Monday, March 2, 2015

ಅಮ್ಮಾ.... ಇದೆಂತಹ ಕಾಕತಾಳೀಯ?

1929ನೇ ಇಸವಿಯ ಜೂನ್ 14ರಂದು ಐರೋಡಿಯ ಪ್ರತಿಷ್ಠಿತ ಹೆಬ್ಬಾರರ ಕುಟುಂಬದಲ್ಲಿ ಜನಿಸಿದ್ದ ನನ್ನ ಅಮ್ಮನು, ಮೊನ್ನೆ 2015 ಫ಼ೆಬ್ರುವರಿ 27 ರ ಬೆಳಗಿನ ನಾಲ್ಕು ಗಂಟೆಯ ಹೊತ್ತಿಗೆ ಬೆಂಗಳೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ತನ್ನ ಜೀವನಯಾತ್ರೆಯನ್ನು ಮುಗಿಸಿಬಿಟ್ಟಳು. ಬಹುಶಃ ಮಕ್ಕಳನ್ನು ಜಗತ್ತನ್ನು ಅದರದರ ಪಾಡಿಗೆ ಬಿಟ್ಟು, ಅಪ್ಪಯ್ಯನನ್ನು ಹುಡುಕುತ್ತ ಹೊರಟುಬಿಟ್ಟಳು.

ಹಸೆಹಾಡುಗಳ ಕಣಜ, ಬದುಕನ್ನೇ ದೈವವೆಂದು ಆರಾಧಿಸಿ, ಹಾಗೇ ಬದುಕಿದ್ದ ನನ್ನ ಅಮ್ಮ (ಶ್ರೀಮತಿ ಐರೋಡಿ ರುಕ್ಮಿಣೀ ಉಡುಪ), 2015 ರಲ್ಲಿ - ವರ್ಷದ ಕಿರಿಯ ತಿಂಗಳಿನ (ಫೆಬ್ರುವರಿ) ಕೊನೆಯ ದಿನದಿಂದ - ತನ್ನ ಬದುಕಿನ ಭೌತಿಕ ಸಂಬಂಧದಿಂದ ಕಳಚಿಕೊಂಡಿದ್ದಾಳೆ. ನಾಲ್ವರು ಪುತ್ರಿಯರು, ಇಬ್ಬರು ಪುತ್ರರಿಗೆ.... ಅಳಿದುಳಿದ ಭೂಮಿಯ ಋಣ ತೀರಿಸುವಂತೆ ಹೇಳಿ ಅಮ್ಮನು ಹೊರಟು ಹೋಗಿದ್ದಾಳೆ. ಮಾಗಿ ಹಣ್ಣಾದ ಜೀವವೊಂದು, ಹೆಣಗಾಡುತ್ತ, 86 ರ ಗೆರೆ ದಾಟಲಾಗದೆ, ಸೋತು ಬಸವಳಿದು ಹೊರಟೇ ಹೋಗಿದೆ. ಕಾಲನಾಣತಿಗೆ ತಲೆಬಾಗಿದೆ.

ಇದು.... ಎರಡು ಸಾಲಿನಲ್ಲಿ ಮುಗಿದು ಹೋದ ಬದುಕಲ್ಲ. ಏಕೆಂದರೆ ಬದುಕಿನ ಹೋರಾಟದ ನೂರಾರು ಹೊಡೆತಗಳನ್ನು ಕಂಡು ಉಂಡು ಜೀರ್ಣಿಸಿಕೊಂಡ ಬದುಕಿದು. 2015 ರ ಫೆಬ್ರುವರಿ 27 ರಂದು, ತನ್ನ ಸುದೀರ್ಘ 86 ವರ್ಷಗಳ - ವ್ಯರ್ಥ ಹೊಡಚಾಟ ಮತ್ತು ಸಾರ್ಥಕ ಹೋರಾಟಗಳಿಂದ ನನ್ನ ಅಮ್ಮನು ಪಾರಾಗಿ, ಉಸಿರಿಗೆ ವಿದಾಯ ಹೇಳಿಯೇ ಬಿಟ್ಟಳು. ನನ್ನ ಅಮ್ಮನ ಕಾಲಘಟ್ಟದ - "ಕರ್ತವ್ಯಪರ ಅಮ್ಮಂದಿರೆಲ್ಲರೂ ನಮ್ಮ ಜೊತೆಗೆ ಇದೇ ಭೂಮಿಯಲ್ಲಿ ಬದುಕಿದ್ದರೆ?...." ಎಂದು ಮುಂದಿನ ಜನಾಂಗವು... ಪುರಸೊತ್ತಿದ್ದರೆ... ಯೋಚಿಸಬಹುದಾದಂತಹ ಬದುಕುಗಳಿವು.


ಕಾಲದ ಓಟದ ಸುಳಿಯಲ್ಲಿ ಸಿಲುಕಿರುವ ನಾವೆಲ್ಲರೂ "ಉಳಿಯಬೇಕು ಉಳಿಯಬೇಕು" ಎಂಬಂತಹ ಜಂಗೀಕುಸ್ತಿ ಹೋರಾಟವನ್ನು ಬದುಕಿನುದ್ದಕ್ಕೂ ನಡೆಸುತ್ತಲೇ ಇರುತ್ತೇವೆ. ಅವರಲ್ಲಿ ಕೆಲವರು ನಿಷ್ಕಾಮ - ನಿರ್ವ್ಯಾಜಪ್ರೇಮದಿಂದ ಬದುಕುತ್ತ, ಸುತ್ತಿನವರ ನೆನಪಿನಲ್ಲಿ ಸಹಜವಾಗಿ ಉಳಿದು ಹೋಗುತ್ತಾರೆ; ಇನ್ನು ಕೆಲವರು ಹತ್ತಾರು ಬದುಕುಗಳನ್ನು ಸ್ವಂತ ಮುಷ್ಟಿಯಲ್ಲಿರಿಸಿಕೊಳ್ಳಲು ವಾಮಮಾರ್ಗದಲ್ಲಿ ಹೊಡಚಾಡುತ್ತ, ತನ್ಮಧ್ಯೆ ಸ್ವಂತ ಬದುಕನ್ನು ಪ್ರಾಮಾಣಿಕವಾಗಿ ಬದುಕಲಾಗದೆ, ಆತ್ತ ಅಳಿಯದೆ ಇತ್ತ ಉಳಿಯದೆ ತ್ರಿಶಂಕು ಸುಖಕ್ಕೆ ಎರವಾಗುತ್ತಾರೆ. ನನ್ನ ಅಮ್ಮನು ಇವರಲ್ಲಿ ಮೊದಲ ವರ್ಗಕ್ಕೆ ಸೇರಿದವಳು. ಅವಳಷ್ಟು ಅಂಕೆಯಲ್ಲಿ ಬದುಕಿ, ತನ್ನ ಮತ್ತು ತನ್ನವರೆಲ್ಲರ ಬದುಕುಗಳನ್ನು ತನ್ನದೇ ಎಂಬಂತೆ ಉತ್ಕಟವಾಗಿ ಪ್ರೀತಿಸಿದವರನ್ನು ನಾನಂತೂ ಕಂಡಿಲ್ಲ. "ನನ್ನ ಅಮ್ಮ" ಎಂಬ ಮೋಹದಿಂದ ಹೊರನಿಂತು ನಾನು ಈ ಮಾತನ್ನಾಡುತ್ತಿದ್ದೇನೆ. ಅದಕ್ಕೂ ಕಾರಣವಿದೆ.

ಕಾಲಕಾಲಕ್ಕೆ ಸಿಗಬೇಕಾದುದೆಲ್ಲವನ್ನೂ ಬದುಕಿನಲ್ಲಿ ಕಾಣುತ್ತ - ಉಣ್ಣುತ್ತ, ಬದುಕನ್ನು ಆರಾಧಿಸುವುದು ಸಾಮಾನ್ಯ ವಿಚಾರ. ಆದರೆ ಬದುಕಿನ ಹೆಜ್ಜೆಹೆಜ್ಜೆಗೆ ಪ್ರತಿಕೂಲ ಪರಿಸ್ಥಿತಿಯನ್ನೆದುರಿಸುತ್ತಿದ್ದರೂ ಬದುಕಿನತ್ತ ತೋರುವ ನಿಷ್ಕಾಮ ಪ್ರೇಮವಿದೆಯಲ್ಲಾ.... ಅದೇ ದೈವೀಕ ಪ್ರೇಮ; ಅದು - ಈ ಪ್ರಕೃತಿಗೆ - ಸೃಷ್ಟಿಗೆ ತೋರುವ ವಿನೀತ ಭಾವ. ಆಕೆಯು ಬದುಕಿನತ್ತ ತೋರಿದ ಭಾವವು ಅಂಥದ್ದು. ಅವಳಲ್ಲಿದ್ದ - "ಇಟ್ಟ ಹಾಂಗೆ ಇರುವೆನು" ಎಂಬಂತಹ ಪೂರ್ಣ ಶರಣಾಗತಭಾವವನ್ನು ಮಕ್ಕಳಾದ ನಾವೆಲ್ಲ ಹತ್ತಿರದಿಂದ ಕಂಡಿದ್ದೇವೆ. ಆಕೆಯು ಕಂಡ ಕಷ್ಟಗಳೆಷ್ಟು! ಉಂಡ ಸಂಕಟಗಳೆಷ್ಟು! ಆದರೂ ನನ್ನ ಅಮ್ಮನು ಧೃತಿಗೆಟ್ಟುದನ್ನು ನಾನು ಕಂಡಿಲ್ಲ.

ಅವಳ ದೃಷ್ಟಿಯಲ್ಲಿ - "ಈ ಬದುಕಿನಲ್ಲಿ ಸಮಸ್ಯೆಗಳೂ ಇವೆ; ಯಾವುದೇ ಸಮಸ್ಯೆಗೆ ಪರಿಹಾರವೂ ಇದೆ." ಅಮ್ಮನ ಭಾಷೆಯಲ್ಲಿಯೇ ಹೇಳುವುದಾದರೆ..." ಬದುಕನ್ನು ಪ್ರೀತಿಸುವವರಿಗೆ ವಿನಯಶೀಲತೆ ಬೇಕು. ಗ....ಅಂದ ಕೂಡಲೇ ಗಬಕ್ಕ್ ಅನ್ನಬಾರದು. ತಾಳ್ಮೆಯಿಂದ ಯೋಚಿಸಬೇಕು. ಕಾಯಬೇಕು. ಕಾಲವೇ ಎಲ್ಲದಕ್ಕೂ ಪರಿಹಾರ ನೀಡುತ್ತದೆ. ಆದರೆ ಹೋರಾಟದೆದುರು ಮನುಷ್ಯಭಾವವು ಸೊರಗಲು ಬಿಡಬಾರದು; ಮನುಷ್ಯತ್ವವು ಮರೆಯಾಗಬಾರದು. ಎಂದಿಗೂ ಕೆಟ್ಟ ಯೋಚನೆ ಮಾಡಬೇಡ; ಕನಸಿನಲ್ಲಿಯೂ ಯಾರಿಗೂ ಕೆಡುಕನ್ನು ಬಯಸಬೇಡ; ನೋಯಿಸಬೇಡ. ಯಾವುದೇ ವ್ಯಕ್ತಿಯೋ ಸಂದರ್ಭವೋ ನಮ್ಮ ಸ್ವಂತಕ್ಕೆ ಹೊಂದಿಕೆಯಾಗದಿದ್ದರೆ ತತ್ಕಾಲಕ್ಕೆ ದೂರವಿದ್ದುಬಿಡು. ಏಕೆಂದರೆ ಯಾರಿಗೂ ಯಾರನ್ನೂ ರಿಪೇರಿ ಮಾಡಿ ಹೊಸದಾಗಿಸಲು ಆಗುವುದಿಲ್ಲ. ಬುದ್ಧಿಮಾತಿನಿಂದಲೇ ಯಾರನ್ನೂ ಬದಲಾಯಿಸಲು ಸಾಧ್ಯವಿಲ್ಲ ; ಉಪದೇಶವು ಕೆಲವರ ಒಳಗೆ ಹೊಗ್ಗುವುದೇ ಇಲ್ಲ. ಅದು ಸಂಸ್ಕಾರ ದೋಷ. ಯಾವುದೇ ಬದಲಾವಣೆಗೆ ಆಯಾ ಆಂತರ್ಯದಲ್ಲಿಯೇ ಅಡುಗೆ ನಡೆಯಬೇಕು. ಹೊರ ಉಪದೇಶಗಳೆಲ್ಲವೂ... ತೊಳೆದರೆ ಬಳಿದುಹೋಗುವ ಮುಖಶೃಂಗಾರದಂತೆ - ಕೋಣನ ಮುಂದೆ ಕಿನ್ನರಿ ನುಡಿಸಿದಂತೆ...  ವ್ಯರ್ಥ. ಆದರೆ ಸಾಂತ್ವನ ಬಯಸಿ ಬಂದವರನ್ನು ಮಾತ್ರ ಬರಿಗೈಯಲ್ಲಿ ಕಳಿಸಬಾರದು. ಅದಕ್ಕೇ ಮಕ್ಕಳೇ ನಾನು ನಿಮಗೆ ಹೇಳುತ್ತೇನೆ... ನೀವೆಲ್ಲರೂ ಈಗ ಸ್ವಸಂತುಷ್ಟರಾಗಿದ್ದೀರಿ. ಅವರವರ ಕುಟುಂಬಕ್ಕೆ ಬದ್ಧವಾಗಿರುವ ನೀವೆಲ್ಲರೂ ಈಗ ನಿಮ್ಮನಿಮ್ಮ ವೃತ್ತದಲ್ಲಿಯೇ ಸುತ್ತಬೇಕು; ಯಾರೂ ಇನ್ನೊಬ್ಬರ ಸ್ವಂತ ವಿಷಯದಲ್ಲಿ ಮೂಗು ತೂರಿಸಬಾರದು. ಈ ಪ್ರಪಂಚದಲ್ಲಿ ಬಡತನವು ಮನುಷ್ಯನನ್ನು ಹತ್ತಿರ ತರುತ್ತದೆ; ಈ ದುಡ್ಡು ಇದೆಯಲ್ಲಾ... ಅದು ಮನಸ್ಸುಗಳನ್ನು ದೂರ ಮಾಡುತ್ತದೆ. ಅದು ಸಹಜ. ಕಾಂಚಾಣದ ಅಡ್ಡ ಪರಿಣಾಮವು ಒಂದೆರಡಲ್ಲ. ದುಡ್ದಿನ ಜೊತೆಗೇ ದುಷ್ಟ ಅಹಂಕಾರವು ನುಸುಳಿ, ತಿಳಿಯಾದ ಮನಸ್ಸನ್ನು ಅತಿ ಸೂಕ್ಷ್ಮಗೊಳಿಸಿ ಒಣಪ್ರತಿಷ್ಠೆ ತುಂಬಿ, ಒಬ್ಬೊಬ್ಬರೂ ಸ್ವಕೇಂದ್ರಿತರಾಗುವುದನ್ನು ಈ ಸಮಾಜದಲ್ಲಿ ನೋಡುತ್ತ ಬಂದವಳು ನಾನು. ಸಂದರ್ಭ - ಸನ್ನಿವೇಶಗಳೂ ಕೆಲವೊಮ್ಮೆ ಅನುಚಿತವಾದುದನ್ನೆಲ್ಲ ಮಾಡಿಸುತ್ತವೆ. ಇಂತಹ ಅಡಕತ್ತರಿಯ ಸನ್ನಿವೇಶದಲ್ಲಿ ನಾವಿರುವಾಗ, ತಮಾಷೆಯೆಂದು ನಾವು ನೀವು ಅಂದುಕೊಂಡ ಮಾತು ವರ್ತನೆಗಳೂ - ಕೆಲವೊಮ್ಮೆ ಗಂಭೀರ ರೂಪ ಪಡೆಯಬಹುದು. ಆದ್ದರಿಂದ ನಿಮ್ಮನಿಮ್ಮಲ್ಲಿಯೂ ಅಡ್ಡಾದಿಡ್ಡಿ ತಮಾಷೆ ಬೇಡ. ತಮಾಷೆಯ ಘಟ್ಟವನ್ನು ನೀವೆಲ್ಲರೂ ದಾಟಿದ್ದೀರಿ. ಈ ಬದುಕಿನಲ್ಲಿ ತಮಾಷೆಗೆ ತುಂಬ ಮಹತ್ವವಿಲ್ಲ. ಆದ್ದರಿಂದ ಗಂಭೀರವಾಗಿಯೇ ಬದುಕಿ. ಆದರೆ ಸಹಜವಾಗಿ ಬದುಕಿ. ಅದಕ್ಕಿಂತ ದೊಡ್ಡ ಪೂಜೆ ಹರಕೆ ಯಾವುದೂ ಬೇಡ. ಸಮಾಜದ ಪ್ರತಿಯೊಂದು ಬದುಕನ್ನೂ ಪ್ರೀತಿಸಿ ಗೌರವಿಸುವುದನ್ನು "ಕರ್ತವ್ಯ" ಎಂದುಕೊಂಡರೆ ಬೇಕಾದಷ್ಟಾಯಿತು. ಅದೇ ಪೂಜೆ. ನಾನು ಎಷ್ಟು ದಿನ ಇರಬಹುದು? ಆದರೆ ನನ್ನ ಮಾತನ್ನು ನೀವು ಮುಂದೆಯೂ ಜ್ಞಾಪಿಸಿಕೊಳ್ಳುತ್ತೀರಿ..." ಅಮ್ಮನ ಇಂತಹ ಮಾತುಗಳು - ನೆನಪಿನ ಕೋಶದಲ್ಲಿ ಈಗಲೂ ನಮ್ಮೊಂದಿಗಿವೆ.

ಆದರೆ.. "ಅಮ್ಮ ದೈಹಿಕವಾಗಿ ಇನ್ನಿಲ್ಲ" ಎಂಬುದು ವಾಸ್ತವ. ಅಂದಮಾತ್ರಕ್ಕೆ - ಆಕೆಯೊಂದಿಗೆ ಒಡನಾಡಿದ ಜೀವಗಳಲ್ಲಿ ನಡೆಯುವ ಭಾವ ಸಂಚಾರವನ್ನು ಪ್ರತಿಬಂಧಿಸುವುದಾದರೂ ಹೇಗೆ ? ಸೀರೆ ಹರಿದರೆ ಸೇರಿಸಿ ಉಡಬಹುದು, ದಾರಿ ತಪ್ಪಿದರೆ ತರಬಹುದು, ಹಡೆದಮ್ಮನೆಲ್ಲಿ ತರುವೆನೇ?... ಜನಪದದ ಭಾವವಿದು. ಹೊರಟೇ ಹೋದ ಹಡೆದಮ್ಮನನ್ನು ಎಲ್ಲಿಂದ ತರಲಿ? ಕಣ್ಣು ಕಾಣುವ ತನಕ, ಬೆನ್ನು ಬಾಗುವ ತನಕ, ತಾಯಿರಲಿ ನನಗೆ ತವರಿರಲಿ - ನನ್ನವ್ವ, ಅಣ್ಣಯ್ಯರಿರಲಿ ಕರೆತಾಗೆ ಎಂಬ ಯಾವುದೇ ಜಾನಪದೀಯ ಹೆಣ್ಣಿನ ಮನದಾಳದ ಮೃದುಭಾವವು ಕೇವಲ ಅನುಭವವೇದ್ಯ. ಹಡೆದವ್ವ ಇರೋತನಕ ತೌರಿನ ಮನೆ ನಮ್ಮದು, ಹಡೆದವ್ವ ತೀರಿ ದಿನವೊಂದು ಕಳೆದರೆ - ತೌರಿನವರ್ಯಾರೋ - ನಾವ್ಯಾರೋ - ಎಂಬುದೂ.. ಅನುಭವದ ಮಾತೇ ಆಗಿದೆ. ಜನಪದರ ಈ ಭಾವವು ಅಮ್ಮನಿಲ್ಲದ ಹೊತ್ತಿನಲ್ಲಿ ನೆನಪಾಗಿ - ಹೆಚ್ಚು ಆತ್ಮೀಯವೆನ್ನಿಸುತ್ತದೆ.

ಬ್ರಹ್ಮಚರ್ಯದ ದೀಕ್ಷೆ ತೊಟ್ಟಂತೆ 32 ವರ್ಷಗಳನ್ನು ದೃಢವಾಗಿ ಕ್ರಮಿಸಿದ ಪಂಡಿತ ಯಜ್ಞನಾರಾಯಣ ಉಡುಪರ ವ್ರತಭಂಗಗೊಳಿಸಿದ ಹುಡುಗಿ - ನಮ್ಮ ಅಮ್ಮ. ಅಂದಿನದು - ನಮ್ಮ ಅಪ್ಪಯ್ಯನೇ ಒಪ್ಪಿಕೊಂಡಂತೆ - ಅವರ ಏಕಮುಖ ಪ್ರೇಮ. ದುಡ್ಡುಕಾಸಿನ ನಿರೀಕ್ಷೆಯಿಲ್ಲದ ಶುದ್ಧ ಪ್ರೇಮ. ಆದರೆ... ನಾವು ಮಕ್ಕಳು ಕಂಡಂತೆ - ಪ್ರತಿಕೂಲ ಸ್ಥಿತಿಯಲ್ಲಿಯೂ ಯಾವುದೇ ಏರಿಳಿತವಿಲ್ಲದೆ ಸಾಗಿಬಂದ "ಸುಂದರ ದಾಂಪತ್ಯ"ವೆಂಬ ಕಲ್ಪನೆಗೆ ದೃಷ್ಟಾಂತವಾಗಿದ್ದ ಪ್ರೇಮವದು. 

ಅಂದು ಮದುವೆಯಾಗುವಾಗ ಅಮ್ಮನಿಗೆ ಕೇವಲ ಹದಿನಾಲ್ಕು ವರ್ಷ ಪ್ರಾಯ. ಅದು ಪ್ರೀತಿ ಪ್ರೇಮ ಎಂದರೇನೆಂದೇ ಗೊತ್ತಿರದ ವಯಸ್ಸು. ಐರೋಡಿಯ ದಿ. ಕೃಷ್ಣ ಹೆಬ್ಬಾರ್ ಮತ್ತು ಯಮುನಾ ಹೆಬ್ಬಾರ್ ದಂಪತಿಯ ಹಿರಿಯ ಮಗಳೀಕೆ. ಧಾರ್ಮಿಕ ಮನೋಭಾವದ ತಂದೆತಾಯಿಯಿಂದ ಮುಗ್ಧತೆ, ಪ್ರಾಮಾಣಿಕತೆಯಂತಹ ಮೌಲ್ಯಗಳನ್ನು ಅದಾಗಲೇ ತನ್ನದಾಗಿಸಿಕೊಂಡಿದ್ದ  ಅಂದಿನ ಬಾಲಕಿ ರುಕ್ಮಿಣಿಗೆ ಶಾಲೆ..ಓದು.. ಎಂದರೆ - ಜೀವ. (ಮುಂದೆ ತನ್ನ ಮದುವೆಯ ನಂತರ...ತೊಟ್ಟಿಲ ಕೂಸಾಗಿದ್ದ ನನಗೆ ಹಾಲೂಡಿಸಿ, ತನ್ನ ಅತ್ತೆಯ ಸುಪರ್ದಿಗೆ ಮಗುವನ್ನು ಒಪ್ಪಿಸಿ ಎಂಟನೆಯ ತರಗತಿಯ ಪರೀಕ್ಷೆಗೆ ಬರೆದು ಬಂದಿದ್ದ ಅಮ್ಮನು ಆ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿದ್ದರೂ ಸಂಸಾರ ಬೆಳೆಯುತ್ತ ಹೋದಂತೆ, ಓದು ಮುಂದುವರಿಸಲಾಗದೆ - ತನ್ನ ಸ್ವಂತ ಆಸೆಗಳನ್ನೆಲ್ಲ ಅದುಮುತ್ತ ಬಂದವಳು.. ಕರ್ತವ್ಯ ದೀಕ್ಷೆಗೆ ಬದ್ಧಳಾದವಳು.) 

ಏಕಗ್ರಾಹಿತ್ವ, ಸದಭಿರುಚಿ, ವಿನಯ, ಏಕಾಗ್ರತೆ, ಸ್ಮೃತಿ-ಶ್ರುತಿ... ಮುಂತಾದ ಜನ್ಮಜಾತ ಶಕ್ತಿಗಳು ಬಾಲ್ಯದಲ್ಲೇ ಆಕೆಯ ವ್ಯಕ್ತಿತ್ವವನ್ನು ರೂಪಿಸುತ್ತಿದ್ದವು. ಉಡುಪಿ ತಾಲೂಕಿನ ಹಂಗಾರಕಟ್ಟೆಯ ಶಾಲೆಯಲ್ಲಿ  ಅಂದು ಉಪಾಧ್ಯಾಯರಾಗಿದ್ದ ಉಡುಪರ - ಶಿಷ್ಯೋತ್ತಮೆಯೀಕೆ. ಆಗ ಐದು - ಆರನೇ ತರಗತಿಯಲ್ಲಿ ಓದುತ್ತಿದ್ದ ಈ ಎಣ್ಣೆಗಪ್ಪು ಬಣ್ಣದ ಸಣಕಲು ಹುಡುಗಿಗೆ ಕಟ್ಟುಮಸ್ತಾದ ದೇಹಸಂಪತ್ತು ಹೊಂದಿದ್ದ ಚೆಲುವ ಉಡುಪರು ಒಲಿದದ್ದಾದರೂ ಹೇಗೆ? ಯಾಕೆ? 

"ಶಿಷ್ಯಳೆಂದರೆ ಮಗಳ ಸಮಾನವಲ್ಲವೇ ಅಪ್ಪಯ್ಯಾ?" ಎಂದು ತಮ್ಮ ಮಕ್ಕಳೇ ಮುಂದೊಂದು ದಿನ, ಅಪ್ಪನನ್ನು ಆರೋಪಿಸುವಂತೆ ಪ್ರಶ್ನಿಸಿದಾಗ, ಅದಾಗಲೇ ಆರು ಮಕ್ಕಳ ತಾಯಿಯಾಗಿದ್ದ ಅಮ್ಮನು ನಾಚುತ್ತಿದ್ದುದು ನನಗೆ ನೆನಪಾಗುತ್ತದೆ. "ನನ್ನ ಗ್ರಹಚಾರ; ಬಲೆಗೆ ಬಿದ್ದೆ.." ಎಂದು ಹೇಳುತ್ತ ಅಮ್ಮನನ್ನು ಕಡೆಗಣ್ಣಿನಿಂದ ನೋಡುತ್ತ ಆ ಅರುವತ್ತರ ಇಳಿವಯಸ್ಸಿನಲ್ಲೂ ಅಪ್ಪಯ್ಯನು ಅವಳನ್ನು ಕೆಣಕುತ್ತಿದ್ದುದೂ ಇತ್ತು; ಜತೆಜತೆಗೆ, ಒಳ್ಳೆಯ ಗುಣ.. ಮುಗ್ಧತೆ, ನಿಜವಾದ ಸಹಚಾರಿ... ಇತ್ಯಾದಿಯಾಗಿ ಅಮ್ಮನ ಸತ್ವವನ್ನು ಬಣ್ಣಿಸುತ್ತಿದ್ದುದೂ ಇತ್ತು. ಆದರೆ ಒಟ್ಟಾರೆಯಾಗಿ ನೋಡಿದರೆ, ತನ್ನ ತಂದೆ ತಾಯಿಯಿಂದ ಬಾಲ್ಯದಲ್ಲಿ ಪಡೆದ ಸಂಸ್ಕಾರಕ್ಕಿಂತ ಮದುವೆಯ ಅನಂತರ ತನ್ನ ಪತಿಯಿಂದ ಪಡೆದ ಸಂಸ್ಕಾರವೇ ಅಮ್ಮನನ್ನು ಬಲವಾಗಿ ರೂಪಿಸಿತ್ತು ಎಂದು ಹೇಳಿದರೆ ತಪ್ಪಾಗದು. ಯಾಕೆಂದರೆ ಆಕೆಯು ಹುಟ್ಟಿದ ಮನೆಯಲ್ಲಿ ಬೆಳೆದದ್ದು ಕೇವಲ 14 ವರ್ಷ. ಅಮ್ಮನ ಹದಿಹರೆಯದಿಂದಲೇ ತೊಡಗಿ, ಆಕೆಯು ಆರಾಧಿಸುತ್ತಿದ್ದ ಪತಿಯ ಆಶ್ರಯದಲ್ಲಿಯೇ ಅವಳ ಬದುಕು ಸಾಗಿ ಬಂತು. ಅಂದಿನ ಬಹುಪಾಲು ಮಹಿಳೆಯರಂತೆ, ಆದರ್ಶ ಸತಿಯಾಗಿ, ಗಂಡನ ಹೆಜ್ಜೆಯ ಜೊತೆಗೇ ಹೆಜ್ಜೆ ಹಾಕುತ್ತ ಬಂದ ಅಮ್ಮ ಇವಳು. ಆದ್ದರಿಂದ ಅವಳ ವ್ಯಕ್ತಿತ್ವವು ರೂಪುಗೊಂಡದ್ದು ಗಂಡನ ಮನೆಯಲ್ಲಿಯೇ.

ವಿದ್ಯಾರ್ಥಿನಿಯಾಗಿರುವಾಗಲೇ ಮದುವೆಯಾಗಿದ್ದ ಆ ಕಿರಿಯ ವಯಸ್ಸಿನಲ್ಲಿಯೇ ಅಮ್ಮನು ತನ್ನ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿನಿಯಾಗಿ ಗುರುತಿಸಿಕೊಂಡಿದ್ದಳು. ತರಗತಿಯ ಪಾಠದಲ್ಲಿ ಮೊದಲನೇ ಸ್ಥಾನದಲ್ಲಿಯೇ ಇರುತ್ತಿದ್ದ ಅಮ್ಮನು, ಆಗ ತನ್ನ ಗುರುವಾಗಿದ್ದ ಅಪ್ಪಯ್ಯನು ಶಾಲೆಯ ಮಕ್ಕಳಿಂದ ನಡೆಸುತ್ತಿದ್ದ ಪಠ್ಯೇತರ ಚಟುವಟಿಕೆಗಳಲ್ಲಿಯೂ ಅಗ್ರಣಿಯಾಗಿದ್ದಳು. ಅಮ್ಮನಿಂದ "ಮುದ್ದಣ", ದಕ್ಷ ಯಜ್ಞ"... ಮುಂತಾದ ಹರಿಕತೆಗಳನ್ನು ಅಂದು ಶಾಲೆಯಲ್ಲಿ ಮಾಡಿಸಿದ್ದ ಅಪ್ಪಯ್ಯನು ಅವಳ ಕಂಠಶ್ರೀ ಮತ್ತು ನಿರೂಪಣೆಯ ಬೆಡಗಿಗೆ ಮನಸೋತು, ತಮ್ಮ ಬ್ರಹ್ಮಚರ್ಯದ ವ್ರತಭಂಗಕ್ಕೆಳಸಿ, ಅಂದಿನ ಸಮಾಜದ ವಿಚಿತ್ರ ಪ್ರತಿರೋಧವನ್ನೂ ಮೆಟ್ಟಿನಿಂತು, 1942 ರಲ್ಲಿ ಅವಳನ್ನು ಮದುವೆಯಾಗಿಯೇ ಬಿಟ್ಟಿದ್ದರು. 

ವಯಸ್ಸಿನಲ್ಲಿ 18 ವರ್ಷಗಳ ಅಂತರವಿದ್ದರೂ ಅವರಿಬ್ಬರೂ ನಡೆಸಿದ್ದ ಪ್ರೀತಿಯ ಸಹಬಾಳ್ವೆಯನ್ನು ಹತ್ತಿರದಿಂದ ಕಂಡು, ಅಂದು ಪ್ರೇರಣೆ ಪಡೆದವರೂ ಇದ್ದರು; ವಿಸ್ಮಯಗೊಂಡವರೂ ಇದ್ದರು. ಅಪ್ಪಯ್ಯನು ಬದುಕಿರುವವರೆಗೂ ಅವರ ಕುಟುಂಬವನ್ನು ಕಾಡಿಸಿದ್ದ - ಕಿತ್ತು ತಿನ್ನುವ ಆರ್ಥಿಕ ಬಡತನವು ಈ ದಂಪತಿಗಳ ಪ್ರೀತಿಯನ್ನು ಮಾತ್ರ ರವಷ್ಟೂ ಕಡಿಮೆ ಮಾಡಿರಲಿಲ್ಲ. 

ಆ ಕಾಲದಲ್ಲಿ ಯಾವುದೇ ಮದುವೆಗೆ ಹೋಗಿ ಬಂದರೂ ಮನೆಯಲ್ಲಿ ಕೇಳುತ್ತಿದ್ದ ಮೊದಲ ಪ್ರಶ್ನೆಯೇ - "ಮದುಮಕ್ಕಳು ಚೆಂದ ಇದ್ದಾರಾ? ಜೋಡಿ ಹೇಗಿದೆ?" - ಅಂತ. ಆಗ ಅಮ್ಮನ ಬಾಯಿಯಿಂದ ನಾನು ಅದೆಷ್ಟೋ ಬಾರಿ ಕೇಳಿದ್ದೇನೆ..."ನಿನ್ನ ಅಪ್ಪಯ್ಯನನ್ನು ಕಂಡ ನನಗೆ ಯಾರನ್ನೂ ಚೆಂದ ಅನ್ನಲಿಕ್ಕೆ ಆಗುವುದೇ ಇಲ್ಲ ಮಗೂ. ಯಾರಲ್ಲೂ ಆ ತೇಜಸ್ಸು ಕಾಣುವುದಿಲ್ಲ.."  ಎನ್ನುತ್ತಿದ್ದಳು. ಆಗ ಮಕ್ಕಳಾದ ನಮಗೆ ಚಂಗು ಬಂದು, "ನಿನ್ನ ಶಿವನೆದುರಲ್ಲಿ - ಈ ಸಾವ ಕೆಡುವ ಗಂಡರನೊಯ್ದು ಒಲೆಯೊಳಗಿಕ್ಕು... ಅಲ್ಲವೇನಮ್ಮಾ?" ಎನ್ನುತ್ತ ನಾವೆಲ್ಲರೂ ಅಮ್ಮನನ್ನು ಕಿಚಾಯಿಸುತ್ತಿದ್ದುದೂ ಇತ್ತು.

ನಮ್ಮ ಅಮ್ಮನ ಬದುಕಿನಲ್ಲಿ ಇದ್ದದ್ದು - ಎರಡೇ ಅಧ್ಯಾಯ. ಮೊದಲನೆಯದು ಪತಿ ಸಾಂಗತ್ಯ, ಮುಂದಿನದು ಮಕ್ಕಳ ಆಶ್ರಯ. ಅಲ್ಲಿಯೂ - ಅವಳದ್ದು ತಾರತಮ್ಯವಿಲ್ಲದ ಸರಿಯಾದ ಹಂಚಿಕೆ! 36 ವರ್ಷಗಳ ಕಾಲ ಅಪ್ಪಯ್ಯನ ಜೊತೆಗೆ ದಾಂಪತ್ಯ ಜೀವನ ನಡೆಸಿದ್ದ ಅಮ್ಮನು, ಆಮೇಲೆ.... ಮಕ್ಕಳ ಆಶ್ರಯದಲ್ಲಿ ಕಳೆದದ್ದು 36 ವರ್ಷಗಳನ್ನು. ಅಂದು 1978 ರಲ್ಲಿ, ಅಪ್ಪಯ್ಯನು ಎಲ್ಲರಿಗೂ ಕೈಬೀಸಿ ಭೂಯಾತ್ರೆಯನ್ನು ಮುಗಿಸಿ ಹೊರಟಾಗ - ಅಮ್ಮನಿಗೆ ಕೇವಲ 49 ವರ್ಷ ಪ್ರಾಯ. ಮನೆಯ ಇಬ್ಬರು ಹೆಣ್ಣುಮಕ್ಕಳಿಗೆ ಮಾತ್ರ ಆಗ ಮದುವೆಯಾಗಿತ್ತು. ನಾನು ಆಕಾಶವಾಣಿಯ ನೌಕರಿಯಲ್ಲಿದ್ದೆ. ನನ್ನ ತಂಗಿಯ ಪದವಿ ಯಾತ್ರೆ ಮುಗಿದಿತ್ತು. ಪ್ರೌಢಶಾಲೆಗೆ ಹೋಗುತ್ತಿದ್ದ ಇಬ್ಬರು ಅಪ್ರಬುದ್ಧ ಗಂಡು ಮಕ್ಕಳ ಜವಾಬ್ದಾರಿಯು - ಪೂರ್ತಿಯಾಗಿ ಅಮ್ಮನ ಮೇಲಿತ್ತು. ಆದರೂ ಅಮ್ಮನು ಕಂಗಾಲಾಗಲಿಲ್ಲ; ಶಸ್ತ್ರಸನ್ಯಾಸಕ್ಕೆಳಸಲಿಲ್ಲ. ತಾಳ್ಮೆಯಿಂದಲೇ ತನ್ನನ್ನು ತಾನೇ ಸಂತೈಸಿಕೊಳ್ಳುತ್ತ, ಹತಾಶೆ ಒತ್ತರಿಸಿದಾಗ ಒಮ್ಮೊಮ್ಮೆ ಅತ್ತು ಹಗುರಾಗುತ್ತ, ನಿಲ್ಲದ ನಡಿಗೆಗೆ ಅಂಟಿಕೊಂಡಿದ್ದ ಅಮ್ಮನು, ಅಂತೂ ಇಂತೂ ದೈವಬಲದಿಂದ ಮಕ್ಕಳೆಲ್ಲರೂ ತಮ್ಮ ಕಾಲ ಮೇಲೆ ತಾವು ನಿಂತುದನ್ನು - ಕಂಡಳು. ಅನಂತರವೂ ಆಕೆಯು ಸ್ವಂತ ಸುಖದ ಚಿಂತೆಯನ್ನು ಮಾಡುವ ಗೋಜಿಗೆ ಹೋಗದೆ, ತನ್ನ ವೈಯ್ಯಕ್ತಿಕ ಸಲಹೆ ಸೂಚನೆ ಸೇವೆಯ ಅಗತ್ಯವಿರುವ ಮಕ್ಕಳ ಬದುಕನ್ನು, ತಾನೇ ಸ್ವತಃ ಮೈಬಗ್ಗಿಸಿ ದುಡಿಯುವುದಕ್ಕೂ ಹಿಂಜರಿಯದೆ... ಕಟ್ಟಿಕೊಟ್ಟಳು. ಸುಮಾರು ಆರೇಳು ವರ್ಷಗಳ ಕಾಲ ನನ್ನ ಜೊತೆಗೇ ಇದ್ದು ನನ್ನ ಬದುಕನ್ನು ನೇರ್ಪುಗೊಳಿಸಿದ್ದು ಇದೇ ಅಮ್ಮ. ಯಾವುದೇ ಪ್ರಶಸ್ತಿಗೆ ನಿಲುಕದ ಸೇವೆಯಿದು! ಯಾವ ಪ್ರಶಸ್ತಿಗೂ ಹಂಬಲಿಸದ ಇಂತಹ ಅಮ್ಮಂದಿರ ಸೇವೆಗಿಂತ ದೊಡ್ಡ ಸೇವೆಯುಂಟೆ?





ನನ್ನ ಔದ್ಯೋಗಿಕ ಬದುಕಿನ ಉಚ್ಛಿಷ್ಟಗಳಂತಿರುವ ನಿರಂತರ ಅವಮಾನ, ನೋವಿನ ಘಳಿಗೆಗಳಲ್ಲಿ ತನ್ನ ಮಡಿಲಿನ ಆಶ್ರಯ ನೀಡಿದ ಅಮ್ಮ ಇವಳೇ. ಎಲ್ಲವನ್ನೂ ಹೊಟ್ಟೆಯಲ್ಲಿ ಹಾಕಿಕೊಳ್ಳುವ ವಿಶೇಷ ಕಲೆಯನ್ನು ನನಗೆ ಕಲಿಸಲು ಹೆಣಗಾಡಿದ್ದ ಅಮ್ಮ ಇವಳು. "ಎಲ್ಲವನ್ನೂ ಹೊಟ್ಟೆಯಲ್ಲಿ ಹಾಕಿಕೊಂಡರೆ ನಿನ್ನ ಹಾಗೆ ಹೊಟ್ಟೆಯು ಬೆಳೆಯುತ್ತದಲ್ಲಾ?" ಎಂಬ ನಮ್ಮ ಅಪ್ರಬುದ್ಧ ಮಾತುಗಳಿಗೂ ಸಿಡುಕದೆ, "ಅಡಾದಿಡ್ಡಿ ಮಾತು ಬೇಡ" ಎಂದು ಗದರುತ್ತಲೇ ಪರಿಹಾರ ಸೂಚಿಸುತ್ತಿದ್ದ ಅಮ್ಮ ಇವಳು. "ಬುದ್ಧಿಯಿಂದಲೇ ದೇಹವು ಆಕರ್ಷಕವಾಗಬೇಕು ಮಕ್ಕಳೇ.. ದೇಹದ ಕಡೆಗೆ ಹೆಚ್ಚಿನ ಗಮನ ಯಾಕೆ ಬೇಕು? ನಿಮಗೆಲ್ಲರಿಗೂ ಅಪ್ಪ ಕೊಟ್ಟ ಆಕರ್ಷಕ ದೇಹ ಸಂಪತ್ತಿದೆ. ಅದಕ್ಕೆ ಕೃತಕ ಶೋಪಸ್ಕಾರವೇ ಬೇಕಾಗಿಲ್ಲ; ಅದು ನಮಗೆಲ್ಲ ಹೇಳಿಸಿದ್ದೂ ಅಲ್ಲ. ಆದ್ದರಿಂದ ಬುದ್ಧಿಯ ಕಡೆ ಗಮನ ಕೊಡಿ; ದೇಹದ ಆರೋಗ್ಯವನ್ನು ಮಾತ್ರ - ನಿರ್ಲಕ್ಷಿಸಬೇಡಿ. ಅಷ್ಟಾದರೆ  ಬೇಕಾದಷ್ಟಾಯಿತು. ನಿಮಗೆಲ್ಲೋ ಭ್ರಮೆ.... ನೋವು ನುಂಗಿದರೆ ಹೊಟ್ಟೆ ಬೆಳೆಯತ್ತಾ? ನನ್ನನ್ನು ಪೆದ್ದಿ ಅಂದುಕೊಂಡಿದ್ದೀರಾ? ಅದಕ್ಕೆಲ್ಲ ಯಾವ್ಯಾವುದೋ ಕಾರಣ ಇರುತ್ತದೆ..." ಎನ್ನುತ್ತ ಮೊನ್ನೆ ಮೊನ್ನೆಯವರೆಗೂ ತಿದ್ದುತ್ತ ತೀಡುತ್ತ - ದಿಕ್ಕು ತಪ್ಪದಂತೆ ನಮ್ಮನ್ನು ಕಾಪಾಡಿದ ಅಮ್ಮ ಇವಳೇ.

ನನ್ನ ಮಗನು ಐದನೆಯ ತರಗತಿಗೆ ಹೋಗುವವರೆಗೂ ನನ್ನ ಜೊತೆಗೇ ಇದ್ದು, ಕತೆ ಹೇಳುತ್ತ ನನ್ನ ಮಗನನ್ನು ಮುದ್ದಿನಿಂದ ಬೆಳೆಸಿದ ಅಮ್ಮ ಇವಳು. ಆಕಾಶವಾಣಿಯ ಉದ್ಘೋಷಕಿಯಾಗಿದ್ದ ನನ್ನ ಅವ್ಯವಸ್ಥಿತ ಪಾಳಿಯ ಓಡಾಟದಿಂದಾಗಿ ನನ್ನ ಕುಟುಂಬದ ಬದುಕು ಅಸ್ತವ್ಯಸ್ತವಾಗದಂತೆ ಜತನದಿಂದ ನೋಡಿಕೊಂಡದ್ದು... ಮತ್ತು  ನನ್ನಲ್ಲಿದೆ ಅಂದುಕೊಂಡ ಕ್ರಿಯಾಶೀಲತೆಯು ಇದೇ ಅವಧಿಯಲ್ಲಿಯೇ ಅನಾವರಣವಾದದ್ದು ವಾಸ್ತವ. ಅಂದು ನಾವು ಆಕಾಶವಾಣಿಯಲ್ಲಿ ನಡೆಸುತ್ತಿದ್ದ "ಮಾತುಕತೆ" ಎಂಬ ವಾರದ ಕೌಟುಂಬಿಕ ಸಂಭಾಷಣೆಗೆ ಪೂರಕವಾಗಿ ಎಷ್ಟೋ ಬಾರಿ ರಸವತ್ತಾದ ವಸ್ತುಗಳನ್ನು ಕೊಟ್ಟು, ತಾನು ಮಾತ್ರ ನೇಪಥ್ಯದಲ್ಲಿಯೇ ಇದ್ದು, ನನ್ನ ಪಾತ್ರವನ್ನು ಮುನ್ನಡೆಸಿದವಳು ನನ್ನ ಅಮ್ಮ.

ನನ್ನ ಜೊತೆಗಿದ್ದ ಈ ಅವಧಿಯಲ್ಲಿಯೇ ನನಗೆ ಬಗೆಬಗೆಯ ಅಡಿಗೆಯ ಸೂಕ್ಷ್ಮದ ತರಬೇತಿಯನ್ನೂ ಕೊಟ್ಟು, ಮನೆ ವಾರ್ತೆಯ ಸಂಸ್ಕಾರವನ್ನೂಡಿದವಳೂ ನನ್ನ ಅಮ್ಮನೇ. ತನ್ನ ಶುದ್ಧ ಪ್ರೀತಿಯ ಬಲದಿಂದ, ಅದಾಗಲೇ ದುಡಿಮೆಗಿಳಿದಿದ್ದ ಮತ್ತು ವಿವಾಹವಾಗಿದ್ದ ತನ್ನ ಹೆಣ್ಣುಮಕ್ಕಳನ್ನು ಬಳಸಿಕೊಂಡೇ - ತನ್ನ ಗಂಡುಮಕ್ಕಳು ದಡ ತಲುಪುವಂತೆ ಮಾಡಿದವಳು ಇದೇ ಅಮ್ಮ. ತಾನೊಂದು "ನಿಮಿತ್ತ ಮಾತ್ರ" ಎಂಬ ನಮ್ರತೆಯಿಂದಲೇ ಅಪ್ಪಯ್ಯನು ಅರ್ಧದಲ್ಲಿ ಉಳಿಸಿಹೋದ ಜವಾಬ್ದಾರಿಯನ್ನು ಪೂರೈಸಿ, ಅಪ್ಪಯ್ಯನಿಗೂ ಗೌರವ ಹೆಚ್ಚುವಂತೆ ಬದುಕಿದವಳು ಈ ನನ್ನ ಅಮ್ಮ.

ಅಮ್ಮನು ನನ್ನ ಮನೆಯಲ್ಲಿ ಇದ್ದಾಗಲೇ ತನಗೆ ಗೊತ್ತಿದ್ದ ಹಸೆಹಾಡುಗಳನ್ನೆಲ್ಲ ಬರೆದು, "ಹಸೆ ಹಾಡುಗಳು" ಎಂಬ ಪುಸ್ತಕವನ್ನು ಉಡುಪಿಯ ಗೋವಿಂದ ಪೈ ಸಂಶೋಧನಾ ಕೇಂದ್ರದವರ ಮೂಲಕ 1996 ರಲ್ಲಿ ಹೊರ ತಂದಳು. (ಡಾ. ಶಿವರಾಮ ಕಾರಂತರ ಮುನ್ನುಡಿಯನ್ನು - ಕಾರಂತರ ಮನೆಗೆ ತಾನೇ ಹೋಗಿ ಕೇಳಿ, ಬರೆಸಿಕೊಂಡಿದ್ದಳು.) ಆಗ ಅಮ್ಮನಿಗೆ 67 ವರ್ಷವಾಗಿತ್ತು.



ತನ್ನ 55 ನೇ ವಯಸ್ಸಿನಲ್ಲಿ ಮಂಗಳೂರಿನ ಆಕಾಶವಾಣಿಯಲ್ಲಿ ಧ್ವನಿ ಪರೀಕ್ಷೆಗೆ ಕುಳಿತು, ಉತ್ತೀರ್ಣಳಾಗಿ, ತನ್ನ 77 ನೇ ವಯಸ್ಸಿನವರೆಗೂ... ಸುಮಾರು 22 ವರ್ಷಗಳ ಕಾಲ, ಆಕಾಶವಾಣಿಯು ಆಹ್ವಾನಿಸಿದಾಗೆಲ್ಲ ಹೋಗಿ ಹಾಡಿ ಬಂದಳು. ನಮ್ಮ ಹಿಂದಿನ ಪೀಳಿಗೆಯವರು ಹೇಗೆ ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣತ ಮತಿಗಳಾಗಿದ್ದರು - ಎಂಬುದನ್ನು ನಮ್ಮ ಮುಂದಿನ ಪೀಳಿಗೆಯವರಿಗೆ ತಿಳಿಸುವ ದೃಷ್ಟಿಯಿಂದಾದರೂ ಸ್ತ್ರೀಯರ ಬಾಯಲ್ಲಿ ನಲಿಯುತ್ತಿದ್ದ ಹಸೆ ಹಾಡುಗಳು ಉಳಿಯಬೇಕು... ಎನ್ನುತ್ತ ಕೊನೆಯವರೆಗೂ ಅಲವತ್ತುಕೊಂಡಳು. ಅಮ್ಮನ 184 ಪುಟಗಳ ಆ ಪುಸ್ತಕವು ಒಮ್ಮೆ ಬೆಳಕು ಕಂಡಿತು; ಪುನರ್ಮುದ್ರಣವಾಗಲಿಲ್ಲ. ಈಗ ಬೇಕೆಂದರೂ ಆ ಪುಸ್ತಕವು ಎಲ್ಲೂ ಸಿಗುವುದೂ ಇಲ್ಲ. 

ಇಂದಿನ ಪ್ರಕಾಶನ ವ್ಯವಸ್ಥೆ ಎಂಬುದು ಪಕ್ಕಾ Business ಆಗಿರುವುದರಿಂದ - ಈ ಕುರಿತ ಯಾವುದೇ ಅಡಿಟಿಪ್ಪಣಿಗಳೂ ಸಮಂಜಸವಲ್ಲ. ಆರ್ಥಿಕ ನಷ್ಟವನ್ನೂ ಗಮನಿಸದೆ ಉತ್ತಮ ಚಿಂತನೆಗಳನ್ನು ಸಮಾಜಕ್ಕೆ ತಲುಪಿಸುವ ಹೊಣೆಯನ್ನು ಹೊತ್ತಂತೆ ಬದುಕಿದ್ದ ಪ್ರಕಾಶಕರು - ಈಗ ಸಿಗುವುದಿಲ್ಲ. ಇಂದಿನ ವ್ಯಾವಹಾರಿಕ ಲಾಭ - ನಷ್ಟದ ಜಂಜಾಟದಲ್ಲಿಯೇ ಮುಳುಗಿರುವವರಿಗೆ - ಯಾವುದೇ ಭಾವಭಕ್ತಿಗಳು ಲಗಾವಾಗುವುದೂ ಇಲ್ಲ. ಓಡುವ ಕುದುರೆಗಳ ಮೇಲೇ ಬಾಜಿ ಕಟ್ಟುವವರು ವಿಮರ್ಶೆಗಳಿಗೆ ನಿಲುಕುವುದಿಲ್ಲ. 

ಆದರೆ ಅಮ್ಮನಿಗೆ ಮಾತ್ರ - ಕೊನೆಯವರೆಗೂ ಒಂದು ಆಸೆ ಉಳಿದುಕೊಂಡಿತ್ತು. ತನ್ನ "ಹಸೆ ಹಾಡುಗಳು" ಪುಸ್ತಕವು ಪುನರ್ಮುದ್ರಣಗೊಳ್ಳಬೇಕು ಎಂದು ಆಕೆಗೆ ಅನ್ನಿಸುತ್ತಿತ್ತು. ತನ್ನ ಬದುಕಿನ ಕೊನೆಯ ನಾಲ್ಕು ವರ್ಷಗಳ ಹಿಂದಿನ ವರೆಗೂ "ಪುನರ್ಮುದ್ರಣ, ಪುನರ್ಮುದ್ರಣ" ಎಂದು ಕನವರಿಸುತ್ತಿದ್ದ ಅಮ್ಮನು, ಅನಂತರ ಅನಾರೋಗ್ಯದ ಸುಳಿಯಲ್ಲಿ ಸಿಲುಕಿದ ಮೇಲೆ ದೇಹ ಕೇಂದ್ರಿತಳಾಗಿ ಸ್ಮರಣಶಕ್ತಿಯೂ ಕುಂದಿಹೋಗಿ, ಕನವರಿಕೆಗಳನ್ನೆಲ್ಲ ಮರೆತೇ ಬಿಟ್ಟಳು. ಅಂದಿನಿಂದಲೇ ಬಹುಶಃ - ಅಮ್ಮ ಸುಖವಾಗಿದ್ದಿರಬಹುದು; ಆದರೆ ನನಗೆ ಮಾತ್ರ - ವಿನಾಕಾರಣ ತಪ್ಪಿತಸ್ಥ ಭಾವವು ಕುಟುಕುತ್ತಿತ್ತು. ಅಮ್ಮನ ಈ ಆಸೆಯನ್ನು ಪೂರೈಸಲಾಗದ ನೋವು, ನನ್ನನ್ನು ಎಡೆಬಿಡದೆ ಕಾಡುವುದಂತೂ ಸತ್ಯ.

ಎಲ್ಲರ ಎಲ್ಲ ಆಸೆಯೂ ಪೂರ್ಣವಾಗಲೇಬೇಕೆಂದಿಲ್ಲವಲ್ಲಾ? ಬದುಕಿಗೆ ಅಂಟಿಕೊಳ್ಳಲು ಇಂತಹ ಸಮಾಧಾನದ ಆಸರೆಯೂ ಬೇಕಾಗುತ್ತದೆ. ಅಂತೂ... ನನ್ನ ಜೊತೆಗಿದ್ದು ನನ್ನನ್ನು ಬೆಳೆಸಿ, ತಾನೂ ಸೃಜನಶೀಲ ಕೆಲಸಗಳಲ್ಲಿ ತೊಡಗಿಕೊಂಡು ಅರ್ಥಪೂರ್ಣ ಘಳಿಗೆಗಳನ್ನು ಹಾದು ಬಂದ ಅಮ್ಮನ ಬದುಕಿನ ಒಂದಷ್ಟು ಅವಧಿಯು - ಆಕೆಯ ಬದುಕಿನ ಹೊಸ ಪುಟಗಳನ್ನು ತೆರೆದಿಟ್ಟುದಂತೂ ಸತ್ಯ.

ಮುಂದೆ, ತನ್ನ ಕಿರಿಯ ಮಗನಾದ ನರೇಂದ್ರನು ಇಂಜಿನಿಯರಿಂಗ್ (B E) ಮುಗಿಸಿ, ಹಾಸನದ ಮಲ್ನಾಡ್ ಇಂಜಿನಿಯರಿಂಗ್ ಕಾಲೇಜಿನಲ್ಲಿ Lecturer ಆಗಿ ಸೇರಿಕೊಂಡ ಮೇಲೆ "ಮಗಾ, ನರೇಂದ್ರನಿಗೆ ಅನ್ನ ಬೇಯಿಸಿ ಹಾಕಲು ಅಲ್ಲಿ ಯಾರೂ ಇಲ್ಲ; ನಿನ್ನ ಮಗನೂ ಈಗ ದೊಡ್ಡವನಾದ; ನರೇಂದ್ರನಿಗೆ ಈಗ ನನ್ನ ಅಗತ್ಯವಿದೆ; ಇಲ್ಲಿನ ನನ್ನ ಕರ್ತವ್ಯ ಮುಗಿಯಿತು... ನಾನು ಅವನ ಮನೆಗೆ ಹೊರಡುತ್ತೇನೆ ಮಗೂ..." ಎಂದು ನನ್ನನ್ನು ಒಪ್ಪಿಸಿ ಅಮ್ಮನು ಹಾಸನದಲ್ಲಿ ಆಸೀನಳಾದಳು.

"ಅಲ್ಲಿದೆ ನಮ್ಮ ಮನೆ, ಇಲ್ಲಿಗೆ ಬಂದೆನು ಸುಮ್ಮನೆ" ಎಂಬ ಆಧಾರಭಾವದ ಮೇಲೇ ಬದುಕಿನುದ್ದಕ್ಕೂ ತನ್ನನ್ನು ಅಲ್ಲಿಇಲ್ಲಿ ಹೊಂದಿಸಿಕೊಳ್ಳುತ್ತಲೇ ನಡೆದವಳು - ಈ ಅಮ್ಮ. ಅನಂತರ ನನ್ನ ತಮ್ಮನು PHILIPS ಬಳಗದಲ್ಲಿ ಸೇರಿಕೊಂಡು ಬೆಂಗಳೂರಿನಲ್ಲಿ ಸ್ಥಾಪಿತಗೊಂಡ ಮೇಲೆ ತನ್ನ ಮಗನೊಂದಿಗೆ - ಗದ್ದಲದ ಬೆಂಗಳೂರಿಗೂ ಗೊಣಗುತ್ತಲೇ ಹೊಂದಿಕೊಂಡ ಅಮ್ಮ ಇವಳು. ತನ್ನ ಕೊನೆಯುಸಿರಿನವರೆಗೂ ಅದೇ ಮಗನ ಮನೆಯನ್ನು ತನ್ನ Head Quarters ಮಾಡಿಕೊಂಡಿದ್ದಳು. ಅದೇ ಮಗನ ಮಡಿಲಲ್ಲೇ ಕೊನೆಯುಸಿರೆಳೆದಳು. ಏಕಾಂಗಿ ಹೋರಾಟದ ಬದುಕೊಂದು ಹೀಗೆ ಅಸ್ತಂಗತವಾಯಿತು. "ಅಹಂಭಾವವಿಲ್ಲದ ನಮ್ರ ಬದುಕಿಗೂ ಅರ್ಥವಿದೆ" ಎಂಬುದನ್ನು ನನ್ನ ಅಮ್ಮನು ತನ್ನ ಬದುಕಿನಿಂದಲೇ ಸಾಧಿಸಿ ತೋರಿದಂತೆ ನನಗೆ ಕಂಡಿತ್ತು.

ನೆನಪುಗಳಿಗೆ ನೂರೆಂಟು ಕೊಂಬೆಗಳು. 

ಆಗ ನನ್ನ ಮಗು ರೋಹಿತನಿಗೆ ಒಂದು ವರ್ಷವೂ ತುಂಬಿರಲಿಲ್ಲ. ಹಾಲೂಡಿಸಬೇಕಾದ ಹಂತದಲ್ಲಿದ್ದ ಆ ಮಗುವನ್ನು ನನ್ನ ಅನಿಶ್ಚಿತ ಪಾಳಿಗಳ ಅಬ್ಬರ, ಅರ್ಧ ಘಂಟೆಯ ರಿಯಾಯಿತಿಯನ್ನೂ ಕೊಡದ ನನ್ನ ಆಕಾಶವಾಣಿಯ ವಿಕಟ ಸನ್ನಿವೇಶದ ನಡುವೆಯೂ... ನಾನೂ ಕುಗ್ಗದಂತೆ, ನನ್ನ ಮಗುವೂ ಬಳಲದಂತೆ ಜೋಪಾನ ಮಾಡಿದ ಅಮ್ಮನ ಶ್ರೀರಕ್ಷೆಯು - ನನ್ನ ಆತ್ಮಸ್ಥೈರ್ಯ ಕುಸಿಯದಂತೆ ಕಾಪಾಡುತ್ತಲೇ ಬಂದಿತ್ತು. 

ತನ್ನ ಮಕ್ಕಳ ಕ್ಷಣಿಕ ಸಂದೇಹಗಳನ್ನು ಸೂಕ್ತ ಸಮಾಧಾನದ ಮೂಲಕವೇ ನಿರ್ವಹಿಸುತ್ತಿದ್ದುದರಿಂದ ನನ್ನ ಸೋದರ ಸೋದರಿಯರೆಲ್ಲರಲ್ಲೂ - ಅಮ್ಮನು ಸಮಾನವಾಗಿ ಪ್ರೀತಿಯನ್ನೂಡಿದ ಭಾವವಿದೆ. ಅದು ಹೇಗೆ ಸಾಧ್ಯವಾಯಿತು? ಎಂಬುದನ್ನು ಮಾತ್ರ ನಾವು ಕೇಳಲಿಲ್ಲ; ಆದ್ದರಿಂದ ಬಹುಶಃ ಅಮ್ಮನೂ ಹೇಳಿಕೊಳ್ಳಲಿಲ್ಲ. ಹೀಗಿದ್ದರೂ... ಇದನ್ನು - ಪ್ರಾಮಾಣಿಕ ಕರ್ತವ್ಯ ನಿರ್ವಹಣೆ - ಎಂದೇ ನಾನು ಅರ್ಥೈಸಬಯಸುತ್ತೇನೆ. ಭಾಗವತದಲ್ಲಿ ಭಗವಾನ್ ಶ್ರೀಕೃಷ್ಣನು ಪ್ರತಿಯೊಬ್ಬ ಗೋಪಿಕಾಸ್ತ್ರೀಯರ ಮನದಲ್ಲೂ ತನ್ನ ಕೃಷ್ಣನಿಗೆ ತಾನೇ ಹೆಚ್ಚು ಪ್ರಿಯಳು ಎಂಬ ಭಾವ ಮೂಡುವಂತೆ ಮಾಡಿದ ಪ್ರಸಂಗವಿದೆ. ನಮ್ಮ ಅಮ್ಮನು ತನ್ನ ಎಲ್ಲ ಮಕ್ಕಳಲ್ಲೂ ಇಂತಹುದೇ ಭಾವೋದ್ದೀಪನಗೊಳಿಸುವಲ್ಲಿ ಸಫಲಳಾದದ್ದು ಸತ್ಯ. ಅದು ಹೇಗೆ? ಹೇಗೆ? ಅಂದುಕೊಂಡ ಮಾತ್ರಕ್ಕೇ - ಸಾಧಿಸಲಾಗದ ಕಲೆ ಇದು. ಇಂದಿನ Management Skill ನ್ನು ಅರೆದು ಕುಡಿದವರೂ ಅಧ್ಯಯನ ಮಾಡಬೇಕಾದ ವಿಷಯವಿದು. ಅಮ್ಮನು ಹೇಳುತ್ತಿದ್ದ - "ಸಹಜವಾಗಿರಿ" ಎಂಬ ಸಾತ್ವಿಕ ಬದುಕಿನ ಸೂತ್ರದಲ್ಲೇ ಇದರ ರಹಸ್ಯವೂ ಇರಬಹುದಲ್ಲವೆ? 

ಆಗ ನಾನು ಮಂಗಳೂರಿನ ಕುಲಶೇಖರದಲ್ಲಿ ಒಂದು ಬಾಡಿಗೆ ಮನೆಯಲ್ಲಿದ್ದೆ. ಅಮ್ಮನೂ ನಮ್ಮ ಜೊತೆಗಿದ್ದ ಅವಧಿಯದು. ಆ 80 ರ ದಶಕದ ಆದಿಯಲ್ಲಿ, ನಮ್ಮ ಮನೆಗೂ T V (ದೂರದರ್ಶನ) ಯೆಂಬ ಮಾಯಾ ಪೆಟ್ಟಿಗೆಯ ಪ್ರವೇಶವಾಗಿತ್ತು. ಆದರೆ ಅಂಕೆಯೇ ಇಲ್ಲದಂತಹ ವಿದ್ಯುತ್ತಿನ ಕಣ್ಣುಮುಚ್ಚಾಲೆಯಿಂದಾಗಿ ಅದರ ಉಪಯೋಗ ಪಡೆಯಲು ಪದೇಪದೇ ಅಡ್ಡಿಯಾಗುತ್ತಿತ್ತು. ಅಂದು, ನನ್ನ ಮೆಚ್ಚಿನ ಕ್ರಿಕೆಟ್ ಪಂದ್ಯಗಳು ಇದ್ದಾಗ, ನಾನು ತುಂಬ ಹೊತ್ತನ್ನು TV ವೀಕ್ಷಿಸುತ್ತಲೇ ಕಳೆದು ಬಿಡುತ್ತಿದ್ದೆ. ಆಗ ಸಿಡುಕುತ್ತಿದ್ದ ಅಮ್ಮ, "ಎಷ್ಟು ಸಮಯ ವ್ಯರ್ಥವಾಯಿತಲ್ಲಾ?" ಎಂದು ಚಡಪಡಿಸುತ್ತಿದ್ದಳು. ಆ ಹೊತ್ತಿನಲ್ಲಿ, ಅಕಸ್ಮಾತ್ ವಿದ್ಯುತ್ ಕಡಿತಗೊಂಡರೆ ತನ್ನ ಖುಶಿಯನ್ನು ಬಾಯಿಬಿಟ್ಟು ಹೇಳಿ ನಮ್ಮನ್ನು ಚುಚ್ಚುತ್ತಿದ್ದಳು. "ಅಯ್ಯಮ್ಮ...! ನನಗೆ ಖುಶೀ ಆಯ್ತು. ಹೋಗಲಿ.. ಆ ವಿದ್ಯುತ್ತು ಬರುವುದೇ ಬೇಡ. ಆ TV ಮುಂದಿನಿಂದ ಈಗಾದರೂ ಎಲ್ಲರೂ ಏಳಿ. ನಿಮ್ಮ ನಿಮ್ಮ ಕೆಲಸ ಮಾಡಿ. ಹಗಲೂ ರಾತ್ರಿ ಇದಕ್ಕೇ ಅಂಟಿಕೊಂಡರೆ ಅದೇ ಚಟವಾಗುತ್ತದೆ. ಮನುಷ್ಯ ಸಂಬಂಧವನ್ನೆಲ್ಲ ಹಾಳು ಮಾಡುವ TV ಇದು. ಪರಸ್ಪರ ಸುಖ ದುಃಖ ಮಾತನಾಡಿಕೊಳ್ಳಲೂ ಈ ದರಿದ್ರ TV ಯಿಂದಾಗಿ ಅಸಾಧ್ಯವಾಗಿ ಹೋಗಿದೆ. ಚಟಗಳಿಗೆ ಸ್ವಯಂ ನಿಯಂತ್ರಣ ಹೇರಿಕೊಳ್ಳುವ ಶಕ್ತಿಯಿರದಿದ್ದರೆ ಸಂಸಾರವೇ ನಾಶವಾದೀತು. ನಾನಾದರೆ ಮುದುಕಿ. ನಿಮ್ಮ ಮುಂದೆ ಈಗಲೂ ದೊಡ್ಡ ಭವಿಷ್ಯವಿದೆ. ಕಳೆದು ಹೋದ ಕಾಲವು ಮತ್ತೆ ಸಿಗಲಾರದು. ದಮ್ಮಯ್ಯ ಮಕ್ಕಳೇ... ವ್ಯರ್ಥವಾಗಿ ಕಾಲಹರಣ ಮಾಡಬೇಡಿ..." ಎಂದು ತನ್ನ ಸಂತಾನಕ್ಕೆ ಕಡಿವಾಣ ಹಾಕುತ್ತಿದ್ದ ಅಮ್ಮ, ಎಷ್ಟು ದೂರದವರೆಗೆ ನಮ್ಮ ಕೈಹಿಡಿದು ನಡೆಸಿದಳಲ್ಲವೇ? ಮಗಳಿಗೆ 60 ತುಂಬುವವರೆಗೂ...!

ಮನುಷ್ಯ ಸಂಬಂಧಗಳಿಗೆ ಅತಿಯೆನಿಸುವಷ್ಟು ಮನ್ನಣೆ ನೀಡುತ್ತಿದ್ದ ನನ್ನ ಅಮ್ಮನು, ತನ್ನನ್ನು ಬೈದವರನ್ನೂ ಬಂಧುವೆಂದು ಹೃತ್ವೂರ್ವಕವಾಗಿ ಆದರಿಸಿದವಳು. "ಏನೋ ಕೆಟ್ಟಕಾಲ. ಮರೆತುಬಿಡಬೇಕು. ಕೆಟ್ಟದ್ದನ್ನು ಮರೆತು ಒಳ್ಳೆಯದನ್ನು ಮಾತ್ರ ನೆನಪಿಟ್ಟುಕೊಳ್ಳಿ. ಅದರಿಂದ ನಿಮ್ಮ ಆರೋಗ್ಯಕ್ಕೂ ಒಳ್ಳೆಯದು.." ಎಂದು ಭವರೋಗ ಪರಿಹಾರದ ದಾರಿ ತೋರಿದ ನಮ್ಮ ಅಮ್ಮನು, ತನ್ನ 80 ವರ್ಷ ಪ್ರಾಯದವರೆಗೂ ಇದೇ ಔಷಧ ಸೇವಿಸುತ್ತ, ಜೀವನೋತ್ಸಾಹ ಉಳಿಸಿಕೊಂಡವಳು. 

ಆಕೆಯು ವರ್ಷದಲ್ಲಿ ಒಂದು ಬಾರಿಯಾದರೂ ತನ್ನ ಎಲ್ಲ ಮಕ್ಕಳ ಮನೆಗೂ ಹೋಗಿ ಒಂದಷ್ಟು ದಿನ ಇದ್ದು ಬರುತ್ತಿದ್ದಳು. ನಾವೆಲ್ಲರೂ ಅವಳನ್ನು "Roaming Public Relation Officer" ಎನ್ನುತ್ತಿದ್ದೆವು. ತನ್ನದೇ ಎಂಬ ಒಂದು ಮನೆ ಇದ್ದಿದ್ದರೆ ತಾನು ಇನ್ನೂ ಹೆಚ್ಚು ಸುಖವಾಗಿರುತ್ತಿದ್ದೆ ಎಂದು ಅಮ್ಮನಿಗೆ ಅನ್ನಿಸಿರಬಹುದು; ಆದರೆ ತನ್ನ ಸ್ವಂತ ಸುಖದ ಭಾವನೆಗಳ ಬಿಸಿಯು ಮಕ್ಕಳಿಗೆ ತಗುಲದಂತೆ ಅವಳು ನಿಯಂತ್ರಣದಿಂದ ಬದುಕಿದ್ದಳು ಎಂಬುದು ನನ್ನ ಅನ್ನಿಸಿಕೆ. ಅಮ್ಮನು ನನ್ನೊಂದಿಗೆ ನಡೆಸುತ್ತಿದ್ದ ಸಾಮಾನ್ಯ ಮಾತುಕತೆಗಳ ಸಂದರ್ಭದಲ್ಲಿ ನಾನು ಕಂಡುಕೊಂಡ ಅಂಶವಿದು. ಆದರೆ ಆ ಅವಧಿಯಲ್ಲಿ ಅಂತಹ ಸ್ವತಂತ್ರ ವ್ಯವಸ್ಥೆಯೊಂದನ್ನು ಮಾಡಿಕೊಡುವ ಶಕ್ತಿ - ಮಕ್ಕಳಲ್ಲಿರಲಿಲ್ಲ. ಮುಂದೆ ಅಂತಹ ಶಕ್ತಿಯು ಮಕ್ಕಳಿಗೆ ಒದಗಿದಾಗ, ಏಕಾಂಗಿಯಾಗಿ ಬದುಕನ್ನು ನಿರ್ವಹಿಸಬಲ್ಲ ದೈಹಿಕ ಶಕ್ತಿಯು ಅಮ್ಮನಲ್ಲಿ ಇರಲಿಲ್ಲ ! ಇದೇ ಜೀವನ. 

ಹೀಗಿದ್ದೂ... ತನ್ನ ನಿಶ್ಚಿಂತ ಬದುಕಿಗಾಗಿ ಹಲುಬುತ್ತ ಆಕೆಯು ಕರ್ತವ್ಯವನ್ನು ಕಡೆಗಣಿಸಿದವಳಲ್ಲ. ಬದುಕಿನ ಹೋರಾಟದಲ್ಲಿ ಎಡವಿ ಬಿದ್ದ ತನ್ನ ಮಕ್ಕಳಿಗೆ ತಾನೇ ಪ್ರತ್ಯಕ್ಷವಾಗಿ ಜೊತೆ ನೀಡುತ್ತ ಒಂದಷ್ಟು ಚೈತನ್ಯ ತುಂಬುತ್ತಲೇ ಇದ್ದಳು. " ಬಿಟ್ಟು ಬಿಡು; ಮುಂದುವರಿಸಬೇಡ; ಸುಮ್ಮನಿರು; ದೂರವಿರು, ತೆಪ್ಪಗಿರು, ಮಾತುಮಾತಿಗೂ ಪ್ರತಿಮಾತು ಬೇಡ... ಕಾಲಕ್ಕೆ ಎಲ್ಲವನ್ನೂ ಗುಣಪಡಿಸುವ ಶಕ್ತಿಯಿದೆ; ಆದರೆ ಕಾಯಬೇಕು...; ಏನಾದರೂ ಒಳ್ಳೆಯ ಕೆಲಸದಲ್ಲಿ ತೊಡಗಿಕೋ; ಪುಸ್ತಕ ಓದು..." ಎಂದೆಲ್ಲ ಸಂತೈಸುತ್ತಿದ್ದಳು. ಬಹುಶಃ ಬದುಕನ್ನು ಭದ್ರವಾಗಿ ಕಟ್ಟಿಕೊಳ್ಳಲು ಅವಳು ಅನುಸರಿಸಿದ್ದ ಸೂತ್ರ - ಇದೇ ಇರಬೇಕು - ಅನ್ನಿಸುತ್ತದೆ. 

ತನ್ನ ಮಕ್ಕಳು - ಅನ್ಯ ಜೀವಿಗಳ ಸಂಸರ್ಗದಿಂದ ತಲೆ ಕೆಡಿಸಿಕೊಂಡು ವಿನಾಕಾರಣ ಪರಿತಪಿಸುತ್ತಿದ್ದರೆ..."ಯಾಕೆ ಹೀಗಾಗುತ್ತಿದೆ?...ಛೆ! ಅಜ್ಞಾನ - ಮಕ್ಕಳೇ...ಅಜ್ಞಾನ ಇದು... ಅಜ್ಞಾನದಲ್ಲೇ ಅಹಂಕಾರ ಹುಟ್ಟುವುದು. ಅಹಂಕಾರ ಅಂದರೆ ಬೆಂಕಿ ಇದ್ದಂತೆ; ಅದರ ಬಿಸಿಯು ಹತ್ತಿರ ಬಂದವರಿಗೆಲ್ಲ ತಾಕುತ್ತದೆ. ಸ್ವಲ್ಪ ದೂರವಿರಿ; ಸುಮ್ಮನಿರಿ. ಇಂಥದಕ್ಕೆಲ್ಲ ಪ್ರತಿಯಾಗಿ ನೀವು ಹೊಡೆಯುತ್ತ ಹೋದರೆ - ಅಂತಹ ಪ್ರತಿಪೆಟ್ಟುಗಳು ಏನನ್ನೂ ಬದಲಾಯಿಸುವುದಿಲ್ಲ. ಅದರಿಂದ, ಸಮೂಲವಾಗಿ ರೋಗನಾಶವಾಗುವುದೂ ಇಲ್ಲ. ಅರ್ಥವಿಲ್ಲದ ಪೋಕು ಹೋರಾಟದಲ್ಲಿಯೇ ನಿಮ್ಮ ಶಕ್ತಿಹ್ರಾಸ ಮಾಡಿಕೊಳ್ಳಬೇಡಿ. ಎಲ್ಲದಕ್ಕೂ ಕಾಲವೇ ಉತ್ತರ ಕೊಡುತ್ತದೆ; ನಿಮಗೆ ಸಹನೆಯಿರಲಿ. ಸಹನೆಯಿಂದಲೇ ಸ್ವಂತ ಶಕ್ತಿಯು ಹೆಚ್ಚಾಗುತ್ತದೆ. ಯಾವತ್ತೂ ವ್ಯರ್ಥ ಕೆಲಸಗಳಲ್ಲಿ ತೊಡಗಿಕೊಂಡು ಭಾವನಾತ್ಮಕವಾಗಿ ಕುಸಿಯಬಾರದು. ಇದೇ ಅಂತ್ಯವಲ್ಲ; ಇನ್ನೂ ಇದೆ ಎಂಬುದನ್ನು ನೆನಪಿಡಿ... ಇನ್ನೂ ಇದೆ..." ಬದುಕಿನುದ್ದಕ್ಕೂ ಅಮ್ಮ ನೀಡುತ್ತಿದ್ದ ಇಂತಹ Tonic ನ ಬಲದಿಂದಲೇ ನಾನಂತೂ ಆಗಿಂದಾಗ ಸ್ವಚ್ಛವಾಗುತ್ತಿದ್ದೆ.




ಮೊನ್ನೆ 2015 ರ ಫ಼ೆಬ್ರುವರಿ 27 ರಂದು ನಾನು ಆಕಾಶವಾಣಿಯಿಂದ ನಿವೃತ್ತಳಾದೆ; ಅಂದು ಅಮ್ಮನು - ಬದುಕಿನಿಂದಲೇ ನಿವೃತ್ತಳಾದಳು. ಇದೆಂತಹ ಕಾಕತಾಳೀಯ?! 

ನನ್ನ ವೃತ್ತಿ ಜೀವನದ ಹೋರಾಟದ ಕ್ಷಣಗಳಲ್ಲಿ ನಾನು ಸ್ವಯಂ ನಿವೃತ್ತಿಯ ಯೋಚನೆ ಮಾಡಿದ್ದು ಒಂದೆರಡು ಬಾರಿಯಲ್ಲ. ಆಗ ನನ್ನ ನಿರ್ಧಾರದ ಎದುರಿಗೆ ಬಂಡೆಯಂತೆ ನಿಂತು "ನನ್ನ ಕಣ್ಣೆದುರಿನಲ್ಲಿ ಇಂತಹ ಹುಂಬತನಗಳು ಸಾಧ್ಯವಿಲ್ಲ..." ಎಂದು ಬಹಿರಂಗವಾಗಿ ಗದರಿಸುತ್ತ, ನನ್ನ ಗಂಡನಿಗೂ ತಿಳಿಹೇಳಿದವಳು ನನ್ನ ಅಮ್ಮ. ಇತ್ತೀಚೆಗೆ ಅಮ್ಮನು ಆಸ್ಪತ್ರೆ ಸೇರಿದ ಸುದ್ದಿ ತಿಳಿದಾಗ (ಫೆಬ್ರುವರಿ 25 ರಂದು) ಆಸ್ಪತ್ರೆಯಲ್ಲಿದ್ದ ಅಮ್ಮನನ್ನು ನೋಡಲು ನಾನು ಬೆಂಗಳೂರಿಗೆ ಹೋಗಿದ್ದೆ. ಆದರೆ ಮರುದಿನವೇ ಅನಿವಾರ್ಯವಾಗಿ ನಾನು ಮಂಗಳೂರಿಗೆ ಹಿಂದಿರುಗಲೇ ಬೇಕಾಯಿತು. ಮುಂದಿನ 3 ದಿನಗಳಲ್ಲಿ - ಅಂದರೆ ಫೆಬ್ರುವರಿ 28 ರಂದು ಉದ್ಯೋಗದಿಂದ ನಿವೃತ್ತಳಾಗಬೇಕಿದ್ದ ನಾನು, ನಿವೃತ್ತಿಯ ಕೊನೆಯ ದಿನದಂದು ಕಛೇರಿಯಲ್ಲಿ ಇರಲೇಬೇಕಾದ ತಾಂತ್ರಿಕ ಅನಿವಾರ್ಯತೆಯಿತ್ತು. ಆದ್ದರಿಂದ ಮನಸ್ಸಿನಲ್ಲಿ ಅಮ್ಮನನ್ನು ತುಂಬಿಕೊಂಡು, ಚಡಪಡಿಸುತ್ತಲೇ ನಾನು ಮಂಗಳೂರಿಗೆ ಹಿಂದಿರುಗಿದ್ದೆ.

ಅಂದು ಪೂರ್ಣ ಅಸಹಾಯಕ ಸ್ಥಿತಿಯಲ್ಲಿ ಆಸ್ಪತ್ರೆಯ ಮಂಚದಲ್ಲಿ ನಿರಾಯುಧಳಾಗಿ ಮಲಗಿದ್ದ ಅಮ್ಮನ ಕಿವಿಯಲ್ಲಿ ನಾನು ನನ್ನ ದ್ವಂದ್ವವನ್ನು ತೋಡಿಕೊಂಡಿದ್ದೆ. "ಅಮ್ಮಾ, ಕಚೇರಿಯು ಕಾರ್ಯ ನಿರ್ವಹಿಸುವ ಫ಼ೆಬ್ರುವರಿ 27 ನೇ ತಾರೀಕಿನಂದು - ಶುಕ್ರವಾರ, ನಾನು ಪ್ರಾಯೋಗಿಕವಾಗಿ ಆಕಾಶವಾಣಿಯಿಂದ ನಿವೃತ್ತಳಾಗುತ್ತಿದ್ದೇನೆ. ತಿಂಗಳ ಕೊನೆಯ ದಿನವಾದ 28 ರಂದು ಅಧಿಕೃತವಾಗಿ ಹೊರಗೆ ಬರುತ್ತಿದ್ದೇನೆ. ಆಕಾಶವಾಣಿಯಿಂದ ನನ್ನ ಬಿಡುಗಡೆಯ ಕಾಗದ ಸಿಕ್ಕಿದ ಕೂಡಲೇ ಮತ್ತೆ ನಿನ್ನ ಹತ್ತಿರಕ್ಕೆ ಓಡಿ ಬರುತ್ತೇನೆ. "ಗಡಿಬಿಡಿ ಮಾಡಬಾರದು" ಅಂತ ನೀನು ನನಗೆ ಹೇಳುತ್ತಿದ್ದದ್ದು ನೆನಪಿದೆಯಾ? ಈಗ ನೀನೂ ಗಡಿಬಿಡಿ ಮಾಡಬಾರದಮ್ಮಾ. ಎರಡೇ ಎರಡು ದಿನ... ನನಗೆ ಸಮಯ ಕೊಡು... Please ಅಮ್ಮಾ.." ಎಂದಾಗ ಕಷ್ಟದಿಂದ ಅಮ್ಮ ಕಣ್ಣು ತೆರೆದಿದ್ದಳು.

ಆಗ ಭಾವುಕಳಾಗಿದ್ದ ನಾನು - " ನೆಂಟರಿಷ್ಟರು ಉಂಟು ಬಹು ಹಣ ಒಳಗುಂಟು, ಬಂಟ ಬಳಗವುಂಟು, ಭಾಗ್ಯವುಂಟು... ಒಂಟಿಯಾಗಿ ಪೋಗುವಾಗ ಸಂಗಡ ಒಬ್ಬರ ಕಾಣೆ... ಆಗಲೇ ಕಾಯಬೇಕೋ ಅಂಬುಜನಯನ, ಈಗ ನೀ ಕಾಯ್ದರೇನು ಕಾಯದಿದ್ದರೆ ಏನು..." ಎಂದು ICU ನಲ್ಲಿದ್ದ ಅಮ್ಮನ ಕಿವಿಯ ಹತ್ತಿರ ಬಾಗಿಕೊಂಡು ಮೆತ್ತಗೆ ಹಾಡಿದ್ದೆ. ಅದು ಗಾಯನವಲ್ಲ; ರೋದನವೇ ಆಗಿತ್ತು. ಹಾಡನ್ನು ಕೇಳಿದರೆ ಎಲ್ಲಿದ್ದರೂ ಓಡಿಬರುತ್ತಿದ್ದ ಅಮ್ಮನು - ಅಂದೂ ಕುತ್ತಿಗೆ ತಿರುಗಿಸಿ ಮತ್ತೊಮ್ಮೆ ಕಣ್ತೆರೆದಿದ್ದಳು. ಮುಖ ನನ್ನ ಕಡೆಗಿದ್ದರೂ ದೃಷ್ಟಿ ಎಲ್ಲೋ ಇತ್ತು. ಆ ದೃಷ್ಟಿಯನ್ನೇ ಹಿಂಬಾಲಿಸಲು ನಾನು ಪ್ರಯತ್ನಿಸಿದ್ದೆ. ವಿಳಾಸ ಸಿಗಲಿಲ್ಲ. ಅಷ್ಟರಲ್ಲಿ ಒಬ್ಬಳು ದಾದಿಯು ಬಂದು, "ಅವರ ಸುಪ್ತಪ್ರಜ್ಞೆಗೆ ಎಲ್ಲವೂ ತಿಳಿಯುತ್ತದೆ... ನೀವು ಅಳಬಾರದು... ಅದರಿಂದ ಅವರ ಧೈರ್ಯ ಕುಸಿಯುತ್ತದೆ" ಎಂದಾಗ, ಅನಾಥ ಭಾವದಲ್ಲಿ ಅಮ್ಮನನ್ನು ಕೈಯಿಂದ ಸವರುತ್ತ ನಾರಾಯಣ ಸ್ಮರಣೆ ಮಾಡಿ, ಅಂತರಂಗದ ಮೃದುಭಾವಗಳಿಗೆ ಕಲ್ಲು ಚಪ್ಪಡಿ ಹೊದಿಸಿ, ಅಲ್ಲಿಂದ ಹೊರ ಬಂದಿದ್ದೆ. "ಕ್ಷುಲ್ಲಕ ಮಗಳು" ಅನ್ನಿಸಿತ್ತು.... ಚಡಪಡಿಸಿದ್ದೆ. ಇದೇ ಜಗತ್ತು !

"ನನ್ನ ಕಣ್ಣೆದುರಿಗೆ ನೀನು ಕೆಲಸ ಬಿಡುವ ಮಾತಾಡಬಾರದು" ಎಂದಿದ್ದ ಅಮ್ಮನು ನನ್ನ "ಸಹಜ ನಿವೃತ್ತಿ"ಯನ್ನೂ ನೋಡಲಾರದೆ ಹೊರಟು ಹೋದಳೆ ? ಅಥವ ಆಕಾಶವಾಣಿಯ ಪೀಡಾಪರಿಧಿಯನ್ನು ಕಂಡು ನೊಂದಿದ್ದ ನನ್ನ ಬುದ್ಧಿಯನ್ನು ತಿಳಿದಿದ್ದ ಅಮ್ಮನು - "ಈ ಮಗಳು ನಗುನಗುತ್ತ ನಿವೃತ್ತಳಾಗಬಹುದು; ಆದರೆ ಹಾಗಾಗಬಾರದು... ಸಂಸ್ಥೆಯ ಕುರಿತ ಋಣೀಭಾವವಿರಲಿ... ಭಾವದಲ್ಲೂ ಪ್ರಾಮಾಣಿಕತೆಯಿರಲಿ" ಎಂದುಕೊಂಡಳೆ ? ಆದ್ದರಿಂದಲೇ ನನ್ನ ನಿವೃತ್ತಿಯ ದಿನದಂದು ತನ್ನ ಹೆಳೆಯಲ್ಲಾದರೂ ಮಗಳು ಅತ್ತುಬಿಡಲಿ - ಅಂದುಕೊಂಡಳೆ ? ಗೊತ್ತಿಲ್ಲ. 

ನನ್ನ ವಂಶವಾಹಿಯಲ್ಲಿ ಕಲೆಯನ್ನು ಮೇಳೈಸಿದ ಅಮ್ಮನು ತಾನು ಬಹುವಾಗಿ ಆರಾಧಿಸುತ್ತಿದ್ದ ಆಕಾಶವಾಣಿಯಲ್ಲಿ ತನ್ನ ಪ್ರತಿನಿಧಿಯಾಗಿಯೇ ನನ್ನನ್ನಿಟ್ಟಿದ್ದಳೆ ? ಅದಕ್ಕಾಗಿಯೇ... ತಾನು ಭೂವ್ಯಾಪಾರ ಮುಗಿಸಿ ಹೊರಡುವ ದಿನವನ್ನು ನನ್ನ ನಿವೃತ್ತಿಯ ದಿನಕ್ಕೆ ಹೊಂದಿಸಿದಳೆ? ನನ್ನನ್ನು ಕಟ್ಟಿ ಬೆಳೆಸಿದ ಆಕಾಶವಾಣಿಗೆ "ಅಳುವಿನ ಋಣೀ ಭಾವ"ದ ಬಾಷ್ಪಾಂಜಲಿ ಸಲ್ಲಿಸದೆ ತನ್ನ ಮಗಳು ಜಿದ್ದಿಗೆ ಬಿದ್ದು ಅನಾದರ ತೋರಬಾರದೆಂಬ ದೃಷ್ಟಿಯಿಂದ ತಾನೇ ಸತ್ತು, ಹಾಗಾದರೂ ನನ್ನನ್ನು ಅಳುವಂತೆ ಮಾಡಿದಳೆ ? ಆ ಮೂಲಕ ಹುಂಬಲೋಕದ ವಕ್ರ ದೃಷ್ಟಿಯಿಂದ ನನ್ನನ್ನು ಪಾರು ಮಾಡಿದಳೆ? ಭಾವನೆಲೆಯಲ್ಲಿ ನೂರೆಂಟು ಪ್ರಶ್ನೆಗಳು. ಆದರೆ ಇದ್ದವರಿಗೆ - ಉತ್ತರ ಗೊತ್ತಿಲ್ಲ; ಸತ್ತವರು - ಬಂದು ಹೇಳುವುದಿಲ್ಲ. ಭಾವಲೋಕದ ನೂರೆಂಟು ತುಮುಲಗಳು ಮನುಷ್ಯರನ್ನು ಬಿಡುವುದೇ ಇಲ್ಲ.

ಬದುಕನ್ನು ಮಾತ್ರವಲ್ಲದೆ ಸಾವನ್ನೂ ಪ್ರೀತಿಯಿಂದ ಗೌರವಿಸುತ್ತಿದ್ದ ನನ್ನ ಅಮ್ಮನಲ್ಲಿ ಕಂಡ ಗುಣವಿಶೇಷಗಳನ್ನು ಪಟ್ಟಿಮಾಡುತ್ತ ಜಗಜ್ಜಾಹೀರುಗೊಳಿಸಬೇಕೆಂಬ ಅತ್ಯುತ್ಸಾಹ ನನಗಿಲ್ಲ. ಆದರೆ ಅವಳ ಯೋಚನಾಶೈಲಿಯನ್ನು ಮಾತ್ರ - ಈ ಘಟ್ಟದಲ್ಲಿಯೂ ನೆನಪಿಸಿಕೊಳ್ಳದಿರಲಾರೆ. 

ತಾವು ಸ್ಥಿತಪ್ರಜ್ಞರು, ಪ್ರಬುದ್ಧರು, ಬುದ್ಧಿಜೀವಿಗಳು... ಎಂದುಕೊಳ್ಳುತ್ತಿದ್ದ ಕೆಲವು ಬಂಧುಗಳು ಅವಳಿಗಿದ್ದರು ! ಒಂದು ಘಟನೆ ನೆನಪಾಗುತ್ತದೆ. ಆಗ 75ರ ಹರೆಯದ ಅಮ್ಮನು ತನ್ನ ತಮ್ಮನಾದ ಐರೋಡಿ ಸದಾನಂದ ಹೆಬ್ಬಾರ್ ಅವರು ಮೃತರಾದಾಗ, ಚಿಕ್ಕ ಮಗುವಿನಂತೆ ಅತ್ತದ್ದನ್ನು ನೋಡಿ - ಆಕೆಯ ಬುದ್ಧಿವಂತ ಬಂಧುಗಳು (!) ಅಮ್ಮನನ್ನು ಹೀಯಾಳಿಸಿದ್ದರು. ಅಂದು ಬೇರೊಬ್ಬ ಸ್ತ್ರೀಯ ಉದಾಹರಣೆ ಕೊಟ್ಟು "ತನ್ನ ಮಕ್ಕಳು ಸತ್ತಾಗಲೂ ಆಕೆಯ ಗಂಡ ಸತ್ತಾಗಲೂ ಅವರು ಅತ್ತವರಲ್ಲ; ತುಂಬ ಓದಿಕೊಂಡ ಪ್ರಬುದ್ಧ ಸ್ತ್ರೀ ಅವರು... ಈ ರುಕ್ಮಿಣಿಯಕ್ಕ ಹೀಗ್ಯಾಕೆ ಅಳುತ್ತಾರಪ್ಪಾ?" ಎಂದು ಪ್ರತಿಕ್ರಿಯಿಸಿದ್ದುಂಟು. ಆಗ ಅವರ ಮಾತನ್ನು ತಾನು ಕೇಳಿಸಿಕೊಂಡೇ ಇಲ್ಲ ಎಂಬಂತೆ ಸುಮ್ಮನಿದ್ದ ಅಮ್ಮನನ್ನು ಮುಂದೊಂದು ದಿನ ಇದೇ ಹಿನ್ನೆಲೆಯಲ್ಲಿ ನಾನು ಪ್ರಶ್ನಿಸಿದ್ದೆ. 

"ನಮ್ಮವರು ಸತ್ತಾಗ ಅತ್ತರೆ, ಬುರ್ಣಾಸ್ ಅಂತಾರಾ ಅಮ್ಮಾ?" ಎಂದು ಕೇಳಿದ್ದೆ. ಆಗ ಶಾಂತದನಿಯಲ್ಲಿ ಅಮ್ಮನು ಹೇಳಿದ ಮಾತುಗಳು ಈಗಲೂ ನನ್ನ ಕಿವಿಯಲ್ಲಿ ಗುಂಯ್ ಗುಡುತ್ತಿದೆ. 

"ಈ ವಿಶಾಲ ಪ್ರಪಂಚದಲ್ಲಿ ಬದುಕುತ್ತಿರುವ ನಾವು, ಕ್ಷಣಕಾಲವಾದರೂ ಭಾವ ಸಂವಹನ ನಡೆಸಿದ್ದ ಯಾವುದೇ ವ್ಯಕ್ತಿ ಸತ್ತರೂ, ನಾಲ್ಕು ಹನಿ ಕಣ್ಣೀರಿನ ಭಾವ ತರ್ಪಣ ಬಿಡುವುದು ಪ್ರತಿಯೊಂದು ಜೀವಿಯ ಕರ್ತವ್ಯ ಮಗೂ. ಅದು ಆ ವ್ಯಕ್ತಿಗೆ ತೋರುವ ಗೌರವ ಮಾತ್ರವಲ್ಲ; ಅದು ಈ ಭೂಮಿಯ ಬದುಕಿಗೆ ತೋರುವ ಗೌರವ; ಪ್ರಕೃತಿಗೆ ತೋರುವ ಗೌರವ; ತನ್ಮೂಲಕ ಬಿಡುಗಡೆಯ ದಾರಿ ತೋರಿಸಿದ ಭಗವಂತನಿಗೆ ತೋರುವ ಗೌರವ. ಋಣೀಭಾವದ ಸಾಂಕೇತಿಕ ಪ್ರಕಟರೂಪವದು. ಸತ್ತಾಗಲೂ ಅಳದೇ ಹೋದರೆ ಅದು ಉದ್ಧಟತನ; ಬದುಕನ್ನೇ ಹಗುರವಾಗಿಸುವ ಸೊಕ್ಕು ಎಂದಾಗುತ್ತದೆ. ನಗುವುದು ಮಾತ್ರ ಪ್ರೀತಿಯ ಪ್ರಾಕಟ್ಯದ ರೀತಿಯಲ್ಲ. ಎಲ್ಲ ಕೊಳೆಯನ್ನು ತೊಳೆಯಬಲ್ಲ ಶಕ್ತಿಯೇ ಅಳು. ಅಳುವಿನಂತಹ ಶುದ್ಧ ಭಾವ ಪ್ರಾಕಟ್ಯವು - ಇನ್ನೊಂದಿಲ್ಲ. ನಗುವು ಹುಚ್ಚೆಬ್ಬಿಸಿದರೆ ಅಳುವು ನಮ್ಮನ್ನು ವಿನಮ್ರಗೊಳಿಸುತ್ತದೆ. ಬದುಕಿನ ಹಳಿ ತಪ್ಪಿದವರನ್ನೂ - ಆತ್ಮನಿರೀಕ್ಷೆಗೆ ಪ್ರಚೋದಿಸುವ ಅಳುವು - ಮತ್ತೊಮ್ಮೆ ಹಳಿ ಹತ್ತಿಸಲು ಸಹಕರಿಸುತ್ತದೆ. ಆತ್ಮನಿರೀಕ್ಷಣೆ ಮಾಡಿಸುತ್ತದೆ. ಹೌದು. ನನ್ನ ಪ್ರೀತಿಯ ತಮ್ಮ ಸತ್ತಾಗ ನಾನು ಹೃತ್ಪೂರ್ವಕವಾಗಿ ಅತ್ತಿದ್ದೇನೆ. ಎಷ್ಟೊಂದು ಪ್ರತಿಭಾವಂತನಾಗಿದ್ದೂ ನಿಗೂಢ ಸಂಚಿಗೆ ಬಲಿಯಾಗಿ ಹೀಗೆ ಅನ್ಯಾಯವಾಯಿತಲ್ಲಾ?.. ಎಂಬ ದುಃಖವೂ ಸೇರಿಕೊಂಡು ನಾನು ಸ್ವಲ್ಪ ಹೆಚ್ಚೇ ರೋದಿಸಿರಬಹುದು. ಅದು ತೋರಿಕೆಯಲ್ಲ. ತಡೆಯಲಾಗದೇ ಹೊರಬಂದ ಸಹಜ ರೋದನ. ಯಾವುದೇ ಪ್ರೀತಿಯು ಕೇವಲ ನಗಿಸುವುದರಲ್ಲೇ ಮುಗಿಯುವುದಿಲ್ಲ; ಪ್ರೀತಿಯು ಅಳಿಸುವುದೂ ಇದೆ. ಆದರೆ ಇವತ್ತಿನ ಜನರಿಗೆ ಗೊಂದಲವಿದೆ. ಆದ್ದರಿಂದಲೇ ವಾಸ್ತವದ ಬದುಕನ್ನೂ ಸಿನೆಮಾ ಮಾಡಿಕೊಳ್ಳುತ್ತಿದ್ದಾರೆ. ಸಿನೆಮಾ ಬೇರೆ; ಬದುಕು ಬೇರೆಯೆಂಬ ಲಕ್ಷ್ಮಣರೇಖೆ ಎಳೆಯುವಲ್ಲೇ ತಪ್ಪುತ್ತಿದ್ದಾರೆ. ಬದುಕು ಸಿನೆಮಾ ಅಲ್ಲ. ಮನುಷ್ಯನೊಬ್ಬ ಎಲ್ಲಿ ಅಳಬೇಕು; ಎಲ್ಲಿ ನಗಬೇಕು ಎಂದು ಪೂರ್ವತಯಾರಿ ಮಾಡುವುದು ನನಗೆ ಗೊತ್ತೂ ಇಲ್ಲ. ಅಂದು ಕರುಳು ಕಿತ್ತು ಬರುವಂಥ ದುಃಖವಾಯಿತು. ಹೊಟ್ಟೆತುಂಬ ಅತ್ತುಬಿಟ್ಟೆ; ಇಷ್ಟು ಸತ್ಯ. ಇನ್ನು ಯಾರೋ ಏನೋ ಅಂದರೆಂದು ನೀನೇಕೆ ಚಿಂತಿಸುತ್ತೀ? ಈ ಜನರಿಗೆ ಬೇರೆ ಕಸುಬಿಲ್ಲ." 

ಬದುಕಿನುದ್ದಕ್ಕೂ ಹಕ್ಕಿನ ಗೊಡವೆಗೇ ಹೋಗದೆ ಏಕಮನದಿಂದ ಕರ್ತವ್ಯವನ್ನೇ ಆರಾಧಿಸಿದ ಇಂತಹ ಸರಳ ಬದುಕುಗಳಿಗೆ ಬೇರೆ ತಪಸ್ಸಿನ ಹಂಗಿದೆಯೇ?     

ಸತ್ಯ ಮತ್ತು ಪ್ರಾಮಾಣಿಕತೆಯ ತಳಪಾಯದ ಮೇಲೆ ಬದುಕನ್ನು ಕಟ್ಟಿದವಳು ನನ್ನಮ್ಮ. ಅದರಿಂದಾಗಿ ಒಳಹೊರಗಿನ ಮಂದಿಯಿಂದ "ಹೆಡ್ಡಿ" ಅನ್ನಿಸಿಕೊಂಡದ್ದೂ ಪಿಗ್ಗಿಬಿದ್ದದ್ದೂ ಒಂದೆರಡು ಬಾರಿಯಲ್ಲ; ಅನೇಕ ಬಾರಿ. ಅದರೆ ಅವಳ ಮುಗ್ಧ ಸ್ವಭಾವ ಮತ್ತು ಅವಳು ಬದುಕನ್ನು ಹೆಚ್ಚು ಕಂಡುಂಡದ್ದರಿಂದ, ಸೋಲು - ಗೆಲುವಿನ ಅನುಭವ ಜ್ಞಾನದ ಭಂಡಾರವೇ ಆಗಿಹೋಗಿದ್ದಳು; ತಾಳ್ಮೆಯ ಸಾಕಾರವೇ ಆಗಿದ್ದಳು. 

ಒಮ್ಮೆ ನಾನು..."ಅಮ್ಮ, ಅಪ್ಪಯ್ಯನು ಇರುವವರೆಗೂ ಬಡತನದಲ್ಲಿಯೇ ನೀನು ಒದ್ದಾಡಿದ್ದಾಯ್ತು. ಈಗ ನಿನ್ನ ಮಕ್ಕಳೆಲ್ಲರೂ ತಕ್ಕಮಟ್ಟಿಗೆ ಸ್ಥಿತಿವಂತರಾಗಿದ್ದಾರೆ. ನೀನು ಯಾವ ಮಕ್ಕಳ ಮನೆಗೆ ಹೋದರೂ ಅಲ್ಲಿ ಸಮೃದ್ಧಿಯಿದೆ. ನಿನ್ನ ಬದುಕನ್ನು ಈಗ ಎರಡು ಭಾಗವಾಗಿ ನೀನು ಹೋಲಿಸಿ ನೋಡಿದರೆ, ನಿನಗೆ - ಅಪ್ಪಯ್ಯನ ಜೊತೆಗೆ ಕಳೆದ ದಿನಗಳಿಗಿಂತ ಮಕ್ಕಳ ಜತೆಗೆ ಕಳೆದ ದಿನಗಳೇ ಹೆಚ್ಚು ನೆಮ್ಮದಿಯ ದಿನಗಳು ಅನ್ನಿಸುವುದಿಲ್ಲವೆ?" ಎಂದು ಅಮ್ಮನೊಡನೆ ಹುಡುಗಾಟವಾಡಿದ್ದೆ. ನನ್ನ ಕೀಟಲೆಯ ದನಿಯನ್ನು ಗಮನಿಸಿದ್ದ ಅಮ್ಮ, ತುಟಿಯಂಚಿನಲ್ಲಿಯೇ ನಕ್ಕಿದ್ದಳು. ಅನಂತರ ಸ್ವಲ್ಪ ಹೊತ್ತು ನನ್ನ ಮುಖವನ್ನೇ ಪ್ರೀತಿಯಿಂದ ನೋಡಿದ್ದಳು. "ಎಷ್ಟು ಮುಗ್ಧ ಮಗಳು" ಎಂಬ ಭಾವದಲ್ಲಿ - ಆಮೇಲೆ ಉತ್ತರಿಸಿದ್ದಳು. "ಮಗೂ, ಗಂಡ ಗಂಡನೇ.... ಮಕ್ಕಳು ಮಕ್ಕಳೇ. ಗಂಡ ಹಾಕುವ ನೀರಕ್ಕಿ ಅನ್ನದಷ್ಟು ರುಚಿ - ಯಾವ ಮೃಷ್ಟಾನ್ನಕ್ಕೂ ಇಲ್ಲ. ಯಾವ ಹೆಣ್ಣಿಗೂ ಗಂಡನ ಕೂಳು ತಪ್ಪಬಾರದು.." ಎಂದು ಭಾವುಕಳಾಗಿದ್ದಳು; ಮಕ್ಕಳ ಅಹಂಭಾವಕ್ಕೆ ಮೃದುವಾಗಿ ಮೊಟಕಿದ್ದಳು.

ತನ್ನ ಮಕ್ಕಳು ಪ್ರೌಢಶಾಲೆಗೆ ಬಂದಮೇಲೂ ಅಮ್ಮನು ತನ್ನ ಮಕ್ಕಳಿಗೆ ಎಣ್ಣೆ ಹಾಕಿ ವಾರಕ್ಕೊಮ್ಮೆಯಾದರೂ ಸ್ನಾನ ಮಾಡಿಸುತ್ತಿದ್ದಳು. ರಾತ್ರಿ ಮಲಗುವ ಮುಂಚೆ ಬೇಡವೆಂದರೂ ಕೇಳದೆ ಎಲ್ಲರೂ ಒಂದೊಂದು ಲೋಟ ಹಾಲನ್ನು ಕುಡಿಯುವಂತೆ ಮಾಡುತ್ತಿದ್ದಳು. ಮುಂದೆ ಅಪ್ಪಯ್ಯ ಅನಾರೋಗ್ಯದಿಂದ ಮಲಗಿದ ನಂತರ ಎದುರಾಗಿದ್ದ ಕಷ್ಟದ ದಿನಗಳಲ್ಲಿ, ಅದಾಗಲೇ ಬೆಳೆದು ನಿಂತಿದ್ದ ಅವಳ ಹೆಣ್ಣು ಮಕ್ಕಳಿಗೆ ಈ ಹಾಲಿನ ಕಾಟದಿಂದ ಮುಕ್ತಿ ಸಿಕ್ಕಿದರೂ - ಎಳೆಯ ಪ್ರಾಯದ ಇಬ್ಬರು ತಮ್ಮಂದಿರಿಗೆ ಮಾತ್ರ ತನ್ನ ಕೈಯ್ಯಲ್ಲಾಗುವ ವರೆಗೂ ಹಾಲು - ಹಣ್ಣನ್ನು ಮುಚ್ಚಿಟ್ಟು ಮುಚ್ಚಿಟ್ಟು ಒತ್ತಾಯದಿಂದ ಕೊಡುತ್ತಿದ್ದಳು. ಆ ಪುಟ್ಟ ಮಕ್ಕಳಿಗೆ ಪ್ರಿಯವಾದುದನ್ನು ತನ್ನ ಕೈಯ್ಯಾರ ಮಾಡಿ ಬಡಿಸುತ್ತಿದ್ದಳು. 

ತನ್ನ ಪ್ರೀತಿಯ ಗಂಡುಮಕ್ಕಳಿಗೆ ಅವರವರ ಹೆಂಡಂದಿರು ಬಂದ ಮೇಲೂ ತನ್ನ ಪಾಲಿನ ಆರೈಕೆಯನ್ನು ಮಾತ್ರ ವ್ರತದಂತೆಯೇ ನಡೆಸಿದ್ದ ಅಮ್ಮ ಇವಳು. ಹಿಂದೊಮ್ಮೆ ಇದೇ ಹಿನ್ನೆಲೆಯಲ್ಲಿ ಅಮ್ಮನೊಂದಿಗೆ - ನಾನು ನನ್ನ ಪೋಕರಿಬುದ್ಧಿ ತೋರಿಸಿದ್ದೆ. "ಅಮ್ಮಾ, ನಿನಗೆ ಗಂಡು ಮಕ್ಕಳೆಂದರೆ ಹೆಚ್ಚು ಪ್ರೀತಿ..." ಎಂದು - ಒಂದೇ ವಾಕ್ಯದಲ್ಲಿ ನಾನು ಅವಳನ್ನು ಕೆಣಕಿದಾಗ, ಅಂದು ಅಮ್ಮನ ಕಣ್ಣು ತೇವವಾಗಿತ್ತು. ತಕ್ಷಣ ನಾನು ಪೆಚ್ಚಾಗಿದ್ದೆ. 

ಎಷ್ಟೋ ಹೊತ್ತಿನ ಮೇಲೆ, ತನ್ನನ್ನು ತಾನು ಸಂಭಾಳಿಸಿಕೊಂಡ ಅಮ್ಮ, ಮುಂದೆಂದೂ ಇಂತಹ ಸಂಶಯ ಏಳದಂತೆ ನನ್ನ ಅಧಿಕಪ್ರಸಂಗದ ಹುಟ್ಟಡಗಿಸಿದ್ದಳು.

"ಮಗೂ, ನಿಮಗೆಲ್ಲರಿಗೂ ಪ್ರೀತಿಸುವ ಗಂಡ, ಸಂಸಾರವಿದೆ. ನಿಮ್ಮ ಜವಾಬ್ದಾರಿ ಹೊರುವ ಗಂಡ ಇದ್ದಾರೆ. ಹೌದು. ನನ್ನ ಗಂಡು ಮಕ್ಕಳಿಗೂ ಪ್ರೀತಿಸುವ ಸಂಸಾರವಿದೆ; ಆದರೆ ಅವರಿಗೆ - ತಮ್ಮ ಸಂಸಾರವನ್ನು ಸರ್ವತ್ರ ತೂಗಿಸುವ ಇನ್ನೊಂದು ಜವಾಬ್ದಾರಿಯೂ ಇದೆ. ಈ ಹೊಂದಾಣಿಕೆಯ ಗಡಿಬಿಡಿಯಲ್ಲಿ ಎಷ್ಟೋ ಬಾರಿ ಸ್ವಂತ ಸುಖದತ್ತ ಗಮನಿಸಲೂ ಆ ಗಂಡುಗಳಿಗೆ ಆಗುವುದಿಲ್ಲ. ನಿಮಗೆಲ್ಲರಿಗೆ ಬಸರಿ-ಬಾಣಂತನ ಎಂದಾದರೂ... ಹಣ್ಣು ಹಾಲು ವಿಶ್ರಾಂತಿಯ ಶೋಪಸ್ಕಾರ ನಡೆಯುತ್ತದೆ. ಆದರೆ ನನ್ನ ಗಂಡು ಮಕ್ಕಳಿಗೆ ಅದೂ ಇಲ್ಲ. ಅಮ್ಮನ ಕೈ ತಪ್ಪಿದ ಮೇಲೆ ಗಂಡುಮಕ್ಕಳು ಒಣಗಿ ಹೋಗುವುದೇ ಹೆಚ್ಚು. ಅವುಗಳ "ತಲೆಗೆ ಎಣ್ಣೆ ಹಾಕಿದೆಯಾ, ಹಾಲು ಕುಡಿದೆಯಾ, ದುಡ್ಡಿನ ಸ್ಥಿತಿಗತಿಯೇನು..." ಅಂತ ಪ್ರೀತಿಯಿಂದ ಬೆನ್ನು ಬಿದ್ದು ಆ ಗಂಡು ಮಕ್ಕಳನ್ನು ನೋಡಿಕೊಳ್ಳುವವರ್ಯಾರು? ದೇಹಸುಖ ಕೊಟ್ಟು ಉಪಕಾರ ಮಾಡಿದಂತೆ ವರ್ತಿಸುವ... ಪ್ರಾಣ ಹಿಂಡುವ ಹೆಂಡತಿಯರೂ ಮುಂದೆ ಸಿಗಬಹುದು; ತಾವು "ಕೇವಲ ಕೊಟ್ಟವರು; ಏನನ್ನೂ ಪಡೆದೇ ಇಲ್ಲ" ಎಂಬಂತೆ ಕ್ರೂರವಾಗಿ ನಡೆಸಿಕೊಳ್ಳುವವರೂ ಸಿಗಬಹುದು. ಋಣದಲ್ಲಿ ಬಿದ್ದಂತೆ ಮರ್ಯಾದೆಗಾಗಿ ಹೆಣಗಾಡುತ್ತ ಏನನ್ನೂ ಬಾಯಿಬಿಟ್ಟು ಹೇಳಲಾಗದೆ ಜೀವ ಸವೆಸುವ ಎಷ್ಟೋ ಬಡಪಾಯಿ ಗಂಡುಗಳನ್ನೂ ನಾನು ನೋಡಿದ್ದೇನೆ. ಆದ್ದರಿಂದ ನಾನು ಇರುವವರೆಗೆ ಯಾರು ಏನು ಅನ್ನುತ್ತಾರೆಂಬ ಯೋಚನೆಯಿಲ್ಲದೆ, ನನ್ನ ಸಮಾಧಾನಕ್ಕಾಗಿ ಆ ಗಂಡು ಮಕ್ಕಳ ಹೊಟ್ಟೆಯ ಚಿಂತೆ, ಆರೋಗ್ಯದ ಚಿಂತೆ, ಮಾನಸಿಕ ಆಧಾರ ಒದಗಿಸುವ ಚಿಂತೆ ಮಾಡುತ್ತೇನೆ. ಅಂದಮಾತ್ರಕ್ಕೇ ಉಳಿದ ಮಕ್ಕಳ ಚಿಂತೆ ಇಲ್ಲ ಎಂದರ್ಥವಲ್ಲ. ಎಲ್ಲ ಮಕ್ಕಳ ನೆಮ್ಮದಿಯ ಚಿಂತೆ ಹೇಗೂ ಇದ್ದೇ ಇರುತ್ತದೆ. ನಾಲ್ಕು ಹೆಣ್ಣುಮಕ್ಕಳ ನಂತರ ಬಯಸಿ ಬಯಸಿ ಪಡೆದ ಗಂಡು ಮಕ್ಕಳಿವರು. ಆದ್ದರಿಂದ ನನ್ನ ಜವಾಬ್ದಾರಿಯೂ ಹೆಚ್ಚಿದೆ. ನನ್ನ ಗಂಡು ಮಕ್ಕಳನ್ನು ಮೊದಲಿನಿಂದಲೂ ನಾನು ಹೆಚ್ಚು ಓಲೈಸಿದ್ದು ನಿಜ. ಆದರೆ ಒಂದಂತೂ ಸತ್ಯ. ಎಲ್ಲಿ ಗಾಯವಾದರೂ ಅಲ್ಲಿಗೆ ಮುಲಾಮು ಸವರುತ್ತಲೇ ಇರುವವಳು ಈ ಅಮ್ಮ. ನೀವೆಲ್ಲರೂ ನನ್ನ ಮಕ್ಕಳು ಎಂದು ಪದೇ ಪದೇ ಖಚಿತಪಡಿಸುವ ಅಗತ್ಯ ನನಗಿಲ್ಲ ಮಗೂ..."

ಇಷ್ಟು ಸ್ಪಷ್ಟ ಚಿಂತನೆಯ ಅಮ್ಮನ ಮಕ್ಕಳಾಗುವುದಕ್ಕಿಂತ ಬೇರೆ ಭಾಗ್ಯವುಂಟೆ?

ಇನ್ನೊಬ್ಬರ ಸಹಾಯವಿಲ್ಲದೆ ಒಬ್ಬಳೇ ಸಂಚರಿಸಲಾಗದ ದಿನಗಳನ್ನೂ ಅಮ್ಮ ದಾಟಿದಳು. ನನ್ನ ತಮ್ಮನೇ ಅವಳನ್ನು ಕರೆ ತಂದು ಜೋಪಾನವಾಗಿ ನಮ್ಮ ಮನೆಗೆ ತಲುಪಿಸಿ ಹೋಗುತ್ತಿದ್ದ ಕಾಲವೂ ಇತ್ತು. ದೇಹವು ಸಹಕರಿಸದ ಆ ಹಂತದಲ್ಲಿ ಅನಿವಾರ್ಯವಾಗಿ - ಆಕೆಯು ತನ್ನ ಮಕ್ಕಳ ಮನೆಗೆ ಭೇಟಿ ನೀಡುವುದೂ ಅಪರೂಪವಾಗತೊಡಗಿತು. ಏಳು ವರ್ಷದ ಹಿಂದೆ - 2008 ರಲ್ಲಿ ನಮ್ಮ ಮನೆಗೆ ಬಂದು ಒಂದು ತಿಂಗಳ ಕಾಲ ಉಳಿದುಕೊಂಡಿದ್ದಳು; ತಮ್ಮ ನರೇಂದ್ರನೇ ಅವಳನ್ನು ಕರೆತಂದು ಬಿಟ್ಟು ಹೋಗಿದ್ದ. ಅದೇ ಕೊನೆ. ಆಗ ಅವಳಿಗೆ 80 ವರ್ಷ ದಾಟಿತ್ತು. ಅನಂತರ ಅವಳು ಬಂದು ವಿರಾಮದಲ್ಲಿ ನನಗೆ ಜೊತೆ ನೀಡಲು ಆಗಲಿಲ್ಲ. ಅವರವರ ಬದುಕಿನಲ್ಲಿ ಮುಳುಗಿ ಹೋಗಿದ್ದ ನಮಗೂ ಅವಳಿದ್ದಲ್ಲಿಗೇ ಹೋಗಿ - ಅವಳಿಗೆ ದಿನಗಟ್ಟಲೆ ಜೊತೆ ನೀಡಲಾಗಲಿಲ್ಲ. ಬದುಕಿನ ವೇಗವು - ಓಡಲಾಗದ ದುರ್ಬಲರನ್ನು ತನ್ನ ಓಟದಲ್ಲಿ ಸೇರಿಸಿಕೊಳ್ಳದು. ಅಲ್ಲವೆ ? 

ಅಂದು ಏಳು ವರ್ಷದ ಹಿಂದೆ ಬಂದಾಗಲೂ - 80ರ ಪ್ರಾಯದ ಅವಳನ್ನು ಎಚ್ಚರದಿಂದ ಗಮನಿಸಬೇಕಾದ ಅವಸ್ಥೆಯಿತ್ತು. ಅದೊಂದು ದಿನ, ಅವಳು ಎಂದಿನಂತೆ - ತಾನೇ ಸ್ನಾನ ಮುಗಿಸಿ ಬಚ್ಚಲಿನಿಂದ ಹೊರಗೆ ಬಂದವಳು ಅಲ್ಲೇ ಕಾಯುತ್ತ ನಿಂತಿದ್ದ ನನ್ನನ್ನು ನೋಡಿ "ಇಲ್ಲ್ಯಾಕ್ ನಿಂತಿದ್ದೆ ?" ಅಂದಿದ್ದಳು. ಆಗ - ಸದಾ ಬೆದರಿಸುತ್ತಿದ್ದ ಅಮ್ಮನ ವಯಸ್ಸನ್ನು ನಂಬಲಾಗದಿದ್ದ ನಾನು, ಅಮ್ಮನು ಸ್ನಾನ ಮುಗಿಸಿ ಹೊರಗೆ ಬರುವವರೆಗೂ "ಚಿಲಕ ಹಾಕದ" ಬಚ್ಚಲ ಬಾಗಿಲ ಹೊರಗೇ ಕಾಯುತ್ತ ನಿಂತಿರುತ್ತಿದ್ದೆ. ಕುಳಿತು ಸ್ನಾನ ಮಾಡುವಾಗಲೂ ಸೂ ಸಾ ಎನ್ನುತ್ತ ಅವಳು ಮಾಡುತ್ತಿದ್ದ ಸದ್ದುಗಳನ್ನು ಗಮನಿಸುತ್ತ, ತಕ್ಷಣ ಒಳಗೆ ಹೋಗಲು ಸಿದ್ಧವಾಗಿರುತ್ತಿದ್ದೆ ! "ನಾನೇ ಅಮ್ಮನನ್ನು ಕಾಯುವವಳು!" ಎಂಬ ಅಹಂಕಾರವೂ ಅಲ್ಲಿದ್ದಿರಬಹುದು ! ಕಾಲನನ್ನು ಕಾಯುವ ಕೃತ್ಯವನ್ನು ಹುಂಬತನವೆಂದೂ ಹೇಳಬಹುದು. 

ಅಂದು ಸ್ನಾನ ಮುಗಿಸಿ ಹೊರಗೆ ಬಂದವಳೇ ನನ್ನನ್ನು ನೋಡಿದ ಅಮ್ಮನು... "ಉಸ್ಸಪ್ಪಾ...ಏನೋ ಮಗಳೇ.. ಎಷ್ಟು ದಿನ ಓಡತ್ತೋ ಈ ಗಾಡಿ... ಗೊತ್ತಿಲ್ಲ. ನಾರಾಯಣೀ, ಮಗಳೇ, ನಾನು ಸಾಯುವುದೂ ಸುಲಭವಲ್ಲ. ಕಷ್ಟಪಟ್ಟ ದೇಹ ಇದು. ಅಷ್ಟು ಬೇಗ ಪ್ರಾಣವನ್ನು ಬಿಟ್ಟು ಕೊಡಲಿಕ್ಕಿಲ್ಲ. "ನಾಕೊಡೆ ನೀ ಬಿಡೆ" ಅನ್ನುವ ಜಗ್ಗಾಟದಲ್ಲಿ ಈ ದೇಹವಂತೂ ಹೈರಾಣಾಗಬಹುದು. ಜೊತೆಗೆ ನಿಮಗೆಲ್ಲರಿಗೂ ಕಷ್ಟ. ಈಗಂತೂ ದೇಹದ ಒಳಗೆ ಹೋಗುವ ಉಸಿರಿಗಿಂತ, ಹೊರಗೆ ಹೋಗುವ ಉಸಿರಿನ ಕಾರುಬಾರೇ ಜೋರಾಗಿದೆ... ಏನಾಗತ್ತೋ ಆಗಲಿ... ಹೆಚ್ಚು ನಬಿಯದಿದ್ದರೆ ಸಾಕು..." ಎಂದಿದ್ದಳು. ಅನುಭವದಿಂದ ಮಾಗಿದ ಎಲ್ಲ ವೃದ್ಧ ಜೀವಗಳೂ ಈ ಹಂತವನ್ನು ದಾಟದಿರುವುದು ಅಸಾಧ್ಯ. ಅಂದು ಅಮ್ಮನು ತನ್ನ ವಾಸ್ತವದತ್ತ ನೋಡಿ ನಿಟ್ಟುಸಿರು ಬಿಡುತ್ತ, ಮೌನವಾಗಿ ಕೂತು ಸ್ವಲ್ಪ ಸುಧಾರಿಸಿಕೊಂಡಿದ್ದಳು. ಅನಂತರ, ಎಂದಿನಂತೆ ನಿಧಾನವಾಗಿ ವಿಷ್ಣು ಸಹಸ್ರನಾಮ ಹೇಳಲು ಶುರು ಮಾಡಿದ್ದಳು. ಅಂದೂ ಅವಳ ದನಿಯಲ್ಲಿ ಮಾತ್ರ - ಒಂದಿಷ್ಟೂ ಆಯಾಸ ಕಂಡಿರಲಿಲ್ಲ ! 

"ನಾನಂತೂ ಸದ್ಯ ಸಾಯುವುದಿಲ್ಲ" ಎಂಬ ನನ್ನೊಳಗಿನ ಅಂದಿನ ಅಪಕ್ವ ಧೈರ್ಯ ಮತ್ತು ಅಮ್ಮನು ತನ್ನ ಆತ್ಮವಿಶ್ವಾಸ ಉಳಿಸಿಕೊಳ್ಳಲಿ ಎಂಬ ನನ್ನ ವ್ಯಾವಹಾರಿಕತೆಯು (ಮಿಥ್ಯೆ!) - ಆಗ ಅಮ್ಮನೆದುರು ಹಾಡುತ್ತ ಮಾತಾಡಿತ್ತು. "ಕೊಡುವ ಕರ್ತೃ ಬೇರೆ ಇರುತಿರೆ ಬಿಡು ಬಿಡು ಚಿಂತೆಯನು.... ಚಿಂತೆ ಯಾತಕೋ ಬಯಲ ಭ್ರಾಂತಿ ಯಾತಕೋ..." ಎಂಬ ಅಮ್ಮನ ನೆಚ್ಚಿನ ದಾಸರಪದಗಳನ್ನು ಹಾಡಿ ಅವಳಲ್ಲಿ ಉತ್ಸಾಹ ತುಂಬಲು - ಅಂದು ನಾನು ಯತ್ನಿಸಿದ್ದೆ. "ಅಮ್ಮಾ, ನೀನು ತಲೆಬಿಸಿ ಮಾಡಬೇಡ. ಆಗುವುದನ್ನು ತಡೆಯಲಿಕ್ಕಾಗತ್ತಾ? ಕಷ್ಟ ಬಂದಾಗ ಅಳುವುದು ಹೇಗೂ ಇದ್ದದ್ದೇ. ಒಪ್ಪತ್ತು ಮುಂಚಿತವಾಗಿ ಅಳುವುದ್ಯಾಕೆ?" ಎಂದು ಹರಿಕತೆಯನ್ನೂ ಮಾಡಿದ್ದೆ! ಆಗ ಅಮ್ಮ ನಕ್ಕಿದ್ದಳು. ಆ ನಗುವಿನಲ್ಲಿ ಪ್ರೀತಿಯಿತ್ತು; ಭರವಸೆ ಇತ್ತು; ಆಶೀರ್ವಾದ ಇತ್ತು; ವಾಸ್ತವಕ್ಕೆ ತಲೆ ಬಾಗುವ ವಿಧೇಯತೆ ಇತ್ತು. ಮಕ್ಕಳು ತಮ್ಮ ವಯಸ್ಸು ಅನುಭವದಲ್ಲಿ ಎಷ್ಟು ಬೆಳೆದರೂ ಅಮ್ಮನಿಗಿಂತ ಬೆಳೆಯಲು ಸಾಧ್ಯವೆ ? ಅವಳ ಅಂದಿನ ನಗು... ಅದನ್ನೇ ಹೇಳಿತ್ತು. ನಮ್ಮ ಹತ್ತಿರಕ್ಕೆ ಅದಾಗಲೇ ಬರುತ್ತಿದ್ದ ಅಮ್ಮನ "ಅಗಲಿಕೆಯ ಅಳು" ಎಂಬ ವಾಸ್ತವವನ್ನು ಕಣ್ಣಾರೆ ಕಂಡು ಭಾವಿಸುತ್ತಿದ್ದ ನನ್ನ ಕಣ್ಣುಗಳು - ಅಂದು - ಆಗಲೇ ತೇವವಾಗಿದ್ದವು.  

ಸಾಯುವ ಹಿಂದಿನ ತಿಂಗಳಲ್ಲಿಯೂ (ಜನವರಿ-2015) ನಾನು ಮಂಗಳೂರಿನಿಂದ ಬೆಂಗಳೂರಿಗೆ ಹೋಗಿ, ಅವಳನ್ನು ನೋಡಿ ಬಂದಿದ್ದೆ. ಆಗ ಅವಳು ತಮ್ಮನ ಮನೆಯಲ್ಲಿಯೇ ಇದ್ದಳು. ಆಗಲೇ ಅವಳು ಸೋತು ಸುಣ್ಣವಾಗಿದ್ದಳು. ಅಂದು ಅವಳಿಗೆ ಒಂದು ಎಣ್ಣೆಸ್ನಾನ ಮಾಡಿಸಿ ಅವಳ ತಲೆ ಬಾಚಿದ್ದೆ. ಅಷ್ಟಕ್ಕೇ..."ಸುಸ್ತಾಗಿ ಹೋಯಿತು. ಸಾಕು; ಬಿಡು.." ಅಂತ - ಅವಳಿಂದ ಒಂದಿಷ್ಟು ಬೈಸಿಕೊಂಡೂ ಬಂದಿದ್ದೆ. ಆದರೆ ಅದೇ ಅವಳ ಕೊನೆಯ ಆಶೀರ್ವಾದ ಎಂದುಕೊಂಡಿರಲಿಲ್ಲ.

ನಾನು ಮಂಗಳೂರಿಗೆ ಹೊರಟು ನಿಂತಾಗ, ಊರುಗೋಲಿನ ನೆರವಿನಿಂದ ಸುಮಾರು ನೂರು ಹೆಜ್ಜೆಗಳಷ್ಟು ನಡೆಯುತ್ತ ಬಾಗಿಲವರೆಗೆ ಬಂದಿದ್ದ ಅಮ್ಮ, ನಿಟ್ಟುಸಿರು ಬಿಡುತ್ತಲೇ - ಅಂದು ನನ್ನನ್ನು ಹರಸಿ ಕಳಿಸಿದ್ದಳು. ನನ್ನ ತಮ್ಮ ನರೇಂದ್ರನು ಅಮ್ಮನ ಕೈಯ್ಯಿಂದ ನನಗೊಂದು ಸೀರೆಯನ್ನೂ ಕೊಡಿಸಿದ್ದ. 


ಅಂದು ಹಿಂದಿರುಗುವಾಗ ನಾನು ನನ್ನಷ್ಟಕ್ಕೇ ಅಂದುಕೊಂಡಿದ್ದೆ... "ಎಲ್ಲರೂ ನನ್ನ ಧ್ವನಿಯನ್ನು ಕೊಂಡಾಡುತ್ತಾರೆ. ಆದರೆ ನನ್ನ ಅಮ್ಮನ ಧ್ವನಿಯು ಈಗಲೂ ನನಗಿಂತ ಸುಂದರವಾಗಿದೆಯಲ್ಲಾ? ಅವಳ ಒಂದು ಅಂಶವಷ್ಟೇ ನನ್ನಲ್ಲಿರಬಹುದು. ಬಹುಪಾಲು ಅವಳಲ್ಲೇ ಇತ್ತು. ಅವಳ ಮಧುರ ಸ್ವರ, ಇಂಪಾಗಿ ಭಾವಪೂರ್ಣವಾಗಿ ಹಾಡುವ ಶಕ್ತಿ, ಪರಿಣಾಮಕಾರಿಯಾಗಿ ತನ್ನ ಅಭಿಪ್ರಾಯವನ್ನು ಮಂಡಿಸುವ ಅವಳ ಅಸ್ಖಲಿತ ವಾಕ್ ಪ್ರತಿಭೆ, ಸ್ಪಷ್ಟ ಚಿಂತನೆ, ಯಾವುದೇ ಪೂರ್ವತಯಾರಿಯಿಲ್ಲದೆಯೂ ಸಭೆಗಳಲ್ಲಿಯೂ ವಿಚಾರ ಮಂಡಿಸಬಲ್ಲ ಅವಳ ವಾಗ್ವೈಖರಿ... ಎಲ್ಲಕ್ಕಿಂತ ಮುಖ್ಯವಾಗಿ ಇಡೀ ವ್ಯಕ್ತಿತ್ವದ ಸುಭಗತನ, ಮುಗ್ಧತೆ - ಇವುಗಳೆಲ್ಲವೂ - ಮಕ್ಕಳನ್ನು ಬೆಳೆಸುವ ಅವಳ ಕರ್ತವ್ಯದ ಭರದಲ್ಲಿ ಬಹಿಃಪ್ರಕಾಶಕ್ಕೆ ಬರದೇ ಹೋಯಿತಲ್ಲಾ? ಆದರೆ... "ಅಮ್ಮನ ಬದುಕು ವನಸುಮದಂತಾಯ್ತೆ ?" ಎಂದುಕೊಳ್ಳುವಂತಿಲ್ಲ. ಏಕೆಂದರೆ ಯಾವುದೇ ಬದುಕಿಗೆ ತನ್ನ ಇತಿಮಿತಿಯಲ್ಲಿ ಬದುಕುವುದಷ್ಟೇ - ಇರುವ ಏಕೈಕ ಆಯ್ಕೆ. ಅದನ್ನು ಅಮ್ಮನಷ್ಟು ಸರಿಯಾಗಿ ಅರ್ಥೈಸಿಕೊಂಡವರನ್ನು ನಾನು ನೋಡಿಲ್ಲ. ಆದ್ದರಿಂದ ತನ್ನ ವೃತ್ತದಲ್ಲಿ ಅಮ್ಮನು ಪ್ರಾಮಾಣಿಕ ಹೊಣೆಗಾರಿಕೆಯಿಂದಲೇ ಸಂಚರಿಸಿ ಬದುಕನ್ನು ಗೌರವಿಸಿದ್ದಾಳೆ - ಅಂದುಕೊಳ್ಳಬೇಕಾಗುತ್ತದೆ..

ಸೃಷ್ಟಿಯ ವೈಚಿತ್ರ್ಯವಿದು. "ಪುತ್ರ ಶೋಕಂ ನಿರಂತರ.." ಎಂಬುದು ಎಲ್ಲರೂ ಒಪ್ಪುವ ಬದುಕಿನ ಸತ್ಯ. ಬದುಕುಗಳ ಸುಗಮ ಚಾಲನೆಗಾಗಿ, ಮುಂದಕ್ಕೆ ಮಾತ್ರ ದೃಷ್ಟಿ ನೆಡುವಂತಹ ಅನಿವಾರ್ಯ ಸ್ಥಿತಿಯ ಬದುಕಿದು. ಇದೂ ಸತ್ಯವೇ. ಆದ್ದರಿಂದಲೇ ತಮ್ಮ ಹಿಂದನ್ನು ಬುದ್ಧಿಪೂರ್ವಕವಾಗಿ ಕಳಚಿಕೊಳ್ಳುತ್ತ ಬಂದಿರುವ ಪರಂಪರೆ ಜೀವಿಗಳದು. ಬದುಕನ್ನು ಪರಮೋಚ್ಚ ಎಂದುಕೊಳ್ಳುವ ಎಲ್ಲರಿಗೂ - ಮಾತೃ ಶೋಕ, ಪಿತೃ ಶೋಕ - ಇವೆಲ್ಲವನ್ನೂ ಸಹಜ ಎಂದು ಒಪ್ಪಿಕೊಳ್ಳುವ ಅನಿವಾರ್ಯತೆಯೂ ಇದೆ. ಮಾತಾಪಿತೃಗಳು ಪ್ರಾತಃಸ್ಮರಣೀಯರು ಎಂಬುದನ್ನು ಭಾವಿಸಲಾಗದ ಹಲವರು - ವರ್ಷಕ್ಕೆ ಒಮ್ಮೆಯಾದರೂ ತಮ್ಮ ಪಿತೃಗಳನ್ನು ಸ್ಮರಿಸಿಕೊಳ್ಳುವ ಅಥವ ಅವರ ಹೆಸರಿನಲ್ಲಿ "ಸಾರ್ವಜನಿಕ ಸಂಭ್ರಮ"ವಾಗಿ ಶ್ರಾದ್ಧವನ್ನು ಆಚರಿಸುವ ಹಂತದಲ್ಲಿ - ಇನ್ನೂ ಇದ್ದಾರೆ. ಆದರೆ ಯಾವುದೇ ಶುದ್ಧ ಸ್ಮರಣೆ ಎಂಬುದು - ಗದ್ದಲದಲ್ಲಿ ಅನುಭವಕ್ಕೆ ಬಂದೀತೆ ? ಯಾವುದೇ ಆಚರಣೆಗಳಲ್ಲಿ ಅರ್ಥ ಬೇಡವೇ ? ಇಂತಹ ತೋರಿಕೆಯ ಮನೋಭಾವವನ್ನು ಮೆಚ್ಚುವ, ಪ್ರೋತ್ಸಾಹಿಸುವ ಮತ್ತು ಅನುಸರಿಸುವ "ಅಲ್ಪ ತೃಪ್ತಿ"ಯ ಹೆಸರಿನ ಮುಖಗಳೂ ಜೀವಸ್ವಾರ್ಥದ ಒಂದು ವಿಧವೇ ಅಲ್ಲವೆ ?

ಈಗ ಅಮ್ಮನಿಲ್ಲದ ಬದುಕಿನ ವಾಸ್ತವವು ನಮ್ಮ ಮುಂದೇ ಇದೆ. "ಅಂತೂ ಬಚಾವಾದೆ.." ಎನ್ನುತ್ತ ಈಗಂತೂ ಅಮ್ಮ ನಗುತ್ತಿದ್ದಾಳೆ; ನಾವು ನೆನಸಿಕೊಳ್ಳುತ್ತಿದ್ದೇವೆ. ಇದೊಂದು ನಿರಂತರ ಸುತ್ತುವ ಚಕ್ರ. ಹೀಗಿದ್ದೂ.. "ನಾನೇನು ಮಾಡಲಿ?...ಅಮ್ಮನಿಲ್ಲದ ಬದುಕನ್ನು ಹೇಗೆ ಬಾಳಲಿ?" ಎಂದು ಅನ್ನಿಸಿದಾಗಲೆಲ್ಲ ಕರುಳು ಹಿಂಡುತ್ತದೆ. ಭಾವ ಜಗ್ಗಾಟ.

                                           


ವಾಸ್ತವಕ್ಕೆ ನಾವು ಬೆನ್ನು ತಿರುಗಿಸಿದರೆ ವಾಸ್ತವವು ಬದಲಾದೀತೆ? ಪಲಾಯನವಾದವು ನಮ್ಮ ನೀತಿಯಾಗಬಾರದು. ನಮ್ಮನ್ನು ಭಾವನಾತ್ಮಕವಾಗಿ ಗಟ್ಟಿಗೊಳಿಸಿ, ಕಟ್ಟಿ ರೂಪಿಸಿದ ಅಮ್ಮನಾದರೂ ಎಷ್ಟು ಕಾಲ ಜೊತೆಯಾದಾಳು? ಮೊಮ್ಮಕ್ಕಳು, ಮರಿಮಕ್ಕಳನ್ನೂ ನೋಡಿ, ಬದುಕಿನ ಏರಿಳಿತಗಳನ್ನೆಲ್ಲ ಹಾದುಹೋಗಿ ಕೊನೆಗೆ ಸಹಜ ಗಮ್ಯವನ್ನು ತಲುಪಿದ ಅಮ್ಮನದು - ನಿಜವಾಗಿಯೂ ತುಂಬು ಬದುಕು. "ಅಮ್ಮಾ, ನಿನ್ನ ಪ್ರಾಣೋತ್ಕ್ರಮಣದ ಕಾಲದಲ್ಲಿ ಏನೇನು ಕಂಡೆಯೋ...ನಮಗೆ ಗೊತ್ತಿಲ್ಲ. ಹೇಗೂ ನಾವೂ ಅಲ್ಲಿಗೇ ಬರುವವರು. ಅಲ್ಲಿ ಇನ್ನೆಷ್ಟು ಪೀಡಾಪಟುಗಳಿದ್ದಾರೋ ಗೊತ್ತಿಲ್ಲ. ಬಂದಾಗ ಅಲ್ಲೇ ಕೂತು ಅನುಭವವನ್ನು ಹಂಚಿಕೊಳ್ಳೋಣ." ಎಂದುಕೊಳ್ಳುತ್ತ - ನನ್ನ ಹೊಡಚಾಟಗಳ ನಡುವೆಯೂ ನಿನ್ನ ಭಾವ ಸನ್ನಿಧಿಯನ್ನು ಪ್ರತ್ಯಕ್ಷ ಅನುಭವಿಸುತ್ತ - ನಾನಂತೂ ಇಂದಿನಲ್ಲಿಯೇ ಬದುಕಬೇಕಾಗಿದೆ. ಹೀಗಿದ್ದೂ.. ಭಾವಸಂಬಂಧದ ನೆರಳಲ್ಲಿಯೇ ನಾವೆಲ್ಲರೂ ಬದುಕಬಹುದು ಎಂದೂ ಅಂದುಕೊಂಡಿದ್ದೇನೆ.

ಈ ಬದುಕಿನಲ್ಲಿ ಯಾವುದೂ ವ್ಯರ್ಥವಲ್ಲ; ಎಲ್ಲದಕ್ಕೂ ಅರ್ಥವಿದೆ. ಮಕ್ಕಳಾದ ನಾವು ಪ್ರತೀ ದಿನವೂ ಕ್ರಿಯಾಶೀಲರಾಗಿರುತ್ತ..."ಪರೋಪಕಾರಾಯ ಪುಣ್ಯಾಯ, ಪಾಪಾಯ ಪರಪೀಡನಂ" ಎಂಬುದನ್ನು ಅರಿತು ಬದುಕಿದರೆ, ನಿಷ್ಕಾಮ ಅವ್ಯಾಜ ಪ್ರೀತಿಯ ಪ್ರತೀಕವಾಗಿರುವ ಜಗತ್ತಿನ "ಎಲ್ಲ ಅಮ್ಮಂದಿರಿಗೆ" ಸೂಕ್ತವಾದ  ಗೌರವ ಸಲ್ಲಿಸಿದಂತೆಯೇ ಅಲ್ಲವೇ?

                                         *****_____*****_____*****