Saturday, December 31, 2016

ಮರುಳು - ಗುಬ್ಬಿ ಕನಸು...

ಭಯವಿಲ್ಲದ ಬದುಕು ಮಾತ್ರ ನೆಮ್ಮದಿಯಿಂದ ಸಾಗಬಲ್ಲದು. ಧಾರ್ಮಿಕ ಮನೋಭಾವಗಳು - ಭಯನಿವಾರಣೆಗೆ ತಮ್ಮದೇ ಹಾದಿಯನ್ನು ಎಂದೋ ಕಂಡುಕೊಂಡಿವೆ; "ಭಗವಂತನ ಆಸರೆಯನ್ನು ಹೊಂದದೆ ಭಯ ಎಂಬುದು ನಿವಾರಣೆಯಾಗದು" ಎನ್ನುತ್ತಲೇ ಬಂದಿವೆ. ಆದರೆ ಇಂತಹ ಮನೋಭಾವವನ್ನು ರೂಢಿಸಿಕೊಳ್ಳುವುದು ಸುಲಭವೇನಲ್ಲ. ಭದ್ರವಾಗಿ ಭಗವಂತನ ಪಾದಗಳನ್ನು ಹಿಡಿದುಕೊಂಡೇ ಸಂಸಾರ ತೂಗಿಸುವುದಕ್ಕಿಂತ ದೊಡ್ಡ ಸರ್ಕಸ್ಸು ಉಂಟೆ ? ಸ್ಥಿರವಾದ ವೈರಾಗ್ಯವನ್ನು ಆವಾಹನೆ ಮಾಡಿಕೊಳ್ಳಲಾಗದೆ ನಡುಹಾದಿಯಲ್ಲೇ ಬಳಲಿಹೋಗುವ ಹಕ್ಕಿಸಂಸಾರಗಳ ಪಾಡೇನು ? ವಿರಕ್ತಿಯ ವಿಳಾಸವನ್ನೇ ತಿಳಿಯದ ಕೌಟುಂಬಿಕ ಮತ್ತು ಔದ್ಯೋಗಿಕ ಭಾವವರ್ತುಲದಲ್ಲಿ ತೇಲುವಂತಾದಾಗ ಕ್ಷಣಕ್ಷಣವೂ ಏಕಾಗ್ರತೆಯ ಭಂಗವಾಗುತ್ತಲೇ ಇರುತ್ತದಲ್ಲ ! ಅತ್ತ ಇತ್ತ ಸುತ್ತ ಎತ್ತೆತ್ತಲಿಂದ ಅನಿರೀಕ್ಷಿತಗಳ ಹೊಡೆತಕ್ಕೆ ಸಿಲುಕಿದಂತಾಗುವುದಲ್ಲ ! ಆಗ ಏಕಾಗ್ರತೆ -  ವೈರಾಗ್ಯಗಳೆಲ್ಲ ಉಳಿದೀತೆ ? ಅರ್ಧಂಬರ್ಧ ಮೆಚ್ಚಿ ಕಲಿತು ಒಪ್ಪಿಕೊಂಡ ಸಿದ್ಧಮೌಲ್ಯಗಳನ್ನು ತಮಗೆ ಗೊತ್ತಿದ್ದೇ ಮೀರಬೇಕಾದ ಅನೇಕ ಸಂದರ್ಭಗಳು ಸಾಂಸಾರಿಕ ಬದುಕಿನಲ್ಲಿ ನಿತ್ಯವೂ ಎದುರಾಗುವುದಿಲ್ಲವೆ ? ಅಂತಹ ಅನಿಶ್ಚಿತತೆಗಳೇ ಭಯಮೂಲಗಳು. ಭಯರಹಿತ ಸುರಕ್ಷಿತ ಸಾಮಾಜಿಕ ಸನ್ನಿವೇಶವನ್ನು ರೂಪಿಸುವುದರಲ್ಲಿ ನ್ಯಾಯಾಂಗದ ಪಾತ್ರ - ಹಿರಿದಾದುದು.

ಇವತ್ತಿನ ನ್ಯಾಯಾಲಯಗಳು ಹೇಗಿವೆ ? ಅಪರಾಧಿಗಳಿಗೆ ಮೋಜಿನ ತಾಣವಾಗಿರುವಂತೆ ಕಾಣಿಸಿದರೆ - ನಿರಪರಾಧಿಗಳಿಗೆ ಭಯ ಹುಟ್ಟಿಸುವ ಶಕ್ತಿಯುತ ತಾಣವೆನ್ನಿಸುತ್ತಿದೆಯೆ ?

ಬರಬರುತ್ತ - ನ್ಯಾಯಕ್ಷೇತ್ರಗಳ ಪರಿವರ್ತನೆಯಾಗಿದ್ದರೆ ಅದಕ್ಕೆ ವ್ಯವಸ್ಥೆಯ ಜತೆಗೆ ಪ್ರತಿಯೊಬ್ಬ ಮನುಷ್ಯನ ಕಾಣಿಕೆಯೂ ಎಷ್ಟೆಷ್ಟು ? ಸಮಾಜದ ಸಣ್ಣ ಹಕ್ಕಿಪಕ್ಕಿಗಳಿಗೆ ಯಾವುದೇ ಭ್ರಷ್ಟತನವನ್ನು ಪರಿವರ್ತಿಸುವ ಶಕ್ತಿ ಇರುವುದಿಲ್ಲ; ಎಂದೂ ಇರಲಿಲ್ಲ. "ಅಲ್ಲಲ್ಲಿ ಸ್ವಲ್ಪ ಸ್ವಲ್ಪ ಭ್ರಷ್ಟತೆ ಇರಲಿ" ಎಂಬ ಧೋರಣೆಯನ್ನು ನಮ್ಮ ನ್ಯಾಯವಂತರು ನಿರಂತರವಾಗಿ ಅನುಸರಿಸುತ್ತ ಬಂದಂತೆ ಕಾಣುವುದಿಲ್ಲವೆ ? ಅದೇಕೆ ? "ಪಲಾಯನಕ್ಕೆ ಕಳ್ಳಗಿಂಡಿಗಳು ಇರಲಿ; ಸ್ವತಃ ನಡೆಸಿದ ದರೋಡೆಗಳಿಂದ ಪಾರಾಗಲು ಬೇಕಾದೀತು" ಎಂಬ ಕುಟಿಲ ಮುತ್ಸದ್ದಿತನವೆ ? ಭ್ರಷ್ಟತನದ ನಿವಾರಣೆಯ ಪ್ರಯತ್ನಗಳಿಗೆ ಪೂರ್ಣ ಸಹಕಾರವಾದರೂ ಸಿಗುತ್ತಿದೆಯೆ ? ಇಂತಹ ಹಿನ್ನೆಲೆಯಲ್ಲಿ ರೂಪುಗೊಂಡಿರುವ ಸ್ವಾರ್ಥಪ್ರೇರಿತ ನ್ಯಾಯದಾನ ಎಂಬ ಬೆಂಕಿಯಾಟವು ಅಪಾಯಕಾರಿಯಲ್ಲವೆ ?

ಪೇಜಾವರಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ತಮ್ಮ ಸುದೀರ್ಘ ಆಯುರ್ಮಾನದಲ್ಲಿ ಲೋಕವ್ಯಾಪಾರದ ಸಮೀಪ ದರ್ಶನವನ್ನೂ ಮಾಡಿದವರು. ಇತ್ತೀಚೆಗೆ ಅವರು ಹೇಳಿದ ಮಾತು ಇಂದಿನ "ಐನ್ ಭ್ರಷ್ಟತೆ" ಗಳಿಗೆ ಮತ್ತೊಮ್ಮೆ ಕನ್ನಡಿ ಹಿಡಿದಿದೆ. "ಭಾರತ ದೇಶದಲ್ಲಿ ಶೇ. 75 ರಷ್ಟು ಮಂದಿ ಭ್ರಷ್ಟರಿದ್ದಾರೆ. ಉಳಿದ ಶೇ. 25 ಮಂದಿಗೆ ಭ್ರಷ್ಟಾಚಾರಕ್ಕೆ ಅವಕಾಶ ಸಿಗುತ್ತಿಲ್ಲ. ಸಿಕ್ಕರೆ ಅವರು ಕೂಡ ಭ್ರಷ್ಟಾಚಾರದಲ್ಲಿ ನಿರತರಾಗುತ್ತಾರೆ..." ಎಂಬುದು ಜನಸಾಮಾನ್ಯರ ಅನುಭವವೂ ಹೌದು. ಹಾಗಿದ್ದರೆ ಎಲ್ಲರೂ ಕಳ್ಳರೆ ? ಅಥವ ಮನುಷ್ಯರ "ತೂರಿ ಜಾರುವ ಮೂಲ ಸ್ವಭಾವ"ಕ್ಕೆ ತಕ್ಕಂತೆ ರೂಪುಗೊಂಡಿರುವ ಸಾಮಾಜಿಕ ಚೌಕಟ್ಟಿನಲ್ಲಿ - ಕಳ್ಳನೋಟು ಉತ್ಪಾದಿಸಿದಂತೆ - ಕಳ್ಳಬುದ್ಧಿಗಳನ್ನೂ ಉತ್ಪಾದಿಸಲಾಗುತ್ತಿದೆಯೆ ? "ಕಳ್ಳ ಬುದ್ಧಿಗಳ ಅಮಾನ್ಯೀಕರಣ"ವೂ ನಡೆಯಬೇಕಲ್ಲವೆ ?

ಮೂಲತಃ ಮನುಷ್ಯರದು - ಕಪಿಗಳನ್ನೂ ಮೀರಿಸುವ ಚಾಂಚಲ್ಯ ಹೊಂದಿದ ಸಂತತಿ. ಮನುಷ್ಯರೇ ಸ್ವೈರವೃತ್ತಿಯ ಮೂಲ ಪಿತಾಮಹರು. ಸ್ವಯಂ ನಿಯಂತ್ರಣ ಮತ್ತು ಬಾಹ್ಯ ನಿಯಂತ್ರಣ ಎಂಬ ಎರಡು ಬ್ರೇಕುಗಳನ್ನು ಸಮರ್ಪಕವಾಗಿ ಬಳಸದಿದ್ದರೆ ಮನುಷ್ಯರನ್ನು ನಿಯಂತ್ರಿಸುವುದು ಬಲು ಕಷ್ಟ.

ಆದರೆ ಇದೇ ಬಿಟ್ಟಿ ವ್ಯವಸ್ಥೆಯಲ್ಲಿ - ನನಗೆ ಮಾತ್ರ ತಕ್ಕಮಟ್ಟಿನ ನ್ಯಾಯ ದೊರೆತಿದೆ ! ಜೊತೆಗೆ ಮತ್ತೊಮ್ಮೆ ಭಾರತೀಯ ನ್ಯಾಯ ಕ್ಷೇತ್ರದ ಸಮೀಪ ದರ್ಶನವೂ ಆಗಿದೆ.

ಕೋರ್ಟಿಗೆ ನಾನು ಹೋದದ್ದಲ್ಲ - ದೂಡಿದ್ದು !

ಆಕಾಶವಾಣಿಯ ಉದ್ಘೋಷಕಿಯ ವೃತ್ತಿಯಿಂದ ನಾನು ನಿವೃತ್ತಳಾದಾಗ ಅಲ್ಲಿನ ಕೊಳೆತ ವ್ಯವಸ್ಥೆಯು - ಶಾಂತವಾಗಿ ನಿರ್ಗಮಿಸಲು ನನಗೆ ಅವಕಾಶವನ್ನು ಕೊಟ್ಟಿರಲಿಲ್ಲ. ನನ್ನ 38 ವರ್ಷಗಳ ಪ್ರಾಮಾಣಿಕ ದುಡಿಮೆಯನ್ನು ಹೀಗಳೆಯುವಂತೆ - ಆಡಳಿತಾತ್ಮಕ ಉದ್ಧಟತನವನ್ನು ಪ್ರದರ್ಶಿಸಿತ್ತು. ಏಕೆಂದರೆ ಆಕಾಶವಾಣಿಯು ಸರಕಾರದ ಕೂಸು ! ಮತ್ತು... ಉದ್ಧಟತನ ಎಂಬುದು ಅಧಿಕಾರಮತ್ತವಾದ ಯಾವುದೇ ಸರಕಾರದ  ಕೂಸು ! ಇಂತಹ ಉದ್ದಂಡ ಕೂಸುಗಳ ಸಂಸಾರದಲ್ಲಿ ಯಾವ ಮರಿಕೂಸುಗಳೂ ಸುರಕ್ಷಿತವಾಗಿರುವುದು ಅಸಾಧ್ಯ. ನಮ್ಮ ಸರಕಾರವು ಮೂಗು ತೂರಿಸಿದ ಇದುವರೆಗಿನ ಎಲ್ಲ ವ್ಯವಸ್ಥೆಗಳಲ್ಲೂ ಇದೇ ಅರಾಜಕ ಸ್ಥಿತಿಯಿದ್ದರೆ ಅದಕ್ಕೆ ಸರಕಾರೀ ಬಾಬುಗಳ ಉದ್ಧಟತನವೇ ಕಾರಣ. ಉತ್ತರದಾಯಿತ್ವವೇ ಇಲ್ಲದ ಅಧೋಗತಿ ಇದು ! ಶಾಸನದ ಶೀರ್ಷಾಸನ ! ಹೆಸರಿಗೆ ಪ್ರಜಾಪ್ರಭುತ್ವವಾದರೂ ಜವಾಬ್ದಾರಿಯನ್ನು ವರ್ಗಾಯಿಸುತ್ತಲೇ ಹೋಗುವ ಅಸ್ಪಷ್ಟ ತ್ರಿಶಂಕು ಸ್ಥಿತಿಯ ದರ್ಶನವು ಎಲ್ಲರಿಗೂ ಆಗುತ್ತದೆ. ಬೀಳುವ ಬೀಳಿಸುವ - ಸಾಮಾಜಿಕ ಮತ್ತು ಸರಕಾರೀ ಆಟದ ನಡುನಡುವೆ - ಅಗ್ನಿಪರೀಕ್ಷೆಯ ಘಳಿಗೆಗಳಲ್ಲಿ ಮಾತ್ರ - ಅಂತಹ ನಿಜ ಮುಖದ ದರ್ಶನವಾಗುವುದು ಸಾಧ್ಯ ! ನನ್ನ ಔದ್ಯೋಗಿಕ ಪರಿಸರವೂ ಬೀಳಿಸುವ ಎಡಬಿಡಂಗಿತನದ ಅಂತಹುದೇ ಇನ್ನೊಂದು ಮಾದರಿಯಾಗಿತ್ತು. ಈಗಲೂ ದೊಡ್ಡದೆಂದು ಹೇಳಿಸಿಕೊಳ್ಳಲು ಹಾತೊರೆಯುತ್ತಿರುವ ಆಕಾಶವಾಣಿ ಎಂಬ ಸಂಸ್ಥೆಯು ತನ್ನ ಬಾಹ್ಯ ಮುಖವಾಡದ ಹಿಂದಿನ ಆವರಣದಲ್ಲಿ ತನ್ನ ಸಜ್ಜನಿಕೆಯನ್ನು ತೊರೆದು ಬಹಳ  ಸಮಯ ಕಳೆದುಹೋಗಿದೆ. ಅಲ್ಲಿ - "ಅಂದಿನ ಸಭ್ಯತೆ " - ಎಂಬುದು ಈಗ ಇಲ್ಲ. ಇದು ನಾನು ಕಂಡಿದ್ದ ಮಂಗಳೂರು ಆಕಾಶವಾಣಿಯ ಸ್ವರೂಪ; ಕುದುರೆಯು ಕತ್ತೆಯಾಗಿ ಹೋದುದಕ್ಕೆ 38 ವರ್ಷಗಳ ಉದ್ದಕ್ಕೂ ಸಾಕ್ಷಿಯಾಗಿದ್ದ ನನ್ನ ಅನುಭವ . (ನೋಡಿ - "ನಡೆದು ಬಂದ ದಾರಿ " ಭಾಗ  1 ರಿಂದ 18 ರ ವರೆಗಿನ ಕಥಾನಕ - ನಿಷ್ಠೆಯಿಂದ ಉಂಡು ಶ್ರದ್ಧೆಯಿಂದಲೇ ಉಗಿದ ವೃತ್ತಾಂತ . )

ಇದೇ ಸಂಸ್ಥೆಯಲ್ಲಿ 38 ವರ್ಷಗಳ ಕಾಲ ಧ್ವನಿ ಸವೆಸಿಕೊಳ್ಳುತ್ತ ಉದ್ಘೋಷಕಿಯಾಗಿದ್ದ ನನಗೆ - ನನ್ನ ಕರ್ತವ್ಯ ನಿರ್ವಹಣೆಯಲ್ಲೂ ಎಡೆಬಿಡದೆ ಅಡಚಣೆಗಳನ್ನು ಸೃಷ್ಟಿಸುತ್ತಿದ್ದುದು ಮಾತ್ರವಲ್ಲದೆ - ನಿವೃತ್ತಿಯ ಕಾಲದಲ್ಲಿ ನನಗೆ ಸಂದಾಯವಾಗಬೇಕಿದ್ದ ಒಟ್ಟು ಮೊಬಲಗನ್ನು ಹಿಡಿದಿಟ್ಟುಕೊಂಡು ಮತ್ತು ಮೂಲ ವೇತನವನ್ನು ನಿವೃತ್ತಿಯ ಅಂತಿಮ ಹಂತದಲ್ಲಿ ಕಡಿತಗೊಳಿಸಿದ್ದ ಆಕಾಶವಾಣಿಯು - ನಿಯಮ ಮೀರಿ - ಏಕಪಕ್ಷೀಯವಾಗಿ ಉದ್ಧಟತನವನ್ನು ಮೆರೆದಿತ್ತು; ನಿವೃತ್ತ ಬದುಕಿಗೆ ಅಶಾಂತಿಯನ್ನು ತುಂಬುವ ಕುಟಿಲ, ದುಷ್ಟ ಕಾರ್ಯತಂತ್ರವನ್ನು ಅನುಸರಿಸಿತ್ತು. ಆಕಾಶವಾಣಿಯ ಕುತಂತ್ರವನ್ನು ಪ್ರತಿಭಟಿಸಲೋಸುಗ - ನಾನು ನ್ಯಾಯಾಂಗದಲ್ಲಿ ಹೋರಾಡಬೇಕಾಯಿತು. ಹೋರಾಟವು ಇನ್ನೂ ಪೂರ್ತಿ ಮುಗಿದಿಲ್ಲ. ಏಕೆಂದರೆ ಈ ದೇಶದಲ್ಲಿ ಸರಕಾರೀ ಅಧಿಕಾರಿಗಳು ಸ್ವಚ್ಛಂದತೆಯಿಂದ ವರ್ತಿಸಲು ಪೂರ್ಣ ಸ್ವಾತಂತ್ರ್ಯವಿರುವ ವರೆಗೂ ಒಂದಲ್ಲ ಒಂದು ಹೋರಾಟಗಳಿಗೆ ನೌಕರರನ್ನು ನೂಕುತ್ತಲೇ ಇರುವಂತಹ ಸನ್ನಿವೇಶವಿರುತ್ತದೆ; ಸುಮ್ಮನೆ ಸಾಯಿಸುವ ಆಟವು ನಡೆಯುತ್ತಲೇ ಇರುತ್ತದೆ.  ಸ್ವಚ್ಛಂದ ವರ್ತನೆಗಳಿಗೆ ಪ್ರೋತ್ಸಾಹ ಸಿಗುವ ಯಾವುದೇ ಪರಿಸರದಲ್ಲಿ ಬಹುಸಂಖ್ಯಾಕ ಶೋಷಿತರ ನಿರ್ಮಾಣವಾಗುತ್ತದೆ. ತತ್ಪರಿಣಾಮವಾಗಿ ಈಗ - "ನ್ಯಾಯ ನ್ಯಾಯ" ಎಂದು ಬಾಯಿ ಬಡಿದುಕೊಳ್ಳುತ್ತ ನ್ಯಾಯಾಲಯಗಳ ಬಾಗಿಲು ಕಾಯುವ ಶೋಷಿತ ಜನಹಿಂಡು ಗಾಬರಿ ಹುಟ್ಟಿಸುವಷ್ಟಿದೆ ! ಈ ಹಿನ್ನೆಲೆಯಲ್ಲಿ ಇಂದಿನ ನ್ಯಾಯಾಲಯಗಳು ತಮ್ಮ ಬೇಡಿಕೆ ಮತ್ತು ಗೌರವವನ್ನು - ಕೃತಕವಾಗಿ ಹೆಚ್ಚಿಸಿಕೊಂಡಂತೆ ಕಂಡರೂ - ಸ್ವಂತ ಗೌರವವನ್ನು ಪಣಕ್ಕಿಳಿಸಿಕೊಂಡಿರುವ ನೋಟವೂ ಬಯಲಾಗುತ್ತಿದೆ!

"ನನಗೆ ನ್ಯಾಯವಾಗಿ ದೊರಕಬೇಕಿದ್ದ ನಿವೃತ್ತಿಯ ನಂತರದ ಎಲ್ಲ ಸೌಲಭ್ಯಗಳನ್ನು ಪಡೆಯಲು ನನಗೂ ಅರ್ಹತೆಯಿದೆ" - ಎಂಬ ಭಾವನೆಯಿಂದಲೇ ನಾನು ನ್ಯಾಯಾಸ್ಥಾನದ ಬಾಗಿಲು ಬಡಿದಿದ್ದೆ. ಅಂದ ಮಾತ್ರಕ್ಕೆ ನನ್ನ ಹೋರಾಟವಿದ್ದುದು ಕೇವಲ ದುಡ್ಡಿಗಾಗಿ ಅಂದುಕೊಳ್ಳಬೇಕಾಗಿಲ್ಲ. ಸೈದ್ಧಾಂತಿಕವಾಗಿ ಹೋರಾಡಲೇ ಬೇಕಾದ ಅನಿವಾರ್ಯತೆಯು ನನಗಿತ್ತು. ನನ್ನದು ಮತಿಗೆಟ್ಟ ನಿರ್ಧಾರವಾಗಿರಲಿಲ್ಲ. ನಮ್ಮ ನ್ಯಾಯದಾನದ ಪರಿಯ ಹುರುಳನ್ನು ಹೊರಗಿದ್ದೇ ಸ್ಥೂಲವಾಗಿ ತಿಳಿದಿದ್ದೂ ನಾನು ಅಲ್ಲಿಗೆ ಪ್ರವೇಶಿಸಿದುದಕ್ಕೆ ಇನ್ನೂ ಹಲವು ಕಾರಣಗಳಿವೆ.

ಮುಖ್ಯವಾಗಿ, ಬುದ್ಧಿಯ ತುಂಟಾಟಕ್ಕೆ ಕೊಟ್ಟ ಕ್ಷುಲ್ಲಕ ಆಸ್ಪದ. ಆಕಾಶವಾಣಿ ಎಂಬ ಗಬ್ಬೆದ್ದ ವ್ಯವಸ್ಥೆಯ ವಿರುದ್ಧ ನಾನು ಕೋರ್ಟ್ ಮೆಟ್ಟಿಲೇರಿದ್ದು ಕೇವಲ ಪ್ರತಿಭಟನೆಯ ಸಂಕೇತವಷ್ಟೆ. ವ್ಯವಸ್ಥೆಯ ಅಷಡ್ಡಾಳಗಳ ವಿರುದ್ಧ ಆತ್ಮತೃಪ್ತಿಗಾಗಿ ನಡೆಸಿದ್ದ ಗುಬ್ಬಚ್ಚಿ ಪ್ರತಿಭಟನೆಯದು ! ಜತೆಗೆ - ನಮ್ಮ "ಭಾರತದ ನ್ಯಾಯ" ಎಂಬುದು ಎಷ್ಟು ಸಮಗ್ರವಾಗಿರುತ್ತದೆ ? ಎಂಬುದರ ಸ್ವಂತ ಅನುಭವ ಮಾಡಿಕೊಳ್ಳುವ ಉದ್ದೇಶವೂ ಇತ್ತು. "ಕೋರ್ಟುಗಳೆಂದರೆ ಮುಗ್ಧ ಪ್ರಜೆಗಳನ್ನು ಸತಾಯಿಸಿ ಸಾಯಿಸುವ ಕೇಂದ್ರಗಳು" ಎಂದು ಹೇಳುವುದನ್ನಷ್ಟೇ ಕೇಳಿದ್ದ ನನಗೆ - "ಅದು ಹೇಗೆ ಸಾಯಿಸುತ್ತಾರೆ ? ಕೋರ್ಟಿನಲ್ಲಿ ಸಾಯುವುದು ಹೇಗೆ ? ನ್ಯಾಯ ಎಂಬುದು ಅನ್ಯಾಯವಾಗಿ ಸಾಯಿಸುವುದೆಂದರೆ ಏನದು ?" ಎಂಬುದನ್ನು ಅನುಭವಿಸಿ ನೋಡುವ ಉತ್ಸಾಹವೂ ಇತ್ತು. ಎರಡು ವಾಕ್ಯದ ನಿರ್ದೇಶನ ನೀಡಲು ಎಷ್ಟೆಲ್ಲ ಎಳೆದಾಡಬಹುದು ಎಂಬುದನ್ನು ಪುರಸೊತ್ತಿನಲ್ಲಿ ಮನಸ್ವೀ ಅನುಭವಿಸುವ ಇಚ್ಛೆಯೂ ಇತ್ತು. ಸ್ವತಃ ಸಾಯಲು ಸಿದ್ಧವಾಗಿದ್ದ ಇಂತಹ ಒಂದು ಮನೋವೇದಿಕೆಯಲ್ಲಿ - ಕೋರ್ಟಿನ ರುಚಿಯನ್ನು ಅನುಭವಿಸಲು ನಾನು ಸಿದ್ಧಳಾಗಿದ್ದೆ. ಈಗ ಹಿಂತಿರುಗಿ ನೋಡಿದರೆ... "ಅನನ್ಯ ನರಕದ ಘನಘೋರ ಕ್ಷುಲ್ಲಕ" - ಎಂದಷ್ಟೇ ಅನ್ನಿಸುತ್ತಿದೆ. ಅನ್ಯಾಯಗಳನ್ನು ವರ್ಷಗಟ್ಟಲೆ ಎಳೆದಾಡುವ ಮೊಂಡು ವಕಾಲತ್ತಿಗಾಗಿ ಸರಕಾರೀ ವಕೀಲರಿಗೆ ಸುರಿಯುತ್ತಿರುವ ತಿಜೋರಿಯ ದುಡ್ಡನ್ನು ಸಂತ್ರಸ್ತ ನೌಕರರಿಗೇ ಕೊಡಲಾಗದ ಜಿಡುಕುತನವೇಕೆ ? ಎಂಬುದು - ಇವತ್ತಿನ ಭಾರತದಲ್ಲಿ ಉತ್ತರವಿಲ್ಲದ ಪ್ರಶ್ನೆ ! ಪ್ರಸ್ತುತ - ಇದೇ GOOD GOVERNANCE !

ನಿತ್ಯವೂ ಕನಸನ್ನು ಬಿತ್ತುವ ಹೇಳಿಕೆಗಳು - ಘೋಷಣೆಗಳಿಂದಲೇ ಯಾವುದಾದರೂ ವಾಸ್ತವವು ಬದಲಾಗುವುದೆ ? ರಾಜಕೀಯ ಲಾಭವಿಲ್ಲದೆ ಯಾರದೇ ಸ್ವಂತ ಸಮಸ್ಯೆಗಳಿಗೂ ಸರಕಾರದ ಕಡೆಯಿಂದ ಯುಕ್ತ ಸ್ಪಂದನೆ ಸಿಗುವಂತಿಲ್ಲ ಎಂಬುದು ನನಗೆ ಸ್ಪಷ್ಟವಾಗತೊಡಗಿತ್ತು. ಹೆಚ್ಚೆಂದರೆ... "ನಿಮ್ಮ ಅಳಲನ್ನು ಸಂಬಂಧಿಸಿದ ವಿಭಾಗಕ್ಕೆ ಕಳಿಸಲಾಗಿದೆ.." ಎಂಬ ಸಿದ್ಧ ಉತ್ತರ ಸಿಗಬಹುದು ! ನನಗೂ ಅದೇ ಉತ್ತರ ಸಿಕ್ಕಿದೆ ! ಸುಮಾರು ನಾಲ್ಕೈದು ತಿಂಗಳ ಕಾಲ ನಿರೀಕ್ಷಿಸಿದ ಮೇಲೆ ಪ್ರಧಾನಿಯವರ GRIEVANCE CELL ನಿಂದ ನನಗೆ ಸಿಕ್ಕ "ಸೆಗಣಿ ಸಾರಿಸಿದಂತಹ ಉತ್ತರ"ವನ್ನು ಕಣ್ಣಿಗೊತ್ತಿಕೊಂಡ ನಾನು ನ್ಯಾಯಾಸ್ಥಾನವನ್ನು ಪ್ರವೇಶಿಸಬೇಕಾದ ಅನಿವಾರ್ಯತೆಯನ್ನು ಮನಗಂಡಿದ್ದೆ. ಜಗಳದ ಮನೆಯನ್ನು ಪ್ರವೇಶಿಸಿದ್ದೆ.

ನನ್ನ ಯುದ್ಧಕ್ಕೆ ಪೂರ್ವಭಾವಿಯಾಗಿ - ಬೆಂಗಳೂರಿನಲ್ಲಿ ಒಬ್ಬ ದಕ್ಷ ವಕೀಲರನ್ನು ನಿಯೋಜಿಸಿ ದಾಖಲಾತಿಗಳನ್ನು ಪೂರೈಸಲು ನನಗೆ ತಗಲಿದ ಒಂದು ತಿಂಗಳ ಸಮಯವು ನನ್ನ ಬದುಕಿನಿಂದ ನಷ್ಟವಾದದ್ದು ಬಿಟ್ಟರೆ ಉಳಿದುದೆಲ್ಲವೂ - ದುಷ್ಟಾನುಭವದ ಲೆಕ್ಕದಲ್ಲಿ - ಲಾಭವೇ ಲಾಭ. ಮನುಷ್ಯರು ಹೇಗಿರಬಾರದು ? ಎಂಬ ಪ್ರಾತ್ಯಕ್ಷಿಕೆಯಲ್ಲಿ ಸ್ವತಃ ಭಾಗವಹಿಸಿದಂತಹ ಭಾವವು ಈಗ ನನ್ನಲ್ಲಿದೆ. ಈ ಸಮಾಜದ ಇನ್ನೊಂದಿಷ್ಟು ಕಳ್ಳಮಳ್ಳ ಮನಸ್ಸುಗಳೊಂದಿಗೆ ಹತ್ತಿರದಿಂದ ವ್ಯವಹರಿಸಿದ ಅವಕಾಶವು - ಭಯಂಕರ ನಷ್ಟವೆಂದು ನನಗೆ ಅನ್ನಿಸುವುದಿಲ್ಲ. ಬದುಕಿನಲ್ಲಿ ಹೀಗೇ ಆಡಬೇಕು... ಮತ್ತು... ಬದುಕನ್ನು ಹೀಗೇ ಆಡಿಸಬೇಕು ಎಂಬುದು ನನ್ನ ಸೂತ್ರ. ಆದ್ದರಿಂದಲೇ ಒಂದರ್ಥದಲ್ಲಿ - ನ್ಯಾಯದ ಹಾದಿಯು ನನ್ನನ್ನು ರಂಜಿಸಿದೆ !

ಒಂದು ದೇಶದ ಸುಭದ್ರ ಆಡಳಿತವನ್ನು ಕಟ್ಟಿ ನಿಲ್ಲಿಸುವ ಸಾಧನವೇ - ನ್ಯಾಯ ಪರಿಪಾಲನೆಯ ಶಕ್ತಿ. ಸಮಗ್ರವಾಗಿ ಪರಿಶೀಲಿಸುವಾಗ ಅನ್ನಿಸುವುದೇನೆಂದರೆ, ಯಾವುದೇ ನ್ಯಾಯದಾನವು ಆಗಾಗ ಎಡವಿದರೆ ಅಥವ ನಾಗರಿಕರನ್ನು ಎಡವಿ ಬೀಳುವಂತೆ ಮಾಡುತ್ತಿದ್ದರೆ ಅದು ಸಮಷ್ಟಿಯನ್ನು ಪರೋಕ್ಷವಾಗಿ ಗಾಯಗೊಳಿಸುತ್ತಿದೆ ಎಂದೇ ಅಂದುಕೊಳ್ಳಬೇಕು. ಹೀಗೆ ಎಂದೂ ಗುಣಕಾಣದ ಯಾವುದೇ ಗಾಯಪರಂಪರೆಯು ವ್ರಣವಾಗಿಬಿಟ್ಟರೆ ಇಡೀ ದೇಹವನ್ನೇ ನುಂಗಿಹಾಕಬಲ್ಲದು ಎಂಬುದೂ ಪ್ರಮಾಣಿತ ಸತ್ಯ. ಅಂದಮೇಲೆ ಎಡವಟ್ಟಿನ ಕಾನೂನುಗಳನ್ನು ಅವಲಂಬಿಸುವ ಯಾವುದೇ ಸ್ಥಾನಗಳಲ್ಲಿ ನ್ಯಾಯದ ವಿತರಣೆಯ ಸ್ಥಿತಿಗತಿ ಹೇಗಿರಬಹುದು ? ನ್ಯಾಯದ ಹೆಸರಿನಲ್ಲಿ ಕಾನೂನಿನ ವ್ಯಾಖ್ಯಾನಕಾರರು ತೋಡಿತೋಡಿ ನಿರ್ಮಿಸಿರುವ - ಆಳವೇ ತಿಳಿಯದ ಹೊಂಡಗಳಲ್ಲಿ ಬಿದ್ದು ಎದ್ದು ಮತ್ತೆ ಮತ್ತೆ ಸಂಭವಿಸುವ ಸಾಮೂಹಿಕ ಗಾಯಗಳು ಎಂತಹ ಕೆಟ್ಟ ಪರಿಣಾಮಗಳನ್ನು ಸೃಷ್ಟಿಸಬಹುದು ? ಅಲ್ಲವೆ ? ಎಷ್ಟು ಕೊಟ್ಟರೂ ಮತ್ತಷ್ಟು ಬೇಕೆಂಬ - ಜಟಿಲತೆಯನ್ನೇ ಸೂತ್ರವಾಗಿ ಅನುಸರಿಸುವ ಯಾವುದೇ "ನ್ಯಾಯ ಸೋಲಿಸುವ ಮತ್ತು ಸೋಲುವ" ಭಾವವ್ಯವಸ್ಥೆಗಳಿಂದ ಸಾಮಾಜಿಕ ಕ್ಷೋಭೆಗಳು ತಣಿಯಲಾರವು.

ಗೊತ್ತುಗುರಿಗಳಿಲ್ಲದ ಬದುಕುಗಳಿಗೂ ಗೊತ್ತಿರಲೇಬೇಕಾದ - ಆದರೂ ಇದುವರೆಗೂ ಗೊತ್ತೇ ಇಲ್ಲದ ಮತ್ತು ಗೊತ್ತೂ ಇಲ್ಲದ ಹಲವು ಕ್ಷೇತ್ರಗಳಿವೆ. ಆದರೂ ಪರಿಣತಿ ಇಲ್ಲದಿದ್ದರೂ ಕಾಗೆ ಗುಬ್ಬಿಗಳಿಗೂ ತಮ್ಮ ಹಾರಾಟ ವಲಯದ ಸ್ಥೂಲವಾದ ಅರಿವು ಇದ್ದೇ ಇರುತ್ತದೆ. ಆದರೆ ಸೂಕ್ಷ್ಮ ಅರಿವು ಮಾತ್ರ ಇರುವುದಿಲ್ಲ. ಸೂಕ್ಷ್ಮ ಅರಿವಿನ ಕೊರತೆಯೇ ಜೀವಿಗಳ ಆಂತರ್ಯದಲ್ಲಿ ಭಯವನ್ನು ಛೂ ಬಿಡುವ ಕೇಂದ್ರಸ್ಥಾನ. ಸಾಮಾನ್ಯ ಜೀವಿಗಳ ಇದೇ ಸೂಕ್ಷ್ಮ ಅರಿವಿನ ಕೊರತೆಯ ದೌರ್ಬಲ್ಯದ ದುರುಪಯೋಗವು ಬದುಕಿನಲ್ಲೆಲ್ಲ ನಡೆಯುತ್ತಲೇ ಇರುತ್ತದೆ. ಪರೋಕ್ಷವಾಗಿ - ನ್ಯಾಯಾಲಯವೂ ಛೂ ಬಿಡುವ ಭಯ ಪ್ರಸಾರದ ಕಾಯಕದಲ್ಲಿ ಹಿಂದೆ ಬಿದ್ದಿಲ್ಲ. ಆದರೆ ಅದನ್ನು ಮೂಢ ನಡವಳಿಕೆ ಎಂದೆಲ್ಲ ಹೇಳಲಾಗುವುದಿಲ್ಲ. ಅದೊಂಥರ... ಹಕ್ಕು ಕರ್ತವ್ಯದ ಹೆಸರಿನಲ್ಲಿ - ತನು ಮನ ಧನದ ವೈಜ್ಞಾನಿಕ ಶೈಲಿಯ ದರೋಡೆ ! ಕಾನೂನಿನ ಸುಪರ್ದಿಯಲ್ಲಿ ನಡೆಸಲಾಗುವ ಕಲಾತ್ಮಕ ಗದ್ದಲ ! ಅಂತಹ ಗದ್ದಲದ ಸಾಗರದಲ್ಲಿ ಮುಳುಗಿಸಲ್ಪಡುವ ನಿರಪರಾಧಿಗಳೂ ತಮ್ಮ ಮೂಗು ಬಾಯಲ್ಲಿ ನೀರು ತುಂಬಿಸಿಕೊಂಡು ಕೆಮ್ಮದೇ ಬೇರೆ ನಿರ್ವಾಹವಿಲ್ಲ.

ನಮ್ಮ ಭಾರತದ ಪ್ರಸಂಗವನ್ನೇ ಗಮನಿಸಿದರೆ... ಪ್ರಸ್ತುತದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ - ಎಂಬ ಮೂರೂ ಸಾಂವಿಧಾನಿಕ ವ್ಯವಸ್ಥೆಗಳು ನಿಜವಾಗಿಯೂ ಚೊಕ್ಕವಾಗಿ ಕಾರ್ಯ ನಿರ್ವಹಿಸುತ್ತಿವೆಯೆ ? ಜನಸಾಮಾನ್ಯರಿಗೆ ಉತ್ತರ ಗೊತ್ತಿದೆ. ಲಂಚ ಮಂಚದ ಯಾವುದೇ ಆಡಳಿತ ವ್ಯವಸ್ಥೆಯಲ್ಲಿ ಅನ್ಯಾಯಕ್ಕೆ ಒಳಗಾಗಿ ಬಲಿಪಶುವಾಗುವವರು ಯಾರು ? ಉತ್ತರ - ಜನರಿಗೆ ಗೊತ್ತಿದೆ. ಕೆಲವು ತಲೆಹಿಡುಕರನ್ನು ರಕ್ಷಿಸುವುದಕ್ಕಾಗಿ ನಮಗೆ ಸ್ವಾತಂತ್ರ್ಯ ಸಿಕ್ಕಿದ್ದೆ ? ಸುದೀರ್ಘವಾಗಿ ನಡೆಸಲಾಗುವ ಸಾಮಾಜಿಕ ಕೊಳಕು ಗದ್ದಲಗಳನ್ನು ಸ್ವಯಂಪ್ರೇರಿತವಾಗಿ ನ್ಯಾಯಾಲಯಕ್ಕೆ ಎಳೆದು ತಂದು ಸಮೂಲ ವಿಚಾರಣೆ ನಡೆಸಿ, ಅಪರಾಧಿಗಳನ್ನು ಶಿಕ್ಷಿಸಿ, ಸುಶೀಲ ಸಾಮಾಜಿಕ ಪರಿಸರವನ್ನು ನಿರ್ಮಿಸಬೇಕಾದ ಮೂಲ ಜವಾಬ್ದಾರಿ ಯಾರದ್ದು ? ರಕ್ಷಿಸುವ ಉತ್ತರದಾಯಿತ್ವವಿಲ್ಲದ ಸಾಂವಿಧಾನಿಕ ಅಂಗಗಳ ಉಡಾಫೆಯ ಕಾರ್ಯ ಶೈಲಿಯಿಂದ ಬೇಸತ್ತು ಹೋದ ಪ್ರಜೆಗಳು ಇಂತಹ ಪ್ರಶ್ನೆಗಳಿಗೆ 2014 ರಲ್ಲಿ ಸ್ಪಷ್ಟವಾಗಿ ಉತ್ತರಿಸಿದ್ದಾರೆ; ತಮ್ಮ ಅಪಾರ ನಿರೀಕ್ಷೆಗಳನ್ನು ಬದಲಾವಣೆಯ ಚಾಟಿ ಬೀಸಿ ವ್ಯಕ್ತಪಡಿಸಿದ್ದಾರೆ. ಆದರೆ ಸುದೀರ್ಘಕಾಲದಿಂದ ಮೈಗೂಡಿಹೋಗಿರುವ ಕುಟಿಲತೆಯ ಪೂರ್ವ ಸಂಸ್ಕಾರವನ್ನು ತೊಲಗಿಸಲು ದೀರ್ಘ ಸಮಯವೇ ಬೇಕಾದೀತು. ಅಷ್ಟು ಸಮಯ ಕಾದು ನೋಡುವ ತಾಳ್ಮೆ ಜನರಲ್ಲಿದೆಯೆ ? ಈಗಲೇ ಹೇಳುವಂತಿಲ್ಲ.

ಒಂದಂತೂ ಸತ್ಯ. ಕುಲಗೆಟ್ಟು ಹೋಗಿರುವ ಭಾರತದ ಸರಕಾರೀ ಯಂತ್ರವನ್ನು ಶಿಸ್ತಿಗೊಳಪಡಿಸುವ ಕ್ರಿಯೆಯು ಚುನಾವಣೆಯ ಮೂಲಕ ಶಾಸಕರನ್ನು ಕಿತ್ತೊಗೆಯುವಷ್ಟು ಸುಲಭವೇನಲ್ಲ. ಇರುವ ಕಾನೂನನ್ನೇ ತಮಗೆ ಬೇಕಾದಂತೆ ದುಡಿಸಿಕೊಳ್ಳುತ್ತ ಕಣ್ಣು ಮುಚ್ಚಿ ಕದ್ದ ಹಾಲನ್ನೇ ಕುಡಿಯುವ ಚಟಕ್ಕೆ ಬಿದ್ದಿರುವ ಇಂದಿನ ಸರಕಾರೀ ಬಾಬು(ಬಾಬಿ)ಗಳ ಖದೀಮತನಕ್ಕೆ - ಅಚ್ಚ ಬಿಳಿಯ ಟೋಪಿಧಾರಿಗಳಿಂದಲೂ ನಿಗೂಢ ಪ್ರೋತ್ಸಾಹವೂ ದೊರೆಯುತ್ತಿರುವುದರಿಂದ ಪೀಡಿಸಲ್ಪಡುತ್ತಿರುವ ಬಹುಸಂಖ್ಯಾತ ಪ್ರಜೆಗಳನ್ನು ಪಾರು ಮಾಡುವುದೂ ಸುಲಭವೇನಲ್ಲ. ಆದ್ದರಿಂದಲೇ ಅತ್ಯಂತ ಕಠಿಣ ಕಾರ್ಯವಾದ "ಜಡ್ಡುಗಟ್ಟಿದ ಸರಕಾರೀ ಯಂತ್ರದ ಸ್ವಚ್ಛತಾ ಅಭಿಯಾನ"ವು - ಇಂದಿನ ಸರಕಾರಗಳ ಪ್ರಥಮ ಆದ್ಯತೆಯಾಗಬೇಕಾಗಿದೆ.
    
ಕಳ್ಳ ವಿದ್ಯೆಯಲ್ಲಿ ಪಾರಂಗತರಾಗಿರುವ ಸರಕಾರೀ ನೌಕರರು ನಮ್ಮ ಮೋದಿಯನ್ನೂ ಸೋಲಿಸುವಂತಹ ಕಳ್ಳ ಆಟ ಆಡಬಲ್ಲವರು ! ಇದು ಸದ್ಯ ಗೋಚರಿಸುತ್ತಿರುವ ಸ್ಥಿತಿ. ಅಂದಮೇಲೆ ಕಾಗಕ್ಕ ಗುಬ್ಬಕ್ಕಗಳ ಸ್ಥಿತಿ ಏನಿರಬಹುದು ? 70 ವರ್ಷಗಳ ರಾಡಿಯಾಗಿ ಕೂತಿರುವ ಸದ್ಯದ ಭಾರತ ಸರಕಾರದ ಕಾರ್ಯಪಡೆಯ ವರ್ಗವ್ಯವಸ್ಥೆಯಲ್ಲಿ ಎಂದಿನಂತೆ "ನನ್ನಿಷ್ಟ; ನಮ್ಮಿಷ್ಟ; ನಂಗೆಷ್ಟು ? ನಿಂಗೆಷ್ಟು ?"ಗಳ ಸ್ವಚ್ಛಂದ ಮೆರವಣಿಗೆ ನಡೆಯುತ್ತಿದೆ ! ನ್ಯಾಯವನ್ನು ಅಪೇಕ್ಷಿಸುವುದೇ ಅವಿಧೇಯತೆ ಎಂಬ ವಾತಾವರಣವು ಸರಕಾರೀ ಕೃಪಾಪೋಷಿತ ವ್ಯವಸ್ಥೆಗಳಲ್ಲಿದೆ. ಆದ್ದರಿಂದಲೇ ಸರಕಾರೀ ಕಚೇರಿಗಳಲ್ಲಿ ಸಂಭವಿಸುವ ಬರಿಗಣ್ಣಿಗೆ ಕಾಣುವಂತಹ ಸತ್ಯವನ್ನೂ - "ಅಧಿಕೃತ ಸತ್ಯ" ಎಂದು - ಊರಿನ "ದೂಮ ದಾಮರ" ಮೂಲಕ ಹೇಳಿಸಿಕೊಳ್ಳಬೇಕಾಗುತ್ತಿದೆ ! ಆದ್ದರಿಂದ ಅನಿವಾರ್ಯವಾಗಿ, ನನ್ನ ಉದ್ಯೋಗದ ಸ್ಥಳದಲ್ಲಿ ನಡೆದಿದ್ದ ಅಧಿಕಪ್ರಸಂಗದ ಅಧಿಕಾರೀ ನಡೆಗಳನ್ನು ಪ್ರಶ್ನಿಸಲೋಸುಗ - ಊರಿನ ಸತ್ಯಾರ್ಥಿ ನ್ಯಾಯವಂತರ ಕಣ್ಕಟ್ಟಿನಂಥ ತರ್ಕಗಳ ಆಶ್ರಯವನ್ನು ನಾನು ಪಡೆಯಬೇಕಾಗಿ ಬಂತು. ಅಂತಹ "ಕಾಗದ ವಾದ"ಗಳ ಸಂದಿಯಿಂದ ಚೂರುಪಾರು ನ್ಯಾಯದಂಥ ಏನೋ ಒಂದನ್ನು ಕಿತ್ತುಕೊಳ್ಳಲು - ನನಗೆ ಭರ್ತಿ ಒಂದು ವರ್ಷ ಹಿಡಿಯಿತಲ್ಲ ? ವರ್ಷಪೂರ್ತಿ ನನಗೆ ಸಿಕ್ಕಿದ್ದು ಬರೇ DATE ಗಳು...! "ನ್ಯಾಯದ ಜೊತೆಗೆ Dating" ಅಂದುಕೊಂಡದ್ದೂ ಇತ್ತು. ನ್ಯಾಯಾಲಯದಲ್ಲಿ ಸಿಗುವುದೆಲ್ಲವನ್ನೂ ನ್ಯಾಯ ಎಂದೇ ಹೇಳುವುದು ಅನಿವಾರ್ಯ. ಆದ್ದರಿಂದ... ಅಂತೂ ಕಳೆದ ಸೆಪ್ಟೆಂಬರದಲ್ಲಿ ನನಗೆ ನ್ಯಾಯ ಸಿಕ್ಕಿತು. ತೀರ್ಪು ಬಂತು. "ಸಂಸ್ಥೆಯು ತಾನೇ ಅಳವಡಿಸಿಕೊಂಡ ನಿಯಮಕ್ಕೆ ಬದ್ಧವಾಗಿ - ಮೂರು ತಿಂಗಳ ಒಳಗೆ ಅಹವಾಲುದಾರರಿಗೆ ಸಲ್ಲಬೇಕಾದುದೆಲ್ಲವನ್ನೂ ನೀಡಬೇಕು" ಎಂಬ ತೀರ್ಮಾನವಾಯಿತು. "ಯಾವುದೇ ನೌಕರರ ನಿವೃತ್ತಿಯ ಹಂತದಲ್ಲಿ ಅವರ ವೇತನ ಮತ್ತು ನೌಕರರಿಗೆ ಕೊನೆಯದಾಗಿ ಸಲ್ಲಿಸುವ ಗಂಟಿನಲ್ಲಿ ಯಾವುದೇ ವ್ಯವಸ್ಥೆಯು ಕೈಯ್ಯಾಡಿಸುವಂತಿಲ್ಲ..." ಎಂಬ ಸುಪ್ರೀಂ ಕೋರ್ಟಿನ ತೀರ್ಪನ್ನು ಉದ್ಧರಿಸಿದ ಆದೇಶವನ್ನೂ ನೆನಪಿಸಲಾಯಿತು.

ಇಷ್ಟಾದರೂ ಆಕಾಶವಾಣಿಯ ವ್ಯವಸ್ಥೆಯು ಕರ್ಕರೆಗಳನ್ನು ಕೈಚೆಲ್ಲಿ ಸುಮ್ಮನಾಗಲಿಲ್ಲ. ಏಕೆ ? ಏಕೆಂದರೆ ಸರಕಾರದ ಮುದ್ದಿನ ಮಕ್ಕಳ ಕಾರ್ಯಶೈಲಿಯೇ ಹಾಗಿದೆ. ಅವರಿಗೆಲ್ಲ ಕರ್ತವ್ಯದ ಹೊತ್ತಿನಲ್ಲಿ ಚಾ ಕುಡಿಯುವುದು ಮತ್ತು ಬಿಟ್ಟಿ ಔತಣದಲ್ಲಿ ಪಾಲ್ಗೊಳ್ಳುವುದನ್ನು ಬಿಟ್ಟು ಬೇರೆ ಕೆಲಸವೇ ಇಲ್ಲ. ಸರಕಾರೀ ನೌಕರರ ಎಲ್ಲ ಅಷಡ್ಡಾಳಗಳನ್ನು ಕಂಡೂ ಕಾಣದಂತಿದ್ದು ದೈತ್ಯಾಕಾರದಲ್ಲಿ ಬೆಳೆಸಿದವರಿಗೂ ಯಾವ ಉತ್ತರದಾಯಿತ್ವವಿಲ್ಲ. ಇಂದಿನ ಸರಕಾರೀ ವ್ಯವಸ್ಥೆಯಲ್ಲಿ - ತಪ್ಪು ಆದೇಶವನ್ನು ಹೊರಡಿಸಿದ ಸರಕಾರೀ ಉದ್ಯೋಗಿಗಳಿಗೆ ಯಾವ ಶಿಕ್ಷೆಯೂ ಆಗುವುದಿಲ್ಲ. ತಪ್ಪೆಸಗುವ ಅಧಿಕಾರಿಗಳನ್ನು ಹೆಡಮುರಿ ಕಟ್ಟಿ, ಪ್ರಶ್ನಿಸಿ, ಶಿಕ್ಷಿಸುವಂತಹ ಇಚ್ಛಾಶಕ್ತಿಯೂ - ಸಾಂವಿಧಾನಿಕ ಅಂಗಗಳಲ್ಲಿ ಕಾಣುವುದಿಲ್ಲ. ಆದ್ದರಿಂದ ಯಾರನ್ನು ಯಾರೂ ತಮ್ಮ ಕೈಲಾದಷ್ಟು ಪೀಡಿಸಿ ಹಿಂಸಿಸಲು ಮುಕ್ತ ಅವಕಾಶವಿದೆ. ಯಾರಿಗೂ ಭಯವೇ ಇಲ್ಲದ ನಿರ್ಭಯ ಸ್ವರ್ಗವೇ ಸರಕಾರೀ ಕಚೇರಿಗಳು - ಎಂಬಂತಾಗಿದೆ ! ಆದ್ದರಿಂದಲೇ ನನ್ನ ಸಂದರ್ಭದಲ್ಲಿ... ನನ್ನನ್ನು ಪೀಡಿಸಿದ್ದ ORDER ನ್ನು ಹಿಂಪಡೆದು ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವಂತೆ ಹೇಳಲಾಯಿತೇ ವಿನಹ ತಪ್ಪೆಸಗಿದ ಅಧಿಕಾರಿಯನ್ನು ಗುರುತಿಸಿ ಮುಂದೆಂದೂ ಅಂತಹ ತಪ್ಪುಗಳು ಮರುಕಳಿಸದಂತಹ ಪಾಠ ಕಲಿಸಲು ನ್ಯಾಯಾಲಯಕ್ಕೆ ಉತ್ಸಾಹವಿರಲಿಲ್ಲ.

ಇಂತಹ ಸರಕಾರೀ ಹೊಲಸಿನಲ್ಲಿ ಬಿದ್ದಿದ್ದ ನನ್ನದೂ ಅದೇ ದುಸ್ಥಿತಿ. 2016 ರ ಸೆಪ್ಟೆಂಬರದಲ್ಲಿ ಹೊರಬಿದ್ದ ಕೋರ್ಟಿನ ಆದೇಶದ ನಂತರ ನವೆಂಬರದಲ್ಲಿ - ನಮ್ಮ ಚೆನ್ನೈ ನ ACCOUNTS ಕಛೇರಿಯಿಂದ ನನಗೆ ಮತ್ತೊಂದು ಪತ್ರ ಬಂದಿತ್ತು. "ನಿಮ್ಮ ಸೇವಾ ಪುಸ್ತಕದ ಅಧ್ಯಯನ ಮತ್ತು ಪುನರ್ವ್ಯವಸ್ಥೆಗಾಗಿ ನಮಗೆ 6 ತಿಂಗಳ ಸಮಯ ಕೊಡಿ..." ಎಂದು ತಮ್ಮ ಸರಕಾರೀ ವಕೀಲರಲ್ಲಿ ಬೇಡಿಕೆಯನ್ನಿಟ್ಟ ನೊಣಪ್ರತಿಯ ಭಾವಪತ್ರವದು ! ಅನಂತರ ಬಹುಶಃ ಸರಕಾರೀ ವಕೀಲರು ಗುಟ್ಟಾಗಿ ಬುದ್ಧಿ ಹೇಳಿ ಚೌಕಾಸಿ ಮಾಡಿದ್ದರಿಂದಲೋ ಏನೋ... ನ್ಯಾಯಾಲಯದ ಮುಂದೆ ಅಧಿಕೃತವಾದ ಸರಕಾರೀ ಅಹವಾಲು ಸಲ್ಲಿಸುವಾಗ ನನ್ನ ಲೆಕ್ಕ ಚುಕ್ತಾ ಮಾಡಲು 3 ತಿಂಗಳ ಹೆಚ್ಚಿನ ಸಮಯವನ್ನಷ್ಟೇ ಕೇಳಿಕೊಂಡಿತ್ತು.


ಇಂತಹ ಎಳೆದಾಟಗಳಿಗೆ ಸಿಲುಕಿದಾಗ ನಿಜವಾದ ಶೋಷಿತರು ಮಾನಸಿಕವಾಗಿ ಬಳಲುತ್ತಾರೆ. "ನಿವೃತ್ತ ನ್ಯಾಯಾಧೀಶರಿಗೆ ಒಂದು ಪುನರ್ವಸತಿ ಕೇಂದ್ರವಿರಲಿ ಎಂಬ ಉದ್ದೇಶದಿಂದಲೇ ಸರಕಾರೀ ಸಂಸ್ಥೆಗಳು ಬಗೆಬಗೆಯ CASE ಗಳನ್ನು ಸೃಷ್ಟಿಸಿ CAT (ಕೇಂದ್ರ ಆಡಳಿತಾತ್ಮಕ ನ್ಯಾಯಾಲಯ) ಗಳಿಗೆ ಉಣ್ಣಿಸುತ್ತಿರಬಹುದೆ ?... "ನೀ ನನಗೆ ನಾ ನಿನಗೆ " ಎಂಬ ಜೋಡಾಟದ ಪ್ರಸಂಗವನ್ನು ಹರಕೆಬಲಿಯಂತೆ ಪ್ರದರ್ಶಿಸುತ್ತಿರಬಹುದೆ ?" - ಎಂದೂ ಅನ್ನಿಸಬಹುದಲ್ಲವೆ ? ಕೆಲವು ಬೇಜವಾಬ್ದಾರಿತನಗಳು - ಹೀಗೇ.... ಎಂದೂ ಇಣುಕದ ಪೂರ್ವಾಗ್ರಹವನ್ನು ಉದ್ದೇಶಿತವಾಗಿ ಪೋಷಿಸಲು ಪ್ರೇರೇಪಿಸುವುದೂ ಇದೆ !
 
ನನ್ನ ಪೀಡಾಕಾಂಡದ ಸಂದರ್ಭದಲ್ಲಿ ಬಾಕಿ ಚುಕ್ತಾ ಮಾಡಲು 3 ತಿಂಗಳ ಹೆಚ್ಚಿನ ಅವಧಿಗಾಗಿ ಆಕಾಶವಾಣಿಯು ಮತ್ತೊಮ್ಮೆ ಕೋರ್ಟಿಗೆ ಸಲ್ಲಿಸಿದ್ದ "ಹೊಸ ಅರ್ಜಿ" ಎಂಬ ಖದೀಮ ಕೀಟಲೆ ಯು - ನನ್ನನ್ನು ವಿಚಲಿತಗೊಳಿಸಲಿಲ್ಲ. ಅದೇ ಗಬ್ಬೆದ್ದ ವ್ಯವಸ್ಥೆಯಲ್ಲಿ ಅದಾಗಲೇ ನಾನೂ ನುರಿತಿದ್ದೆನಲ್ಲ ? ನನಗೆ ಕುತೂಹಲವಿದ್ದದ್ದು ಕೋರ್ಟಿನ ಆಗುಹೋಗುಗಳಲ್ಲಿ ಮಾತ್ರ. ಆಕಾಶವಾಣಿಯು ಸಲ್ಲಿಸಿದ್ದ ಹೊಸ ಅರ್ಜಿಯನ್ನು ಕೆಲವು ದಿನಗಳ ಕಾಲ ಎತ್ತಿ ಮುದ್ದಾಡಿದ ಬೆಂಗಳೂರಿನ CAT (Central administrative Tribunal) - ಆಕಾಶವಾಣಿಗೆ ಹೆಚ್ಚಿನ 2 ತಿಂಗಳ ಸಮಯವನ್ನು ಮಾತ್ರ - ಪ್ರಸಾದಿಸಿತು. ಅದರಂತೆ 2017 ರ ಜನವರಿಯವರೆಗೆ ನಾನು ಕಾಯಬೇಕಾಗಿದೆ. ಮಿಯಾಂವ್. ನನಗೆ ಮಾರ್ಜಾಲತೃಪ್ತಿ ಸಿಕ್ಕಿದೆ !

( ತೀರ್ಪಿನಂತೆ ಸರಕಾರೀ ವಕೀಲರು ಬೇಡಿಕೆಯಿಟ್ಟ 3 ತಿಂಗಳ ಅವಧಿಯಲ್ಲಿ - 1 ತಿಂಗಳ ಕಡಿತವಾದಂತಾಯಿತು; ಇನ್ನೂ 3 ತಿಂಗಳಕಾಲ "ರಾಮ ಬರುವನೆಂದು" ಕಾಯಬೇಕಾಗಿದ್ದ ನಾನು ಈ ತೀರ್ಪಿನಿಂದಾಗಿ ಹೆಚ್ಚಿಗೆ - 2 ತಿಂಗಳು ಕಾಯುವಂತಾಗಿದೆ. ಹೀಗಿದ್ದೂ... ನನ್ನ ಕಾಯುವ ಶಿಕ್ಷೆಯನ್ನು 1 ತಿಂಗಳು ಕಡಿತಗೊಳಿಸಿದ್ದೂ ನನಗೆ ಕೊಟ್ಟ ನ್ಯಾಯವೇ ! ನಾನು ಹಾಗೆ ಅಂದುಕೊಳ್ಳಲೇಬೇಕು ! ಇಬ್ಬರಿಗೂ ಚೂರು ಚೂರು ನ್ಯಾಯ ! ಅಲ್ಲವೆ ? ಅನ್ಯಾಯದ ಪ್ರಶ್ನೆಯೇ ಏಳುವುದಿಲ್ಲ. ಕೋರ್ಟು ಹೇಳಿದ್ದೆಲ್ಲವೂ ಅಪ್ಪಟ ನ್ಯಾಯವೇ. ಗಪ್ ಚುಪ್.)

ಇತ್ತ, ಭ್ರಷ್ಟ ಮನಸ್ಸುಗಳನ್ನು ರಕ್ಷಿಸಬಲ್ಲ ಕಾನೂನುಗಳು - ಅಧಿಕಾರಿಗಳ ಬತ್ತಳಿಕೆಯಲ್ಲಿ ಭದ್ರವಾಗಿರುತ್ತವೆ ! ಒಂದು ಕಾನೂನಿನಿಂದಲೇ ಇನ್ನೊಂದು ಕಾನೂನನ್ನು ಬಡಿದು ಹಾಕುವ ಕೋಲಾಟದಲ್ಲಿ ಪರಿಣತರಾದವರು ಕಚೇರಿಗಳಲ್ಲಿ ಪರಸ್ಪರ ಕೈಜೋಡಿಸಿ ಸರಕಾರವನ್ನು ತೂಗಿ ಮಲಗಿಸುತ್ತಿರುವ ವಿಕಟ ಸೌಹಾರ್ದತೆಯ ಸನ್ನಿವೇಶವು ಸರಕಾರೀ ವಲಯದಲ್ಲಿದೆ. ಆದ್ದರಿಂದಲೇ ಅಧಿಕಾರೀ ವರ್ಗದ ಆಟಗಳು ಅನೂಚಾನವಾಗಿ ನಡೆಯುತ್ತಲೇ ಬಂದಿವೆ; ಪರಿಣಾಮವಾಗಿ - ನ್ಯಾಯಾಸ್ಥಾನಗಳಿಗೆ ಸುಗ್ಗಿ ! ಅತೃಪ್ತಿ ಹೆಚ್ಚಿಸುವ ನ್ಯಾಯಿಕ ಹೋರಾಟಗಳಿಗೂ ಸುಗ್ಗಿ !

ಯಾವುದೇ ಸುವ್ಯವಸ್ಥೆ ರೂಪುಗೊಳ್ಳಬೇಕಾದರೆ ಒಂದೋ ನೈತಿಕ ಬಲವಿರುವ ಸರಕಾರೀ ಯಂತ್ರ ಬೇಕು; ಇಲ್ಲವೇ ಕಾನೂನಿನ ಹಿಡಿತ ಬೇಕು. ಇವೆರಡೂ ಇಲ್ಲದ ನತದೃಷ್ಟ ಸ್ಥಿತಿಯಲ್ಲಿ ಇಂದಿನ ನಮ್ಮ ಸರಕಾರೀ ಯಂತ್ರಗಳು ಅದಮ್ಯ ರಕ್ಕಸತನವನ್ನು ರೂಢಿಸಿಕೊಂಡಿವೆ. ಸದ್ಯದ ತೂತು ಕಾನೂನುಗಳ ತೂತು ಮುಚ್ಚದಿದ್ದರೆ ನಮ್ಮ ಮೋದಿಯನ್ನೂ ಅಡ್ಡಡ್ಡ ಮಲಗಿಸಬಲ್ಲ ಪರಿಣತರು ಸರಕಾರೀ ವಲಯದಲ್ಲಿದ್ದಾರೆ ! ನಿಯಮವನ್ನು ತಿರುಚುತ್ತ ಮನಸೋ ಇಚ್ಛೆ ವರ್ತಿಸುವ ಸೊಕ್ಕಿದ ಸರಕಾರೀ ನೌಕರರಿಗೆ ಕಠಿಣ ಶಿಕ್ಷೆಯಾಗುವಂತಿದ್ದಿದ್ದರೆ - ಬಡಪಾಯೀ ನೌಕರರ ಮತ್ತು ಸಾರ್ವಜನಿಕರ ಶೋಷಣೆಯ ಯಾವುದೇ ಪ್ರಸಂಗವೇ ಉದ್ಭವಿಸುತ್ತಿರಲಿಲ್ಲ. ಒಬ್ಬ ಅಪರಾಧೀ ಅಧಿಕಾರಿಯನ್ನು - ಆತ/ಆಕೆಯ - ತಪ್ಪು ನಿರ್ಧಾರಕ್ಕಾಗಿ ತಕ್ಷಣ ಉಚ್ಛಾಟಿಸುತ್ತ ನಡೆದಿದ್ದರೆ ಸೊಟ್ಟಗಾಗಿರುವ ವ್ಯವಸ್ಥೆಯು ಕ್ಷಣಮಾತ್ರದಲ್ಲಿ ನೆಟ್ಟಗಾಗುತ್ತಿತ್ತು. ಆದರೆ ವಿಕಟ ಸೌಹಾರ್ದತೆ ಎಂಬ ಉಚ್ಚಸ್ತರೀಯ ಪರಸ್ಪರ ಕೊಡುಕೊಳ್ಳುವಿಕೆಯು ಅಧಿಕಾರೀ ವರ್ಗದ ಸ್ವಚ್ಛಂದತೆಗಳನ್ನು - ಅಲ್ಲಲ್ಲೇ ಪ್ರಶ್ನಿಸಿ ಕಠಿಣವಾಗಿ ವರ್ತಿಸಲು ಸ್ವತಃ ಇಚ್ಛಿಸುತ್ತಿಲ್ಲ; ಕಳ್ಳ ದೋಸ್ತಿ ! ತತ್ಪರಿಣಾಮವಾಗಿ ಭಾರತದ ಸರಕಾರೀ ಯಂತ್ರಗಳು ಕೊಳೆತು ನಾರುತ್ತಿವೆ.

ಇತ್ತ ನಮ್ಮ ಕಾನೂನುಗಳು ಹೇಗಿವೆ ಎಂದರೆ - ಶೋಷಣೆಗೆ ಅಗತ್ಯವಾದ ಜಾರುಗಿಂಡಿಯ ಎಲ್ಲ ಅವಕಾಶಗಳನ್ನು ತಮ್ಮೊಳಗೇ ಮುಕ್ತವಾಗಿಟ್ಟುಕೊಂಡು... ವಕೀಲರು, ಕೋರ್ಟು, ನ್ಯಾಯಾಲಯ ... ಮುಂತಾದ ಉದ್ಧಾರಕರ ವೇಷವನ್ನು ಪ್ರದರ್ಶಿಸುವಂತಿವೆ. ಜನಸಾಮಾನ್ಯರು ನ್ಯಾಯಾಲಯದ ಬಾಗಿಲಲ್ಲಿ ಬಿದ್ದು ಹೊರಳುತ್ತ ಬಸವಳಿಯುವಂತಹ "ಮುಕ್ತ ಅವಕಾಶಗಳನ್ನು" ಉದಾರವಾಗಿ ದಯಪಾಲಿಸಿದಂತೆ ವಿಕಟ ಸೋಗು ಹಾಕುತ್ತಿವೆ ! ಅಪವ್ಯಾಖ್ಯಾನಕ್ಕೆ ಆಸ್ಪದವೇ ಇಲ್ಲದಂತಹ ಬಿಗಿಯಾದ ಕಾನೂನನ್ನು ರೂಪಿಸುವುದು ಮತ್ತು ಅದಕ್ಕೆ ಬದ್ಧರಾಗಲೇಬೇಕಾದ ಅನಿವಾರ್ಯತೆ ಮೂಡದಿದ್ದರೆ ಯಾವುದೇ ವ್ಯವಸ್ಥೆಯ ಗತಿ - ಇದೇ ಅವಸ್ಥೆ !

ಕಾನೂನೇನು ಬದಲಾಯಿಸಲಾಗದ ಬ್ರಹ್ಮ ಬರಹವೆ ? ಜನಕ್ಷೇಮವೇ ಪರಮೋಚ್ಚವಾಗಿದ್ದ ರಾಮರಾಜ್ಯದ ಕನಸನ್ನು ಮೂರ್ತರೂಪಕ್ಕಿಳಿಸುವುದು ಒಬ್ಬ ಮೋದಿಯಿಂದ ಸಾಧ್ಯವೆ ? ಸಾಮೂಹಿಕ ಪಾಲುದಾರಿಕೆ ಬೇಡವೆ ? ಸಂವಿಧಾನದ ಮೂರೂ ಅಂಗಗಳು ಕೈಜೋಡಿಸಿ ದೇಶ ಕಟ್ಟಲು ಶ್ರಮಿಸಬೇಡವೆ ? ಜನಸಮುದಾಯವು ರೊಚ್ಚಿಗೆದ್ದು ಜನತಾಂತ್ರಿಕ ವ್ಯವಸ್ಥೆಗಳನ್ನು ದಾರಿಗೆ ತರಲೇಬೇಕಾದ ಸನ್ನಿವೇಶವನ್ನು ನಿರ್ಮಾಣ ಮಾಡಲು ನಾವು ಹೊರಟಿದ್ದೇವೆಯೆ ? ಅಪರಾಧಕ್ಕೆ ಶಿಕ್ಷೆ ತಪ್ಪದು - ಎಂಬ ಸುಭಗ ವಾತಾವರಣವು ಅಪೇಕ್ಷಣೀಯವಲ್ಲವೆ ? ಅದಕ್ಕಾಗಿ ಶ್ರಮಿಸಲು ಪ್ರಯತ್ನಿಸುವವರನ್ನು "ಹಿಟ್ಲರ್, ನೆಪೋಲಿಯನ್, ಘಜ಼್ನಿ ಮೊಹಮ್ಮದ್, ಹುಚ್ಚು ದೊರೆ ತುಗ್ಲಕ್ - ಎಂದೆಲ್ಲ ಗಳಹುತ್ತ ಉಂಡುತೇಗುತ್ತಿರುವುದು ಯಾರ ಉದ್ಧಾರಕ್ಕಾಗಿ ? ಇದೆಂತಹ ನರಳಿಕೆ ? "ದಿನಕ್ಕೊಂದು "ಮುಕ್ತ ಭ್ರಾಂತಿ"ಗಳನ್ನು ಹುಟ್ಟುಹಾಕಿ ಮಿಥ್ಯಾಲೋಕವನ್ನು ನಿರ್ಮಿಸುವುದಕ್ಕಿಂತ ಪ್ರಾಮಾಣಿಕರನ್ನು ಹುಡುಕಿ ಹುಡುಕಿ ಒಂದೇ ಬಾರಿಗೆ ಅವರಿಗೆಲ್ಲ "ಶಾಂತ ಮುಕ್ತಿ"ಯನ್ನು ಕೊಡಿಸುವಂತಹ ಕಾನೂನನ್ನಾದರೂ ಏಕೆ ತರಬಾರದು?"... ಅನ್ನಿಸುವಂತಿದ್ದರೆ - ಅದು ಯಾವ ನೆಲಕ್ಕೂ ಶೋಭೆತರದು. ಬಸವಳಿದ ಶೋಷಿತ ವಲಯವು ಸ್ಫೋಟಿಸುವ ಹಂತ ತಲುಪದೆ ? ಸುದೀರ್ಘ ಅವಧಿಯ - ಶಾಸಕಾಂಗದ ಸಂಪೂರ್ಣ ಕಾರ್ಯವೈಫಲ್ಯದ - ಫಲಶ್ರುತಿಯಿದು ! ತತ್ಫಲ - ನಮ್ಮ ನ್ಯಾಯಾಲಯಗಳು ಕರೆಯದೇ ಬರುವ ನನ್ನಂಥ ಅಭ್ಯಾಗತರಿಂದ ತುಂಬಿ ತುಳುಕುವಂತಾಗಿದೆ !

ಕಾನೂನಿನ ನಿಯಮಗಳನ್ನು ರೂಪಿಸುವಾಗಲೇ - ತಪ್ಪು ಮಾಡಲು ಮತ್ತು ದುರುಪಯೋಗಿಸಿಕೊಳ್ಳಲು - ಯಥೇಷ್ಟ ಅವಕಾಶವನ್ನು ತನ್ನ ನೌಕರರಿಗೆ ಕೊಟ್ಟು, ತಮ್ಮ ಸ್ವಕಾರ್ಯಕ್ಕಾಗಿ ಅವರ ಮೂಲಕವೇ ತಪ್ಪುಗಳನ್ನು ಮಾಡಿಸುತ್ತ, ಪರಸ್ಪರರ ದೌರ್ಬಲ್ಯಗಳನ್ನೇ ನಗದೀಕರಿಸಿಕೊಳ್ಳುತ್ತ - ನೌಕರಶಾಹಿ ಎಂಬ ಅನಿಯಂತ್ರಿತ ಭಸ್ಮಾಸುರರನ್ನು ಸೃಷ್ಟಿಸಿದವರು ಯಾರು ? ಅಂತಹ ಕಳ್ಳ ನೌಕರರನ್ನು ಬೆಂಬಿಡದೆ ರಕ್ಷಿಸುತ್ತಿರುವವರು ಯಾರು ? ಜನರಿಗೆ ಗೊತ್ತಿದೆ. ಆದರೆ ಜನರು ನಿಸ್ಸಹಾಯಕರು. ಆದ್ದರಿಂದಲೇ ಅನ್ಯಾಯ ಮಿತಿಮೀರಿ, ದಿನದಿಂದ ದಿನಕ್ಕೆ ಕೋರ್ಟುಗಳಲ್ಲಿ ಜನಜಾತ್ರೆ ನೆರೆಯುತ್ತಿದೆ; ಅನಿವಾರ್ಯವಾಗಿ ಕಪ್ಪು ಸಾಮ್ರಾಜ್ಯಕ್ಕೆ ತಳ್ಳಲ್ಪಟ್ಟ ಬಿಳೀ ಪ್ರಜೆಗಳೂ ಕ್ರಮೇಣ ಕಪ್ಪನ್ನೇ ಬಿಳಿಯೆಂದು ಒಪ್ಪಿ ಮೆಚ್ಚಿ - ಅದೇ ಸುಲಭ ಮಾರ್ಗವೆಂದು ಆಯ್ದುಕೊಂಡು ಅನುಸರಿಸುವಂತಾದರೆ - ಅದು ದೇಶಕ್ಕೇ ತೂತು ಕೊರೆದಂತೆ ! ಈ ಎಚ್ಚರವು ಬೇಡವೆ ? ಇವೆಲ್ಲವೂ ಪರೋಕ್ಷವಾಗಿ ದೇಶದ್ರೋಹದ ಕೆಲಸಗಳೇ. "ಮಾತಿನಲ್ಲೇ ಮನೆ ಕಟ್ಟುವ" ಕುಟಿಲ ವಕಾಲತ್ತಿನ ಹೊಂಡಕ್ಕೆ ಸುಭಗ ಪ್ರಜೆಗಳನ್ನು ನೂಕುವ ಯಾವುದೇ ಸ್ವಚ್ಛಂದ ಆಡಳಿತವನ್ನು ಜನರು ಕ್ಷಮಿಸಲಾರರು. ಮಾನ ಮರ್ಯಾದೆ ಎಂಬ ಶಬ್ದಾನುಭೂತಿಗೆ ಸ್ಪಂದಿಸಬಲ್ಲ ಸೂಕ್ಷ್ಮಮತಿಗಳಿಗೆ ಎಲ್ಲವೂ ಅರ್ಥವಾಗುತ್ತದೆ. ಆದರೆ ಎಲ್ಲೆಂದರಲ್ಲಿ ಗೊರಕೆ ಹೊಡೆಯುತ್ತ ನಿದ್ರಿಸಿ ತಮ್ಮ ಸ್ವಪ್ನಸಾಮ್ರಾಜ್ಯದಲ್ಲೇ ವಿಹರಿಸುತ್ತ ಜೀವಚ್ಛವಗಳಂತಿರುವ ಆಯಕಟ್ಟಿನ ಕುಟಿಲ ಸ್ಥಾನಗಳಿಗೆ - ಈಗಲೂ ಕಣ್ಣು ಬಿಟ್ಟು ನೋಡುವ ಮನಸ್ಸಿಲ್ಲ. ರಕ್ಷಾಕವಚವಿಲ್ಲದೆ ರಸ್ತೆಗಿಳಿಯಲು ಹೆದರುವಂತಹ ನಮ್ಮ ಪಟಾಕಿ ವೀರರಿಗೆಲ್ಲ "ಮಾನ ಮರ್ಯಾದೆ"ಯ ಹಂಗಿದೆಯೆ? ಭಂಡತನವೇ ಅವರ ಬಂಡವಾಳ. ಅವರ ಕರ್ಮಗಳಿಗೇ ಅವರು ಹೆದರುತ್ತಿದ್ದಾರೆ. ಬಾಹ್ಯ ರಕ್ಷಣೆಯನ್ನೇ ನೆಚ್ಚಿಕೊಂಡಿರುವ ಅಂತಹ ಸ್ಥಾನಗಳೆಲ್ಲವೂ ಊರನ್ನು ರಕ್ಷಿಸಬಲ್ಲವೆ ? ಇವೆಲ್ಲವೂ ಕುರ್ಚಿ ಭರ್ತಿಯ ಸ್ಥಾನಗಳಷ್ಟೆ. ಭೂಮಿಗೆ ಭಾರ; ಕೂಳಿಗೆ ದಂಡ... ಇಂತಹ ದಂಡಪಿಂಡಗಳಿಂದಲೇ - ಭವ್ಯವಾಗಿದ್ದ ಭಾರತವು ಈಗ ಬಡವಾಗಿ ಹೋಗಿದೆ !

ಸ್ವಾತಂತ್ರ್ಯ ಬಂದು 70 ವರ್ಷಗಳಾದರೂ ಭಾರತವು ಇನ್ನೂ ಬಡವಾಗಿಯೇ ಇದ್ದರೆ ಅದಕ್ಕೆ ಇಂತಹ "ಠುಸ್" ಪಟಾಕಿಗಳೇ ಕಾರಣ. ಪ್ರತಿಯೊಬ್ಬರೂ ಪ್ರಶ್ನಿಸಿಕೊಳ್ಳಬೇಕು. ಬೆರಳೆಣಿಕೆಯ "ಸೊಕ್ಕಿನ ಸಿರಿಗೆಂಡೆ"ಗಳನ್ನು ಪೋಷಿಸುವುದಕ್ಕಾಗಿ ನಾವು ಸ್ವಾತಂತ್ರ್ಯದ ಜಪ ಮಾಡಿದ್ದೆ ? ಈಗ ಇಡೀ ದೇಶದ ಸರಕಾರೀ ಯಂತ್ರಗಳು ಭ್ರಷ್ಟವಾಗಿ ಕೂತಿವೆಯಲ್ಲ ? ಸರಕಾರೀ ಮಕ್ಕಳಿಗೆ ಹಾದಿ ತಪ್ಪಿಸುವ ಶಿಕ್ಷಣವನ್ನು ಊಡುತ್ತ ಬಂದವರು ಯಾರು ? ಭ್ರಷ್ಟತೆಯ ವಿಷಪ್ರಾಶನ ಮಾಡಿಸಿ ಬಲಿಷ್ಠ ಸರಕಾರೀ ಯಂತ್ರವನ್ನು ದುರ್ಬಲಗೊಳಿಸುತ್ತ ಬಂದವರು ಯಾರು ? ರಾಜಕೀಯವೂ ಬದುಕಿನ ಅಂಗವೆನಿಸುವ ಒಂದು ಕ್ಷೇತ್ರ. ಅದು ಶಾಸ್ತ್ರೀಯವಾಗಿ ಬಳಕೆಯಾದಾಗ ಮಾತ್ರ ಸಮಾಜವನ್ನು ಕಟ್ಟುವ ಶಕ್ತಿಯಾದೀತು. ಬದಲಾಗಿ ಉದ್ಧಟವಾದರೆ, ಶ್ರುತಿ - ತಾಳತಪ್ಪಿದ ಹಾಡಿನಂತೆ - ಬದುಕನ್ನು ನರಳಿಸಬಲ್ಲದು ! ಇಂದಿನ ಸಮಾಜವು ಬಳಲುತ್ತಿರುವುದಕ್ಕೆ - ನಮ್ಮ ಮೌಲ್ಯರಹಿತ ಅಧರ್ಮೀ ರಾಜಕೀಯವೇ ಮುಖ್ಯ ಕಾರಣ.

ಸರಕಾರೀ ಕ್ಷೇತ್ರದಲ್ಲಿ ತಪ್ಪುಗಳು ಒಮ್ಮೊಮ್ಮೆ ತಾನಾಗಿಯೇ ಸಂಭವಿಸಬಹುದು; Human Error ನಂತಹ ಯಾವುದೇ ರೋಗಗಳು - ತಕ್ಕ ಔಷಧಗಳಿಗೆ ಪ್ರತಿಕ್ರಿಯಿಸಿ ಗುಣಹೊಂದುತ್ತವೆ. ಆದರೆ "PLANNED MISTAKES"  ಎಂಬ ಇನ್ನೊಂದು ವಿಧಾನವಿದೆಯಲ್ಲ? ಅದು ಪರಿಹಾರವಿಲ್ಲದ ರೋಗ ; ಕುಟಿಲತೆಯಿಂದ ಭ್ರಷ್ಟಗೊಂಡ ಮನೋರೋಗವದು. ಅದಕ್ಕೆ ಒಂದೇ ಮದ್ದು. "ದಂಡಂ ಪರಮೌಷಧಂ".

ಇಂದಿನ ದುರಂತ ಎಂದರೆ - ದಂಡಿಸುವ ನೈತಿಕ ಬಲವನ್ನೇ ಕಳೆದುಕೊಂಡವರು ಎಷ್ಟೋ ಬಾರಿ ತನಿಖಾಧಿಕಾರಿಗಳಾಗಿ ಬಿಡುತ್ತಿದ್ದಾರೆ; ಆಯಕಟ್ಟಿನ ಸ್ಥಾನಗಳನ್ನು ಆಕ್ರಮಿಸಿಕೊಂಡು ಭ್ರಷ್ಟರೇ ಭ್ರಷ್ಟರ ತನಿಖೆಗಳನ್ನು ನಡೆಸುವಂತಾಗಿದೆ. ಆದ್ದರಿಂದಲೇ ಶೂನ್ಯ ಸಂಪಾದನೆಗೆ ಸಮಾಜವು ಸಾಕ್ಷಿಯಾಗುತ್ತಿದೆ. ಸಾಮಾಜಿಕ ಶೂನ್ಯ - ಏರ್ಪಡುತ್ತಿದೆ. ಇಂತಹ ದುರವಸ್ಥೆಯ ವ್ಯವಸ್ಥೆಗಳಿಂದ ಏನು ಫಲ ? ಉಭಯತರ ಭ್ರಷ್ಟರನ್ನು ಪುಸಲಾಯಿಸಿಯೇ ನಿಭಾಯಿಸುತ್ತ ದೇಶದ ಬೊಕ್ಕಸ ಖಾಲಿಮಾಡುವುದೆಂದರೆ - ಬೇಲಿಯೇ ಎದ್ದು ಹೊಲ ಮೇಯುವಂತಹ ದುರಂತ ಸ್ಥಿತಿ.

ಅಪರಾಧಿಗಳನ್ನು ಕುರಿತ ಮೃದು ಧೋರಣೆ ಮತ್ತು ಅಪರಾಧಗಳನ್ನು ಓಲೈಸುವಂತಹ ಅಪಾರ ಅಭಿರುಚಿಯನ್ನು ನಮ್ಮ ಸರಕಾರಗಳು ಅನುಸರಿಸುತ್ತಲೇ ಬಂದಿವೆ. ಹತಾಶೆಯ ಮನಸ್ಸುಗಳು ಉದ್ಗರಿಸುತ್ತಿರುತ್ತವೆ. "ಈ ದೇಶ ಉದ್ಧಾರವಾಗಲು ಚಮತ್ಕಾರವೊಂದು ಸಂಭವಿಸಬೇಕು; ಅದಾಗದೆ ಈಗ ಸೊಟ್ಟಗಿರುವುದು ನೆಟ್ಟಗಾಗುವುದು ಅಸಂಭವ.."  ಹಾಗೆಂದು ಮನುಷ್ಯ ಪ್ರಯತ್ನವನ್ನು ಅವಗಣಿಸುವಂತಿಲ್ಲ. ಲಜ್ಜೆಗೆಟ್ಟ ಭಂಡತನವನ್ನು ಕಠಿಣವಾಗಿ ದಂಡಿಸದೆ ತಾತ್ಕಾಲಿಕ ಮುಲಾಮು ಹಚ್ಚುವುದನ್ನು ನಿಲ್ಲಿಸಬೇಕಾಗಿದೆ. ಭಾರತದಲ್ಲಿ ಹುಟ್ಟಿದ ಕರ್ಮಕ್ಕೆ - ಸಮಸ್ತ ಪ್ರಜೆಗಳ ಸ್ಥಿತಿಯು - ದಾರಿ ಮತ್ತು ದಿಕ್ಕು ತಪ್ಪಿದ ಅಪ್ಪ ಅಮ್ಮನ ಆಶ್ರಯದಲ್ಲಿರುವ ಮಕ್ಕಳಂತಾಗಿದೆಯಲ್ಲ ! 

ಇಂದಿನ ಭಾರತೀಯ ನ್ಯಾಯಾಲಯದ ಒಟ್ಟಾರೆ ಚಿತ್ರ ಹೇಗಿದೆ ಎಂದರೆ - ಅಲ್ಲಿ ಪ್ರವೇಶಿಸುವವರೆಲ್ಲರೂ ನರಕದ ಶಿಕ್ಷೆಗೆ ಪೂರ್ಣ ಸಹಮತಿ ನೀಡಿರಬೇಕು ಎಂಬಂತೆ... ಅಲ್ಲಿ ನಿಜವಾದ ಸಂತ್ರಸ್ತರಿಗೆ ಕೊಡಬಾರದ ಮಾನಸಿಕ ಹಿಂಸೆ ಕೊಡುತ್ತ ಅಪರಾಧದ ಆರೋಪ ಹೊತ್ತವರನ್ನು ರಕ್ಷಿಸಿ ಓಲೈಸುವ ಸನ್ನಿವೇಶವಿದೆ. Discretion ಅಂದರೆ ವಿವೇಕ ಅಥವ ವಿವೇಚನೆ. ಆದರೆ ಅದು ವ್ಯಕ್ತಿಗತ ತಪಸ್ಸಿಲ್ಲದೆ ಒಲಿಯುವ ಗುಣವಲ್ಲ. ಪುಸ್ತಕಬ್ರಹ್ಮರಷ್ಟೇ ಆಗಿರುವವರಿಗೆಲ್ಲ Discretionary (ತಿಳಿದಂತೆ ನಡೆದುಕೊಳ್ಳುವ ಅಥವ ಕಾನೂನು ಪುಸ್ತಕದಲ್ಲಿ ಅದೃಶ್ಯವಾಗಿ ಇರುವ ವಿವೇಕಪೂರ್ಣ ವಿವೇಚನೆ  ) ಶಕ್ತಿಯನ್ನು ಉದಾರವಾಗಿ ದಯಪಾಲಿಸಿದಂತೆ ಕಾಣುತ್ತಿರುವುದರಿಂದ ಒಮ್ಮೊಮ್ಮೆ... ವಿವೇಕದ ಆಟವು "ಸ್ವೇಚ್ಛಾಚಾರ" ಎನ್ನಿಸುವುದೂ ಇದೆ. ಏಕೆಂದರೆ... ಅಂತಹ ತಂತ್ರ ಮಂತ್ರ ಭರಿತ ಮನೋಮೂಸೆಯಿಂದ ಹಾದು ಉತ್ತೀರ್ಣಗೊಳ್ಳುವ ಅಪ್ಪಟ "ವಿಚಕ್ಷಣಾ ಮತಿ"ಗಳನ್ನೇ ನ್ಯಾಯಾಧೀಶರನ್ನಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೇನು ? ಭಾರತದ ಕ್ಷಿತಿಜದಲ್ಲಿ - ಸದ್ಯದಲ್ಲಿ ಅಂತಹ ಎಷ್ಟು ಮಾದರಿಗಳಿರಬಹುದು ? ಅಕಸ್ಮಾತ್... ತಮಗೆ ಕೊಡಮಾಡಲ್ಪಟ್ಟ ವಿವೇಚನಾ ಖಡ್ಗವನ್ನು ಸಮರ್ಪಕವಾಗಿ ಬಳಸುವ ಸಾಮರ್ಥ್ಯವನ್ನು ಹೊಂದಿರದ ಮನುಷ್ಯರೂಪದ ದೇವರುಗಳ ಎದುರಿನಲ್ಲಿ ತಲೆಕೊಟ್ಟವರ ಸ್ಥಿತಿ ಏನಾಗಬಹುದು ? ಕೇವಲ ಪುಸ್ತಕ ಓದಿಕೊಂಡ ಪ್ರಾಜ್ಞರೆಲ್ಲರನ್ನೂ "ನ್ಯಾಯ ದಯಪಾಲಿಸುವ ದೇವರು" ಎಂದುಕೊಳ್ಳಬೇಕಾದ ಕ್ಲಿಷ್ಟತೆಯು ನಮ್ಮ ಮುಂದಿಲ್ಲವೆ ?

ಆದ್ದರಿಂದಲೇ ನ್ಯಾಯ ಅನ್ಯಾಯಗಳ ಗೊಂದಲದ ವಾತಾವರಣವು ಏರ್ಪಡುತ್ತಿದೆ. ಇವತ್ತಿನ ಡೊಂಕು ಕಾನೂನುಗಳ ಕುಂಟು ರಣರಂಗದಲ್ಲಿ - ವಿಚಾರಣೆಯ ಪ್ರಾಥಮಿಕ ಹಂತದಲ್ಲಂತೂ "ಅನ್ಯಾಯಕ್ಕೆ ಒಳಗಾದವರೇ ಅಪರಾಧಿಗಳು" ಎಂಬಂತಹ ಕಠಿಣ ಘಟ್ಟವನ್ನು ಹಾದುಹೋಗಬೇಕಾದ ವಿಚಿತ್ರ ಸನ್ನಿವೇಶಗಳು ಎದುರಾಗುತ್ತವೆ. ಅಪರಾಧದ ಆರೋಪ ಹೊತ್ತವರನ್ನು ಕಾನೂನು ಸಾಕ್ಷ್ಯಗಳ ಬಲವಿಲ್ಲದೆ "ಸಾಮಾನ್ಯ ಜ್ಞಾನದಿಂದ" ಅರ್ಥೈಸಿಕೊಳ್ಳುವ ಸೂಕ್ಷ್ಮತೆಯೇ ನಷ್ಟವಾಗಿರುವಂತೆ - ಕೆಲವೊಮ್ಮೆ ಕಾಣುತ್ತದೆ ! ಅತ್ಯಂತ ಸ್ಪಷ್ಟವಾಗಿ ಕಾಣುವ ಕಾನೂನು ಭಂಗದ ಸಂದರ್ಭಗಳನ್ನೂ ಗಜ್ಜುಗದಾಟವಾಡುವಂತೆ ವರ್ಷಗಟ್ಟಲೆ ಎಳೆದಾಡುವ ವಿಶೇಷ ಅವಕಾಶಗಳು ಭಾರತದ ನ್ಯಾಯಿಕ ವ್ಯವಸ್ಥೆಯಲ್ಲಿದೆ ! ನ್ಯಾಯಕ್ಕಾಗಿ ಬೇಡುವ ಸಂತ್ರಸ್ತರನ್ನು "ಅಲೆದಾಡಿಸುತ್ತ ಮಜಾ ನೋಡುವ" ವಿಕ್ಷಿಪ್ತತೆಯೂ ಇದೆ; ಅಸಡ್ಡೆಯೂ ಇದೆ. "ಆತ್ಮ ಗೌರವವು ಕೋರ್ಟಿಗೆ ಮಾತ್ರ - ಪ್ರಜೆಗಳಿಗಿಲ್ಲ ; ಕೋರ್ಟು ದೇವಲೋಕದಲ್ಲಿದೆ..." ಎಂಬಂತಹ "ಒಡೆಯ - ಗುಲಾಮ" ಪಂಜರದ ವಾತಾವರಣವು ಸ್ವತಂತ್ರ ಭಾರತಕ್ಕೆ ಹೇಳಿಸಿದ್ದೆ ? ಅಲ್ಲವೇ ಅಲ್ಲ. ಭಾರತೀಯ ಪ್ರಜೆಗಳು ತಮ್ಮದೇ ಭಾರತದ ತಮ್ಮದೇ ಆಡಳಿತದ ಗುಲಾಮರೆ ? ಸರ್ವಥಾ ಸಾಧ್ಯವಿಲ್ಲ.

  

ಪರಸ್ಪರ ಗೌರವದ ವ್ಯವಹಾರವು ನಾಗರಿಕ ಬದುಕಿಗೆ ಅತೀ ಅವಶ್ಯ. ಆದರೆ ಭಾರತದ ಕೋರ್ಟುಗಳನ್ನು ಪ್ರವೇಶಿಸಿದವರಿಗೆ "YOUR HONOUR" ಶೈಲಿಯ ಗುಲಾಮತನವನ್ನು ಹೇರಿ, "OUR HONOUR" ನ್ನು ಅಲಕ್ಷಿಸಿದ ಅನುಭವವಾಗುವುದು ಮಾತ್ರ - ಸತ್ಯ. ಹಾಗಿದ್ದರೆ ಇಂತಹ ಪರಂಪರೆಯನ್ನು ಮುಚ್ಚಟೆಯಿಂದ ಇದುವರೆಗೆ ರಕ್ಷಿಸಿಕೊಂಡು ಬಂದಿರುವ ನ್ಯಾಯಾಂಗದ ಅಭಿಪ್ರಾಯ ಏನಿರಬಹುದು ? ಸ್ವರತಿಯ ಜ್ವಲಂತ ನಿದರ್ಶನದಂತೆಯೂ ಕಾಣುವುದಿಲ್ಲವೆ ? ನಿತ್ಯವೂ ರೋಮಾಂಚನದಲ್ಲಿ ಮುಳುಗಿ ಏಳುತ್ತಿರುವುದರಿಂದಲೇ - ತಮ್ಮೊಳಗೆ ಸ್ವಚ್ಛತಾ ಅಭಿಯಾನವನ್ನು ನಡೆಸದೆ ಹಾಗೇ ಬಿಟ್ಟುಕೊಂಡಿದ್ದಾರೆ ಅಂದುಕೊಳ್ಳಬಹುದೆ ? "ಸ್ವಾಮಿ-ಸೇವಕ, ಮೇಲು ಕೀಳು" ಭಾವವನ್ನು ಪ್ರಚೋದಿಸುವ ಅನೇಕ ಕೊಳಕು ಸಂಪ್ರದಾಯಗಳನ್ನು ತಮ್ಮ ಅಹಂ ತೃಪ್ತಿಗಾಗಿಯೇ ಉಳಿಸಿಕೊಂಡಿರಬಹುದು ಎಂದು ಭಾವಿಸುವಂತಾದರೆ ಅದರಲ್ಲಿ ಅಸಹಜವೇನಿದೆ ? ಗೌರವವನ್ನು ಶಬ್ದರೂಪದಲ್ಲಿಯೇ ನುಂಗಬೇಕಾದ ಅಗತ್ಯವಿದೆಯೆ ?

ವಿವೇಚನೆ ಇದ್ದವರು ಮತ್ತು ಇಲ್ಲದವರ ಸಾಲಿನಲ್ಲಿ ಎಳೆದು ನಿಲ್ಲಿಸಲ್ಪಟ್ಟವರೂ - ಯೋಚಿಸಬೇಕು. ಕೋರ್ಟಿನ ಹೊರಗೂ Discretionary ಶಕ್ತಿಗಳು ಇರಬಹುದು. ಅವರೂ ಯೋಚಿಸುತ್ತಾರೆ. ಕೋರ್ಟಿಗೆ ಹೋಗುವವರೆಲ್ಲರೂ ಅಪರಾಧಿಗಳೆ ? ಅಪರಾಧವು ಸಾಬೀತಾಗುವ ಮೊದಲೇ ಅಲ್ಲಿ ನೆರೆದವರೆಲ್ಲರಲ್ಲೂ ಕ್ಷುಲ್ಲಕವಾಗಿ ವರ್ತಿಸುವಷ್ಟು ಪರಮಾಧಿಕಾರವು ನ್ಯಾಯಾಂಗಕ್ಕೆ ಯಾಕೆ ಬೇಕು ? ಕೋರ್ಟುಗಳಿಗೆ ತಳ್ಳಲ್ಪಡುವ ಎಲ್ಲರನ್ನೂ ಅವಿವೇಕಿಗಳಂತೆಯೇ ನಡೆಸಿಕೊಂಡರೆ ವಿವೇಚನೆ ಎಂಬ ಆಯುಧವು ಸಪಾತ್ರರಲ್ಲಿದೆಯೆ ? ಎಂಬ ಸಂಶಯವು ಮೂಡುವುದಿಲ್ಲವೆ ? ಪ್ರಜಾಪ್ರಭುತ್ವದ ಹೆಸರಿನ ಮರೆಯಲ್ಲಿ ನ್ಯಾಯಾಂಗವು ಮಾತ್ರ ಯಾವುದೇ ಉತ್ತರದಾಯಿತ್ವವಿಲ್ಲದ ರಕ್ಕಸ ಶಕ್ತಿಯಂತಿದೆ - ಎಂಬ ಭಾವವು ಸ್ಫುರಿಸಲಾರದೆ ? ತಲೆತಗ್ಗಿಸಿ ತಮ್ಮ ತಮ್ಮ ಕರ್ತವ್ಯವನ್ನು ನಿರ್ವಹಿಸುವ ಶಿಷ್ಟತೆಯನ್ನು ಸಮಾಜದ ಕೆಲವು ವರ್ಗದಿಂದ ಮಾತ್ರ ಅಪೇಕ್ಷಿಸುತ್ತ ಕೆಲವು ವರ್ಗವನ್ನು ಹೊರತುಪಡಿಸಿದ್ದರೆ - ಅದು ನ್ಯಾಯವೆ ? ಕೆಲವರ ದೃಷ್ಟಿಯಲ್ಲಿ - "ವಿವೇಕವಿಲ್ಲದವರು" - ಅನ್ನಿಸಿಕೊಂಡವರಿಗೂ ಹೀಗೆಲ್ಲ ಅನ್ನಿಸಬಹುದಲ್ಲವೆ ?


ನ್ಯಾಯದೇವತೆಯ ಕಣ್ಣಿನ ಪಟ್ಟಿಯನ್ನು ಬಿಚ್ಚಬೇಕಾದ ಕಾಲ ಬಂದಿದೆ. ಕುರುಡುನ್ಯಾಯವು ಅನರ್ಥಕಾರಿ. ನ್ಯಾಯದೇವತೆಯ ಪಟ್ಟ ಕೊಟ್ಟು - ಕೃತಕವಾಗಿ ಕುರುಡಾಗಿಸಿರುವುದಂತೂ ಮಹಾ ಅಪರಾಧ. ಏಕೆಂದರೆ ಯಾವ ದೇವತೆಗಳೂ ಕುರುಡರಲ್ಲ. ಸಾಧ್ಯವಿದ್ದರೆ ಕಣ್ಣಿಲ್ಲದವರಿಗೆ ದೃಷ್ಟಿ ಕೊಡಬೇಕು; ಇರುವ ದೃಷ್ಟಿಯನ್ನು ಮಂಕಾಗಿಸಿಕೊಳ್ಳಬಾರದು. ದೃಷ್ಟಿಮಾಂದ್ಯತೆಯ ದೌರ್ಬಲ್ಯದಲ್ಲಿ ನ್ಯಾಯವು ನರಳುವಂತಾಗಬಾರದು. ಕುರುಡುತನವನ್ನು ತಾವಾಗಿಯೇ ಆರೋಪಿಸಿಕೊಳ್ಳುವುದು ಅಕ್ಷಮ್ಯ ದುರಂತಗಳಿಗೂ ಎಡೆಮಾಡಿಕೊಡಬಲ್ಲದು.

ಅಜ್ಞಾತ - ಅನರ್ಥಕಾರೀ ಮುನಿಸಿಗೆ ವಶವಾದ ಗಾಂಧಾರಿಯು ತನ್ನ ಕಣ್ಣಿಗೆ ತಾನೇ ಪಟ್ಟಿ ಕಟ್ಟಿಕೊಂಡ ಆತ್ಮಘಾತೀ ವರ್ತನೆಯಿಂದಲೇ - ಆಕೆಯ ಮಗ ದುರ್ಯೋಧನನು ದುಷ್ಟನಾಗುವಂತಾಯಿತು. ಕುಂತಿಯಂತೆ ಗಾಂಧಾರಿಯೂ ಸಹಜವಾಗಿ ಬದುಕಿ, ತನ್ನ ಮಕ್ಕಳ ಬಾಲ್ಯದ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸಿ ತಿದ್ದಿತೀಡಿದ್ದರೆ, ತನ್ನ ಮಕ್ಕಳಲ್ಲಿಯೂ ಕುಂತಿಯಂತೆಯೇ ಸಹಜ ಪ್ರೀತಿಯನ್ನು ಹರಿಸಿದ್ದರೆ, ದುರ್ಯೋಧನನೂ ಧರ್ಮರಾಯನ ಪ್ರಶಂಸಕನಾಗಿ ಅಣ್ಣನ ಪ್ರೀತಿಗೆ ಪ್ರತಿಸ್ಪಂದಿಸುತ್ತ - ಕುರುಕ್ಷೇತ್ರದ ಸಂಗ್ರಾಮವೇ ನಡೆಯುತ್ತಿರಲಿಲ್ಲವೋ ಏನೋ ? ಯಾರಿಗೆ ಗೊತ್ತು ? ಧೃತರಾಷ್ಟ್ರನ ಹುಟ್ಟು ಕುರುಡು ಮತ್ತು ಗಾಂಧಾರಿಯು ಆರೋಪಿಸಿಕೊಂಡ ಕುರುಡುತನಗಳೆಂಬ ಎರಡು ಅವಿವೇಕದಿಂದಲೇ ಹಸ್ತಿನಾವತಿಯು ಕುರುಕ್ಷೇತ್ರವಾದದ್ದು !

ಕುರುಕ್ಷೇತ್ರ ಘಟಿಸದೆ ಯಾವ ವ್ಯಾಸರಿಗೂ ಮಹಾಭಾರತವನ್ನು ಬರೆಯಲಾಗುವುದಿಲ್ಲ ! ಅಂತೆಯೇ ಭೂಮಿಯ ಎಲ್ಲ ಮಹಾಭಾರತಗಳಿಗೂ ನೂರೆಂಟು ಕಾರಣಗಳಿರಬಹುದು. ಅಂತಹ ಸಾಮಾಜಿಕ ಸೂಕ್ಷ್ಮಗಳನ್ನು ಗ್ರಹಿಸುವ ಸಮೃದ್ಧ ವಿವೇಚನಾ ಶಕ್ತಿಯು ನಮ್ಮ ನ್ಯಾಯಾಲಯಗಳಿಗಿವೆಯೆ ? ಒತ್ತಡದಿಂದಾಗಿ ಪುರಸೊತ್ತು ಇಲ್ಲ - ಎಂದಾದರೆ ಇಲ್ಲಿ ಯಾರಿಗೂ ಸಮಗ್ರ ನ್ಯಾಯವು ಸಿಗುತ್ತಿಲ್ಲ ಎಂದೇ ಅರ್ಥ. ಆದ್ದರಿಂದ ಕಣ್ಣು ಮುಚ್ಚಿ ಕೂಡಿಸಿರುವ ನ್ಯಾಯದೇವತೆಯನ್ನು - ತಪ್ಪಿಗೆ ಸಿಕ್ಕಿಸುವ ದೇವಸಾಕ್ಷಿಯಾಗಿಸಿ, "ತಮತಮಗೆ ತಿಳಿದಂತೆ" ಒತ್ತಡದಿಂದ ಕಣ್ಣು ಮುಚ್ಚಿಕೊಂಡು ನ್ಯಾಯ ತೀರ್ಮಾನ ಮಾಡುವಂತಾದರೆ - ಅದು ಸುತರಾಂ ಸರಿಯಲ್ಲ. "ತಿಳಿದಂತೆ ವರ್ತಿಸುತ್ತಿದ್ದಾರೆ..." ಎಂದು ನನ್ನಂತಹ ಕಾಗೆ ಗುಬ್ಬಿಗಳು ಕೆಲವೊಮ್ಮೆ ಗೊಣಗಬಹುದು - ಅಲ್ಲವೆ ? ನ್ಯಾಯಾಲಯವನ್ನು ಯಾರೂ ನಿಂದಿಸಬಾರದು. ಅದು ತಪ್ಪು. ಆದರೆ ಸದ್ಯದ "ಚಕ್ಕಳಬಕ್ಕಳ ಕಾನೂನಿನ ಸ್ಥಿತಿ"ಯಲ್ಲಿ - ಅಪ್ಪಟ ನ್ಯಾಯದ ಮಾತನಾಡುವುದೂ ಕೂಡ - ಹುತ್ತದಲ್ಲಿ ಕೈ ಹಾಕಿ ಹಾವು ಹಿಡಿಯುವಷ್ಟೇ ಅಪಾಯಕಾರಿ ಸಾಹಸವಾದೀತು !


ಕಡಿಮೆ ಪಕ್ಷ, ನ್ಯಾಯಾಂಗವಾದರೂ ಗಂಭೀರವಾಗಿ ವರ್ತಿಸಬೇಕೆಂಬ - ಮರುಳು ಗುಬ್ಬಿಗಳ ಮರುಳು ಅಪೇಕ್ಷೆಯು ತಪ್ಪೆ? ನ್ಯಾಯಾಂಗವಾದರೇನಂತೆ ? ಜನರೇ ಸ್ವಯಂಪ್ರೇರಿತರಾಗಿ ಗೌರವಿಸುವಂತಿದ್ದರೆ ಮಾತ್ರ ನ್ಯಾಯಧರ್ಮವನ್ನು ಸಮಗ್ರವಾಗಿ ಗೌರವಿಸಿದಂತಾದೀತು. ಇದಕ್ಕೆ ಪೂರಕವಾದ ಸನ್ನಿವೇಶಗಳನ್ನು ನಿರ್ಮಿಸಿಕೊಳ್ಳಬೇಕು. ವ್ಯತಿರಿಕ್ತವಾಗಿ - ಬ್ರಿಟಿಷರ ಕಾಲದ ಶಿಸ್ತಿನ ವೇಷದಲ್ಲಿ ಸಾಮಾನ್ಯ ದುಃಖಿತ ವರ್ಗವನ್ನು ಅಟಕಾಯಿಸುತ್ತ ಸಾರ್ವಜನಿಕರತ್ತ ತೋರುವ ಅಸಡ್ಡೆ, ಸೌಜನ್ಯಹೀನ ನಡವಳಿಕೆಗಳು, ಅತಿ ಎನ್ನಿಸುವಷ್ಟು ರಜಾಸೌಲಭ್ಯಗಳು... ಇವೆಲ್ಲವೂ ಇಡೀ ನ್ಯಾಯಾಂಗ ವ್ಯವಸ್ಥೆಯನ್ನೇ ಸಂಶಯದಿಂದ ನೋಡುವಂತೆ ಮಾಡಬಹುದು. ಇಂದಿಗೆ ನಗು ತರಿಸುವಂತಹ ರಾಜಮಹಾರಾಜರ ಕಾಲದ PROTOCOL ಸಂಸ್ಕೃತಿಗೆ ಇತಿಶ್ರೀ ಹಾಡಲೇ ಬೇಕಾಗಿದೆ. ನ್ಯಾಯಾಂಗದ ಹೊರಗಾಗಲೀ ಒಳಗಿನ ವ್ಯವಸ್ಥೆಗಳಲ್ಲಾಗಲೀ ಸಂಶಯ ಮೂಡಿಸುವಂತಹ ಯಾವುದೇ ಗುಸುಗುಸು - ಮುಚ್ಚುಮರೆ ಇರಲೇಬಾರದು; ಅಪರಾಧವೆಸಗದ ದುಃಖಿತರೂ ನ್ಯಾಯಾಲಯಕ್ಕೆ ಬರುತ್ತಾರೆ ಅಥವ ಅವರನ್ನು ಎಳೆದು ತರುತ್ತಾರೆ ಎಂಬ ಪ್ರಜ್ಞೆಯೂ ಇರಬೇಕಾಗುತ್ತದೆ. ಅದೇ ಸರಿಯಾದ ವಿವೇಚನೆ.

"ಎಲ್ಲವೂ ಹೊಟ್ಟೆಪಾಡಿನ ತಂತ್ರಗಳು; ನ್ಯಾಯಾಲಯವೂ ಅದಕ್ಕೆ ಹೊರತಲ್ಲ" - ಅನ್ನಿಸುವ ಶೋಕದ ಹೊತ್ತಿನಲ್ಲಿ - ನಮ್ಮಂತೇ ಉಪ್ಪುಹುಳಿ ಖಾರ ತಿನ್ನುತ್ತ ನ್ಯಾಯಾಂಗದ ಭಾಗವಾಗಿರುವ ಹುಲುಮಾನವರು ತಮಗೆ ತಾವೇ ದೈವತ್ವವನ್ನು ಆರೋಪಿಸಿಕೊಳ್ಳುವುದನ್ನು ನೋಡಿ ನಾನು ಮುಸಿಮುಸಿ ನಕ್ಕದ್ದೂ ಇದೆ.

ಒಮ್ಮೆ ... ಸಮಯವನ್ನು ಕೊಂದುಕೊಳ್ಳುತ್ತ ಕೋರ್ಟಿನ ಆವರಣದಲ್ಲಿ ಕುಳಿತಿದ್ದಾಗ, ಅಲ್ಲಿ ಧಸಭಸ ಸುತ್ತಾಡುತ್ತಿದ್ದ ಹಿಂಡು ಹಿಂಡು ಕಪ್ಪು ಕಪ್ಪಾದ ದೃಶ್ಯ ಸಾದೃಶ್ಯ ಅನುದೃಶ್ಯಗಳನ್ನು ನೋಡುತ್ತಿದ್ದಾಗ, ಶ್ರಾದ್ಧದ ಪಿಂಡ ತಿನ್ನಲು ಮುತ್ತಿಕ್ಕುವ ಕಪ್ಪು ಕಾಗೆ  ಗಳನ್ನು ಕಲ್ಪಿಸಿಕೊಂಡು ಕಿಸಕ್ಕೆಂದು ನಕ್ಕದ್ದೂ ಇದೆ. (ಆದರೆ ಈಗೀಗ ಪಿಂಡದಾಸೆಗೆ ಓಡೋಡಿ ಬರುವ ಕಾಗೆಗಳ ಸಂಖ್ಯೆಯೂ ಕಡಿಮೆಯಾಗಿದೆ. ಕಾಗೆಗಳಿಗೂ ಡೌಲು ಬಂದಿದೆ ! ಪಿತೃಗಳು ಉಪವಾಸ ಬೀಳುವಂತಾಗಿದೆ ! ಪೇಟೆ ಪಟ್ಟಣಗಳಲ್ಲಂತೂ ಕಾಗೆಯನ್ನು ಒತ್ತಿ ಹಿಡಿದು ತಂದು ಒತ್ತಾಯದಿಂದ ಪಿಂಡ ತಿನ್ನಿಸಬೇಕಾದ ಸ್ಥಿತಿ ಬಂದಿದೆ !)

ನ್ಯಾಯಸೋಂಕು ತಗಲಿ - ಹಾರುವ ಕಾಗೆ ಗುಬ್ಬಿಗಳು...

ನಾನು ಕಂಡ ಪ್ರಶಾಂತ ಕೋರ್ಟು ಆವರಣವೊಂದರಲ್ಲಿ ಒಂದಷ್ಟು ಕರ್ರನೆ ಕಾಗೆಗಳಿದ್ದುವಲ್ಲ ! ಎಲ್ಲವೂ ಕಪ್ಪು ಕಾಗೆಗಳೇ. ಸರದಿಗಾಗಿ ಕಾಯುತ್ತ ಆಕಳಿಸುತ್ತ ಕುಳಿತಿದ್ದ ನಾನು ಅನಿವಾರ್ಯವಾಗಿ ಸಮಯ ಕೊಂದುಕೊಳ್ಳಲು ದಾರಿ ಹುಡುಕುತ್ತಿದ್ದೆ. ಊರಿನಿಂದ ಮಾಯವಾಗಿರುವ ಕಾಗೆ ಹಿಂಡನ್ನು ಕೋರ್ಟಿನಲ್ಲಿ ನೋಡಿ ವಿಸ್ಮಿತಳಾಗಿದ್ದೆ ! ನನ್ನ ಆಕಳಿಕೆ ಹೆಚ್ಚತೊಡಗಿ ನಿದ್ದೆಯತ್ತ ಸೆಳೆಯುತ್ತಿತ್ತು....

"ಎಲ ಎಲಾ ಕಾಗೆಯೇ.." ಎನ್ನುತ್ತ ಒಂದು ಕಾಗೆಯ ಬೆನ್ನು ಹತ್ತಿ ಸುತ್ತತೊಡಗಿದ್ದೆ. ಮಾತು ಬೆಳೆಸುತ್ತ ನಿಧಾನವಾಗಿ ಕಾಗೆಯ ಸ್ನೇಹವನ್ನೂ ಸಂಪಾದಿಸಿದೆ. ಚಿರಿಪಿರಿ ಕರಕರ ಎನ್ನುತ್ತ ಕಾಗೆಶಕುನದ ಮಾತಾಡಿದ್ದೇ ಆಡಿದ್ದು. ಆಗ ನನಗೆ ಕಾಗೆ ಹೇಳಿದ್ದು ಏನೆಂದರೆ...

ಪುರೋಹಿತಶಾಹಿಗಳನ್ನು ಧಿಕ್ಕರಿಸುವ ಶಕ್ತಿಯನ್ನು (EMPOWERMENT) ಇಂದಿನ ಕಾಗೆಗಳಿಗೂ ದಯಪಾಲಿಸಿದ್ದಾರಂತೆ ! ಆದ್ದರಿಂದಲೇ ಪಿಂಡವನ್ನು ಹೆಕ್ಕಿ ತಿನ್ನುವ ಅಮಾನವೀಯತೆಗೆ ಅವನ್ನು ತಳ್ಳಿದ ಪುರೋಹಿತಶಾಹಿಗಳ ಹಿಂದೆ ಸುತ್ತಲು ಈಗ ಕಾಗೆಗಳಿಗೆ ಆತ್ಮಾಭಿಮಾನ ಒಪ್ಪುವುದಿಲ್ಲವಂತೆ ! ತಮ್ಮ ಗೂಡಿಗೇ ತಂದು ಕೊಟ್ಟರೆ ಮಾತ್ರ ಪಿಂಡ ತಿನ್ನುತ್ತವಂತೆ ! ಕಾಗೆಗಳಿಗೂ ಹಕ್ಕುಗಳ ಜ್ಞಾನ  ಒದಗಿಸಿದಂತಹ - ದುರ್ಬಲರ ಹಿತಚಿಂತನೆ ಮುಂತಾದ ಪ್ರೇರೇಪಿಸುವ ಮಾತುಗಳು ಕಾಗೆ ಬಳಗಕ್ಕೆ ರೋಮಾಂಚನ ಹುಟ್ಟಿಸಿದ್ದರಿಂದ ಉದ್ಧಾರಕ ಮರಿದೊರೆಗಳ ಮಾರ್ಗದರ್ಶನದಂತೆ, ಹಕ್ಕು ಸ್ಥಾಪನೆಯ ಓರಾಟಕ್ಕೆ ಇಳಿದಿವೆಯಂತೆ ! ಆದ್ದರಿಂದಲೇ ದೊಡ್ಡ ದೊಡ್ಡ ಮನುಷ್ಯರಂತೆ - ಕಾಗೆಗಳಿಗೂ ಮನೆಮಠ ಬಿಟ್ಟು ಕೋರ್ಟುಗಳಲ್ಲಿ ತಿಣುಕಾಡುವ ಶಕ್ತಿಯು ಬಂದಿದೆಯಂತೆ ! ಆದುದರಿಂದಲೇ ಎಲ್ಲೋ ಒಂದೊಂದು ದಿನ ಕಾಗೆಗಳಿಗೆ "ಗಿಮಿಚಿದ ಪಿಂಡಾನ್ನ" ಕೊಡುವ ಪುರೋಹಿತಶಾಹಿಗಳ ಕ್ಷುಲ್ಲಕತನವನ್ನು ಪ್ರತಿಭಟಿಸಲೆಂದೇ ಅಂತಹ ಯಾವುದೇ ಆಹಾರವನ್ನು ಅವುಗಳು ಸ್ವೀಕರಿಸುವುದಿಲ್ಲವಂತೆ ! ತನ್ಮೂಲಕ ಪುರೋಹಿತಶಾಹಿಗಳ ಕರ್ಮಸಾಫಲ್ಯವಾಗದೆ - ಜುಟ್ಟುಗಳು ಸಾಮೂಹಿಕವಾಗಿ ಚಡಪಡಿಸುವಂತೆ ಮಾಡಿವೆಯಂತೆ !

ಆದರೆ ಹಳ್ಳಿಯ ಕಾಗೆಗಳಿಗೆ ಮಾತ್ರ ಇನ್ನೂ ಜ್ಞಾನೋದಯವಾಗಿಲ್ಲವಂತೆ. ಅದಕ್ಕಾಗಿ ಹಳ್ಳಿಯ ಕಾಗೆಗಳ ಒಂದು ಬೃಹತ್ ಸಮ್ಮೇಳನವನ್ನು ಏರ್ಪಡಿಸಿದ್ದಾವಂತೆ. ಕೆಲವು ವಿಶಿಷ್ಟ ಊಟದಿಂದ ಕೆಲವೇ ಕೆಲವು ಪಟ್ಟಣದ ಕಾಗೆಗಳು ಮಾತ್ರ ವಂಚಿತವಾಗುವಂತಾಗದೆ - ಪುರೋಹಿತರನ್ನು ಬಹಿಷ್ಕರಿಸಿ ಕರಕರ ಕೆರೆಯುವ ಸಾಹಸದ ಕಾಯಕದಲ್ಲಿ ಕಾಗೆಗಳ ಒಟ್ಟಾರೆ ಬಳಗವು ಏಕಸ್ವರದಿಂದ ಘೋಷಣೆಗಳನ್ನು ಕೂಗುವಂತೆ ಮಾಡಿ - ಸಮ್ಮೇಳನದಲ್ಲಿ ಕಾಗೆಜಾಗ್ರತಿಯನ್ನು ಮೂಡಿಸುತ್ತವಂತೆ ! ಕಾ...ಕಾ...ಕಾ...

ಕಾಗೆಬಳಗದ ಸುಖದುಃಖವನ್ನು ಸಮಾನವಾಗಿ ಹಂಚಿಕೊಳ್ಳುವ ಪ್ರತಿಜ್ಞಾವಿಧಿಯೂ ಅಂದು ನಡೆಯುತ್ತದಂತೆ ! ಆದರೆ ವಿಶಿಷ್ಟ ಊಟವನ್ನು ಪದೇ ಪದೇ ಕನವರಿಸಿಕೊಳ್ಳುವ ಕೆಲವು ಪೆದ್ದು ಕಾಗೆಗಳಲ್ಲಿ ಧೈರ್ಯ ತುಂಬುವ ದೃಷ್ಟಿಯಿಂದ - "ಪುರೋಹಿತ ವರ್ಗವು ತಮ್ಮ ಪಿತೃಗಳಿಗಾಗಿ ಪಿಂಡವಿಟ್ಟು ತಮ್ಮ ದುಷ್ಟ ಕರ್ಮಕ್ಕೆ ಸುಭಗ ಕಾಗೆಗಳ ದುರ್ಬಳಕೆ ಮಾಡುತ್ತಿದ್ದಾರೆ" ಎಂಬ ದೂರನ್ನು ಕೋರ್ಟಿನಲ್ಲಿ ದಾಖಲಿಸಲಾಗಿದೆಯಂತೆ. ಅದೇ ಕಾರ್ಯನಿಮಿತ್ತ ನನ್ನ ದೋಸ್ತಿ ಕಾಗೆಯು ಮಿತ್ರರೊಂದಿಗೆ ಕೋರ್ಟಿಗೆ ಬಂದಿದೆಯಂತೆ. ಇದರಿಂದಾಗಿ ಕಾಗೆಗಳ ಮನೋಬಲವು ಯದ್ವಾತದ್ವಾ ಹೆಚ್ಚಿದೆಯಂತೆ !

ಹೀಗಿದ್ದರೂ... ಇನ್ನೂ ನೂರಾರು ಕಾಗೆಬೇಡಿಕೆಗಳು ಪೂರ್ಣವಾಗದೆ ಉಳಿದಿವೆಯಂತೆ ! ಬ್ರಾಹ್ಮಣರ ಧರ್ಮದೂಟವಿಲ್ಲದಂತಾದ ಸಮಗ್ರ ಕಾಗೆ ಬಳಗದ ರಂಜನೆಗಾಗಿ - "ಊಟ ತಪ್ಪಿದ ಕಾಗೆಗಳ ಸಮಸ್ತ ನಷ್ಟವನ್ನು ಮೋದಿ ಸರಕಾರವು ಬಡ್ಡಿಸಮೇತ ಭರ್ತಿಮಾಡಿ ಕೊಡಬೇಕು" ಎಂಬ ಹಕ್ಕೊತ್ತಾಯವನ್ನು ಭಾರತದ ಎಲ್ಲ ಕೋರ್ಟುಗಳಲ್ಲಿ ಸಲ್ಲಿಸಿದ್ದಾವಂತೆ ! ಜತೆಗೆ ಪುರೋಹಿತ ವರ್ಗಕ್ಕೆ ಹೊಟ್ಟೆ ಬಿರಿಯುವಷ್ಟು ವಡೆ ತಿನ್ನಿಸುವ ಕಠಿಣ ಶಿಕ್ಷೆಗಾಗಿಯೂ ಬೇಡಿಕೆಯಿಟ್ಟಿದ್ದಾವಂತೆ ! ಕಾಗೆಗಳ ನೈತಿಕ ಬಲವನ್ನು ಹೆಚ್ಚಿಸುವ ದೃಷ್ಟಿಯಿಂದ - ಕೊಕ್ಕು ತೆರೆಯಲಾಗದಷ್ಟು ದುರ್ಬಲ, ಚೂರುಪಾರು ಅಂಗಚ್ಛೇದಗೊಂಡ ದಿವ್ಯಾಂಗ, ಹಾರಲಾರದೆ ಹಿಂದುಳಿದ, ಏಳಲಾಗದೆ ಶೋಷಿಸಿಕೊಂಡ ನತದೃಷ್ಟ ಕಾಗೆವರ್ಗದ ಏಳಿಗೆಗೆ ಪ್ರಥಮ ಪ್ರಾಶಸ್ತ್ಯವನ್ನು ಕೊಡಲೋಸುಗ - ಸ್ವತಃ ಪ್ರಧಾನಿ ಮೋದಿಯವರಿಗೇ ಸಮ್ಮನ್ಸ್ ಕೊಟ್ಟು ಅವರನ್ನು ಶೀಘ್ರಾತಿಶೀಘ್ರವಾಗಿ ಕರೆಸಿ ಕಟಕಟೆಯಲ್ಲಿ ನಿಲ್ಲಿಸಿ "ಕಾಗೆ ಸ್ಥಿತಿಗತಿಯ ವಿವರಣೆ" ನೀಡುವಂತೆ ಆಜ್ಞಾಪಿಸಲು ಜರ್ಪಿನ ಅರ್ಜಿ ಸಲ್ಲಿಸಲಾಗಿದೆಯಂತೆ ! "ಕಾಗೆಗಳಿಗೂ ಓಟಿನ ಅಕ್ಕು ಬೇಕು" ಎಂಬ ಇನ್ನೊಂದು ಕಾಗೆಬೇಡಿಕೆಯೂ ವಿಚಾರಣೆಯ ಹಂತದಲ್ಲಿದೆಯಂತೆ ! ...ನೆಲದ ಹಾರುವರಿಗಾದರೆ ತಿರುಗಾಟದ ಖರ್ಚಿದೆ; ನಮ್ಮಂಥ ಆಕಾಶದ ಹಾರುವರಿಗಾದರೆ ಖರ್ಚೇ ಇಲ್ಲ; ಎಲ್ಲವೂ ಸುಲಭ; ಆಕಾಶ ನನ್ನದು - ರೆಕ್ಕೆ ನನ್ನದು ಎನ್ನುತ್ತ ಎಲ್ಲಿ ಬೇಕಾದರೂ ಹಾರುವ ಜನ್ಮಸಿದ್ಧ ಸೌಲಭ್ಯವೇ ನಮ್ಮ ಸಂಪತ್ತು ಗುಬ್ಬಕ್ಕಾ ! ಎಲ್ಲಿ ಬೇಕಾದರೂ ಕೂರಬಹುದು; ಏರಬಹುದು ! ಶತಶತಮಾನಗಳ ಕಾಗೆಶೋಷಣೆಗೆ ಪ್ರಚಂಡ ಪ್ರತೀಕಾರ ಮಾಡದೆ ಬಿಡುವುದಿಲ್ಲ... ಕಾ... ಕಾ... 

ಆಕಾಶದಲ್ಲಿ ತೇಲುತ್ತಿದ್ದ ಕಾಗೆಯು ಹೆಮ್ಮೆಯಿಂದ ಮೈಕುಲುಕಿಸಿ ನಕ್ಕಾಗ ಕಾಗೆಯ ಕುತ್ತಿಗೆಯನ್ನು ಒತ್ತಿಹಿಡಿದುಕೊಂಡು ಗುಬ್ಬಿಯಂತೆಯೇ ಕುಳಿತಿದ್ದ ನನ್ನ ಮೈ ತೇಲಿದಂತಾಗಿ ಹಿಡಿತ ಬಿಗಿಗೊಳಿಸಿದ್ದೆ. ಆಗ ಕುತ್ತಿಗೆ ಹಿಚುಕಿದಂತಾದ ಕಾಗೆಯು ತಾನೇನೋ ಸತ್ತೇ ಹೋದಂತೆ "ಕರ್ರ್ ಕರ್ರ್ .." ಎನ್ನುತ್ತ ಕಿರುಚಿತು. "Sorry Sorry "ಎಂದ ನಾನು - ಕಾಗೆಯನ್ನು ಕೇಳಿದೆ. "ಕಾಗಕ್ಕಾ, ನೀನು ಕೋರ್ಟಿಗೆ ಅರ್ಜಿ ಸಲ್ಲಿಸಿ ಎಷ್ಟು ಸಮಯವಾಯಿತು ?" ಎಂದೆ. "ಎರಡು ಮಳೆಗಾಲ ಮುಗಿಯಿತು ತಂಗೀ " ಎಂದ ಕಾಗಕ್ಕ ಹಾರಿ ಬಂದು ಅಲ್ಲೇ ಇದ್ದ ಮರದ ಮೇಲೆ ಕೂತು ನನ್ನನ್ನೂ ಅದೇ ಟೊಂಗೆಯ ಮೇಲೆ ಇಳಿಸಿ, ನೋವು ನಿವಾರಿಸಿಕೊಳ್ಳುವಂತೆ ಕುತ್ತಿಗೆ ಅಲುಗಿಸುವ ವ್ಯಾಯಾಮ ಮಾಡತೊಡಗಿತು.

ಕಾಗೆಯ ವ್ಯಾಜ್ಯದ ಪುರಾಣದಿಂದ ಆಕರ್ಷಿತಳಾದ ನಾನು "ಅಕ್ಕಾ, ಈಗಾಗಲೇ ನಿನ್ನ ಅರ್ಜಿಯ ವಿಚಾರಣೆಯೆಲ್ಲ ಮುಗಿದಿದೆಯಾ?" ಎಂದು ಕೇಳಿದೆ. "ಇಲ್ಲ ತಂಗೀ, ಇನ್ನೂ ಶುರುವಾಗಿಲ್ಲ; ಇವತ್ತೂ ನಡೆಯಲಿಲ್ಲ. ಇನ್ನು ಮೂರು ತಿಂಗಳ ನಂತರ ಬನ್ನಿ ಎಂದಿದ್ದಾರೆ..." ಎಂದಿತು ಕಾಗಕ್ಕ. ಆಮೇಲೆ ಕಾಗೆಯು ತನ್ನಷ್ಟಕ್ಕೇ ಗೊಣಗತೊಡಗಿತು. "ಗೌರವದಿಂದ ಕೊಡುತ್ತಿದ್ದ ಅನ್ನವನ್ನು ತಿನ್ನದೆ ಕಂಡಕಂಡವರ ಮಾತಿಗೆ ಬಲಿಯಾದೆನಾ ? ಈ ರಗಳೆ ಮುಗಿಯುವಂತೆ ಕಾಣುವುದಿಲ್ಲ. ಇಲ್ಲಿ ನಮ್ಮ ಜಾತಿಯವರು ತುಂಬ ಜನರಿದ್ದಾರೆ ಅಂದುಕೊಂಡು ಸುಲಭದಲ್ಲಿ ಹೊಸಹಕ್ಕನ್ನು ಗಿಟ್ಟಿಸಿಕೊಳ್ಳಲು ಬಂದರೆ ಈಗೀಗ ನಮ್ಮನ್ನು ಪುಸಲಾಯಿಸಿ ಇಲ್ಲಿಗೆ ಕರೆತಂದವರಿಗೂ ನಾವು ಬೇಡವಾದಂತಿದೆ..." ಹೀಗೆ ಖುಕ್ ಖುಕ್ ಖುಕ್ ಎಂದು ಕರಕರಿಸುತ್ತಿದ್ದ ಕಾಕಮ್ಮನ ಆತ್ಮಸ್ಥೈರ್ಯವನ್ನು ನೋಡಿದ ನಾನು "ಈ ಕಾಗೆಗಳು ಅವರಿವರ ಬಿಟ್ಟಿ ಪ್ರಚೋದನೆಗೆ ಬಲಿಯಾಗಿ ತನಗೆ ಕೈಮುಗಿದು ಗೌರವದಿಂದ ಅರ್ಪಿಸುತ್ತಿದ್ದ ಅನ್ನಕ್ಕೂ ಸಂಚಕಾರ ತಂದುಕೊಳ್ಳದಿದ್ದರೆ ಸಾಕು..." ಅಂದುಕೊಳ್ಳುತ್ತಿದ್ದೆ.

ಕೋರ್ಟ್ ಆವರಣದಲ್ಲಿ FEES ಕೊಡದೆ ಯಾರಿಗೂ ಸಲಹೆಗಳನ್ನು ಕೊಡುವಂತಿಲ್ಲವಾದುದರಿಂದ ಮತ್ತು ಫೀಸಿನ ಗಂಟು ಕೊಡಲು ಕಾಗಕ್ಕನಲ್ಲಿ ರೆಕ್ಕೆ ಕೊಕ್ಕು ಬಿಟ್ಟು ಬೇರೇನೂ ಇಲ್ಲದುದರಿಂದ ನಾನು ಬಾಯಿ ತೆರೆದು ಏನನ್ನೂ ಹೇಳಲಿಲ್ಲ. ಸುಮ್ಮನೆ ಕೇಳುತ್ತ ದೇವರಮರಿಯಂತೆ ಗುಬ್ಬಿ ಸಾಂತ್ವನವನ್ನಷ್ಟೇ ಪ್ರದರ್ಶಿಸಿದೆ. ಆಕಾಶಮಾರ್ಗದಲ್ಲಿ ನನ್ನನ್ನು ಸುತ್ತಿಸಿದ ಬಾಬ್ತು ಒಂದೆರಡು ನಿರಪಾಯಕಾರೀ ಸಲಹೆಗಳನ್ನೂ ಕೊಟ್ಟೆ. "ಬಿಡು ಕಾಗಕ್ಕಾ, ಪರಸ್ಪರ ಪ್ರೀತಿಸುವುದರಲ್ಲಿ ಮರ್ಯಾದೆ ಇದೆ. ಗೌರವವು ಎಲ್ಲರ ಜನ್ಮಸಿದ್ಧ ಹಕ್ಕು. ಹೋರಾಟ ತಪ್ಪಲ್ಲ. ನಿನ್ನ ಮೂಲ ಗುಣವನ್ನು ಬಿಡಬೇಡ. ಕಾಕನಿಷ್ಠುರತನವನ್ನೂ ಬಿಡಬೇಡ. ಆದರೆ ಸಹಜೀವನದ ವ್ರತವನ್ನು ಮಾತ್ರ ಯಾವತ್ತೂ ಬಿಡಲೇಬೇಡ...ಆಯ್ತಾ ? ನೀನು ಈಗ ಸುತ್ತುತ್ತಿರುವುದು ತರಲೆ ಮುಗಿಸುವ ಜಾಗವಲ್ಲ; ತರಲೆಯನ್ನು ಎಳೆದಾಡುವ ಜಾಗ. ಆದ್ದರಿಂದ ನಾನೂ ಗೋಣು ಎಳೆದಾಡಿಸಿಕೊಳ್ಳಲು - ಸ್ವಲ್ಪ ಕಾಲ ಇಲ್ಲಿಗೆ ಬರುತ್ತಿರುತ್ತೇನೆ. ನೋಡಕ್ಕ, ನನಗೆ ನಿನ್ನಂತೆ ಹಾರಿ ತೂರಿ ಅತಿ ಎತ್ತರದ ಮರ ಹತ್ತಲೂ ಬರುವುದಿಲ್ಲ; ಜಾರಿ ಇಳಿಯಲೂ ಬರುವುದಿಲ್ಲ; ನಿನ್ನಂತಹ ತೀಕ್ಷ್ಣ ದೃಷ್ಟಿಯೂ ಇಲ್ಲ. ಆದ್ದರಿಂದ ಈಗ ಒಂದು ಉಪಕಾರ ಮಾಡು. ನಿನ್ನನ್ನು ಸವಾರಿ ಮಾಡಿದ್ದು ನನಗೆ ಖುಶಿ ಕೊಟ್ಟಿದೆ; ಈಗ ನೀನೇ ನನ್ನನ್ನು ಈ ಟೊಂಗೆಯಿಂದ ಕೆಳಗಿಳಿಸಿಬಿಡು. ಓ ಅಲ್ಲಿನ ಬೆಂಚಿನ ಮೇಲೆ ಇಳಿಸಿಬಿಡು. ಇನ್ನೊಮ್ಮೆ ಬರುವಾಗ ನಿನಗೆಂದೇ ಬೆಣ್ಣೆಮುದ್ದೆ ತರುತ್ತೇನೆ. ನಾನೂ ನೀನೂ ಜೋಡಿ...ಆಯ್ತಾ ?" ಎಂದು ಚೆಂದದ ಮಾತಾಡಿ ಪರಸ್ಪರ ಸಂತೈಸಿಕೊಂಡೆವು. ಕಲ್ಲುಬೆಂಚಿನ ಮೇಲೆ ನನ್ನನ್ನು ಇಳಿಸಿದ ಕಾಗಕ್ಕ - "ಚಿಂವ್ ಚಿಂವ್ ಚಿಟಕುಬ್ಬಿ, ಬರಲೆ ?" ಎಂದು ಕೊರಳು ಕೊಂಕಿಸುತ್ತ ಪುರ್ರೆಂದು ಹಾರಿ ಹೋಯಿತು.

ಕೋರ್ಟ್ ಆವರಣದ ನೆಲಬಾನಿನಲ್ಲಿ ಕಾಕಾ ಎನ್ನುತ್ತ ಹಾರಾಡುತ್ತಿದ್ದ ಕಾಗೆಗದ್ದಲವು ನನ್ನನ್ನು ಪಟ್ಟಂತ ನೆಲಕ್ಕಿಳಿಸಿತ್ತು. ನಿದ್ದೆ ಕಳಚಿತ್ತು ! ಎಚ್ಚೆತ್ತು ತಲೆಯೆತ್ತಿ ಹಾರಿಹೋದ ಕಾಕಿಯನ್ನು ನೋಡುತ್ತಿದ್ದ ನಾನು - "ಗುಬ್ಬಿ ಕನಸು" ಅಂದುಕೊಂಡು ಅಲ್ಲಿಂದ ಎದ್ದೆ.

"ಛೆ... ಕಾಗೆಗಳಿಗೂ ಇಂಥ ದುಸ್ಥಿತಿಯೆ ? ಕಾಗೆಗಳ ಅಭಿರುಚಿ, ಸಮಸ್ಯೆಗಳೂ ಈಗ ಪರಿವರ್ತಿತವಾಗಿರಬಹುದೆ ? ಗೌರವದಿಂದ ಅರ್ಪಿಸುತ್ತಿದ್ದ ಪಿಂಡ ತಿನ್ನುವುದನ್ನು ಶೋಷಣೆಯೆನ್ನುತ್ತ ತಾವಾಗಿಯೇ ತಿರಸ್ಕರಿಸಿ - ಈಗ ಅವರಿವರ ಹೇಸಿಗೆ ತಿನ್ನುವಂತಾಯಿತಲ್ಲ ? ಇದೆಂಥ ಕನಸು ? ತಮ್ಮ ವ್ಯಾಜ್ಯವನ್ನು ಪರಿಹರಿಸಿಕೊಳ್ಳಲು ಕಾಗೆಗಳೆಲ್ಲವೂ ಕೋರ್ಟಿಗೆ ಬರುವುದುಂಟೆ ? ಅಥವ... ಕೋರ್ಟಿಗೆ ಬರುವವರೆಲ್ಲರೂ ಕಾಗೆಗಳೆ ?..."  ನೂರೆಂಟು ಪ್ರಶ್ನೆಗಳು ಮಾತ್ರ ತಲೆಯಲ್ಲಿ ಸುತ್ತುತ್ತಲೇ ಇದ್ದವು. ಏಕೆಂದರೆ ಊರು ಹಿಡಿಸದ, ಊರಿಗೇ ಬಾರದ, ಬಾರದ ಊರಿನ, ಕಾರುಬಾರಿನ, ಮನೆಮಠ ಬೇಡವಾದ ಕಾಗೆಗಳೆಲ್ಲವೂ ನ್ಯಾಯಾಲಯದ ಸುತ್ತಮುತ್ತ ಹಾರುತ್ತಿದ್ದವು !

ಹೋಗಲಿ. ಕೆಟ್ಟ ಕಾಗೆ ಕನಸು ! "ನ್ಯಾಯದ ರೋಗ" ಹಿಡಿದರೆ ಹಾಗೇ ಆಗುವುದು. ಕೊನೆಗೆ - ಕಾಗೆ ಆಗುವುದು ! ಅಕಸ್ಮಾತ್ ನ್ಯಾಯ ಸಿಗದಿದ್ದರೂ ಯಾವ ಕಾಗೆಗಳಿಗೂ ಅನ್ಯಾಯವಾಗದಿರಲಿ ಎಂದು ಹಾರೈಸಲು ನನ್ನಲ್ಲೇನಿದೆ ? ಇದ್ದುದನ್ನು ಕೊಡಬಹುದಲ್ಲದೆ ಇಲ್ಲದುದನ್ನು ಎಲ್ಲಿಂದ ಕೊಡುವುದು ? ಬಾಯಿ ಹರಕೆಗಳಿಂದ ಗುಬ್ಬಿ ಹರಕೆಗಳಿಂದ - ನ್ಯಾಯವನ್ನು ಸ್ಥಾಪಿಸಲು ಆದೀತೆ ?

ಹೀಗಿದ್ದೂ ಕೋರ್ಟ್ ಆವರಣದಲ್ಲಿ ನೆರೆದಿರುವ ಜನಜಾತ್ರೆಯ ವಿಶ್ವರೂಪ ದರ್ಶನವನ್ನು ನೋಡಿದರೆ ಕನಿಕರ ಮೂಡುತ್ತದೆ. "ಅವನ ಹೊಗೆ ಕಾಣುವ ವರೆಗೆ ಬಿಡುವುದಿಲ್ಲ.." ಎನ್ನುವವರು, ಅಂಗಿಯ ತೋಳು ಮಡಿಸುತ್ತ ಅಲ್ಲೇ ಪಾಠ ಕಲಿಸಲು ಹೊರಡುವ ಕ್ರಾಂತಿಕಾರಿಗಳು, ತಲೆ ಎತ್ತಲಾಗದ ಹಣ್ಣು ಹಣ್ಣು ಮುದುಕರು ಮುದುಕಿಯರು, ತೆಗಲೆ ಸೊಕ್ಕಿದ ಯುವಶಕ್ತಿಗಳು, ಮನೆಮುರುಕ/ಕಿಯರು, ಮಧ್ಯಸ್ಥಿಕೆದಾರರು, ಮರದ ನೆರಳಲ್ಲಿ ಕೂತು ತಮ್ಮ ತಮ್ಮ ಕರ್ಮವನ್ನು ಬಿಚ್ಚಿ ಉಂಡು ಮುಗಿಸುವವರು, ಕೋರ್ಟನ್ನೇ ಮನೆಯಾಗಿಸಿಕೊಂಡಂತೆ ಪಿಕ್ನಿಕ್ ಭಾವದಲ್ಲಿರುವ ಸ್ಥಿತಪ್ರಜ್ಞರು, ಮರದ ಬೊಡ್ಡೆಗೆ ತಲೆಯಾನಿಸಿ ನಿಶ್ಚಿಂತೆಯಿಂದ ಗೊರಕೆ ಹೊಡೆಯುವವರು, ಅಪ್ಪ ಅಮ್ಮನ ಜಗಳದಿಂದ ಬಡವಾಗುತ್ತಿದ್ದ ಕೂಸುಗಳು, ಬೇಡಿಯ ಸಮೇತ ಪೋಲೀಸರ ಸುಪರ್ದಿಯಲ್ಲಿ ತಲೆಯೆತ್ತಿ ಆಗಮಿಸುತ್ತಿದ್ದ ಘಟಾನುಘಟಿಗಳು, ಇಂಥವರ ಮೂಲಕವೇ ಜೀವನ ಸಾಗಿಸುವ ವೃತ್ತಿನಿರತರು... ಆಹಾ ! ನ್ಯಾಯಲೋಕ ಎಂದರೆ ಭೂಲೋಕದ ಸ್ವರ್ಗ !

ಶಿಕ್ಷಿತರು ಹೆಚ್ಚಿದಂತೆ ಅಪರಾಧಗಳು ಕಡಿಮೆಯಾಗದೆ ಹೆಚ್ಚುತ್ತಿರುವುದನ್ನು ನೋಡಿದರೆ - ನಾವು ತಪ್ಪಿದ್ದೆಲ್ಲಿ ? ಎಂಬ ಪ್ರಶ್ನೆ ಮೂಡುತ್ತದೆ. ನ್ಯಾಯ ಎಡವುತ್ತಿದೆಯೆ ? ಕಾನೂನುಗಳ ದುರ್ಬಲತೆಯೆ ? ಯಾವುದೇ ಸಮಸ್ಯೆಗೆ ಶೀಘ್ರ ಪರಿಹಾರ ಕೊಡಲಾಗದ ಅಸಮರ್ಥತೆಯೆ ? ಮೂಲಶಿಕ್ಷಣದ ಕುಂದುಕೊರತೆಗಳೆ ?

ಭಾರತದ ನ್ಯಾಯ ಮಂದಿರಗಳಲ್ಲಿ ನ್ಯಾಯ ದೇವತೆಯು ಇರಬಹುದೆ ? ಅಥವ... ಅದೀಗ ದೇವರಿಲ್ಲದ ಗುಡಿಯೆ ? ಭಾರತದ ಕೋರ್ಟು ಅಂದರೆ - ಎಂಥವರಲ್ಲೂ "ಕೀಳರಿಮೆ" ತುಂಬಬಲ್ಲ ತಾಣವಾಗಿ ಹೋಗಿದೆ ಎಂಬುದು ನಾನು ಕಂಡ ಯಥಾರ್ಥ. ನಮ್ಮ ನ್ಯಾಯಾಸ್ಥಾನಗಳು ಅಪರಾಧಿಯಲ್ಲದವರಿಗೂ - ಅಪರಾಧಿಯಾಗಬೇಕೆನ್ನುವ ಪ್ರೇರಣೆ ಸಿಗುವಂತಹ ತಾಣವಾಗಿದೆಯೆ ?


                                                      (ಕೇವಲ ಸಾಂದರ್ಭಿಕ ಚಿತ್ರ)

ಕೋರ್ಟ್ ಕೋಣೆಯ ಒಳಗೆ ಮತ್ತು ಅದರ ಹೊರಗೆ - ನಡೆಯುವ ಮತ್ತು ನಡೆಸಲಾಗುವ - ಬಗೆಬಗೆಯ ವ್ಯಾಪಾರಗಳನ್ನು ಗಮನಿಸಬಲ್ಲವರಿಗೆ - "ಯಾರದ್ದೋ ತರಲೆ ! ನಮಗೆ ಬಿದ್ದುಹೋಗುವುದೇನಿದೆ ? ಎಂದುಕೊಂಡಂತಿದೆ" - ಅನ್ನಿಸಿದರೆ ಆಶ್ಚರ್ಯವೇನಿಲ್ಲ. ನ್ಯಾಯದಾನ(?)ದ ಸ್ಥಾನಗಳೇ ಇವು ? - ಅನ್ನಿಸಿಬಿಡುತ್ತದೆ ! ಧರಿತ್ರೀಪಾಲರ ಶೈಲಿಯಲ್ಲಿ Case File ಗಳನ್ನು ಎತ್ತಿ ಎತ್ತಿ ಒಗೆಯುವ ಅಲ್ಲಿನ ಪ್ರಚಂಡ ವೈಖರಿಗಳು ಗಾಬರಿ ಹುಟ್ಟಿಸುತ್ತವೆ ! ಸೂಕ್ಷ್ಮವಾಗಿ ವಿಚಾರಿಸಿ ನೋಡಿದರೆ - ಒಂದು ಇಡಿಯಾದ ನ್ಯಾಯವನ್ನು ಹರಿಹರಿದು ಎಲ್ಲರಿಗೂ ಚೂರು ಚೂರು ಹಂಚುವಂತಹ ತನ್ನ ಅಡ್ಡಕಸುಬಿನಲ್ಲಿ ಭಾರತದ ನ್ಯಾಯಾಂಗವು ಎಂದೂ ಹಿಂದೆ ಬಿದ್ದಿಲ್ಲವೇನೋ - ಅನ್ನಿಸುವುದೂ ಇದೆ !

ನನಗೆ ಇನ್ನೂ ಅರ್ಥವಾಗಿಲ್ಲದಿರುವುದು ಏನೆಂದರೆ... ಸಮಾನತೆಯ ಪಾಠ ಹೇಳುವ ನ್ಯಾಯಾಂಗಕ್ಕೆ ದರ್ಪವು ಅನಿವಾರ್ಯವೆ? ದರ್ಪವೇ ನ್ಯಾಯಾಂಗದ ಗುರುತು ಚಿಹ್ನೆಯೆ ? ನ್ಯಾಯಾಸ್ಥಾನಕ್ಕೆ ಬರುವವರೆಲ್ಲರೂ ಕಳ್ಳ ಸುಳ್ಳ ಮಳ್ಳರೆ ? ಯಾವುದೇ ತೀರ್ಪಿನಲ್ಲಿ ಮಾತ್ರ ಕ್ಷಿಪ್ರತೆ ಮತ್ತು ದರ್ಪವಿದ್ದರೆ ಸಾಲದೆ ? ಅಸಡ್ಡೆ, "ಚಲ್ತಾ ಹೈ" ಶೈಲಿಯ ಸೋದಾಹರಣ ದೃಶ್ಯವು ನ್ಯಾಯಾಂಗಕ್ಕೆ ಭೂಷಣವೆ ? ನ್ಯಾಯಾಸ್ಥಾನಕ್ಕೆ ಹೋದ ಎಷ್ಟು ಬಡಪಾಯಿಗಳು ವರ್ಷಾನುಗಟ್ಟಲೆ ಅಲೆಅಲೆದು ಕೊನೆಗೂ ತೀರ್ಪಿನ ಮುಖ ಕಾಣದೆ ಗತಪ್ರಾಣರಾಗಿಲ್ಲ ? ಇಂತಹ ಅವ್ಯವಸ್ಥೆಗಳಿಗೆ ಯಾವ ಉತ್ತರದಾಯಿತ್ವವೂ ಇಲ್ಲವೆ ? "ಹಾಗಿದ್ದರೆ... ನೀವು ಅದೇ ಕಾರಣ ನೀಡಿ ಇನ್ನೊಂದು Case ಹಾಕಿ" ಎನ್ನುವಂತಹ ಪ್ರಚಂಡ ನ್ಯಾಯ ಸಂತಾನವಿದು - ಅನ್ನಿಸುವುದಿಲ್ಲವೆ ? ಒಂದು ತೀರ್ಪು ಯಾವುದೇ ಸಮಸ್ಯೆಯನ್ನು ಆಮೂಲಾಗ್ರವಾಗಿ ಸಂಶೋಧಿಸಿ ಮತ್ತೊಮ್ಮೆ ಅದೇ ತಪ್ಪು ಮರುಕಳಿಸದಂತಹ ಸೂಕ್ತ ಶಿಕ್ಷೆ ಮತ್ತು ಪರಿಹಾರವನ್ನೂ ತಿಳಿಸುವಂತಿರಬೇಡವೆ ? ಹಾಗಿಲ್ಲದ ಒಂದು ವ್ಯವಸ್ಥೆಯು - "ಅನ್ಯಾಯವಾಗಿ ಬಡಿದು ತಿನ್ನುವ ಧಂದೆ"  ಎಂದು ಯಾರಿಗಾದರೂ ಅನ್ನಿಸಿದರೆ ಅದರಲ್ಲಿ ತಪ್ಪೇನಿದೆ ?

ತಮಗೆ ಮರ್ಯಾದೆ ಕೊಡಿ ಎಂದು ಹಕ್ಕಿನಿಂದ ಕೇಳುವಂತೆ ವರ್ತಿಸುವ ನ್ಯಾಯವೇತ್ತರ ಪರಿಸರದಲ್ಲಿ ತುರ್ತಾಗಿ "ಸ್ವಚ್ಛತಾ ಅಭಿಯಾನ" ನಡೆಯಬೇಕಲ್ಲವೆ ? ಸರಕಾರದ ಸಂಬಳ ಪಡೆದು ಘನಕರ್ತವ್ಯ ನಿರ್ವಹಿಸುವ... ಮತ್ತು ಯಾವ - ಯಾರ ಕಟ್ಟಿಗೂ ಒಳಪಡದ ಸ್ವಚ್ಛಂದ, ಕರಾಳ, ಹರಿದು ತಿನ್ನುವ ಕಪ್ಪುಜಾಲದ ನಡುವೆ ಸಿಲುಕಿರುವ ಈ ಭಾರತೀಯರು ಮುಕ್ತರಾಗಲುಂಟೆ ? ಈಗ ಬಾ, ಆಗ ಬಾ, ಹೋಗಿ ಬಾ, ಬಾಗಿ ಬಾ, ನಾಳೆ ಬಾ, ತೆವಳಿ ಬಾ, ನುಸುಳಿ ಬಾ ... ಎನ್ನುವವರು ಮತ್ತು ಹಾಗೆ ಹೇಳಿಕೊಟ್ಟು, ಹೇಳಿಸುತ್ತ ದಿನ ತಳ್ಳಿಸುವವರನ್ನು ಕಾನೂನಿನ ಪರಿಧಿಯೊಳಗೆ ತರುವುದಾದರೂ ಹೇಗೆ ? ಬೆತ್ತ ತೋರಿಸಿ ಗೌರವ ಕಕ್ಕಿಸಿಕೊಳ್ಳುವ ಈ ಅಸಹ್ಯ ವ್ಯವಸ್ಥೆಗೆ ಪರ್ಯಾಯವೇನು ? ಇಂತಹ ಪರಿಸ್ಥಿತಿಯಲ್ಲಿ - ನಾಗರಿಕರನ್ನು ನಾಗರಿಕರಂತೆಯೇ ನಾಗರಿಕವಾಗಿ ಉಪಚರಿಸುವ ಪ್ರತಿಯೊಬ್ಬರ ಕರ್ತವ್ಯವನ್ನು ಮತ್ತು ಉಪಚರಿಸಿಕೊಳ್ಳುವ ಹಕ್ಕನ್ನು ಒಮ್ಮೊಮ್ಮೆ ಲೇವಡಿ ಮಾಡುವಂತೆಯೂ ಕಾಣುವುದಿಲ್ಲವೆ ? "ರಾಮನಾದರೂ ಸರಿ; ರಾವಣನಾದರೂ ಸರಿ" ಎಂಬಂತೆ ಕೋಲ ಕಟ್ಟುತ್ತ ಪ್ರತಿಪಾದಿಸುವವರು ಆತ್ಮನಿರೀಕ್ಷಣೆಯನ್ನು ಮಾಡಿಕೊಳ್ಳದೆ - ಯಾರಿಂದಲೂ ಮರ್ಯಾದೆಯನ್ನು ಅಪೇಕ್ಷಿಸಬಾರದು. ಇದು ವೃತ್ತಿ ಧರ್ಮವಲ್ಲ; ಅಧರ್ಮ. ಒಂದು ಸಂವಿಧಾನಬದ್ಧ ವ್ಯವಸ್ಥೆಯು ಹೀಗೂ ಇರುವುದುಂಟೆ ? ಆಹಾ ! ಇದು ಭಾರತ !

ಆದರೆ ನನ್ನ ಅದೃಷ್ಟ ! ಮುಗಿಯದ ಆಕಾಶ ಕಾಂಡದ ನನ್ನ ರಾಮಾಯಣದಲ್ಲಿ - ವಕೀಲಪೀಡೆಯು ನನ್ನನ್ನು ಅಷ್ಟೊಂದು ಬಾಧಿಸಲಿಲ್ಲ. ಆದ್ದರಿಂದ ಓಹೋ... ಕೆಲವು ಉತ್ತಮರೂ ಇದ್ದಾರೆ ಎಂದು ಅಂದುಕೊಳ್ಳುವಂತಾಯಿತು. ಆದರೆ ಅಲ್ಲಿ - ಎಲ್ಲವೂ ಸರಿಯಿಲ್ಲ ಎಂಬುದು ಮಾತ್ರ ಸ್ಪಷ್ಟವಾಗಿ ತಿಳಿಯುತ್ತಿತ್ತು. ಸರಕಾರದ ಆಡಳಿತಾತ್ಮಕ ಅವ್ಯವಸ್ಥೆಯನ್ನು ಆಯಾ ಸಂಸ್ಥೆಗಳಲ್ಲಿಯೇ ಸರಿಪಡಿಸಿಕೊಳ್ಳುವಂತೆ - ಕಚೇರಿಗಳ ದುರವಸ್ಥೆಯನ್ನು ಅಲ್ಲಲ್ಲೇ ಸುವ್ಯವಸ್ಥಿತಗೊಳಿಸಲು ಸರಕಾರಗಳಿಗೆ ಏಕೆ ಸಾಧ್ಯವಿಲ್ಲ ? ನ್ಯಾಯಾಲಯಗಳು ಈ ಅಂಶಕ್ಕೆ ಯಾಕೆ ಒತ್ತು ಕೊಡುತ್ತಿಲ್ಲ ? ನ್ಯಾಯಕ್ಕಾಗಿ ಯಾರದೋ ಮನೆಗೆ ಹೋದಂತೆ ಭಾಸವಾಗುವುದನ್ನು ಮತ್ತು ನ್ಯಾಯಕಾಣದ ಸ್ಥಳಗಳಲ್ಲಿ ನೌಕರರನ್ನು ಅಟ್ಟಿ ಒಣಕಲು ನಾಯಿಗಳಂತೆ ಅವರನ್ನು ಬಳಲಿಸುವುದನ್ನು ಈ ಮೂಲಕ ತಪ್ಪಿಸಬಹುದಲ್ಲವೆ ? ಎಂಬ ಪ್ರಶ್ನೆಯು ಮಾತ್ರ ಇನ್ನೂ ನನ್ನೊಂದಿಗಿದೆ. ಸಾವಿರಾರು ಸರಕಾರೀ ನೌಕರರನ್ನು ಕೋರ್ಟುಗಳಿಗೆ ನೂಕಿ ಚೆಂದ ನೋಡುವ ಬೇಜವಾಬ್ದಾರಿಯ ದುಷ್ಟ ಹಿಕ್ಮತ್ತುಗಳಿಗೆ ಕಡಿವಾಣ ಬೇಡವೆ ?? ಬೇಸರವಾದರೂ ಹೇಳಲೇಬೇಕು - ಬೇಜವಾಬ್ದಾರಿಯ ಸರಕಾರೀ ಯಂತ್ರವನ್ನು ನೆಚ್ಚಿಕೊಂಡಿರುವ ಇಂದಿನದೂ ಸದ್ಯಕ್ಕೆ - ಬೇಜವಾಬ್ದಾರಿಯ ಸರಕಾರವೇ !  

ಗೆಲ್ಲಬೇಕಾದವರನ್ನು ಸೋಲಿಸಿ ಸೋಲಬೇಕಾದವರನ್ನು ಸಾಯಿಸುವುದು ಈ ಭೂಮಿಯ ನ್ಯಾಯಾಲಯಗಳ ಆಜನ್ಮ ಹಕ್ಕೆ ? ನ್ಯಾಯಾಲಯವನ್ನು ಮೂಸಿ ಬಂದ ಯಾರಿಗಾದರೂ ಹೀಗೆ ಅನ್ನಿಸುವುದು ಸಹಜ. ಆದರೆ ಧರ್ಮದ ಬುನಾದಿಯಿಲ್ಲದ ಯಾವುದೇ ನ್ಯಾಯ ವ್ಯವಸ್ಥೆಯ ಗತಿ ಇಷ್ಟೇ. ಧರ್ಮರಹಿತ "ಪುಸ್ತಕದ ಬದನೇ ಕಾಯಿ ಕಾನೂನು"ಗಳು ಕುರುಡು ನ್ಯಾಯವನ್ನಷ್ಟೇ ಕೊಡಬಲ್ಲವು. ಅದು ಇವತ್ತಿನ TV ಧಾರಾವಾಹಿಗಳಂತೆ - ಎಳೆದು ಉದ್ದ ಮಾಡುವ, ಸಮಯ ಕೊಲ್ಲುವ  ನೀರಸ ಕ್ರಿಯೆಯೇ ಆಗಿಹೋಗುತ್ತದೆ. ಮುಗಿಯದ ಯಾವುದೇ ಧಾರಾವಾಹಿಯು ಸುಖ ಕೊಡುವುದಿಲ್ಲ; ಬದಲಾಗಿ ಪೀಡಿಸುತ್ತದೆ.

ನನ್ನ ಅಹವಾಲಿಗೆ ಕೊಟ್ಟ ಕಂತುಕಂತಿನ ತೀರ್ಪಿನ ನಂತರವೂ - ಕೋರ್ಟು ಸೂಚಿಸಿದಂತೆ ಮುಂದಿನ 2 ತಿಂಗಳು ಪೂರೈಸಿದ ಮೇಲೆ "ಭಾರತದ ವಿಚಿತ್ರ ಕಾನೂನಿನ ಪರಿಧಿ"ಯಲ್ಲಿ ಆಕಾಶವಾಣಿಯು ಯಾವುದೇ ಹೊಸ ಕ್ಯಾತೆಯನ್ನು ತೆಗೆಯಬಾರದೆಂದೇನೂ ಇಲ್ಲವಲ್ಲ ? ಎಳೆದಾಡುವ ಆಟಕ್ಕೆ ಎಲ್ಲರಿಗೂ ಎಲ್ಲ ಅವಕಾಶಗಳೂ ಇರುತ್ತವೆ ! ಇದೇ ಭಾರತದ ಸರ್ವ ಸಮಾನತೆ ! ಕೋರ್ಟುಗಳಿಗೆ ಹೆಚ್ಚು ಹೆಚ್ಚು ಜನರು ಬರುತ್ತಲೇ ಇರಬೇಕಲ್ಲವೆ ?

"ಆಕಾಶವಾಣಿಯ ಕ್ಯಾತೆಗಳು, ಕಾರುಬಾರುಗಳು ಹೀಗೇ ಮುಂದುವರಿದರೆ, ಅನಂತರ ಬೇಕಿದ್ದರೆ CONTEMPT OF COURT... ಹಾಕಿಕೊಳ್ಳಿ; ಇಷ್ಟು ಸತಾಯಿಸಿದ್ದಕ್ಕಾಗಿ ನೀವು ನಿಮ್ಮ ಆಕಾಶವಾಣಿಯ ವ್ಯವಸ್ಥೆಯಿಂದ ಬಡ್ಡಿಯನ್ನು ಕೇಳುವ ಅವಕಾಶವೂ ಇದೆ; ಅಂತಹ ಬಡ್ಡಿಗಾಗಿ ಇನ್ನೊಂದು Case File ಮಾಡಿ..." ಇತ್ಯಾದಿ ಉಚಿತ ಸಲಹೆಗಳೂ ಕೋರ್ಟ್ ಅಂಗಳದಲ್ಲಿ ಸಿಗುತ್ತವೆ; "ಆಗಾಗ ಬರುತ್ತಿರಿ... ಬಡಿದು ತಿನ್ನಲು ನಾವಿದ್ದೇವೆ..." ಎಂಬ ಪರೋಕ್ಷ ಆಹ್ವಾನ ! ಅಂತಹ ಮಾತಿಗೆ ಮರುಳಾದರೆ ಕರಿಕರಿ ಕಾಗೆ ; ಮರುಳು ಕೊಡವಿಕೊಂಡರೆ - ಗುಬ್ಬಿ !

ಈ ಸಂಸಾರದಲ್ಲಿ ಸತ್ತುಹೋಗಲು ಎಷ್ಟೊಂದು ಮಾರ್ಗಗಳು ?  ಅಲ್ಲವೆ ? ಕಾನೂನಿನ ಆಶ್ರಯದಲ್ಲಿ ಸಾಯುವುದೆಂದರೆ ಅದೆಂತಹ ವೀರ ಮರಣ ! ಎಂದು ಊಹಿಸುವಾಗ ಒಮ್ಮೊಮ್ಮೆ ನನಗೆ ನಗು ಬರುತ್ತದೆ. ಆದರೆ ನ್ಯಾಯ ಕೇಳುವ ಯಾವುದೇ ಭಾರತೀಯರು ದಿನವೂ ಸಾಯುವಂತಹ ಅನಿವಾರ್ಯತೆಯನ್ನು ತಂದು ಕುಕ್ಕಿದ ಸರಕಾರೀ ಯಂತ್ರಗಳನ್ನು ನಿಯಂತ್ರಿಸಲಾಗದ ಕರ್ಮಕ್ಕೆ - ಮುದ್ದಿಸಿ ಮುದ್ದಿಸಿ ಪೋಷಿಸುತ್ತಿರುವ ಯಾವುದೇ ಸರಕಾರಗಳನ್ನು ಕ್ಷಮಿಸಲು ಸಾಧ್ಯವೆ ? ಪ್ರಜೆಗಳನ್ನು ಕಸಾಯಿಖಾನೆಗೆ ತಳ್ಳಿದ ಕಟುಕರೆನ್ನಿಸುವುದಿಲ್ಲವೆ ?

ಒಟ್ಟಿನಲ್ಲಿ, ಹೊಡೆದು ತಿನ್ನುವ, ಬಡಿದು ತಿನ್ನುವ ಕಾನೂನುಗಳ ಅನಂತ ಅವಕಾಶಗಳನ್ನು ನೋಡಿ ನೋಡಿ ಪುಳಕಿತಳಾಗಿದ್ದೇನೆ. ಈ ಭೂಮಿಯಲ್ಲಿ "ನ್ಯಾಯ " ಎಂಬುದು ಎಂದೂ ಇರಲಿಲ್ಲ ಎಂದುಕೊಂಡು ಒಮ್ಮೊಮ್ಮೆ ನಾನೇ ಸಮಾಧಾನವನ್ನೂ ಮಾಡಿಕೊಳ್ಳುತ್ತೇನೆ. ಯಾರಿಗೂ ಪೂರ್ಣ ನ್ಯಾಯವು ಸಿಗುವುದಿಲ್ಲ; ಕೆಲವರಿಗೆ ಚೂರು ನ್ಯಾಯವೂ ಸಿಗುವುದಿಲ್ಲ. ಕೆಲವರು ನಿರಂತರ ಅನ್ಯಾಯದ ಶಿಕಾರಿಗಳಾಗುತ್ತಲೇ ಇರುತ್ತಾರೆ. ಅಲ್ಲವೆ ? ಸುಖೀ ಭಾವಕ್ಕೆ ಇಂತಹ ಚಿಂತನೆಗಳೇ ಸಹಕರಿಸುವುದು. ಅಧ್ಯಾತ್ಮದ ಕಿಂಚಿತ್ ಸಾನ್ನಿಧ್ಯವೂ ಇಂತಹ ಮನಃಸ್ಥಿತಿಯನ್ನು ದಯಪಾಲಿಸಬಲ್ಲದು ! ಆದ್ದರಿಂದಲೇ - ನ್ಯಾಯ ಎಂದರೆ "ಕೋತಿಯು ಬೆಣ್ಣೆ ಹಂಚಿದ ಕತೆಯಂತೆ" ಎಂದುಕೊಳ್ಳುತ್ತೇನೆ ; ನಾನೂ ಕತೆ ಕಟ್ಟುತ್ತೇನೆ ! ನನ್ನನ್ನು ನೋಡಿ ನಾನೇ ನಗುತ್ತಿರುತ್ತೇನೆ !

ಸ್ಥಾನವನ್ನು ಅಲಂಕರಿಸುವವರ ವ್ಯಕ್ತಿತ್ವವು ಪ್ರಶ್ನಾತೀತವಾದಾಗ... ನ್ಯಾಯಾಧೀಶ ಸ್ಥಾನವು ನಿಸ್ಸಂದೇಹವಾಗಿ ಪ್ರಶ್ನಾತೀತ.   ಯಾವುದೇ ಪ್ರಶ್ನಾತೀತ ಗಂಭೀರ ತೀರ್ಪುಗಳು ಯಾರನ್ನೂ ಬಳಲಿಸುವುದಿಲ್ಲ. ಆದರೆ ಎಲ್ಲೋ ಒಮ್ಮೊಮ್ಮೆ ಮಾತ್ರ ಸಮಗ್ರ ಮತ್ತು ಸಮರ್ಪಕ ತೀರ್ಪುಗಳು ಮಿಂಚಿ ಮರೆಯಾಗುತ್ತಿದ್ದರೆ ಅದು ಸಾಮಾಜಿಕ ಹಿತದ ದೃಷ್ಟಿಯಿಂದ - ಸುಲಕ್ಷಣವಲ್ಲ. ಕ್ಷಿಪ್ರ ವಿಚಾರಣೆ ಎಂದರೆ "ತರಾತುರಿ" ಎಂದು ಯಾರೂ ಭಾವಿಸಬೇಕಾಗಿಲ್ಲ. ಮನೆಯಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೂ ಒಂದು ಹೊತ್ತಿನ ಅಡುಗೆ ಕೆಲಸವೇ ಮುಗಿಯದಿದ್ದರೆ ಯಾರಿಗೂ ದಿನಕ್ಕೆ ಒಂದು ಊಟವೂ ಸಿಗುವುದಿಲ್ಲ. ಗೃಹಿಣಿಯದು -  ತರಾತುರಿಯಲ್ಲ; ಸಮಯಬದ್ಧತೆ ! ಸಮಯ ಮತ್ತು ವೃತ್ತಿ ಬದ್ಧತೆಯುಳ್ಳವರು ಕರ್ತವ್ಯವನ್ನು ಒತ್ತಡ ಎಂದುಕೊಳ್ಳುವುದಿಲ್ಲ; ಬದಲಾಗಿ ವೃತ್ತಿಧರ್ಮವನ್ನು ನಿಷ್ಠೆಯಿಂದ ಪಾಲಿಸುವವರಿಗೆ ಒದಗುವ ಒತ್ತಡಗಳು ಅವರ ಕರ್ತವ್ಯ ನಿಷ್ಠೆಯನ್ನು ಹೆಚ್ಚಿಸುತ್ತದೆ. ಯಾವುದೇ ಅಪರಾಧದ ತಲಸ್ಪರ್ಶೀ ಕಾರಣ ಮತ್ತು ಅಪರಾಧಕ್ಕೆ ಕಾರಣವಾದ ವ್ಯಕ್ತಿಗಳನ್ನೂ ಜೋಡಿಸಿಕೊಂಡು ಯಾವುದೇ ಅಪರಾಧವು ಆಗಾಗ ಮರುಕಳಿಸದಂತೆ - ಅಪರಾಧದ ಪ್ರಮಾಣಕ್ಕೆ ತಕ್ಕಂತೆ ಶೀಘ್ರಾತಿಶೀಘ್ರವಾಗಿ ಶಿಕ್ಷೆಯನ್ನು ನೀಡಲಾಗದ ಯಾವುದೇ ನ್ಯಾಯ ವಿತರಣೆಯು - ನ್ಯಾಯವೇ ಅಲ್ಲ. ಅದು ಅನ್ಯಾಯದ ಇನ್ನೊಂದು ವೇಷ ಆಗಬಹುದು - ಅಷ್ಟೆ. ಪರಿಣಾಮವೇ - ಕೋಡಲೆಯಿಂದ ಒಲೆಗೆ ಬೀಳುತ್ತಿರುವ ಸದ್ಯದ ಸ್ಥಿತಿ.

ನ್ಯಾಯಾನ್ಯಾಯದ ಕುರಿತು ಪ್ರಶ್ನೆ ಕೇಳುವವರೆಲ್ಲರೂ ವೈರಿಗಳೆ ? ಇತ್ಯಾತ್ಮಕವಾಗಿ ನೋಡಿದರೆ - ನಮ್ಮ ಆತ್ಮನಿರೀಕ್ಷಣೆಗೆ ಪ್ರಚೋದಿಸುವುದೇ ಪ್ರಶ್ನೆಗಳು. ಆದ್ದರಿಂದ - ಸದುದ್ದೇಶದಿಂದ, ನಿಸ್ವಾರ್ಥದಿಂದ ಪ್ರಶ್ನಿಸಿದಾಗ ಸ್ಥಾನಮಾನದ ಘನತೆಗೆ ಧಕ್ಕೆಯಾದಂತೆ ಪರಿಭಾವಿಸಿ ಹರಿಹಾಯುವುದು ಸಭ್ಯತೆ ಆಗಲಾರದು; ಪರಾಂಬರಿಸಿ ಮತ್ತೊಮ್ಮೆ ನೋಡುವ ಹೃದಯ ವೈಶಾಲ್ಯವು ನ್ಯಾಯವಾಗಿ - ನ್ಯಾಯವನ್ನು ಎತ್ತರಿಸುತ್ತದೆ. ಎಷ್ಟೋ ಮಂದಿ, ಯಾವುದೇ ತೀರ್ಪನ್ನು ಪ್ರಶ್ನಿಸಿದರೆ - ತಮ್ಮ ಬೆನ್ನು ಗೋಂಕಿಗೆ ಗುದ್ದಬಹುದೆಂಬ ಭಯದಿಂದ ನನ್ನಂತೆ (!) ಸುಮ್ಮನಿರುತ್ತಾರೆ. ಭಂಡತನ ತೋರಿಸುತ್ತ All is well... ಅನ್ನುತ್ತಾರೆ ! ಇದರಿಂದಾಗಿ ಈ ಪ್ರಜಾಪ್ರಭುತ್ವದಲ್ಲಿ - ಪ್ರಭುಗಳ ಅಟ್ಟಹಾಸದ ಎದುರಿನಲ್ಲಿ ಪ್ರಜೆಗಳು ಮಾತ್ರ ನಾಚಿಕೆಯಿಂದ ತಲೆತಗ್ಗಿಸುವಂತಾಗಿದೆ !


ಇಂದಿನ ಭಾರತವು ಜಗಳಗಂಟತನಕ್ಕೆ ಬೇಕಾದ ಫಲವತ್ತಾದ ಹೊಲ ! ಸರಕಾರೀ ಕಛೇರಿಗಳೇ ಜಗಳಗಂಟತನದ ತರಬೇತಿ ಶಾಲೆ ! ಆದ್ದರಿಂದಲೇ ಬೀದಿ ರಂಪಗಳಿಗೆ ರಾಜಮರ್ಯಾದೆ ಸಿಗುತ್ತಿರುವ ಸನ್ನಿವೇಶವಿದೆ ! ನಿತ್ಯರಂಪವನ್ನು ಪೋಷಿಸುವುದೇ ರಾಜಕೀಯ ಧರ್ಮವಾದಂತಿದೆ ! ನ್ಯಾಯ ಪ್ರತಿಪಾದಿಸುವ ನಿತ್ಯಫಲಾನುಭವಿಗಳೇ ಬೀದಿರಗಳೆಯ ಪ್ರತಿಭಟನೆ ನಡೆಸಿ ಕಾನೂನಿನ "ಮಜಾ ಉಡಾಯಿಸುವ" ದೃಶ್ಯಗಳೂ ಒಮ್ಮೊಮ್ಮೆ ಬಿತ್ತರಗೊಳ್ಳುತ್ತವೆ. ಕೆಲವೊಮ್ಮೆ ಪ್ರಜೆಗಳು "ಅಯ್ಯೋ ಪಾಪ" ಎನ್ನುವಂತೆ - ರಾಜಕಾರಣಿಗಳು, ನ್ಯಾಯಾಧೀಶರುಗಳೇ ಗೋಳೆಂದು ಅಳುತ್ತ ಕೂರುತ್ತಾರೆ ! ಅತ್ತಂತೆ ನಟಿಸುವುದೂ ಇದೆ ! ದೇಶದ ಪ್ರಧಾನಿಯು ಅತ್ತರೆ ಅಥವ ಪ್ರಧಾನಿಯನ್ನು ಕೂಡಿಸಿಕೊಂಡು ನ್ಯಾಯಾಧೀಶರೇ ಅಳುವುದಕ್ಕೆ ಶುರುಮಾಡಿದರೆ ಅಥವ ಕಣ್ಣುಜ್ಜಿಕೊಂಡಂತೆ ಮಾಡಿದರೆ ಭಾವುಕ ಜನಸಾಮಾನ್ಯರು ಎಲ್ಲಿ ಹೋಗಿ ಕಣ್ಣುಜ್ಜಿಕೊಂಡು ಅಳಬೇಕು ? ಭರವಸೆಯೇ ಕುಸಿದು ಹೋಗಲಾರದೆ ? ಅಸಹನೀಯ ಬಿಕ್ಕಟ್ಟುಗಳನ್ನು ದಿನವೂ ಉಂಡು ಜೀರ್ಣಿಸಿಕೊಳ್ಳುತ್ತಿರುವ ಜನಸಾಮಾನ್ಯರು ಇವನ್ನೆಲ್ಲ ನೋಡುತ್ತ, ಪರದುಃಖಕ್ಕೆ ಮಿಡುಕುತ್ತ ನ್ಯಾಯಾಧೀಶರುಗಳ ಸಂಕಟಕ್ಕೂ ಪ್ರತಿಸ್ಪಂದಿಸುತ್ತ - ತಮ್ಮ ನಿತ್ಯಶೋಕಗೀತೆಗೆ ಇನ್ನೊಂದು ಸೊಲ್ಲು ಸೇರಿಸಿಕೊಳ್ಳುವಂತಾಗದೆ ? ಅಪ್ಪ ಅನ್ನಿಸಿಕೊಂಡವನು ಚಾವಡಿಯಲ್ಲಿ ಕೂತು ಅತ್ತರೆ ಮಕ್ಕಳು ಕಂಗಾಲಾಗಿ ಬಿಡುವುದಿಲ್ಲವೆ ? ಕೋಣವೆರಡುಂ ಹೋರೆ ಗಿಡಕ್ಕೆ ಮೃತ್ಯು ! ಮಕ್ಕಳ ಎದುರಿನಲ್ಲಿ ಯಾವ ಅಪ್ಪನೂ ಅಳಬಾರದು; ಜವಾಬ್ದಾರಿ ಹೊತ್ತ ಯಾವ ಅಪ್ಪನಿಗೂ ಸಾರ್ವಜನಿಕವಾಗಿ ಅಳುವ ಹಕ್ಕು ಇರುವುದಿಲ್ಲ ! ಆಗಾಗ ಕಣ್ಣಿಂದ ನೀರು ಒಸರುವವರು ಸಂಸಾರವನ್ನು ಕಟ್ಟಿಕೊಂಡು ಯಜಮಾನ ಎಂಬ ಪೀಠವನ್ನು ಏರಬಾರದು; ಆಗ ಪೀಠಕ್ಕೆ ನ್ಯಾಯ ಒದಗಿಸುವುದು ಕಷ್ಟವಾಗುತ್ತದೆ.


ಅಳುವಂತಹ ರಾಜಕಾರಣಿಗಳು, ಪೋಲೀಸರು, ಅಧಿಕಾರಿಗಳು, ನ್ಯಾಯಾಧೀಶರು... ಇವರೆಲ್ಲ ನಮಗೆ ಬೇಕೆ ? ಪ್ರಜೆ ಎಂಬ ಸಮೂಹವನ್ನು ಅಧಿಕಾರಸ್ಥ ಸ್ಥಾನಗಳು ಕಸಕಡ್ಡಿಗಳಂತೆ ಅಲಕ್ಷಿಸುತ್ತಿದ್ದರೂ ನಮ್ಮ ಭಾರತೀಯ ಪ್ರಜೆಗಳು ಇಂದಿಗೂ ಸಂಯಮವನ್ನು ಮೀರಿಲ್ಲ. ಶಿಷ್ಟತೆಯನ್ನು ಪೂರ್ತಿಯಾಗಿ ಮರೆತಿಲ್ಲ. "ಸಂಬಂಧಿಸಿದ ವಿಭಾಗಗಳು" ಹೇತು ಹಾಕಿದ್ದನ್ನು ಊರ ಮಂದಿಯು ಹೊರುವಂತಹ ಸ್ಥಿತಿ - ಪ್ರಜೆಗಳದಾಗಿದೆ ! ಹಾಗೆಂದು - ಅಳುವ ಕಾಯಕವನ್ನೇ ನಂಬಿ ಯಾರೂ ಸುಮ್ಮನೆ ಕೂತಿಲ್ಲ. ಉಸಿರು ಇರುವವರೆಗೂ ಹೋರಾಡುತ್ತಿದ್ದಾರೆ. ಇರುವ ಅನುಕೂಲಗಳನ್ನೇ ಯುಕ್ತಿಯಿಂದ ಬಳಸಿಕೊಂಡು ಪರಮಾವಧಿ ಕರ್ತವ್ಯಗಳನ್ನು ನಿರ್ವಹಿಸಬಲ್ಲ ಬುದ್ಧಿ ದಾರ್ಢ್ಯತೆ ಇಲ್ಲದವರು ಯಜಮಾನರಾದಾಗ ಮಾತ್ರ ಮನೆಮಂದಿಯೆಲ್ಲ ಅಳುತ್ತ ಕೂರುವ ಪ್ರಸಂಗ ಬಂದೇ ಬರುತ್ತದೆ. ಭರವಸೆಯ ಬುನಾದಿಯೇ ಕುಸಿದಂತಾಗುತ್ತದೆ. ತಾವೂ ಅತ್ತು ಮನೆಮಂದಿಯನ್ನೆಲ್ಲ ಅಳಿಸುವವರು ನಮಗೆ ಬೇಕೆ ? ಬೇಡವೇ ಬೇಡ. ಯಾರೂ ತಮ್ಮ ಬದುಕನ್ನು ಅಳುವ ಕಡಲಾಗಿಸಿಕೊಳ್ಳುವುದು ಬೇಡ. ಬಾಳೆಂಬ ಅಳುವ ಕಡಲಿನಲ್ಲೂ ನಗುವಿನ ಹಾಯಿದೋಣಿಯನ್ನು ಏರಿ ತೇಲುವಂತಹ ಆಶಾವಾದವು ಒಳಹೊರಗಿನಿಂದ ಬೀಸುತ್ತಲೇ ಇರಬೇಕು. ಯಾವುದೇ ಸ್ವಾರ್ಥಸಾಧನೆಗಾಗಿ - ಅಳು ಅಥವ ನಗುವಿನಂತಹ ಹೃತ್ಪೂರ್ವಕ ಭಾವಸ್ಪಂದನವನ್ನು ವ್ಯಾವಹಾರಿಕವಾಗಿ ಬಳಸಿಕೊಳ್ಳುವ "ಭಾವ ವ್ಯಭಿಚಾರವು" ಕೂಡ ಸಮಾಜಘಾತಕವಾದುದು.

ತಮ್ಮ ವೈಭವ ಹೆಚ್ಚಿಸಿಕೊಳ್ಳುವ ಏಕೈಕ ಉದ್ದೇಶದಿಂದ ನ್ಯಾಯದೇವತೆಯನ್ನು ಸಾಂದರ್ಭಿಕವಾಗಿ ಕಪ್ಪುಬಿಳಿಯಾಗಿಸುತ್ತಿರುವ ಅಪ್ರತಿಮ ತರ್ಕ ಶಿರೋಮಣಿಗಳು ನಮ್ಮ ದೇಶವನ್ನು ಕಪ್ಪುಕಪ್ಪಾಗಿಯೇ ಉಳಿಸಿಕೊಳ್ಳುವಲ್ಲಿ ಸಕ್ರಿಯರಾಗಿರುವುದು ಸ್ವತಂತ್ರ ಭಾರತದ ದೊಡ್ಡ ದುರಂತ ! ಇದೆಂತಹ ಗೊಣಗೊಂಡೆ ವ್ಯವಸ್ಥೆ ? ಇಂದಿನ ಕೆನೆಪದರದ ಬದುಕುಗಳು ಸಂಪೂರ್ಣ  ರಾಜಕೀಯಮಯವಾಗಿ ಹೋಗಿದೆ. ಅಲ್ಲಿ ಅಸ್ತಿತ್ವದಲ್ಲಿರುವ ಎಲ್ಲವೂ - "ಕೊಡುವ ಪಡೆಯುವ" ವ್ಯಾಪಾರಗಳಾಗಿವೆ; ಬಾಯಾರಿ ಬಳಲುವವರು ಉಪ್ಪುನೀರು ಕುಡಿಯುವಂತೆ - ಗುಣಮೌಲ್ಯ ಸಂಪತ್ತನ್ನು ನಷ್ಟಗೊಳಿಸಿಕೊಂಡ ವ್ಯವಸ್ಥೆಗಳಾಗಿವೆ. ಬದುಕಿನ ಸತ್ಯ ನ್ಯಾಯ ನೀತಿ ಧರ್ಮಗಳನ್ನು - ಹೊಲಸು ರಾಜಕೀಯ ದರ್ಪಣದಲ್ಲಿ ನೋಡಲು ಹೊರಟರೆ ಇನ್ನೇನಾದೀತು ?

ಪ್ರಾಮಾಣಿಕರನ್ನು ಬಾಹ್ಯ ಪ್ರಯತ್ನದಿಂದಲೂ ಅಪ್ರಾಮಾಣಿಕರಾಗಿಸಬಹುದು ; ಆದರೆ ಅಪ್ರಾಮಾಣಿಕರನ್ನು ಅವರೇ ಇಚ್ಛಿಸದೆ - ಪ್ರಾಮಾಣಿಕರಾಗಿಸುವುದು  ಅಸಾಧ್ಯ. ಹೀಗಿರುವಾಗ, ಇಚ್ಛಾಶಕ್ತಿಯಿಲ್ಲದ ಅಪ್ರಾಮಾಣಿಕ ಮನಸ್ಸುಗಳನ್ನು ಈಗ ಇರುವ ಸಡಿಲವಾದ ಕಾನೂನಿನ ಕಟ್ಟಿನಲ್ಲಿ ಸಿಲುಕಿಸುವುದು ಸಾಧ್ಯವಾಗದು. ಅಪ್ರಾಮಾಣಿಕತನವನ್ನು ದರ್ಪದಿಂದಲೇ ಬಗ್ಗುಬಡಿಯದೆ ಹೋದರೆ ಸಮಾಜದಲ್ಲಿ ನ್ಯಾಯ ಎಂಬುದು - ಕಾಗಕ್ಕ ಗುಬ್ಬಕ್ಕನ ಕತೆ ಆದೀತು. GOOD GOVERNANCE ಎಂಬ ಕೋಲಾಹಲವು ಹಾಸ್ಯಾಸ್ಪದವಾದೀತು. ಆದರೆ ಯಾರೋ ಕನಸುಗಾರ ಠೊಣಪಯ್ಯ ಪ್ರತ್ಯಕ್ಷವಾಗಿ ಬಂದು ತಮಗೆ ನ್ಯಾಯ ಕೊಡಿಸುತ್ತಾನೆಂದು ಕೈಕಟ್ಟಿ ಕೂಡಲಾದೀತೆ ? ತಕ್ಷಣದ ಪರಿಹಾರವಾಗಿ ಮುಂದಿನ ಹೆಜ್ಜೆ ಇಡುವುದು ಅನಿವಾರ್ಯವಾಗುತ್ತದೆ. ಇದಕ್ಕಿಂತ ಭಿನ್ನವಾದ ಸುಲಭದ ಮಾರ್ಗವೂ ಇಲ್ಲವೆಂದಲ್ಲ. ಅಂತಹ ಸುಲಭಪ್ರಾಯರಿಗೆ - "ಅನ್ಯಾಯದ ಪರಿಸರದಿಂದ ದೂರವಾಗಿರುವುದು - ಅಥವ - ತಮಗೆ ಕೂಡಿದಷ್ಟು ಅನ್ಯಾಯಗಳನ್ನು ತಾವೂ ಮಾಡುತ್ತ ವರಾಹರೂಪಿನಲ್ಲಿ ಸುಖವಾಗಿರುವುದು" - ಇವೆರಡು ಆಯ್ಕೆಗಳೂ ಇವೆ !

ನ್ಯಾಯ ಪಡೆಯಲು ನ್ಯಾಯಾಸ್ಥಾನಕ್ಕೆ ಹೋಗುವ ಬಹು ದೊಡ್ಡ ಸಮೂಹವು - ಬಿಸಿಯೂಟ, ಹೊಸ ಪಾದರಕ್ಷೆಗಳನ್ನೇನೂ ಬಯಸುವುದಿಲ್ಲ. ಒಂದಿಷ್ಟು ಸಜ್ಜನಿಕೆ; ಒಂದಿಷ್ಟು ಸೌಜನ್ಯ; Case ಗಳ ಶೀಘ್ರ ವಿಲೇವಾರಿಯ ಇಚ್ಛಾಶಕ್ತಿ, ಪೂರ್ವಾಗ್ರಹವಿಲ್ಲದ ನ್ಯಾಯದಾನ ...  ನಾಗರಿಕರಿಗಿರುವುದು - ಇಂತಹುದೇ ಗುಬ್ಬಿ ಅಪೇಕ್ಷೆಗಳು. ಅನ್ಯಾಯಕ್ಕೆ ಒಳಗಾದವರಿಗೆ ಸುಲಭ ಮತ್ತು ಶೀಘ್ರವಾಗಿ ನ್ಯಾಯದಾನ ಮಾಡುವಂತಹ ಬಲಿಷ್ಠ ವ್ಯವಸ್ಥೆಯು ನಮಗೆ ಬೇಡವೆ ? ಇದೆಂತಹ ಪ್ರಜಾಪ್ರಭುತ್ವ ? ಪ್ರಜೆಗಳನ್ನು "ಕಣ್ಣ ನೀರಿನಲಿ ಮಣ್ಣಧೂಳಿನಲಿ ಹೊರಳಿಸುವ" ಇದೂ ಒಂದು ಪ್ರಜಾಪ್ರಭುತ್ವವೆ ? ಮಾಧ್ಯಮಗಳೂ ಕಮಕ್ ಕಿಮಕ್ ಅನ್ನುತ್ತಿಲ್ಲವಲ್ಲ ? ಇಂತಹ ಹಳವಂಡದಲ್ಲಿ ಇದುವರೆಗೆ ನ್ಯಾಯ ಧರ್ಮ ಎನ್ನುತ್ತ ಸತ್ತವರಾದರೂ ಎಷ್ಟು ? ಹೀಗಿದ್ದೂ... ಈಗಲೂ ನ್ಯಾಯ ಧರ್ಮ ಎನ್ನುವ ಅಸಂಖ್ಯ ಜನರು ಈ ದೇಶದಲ್ಲಿ ಇದ್ದಾರೆ. ಅವರನ್ನು ಹೇಗಾದರೂ ಸಾಯಿಸಲು ಈ ಸಮಾಜದಲ್ಲಿ ಎಂತೆಂತಹ ಕುಸ್ತಿಗಳು ನಡೆಯುತ್ತಿವೆ ? ಈ ಎಲ್ಲ ಡೊಂಬರಾಟಗಳ ಗುರಿಯೇ ಭಾರತೀಯ ಮೌಲ್ಯಗಳನ್ನು ವ್ಯವಸ್ಥಿತವಾಗಿ ಕೊಲ್ಲುವುದೆ ? "ಸಬ್ ಕಾ ವಿಕಾಸ್ " ಆಗಲು ಯಾವುದೇ ವ್ಯವಸ್ಥೆಯ ನ್ಯಾಯಸ್ತಂಭವು ದೃಢವಾಗದೆ ಸಾಧ್ಯವುಂಟೆ ? ನ್ಯಾಯ ನರಳುವಲ್ಲಿ "ಸಬ್ ಕಾ ಸಾಥ್ " ಕೂಡ ದೃಢವಾಗಿ ಕಾರ್ಯರೂಪಕ್ಕಿಳಿಯದು. ಟೋಪಿ ಬದುಕಿನಲ್ಲಿ ನಾವು ಬಿದ್ದಿರುವುದಂತೂ ಸತ್ಯ. ಇದನ್ನು ಉದ್ಧರಿಸಲು ಪ್ರಾಮಾಣಿಕವಾಗಿ ಹೊರಟವರಿಗೂ ಕಾಲ್ತೊಡಕು ತಪ್ಪದು. ಹಾಗಿದೆ ನಮ್ಮ ಸರಕಾರೀ ಯಂತ್ರ - ತಂತ್ರ, ಮಂತ್ರ !!
                                                    ****** ****** ******
ಉಪಸಂಹಾರ... 

ಎಲ್ಲೆಲ್ಲಿಂದಲೋ ದರ್ಶನಾಕಾಂಕ್ಷಿಗಳಾಗಿ ಬರುತ್ತಿದ್ದ ತಮ್ಮ ಪ್ರೀತಿಪಾತ್ರ ಭಕ್ತರು ತಮ್ಮನ್ನು ಭೇಟಿ ಮಾಡಿ ಹಿಂದಿರುಗುವಾಗೆಲ್ಲ ಆಗ ದಕ್ಷಿಣೇಶ್ವರದಲ್ಲಿದ್ದ ಪರಮಹಂಸರು - "ಮತ್ತೊಮ್ಮೆ ಯಾವಾಗ ಬರುತ್ತೀ ? ಆಗಾಗ ಬರುತ್ತಿರು..." ಎನ್ನುತ್ತಿದ್ದರಂತೆ. ಅದು - ತನ್ನ ಭಕ್ತರನ್ನು ಸಂಸಾರದ ಜಂಜಾಟಗಳಿಂದ ಉದ್ಧರಿಸುವ ಭಾವಪೂರ್ಣ ಕರೆಯಾಗಿತ್ತು. ಆದರೆ - ನ್ಯಾಯ ಬಯಸುವ ಕಾಗಕ್ಕ ಗುಬ್ಬಕ್ಕನ ಇಂದಿನ ನ್ಯಾಯದ ಕತೆಯು - ಪೂರ್ತಿ ಮುಳುಗಿಸಿ ಹಾಕುವ ಕಲಾತ್ಮಕತೆಯಂತಿದೆ . ಇದು - ನಿಮ್ಮನ್ನು ಪೂರ್ತಿ ಹೀರುವ ವರೆಗೂ "ಆಗಾಗ ಬರುತ್ತಿರಿ..." ಎನ್ನುವಂತಹ ಎಡಬಿಡಂಗಿ ನ್ಯಾಯ . ತಮ್ಮ ಬದುಕಿನುದ್ದಕ್ಕೂ ನ್ಯಾಯಾಲಯದ ಸುದ್ದಿಗಳನ್ನು ಕೂಡ ಇಷ್ಟಪಡದ ಶ್ರೀ ರಾಮಕೃಷ್ಣ ಪರಮಹಂಸರನ್ನು ಇಂತಹ "ಅ-ನ್ಯಾಯದ ಪುರಾಣ"ಗಳಲ್ಲಿ ತಂದು ಹಾಕುವುದು ಸರ್ವಥಾ ಸರಿಯಲ್ಲ. ಆದರೆ ಅವರಿಗೇ ನನ್ನ ಕತೆ ಹೇಳಿ, ಅನ್ಯಾಯದ ಸಂತೆಗಳಿಂದ ಕಾಗೆ ಗುಬ್ಬಿಗಳನ್ನು ಬಿಡುಗಡೆಗೊಳಿಸುವಂತೆ - ನಡುನಡುವೆ ಪ್ರಾರ್ಥಿಸಲು ಏನಡ್ಡಿ ?

ಈ ಬದುಕಿನಲ್ಲಿ ನಮ್ಮನ್ನು ಬಹಿರ್ಮುಖಗೊಳಿಸುವ ಅವಕಾಶಗಳು ಒಂದೇ ? ಎರಡೆ ? ಒಟ್ಟಿನಲ್ಲಿ... ಅ-ನ್ಯಾಯ ಪುರಾಣದ ತಾತ್ಪರ್ಯ ಏನೆಂದರೆ - ಟೋಪಿ ಹಾಕುವುದಕ್ಕೆ ಹುಲುಸಾದ ಅವಕಾಶಗಳಿರುವ ಭಾರತೀಯ ವ್ಯವಸ್ಥೆಯಲ್ಲಿ ಪ್ರಾಮಾಣಿಕರನ್ನು ಪ್ರೋತ್ಸಾಹಿಸುವುದಕ್ಕಿಂತ - ಕಳ್ಳರನ್ನು ನೋಯಿಸಬಾರದೆಂಬ ಕಾಳಜಿಯೇ - ಭಾರತೀಯ ನ್ಯಾಯ ವ್ಯವಸ್ಥೆಯಲ್ಲಿ ಎದ್ದು ಕಾಣುತ್ತಿದೆ ! ಇಂತಹ ಸನ್ನಿವೇಶದಲ್ಲಿ - "ಈ ದೇಶದಲ್ಲಿ ಪ್ರಾಮಾಣಿಕರು ನ್ಯಾಯ ಪಡೆದುಕೊಳ್ಳುವುದು ಅತ್ಯಂತ ಕಷ್ಟ" ಎಂಬ ಭಾವನೆಗೆ - ನಿತ್ಯವೂ ವಿಪುಲ ಉದಾಹರಣೆಗಳು ಸಿಗುತ್ತಲೇ ಇರುತ್ತವೆ. ಅತ್ಯಂತ ಅಪಾಯಕಾರೀ ಒಪ್ಪಿತ ವಿಧಾನವಿದು !

ಆದರೆ ಈಗಾಗಲೇ ನಿತ್ಯ ನರಕದಲ್ಲಿರುವ ಸಂಸಾರಿಗಳು ತಮ್ಮ ಮನಸ್ಸನ್ನು ದುರ್ಬಲಗೊಳಿಸಿಕೊಳ್ಳಬೇಕಿಲ್ಲ. ಸಂಸಾರದಲ್ಲಿ ಕೊಂಚ ಭಂಡತನವೂ ಅವಶ್ಯಕ. ಒಮ್ಮೊಮ್ಮೆ ನಮ್ಮನ್ನು ನಾವೇ ನೋಡಿಕೊಂಡು ನಗುವುದೂ ಭಂಡತನವೇ. ಹೀಗಿದ್ದೂ... ಕುಟುಂಬ ಮತ್ತು ಉದ್ಯೋಗದ ಪರಿಸರದಲ್ಲಿ ಪರಿತ್ಯಕ್ತ ಸನ್ಯಾಸಿಯಂತಿರಲು ಸಾಧ್ಯವೆ ? ಹೆಚ್ಚೆಂದರೆ ಬುದ್ಧಿಭ್ರಷ್ಟವಾಗದ ಎಚ್ಚರದಲ್ಲಿರಬಹುದು. ಟೋಪಿ ಹಾಕಲು ಬಂದಾಗ ಟೋಪಿ ಕಿತ್ತು ಎಸೆಯಬಹುದು; ಅಷ್ಟೇ.  ಸಂಸಾರಿಗಳಿಗೆ ಅಷ್ಟೇ ಸಾಧ್ಯ.

ಎಷ್ಟೇ ಎಚ್ಚರದಿಂದ ಚಲಿಸುವ ಬದುಕಿನಲ್ಲೂ ಅಪಘಾತಗಳು ಸಂಭವಿಸಬಾರದೆಂದೇನೂ ಇಲ್ಲ. ಅದನ್ನೇ ಆಕಸ್ಮಿಕ ಎನ್ನುವುದು. ನಮ್ಮ ಹುಟ್ಟೇ ಆಕಸ್ಮಿಕ ಆಗಿರುವಾಗ ಅನಂತರ ಸಂಭವಿಸುವ ಕೆಲವು ಅಪಘಾತಗಳೂ ಆಕಸ್ಮಿಕ ಎಂದೇ ಅಂದುಕೊಳ್ಳಬೇಕಾಗುತ್ತದೆ. ವ್ಯಕ್ತಿಯ ಸ್ವಭಾವ ಮತ್ತು ಆಯಾ ಬದುಕು ಉರುಳುತ್ತ ಹೋಗಿ ಬೀಳುವ ಪರಿಸರವು ಪರಸ್ಪರ ಪೂರಕವಾಗದಂತಹ ಜಟಿಲ ಸನ್ನಿವೇಶಗಳಲ್ಲಿ - ಆಕಸ್ಮಿಕಗಳು ನಡೆಯುತ್ತಲೇ ಇರುತ್ತವೆ. ಯಾರದೋ ತಪ್ಪಿನಿಂದ ನಡೆಯುವ ಅಪಘಾತವಾದರೂ ಅದಕ್ಕೆ ಇಬ್ಬರೂ ಸಮಾನವಾಗಿ ಶೋಷಿತರಾಗುವುದಿಲ್ಲವೆ ? ತದನಂತರದ ಪೀಡೆಗಳನ್ನು ಉಭಯ ಪಕ್ಷಗಳೂ ಸಹಿಸುವಂತಾಗುವುದಿಲ್ಲವೆ ? ಇಂತಹ ಸ್ವಸ್ಥ ಚಿಂತನೆಯ ಮುಗ್ಧ ಭಂಡತನಗಳು ಯಾವುದೇ ಬದುಕನ್ನು ಉಳಿಸುವ ಜೀವಸತ್ವಗಳು. "ನಿನಗೆ - ಒಂದೇ ವರ್ಷದಲ್ಲಿ ಕೋರ್ಟ್ ತೀರ್ಪು ಬಂದದ್ದು ನಿನ್ನ ಪುಣ್ಯ.." ಎಂದು ಹೇಳಿ ನನ್ನನ್ನು ಅಭಿನಂದಿಸಿದವರೂ ಇದ್ದರು. ಪ್ರಸ್ತುತದ ನ್ಯಾಯಿಕ ಸಂತೆಯಲ್ಲಿ ನಾನೂ ಹಾಗೇ ಅಂದುಕೊಳ್ಳುವುದಲ್ಲದೆ ಬೇರೆ ಆಯ್ಕೆಗಳಿಲ್ಲ. ಇಂತಹ ಸಾಂತ್ವನಗಳಿಗೂ ಪರಸ್ಪರ ಬದುಕಿಸುವ ಶಕ್ತಿಯಿದೆ !

ಸಂಕಟ ಬಂದಾಗ ಅಗೋಚರ ಶಕ್ತಿಯ ನೆನಪಾಗುವುದು ಸ್ವಾಭಾವಿಕ. ಏಕೆಂದರೆ ಯಾವುದೇ ಅಡ್ಡ ಪರಿಣಾಮಗಳಿಗೆ ಈಡುಮಾಡದೆ ಮನುಷ್ಯರ ಮಾನಸಿಕ ಹಿಂಸೆಗಳನ್ನು ಸಂತೈಸುವ ಶಕ್ತಿಯು ಅಧ್ಯಾತ್ಮಕ್ಕಿದೆ. ಅಡ್ಡ ಚಿಂತನೆಗಳಿಗೆ ಆರೋಗ್ಯಕರ ದಿಕ್ಕು ತೋರಿಸಿ ಅಧ್ಯಾತ್ಮವು ಮಾತ್ರ ಆಧರಿಸಬಲ್ಲದು... ಅಧ್ಯಾತ್ಮದ ಹಾದಿಯನ್ನು ಹಿಡಿದವರು ಅದೆಷ್ಟೇ ವ್ಯಾವಹಾರಿಕವಾಗಿ ಬಳಲಿದರೂ ಬೀಳಲಾರರು; ಅವರು ತಮ್ಮನ್ನು ತಾವೇ ಸಂಭಾಳಿಸಿಕೊಳ್ಳಬಲ್ಲರು; ಹೋರಾಡಲೂ ಬಲ್ಲರು.

ಅಂದು ಶ್ರೀ ರಾಮಕೃಷ್ಣರು ತಮ್ಮ ವಚನಸುಧೆಯಿಂದಲೇ ಸಂಸಾರದ ಪ್ರಕ್ಷುಬ್ಧ ಮನಸ್ಸುಗಳನ್ನು ಆಧರಿಸಿ ಸಾಂತ್ವನ ನೀಡುತ್ತಿದ್ದರು. ತಮ್ಮ ಸ್ವಂತ ವಹಿವಾಟಿನ ವ್ಯಾಜ್ಯಗಳಿಗಾಗಿ ಬ್ರಿಟಿಷ್ ದರ್ಬಾರಿನ ಕೋರ್ಟಿಗೆ ಹೋಗಿ ಬರುತ್ತಿದ್ದ ತಮ್ಮ ಭಕ್ತರನ್ನು ಕಂಡು - ಅವರು ಕನಿಕರಿಸಿದ್ದೂ ಇತ್ತು. ನ್ಯಾಯಾಲಯವೆಂದರೆ ಹಾವನ್ನು ಮೆಟ್ಟಿದಂತೆ ಆಡುತ್ತಿದ್ದ ಅವರು - "ಸುಳ್ಳು ಸಾಕ್ಷಿಯ ನ್ಯಾಯಾಲಯ"ದಿಂದ ದೈಹಿಕವಾಗಿಯೂ ಮಾನಸಿಕವಾಗಿಯೂ ಮಾರುದೂರವಿದ್ದು ಮನಶ್ಶುದ್ಧಿಗೆ ಮೇಲ್ಪಂಙ್ತಿ ಹಾಕಿಕೊಟ್ಟಿದ್ದರು. ಅಂದಮೇಲೆ ನ್ಯಾಯ ಸತ್ತದ್ದು ಮೊನ್ನೆಮೊನ್ನೆ ಏನಲ್ಲ. ನ್ಯಾಯದ ಅಂತ್ಯ ಸಂಸ್ಕಾರವು ತ್ರೇತಾಯುಗ ಮುಗಿದಾಗಲೇ ನಡೆದು ಹೋಗಿದೆ. 

ಶ್ರೀ ರಾಮಕೃಷ್ಣರನ್ನು ಓದಿದವರೆಲ್ಲರೂ ರಾಮಕೃಷ್ಣರಾಗುವುದು ಅಸಾಧ್ಯವಾದರೂ "ಸಂಸಾರವೆಂದರೆ ಇಷ್ಟೇ" ಎಂಬ ಮನೋಸ್ಥಿರತೆಯನ್ನು ಮೂಡಿಸಿಕೊಂಡು ತಮ್ಮ ನಡಿಗೆಗೆ ಶಕ್ತಿ ತುಂಬಿಸಿಕೊಳ್ಳುವ ಸಾಮರ್ಥ್ಯ ಪಡೆದುಕೊಳ್ಳಬಹುದು. ಕಳ್ಳ, ಪೋಲೀಸ್, ವಕೀಲಿಕೆ, ವೈದ್ಯ ಮುಂತಾದ ಮಾರ್ಗಗಳನ್ನು ವೃತ್ತಿಯಾಗಿಸಿಕೊಂಡವರಿಗಿಂತ - ಅಂತಹ ಮನೋಭಾವವನ್ನು ಬೆಳೆಸಿಕೊಂಡು ತಮ್ಮ ಪ್ರವೃತ್ತಿಯಾಗಿಸಿ, ಸ್ವಭಾವಮೌಲ್ಯಗಳು ಕ್ಷಯಿಸಿಹೋಗದಂತೆ ನಿಯಂತ್ರಿಸಿಕೊಳ್ಳುವವರಿಂದ ಮಾತ್ರ ಈ ಜಗತ್ತು ಮತ್ತು ವೃತ್ತಿಯೂ ಉಪಕೃತವಾಗುವಂತಾಗುತ್ತದೆ.

ಯಾವುದೇ ವೃತ್ತಿಯಿಂದಲೇ ಆಯಾ ವ್ಯಕ್ತಿಯ ಮೂಲ ಸ್ವಭಾವವು ಪರಿವರ್ತನೆಯಾಗಲಾರದು. ಆದರೆ ವೃತ್ತಿಯ ದುಷ್ಪ್ರಭಾವದಿಂದ ಬದುಕು ಮತ್ತು ಚಿಂತನೆಯ ಶೈಲಿಯೇ ಬದಲಾಗಬಹುದು ಎಂಬ ಎಚ್ಚರವೂ ಅವಶ್ಯಕ. ವೃತ್ತಿಗಳ ಕೀಟಲೆಯಿಂದಾಗಿ ಉಂಟಾಗಬಹುದಾದ ಅನಪೇಕ್ಷಿತ ಭಾವಪರಿವರ್ತನೆಯನ್ನು ದೀರ್ಘ ಕಾಲ ಉಪೇಕ್ಷಿಸಿದರೆ ಸ್ವಭಾವವೈಕಲ್ಯಕ್ಕೂ ಎಡೆಯಾಗಬಹುದು. ವೃತ್ತಿಪರರಿಗೆ ಈ ಎಚ್ಚರವು ಅತೀ ಅವಶ್ಯಕ. ಆದರೆ ಕಳ್ಳನು ಪೋಲೀಸ್ ಆಗುವಷ್ಟು ಪರಿವರ್ತನೆಯು ಒಂದೇ ಜನ್ಮಕಾಲದಲ್ಲಿ ಆಗಲಾರದು ಎಂಬ ಇತಿಮಿತಿಯೂ ಗೊತ್ತಿರಲಿ. ಆದ್ದರಿಂದ ಎಷ್ಟೋ ಜನ್ಮದ ಸಂಪಾದನೆಯಾದ ನಮ್ಮೊಳಗಿನ ಶಿಷ್ಟ ಸ್ವಭಾವಸಂಪತ್ತಿಗೆ ಧಕ್ಕೆಯಾಗದಂತೆ ವೃತ್ತಿಜೀವನವನ್ನು ನಡೆಸುವುದು ಅಪೇಕ್ಷಣೀಯ. ಆಗ ಲಾಭವಿಲ್ಲದಿದ್ದರೂ ಯಾವುದೇ ನಷ್ಟ ಸಂಭವಿಸದು. ನಮ್ಮ ಬದುಕನ್ನು ನಾವೇ ನಷ್ಟದ ಖಾತೆಗೆ ತಳ್ಳುತ್ತ ಹೋದರೆ ಅದೇ ದುರಂತ. ಪ್ರತೀ ಬದುಕಿನಲ್ಲೂ ಅನೇಕ ಜಾರುದಾರಿಗಳು ಎದುರಾಗುತ್ತವೆ. ಸ್ಥಿರತೆಯಿಲ್ಲದ ಮನಸ್ಸುಗಳು ಅಂತಹ ಜಾರುದಾರಿಯಲ್ಲಿ ನಡೆದಾಗ ಸ್ವಭಾವಕ್ಷಯಕ್ಕೆ ತುತ್ತಾಗುವ ಅಪಾಯವಿದೆ. ಅಂತಹ ಭಾವವಸ್ತುಗಳು ನಿರ್ವಹಿಸುವಂತಹ ಯಾವುದೇ ವೃತ್ತಿಗೂ ಕಳಂಕ ತಪ್ಪದು. ಆಯಾ ವೃತ್ತಿಗೆ ಆಯಾ ಮನೋಭಾವದವರನ್ನು ಆಯ್ಕೆ ಮಾಡಿಕೊಂಡಾಗ ಮಾತ್ರ ಯಾವುದೇ ವೃತ್ತಿಗೆ ಪೂರ್ಣ ಮರ್ಯಾದೆ ಲಭಿಸೀತು. ಯಾರೂ ಏನೂ ಆಗಬಹುದು ಎಂಬಂತಹ ಧಾರ್ಷ್ಟ್ಯವನ್ನು ಭೂಮಿಯ ನ್ಯಾಯವೂ ಒಪ್ಪುವಂತಿಲ್ಲ. ಮರ್ಯಾದೆ ಎಂಬುದರ ಸಭ್ಯಸೂತ್ರವಿದು.

ಮರ್ಯಾದೆ ಮತ್ತು ನಿರ್ಭಯತೆಗಳು ಜೊತೆಯಾಗಿ ಪಯಣಿಸುವ ಸಹಯಾತ್ರಿಗಳು. ನಿರ್ಭಯತ್ವ ಎಂದರೆ ಹೊತ್ತಲ್ಲದ ಹೊತ್ತಿನಲ್ಲಿ ಪೇಟೆ ಸುತ್ತುವುದೆಂಬ ಅರ್ಥವಲ್ಲ. ಹಾಗೆ ಅಂದುಕೊಂಡರೆ ಅದು ಮರ್ಯಾದೆಯಿಲ್ಲದ ಮೂರ್ಖತನವೆಂದೇ ಅರ್ಥ. ಆದ್ದರಿಂದ ಯಾವುದೇ ಬಿಂದಾಸ್ ಬದುಕಿನಲ್ಲಿ ನಿರ್ಭಯತೆ ಇರುವುದಿಲ್ಲ: ಬೆಚ್ಚಿ ಬೀಳುತ್ತಿರುವುದೇ ಅವರ ಬದುಕಾಗುತ್ತದೆ. ನಿರ್ಭಯತೆಯ ಸ್ವಭಾವ ಮೌಲ್ಯಗಳನ್ನು ಕುಂಟಿಕೋಣಗಳಾದ ಮೇಲೆ ರೂಢಿಸಿಕೊಳ್ಳುವುದೂ ಕಷ್ಟ. ನಿರ್ಭಯತೆಗೆ ಬೀಜಾರ್ಪಣವಾಗುವ ಕಾಲ - ಬಾಲ್ಯಕಾಲ. ತಪ್ಪು ಮಾಡಿ ಅಮ್ಮನಿಗೆ ಬೆದರುವ ಮಗುವಿನಲ್ಲಿ ಸಾತ್ವಿಕ ನಿರ್ಭಯತೆಯ ಓನಾಮವಾಗುತ್ತದೆ. ಅಂತಹ ಮುಗ್ಧ ಭಯದಲ್ಲಿಯೇ ನಿರ್ಭಯದ ಬೀಜವಿರುತ್ತದೆ ! ಮುಗ್ಧ ಬಾಲ್ಯವೇ - ಮರ್ಯಾದೆ ಮತ್ತು ನಿರ್ಭಯತೆಗಳಿಗೆ ಭದ್ರ ಪಂಚಾಂಗವನ್ನು ನಿರ್ಮಿಸಿಕೊಳ್ಳುವ ಅಥವ ಶಿಷ್ಟ ನಿರ್ಭಯತೆಯು ಮೊಳಕೆಯೊಡೆಯುವ ಸುಂದರ ಕಾಲ. ಬಾಲ್ಯ ಕೆಟ್ಟರೆ ಬದುಕು ಕೆಟ್ಟಂತೆ. ಅದೇ ಇಂದಿನ ಸಮಸ್ಯೆ.

ಪುರಾಣದತ್ತ ನೋಡಿದರೆ ವೀರಾಗ್ರೇಸರ ಮಾರುತಿಯ ವರ್ತನೆಯಲ್ಲಿ - ಅಪೂರ್ವ ಎನ್ನಿಸುವ - ಶಿಷ್ಟ ನಿರ್ಭಯತ್ವವು ಕಾಣುತ್ತದೆ. ಸಮುದ್ರೋಲ್ಲಂಘನಗೈಯ್ಯುವಾಗ, ಲಂಕಾದಹನದ ಸಂದರ್ಭ, ಸಂಜೀವಿನೀ ಪರ್ವತವನ್ನು ಹೊತ್ತು ತರುವಾಗ, ನವಗ್ರಹಗಳನ್ನು ರಾವಣಶಕ್ತಿಯಿಂದ ಬಂಧಮುಕ್ತಗೊಳಿಸುವಾಗ ವೀರ ಹನುಮನಲ್ಲಿದ್ದ ರಾಮಭಾವಸಮೃದ್ಧಿಯಲ್ಲಿ - ವಿಶ್ವಾಸಪೂರ್ಣ ಶುದ್ಧ ನಿರ್ಭಯತ್ವವು ಕಾಣುತ್ತದೆ ! ಆದರೆ ಹನುಮನ ಗುಣವಿಶೇಷಗಳನ್ನು ಅವಗಣಿಸುವ ಇಂದಿನ ಜೀವನ ಶೈಲಿಗಳು ತಮ್ಮ ಸ್ವಯಂಕೃತ ಭಯವನ್ನು ಪರಿಹರಿಸುವಂತೆ ಅವನಿಗೆ ಹರಕೆಹೊತ್ತು, ಹನುಮನ ಪಾದಕ್ಕೆ ತೆಂಗಿನ ಕಾಯನ್ನು ಕುಟ್ಟಿ ಕುಟ್ಟಿ ಒಡೆಯುತ್ತಿದ್ದರೆ ನಿರ್ಭಯತೆ ಎಂಬುದು ಸಾಧಿಸೀತೆ ?

ನಿರ್ಭಯತ್ವವು ಬಾಹ್ಯ ಆಚರಣೆಗಳಿಗೆ ಒಲಿಯುವಂತಹುದಲ್ಲ. ಮನುಷ್ಯ ಎಂದುಕೊಳ್ಳುವವರ - ಒಡೆಯುವ ತಟ್ಟುವ ಊದುವ ಮಂಗಾಟಗಳಿಂದ ಹನುಮನಿಗೆ ಒಮ್ಮೊಮ್ಮೆ ದುಃಖ - ಮತ್ತೊಮ್ಮೆ ಮನರಂಜನೆಯಾದೀತು ! ಅಷ್ಟೆ. ವೀರವಿಜಯದ ಭಾಸವಾಗುವ ನಿಜವಾದ ವೀರತ್ವಕ್ಕೆ - ವಿನೀತ ಕರ್ತವ್ಯಪರತೆ ಮತ್ತು ಅಹಂಕಾರನಿಗ್ರಹವು ತೀರ ಅವಶ್ಯ. ಆದ್ದರಿಂದ ಅಧೀಶರಾಗಲೀ ಸುದೀಶರಾಗಲೀ ವ್ಯಾಧೀಶರಾಗಲೀ ತಮ್ಮ ಉಪಾಧಿಯ ಹೆಸರಿನ ಬಲದಿಂದಲೇ ಎಲ್ಲವನ್ನೂ ಗಳಿಸಲು ಆಗುವುದಿಲ್ಲ. ಸೌಜನ್ಯದ ಮೂಲಕ "ಮೊದಲು ಮಾನವ"ರಾದರೆ - ಅನಂತರ ಕರ್ತವ್ಯ ಭಾಗವೂ ಸುಗಮವಾದೀತು. ಯಾವುದೇ ಸತ್ಕಾರ್ಯವನ್ನು ಗೌರವವೇ ಹುಡುಕಿಕೊಂಡು ಬರುತ್ತದೆ.

ಆದರೆ ಸತ್ಕಾರ್ಯದ ಇಚ್ಛೆ ಮೂಡಿಸಿಕೊಳ್ಳದ ರಾವಣ ಮನಸ್ಸುಗಳು ಯಾವತ್ತೂ ಸ್ವನಿರೀಕ್ಷಣೆಗೆ ಇಚ್ಛಿಸುವುದಿಲ್ಲ. ಅವುಗಳು ಅಂಡಾಡಿಸುತ್ತ - ಯಾರ್ಯಾರಿಗೋ ORDER ಮಾಡುತ್ತ - ಕೆಲವೊಮ್ಮೆ ಅನಾವಶ್ಯಕವಾಗಿ ಮುಗ್ಧರನ್ನು ನೋಯಿಸುವುದರಲ್ಲಿಯೇ ಸುಖ ಕಾಣುತ್ತಿರುತ್ತವೆ. ಆದರೆ ಆಂತರ್ಯದಲ್ಲಿ ಇಂತಹ "ಅಹಂಕಾರೀ ಅಂಡಾಡಿ"ಗಳಷ್ಟು ಭಯಗ್ರಸ್ತರು ಇನ್ನ್ಯಾರೂ ಇರುವುದಿಲ್ಲ. ತಮ್ಮ ಪ್ರತಿಬಿಂಬಕ್ಕೇ ಹೆದರುವ ಪೈಕಿಯ ಜನರಿವರು. ಏಕೆಂದರೆ ಇಂತಹ ಜನರು ಸಾಗಿಸಿದ ಕ್ರೂರ ಬದುಕೇ ಅವರನ್ನು ಬೆನ್ನ ಹಿಂದಿನಿಂದ ಹೆದರಿಸುತ್ತಿರುತ್ತದೆ. ನಿರಪರಾಧಿಗಳನ್ನು ನೋಯಿಸಿದ ಬದುಕುಗಳು ಭಯಮುಕ್ತವಾಗುವುದು ಅಸಂಭವ. ಸ್ವಚ್ಛ ಬದುಕಿನ ಉಪದೇಶಕರೊಂದಿಗೆ ಅವರ ಉಪದೇಶಗಳನ್ನೂ ಹೀಗಳೆಯುವ ಸಮಸ್ತ ಜನಸಮೂಹವನ್ನು - ಭಯವೇ ಆಡಿಸುತ್ತಿರುತ್ತದೆ; ಭಯವೇ ಊದಿ ಉರುಳಿಸುತ್ತಿರುತ್ತದೆ. ಭಯಮೂಲ ಅಶಾಂತಿಗ್ರಸ್ತ ಸಂತತಿಯಿದು. ಸದ್ಯದ ನೋಟಿನ ಪ್ರವಾಹದಲ್ಲಿ ತೇಲಿಹೋಗುತ್ತ ಹುಚ್ಚು ಹೇಳಿಕೆಗಳನ್ನು ನೀಡುತ್ತಿರುವವರ ಬದುಕೇ ಇದಕ್ಕೆ ಸಾಕ್ಷಿ. ಹುಚ್ಚು ಮಾತುಗಳನ್ನಾಡಿಸುವುದೂ ಭಯಮೂಲ ಅಶಾಂತಿಯೇ. ಸ್ವಾರ್ಥ ಸಾಧನೆಯ ಹುಚ್ಚಿನಲ್ಲಿ ಯಾರ್ಯಾರದೋ ತಲೆಯೊಡೆದ ತಮ್ಮ ಕುಕೃತ್ಯಗಳ ಮೂಲಕ ತಾವಾಗಿಯೇ ಬಹಿರಂಗ ಮತ್ತು ಅಂತರಂಗಗಳೆರಡನ್ನೂ ಭಯದ ಉಗ್ರಾಣವನ್ನಾಗಿಸಿಕೊಂಡವರ ದುಃಸ್ಥಿತಿಗೆ ಎಷ್ಟೇ ದೃಷ್ಟಾಂತಗಳಿದ್ದರೂ ಉಲ್ಬಣಾವಸ್ಥೆಯ ಕೆಲವು ರೋಗಗಳು ತಿದ್ದಿಕೊಳ್ಳುವುದಿಲ್ಲ; ಗುಣವಾಗುವುದೂ ಇಲ್ಲ. ಆದರೆ ಆರ್ಜಿತ ಕುಕರ್ಮಗಳು ಸರ್ವನಾಶ ಮಾಡದೆ ಹೊರಡುವುದಿಲ್ಲವಲ್ಲ ?

ಪುರಾಣಗರ್ಭದಲ್ಲಿರುವ ನವಗ್ರಹಗಳ ಪ್ರಭುತ್ವದ ಜ್ಯೋತಿಷಶಾಸ್ತ್ರದಲ್ಲಿ - "ಶನಿ ಗ್ರಹವು" ನ್ಯಾಯಾಧೀಶನ ಪಾತ್ರವನ್ನು ನಿರ್ವಹಿಸುತ್ತದೆ. ಸಕಲಗ್ರಹಗಳ ಬಲವು ಸರಸಿಜಾಕ್ಷನೇ ಆದರೂ - ಕರ್ಮಫಲದ ದಿಕ್ಕು ತಪ್ಪಿಸಲಾಗದ - ಬಲಿಷ್ಠ ನವಗ್ರಹಗಳೆಂಬ ಅಂದಿನ ಸರಕಾರೀ ವ್ಯವಸ್ಥೆಯ ಸುವ್ಯವಸ್ಥಿತ ಸಂವಿಧಾನವದು. ಗ್ರಹ ಪ್ರೀತ್ಯರ್ಥವಾಗಿ ಯಾವುದೇ ಜೀವಿಗಳು ನಡೆಸುವ ಹೋಮಹವನಗಳಿಂದ ಪ್ರಭಾವಿತವಾಗಿ ಪಥಭ್ರಷ್ಟವಾಗದಂತಹ ಕರ್ತವ್ಯಪರತೆಯ ನಿದರ್ಶನವದು. ಹೋಮಹವನಗಳೆಲ್ಲವೂ ಪರೋಕ್ಷವಾಗಿ ಮಾನಸಿಕ ಚಿಕಿತ್ಸೆಗಳೇ ಆಗಿವೆ. ಆದ್ದರಿಂದಲೇ - ಸಲ್ಲದ ಕೆಲಸಗಳನ್ನು ಮಾಡದಂತೆ - ಜೀವಿಗಳನ್ನು ಆತ್ಮನಿರೀಕ್ಷಣೆಗೆ ಪ್ರಚೋದಿಸಬಲ್ಲ ದಂಡಶಕ್ತಿಯಾಗಿ ಇಂದಿಗೂ ಮನ್ನಣೆಯನ್ನು ಉಳಿಸಿಕೊಂಡಿದೆ. ತುಪ್ಪದ ಆಸೆಗೆ ಬಲಿಯಾಗದೆ ತಲೆಯೆತ್ತಿ ಕರ್ತವ್ಯಬದ್ಧತೆ ಮೆರೆಯುವ ಗ್ರಹವೈಖರಿಯ ಮಾದರಿಯೇ - ನ್ಯಾಯಪರಿಪಾಲನೆಯ ಶುದ್ಧ ಶೈಲಿ; ಯಾವುದೇ ಲೋಕನಿಂದೆಗೆ ಬೆದರದೆ - ಸಹಜ ಶಿಸ್ತಿನಿಂದ ಕಾರ್ಯೋನ್ಮುಖವಾಗುವ ಪರಿಯಿದು; ನ್ಯಾಯಾಸ್ಥಾನವು "ತಂ ನಮಾಮಿ" ಗೌರವವನ್ನು ಪಡೆಯಬಹುದಾದ ಧೀಮಂತ ರೀತಿಯಿದು. ಸ್ವಾರ್ಥವಿಲ್ಲದ ನಿಷ್ಠೆಯ ಶಿಸ್ತಿಗೆ ಒಳಪಟ್ಟಾಗ ಮಾತ್ರ - ನ್ಯಾಯದ ಅರಿವು ಜಾಗ್ರತವಾಗಿ - ಬದುಕಿನಲ್ಲಿ ಸಜ್ಜನಿಕೆಯು ಒಡಮೂಡೀತು.   

ಕರ್ತವ್ಯ ನಿಷ್ಠರಾಗುವುದು ಮತ್ತು ತಮಗೆ ಎದುರಾಗುವ ಯಾವುದೇ ಆಕಸ್ಮಿಕಗಳನ್ನು ನಿಭಾಯಿಸಿ ಜೀರ್ಣಿಸಿಕೊಳ್ಳುವ ಸತ್ವ ಇರುವುದು - ಅರಿವಿನ ಸಾಕ್ಷಿಯು ಜಾಗ್ರತವಾಗಿರುವಲ್ಲಿ ಮಾತ್ರ. ವಸ್ತುವಿಗಾಗಿ ಹೋರಾಡದೆ ಸಿದ್ಧಾಂತಕ್ಕಾಗಿ ಹೋರಾಡುವ ಮನಸ್ಸುಗಳು ಎಂದಿಗೂ ಸೋಲುವುದಿಲ್ಲ. ಬಲವಾದ ಹೋರಾಟವು ಕೂಡ - ಸಿಡಿದು ನಿಲ್ಲುವ ಮೃದು ಸ್ವಭಾವಕ್ಕೆ ಮಾತ್ರ ಸಾಧ್ಯ. ಇದೇ ಪ್ರಕೃತಿಯ ವಿರೋಧಾಭಾಸ ಮತ್ತು ವೈಶಿಷ್ಟ್ಯ. ಆದ್ದರಿಂದಲೇ ಭಯಮುಕ್ತರಾಗಲು ಅಂತಃಕರಣವನ್ನು ಮೃದುವಾಗಿಸಿಕೊಳ್ಳುವ ಸಾತ್ವಿಕ ಸಾಧನೆಗಳು ನಡೆಯುತ್ತಲೇ ಇರಬೇಕು. ಪ್ರತೀದಿನವೂ ಮನೆಯನ್ನು ಗುಡಿಸಿ ಒರೆಸಿ ಸ್ವಚ್ಛಗೊಳಿಸುವಂತೆ, ಪ್ರತೀದಿನವೂ ಆತ್ಮನಿರೀಕ್ಷಣೆ ನಡೆಸುವುದು ಇಂತಹ ಸಾಧನೆಯ ಮೊದಲ ಹೆಜ್ಜೆ. ಆತ್ಮನಿರೀಕ್ಷಣೆಗೆ ಅಳುಕದ ಸಾಧಕರು ಬದುಕಿಗೂ ಹೆದರುವುದಿಲ್ಲ. ಅವರಿಗೆ ಬದುಕನ್ನು ಚೊಕ್ಕಟವಾಗಿ ಬದುಕುವುದು ಸುಲಭ ಸಾಧ್ಯವಾಗುತ್ತದೆ.

ಹುಚ್ಚು ಮನಸ್ಸಿನ ಬಯಕೆಗಳೆಲ್ಲವೂ ಸಿದ್ಧಿಸುವುದಿಲ್ಲ; ಎಂದೆಂದಿಗೂ ತಳಮಳಿಸುತ್ತಿರುವ ಕೊಡವದು. ಕಾಗೆ ಗುಬ್ಬಿಗಳೇಕೆ ? ಸಿಂಹಗಳೂ - ಬಯಸಿದ್ದೆಲ್ಲವೂ ಸಿಗುವುದಿಲ್ಲ. ನ್ಯಾಯವೂ ಅದಕ್ಕೆ ಹೊರತಲ್ಲ. ಏಕೆಂದರೆ ಬಯಕೆಗಳೆಲ್ಲವೂ ಬಾಹ್ಯ ನಿರೀಕ್ಷೆ ಅಪೇಕ್ಷೆ ಮುಂತಾದ ಹೊರ ಕೇಂದ್ರದಲ್ಲಿ ಸುಳಿದಾಡುವ ವಸ್ತುಗಳಾದುದರಿಂದ ಅವುಗಳ ಪರಿಣಾಮವು ಪರಿಸರದ ವಾಸ್ತವದಂತೆಯೇ ಇರುತ್ತದೆ ಮತ್ತು ನಿರಾಶೆಯಲ್ಲಿಯೇ ಪರಿಸಮಾಪ್ತಿಯಾಗುವುದು ಬಹುತೇಕ ಸಾಮಾನ್ಯ. ಆದರೆ ನಮ್ಮೊಳಗೇ ಇರುವ ಭಕ್ತಿ ಪ್ರೇಮ ಕರುಣೆ ಶ್ರದ್ಧೆ ಪ್ರಾಮಾಣಿಕತೆ ಮುಂತಾದ ಸ್ವಭಾವಜನ್ಯ ಮೌಲ್ಯಗಳನ್ನು ಮನಸೋ ಇಚ್ಛೆ ಸದ್ವಿನಿಯೋಗಿಸುವ ಶಕ್ತಿಯು ಮನುಷ್ಯರಿಗಿದೆ; ಅದರಿಂದಲೇ ನಮ್ಮ ಬಯಕೆಯ ದಿಕ್ಕನ್ನೂ ಬದಲಿಸಿಕೊಳ್ಳಬಹುದು. ನಿರಾಸೆಗೆ ತಳ್ಳದ ಸ್ವಾಂತರಂಗದತ್ತ ಚಿಂತನೆಯನ್ನು ತಿರುಗಿಸಿಕೊಳ್ಳುವುದೇ ಗೊಂದಲಗಳಿಂದ ಶಾಶ್ವತವಾಗಿ ಬಿಡುಗಡೆ ಪಡೆಯಬಹುದಾದ ಮಾರ್ಗ. ಇಂತಹ ಸಾಧನೆಯಲ್ಲಿ ತೊಡಗಿಕೊಂಡಾಗ ಮನುಷ್ಯರ ಚಿಂತನೆ ಮತ್ತು ಕರ್ಮಗಳಲ್ಲಿ ಸ್ಪಷ್ಟತೆ, ದೃಢತೆ ಮೂಡುವುದು ಸಾಧ್ಯ.  

ಈ ಬದುಕಿನಲ್ಲಿ ತನ್ನದು ಎಂದುಕೊಳ್ಳದ ಮತ್ತು ತನ್ನದು ಎಂದುಕೊಳ್ಳುವ ಎಲ್ಲ ದೃಷ್ಟಗಳೂ - ಅದೃಷ್ಟವೇ . ರಥಿಕನು ನಮ್ಮೊಳಗೇ ಇದ್ದಾನೆ ಎಂಬ ವಿಶ್ವಾಸದೊಂದಿಗೆ ಶುದ್ಧಾಂತಃಕರಣದಿಂದ ಅನುಭಾವಿಸಬಲ್ಲವರಿಗೆ ಎಲ್ಲವೂ ಅದೃಷ್ಟದಂತೆಯೇ ಕಾಣತೊಡಗುತ್ತದೆ. ಅದೇ ಸುಖ. ಆಗ ಭಯವೇ ಇರುವುದಿಲ್ಲ. ಭಯವಿಲ್ಲದ ಬದುಕು ಮಾತ್ರ ನೆಮ್ಮದಿಯಿಂದ ಸಾಗಬಲ್ಲದು; ಮರುಳು ಕನಸುಗಳು ಪೀಡಿಸಲಾರವು...

ಭಯದೊಂದಿಗೆ ಪಾಣಿಗ್ರಹಣ ಮಾಡಿಕೊಂಡಿರುವ ವಿದ್ಯೆಯೇ  - ಚೋರವಿದ್ಯೆ. ತನಗೂ ಸುಖವಿಲ್ಲದ ಮತ್ತು ಯಾರಿಗೂ ಸುಖ ಕೊಡದ "ಚುಪ್ಕೇ ಚುಪ್ಕೇ" ದಾಂಪತ್ಯವದು. ಅಂದಿನಿಂದಲೂ - ಅತ್ಯಂತ ಪ್ರಾಚೀನವಾದ ಚೋರವಿದ್ಯೆಯ ಬೆನ್ನಿನ ಹಿಂದಿನಿಂದಲೇ ನ್ಯಾಯದಂಡವು ಓಡುತ್ತ ಬಂದಿದೆ. ಆದ್ದರಿಂದ ಚೋರತನವೇ ಸೃಷ್ಟಿಯ ದಿಕ್ಕುದೆಸೆಗಳನ್ನು ನಿರ್ಧರಿಸುವಂತಾಗಿದೆ !

ಈ ಭೂಮಿಯಲ್ಲಿ ಅಪರೂಪಕ್ಕೊಮ್ಮೆ - ನ್ಯಾಯವೂ ಗೆಲ್ಲುತ್ತದೆ ! ಆಗ -  "ಆಕಸ್ಮಿಕ ಮಧುರ ಅವಘಡ"ದ ಭಾವ ಮೂಡಿಸಿ ಖುಶಿ ಕೊಡುತ್ತದೆ !

ನ್ಯಾಯ ಎಂಬುದು ಪ್ರತಿಯೊಂದು ಬದುಕಿನ ಬಂಡಿಯನ್ನು ದಡ ಸೇರಿಸಬಲ್ಲ ಸುರಕ್ಷಿತ ನಾವೆ. ಯಾವುದೇ ನಾವೆ ಸುರಕ್ಷಿತವಾಗಿದ್ದರೆ ಮಾತ್ರ ಪ್ರಯಾಣಿಕರು ಸುರಕ್ಷಿತ. ಆದ್ದರಿಂದ ನ್ಯಾಯದ ನಾವೆಯಲ್ಲಿ ರಂಧ್ರಗಳಿರಲೇಬಾರದು; ಆಗಾಗ ಅವಲೋಕಿಸಿ ದುರಸ್ತಿ ನಡೆಸುತ್ತ - ನಾವೆಯ ಯೋಗಕ್ಷೇಮವನ್ನು ದೃಢಪಡಿಸಿಕೊಳ್ಳುತ್ತಿರಬೇಕು.

ಭೂಮಿಯ ನ್ಯಾಯಪಾಲನೆಯು ತೃಪ್ತಿಕರವಾಗಿದ್ದರೆ - ಜೀವವೈವಿಧ್ಯಗಳು ನಿರ್ಭಯದಿಂದ ಬದುಕುವ ಅವಕಾಶವಿರುತ್ತದೆ; ಹಿರಿಕಿರಿಮರಿಗಳೆಲ್ಲವೂ ಸಹಬಾಳ್ವೆ ನಡೆಸುವಂತಾಗುತ್ತದೆ. "ನ್ಯಾಯವಾದ ಬದುಕು" ಸಾಗಿಸುವುದೂ ಸುಲಭವಾಗುತ್ತದೆ.

2017 - ಹೊಸವರ್ಷವು "ಎಲ್ಲರೂ ಬದುಕುವಂತಹ ಸುಭಿಕ್ಷ ವ್ಯವಸ್ಥೆ" ಗೆ ಸಾಕ್ಷಿಯಾಗಲಿ.

ಹೊಸ ವರ್ಷದ ಶುಭಾಶಯ.    

                                                     *****-----*****-----*****


Thursday, December 15, 2016

ಶ್ರೀ ರಾಮಕೃಷ್ಣ ಭಾವಮಂಜರಿ - 4

ಶ್ರೀ ರಾಮಕೃಷ್ಣ ಪ್ರಪಂಚವನ್ನು ಸುತ್ತುವುದೇ ಒಂದು ರೋಮಾಂಚಕ ಅನುಭವ. ಈ ದಿವ್ಯಪ್ರಪಂಚವನ್ನು ಇದುವರೆಗೆ ಕೋಟ್ಯಾಂತರ ಮಂದಿ ಸುತ್ತಿ ಮುಗಿದಿದೆ; ನಿತ್ಯೋತ್ಸವದಂತೆ ಇಂದಿಗೂ ಸುತ್ತುತ್ತಲೇ ಇದ್ದಾರೆ. ದಿನನಿತ್ಯದ ಬರಹ ಉಪನ್ಯಾಸ ಸಂಭಾಷಣೆ ಮತ್ತು ಬದುಕಿನ ಜೀವಪ್ರಜ್ಞೆಯಲ್ಲಿ ಅವರು ಸರ್ವದಾ ನಮ್ಮೊಂದಿಗೇ ಬದುಕಿದ್ದಾರೆ. ಶ್ರೀ ರಾಮಕೃಷ್ಣ ಚಿಂತನೆಗಳಿಂದ ಸ್ಫೂರ್ತಿ ಪಡೆಯದ ಯಾವುದೇ ಚಿಂತಕರಿಲ್ಲ. ಏಕೆಂದರೆ ಅದೊಂದು ಚುಂಬಕ ಶಕ್ತಿ ! ಪೂರ್ತಿ ಮುಳುಗೇಳುವಂತೆ ಸೆಳೆಯಬಲ್ಲ ಅವ್ಯಕ್ತ ಅನುಭವ ಮಾತ್ರವಲ್ಲ; ನಿತ್ಯಾನುಭೂತಿಯನ್ನು ಪುಷ್ಟಿಗೊಳಿಸುವ ದಿವ್ಯೌಷಧವೂ ಆಗಿಹೋಗಿದೆ. ಶ್ರೀ ರಾಮಕೃಷ್ಣ ತತ್ವದ ವ್ಯಾಪ್ತಿಯೇ ಅಂತಹುದು. ಅದು ಅನಂತ; ಅಗಾಧ ! ಜೀವ ಜಗತ್ತಿನ ಯಾವುದೇ ಕಠಿಣ ಸವಾಲುಗಳೂ ಶ್ರೀ ರಾಮಕೃಷ್ಣ ಸನ್ನಿಧಿಯಲ್ಲಿ ಸರಳವಾಗುವುದೇ - ರಾಮಕೃಷ್ಣ ಭಾವದಲ್ಲಿರುವ ವ್ರಜಮೋಡಿ. ಶ್ರೀ ರಾಮಕೃಷ್ಣರ ಬದುಕಿನಂತೆಯೇ - ಅವರು ಕಂಡು ಉದಾಹರಿಸಿದ ಸಾದೃಶ್ಯಗಳೂ ಮೋಡಿ ಹಾಕುವಂತಿವೆ. ಶ್ರೀ ರಾಮಕೃಷ್ಣರು ಸ್ಪರ್ಶಿಸಿದ ದೃಷ್ಟಾಂತಗಳನ್ನಷ್ಟೇ ಅನುಭಾವಿಸಿದರೂ ಸಾಕು; ರಾಮಕೃಷ್ಣ ಭಾವದ ವಿರಾಟ್ ದರ್ಶನವಾಗುತ್ತದೆ; ಬದುಕು ಅರಳುತ್ತದೆ..

ಶ್ರೀ ರಾಮಕೃಷ್ಣರನ್ನು ಕುರಿತು ಅಕ್ಷರ ಜೋಡಿಸುವುದೆಂದರೆ ಅದೊಂದು ಪ್ರಯಾಸದ ಕೆಲಸ ಎಂಬುದು - ಎಲ್ಲರಂತೆ ನನ್ನ ಅರಿವಿಗೂ ಬಂದಿದೆ. ಏಕೆಂದರೆ ಶ್ರೀ ರಾಮಕೃಷ್ಣ ಪರಮಹಂಸರು ಸ್ಪರ್ಶಿಸದ ಲೋಕವಾಗಲೀ ಅಲೋಕವಾಗಲೀ ಕಾಣುವುದಿಲ್ಲ. ಅವರ ಚಿಂತನೆಯ ವೈಶಾಲ್ಯದಲ್ಲಿ ಸುಳಿದಾಡದ ವಸ್ತು ವಿಚಾರಗಳಿಲ್ಲ. ಶ್ರೀ ರಾಮಕೃಷ್ಣ ಎಂಬ ಪೂರ್ಣಭಾವದಲ್ಲಿ ಯಾವುದೇ ಅಭಾವದ ಸೋಂಕೇ ಇಲ್ಲ. ಹೊಸದಾಗಿ ಭಾವಬಾಂಧವ್ಯ ಬಯಸುವವರಿಗೆ ಕಣ್ಣಿಗೊತ್ತಿಕೊಳ್ಳಲು ಸಿಗುವುದು ಪೂಜಿಸಿ ಉಳಿದ  ನೈರ್ಮಾಲ್ಯ ಮಾತ್ರ. ಆದ್ದರಿಂದಲೇ ನಮ್ಮ ರಾಮಾಯಣ ಮಹಾಭಾರತಗಳಂತೆ - ರಾಮಕೃಷ್ಣ ಭಾವದ ಪುನರ್ನಿರ್ಮಾಣವು ಕಠಿಣವೆನ್ನಿಸುತ್ತಲೇ ನಾವೀನ್ಯವನ್ನೂ ಸೃಷ್ಟಿಸಬಲ್ಲದು ! ಆದ್ದರಿಂದಲೇ - "ಇನ್ನು ಹೊಸದಾಗಿ ಹೇಳುವುದು ಏನೂ ಇಲ್ಲವೇ ಇಲ್ಲ" ಎಂಬಷ್ಟು ರಾಮಕೃಷ್ಣ ಸ್ಮರಣೆಯು ಈಗಾಗಲೇ ನಡೆದು ಹೋಗಿದ್ದರೂ ಹೊಸತಿನ ಅನ್ವೇಷಣೆಗೆ ನಿರಂತರ ಪ್ರೇರಣೆಯನ್ನು ನೀಡುತ್ತ ಇಂದಿಗೂ ಹೊಸ ಹೊಳಹು ಹೊಮ್ಮುತ್ತಿರುವುದು - ಶ್ರೀ ರಾಮಕೃಷ್ಣ ಭಾವಸತ್ವದ ಹಿರಿಮೆಯ ದ್ಯೋತಕ. ಹೊಸ ಸಾಮಾಜಿಕರ ದೃಷ್ಟಿ, ಭಾಷೆ ಮತ್ತು ಪರಿವರ್ತಿತ ದೇಶಕಾಲದ ವಿಚಾರಸ್ಪರ್ಷದ ವೈಖರಿಯಲ್ಲಿ ಮಾತ್ರವೇ ಹೊಸದೇನನ್ನಾದರೂ ಕಾಣಬಹುದು - ಎಂಬ ಭಾವಸಂಯಮವನ್ನೂ ಹುಟ್ಟಿಸಬಲ್ಲ ಶಕ್ತಿಯು "ಶ್ರೀ ರಾಮಕೃಷ್ಣ ಅಧ್ಯಾತ್ಮ"ಕ್ಕಿದೆ ! ಹೀಗಿದ್ದೂ...  ಯಾವುದೇ ಚೌಕಟ್ಟಿನಲ್ಲಿಟ್ಟರೂ ಒಂದೋ ಅದು ಶ್ರೀ ರಾಮಕೃಷ್ಣರ ನೋಟದ ಪುನರ್ದೃಷ್ಟಿಯಾಗುತ್ತದೆ ಅಥವ ಅವರು ನೀಡಿದ ದೃಷ್ಟಾಂತಗಳ ಪುನರ್ನಿರ್ಮಾಣವಾಗುವ ಸಂಭಾವ್ಯದಿಂದ ತಪ್ಪಿಸಿಕೊಳ್ಳಲಾಗುವುದಿಲ್ಲ. ಇದೇ - ಪೂರ್ಣತೆಯ ಚಮತ್ಕಾರ ! ಯಾವುದೇ ಪೂರ್ಣತೆಯು ಕೆತ್ತಲು ಸಿಗದು; ಜೋಡಿಸಲೂ ಆಗದು ! ಭಾಗ ವಿಭಾಗಗಳಿಲ್ಲದ ಪರಿಪೂರ್ಣತೆಯ ಸೊಗಸಿನ - ಸ್ವಭಾವ ರಹಸ್ಯವಿದು !

ಜೀವ ಜೀವನದ ಮಹಾಮಥನಗೈದ ಶ್ರೀ ರಾಮಕೃಷ್ಣ, ಮಾತೆ ಶಾರದಾದೇವಿ ಮತ್ತು ಸ್ವಾಮಿ ವಿವೇಕಾನಂದರೆಂಬ ಗುರುತ್ರಯರ ಬದುಕುಗಳು ಮತ್ತು ಅವರ ಉಪದೇಶಗಳ ಮಹಾಸಾಗರದಲ್ಲಿ ಮುಳುಗಿ ಎದ್ದವರು - ಶಾಂತಿ ನೆಮ್ಮದಿಗಾಗಿ ಅಂಡಲೆಯುವ ತುರ್ತಿನಿಂದ ಬಿಡುಗಡೆಗೊಳ್ಳುತ್ತಲೇ ಬಂದಿದ್ದಾರೆ; ದಿಕ್ಕೆಟ್ಟ ಹುಡುಕಾಟವು ಕೊನೆಯಾಗಿ ಜೀವಿಗಳ ನಡಿಗೆಗೆ ದಿಕ್ಕು ದೊರೆತಿದೆ; ಬದುಕುಗಳಿಗೆ ಒಳನೋಟವು ಸಾಧ್ಯವಾಗಿದೆ. ಅತ್ಯಂತ ಸಾಮಾನ್ಯ ಬದುಕುಗಳಿಂದ ಹಿಡಿದು ಆಧ್ಯಾತ್ಮಿಕ ಮಹಾಸಾಧಕರ ವರೆಗೆ ಎಲ್ಲರಿಗೂ ಶ್ರೀ ರಾಮಕೃಷ್ಣ ವಿಚಾರಸನ್ನಿಧಿಯಲ್ಲಿ ದಡ ಸೇರಿಸಬಲ್ಲ ತೋರುಬೆಳಕು ಗೋಚರಿಸುತ್ತದೆ. ಅಧ್ಯಾತ್ಮವು ಪರಿತ್ಯಾಗೀ ಸನ್ಯಾಸಿಗಳಿಗೆ ಮಾತ್ರವಲ್ಲ - ಅಧ್ಯಾತ್ಮವು ಪ್ರತಿಯೊಂದು ಬದುಕಿನ ಅನಿವಾರ್ಯ ಜೀವಜಲ ಎಂಬ ಸತ್ಯವು - ಶ್ರೀ ರಾಮಕೃಷ್ಣ ವಚನವೇದದ ಸುಭಗ ಅಂತರಂಗದಲ್ಲಿ ವಿಧೇಯವಾಗಿ ಅನಾವರಣಗೊಳ್ಳುತ್ತದೆ !

ಶ್ರೀ ರಾಮಕೃಷ್ಣರು ಪೂರ್ಣತೆಯ ಶುದ್ಧ ಪ್ರತಿನಿಧಿಯಾದರೆ ಮಾತೆ ಶಾರದಾದೇವಿಯವರು ಭಕ್ತಿ, ಕರುಣೆ, ಸರಳತೆ ಮತ್ತು ಅನುಕರಣೀಯ ಸೌಮ್ಯತೆಯ ಪ್ರತಿನಿಧಿಯಾಗಿ - ಪೂರ್ಣತೆಯ ತೃಪ್ತಮಾರ್ಗವನ್ನು ತಾವೇ ಬದುಕಿ ತೋರಿ, ಸ್ತ್ರೀತ್ವದ ಸಾತ್ವಿಕ  ಪ್ರತಿನಿಧಿಯಾಗಿಯೂ ಅನಾವರಣಗೊಂಡಿದ್ದರು. ಅಧ್ಯಾತ್ಮದ ಅಮೃತವನ್ನು ತಾವೂ ಸವಿದು ಇತರರಿಗೂ ಹಂಚಿದ್ದ ಮಾತೆ  ಶಾರದಾದೇವಿಯವರು - ಲೌಕಿಕ ಮಾಯೆಯ ಸಾಮಾನ್ಯ ಪ್ರತಿನಿಧಿಯಂತೆ ದೂರುವ ಹೆಂಡತಿಯಾಗದೆ, ತಮಗೆ ಲೋಕದ ಗಂಡನಾಗಿದ್ದ ಶ್ರೀ ರಾಮಕೃಷ್ಣರ ದಾರಿಯನ್ನು ಸುಗಮಗೊಳಿಸಿದ್ದರು. ತಪಸ್ವೀ ಪತಿಯ ಭಾವತಪಸ್ಸಿಗೆ ಆಜ್ಯವನ್ನೆರೆದಿದ್ದರು ! ತಪಸ್ಸನ್ನು ಪೋಷಿಸುವುದೂ ತಪಸ್ಸೇ ಅಲ್ಲವೆ ?

ಶರೀರದಲ್ಲಿದ್ದೂ ಶರೀರ ಭಾವದಿಂದ ವಿಮುಕ್ತವಾಗಿದ್ದ ತಮ್ಮ ಗುರು ದಂಪತಿಗಳ "ಅಭೂತಪೂರ್ವ ಅಪೂರ್ವ"ಗಳನ್ನು - ಅಂದು ನರೇಂದ್ರನಾಗಿ ಸಂಧಿಸುತ್ತಿದ್ದ ಸ್ವಾಮಿ ವಿವೇಕಾನಂದರೂ - ಅಚ್ಚರಿಯಿಂದಲೇ ಗಮನಿಸಿದ್ದರು. ಭಾರತೀಯ ಸನಾತನ ಆಧ್ಯಾತ್ಮಕ್ಕಿಂತ ಹೆಚ್ಚಾಗಿ - ಬ್ರಹ್ಮ ಸಮಾಜ, ಪಾಶ್ಚಾತ್ಯ ತತ್ವ ಚಿಂತನೆಗಳೆಂಬ ವೈಚಾರಿಕ ಪೂರ್ವಾಗ್ರಹಗಳಿಗೆ ಅದಾಗಲೇ ಒಳಗಾಗಿದ್ದ ಅಂದಿನ ನರೇಂದ್ರನು - ವಿಗ್ರಹಾರಾಧನೆ, ಬ್ರಹ್ಮಚರ್ಯ, ಸನ್ಯಾಸ, ಪೂಜೆಪುನಸ್ಕಾರಗಳೆಂಬ ಬಾಹ್ಯ ಆಚರಣೆಗಳನ್ನೆಲ್ಲ ಆರಂಭದಲ್ಲಿ ಸಂಶಯಿಸಿದ್ದರೂ - ಬರಬರುತ್ತ ಶ್ರೀ ರಾಮಕೃಷ್ಣ ಭಾವದತ್ತ ಆಕರ್ಷಿತರಾಗಿದ್ದರು ಮತ್ತು ಅವೇ ಹೆಜ್ಜೆಗಳನ್ನು ಮೆಚ್ಚಿ ಒಪ್ಪಿ ಅನುಸರಿಸಿದ್ದರು. ಭಾವರಹಿತ "ಅಧ್ಯಾತ್ಮದ ಆಧುನಿಕತೆ" ಎಂಬ "ತಾಮಸದ ನಾಶಕ್ಕಾಗಿಯೇ ಶ್ರೀ ರಾಮಕೃಷ್ಣರು ಅವತರಿಸಿದ್ದು..." ಎಂಬುದನ್ನು ಬಹಳ ಬೇಗ ಅರಿತು, "ಯಾರು ನಮ್ಮ ದೇಶದ ಕಲ್ಯಾಣಕ್ಕಾಗಿ ಬಂದರೋ ಅವರ ವಿಷಯವೇ ಜನರಿಗೆ ಗೊತ್ತಿಲ್ಲದೆ ಹೋದರೆ ಜನರ ಕಲ್ಯಾಣವಾಗುವುದಾದರೂ ಹೇಗೆ ? ರಾಮಕೃಷ್ಣರನ್ನು ತಿಳಿದಾಗಲೇ ಮನುಷ್ಯರು ನಿಜವಾದ ಮನುಷ್ಯರಾಗಬಲ್ಲರು.." ಎಂದುಕೊಂಡು ಶ್ರೀ ರಾಮಕೃಷ್ಣ ಭಾವಪ್ರಸಾರದಲ್ಲಿ ತೊಡಗಿಕೊಂಡರು. ಶ್ರೀ ರಾಮಕೃಷ್ಣರ ಮಹಾಸಮಾಧಿಯ ನಂತರ ದೇಶಾದ್ಯಂತ ಬರಿಗಾಲಿನಲ್ಲಿ ಸುತ್ತಿದರು. ಶಿಷ್ಯವರ್ಗವನ್ನು ಸಂಘಟಿಸಿದರು. ರಾಮಕೃಷ್ಣರ ಬದುಕು ಮತ್ತು ಸಂದೇಶಗಳು ಅಳಿಸಿಹೋಗದಂತೆ - ಅವನ್ನು ವ್ಯವಸ್ಥಿತವಾಗಿ ಕ್ರೋಢೀಕರಿಸಿ, ಶ್ರೀ ರಾಮಕೃಷ್ಣ ಭಾವ ಸನ್ನಿಧಿಗೆ ಮತ್ತು ಪರಂಪರೆಗೆ ದೃಢವಾದ ರೂಪ ನೀಡುವ ಕೈಂಕರ್ಯದಲ್ಲಿ ಸನ್ಯಾಸೀ ಶಿಷ್ಯರಾಗಿದ್ದ ವಿವೇಕಾನಂದ ಮತ್ತು ಗೃಹಸ್ಥ ಶಿಷ್ಯ ಮಹೇಂದ್ರನಾಥ ಗುಪ್ತರ ಸಕ್ರಿಯ ಪಾತ್ರವು ಮಹತ್ವಪೂರ್ಣವೆನ್ನಿಸುತ್ತವೆ.

ಸ್ವಾಮಿ ವಿವೇಕಾನಂದರು ಆತ್ಮೋದ್ಧಾರವನ್ನು ಹೊಂದಲು ಸಮಾಜವನ್ನು ಸಿದ್ಧಪಡಿಸುವ ಪ್ರಾಥಮಿಕ ಅಗತ್ಯವನ್ನು ಮನಗಂಡು ಅಂದಿನ ಸಮಾಜದ ತುರ್ತು ಅಗತ್ಯಗಳ ಸಂಪೂರ್ತಿಗೆ ಮೊದಲ ಆದ್ಯತೆಯನ್ನು ನೀಡಿ ಸಾಮಾಜಿಕ ಮೌಢ್ಯತೆಯನ್ನು ಹೋಗಲಾಡಿಸಲು ಅಪಾರವಾಗಿ ತುಡಿಯುತ್ತಿದ್ದರು. ಹೊಟ್ಟೆಗೆ ಆಹಾರ, ಉಟ್ಟುಕೊಳ್ಳಲು ಬಟ್ಟೆ, ದೈಹಿಕ ಅನಾರೋಗ್ಯಕ್ಕೆ ಚಿಕಿತ್ಸೆ - ಇವನ್ನು ಮೊದಲ ಆದ್ಯತೆಯಾಗಿ ಗುರುತಿಸಿ, ತಮ್ಮ ಮುಂದಿನ ಹೆಜ್ಜೆಯು ಚಾರಿತ್ರ್ಯ ನಿರ್ಮಾಣದ ಶಿಕ್ಷಣ  - ಎಂದು ಸ್ವಾಮಿ ವಿವೇಕಾನಂದರು ತೀರ್ಮಾನಿಸಿದ್ದರು. ಅಜ್ಞಾನದ ಬಾಧೆಗೆ ಸಿಲುಕಿ ಅಂದಿನ ಭಾರತದಲ್ಲಿ ತುಂಬಿಹೋಗಿದ್ದ "ದರಿದ್ರ ನಾರಾಯಣ" ವರ್ಗದ ಬವಣೆಗಳಿಗೆ ಸ್ಪಂದಿಸಬೇಕಾದ ಸಾಮಾಜಿಕ ಹೊಣೆಯನ್ನು ಪುನರಪಿ ನೆನಪಿಸಿದ್ದರು; "ಏಳಿ ಎದ್ದೇಳಿ.." ಎನ್ನುತ್ತ ತಳಮಟ್ಟದಲ್ಲಿದ್ದ ಸಾಮಾಜಿಕ ಸಂಕಷ್ಟಗಳಿಗೆ ಸ್ಪಂದಿಸುವಂತೆ ತಮ್ಮ ಅಧ್ಯಾತ್ಮದ ಪರಿಧಿಯ ಆದ್ಯತೆಯನ್ನು ಏಕಪಕ್ಷೀಯವಾಗಿ ವಿಸ್ತರಿಸಿದ್ದರು. ಹಸಿವಿನ ಹೊಟ್ಟೆಗೆ ಅಧ್ಯಾತ್ಮವನ್ನು ಸುರಿಯುವುದು ವ್ಯರ್ಥ - ಎಂದೂ ಅಬ್ಬರಿಸಿದ್ದರು. ಅಧ್ಯಾತ್ಮಕ್ಕೆ ಹೊಸ ವ್ಯಾಖ್ಯೆ ಬರೆದಿದ್ದರು. ಜತೆಜತೆಗೆ, ಅಂದಿನ ಚೈತನ್ಯಹೀನ ಸಮಾಜವನ್ನು ಕಂಡು ಮರುಗುತ್ತ, ಆತ್ಮವಿಶ್ವಾಸವಿಲ್ಲದೆ ನರಳುತ್ತಿರುವವರಲ್ಲಿ ಧೈರ್ಯ ಉತ್ಸಾಹ ಕರ್ಮಶೀಲತೆಯನ್ನು ತುಂಬಿಕೊಳ್ಳಲು ಹುರಿದುಂಬಿಸಿದವರು - ಸ್ವಾಮಿ ವಿವೇಕಾನಂದರು. ಮೈಕೊಡವಿಕೊಂಡು "ಪುರುಷ ಸಿಂಹ"ರಾಗುವ ಚೈತನ್ಯವನ್ನು ಅಂದಿನ ಯುವ ಜನಾಂಗದಲ್ಲಿ ತುಂಬಿ, ಈಗಲೂ ಪ್ರೇರಣೆಯ ಸ್ರೋತವಾಗಿರುವ - ಶ್ರೀ ರಾಮಕೃಷ್ಣರಿಂದಲೇ ನೇಮಿಸಲ್ಪಟ್ಟ "ಶಿಷ್ಯ ನೇತಾರ"ರಿವರು. ಹೀಗೆ ಶ್ರೀ ರಾಮಕೃಷ್ಣ ಭಾವಕ್ಕೆ ಭದ್ರ ಚೌಕಟ್ಟನ್ನು ರೂಪಿಸಿದವರು - ಸ್ವಾಮಿ ವಿವೇಕಾನಂದರು. ಶ್ರೀ ರಾಮಕೃಷ್ಣರ "ಭರವಸೆಯ ಪ್ರತೀಕ"ದಂತಿದ್ದ - "ಅವರ ನರೇಂದ್ರ"ನು - ಹೀಗೆ ನಿಜಾರ್ಥದಲ್ಲಿ, ಹೊಸ ಚಿಗುರು ಹಳೆಬೇರು ಕೂಡಿದ್ದ ಸುಂದರ ಎರಕದಂತಿದ್ದರು. ಇದು - 18 ನೇ ಶತಮಾನದ ಅಂತ್ಯದಲ್ಲಿ ಸಾಮಾಜಿಕ ಮೂಲದಲ್ಲಿ ಸಂಭವಿಸಿದ್ದ - ಆಧ್ಯಾತ್ಮಿಕ ಕ್ರಾಂತಿ !



ಅಂದು ಶ್ರೀ ರಾಮಕೃಷ್ಣರ ನೇರ ಶಿಷ್ಯರೆಲ್ಲರೂ ತಮ್ಮ ಸೋದರಸನ್ಯಾಸಿ ನರೇಂದ್ರನಲ್ಲಿ ಸಾಂದ್ರವಾಗಿದ್ದ ಗುರುಭಾವ, ವೈಚಾರಿಕತೆ ಮತ್ತು ಸಾಂಘಿಕ ಶಕ್ತಿಯನ್ನು ಏಕಮನಸ್ಸಿನಿಂದ ಅನುಸರಿಸಿ ಬಲಪಡಿಸಿದ್ದರು. ಹೀಗೆ ಶತಮಾನಪೂರ್ವದಲ್ಲಿ ಶ್ರೀ ರಾಮಕೃಷ್ಣ ಸಂಸಾರದ ಅಸ್ತಿವಾರವು ಬಲಿಷ್ಠವಾಗಿಯೇ ಸ್ಥಾಪಿತವಾಗಿತ್ತು. ಅನಂತರದ ತ್ಯಾಗೀ ಶಿಷ್ಯವರ್ಗವೂ ತಮ್ಮ ಗುರುವರ್ಯರ ಹಾದಿಯಲ್ಲೇ ಹೆಜ್ಜೆಯಿಡುತ್ತ - ಗೃಹಸ್ಥ ಭಕ್ತರನ್ನೂ ಒಳಗೊಂಡು ಮುನ್ನಡೆಸುತ್ತ - 'ಜಗದ್ಧಿತಾಯ ಚ..." ಎಂಬ ಉದಾತ್ತ ಧ್ಯೇಯವುಳ್ಳ ಸಂಘದ ಮೂಲಭಾವವನ್ನು ಪುಷ್ಟಿಗೊಳಿಸುವಲ್ಲಿ ಸಮರ್ಪಣಾಭಾವದಿಂದ ತೊಡಗಿಕೊಂಡಿರುವುದು ಶ್ರೀ ರಾಮಕೃಷ್ಣ ವಲಯದ ವೈಶಿಷ್ಟ್ಯವೂ ಹೌದು. ಆದ್ದರಿಂದಲೇ - ಚಿಂತನೆ ಸಿದ್ಧಾಂತಗಳ ಮೌಲಿಕ ಬಲದಿಂದಲೇ ಶ್ರೀ ರಾಮಕೃಷ್ಣ ಭಾವವು ಜನಮಾನಸವನ್ನು ಇಂದಿಗೂ ಸಮರ್ಥವಾಗಿ ತಲುಪುತ್ತಿದೆ.

ಆದರೆ ಪ್ರತಿನಿತ್ಯವೂ "ಗಿಲೀಟು ಸುದ್ದಿ"ಗಳನ್ನು ಕೇಳುವ, ನೋಡುವ, ಮಾತನಾಡುವ ಅಮಲಿಗೆ ಬಿದ್ದಿರುವ ಮನುಷ್ಯರು ತಮ್ಮ ಬುದ್ಧಿಭಾವಗಳ "ಶುಚಿ ರುಚಿ" ಯನ್ನು ಕೆಡಿಸಿಕೊಳ್ಳುತ್ತಲೇ ಬಂದಿದ್ದಾರೆ. ಇಂದಿಗೂ ಅಂತೆಕಂತೆಗಳ ಗೊಂತೆಯಲ್ಲಿಯೇ ಮುಳುಗಿ ಏಳುತ್ತಿರುವ ಜನಸಮೂಹದ ನಿತ್ಯ ದೃಶ್ಯವೇ ಇದಕ್ಕೆ ಸಾಕ್ಷಿ. ಇದು - ತಮ್ಮ ಸದಸದ್ವಿವೇಕವನ್ನು ಮೊಂಡುಗೊಳಿಸಿಕೊಂಡು ದಿಕ್ಕುದೆಸೆ ತಪ್ಪಿಸಿಕೊಳ್ಳುತ್ತಿರುವ ಕ್ರಿಯೆ; ದಿನನಿತ್ಯವೂ - ಮನಸ್ಸು ಬುದ್ಧಿ ಬಾವದಲ್ಲಿ "ಕಸ ತುಂಬಿಸಿಕೊಳ್ಳುತ್ತಿರುವ" ನಮ್ಮ ದೈನಂದಿನ ಕ್ರಿಯೆಗಳನ್ನು ತುರ್ತಾಗಿ ಗಮನಿಸಿಕೊಳ್ಳದೆ ಹೋದರೆ ಅದು - ನಮ್ಮನ್ನು ನಮ್ಮಿಂದ ದೂರಗೊಳಿಸಿಕೊಳ್ಳುವಂತಹ - ಆತ್ಮಹತ್ಯೆಯ ಕ್ರಿಯೆಯೇ ಆಗುತ್ತದೆ.

ಶ್ರೀ ರಾಮಕೃಷ್ಣರು 1885 ರ ಮಾರ್ಚ್ 11 ರಂದು ಗಿರೀಶ್ಚಂದ್ರ ಘೋಷರ ಮನೆಗೆ ಬರುತ್ತಾರೆ. ಅಲ್ಲಿ ತಮಗಾಗಿ ಮೀಸಲಾಗಿಟ್ಟಿದ್ದ ಆಸನದ ಮೇಲೆ ಕುಳಿತುಕೊಳ್ಳಲು ಹೋದಾಗ ಅದರ ಹತ್ತಿರವೇ ಒಂದು ವಾರ್ತಾಪತ್ರಿಕೆ ಬಿದ್ದಿರುವುದು ಅವರಿಗೆ ಕಾಣಿಸಿತು. ತಕ್ಷಣ ಅದನ್ನು ಬೇರೆ ಕಡೆಗೆ ತೆಗೆದಿಡುವಂತೆ ಅವರು ಸಂಜ್ಞೆ ಮಾಡಿದರು. ಪ್ರಾಪಂಚಿಕ ವಿಷಯಗಳು, ಪರ ನಿಂದೆ, ಪರ ಚರ್ಚೆಗಳನ್ನು ಒಳಗೊಂಡಿರುವ ವಾರ್ತಾಪತ್ರಿಕೆಗಳು - "ಅಪವಿತ್ರ ವಸ್ತು " ಎಂಬುದು ಶ್ರೀ ರಾಮಕೃಷ್ಣರ ದೃಷ್ಟಿ. ಏಕೆಂದರೆ "ಪರ ವ್ಯಕ್ತಿ - ವಸ್ತುಗಳ ಚರ್ಚೆ, ಸುದ್ದಿಗಳನ್ನು ಕೇಳಬಾರದು; ನೋಡಬಾರದು; ಮಾತಾಡಬಾರದು; ಅದರಿಂದ ವ್ಯಕ್ತಿ ಮತ್ತು ವ್ಯಕ್ತಿತ್ವಗಳು ಮುಕ್ಕಾಗುತ್ತವೆ; ಆಂತರಿಕ ಶಕ್ತಿ ಕುಂದುತ್ತದೆ; ಜೀವಿಗಳ ಉದ್ದೇಶಿತ ನಿಜಪಯಣದ ಅರಿವಿನ - ಪ್ರಜ್ಞೆ ತಪ್ಪುತ್ತದೆ. ಮಿತಿಮೀರಿದ ಲೌಕಿಕ ತಾಕಲಾಟದ  ವೈಚಾರಿಕತೆಗಳು "ವಿಚಾರ ವಿಕಾರ ವ್ಯಾಧಿ"ಯಾಗಿ ಬಿಡುತ್ತವೆ..." - ಎಂಬುದು ಶ್ರೀ ರಾಮಕೃಷ್ಣರ ಬೋಧನೆ. ಅಂದು - ಆ ವಾರ್ತಾಪತ್ರಿಕೆಯನ್ನು ಅಲ್ಲಿಂದ ಸ್ಥಳಾಂತರಗೊಳಿಸಿದ ನಂತರವೇ ಅವರು ಆಸನಗ್ರಹಣ ಮಾಡಿದ್ದರು.

ಎಲ್ಲಿಯ ವರೆಗೆ ಮನುಷ್ಯರು ಕುತರ್ಕ ಕುವಿಚಾರದಲ್ಲಿಯೇ ಆಸಕ್ತರಾಗಿರುವರೋ ಆಗ ಭಾವಮೌಢ್ಯವೊದಗಿ, ಭಗವತ್ (ಅಂತ) ಶಕ್ತಿಯು ಕ್ಷೀಣಿಸುತ್ತ ಇಡೀ ವ್ಯಕ್ತಿತ್ವವೇ ದುರ್ಬಲವಾಗುತ್ತದೆ; ಬುದ್ಧಿಭಾವವನ್ನು ಕಲುಕುತ್ತ ಗಮ್ಯ ಮತ್ತು ಗಮನದಿಂದ ವ್ಯಕ್ತಿಯನ್ನು ವಿಚಲಿತವಾಗಿಸುವ ಯಾವುದೇ ಸಾಧನಗಳಿಂದ ದೂರವಿರಿ; ಸ ಶುದ್ಧ ಭಾವಕೊಳದಲ್ಲಿ ರಾಡಿಯೆಬ್ಬಿಸಿಕೊಂಡು ಅಂತಃಶಕ್ತಿಯನ್ನು ಕುಗ್ಗಿಸಿಕೊಳ್ಳಬೇಡಿ... ಎಂದು ಹೇಳುತ್ತ ಶ್ರದ್ಧೆಯ ಬೇರಿಗೆ ನೀರೆರೆದವರು ಶ್ರೀ ರಾಮಕೃಷ್ಣರು. (ಶ್ರೀ ರಾಮಕೃಷ್ಣ ವಚನವೇದ ಭಾಗ 2 ಪುಟ 259)


"ಔತದ ಮೆಯಂದಿಯದ್ದು ಎಲ್ಲಿಯೆಗೆ ಕೇಳಿಸುತ್ತ?
ಊಟಕ್ಕೆ ಕೆಯುವೆಗೆ ಮಾತ್ರ.
ಾವಾಗ ಎಲೆಗೆ ಅನ್ನಾರು ಬೀಳುವುದಆಗುಕ್ಕಾಲಾಗ ಬ್ದು ಅಡಿ ಹೋಗುತ್ತೆ.
 ಉಳಿದ ಕ್ಷ್ಯ ೋಜ್ಯು ಬಿದ್ದಂತ ಇನ್ನೂ ಕಿಮೆಯಾಗಿಬಿಡುತ್ತೆ.
ಜ್ಜಿಗೆ ಹಾಕುವಾಗೇವ "ಸುಪ್ ಸುಪ್"  ಬ್ದಾತ್ರೇಳುತ್ತೆ.
ಊಟುಗಿಯಿತು ಎಂದೆ - ನಿದ್ರೆ.
ಂತೆಗೆ ಮುಂದುವಿದಂತೆಲ್ಲ ಆತಂಬಾಗಿ ನೆಸುವಿಾರಿಮೆಯಾಗಿ ಬಿಡುತ್ತೆ..
ಆತಾಕ್ಾತ್ಕಾರು ದೊರೆಯಿತೆಂದೆ ಮತ್ತೆ - ಬ್ದ, ವಿಚಾರ ಏನೂ ಇರುವುದಿಲ್ಲ. ಆಗಿದ್ರೆ - ಸಿ.. " 


                                                            (ಶ್ರೀ ರಾಮಕೃಷ್ಣ ವಚನವೇದ - ಭಾಗ 2 ಪುಟ 264)

 "ಭಗವನ್ಮುಖವಾಗುವವರೆಗೂ ಪ್ರಾಪಂಚಿಕ ಸದ್ದು ಗದ್ದಲಗಳು ಕಡಿಮೆಯಾಗಲಾರವು. ಗದ್ದಲದ ಆಕರ್ಷಣೆಯೂ ಕ್ಷೀಣಿಸದು. ಭಗವದೌತಣದ ಸವಿಯು ಅನುಭವಕ್ಕೆ ಬಂದ ಒಡನೆಯೇ ಸದ್ದು ಗದ್ದಲ ನಿಲ್ಲುತ್ತದೆ.
ಆದ್ದರಿಂದ ಭಗವದೌತಣವಲ್ಲದ ಯಾವ ಮನೋಗರವನ್ನೂ ಸೇವಿಸಬಾರದು.
ಸಾಧನೆಯ ಹಾದಿಯಲ್ಲಿ ಕ್ರಮಿಸಲು ಇಚ್ಛಿಸುವವರು - ಕ್ಷುದ್ರ ಭಾವಪ್ರಸಾರದ ಯಾವುದೇ ಕ್ಷೇತ್ರದಿಂದ ದೂರವಿರಬೇಕು..."
ಇದು ಶ್ರೀ ರಾಮಕೃಷ್ಣ ಭಾವ.

ಆಧ್ಯಾತ್ಮಿಕ ವಿಷಯವನ್ನು ಇದಕ್ಕಿಂತ ಸರಳವಾಗಿ ಹೇಳುವುದು ಸಾಧ್ಯವೆ ? ಹೀಗಿದ್ದರೂ ಶ್ರೀ ರಾಮಕೃಷ್ಣರನ್ನು ಇದುವರೆಗೂ ಕಿಂಚಿತ್ತಾದರೂ ಪ್ರವೇಶಿಸಲಾಗದ ಬಹು ದೊಡ್ಡ - ನತದೃಷ್ಟ ವರ್ಗವೇ ಸಮಾಜದಲ್ಲಿದೆ. ಆದ್ದರಿಂದಲೇ ಹೊಸ ತಲೆಮಾರುಗಳ ಹೊಸ ಪ್ರವೇಶಿಗರನ್ನು ತಟ್ಟಿ ಎಬ್ಬಿಸುವ ನಿರಂತರ ಕ್ರಿಯೆಯೂ ಅನಿವಾರ್ಯ ಆಗುತ್ತದೆ. "ದುರ್ಮಾರ್ಗಕ್ಕೆ ಉಪದೇಶಕರು ಬೇಕಾಗುವುದಿಲ್ಲ; ಸನ್ಮಾರ್ಗಕ್ಕೆ ಎಷ್ಟು ಉಪದೇಶಕರಿದ್ದರೂ ಸಾಕಾಗುವುದಿಲ್ಲ !"

ಯಾವುದೇ ಉಪದೇಶಕ ವರ್ಗದವರಿಗೂ ಕನಿಷ್ಠ ಅರ್ಹತೆ ಎಂಬುದು ಅನಿವಾರ್ಯ. ಚಾರಿತ್ರ್ಯ ನಿರ್ಮಾಣದ ಶಿಕ್ಷಣದಿಂದ ಮಾತ್ರ ಇದು ಸಾಧ್ಯ. ಇಂದಿನ ಸಾಮಾಜಿಕ "ಕಪಿತನ"ಕ್ಕೆ ಶೈಕ್ಷಣಿಕ ವಲಯದ ನಮ್ಮ ಸೋಲೇ ಕಾರಣ. ತತ್ಪರಿಣಾಮವಾಗಿ, ಕುತಂತ್ರಿಗಳು ಜನಪ್ರತಿನಿಧಿಗಳಾಗಿ ಅನಂತರ ಮಂತ್ರಿಗಳೂ ಆಗುತ್ತಿರುವುದು ಇಂದಿನ ಸಮಾಜದ ಒಟ್ಟಾರೆ ಮೂರ್ಖತನಕ್ಕೆ ಜ್ವಲಂತ ನಿದರ್ಶನ. ಇತ್ತೀಚೆಗೆ ಕರ್ನಾಟಕದ ಹೆಸರಿಗೆ ಮಸಿ ಬಳಿಯುವಂತೆ ಬೆಳಕಿಗೆ ಬಂದ ಪಶು ಸ್ವಭಾವದ "ಮೇಟಿ ವಿದ್ಯೆ" ಗೆ ಯಾವುದಾದರೂ ಗುರೂಪದೇಶ ಬೇಕೆ ? ಅನಗತ್ಯ ಎಂಬುದು ಅಕ್ಷರಶಃ ನಿರೂಪಿತವಾಗುತ್ತಲೇ ಇರುತ್ತದೆ. ಪಶುಭಾವದಿಂದ ಬಿಡುಗಡೆಯಾಗದ ದಯನೀಯ ಸ್ಥಿತಿಯದು. ದೇಹ ಮುಪ್ಪಾದರೂ ಭಾವಪ್ರಬುದ್ಧತೆಯನ್ನು ಹೊಂದಲಾಗದ ಜನ್ಮಜಾತ ಕಲೆಯನ್ನಷ್ಟೇ ಬಲ್ಲ ಯಾವುದೇ ನೀತಿ ನಿರೂಪಕರು ಉಪದೇಶಕರಾಗಲಾರರು; ಆಗಬಾರದು. ಯಾವುದೇ ಸಿದ್ಧಾಂತದಲ್ಲಿ ಬದ್ಧತೆ, ಪ್ರಾಮಾಣಿಕತೆ, ನೈತಿಕತೆ ಇದ್ದಾಗ ಮಾತ್ರ ನಾಯಕ ಅನ್ನಿಸಿಕೊಳ್ಳಬಹುದು; ಅದಿಲ್ಲದೆ "ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೆ ಮೇಲು" ಎಂದುಕೊಳ್ಳುವ - ನ್ಮೂಲ ವ್ಯ ೈಲಿಯಲ್ಲಿ "ಸರ್ವಜ್ಞ"ನನ್ನು ಅಣಕಿುವಂತೆ ಕಾಣುವ ೂಳ ಖಳನಾಯಕರಿಂದಾಗಿ ಇಡೀ ಮಷ್ಯ ಸಮೂಹವೇ ಹಾಸ್ಯಾಸ್ಪದವಾಗುತ್ತದೆ. ಇದು ಸದ್ಯದ ಲೋಕಸ್ಥಿತಿ ! ಮರುಳು ಮಾಯಾಮತಿ ! ಕುಸಂಸ್ಕೃತಿ !

ಾವುದದುರಾಚಾರಿಗಿಗೀತಿನಿರೂಪಾಗುವ ಅರ್ಹೆ ಇರುವುದಿಲ್ಲ. ಂತಹಂದಿಗೆ ಕುರ್ಚಿಯನ್ನು ಒರೆಸಿ ಕೊಟ್ಟೂ ಅವು ಅದನ್ನು ಹೊಲೆಬ್ಬಿಸೆ ಬಿಡು. ಯಾರನ್ನೂ ತಲುಪಾರ ೀಜೇಲ್ಪಙ್ತಿಯಲ್ಲಅವಿಂದ ಇನ್ನೇನು ಸಿಕ್ಕೀತು ? ಇಂದು ದಿನನಿತ್ಯವೂ ಸಿಗುತ್ತಿುವ ಇಂತ ಉದಾಹರಣೆಗನ್ನೆಲ್ಲುದ್ದಿ ಮಧ್ಯು ಚೆನ್ನಿಗಂತೆ ಬಿತ್ತಿಸುತ್ತೇ ಇರುತ್ತ; ಜು ಓದಿ, ನೋಡಿ ನ್ಯಾಗುತ್ತಿದ್ದಾರೆ !! ಇವೆಲ್ಲೂ ರುಚಿ ಕೆಡಿಸಿಕೊಳ್ಳುವ ಮಾರ್ಗು; ಚಾರಿತ್ರ್ಯೀನ ಿಕ್ುಗು.

ದೌರ್ಭಾಗ್ಯವೆಂದರೆ ಸುವಿಚಾರ ಸಚ್ಚಿಂತನೆಗಳನ್ನು ಭಾವಿಸಿ ಅನುಸರಿಸುವವರು ಸಮಾಜದಲ್ಲಿ ವಿರಳವಾಗುತ್ತಲೇ ಇದ್ದಾರೆ. ಹಾಗೆ ನೋಡಿದರೆ - ಸನ್ಮಾರ್ಗಕ್ಕೆ ಎಂದಿನಿಂದಲೂ ಬೇಡಿಕೆ ಕಡಿಮೆಯೇ. "ಅಂದು ಶ್ರೀ ರಾಮಕೃಷ್ಣರನ್ನು ಸಂದರ್ಶಿಸಿದ್ದ ಕೆಲವರು ಅವರ ಮಹತ್ವವನ್ನು ಅರಿಯಲಾರದವರಾಗಿದ್ದರು..." ಎಂದು ಸ್ವಾಮಿ ವಿವೇಕಾನಂದರು ಸ್ಮರಿಸಿಕೊಂಡದ್ದಿದೆ. ಇದನ್ನೇ ದೌರ್ಭಾಗ್ಯ ಎನ್ನುವುದು. ಮೌಢ್ಯವೇ ದೌರ್ಭಾಗ್ಯದ ಹೇತು. ನಮ್ಮ ಕಣ್ಣೆದುರಿನಲ್ಲೇ ಇರುವ ಎಷ್ಟೋ ಮೌಲ್ಯಾದ್ಭುತಗಳನ್ನು ಅವಗಣಿಸುವುದು ಮತ್ತು ಯಾವುದೇ ಗುರಿಯಿಲ್ಲದ ಓಟದಲ್ಲಿ ತೊಡಗಿಕೊಳ್ಳುವುದು ಮನುಷ್ಯರ ಜನ್ಮಜಾತ ಸ್ವಭಾವ ಮತ್ತು ದೌರ್ಭಾಗ್ಯ. ಅದು ಎಂದಿನಿಂದಲೂ ಹಾಗೇ ಇದೆ. ಜನ್ಮಜಾತ ಸ್ವಭಾವದ ಸಂಸ್ಕರಣೆಗಾಗಿ ಯೋಗ್ಯ ಉಪದೇಶಕರನ್ನು ಆಶ್ರಯಿಸುವುದೇ ಜನ್ಮವನ್ನು ಸಾರ್ಥಕಗೊಳಿಸಿಕೊಳ್ಳುವ ಸುಲಭ ಮಾರ್ಗ. ಶ್ರೀ ರಾಮಕೃಷ್ಣ ಪರಮಹಂಸರನ್ನು ಸುತ್ತುವವರು ಎಡವಿ ಬೀಳಲಾರರು; ಒಂದೊಮ್ಮೆ ಎಡವುವಂತಾದರೂ ತಮ್ಮನ್ನು ತಾವೇ ಸಂಭಾಳಿಸಿಕೊಳ್ಳಬಲ್ಲರು.

ಯಾವುದೇ ಉನ್ನತ ಸ್ಮರಣೆಯು ನಿರಂತರವಾಗಿ ನಡೆಯುತ್ತಲೇ ಇರುವಂತೆ ಪ್ರೇರೇಪಿಸುವುದೂ ಸುಲಭವೇನಲ್ಲ. ಶ್ರೀ ರಾಮಕೃಷ್ಣ ವಲಯವು ಅಂತಹ ಕಠಿಣವಾದ ಸವಾಲನ್ನು ಶತಮಾನ ಪೂರ್ವದಿಂದಲೇ ಲೀಲಾಜಾಲವಾಗಿ ನಿಭಾಯಿಸುತ್ತ - "ಜನತೆ ಮತ್ತು ಜನಾರ್ದನ" ಎಂಬ ಜೀವ - ಭಾವದ ದ್ವಿಮುಖ ಸೇವೆಯಲ್ಲಿ ಭೇದವನ್ನೆಣಿಸದೆ - ಶ್ರೀ ರಾಮಕೃಷ್ಣ ಭಾವ ಪ್ರಸಾರವನ್ನು ನಿರಂತರವಾಗಿ ನಿರ್ವಹಿಸುತ್ತ ಬಂದ ಹಿರಿಮೆಯನ್ನೂ ಹೊಂದಿದೆ.

                                          ಉತ್ತಿಷ್ಠತ, ಜಾಗ್ರತ, ಪ್ರಾಪ್ಯವರಾನ್ನಿಬೋಧತ...

ಶ್ರೀ ರಾಮಕೃಷ್ಣ ಭಾವವು - ಮಲಗಿದವರನ್ನು ಎಬ್ಬಿಸುವ ಸುಶ್ರಾವ್ಯ ಸುಪ್ರಭಾತ. "ಸಮಯವನ್ನು ವ್ಯರ್ಥಗೊಳಿಸಬೇಡಿ; ಯೌವ್ವನವನ್ನು ಹಾಳುಗೆಡಿಸಬೇಡಿ..." ಎಂದು - ತಮ್ಮ ಸುತ್ತ ನೆರೆಯುತ್ತಿದ್ದ ಆಯ್ದ ಭಕ್ತರ ಆತ್ಮೋದ್ಧಾರಕ್ಕಾಗಿ ಶ್ರೀ ರಾಮಕೃಷ್ಣರು ಬೋಧಿಸಿದ್ದ ಸಂದೇಶಗಳನ್ನೇ ಸ್ವಾಮಿ ವಿವೇಕಾನಂದರು ಸಮಷ್ಟಿಗೇ ಕೇಳುವಂತೆ ಉದ್ಘೋಷಿಸಿದ್ದರು ! ಶ್ರೀ ರಾಮಕೃಷ್ಣರು "ಆತ್ಮ ಸಾಕ್ಷಾತ್ಕಾರವೇ ಬದುಕಿನ ಪರಮಗುರಿ " ಎಂದಿದ್ದರು. ಅವರ ಶಿಷ್ಯ ನರೇಂದ್ರನು - "ಆತ್ಮ ಸಾಕ್ಷಾತ್ಕಾರವೇ ಪರಮ ಗುರಿ ಎಂಬುದು ಸತ್ಯವಾದರೂ ಮೊತ್ತಮೊದಲು ಎಲ್ಲರೂ ಆತ್ಮಗೌರವದಿಂದ ಬದುಕಿ ; ಅನಂತರ ಆತ್ಮೋದ್ಧಾರದ ಚಿಂತನೆ ನಡೆಯಲಿ..." ಎಂದರು. ಇಲ್ಲಿ ಭಾಷೆ ಬೇರೆಯಾದರೂ ಭಾವ ಒಂದೇ. ಶ್ರೀ ರಾಮಕೃಷ್ಣರು ಅತ್ಯುಚ್ಛ ಹಂತದ ಬೆರಳೆಣಿಕೆಯ ವಿದ್ಯಾರ್ಥಿಗಳನ್ನಷ್ಟೇ ಆಯ್ದುಕೊಂಡು ಸಾಕ್ಷಾತ್ಕಾರದತ್ತ ನಡೆಸಿದ್ದರು; ಆದರೆ ಸ್ವಾಮಿ ವಿವೇಕಾನಂದರು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಹಿಂದುಳಿದವರನ್ನೂ ಪ್ರಭಾವಿಸಲು ಯತ್ನಿಸಿದರು ಮತ್ತು ಅನುತ್ತೀರ್ಣರಾದವರಿಗೂ ಸಹಾನುಭೂತಿ ತೋರಿಸಿದ್ದರು. ಹೀಗೆ ಸಕಾಲಿಕವಾಗಿ ಸಾಂದರ್ಭಿಕವಾಗಿ ಶ್ರೀ ರಾಮಕೃಷ್ಣರ ಸಂದೇಶಗಳನ್ನು ಹಿಂಜಿ - ಹಿಗ್ಗಿಸಿ ತನ್ಮೂಲಕ "ಬಹುಜನರು" ಶ್ರೀ ರಾಮಕೃಷ್ಣ ಭಾವಾಂತರ್ಗತವಾಗುವಂತೆ ಮಾಡಿ, "ವಿವೇಕಾನಂದ ಛಾಪನ್ನು" ಒತ್ತಿದವರು ಸ್ವಾಮಿ ವಿವೇಕಾನಂದರು; ಶ್ರೀ ರಾಮಕೃಷ್ಣ - ಶಾರದಾಮಾತೆಯ ಬದುಕು ಮತ್ತು ಚಿಂತನೆಗಳ ವರ್ಣರಂಜಿತ ರಾಯಭಾರಿಯಾಗಿ, ವೇದೋಪನಿಷತ್ತುಗಳೊಂದಿಗೆ ಬುದ್ಧನನ್ನೂ ಉದಾಹರಿಸುತ್ತ - ತಮ್ಮ ಅತ್ಯುಚ್ಛ ಗುರುಸ್ಥಾನವನ್ನು ಭಾವಪೂರ್ಣವಾಗಿ ಹೊತ್ತು ವಿಸ್ತರಿಸಿದವರು ಸ್ವಾಮಿ ವಿವೇಕಾನಂದರು. "ಆತ್ಮನೋ ಮೋಕ್ಷಾರ್ಥಂ ಜಗದ್ಧಿತಾಯ ಚ " ಎಂಬ ಸಮಷ್ಟಿಯ ಉದ್ಧಾರದ ಉನ್ನತ ಧ್ಯೇಯಪ್ರಸಾರದ ವಿಶಾಲ ಛತ್ರದಡಿಯಲ್ಲಿ ಶ್ರೀ ರಾಮಕೃಷ್ಣ ಮಹಾಸಂಘವನ್ನು ಕಟ್ಟಿ ಸಮಾಜವನ್ನು ತತ್ಪರಗೊಳಿಸಿದವರು - ಸ್ವಾಮಿ ವಿವೇಕಾನಂದರು. ಉದ್ದೇಶ ಮತ್ತು ಕ್ರಿಯೆ - ಎರಡೂ - ಸಮರ್ಪಕ ಮತ್ತು ಸಮರ್ಪಿತವಾಗಿದ್ದರೆ ಮಾತ್ರ ಅಘಟಿತಗಳು ಘಟಿಸುತ್ತವೆ. ಶ್ರೀ ರಾಮಕೃಷ್ಣ, ಮಾತೆ ಶಾರದಾದೇವಿ ಮತ್ತು ಸ್ವಾಮಿ ವಿವೇಕಾನಂದರ ಮಾತು ಮತ್ತು ಕ್ರಿಯೆಗಳು ಜನಮಾನಸವನ್ನು ತಲುಪಿದ್ದು - ಅಂತಹುದೇ ವಿಶಿಷ್ಟ ಅಸಾಮಾನ್ಯ.
 
ಶ್ರೀ ರಾಮಕೃಷ್ಣರು - "ಯಾವುದೇ ಮಹತ್ಕಾರ್ಯಗಳು ದೈವಕೃಪೆಯಿಲ್ಲದೆ ದೈವ ಸಂಕಲ್ಪವಿಲ್ಲದೆ ಸಂಭವಿಸಲಾರವು " - ಎನ್ನುತ್ತಿದ್ದರು. ಗುರು ರಾಮಕೃಷ್ಣರಿಂದ ನಿಯುಕ್ತರಾಗಿದ್ದ ಸ್ವಾಮಿ ವಿವೇಕಾನಂದರು ಮತ್ತು ಶ್ರೀ ರಾಮಕೃಷ್ಣ ಬಳಗದ ಸಾಧನೆಯನ್ನು ಇದೇ ಹಿನ್ನೆಲೆಯಿಂದಲೇ ಅರ್ಥೈಸಿಕೊಳ್ಳಬಹುದು. ಆದ್ದರಿಂದಲೇ... ಆತ್ಮೋದ್ಧಾರವಾಗಲೀ ಜಗದೋದ್ಧಾರವಾಗಲೀ "ಗುರುತಿಸಲ್ಪಟ್ಟ" ಶಕ್ತಿಗಳಿಂದ ಮಾತ್ರ ಸಂಭವ.... ಆದ್ದರಿಂದಲೇ ಕೆಲವರ ಮಾತು ಕೃತಿಗಳು ನೇರವಾಗಿ ಹೃದಯವನ್ನು ತಲುಪುತ್ತವೆ; ಇನ್ನು ಕೆಲವು ಹಾರಾಟಗಳು ಎಲ್ಲೆಲ್ಲೋ ಹಾರಿಹೋಗುತ್ತವೆ; ಮತ್ತೊಂದಿಷ್ಟು... ಹಾಸ್ಯಾಸ್ಪದವಾಗುತ್ತಿವೆ !

ಆದರೂ "ಹೀಗೇಕೆ ?" ಎಂದು ಸಾಮಾನ್ಯರಿಗೆ ಅನ್ನಿಸುವುದು ಸಹಜ. ಹೌದು. ಇನ್ನೊಬ್ಬರ ಅದೇ ವಿಚಾರಗಳನ್ನು - ತಾನು ಹೇಳಿದರೆ ಅದೇ ಸಾಮಾಜಿಕ ಪರಿಣಾಮ ಏಕಾಗುವುದಿಲ್ಲ ? ಎಂದುಕೊಳ್ಳುವವರಿದ್ದಾರೆ. ಏಕೆಂದರೆ ಯಾವುದೇ ವಿಚಾರಗಳು ಆತ್ಮಿಕ ಅನುಭವದ ಮೂಸೆಯಲ್ಲಿ ಹೊರಳಿ ಅಪರಂಜಿಯಾಗಿ, ತಾನೇ ತಾನಾಗಿ ಹೊಮ್ಮಿದಾಗ ಮಾತ್ರ ಅವು ಇನ್ನೊಂದು ಹೃದಯವನ್ನು ಮುಟ್ಟುತ್ತವೆ. ಆದ್ದರಿಂದಲೇ ಅವರಿವರ ಮಾತನ್ನು ಉದ್ಧರಿಸಿಕೊಂಡು ಯಾರೂ ಭಾಷಣಕಾರರಾಗಬಹುದು; ಆದರೆ ಆಧ್ಯಾತ್ಮಿಕ ಚಿಂತಕರಾಗುವುದು ಅಸಾಧ್ಯ. ಏಕೆಂದರೆ ಅಧ್ಯಾತ್ಮದ ಭಾಷೆಯೇ ಬೇರೆ; ಅದು ಹೃದಯದ ಭಾಷೆ. ಹೃದಯದ ಭಾಷೆಯನ್ನು ಅನುಭಾವಿಸಬಲ್ಲ ಅನುಭಾವಿಗಳ ಮಾತು ವಿಚಾರಗಳನ್ನು ಮಾತ್ರವೇ ಇನ್ನೊಂದು ಹೃದಯವು ಸ್ವೀಕರಿಸುತ್ತದೆ. ಇದೇ ಜೀವಾತ್ಮ ಪರಮಾತ್ಮ ಸಂವಹನದ ಅಧ್ಯಾತ್ಮ ಕಲೆ ! ಇದೊಂದು ನಿಗೂಢ ಕಲೆ ! ಅನುಗ್ರಹಿತ ಕಲೆ ! ಹೃದಯ ವ್ಯಾಪಾರ ಎಂಬುದು ಮೂಲತಃ ಪ್ರದರ್ಶನ ಕಲೆಯಲ್ಲ; ಅನುಭಾವದ ಕಲೆ ! ಅಂತರಂಗವೇ ಅದರ ನೆಲೆ ! ಆದ್ದರಿಂದಲೇ ಈ ಜೀವಜಗತ್ತಿನಲ್ಲಿ - ಎಲ್ಲವೂ ಎಲ್ಲರಿಗೂ ಹೊಂದುವುದಿಲ್ಲ.

ಹೊರನೋಟಕ್ಕೆ ನಾವೆಲ್ಲರೂ ಮನುಷ್ಯರು; ಎಲ್ಲರ ರಕ್ತವೂ ಕೆಂಪು ಬಣ್ಣದ್ದು ಎಂದು ಗುರುತಿಸಲ್ಪಟ್ಟರೂ ಆಂತರ್ಯದಲ್ಲಿ ನಾವೆಲ್ಲರೂ ಒಂದೇ ಸ್ವಭಾವ-ಸಂಸ್ಕಾರದವರೆ ? ದಿಕ್ಕೆಟ್ಟು ಓಡುತ್ತಿರುವಂತಹ ಸಾಮಾನ್ಯ ಜನಸಮೂಹದ ಆಸಕ್ತಿ, ಆದ್ಯತೆ, ಸಂಸ್ಕಾರ, ಗುರಿ - ಯಾವತ್ತೂ ಒಂದೇ ಆಗಿರುವುದು ಸಾಧ್ಯವೆ ? ಅಸಾಧ್ಯ... ಆದ್ದರಿಂದಲೇ ಒಂದೇ ಗುಂಪಿನ ರಕ್ತದವರೆಲ್ಲರೂ "ಒಂದೇ" ಆಗಲಾರರು; ಒಂದೇ ಉದ್ದೇಶದ ಗುರಿಯನ್ನು ಹೊಂದಿದವರೂ "ಒಂದೇ" ಆಗಲಾರರು. ನಿತ್ಯ ಬದುಕಿನಲ್ಲಿ ವಿಕಾರ ಸಾಮೀಪ್ಯವು ಸಂಭವನೀಯವಾದರೂ ವಿಚಾರಸಾಮೀಪ್ಯವು ಅಪೂರ್ವಕ್ಕೊಮ್ಮೆ ಮಾತ್ರ ಸಂಭವಿಸುವಂಥದ್ದು. ವಿಚಾರ ಸಾಮೀಪ್ಯವಿಲ್ಲದೆ - ಹೃದ್ಭಾವವು ಒಂದಾಗುವುದು ಯಾವತ್ತೂ ಅಸಾಧ್ಯ; ವಿಚಾರಸಾಮೀಪ್ಯವಿದ್ದರೂ ದಾರಿ ಅನುಸರಣೆಗಳು ಒಂದೇ ಆಗಿರಲಾರದು; ಆಗಲೂ ವಿಭಿನ್ನ ಭಾವ ಹುಟ್ಟುತ್ತದೆ; ಅಂತರ ಏರ್ಪಡುತ್ತದೆ. ಆದ್ದರಿಂದಲೇ ಬಾಹ್ಯದಲ್ಲಿ "ಒಂದೇ ಗುಂಪು" ಎಂದು ಕಾಣುವ ಎಡೆಗಳಲ್ಲಿಯೂ ಏಕಭಾವವು ಚದುರಿಹೋಗಿರುವುದರಿಂದಲೇ ಒಬ್ಬೊಬ್ಬರು ಒಂದೊಂದು ದಿಕ್ಕಿಗೆ ಓಡುವವರಾಗಿರುವುದು ಮತ್ತು ಕಾಲಕ್ರಮೇಣ ಗುಂಪುಗಳು ಕ್ಷೀಣಿಸುವುದು - ವಾಸ್ತವ; ಸಹಜ. ಆದ್ದರಿಂದಲೇ ಒಂದೇ ವರ್ಗದ ರಕ್ತವು ದೇಹಭಾವಕ್ಕೆ ಹೊಂದಿದರೂ ಅದರಿಂದ ಸ್ವಾತ್ಮಭಾವಕ್ಕೆ ಜೀವ ತುಂಬಲಾದೀತೆ ? ಎಳೆಯ ಯೌವ್ವನದ ರಕ್ತವನ್ನು ಸ್ವೀಕರಿಸಿದವರೆಲ್ಲ ಕನಿಷ್ಠ - ದೈಹಿಕವಾಗಿಯಾದರೂ ಯೌವ್ವನಿಗರಾಗುವುದು ಸಾಧ್ಯವೆ? ಎಂಬುದನ್ನೂ ದೇಹಕೇಂದ್ರಿತ ಮನಸ್ಸುಗಳು ಯೋಚಿಸಬಹುದು. ಅದು ಅಸಾಧ್ಯ. ಏಕೆಂದರೆ, ಯೌವ್ವನದ ಸತ್ವ ಮತ್ತು ಸತ್ಯವು ಭಾವದಲ್ಲಿದೆ; ದೇಹದಲ್ಲಿಲ್ಲ. ಆದ್ದರಿಂದಲೇ ಪ್ರತಿಯೊಂದು ಬದುಕೂ ಆತ್ಮರೂಪೀ ಭಾವಜೀವ ; ಸ್ವಭಾವಜೀವ ; ಯಾವುದೇ ಬದುಕು - ನಾವೆಂದುಕೊಂಡಂತೆ ದೇಹಜೀವವಲ್ಲ. ಆದ್ದರಿಂದ ದೇಹಪೋಷಣೆಯನ್ನು ಭಾವಮೂಲದಿಂದ ನಡೆಸುವುದು - ಬದುಕಿನ ಸುಪುಷ್ಟ ಪೋಷಣೆಗೆ ಅನಿವಾರ್ಯ. ಭಾವ ಸಂವಹನ ಮತ್ತು ಸಮನ್ವಯವೇ ಅನೇಕವು ಏಕವಾಗುವ ತಂತ್ರ; ಇದೇ ಸಮತ್ವದ ಮತ್ತು ಪರಿಪೂರ್ಣ ಆರೋಗ್ಯ ಭಾವದ ಸರಳ ಸೂತ್ರ.

ಆದರೆ ಮನುಷ್ಯಬಾವಿಗಳು ಎಂಬ ದೇಹಮೂಲಗಳಲ್ಲಿ ನಾನಾ ಕಾರಣಗಳಿಂದ ಭಾವ - ಸ್ವಭಾವಜಲವು ಬತ್ತಿ ಹೋಗಿರುತ್ತದೆ; ಬಾವಿಯ ಆಕೃತಿಗಳಷ್ಟೇ ಇರುತ್ತವೆ; ಆದ್ದರಿಂದ ಕನಸಿನಲ್ಲಿ ಚಲಿಸುವಂತೆ ದೇಹಗಳಷ್ಟೇ ಚಲಿಸುತ್ತಿರುತ್ತವೆ. ಇನ್ನಷ್ಟು ಭಾವಬಾವಿಗಳು ಬಳಕೆಯೇ ಆಗದೆ, ಜನ್ಮಜನ್ಮಾಂತರದಿಂದ ಹಾಳು ಬಿದ್ದಿದ್ದು - ಅದರಲ್ಲಿನ ಭಾವಜಲವು ವಿಷಪೂರಿತವಾಗಿರುತ್ತದೆ.



"ಎಲ್ಲ ನೀರೂ ನಾರಾಯಣನೇ ಆದರೂ ಕೆಲವನ್ನು ಕುಡಿಯಬಹುದು; ಕೆಲವು ನೀರಿನಲ್ಲಿ ಮುಖ ಮಾತ್ರ ತೊಳೆಯಬಹುದು. ಇನ್ನೂ ಕೆಲವು - ಮುಸುರೆ ತೊಳೆಯುವುದಕ್ಕೆ ಮಾತ್ರ ಉಪಯೋಗವಾಗುತ್ತವೆ.." 
                                                                         (ಶ್ರೀ ರಾಮಕೃಷ್ಣ ವಚನವೇದ - ಭಾಗ 2, ಪುಟ - 129)
                                                                                  

ಆದ್ದರಿಂದಲೇ ಶಾಬ್ದಿಕವಾದ ಆತ್ಮೀಯರೆಲ್ಲರೂ ಭಾವನಾತ್ಮಕವಾಗಿ ಆತ್ಮೀಯರಾಗುತ್ತಿಲ್ಲ. ಜೀವಿಗಳ ಭಾವ ಸಂಧಿಸಿದಾಗ ಮಾತ್ರ - "ಆತ್ಮೀಯ"ವಾಗಲು ಸಾಧ್ಯ. ಇತರ "ಸಂಧಿ"ಗಳೆಲ್ಲವೂ ಲೋಪ ಸಂಧಿಗಳೇ; ವ್ಯರ್ಥ ಕಾಲಕ್ಷೇಪ. ಇಂತಹ ಲೋಪಜಾತ್ರೆಯ ಇವತ್ತಿನ ನಮ್ಮ ಭಾವರಹಿತ ಬದುಕುಗಳು ದಿಕ್ಕು ತಪ್ಪಿರುವುದರಿಂದಾಗಿ ಕ್ಷುಲ್ಲಕ ಕಾರಣಗಳಿಗೂ ವ್ಯಗ್ರಗೊಳ್ಳುತ್ತಿದ್ದು - ನಿಜ ಬದುಕಾಗಿಯೇ ಉಳಿದಿಲ್ಲ. ತಳಮಳಿಸುತ್ತಿರುವ ಭಾವಜಲವು ಕಲುಷಿತಗೊಳ್ಳುತ್ತಿದೆ. ಇದರಿಂದಾಗಿ ಬಳಕೆಯ ಬಹುಪಾಲು ನೀರೂ - ಈಗ ನಾರಾಯಣವಾಗಿಲ್ಲ;  ವ್ಯರ್ಥ ಓಟ ಒಳತೋಟಿಗಳ ಬಿಸಿಯಿಂದ ಜೀವಿಗಳ ಭಾವಜಲವು ಬತ್ತಿಹೋಗುತ್ತಿದೆ. ಬಾಹ್ಯದ ಗೊಂದಲಗಳೆಂಬ ನಿದ್ದೆ ಕೆಡಿಸುವ ಭೋಜನವನ್ನು ಯಥೇಷ್ಟ ತಿನ್ನುತ್ತಿರುವ ಮನೋದೇಹಗಳ ಲೌಕಿಕ ದಾಹವು ಹೆಚ್ಚುತ್ತಲೇ ಇದೆ; ಆದರೆ ದಾಹ ತೀರಿಸಬಲ್ಲ ಅಂತರಂಗದ ಭಾವಜಲಸ್ಥಾನಗಳು ಬರಡಾಗಿವೆ. ಸಂದು ತಪ್ಪಿದ ಅಸಮತೋಲನ ! ಹೀಗೆ ಸ್ವಾತ್ಮವನ್ನು ನಗಣ್ಯಗೊಳಿಸಿ, ಅದನ್ನು ನೇಪಥ್ಯಕ್ಕೆ ಸರಿಸಿ, ಮೆಟ್ಟಿ ಮೇಲೇಳಲಾಗದಂತೆ ಬರಡು ಮಾಡಿಕೊಂಡಿರುವ ಬದುಕುಗಳು ಒಣಗಿ ಬತ್ತಿಹೋಗುತ್ತಿರುವುದು ಸಹಜ. ಆದ್ದರಿಂದಲೇ "ಬಾವಿಯ ಜಲ ಬತ್ತಿ ಬರಿದಾಯ್ತೋ ಹರಿಯೇ..." ಎನ್ನುತ್ತ ಹಲುಬುವಂತಾಗಿದೆ. ಆಂತರಿಕ ಮಾರ್ದವತೆಯಿಲ್ಲದಾದಾಗ ಒಳದನಿಯು ಒಣಗಿ ಸ್ಪಂದಿಸಲಾಗದೆ ಕೈಚೆಲ್ಲುವಂತಾಗುತ್ತದೆ. "ಸ್ವಾತ್ಮದ ಮೊರೆ"ಯು ನಮಗೆ ಕೇಳದಂತೆ ನಾವೇ ಮಾಡಿಕೊಂಡಿದ್ದೇವೆ. ಆದ್ದರಿಂದಲೇ ಸಮಾಜದಲ್ಲಿ ಭೂತ ಪ್ರೇತಸಂಚಾರವು ಹೆಚ್ಚಿದಂತೆ ಭಾಸವಾಗುತ್ತದೆ. ಇದೂ ಭ್ರಮೆಯೇ. ಗಲಿಬಿಲಿ ತಳಮಳಗಳ ಅಸು ಬಳಲಿಕೆಯ ಸ್ಥಿತಿಯದು ! ಅಧ್ಯಾತ್ಮದ ಶುದ್ಧ ಜಲಸ್ಥಾನವನ್ನು ಪುನರುಜ್ಜೀವಗೊಳಿಸದೆ ಜೀವದ ದಾಹವು ತೀರುವುದಿಲ್ಲ; ಭ್ರಾಂತಿ ಅಳಿಯುವುದಿಲ್ಲ; ಅಪೇಕ್ಷಿತ ಔಷಧ ಕೊಡದೆ ರೋಗ ಗುಣವಾಗುವುದಿಲ್ಲ; ನೆಮ್ಮದಿ ಕಾಣುವುದಿಲ್ಲ.

ನಿರಂತರವಾಗಿ ಗೊಂದಲ ಗೋಟಾಳಿಗಳ ಭ್ರಮೆಗೆ ತಾವೇ ಸಿಲುಕಿಕೊಳ್ಳುತ್ತ - ನಡುನಡುವೆ ಒಮ್ಮೊಮ್ಮೆ ಪ್ರೇತೋಚ್ಛಾಟನೆ ಮಾಡಿಕೊಳ್ಳುವ ಇಚ್ಛೆಯನ್ನೂ ಹೊಂದಿರುವ ಭವ-ಭಾವ ಗೊಂದಲಿಗರು - ಮೊತ್ತಮೊದಲಿಗೆ ಅಮೂರ್ತ ಪ್ರೇತಗಳ ಗುಂಪಿನಿಂದ ಹೊರಬಂದು ಧ್ಯಾನಸ್ಥರಾಗುವುದು ಅನಿವಾರ್ಯ. ಬದುಕನ್ನೇ ವಿಕಟ ರಾಜಕೀಯವಾಗಿಸಿಕೊಂಡು ಪರಕೀಯ ಆಕರ್ಷಣೆಗಳ ಭ್ರಾಂತಿಯೆಂಬ ಅಮಲಿಗೆ ವಶವಾದರೆ ಅಸು ಬಳಲಿಸುವ ಜೀವನ ಸಂಘರ್ಷವು ತಪ್ಪುವುದೇ ಇಲ್ಲ. ವ್ಯರ್ಥವಾದ ಕತ್ತೆ ದುಡಿತ; ಹೆಸರು ದುಡ್ಡು ಖ್ಯಾತಿಯ ಮುಳ್ಳುಗಳ ಆಘಾತ, ಮತ್ಸರ ಪ್ರತೀಕಾರಗಳ ಧೀಂಗುಣಿತ, ಸ್ವಪ್ರತಿಷ್ಠೆಯ ವ್ಯಾವಹಾರಿಕ ಮಿಥ್ಯಾಪೊರೆ.... ಇವೆಲ್ಲವೂ ಆತ್ಮಭಾವವಿಲ್ಲದಲ್ಲಿ ಮಾತ್ರ ನಡೆಸಲಾಗುವ ಯಥೇಚ್ಛ ಕಾರುಬಾರುಗಳು ! ಆದರೆ ಇದೇ ಬದುಕಲ್ಲ; ಶಾಂತ ಬದುಕಂತೂ ಅಲ್ಲವೇ ಅಲ್ಲ. ಇದು ನಿಜವಾಗಿಯೂ ರಂಗಿನ ಕನಸು; "ಭಯೋಚ್ಛಾದಿತ - ಭಯೋತ್ಪಾದಕ ಬದುಕು !".

ಅರಿವಿಗೆ ಏಳ್ಗತಿ ಇಲ್ಲದಂತೆ ನಿತ್ಯವೂ ತಮ್ಮನ್ನು ತಾವೇ ಕೊಂದುಕೊಳ್ಳುತ್ತ ಆತ್ಮಹತ್ಯೆಗೆ ಸ್ವೇಚ್ಛೆಯಿಂದ ಒಳಗಾಗುವ ಪುಂಡರ ಕ್ಷೇತ್ರವನ್ನು ಬದುಕು ಎನ್ನಲಾಗದು; ಧರ್ಮರಹಿತ - ರಾಜಕೀಯ ಕಲಬೆರಕೆಯ ಬದುಕಿನ ವೇಷ ಎನ್ನಬಹುದು.. ದೇಹದ ಗಿರಕಿ ಹೊಡೆಯುತ್ತ ದೇಹವನ್ನೇ ತಾವೆಂದುಕೊಂಡು ಸೊತ್ತುಗಳ ಸಂಗ್ರಹದಲ್ಲಿಯೇ ತನ್ಮಯವಾಗುವ ಎಲ್ಲವೂ - ಇದೇ ಅಧರ್ಮೀ ರಾಜಕೀಯ ವರ್ಗಕ್ಕೆ ಸೇರುತ್ತವೆ. ಇಂತಹ ಬದುಕುಗಳು - ಸ್ವಾರ್ಥಕ್ಕಾಗಿ ಪರಸ್ಪರ ಸ್ಪರ್ಧಿಸುವುದರಲ್ಲಿಯೇ ತಮ್ಮ ಬದುಕನ್ನು ಕಳೆದುಕೊಂಡು ಬಿಡುತ್ತವೆ. ಇಂತಹ ಸ್ಪರ್ಧಿಗಳು ತಾವು ಏನನ್ನೋ ಪಡೆದುಕೊಂಡೆವು ಎಂದುಕೊಳ್ಳುತ್ತಿದ್ದರೂ ಯಾವುದೂ ಅವರನ್ನು ನಿಜಾರ್ಥದಲ್ಲಿ ಪೊರೆಯುವ ಸರಕುಗಳಲ್ಲ; ಆದ್ದರಿಂದಲೇ ಅವು ಕಿಂಚಿತ್ ತೃಪ್ತಿಯನ್ನೂ ನೀಡದೆ ನಿರಂತರ ಸತಾಯಿಸುತ್ತವೆ.

ನಾವು ಹುಟ್ಟುವ ಮೊದಲು ಇದ್ದದ್ದು ಮತ್ತು ಸತ್ತ ನಂತರವೂ ನಮ್ಮೊಂದಿಗೆ ಇರುವುದು ಮಾತ್ರ "ನಮ್ಮದು" - ಎಂಬ ಆಧ್ಯಾತ್ಮಿಕ ದೃಷ್ಟಿಯು ಬಲವಾಗುತ್ತ ಹೋದಂತೆ ತೃಪ್ತಿಯು ಸಹಜವಾಗಿ ನೆಲೆಗೊಳ್ಳುತ್ತದೆ; "ಕೊಳ್ಳುಬಾಕ, ಕೂಡುಬಾಕತನಗಳು" ಮರೆಯಾಗುತ್ತವೆ. ಸುಖಜೀವಿಗಳನ್ನು ಆಧರಿಸುವುದು - "ನ ಮಮ " - "ಇದು ನನ್ನದಲ್ಲ" ಎಂಬ ಭಾವನೆಯೇ ಆಗಿದೆ. ಈ ಬಗೆಯ ಸುಖತೃಪ್ತಿಯಿಂದ ಹೊಮ್ಮುವ - "ನಮ್ಮದು" ಎಂಬ ನಿಜಾತ್ಮಾನಂದವನ್ನು ಯಾವುದೇ ಹೊರದೇಹಗಳಿಗೆ ನೋಡಲಾಗುವುದಿಲ್ಲ. ಆಯಾ ಅನುಭೂತಿಗೆ ಮಾತ್ರ ಎಟಕುವ ವಸ್ತುವಿದು; ಎಚ್ಚರದ ಸಾಕ್ಷಿಯು ಮಾತ್ರ ಕಾಣುವ ಸತ್ಯವಿದು.

ಸತ್ಸಂಗದಲ್ಲಿರುವಾಗ, ಸಾತ್ವಿಕ ಸತ್ಕಾರ್ಯಗಳಲ್ಲಿ ತೊಡಗಿಕೊಂಡಾಗ ಸದ್ಭಾವಗಳು ಎಚ್ಚರಗೊಳ್ಳತೊಡಗುತ್ತವೆ. ಆದರೆ ಅದು - ತಾತ್ಕಾಲಿಕ. ಹಳೆಯ ವೃತ್ತಕ್ಕೆ ಹಿಂದಿರುಗಿದೊಡನೆಯೇ - ಮತ್ತೆ ಎಚ್ಚರ ತಪ್ಪುತ್ತದೆ. ರಾಗ ರಕ್ತಿಗಳ ಡೋಲುಬಾರಿಸುತ್ತ ನಡೆಸುವ ಮನುಷ್ಯರ ಯಾವತ್ತೂ ಸುಕರ್ಮಗಳು ನಾಯಿಯ ಬಾಲಕ್ಕೆ ನಳಿಕೆ ಸಿಕ್ಕಿಸಿ ನೇರಗೊಳಿಸುವ ಪ್ರಯತ್ನಗಳಂತೆಯೇ - ಅಸ್ಥಾಯೀ ಚಿತ್ರವನ್ನು ಮಾತ್ರ ತೋರಬಲ್ಲವು. ಭ್ರಮೆಯಂತೆ ಮೂಡಿ ಮಾಯವಾಗುತ್ತ ಆಳವಾದ ಗೊಂದಲಕ್ಕೆ ತಳ್ಳುವ ಸಂಚಾರೀ ಭ್ರಮಾಚಿತ್ರಗಳವು. ಆದ್ದರಿಂದ ವಿರಕ್ತಿ - ವೈರಾಗ್ಯ ಭಾವವಿಲ್ಲದ ಯಾವುದೇ ಕರ್ಮಗಳು ಶಾಂತಿ ನೆಮ್ಮದಿಯ ಸ್ಥಾಯೀ ಭಾವವನ್ನು ಮೂಡಿಸಲಾರವು. ಇದು ಸಾಮಾನ್ಯ ಸಾಂಸಾರಿಕರ ತ್ರಿಶಂಕು ಅವಸ್ಥೆ. ಅದಕ್ಕಾಗಿಯೇ ಆಧ್ಯಾತ್ಮಿಕ ಅಧಿಕಾರವಿಲ್ಲದವರು ಸೇವೆ (ಯ ಆಟ) ನಡೆಸುವುದು ಮತ್ತು ಉಪದೇಶಿಸುವುದನ್ನು - ಪರಮಹಂಸರು "ವ್ಯರ್ಥ ಕರ್ಮಗಳು" ಎನ್ನುತ್ತಿದ್ದರು; "ಅಂತಹ ಸೇವೆಗಳಿಂದ ಯಾವುದೇ ಪ್ರಯೋಜನವಾಗದು; ಅಂತಹ ಉಪದೇಶಗಳು ಯಾವುದೇ ಹೃದಯವನ್ನು ತಲುಪವು" - ಎನ್ನುತ್ತಿದ್ದರು. "ನಮ್ಮನ್ನು ನಾವು ಉದ್ಧರಿಸಿಕೊಂಡರೆ ಬೇಕಾದಷ್ಟಾಯಿತು; ಶಕ್ತಿಯಿಲ್ಲದೆ ಬೆಟ್ಟ ಎತ್ತಲು ಹೊರಡಬಾರದು..." ಎನ್ನುತ್ತಿದ್ದರು; "ಶ್ರುತಿಗಳಾಗಿ; ಸ್ಮೃತಿಗಳಾಗಿ; ಅನುಸ್ಮೃತಿಗಳಾಗಿ; ಅಪಶ್ರುತಿಗಳಾಗಬೇಡಿ; ವಿಸ್ಮೃತಿಗಳಾಗಬೇಡಿ; ಅಪಸ್ಮೃತಿಗಳಾಗಬೇಡಿ... ಅಧಿಕೃತ ಅಧಿಕಾರವಿಲ್ಲದ ಉಚಿತ ಉಪದೇಶಗಳೆಲ್ಲವೂ ಅಲ್ಪಾಯುಷಿ ಪಟಾಕಿಗಳಂತೆ; ಅದರಿಂದಾಗುವ ಉಪಯೋಗ - ತಾತ್ಕಾಲಿಕ ರಂಜನೆಯಷ್ಟೇ..." ಎಂದೂ ತಮ್ಮ ಭಕ್ತರನ್ನು ಎಚ್ಚರಿಸುತ್ತಿದ್ದರು; ಸಾಧನೆಯಲ್ಲಿ ತೊಡಗಿಕೊಳ್ಳಲು ಪ್ರೇರೇಪಿಸುತ್ತಿದ್ದರು.


"ಪ್ರಾಪಂಚಿಕರು ಸಾಧುಗಳ ಹತ್ತಿರಕ್ಕೆ ಬಂದಾಗ ತಮ್ಮ ಪ್ರಾಪಂಚಿಕ ಭಾವನೆ, ವಿಷಯಚಿಂತನೆಗಳನ್ನೆಲ್ಲ ತಮ್ಮ ಹೃದಯದಲ್ಲಿ ಬಚ್ಚಿಟ್ಟುಕೊಂಡು ಕುಳಿತಿರುತ್ತಾರೆ. ಅಲ್ಲಿಂದ ಹಿಂದಿರುಗಿದ ನಂತರ ಅವನ್ನೆಲ್ಲ ಹೊರಕ್ಕೆ ತರುತ್ತಾರೆ. ಹೇಗೆಂದರೆ... ಪಾರಿವಾಳವು ಬಟಾಣಿಯನ್ನು ತಿನ್ನುತ್ತದೆ. ಅದು ಗುಳುಂ ಗುಳುಂ ಎಂದು ನುಂಗುವುದನ್ನು ನೋಡುವಾಗ ಅವನ್ನೆಲ್ಲ ಅರಗಿಸಿಕೊಂಡುಬಿಟ್ಟಂತೆಯೇ ಕಾಣುತ್ತದೆ. ಆದರೆ ಆ ಕಾಳುಗಳನ್ನೆಲ್ಲ ಅದು ತನ್ನ ಗಂಟಲಿನೊಳಗೇ ಇಟ್ಟುಕೊಂಡಿರುತ್ತದೆ. ಕಾಳು ಜಠರ ತಲುಪುವುದೇ ಇಲ್ಲ; ಆಂತರ್ಯಕ್ಕಿಳಿಯುವುದೇ ಇಲ್ಲ. ಗಂಟಲಿನಲ್ಲಿಯೇ ಗಿಜಿಗಿಜಿ ಗಿಜಿಗಿಜಿ ಅನ್ನುತ್ತಿರುತ್ತದೆ..."  ತಮ್ಮ ಸಂಸಾರದ ತಾಪತ್ರಯಗಳನ್ನು ಸಾಧು ಸಂಗದಲ್ಲಿರುವಾಗಲೂ ಬದಿಯಲ್ಲಿ ಎತ್ತಿಡಲಾಗದಂತಹ ಭವಬಂಧನದಲ್ಲಿ ಸಿಲುಕಿರುವವರನ್ನು ಕುರಿತು ಶ್ರೀ ರಾಮಕೃಷ್ಣರು ನೀಡಿದ್ದ ದೃಷ್ಟಾಂತವಿದು.

ಮಿದುವಾದ ಮಣ್ಣು ತನ್ನನ್ನು ಸಂಧಿಸಿದ ಬೀಜವನ್ನು ಸಸಿಯಾಗಿಸುವಂತೆ ಮಿದುವಾದ ಹೃದಯಗಳು ಮಾತ್ರ ಸದ್ಭಾವಗಳನ್ನು ಹೀರಿಕೊಳ್ಳಬಲ್ಲವು ಮತ್ತು ಬೆಳೆಸಬಲ್ಲವು. ಅಂತೆಯೇ ಒಣಗಿ ಹೋಗಿರುವ ಭಾವನೆಲೆಯಲ್ಲಿ ಸಚ್ಚಿಂತನೆಗಳು ನಮ್ಮೊಳಗನ್ನು ಸ್ಪರ್ಶಿಸಿ ಅರಳಲು ಅವಕಾಶವೇ ಇರುವುದಿಲ್ಲ; ಅಂತಹ ಇಂದ್ರಿಯಗಳು ಕೇಳಿದ್ದು ನೋಡಿದ್ದೆಲ್ಲವೂ ಅಲ್ಲಲ್ಲೇ ಹಾರಿ ಹೋಗಿರುತ್ತದೆ; ಮುಖಕ್ಕೆ ಬಡಿದು ಹಿಂದೆ ಹೋಗಿರುತ್ತದೆ; ಸಾಂಸಾರಿಕ ಕೋಟಲೆಯ ತ್ಯಾಜ್ಯ ನಿಬಿಡತೆಯೆಂಬ ಗಿಜಿಗಿಜಿ ಕಾಳುಗಳಿಂದ ಅದಾಗಲೇ ತುಂಬಿಹೋಗಿರುವ ಗಂಟಲನ್ನು ದಾಟಿ ಸದ್ವಿಚಾರಗಳು ಮುಂದೆ ಹೋಗಲು ಯಾವುದೇ ಅವಕಾಶವಿರುವುದಿಲ್ಲ. ಆದ್ದರಿಂದಲೇ ಉದಾತ್ತ ಉಪದೇಶಗಳು ಕಿವಿಗೆ ಬಿದ್ದರೂ ಹೃದಯವನ್ನು ತಲುಪುವುದೇ ಇಲ್ಲ. ಭವರೋಗವು ಪರಿಹಾರವಾಗುವುದೂ ಇಲ್ಲ. ಅಂತಹ ಭಕ್ತಿಯಾತ್ರಿಗಳು ಎಷ್ಟೇ ಸಚ್ಚಿಂತನೆಗಳಲ್ಲಿ ಪಾಲ್ಗೊಂಡರೂ ತಾವು ನಿಂತಲ್ಲಿಂದ ಒಂದು ಹೆಜ್ಜೆಯೂ ಮುಂದೆ ಸರಿಯುವುದಿಲ್ಲ.

ಕೆಲವರು ಎಷ್ಟು ಆಯಾಸಗೊಂಡಿರುತ್ತಾರೆಂದರೆ ನಿದ್ರಿಸುವುದಕ್ಕಾಗಿಯೇ ಧಾರ್ಮಿಕ ಸಭೆಗಳಿಗೆ ಬರುವವರೂ ಇದ್ದಾರೆ ! ಒಮ್ಮೆ ಉಪನಿಷತ್ತಿನ ಕುರಿತು ನಡೆಸಿದ್ದ ಒಂದು ವಿಚಾರ ಗೋಷ್ಠಿಯಲ್ಲಿ ನಾನೂ ಭಾಗವಹಿಸಿದ್ದೆ. ಅಂದು ನನ್ನ ಪಕ್ಕದಲ್ಲಿ ಕುಳಿತಿದ್ದ ಇಬ್ಬರು ಮಾತೆಯರು ಅಕ್ಷರಶಃ ಗೊರಕೆ ಹೊಡೆಯುತ್ತ ನಿದ್ರಿಸಿದ್ದರು ! ಅಂದು ನನ್ನ ಏಕಾಗ್ರತೆಗಾಗಿ ನಾನು ಸ್ಥಳ ಬದಲಿಸಿ ಕುಳಿತುಕೊಳ್ಳುವಂತಾಗಿತ್ತು. ಇದು ಅಸು ಬಳಲಿಕೆಯ ಸ್ಥಿತಿ ! ನಿದ್ದೆ ಮಾಡುವುದು ತಪ್ಪೇನಲ್ಲ; ಆಯಾಸವಾದಾಗ ನಿದ್ರೆ ಬರುವುದೂ ಸಹಜ. ಆದರೆ ನಿರೀಕ್ಷಿಸಿಕೊಳ್ಳಬೇಕಾದ್ದು ಅದಲ್ಲ. ಬಳಲಿಕೆಯ ಗಿಜಿಗಿಜಿಯು ಯಾವತ್ತೂ ನಿಷ್ಕ್ರಿಯತೆಯನ್ನೇ ಅವಲಂಬಿಸುತ್ತದೆ; ಎಚ್ಚರ ತಪ್ಪಿಸುತ್ತದೆ; ಆದ್ದರಿಂದಲೇ ನಿದ್ದೆ ಬರುತ್ತದೆ. ಇದು - ಗ್ರಹಿಸಬೇಕಾದ ವಿಷಯ. ಹೀಗೆ ನಿದ್ರೆ ಬರುವಂತಿದ್ದರೆ - ಗಂಭೀರ ಸಭೆಗಳನ್ನು ನಿದ್ದೆಗಾಗಿ ಆಯ್ದುಕೊಳ್ಳುವ ಅಗತ್ಯವಿದೆಯೆ ? ಇತರರಿಗೆ "ಇಲ್ಲ" ಅನ್ನಿಸಿದರೂ ಅದೇನೋ ಅವ್ಯಕ್ತ ಆಕರ್ಷಣೆಯು ಜ್ಞಾನನದಿಯವರೆಗೆ ಅವರನ್ನು ಸೆಳೆದೊಯ್ದಿರುತ್ತದೆ; ಆದರೆ ಬಳಲಿರುವ ಪ್ರಜ್ಞೆಯು ತನ್ನ ದಾಹ ತೀರಿಸಿಕೊಳ್ಳಲಾಗದೆ ದಡದಲ್ಲಿಯೇ ನಿದ್ರಿಸುತ್ತದೆ; ಜ್ಞಾನಪಾನ ಸಾಧ್ಯವಾಗುವುದಿಲ್ಲ. ಇಂತಹ ಅಸ್ಥಿರ ದೇಹಮನಸ್ಸುಗಳ ಒಡೆಯರ ಗಿಜಿಗಿಜಿ ಭಾವಚಿಂತನೆಗಳಿಂದಾಗಿ - ಅವರ ಅಪೇಕ್ಷೆ ಮತ್ತು ಉದ್ದೇಶಗಳು ಒಳ್ಳೆಯದೇ ಇದ್ದರೂ ಯಾವುದೇ ಉದ್ದೇಶ ಸಾಧನೆಯಾಗಲು ಅವರ ಇಂದ್ರಿಯಗಳೇ ಸಹಕರಿಸಲಾರವು. ದೇಹ ಮನಸ್ಸು ಬುದ್ಧಿಗಳನ್ನು ತರಬೇತುಗೊಳಿಸಿಕೊಳ್ಳದೆ ಯಾವ ಗೋಷ್ಠಿಗಳಲ್ಲಿ ಎಷ್ಟು ಭಾಗವಹಿಸಿದರೂ ಅರ್ಥ ಹುಟ್ಟುವುದಿಲ್ಲ; ವ್ಯರ್ಥವೇ ಆಗುತ್ತದೆ. ಎಷ್ಟೋ ಲಕ್ಷ ಜನರನ್ನು ಗುಡ್ಡೆಹಾಕಿದ ದೃಶ್ಯಾವಳಿಯಿಂದ ಸಂಘಟಕರ ಅಹಂ ತುಂಬಿಕೊಳ್ಳಬಹುದಲ್ಲದೆ ಬೇರೇನೂ ಪರಿಣಾಮ ಆಗುವುದಿಲ್ಲ. ಇದನ್ನೇ ಗೊಂದಲದ ಸಂಸಾರ ಎನ್ನುವುದು. ಭಕ್ತಿಯು Fashion ಸರಕಲ್ಲ. ಸಂಸಾರದ ಸಂತೆಯನ್ನು ಗಂಟಲಿಗೆ ಸಿಕ್ಕಿಸಿಕೊಂಡು ಪಾಲ್ಗೊಳ್ಳುವಂತಹ ಭಕ್ತಿ ಶ್ರವಣದಿಂದ ಯಾವುದೇ ಉಪಯೋಗವಿಲ್ಲ ಎಂಬುದು ಶ್ರೀ ರಾಮಕೃಷ್ಣರ ಭಾವವಾಗಿತ್ತು.



"ಪೂಜೆಗಿಂತ ಮೇಲಾದುದು ಜಪ, ಜಪಕ್ಕಿಂತ ಮೇಲಾದುದು ಧ್ಯಾನ, ಧ್ಯಾನಕ್ಕಿಂತ ಮೇಲಾದುದು ಭಾವ, ಭಾವಕ್ಕಿಂತ ಮೇಲಾದುದು ಮಹಾಭಾವ. ಅದೇ ಪ್ರೇಮ. ಒಮ್ಮೆ ಪ್ರೇಮ ಉಂಟಾಯಿತೆಂದರೆ ಭಗವಂತನನ್ನು ಕಟ್ಟಿ ಇಡಲು ಒಂದು ಹಗ್ಗ ದೊರಕಿದಂತೆ.."

ಪ್ರೇಮ ಅಂದರೆ - ಇವತ್ತು ಎಲ್ಲೆಂದರಲ್ಲಿ ಬಿದ್ದು ಹೊರಳುತ್ತಿರುವ - "I love you..." ಪ್ರೇಮವಲ್ಲ. ಭಗವಂತನಲ್ಲಿ ಮೂಡುವ ಪ್ರೇಮವು - ಸ್ವಾತ್ಮವನ್ನು ಸಂಸ್ಕರಿಸಿಕೊಳ್ಳುವ ಅವ್ಯಾಜ ನಿರ್ಮಮ ಅಂತರಂಗದ ಪೂಜೆ; ಭಾವಪುಷ್ಪಗಳಿಂದ ನಡೆಸುವ ನಿಶ್ಶಬ್ದ ಆತ್ಮಾರಾಧನೆ; ಸ್ವಾತ್ಮ ಮತ್ತು ಸೃಷ್ಟಿಯ ಸಕಲ ಪರಮಾತ್ಮರೂಪಿಗಳನ್ನು ಗೌರವಿಸಿ ಆದರಿಸಿ ಆಧರಿಸಬಲ್ಲ ವಿಶ್ವಪ್ರೇಮ. ಅಂತಹ ಸುಭಗ ಪ್ರೇಮದಿಂದಲೇ ನಿಜಭಾವದರಿವು ಎಂಬುದನ್ನು ಶ್ರೀ ರಾಮಕೃಷ್ಣರು ಪ್ರತಿಪಾದಿಸಿದ್ದರು. ಅದೇ ಭಗವಂತನ ಪ್ರೇಮ; ಭಗವಂತನನ್ನು ಕಟ್ಟಿಹಾಕುವ "ಭಾವ ಪಾಶ...". ಬಗೆಬಗೆಯ ರೂಪಕೊಟ್ಟು ತಮ್ಮ ಇಷ್ಟಾರ್ಥಗಳನ್ನೆಲ್ಲ ಪೂರೈಸುವ ಒಂದು ಯಂತ್ರದಂತೆ ಭಗವಂತ ಭಾವವನ್ನು ಉಪಚರಿಸುತ್ತಲೇ ಬಂದಿರುವವರು ನಿಜವಾಗಿಯೂ ಭಕ್ತರೆ ? ಭಕ್ತ ಎಂದು ಅಂದುಕೊಂಡವರ ಇಚ್ಛೆಯನ್ನೆಲ್ಲ ಪೂರೈಸುವ ATM - ಭಗವಂತನೆ ? ನಾವು ಹಾಗೆ ಅಂದುಕೊಂಡು ನರಳುತ್ತಿದ್ದೇವೆ - ಅಷ್ಟೆ. ಇಂತಹ ವ್ಯಾವಹಾರಿಕ ಪ್ರೇಮಗಳೊಂದೂ ಶಾಶ್ವತವಲ್ಲ. ಸ್ಥಿರವಾದ ನಿರಪೇಕ್ಷ ಪ್ರೇಮವೊಂದೇ ಶಾಶ್ವತ. ವಸ್ತು ಸೊತ್ತುಗಳ ಅಪೇಕ್ಷೆಯ - ಸ್ಥಿತ್ಯಂತರ ಹೊಂದುವಂತಹ ಅಸ್ಥಿರ ಪ್ರೇಮಕ್ಕೆ ಭಗವಂತನನ್ನು ಒಲಿಸಿಕೊಳ್ಳುವ ಶಕ್ತಿ ಇರುವುದಿಲ್ಲ. ಮಾಯೆಯ ನಾಟಕದಿಂದ ಭಗವಂತನನ್ನು ಮರುಳುಗೊಳಿಸಲು ಆಗುವುದಿಲ್ಲ. ಆದ್ದರಿಂದಲೇ "ಪ್ರೇಮೋನ್ಮತ್ತನಾಗದೆ ಇರುವ ಭಕ್ತನ ಹೊರೆಯನ್ನು ಭಗವಂತನು ಹೊರಲಾರ " ಎನ್ನುತ್ತಿದ್ದರು - ಶ್ರೀ ರಾಮಕೃಷ್ಣರು. ಅವರು ಅದಕ್ಕೂ ಸರಳ ದೃಷ್ಟಾಂತವನ್ನು ಕೊಟ್ಟರು.

"ಚಿಕ್ಕ ಮಕ್ಕಳನ್ನು ಮಾತ್ರವೇ ಅವುಗಳ ಕೈಹಿಡಿದುಕೊಂಡು ಹೋಗಿ ಊಟಕ್ಕೆ ಕುಳ್ಳಿರಿಸುತ್ತಾರೆ. ದೊಡ್ಡವರ ವಿಷಯವಾಗಿ ಯಾರು ತಾನೇ ಹಾಗೆ ವರ್ತಿಸುತ್ತಾರೆ ? ಭಕ್ತನು ತನ್ನ ಯೋಗಕ್ಷೇಮವನ್ನು ತಾನೇ ನೋಡಿಕೊಳ್ಳಲಾರದಷ್ಟು ಭಗವತ್ ಚಿಂತನೆಯಲ್ಲಿ ತನ್ಮಯನಾಗಿಬಿಟ್ಟರೆ, ಆಗ ಮಾತ್ರ, ಆತನ ಸಂಪೂರ್ಣ ಹೊರೆಯನ್ನು ಭಗವಂತನೇ ಹೊತ್ತುಕೊಳ್ಳುತ್ತಾನೆ..."

ತನ್ನ ಯೋಗಕ್ಷೇಮವನ್ನು ತಾನೇ ಮಾಡಿಕೊಳ್ಳಲಾಗದಷ್ಟು ಉತ್ಕಟತೆಯಿಂದ ಯಾರು ಧ್ಯಾನಿಸುತ್ತಿದ್ದಾರೆ ? ಭಗವಂತನನ್ನು ದೂರುವವರು ತಾವೇ ಪ್ರಶ್ನಿಸಿಕೊಳ್ಳಬೇಕು. ನಿತ್ಯದ ಬದುಕಿನಲ್ಲಿ - ತಮ್ಮ ಮತ್ತು ಭಗವಂತನ ಯೋಗಕ್ಷೇಮವನ್ನೂ ತಾವೇ ನೋಡಿಕೊಳ್ಳುತ್ತಿದ್ದೇವೆ - ಎಂಬಂತಹ ಹಮ್ಮಿನ ಕ್ರಿಯೆಗಳು ಎಡೆಬಿಡದೆ ನಡೆಯುತ್ತಿಲ್ಲವೆ ? ದಿನಕ್ಕೊಮ್ಮೆ ದೇವಸ್ಥಾನದೆದುರು ನಿಂತು ಯಾರಿಗೋ ಹೊಡೆಯುವಂತೆ ಕೈ ಎತ್ತುವವರೆಲ್ಲರೂ ಭಕ್ತರೆ ? ಹುಂಡಿಗೆ ಕಂತೆ ಕಂತೆ ಸುರಿಯುವವರೆಲ್ಲರೂ ಭಕ್ತರೆ ? ಇವೆಲ್ಲವೂ - ಭಗವಂತನಿಗೇ ಉಪಕರಿಸುವಂತೆ ನಡೆಸುವ ಹುಂಬ ಕ್ರಿಯೆಗಳು. ಭಾವಪೂರ್ಣ ಪ್ರೇಮಭಕ್ತಿಯು ಸ್ಥಾಯೀ ಭಾವವಾಗದ ಯಾವುದೇ ಹೃದಯದಲ್ಲಿ ಭಗವಂತನಿರುವುದಿಲ್ಲ; ಆದ್ದರಿಂದಲೇ ಜೀವಿಗಳ ತಳಮಳಗಳು ನಿಲ್ಲುವುದೇ ಇಲ್ಲ. ಸಮಸ್ಯೆ - ನಮ್ಮೊಳಗೇ ಇದೆ. ತಮ್ಮ ಯಾವುದೇ ನಿತ್ಯದ ಪಡಿಪಾಟಲುಗಳು "ಸಮಸ್ಯೆಗಳು - ಅಲ್ಲ; .. ಸಮಸ್ಯೆಗಳೇ ಇಲ್ಲ.." ಎಂಬ ಅರಿವು ಮೂಡಿದಾಗಲೇ ಎಲ್ಲ ಸಮಸ್ಯೆಗಳೂ ಪರಿಹಾರವಾಗುವುದು. ಇದೇ ಅರಿವು. ಪ್ರಾಯೋಗಿಕವಾಗಿ ಕಷ್ಟದ ಹಾದಿ; ನಿಸ್ಸಂಶಯ. ಆದರೆ ಈ ಕರ್ಮಭೂಮಿ ಇರುವುದೇ ಜೀವಿಗಳ ಪ್ರಯತ್ನಶೀಲತೆಯನ್ನು ಸಾಣೆಹಿಡಿಯುವುದಕ್ಕೆ...

ಸಾಧನೆಯ ಹಾದಿಗಳೆಲ್ಲವೂ ಕಠಿಣತಮವೇ ಆಗಿರುತ್ತದೆ ಎಂಬ ಸತ್ಯವನ್ನು ಬಲ್ಲವರು ಭಗವತ್ಪ್ರೇಮದ ಹಾದಿಯನ್ನೂ ಅಂತೆಯೇ ಸ್ವೀಕರಿಸಬಲ್ಲರು. ಬರಿಗೈದಾಸರ ಭಕ್ತಿಯ ಹಾದಿಯಲ್ಲಿ "ಕೊಡುಕೊಳುವ" ಯಾವುದೇ ಜಂಜಾಟಗಳಿರುವುದಿಲ್ಲ. ಆದ್ದರಿಂದಲೇ ಅಂತಹ ಭಕ್ತಿಭಾವವು ಯಾರನ್ನೂ ಪೀಡಿಸುವುದಿಲ್ಲ. ಸ್ವಚ್ಛ ಭಕ್ತಿಯು ಎಂದಿಗೂ ಅಮಾನ್ಯೀಕರಣಗೊಳ್ಳುವುದಿಲ್ಲ. ಇದಕ್ಕೆ ಹೊರತಾದ "ಸೇವೆಗಳು- ರಿಸೀಟುಗಳು" ಎಂಬ ಯಾವುದೇ ಬಾಹ್ಯ ಹೋರಾಟ ಹಾರಾಟ ತೋರಾಟಗಳಿಂದ ಜೀವರ ಸಮಸ್ಯೆಗಳು ನಾಶವಾಗುವುದಿಲ್ಲ. ಲೌಕಿಕ ಸುಖಕ್ಕಾಗಿ ಮನಸ್ಸಿನೊಂದಿಗೆ ಹೋರಾಟಕ್ಕಿಳಿದು ಬದುಕಿನ ಸಹಜ ಸೌಂದರ್ಯವನ್ನು ದೂರಗೊಳಿಸುತ್ತ ಬಂದರೆ ಅಂತಹ ಯಾವುದೇ ಜೀವಸಮಸ್ಯೆಗಳಿಗೆ ಪರಿಹಾರವು ಸಿಗುವುದೇ ಇಲ್ಲ. ಮನಸ್ಸನ್ನು ಶಾಂತಗೊಳಿಸಿ ದಿಗಂಬರವಾದಾಗ ಯಾವ ಸಂದರ್ಭವೂ ಸಮಸ್ಯೆಯೇ ಆಗುವುದಿಲ್ಲ. ಎಷ್ಟೇ ಪ್ರಯತ್ನಿಸಿದರೂ ಒಂದೇ ಬದುಕಿನಲ್ಲಿ ಸಾಧಿಸಲಾಗದ ದಿವ್ಯ ಸ್ಥಿತಿಯಿದು. "ತಮ್ಮ ಗಂಡ ಹೆಂಡತಿ ಮಕ್ಕಳಿಗಾಗಿ ಅರ್ಥವಿಲ್ಲದ ಅರ್ಥಸಂಚಯದ ಪಡಿಪಾಟಲು ಪಡುತ್ತ ನಿತ್ಯವೂ ಕಣ್ಣೀರಕೋಡಿ ಹರಿಸುವ ಜನರು ಭಗವಂತನಿಗಾಗಿ ಕಣ್ಣೀರು ಹರಿಸುವುದುಂಟೆ ?" ಎಂದು ಶ್ರೀ ರಾಮಕೃಷ್ಣರು ತಲ್ಲಣಿಸುತ್ತಿದ್ದರು. ಹೀಗಿದ್ದೂ ತಮ್ಮ ಕಷ್ಟಗಳಿಗೆಲ್ಲ ಭಗವಂತನೇ ಕಾರಣ - ಎನ್ನುವ ಭಕ್ತವೇಷಗಳಿಗೆ ಕಡಿಮೆಯಿಲ್ಲ. ಮಗುವಿನಂತೆ ತನ್ನನ್ನೇ ಆಶ್ರಯಿಸುವ ಪ್ರೇಮಾಭಕ್ತಿಗೆ ಮಾತ್ರ ಭಗವಂತನು ಸ್ಪಂದಿಸುತ್ತಾನೆ; "ನನ್ನ ಕಾಲ ಮೇಲೆ ನಾನು ನಿಂತಿದ್ದೇನೆ" ಎನ್ನುವ ಜೀವಬಳಗವು ತಮ್ಮ ಸ್ವಂತ ಯೋಗಕ್ಷೇಮಕ್ಕೆ ಆಗೊಮ್ಮೆ ಈಗೊಮ್ಮೆ ಮಾತ್ರ "ದೇವರ ಮರಿ"ಯನ್ನು ಅವಲಂಬಿಸುವಂತಿಲ್ಲ. ಪರಮಾತ್ಮವೇ ತನ್ನ ಪರಮಗಂತವ್ಯ ಎಂಬ ಪೂರ್ಣ ಶ್ರದ್ಧೆ ಇದ್ದಾಗ ಮಾತ್ರ - ಕರೆಯದೇ ಬಂದು ರಕ್ಷಿಸುವ "ಕಾಣದ ಕೈ" - ಮನುಷ್ಯರ ಅನುಭವಕ್ಕೆ ಬರುತ್ತದೆ. ಶ್ರದ್ಧೆಯಿಂದ ನಡೆಸುವ ಪ್ರಯತ್ನದ ಹಾದಿಯಲ್ಲಿ ತೊಡಗಿಕೊಂಡ ಹೃದಯವು ಆರ್ತವಾಗಿ ರೋದಿಸುತ್ತದೆ; ಪೂರ್ಣತೆಯ ಭಾವೈಕ್ಯಕ್ಕಾಗಿ ಅತ್ತು ಹಂಬಲಿಸುತ್ತದೆ; ಭಗವಂತನಿಗಾಗಿ ಅಳುವ ಹೃದಯವನ್ನು ಮಾತ್ರ ಭಗವಂತನೇ ಸಂತೈಸುತ್ತಾನೆ. ಸಂಕಟ ಬಂದಾಗ ಮಾತ್ರ ಆಗೊಮ್ಮೆ ಈಗೊಮ್ಮೆ ಇಣುಕಿ ಓಡುವ ಜೀವಿಗಳು ತಮ್ಮ ಕಾಲ ಮೇಲೆ ತಾವು ನಿಲ್ಲುವುದು ಅನಿವಾರ್ಯ. ಭಗವಂತನ ಭಾವವನ್ನು "Use & Throw" ಶೈಲಿಯಲ್ಲಿ ಉಪಯೋಗಿಸುವವರ ಗಳಿಕೆ ಹೆಗ್ಗಳಿಕೆ ಹೀಗಳಿಕೆಗಳಿಗೆಲ್ಲ ಅವರವರೇ ಹೊಣೆ; ಭಗವಂತನಲ್ಲ. ಭಗವಂತನ ನಿಜ ಅರಿವಿಗೆ ಪ್ರೇಮಾಭಕ್ತಿಯೇ ದಿವ್ಯೌಷಧ.

"ದೇಹವೊಂದು ಯಂತ್ರ; ಅದನ್ನು ನಡೆಸುವವನು ಯಂತ್ರಿ" ಎಂಬ ವಿಶ್ವಾಸದ ನೆಲೆಯಲ್ಲಿ ಆತ್ಮನಿರೀಕ್ಷಣೆಯಲ್ಲಿರುತ್ತ ಸಂಚರಿಸುವವರಿಗೆ ಕಲುಷಿತ ಭಾವಬಾವಿಯನ್ನು ಸ್ವಚ್ಛಗೊಳಿಸುವ ಇಚ್ಛೆಯುಂಟಾಗುತ್ತದೆ. ಆಗಲೇ... ನಿದ್ರೆ ಹರಿದು ಎಚ್ಚರವಾಗುತ್ತದೆ. ಗಾಯಗೊಳಿಸಬಲ್ಲ ಹಲ್ಲುಗಳ ನಡುವೆಯೇ ಇರುತ್ತ ತನ್ನನ್ನು ತಾನು ಸುರಕ್ಷಿತವಾಗಿರಿಸಿಕೊಳ್ಳುವ ನಾಲಗೆಯು ನಮಗೆ ಅಂತಹ ಎಚ್ಚರದ ಪಾಠವನ್ನು ನಿತ್ಯವೂ ಹೇಳುತ್ತದೆ. ನಾಲಗೆಯದು ಧ್ಯಾನಸ್ಥ ಸ್ಥಿತಿ; ಅದು ಏಕಗಮ್ಯ. ಸಂಘರ್ಷಕ್ಕೆ ವಿಮುಖವಾದ ಸ್ಥಿತಿಯದು. ಹೀಗಿದ್ದೂ ಅಲ್ಲಿ ಕರ್ತವ್ಯ ವಿಮುಖತೆ ಇರುವುದಿಲ್ಲ. "ಮನೋಯಂತ್ರದ ದೋಷ"ದಿಂದಾಗಿ ಅಕಸ್ಮಾತ್ ನಾಲಗೆಯು ಸ್ವಚ್ಛಂದ ಸುಖಕ್ಕೆಳಸಿದರೆ ಅದರ ಹದ ತಪ್ಪಿದ ಹಂದಾಟದಿಂದ ಇಡೀ ದೇಹಯಂತ್ರವು ನೋವುಣ್ಣುವುದುಂಟು. ನಾಲಗೆಯ ದೋಷಪೂರಿತ ಚಲನೆಯಿಂದಾಗಿ ಹಲ್ಲು ಉದುರಿಸಿಕೊಂಡವರೂ ಇದ್ದಾರೆ ! ನಾಲಗೆಯ ಕುಣಿತದಿಂದ ಹಲ್ಲುಗಳು ಅಪಾಯಕ್ಕೊಳಗಾಗಬಹುದೇ ಹೊರತು ನಾಲಗೆಯಲ್ಲ ಎಂದು ಹೊರಕಣ್ಣಿಗೆ ಕಾಣಿಸಬಹುದು. ಆದರೆ ಪಕ್ಕದ ಮನೆಗೆ ಬೆಂಕಿ ಹತ್ತಿದರೆ ಸ್ವಂತ ಮನೆಯೂ ಭಯಭೀತವಾಗಬೇಕಾಗುತ್ತದೆ. ಅಸ್ವಸ್ಥ ಹಲ್ಲುಗಳ ನಡುವೆ ಸಿಲುಕಿದಾಗ ನಾಲಗೆಯೂ ಉಪವಾಸ ಬೀಳಬೇಕಾಗುತ್ತದೆ. ಹೀಗೆ ಸಮಗ್ರವಾಗಿ ನೋಡಬಲ್ಲ ಅಧ್ಯಾತ್ಮವಾದಿಗಳಿಗೆ ಹಲ್ಲು ಬೇರೆ; ನಾಲಗೆ ಬೇರೆ ಅಲ್ಲ. ಎಲ್ಲ ಅಂಗಗಳೂ ಒಂದಕ್ಕೊಂದು ಅವಿಭಾಜ್ಯ ಸಂಬಂಧದಿಂದ ಕೂಡಿರುವಂತಹ ದೇಹವನ್ನು ಅಂತಹ ದಾರ್ಶನಿಕರು ಭಾವಿಸಬಲ್ಲರು. ನಾವು ಸವಾರಿ ಮಾಡುವ ವಾಹನದ ಯಾವುದೇ ಭಾಗವು ನಿಶ್ಚಲವಾದರೂ ವಾಹನವು ಓಡಲಾರದು ಅಥವ ಅದರ ವೇಗ ತಗ್ಗಬಹುದು. ನಮ್ಮ ಉದ್ದೇಶಿತ ಪ್ರಯಾಣವು ನಿಲ್ಲುತ್ತದೆ ಅಥವ ವಿಳಂಬವಾಗುತ್ತದೆ. ಯಾವುದೇ ಯಂತ್ರದ ದುರ್ಬಳಕೆಯಿಂದಲೂ ಯಂತ್ರವು ಬಳಲುತ್ತದೆ; ಬಳಲಿದ ಯಂತ್ರವು ಸಹಕರಿಸುವುದಿಲ್ಲ. ಯಂತ್ರಿಯು ತನ್ನ ಅಂತರ್ಭಾವವನ್ನು ಅವಗಣಿಸಿದಾಗಲೂ ಜಡಯಂತ್ರಕ್ಕೆ ಅಪಾಯವು ತಪ್ಪಿದ್ದಲ್ಲ; ದೇಹಯಂತ್ರವು ಸುಸ್ಥಿತಿಯಲ್ಲಿದ್ದು ಚಾಲಕನು ನಿದ್ರಿಸಿದರೂ ಅಪಘಾತ ನಿಶ್ಚಯ. ಯಂತ್ರಿ ಮತ್ತು ಯಂತ್ರ ಇವೆರಡರ ಸಮನ್ವಯಶೀಲ ಚಲನೆಯಿಂದ ಮಾತ್ರವೇ ಯಾವುದೇ ಪಯಣವು ಸುಗಮವಾಗುತ್ತದೆ. ಈ ಬದುಕು ಎಂಬುದು - ನಾಲಗೆ ಮತ್ತು ಹಲ್ಲುಗಳ ದಾಂಪತ್ಯವಿದ್ದಂತೆ. ಆದುದರಿಂದ ದೇಹವಾಹನವನ್ನು ಚಲಾಯಿಸುವಾಗ ಅಹಂಕಾರವಿರದ ಪೂರ್ಣ ಎಚ್ಚರವು ಅನಿವಾರ್ಯ. ದೇಹ ಮನೋಬುದ್ಧಿ ಆತ್ಮಗಳ ಸಮನ್ವಯವಾಗಬೇಕು ಎಂಬ ಇಚ್ಛೆ ಮತ್ತು ಪೂರ್ಣ ಎಚ್ಚರ ಬೇಕು. ಆಗ ಗುರು-ಗುರಿ ಕಾಣುತ್ತದೆ.

ಆದರೆ ಇಚ್ಛೆಯಾಗಲೀ ಎಚ್ಚರವಾಗಲೀ ತ್ಯಾಗಭಾವವಿಲ್ಲದೆ ಸಿದ್ಧಿಸಲಾರದು. ಕೇವಲ ಬಾಯಿಯಲ್ಲಿ ತ್ಯಾಗದ ಮಾತನಾಡುತ್ತ ನಾವು ನಡೆಸುತ್ತಿರುವ ಸ್ವಾರ್ಥದ ಕಾರುಬಾರುಗಳು ಒಂದೇ ಎರಡೆ ? ಇಂತಹ ಪಡಪೋಶಿ ತ್ಯಾಗದ ಸದ್ದಿನಲ್ಲೂ ಇಷ್ಟ ವಿಶಿಷ್ಟಗಳ ಸ್ಪರ್ಧೆ ನಡೆಯುತ್ತಿರುತ್ತದೆ. ಇವೆಲ್ಲವೂ ಪೈಪೋಟಿ ರಾಜಕೀಯದ ಪಕ್ಕಾ ಪಡಪೋಶಿತನಗಳು. ನಾವು ನಮ್ಮನ್ನೇ ಮೋಸಗೊಳಿಸಿಕೊಳ್ಳುವ ಬಾಲಿಶ ಆಟವಿದು. ಇಂತಹ ಆಟ ಓಟಗಳಿಂದ ಮನಸ್ಸು ಜಿಡುಕಾಗುತ್ತದೆ; ಬುದ್ಧಿ ಮಂಕಾಗುತ್ತದೆ. ಹಗ್ಗವೂ ಹಾವಿನಂತೆ ಕಾಣಿಸತೊಡಗುತ್ತದೆ. ಇಂತಹ ಪಡಪೋಶಿ ಸಂಸಾರಗಳನ್ನು ಕಟ್ಟುವವರು ಮಾತ್ರವಲ್ಲದೆ - ಅನಿವಾರ್ಯವಾಗಿ ಅಂತಹ ಸಂಸಾರದ ಸದಸ್ಯರಾಗಿರುವವರೂ ಮಾನಸಿಕ ಖಿನ್ನತೆಗೆ ಒಳಗಾಗುವ ಅಪಾರ ಸಾಧ್ಯತೆಗಳಿವೆ. ಅಂತಹ ಮೋಸಗಳ ಬಲೆಯಲ್ಲಿ ಸಿಲುಕಿ ಜಡವಾಗಿ ಹೋಗುತ್ತಿರುವ ಮನುಷ್ಯರ ಅಂತಃಸಾಕ್ಷಿಯು ಪ್ರತಿಸ್ಪಂದಿಸಲಾಗದ ಮೌಢ್ಯದ ಸ್ಥಿತಿಯಲ್ಲಿರುತ್ತದೆ; ಅಲ್ಲಿ ಕತ್ತಲೆ ಕವುಚಿರುತ್ತದೆ. ಆದ್ದರಿಂದ ಅನರ್ಥದ ಹಾದಿಯಲ್ಲಿ ನಡೆಸುತ್ತಿರುವ ಗುರಿಯಿಲ್ಲದ ಓಟವನ್ನು ಕೊನೆಗಾಣಿಸದೆ ಯಾವುದೇ ಬದುಕಿನ ರೋಗವು ಗುಣವಾಗದು. ಸ್ವಚ್ಛ ಚಿಂತನೆಗಳಿಂದ ಮೂಡುವ ಸ್ವಚ್ಛ ಇಚ್ಛೆ ಮತ್ತು ತದನುರೂಪೀ ಸ್ವಚ್ಛ ಕಾರ್ಯಗಳಿಂದ ಮಾತ್ರವೇ ನೆಮ್ಮದಿಯ ಬದುಕಿನ ಸಾಕ್ಷಾತ್ಕಾರವು ಸಾಧ್ಯ.

ಪ್ರತಿಯೊಂದು ಬದುಕೂ - ದೈಹಿಕ ಮಾನಸಿಕವಾಗಿ ಇಚ್ಛಾಪೂರ್ವಕವಾಗಿ ಮಾಡುವುದು ಮತ್ತು ಸ್ವಾಭಾವಿಕವಾಗಿ ಉಂಟಾಗುವುದು - ಇವೆರಡರ ಸಂಭವನೀಯ ಅನೂಹ್ಯ ಮಿಶ್ರಣ. ಈ ಸಂಭಾವ್ಯಕ್ಕೆ ವೇಗವರ್ಧಕದಂತೆ ತೊಡಗಿಕೊಳ್ಳುವ ಸಾಧನವೇ - ಇಚ್ಛಾಸ್ಪಂದನ. ಇಚ್ಛಾಶಕ್ತಿಯಿಂದ ಆಂತರ್ಯವು ಸ್ವಚ್ಛಗೊಳ್ಳುತ್ತ ಬಂದಂತೆ ಅಂತಃದರ್ಪಣದಲ್ಲಿ ಸ್ವಚ್ಛ ಪ್ರತಿಬಿಂಬವು ಮೂಡತೊಡಗುತ್ತದೆ. ವಿಚಾರಗಳು ಸ್ಫುಟಗೊಳ್ಳುತ್ತ ಭಾವಶುದ್ಧಿಯಾಗುತ್ತದೆ. ಬಾಹ್ಯದಲ್ಲಿ ಜೀವಿಗಳೆಲ್ಲವೂ ಪ್ರತ್ಯೇಕವಾದರೂ ಆಂತರ್ಯದಲ್ಲಿ ಒಂದೇ ಗುರಿಯ ಪಯಣಿಗರು ಎಂಬ ಅರಿವು ಮೂಡುತ್ತದೆ; ಸಾಮಾಜಿಕ ತಲ್ಲಣಗಳ ಶಮನವಾಗುತ್ತದೆ. ಸಾಗರದ ದಂಡೆಯಲ್ಲಿ ವಿಪರೀತ ಅಲೆಗಳು ಕಾಣಿಸಿದರೂ ಎಲ್ಲ ಅಲೆಗಳೂ ಮತ್ತದೇ ಸಾಗರದಲ್ಲಿ ಐಕ್ಯವಾಗಿ ಸಾಗರೋಪಮವಾಗುವ ಸತ್ಯ ಮತ್ತು ಸಾಗರದ ಮೇಲ್ಪದರದಲ್ಲಿ ಅಲೆಗಳ ಕೋಲಾಹಲವು ತಳಮಳಿಸುತ್ತಿದ್ದರೂ ಆಳದ ಸಾಗರವು ಧ್ಯಾನಸ್ಥ ಸ್ಥಿತಿಯಲ್ಲಿರುವುದೂ ನಾವು ಕಾಣುತ್ತಿರುವ ಸತ್ಯ. ಅಪ್ಪನಂತೇ ಮಕ್ಕಳು; ಬಾಹ್ಯದಂತೇ ಆಂತರ್ಯ; ಸೃಷ್ಟಿಯಂತೆಯೇ ಜೀವಿಗಳು ! ಅಂತೆಯೇ ಕಣ್ಣಿಗೆ ಕಾಣಿಸುವ ತಳಮಳಗಳ ಅಲೆಗಳೆಲ್ಲವೂ ಸತ್ಯವಲ್ಲ; ಬಂದು ಹೋಗುವ ವ್ಯಾವಹಾರಿಕ ಸತ್ಯ ಅಥವ ಖದೀಮ ಮಿಥ್ಯೆ. ನಿತ್ಯಸತ್ಯವು ಧ್ಯಾನಸ್ಥ ಆಳದಲ್ಲಿದೆ. ಪ್ರೇಮೋನ್ಮತ್ತರಾಗದೆ ಆಳವು ಸಿಗದು. ದೇಹ ಮನಸ್ಸುಗಳನ್ನು ದಾಟಬಲ್ಲ, ಲೌಕಿಕದಲ್ಲಿ ಅಲ್ಪತೃಪ್ತರಾಗಿರಬಲ್ಲ ಮತ್ತು ಇಚ್ಛಾಶಕ್ತಿಯನ್ನು ದುಡಿಸಿಕೊಳ್ಳುವಂತಹ ಯೋಗ್ಯರಿಗೆ-ಯೋಗಿಗಳಿಗೆ ಮಾತ್ರ ಅಧ್ಯಾತ್ಮದ ಆಳದ ಅನುಭವವಾಗುತ್ತದೆ. ಪ್ರೇಮೋನ್ಮತ್ತರಾಗಿ ಭಗವದ್ಭಾವದಲ್ಲಿ ಮುಳುಗುವವರಿಗೆ ಭಗವಂತನು ಬಹಳ ಸುಲಭನೂ ಹೌದು.
ಮಲಗಿ ಪರಮಾದರದಿ ಪಾಡಲು
ಕುಳಿತು ಕೇಳುವ ಕುಳಿತು ಪಾಡಲು
ನಿಲುವ ನಿಂತರೆ ನಲಿವ ನಲಿದರೆ ಒಲಿವ ನಿಮಗೆಂಬ //
ಸುಲಭನೋ ಹರಿ ತನ್ನವರನರೆ
ಘಳಿಗೆ ಬಿಟ್ಟಗಲನು ರಮಾಧವ
ನೊಲಿಸಲರಿಯದೆ ಪಾಮರರು ಬಳಲುವರು ಭವದೊಳಗೆ //

                                         *****-----*****-----*****