Thursday, July 23, 2015

ನಾನೊಲಿದಂತೆ (1) - ಓದು - ಬದುಕು

 (ಇನ್ನು - ನಾನೊಲಿದಂತೆ...ಬದುಕು ಮತ್ತು ಬರಹಗಳ ಮಾಲೆಯೊಂದಿಗೆ ಒಮ್ಮೊಮ್ಮೆ ನಿಮ್ಮ ಮುಂದೆ ಪ್ರತ್ಯಕ್ಷವಾಗುತ್ತೇನೆ.)
 
                                                         
                                                            ಓದು - ಬದುಕು

  ನಿತ್ಯ ಬದುಕಿನಲ್ಲಿ ತೇಲುತ್ತ ಮುಳುಗುತ್ತ ಲೌಕಿಕದಲ್ಲಿ ತೊಡಗಿಕೊಂಡಾಗ ಯಾವುದೇ ವೈರಾಗ್ಯವು ನಮಗೆ ಉಪಕರಿಸುವುದಿಲ್ಲ. ಮಾತ್ರವಲ್ಲ - ಪ್ರಾಯೋಗಿಕವಾಗಿಯೂ ಸಾಮಾನ್ಯರಿಗೆ ಎಟುಕದ ಅಸಾಧ್ಯವದು. ಹೀಗಿರುವಾಗ ಬದುಕಿನ ಸಂದಿಗ್ಧಗಳಿಗೆ ಒಡ್ಡಿಕೊಳ್ಳುತ್ತ ಸಂಸಾರದ ಕರ್ತವ್ಯಗಳನ್ನು ನಿರ್ವಹಿಸುತ್ತ ಎಡೆ ಎಡೆಯಲ್ಲಿ ಅಂತರಂಗವನ್ನು ಮುಟ್ಟಿಬರುವ ಪ್ರಯತ್ನವನ್ನಷ್ಟೇ ನಾವು ಮಾಡಬಹುದು. ಅದು ಹೇಗೆಂದರೆ...ಅಂಗಳದಲ್ಲಿ ತನ್ನ ಗೆಳೆಯರೊಂದಿಗೆ ಆಟವಾಡುತ್ತಿರುವ ಮಗುವು ಗಳಿಗೆಗೊಮ್ಮೆ ಮನೆಯೊಳಗೆ ಓಡಿಬಂದು ಅಮ್ಮನ ಸೆರಗಿನಲ್ಲಿ ಕ್ಷಣಕಾಲ ಮುಖವನ್ನು ಹುದುಗಿಸಿ, ನಿರಾಳ ಭದ್ರಭಾವದಿಂದ ಅಂಗಳದ ಆಟಕ್ಕೆ ಮತ್ತೊಮ್ಮೆ ಓಡುವಂತೆ - ಬದುಕಿನುದ್ದಕ್ಕೂ ಅಂತಃದರ್ಶನವು ನಡೆಯುತ್ತಲೇ ಇದ್ದರೆ ಸಂಸಾರವು ಸಹನೀಯವಾಗುತ್ತದೆ. ಆದರೆ ಅದಕ್ಕೂ ಭಾವ ಸಂಸ್ಕಾರ ಬೇಕು; ಪೂರ್ವ ಸಜ್ಜಿಕೆಯ ಅಗತ್ಯವಿದೆ.

  ತಮ್ಮ ಮಾತಿನ ಚಾಕಚಕ್ಯತೆಯಿಂದಲೇ ಬದುಕನ್ನು ತೂಗಿಸುವ ಹಲವರು ನಮ್ಮ ಈ ಭೂಮಿಗೆ ಪರಿಚಿತರು. ಪೂರ್ವಾಗ್ರಹ ಪೀಡಿತ ತರ್ಕ ವಿತರ್ಕಗಳ ಆಶ್ರಯದಲ್ಲಿ ವಾಸ್ತವವನ್ನು ಬಡಿದು ವಿಜೃಂಭಿಸುವ ಪೋರಪೋರಿಯರೂ ಇದ್ದಾರೆ. ವೃತ್ತಿ ಧರ್ಮದಂತೆ ತಮ್ಮ ಪಕ್ಷದ ವಕಾಲತ್ತು ನಡೆಸುವ ವಕೀಲರು ಮತ್ತು ಮಾತಿನಲ್ಲಿಯೇ ಮನೆ ಕಟ್ಟುವ ರಾಜಕಾರಣಿಗಳಂತೆಯೇ ನಮ್ಮ ಸಾಮಾನ್ಯ ಬದುಕುಗಳನ್ನೂ ಅಂತಹ ತರ್ಕಾಧಿಪತ್ಯಕ್ಕೆ ಬೇಕಾಬಿಟ್ಟಿಯಾಗಿ ಒಪ್ಪಿಸಿಕೊಂಡ ಚರ್ಚಾಸುರರೂ ಇದ್ದಾರೆ. ಹೀಗೆ ಒಣ ಚರ್ಚಾ ವಿಷಪಾನ ಮಾಡುತ್ತ ಸಂಸಾರದಲ್ಲಿ ಅವರವರೇ ಬಿಗಿದುಕೊಂಡ ಕಂಬಕ್ಕೆ ಸುತ್ತುತ್ತ ಎಲ್ಲರೂ ನರಳುತ್ತಿರುವುದು ಸದ್ಯದ ವಾಸ್ತವ. ಇವೆಲ್ಲವೂ - ನಡೆಯುತ್ತಲೇ ಬಂದ ಸಾಂಸಾರಿಕ ಕೋಲಾಹಲಗಳು; ಅಧ್ಯಾತ್ಮದ ವಿರಾಗಿಗಳ ಭಾಷೆಯಲ್ಲಿ - ಭವರೋಗ! ಹೊಸ ಹೊಸ ರೂಪ ವೇಷಗಳ "ಪ್ರವೇಶ ಮತ್ತು ನಿಷ್ಕ್ರಮಣ"ವು ಓಡುವ ಕಾಲದ ಸಹಜ ಪ್ರಕ್ರಿಯೆ. ಆದರೆ ಹಿತ-ಅಹಿತದ ಆಯ್ಕೆಯಲ್ಲಿಯೇ ಸೋಲುತ್ತ - ಮುಖ್ಯವಾಗಿ, ವಾಕ್ ಸಂಸ್ಕಾರ ವಿಲ್ಲದ, ವಿಷ ಬಾಲ-ಬಾಲೆಯರ ಪುಟ್ಟ ಸಮಾಜವೊಂದು ಈಗ ತಲೆ ಎತ್ತುತ್ತಿರುವಂತೆ ಭಾಸವಾಗುವುದಿದೆ.

   ಇಂದು ಪಾಶ್ಚಾತ್ಯ ಶಿಕ್ಷಣದ ಪ್ರಭಾವದಿಂದಾಗಿ ಭಾರತೀಯರ ಭಾವಪ್ರಪಂಚವೇ ಅಲ್ಲೋಲಕಲ್ಲೋಲವಾಗಿದೆ. ಗೆಳೆಯನ ಅಮ್ಮನು ತನ್ನ ಅಮ್ಮನಿಗಿಂತ ಉತ್ತಮ - ಚೆಂದ (!) ಎನ್ನುವಂತಹ ಅಸಂಬದ್ಧ ವಿಕಾರ ಭಾವಗಳು Fashion ರೂಪದಲ್ಲಿ ಈಗ ಹಬ್ಬುತ್ತಿವೆ. ಅಮ್ಮಂದಿರ ದೇಹ ಸೌಂದರ್ಯದ ಸ್ಪರ್ಧೆಯೂ ನಡೆಯುತ್ತಿದೆ! ಇಂತಹ ವಿಕಾರದ ನಡೆನುಡಿಗಳು ತೊಡೆತಟ್ಟುತ್ತ ಮುಂಚೂಣಿಯಲ್ಲಿದ್ದು ಅಂತಹುದೇ ಭಾವಗಳು ಇಂದಿನ ಅಶಾಂತ ಬದುಕುಗಳನ್ನು ನಡೆಸುತ್ತಿವೆ. ಇರುವ ಇಂತಹ ವ್ಯವಸ್ಥೆಯಲ್ಲೇ ಒಂದಷ್ಟು ಹೊಂದಿಕೆ ಮಾಡಿಕೊಳ್ಳುತ್ತ ನಮ್ಮ ರೂಪ - ವೇಷವನ್ನು ನಾವೇ ಒಪ್ಪವಾಗಿ ಮೂಡಿಸಿಕೊಳ್ಳಬೇಕಾಗುತ್ತದೆ. ಬೇರೆ ದಾರಿಯಿಲ್ಲ. 

  ಬಾಲ್ಯದಲ್ಲಿಯೇ ಹೂರಣವಿರುವ ಶಿಕ್ಷಣವನ್ನು ಎಚ್ಚರದಿಂದ ಊಡಿಸಿ ಜೀವನಮೌಲ್ಯದ ಕಲ್ಪನೆಯನ್ನು ಮೂಡಿಸುವುದರಿಂದ -  ಸಮಾಧಾನದ ವಿವೇಕವಂತ ತಾಜಾ ಸಮಾಜವನ್ನು ಕಟ್ಟಲು ನಾವು ಪ್ರಯತ್ನಿಸಬಹುದು. ತನ್ಮೂಲಕ ಬದುಕಿಗೆ ಹಿತವನ್ನು ನೀಡುವ ವಸ್ತು ವಿಷಯಗಳನ್ನಷ್ಟೇ ಆಯ್ದುಕೊಳ್ಳಬಲ್ಲ ಸ್ವಸಾಮರ್ಥ್ಯವನ್ನು ಬೆಳೆಸಿಕೊಳ್ಳಬಹುದು. ಬದುಕುಗಳನ್ನು ಕಟ್ಟಬಲ್ಲ ಮೌಲ್ಯಗಳಾದ ಪ್ರೀತಿ, ಕರುಣೆ, ಸಹನೆ, ವಿನಯ, ಗೌರವ, ಭಕ್ತಿ...ಇವು ಯಾವುವೂ ಖರೀದಿಗೆ ಸಿಗುವ ವಸ್ತುಗಳಲ್ಲ; ಕಳೆದುಹೋಗುವ ವಸ್ತುಗಳೂ ಅಲ್ಲ. ಇಂತಹ ಶಾಶ್ವತ ಮೌಲ್ಯಗಳನ್ನು ಭಾಷಾ ಪಠ್ಯದ ರೂಪದಲ್ಲಿ ಮತ್ತು ಕೌಟುಂಬಿಕ ಪರಿಸರದ ರೂಪದಲ್ಲಿಯೂ ಎಳವೆಯಲ್ಲಿಯೇ ಮಕ್ಕಳಿಗೆ ಊಡಿಸಿದರೆ ಭವಿಷ್ಯದ ಸಮಾಜವನ್ನು ರೂಪಿಸಲು ಸಹಕರಿಸಿದಂತಾದೀತು. ಆದರೆ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು? ಈ ನಿಟ್ಟಿನಲ್ಲಿ ಉತ್ತಮ ಓದು ಮತ್ತು ಸಹವಾಸ ಗಳು ನಮ್ಮ ಬುದ್ಧಿಯಲ್ಲಿ ಇರುವ ದುಷ್ಟ - ಶಿಷ್ಟ ಭಾವಗಳನ್ನು ಹದವಾಗಿಸಿ ನಮ್ಮನ್ನು ಮುನ್ನಡೆಸಬಲ್ಲವು.

  ಪಂಚತಂತ್ರ - ಉಪನಿಷತ್ತಿನ  ಒಂದಾದರೂ ಕತೆಯನ್ನು ಇಂದಿನ ಪ್ರಾಥಮಿಕ ವಿದ್ಯಾರ್ಥಿಗಳು ದಿನವೂ ಓದಿ ಮನನ ಮಾಡಿದರೆ ಅವರ ವ್ಯಕ್ತಿತ್ವ ನಿರ್ಮಾಣದ ಹಾದಿಯು ಸುಗಮವಾಗುತ್ತದೆ. ಮನುಷ್ಯನೆಂಬ Raw material ನ್ನು ( ಮೃಗತ್ವ) Refined Material (ಸುಸಂಸ್ಕೃತ) ಆಗಿ ಪರಿವರ್ತಿಸುವ ಶಕ್ತಿಯು - ಇಂದು ವಿಜೃಂಭಿಸುತ್ತಿರುವ ಭಾರತೀಯ ಶಿಕ್ಷಣಕ್ಕೆ ಇಲ್ಲ; ಬದಲಾಗಿ ಪುರಾಣ, ಉಪನಿಷತ್ತುಗಳಿಗಿದೆ. ಅವು ಒಮ್ಮೆ ಓದಿ ಪಕ್ಕಕ್ಕಿಡುವ ಕತೆಗಳಲ್ಲ. ಆದರೆ ಅಂತಹ ಕತೆಗಳನ್ನು ಓದಿ ಅರ್ಥೈಸಿಕೊಳ್ಳುವ ಶೈಲಿಯನ್ನು ಗುರುಮುಖೇನ ಅರಿತಿರಬೇಕು; ಅರಿವಿನ ತುಡಿತವೇ ಉತ್ತಮ ಓದಿನತ್ತ ನಮ್ಮನ್ನು  ಪ್ರೇರೇಪಿಸಿ, ಅಪೇಕ್ಷಿತ ಮಾರ್ಗದರ್ಶನವನ್ನೂ ಮಾಡಬಲ್ಲದು.

  ಒಳ್ಳೆಯದನ್ನು ಗುರುತಿಸಿ ಮಕ್ಕಳ ಮುಂದೆ ಹರವುವ ಜವಾಬ್ದಾರಿಯು ಹಿರಿಯರ ಮೇಲಿದೆ. ಹಾಗೆ ಓದಿಸಿದ್ದನ್ನು ಆಚರಿಸುವಂತೆ ಪ್ರೇರೇಪಿಸುವ ಹೊಣೆಯೂ ಪಾಲಕರಿಗಿದೆ. ಬಾಲ್ಯದಲ್ಲಿ ನಾವು ರೂಢಿಸಿಕೊಳ್ಳುವ ಸುಸಂಸ್ಕಾರಗಳು ನಮ್ಮ ಬದುಕನ್ನು ಎಡವಿ ಬೀಳಲು ಬಿಡುವುದಿಲ್ಲ; ಎಡವಿದರೂ ಮತ್ತೊಮ್ಮೆ ಎದ್ದು ನಿಲ್ಲುವ ಧಾರಣಾ ಶಕ್ತಿಯನ್ನು ಸುಸಂಸ್ಕಾರಗಳು ನಮ್ಮಲ್ಲಿ ಬಿತ್ತುತ್ತವೆ. ಇದು ಹಿರಿಯರ ಮಾರ್ಗದರ್ಶನದಲ್ಲಿ ಬಾಲ್ಯದಲ್ಲೇ ಸಿಗಬೇಕಾದ ಬದುಕಿನ ಪಾಠ. ಒಂದು ಓದಿನ ಸ್ಥೂಲವಾದ ಚೌಕಟ್ಟಿನ ಆಳಕ್ಕೆ ಇಳಿಯುವ ತರಬೇತಿಗೆ ಮುಖ್ಯವಾಗಿ ಸಂಕಲ್ಪ ಬೇಕು; ಪರಿಸರ ಬೇಕು; ಪ್ರಯತ್ನವೂ ಬೇಕು.

  ಪಠಣ, ಚಿಂತನ, ಮನನ...ಮುಂತಾದ ವಿದ್ಯೆಯ ಕಸರತ್ತಿನ ಹಾದಿಯಲ್ಲಿ ಕ್ರಮಿಸಿ ನಮ್ಮ ಮಿದುಳನ್ನು ನಮಗೆ ನಾವೇ  ಸಂಸ್ಕರಿಸಬೇಕಾಗುತ್ತದೆ. ಇದರಿಂದಾಗಿ ವಿರುದ್ಧ ಚಿಂತನೆಗಳು ಪರಸ್ಪರ ಘರ್ಷಣೆಗೆ ತೊಡಗಿದರೂ ಆ ಘರ್ಷಣೆಯು ಸಜ್ಜನಿಕೆಯ ಎಲ್ಲೆಯನ್ನು ಮೀರದಂತೆ ತೂಗುವ ನಿಯಂತ್ರಣ ಸಿಗುತ್ತದೆ; ನಾವು ಓದುತ್ತ ಸಂಗ್ರಹಿಸಿದ ವಿಚಾರ ಮತ್ತು ನಮ್ಮ ಅನುಭವಗಳ ನಡುವೆ ತಾಕಲಾಟಗಳು ಹೊಮ್ಮಿದಾಗ ಅನರ್ಥವೆನಿಸಿದ್ದನ್ನು ನಿರ್ದಯೆಯಿಂದ ತಿರಸ್ಕರಿಸುವ ಶಕ್ತಿಯನ್ನೂ ಹೊಂದಬಹುದು. ಓದುವಾಗ ಉತ್ತಮವೆನಿಸಿದ್ದನ್ನು ಗುರುತು ಮಾಡಿ ಇಟ್ಟುಕೊಳ್ಳಬೇಕು. ಇಂತಹ ಬೌದ್ಧಿಕ ಚಟುವಟಿಕೆಗಳಿಗೆ ಇಂಬು ನೀಡುವ ಓದನ್ನು ಅವಲಂಬಿಸಿದಾಗ ಬದುಕು ಸ್ಪಷ್ಟವಾಗುತ್ತದೆ - ಸುಲಭವಾಗುತ್ತದೆ ಎಂಬುದರಲ್ಲಿ ಸಂದೇಹಬೇಡ.

  ಪೂರ್ವದ ಭಾರತೀಯ ಕತೆಗಳಲ್ಲಿ ಬದುಕನ್ನು ದೃಢವಾಗಿ ಕಟ್ಟಬಲ್ಲ ಮೌಲ್ಯಗಳೂ ಹುದುಗಿರುತ್ತಿದ್ದವು. ಇಂದಿನ ಕಣ್ಕಟ್ಟಿನ ಕತೆಗಳನ್ನು "ಪ್ರಶಸ್ತಿಗಾಗಿ" - ಎಂದು ಪಕ್ಕಕ್ಕಿಟ್ಟು ಹಳೆಯ ಕತೆಗಳನ್ನು ಓದುತ್ತ ಹೋದರೆ, ಅಂದಿನ ಒಂದೊಂದು ಕತೆಯಲ್ಲಿ ಮೌಲ್ಯದ ಒಂದೊಂದು ಮುಖವು ಕಾಣುತ್ತದೆ. ಮೌಲಿಕ ಕತೆಗಳ ಓದಿನಿಂದ ಸುಪುಷ್ಟ ವ್ಯಕ್ತಿತ್ವದ ನಿರ್ಮಾಣವು ಸಾಧ್ಯ.

   ನಾನು ಎಂದೋ ಕಣ್ಣು ಹಾಯಿಸಿದ್ದ ಒಂದು ಸಾಮಾಜಿಕ ಕತೆ ಇದು.
 
              **********     **********     **********     **********     **********
 
  ಒಬ್ಬರು ವಕೀಲರಿದ್ದರು. ಅವರಿಗೆ ಒಬ್ಬ ಸೇವಕನಿದ್ದ. ಒಂದು ದಿನ ಆ ವಕೀಲರು ನ್ಯಾಯಾಲಯಕ್ಕೆ ಹೋಗುತ್ತಿದ್ದಾಗ ಅವರ ಹಣದ ಚೀಲವು (Purse) ದಾರಿಯಲ್ಲಿ ಬಿದ್ದು ಬಿಟ್ಟಿತು. ಆಗ ಅವರ ಹಿಂದಿನಿಂದಲೇ ಬರುತ್ತಿದ್ದ ಸೇವಕನೂ ಅದನ್ನು ಗಮನಿಸಲಿಲ್ಲ. ಅಂತೂ ವಕೀಲರ ದುಡ್ಡು ಕಳೆದುಹೋಯಿತು. ಬೇಸರಗೊಂಡ ಆ ವಕೀಲರು ಅಂದು ಸಂಜೆ ತನ್ನ ಸೇವಕನನ್ನು ಕರೆದು "ನೋಡಪ್ಪಾ, ಇನ್ನು ಮುಂದೆ ನಾನು ಹೊರಗೆ ಹೋದಾಗ ಏನಾದರೂ ವಸ್ತುವನ್ನು ಬೀಳಿಸಿಕೊಂಡರೆ ಅದನ್ನು ಎತ್ತಿಕೊಂಡು ಬಂದು ನನಗೆ ಕೊಡಬೇಕು; ನ್ಯಾಯಾಲಯದಲ್ಲಿದ್ದರೂ ತಂದು ಕೊಡಬೇಕು. ತಿಳಿಯಿತೆ?" ಎಂದು ಸೂಚಿಸಿದರು. ಸೇವಕನು ತಲೆಯಾಡಿಸಿ ಒಪ್ಪಿಕೊಂಡ.

  ಮಾರನೆಯ ದಿನ ನ್ಯಾಯಾಲಯಕ್ಕೆ ಹೋಗುವ ದಾರಿಯಲ್ಲಿ ಕೆಲವು ಕಿತ್ತಳೆ ಹಣ್ಣುಗಳನ್ನು ಕೊಂಡುಕೊಂಡ ವಕೀಲರು ಅಲ್ಲೇ ಸಿಪ್ಪೆಯನ್ನು ಸುಲಿದು ಒಂದು ಹಣ್ಣನ್ನು ತಿಂದು ಸಿಪ್ಪೆಯನ್ನು ಕೆಳಗೆ ಹಾಕಿದರು. ಯಜಮಾನರನ್ನೇ ಗಮನಿಸುತ್ತಿದ್ದ ಸೇವಕನು ಆ ಸಿಪ್ಪೆಗಳನ್ನೆಲ್ಲ ಜೋಪಾನವಾಗಿ ಹೆಕ್ಕಿ ಇಟ್ಟುಕೊಂಡ.

  ವಕೀಲರು ನ್ಯಾಯಾಲಯವನ್ನು ತಲುಪಿ ವಕೀಲರ ಕೋಣೆಯಲ್ಲಿ ಕುಳಿತು ಇತರ ವಕೀಲರೊಂದಿಗೆ ವ್ಯವಹರಿಸುತ್ತಿರುವಾಗ ಅವರ ಸೇವಕನು ಓಡಿಬಂದು ಕಿತ್ತಳೆ ಹಣ್ಣಿನ ಸಿಪ್ಪೆಗಳನ್ನು ಅವರ ಮುಂದೆ ಇರಿಸಿ "ಸ್ವಾಮೀ, ನೀವು ದಾರಿಯಲ್ಲಿ ಬೀಳಿಸಿದ ಸಿಪ್ಪೆಗಳೆಲ್ಲವೂ ಇಲ್ಲಿವೆ" ಎಂದ. ಆಗ ಅಲ್ಲಿದ್ದ ವಕೀಲರೆಲ್ಲರೂ ಜೋರಾಗಿ ನಕ್ಕರು. ಆಗ ಮುಜುಗರಗೊಂಡ ವಕೀಲರು "ನೀನು ಮನೆಗೆ ಹೋಗು" ಎಂದು ಗದರಿಸಿ ತನ್ನ ಸೇವಕನನ್ನು ಅಲ್ಲಿಂದ ಓಡಿಸಿಬಿಟ್ಟರು.

  ಸಂಜೆ ಮನೆಗೆ ಬಂದ ಮೇಲೆ ಆ ವಕೀಲರು ತನ್ನ ಸೇವಕನನ್ನು ಕರೆದು "ನೋಡಪ್ಪಾ, ನೀನು ಇನ್ನು ಮುಂದೆ ನನ್ನ ಜೊತೆಗೆ ನ್ಯಾಯಾಲಯಕ್ಕೆ ಬರುವುದು ಬೇಡ. ನೀನು ಮನೆಯಲ್ಲೇ ಇರು. ಏನಾದರೂ ತುರ್ತು ಕೆಲಸವಿದ್ದಾಗ ಮಾತ್ರ ನ್ಯಾಯಾಲಯಕ್ಕೆ ಬಂದು ಹೇಳು" ಎಂದರು. ಸೇವಕನು ತಲೆ ಬಾಗಿ ಒಪ್ಪಿದ.

  ಕೆಲವು ದಿನಗಳ ನಂತರ ಆ ವಕೀಲರ ಹೆಂಡತಿಯು ಸೇವಕನಿಗೆ ಒಂದು ಕೆಲಸವನ್ನು ಒಪ್ಪಿಸಿದಳು. "ನೋಡಪ್ಪಾ, ಮನೆಯಲ್ಲಿ ಅಕ್ಕಿ ಬೇಳೆ...ಒಂದೂ ಇಲ್ಲ. ನ್ಯಾಯಾಲಯದಿಂದ ಬರುವಾಗ ಕೊಂಡು ತರುವಂತೆ ವಕೀಲರಿಗೆ ಹೇಳಿ ಬಾ" ಎಂದು ಹೇಳಿ ಆತನನ್ನು ನ್ಯಾಯಾಲಯಕ್ಕೆ ಕಳಿಸಿದಳು.

  ಒಡತಿಯ ಮಾತನ್ನು ತಲೆತಗ್ಗಿಸಿ ಕೇಳಿಸಿಕೊಂಡ ಸೇವಕನು ನ್ಯಾಯಾಲಯಕ್ಕೆ ಓಡಿದ. ಒಳಗೆ ಹೋಗಿ ಬಗ್ಗಿ ನೋಡಿದಾಗ Court ನಲ್ಲಿ ವಾದ - ಕಲಾಪಗಳು ನಡೆಯುತ್ತಿದ್ದವು. ಅವನ್ನೆಲ್ಲ ಲೆಕ್ಕಿಸದ ಸೇವಕನು ಥಟ್ಟಂತ ಒಳಗೆ ನುಗ್ಗಿ "ಯಜಮಾನರೇ, ಯಜಮಾನರೇ" ಎಂದು ಕೂಗಿ ಕರೆದ; "ಮನೆಯಲ್ಲಿ ಅಕ್ಕಿ ಬೇಳೆ ಒಂದೂ ಇಲ್ಲವಂತೆ; ನೀವು ಮನೆಗೆ ಬರುವಾಗ ತರಬೇಕಂತೆ" ಎಂದೂ ತೆರೆದ ದನಿಯಲ್ಲಿ ಗಿಣಿಪಾಠವನ್ನು ಒಪ್ಪಿಸಿದ. Court Hall ನಲ್ಲಿ ನೆರೆದಿದ್ದ ಎಲ್ಲರೂ ಅವನ ಮಾತನ್ನು ಕೇಳಿ ಹೋ...ಎಂದು ನಕ್ಕರು. ನ್ಯಾಯಾಧೀಶರು "Silence.." ಎಂದು ಆಜ್ಞಾಪಿಸಿದರು. ನಮ್ಮ ವಕೀಲರಿಗೆ ಮುಖ ಎತ್ತಲಾರದಂತಹ ಸಂಕೋಚವಾಯಿತು; ಕೋಪವೂ ಬಂತು.

  ಸಂಜೆ ಮನೆಗೆ ಹಿಂದಿರುಗಿದ ವಕೀಲರು ತಾವು ತಂದಿದ್ದ ಅಕ್ಕಿ ಬೇಳೆಯನ್ನೆಲ್ಲ ಹೆಂಡತಿಗೆ ಕೊಟ್ಟು ತಮ್ಮ ಕೊಠಡಿಗೆ ಹೋದವರೇ ಆ ಸೇವಕನನ್ನು ಕೂಗಿ ಕರೆದರು. "ಮೂರ್ಖ! ನ್ಯಾಯಾಲಯದಲ್ಲಿ ಹಾಗೇಕೆ ಕಿರಿಚಿಕೊಂಡೆಯೋ ಮೂರ್ಖ ಶಿಖಾಮಣಿ? ಇನ್ನು ಮುಂದೆ ಹೀಗೇನಾದರೂ ಮಾಡಿದರೆ ಮನೆಯಿಂದ ಆಚೆಗೆ ಅಟ್ಟುತ್ತೇನೆ; ಹುಷಾರ್! ಯಾವುದೇ ವೈಯ್ಯಕ್ತಿಕ ವಿಷಯವಿದ್ದರೂ ನಾನು ಒಬ್ಬನೇ ಇದ್ದಾಗ ಮಾತ್ರ ಹೇಳಬೇಕು. ಎಲ್ಲರೆದುರಿನಲ್ಲಿ ಬೊಬ್ಬೆಹೊಡೆಯಬಾರದು. ಏನು? ತಿಳಿಯಿತೆ?.." ಎಂದು ವಕೀಲರು ಗದರಿಸಿ ಎಚ್ಚರಿಸಿದರು. ಅದಾಗಲೇ ಹೆದರಿದ್ದ ಸೇವಕನು ಒಪ್ಪಿ ತಲೆಯಾಡಿಸಿದ.

  ಮುಂದೊಂದು ದಿನ, ವಕೀಲರ ಗ್ರಹಚಾರದಿಂದ ಅವರ ಮನೆಗೆ ಬೆಂಕಿ ಬಿತ್ತು. ಆ ಹೊತ್ತಿನಲ್ಲಿ ವಕೀಲರು ನ್ಯಾಯಾಲಯದಲ್ಲಿದ್ದರು. ಮನೆಯಲ್ಲಿದ್ದ ಅವರ ಹೆಂಡತಿಯು ಬೆಂಕಿಯನ್ನು ನಂದಿಸಲಾಗದೆ ಕಂಗಾಲಾಗಿ " ಓಡಿ ಹೋಗಿ ಯಜಮಾನರಿಗೆ ಹೇಳಿ ಅವರನ್ನು ಕರೆದುಕೊಂಡು ಬಾ" ಎಂದು ಹೇಳಿ ಸೇವಕನನ್ನು ನ್ಯಾಯಾಲಯಕ್ಕೆ ಓಡಿಸಿದಳು. ತಕ್ಷಣವೇ ನ್ಯಾಯಾಲಯಕ್ಕೆ ಧಾವಿಸಿ ಬಂದ ಸೇವಕನು ಅಲ್ಲಿ ಕಕ್ಷಿಗಾರರೊಂದಿಗೆ ಚರ್ಚಿಸುತ್ತ ಕುಳಿತ ಯಜಮಾನರನ್ನು ಕಂಡು ತಾನು ಏನು ಮಾಡಬೇಕೆಂದೇ ತಿಳಿಯದೆ ಸುಮ್ಮನೆ ನಿಂತ. "ತಾನು ಒಬ್ಬನೇ ಇದ್ದಾಗ ಮಾತ್ರ ಏನಾದರೂ ಸಂದೇಶವಿದ್ದರೆ ಹೇಳಬೇಕು" ಎಂದು ಯಜಮಾನನ ಅಪ್ಪಣೆಯಾಗಿದೆ. ಇತ್ತ "ಕೂಡಲೇ ಕರೆದುಕೊಂಡು ಬಾ" ಎಂದು ಒಡತಿಯ ಅಪ್ಪಣೆಯಾಗಿದೆ! "ಏನು ಮಾಡಲಿ? ಹೇಳಲೆ? ಸ್ವಲ್ಪ ಕಾಯಲೆ?" ಎಂದು ಸೇವಕನು ಬಹಳ ಯೋಚಿಸಿದ. ಅಷ್ಟು ಹೊತ್ತಿಗೆ ವಕೀಲರ ಮುಂದೆ ಕುಳಿತಿದ್ದ ಕಕ್ಷಿಗಾರರೆಲ್ಲರೂ ಹೊರಟು ಹೋಗಿದ್ದರು. ಇದೇ ಸರಿಯಾದ ಸಮಯವೆಂದುಕೊಂಡು ಕೊಠಡಿಯ ಒಳಗೆ ನುಗ್ಗಿದ ಸೇವಕನು:::"ಸ್ವಾಮೀ, ನಿಮ್ಮ ಮನೆಗೆ ಬೆಂಕಿ ಬಿದ್ದಿದೆ; ಇದನ್ನು ಹೇಳಬೇಕೆಂದು ಆಗಲೇ ಬಂದೆ; ಆದರೆ ನಿಮ್ಮ ಜೊತೆಯಲ್ಲಿ ಬೇರೆಯವರೂ ಇದ್ದರು; ಆದ್ದರಿಂದ ಏನೂ ಮಾತನಾಡದೆ - ಸುಮ್ಮನೆ ಹೊರಗೇ ಕಾಯುತ್ತಿದ್ದೆ. ನೀವು ಹೇಳಿದಂತೆಯೇ - ಎಲ್ಲರೂ ಹೋದ ಮೇಲೆ ಒಳಗೆ ಬಂದು ಈಗ ಹೇಳಿದ್ದೇನೆ..." ಎನ್ನುತ್ತ ಶಹಬ್ಬಾಸ್ ಗಿರಿ ಪಡೆಯುವ ಆಸೆಯಿಂದ ವಕೀಲರ ಮುಖ ನೋಡಿದ.


  ಆಗ ಎದ್ದೆನೋ ಬಿದ್ದೆನೋ ಎಂಬುದನ್ನೂ ಲೆಕ್ಕಿಸದೆ ಎದುರಿನಲ್ಲಿದ್ದ ಸೇವಕನನ್ನು ದೂರತಳ್ಳಿ ಮನೆಯತ್ತ ಓಡಿದ ವಕೀಲರು ಅಲ್ಲಿ ಪೂರ್ತಿಯಾಗಿ ಸುಟ್ಟು ಹೋದ ತಮ್ಮ ಮನೆಯ ಎದುರಿನಲ್ಲಿ ತಮ್ಮ ಹೆಂಡತಿಯೂ ಮಗಳೂ ಅಳುತ್ತ ನಿಂತಿರುವುದನ್ನು ಕಂಡರು.

                            **********     **********     **********     **********
    
  ಮನೆಗೆ ಬೆಂಕಿ ಬಿದ್ದ ಆ ಕ್ಷಣದ ಅಗತ್ಯವೇನಿತ್ತು? ಸೇವಕನು ವಕೀಲರ ಪತ್ನಿಯ ಆಣತಿಯನ್ನು ಮೀರಿ ತಾನು ಅಲ್ಲೇ ನಿಂತು ಹೇಗಾದರೂ ಬೆಂಕಿಯನ್ನು ನಂದಿಸಲು ಯತ್ನಿಸಬಹುದಿತ್ತಲ್ಲವೆ? ಆಪತ್ಕಾಲದಲ್ಲಿ ವಿವೇಚನೆಯಿಂದ ಕಾರ್ಯಶೀಲರಾಗಬೇಡವೆ? ಒಡೆಯನನ್ನು ಭಿಕಾರಿಯಾಗಿಸಬಲ್ಲ ಸೇವಕನ ಅವಿವೇಕದ ಕಾರ್ಯಶೈಲಿಯು ವಿಧೇಯತೆಯೆ? ತನ್ನ ಮೂರ್ಖ ಸೇವಕನಿಗೆ ಹಲವು ಅವಕಾಶಗಳನ್ನು ಕೊಟ್ಟ ಸೂಕ್ಷ್ಮಗ್ರಾಹಿತ್ವವಿಲ್ಲದ ವಕೀಲರು ಕೊನೆಗೆ ತಾವೇ ಮೂರ್ಖರಾಗಲಿಲ್ಲವೆ? ಮೂಢೋ ಮೂರ್ಖೋ ಗಾರ್ದಭೋ ಏಕ ರಾಶಿ ಎನ್ನುವುದು ಇದಕ್ಕೇ. ಇವರದೆಲ್ಲ ಒಂದೇ ಕುಟುಂಬ. ಆ ಸೇವಕನದು ವಿಧೇಯತೆಯಲ್ಲ; ವಕೀಲರು ತೋರಿದ್ದು ಸಹನೆಯೂ ಅಲ್ಲ. ಅದು ಎಚ್ಚರ ತಪ್ಪಿದ ಒಟ್ಟಾರೆ ಸ್ಥಿತಿ! ವಿವೇಚನಾರಹಿತವಾದ ಮೂರ್ಖ ವರ್ತನೆ,  ತೋರಿಕೆಗಳಿಂದ ಅನಾಹುತಗಳ ಸರಮಾಲೆಯೇ ಘಟಿಸಬಹುದು.

  "ಮೂರ್ಖನೆಂಬ ಸರ್ಪವು ಕೊಲ್ಲುವ ರೀತಿಯು ವಿಲಕ್ಷಣವಾಗಿರುತ್ತದೆ. ಮೂರ್ಖತನದ ಸರ್ಪವು - ಒಬ್ಬನ ಕಿವಿಯನ್ನು ಕಚ್ಚಿದರೆ ಇನ್ನೊಬ್ಬನ ಮರಣ ಸಂಭವಿಸುವುದು!" (ಅಹೋ ಖಲ ಭುಜಂಗಸ್ಯ ವಿಚಿತ್ರೋಯಂ ವಧಕ್ರಮಃ // ಅನ್ಯಸ್ಯ ದಶತಿ ಶ್ರೋತೃಮನ್ಯಃ ಪ್ರಾಣೈರ್ವಿಯುಜ್ಯತೇ // (ಪಂಚತಂತ್ರ)
ಮೂರ್ಖ ಅವಿವೇಕಿಗಳ ಕಾರ್ಯ ವಿಧೇಯತೆಯು - ಪ್ರತ್ಯಕ್ಷವಾಗಿಯೂ ಪರೋಕ್ಷವಾಗಿಯೂ ಗಂಡಾಂತರಕಾರಿ!

                                **********     **********     **********     **********

 

  ವಿಧೇಯತೆ ಎಂದರೆ ಹಿಂಜರಿಕೆಯ ಪ್ರಾಕಟ್ಯವೆ? ವಿಧೇಯತೆ ಎಂದರೆ ಮೆಚ್ಚಿಸುವ ವಿಧಾನವೆ? ಕೋಲಾಹಲವೆಬ್ಬಿಸುವ ವಿವೇಚನಾರಾಹಿತ್ಯವೆ? ಅಥವ ಫಲಾಪೇಕ್ಷೆಯ ನಿರೀಕ್ಷೆಯಲ್ಲಿ ಪ್ರಕಟವಾಗುವ ವೇಷಭಾವವೆ?.....
ಒಂದು ಕತೆಯನ್ನು ಓದಿದಾಗ ಇಂತಹ ನೂರು ಪ್ರಶ್ನೆಗಳು ಮೂಡಬೇಕು; ಉತ್ತರ ಸಿಗಬೇಕು.

  ಮಾತು ಮಾತಿಗೆ ಸಾಷ್ಟಾಂಗ ನಮಸ್ಕರಿಸುವವರೆಲ್ಲರೂ ವಿಧೇಯತೆಯ ಪ್ರತೀಕಗಳಲ್ಲ. ಯುಕ್ತಾಯುಕ್ತ - ಸದಸದ್ವಿವೇಕಪೂರ್ಣ ವಿನಯಶೀಲತೆಯೇ ವಿಧೇಯತೆ. ನಮ್ಮನ್ನು ಸುಪ್ತಾವಸ್ಥೆಗೆ ಕೊಂಡೊಯ್ಯುವ ದಾಸ್ಯ ಭಾವದ ವಿಧೇಯತೆಯು ಅಪೂರ್ಣ; ಅದು ಕೆಲವೊಮ್ಮೆ ಹಾಸ್ಯಾಸ್ಪದವೂ ಆಗುತ್ತದೆ. ಸ್ವಂತಕ್ಕೂ ಉಪಕರಿಸಲಾಗದ ಮುಮೂರ್ಷು ವಿಧೇಯತೆಯಿಂದ ಕೆಲವೊಮ್ಮೆ ಪರಪೀಡೆಯೂ ಆಗಬಹುದು. ವಿಧೇಯತೆ ಎಂದರೆ ಹೆಡ್ಡತನವಲ್ಲ; ಅದು ಅಭಿಮಾನ ಶೂನ್ಯತೆಯೂ ಅಲ್ಲ.

  ಸೇವಕನಲ್ಲಿ ವಿಧೇಯತೆಯು ಅಪೇಕ್ಷಣೀಯವಾದರೂ - ಗುರಿತಪ್ಪಿದಂತಹ ಸೇವೆಯ ಹೆಸರಿನ ಉಪಾಯಗಳು ಅಥವ ಮೊದ್ದುತನ ದಲ್ಲಿ ವಿಧೇಯತೆಯು ಇರುವುದಿಲ್ಲ. ಅಂತಹ ಸೇವಕರಿಂದ ಅಪಾಯವು ನಿಶ್ಚಿತ. ಸೇವೆ ಎಂದರೆ ಕೇವಲ ಅಕ್ಷರ, ವಾಕ್ಯ, ಮಾತನ್ನು ಹಿಂಬಾಲಿಸುವುದಲ್ಲ; ಭಾವವನ್ನು ಗ್ರಹಿಸಿ ಸಂದರ್ಭೋಚಿತವಾಗಿ ಮೈಯೆಲ್ಲ ಎಚ್ಚರದಿಂದ ತೊಡಗಿಕೊಂಡಾಗ ಮಾತ್ರ ಅದು ವಿಧೇಯ ಸೇವೆ - ಯಥಾರ್ಥ ಸೇವೆ ಅನ್ನಿಸಿಕೊಳ್ಳುತ್ತದೆ.

  ಬಂಧನಕ್ಕೂ ಬಿಡುಗಡೆಗೂ ಕಾರಣವಾಗಿರುವ ನಮ್ಮ ಮನಸ್ಸು ಒಂದು ಕ್ಷಣವೂ ಸುಮ್ಮನಿರುವುದಿಲ್ಲ. ಅಲ್ಲಿ ಇಲ್ಲಿ ಹೊಕ್ಕು ಹೊರಡುತ್ತಲೇ ಇರುತ್ತದೆ! ಹೀಗೆ ಎಡತಾಕುತ್ತ ಪ್ರಶ್ನಿಸುತ್ತಲೇ ಇರುವ ಮನಸ್ಸಿಗೆ ವಿವೇಕಯುಕ್ತ ಉತ್ತರವನ್ನು ನಾವೇ ಒದಗಿಸುತ್ತ ಹೋಗಬೇಕು. ಆ ಉತ್ತರಗಳು ನಮ್ಮ ಮತ್ತು ಸಮಷ್ಟಿಯ ಬದುಕನ್ನು ಕಟ್ಟಿಕೊಳ್ಳಲು ಉಪಕರಿಸುವಂತಿರಬೇಕು. ಮನಸ್ಸಿನೊಂದಿಗೆ ಸಂಭಾಷಿಸುತ್ತ ಬದುಕಿದರೆ ಆ ಮನಸ್ಸು ನಮ್ಮ ಗೆಳೆಯನಾಗುತ್ತದೆ! ಇಂದ್ರಿಯ ಮತ್ತು ಮನಸ್ಸಿನ ಹೊಂದಿಕೆಯಿಂದ ಕಳವಳ ತಳಮಳಗಳೆಲ್ಲವೂ ಕರಗಿ ಸ್ವಚ್ಛ ಮುನ್ನೋಟವು ಸಿಗುತ್ತದೆ. ಉತ್ತಮ ಓದು ಇದಕ್ಕೆ ಸಹಕಾರಿ. ಉತ್ತಮ ಓದಿನ ಭಾಗ್ಯವಿಲ್ಲದ ವ್ಯಕ್ತಿಗೆ ಹೊರಗಿನ ವೈರಿಗಳೇ ಬೇಡ; ಅವರ ಮನಸ್ಸೇ ಅವರಿಂದ ಮೂರ್ಖ ಕ್ರಿಯೆಗಳನ್ನು ಮಾಡಿಸುತ್ತ ಮೂಢನ ಭಾಗ್ಯವನ್ನು ನಿರ್ಧರಿಸಿ ಆಡಿಸುತ್ತದೆ. 

  ಮೂಢ ಅವಿವೇಕಿಗಳು ಎಂದರೆ ಪಾಯಸದಲ್ಲಿ ಅದ್ದಿದ ಸವುಟಿನಂತೆ. ಸವುಟಿಗೆ ಪಾಯಸದ ರುಚಿಯು ತಿಳಿದೀತೆ? ವಸ್ತುಪ್ರಾಯರಂತಿರುವವರನ್ನು ಉತ್ತಮ ಸಹವಾಸದಿಂದಲೂ ಬದಲಿಸುವುದು ಕಠಿಣ. ಜಡವಾಗಿರುವ ಸವುಟು ಎಂಬ ಮೂಲ ಸಾಮಗ್ರಿಯೇ Flexible ಅಲ್ಲದಿರುವಾಗ ಅದನ್ನು ಬಗ್ಗಿಸುವುದಾಗಲೀ ಒಗ್ಗಿಸುವುದಾಗಲೀ ಅಸಾಧ್ಯ. ಅಂತಹ ಜಡ ಮೂಢರಿಗೆ ಸುತ್ತಲಿನ ಸ್ಥಳ ಸಂದರ್ಭದ ಅರ್ಥವನ್ನೂ ಗ್ರಹಿಸಲಾಗುವುದಿಲ್ಲ. ಹಲವು ಭೌತಿಕ ಸ್ಥಿತ್ಯಂತರಗಳ ನಂತರವೇ ಸವಿಯಾದ ಪಾಯಸವು ಹೊಮ್ಮುವಂತೆ,  - ಹಂತ ಹಂತವಾಗಿ ನಮ್ಮಲ್ಲಿ ಬೌದ್ಧಿಕ ಸ್ಥಿತ್ಯಂತರವನ್ನು ಮೂಡಿಸಿ, ವ್ಯಕ್ತಿತ್ವವನ್ನು ಮೃದುವಾಗಿಸಿ, ಬದುಕು ರಸಾಯನವಾಗಲು - ಸವಿಯಾದ ಮೌಲಿಕ ಓದು - ಸಹಕರಿಸುತ್ತದೆ.

  ಆದರೆ ಭಾರತ ದೇಶದ ಸರಕಾರೀ ಸೇವಕರೆಂಬ ಸವುಟುಗಳು ಮಾತ್ರ ಈ ಸೂತ್ರಕ್ಕೆ ಅಪವಾದಗಳು. ಯಾವುದೇ ಸರಕಾರದ ಉತ್ತಮ ಯೋಜನೆಗಳನ್ನು ಜನ ಸಾಮಾನ್ಯರಿಗೆ ತಲುಪುವಂತೆ ಮಾಡುವಲ್ಲಿ ಕೆಲವು ಸೇವಕರು ಮಾತ್ರ ಯಾಕೆ ಯಶಸ್ಸು ಕಾಣುತ್ತಾರೆ? ಹಲವು ಸೇವಕರು ಯಾಕೆ ಸೋಲುತ್ತಾರೆ? ಯಾಕೆಂದರೆ ಬಹುತೇಕ ಸರಕಾರೀ ನೌಕರರು ಪಾಯಸದಲ್ಲಿ ಅದ್ದಿದ Spongy ಸವುಟುಗಳು. ತಾವೇ ಪಾಯಸವನ್ನು ಹೀರಿ ಬಿಡುವ ಚಮತ್ಕಾರದ ಸವುಟುಗಳು! ದಪ್ಪ ಪಾಯಸವನ್ನು ಸ್ವಂತ ಪಾತ್ರೆಗೆ ಬಗ್ಗಿಸಿಕೊಂಡು ಪಾತ್ರೆ ತೊಳೆಸಿದ ಬಣ್ಣದ ನೀರನ್ನೇ ಪಾಯಸವೆಂದು ಹಂಚುವ ಜಾಣ ಸವುಟುಗಳವು! ಇವೆಲ್ಲವೂ ಕಿಲಾಡಿ ಮೂರ್ಖರು ವಿಧೇಯತೆಯ ಮುಖವಾಡದಲ್ಲಿ ಪ್ರಜ್ಞಾಪೂರ್ವಕವಾಗಿ ನಡೆಸುವ ವಿದ್ರೋಹದ ಉದಾಹರಣೆಗಳು! ಆದರ್ಶದ ಗಂಧಗಾಳಿಯಿಲ್ಲದ ಅನ್ಯಾದೃಶ ಸಂಗತಿಗಳು!

               ವಿಧೇಯತೆಯ ಮುಖ್ಯವಾದ Ingredients (ಒಳಗೊಳ್ಳುವ ಅಂಶಗಳು) ಯಾವುವೆಂದರೆ :
        ನಿಸ್ವಾರ್ಥದಿಂದ ವ್ಯವಹರಿಸುವ ಕೌಶಲ್ಯ ಮತ್ತು  ಅನ್ಯರನ್ನು ಅರ್ಥ ಮಾಡಿಕೊಳ್ಳುವ ಪರೇಂಗಿತಜ್ಞತೆ.
                    ಸಮಯ ಸಂದರ್ಭಗಳ ವಿವೇಕ, ಆಜ್ಞೆಯನ್ನು ಹದವರಿತು ಪಾಲಿಸುವ ನಮ್ರತೆ.
 
    ಸ್ವಾರ್ಥರಹಿತ, ವಿವೇಕಪೂರ್ಣ, ಪರೇಂಗಿತಜ್ಞತೆಯುಳ್ಳ ನಮ್ರತೆಯೇ - ವಿಧೇಯತೆಯ ದೇಹ ಮತ್ತು ಭಾವ. ಅಂತರ್ದೃಷ್ಟಿಯುಳ್ಳವರು ಮಾತ್ರ  ಸಾಂಸಾರಿಕ ಕೋಲಾಹಲಕ್ಕೆಡೆ ಮಾಡದ ಅಂತಹ ವಿಧೇಯತೆಯ ದೇಹಭಾವವನ್ನು ರೂಢಿಸಿಕೊಳ್ಳಬಲ್ಲರು. ಸೇವೆಯು ಸೇವ್ಯವಾಗಿ ಮಾನ್ಯವಾಗುವುದು ಆಗಲೇ. ಪ್ರತಿದಿನವೂ ಒಂದು ಗಂಟೆಯಾದರೂ ನಾವು ಓದುವ ವಸ್ತು ವಿಷಯಗಳು ನಮ್ಮನ್ನು ಇಂತಹ ಚಿಂತನೆಗೆ ಒಡ್ಡಬೇಕು. ಮನೋವಾಕ್ಕಾಯಗಳು ಸಂಸ್ಕರಿತಗೊಳ್ಳಲು ಉತ್ತಮ ಓದು - ಸಹಕಾರಿ.

                                                                                                    ---  ನಾರಾಯಣೀ ದಾಮೋದರ್