Saturday, April 16, 2016

ಸರ್ವಾವಸ್ಥೆಯೊಳ್ ಬಾಲ್ಯಾವಸ್ಥೆ ಹರಹರಾ...೨

ಪ್ರತೀ ಬದುಕಿನ ಆರಂಭದ ಹದಿನೈದು ವರ್ಷಗಳು ಆಯಾ ಬದುಕನ್ನು ರೂಪಿಸುವ ಅವಧಿ. ಆ ಅವಧಿಯಲ್ಲಿ ಕೆಟ್ಟ ಗುರುತುಗಳಂತೆಯೇ ಉತ್ತಮ ಗುರುತುಗಳೂ ವ್ಯಕ್ತಿತ್ವದಲ್ಲಿ ದಾಖಲಾಗುತ್ತ ಹೋಗುತ್ತವೆ. ಉತ್ತಮ ಗುರುತುಗಳೇ ಹೆಚ್ಚು ದಾಖಲಾದಲ್ಲಿ ಅಂತಹ ಬದುಕುಗಳು ಮುಂದೆ ಆಗೊಮ್ಮೆ ಈಗೊಮ್ಮೆ ದಾರಿ ತಪ್ಪಿದರೂ ದಿಕ್ಕು ತಪ್ಪಲಾರವು. ಬಾಲ್ಯದಲ್ಲಿ ಕೆಡುಕಿನಲ್ಲಿಯೇ ಉರುಳಿ ಹೊರಳುವಂತಾಗಿದ್ದರೆ ಭವಿಷ್ಯದ ದಾರಿ ದಿಕ್ಕುಗಳೂ ಗೊಂದಲಮಯವಾಗಬಹುದು.

ಸಾಮಾನ್ಯವಾಗಿ ಬಾಹ್ಯ ಪ್ರಪಂಚದಲ್ಲಿ ಯಥೇಷ್ಟವಾಗಿದ್ದು ಬಾಲ್ಯವನ್ನು ಬಲವಾಗಿ ಆಕರ್ಷಿಸುವ ಒಂದಲ್ಲ ಒಂದು ವಿಧದ ನೇತ್ಯಾತ್ಮಕ ಸಂಗತಿಗಳು - ಆರಂಭದಿಂದಲೇ ಮನುಷ್ಯನನ್ನು ಬಲವಾಗಿ ಸೆಳೆಯುತ್ತಲೇ ಇರುತ್ತವೆ. ಅದಕ್ಕೆ ಹೆಣ್ಣು ಗಂಡು ಎಂಬ ವ್ಯತ್ಯಾಸವಿರುವುದಿಲ್ಲ. ಒಮ್ಮೊಮ್ಮೆ ಆಕಸ್ಮಿಕವಾಗಿ ಅಥವ ಉದ್ದೇಶಿತವಾಗಿ ಕೆಲವರು ಅದು ಹೇಗೋ ಅಂತಹ ಕೆಡುಕಿನ ಸಂಪರ್ಕದಿಂದ ಪಾರಾಗಿ ಬಿಡುತ್ತಾರೆ; ಕೆಲವರು ಬಿದ್ದಲ್ಲಿಯೇ ಮತ್ತೆ ಮತ್ತೆ ಮುಗ್ಗರಿಸುತ್ತಾರೆ; ಕೆಲವರು ಅನಿರೀಕ್ಷಿತಗಳನ್ನು ನಿಭಾಯಿಸಲಾಗದೆ ಬದುಕಿನ ಉದ್ದಕ್ಕೂ ಎಡವುತ್ತಲೇ ಇರುತ್ತಾರೆ.

ಉತ್ಸಾಹ, ಉತ್ಸುಕತೆ, ಉತ್ತೇಜನಗಳಿಂದ ಅಪ್ರಚೋದಿತವಾಗಿ ಉತ್ತೇಜಿತವಾಗುವ ಬಾಲ್ಯದ ಬಾಲಿಶ ಮನಸ್ಸುಗಳು ಆಗಾಗ ಎಡವುವುದು ಸಹಜವೇ. ಎಷ್ಟೋ ಬಾರಿ "ಉತ್ತರಗಳಿಗಾಗಿ ಹುಡುಕಾಟ" ಎಂಬ ಅಪ್ರಬುದ್ಧ ಅವಸರವೇ ಎಳೆಯ ಪ್ರಶ್ನಾರ್ಥಿಗಳನ್ನು ಹೊಂಡಕ್ಕೆ ಕೆಡವುವುದೂ ಇದೆ. ಹೀಗಿದ್ದರೂ - ಯಾವುದೇ ಬದುಕನ್ನು ಕಟ್ಟುವುದು ಮಾತ್ರ ಬಾಲ್ಯಕಾಲದ ಪ್ರಶ್ನೆಗಳೇ. ಪ್ರಶ್ನೆಗಳು ಹುಟ್ಟುವ ಮತ್ತು ಉತ್ತರಕ್ಕಾಗಿ ಅಲೆಯುವ ನಮ್ಮ ಬಾಲ್ಯಕಾಲದಲ್ಲಿ ಇಡೀ ವಿಶ್ವದ ಪರಿಚಯ ಮಾಡಿಕೊಳ್ಳುವ ಬೌದ್ಧಿಕ ಅಥವ ದೈಹಿಕ ಶಕ್ತಿಯಿಲ್ಲದಿದ್ದರೂ - ಅಪ್ರಬುದ್ಧ ಕುತೂಹಲ ಮತ್ತು ಅತೀವ ಹುಮ್ಮಸ್ಸಿರುತ್ತದೆ. ಅಂತಹ ಅಪ್ರಬುದ್ಧ ಕುತೂಹಲ ಮತ್ತು ಹುಮ್ಮಸ್ಸುಗಳು ಎತ್ತಲೋ ಹಾಯುವ ಘಟನೆಗಳನ್ನೆಲ್ಲ - ಇತ್ತ ಆಹ್ವಾನಿಸುತ್ತಲೇ ಇರುತ್ತವೆ. ಆದ್ದರಿಂದ ಆ ಹಂತದಲ್ಲಿ ಎದುರಾಗುವ ಎಲ್ಲ ಘಟನೆಗಳೂ ಏಳುಬೀಳುಗಳ ಅಚ್ಚಿನಲ್ಲಿ ಸರಸರನೆ ಹಾದು ಹೋಗುತ್ತವೆ; ಆಯಾ ಮನಸ್ಸುಗಳನ್ನು - ತನ್ಮೂಲಕ ವ್ಯಕ್ತಿತ್ವವನ್ನು ಕಟ್ಟುವಲ್ಲಿ ಪ್ರಮುಖ ಪಾತ್ರವನ್ನೂ ವಹಿಸುತ್ತವೆ.

ಮನುಷ್ಯನಲ್ಲಿ ಹುಟ್ಟಿನಿಂದಲೇ ಹುದುಗಿರುವ "ಬಾಚಿಕೊಳ್ಳುವ" ಅದಮ್ಯ ಹಂಬಲವನ್ನು - ಬಾಲ್ಯದ "ಸರಿ ತಪ್ಪು"ಗಳ ಸಂಯಮಪೂರ್ಣ ಮತ್ತು ಸಂಸ್ಕರಿತ ಶಿಕ್ಷಣದಿಂದ ಮಾತ್ರ ನಿಯಂತ್ರಿಸಲು ಸಾಧ್ಯ. ಆರಂಭದಲ್ಲಿ ಅದು - ಕೇವಲ "ಕೇಳಿ - ನೋಡಿ" ಕಲಿಯುವಂತಹ ಸರಳ ಶಿಕ್ಷಣ. ಬಾಲ್ಯದಲ್ಲಿ ಎಡವಿದಾಗೆಲ್ಲ ಆಗಿಂದಾಗಲೇ ಸರಿದಾರಿಯನ್ನು ಹಿಡಿಸುವ ಸಮರ್ಥ ಮಾರ್ಗದರ್ಶಕ ಪರಿಸರವಿದ್ದರೆ ಅಂತಹ ಹಿನ್ನೆಲೆಯಿರುವ ಮಕ್ಕಳು ಭವಿಷ್ಯದಲ್ಲಿ ಎದುರಾಗುವ "ಸರಿ ತಪ್ಪು"ಗಳನ್ನು ಚಾಣಾಕ್ಷತೆಯಿಂದ ನಿಭಾಯಿಸಿ ಜೀರ್ಣಿಸಿಕೊಳ್ಳಲು ಸಮರ್ಥರಾಗುತ್ತಾರೆ; ತಮ್ಮ ಬದುಕಿನಲ್ಲಿ "ಬರುವ ಸಮಸ್ಯೆಗಳನ್ನು ಎಡವಿಯೂ ನಿಲ್ಲುವ, ಕೊಡವಿ ನಡೆಯುವ,ಅನುಕರಣೆಯಲ್ಲದ ಸ್ವತಂತ್ರ ಕಲಾತ್ಮಕ ಬದುಕು" - ಎಂಬ ಸುಲಲಿತ ವ್ಯಾಕರಣವು ಅಂಥವರನ್ನು ಬಾಲ್ಯದಲ್ಲಿಯೇ ಪ್ರವೇಶಿಸಿಬಿಡುತ್ತದೆ.

ಅನಂತ ಅವಕಾಶಗಳ ಜೊತೆಜೊತೆಗೆ ಬಗೆಬಗೆಯ ಅಗ್ನಿಪರೀಕ್ಷೆಗಳನ್ನೊಡ್ಡುವ ಈ ಸಂಸಾರದಲ್ಲಿ "ಕಂಡೂ ಕಾಣದಂತೆ, ಕೇಳಿಯೂ ಕೇಳಿಸದಂತೆ, ಮಾಡಿಯೂ ಮಾಡದಂತೆ " ಬದುಕಲು ಬೇಕಾದ ಸ್ವಚ್ಛ ಸ್ಪಷ್ಟ ವಿಚಾರಗಳುಳ್ಳ ವ್ಯಕ್ತಿಯನ್ನು ರೂಪಿಸಿ ತರಬೇತುಗೊಳಿಸಬಲ್ಲ ಬಾಲಶಿಕ್ಷಣವು - ಯಾವುದೇ ಬದುಕು ಯಾವುದೇ ಹಂತದಲ್ಲೂ - ಸೋತು ಓಡಿಹೋಗಲು ಬಿಡುವುದಿಲ್ಲ. ಬದಲಾಗಿ, ಬಾಲ್ಯದಲ್ಲಿಯೇ ಗ್ರಹಿಕೆಯ ಶಕ್ತಿಯನ್ನು ಹೆಚ್ಚಿಸಿ, ಬದುಕಿನಲ್ಲಿ "ಗಂಭೀರವಾಗಿ ಇದ್ದು - ಜಯಿಸಲು" ಪ್ರೇರೇಪಿಸುತ್ತಲೇ ಇರುತ್ತದೆ.

ಆದರೆ ಹಾಗೆ ಸವಾಲೊಡ್ಡುವ, ಬಾಲ್ಯದ ಬಣ್ಣಬಣ್ಣದ ಕಲ್ಪನೆಗಳಿಗೆ ಕಾವುಕೊಡುವ, ಸುಂದರ ಪ್ರಕೃತಿಯನ್ನು ಸ್ವತಂತ್ರವಾಗಿ ಆಸ್ವಾದಿಸುವ, "ಜವಾಬ್ದಾರಿ" ಎಂಬುದನ್ನು ತಮ್ಮ ಕುಟುಂಬದಲ್ಲಿಯೇ ಸಹಜವಾಗಿ ಕಂಡು ಅನುಭವಿಸಿ ಅರಿತುಕೊಳ್ಳುವ ವಾತಾವರಣವು - ಸುಖ ಸೌಕರ್ಯವಿರುವಂತೆ ಕಾಣುವ ಇಂದಿನ ಎಷ್ಟೋ ಮಕ್ಕಳಿಗೆ ಸಿಗುತ್ತಿಲ್ಲ. "ನಿಶ್ಶಬ್ದ ಮನೆಯಲ್ಲಿ ಏಕಾಂತ ಬದುಕು" ಎಂಬುದು ಇಂದಿನ ಬಹುತೇಕ ಮಕ್ಕಳ ಸ್ಥಿತಿ.

ಹೀಗಾಗಿ ಹುಮ್ಮಸ್ಸಿನಿಂದ ಕುಪ್ಪಳಿಸುವ ಮನಸ್ಸುಗಳು ಬಂಧಿತ ಪರಿಸರ ಎಂಬ ಅಪೌಷ್ಟಿಕತೆಯಿಂದ ಬಾಡಿಹೋಗುತ್ತಿವೆ. "ಅತಿ ಸುರಕ್ಷಿತ" ಗೊಂಡಿರುವ ಇಂದಿನ ಬಾಲ್ಯದ ಕೋಟೆಯೊಳಗೆ ಒಂಟಿಯಾಗಿರುವ ಮಕ್ಕಳು ಅವ್ಯಕ್ತ ಬಳಲಿಕೆಗೆ ಒಳಗಾಗುತ್ತಿದ್ದಾರೆ. ಬಗೆಬಗೆಯ ಮನುಷ್ಯರೊಂದಿಗೆ, ವಿಶಾಲ ಪ್ರಕೃತಿಯೊಂದಿಗೆ ಸ್ವಚ್ಛಂದವಾಗಿ ಒಡನಾಟ ನಡೆಸುತ್ತಿದ್ದ ಅಂದಿನ ಸಾಮಾನ್ಯ ಮಕ್ಕಳಂತೆ ಈಗಿನ ಮಕ್ಕಳು ಬಾಲ್ಯಕಾಲವನ್ನು ಕಳೆಯಲಾಗುತ್ತಿಲ್ಲ. ಆದ್ದರಿಂದಲೇ  ಮಾನಸಿಕ ಸೌಖ್ಯದ ಸೆರಗಿನಲ್ಲಿ ವಿಕಸಿತಗೊಳ್ಳುವ - ಅಂತಹ ಹಿತಕರವಾದ, ಜೀವನಸ್ನೇಹಿಯಾದ ಅನುಭವದಿಂದಲೂ ಇಂದಿನ ಮಕ್ಕಳು ವಂಚಿತರಾಗುತ್ತಿದ್ದಾರೆ. ಹೀಗೆ ಬಂದಿಗಳಂತೆ ಬೆಳೆಯುವ ಮಿತಾನುಭವದ ಮಕ್ಕಳು ತಮ್ಮ ಭವಿಷ್ಯದ ಬದುಕಿನಲ್ಲಿ ಎದುರಾಗುವ ಆಕಸ್ಮಿಕಗಳನ್ನು ನಿಭಾಯಿಸಲಾಗದೆ - ತಾವೂ ಸೋಲುತ್ತ... ತಮ್ಮ ಸುತ್ತಲಿನ ಬದುಕುಗಳನ್ನೂ ಸೋಲಿಸುತ್ತಿರುವುದು ಈಗ ಸಾಮಾನ್ಯವಾಗಿ ಹೋಗಿದೆ.

ಸುಮಾರು ೪೦ - ೫೦ ವರ್ಷಗಳ ಹಿಂದಿನವರೆಗೂ ಇಷ್ಟೊಂದು ಗೊಂದಲವಿರಲಿಲ್ಲ. ಆಗ ಮುಕ್ತ ಸಮಾಜವೊಂದು ಇತ್ತು. ಮಕ್ಕಳ ಕೈಯ್ಯಳತೆಯಲ್ಲಿಯೇ ಅಮ್ಮ ಅಪ್ಪ ಎಂಬ ಸುರಕ್ಷಾ ಛತ್ರಿ ಇರುತ್ತಿದ್ದುದರಿಂದ ಮಕ್ಕಳ ಪಾಲಿಗೆ ನಿರ್ಭಯದ ವಾತಾವರಣವಿತ್ತು. ಆಗ ಅಲ್ಲಿ ಮಕ್ಕಳ ರಾಜ್ಯವಿತ್ತು. ಮಕ್ಕಳದೇ ಸ್ವತಂತ್ರ ಪ್ರಪಂಚವಿತ್ತು. ಭಯಮುಕ್ತವಾದ ಅಂತಹ ಪರಿಸರದಲ್ಲಿ ಮಕ್ಕಳು ಸಹಜವಾಗಿ ಅರಳುತ್ತಿದ್ದರು. ಅಂತಹ ರಾಜ್ಯದಲ್ಲಿ ಆಗ - ನನ್ನಂತಹ ಹಲವು ಸುಖೀ ಪ್ರಜೆಗಳಿದ್ದರು.

ನನ್ನ ಅದೃಷ್ಟ! ಅಕ್ಕ, ತಂಗಿ, ತಮ್ಮಂದಿರು ಮತ್ತು ಸ್ವಲ್ಪ ಬಡತನದ ಜೊತೆಗೆ ದೊಡ್ಡ ಸಂಸಾರದಲ್ಲಿ ಬೆಳೆಯುವ ಅವಕಾಶವು ನನ್ನ ಬದುಕಿಗಿತ್ತು. ಈ ಎಲ್ಲ ಅಂಶಗಳೂ "ಬಾಲ್ಯಕ್ಕೆ ಸಿಗಲೇಬೇಕಾದ ವಿಟಮಿನ್ ಗಳು" ಎಂಬುದು ನನ್ನ ಅನುಭವ. ಈ ಎಲ್ಲ ಅಂಶಗಳ ಜೊತೆಗೆ ಹೊಂದಾಣಿಕೆಯಿಂದ ಬಾಲ್ಯದಲ್ಲಿಯೇ ಏಗುವುದನ್ನು ಕಲಿತರೆ ಮುಂದೆ ಬದುಕಿನಲ್ಲಿ ಎದುರಾಗುವ ಬಣ್ಣದ ಗುದ್ದುಗಳನ್ನೆಲ್ಲ ಜೀರ್ಣಿಸಿಕೊಳ್ಳುವ ಶಕ್ತಿಯು ತಾನೇ ತಾನಾಗಿ ಕೂಡಿಕೊಳ್ಳುತ್ತದೆ. ಹಾಗಾದಾಗ - ಸಾವನ್ನೂ ಹಳೆಯ ಗೆಳೆಯನಂತೆ ಸ್ವಾಗತಿಸಲು ಯಾವುದೇ ಬದುಕಿಗೆ ಸಾಧ್ಯವಾಗುತ್ತದೆ. ಬಾಲ್ಯದಲ್ಲಿಯೇ ತಮ್ಮ ಊರಿನ ಪರಿಚಯ, ಜನ - ಮಾತು - ರೀತಿ - ವ್ಯವಹಾರ ಶೈಲಿಯ ಪರಿಚಯ, ಗದ್ದೆಬಯಲು ಮರಗಿಡಗಳ ಪರಿಚಯ, ಕಲೆ ಸಂಸ್ಕೃತಿಯ ಪರಿಚಯ, ತನ್ನ ಸುತ್ತಲಿನ ಸಮಸ್ತ ಭೂಮಿಯ ಸ್ಥೂಲ ಪರಿಚಯವಾದಾಗ - ಬಾಲ್ಯವನ್ನು ಹಿಂಬಾಲಿಸುವ "ನಿಜಜೀವನ ಎನ್ನುವ ನಾಟಕ"ಕ್ಕೆ ಪೂರ್ವ ರಂಗಭೂಮಿಯು ಸಿದ್ಧವಾದಂತೆಯೇ.

ನನ್ನ ಬಾಲ್ಯವನ್ನು ಬೆಳೆಸಿದ ಕೋಟೇಶ್ವರ ಎಂಬ ಊರು - ಬದುಕಿನ ವಿದ್ಯೆಯ, ಜೀವನವೆಂಬ ನವರಸಗಳ ನಾಟಕಕ್ಕೆ ನನ್ನ ಪೂರ್ವ ವೇದಿಕೆಯಾಗಿತ್ತು. ಆದ್ದರಿಂದಲೇ ಅಲ್ಲಿ ಇಲ್ಲಿ ಸುತ್ತಿ, ಮತ್ತೆ ಮತ್ತೆ ಕೋಟೇಶ್ವರಕ್ಕೇ ಬಂದು - ನಾನು ನಿಲ್ಲುತ್ತಿದ್ದೇನೆ.

"ಬಾಲ್ಯದ ದೃಷ್ಟಿ" ಗೆ ಅದರದ್ದೇ ಆದ ಅನನ್ಯತೆ ಇದೆ. ಅದು ಸಹಜ ದೃಷ್ಟಿ. ಯಾವುದೇ ಪ್ರಭಾವಕ್ಕೆ ಒಳಗಾಗದ ಶುದ್ಧ ದೃಷ್ಟಿ. ಯಾವುದೇ ವಸ್ತು, ವಿಷಯಗಳನ್ನು ಹಾರುಮಣೆಯಾಗಿಸಿಕೊಳ್ಳುವ - ತನ್ಮೂಲಕ ಏನನ್ನಾದರೂ ಗಿಟ್ಟಿಸಿಕೊಳ್ಳುವ ಉದ್ದೇಶವಿಲ್ಲದೆ ವೀಕ್ಷಿಸುವ ಸರಳ ದೃಷ್ಟಿ. ಆದ್ದರಿಂದ ಯಾವುದೇ ಸಾಧನೆಯ ಹಂಬಲದ ಪೂರ್ವಾಗ್ರಹವಿಲ್ಲದೆ ನೋಡಬಲ್ಲ ಬಾಲ್ಯಕಾಲವು ಆಳವಾದ - ಸಮಗ್ರವಾದ ವಿಷಯಪುಷ್ಟಿಯನ್ನು ನೀಡದಿದ್ದರೂ ಬಾಲ್ಯದ ನೋಟದಲ್ಲಿ ದಟ್ಟವಾದ ಪ್ರಾಮಾಣಿಕತೆ ಇರುತ್ತದೆ. ಆದ್ದರಿಂದಲೇ ನನ್ನ ಬಾಲ್ಯ ಕಾಲದ ಕೋಟೇಶ್ವರ ಎಂಬ ಊರು ನನಗೆ ಪ್ರಿಯವೆನಿಸುತ್ತದೆ.

ಕೋಟೇಶ್ವರದ ಆಧಾರವೇ ಕೋಟಿಲಿಂಗೇಶ್ವರ. ಅಂದು ಆಯಾ ಊರಿನಲ್ಲಿರುತ್ತಿದ್ದ ಪೂಜಾ ಕೇಂದ್ರಗಳು ಸಮಾಜವನ್ನು - ನಿತ್ಯದ ಬದುಕುಗಳನ್ನು ಕಟ್ಟುತ್ತಿದ್ದ ಪರಿಯೇ ಅನ್ಯಾದೃಶವಾದುದು.


ಕೋಟೇಶ್ವರದಲ್ಲಿದ್ದ ನಮ್ಮ ಮನೆಯ ಬಲಗಡೆಗೆ ಸುಮಾರು ಒಂದು ಮೈಲಿ ದೂರದಲ್ಲಿ ಕುಂಭಾಶಿ - ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನವಿದ್ದರೆ - ಒಂದು ಮೈಲಿ ಎಡಗಡೆಯಲ್ಲಿ ಮಹತೋಭಾರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನವಿತ್ತು. ಆಧ್ಯಾತ್ಮಿಕ ಒಲವಿದ್ದ ನನ್ನ ಅಪ್ಪಯ್ಯ ಮತ್ತು ಅಮ್ಮ ಈ ಎರಡೂ ದೇವಸ್ಥಾನಗಳಿಗೆ ಆಗಾಗ ಹೋಗಿ ಬರುತ್ತಿದ್ದರು. "ಅಳಿಯನ ಜೊತೆಗೆ ಗೆಳೆಯ" ಅನ್ನುವಂತೆ - ನಾನೂ ಅವರ ಜೊತೆ ಅವರು ಹೋಗುವಲ್ಲಿಗೆಲ್ಲ ಆಗ ಹೋಗುತ್ತಿದ್ದೆ. ೪ - ೫ನೇ ತರಗತಿಗೆ ಬಂದ ಮೇಲೆ ಎಲ್ಲ ಬಂಧುಗಳ ಮನೆಗಳಿಗೆ ಹೋಗುವುದನ್ನು ಇಷ್ಟಪಡದೆ ತಪ್ಪಿಸಿಕೊಳ್ಳುತ್ತಿದ್ದರೂ ದೇವಸ್ಥಾನಗಳಿಗೆಂದು ಹಿರಿಯರು ಹೊರಟಾಗ ನಾನು ಖುಶಿಯಿಂದಲೇ ಒಟ್ಟಿಗೆ ಹೋಗುತ್ತಿದ್ದೆ. ದೇವಸ್ಥಾನದ ಜಾತ್ರೆಯು ಬಂತೆಂದರೆ ಇಡೀ ಊರೇ ಉತ್ಸವದ ಸಂಭ್ರಮದಲ್ಲಿ ಭಾಗಿಯಾಗುತ್ತಿದ್ದ ಕಾಲವದು.

ಅಂದಿನ ಕೋಟಿಲಿಂಗೇಶ್ವರ ದೇವಸ್ಥಾನವು ಆಗ - ಈಗಿನಂತಿರಲಿಲ್ಲ. ಒಳಗಿನ ಒಂದು ಸುತ್ತು ಬಿಟ್ಟರೆ ಉಳಿದಂತೆ ದೇವಳದ ಒಳ ಭಾಗದಲ್ಲಿ ಬರೇ ಕತ್ತಲೆಯೋ ಕತ್ತಲೆ. ದೇವರಿಗೆಂದು ಉರಿಸಿದ ಹಣತೆಗಳನ್ನು ಬಿಟ್ಟರೆ ಅಲ್ಲಿ ಬೇರೆ ದೀಪವೂ ಇರುತ್ತಿರಲಿಲ್ಲ. ಆದರೆ... ಅಂದಿನ ದೇವಸ್ಥಾನಗಳ ಪರಿಸರವು - ಪಕ್ಕಾ ದೇವಸ್ಥಾನದ ಭಾವವನ್ನು ಪ್ರಚೋದಿಸುವಂತಿರುತ್ತಿತ್ತು.


ಮಹತೋಭಾರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನವು ಕೋಟೇಶ್ವರದ ಆತ್ಮ. ಮಹತ್ ಅಥವ ಮಹಾನ್ ಆತ್ಮಾ ಎಂಬುದು ಮನೋವಲಯವನ್ನು ಸಾಂಕೇತಿಸುತ್ತದೆ. ಮಹತೋಭಾರ ಅಂದರೆ ಆತ್ಮರೂಪೀ ನಿರ್ದೇಶ. ಆಶ್ರಿತರ ಮನೋವಲಯವನ್ನು ಶುಭ್ರವಾಗಿರಿಸುವುದೇ ದೇವಾಲಯಗಳ ಉದ್ದೇಶ.



ಈ ಕೋಟಿಲಿಂಗೇಶ್ವರ ದೇವಳದಲ್ಲಿ ಭರ್ಜರಿಯಾದ ಎರಡು "ತಟ್ಟೀರಾಯ"ಗಳಿದ್ದವು. ಜಾತ್ರೆಯ (ಕೊಡಿ ಹಬ್ಬ) ಮತ್ತು ವಿಶೇಷ ಸಂದರ್ಭಗಳಲ್ಲಿ ಅವುಗಳು ಮೆರವಣಿಗೆಯ ಮುಂದೆ ಕುಣಿಯುತ್ತಿದ್ದವು. ಉಳಿದ ಸಮಯದಲ್ಲಿ ದೇವಸ್ಥಾನದ ಒಳಗಿನ ಜಗಲಿಯ ಎರಡು ಬದಿಗಳಲ್ಲಿ ಅವು ನಿಂತಿರುತ್ತಿದ್ದವು. ಅಂದು ನನ್ನನ್ನು ಹೆದರಿಸುತ್ತಿದ್ದುದು - ದಿನವೂ ವಕ್ಕರಿಸುತ್ತಿದ್ದ ರಾತ್ರಿಯ ಕತ್ತಲೆ ಮತ್ತು ಈ ತಟ್ಟೀರಾಯಗಳು. ಇವೆರಡೂ ಆ ದೇವಸ್ಥಾನದಲ್ಲಿದ್ದವು. ಮಟಮಟ ಮಧ್ಯಾಹ್ನದ ಹೊತ್ತಿನಲ್ಲೂ ಅಲ್ಲಿನ ಮಾಡಿನಡಿಯಲ್ಲಿ ಮಬ್ಬು ಕತ್ತಲು ಇರುತ್ತಿತ್ತು. ಕೋಟಿಲಿಂಗೇಶ್ವರ ದೇವಳದ ಹೊಸ್ತಿಲ ಒಳಗೆ ಪ್ರವೇಶಿಸುವಾಗಲೇ ನಾನು ಅಮ್ಮನ ಕೈಯನ್ನು ಬಲವಾಗಿ ಹಿಡಿದುಕೊಂಡು - ಒಳ ಪೌಳಿಯಲ್ಲಿ ನಿಂತಿರುತ್ತಿದ್ದ ದುಷ್ಮನ್ ತಟ್ಟಿರಾಯಂದಿರನ್ನು ದಾಟುವ ವರೆಗೂ... ಅಂದರೆ ಇನ್ನೊಂದು ಹೊಸ್ತಿಲು ನನ್ನ ಕಾಲಿಗೆ ತಾಕುವ ವರೆಗೂ ಕಣ್ಣು ಮುಚ್ಚಿಕೊಂಡು ಓಡಿದಂತೆಯೇ ದಾಟಿಬಿಡುತ್ತಿದ್ದೆ. ಆಮೇಲೆ ಒಳಗೆ ಹೋಗಿ ಶಿವನ ಎದುರು ನಿಲ್ಲುವಾಗ "ಎದೆ ಹಾರಿದೆ ಬಾಯಾರಿದೆ" ಅನ್ನುವಂತಹ ಆತಂಕ! ಶಿವನಿಗೆ ಹಣ್ಣುಕಾಯಿ ಅರ್ಪಿಸಿ ತೀರ್ಥ ಸ್ವೀಕರಿಸುವಾಗ, "ಬರುವಾಗ ದಾರಿಯಲ್ಲಿದ್ದ ದುಷ್ಮನ್ ನಿಂದ ಹೇಗೋ ಪಾರಾದೆ; ಹಿಂದಿರುಗುವಾಗಲೂ ಹೀಗೇ ಸುಸೂತ್ರವಾಗಿ ಪಾರುಮಾಡಪ್ಪಾ" ಎಂದು ಶಿವನಿಗೆ ಹೇಳಿದ್ದು ಬಿಟ್ಟರೆ - ಆಗ ನನಗೆ ಬೇರೆ ಯಾವ ಯೋಚನೆಯೂ ಬರುತ್ತಿರಲಿಲ್ಲ. ಆದರೂ... ದೇವಸ್ಥಾನಕ್ಕೆ ಹೋಗುತ್ತಿದ್ದೆ. ತನ್ನ ಮಗಳ ಈ ಅವಸ್ಥೆಯನ್ನು ಕಂಡುಕಂಡು ಸುಸ್ತಾದ ಅಮ್ಮನು ಮಗಳ ಈ "ಮರಣಸಂಕಟ"ವನ್ನು ಒಮ್ಮೆ ಅಪ್ಪಯ್ಯನಿಗೆ ಹೇಳಿದಾಗ ಅವರು ನನ್ನನ್ನು ಕೂಡಿಸಿಕೊಂಡು "ತಟ್ಟೀರಾಯ"ನ ನಿಜರೂಪವನ್ನು ವಿವರಿಸಿ ಭಯ ಪರಿಹರಿಸಲು ಪ್ರಯತ್ನಿಸಿದ್ದರು.


"ತಟ್ಟೀರಾಯ ಅಂದರೆ ಅದೊಂದು ವಿಶಿಷ್ಟ ಆಕಾರದಲ್ಲಿರುವ ತಟ್ಟಿ. ಬಿದಿರಿನಿಂದ ರೂಪಿಸುವ ಒಂದು ಆಕಾರಕ್ಕೆ ಅಂಗಿ ತೊಡಿಸಿ ಇಟ್ಟಿರುತ್ತಾರೆ. ಅದನ್ನು ತಟ್ಟೀರಾಯ ಎನ್ನುತ್ತಾರೆ. ಉತ್ಸವದ ಸಂದರ್ಭದಲ್ಲಿ ಅದರ ಒಳಗೆ ಒಬ್ಬ ಗಟ್ಟಿ ಮನುಷ್ಯನು ನಿಂತುಕೊಂಡು ಆ ಆಕಾರವನ್ನು ಹೊತ್ತುಕೊಂಡು ನಡೆಯುತ್ತಾನೆ. ಆಗ ಆ ವ್ಯಕ್ತಿಯ ಪಾದಗಳು ಮಾತ್ರ ಹೊರಗೆ ಕಾಣಿಸುತ್ತವೆ. ಒಳಗಿರುವ ಅವನ ಕಣ್ಣಿನ ನೇರಕ್ಕೆ ಸರಿಯಾಗಿ ಆ ತಟ್ಟಿಯಲ್ಲಿ ಸ್ಥಳಾವಕಾಶ ಮತ್ತು ಅದಕ್ಕೆ ತೊಡಿಸಿದ ಬಟ್ಟೆಯಲ್ಲಿ ಎರಡು ರಂಧ್ರಗಳನ್ನೂ ಮಾಡಿರುತ್ತಾರೆ. ತಟ್ಟೀರಾಯನ ಒಳಗಿರುವ ಮನುಷ್ಯನು ಆ ರಂಧ್ರದ ಮೂಲಕ ಹೊರಗೆ ನೋಡುತ್ತ ಉತ್ಸವದ ಸಮಯದಲ್ಲಿ ಹೆಜ್ಜೆ ಹಾಕುತ್ತಾನೆ. ನಮ್ಮ ಕಣ್ಣಿಗೆ ಯಾವುದೋ ರಾಕ್ಷಸ ರೂಪ ಅನ್ನಿಸಿದರೂ ಅದು ಚೈತನ್ಯವಿಲ್ಲದ ಬರೇ ಒಂದು ಆಕಾರ. ಆದರೆ ನಮ್ಮ ಕಣ್ಣಿಗೆ - ತಟ್ಟೀರಾಯನೇ ಕುಣಿದಂತೆ ಅನ್ನಿಸುತ್ತದೆ. ಈ ತಟ್ಟೀರಾಯನು ಸೃಷ್ಟಿಯ ಭವ್ಯತೆಯ ಸಂಕೇತವೂ ಹೌದು; ಮಾಯೆಯ ಸಂಕೇತವೂ ಹೌದು. ಭವ್ಯವಾದ ಈಶರಥದ ಯಾತ್ರೆಗೆ ಯಾವುದೇ ಕೆಟ್ಟ ದೃಷ್ಟಿಯು ತಾಗದಿರಲಿ (ಕೆಟ್ಟ ದೃಷ್ಟಿಗಳನ್ನೆಲ್ಲ ತಟ್ಟೀರಾಯನೇ ಆಕರ್ಷಿಸಲಿ...) ಎಂಬ ಮನುಜಭಾವದ ಸಾಂಕೇತಿಕತೆ ಮತ್ತು ಇಡೀ ಉತ್ಸವದ ರಂಗನ್ನು ಹೆಚ್ಚಿಸುವ ಲೌಕಿಕ ದೃಷ್ಟಿಯೂ ಇದರಲ್ಲಿದೆ. ಆ ಆಕೃತಿಯ ಬೃಹದ್ರೂಪ, ಮೀಸೆ, ಉದ್ದುದ್ದದ ಕೈಕಾಲುಗಳನ್ನು ನೋಡಿ ನೀನು ಹೆದರುವ ಅಗತ್ಯವಿಲ್ಲ ಮಗಳೇ. ಚೈತನ್ಯವಿಲ್ಲದ ಅಂತಹ ರಕ್ಕಸ ಆಕಾರಗಳಿಗೆಲ್ಲ ಎಂದೂ ಹೆದರಬಾರದು. ಮನುಷ್ಯರ ಭಾವ ಕೃತ್ರಿಮದ ಪ್ರತಿರೂಪವೇ ತಟ್ಟೀರಾಯ..." ಎಂದು ನನ್ನ ತಲೆ ನೇವರಿಸುತ್ತ ಹೇಳಿದ್ದ ಅಪ್ಪಯ್ಯ - ಮರುದಿನ - ತಾವೇ ನನ್ನನ್ನು ಕರೆದುಕೊಂಡು ಹೋಗಿ ತಟ್ಟೀರಾಯನನ್ನು ನನ್ನ ಕೈಯ್ಯಿಂದಲೇ ಮುಟ್ಟಿಸಿ ಭಯ ನಿವಾರಿಸಲೂ ಯತ್ನಿಸಿದ್ದರು.

ಅಪ್ಪಯ್ಯನ ಮಾತುಗಳು ನನ್ನ ಅಂದಿನ ಆ ತಲೆಯ (ತರಲೆ) ಒಳಗೆ ಹೋದದ್ದೆಷ್ಟೋ - ಹೊರಹೊರಗೇ ಹಾರಿ ಹೋದದ್ದೆಷ್ಟೋ ನನಗೆ ಗೊತ್ತಿಲ್ಲ. ಏಕೆಂದರೆ ಅನಂತರವೂ ಬಹಳ ಕಾಲ ನಾನು ತಟ್ಟೀರಾಯನಿಗೆ ಹೆದರುತ್ತಿದ್ದೆ; ಆದರೆ... ಕತ್ತಲಿನ ಅಂಜಿಕೆ ಯು ಮಾತ್ರ - ನಾನೇ "ಅಮ್ಮ"ನಾಗುವ ವರೆಗೂ ನನ್ನನ್ನು ಬಿಟ್ಟಿರಲಿಲ್ಲ. ಏಕೆಂದರೆ... ಅಮ್ಮನಾದ ಮೇಲೆ - ಪುಟ್ಟ ಮಗ ಮತ್ತು ಅಮ್ಮ - ಇಬ್ಬರೂ ಹೆದರುವುದು ಸಾಧ್ಯವೇ ಇರಲಿಲ್ಲ! ಯಾವುದೇ ಅನಿವಾರ್ಯತೆಯು ಅಂಜಿಕೆಯನ್ನು ಓಡಿಸುತ್ತದೆ! ಆದರೆ ಈಗಲೂ - ಕತ್ತಲಾಗುವ ಮೊದಲೇ ಮನೆ ಸೇರಿಕೊಂಡು ನೆಮ್ಮದಿ ಕಾಣುವ - ನನ್ನ ಶೈಲಿಯ ಆಳದಲ್ಲಿ "ಭಯ"ದ ವಾಸನೆಯೂ - ಅಲ್ಪಸ್ವಲ್ಪ ಇರಬಹುದು!

ಅನಂತರ ನನ್ನ ಬದುಕಿನ "ಹರಿಕಥಾ ತೀರ್ಥಯಾತ್ರೆ"ಯಲ್ಲಿ ಹಲವು ದೇವಳಗಳನ್ನು ಹೊಕ್ಕು ಹೊರಟ ನನಗೆ ಬಗೆಬಗೆಯ ತಟ್ಟೀರಾಯರುಗಳನ್ನು ಕಾಣುವ ಭಾಗ್ಯ ಸಿಕ್ಕಿತ್ತು. ಆದರೂ ತಟ್ಟೀರಾಯಂದಿರ ಅಸಾಮಾನ್ಯ ಆಕೃತಿಯು ನನ್ನನ್ನು ಎಂದೂ ಆಕರ್ಷಿಸಿದ್ದಿಲ್ಲ; ಅದರ ಕುಣಿತವು ಎಂದೂ ಆಹ್ಲಾದಕರವೆನ್ನಿಸಿದ್ದಿಲ್ಲ. ಬಾಲ್ಯದ ಆ ದಿನಗಳಲ್ಲಿ ಅಪ್ಪಯ್ಯನು ನೀಡಿದ ಸಾಂತ್ವನದ ನಂತರವೂ ಕೋಟೇಶ್ವರದ ದೇವಸ್ಥಾನದ ಒಳಗೆ ಹೋಗುವಾಗ ನಾನು ಅಗತ್ಯಕ್ಕಿಂತ ಹೆಚ್ಚು ತಲೆತಗ್ಗಿಸಿಕೊಂಡೇ ಹೋಗುತ್ತಿದ್ದೆ. ಅದನ್ನು "ಅಕಾರಣ ಭಯ" ಎನ್ನಲೂಬಹುದು; "ಇಲ್ಲದುದನ್ನು ಇದ್ದಂತೆ ತೋರಿಸುವ ಕೃತ್ರಿಮಗಳಿಗೆ ಒಗ್ಗದಿರುವುದು" -  ಎನ್ನಲೂಬಹುದು. ಅನಂತರ ಸುಮಾರು ೩೫ ವರ್ಷಗಳ ನಂತರ ಅದೇ ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ನಾನು ಹರಿಕತೆ ಮಾಡಿದ್ದೆ. ಅಂದು ಕೂಡ ಅಮ್ಮನ ಕೈ ಹಿಡಿದುಕೊಂಡೇ ನಾನು ಕೋಟೇಶ್ವರದ ಕೋಟಿಲಿಂಗೇಶ್ವರನ ಸನ್ನಿಧಿಯನ್ನು ಪ್ರವೇಶಿಸಿದ್ದೆ. ಏಕೆಂದರೆ... ಆಗ - ಅಮ್ಮನಿಗೆ ನಡೆಯುವಾಗ ಕಷ್ಟವಾಗುತ್ತಿತ್ತು. ಆಗ ೭೫ ರ ಆಸುಪಾಸಿನಲ್ಲಿದ್ದ ನನ್ನ ಅಮ್ಮನನ್ನು ಆಧರಿಸುತ್ತ ಆಕೆಯನ್ನು ನಡೆಸಿಕೊಂಡು ಒಳಗೆ ಪ್ರವೇಶಿಸಿದ ಕೂಡಲೇ - ಅಂದು ನಾನು ಮೊದಲು ಹುಡುಕಿದ್ದು - ಆ ತಟ್ಟೀರಾಯರನ್ನು. ಆದರೆ ಅಂದಿನ ಹುಡುಕಾಟವು ನಿಶ್ಚಿತವಾಗಿಯೂ ಭೀತಿಯಿಂದಲ್ಲ; ಹೆದರಿಸಿದವರನ್ನು ಹಾಗೆಲ್ಲ ಮರೆಯಬಾರದು - ಎನ್ನುವ ಹುಡುಗಾಟದ ನೀತಿಯಿಂದ.

ಆದರೆ ಈಗ - ಕೋಟಿಲಿಂಗೇಶ್ವರ ದೇವಸ್ಥಾನವು ಮೊದಲಿನಂತಿಲ್ಲ. ಎಣ್ಣೆ ವಾಸನೆಯಿಲ್ಲ. ಸಂಪೂರ್ಣ ನವೀಕೃತಗೊಂಡಿದೆ. ಸಿಂಗಾರಗೊಂಡಿದೆ. ಅಂದಿಗಿಂತ ಸ್ವಚ್ಛವಾಗಿದೆ. ತಟ್ಟೀರಾಯಂದಿರ ಸ್ಥಾನಪಲ್ಲಟವಾಗಿದೆ. ಇಡೀ ದೇವಸ್ಥಾನದಲ್ಲಿ ಬೆಳಕಿದೆ. ಹರಿಕತೆಗೆಂದು ಹೋದಾಗ ಹಿಂದಿನದೇ ಗುಂಗಿನಲ್ಲಿ ಮುಳುಗಿ ಏಳುತ್ತ ಹೊಸ ಪರಿಸರವನ್ನು ವೀಕ್ಷಿಸಿದ್ದೆ.

ವಿದ್ಯುದ್ದೀಪದ ಬೆಳಕಿನಲ್ಲಿ ಈಶ್ವರನ ಗರ್ಭಗುಡಿಯನ್ನು ದರ್ಶಿಸಿದಾಗ - "ಹೊರಕಣ್ಣಿನಿಂದ ನಾವು ನೋಡಬಯಸುವ ದೇವರ ಸ್ಥಾವರಮೂರ್ತಿಯನ್ನು ಕಾಣುವುದಕ್ಕೆ - ಹೊರಗಿನ ಬೆಳಕು ಮತ್ತು ಇಂದ್ರಿಯಚಕ್ಷುವಿನ ಬೆಳಕು ಸಾಕಾಗುತ್ತದೆ! ಹಾಗಿದ್ದರೆ... ಇಷ್ಟು ಸುಲಭವೇ ದೇವರನ್ನು ಕಾಣುವುದು?!" ಎಂದು ಅನ್ನಿಸಿ - ಕೊಂಚ ಗಲಿಬಿಲಿಗೊಂಡಿದ್ದೆ. "ನಿಜವಾಗಿಯೂ ಶಿವನನ್ನು ಕಂಡೆಯಾ?" ಎಂದು ನನ್ನನ್ನೇ ಅಂದು ಕೇಳಿಕೊಂಡಿದ್ದೆ. ಎಲ್ಲೆಲ್ಲೋ ಹುಡುಕುತ್ತ ಯಾವ್ಯಾವುದೋ ಕಲ್ಲುಗಳು - ಮೂರ್ತಿಗಳನ್ನು ಕಂಡು, ಅವನ್ನು ಮುಟ್ಟಿ, ಎಣ್ಣೆ ನೀರು ಹೊಯ್ದು - "ಆಹಾ! ಪೂರ್ತಿ ಆಯಿತು; ಸಾಧಿಸಿಬಿಟ್ಟೆ" ಅಂದುಕೊಳ್ಳುವುದೂ ಒಂದು ಬಗೆಯ ಬಾಲನಾಟಕವೇ ಅಲ್ಲವೆ? ಅಲ್ಲಿಂದ ಒಂದಿಂಚೂ ಮುಂದೆ ಸರಿಯದೆ... ಇಡೀ ಜನ್ಮವನ್ನು ಇಂತಹ ಹೋಕುಬಾರದ ನಾಟಕ ಮಾಡುವುದರಲ್ಲಿಯೇ ಮುಗಿಸಿ ಬಿಡುತ್ತಿದ್ದೇವಲ್ಲವೆ?

ದೇವಸ್ಥಾನಗಳಲ್ಲಿ ಮಾತ್ರವೇ ದೈವಶಕ್ತಿ ಇರುತ್ತದೆ ಎಂಬುದು ಪೂರ್ಣ ಸತ್ಯವಲ್ಲ. ಮನುಷ್ಯರು ತಮ್ಮ ನಿತ್ಯದ ಜಂಜಾಟ, ಸಂಸಾರದ ಕೋಟಲೆಗಳಿಂದ ದೂರಬಂದು ಆಗಾಗ ಮನಃಶುದ್ಧೀಕರಿಸಿಕೊಂಡು ತಮ್ಮನ್ನು ಅಂತರ್ಯಾತ್ರೆಗೆ ಪ್ರಚೋದಿಸಿಕೊಳ್ಳುವುದೇ ದೇವಸ್ಥಾನ - ಪೂಜಾಸ್ಥಳಗಳ ಭೇಟಿಯ ನಿಜವಾದ ಉದ್ದೇಶ. ಹೀಗೆ ಅಂತರ್ಯಾತ್ರೆ ನಡೆಸಬೇಕಾದ ದೇವಸ್ಥಾನಗಳಲ್ಲಿ ಬಾಹ್ಯದತ್ತ ನಮ್ಮನ್ನು ಸೆಳೆಯುವ ಕಣ್ಣು ಕೋರೈಸುವಂತಹ ಬೆಳಕು, ಸದ್ದುಗದ್ದಲಗಳಿಗೆ ಸ್ಥಾನವಿರಬಾರದು. ಆದ್ದರಿಂದ ದೇವಸ್ಥಾನದ ಗರ್ಭಗುಡಿಯ ಒಳಗೆ ಎಣ್ಣೆ ದೀಪಗಳು, ಹಣತೆಯ ಬೆಳಕೇ ಉತ್ತಮ ಎಂಬುದರಲ್ಲಿ ಸಂಶಯವಿಲ್ಲ. ಹಣತೆಯ ಮಿತಬೆಳಕು ಎಂಬುದು ಏಕಾಗ್ರತೆಗೆ ಅನುಕೂಲ ಕಲ್ಪಿಸಿ, ನಮ್ಮನ್ನು ಅಂತರ್ಮುಖಿಯಾಗಿಸಿದರೆ - ವಿದ್ಯುದ್ದೀಪವು ಬಾಹ್ಯಕ್ಕೆ ಎಳೆಯುತ್ತದೆ. ಅದು ಅನಗತ್ಯವಾದುದಕ್ಕೆಲ್ಲ ಬೆಳಕು ಚೆಲ್ಲಿ ಮನಸ್ಸು ಚಂಚಲವಾಗುವಂತೆ ಮಾಡಿ, ಏಕಾಗ್ರತೆಯನ್ನು ಕಲಕುತ್ತದೆ. ಮನುಷ್ಯನಿಗೆ ತನ್ನ ಅಂತರಂಗದತ್ತ ಸರಿಯಲು ಪ್ರೇರೇಪಿಸುವ ಏಕಾಗ್ರ ವಾತಾವರಣವು ಯಾವುದೇ ದೇವಸ್ಥಾನದಲ್ಲಿರುವುದು ಅವಶ್ಯಕ. ಆದ್ದರಿಂದ... ಆಧುನಿಕ ಉಪಕರಣಗಳನ್ನು ಎಲ್ಲಿ ಎಷ್ಟು ಹೇಗೆ ಬಳಸಿಕೊಳ್ಳಬೇಕು ಎಂಬ ವಿವೇಚನೆಯನ್ನು ಹೊಂದುವುದೂ ಅವಶ್ಯಕ.

ಯಾವುದೇ ದೇವಸ್ಥಾನದಲ್ಲಿ ಮಹಾಮಂಗಳಾರತಿಯ ಸಮಯದಲ್ಲಿ ಮಾತ್ರ ಗಂಟೆ ಜಾಗಟೆಗಳ ಸೇವೆ ನಡೆಸಲು ಅವಕಾಶ ನೀಡಬೇಕು. ಹೀಗೆ ಮಾಡುವುದರಿಂದ ... ಭಗವಂತ ಭಾವದೊಂದಿಗೆ - ಶಾಂತ ಪರಿಸರವನ್ನು ಅರಸಿ ಬರುವ ಭಕ್ತರನ್ನೂ ಆಧರಿಸಿದಂತಾಗುತ್ತದೆ. ನನ್ನ ಹರಿಕಥಾ ತಿರುಗಾಟದ ಸಂದರ್ಭದಲ್ಲಿ ಗರ್ನಾಲ್, ಡೋಲು ಇತ್ಯಾದಿ ಶಬ್ದಕೋಲಾಹಲದ ಕರ್ಣಕಠೋರತೆಯಿಂದ ಹರಿಕತೆಯ ನಡುನಡುವೆ ನಾನೇ ಕುಮಟಿ ಬಿದ್ದದ್ದು ...ಕತೆಯು ನಡುನಡುವೆ ವ್ಯಥೆಯಾದದ್ದು ಒಂದೆರಡು ಬಾರಿಯಲ್ಲ. ಸಾಂಸ್ಕೃತಿಕ ಕಾರ್ಯಕ್ರಮವು ದೇವಸ್ಥಾನದಲ್ಲಿ ನಡೆಯುವುದಿದ್ದರೆ, ನಿತ್ಯದ ಮಂಗಳಾರತಿಯ ಹೊತ್ತಿನ ಮೊದಲು ಅಥವ ಅನಂತರ ಅವನ್ನು ಏರ್ಪಡಿಸಿದರೆ ದೇವರಿಗೂ ಸುಖ; ನಿಜವಾದ ಭಕ್ತರಿಗೂ ಕಲಾವಿದರಿಗೂ ಜೋಡಿ ನೆಮ್ಮದಿಯಿರುತ್ತದೆ. ಆದರೆ ಈಗ - ಬಹುತೇಕ ಸ್ಥಳಗಳಲ್ಲಿ ನಡೆಸುತ್ತಿರುವುದು ದೇವರನ್ನು ಓಡಿಸುವಂತಹ - ಬರೇ ಗದ್ದಲ.

ದೇವಸ್ಥಾನಗಳು ಎಲ್ಲರಿಗೂ ಮುಕ್ತ. ಇದು - ಚರ್ಚೆಯ ವಿಷಯ ಆಗಲೇಬಾರದು. ಶ್ರದ್ಧೆ, ನಂಬಿಕೆ ಇರುವ ಮನುಷ್ಯರು ತಮ್ಮ ಒಳಗನ್ನು ಆಗಾಗ ಶುದ್ಧೀಕರಿಸಿಕೊಳ್ಳಲು ದೇವಸ್ಥಾನಗಳಿಗೆ ಹೋಗುತ್ತಾರೆ; ತನ್ಮೂಲಕ ದೇವಸ್ಥಾನದಲ್ಲಿ ಸಿಗುವ ಬಾಹ್ಯ ಸ್ಫೂರ್ತಿಯ ನೆರವನ್ನು ಪಡೆಯುತ್ತಾರೆ. ಆದರೆ ಲಗಾಮಿಲ್ಲದ ಇಂದಿನ Tourist ಭಕ್ತರಿಗೆ - (ಮತ್ತು ಅಧಿಕಪ್ರಸಂಗದಿಂದಲೇ ಜೀವನ ನಿರ್ವಹಿಸುತ್ತಿರುವ ಪ್ರಚಾರಪ್ರಿಯ ಹೋರಾಟಗಾರರಿಗೆ) ದೇವಸ್ಥಾನಗಳು ಎಂದರೆ "ವಾರಾಂತ್ಯದ ರಜಾದಿನಗಳ ಮಜಾತಾಣ ; ತರಲೆ ವ್ಯಾಪಾರ ವ್ಯವಹಾರದ ಮಾರುಕಟ್ಟೆ"ಗಳಂತೆ ಆಗಿಹೋಗುತ್ತಿವೆ.

ಖಾಲಿಯಿರುವ ತಮ್ಮ ತಮ್ಮ SELF ನ್ನು - "Selfie ಅಹಂ"ನ್ನು ದೇವಸ್ಥಾನಗಳ ಒಳಗೂ ವಿಜೃಂಭಿಸಿಕೊಳ್ಳುತ್ತ ದೇವಸ್ಥಾನದ ಪರಿಸರದಲ್ಲಿ ಅಸಭ್ಯವಾಗಿ ಪ್ರದರ್ಶಿಸುವುದನ್ನು ನೋಡುವಾಗ ನನ್ನಂಥ ಕೆಲವು "ಹಿಂದುಳಿದವರಿಗೆ" ವಿಚಿತ್ರ ಎನ್ನಿಸುವುದಿದೆ. ಸ್ವಂತದಲ್ಲಿ ಪೂರ್ತಿ ಮುಳುಗಿದವರಿಗೆ ದೇವಸ್ಥಾನವೂ ಸಿನೆಮಾ ಟಾಕೀಸೂ ಒಂದೇ ಆಗಿ ಕಾಣುತ್ತಿರುವುದು ಇತ್ತೀಚೆಗೆ ಸಹಜವಾದರೂ ಶೋಚನೀಯ. "ದೇವಸ್ಥಾನಕ್ಕೆ ಹೋಗುವುದೇ ದೊಡ್ಡ ಸಾಧನೆ" ಎಂಬಂತಹ ಹೋರಾಟ, ಸ್ಪರ್ಧೆಗೆ ಬಿದ್ದಿರುವವರ ಮಧ್ಯದಲ್ಲಿ, ನಿಜವಾದ ಶ್ರದ್ಧೆಯಿರುವವರು ಈಗೀಗ ದೇವಸ್ಥಾನಗಳಿಂದ ದೂರದೂರ ಓಡುವಂತಾಗಿದೆ; ಅಂಥವರಿಗೆ - ತಮ್ಮ ತಮ್ಮ "ಮನೆಯೇ ಮಂತ್ರಾಲಯ" ಅಂದುಕೊಳ್ಳುವಂತಾಗಿದೆ. ಗದ್ದಲ ಶಬ್ದಮಾಲಿನ್ಯದ ದೇವಾಲಯಗಳಿಗಿಂತ ಶಾಂತ ಪರಿಸರದ ಮನೆಯೇ ಶ್ರೇಷ್ಠ. ಈಗಲೂ ನಾನು ದೇವಸ್ಥಾನಗಳ ಭೇಟಿಯನ್ನು ಇಷ್ಟಪಡುತ್ತೇನೆ. ಆದರೆ ಜನಸಂತೆಯಿರುವ ದೇವಸ್ಥಾನಗಳಿಗೆ ನಾನು ಹೋಗುವುದಿಲ್ಲ.

ದೈವ ಸಾಕ್ಷಾತ್ಕಾರಕ್ಕಾಗಿ ಈಗ ಅತ್ತು ಹೊರಳಾಡುವವರು ಒಬ್ಬರೂ ಕಾಣುವುದಿಲ್ಲ. ಬೇಕಿದ್ದರೆ ದೇವರಿಗೇ ಅಷ್ಟೋ ಇಷ್ಟೋ ಕೊಟ್ಟು "ಸುಮ್ಮನಾಗಿಸಿಬಿಟ್ಟೆ" ಅಂದುಕೊಳ್ಳುವ ಕಳ್ಳ ಕೊರಮರು - ಒಂದಷ್ಟು ದೊಡ್ಡದೊಡ್ಡ ದೇವಸ್ಥಾನಗಳ ಆಯಕಟ್ಟಿನ ಜಾಗಗಳನ್ನು ಹಿಡಿದು ಈಗ ಕೂತುಬಿಟ್ಟಿದ್ದಾರೆ. ಅಲ್ಲೆಲ್ಲ ದೇವರಿರಲಿ ಬಿಡಲಿ ಇಂತಹ ಉಸ್ತುವಾರಿ ನಟಭಯಂಕರರಂತೂ ಹಾಜರಿರುತ್ತಾರೆ; ದೇವರಿಗೆ STAR VALUE ತಂದುಕೊಡಲು ಸುಸ್ತಾಗುವಷ್ಟು ಒದ್ದಾಡುತ್ತಿರುತ್ತಾರೆ. "ಅಂತೆಗೆ ತಕ್ಕ ಬೊಂತೆ" ಎಂಬಂತಹ ಭಕ್ತರ ಬೆಂಬಲದಿಂದ ಕೆಲವು ದೇವಸ್ಥಾನಗಳಲ್ಲಿ ಈಗೀಗ ದೇವರನ್ನೇ ಮಾರಾಟಕ್ಕಿಟ್ಟಂತೆ ಕಾಣುವುದೂ ಇದೆ. ಒಬ್ಬರನ್ನೊಬ್ಬರು ನೂಕಿಕೊಂಡು ಒಳಗೆ ಪ್ರವೇಶಿಸುವ ಭಕ್ತರೆಂದುಕೊಂಡವರ ಚಲನವಲನವನ್ನು ದೇವಸ್ಥಾನದ ಮೂಲೆಯಲ್ಲಿ ನಿಂತು ಅವಲೋಕಿಸಿದರೆ - ಅಲ್ಲಿ ಏನು ನಡೆಯುತ್ತಿದೆ ಎಂಬುದೇ ತಿಳಿಯದೆ ಗಲಿಬಿಲಿಯಾಗುತ್ತದೆ.

ಇಷ್ಟೆಲ್ಲ ಗಂಡಾಗುಂಡಿಯ ಜೊತೆಜೊತೆಗೆ ಈಗ ಹೊಸ ಭಕ್ತಸೇನೆಯು ಹುಟ್ಟಿಕೊಂಡಿದೆ. ಇವರ ಸ್ಟೈಲೇ ಬೇರೆ. "ನಡೆಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ" ಎನ್ನುವ ವೀರಕೇಸರಿಗಳಿವರು. ನಾವೀನ್ಯದ ಮುಖ ಹೊತ್ತು ಕಾನೂನು ಹೋರಾಟದ ಮುಸುಕಿನಲ್ಲಿ - ಕೆಮರಾ ಕಣ್ಣಿಗೆ ಬೀಳುವಂತೆ ದೇವರ ಬಿಂಬಗಳನ್ನು ಅಪ್ಪಿಕೊಳ್ಳುವ ಇಂಥ ಪ್ರಾಯೋಜಿತ ಭಕ್ತರ ಸಂಖ್ಯೆಯು ಬಲಿಯುತ್ತಿರುವುದು - ಇಂದಿನ ಹೊಸ ಸಿನೆಮಾ ಶೈಲಿ! ಯಾವುದೋ ಗುಪ್ತ ಕಾರಸ್ಥಾನದ ಹೊರರೂಪದಂತೆ ಕಾಣುವ ಇಂತಹ ಚಟುವಟಿಕೆಗಳನ್ನೆಲ್ಲ ಅಲಕ್ಷಿಸುವುದೇ ಉತ್ತಮ.

ಈ ಜಗತ್ತಿನಲ್ಲಿ ಯಾವತ್ತೂ ದಾರಿತಪ್ಪಿಸಬಲ್ಲ ಬುದ್ಧಿವಂತರೆಂದು ಅಂದುಕೊಂಡಿರುವವರು ಯೋಜಿಸುವ ನಾಟಕವು ದಡ್ಡರ ನಾಟಕಕ್ಕಿಂತ ನಮ್ಮನ್ನು ಹೆಚ್ಚು ಗಲಿಬಿಲಿಗೊಳಿಸುವುದು ಸಹಜ. ಆದರೆ ಯಾವುದೇ ಗುಡಿಯಲ್ಲಿರುವ ದೇವರ ಮೂರ್ತಿಯು - ಭಕ್ತರ ಭಾವನೆಗೆ ಮಾತ್ರ ಸಂಬಂಧಿಸಿದ ವಿಷಯ - ಎಂಬುದು ಮೊದಲು ಅರ್ಥವಾಗಬೇಕಾದ ಸಂಗತಿ.

ಶುದ್ಧ ಭಾವವೇ ದೇವರು. ಯಾವುದೇ ಸ್ಥಳೀಯ ಕಾನೂನುಗಳು ಮನುಷ್ಯರ ಭಾವ ವಲಯವನ್ನು ಅತಿಕ್ರಮಿಸತೊಡಗಿದರೆ ಸಾಮಾಜಿಕ ಸಾಮರಸ್ಯವೆಂಬುದು ಕ್ರಮೇಣ ಕ್ಷೀಣಿಸುತ್ತ ಬರಬಹುದು ಎಂಬ ಎಚ್ಚರವಿರಬೇಕು. "ಮೂರ್ತಿ ಪ್ರತಿಮೆಗಳೇ ದೇವರಲ್ಲ" ಎಂಬುದು ಅರ್ಥವಾದವರಿಗೆ ಇಂತಹ ಬಾಲಪಾಠದ ಅಗತ್ಯವೇ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ನೋಡಿದರೆ ಇಂದು ನಡೆಯುತ್ತಿರುವ ಕೆಲವು ಹುಚ್ಚು ಹೋರಾಟಗಳು - "ದೇವರಿಗಾಗಿ ನಡೆಸುವ ಹೋರಾಟಗಳೇ ಅಲ್ಲ; ಯಾವುದೇ ಶ್ರದ್ಧೆ ಆಸಕ್ತಿಗಳೂ ಇವುಗಳಿಗೆ ಕಾರಣವಲ್ಲ. ಅನೂಚಾನವಾಗಿ ಬಂದಂತಹ ನಿಯಮಗಳನ್ನು ಮುರಿದು ಚೆಂದ ನೋಡುವ "ವಿಘ್ನಸಂತೋಷಿ" ಗುಂಪಿನ ಕಾರ್ಯಶೈಲಿ ಇದು. ಮಾಡಲು ಬೇರೆ ಕೆಲಸವೇ ಇಲ್ಲದೆ ಹೋರಾಟವನ್ನೇ ತಮ್ಮ ಉದ್ಯೋಗವಾಗಿಸಿಕೊಂಡು ದಿನಕ್ಕೊಂದು ಕಡೆ ಟೆಂಟ್ ಹಾಕುವ ಇಂತಹ ಒಂದು ವರ್ಗವು ಇತ್ತೀಚೆಗೆ ಹೆಚ್ಚು ಚಟುವಟಿಕೆಯಿಂದಿದೆ. ಇವೆಲ್ಲವೂ ಸಾಮಾಜಿಕ ಕ್ಷೋಭೆಯನ್ನು ಹೆಚ್ಚಿಸುವ ದುರುದ್ದೇಶವುಳ್ಳದ್ದು" ಎಂಬುದು ಬರಿಕಣ್ಣಿಗೇ ಸ್ಪಷ್ಟವಾಗುತ್ತದೆ.

ದೇವರು ಎಂಬ ವಸ್ತುವು ಇಡಿಯಾಗಿಯಾಗಲೀ ಬಿಡಿಯಾಗಿಯಾಗಲೀ - ಯಾವುದೇ ದೇವಸ್ಥಾನಗಳಲ್ಲಿ ಸಿಕ್ಕೀತೆ? ಭಕ್ತಿಯಾಗಲೀ ಪ್ರೀತಿಯಾಗಲೀ - ಯಾವುದೇ ಶ್ರದ್ಧೆಯ ವಸ್ತುವನ್ನಾಗಲೀ ಯಾರೂ ಹಕ್ಕೊತ್ತಾಯದಿಂದ ಪಡೆಯಲಾಗುವುದಿಲ್ಲ. ಭಕ್ತಿಶ್ರದ್ಧೆಗಳಿಲ್ಲದೆ ಕೇವಲ ಪೂಜಾ ಸ್ಥಳಗಳ ಶಾಂತಿಯನ್ನು ಕದಡುವ ಒಂದೇ ಉದ್ದೇಶದಿಂದ ನಡೆಸುವ "ಕಾನೂನಿನ ಹೊರಳು ಉರುಳಾಟ"ದ ಯಾವುದೇ ಕೃತ್ರಿಮದಿಂದಲೂ ಏನೂ ಸಾಧನೆಯಾಗುವುದಿಲ್ಲ. ಯಾವುದೇ ಸದ್ಭಾವವಿಲ್ಲದೆ ಕಂಡದ್ದನ್ನೆಲ್ಲ ಮುಟ್ಟಿ ಮೂಸಿ ನೋಡುತ್ತ - "ನಾನು ಮುಟ್ಟಿದೆ; ನಾನು ಮೂಸಿದೆ..." ಎನ್ನುವ ವಿಪರೀತ ಬುದ್ಧಿಯ ಛದ್ಮವೇಷಗಳಿಗೆ ದೇವತಾಭಾವದ ಅರಿವೇ ಇಲ್ಲ ಎನ್ನಬಹುದು.

ಆದರೆ ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರನ ಬೃಹತ್ ದೇವಸ್ಥಾನದಲ್ಲಿ ಈಗಲೂ ಯಾವುದೇ ನೂಕುನುಗ್ಗಲಿಲ್ಲ. ಇತ್ತೀಚೆಗೆ ಹೆಚ್ಚುತ್ತಿರುವ "ದೇವಸ್ಥಾನಗಳ ಪ್ರವಾಸೋದ್ಯಮ" ದಿಂದಾಗಿ ದೇವರನ್ನು ಮಾರಾಟಕ್ಕಿಟ್ಟಂತಾಗಿ, ಯಾವ ದೇವಸ್ಥಾನದಲ್ಲಿಯೂ ಮೊದಲಿದ್ದಂತೆ ಧ್ಯಾನಕ್ಕೆ ಯೋಗ್ಯವಾದ - ಏಕಾಗ್ರತೆಗೆ ಪೂರಕವಾದ ಪರಿಸರವಿಲ್ಲದಿದ್ದರೂ ಕೋಟೇಶ್ವರ ದೇವಸ್ಥಾನದ ವೈಶಾಲ್ಯದಿಂದಾಗಿ ಈಗಲೂ ಕೋಟಿಲಿಂಗೇಶ್ವರನ ಸನ್ನಿಧಿಯಲ್ಲಿ ಏಕಾಂತದ ಮೂಲೆಗಳು ಸಿಗುತ್ತವೆ; ಅಲ್ಲಿ - "ಮನಸ್ಸಿದ್ದರೆ ಮಹಾದೇವ"ನನ್ನು ಆಘ್ರಾಣಿಸಬಹುದು; ಮನಸ್ಸಿನ ಬಾಹ್ಯ ಓಟಕ್ಕೆ ಕ್ಷಣಕಾಲವಾದರೂ ಕಡಿವಾಣ ಬಿಗಿಯಬಹುದು. ಯಶಸ್ಸಿಗೆ ಒಳದಾರಿ ಹುಡುಕುವ "ಓರಾಟದ" ಜನರ ಗೃಧ್ರ ದೃಷ್ಟಿಗೆ ಬೀಳುವ ವರೆಗೂ ಹೀಗೇ ಉಳಿದೀತು ಎಂದು ಆಶಿಸಬಹುದು!

ಶ್ರೀ ಕೋಟಿಲಿಂಗೇಶ್ವರ ದೇವಳದಲ್ಲಿ ನಡೆಸಲಾಗುವ ಚೆಂದದ "ರಂಗ ಪೂಜೆ"ಯನ್ನು ನೋಡಿ ರೋಮಾಂಚನಗೊಳ್ಳಲು, ದೃಶ್ಯಭಾವವನ್ನು ಮನಸ್ಸಿನಲ್ಲಿ ತುಂಬಿಕೊಳ್ಳಲು ಶ್ರದ್ಧೆಯುಳ್ಳವರಿಗೆ ಮಾತ್ರ ಸಾಧ್ಯ. ಕೋಟಿಲಿಂಗೇಶ್ವರ ದೇವಸ್ಥಾನದ ಹೊರಸುತ್ತು, ಒಳಸುತ್ತಿನಲ್ಲಿ ಪ್ರದಕ್ಷಿಣೆ ಮಾಡಿ ಅಲ್ಲಿಂದ ಹೊರಬಂದರೆ ದೇವಸ್ಥಾನದ ಎಡಬದಿಯಲ್ಲಿ ಚೌಕಾಕಾರದ ವಿಶಾಲವಾದ ಸ್ವಚ್ಛ ಕೆರೆ ಇದೆ. ಮಳೆಗಾಲದಲ್ಲಿ ಸಂಪೂರ್ಣ ತುಂಬಿಕೊಂಡು ಉಕ್ಕಿ ಹೊರಗೆ ಹರಿಯುತ್ತಿದ್ದ ಆ "ತುಂಬಿದ ಕೆರೆ"ಯನ್ನು ನೋಡುತ್ತ ನಾನು ಬಾಲ್ಯದಲ್ಲಿ ಅಪ್ರತಿಭಳಾದದ್ದು ಅದೆಷ್ಟೋ ಬಾರಿ.
 

ನನ್ನ ಬಾಲ್ಯಕಾಲದಲ್ಲಿ ಆ ಕೆರೆಯಲ್ಲಿ ಅಸಂಖ್ಯ ಮೀನುಗಳಿದ್ದವು. ಆದರೆ ಇತ್ತೀಚೆಗೆ ನೋಡಿದಾಗ ಕಾಣಿಸಲಿಲ್ಲ. ಬಹುಶಃ ಮಧ್ಯಾಹ್ನದ ಸೆಕೆಯಿಂದ ಪಾರಾಗಲು ಆಳದಲ್ಲೆಲ್ಲಾದರೂ ಇರಬಹುದು ಅಂದುಕೊಂಡು ಬಂದಿದ್ದೆ. ದೇವಸ್ಥಾನದ ಆ ಕೆರೆಯಲ್ಲಿ ನಡೆಯುತ್ತಿದ್ದ ಉತ್ಸವ ಮೂರ್ತಿಯ "ತೆಪ್ಪೋತ್ಸವ "ವೂ ನಯನಮನೋಹರ ದೃಶ್ಯ. ಎಲ್ಲ ದೇವಸ್ಥಾನಗಳಂತೆ ಈ ದೇವಸ್ಥಾನಕ್ಕೂ ಪೌರಾಣಿಕ ಕತೆಗಳ ದೊಡ್ಡ ನಂಟುಗಂಟಿದೆ; ಸ್ಥಳಪುರಾಣವಿದೆ. ಶ್ರದ್ಧಾಳುಗಳ ಭಾವೋದ್ದೀಪನಗೊಳಿಸುವ ಅನೇಕ ದಂತಕತೆಗಳಿವೆ.

 
ದೇವಸ್ಥಾನ, ಕೆರೆ, ಓಕುಳಿ ಹೊಂಡಗಳ ಹಿಂದೆ ಹಿಂದೆ ಸರಿಯುತ್ತಿದ್ದರೆ ಮಾನವ ವಿಕಾಸದ ಅನೇಕ ಮಜಲುಗಳು ಕಣ್ಣಿಗೆ ಕಟ್ಟುತ್ತವೆ. ದೇವಸ್ಥಾನದ ಸುತ್ತಲೂ ಮತ್ತು ದೇವಸ್ಥಾನದ ಕೆರೆಯ ಬದಿಯಲ್ಲಿ ಈಗಲೂ ಅನೇಕ ಕುಟುಂಬಗಳು ಮನೆ ಮಾಡಿಕೊಂಡಿವೆ; ಬದುಕುಗಳು ಅರಳುತ್ತ ಹೊರಳುತ್ತ ಬಂದಿವೆ. ದೇವಸ್ಥಾನದ ಎದುರಿನಲ್ಲಿ ಉದ್ದದ ರಥಬೀದಿಯಿದೆ. ಈ ರಥಬೀದಿಯ ವಿಸ್ತ್ರತ ಭಾಗವೇ ಕೋಟೇಶ್ವರವಾಗಿ ಬೆಳೆದು ನಿಂತಿದೆ. ಕೋಟೇಶ್ವರದ ಸುತ್ತಲಿನ ಲಕ್ಷಾಂತರ ಜನರು ಕೋಟಿಲಿಂಗೇಶನ ಭದ್ರ ಆಶ್ರಯದಲ್ಲಿದ್ದಾರೆ. ಉದ್ಯೋಗ ನಿಮಿತ್ತ ಪರವೂರಿನಲ್ಲಿರುವ ಊರಮಂದಿಯೂ ಪ್ರತೀ ವರ್ಷ ನಡೆಯುವ ಕೊಡಿಹಬ್ಬಕ್ಕೆ ಬಂದು ಶಿವದರ್ಶನ ಪಡೆದು, ರಥ ಎಳೆಯುತ್ತಾರೆ. ತಮ್ಮ ತಮ್ಮ ಬದುಕಿನ ರಥಯಾತ್ರೆಯನ್ನು ಸುಗಮಗೊಳಿಸುವಂತೆ ಪ್ರಾರ್ಥನೆಯನ್ನೂ ಸಲ್ಲಿಸುತ್ತಾರೆ. ಆಗ ಯಾವುದೇ ಜಾತಿಮತಭೇದವಿಲ್ಲದೆ - ಇಡೀ ಕೊಟೇಶ್ವರವು ಹಬ್ಬದ ಸಂಭ್ರಮದಲ್ಲಿ ಮುಳುಗಿ ಏಳುತ್ತದೆ. ಕೋಟೇಶ್ವರ ಎಂಬ ಇಡೀ ಊರೇ ಶಿವಮಯವಾಗುವ ಸಂಭ್ರಮದಲ್ಲಿ ನಲಿಯುತ್ತದೆ.

ವರ್ಷಕ್ಕೊಮ್ಮೆ ಕೊಡಿಹಬ್ಬಕ್ಕೆಂದು ಬಂದ ಅತಿಥಿ ಬಂಧುಗಳನ್ನು ಊರ ಸ್ಥಳೀಯರು ಮನೆಗೆ ಕರೆದು ಊಟ ಉಪಚಾರದಿಂದ ಆದರಿಸುತ್ತಾರೆ. ಹಬ್ಬದ ನೆವನದಲ್ಲಿ ಒಟ್ಟಿಗೆ ಕೂತು ಪರಸ್ಪರ ಸುಖ ದುಃಖ ಹಂಚಿಕೊಂಡು ಹಗುರಾಗುತ್ತಾರೆ. ಇಂತಹ ಹಬ್ಬಗಳನ್ನು ಮಕ್ಕಳು ಸವಿಯುವ ಪರಿಯೇ ಬೇರೆ. ಮನೆಯ ಹೆಂಗಸರಿಗೆ ಜಾತ್ರೆಯ ಸಂದರ್ಭ ಎಂದರೆ... ಅದು - ಕೆಲಸದ ಹೊರೆಯನ್ನು ಸ್ವಲ್ಪ ಹೆಚ್ಚಿಸುವ ಹಬ್ಬವಾದರೆ, ಮಕ್ಕಳಿಗೆ ನವಿರೆಬ್ಬಿಸುವ ಆಟ ತಿರುಗಾಟದ ಹಬ್ಬ. ಕೋಟೇಶ್ವರದ ಕೊಡಿ ಹಬ್ಬದಲ್ಲಿ - ಕೊಡಿ ಅಂದರೆ ದಪ್ಪ ದಪ್ಪದ ಕಬ್ಬಿನ ವ್ಯಾಪಾರವು ಜೋರಾಗಿ ನಡೆಯುತ್ತದೆ. ಜಾತ್ರೆಗೆ ಹೋಗಿ ಹಿಂದಿರುಗುವಾಗ ಕಬ್ಬನ್ನು ಕೊಂಡುತಂದು ಅದನ್ನು ಹಲ್ಲಿನಿಂದಲೇ ಸಿಪ್ಪೆ ಸುಲಿದು ತಿನ್ನುತ್ತಿದ್ದ ನನ್ನ ಬಾಲ್ಯದ ದಿನಗಳನ್ನು ನೆನಪಿಸಿಕೊಂಡರೆ - ಈಗ ಆಶ್ಚರ್ಯವೆನ್ನಿಸುತ್ತದೆ. ಒಂದು ಇಡೀ ಕಬ್ಬನ್ನು ಜಗಿದು ಅದರ ರಸ ನುಂಗಿ, ಜೊಗಟಿಯನ್ನು ಉಗಿದು ಮುಗಿಸುವಾಗ ಬಾಯಿಯ ಒಳಗೆ, ತುಟಿಯ ಎರಡೂ ಬದಿಗಳಲ್ಲಿ ತರಚಿದಂತೆ ಗಾಯವಾಗಿರುತ್ತಿತ್ತು! ಆದರೆ ಅವೆಲ್ಲವೂ ಆಗ - ದೊಡ್ಡ ಚಿಂತೆಯ ಸಂಗತಿ ಆಗುತ್ತಿರಲೇ ಇಲ್ಲ. ಕಬ್ಬಿನ ರಸವನ್ನು ನುಂಗುವ ಅವಸರದಲ್ಲಿ ರಸದ ದಾರಿತಪ್ಪಿ ಎತ್ತೆತ್ತಲೋ ನುಗ್ಗಿದಾಗ ಕೆಮ್ಮುತ್ತ ತೇಲುಗಣ್ಣು ಮೇಲುಗಣ್ಣಾಗುವುದೂ ಇತ್ತು. ಯಾರು ಹೆಚ್ಚು ಕಬ್ಬಿನ ಗಿಣ್ಣನ್ನು ಜಗಿದು ಉಗಿಯುತ್ತಾರೋ ಅಂತಹ "ಗಟ್ಟಿ ದಾಂತಿ"ಗಳು ಜಯಶಾಲಿಗಳಾಗುತ್ತಿದ್ದ ಮಕ್ಕಳ ಆಟವು ಜಾತ್ರೆಯ ದಿನಗಳಲ್ಲಿ ಸಿಹಿಯಾದ ಖುಶಿ ಕೊಡುತ್ತಿದ್ದವು. ನಮ್ಮ ಬಾಲ್ಯದ ಸಾಹಸ ಕ್ರೀಡೆಗಳು ಇಂಥವೇ ಆಗಿದ್ದವು. ಊರಿನ ದೇವಸ್ಥಾನಗಳು - ಹೀಗೆ ಎಲ್ಲ ವಯಸ್ಸಿನ ಬದುಕುಗಳನ್ನೂ ಆಕರ್ಷಿಸುತ್ತ - ಬದುಕನ್ನು ಕಟ್ಟಿ ನಿಲ್ಲಿಸುತ್ತಿದ್ದವು.

ಆಗಲೂ ಜಾತಿ ಇತ್ತು; ಭಾಷೆಗಳಿದ್ದವು; ವಿಭಿನ್ನ ವೈಚಾರಿಕತೆಯೂ ಇತ್ತು. ಆದರೆ ಇವುಗಳಿಗೆ ಹೊರತಾಗಿ ಅಂದಿನ ಸಮಾಜದಲ್ಲಿ ಪರಸ್ಪರ ಭಾವ ಸಂಬಂಧವಿತ್ತು. ಭಾವ ಅವಲಂಬನೆಯೂ ಗಟ್ಟಿಯಾಗಿತ್ತು. ಶ್ರೇಷ್ಠವಾದುದನ್ನು ಶ್ರೇಷ್ಠವೆಂದು ಒಪ್ಪಿಕೊಳ್ಳುವ ಸಜ್ಜನಿಕೆಯುಳ್ಳವರು ಬಹುಸಂಖ್ಯೆಯಲ್ಲಿದ್ದರು. ಪಿತೂರಿ, ಕುತಂತ್ರದ ರಾಜಕೀಯಕ್ಕೆ ಸಮಾಜದಲ್ಲಾಗಲೀ ಪತ್ರಿಕೆಗಳಲ್ಲಾಗಲೀ ಬೆಲೆ ಸಿಗುತ್ತಿರಲಿಲ್ಲ. ಯಾವುದೇ ಮನೆಗೆ ಬೆಂಕಿ ಹೊತ್ತಿ ಉರಿದರೆ ಜನರು ತಾವಾಗಿಯೇ ಸಹಾಯಕ್ಕೆ ಕೈಚಾಚುತ್ತಿದ್ದರು. ಆಗ ಮಾತ್ರ - ಅದು ಸುದ್ದಿಯೂ ಆಗುತ್ತಿತ್ತು. ಆದರೆ ಇಂದಿನಂತೆ - ಮನೆಗೆ ತಾವೇ ಬೆಂಕಿ ಹೊತ್ತಿಸಿ, ಅನಂತರ ಸಹಾಯದ ವೇಷ - ಸುದ್ದಿಯ ಆವೇಶ.... ಇವೆಲ್ಲವೂ ಇತ್ತೀಚಿನ ತೋರಿಕೆಯ "ಭಯಂಕರ ವಿಕಾಸ ವಿಕಾರ ಪರ್ವ".  

ಭಾವಲೊಳಲೊಟ್ಟೆ ಅಂದರೆ ಇದೇ. ಮನುಷ್ಯರು ದೀರ್ಘ ಕಾಲದ ಪ್ರಯತ್ನದಿಂದ ಬೆಳೆಸಿಕೊಂಡು ಬಂದ ಮೃದು ಭಾವ ವಲಯವು ಸೊರಗಿದರೆ ಅಥವ ಸಹಜ ಭಾವವು ಸೊರಗುವಂತೆ ಮಾಡಿಕೊಂಡರೆ - ವಿಶ್ವಾಸದ ಬುಡವೇ ಕುಸಿದು, ದುಷ್ಟ ಉಪದ್ರವಕಾರೀ ಸಮಾಜವು ತಲೆ ಎತ್ತುವುದರಲ್ಲಿ ಸಂದೇಹಬೇಡ. ಇಂದು ನಮ್ಮನ್ನು ಕಾಡುತ್ತಿರುವ ಸಮಸ್ಯೆಯೇ - ಹಕ್ಕು ಸ್ಥಾಪಿಸಿ ರಕ್ತ ಕುಡಿಯುವ ತವಕದ - ನಮ್ಮೊಳಗಿನ ಲಾಭ ಕೇಂದ್ರಿತ - ರಕ್ಕಸ ತಟ್ಟೀರಾಯಭಾವ. ಇಂತಹ ಮನೋಸ್ಥಿತಿಗೆ - ಕೆಟ್ಟು ಹೋದ, ಕೆಟ್ಟ ಬೆಳಸಿನ ಬಾಲ್ಯಕಾಲವೇ ಮುಖ್ಯ ಕಾರಣ. ಇದಕ್ಕೂ ಪರಿಹಾರವಿದೆ. ಸದ್ಭಾವದ ತಳಹದಿಯಿಂದಲೇ ಸಮರಸಭಾವವು ಅರಳಿದರೆ ಮಾತ್ರ ಇಂತಹ ಗೊಂದಲಗಳು ತಗ್ಗಬಹುದು. ಅದಕ್ಕಾಗಿ ಬಾಲ್ಯಕಾಲವನ್ನು ನಾವು ಮುಚ್ಚಟೆಯಿಂದ ಪೋಷಿಸಬೇಕಾಗಿದೆ; ಪ್ರತೀ ಬಾಲ್ಯವೂ ಸುಂದರವಾಗಿ ಅರಳುವತ್ತ ಗಮನಿಸಬೇಕಾಗಿದೆ. "ನಮ್ಮ ಜತೆಯಲ್ಲಿ ಉಸಿರಾಡುವ ಪ್ರತಿಯೊಂದು ಬಾಲ್ಯವೂ ಭಾವಪುಷ್ಟಿಯಿಂದ ಕೂಡಿ ಸ್ವಸ್ಥವಾಗಿದ್ದರೆ ಸ್ವಂತ ಮತ್ತು ಸುತ್ತಲಿನ ಬದುಕುಗಳೂ ಸ್ವಸ್ಥವಾಗಿರಬಲ್ಲದು" ಎಂಬುದನ್ನು ಪ್ರಾಯೋಗಿಕವಾಗಿ ಸಿದ್ಧಪಡಿಸಲು ಪ್ರತಿಯೊಂದೂ ಮನಸ್ಸು ತೊಡಗಿಕೊಂಡರೆ - ಅಸಾಧ್ಯವೆಂಬುದು ಇಲ್ಲವೇ ಇಲ್ಲ.
                                                              *****-----*****


Saturday, April 2, 2016

ಉಪನಿಷದುವಾಚ

ಸನಾತನ ಭಾರತೀಯ ಬದುಕುಗಳು ಅಂತರಂಗದಲ್ಲಿ ಅರಳಿ ವಿಕಾಸಗೊಂಡುದರಿಂದ ಭಾರತೀಯ ದೃಷ್ಟಿ ಚಿಂತನೆಗಳೂ ಅಂತರಂಗ ಕೇಂದ್ರಿತವಾಗಿವೆ. ಭೌತ ಜಗತ್ತನ್ನು ಎಷ್ಟೆಷ್ಟು ಹೊರಗಿನಿಂದ ಕಂಡು ಭ್ರಾಂತಿಗೊಂಡರೂ ಭಾರತೀಯ ಮನಸ್ಸುಗಳು ಅಂತರ್ಮುಖಿಯಾಗಿಯೇ ಇರುವುದು ಈ ನೆಲದ ಸಹಜ ಗುಣ; ಕಾಣುವ ಸತ್ಯದ ಮೂಲಕ ಕಾಣದ ಸತ್ಯದ ಹುಡುಕಾಟ, ಒಳದರ್ಶನಗಳಿಗಾಗಿ ತುಡಿಯುತ್ತಿರುವುದೂ ಭಾರತೀಯ ಮನಸ್ಸುಗಳ ಸಹಜ ಶೈಲಿ. ಅತಿಯಾಗಿ ಆಧುನಿಕತೆಯತ್ತ ಆಕರ್ಷಿತಗೊಂಡು ಸಾಂತ್ವನಕ್ಕಾಗಿ ಹಾತೊರೆಯುತ್ತ ದಿಕ್ಕುದೆಸೆಗಾಗಿ ತೊಳಲುತ್ತಿರುವ ಇಂದಿನ ಭಾರತೀಯ ಬದುಕುಗಳೂ ಇದಕ್ಕೆ ಹೊರತಾಗಿಲ್ಲ.

ಇಂದಿನ "ಆಧುನಿಕ ಜಗತ್ತು" ಎಂಬುದು ಸ್ವನಿಷ್ಠ, ವಸ್ತುನಿಷ್ಠವೆನ್ನುವ ಕತ್ತಲಿನ ಅರೆದಾರಿಯಲ್ಲಿ ನಿಂತುಬಿಡುತ್ತಿದೆ; ತಮ್ಮ ಸ್ವಂತ ಶಕ್ತಿಯ ಅರಿವಿಲ್ಲದೆ ಬಾಹ್ಯ ಚಿತ್ರಗಳನ್ನೇ ನೆಚ್ಚಿ ಅರೆ ಎಚ್ಚರದಲ್ಲಿ ತೊನೆಯುತ್ತಿವೆ. ಅದ್ದರಿಂದಲೇ ಎಲ್ಲೆಲ್ಲೂ ಅತೃಪ್ತಿಯ ಆತಂಕ, ಉದ್ವೇಗ, ನಿರಾಶೆ, ಉತ್ತರ ಕಾಣದ ಪ್ರಶ್ನೆಗಳು. ಅಂತರಂಗದ ಆಧ್ಯಾತ್ಮಿಕ ಅಂಧತೆಯನ್ನು ನೀಗಿಸಿಕೊಂಡು ತನ್ನೊಳಗೆ ಅಂತರ್ಗತವಾಗಿರುವ ಶಕ್ತಿಯನ್ನು ಪ್ರತಿಯೊಬ್ಬರೂ ಅವರವರೇ ಕಾಣುವಂತಾದಾಗ ಮಾತ್ರ ಕ್ರಿಯಾಶೀಲ, ನಿರ್ಭಯ, ಸಂತೃಪ್ತ  ಸಮಾಜವು ವಿಕಸಿತಗೊಳ್ಳುತ್ತದೆ. ಆದ್ದರಿಂದ ತಳಮಳದ ಚೆಂಡಾಟದಲ್ಲಿ ಮುಳುಗಿರುವ ಇಂದಿನ ಪ್ರತಿಯೊಂದು ಮಾನವ ಜೀವಿಯೂ ತನ್ನೊಳಗಿನ ಆಂತರ್ಯವನ್ನು ಕಟ್ಟಿ, ತಟ್ಟಿ ಎಚ್ಚರಿಸಿ, ತನ್ನೊಳಗಿನ ಆಂತರಂಗಿಕ ಶಕ್ತಿಸ್ರೋತದ ಶುದ್ಧ - ಸಹಜ ಸಂವಹನ ನಡೆಸಲು ಪ್ರಯತ್ನಿಸಬೇಕಾದ ಅಗತ್ಯವಿದೆ.

ಮನುಷ್ಯನೇ ಒಂದು ದೊಡ್ಡ ರಹಸ್ಯ. ಮನುಷ್ಯನಿಗೆ "ತಾನು ಏನು?" ಎಂಬುದು ಅರ್ಥವಾದಾಗ, ಹಂತ ಹಂತವಾಗಿ ವಿಶ್ವತೋಮುಖವೂ ಅನುಭವಕ್ಕೆ ದಕ್ಕುತ್ತದೆ. ಅಂತರಂಗದಲ್ಲಿ ತಾನೇ ತಾನಾಗಿ ನಡೆಸುವ ಆಳವಾದ ಜಿಜ್ಞಾಸೆಗಳಿಂದ ಮಾತ್ರ ಯಾವುದೇ ಉತ್ಕರ್ಷದ - ಚಿರಂತನ ಸತ್ಯದ ದರ್ಶನವಾದೀತು. "ಆನಂದವು ಎಲ್ಲೋ ಹೊರಗಿಲ್ಲ; ನಮ್ಮ ಒಳಗೇ ಇದೆ " ಎಂಬ ಪರಿಜ್ಞಾನವೇ ಆ ಏಣಿಯ ಮೊದಲ ಮೆಟ್ಟಿಲು. "ವಿಜ್ಞಾನದ ಜಡವಸ್ತು - ವೈಜ್ಞಾನಿಕ ಭಾಷೆ" ಗಳೆಂಬ ಇಂದ್ರಿಯಸೂಚ್ಯ ವಿಜ್ಞಾನಭಾವಕ್ಕೆ ಇದುವರೆಗೆ ಎಟುಕದ ಅನೇಕ ವಿಶಿಷ್ಟ ಅನುಭವಗಳೂ ಈ ಸೃಷ್ಟಿಯಲ್ಲಿವೆ. ಅಂತಹ ಅನುಭವಗಳನ್ನು ಶಬ್ದಗಳಲ್ಲಿ ಸಶಕ್ತವಾಗಿ ಹಿಡಿದಿಡಲು ಆಗುವುದಿಲ್ಲ. ಹಾಗೆ ಹೊರಟರೆ ಸಕ್ಕರೆಯು ಸಿಹಿಯಾಗಿದೆಯೆಂದು ವರ್ಣಿಸಿದಂತೆ - ಶಾಬ್ದಿಕ ಕಸರತ್ತಾದೀತು. ಸಿಹಿ ಹೇಗಿದೆ? ಎಂದು ಯಾರಾದರೂ ಕೇಳಿದಾಗ - ಸವಿದು ನೋಡು, ಸ್ವತಃ ಅನುಭವಿಸಿ ನೋಡು - ಎಂದಷ್ಟೇ ಹೇಳಲಾಗುವಂತೆ, ಬಣ್ಣಿಸಲಾಗದ ಅನೇಕ ಅನುಭವಗಳು ಈಗಲೂ ಆಧುನಿಕ ವಿಜ್ಞಾನದ "ಅತ್ತತ್ತ"ವೇ ಇದ್ದು ವೈಜ್ಞಾನಿಕ ಸೂತ್ರಗಳ ಅಳವಿಗೆ ಅವು ಎಂದಿಗೂ ಸಿಗುವುದಿಲ್ಲ. ಏಕೆಂದರೆ ಬಾಹ್ಯೇಂದ್ರಿಯ ಗ್ರಾಹ್ಯವಾದ ಜ್ಞಾನಕ್ಕೆ ಒಂದು ಇತಿಮಿತಿಯಿದೆ. ಆದ್ದರಿಂದ ವಿಜ್ಞಾನವು ಇದುವರೆಗೆ ಸ್ಪರ್ಶಿಸಲಾಗದಂತಹದು ಒಂದಿದೆ - ಎಂಬುದನ್ನು ಪಾಶ್ಚಾತ್ಯ-ಪೌರಾತ್ಯ ಮಹಾನ್ ತತ್ವವೇತ್ತರುಗಳೆಲ್ಲರೂ ಒಪ್ಪಿಕೊಂಡಿದ್ದಾರೆ. ಅದೇ - ಆತ್ಮ ವಿಜ್ಞಾನ. ಭಾರತೀಯ ಋಷಿಮುನಿಗಳು ಅಂತಹ ಆತ್ಮವಿಜ್ಞಾನದ ಉಪಾಸಕರು. "ಬೇರೆ ಬೇರೆ ಇಂದ್ರಿಯಗಳ ಹಿಂದಿರುವ ಅಗೋಚರ ಶಕ್ತಿಯು - ಆತ್ಮವೇ ಆಗಿದೆ" - ಎಂದು ಉಪನಿಷದ್ಕಾಲದ ಗುರುಗಳು - ತಮ್ಮ ಶಿಷ್ಯರಿಗೆ ವಿವರಿಸಿದ್ದರು.

ನಮ್ಮ ಅಂತರಂಗದ ಆಧ್ಯಾತ್ಮಿಕ ಗುಣವನ್ನೂ ಶಕ್ತಿಯನ್ನೂ ಅದರ ಲೋಕ ದೃಷ್ಟಿಯು ಅದುಮಿಟ್ಟಿದೆ. ಇವನ್ನೆಲ್ಲ ಕಂಡ ಮಹಾನ್ ತತ್ವಜ್ಞಾನಿ ಡಾ. ಎಸ್. ರಾಧಾಕೃಷ್ಣನ್ ಅವರು " ವಕ್ರ ಸ್ವಭಾವದ, ದುರಹಂಕಾರದ, ಸಿಡುಕಿನ, ಪರಸ್ಪರ ಮೂದಲಿಸುತ್ತಿರುವ, ತಮ್ಮ ಬಳಿ ಇರುವ ಲೌಕಿಕ ಆಸ್ತಿಪಾಸ್ತಿಗಳ ಆಟದ ಸಾಮಾನುಗಳನ್ನು ಪ್ರದರ್ಶಿಸುತ್ತ ಅವುಗಳ ದೊಡ್ಡ ಆಕಾರದಿಂದಲೇ ರೋಮಾಂಚನಗೊಳ್ಳುತ್ತಿರುವ ಮಕ್ಕಳಿಂದ ತುಂಬಿದ ಶಿಶುವಿಹಾರದಂತೆ - ಈ ರಾಷ್ಟ್ರಗಳೆಂಬ ಜಗತ್ತು ತೋರುತ್ತಿದೆ " ಎಂದಿದ್ದರು.

ಆದರೆ ಇವನ್ನು ಮೀರುವುದು ಹೇಗೆ? "ಸಾಮಾನ್ಯ ಭೌತಿಕಸ್ತರದಲ್ಲಿ ಇದ್ದಕ್ಕಿದ್ದಂತೆ ಆತ್ಮಜ್ಞಾನವನ್ನು ಸಾಧಿಸಲು ಆಗುವುದಿಲ್ಲ; ಹೀಗಿದ್ದರೂ, ಇಂತಹ ಸಾಮಾನ್ಯ ಸ್ಥಿತಿಯಲ್ಲಿರುವಾಗಲೂ ಕಿವಿ, ಕಣ್ಣು ಮುಂತಾದ ಇಂದ್ರಿಯಗಳೊಂದಿಗೆ ಅಗೋಚರ ಆತ್ಮಶಕ್ತಿಯು ತಾದಾತ್ಮ್ಯವನ್ನು ಕಲ್ಪಿಸಿಕೊಂಡಿರುತ್ತದೆ. ಅಸಾಮಾನ್ಯವಾದ ಬುದ್ಧಿ ಪ್ರಚೋದನೆ ಯಿಂದಲ್ಲದೆ ಯಾರೂ ಇಂದ್ರಿಯ ತಾದಾತ್ಮ್ಯವನ್ನು ದಾಟುವುದು ಅಸಾಧ್ಯ" ಎಂದು ಶಂಕರಾಚಾರ್ಯರು ಹೇಳಿದ್ದಾರೆ. (ನ ಹಿ ವಿಶಿಷ್ಟ ಧೀಮತ್ವಮಂತರೇಣ ಶ್ರೋತ್ರಾಧ್ಯಾತ್ಮಭಾವಃ ಶಕ್ಯಃ ಪರಿತ್ಯಕ್ತುಂ -)  ಭೌತ ವಸ್ತುಪ್ರಪಂಚ ಮತ್ತು ಬಾಹ್ಯ ಪ್ರಕೃತಿಯಲ್ಲಿಯೇ ಮುಳುಗಿರುವ, ಅದೇ ಹಾದಿಯಲ್ಲಿಯೇ ಮುಂದುವರಿಯುತ್ತಿರುವ ಭೌತ ವಿಜ್ಞಾನವು ಮಾನವನ ಸ್ವಭಾವವನ್ನು ಮತ್ತು ಅದರ ಆಳವನ್ನು ಭೇದಿಸಿ, ಅದರ ರಹಸ್ಯವನ್ನು ಕಾಣಲು - ಪರಿಹರಿಸಲು ತನ್ಮಯವಾಗುವಂತಹ ಧ್ಯಾನಸ್ಥ ಸ್ಥಿತಿಯಲ್ಲಿ - ಅದು ಆತ್ಮ ವಿಜ್ಞಾನವೆನಿಸುತ್ತದೆ. ಕಣ್ಣು ತೆರೆದರೆ ಕಾಣಲಾಗದ, ಕಣ್ಣು ಮುಚ್ಚಿಕೊಂಡೇ ಕಾಣಲಾಗುವ - ಮಾನವನ ತುರೀಯಾವಸ್ಥೆಯ "ಚೇತನ" ಎಂಬ ನಿಜಸ್ವರೂಪವನ್ನು ಅನುಭವಿಸುವ ವಿದ್ಯೆಯೇ ಆತ್ಮ ವಿಜ್ಞಾನ.

ಪ್ರಕೃತಿಯೂ ಒಂದು ಯಂತ್ರವೇ. ಅದು ಭಾಗಶಃ ಮಾನಸೀಕರಣಗೊಂಡ ಯಂತ್ರ. ನಮ್ಮನ್ನೂ ಒಳಗೊಂಡಿರುವುದರಿಂದ ಈ ಪ್ರಕೃತಿಯನ್ನು - "ಮನಸ್ಸಿನ ಮಾನವ ಗುಣಗಳನ್ನೂ ಹೊಂದಿರುವ ಯಂತ್ರ" - ಎನ್ನಬಹುದು. ಪ್ರಕೃತಿಯೆಂದರೆ ಮಾನಸಿಕ ಮತ್ತು ಭೌತಿಕ ಶಕ್ತಿಗಳ ನಿರಂತರ ಹರಿವಿನ ಪ್ರವಾಹ. ಮಾನವ ನಿರ್ಮಿತ ಯಂತ್ರಗಳಿಗೂ ಪ್ರಕೃತಿಗೂ ಇರುವ ಒಂದೇ ಭೇದವೆಂದರೆ, ಮಾನವನ ಮನಸ್ಸು ಪ್ರೇರಿತವಾಗುವುದು ಭಾವನೆಗಳಿಂದ - ಭಯ ಆಸೆ ಪ್ರೇಮ ಇಚ್ಛೆ ಅನಿಚ್ಛೆಗಳಿಂದ. ಆದರೆ ಯಂತ್ರಗಳು ಹಾಗಲ್ಲ. ಅವು - ಮಾನವನ ಆಜ್ಞಾಧಾರಕವಾದ ಕೇವಲ - ವಸ್ತು. ಆದ್ದರಿಂದ ಅಂತರಂಗದ ಆಯಾಮವನ್ನು ಬದುಕು-ಪ್ರಜ್ಞೆಗಳ ನೆಲೆಯಲ್ಲಿಯೇ ಸಮಗ್ರವಾಗಿ ತೂಗಬೇಕಲ್ಲದೆ ಕೇವಲ ಹೊರಹೊರಗಿನ ಸಂಶೋಧನೆ, ವಿಮರ್ಶೆಗಳಿಂದ ಅಂತಃಸತ್ವವನ್ನು ಅಳೆಯಲಾಗುವುದಿಲ್ಲ; ಅಂತರಂಗ ಜಗತ್ತನ್ನು ಹೊರಗಿನ ಯಾವ ದೊಣ್ಣೆಯಪ್ಪನೂ ನಿಯಂತ್ರಿಸಲು ಬರುವುದಿಲ್ಲ. ಸ್ವಾಂತವನ್ನು ದಾಟಿ ಅನಂತವನ್ನು ಧ್ಯಾನಿಸಬಲ್ಲ ಸ್ವವಿಕಾಸದ ಸಾಧನೆಗೆ - ಸ್ವಚ್ಛ ಮನೋವಾಕ್ಕಾಯದ ಸ್ವಪ್ರಯತ್ನವೊಂದೇ ದಾರಿ. ಆದ್ದರಿಂದಲೇ ಪುರಂದರದಾಸರು "ಒಳಗಿದ್ದು - ಎನ್ನ ಸ್ವತಂತ್ರನೆಂದೆನಿಸಿದ ಯಂತ್ರವಾಹಕ ನೀನು" ಎನ್ನುತ್ತ ಆತ್ಮಶಕ್ತಿಗೆ ಶರಣಾದರು; ಸಜ್ಜನರನ್ನು ಅಧ್ಯಾತ್ಮದತ್ತ ಆಕರ್ಷಿಸಿದರು.

ಸ್ವಾಮಿ ವಿವೇಕಾನಂದರು ಹೇಳಿದ್ದರು: " ಭಾರತದ ಇತಿಹಾಸದ ಒಂದು ನಿರ್ದಿಷ್ಟ ಅವಧಿಯಲ್ಲಿ ನಮ್ಮ ಋಷಿಮುನಿಗಳ ಎಲ್ಲ ಗಮನವನ್ನೂ - "ಮಾನವ ಮತ್ತು ಅವನ ಮನಸ್ಸು"- ಎಂಬ ಒಂದು ವಿಷಯವು ಸೆಳೆದಿಟ್ಟುಕೊಂಡಿತು. ತಮ್ಮ ಗುರಿಯನ್ನು ಸಾಧಿಸಲು ಈ ಹಾದಿಯೇ ಅತ್ಯಂತ ಸುಲಭೋಪಾಯವಾಗಿ ಅವರಿಗೆ ಕಂಡಿತು. ನಿಯಮದ ಪ್ರಕಾರವಾಗಿ ಪಳಗಿಸಿಕೊಂಡಾಗ ನಮ್ಮ ಮನಸ್ಸು ಏನನ್ನೇ ಆದರೂ ಮಾಡಬಲ್ಲದು ಎಂಬ ವಿಷಯವು ಭಾರತೀಯ ಮನಸ್ಸಿಗೆ ಎಷ್ಟು ಖಚಿತವಾಯಿತೆಂದರೆ ಆ "ಮನಸ್ಸಿನ ಶಕ್ತಿ" ಎಂಬುದೇ ಅವರ ಅಂದಿನ ಅಧ್ಯಯನದ ಮಹಾವಸ್ತುವಾಯಿತು....

...ಆಧುನಿಕ ಭೌತ ನಿಯಮಗಳ ಹಿಂದೆಯೂ ಅತ್ಯಂತ ಸೂಕ್ಷ್ಮವಾದ ನಿಯಮಗಳಿವೆ. ಬರಬರುತ್ತ ಸಣ್ಣದಾಗುವ ಅಸ್ತಿತ್ವ ಅದು. ಕಾಣಿಸುವ ದಪ್ಪ ಭಾಗವು ನಮ್ಮಲ್ಲಿದೆ. ಅದು ಕ್ರಮೇಣ ಸಣ್ಣದಾಗುತ್ತ ಸೂಕ್ಷ್ಮತರವಾಗುತ್ತ ಹೋಗುತ್ತದೆ. ಹಾಗೆ ಅತ್ಯಂತ ಸೂಕ್ಷ್ಮವಾದುದನ್ನು "ಆತ್ಮ" ಎಂದೂ ಅತ್ಯಂತ ಸ್ಥೂಲವಾದದ್ದನ್ನು ದೇಹ ಎಂದೂ ಹೇಳುತ್ತೇವೆ. ಸೂಕ್ಷ್ಮ ಪಿಂಡಾಂಡದಲ್ಲಿ ಹೇಗಿದೆಯೋ - ಸ್ಥೂಲ ಬ್ರಹ್ಮಾಂಡದಲ್ಲಿಯೂ ಅದು ಯಥಾವತ್ತಾಗಿ ಹಾಗೇ ಇರುತ್ತದೆ. ಆತ್ಮದ ಸ್ವರೂಪದಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ. ವಿಶ್ವವೂ ದೇಹದಂತೆಯೇ ಸ್ಥೂಲವಾದ ಮಂದ. ಸ್ಥೂಲವಾದುದು ಭಗವಂತನಾಗುವವರೆಗೂ ಸೂಕ್ಷ್ಮವಾಗುತ್ತಲೇ ಹೋಗುತ್ತದೆ." (Swami Vivekananda - Lecture on the Powers of the Mind CW Vol. 2, 9th edition, pp.20-21-16) ಆದರೆ ಅಂತಹ ಸೂಕ್ಷ್ಮವನ್ನು ಗ್ರಹಿಸುವ ಕಣ್ಣು, ಅದನ್ನು ಆಧರಿಸುವ ಬುದ್ಧಿಯನ್ನು ಹೊಂದುವ ಹಾದಿಯು ಅಪೇಕ್ಷಿಸುವ ಅರ್ಹತೆಗಳು ಬೇರೆ. ಇದೇ ಅಧ್ಯಾತ್ಮ ವಿದ್ಯೆ. ಅಂದರೆ ಅಂತರಾತ್ಮನ ವಿಜ್ಞಾನ.



" ಅನೇಜದೇಕಂ ಮನಸೋ ಜವೀಯೋ
 ನೈನದ್ದೇವಾ ಆಪ್ನುವನ್ ಪೂರ್ವಮರ್ಷತ್
ತದ್ಧಾವತೋನ್ಯಾನ್  ಅತ್ಯೇತಿ ತಿಷ್ಠತ್
ತಸ್ಮಿನ್ ಅಪೋ ಮಾತರಿಶ್ವಾ ದಧಾತಿ"           


" ಆತ್ಮವು ಒಂದು. ಅದು ಚಲಿಸುವುದಿಲ್ಲ. ಆದರೂ ಅದು ಮನಸ್ಸಿಗಿಂತ ವೇಗವಾದದ್ದು. ತಾನು ಸ್ಥಿರವಾಗಿದ್ದು, ಓಡುವ ಎಲ್ಲವನ್ನೂ ಅದು ಮೀರುತ್ತದೆ. ವಿಶ್ವಶಕ್ತಿಯಾದ ಅದು - ತಾನು ಸ್ಥಿರವಾಗಿದ್ದುಕೊಂಡೇ ಎಲ್ಲ ಜೀವಿಗಳ ಚಟುವಟಿಕೆಗಳಿಗೂ ಶಕ್ತಿ ನೀಡುತ್ತದೆ." 


" ತೇನ ತ್ಯಕ್ತೇನ ಭುಂಜೀಥಾಃ "       

                                                  ತ್ಯಾಗದ ಮೂಲಕ ಭೋಗವನ್ನು ಅನುಭವಿಸು. (ಈಶೋಪನಿಷತ್ತು)


"ಈಶಾವಾಸ್ಯಮಿದಂ ಸರ್ವಂ ಯತ್ಕಿಂಚ ಜಗತ್ಯಾಮ್ ಜಗತ್  "   -       
ಈ ಕ್ಷಣಿಕವಾದ ಜಗತ್ತಿನಲ್ಲಿ ಬದಲಾವಣೆ ಹೊಂದುವಥದ್ದು ಏನಿದೆಯೋ ಅದೆಲ್ಲವನ್ನೂ ಭಗವಂತನಿಂದ ಆವರಿಸಬೇಕು. [ಈಶೋಪನಿಷತ್ತು] 

ತನ್ನ ಮೊದಲ ಮಂತ್ರದಲ್ಲೇ ಸತ್ಯದ ರಹಸ್ಯ ಆಳಕ್ಕೆ ನಮ್ಮನ್ನು ಒಯ್ಯುತ್ತದೆ - ಈಶೋಪನಿಷತ್ತು.


" ಓಂ   ಸಹನಾವವತು; ಸಹನೌ ಭುನಕ್ತು; ಸಹವೀರ್ಯಂ ಕರವಾವಹೈ; ತೇಜಸ್ವಿನಾವಧೀತಮಸ್ತು; ಮಾವಿದ್ವಿಷಾವಹೈ. ಓಂ ಶಾಂತಿಃ ಶಾಂತಿಃ ಶಾಂತಿಃ "     -      ಓಂ...
ಬ್ರಹ್ಮನು ನಮ್ಮಿಬ್ಬರನ್ನೂ ರಕ್ಷಿಸಲಿ. ಅವನು ನಮ್ಮಿಬ್ಬರನ್ನೂ (ಗುರು ಶಿಷ್ಯ) ಪೋಷಿಸಲಿ. ನಾವಿಬ್ಬರೂ ಶಕ್ತಿಯನ್ನು ಹೊಂದುವಂತಾಗಲಿ. ಈ ಅಧ್ಯಯನವು ನಮ್ಮಿಬ್ಬರನ್ನೂ ತೇಜಸ್ವಿಗಳನ್ನಾಗಿ ಮಾಡಲಿ. ನಾವಿಬ್ಬರೂ ಪರಸ್ಪರ ದ್ವೇಷಿಸುವುದು ಬೇಡ. ಓಂ ಶಾಂತಿ, ಶಾಂತಿ, ಶಾಂತಿ. (ಕೇನೋಪನಿಷತ್ತು)

ಸಹಸ್ರಾರು ವರ್ಷಗಳಿಂದ ಭಾರತದ ಲೌಕಿಕ ಮತ್ತು ಧಾರ್ಮಿಕ ವಿದ್ಯಾಭ್ಯಾಸಕ್ಕೆ ಸ್ಫೂರ್ತಿದಾಯಕವಾದ, ಸುಂದರ ಭಾವದುಂಬಿದ, ಗುರು ಶಿಷ್ಯರನ್ನು ವಿಶ್ವಾಸದ ಸಂಬಂಧದಲ್ಲಿ ಕಟ್ಟಿದ ಶಾಂತಿ ಮಂತ್ರವಿದು.


"ಉತ್ತಿಷ್ಠತ, ಜಾಗ್ರತ  ಪ್ರಾಪ್ಯವರಾನ್ನಿಬೋಧತ ..."        
                                                   ಏಳಿ! ಜಾಗ್ರತರಾಗಿ! ಮಹಾನುಭಾವರನ್ನು ಸೇರಿ ಬೆಳಕನ್ನು ಪಡೆಯಿರಿ!


"ಅನ್ಯತ್  ಶ್ರೇಯೋ ಅನ್ಯದುತೈವ ಪ್ರೇಯಃ ,   ತೇ ಉಭೇ ನಾನಾರ್ಥೇ ಪುರುಷಂ ಸಿನೀತಃ ;   ತಯೋಃ ಶ್ರೇಯ ಆದದಾನಸ್ಯ ಸಾಧುರ್ಭವತಿ,   ಹೀಯತೇ ಅರ್ಥಾತ್ ಯ ಉ ಪ್ರೇಯೋ  ವೃಣೀತೇ "                                 
ಶ್ರೇಯ (ಒಳಿತು) ಎಂಬುದು ಬೇರೆ  ಮತ್ತು ಪ್ರೇಯ (ಹಿತವಾದದ್ದು) ಎಂಬುದು ಬೇರೆ. ಎರಡೂ ಬೇರೆ ಬೇರೆ ಗುರಿಗೆ ಒಯ್ಯುವಂಥವಾಗಿ ಇವೆರಡೂ ಮಾನವನನ್ನು ಬಂಧಿಸುತ್ತವೆ. ಒಳಿತನ್ನು ಒಪ್ಪಿಕೊಳ್ಳುವವನಿಗೆ ಒಳಿತು ದೊರಕುತ್ತದೆ. ಆದರೆ ಪ್ರಿಯವಾದುದನ್ನು ಆರಿಸಿಕೊಳ್ಳುವವನು ಗುರಿಯಿಂದ ಬಹುದೂರ ಉಳಿಯುತ್ತಾನೆ. ಕೊನೆಗೆ ಗುರಿ ತಪ್ಪಿ ಬೀಳುತ್ತಾನೆ. ಪ್ರೇಯಸ್ಸು ಎಂಬುದು ಇಂದ್ರಿಯಗಳ ಸ್ವಾತಂತ್ರ್ಯವನ್ನು ಒತ್ತಾಯಪೂರ್ವಕವಾಗಿ ಕೇಳುತ್ತದೆ. ಆದರೆ ಶ್ರೇಯಸ್ಸು - ಇಂದ್ರಿಯಗಳಿಂದ ಬಿಡುಗಡೆ ಯನ್ನು ಒತ್ತಾಯದಿಂದ ಕೇಳುತ್ತದೆ. (ಕಠೋಪನಿಷತ್ತು)

"ಯಾವುದರಿಂದ ಎಲ್ಲ ಜೀವಿಗಳು ಜನಿಸಿವೆಯೋ, ಜನಿಸಿದಮೇಲೆ ಯಾವುದರ ಮೂಲಕ ಅವು ಜೀವಿಸುತ್ತವೆಯೋ, ಇರುವುದು ಮುಗಿದ ಮೇಲೆ ಯಾವುದರಲ್ಲಿ ಅವು ಲೀನವಾಗುತ್ತವೆಯೋ ಅದೇ ಬ್ರಹ್ಮ " ;  " ರಸೋ ವೈ ಸಃ " - ಆತ ವಾಸ್ತವವಾಗಿ ಆನಂದ. (ತೈತ್ತಿರೀಯ ಉಪನಿಷತ್ತು)

                                                  " ಪ್ರಜ್ಞಾನಂ ಬ್ರಹ್ಮ"              
ಶುದ್ಧ ಚಿತ್ ಅನ್ನುವುದೇ ಬ್ರಹ್ಮ. (ಐತರೇಯ ಉಪನಿಷತ್ತು)

                                                  " ತತ್  ತ್ವಂ ಅಸಿ "               
ಅದು ನೀನೇ ಆಗಿದ್ದೀಯ... ಆತ್ಮವನ್ನು ಅರಿತವನು ಎಲ್ಲ ಶೋಕವನ್ನೂ ದಾಟುತ್ತಾನೆ...(ಛಾಂದೋಗ್ಯ ಉಪನಿಷತ್ತು)


" ಅಹಂ ಬ್ರಹ್ಮಾಸ್ಮಿ "    
ನಾನೇ ಬ್ರಹ್ಮ .  
" ಅಸತೋ ಮಾ ಸದ್ಗಮಯ; ತಮಸೋ ಮಾ ಜ್ಯೋತಿರ್ಗಮಯ; ಮೃತ್ಯೋರ್ಮಾ  ಅಮೃತಂಗಮಯ "                        
ಅಸತ್ಯದಿಂದ ಸತ್ಯಕ್ಕೆ, ಕತ್ತಲಿನಿಂದ ಬೆಳಕಿಗೆ, ಮೃತ್ಯುವಿನಿಂದ ಅಮೃತತ್ವಕ್ಕೆ ನನ್ನನ್ನು ನಡೆಸು...(ಬೃಹದಾರಣ್ಯಕ ಉಪನಿಷತ್ತು)


" ಅಯಂ ಆತ್ಮಾ ಬ್ರಹ್ಮ "
ಈ ಆತ್ಮವೇ ಬ್ರಹ್ಮ. (ಮಾಂಡೂಕ್ಯ ಉಪನಿಷತ್ತು)

ಈ ಎಲ್ಲ ಉಕ್ತಿಗಳೂ ನಮ್ಮ ನಿತ್ಯದ ಮಾತಿನಲ್ಲಿ ಬಂದು ಹೋಗುತ್ತಿರುತ್ತವೆ. ಆದರೆ ಅದರ ಮೂಲ, ಆಳದ ಕುರಿತ ಚಿಂತನೆಯನ್ನು ಮಾತ್ರ ನಮ್ಮಿಂದ ನಡೆಸಲಾಗುತ್ತಿಲ್ಲ. ಉಪನಿಷತ್ತು ಅಂದರೆ ಸತ್ಯದ ಅನ್ವೇಷಣೆಯ, ಸತ್ಯ ಸಾಕ್ಷಾತ್ಕಾರದ ಬೃಹತ್ ಪ್ರಬಂಧ. ಸಂಸಾರಬೀಜವಾದ ಅವಿದ್ಯೆಯನ್ನು ಪರಿಹರಿಸುವ ಜ್ಞಾನನಿಧಿಯೇ ಉಪನಿಷತ್ತು. ಆದಿಯಾಗಲೀ ಅಂತ್ಯವಾಗಲೀ ಇಲ್ಲದ, ವಿಭಿನ್ನ ಅನಾಮಿಕ ವ್ಯಕ್ತಿಗಳು ವಿಭಿನ್ನ ಕಾಲಘಟ್ಟದಲ್ಲಿ ಕಂಡುಕೊಂಡ ಆಧ್ಯಾತ್ಮಿಕ ಉನ್ನತಿಯ ನಿಯಮಗಳ ಒಟ್ಟು ಮೊತ್ತವೇ - ಸನಾತನವೆನ್ನಿಸಿದ ವೇದ ವೇದಾಂತಗಳು. ಈ ಅಂತಃಜ್ಞಾನ ವಿಭಾಗದಲ್ಲಿ ಭಾರತೀಯರಷ್ಟು ಅಧ್ಯಯನ ನಡೆಸಿದವರು ವಿಶ್ವದಲ್ಲಿ ಇನ್ನೊಬ್ಬರಿಲ್ಲ. ಆದರೆ ಉಪನಿಷತ್ತಿನ ಯಾವುದೇ ಸಂಕೇತರೂಪೀ ಸೂತ್ರಗಳು, ಸೂಕ್ತಿಗಳು ದೀರ್ಘ ವಿವರಣೆಯಿಲ್ಲದೆ ಆದ್ಯಂತವಾಗಿ ಮನವರಿಕೆಯಾಗುವುದಿಲ್ಲ.

"ಯಾವುದು ಇಂದ್ರಿಯ ಮತ್ತು ಮನಸ್ಸುಗಳಿಂದ ವ್ಯಕ್ತವಾಗುವುದಿಲ್ಲವೋ  ಆದರೆ ಯಾವುದರಿಂದ  ಇಂದ್ರಿಯಗಳು ಮತ್ತು ಮನಸ್ಸು ವ್ಯಕ್ತವಾಗುತ್ತದೆಯೋ - ಅದೇ ಬ್ರಹ್ಮ"   ಎಂದು ಉಪನಿಷತ್ತು ಸಾರಿತು.

ಬ್ರಹ್ಮ ಅಥವ ಆತ್ಮದ ಸ್ವರೂಪವನ್ನು - ಸಲಹೆ, ಸೂಚನೆ, ಸಂಕೇತಗಳ ಮೂಲಕವೇ ಉಪನಿಷತ್ತು ತಿಳಿಸುತ್ತದೆ. ಋಷಿಮುನಿಗಳ ಕಾಲಘಟ್ಟದಲ್ಲಿ ಉಪನಿಷತ್ತಿನ ನಿರೂಪಣೆಯು ಅವರಿಗೆ ಕ್ಲಿಷ್ಟವೆನ್ನಿಸದಿದ್ದರೂ ಇಂದಿನ ಕಾಲಘಟ್ಟದಲ್ಲಿ ಅಂತಹ ಸಂಕ್ಷಿಪ್ತ ಸೂತ್ರಗಳು ಪ್ರವೇಶಿಗರಿಗೆ ಸಹಜವಾಗಿಯೇ ಅಸ್ಪಷ್ಟವೆನ್ನಿಸುತ್ತವೆ. ಆದ್ದರಿಂದಲೇ ಅನಂತರದ ಕಾಲದಲ್ಲಿ - ವೇದ, ವೇದಾಂತಗಳ ಸಾರವನ್ನು ಸಾಮಾನ್ಯರಿಗೂ ತಲುಪಿಸುವ ಮತ್ತು ಸರ್ವರಿಗೂ ಉದ್ಧಾರದ ದಾರಿ ತೋರಿಸಲು ಯತ್ನಿಸಿದ ವೇದವ್ಯಾಸರು ಮತ್ತು ಅವರಂತಹ ಅನೇಕ ಋಷಿಗಳು, ವೇದ - ಉಪನಿಷತ್ತುಗಳಿಗೆ ಭಾಷ್ಯಗಳನ್ನು ಬರೆದರು. ಉಪನಿಷತ್ತಿನ ಸಾರವನ್ನು, ಸತ್ಯವನ್ನು, ತತ್ತ್ವವನ್ನು ರಾಮಾಯಣ, ಮಹಾಭಾರತ, ಭಾಗವತ, ಭಗವದ್ಗೀತೆಗಳ ಮೂಲಕ - ಸರಳ ಕಥಾರೂಪದಲ್ಲಿ ತಮ್ಮ ಪೀಳಿಗೆಗೆ ದಾಟಿಸುವಲ್ಲಿ ಅವರು ಒಂದಷ್ಟು ಯಶಸ್ವಿಯೂ ಆದರು.

ಕೆಲವೇ ಶತಮಾನಗಳ ಹಿಂದೆ ಶ್ರೀ ಶಂಕರಾಚಾರ್ಯರು ಈ ಮಹತ್ಕಾರ್ಯವನ್ನು ಮತ್ತೊಮ್ಮೆ ಪುನರುಜ್ಜೀವಗೊಳಿಸಿದರು. ಕೇವಲ ನೂರೈವತ್ತು ವರ್ಷಗಳ ಹಿಂದೆ ನಮ್ಮೊಂದಿಗಿದ್ದ ಶ್ರೀ ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದರು ಭಾರತೀಯ ಸನಾತನ ತತ್ವ ಚಿಂತನೆಗಳು ಆಧುನಿಕರಿಗೂ ಮನಮುಟ್ಟುವಂತೆ - ದೃಷ್ಟಾಂತಗಳೊಂದಿಗೆ ಘಂಟಾಘೋಷವಾಗಿ ಸಾರಿಹೋದರು. ಶ್ರೀ ರಾಮಕೃಷ್ಣ ಆಶ್ರಮ (ಮಿಶನ್)ದ ಹಲವಾರು ಹಿರಿಯ ಸನ್ಯಾಸಿಗಳು ಈ ಜ್ಞಾನಸತ್ರವನ್ನು ಅನಂತರವೂ ಗಂಭೀರವಾಗಿ ಮುಂದುವರಿಸಿಕೊಂಡು ಬಂದಿದ್ದಾರೆ; ಬರುತ್ತಿದ್ದಾರೆ. ಇಳಿದುಹೋದ ಇಂದಿನ ವಿದ್ಯಾ ಸಂಸ್ಕೃತಿಯಿಂದಾಗಿ - ಅಂದಿನ ಕಾಲಮಾನದಲ್ಲಿ ಅರ್ಥವಾಗುವಂತಿದ್ದ ಭಾಷ್ಯಗಳಿಗೆ ಈಗ ಮತ್ತೊಮ್ಮೆ ಪುನರ್ವ್ಯಾಖ್ಯಾನ ಮಾಡಬೇಕಾಗಿ ಬಂದಿದೆ. ಏಕೆಂದರೆ ನಮ್ಮ ಆಧುನಿಕ ಶಿಕ್ಷಣವು ಮನೆಯಲ್ಲಿರುವ ಸಂಪತ್ತನ್ನು ಗುರುತಿಸಲಾಗದೆ ಯಾರದೋ ಹಗಲು ವೇಷ ತೊಟ್ಟುಕೊಂಡು ಯಾವುದೋ ಕಿರಿದಾದ ಓಣಿಯಲ್ಲಿ ಈಗ ವಂತಿಗೆ ಎತ್ತುತ್ತಿದೆ!

ಮಾನಸಿಕ ಪಕ್ಷುಬ್ಧತೆಗೆ ಉಪನಿಷತ್ತು ದಿವ್ಯೌಷಧ. ಮಾನವನು ಸೃಷ್ಟಿಯ ನಾಟಕದ ನಟನೂ ಹೌದು; ಪ್ರೇಕ್ಷಕನೂ ಹೌದು ಎಂಬುದು ಉಪನಿಷತ್ತುಗಳ ದೃಷ್ಟಿ. ಮಾನವನ ಸರ್ವತೋಮುಖ ವಿಕಾಸದ ಜೊತೆಜೊತೆಗೆ, ಆಧ್ಯಾತ್ಮಿಕ ಬೆಳವಣಿಗೆಯ ವಿಷಯದಲ್ಲಿ ವೇದಾಂತಕ್ಕೆ ಇರುವ ಕಾಳಜಿ ಎಷ್ಟು ಎಂಬುದನ್ನು ಅರಿಯಲು ಶ್ರೀಮದ್ಭಾಗವತದ ಈ ಶ್ಲೋಕವನ್ನು ಮನನ ಮಾಡಬಹುದು. "ಮಾನವನ ಅಸದೃಶ ಬುದ್ಧಿಶಕ್ತಿಯ ಯುಕ್ತ ಬಳಕೆಯಾಗಲಿ "  ಎಂದು ಶ್ರೀಕೃಷ್ಣನು ವಿಶಾಲಾರ್ಥದಲ್ಲಿ ಭಾಗವತದಲ್ಲಿ ಹೇಳಿದ ಈ ಮಾತು ಸ್ಮರಣೀಯವಾಗಿದೆ.


" ಲಬ್ಧ್ವಾಸುದುರ್ಲಭಮಿದಂ ಬಹುಸಂಭವಾಂತೇ     
ಮಾನುಷ್ಯಂ ಅರ್ಥದಂ ಅನಿತ್ಯಪೀಹ ಧೀರಃ ;           
ತೂರ್ಣಂ ಯತೇತ ನ ಪತೇತ್ ಅನುಮೃತ್ಯು ಯಾವತ್           
ನಿಶ್ರೇಯಸಾಯ ವಿಷಯಃ ಖಲು ಸರ್ವತಃ ಸ್ಯಾತ್  "          


" ಪಡೆಯಲು ಕಷ್ಟವಾದ ಈ ಮನುಷ್ಯ ಜನ್ಮವನ್ನು ಅನೇಕ     ಜನ್ಮಗಳ ನಂತರ ಪಡೆದ ಮೇಲೆ, ಮೃತ್ಯುವು ಅವನನ್ನು ಉರುಳಿಸುವ ಮುನ್ನವೇ ಅತ್ಯಂತ ಶ್ರೇಷ್ಠವಾದ ಆಧ್ಯಾತ್ಮಿಕ ಸಂಪತ್ತನ್ನು ಪಡೆಯಲು - ವಿವೇಕಿಯಾದವನು ಪ್ರಯತ್ನಿಸಬೇಕು. ಇದೇ ಜೀವನದಲ್ಲಿಯೇ ಆಧ್ಯಾತ್ಮಿಕ ಉತ್ತುಂಗವನ್ನು ತಲುಪುವ ಶಕ್ತಿಯು ಮಾನವ ಜನ್ಮಕ್ಕಿದೆ. ಇಂದ್ರಿಯ ಸುಖವನ್ನು ಎಲ್ಲ ದೇಹಗಳಲ್ಲಿಯೂ ಪಡೆಯಬಹುದು."
(ಮಾನವ ದೇಹವನ್ನು ಆ ಸುಖಕ್ಕೆ ಮೀಸಲಾಗಿಡಬೇಕಾಗಿಲ್ಲ ಎಂಬ ಅರ್ಥ)
ಭಾಗವತದಲ್ಲಿ ಬರುವ ಕೃಷ್ಣನ ಈ ಮಾತು ಇಂದ್ರಿಯಗಳಲ್ಲೇ ತಲ್ಲೀನರಾಗಿರುವವರಿಗೆ ಒಗ್ಗುವುದಿಲ್ಲ; "ಕೃಷ್ಣ" ಹಿಡಿಸುವುದಿಲ್ಲ; ಅರ್ಥವಾಗುವುದೂ ಇಲ್ಲ. ಹುಲುಮಾನವರ ಇಂತಹ ಬಗೆಬಗೆಯ ಹುಚ್ಚನ್ನು ಉಪನಿಷತ್ತುಗಳು ಶಮನಗೊಳಿಸಬಲ್ಲವು. ಅತೀಂದ್ರಿಯ ಶಕ್ತಿಗಳ ಉನ್ನತ ಆಯಾಮವನ್ನು ತಲುಪಲು ಮಾನವನಿಗೆ ದಿಕ್ಸೂಚಿಯಂತಿರುವ ಉಪನಿಷತ್ತುಗಳಲ್ಲಿ ವೇದಾಂತರ್ಗತ ಸಾರವೆಲ್ಲವೂ ಅಡಗಿದೆ. ಆದ್ದರಿಂದ ಮಾನವನ ಬದುಕಿನ ಮೊದಲ ಹದಿನೈದು ವರ್ಷಗಳಲ್ಲಿಯೇ ಉಪನಿಷತ್ತಿನೊಳಗೆ ಪ್ರವೇಶಿಸಿಬಿಡಬೇಕು.

ಆಧ್ಯಾತ್ಮಿಕ ನೆಲೆಗಟ್ಟು, ಮಾರ್ಗದರ್ಶನವಿಲ್ಲದಿದ್ದರೆ ಮಾನವನ ಪ್ರತಿಯೊಂದು ಕ್ರಿಯಾಕರ್ಮವೂ ತುಮುಲ ತಲ್ಲಣಗಳನ್ನು ಹೆಚ್ಚಿಸುತ್ತವೆ. ಆಗ ಉಪ್ಪುನೀರನ್ನು ಕುಡಿದಂತೆ - ತಣಿಯದ ತೃಷೆ ; ಅತೃಪ್ತಿ . ಆದ್ದರಿಂದಲೇ ವ್ಯರ್ಥ ಹೋರಾಟದ ಜಂಜಾಟಗಳಲ್ಲಿ ಸಿಲುಕಿ ಬಿಡುತ್ತೇವೆ. ತಮ್ಮ ಭಕ್ತರನ್ನು ಸಾಂಸಾರಿಕ ದ್ವಂದ್ವಗಳು ಕಾಡಿ ಬಸವಳಿದಾಗ - "ಅಧ್ಯಾತ್ಮವು ಹರಿಯುವ ನೀರಾದರೆ ಈ ಸಂಸಾರವು ನಿಂತ ನೀರು" ಎನ್ನುತ್ತಿದ್ದ ಶ್ರೀ ರಾಮಕೃಷ್ಣರು "ಸಂಸಾರದಲ್ಲಿ ಇರಬಹುದು; ಆದರೆ ಆ ಸಂಸಾರವು ನಿಮ್ಮ ಒಳಗೆ ಪ್ರವೇಶಿಸದಂತೆ ನೋಡಿಕೊಳ್ಳಿ" ಅನ್ನುತ್ತಿದ್ದರು. ನಿಂತ ನೀರು ಎಂದರೆ ಆಧ್ಯಾತ್ಮಿಕ ಮೃತ್ಯು. ದೋಣಿ ನೀರಿನಲ್ಲಿರಬೇಕು; ಆದರೆ ದೋಣಿಯಲ್ಲಿ ನೀರಿರಬಾರದು. ಇಂತಹ ಮನೋಸ್ಥಿತಿಯನ್ನು ಮೂಡಿಸಿಕೊಳ್ಳಲು ಅಸಾಧಾರಣ ಪೂರ್ವ ಸಿದ್ಧತೆಯು ಅವಶ್ಯವಾಗುತ್ತದೆ. ಉಪನಿಷತ್ತುಗಳು ಅಂತಹ ರಂಗವನ್ನು ರೂಪಿಸಿಕೊಳ್ಳಲು, ಸಾಮಾನ್ಯರೊಳಗಿನ ಅಸಾಮಾನ್ಯವನ್ನು ಸಮೀಪಿಸಲು ಸಹಕರಿಸುತ್ತವೆ. ತನ್ನ ಅಹಂನ್ನು ದಾಟಿ ಲೋಕಪ್ರಜ್ಞೆಯನ್ನು ಸಾಧಿಸುವುದಕ್ಕೆ ಸಂಸಾರವೆಂಬ ಕುರುಕ್ಷೇತ್ರ ಯುದ್ಧವನ್ನು ಮೊದಲು ಜಯಿಸಬೇಕಾಗುತ್ತದೆ ಎನ್ನುವ ವೇದಾಂತದ ಭಾವವನ್ನು ಇದೇ ಜನ್ಮದಲ್ಲಿಯೇ ಅರಿತರೆ - ಅದು ನಿಜವಾದ ಜೀವನ ವಾಗುತ್ತದೆ. ( "ಇಹ ಚೇದವೇದೀತ್ ಅಥ ಸತ್ಯಮಸ್ತಿ " - ಕೇನೋಪನಿಷತ್ತು)

"ಮಾನವನು ಅಸದೃಶ" ಎನ್ನುವ ವೇದಾಂತ ದೃಷ್ಟಿಯನ್ನು ವಿವರಿಸುತ್ತ, ಅಧ್ಯಾತ್ಮ ವಿಜ್ಞಾನದ ಪ್ರಯೋಜನವನ್ನು ಮನುಷ್ಯರು ಪಡೆಯಲೇಬೇಕು ಎಂಬುದನ್ನು ಸ್ವಾಮಿ ವಿವೇಕಾನಂದರು ಒತ್ತಿ ಹೇಳಿದ್ದಾರೆ. " ಈ ಅಧ್ಯಾತ್ಮ ವಿಜ್ಞಾನದ ಪ್ರಯೋಜನವೆಂದರೆ ಅದು ಪೂರ್ಣ ಮಾನವನನ್ನು ರೂಪಿಸುತ್ತದೆ. ಅದು ಯುಗಯುಗಗಳವರೆಗೂ ಕಾಯಲು ಬಿಡುವುದಿಲ್ಲ. ಈ ಬದುಕಿನಲ್ಲಿ ನಮ್ಮ ಕೆಲಸವನ್ನು ನಾವೇ ನಿರ್ವಹಿಸಬೇಕು. ಅದಕ್ಕೆ ನಮಲ್ಲಿ ಶಕ್ತಿ ಬೇಕು. ಮನುಷ್ಯರು ಈ ಪುಟ್ಟ ಜೀವನದ ಆಚೆಗೆ ನಡೆಯಬೇಕು -  ಎಂಬುದು ಈ ಅಧ್ಯಾತ್ಮ ವಿಜ್ಞಾನದ ಅಪೇಕ್ಷೆ. ಮಾನವನ ಆಧ್ಯಾತ್ಮಿಕ ಬೆಳವಣಿಗೆಯ ಅಧ್ಯಯನವು - ಮಾನವ ಶಾಸ್ತ್ರ ಮತ್ತು ಪ್ರಾಣಿಶಾಸ್ತ್ರಗಳ ಅಧ್ಯಯನವನ್ನು ಇನ್ನೂ ಆಳಗೊಳಿಸುತ್ತದೆ. ಆದ್ದರಿಂದ ಇದು ಅಗತ್ " ಎಂದು ವಿವೇಕಾನಂದರು ಸಾರಿದ್ದರು.

ಇಂದಿನ ವೈಶ್ವಿಕ ಪರಿಸರದಲ್ಲಿ ಎಲ್ಲೆಲ್ಲೂ ಆತಂಕ, ಭಯ, ಉದ್ವೇಗಗಳು ತಾಂಡವವಾಡುತ್ತಿವೆ. ಒಂದು ವಿಧವಾದ ಮಾನಸಿಕ ತುಮುಲದಿಂದ ಇನ್ನೊಂದಕ್ಕೆ, ಒಂದು ದುಃಖದಿಂದ ಮತ್ತೊಂದಕ್ಕೆ ಕುಪ್ಪಳಿಸುತ್ತಿರುವ ಸನ್ನಿವೇಶವು ಈಗ ನಮ್ಮ ಜೊತೆಗಿದೆ. ಇನ್ನೇನು? ಮುಂದೇನು? ಎನ್ನುವ ಲೌಕಿಕ ಕಳವಳದ ಮನೋಸ್ಥಿತಿಯಲ್ಲಿ ಬಹುತೇಕ ಜನರು ಬಳಲುತ್ತಿದ್ದಾರೆ. ಸಂಯಮ, ಸಮಭಾವದ ನೈತಿಕ - ಆಧ್ಯಾತ್ಮಿಕ ಎಚ್ಚರವೊಂದೇ ಇದಕ್ಕೆ ಪರಿಹಾರ. ಯಾವುದೇ ಸ್ವಸ್ಥ ಸಮಾಜವು ಭೌತಿಕ - ಸಾಮಾಜಿಕ ವಿಕಾಸ ಎಂಬುದರಿಂದಲೇ ಎಂದಿಗೂ ನಿರ್ಮಾಣವಾಗಲಾರದು. ಉಪನಿಷತ್ತುಗಳು ಅಲ್ಲಲ್ಲಿ  "ಯೋಗಕ್ಷೇಮ " ದ ಪ್ರಸ್ತಾಪವನ್ನೂ ಮಾಡುತ್ತವೆ. ಲೌಕಿಕ ಪ್ರವೃತ್ತಿಗಳ ಸಮಸ್ತ ವ್ಯಾಪ್ತಿಯಲ್ಲಿ ನೋಡಿದರೆ - ಯೋಗ ಅಂದರೆ ಪಡೆದುಕೊಳ್ಳುವುದು ; ಕ್ಷೇಮ ಅಂದರೆ ಅದನ್ನು ಕಾಪಾಡಿಕೊಳ್ಳುವುದು. ಅರ್ಥಾತ್ - ಲೋಭ ಮತ್ತು ಮೋಹ. ನೈತಿಕ ಪ್ರೇರಣೆಯ ಚೌಕಟ್ಟನ್ನು ಮೀರಿದ ಲೌಕಿಕ ಮನೋಭಾವದಲ್ಲಿ - ಯೋಗಕ್ಷೇಮ ಎನ್ನುವುದು ಆಕ್ರಮಣಶಾಲಿಯಾಗುತ್ತದೆ; ಆಗ - ಪ್ರಭುತ್ವ ನಡೆಸುವ ಪ್ರೇರಣೆ ದೊರೆತು ನಿಜವಾದ ಶ್ರೇಯಸ್ಸು ನಮ್ಮಿಂದ ದೂರವಾಗುತ್ತದೆ. ತೋರಿಕೆಯ ಸಂಬಂಧಗಳನ್ನು ಬೆಳೆಸಿಕೊಳ್ಳುವುದರಿಂದಲೂ ಕೃತಕ ಶಿಷ್ಟಾಚಾರದಿಂದಲೂ ಯಾರಿಗೂ ನೆಮ್ಮದಿಯ ಬದುಕು ಸಿಗಲಾರದು. ಅದು ಉಪನಿಷದ್ದೃಷ್ಟಿ ಅಲ್ಲ. ಸ್ವಾರ್ಥವನ್ನು ಮೀರಿ ವಿವೇಕದ ಸ್ಥಿತಿಗೆ ಏರುವವರೆಗೂ - ತಾಂತ್ರಿಕ ದಕ್ಷತೆಯ ಜೊತೆಗೆ ನಿಯಂತ್ರಿತ ಸ್ವಪ್ರಜ್ಞೆಯಿಂದ ಮಾನವೀಕರಣಗೊಂಡ ಪವಿತ್ರಾತ್ಮರಾಗುವವರೆಗೂ ಮನುಷ್ಯರ ಶಿಕ್ಷಣವು ಪ್ರೌಢ, ಪ್ರಬುದ್ಧ, ಹೂರಣಯುಕ್ತವಾಗುತ್ತಲೇ ಸಾಗುವ ನಿಲ್ಲದ ಯಾತ್ರೆಯಾಗಬೇಕು. ಆಗ ಮಾತ್ರ ನಿಜವಾದ ವಿಕಾಸವಾದೀತು ಎಂಬುದು ಉಪನಿಷತ್ತಿನ ಸಂದೇಶ. ಭಾವನೆಗಳನ್ನು ಹೀಗೆ ಶಿಸ್ತಿಗೆ ಒಳಪಡಿಸಿ ಸ್ವಭಾವವನ್ನು ಶಿಷ್ಟಗೊಳಿಸುವ ಶಿಕ್ಷಣವು ಇಂದಿನ ಅತೀ ಅಗತ್ಯ. "ನ ವಿತ್ತೇನ ತರ್ಪಣೀಯೋ ಮನುಷ್ಯೋ..." ಮನುಷ್ಯನು ಐಶ್ವರ್ಯದಿಂದ ಎಂದೂ ತೃಪ್ತಿ ಹೊಂದುವುದಿಲ್ಲ ಎಂಬ ಅರಿವು ಬಾಲ್ಯದಲ್ಲಿಯೇ ಮೂಡಬೇಕಾಗಿದೆ.

ಬರ್ಟ್ರಂಡ್ ರಸ್ಸೆಲ್ ಅವರು ಹೇಳಿದಂತೆ - "ದಾರಿ ಗಳ ವಿಷಯದಲ್ಲಿ ಮಾನವರ ಕೌಶಲ - ಮತ್ತು - ಗುರಿ ಗಳ ವಿಷಯದಲ್ಲಿ ಮಾನವರ ದೋಷ - ಎನ್ನುವ ಇವೆರಡರ ನಡುವೆ ನಡೆಯುತ್ತಿರುವ ಒಂದು ಪಂದ್ಯದಲ್ಲಿ ನಾವೀಗ ಸಿಕ್ಕಿಕೊಂಡಿದ್ದೇವೆ. ದೋಷಪೂರ್ಣ ಗುರಿಗಳನ್ನು ಸಾಧಿಸಲು ಬೇಕಾಗುವ ಕೌಶಲವೂ ದೋಷಪೂರ್ಣವೇ ಆಗಿರುತ್ತದೆ. ಅಜ್ಞಾನ ಮತ್ತು ಅದಕ್ಷತೆಗಳಿಂದ ಮಾತ್ರವೇ ಮಾನವ ವಂಶವು ಇದುವರೆಗೂ ಕುಂಟುತ್ತ ಉಳಿದುಬಂದಿದೆ. ಆದರೆ, ಒಂದೊಮ್ಮೆ ಜ್ಞಾನ ದಕ್ಷತೆ ಮತ್ತು ದೋಷಗಳು ಒಂದಾದರೆ  ಮಾನವ ವಂಶವು ಉಳಿಯುತ್ತದೆ ಎಂದು ಖಚಿತವಾಗಿ ಹೇಳುವಂತಿಲ್. (ಅದು ಮಹಾ ಗಂಡಾಂತರಕಾರಿ) ಜ್ಞಾನವೇ ಶಕ್ತಿ. ಆದರೆ ಒಳಿತಿಗೆ ಹೇಗೋ ಹಾಗೇ ಕೆಟ್ಟದ್ದಕ್ಕೂ ಅದು ಶಕ್ತಿಯೇ. ಹೀಗಾಗಿ ಮಾನವರು ಜ್ಞಾನವನ್ನು ಹೇಗೋ ಹಾಗೇ ವಿವೇಕವನ್ನು ಬೆಳೆಸಿಕೊಳ್ಳದಿದ್ದರೆ - ಜ್ಞಾನದ ವೃದ್ಧಿ ಎಂದರೆ ದುಃಖದ ಹೆಚ್ಚಳ ಎಂದೂ ಸಿದ್ಧವಾಗುತ್ತದೆ." ಎಂದು ರಸ್ಸೆಲ್ ಮಹಾಶಯರು ಅಂದೇ ಹೇಳಿದ್ದರು.... ಇಂದಿನ ವಿಶ್ವವಿದ್ಯಾಲಯಗಳು ಹೇಗಿವೆ? ನಾವು ಇದೇ ದುಃಖದ ದಾರಿಯಲ್ಲಿದ್ದೇವೆಯೆ? ಎಂಬುದನ್ನು ಇಂದಿನ ತರ್ಕದ ಕರಕರೆಗಳು ಯೋಚಿಸಬೇಕಾಗಿದೆ.

ಸುಂದರ ಪದಭಂಡಾರದ ವೈಜ್ಞಾನಿಕವಾದ ಸಂಸ್ಕೃತ ಭಾಷೆಯಲ್ಲಿ "ಪಶು" ಎಂಬ ಒಂದು ಶಬ್ದವಿದೆ.  ಪಾಶ ಎಂಬ ಮೂಲದಿಂದ ಈ "ಪಶು" ಹೊರಟಿದೆ. ಪಾಶ ಅಂದರೆ ಬಂಧನ. ಸ್ವ ಇಚ್ಛೆಯಿಂದ ಬಂಧನಕ್ಕೆ ಒಳಗಾಗುವ ವರ್ಗವೇ ಪಶು ವರ್ಗ. ಸಾಮಾನ್ಯ ಬಳಕೆಯಲ್ಲಿ "ಮನುಷ್ಯರಲ್ಲದ ಪ್ರಾಣಿ"ಗಳನ್ನು ಮಾತ್ರ ನಾವು - "ಪಶುಗಳು" ಎನ್ನುತ್ತಿದ್ದೇವೆ. ಆದರೆ "ಪಶು ಎಂಬುದರ ಅರ್ಥ - ಯಾರು ಬಂಧಿತರೋ ಯಾರು ಸಿಕ್ಕಿ ಹಾಕಿಕೊಂಡಿದ್ದಾರೋ ಯಾರು ಪ್ರಕೃತಿಯ ಮೂಲ ಸ್ವಭಾವದ ಗುಲಾಮರಾಗಿಯೇ ಇನ್ನೂ ಉಳಿದಿರುವರೋ ಯಾರು ಮುಕ್ತರಾಗಿಲ್ಲವೋ - ಅವರೆಲ್ಲರೂ ಪಶುಗಳೇ. ಸ್ವಾಭಾವಿಕ ಮೂಲ ಸ್ವಭಾವದಿಂದ ಉನ್ನತ ಸ್ಥಿತಿಗೆ ಏರುವ ಸಾಧನೆಯಲ್ಲಿ ತೊಡಗಿದರೆ ಮಾತ್ರ ಪಶುತ್ವದ ಸಂಕೋಲೆಯಿಂದ ಕಳಚಿಕೊಳ್ಳಲು ಸಾಧ್ಯ. ಪಶುತ್ವ ಎಂದರೆ ಜಡತ್ವ. ಈ ಜಡತ್ವದಿಂದ ಪಾರಾಗಲು - ಬಾಹ್ಯ ಅವಲಂಬನೆಯನ್ನು ಬಿಟ್ಟು ನಮ್ಮ ಚಿಂತನೆಯ ಶೈಲಿಯನ್ನೇ ಬದಲಿಸಿಕೊಳ್ಳಬೇಕು. ಶೀರ್ಷಾಸನದ ಸ್ಥಿತಿಯಲ್ಲಿದ್ದರೆ ನಮಗೆ ಎಲ್ಲವೂ ತಲೆ ಕೆಳಗಾಗಿಯೇ ಕಾಣುತ್ತದೆ. ನೆಟ್ಟಗೆ ನಿಂತು ನೋಡುವುದೇ ಇದಕ್ಕೆ ಮದ್ದು. ಆಗ ನಮ್ಮ ದೃಷ್ಟಿಯು ನೇರ, ಸ್ಥಿರವಾಗಿದ್ದು - ನಮ್ಮ ಕ್ರಿಯೆ ಮತ್ತು ಪ್ರತಿಕ್ರಿಯೆಗಳೆರಡೂ ಸ್ಥಿಮಿತದಲ್ಲಿರುತ್ತವೆ. ಅದಕ್ಕಾಗಿ ಬದುಕಿನ ಭಂಗಿಯನ್ನು ಬದಲಿಸಿಕೊಳ್ಳಬೇಕಾಗುತ್ತದೆ.

ಉನ್ನತ ವಿಚಾರಗಳನ್ನು ಮಾತ್ರ ಮನನ ಮಾಡುತ್ತಿರುವುದರಿಂದ ಯಾವುದೇ ಬದುಕು ಸ್ವಚ್ಛವಾಗುತ್ತದೆ; ಹಗುರವೆನಿಸುತ್ತದೆ. ಅಂತಹ ಮನಸ್ಸುಗಳು ಕ್ರಮೇಣ ವೈಚಾರಿಕವಾಗಿ ಉನ್ನತ ಸ್ತರಕ್ಕೆ ಏರಿದಂತೆ - ಹೆಚ್ಚು ಹೆಚ್ಚು ಸಹಿಷ್ಣುವಾಗುತ್ತದೆ. ನಮ್ಮ ಕ್ರಿಯೆ ಮತ್ತು ಪ್ರತಿಕ್ರಿಯೆಗಳೆರಡೂ ಆಗ ಸಮತೋಲನದಲ್ಲಿರುತ್ತದೆ.

ಭಗವಾನ್ ಬುದ್ಧನ ಮುಖಕ್ಕೆ ಯಾರೋ ಒಬ್ಬ ಉಗುಳಿದನಂತೆ. ಆಗ ಬುದ್ಧನು ಸುಮ್ಮನೆ ಅದನ್ನು ಒರೆಸಿಕೊಂಡು "ಏನಪ್ಪ...ಇನ್ನೇನಾದರೂ ಹೇಳುವುದು ಇದೆಯೆ?" ಎಂದು ಆ ಉಗುಳಿದಾತನನ್ನು ಕೇಳಿದ. ಆಗ ಶಿಷ್ಯನಾದ ಆನಂದನು ಕುಪಿತಗೊಂಡು "ಸ್ವಾಮೀ, ಆತನನ್ನು ಏನು ಕೇಳುತ್ತಿದ್ದೀರಿ? ಆತ ನಿಮ್ಮ ಮುಖಕ್ಕೆ ಉಗುಳಿದ್ದಾನೆ. ನೀವು ನನಗೆ ಅವಕಾಶ ಕೊಡಿ. ಆತನನ್ನು ವಿಚಾರಿಸಿಕೊಳ್ಳುತ್ತೇನೆ.." ಎನ್ನುತ್ತಾನೆ.

ಆಗ ಬುದ್ಧನು "ನಾನು ಆತನನ್ನು ಕ್ಷಮಿಸಿದ್ದೇನೆ. ಏಕೆಂದರೆ ಅವನು ಅಜಾಗ್ರತ ಸ್ಥಿತಿಯಲ್ಲಿದ್ದಾನೆ. ಅವನಿಗೆ ಏನನ್ನೋ ಹೇಳಬೇಕು ಅನ್ನಿಸಿದೆ. ಆದರೆ ಶಬ್ದಗಳ ಮೂಲಕ ಹೇಳಲು ಬರುತ್ತಿಲ್ಲ. ಅದಕ್ಕಾಗಿ ಉಗುಳಿನ ಮೂಲಕ ಹೇಳುತ್ತಿದ್ದಾನೆ. ಅದಕ್ಕಾಗಿ ನಾನು ಆತನಲ್ಲಿ ಇನ್ನೇನಾದರೂ ಹೇಳುವುದಕ್ಕಿದೆಯಾ? ಎಂದು ಕೇಳಿದ್ದು.." ಎನ್ನುತ್ತ ಆ ಉಗುಳಿದ ವ್ಯಕ್ತಿಯತ್ತ ತಿರುಗಿ "ಏನಪ್ಪ, ಇನ್ನೂ ಏನಾದರೂ ಹೇಳಲಿಕ್ಕಿದ್ದರೆ ಹೇಳು..." ಅಂದ.

ಬುದ್ಧನ ಮಾತುಗಳನ್ನು ಕೇಳಿದ ಆ ಉಗುಳುಕೋರನಿಗೆ ಆಗ ಏನು ಮಾಡಬೇಕೆಂದು ತಿಳಿಯಲಿಲ್ಲ. ಆತ ಏನೊಂದೂ ಹೇಳದೆ ಅಲ್ಲಿಂದ ಹೊರಟುಹೋದ. ಆದರೆ ಮರುದಿನ ಮತ್ತೆ ಬಂದ. ರೋದಿಸುತ್ತ ಬುದ್ಧನಿಗೆ ನಮಸ್ಕರಿಸಿ "ಕ್ಷಮಿಸಿ. ನಿನ್ನೆ ನಾನು ಉಗುಳಿದೆ. ದೊಡ್ಡ ತಪ್ಪು ಮಾಡಿದೆ. ಅನಂತರ ತುಂಬ ವೇದನೆಯಾಯಿತು. ರಾತ್ರಿಯಿಡೀ ನಿದ್ದೆ ಬರಲಿಲ್ಲ..." ಎನ್ನುತ್ತ ಬುದ್ಧನ ಪಾದಗಳಿಗೆ ಎರಗಿದ.

"ಅಯ್ಯೋ ಪೆದ್ದಾ, ನೀನು ಉಗುಳಿರಬಹುದು. ಆದರೆ ಅದನ್ನು ನಾನು ಸ್ವೀಕರಿಸಲೇ ಇಲ್ಲ. ಅನಗತ್ಯವಾಗಿ ದುಃಖಿಸಬೇಡ. ನೀನು ನನ್ನ ಮುಖಕ್ಕೆ ಉಗುಳಿದೆ. ಅದರಿಂದ ನನಗೇನೂ ನೋವಾಗಲಿಲ್ಲ. ಆದ್ದರಿಂದ ನೀನು ಪಶ್ಚಾತ್ತಾಪ ಪಡುವ ಅಗತ್ಯವೇ ಇಲ್ಲ." ಎನ್ನುತ್ತ ಬುದ್ಧನು ಉಗುಳಿದವನನ್ನು ಸಾಂತ್ವನಗೊಳಿಸಿದ.

ಅನಂತರ ಬುದ್ಧನು ತನ್ನ ಶಿಷ್ಯನಾದ ಆನಂದನಿಗೆ ಹೇಳಿದ..." ಆನಂದ, ಈಗಲೂ ಆತನಿಗೆ ಏನೋ ಹೇಳಬೇಕೆಂದಿದೆ. ಆದರೆ ಆತನಿಗೆ ಅದನ್ನು ಪದಗಳ ಮೂಲಕ ನನ್ನೆದುರು ವ್ಯಕ್ತಪಡಿಸಲು ಆಗುತ್ತಿಲ್ಲ. ಯಾಕೆಂದರೆ ಅದು ಅವನ ಮಾತಿನ ಅಳವಿಗೆ ಸಿಗುತ್ತಿಲ್ಲ. ಆದ್ದರಿಂದಲೇ ನನ್ನ ಪಾದಗಳನ್ನು ತನ್ನ ಕಂಬನಿಯಿಂದ ತೊಳೆದಿದ್ದಾನೆ.."

ಇದು ಜ್ಞಾನದ ಪರಿಣಾಮ. ಉಗುಳುವುದೂ ಒಂದು ಭಾಷೆಯೇ. ಆಲಿಂಗಿಸುವುದೂ ಒಂದು ಭಾಷೆಯೇ. ನಮ್ಮ ಆಂಗಿಕ ವರ್ತನೆಗಳೆಲ್ಲವೂ ಭಾಷೆಗಳೇ. ನಮ್ಮ ಹೃದಯದಾಳದಲ್ಲಿ ಏನೋ ಒಂದು ಇದೆ; ಆಳದಲ್ಲೆಲ್ಲೋ ಅದು ಅವ್ಯಕ್ತವಾಗಿದೆ - ಪ್ರಕಟವಾಗಲು ಚಡಪಡಿಸುತ್ತಿದೆ ಎಂದಾದಾಗ ಅದು ಸಾಮಾನ್ಯ ಬುದ್ಧಿಸ್ತರದಲ್ಲಿ ಒಂದು ರೀತಿಯಲ್ಲಿ ವ್ಯಕ್ತವಾದರೆ ಜ್ಞಾನಿಯ ಉನ್ನತ ಸ್ತರದಲ್ಲಿ ಇನ್ನೊಂದು ರೀತಿಯಲ್ಲಿ ವ್ಯಕ್ತವಾಗುತ್ತದೆ.

ಹೀಗೆ ಚಿಂತನೆಗೆ ಪ್ರಚೋದಿಸುತ್ತ ವಿವೇಕದ ನೆಲೆಯನ್ನು ವಿಸ್ತರಿಸಿಕೊಳ್ಳಬಹುದಾದ ಇಂತಹ ಪಾಠಗಳು ಉಪನಿಷತ್ತಿನ ವ್ಯಾಖ್ಯಾನಗಳಲ್ಲಿ ದಂಡಿಯಾಗಿವೆ. ಮಾನವ ಜನ್ಮವನ್ನು ಸಾರ್ಥಕ ಪಡಿಸಿಕೊಳ್ಳುವ ಭದ್ರ ಮಾರ್ಗವನ್ನು ತೋರಿಸುವ ಉಪನಿಷತ್ತುಗಳು ಶ್ರೇಷ್ಠ ಮಾನವ ಸಂತಾನವನ್ನು ಉಳಿಸಿ ಬೆಳೆಸುವ ಮಹದುದ್ದೇಶವನ್ನೂ ಹೊಂದಿವೆ. "ಮಾನವ ಜನ್ಮ ದೊಡ್ಡದು; ಅದನ್ನು ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ.." ಎಂದು ಪುರಂದರದಾಸರು ನಯವಾಗಿ ಗದರಿಸಿದ್ದು ಅದಕ್ಕೇ. ಇದೂ ಉಪನಿಷದ್ಭಾವವೇ. ಭಾರತೀಯ ಸಂಸ್ಕೃತಿಕೇಂದ್ರದ ಆಳದಲ್ಲಿರುವ - ಶಕ್ತಿಯ ಕಾರಂಜಿಯೇ ಉಪನಿಷತ್ತು.

ಯಾವುದೇ ಅಂತಿಮ ರಹಸ್ಯ ಅರಿಯಲು ವಿನಯ ಬೇಕು. ಉಪನಿಷತ್ತುಗಳು ಅಂತಹ ವಿನಯ ಕಲಿಸುತ್ತವೆ. ಸ್ವಸ್ಥ ಗಂಭೀರ ಬದುಕಿಗೆ ದಾರಿ ತೋರಿಸುತ್ತವೆ. ನಿಜರಹಸ್ಯದತ್ತ ಸ್ನೇಹದಿಂದ ನಮ್ಮನ್ನು ಸೆಳೆಯುತ್ತವೆ. ಇದುವರೆಗೆ ಭೌತಿಕ ಜಗತ್ತಿನ ರಹಸ್ಯ ಶೋಧನೆಗೆ ಹೊರಟವರೆಲ್ಲರೂ ತಮ್ಮ ಕೈಗೆಟುಕದ, ತಮ್ಮಿಂದ ಆಚೆಗಿರುವ ಇನ್ನೇನೋ ರಹಸ್ಯದತ್ತ ಬೆರಳು ತೋರಿಸುತ್ತಲೇ ನಡೆದಿದ್ದಾರೆ. ಆಧುನಿಕ ವಿಜ್ಞಾನವೂ "ಇಷ್ಟೇ ಅಲ್ಲ; ಇನ್ನೂ ಏನೋ ಇದೆ" ಎನ್ನುತ್ತಲೇ ಬಂದಿದೆ. ಹೀಗಿರುವಾಗ ಹೊರ ಕಣ್ಣಿನಿಂದ - ಭೌತಿಕವಾಗಿ ಕಂಡದ್ದನ್ನು ಮಾತ್ರ ಒಪ್ಪುತ್ತೇನೆ ಅನ್ನುವವರೆಲ್ಲರೂ ತರ್ಕದಲ್ಲಿ ತೊಡಗುವ ಮೊದಲು ಉಪನಿಷತ್ತನ್ನು ಹಿಂಬಾಲಿಸುವುದು ಒಳಿತು. ಮನುಷ್ಯನ ಆಕಾರದಲ್ಲಿ ಇರುವಾಗಲೇ ಆಧ್ಯಾತ್ಮ ಸತ್ಯವನ್ನು ತಿಳಿದರೆ ಒಳ್ಳೆಯದು; ಮನುಷ್ಯನ ಶರೀರವು ಪಂಚಭೂತಗಳಲ್ಲಿ ಬೆರೆಯುವುದಕ್ಕೆ ಮೊದಲು ಆ ಸತ್ಯದ ಅರಿವಾದರೆ ಬಹಳ ಒಳ್ಳೆಯದು. ಮನುಷ್ಯನು ಗುರಿಯಿಲ್ಲದ ತನ್ನ ಬಾಹ್ಯ ಓಟವನ್ನು ಬಿಟ್ಟು ತನ್ನೊಳಗೆ ತಾನು ಯಾತ್ರಿಸಲು ಆರಂಭಿಸಿದರೆ, ತನ್ನ ತಪ್ಪಿದ ದಿಕ್ಕನ್ನು ಬದಲಿಸಿಕೊಳ್ಳತೊಡಗಿದರೆ, ಬಾಹ್ಯ ಪ್ರಾಪಂಚಿಕತೆಯಿಂದ ಆಂತರಿಕ ವಾಸ್ತವದೆಡೆಗೆ ದೃಷ್ಟಿ ನೆಟ್ಟರೆ ಮನುಷ್ಯನಾದ ಸದವಕಾಶದ ಸದುಪಯೋಗವಾದಂತೆ; ಸೃಷ್ಟಿಯನ್ನೂ ಗೌರವಿಸಿದಂತೆ - ಎನ್ನುತ್ತದೆ ಉಪನಿಷತ್ತು.

ಪ್ರತಿಯೊಬ್ಬ ವ್ಯಕ್ತಿ-ಜೀವಿಗಳೂ ಪರಿಪೂರ್ಣವಾದಾಗ ಮಾತ್ರ ಇಡೀ ಸಮಷ್ಟಿಯ ಸುಂದರ ಚಿತ್ರವು ಮೂಡುವುದು ಸಾಧ್ಯ. ಅದು - ಮನುಷ್ಯಪ್ರಯತ್ನಕ್ಕೆ ಎಟುಕದ ಆದರ್ಶ. ಲೌಕಿಕ ಸಮಾಜದ ಸಾಮಾನ್ಯ ಅಭಿರುಚಿಯು ಸದಾಕಾಲವೂ ತಪ್ಪೇ ಆಗಿರುತ್ತದೆ. ಉಪನಿಷತ್ ಮಾರ್ಗದಲ್ಲಿ ನಡೆಯುತ್ತ - ಅಂತಹ ತಪ್ಪುಗಳನ್ನು ಮಿತಿಗೊಳಿಸಿಕೊಂಡರೂ ಸಹನೀಯ ಬದುಕು-ಸಮಾಜವನ್ನು ಕಟ್ಟಿಕೊಳ್ಳಬಹುದು. ಆದ್ದರಿಂದ ಯಾವುದೇ ಪ್ರಯತ್ನವಿಲ್ಲದೆ ಹಂತಹಂತವಾಗಿ ಸಮಾಜವು ತಾನಾಗಿಯೇ ಸುಧಾರಣೆ ಕಾಣುತ್ತದೆ ಎಂಬ ಕನಸನ್ನು ಕಾಣಲಾಗುವುದಿಲ್ಲ. ಭಗವಂತನೇ ಅವತಾರ ಎತ್ತಿ ಬಂದರೂ - ಸಮಷ್ಟಿಯಲ್ಲಿ ಏಕಕಾಲದಲ್ಲಿ ಅಮೃತಭಾವವನ್ನು ತುಂಬುವುದು ಅಸಾಧ್ಯ. ಶ್ರೀ ರಾಮ - ಕೃಷ್ಣರ ಅವತಾರದ ನಂತರವೂ ರಾಕ್ಷಸ ಸಂತಾನದ ಸಮೂಲ ನಾಶವಾಗಲಿಲ್ಲ! ಏಕೆಂದರೆ ಕೆಡುಕುಗಳಿಗೆ ನಿರೋಧಕ ಶಕ್ತಿ ಮತ್ತು ಆಯುಷ್ಯ - ಜಾಸ್ತಿ; ಒಳಿತುಗಳು ಸೂಕ್ಷ್ಮ ಮತ್ತು ನುಗ್ಗಿ ಆಕ್ರಮಿಸಿಕೊಳ್ಳದವುಗಳು. ಆದ್ದರಿಂದಲೇ ಒಳಿತಿನ ಭಾವಗಳನ್ನು ಪ್ರಯತ್ನಪೂರ್ವಕವಾಗಿ ಪೋಷಿಸಬೇಕಾಗುತ್ತದೆ.

"ಉದ್ಧರೇದಾತ್ಮದಾತ್ಮಾನಾಂ " - ಅವರವರನ್ನು ಅವರವರೇ ಉದ್ಧರಿಸಿಕೊಳ್ಳಬೇಕೆಂದು ವೇದಾಂತದ ಹಲವು ಸಂದರ್ಭಗಳಲ್ಲಿ ಸೂಚನೆ ಸಿಗುತ್ತದೆ. ಅಂತಃಶುದ್ಧಿಯು ಈ ನಿಟ್ಟಿನಲ್ಲಿ ಮೊದಲ ಹೆಜ್ಜೆ. ಅಂತಃಕರಣವು ನಮ್ಮ ಆಂತರಿಕ ಇಂದ್ರಿಯ. ಉಳಿದ ಎಲ್ಲ ಇಂದ್ರಿಯಗಳು ನಮ್ಮನ್ನು ಹೊರಗೆ ಕರೆದೊಯ್ದರೆ ಅಂತಃಕರಣವು ನಮ್ಮನ್ನು ಒಳಗೆ ಕರೆದೊಯ್ಯುತ್ತದೆ. ಆದರೆ ಈ ಅತೀಂದ್ರಿಯವನ್ನು ನಾವು ಮನುಷ್ಯರು ಉಪಯೋಗಿಸುವುದೇ ಇಲ್ಲ. ಎಂದೂ ಉಪಯೋಗಿಸದೇ ಇರುವ ದೇಹಭಾಗವು ಸಹಜವಾಗಿ ಶಿಥಿಲಗೊಳ್ಳುತ್ತದೆ. ಬರಬರುತ್ತ ನಿರ್ಜೀವವಾಗುತ್ತದೆ. ಅನೇಕ ಜನ್ಮಗಳಿಂದಲೂ ಉಪಯೋಗಿಸದೆ ಜಡ್ಡಾಗಿರುವ ನಮ್ಮ ಅಂತಃಕರಣಕ್ಕೆ ಈಗ ಜುಮ್ಮು ಹಿಡಿದಿದೆ. ಈಗ ಅದನ್ನು ತಿಕ್ಕಿ ಒತ್ತಿ ಮತ್ತೊಮ್ಮೆ ಜೀವಸಂಚಾರಕ್ಕೆ ಸಿದ್ಧಗೊಳಿಸಬೇಕಾಗುತ್ತದೆ. ಅದಕ್ಕೆ ಅಪಾರವಾದ ಸಹನೆ ಬೇಕು.  

ಜೊತೆಗೆ - ಊರು ಉದ್ಧಾರ ಮಾಡುವ ಪ್ರಚಾರಪ್ರಿಯ ಬಾಹ್ಯ ತಂಟೆಗಳಿಗೆ ಕಡಿವಾಣ ಹಾಕಲೇಬೇಕಾಗಿದೆ. ಅತಿಯಾದರೆ ಪರೋಪಕಾರವೂ ವ್ಯಸನವೇ . ಸಪಾತ್ರ ಸಜ್ಜನರಿಗಲ್ಲದೆ - ಸಾರಾಸಗಟಾಗಿ ಕೈಗೊಳ್ಳುವ  ಉಪಕಾರ ಶಿಬಿರಗಳಿಂದ ಸಾಮಾಜಿಕ ಏರುಪೇರುಗಳಾಗಿ ಒಟ್ಟಾರೆ ಸಮಾಜದ ಸ್ವಾಸ್ಥ್ಯವೂ ಕೆಡಬಹುದು ಎಂಬುದು ಈಗಾಗಲೇ ಸಿದ್ಧವಾಗಿದೆ. ಇಂತಹ ವ್ಯಾಯಾಮಗಳಿಂದ ಸ್ವಂತಕ್ಕಾಗಲೀ ಇತರರಿಗಾಗಲೀ ಆಗುವ ಅನುಕೂಲಕ್ಕಿಂತ - ಪರೋಕ್ಷ ಅನಾನುಕೂಲವೇ ಹೆಚ್ಚು. ಉಪಕಾರವೂ ಒಂದು ಶಸ್ತ್ರ. ಅದರ ಪ್ರಯೋಗ ಮತ್ತು ಉಪಸಂಹಾರದ ಎರಡೂ ಬಗೆಯ ವಿದ್ಯೆಯನ್ನು ತಿಳಿದವರು ಮಾತ್ರ ಉಪಕಾರ ಮಾಡಲು ಅರ್ಹರಾಗುತ್ತಾರೆ. ಹಾಗೆ ನೋಡಿದರೆ... ಯಾರೂ ಯಾರನ್ನೂ ಸಾದ್ಯಂತವಾಗಿ ಉದ್ಧರಿಸಲು ಆಗುವುದಿಲ್ಲ ; ಸ್ವಯಂ ಸಹಕರಿಸಿಕೊಳ್ಳುವ ಕ್ರಿಯೆಯೇ - ಸರ್ವೋತ್ತಮವಾದುದು - ಎಂಬುದು ಉಪನಿಷತ್ತಿನ ಸಂದೇಶ. ಈ ಅರಿವು ನಮ್ಮಲ್ಲಿ ಮೂಡದಿದ್ದರೆ "ಕೆರೆಯುವುದು, ಬರೆಯುವುದು, ಉಜ್ಜುವುದು" ಇತ್ಯಾದಿ ವ್ಯರ್ಥ ಕೆಲಸದಲ್ಲಿಯೇ ಇಡೀ ಬದುಕು ಮುಗಿಯುತ್ತದೆ.

ಲೌಕಿಕವಾದದ ಕ್ರಮಬದ್ಧ ಸರಪಣಿಗೆ ಕಟ್ಟಿಕೊಂಡರೆ - ಅದು - ಒಂದು ಬದುಕಿನ ಶಕ್ತಿಯನ್ನೆಲ್ಲ ಸ್ಥಗಿತಗೊಳಿಸಿ ಅದರ ಸೌಂದರ್ಯವನ್ನೇ ಹಾಳುಮಾಡಬಹುದು. ಈ ಲೋಕವೊಂದು ಸಂತೆ. ಬೃಹತ್ ಲೋಕಶಕ್ತಿಯ ಜೀವಸಮುದ್ರದ ಮಥನಕ್ಕೆ ನಮ್ಮೊಳಗಿನ ಶಕ್ತಿ ಸಾಲದು. ಆದರೆ... ಯಾವುದೇ ವ್ಯಕ್ತಿಯು ತಾನು ತನ್ನಷ್ಟಕ್ಕೆ ಸರಿಯಾಗಿರಲು ಪ್ರಯತ್ನಿಸುವುದು ಸಾಧ್ಯವಿದೆ. ಆದರೆ ಇನ್ನೊಬ್ಬರಿಗೆ ಉಪಕರಿಸಿ ಇತರರನ್ನು ನೇರಗೊಳಿಸುವ ಕ್ರಿಯೆಗಳೆಲ್ಲವೂ ಅಪಾಯಕಾರಿ ಸಾಹಸಕ್ರೀಡೆಗಳು. ಅವತಾರವರಿಷ್ಠರಾದವರು ನಡೆಸುವಂತಹ ಸಾಹಸದ ಕ್ರಿಯೆಗಳನ್ನು ವೇಷಧಾರಿಗಳೆಲ್ಲರೂ ನಡೆಸಲು ಪ್ರಯತ್ನಿಸಿದರೆ - ಅವು ಹಾಸ್ಯಾಸ್ಪದವಾಗುವುದೂ ಇದೆ. ಅದು ನಾಯಿಯ ಬಾಲಕ್ಕೆ ನಳಿಗೆ ಹಾಕಿ ನೇರಗೊಳಿಸಲು ಯತ್ನಿಸಿದಂತೆ ವ್ಯರ್ಥವಾಗುವುದು ಸಾಮಾನ್ಯ. ಆದ್ದರಿಂದ ಮತ್ತೊಮ್ಮೆ ಮೂಲ ಗರ್ಭಗುಡಿಯನ್ನು ಪ್ರವೇಶಿಸಬೇಕು ಎಂದಾದರೆ ನಮ್ಮ ಅದಮ್ಯ ಏಕನಿಷ್ಠೆಯು ಮಾತ್ರ ಉಪಕರಿಸಬಲ್ಲದು. ಅನುಭವಜನ್ಯ ತಿಳಿವಿನೆಡೆಗೆ - ನಮ್ಮ ಶ್ರದ್ಧೆ- ನಿಷ್ಠೆಗಳೇ ನಮ್ಮನ್ನು ಕರೆದೊಯ್ಯಬಲ್ಲದು. ಇದು ಅಭಯಪ್ರದ ಪಥ - ಎನ್ನುತ್ತವೆ ಉಪನಿಷತ್ತುಗಳು.

ಉಪನಿಷತ್ತುಗಳೆಂದರೆ ಭಯಹಾರಕ; ಅಭಯದಾಯಕ. ತನಗೆ ತಾನು ಅರ್ಥವಾಗಲಾಗದ ಒಂದು ರಹಸ್ಯವೇ ತಾನು -  ಎಂಬಷ್ಟನ್ನಾದರೂ ಮನುಷ್ಯನು ಅರ್ಥ ಮಾಡಿಕೊಂಡು ಅಷ್ಟನ್ನಾದರೂ ಒಪ್ಪಿಕೊಳ್ಳಲು, ಹದವರಿತು ಬದುಕಲು - ಉಪನಿಷತ್ತನ್ನು ಒಮ್ಮೆಯಾದರೂ ಪ್ರವೇಶಿಸಬೇಕು. ಎಲ್ಲರಿಗೂ ಅಂತಿಮ ಗುರಿಯನ್ನು ತಲುಪಲಾಗದಿದ್ದರೂ ಇದರಿಂದಾಗಿ ಸ್ವಸ್ಥ ಮನಸ್ಸಿನ ಸಾತ್ವಿಕ ಸಮಾಜವಂತೂ ಉದಿಸಬಹುದು. ಈ ನಿಟ್ಟಿನಲ್ಲಿ ಉಪನಿಷತ್ತುಗಳು ನಮಗೆ ಸಮರ್ಥ ಮಾರ್ಗದರ್ಶನ ನೀಡಬಲ್ಲವು.

ಉಪನಿಷತ್ತಿನ ಋಷಿಗಳು ನಿರ್ಭೀತಿಯಿಂದ ಪರಸ್ಪರ ಪ್ರಶ್ನೆಗಳನ್ನು ಕೇಳಿಕೊಂಡರು; ಯಾಕೆ? ಏನು? ಹೇಗೆ? ಯಾರು? ಯಾರಿಂದ? ಎಂದು ತಾವೇ ಕೇಳಿಕೊಳ್ಳುತ್ತ ಉತ್ತರಾನ್ವೇಷಿಯಾದರು; ಪ್ರಶ್ನೆಯ ಹಿಂದೇ ನಡೆದರು. ಉತ್ತರವನ್ನೂ ಪಡೆದರು. ತಾವು ಕಂಡುದನ್ನು ಶ್ರುತಿ ರೂಪದಲ್ಲಿ ವರ್ಗಾಯಿಸುತ್ತ ಬಂದರು. ಎಷ್ಟೋ ಜ್ಞಾನ ಬಿಂದುಗಳು ಚೆಲ್ಲಿಹೋದರೂ ಮುಂದೆ ವೇದವ್ಯಾಸರ ನಂತರ - ಸ್ಮೃತಿಯಾಗಿಯೂ - ವಿಭಿನ್ನ ರೂಪದಲ್ಲಿ ಉಪನಿಷತ್ ವೃತ್ತಾಂತಗಳು ಉಳಿದುಕೊಂಡಿವೆ.

ಆದರೆ ಉಪನಿಷತ್ತಿನ ಆಧ್ಯಾತ್ಮಿಕ ಅನುಭವವನ್ನು ಯಥಾವತ್ತಾಗಿ ವಿವರಿಸುವ ಸಾಮರ್ಥ್ಯವು ಯಾವುದೇ ಭಾಷೆಗಿಲ್ಲ; ಭಾಷ್ಯಕ್ಕೂ ಇಲ್ಲ. ಹೇಳಿದಷ್ಟೂ ವಿಸ್ತರಿಸಲ್ಪಡುವ ವಿಷಯವಿದು. ಇಂದ್ರಿಯ ಚೇತನದ ಮಣ್ಣಿನ ನಾಲಗೆಗಳಿಗಂತೂ ಉಪನಿಷತ್ತಿನ ಭಾರವನ್ನು ತಾಳಿಕೊಳ್ಳಲು ಆಗುವುದೇ ಇಲ್ಲ. ಆಯಾ ಕಾಲದ ಭಾಷೆಯ ವೈಖರಿಯ ವ್ಯತ್ಯಾಸದಿಂದಲೂ - ಹಳೆಯ ಪಾಠಗಳನ್ನು ಅನುಸರಿಸುವಾಗ ಉಪನಿಷದ್ಭಕ್ತರಿಗೆ ಕ್ಲಿಷ್ಟತೆಯ ಅನುಭವವಾಗಬಹುದು. "ನಾನು ಅವನೇ ಆಗದೆ (ಅಹಂ ಬ್ರಹ್ಮಾಸ್ಮಿ) ಬ್ರಹ್ಮ ಸತ್ಯವು ಅನುಭವಕ್ಕೆ ನಿಲುಕದು" ಎಂಬ ಒಂದೇ ಒಂದು ಸೂತ್ರವನ್ನು ಬಿಡಿಸಲು ಆಚಾರ್ಯರುಗಳು ಅದೆಷ್ಟು ಮಥನ ನಡೆಸಿರಬಹುದು? ಆದರೂ... ಏನೋ ಅಪೂರ್ಣತೆ! ಮಾತಿಗೆ ನಿಲುಕದ ಅನನ್ಯತೆ! ಇಂದ್ರಿಯಗಳ ಒಡೆತನದ ಮಿಥ್ಯ ಜಗತ್ತಿನಲ್ಲಿದ್ದು ನಡೆಸುವ ಸತ್ಯದ ಹುಡುಕಾಟದ ವೈಕಲ್ಯ! ಆಧುನಿಕತೆಯೆಂಬ ಗೊಂದಲಿಗರ ನಿತ್ಯದ ಶಬ್ದ ಮಾಲಿನ್ಯವನ್ನು ನಿಲ್ಲಿಸಿ ಏಕಾಂತದಲ್ಲಿ ಮೌನ ತಪಸ್ವಿಗಳಾಗದೆ - ಚೈತನ್ಯದ ಪೂಜೆ ನಡೆಸಲು ಬಾರದು; ಅನುಭವವೂ ದಕ್ಕದು.

ಪೌರಾಣಿಕ ಯುಗದಲ್ಲಿ ಆಗ, ಒಬ್ಬನೇ ಒಬ್ಬ ಯಯಾತಿಯಿದ್ದ. ಅಥವ ಯಯಾತಿಯಂತಹ - ಮುಗಿಯದ ಬಯಕೆಗಳ ಸರದಾರ ರ ಸಾಮಾಜಿಕ ರಾಜನೇತೃತ್ವವು ಅಂದು ಇದ್ದಿರಲಿಲ್ಲ. ಆದ್ದರಿಂದ ಅಂದಿನ ಸಮಾಜದ ಶಿಸ್ತುಗಳಿಗೆ ಬೆನ್ನು ತಿರುಗಿಸಿ, "ರಾಜ ವಿಶಿಷ್ಟ" ಎನ್ನಿಸಿಕೊಂಡ ಯಯಾತಿಯು - ಋಷಿಮುನಿಗಳ ಕಥಾವಸ್ತುವಾದ. ಆದರೆ ಈಗ ಹಾಗಲ್ಲ. ಇಂದಿನ ಆಧುನಿಕ ಜಗತ್ತು ಅಂದಿಗಿಂತ ಶಕ್ತಿವಂತರಾದ ಯಯಾತಿಗಳಿಂದ ತುಂಬಿ ತುಳುಕುತ್ತಿದೆ. "ಬದುಕನ್ನು ಓಲೈಸಿ ಬಯಕೆಗಳನ್ನು ಪೂರೈಸಿದಷ್ಟೂ ಹೊಸಹೊಸ ಬಯಕೆಗಳು ಮುತ್ತುತ್ತಲೇ ಹೋಗುತ್ತವೆ" ಎಂಬ ಉಪನಿಷತ್ತಿನ ಸಂದೇಶವು ಇಂದಿಗಿಂತ ಅಂದೇ ಹೆಚ್ಚು ಸ್ವೀಕೃತವಾಗಿದ್ದರೂ ಅಂದಿನ ಯಯಾತಿಯ ಆಸೆ, ಸ್ವಪ್ರತಿಷ್ಠೆ, ಸ್ವಾರ್ಥದ ಪರಾಕಾಷ್ಠೆಯಿಂದಾಗಿ - ಆ ಯಯಾತಿಯು ಕುಬ್ಜನಾಗಿ ಹೋದ. ಸ್ವರ್ಗದಿಂದಲೂ ಉರುಳಿದ; ಕತೆಯಾಗಿ ಉಳಿದುಹೋದ. ತನ್ನ ಇಂದ್ರಿಯಗಳು ಜೋತುಬಿದ್ದು ಸೋಲುವವರೆಗೂ ಯಯಾತಿಗೆ ಜ್ಞಾನೋದಯವಾಗಲಿಲ್ಲ. ಅಂದಿನ ಯಯಾತಿಯು ಜನಾಕರ್ಷಣೆಯ ರಾಜನಾದುದರಿಂದಲೂ - ಅಂತಹ ವಿಷಮ ಘಟನೆಗಳು ಅಂದು ವಿರಳವಾಗಿದ್ದುದರಿಂದಲೂ ಆತನು ಸಾಮಾಜಿಕ ಭರ್ತ್ಸನೆಗೂ ಒಳಗಾದ.

ಆದರೆ ಇಂದಿನ ಯಯಾತಿಗಳಿಗೆ ಅಂತಹ ಬಿಗುವಿನ ಸಾಮಾಜಿಕ ಪರಿಸರವಾಗಲೀ ಬೌದ್ಧಿಕ ವಾತಾವರಣವಾಗಲೀ ಧರ್ಮನೀತಿಬೀರುತನವಾಗಲೀ ಅಸ್ತಿತ್ವದಲ್ಲೇ ಇಲ್ಲದಿರುವುದರಿಂದ ಇಂದಿನ ಸಮಾಜವು ಅಂಕೆತಪ್ಪಿ, ಅಂತಃಕ್ಷೋಭೆಯಿಂದ ದಿಕ್ಕುದೆಸೆಯಿಲ್ಲದೆ "ಯಯಾತಿ ವಿಶ್ವ" ವಾಗಿ ಅರಳುತ್ತಿದೆ; ನರಳುತ್ತಿದೆ. ಆದ್ದರಿಂದಲೇ ಒಳ್ಳೆಯ ವಿಚಾರಗಳನ್ನು ಹುಡುಕಿ ಹುಡುಕಿ ತಿರಸ್ಕರಿಸುವ, ಅವಹೇಳನ ಮಾಡುವ ವಿಕೃತಿ (Fashion) ಗೆ ಇಂದಿನ ಸಮಾಜವು ಬಲಿಯಾಗುತ್ತಿದೆ. ಆದ್ದರಿಂದಲೇ ಎಲ್ಲೆಲ್ಲೂ ಅತೃಪ್ತಿ. ಅತೃಪ್ತಿಯಿಂದ - ಪರಸ್ಪರ ಅವಹೇಳನ; ಅಸಹನೆ. ಅಸಹನೆಯಿಂದ ಹಿಂಸೆ. ಹಿಂಸೆಯಿಂದ ನಾಶ. ಹೀಗೆ ವಿನಾಶದ ಚಕ್ರವು ಸುತ್ತುತ್ತಲೇ ಇದೆ.

ಭಾರತೀಯ ಸಾಂಸ್ಕೃತಿಕ ಮೌಲ್ಯಗಳ ಅಡಿಪಾಯವೇ ಉಪನಿಷತ್ತು. ನಮ್ಮ ನಿಜ ಸಂಪತ್ತಾದ ಸಾಕ್ಷಾತ್ ಮೌಲ್ಯಗಳನ್ನೆಲ್ಲ ಹೀನಾಯವಾಗಿ ಹೀಯಾಳಿಸುತ್ತ ಅಡ್ಡಾಡುವ ದೊಡ್ಡ ವರ್ಗವೇ ಈಗ ಬೆಳೆದು ನಿಂತಿದೆ. ಇದು ಭವಿಷ್ಯದಲ್ಲಿ ಸಂಭವಿಸುವ ಮಹಾದುರಂತಕ್ಕೆ ಮುನ್ನುಡಿ. ಇಂದಿನ "ಶಿಕ್ಷಿತರು" ಎಂದುಕೊಂಡಿರುವ, ಅಕ್ಷರದ ಜಾತ್ರೆ ನಡೆಸುವ ವರ್ಗಕ್ಕೆ ಒಂದೋ ಉಪನಿಷತ್ತಿನ ಪರಿಚಯವೇ ಇಲ್ಲ. ಅಥವ ಅದು ಅವರ ದೌರ್ಭಾಗ್ಯಕ್ಕೆ ಒಗ್ಗುವುದಿಲ್ಲ. ಅಥವ ಸ್ವಾರ್ಥಪ್ರೇರಿತ ಕ್ಷಣಿಕ ಲಾಭದ ಪ್ರೇಯಸ್ಸಿನ ಹಿಂದೆ ಅವರೆಲ್ಲರೂ ಓಡುತ್ತಿರಬಹುದು. ಅಥವ ಪೂರ್ವಾಗ್ರಹ ಪೀಡಿತ ರೋಗಬಾಧೆಗೆ ಒಳಗಾಗಿರಬಹುದು. ಆದರೆ ನೆನಪಿರಲಿ. ಅರವಿಂದರನ್ನು ಪಾಂಡಿಚೇರಿಯ ಮಾಣಿಕ್ಯವಾಗಿಸುವಲ್ಲಿ, ನರೇಂದ್ರನನ್ನು ವೀರ ವಿವೇಕಾನಂದರಾಗಿಸುವಲ್ಲಿ ಉಪನಿಷತ್ತು ನಿರ್ವಹಿಸಿದ ಪಾತ್ರವು ಮಹತ್ವದ್ದು. ಕನ್ನಡದ ವಚನ ಸಾಹಿತ್ಯದ ತುಂಬ ಉಪನಿಷತ್ ಬೋಧನೆಗಳು ಮರುಕಳಿಸುತ್ತವೆ. ಉಪನಿಷತ್ತು ಸಾಧಕರನ್ನು - ಧೀರರನ್ನು ನಿರ್ಮಿಸುತ್ತದೆ. ಆಳಕ್ಕೆ ಮುಳುಗಿ ಮುತ್ತನ್ನು ಹೆಕ್ಕಿ ತರಬಲ್ಲ "ಧೀರ " ನೇ ನಿಜವಾದ ಸಾಧಕ.

" ಭಾರತದ ಇತಿಹಾಸ, ಸಂಸ್ಕೃತಿಗಳ ಒಳದೃಷ್ಟಿ ಪಡೆಯಲು ಉಪನಿಷತ್ತುಗಳಲ್ಲಿ ಸಂಚರಿಸುವುದು ಅನಿವಾರ್ಯ. ಭಾರತದ ತತ್ತ್ವ ಮತ್ತು ಧರ್ಮವಿಜ್ಞಾನವು ಉಪನಿಷತ್ತು ತೋರಿದ ದಾರಿಯಲ್ಲಿಯೇ ನಡೆದು ಬಂದಿದೆ. ಭಾರತದ ಧಾರ್ಮಿಕ ಪ್ರಪಂಚದಲ್ಲಿ ಮುಂದೆ ಆದ ಎಲ್ಲ ಚಿಂತನೆಯ ಶಾಖೆಗಳೂ ಉಪನಿಷತ್ತಿನಿಂದಲೇ ಪ್ರೇರಿತವಾದವುಗಳು. ಭಕ್ತಿಯ ಆದರ್ಶವೂ ಉಪನಿಷತ್ತಿನಲ್ಲಿದೆ. ಪುರಾಣಗಳಲ್ಲೂ ಇತರ ಸ್ಮೃತಿಗಳಲ್ಲೂ ಮುಂದೆ ಪೂರ್ಣವಾಗಿ ಬೆಳೆದ ಅನೇಕ ಭಾವನೆಗಳು ಉಪನಿಷತ್ತುಗಳಲ್ಲಿ ಬೀಜರೂಪದಲ್ಲಿವೆ. ಒಂದು ಸ್ಥೂಲ ನಕ್ಷೆ, ಚೌಕಟ್ಟು ಉಪನಿಷತ್ತಿನಲ್ಲಿತ್ತು. ಕೆಲವು ಪುರಾಣಗಳು ಅದನ್ನು ತುಂಬಿದವು - ಅಷ್ಟೆ. ಪೂರ್ಣವಾಗಿ ವಿಕಾಸಗೊಂಡ ಯಾವುದೇ ಭಾರತೀಯ ಆದರ್ಶದ ಮೂಲವು ಉಪನಿಷತ್ತೇ ಆಗಿದೆ." ಎಂದು ವಿವೇಕಾನಂದರು ಅಭಿಪ್ರಾಯಪಟ್ಟಿದ್ದಾರೆ. ಇಷ್ಟೇ ಅಲ್ಲ. ಕೆಲವು ಕರ್ಮಭಾಗದ ಅಂಶಗಳಿಗೆ ಹೆಚ್ಚು ಒತ್ತನ್ನು ಕೊಟ್ಟದ್ದು ಬಿಟ್ಟರೆ ಅವೈದಿಕವಾದ ಬೌದ್ಧಧರ್ಮವೂ ಉಪನಿಷತ್ತಿನ ಬೇರಿನ ಮೇಲೇ ನಿಂತಿದೆ.

ಇತ್ತೀಚೆಗಿನ ವರ್ಷಗಳಲ್ಲಿ ಇಂತಹ ಗಂಭೀರವಾದ ತತ್ತ್ವ ಸಿದ್ಧಾಂತಗಳು ಸಾಹಿತ್ಯ ಪ್ರಕಾರಗಳಲ್ಲಿ ವಿರಳವಾಗಿ ಹೋಗಿವೆ. ವ್ಯರ್ಥ "ಕರಟ ಹೆರೆಯುವುದು" ಒಂದು ಚಟವಾಗಿ ಹೋಗಿದೆ. ಗಾಂಭೀರ್ಯವೇ ಇಲ್ಲದ ಪೋಕು ಮಾತುಗಳಿಂದಲೇ ತಮ್ಮ ಮತ್ತು ಸುತ್ತಿನ ಬದುಕುಗಳನ್ನು ಹ್ರಸ್ವಗೊಳಿಸುತ್ತಿರುವವರ ನೇತೃತ್ವದಲ್ಲಿ ಇಂದಿನ ಅಸ್ವಸ್ಥ ಸಮಾಜವು ತೆವಳುತ್ತ ಸಾಗುತ್ತಿದೆ. ಉಪನಿಷತ್ತನ್ನು ಪ್ರವೇಶಿಸಿದ ಯಾವ ಬರಹಗಾರನೂ "ಹೊಟ್ಟೆಪಾಡಿನ ಸಾಹಿತಿ" ಆಗುವುದು ಅಸಾಧ್ಯ.

ನಿಜವಾದ ಸಾಹಿತಿಯೂ ತಪಸ್ವಿಯೇ ಆಗಬೇಕಾಗುತ್ತದೆ. ಉಪನಿಷತ್ತಿನ ವಿದ್ಯಾರ್ಥಿಯು ಎಂದಿಗೂ ಪುಕ್ಕಟೆ ಪ್ರಚಾರ, ಸಂದಿಗೊಂದಿಯ ಒಳದಾರಿಗಳನ್ನು ಆಯ್ದುಕೊಳ್ಳುವುದು ಅಸಂಭವ. ಏಕೆಂದರೆ ಉಪನಿಷತ್ತು ವ್ಯಕ್ತಿಯ ಅಂತರಂಗವನ್ನು ಶುದ್ಧಿಗೊಳಿಸುತ್ತದೆ. ಸಮಾಜಕ್ಕೆ ನೀಡುವ ಒಂದೊಂದು ಅಕ್ಷರವೂ ಅಮೂಲ್ಯವಾಗುವುದು ಉಪನಿಷತ್ತಿನ ಸಾನ್ನಿಧ್ಯದಿಂದ ಮಾತ್ರ ಸಾಧ್ಯ. ಶ್ರೀ ಎಸ್.ಎಲ್.ಭೈರಪ್ಪನವರ ಹಿಂದಿನ ಬರಹಗಳಲ್ಲಿ ಉಪನಿಷತ್ತಿನ ಸುವಾಸನೆಯ ಮಿಂಚಿದೆ. ಆದ್ದರಿಂದಲೇ ಎಷ್ಟು ಬಾರಿ ಓದಿದರೂ ಅವರ ಬರಹಗಳು ಓದುಗರನ್ನು ಪುಳಕಿತಗೊಳಿಸುತ್ತವೆ. ಇನ್ನೂ ಸ್ವಲ್ಪ ಹಿಂದೆ ಸರಿದು ನೋಡಿದರೆ ಸರ್ವಶ್ರೀ ಡಿ ವಿ ಜಿ, ಎ.ಆರ್.ಕೃಷ್ಣಶಾಸ್ತ್ರಿ, ದೇವುಡು ನರಸಿಂಹ ಶಾಸ್ತ್ರಿ, ಅಂಬಿಕಾತನಯದತ್ತ, ಕುವೆಂಪು, ಕಾವ್ಯಾನಂದ ಮುಂತಾದ ಕೆಲವು ಹಿರಿಯ ಬರಹಗಾರರನ್ನು ಉಪನಿಷತ್ ಹಿನ್ನೆಲೆಯಲ್ಲಿ ಗುರುತಿಸಿದಾಗ - ತಲೆಬಾಗುತ್ತದೆ. ಸರ್ವಶ್ರೀ ಕೆ.ಎಸ್. ನಾರಾಯಣಾಚಾರ್ಯ, ಬನ್ನಂಜೆ ಗೋವಿಂದಾಚಾರ್ಯ ಮುಂತಾದ ವಿದ್ವಾಂಸರು ಈಗಲೂ ಉಪನಿಷತ್ತಿನ ಸದ್ವಿಚಾರಗಳನ್ನು ಪ್ರಚುರಪಡಿಸುತ್ತಲೇ ಇದ್ದಾರೆ. "ಮಂಕು ತಿಮ್ಮ" ಎನ್ನುತ್ತಲೇ ಬದುಕಿನ ಸುಭಗ ದಾರಿಯನ್ನು ತೋರಿಸಿದ, ಕಠಿಣ ಸಿದ್ಧಾಂತಗಳನ್ನು ಸರಳವಾಗಿ ಬಿಡಿಸಿಟ್ಟ ಡಿ ವಿ ಜಿ ಅವರಲ್ಲಿದ್ದ ಜ್ಞಾನಿಯ ಸಂಯಮ, ವಿನಯವಂತಿಕೆಯನ್ನು ಇಂದಿನ ಬಹುತೇಕ ಯುವಜನರಿಗೆ ತಲುಪಿಸಬೇಕಾಗಿದೆ. ಆದರೆ ದಿನಹೋದಂತೆ - ಉತ್ತಮ ಸಾಹಿತ್ಯಗಳು ಕಾಣಿಸದಂತೆ - ಅವುಗಳ ಮೇಲೆ ರಾಶಿ ಬೀಳುತ್ತಿರುವ ರದ್ದಿ ಸಾಹಿತ್ಯ ಸಂಚಲನವು - ಮಾನವ ಕಲ್ಯಾಣದ ಅಪಾಯದ ಮುನ್ಸೂಚನೆಯಂತೆಯೂ ಒಮ್ಮೊಮ್ಮೆ ಕಾಣುತ್ತದೆ. (ಜತೆಜತೆಗೆ ಉತ್ತಮವಾದುದನ್ನು ಗುರುತಿಸಿ, ಓದುವ ಹವ್ಯಾಸವೂ ಇಳಿಮುಖವಾಗುತ್ತಿದೆ!)

ಆದ್ದರಿಂದಲೇ ಹತ್ತಿದ ಏಣಿಯನ್ನು ಮರೆಯದ, ಹತ್ತಬಹುದಾದ ಸುಭದ್ರ ಏಣಿಯನ್ನು ಎಲ್ಲರೂ ಬಳಸಿಕೊಳ್ಳುವ ಮನೋಭಾವವು ವಿಕಸಿಸುವಂತಹ ಶಿಕ್ಷಣವು ಇಂದಿನ ಅಗತ್ಯವೆನ್ನಿಸಿದೆ. "ನಾವು ಏನು ಮಾಡಿದ್ದೇವೆ? ಅಥವ ಏನು ಸಾಧಿಸಿದ್ದೇವೆ?" ಎಂಬುದಕ್ಕಿಂತ "ನಾವು ಈಗ ಏನಾಗಿದ್ದೇವೆ?" ಎಂಬುದೇ ಮನುಷ್ಯರು ಮೊತ್ತಮೊದಲು ಕೇಳಿಕೊಳ್ಳಬೇಕಾದ ಅರ್ಥಪೂರ್ಣ ಪ್ರಶ್ನೆ. ನಮ್ಮ ಬದುಕಿನ ಕರ್ಮವು "ಸಿದ್ಧಿ"ಯನ್ನು ಪ್ರತಿಬಿಂಬಿಸುತ್ತಿದ್ದರೆ - - ನಾವು ಏನಾಗಿದ್ದೇವೆ? ಎಂಬುದು ನಮ್ಮ "ವ್ಯಕ್ತಿತ್ವ ಮತ್ತು ಸಂಸ್ಕೃತಿ"ಯನ್ನು ಪ್ರತಿಬಿಂಬಿಸುತ್ತದೆ. ಕಲೆ, ವಿಜ್ಞಾನ, ಧರ್ಮ - ಇವು ಒಂದೇ ಸತ್ಯವನ್ನು ಹೇಳುವ ಮೂರು ವಿಧಾನಗಳು. "ಹಣ ಮಾಡುವುದು, ಕುಟುಂಬ, ಪೀಳಿಗೆ ಮುಂತಾದುವೆಲ್ಲವೂ ಕೇವಲ "ಪ್ರಕೃತಿ"ಯೇ ಹೊರತು - ಅದು "ಸಂಸ್ಕೃತಿ" ಅಲ್ಲ. ಯಾವುದೇ ಬದುಕಿನ ಮೊದಲನೆಯ ಅರ್ಧ ಭಾಗದಲ್ಲಿ ಸಾಧಿಸುವ ಈ "ಸಿದ್ಧಿ"ಯ ಶಿಕ್ಷಣವು ಆಯಾ ಬದುಕಿನ ಉತ್ತರಾರ್ಧದಲ್ಲಿ ಆಧ್ಯಾತ್ಮಿಕ ಶಿಕ್ಷಣಕ್ಕೆ ಪೂರಕವಾಗಿರಬೇಕು. ಯಾವುದೇ ಬದುಕಿನ ಪೂರ್ವಾರ್ಧ ಮತ್ತು ಉತ್ತರಾರ್ಧಗಳ ನಡುವೆ ಕಂದಕವುಂಟಾಗದೆ ಅವುಗಳ ನಡುವೆ ಸೌಹಾರ್ದದ ಸೇತುವೆಯು ರೂಪುಗೊಳ್ಳಬೇಕು. ಉಪನಿಷತ್ತುಗಳು ಅಂತಹ ಸಮಭಾವದ - "ಸಾಧು ಶಿಕ್ಷಣ" ದ ಸೇತುವೆಯನ್ನು ಕಟ್ಟಬಲ್ಲದು.

ಬದುಕು ಎಂದರೇನು? ಮಾನವ ಎಂದರೇನು? ಇಲ್ಲಿ ಶಾಶ್ವತವಾದದ್ದು ಏನಾದರೂ ಇದೆಯೆ? ನಮ್ಮ ದಾರಿ - ಗುರಿ ಯಾವುದು? ಈಗ ನಾವೆಲ್ಲಿದ್ದೇವೆ? ಬದುಕಿನ ಉದ್ದಕ್ಕೂ ಸ್ಥಿತ್ಯಂತರದ ಅನುಭವವನ್ನು ಹೊಂದುತ್ತಿರುವ ಮನುಷ್ಯರು ತಮ್ಮನ್ನು ತಾವೇ ಆಗಾಗ ಕೇಳಿಕೊಳ್ಳಬೇಕಾದ ಪ್ರಶ್ನೆಗಳಿವು. ಈ ಎಲ್ಲ  ಪ್ರಶ್ನೆಗಳಿಗೂ ಉತ್ತರ ಕಂಡುಕೊಳ್ಳಬಹುದು - ಎಂಬ ಸಾಂತ್ವನದ ಭರವಸೆಯು ಉಪನಿಷತ್ತುಗಳಲ್ಲಿ ಸಿಗುತ್ತದೆ; ಮಾನವರ ಜನ್ಮ ಸಾರ್ಥಕ್ಯದ ಗುರಿ ಮತ್ತು ದಾರಿಯ ಸ್ಪಷ್ಟ ಅನಾವರಣವಾಗುತ್ತದೆ. ಚಿಂತನೆಗೆ ಬೆಳಕು ತೋರುತ್ತದೆ. ಸಭ್ಯ ಸಜ್ಜನ ಸಚ್ಚರಿತ ಸಮಾಜ ನಿರ್ಮಾಣಕ್ಕೆ ಉಪನಿಷತ್ತುಗಳ ಅಧ್ಯಯನವು - ಸದೃಢ ಊರುಗೋಲು.

"ಉಪನಿಷತ್ತುಗಳು ಚೈತನ್ಯ ಮತ್ತು ಸೃಜನಶಕ್ತಿಗಳ ನಿರಂತರ ಚಿಲುಮೆ. ಸಹನೆಯಿಂದ ಕೂಡಿದ ಎಲ್ಲವನ್ನೂ ಒಳಗೊಳ್ಳುವ ಪರಂಪರೆಯು ಉಪನಿಷತ್ತಿನ ಅಂತಃಸ್ಫೂರ್ತಿ. ಎಚ್ಚರದ ಆವರಣ, ನಿರಂತರ ಅನ್ವೇಷಣೆಯ ಮನೋಭಾವ, ಸತ್ಯದ ಬಗೆಗೆ ಗಾಢ ಪ್ರೇಮ, "ಎಲ್ಲವೂ ಸರಿಯಾಗಿದೆ" ಎಂಬ ತೃಪ್ತಿಯ ಮನೋಭಾವದಿಂದ ಸುಮ್ಮನಿರದೆ ಏಕಪ್ರಕಾರವಾಗಿ ಮುಂದುವರಿಯುವ ಇಚ್ಛೆ - ಇವೆಲ್ಲ ಗುಣಗಳಿಂದಾಗಿ ಉಪನಿಷತ್ತುಗಳು ಆಧುನಿಕ ದೃಷ್ಟಿಯನ್ನು ಹೊಂದಿದ್ದು ಇಂದಿಗೂ ಚಿರನೂತನವೆನಿಸುತ್ತವೆ. ಮಾನವನ ಸ್ಥೂಲ ಸೂಕ್ಷ್ಮ, ಜಾಗ್ರತ ಸ್ವಪ್ನ ಸುಷುಪ್ತಿ ಅವ್ಯಕ್ತ, ಶರೀರ ಮನಸ್ಸು ಜ್ಞಾನಕೋಶಗಳನ್ನೆಲ್ಲ ಆಳವಾಗಿ ಅಧ್ಯಯನ ಮಾಡಿರುವ ವೇದಾಂತವಿದು" ಎನ್ನುತ್ತಾರೆ ಸ್ವಾಮಿ ರಂಗನಾಥಾನಂದರು.



(ಸ್ವಾಮಿ ರಂಗನಾಥಾನಂದರ - "ಉಪನಿಷತ್ತುಗಳ ಸಂದೇಶ", ಪ್ರಕಾಶಕರು - ಶ್ರೀ ರಾಮಕೃಷ್ಣ ಆಶ್ರಮ, ಯಾದವಗಿರಿ, ಮೈಸೂರು - ಎಂಬ ಪುಸ್ತಕದ ಓದಿನಿಂದ ಪ್ರಭಾವಿತಗೊಂಡು ಬರೆದ ಬರಹವಿದು. ನನ್ನ ಭಾವ ದೃಷ್ಟಿಯೊಂದಿಗೆ ಸ್ವಾಮಿ ರಂಗನಾಥಾನಂದರ ಉಪನ್ಯಾಸದ ಕೆಲವು ಸಾಲುಗಳನ್ನು ನಿಮ್ಮೊಂದಿಗೆ ಯಥಾವತ್ ಹಂಚಿಕೊಂಡಿದ್ದೇನೆ. ಈ ಇಡೀ ಪುಸ್ತಕವೇ ಒಂದು ರಸಗಟ್ಟಿ. ಮನುಷ್ಯರಾಗಿ ಹುಟ್ಟಿದವರ ಮನೆಯಲ್ಲಿ ಇರಬೇಕಾದ ಮತ್ತು ಅಗತ್ಯವಾಗಿ ಓದಲೇಬೇಕಾದ  ಈ ಪುಸ್ತಕವು ಬರೇ ರಟ್ಟು ಹೊದೆಸಿದ ಕಾಗದದ ಕಟ್ಟಲ್ಲ; ಶುದ್ಧ ಸಂಪತ್ತು. ಈ ಪುಸ್ತಕವನ್ನು ಓದುವುದಕ್ಕೂ ಭಾಗ್ಯ ಬೇಕು!)