೧
ಮಠದ ಪಾರುಪತ್ಯದವರೆಲ್ಲರೂ ತಲೆಗೆ ಕೈ ಕೊಟ್ಟು ಕೂತಿದ್ದರು.....
"ಛೆ....ಇವತ್ತೇ ಹೊರಟು ನಾಳೆಯೊಳಗೆ ಭೈರವಪುರ ತಲುಪುತ್ತಿದ್ದೆವು. ಇವತ್ತೇ ಉಸಿರು ಚೆಲ್ಲಿದರಲ್ಲ ? ಈಗ ಏನು ಮಾಡುವ ?"
"ನಮ್ಮ ಸಮಾಜದ ಹಿರಿಯರು; ನಮಗೆ ಮಾರ್ಗದರ್ಶಕರಾಗಿ ಬದುಕಿದವರು; ಅವರು ಎಲ್ಲರಂತೆ ಸಾಯುವುದಾ ?"
"ಗುರುಗಳು ಸುಮ್ಮನೆ ಸತ್ತಂತೆ ಆಗಬಾರದು..."
ಎಲ್ಲರೂ ಮುಖ ಮುಖ ನೋಡಿಕೊಂಡರು.
"ಹೌದು; ಹೌದು..."
೨
ಅಲ್ಲೆಲ್ಲ ಓಡಾಡುತ್ತ, ಅವರಿವರ ಕಿವಿಯೊಳಗೆ ತನ್ನ ಬಾಯಿ ತೂರಿಸಿ ಸೂಚನೆ ಕೊಡುತ್ತಿದ್ದ ಕಿರಿಯ ಮಾಧವ - ದೂರದಲ್ಲಿ ನಿಂತಿದ್ದ ನನ್ನತ್ತ ತಿರುಗಿ
"ಏನು ಬಂದದ್ದು ರವಿರಾಯರು ?" ಅಂದ.
"ಅಲ್ಲ...ಗುರುಗಳನ್ನು ನೋಡಿಹೋಗುವ ಅಂತ......" ಅನ್ನುತ್ತ ನಿಲ್ಲಿಸಿದೆ.
"ಏನೂ ತೊಂದರೆಯಿಲ್ಲ. ನಿದ್ದೆ ಮಾಡಿದ್ದಾರೆ. ಈಗ ಅವರನ್ನು ಎಬ್ಬಿಸಿ ತೊಂದರೆ ಕೊಡುವುದು ಬೇಡ....ಆಯ್ತಾ ? ನೀವು ನಾಳೆ ಬನ್ನಿ" ಅನ್ನುತ್ತ ಮುಂಡನ್ನು ಮಡಚಿ ಕಟ್ಟುತ್ತ ಹೊರಟುಹೋದರು.
ನಾನು ಅಲ್ಲೇ ಕೂತೆ. "ಗಂಟೆ 9 ಆಗಿದೆ; ಗುರುಗಳು ಇನ್ನೂ ನಿದ್ದೆ ಮಾಡುತ್ತಿದ್ದಾರಾ ? ಹಾಗೆ ಮಲಗುವವರಲ್ಲವಲ್ಲ ?" ಅಂದುಕೊಂಡರೂ ಕೇಳುವ ಅವಕಾಶವೇ ಸಿಗಲಿಲ್ಲ. ತನ್ನ ಗುರುಗಳ ವಯಸ್ಸಿನವರು ಅನ್ನುವ ಗೌರವವೂ ಇಲ್ಲದಂತೆ "ಹೊರಡಿ" ಎನ್ನುವ ಧಾಟಿಯಲ್ಲಿಯೇ ಮಾಧವ ನನಗೆ ಉತ್ತರಿಸಿದ್ದ. ಮಠದಲ್ಲಿ ಯಾಕೋ ವಿಚಿತ್ರ ಮೌನ ಇದ್ದಂತೆಯೂ ಅನ್ನಿಸಿತ್ತು. ಸುತ್ತಲೂ ನೋಡಿದೆ. ಊದುಬತ್ತಿಯ ಪರಿಮಳವು ತುಂಬಿ ಹೋಗಿತ್ತು. "ಇನ್ನೂ ಪೂಜೆ ಆದಂತಿಲ್ಲ. ಆದರೂ..." ಅಂದುಕೊಂಡ ನಾನು ಮಠಕ್ಕೆ ಒಂದು ಸುತ್ತು ಬಂದೆ. ಮನಸ್ಸಿನ ಕಳವಳವನ್ನು ತಣಿಸಿಕೊಳ್ಳುವ ಉಪದ್ವ್ಯಾಪಕ್ಕೆ ಎಳಸದೆ, ನಾನು ತಂದಿದ್ದ ನಾಲ್ಕು ತುಳಸಿ, ಹೂವಿನ ಕಟ್ಟನ್ನು ಜಗಲಿಯ ಮೇಲೆ ಇಟ್ಟೆ. ಆಗೊಮ್ಮೆ ಈಗೊಮ್ಮೆ ಹಜಾರದಲ್ಲಿ ಇಣುಕಿ ಹೋಗುತ್ತಿದ್ದ ಮುಖಗಳು ಅಂದು ನನ್ನತ್ತ ತಿರುಗಿಯೂ ನೋಡುತ್ತಿರಲಿಲ್ಲ; ಕಣ್ಣು ತಪ್ಪಿಸಿ ಜಾರಿಕೊಳ್ಳುವಂತೆ ಕಾಣುತ್ತಿತ್ತು. ಯಾಕೋ ಅಲ್ಲಿಂದ ಹೊರಡಲೂ ಆಗದೆ ಕೂರಲೂ ಆಗದಂತಹ ಒದ್ದಾಟವು ಅಸಹನೀಯ ಅನ್ನಿಸಿದ ನಾನು ಅಲ್ಲಿಂದ ಎದ್ದು ಹೊರಬಂದು ಬಿರಬಿರನೆ ನನ್ನ ಮನೆಯತ್ತ ನಡೆದೆ.
೩
"ಪಪ್ಪಾ, ಇವತ್ತಿನ ಪತ್ರಿಕೆ ನೋಡಿದಿರಾ ? ನಿಮ್ಮ ಶಾಸ್ತ್ರಿಗಳು - ಅಂದರೆ ಗುರುಗಳು ಸತ್ತರಂತೆ." ಅನ್ನುತ್ತ ಓಡಿಬಂದ ಮಗ ವಿಶ್ವನ ಕೈಯ್ಯಿಂದ ಪತ್ರಿಕೆಯನ್ನು ಎಳೆದುಕೊಂಡ ರವಿರಾಯರು "ಯಾವಾಗಂತೆ ? ಅಯ್ಯೋ..ಮೊನ್ನೆ ಮಠಕ್ಕೆ ಹೋಗಿದ್ದರೂ ನೋಡಲಾಗಲಿಲ್ಲವಲ್ಲ..." ಅನ್ನುತ್ತ ಓದತೊಡಗಿದರು.
"ಸಾವಿರಾರು ಶಿಷ್ಯರಿಗೆ ವಿದ್ಯಾದಾನ, ಅನ್ನ ದಾನ ಮಾಡಿ ಬದುಕನ್ನು ಸಾರ್ಥಕಗೊಳಿಸಿಕೊಂಡ ಗುರು ಶ್ರೀ ಶ್ರೀ ಸಿಂಗಾರಣ್ಯರು ಇಂದು ಬೆಳಿಗ್ಗೆ 9 ಗಂಟೆ, 13 ನಿಮಿಷ, 28 ಸೆಕೆಂಡಿಗೆ ನಿಧನರಾದರು. ಗುರುಗಳ ಇಚ್ಛೆಯಂತೆ ಶಿಷ್ಯರೆಲ್ಲರೂ ಮೊನ್ನೆಯೇ ಅವರನ್ನು ಭೈರವಪುರಕ್ಕೆ ಕರೆದೊಯ್ದಿದ್ದರು. ಅವರ ಕೊನೆಯ ಇಚ್ಛೆಯಂತೆ ಭೈರವನ ದರ್ಶನವನ್ನೂ ಮಾಡಿಸಿದ್ದರು. ಮರುದಿನ ಬೆಳಗಿನ ನಿತ್ಯದ ಪೂಜೆಯನ್ನು ಹಿರಿಯರೇ ಮಾಡಿದ್ದರು. ಪೂಜೆ ಮುಗಿಸಿ ಶಿಷ್ಯರಿಗೆ ತೀರ್ಥ ಕೊಡುವಾಗ "ಯಾಕೋ ಆಯಾಸವಾಗುತ್ತಿದೆ..." ಅಂದಿದ್ದರು. ಪೂಜೆಯ ನಂತರ ಅವರ ಪಟ್ಟ ಶಿಷ್ಯರಾಗಿದ್ದ ಶ್ರೀ ಶ್ರೀ ಮಾಧವಾರಣ್ಯರಿಗೆ ತೀರ್ಥ ಕೊಟ್ಟು ತಲೆ ಮುಟ್ಟಿ ಆಶೀರ್ವದಿಸುವಾಗಲೇ ನಿಧಾನವಾಗಿ ಕುಸಿದು ಒರಗಿದ್ದರು. "ಶರಣನ ಜೀವನವನ್ನು ಮರಣದಲ್ಲಿ ನೋಡು" ಎಂಬಂತೆ ಗುರುಗಳು ತಮ್ಮ ಕೊನೆಯ ಕ್ಷಣದ ವರೆಗೂ ಕರ್ತವ್ಯಕರ್ಮಗಳನ್ನು ನಿಷ್ಠೆಯಿಂದ ನಿರ್ವಹಿಸುತ್ತಲೇ ದೈವಾಧೀನರಾದರು. ತಾವು ಇಚ್ಛೆಪಟ್ಟಂತೆಯೇ ಶಿಷ್ಯನಿಗೆ ಜವಾಬ್ದಾರಿಯನ್ನು ನೀಡಿ ಅನಾಯಾಸವಾಗಿ ದೇಹ ತ್ಯಜಿಸಿದರು..." ಪತ್ರಿಕೆಯಿಂದ ತಲೆಯೆತ್ತಿ ನಿಟ್ಟುಸಿರುಬಿಟ್ಟ ರವಿರಾಯರು ಮುಂದಿನ ಸುದ್ದಿ ಓದತೊಡಗಿದರು.
"ಗುರುಗಳ ಇಚ್ಛೆಯಂತೆ ಭೈರವಪುರದಲ್ಲೇ ಅವರ ಉತ್ತರಕ್ರಿಯೆಗಳು ನಡೆಯಲಿವೆ. ಅವರ ಪಟ್ಟ ಶಿಷ್ಯ ಶ್ರೀ ಶ್ರೀ ಮಾಧವಾರಣ್ಯರು ಗುರು ಮಠದ ಜವಾಬ್ದಾರಿ ಹೊತ್ತಿದ್ದು ಅವರ ನಿರ್ದೇಶನದಂತೆ ಮುಂದಿನ ಕಾರ್ಯಗಳು ನಡೆಯಲಿವೆ. ಪೀಠದ ಭಕ್ತಾದಿಗಳೆಲ್ಲರೂ ಸಂಯಮದಿಂದ ಗುರು ಕಾರ್ಯದಲ್ಲಿ ಭಾಗವಹಿಸಬೇಕೆಂದು ನೂತನ ಪೀಠಾಧಿಪತಿಗಳಾಗಲಿರುವ ಶ್ರೀ ಶ್ರೀ ಮಾಧವಾರಣ್ಯರು ಅಪ್ಪಣೆ ಕೊಡಿಸಿದ್ದಾರೆ."
"ಛೆ...." ಅನ್ನುತ್ತ ಪತ್ರಿಕೆಯನ್ನು ಮಡಿಸಿಟ್ಟ ಪಪ್ಪನನ್ನು ನೋಡಿದ ವಿಶ್ವನಿಗೂ ಬೇಸರವಾಗಿತ್ತು. "ಪಪ್ಪಾ, ಗುರುಗಳಿಗೆ ಅಂಥ ವಯಸ್ಸೇನೂ ಆಗಿರಲಿಲ್ಲ. ಆದರೆ ಮರಣವು ನಮ್ಮ ಕೈಯ್ಯಲ್ಲುಂಟಾ ? ಸುಖ ಮರಣ ಅಂತೆ. ನೀವು ಸಮಾಧಾನ ಮಾಡಿಕೊಳ್ಳಿ. ಆರೋಗ್ಯ ಹಾಳು ಮಾಡಿಕೊಳ್ಳಬೇಡಿ. ನಿಮಗೆ ಅಲ್ಲಿಗೆ ಹೋಗಿ ಗುರುಗಳ ಅಪರಕಾರ್ಯದಲ್ಲಿ ಭಾಗವಹಿಸಬೇಕು ಅಂತಿದ್ದರೆ ನಾನೇ ಕರೆದುಕೊಂಡು ಹೋಗುತ್ತೇನೆ..." ಅಂದ ಮಗನನ್ನು ನೋಡಿದ ರವಿರಾಯರು "ಬೇಡ ಮಗೂ...ನನಗೆ ಇದೇ ಭೈರವಪುರ; ನನ್ನ ಕುಟುಂಬವೇ ವೃಂದಾವನ. ಇಲ್ಲಿ ಇಲ್ಲದ್ದನ್ನು ಎಲ್ಲೆಲ್ಲೋ ಹುಡುಕುವುದು ಬೇಡ. ಏನೋ... ಒಂದಷ್ಟು ದಿನ ಆ ಗುರುಗಳ ಜತೆಯಲ್ಲಿ ನಾನೂ ಇದ್ದೆನಲ್ಲ ? ಹಳೆಯ ಸಂಬಂಧ... ಅದಕ್ಕೇ ಕೊಂಡಿ ಮುರಿದ ಹಾಗೆ ಭಾಸವಾಯಿತು... ಇವೆಲ್ಲ ಕ್ಷಣಿಕ... ಏಳು. ನಿನ್ನ ಕೆಲಸಕ್ಕೆ ಹೊರಡು..." ಅನ್ನುತ್ತ ರವಿರಾಯರು ಪತ್ರಿಕೆ ಮಡಿಸಿಟ್ಟು, ತಾವು ಕೂತಲ್ಲಿಂದ ಎದ್ದರು. ಕಾಲಿಗೆ ಚಪ್ಪಲಿ ಸಿಕ್ಕಿಸಿಕೊಂಡು ಊರಿನ ಮಠದತ್ತ ಹೆಜ್ಜೆ ಹಾಕಿದರು. ಮನಸ್ಸಿನಲ್ಲಿ ಒಂದೇ ಯೋಚನೆ..."ಮೊನ್ನೆ ನಾನು ಮಠಕ್ಕೆ ಹೋದಾಗ ಎಲ್ಲರೂ ಸೇರಿಕೊಂಡು ನನ್ನಿಂದ ಏನನ್ನು ಬಚ್ಚಿಟ್ಟಿರಬಹುದು ?"
೪
ಆಗ ನಾವಿಬ್ಬರೂ ಶಾಲೆಯ ಗೆಳೆಯರು. ಓದುವುದರಲ್ಲಿ ಜಾಣನಾಗಿದ್ದ ಶಾಸ್ತ್ರಿಯು ನನಗಿಂತ ನಾಲ್ಕು ವರ್ಷ ದೊಡ್ಡವನು. ಹತ್ತಿರದ ಮನೆಯವರಾದ್ದರಿಂದ ಒಟ್ಟಿಗೆ ಶಾಲೆಗೆ ಹೋಗಿ ಬರುತ್ತಿದ್ದೆವು. ಆರನೇ ತರಗತಿಯಲ್ಲಿರುವಾಗಲೇ ಶಾಸ್ತ್ರಿಯನ್ನು ವೇದಾಭ್ಯಾಸಕ್ಕೆಂದು ಮಠಕ್ಕೆ ಸೇರಿಸಿದ್ದರು. ಆದರೆ ನಾನು ನನ್ನ ಶಾಲಾ ವಿದ್ಯಾಭ್ಯಾಸ ಮುಂದುವರಿಸಿದ್ದೆ. ಆಮೇಲೆ ನನಗೂ ಶಾಸ್ತ್ರಿಗೂ ಸಂಪರ್ಕವೇ ಇರಲಿಲ್ಲ. ಪರವೂರಿನಲ್ಲಿದ್ದು ನನ್ನ ಕಾಲೇಜಿನ ತಿರುಗಾಟವೆಲ್ಲ ಮುಗಿದ ಮೇಲೆ ಊರಿಗೇ ಬಂದು ಅಣ್ಣನ ವ್ಯಾಪಾರದ ಮಂಡಿಯಲ್ಲಿ ನಾನೂ ಜವಾಬ್ದಾರಿ ವಹಿಸಿಕೊಂಡೆ. ಅದೇ ವರ್ಷ ಊರಿನ ಮಠದ ಗುರುಗಳಾಗಿ ಸಿಂಗಾರಣ್ಯರು ಬಂದದ್ದು. ಒಂದು ದಿನ ಮಠಕ್ಕೆ ಹೋಗಿದ್ದ ನನಗೆ ಅವರ ಭೇಟಿಯಾಯಿತು. ಮಂತ್ರಾಕ್ಷತೆ ನೀಡಿ, ನನ್ನ ಬಗ್ಗೆ ತಿಳಿದುಕೊಂಡ ಸ್ವಾಮಿಗಳು "ಏನಪ್ಪ ? ಶಾಸ್ತ್ರಿಯನ್ನು ಮರೆತೇ ಬಿಟ್ಟದ್ದಾ ?" ಅಂದರು. ಪೂರ್ತಿಯಾಗಿ ರೂಪ ಬದಲಾಗಿದ್ದ ಅವರನ್ನು ಕಣ್ಣು ಬಿಟ್ಟು ಕಂಡ ನನಗೆ ಚಕ್ಕೆಂದು ನೆನಪಾಗಿತ್ತು. "ಕ್ಷಮಿಸಿ. ತುಂಬ ವರ್ಷವಾಯಿತಲ್ಲ ? ಅದೂ ನಿಮ್ಮ ಈ ರೂಪದಲ್ಲಿ ಗುರುತಿಸುವುದು ಕಷ್ಟ." ಅನ್ನುತ್ತ ನಕ್ಕಿದ್ದೆ. ಸ್ವಲ್ಪ ಹೊತ್ತು ಪೂರ್ವಾಶ್ರಮದ ನೆನಪು, ನನ್ನ ಬದುಕು ವಹಿವಾಟಿನ ವಿಷಯ ಮಾತಾಡಿ, "ರವಿ, ನೀನು ಆಗಾಗ ಬಿಡುವು ಮಾಡಿಕೊಂಡು ಬರುತ್ತಿರು. ಮಠದ ಲೆಕ್ಕಪತ್ರವನ್ನೆಲ್ಲ ನೋಡುವುದರಲ್ಲಿ ನನಗೆ ಸಹಾಯಕನಾಗಿರು.." ಎಂದು ಹೇಳಿ ಅಂದು ಕಳಿಸಿಕೊಟ್ಟಿದ್ದರು. ಅಂದಿನಿಂದ ನಾನು ನಿಯಮಿತವಾಗಿ ಮಠಕ್ಕೆ ಹೋಗುತ್ತಿದ್ದೆ. ಬರಬರುತ್ತ ಸ್ವಾಮಿಗಳ ಬಲಗೈ ಬಂಟನಂತಾಗಿದ್ದೆ.
ಸುಮಾರು 20 ವರ್ಷ ಹೀಗೇ ನಡೆಯಿತು. ಮಠದ ಭಕ್ತರ ಸಂಖ್ಯೆ, ಆದಾಯವೂ ಹೆಚ್ಚುತ್ತ ಹೋಯಿತು. ಆದರೆ ಅದೇ ಹೊತ್ತಿನಲ್ಲಿ - ಗುರುಗಳನ್ನು ಆಗಾಗ ಅನಾರೋಗ್ಯವೊಂದು ಪೀಡಿಸತೊಡಗಿತು. ಅವರಿಗೆ ಸ್ವಯಂ ನಿಯಂತ್ರಣದ ಪಾಠ ಹೇಳುವುದಕ್ಕೆ ನಾನೂ ಮುಂದಾಗಲಿಲ್ಲ. ಅದು ನನ್ನ ಸ್ವಭಾವವೂ ಆಗಿರಲಿಲ್ಲ. ಇಂತಹ ದಿನಗಳಲ್ಲಿ ಸ್ವಾಮಿಗಳಿಗೆ ಮಠದ ಚಿಂತೆಯೂ ಕಾಡುತ್ತಿತ್ತು. ತನ್ನ ನಂತರ ಮಠದ ಜವಾಬ್ದಾರಿ ವಹಿಸಬಲ್ಲ ಯೋಗ್ಯ ವ್ಯಕ್ತಿಯನ್ನು ಆರಿಸಿ, ಸನ್ಯಾಸ ದೀಕ್ಷೆ ಕೊಟ್ಟು, ಕಿರಿಯನೊಬ್ಬನನ್ನು ಉತ್ತರಾಧಿಕಾರಿಯಾಗಿಸಿಕೊಳ್ಳಬೇಕು ಅಂದುಕೊಂಡರು. ಅದೇ ಊರಿನವನೇ ಆದ - ಕಾಲೇಜಿನ ಮುಖ ಕಂಡಿದ್ದ ಒಬ್ಬ ಯುವಕನನ್ನು ಆರಿಸಿಕೊಂಡು ಆಮೇಲೆ ನನ್ನ ಅಭಿಪ್ರಾಯವನ್ನೂ ಕೇಳಿದ್ದರು. ಆಗ ಆ ಹುಡುಗನ ಹಿನ್ನೆಲೆಯನ್ನೆಲ್ಲ ವಿಚಾರಿಸಿದ ನಾನು "ಸ್ವಲ್ಪ ನಿಧಾನಿಸಿ. ಇನ್ನೂ ಒಳ್ಳೆಯ - ಸೂಕ್ತನಾದ ವ್ಯಕ್ತಿ ಸಿಗಬಹುದು..." ಎಂದಷ್ಟೇ ಹೇಳಿದ್ದೆ. ಆದರೆ ಅದು ಎಂತಹ ಒತ್ತಡ ಬಂದಿತ್ತೋ... ಗುರುಗಳು ಅದೇ ಹುಡುಗನನ್ನು ಕಿರಿಯ ಸ್ವಾಮಿಯಾಗಿ ಆರಿಸಿ ಸ್ವೀಕರಿಸಿಯೂ ಬಿಟ್ಟರು. ಮಾಧವನು ಕಿರಿಯ ಸ್ವಾಮಿಯಾದ ಎರಡು ವರ್ಷದಲ್ಲೇ - ನನ್ನನ್ನು ಮಠದ ಜವಾಬ್ದಾರಿಯಿಂದ ಒಂದೊಂದಾಗಿ ಬಿಡುಗಡೆಗೊಳಿಸುತ್ತ ಬಂದರು. ಒಂದು ಸಂದರ್ಭದಲ್ಲಿ, ಹಿರಿಯರೊಂದಿಗೆ ಕೂತಿದ್ದ ಆ ಕಿರಿಯ ಸ್ವಾಮಿಗಳಿಗೆ ನಾನು ನಮಸ್ಕರಿಸಿದಾಗ "ನನ್ನನ್ನು ಅಯೋಗ್ಯ ಎಂದಿದ್ದ ನೀವು ನನಗೆ ನಮಸ್ಕರಿಸಬೇಡಿ...ನಾವು ನಿಮ್ಮ ಯೋಗ್ಯತೆಯವರಲ್ಲ..." ಅಂದಿದ್ದರು. ಆಗ ಅಲ್ಲೇ ಇದ್ದ ಗುರುಗಳು ತಟಸ್ಥವಾಗಿದ್ದರು. ಅವರ ಆಯ್ಕೆಯ ಸಂದರ್ಭದಲ್ಲಿ ನನಗೂ ಹಿರಿಯ ಗುರುಗಳಿಗೂ ನಡೆದಿದ್ದ ಅಂದಿನ ಸಂಭಾಷಣೆಯನ್ನು ಕಿರಿಯರ ಕಿವಿಗೂ ಬೀಳುವಂತೆ ಮಾಡಿದ ಪುಣ್ಯಾತ್ಮ ಯಾರಿರಬಹುದು ? ಎಂದು ಎರಡು ಮೂರು ದಿನ ನಾನೂ ತಲೆ ಕೆಡಿಸಿಕೊಂಡಿದ್ದೆ. ಬರಬರುತ್ತ ಮಠಕ್ಕೆ ನಾನು ಹೊರಗಿನವನಾಗತೊಡಗಿದ್ದೆ. ಹಿರಿಯ ಗುರುಗಳನ್ನು ನಾನು ಕಾಣಬೇಕಾದರೂ ಕಿರಿಯರ ಅಪ್ಪಣೆ ಪಡೆಯುವಂತಾಯ್ತು.
೫
ಬಹುಶಃ ಒಂದು ತಿಂಗಳ ಹಿಂದೆ, ಅಕಸ್ಮಾತ್ ಮಠಕ್ಕೆ ಹೋಗಿದ್ದ ನಾನು ಹಿರಿಯರನ್ನು ಭೇಟಿಯಾಗಿದ್ದೆ. ಕಿರಿಯ ಸ್ವಾಮಿಗಳು ಅಂದು ಮಠದಲ್ಲಿ ಇರಲಿಲ್ಲ. ಖಿನ್ನರಾಗಿ ಒಬ್ಬರೇ ಕೂತಿದ್ದ ಗುರುಗಳು ಅಂದು ನನ್ನೊಂದಿಗೆ ಮನಬಿಚ್ಚಿ ಮಾತಾಡಿದ್ದರು. "ಯಾಕೋ...ಎಲ್ಲವನ್ನೂ ಬಿಟ್ಟು ದೂರ ಹೋಗುವ ಅನ್ನಿಸುತ್ತಿದೆ ರವೀ...ಅವತ್ತು ನೀನು ಹೇಳಿದ ಮಾತನ್ನು ನಾನು ಕೇಳಬೇಕಿತ್ತು...ಆಗ ಅದೊಂದು ಸಂಕಟ ಇತ್ತು. ಅವಳು ಎಲ್ಲಿ ಬಾಯಿ ಬಿಡುತ್ತಾಳೋ ಅಂತ ಹೆದರಿ ಅವಳು ತೋರಿಸಿದವರನ್ನೇ ಒಪ್ಪಿಕೊಂಡುಬಿಟ್ಟೆ. ರವೀ, ಅಂದಿನಿಂದ ನಾನು ಬರೀ ಸೂತ್ರದ ಬೊಂಬೆ ಆಗಿಬಿಟ್ಟೆ. ನಿನ್ನಲ್ಲಾದರೂ ಏನಾದರೂ ಹೇಳಿಕೊಳ್ಳುವ ಅಂತಂದರೆ ನೀನು ಮಠಕ್ಕೆ ಬರುವುದನ್ನೇ ಕಡಿಮೆ ಮಾಡಿದೆ. ಒಮ್ಮೊಮ್ಮೆ ಬಂದಾಗಲೂ ಮಾತಾಡುವ ಸನ್ನಿವೇಶವೂ ಇರುತ್ತಿರಲಿಲ್ಲ. ಒಟ್ಟಿನಲ್ಲಿ ನಾನು ತಪ್ಪು ಮಾಡಿದೆ ರವೀ.. ಈ ಸ್ವಾಮಿತನವೇ ನನಗೆ ಬೇಡವಾಗಿತ್ತು. ನಿನ್ನ ಹಾಗೇ ಓದಿಕೊಂಡು ಸಂಸಾರವಂದಿಗನಾಗಿ ಎಲ್ಲರಂತೆ ನಾನೂ ಇರಬಹುದಿತ್ತು. ಈಗ ನೋಡು...ತ್ರಿಶಂಕು ಸ್ಥಿತಿ. ಈಗ ಇದೇ ಮಠದಲ್ಲಿ ನನ್ನ ಕಣ್ಣೆದುರಿನಲ್ಲೇ ಆಗಬಾರದ್ದೆಲ್ಲ ಆಗುತ್ತಿದೆ. ಏನೊಂದು ಮಾತನಾಡುವ ನೈತಿಕ ಶಕ್ತಿಯೂ ನನಗೀಗ ಉಳಿದಿಲ್ಲ. ಉಳಿದದ್ದು ಒಂದೇ. ನನ್ನ ಈ ದೇಹ; ತಟಕು ಉಸಿರು. ಅಷ್ಟೆ. ನಾನು ಸಾಯಬೇಕು ರವೀ. ಆದರೆ ಹೇಗೆ ?.."
ಗುರುಗಳು ಅಷ್ಟು ಹತಾಶರಾದುದನ್ನು - ನಾನು ಅದುವರೆಗೆ ಕಂಡಿರಲಿಲ್ಲ. "ಗುರುಗಳೇ, ಎಂದೋ ಆಗಿಹೋದ ಘಟನೆಯನ್ನೇ ನೆನಪಿಸಿಕೊಂಡು ದುಃಖಿಸಬೇಡಿ. ನೀವು ತುಂಬ ಒಳ್ಳೆಯ ಕೆಲಸಗಳನ್ನೂ ಮಾಡಿದ್ದೀರಿ. ಇಲ್ಲಿ ಅನ್ನದಾನ, ವಿದ್ಯಾದಾನ ಬೇಕಾದಷ್ಟು ನಡೆದಿದೆ. ಈಗಲೂ ನೀವು ಅವನ್ನೆಲ್ಲ ಮಾಡಬಲ್ಲಿರಿ. ನಿಮ್ಮ ಮನಸ್ಸನ್ನು ನಿಮಗೆ ತೃಪ್ತಿ ಕೊಡುವ ಆಧ್ಯಾತ್ಮಿಕತೆಯಲ್ಲಿ, ದುಃಖಿಗಳ ಸೇವೆಯಲ್ಲಿ ತೊಡಗಿಸಿಕೊಂಡರೆ ನೆಮ್ಮದಿ ಸಿಗುತ್ತದೆ..." ಅಂತ ಕಷ್ಟದಿಂದ ಹೇಳಿದೆ.
"ಆದರೆ ಯಾವುದೇ ಒಳ್ಳೆಯ ಕೆಲಸ ಮಾಡುವುದಕ್ಕೂ ಸ್ವಸ್ಥ ಮನಸ್ಸು ಬೇಕಲ್ಲ ? ದಿನ ಬೆಳಗಾದರೆ ಕಂಡಕಂಡಲ್ಲಿ ನನ್ನಿಂದ ದಸ್ಕತ್ತು ಹಾಕಿಸಿಕೊಳ್ಳುವ ನನ್ನ ಶಿಷ್ಯನೆಂಬ ಈ ಭೂತದಿಂದ ಬಿಡುಗಡೆಯಾಗುವುದು ಹೇಗೆ ? ಅದಕ್ಕೇ.. ಅವನು ಮೊದಲಿಗೆ ನಿನ್ನನ್ನು ಈ ಮಠದಿಂದ ಓಡಿಸಿ ಹಾಕಿದ್ದಾನೆ...ನನ್ನ ಶಕ್ತಿಯನ್ನೇ ಮುರಿದು ಹಾಕಿದ್ದಾನೆ..."
"ನೀವು ದಸ್ಕತ್ತು ಹಾಕಬೇಡಿ.." ಅಂದೆ.
"ದಸ್ಕತ್ತು ಹಾಕದಿದ್ದರೆ "ನಾನು ನಿಮ್ಮ ಮಗ" ಅಂತ ಊರಿಗೆಲ್ಲ ಹೇಳುತ್ತೇನೆ ಅನ್ನುವ ಧಮಕಿ ಹಾಕುತ್ತಾನೆ...ಅವನಿಗೆ ಅವನ ಅಮ್ಮನ ಬೆಂಬಲವೂ ಇದೆ...ಎಂದೋ ಮಾಡಿದ ಒಂದು ತಪ್ಪಿಗೆ ನನ್ನ ಜೊತೆಗೆ ಈ ಮಠವೂ ದಣಿಯುವಂತಾಯಿತಲ್ಲ ರವೀ ? ನನ್ನನ್ನು ನಂಬಿ ಮಂತ್ರೋಪದೇಶ ಮಾಡಿ ಜವಾಬ್ದಾರಿ ಕೊಟ್ಟು ನಡೆದ ಆ ನನ್ನ ಗುರುಗಳಿಗೆ ನನ್ನಿಂದ ಇಂತಹ ದ್ರೋಹವಾಯ್ತಲ್ಲ.. " ಗುರುಗಳು ಶಲ್ಯದಿಂದ ಮುಖ ಒರೆಸಿಕೊಂಡರು.
"ಗುರುಗಳೇ, ಈಗ ಮಠದ ಪಾರುಪತ್ಯದಿಂದ ನಿಮ್ಮ ಹಾಗೆ ನನ್ನನ್ನೂ ಹೊರಗಿಟ್ಟಿದ್ದಾರೆ. ಕಿರಿಯ ಸ್ವಾಮಿಗಳಿಗೆ ನನ್ನ ಬಗ್ಗೆ ಬಹುಶಃ ವಿಶ್ವಾಸವಿಲ್ಲ. ಆದರೂ ನಿಮ್ಮನ್ನು ನೋಡಿ ಹೋಗುವ ಮನಸ್ಸಾದರೆ ಒಮ್ಮೊಮ್ಮೆ ನಾನು ಬರುವುದಿದೆ. ಆದರೆ ಬಂದಾಗೆಲ್ಲ ನಿಮ್ಮ ದರ್ಶನದ ಅವಕಾಶ ಸಿಗುವುದಿಲ್ಲ. ನಿಮ್ಮ ಸುತ್ತ ಎತ್ತರದ ಗೋಡೆ ಕಟ್ಟಿ ಇಟ್ಟಿದ್ದಾರೆ ಅಂತ ನನಗೂ ಅನ್ನಿಸಿದೆ. ಆದರೆ ನಾನು ಅಸಹಾಯಕ. ಯಾವ ದೂರುದುಮ್ಮಾನವಿಲ್ಲದೆ ಈಗಲೂ ನಾನು ನನ್ನ ಶ್ರದ್ಧೆ ಉಳಿಸಿಕೊಂಡಿದ್ದೇನೆ. ಇವತ್ತು ಯಾಕೋ ನಾನು ಬಂದಾಗ ಯಾರೂ ನನ್ನನ್ನು ತಡೆಯಲಿಲ್ಲ. ಅದಕ್ಕೇ..ನಿಮ್ಮ ವರೆಗೆ ಬರಲಿಕ್ಕಾಯಿತು. ಆದರೆ ನಿಮ್ಮನ್ನು ಈ ಬಂಧನದಿಂದ ನಾನಾದರೂ ಹೇಗೆ ಬಿಡಿಸುವುದು ? ಭಕ್ತರನ್ನೆಲ್ಲ ಒಟ್ಟು ಸೇರಿಸಿ ಬಲಪ್ರಯೋಗಕ್ಕೆ ಹೊರಟರೆ ಒಳಗಿನ ಸಂಗತಿಯು ಊರಿಗೆಲ್ಲ ಗೊತ್ತಾಗಿ ಮಠದ ಹೆಸರು ಹಾಳಾಗುವುದಲ್ಲ ? ನನಗೇನೂ ತೋಚುವುದಿಲ್ಲ..."
ಸ್ವಾಮಿಗಳು ನಕ್ಕರು. "ಇರಲಿ. ಅವರವರ ಕರ್ಮ ಅವರವರೇ ಅನುಭವಿಸಬೇಕು...ದುಡ್ಡುಕಾಸಿನ ಯಜಮಾನಿಕೆಯನ್ನು ಅವನು ನನ್ನಿಂದ ಕಿತ್ತುಕೊಂಡಾಗಿದೆ. ಬಹುಪಾಲು ಅಧಿಕಾರವನ್ನೂ ವರ್ಗಾಯಿಸಿಕೊಂಡಾಗಿದೆ. ಇನ್ನೂ ಕಾಟ ತಪ್ಪಿಲ್ಲ. ಈ ಒತ್ತಡದಲ್ಲಿ ಬಹುಶಃ ನಾನಿನ್ನು ಬಹಳ ಕಾಲ ಬದುಕಲಿಕ್ಕಿಲ್ಲ. ತಾನಾಗಿಯೇ ಗೋಡೆ ಬಿದ್ದು ಬಯಲಾಗುವ ಮೊದಲೇ ನನ್ನನ್ನು ಕಳಿಸಿಕೊಡುವ ತಯಾರಿಯೂ ನಡೆದಂತಿದೆ..." ಅಂದವರು ಸ್ವಲ್ಪ ಸಮಯ ಕಣ್ಣುಮುಚ್ಚಿ ಕೂತಿದ್ದರು.
"ಹಾಗೆಲ್ಲ ಏನೂ ನಡೆಯುವುದಿಲ್ಲ. ನೀವು ಧೈರ್ಯದಿಂದ ವ್ಯವಹರಿಸಿ. ನೀವೇ ಕಂಗಾಲಾಗಿ ಕೂತರೆ ಪಿತೂರಿಯ ಕೆಲಸ ಸುಲಭವಾಗುತ್ತದೆ...ಮೊದಲಿನಂತೇ ಚುರುಕಾಗಿ ಮಠದಲ್ಲಿ ಇದ್ದುಬಿಡಿ...ಚಿಂತೆ ಮಾಡಿದರೆ ಕೆಲಸ ಕೆಟ್ಟು ಹೋಗುತ್ತದೆ..." ಅನ್ನುತ್ತ ಅನ್ನಿಸಿದ್ದನ್ನು ಗಳಹಿ ಬಂದಿದ್ದೆ. ಆದರೆ ಗುರುಗಳು ಕೊನೆಗೊಂದು ಮಾತು ಹೇಳಿದ್ದರು. "ರವೀ, ಈ ಸನ್ಯಾಸದ ವೇಷ ಇದೆಯಲ್ಲ ? ಇದು ನೋಡುವುದಕ್ಕೆ ಮಾತ್ರ ಸರಳ; ನಿಜವಾದ ಸನ್ಯಾಸಿಯ ಬದುಕು - ಅತಿ ಕಠಿಣ. ಈ ಮಾಡಿಲ್ಲದ ಗೂಡಿನಲ್ಲಿ ಎಲ್ಲರಿಗೂ ಬದುಕಲಾಗುವುದಿಲ್ಲ. ಪೂರ್ಣತೆಯಿಲ್ಲದ ಸನ್ಯಾಸಿಯ ಬದುಕಿನಲ್ಲಿ - ನನ್ನ ಹಾಗೆ ನೆಮ್ಮದಿಯೂ ಇರುವುದಿಲ್ಲ. ನನ್ನದಲ್ಲದ ಈ ಜಾಗದಲ್ಲಿ ಇಷ್ಟು ದಿನ ಯಾಕೆ ನಾನಿದ್ದೆನೊ ?...ಎಲ್ಲೂ ಸಲ್ಲದ ಬದುಕಿದು..." ಅಂದವರೇ ತಮ್ಮ ಒಳಕೋಣೆಗೆ ಹೋಗಿ ಬಂದು "ರವೀ, ತಕೋ." ಅನ್ನುತ್ತ ಪ್ರಸಾದದ ಜೊತೆಗೆ ಒಂದು ಲಕೋಟೆಯನ್ನೂ ಕೊಟ್ಟಿದ್ದರು.
"ಏನಿದು ?" ಅಂದೆ.
"ಅಷ್ಟು ವರ್ಷ ನನ್ನ ಜೊತೆಗಿದ್ದು ಲೆಕ್ಕಪತ್ರ ನೋಡಿಕೊಂಡರೂ ನಿನಗೆ ನಾನು ಏನನ್ನೂ ಕೊಟ್ಟಿರಲಿಲ್ಲ. ನೀನು ಅಪೇಕ್ಷಿಸಿದವನೂ ಅಲ್ಲ. ಈಗ ಇದನ್ನು ತಕೋ. ಈ ಮಠಪಟ ಕಟ್ಟಿದ್ದು ಬೆಳೆಸಿದ್ದು, ಪ್ರವಚನ, ವೈಭವ...ಎಲ್ಲವೂ ಸಾಕು ಅನ್ನಿಸಿದೆ. ಈ ಗೋರುವುದು, ಸೋರುವುದು ಎಲ್ಲವೂ ವ್ಯರ್ಥ ಕರ್ಮಗಳು. ನಿಮ್ಮಂಥ ನಿಸ್ವಾರ್ಥ ಸೇವಕರಿಗೆ ಏನಾದರೂ ಕೊಟ್ಟರೆ ಅದು ನೇರವಾಗಿ ಸತ್ಕಾರ್ಯಕ್ಕೆ ತಲಪುತ್ತದೆ. ಇದನ್ನು ನೀನು ಇಟ್ಟುಕೋ. ಮಠದ ಹೊರಗೆ ಎಷ್ಟೋ ಉತ್ತಮ ಬದುಕುಗಳಿವೆ. ಅವರಿಗೆ ನಿನ್ನಿಂದಾದಷ್ಟು ಸಹಾಯ ಮಾಡು...ನನ್ನ ಹೆಸರು ಬೇಡ... ನಾನು ಕೊಟ್ಟದ್ದು ಅಂತ ಎಲ್ಲಿಯೂ ಹೇಳಬೇಡ..." ಅಂದರು.
ಲಕೋಟೆ ಬಿಚ್ಚಿ ನೋಡಿದೆ. 10 ಲಕ್ಷದ ಚೆಕ್ ಇತ್ತು. ಗಾಬರಿಯಾದ ನಾನು "ಅಯ್ಯೋ, ಕಿರಿಯ ಸ್ವಾಮಿಗಳಿಗೆ ಗೊತ್ತಾದರೆ ಸಮಸ್ಯೆಯಾದೀತು. ನನ್ನ ತಲೆ ಒಡೆದಾರು. ಗುರುಗಳೇ, ನನಗೆ ದುಡ್ಡು ಬೇಡ. ನೀವು ಹೇಳಿದ ಸತ್ಕಾರ್ಯಗಳನ್ನು ನಿಮ್ಮನ್ನು ನೆನಸಿಕೊಳ್ಳುತ್ತ ನನ್ನ ದುಡ್ಡಿನಿಂದಲೇ ಮಾಡುತ್ತೇನೆ..." ಅನ್ನುತ್ತ ಲಕೋಟೆಯನ್ನು ಅವರ ಮುಂದೆ ಇರಿಸುವಾಗಲೇ ಕಿರಿಯ ಸ್ವಾಮಿಗಳು ಒಳಬಂದರು. ಆಗ ಹಿರಿಯರ ಕೈಯ್ಯಲ್ಲಿದ್ದ ಲಕೋಟೆಯನ್ನು ಎಳೆದುಕೊಂಡು ಬಿಡಿಸಿ ನೋಡಿದರು. "ಏನು ? ಸಾಲ ಕೇಳಲು ಬಂದದ್ದಾ ?" ಅಂದರು. ಹಿರಿಯರು ಮಾತನಾಡಲಿಲ್ಲ. ನಾನು ನಮಸ್ಕರಿಸಿ ಎದ್ದು ಬಂದಿದ್ದೆ.
೬
ಮರುದಿನ, ಮಠದ ಹಳೆಯ ಅಡಿಗೆಯವ ಶಂಭು ನನ್ನ ಮಂಡಿಗೆ ಬಂದಿದ್ದ. ಅವನನ್ನು ಮಠದ ಅಡುಗೆಗೆ ಸೇರಿಸಿದ್ದು ನಾನೇ ಅನ್ನುವ ವಿಶ್ವಾಸ ಅವನಿಗೆ. ಅವನು ಬೇಸರದಿಂದಲೇ ಮಾತಿಗೆ ತೊಡಗಿದ. "ರಾಯರೇ, ಮೊನ್ನೆ ನೀವು ಮಠಕ್ಕೆ ಬಂದದ್ದು, ವಾಪಸ್ ಹೋದದ್ದು ಎಲ್ಲವನ್ನೂ ನಾನು ನೋಡಿದ್ದೆ. ಆದರೆ ಮಾತಾಡಿಸಲಿಕ್ಕೆ ಧೈರ್ಯ ಬರಲಿಲ್ಲ. ಅಲ್ಲಿ ಈಗ ಎಲ್ಲವೂ ಸರಿ ಇಲ್ಲ. ಯಾರನ್ನು ಮಾತಾಡಿಸಿದರೆ ಯಾರಿಗೆ ಸಿಟ್ಟು ಬರ್ತದೋ ಹೇಳಲಿಕ್ಕೆ ಬರುವುದಿಲ್ಲ. ಕಳೆದ ತಿಂಗಳು ನೀವು ಮಠಕ್ಕೆ ಬಂದು ಹೋದ ಮೇಲೆ ಭಯಂಕರ ಗದ್ದಲ ಅಲ್ವ ಮಾರಾಯ್ರೇ. ಇಬ್ಬರು ಸ್ವಾಮಿಗಳಿಗೂ ಜೋರು ಲಡಾಯಿ ಆಯ್ತು. ದೊಡ್ಡ ಸ್ವಾಮಿಗಳು ಕಿರಿಯರಿಗೆ ಪಟಾರಂತ ಒಂದೇಟು ಬಾರಿಸಿದರು. "ನಿಯತ್ತಿನಿಂದ ನನ್ನ ಕೆಲಸ ಮಾಡಿದವರಿಗೆ ನನ್ನೆದುರೇ ಅಪಮಾನ ಮಾಡುವ ನಿನಗೆ - ನನ್ನ ಮೇಲೆ ಎಷ್ಟು ಗೌರವ ಇರಬಹುದು ? ನನ್ನ ಗುರುಗಳಿಂದ ಪಡೆದ ಪೀಠವನ್ನು ಎಷ್ಟು ಕಷ್ಟಪಟ್ಟು ನಾನು ಭದ್ರವಾಗಿ ಬೆಳೆಸಿದೆ... ನೀನು ಅದನ್ನು ಲಗಾಡಿ ಎಬ್ಬಿಸುತ್ತಿದ್ದೀಯಲ್ಲ ? ನಿನ್ನ ಸೊಕ್ಕು ಮಿತಿ ಮೀರಿದೆ. ನಾಳೆಯೇ ವಕೀಲರನ್ನು ಕರೆಸಿ ಮಠದ ಎಲ್ಲ ವಹಿವಾಟಿನ ಹೊಸ ಪತ್ರ ಬರೆಸುತ್ತೇನೆ...ನೀನು ಏನು ಬೇಕಾದರೂ ಹೇಳಿಕೊಂಡು ಊರೆಲ್ಲ ತಿರುಗು. ನಿನ್ನ ಧಮಕಿಗೆಲ್ಲ ನಾನು ಹೆದರುವವನಲ್ಲ. ನಿನ್ನನ್ನು ಹೊರಹಾಕಿ ಹೊಸ ಶಿಷ್ಯನನ್ನು ಸ್ವೀಕರಿಸುತ್ತೇನೆ.." ಅಂತೆಲ್ಲ ಕೂಗಾಡಿದ್ದರು.
ಅದೇ ಕೊನೆ ನೋಡಿ. ಮತ್ತೆ ನಾವು ಹಿರಿಯ ಸ್ವಾಮಿಗಳ ಮುಖ ನೋಡಲಿಲ್ಲ. ಸುಮಾರು ದಿನದಿಂದ ಅವರು ಕೋಣೆಯಿಂದ ಹೊರಗೇ ಬರುತ್ತಿರಲಿಲ್ಲ. ಪೂಜೆಗೂ ಎದ್ದು ಬರುತ್ತಿರಲಿಲ್ಲ. ಯಾರಲ್ಲೂ ಮಾತಾಡುತ್ತಿರಲಿಲ್ಲ. ಈಗ ಒಂದು ವಾರದಿಂದ ಅವರ ಊಟವನ್ನೂ ಕಿರಿಯ ಸ್ವಾಮಿಗಳೇ ಕೊಂಡು ಹೋಗಿ ಕೊಡುತ್ತಿದ್ದರು. ನಮಗೆ ಯಾರಿಗೂ ಆ ಚಿನ್ನದ ಪಂಜರದ ಒಳಗೆ ಪ್ರವೇಶವೇ ಇರಲಿಲ್ಲ. ಆದರೆ ಮೊನ್ನೆ ರಾತ್ರಿ - ಅಂದರೆ ನೀವು ಮಠಕ್ಕೆ ಬಂದ ಹಿಂದಿನ ರಾತ್ರಿ ಅವರ ಆರೋಗ್ಯ ಕೆಟ್ಟಿತಂತೆ. ಮರುದಿನ ಅವರು ಎಚ್ಚರ ತಪ್ಪಿದ್ದರಂತೆ. ನಿಮಗೆ ಅವರನ್ನು ನೋಡಲಿಕ್ಕೂ ಬಿಡದೆ ಮಠದಿಂದ ಓಡಿಸಿದರಲ್ಲ ? ಅದೇ ದಿನ. ಅವತ್ತು ನೀವು ಮಠಕ್ಕೆ ಬಂದಾಗಲೂ ಅವರಿಗೆ ಎಚ್ಚರವಿರಲಿಲ್ಲ. ಅದೇ ಸ್ಥಿತಿಯಲ್ಲಿಯೇ ಅದೇ ದಿನವೇ ಅವರನ್ನು ಭೈರವಪುರಕ್ಕೆ ಕರೆದುಕೊಂಡು ಹೋಗಿದ್ದರು. ಜೊತೆಯಲ್ಲಿ ಕಿರಿಯ ಸ್ವಾಮಿಗಳ ಗೆಳೆಯರಾಗಿದ್ದ ಕೇಶವ ವೈದ್ಯರೂ ಇದ್ದರು. ವಿಮಾನದಲ್ಲೋ ಹೆಲಿಕಾಪ್ಟರ್ ನಲ್ಲೋ ಹೋದರಂತೆ. ಮತ್ತೆ ಗುರುಗಳು ವಾಪಸ್ ಬರಲೇ ಇಲ್ಲ. ಅಲ್ಲಿ ಸತ್ತೇ ಹೋದರಂತೆ... ಏನೋ ಇರಬೇಕು....ಗಂಡಾಗುಂಡಿ. ಕಳೆದ ಒಂದು ವಾರದಿಂದ ನಾವು ನಾಕೈದು ಜನ ಹಳೆಯ ಕೆಲಸಗಾರರು ಆ ಮಠದಲ್ಲಿ ನಬದದ್ದು ಅಷ್ಟಿಷ್ಟಲ್ಲ; ಜೀವಸಂಕಟ ಮಾರಾಯ್ರೇ... ಎದ್ದದ್ದು ತಪ್ಪು; ಕೂತದ್ದು ತಪ್ಪು... ಒಂದು ಮರ್ಯಾದೆಯಾದರೂ ಉಂಟಾ ? ಹೋಗಲಿ ಬಿಡಿ. ದೊಡ್ಡವರ ಸುದ್ದಿ ನಮಗ್ಯಾಕೆ ? ಎಲ್ಲವೂ ಮುಗಿದೇ ಹೋಯ್ತು. ಈಗ ನಾನೂ ಅಲ್ಲಿನ ಹಂಬಗ್ ಕೆಲಸ ಬಿಟ್ಟುಬಿಟ್ಟೆ... ಇವರೇನು ನಮಗೆ ಕೊಪ್ಪರಿಗೆ ಕೊಡ್ತಾರಾ ? ದುಡಿದು ತಿನ್ನುವ ನಮಗೆ ಎಲ್ಲೋ ಕೆಲಸ ಸಿಗ್ತದೆ ಬಿಡಿ; ಈ ನಿತ್ಯನರಕ ಯಾರಿಗೆ ಬೇಕು ?" ಅನ್ನುತ್ತ ಶಂಭುವು ಹೆಗಲಿನ ಶಾಲನ್ನು ಕೊಡವಿ ಹಾಕಿಕೊಂಡು ಹೊರಟು ಹೋದ.
ಸುಮ್ಮನೆ ಗಲ್ಲಕ್ಕೆ ಕೈಕೊಟ್ಟು ಕೇಳುತ್ತಿದ್ದ ರವಿರಾಯರು ಶಿಲೆಯಾಗಿದ್ದರು.
"ಸನ್ಯಾಸ ಎಂಬ ಮಾಡಿಲ್ಲದ ಗೂಡಿನಲ್ಲಿ ಗರಿಗರಿಯಾಗಿ - ಮಡಿಯಾಗಿರುವುದು ಇಷ್ಟು ಕಷ್ಟವೆ ? ಮನಸ್ಸಿನ ಮುಸುರೆಯನ್ನು - ಬಿಡುಬೀಸಾಗಿದ್ದುಕೊಂಡು ತೊಳೆಯಲಾದೀತೆ ?" ರವಿರಾಯರ ತಲೆಯಲ್ಲಿ ನಿಷ್ಕ್ರಮಿಸಿದ ಗುರುಗಳ ಪರಾಜಯಗಾಥೆಯು ಥಕಥಕ ಕುಣಿಯುತ್ತಿತ್ತು. ಗಲ್ಲಕ್ಕೆ ಕೈಕೊಟ್ಟು ಯಾವುದೋ ಲೋಕದಲ್ಲಿದ್ದಂತೆ ಕೂತಿದ್ದವರನ್ನು - ಮಗ ವಿಶ್ವ ಬಂದು ಕರೆದಾಗಲೇ ಅವರು ವಾಸ್ತವಕ್ಕೆ ಬಂದದ್ದು. "ಸ್ವಾಮೀ..ದೇವರೇ.. ಭೈರವೇಶ್ವರಾ.." ಅನ್ನುತ್ತ ತಟಕ್ಕನೆ ಎದ್ದು ಮಗನ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡು ಮನೆಗೆ ಹೊರಟರು.
No comments:
Post a Comment