ್ನಿಂದ ಕಿತ್ತುಕೊಂಡಾಗಿದೆ. ಬಹುಪಾಲು ಅಧಿಕಾರವನ್ನೂ ವರ್ಗಾಯಿಸಿಕೊಂಡಾಗಿದೆ. ಇನ್ನೂ ಕಾಟ ತಪ್ಪಿಲ್ಲ. ಈ ಒತ್ತಡದಲ್ಲಿ ಬಹುಶಃ ನಾನಿನ್ನು ಬಹಳ ಕಾಲ ಬದುಕಲಿಕ್ಕಿಲ್ಲ. ತಾನಾಗಿಯೇ ಗೋಡೆ ಬಿದ್ದು ಬಯಲಾಗುವ ಮೊದಲೇ ನನ್ನನ್ನು ಕಳಿಸಿಕೊಡುವ ತಯಾರಿಯೂ ನಡೆದಂತಿದೆ..." ಅಂದವರು ಸ್ವಲ್ಪ ಸಮಯ ಕಣ್ಣುಮುಚ್ಚಿ ಕೂತಿದ್ದರು.

"ಹಾಗೆಲ್ಲ ಏನೂ ನಡೆಯುವುದಿಲ್ಲ. ನೀವು ಧೈರ್ಯದಿಂದ ವ್ಯವಹರಿಸಿ. ನೀವೇ ಕಂಗಾಲಾಗಿ ಕೂತರೆ ಪಿತೂರಿಯ ಕೆಲಸ ಸುಲಭವಾಗುತ್ತದೆ...ಮೊದಲಿನಂತೇ ಚುರುಕಾಗಿ ಮಠದಲ್ಲಿ ಇದ್ದುಬಿಡಿ...ಚಿಂತೆ ಮಾಡಿದರೆ ಕೆಲಸ ಕೆಟ್ಟು ಹೋಗುತ್ತದೆ..." ಅನ್ನುತ್ತ ಅನ್ನಿಸಿದ್ದನ್ನು ಗಳಹಿ ಬಂದಿದ್ದೆ. ಆದರೆ ಗುರುಗಳು ಕೊನೆಗೊಂದು ಮಾತು ಹೇಳಿದ್ದರು. "ರವೀ, ಈ ಸನ್ಯಾಸದ ವೇಷ ಇದೆಯಲ್ಲ ? ಇದು ನೋಡುವುದಕ್ಕೆ ಮಾತ್ರ  ಸರಳ; ನಿಜವಾದ ಸನ್ಯಾಸಿಯ ಬದುಕು - ಅತಿ ಕಠಿಣ. ಈ ಮಾಡಿಲ್ಲದ ಗೂಡಿನಲ್ಲಿ ಎಲ್ಲರಿಗೂ ಬದುಕಲಾಗುವುದಿಲ್ಲ. ಪೂರ್ಣತೆಯಿಲ್ಲದ ಸನ್ಯಾಸಿಯ ಬದುಕಿನಲ್ಲಿ - ನನ್ನ ಹಾಗೆ ನೆಮ್ಮದಿಯೂ ಇರುವುದಿಲ್ಲ. ನನ್ನದಲ್ಲದ ಈ ಜಾಗದಲ್ಲಿ ಇಷ್ಟು ದಿನ ಯಾಕೆ ನಾನಿದ್ದೆನೊ ?...ಎಲ್ಲೂ ಸಲ್ಲದ ಬದುಕಿದು..." ಅಂದವರೇ ತಮ್ಮ ಒಳಕೋಣೆಗೆ ಹೋಗಿ ಬಂದು "ರವೀ, ತಕೋ." ಅನ್ನುತ್ತ ಪ್ರಸಾದದ ಜೊತೆಗೆ ಒಂದು ಲಕೋಟೆಯನ್ನೂ ಕೊಟ್ಟಿದ್ದರು.

"ಏನಿದು ?" ಅಂದೆ.

"ಅಷ್ಟು ವರ್ಷ ನನ್ನ ಜೊತೆಗಿದ್ದು ಲೆಕ್ಕಪತ್ರ ನೋಡಿಕೊಂಡರೂ ನಿನಗೆ ನಾನು ಏನನ್ನೂ ಕೊಟ್ಟಿರಲಿಲ್ಲ. ನೀನು ಅಪೇಕ್ಷಿಸಿದವನೂ ಅಲ್ಲ. ಈಗ ಇದನ್ನು ತಕೋ. ಈ ಮಠಪಟ ಕಟ್ಟಿದ್ದು ಬೆಳೆಸಿದ್ದು, ಪ್ರವಚನ, ವೈಭವ...ಎಲ್ಲವೂ ಸಾಕು ಅನ್ನಿಸಿದೆ. ಈ ಗೋರುವುದು, ಸೋರುವುದು ಎಲ್ಲವೂ ವ್ಯರ್ಥ ಕರ್ಮಗಳು. ನಿಮ್ಮಂಥ ನಿಸ್ವಾರ್ಥ ಸೇವಕರಿಗೆ ಏನಾದರೂ ಕೊಟ್ಟರೆ ಅದು ನೇರವಾಗಿ ಸತ್ಕಾರ್ಯಕ್ಕೆ ತಲಪುತ್ತದೆ. ಇದನ್ನು ನೀನು ಇಟ್ಟುಕೋ. ಮಠದ ಹೊರಗೆ ಎಷ್ಟೋ ಉತ್ತಮ ಬದುಕುಗಳಿವೆ. ಅವರಿಗೆ ನಿನ್ನಿಂದಾದಷ್ಟು ಸಹಾಯ ಮಾಡು...ನನ್ನ ಹೆಸರು ಬೇಡ... ನಾನು ಕೊಟ್ಟದ್ದು ಅಂತ ಎಲ್ಲಿಯೂ ಹೇಳಬೇಡ..." ಅಂದರು.

ಲಕೋಟೆ ಬಿಚ್ಚಿ ನೋಡಿದೆ. 10 ಲಕ್ಷದ ಚೆಕ್ ಇತ್ತು. ಗಾಬರಿಯಾದ ನಾನು "ಅಯ್ಯೋ, ಕಿರಿಯ ಸ್ವಾಮಿಗಳಿಗೆ ಗೊತ್ತಾದರೆ ಸಮಸ್ಯೆಯಾದೀತು. ನನ್ನ ತಲೆ ಒಡೆದಾರು. ಗುರುಗಳೇ, ನನಗೆ ದುಡ್ಡು ಬೇಡ. ನೀವು ಹೇಳಿದ ಸತ್ಕಾರ್ಯಗಳನ್ನು ನಿಮ್ಮನ್ನು ನೆನಸಿಕೊಳ್ಳುತ್ತ ನನ್ನ ದುಡ್ಡಿನಿಂದಲೇ ಮಾಡುತ್ತೇನೆ..." ಅನ್ನುತ್ತ ಲಕೋಟೆಯನ್ನು ಅವರ ಮುಂದೆ ಇರಿಸುವಾಗಲೇ ಕಿರಿಯ ಸ್ವಾಮಿಗಳು ಒಳಬಂದರು. ಆಗ ಹಿರಿಯರ ಕೈಯ್ಯಲ್ಲಿದ್ದ ಲಕೋಟೆಯನ್ನು ಎಳೆದುಕೊಂಡು ಬಿಡಿಸಿ ನೋಡಿದರು. "ಏನು ? ಸಾಲ ಕೇಳಲು ಬಂದದ್ದಾ ?" ಅಂದರು. ಹಿರಿಯರು ಮಾತನಾಡಲಿಲ್ಲ. ನಾನು ನಮಸ್ಕರಿಸಿ ಎದ್ದು ಬಂದಿದ್ದೆ.
                                                                       

ಮರುದಿನ, ಮಠದ ಹಳೆಯ ಅಡಿಗೆಯವ ಶಂಭು ನನ್ನ ಮಂಡಿಗೆ ಬಂದಿದ್ದ. ಅವನನ್ನು ಮಠದ ಅಡುಗೆಗೆ ಸೇರಿಸಿದ್ದು ನಾನೇ ಅನ್ನುವ ವಿಶ್ವಾಸ ಅವನಿಗೆ. ಅವನು ಬೇಸರದಿಂದಲೇ ಮಾತಿಗೆ ತೊಡಗಿದ. "ರಾಯರೇ, ಮೊನ್ನೆ ನೀವು ಮಠಕ್ಕೆ ಬಂದದ್ದು, ವಾಪಸ್ ಹೋದದ್ದು ಎಲ್ಲವನ್ನೂ ನಾನು ನೋಡಿದ್ದೆ. ಆದರೆ ಮಾತಾಡಿಸಲಿಕ್ಕೆ ಧೈರ್ಯ ಬರಲಿಲ್ಲ. ಅಲ್ಲಿ ಈಗ ಎಲ್ಲವೂ ಸರಿ ಇಲ್ಲ. ಯಾರನ್ನು ಮಾತಾಡಿಸಿದರೆ ಯಾರಿಗೆ ಸಿಟ್ಟು ಬರ್ತದೋ ಹೇಳಲಿಕ್ಕೆ ಬರುವುದಿಲ್ಲ. ಕಳೆದ ತಿಂಗಳು ನೀವು ಮಠಕ್ಕೆ ಬಂದು ಹೋದ ಮೇಲೆ ಭಯಂಕರ ಗದ್ದಲ ಅಲ್ವ ಮಾರಾಯ್ರೇ. ಇಬ್ಬರು ಸ್ವಾಮಿಗಳಿಗೂ ಜೋರು ಲಡಾಯಿ ಆಯ್ತು. ದೊಡ್ಡ ಸ್ವಾಮಿಗಳು ಕಿರಿಯರಿಗೆ ಪಟಾರಂತ ಒಂದೇಟು ಬಾರಿಸಿದರು. "ನಿಯತ್ತಿನಿಂದ ನನ್ನ ಕೆಲಸ ಮಾಡಿದವರಿಗೆ ನನ್ನೆದುರೇ ಅಪಮಾನ ಮಾಡುವ ನಿನಗೆ - ನನ್ನ ಮೇಲೆ ಎಷ್ಟು ಗೌರವ ಇರಬಹುದು ? ನನ್ನ ಗುರುಗಳಿಂದ ಪಡೆದ ಪೀಠವನ್ನು ಎಷ್ಟು ಕಷ್ಟಪಟ್ಟು ನಾನು ಭದ್ರವಾಗಿ ಬೆಳೆಸಿದೆ... ನೀನು ಅದನ್ನು ಲಗಾಡಿ ಎಬ್ಬಿಸುತ್ತಿದ್ದೀಯಲ್ಲ ? ನಿನ್ನ ಸೊಕ್ಕು ಮಿತಿ ಮೀರಿದೆ. ನಾಳೆಯೇ ವಕೀಲರನ್ನು ಕರೆಸಿ ಮಠದ ಎಲ್ಲ ವಹಿವಾಟಿನ ಹೊಸ ಪತ್ರ ಬರೆಸುತ್ತೇನೆ...ನೀನು ಏನು ಬೇಕಾದರೂ ಹೇಳಿಕೊಂಡು ಊರೆಲ್ಲ ತಿರುಗು. ನಿನ್ನ ಧಮಕಿಗೆಲ್ಲ ನಾನು ಹೆದರುವವನಲ್ಲ. ನಿನ್ನನ್ನು ಹೊರಹಾಕಿ ಹೊಸ ಶಿಷ್ಯನನ್ನು ಸ್ವೀಕರಿಸುತ್ತೇನೆ.." ಅಂತೆಲ್ಲ ಕೂಗಾಡಿದ್ದರು.

ಅದೇ ಕೊನೆ ನೋಡಿ. ಮತ್ತೆ ನಾವು ಹಿರಿಯ ಸ್ವಾಮಿಗಳ ಮುಖ ನೋಡಲಿಲ್ಲ. ಸುಮಾರು ದಿನದಿಂದ ಅವರು ಕೋಣೆಯಿಂದ ಹೊರಗೇ ಬರುತ್ತಿರಲಿಲ್ಲ. ಪೂಜೆಗೂ ಎದ್ದು ಬರುತ್ತಿರಲಿಲ್ಲ. ಯಾರಲ್ಲೂ ಮಾತಾಡುತ್ತಿರಲಿಲ್ಲ. ಈಗ ಒಂದು ವಾರದಿಂದ ಅವರ ಊಟವನ್ನೂ ಕಿರಿಯ ಸ್ವಾಮಿಗಳೇ ಕೊಂಡು ಹೋಗಿ ಕೊಡುತ್ತಿದ್ದರು. ನಮಗೆ ಯಾರಿಗೂ ಆ ಚಿನ್ನದ ಪಂಜರದ ಒಳಗೆ ಪ್ರವೇಶವೇ ಇರಲಿಲ್ಲ. ಆದರೆ ಮೊನ್ನೆ ರಾತ್ರಿ - ಅಂದರೆ ನೀವು ಮಠಕ್ಕೆ ಬಂದ ಹಿಂದಿನ ರಾತ್ರಿ ಅವರ ಆರೋಗ್ಯ ಕೆಟ್ಟಿತಂತೆ. ಮರುದಿನ ಅವರು ಎಚ್ಚರ ತಪ್ಪಿದ್ದರಂತೆ. ನಿಮಗೆ ಅವರನ್ನು ನೋಡಲಿಕ್ಕೂ ಬಿಡದೆ ಮಠದಿಂದ ಓಡಿಸಿದರಲ್ಲ ? ಅದೇ ದಿನ. ಅವತ್ತು ನೀವು ಮಠಕ್ಕೆ ಬಂದಾಗಲೂ ಅವರಿಗೆ ಎಚ್ಚರವಿರಲಿಲ್ಲ. ಅದೇ ಸ್ಥಿತಿಯಲ್ಲಿಯೇ ಅದೇ ದಿನವೇ  ಅವರನ್ನು ಭೈರವಪುರಕ್ಕೆ ಕರೆದುಕೊಂಡು ಹೋಗಿದ್ದರು. ಜೊತೆಯಲ್ಲಿ ಕಿರಿಯ ಸ್ವಾಮಿಗಳ ಗೆಳೆಯರಾಗಿದ್ದ ಕೇಶವ ವೈದ್ಯರೂ ಇದ್ದರು. ವಿಮಾನದಲ್ಲೋ ಹೆಲಿಕಾಪ್ಟರ್ ನಲ್ಲೋ ಹೋದರಂತೆ. ಮತ್ತೆ ಗುರುಗಳು ವಾಪಸ್ ಬರಲೇ ಇಲ್ಲ. ಅಲ್ಲಿ ಸತ್ತೇ ಹೋದರಂತೆ... ಏನೋ ಇರಬೇಕು....ಗಂಡಾಗುಂಡಿ. ಕಳೆದ ಒಂದು ವಾರದಿಂದ ನಾವು ನಾಕೈದು ಜನ ಹಳೆಯ ಕೆಲಸಗಾರರು ಆ ಮಠದಲ್ಲಿ ನಬದದ್ದು ಅಷ್ಟಿಷ್ಟಲ್ಲ; ಜೀವಸಂಕಟ ಮಾರಾಯ್ರೇ... ಎದ್ದದ್ದು ತಪ್ಪು; ಕೂತದ್ದು ತಪ್ಪು... ಒಂದು ಮರ್ಯಾದೆಯಾದರೂ ಉಂಟಾ ? ಹೋಗಲಿ ಬಿಡಿ. ದೊಡ್ಡವರ ಸುದ್ದಿ ನಮಗ್ಯಾಕೆ ? ಎಲ್ಲವೂ ಮುಗಿದೇ ಹೋಯ್ತು. ಈಗ ನಾನೂ ಅಲ್ಲಿನ ಹಂಬಗ್ ಕೆಲಸ ಬಿಟ್ಟುಬಿಟ್ಟೆ... ಇವರೇನು ನಮಗೆ ಕೊಪ್ಪರಿಗೆ ಕೊಡ್ತಾರಾ ? ದುಡಿದು ತಿನ್ನುವ ನಮಗೆ ಎಲ್ಲೋ ಕೆಲಸ ಸಿಗ್ತದೆ ಬಿಡಿ; ಈ ನಿತ್ಯನರಕ ಯಾರಿಗೆ ಬೇಕು ?" ಅನ್ನುತ್ತ ಶಂಭುವು ಹೆಗಲಿನ ಶಾಲನ್ನು ಕೊಡವಿ ಹಾಕಿಕೊಂಡು ಹೊರಟು ಹೋದ. 


ಸುಮ್ಮನೆ ಗಲ್ಲಕ್ಕೆ ಕೈಕೊಟ್ಟು ಕೇಳುತ್ತಿದ್ದ ರವಿರಾಯರು ಶಿಲೆಯಾಗಿದ್ದರು. 

"ಸನ್ಯಾಸ ಎಂಬ ಮಾಡಿಲ್ಲದ ಗೂಡಿನಲ್ಲಿ ಗರಿಗರಿಯಾಗಿ - ಮಡಿಯಾಗಿರುವುದು ಇಷ್ಟು ಕಷ್ಟವೆ ? ಮನಸ್ಸಿನ ಮುಸುರೆಯನ್ನು -  ಬಿಡುಬೀಸಾಗಿದ್ದುಕೊಂಡು ತೊಳೆಯಲಾದೀತೆ ?" ರವಿರಾಯರ ತಲೆಯಲ್ಲಿ ನಿಷ್ಕ್ರಮಿಸಿದ ಗುರುಗಳ ಪರಾಜಯಗಾಥೆಯು ಥಕಥಕ ಕುಣಿಯುತ್ತಿತ್ತು. ಗಲ್ಲಕ್ಕೆ ಕೈಕೊಟ್ಟು ಯಾವುದೋ ಲೋಕದಲ್ಲಿದ್ದಂತೆ ಕೂತಿದ್ದವರನ್ನು - ಮಗ ವಿಶ್ವ ಬಂದು ಕರೆದಾಗಲೇ ಅವರು ವಾಸ್ತವಕ್ಕೆ ಬಂದದ್ದು. "ಸ್ವಾಮೀ..ದೇವರೇ.. ಭೈರವೇಶ್ವರಾ.." ಅನ್ನುತ್ತ ತಟಕ್ಕನೆ ಎದ್ದು ಮಗನ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡು ಮನೆಗೆ ಹೊರಟರು.
        
  

Wednesday, February 3, 2016

ಮರು ಓದು ....ಅಮೆರಿಕಾದಲ್ಲಿ ಗೊರೂರು

ಕೆಲವು ಪುಸ್ತಕಗಳು ಮರು ಓದಿಗೆ ಅರ್ಹವಾಗಿರುತ್ತವೆ. ರಸಾಸ್ವಾದವು - ಕೆಲವೊಮ್ಮೆ ಮರು ಓದಿನಲ್ಲಿಯೇ ಹೆಚ್ಚು....
ವಿರಾಮದಲ್ಲಿ ಓದಬಹುದಾದ ಅಂತಹ ಪುಸ್ತಕಗಳಲ್ಲಿ ಒಂದು - "ಅಮೆರಿಕಾದಲ್ಲಿ ಗೊರೂರು". ಪ್ರತಿಯೊಬ್ಬ ಕನ್ನಡಿಗನ ಮನೆಯಲ್ಲಿ ಇರಲೇಬೇಕಾದ ಪುಸ್ತಕವಿದು. ಊರೂರು ಓಡಾಡಿ ಮೈ ಹುಡಿ ಮಾಡಿಕೊಂಡು ಕಿಸೆ ಖಾಲಿ ಮಾಡಿಕೊಂಡು ಅದೂ ಇದೂ ತಿಂದು ಆರೋಗ್ಯವನ್ನೂ ಕೆಡಿಸಿಕೊಳ್ಳುವ ಶಕ್ತಿಯಿಲ್ಲದವರಿಗೆ ಮತ್ತು ಓದಿ ಸುಖಿಸುವ ಕಲೆ ತಿಳಿದವರೆಲ್ಲರಿಗೂ ಪ್ರವಾಸ ಕಥನಗಳು ರಸದೂಟವಿದ್ದಂತೆ.


ಡಾ. ಗೊರೂರು ರಾಮಸ್ವಾಮಿ ಐಯ್ಯಂಗಾರ್ ಅವರ ಅಮೆರಿಕಾ ದೇಶದ ಪ್ರವಾಸ ಕಥನ - "ಅಮೆರಿಕಾದಲ್ಲಿ ಗೊರೂರು" ಎಂಬ  ಪುಸ್ತಕವು ಪ್ರವಾಸ ಕಥನಗಳ ಸಾಲಿನಲ್ಲಿ ಕಿರೀಟಪ್ರಾಯವಾದುದು. 1977 ರ ಅಗೋಸ್ತ್ 15 ರಂದು ಪತ್ನಿಯೊಂದಿಗೆ ದೆಹಲಿಯಿಂದ ಅಮೆರಿಕಕ್ಕೆ ಹೊರಟ ಗೊರೂರರು ಕೆಲವು ವಾರ "ಪರದೇಸಿ"ಯಾಗಿದ್ದು ಅಮೆರಿಕ - ಕೆನಡಾದಲ್ಲಿ ಅಲೆದಾಡಿದ, ಅಲ್ಲಿ ಕಂಡು ಅನುಭವಿಸಿದ ರಸಾನುಭವಗಳು, ಅವರ ಅನ್ನಿಸಿಕೆಗಳು -"ಅಮೆರಿಕಾದಲ್ಲಿ ಗೊರೂರು" ಪ್ರವಾಸ ಕಥನದಲ್ಲಿವೆ.
 

ಇದು ಒಮ್ಮೆ ಓದಿ ಪಕ್ಕದಲ್ಲಿಡುವ ಪುಸ್ತಕವಲ್ಲ. ಬಹುಶಃ ನಾನು ಇದು 3 ನೇ ಬಾರಿ ಈ ಪುಸ್ತಕದಲ್ಲಿ ಮುಳುಗಿದ್ದೇನೆ. ತಮ್ಮ ತಿರುಗಾಟದುದ್ದಕ್ಕೂ 80 ರ ವಯಸ್ಸನ್ನು ಲೇವಡಿ ಮಾಡುವಂತೆ ತೋರುವ ಲೇಖಕರ ಜೀವನೋತ್ಸಾಹ, ಅವರು ಉಳಿಸಿಕೊಂಡಿದ್ದ ಬಾಲ್ಯದ ಕುತೂಹಲವು ಈ ಕಥನದ ಪ್ರತೀ ಪುಟದಲ್ಲೂ ಎದ್ದು ತೋರುತ್ತದೆ. ಅಮೆರಿಕ ಎಂಬ ಚುಂಬಕದ ಗುಣಾವಗುಣಗಳನ್ನು ಇಲ್ಲಿ ಸೊಗಸಾಗಿ ಚಿತ್ರಿಸಿರುವ ಗೊರೂರರು ಪ್ರವಾಸದುದ್ದಕ್ಕೂ ಯಾವುದೇ ಟಿಪ್ಪಣಿ ಮಾಡಿಕೊಳ್ಳದೆ ತಮ್ಮೊಳಗೆ ದಾಖಲಾಗಿದ್ದ ನೆನಪುಗಳನ್ನು ಆ "80" ಎನ್ನುವ ಭೂತದೊಂದಿಗೆ ಹೋರಾಡುತ್ತ ಓದುಗರಿಗೆ ತೆರೆದಿಟ್ಟ ರೀತಿಯೂ ಅನನ್ಯವಾಗಿದೆ. IBH ಪ್ರಕಾಶನವು ಹೊರತಂದಿರುವ ಈ ಪುಸ್ತಕವು ಹಲವಾರು ಮುದ್ರಣಗಳನ್ನೂ ಕಂಡಿದೆ. ಕೆಲವೇ ವಾರಗಳ ಕಾಲ ಅಮೆರಿಕದಲ್ಲಿದ್ದ ವಯೋವೃದ್ಧ ಗೊರೂರರು ಅಷ್ಟು ಕಡಿಮೆ ಅವಧಿಯಲ್ಲಿ ಅಮೆರಿಕದ ಬದುಕಿನ ವಿಸ್ತೃತ ನೋಟವೊಂದನ್ನು ತಾವು ಕಂಡಂತೆ ಹೃದ್ಯವಾಗಿ ಕಥನಿಸಿದ್ದಾರೆ. ಪುಸ್ತಕ ದ್ವೇಷಿಗಳಲ್ಲದ ಎಲ್ಲರನ್ನೂ ಮುದಗೊಳಿಸುವ ಪ್ರವಾಸ ಕಥನವಿದು. ಸುಲಲಿತ ಭಾಷೆ, ನಿರೂಪಣೆಯು ಅವರ ಅನುಭವಗಳಿಗೆ ಕಲಶವಿಟ್ಟಂತಿದೆ. ವೃದ್ಧಾಪ್ಯದಿಂದಾಗಿ ಹೆಬ್ಬೆರಳು, ಮುಷ್ಟಿಯನ್ನು ಪೀಡಿಸುತ್ತಿದ್ದ ನೋವಿನ ಕಾರಣದಿಂದ ತಮ್ಮ ಮಿತ್ರರಿಗೆ ಹೇಳಿ ಅವರಿಂದ ಬರೆಸಿ, ಒಮ್ಮೊಮ್ಮೆ ತಾವೇ ಬರೆದು - ಅಂತೂ ಸಾಧ್ಯವಾದಷ್ಟು ಅನುಭವವನ್ನು ಹಂಚಿಕೊಂಡು, ಗೊರೂರರು ನಮಗೆಲ್ಲ ಉಪಕರಿಸಿದ್ದಾರೆ. ಅಮೆರಿಕದ ಈ ಕಥನವನ್ನು ಓದಿದವರು ಯಾವುದೇ ಶ್ರಮವಿಲ್ಲದೆ, ಖರ್ಚಿಲ್ಲದೆ, ತಾವೇ ಅಮೆರಿಕಕ್ಕೆ ಹೋಗಿ ಬಂದರೂ ಪಡೆಯಲಾಗದಷ್ಟು ವಿಷಯಗಳನ್ನು ತಿಳಿದು ತೃಪ್ತರಾಗಬಹುದು. ಅಮೆರಿಕದಿಂದ ಹಿಂದಿರುಗಿದ ನಂತರ ಅವರ ಅನುಭವವನ್ನು ಅವರ ಬಾಯಿಂದಲೇ ಆಲಿಸಿದ ಪುಣ್ಯಾತ್ಮರಾದ ದಿ. ಪು.ತಿ.ನರಸಿಂಹಾಚಾರ್, ದಿ. ಹಾ.ಮಾ.ನಾಯಕರು, ಶ್ರೀ ಹಂ.ಪ. ನಾಗರಾಜಯ್ಯ, ದಿ. ಜಿ.ನಾರಾಯಣ ಮುಂತಾದವರ ಒತ್ತಾಸೆಯಿಂದ ಮೂಡಿ ಬಂದಿರುವ ಈ ಪ್ರವಾಸ ಕಥನವು "ಪ್ರವಾಸ ಕಥನ" ಎಂಬ ಸಾಗರದ ಅಮೂಲ್ಯ ರತ್ನ. ನನಗಂತೂ ಅಮೆರಿಕಕ್ಕೆ ನಾನೇ ಹೋಗಿ ಕಂಡು ಬಂದುದಕ್ಕಿಂತ ಹೆಚ್ಚು ವಿಸ್ತಾರವಾದ ವರ್ಣನೆಯನ್ನೊಳಗೊಂಡ ಈ ಪ್ರವಾಸ ಕಥನವು ವಿಶೇಷ ಮುದ ನೀಡಿದೆ. 317 ಪುಟಗಳ ಈ ಹೊತ್ತಗೆಯು ಪ್ರತೀ ಮನೆಯಲ್ಲೂ ಇರಲೇ ಬೇಕಾದ ಸಂಪತ್ತು. ಕುತೂಹಲ ಉಳಿಯುವಂತೆ ಬರೆಯುವ ರೀತಿ, ಹಿತವಿಲ್ಲದ ವಿಷಯಗಳನ್ನು ಮಂಡಿಸುವಾಗ ತೋರಿಸಿದ ಸಂಯಮ, ಎಲ್ಲ ಬದುಕುಗಳನ್ನೂ ಸಮಭಾವದಿಂದ ಓಲೈಸಿದ ಹಿರಿಮೆ, ಪರದೇಶದಲ್ಲಿ ಎದುರಾದ ಕಿರಿಕಿರಿಗಳನ್ನು ಆಡುತ್ತಾಡುತ್ತ ನಿಭಾಯಿಸಿದ ರೀತಿ, ಹೊಸ ಭಾರತದ ಅನಧಿಕೃತ ರಾಯಭಾರಿಯಂತೆ - ಭಾರತೀಯ ಸಂಸ್ಕೃತಿಯ ನಿಜಮುಖವಾಗಿ ಅಮೆರಿಕನ್ನರ ವಿಶ್ವಾಸ ಗಳಿಸಿದ ಬಗೆ, ಕೆಲವೊಮ್ಮೆ ಅದರಿಂದಲೇ ಉಂಟಾದ ಪೇಚಾಟಗಳು... ಹೀಗೆ ಗೊರೂರರ ಕಣ್ಣಿಗೆ ಬಿದ್ದ - ಬೀಳಿಸಿಕೊಂಡ ಸಂಗತಿಗಳು ಒಂದೆರಡಲ್ಲ. ವೀಸ, ಪಾಸ್ ಪೋರ್ಟ್, ಭದ್ರತಾ ಪರೀಕ್ಷೆ, ಡಾಲರ್ ಲೆಕ್ಕ... ಎಂಬ ಮುಜುಗರಗಳಿಲ್ಲದೆ - ತಮ್ಮ ಜೊತೆಗೆ ಈ ಕಥಾನಕದ ಓದುಗರನ್ನೂ ಅಮೆರಿಕಕ್ಕೆ ಕರೆದೊಯ್ಯುವ ಗೊರೂರರನ್ನು ಇಡಿಯಾಗಿ ಕಾಣಲು "ಅಮೆರಿಕಾದಲ್ಲಿ ಗೊರೂರು" (ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕೃತಿ) ಓದಲೇಬೇಕು. ನಗುತ ನಗುತ ಬಾಳುವ ಜೀವನ ದರ್ಶನವು ಗೊರೂರರ ಎಲ್ಲ ಬರಹಗಳಲ್ಲಿಯೂ ಕಾಣುವಂತೆ ಇಲ್ಲಿಯೂ ಬಲು ಸುಂದರವಾಗಿದೆ....

ರುಚಿ ನೋಡಲು...ಪುಸ್ತಕದ ಒಂದೆರಡು ಭಾಗ... ಇಲ್ಲಿ ಕಾಣುವ ಅಮೆರಿಕವು - 1977 ರ ಅಮೆರಿಕ ಎಂಬುದನ್ನು ನೆನಪಿಟ್ಟುಕೊಂಡು ಓದಿ. ಇಂದು ಅಮೆರಿಕದಲ್ಲಿ ಕಾರುಬಾರು ನಡೆಸುತ್ತ ಚುರುಕಾಗಿರುವ ಹಲವರು ಒಂದೋ ಆಗ ಹುಟ್ಟಿರಲಿಲ್ಲ ಅಥವ ಎಲ್ಲೋ ನೇಪಥ್ಯದಲ್ಲಿದ್ದರು.
 
ಎರಡು ಅಧ್ಯಾಯಗಳ ಕೆಲವು ಅಂಶಗಳು...

ಅಮೆರಿಕನ್ ದೂರದರ್ಶನ :

"ಒಂದು ಬ್ರಾಡ್ ಕಾಸ್ಟಿಂಗ್ ಕಾರ್ಪೊರೇಷನ್ ಗೆ ನಾವು ಹೋಗಿದ್ದೆವು...ಅದೊಂದು ಅಸಾಧ್ಯವಾದ  ಕಟ್ಟಡ. ಅಲ್ಲಿ ಜನಗಳೆಷ್ಟೋ, ಚಿತ್ರ ತಯಾರಕರೆಷ್ಟೋ, ಸ್ಟುಡಿಯೋಗಳು, ಸೆಟ್ ಗಳು, ಗೊಂದಲವೋ ಗೊಂದಲ. ಟೆಲಿವಿಷನ್ ಪ್ರಸಿದ್ಧಿ ಅಮೆರಿಕದಲ್ಲಿ ಜನಪ್ರಿಯತೆ ಮತ್ತು ಉಪಯುಕ್ತತೆಯ ತುದಿಯನ್ನು ಮುಟ್ಟಿದೆ...."

"ಟೆಲಿವಿಷನ್ ಅಮೆರಿಕದಲ್ಲಿ ವ್ಯಾಪಾರ ಮತ್ತು ಮನರಂಜನೆಯ ಮುಖ್ಯ ಸಾಧನ. ಅಮೆರಿಕದಲ್ಲಿ ಯಾವುದೂ ವ್ಯಾಪಾರವಾಗಬೇಕು. ವ್ಯಾಪಾರೀ ಸಾಧನವಾಗಬೇಕು. ಹಾಗಾದರೆ ಅದು ಎಷ್ಟೇ ಅಲ್ಪವಾದುದಾಗಿರಲಿ, ತುಚ್ಛವಾದುದಾಗಿರಲಿ ಅದಕ್ಕೆ ಒಂದು ಸ್ಥಾನ ಸಿಕ್ಕುತ್ತದೆ. ದೇವರು ಸಹ ವ್ಯಾಪಾರವಾಗುವ ಒಂದು ಮಾಲು ಆಗಿ ಬಂದರೆ, ಎಲ್ಲ ಅಮೆರಿಕನ್ ರೂ ಅತ್ಯಂತ ಗಾಢವಾದ ಭಕ್ತರಾಗುವುದರಲ್ಲಿ ಸಂದೇಹವಿಲ್ಲ. ಅಮೆರಿಕನ್ ರು ಕೇಳುವುದು ಒಂದೇ ಪ್ರಶ್ನೆ. "ಅದು ಡಾಲರ್ ಆಗುತ್ತದೆಯೇ?" ವಸ್ತುಗಳನ್ನು ಹೀಗೆ ಡಾಲರ್ ಆಗಿ ಪರಿವರ್ತಿಸುವುದರಲ್ಲಿ ಟೆಲಿವಿಷನ್ ಪಾತ್ರ ಅತಿ ಮುಖ್ಯವಾದುದು. ಅಮೆರಿಕನ್ ಟೆಲಿವಿಷನ್ ಕೆಲಸವೇ ವ್ಯಾಪಾರದ ವಸ್ತುಗಳನ್ನು ನಿತ್ಯವೂ ಅನೇಕ ಸಲ - ನೋಡುವವರಿಗೆ ಬೇಸರಿಕೆ ಹುಟ್ಟಿಸುವವರೆಗೆ ಪ್ರದರ್ಶನ ಮಾಡುವುದು...ಅತ್ಯುತ್ಕೃಷ್ಟ ನಟನಟಿಯರೂ ತಮ್ಮ ಆಕರ್ಷಕ ಅಭಿನಯದ ಮಧ್ಯದಲ್ಲಿ ನಿಲ್ಲಿಸಿ, ಯಾವುದೋ ತಿಂಡಿಯನ್ನೋ, ಶೌಚದ ಕಾಗದವನ್ನೋ ಜಾಹೀರು ಮಾಡುತ್ತಾರೆ. ಅದು ಅಸಹ್ಯವೂ ಅಪ್ರಕೃತವೂ ಅಲ್ಪವೂ ಆದ ಕಾರ್ಯವಾಗಿ ತೋರುತ್ತದೆ...ಇವೆಲ್ಲ ಜ್ಞಾನ ಪ್ರಚಾರ, ಮನರಂಜನೆ ಇವುಗಳೆಲ್ಲದಕ್ಕಿಂತ ಬರೀ ವ್ಯಾಪಾರಕ್ಕೆ ಮಾತ್ರ ಉಪಯೋಗವಾಗುತ್ತಿದೆ...ನ್ಯೂಯಾರ್ಕಿನ ಕಾಲೇಜೊಂದರಲ್ಲಿ ಭಾಷಣ ಮಾಡುತ್ತಿರುವಾಗ "ನಿಮ್ಮದು ಊಟ - ತಿಂಡಿ ಬಹಳ ಹೆಚ್ಚು. ನಿಮ್ಮ ಟೆಲಿವಿಷನ್ ಅದರಿಂದಲೇ ತುಂಬಿದೆ" ಎಂದೆ. ಆಗ ಮಹಿಳೆಯೊಬ್ಬಳು "ಹೌದು. ಈಗ ನಮಗೂ ಹಾಗೆ ತೋರುತ್ತಿದೆ. ನೀವು ಹೇಳುವವರೆಗೆ ನಮಗೆ ತಿಳಿದಿರಲಿಲ್ಲ. ಹೀಗೆಯೇ ನಿಮ್ಮಲ್ಲಿಯೂ ಇರಬಹುದಾದ ಅನೇಕ ದೋಷಗಳು, ಯಾರಾದರೂ ಹೇಳುವವರೆಗೆ ನಿಮಗೂ ತಿಳಿಯುವುದಿಲ್ಲ." ಎಂದಳು. ಆ ಹುಡುಗಿಯ ಬುದ್ಧಿವಂತಿಕೆಯ ಉತ್ತರವನ್ನು ನಾನು ಮೆಚ್ಚಿದೆ.... ಜಾಹೀರಾತುಗಳಲ್ಲಿ ಹೊಸ ಹೊಸ ಬಗೆಯ ಬುದ್ಧಿವಂತಿಕೆ ಕಂಡು ಹಿಡಿದರೆ, ಅಮೆರಿಕದಲ್ಲಿ ಅದಕ್ಕೆ ನ್ಯೂಟನ್ , ಐನ್ ಸ್ಟೈನ್ ರ ಪ್ರತಿಭೆಗಿಂತ ಹೆಚ್ಚು ಬೆಲೆ ಕೊಡುತ್ತಾರೆ...." (ಅನಂತರದ ಕೇವಲ ೨೦ ವರ್ಷಗಳಲ್ಲಿ ನಾವು ಭಾರತೀಯರು, ಅಮೆರಿಕದವರ ದುಡ್ಡು ಗೋರುವ ನೇತ್ಯಾತ್ಮಕ (?) ಅಂಶಗಳಲ್ಲೆಲ್ಲ ಅಮೆರಿಕಕ್ಕಿಂತಲೂ ಒಂದು ಹೆಜ್ಜೆ ಮುಂದಿರುವ ಛಲ ಹೊತ್ತು ಸಾಧಿಸುವ ಪಣ ತೊಟ್ಟಿದ್ದೇವೆ! ಇವನ್ನೆಲ್ಲ ಕಾಣುವ ಭಾಗ್ಯ ಸುದೈವವಶಾತ್ ಗೊರೂರರಿಗಿರಲಿಲ್ಲ.)

ಗೊರೂರರು ಬರೆಯುತ್ತಾರೆ.."ಹೀಗೆ ಅಮೆರಿಕದಲ್ಲಿ ಅನಿವಾರ್ಯವಾಗಿರುವ ಟೆಲಿವಿಷನ್ ನಿಂದ ಅನೇಕ ಕೇಡುಗಳು ಸಂಭವಿಸುತ್ತವೆ. ಅಮೆರಿಕದ ಜನತೆ ಮೊದಲೇ ಮಾತನಾಡುವುದು ಕಡಿಮೆ. ಟೆಲಿವಿಷನ್ ಬಂದುದರಿಂದ, ಒಬ್ಬರನ್ನೊಬ್ಬರು ನೋಡಿ ಮಾತನಾಡುವುದಕ್ಕೆ ಹೋದರೂ ಟೆಲಿವಿಷನ್ ನೋಡುತ್ತ ಮೌನವಾಗಿ ಕುಳಿತು ಬಿಡುತ್ತಾರೆ. ಮನೆಯಲ್ಲಿ ತಂದೆ - ತಾಯಿ ಮಕ್ಕಳಲ್ಲಿ ಸಂಭಾಷಣೆ ಕಡಿಮೆಯಾಗಿದೆ. ಸ್ವಾಭಾವಿಕವಾಗಿಯೇ ಜಗತ್ತಿನ ಎಲ್ಲ ಭಾಗಗಳಲ್ಲಿಯೂ ತಲೆಮಾರಿನ ಅಂತರದಿಂದಾಗಿ ತಂದೆ ತಾಯಿ ಮತ್ತು ಮಕ್ಕಳ ನಡುವೆ ಅಂತರ ಹೆಚ್ಚಾಗುತ್ತಿದೆ... ಟೆಲಿವಿಷನ್ ನೋಡುವುದರಿಂದ ಬಾಲಾಪರಾಧಗಳು ಹೆಚ್ಚುತ್ತಿವೆ. ಈ ಅಪರಾಧಗಳಲ್ಲಿ ಕಳುವಿನಿಂದ ಹಿಡಿದು, ಖೂನಿವರೆಗೆ ಇವೆ... 18 ವರ್ಷದ ಒಬ್ಬ ಅಪ್ರಾಪ್ತ ವಯಸ್ಕನು ಕಳುವು ಮಾಡಿ, ಪೋಲೀಸಿಗೆ ಸಿಗುವ ಭಯದಿಂದ ಆ ಹೆಂಗಸನ್ನು ಕೊಲೆ ಮಾಡಿದ. ವಿಚಾರಣೆಯ ಕಾಲದಲ್ಲಿ "ಟೆಲಿವಿಷನ್ ನಲ್ಲಿ ಹಿಂಸೆಯನ್ನು ನೋಡಿನೋಡಿ, ನಾನು ಕಳವು ಮಾಡಿ ಕೊಲೆ ಮಾಡಿದೆ. ನಾನು ಹುಟ್ಟಿದಂದಿನಿಂದ ಟೆಲಿವಿಷನ್ ನೋಡುವುದರ ಹೊರತು ಮತ್ತೇನನ್ನೂ ಮಾಡಿಲ್ಲ. ಟೆಲಿವಿಷನ್ ನೇ ನನ್ನ ಮನೆ. ನನ್ನ ಪಾಠಶಾಲೆ, ನನ್ನ ಚರ್ಚು" ಎಂದು ಹೇಳಿದ. ಇಂತಹ ಹಲವು ಬಗೆಯ ಅಪರಾಧಗಳು ಅಶಿಕ್ಷಿತರಿಂದ - ಅಥವ ದಾರಿದ್ರ್ಯ, ಅವಶ್ಯಕತೆಯಿಂದ ಸಂಭವಿಸುತ್ತವೆ ಎಂದಲ್ಲ. ಇದು ಜಗತ್ತಿನ ಎಲ್ಲೆಲ್ಲಿಯೂ ನಾಗರಿಕತೆ, ಸಭ್ಯತೆ, ಸಹಜೀವನಕ್ಕೆ ಸವಾಲಾಗಿರುವ ಹಿಂಸಾ ಪ್ರವೃತ್ತಿ; ಅಮೆರಿಕದ ಅತಿ ಸೌಖ್ಯ ಎಂಬುದು ಜೀವನದ ವಾಸಿಯಾಗದ ವ್ರಣ...." ಹೀಗೆ ತಾವು ಅಮೆರಿಕದಲ್ಲಿದ್ದಾಗ ಘಟಿಸಿ, ಪತ್ರಿಕೆಗಳಲ್ಲಿ ಪ್ರಕಟವಾಗಿದ್ದ ಟೆಲಿವಿಷನ್ ಪ್ರೇರಿತ ಹಲವಾರು ಹಿಂಸಾ ದೃಷ್ಟಾಂತಗಳೊಂದಿಗೆ ಗೊರೂರರು ಉತ್ತಮ ಬದುಕಿನತ್ತ ಓದುಗರು ಚಿಂತಿಸುವಂತೆ ಮಾಡುತ್ತಾರೆ.

ಮುಂದುವರಿದು, "ಇದರಿಂದ ಅಮೆರಿಕನ್ ಜೀವನವೆಲ್ಲ ಕೊಲೆ, ದರೋಡೆ, ವ್ಯಭಿಚಾರ ಇವುಗಳಿಂದಲೇ ತುಂಬಿದೆ ಎಂದು ಭಾವಿಸಲಾಗದು. ಅಮೆರಿಕನ್ ರು ಇಂತಹ ಸುದ್ದಿಗಳನ್ನು ಸ್ವಲ್ಪ ಪ್ರಾಮುಖ್ಯವಾಗಿಯೇ ಪ್ರಕಟಿಸುತ್ತಾರೆ. ಅದಕ್ಕೆ ಮುಖ್ಯ ಕಾರಣ ಇವು ಸ್ವಲ್ಪ ರಂಜಕವಾದ, ಆಕರ್ಷಣೀಯವಾದ - ನಿತ್ಯದ ಮಾಮೂಲು ಸುದ್ದಿಗಳಿಗಿಂತ ಭಿನ್ನವಾದುವು ಎಂಬುದು. ಮತ್ತೊಂದು ಕಾರಣ, ಅಮೆರಿಕ ಜೀವನದಲ್ಲಿಯ - ಬಾಲಕರಿಂದ ಹಿಂಸಾ ಪ್ರವೃತ್ತಿ , ಸಮಾಜ ಘಾತುಕ ಪ್ರವೃತ್ತಿ ಎಂಬುದು ಅಪಾಯಕಾರೀ ಬೆಳವಣಿಗೆ; ಇದು ಚೆನ್ನಾಗಿ ಪ್ರಚಾರವಾಗಲಿ ಎಂಬುದೂ ಉದ್ದೇಶವಾಗಿರಬಹುದು. ಒಟ್ಟಿನಲ್ಲಿ ಅಂತಹ ಸುದ್ದಿಗಳು ಪತ್ರಿಕೆ, ವೇದಿಕೆ, ಟೆಲಿವಿಷನ್, ರೇಡಿಯೋ ಎಲ್ಲೆಲ್ಲಿಯೂ ಪ್ರಸ್ತಾಪಿಸಲ್ಪಡುತ್ತವೆ. ಕ್ರಿಸ್ತ ಪಾದ್ರಿಗಳು "ಯೇಸುವಿನ ಪುನರವತಾರಕ್ಕೆ ಇದು ಸಕಾಲ. ಇನ್ನು ಮುವ್ವತ್ತೆರಡು ವರ್ಷಕ್ಕೆ ಏಸು ಖಂಡಿತವಾಗಿ ಈ ಜಗತ್ತಿನಲ್ಲಿ ಕಾಣಿಸಿಕೊಳ್ಳುತ್ತಾನೆ" ಎಂದು ಪ್ರಚಾರ ಮಾಡುತ್ತಾರೆ....ಈಚಿನ ದಿನಗಳಲ್ಲಿ ಹಿಂಸಾ ಪ್ರವೃತ್ತಿಯು ಹೆಚ್ಚಾಗಿ, ಖೂನಿ ಸಹ ಅಮೆರಿಕದ ಬಾಲಕರಿಗೆ ಆಟವಾಗಿದೆ. ಶಾಂತಿ ಮತ್ತು ಕಾನೂನು ರಕ್ಷಣೆಯ ಹೊಣೆ ಹೊತ್ತಿರುವ ಪೋಲೀಸಿನವರಿಗೆ, ನ್ಯಾಯಾಧಿಪತಿಗಳಿಗೆ, ಸಮಾಜ ಕಾರ್ಯಕರ್ತರಿಗೆ, ಇಡೀ ರಾಷ್ಟ್ರಕ್ಕೇ ಈ ಸಮಸ್ಯೆಯು ದೊಡ್ಡ ತಲೆನೋವಾಗಿದೆ. ಈಚಿನ ದಿನಗಳಲ್ಲಿ ಅಮೆರಿಕದಲ್ಲಿ "ಸ್ಯಾಮ್ ನ ಮಗ ಮಾಡಿದ ಖೂನಿಗಳು" (SON OF SAM ಎಂಬುದೇ ಅವನ ಹೆಸರು) ಎಂಬ ಪ್ರಸಂಗವು ಜಗತ್ತಿನ ದೃಷ್ಟಿಯನ್ನೆಲ್ಲ ಆಕರ್ಷಿಸಿತು. ಈಗ ಅವನೇ ಒಬ್ಬ ಧೀರ ಎಂದಾಗಿಬಿಟ್ಟಿದೆ. ನ್ಯೂಯಾರ್ಕಿನಂತಹ ನಗರದಲ್ಲಿ ಅವನು ಈ ವರೆಗೆ ಏಳು ಖೂನಿಗಳನ್ನು ಮಾಡಿದ್ದಾನೆ. ಅವನ ವಿಚಾರಣೆಯ ದಿನ ಅವನ ಸುತ್ತಮುತ್ತ ಸಾವಿರಾರು ಜನ ಇರುತ್ತಾರೆ. ಪೋಲೀಸ್ ಕಾವಲನ್ನೂ ಮೀರಿ ಒಬ್ಬ ಪತ್ರಕರ್ತ ಅವನ ಮುಖಕ್ಕೆ ಒಂದು ಧ್ವನಿವರ್ಧಕವನ್ನು ಹಿಡಿದ. ಸನ್ ಆಫ್ ಸ್ಯಾಮನು ..."ನಾನು ಖೂನಿ ಮಾಡಲು ಬಯಸುವುದಿಲ್ಲ. ಆದರೆ ಈ ಶಕ್ತಿಗಳು ನನ್ನನ್ನು "ಹೋಗು ಖೂನಿ ಮಾಡು, ಯಾಕೆ ಸುಮ್ಮನಿದ್ದೀ, ಅದೇ ನಿನ್ನ ಕೆಲಸ ಎಂದು ದೂಡುತ್ತವೆ" ಅಂದ. "ದೂಡುವವರು ಯಾರು ?" ಎಂದು ಕೇಳಿದಾಗ "ಅದೇ...ಶಕ್ತಿಗಳು..." ಎಂದು ಹೇಳಿದ. ಇಂತಹ ವಿಕೃತಿಯ ಸುದ್ದಿಗಳು ಪತ್ರಿಕೆಗಳಲ್ಲಿ, ಟೆಲಿವಿಷನ್ ನಲ್ಲಿ ನಿತ್ಯವೂ ಬರುತ್ತಿವೆ. ಟೆಲಿವಿಷನ್ ನೋಡುವ ಸಣ್ಣ ಮಕ್ಕಳಿಗೂ ಇಂತಹ ಸುದ್ದಿಗಳು ಗೊತ್ತಾಗುತ್ತವೆ. ಕೋರ್ಟಿನಲ್ಲಿ - ಏಳು ನಿಷ್ಕರುಣಿ ಕೊಲೆಗಳಿಗಾಗಿ ಅವನ ವಿಚಾರಣೆಯಾಗುತ್ತಿದ್ದರೂ ಅವನ ವಿಷಯದಲ್ಲಿ ಒಂದು ಭಯಂಕರ ಅದ್ಭುತ ರೌದ್ರ ಆಕರ್ಷಣೆ ಸೃಷ್ಟಿಯಾಗುತ್ತಿದೆ. ಅವನ ಈ ಜನಪ್ರಿಯತೆ, ಪ್ರಚಾರ, ಪ್ರಸಿದ್ಧಿಗಳಿಂದ ಅವನು ನಿರಪರಾಧಿ ಎಂದು ಭಾವಿಸಿ ಎಲ್ಲ ಜ್ಯೂರಿಗಳೂ ಜಡ್ಜರೂ ಈ ನರಘಾತುಕನನ್ನು ಬಿಡುಗಡೆ ಮಾಡಿಬಿಡುತ್ತಾರೋ ಎಂದು ವಿವೇಕಿಗಳು ಅಮೆರಿಕದಲ್ಲಿ ಚಿಂತಾಕ್ರಾಂತರಾಗಿದ್ದಾರೆ. ಅಮೆರಿಕದಲ್ಲಿ ಈಗ ಮರಣದಂಡನೆಯನ್ನು ಕಾರ್ಯಗತಗೊಳಿಸದಿರುವುದರಿಂದ ಈಚೆಗೆ - ಇವನಿಗೆ 98 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿದ್ದಾರೆ..." (ಗೊರೂರರು ಅಮೆರಿಕ ದರ್ಶನ ಮಾಡಿ ಅದಾಗಲೇ 38 ವರ್ಷ ಸಂದು ಹೋಗಿದೆ. ಈಗ ನೋಡಿದರೆ - "GREAT" ಅನ್ನಿಸಿಕೊಳ್ಳುವ ಚಪಲದಲ್ಲಿ Business Management ಕಲಿಯುತ್ತಿರುವ ಇಂದಿನ ಭಾರತೀಯರು ಇಂಥದ್ದನ್ನೆಲ್ಲ ಅವರಪ್ಪನಂತೆ ಅನುಕರಿಸಿ ಅಮೆರಿಕವನ್ನು ನಿವಾಳಿಸಿ ಬಿಸಾಡುವಷ್ಟು ಕಲಿತು, ಮಾಧ್ಯಮ ಪರಿಣತಿಯನ್ನೂ ಪಡೆದು, ಪತ್ರಿಕೆ ಮತ್ತು ಇತರ ಮಾಧ್ಯಮಗಳನ್ನು ವ್ಯಾಪಾರೀ ಸಂಸ್ಥೆಯಾಗಿಸುವಲ್ಲಿ ನಿಸ್ಸೀಮರಾಗಿದ್ದಾರೆ ! ದುರ್ಮಾರ್ಗಕ್ಕೆ ಉಪದೇಶಕರು ಬೇಕಾಗುವುದಿಲ್ಲ; ಸನ್ಮಾರ್ಗಕ್ಕೆ ಎಷ್ಟು ಉಪದೇಶಕರಿದ್ದರೂ ಸಾಕಾಗುವುದಿಲ್ಲ. (?) )  

ಗೊರೂರರು ಮುಂದುವರಿಯುತ್ತ "ಟೆಲಿವಿಷನ್ ನಿಂದ ಏನೂ ಉಪಯೋಗವಿಲ್ಲ ಎಂಬುದು ನನ್ನ ಅಭಿಪ್ರಾಯವಲ್ಲ. ಆದರೆ ಅದರಿಂದ ಎಷ್ಟು ಜ್ಞಾನ ಪ್ರಸಾರವಾಗುತ್ತದೆ, ಫಲದಾಯಕವಾಗುತ್ತದೆ ಎಂದು ಆಸಕ್ತರು ಕೂಗುತ್ತಿದ್ದಾರೋ, ಅಷ್ಟು ಆಗುತ್ತಿಲ್ಲವೆಂಬುದು, ಅಮೆರಿಕದಂತಹ ಟೆಲಿವಿಷನ್ ಸಮೃದ್ಧ ರಾಷ್ಟ್ರದ ಜನತೆಯ ಮತ ಸಹ. ಆದುದರಿಂದ ನಾವೂ ಸಹ ಟೆಲಿವಿಷನ್ ನ ಅತಿಪ್ರಸರಣದ ಹುಚ್ಚನ್ನು ನಿಲ್ಲಿಸಿ, ಹಳ್ಳಿಗಳಲ್ಲಿ ರಸ್ತೆ, ಬಾವಿ, ಹಿಂದುಳಿದವರಿಗೆಲ್ಲ ಮನೆ, ಉತ್ತಮವಾದ ಸಾರಿಗೆ ವ್ಯವಸ್ಥೆ, ಬಸ್ ನಿಲ್ದಾಣಗಳಲ್ಲಿ ಸ್ವಚ್ಛವಾದ ಪಾಯಿಖಾನೆಯ ಗೃಹ, ಕುಡಿಯುವ ಸ್ವಚ್ಛ ನೀರು, ಹಳ್ಳಿಗಳಿಗೆಲ್ಲ ಗಾಳಿ ಬೆಳಕುಳ್ಳ ಶಾಲಾ ಕಟ್ಟಡ..ಮುಂತಾದವುಗಳತ್ತ ನಮ್ಮ ಗಮನ ಹರಿಸುವುದು ವಿವೇಕವಾಗುತ್ತದೆ. ಟೆಲಿವಿಷನ್ ಕಾರ್ಯಕ್ರಮಗಳನ್ನು ಸಿದ್ಧಗೊಳಿಸುವುದಕ್ಕಾಗಿಯೇ ಅನೇಕ ಸಂಸ್ಥೆಗಳು ಹುಟ್ಟಿಕೊಂಡಿರುವ ಅಮೆರಿಕದಲ್ಲಿಯೇ ಅದಕ್ಕೆ ಬೇಕಾದಷ್ಟು ವಿಷಯಗಳನ್ನು ಒದಗಿಸಲು ಸಾಧ್ಯವಿಲ್ಲದಿರುವಾಗ, ನಾವು ಇಪ್ಪತ್ತನಾಲ್ಕು ಗಂಟೆಯೂ ಟೆಲಿವಿಷನ್ನನ್ನು ತೋರಿಸಬೇಕಾದರೆ, ಇನ್ನು ಬರೀ ಫಿಲ್ಮ್ ಗಳನ್ನು ಮಾತ್ರ ತೋರಿಸಬೇಕು. ಈಗಲೇ ಡೆಲ್ಲಿ ಟೆಲಿವಿಷನ್ ನೋಡಿದರೆ, ಅದರ ತೀರ ಸಾಮಾನ್ಯ ಮಟ್ಟದಿಂದ ನಮಗೆ ಬೇಸರಿಕೆಯೇ ಬರುವುದು." (ಆದರೆ, "ಕುರುಡರ ರಾಜ್ಯದಲ್ಲಿ ಒಕ್ಕಣ್ಣನೇ ರಾಜ" ಎನ್ನುವಂತೆ ಇಂದಿನ ಇತರ ದುಶ್ಶಾಸನ ದೃಶ್ಯಾಸುರರಿಗೆ ಹೋಲಿಸಿಕೊಂಡು ದೂರದರ್ಶನವೇ ಪರವಾಗಿಲ್ಲ ಎಂಬ ಅನಿವಾರ್ಯ ಸಂಧಿಯಲ್ಲಿ ಇಂದಿನ ಭಾರತೀಯರಿದ್ದಾರೆ !)

"ಅಮೆರಿಕದವರು ಜನಸಂಖ್ಯೆಯ ಬಾಹುಳ್ಯದ ಭಯದಿಂದ ಮತ್ತು ಸ್ವಂತ ಸುಖದ ಆಸೆಯಿಂದ ಮಕ್ಕಳನ್ನು ಪಡೆಯಲು ಬಯಸುವುದಿಲ್ಲ. ಆದರೆ ಮಕ್ಕಳ ಆಸೆ, ಆಕರ್ಷಣೆ ಅವರಿಗೆ ಇಲ್ಲದಿಲ್ಲ. ಮಕ್ಕಳ ಸ್ಥಾನವನ್ನು ನಾಯಿ, ಬೆಕ್ಕುಗಳು (ಕೆಲವು ವೇಳೆ ಇಲಿಗಳು ಸಹ) ಆಕ್ರಮಿಸುತ್ತವೆ. ನಾಯಿ ಪ್ರಥಮ ಆಕರ್ಷಣೆ. ನಾಯಿಯನ್ನು ಮಗುವನ್ನು ಎತ್ತಿಕೊಳ್ಳುವಂತೆಯೇ ಎತ್ತಿಕೊಂಡು ತಿರುಗುತ್ತಿರುತ್ತಾರೆ. ಪಾಠಶಾಲೆಯ ಮಕ್ಕಳಿಗೂ ನಾಯಿ ಅತಿ ಪ್ರಿಯ. ನಾಯಿಯನ್ನು ಎತ್ತಿಕೊಂಡ ವಿದ್ಯಾರ್ಥಿಯ ಸುತ್ತ ಅದನ್ನು ಮುದ್ದಾಡುತ್ತ ನೂರಾರು ಹುಡುಗರು ಸೇರುತ್ತಾರೆ. ಕೆಲವರು ನಾಯಿಗೇ ಮುತ್ತು ಕೊಡುತ್ತಾರೆ. ಅದನ್ನೆಲ್ಲ ನೋಡಿದರೆ ನಮಗೆ ಮೈ ಜುಂ ಎನ್ನುತ್ತದೆ. ಅಲ್ಲದೆ ನಾವೇ ಅಷ್ಟೊಂದು ಮೆಚ್ಚುವ ಅದರ ಸ್ವಚ್ಚತೆಯ ಬಗೆಗೇ ನಮಗೆ ಸಂಶಯವುಂಟಾಗುತ್ತದೆ. ಒಂದು ಸಲ ಇದು ನನ್ನ ಅನುಭವಕ್ಕೆ ಬಂದಿತು. ನನ್ನ ಕಡೆಗೆ ಒಂದು ನಾಯಿಯು ಬೊಗಳುತ್ತ ಬಂದಾಗ, ನಾನು ಅದನ್ನು ಗದರಿಸಲು, ಒಬ್ಬ - ಅದರ ಯಜಮಾನ -"ಗದರಿಸಬೇಡಿ. ನನ್ನ ನಾಯಿಯನ್ನು ನೀವು ಹಾಗೆ ದಬಾಯಿಸಬಾರದು. ಮೃದುವಾಗಿ ಮಾತಾಡಿ" ಎಂದ ! ಸ್ವಲ್ಪ ಹಾಲು ಕಡಿಮೆ ಕೊಟ್ಟಿತೆಂದು ಹಸುವನ್ನು ಕುಯ್ದು ತಿನ್ನುವ ಜನ ಇವರು !..." (ಗೊರೂರರು ಮತ್ತು ಅವರಂತಹ ಸಜ್ಜನರು - ಅಂದೇ - ಸತ್ತು ಬದುಕಿದರು ! ಅಮೆರಿಕದ ವಿಕೃತಿಗಳನ್ನು ಮಾತ್ರ ಹುಡುಕಿ ಹುಡುಕಿ ಆಯ್ದುಕೊಂಡು ಬರುವ, ಅರ್ಧ ಕೊಡ ತುಂಬಿದಂತಿರುವ ಇತ್ತೀಚಿನ ಭಾರತೀಯ ಮನಸ್ಸುಗಳು ಭಾರತವನ್ನು ಅಮೆರಿಕದ ತ್ಯಾಜ್ಯ ಸಂರಕ್ಷಣಾ ಕೇಂದ್ರವಾಗಿಸಿಕೊಂಡಾಗಿದೆ. ಮಾನವ ಹಕ್ಕುಗಳ ಹೆಸರಿನಲ್ಲಿ ಕುಟುಂಬ ಒಡೆಯುತ್ತಿರುವ, ಕರುಣೆಯ ಹೆಸರಿನಲ್ಲಿ ಧಾರ್ಷ್ಟ್ಯವನ್ನು ಪ್ರತಿಪಾದಿಸುತ್ತಿರುವ - ಭಾರತೀಯ ವೇಷ ತೊಟ್ಟ ಹಲವಾರು ಸೇವಾ ಸಂಸ್ಥೆಗಳು ಇಂದು ಡಾಲರ್ ನುಂಗುತ್ತ ಭಾರತೀಯರ ಹುಂಬತನದ (ಮುಗ್ಧತೆ?) ಲಾಭ ಪಡೆಯುತ್ತ ಗುಪ್ತ ಕಾರ್ಯಸೂಚಿಯನ್ನು ಕಾರ್ಯಗತಗೊಳಿಸುವಲ್ಲಿ ತನ್ಮಯವಾಗಿವೆ ! ಈಗ ಭಾರತದಲ್ಲಿ ನಾಯಿ ಬೆಕ್ಕುಗಳಿಗೆ ಕೊಡುತ್ತಿರುವ ಸ್ಥಾನಮಾನವು ಹಿರಿಯರಿಗೆ, ಹೆತ್ತ ಅಪ್ಪ ಅಮ್ಮನಿಗೂ ಸಿಗದಂತಹ ವಾತಾವರಣವು ನಿರ್ಮಾಣವಾಗಿದೆ. ಇದರಿಂದಲೂ -"ಕರುಣೆ ಒಸರುವ" ವ್ಯಾಪಾರಕ್ಕೆ ಅವಕಾಶ ಮಾಡಿಕೊಂಡಿದ್ದಾರೆ. CANDLE ಬೆಳಕಿನ ಮಂದ ಉರಿಯಲ್ಲಿ ಹೊಸಹೊಸ ಕಾನೂನುಗಳನ್ನು ಎಳೆದು ತರಲೂ ಯತ್ನಿಸುತ್ತಿದ್ದಾರೆ. ಹೀಗೆ...ಭಾರತವು ಅಮೆರಿಕವಾದಂತಾಗಿದೆ ! ಅಥವ ವಿಶ್ವಗುರುವಾಗುವ ದಿಕ್ಕಿನಲ್ಲಿ ಸಾಗುತ್ತಿದೆ...)

ಗೊರೂರರು ಅಮೆರಿಕದ ಸುಖ ವೈಭೋಗಗಳಿಗೆ ದಂಗಾಗಿದ್ದರು. ಅಮೆರಿಕನ್ನರು ತಮ್ಮ ಕೆಲಸದಲ್ಲಿ ತೋರುವ ಶ್ರದ್ಧೆ, ಶಿಸ್ತು, ಸಮಪಾಲನೆ, ಸ್ವಚ್ಚತೆಯನ್ನು ನೋಡಿ ಪ್ರಭಾವಿತರಾಗಿದ್ದರು. ಅಂತಹ ದೃಶ್ಯಗಳನ್ನು ಕಂಡಾಗೆಲ್ಲ "ಅಯ್ಯೋ, ನನ್ನ ಭಾರತವು ಹೀಗೆ ಎದ್ದು ನಿಲ್ಲುವುದು ಯಾವಾಗ ? ಎಂದು ಅವರ ಒಡಲು ಮರುಗುತ್ತಿದ್ದುದು ಓದುಗರ ಅನುಭವಕ್ಕೆ ದಕ್ಕುತ್ತದೆ. "ನಮ್ಮ ವೇದ, ಉಪನಿಷತ್ತು, ಗಾಂಧಿ - ಇವುಗಳೇ ನನ್ನನ್ನು ಅಮೆರಿಕದಲ್ಲಿ ಬಚಾಯಿಸಿದ್ದು" ಎಂದು ಹೇಳುವ ಗೊರೂರರು ಅಲ್ಲಿ ಕುದುರೆ ಸವಾರಿ ಮಾಡಿದರು; ಮುಷ್ಟಿ ಯುದ್ಧ ನೋಡಿದರು; ಸರ್ಕಸ್ ಕಂಡರು; ಸಾರ್ವಜನಿಕ ಪುಸ್ತಕ ಭಂಡಾರವನ್ನು ಸಂದರ್ಶಿಸಿದರು; ಪೋಸ್ಟ್ ಮನ್ ದಂಪತಿಗಳನ್ನೂ ಮಾತಾಡಿಸಿದರು; ಜ್ಯೋತಿಷ್ಯ ಹೇಳಿದರು; ಶ್ರಾದ್ಧ ಮಾಡಿಸಿದರು; ಪೌರ ಸಭೆಯ ಚುನಾವಣೆಯು ನಡೆಯುವಲ್ಲಿಗೆ ಹೋಗಿ ಇಣುಕಿ, ಗೊರೂರತ್ವವನ್ನು ಛಾಪಿಸಿ ಬಂದರು; ಸಹಜ ಕುತೂಹಲಕ್ಕೆ ಬಲಿಯಾಗಿ ಕೋರ್ಟಿಗೆ ಸಾಕ್ಷಿಯಾಗಿ ಹೋಗುವ ತೊಂದರೆಗೂ ಸಿಕ್ಕಿಕೊಂಡರು; ಕೆಲವೇ ವಾರಗಳಲ್ಲಿ ಇನ್ನೂ ಹಲವು ಫಜೀತಿಗಳನ್ನು ತಮ್ಮದೇ ಶೈಲಿಯಲ್ಲಿ ನಿಭಾಯಿಸಿದರು. ಎಡ್ಮಂಟನ್ ವಿಧಾನ ಸಭೆಯ ಕಾರ್ಯಕಲಾಪಗಳನ್ನು ಹತ್ತಿರದಿಂದ ನೋಡಿದರು; ಭಾರತದ ಗಾಂಧೀಜಿಯ ಸಹಚಾರಿ ಎಂದು ತಿಳಿದ ಮೇಲೆ ಅಲ್ಲಿ ಅವರು ವಿಶೇಷ ಗೌರವಕ್ಕೂ ಪಾತ್ರರಾದರು; ರಾಕಿ ಪರ್ವತ-ಗ್ಲೇಸಿಯರ್- ನ್ಯಾಶನಲ್ ಪಾರ್ಕ್ ನೋಡಿದರು. ಕೆನಡಕ್ಕೂ ಹೋಗಿ ನಯಾಗರ ಮಂಜುಕನ್ಯೆಯ ದರ್ಶನದೊಂದಿಗೆ ಒಂದು ರಾತ್ರಿ ಟ್ಯಾಕ್ಸೀವಾಲನ ಮನೆಯಲ್ಲಿ ಅತಿಥಿಯಾಗಿದ್ದು ಬಂದರು; ಹೊಲ ಗದ್ದೆಗಳಲ್ಲಿ ಸುತ್ತಿದರು; ಅಮೆರಿಕನ್ ಪಶುಗಳನ್ನೂ ಸವರಿ ಗೆಳೆತನ ಕುದುರಿಸಿಕೊಂಡರು. ಒಂದು ರಾತ್ರಿಯನ್ನು ಜೈಲು ಕೋಣೆಯಲ್ಲಿಯೂ ಕಳೆದರು. ಕರೆದಲ್ಲಿಗೆ ಹೋಗಿ ಉಪನ್ಯಾಸ ನೀಡಿದರು. ಶಾಲೆಗಳಿಗೆ ಕರೆದು, ಕರೆಯದೆಯೂ ಹೋಗಿ ಭಾರತದ ಸಂಸ್ಕೃತಿಯ ಧ್ವಜವನ್ನು ಹಾರಿಸಿ ಬಂದರು. ಅಮೆರಿಕದ ಮಕ್ಕಳಿಗೆ ಪಂಚತಂತ್ರದ ಕತೆ ಹೇಳಿದರು; ಅವರೊಂದಿಗೆ ಸಂಭಾಷಿಸಿದರು. ಅಮೆರಿಕದ ಅಂಕೆಯಲ್ಲಿದ್ದ ಸೌಂದರ್ಯ ಸಮೃದ್ಧಿಯನ್ನು ಕಂಡು ಹಿರಿಹಿರಿ ಹಿಗ್ಗಿದರು; ಸ್ವಚ್ಛಂದತೆಯ ಉಸಿರಾಡುತ್ತಿದ್ದ ಅವರ ಬಿಚ್ಚು ಸ್ವಾತಂತ್ರ್ಯವನ್ನು ಕಂಡು ಬೆಚ್ಚಿಬಿದ್ದರು. ಆದರೂ ಅಲ್ಲಿದ್ದ ಕೊನೆಯ ಕ್ಷಣದ ವರೆಗೂ ಅಮೆರಿಕವನ್ನು ಉಂಡು ತೇಗಿದರು; ಆದರೆ ಬೀಗಲಿಲ್ಲ. ಕೊನೆಯಲ್ಲಿ "ಭಾರತದ ನಾಗರಿಕತೆಯೇ ಅತ್ಯುತ್ತಮ. ನಮ್ಮ ಸಂಸ್ಕೃತಿಯೇ ಉಚ್ಚ. ಸಂಸ್ಕೃತ ಭಾಷೆಯು ಜ್ಞಾನಕ್ಕೆಲ್ಲ ಕೇಂದ್ರ. ಇಲ್ಲಿನ ಜನ, ಪ್ರಕೃತಿ, ಜೀವನ, ಗಿಡಮರ, ಬಿಡುವು, ಅತ್ಯಾತುರವಿಲ್ಲದ ಚಿಂತನಾಪರ ವಿಚಾರಶೀಲ ಜೀವನ, ಇಲ್ಲಿಯ ಆರ್ಷೇಯ ಧರ್ಮ, ಧಾರ್ಮಿಕ ಪುರುಷರು, ಇವೇ ನಮಗೆ ತುಂಬ ಪ್ರಿಯ." ಎಂಬ ತೀರ್ಮಾನಕ್ಕೂ ಬಂದರು. (ಹಿತ್ತಲ ಗಿಡವು ಮದ್ದಲ್ಲ ಎನ್ನುವವರ ಮಧ್ಯದಲ್ಲಿ "ಹಿತ್ತಲ ಗಿಡವೇ ಉತ್ತಮ ಮದ್ದು !" ಅಂದುಕೊಂಡು ತಾವೇ ತಾವಾಗಿ ನಿಂತರು.)


ಮತ್ತೆ ನ್ಯೂಯಾರ್ಕ್ : ಅಮೆರಿಕದ ಬೇಸಿಗೆಯ ವಿಹಾರ ಸ್ಥಳಗಳನ್ನೆಲ್ಲ ನೋಡಿಕೊಂಡು ಗೊರೂರರು ಎಡ್ಮಂಟನ್ ನಲ್ಲಿರುವಾಗ ನ್ಯೂಯಾರ್ಕಿನ ಕನ್ನಡಕೂಟದವರಿಂದ ಅವರಿಗೆ ಆತ್ಮೀಯ ಆಹ್ವಾನ ಬಂತು. ಅವರು ಇದ್ದ ಸ್ಥಳದಿಂದ 3000 ಮೈಲು ದೂರದಲ್ಲಿದ್ದ ನ್ಯೂಯಾರ್ಕಿಗೆ ಗೊರೂರರು ಹೊರಟೇ ಬಿಟ್ಟರು. ಈ ಭೇಟಿಯಲ್ಲಿ ಅವರಿಗೆ ಅಪೂರ್ವವಾದ ಅನುಭವಗಳಾದವು. ಕೆಲವು ಕಾಲೇಜುಗಳಿಗೆ ಹೋಗಿ ಉಪನ್ಯಾಸವನ್ನೂ ನೀಡಿದರು.

"ಅಮೆರಿಕದಲ್ಲಿ ವಿದ್ಯಾರ್ಥಿಗಳು ಉಪಾಧ್ಯಾಯರಿಂದ ಕಲಿಯುವುದಕ್ಕಿಂತ ಹೆಚ್ಚಾಗಿ ಪುಸ್ತಕ ಭಂಡಾರದಲ್ಲಿ (Library) ಕಲಿಯುತ್ತಾರೆ. ತಮ್ಮ ಬಹುಪಾಲು ಕಾಲವನ್ನು - ತರಗತಿಯಲ್ಲಿ ಕಳೆಯುವುದಕ್ಕಿಂತ ಹೆಚ್ಚಾಗಿ ಅವರು ಗ್ರಂಥಾಲಯದಲ್ಲಿ ಕಳೆಯುತ್ತಾರೆ. ಅವರ ಸಮಗ್ರ ತಿಳುವಳಿಕೆ, ತರಗತಿಯಲ್ಲಿ ಕಲಿತುದಕ್ಕಿಂತ ಹೆಚ್ಚು ಪೂರ್ಣವೂ ವಿಶಾಲವೂ ಆಗಿರುತ್ತದೆ. ಅವರು ತುಂಬ ಬುದ್ಧಿವಂತಿಕೆಯ ಪ್ರಶ್ನೆಗಳನ್ನೇ ಹಾಕುತ್ತಿದ್ದರು. ಒಂದು ಸಭೆಯಲ್ಲಿ ಒಬ್ಬ ವಿದ್ಯಾರ್ಥಿನಿ "ಭಾರತದಲ್ಲಿ ಈಗ ಹರಿಜನರಿಗೆ ತೊಂದರೆ ಕಡಿಮೆಯಾಗಿದೆಯೆ ?" ಎಂದು ಕೇಳಿದಳು. ನಾನು ಹರಿಜನ ಚಳುವಳಿ, ಗಾಂಧೀಜಿಯ ಪಾತ್ರಗಳನ್ನು ವಿವರಿಸಿ, "ಕಾನೂನಿನಲ್ಲಿ ಪೂರ್ಣವಾಗಿ ಅಸ್ಪೃಶ್ಯತೆ ತೊಲಗಿದೆ; ಆದರೆ ಇದು ಹಳೆಯ ಬೇರೂರಿರುವ ರೋಗ; ಮುಖ್ಯವಾಗಿ ಆಚರಣೆಯಲ್ಲಿ ಬದಲಾವಣೆಯಾಗಬೇಕು. ಅಸ್ಪೃಶ್ಯತೆ ತಪ್ಪು ಎಂಬುದು ಎಲ್ಲರಿಗೂ ಮನದಟ್ಟಾಗಿದೆ. ಸರ್ಕಾರಗಳೂ ಪ್ರಜೆಗಳೂ ಇದನ್ನು ತೊಡೆದು ಹಾಕಲು ಸರ್ವ ಪ್ರಯತ್ನವನ್ನೂ ಮಾಡುತ್ತಿದ್ದಾರೆ" ಎಂದೆ. ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳಿಗೆ ಭಾರತದ ಪರಿಸ್ಥಿತಿ, ರಾಜಕೀಯ ತಕ್ಕಮಟ್ಟಿಗೆ ಗೊತ್ತಿದೆ...ಒಬ್ಬ ವಿದ್ಯಾರ್ಥಿ "ಗ್ರಾಮಾಂತರಗಳಲ್ಲಿ ನಿರುದ್ಯೋಗ ನಿವಾರಣೆ, ರಸ್ತೆ - ಸಾರಿಗೆ ಸೌಕರ್ಯ, ಕುಡಿಯುವ ನೀರು ಇವುಗಳ ಪರಿಸ್ಥಿತಿಯು ಉತ್ತಮಗೊಂಡಿದೆಯೆ ?" ಎಂದು ಕೇಳಿದ. ಅವನ ಪ್ರಶ್ನೆ ನನಗೆ ನಿಜವಾಗಿಯೂ ಮಾರ್ಮಿಕವಾಗಿ ತೋರಿತು. ಭಾರತದ ರಾಜಕೀಯಕ್ಕಿಂತ ಅವನಿಗೆ ಇದು ಪ್ರಮುಖವಾಗಿತ್ತು. ಆಗ ನಾನು "ನೀನು ಭಾರತಕ್ಕೆ ಹೋಗಿದ್ದೆಯಾ ?" ಎಂದು ಕೇಳಿದೆ. "ಇಲ್ಲ...ಆದರೆ ನನ್ನ ತಂದೆ ಪ್ರತೀ ವರ್ಷವೂ ಬಿಸಿನೆಸ್ ಗಾಗಿ ಹೋಗಿ ಬರುತ್ತಿದ್ದಾರೆ. ಭಾರತದ ವಿಷಯವೆಲ್ಲ ನಮಗೆ ಗೊತ್ತು. ಬೆಂಗಳೂರು ಸುಂದರ ನಗರವೆಂದೂ ಆದರೆ ಅಲ್ಲಿಯ ಸಾರಿಗೆ ವ್ಯವಸ್ಥೆಯು ಬಹಳ ಅಸಮರ್ಪಕವಾಗಿದೆಯೆಂದೂ ಹೇಳುತ್ತಾರೆ..." ಎಂದ. ನಾನು " ಬೆಂಗಳೂರು ಬಹಳ ಬೇಗ ಬೇಗ ಬೆಳೆಯುತ್ತಿರುವ ನಗರ. ನಗರದ ಬೆಳವಣಿಗೆಯ ವೇಗದಲ್ಲಿ ಸೌಕರ್ಯಗಳೂ ಓಡಲಾರವು. ನಗರದ ಜನ ಬುದ್ಧಿವಂತರಾದುದರಿಂದ ಹೇಗೋ ಸರಿಹೋಗುತ್ತದೆ. ಆದರೆ ಗ್ರಾಮಾಂತರಗಳು ಹಿಂದುಳಿದಿರುವುದರಿಂದ ಅವುಗಳ ಅಭಿವೃದ್ಧಿಗೆ ಗಮನ ಕೊಡಬೇಕು. ಬಸ್ ಗಾಡಿಗಳ ಸಂಖ್ಯೆ ಸಾಲದು. ಸಾಲದುದಕ್ಕೆ ಪೆಟ್ರೋಲ್ ಅಭಾವ " ಎಂದೆ. ಆಗ ಒಬ್ಬ ವಿದ್ಯಾರ್ಥಿ " ಪೆಟ್ರೋಲ್ ಅಭಾವವಾದರೆ ಪ್ರಾಣಿಗಳ ಸಾರಿಗೆ ಏರ್ಪಡಿಸಬಹುದಲ್ಲ ? ಕುದುರೆ ಎತ್ತುಗಳ ಗಾಡಿ, ಸಾರೋಟುಗಳನ್ನು ಏಕೆ ಬಳಸಬಾರದು ? ಇದರಿಂದ ನಿರುದ್ಯೋಗ ಸಮಸ್ಯೆಯೂ ಪರಿಹಾರವಾಗುವುದಿಲ್ಲವೆ ? ವಿಕೇಂದ್ರೀಕರಣದಿಂದಾಗಿ ಹಳ್ಳಿ ಹಳ್ಳಿಗಳಲ್ಲಿ ಜನರಿಗೆ ಉದ್ಯೋಗ ದೊರೆಯುವುದಿಲ್ಲ. ಎಲ್ಲರೂ ಖಾದಿ ಧರಿಸಿದರೆ ಎಲ್ಲರಿಗೂ ಉದ್ಯೋಗ ಎಂದು ಗಾಂಧಿ ಹೇಳಿದರಲ್ಲ. ಭಾರತದಲ್ಲಿಯೂ ಬಟ್ಟೆ ಯಂತ್ರಗಳು ದಿನದಿನಕ್ಕೂ ಹೆಚ್ಚುತ್ತಿವೆ ಎಂದು ಕೇಳಿದೆ.." ಎಂದ. ನನಗೆ ತೋರಿದ ಪ್ರತ್ಯುತ್ತರ ಕೊಟ್ಟೆ. ಈ ಪ್ರಶ್ನೆಗಳನ್ನು ಕೇಳುತ್ತಿದ್ದವರು ಅಮೆರಿಕನ್ ಶ್ರೋತೃಗಳು. ಸಾಮಾನ್ಯ ಅಮೆರಿಕನ್ನರಿಗೆ ಭಾರತದ ವಿಷಯದಲ್ಲಿ ಅಷ್ಟೊಂದು ಸಾಮಾನ್ಯ ತಿಳುವಳಿಕೆ ಇಲ್ಲವಾದರೂ ತಿಳಿದವರು ನಮ್ಮ ಸಮಸ್ಯೆಗಳನ್ನು ಎಷ್ಟು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆಂಬುದು ಆಶ್ಚರ್ಯ ಹುಟ್ಟಿಸಿತು... ಒಬ್ಬ ವಿದ್ಯಾರ್ಥಿಯು " ಜಗತ್ತಿನ ನಾನಾ ಭಾಷೆಗಳಿಗೆ ಭಾರತದ ಪ್ರಾಚೀನ ಮಹಾಕಾವ್ಯಗಳೂ ಗ್ರಂಥಗಳೂ ಅನುವಾದವಾಗಿವೆ. ರಷ್ಯದ ಗೂಸೋವ, ರಾಮಾಯಣವನ್ನು ನಾಟಕಕ್ಕೆ ಅಳವಡಿಸಿ ಈಗ ಹದಿನೇಳು ವರ್ಷಗಳಿಂದಲೂ ಪ್ರದರ್ಶಿಸುತ್ತಿದ್ದಾರೆ. ಮಹಾಭಾರತವೂ ರಷ್ಯನ್ ಗೆ ಪದ್ಯಾನುವಾದವಾಗಿದೆ. ಈಚೆಗೆ ಬಂದ ನಿಮ್ಮ ಗ್ರಂಥಗಳು ಹೀಗೆ ಯಾವುದಾದರೂ ಭಾಷೆಗೆ ಅನುವಾದವಾಗಿದೆಯೆ ? " ಎಂದು ಕೇಳಿದ... ಆ ವಿದ್ಯಾರ್ಥಿಗಳ, ಉಪಾಧ್ಯಾಯರ, ಭಾರತೀಯ ಉದ್ಗ್ರಂಥಗಳ ಜ್ಞಾನವನ್ನು ನೋಡಿ ನಾನು ಅವಾಕ್ಕಾದೆ. ನಾನೂ ಸಹ ವ್ಯಾಸ ವಾಲ್ಮೀಕಿ ಉಪನಿಷತ್ ಋಷಿಗಳಿಂದ ನಾಲ್ಕು ಅಕ್ಷರಗಳನ್ನು ಭಿಕ್ಷೆ ಬೇಡಿ ಇಟ್ಟುಕೊಂಡದ್ದರಿಂದ ಹೇಗೋ ನಿಭಾಯಿಸಿದೆ... ಒಂದು ಸಂದರ್ಭದಲ್ಲಿ - "ನೀವು ಚಂದ್ರಲೋಕಕ್ಕೆ ಹೋಗಿ ಬಂದದ್ದು ಹೀಗೆ. ಭಾರತದ ನಚಿಕೇತ ಸಾವಿರಾರು ವರುಷಗಳ ಹಿಂದೆ ಯಮಲೋಕಕ್ಕೆ ಹೋದದ್ದು ಹಾಗೆ.." ಎನ್ನುತ್ತ ಅವರಿಗೆ ವಾಜಶ್ರವಸ್ಸಿನ ಯಾಗ, ನಚಿಕೇತನನ್ನು ಯಮನಿಗೆ ಕೊಟ್ಟದ್ದು, ವಿಧೇಯತೆಯಿಂದ ಯಮಲೋಕಕ್ಕೆ ಹೋದ ನಚಿಕೇತನು ಉಪವಾಸ ಕೂತು ಏಕನಿಷ್ಠೆಯಿಂದ ಯಮನನ್ನು ಒಲಿಸಿಕೊಂಡದ್ದು, ಆಗ ಮೆಚ್ಚಿ ಸ್ವರ್ಗಲೋಕದ ವೈಭೋಗಗಳನ್ನೆಲ್ಲ ಕೊಡಲು ಯಮನು ಇಚ್ಛಿಸಿದರೂ ಅವನ್ನೆಲ್ಲ ತಿರಸ್ಕರಿಸಿದ ನಚಿಕೇತನು "ಇವೆಲ್ಲವೂ ಅಪ್ರಯೋಜಕ; ಇಂದ್ರಿಯಗಳು ದುರ್ಬಲವಾಗಿ ಮುಪ್ಪು ಬಂದೇ ಬರುತ್ತದೆ. ಜೀವವು ಅಲ್ಪ, ಅಶಾಶ್ವತ. ನಿನ್ನ ಐಶ್ವರ್ಯ, ಆಮೋದಗಳನ್ನು ನೀನೇ ಇಟ್ಟುಕೋ. ನನಗೆ ಶಾಶ್ವತ ಜ್ಞಾನವನ್ನು ಬೋಧಿಸು " ಎಂದು ಕೊನೆಗೂ ಯಮನಿಂದ ಜ್ಞಾನ ಪಡೆದ ನಚಿಕೇತನ ಕತೆ ಹೇಳಿದೆ. "ನೀವೆಲ್ಲರೂ ಭೋಗಗಳನ್ನು ಅನುಭವಿಸಿ ಅನುಭವಿಸಿ ಸಾಕಾಗಿ ಅವುಗಳಲ್ಲಿಯೂ ಜಿಗುಪ್ಸೆಪಟ್ಟು ದಿಕ್ಕೆಟ್ಟವರಾಗಿದ್ದೀರಿ. ಇವೆಲ್ಲವನ್ನೂ ಮೀರಿದುದು ಮತ್ತಾವುದಾದರೂ ಈ ಬಾಳಿನಲ್ಲಿ ಉಂಟೆ ? ಎಂಬುದನ್ನು ಚಿಂತಿಸಲು ನಿಮಗೆ ಈಗ ವಿರಾಮವೂ ಮನಶ್ಶಾಂತಿಯೂ ಇದೆ" ಎಂದೆ. ಶ್ರೋತೃಗಳಲ್ಲಿ ಕೆಲವರು "ಹೌದು. ಆದರೆ ನಮಗೆ ಮಾರ್ಗದರ್ಶಕರಿಲ್ಲ. ಭಾರತವರ್ಷವು ತನ್ನ ಭಾರತೀಯ ಮೌಲ್ಯಗಳನ್ನು ಆಧುನಿಕ ಜಗತ್ತಿನ ಸಮಸ್ಯೆಗಳಿಗೆ ಅನ್ವಯಿಸಿ ವಿಜ್ಞಾನವನ್ನು ಆಧ್ಯಾತ್ಮೀಕರಿಸಿ ಜಗತ್ತಿಗೆ ಮಾರ್ಗದರ್ಶನ ಮಾಡುವುದೆಂದು ನಾವು ನಿರೀಕ್ಷಿಸುತ್ತಿದ್ದೇವೆ" ಎಂದರು. ಒಬ್ಬ ಪ್ರೊಫೆಸರ್ ರು "ನಾವು ಭೌತ ಸುಖಗಳ ಪರಾಕಾಷ್ಠತೆಯನ್ನು ಅನುಭವಿಸಿಯಾಯಿತು. ಇನ್ನು ಆಧ್ಯಾತ್ಮಿಕದತ್ತ ಹೋಗಬೇಕು.." - ಎಂದರು. "

ಹೀಗೆ ಅಮೆರಿಕದಲ್ಲಿ ಗೊರೂರರು ತಮ್ಮನ್ನು ಸ್ಥಾಪಿಸಿ ಬಂದರು. ತಮ್ಮ ಸ್ವಂತ ರೂಪಾಯಿಯನ್ನೇ ಡಾಲರಾಗಿಸಿಕೊಂಡು ಯಾವುದೇ ಪ್ರಾಯೋಜಕರಿಲ್ಲದೆ ತಮ್ಮ ಬಂಧುಗಳು, ಮಕ್ಕಳನ್ನೇ ಅವಲಂಬಿಸಿಕೊಂಡು ಗೊರೂರರು ಅಮೆರಿಕ ಸುತ್ತಿ ಬಂದರು. ತಮ್ಮ ಜತೆಯಲ್ಲಿಯೇ ಅಮೆರಿಕಕ್ಕೆ ಕರೆದೊಯ್ದಿದ್ದ ಹೆಂಡತಿಯ ಬಲದಿಂದ - ಅಯ್ಯಂಗಾರರ ವೈಶಿಷ್ಟ್ಯವಾದ ಹುಳಿಯನ್ನವನ್ನೇ (ಪುಳಿಯೋಗರೆ) ಬಹುಪಾಲು ನೆಚ್ಚಿಕೊಂಡು - ಒಟ್ಟಾರೆಯಾಗಿ, ತಮ್ಮ ಹೊಟ್ಟೆಯಲ್ಲಿ ಭಾರತವನ್ನಿಟ್ಟುಕೊಂಡೇ ಗೊರೂರರು ಅಮೆರಿಕ ಸುತ್ತಿದರು. ಅವರನ್ನು ಅಮೆರಿಕದ ದಿಕ್ಕುದಿಕ್ಕಿಗೆ ಸುತ್ತಿಸಿ ಅಮೆರಿಕದ ಅಂತಃದರ್ಶನ ಪಡೆಯಲು ಸಹಕರಿಸಿದ ಅವರ ಮಕ್ಕಳು, ಅಳಿಯ, ಬಂಧುಬಳಗವನ್ನೂ - ಪುಸ್ತಕ ಓದಿ ಆನಂದಿಸುವವರು ಸ್ಮರಿಸಿಕೊಳ್ಳಲೇಬೇಕು. ಅನನ್ಯ ಅನುಭವ ನೀಡುವ ಪ್ರವಾಸ ಕಥನ - "ಅಮೆರಿಕಾದಲ್ಲಿ ಗೊರೂರು". ಅಂದರೆ - ನೂರಾರು ಅನುಭವಗಳ ಉತ್ಸವದ ನುಡಿತೋರಣ. ಒಂದು ನಿಮಿಷಕ್ಕಿಂತ ಹೆಚ್ಚು ಹೊತ್ತು ಕೂತು ಏಕಾಗ್ರತೆಯಿಂದ ಪಠ್ಯೇತರ ಓದನ್ನು ನಡೆಸುವ ತಾಳ್ಮೆಯಿಲ್ಲದ ಇಂದಿನ ಯುವ ಪೀಳಿಗೆಗೂ ಇಂತಹ ಸರಕು ತಲುಪಬೇಕಾಗಿದೆ.

ಇಂದು, "ಯಂತ್ರಗಳು ( INTERNET, MOBILE...ಇತ್ಯಾದಿ...) ವಿಸರ್ಜಿಸುವ ಅಕ್ಷರಗಳನ್ನಷ್ಟೇ ಓದುತ್ತೇವೆ" ಎಂದು ಪ್ರತಿಜ್ಞೆ ಮಾಡಿದವರೂ ನಿಯಮಿತವಾಗಿ. ಸಾಂಪ್ರದಾಯಿಕ ಓದಿನ ಶೈಲಿಗೆ ಮರಳುವುದಕ್ಕೆ ಇದು ಸಕಾಲ. ಉತ್ತಮ ಅಭಿರುಚಿಯನ್ನು ಬೆಳೆಸುವುದಕ್ಕೆ ಇಂತಹ ಪುಸ್ತಕಗಳು ಸಹಕರಿಸುತ್ತವೆ. ವ್ಯರ್ಥ ಸ್ಪರ್ಧೆಯ ಇಂದಿನ ದಿನಪತ್ರಿಕೆಗಳ ಓದಿನಿಂದ ಮನಸ್ಸು ಕಲುಷಿತವಾದರೆ - ಗೊರೂರು ರಾಮಸ್ವಾಮಿ ಐಯ್ಯಂಗಾರ್ ಮತ್ತು ಅವರ ಅವಧಿಯ ಲೇಖಕರ ಪುಸ್ತಕಗಳು ನಮ್ಮನ್ನು ಮತ್ತೊಮ್ಮೆ ಸ್ವಚ್ಛಗೊಳಿಸಿ, ಹಳಿ ಹತ್ತಿಸಬಲ್ಲವು.

ಸ್ನೇಹಿತರೇ, ಅಕ್ಷರ ಜ್ಞಾನ ಇರುವವರೆಲ್ಲರೂ ಕೈಯ್ಯಲ್ಲಿ ಪುಸ್ತಕವನ್ನು ಹಿಡಿದು ಅಕ್ಷರಾಮೃತ ಸವಿಯುವುದರಿಂದ ಯಾವುದೇ ವಿಷಪೂರಿತ ತರಂಗಗಳ ಸಂಪರ್ಕವಿಲ್ಲದೆ ಸರ್ವಾಂಗ ಆರೋಗ್ಯಕ್ಕೂ ಹಿತವೆನಿಸೀತು. ಬೇಸರ ಓಡಿಸುವ, ಪ್ರಸನ್ನತೆ ನೀಡುವ ರುಚಿಕಟ್ಟಾದ ಓದು - ಇಂದಿನ ಅಗತ್ಯ. "ಅಮೆರಿಕಾದಲ್ಲಿ ಗೊರೂರು" - ಇಂದಿನ ಯುವ ಜನರು ಓದಲೇಬೇಕಾದ ಪುಸ್ತಕ. ಸಾಧ್ಯವಾದರೆ, ಇನ್ನೂ ಓದಿಲ್ಲದಿದ್ದರೆ - ಒಮ್ಮೆ ಓದಿ. ಶ್ರೀ ಹಾ.ಮಾ.ನಾಯಕರ ಮುನ್ನುಡಿಯಿಂದ ತೊಡಗಿ ಪೂರ್ತಿಯಾಗಿ ಓದಿ. ಮರು ಓದಿಗೂ ಅರ್ಹವಾದ ಮಾಹಿತಿಯುಕ್ತ ಪುಸ್ತಕ ಇದು.