Tuesday, December 30, 2014

ಹೊಸ ವರುಷ - ಕಸದಿಂದ ರಸದೆಡೆಗೆ.

ನನ್ನ ಬದುಕೊಂದು ಈಸ್ಟ್ ಮನ್ ಕಲರ್ ಸಿನೆಮಾ ಇದ್ದ ಹಾಗಿದೆ. ಅದನ್ನು ಕಟ್ಟಿಕೊಡಲು ಹೊರಟ ಸೂತ್ರಬಂಧದ ಬಗೆಗೆ ಮಾತ್ರ ಈಗ ನಾನು, ಗಮನಿಸಿದರೆ ಸಾಕು. ವಿಷಯ - ವಿಷಾಮೄತಗಳೆಲ್ಲವೂ ತಾವಾಗಿಯೇ ರಂಗ ಪ್ರವೇಶಿಸುತ್ತವೆ.

ಸರಸ ಕವಿ ವಿದ್ವಾಂಸ ಡಾ.ಎಸ್.ವಿ.ಪರಮೇಶ್ವರ ಭಟ್ಟರನ್ನು ೧೯೬೯-೭೦ ರ ಅವಧಿಯಲ್ಲಿ ನಾನು ನೋಡಿದಾಗ, ಬದುಕಿನ ಮುಕ್ಕಾಲು ದಾರಿಯನ್ನು ಅವರು ನಡೆದು ಮುಗಿಸಿದ್ದರು. ಕುಂದಾಪುರದಲ್ಲಿ ನಡೆದ ಸಾಹಿತ್ಯಿಕ ಸಮಾರಂಭವೊಂದರಲ್ಲಿ ಭಾಗವಹಿಸಿದ್ದ ಎಸ್ ವಿ ಪಿ ಅವರ ಮಾತುಗಳನ್ನು ಕೇಳಲು ನಾನೂ ಓಡಿದ್ದೆ. ಒಂದು ಪುಸ್ತಕದಲ್ಲಿ ಅವರ ನುಡಿಮುತ್ತುಗಳನ್ನು ದಾಖಲಿಸಿಕೊಂಡಿದ್ದೆ .

ಅಂದು ಎಸ್ ವಿ ಪಿ ಅವರು ಹೇಳಿದ್ದ ಒಂದು ಕತೆಯು ಇತ್ತೀಚಿನ ದಿನಗಳಲ್ಲಿ ನನ್ನನ್ನು ಪದೇಪದೇ ಸ್ಪರ್ಶಿಸುತ್ತಿದೆ .

"ಹಿಟ್ಟಿನ ಹೋಳಿಗೆ ಬಡಿಸುವ ಒಬ್ಬ ಪರಿಣಿತನಿದ್ದ. ಕೆಲವರಿಗೆ ಕಿಟ್ಟಪ್ಪ; ಕೆಲವರಿಗೆ ಕಿಟ್ಟಣ್ಣ . ಎಲ್ಲೇ ಮದುವೆಮುಂಜಿ ನಡೆದರೂ ಹೋಳಿಗೆ ಬಡಿಸಲು ಈತನನ್ನೇ ಕರೆಯುತ್ತಿದ್ದರು. ಮೄದುವಾದ ಹೋಳಿಗೆಗೆ ಮುಕ್ಕಾಗದಂತೆ, ಎಡೆಗಳಿಗೆ ಇಡಿಯಾಗಿ ಬಡಿಸುತ್ತಿದ್ದ ಆ ವ್ಯಕ್ತಿಯ ಕೈಚಳಕವು ಭೋಜನಪ್ರಿಯರನ್ನು ಮಂತ್ರಮುಗ್ಧಗೊಳಿಸುತ್ತಿದ್ದವು. ಪಾಪ....ದಿನವೂ ದಾಕ್ಷಿಣ್ಯಕ್ಕೆ ಬಿದ್ದು ೨-೩ ಸಮಾರಂಭಗಳಿಗೆ ಈತನೂ ಹಾಜರಾಗುತ್ತಿದ್ದ. ರಾತ್ರಿಯವರೆಗೂ ದುಡಿದು, ತನ್ನ ಮನೆಗೆ ಹಿಂದಿರುಗಿ, ಚಾಪೆ ಕಾಣುವಾಗ ಸೋತು ಸುಣ್ಣವಾಗುತ್ತಿದ್ದ. ಬೆಳಗಾದರೆ ಮತ್ತೆ ಇದೇ ಚಕ್ರ ಸುತ್ತುತ್ತಿತ್ತು. ವರ್ಷದಲ್ಲಿ ಎಲ್ಲೋ ಒಮ್ಮೊಮ್ಮೆ "ಹೋಳಿಗೆ ಭಾಗ್ಯ" ಉಣ್ಣುತ್ತಿದ್ದವರಿಗೆ ಈ ಕಾರಕೂನನನ್ನು ಕಂಡು ಹೊಟ್ಟೆ ಗಿಮಚುತ್ತಿತ್ತು . "ಎಂಥ ಭಾಗ್ಯವಂತ ! ಹೋಳಿಗೆ ಹಿಡಿದವನು ತಿನ್ನದೆ ಇರುವುದುಂಟೇ ? ದಿನವೂ ಹೋಳಿಗೆ ತಿನ್ನುವ ಭಾಗ್ಯ ಯಾರಿಗುಂಟು.." ಎಂದೆಲ್ಲ ಪೋಕು ಮಾತನಾಡುತ್ತ ಉಂಡು ತೇಗುತ್ತ  ಆ ಕಷ್ಟಜೀವಿಯ "ಭಾಗ್ಯ"ದ ಬಗೆಗೂ ಕರುಬಿ ಕೆರೆದುಕೊಳ್ಳುತ್ತಿದ್ದರು. ಆತನಿಗೋ...ಹೋಳಿಗೆ ತಿನ್ನುವ ಮಾತಿರಲಿ, ಹೋಳಿಗೆಯ ಪರಿಮಳ ಉಂಡುಂಡೇ ಹೊಟ್ಟೆ ತುಂಬಿರುತ್ತಿತ್ತು (ಅಡಿಗೆಯ ಭಟ್ಟರಿಗೆ ವಿಶೇಷದ ಊಟವೆಂದರೇ ವಾಕರಿಕೆ). ಬೇಸಿಗೆಯ ಕಾಲದಲ್ಲೇ ಹೆಚ್ಚಾಗಿ ನಡೆಯುವ ಭೂರಿಭೋಜನಗಳಲ್ಲಿ ಓಡಾಡಿ ಬೆವರು ಸುರಿಸುತ್ತಿದ್ದ ಆ "ಹೋಳಿಗೆ ವ್ಯಕ್ತಿ"ಗೆ ಒಂದು ಸ್ನಾನ, ಗಂಜಿ - ಉಪ್ಪಿನಕಾಯಿಯ ಬಿಸಿಬಿಸಿ ಊಟ, ಒಂದು ನಿದ್ದೆ ಕೊಡುತ್ತಿದ್ದ ಸುಖವನ್ನು... ರಾಶಿ ಬಿದ್ದ ಹೋಳಿಗೆಯು ಕೊಡುವುದಾದರೂ ಹೇಗೆ ? ಕುರುಡರು ಆನೆಯನ್ನು ಮುಟ್ಟಿ ತಮಗೆ ತೋಚಿದಂತೆ ಬಣ್ಣಿಸಿ ಹೇಳುತ್ತಿದ್ದ ಕತೆಯಂತೆ....ಆ ಹೋಳಿಗೆ "ಪಾತ್ರ"ಕ್ಕೆ ಜನರ ಅಂಬೋಣಗಳೆಲ್ಲ ಲಗಾವಾಗುತ್ತಿರಲಿಲ್ಲ. ಹೀಗಿರುವಾಗ....ಇಂತಹ ಕರ್ಮಯೋಗಿಗೆ ವಯಸ್ಸಾಗುತ್ತಾ ಬಂತು. ಎಡಗೈಯಲ್ಲಿ ಭುಜದೆತ್ತರಕ್ಕೆ ಎತ್ತಿ ಹಿಡಿಯುತ್ತಿದ್ದ ಹೋಳಿಗೆಯ ತಟ್ಟೆಯು ಕಂಪಿಸತೊಡಗಿತ್ತು. ಹೋಳಿಗೆ ಬಡಿಸುವ ಬಲಗೈಯಿಂದ ಎಲೆಗೆ ಬೀಳುತ್ತಿದ್ದ ಹೋಳಿಗೆಯು ಅಲ್ಲಲ್ಲಿ ಹರಿದು ಹೋಗುತ್ತಿತ್ತು. ಜನರು ಆಡಿಕೊಂಡರು..."ಇವನಿಗೆಂಥ ಧಾಡಿ ಮಾರಾಯ್ರೆ..? ಹೂರಣವನ್ನೆಲ್ಲ ಚೆಲ್ಲಿ ಬರೇ ಹೊರಗಿನ ಸಿಪ್ಪೆಯನ್ನಷ್ಟೇ ಇಕ್ಕುತ್ತಿದ್ದಾನಲ್ಲ ? ಎಷ್ಟು ಚುರುಕಾಗಿ ಚೆಂದದ ಹೋಳಿಗೆ ಬಡಿಸುತ್ತಿದ್ದವ...ಈಗ ಏನೂ ಸುಖವಿಲ್ಲ " ಎಂದರು. ಜನಾಭಿಪ್ರಾಯವು ಬೆಳೆಯುತ್ತ ಬಂದು ಆ ಹೋಳಿಗೆಯ ಹಮ್ಮೀರನನ್ನು ಕರೆಸುವುದನ್ನೇ ಬಿಟ್ಟುಬಿಟ್ಟರು. ಬಡವನನ್ನು ಭಡವನಾಗಿಸಲು ಒಂದೇ ಗೆರೆ ಸಾಕು!! ಕೆಲಸ ಮಾಡಿಸದೆ, ಪ್ರೀತಿಯಿಂದ ಯಾರಾದರೂ ಬಡಿಸಿದ, ಒಂದು ಮುಷ್ಟಿ ಉಣ್ಣಲು ಆತನಿಗೆ ಸಂದರ್ಭವೇ ಸಿಗಲಿಲ್ಲ. ಮುಂದೆ ತನ್ನ ಕುಟುಂಬ ಮತ್ತು ಬಡತನದೊಂದಿಗೆ ಹೋಳಿಗೆಯ ಕನಸು ಕಾಣುತ್ತ ಇಂತಿಪ್ಪ ಕಿಟ್ಟಣ್ಣನು ಸುಖವಾಗಿ ಶೇಷಾಯುಷ್ಯವನ್ನು  ಕಳೆದನು..." ಎಂಬಲ್ಲಿಗೆ ಈ ಕತೆ ಮುಗಿಯಿತು.

ಎಸ್ ವಿ ಪಿ ಅವರ ಕತೆಯ ಎಳೆಯನ್ನಷ್ಟೇ ಅವಲಂಬಿಸಿ ಈ ನಿರೂಪಣೆಯು ಸಾಗಿ ಬಂದಿದೆ. " ಅಂದು ರಸವತ್ತಾಗಿ ಭಾಷಣ ಮಾಡುತ್ತಿದ್ದೆನೆಂದು ಇಂದೂ ಕರೆಯುತ್ತಿದ್ದಾರೆ " ಎಂಬ ತಮ್ಮ ಭಾವನೆಯನ್ನು ಪೋಷಿಸಲು ಎಸ್ ವಿ ಪಿ ಅವರು ಈ ಕತೆಯನ್ನು, ಸ್ವಲ್ಪ ಭಿನ್ನವಾಗಿ ಹೇಳಿದ್ದರು.

ತಾತ್ಪರ್ಯ ಏನಪ್ಪಾ ಅಂದರೆ ಎಂತಹ ಪ್ರತಿಭಾವಂತನೇ ಆಗಿದ್ದರೂ ಎಳೆಯ ವಯಸ್ಸಿನಲ್ಲಿ ಆಡುವ ಆಟಗಳಲ್ಲಿ ಶಕ್ತಿ ಚೈತನ್ಯದ ಕಲೆಗಾರಿಕೆಯ ಅನಾವರಣವೂ ಆಗುತ್ತಲೇ ಇರುತ್ತದೆ. ಅರ್ಧ ಹಾದಿ ನಡೆದ ಮೇಲೆ ಹಳೆಯ ಅಮ್ಮನೂ ರುಚಿಯಾದ ಅಡಿಗೆ ಮಾಡಿ ಬಡಿಸುವಂತೆ...ಏನೋ ಒಂದು ಆನಿಕೆಯಲ್ಲಿ, ಅಭ್ಯಾಸಬಲದಿಂದ ಅದೇ ಕೆಲಸವನ್ನು ನಿರ್ವಹಿಸಿದರೂ...ಹಿಂದಿನ "ವೇಗ"ವನ್ನು ತರಲು ಆಗುವುದಿಲ್ಲ. ಸಾರ್ವಜನಿಕ ಕಲಾ ಪ್ರದರ್ಶನಗಳೆಲ್ಲವೂ ವೇಗ ಮತ್ತು ಪ್ರತ್ಯುತ್ಪನ್ನಮತಿಯನ್ನು ಅತಿಯಾಗಿ ಅಪೇಕ್ಷಿಸುತ್ತವೆ. ಆದರೆ ಎಳಸು ಮತ್ತು ಬಲಿತ ಎರಡೂ ಅವಸ್ಥೆಗಳಿಗೂ ಅದರದರದ್ದೇ ಆದ ವೈಶಿಷ್ಟ್ಯಗಳಿವೆ. ಅನುಭವದ ಎಳಸುತನವು ನೇಪಥ್ಯಕ್ಕೆ ಸರಿದು ಪ್ರಬುಧ್ಧತೆಯು ಪರಿಪಾಕಗೊಳ್ಳುವ ಪ್ರತಿಯೊಬ್ಬರ ಮಧ್ಯಂತರದ ಮುಂದಿನ ಭಾಗವು ಅವರವರ ಅನುಭವವನ್ನು ಹಂಚಿಕೊಳ್ಳುತ್ತ ಸುಖಿಸುವ ಕಾಲ. ಮಕ್ಕಳ ಕಿವಿಗೂ ಅಂತಹ ಅನುಭವಗಳು ಬೀಳುತ್ತಿದ್ದರೆ ಮಕ್ಕಳಿಗೂ ಅನಾಯಾಸವಾಗಿ ಜೀವನಪಾಠವು ಲಭಿಸಿದಂತೆ ಆದೀತು. ದೇಹಧರ್ಮವನ್ನು ಗೌರವಿಸುತ್ತ, ವಿಧೇಯತೆಯಿಂದ, ಸ್ವಂತ ಪರಿಧಿಯ ವ್ಯಾಪ್ತಿಯಲ್ಲಿಯೇ ಕ್ರಿಯಾಶೀಲರಾಗುವವರಿಗೆ ಮಧ್ಯಂತರದ ನಂತರವೂ ಈ ಬದುಕಿನಲ್ಲಿ ಅಪಾರ ಸಾಧ್ಯತೆಗಳಿವೆ.

ಹೀಗೆಲ್ಲ ಹೇಳಿದೆ ಅಂತ "ಹ್ವಾಯ್...ನಾನು ನಿಶ್ಶಕ್ತಳಾಗಿದ್ದೇನೆ"...ಎಂದೆಲ್ಲ ಅಂದುಕೊಳ್ಳಬೇಡಿ. ಸದ್ಯಕ್ಕೆ ಅಂತಹ ಸಮಸ್ಯೆಯಿಲ್ಲ. ನನಗೆ ಗೊತ್ತಿದೆ. ಸದಾ ಬಳಕೆಯಾಗುತ್ತಿರುವ ಯಂತ್ರವನ್ನು ಎಷ್ಟು ಮತ್ತು ಹೇಗೆ ಉಪಯೋಗಿಸಿಕೊಳ್ಳಬೇಕೆಂಬ ಪ್ರಜ್ಞೆಯನ್ನು ಜಾಗ್ರತವಾಗಿರಿಸಿಕೊಂಡು, ಪ್ರಾಯೋಗಿಕವಾಗಿಯೂ ರೂಢಿಸಿಕೊಳ್ಳುತ್ತಲೇ ಇದ್ದೇನೆ. ಒಂದು ಕಂಪ್ಯೂಟರಿನ ಹಾರ್ಡ್ ಡಿಸ್ಕಿನಲ್ಲಿ ಅದರ ಸಾಮರ್ಥ್ಯವನ್ನೂ ಮೀರಿದ ಭಾರವನ್ನು ತುರುಕಿಸಿದರೆ (ಬೇಕು - ಬೇಡದ JUNK) ಅದರ ವೇಗವು ಕುಗ್ಗಿ, ಓಡಲು ಹಠ ಮಾಡುವುದೂ / HANG ಆಗುವುದೂ ಇದೆ. ಅಂದರೆ ತ್ರಿಶಂಕು ಸ್ವರ್ಗ. ಆಗ ಅಂಗಡಿಯನ್ನು ಒಮ್ಮೆ ಪೂರ್ತಿ ಮುಚ್ಚಿ (SHUT DOWN), ಪುನರ್ನವೀಕರಣ (REBOOT) ಮಾಡಬೇಕಾಗುತ್ತದೆ...ಅಲ್ಲವೇ ?

ಅದು ಯಂತ್ರದ ವಿಚಾರ. ಮನುಷ್ಯನ ಸಂದರ್ಭದಲ್ಲಿಯೂ ಈ ದೄಷ್ಟಾಂತವು ಹೊಂದುತ್ತದೆ. ಬದುಕಿನ " ಬೇಕು - ಬೇಡಗಳೆಲ್ಲವೂ  ಗಂಟುಗಂಟಾಗಿ, ಕೆಲವೊಮ್ಮೆ ಕಗ್ಗಂಟಾಗಿ, ಮಿದುಳೆಂಬ ಹಾರ್ಡ್ ಡಿಸ್ಕಿನಲ್ಲಿ ಎರ್ರಾಬಿರ್ರಿಯಾಗಿ  ರಾಶಿಬೀಳುವುದಿದೆ. ಆಗ ಕ್ರಿಯಾಶಕ್ತಿಯ (performance) ವೇಗದಲ್ಲಿಯೂ ವ್ಯತ್ಯಯವಾಗಿ ಅಯೋಮಯವೆನಿಸುವುದೂ - ಸಹಜ. ಆಗ Refresh ಆಗಬೇಕು; ಅನಪೇಕ್ಷಿತ ನಿರುಪಯೋಗೀ "ಮಿದುಳುಕಸ"ವನ್ನು ಅಳಿಸಿ (DELETE) ಹಾಕಬೇಕು . ಅಷ್ಟೇ. ನನ್ನ " ಅಂತರಂಗ ಬಹಿರಂಗ "ದ ಮೂಲಕ, ನನ್ನೊಳಗಿನ ಕೆಲವು "ರಸಕಸಿ" ಮತ್ತು "ಕಸರಸಿ"ಗಳನ್ನು ನಿಮ್ಮ ಹೆಗಲಿನ ಆಧಾರಕ್ಕೆ ಜೋತುಬಿದ್ದು ಹೊರಗೆಳೆದು ಹಾಕಿ, ಹಸಿಹಸಿ ನಾರಾಯಣಿಯಾಗಲು ಹೊರಟಿದ್ದೇನೆ.



"ಶರೀರಮಾಧ್ಯಂ ಖಲುಧರ್ಮ ಸಾಧನಂ" ಎಂಬ ಆರ್ಯೋಕ್ತಿಯಂತೆ ದೇಹವೆಂಬ ದೇವವೀಣೆಯನ್ನು ಶ್ರುತಿಬಧ್ಧಗೊಳಿಸುತ್ತಿದ್ದೇನೆ. ಹಂಚಿಕೊಂಡು ಬದುಕುವ ಸ್ವತಂತ್ರ, ಸಹಜ ಧರ್ಮದತ್ತ ಹೊರಳಿದ್ದೇನೆ . ಇನ್ನು...ನೀ ನನಗೆ, ನಾ ನಿನಗೆ...ಜೀವನ ನಗುತಲಿದೆ.

ಹೊಸ ವರುಷ ೨೦೧೫ - ಎಲ್ಲರಿಗೂ ಒಳಿತನ್ನೇ ತರಲಿ.  "ಹಿಟ್ಟಿನ ಹೋಳಿಗೆ"ಯನ್ನು, ಸುಖವೆನಿಸುವಷ್ಟು ಎಲ್ಲರೂ ಚಪ್ಪರಿಸುವಂತಾಗಲಿ. ಊರಿನ ಕಿಟ್ಟಣ್ಣನಿಗೂ ಹೋಳಿಗೆ ಬಡಿಸುತ್ತ ಕಾಯಕವನ್ನು ಗೌರವಿಸುವ. ಸರ್ವಸ್ಸುಖಮವಾಪ್ನೋತು...ಸರ್ವಸ್ಸರ್ವತ್ರನಂದತು.

Saturday, December 20, 2014

ಒಂದು ಅಂತರ್ಮಥನ

  ಅನಿವಾಸೀ ಭಾರತೀಯರಾದ ಶ್ರೀ ಶ್ರೀವತ್ಸ ಜೋಶಿ ಅವರು ಇತ್ತೀಚೆಗೆ ತಮ್ಮ Facebook ನಲ್ಲಿ ಒಂದು ಸ್ನಿಗ್ಧ ಕನವರಿಕೆಯನ್ನು ತೇಲಿಬಿಟ್ಟಿದ್ದರು. ಅದಕ್ಕೆ ಪರೋಕ್ಷವಾಗಿ ನಾನಾಡಿದ ಜೂಟಾಟವೇ ಕಾರಣವಾಗಿತ್ತು. ಆ ನೆನಪಿನಲ್ಲಿ ನನ್ನ ಹಿಂದೆ ಅವರು ಸರಿಯುತ್ತ... ಸಾರ್ವಜನಿಕ ಪ್ರಸಾರ ಸಂಸ್ಥೆ "ಆಕಾಶವಾಣಿ" ಯನ್ನು ಚಪ್ಪರಿಸಿದ್ದನ್ನು ಮತ್ತು ಅದರ ಜೊತೆಗೆ ನೂರಾರು ಜನರು ಆಕಾಶವಾಣಿಯ ಬಾಂಧವ್ಯದ ತಮ್ಮ ತಮ್ಮ ನೆನಪುಗಳನ್ನು ಆಸ್ವಾದಿಸಿದನ್ನು ಕಂಡಾಗ, ಅಕಾಶವಾಣಿಯೆಂಬ ಸಂಸ್ಥೆಯು ಸಾಧಿಸಿದ ಮೇರು ಸಾಧನೆ ಮತ್ತು ಆ ಹಿನ್ನೆಲೆಯನ್ನು ಸುಪುಷ್ಟಗೊಳಿಸುವ ಬಾಧ್ಯತೆಯನ್ನು ಪುನರಪಿ ಅವಲೋಕನ ಮಾಡುವಂತೆ ಮಾಡಿದೆ. ಆಕಾಶವಾಣಿಯನ್ನು ಗೌರವಿಸುವ, ಹಿಂಬಾಲಿಸುವ ಸಮಸ್ತ ಜನತೆಗೆ ಋಣಿಯಾಗಿರುತ್ತ ನನ್ನೊಳಗಿನ ಕೆಲವು ಅವ್ಯಕ್ತಗಳಿಗೆ ಶಬ್ದಗಳನ್ನು ಜೋಡಿಸುತ್ತಿದ್ದೇನೆ.

    ಮೇರು ಸಂಗೀತ ಕಲಾವಿದರು, ಸಾಹಿತಿಗಳು, ಸಮಾಜದ ವಿಭಿನ್ನ ವರ್ಗದ ಅನೇಕ ಸಾಧಕರನ್ನು ಮಾತ್ರವಲ್ಲದೆ ಅರಳುತ್ತಿರುವ ಪ್ರತಿಭೆಗಳನ್ನೂ ಜನರ ಮನೆಯೊಳಗೇ ಹೊಗ್ಗಿಸಿ, ಸಮಸ್ತ ರಸಿಕರ ಹೃದಯದಲ್ಲಿ ಅವರನ್ನು ಸ್ಥಾಪಿಸುವಂತೆ ಮಾಡಿದ ಕೀರ್ತಿ "ಅಕಾಶವಾಣಿ"ಗೆ ಸಲ್ಲುತ್ತದೆ.

    ಸಾರ್ವಜನಿಕ ಪ್ರಸಾರ ಸಂಸ್ಥೆಯಾದ ಆಕಾಶವಾಣಿಯು "ಬಹುಜನ ಹಿತಾಯ ಬಹುಜನ ಸುಖಾಯ" ಎಂಬ ತನ್ನ ಧ್ಯೇಯ ವಾಕ್ಯಕ್ಕೆ ಸಂಪೂರ್ಣ ಬದ್ಧವಾಗಿ ನಡೆದುಕೊಳ್ಳುತ್ತಿರುವ ಸಂಸ್ಥೆ. ಸಾಮಾಜಿಕ ಕಿರಿ ಕಿರಿಗಳನ್ನು ದೊಡ್ಡ ಸುದ್ದಿ ಎಂಬಂತೆ ಪ್ರಸಾರ ಮಾಡಿದ ಕುಖ್ಯಾತಿಯು ಇಂದಿಗೂ ಆಕಾಶವಾಣಿಗೆ ತಟ್ಟಿಲ್ಲ. ಸುದ್ದಿಗಳಲ್ಲಿಯೂ ಸಭ್ಯತೆ, ಸ್ವಚ್ಚತೆ, ಸುಭಗತೆಯನ್ನು ಕಾಯ್ದುಕೊಂಡು ಸಾಮಾಜಿಕ ಜವಾಬ್ದಾರಿಯನ್ನು ಅರಿತು ನಡೆದುಕೊಳ್ಳುತ್ತಿರುವ ಈ ಸಂಸ್ಥೆಯು ತನ್ನ ಲಕ್ಷ್ಮಣ ರೇಖೆಯನ್ನು ದಾಟಿಲ್ಲ. ಮಾನವಂತರ ಮಾನವನ್ನು ಎತ್ತರಿಸುತ್ತ, ಮಾನಗೇಡಿತನವನ್ನು ಉಪೇಕ್ಷಿಸುತ್ತ ಸದ್ದುಗದ್ದಲವಿಲ್ಲದೆ ತನ್ನ ಹೊಣೆಗಾರಿಕೆಯನ್ನು ನಿಭಾಯಿಸುತ್ತ ಬಂದಿರುವ ಆಕಾಶವಾಣಿಯು ಇಂದಿಗೂ "ಸಜ್ಜನಿಕೆ"ಗೆ ಇತರರಿಗೆ ಮಾದರಿಯಾಗಿಯೇ ಉಳಿದಿದೆ.

    ಹೌದು. ೧೯೯೦ರ ನಂತರ ಹೊಸ ಗಾಳಿ ಬೀಸತೊಡಗಿದ ಮೇಲೆ, ಆಕಾಶವಾಣಿಯ ಅಂತರಂಗದಲ್ಲಿ ಹಲವಾರು ಕೋಲಾಹಲವೆದ್ದಿದೆ. ಅಲ್ಲಿಂದ ಮುಂದಿನ ೨೫ ವರ್ಷಗಳಲ್ಲಿ ಆಕಾಶವಾಣಿಯಲ್ಲಿ ಅಪಾರ ಪರಿವರ್ತನೆಗಳಾಗಿವೆ. "ಭಯ ಭಕ್ತಿ"ಯಿಂದ ಕಾರ್ಯ ನಿರ್ವಹಿಸುವ ಸಮರ್ಪಣಾ ಭಾವದ ಒಳಪದರವು ಕ್ಷೀಣಗೊಳ್ಳುತ್ತಿದೆ. ಸರಕಾರದ ಹಲವು ಕಾನೂನುಗಳ ಸದುಪಯೋಗದಷ್ಟೇ ದುರುಪಯೋಗವೂ ಅಲ್ಲಲ್ಲಿ ಕಾಣುತ್ತಿದೆ. ಒಟ್ಟಾರೆ ಸಮಾಜದ ಪ್ರತಿಬಿಂಬದಂತೆ ಇಂತಹ ಘಟನೆಗಳು ನಡೆದಾಗ, ಒಂದು ಸಂಸ್ಥೆ ಮಾತ್ರವೇ ಇಂತಹ ಅನಿಷ್ಟಗಳಿಗೆ ಕಾರಣವಾಗದು. ಅಷ್ಟರ ಮಟ್ಟಿಗೆ "ಅಪರಾಧಿ ನಾನಲ್ಲ ಅಪರಾಧವೆನಗಿಲ್ಲ...ಕಾಲಾಯ ತಸ್ಮೈ ನಮಃ" ಎಂದು ಹೇಳಿ ಸಮಾಧಾನ ಮಾಡಿಕೊಳ್ಳಲೂ ಬಹುದು.

    ಒಂದು ಸಮಾಜದಲ್ಲಿ ಉತ್ತಮ ಅಭಿರುಚಿಯನ್ನು ಬೆಳೆಸಿ ಪೋಷಿಸುವಲ್ಲಿ ಆಕಾಶವಾಣಿಯು ನಿರ್ವಹಿಸಿದ ಪಾತ್ರ ಅಮೋಘವಾದದ್ದು. ನೆನಪಿನತ್ತ ಜಾರಿದರೆ......

    ಅಂದು....ಬೆಳಗಿನ ೭.೧೫ ಘಂಟೆಗೆ ಪ್ರಸಾರವಾಗುತ್ತಿದ್ದ ಶಾಸ್ತ್ರೀಯ "ಸಂಗೀತ ಸುಧಾ", ೮.೩೦ಕ್ಕೆ ಪ್ರಸಾರವಾಗುತ್ತಿದ್ದ ಗಂಭೀರ ಶಾಸ್ತ್ರೀಯ ಸಂಗೀತ ಮಿಡಿತವು ಕೇಳುಗರ ಮನಸ್ಸನ್ನು ಶಾಂತ ಪ್ರಸನ್ನಗೊಳಿಸುತ್ತಿದ್ದವು. ಪ್ರತೀ ಬೆಳಗನ್ನೂ ಪ್ರಫ಼ುಲ್ಲ ಗೊಳಿಸುತ್ತಿದ್ದವು. ಸಂಜೆ ಮತ್ತು ರಾತ್ರಿಯೂ ಶಾಸ್ತ್ರೀಯ ಸಂಗೀತದ ಒರತೆಯು ಹೊಮ್ಮುತ್ತಿತ್ತು. ಮಧ್ಯಾಹ್ನ ಅಥವ ಸಂಜೆಯ ರಾಗವೊಂದು (ಹಿಂದೂಸ್ತಾನಿ ಶೈಲಿ) ಬೆಳಿಗ್ಗೆ ಪ್ರಸಾರವಾದರೆ - ಶ್ರೋತೃಗಳು "ಹಾಗಲ್ಲ ಹೀಗೆ" ಎಂದು ಪ್ರತಿಕ್ರಿಯಿಸುತ್ತಿದ್ದರು. ಇದರಿಂದಾಗಿ ಸಂಗೀತ ಉಣಬಡಿಸುವ ನಿಲಯದ ಸಿಬ್ಬಂದಿಗಳೂ ಎಚ್ಚರದಲ್ಲಿರುತ್ತಿದ್ದರು. ಶ್ರೋತೃಗಳು ತಮಗೆ ಬೇಕಾದುದನ್ನು ಕೇಳಿ ಪಡೆಯುತ್ತಿದ್ದುದೂ ಅಪರೂಪವಲ್ಲ. ಅಷ್ಟರ ಮಟ್ಟಿಗೆ "ಆಕಾಶವಾಣಿ- ಕೇಳುಗ" ಸೇತುವು ಬಲಿಷ್ಠವಾಗಿತ್ತು. ದೊಡ್ಡ ಸಂಖ್ಯೆಯ ಜನರ ಅಭಿರುಚಿಯೂ ಆರೋಗ್ಯಪೂರ್ಣವಾಗಿದ್ದ ಆ ದಿನಗಳಲ್ಲಿ ಸ್ವಸ್ಥ ಮನಸ್ಸಿಗೆ ಬೇಕಾದ ವ್ಯಂಜನಗಳನ್ನು ಬಡಿಸುವುದರಲ್ಲಿ ಆಕಾಶವಾಣಿಯು ಮುಂಚೂಣಿಯಲ್ಲಿತ್ತು.

   ಇಂದೂ ಎಲ್ಲ ಬಗೆಯ ಸಂಗೀತವು...ಅಂದಿನ ಪ್ರಮಾಣದಲ್ಲಿ ಅಲ್ಲದಿದ್ದರೂ, ಸಾಕಷ್ಟು ಪ್ರಸಾರವಾಗುತ್ತಿದೆ. ಆದರೆ ಪ್ರಸಾರಯೋಗ್ಯ ಮತ್ತು ಅಯೋಗ್ಯ ಎಂಬ ಅಳತೆಗೋಲು ಈಗ ಚಾಲ್ತಿಯಲ್ಲಿರುವಂತೆ ಕಾಣುವುದಿಲ್ಲ. ಇದ್ದಬಿದ್ದ CD ಗಳನ್ನೆಲ್ಲ ಇತರ FM ಗಳಂತೆ ನಾವೂ ಪ್ರಸಾರ ಮಾಡುತ್ತಿದ್ದೇವೆ. ಸೋಸುವಿಕೆಯಲ್ಲಿ ಮೊದಲಿನ ನಿಷ್ಠುರತೆಯಿಲ್ಲ. ಬದಲಾದ ಕಾಲಘಟ್ಟದಲ್ಲಿ ಬಹುಶಃ ಇಂತಹ ನಿರ್ಧಾರಗಳು ಅನಿವಾರ್ಯವೇ ಇರಬಹುದು. ಆದರೆ, ಈ ಸ್ಪರ್ಧಾಯುಗದಲ್ಲಿ, ನಮಗಿಂತ ಉತ್ತಮರೊಂದಿಗೆ ಸ್ಪರ್ಧಿಸಿದರೆ ಮಾತ್ರ ನಾವು ಇನ್ನಷ್ಟು ಉತ್ತಮಿಕೆಯತ್ತ ಹೊರಳಬಹುದು - ಎಂಬ ಎಚ್ಚರವು ಅಂತರಂಗದ ಅಪೇಕ್ಷೆಯಾಗಿದ್ದರೆ ಒಳ್ಳೆಯದು.

    ಅಂದಿನ ದಿನಗಳಲ್ಲಿ ದಿನಕ್ಕೆ ಒಂದರಿಂದ ಒಂದೂವರೆ ಘಂಟೆಗಳ ಕಾಲ ಮಾತ್ರ ಚಿತ್ರಗೀತೆಗಳು  ಪ್ರಸಾರವಾಗುತ್ತಿದ್ದವು. ಆ ಗೀತೆಗಳನ್ನು ತಿಂಗಳ ಮೊದಲೇ ಆಯ್ಕೆ ಮಾಡಿ ಪಟ್ಟಿ ತಯಾರಿಸಬೇಕಿತ್ತು. ಉದ್ಘೋಷಕರೇ ಈ ಕೆಲಸವನ್ನು ಮಾಡುತ್ತಿದ್ದರು (ಬಹುಶಃ ಚಿತ್ರಗೀತೆಗಳ ವಿಶೇಷ ಪರಿಣತರು ಎಂದಿರಬೇಕು) ಹಬ್ಬ ಹರಿದಿನಗಳನ್ನು ನೋಡಿಕೊಂಡು ಸಾಂದರ್ಭಿಕವಾಗಿ ಸೂಕ್ತ ಗೀತೆಗಳನ್ನು ಆಯ್ಕೆ ಮಾಡಬೇಕಾಗಿತ್ತು. ಒಂದು ಗೀತೆಯು ಪದೇ ಪದೇ ಪ್ರಸಾರವಾದರೆ, ನಿಗದಿಗೊಳಿಸಿದವರು "ವಿವರಣೆ" ನೀಡಬೇಕಾದ ಫಜೀತಿ ಎದುರಾಗುತ್ತಿತ್ತು. ಈ ಶಿಸ್ತಿನಿಂದಾಗಿ ಕೇಳುಗನಿಗೆ ಕಿರಿ ಕಿರಿಯಾಗುವುದು ತಪ್ಪುತ್ತಿತ್ತು. ಆದರೆ ಇಂದು ದಿನವೂ ಎರಡೂವರೆ - ಮೂರು ಘಂಟೆಗಳ ಕಾಲ ಚಿತ್ರಗೀತೆಗಳು ಪ್ರಸಾರವಾಗುತ್ತವೆ. ಚಿತ್ರಗೀತೆಗಳೆಂದರೆ ಸಿದ್ಧ ಆಹಾರ. ಈ ಸಿದ್ಧ ಆಹಾರವನ್ನು ಬಡಿಸಲಿಕ್ಕೂ ಒಂದಿಷ್ಟು ಶಿಸ್ತು ಬೇಕು. ಆದರೆ ಈಗ ಬಡಿಸುವ ಶಿಸ್ತೂ ಶಿಥಿಲವಾಗಿದೆ. "ಉದ್ಘೋಷಕರ ಮೆಚ್ಚಿನ" ಚಿತ್ರಗೀತೆಗಳನ್ನು ಕೇಳುಗರಿಗೆ ಕೇಳಿಸುವಂತಾಗಿದೆ. ಕೆಲವೊಮ್ಮೆ ನೂರಾರು ಬಾರಿ ತಿರುಗಿ ಸೋತುಹೋದ ಅದೇ ಚಿತ್ರಗೀತೆಗಳನ್ನೇ ಆಧರಿಸಿ, ಉದ್ಘೋಷಕರ ಸಂಕ್ಷಿಪ್ತ ವಿವರಣೆಗಳೊಂದಿಗೆ, ನೇರಪ್ರಸಾರವಾಗಿ, ಕರ್ತವ್ಯನಿರತ ಉದ್ಘೋಷಕರು ಸಂಯೋಜಿತ ಕಾರ್ಯಕ್ರಮಗಳನ್ನೂ ಪ್ರಸಾರ ಮಾಡುತ್ತಿದ್ದಾರೆ.ಇದು ಏಕತಾನತೆಯಿಂದ ಪಾರಾಗಲು ಉದ್ಘೋಷಕರೇ ಕಂಡುಕೊಂಡ ವಿಧಾನ. "ಹಳೆಯ ಅಮ್ಮನಿಗೆ ಹೊಸ ಸೀರೆ ಉಡಿಸಿದಂತೆ" ಇಂತಹ ಕಾರ್ಯಕ್ರಮಗಳು ಜನಪ್ರಿಯವಾದುದೂ ಇದೆ. ಆದರೆ ಆಕಸ್ಮಿಕಗಳಂತೆ ಮೂಡಿಬರುವ ಇಂತಹ ಕುಸ್ತಿಗಳೇ ಸಾಲದು. "ಪೂರ್ವತಯಾರಿ" ಎಂಬ ಅತ್ಯಂತ ಅವಶ್ಯಕವಾದ ಶಿಸ್ತನ್ನು ಮತ್ತೊಮ್ಮೆ ಸ್ವೀಕರಿಸದಿದ್ದರೆ ನಮ್ಮ ಹೊಳಪು ಕಂದಿ ಹೋದೀತು ಎಂಬ ಎಚ್ಚರವಿದ್ದರೆ ಒಳ್ಳೆಯದು.

   ಇವೆಲ್ಲವೂ ಸಣ್ಣ ಪುಟ್ಟ ಏರಿಳಿತಗಳ - ಮೆಲುಕು.... ಅಷ್ಟೆ.

   ಶ್ರೀ ಶ್ರೀವತ್ಸ ಜೋಶಿ ಅವರಂತಹ ಲಕ್ಷಾಂತರ ಶ್ರೋತೃಗಳು ನಮ್ಮ ಜೊತೆ ಇದ್ದಾರೆ. ಆಕಾಶವಾಣಿಯನ್ನು ಮನೆ ಮಗನಂತೆ ಆದರಿಸುವವರು ಇಂದಿಗೂ ಇದ್ದಾರೆ. ಆದ್ದರಿಂದ ಸ್ವಂತ ಲಾಭದ ಜೊತೆಗೇ ಆಕಾಶವಾಣಿಯೆಂಬ ಸಂಸ್ಥೆಯ ಹೊಸ ಹೊಳಹುಗಳನ್ನು ಚಿಂತಿಸಬಲ್ಲ ಸಾಮರ್ಥ್ಯವುಳ್ಳ ಅಂತರಂಗಿಗಳೂ ಮುಕ್ತ ಮನಸ್ಸಿನಿಂದ ಕಾರ್ಯೋನ್ಮುಖರಾಗಲು ಕಾಯಬೇಕಾಗಿಲ್ಲ.

   "ಈ ಖಾಸಗೀ FMಗಳ ಎದುರಿನಲ್ಲಿ ಆಕಾಶವಾಣಿಗೆ ಉಳಿಗಾಲವಿಲ್ಲ" ಎನ್ನುವ ಮಾತು ಬಾಲಿಶ ಮತ್ತು ಅರ್ಥಹೀನವಾದದ್ದು. ಪಾನೀಪುರಿ ತಿನ್ನುತ್ತ ಬದುಕು ಸಾಗಿಸಲು ಸಾಧ್ಯವೇ !!?? ವೈದ್ಯರು ಕಟ್ಟುನಿಟ್ಟಿನ ಆಹಾರ ಕ್ರಮ ಸೂಚಿಸುವವರೆಗೆ ಅಂತಹ ಹುಡುಗಾಟ ನಡೆದೀತು!! ಆರೋಗ್ಯ ಕೆಡಿಸಿಕೊಂಡಮೇಲೆ ಸಹಜ ಆಹಾರ ಕ್ರಮದತ್ತ ಒತ್ತಾಯಪೂರ್ವಕವಾಗಿಯಾದರೂ ಮರಳಲೇಬೇಕು. ಈ ಮಧ್ಯಂತರ ಅವಧಿಯಲ್ಲಿ ಹೊಸ ಹೊಸ ಸಾಧ್ಯತೆಗಳನ್ನು ಪ್ರಿಯವಾಗಿ ಪ್ರಸ್ತುತ ಪಡಿಸುವ ದಿಕ್ಕಿನಲ್ಲಿ ಆಕಾಶವಾಣಿಯೂ ತಾಳ್ಮೆಯಿಂದ ಯೋಚಿಸಬೇಕು.


   ಹಳೆಯದೆಲ್ಲವೂ ಕೊಳಕಲ್ಲ; ಹೊಸತೆಲ್ಲವೂ ಅಮೃತವಲ್ಲ. ಹೊಸ ಚಿಗುರು ಹಳೆ ಬೇರು ಕೂಡಿರುವ ಸೊಗಸಾದ "ಪ್ರಸಾರ ವೃಕ್ಷ"ವನ್ನು ಆವಿರ್ಭವಿಸಿಕೊಳ್ಳಬೇಕು. "ಆ ಕಸವಾನಿ "ಎನ್ನುತ್ತ ಪದೇ ಪದೇ ಕೇಳುಗರನ್ನು ತಬ್ಬಿಬ್ಬುಗೊಳಿಸುವವರನ್ನು ಧ್ವನಿವರ್ಧಕದತ್ತ ಸುಳಿದಾಡಲೂ ಬಿಡಬಾರದು. ಧ್ವನಿಯಿಂದಲೇ ಅಕ್ಷರಗಳನ್ನುಸಲಹುತ್ತ , ಸರ್ವಸ್ವವನ್ನೂ ಕಟ್ಟಿಕೊಡಬೇಕಾದ ಅನಿವಾರ್ಯತೆ ಇರುವ ಆಕಾಶವಾಣಿಯನ್ನು ಮೂರ್ಖರ ಕೈಗೆ ಒಪ್ಪಿಸಿ, ದುರ್ಬಲಗೊಳ್ಳದಂತೆ ಕಾಯ್ದುಕೊಳ್ಳಬೇಕು. ಮಾತ್ರವಲ್ಲ; ಸ್ವಕೇಂದ್ರಿತ ಮನಸ್ಸುಗಳು ತಮ್ಮ ಪರಿಧಿಯನ್ನು ಇತ್ಯಾತ್ಮಕವಾಗಿ ನಿಯಂತ್ರಿಸಿಗೊಳ್ಳಲೂ ಬೇಕಾಗಿದೆ.

    ಉದಾತ್ತ ಧ್ಯೇಯವನ್ನು ಹೊಂದಿದ ಆಕಾಶವಾಣಿಗೆ ಅಂತರಂಗದಲ್ಲೇ ಕಾಯಕಲ್ಪವಾಗಬೇಕು. ಒಳ್ಳೆಯದನ್ನು ಎಲ್ಲಿದ್ದರೂ ಹೇಗಿದ್ದರೂ ಸ್ವೀಕರಿಸುವ ಹೃದಯಶೀಲತೆಯನ್ನು ಮೆರೆಯಬೇಕು. ಯಾವುದೇ ಸಂಸ್ಥೆಯು "ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ" ಎಂಬ ಸಂದೇಹ ಬರುವಂತಿರಬಾರದು. "ವ್ಯಕ್ತಿಗಿಂತ ಸಂಸ್ಥೆ ದೊಡ್ಡದು" ಎಂಬ ಸತ್ಯವನ್ನು ಅರಗಿಸಿಕೊಳ್ಳಬೇಕು. ಕಾಲ, ಸ್ಥಳ, ಸಂದರ್ಭಗಳಿಗೆ ಹೊಂದಿ ಬದಲಾಗಬಹುದಾದ "ಹೊಗಳಿಕೆ" ಎಂಬ ಸಂಚಾರೀ ಭಾವಕ್ಕೆ ಸಮರ್ಪಣಾ ಭಾವದ ಆಭಾರ ಸಲ್ಲಿಸಿ ಸುಮ್ಮನಾಗುವುದು ವಿವೇಕ. ಸಂಚಾರೀ ಭಾವಕ್ಕೆ ಸಿಲುಕಿ ಸ್ವಂತ ಮನೆಯ ಸ್ಥಾಯೀ ವಿಳಾಸವೇ ಮರೆತು ಹೋಗಬಾರದು.

      ಈ ಸಂಸ್ಥೆಯ ಮಾನವ ಸಂಪನ್ಮೂಲವು ಸದ್ಬಳಕೆಯಾದರೆ ಆಕಾಶವಾಣಿಯ ಹತ್ತಿರಕ್ಕೆ ಸುಳಿಯುವ ಅರ್ಹತೆ ಪಡೆಯಲೂ ಉಳಿದ ಸ್ಪರ್ಧಾಳುಗಳು ತಿಣುಕಬೇಕಾದೀತು.

   ಸ್ವಚ್ಚ, ಸಮೃದ್ಧ ಆಕಾಶವಾಣಿಯು ಮತ್ತೊಮ್ಮೆ ಮೈ ಕೊಡವಿಕೊಂಡು ಎದ್ದರೆ ಶ್ರೀ ಶ್ರೀವತ್ಸ ಜೋಶಿ ಅವರಂತಹ ಲಕ್ಷಾಂತರ ನಿಸ್ವಾರ್ಥ, ಅಕಳಂಕ ಅಭಿಮಾನಿಗಳನ್ನು ಮುಂದೆಯೂ ಬಹುಕಾಲ ತನ್ನ ತೆಕ್ಕೆಯಲ್ಲಿ ಪೋಷಿಸುವಂತಾದೀತು. ಅಂತಹ ಸಂಕಲ್ಪ ಮತ್ತು ಕ್ರಿಯಾಶಕ್ತಿ ಮೇಳೈಸಲು ಪುರುಷಪ್ರಯತ್ನವೂ ಬೇಡವೇ ?

   ಆಕಾಶವಾಣಿಯಲ್ಲಿ ಬೃಹತ್ ಸಂಪತ್ತಿನ ಭಂಡಾರವಿದೆ. ಆ ಭಂಡಾರಕ್ಕೆ ನಾನೂ ನನ್ನ ಕಿರುಗಾಣಿಕೆಯನ್ನು ಸಮರ್ಪಿಸಿದ್ದೇನೆಂಬ ಆತ್ಮತೃಪ್ತಿ ನನಗಿದೆ. "ನನ್ನ ಆಕಾಶವಾಣಿ"ಯು ಸಹಸ್ರದಳ ಕಮಲದಂತೆ ಆಕರ್ಷಕವಾಗಿ ಸುಗಂಧ ಭರಿತವಾಗಿ, ಕರ್ಣ - ಮನ ಸೂರೆಗೊಳ್ಳುವಂತಿರಬೇಕು ಎಂಬುದಷ್ಟೇ - ಸಂಸ್ಥೆಯ ಋಣ ಭಾರದಿಂದ ಬಾಗಿರುವ ನನ್ನ ಈ ಬರಹದ ಉದ್ದೇಶ.

    ಸ-ನಾಥ ಸುರಕ್ಷಿತ ಪ್ರಜ್ಞೆಯು ಒಳಗೂ - ಹೊರಗೂ ಕಾಣುವಂತಾಗಲಿ.

Saturday, December 13, 2014

ನೆನಪು - ಮೆಲುಕು


ಈಗ ನಿಂತು ಹಿಂದಿರುಗಿ ನೋಡುತ್ತಿದ್ದರೆ....ಒಂದೊಂದು ಘಟನೆಯೂ ಮಿಶ್ರ ಭಾವಗಳನ್ನು ಮೂಡಿಸುತ್ತಿದೆ.

ನಡೆವರೆಡಹದೆ ಕುಳಿತವರೆಡಹುವರೇ ?

ಹೌದು. ಮೌನವಾಗಿರುವವರಿಂದ ಅಸಂಬದ್ಧ ವಾಕ್ ಪ್ರಲಾಪ - ಹೇಗೂ ಆಗಲಾರದು. ಮಾತನಾಡುವವರಿಂದಲೇ ಅಂತಹ ಚಮತ್ಕಾರಗಳು ಸಂಭವಿಸುತ್ತವೆ.

ಸಂಗೀತ - ಸಾಹಿತ್ಯಕ್ಕೆ ಸಂಬಂಧಿಸಿದ ಮತ್ತು ಪ್ರಚಲಿತ ವಿದ್ಯಮಾನಗಳನ್ನು ತಕ್ಕ ಮಟ್ಟಿಗೆ ತಿಳಿದುಕೊಂಡಿದ್ದರೆ ಉದ್ಘೋಷಕರಿಗೆ ಭೀಮ ಬಲ ಬಂದಂತೆ ಆಗುತ್ತದೆ. ಉದಾಹರಣೆಗೆ : ಹಿಂದುಸ್ತಾನಿ ಶೈಲಿಯಲ್ಲಿ ರಾಗ - ಕಾಫಿ ಅಂದರೆ, ಕರ್ಣಾಟಕೀ ಶೈಲಿಯಲ್ಲಿ - ಕಾಪಿ ಎಂದು ಹೇಳುತ್ತಾರೆ. ಇವೆರಡೂ ಬೇರೆಯೇ ಆದ -  ಎರಡು ರಾಗಗಳು.  ಒಬ್ಬ ಉದ್ಘೋಷಕರಿಗೆ, ತಾವು ಕೇಳಿಸಲಿರುವ ಸಂಗೀತವು ಯಾವ ಶೈಲಿಯದ್ದು ಎಂಬ ಪರಿಜ್ಞಾನವಿದ್ದರೆ, ಆ ವ್ಯತ್ಯಾಸವು, ಹೇಳುವ ಉಚ್ಚಾರದಲ್ಲಿಯೂ ಸ್ಪಷ್ಟವಾಗಿ ಹೊರಹೊಮ್ಮಿದರೆ, ಆಗ ಕೇಳುವವರಿಗೆ ಹಿತವೆನಿಸುತ್ತದೆ. ಖರಹರಪ್ರಿಯ ಎಂಬ ರಾಗವನ್ನು "ಕರಕರಪ್ರಿಯ"(?) ಎಂದು ಬರಹದಲ್ಲಿ ಸೂಚಿಸಿದ್ದರೂ ಅದನ್ನು ತಿದ್ದಿಕೊಂಡು ಸರಿಯಾದ ರೂಪವನ್ನೇ ಉಚ್ಚರಿಸಬಲ್ಲವರು ಉದ್ಘೋಷಕರಾಗಿ ಯಶಸ್ಸು ಕಾಣುತ್ತಾರೆ. ಬೇರೆ ಬೇರೆ ಭಾಷೆಯ ಶಬ್ದಪುಂಜಗಳು ಎದುರಾದಾಗ ಅದನ್ನು ಉಚ್ಚರಿಸುವ ರೀತಿಯನ್ನು ಕೇಳಿ ತಿಳಿದುಕೊಂಡೇ ಕರ್ತವ್ಯಕ್ಕೆ ಅಣಿಯಾಗಬೇಕು. ದ.ರಾ. ಬೇಂದ್ರೆಯವರನ್ನು "ದಾರ ಬೇಂದ್ರೆ" ಎಂದರೆ ಆಭಾಸವಾಗುತ್ತದೆ. ಆಳವಾದ ವಿಷಯಜ್ಞಾನವಲ್ಲದಿದ್ದರೂ ತಪ್ಪೆಂದು ಗುರುತಿಸುವಷ್ಟಾದರೂ, ಕೊನೇಪಕ್ಷ ಸಣ್ಣ ಸಂಶಯ ಬರುವಷ್ಟಾದರೂ ಸಾಹಿತ್ಯ - ಸಂಗೀತದ ತಿಳುವಳಿಕೆಯು ಉದ್ಘೋಷಕರಿಗೆ ಇರಲೇ ಬೇಕು.

ಎಲ್ಲರೊಡನೊಂದೊಂದು ಪಾಠವನ್ನು ಕಲಿಯಲೇಬೇಕಾದ ಪೀಠ - ಉದ್ಘೋಷಕ ಪೀಠ.
                                           
ನಾನು ಬಾಲ್ಯದಲ್ಲಿ ಹಿಂದುಸ್ಥಾನಿ ಸಂಗೀತವನ್ನು ಸ್ವಲ್ಪ ಕಾಲ ಅಭ್ಯಾಸ ಮಾಡಿದ್ದೆ. ಕುಂದಾಪುರದಲ್ಲಿದ್ದ... ಈಗ ದಿವಂಗತರಾಗಿರುವ ವಾಸುದೇವ ನಾಯಕ್  ಅವರು ನನ್ನ ಗುರುಗಳಾಗಿದ್ದರು. ಕೊಟ್ಟ ಪಾಠವನ್ನು ಅಭ್ಯಾಸಮಾಡದೆ ಮುಂದಿನ ತರಗತಿಗೆ ಹೋದರೆ, ನಾನು ಬಾಯಿ ತೆಗೆದ ಕೂಡಲೇ, ಅವರು ಕನ್ನಡಕದ ಸಂದಿಯಿಂದ ಕೆಕ್ಕರಿಸಿ ನೋಡುತ್ತಿದ್ದರು. ಇಂದಿಗೂ ನಾನು ಭಯಭಕ್ತಿಯಿಂದ ನೆನಸಿಕೊಳ್ಳುವ ಗುರು - ಶ್ರೀ ವಾಸುದೇವ ನಾಯಕ್ ಅವರು. ಒಮ್ಮೆ ಆ ಗುರುಗಳಿಗೆ ಹೆದರಿ ತರಗತಿಯಿಂದ ಹೊರಗೆ ಓಡಿ ಬಂದದ್ದು ನನಗೆ ಇನ್ನೂ ನೆನಪಿದೆ. ಆದರೆ ಅವರು ತಿದ್ದಿ ತೀಡಿದ ಪಾಠವು ಇನ್ನೂ ನನ್ನಲ್ಲಿ ಉಳಿದುಕೊಂಡಿದೆ; ಬಹುಶಃ ಅಷ್ಟೇ ಉಳಿದುಕೊಂಡಿರುವುದು !  ಅನಂತರ ನಾನು ಹರಿಕಥೆಗಳನ್ನು ಮಾಡಲು ಹೊರಟಾಗ, ಹರಿಕಥೆಗಾಗಿ ನಾನು ಆಯ್ದುಕೊಂಡ ಹೆಚ್ಚಿನ ಪದ್ಯಗಳಿಗೆ ರೂಪ ಕೊಟ್ಟವರೂ ನನ್ನ ಗುರುಗಳೇ. ಅಂದು ನನ್ನ ತಂದೆಯಾದ ದಿವಂಗತ ಯಜ್ಞನಾರಾಯಣ ಉಡುಪ ಅವರು ಚಂದ್ರಹಾಸ ಎಂಬ ಹರಿಕಥೆಯನ್ನು ಬರೆದು ನನ್ನ ಒಳಗಿಳಿಸಿದ್ದರು. ಅದರಲ್ಲಿ ಭಾಮಿನಿ ಷಟ್ಪದಿ ಮತ್ತು ವಾರ್ಧಿಕ ಷಟ್ಪದಿಯ ಹಲವು ಪದ್ಯಗಳೂ ಇದ್ದುವು. ಕನ್ನಡ ಪಂಡಿತರಾಗಿದ್ದ ನನ್ನ ತಂದೆ ಸಾಹಿತ್ಯದ ಸೊಗಡನ್ನು ಆ ಕಥೆಯಲ್ಲಿ ತುಂಬಿಬಿಟ್ಟಿದ್ದರು. ವಾರ್ಧಿಕ ಷಟ್ಪದಿಯನ್ನು ತಾಳಕ್ಕೆ ಹೊಂದಿಸುವುದು ಸ್ವಲ್ಪ ಕಷ್ಟ; ಅಲ್ಲಿ ಇಲ್ಲಿ ಎಳೆದಾಡಬೇಕಾಗುತ್ತದೆ. ಈ ವಾರ್ಧಿಕ ಷಟ್ಪದಿಯ ಭಾಗಕ್ಕೆ ರಾಗ ಸಂಯೋಜಿಸುವ ಪ್ರಸಂಗ ಬಂದಾಗಲೆಲ್ಲ ನನ್ನ ಗುರುಗಳು ಸಿಡಿಮಿಡಿಗುಟ್ಟುತ್ತಿದ್ದರು. "ಹೋಗು, ನಿನ್ನ ಅಪ್ಪಯ್ಯನಿಗೇ ರಾಗ ಹಾಕಲು ಹೇಳು..." ಎಂದು ಎದ್ದು ಹೋಗಿ ಒಂದು ಎಲೆ ಅಡಿಕೆಯ ಶಾಸ್ತ್ರ ಮುಗಿಸುತ್ತಿದ್ದರು. ನಾನು ಕಾಯುತ್ತ ಸುಮ್ಮನೆ ಕೂತಿರುತ್ತಿದ್ದೆ. ಸ್ವಲ್ಪ ಹೊತ್ತಾದ ಮೇಲೆ ಹಿಂದಿರುಗಿ ಬಂದ ಗುರುಗಳು ಅದ್ಭುತವಾದ ರಾಗ ಸಂಯೋಜನೆ ಮಾಡಿಬಿಡುತ್ತಿದ್ದರು. ಅಂತಹ ಅದ್ಭುತ ಸಂಯೋಜನೆಯ ಹಲವು ವಾರ್ಧಿಕ ಷಟ್ಪದಿಗಳು ನನ್ನ ಚಂದ್ರಹಾಸ ಹರಿಕಥೆಯಲ್ಲಿವೆ. ನನ್ನ ಗುರುಗಳನ್ನು ನೆನೆಸಿಕೊಂಡರೆ ನಾನು ಈಗಲೂ ಭಾವುಕಳಾಗುತ್ತೇನೆ. ಅವರು ನನಗಾಗಿ ಏನೆಲ್ಲ ಮಾಡಿದರು!! ನನ್ನ ಜೊತೆಗೆ ಹಾರ್ಮೋನಿಯಂ ವಾದಕರಾಗಿಯೂ ಬಂದು, ಆಗಿಂದಾಗ ನನ್ನನ್ನು ತಿದ್ದುತ್ತ, ಪ್ರೋತ್ಸಾಹಿಸಿದವರು - ನನ್ನ ಗುರುಗಳು. ೧೯೭೧ - ೧೯೭೨ ರ ಹೊತ್ತಿನಲ್ಲಿ ಹಾರ್ಮೋನಿಯಂ ತಬಲಾ ಹೊತ್ತುಕೊಂಡು, ಬಸ್ಸಿನಲ್ಲೇ ಊರೂರಿಗೆ ಹೋಗಿ ಹರಿಕಥೆ ಮಾಡಬೇಕಿತ್ತು. ನನಗಾಗ ೧೬ - ೧೭ ವರ್ಷ ಪ್ರಾಯ. ನನ್ನ ಗುರುಗಳು ಹಾರ್ಮೋನಿಯಂ ಹಿಡಿದುಕೊಂಡರೆ, ಪ್ರತಿಭಾವಂತ ಕಲಾವಿದರಾಗಿದ್ದ ಶ್ರೀ ಆನಂದ ಬಸ್ರೂರು ಎಂಬವರು ತಬ್ಲಾ ವಾದಕರಾಗಿ ನನ್ನೊಡನೆ ಬರುತ್ತಿದ್ದರು. ನನ್ನ ಗುರುಗಳಿಗೆ ಅದಾಗಲೇ ೫೫ ವರ್ಷ ದಾಟಿತ್ತು. ಈ ಲಗ್ಗೇಜುಗಳನ್ನೆಲ್ಲ ಹೊತ್ತುಕೊಂಡು ಕೆಲವೊಮ್ಮೆ ೧ - ೨ ಕಿ .ಮೀ. ನಡೆದುಕೊಂಡು ಹೋಗಬೇಕಾಗುತ್ತಿತ್ತು. ತಮ್ಮ ವಾದ್ಯವನ್ನು ಬೇರೆ ಜನರ ಕೈಯಲ್ಲಿ ಹೊರೆಸುವುದು ಗುರುಗಳಿಗೆ ಇಷ್ಟವಿರಲಿಲ್ಲ. ಕೆಲವೊಮ್ಮೆ ಹೆಗಲ ಮೇಲೆ, ಕೆಲವೊಮ್ಮೆ ತಲೆಯ ಮೇಲೂ ಹಾರ್ಮೋನಿಯಂ ಇರಿಸಿಕೊಳ್ಳುತ್ತಿದ್ದರು. ೨ -೩ ಗಂಟೆಗಳ ಹರಿಕತೆ ಮುಗಿಸಿ, ಹಿಂದೆ ಬರುವಾಗ ಗುರುಗಳು ಸುಸ್ತಾಗುತ್ತಿದ್ದರು. ಕೆಲವೊಮ್ಮೆ ನನ್ನ ಮೇಲೆ ಸಿಡುಕುತ್ತಿದ್ದರು. ಕೆಲವೊಮ್ಮೆ "ಹರಿದಾಸರ ಸಂಗ ದೊರಕಿತು ನಮಗಿನ್ನೇನು " - ಅನ್ನುತ್ತಿದ್ದರು. ಅವರು ನಗುತ್ತಿದ್ದುದು ಕಡಿಮೆ. ಅವರಿರುವಲ್ಲಿ ಉಳಿದವರೂ ನಗುವ "ಅಧಿಕಪ್ರಸಂಗ" ಮಾಡುತ್ತಿರಲಿಲ್ಲ. ಅಂತೂ... ಗುರುಗಳ ಜೊತೆಗಿದ್ದು ಶಾಸ್ತ್ರೀಯ ಅಭ್ಯಾಸದ ಜೊತೆಗೆ  ಹಲವಾರು ರಾಗಭಾವಗಳ ಹೊರ ದರ್ಶನವೂ ಆಗಿಹೋಯಿತು. ಅನಂತರ ನಾನು ಆಕಾಶವಾಣಿ ಸೇರಿಕೊಂಡಾಗ ಗುರುಗಳಲ್ಲಿ ಆಶೀರ್ವಾದ ಪಡೆಯಲು ಹೋಗಿದ್ದೆ. "ಕಲಾವಿದರ ಕ್ಷೇತ್ರದಲ್ಲಿ ಎಚ್ಚರದಿಂದಿರು" ಎಂದು ಬುದ್ದಿಮಾತು ಹೇಳಿ ನನ್ನನ್ನು ಹರಸಿ ಕಳಿಸಿದ್ದರು. ನನ್ನ ಗುರುಗಳನ್ನು ಇಂದಿಗೂ ನಾನು ದಿನವೂ ನೆನಪಿಸಿಕೊಳ್ಳುತ್ತೇನೆ. ಅವರು ಕಲಿಸಿದ ಹಾಡುಗಳನ್ನು ಹಾಡುವಾಗ ಮತ್ತೊಮ್ಮೆ ಬಾಲ್ಯಕ್ಕೆ ಜಾರುತ್ತೇನೆ.

ಕಲಿತದ್ದು  ಬಾಲಪಾಠ. ಆದರೆ ಅದು ಬರೇ ಸಂಗೀತ ಪಾಠವಾಗಿರಲಿಲ್ಲ. ಆ ಅವಧಿಯುದ್ದಕ್ಕೂ ನನಗೆ ಸಿಕ್ಕಿದ್ದು ಬದುಕಿನ ಪಾಠ.

ಆದರೆ ಆಕಾಶವಾಣಿಗೆ ಈ ವಿದ್ಯೆಯ ಅನುಭವವು ಸಾಕಾಗಲಿಲ್ಲ.

ನಾನು ಉದ್ಘೋಷಕಿಯಾಗಿ ಆಕಾಶವಾಣಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಕರ್ನಾಟಕ ಸಂಗೀತದ ಹಿರಿಯ ಕಲಾವಿದರೊಬ್ಬರ ಹಾಡುಗಾರಿಕೆಯನ್ನು ಪ್ರಸಾರ ಮಾಡುವಾಗ ನನ್ನಿಂದ ಒಂದು ತಪ್ಪಾಯಿತು. ಅದು ಆರಂಭದ ಕಾಲ. (೧೯೭೭ ಇರಬಹುದು) ಅಂದು ನಿಗದಿಯಾಗಿದ್ದ LP ಧ್ವನಿ ಮುದ್ರಿಕೆಯ ಹೊರ ಭಾಗದಲ್ಲಿ, ರಾಗ - Bahaduri ಎಂದು print  ಆಗಿತ್ತು. ಅದನ್ನು ನಾನು ಬಹಾದುರಿ ಎಂದು ಹೇಳಿಬಿಟ್ಟೆ. ಆದರೆ ಆ ವಿವರವು print ಆಗುವಾಗಲೇ ತಪ್ಪಾಗಿತ್ತು. ರಾಗ ಬಹುದಾರಿ ಎಂಬುದು ಅಕ್ಷರ ತಪ್ಪಿನಿಂದ ಬಹಾದುರಿಯಾಗಿ ಹೋಗಿತ್ತು. ನಾನು ಹಾಗೇ ಹೇಳಿಬಿಟ್ಟೆ. ಹೇಳಿದ್ದು ಗಾಳಿಯಲ್ಲಿ ಹಾರಿಯೇ ಹೋಗಿತ್ತು. ಇದನ್ನು ಕೇಳಿದ ಅಂದಿನ ನಿಲಯದ ಉಪನಿರ್ದೇಶಕರಾಗಿದ್ದ M.V.ವಸಂತಕುಮಾರಿ ಅವರು ನನ್ನನ್ನು ಕರೆಸಿ ಉಗಿದು ಉಪ್ಪಿನಕಾಯಿ ಹಾಕಿದರು. "ನಿಮ್ಮ ಯಾವ ವಿವರಣೆಯೂ ನನಗೆ ಬೇಡ. ನನ್ನನ್ನು ಕೇಳಿದ್ದರೆ ಸರಿಯಾದ ರೂಪ ಏನೆಂದು ನಾನು ಹೇಳುತ್ತಿರಲಿಲ್ಲವೇ ?" ಎಂದಿದ್ದರು. ಅಂದಿನ ಅಧಿಕಾರಿಗಳು ಸಾಹಿತ್ಯ ಸಂಗೀತದ ಪೂರ್ವಾನುಭವ ಇರುವವರೇ ಆಗಿರುತ್ತಿದ್ದ ಸುಪುಷ್ಟ ಆಕಾಶವಾಣಿಯ ಕಾಲವದು. ನಾನು ಸುಮ್ಮನಿರಲಿಲ್ಲ. "ನನಗೆ ಸಂಶಯವೇ ಬರಲಿಲ್ಲ. ಬಂದಿದ್ದರೆ ಕೇಳುತ್ತಿದ್ದೆ..." ಅಂದಾಗ ಅವರಿಗೆ ತೃಪ್ತಿಯಾಗಲಿಲ್ಲ; ತನ್ನೆದುರು ನಿಂತು ವಾದಿಸುತ್ತಿದ್ದಾಳೆ ಅಂತ ಸಿಟ್ಟೂ ಬಂದಿತ್ತು. ಅದೇ ಪೂರ್ವಾಗ್ರಹದಿಂದ ಆ ದಿನವಿಡೀ ನನ್ನ ಬೆನ್ನು ಬಿದ್ದ ಅವರು "ನಿಮಗೆ ಆ ರಾಗ ಗೊತ್ತಿಲ್ಲ - ಈ ರಾಗ ಗೊತ್ತಿಲ್ಲ ಎಂದೆಲ್ಲ ಹೇಳಿ ನೀವು ತಪ್ಪಿಸಿಕೊಳ್ಳುವಂತಿಲ್ಲ. ಆಕಾಶವಾಣಿಯ ಮುಖ ಉಳಿಸುವ ಜವಾಬ್ದಾರಿಯೂ ನಿಮ್ಮ ಮೇಲಿದೆ. ಪ್ರಸಾರದ ಅವಧಿಯಲ್ಲಿ ನಡೆಯುವ ತಪ್ಪುಗಳಿಗೆ ಕ್ಷಮೆಯಿಲ್ಲ. ಉದ್ಘೋಷಕರಿಗೆ ಸಾಮಾನ್ಯ ಜ್ಞಾನ ಇರಲೇ ಬೇಕು.." ಇತ್ಯಾದಿ ಮಂಗಳಾರತಿ ಮಾಡುತ್ತ ಬೆವರಿಳಿಸಿದ್ದರು.




ನನ್ನ ಬಹಾದುರಿತನಕ್ಕೆ ಆ ಕ್ಷಣಕ್ಕೆ ಮುಖ ಭಂಗವಾಗಿದ್ದರೂ ಮುಂದಿನ ದಿನಗಳಲ್ಲಿ ಜಾಗರೂಕಳಾಗಿರಲು ಈ ಘಟನೆಯೇ ನನಗೆ ಬೆಂಬಲವಾಯಿತು. ಯಾವುದೇ ಸಂಗೀತದ ಪ್ರಸಾರಕ್ಕೂ ಮೊದಲು ಅದಕ್ಕದಕ್ಕೆ ಸಂಬಂಧಿಸಿದ ನಿಲಯದ ಕಲಾವಿದರನ್ನು ಕೇಳಿಯೇ ನಾನು ಪ್ರಸಾರಿಸತೊಡಗಿದೆ; ಗೊತ್ತಿದ್ದರೂ ಮತ್ತೊಮ್ಮೆ ಕೇಳಿ ದೃಢಪಡಿಸಿಕೊಳ್ಳುತ್ತಿದ್ದೆ. ಮಾತ್ರವಲ್ಲ - ನಮ್ಮ ನಿಲಯದ ಕಲಾವಿದರಾಗಿದ್ದ ದಿವಂಗತ M. ಶ್ರೀನಾಥ ಮರಾಠೆಯವರಲ್ಲಿ ಕರ್ನಾಟಕ ಸಂಗೀತದ ಅಭ್ಯಾಸಕ್ಕೂ ತೊಡಗಿದೆ. ಎರಡು ಮೂರು ವರ್ಷಗಳ ಕಾಲ ರಾಗ ವರ್ಣಗಳ ವರಸೆಯಲ್ಲಿ ಧ್ವನಿ ವ್ಯಾಯಾಮ ನಡೆಸಿದೆ. ಸಂಗೀತ ಎಷ್ಟು ಒಲಿಯಿತೋ ಗೊತ್ತಿಲ್ಲ; ಆದರೆ ಸಂಗೀತ ವಿಷಯದಲ್ಲಿ ನನ್ನ ಖರ್ಚಿಗೆ ಬೇಕಾದಷ್ಟು ಜ್ಞಾನವಂತೂ ಆಯಿತು. ಹೀಗೆ ಕಲಿಸುವವರ ಮಧ್ಯೆ ಇದ್ದುಕೊಂಡು ಕಲಿಯುತ್ತ ಕಲಿಯುತ್ತ, ನಾನು ಎಚ್ಚರದ ಹೆಜ್ಜೆ ಹಾಕತೊಡಗಿದ್ದೆ.

ಆದ್ದರಿಂದ ಉದ್ಘೋಷಕರಿಗೆ ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ. ಸಂದೇಹಗಳು ಬಂದರೇ - ಒಳ್ಳೆಯದು. ಬಂದ ಸಂದೇಹಗಳನ್ನು ತಡ ಮಾಡದೆ ಪರಿಹರಿಸಿಕೊಳ್ಳಲು ಪ್ರಯತ್ನಿಸಬೇಕು. ಆಗ ಕೊನೇ ಕ್ಷಣದಲ್ಲಿ ಅಪಹಾಸ್ಯಕ್ಕೀಡಾಗುವುದು ತಪ್ಪುತ್ತದೆ; ಚೆನ್ನಾಗಿ ಕರ್ತವ್ಯ ನಿರ್ವಹಿಸಿದ ತೃಪ್ತಿಯೂ ಸಿಗುತ್ತದೆ.

ಉದ್ಘೋಷಕರು ಪ್ರಸ್ತುತರಾಗಬೇಕೆಂದಿದ್ದರೆ ಸದಾ ಕಾಲ ಕಲಿಯುವ ತುಡಿತ ಹೊಂದಿರಲೇಬೇಕು. ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ಸುಲಭದಲ್ಲಿ ಎಲ್ಲವನ್ನೂ ಪಡೆಯುವ ಹಪಹಪಿಕೆಯ ಹೊಸಪೀಳಿಗೆಯು ಎದ್ದು ನಿಂತಿದೆ. ಆದರೆ ಒಂದಂತೂ ಸತ್ಯ. ಈ ಬದುಕಿನಲ್ಲಿ ಯಾವುದೂ ಸುಲಭವಲ್ಲ. ಸುಲಭವಾದದ್ದು ಯಾವುದೂ ಶ್ರೇಷ್ಠವಲ್ಲ. ಕಷ್ಟಪಟ್ಟೇ ಸುಲಭವನ್ನೂ ವಶಪಡಿಸಿಕೊಳ್ಳಬೇಕು. ಆಗ ಮಾತ್ರ ಸುಲಭವೂ ಶ್ರೇಷ್ಠವಾಗುತ್ತದೆ. ಪೂರ್ವ ತಯಾರಿಯುಳ್ಳ ಉದ್ಘೋಷಕರಿಗೆ ಎಲ್ಲ ಸಂದರ್ಭವನ್ನೂ ಶ್ರೇಷ್ಠಗೊಳಿಸಲು ಸಾಧ್ಯವಿದೆ. ಈ ಸತ್ಯವು ಅರಿವಿಗೆ ಬಂದರೆ ಉದ್ಯೋಗವು ಕಠಿಣವೆನ್ನಿಸದು; ಯಾವುದೇ ಗೊಂದಲಗಳು ಪೀಡಿಸಲಾರವು.

                                                *****-----*****-----*****



Wednesday, December 3, 2014

ಗಟ್ಟಿಗಿತ್ತಿಯರ ಸದ್ದುಗದ್ದಲ


  ಸ್ತ್ರೀ ಸಮಾನತೆ, ಸ್ತ್ರೀ ಸ್ವಾತಂತ್ರ್ಯ, ಸ್ತ್ರೀ ಸಾಧನೆ, ಸ್ತ್ರೀಯರ ಮೇಲೆ ಮತ್ತು ಸ್ತ್ರೀಯರಿಂದ ಹಿಂಸೆ, ಸ್ತ್ರೀ ಶೋಷಣೆ, ಸ್ತ್ರೀ ಪರ....ಇತ್ಯಾದಿ ಶಬ್ದವ್ಯೂಹದಲ್ಲಿ ಸಿಲುಕಿಸಿ ಸ್ತ್ರೀಯರ ಮೇಲೆ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಶಾಬ್ದಿಕ ಮತ್ತು ದೃಶ್ಯ ರೂಪದ ಅತ್ಯಾಚಾರಗಳು....ಇವತ್ತಿನ ಸಮಾಜದಲ್ಲಿ ಮತ್ತೊಮ್ಮೆ "ಸಂಸ್ಕೃತ - ಸಂಸ್ಕೃತಿ" ಯತ್ತ ಹೊರಳಿ ನೋಡುವಂತೆ ಮಾಡಿದೆ. ಅಕ್ಷರ ಕಲಿತ ಇಂದಿನ ತುಂಡರಸ ಅರಸಿಯರನ್ನು ಬಗೆದು ನೋಡುವ ಅಗತ್ಯ ಎದುರಾಗಿದೆ.

"ಸಮಾನತೆ" - ಅದರಲ್ಲಿ ಸ್ತ್ರೀಯರೂ ಸೇರುವುದಿಲ್ಲವೇ ?
"ಸ್ವಾತಂತ್ರ್ಯ" - ಸ್ತ್ರೀಯರನ್ನು ಹೊರತು ಪಡಿಸಿ ಎಂದಿದೆಯೇ ?
ಸಾಧನೆಯಲ್ಲೂ ಸ್ತ್ರೀ ಪುರುಷ ಭೇದದ ಅಳತೆಗೋಲು ಬೇಕೇ ?
ಹಿಂಸೆಯಲ್ಲಿಯೂ "ಸ್ತ್ರೀ ಹಿಂಸೆ" ಮತ್ತು "ಪುರುಷ ಹಿಂಸೆ" ಎಂದಿದೆಯೇ ?
ಶೋಷಣೆ ಎಂದಾಗಲೂ "ಸ್ತ್ರೀ ಶೋಷಣೆ" ಮತ್ತು "ಪುರುಷ ಶೋಷಣೆ" ಎಂಬ ಪ್ರತ್ಯೇಕ ಮಣೆ ಇದೆಯೇ ?
ಸಮತೂಕದ ವಿಶ್ಲೇಷಣೆ ಯಾಕಿಲ್ಲ ?

  ನಾವೀಗ "ಎಲ್ಲರೂ ಎಲ್ಲರಿಗಾಗಿ ಎಲ್ಲರನ್ನೂ" ಎಂಬ ಪದ ಬಳಕೆಯನ್ನು ಉದ್ದೇಶಪೂರ್ವಕ (?) ವಾಗಿ ಮರೆತಂತೆ ಏಕೆ ವ್ಯವಹರಿಸುತ್ತಿದ್ದೇವೆ ?

ಇದೇ  ನೋಡಿ ಚಮತ್ಕಾರ.

ಹೊಟ್ಟೆ ಪಾಡಿನ ಹಣಸಂಪಾದನೆಗಾಗಿ ಅಕ್ಷರವನ್ನು ಬಳಸುವ ಸಹಸ್ರಾರು ಮಂದಿ ಇಂದು ಓಡಾಡುತ್ತಿದ್ದಾರೆ. ದಿನವೂ ಅಕ್ಷರಗಳನ್ನು ಪೋಣಿಸಲೇಬೇಕಾದ ದರ್ದು - ಇಂಥವರದ್ದು. ಶೀಘ್ರವಾಗಿ ಬೆಳಗಿ ತೊಳಗುವ ಅವಸರದಲ್ಲಿರುವ ಸುದ್ದಿ ಬೇಟೆಯ ಇಂತಹ ಶಬ್ದಬ್ರಹ್ಮರುಗಳಿಂದ ನಿತ್ಯವೂ ಪ್ರತಿಭಾ ಪ್ರದರ್ಶನ ನಡೆಯುತ್ತಿರುತ್ತದೆ. ಇವರ ವಿಚಾರಗಳು ಮತ್ತು ಅದಕ್ಕೆ ಪೂರಕವಾದ ದೃಶ್ಯಗಳನ್ನು ಕೇಳಿ ಓದಿ ನೋಡುತ್ತ ಸಾತ್ವಿಕ ಸ್ತ್ರೀ ವರ್ಗಕ್ಕೆ ಗರ ಬಡಿದಂತಾಗಿದೆ. ಸ್ತ್ರೀತ್ವಕ್ಕೆ ಹೊಂದದ "ಉಗ್ರ HORMONE" ನ್ನು ಚುಚ್ಚುಮದ್ದಿನಂತೆ ದಿನವೂ ಸಮಾಜದ ಸ್ತ್ರೀ ಬಳಗಕ್ಕೆ ಊಡಿಸಿ ಧನ್ಯರಾಗುತ್ತಿರುವ ಇಂತಹ ಪ್ರಚಂಡರು ಜಾಗ್ರತರಾಗಬೇಕಾದ ಕಾಲ ಬಂದಿದೆ.

ಇನ್ನು ಸ್ತ್ರೀಯರ ವಿಚಾರಕ್ಕೆ ಬಂದರೆ - "ನಮಗೆ ಗೌರವ ಕೊಡಿ" ಎಂದು ಕೇಳಿಕೊಳ್ಳುವ ಸ್ಥಿತಿ ಯಾರಿಗೂ ಬರಬಾರದು. ಗೌರವ ಎಂಬುದು ನಮ್ಮ ಮಾತು - ಕೃತಿಯಿಂದ ತಾನಾಗಿಯೇ ಹಿಂಬಾಲಿಸಿ ಬರಬೇಕಾದ ಸದ್ಭಾವ. ಕೋಲು ತೋರಿಸಿ ಗೌರವ ಸಂಪಾದಿಸುವುದೂ ಸ್ನೇಹ ಸಂಪಾದಿಸುವುದೂ ಭಯೋತ್ಪಾದನೆಯೇ ಅಲ್ಲವೆ ? ಕೆಲವರಿಗೇಕೆ ಇದು ಅರ್ಥವಾಗುವುದಿಲ್ಲ ? ಸುಲಭದ  “ವೇದಿಕೆಯ ಸುಖಕ್ಕಾಗಿ ದ್ರೋಹ ಚಿಂತನೆಯು ಒಳ್ಳೆಯದಲ್ಲ.

ಹೆಣ್ಣಿಗೆ ಆರ್ಥಿಕ ಸ್ವಾವಲಂಬನೆಯು ಬೇಕು. ಹಾಗೆಂದ ಮಾತ್ರಕ್ಕೆ ಆರ್ಥಿಕ ಸ್ವಾವಲಂಬನೆಗಾಗಿ ತಂತ್ರ - ಕುತಂತ್ರಗಳನ್ನೆಲ್ಲ ಮಾಡಬಹುದೆಂದಲ್ಲ. ಸಮಾಜದ ಹರಿವಿನಲ್ಲಿ ಸ್ವಸಾಮರ್ಥ್ಯದಿಂದಲೇ, ತನ್ನ ಇತಿಮಿತಿಯಲ್ಲಿಯೇ ಸ್ವಾವಲಂಬಿಯಾಗುವ ದಾರಿಯನ್ನು ಕಂಡುಕೊಳ್ಳಬೇಕಾಗುತ್ತದೆ. ಅವರವರ ಇತಿಮಿತಿಯನ್ನು ಮೀರಿದಾಗ ಪರಸ್ಪರ ಎಚ್ಚರಿಸುವುದಕ್ಕೂ ಹಿಂಜರಿಯಬಾರದು. ಆದರೆ ಇಂದಿನ ಸಾಮಜಿಕ ವರ್ತನೆಗಳು ವಿಕ್ಷಿಪ್ತವೆನ್ನಿಸುವಷ್ಟು ಆಘಾತಕಾರಿಯಾಗಿವೆ.

ತಪ್ಪು ಎಂದರೆ ತಪ್ಪು. ಸರಿ ಎಂದರೆ ಸರಿ. ಆದರೆ ಬುದ್ಧಿಕಲುಷಿತವಾದ ಇಂದಿನ ಸನ್ನಿವೇಶದಲ್ಲಿ - ಸತ್ಯಕ್ಕೆ ಹತ್ತಿರ, ಸತ್ಯಕ್ಕೆ ದೂರ, ಹೆಚ್ಚು ಸರಿ, ಸಣ್ಣ ತಪ್ಪು- ಇತ್ಯಾದಿ ತರತಮದ ಗೋಳಾಟ ಕಾಣುತ್ತಿದೆ. ಒಂದು ಹೆಣ್ಣು "ಗಂಡನನ್ನು ಹೊಡೆದು ಕೊಂದಳು" - ಎಂದು ಕೇಳಿದ ಕೂಡಲೆ "ಆ ಗಂಡ ಎಂಬ "ರಾಕ್ಷಸ"ನು ಆಕೆಯ ಜೀವ ಹಿಂಡಿರಬೇಕು; ಅದಕ್ಕೇ ಕೊಂದಳು " ಎನ್ನುವ ತಕ್ಷಣದ ಪೂರ್ವಾಗ್ರಹಪೀಡಿತ ಪ್ರತಿಕ್ರಿಯೆ ಸಾಮಾನ್ಯ. ಇದು ಪರೋಕ್ಷವಾಗಿ ಪ್ರತೀಕಾರದ ಜೈ ಜೈಕಾರವಲ್ಲವೇ? ಪ್ರತೀಕಾರಗಳೇ ಆದರ್ಶವೆಂದಾದರೆ ಡಕಾಯಿತ ಮಹಿಳೆಯರಿಗೂ ಗುಡಿ ಕಟ್ಟಿ ಪೂಜಿಸಬಹುದು. ಪ್ರತೀ ಊರಲ್ಲೂ "ಡಕಾಯತಿ ಶಾಸ್ತ್ರ"  ಬೋಧಿಸಬಹುದು. ಬದುಕು ತಮಾಷೆಯ ವಸ್ತುವಲ್ಲ. ಒಡಕು ಚಿಂತನೆಗಳು ನಮ್ಮನ್ನು ಎಲ್ಲಿಗೆ ಒಯ್ಯುತ್ತಿವೆ ಎಂದೂ ಯೋಚಿಸಬೇಕಾಗುತ್ತದೆ.

ಜೀವ ಹಿಂಡುವ ಕಲೆಯು ಗಂಡುಗಳಿಗೇ ಮೀಸಲಾದುದೇನಲ್ಲವಲ್ಲ? ಅದು ಮನುಷ್ಯ ಸಹಜವಾದ ಪ್ರಾಣಿಮೂಲ ಗುಣ. ಒಂದು ಮನೆ, ಕಛೇರಿ, ಸಮಾಜದ ಯಾವುದೇ ವ್ಯಕ್ತಿಯೂ ತನ್ನ "ಶಕ್ತ್ಯಾನುಸಾರ" ಪರಸ್ಪರ ಜೀವ ಹಿಂಡುವುದು ಬದುಕಿನ ಸಾಮಾನ್ಯ ಅನುಭವವಲ್ಲವೇ?  ಜೀವ ಹಿಂಡುವವರನ್ನೆಲ್ಲ ದೈಹಿಕವಾಗಿ ನಿವಾರಿಸಿಕೊಳ್ಳುತ್ತ ಹೋದರೆ - ಯಾರು ಉಳಿಯಬಹುದು? ಹೆಣ್ಣನ್ನು ವೈಭವೀಕರಿಸುವ ಭರದಲ್ಲಿ, ಸ್ತ್ರೀಭೂತ ಅನಿಷ್ಟಗಳೆಲ್ಲವನ್ನೂ "ಇಷ್ಟ ಇಷ್ಟ ಸಂತುಷ್ಟ" ಎನ್ನುತ್ತ ನಡೆದರೆ, ಸ್ತ್ರೀಯರನ್ನು ಘೋರ ಅಧಃಪತನಕ್ಕೆ ಸಜ್ಜುಗೊಳಿಸುತ್ತಿದ್ದಾರೆಂದೇ ತಿಳಿಯಬೇಕಾಗುತ್ತದೆ.

ಪ್ರಕೄತಿಸಹಜವಲ್ಲದ ಭೇದ ಭಾವಗಳನ್ನು ಕೃತಕ ಬಣ್ಣ ಹಚ್ಚಿ, ಸೃಷ್ಟಿಸಿ, ಸಮಾಜದ ಒಂದು ವರ್ಗದ ಮನಸ್ಸಿನಲ್ಲಿ ಸ್ತ್ರೀಯರನ್ನು ಖಳನಾಯಕಿಯರಂತೆ ಚಿತ್ರಿಸುತ್ತಿರುವವರು ಸಮಷ್ಟಿಯ ಹಿತಚಿಂತನೆಗೆ ತೊಡಗುವುದು ಯಾವಾಗ ?
ಭಾರತ ದೇಶದ ಬೆನ್ನೆಲುಬೇ ಕುಟುಂಬ. ಒಂದು ಕುಟುಂಬದ ಆಧಾರಸ್ತಂಭಗಳೇ - ಹೆಣ್ಣು ಮತ್ತು ಗಂಡು. ಸುಂದರ ಕುಟುಂಬದ ಕಣ್ಣುಗಳಂತಿರುವ ಇವರು, ಪರಸ್ಪರ ಪ್ರತಿಷ್ಠೆ, ಸಂಶಯದಿಂದ ಮೇಲಾಟ ನಡೆಸುವಂತಾದರೆ ಕುಟುಂಬಗಳ ಗತಿ ಏನು? ಸೄಜನಶೀಲ ಸ್ವಸ್ಥ ಹೆಣ್ಣಿನ ಸ್ವಚ್ಛ  ಬದುಕಿನ ತುಂಬ ಕಪ್ಪು ಚಿತ್ತುಗಳನ್ನು ಮೂಡಿಸುವಲ್ಲಿ ಬಾಹ್ಯ ಕೈವಾಡದ ಪಾಲೆಷ್ಟು? ಸ್ವಯಂಕೄತವೆಷ್ಟು?....ಗಂಭೀರ ಚಿಂತನೆಯ ವಸ್ತುವಿದು.

ಗಂಡಾಗಲೀ ಹೆಣ್ಣಾಗಲೀ - ತಮ್ಮ ಶಕ್ತಿ ಸಾಮರ್ಥ್ಯವನ್ನು  ಸ್ವಂತ ಮತ್ತು ಅವಲಂಬಿತರ ಉನ್ನತಿಗಾಗಿ ಬಳಸುವಂತಾದರೆ ಆ ಕುಟುಂಬ ಮಾತ್ರವಲ್ಲ; ತನ್ಮೂಲಕ ಸಮಾಜವೂ ಉಳಿಯುತ್ತದೆ. ನೋವುಗಳು, ಅಭಿಪ್ರಾಯ ಭೇದ, ಸಂತಸ ಸಂಭ್ರಮದ ಕ್ಷಣಗಳು, ಹೆಮ್ಮೆಯ ಅನುಭವಗಳು....ಇವೆಲ್ಲವೂ ಎಲ್ಲ ಬದುಕಿನಲ್ಲೂ ಬಂದು ಹೋಗುವ ಅತಿಥಿಗಳು. ಇಂತಹ ಏರಿಳಿತಗಳನ್ನು ನುಂಗಿ ಜೀರ್ಣಿಸಿಕೊಂಡರೆ ಯಾವ ಹೊರಳಾಟ ನರಳಾಟಗಳಿಗೂ ಆಸ್ಪದವಿರಲಾರದು. ಇದೇ ಬದುಕಿನ ಸೂತ್ರ. ನೋವಿನಿಂದ ಮುಕ್ತವಾದ, ನೋವಿನ ಹೋರಾಟವೇ ಇಲ್ಲದ - ಯಾವುದೇ ಯಶಸ್ವೀ ಬದುಕುಂಟೇ ? ಬದುಕಿನ ಕಾಗುಣಿತ ಕಲಿಸುವ ಶಿಕ್ಷಣದ ಕೊರತೆಯೇ ಹಲವಾರು ಸಾಮಾಜಿಕ ಅನಿಷ್ಟಗಳಿಗೆ ಮೂಲ ಹೇತು ಎಂದೂ ಅನ್ನಿಸುವುದಿಲ್ಲವೆ? 

ಯಾವುದೇ ಸೂತ್ರದ ಅಳವಿಗೆ ಸಿಗದ ಸ್ವಚ್ಛಂದ ಬದುಕು ಸುಸೂತ್ರವಾಗುವುದಾದರೂ ಹೇಗೆ ? ಕರ್ತವ್ಯದ ಗೊಡವೆಗೇ ಹೋಗದೆ, ಕೇವಲ ಹಕ್ಕಿನ ಪ್ರತಿಪಾದನೆ ಮಾಡುವ ಧಾರ್ಷ್ಟ್ಯದ ಶಿಕ್ಷಣ ಪಡೆದಿರುವ ಇಂದಿನ ಒಂದಿಷ್ಟು ಮಕ್ಕಳು  " ನನ್ನನ್ನು ಕೇಳಲು ನೀನ್ಯಾರು ?’  ಎಂದು - ವ್ಯವಸ್ಥಿತವಾಗಿ  ಜಗಳ ಕಾಯುವ  ಸರ್ವಾಂಗೀಣ ತರಬೇತಿ  ಪಡೆಯುತ್ತಿದ್ದಾರೆ. ಕರ್ತವ್ಯಗಳನ್ನು ನೆನಪಿಸುವುದೂ  ಶೋಷಣೆ ಎಂದಾಗಿ ಹೋಗಿದೆ. ಪಾಶ್ಚಾತ್ಯರಿಂದ ಏನನ್ನು- ಎಷ್ಟು ಕಲಿಯಬೇಕು ಎಂಬ ಪರಿಜ್ಞಾನವಿಲ್ಲದ ತರಬೇತುದಾರರು ಮತ್ತು ಏನನ್ನು - ಹೇಗೆ - ಎಲ್ಲಿ ಕಲಿಯುತ್ತಿದ್ದಾರೆಂದು ಬಿಲ್ ಕುಲ್ ಗಮನಿಸದ ಹೆತ್ತವರು ಒಟ್ಟಾಗಿ, ನಮ್ಮ ಮುಂದಿನ  ಇಡೀ ಪೀಳಿಗೆಯನ್ನೇ ಕುರೂಪಗೊಳಿಸುತ್ತ ಚೆಂದ ನೋಡುತ್ತಿದ್ದಾರೆ.

"ಕಿತ್ತೂರು ಚೆನ್ನಮ್ಮ" ಅಂದರೆ - "ಪಕ್ಕದ ಮನೆಯ ಕೆಲಸದವಳಾ ? " ಎಂದು ಕೇಳುವ ಇಂದಿನ ಪೀಳಿಗೆಯು ನಮ್ಮ ಪುರಾಣ ಇತಿಹಾಸವನ್ನು ಓದಿ ತಿಳಿಯುವುದು ಬಹಳಷ್ಟಿದೆ. ಹೊಡೆದಾಡಿಕೊಳ್ಳುವುದನ್ನೇ ಎದ್ದೂಬಿದ್ದೂ ತೋರಿಸುವ ಒಂದಿಷ್ಟು ಮಾಧ್ಯಮಗಳು ಸುದ್ದಿಯ ಹೆಸರಿನಲ್ಲಿ ಹೆಸರು ಮಾಡುತ್ತ ಏನನ್ನು ಸಿದ್ಧಿಸಲು ಹೊರಟಿವೆಯೋ ಗೊತ್ತಿಲ್ಲ. ಶುದ್ಧತೆಯನ್ನು ವಿಕ್ರಯಕ್ಕಿಟ್ಟಂತಿದೆ. ಯಾರನ್ನು ನಂಬುವುದು, ಏನನ್ನು ನಂಬುವುದು ಎಂಬ ಗೊಂದಲದ ಸನ್ನಿವೇಶ ತುಂಬಿಕೊಂಡಿದೆ. ಮುಕ್ತವಾಗಿ ಭಿಕ್ಷೆ ನೀಡುವುದಕ್ಕೂ ಹಿಂಜರಿಯುವ ಸ್ಥಿತಿ ನಿರ್ಮಾಣವಾಗಿದೆ. ಎಲ್ಲರನ್ನೂ ಸಂಶಯದಿಂದಲೇ ನೋಡಬೇಕಾದ ಅವ್ಯಕ್ತ ಭಯ ಹುಟ್ಟಿದೆ. ಪ್ರಾಮಾಣಿಕತೆಯೆಂಬುದು ನಗೆಪಾಟಲಾಗುತ್ತಿದೆ. ಶಿಕ್ಷಣ ಎಲ್ಲಿ ಸೋತಿದೆ ? ಎಲ್ಲೋ ಕಳೆದು ಹೋಗಿದೆಯೇ ?

ಗುರುಹಿರಿಯರನ್ನು ಗೌರವಿಸುವುದು...ಅನುಭವವೆಂಬ ಜೀವನ ಪಾಠಕ್ಕೆ ಪೂರ್ಣ ಶರಣಾಗುವುದು ಏಕೆ ಮತ್ತು ಹೇಗೆ  ಎಂದು ನಮ್ಮ ಮಕ್ಕಳಿಗೆ ಮನದಟ್ಟು ಮಾಡಿಸುವುದು ಬೇಡವೆ? ಶಿಕ್ಷೆ ಇಲ್ಲದ ಶಿಕ್ಷಣವು ಮುಳುಗುವುದನ್ನು ಮಾತ್ರ ಕಲಿಸಬಹುದು. ಶಿಕ್ಷೆ ಎನ್ನುವುದು ಲೈಫ಼್ ಜಾಕೆಟ್ ಇದ್ದಂತೆ. ಬದುಕಿನ ಮಡುವಿನಲ್ಲಿ ಸಿಗುವ ಸುಳಿಗಳಿರುವ ಸ್ಥಳ ಸನ್ನಿವೇಶಗಳನ್ನು ಬದುಕಿನುದ್ದಕ್ಕೂ ಮರೆಯದಂತೆ memoryಯಲ್ಲಿ save ಮಾಡಿಕೊಳ್ಳುವ ತಂತ್ರಾಂಶವೇ ಹಿತಮಿತದ ಶಿಕ್ಷೆ. ಸಮರ್ಥ ಗುರುವೊಬ್ಬ ಶಿಕ್ಷೆಯ  dosage ನ್ನು ಸರಿಯಾಗಿಯೇ ನಿರ್ಧರಿಸಬಲ್ಲ. ಸಮರ್ಥ ಗುರುವಿನ ಆಯ್ಕೆಯಲ್ಲಿಯೇ ನಾವು ಸೋತಿದ್ದರೆ ಅದಕ್ಕೆ ಶಿಕ್ಷಣದ ಸ್ವರೂಪವನ್ನು ವಿರೂಪಗೊಳಿಸಿ, ಹೊಸಯುಗದ ಹೆಸರಿನಲ್ಲಿ ಅಡ್ಡದಾರಿ ಹಿಡಿಯುವುದು ಪರಿಹಾರವಲ್ಲ. ಅದರ ಅಗತ್ಯವೂ ಭಾರತ ದೇಶಕ್ಕೆ ಬಂದಿಲ್ಲ. ಶಿಕ್ಷಣದ ಬಲಿಷ್ಠ ಪರಂಪರೆಯುಳ್ಳ ನಮ್ಮ ದೇಶದ  ಇಂದಿನ  ಶಿಕ್ಷಣವು, ಪರದೇಶೀ ಫ಼್ಯಾಶನ್ನಿನ ಹಿಂದೆ ಬಿದ್ದು ನಮ್ಮ ನೆಲದ ಅಮೂಲ್ಯ "ಗುರುಪದ್ಧತಿ"ಯ  ಉತ್ತಮಾಂಶಗಳನೆಲ್ಲ ಬದಿಗೆ ಸರಿಸಿ ಇಟ್ಟಿದೆ. ವಿದ್ಯಾ ಸಂಸ್ಕಾರ ಪಡೆಯುವಾಗ ದಯೆ ಕರುಣೆಗಳೆಲ್ಲವೂ ಹಿಂದೆ ಸರಿಯಲೇಬೇಕು. ಶಿಸ್ತು ಎಂಬುದು ವಿದ್ಯೆಯ ಆಧಾರ ಸ್ತಂಭ. ವಿದ್ಯಾರ್ಥಿದೆಸೆ ಎಂದರೆ ಗೌರವ ಕೊಡುವುದನ್ನು ಕಲಿಯುವ ಕಾಲ. ಪ್ರತಿಯಾಗಿ ತುಂಬು ಮನಸ್ಸಿನಿಂದ ಗುರುವು ನೀಡುವ ಜ್ಞಾನವನ್ನು ಪಡೆದುಕೊಳ್ಳುವ ಕಾಲ. ಆದರೆ ಪರಿಸ್ಥಿತಿ ಹಾಗಿಲ್ಲ. ಗುರು ಗುರುವಿನಂತಿಲ್ಲ. ಶಿಷ್ಯ ಶಿಷ್ಯನಂತೆಯೂ ಇಲ್ಲ. ಹೆತ್ತವರು - ಮಕ್ಕಳ ಸಂಬಂಧಗಳೂ  - "ಹಲೋ ಹಲೋ" ಮಟ್ಟಕ್ಕೆ ಇಳಿದಿದೆ. ಹಕ್ಕುಗಳ ಅಡಾವುಡಿಯು ಊರೆಲ್ಲಾ ತುಂಬಿ, ಈಗ ಮನೆಮನೆಯ ಹೊಸ್ತಿಲೊಳಗೂ ತುಂಬುತ್ತಿದೆ. ತಂದೆಯೊಬ್ಬ ಸಕಾರಣವಾಗಿ ತನ್ನ ಮಗುವಿನ ಹಿತದೄಷ್ಟಿಯಿಂದ ಶಿಕ್ಷಿಸಿದರೆಆ ಮಗುವು, ತನ್ನ ತಂದೆಯ ಮೇಲೇ ಕ್ರಿಮಿನಲ್ ಪ್ರಕರಣ ದಾಖಲಿಸುವಂತಹ ಪ್ರಸಂಗಗಳು ಈಗೀಗ ಭಾರತ ದೇಶದಲ್ಲಿಯೂ ಬಯಲಾಗುತ್ತಿದೆ. ಮೌಲ್ಯಗಳ ಅರಿವು ಮೂಡಿಸದ ಇಂದಿನ ಶಿಕ್ಷಣವು ನಮ್ಮನ್ನು ಎಲ್ಲಿಗೆ ಕೊಂಡೊಯ್ಯುತ್ತಿದೆ ? ಕಾನೂನನ್ನೇ ಕೊರೆದು ಸ್ವಚ್ಛಂದ ದಾರಿ ಕಂಡುಕೊಳ್ಳುವ ಅಥರ್ವಣ ವಿದ್ಯೆಯತ್ತ ತಳ್ಳುತ್ತಿದೆಯೇ?



ಇಷ್ಟೇ ಅಲ್ಲ  "ಬಾಲಕಿಯ ಮೇಲೆ ಅತ್ಯಾಚಾರ ನಡೆಯಿತು " ಎಂದು ಮಕ್ಕಳಿಂದ ಸುಳ್ಳು ಹೇಳಿಸಿ, ಆ ಮಗುವಿನ ಹೆತ್ತವರ ಉಸ್ತುವಾರಿಯಲ್ಲಿಯೇ ಹೆದರಿಸಿ, ಹಣ ಮಾಡುವ ಧಂದೆಗೆ ಓನಾಮವಾಗಿದೆ ! ಶಿಕ್ಷಣದ ವ್ಯಾಪಾರವನ್ನು ಹತ್ತಿರದಿಂದ ಕಾಣುತ್ತಿರುವ ಮಕ್ಕಳು ಮತ್ತು ಸಮಾಜ ಒಟ್ಟಾರೆಯಾಗಿ ಇಡೀ ಬದುಕನ್ನೇ ವ್ಯಾಪಾರ ವ್ಯವಹಾರದ ರಂಗಸ್ಥಳವಾಗಿ ಪರಿವರ್ತಿಸಿಕೊಳ್ಳುತ್ತಿವೆ. ಇಂತಹ ಒಂದೊಂದು ಘಟನೆಯೂ ಭವಿಷ್ಯದಲ್ಲಿ ಸಂಭವಿಸಬಹುದಾದ ಅನಾಹುತಗಳ ಪೂರ್ವ ಲಕ್ಷಣಗಳು. ಸಮಾಜವಿರೋಧೀ ಶಕ್ತಿಗಳಿಗೆ ಹುಲುಸಾದ ಆಡುಂಬೊಲವನ್ನು ಒದಗಿಸುವಂತೆ ಕಾಣುತ್ತಿದೆಯೇ !

"ಹೆಣ್ಣಿಗೆ ಲಜ್ಜೆಯೇ ಆಭರಣ! " ಹಾಗೆಂದು ಹೇಳಿ ನೋಡಿ...ನಿಮ್ಮನ್ನು ಕಚ್ಚಿ ಚೂರುಮಾಡಿ ಬಿಸಾಡುತ್ತಾರೆ. ನಾಚಿಕೆಯುಳ್ಳ ಹೆಣ್ಣಿಗೆ, ಮರ್ಯಾದೆಯ ವ್ಯಾಖ್ಯೆಯಂತೆ  ಡೀಸೆಂಟ್ ಆಗಿ ಗದ್ದಲ ಮಾಡದೆ ಬದುಕುತ್ತಿರುವವರಿಗೆ ಈಗ ಯಾವ ಕಿಮ್ಮತ್ತೂ ಇಲ್ಲವೇನೋ...ಅನ್ನಿಸುವುದೂ ಇದೆ. ರಸ್ತೆಯಲ್ಲಿ ನಿಂತುಕೊಂಡು ಎರಡೂ ಕಾಲನ್ನೆತ್ತಿ ಒದೆಯುತ್ತ, ಸೊಂಟದ ಪಟ್ಟಿಯನ್ನು ಕಿತ್ತು  ಅವರಿವರನ್ನು ಥಳಿಸುತ್ತ, ಅಂತಹ ಚಿತ್ರೀಕರಣವನ್ನು (ಪೂರ್ವ ಯೋಜಿತವೇ ಎಂಬ ಸಂಶಯ ಬಂದರೂ ಅದನ್ನೂ ಸ್ತ್ರೀ ವಿರೋಧಿ ಚಿಂತನೆಯೆಂದಾರು) ಆಧರಿಸಿ ದಿನಗಟ್ಟಲೆ  ನಡೆಸುವ  ಚರ್ವಿತಚರ್ವಣ ಚರ್ಚೆಗಳ ಪ್ರಧಾನ ಪಾತ್ರಧಾರಿಗಳಿಗೆ ಕೆಟ್ಟ ಪ್ರಚಾರ, ಪ್ರಶಸ್ತಿ, ಮುಂಬಡ್ತಿ(?) ಯೂ ಸಿಗುತ್ತದಂತೆ! ಸಾರಾಂಶ ಏನೆಂದರೆ, "ರಸ್ತೆಯಲ್ಲಿ ಕ್ಯಾರೇಎನ್ನುತ್ತ  ಒದೆಯಿರಿ, ಥಳಿಸಿರಿ, ರಸ್ತೆಯನ್ನು ರಣರಂಗ ಮಾಡಿ" ಎಂಬ ಸಂದೇಶವನ್ನು ಸ್ತ್ರೀ ಜಗತ್ತಿಗೆ ನೀಡುತ್ತಿರಬಹುದೇ? ಇದೂ ಓಲೈಕೆಯೆಂಬ ಹಿಂಸೆಯ ವೈಭವೀಕರಣವಲ್ಲವೇ? ಸ್ತ್ರೀಯರನ್ನು ಉಗ್ರಗಾಮಿಗಳನ್ನಾಗಿಸಿ, ಗುರಾಣಿಯಂತೆ ಅವರ ಉಪಯೋಗಪಡೆಯುವ ಹುನ್ನಾರವೇ? ಅಥವ ತೂಕಡಿಸಿ ಬೀಳುತ್ತಿರುವ ಅಣ್ಣ ತಮ್ಮಂದಿರ ಸಗಟು ಬೇಜವಾಬ್ದಾರಿಯೇ?

ಎಲ್ಲರಿಗೂ ಎಲ್ಲ ಕಾಲಕ್ಕೂ ಉಗ್ರತನದಿಂದ ಗೆಲುವು ಸಿಗಬಹುದೇ? ಎದುರು ಪಕ್ಷವು ಪ್ರತೀಕಾರಕ್ಕೆ ಪ್ರಾರಂಭಿಸಿದರೆ ಆಗ ಏನಾಗಬಹುದು? ಪ್ರತೀ ಮನೆಯ ಎದುರಿನಲ್ಲೂ ಪೋಲೀಸರನ್ನು ಇಡುವುದು ಸಾಧ್ಯವೇ? ಒಬ್ಬ ಪೋಲೀಸ್ - ಎಷ್ಟು ಜನರನ್ನು ಕಾದಾನು?

ಸ್ವಂತ ರಕ್ಷಣೆ ಎಂಬ ಪದಕ್ಕೆ ಇಂದು ನೀಡುತ್ತಿರುವ ಸೌಲಭ್ಯಗಳ ಪಟ್ಟಿ (ಮೆಣಸಿನ ಹುಡಿ...ಇತ್ಯಾದಿ..) ನೋಡಿದರೆ, ಇವು ಯಾವುವೂ ಪೂರ್ಣರಕ್ಷಣೆಯ ಸಾಧನಗಳಲ್ಲ ಎಂಬುದು ಸ್ತ್ರೀಯರಿಗೆ ಅರ್ಥವಾಗಬೇಕು. ದೈಹಿಕವಾಗಿ ಗಂಡಿಗಿಂತ ದುರ್ಬಲವಾಗಿರುವ ಪ್ರಕೃತಿ ಹೆಣ್ಣಿನದು; ಮಾತ್ರವಲ್ಲ - ಮನುಷ್ಯ ಜಾತಿಯ ಹೆಣ್ಣಿಗೆ ಕ್ರೌರ್ಯವೆಂಬುದು ಒಗ್ಗುವುದಿಲ್ಲ. ಮೆತ್ತಿಕೊಂಡ ತನ್ನದಲ್ಲದ ಗುಣವೆಂಬ ಬಣ್ಣವು ಶಾಶ್ವತವಲ್ಲ ಎಂಬ ಸತ್ಯವನ್ನು ಒಪ್ಪಬೇಕು. ಆದರೆ ಬೌದ್ಧಿಕ ಸ್ಪರ್ಧೆಯಿಂದ ಹೆಣ್ಣನ್ನು ಯಾರೂ ಹಿಂದೆ ತಳ್ಳುವುದು ಸಾಧ್ಯವಿಲ್ಲ. ಬೌದ್ಧಿಕವಾಗಿ ಎಷ್ಟೋ ಬಾರಿ ಗಂಡಿಗಿಂತ ಒಂದು ಹೆಜ್ಜೆ ಮುಂದೆಯೇ ಇರುವ ಹೆಣ್ಣು, ಬುದ್ಧಿ ಸಂಬಂಧಿತ ಕ್ಷೇತ್ರಗಳಲ್ಲಿ ಹೆಚ್ಚು ಸುರಕ್ಷಿತವಾಗಿ ತನ್ನ ಪ್ರತಿಭೆ ತೋರಬಹುದು. ಈ ಹಂತದಲ್ಲೂ "ಎಚ್ಚರ"ದ ನಡೆ ನುಡಿಯ ಕ್ರಿಯಾಶೈಲಿಯನ್ನು ಬೆಳೆಸಿಕೊಂಡಾಗ ಮಾತ್ರ ಸ್ವರಕ್ಷಣೆಯ ನೆಮ್ಮದಿ ಕಾಣುವುದು ಸಾಧ್ಯ. ಬಾಹ್ಯ ರಕ್ಷಣೆಯನ್ನೇ ನಂಬಿ ಹಾರುವ - ಹೋರುವಪ್ರವೃತ್ತಿಯಿಂದ ಯಾವ ಹೆಣ್ಣಿಗೂ ಒಳಿತಾಗದು. ಪ್ರತಿಯೊಂದು ಕ್ರಿಯೆಗೂ ಪ್ರತಿಕ್ರಿಯೆ ನೀಡುತ್ತ ಬಂದರೆ - ಬಡ್ಡಿ ಬಿಡಿ ; ಅಸಲೂ ಇಲ್ಲದಂತಾದೀತು. ಅಹಂಕಾರಕ್ಕೆ ಉದಾಸೀನಕ್ಕಿಂತ ದೊಡ್ಡ ಮದ್ದೇ ಇಲ್ಲ.

ಈಗ ಏನಾಗಿದೆ ಅಂದರೆ, ರೌಡಿಗಳು ಉಪಯೋಗಿಸುವ ಭಾಷೆ ಭಾವ ಚೇಷ್ಟೆಗಳನ್ನು ಕೆಲವು ಸ್ತ್ರೀಯರು ಪ್ರಯೋಗಿಸತೊಡಗಿದ್ದಾರೆ. ಅರ್ಧ ರಾತ್ರಿಯಲ್ಲಿ ನಾವು ಒಬ್ಬೊಬ್ಬರೇ ಓಡಾಡುತ್ತೇವೆ.. ಏನೀಗ? ಏನು ಮಾಡುತ್ತೀರಿ? ನಮಗೂ ಸ್ವಾತಂತ್ರ್ಯವಿದೆ. ಕೇಳಲು ನೀವ್ಯಾರು?" ಇತ್ಯಾದಿ ಡುರಕಿ ಹಾರಿಸುತ್ತ, ಅದೇ ಉಸಿರಿನಲ್ಲಿ ನಮಗೆ ರಕ್ಷಣೆ ಕೊಡುವುದು ನಿಮ್ಮ ಕರ್ತವ್ಯಎಂದೂ ವಿರೋಧಾಭಾಸದ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಹೀಗೆ ಸ್ತ್ರೀಯರ ಮುಖವಾಣಿಯಂತೆ ಬಳಕೆಯಾಗುತ್ತಿರುವ ಕೆಲವು ಗಟ್ಟಿಗಿತ್ತಿ ವಿದ್ವನ್ಮಣಿಗಳುಬಹಿರಂಗ ಸವಾಲನ್ನೂ ಹಾಕಿದಂತೆ ಕಾಣುವುದಿದೆ. (ತಮ್ಮ ಸ್ವರಕ್ಷಣೆಯನ್ನು ಮಜಬೂತಾಗಿ ಮಾಡಿಕೊಂಡು, ಇತರ ಮುಗ್ಧ ಸ್ತ್ರೀಯರನ್ನು ಎತ್ತಿ ಕಟ್ಟುತ್ತಿದ್ದಾರೆಯೆ?) ಇಂತಹ ಸವಾಲುಗಳಿಗೆ ಉತ್ತರವಾಗಿ, ಕೆಲವು ಪುರುಷಶ್ರೇಷ್ಠರೆಂದು ತಮಗೆ ತಾವೇ ಅಂದುಕೊಂಡಿರುವವರು "ನಾವು ನಿಮ್ಮನ್ನು ಹಾಡಹಗಲೇ ಹೊತ್ತೊಯ್ದು ಪೀಡಿಸುತ್ತೇವೆ" ಎಂದು ಪ್ರತಿಜ್ಞೆ ಮಾಡುತ್ತಾರೆ. (ಇಂತಹ ಮೂಢರಿಗೆ ಬಲಿಪಶುವಾಗುವುದು ಯಾವುದೋ ಬಡಪಾಯಿ!) ಎಲ್ಲೆಲ್ಲೂ ಪೌರುಷದ ಅಬ್ಬರ! ಸ್ತ್ರೀಯರು ತಮ್ಮ ಓಟವನ್ನು ಕ್ಷಣಕಾಲ ನಿಲ್ಲಿಸಿ, ನಾವೆಲ್ಲಿದ್ದೇವೆ ಎಂದು ನೋಡಿಕೊಳ್ಳಬೇಕಾದ ಕಾಲ ಬಂದಿದೆ. ಶಬ್ದಗಳನ್ನು ಒಡೆದು ಒಡೆದು ಕಟ್ಟುತ್ತ, ನವ್ಯಾರ್ಥಗಳನ್ನು ಅನ್ವೇಷಿಸುತ್ತ, ಮಾಧ್ಯಮಗಳಲ್ಲಿ ಗಂಟೆಗಟ್ಟಲೆ ಗಂಟಲು ಕೆರೆದುಕೊಳ್ಳುವ ಒಣಚರ್ಚೆಗಳಿಂದಲೂ ಸ್ತ್ರೀಯರು ತಮ್ಮನ್ನು ತಾವೇ ರಕ್ಷಿಸಿಕೊಳ್ಳಬೇಕಾಗಿದೆ. ಮಾತಿನಲ್ಲೇ ಮನೆ ಕಟ್ಟುತ್ತ "ಗೌರವಧನ" ದಿಂದ ಗೌರವ ಪಡೆದು ಬದುಕು ಸಾಗಿಸುತ್ತಿರುವ ಇಂತಹ "ಮುಖವಾಣಿ" ಗಳನ್ನು ನಾವು ಎಷ್ಟು ಸ್ವೀಕರಿಸಬೇಕು ಎಂಬ ಸ್ಪಷ್ಟತೆಯೂ ಬೇಕಾಗಿದೆ. ಈ ಎಲ್ಲ ಬವಣೆಗಳಿಂದ ಪಾರಾಗಿ ನಿತ್ಯದ ಬದುಕನ್ನು ಮೌನವಾಗಿ ಸಹನೆಯಿಂದ ಸುಂದರವಾಗಿ ಕಟ್ಟುತ್ತಿರುವ ಸ್ತ್ರೀಯರು ನಿಜವಾಗಿಯೂ "ಗಟ್ಟಿಗಿತ್ತಿ"ಯರಲ್ಲವೇ ?

ಸ್ವಾತಂತ್ರ್ಯಕ್ಕೆ ಬಿಡುಬೀಸಾದ ಸ್ವಚ್ಛಂದತೆಯೆಂಬ ಅರ್ಥ ಮಾಡಬಾರದು. ನಿಶ್ಚಯವಾಗಿ - ಧೈರ್ಯ ಎಂಬುದು ಬೇಕು; ಜೊತೆಗೆ ವಿವೇಕವೂ ಬೇಕು. ನಮ್ಮ ವರ್ತನೆಗಳ ತತ್ಪರಿಣಾಮಗಳ ಚಿಂತೆಯೂ ಬೇಕು. ಸುಮ್ಮನೆ ಸದ್ದುಗದ್ದಲ ಮಾಡಿ ಏನು ಪ್ರಯೋಜನ ?

ಶೋಷಣೆ ಅಂದರೆ - "ಶೋಷಣೆ". ಅಷ್ಟೆ. ಹೆಣ್ಣಿನ ಶೋಷಣೆ ಮಾತ್ರ ನಿಜವಾದ ವೇದನೆ; ಉಳಿದ ವೇದನೆಗಳು ನಗಣ್ಯ ಎಂದಾಗಬಾರದು. ಗಂಡಿನ ಶೋಷಣೆಯಲ್ಲೂ ವೇದನೆ ಇದೆ. ಹೆಚ್ಚು ಶೋಷಣೆ, ಕಡಿಮೆ ಶೋಷಣೆ, ನಿನ್ನೆ ಮೊನ್ನೆಯ ಶೋಷಣೆ, ಶತಶತಮಾನದ ಶೋಷಣೆ ಮತ್ತು ಅದಕ್ಕಾಗಿ ಅಧಿಕೃತವಾಗಿ ನಡೆಸುತ್ತಿರುವ ಪ್ರತಿಶೋಷಣೆ - ಮುಂತಾದ ಶಾಬ್ದಿಕ ಶೋಷಣೆಗೆ ಇಳಿದಿರುವ ಕ್ರೂರ ಮನಸ್ಸುಗಳಿಂದ ಪಾರಾಗುವುದು ಹೇಗೆ ಎಂಬ ವಿಚಾರವು ಮಾತ್ರ ಇಂದಿಗೆ ಹೆಚ್ಚು ಪ್ರಸ್ತುತ.

"ನಮ್ಮತನ"ವನ್ನು ಉಳಿಸಿಕೊಳ್ಳುವ ಇಚ್ಛೆಯೆಂಬುದು ಹೆಣ್ಣಿಗೆ ಇರುವುದೇ ಹೌದಾದರೆ ಹೆಣ್ತನ ಉಳಿಸಿಕೊಳ್ಳಲಿ. ಹೆಣ್ಣು ಹೆಣ್ಣಿನಂತೇ ಇರಲಿ; ಗಂಡು ಗಂಡಿನಂತೇ ಇರಲಿ. ಅಸಹಜಗಳ ವೈಭವೀಕರಣದಿಂದ ವಸ್ತುಸ್ಥಿತಿ ಬದಲಾಗಲಾರದು; ವಿಕೃತಿ ಹೆಚ್ಚಬಹುದು - ಅಷ್ಟೆ.

ಹೆಣ್ಣು ನೌಕರಿ ಮಾಡಿದರೆ ಗಂಡಾಗುವುದಿಲ್ಲ. ಗಂಡನಿಗೆ ಹೊಡೆದರೂ ಗಂಡಾಗುವುದಿಲ್ಲ. ಎಷ್ಟೇ ಕೂಗಾಡಿದರೂ ಗಂಡಾಗುವುದಿಲ್ಲ. ಮಂಗಳನನ್ನು ಮುಟ್ಟಿ ಬಂದರೂ ಗಂಡಾಗುವುದಿಲ್ಲ. ಅಂದ ಮಾತ್ರಕ್ಕೇ ಹೆಣ್ಣು ಕೀಳಾಗುವುದೂ ಇಲ್ಲ; ಗಂಡು ಮೇಲಾಗುವುದೂ ಇಲ್ಲ. ಅನಾರೋಗ್ಯಕರ ಸ್ಪರ್ಧೆಯಿಂದ ಸಮಾಜವು ಕಲುಷಿತವಾಗಬಹುದು; ದೀರ್ಘಕಾಲದವರೆಗೆ ದುಷ್ಪರಿಣಾಮವೆಂಬ ಹೊರೆಯನ್ನೂ ಹೊರಬೇಕಾಗಬಹುದು. ವಿಕಸಿತ ನಾಗರಿಕತೆಯನ್ನು ಮುಕ್ಕಾಗಿಸುವುದು ಬೇಡ.

ಬದುಕು ಎಂದರೆ Missed Call ಅಲ್ಲ. ಆದರೆ ಬದುಕಿನ Call ಮಾತ್ರ Miss ಆಗಬಾರದು; Miss ಮಾಡಿಕೊಳ್ಳಬಾರದು. ಸ್ವಚ್ಛ ಚಿಂತನೆಗಳಿಗೆ ಮುಕ್ತರಾಗಿರಬೇಕು. ನೇತ್ಯಾತ್ಮಕ ವಿಷಯಗಳ ಗೊಡವೆಯನ್ನೇ ಬಿಡಬೇಕು. ಸ್ತ್ರೀತ್ವದ ಒಂದೊಂದು ಕೋಟೆಯೂ ಭದ್ರವಾಗಿರಲು ಕೋಟೆಯ ಬಾಗಿಲಿನ ಕೀಲಿ ಕೈ ನಮ್ಮಲ್ಲೇ ಇರಬೇಕು. "ಶಕ್ತಿ ಸ್ವರೂಪಿಣಿ" ಎಂದು ಉಬ್ಬಿಸಿದರೆ ಅದರ ಅಂತರಾರ್ಥ ಮತ್ತು ವ್ಯಾಪಕ ಅರ್ಥವನ್ನು ತಿಳಿದುಕೊಳ್ಳುವಷ್ಟಾದರೂ ಪ್ರಬುದ್ಧತೆಯನ್ನು ಬೆಳೆಸಿಕೊಳ್ಳುವುದಕ್ಕೆ ನಮ್ಮ ಶಿಕ್ಷಣವೂ ಬೆಂಬಲಿಸಬೇಕು. ಇಂದಿನ ಶಿಕ್ಷಣ ರಂಗವು ದಿಕ್ಕು ದೆಸೆಯಿಲ್ಲದಂತಾಗಿ ಹಳಿ ತಪ್ಪಿದೆ. ಓದುವುದು ಯಾಕೆ? ಏನನ್ನು ಓದಬೇಕು? ಯಾರಿಗೂ ಗೊತ್ತಿಲ್ಲ. ಪ್ರತೀ ಮಗುವಿನ ಅಭಿರುಚಿಯನ್ನು ಅರಿತು ನೀರೆರೆಯುವವರೂ ಇಲ್ಲ. ಸಬಲ ವ್ಯಕ್ತಿತ್ವ ನಿರ್ಮಾಣಕ್ಕೆ ಪೂರಕವಾದ ಶಿಕ್ಷಣವಾದರೂ ಉಂಟೇ? ಗುಣಪ್ರೇರಕವಾದ ಶಿಕ್ಷಣ ಬೇಡವೆ? ಹಣ ಸಂಪಾದನೆಯ ಗುರಿ ಹೊತ್ತ ಶಿಕ್ಷಣ ಒಂದೇ ಸಾಕೆ? ಮೌಲ್ಯಗಳನ್ನೆಲ್ಲ ಕೆಟ್ಟ ರಾಜಕೀಯದೊಂದಿಗೆ ಪಾಣಿಗ್ರಹಣ ಮಾಡುತ್ತ ಹೋದರೆ ಗತಿಯೇನು? ಮಕ್ಕಳ ಮನಸ್ಸನ್ನು ಅರಳಿಸಬೇಕಾದ ನೆಲ - ನೆಲೆಗಳಲ್ಲಿ, ಮನಸ್ಸನ್ನು ಕೆರಳಿಸುವ ಸತತ ಹುನ್ನಾರಗಳು ನಡೆಯುತ್ತಿದ್ದರೆ ಭದ್ರ ಭವಿಷ್ಯವು ನನಸಾಗುವುದಾದರೂ ಹೇಗೆ? ತಾಂತ್ರಿಕ ಯಾಂತ್ರಿಕ ಉನ್ನತಿಯಿಂದ ಯಂತ್ರ ಮಾನವರುಗಳನ್ನೇ ನಿರ್ಮಿಸುತ್ತ, ಭಾವನಾತ್ಮಕವಾದ ಸೂಕ್ಷ್ಮ ಭಾವ, ಮಾನವೀಯ ಪ್ರವೃತ್ತಿಗಳನ್ನು ಚಿವುಟುತ್ತ ಹೋಗಿ, ಕೊನೆಯಲ್ಲಿ, ಹೆಣ್ಣು-ಗಂಡುಗಳ ಕುರಿತು ದಿನವಿಡೀ ಆಡಿಕೊಂಡು, ಗಂಟಲು ಹರಿದುಕೊಂಡು ಸಾಧಿಸುವುದಾದರೂ ಏನು ?

ಈಗೂ ತನ್ನ ಮಕ್ಕಳು, ತನ್ನ ಕುಟುಂಬವೆಂದು ಹಂಬಲಿಸುತ್ತ ಸ್ವಗೃಹದ ದೇವತೆಯಂತೆ ಬದುಕನ್ನು ಪ್ರೀತಿಯಿಂದ ಪೋಷಿಸುತ್ತಿರುವ ಲಕ್ಷಾಂತರ ಸ್ತ್ರೀಯರಿದ್ದಾರೆ. ಅಂತಹ ಸ್ತ್ರೀರತ್ನಗಳಿಂದಲೇ ಎಷ್ಟೋ ಬದುಕುಗಳು ಸ್ವರ್ಗವಾಗಿವೆ; ಆಗುತ್ತಿವೆ. ತನ್ನ ಸುತ್ತಲಿನ ಬದುಕುಗಳನ್ನೂ ಸಹನೀಯವಾಗಿಸುತ್ತ ನಿಃಸ್ವಾರ್ಥ "ಸೇವೆ" ನಡೆಸುತ್ತಿರುವ ಸ್ತ್ರೀಯರನ್ನು ದೇವತೆಯೆಂದರೆ ಯಾರೂ ಚಕಾರವೆತ್ತಲಾರರು; ಬದಲಿಗೆ ಕೈ ಮುಗಿದಾರು. ಸಹನೆ, ತ್ಯಾಗ, ಪ್ರೀತಿಯನ್ನೇ ಉಂಡು ಉಣಿಸುತ್ತಿರುವ ಇಂತಹ ಕಷ್ಟ ಸಹಿಷ್ಣು ಸ್ತ್ರೀಯರನ್ನೂ ಘರ್ಷಣೆಗೆ ಪ್ರಚೋದಿಸುವ ಅನುದ್ದೇಶಿತ ಹುನ್ನಾರವು ಈಗ, ಸದ್ದುಗದ್ದಲದೊಂದಿಗೆ ನಡೆಯುತ್ತಿದೆ. ಕಷ್ಟವಿಲ್ಲದೆ ಸುಖ ಬಾಚುವ, ಅವರ ಟೋಪಿ ತೆಗೆದು ಇವರಿಗೆ ಹಾಕುವ ಬಗೆಬಗೆಯ ದಾರಿಗಳನ್ನು ಪರೋಕ್ಷವಾಗಿ, ಸೋದಾಹರಣವಾಗಿಯೂ ನಿರೂಪಿಸಲಾಗುತ್ತಿದೆ. ದಿನಕ್ಕೊಂದು ನಾಟಕ ಪ್ರದರ್ಶನವೂ ನಡೆಯುತ್ತಿದೆ. ಬುದ್ಧಿ ಹೇಳುವ ಅಪ್ಪ ಅಮ್ಮ ಅಜ್ಜ ಅಜ್ಜಿ ಅತ್ತೆ ಮಾವ- ಯಾರೂ ಬೇಡವಾಗುತ್ತಿದೆ; ಅವರಿಗೆಲ್ಲ "OLD FURNITURE" ನ ಸ್ಥಾನಮಾನ ಕೊಟ್ಟಾಗಿದೆ.  ಬುದ್ಧಿ ಜಿಡುಕಾಗಿ ಕಗ್ಗಂಟಾದ ಮೇಲೆ ಕರೆಸಿ, ಬುದ್ಧಿ ಹೇಳುವ ವ್ಯಾಪಾರ ನಡೆಸುವವರಿಗೆ (COUNSELLING) ಸುಭಿಕ್ಷ ಕಾಲ ಬಂದಿದೆ. ಪುರಂದರದಾಸರು ಹೇಳಿದ್ದ ಬುದ್ಧಿಮಾತು ಆಕ್ಷೇಪಾರ್ಹವೆಂದಾಗಿ, ಯಾರ್ಯಾರಿಗೋ ದುಡ್ಡು ಕೊಟ್ಟೇ ಬುದ್ಧಿ ಹೇಳಿಸಿಕೊಳ್ಳುವ ಗ್ರಹಚಾರವೂ ಬಡಿದಾಗಿದೆ; ತನ್ಮೂಲಕ ಬುದ್ಧಿಮಾತಿನ ಮೌಲ್ಯವರ್ಧನೆಯಾಗಿದೆ.

ಗೊಣಗಾಡುತ್ತ ದೂರುತ್ತ ತನ್ನೊಳಗಿನ ಹಿಂಸೆಯನ್ನು ಹಗುರಗೊಳಿಸಿಕೊಳ್ಳುವುದು ಸಾಮಾನ್ಯವಾಗಿ ಗಂಡಸಿನ ಜಾಯಮಾನವಲ್ಲ. ಅದು ಗಂಡಸಿನ ಸಹಜ ಸ್ವಭಾವವಾದರೂ ಒಳಗಿನ ಹಿಂಸೆಯ “ಒತ್ತಿನ ಮೊತ್ತ” ಮಿತಿಮೀರಿದಾಗ "ಸಮಾಜದ್ವೇಷಿ" ಗಂಡು ಸಮಾಜವು ರೂಪುಗೊಳ್ಳುವುದೂ ಅಸಹಜವೇನಲ್ಲ. ಇದರ ಆಂಶಿಕ ಪರಿಣಾಮ ಬಡಿದರೂ ಸಮಾಜಕ್ಕೆ ಒಳ್ಳೆಯದಾಗುವ ಸಂಭವವಿಲ್ಲ. ಆದುದರಿಂದ ಹೆಣ್ಣು ಗಂಡೆಂದು ಒಡೆದು ಆಳುವ ಚಟವನ್ನು ಇನ್ನಾದರೂ ಬಿಟ್ಟು ಬಿಡುವುದರಿಂದ ಸಮಾಜಕ್ಕೆ ಹಿತವಾದೀತು. ವಿದ್ಯೆಯನ್ನು ಒಡೆದು ಚೂರಾಗಿಸಿ, ಸಮಗ್ರ ಶಿಕ್ಷಣದ ಸಂಪತ್ತನ್ನು ಕಸಿದುಕೊಂಡಾಯಿತು. ಜಾತಿ ಧರ್ಮ ವರ್ಣವೆಂದು ಓಲೈಕೆಯ ವಿಷ ತುಂಬಿ ತರತಮದ ಲೇಪನ ಹಚ್ಚಿ ಸಮಾಜವನ್ನು ಒಡೆದಾಯಿತು. ಕೊನೆಯದಾಗಿ, ಗಂಡು ಹೆಣ್ಣು” ಎಂಬ ವಿಷಯಕ್ಕೆ "ವಿಷ ಲೇಪನ" ನಡೆಸುತ್ತ ವಿಷಸಂತಾನವನ್ನು ಹುಟ್ಟು ಹಾಕಬೇಕೆ? ಈ ಬುದ್ಧಿಗೇಡಿ ಷಡ್ಯಂತ್ರದಿಂದ ಸಮಾಜವು ಎಂತೆಂತಹ ತಲ್ಲಣಗಳಿಗೆ ಒಡ್ಡಿಕೊಳ್ಳಬೇಕಾಗಬಹುದು ಎಂಬ ಕನಿಷ್ಠ ಪ್ರಜ್ಞೆಯನ್ನಾದರೂ ನಾವು ಬೆಳೆಸಿಕೊಳ್ಳುವುದು ಬೇಡವೇ ?

ನಾವು ಸ್ತ್ರೀ ಭಾವಕ್ಕೆ ಹೊಸ ಭಾಷ್ಯ ಬರೆಯುವ ಆಚಾರ್ಯರಾಗುವುದು ಬೇಡ. ನಾಗರಿಕ ಮನುಷ್ಯರಾಗಿ ಪರಸ್ಪರ ನೆರಳು ನೀಡುತ್ತ ಬದುಕಿದರೆ ಸಾಕು. ರಕ್ತಸಿಕ್ತ ಸಮಾಜವನ್ನು ಕಾಣುವ ಮೂರ್ಖ ದುರುಳತನ ((Perversion), ಯಾರಿಗೂ ಹಿತಕರವಲ್ಲ. ಸ್ತ್ರೀಪರವೂ ಬೇಡ; ಪುರುಷಪರವೂ ಬೇಡ. ಬದುಕಿನ ಪರವಾಗಿರೋಣ.

ಈಗ ಸ್ತ್ರೀಯರ ಸಮಸ್ಯೆ ಸವಾಲುಗಳ ಪ್ರತ್ಯೇಕ ಅಧ್ಯಯನ - ಸಂಶೋಧನೆಗಳ ಅಗತ್ಯಕ್ಕಿಂತ ಸಮಗ್ರ ಸಮಾಜದ ಸಮಸ್ಯೆ ಸವಾಲುಗಳನ್ನ ಇಡಿಯಾಗಿ ಚಿಂತಿಸತೊಡಗಿದರೆ ಸಮಸ್ತ ಕುಟುಂಬಕ್ಕೆ ನೆಮ್ಮದಿ ಸಿಗಬಹುದು. ತನ್ಮೂಲಕ ಸಮಾಜವೂ ಸ್ವಸ್ಥವಾಗಿ ಉಳಿಯಬಹುದು. ಅಂತಹ ಸಮಾಜದಲ್ಲಿ ಹೆಣ್ಣು ಗಂಡುಗಳೂ ನಿಸ್ಸಂದೇಹವಾಗಿ ಸ್ವಸ್ಥ ಬಾಳ್ವೆ ನಡೆಸಬಲ್ಲರು ಎಂಬುದು ಪ್ರಾಯೋಗಿಕವಾಗಿ ಸಿದ್ಧವಾದ ಸತ್ಯ.

ಗಂಡು ಹೆಣ್ಣಿನ ಮಧ್ಯೆ ಉದ್ದೇಶಿತವಾಗಿಯೋ ಅನುದ್ದೇಶಿತವಾಗಿಯೋ ಕಡ್ಡಿ ಹಾಕುವ ಕೆಲಸವನ್ನು ಸ್ವಸ್ಥ ಮನಸ್ಸುಗಳು ಮಾಡುವುದಿಲ್ಲ. ಬೇರೆ ಬೇರೆ ಎಂಬ ಪ್ರತ್ಯೇಕತೆಯ ಭಾವನೆಯು ಸಮಷ್ಟಿಯಿಂದ ಮರೆಯಾಗುವಂತಹ ನಡೆ ನುಡಿಯು ಇಂದಿನ ತುರ್ತು ಅಗತ್ಯ. ಇದು ಸಾಧ್ಯವಾದಾಗ ಮಾತ್ರ ಒಂದಾಗಿ ಉಳಿಯುವ ಸದಾಶಯದ ಕ್ರಿಯೆಯು ಸ್ವಯಂ ತತ್ಪರವಾಗತೊಡಗುತ್ತದೆ.


ಆದ್ದರಿಂದ ಎಚ್ಚರ ತಪ್ಪದಿರೋಣ. ಪಕ್ಕದ ಮನೆ ಹೊತ್ತಿ ಉರಿಯುವಾಗ ಬೀಡಿ ಹಚ್ಚಿಕೊಳ್ಳುವ "ಸುಧಾರಕ ವರೇಣ್ಯ"ರಿಂದಲೂ ಎಚ್ಚರದ ದೂರವನ್ನು ಕಾಯ್ದುಕೊಳ್ಳೋಣ. "ನಮ್ಮ ಬಾಳಿಗೆ ನಾವೇ ಶಿಲ್ಪಿ” ಎಂಬುದನ್ನು ನೆಚ್ಚಿ ನಡೆಯೋಣ.