Friday, July 14, 2017

ಮನ ಏವ ಮನುಷ್ಯಾಣಾಂ...

ಆಯಾ ಜೈವಿಕ ಅಗತ್ಯಗಳನ್ನು ಶಿಷ್ಟವಾಗಿ ನಿಯಂತ್ರಿಸಬಲ್ಲ ತೃಪ್ತಿ, ಕರುಣೆ, ಸ್ನೇಹ, ಪ್ರೇಮ, ಸಹನೆ ಮುಂತಾದ ಮನೋಮೂಲದ ಭಾವಸಂಪತ್ತಿನಿಂದಲೇ ಮನುಷ್ಯರು ಇತರ ಪ್ರಾಣಿಗಳಿಗಿಂತ ಭಿನ್ನವಾಗಿ ನಿಲ್ಲುತ್ತಾರೆ. ಅಂತರ್ಮಥನದ ಮೂಲಕ ಮನಸ್ಸಿಗೆ ಕಡಿವಾಣ ಬಿಗಿದು, ತಮ್ಮ ಮೌಲ್ಯವನ್ನು ತಾವೇ ಹಿಗ್ಗಿಸುವ ಅಥವ ಕುಗ್ಗಿಸುವ ಸಾಮರ್ಥ್ಯವನ್ನೂ - ಮನುಷ್ಯರು ಹೊಂದಿರುತ್ತಾರೆ. ಹೀಗಿದ್ದೂ ತನ್ನನ್ನು ಮಾತ್ರ ಹೊರಗಿರಿಸಿಕೊಂಡು ಇತರ ವಸ್ತು ವಿಷಯಗಳನ್ನು ಉತ್ಸಾಹದಿಂದ ತೂಗಿ ನೋಡುವುದರಲ್ಲಿಯೇ ಮನುಷ್ಯರಿಗೆ ಹೆಚ್ಚಿನ ಆಸಕ್ತಿಯಿರುವುದು - ಅನುಭವ ಮೂಲದ ಸತ್ಯ. ಅನುಕೂಲ ಸಿಂಧು ತತ್ವ ಎಂಬ ದೌರ್ಬಲ್ಯದ ಅನುಯಾಯಿಗಳೆಲ್ಲರ ಪಾಡೂ ಇದೇ ಆಗಿದೆ.

ಈ ಜೀವಜಗತ್ತಿನಲ್ಲಿ ಮನುಷ್ಯ ಪ್ರಾಣಿಯು ಮಾತ್ರ ತನ್ನನ್ನು ತಾನೇ ಮೌಲ್ಯಮಾಪನಕ್ಕೆ ಒಡ್ದಿಕೊಳ್ಳಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಆದರೆ ತಮ್ಮ ಮೌಲ್ಯಮಾಪನವನ್ನು ಸಾಂದರ್ಭಿಕವಾಗಿ - ಒಂದೋ "Under estimate ಅಥವ Over Estimate" ಮಾಡಿಕೊಳ್ಳುತ್ತಲೇ ಬಂದಿರುವ ಮನುಷ್ಯರು - ವಾಸ್ತವಕ್ಕೆ ಹಿಂಜರಿಯುತ್ತಿರುವ ಉದಾಹರಣೆಗಳೇ ಅನೇಕ. ಮನೋಮೂಲದ ಚಮತ್ಕಾರಗಳನ್ನು ಪ್ರದರ್ಶಿಸುತ್ತ ತನಗೆ ತಾನೇ "ದಯಾ ಅಂಕವನ್ನು (Grace Mark)" ನೀಡಿಕೊಳ್ಳುತ್ತ ಬಂದ ವರ್ಗವೂ ಇದೊಂದೇ.

ಅರ್ಥಾತ್ -  ತನ್ನನ್ನು ತಾನೇ ಮೋಸಗೊಳಿಸಿಕೊಳ್ಳಬಲ್ಲ ಏಕೈಕ ಪ್ರಾಣಿಯಾದ ಮನುಷ್ಯ ವರ್ಗದ ಪ್ರಕ್ಷಿಪ್ತ ವರ್ತನೆಗಳೆಲ್ಲವೂ - ಬುದ್ಧಿಯನ್ನು ಬಡಿದು ಮಲಗಿಸಲ್ಪಟ್ಟ - ಚಾಂಚಲ್ಯದಿಂದ ವಿಕೃತಗೊಂಡ ಮನೋವಲಯದ ಕಾರ್ಯತಂತ್ರವೇ ಆಗಿದೆ. ತನ್ನೊಳಗಿನ ಕಲ್ಮಷಗಳನ್ನು ಮರೆಮಾಚುವ ಮತ್ತು ಅಂತಃ ನಿರ್ವಹಣೆಯ ಚಿಂತನೆಯನ್ನು ಮಾತ್ರ - ತನ್ನ ಕೊನೆಯ ಆಯ್ಕೆಯನ್ನಾಗಿ ಮಾಡಿಕೊಂಡಿರುವ ಮತ್ತು ಸ್ವಚ್ಛಂದ ಮನೋತಂತ್ರಗಳಿಗೆ ಸ್ವ-ಇಚ್ಛೆಯಿಂದಲೇ ವಶವಾಗಿ, ರಾಜಮಾರ್ಗವನ್ನು ತದುದ್ದೇಶಿತವಾಗಿ ಅಲಕ್ಷಿಸಿ, ಸಾಮಾಜಿಕ ಕಾನೂನುಗಳಿಗೂ ಹೊಸ ವ್ಯಾಖ್ಯೆಯನ್ನು ನೀಡಬಲ್ಲ - "ಮನ ಏವ ಮನುಷ್ಯ"ನಾದುದೇ - ಇವುಗಳಿಗೆಲ್ಲ ಮೂಲ ಕಾರಣ. "ಮನಸ್ಸು ಓಡಿಸಿದತ್ತ ಓಡುವ" - ಇಂತಹ ಅರೆಪಾಕದ - ಅನಿಯಂತ್ರಿತ ಮನುಷ್ಯ ಮನಸ್ಸುಗಳನ್ನು ಮಾತ್ರ - ಮಾತಿನ ಪಟಾಕಿಗಳಿಂದ ಮರುಳುಗೊಳಿಸಲು ಸಾಧ್ಯ ಮತ್ತು ಸ್ಥಿರವಾಗಿ ಬೇಲಿಯೊಳಗೆ ಹಿಡಿದಿಟ್ಟುಕೊಳ್ಳುವುದು ನಿರಂತರದ ಸವಾಲು.

"ಮನುಷ್ಯನ ಮನಸ್ಸು" ಎಂಬ ವಸ್ತುವು ಇತರೆಲ್ಲ ಪ್ರಾಣಿಗಳಿಗಿಂತ ಭಿನ್ನವಾಗಿ ವರ್ತಿಸುವುದರಿಂದಲೇ ಇತರ ಜೀವಿಗಳಿಗಿಂತ ಮನುಷ್ಯನನ್ನು ಭಿನ್ನವಾಗಿ ಕಡೆದಿಟ್ಟಿದೆ. ಆದ್ದರಿಂದಲೇ ಇತರ ಜೀವಿಗಳನ್ನು ಹೆಚ್ಚಾಗಿ ಬಾಧಿಸದ - ಮುಖಮೌಲ್ಯದ ಸಾಮಾಜಿಕ ಬಂಧನ ಮತ್ತು ಬಿಡುಗಡೆಯ ತೊಳಲಾಟಗಳು ಮನುಷ್ಯರಲ್ಲಿ ಸ್ಪಷ್ಟವಾಗಿ ಕಾಣುತ್ತವೆ ಮತ್ತು ಅವುಗಳು ಕಗ್ಗಂಟುಗಳನ್ನೂ ಸೃಷ್ಟಿಸುತ್ತ ಬಂದಿವೆ. ಆದರೆ ಎಲ್ಲ ಬಗೆಯ ರೋಗಮೂಲವೂ ಆಯಾ ಮನಸ್ಸುಗಳಲ್ಲೇ ಇವೆ ಮತ್ತು ಮನೋಮೂಲದ ಎಲ್ಲ ಬಗೆಯ ಜಿಡುಕುಗಳಿಗೆ ಪರಿಹಾರದ ಎಳೆಗಳೂ ಆಯಾ ಮನಸ್ಸುಗಳಲ್ಲೇ ಹುದುಗಿರುತ್ತವೆ ! ಮನೋಕೋಶದಲ್ಲಿ ಪ್ರವೇಶಿಸಿ, ಮನಸ್ಸಿನಾಚೆ ಮತ್ತು ಈಚೆಗೂ ಹುಡುಕಬಲ್ಲವರಿಗೆ ಮತ್ತು ಮನಸ್ಸಿನ ಅತಿವೇಗದ ಕುಣಿತವನ್ನು ಕಾಲಕಾಲದಲ್ಲಿ ಅರಿತು - ಆಯಾ ವಾಸ್ತವದಲ್ಲಿ ನಿಂತು, ಆಯಾ ಬದುಕಿನ ಯೋಗವನ್ನು ವಿನಮ್ರವಾಗಿ ನಿರ್ವಹಿಸುತ್ತ ನಿಯಂತ್ರಿಸಬಲ್ಲ ಯೋಗನಿರತರಿಗೆ ಮಾತ್ರ - ಬಹು ಪ್ರಯಾಸದಿಂದ ಅದರ ಕಿಂಚಿತ್ ದರ್ಶನವಾದದ್ದೂ ಇದೆ.

ಆದಿಯಿಂದಲೂ ಸಾಮಾಜಿಕ ಬದುಕಿನ ಸಂಘಟಿತ ಸಂಬಂಧಗಳಿಗೆ ಪ್ರಾಮುಖ್ಯತೆ ನೀಡುತ್ತ ಬಂದ ಸಂತತಿಯೇ ಮನುಷ್ಯ ಸಂತತಿ. ಇದಕ್ಕೆ ಮೂಲ ಕಾರಣವೇ - ದೈಹಿಕ ದುರ್ಬಲತೆ ಮತ್ತು ಭಾವನೆಗಳ ಪಾರುಪತ್ಯ. ಬುದ್ಧಿಯನ್ನು ನೇರವಾಗಿ ಪ್ರಭಾವಿಸಲಾಗದ ಕ್ರೋಧ, ಮೋಹ, ಪ್ರೇಮ ಮುಂತಾದ ಭಾವನೆಗಳು - ಮೊದಲು ಮಿದುವಾದ ಮನಸ್ಸಿನ ಆಶ್ರಯ ಪಡೆದು, ಅನಂತರ ಬುದ್ಧಿಯನ್ನೂ ಪ್ರಚೋದಿಸುವಷ್ಟು ಶಕ್ತಿ ಪಡೆಯುವುದುಂಟು. ಇಂತಹ ದುರ್ಬಲ ಮನುಷ್ಯರಲ್ಲಿ ಹುದುಗಿರುವ ಪ್ರಚಂಡ ಶಕ್ತಿಯ ಮನಸ್ಸು ಮತ್ತು ಅದರ ಉಬ್ಬರ ಇಳಿತಗಳು - ಸಣ್ಣ ವಾಹನಕ್ಕೆ ದೊಡ್ಡ ಎಂಜಿನ್ ಜೋಡಿಸಿದಂತಹ ಸ್ಥಿತಿಯಲ್ಲಿದೆ ! ಆದ್ದರಿಂದಲೇ ದೇಹವಾಹನದ ಚಾಲಕರು - ಚಾಲನೆಯ ಪ್ರಾವೀಣ್ಯತೆ ಮತ್ತು ಎಚ್ಚರವನ್ನು ತಪ್ಪುವಂತೆಯೇ ಇಲ್ಲ. ಯಂತ್ರ ಚಾಲನೆಯ ಪ್ರಾವೀಣ್ಯತೆ ಮತ್ತು ಅನುಕ್ಷಣದ ಎಚ್ಚರವನ್ನು ರೂಢಿಸಿಕೊಳ್ಳಲು ತಡವರಿಸುವ ದೇಹ ಕೇಂದ್ರಗಳಲ್ಲಿ - ಆದ್ದರಿಂದಲೇ - ಭಯದ ಭಾವವು ನಿರಂತರವಾಗಿ ಸಂಚರಿಸುತ್ತಿರುತ್ತದೆ. ಆದ್ದರಿಂದಲೇ ದೃಷ್ಟಕ್ಕಿಂತ ಹೆಚ್ಚು - ಅದೃಷ್ಟವೇ ಕಾಣುವಂತಾಗುತ್ತದೆ. ಹೀಗೆ ಅಪಘಾತದ ಸಂವೇದನೆಯನ್ನು ಅನುಕ್ಷಣವೂ ಹುಟ್ಟಿಸುತ್ತಲೇ ಇರುವ ಮನಸ್ಸಿನ ವೇಗವನ್ನು ನಿಯಂತ್ರಿಸಲಾಗದ - ಜೀವ ಭಯವದು.

ಮನುಷ್ಯರ ಬಾಡಿಗೆ ದೇಹಯಂತ್ರದಲ್ಲಿ ಯಾವತ್ತೂ ವಾಸಿಸುವ ಅಮೂರ್ತ ಭಯಭಾವದ ಸ್ವಂತ ಮನೆಯೇ - ಮನಸ್ಸು! ಜೀವಿಗಳಲ್ಲಿ ಅಂತರ್ಗತವಾಗಿರುವ ಸಾವಿನ ಭಯ - ಜೀವಿಗಳ ಹುಟ್ಟಿನೊಂದಿಗೇ ಅಂತರ್ಗತವಾಗಿರುವ "ಕ್ಷಣಿಕ ಭಾವ" - ಜೀವನಾಶದ ಅಸ್ಥಿರತೆಯ ಭಯವೇ - ಮನುಷ್ಯರಿಂದ ಪ್ರಾಕಟ್ಯಗೊಳ್ಳುವ ಎಲ್ಲ ಬಗೆಯ ದೌರ್ಬಲ್ಯಗಳಿಗೂ ಮೂಲ ಕಾರಣ. ಹಿನ್ನೆಲೆಯು ಇದಾಗಿದ್ದರೂ... ದೈನಂದಿನ ಹೊಟ್ಟೆಪಾಡಿನ ಹೊಡಚಾಟಗಳಲ್ಲಿ ಎದುರಾಗುವ ಅಸ್ಥಿರತೆ, ದುರ್ಬಲ ಶರೀರವನ್ನು ಬಾಧಿಸುವ ಅಗೋಚರ ವೈರಿಗಳಿಂದಾಗಿ ಉಂಟಾಗುವ ಅಸ್ಥಿರ ಭಾವ, ಬದುಕಿನ ಭಾವನೆಲೆಯ ಸಂಬಂಧಗಳ ನಿರ್ವಹಣೆಯಲ್ಲಿ ಆಗಾಗ ಎದುರಾಗುವ ಅಸ್ಥಿರತೆ, ತನ್ನ ಸ್ವಂತ ಅಸ್ತಿತ್ವದ ಅನನ್ಯತೆಯ ಅಸ್ಥಿರತೆ... ಮುಂತಾದ ಅನೇಕ ಅಸ್ಥಿರತೆಗಳು - ಮನುಷ್ಯನನ್ನು "ದುರ್ಬಲ ಭಾವಜೀವಿ" ಯನ್ನಾಗಿಯೂ ರೂಪಿಸುವಂತಾಗಿ, ಭಯಭಾವಗಳಿಗೆ ಉಸಿರು ನೀಡುತ್ತ ಬಂದಿವೆ. ಹಿತವಾದ ಭಾವಗಳಿಂದ ಪದೇಪದೇ ಮನಸ್ಸುಗಳನ್ನು ಪೋಷಿಸದಿರುವ ಶರೀರಗಳಲ್ಲಿ ಸಂಭವಿಸುವ ಇಂತಹ ಅಂತರ್ವೈರುದ್ಧ್ಯಗಳೇ - ಭಯದ ಜನನಿ ಜನಕರು.

ಉಕ್ಕುವ ತಳಮಳದ ಯಾವುದೇ ಭಾವ ಘರ್ಷಣೆಗಳಿಲ್ಲದ ಮನಸ್ಸುಗಳಲ್ಲಿ - ಯಾವ ಭಯವೂ ಸಂಚರಿಸಲಾರದು. ಆದರೆ ಅಂತಹ ಒಂದು ಸಾಮಾನ್ಯ ಸ್ಥಿತಿಯು ಯಾವುದೇ ಮನಸ್ಸಿನಲ್ಲಿ ತಾನಾಗಿಯೇ ಸಂಭವಿಸಲಾರದು. ಇಚ್ಛಾಶಕ್ತಿಯಿಂದ ಶುದ್ಧ ಭಾವಗಳನ್ನು ಪೋಷಿಸುವ ಮೂಲಕವೇ ಭಯ ಭಾವವನ್ನು ಆಗಿಂದಾಗ ನಿವಾರಿಸಿಕೊಳ್ಳಲು ಸಾಧ್ಯ. ಪರಿಶುದ್ಧವಾದ ಭಾವ ಸಂಚಲನವು ಸಹಜವಾಗಿ ಸಂಭವಿಸಿದಾಗ - ಮನಸ್ಸುಗಳು ಭಯಮುಕ್ತವಾಗಬಹುದು. ಆಯಾ ಮನೋಶರೀರದ ಕ್ರಮಬದ್ಧ ಅಂತಃನಿರ್ವಹಣೆ ಮತ್ತು ವಾಸ್ತವವನ್ನು ಒಪ್ಪಿಕೊಳ್ಳುವ ಮಾನಸಿಕ ತರಬೇತಿಯೊಂದೇ ಇದಕ್ಕೆ ಪರಿಹಾರ. ತನಗೆ ತಾನೇ ಸಹಕರಿಸುವ ಕ್ರಿಯೆ ಇದು.

ಬದುಕಿನ ನಡಿಗೆಯಲ್ಲಿ ನಿರತವಾಗಿದ್ದು - ಭಯಾಕ್ರಾಂತ ಮನೋಮೂಲದಲ್ಲಿ ಸುಳಿದಾಡುವ ಹಲವಾರು ಬಗೆಯ ಲೌಕಿಕ ಹಂಬಲಗಳು - "ಭಯದ ಬೀಜವು" ಮೊಳೆತು ಹೆಮ್ಮರವಾಗಲು ಅವಶ್ಯವಾದ ಪೋಷಣೆಯನ್ನು ನೀಡುವಂಥವು. ತನ್ನದಲ್ಲದ ವಸ್ತು-ವಿಷಯಗಳ ಮಿತಿಮೀರಿದ ಆಸೆ, ಹಂಬಲ, ಬಯಕೆಗಳು - ಯಾವುದೇ ಮನುಷ್ಯನ ನಡಿಗೆಯ ದಿಕ್ಕು ತಪ್ಪಿಸುತ್ತ ಅಸ್ಥಿರ ಭಾವ ಪ್ರಚೋದಕ ದ್ರವ್ಯವಾಗಿ ದುಡಿಯುತ್ತಲೇ ಬಂದಿವೆ. ಚಿನ್ನದಂತೆ ಹೊಳೆಯುತ್ತಿದ್ದ ರೂಪವನ್ನು ಚಿನ್ನದ ಜಿಂಕೆ ಎಂದುಕೊಂಡ - ರಾಮಾಯಣದ ದೃಷ್ಟಾಂತವು - ಭ್ರಮೆಗಳೇ ಭಯಕಾರಕಗಳು ಎಂಬುದಕ್ಕೆ ಒಂದು ಪೂರ್ವೋದಹಾರಣೆ. ಆಯಾ ಮನಸ್ಸುಗಳ ಪರಿಧಿಯಲ್ಲಿ ಆಕ್ರಮಿಸಿಕೊಳ್ಳುವ - ಅಂತಹ "ದಿಕ್ಕೆಡಿಸುವ ಅತೀವ ಹಂಬಲ ಮತ್ತು ತತ್ಪ್ರಚೋದಕ ಭಾವ ವಿಶೇಷಗಳು" - ಮನುಷ್ಯನನ್ನು ಅತ್ತಿತ್ತ ಎಳೆದಾಡುತ್ತ ಹೆದರಿಸುತ್ತ ಒಮ್ಮೊಮ್ಮೆ ಅಪಾಯವನ್ನೂ ತಂದೊಡ್ಡುವುದಿದೆ. ಆದ್ದರಿಂದಲೇ ಅಸಂಗತ ಆಸೆ ನಿರೀಕ್ಷೆಗಳು ಮತ್ತು ಅವುಗಳು ಕಾಲಕಾಲಕ್ಕೆ ಹುಟ್ಟುಹಾಕುವ ಭಯಬಂಧನದಿಂದ ಸುತರಾಂ ಹೊರಬರಲೂ ಆಗದೆ - ಜೊತೆಜೊತೆಗೇ ಜಿಡುಕುಗಳಿಂದ ಬಿಡುಗಡೆಗಾಗಿಯೂ ತಳಮಳಿಸುವಂತಹ ವಿರೋಧಾಭಾಸದ ವಿಚಿತ್ರ ಮನೋಭೂಮಿಕೆಯು - ಮನುಷ್ಯರದಾಗಿದೆ. ಇದನ್ನೇ "ಅಂತರಂಗದ ಮಹಾಯುದ್ಧ" ಎನ್ನುವುದು.

ಇಂದು ಒಪ್ಪವಾಗಿದ್ದಂತೆ ಕಾಣಿಸುತ್ತಿರುವ ಬಾಹ್ಯ ಲಕ್ಷಣಗಳು - ತುಪ್ಪ ತಿನ್ನಲು ಹೊಂಚುಹಾಕುವ ಚೌಕಟ್ಟಿನ ಇಂದಿನ ಸಾಮಾಜಿಕ ಜೀವನವು - ಮನಸ್ಸುಗಳನ್ನು ಬಗ್ಗಡಗೊಳಿಸಬಲ್ಲ ಹುಲುಸಾದ ಕ್ಷೇತ್ರ. ಯಾವುದೇ ಸಾಮಾಜಿಕ ಪರಿಸರದಲ್ಲಿ ವ್ಯಸ್ತರಾಗಿರುವುದು ಎಂದರೆ - ಅಸಂಸ್ಕರಿತ ಮನಸ್ಸುಗಳ ಜೊತೆಯಲ್ಲಿಯೂ ಒಡನಾಟ - ಎಂದೇ ಅರ್ಥ. ಮಾತ್ಸರ್ಯ, ಕೋಪ, ತಂತ್ರಗಾರಿಕೆ, ಸ್ಪರ್ಧೆ, ಮೇಲಾಟಗಳು ಮುಂತಾದ ಭಾವನಾತ್ಮಕ ಸಂವೇದನೆಗಳ ಅಮಲುಕೋರತನವನ್ನು ಪ್ರೀತಿಯಿಂದಲೇ ಪೋಷಿಸುವ ಸಾರ್ವಜನಿಕ ಪರಿಸರದ ಮನಸ್ಸುಗಳನ್ನು ಪುನರಪಿ ಸಂಧಿಸುವುದರಿಂದ ಮನಸ್ಸಿನ ತಲ್ಲಣಗಳು ಹೆಚ್ಚುತ್ತವೆ. ಸತ್ಸಂಗದ ವ್ಯಾಖ್ಯೆಯನ್ನೂ ಆಯಾ ಬಾಧಿತ ಮನಸ್ಸುಗಳೇ ನಿರ್ಧರಿಸುವುದರಿಂದ - ಹೊರಗಿನಂತೆಯೇ ತನ್ನೊಳಗೂ - ಸ್ಥಿರತೆಯು ಸಿಗುತ್ತದೆ ಎಂಬ ಭರವಸೆಯೇನೂ ಸಿಗಲಾರದು. ಆದ್ದರಿಂದ ಮನಸ್ಸನ್ನು ಆಗಾಗ ಏಕಾಂತದಲ್ಲಿ ಸಂಧಿಸುತ್ತ ಆಯಾ ಒಳದನಿಗೆ ಕಿವಿಗೊಡುವುದು ಅನಿವಾರ್ಯ; ಮನಸ್ಸನ್ನು ಕಲುಷಿತಗೊಳಿಸಿಕೊಳ್ಳದಂತಹ ಉದ್ದೇಶಿತ ಎಚ್ಚರವನ್ನು ತಪ್ಪಲು ಸಾಧ್ಯವೇ ಇಲ್ಲ. ಅಂದಮಾತ್ರಕ್ಕೇ - ಭಯ ಎಂಬ ವಸ್ತುವು ಮನುಷ್ಯನ ಹಾದಿತಪ್ಪಿಸುವ ಭಾವಪ್ರಚೋದಕ ಎಂದು ಏಕಪಕ್ಷೀಯವಾಗಿ ನಿಶ್ಚಯಿಸಲೂ ಆಗದು. ಭಯದಲ್ಲೂ ಎರಡು ಬಗೆಯಿದೆ. ಒಂದು, ಜೀವಪರ ಭಯ; ಇನ್ನೊಂದು, ಜೀವಪೀಡಕ ಭಯ. ಮನುಷ್ಯರನ್ನು ಸತ್ಕಾರ್ಯಗಳಿಗೆ ಪ್ರೇರೇಪಿಸುವ ಸಾತ್ವಿಕ ಭಯವು ಜೀವಪರವಾಗಿ ವರ್ತಿಸಿದರೆ, "ಸಾಲ ಮಾಡಿಯಾದರೂ ತುಪ್ಪ ತಿನ್ನುವ" ತಾಮಸ ಭಯಮೂಲವು ಜೀವ ಪೀಡಕವಾಗಿ, ಅನೇಕ ಅನರ್ಥಗಳಿಗೂ ಕಾರಣವಾಗುತ್ತಿರುವುದನ್ನು ನಾವು ನೋಡುತ್ತ ಬಂದಿದ್ದೇವೆ.

I asked GOD that "I WANT PEACE !"
GOD replied,
Remove the "I", that is EGO;
Remove the "WANT", that is Desire;
And then "PEACE" will come automatically...

ಆದರೆ... ಉಪದೇಶದಷ್ಟು ಸುಲಭದ ಸಾಧನೆ - ಇದಲ್ಲ. ದೇಹ ಇರುವಷ್ಟು ದಿನವೂ "I" ಎಂಬುದು ಇದ್ದೇ ಇರುತ್ತದೆ. ನಾನು ಎಂಬ ಭಾವಕ್ಕೆ "WANTS" ಎಂಬುದು - ಯಾವತ್ತೂ ಅಂಟಿಕೊಂಡೇ ಇರುತ್ತದೆ. ಆದ್ದರಿಂದ, ನಾಯಿಯ ಬಾಲವನ್ನು ನೆಟ್ಟಗಿರಿಸಲು ಕೊಳವೆ ಹಾಕುವಂತಹ ವ್ಯಾಯಾಮವಿದು ! ಅನುಕ್ಷಣವೂ ಮನಸ್ಸನ್ನು ಬಂಧಿಸಿಟ್ಟು, ತಮತಮಗೆ ಬೇಕಾದಂತೆ ಅದನ್ನು ದುಡಿಸಿಕೊಂಡರೆ - ಅಂತಹ ದೇಹ ಮಾಧ್ಯಮಗಳು - ಸಾಕ್ಷಾತ್ ಋಷಿಗಳು. ಆದರೆ ಎಲ್ಲರೂ ಋಷಿಗಳಾಗುವುದು ಅಸಾಧ್ಯ. ಸಂಸಾರಿಗಳಾದವರು - ತಮ್ಮ ತಮ್ಮ ಇಚ್ಛಾಶಕ್ತಿಯಿಂದ ಮನಸ್ಸಿನತ್ತ ಪೂರ್ಣ ಗಮನವೀಯುವ ಅಥವ ಅಂತಹ ಪ್ರಯತ್ನದ ಹಾದಿಯನ್ನು ಅನುಸರಿಸಬಹುದು. ಅಷ್ಟೆ. ಈ ಸಂಸಾರವೆಂಬ ಸಂತೆಯಲ್ಲಿ ಅಡ್ಡಾದಿಡ್ಡಿ ಓಡಾಡುವ ಮನಸ್ಸನ್ನು ಹಿಡಿದು ನಿಲ್ಲಿಸುವುದು ಸುಲಭವಲ್ಲದಿದ್ದರೂ - ಜಾಗ್ರತ ಪ್ರಯತ್ನಗಳು ಮಾತ್ರ ನಿಲ್ಲಲೇಬಾರದು. ಆಯಾ ದಿನದ "ಮುಸುರೆ"ಯನ್ನು ಆಯಾ ದಿನವೇ ತೊಳೆದುಕೊಳ್ಳುವ ಸರಳ ಸೂತ್ರವಿದು.

ಈ ಭೂಮಿಯಲ್ಲಿ ದುರ್ಮಾರ್ಗದಲ್ಲಿ ಬೀಳಲು ಯಾರಿಗೂ ಯಾವ ಗುರುವೂ ಬೇಕಾಗುವುದಿಲ್ಲ. ಸಾರ್ವಜನಿಕ ಬದುಕು ಎಂದರೆ - ಹೆಂಡದ ವ್ಯಾಪಾರ ನಡೆಸಿದಂತೆ; ಸಾಂದರ್ಭಿಕವಾಗಿ ದುರ್ಮಾರ್ಗದಲ್ಲಿಯೂ ಎಳೆದೊಯ್ಯಬಲ್ಲ ಹಾದಿಯಿದು. ಹೆಂಡದ ವ್ಯಾಪಾರಿಯು ಹೆಂಡದ ದಾಸನಾಗಿರದಿದ್ದರೂ ರುಚಿ ನೋಡದೆ ಇರಲು ಅಥವ ಗಂಧವನ್ನು ಆಘ್ರಾಣಿಸದೆ ಇರಲು ಸಾಧ್ಯವೆ ? ಕೃತಕ ಅಮಲಿನ ನೆರಳಿನಲ್ಲಿರುವಾಗ, ಸಾಧು ಆಗಿರಲು ಸಾಧ್ಯವೆ ? ಮನಸ್ಸು ಎಂಬ ವೇದಿಕೆಗೆ ಕಲಿಯ ಪ್ರವೇಶವಾಗಲು - ಮನಸ್ಸು ನಿರಂಕುಶವಾಗಲು - ವಾಸ್ತವ ಮತ್ತು ಭ್ರಮೆಯ ನೆರಳೂ ಸಾಕಾಗುತ್ತದೆ. ಆದ್ದರಿಂದ ನಮ್ಮ ನಿತ್ಯ ಬದುಕಿನ ಸಂವಹನ, ಸಂಪರ್ಕ, ಸಂಭಾಷಿಸುವ ಪಾತ್ರಾಪಾತ್ರ ವಿವೇಚನೆಯು - ಯಾವುದೇ ಮನಸ್ಸಿನ ಸ್ವಾಸ್ಥ್ಯಕ್ಕೆ ತೀರ ಅನಿವಾರ್ಯ.

ಭಾವ ಘರ್ಷಣೆಗೆ ಎಡೆ ನೀಡುವಂತಹ ಬದುಕಿನ ಸಂದರ್ಭಗಳಲ್ಲಿಯೇ ಯಾವುದೇ ಮನಸ್ಸಿನ ಹದ ತಪ್ಪುವುದು. ಇದು ಕಠಿಣ ಮತ್ತು ನಾಜೂಕಿನ ವ್ಯವಹಾರವಾದುದರಿಂದಲೇ - ಮನಸ್ಸು ನಿಲ್ಲಿಸುವ ಕಷ್ಟಕರವಾದ ಕ್ರೀಡೆಯು - ಯಾವತ್ತೂ ಜನಪ್ರಿಯವಾಗಲಿಲ್ಲ. ಈ ಸಂಕೀರ್ಣ ಸಂಗ್ರಾಮದಲ್ಲಿ ಮುಳುಗಿಕೊಳ್ಳುವ ಧೀರ ಸಾಧಕರೆಲ್ಲರೂ - ಆದ್ದರಿಂದಲೇ ಏಕಾಂತವಾಸಿಗಳು; ಅನುಭವಕ್ಕೆ ಸಿಗದ - ಕಣ್ಣಿಗೆ ಕಾಣದುದೆಲ್ಲವನ್ನೂ "ಅದಿಲ್ಲ" ಎಂದುಕೊಳ್ಳುವುದೂ ಪಲಾಯನವಾದವೇ ಆಗುತ್ತದೆ.

ಯಾವತ್ತೂ ಹೊರಗಿನ ವೈರಿಗಳಿಗಿಂತಲೂ ಒಳಗಿನ ವೈರಿಗಳೇ ಹೆಚ್ಚು ಅಪಾಯಕಾರಿ. "ಭಯ" ಎಂಬುದು - ಹಲವಾರು ವಿಷಯ ವ್ಯಂಜನಗಳಿಂದ ಕೂಡಿ, ಮಿತ್ರನಂತೆಯೂ ಒಡನಾಡುವ ನಮ್ಮೊಳಗಿನ ವೈರಿ. ಹೀಗಿರುವಾಗ, ಪೂರ್ಣ ಎಚ್ಚರದಿಂದ ತನಗೆ ತಾನೇ ಮಿತ್ರನಾಗಿರುತ್ತ ತನ್ನ ಒಳಗಿನ ವೈರಿಪಡೆಯನ್ನು ನಿವಾರಿಸಿಕೊಂಡಲ್ಲದೆ - ಸ್ನೇಹಪೂರ್ಣ ಆಂತರಂಗಿಕ ಪರಿಸರವನ್ನು ಏರ್ಪಡಿಸುವುದು ಅಸಾಧ್ಯ.

ಒಬ್ಬ ರಾವಣನ ಸಂಹಾರವಾದರೆ ನೂರಾರು ರಾವಣರು ಉದ್ಭವಿಸಬಲ್ಲ ಮನೋ ವೇದಿಕೆಯಿದು. ಆದ್ದರಿಂದಲೇ - ಮನಸ್ಸಿನ ಚಂಚಲ ಭಾವವಲಯದ ದುಷ್ಟನಿಗ್ರಹ ಕಾರ್ಯಕ್ಕೆ ಕೊನೆ ಎಂಬುದಿಲ್ಲ. ಬದುಕುಗಳನ್ನು ದಿಙ್ಮೂಢಗೊಳಿಸುತ್ತ ಬಂದ, ಇಂತಹ ಅಮೂರ್ತ ಚಮತ್ಕಾರಗಳನ್ನೇ ಭ್ರಮಾಧೀನಗೊಳಿಸುವ - ಮಾಯೆಯ ಮುಸುಕು ಎನ್ನುವುದು. ಇದು ಅಧ್ಯಾತ್ಮದ ಭಾಷೆ. ಅಧ್ಯಾತ್ಮದಲ್ಲಿ ಬಣ್ಣಿಸಲಾದ "ಮಾಯೆ" ಎಂಬುದರ ಕಾರ್ಯಕ್ಷೇತ್ರವೇ ಮನಸ್ಸು. ವಿನಮ್ರ ಶರಣಾಗತ ಭಾವದಿಂದ ಬದುಕನ್ನು ತಪಸ್ಸನ್ನಾಗಿಸದೆ - ದ್ವಂದ್ವಕ್ಕೆ ತಳ್ಳುವ ಮಾಯೆಯನ್ನು ನಿಭಾಯಿಸಲಾಗುವುದಿಲ್ಲ; ತಳಮಳದ ಭಯವೂ ಪರಿಹಾರ ಆಗುವುದಿಲ್ಲ. ಅಶುಚಿಗೊಳಿಸಿಕೊಂಡಿರುವ ಮನಸ್ಸಿನಲ್ಲಿ ತಳವೂರಿಕೊಂಡಿರುವ ಭಯದ ಭಾವವು ಪರಿಹಾರವಾಗದೇ ಶರೀರಯಂತ್ರದ ಸುಗಮ ಚಾಲನೆಯೂ ಅಸಾಧ್ಯ. ಮಾಯಾಭಯ ಎಂಬುದನ್ನು ದಾಟಲು - ಮನಸ್ಸಿನ ಸ್ವಚ್ಛತೆಗಾಗಿ ನಡೆಸುವ ಮನೋನಿಯಂತ್ರಣದ ಸಾಧನೆಯೇ - ತಪಸ್ಸು. "ಅಸತೋ ಮಾ ಸದ್ಗಮಯ"ದ ಹಾದಿಯಿದು.


ಜೀವಜಗತ್ತಿನಲ್ಲಿ ಸಂಭವಿಸುವ ಬಹುಪಾಲು ದುರಂತಗಳಿಗೆ - ಕತ್ತಲಿನಲ್ಲಿ ತಡವರಿಸುತ್ತಿರುವಂತಿರುವ ಮನಸ್ಸುಗಳ - "ಬೆಳಕು ಕಾಣಿಸದ" ಭಯವೇ ಕಾರಣ. ಮಾಯೆ ಎಂಬ ಶಬ್ದ ಪ್ರಯೋಗದ ಕುರಿತು ಹೇಸಿಗೆ (Allergy) ಉಳ್ಳವರೂ ಕೂಡ - ತಮ್ಮ ಬದುಕುಗಳನ್ನು ಕಾಡುವ ಮಾಯೆಯ ಅನುಭವ ಮತ್ತು ಪರಿಣಾಮಗಳಿಂದ ತಪ್ಪಿಸಿಕೊಳ್ಳಲಾಗುವುದಿಲ್ಲ.

ದೇಹ ರಕ್ಷಣೆಯ ಏಕೋದ್ದೇಶವನ್ನು ಹೊಂದಿದ ನವಜಾತ ಶಿಶುವಿನ ಅವಸ್ಥೆಯಲ್ಲಿ ಮಗುವು ದೇಹದ ಅಗತ್ಯಗಳಿಗಾಗಿ ಮಾತ್ರವೇ ಚಡಪಡಿಸುವ ಹಂತದಲ್ಲಿ ಇರುತ್ತದೆ. ಆದ್ದರಿಂದಲೇ ಹಸಿವು, ನಿದ್ರೆ, ಅನಾರೋಗ್ಯದ ಕ್ಷಣಗಳಲ್ಲಿ ಮಾತ್ರವೇ - ಮಗುವು "ರೋದನಾಸ್ತ್ರ"ವನ್ನು ಪ್ರಯೋಗಿಸುತ್ತದೆ. ಶರೀರ ರಥದ ಪರಿಧಿಯಲ್ಲಿ ಮಾತ್ರ ಸಂಚರಿಸುವ ಶಿಶು ಅವಸ್ಥೆ ಇದು. ಇಂತಹ ಶಿಶು ಮುಗ್ಧತೆಯು - ಕನಿಷ್ಠ ಬಯಕೆಗಳಿರುವ ಹಸುಳೆಗಳಲ್ಲಿ ಮಾತ್ರ ಸಾಧ್ಯವಾಗುತ್ತದೆ. ಮುಂದೆ ಸಮಾಜಜೀವಿಯಾಗುತ್ತ ಬಂದಾಗ, ಸುತ್ತಲಿನ ಭೇದಭಾವಗಳನ್ನು ನೋಡಿ, ಅಸಂಗತಗಳನ್ನು ತಾನೇ ಸ್ವತಃ ಅನುಭವಿಸುತ್ತ, ಭಾವವ್ಯಾಪಾರದ ಪರಿಯನ್ನು ಮತ್ತು "ವರಿ"ಯನ್ನೂ ಅರ್ಥೈಸಿಕೊಳ್ಳತೊಡಗುತ್ತದೆ. "ಜೀವ ರಕ್ಷಣೆ" ಎಂಬ ಭಯದ ಆಧಾರದಲ್ಲಿ, ಯಾವುದೇ ಭಾವನಾಸ್ತ್ರಗಳ ದುರುಪಯೋಗದ ಶೈಲಿಯನ್ನೂ ಅರಿಯತೊಡಗುತ್ತದೆ; ಅನುಸರಿಸತೊಡಗುತ್ತದೆ. ಕ್ರಮೇಣ, ಇತರ ಜೀವಿಗಳ "ಗಮನ ಸೆಳೆಯುವ ಆಯುಧ"ದಂತೆ ರೋದನಾಸ್ತ್ರವನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಲೂ - ಮಗುವು ಶಕ್ತವಾಗುತ್ತದೆ. ಭಾವವ್ಯಾಪಾರದ ಬಿಡುಬೀಸುತನವನ್ನು ಮನಸ್ಸುಗಳು ಅವಲಂಬಿಸುವ ಪರಿ ಇದು. ದೇಹಪೋಷಣೆಯಿಂದ ಮನಸ್ಸೂ ಬಲಿತಾಗ "ಭಾವ ಮನಸ್ಸುಗಳು" - ತಮ್ಮ ಸುತ್ತಲಿನ ಹದ್ದುಮೀರಿದ ಮಿಥ್ಯೆಯೊಂದಿಗೆ ಬಹಿರಂಗ ವ್ಯಾಪಾರಗಳಲ್ಲಿ ಸರಸವಾಡುತ್ತ, ಅಸ್ಥಿರಗ್ರಸ್ತ ಮಿಥ್ಯೆಯನ್ನೇ ಸುಪುಷ್ಟವಾಗಿ ಪೋಷಿಸಲು ತೊಡಗಿದಾಗ, ಕೊಬ್ಬಿ ಹದತಪ್ಪುವ ಮನಸ್ಸುಗಳು ಅಡ್ಡಾದಿಡ್ಡಿಯಾಗಿ ಸಂಚರಿಸತೊಡಗುತ್ತವೆ; ಪರಿಣಾಮವಾಗಿ, ಅಪಘಾತದ ಮುನ್ಸೂಚನೆಯಂತೆ ಮನಸ್ಸನ್ನು ಆಕ್ರಮಿಸುವ ಭಯಾಸುರನಲ್ಲಿ - ಜೀವಸಂಚಾರವಾಗುತ್ತದೆ. ಹಗ್ಗವೂ ಹಾವಾಗಿ ಕಾಣತೊಡಗುತ್ತದೆ. ಇದೇ - ಭಯ ಬಂಧನ. ತ್ರಿಗುಣಗಳ (ಸತ್ವ, ರಜಸ್ಸು, ತಮಸ್ಸು) ನಿರಂತರ ಮೇಲಾಟ ನಡೆಸುವಂತಹ ಮನಸ್ಸು ಎಂಬ ಸ್ಥಾನವನ್ನು ಹದಗೊಳಿಸಿಕೊಳ್ಳದೆ ಹೋದರೆ - ಯಾವುದೇ ಬದುಕಿಗೆ - ಭಯಮುಕ್ತ ನೆಮ್ಮದಿಯ ಅನುಭವವಾಗದು.

ಆದರೆ... ಭಯ ಎಂಬ ಪದವೇ ನಮ್ಮನ್ನು ಭಯಗೊಳಿಸುವಂತಾಗಬಾರದು ಅಥವ ಭಯ ಎಂಬ ಭಾವಗಳೆಲ್ಲವೂ ಅಸ್ಪೃಶ್ಯವೂ ಅಲ್ಲ. ಭಯ ಎಂಬುದು ವಿನಮ್ರತೆಯ, ಸಜ್ಜನಿಕೆಯ, ಎಚ್ಚರದ ಲಕ್ಷಣವೂ ಆಗಿರುವುದರಿಂದ ಸ್ಥಳ ಸನ್ನಿವೇಶಗಳಿಗೆ ಹೊಂದಿಕೊಂಡು ಭಯದ ಭಾವವು ಉಪಕರಿಸುವುದೂ ಇದೆ. ಉತ್ತಮ ಕೌಟುಂಬಿಕ ವಲಯವನ್ನು ನಿರ್ಮಿಸಿಕೊಳ್ಳಬಯಸುವ ಹೆತ್ತವರ ಶಿಕ್ಷೆಯ ಭಯ, ಏಕಮನಸ್ಸಿನಿಂದ ಜ್ಞಾನವನ್ನು ಊಡಿಸುವ ಗುರುಗಳು ವಿದ್ಯಾರ್ಥಿಯಿಂದ ಅಪೇಕ್ಷಿಸುವ ಭಯ, ಶಿಷ್ಟತೆಯನ್ನು ಮರೆಯದಂತಹ ಬದುಕುಗಳನ್ನು ಅಪೇಕ್ಷಿಸುವ ಸಮಾಜದ ಕುರಿತ ಭಯ... ಇವುಗಳೆಲ್ಲವೂ ಉದ್ಧರಿಸುವ ಭಯಗಳು; ವಕ್ರಬಾಲವನ್ನು ನಳಿಗೆಯಲ್ಲಿ ಬಂಧಿಸಿ ನೆಟ್ಟಗಾಗಿಸುವ ಉಪಕಾರೀ ಭಯಗಳು; ಜಾಗ್ರತಿಯನ್ನು ಮೂಡಿಸುವ ಭಯಗಳು. ನಿಶಾಚರ ಅಪ್ರಬುದ್ಧ ಮಕ್ಕಳಿಗೆ ತಿಳಿಹೇಳಿ ಭಯ ಹುಟ್ಟಿಸುವ ಭಯದಂಡ, ಉದ್ಧಟರನ್ನು ಸದೆಬಡಿಯುವ ಭಯದ್ರವ್ಯ, ಸಮಾಜಘಾತಕರನ್ನು ನಿರ್ಮೂಲಗೊಳಿಸುವ ಇಚ್ಛಾದಂಡ, ವಿಕೃತ ಬುದ್ಧಿಯಿಂದ ಮಾನವ ಸಮೂಹವನ್ನೇ ಹಾದಿತಪ್ಪಿಸುವಂತೆ ಮಲೆಯುತ್ತಿರುವ - ತಲೆಕೆಳಗಾದಂತಿರುವ ಧೂರ್ತ ಮನಸ್ಸು, ವಿಚಾರಗಳಿಗೆ ಅಂಕುಶದ ಭಯ - ಇವೆಲ್ಲ ಬೇಡವೇ ?

ನನ್ನ ತಂದೆ ದಿ. ಐರೋಡಿ ಯಜ್ಞ್ನನಾರಾಯಣ ಉಡುಪರು - ಪುರಾಣ ಭಾರತ ಕೋಶ ಎಂಬ ಗ್ರಂಥವನ್ನು ಸಿದ್ಧಪಡಿಸುತ್ತಿದ್ದ ಕಾಲದಲ್ಲಿ - ಅವರ ಮಕ್ಕಳೆಲ್ಲರೂ ಶೈಕ್ಷಣಿಕವಾಗಿ, ಪ್ರಾಥಮಿಕ ಹಂತದಲ್ಲಿದ್ದವರು. ಪ್ರಕಟಣೆಗಾಗಿ ಆ ಗ್ರಂಥವನ್ನು ನೀಡಬೇಕಾದ ಹಂತದಲ್ಲಿ ಮಕ್ಕಳಲ್ಲಿ ಕೆಲವರು ಪ್ರೌಢಶಾಲೆಯಲ್ಲಿ ಓದುತ್ತಿದ್ದೆವು. ಆಗ ಅನಾರೋಗ್ಯದಿಂದ ಬಳಲುತ್ತಿದ್ದ ನನ್ನ ಅಪ್ಪಯ್ಯನಿಗೆ ಲೆಕ್ಕಣಿಕೆಯನ್ನು ಹಿಡಿದು ಬರೆಯುವಾಗ ಕೈ ಬಳಲುತ್ತಿತ್ತು. ಇದರಿಂದಾಗಿ, ತಮ್ಮ ಮೂರು ಜನ ಹೆಣ್ಣುಮಕ್ಕಳನ್ನು - ಗ್ರಂಥದ ಶುದ್ಧಪ್ರತಿಯನ್ನು ಸಿದ್ಧಪಡಿಸಲು ನೇಮಿಸಿಕೊಂಡಿದ್ದರು. ಇಂದಿನಂತೆ, Xerox ಪ್ರತಿ ತೆಗೆಯುವ ಸೌಲಭ್ಯವೂ ಆಗ ಇರಲಿಲ್ಲ; ಎಲ್ಲಾದರೂ ಇದ್ದಿದ್ದರೂ... ಅಷ್ಟು ಹಣ ವಿನಿಯೋಗಿಸುವ ಶಕ್ತಿಯೂ ಆಗ ನಮಗಿರಲಿಲ್ಲ. ಇತ್ತ, ಮೂಲಪ್ರತಿಯನ್ನೇ ಪ್ರಕಟಣೆಗಾಗಿ ಕೊಟ್ಟುಬಿಡುವ ನಿರ್ಧಾರವೂ ಒಪ್ಪಿತವಾಗಿರಲಿಲ್ಲ. ಆದ್ದರಿಂದ, ಸಾವಿರ ಪುಟಗಳಷ್ಟು ದೀರ್ಘವಾದ ಬರಹವನ್ನು ಮತ್ತೊಮ್ಮೆ ಬರೆಯುವುದು ಅನಿವಾರ್ಯವಾಗಿತ್ತು.

ಆದರೆ... ಆ ಹದಿಹರೆಯದಲ್ಲಿ ಗಂಟೆಗಟ್ಟಲೆ ಒಂದೆಡೆಯಲ್ಲಿ ಕೂತು ಬರೆಯುವುದು - ಮಕ್ಕಳ ಮನಸ್ಸಿಗೆ ರುಚಿಸುತ್ತಿದ್ದ ಕೆಲಸ ಆಗಿರಲಿಲ್ಲ. ಹೊರಜಗತ್ತು ಹೆಚ್ಚು ಆಕರ್ಷಕವಾಗಿ ತಮ್ಮನ್ನು ಬಲವಾಗಿ ಆಕರ್ಷಿಸುತ್ತಿದ್ದ ಎಳೆಯ ಮನಸ್ಸುಗಳಿಗೆ ಒಂದೆಡೆ ಕೂತು ಏಕಾಗ್ರತೆಯಿಂದ ಗಂಟೆಗಟ್ಟಲೆ ಬರೆಯುತ್ತಿರುವುದು ಶಿಕ್ಷೆಯಾಗಿಯೇ ಕಾಣುತ್ತಿತ್ತು ! ಇದರಿಂದಾಗಿ, ಮಕ್ಕಳಲ್ಲೇ "ನೀನು ಬರಿ, ನೀನು ಬರೆ.." ಎನ್ನುತ್ತ ಕೆಲಸ ವರ್ಗಾಯಿಸುವ ಮೇಲಾಟವೂ ನಡೆಯುತ್ತಿತ್ತು. ಆದರೆ... ಅಪ್ಪಯ್ಯನ ಮುಂದೆ ನಿಂತು ಗಟ್ಟಿಯಾಗಿ ಹೇಳಲಾಗದ ಭಯವೂ ಇತ್ತು. "ಯಾರೋ ಒಬ್ಬರು ಹೋಗಿ; ತೆಪ್ಪಗೆ ಕೂತು ಬರೆಯಿರಿ..." ಎಂದು - ಆಗಾಗ ಅಮ್ಮನು ಗದರಿಸುತ್ತಿದ್ದುದೂ ಇತ್ತು. ಕೊನೆಗೆ ಮನಸ್ಸಿಲ್ಲದ ಮನಸ್ಸಿನಿಂದ - ಸರದಿಯಲ್ಲಿ ಕೂತು - ಗ್ರಂಥದ ಪ್ರತಿ ತೆಗೆಯುವ ಕೆಲಸವನ್ನು ನಾವು ಪೂರೈಸಿದ್ದಿದ್ದರೆ - ಅದಕ್ಕೆ ನಮ್ಮೊಳಗಿನ ಸಾತ್ವಿಕ ಭಯವೇ ಕಾರಣ. ಅಮ್ಮನ ಬೆಂಬಲವೂ ಇಲ್ಲದ ಅಪ್ಪಯ್ಯನ ಭಯ ! ಅಪ್ಪಯ್ಯನ ತಪರಾಕಿಯ ಭಯ ! ತಪರಾಕಿಗಳಿಗೆ ಹಿಂಜರಿಯುತ್ತಿದ್ದ "ಜೀವಪರ" ನಾಚಿಕೆ !

ಭಯವು - ಬದುಕಿಗೆ ಉಪಕರಿಸಿದ ಪ್ರಸಂಗವಿದು. ಗ್ರಂಥದ ಪ್ರತಿ ತೆಗೆಯುವ - ಅಂದಿನ ಬರವಣಿಗೆಯ ಕರ್ಮದಿಂದಾಗಿ, ಪುರಾಣ ಸಂಬಂಧಿತ ಅನೇಕ ವಿಷಯಗಳು - ಅನಾಯಾಸವಾಗಿ ನಮಗೂ ತಿಳಿಯುವಂತಾಗಿತ್ತು. ಅದರಿಂದಾಗಿ ಭವಿಷ್ಯದಲ್ಲಿ ನಮಗೆ ಮಹದುಪಕಾರವೇ ಆಗಿದೆ. ಆದ್ದರಿಂದ ಭಯವು ಯಾವಾಗಲೂ ಅನರ್ಥಕಾರಿಯಲ್ಲ; ಯಾರು ಯಾರಿಗೆ ಯಾವಾಗ ಹೇಗೆ ಎಂಬುದನ್ನೆಲ್ಲ ಭಯದ ಹಿನ್ನೆಲೆಯಲ್ಲಿ ಪರಿಶೀಲಿಸದೆ - ಸಾರಾಸಗಟಾಗಿ ಭಯನಿಂದನೆಯು ಸೂಕ್ತವಲ್ಲ.

"ಉದ್ಧರೇದಾತ್ಮನಾತ್ಮಾನಂ" ಎಂಬ ಮಾತಿನಲ್ಲಿ... ಉದ್ಧಾರಕ್ಕಾಗಿ ಹಂಬಲಿಸುತ್ತ ಉದ್ಧಾರದ ಹಾದಿಯನ್ನು ಕ್ರಮಿಸುವವನಾಗು... ಎಂಬ ಸೂಚನೆಯೂ ಇದೆ. ಮನಸ್ಸಿದ್ದಲ್ಲಿ ಮಾತ್ರವೇ ಮಾರ್ಗವು ತೆರೆದುಕೊಳ್ಳುತ್ತದೆ ಎಂಬ ಪರೋಕ್ಷ ಸೂಚನೆಯೂ ಇದೆ. ಮನಸ್ಸನ್ನು ಸಿದ್ಧಗೊಳಿಸಿಕೋ... ಶುದ್ಧಗೊಳಿಸಿಕೋ...ನಿನಗೆ ನೀನೇ ಸ್ನೇಹಿತ... ನಿನಗೆ ನೀನು ಉಪಕರಿಸು... ಎಂಬ ಸಾಂಕೇತಿಕ ಸಂದೇಶವೂ ಇದೆ. ಯಾವುದೇ ಸತ್ಕಾರ್ಯಗಳಲ್ಲಿ ತೊಡಗುವ ಮನಸ್ಸಿಲ್ಲದಿದ್ದಲ್ಲಿ ಅಂತಹ ಮನಸ್ಸನ್ನು ಸಾತ್ವಿಕ ಭಯದ ಮೂಲಕವಾದರೂ ಪ್ರಯತ್ನಪೂರ್ವಕ ಪಳಗಿಸಿಕೊಂಡು ಉದ್ಧಾರದ ಹಾದಿಯನ್ನು ಹಿಡಿ - ಎಂಬ ಸಂಜ್ಞೆಯೂ ಇದೆ. ಉದ್ಧರಿಸುವ ಉಪಾಯಗಳಾಗಿ ಸಮರ್ಥವಾಗಿ ಬಳಸಿಕೊಂಡಾಗ, ಸಾಮ ದಾನ ಭೇದ ದಂಡ - ಎಲ್ಲವೂ ಮನಸ್ಸಿನ ಸಂಸ್ಕರಣೆಗೆ ಉಪಯುಕ್ತವೇ ಆಗುತ್ತದೆ; ಬಳಸಿಕೊಳ್ಳುವ ಸ್ಥಾನವು ಸಮರ್ಥವಾಗಿದ್ದರೆ!


"Fill the brain with high thoughts, highest ideals, Place them day and night before you... and out of that will come great work..." - Swami Vivekananda.

ಮನೋನಿಗ್ರಹ ದ ಮತ್ತು ಮನೋವಿಗ್ರಹ ದ ದಿಕ್ಕಿನಲ್ಲಿ ಉಪಯುಕ್ತವಾದ ಬೋಧನೆಯಿದು. ಗುರಿಯತ್ತ ದೃಷ್ಟಿ ನೆಟ್ಟ ಧನುರ್ಧಾರಿಯ ಏಕಾಗ್ರತೆಯದು. ಆದರೆ... ಮುಖ್ಯ ಚಿತ್ರವನ್ನು ಲಕ್ಷಿಸದೆ, ಕೇವಲ ಚೌಕಟ್ಟಿನಲ್ಲಿಯೇ ವ್ಯಸ್ತರಾದಂತೆ - ಶರೀರದ ಅಂದಂದಿನ ಸುಖ ದುಃಖಗಳಲ್ಲಿ ಮಾತ್ರವೇ ಸಂಪೂರ್ಣ ಮಗ್ನವಾಗಿರುವ ಹಲವಾರು ಆಧುನಿಕ ಚಿಂತನೆಗಳು ನಮ್ಮನ್ನು ವಿಸ್ಮಯಗೊಳಿಸುವಂತಿವೆ.

ಕೂದಲು ಬೆಳೆಸುವುದು ಹೇಗೆ ? ಚರ್ಮದ ಕಾಂತಿಗೆ ಏನು ಮಾಡಬೇಕು ? ಉಗುರಿನ ಸೌಂದರ್ಯ ರಕ್ಷಣೆಯ ಸೂತ್ರಗಳು... ಇತ್ಯಾದಿ ಬರಹಗಳು ಇಂದು ಬಹುಬೇಡಿಕೆಯ ಸಾಹಿತ್ಯಗಳೆನ್ನಿಸುತ್ತಿವೆ ! ನಿಷ್ಫಲ ಮಾರಿಗಳನ್ನೇ ಮಾರುತ್ತ, ದ್ರವ್ಯ ಸಂಪಾದನೆಗೆ ಇಳಿದಿರುವ ಟೊಳ್ಳುಗಳನ್ನು ಯುವಶಕ್ತಿಗಳು ಅನುಸರಿಸುತ್ತ, ಅದರಿಂದ ಶೀಘ್ರ ಫಲವನ್ನೂ ನಿರೀಕ್ಷಿಸುವಂತಹ ಅವಿವೇಕಿಗಳನ್ನು ಇಂದಿನ ಬರಹಗಳು ರೂಪಿಸುತ್ತಿವೆ. ಶಕ್ತಿವರ್ಧಕಗಳೆಂಬ ಮಾಯೆಯ ಹೆಸರಿನಲ್ಲಿ ದೊಡ್ಡ ದೊಡ್ಡ ವಹಿವಾಟುಗಳೂ ನಡೆಯುತ್ತಿವೆ. ಮನುಷ್ಯರಿಗೆ ತಮ್ಮ ಶರೀರದ ಆರೋಗ್ಯದ ಚಿಂತೆ ಹೇಗಿರಬೇಕು ? ಎಷ್ಟಿರಬೇಕು ? ನಿಜವಾಗಿಯೂ ಆರೋಗ್ಯ ಎಂದರೇನು ? ಎಂಬ ವಿವೇಕವನ್ನು ಮೂಡಿಸುವವರ ಪ್ರಮಾಣವು ಮಾತ್ರ ಇಳಿಮುಖವಾಗುತ್ತಿದೆ. ನೈಜ ಗುರುಗಳನ್ನು - "ಏನ್ಮಹಾ ?" ಎನ್ನುತ್ತ ತಮಗೆ ತಾವೇ ಗುರು ಎಂದುಕೊಳ್ಳುತ್ತಿರುವ ದಿಕ್ಕೆಟ್ಟ ಸ್ಥಿತಿಯಿದು !

ಇವತ್ತಿನ ಮನೆಮನೆಗಳ ಅಶಿಸ್ತು ಮತ್ತು ಅಶ್ಲೀಲತೆಗಳಿಗೆ - ಅಂಕೆ ತಪ್ಪಿದ ಮನಸ್ಸುಗಳೇ ಕಾರಣ. ಮನಸ್ಸನ್ನು ಸಂಸ್ಕರಿಸುವ ಶಿಕ್ಷಣಕ್ಕೆ ನಾವು ತಿಲಾಂಜಲಿ ಇಟ್ಟಂತಿದೆ. ಕೇವಲ ಕರ್ಮದ ದಕ್ಷತೆಯೊಂದರಿಂದಲೇ ಮನಸ್ಸನ್ನು ಸಂಸ್ಕರಿಸಲಾಗುವುದಿಲ್ಲ; ಮರ್ಮದ ಭಾವಘನತೆಯನ್ನೂ ಊಡಿಸಬೇಕಾಗುತ್ತದೆ - ಅಲ್ಲವೆ ? ನಾಗರಿಕರ ಆದರ್ಶ, ಜವಾಬ್ದಾರಿ, ಮಾನವೀಯ ಭಾವಪುಷ್ಟಿ, ಕೃತಜ್ಞತೆ ಮುಂತಾದ ಜೀವಪರ ಭಾವವನ್ನು ಮೂಡಿಸಲಾಗದ ಆಧುನಿಕ ವಿದ್ಯೆಯಿಂದ ಕೆಡುಕಿನ ಮನೋಸಮೂಹವನ್ನು ಸೃಷ್ಟಿಸಿದಂತಾಗಿ ಜೀವನಾಶಕಗಳನ್ನೇ ಉತ್ಪಾದಿಸಿದಂತಾಗದೆ ?

ಎಲ್ಲೂ ಉಪಯೋಗಕ್ಕೆ ಬಾರದ - ಭಾವಹಂತಕ ಬೌದ್ಧಿಕ ಕಸರತ್ತುಗಳನ್ನೆಲ್ಲ ವಿದ್ಯೆ ಎನ್ನಲಾದೀತೆ ? ತಮ್ಮ ನೆಲದ ಸಂಸ್ಕೃತಿಯನ್ನೇ ಅಪಹಾಸ್ಯ ಮಾಡುವ, ಅಹಂಕಾರ ಒಂದನ್ನಲ್ಲದೆ ಆತ್ಮಗೌರವವನ್ನು ಕಿಂಚಿತ್ತೂ ಬೆಳೆಸಲಾಗದ ವಿದ್ಯೆ ಎಂಬ ಅಲಂಕಾರವನ್ನು ನೀಡುವುದಕ್ಕಿಂತ - ನೀಡದಿರುವುದೇ ಉತ್ತಮವಲ್ಲವೆ ? ಆಯಾ ಅಂತಃಸತ್ವವನ್ನು ಪ್ರಚೋದಿಸಿ ಉದ್ದೀಪನಗೊಳಿಸಲಾಗದ - "ಗುಂಪಿನ ಗೋವಿಂದ" ದಂತಹ ಶಿಕ್ಷಣವಾದರೂ ಏಕೆ ಬೇಕು ? ಇಂದಿನ ವಿದ್ಯಾವಂತರಿಗಿಂತ ಅವಿದ್ಯಾವಂತರೆಂದು ಕರೆಸಿಕೊಳ್ಳುವ ಮಂದಿಯೇ ಮಾನಸಿಕವಾಗಿ ಹೆಚ್ಚು ಸ್ವಸ್ಥರಾಗಿಲ್ಲವೆ ? ಸದ್ಭಾವ ಪುಷ್ಟಿಯ ಕೊರತೆಯೇ ಇಂದಿನ ಸಾಮಾಜಿಕ ಅಸ್ವಸ್ಥತೆಯ ಮೂಲ ಕಾರಣ.

ಸ್ವಸ್ಥ ಮನಸ್ಸು, ಬುದ್ಧಿಬಲ, ಅಧ್ಯಾತ್ಮ ಬಲವಿಲ್ಲದೆ - ಕೇವಲ ಶರೀರ ಬಲವೊಂದನ್ನೇ ಹೊಂದಿದ್ದರೆ - ಅದು ಪೂರ್ಣ ಸುಖಾನುಭವ ಆದೀತೆ ? ಹೌದು. ಮನಸ್ಸು ಎಂಬ ಒಂದು ಕೋಣೆಯನ್ನು ಮೊದಲು ಸ್ವಚ್ಛಗೊಳಿಸಿಕೊಂಡರೂ ಇತರ ಕೋಣೆಗಳ ಉಸ್ತುವಾರಿಯನ್ನೂ ಮರೆಯಲಾಗುವುದಿಲ್ಲ. ಆದರೆ... ಅಂಗಳ ಗುಡಿಸಿದರೆ ಮನೆಯನ್ನು ಗುಡಿಸಿದಂತೆ ಆಗುವುದಿಲ್ಲ ಅಲ್ಲವೆ ? ನಿನ್ನೆ ಗುಡಿಸಿದ್ದರೂ ಇಂದು ಮತ್ತು ಪ್ರತೀದಿನವೂ ಗುಡಿಸುವುದನ್ನು ನಿಲ್ಲಿಸಲಾಗುವುದೂ ಇಲ್ಲ. ಶರೀರ ಎಂಬ ಮನೆಯನ್ನು ವಾಸಯೋಗ್ಯಗೊಳಿಸಿಕೊಳ್ಳಲು ಅಂತಃ ಬುದ್ಧಿ ಶುದ್ಧಿಗಳ ಕಡೆಗೂ ಗಮನ ಹರಿಸಬೇಕಾಗುತ್ತದೆ. ಸ್ವಚ್ಛ ಹಾಳೆಯಲ್ಲಿ ದಾಖಲಿಸುವ ವಿಚಾರಗಳು ಮರು ಓದಿಗೂ ಹೇಗೆ ಸುಲಭವಾಗಿರುತ್ತದೋ ಹಾಗೆ.

ಯಾವುದೇ ಧೀರ ಧೀಮಂತ ಬದುಕುಗಳಲ್ಲಿ - ಶರೀರವನ್ನು ಸದುಪಯೋಗಕ್ಕೆ ಮಾತ್ರ ದುಡಿಸಿಕೊಂಡ ಮನೋಪಾತಳಿ ಇರುವುದನ್ನು ಗಮನಿಸಬಹುದು. ಚೈತನ್ಯ, ಲಾವಣ್ಯ, ತೇಜಸ್ಸು, ದಿವ್ಯತೆ - ಮುಂತಾದ ಅನನ್ಯಗಳೆಲ್ಲವೂ ಸಾಧ್ಯವಾಗುವುದು - ಮನಸ್ಸು ದೇಹಗಳ ಸ್ವಚ್ಛತೆಯನ್ನು ಸಾಧಿಸುವುದರಿಂದಲೇ ಆಗಿದೆ. ಮುಖ್ಯವಾಗಿ, ಬದುಕಿನ ಸ್ವಚ್ಛತೆಯು - ಮನಸ್ಸಿನ ಸ್ವಚ್ಛತೆಯದೇ ಪ್ರತಿಬಿಂಬ. ಆದ್ದರಿಂದ - ಅಂಗಳವನ್ನು ಗುಡಿಸಿ, ನಿತ್ಯ ವಾಸಿಸುವ ಮನಸ್ಸಿನ ಮನೆಯನ್ನು ನಗಣ್ಯಗೊಳಿಸುತ್ತಿರುವ ಆಧುನಿಕ ಶರೀರನಿಷ್ಠ ಚಿಂತನೆಗಳು ನಿಜವಾಗಿಯೂ "ಜೀವಪರವೆ ?".. ಯೋಚಿಸಬೇಕು.

ಎಲ್ಲರೂ ವಿದ್ಯಾರ್ಥಿಗಳೇ ಆಗಿರುತ್ತಾರೆ. ವಿದ್ಯಾರ್ಥಿದೆಸೆ ಎಂಬುದು ಮುಗಿದು ಹೋಗುವ ಅವಸ್ಥೆ ಅಲ್ಲವೇ ಅಲ್ಲ. ಆದ್ದರಿಂದ ಮನೋವ್ಯಾಪಾರಕ್ಕೆ ವಿಶ್ರಾಂತಿ ಇರುವುದಿಲ್ಲ. ವಿಶ್ರಾಂತಿ ನೀಡಿದರೆ - ಮನೋಭೂಮಿಯಲ್ಲಿ ಕಳೆ ಬೆಳೆದು, ಬೆಳೆ ಕಾಣದೆ ಹಡಿಲು ಬೀಳುತ್ತದೆ. ಆದ್ದರಿಂದ ಶರೀರ ಎಂಬ ವಿದ್ಯಾಲಯದ, ಮನಸ್ಸು ಎಂಬ ಪ್ರಯೋಗಶಾಲೆಯಲ್ಲಿ ಸದ್ವಿಚಾರದ ಅನ್ವೇಷಣೆಗಳು ನಡೆಯುತ್ತಲೇ ಇರಬೇಕು. ತನ್ನನ್ನು ತಾನು ಅರಿಯುವ ಅನ್ವೇಷಣೆ ಅದು. ಗುರಿ ತಲುಪಿಸುವ ತಲ್ಲೀನತೆಯನ್ನು ಸಾಧಿಸುವ ಇಚ್ಛೆಯಿಂದ ಎಚ್ಚರದ ಮನಃಸ್ಥಿತಿಯುಳ್ಳ ಯಾವುದೇ ವಿದ್ಯಾರ್ಥಿಗಳಲ್ಲಿ - ಅಂತರ್ಮುಖಿಯಾದ ನಿಶ್ಚಲ ಮನಸ್ಸು ಅವಶ್ಯಕ. ಆದ್ದರಿಂದ ಅಧ್ಯಯನ ಮತ್ತು ಸಾಧನೆಯ - ಈ ಬದುಕಿನ ಹಾದಿಯಲ್ಲಿ - ಎಲ್ಲರೂ ಯಾವಾಗಲೂ ವಿದ್ಯಾರ್ಥಿಗಳೇ.

ಗಾಂಭೀರ್ಯವಿಲ್ಲದ ಬದುಕಿನ ಶೈಲಿಯನ್ನೇ - ಇಂದು - ಆಧುನಿಕತೆ ಎನ್ನುವಂತೆ ಕಾಣುತ್ತಿದೆ. ಆದ್ದರಿಂದಲೇ - ಹೂಂ ಅಂತೀಯಾ ? ಊಹೂಂ ಅಂತೀಯಾ ? ಎಂಬ ಪ್ರಾಥಮಿಕ - ಅಗ್ಗದ ಪ್ರೀತಿಯ ಶಾರೀರಿಕ ಮಾರ್ಗದಲ್ಲಿ - ಈಗ ವಿಪರೀತ ನೂಕು ನುಗ್ಗಲು. ಅಶಾಂತಿಗೆ ಕಾರಣವಾಗುವ ಇಂತಹ ಅಲೆಮಾರೀ ಕಲ್ಪನೆಗಳು ಪ್ರಬುದ್ಧ ಮನಸ್ಸುಗಳಿಗೆ ಅರ್ಥಹೀನ ಮಮಕಾರ ಎನ್ನಿಸುವಂತಿದ್ದರೂ - ಸ್ವಯಂ ಪೋಷಕರಿಗೆ ಹಾಗನ್ನಿಸದಿರುವುದು ಸ್ವಾಭಾವಿಕ. ಅದೇ ಮನಸ್ಸಿನ ಚಮತ್ಕಾರ. ಇಂತಹ ಮನಸ್ಸುಗಳು - ಬಂಧನದ ಗಂಟನ್ನು ಬಿಗಿಸಿಕೊಳ್ಳುತ್ತಲೇ ಸಾಗುತ್ತವೆ; ದುಃಖವನ್ನು ಆಹ್ವಾನಿಸುತ್ತಲೇ ಇರುತ್ತವೆ.

ಬಂಧನದ ಮೊದಲ ಸ್ವಾದವೇ - ಬರಿಗಣ್ಣಿಗೆ ಕಾಣಿಸುವ ಸಂಚಾರೀ ಪ್ರೀತಿ ಅಥವ ಲೌಕಿಕರ ಸ್ವಾರ್ಥಪ್ರೇರಿತ ಪ್ರೀತಿ. ಇದು - ಸಂಸಾರವಂದಿಗರ ಅಲೆಮಾರೀ ಪ್ರೀತಿ ! ಪ್ರೀತಿ ಎಂಬುದು - ಕೇವಲ ತನ್ನ ಸಾಂಸಾರಿಕ ಸೆಳೆತದಲ್ಲಿಯೇ ಹೊರಳಾಡುತ್ತಿದ್ದರೆ - ಅದು ತನ್ನ ಗೂಡನ್ನೇ ಕಚ್ಚಿ ತಿನ್ನತೊಡಗುವ ಪೀಡೆಯೂ ಆಗಬಲ್ಲದು. ಎಚ್ಚರ ಎಂಬ ಸಾತ್ವಿಕ ಭಯವು ಮಾತ್ರ ಮೂಡಿಸಬಲ್ಲ ಭಾವವಿದು.

ಮನುಷ್ಯರಲ್ಲಿ ಹರಿದಾಡುತ್ತಿರುವ "ಅನುಕೂಲಕ್ಕೆ ತಕ್ಕಂತೆ ಒದಗುವ" ಸ್ವಾರ್ಥಪೂರಿತ ಪ್ರೀತಿಭಾವವು ಕೇವಲ ತರಬೇತಿರಹಿತವಾದ ಮನೋಜನ್ಯವಾಗಿದ್ದು, ಇದನ್ನೇ ಬಂಧನ ಎನ್ನುವುದು. ದುಃಖ, ನಿರಾಶೆಯನ್ನು ಮಾತ್ರ ಪ್ರಸಾದಿಸಬಲ್ಲ ಬಂಧನವಿದು. ಬದುಕಿನ ನವರಸಗಳಲ್ಲಿ ಅತ್ಯಂತ ಸುಲಭ ಮತ್ತು ಆಕರ್ಷಕ ಎನ್ನಿಸಿದರೂ - ನಿಷ್ಕಾಮವಾಗಲಾಗದ ಕಾರಣದಿಂದಲೇ, "ಪ್ರೇಮರಸ" ಎಂಬುದು ಮನುಷ್ಯರಿಗೆ ಪ್ರಾಯೋಗಿಕವಾಗಿ ಅತ್ಯಂತ ಕಠಿಣಸಾಧ್ಯವಾಗಿ, ಯಶಸ್ಸೆಂಬುದು ದುರ್ಭರವಾಗುತ್ತಿದೆ. ಏಕೆಂದರೆ... ನಮ್ಮ ನಿತ್ಯ ಬದುಕಿನಲ್ಲಿ ಸುಳಿದಾಡುವ ವ್ಯಾವಹಾರಿಕ ದೃಷ್ಟಿಯ ಬಗೆಬಗೆಯ ಪ್ರೇಮಭಾವಗಳು - ವಾಸ್ತವವಾಗಿ - ಶುದ್ಧ ಪ್ರೇಮವಾಗಿ ಇರುವುದಿಲ್ಲ. ಅದು - ಕೊಡುಕೊಳ್ಳುವ ಮನೋನೆಲೆಯ ಸ್ವಾರ್ಥ ವ್ಯವಹಾರಗಳಷ್ಟೇ ಆಗಿ ಉಳಿದುಬಿಡುತ್ತಿವೆ. ಆದ್ದರಿಂದಲೇ ಎಷ್ಟು ಗೋಳಾಡಿದರೂ - ಯಾರಿಗೂ - ನಿಜ ಪ್ರೇಮದ ಸವಿಯ ಅನುಭವವು ದಕ್ಕುವುದಿಲ್ಲ; ಮನಸ್ಸಿನ ತಳಮಳವೂ ತಗ್ಗುವುದಿಲ್ಲ.

"ಪ್ರೀತಿಸುವುದು ಅತ್ಯಂತ ಸುಲಭ ಕಾರ್ಯ ಎಂದು - ಜನರೇನೋ ನಂಬಿದ್ದಾರೆ. ಪ್ರತಿಯೊಬ್ಬ ವ್ಯಕ್ತಿಯಲ್ಲೂ ಪ್ರೀತಿಸುವ ಸಾಮರ್ಥ್ಯ ಇದ್ದರೂ - ನಿಜವಾಗಿ ಪ್ರೀತಿಸುವುದು ಮಾತ್ರ - ಒಂದು ಅಸಾಮಾನ್ಯ ಸಿದ್ಧಿಯೇ ಸರಿ.." ಎಂದಿರುವ ಜರ್ಮನಿಯ ಪ್ರಖ್ಯಾತ ಮನಃಶಾಸ್ತ್ರಜ್ಞ ಎರಿಕ್ ಫ಼್ರಾಂ ಎಂಬಾತ ಅಸಂಖ್ಯಾತ ಮನಸ್ಸುಗಳೊಂದಿಗೆ ಒಡನಾಡಿ, ತಾನು ಕಂಡುಕೊಂಡ ಸತ್ಯವನ್ನು ಜಗತ್ತಿನ ಮುಂದೆ ಇಟ್ಟುಹೋಗಿದ್ದಾರೆ. ಅವರು, ಪ್ರೇಮಭಾವದ ಸರಳತೆಯೊಳಗಿನ ನಿಗೂಢತೆಯನ್ನು ಸೂಕ್ಷ್ಮವಾಗಿ ನಮ್ಮ ಮುಂದೆ ತೆರೆದಿರಿಸಿದ್ದಾರೆ. ಸ್ವಚ್ಛ ಮನಸ್ಸನ್ನು ಸ್ಥಾಪಿಸಿಕೊಳ್ಳದೆ ಸ್ವಚ್ಛ ಪ್ರೀತಿಯು ದಕ್ಕುವುದಿಲ್ಲ ಎಂಬುದೇ ಗೂಢಾರ್ಥ. ಕೇವಲ ಮನಸ್ಸಿನಲ್ಲಿ ಹಂಬಲಿಸಿದ ಮಾತ್ರಕ್ಕೇ - ಅಶುದ್ಧಗೊಂಡಿರುವ ಮನೋಕ್ಷೇತ್ರದಲ್ಲಿ, ಯಾವುದೇ ರಸಭಾವದ ನೈಜ ಅನುಭೂತಿಯ ಸಂವಹನವು ಅಸಾಧ್ಯ.

ಇಂತಹ ಯಾವುದೇ ಸಾಧನೆಗಳು ಅವಸರದಲ್ಲಿ ಸಂಭವಿಸುವುದಿಲ್ಲ. ಯಾವುದೇ Crash Course ಗಳಿಂದ ಪರಿಣಾಮ ಮೂಡುವುದೂ ಇಲ್ಲ. ಸ್ವಭಾವ ಶುದ್ಧಿಯ ಹಾದಿಯಲ್ಲಿ ಹಂತಹಂತವಾಗಿ ಕ್ರಮಿಸಿದಾಗ ಮಾತ್ರವೇ ಶ್ರೇಯಸ್ಸಿನ ಅನುಭವ ಆಗಬಲ್ಲದು. ಏಕಾಂತದ ಧ್ಯಾನ, ಶುದ್ಧ ಸಂಗೀತ, ಅರಳಿಸಬಲ್ಲ ಸಾಹಿತ್ಯ, ಪ್ರಕೃತಿಯ ಸಾಮೀಪ್ಯ... ಇವುಗಳೆಲ್ಲವೂ ಪ್ರಸನ್ನ ಚಿತ್ತರನ್ನಾಗಿಸುತ್ತ ರಥ ಸಾರಥಿಯ ಚಿತ್ತ ಶುದ್ಧಿಗೆ ನೆರವಾಗಬಲ್ಲ ಸರಕುಗಳು.

ಶ್ರದ್ಧೆ ಮತ್ತು ಶ್ರಮದಿಂದ ಮಾತ್ರವೇ ಮನಸ್ಸನ್ನು ನಿಗ್ರಹಿಸಲು ಸಾಧ್ಯ. ಭಾರತೀಯ ವೈದಿಕ ಮಾರ್ಗದಲ್ಲಿ ಸಹಸ್ರಾರು ವರ್ಷಗಳ ಹಿಂದೇ - "ಚಿತ್ತವೃತ್ತಿ ನಿರೋಧ" ಎಂಬ ಸೂಚನೆಯು ಪುನರಾವರ್ತನೆಗೊಳ್ಳುತ್ತ ಬಂದಿದ್ದು, ಶಾಂತ ಬದುಕನ್ನು ಸಾಧಿಸುವ ಮಾರ್ಗದರ್ಶನವು ನಮ್ಮ ಮುಂದಿದೆ. ಮನಸ್ಸಿನಲ್ಲಿ ಮೂಡುವ ಎಲ್ಲ ಬಗೆಯ ಯೋಚನೆ ಮತ್ತು ಹಂಬಲಗಳನ್ನು ಸರ್ವಥಾ ವಿರೋಧಿಸಿ, ಮನಸ್ಸನ್ನು ಸ್ವಚ್ಛಗೊಳಿಸಿ, ಚಿತ್ತದ ಏಕಾಗ್ರತೆಯನ್ನು ಸಾಧಿಸುವ ಮಾರ್ಗವಿದು; ಮನಸ್ಸನ್ನು ಹದ್ದುಬಸ್ತಿನಲ್ಲಿಡುವ ಯೋಗವ್ಯಾಯಾಮ.


ನಮ್ಮ ಹೊರಗಣ್ಣಿಗೆ ಕಾಣಿಸಿಕೊಳ್ಳದ ಮನಸ್ಸೇ - ಮನುಷ್ಯನನ್ನು ಆಡಿಸುತ್ತಿರುತ್ತದೆ. ಮನಸ್ಸು ಎಂಬುದು - ಭೂಮಿಯಂತೆ. ಆಯಾ ನೆಲೆಯಲ್ಲಿ ಬಿತ್ತುವ ಬೀಜದ ಶಕ್ತಿ ಮತ್ತು ಅದರ ಹೋರಾಟದ ಫಲವಾಗಿ - ಭೂಮಿಯು ತನ್ನ ನೆಲದಲ್ಲಿ ಬೇರುಬಿಡಲು ಬೀಜಕ್ಕೆ ಆಶ್ರಯವನ್ನು ನೀಡುವಂತೆ - ಮನಸ್ಸೂ ಕೂಡ ವರ್ತಿಸುತ್ತದೆ. ಮನಸ್ಸನ್ನು ನಿಯಂತ್ರಿಸುವ ಹೋರಾಟದಲ್ಲಿ ತೊಡಗಿಕೊಂಡ ಅವಸ್ಥೆಗಳಲ್ಲಿ ಮಾತ್ರ - ಫಲಾನುಭವದ ಅನುಭೂತಿಯು ಸಾಧ್ಯ. ಈ ಹೋರಾಟದ ಹಾದಿಯಲ್ಲಿಯೂ, ಬಿತ್ತಿದ ಬೀಜಗಳೆಲ್ಲವೂ ಮೊಳೆಯಲಾರವು. ಒಂದೊಮ್ಮೆ ಮೊಳೆತರೂ ಪೂರ್ಣತೆ ಕಾಣದೆ ಕಮರಿಹೋಗಬಹುದು. ಮಳೆಯಂತೆ - ಭಗವಂತನ ಕೃಪಾವರ್ಷವಾದಾಗ ಮಾತ್ರವೇ ಅನುಗ್ರಹರೂಪದಲ್ಲಿ - ಆಂತರಂಗಿಕ ಚೈತನ್ಯಶಕ್ತಿಯು ಅರಳಬಲ್ಲದು. ಇಂತಹ ಯೌಗಿಕ ಸಂಕಲ್ಪ ಶಕ್ತಿಗೆ ಮಾತ್ರ ಮನಸ್ಸು ಮಣಿಯುತ್ತದೆ ಮತ್ತು ತನ್ನಿಂದಾಚೆಗಿನ ಮಹಾ ಚೈತನ್ಯವನ್ನು ಸಂಧಿಸಿ ಸಂಚರಿಸಲು ದಾರಿ ಬಿಡುತ್ತದೆ. ಮಣ್ಣಿನಲ್ಲಿ ತಪಸ್ಸುಗೈಯ್ಯುವ ಬೀಜದ ವಿರಾಗವು ಮನಸ್ಸಿನ ಸ್ವಾಭಾವಿಕವಾದ ಸ್ಥಿತಿಯಾದಾಗ ಮಾತ್ರ - ಮನಸ್ಸಿನ ಕದವು ತೆರೆಯುತ್ತದೆ; ಬೆಳಕು ಕಾಣುತ್ತದೆ. ಬಿತ್ತಿದ ಬೀಜವು ಮೊಳೆತು ಸಸಿಯಾಗಿ ಮರವಾಗಿ ಫಲವನ್ನೂ ನೀಡುತ್ತದೆ; ಕಾಲಕ್ರಮದಲ್ಲಿ, ಪ್ರಕೃತಿವೃತ್ತದ ನಿಯಮಾನುಸಾರ - ಮರಳಿ ಮಣ್ಣನ್ನೇ ಸೇರುತ್ತದೆ. ಇದೇ ಬೀಜಾಂಕುರ ನ್ಯಾಯ ! ಬೀಜದಿಂದ ವೃಕ್ಷ, ವೃಕ್ಷದಿಂದ ಬೀಜ... ಹೀಗೆ ಕಾರ್ಯ ಕಾರಣಗಳ ಪರಸ್ಪರ ಅನಿವಾರ್ಯ ಅವಲಂಬನೆಯನ್ನು ಹೇಳುವ ನ್ಯಾಯವಿದು. ಮನಸ್ಸಿನ ಪಾತಳಿಯ ಶುಚಿತ್ವದಂತೆಯೇ ಮನುಷ್ಯನ ಬದುಕು ವರ್ತಿಸುತ್ತಿರುತ್ತದೆ. ಅದಕ್ಕಾಗಿ, ಅಂತರ್ಮುಖೀ ಚಿಕಿತ್ಸೆಗೆ ಒಡ್ಡಿಕೊಳ್ಳಬೇಕಾಗುತ್ತದೆ.

ಮನಸ್ಸಿನ ಸ್ವಾಭಾವಿಕ ಗುಣವೇ ಅಡ್ಡಿಪಡಿಸುವುದು; ಚಾಂಚಲ್ಯ ಮೂಡಿಸುವುದು ! ಅದು - ಮನಸ್ಸಿನ ಸ್ವಭಾವ. ಇಂತಹ ಚಂಚಲ ಸ್ವಭಾವದ ಮನಸ್ಸನ್ನು ನಿಗ್ರಹಿಸಲು ಹೆಚ್ಚು ಸಹಕರಿಸುವ ಕ್ರಿಯೆಯೇ ಪ್ರಾಣಾಯಾಮ. ಯಮ ನಿಯಮ ಆಸನ ಪ್ರಾಣಾಯಾಮ ಪ್ರತ್ಯಾಹಾರ ಧ್ಯಾನ ಧಾರಣಾ ಮುಂತಾದ ಯೋಗ ಸಾಧನೆಗಳು ಮನೋನಿಗ್ರಹಕ್ಕಾಗಿಯೇ ಹುಟ್ಟಿಕೊಂಡವುಗಳು. ಯೋಗದಿಂದ ಪರಮಾತ್ಮನ ಅನುಭವ ಆಗದಿದ್ದರೂ ಬದುಕಿನ ನೆಮ್ಮದಿಯ ಹಾದಿಯು ಪ್ರಶಸ್ತಗೊಳ್ಳುತ್ತದೆ. ಸಾಧನೆಯ ಚರಮ ಹಂತದ - ಸಮಾಧಿ ಎಂಬ "ಪರಮಾನಂದ ಸ್ಥಿತಿಯನ್ನು" ತಲುಪುವ ಪೂರ್ವಸಿದ್ಧತೆಯಂತೆಯೂ ಯೋಗಾಭ್ಯಾಸಗಳು ಬಳಕೆಯಾಗುತ್ತವೆ. ಪೂರ್ಣಕಾಲಿಕ ತನ್ಮಯತೆಯಿದ್ದಾಗ ಮಾತ್ರ - ಭೋಗದ ಬದುಕುಗಳನ್ನು ಸುಯೋಗದತ್ತ ಕರೆದೊಯ್ಯುವ ಶಕ್ತಿಯೂ ಯೋಗ ಕ್ರಿಯೆಗಳಿಗಿದೆ. ತನ್ಮೂಲಕ ತಾಳ್ಮೆ, ಸದಿಚ್ಛೆಯ ಸಚ್ಚಿಂತನೆಗಳನ್ನು ರೂಢಿಸಿಕೊಳ್ಳುತ್ತ ಮನಸ್ಸನ್ನು ತೊಳೆಯುವ ಇಚ್ಛಾಪೂರ್ವಕ ಕ್ರಿಯೆಗಳು ಸಂಭವಿಸತೊಡಗುತ್ತವೆ. ಉತ್ತಮಿಕೆಯನ್ನು ಸ್ಥಾಪಿಸಿಕೊಳ್ಳುವ ಸಾಧನೆಯಲ್ಲಿ ನಿರತವಾಗುವ ಮನಸ್ಸುಗಳು ನಿರಂತರ ಸಾಧನೆಯನ್ನು ಅವಲಂಬಿಸಬೇಕಾಗುತ್ತದೆ. ಪ್ರತಿಯೊಂದು ಶರೀರದಲ್ಲಿಯೇ ಹುಟ್ಟಿ ಬೆಳೆದು ಸಂಘಟಿತವಾಗುವ ಕಾಮ ಕ್ರೋಧ ಮುಂತಾದ ವಿಕಾರಗಳು ಮತ್ತು ಜಡಶಕ್ತಿಗಳ - ಮುಕ್ತ ಸಂಚಾರೀವಲಯವಾದ ಮನಸ್ಸುಗಳನ್ನು ಹತೋಟಿಯಲ್ಲಿಡುವ ಸತತ ಯತ್ನಗಳು - ಉನ್ನತಿಗಾಗಿ ಹಂಬಲಿಸುವ ಶರೀರ ಮಾಧ್ಯಮದಿಂದ ನಡೆಯುತ್ತಲೇ ಇದ್ದಾಗ, ಮನಸ್ಸು ಸಂಸ್ಕರಿಸಲ್ಪಟ್ಟು - ದೇಹ ಮನಸ್ಸುಗಳು ಇಚ್ಛೆ ಮತ್ತು ಕ್ರಿಯೆಯ ಏಕಸೂತ್ರಕ್ಕೆ ಅಳವಡುವುದು ಸಾಧ್ಯವಾಗುತ್ತದೆ.

ಮನಸ್ಸಿನ ತುಂಟಾಟಗಳು ಸ್ಥಗಿತಗೊಳ್ಳದೆ - ಬುದ್ಧಿಯ ಸ್ವರೂಪದರ್ಶನವು ಆಗಲಾರದು; ಬುದ್ಧಿಯು ಸಕ್ರಿಯವಾಗಲಾರದು. ವಿವೇಕಪೂರ್ಣ ಬುದ್ಧಿಯು ರಂಗಕ್ಕಿಳಿಯದೆ ಇಚ್ಛಿತ ಕರ್ಮಗಳು ಅಪೇಕ್ಷೆಯಂತೆ ನಡೆಯಲಾರವು; ಬದುಕು ಸುಗಮವಾಗದು. ಆದ್ದರಿಂದ - ಪ್ರಶಾಂತ ಮನೋಪರಿಸರವನ್ನು ರೂಪಿಸಿಕೊಳ್ಳುವುದರಲ್ಲಿಯೇ ಬದುಕಿನ ಯಶಸ್ಸು ಅಡಗಿದೆ. ಆದ್ದರಿಂದ, ದಿನಬೆಳಗಾದರೆ ದುಃಖ ಕಷ್ಟಗಳ ಮಾಯಕದ ಸುದ್ದಿಯನ್ನೇ ಮುಂದಿಡುತ್ತ ಮನುಷ್ಯರನ್ನು ತಲ್ಲಣಿಸುವಂತೆ ಮಾಡುವ ಆಯಾ ಮನೋವಲಯವನ್ನು ಸ್ವನಿಯಂತ್ರಣಕ್ಕೆ ತಂದುಕೊಳ್ಳುವ ಪ್ರಯತ್ನಗಳು ನಿರಂತರವಾಗಿ ನಡೆಯಬೇಕಾಗುತ್ತದೆ.

ಮನುಷ್ಯನನ್ನು ಒಡ್ಡನನ್ನಾಗಿಸಿ ಖೆಡ್ಡಕ್ಕೆ ಕೆಡಹುವ - ತುಂಟ ಸ್ಥಾನವೇ ಮನಸ್ಸು. ಮನುಷ್ಯರ ಸುಖ ದುಃಖಗಳೆಲ್ಲವೂ ಮನೋಜನ್ಯವಾದ ಸಂಚಾರೀ ಭಾವಗಳು ಮತ್ತು ಅನಿತ್ಯವಾದವುಗಳು. ಅನಿತ್ಯವಾದುದೆಲ್ಲವನ್ನೂ ಪರಮಸತ್ಯ ಎಂದೇ ಬಿಂಬಿಸುವ ತರಬೇತುಗೊಳ್ಳದ ಮನಸ್ಸುಗಳು, ಮನುಷ್ಯರನ್ನು ದಿಕ್ಕೆಡಿಸುತ್ತಲೇ ಇರುತ್ತವೆ. ಆದ್ದರಿಂದ ಲೋಲುಪತೆಯತ್ತಲೇ ಸ್ವಾಭಾವಿಕವಾಗಿ ವಾಲುವ ಅಂಕೆತಪ್ಪಿದ ಮನಸ್ಸಿನ ಸ್ವಚ್ಛಂದ ಹರಿದಾಟವನ್ನೇ ಹಿಂಬಾಲಿಸಿದರೆ - ನಿರಾಶೆ ನೋವು ಕಟ್ಟಿಟ್ಟ ಬುತ್ತಿ. ಆದ್ದರಿಂದಲೇ ಭಾರತೀಯ ವೈದಿಕ ಶಾಸ್ತ್ರದಲ್ಲಿ ಮನೋನಿಗ್ರಹಕ್ಕೆ ವಿಶೇಷ ಒತ್ತನ್ನು ನೀಡಲಾಗಿದೆ. Dating, Live in Relation, ಮಾತು ಮಾತಿಗೆ ಉದುರುವ SO WHAT ? ವರ್ತನೆಗಳಂತಹ - ಇಂದಿನ ಆಧುನಿಕರ ನಿತ್ಯೋತ್ಸವಗಳೆಲ್ಲವೂ ಅಂಕೆಯಿಲ್ಲದ ಮನಸ್ಸಿನ ಪ್ರತಿಬಿಂಬಗಳು; ಅಸಹನೀಯ ಸ್ಥಿತಿಗಳನ್ನು ಆಹ್ವಾನಿಸುವ ಅಸ್ವಸ್ಥ ಮನಸ್ಸಿನ ಕುಣಿತದ ದ್ಯೋತಕಗಳು.

"ಸ್ವಸ್ಥ ಮನಸ್ಸಿನಿಂದ ಸ್ವಸ್ಥ ಬದುಕು" ಎಂಬ ಭಾರತೀಯ ಯೌಗಿಕ ಸೂತ್ರವನ್ನು ಸುಯೋಗ್ಯ ಸಮಾಜ ನಿರ್ಮಾಣದ ದೃಷ್ಟಿಯಿಂದಲೇ ಸ್ಥಾಪಿಸಲಾಗಿದೆ. ಸರ್ವೇ ಭವಂತು ಸುಖಿನಃ ಎಂಬ ಸದಾಶಯದ ಸೂತ್ರವಿದು. ಕೆರಳದೆ ಅರಳುವ ವಿದ್ಯೆ ಇದು. ಋಷಿ ದ್ರಷ್ಟಾರರ ಅರಿವಿಗೆ ಬಂದು - ಮಾನವ ಕಲ್ಯಾಣಕ್ಕಾಗಿ ಬೋಧಿಸಿದ ತಾತ್ವಿಕ ವಿಷಯಗಳನ್ನು ಕಿಂಚಿತ್ತಾದರೂ ಅರಿತು ಆಚರಿಸದೆ ಹೋದರೆ - ಯಾವುದೇ ಆನಂದದಾಯಕ ಅನುಭವವು ಒದಗಲಾರದು.

ಇತ್ತೀಚೆಗೆ ನನ್ನನ್ನು ಭೇಟಿಯಾಗಿದ್ದ ಒಬ್ಬ ಮಹಿಳೆಯು ತನ್ನ ಅಲೌಕಿಕ ಅನುಭವಗಳನ್ನು (!) ಹೇಳಿಕೊಂಡಿದ್ದರು. ನಾನೂ ಕುತೂಹಲದಿಂದ ಕೇಳಿಸಿಕೊಂಡಿದ್ದೆ. ಆಕೆಯ ಮಾತಿನ ಸಾರಾಂಶ ಇದು.

"ನಿತ್ಯವೂ ಬೆಳಿಗ್ಗೆ ಸೂರ್ಯೋದಯದ ಹೊತ್ತಿನಲ್ಲಿ ಮತ್ತು ಸಂಜೆ ಸೂರ್ಯಾಸ್ತದ ಹೊತ್ತಿನಲ್ಲಿ ಕಡಿಮೆಪಕ್ಷ 15 ನಿಮಿಷವಾದರೂ ಪ್ರಾಣಾಯಾಮ ಮಾಡುತ್ತೇನೆ. ಆ ಹೊತ್ತಿನಲ್ಲಿ ಸರ್ವಾಪರಾಧಗಳನ್ನೂ ಕ್ಷಮಿಸುವಂತೆ ಸರ್ವಶಕ್ತ ಶಕ್ತಿಯನ್ನು ಧ್ಯಾನಿಸುತ್ತೇನೆ. ಇದರಿಂದ ದಿನವಿಡೀ ಉತ್ಸಾಹದಿಂದ ಇರುವಷ್ಟು ಧನಾತ್ಮಕ ಶಕ್ತಿ ಒದಗುತ್ತದೆ. ಆದ್ದರಿಂದ ದಿನವೂ ಆಯಾಸವಿಲ್ಲದೆ 18 - 20 ಗಂಟೆಗಳ ಕಾಲ ನಾನು ದುಡಿಯುತ್ತಿದ್ದೇನೆ. ಇದರಿಂದ ನನ್ನ ಮಾತುಗಳು ಮತ್ತು ಕೃತಿಗಳು ಪ್ರಭಾವಪೂರ್ಣವಾಗಿವೆ. ಇಚ್ಛಾಶಕ್ತಿಯು ಬೆಳೆದಿದೆ. ನಾನು ಯೋಚಿಸಿದ್ದೆಲ್ಲವೂ ಸಂಭವಿಸುತ್ತಿದೆ. ಇದು ನನ್ನ ಸ್ವಂತ ಅನುಭವ..." ಇತ್ಯಾದಿಯಾಗಿ ಹೇಳುತ್ತ ಕೆಲವು ಪವಾಡಸದೃಶ ಘಟನೆಗಳನ್ನೂ ವಿವರಿಸಿದ್ದರು !

ಆಕೆಯ ನಿಷ್ಠೆ ಮತ್ತು ಶಿಸ್ತಿನ ಜೀವನಕ್ರಮವನ್ನು ಮೆಚ್ಚಿಕೊಂಡು ಅಂದು ಶ್ಲಾಘಿಸಿದ್ದ ನಾನು, ಆಕೆಯ ಮಾತುಗಳನ್ನು ಸುಮ್ಮನೆ ಕೇಳಿಸಿಕೊಳ್ಳುವ ಮೂಲಕ ಪ್ರೋತ್ಸಾಹಿಸಿದ್ದೆ. ಅಕೆಯ ವಿವರಣೆಯು - ವಾಸ್ತವವನ್ನು ತಪ್ಪಾಗಿ ಅರ್ಥೈಸಿದ್ದ ಅನ್ನಿಸಿಕೆ ಆಗಿದ್ದರೂ ಆಕೆಯನ್ನು ನಿರುತ್ಸಾಹಗೊಳಿಸಿದಂತೆ ಆಗಬಾರದೆನ್ನುವ ಉದ್ದೇಶದಿಂದ - ಅವಸರದ ಪ್ರತಿಕ್ರಿಯೆಗೆ ಅಂದು ನಾನು ಮುಂದಾಗಿರಲಿಲ್ಲ. ಆಕೆಯಂತೆಯೇ ಯೋಚಿಸುವ ಅನೇಕ ಮನಸ್ಸುಗಳಿವೆ. ಯಾರಾದರೂ ದಿನಕ್ಕೆ 15 - 30 ನಿಮಿಷ ನಿರ್ವಹಿಸುವ ಪ್ರಾಣಾಯಾಮ ಅಥವ ಮನೋವ್ಯಾಯಾಮದಿಂದ - ಅಂದುಕೊಂಡಂತಹ ಯಾವುದೇ ಬಾಹ್ಯ / ಆಂತರಂಗಿಕ ಅದ್ಭುತಗಳು ಸಿದ್ಧಿಸಲು ಸಾಧ್ಯವೆ ? ಶಾರೀರಿಕವಾಗಿ ತಾತ್ಕಾಲಿಕ ಹೊಸತನದ ಅನುಭವ ಆಗಬಹುದಷ್ಟೆ.

ಯೋಗ ಎಂಬುದು ಆತ್ಮಶುದ್ಧಿಗಾಗಿ ನಡೆಸುವ ಕ್ರಿಯೆ. ಆದರೆ ಅರೆಕಾಲಿಕವಾಗಿ ತೊಡಗಿಕೊಳ್ಳುವ ಇಂತಹ ಯಾವುದೇ ಕ್ರಿಯೆಯಿಂದ ಅಸಾಮಾನ್ಯ ಎಂಬುದು ಸಂಭವಿಸಲಾರದು; ಅಸಾಮಾನ್ಯವಾದ ಶಕ್ತಿಯುಳ್ಳ - ಮನಸ್ಸು ಎಂಬ ರಾವಣನ ಹೊಟ್ಟೆಗೆ ಕಾಸಿನ ಮಜ್ಜಿಗೆ ಸುರಿದರೆ ಅದು ಹೇಗೆ ಅನುಭವಕ್ಕೆ ಬಾರದೋ - ಹಾಗೆ ಆದೀತು; ಪರಿಣಾಮ - ಮೆಟ್ಟಿಲನ್ನೇ ಉಪ್ಪರಿಗೆ ಅಂದುಕೊಂಡಂತೆ - ಅಷ್ಟೆ; ಹತ್ತರೊಡನೆ ಇನ್ನೊಂದು ಭ್ರಾಂತಿ !

ಹೀಗಿದ್ದರೂ... ಯಾವುದೂ ಪೂರ್ತಿಯಾಗಿ ವ್ಯರ್ಥ ಆಗದು; ಎರಡು ಊಟದ ನಡುವೆ ಸಿಗುವ ನೆಮ್ಮದಿಯಂತಹ ಕಿಂಚಿತ್ ಅನುಭವ ಅಥವ ಅರೆಬರೆ ಸ್ನಾನದ ಸುಖಪ್ರಾಪ್ತಿಯಾದಂತೆ - ಅಂದುಕೊಳ್ಳಲೂ ಬಹುದು. ಮನಸ್ಸಿನಲ್ಲಿ ರಾಶಿ ರಾಶಿ ಅಪೇಕ್ಷೆಗಳನ್ನು ತುಂಬಿಕೊಂಡು ಸಂಕಲ್ಪಗಳ ಮೂಟೆಯನ್ನು ಹೊತ್ತುಕೊಂಡು - ಯಾರಿಗೂ ಯೋಗಿಯಾಗಲು ಆಗುವುದಿಲ್ಲ; ನಿರರ್ಥಕ ಮೂಟೆಗಳನ್ನು ಮನಸ್ಸಿನಿಂದ ದೂರ ಇಡುವುದೇ ಯೋಗ. ಇಡೀ ಬದುಕನ್ನೇ ಅಪೇಕ್ಷಿಸುವ ಸಾಧನೆಯಿದು.

ಆದರೆ... ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿಸಿ ಚೆಂದ ನೋಡುವ ಮನಸ್ಸಿದು. ಹೀಗೆ ಶ್ರಮರಹಿತ ಕನಸುಗಳನ್ನು ಮಾತ್ರ ಉಣ್ಣುತ್ತಿದ್ದರೆ ತೃಪ್ತಿ ಸಿಕ್ಕೀತೆ ? ಊಟ, ನಿದ್ರೆ ಮುಂತಾದ ನಿತ್ಯ ಕರ್ಮಗಳ ಕಟ್ಟುಪಾಡಿನಂತೆಯೇ - ಮನಸ್ಸಿನಲ್ಲಿ ದೃಢವಾಗಿ ನಿಂತು ಅಂತಃನಿರೀಕ್ಷೆಯ ಭೋಜನವನ್ನು ನಡೆಸುವುದರಿಂದಲೂ ತತ್ಕಾಲೀನ ಉಪಚಾರವನ್ನು ಒದಗಿಸಿದಂತಾಗಿ ಕ್ಷಣಿಕ ನೆಮ್ಮದಿಯ ಅನುಭವ ಆಗುವುದು ಸಾಧ್ಯವಿದೆ. ಆದರೆ... ಅದೂ ಕೂಡ - ತಾನು ನಿಲ್ಲುವ ಪದತಲದ ನೆಲವನ್ನಷ್ಟೇ ಶುಚಿಗೊಳಿಸಿಕೊಂಡಂತೆ; ಇಡೀ ಮನೆಯನ್ನಲ್ಲ. ಯೌಗಿಕ ಮುಕ್ತ ಫಲಗಳಾದ ಇಚ್ಛಾ ಶಕ್ತಿ, ಜ್ಞಾನ ಶಕ್ತಿ ಮತ್ತು ಕ್ರಿಯಾಶಕ್ತಿಗಳು ಕೂಡ - ಮನುಷ್ಯರ ತಾತ್ಕಾಲಿಕ ಸುಖಯಾದಿಯ ಪಟ್ಟಿಯನ್ನು ಯಥಾವತ್ ಪುಷ್ಟಿಗೊಳಿಸಲಾರವು.. ಇವು - ಮನಸ್ಸನ್ನು ಸಮಗ್ರವಾಗಿ ಶುದ್ಧೀಕರಿಸಿಕೊಂಡ ಮನೋಮನೆಯ ಆರೋಗ್ಯದ ಪ್ರೇರಕಗಳು; ಯೋಗನೆಲೆಯಲ್ಲಿ ಅವಲೋಕಿಸಿದರೆ - ಮನಸ್ಸಿನ ಅಂತಃಸ್ರೋತವೇ ದೃಷ್ಟಿ. ದೃಷ್ಟಿ ಮತ್ತು ಸೃಷ್ಟಿಯ ಸಮನ್ವಯದ ಫಲಿತಾಂಶವನ್ನು ವಿವೇಚನೆಯಿಂದ ಬಳಸಿಕೊಂಡಾಗಲೇ ರಥಿಕನಿಗೆ ಸುಖಾನುಭವ. ಆದ್ದರಿಂದ ಸ್ವಚ್ಛ ದೃಷ್ಟಿಗಾಗಿ ಕನ್ನಡಕವನ್ನು ಆಗಾಗ ಸ್ವಚ್ಛಗೊಳಿಸಿಕೊಳ್ಳುವಂತೆಯೇ ಮನಸ್ಸನ್ನೂ ನಿಭಾಯಿಸಬೇಕಾಗುತ್ತದೆ.

ಮನಸ್ಸು ಎಂಬುದು ಅಷ್ಟೊಂದು ಸುಲಭದ ವಿಷಯವೇನಲ್ಲ. ಆದರೆ.. ಮೊದಲ ಹೆಜ್ಜೆಯನ್ನಿಟ್ಟೇ ಮುಂದಿನ ಹೆಜ್ಜೆ ಇರಿಸಬೇಕಾದುದರಿಂದ ಯಾವುದೇ ಆರಂಭವನ್ನು ತಿರಸ್ಕರಿಸಲಾಗದು ಮತ್ತು ತಕ್ಷಣದ ಫಲವನ್ನೂ ನಿರೀಕ್ಷಿಸಲಾಗದು. ಆದ್ದರಿಂದಲೇ - ಅಂದು ನನ್ನ ಗೆಳತಿಯನ್ನು ನಾನು ಪ್ರೋತ್ಸಾಹಿಸಿದ್ದೆ. ಯಾವುದೇ ಮನಸ್ಸಿನ ದಾಂಪತ್ಯವನ್ನು ಬಹಿರಂಗವಾಗಿ ಅಥವ ಸಾಮೂಹಿಕವಾಗಿ ನಿರ್ವಹಿಸಲು ಆಗುವುದೂ ಇಲ್ಲ. ಮನಸ್ಸೆಂಬ ಹುಚ್ಚು ಕುದುರೆಯನ್ನು ಎಲ್ಲೋ ಒಮ್ಮೊಮ್ಮೆ - ದಿನಕ್ಕೆ ಎರಡು ಬಾರಿ ಅಥವ ವರ್ಷಕ್ಕೊಮ್ಮೆ ಕಟ್ಟಿದ ಮಾತ್ರಕ್ಕೇ ಯಾವುದೇ ಸಿದ್ಧಿಯೂ ಆಗದು; ಇದೊಂದು ನಿರಂತರ ಹೋರಾಟವೇ ಸರಿ. ಚಾಂಚಲ್ಯವನ್ನು ಕಳೆದುಕೊಂಡು ಸ್ಥಿರತೆಯನ್ನು ಕಂಡುಕೊಳ್ಳುವ ಮನೋ ನಿಗ್ರಹ ಎಂಬುದು - ಮರಣದವರೆಗೂ ನಿರಂತರವಾಗಿ ನಡೆಸಬೇಕಾದ ಮನೋವ್ಯಾಯಾಮ. ಎಂತಹ ಸಶಕ್ತ ಬೀಜವೇ ಆದರೂ ಭಗವಂತನ ಕೃಪಾವರ್ಷವಾಗದೇ ಹೋದರೆ ಹೇಗೆ ಮೊಳಕೆಯೊಡೆಯಲಾರದೋ ಹಾಗೇ - ಯಾವುದೇ ಕಠಿಣ ಸಾಧನೆಯೂ "ಕೃಪಾವರ್ಷಕ್ಕಾಗಿ" ಕಾಯಬೇಕಾಗುತ್ತದೆ. ಆದರೆ ಶಿಸ್ತಿನ ಯೌಗಿಕ ಕ್ರಿಯೆಗಳಿಂದ - ಸತ್ಯ, ಕರುಣೆ, ನಿಸ್ವಾರ್ಥಭಾವ ಮುಂತಾದ ಧ್ಯೇಯನೀತಿಗಳನ್ನು ಪ್ರಚೋದಿಸಿಕೊಳ್ಳುತ್ತ ಶುಚಿತ್ವವನ್ನಂತೂ ಸಾಧಿಸಿಕೊಳ್ಳಲು ಸಾಧ್ಯವಿದೆ. ತನ್ಮೂಲಕ ಆರೋಗ್ಯವಂತ ಸಮಾಜವನ್ನು ಕಟ್ಟಿ ನಿಲ್ಲಿಸಲೂ ಸಾಧ್ಯವಿದೆ. ಸಾಧಕರ ದೇಹ ಮತ್ತು ಮನಸ್ಸುಗಳ ಪತರಗುಟ್ಟುವಿಕೆಯು ನಿಂತು, ಏಕ ಸೂತ್ರದಲ್ಲಿ ಸ್ಥಿರವಾದಾಗ - ಅದನ್ನೇ - ಸಂಪೂರ್ಣ ಸ್ವಾಸ್ಥ್ಯ ಎನ್ನುವುದು.

ಶರೀರಸ್ವಾಸ್ಥ್ಯದ ಹಂತದಿಂದಲೇ ಆರಂಭವಾಗುವ ಯೋಗಾಸನಗಳು ಮುಂದೆ, ತಲ್ಲೀನತೆಯಿಂದ ತೊಡಗಿಕೊಂಡರೆ - ಮನಸ್ಸು ಬುದ್ಧಿಯ ಶುದ್ಧಿಯವರೆಗೂ ದಾರಿ ತೋರಿಸಬಲ್ಲ ವಿಜ್ಞಾನ.

                                                              *****************

ಈ ಬದುಕೆಂಬುದು "ಪ್ರವಾಹದ ವಿರುದ್ಧದ ಈಜು" ಎಂಬ ಪೂರ್ವಸೂರಿಗಳ ನಿರ್ದೇಶನವು - ಎತ್ತೆತ್ತಲೋ ಸೆಳೆಯುವ ಮನೋಚಾಂಚಲ್ಯದ ಭಾವವನ್ನು ಪುಷ್ಟಿಗೊಳಿಸುತ್ತದೆ. ಬದುಕಿನ ಪ್ರವಾಹ ಎಂಬ ಪದಪುಂಜವು - ಮನಸ್ಸಿನ ನೆರೆಯುಬ್ಬರ ವನ್ನೇ ಪ್ರತಿನಿಧಿಸುತ್ತದೆ; ಅಡ್ಡಾದಿಡ್ಡಿಯಾದ ಭಾವ ಪ್ರವಾಹವನ್ನು ಉಕ್ಕಿಸುವ ಮೂಲಸ್ಥಾನವೇ ಚಂಚಲ ಮನಸ್ಸು. ಎಂತಹ ಪ್ರಚಂಡ ಈಜುಗಾರರನ್ನೂ ಸುತ್ತಿಕೊಳ್ಳುವ ಅಥವ ಮನಃಪೂರ್ವಕವಾಗಿ ಅವರು ತಮ್ಮನ್ನು ತಾವೇ ಸುತ್ತಿಸಿಕೊಳ್ಳುವ ಪ್ರವಾಹರೂಪೀ ಸೆಳೆತದ ಜೀವ ಬಂಧನಗಳು ಒಂದೆರಡಲ್ಲ. ಅಮಿತ ಆಮಿಷಗಳಿರುವ ಈ ಬದುಕಿನ ಪ್ರವಾಹದಲ್ಲಿ ಅಸಂಖ್ಯ ರುಚಿ ಸ್ವಾದಗಳನ್ನು ತೆರೆದು ತೋರಿಸಿ, ಮನಸ್ಸುಗಳು ಆಮಿಷಕ್ಕೆ ಒಳಗಾಗುವ ಹಂತದಲ್ಲಿ - ಅವುಗಳನ್ನೆಲ್ಲ ಮುಂದಾಗಿ ನಿಂತು ಸ್ವಾಗತಿಸುವುದು - ಮನಸ್ಸೇ ಆಗಿದೆ; ಅನುದಿನವೂ ವಿಭಿನ್ನ ರುಚಿಗಳ ಅನೇಕ ಸಾಧ್ಯತೆಗಳನ್ನು ತೆರೆದಿಟ್ಟು ಆಕರ್ಷಿಸುತ್ತ, ಬುದ್ಧಿಯನ್ನು ಜಡವಾಗಿಸಿ ಚಡಪಡಿಸುವಂತೆ ಮಾಡಿ ಕುಣಿಸಿ ಚೆಂದ ನೋಡುವುದೂ - ನಮ್ಮ ಮನಸ್ಸೇ ಆಗಿದೆ. ಆದ್ದರಿಂದಲೇ ಶಾಂತ ಬದುಕನ್ನು ಅಪೇಕ್ಷಿಸುವವರು ಸಂಕುಚಿತ ಭಾವದ ಚಿತ್ತಚೋರರಾಗದೆ - ಚಿತ್ತವೀರರಾಗಲು ಶ್ರಮಿಸುವ ಸಾತ್ವಿಕ ಹಾದಿಯನ್ನು ಹಿಡಿಯಬೇಕಾಗುತ್ತದೆ.

ತನ್ನ ಹಾಗೂ ಸುತ್ತಿನ ಸಮಾಜದ ಕುರಿತ ಪ್ರೀತಿಯಿಲ್ಲದೆ - ಯಾವುದೇ ಬದುಕು ಸಾಗಲಾರದು. ಬಹಳ ಸಂಕೀರ್ಣವಾದ "ಪರಸ್ಪರ ಪ್ರೀತಿ" ಎಂಬುದು - "ಅವಲಂಬನೆ" ಎಂಬ ಬಂಧನಕ್ಕೂ ಸಿಕ್ಕಿಸಿಬಿಡುತ್ತದೆ. ಯಾವುದೇ ಲೌಕಿಕ ಪ್ರೀತಿಯ ನೈಜ ಪೋಷಣೆ ನಡೆಯುವುದು - ಕೇವಲ ಮನಸ್ಸಿನ ಹಂತದಲ್ಲಿ. ಅವಲಂಬನೆ ಎಂಬ ಭಾವಪುಷ್ಟಿಯ ಹಂತದಲ್ಲಿಯೇ - ಪ್ರೀತಿಯು ತನ್ನ ಕ್ಷೇತ್ರ ವಿಸ್ತಾರಕ್ಕೂ ತೊಡಗಿಕೊಳ್ಳುತ್ತದೆ. ಬೇಕುಬೇಡದ ಅನೇಕ ಪ್ರೀತಿ ಸಾಧ್ಯತೆಗಳನ್ನೂ ಪ್ರಾಯೋಗಿಕವಾಗಿ ಅನುಭವಿಸತೊಡಗುತ್ತದೆ.

ಆರಂಭದಲ್ಲಿ ತನ್ನನ್ನು ಹೊತ್ತು ಹೆತ್ತು ಪೋಷಿಸುವ ತಾಯಿಯ ಮೂಲಕವೇ ಮಗುವು "ಅವಲಂಬನೆಯ ಪ್ರೀತಿಯ ಭಾವ"ವನ್ನು ಅರಿಯತೊಡಗುತ್ತದೆ. ಮಗುವಿನ ಭಾವಕೋಶವು ಕ್ರಿಯಾಶೀಲವಾಗುವ "ಹಸಿಮಣ್ಣಿನ" ಹಂತವದು. ಕ್ರಮೇಣ ಹಂತಹಂತವಾಗಿ ಪ್ರೀತಿಭಾವದ ಮಿಥ್ಯಾಪರಿಧಿಯಲ್ಲಿ ಹೊರಳಾಡುವ ಮಗುವಿನ ಮನಸ್ಸು - ಸುಗುಣ ದುರ್ಗುಣ, ರೋಷ ತಿರಸ್ಕಾರ, ಭೇದಭಾವಗಳನ್ನೆಲ್ಲ ಗ್ರಹಿಸುವಷ್ಟು ಸಬಲವಾಗುತ್ತದೆ. ಮುಂದೆ... ಪ್ರೀತಿಯಿಂದ ತೊಡಗಿ ಎಲ್ಲ ಬಗೆಯ "ಭಾವ-ಅಭಾವ ಸಂಪತ್ತನ್ನು" ಗ್ರಹಿಸಿ ಸಮರ್ಥವಾಗಿ ರೂಢಿಸಿಕೊಳ್ಳುವ ಹಂತವನ್ನೂ ತಲುಪಿ ಬಿಡುತ್ತದೆ. ಮನಸ್ಸು ಸುತ್ತುವುದು ಮತ್ತು ಮನೋರಾಧಕರನ್ನು ಸುತ್ತಿಸುವುದು ಆಯಾ ಇಂದ್ರಿಯಗಳ ವಲಯದಲ್ಲೇ. ಆದ್ದರಿಂದ ಮನುಷ್ಯ ಸಮಾಜವೂ - ಮನಸ್ಸುಗಳ ತರಬೇತಿದಾರ ವಲಯದಲ್ಲಿಯೇ ಬರುತ್ತದೆ. "ಭಾವನೆಗಳ ದುರುಪಯೋಗದ ಕಲೆ"ಯಲ್ಲೂ ಸಮಯಕ್ಕೆ ತಕ್ಕಂತೆ ಪಳಗುವಷ್ಟು ತರಬೇತಿಯನ್ನು ಪಡೆದುಕೊಳ್ಳುವ ಬದುಕಿನ ಹಂತದಲ್ಲಿ... ಮಗುವು ತನ್ನ ಶಕ್ತ್ಯಾನುಸಾರ ಬೇಕುಬೇಡಗಳೆಲ್ಲವನ್ನೂ ಗ್ರಹಿಸಿ ತನ್ನ ಲಾಭಕ್ಕೆ ತಕ್ಕಂತೆ ಬಳಸಲೂ ಶಕ್ತವಾಗುತ್ತದೆ; ಮನಸ್ಸು ನರಳುತ್ತದೆ.

ತಮ್ಮ ಮಗುವಿನ ದೇಹವನ್ನು ಗಟ್ಟಿಗೊಳಿಸಿ ಸಶಕ್ತವನ್ನಾಗಿ ಮಾಡುವ ಹಂತದಲ್ಲಿಯೇ ತನಗೆ ಒದಗುವ ಬಾಹ್ಯ ಮತ್ತು ಆಂತರಿಕ ಆಹಾರಕ್ಕೆ ತಕ್ಕಂತೆ - ಅಗೋಚರವಾದ ಮನಸ್ಸೂ ತನ್ನ ಭಾವ ವೇದಿಕೆಯನ್ನು ಸಿಂಗರಿಸುತ್ತಿರುತ್ತದೆ; ಬಗೆಬಗೆಯ ಅಳತೆಯ ಬಣ್ಣದ ಕಡ್ಡಿಗಳಿಂದ ಹಕ್ಕಿಯು ತನ್ನ ದುರ್ಬಲ ಮತ್ತು ತಾತ್ಕಾಲಿಕ ಗೂಡು ಕಟ್ಟುವಂತಹುದೇ ಕ್ರಿಯೆ ಇದು. ಆದರೆ ಅಂತಹ "ಮನೋ ಮಾಟಗಳು" ಬರಿಗಣ್ಣಿಗೆ ಕಾಣುವುದಿಲ್ಲ. ಆದರೆ ಮನುಷ್ಯರು ತಮಗೆ ತಾವೇ ಕೃತಕವಾಗಿ ಆರೋಪಿಸಿಕೊಂಡ "ಸಾಂಘಿಕ ಜೀವನದ" ಹಂತದಲ್ಲಿ - ಆಯಾ ಇಂದ್ರಿಯಗಳನ್ನು ಆಯಾ ಸಂಸ್ಕಾರದ ಮನಸ್ಸುಗಳು ನಿರ್ದೇಶಿಸುವಂತಹ ಸಾಮಾಜಿಕ ಅನುಭವವು ಆಗತೊಡಗುತ್ತದೆ. ಮನುಷ್ಯರ ವರ್ತನೆ ಮತ್ತು ಕ್ರಿಯೆಗಳು, ಮನೋ ಆಕಾರ ವಿಕಾರಗಳು - ಪೂರ್ವ ಸಂಸ್ಕಾರ ಮತ್ತು ಜನ್ಮಾರಭ್ಯ ಆಯಾ ಮನಸ್ಸುಗಳು ಪಡೆಯುತ್ತ ಬಂದ "ಗುಣಾವಗುಣ" ಆಹಾರದಂತೆಯೇ - ಆಯಾ ಮನಸ್ಸುಗಳು ವಿಭಿನ್ನವಾಗಿ ಪರಿವರ್ತಿಸುತ್ತಿರುತ್ತವೆ.

ಆದ್ದರಿಂದ ಮೂಲತಃ ಯಾವ ಮನುಷ್ಯನನ್ನೂ ಶಿಷ್ಟ / ದುಷ್ಟ ಎಂದು ಸರಳವಾಗಿ ವರ್ಗೀಕರಿಸಿ ವ್ಯಕ್ತಿನಾಮ ಬಳಿಯಲು ಆಗುವುದಿಲ್ಲ. ಹೌದು. ಪರ ಪೀಡೆಗೆಳಸದೆ ಬದುಕುವುದನ್ನೇ ಶಿಷ್ಟತೆ ಎನ್ನುವುದು. ಆದರೆ ಅಂತಹ ಶಿಷ್ಟತೆಯು ಎಲ್ಲರಲ್ಲಿಯೂ ಒಂದೇ ಪ್ರಮಾಣದಲ್ಲಿ ಇರಲಾರದು. ಕಿಂಚಿತ್ ಎಚ್ಚರ ತಪ್ಪಿದರೂ ಶಿಷ್ಟತೆಗಳ ನಡುನಡುವೆ, ಒಮ್ಮೊಮ್ಮೆ ಅಶಿಷ್ಟತೆ, ದುಷ್ಟತನಗಳು ಪ್ರಕಟವಾಗುವುದೂ ಉಂಟು. ನಿಂತಲ್ಲಿ ನಿಲ್ಲದ, ಸಂಚಾರೀ ತೆವಲಿನ ಸ್ವಭಾವದ ಮನಸ್ಸುಗಳನ್ನು ಶಿಷ್ಟತೆಗೆ ಒಳಪಡಿಸುವುದು ಅತ್ಯಂತ ಕಠಿಣವಾದ ಸಾಧನೆ. ಆಯಾ ಮನಸ್ಸು ದೇಹಗಳ ಜನ್ಮಸ್ಥಾನ, ಬೆಳೆದ ಪರಿಸರ, ಅದುವರೆಗೆ ಪಡೆದ ಜ್ಞಾನಸಂಪತ್ತು ಮತ್ತು ಅವನ್ನು ಬದುಕಿಗೆ ಅಳವಡಿಸಿಕೊಂಡ ಪ್ರಮಾಣ, ತನ್ಮೂಲಕ ಬೆಳೆಸಿಕೊಂಡಿರುವ ವಿವೇಚನೆ, ಅನುಕ್ಷಣದ ಎಚ್ಚರ... ಮುಂತಾದ ಅನೇಕ ದ್ರವ್ಯಗಳು ಒಟ್ಟಾಗಿ "ಶಿಷ್ಟತೆ"ಯು ಪ್ರಕಟವಾಗಬಹುದು. ಸ್ಥೂಲವಾಗಿ ಹೇಳುವುದಾದರೆ... ದೈನಂದಿನ ವರ್ತನೆಗಳೇ ಶಿಷ್ಟತೆಯ ಬಾಹ್ಯ ಪ್ರಮಾಣಗಳು. ಎಚ್ಚರವೇ ಶಿಷ್ಟತೆಯ ಆತ್ಮ. ಅಂದಂದಿನ ಸಾಮಾಜಿಕ ಸನ್ನಿವೇಶಗಳು ಶಿಷ್ಟರನ್ನು ದುಷ್ಟರಾಗಿ - ದುಷ್ಟರನ್ನು ಶಿಷ್ಟರನ್ನಾಗಿ ಪರಿವರ್ತಿಸುತ್ತಿರುವುದರ ಹಿಂದೆಯೂ "ಮನಸ್ಸುಗಳ" ಮಹತ್ತರ ಪಾತ್ರವಿದೆ. ಆದ್ದರಿಂದಲೇ - ಮನೋವ್ಯಾಪಾರ ಎಂಬುದು ಸರಳ ವ್ಯಾಖ್ಯೆಗೆ ನಿಲುಕದ ಒಂದು ಅಮೂರ್ತ ಮತ್ತು ಸಾಧಕರಿಗೆ ಮಾತ್ರ ಒಲಿಯುವ ಕ್ಷೇತ್ರ. ಆದ್ದರಿಂದಲೇ - ಮನಸ್ಸಿನ ಉತ್ತಮಿಕೆಯ ಸ್ಪರ್ಧೆಯಲ್ಲಿ ಭಾಗವಹಿಸುವ ಅರ್ಹತೆ ಹೊಂದಿರುವವರು ಇಲ್ಲವೇ ಇಲ್ಲ ಎಂಬಷ್ಟು ವಿರಳವಾಗಿದೆ. ವರ್ಗೀಕರಣ ಮಾಡುವುದೇ ಇದ್ದರೆ - ಅತ್ಯಂತ ದುಷ್ಟರು ಮತ್ತು ಹಿತಮಿತವಾದ ದುಷ್ಟರು ಎಂದಷ್ಟೇ ಗುರುತಿಸುವ ಸಮಾಜದಲ್ಲಿ - ಈಗ ನಾವಿದ್ದೇವೆ.

ಮನೋಕ್ಷೇತ್ರದ ಭಾವುಕ ನೆಲೆಯು ಪ್ರಕ್ಷುಬ್ಧವಾಗಿರುವ ಆಧುನಿಕ ಸಮಾಜದ ಸನ್ನಿವೇಶಗಳೆಲ್ಲವೂ ಈ ಮಾತಿಗೆ ಜ್ವಲಂತ ಉದಾಹರಣೆ.

ಆತ್ಮನಿರೀಕ್ಷಣೆಗೆ ಒಡ್ಡಿಕೊಳ್ಳಲು ಅನಾಸಕ್ತರಾದವರಿಂದಲೇ ತುಂಬಿಕೊಂಡಿರುವ ಸಮಾಜದಲ್ಲಿ - ಈಗ ನಾವಿದ್ದೇವೆ. ಆದ್ದರಿಂದಲೇ ಪ್ರಸ್ತುತದ ಕಾಲಮಾನವೂ - ಅತ್ಯಂತ ದುಷ್ಟರು ಮತ್ತು ಸಾಧಾರಣ ದುಷ್ಟರ ಸಹಬಾಳ್ವೆಗೆ ಸಾಕ್ಷಿಯಾಗಿದೆ; ಉತ್ತಮ ಎಂಬ ವರ್ಗವು ಥಟ್ಟೆಂದು ಕಣ್ಣಿಗೆ ಕಾಣಿಸುತ್ತಿಲ್ಲ.

ಜೈ ಜವಾನ್ ಜೈ ಕಿಸಾನ್ ಎಂದು ಪೂರ್ಣ ನಿಷ್ಠೆಯಿಂದ ಜಪಿಸುತ್ತಿದ್ದ ಭಾರತದ ನೆಲದಲ್ಲಿ ಜವಾನರೂ ಕಿಸಾನರೂ ಈಗ ವಿವಾದಗ್ರಸ್ತರಾಗುತ್ತಿಲ್ಲವೆ ? ಕೃತಘ್ನತೆಯನ್ನು ಹೊತ್ತು ಮೆರೆಸುತ್ತಿರುವ, ಸಹಾನುಭೂತಿಯ ಕಪಟ ನಾಟಕವಾಡುತ್ತಿರುವ ಇಂದಿನ ಕಾಲಘಟ್ಟದಲ್ಲಿ - ಉತ್ತಮಿಕೆಯನ್ನು ಎಡಕಾಲಿನಿಂದ ಒದೆಯುವಂತಹ ಧಾರ್ಷ್ಟ್ಯ ಲಕ್ಷಣಗಳನ್ನು ಕಾಣುತ್ತಿರುವಾಗ - ಅವನ್ನೆಲ್ಲ ಶಿಷ್ಟತೆ ಎನ್ನಲಾದೀತೆ ? ಸ್ವದೇಶಾಭಿಮಾನವನ್ನು ಕುಂದಿಸುವ ಪುಡಿ ನೇತಾರರ ಮಾತು ನಡತೆಗಳನ್ನು "ಶಿಷ್ಟತೆ" ಎನ್ನಲಾದೀತೆ ?  ಹಿರಿಯ ಸ್ಥಾನಗಳಿಂದ ದಿನಕ್ಕೊಂದು ವೈರುದ್ಧ್ಯದ ಹೇಳಿಕೆ - ವರ್ತನೆಗಳನ್ನು ನೋಡುವಾಗ ಭಾವಶಿಷ್ಟತೆಯ ಪ್ರಶ್ನೆ ಕಾಡುವುದಿಲ್ಲವೆ ? ಮನುಷ್ಯರ ಮೂಲ ಸಂಕೇತವಾದ ಗಂಡು ಹೆಣ್ಣನ್ನು ಪ್ರತ್ಯೇಕಿಸಿ ನೋಡುವ ಮತ್ತು ಕೃತಕವಾಗಿ ಉಪಚರಿಸುವ ರಾಜಕೀಯದ ವಿಕಟ ದೃಶ್ಯಗಳನ್ನು ಚಾತುರ್ಯದಿಂದ ಅಭಿನಯಿಸಿ ಮೆಚ್ಚುಗೆಯನ್ನೂ ಅಪೇಕ್ಷಿಸುವ ರಾಜಕೀಯ ದುಷ್ಟತೆಗಳು ಈಗ ನಿತ್ಯದೂಟವಾಗಿಲ್ಲವೆ ? ಸೌಹಾರ್ದತೆ ಕೃತಜ್ಞತೆ ಉತ್ತಮಿಕೆಗಳೆಲ್ಲವನ್ನೂ ಚೆಂಡಾಡುತ್ತಿರುವ ಸನ್ನಿವೇಶದಲ್ಲಿಯೇ ಹೊರಳಾಡುತ್ತಿದ್ದರೂ - ಅಲ್ಲೇ - ಅದೇ ಪರಿಸರದಲ್ಲಿಯೇ ಶಿಷ್ಟತೆಯನ್ನು ಹುಡುಕುವ ತೋರಿಕೆಯು ಮಾತ್ರ - ಈಗ ಶಿಷ್ಟತೆ ಎನ್ನಿಸಿಕೊಳ್ಳುತ್ತಿದೆಯಲ್ಲವೆ ?

ಆಡಳಿತದ ಅಮಲಿನ ರಾಜಕೀಯದಲ್ಲಿ ತೊಡಗಿಕೊಂಡು ಸಂಚರಿಸುತ್ತಿರುವ ಇಂದಿನ "ಸುಭಗ ಮುಖ ಮೂತಿಗಳಿಂದ" ಜನರಿಗೆ ದುಷ್ಟ ಸಂಸ್ಕೃತಿಯ ಕೆಟ್ಟ ಮಾದರಿಗಳು ಸಿಗುತ್ತಿಲ್ಲವೆ ? ಅಧಿಕಾರ ಗ್ರಹಣ ಮತ್ತು ತನ್ಮೂಲಕವೇ ಮಾನಧನರಾಗುವ ಹೊಂಚಿನಲ್ಲಿ ತನ್ಮಯವಾಗಿರುವ ಯಾವುದೇ ಪಕ್ಷಗಳು - ಯಾ - ವ್ಯಕ್ತಿಗಳು, ಸಮಾಜಮುಖೀ ಚಿಂತನೆ ನಡೆಸುವಂತೆ ಕಾಣುತ್ತಿದೆಯೆ ? ಸ್ವಂತ ಲಾಭಕ್ಕಾಗಿ ಜೀವನ ಮೌಲ್ಯಗಳನ್ನೂ ದಾಳವಾಗಿ ಬಳಸಿಕೊಳ್ಳುತ್ತಿರುವ ಯಾವುದೇ ರಾಜಕೀಯ ಪಕ್ಷಗಳು ನಿಜಾರ್ಥದ ಶಿಷ್ಟತೆಯನ್ನು ಉಳಿಸಿಕೊಂಡಿವೆಯೆ ? ರಾಜಕೀಯದಲ್ಲಂತೂ - ಕಿಂಚಿತ್ತಾದರೂ ಕೊಳಕನ್ನು ಉಳಿಸಿಕೊಳ್ಳುವುದೇ ದೊಡ್ಡ ಅರ್ಹತೆ - ಎಂದು ಭಾವಿಸಿಕೊಳ್ಳುವಂತಾಗಿದೆಯೆ ? ಆದ್ದರಿಂದಲೇ ಅತಿ ದುಷ್ಟರು ಮತ್ತು ಮಿತ ದುಷ್ಟರ ನಡುವೆ  - ಸಹಿತ ದುಷ್ಟರೂ ಸನ್ನಿಹಿತರಾಗಿ ಭ್ರಷ್ಟ ಬದುಕನ್ನು ಒಪ್ಪಿಕೊಳ್ಳಬೇಕಾದ ಮನಸ್ಸುಗಳನ್ನು ಹೊಂದಲೇಬೇಕಾದ ಸಾಮಾಜಿಕ ಸನ್ನಿವೇಶವು ಏರ್ಪಟ್ಟಿಲ್ಲವೆ ? ಪ್ರತಿಯೊಂದು ಮನಸ್ಸಿನ ಸ್ವನಿಯಂತ್ರಣದಿಂದಲ್ಲದೆ - ಕೇವಲ ನೀತಿಕತೆಗಳಿಂದ ಈ ಸನ್ನಿವೇಶವು ಬದಲಾಗಲಾರದು.

ಬಹುಪಾಲು - ಶಿಷ್ಟತೆಯೇ ಇಲ್ಲದ ಸಮಾಜದಲ್ಲಿಯೇ ಈಗ ನಾವಿದ್ದೇವೆ; ಈಗ ಕಾಣುವುದನ್ನು - ಸೋಗಿನ ಶಿಷ್ಟತೆ ಎನ್ನಲೂಬಹುದು; ಇದನ್ನು ಪ್ರಸ್ತುತದ ವಿಶಿಷ್ಟತೆ ಎಂದೂ ಅನ್ನಬಹುದು. ಅಷ್ಟೇ. ಇಂತಹ ನಾಜೂಕಿನ ಶಾಬ್ದಿಕ ಪಡಪೋಶಿತನಗಳನ್ನು - ಅಂಕೆಯಿಲ್ಲದ ಮನಸ್ಸುಗಳ ಸೋಗಲಾಡಿತನದ ವಿಕ್ಷಿಪ್ತತೆ - ಅಂದುಕೊಂಡು, ಸೂಕ್ತ ಚಿಕಿತ್ಸೆಗೆ ಅನುವಾಗಬೇಕಾದ ಅನಿವಾರ್ಯತೆಯು ಈಗ ಮನುಷ್ಯರ ಮುಂದಿದೆ. ಆದರೆ... ಕಳ್ಳ ಸುಳ್ಳ ವಲಯದಲ್ಲಿಯೇ ಸತತ ಸುತ್ತುತ್ತಿರುವ ಸ್ವಾರ್ಥ ರಾಜಕಾರಣಗ್ರಸ್ತ ರಾಜಕೀಯದ ಮನಸ್ಸುಗಳಿಂದ ಮತ್ತು "ಬೈಗುಳದ ಸಾಲಿನಲ್ಲಿ ಮಾತ್ರ ಸರಿಯಾಗಿ ಹೊಂದುವ" ಪ್ರಸ್ತುತದ - ಪ್ರಗತಿಪರ ಎಂಬ ಬೂಟಾಟಿಕೆ ಯ ಮನುಷ್ಯರ ಮನಸ್ಸುಗಳನ್ನು ಪುಷ್ಟಿಗೊಳಿಸಿ ಎತ್ತರಿಸುವ ಕೆಲಸವು ಎಂದಿಗಾದರೂ ಸಾಧ್ಯವೆ ? ವಿಶ್ವಾಸ ಹುಟ್ಟಿಸುವ ಪೂರ್ವ ನಿದರ್ಶನಗಳಿಲ್ಲ. ಏಕೆಂದರೆ... ಇದು ಬುದ್ಧಿಪೂರ್ವಕವಾಗಿ ನಡೆಸುತ್ತಿರುವ ಮನಸ್ಸಿನ ವೇಶ್ಯಾವೃತ್ತಿ ! ಸ್ವ - ಇಚ್ಛೆಯಿಂದ ದುರುದ್ದೇಶಪೂರಿತವಾಗಿ ನಡೆಸುವ ಬಗ್ಗಡಗೊಂಡ ಮನಸ್ಸುಗಳ ಯಾವುದೇ ಕರ್ಮಗಳನ್ನು - ಹೊರ ಒತ್ತಡಗಳಿಂದ ನಿಯಂತ್ರಿಸುವುದು ಕಠಿಣ. ಆದರೆ... ದುರದೃಷ್ಟವೆಂದರೆ... "ಉದ್ಧರಿಸುವ CONTRACT ನ್ನು (ಗುತ್ತಿಗೆ)" ದೇವಮಾನವರೆಂಬ ಅಪಾತ್ರರಿಗೇ ಒಪ್ಪಿಸಿ, ನಾವು ನಿಶ್ಚಿಂತರಾಗುತ್ತಿದ್ದೇವೆ !

ಕೇವಲ 50 ವರ್ಷಗಳಷ್ಟು ಹಿಂದೆ ಸರಿದು ನೋಡಿದರೆ... ಅದೂ ಕಲಬೆರಕೆಯ ಪ್ರಾರಂಭದ ಸ್ಥಿತಿಯಾಗಿದ್ದರೂ... ಅಂದಿನ ಸಮಾಜದಲ್ಲಿ ಪ್ರತಿನಿತ್ಯವೂ ಕೆಲವು ಶಿಷ್ಟತೆಯನ್ನು ಸಜೀವವಾಗಿ ಸಂಧಿಸುವ ಅವಕಾಶವಿತ್ತು; ಸಜ್ಜನಿಕೆ ಸೌಮ್ಯತೆ, ವಿನಮ್ರತೆಗಳ ಜೀವಸಂಚಾರವು ಕಣ್ಣಿಗೆ ಕಾಣುತ್ತಿತ್ತು. ಇಂದಿನ "So What?" ಸಂಸ್ಕೃತಿಗೆ - ಆಗ ಬೆಲೆ ಇರಲಿಲ್ಲ ಮಾತ್ರವಲ್ಲ; ತಿರಸ್ಕಾರಪ್ರಾಯವಾಗಿಯೂ ಇತ್ತು. ಮನಸ್ಸುಗಳ ಅಸಭ್ಯ ತಿಪ್ಪರಲಾಗವನ್ನು ಕಂಡು ಬಹಿರಂಗದಲ್ಲಿ ಆನಂದಿಸುವವರು ಆಗ ಇರಲಿಲ್ಲ. ಆದ್ದರಿಂದಲೇ - ಸಹಜೀವನ ಎಂಬುದು ಹೆಚ್ಚು ಗೊಂದಲವಿಲ್ಲದೆ, ಸಹಜ ಕ್ರಿಯೆಯಂತೆ ನಡೆದು ಹೋಗುತ್ತಿತ್ತು. ಅಂದಿನ ಜನರಿಗೆ ನಾಚಿಕೆಯೂ ಆಗುತ್ತಿತ್ತು ! ಹೆಣ್ಣು ಮತ್ತು ನಾಚಿಕೆ ಎಂಬುದು ಜೋಡಿಪದಗಳಾಗಿದ್ದ ಅಂದಿನ ದಿನಗಳಲ್ಲಿ, ನಾಚಿಕೆ ಎಂಬುದು ಅನರ್ಹತೆಯ ಗುರುತಾಗಿರದೆ - ಅದೊಂದು ಸುಂದರ ಮೌಲ್ಯವಾಗಿದ್ದ ಕಾಲಘಟ್ಟವದು.

ನಾಚಿಕೆಯ ಮೂಲಸ್ಥಾನವೇ Humbleness, ನಮ್ರತೆ, ವಿನಯ. ಕೇವಲ 50 ವರ್ಷಗಳಷ್ಟು ಹಿಂದಿನ ಭಾರತೀಯ ಸಮಾಜದಲ್ಲಿ - "ಇದೆಂಥ ಕೆಲಸ ಮಾಡಿದೆ ?  ನಿನಗೆ ನಾಚಿಕೆ ಆಗುವುದಿಲ್ಲವಾ ?" ಎಂಬಂತಹ ಮಾತಿಗೆ ತಮ್ಮನ್ನು ಒಡ್ಡಿಕೊಂಡು, ನಾಚಿಕೆಗೆ ಸಿಲುಕದಂತೆ ತಮ್ಮ ಬದುಕು ಸಾಗಿಸುತ್ತಿದ್ದ ಅನೇಕ ಕೌಟುಂಬಿಕ ಹೊಡಚಾಟಗಳನ್ನು ನೋಡಬಹುದಿತ್ತು. ಶಿಷ್ಟತೆಯ ಪರಿಧಿಯ ಮನೋನಿಯಂತ್ರಣದ - ಪ್ರಯಾಸದ ಬದುಕಿನ ಗುದುಮುದಿ ಅದು. ಮೃಗೀಯತೆಯನ್ನು ಮೀರಿ ಬೆಳೆಯುವ ಮನುಷ್ಯಭಾವದ ಪ್ರಯತ್ನವದು. ಆದರೆ... ನಾಚಿಕೆಯ ಬದಲಾದ ಮಾನದಂಡದ ಇವತ್ತಿನ ಸಾಮಾಜಿಕ ಸಂದರ್ಭದಲ್ಲಿ - "ನಾಚಿಕೆ" ಎಂಬ ಭಾವಕ್ಕೇ ಪೂರ್ಣ ಬಹಿಷ್ಕಾರ ಹಾಕಿದಂತಹ ನಿತ್ಯ ಪ್ರಹಸನಗಳನ್ನು ನೋಡುವಂತಾಗಿದೆ ! ಅಹಂಕಾರಗ್ರಸ್ತ "So What ?" ಶೈಲಿಯ ವರ್ತನೆಗಳು ಹೆಚ್ಚುತ್ತ ಹೋದಂತೆ - ನಾಚಿಕೆಯೇ ಈಗ ನಾಚಿಕೊಳ್ಳುವಂತಾಗಿಬಿಟ್ಟಿದೆ ! ನಾಚಿಕೊಳ್ಳುವವರನ್ನೇ "ನಾಲಾಯಕ್" ಎಂದುಕೊಳ್ಳುವ ಇಂದಿನ ಸನ್ನಿವೇಶಗಳೇ - ಇದಕ್ಕೆ ಸಾಕ್ಷಿ.

ಈ - "ಮನಸ್ಸಿನ ನಾಚಿಕೆ" ಎಂಬ ಭಾವವಲಯಕ್ಕೂ ಹಲವು ರೂಪಗಳಿವೆ ! ಉದಾಹರಣೆಗೆ - ಬಡತನದ ನಾಚಿಕೆಯ ವ್ಯಾಖ್ಯೆಗೂ ಸಿರಿತನದ ವ್ಯಾಖ್ಯೆಗೂ ಅಜಗಜಾಂತರವಿದೆ. ಇಂದು ದೊಡ್ಡ ಮನುಷ್ಯ ಎಂದು ಕರೆಸಿಕೊಳ್ಳುವ ಅನೇಕ ಪಂಗನಾಮ ಪರಿಣತ ಸಿರಿವಂತ ರ ಭಿಕ್ಷುಕ ವರ್ತನೆಗಳು ಈ ಮಾತಿಗೆ ಪುಷ್ಟಿ ನೀಡುವ ನವೀನ ಸಾಕ್ಷಿಗಳು. ನಾಚಿಕೆಗೆ ಹೊಸಹೊಸ ಭಾಷ್ಯ ಬರೆಯುತ್ತಿರುವ "ದರೋಡೆಕೋರ ಸಿರಿವಂತರು" - ತಮ್ಮ "ನಾಚಿಕೆ ಜೀರ್ಣೋಭವ" ಸಾಮರ್ಥ್ಯದಿಂದಾಗಿ, ಸಮಾಜದ ಕಾನೂನುಗಳೇ ನಾಚಿ ತಮ್ಮನ್ನು ಹಿಂಬಾಲಿಸುವಂತೆ ಮಾಡುತ್ತಿರುವುದು ಇಂದಿನ ವಾಸ್ತವ. ಸಿರಿವಂತರಾಗುವ ಹಾದಿಯಲ್ಲಿ ಸಾತ್ವಿಕ (PIOUS) ನಾಚಿಕೆಯು ಕಳೆದುಹೋಗುವುದು ಹೊಸದೇನೂ ಅಲ್ಲ. ನಾಚಿಕೆಯಿಲ್ಲದ ಮನಸ್ಸುಗಳು - ಕಮಲಗಳು ಅರಳದ ವಿಷಪೂರಿತ ಕೆಸರಿನ ಹೊಂಡದಂತೆ.

ಇತ್ತ ದೇಹಪೋಷಣೆಯಲ್ಲಿಯೇ ಸಂಪೂರ್ಣ ಕೇಂದ್ರಿತವಾದ ಬಡತನ ಎಂಬ ಪರಿವೃತ್ತದಲ್ಲಿ ಯಾವುದೇ ಭಾವಪೋಷಣೆಗೆ ಅವಕಾಶವಿರುವುದಿಲ್ಲ. ಜೀವಪೋಷಣೆಗಾಗಿ - ನಾಚಿಕೆಯಿಂದಲೇ ನಾಚಿಕೆಯನ್ನು ಪರಿತ್ಯಜಿಸಬೇಕಾದ ಸ್ಥಿತಿ ಅದು. ಒಂದೊಮ್ಮೆ ಶಿಷ್ಟತೆಯನ್ನು ಅರಿತಿದ್ದರೂ ಪ್ರತಿಸ್ಪಂದಿಸಲಾರದಷ್ಟು ಅಸಹಾಯಕವಾಗುವ ಒತ್ತಡದ ಬದುಕುಗಳ ಸಂಘರ್ಷಮಯ ವೃತ್ತವದು. ಆದ್ದರಿಂದ ಬಡತನ ಎಂಬುದು ನಾಚಿಕೆಯನ್ನು ಲಕ್ಷಿಸುವುದೇ ಇಲ್ಲ. ಕೇವಲ ದೇಹಪೋಷಣೆಯ ಜಂಜಾಟದಲ್ಲಿಯೇ ಜೀವಸವೆಸುವ ಯಾವುದೇ ಸ್ಥಳದಲ್ಲಿ ನಾಚಿಕೆ ಎಂಬುದು ವಿಲಾಸೀ ವಸ್ತುವಾಗಿ (LUXURY) ಪರಿಣಮಿಸುತ್ತದೆ. ಆದ್ದರಿಂದ ಆರ್ಥಿಕ ಬಿಕ್ಕಟ್ಟಿನ ಎಡೆಗಳಲ್ಲಿ ನಾಚಿಕೆಗೆ ಪ್ರವೇಶವಿಲ್ಲದಂತಹ ಸನ್ನಿವೇಶ ಇದ್ದರೂ... ಹಲವು ಸಂದರ್ಭಗಳಲ್ಲಿ, ಶಿಷ್ಟತೆಗಾಗಿ ಹಂಬಲಿಸುವ ಮಿಡಿತವಿರುತ್ತದೆ.

ಆದರೆ... ಸಿರಿತನ ಬಡತನಗಳ ನಡುವಿನ ತ್ರಿಶಂಕು ಬದುಕು ಗಳಲ್ಲಿ ಮಾತ್ರ - ನಾಚಿಕೆ ಎಂಬುದು - "ನಿಷ್ಕರುಣೆಯಿಂದ" ಹೊಕ್ಕು ಹೊರಡುತ್ತ ಇರುತ್ತದೆ. ತಮ್ಮ ಬಡತನವನ್ನು ಮುಚ್ಚಿಡುತ್ತ ಸಿರಿತನದ ಸೋಗುಹಾಕುವ ಇಂತಹ ತ್ರಿಶಂಕು ಮನಸ್ಸುಗಳು - ಒಮ್ಮೊಮ್ಮೆ ಅಂತರ್ಮಥನ ನಡೆಸುತ್ತ, ತಮ್ಮ ಅನುಕೂಲಕ್ಕೆ ತಕ್ಕಂತೆ ನಾಚಿಕೆಯನ್ನು ಕರೆದು ಕಳುಹಿಸುತ್ತ - ದ್ವಂದ್ವದ ದಿಬ್ಬಣ ನಡೆಸುತ್ತಿರುವುದು ಸಾಮಾನ್ಯ. ಮನಸ್ಸು ಬಳಲುವ ನಿಜವಾದ ಸಂದರ್ಭಗಳಿವು. ಅರಿತೂ ಅರಿಯದಂತೆ - ಅರಿಯದೆಯೂ ಅರಿತಂತೆ ವರ್ತಿಸುತ್ತ - ಬಸವಳಿಯುವ ತ್ರಿಶಂಕು ವರ್ಗವಿದು !

ಹೆಣ್ಣಿಗೆ ಮಾತ್ರವೇ ನಾಚಿಕೆಯು ಸೀಮಿತವಲ್ಲ. ಅಲ್ಲಸಲ್ಲದ ಕೆಲಸಗಳಲ್ಲೇ ತೊಡಗಿಕೊಂಡು ಬದುಕಿನ ಲಕ್ಷ್ಮಣರೇಖೆಯನ್ನು ದಾಟುವಂತಹ ಎಲ್ಲರಿಗೂ ನಾಚಿಕೆಯ ಅನುಭವ ಆಗಲೇಬೇಕಾಗುತ್ತದೆ. ತಾವಾಗಿಯೇ ಅದನ್ನು ತೋರಿಸಿಕೊಳ್ಳದಂತಹ   ಸಂದರ್ಭಗಳಲ್ಲೂ ಮನಸ್ಸಿನಲ್ಲಿ ನಾಚಿಕೆಯು ಸುಪ್ತವಾಗಿ ಸುಳಿದಾಡುತ್ತಲೇ ಇರುತ್ತದೆ. ಸೂಕ್ಷ್ಮ ಸ್ವಭಾವದ ಹೆಣ್ಣಿನಲ್ಲಿ ನಾಚಿಕೆಯು ಹೆಚ್ಚು ವ್ಯಕ್ತವಾಗುವುದರಿಂದ - ನಾಚಿಕೆಯ ಅಂಗಪ್ರದರ್ಶನವು ಬಹಿರ್ನೋಟಕ್ಕೆ ಸಿಗುತ್ತದೆ - ಅಷ್ಟೆ. ನಾಚಿಕೆ ಎಂದರೆ - ಅಲ್ಲಸಲ್ಲದ ಕ್ರಿಯೆಗೆ ಒಗ್ಗದೆ ಮನಸ್ಸು ಮುದುಡುವ ಅಥವ ಮನಸ್ಸನ್ನು ನಿಗ್ರಹಿಸಿಕೊಳ್ಳುವ ಸಾಧನ. ಇದು - ಸ್ವರಕ್ಷಣೆಯ ಅಸ್ತ್ರದಂತೆಯೇ ದುಡಿಯುತ್ತಿರುತ್ತದೆ. ಆದ್ದರಿಂದ - ನಾಚಿಕೆಯನ್ನು ಮುನ್ನೆಚ್ಚರಿಕೆಯ ಸೂಚನೆ ಎಂದೂ ಅರ್ಥೈಸಬಹುದು.

ಮನಸ್ಸಿನ ಪ್ರಥಮ ಎಚ್ಚರಿಕೆಯಂತೆ ಮೂಡುವ ನಾಚಿಕೆ ಎಂಬ ಭಾವವು - ಅಂತಃನಿರೀಕ್ಷೆಯ ಪ್ರತಿಫಲ. ಅಂತಃನಿರೀಕ್ಷೆಯ ಗೊಡವೆಯೇ ಇಲ್ಲದಲ್ಲಿ ಮತ್ತು ಅದಕ್ಕೆ ಎಡೆಯೇ ಇಲ್ಲದಲ್ಲಿ ಶಿಷ್ಟತೆ ಅಥವ ನಾಚಿಕೆಯ ಭಾವಗಳು ಒಂದೋ ತಿರಸ್ಕರಿಸಲ್ಪಡುತ್ತವೆ; ಇಲ್ಲವೇ ನೆಂಟಸ್ತನ ನಡೆಸಲಾಗದೆ ಸೋತು ಮುದುಡಿಕೊಳ್ಳುತ್ತವೆ. ಸಾಮಾನ್ಯವಾಗಿ, ಐಶ್ವರ್ಯವನ್ನು ಬಾಚಿ ಗುಡ್ಡೆಹಾಕುವುದರಲ್ಲಿಯೇ ಮಗ್ನರಾದವರಿಗೆ - ಅಂತಃನಿರೀಕ್ಷೆಯ ವ್ಯವಧಾನವಿರುವುದಿಲ್ಲ; ಅದರ ಅಗತ್ಯವೂ ಅವರಿಗೆ ಕಾಣುವುದಿಲ್ಲ. ಇತ್ತ ಊಟಬಟ್ಟೆಗೆ ಪರದಾಡುತ್ತ ಬಡತನವನ್ನೇ ಹಾಸಿ ಹೊದೆಯುವವರಿಗೆ ನಾಚಿಕೆ ಎಂಬುದು Foreign Body ಅನ್ನಿಸಿ, ಅವರು ಅದನ್ನು ಗಮನಿಸುವ ಗೊಡವೆಗೇ ಹೋಗುವುದಿಲ್ಲ. ಆದರೆ... ಊಟ, ಬಟ್ಟೆ, ವಾಸಕ್ಕೊಂದು ಗುಡಿಸಲನ್ನು ಹೊಂದಿದ ತಕ್ಕಮಟ್ಟಿನ ಮನುಷ್ಯರು ಮಾತ್ರ ಮನಸ್ಸಿನ ಹಿಂದೂ ಮುಂದೂ ಹೊಕ್ಕು ಹೊರಡುತ್ತ ಅಂತಃನಿರೀಕ್ಷೆಗೆ ತೊಡಗಿ - ಶಿಷ್ಟತೆಯೊಂದಿಗೆ ನುರಿದುಕೊಳ್ಳುತ್ತ, ನಾಚಿಕೆಯಿಂದ ಬಳಲುತ್ತ - ಅನುಕೂಲಕ್ಕೆ ತಕ್ಕಂತೆ ಕೊಡವಿಕೊಳ್ಳುತ್ತಲೂ ಬಂದಿದ್ದಾರೆ.

ಆದ್ದರಿಂದ ಇಂದಿಗೂ - ನಾಚಿಕೆ ಎಂಬುದು ಕಿಂಚಿತ್ತಾದರೂ ಉಳಿದಿದ್ದರೆ - ಅದು ಈ "ತಕ್ಕಮಟ್ಟಿನ" ತ್ರಿಶಂಕು ವರ್ಗದಲ್ಲಿಯೇ. ಏಕೆಂದರೆ, ತಮ್ಮ ತಮ್ಮ ಮನಸ್ಸುಗಳನ್ನು ಒಮ್ಮೊಮ್ಮೆಯಾದರೂ ಉಪಚರಿಸುವ ವರ್ಗವಿದು. ಜೀವನೋಪಯೋಗೀ ಮೌಲ್ಯಗಳನ್ನು ಕುರಿತು ಚಿಂತಿಸಬಲ್ಲ ಯಾವುದೇ ಚಿತ್ತಸಾರಥಿಗಳಲ್ಲಿ ಮಾತ್ರವೇ "ನಾಚಿಕೆ ಮಾನ ಅವಮಾನ" ಮುಂತಾದ ಸಂವೇದನೆಗಳು ಹೆಚ್ಚು ಕ್ರಿಯಾಶೀಲವಾಗಿರುತ್ತವೆ. ಇಂತಹ ವಲಯದಲ್ಲಿ ಮಾತ್ರವೇ "ಮಾರಾಟಕ್ಕೆ ಸಿಲುಕದ ಸಂಸ್ಕೃತಿ ಸಚ್ಚಿಂತನೆಗಳು" ಹರಿದಾಡುತ್ತಿರುತ್ತವೆ ಮತ್ತು ಮುಂದಿನ ಪೀಳಿಗೆಗೆ ಹರಿದು ಹೋಗುತ್ತಲೂ ಇರುತ್ತದೆ. ಇಂತಹ ಮನೋ ಮಾರ್ಗದರ್ಶಕ ಸಂವೇದನೆಗಳು ಬಲಗೊಳ್ಳಲು ಅಥವ ದುರ್ಬಲವಾಗಲು - ಆಯಾ ಬದುಕಿನ ಚೌಕಟ್ಟು, ಶ್ರದ್ಧೆ ಮತ್ತು ಶೈಲಿಯೂ ಮುಖ್ಯ ಕಾರಣ.

ಬರಬರುತ್ತ "ಆಧುನಿಕ ವಿದ್ಯೆ" ಎಂಬುದು ದೈತ್ಯಾಕಾರದಲ್ಲಿ ಪ್ರವೇಶಿಸಿ, ತನ್ನ ಕಾಲಗಲಿಸಿ ನಿಂತ ಮೇಲೆ - ಭಾರತೀಯ ಸಂಸ್ಕೃತಿಯ ವ್ಯಾಖ್ಯೆಯೇ ಬದಲಾಗತೊಡಗಿತು. ಪುಟ್ಟ ಮಕ್ಕಳ ಮನಸ್ಸಿನಲ್ಲಿ ವಕ್ರ ಚಿಂತನೆಗಳನ್ನು ಬಿತ್ತುವ "ಮನೋ ತೆಗಲಿನ ಪಠ್ಯಕ್ರಮಗಳು" - ಇವತ್ತಿನ ಮನಸ್ಸುಗಳ ವಿಕ್ಷಿಪ್ತತೆಗೆ ಸಿಗುತ್ತಿರುವ ಇತ್ತೀಚಿನ ಉದಾಹರಣೆಗಳು.

"ಸುಳ್ಳೇ ನಮ್ಮನೆ ದೇವರು" ಎಂದುಕೊಂಡ ಮಂದಿಯೇ ಸಮಾಜದ ಮಾರ್ಗದರ್ಶಕರಾದಾಗ ಇಂತಹ "ಪಿತ್ಥ ಪವಾಡಗಳು" ಸಂಭವಿಸುತ್ತಲೇ ಇರುತ್ತವೆ. ಉದ್ದೇಶಿತ ಪೀಕಲಾಟ, ಸ್ವಾರ್ಥ ಮತ್ತು ವಿತ್ತ ಪಿತ್ಥದ ಅಮಲೇರಿಸಿರುವ ಆಮದಿತ ವಿದ್ಯೆ ಎಂಬ - ಇವತ್ತಿನ ಬೇಗಡೆಯ ಅಲಂಕಾರವು - ಯುವ ಪೀಳಿಗೆಗೆ ಯಾವುದೇ ಮನೋಸಂಸ್ಕಾರ ನೀಡಲಾಗದೆ ಸೋತು, ಭಾರತೀಯರನ್ನು "ಎಲ್ಲೂ ಸಲ್ಲದವರನ್ನಾಗಿ" ಮಾಡಲು ಶತಪ್ರಯತ್ನ ನಡೆಸುತ್ತಿರುವಂತೆಯೂ ಕಾಣುತ್ತಿದೆ !

ಬಾಡಿಗೆ ಅಮ್ಮ, ಬಾಡಿಗೆ ಅಪ್ಪ, ಬಾಡಿಗೆ ಸಂಸಾರ, ಬಾಡಿಗೆ ಉದ್ಯೋಗ... ಮುಂತಾದ - ಯಾವುದೂ ಸ್ವಂತವಲ್ಲದ ಮತ್ತು - ಆದ್ದರಿಂದಲೇ ಯಾವ ಭಾವ ಸಂಬಂಧವೂ ಇಲ್ಲದ ಅನಿಷ್ಟಕಾರೀ ಹೊಸ ವ್ಯವಸ್ಥೆ ಮತ್ತು ಹಾದಿಯ ಕೌಟುಂಬಿಕ ಮತ್ತು ಸಾಮಾಜಿಕ ನೀತಿಯನ್ನು ಪ್ರೋತ್ಸಾಹಿಸುತ್ತ - ಸ್ವಾರ್ಥೀ ಆಲಸಿಗಳ ಬೇಜವಾಬ್ದಾರಿಯ ಸಮಾಜವನ್ನು ಬೆಂಬಲಿಸಲು ಟೊಂಕ ಕಟ್ಟಿ ನಿಂತಂತೆಯೂ - ವರ್ತಮಾನವು ಗೋಚರಿಸುತ್ತಿದೆ !

ವಸ್ತು ಸ್ಥಿತಿಗಳಿಗೆ (ಉದಾ: ಅಂಗವಿಕಲ = ದಿವ್ಯಾಂಗ ? ನಪುಂಸಕ = ಕಿನ್ನರ ?... ಇತ್ಯಾದಿ) ಹೊಸಹೊಸ ನಾಮಕರಣ ಮಾಡುವುದರಲ್ಲಿಯೇ ತೊಡಗಿಕೊಂಡು, ರಾಜಕೀಯ ತುಷ್ಟೀಕರಣದಲ್ಲಿಯೇ ಇಂದಿನ ವ್ಯವಸ್ಥೆಯು ಪ್ರವೃತ್ತವಾಗಿಲ್ಲವೆ? "ಕಿಂ ನರಃ = ಮನುಷ್ಯನೋ ಎಂಬ ಭ್ರಾಂತಿ ಬರುವಂತಿರುವವ" ಎಂದರ್ಥ. ಕಿನ್ನರ ಎಂಬುದರ ಅರ್ಥ ಏನು ಎಂಬುದನ್ನೂ ಅರಿಯಲಾಗದ ಮಂದಿಯನ್ನು "ಮಾತಿನಲ್ಲೇ ಸ್ವರ್ಗಕ್ಕೇರಿಸುವ ತುಷ್ಟೀಕರಣದ" ವಿಡಂಬನೆಗೆ ಒಡ್ಡಿದರೆ - ಆಯಾ ಪಾಲಿನ ವಾಸ್ತವವು ಬದಲಾದೀತೆ ? ಅಂಗವಿಕಲರನ್ನು "ದಿವ್ಯಾಂಗ" ಎಂದು ಸಂಬೋಧಿಸಿದಾಗ - ಅದು ಅವರನ್ನು ವ್ಯಂಗ್ಯವಾಗಿ ಅವಹೇಳನ ಮಾಡಿದಂತಾಗದೆ ? ಇಂತಹ ರಾಜಕೀಯ ವ್ಯಾಯಾಮಗಳಿಂದ ಪ್ರಯೋಜನವಾದರೂ ಏನು ? ಯೋಚಿಸಬೇಕು. ಇದನ್ನೇ - "ಮನಸ್ಸುಗಳಿಗೆ ಮಾಡುವ ಮಾಯಕ" ಅನ್ನುವುದು.

ವಾಸ್ತವವನ್ನು ಒಪ್ಪಿ ಸ್ವೀಕರಿಸಲು ಮನಸ್ಸುಗಳನ್ನು ಸಜ್ಜುಗೊಳಿಸುವ ವಿದ್ಯೆಯು ಮಾತ್ರ - ಯಾವುದೇ "ಮನಸ್ಸಿನ ಅಸ್ತವ್ಯಸ್ಥ ಕುಣಿತವನ್ನು" ನಿಯಂತ್ರಿಸಬಲ್ಲದು. ಬೇರೆ ಮಾರ್ಗವೇ ಇಲ್ಲ. ಬದಲಾಗಿ, ವ್ಯವಸ್ಥೆಗಳೇ ಭ್ರಮೆಯನ್ನು ಪಸರಿಸುವುದರಲ್ಲಿ ತೊಡಗಿಕೊಳ್ಳಬಾರದು. ಅಷ್ಟಾವಕ್ರನನ್ನು ಸುಂದರಾಂಗ ಎಂದ ಮಾತ್ರಕ್ಕೆ ಆತನ ಊನಗಳೆಲ್ಲವೂ ಮಾಯವಾದಾವೆ ? ಅಂದಿನ ಅಷ್ಟಾವಕ್ರನು ವಕ್ರ ಶರೀರವನ್ನು ಹೊಂದಿದ್ದರೂ ತನ್ನ ಜ್ಞಾನಬಲದಿಂದಲೇ - ತನ್ನ ಸಾಮಾಜಿಕ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದ ಎಂಬುದನ್ನು ಮರೆಯಬಾರದು. ಇಂದು "ದಿವ್ಯಾಂಗ" ಎಂದು ಕರೆಸಿಕೊಂಡವರೆಲ್ಲರನ್ನೂ ಮಹಾಜ್ಞಾನಿಗಳಾಗಿಸುವ ವ್ಯವಸ್ಥೆಯೇನಾದರೂ ಇದೆಯೆ ? ಒಂದು ದಿನ ಸಭೆ ಸೇರಿಸಿ ಮಾಲೆ ಹಾಕಿ, ನಾಶವಾಗುವ ವಸ್ತುಗಳನ್ನು ಕೊಟ್ಟರೆ ಉದ್ಧಾರವಾದಂತಾಯಿತೆ ? ಉಪಕರಿಸುವ, ಸಹಾನುಭೂತಿಯ ಮನೋವಲಯವನ್ನು ನಿರ್ಮಿಸುವುದರಲ್ಲಿ ತೊಡಗಿಕೊಳ್ಳದೆ, ಕೇವಲ ಮಾತಿನ ಅರಮನೆಯನ್ನು ಕಟ್ಟುವುದು ಯಾವ ಪುರುಷಾರ್ಥಕ್ಕಾಗಿ ? ಮನಸ್ಸು, ಬುದ್ಧಿಯನ್ನು ತರಬೇತಿಗೆ ಒಡ್ಡಿಕೊಳ್ಳುವುದರಿಂದ ಮಾತ್ರವೇ ಯಾವುದೇ ದೈಹಿಕ ಕೊರತೆಗಳನ್ನು ನೀಗಿಸಿಕೊಳ್ಳಲು ಸಾಧ್ಯವಿದೆ - ಎಂಬ ಸಂದೇಶವನ್ನು ನೀಡುವವರು ಮತ್ತು ನಿಯಮಗಳ ಬೇಲಿಯನ್ನು ಹಾರದೆ ಅವನ್ನು ಅನುಸರಿಸುವವರು - ಇಂದಿನ ಅಗತ್ಯ..

ಮೊದಲು, ವಾಸ್ತವವನ್ನು ಒಪ್ಪುವ ವಿನಮ್ರತೆಯನ್ನು ನಮ್ಮ ಶಿಕ್ಷಣದಲ್ಲಿ ಊಡಬೇಕಾಗಿದೆ. ಒಪ್ಪಿದ ವಾಸ್ತವವನ್ನು ಮನೋದಾರ್ಢ್ಯದಿಂದ ನಿಭಾಯಿಸುವ ಕಲೆಯನ್ನೂ ಕಲಿಸಬೇಕಾಗಿದೆ. ಇತಿಮಿತಿಯ ಅರಿವನ್ನು ಮೂಡಿಸಬೇಕಾಗಿದೆ.   ಮನಸ್ಸುಗಳ ಅನಿಯಮಿತ ಸಂಚಾರವನ್ನು ನಿಯಂತ್ರಿಸುವ ವಿದ್ಯೆಯನ್ನು ಸರ್ವತ್ರ ಪ್ರಿಯವಾಗಿಸಬೇಕಾಗಿದೆ. ಅದಕ್ಕಾಗಿ, ಸಾತ್ವಿಕ ಭಯವನ್ನು ಉಳಿಸಿಕೊಂಡು, ಉತ್ತೇಜಿಸಬೇಕಾಗಿದೆ. ಆಗ, ಸಮಸ್ತ ವರ್ಗಗಳು ಪರಸ್ಪರರನ್ನು ಆಧರಿಸುವ ಮತ್ತು ಆದರಿಸುವ ಸಾಮಾಜಿಕ ವಾತಾವರಣವು ತಾನಾಗಿಯೇ ಸೃಷ್ಟಿಯಾಗುತ್ತದೆ. ಇದಕ್ಕೆ ಹೊರತಾದ ಮಾತು - ಕ್ರಿಯೆಗಳೆಲ್ಲವೂ ಓಟಿನ ರಾಜಕೀಯದ ತಿಪ್ಪರಲಾಗ ಅಥವ ತಿರುಕನ ಕನಸುಗಳೇ ಹೊರತು ಇನ್ನೇನೂ ಅಲ್ಲ. ರಾಜನ ವೇಷ ತೊಟ್ಟವರೆಲ್ಲರೂ ರಾಜರಾದಾರೆ ? ಚಪ್ಪಾಳೆ ಗಿಟ್ಟಿಸಲು ಕ್ರೂರ ಮನಸ್ಸುಗಳು ಹೂಡುವ ತಂತ್ರ, ಮಾಡುವ ಹಗಲು ವೇಷಗಳೆಲ್ಲವೂ ಬೂಸಾಗಳೇ ಆಗಿರುತ್ತವೆ.

ಅಡ್ಡ ಒಡ್ಡ ದಾರಿಯನ್ನೇ ರಾಜಮಾರ್ಗ ಎಂದು ಬಿಂಬಿಸುವ ರಾಜಕೀಯ ಕುಯುಕ್ತಿಗಳನ್ನು - ಮೆಟ್ಟಿಲನ್ನೇ ಉಪ್ಪರಿಗೆ ಎನ್ನುವ ಭ್ರಾಂತಿಗಳನ್ನು ನಾವೀಗ ನಿತ್ಯವೂ ಹಾಯಬೇಕಾಗಿ ಬಂದಿದೆ. ತತ್ಪರಿಣಾಮವಾಗಿ, ಅಂಕೆಯಿಲ್ಲದ ಮನಸ್ಸುಗಳ ಮಹಾ ಪ್ರವಾಹವೇ - ಈಗ ಸೃಷ್ಟಿಯಾಗಿಬಿಟ್ಟಿದೆ. ಇಂದು - ಭಾರತೀಯ ಮೌಲ್ಯಗಳನ್ನೆಲ್ಲವನ್ನೂ "ರಾಜಕೀಯ ಲಾಭ - ನಷ್ಟದ" ಹಿನ್ನೆಲೆಯಿಂದಲೇ ತೂಗಿ ನೋಡುವಂತಹ ವಿಕ್ಷಿಪ್ತ ಸನ್ನಿವೇಶಗಳನ್ನು ಹುಟ್ಟು ಹಾಕಲಾಗಿದೆ. "ಆಮದು ರಫ್ತಿನ ಪಟ್ಟಿಯಲ್ಲಿ" ಭಾರತೀಯ ಮೌಲ್ಯಗಳೂ ಬಂದು ಕೂತಿವೆ ! ಮಾನವೀಯ ಸಂಬಂಧ, ಮಾನವೀಯತೆ, ಸಂಯಮ, ವಿನಯ ಮುಂತಾದ - ಮನೋವಿಕಾಸಕ್ಕೆ ಪೂರಕವಾದ ಮೌಲ್ಯಗಳನ್ನೆಲ್ಲ ಬದಿಗೆ ಸರಿಸಿರುವ ವರ್ತಮಾನದಲ್ಲಿ - ಸಾಮಾಜಿಕ ತೋರಿಕೆಯ ಅಟ್ಟಹಾಸಗಳಲ್ಲೇ ತೊಡಗಿಕೊಂಡಿರುವ ಮಾನವ ಮನಸ್ಸುಗಳು - ನಮ್ಮ ಆಧುನಿಕ ಶಿಕ್ಷಣದ ವಿಷವೃಕ್ಷಗಳಂತಿವೆ !

ಪ್ರಕ್ಷುಬ್ಢ ಮನಸ್ಸುಗಳಿಂದ ಯಾವುದೇ ಉತ್ತಮ ನಿರ್ಧಾರಗಳು ಹೊಮ್ಮುವುದಿಲ್ಲ. ಉತ್ತಮ ಸಂಕಲ್ಪಗಳು ಮತ್ತು ತತ್ಸಂಬಂಧೀ ಕರ್ಮಗಳು - ಆರೋಗ್ಯವಂತ ಮನೋಸ್ಥಿತಿಯಿಂದ ಮಾತ್ರ ಸಾಧಿಸುವಂಥವು. ಆದ್ದರಿಂದ - ಶಾಂತಿ ನೆಮ್ಮದಿಯನ್ನು ಅಪೇಕ್ಷಿಸುವ ಬಾಳ ಪಯಣಿಗರಲ್ಲಿ - ಮನಸ್ಸಿನ ವೈಕಾರವನ್ನು ಉಜ್ಜಿ ನಿವಾರಿಸಿಕೊಳ್ಳುವ ಸತತ ಯತ್ನವು ಅನಿವಾರ್ಯವಾಗುತ್ತದೆ.

ಶಿಕ್ಷಣ ಮತ್ತು ಸಂಸ್ಕೃತಿಗಳು ಒಂದೇ ನಾಣ್ಯದ ಎರಡು ಮುಖಗಳು. ಯಾವುದೇ ಪೂರ್ವಸಂಸ್ಕಾರವುಳ್ಳ ಮಗುವಾಗಿದ್ದರೂ - ಜನಿಸಿದ ನಂತರ ಅದಕ್ಕೆ ಸಿಗುವ ಒಟ್ಟಾರೆ ಶಿಕ್ಷಣವು ಕೂಡ - ಆಯಾ ಮಗುವನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಇದು - ವೈಜ್ಞಾನಿಕವಾಗಿಯೂ ಕಂಡುಕೊಂಡ ವಿಷಯ.

"ದೃಢವಾದ ನೆಲೆ ಇಲ್ಲವಾದರೆ ಜ್ಞಾನವು ಹಾಳಾಗುತ್ತದೆ. ಎಚ್ಚರ ತಪ್ಪಿದರೆ ಕೇಳಿಸಿಕೊಂಡ ಜ್ಞಾನವೂ ಹಾಳಾಗುತ್ತದೆ. ಸಂದೇಹ ಪಟ್ಟರೆ ಮಂತ್ರವೂ ವ್ಯರ್ಥವಾಗುತ್ತದೆ. ಏಕಾಗ್ರತೆ ಇಲ್ಲದೆ ಹೋದರೆ ಜಪವೂ ನಿಷ್ಫಲ. ಭಕ್ತಿ ಭಕ್ತರಿಲ್ಲದ ಸ್ಥಳವು ನಾಶ ಹೊಂದುತ್ತದೆ. ಶ್ರದ್ಧೆಯಿಲ್ಲದೆ ಮಾಡುವ ಶ್ರಾದ್ಧವೂ ವ್ಯರ್ಥ. ಶ್ರೋತ್ರಿಯನಲ್ಲದವರಿಗೆ ಕೊಟ್ಟ ದಾನವೂ ವ್ಯರ್ಥ. ಆಚಾರವನ್ನು ಬಿಟ್ಟರೆ ಸಂತತಿಯೇ ಹಾಳು."

ಇದು - ಆರ್ಯೋಕ್ತಿ. ಮನಸ್ಸನ್ನು ನಿಗ್ರಹಿಸಿ ಸನ್ಮಾರ್ಗದಲ್ಲಿ ನಡೆಯಲು ನಮ್ಮ ಹಿರಿಯರು ಹಾಕಿಕೊಟ್ಟ ಇಂತಹ ಅನೇಕ ಮಾರ್ಗಸೂಚಿಗಳಿವೆ. ಹಾಳು, ವ್ಯರ್ಥ, ನಿಷ್ಫಲ, ನಾಶ - ಮುಂತಾದ ಯಾವುದೇ ಸಂಭವನೀಯತೆಗಳಿಗೆಲ್ಲ - ಕಡಿವಾಣ ತಪ್ಪಿದ ಮನಸ್ಸೇ ಕಾರಣ.

ತಾತ್ಪರ್ಯವೇನೆಂದರೆ... ಪ್ರಾಂಜಲವಾದ ಮನಸ್ಸು, ಬುದ್ಧಿಯ ಬಲಿಷ್ಠ ತಳಹದಿಯ ಮೇಲೆ - ಜ್ಞಾನವನ್ನು ಬೆಳೆಸಿಕೊಳ್ಳಿ; ಎಚ್ಚರ ತಪ್ಪಿದ ಅಪಾತ್ರ ನಂಬಿಕೆ ಬೇಡ; ನಿಷ್ಠೆಯಿಂದ ಶುದ್ಧ ವಾತಾವರಣವನ್ನು ನಿರ್ಮಿಸಿಕೊಳ್ಳಿ; ಪರಿಶುದ್ಧ ಬದುಕನ್ನು ನಡೆಸುತ್ತಿರುವ ಜ್ಞಾನಿಯನ್ನು ಗೌರವಿಸಿ; ಪರಂಪರೆಯಿಂದ ಬಂದ ಉತ್ತಮ ಮೌಲ್ಯಗಳನ್ನು ಪರಿಪಾಲಿಸಿ... ಮುಂತಾದ ಸಂದೇಶಗಳು ಮನುಷ್ಯ ಜನಾಂಗದ ಉತ್ತಮಿಕೆಗಾಗಿಯೇ ಮೂಡಿಬಂದವುಗಳು. ಪ್ರಸ್ತುತದ ಬಹುಪಾಲು ಅಶಾಂತಿಗೆ ಕಾರಣವಾಗಿರುವ - ಅನಿಯಂತ್ರಿತ ಮನಸ್ಸುಗಳೆಂಬ ದೈತ್ಯ ಶಕ್ತಿಯನ್ನು ಪಳಗಿಸಿಕೊಳ್ಳಲು ಸಹಕರಿಸುವ ನೀತಿಗಳಿವು.

ಸಹಸ್ರಾರು ವರ್ಷಗಳ ಹಿಂದೆಯೇ ವ್ಯಾಸರು ರಚಿಸಿದ್ದ ಶ್ರೀಮದ್ ಭಾಗವತದಲ್ಲಿ - ಭಕ್ತಿಪೂರಿತ ಕತೆಗಳು ಮಾತ್ರವಲ್ಲದೆ ದೂರದರ್ಶಿತ್ವದ ಹೂರಣವೂ ಇದೆ. ದ್ವಾಪರದ ಕೊನೆಯ ದೊರೆಯಾದ ಪರೀಕ್ಷಿತ ರಾಜನು ಅದಾಗಲೇ ಹೊಂಚು ಹಾಕುತ್ತಿದ್ದ ಕಲಿಯ ಪ್ರವೇಶವನ್ನು - ತನ್ನ ರಾಜ್ಯದಲ್ಲಿ ತಡೆದಿದ್ದ ! ಕಲಿಭಾವದ ಯಾವುದೇ ಕುಕೃತ್ಯಗಳು ನಡೆಯದಂತೆ ಹದ್ದಿನ ಕಣ್ಣಿರಿಸಿದ್ದ. ಹೀಗಿದ್ದೂ... ಕಲಿಯನ್ನು ಬಂಧಿಸಿ ನಿಗ್ರಹಿಸಲು ಯತ್ನಿಸಿದ್ದರೂ... ಕಾಲಧರ್ಮಕ್ಕೆ ತಲೆಬಾಗಿದ್ದ ಆತನಿಗೆ ಕಲಿಯನ್ನು ಶಾಶ್ವತವಾಗಿ ನಿವಾರಿಸಲು ಸಾಧ್ಯವಾಗಲಿಲ್ಲ. ಅಂದು ಪರೀಕ್ಷಿತನ ಬಂಧಿಯಾಗಿದ್ದ ಕಲಿಪುರುಷನು ಧೂರ್ತನಂತೆ, ಶಿಷ್ಟತೆಯ ಗಂಧಗಾಳಿಯೂ ಇಲ್ಲದವನಂತೆ, ನಾಚಿಕೆಯ ಹಂಗಿಲ್ಲದವನಂತೆ ಪರೀಕ್ಷಿತನೊಂದಿಗೆ ಆಡುವ ಮಾತುಗಳು - ಇಂದಿನ ಆಧುನಿಕರ ಬದುಕನ್ನು ಯಥಾವತ್ತಾಗಿ ಪ್ರತಿಬಿಂಬಿಸುವಂತಿವೆ ! ಕಲಿಯು ಸಂಕಲ್ಪಿಸಿದ್ದ ಕಲಿಸಂತಾನದ ಲಕ್ಷಣಗಳು - ಈ ಮಾತಿಗೆ ಪುಷ್ಟಿ ನೀಡುತ್ತದೆ.

"ಕಾಮವೇ ಪರಮ ಪುರುಷಾರ್ಥ ಎಂಬ ಭ್ರಮೆಯನ್ನು ಹರಡುವುದು ನನ್ನ ತಂತ್ರ. ಸುಳ್ಳು, ಜೂಜು, ಹಾದರ, ಹಿಂಸೆ, ಲೋಭ, ಮಾತ್ಸರ್ಯಗಳನ್ನು ಇಂದಿನ ಮತ್ತು ನಿನ್ನ ಮುಂದಿನ ವೃಷಲಪ್ರಾಯರಾದ ದೊರೆಗಳಲ್ಲಿ ಹರಡುತ್ತೇನೆ. ಯುದ್ಧಗಳನ್ನೇರ್ಪಡಿಸುತ್ತೇನೆ. ಅದಕ್ಕೆ ಎಲ್ಲರೂ ಸುಲಭವಾಗಿ ಬಲಿಬೀಳುತ್ತಾರೆ. ಧರ್ಮದ ಶಿಸ್ತು, ವಿಶ್ವಜ್ಞಾನ, ದರ್ಶನವಿಲ್ಲದವರನ್ನು ದಾರಿ ತಪ್ಪಿಸುವುದು ಸುಲಭ. ಇದು ನನ್ನ ಪರಮೋಚ್ಚ ಕಾಲ. ಇಷ್ಟು ದಿನ ಶ್ರೀ ಕೃಷ್ಣನೇ ನೇರವಾಗಿ ಇದ್ದುದರಿಂದ ನನ್ನ ಕೈಚಳಕವನ್ನು ತೋರಿಸಲಾಗಲಿಲ್ಲ. ಆದರೂ... ನಿನ್ನ ಪೂರ್ವಜನಾದ ಧರ್ಮರಾಯನು ನನ್ನ ಬಲೆಗೆ ಬಿದ್ದು ಜೂಜಾಡಿದ. ಹೆಂಡತಿಯ ಮಾನವನ್ನೇ ಪಣವಾಗಿಟ್ಟ. ಅಷ್ಟು ಪ್ರವೇಶವು ನನಗೆ ಸಾಕಾಗುತ್ತದೆ. ದ್ವಾಪರ ಯುಗವನ್ನೇ ಮುಗಿಸಿಬಿಡಲು - ನನ್ನ ಅನುಯಾಯಿಯಾಗಿದ್ದ ದುರ್ಯೋಧನನ ಮೂಲಕ ಒಂದು ಘೋರವಾದ ಯುದ್ಧಕ್ಕೆ ನಾಂದಿ ಹಾಡಿಸಿದೆ. ಆ ಬ್ರಾಹ್ಮಣ ಅಶ್ವತ್ಥಾಮ ಎಂಬವನು ನಿನ್ನನ್ನೂ ನಿನ್ನ ವಂಶವನ್ನೂ ಅಳಿಸಿ ಹಾಕಲು ಯತ್ನಿಸಿದ. ಆ ಶ್ರೀ ಕೃಷ್ಣನ ಕೃಪೆಯಿಂದ ನೀನೇನೋ ಬದುಕಿಕೊಂಡೆ. ಅದಕ್ಕಾಗಿಯೇ ನಿನಗೆ ನಾನು ವಂದಿಸುತ್ತೇನೆ. ಒಹೋ... ಪರೀಕ್ಷಿತ ಮಹಾರಾಜಾ, ನೀನು ಕೊಂದರೂ ನಾನು ಸಾಯಲಾರೆ!"

ಕಲಿಪುರುಷನು - ಪರೀಕ್ಷಿತನೆಂಬ ಸಮರ್ಥ, ಧರ್ಮಿಷ್ಟ ರಾಜನ ಮುಂದೆ ನಿಂತು ಆಡಿದ್ದ ಮಾತುಗಳಿವು ! ಕಲಿಯ ಉದ್ದೇಶ ಮತ್ತು ಗುರಿಯು ಸಾರ್ಥಕ್ಯಗೊಳ್ಳುತ್ತಿರುವಂತೆ - ಇಂದು ಅನ್ನಿಸುತ್ತಿಲ್ಲವೆ ? ಮನುಷ್ಯನ ಮನಸ್ಸು ದುರ್ಬಲವಾದಾಗ, ಕಲುಷಿತಗೊಂಡಾಗ, ಕೋಪಕ್ಕೆ ವಶವಾಗಿ ದುಡುಕಿದಾಗ - ಕಲಿಯನ್ನು ಆಹ್ವಾನಿಸಿದಂತೆ ! ಕೆಟ್ಟ ಆಸಕ್ತಿ, ಅಭಿರುಚಿ ಮುಂತಾದ ಎಲ್ಲ ಬಗೆಯ ಜೀವವಿರೋಧೀ ಚಿಂತನೆಗಳ ಮೂಲಕವೇ ಕೆಡುಕು ಸಂಭವಿಸಲು ಸಾಧ್ಯ. ಆದ್ದರಿಂದಲೇ ಪ್ರಶಾಂತ ಬದುಕನ್ನು ಹೊಂದಲು - ಮನಸ್ಸು ಬುದ್ಧಿಗಳ ನಿಯಂತ್ರಣವಲ್ಲದೆ ಬೇರೆ ಮಾರ್ಗವಿಲ್ಲ.

ಮನೋಕಲ್ಮಷವನ್ನು ಊಡಿ, ಮನುಷ್ಯರ ಸ್ಥಿತಿಗತಿಮತಿಗಳನ್ನು ಬದಲಿಸುವ ಕಾರ್ಯಗಳೆಲ್ಲವೂ - ಅಂದಿನಿಂದಲೂ ಕಲಿಯ ಅನುಯಾಯಿಗಳ ಮೂಲಕವೇ ನಡೆಯುತ್ತ ಬಂದಿದೆ. ಈ ಜಗತ್ತು ಸೃಷ್ಟಿಯಾದಾಗಲೇ ಸತ್ಯ ಅಸತ್ಯ, ಜ್ಞಾನ ಅಜ್ಞಾನ, ಹಿಂಸೆ ಅಹಿಂಸೆ... ಇತ್ಯಾದಿ ವೈರುದ್ಧ್ಯಗಳೆಲ್ಲವೂ ಸೃಷ್ಟಿಯಾಗಿಬಿಟ್ಟಿವೆ. ವಿಶ್ವ ಎಂಬ ಹಸರದ ಅಂಗಡಿಯಲ್ಲಿ - ಎಲ್ಲ ಬಗೆಯ ಸರಕುಗಳೂ ಇವೆ; ಆದರೆ... ನಮ್ಮ ಆಯ್ಕೆ ಮತ್ತು ಸ್ವಂತ ಆಯ್ಕೆಯನ್ನು ಎಚ್ಚರದಿಂದ ನಿಭಾಯಿಸುವ ಪಾತ್ರ ಮಾತ್ರ - ನಮ್ಮದೇ ಆಗಿದೆ !

ಪ್ರತಿಯೊಂದು ಸಂಗತಿಯ ಆರಂಭದಲ್ಲಿಯೇ - ಅದರ ಅಂತ್ಯದ ಮುನ್ನುಡಿಯು ಇದ್ದೇ ಇರುತ್ತದೆ. ಸೃಷ್ಟಿಯೂ ಇದಕ್ಕೆ ಹೊರತಲ್ಲ. ಬುದ್ಧಿಶಕ್ತಿಯುಳ್ಳ ಮನುಷ್ಯ ಸಂತತಿಯು ತನ್ನ ಆತ್ಮನಿರೀಕ್ಷಣೆಯ ಮೂಲಕ ಉತ್ತಮ ಆಯ್ಕೆಗೆ ಮಾತ್ರ ಮುಂದಾಗುವಂತಾದರೆ - ಆರಂಭ ಮತ್ತು ಅಂತ್ಯಗಳ ನಡುವಣ - ಬದುಕು ಎಂಬುದು - ಸಹನೀಯವಾಗುತ್ತದೆ.

ಎಲ್ಲರೂ ಸುಭಗರಾಗುವುದು, ಸುಖಿಗಳಾಗುವುದು, ಅನ್ಯೋನ್ಯತೆಯಿಂದಿರುವುದು... ಇವೆಲ್ಲವೂ ಕೇವಲ ಆದರ್ಶಗಳಲ್ಲ; ಜೀವಪೋಷಕಗಳು. ಯಾವುದೇ ಆದರ್ಶಗಳು ಸದ್ಭಾವಗಳು ಇಂದಿಗೂ ಉಳಿದುಕೊಂಡಿದ್ದರೆ - ಅದಕ್ಕೆ ಕಾರಣವೇ - ಮನುಷ್ಯರ ಅಂತರಂಗದಲ್ಲಿ ಸದಾ ತುಡಿಯುತ್ತಿರುವ "ಉದ್ಧಾರದ" ಬಯಕೆ. ಇದು - Inbuilt, Inborn ಸಹಜ ವ್ಯವಸ್ಥೆ. ಆದ್ದರಿಂದ - ಈಗ ತಪ್ಪಿರುವುದು ಮನಸ್ಸಿನ ಹಂತದಲ್ಲೇ. ಅಂಕೆತಪ್ಪಿದ ಮನುಷ್ಯರ ಮಿತಿಮೀರಿದ ಸ್ವಾರ್ಥ ಮತ್ತು ಅವರವರ ಉದ್ಧಾರಕ್ಕೆ ಬಳಸಿಕೊಳ್ಳುತ್ತಿರುವ ಮನೋವಿಕೃತ ವಾಮಮಾರ್ಗಗಳು - ಆಧುನಿಕರ ಬವಣೆಗಳಿಗೆ ಮೂಲ ಕಾರಣ. ಸದ್ಭಾವಗಳ ಮೇಲೆ ದುರ್ಭಾವಗಳು ಸವಾರಿ ಮಾಡುತ್ತಿರುವ ಕಲಿ ಸನ್ನಿವೇಶವಿದು. ಮನಸ್ಸಿದ್ದರೆ - ಪರಿಹಾರಕ್ಕೆ ಮಾರ್ಗವೂ ಇದೆ. ಪರೀಕ್ಷಿತರಾಗುವ ಹಾದಿ ಹಿಡಿಯಬೇಕಷ್ಟೆ. ಮನಸ್ಸಿನಂತೇ ಮಹದೇವ ! ಅದಾಗಲೇ ನಾವೇ ಕರೆದು ಕೂಡಿಸಿಕೊಂಡ ಕಲಿ ಎಂಬ ದುರ್ಭಾವದ ಅತಿಥಿಯನ್ನು ಹೊರದಬ್ಬಿ ಸ್ವಚ್ಛವಾಗಲು ಇರುವ ಏಕೈಕ ಮಾರ್ಗವು - ಮನೋನಿಗ್ರಹವೊಂದೇ ಆಗಿದೆ. ಸ್ವಚ್ಛ ಮನಸ್ಸಿನ ಪಾತಳಿಯಲ್ಲಿ ಮಾತ್ರವೇ ಬುದ್ಧಿಯು ಪ್ರಚೋದನೆಗೊಂಡು ಸ್ವಚ್ಛ ಕೆಲಸಗಳನ್ನು ನಿರ್ವಹಿಸುವುದು ಸಾಧ್ಯ. ಇದೇ ಜೀವನ ಯೋಗ.

ಆದ್ದರಿಂದ - ಅಹಿತಕಾರಿಯಾದ ಮತ್ತು ತಮ್ಮ ಸಾಮರ್ಥ್ಯಕ್ಕೆ ಮೀರಿದ ಮಹತ್ವಾಕಾಂಕ್ಷೆಗಳನ್ನು ಪೋಷಿಸುತ್ತ ಬಳಲುತ್ತಿರುವ ನಮ್ಮ ಮನಸ್ಸುಗಳಿಗೆ ಶುದ್ಧತೆಯ ಸಾಂಗತ್ಯವನ್ನು ಒದಗಿಸಬೇಕಾಗಿದೆ. ಸ್ವಚ್ಛ ಮನಸ್ಸಿನ ಹಾಳೆಯಲ್ಲಿ ನಮ್ಮ ವಾಸ್ತವವನ್ನು ನಾವೇ ಬರೆಯಬೇಕಾಗಿದೆ. ವ್ಯರ್ಥ ತಿಣುಕಾಟಗಳಲ್ಲಿ ಮುಳುಗುತ್ತಿರುವ ಮನಸ್ಸುಗಳನ್ನು ಶಾಂತಗೊಳಿಸಬೇಕಾಗಿದೆ. ವ್ಯಕ್ತಿಕೇಂದ್ರಿತವಾಗದೆ ತತ್ವಕೇಂದ್ರಿತವಾದ ಅಧ್ಯಾತ್ಮದ ಆಧಾರವನ್ನು ಒದಗಿಸಬೇಕಾಗಿದೆ. ವೇದವೇದಾಂತಗಳನ್ನು ದೂರುವ ಮೊದಲು ಯಾವುದೇ ಪೂರ್ವಾಗ್ರಹವಿಲ್ಲದೆ ಅವನ್ನು ಅಧ್ಯಯನ ಮಾಡಬೇಕಾಗಿದೆ. ಸಂಶಯಗ್ರಸ್ತ ಮನಸ್ಸುಗಳನ್ನು ಸಾಧಾರವಾಗಿ ಸಂತೈಸಬೇಕಿದೆ. ಅನರ್ಥಕಾರೀ ಭಯದ ಭಾವವನ್ನು ನಿವಾರಿಸಿಕೊಳ್ಳಲು ಸಚ್ಚಿಂತನೆಗಳ ಮೊರೆ ಹೋಗಬೇಕಾಗಿದೆ. ಭಯ ಎಂಬ ಅಸ್ಥಿರ ಭಾವವನ್ನು ಹೊಡೆದೋಡಿಸದೆ - ಯಾವುದೇ ನೆಮ್ಮದಿಯು ಸಂಭವಿಸದು. ಅದಕ್ಕಾಗಿ - ಆತ್ಮವು ಪರಮಾತ್ಮವಾಗುವ ಹಾದಿಯನ್ನು ಹಿಡಿಯಬೇಕಾಗಿದೆ. ಯಾವುದೇ ಬದುಕಿನ ಶಾಂತಿಯ ಸೂತ್ರವಿದು.

ದಿನನಿತ್ಯದ ತಾಪತ್ರಯಗಳ ಹಳಸಲು ಯೋಚನೆಗಳನ್ನು ಹಿಂದೆ ಮುಂದೆ ಓಡಿಸುತ್ತಲೇ ಇರುವುದರಿಂದ ಅದೊಂದು ಮಾನಸಿಕ ಚಟವಾಗಿ, ವಿಚಾರ ಕಲ್ಮಷವಾಗಿ ಪರಿಣಮಿಸಿ, ಮನಸ್ಸು ದುರ್ಬಲವಾಗುತ್ತದೆ. ಆದ್ದರಿಂದ ಪ್ರಜ್ಞಾಪೂರ್ವಕವಾಗಿ, ಒಳ್ಳೆಯ ವಿಷಯಗಳನ್ನಷ್ಟೇ ಯೋಚಿಸುತ್ತ, ಹೊಸಹೊಸ ಗುರಿ - ಯೋಜನೆಗಳನ್ನು ಆರೋಪಿಸಿಕೊಳ್ಳುವ ಮೂಲಕ ಮತ್ತು ಆಗಾಗ ಪೃಕೃತಿಯ ಮಡಿಲಲ್ಲಿ ನಿರಾಳವಾಗಿದ್ದು ಹುಚ್ಚುಗಟ್ಟಿ ಓಡುವ ಮನಸ್ಸನ್ನು ಪ್ರಫುಲ್ಲಗೊಳಿಸುವ ಮೂಲಕವೂ - ಒಂದೇ ರಾಗದಿಂದ ಬೇಸತ್ತು ಹೋದಂತಹ ಮನಸ್ಸಿಗೆ ಸ್ವಲ್ಪ ವಿಶ್ರಾಂತಿ ನೀಡಬಹುದು. ಯೋಚನೆಯಿಂದಲೇ ಜಗತ್ತು. ಶ್ರೇಷ್ಠ ಯೋಚನೆಗಳಿಂದ ಶ್ರೇಷ್ಠ ಜಗತ್ತು. ಶ್ರೇಷ್ಠತೆಯ ಸಾಧನೆಯು ಸಾಧಕನಿಂದ ಪ್ರತಿಯಾಗಿ ಅಪೇಕ್ಷಿಸುವುದು - ನಿಯಂತ್ರಣವನ್ನು. ಹೀಗೆ ಸ್ವ -  ಇಚ್ಛೆಯಿಂದ ನಡೆಸಲಾಗುವ ಏಕಾಗ್ರತೆಯ ಸಾಧನೆಯಿಂದ ಮಾತ್ರವೇ ಮನಸ್ಸು ಹಗುರಾಗಲು ಸಾಧ್ಯ. ನಿಗ್ರಹದಿಂದ ವಿಗ್ರಹವಾಗುವ ಪರಿ ಇದು.

ಅದೃಷ್ಟ ಎಂದರೆ ಅವಕಾಶ ಮತ್ತು ಪೂರ್ವ ತಯಾರಿಗಳ ಒಂದಾಗುವಿಕೆ ಎಂದೂ ಅರ್ಥೈಸಬಹುದು. ಅದೃಷ್ಟ  ದೈವಕೃಪೆಯೊಂದನ್ನು ಹೊರತಾಗಿ ಇತರ ಯಾವುದೇ ದೃಷ್ಟ ಬಗೆಯಲ್ಲಿ, ಅವಕಾಶಗಳನ್ನು ಯಾರೋ ತಟ್ಟೆಯಲ್ಲಿಟ್ಟು ಕೊಡುವುದಿಲ್ಲ. ಅವಕಾಶಗಳನ್ನು ನಮ್ಮೆದುರು ತೆರೆದಿಡುವುದೂ ಮನಸ್ಸೇ. ಆದ್ದರಿಂದ ನಮ್ಮ ಮನಸ್ಸನ್ನು ಸಮರ್ಥವಾಗಿ ನಿರ್ವಹಿಸಬಲ್ಲೆವು ಎಂದಾದರೆ - ಅವಕಾಶಗಳನ್ನೂ ನಾವೇ ನಿರ್ಮಿಸಿಕೊಳ್ಳಬಲ್ಲೆವು. ಮನಸ್ಸಿನ ಸಮರ್ಥ ನಿರ್ವಹಣೆಯೇ ಯಶಸ್ಸಿನ ಸೂತ್ರ. ಸೃಜನಶೀಲ ಆರೋಗ್ಯಕರ ಮನಸ್ಸುಗಳಿಗೆ - ಯಶಸ್ಸು ಶತಃಸಿದ್ಧ. ಜೀವನದ ಯಶಸ್ವೀ ನಿರ್ವಹಣೆ ಎಂದರೆ ಮನಸ್ಸಿನ ಯಶಸ್ವೀ ನಿರ್ವಹಣೆ ಎಂದೇ ಅರ್ಥ.

ಒತ್ತಡಮುಕ್ತ ನೆಮ್ಮದಿಯ ಭಾವ ಪರಿವೇಷ್ಟಿತ ವಲಯದಲ್ಲಿ - ಶಿಷ್ಟತೆಯು ತಾನಾಗಿಯೇ ಬಂದು ನೆಲೆಸುತ್ತದೆ. ಮನಸ್ಸಿನ ಆಳಕ್ಕೆ ಇಳಿಯುವಂತಹ - ಇಂತಹ ಮೌಲ್ಯಯುತ ಶಿಕ್ಷಣವು - ಭಾರತದ ಸ್ವಾತಂತ್ರ್ಯಾನಂತರ ಏಕೆ ಕಣ್ಮರೆಯಾಯಿತು ? ನಾಚಿಕೆಗೆಟ್ಟ ಹೊಸ ಜನಾಂಗವನ್ನು ಸೃಷ್ಟಿಸಿದ ಸೋಗಲಾಡಿ ಬುದ್ಧಿಗೇಡಿ ಜೀವಿಗಳು - ಪ್ರಗತಿಪರರೆ ? ಅಥವ...?

ಮನಸ್ಸು ಕೆಡಿಸಲು ತುದಿಗಾಲಿನಲ್ಲಿ ನಿಂತಿರುವ ಇಂತಹ ವಿಕೃತ ಚಿಂತಕರ ವಿಕಾರಗ್ರಸ್ತ ಪುಸ್ತಕಗಳು ಎಷ್ಟು ಬಂದರೂ ಏನು ಉಪಯೋಗ ? ಇವರೆಲ್ಲರೂ ಬಯಸುವುದಾದರೂ ಏನು ? ಎಲ್ಲರೂ ಕಲಿಯ ಅನುಯಾಯಿಗಳಾಗಬೇಕೆಂದೆ ? ಸುಳ್ಳಕಳ್ಳರನ್ನು ಬೆಂಬಲಿಸುವ ಇಂದಿನ ತಥಾಕಥಿತ "ದೊಡ್ಡ ಮನುಷ್ಯ" ಹಣೆಪಟ್ಟಿಯ ಸೈಂಧವರು ಅನುಕರಣೀಯರೆ ? ಮನೋನಿಯಂತ್ರಣವಿದ್ದವರು - ಯೋಚಿಸಬಹುದು. ಮನ ಏವ ಮನುಷ್ಯಾಣಾಂ  ಕಾರಣಂ ಬಂಧ ಮೋಕ್ಷಯೋ...


                                                     ********************