Saturday, February 18, 2017

ಶ್ರೀ ರಾಮಕೃಷ್ಣ ಭಾವ ಮಂಜರಿ - ಭಾಗ 7

ಯುಗಧರ್ಮ - ಕಾಲ ಧರ್ಮ ಎಂಬುದು ಎಲ್ಲದಕ್ಕೂ ಅನ್ವಯವಾಗುವ ಪ್ರಕೃತಿಸೂತ್ರ. ಚರಿತ್ರೆಯಲ್ಲಿ ಕತ್ತಲೆಯ ಖಂಡಗಳು - ಕತ್ತಲೆಯ ಯುಗಗಳು ಎಂದು ಗುರುತಿಸಲ್ಪಟ್ಟ ಕಾಲಘಟ್ಟಗಳಿವೆ. ಆದರೆ ಈ ಭರತಭೂಮಿಯಲ್ಲಿ ಮಾತ್ರ ಜ್ಞಾನ ಪ್ರೇಮದ ನಂದಾದೀಪವು ಎಂದೂ ನಂದಿಹೋಗಲಿಲ್ಲ; ಪೂರ್ಣ ಕತ್ತಲೆ ಕವಿದ ಯಾವುದೇ ಕಾಲವೂ ಈ ನೆಲದಲ್ಲಿ ದಟ್ಟವಾಗಿ ಪ್ರವೇಶಿಸಲಾಗಲಿಲ್ಲ. ಈ ಚಮತ್ಕಾರಕ್ಕೆ ಮೂಲ ಕಾರಣವೇ - ವಿನಮ್ರ ತೃಪ್ತಿಯ ಮರುಪೂರಣ ಮಾಡುತ್ತಿದ್ದ ಅಧ್ಯಾತ್ಮ; ಕತ್ತಲು ಕವಿಸುವ ಅಜ್ಞಾನ ಮತ್ತು ದ್ರಾಬೆ ದುರಾಸೆಗಳಿಂದ ಪಾರಾಗಲು ಜೀವಭಾವಕ್ಕೆ ಉಪಕರಿಸುತ್ತಿದ್ದ ಭಾರತೀಯ ಅಧ್ಯಾತ್ಮ. ಭಾರತದ ಅಧ್ಯಾತ್ಮ ಪರಂಪರೆಯು ತನ್ನ ನೆಲದ ಸತ್ವವು ಬರಡಾಗುತ್ತಿದ್ದ ಯಾವುದೇ ಹಂತದಲ್ಲಿ ಆಗಿಂದಾಗ ಅಧ್ಯಾತ್ಮದ ಜೀವಸತ್ವವನ್ನು ಉಣ್ಣಿಸುತ್ತ - ಶಕ್ತಿಯ ಮರುಪೂರಣ ಮಾಡುತ್ತ ಬಂದ ಹಲವಾರು ಸನ್ನಿವೇಶಗಳನ್ನು ಈ ಹಿನ್ನೆಲೆಯಲ್ಲಿ ಗಮನಿಸಬೇಕು. ಈ ನೆಲದ ವಚನಕಾರರು, ಸಂತರು, ಸೂಫಿ ಪಂಥದ ಚಿಂತನೆಗಳು, ಅವಧೂತ - ದಾಸ ಪರಂಪರೆಗಳು ಮುಂತಾದ ಆಧ್ಯಾತ್ಮಿಕ ಬಹುಧಾರೆಯು ಈ ನಿಟ್ಟಿನಲ್ಲಿ ಶ್ರಮಿಸಿದ ಪರಿಯು ಅಮೋಘ. ಯಾವುದೇ ಪಂಥ ಪಂಗಡಗಳನ್ನು ಮೀರಿದ - ವಿಶ್ವಚೈತನ್ಯದಾಯಿಯಾದ ಭಾರತೀಯ ಧರ್ಮಸಾರವನ್ನು ಪುನರಪಿ ಉಣ್ಣಿಸುತ್ತ - ನೆಲದ ಬದುಕನ್ನು ಎತ್ತರಿಸುವ ಕರ್ಮಯೋಗವು ಇಲ್ಲಿ ಅನೂಚಾನವಾಗಿ ನಡೆಯುತ್ತಲೇ ಬಂದಿದೆ. ಆದ್ದರಿಂದಲೇ ಆದಿಯಲ್ಲಾಗಲೀ ಮಧ್ಯದಲ್ಲಾಗಲೀ ಭಾರತವನ್ನು ಕತ್ತಲೆಯ ಭಯವು ಅಷ್ಟೊಂದು ಕಾಡಿಸಲಿಲ್ಲ; ವಿಚಲಿತಗೊಳಿಸಲಿಲ್ಲ.

ಭಾರತೀಯ ಋಷಿ ಪರಂಪರೆಯ ದೃಷ್ಟಾರರು ಜೀವಸಂಕುಲವನ್ನು ರಕ್ಷಿಸಿಕೊಳ್ಳುವ ಜೀವಮೌಲ್ಯಗಳನ್ನು ಮೂಲ ಆಧಾರವಾಗಿ ನಮಗಿತ್ತು - ಬದುಕನ್ನು ಸ್ವಯಂ ಪೋಷಿಸಿಕೊಳ್ಳುವ ಸನ್ಮಾರ್ಗ ದರ್ಶನವನ್ನು ನೀಡಿರುವುದು - ಇಂದಿಗೂ ಉಳಿದುಕೊಂಡ ಭಾರತದ ಶಾಶ್ವತ ಸಂಪತ್ತು ಎನ್ನಬಹುದು. ಆದ್ದರಿಂದಲೇ ವೇದಕಾಲದಿಂದ ಹಿಡಿದು ಇಂದಿನವರೆಗೂ ದರ್ಶನಮೌಲ್ಯಗಳ ಐಶ್ವರ್ಯದೋಪಾದಿಯಲ್ಲಿ ಅನೂಚಾನವಾಗಿ ಉಪದೇಶಿತಗೊಂಡ ಹೃದಾಂತರ್ಗತ ಮೂಲ ಸಂವೇದನೆಗಳು - ಜನಮಾನಸದಲ್ಲಿ ಚಿರಸ್ಥಾಯಿಯಾಗಿವೆ. ಸತ್ಯದಿಂದ ತೊಡಗಿ - ಜ್ಞಾನ, ಪ್ರೇಮ, ಶಕ್ತಿ, ಸೌಂದರ್ಯ, ಶರಣಾಗತ ಭಾವ ಮುಂತಾದ ಹಲವು ಆಧ್ಯಾತ್ಮಿಕ ಮೌಲ್ಯಗಳು ಕಾಲಧರ್ಮಕ್ಕೆ ಅನುಸಾರವಾಗಿ ಭಾರತೀಯ ಪರಿಸರವನ್ನು ರಕ್ಷಿಸಿ ಪೋಷಿಸುತ್ತಲೇ ಬಂದಿವೆ. 12 ನೇ ಶತಮಾನದಲ್ಲಿ ವಚನಕಾರರಿಂದ ಆಧರಿಸಲ್ಪಟ್ಟ ಜೀವ ಪರಿಸರವನ್ನು - ಅನಂತರದ ಅವಧಿಯಲ್ಲಿ - ಎಲ್ಲದರಿಂದ ಮುಕ್ತವಾಗಿ ಶರಣಾಗತವಾಗುವ ಆತ್ಮಿಕ ಸ್ಥಿತಿಯ ಪ್ರತ್ಯಕ್ಷ ದರ್ಶನವನ್ನು ಮಾಡಿಸಿದ್ದ ದಾಸ ಪಂಥವು ಆಧರಿಸಿತ್ತು. ಸುಮಾರು 16 - 17 ನೇ ಶತಮಾನದ ನಂತರ ಜೀವಪ್ರಜ್ಞೆಯು ಕುಸಿದು ಬೀಳದಂತೆ ಸುದೀರ್ಘಕಾಲ ನಿಭಾಯಿಸಿದ ಶಕ್ತಿ - ದಾಸ ಪಂಥದ್ದು. ಅನಂತರದ 17,18 ಮತ್ತು 19 ನೇ ಶತಮಾನದಲ್ಲಿ ಚೈತನ್ಯ, ನಾನಕ್, ಪರಮಹಂಸ, ದಯಾನಂದ ಸರಸ್ವತಿ, ವಿವೇಕಾನಂದರು, ಅರವಿಂದ ಘೋಷ್, ರಮಣ ಮಹರ್ಷಿಗಳು ಮುಂತಾದವರು - ಆಧುನಿಕತೆಯ ಬಿರುಗಾಳಿಗೆ ಸಿಲುಕಿ ನಾನಾ ಕಾರಣಗಳಿಂದ ಅಸ್ಥಿರಗೊಳ್ಳುತ್ತಿದ್ದ ಜೀವಚೈತನ್ಯವನ್ನು ಪುನರುಜ್ಜೀವಗೊಳಿಸಿ ಜೀವಜಡತೆಯನ್ನು ಯಥಾನುಶಕ್ತಿ  ಹೊಡೆದೋಡಿಸುವ ಹಾದಿಯಲ್ಲಿ ಶ್ರಮಿಸಿದವರು. ಕಾಲಕಾಲಕ್ಕೆ ಅಧ್ಯಾತ್ಮದ ದೀವಟಿಗೆಯನ್ನು ಹಿಡಿದು, ಅಂಧಕಾರಯುಕ್ತ ಮಾನಸಕ್ಕೆ ಶ್ರೇಯದ ಬೆಳಕಿನ ಹಾದಿ ತೋರಿದ ಇಂತಹ ಮಹಾನ್ ಪರಂಪರೆಯು - ಸಮರ್ಥವಾಗಿ ಕಾಲದ ಪರೀಕ್ಷೆಗಳಿಗೂ ಎದೆಯೊಡ್ಡುತ್ತ ಇಂದಿಗೂ ತಮ್ಮ ಛಾಪು ಮೂಡಿಸಿದೆ. ಆದ್ದರಿಂದಲೇ ಇಂದಿಗೂ ಸ್ಮರಣೀಯವೂ ಆಗಿದೆ. ಒಳಿತಿನ ಮಾರ್ಗಗಳೆಲ್ಲವೂ ಈಗಾಗಲೇ ಪ್ರಪಂಚದ ಮುಂದಿದೆ; ಆಚರಣೆ ಮಾತ್ರ ಅಪೂರ್ಣವಾಗಿಯೇ ಉಳಿದುಕೊಂಡಿದೆ. 

ಆಧ್ಯಾತ್ಮಿಕ ವಿಜ್ಞಾನಿ - ಆಧುನಿಕ ಸುಜ್ಞಾನಿ - ಶ್ರೀ ರಾಮಕೃಷ್ಣ
    
ಶಕ್ತಿ ಮತ್ತು ಸೌಂದರ್ಯದ ಸಾಧನೆಯ ಮಾರ್ಗವಾದ ತಾಂತ್ರಿಕ ಸಾಧನೆಗಳನ್ನೂ ನಡೆಸಿ ಅಧ್ಯಾತ್ಮದ ವಿಶ್ವರೂಪದೊಂದಿಗೆ ಸರಸವಾಡುತ್ತ ಸಕಲ ಬಗೆಯ ಸಾಧನೆಗಳ ಒಳಹೊರಗನ್ನು ಅರಿತುಕೊಂಡವರು - ಶ್ರೀ ರಾಮಕೃಷ್ಣ ಪರಮಹಂಸರು. ಆದ್ದರಿಂದಲೇ ಅವರು - ಜ್ಞಾನ ವಿಜ್ಞಾನ ಸುಜ್ಞಾನಗಳ ಅನನ್ಯ ದೃಷ್ಟಾಂತವೆನ್ನಿಸಿದರು; ಅನುಭಾವೀ ದೃಷ್ಟಾರರಾದರು. ತಂತ್ರ ಸಾಧನೆಯಿಂದ ಹಿಡಿದು ಅದ್ವೈತ ಸಾಕ್ಷಾತ್ಕಾರದ ವರೆಗೂ ಸುಮಾರು 12 ವರ್ಷಗಳ ಕಾಲ ನಾನಾ ಬಗೆಯ ಕಠಿಣ ಸಾಧನೆಗಳಿಗೆ ನಿರಂತರವಾಗಿ ತಮ್ಮನ್ನು ಒಡ್ಡಿಕೊಂಡು ಪ್ರಯೋಗಸಿದ್ಧ ಫಲಿತಾಂಶಗಳನ್ನೂ ಆಸ್ವಾದಿಸಿದ್ದ ಮಹಾನ್ ಆಧ್ಯಾತ್ಮಿಕ ವಿಜ್ಞಾನಿ ಇವರು. ಅಪಾರ ಶಕ್ತಿಸಂಪನ್ನರಾಗಿದ್ದರೂ ಎಂದೂ ತಮ್ಮ ಸ್ವ-ವೈಭವೀಕರಣಕ್ಕಾಗಿ - ಸಂಗ್ರಹಿತ ಶಕ್ತಿಯ ದುರುಪಯೋಗ ನಡೆಸದಿರುವುದೇ ರಾಮಕೃಷ್ಣರ ಸಂಯಮ ಮತ್ತು ಜಾಗ್ರತಿಯ ದ್ಯೋತಕ. ತಮ್ಮ ಯಾವತ್ತೂ ಶಕ್ತಿಯನ್ನು ಸಮರ್ಥ ಸಮನ್ವಯಕಾರರಂತೆ - ವಿಶ್ವಕಲ್ಯಾಣಕ್ಕಾಗಿ ಅವರು ಬಳಸಿಕೊಂಡ ರೀತಿಯೇ ಆಕರ್ಷಕ. ವೈವಿಧ್ಯದ ಲೋಕವನ್ನು ವೈರುದ್ಧ್ಯದ ಮುಷ್ಟಿಯಿಂದ ಬಿಡಿಸಿ ಆಧ್ಯಾತ್ಮಿಕ ಸುಗಂಧ ಪೂಸಿ, ಅವರು ಸುಗಮಗೊಳಿಸಿದ ಶೈಲಿಯೇ ಚಿತ್ತಾಪಹಾರಕ. ಶ್ರೀ ರಾಮಕೃಷ್ಣರಲ್ಲಿ ಒಬ್ಬ ಋಷಿಯಿದ್ದ; ಸಂತನಿದ್ದ; ದಾಸನಿದ್ದ; ಸೇವಕನಿದ್ದ; ಪ್ರೇಮಿಯಿದ್ದ; ರಾಜನೂ ಇದ್ದ ! ಸತ್ಯ, ಜ್ಞಾನ, ಪ್ರೇಮ, ಶಕ್ತಿ, ನ್ಯಾಯ, ಪರೇಂಗಿತಜ್ಞತೆ, ಮಾರ್ದವತೆಯೂ ಅವರಲ್ಲಿತ್ತು ! ಅಧ್ಯಾತ್ಮಪ್ರಸಾರದ ನಿರ್ವಹಣೆಗೆ ಪೂರಕವಾಗಬಲ್ಲ ಸುತರ್ಕಜ್ಞಾನವನ್ನು ರಾಮಕೃಷ್ಣರಷ್ಟು ಸಮರ್ಪಕವಾಗಿ ಪೋಷಿಸಿದವರು - ವೈಶ್ವಿಕವಾಗಿ ನೋಡಿದರೂ ಬಹುಶಃ ಇನ್ನೊಬ್ಬರು ಕಾಣಲಾರರು. ಮಂಕು ವ್ಯಾವಹಾರಿಕತೆಗಳ ಜೊತೆಜೊತೆಗೇ ಒಡನಾಡುತ್ತ, ತಪ್ಪುಒಪ್ಪುಗಳನ್ನು ಗ್ರಹಿಸಿ - ಸೋಸಿ, ಮಾನವಕುಲಕ್ಕೆ ಹಿತವಾದುದನ್ನು ಮಾತ್ರ ವಿತರಿಸುತ್ತ ಬಂದವರು - ರಾಮಕೃಷ್ಣರು. ಬುದ್ಧಿ ಹೃದಯಗಳ ಪ್ರಚಂಡ ಸಮನ್ವಯತೆಯನ್ನು ಸಾಧಿಸಿದ್ದ ರಾಮಕೃಷ್ಣರಂತಹ ಯೋಗಿಗಳು ಅಪೂರ್ವ !




ಅನನ್ಯ ಅನುಯಾಯಿಗಳು  

ಶ್ರೀ ರಾಮಕೃಷ್ಣರ ಸಾಧನೆಯ ಅಸಾಧಾರಣ ಫಲಗಳಲ್ಲಿ - ಅವರ ಸಿದ್ಧಾಂತ ಮತ್ತು ಉಪದೇಶಗಳನ್ನು ತಲೆಯಲ್ಲಿ ಹೊತ್ತು ಉದಾರವಾಗಿ ಹಂಚುತ್ತಿರುವ ಶಿಷ್ಯಕೋಟಿಯೇ ಬಹು ಅಮೂಲ್ಯವಾದುದು ಎನ್ನಬಹುದು. "ಜಗತ್ತಿನಲ್ಲಿರುವ ಎಲ್ಲ ಮತಧರ್ಮಗಳು ಪರಸ್ಪರ ವಿರೋಧವಲ್ಲ. ಅವೆಲ್ಲವೂ ಒಂದೇ ಸನಾತನ ಧರ್ಮದ ಹಲವಾರು ಪ್ರತಿಬಿಂಬಗಳು..." ಎಂದ ಸ್ವಾಮಿ ವಿವೇಕಾನಂದರು - ಇದು ನನ್ನ ಗುರುದೇವನಿಂದ ನಾನು ಕಲಿತ ಮುಖ್ಯ ಭಾವನೆ... ಎಂದೂ ಅನಂತರ ಸ್ಮರಿಸಿಕೊಂಡಿದ್ದರು. ಶ್ರೀ ರಾಮಕೃಷ್ಣರು ಅಧ್ಯಾತ್ಮ ಚಿಂತಕರಲ್ಲಿ ಸಹಿಷ್ಣುತೆಯನ್ನು ಊಡಿಸಿದ ಬಗೆಯಿದು. ಪರಮಹಂಸರು ಬಹಳ ಎಚ್ಚರಿಕೆಯಿಂದ ಆಯ್ದುಕೊಂಡಿದ್ದ ಸನ್ಯಾಸೀ ಶಿಷ್ಯರ ಸಂಖ್ಯೆಯು ಅಂದು ಬೆರಳೆಣಿಕೆಯಷ್ಟಿದ್ದರೂ ಶ್ರೀ ರಾಮಕೃಷ್ಣರು ಆಗಲೇ ಅಪಾರ ಗೃಹಸ್ಥ ಶಿಷ್ಯರನ್ನೂ ಗಳಿಸಿಕೊಂಡದ್ದು ಅವರ ಸಾಮಾಜಿಕ ಕಳಕಳಿಯ ದ್ಯೋತಕ. ವೇದವ್ಯಾಸರ ಮಹಾಭಾರತವನ್ನು ತಾನು ಬರೆದು ಸಮಸ್ತರಿಗೆ ವ್ಯಾಸದರ್ಶನವನ್ನು ಮಾಡಿಸಿದ ಗಣಪತಿಯಂತೆ - ಶ್ರೀ ರಾಮಕೃಷ್ಣರ ಮಾತುಗಳನ್ನು ಯಥಾವತ್ ದಾಖಲಿಸಿದ ಮಹೇಂದ್ರನಾಥ ಗುಪ್ತ ("ಮ" ಎಂಬುದು ಅವರ ಗುಪ್ತನಾಮ; ಮಾಸ್ಟರ್ ಮಹಾಶಯ ಎಂಬುದು ಪರಿಚಿತರ ನೆಚ್ಚಿನ ನಾಮ) ಎಂಬ ಅವರ ಗೃಹಸ್ಥ ಶಿಷ್ಯನು "ಶ್ರೀ ರಾಮಕೃಷ್ಣ ವಚನವೇದ"ವನ್ನು ದಾಖಲಿಸಿ, ತನ್ಮೂಲಕ ಸಮಸ್ತ ಲೋಕಕ್ಕೆ ರಾಮಕೃಷ್ಣ ದರ್ಶನವನ್ನು ಮಾಡಿಸಿ "ವಚನ ವೇದವ್ಯಾಸ" ಎಂದೇ ಖ್ಯಾತರಾದವರು. "ಶ್ರೀ ರಾಮಕೃಷ್ಣ ವಚನವೇದ" (ಮೂಲ ಬಂಗಾಳಿ - ಕಥಾಮೃತ) ಎಂಬ ಹೆಸರಿನಿಂದ ಕನ್ನಡದಲ್ಲಿಯೂ ಪ್ರಖ್ಯಾತವಾಗಿರುವ ಮಾಸ್ಟರ್ ಜೀಯವರ ಈ ಹೊತ್ತಗೆಗಳು ಶ್ರೀ ರಾಮಕೃಷ್ಣರ ವಿರಾಟ್ ದರ್ಶನವನ್ನು ಮಾಡಿಸುತ್ತವೆ; ಶ್ರೀ ರಾಮಕೃಷ್ಣರನ್ನು ಸಜೀವವಾಗಿ - ಯಥಾವತ್ ನಮ್ಮ ಮುಂದಿರಿಸಿವೆ.
  

ಈ ಮಾಸ್ಟರ್ ಮಹಾಶಯರು ಶ್ರೀ ರಾಮಕೃಷ್ಣರಿಗಾಗಿ ವರ್ಷಕ್ಕೊಮ್ಮೆ ಉಡುವ ಪಂಚೆಗಳನ್ನೂ ಒದಗಿಸಿದ ದಾಖಲೆಯಿದೆ. ಒಮ್ಮೆ ಅವರು ಮೂರು ಪಂಚೆಗಳನ್ನು ತಂದಾಗ "ನನ್ನ ಉಪಯೋಗಕ್ಕೆ ಎರಡೇ ಸಾಕು.." ಎನ್ನುತ್ತ ಅದರಲ್ಲಿ ಒಂದನ್ನು ರಾಮಕೃಷ್ಣರು ಹಿಂದಿರುಗಿಸಿದ್ದೂ ಇದೆ ! ಜತೆಜತೆಗೇ ಯಾವುದೇ ಸದ್ದಿಲ್ಲದೆ ಮಾತೆ ಶಾರದಾದೇವಿಯವರ ಜೀವನೋಪಾಯಕ್ಕಾಗಿ ಆರ್ಥಿಕ ಬೆಂಬಲವನ್ನು ನೀಡುತ್ತಲೇ ಇದ್ದವರು - ಮಾಸ್ಟರ್ ಮಹಾಶಯರು. ಶ್ರೀ ರಾಮಕೃಷ್ಣರನ್ನು ಕುರಿತು ಮಾಸ್ಟರ್ ಜೀ ಬರೆದ  ಕಥಾಮೃತ ಎಂಬ ಪುಸ್ತಕದ ಮಾರಾಟದಿಂದ ಅನಂತರ ಅವರು ಸಾಕಷ್ಟು ಹಣವನ್ನೂ ಸಂಪಾದಿಸಿದ್ದರು. ಮೊದಮೊದಲು ತನ್ನ ಮಾಸ್ಟರಿಕೆಯ ಸಂಬಳದಿಂದ ಮಾತೆಯವರಿಗೆ ತಿಂಗಳಿಗೆ 2 ರೂಪಾಯಿ ಕೊಡುತ್ತಿದ್ದ ಅವರು ಬರಬರುತ್ತ 10 - 20  ರೂಪಾಯಿಗಳನ್ನು ಕೊಡುತ್ತ ಬಂದಿದ್ದರು. ಮಾತೆಯವರು ತಮ್ಮ ಹುಟ್ಟಿದೂರು ಜಯರಾಂಬಾಟಿಯಲ್ಲಿ ಮನೆ ಕಟ್ಟಲು ತೊಡಗಿದಾಗ 1000 ರೂಪಾಯಿ ಒದಗಿಸಿದ್ದರು; ಮೇಲ್ಖರ್ಚಿಗೂ ತಪ್ಪದೆ ಹಣ ಒದಗಿಸುತ್ತಿದ್ದರು. ಹೀಗೆ ತನ್ನ ಗುರುಪತ್ನಿಯ ಅಗತ್ಯವನ್ನೂ ಅರ್ಥೈಸಿಕೊಂಡು ನಿಸ್ವಾರ್ಥದಿಂದ ಬೆಂಬಲಿಸಿದ ಗೃಹಸ್ಥ ಶಿಷ್ಯ - ಮಹೇಂದ್ರನಾಥ ಗುಪ್ತ ಅವರು. ಮುಂದೊಮ್ಮೆ ಈ ಎಲ್ಲ ಘಟನೆಗಳನ್ನೂ ಮೆಲುಕುಹಾಕುತ್ತ, ಮಾಸ್ಟರ್ ಜೀಯವರನ್ನು ಶ್ರೀಮಾತೆಯವರೇ ಹೃದಯದುಂಬಿ ಸ್ಮರಿಸಿಕೊಂಡದ್ದೂ ಇದೆ. ಋಣೀಭಾವವೂ ದೈವೀಕ ಗುಣ.

ಅಸಾಮಾನ್ಯ ಶ್ರೀಸಾಮಾನ್ಯ 

ಶ್ರೀ ರಾಮಕೃಷ್ಣರು ಜೀವಿತಾವಧಿಯಲ್ಲಿ ದೊಡ್ಡ ದೊಡ್ಡ ಉಪನ್ಯಾಸಗಳನ್ನು ನೀಡಿದವರಲ್ಲ. ಸುದೀರ್ಘ ಪ್ರವಚನಗಳನ್ನೂ ನೀಡಲಿಲ್ಲ. ಬಿರುದುಬಾವಲಿಗಳಿಗಾಗಿ ಅಡ್ಡಾಡಿದವರಲ್ಲ. ಶುದ್ಧ ಭಕ್ತಿಯನ್ನು ಉಣ್ಣುತ್ತ, ಭಕ್ತಿಯ ಅಸಾಮಾನ್ಯ ಸ್ತರದಲ್ಲಿ ಸಂಚರಿಸುತ್ತ - ಶುದ್ಧ ಭಕ್ತಿಯನ್ನು ಹಂಚುತ್ತ ನಡೆದವರು ಶ್ರೀ ರಾಮಕೃಷ್ಣರು. ಕೊಲ್ಕತ್ತದ ದಕ್ಷಿಣೇಶ್ವರದಲ್ಲಿಯೇ ಸ್ಥಿತರಾಗಿದ್ದುಕೊಂಡು ತಮ್ಮ ಅಂತಃಶಕ್ತಿಯಿಂದಲೇ ಅಸಂಖ್ಯಾತ ಭಕ್ತರನ್ನು ತಮ್ಮತ್ತ ಸೂಜಿಗಲ್ಲಿನಂತೆ ಸೆಳೆದವರು - ಶ್ರೀ ರಾಮಕೃಷ್ಣರು. ಅವರು ತಮ್ಮ ಸಂಪರ್ಕಕ್ಕೆ ಬಂದ ಎಲ್ಲರೊಂದಿಗೂ ಮುಕ್ತವಾಗಿ ಸಂಭಾಷಿಸಿದರು. ಮಾಸಕ್ಕೊಮ್ಮೆಯೋ ಪಕ್ಷಕ್ಕೊಮ್ಮೆಯೋ ದಕ್ಷಿಣೇಶ್ವರದಿಂದ ಕಲ್ಕತ್ತಕ್ಕೆ ಹೋಗಿ ಅಂದಿನ ಆಧುನಿಕ ವಿದ್ವಾಂಸರು ಮತ್ತು ತಮ್ಮ ಶಿಷ್ಯಬಳಗವನ್ನು ಖುದ್ದಾಗಿ ಭೇಟಿ ಮಾಡಿ ಅವರು ಸಂಭಾಷಿಸುತ್ತಿದ್ದುದೂ ಇತ್ತು; ಅಲ್ಲಿ ಕೆಲವು ಇಂಗ್ಲಿಷ್ ಶಬ್ದಗಳನ್ನು ಕಲಿತು ಸೂಕ್ತವಾಗಿ ಪ್ರಯೋಗಿಸುತ್ತಿದ್ದುದೂ ಇತ್ತು ! ಹೊಸ ಚಿಂತನೆಗಳಿಗೆ ಮುಕ್ತವಾಗಿ ತೆರೆದುಕೊಂಡೇ ವಿನಮ್ರವಾಗಿ ತಮ್ಮ ವಿಚಾರಗಳನ್ನು ಅವರು ಮಂಡಿಸುತ್ತಿದ್ದ ರೀತಿಯೇ ಅನನ್ಯ. ಅಧ್ಯಾತ್ಮದ ಭಾವತಂತುವು ಕಡಿಯದಂತೆ ಧರ್ಮಪಿಪಾಸುಗಳೊಂದಿಗೆ ಅವರು ನಡೆಸಿದ್ದ ಅಂತಹ ಹಲವಾರು ಸಂಪರ್ಕ ಯಾತ್ರೆಯು ಜನಜಾಗ್ರತಿಯನ್ನು ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ತಮ್ಮ ಕ್ಷಣಮಾತ್ರದ ಸಾಂಗತ್ಯದಿಂದಲೇ ಅವರು ಹಲವಾರು ಪವಿತ್ರಾತ್ಮರನ್ನು ತಮ್ಮತ್ತ ಆಕರ್ಷಿಸುತ್ತಿದ್ದರು. ನೊಂದವರಿಗೆ ಸಾಂತ್ವನ ನೀಡಿ ದಾರಿ ತೋರಿಸುತ್ತ ಮೂಢರನ್ನು ಮೃದುವಾಗಿ ಗದರಿಸುತ್ತ ಸಂಸಾರಿಗಳಿಗೂ ಬದುಕಲು ಕಲಿಸಿದ ಅವಧೂತ - ಶ್ರೀ ರಾಮಕೃಷ್ಣ ಪರಮಹಂಸರು. ಪ್ರಾಪಂಚಿಕತೆಯ ಕೆಸರನ್ನು ಮೈತುಂಬ ಬಳಿದುಕೊಂಡಿದ್ದ ತಮ್ಮದೇ ಗೃಹಸ್ಥ ಬಳಗದಲ್ಲಿ - ಕೆಸರು ತೊಳೆದುಕೊಳ್ಳುವ ಎಚ್ಚರವನ್ನು ಮೂಡಿಸಿ - ದಿಕ್ಕೆಂಟ್ಟಂತೆ ಚದುರಿಹೋಗಿದ್ದ ಅಂದಿನ ಸಮಾಜದಲ್ಲಿ ಹೊಸ ರಂಗು ತುಂಬಿದ  ಶ್ರೇಯವು ರಾಮಕೃಷ್ಣರಿಗೆ ಸಲ್ಲುತ್ತದೆ. ಮಹಾನ್ ವಿಜ್ಞಾನಿಯೊಬ್ಬನಿಗೆ ಒಂದನೇ ತರಗತಿಯ ಪಾಠವನ್ನು ನಿರ್ವಹಿಸುವಷ್ಟೇ ಕಠಿಣವೆನ್ನಿಸುವ ಸಾಧನೆಯಿದು. ಸಂಕ್ಷೇಪವಾಗಿ ಹೇಳುವುದಾದರೆ, ವಜ್ರದಷ್ಟು ಕಠೋರವೂ ಹೂವಿನಷ್ಟು ಮೃದುವೂ ಆಗುತ್ತ - ಪಾತ್ರೆಯ ಶಕ್ತ್ಯಾನುಸಾರದ ಪಾತ್ರವಾಗುತ್ತ - ಕಲ್ಕತ್ತೆಯಲ್ಲಿ ಆಧ್ಯಾತ್ಮಿಕ ಕ್ರಾಂತಿಯ ಹರಿಕಾರರಾದ ಶಕ್ತಿವಿಶೇಷತೆಯೇ ಶ್ರೀ ರಾಮಕೃಷ್ಣ. ಅನಂತರ ಈ ಸುಗಂಧವನ್ನು ವಿಶ್ವವ್ಯಾಪಿಗೊಳಿಸಿದ ಶ್ರೇಯವು - ಶ್ರೀ ರಾಮಕೃಷ್ಣರ ಕೃಪೆಗೆ ಪಾತ್ರರಾಗಿದ್ದ ಸ್ವಾಮಿ ವಿವೇಕಾನಂದರು ಮತ್ತು ಅವರಿಗೆ ಹೆಗಲೆಣೆಯಾಗಿ ಶ್ರಮಿಸಿದ ಸೋದರ ಸನ್ಯಾಸಿಗಳಿಗೆ ಸಲ್ಲುತ್ತದೆ.

ದಕ್ಷಿಣೇಶ್ವರದ ಯೋಗೀಂದ್ರ

ಶ್ರೀ ರಾಮಕೃಷ್ಣರಿಂದಲೇ -  ತನ್ನ ಮಾನಸ ಪುತ್ರ ಎಂದು ಪ್ರೀತಿಸಲ್ಪಟ್ಟ (ಬ್ರಹ್ಮಾನಂದರು) ರಾಖಾಲ ಮತ್ತು - ಶಿವಸ್ವರೂಪಿ ಎಂದು ಕೊಂಡಾಡಲ್ಪಟ್ಟ ನರೇಂದ್ರ ಮುಂತಾದ ಹುಡುಗರು ಋಷಿಸದೃಶರಾದ ಶ್ರೀ ರಾಮಕೃಷ್ಣರನ್ನು ಭೇಟಿಯಾದ ಆರಂಭಿಕ ಅವಧಿಯಲ್ಲಿಯೇ - ರಾಮಕೃಷ್ಣರು ಪೂರ್ಣ ವಿಕಸನಗೊಂಡು ಭಾವ ವಿಕಾಸದ ಗುರುತ್ವದಲ್ಲಿದ್ದರು. ಸಾಕ್ಷಿ ಕೇಳುವ ಚತುರರಿಗೆ ಅವರು ನಿಂತಲ್ಲಿಯೇ ಸಾಕ್ಷಿ ನೀಡುವ ಹಂತದಲ್ಲಿದ್ದರು. ಈ ಹಂತದಲ್ಲಿ, "ಗುರುವಿಗೆ ತಕ್ಕ ಶಿಷ್ಯರು" ಮತ್ತು "ಶಿಷ್ಯರಿಗೆ ತಕ್ಕ ಗುರು" ಎಂಬ ಯುಕ್ತ ಸಮಾಗಮವಾದಾಗ ವಿಸ್ಮಯಗಳ ಸರಮಾಲೆಯೇ ಸಂಭವಿಸುವಂತಾಯಿತು. 18 - 19 ನೇ ಶತಮಾನವು ಅಂತಹ ಅನೇಕ ವಿಸ್ಮಯಗಳಿಗೆ ಸಾಕ್ಷಿಯಾಯಿತು. ಸಾವಿರಾರು ಕಾಟುಗಿಡಗಳನ್ನು ನಿವಾರಿಸಲು ಒಂದೇ ಒಂದು ಹರಿತವಾದ ಕತ್ತಿಯು ಸಾಕಾಗುವಂತೆ - ರಾಮಕೃಷ್ಣರೊಬ್ಬರೇ ತಮ್ಮ ದರ್ಶನದ ಅನಾವರಣದ ಕಾರ್ಯಕ್ಕಾಗಿ ರಂಗಪ್ರವೇಶ ಮಾಡಿ ಭಕ್ತ ಸಮಾಜವನ್ನು ನಿರ್ಮಾಣ ಮಾಡಿದರು. ತಮ್ಮ ಸುತ್ತಲಿನ ಹೊಟ್ಟನ್ನು ತೂರಿ, ಗಟ್ಟಿಕಾಳುಗಳನ್ನು ಮಾತ್ರ ಅಳೆದು ತೂಗಿ ಸ್ವೀಕರಿಸಿ ನೀರು ಗೊಬ್ಬರವೆರೆದು ಪೋಷಿಸಿದ್ದರು; ತನ್ಮೂಲಕ ಈಶ್ವರಕೋಟಿ ಎಂದು ಭಾವಿಸಿದ್ದ ತಮ್ಮ ಶಿಷ್ಯರುಗಳನ್ನು ರೂಪಿಸಿದರು; ಅವರಿಗೆ ಸಶಕ್ತ ಮಾರ್ಗದರ್ಶನ ಮಾಡಿದರು. ಹೀಗೆ ಪೂರ್ವ ಸಂಸ್ಕಾರವುಳ್ಳ ಮತ್ತು ಜ್ಞಾನವನ್ನು ಗ್ರಹಿಸಿ ಅನುಸರಿಸಬಲ್ಲ ಹದಿನಾರು ಅಪರಂಜಿಗಳನ್ನು ಶ್ರೀ ರಾಮಕೃಷ್ಣರು ತಮ್ಮ ಶಿಷ್ಯರನ್ನಾಗಿ ಆಯ್ದುಕೊಂಡು - ತಾವೇ ಕೈಹಿಡಿದು, ಅರಿವನ್ನು ಹೊಂದುವ ಮಾರ್ಗದಲ್ಲಿ ಅವರನ್ನು ಮುನ್ನಡೆಸುತ್ತ, ವೈಚಾರಿಕ ಕೋಡುಗಲ್ಲುಗಳನ್ನು ಕೆತ್ತಿ ಶಿಲ್ಪವಾಗಿಸಿ, ತನ್ಮೂಲಕ ಶ್ರೀ ರಾಮಕೃಷ್ಣ ಚೇತನವನ್ನು ವಿಶ್ವವ್ಯಾಪಿಯಾಗಿಸುವ ಓನಾಮವಾದಂತಾಯಿತು. ವಿಶ್ವಕಲ್ಯಾಣದ ದೀಕ್ಷೆಹೊತ್ತ ಸಮಾಜಮುಖೀ ಅಧ್ಯಾತ್ಮ ಪಿಪಾಸುಗಳಿಗೆ ಮತ್ತು ಆತ್ಮೋದ್ಧಾರದತ್ತಲೇ ದೃಷ್ಟಿ ನೆಟ್ಟಿದ್ದ ಬ್ರಹ್ಮಪಿಪಾಸುಗಳಿಗೆಲ್ಲ ಪರಮಯೋಗೀಂದ್ರರ ದಕ್ಷಿಣೇಶ್ವರವು ಅಂದು ಆಶ್ರಯತಾಣವಾಯಿತು; ಸಮೃದ್ಧ ಆಧ್ಯಾತ್ಮಿಕ ಹೊಲವಾಯಿತು.

ಮುಂದೇನು ?

ಸ್ಥಿತಿವಂತ ಕುಟುಂಬಗಳಿಂದ ಬಂದಿದ್ದ ಅನೇಕ ವಿದ್ಯಾವಂತ ತರುಣರು ರಾಮಕೃಷ್ಣರ ಅದ್ಭುತ ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿ, ಅವರ ಆಧ್ಯಾತ್ಮಿಕ ಸಾಧನೆಗಳಿಂದ ಪರವಶರಾಗಿ - ಅವರನ್ನು ಅದಾಗಲೇ ಅನುಸರಿಸತೊಡಗಿದ್ದರು. ತಮ್ಮ ಮನೆಮಠ ಬಿಟ್ಟು ಅವರೊಂದಿಗೇ ವಾಸ್ತವ್ಯವಿದ್ದು ಬೆಳಿಗ್ಗೆ 3 ಗಂಟೆಗೇ ಎದ್ದು ಸ್ನಾನ ಮಾಡಿ, ಧ್ಯಾನದಲ್ಲಿ ಮೈಮರೆಯುತ್ತಿದ್ದರು. ಕೆಲವರು ರಾತ್ರಿಯಿಡೀ ಧ್ಯಾನಾವಸ್ಥೆಯಲ್ಲಿದ್ದು ಹಗಲಿನಲ್ಲಿ ವಿರಮಿಸುತ್ತಿದ್ದರು. ಊಟತಿಂಡಿ ವಸ್ತ್ರಭೂಷಣ ಮುಂತಾದ ಅದುವರೆಗೆ ರೂಢಿಗತವಾಗಿದ್ದ ತಮ್ಮ ಸಮಸ್ತ ಜೀವನಕ್ರಮವನ್ನೇ ಸರಳಗೊಳಿಸಿಕೊಂಡು ಧೀಶಕ್ತಿಯನ್ನು ವೃದ್ಧಿಸಿಕೊಳ್ಳತೊಡಗಿದ್ದರು; ಚಿತ್ತೇಕಾಗ್ರತೆಯ ಮೂಲಕ ಶಕ್ತಿ ಸಂಚಯದಲ್ಲಿ ತೊಡಗಿರುತ್ತಿದ್ದರು. ಶ್ರೀ ರಾಮಕೃಷ್ಣರ ನಿರ್ಯಾಣಾನಂತರ ಈ ಗುರುಭಾವದ ನಿರಂತರ ಬೆಸುಗೆಯನ್ನು ಉಳಿಸಿಕೊಂಡು ಲೋಕಹಿತಕ್ಕೆ ಪೂರಕವಾಗುವಂತೆ ಅದನ್ನು ಬೆಳೆಸಿಕೊಳ್ಳಲು ನೆರವಾದವರು - ಸಿಡಿಲಮರಿ ನರೇಂದ್ರ. ತಮ್ಮ ಗುರುಬಂಧುಗಳ ಸ್ವಭಾವ, ಸಾಮರ್ಥ್ಯಗಳನ್ನೆಲ್ಲ ಅರಿತಿದ್ದ ನರೇಂದ್ರನು - ರಾಮಕೃಷ್ಣರ ನೆಚ್ಚಿನ ಭಕ್ತಿಗೂಡು ಚದುರಿಹೋಗದಂತೆ ಕಾಯ್ದುಕೊಂಡು, ರಾಮಕೃಷ್ಣಭಾವವನ್ನು ಶಾಶ್ವತಗೊಳಿಸಲೋಸುಗ ಅದೊಂದು ಸಾಂಘಿಕಶಕ್ತಿಯಾಗಿ ತಲೆಯೆತ್ತುವಂತೆ ಶ್ರಮಿಸಿದ್ದರು. ತಮ್ಮ ರುಚಿ ಮತ್ತು ಉದ್ದೇಶದ ಸಾಫಲ್ಯಕ್ಕಾಗಿ ಏಕಚಿತ್ತದಿಂದ ತತ್ಪರರಾಗಲು ಶಿಸ್ತುಬದ್ಧವಾದ ಒಂದು ಚೌಕಟ್ಟಿನ ಅಗತ್ಯವನ್ನು ಮನಗಂಡಿದ್ದ ಈ ಯುವಸಾಧಕರು 1887 ರಲ್ಲಿ ವಿಧ್ಯುಕ್ತವಾಗಿ ಸನ್ಯಾಸವನ್ನು ಸ್ವೀಕರಿಸಿದರು; ಮನೆ ಕುಟುಂಬ ಸಾಂಸಾರಿಕ ತಾಪತ್ರಯಗಳಿಂದ ಬಿಡುಗಡೆ ಕಂಡುಕೊಂಡರು. ಶ್ರೀ ರಾಮಕೃಷ್ಣರ ಮಹಾಸಮಾಧಿಯ ನಂತರ - "ಗುರುಗಳ ನಂತರ ಮುಂದೇನು ?" ಎಂದು ತಮ್ಮನ್ನು ಆಗಾಗ ಕೆಣಕುತ್ತಿದ್ದ ಬೃಹದಾಕಾರದ ಪ್ರಶ್ನೆಗೆ - 1886 ನೇ ಇಸವಿಯ ಅಗೋಸ್ತ್ 16 ರಂದು ಶ್ರೀ ರಾಮಕೃಷ್ಣರ ಮಹಾಸಮಾಧಿಯಾದ 5 ತಿಂಗಳ ನಂತರ... ಅವರ ಶಿಷ್ಯಗಡಣವು ಹೀಗೆ ಸನ್ಯಾಸದ ಶರಣುಹೋಗಿ, ಪರಿಣಾಮಕಾರಿಯಾದ ಉತ್ತರ ಕಂಡುಕೊಂಡಿತು.

ಅಂದಿನ ಸ್ವದೇಶೀಯರ ನಿರ್ವೀರ್ಯತೆ, ಆತ್ಮಶಕ್ತಿ ಕುಂದಿ ನರಳುತ್ತಿದ್ದ ಸನ್ನಿವೇಶಗಳನ್ನು ಕಣ್ಣಾರೆ ಕಂಡಿದ್ದ ಈ ಯುವಕರು ಸಮಾಜದಲ್ಲಿ ಹೊಸಹುರುಪನ್ನು ತುಂಬುವ ಸಂಕಲ್ಪ ಮಾಡಿಕೊಂಡರು. ಸಮಾಜವು ದಯನೀಯ ಸ್ಥಿತಿಯಲ್ಲಿದ್ದರೂ ಅಧ್ಯಾತ್ಮದ ಮಿಡಿತವು ಭಾರತದ ನೆಲದಲ್ಲಿ ಜೀವಂತವಾಗಿದ್ದುದನ್ನು ಗುರುತಿಸಿದ್ದ ಗುರುಸೋದರರು, ಅದೇ ಅಧ್ಯಾತ್ಮಕ್ಕೆ ಪ್ರಾಣಶಕ್ತಿಯನ್ನು ತುಂಬುವ ಕಾರ್ಯದಲ್ಲಿ ತತ್ಪರರಾಗಲು ನಿಶ್ಚಯಿಸಿಕೊಂಡರು. ತಪ್ತಚೇತನಗಳನ್ನು ತೃಪ್ತಚೇತನರಾಗಿಸಲೋಸುಗ ಅಧ್ಯಾತ್ಮದ ದೀವಿಗೆಯನ್ನು ಎತ್ತಿ ಹಿಡಿದರು. ಕ್ರಿಯಾಶೀಲರಾಗಲು ಕರೆಕೊಟ್ಟರು. ಜಗತ್ತಿನ ಹಿತವನ್ನು ಮತ್ತು ಆತ್ಮೋದ್ಧಾರವನ್ನು ಜೊತೆಯಾಗಿ ಸರಿದೂಗಿಸಿಕೊಂಡು ನಡೆಯುವ ವಿಶಾಲ ಚಿತ್ರಪಟವನ್ನು ಮುಂದಿಟ್ಟುಕೊಂಡು ತಮ್ಮ ಕಾರ್ಯಕ್ಷೇತ್ರವನ್ನು ಗುರುತಿಸಿಕೊಂಡರು. ಮೊದಲು ರಾಮಕೃಷ್ಣರ ನರೇಂದ್ರನಾಗಿ - ಅನಂತರ ವಿಶ್ವಕ್ಕೇ ವಿವೇಕಾನಂದರಾದ ಸ್ವಾಮೀಜಿಯವರು ತಮ್ಮ ಧ್ಯೇಯೋದ್ದೇಶಗಳ ನೀಲಿನಕ್ಷೆಯನ್ನು ಸ್ವತಃ ಸಿದ್ಧಪಡಿಸಿ ತಮ್ಮ ಸಂಘಕ್ಕೆ ಭದ್ರವಾದ ತಳಪಾಯವನ್ನು ಒದಗಿಸಿದ್ದರೂ ಅವರು ಅಲ್ಪಾಯುಷಿಗಳಾದರು; ಅವರು ಸಕ್ರಿಯರಾಗಿ ಗುಡುಗತೊಡಗಿದ ಕೇವಲ 16 ವರ್ಷಗಳ ಮಿತ ಅವಧಿಯಲ್ಲೇ ವಿವೇಕಾನಂದರ ಆಯುಷ್ಯ ಮುಗಿದಿತ್ತು. ಅವರ ಕಾಲಾನಂತರ, ವಿವೇಕಾನಂದರು ತೋರಿಸಿದ ದಾರಿಯಲ್ಲೇ ನಡೆದ ರಾಜಾ ಮಹಾರಾಜರು (ಪೂರ್ವದಲ್ಲಿ ರಾಖಾಲ; ಅನಂತರ ಸ್ವಾಮಿ ಬ್ರಹ್ಮಾನಂದರು) ಮತ್ತು ಸ್ವಾಮಿ ಶಾರದಾನಂದರು (ಶರಶ್ಚಂದ್ರ ಚಕ್ರವರ್ತಿ) ತಮ್ಮ ಸೋದರ ಸನ್ಯಾಸಿಗಳನ್ನು ಜೊತೆಗಿರಿಸಿಕೊಂಡು ವಿವೇಕಾನಂದರ ಆಶಯಗಳಿಗೆ ಚ್ಯುತಿ ಬರದಂತೆ ಶ್ರೀ ರಾಮಕೃಷ್ಣರಿಗೆ ದೃಢವಾದ ಸಾಂಸ್ಥಿಕ ರೂಪವನ್ನು ಕೊಟ್ಟ ವಿಸ್ಮಯಕಾರೀ ಪರಿಶ್ರಮವೂ ಇಲ್ಲಿ ಗಮನಾರ್ಹವಾದುದು.

ಶ್ರೀ ರಾಮಕೃಷ್ಣ  ಮೂಲಸಾಮ್ರಾಜ್ಯ

ಶ್ರೀ ಶಂಕರಾಚಾರ್ಯರು ರೂಪಿಸಿದ ದಶನಾಮೀ ಪದ್ಧತಿಯಂತೆ ಮೊದಲು ಸನ್ಯಾಸ ಸ್ವೀಕರಿಸಿದವರು 8 ಮಂದಿ.


       ನರೇಂದ್ರ - ಸ್ವಾಮಿ ವಿವೇಕಾನಂದ.
        ರಾಖಾಲ - ಸ್ವಾಮಿ ಬ್ರಹ್ಮಾನಂದ
   ಬಾಬುರಾಮ - ಸ್ವಾಮಿ ಪ್ರೇಮಾನಂದ
     ಶಶಿಭೂಷಣ - ಸ್ವಾಮಿ ರಾಮಕೃಷ್ಣಾನಂದ
       ಶರಶ್ಚಂದ್ರ - ಸ್ವಾಮಿ ಶಾರದಾನಂದ
        ನಿರಂಜನ - ಸ್ವಾಮಿ ನಿರಂಜನಾನಂದ
  ಕಾಳೀಪ್ರಸಾದ - ಸ್ವಾಮಿ ಅಭೇದಾನಂದ
ಶಾರದಾಪ್ರಸನ್ನ - ಸ್ವಾಮಿ ತ್ರಿಗುಣಾತೀತಾನಂದ

ಈ ಸಂದರ್ಭದಲ್ಲಿ ಮಠದಲ್ಲಿ ವಾಸ್ತವ್ಯವಿಲ್ಲದ  ಉಳಿದ 8 ಮಂದಿ ಶಿಷ್ಯರು ಅನಂತರ ಒಬ್ಬೊಬ್ಬರಾಗಿ ವಿಧಿಪೂರ್ವಕವಾಗಿ ಸನ್ಯಾಸ ದೀಕ್ಷೆ ಪಡೆದುಕೊಂಡರು.
              ತಾರಕ - ಸ್ವಾಮಿ ಶಿವಾನಂದ
           ಹರಿನಾಥ - ಸ್ವಾಮಿ ತುರೀಯಾನಂದ
               ಲಾಟು - ಸ್ವಾಮಿ ಅದ್ಭುತಾನಂದ
       ಯೋಗೀಂದ್ರ - ಸ್ವಾಮಿ ಯೋಗಾನಂದ
           ಸುಬೋಧ - ಸ್ವಾಮಿ ಸುಬೋಧಾನಂದ
ಹಿರಿಯ ಗೋಪಾಲ - ಸ್ವಾಮಿ ಅದ್ವೈತಾನಂದ
           ಗಂಗಾಧರ - ಸ್ವಾಮಿ ಅಖಂಡಾನಂದ
           ಹರಿಪ್ರಸನ್ನ - ಸ್ವಾಮಿ ವಿಜ್ಞಾನಾನಂದ
ಇವರೆಲ್ಲರೂ ಆರಂಭದಲ್ಲಿ ತಾವು ವಾಸ್ತವ್ಯವಿದ್ದ ಬಾರಾನಾಗೋರಿನ ಪುಟ್ಟ ಮನೆಯನ್ನೇ "ಮಠ"ವಾಗಿಸಿಕೊಂಡಿದ್ದರೂ ತದನಂತರ, ತಮ್ಮ ವ್ಯಕ್ತಿತ್ವದ ಪೂರ್ಣ ವಿಕಾಸಕ್ಕಾಗಿ ಮನೆಮಠದ ಮೋಹವನ್ನು ಕೊಡವಿಕೊಳ್ಳಲೋಸುಗವೋ ಎಂಬಂತೆ  ಲೋಕ ಸಂಚಾರದ ನಿರ್ಧಾರ ಮಾಡಿದರು. ಇಬ್ಬಿಬ್ಬರು ಜೊತೆಯಾಗಿ ಮಠದಿಂದ ಹೊರಟರು. ಭಾರತದ ನಾಲ್ದೆಸೆಗಳಲ್ಲಿಯೂ ಸುತ್ತಾಡಿದರು. ಕರತಲ ಭಿಕ್ಷೆ, ತರುತಲ ವಾಸದ ಈ ಪರಿವ್ರಾಜಕ ವೃತ್ತಿಯಿಂದ ಆಗಾಗ ಅನಾರೋಗ್ಯದಿಂದಲೂ ಬಳಲಿದರು. ಈ ಭೂಮಿಯಲ್ಲಿ ಕಷ್ಟದ ಅರಿವಿಲ್ಲದೆ ಯಾರಿಗೂ ಸತ್ಯದ ಅರಿವಾಗದು. ಆದ್ದರಿಂದಲೇ ಈ ಶಿಷ್ಯ ಶಿರೋಮಣಿಗಳು ಬದುಕಿನ ಕಷ್ಟಕಾರ್ಪಣ್ಯಗಳ ಅಗ್ನಿಪರೀಕ್ಷೆಗೆ ತಮ್ಮನ್ನು ತಾವೇ ಒಡ್ಡಿಕೊಂಡು ಬದುಕಿನ ಸತ್ಯಮುಖದ ದರ್ಶನ ಮಾಡಿಕೊಂಡರು. ಕಷ್ಟಗಳ ಮೂಸೆಯಲ್ಲಿ ಇಚ್ಛಾಪೂರ್ವಕವಾಗಿ ಹಾದುಬಂದು ಪರಿಪಕ್ವ ವ್ಯಕ್ತಿತ್ವವನ್ನು ರೂಪಿಸಿಕೊಂಡರು.

ಆದರೆ - ಶ್ರೀ ರಾಮಕೃಷ್ಣಾನಂದರು ಮಾತ್ರ (ಶಶಿಭೂಷಣ) ಶ್ರೀ ರಾಮಕೃಷ್ಣರ ಪವಿತ್ರ ಅಸ್ಥಿಯನ್ನು ಕಾಪಾಡುತ್ತ ಪೂಜೆಕೈಂಕರ್ಯಗಳನ್ನು ಅನೂಚಾನವಾಗಿ ನಡೆಸುತ್ತ ಬಾರಾನಾಗೋರಿನ ಮಠವನ್ನು ಬಿಟ್ಟು ಅಲುಗಿರಲಿಲ್ಲ. ಗರುಡಗಂಬದಂತೆ ಮಠದಲ್ಲೇ ಇದ್ದುಕೊಂಡು ತನ್ನ ಸಂಚಾರೀ ಸೋದರರ ಯೋಗಕ್ಷೇಮವನ್ನು ಪತ್ರಮುಖೇನ ತಿಳಿದುಕೊಳ್ಳುತ್ತ, ಇತರ ಸಂಚಾರೀ ಸೋದರಸನ್ಯಾಸಿಗಳಿಗೆ ಪರಸ್ಪರರ ದಿಕ್ಕುದೆಸೆಗಳನ್ನು ವರದಿಮಾಡುವಂತಹ ಭದ್ರ ಕೊಂಡಿಯಾಗಿ ಶ್ರೀ ರಾಮಕೃಷ್ಣಾನಂದರು ವಿಭಿನ್ನ ಪಾತ್ರ ವಹಿಸಿದ್ದರು. ಒಂದರ್ಥದಲ್ಲಿ - ಮನೆಯೊಂದನ್ನು ಕಟ್ಟಿ ಉಳಿಸುವಂತಹ "ತಾಯಿ"ಯ ಸಮನ್ವಯಭಾವದ ಪಾತ್ರವನ್ನು ಅಂದು - ರಾಮಕೃಷ್ಣಾನಂದರು ವಹಿಸಿದಂತೆ ತೋರುತ್ತದೆ. ಅಂದು ಯಾವುದೇ ಆರ್ಥಿಕ ಬಲವಿಲ್ಲದೆ ಭಾವ ಪೋಷಣೆಗೂ ದಿಕ್ಕಿಲ್ಲದೆ ಈ ಶಿಷ್ಯಗಡಣವು ಪಟ್ಟ ಬವಣೆಗಳಿಗೆ ಇತಿಮಿತಿಯಿರಲಿಲ್ಲ. ಆದರೆ - "ರಾಮಕೃಷ್ಣ ಭಾವ" ಎಂಬ ಅಂತಃಶಕ್ತಿಯು ಈ ತರುಣರ ಕೈಬಿಡಲಿಲ್ಲ. "ಗುರು ಮತ್ತು ಗುರಿ" ಎಂಬ ತತ್ಪರ ನಡಿಗೆಯು ಮಾತ್ರ ಸಂಕಲ್ಪಿತ ಯಶಸ್ಸನ್ನು ತೋರಿಸಬಲ್ಲದು ಎಂಬುದಕ್ಕೆ ಶ್ರೀ ರಾಮಕೃಷ್ಣ ಸಾಮ್ರಾಜ್ಯವೇ ಸಾಕ್ಷಿ.

ಹತಾಶ ನಿರಾಶ ಸಮುದಾಯಕ್ಕೂ ಅಧ್ಯಾತ್ಮದ ರಕ್ಷೆ ನೀಡುವಂತಹ ಪ್ರಾಯೋಗಿಕ ಸನ್ನಿವೇಶವನ್ನು ನಿರ್ಮಿಸಿ, "ಮನುಷ್ಯ ಜಾತಿ ತಾನೊಂದೆ ವಲಂ" ಎಂಬುದನ್ನು ಕ್ರಿಯಾನ್ವಯಗೊಳಿಸಿ, ಎಲ್ಲರ ಬದುಕನ್ನು ಎತ್ತರಿಸುವ ಕೆಲಸದಲ್ಲಿ ಅನೂಚಾನವಾಗಿ ತೊಡಗಿಕೊಂಡಿರುವುದು ರಾಮಕೃಷ್ಣ ವಲಯದ ವೈಶಿಷ್ಟ್ಯ.

ಭಕ್ತ - ಭಕ್ತಿ

ಭಕ್ತರಲ್ಲಿ ಹಲವು ಬಗೆಗಳಿವೆ. ಇದನ್ನು ಸ್ವಾರ್ಥಪೂರಿತ ಭಕ್ತಿ ಮತ್ತು ನಿಸ್ವಾರ್ಥ ಭಕ್ತಿ ಎಂದು ಸ್ಥೂಲವಾಗಿ ವಿಂಗಡಿಸಬಹುದು. ಏನನ್ನಾದರೂ ಕೊಟ್ಟಂತೆ ಮಾಡಿ, ಪ್ರತಿಯಾಗಿ ಪಡೆದುಕೊಳ್ಳುವ ಭಾವಭಕ್ತಿ ಮೂಲಗಳೆಲ್ಲವೂ ಸ್ವಾರ್ಥಪೂರಿತವೆನ್ನಿಸುತ್ತವೆ. ಅಧ್ಯಾತ್ಮದ ಹಾದಿಯಲ್ಲಿ ಒಂದಿಷ್ಟೂ ಮುನ್ನಡೆಸಲಾಗದ ವ್ಯಾವಹಾರಿಕವಾದ ಭಕ್ತಿಭಾವವಿದು. ನಿಂತಲ್ಲೇ ನಿಲ್ಲುವ ನೀರಿನಂತೆ ಕಶ್ಮಲಗೊಳ್ಳುವ ಅಂತಹ ಯಾವುದೇ ವ್ಯಾವಹಾರಿಕತೆಯನ್ನು ತಾವಾಗಿಯೇ ಮಿತಗೊಳಿಸಿಕೊಳ್ಳುತ್ತ ಮುಗ್ಧ ಶರಣಾಗತ ಭಾವವನ್ನು ಆವಾಹಿಸಿಕೊಂಡಲ್ಲದೆ ಸಾರ್ಥಕ ಭಕ್ತಿಯು ಒಡಮೂಡದು. ನಿಸ್ವಾರ್ಥದಿಂದಲೇ ಸಾರ್ಥಕ್ಯ.

ನಿಸ್ವಾರ್ಥದ ಪ್ರತಿರೂಪ

ನಿಸ್ವಾರ್ಥ ಎಂಬ ಶಬ್ದದ ಪ್ರತಿರೂಪವೇ ಶ್ರೀಮಾತೆಯವರು. ಶಾರದಾದೇವಿಯವರು ಗೃಹಿಣಿಯಾಗಿಯೇ ತಮ್ಮ ಬಹುಪಾಲು ಆಯುಷ್ಯವನ್ನು ಕಳೆದವರು. ಪ್ರತೀದಿನವೂ ಧ್ಯಾನ ಪ್ರಾರ್ಥನೆಗಳು ಎಲ್ಲರಿಗೂ ಅವಶ್ಯಕ ಎಂದು ಅವರು ಪ್ರತಿಪಾದಿಸುತ್ತಿದ್ದರು. ಒಮ್ಮೆ ತಮ್ಮನ್ನು ಭೇಟಿಯಾಗಲು ಬಂದಿದ್ದ ಮಹಿಳೆಯರು ಮನೆಗೆ ಹೊರಟಾಗ "ನಿಮ್ಮ ಮಕ್ಕಳಿಗೆ ಧ್ಯಾನ ಪ್ರಾರ್ಥನೆ ಮಾಡುವಂತೆ ಪ್ರೇರೇಪಿಸಿ" ಎಂದಿದ್ದರು. ಅನಂತರ ಅಲ್ಲಿಂದ ಹೊರಟಿದ್ದ ಆ ಮಹಿಳೆಯರು ಸ್ವಲ್ಪ ದೂರದಲ್ಲಿ ನಿಂತು ಹರಟೆ ಹೊಡೆಯುತ್ತಿದ್ದುದನ್ನು ನೋಡಿದಾಗ "ಸಂಜೆಯೊಳಗೆ ಮನೆ ತಲುಪಿ ಪ್ರಾರ್ಥನೆಯಲ್ಲಿ ತೊಡಗಿಕೊಳ್ಳುವ ಬದಲು ಇಲ್ಲಿ ನಿಂತು ಹರಟೆ ಹೊಡೆಯುತ್ತಿದ್ದಾರೆ..." ಎಂದು ತಮ್ಮಷ್ಟಕ್ಕೇ ಹೇಳಿಕೊಂಡಿದ್ದರು. ಭಕ್ತಿಯು ಇಚ್ಛಿಸದೆ ಒಲಿಯುವುದಿಲ್ಲ.

ಬರಬರುತ್ತ, ತಮ್ಮನ್ನು ಕಾಣಲು ಬರುತ್ತಿದ್ದ ವಿಭಿನ್ನ ಮನೋಸ್ತರದ ವ್ಯಕ್ತಿಗಳೊಂದಿಗೆ ಮಾತೆ ಶಾರದಾದೇವಿಯವರು ಅನಿವಾರ್ಯವಾಗಿ  ವ್ಯವಹರಿಸಬೇಕಾಗುತ್ತಿತ್ತು. ತಮ್ಮ ಬದುಕಿನಲ್ಲಿ ಎಷ್ಟೇ ಕಷ್ಟಕಾರ್ಪಣ್ಯಗಳನ್ನು ಹಾದುಬಂದರೂ ಮನುಷ್ಯರ ವಕ್ರತೆಯಲ್ಲಿ ಪರಿವರ್ತನೆಯಾಗದಿರುವುದು ಮತ್ತು ಹೊಸಹೊಸ ವಕ್ರತೆಗಳನ್ನು ಅವರವರೇ ಸಂಶೋಧಿಸಿ ಅನುಸರಿಸುವುದನ್ನು ಕಂಡಿದ್ದ ಅವರು ಒಮ್ಮೊಮ್ಮೆ ದುಃಖಿಸುತ್ತಿದ್ದರು; ಕೆಲವೊಮ್ಮೆ ನಗುತ್ತಿದ್ದರು. ಏನೋ ಪ್ರತಿಫಲಾಪೇಕ್ಷೆಯಿಂದಲೇ ಧಾವಿಸಿ ಬರುತ್ತಿದ್ದ ಜನರನ್ನು ನೋಡಿ - "ಜನ ಎಷ್ಟು ಸ್ವಾರ್ಥ ಅಭಿಲಾಷೆಯಿಂದ ಬರುತ್ತಾರಲ್ಲ ? ಒಂದು ಸೌತೇಕಾಯಿಯನ್ನು ನೈವೇದ್ಯಕ್ಕೆಂದು ಕೊಟ್ಟು ತಮ್ಮ ಸಕಲ ಇಷ್ಟಾರ್ಥಗಳೂ ಫಲಿಸಬೇಕೆಂದು ಇಚ್ಛಿಸುತ್ತಾರೆ ! ಸಾಧಾರಣ ಮನುಷ್ಯರ ಸ್ವಭಾವವೇ ಹೀಗೆ..." ಎಂದುಕೊಳ್ಳುತ್ತಿದ್ದರು. "ಅನೇಕರು ಪ್ರಪಂಚದ ಪೆಟ್ಟಿನಿಂದ ನೊಂದಾದಮೇಲೆ ದೇವರ ಕಡೆಗೆ ತಿರುಗಬಹುದು. ಆದರೆ ಯಾರು ಬಾಲ್ಯದಿಂದಲೂ ಭಗವಂತನ ಕುರಿತು ಚಿಂತಿಸುವರೋ ಅವರೇ ಧನ್ಯರು !" - ಎಂದಿದ್ದರು ಶಾರದಾದೇವಿ. ನಮ್ಮ ಬದುಕಿನ ಅಭಿರುಚಿ ಆದ್ಯತೆಗಳೆಲ್ಲವೂ ಪೂರ್ವ ಸಂಸ್ಕಾರದಂತೆಯೇ ನಡೆಯುತ್ತದೆ ಎಂಬುದನ್ನೇ ಮಾತೆಯವರು ಸೂಚ್ಯವಾಗಿ ಹೇಳಿದಂತಿದೆ. ಪ್ರತಿಯೊಂದು ಜನ್ಮವೂ ಒರಟುಗಲ್ಲನ್ನು ನಯಗೊಳಿಸಿಕೊಳ್ಳಲು ಸಿಕ್ಕಿರುವ ಅಪೂರ್ವ ಅವಕಾಶಗಳಷ್ಟೇ

ಶ್ರೀ ರಾಮಕೃಷ್ಣರನ್ನೂ ದರ್ಶಿಸಿ ಅವರ ಉಪದೇಶಗಳನ್ನು ಆಲಿಸಿದ್ದ ವೃದ್ಧ ಸ್ತ್ರೀಯೊಬ್ಬರು ಮುಂದೊಂದು ದಿನ ಮಾತೆಯವರನ್ನು ಭೇಟಿಯಾಗಿ "ರಾಮಕೃಷ್ಣರ ಉಪದೇಶದ ಕೆಲವನ್ನು ಕೂಡ ನಾವು ಅನುಷ್ಠಾನಕ್ಕೆ ತರಲಾಗಲಿಲ್ಲ. ಅವರ ಮಾತಿನಂತೆ ನಡೆದಿದ್ದರೆ ನಾವು ಪ್ರಪಂಚದಲ್ಲಿ ಇಷ್ಟು ಸಂಕಟಪಡಬೇಕಾಗಿರಲಿಲ್ಲ. ತಾಯೀ, ನಮಗೆ ಇನ್ನೂ ಪ್ರಪಂಚದ ಮೇಲೆ ಆಸೆ ಇದೆ. ಯಾವಾಗಲೂ ಏನನ್ನಾದರೂ ಕರ್ಮವನ್ನು ಮಾಡುತ್ತಲೇ ಇರುತ್ತೇವೆ..." ಎಂದು ಬೇಸರದಿಂದ ಹೇಳಿಕೊಂಡಿದ್ದರು.

ಆಗ ಮಾತೆಯವರು - "ಕೆಲಸ ಮಾಡಲೇಬೇಕು. ಕರ್ಮದಿಂದಲೇ ಕರ್ಮಬಂಧನವನ್ನು ಕಿತ್ತೊಗೆಯಬಹುದು. ಸಂಪೂರ್ಣ ಅನಾಸಕ್ತಿ ಎಂಬುದು ನಿಧಾನವಾಗಿ ಬರುವಂಥದ್ದು. ಆದ್ದರಿಂದ ಕ್ಷಣವೂ ಕೆಲಸವಿಲ್ಲದೆ ಇರಬಾರದು.." ಎಂದಿದ್ದರು. ಭಕ್ತರ ನಿತ್ಯ ಜಂಜಡದ ಪೋಕು ಮಾತುಗಳಿಗೂ ಪ್ರತಿಕ್ರಿಯಿಸಬೇಕಾಗಿ ಬಂದಾಗ, "ಮಹಾಮಾಯೆಯು ಒಂದು ಬೆಕ್ಕನ್ನು ಸಾಕುವಂತೆ ಮಾಡಿ - ಆ ಬೆಕ್ಕಿನೊಂದಿಗೆ - ಬದುಕನ್ನು ಮುಕ್ಕುವ ಆಸೆಗಳನ್ನೂ ಜೋಡಿಸಿ ದೇವರನ್ನು ಕಾಣುವ ಉದ್ದೇಶವನ್ನೇ ಮರೆಯುವಂತೆ ಮಾಡಿಬಿಡುತ್ತದೆ. ಪ್ರಪಂಚ ನಡೆಯುವುದೇ ಹೀಗೆ..." ಎನ್ನುತ್ತ ಮಾಯೆಗೆ ತಲೆಬಾಗುತ್ತಿದ್ದರು.


 

ಯಾವುದೇ ಮಹಾತ್ಮರ ಬಾಹ್ಯ ರೂಪದಲ್ಲಿಯೇ ವೈಶಿಷ್ಟ್ಯವನ್ನು ಕಂಡು ತಟ್ಟನೆ ಗುರುತಿಸಲು ಎಲ್ಲರಿಗೂ ಸಾಧ್ಯವಾಗದು; ಅದಕ್ಕೆ ದೃಷ್ಟಿಸಂಸ್ಕಾರವು ಅವಶ್ಯಕ. ಶ್ರೀ ರಾಮಕೃಷ್ಣ ಮತ್ತು ಶಾರದಾದೇವಿಯವರೂ - "ಅರಿಯದೇ ಅಳೆಯಲು ಯತ್ನಿಸುವ" ಅನೇಕ ಅಪಾತ್ರರನ್ನು ಹಾದುಬಂದಿದ್ದರು. ಯೋಗಿಯಾದವರ ನಡೆನುಡಿ, ಬದುಕು ಬವಣೆಗಳು ಹೊರಗಣ್ಣಿಗೆ ಎಲ್ಲರಂತೆಯೇ ಅನ್ನಿಸಿದರೂ - ಆಂತರ್ಯದಲ್ಲಿ ಇತರರಿಗಿಂತ ಭಿನ್ನವಾಗಿರುವುದು ಸ್ವಾಭಾವಿಕ. ಆದರೆ ಅಂತಹ ಯೋಗಿಗಳೂ ಬದುಕಿನ ನಿಯಮದಂತೆ, ಹಸಿವು ನಿದ್ರೆ ನೋವು ನಲಿವುಗಳನ್ನು ಇತರರಂತೆಯೇ ಹಾದುಬರುತ್ತಾರೆ; ಅವರ ಪ್ರತಿಕ್ರಿಯೆ ಮತ್ತು ಸ್ವೀಕೃತಿಯ ಶೈಲಿಯಲ್ಲಿ ಮಾತ್ರ ಭಿನ್ನತೆ ಇರುತ್ತದೆ. ಆದ್ದರಿಂದಲೇ ಅಧ್ಯಾತ್ಮದ ಸಂಸ್ಕಾರವುಳ್ಳವರಿಗೆ ಮಾತ್ರ ಯೋಗಿಗಳನ್ನು ಗುರುತಿಸುವುದು ಸುಲಭವಾಗುತ್ತದೆ; ಅದಿಲ್ಲದ ಭೋಗಕ್ಕೆ ಯಾವ ಯೋಗವು ಅರ್ಥವಾಗದು. ಯೋಗಿಗಳ ನಿತ್ಯದ ವರ್ತನೆಗಳ ಒಳಪದರದಲ್ಲಿರುವ ಭಾವ ಅನುಭಾವಗಳನ್ನು ಮಾನಸಿಕವಾಗಿ ಸ್ಪರ್ಶಿಸುವುದಕ್ಕೂ ಪೂರ್ವ ಸಂಸ್ಕಾರ ಅಗತ್ಯ.

ಸದಾ ತನ್ನ ಪ್ರಜ್ಞೆಯನ್ನು ಜಾಗ್ರತವಾಗಿ ಇರಿಸಿಕೊಳ್ಳಬಲ್ಲವರೇ ಯೋಗಿಗಳು. ಹೇಗಿದ್ದರೂ ಎಲ್ಲಿದ್ದರೂ ತೃಪ್ತ ಭಾವಸುಖದಲ್ಲಿ ಮುಳುಗಬಲ್ಲವನೇ ಯೋಗಿ. ರಾಮಕೃಷ್ಣ ಗುರುದಂಪತಿಗಳು ಅಂತಹ ಅಪೂರ್ವ ಯೋಗಿಗಳು.

ಶ್ರೀ ರಾಮಕೃಷ್ಣರು ಹೇಳುತ್ತಿದ್ದರು... "ಈ ಪ್ರಪಂಚವು ಮಿಥ್ಯೆ... ಇದು ಸತ್ಯ. ಇಲ್ಲದೇ ಇದ್ದರೆ ಕಾಮಾರಪುಕುರವನ್ನು (ಕಲ್ಕತ್ತದ ಸಮೀಪದಲ್ಲಿರುವ ರಾಮಕೃಷ್ಣರ ಜನ್ಮಭೂಮಿ ) ಚಿನ್ನದ ತಗಡಿನಿಂದ ನಾನು ಮುಚ್ಚುತ್ತಿದ್ದೆ. ಆದರೆ ಪ್ರಪಂಚ ಎಂಬುದು ಮಿಥ್ಯೆ ಎಂದು ನನಗೆ ಗೊತ್ತಿದೆ. ದೇವರೊಬ್ಬನೇ ಸತ್ಯ.." ಶ್ರೀ ರಾಮಕೃಷ್ಣರು ತಮ್ಮ ಬದುಕಿನ ಉತ್ತರಾರ್ಧದಲ್ಲಿ, ಹಣವನ್ನು ಮತ್ತು ಲೋಹಗಳನ್ನು ಕೈಯ್ಯಿಂದ ಮುಟ್ಟುತ್ತಲೂ ಇರಲಿಲ್ಲ. ಅಕಸ್ಮಾತ್ ಸ್ಪರ್ಶಿಸಿದಾಗಲೂ ದೈಹಿಕ ವೇದನೆ ಅನುಭವಿಸುತ್ತಿದ್ದರು ! ಕಾಮ ಕಾಂಚನಗಳು ಅನರ್ಥ ಸಾಧನಗಳು... ಎನ್ನುತ್ತಿದ್ದರು.

ಇಂತಹ ರಾಮಕೃಷ್ಣರ ಜೊತೆಯಲ್ಲಿ ಬದುಕನ್ನು ತೃಪ್ತಿಯಿಂದ ಸಾಗಿಸಿದವರು ಶ್ರೀಮಾತೆಯವರು ! ಒಬ್ಬ ಗೃಹಿಣಿಯಾಗಿ ಬದುಕಿನ ಬಿರುಗಾಳಿಗೆ ಶ್ರೀ ರಾಮಕೃಷ್ಣರಿಗಿಂತ ಹೆಚ್ಚು ಮೈಯೊಡ್ಡಿದವರು - ನಿಸ್ಸಂಶಯವಾಗಿ ಶ್ರೀಮಾತೆಯವರೇ. ಆದರೆ ಅವರೆಂದೂ ನಂಬಿಕೆ ವಿಶ್ವಾಸಗಳನ್ನು ಧಿಕ್ಕರಿಸಲಿಲ್ಲ; ಯಾರನ್ನೂ ಪ್ರಶ್ನಿಸಲೂ ಇಲ್ಲ. ಇದಕ್ಕಿಂತ ದೊಡ್ಡ ಯೋಗವುಂಟೆ ? ಶ್ರೀ ರಾಮಕೃಷ್ಣರ ಸಹವಾಸವು ಮಾತೆಯವರ ವ್ಯಕ್ತಿತ್ವಕ್ಕೆ ಹೊಳಪು ನೀಡಿ ಅವರನ್ನು - ಸುಂದರ ಶಾರದಾಶಿಲ್ಪವಾಗಿ ಕೆತ್ತಿ ನಿಲ್ಲಿಸಿತ್ತು. ಇಂತಹ ವ್ಯಕ್ತಿತ್ವಗಳು ಮಾತ್ರ "ಸಿದ್ಧ ಮಾದರಿ" ಗಳಾಗಲು ಸಾಧ್ಯ. ಸಹವಾಸ ದೋಷ ಗಳನ್ನು ಯಾವುದೇ ಸಂಕೋಚವಿಲ್ಲದೆ ಅನುಸರಿಸುವ ಪ್ರಸ್ತುತದ ಸಾಮಾಜಿಕರಿಗೆ ಸಹವಾಸ ಲಾಭ ದ ಅರಿವು ಮೂಡಿದಾಗ ಮಾತ್ರ - ಚೇತನವು ತಾನಾಗಿಯೇ ಜಾಗ್ರತಗೊಳ್ಳುವ ಅವಕಾಶವು ನಿರ್ಮಾಣವಾಗಬಹುದು. ಶ್ರೀಮಾತೆಯವರು - "ಎಲ್ಲಿದ್ದರೂ ಹೇಗಿದ್ದರೂ ಶಾಂತಿಯಿಂದ ಇರಬೇಕು; ತೃಪ್ತಿಯಿಂದ ಇರಬೇಕು.." ಎನ್ನುತ್ತಿದ್ದರು. ಇದೇ ನಿರ್ಲಿಪ್ತ ಸ್ಥಿತಿ ! ಸ್ಥಿತಪ್ರಜ್ಞ ಅವಸ್ಥೆ ! ತನ್ನೊಳಗೆ ತಾನು ಸದಾಕಾಲವೂ ಸಂತುಷ್ಟಿಯಿಂದ ಇರಬಲ್ಲವನೇ ಯೋಗಿ. ಯೋಗಿಗೆ ಸುಖವಿಲ್ಲ; ದುಃಖವಿಲ್ಲ. ಜ್ಞಾನವಿಲ್ಲ; ಅಜ್ಞಾನವೂ ಇಲ್ಲ. ಧರ್ಮವಿಲ್ಲ; ಅಧರ್ಮವೂ ಇಲ್ಲ. ಶುಭವಿಲ್ಲ; ಅಶುಭವೂ ಇಲ್ಲ. ಪಾಪವಿಲ್ಲ; ಪುಣ್ಯವೂ ಇಲ್ಲ. ಮಾನವಿಲ್ಲ; ಅಪಮಾನವೂ ಇಲ್ಲ. ಇವೆಲ್ಲವನ್ನೂ ಮೀರಿದ ಸ್ಥಿತಿಯದು ! ಸಾಕಾರವನ್ನು ದಾಟಿದ ನಿರಾಕಾರ ಸಿದ್ಧಿಯಿದು ! ಶ್ರೀ ರಾಮಕೃಷ್ಣರು ತಮ್ಮ ಆರಾಧ್ಯ ದೈವವಾದ ಕಾಳಿಕಾಮಾತೆಯಲ್ಲಿ ಸಲ್ಲಿಸುತ್ತಿದ್ದ ಪ್ರಾರ್ಥನೆಯು ಇದೇ ಆಗಿತ್ತು ! "ಇಟ್ಟ್ ಹಾಂಗೆ ಇರುವೆನು ಹರಿಯೇ.." ಎಂದ ದಾಸರೂ ಇದೇ ಯೌಗಿಕ ಸ್ಥಿತಿಯನ್ನು ತಲುಪಿ - ಲೋಕಕ್ಕೆ ತೃಪ್ತಿಯ ಸಂದೇಶವನ್ನು ಉಪದೇಶಿದ್ದರು. "ನಿಮ್ಮ ಚರಣಕಮಲದೊಳಗಾನು ದುಂಬಿ... ಅನ್ಯ ವಿಷಯಕ್ಕೆಳಸದಂತೆ ಇರಿಸು ಕೂಡಲಸಂಗಮದೇವಾ.. ದೇವಾ ಕೇಳಯ್ಯ - ನಿಮ್ಮುದರವ ಬಗಿದಾನು ಹೊಗುವ ಭರವೆನಗೆ..." ಎಂಬ ಬಸವಣ್ಣನ ವಚನಗಳು, "ನಿಮ್ಮ ದಾನವನುಂಡು ಅನ್ಯರ ಹೊಗಳುವ ಕುನ್ನಿಗಳನೇನೆಂಬೆ ರಾಮನಾಥಾ..." ಎಂಬ ದೇವರ ದಾಸಿಮಯ್ಯನ ವಚನಗಳೆಲ್ಲವೂ ಸಮರ್ಪಣೆಯ ಉತ್ಕಟತೆ, ಶರಣಾಗತಿಯ ಭಾವ ವೈಭವದೊಂದಿಗೆ ಹಾಸುಹೊಕ್ಕಾಗಿವೆ. ಮುಗ್ಧ ಸರಳತೆಯನ್ನು ಹಾಸಿಹೊದೆದಿರುವ ತೃಪ್ತ ಯೋಗ - ಭಕ್ತಿಯೋಗವೆಂದರೆ ಇದೇ !

ರಾಜ್ಯದ ಸಂರಕ್ಷಣೆಯ ಸಂದರ್ಭದಲ್ಲಿ ಬಳಕೆಯಾಗುವ ರಾಜಕಾರಣ ಎಂಬ ವಿದ್ಯೆಯಲ್ಲಿ ಸಾಮ ದಾನ ಭೇದ ದಂಡ... ಎಲ್ಲವೂ ಯುಕ್ತವೇ ಆಗಿದೆ ಎಂದಿದ್ದ ಚಾಣಕ್ಯನು - ಯಾವುದೇ ಸಂದರ್ಭದಲ್ಲೂ ಭ್ರಷ್ಟತೆಯು ನಿಷಿದ್ಧ - ಎಂದು ಸಾರಿದ್ದ. "ಶೀಲವಿಲ್ಲದ ಶಿಕ್ಷಣ, ತತ್ತ್ವರಹಿತ ರಾಜಕಾರಣ, ಮಾನವೀಯತೆ ಇಲ್ಲದ ವಿಜ್ಞಾನ, ನೀತಿಯಿಲ್ಲದ ವ್ಯಾಪಾರ... ಇವುಗಳಿಂದ ಅಪಾಯವು ನಿಶ್ಚಿತ" ಎಂದಿದ್ದ. ಆದರೆ ಇಂದು ಅದೇ ಅಪಾಯದ ದಾರಿಯಲ್ಲೇ ಓಡುತ್ತಿರುವ ಸಮಾಜದ ಚಾಣಕ್ಯಮಣಿಗಳನ್ನು ನೋಡಿದರೆ ಗಾಬರಿಯಾಗುವಂತಿದೆ. ಆಧುನಿಕತೆ ಎಂಬ ತಪ್ಪು ಕಲ್ಪನೆಯಲ್ಲಿ ಸಿಲುಕಿ, ಕಪಟತನದ ಉತ್ತುಂಗವನ್ನು ಮುಟ್ಟಿ ದುರ್ವಿಚಾರಗ್ರಸ್ತರಾಗಿರುವ ಇಂದಿನ ಕೆಲವು ಮನುಷ್ಯರಲ್ಲಿ ಎಷ್ಟೊಂದು ಪ್ರಜ್ಞೆನಷ್ಟಗೊಂಡಿದೆಯೆಂದರೆ... "ಮಂತ್ರಿಯಾದರೂ ಸೈ, ಮಂತ್ರಿಗಿರಿಗಾಗಿ ರೌಡಿಯಾಗಲೂ ಸೈ, ಕೊನೆಗೆ ಜೈಲುಪಾಲಾಗಲೂ ಸೈ..." - ಎಂಬಲ್ಲಿಗೆ ಭಂಡ ವ್ಯವಸ್ಥೆಯು ಬಂದು ಮುಟ್ಟಿದೆ ! ಅತ್ಯಂತ ಭ್ರಷ್ಟತೆಗೇ ಮಣೆಹಾಕುವ "ತಲೆ ಲೆಕ್ಕದ" ಧಾರ್ಷ್ಟ್ಯದ ಸನ್ನಿವೇಶಗಳು ರಾಜಾರೋಷಾಗಿ ಪ್ರಕಟಗೊಳ್ಳುತ್ತಿವೆ. ಇದು - ಸ್ವಯಂಕೃತ ದುರ್ಯೋಗಗಳು; ದುರಾಸೆಯ ತುತ್ತತುದಿ; ಸದವಕಾಶಗಳ ದುರುಪಯೋಗ; ಸುಯೋಗಗಳನ್ನು ಬಾಧಿಸುವ ದುರ್ವಿಧಿ ! ವಿನಾಶಕಾರೀ ವರ್ತನೆಗಳು ! ಭವಿಷ್ಯದಲ್ಲಿ - ಇವೇ ಬದುಕನ್ನು ಪೀಡಿಸುವ ಬಂಧನಗಳು.

ಯಾವುದೇ ಬಂಧನ ಎಂಬುದು ಮಂತ್ರಿಗಿರಿಯ ರೂಪದಲ್ಲೇ ಬರಬೇಕೆಂದಿಲ್ಲ; ಅದು - ಬೆಕ್ಕಿನ ಅಥವ ಇಲಿಯಂತಹ ನಗಣ್ಯ ರೂಪದಲ್ಲೂ ಬಂದು ಜೀವಿಗಳನ್ನು ಮುಕ್ಕಬಹುದು. ಸನ್ಯಾಸಿಯೊಬ್ಬನನ್ನು ಸಂಸಾರಿಯಾಗಿಸಬಲ್ಲ ಶಕ್ತಿಯುಳ್ಳ "ಬೆಕ್ಕಿನ ಮೋಹಬಂಧ" ಎಂಬ ಸಣ್ಣ ಹಗ್ಗವೇ ಸುಳಿಹಗ್ಗವಾಗಿ ಮೋಹಬಂಧಿಗಳನ್ನು ಸಂಸಾರದ ಕೊಚ್ಚೆಯೊಳಗೆ ಸುಲಭದಲ್ಲಿ ಸೆಳೆದುಕೊಳ್ಳಬಲ್ಲದು. ಅಂದಮೇಲೆ ದಿನಬೆಳಗಾದರೆ ಹಕ್ಕುಸೊಕ್ಕಿನ ಪ್ರದಕ್ಷಿಣೆ ಹಾಕುತ್ತ ಗುರಾಯಿಸುವ ಮನುಷ್ಯಮಾತ್ರರ ನೂರಾರು ಭಾವಬಂಧಗಳು ಇನ್ನೆಂತಹ ಸುಳಿಗಳಲ್ಲಿ ತಳ್ಳಬಹುದು ? ಅಪಾರ ದುಃಖಕ್ಕೆ ತಳ್ಳಿ ಆಯಾ ಅಂತರಾತ್ಮವನ್ನೇ ಸುಟ್ಟುಬಿಡುವ ಆಸೆಜನ್ಯವಾದ ಯಾವುದೇ ಮನೋರಕ್ಕಸತನಗಳು ಬದುಕಿನ ಸುಳಿಯಲ್ಲಿ ಅವಿಳಾಸಿಯಾಗುವುದು ಸಹಜ. ಪರಿಣಾಮವೇ - ಆತಂಕ, ಉದ್ವೇಗ, ನೋವು. ಸ್ವಾರ್ಥ ಕಾಪಟ್ಯವನ್ನು ತ್ಯಜಿಸದೆ - ಭಕ್ತನಾಗುವುದಂತೂ ಅಸಂಭವ; ಸಾಮಾನ್ಯ ತೃಪ್ತಬದುಕೂ ಸಿಗಲಾರದು.   

ಸರಳತೆಯೇ ದೇವರು

ಮುಗ್ಧ ಸರಳತೆಯಲ್ಲಿಯೇ ಭಕ್ತಿ ಅರಳುತ್ತದೆ. ವ್ಯಾವಹಾರಿಕತೆಯ ನಾಟಕದಿಂದ ಹೊರಬಂದು ಮುಗ್ಧ ಸರಳತೆಯ ಸಾಕಾರವಾಗುವ ಹಾದಿಯು ಬಲು ದೀರ್ಘವಾದುದು. ಒಮ್ಮೆ ರಾಖಾಲ ಎಂಬ ಶಿಷ್ಯನು (ಸ್ವಾಮಿ ಬ್ರಹ್ಮಾನಂದ) ತಮಗೆ ತುಂಬ ಹಸಿವಾಗುತ್ತಿದೆ ಎಂದು ರಾಮಕೃಷ್ಣರಲ್ಲಿ ಹೇಳಿಕೊಂಡಾಗ ರಾಮಕೃಷ್ಣರು ಗಡಿಬಿಡಿಯಿಂದ ತಿಂಡಿ ಹುಡುಕಲು ಓಡಾಡತೊಡಗಿದರು. ನೆಟ್ಟಗೆ ಗಂಗಾತೀರಕ್ಕೆ ಬಂದು ಅಲ್ಲಿದ್ದ ಗೌರೀಮಾ (ಅಧ್ಯಾತ್ಮ ಸಾಧಕಿ) ಅವರಲ್ಲಿ ತಮ್ಮ ಕಷ್ಟವನ್ನು ತೋಡಿಕೊಂಡರು. "ಗೌರೀದಾಸೀ, ಇಲ್ಲಿ ಬಾ. ನನ್ನ ರಾಖಾಲನಿಗೆ ತುಂಬಾ ಹಸಿವು.." ಎಂದರು. ಆಗ ದಕ್ಷಿಣೇಶ್ವರದ ಸಮೀಪದಲ್ಲಿ ತಿಂಡಿತಿನಿಸುಗಳ ಅಂಗಡಿಗಳೂ ಇರಲಿಲ್ಲ. ರಾಮಕೃಷ್ಣರ ಚಡಪಡಿಕೆ ಏರುತ್ತಿತ್ತು. ಸ್ವಲ್ಪ ಹೊತ್ತಿನಲ್ಲಿ ರಾಮಕೃಷ್ಣರ ರಸದ್ದಾರ (ಪೋಷಕ) ಬಲರಾಮ ಬಸು ಮತ್ತು ಗೌರೀದಾಸಿ ಮುಂತಾದವರು ತಮ್ಮ ಕೋಣೆಯಲ್ಲಿ ಕೂತು ಚಡಪಡಿಸುತ್ತಿದ್ದ ರಾಮಕೃಷ್ಣರ ಬಳಿಗೆ ಬಂದರು. ಅವರು ಒಂದಷ್ಟು ತಿಂಡಿಯನ್ನೂ ತಂದಿದ್ದರು. ಅದನ್ನು ನೋಡಿದ ಪರಮಹಂಸರಿಗೆ ಪರಮಾನಂದವಾಗಿ ಅವರು ರಾಖಾಲನನ್ನು ಕೂಗಿ ಕರೆದರು. "ರಾಖಾಲಾ, ಬಾ ಇಲ್ಲಿ. ಹಸಿವು ಎಂದೆಯಲ್ಲ ? ತಿಂಡಿ ಇದೆ; ತಿನ್ನು.. ತಿನ್ನು.." ಎಂದು ಅವಸರಿಸಿದರು. ಆಗ ರಾಖಾಲನಿಗೆ ಸ್ವಲ್ಪ ಕೋಪ ಬಂತು. ದುಡ್ಡು ಕಾಸಿದ್ದ ಪ್ರತಿಷ್ಠಿತ ಕುಟುಂಬದಿಂದ ಬಂದಿದ್ದ ರಾಖಾಲನಿಗೆ ರಾಮಕೃಷ್ಣರ ಅಂದಿನ ವರ್ತನೆಯು ಕೋಪ ತರಿಸಿತ್ತು !

ಕೋಪದ ಮೂಲವೇ "ನಾನು" ಎಂಬ ಮಮಕಾರ. ಮನುಷ್ಯನಲ್ಲಿರುವ ಎಲ್ಲ ಬಗೆಯ ಪ್ರತಿಷ್ಠೆಗಳೂ ಅಹಂಭಾವದ ಪ್ರತಿಕೃತಿಗಳು. ಆ ಅವಧಿಯಲ್ಲಿ ತನ್ನ ಹಳೆಯ ಪ್ರತಿಷ್ಠೆಯ ವಾಸನೆಯಿಂದ ಇನ್ನೂ ಮುಕ್ತನಾಗಿರದಿದ್ದ ರಾಖಾಲನಿಗೆ - ರಾಮಕೃಷ್ಣರ ಸಹಜ ಮುಗ್ಧತೆಯು - ದಯನೀಯತೆ ಅನ್ನಿಸಿರಬಹುದು; ತನ್ನನ್ನೂ ಅಂತಹ ದಯನೀಯತೆಯಲ್ಲಿ ಒಳಗೊಳ್ಳುವಂತೆ ಮಾಡಿದರಲ್ಲ ಈ ಆಸಾಮಿ ? ಇವರು ತನ್ನ ಹಸಿವೆಯನ್ನು ಊರಲ್ಲೆಲ್ಲ ಡಂಗುರ ಹೊಡೆದುಕೊಂಡು ಬಂದದ್ದಾದರೂ ಯಾಕೆ ? - ಎಂದೆನ್ನಿಸಿದಾಗ ರಾಖಾಲನ ಅಹಂಭಾವಕ್ಕೆ ಘಾಸಿಯಾದಂತಾಗಿ ಸಿಟ್ಟು ಬಂದಿತ್ತು. ಆಗ ಅಹಂಭಾವವು ಸಿಡುಕುತ್ತದೆ. "ನನಗೆ ಹಸಿವಾಗಿದೆ ಎಂದು ಎಲ್ಲರಿಗೂ ನೀವೇಕೆ ಡಂಗುರ ಹೊಡೆಯುತ್ತೀರಿ ?" ಎಂದು ನೇರವಾಗಿಯೇ ಕೇಳುತ್ತಾನೆ. ಆಗ ಶ್ರೀ ರಾಮಕೃಷ್ಣರು ಮಗುವಿನಂತೆ "ಅದರಲ್ಲಿ ತಪ್ಪೇನು ? ನಿನಗೆ ಹಸಿವಾಗಿತ್ತು. ನಿನಗೆ ತಿನ್ನಲು ಏನಾದರೂ ಬೇಕಿತ್ತು. ಅದನ್ನು ಹೇಳಿದರೆ ಅಥವ ಯಾರಲ್ಲಾದರೂ ಕೇಳಿದರೆ - ತಪ್ಪೇನು ?" ಎಂದಿದ್ದರು. ಇದು ಶುದ್ಧ ಭಕ್ತನ ಮುಗ್ಧತೆ !
 

ಮುಂದೆ ಇದೇ ರಾಖಾಲನು ಆಧ್ಯಾತ್ಮದ ಹಾದಿಯಲ್ಲಿ ಮುನ್ನಡೆದ ಮೇಲೆ ಮುಗ್ಧ ಭಕ್ತನಾಗಿ ಪರಿವರ್ತಿತಗೊಂಡು ಸ್ವಾಮಿ ಬ್ರಹ್ಮಾನಂದರಾಗಿ ಸಾಫಲ್ಯ ಕಂಡುಕೊಂಡರು. ಶ್ರೀ ರಾಮಕೃಷ್ಣರು ತೋರಿದ ಅಧ್ಯಾತ್ಮದ ಹಾದಿಯಲ್ಲೇ ನಡೆಯುತ್ತ - ರಾಮಕೃಷ್ಣ ಸಂಘವನ್ನು ಬೃಹದಾಕಾರದಲ್ಲಿ ಕಟ್ಟಿ ನಿಲ್ಲಿಸಿ, ಅದನ್ನು ಬಹುದೀರ್ಘಕಾಲ ಸ್ವಾಮಿ ಬ್ರಹ್ಮಾನಂದರೇ ಮುನ್ನಡೆಸಿದ್ದು ಈಗ ಇತಿಹಾಸ. ಭಕ್ತಿಮಾರ್ಗದಲ್ಲಿ ಸರಳತೆಯೇ ಯಶಸ್ಸಿನ ಹಾದಿ.

ಅಧ್ಯಾತ್ಮವು ಶಾಸ್ತ್ರ ವಿದ್ಯೆಯಲ್ಲ; ಆತ್ಮ ವಿದ್ಯೆ 

ಮುಗ್ಧತೆಯಾಗಲೀ ಸರಳತೆಯಾಗಲೀ ಅತ್ಯುಚ್ಛ ನೆಲೆಯನ್ನು ತಲುಪಿದಾಗ - ಒಮ್ಮೊಮ್ಮೆ - ಉನ್ಮತ್ತ ಎಂಬಂತೆಯೂ ಕಾಣುತ್ತದೆ. ಶ್ರೀ ರಾಮಕೃಷ್ಣರನ್ನು ಸಂಧಿಸುತ್ತಿದ್ದ ಮಹಾಶಯರುಗಳಲ್ಲಿ ವಿಭಿನ್ನ ಸ್ತರದ ಸಾಧಕ-ಆರಾಧಕರಿದ್ದರು. ಪೂರ್ಣ ಶರಣಾಗತಿ ಮತ್ತು ಉನ್ಮಾದ ಭಕ್ತಿಯ ನಿದರ್ಶನದಂತಿದ್ದ ನಾಗ ಮಹಾಶಯರೂ (ದುರ್ಗಾಚರಣ ನಾಗ) - ಶ್ರೀ ರಾಮಕೃಷ್ಣ ಮತ್ತು ಮಾತೆ ಶಾರದಾದೇವಿಯವರ ಪರಮ ಭಕ್ತರಾಗಿದ್ದರು ! ಬರಿಗಣ್ಣಿಗೆ "ಪವಾಡ" ಎಂದೆನ್ನಿಸುವ ಅನೇಕ ಘಟನೆಗಳು ನಾಗ ಮಹಾಶಯರ ಬದುಕಿನಲ್ಲಿ ಸಂಭವಿಸಿವೆ. ನೈವೇದ್ಯದ ಪ್ರಸಾದವನ್ನು ಇರಿಸಿ ಅವರಿಗೆ ಕೊಟ್ಟಿದ್ದ ಒಣದೊನ್ನೆಯನ್ನೂ ಪ್ರಸಾದವೆಂದೇ ಭಾವಿಸಿ ತಿಂದುಬಿಟ್ಟ ಅವಧೂತ ಶಿಖಾಮಣಿ - ನಾಗಮಹಾಶಯರು ! ಇದು ಭಕ್ತಿಯ ಪರಾಕಾಷ್ಠತೆ ! ಬಹುಸಂಖ್ಯಾತರಾಗಿರುವ ವ್ಯಾವಹಾರಿಕ ಭಕ್ತರು ಇಂತಹ ವರ್ತನೆಯನ್ನು "ಹುಚ್ಚು" ಎನ್ನಬಹುದು; ಆದರೆ ಭಕ್ತಿ ಮತ್ತು ಭಕ್ತನ ಭಾವಸಂಚಾರದ ನೆಲೆಯೇ ವಿಭಿನ್ನವಾದುದು. ಆದ್ದರಿಂದ ಭಕ್ತರ ಸತ್ವವನ್ನು ನಿಜವಾದ ಭಕ್ತರಲ್ಲದೇ ಇನ್ನೊಬ್ಬರು ತೂಗಲಾಗದು. ಅದು ಹೇಗೆಂದರೆ, ಕಲ್ಯಾಣಿ ರಾಗದ ಆರೋಹ ಅವರೋಹಗಳ ಪ್ರಾಥಮಿಕ ಪರಿಜ್ಞಾನವೂ ಇಲ್ಲದ ಸಾಮಾಜಿಕ ಸ್ವರೂಪಗಳು ಯಾವುದೇ ಕಲ್ಯಾಣಿಯ ವಿಮರ್ಶೆ ಮಾಡಲು ಆಗುವುದಿಲ್ಲ. ಹಾಗೊಮ್ಮೆ ಆಳ ವಿಸ್ತಾರದ ಯಾವುದೇ ಅರಿವಿಲ್ಲದೆ ಕಲ್ಯಾಣಿಯ ಸಂಶೋಧನೆಯಲ್ಲಿ ಮುಳುಗಿದರೆ ಶೂನ್ಯ ಸಂಪಾದನೆಯಷ್ಟೇ ಸಾಧ್ಯವಾದೀತು. ಶಾಸ್ತ್ರವಿದ್ಯೆಯೇ ಯಾವತ್ತೂ ಜ್ಞಾನವಲ್ಲ; ಪ್ರಾಯೋಗಿಕ ವಿದ್ಯೆಯು ಶಾಸ್ತ್ರಕ್ಕಿಂತ ಮುಂದಿನದು. ಅಧ್ಯಾತ್ಮ ಜ್ಞಾನ ಎಂದರೆ - ಶಾಸ್ತ್ರವನ್ನು ಶಾಸ್ತ್ರೀಯವಾಗಿ ದಾಟಿದ ಪ್ರಾಯೋಗಿಕ ಯೋಗವಿದ್ಯೆ.

ಶ್ರೀ ರಾಮಕೃಷ್ಣರನ್ನು ಬೆಂಬಿಡದೆ ಹಿಂಬಾಲಿಸಿದ ಅನ್ವರ್ಥಭಾವದ ಅರ್ಧಾಂಗಿ - ಮಾತೆ ಶಾರದಾದೇವಿ. ತಮ್ಮನ್ನು ಸುತ್ತಿಮುತ್ತುತ್ತಿದ್ದ ಜನಗಡಣದ ನಡುವೆ ಶ್ರೀ ರಾಮಕೃಷ್ಣರನ್ನು ಕಲ್ಪಿಸಿಕೊಳ್ಳುವ ಹಲವಾರು ಸಂದರ್ಭಗಳನ್ನು ಗಮನಿಸಿದರೆ - ಶ್ರೀಮಾತೆಯವರು ಅಪಾತ್ರರಾದ ಬಂಧುಗಳ ನಡುವೆ ನವೆಯುತ್ತ ಭಾವಸಾಂಗತ್ಯವಿಲ್ಲದೆ ನರಳುತ್ತಿದ್ದಂತೆಯೂ ಒಮ್ಮೊಮ್ಮೆ ಭಾಸವಾಗುವುದಿದೆ. ಅಂತಹ ಜಿಡುಕಿನ ಸಂಸಾರದಲ್ಲೇ ಈಜುತ್ತ ಕುತ್ಸಿತ ಕೋಟಲೆಗಳನ್ನೆಲ್ಲ ದಾಟಿಬಂದಿದ್ದರೂ ಮಾತೆಯವರೆಂದೂ ನಿಶ್ಶಕ್ತರಾಗಲಿಲ್ಲ; ನಿಸ್ಸತ್ವರೂ ಆಗಲಿಲ್ಲ. ಸಹನೆ ಸಂಯಮ ಮೀರಲಿಲ್ಲ. "ಕುಕ್ಕಿ ತಿಂದಂತೆ" ವರ್ತಿಸುತ್ತಿದ್ದ ತನ್ನ ಹೆತ್ತಮನೆಯ ಜವಾಬ್ದಾರಿಗಳನ್ನು ಅವರು ಕ್ರಮೇಣ ಕೊಡವಿಕೊಂಡಿದ್ದರೂ - ಅನಂತರ ತಮ್ಮನ್ನು ದರ್ಶಿಸಲು ಬರುತ್ತಿದ್ದ - ಬಂದು ಮುಕುರುತ್ತಿದ್ದ ಬಗೆಬಗೆಯ ಮನೋಭಾವದ ಭಕ್ತಶಿಷ್ಯರ ಉಪಟಳವನ್ನು ಸದ್ದುಮಾಡದೆ ಸಹಿಸಿಕೊಂಡಿದ್ದ ಮಾತೆಯಿವರು. ಒಮ್ಮೊಮ್ಮೆ ಬೇಸರವಾದಾಗ - "ಅಯ್ಯೋ... ಪರಮಹಂಸರು ಏನು ಮಾಡಿಬಿಟ್ಟರು ? ಒಂದು ಸೇರು ಹಾಲಿಗೆ ನಾಲ್ಕೈದು ಸೇರು ನೀರು ಬೆರೆಸಿದಂತಿರುವ ಭಕ್ತರನ್ನೇ ನನಗೆ ಬಿಟ್ಟು ಹೋಗಿರುವರಲ್ಲ ? ಈ ನೀರು ಬೆರೆತ ಹಾಲನ್ನು ಇಂಗಿಸಿ ಅದನ್ನು ಗಟ್ಟಿಗೊಳಿಸಲು - ಒಲೆ ಊದಿ ಊದಿಯೇ ನನಗೆ ಸಾಕಾಗಿಹೋಗುವುದಲ್ಲ ?" ಎಂದುಕೊಳ್ಳುತ್ತಿದ್ದರು ! ಹಲವು ಬಗೆಯ ಜನರನ್ನು ಶ್ರೀ ರಾಮಕೃಷ್ಣರು ಹೇಗೆ ನಿಭಾಯಿಸಿದರಪ್ಪಾ ? ಎಂದು ಒಮ್ಮೊಮ್ಮೆ ಯೋಚಿಸುತ್ತಿದ್ದುದೂ ಇತ್ತು.

"ದೇವರ ಹುಚ್ಚು" ಹಿಡಿದಿತ್ತೆಂದು ಭಾವಿಸಿ - ಅವರ ಅಧ್ಯಾತ್ಮದ ಹುಚ್ಚು ಬಿಡಿಸಲೋಸುಗವೇ ಶ್ರೀ ರಾಮಕೃಷ್ಣರಿಗೆ ಅವಸರದಿಂದ ಮದುವೆ ಮಾಡಿಸಿದ್ದ ಹೆಣ್ಣು - ಶಾರದಾದೇವಿ. ಆದರೆ ಅವರು ಗಂಡನ ಹುಚ್ಚು ಬಿಡಿಸಲಿಲ್ಲ; ಬದಲಾಗಿ ತಮಗೂ ಅದನ್ನು ಅಂಟಿಸಿಕೊಂಡರು. ಗಂಡನ ಅಧ್ಯಾತ್ಮ ಸಾಧನೆಗೆ ಅವರೆಂದೂ ಅಡ್ಡಿಯಾಗಲಿಲ್ಲ. ಮಾತ್ರವಲ್ಲದೆ, ಶ್ರೀ ರಾಮಕೃಷ್ಣರ ಮಹಾಸಮಾಧಿಯ ನಂತರವೂ ಅವರನ್ನು ಆರಾಧಿಸುತ್ತ ರಾಮಕೃಷ್ಣರ ಸಂದೇಶವನ್ನು ಸಾರುತ್ತಲೇ ತಮ್ಮ ಶೇಷಾಯುಷ್ಯವನ್ನು ಕಳೆದರು. ಈ ಭೂಮಿಯ ಮಾಯೆಗಳ ನಡುವೆ ಶ್ರೀಮಾತೆಯಂತಹ ಅರ್ಧಾಂಗಿಯಾಗುವುದು ಸುಲಭವೇ ? ಭಾರತೀಯ ಆಧ್ಯಾತ್ಮಿಕ ಪರಂಪರೆಯಲ್ಲಿ ಮಾತ್ರ ಇಂತಹ ವಿಸ್ಮಯಗಳು ಒಮ್ಮೊಮ್ಮೆ ಸಂಭವಿಸಿವೆ. ಬದುಕಿನಲ್ಲಿ ಯಾವುದೇ ಉಚ್ಚ ಆದರ್ಶಗಳನ್ನು ಒಪ್ಪಿ ಮುಚ್ಚಟೆಯಿಂದ ಪೋಷಿಸುವುದರಿಂದಲೂ ಸಹಜ ಅಧಃಪತನದ ವೇಗವನ್ನು ತಗ್ಗಿಸಿಕೊಳ್ಳಲು ಸಾಧ್ಯವಿದೆ. 

ಶ್ರೀ ರಾಮಕೃಷ್ಣ ಭಾವವು - ಚಿಂತನೆಗೆ ಹೊಳಪು ನೀಡುತ್ತದೆ; ಸ್ವಚ್ಛ ಬದುಕು ಮತ್ತು ಶುದ್ಧ ಭಾವಾಭಿವ್ಯಕ್ತಿಯ ಜೊತೆಗೆ - ಸ್ವಸ್ವರೂಪ ದರ್ಶನಕ್ಕೂ ಪ್ರೇರಣೆ ನೀಡುತ್ತಲೇ ಬಂದಿದೆ.

                                                  *****-----*****-----*****                                            

 

Sunday, February 5, 2017

ಶ್ರೀ ರಾಮಕೃಷ್ಣ ಭಾವ ಮಂಜರಿ - 6

ಅನಂತಕ್ಕೆ ತನ್ನನ್ನು ತಾನು ಸಮರ್ಪಿಸಿಕೊಂಡು ಅನುಭವ ಹೊಂದುವ ಮೌನಪ್ರಕ್ರಿಯೆಯೇ ಅಧ್ಯಾತ್ಮ. ಈ ಹಾದಿಯಲ್ಲಿ ಕೈಹಿಡಿದು ನಡೆಸಬಲ್ಲವನೇ "ಗುರು". ನವವಿಧ ಭಕ್ತಿಯಿಂದ - ಇದೇ ಹಾದಿಯಲ್ಲಿ ಸಾಕ್ಷಾತ್ಕಾರದವರೆಗೂ ಸಂಚರಿಸಿದ್ದ ಶ್ರೀ ರಾಮಕೃಷ್ಣರು -  ಆದ್ದರಿಂದಲೇ "ಗುರು ವರಿಷ್ಠರು".

ಶ್ರೀ ರಾಮಕೃಷ್ಣ ಪರಮಹಂಸರು ಹೇಳಿದ್ದರು. "ತಾನು ತಾನಾಗಿಯೇ ಭಕ್ತಿಯು ಅಂಕುರವಾಗಬೇಕಾದರೆ, ಪೂರ್ವ ಸಂಸ್ಕಾರವಿಲ್ಲದಿದ್ದರೆ ಸಾಧ್ಯವಾಗದು. ಇದೇ ಪ್ರೇಮ ಭಕ್ತಿಯ ಲಕ್ಷಣ. ಆದರೆ.. ಜ್ಞಾನಭಕ್ತಿ ಎಂಬುದು ಪ್ರತ್ಯೇಕ; ಅದು ವಿಚಾರಪೂರಿತ ಭಕ್ತಿ " ಎಂದಿದ್ದರು.



ಅರಿವು ಅಥವ ಜ್ಞಾನ ಎಂಬುದು - ಎಲ್ಲ ಸಂಭವಗಳಿಗೂ ಮೂಲ. ಯಾರನ್ನೇ ಆದರೂ ಅರಿತುಕೊಳ್ಳದೆ ಇದ್ದರೆ ಪ್ರೀತಿ ಎಂಬುದು ಹುಟ್ಟಲಾರದು. ಹಾಗೆ ಏನನ್ನೇ ಆದರೂ ಅರಿತುಕೊಳ್ಳಲು ಒಂದೋ ಪ್ರೇಮ ಬೇಕು; ಅಥವ ಜ್ಞಾನ ಬೇಕು. ಜ್ಞಾನದತ್ತ ಮನಸ್ಸು ವಾಲಲು ಮತ್ತು ಅದನ್ನು ಸಂಪಾದಿಸಲು ಕೂಡ ಜ್ಞಾನದ ಹಪಹಪಿಕೆ ಅಥವ ಪ್ರೇಮಪೂರ್ಣ ತುಡಿತವು ಅನಿವಾರ್ಯ.

ಆರಂಭಿಕ ಹಂತದಲ್ಲಿ ವ್ಯಕ್ತಿಯನ್ನು ಮೃದುಗೊಳಿಸುತ್ತ ಬರುವ ಪ್ರೇಮಪೂರಿತ ಭಕ್ತಿಭಾವವು - ಅಂತಹ ಮನಸ್ಸುಗಳನ್ನು ತನ್ನ ಸುತ್ತಲಿನ ವ್ಯಕ್ತಿ ವಸ್ತುಗಳ ಅಂಧ ಅನುಸರಣೆಯತ್ತ ತಳ್ಳುವುದೂ ಇದೆ. ಈ ಹಂತದಲ್ಲಿ ಭಾವ ಏಕಾಂತವು ಮಾತ್ರ ಆಧರಿಸಬಲ್ಲದು. ಸಾಮಾಜಿಕ ಡೊಂಬರಾಟಗಳಿಂದ ಕೊಂಚ ದೂರವಿದ್ದು ಮನಸ್ಸು ಚಂಚಲವಾಗದಂತೆ ತಮ್ಮನ್ನು ತಾವೇ - ಕಾಯ್ದುಕೊಳ್ಳುತ್ತ ಭಕ್ತಿಭಾವವನ್ನು ರಕ್ಷಿಸುತ್ತ ಪೋಷಿಸಬೇಕಾದ ಅವಧಿಯದು. ಅಂತಹ ಸುರಕ್ಷಿತ ಪರಿಸರದಲ್ಲಿ ಮಾತ್ರವೇ ಭಕ್ತಿಭಾವವು ಅರಳಬಲ್ಲದು. ಪ್ರೇಮಭಕ್ತಿಯು ಸಾಂಸಾರಿಕವಾಗುತ್ತ ಅಧೋಮುಖವಾದರೆ - ಪರಿಣಾಮವಾಗಿ, ಬಂಧಿಸುವ "ವಾಸನಾ" ಕವಿಯುತ್ತದೆ; ಪರಿಶುದ್ಧ ಪಾರಮಾರ್ಥದ ಅಂತರ್ಗಂಗೆಯಂತೆ ಭಾವವು ಊರ್ಧ್ವಮುಖವಾದರೆ - ಜಿಡುಕುಗಳಿಂದ ಬಿಡುಗಡೆಗೊಳಿಸುವ "ನಿರಂಜನ" ಎನ್ನಿಸಿಕೊಳ್ಳುತ್ತದೆ. ಎರಡು ಬಗೆಯ ಹರಿವಿನಲ್ಲೂ ದುರ್ಗಮತೆಯಿದೆ. ಆದ್ದರಿಂದಲೇ ಲೌಕಿಕವು ಒಂದು ಬಗೆಯ ಸರ್ಕಸ್ಸಾದರೆ - ಅಧ್ಯಾತ್ಮದ ಬದುಕು ಇನ್ನೊಂದು ಬಗೆಯ ಸರಿಗೆಯ ಮೇಲಿನ ನಡಿಗೆ. ಆಯ್ಕೆ ಮಾತ್ರ ನಮ್ಮದು.

ಶುದ್ಧ ಅಧ್ಯಾತ್ಮವು ಮಾನವೀಯ ಮೌಲ್ಯಗಳನ್ನು ಮುಚ್ಚಟೆಯಾಗಿ ಪೋಷಿಸುತ್ತದೆ; ಶಾಂತಿ ತೃಪ್ತಿಯನ್ನು ಹನಿಸುತ್ತಿರುತ್ತದೆ. ಏಕೆಂದರೆ ಅಧ್ಯಾತ್ಮದಲ್ಲಿ - ನಿತ್ಯೋಪಯೋಗೀ ಬೇಡಿಕೆಗಳ ದೊಡ್ಡ ಪಟ್ಟಿ ಇರುವುದಿಲ್ಲ. ಇಡೀ ಬದುಕನ್ನು "ಕಾಲಕ್ಷೇಪ"(TIME PASS)ಗೊಳಿಸಿಕೊಳ್ಳುತ್ತಿರುವ ಮನುಷ್ಯರ ಲೌಕಿಕ ಆಸೆಗಳ ಅನಂತ  ಕ್ಷುದ್ರತೆಯನ್ನು ತೊಳೆದುಕೊಳ್ಳುವ ಮತ್ತು ಸತ್ಯದ ಹಸಿವನ್ನು ಮೂಡಿಸಿಕೊಳ್ಳಲು ಇಚ್ಛಿಸುವವರಿಗೆ ಅಧ್ಯಾತ್ಮವು ಸುರಕ್ಷಿತ ವಲಯ. ಈ ಹಾದಿಯಲ್ಲಿ ಮೊದಲಿಗೆ ಅಡ್ಡ ಬರುವುದೇ ಪೂರ್ವಾಗ್ರಹ, ಅಹಂ ಮತ್ತು ಸಂಶಯ.

ಎಚ್ಚರವಿರಲಿ. ಅಧ್ಯಾತ್ಮರಹಿತ ಪ್ರಾಪಂಚಿಕವು ಬಹುಪಾಲು ದೈಹಿಕ ವಿಜ್ಞಾನ; ಆದರೆ ಅಧ್ಯಾತ್ಮವು - ಮನೋದೈಹಿಕ ಎನ್ನಬಹುದಾದ "ಮಿದುಳಿನ ವಿಜ್ಞಾನ". ಆದ್ದರಿಂದಲೇ ಅಂದಿನಿಂದಲೂ ಅನೇಕ ಮಹಾತ್ಮರ ತಲೆತಿನ್ನುತ್ತಲೇ ಬಂದಿದೆ. ಸಂಸಾರದಲ್ಲಿ ವ್ಯಸ್ತರಾದವರ ಬಹುಪಾಲು ಸಮಯವನ್ನು ದೇಹಭಾವವೇ ತಿನ್ನುತ್ತದೆ; ಆದರೆ ಅಧ್ಯಾತ್ಮ ಚಿಂತಕರಲ್ಲಿ ಮಿದುಳಿನ ಸ್ವಾಸ್ಥ್ಯಕ್ಕೆ ಇಂಬುಗೊಡುವಷ್ಟೇ ಮಿತವಾದ ದೇಹಚಿಂತನೆ ಇರುತ್ತದೆ. ಭಾರತೀಯ ಅಧ್ಯಾತ್ಮದಲ್ಲಿ - ಸಚ್ಚಿಂತನೆಗೆ ಪೂರಕವಾಗುವ ಆರೋಗ್ಯವಂತ ಸದೃಢಯುತ ದೇಹ ಪೋಷಣೆಗೆ ಮಾತ್ರ ಅವಕಾಶವಿದೆ. ಆದ್ದರಿಂದಲೇ ಪ್ರಾಪಂಚಿಕರು ದೇಹಭಾವದಲ್ಲಿಯೇ ಪೋಲು ಮಾಡುವ ಅಪಾರ ಸಮಯವು - ಅಧ್ಯಾತ್ಮವಾದಿಗಳ ಪಾಲಿನ ಗಳಿಕೆಯಾಗಿರುತ್ತದೆ ಮತ್ತು ತನ್ಮೂಲಕ ಸಾಧನೆಯ ಏಕಗಮ್ಯ ನಡಿಗೆಗೆ ವೇಗ ಸಿಗುತ್ತದೆ. ಮಿದುಳಿನ ಕಸರತ್ತುಗಳನ್ನು ಇನ್ನಿಲ್ಲದಂತೆ ನಡೆಸಿದ್ದ ಅಂದಿನ ಸನಾತನ ಋಷಿವರ್ಗದ ಪೀಳಿಗೆಗಳು ಸರದಿಯಲ್ಲಿ ನಡೆಸಿದ್ದ ಅನ್ವೇಷಣೆಗಳೇ ವೇದೋಪನಿಷತ್ತುಗಳು. ಸಹಸ್ರಾರು ವರ್ಷಗಳ ಸಾಧನೆಯಿದು ! ಆದ್ದರಿಂದಲೇ ಮನುಷ್ಯನ "ಬುರುಡೆ"ಯನ್ನು ಇದುವರೆಗೂ ಅರ್ಥೈಸಿಕೊಳ್ಳಲಾಗದ ಆಧುನಿಕ ವಿಜ್ಞಾನಕ್ಕಿಂತ ಭಾರತೀಯ ಅಧ್ಯಾತ್ಮವು ಬಹಳ ಮುಂದಿದೆ ! ಏಕೆಂದರೆ ಭಾರತೀಯ ಆಧ್ಯಾತ್ಮ ಪ್ರಯೋಗದಲ್ಲಿ ಮಿದುಳೇ ನಾಯಕ; ದೇಹವು ಪೋಷಕ ನಟ ! ಭಾರತೀಯ ಅಧ್ಯಾತ್ಮವು "ಬುರುಡೆ"ಯ ಅನ್ವೇಷಣೆಯನ್ನು ನಡೆಸಿದಷ್ಟು ಜಗತ್ತಿನ ಯಾವುದೇ ಇತರ ಮತಧರ್ಮಗಳೂ ನಡೆಸಿಲ್ಲ. ಹೀಗಿದ್ದೂ ವೇದ ಉಪನಿಷತ್ತು ಪುರಾಣಗಳ ಅಧ್ಯಾತ್ಮ ತತ್ತ್ವವನ್ನು "ಬರೀ ಬುರುಡೆ" ಎನ್ನುವ ದೇಹಕೇಂದ್ರಿತ ನತದೃಷ್ಟ ಬುರುಡೆಗಳಿಗೆ ಇಂದಿಗೂ ಕೊರತೆಯೇನಿಲ್ಲ. ಅದರಿಂದ ಆಧ್ಯಾತ್ಮಕ್ಕೇನೂ ನಷ್ಟವಾಗಿಲ್ಲ. ಅಂತಹ ಬುರುಡೆಕೋರರ ಉದ್ಧಟ ಗದ್ದಲದಿಂದಾಗಿಯೇ ನನ್ನಂತಹ ಅನೇಕರು ಅಧ್ಯಾತ್ಮದತ್ತ ಆಕರ್ಷಿತರಾದುದೂ ವಾಸ್ತವವೇ. ಅದು ವಿರಳವಾಗಿ ಸಂಭವಿಸುವ ವಿಲೋಮ ಪರಿಣಾಮ ! ಹೊಗಳಿಕೆಯಾಗಲೀ ತೆಗಳಿಕೆಯಾಗಲೀ ಅತಿಯಾದರೆ - ಅದು ವಿರುದ್ಧ ಪರಿಣಾವನ್ನಷ್ಟೇ ಹುಟ್ಟುಹಾಕಬಹುದು.

ಭಾರತೀಯ ಅಧ್ಯಾತ್ಮವನ್ನು ಮುಟ್ಟಲಾಗದೆ ನಿಂತವರು ಮತ್ತು ಅಂತೆಕಂತೆಗಳನ್ನೇ ನಂಬಿ ದೂಷಿಸುತ್ತ ಬಂದವರು - ಅಧ್ಯಾತ್ಮದ ಶ್ರೀಮಂತಿಕೆಗಾಗಿ ಶ್ರಮಿಸಲಾಗದ ತಮ್ಮ ಮೈಗಳ್ಳತನದಿಂದ - ಕೇವಲ ಲೌಕಿಕ ಡೊಂಬರಾಟದ ದಿನಗೂಲಿಯಲ್ಲಿಯೇ ದಿನ ತಳ್ಳುವುದನ್ನು ಆಯ್ದುಕೊಂಡಂತೆಯೂ ಒಮ್ಮೊಮ್ಮೆ ಕಾಣುವುದಿದೆ. ಆದ್ದರಿಂದಲೇ "ಅಧ್ಯಾತ್ಮ ಶಂಖ"ದಿಂದ ಹೊಮ್ಮುವ ಪರಮಸುಖತೀರ್ಥದ ರುಚಿಯನ್ನು ಆತ್ಮಿಕವಾಗಿ ಗ್ರಹಿಸಿ ಆಸ್ವಾದಿಸುವ ಶಕ್ತಿಯನ್ನು ಅಂತಃಕರಣಪೂರ್ವಕವಾಗಿ ಬಹುಜನರು ಬಯಸುತ್ತಿಲ್ಲ; ತಮ್ಮ ನಿತ್ಯ ಭಿಕ್ಷಾಟನೆ ಎಂಬ ಡೋಲು ಬಜಂತ್ರಿಯಲ್ಲಿಯೇ ನಡುಬೀದಿಯ ಮಾರುತಿಯ ಆರತಿಯು ಈಗ ಮುಗಿದುಹೋಗುತ್ತಿದೆ. ಸಾಧ್ಯವಿದ್ದಿದ್ದರೆ RTI ನ ವ್ಯಾಪ್ತಿಯಲ್ಲಿ ಹನುಮನನ್ನೂ ಹನುಮನ ಭಕ್ತಿಭಾವವನ್ನೂ ಎಳೆದು ತರಬಲ್ಲ "ಪ್ರಚಂಡ ಮೇಟಿ"ಗಳೂ ಈ ಸಮಾಜದಲ್ಲಿ ಹೊಕ್ಕುಹೊರಡುತ್ತಿದ್ದಾರೆ ! ಇವೆಲ್ಲವೂ ಭಗವಂತ ಭಾವದೊಂದಿಗೆ ನಡೆಸುವ ಕುತ್ಸಿತ ಹಕ್ಕಿನ ವ್ಯಾಪಾರವೂ ಹೌದು; ಕರ್ತವ್ಯ ಮರೆತ ಸೊಕ್ಕಿನ ವ್ಯಾಪಾರವೂ ಹೌದು. ಯಾವುದೇ ಕಾಲಹರಣಕ್ಕಾಗಿ "ಮಾಡುವ  - ಮಾಡಿಸುವ " ಮತ್ತು ತಕ್ಷಣವೇ ರದ್ದಿಯಾಗುವ ಇಂತಹ ವಿಕೃತ ತುಂಟಾಟಗಳೆಲ್ಲವೂ - ಅಧ್ಯಾತ್ಮದ ವ್ಯಾಪ್ತಿಯ ಹೊರಗೇ ಉಳಿಯುವಂಥವು. ನಾವು ಮರೆಯಬಾರದು - ಸಮಯವು ಅಮೂಲ್ಯವಾದುದು !

ಯೋಗಿಯಾಗದೆ ಯೋಗವೊದಗದು

ಯಾವತ್ತೂ - ಇಂದ್ರಿಯಗಳ ಮೂಲಕ ಮಾಡುವುದು (Doing) ಎಂಬ ಎಲ್ಲ ಕ್ರಿಯೆಗಳೂ ಬಾಹ್ಯ ಸಂಸಾರ; ಅಂತಹ ಯಾವುದೇ ಕ್ರಿಯೆಗಳು ಆಗಾಗ ಗುರಿ ತೋರಿಸಿದಂತೆ ಕಂಡರೂ ಅವು ನಿಜದಡವನ್ನು ತಲುಪಿಸಲಾರವು. ಆದರೆ ಪ್ರಕೃತಿಸಹಜವಾಗಿ ಉಂಟಾಗುವುದು (Happening) ಎಂಬುದು - ಪ್ರಕೃತಿಯ ಅಂತರಂಗದ ಪರಾವರ್ತಿತ ಆಳವ್ಯಾಪಾರ ! ಅದು ಭಕ್ತರ ಪಾಲಿಗೆ - ಗುರಿ ತೋರಿಸುವ ದೈವಕೃಪೆ. ರೇಶನ್ ಸಾಲಿನಲ್ಲಿ ನಿಂತಂತೆ ಕಾಣುವ ಈ ಲೋಕದ ಸಾಂಸಾರಿಕ ನೆಲೆಯ ಎಲ್ಲ ಬದುಕುಗಳೂ ಒಂದಲ್ಲ ಒಂದು ಹಂತದಲ್ಲಿ - "ಏನಾದರೂ ಚಮತ್ಕಾರವು ಘಟಿಸಲಿ" - ಎಂದು ಹಾತೊರೆಯುತ್ತಿರುತ್ತವೆ. ಆದರೆ Doing ಅಥವ ಕರ್ತೃ ಎಂಬ ಜೀವಕ್ರಿಯೆಯ ಹಂತದ ನಿರ್ದಿಷ್ಟ ಭಾವನೆಲೆಯನ್ನು ಮೀರಿ "ಪ್ರಕೃತಿಸಹಜ" ಆತ್ಯಂತಿಕ ಭಾವಸೆಲೆಯತ್ತ ಹೊರಳಿಕೊಳ್ಳದೆ - ಯಾವುದೇ ಅಪೇಕ್ಷಿತ ತೀವ್ರಾನುಭವದ ಕೃಪಾವರ್ಷವು ಅಸಾಧ್ಯ. ಶುದ್ಧ ಮನೋನೆಲೆಯಲ್ಲಿ ಮಾತ್ರ ಯಾವುದೇ ಚಮತ್ಕಾರಗಳು ಘಟಿಸುತ್ತವೆ. ಸ್ವಚ್ಛ ಮನೋಕೊಳದಲ್ಲಿ ಮಾತ್ರ ತಿಳಿನೀರು ಕಾಣುತ್ತದೆ; ಅಂತಹ ತಿಳಿನೀರಿನಲ್ಲಿ ಮಾತ್ರ ಪ್ರತಿಬಿಂಬ ಮೂಡುತ್ತದೆ; ಆಗ ಸೂಕ್ತ ನಿರ್ದೇಶನವೂ ಸಿಗುತ್ತದೆ. ಕ್ಷಣಕ್ಷಣವೂ ಬಗ್ಗಡಗೊಳ್ಳುವ ಮನಸ್ಸು ಎಂಬುದನ್ನು ಸ್ವಚ್ಛಗೊಳಿಸಲು ದೈವಸ್ಮರಣೆ, ಪ್ರಾರ್ಥನೆಗಳು ಅನಿವಾರ್ಯ ಅವಲಂಬನೆ. ತಲ್ಲಣಗಳು ಶಮನಗೊಂಡ ಶಾಂತ ಮನೋಭೂಮಿಕೆಗಾಗಿ - "ಯೋಗ್ಯ ಸಾಂಸಾರಿಕ ಯೋಗಿ"ಗಳಾಗುವುದಲ್ಲದೆ ಅನ್ಯ ವಿಧಿಯಿಲ್ಲ.

ಸಾಕ್ಷಿ ಬೇಕೆ ?

ಆದರೆ ಸಮಸ್ಯೆ ಏನೆಂದರೆ ನಾವೆಲ್ಲರೂ ಸಾಕ್ಷಿ ಕೇಳುವ ಪೈಕಿಯವರು. ಅಧ್ಯಾತ್ಮದ ವಿಷಯದಲ್ಲಂತೂ ವಿಶೇಷವಾಗಿ - ಗ್ಯಾರಂಟಿ ಏನು ? ಗ್ಯಾರಂಟಿ ಏನು ? ಎನ್ನುತ್ತಿರುತ್ತೇವೆ. ಹುಟ್ಟು - ಬದುಕು ಮತ್ತು ಸಾವು - ಇವೆಲ್ಲ ಯಾವ ಗ್ಯಾರಂಟಿಯೂ ಇಲ್ಲದ ಯಾತ್ರೆಗಳು ! ಹುಟ್ಟು ಮತ್ತು ಬದುಕು ಮಾಯಾವೃತ್ತದಲ್ಲಿ ಸಿಲುಕಿಸಿ ಕಣ್ಣುಮುಚ್ಚಾಲೆಯಾಡಿಸುತ್ತಿದ್ದರೆ - ಸಾವು ಮಾತ್ರ ಸತ್ಯದರ್ಶನ ಮಾಡಿಸುವಂಥದ್ದು. ಆದ್ದರಿಂದಲೇ ಹುಟ್ಟು ಮತ್ತು ಬದುಕು ಅನಿತ್ಯದ ಆಧುನಿಕ ವಿಜ್ಞಾನದ ಪರಿಧಿಯಲ್ಲಿ ಸುತ್ತುವುದು ಸಹಜ; ಸತ್ಯ ಸಾಮ್ರಾಜ್ಯದ ಪಂಚಭೂತಗಳ ಯಾಜಮಾನ್ಯದ ಸಾವು ಮಾತ್ರ - ನಿತ್ಯಾಧ್ಯಾತ್ಮದ ಪರಿಧಿಯಲ್ಲಿಯೇ ಉಳಿಯುವಂಥದ್ದು. ಆದ್ದರಿಂದಲೇ ಆಧ್ಯಾತ್ಮದ ಗಂಧವಿಲ್ಲದ ಆಧುನಿಕ ವಿಜ್ಞಾನಕ್ಕೆ ಸಾವು ಮತ್ತು ಸಾವಿನ ರಹಸ್ಯಗಳು ಇನ್ನೂ ಅರ್ಥವಾಗಿಲ್ಲ. ಋಷಿ ತಪಸ್ಸು ನಡೆಸದೆ ಅದು ಅರ್ಥವಾಗಲಾಗದು. ಭಾರತೀಯ ಉಪನಿಷತ್ತುಗಳಲ್ಲಿ ಸಾವಿರಾರು ವರ್ಷಗಳ ಹಿಂದೆಯೇ ಸಾವಿನ ರಹಸ್ಯವನ್ನು ಬಿಡಿಸಲು ಶ್ರಮಿಸಿದ್ದು ಕಾಣುತ್ತದೆ. ಆದರೆ ಎಲ್ಲವೂ ಗೂಢ ಕಠಿಣ ಸೂತ್ರದಲ್ಲಿದ್ದು ಅರ್ಥೈಸಿಕೊಳ್ಳಲು - ಹೆಣಗಾಡುವಂತಿದೆ. ಸ್ಥೂಲವಾಗಿ ಹೇಳುವುದಾದರೆ - ಮೋಹದಿಂದ ಆವೃತವಾಗಿರುವ ಭಾವತಂತುಗಳನ್ನು ಮಿಡಿಸುವ ಸಾವಿನ ಹಿಂದೆ ಅಂತಹ ವಿಶೇಷಗಳೇನೂ ಇರುವುದಿಲ್ಲ. "ಒಂದು ಕೋಣೆಯಿಂದ ಇನ್ನೊಂದು ಕೋಣೆಗೆ ಹೋದಂತೆ, ಹಳೆಯ ಬಟ್ಟೆಯನ್ನು ತೊರೆದು ಹೊಸ ಬಟ್ಟೆಯನ್ನು ಧರಿಸಿದಂತೆ..." ದೇಹವನ್ನು ತೊರೆದು ಪಂಚತತ್ವಗಳಲ್ಲಿ (ಪೃಥ್ವಿ, ಅಪ್ ಅಥವ ನೀರು, ತೇಜ, ವಾಯು, ಆಕಾಶ) ಲೀನವಾಗಿ, ಜೀವವು ಸ್ಥಿತ್ಯಂತರಗೊಳ್ಳುತ್ತದೆ - ಎಂಬ ಸೂಕ್ಷ್ಮವು ವಿದಿತವಾಗುತ್ತದೆ. ಈ ಶೋಧನೆಯನ್ನು "ಇದಮಿತ್ಥಂ" ಎಂದು ಅಧಿಕಾರಯುಕ್ತವಾಗಿ ಹೇಳಿಹೋದವರು ನಮ್ಮ ಋಷಿವಿಜ್ಞಾನಿಗಳು. ಇದನ್ನು ಶ್ರೀ ರಾಮಕೃಷ್ಣರೂ ಅನುಮೋದಿಸಿದ್ದರು; ಕೆಲವು ಅನುಭವಗಳನ್ನು ಶಬ್ದಗಳಲ್ಲಿ ಹಿಡಿದಿಡಲಾಗುವುದಿಲ್ಲ ಎಂದು ಅವರು ಆಗಾಗ ಅಲವತ್ತುಕೊಳ್ಳುತ್ತಿದ್ದರು.

ಶ್ರೀ ರಾಮಕೃಷ್ಣರು ತಮ್ಮ ಸಂದರ್ಶಕರ ಜತೆ ಸಲ್ಲಾಪಿಸುವಾಗ ಮುಗ್ಧವಾಗಿ ವಿಚಾರವಿನಿಮಯ ನಡೆಸುವುದೂ ಇತ್ತು. ಮತಭಿನ್ನತೆ ಸುಳಿದಾಗ, ಕೆಲವೊಮ್ಮೆ ನೆರೆದ ಭಕ್ತರನ್ನೇ ಪ್ರಶ್ನಿಸುವುದೂ ಇತ್ತು. ಒಮ್ಮೆ ಪ್ರಖ್ಯಾತ ಕಾದಂಬರಿಕಾರ ಬಂಕಿಮಚಂದ್ರರೊಂದಿಗೆ ಸಂಭಾಷಣೆ ನಡೆಸುವಾಗ ಅವರು ಕೇಳಿದ್ದರು... "ಕೆಲವರು ಶಾಸ್ತ್ರ ಓದದಿದ್ದರೆ ಪುಸ್ತಕ ಓದದಿದ್ದರೆ ಭಗವಂತನನ್ನು ಪಡೆಯಲಾಗುವುದಿಲ್ಲ ಎಂದು ಭಾವಿಸುತ್ತಾರೆ. ಮೊದಲು ಜಗತ್ತು ಮತ್ತು ಜೀವರ ವಿಷಯವನ್ನು ಅರಿಯಬೇಕು. ಅದಕ್ಕಾಗಿ ಮೊದಲು ಸೈನ್ಸು (Science) ಓದಬೇಕು. ಏಕೆಂದರೆ ಭಗವಂತನ ಸೃಷ್ಟಿಯನ್ನು ಅರಿತುಕೊಳ್ಳದೆ ಆತನನ್ನು ಅರಿಯಲಾಗುವುದಿಲ್ಲ - ಎಂದು ಅವರು ಹೇಳುತ್ತಾರೆ. ನಿನ್ನ ಅಭಿಪ್ರಾಯವೇನು ? ಮೊದಲು ಸೈನ್ಸೋ ಅಥವ ಭಗವಂತನೋ ?" ಎಂದಾಗ, ಬಂಕಿಮ ಉತ್ತರಿಸುತ್ತಾನೆ.

"ಹೌದು. ಮೊದಲು ಸೃಷ್ಟಿಯ ವೈಚಿತ್ರ್ಯವನ್ನು ಅರಿಯಬೇಕು. ಈ ಜ್ಞಾನವನ್ನು ಪಡೆದುಕೊಳ್ಳದೆ ಇದ್ದರೆ ಭಗವಂತನನ್ನು ಅರಿಯುವುದಾದರೂ ಹೇಗೆ ? ಮೊದಲು ಪುಸ್ತಕ ಓದಿ ಅರಿಯಬೇಕು.."

ಆಗ ಶ್ರೀ ರಾಮಕೃಷ್ಣರು - "ಅಯ್ಯೋ, ನಿಮ್ಮೆಲ್ಲರದೂ ಒಂದೇ ಕೂಗು !" ಎಂದು ನಿಡುಸುಯ್ದು ತಿಳಿಸಿ ಹೇಳಲು ತೊಡಗುತ್ತಾರೆ.

"ಅದು ಹಾಗಲ್ಲ. ಮೊದಲು ಭಗವಂತ. ಬಳಿಕ ಆತನ ಸೃಷ್ಟಿ. ಮೊದಲು ಭಗವಂತನನ್ನು ಪಡೆದುಕೊಂಡರೆ - ಅನಂತರ ಇಚ್ಛೆ ಬಂದರೆ ಉಳಿದುದನ್ನೆಲ್ಲ ಅರಿತುಕೊಳ್ಳಬಹುದು.." ಎನ್ನುತ್ತಾರೆ. ಅಲ್ಲಿ ಸೇರಿದ್ದ ಭಕ್ತ ಪರಿಧಿಯಲ್ಲಿ, "ಅದು ಹೇಗೆ ? ಅದು ಹೇಗೆ" ಎಂಬ ಮುಖಭಾವಗಳನ್ನು ನೋಡಿ ಇನ್ನೂ ವಿವರಿಸಿ ಹೇಳುತ್ತಾರೆ.


"ಹೇಗೋ ಮಾಡಿ ನೀನು ಯದುಮಲ್ಲಿಕನ ಪರಿಚಯ ಮಾಡಿಕೊಂಡು ಪ್ರೀತಿ ವಿಶ್ವಾಸ ಗಳಿಸಿಕೊಂಡುಬಿಟ್ಟರೆ - ಬಳಿಕ ನೀನು ಇಚ್ಛಿಸಿದರೆ, ಯದುಮಲ್ಲಿಕನಿಗೆ ಮನೆಗಳೆಷ್ಟಿವೆ ತೋಟಗಳೆಷ್ಟಿವೆ ಎಂಬುದನ್ನೆಲ್ಲ ಅರಿತುಕೊಂಡುಬಿಡಬಹುದು. ಯದುಮಲ್ಲಿಕ ತಾನೇ ಎಲ್ಲವನ್ನೂ ಹೇಳಿಬಿಡಲೂಬಹುದು. ಆದರೆ ಮೊದಲಿಗೆ ಆತನ ಪರಿಚಯ ಮಾಡಿಕೊಳ್ಳದೆ ಇದ್ದರೆ ಆತನ ಮನೆಯ ಜವಾನರು ನಿನ್ನನ್ನು ಒಳಗೆ ಪ್ರವೇಶಿಸಲಿಕ್ಕೇ ಬಿಡಲಾರರು. ಆಗ ಅವನ ಲೇವಾದೇವಿ ಪತ್ರಗಳೆಷ್ಟಿವೆ ತೋಟತುಡಿಕೆಗಳೆಷ್ಟಿವೆ... ಎಂಬುದನ್ನೆಲ್ಲ ನೀನು ಅರಿಯುವ ಬಗೆಯಾದರೂ ಹೇಗೆ ? ಆದ್ದರಿಂದ ಮೊದಲು ಆತನನ್ನು ಅರಿತುಕೊಂಡರೆ ಎಲ್ಲವನ್ನೂ ಅರಿಯಬಹುದು. ವೇದದಲ್ಲಿಯೂ ಈ ವಿಷಯ ಹೇಳಿದೆ. ಒಬ್ಬ ವ್ಯಕ್ತಿಯನ್ನು ನೋಡದ ವರೆಗೆ ಆತನ ಗುಣಸಂಬಂಧವಾಗಿ ಮಾತಾಡಬಹುದು. ಆತ ಎದುರಿಗೆ ಕಾಣಿಸಿಕೊಳ್ಳುವುದೇ ತಡ, ಆಗ ಆ ವಿಧದ ಹೊಂತಕಾರೀ ಮಾತುಗಳೆಲ್ಲವೂ ನಿಂತುಹೋಗುತ್ತವೆ; ಗುಣವರ್ಣನೆಗಳೆಲ್ಲವೂ ಮರೆತುಹೋಗಿ - ಕೇವಲ ಆತನೊಡನೆ ಬೆರೆತು ಸಂತೋಷಪಡುತ್ತಾರೆ... ಒಮ್ಮೆ ಉಪ್ಪಿನ ಗೊಂಬೆಯೊಂದು ಸಮುದ್ರವನ್ನು ಅಳೆಯಲು ಹೋಗಿತ್ತಂತೆ. ಹಿಂದಿರುಗಿ ಬಂದು ಸಮುದ್ರದ ವೃತ್ತಾಂತವನ್ನು ಹೇಳುತ್ತೇನೆ ಎಂದು ಸ್ನೇಹಿತರಿಗೆ ಹೇಳುತ್ತ ಎದೆಯುಬ್ಬಿಸಿ ಸಮುದ್ರದಲ್ಲಿ ಮುಳುಗಿತಂತೆ. ಸಮುದ್ರದಲ್ಲಿ ಮುಳುಗುತ್ತಲೇ ನಿಧಾನವಾಗಿ ಕರಗಿ ತನ್ನ ಅಸ್ತಿತ್ವವನ್ನೇ ಕಳೆದುಕೊಂಡು - ಅದೂ ಸಮುದ್ರವೇ ಆಗಿಬಿಟ್ಟಿತಂತೆ. ಸೃಷ್ಟಿಯ ನಿಗೂಢತೆಯನ್ನು ಅವನೇ ಇಚ್ಛಿಸಿ ಹೇಳಿದರೆ ಮಾತ್ರ ತಿಳಿದುಕೊಳ್ಳಬಹುದು. ಇಲ್ಲವಾದರೆ ತಿಳಿಯಲಾಗದು. ಒಂದೊಮ್ಮೆ ತಿಳಿದರೂ ಅನಂತರ ಹಿಂದಿರುಗಿಬಂದು ಅವನ್ನು ವರ್ಣಿಸಲಾಗದು. ಗ್ರಂಥಗಳ -ಶಾಸ್ತ್ರಗಳ ಉದ್ದೇಶವೇನು ? ಭಗವಂತನ ಸಾಕ್ಷಾತ್ಕಾರವನ್ನು ದೊರಕಿಸಿಕೊಡುವುದು... ಅಷ್ಟೇ . ಶಾಸ್ತ್ರವೇ ಭಗವಂತನಲ್ಲ."

ಅಧ್ಯಾತ್ಮ ಸಂಬಂಧಿತ ಅನುಭವಗಳನ್ನು ಓದಿ ಓದಿಯೇ ಪಡೆಯಲಾಗುವುದಿಲ್ಲ. ಓದು ಎಂಬುದು ಪ್ರವೇಶಿಕೆ ಮಾತ್ರ. ಪುಸ್ತಕ ಕೆಳಗಿಟ್ಟು ಅಲ್ಲಿಂದ ಮುಂದೆ ಸಾಗಬೇಕು. ತತ್ಸಂಬಂಧಿತ ಸಾಧನೆಯಿಂದಲೇ ಅಧ್ಯಾತ್ಮ ಜ್ಞಾನವನ್ನು ಪಡೆಯಬೇಕು ಎಂಬುದು ಶ್ರೀ ರಾಮಕೃಷ್ಣರ ಸಂದೇಶವಾಗಿತ್ತು. ಈ ಹಾದಿಯಲ್ಲಿ ಯಾವುದೇ ಸಾಧನೆಯನ್ನೂ ಮಾಡಲಾಗದೆ ಏನನ್ನೂ ದೃಢೀಕರಿಸಿಕೊಳ್ಳಲೂ ಆಗದ ಸಂಶಯಮಾತ್ರರಾದ ಆಧುನಿಕರು ಆಧ್ಯಾತ್ಮವನ್ನು ಪ್ರವೇಶಿಸುವುದೇ ಅಸಾಧ್ಯ. ಗಂಭೀರವಾಗಿ ಪ್ರಯತ್ನಶೀಲರಾಗದೆ ಅಧ್ಯಾತ್ಮ ಒಲಿಯದು - ಎಂಬುದು ತಾತ್ಪರ್ಯ.

ಆದರೆ ಅನಿಶ್ಚಯದ ಈ ಬದುಕಿನಲ್ಲಿಯೇ ನಿತ್ಯವೂ ಹೊರಳಾಡುತ್ತ, "ನಿಶ್ಚಯ" ಎಂಬ ಏನನ್ನಾದರೂ ಪಡೆಯುವಲ್ಲಿ ನಿತ್ಯವೂ ಸೋಲುತ್ತಿದ್ದರೂ - ವಿಸ್ಮಯವೆಂದರೆ, ಅಂತಹ ಯಾವುದೇ ಸಂದರ್ಭಗಳು ವ್ಯಕ್ತಿಯನ್ನು ತೀವ್ರವಾಗಿ ಆತ್ಮಾವಲೋಕನಕ್ಕೆ ನೂಕಿ ಆತ್ಮಚಿಂತನೆಗೆ ತೊಡಗುವಂತೆ ಮಾಡುವುದಿಲ್ಲ: ಏನೇ ಆದರೂ - ಜೀವಿಗಳ ಯಾವುದೇ "ಪ್ರಾಪಂಚಿಕ ಭರವಸೆಗಳು" ಮಾತ್ರ  ಅಳಿಯುವುದಿಲ್ಲ. ಮರಳಿ ಯತ್ನಿಸುವ ಸೂತ್ರವು - ಆಗ ಪ್ರಾಪಂಚಿಕರ ಕೈಹಿಡಿಯುತ್ತದೆ. ಇದೇ ಮಾಯೆ ! ಮರಳಿ ಯತ್ನಿಸುವುದರಲ್ಲಿ ತಪ್ಪೇನಿಲ್ಲ. ಅಧ್ಯಾತ್ಮವೂ ಕೂಡ ಮರಳಿ ಹೊರಳಿ ತೆವಳಿ, ಹತಾಶೆಯನ್ನು ಮೆಟ್ಟಿ ನಿಂತು ಸಾಧಿಸಿಕೊಳ್ಳಬೇಕಾದ ಕ್ಷೇತ್ರವೇ. ಅಧ್ಯಾತ್ಮಕ್ಕಾಗಿ ವೈಯ್ಯಕ್ತಿಕ ಬದುಕಿನ ವ್ಯಾಕರಣವನ್ನು ಕಠಿಣವಾಗಿ ಅನುಸರಿಸಬೇಕಾಗುತ್ತದೆ. ಹೀಗಿದ್ದೂ... ಕೇವಲ ಯಾವುದೇ ಕಠಿಣ ಶಿಸ್ತಿನ ಬದುಕಿನಿಂದಲೇ ದೈವ ಸಾಕ್ಷಾತ್ಕಾರವನ್ನು ಸಾಧಿಸಲಾಗದಿದ್ದರೂ ದೈವೀಕ ವ್ಯಕ್ತಿತ್ವವನ್ನಂತೂ ರೂಪಿಸಿಕೊಳ್ಳುವಂತಾದರೆ ಅಧ್ಯಾತ್ಮದ ಹಾದಿಯಲ್ಲಿ ಒಂದು ಹೆಜ್ಜೆ ಮುಂದಿಟ್ಟಂತೇ ಆದೀತು.

ಯಾವುದೇ ಸಿದ್ಧಾಂತವನ್ನು ಆಮೂಲಾಗ್ರವಾಗಿ ಪರೀಕ್ಷಿಸಿಯೇ ಸ್ವೀಕರಿಸುವಂತಾದಾಗ ಅಂತಹ ನಂಬುಗೆಯು ದೃಢವಾಗಿದ್ದು ಸುದೀರ್ಘ ಬಾಳಿಕೆ ಬರುತ್ತದೆ. ಆದರೆ ಹಾಗೆ ಇನ್ನೊಂದನ್ನು ಪರೀಕ್ಷಿಸುವವರಿಗೂ ಅಂತಹ ಸಾಮರ್ಥ್ಯ ಇದ್ದರೆ ಮಾತ್ರ ಯಾವುದೇ ಪರೀಕ್ಷೆಗಳಿಗೆ ಅರ್ಥವೊದಗಿ ಸಫಲವಾಗುತ್ತದೆ. ಶ್ರೀ ರಾಮಕೃಷ್ಣರನ್ನು ಗುರುದೇವರೆಂದು ಒಪ್ಪಿಕೊಳ್ಳಲು ನರೇಂದ್ರನಿಗೆ ಕೆಲವು ವರ್ಷಗಳೇ ಹಿಡಿದಿತ್ತು. ಆದರೆ ನರೇಂದ್ರನ ಸಾಮರ್ಥ್ಯವನ್ನು ಪ್ರಥಮ ದರ್ಶನದಂದೇ ಅರಿತಿದ್ದ ಗುರು ಶ್ರೀ ರಾಮಕೃಷ್ಣರು ಶಿಷ್ಯನ ಪರೀಕ್ಷೆಗಳಿಗೆ ತಮ್ಮನ್ನು ಯಾವುದೇ ಹಿಂಜರಿಕೆಯಿಲ್ಲದೆ - ಮುಕ್ತವಾಗಿಯೇ ಒಡ್ಡಿಕೊಂಡಿದ್ದರು. ಯುವಕ ನರೇಂದ್ರನು "ದೇವರಿದ್ದಾನಾ? ನನಗೆ ತೋರಿಸಬಲ್ಲಿರಾ?" ಎಂಬ ಪ್ರಶ್ನೆಯನ್ನು ಕೇಳಿದ್ದು ಆಶ್ಚರ್ಯವಲ್ಲ; ಅಧ್ಯಾತ್ಮದ ಕುರಿತು ಇಂದಿಗೂ ಇಂತಹ ಬುದ್ಧಿ ಘರ್ಷಣೆ ನಡೆಯುತ್ತಿರುವುದಕ್ಕೆ ಯಾವತ್ತೂ ಅಪಕ್ವ ಮತ್ತು ಪಕ್ವ ಸಂದೇಹಗಳೇ ಮೂಲ. ಅಪಕ್ವ ಮನಸ್ಸುಗಳಲ್ಲಿ ಒಮ್ಮೊಮ್ಮೆ ಸದುದ್ದೇಶ ಮತ್ತು ದುರುದ್ದೇಶ ಎಂಬ ಎರಡು ಮೂಲದಿಂದಲೂ ಪ್ರಶ್ನೆಗಳು ಹೊಮ್ಮಬಹುದು. ಕೇಳುಗನ ಉದ್ದೇಶವು ಸದುದ್ದೇಶವಾಗಿದ್ದು ಸತ್ಯಾನ್ವೇಷಣೆ ಮಾತ್ರವೇ ಆಗಿದ್ದಾಗ - ಆಗ ಮಾತ್ರ ಸಪಾತ್ರರಿಂದ ಪಡೆಯುವ ಯಾವುದೇ ಸದುತ್ತರವು ಕೇಳುಗನನ್ನು ಜಾಗ್ರತಗೊಳಿಸಲು ಶಕ್ತವಾಗುತ್ತದೆ. ಆದ್ದರಿಂದಲೇ ಜ್ಞಾನಪಿಪಾಸು ಸತ್ಯಾನ್ವೇಷಕನಾಗಿದ್ದ ನರೇಂದ್ರನನ್ನು ಸಂಶಯಮುಕ್ತನನ್ನಾಗಿಸುವುದು ಗುರುವರಿಷ್ಠರಾಗಿದ್ದ ಶ್ರೀ ರಾಮಕೃಷ್ಣರಿಗೆ ಸಾಧ್ಯವಾಯಿತು. ನರೇಂದ್ರನು ಕೇಳಿದ ಮತ್ತು ಕೇಳಬೇಕೆಂದಿದ್ದ ಪ್ರಶ್ನೆಗಳಿಗೂ ಅಂದು ಶ್ರೀ ರಾಮಕೃಷ್ಣರು ಉತ್ತರಿಸಿಬಿಟ್ಟರು. ನರೇಂದ್ರನು ಮರುಮಾತನಾಡದಂತೆ ಆತನನ್ನು ಶ್ರೀ ರಾಮಕೃಷ್ಣರು ಪ್ರಭಾವಿಸಿದ್ದು ಗುರುಶಿಷ್ಯರ ಉತ್ಕೃಷ್ಟ ಬಾಂಧವ್ಯದ ಸಾಕ್ಷಿಯಾಗಿ - ಮಾದರಿಯಾಗಿ ಉಳಿದುಕೊಂಡಿತು.


"ಮಹಾಶಯರೇ, ನೀವು ದೇವರನ್ನು ಕಂಡಿದ್ದೀರಾ?"
"ಹೌದು; ಖಂಡಿತವಾಗಿ ಕಂಡಿದ್ದೇನೆ. ಈಗ ನಿನ್ನನ್ನು ನೋಡುತ್ತಿರುವಂತೆಯೇ ದೇವರನ್ನು ಕಂಡಿದ್ದೇನೆ. ಅಷ್ಟೇ ಅಲ್ಲ; ಇದಕ್ಕಿಂತಲೂ ಹೆಚ್ಚು ಸ್ಫುಟವಾಗಿ ಕಂಡಿದ್ದೇನೆ. ಮತ್ತು ಅವನನ್ನು ನಾನು ನಿನಗೂ ತೋರಿಸಬಲ್ಲೆ... ಹೌದು, ಭಗವಂತನನ್ನು ಕಾಣಬಹುದು; ಮಾತನಾಡಬಹುದು. ಆದರೆ ದೇವರು ಯಾರಿಗೆ ಬೇಕು ಹೇಳು ?... ಜನರು ತಮ್ಮ ಹೆಂಡತಿ ಮಕ್ಕಳು, ಆಸ್ತಿಪಾಸ್ತಿಗಾಗಿ ಕೊಡಗಟ್ಟಲೆ ಕಣ್ಣೀರು ಸುರಿಸುತ್ತಾರೆ. ಆದರೆ ದೇವರು ಬೇಕೆಂದು ಅಳುವವರು ಯಾರಿದ್ದಾರೆ ? ದೇವರಿಗಾಗಿ ಪ್ರಾಮಾಣಿಕವಾಗಿ ಹಂಬಲಿಸಿದ್ದೇ ಆದರೆ ಅವನು ದರ್ಶನ ಕೊಟ್ಟೇ ಕೊಡುತ್ತಾನೆ..."

ನರೇಂದ್ರನ ಮಿಂಚಿನಂತಹ ಪ್ರಶ್ನೆಗೆ ರಾಮಕೃಷ್ಣರಿಂದ ಸಿಡಿಲಿನಂತಹ ಉತ್ತರವು ತಕ್ಷಣವೇ ಸಿಡಿದಿತ್ತು. ಸತ್ವವುಳ್ಳ ಗುರುವು ಮಾತ್ರ ಹೀಗೆ ಉತ್ತರಿಸಬಲ್ಲ ! ತಾವು ಉತ್ತರಿಸುವಾಗ ಶ್ರೀ ರಾಮಕೃಷ್ಣರಲ್ಲಿ ಕಂಡ ಆತ್ಮವಿಶ್ವಾಸವು ನರೇಂದ್ರನಂತಹ ನರೇಂದ್ರನನ್ನೇ ಅಂದು ದಂಗುಬಡಿಸಿತ್ತು. ಅದಾಗಲೇ ಪಾಶ್ಚಾತ್ಯ ತತ್ತ್ವಶಾಸ್ತ್ರದ ಅಧ್ಯಯನವನ್ನು ಮಾಡಿ ಅರೆಬರೆ ಆಸ್ತಿಕ್ಯವಾದವನ್ನು ಮನಸಾರೆ ಒಪ್ಪಿಕೊಂಡಿದ್ದ ನರೇಂದ್ರನ ಬುಡವೇ - ಅಂದು ಅಲುಗಾಡಿದಂತಾಗಿತ್ತು. "ನರೇನ್, ನಿನಗೂ ಆ ದೇವರನ್ನು ತೋರಿಸುತ್ತೇನೆ..." ಎಂದು ಶ್ರೀ ರಾಮಕೃಷ್ಣರು ನುಡಿದಾಗ ದಿಗ್ಭ್ರಮೆಗೆ ಒಳಗಾದರೂ - "ಅಂತೂ ಕೊನೆಗೊಬ್ಬ ಸಿಕ್ಕಿದನಲ್ಲ... ದೇವರನ್ನು ನೋಡಿದ್ದೇನೆ ಎಂದು ಎದೆ ತಟ್ಟಿ ಹೇಳಬಲ್ಲವನು ಕೊನೆಗೂ ಸಿಕ್ಕಿದನಲ್ಲ.." ಎಂದು ನರೇಂದ್ರನು ಮನಸ್ಸಿನಲ್ಲೇ ಅಂದುಕೊಂಡಿದ್ದ. ಹೀಗಿದ್ದೂ... ನರೇಂದ್ರನ ಮನಸ್ಸಿನ ತಳಮಳವು ಮಾತ್ರ ನಿಂತಿರಲಿಲ್ಲ.

ಅದು ಹಾಗೇ. ಓದಿನ ವೈಶಾಲ್ಯವು ಯಾವತ್ತೂ ಸಂದೇಹ ತಳಮಳವನ್ನು ಹುಟ್ಟು ಹಾಕುವ ಜಾಯಮಾನದ್ದು. ಸಂದೇಹ ಎಂಬ ಪಿಶಾಚಿಗೆ ಯಾವಾಗಲೂ ನಿಂತಲ್ಲಿ ನಿಲ್ಲಲಾಗದ ಕುಲುಕಾಟ. ವಿಪರೀತ ಗೊಬ್ಬರ ಸಾರಗಳನ್ನು ಹೀರಿಕೊಂಡ ತರಕಾರಿಗಳು ರಕ್ಕಸ ಗಾತ್ರವನ್ನು ಹೊಂದುವಂತೆ - ನೂರೆಂಟು ಬಗೆಯ ವಿಷಯಜ್ಞಾನದ ಕಲಸುಮೇಲೋಗರದಿಂದ ಉಂಟಾಗುವ ಬುದ್ಧಿ ಸೊಕ್ಕಿನ ಪರಿಣಾಮವೂ ಅಂತಹುದೇ. ಆದರೆ - ಅಡ್ಡಪ್ರಶ್ನೆಗಳನ್ನು ಮುಂದಿಡುತ್ತ ದಿಕ್ಕುತಪ್ಪಿಸಿ ಸಂದೇಹ ಹುಟ್ಟಿಸುವಂತಹ "ಬುದ್ಧಿ ಕೊಬ್ಬು" - ಬೆಳವಣಿಗೆಯನ್ನು ಸ್ಥಗಿತಗೊಳಿಸುವ ರೋಗ. ಅದು ಅಧ್ಯಾತ್ಮಕ್ಕೂ ಹೊಂದುವುದಿಲ್ಲ. ಸಂಶಯಾತ್ಮಾ ವಿನಶ್ಯತಿ... ಎಂದದ್ದು ಅದಕ್ಕೇ. ಎಲ್ಲೆಲ್ಲೂ ಸಂಶಯ ಪೀಡೆ ಎಂದಾದರೆ - ಅದು ನಿಸ್ಸಂಶಯವಾಗಿ, ಬುದ್ಧಿಯ ಕೀಟಲೆ. ಸಂಶಯಚಿತ್ತವುಳ್ಳವನು ಎಂದಿಗೂ ಭಕ್ತನಾಗುವುದು ಅಸಾಧ್ಯ. ಪ್ರೀತಿ ತುಂಬಿದ ಮುಗ್ಧ ಹೃದಯದ ಭಕ್ತ - ಭಕ್ತಿ ಪಾರಾಯಣನಾಗದೆ - ಅಧ್ಯಾತ್ಮದ ಪ್ರವೇಶವು ಅಸಾಧ್ಯ. ಆದ್ದರಿಂದಲೇ ಸಂಶಯವೃತ್ತವನ್ನು ದಾಟಿ ಮುನ್ನಡೆಯುವುದು ಅನಿವಾರ್ಯ. ಯಾವುದೇ ಸಂಶಯಪೀಡೆಯನ್ನು ದಾಟಿಹೋಗಲು - ಸಮರ್ಥ ಗುರುವಿನ ಮಾರ್ಗದರ್ಶನವು ಅತ್ಯಗತ್ಯ. ಸದ್ಗುರುವಾದವನು ಮಾತ್ರ - "ಬುದ್ಧಿ ಕೊಬ್ಬನ್ನು" ಹಿತವಾಗಿ ಸವರಬಲ್ಲ.

ಶ್ರೀ ರಾಮಕೃಷ್ಣರಿಂದ ನೇರವಾದ ಉತ್ತರವನ್ನು ಪಡೆದ ಬಳಿಕವೂ ನರೇಂದ್ರನ ತಳಮಳವು ನಿಂತಿರಲಿಲ್ಲ; ಮನಸ್ಸಿನಲ್ಲಿ ಅದೇನೋ ಅಸಹಜ ತಲ್ಲಣ. ರಾಮಕೃಷ್ಣರಲ್ಲಿ ಅದೇನೋ ಅತಿರೇಕವಿದ್ದಂತೆ - ನರೇಂದ್ರನಿಗೆ ಅನ್ನಿಸುತ್ತಲೇ ಇತ್ತು. ರಾಮಕೃಷ್ಣರು ನರೇಂದ್ರನ ಸಂಶಯದ ಹೆಡೆ ತುಳಿದಿದ್ದರೂ ಅದರ ಬಾಲ ಇನ್ನೂ ಅಲುಗುತ್ತಿತ್ತು. ಸಂಶಯವನ್ನು "ಪಿಶಾಚಿ" ಅನ್ನುವುದು ಅದಕ್ಕೇ. ಎಷ್ಟು ಕೊಡವಿಕೊಂಡರೂ ಒಂದಷ್ಟು ಜೀವ ಉಳಿಸಿಕೊಳ್ಳುವ ಪೀಡೆ ಅದು. ಸಂಶಯದ ಮೂಲವೇ "ನಾನು" ಎಂಬ ಅವಿದ್ಯಾ ಅಹಂ. ಅದನ್ನು ಪಳಗಿಸಿಕೊಂಡ ಹೊರತು ಅಧ್ಯಾತ್ಮದ ಹಾದಿಯು ಪ್ರಶಸ್ತವಾಗದು.

ನರೇಂದ್ರನಿಗೇಕೆ ತಲ್ಲಣ ? 

ನಿರ್ಗುಣ ನಿರಾಕಾರವೇ ಸತ್ಯ ಎನ್ನುತ್ತಿದ್ದ ಬ್ರಹ್ಮ ಸಮಾಜ, ಒಂದರ್ಥದಲ್ಲಿ ನಿರಾಶಾವಾದವನ್ನು ಪ್ರತಿಪಾದಿಸಿದ್ದ ಬುದ್ಧನ ಚಿಂತನೆಗಳು... ಮತ್ತು ಅದಾಗಲೇ ಕೆಲವು ಪಾಶ್ಚಾತ್ಯ ಸಿದ್ಧಾಂತಗಳನ್ನೂ ಓದಿಕೊಂಡಿದ್ದ ನರೇಂದ್ರನಲ್ಲಿ ಆಗ ಗೊಂದಲವಿತ್ತು. ಅದುವರೆಗೆ ವಿಭಿನ್ನ ತಾತ್ತ್ವಿಕ ನಿಲುವನ್ನು ಆಶ್ರಯಿಸಿದ್ದ ನರೇಂದ್ರನಲ್ಲಿ - ರಾಮಕೃಷ್ಣರನ್ನು ಸಂಧಿಸಿದ ಆ ಸಂಧಿಕಾಲದಲ್ಲಿ ವೈಚಾರಿಕ ಸಂಘರ್ಷವು ತೊನೆದಾಡುತ್ತಿತ್ತು. ಅದು - ಯಾವುದು ಸರಿ ? ಯಾವುದು ತಪ್ಪು ? ಎಂಬ ವೈಚಾರಿಕ ತಾಕಲಾಟ; ತಾನು ಧಾರ್ಮಿಕ ವೇಷಗಳಿಗೆ ಮೋಸಹೋಗಬಾರದು, ಸರಿದಾರಿಯನ್ನೇ ಆಯ್ದುಕೊಳ್ಳಬೇಕೆಂಬ ಎಚ್ಚರದ ತಾಕಲಾಟ. ಪರಮ ಎಚ್ಚರ. ಅದುವರೆಗೆ ತಾನು ಒಪ್ಪಿ ಮೆಚ್ಚಿ ಅನುಸರಿಸುತ್ತಿದ್ದ ಬ್ರಹ್ಮಸಮಾಜದ ದಾರಿಯೇ ಪರಮೋಚ್ಚ ಎಂಬ ಪೂರ್ವಾಗ್ರಹದ ಹಿಂದೆಳೆತ. ಆದ್ದರಿಂದಲೇ - ಶ್ರೀ ರಾಮಕೃಷ್ಣರ ಅನುಭವಗಳೆಲ್ಲವೂ - "ಕಾಣದ ವಸ್ತುವೊಂದರ ಸಾಕಾರ ವೈಭವೀಕರಣ ಇರಬಹುದೆ ?" - ಎಂದೂ ಅನ್ನಿಸುತ್ತಿತ್ತು.

ಅಸಾಮಾನ್ಯ ಬುದ್ಧಿಮತ್ತೆಯು ಯಾವತ್ತೂ ಸಂಶಯಗಳ ಜನ್ಮಸ್ಥಾನ.  ಅದು ರೋಗಕಾರಣವೂ ಆಗಬಲ್ಲದು. ಅಂತಹ ಕಾರಣವನ್ನು ತಿಳಿದು ಉಪಚರಿಸುವ ಯೋಗ್ಯ ಗುರುವಿನ ಮಾರ್ಗದರ್ಶನವಿಲ್ಲದೇ ಹೋದರೆ ರೋಗ ಉಲ್ಬಣಗೊಂಡು - ಪ್ರಚಂಡ ಬುದ್ಧಿಮತ್ತೆಯಿಂದ ಪ್ರಚಂಡ ಅನಾಹುತಗಳೂ ಸಂಭವಿಸಬಲ್ಲದು. ಶಾಂತಿ, ನೆಮ್ಮದಿ, ಜೀವನದ ಅರ್ಥವನ್ನು ಕಂಡುಕೊಳ್ಳಲು ಬುದ್ಧಿಮತ್ತೆಯ ಜೊತೆಗೆ ವಿನಮ್ರತೆ ಮತ್ತು ಸಂದೇಹಮುಕ್ತರೂ ಆಗುವುದು ಅನಿವಾರ್ಯ. ಸಂದೇಹಮುಕ್ತರಾಗಲು ಸರಳಾತಿಸರಳರಾಗುವುದೇ ಕೀಲಿಕೈ. ಆದರೆ ಸರಳವಾಗುವುದಾದರೂ ಹೇಗೆ ? ಬುದ್ಧಿಜನ್ಯ ಕುಟಿಲತೆಯ ಜಟಿಲತೆಯನ್ನು ಕೊಡವಿಕೊಳ್ಳದೆ ಸರಳವಾಗಲಾಗದು. ಇವೆರಡೂ ಪರಸ್ಪರ ಪೂರಕ. ಇಂತಹ ಬಗೆಬಗೆಯ ಪ್ರಶ್ನಾರೋಗಗಳಿಗೆ ತಕ್ಕ ಔಷಧವನ್ನು ನೀಡಿ ಗುಣ ಪಡಿಸಬಲ್ಲವನೇ - ಗುರು. "ಪರಮ ಎಚ್ಚರ "ದ ಪ್ರತೀಕವಾಗಿದ್ದ ನರೇಂದ್ರನು ತನ್ನ ಸಂಶಯಗಳನ್ನು ಕೊಡವಿಕೊಂಡು ಪರಮಹಂಸರಿಗೆ ಶರಣಾದುದೇ ಇದಕ್ಕೆ ಸಾಕ್ಷಿ. ಶ್ರೀ ರಾಮಕೃಷ್ಣರಿಗೆ ಬದುಕಿನ ಕಗ್ಗಂಟುಗಳ ಪೂರ್ಣ ಪರಿಜ್ಞಾನವಿದ್ದೂ - ಸರಳತೆಯ ಜೀವಂತ ಮಾದರಿಯಾಗಿದ್ದರು. ಆದ್ದರಿಂದಲೇ - ಅವರು ತಮ್ಮ ಶಿಷ್ಯರನ್ನು ಸಂದೇಹಮುಕ್ತಗೊಳಿಸಿ ರೂಪಿಸಲು ಸಾಧ್ಯವಾಯಿತು.

ಕಾಲಕ್ರಮದಲ್ಲಿ ಗುರು ರಾಮಕೃಷ್ಣರು ತಮ್ಮ ಶಿಷ್ಯರೊಂದಿಗೆ ನಡೆಸುತ್ತಿದ್ದ ಅವಿರತ ಬುದ್ಧಿನುರಿತ ಮತ್ತು ಅವರ ನಿಕಟ ಸಂವಾದ ಸಾಮೀಪ್ಯದಿಂದ ನರೇಂದ್ರನ ಸಂದೇಹಗಳೆಲ್ಲವೂ ಕೊನೆಗೊಂಡಿದ್ದವು. ಸಂದಿಗೊಂದಿಗಳಿಂದ ಪ್ರಶ್ನೆಗಳ ಹೆಗ್ಗಂಟಿನೊಂದಿಗೆ ನುಗ್ಗುವ ಸಮರ್ಥ ಶಿಷ್ಯರ ಸಂದೇಹಗಳನ್ನು ತಾಳ್ಮೆಯಿಂದ ಗ್ರಹಿಸಿ ನಿವಾರಿಸಬಲ್ಲವನೇ "ಸಮರ್ಥ ಗುರು" ಎನ್ನಿಸಿಕೊಳ್ಳುತ್ತಾರೆ. ಭಕ್ತರ ಸಂಶಯರೋಗವನ್ನು ಸಮೂಲವಾಗಿ ಗುಣಪಡಿಸುತ್ತಿದ್ದುದರಿಂದಲೇ ಶ್ರೀ ರಾಮಕೃಷ್ಣರು ಸಮರ್ಥ ಭವಗುರುವಾದರು.

ಏಕಂ ಸತ್; ವಿಪ್ರಾ ಬಹುಧಾವದಂತಿ... ಎಷ್ಟು ಮತ, ಅಷ್ಟು ಪಥ. ಹೀಗಿದ್ದೂ.. ಸರ್ವಮಾರ್ಗಗಳೂ ಒಂದೇ ನಿಲಯಕ್ಕೆ ಕರೆದೊಯ್ಯುವ ಹಾದಿಗಳು. ರಾಮಕೃಷ್ಣರ ಈ ಸಿದ್ಧಾಂತವನ್ನು ಅವರ ನಡೆನುಡಿಗಳಲ್ಲಿ ಪ್ರತ್ಯಕ್ಷವಾಗಿ ಕಂಡ ರಾಖಾಲ, ಬಾಬುರಾಮ, ಯೋಗೀಂದ್ರನಾಥ, ತಾರಕ, ಶರತ್, ಹರಿಪ್ರಸನ್ನ ಮುಂತಾದ ಅನೇಕ ಬಂಗಾಳೀ ಶಿಷ್ಯರೂ ಅವರಿಂದ ಪ್ರಭಾವಿತರಾಗಿ ಸತ್ಯದ ಅನ್ವೇಷಣೆಯ ಹಾದಿಯತ್ತ ಆಕರ್ಷಿತರಾಗಿಹೋಗಿದ್ದರು; ಅವರನ್ನು ಭಕ್ತಿಯಿಂದ  ಹಿಂಬಾಲಿಸತೊಡಗಿದ್ದರು. ಇತ್ತ ನರೇಂದ್ರ ರಾಮಕೃಷ್ಣರೂ ಪರಸ್ಪರರ ಹೃದಯದಲ್ಲಿ ನಿಸ್ಸಂದೇಹವಾಗಿ ಸ್ಥಾಪಿಸಲ್ಪಟ್ಟಿದ್ದರು. ತಮ್ಮ ಪರಮಪ್ರಿಯ ಶಿಷ್ಯನಾದ  ನರೇಂದ್ರನಲ್ಲಿ ಅದ್ವೈತದ ಕ್ಷಣಗಳು ಸ್ಥಿರಗೊಂಡು ಆತನು ಧ್ಯಾನ, ಸಮಾಧಿಯ ಹಂತವನ್ನು ಶಾಸ್ತ್ರೀಯವಾಗಿ ತಲುಪಲು ಶ್ರೀ ರಾಮಕೃಷ್ಣರೇ ಮುಂದೆ ನಿಂತು ದಾರಿ ತೋರಿದರು; ಅಂತಿಮವಾಗಿ, ತಮ್ಮ ತಪಸ್ಸನ್ನು ಅದೇ ಸತ್ಪಾತ್ರ ಶಿಷ್ಯನಿಗೆ ಪೂರ್ತಿಯಾಗಿ ಧಾರೆಯೆರೆದರು; ತಮ್ಮ ಆಧ್ಯಾತ್ಮಿಕ ಪರಂಪರೆಯ ನೇತೃತ್ವವನ್ನೂ ನರೇಂದ್ರನಿಗೇ ವಹಿಸಿಕೊಟ್ಟರು.

ಶ್ರೀ ರಾಮಕೃಷ್ಣರ ಅಂತರಂಗದ ಶಿಷ್ಯರು - ಅವರ ಒಡನಾಟದಲ್ಲಿದ್ದು ಸ್ವ-ರೂಪದರ್ಶನದ ಮೊದಲ ಹೆಜ್ಜೆಯನ್ನಿಡುತ್ತಿರುವಾಗಲೇ ಶ್ರೀ ರಾಮಕೃಷ್ಣರು ಇಹಯಾತ್ರೆ ಮುಗಿಸಿಬಿಟ್ಟಿದ್ದರು. ಆಗ ಇನ್ನೂ ಅಧ್ಯಾತ್ಮದ ಹಾದಿಯಲ್ಲಿ ಅಂಬೆಗಾಲಿಕ್ಕುತ್ತ ತಮ್ಮ ಗೊತ್ತುಗುರಿಗಳಲ್ಲಿ ಪೂರ್ಣ ಸ್ಪಷ್ಟತೆಯಿಲ್ಲದ ಅವರ ಶಿಷ್ಯರು - ಅಂದು ಹಾಯಿ ಇಲ್ಲದ ದೋಣಿಯಂತೆ ವಿಚಲಿತರಾಗಿದ್ದರು. ಗುರುಗಳ ದೇಹತ್ಯಾಗದ ನಂತರ ದಿಕ್ಕುತೋಚದಂತಾಗಿದ್ದ ಅವರ ಶಿಷ್ಯ ಪಡೆಯು - ಆರಂಭದಲ್ಲಿ ಆತ್ಮೋನ್ನತಿಯ ಹಾದಿಯನ್ನು ಮಾತ್ರ ಅವಲಂಬಿಸಿತ್ತು. ಆದರೆ ನರೇಂದ್ರನು ಸ್ವಾಮಿ ವಿವೇಕಾನಂದರಾದ ಕ್ಷಣದಲ್ಲಿಯೇ "ರಾಮಕೃಷ್ಣ ಭಾವ"ದ ದೃಷ್ಟಿ, ವ್ಯಾಪ್ತಿ ವಿಸ್ತರಿತಗೊಂಡು ಭಾರತೀಯ ಸನಾತನ ಧರ್ಮದ ದಿಗ್ವಿಜಯದ ಓನಾಮವಾದಂತಾಗಿತ್ತು; "ಜಗತ್ತಿನ ಉದ್ಧಾರ" ಎಂಬ ವಿಶಾಲ ಭೂಮಿಕೆಯೊಂದು ಕ್ರಮೇಣ ಸಿದ್ಧವಾಯಿತು. ಗುರಿಯನ್ನು ಸ್ಪಷ್ಟವಾಗಿ ಕೊರೆಯಲಾಯಿತು. ಆತ್ಮೋನ್ನತಿ ಮತ್ತು ವಿಶ್ವ ಚಿಂತನೆ ಎಂಬ ಎರಡು ಖಡ್ಗಗಳನ್ನು ತಮ್ಮ ಎರಡೂ ಕೈಗಳಿಂದ ಝಳಪಿಸುತ್ತ ಭಾರತೀಯ ಅಧ್ಯಾತ್ಮವನ್ನು ಮತ್ತೊಮ್ಮೆ ಪುನರುಜ್ಜೀವಗೊಳಿಸಿ, ಹೊಸ ವ್ಯಾಖ್ಯೆಯೊಂದಿಗೆ ಸರ್ವಮಾನ್ಯಗೊಳಿಸಿದವರು ಸ್ವಾಮಿ ವಿವೇಕಾನಂದ ಎಂದೇ ಮುಂದೆ ಖ್ಯಾತರಾದ - ಶ್ರೀ ರಾಮಕೃಷ್ಣರ ಅದೇ ಸ್ವಾಭಿಮಾನೀ ಶಿಷ್ಯ - ನರೇಂದ್ರನಾಥ ದತ್ತ. ಸ್ವಾಮಿ ವಿವೇಕಾನಂದರ ನೇತೃತ್ವದಲ್ಲಿ ಮುಂದೆ ನಡೆದುದೆಲ್ಲವೂ ಮಹಾ ವಿಸ್ಮಯಗಳು....



ಸದ್ಗುರು

ತತ್ಕಾಲದಲ್ಲೂ ಆತ್ಮೋದ್ಧಾರನಿರತರು ಅನೇಕರಿದ್ದರೂ ವಿಶ್ವ ಕಲ್ಯಾಣದ ಚಿಂತನೆ ನಡೆಸುವ "ಸದ್ಗುರು"ಗಳು ಬೆರಳೆಣಿಕೆಯಷ್ಟು ಮಾತ್ರ. "ಸದ್ಗುರು" ಎಂದೇ ವಿಖ್ಯಾತರಾದ ಜಗ್ಗಿ ವಾಸುದೇವ್ ಅವರು ಅಂತಹ ವಿರಳರಲ್ಲಿ ಒಬ್ಬರು. ಉನ್ನತ ಉದಾತ್ತ ವಿಚಾರಗಳನ್ನು ಜನಸಾಮಾನ್ಯರಿಗೆ ಬೋಧಿಸುತ್ತಿರುವ ಇವರು ತತ್ಕಾಲೀನ ಸಂಗತಿಗಳ ಮೂಲಕವೇ ಶುದ್ಧ ಬುದ್ಧಿ ಮತ್ತು ಭಾವಪ್ರೇರಕ ವೈಚಾರಿಕ ಎಚ್ಚರವನ್ನು ಜನಮಾನಸದಲ್ಲಿ ಮೂಡಿಸುತ್ತಿದ್ದಾರೆ.


"ಜೀವನವು ಒಂದು ವಿಷಯವಾದರೆ, ಜೀವನದ ಮೂಲ ಎನ್ನುವುದು ಮತ್ತೊಂದು ಸಂಗತಿ. ಪ್ರತಿಯೊಂದು ಪ್ರಾಣಿ, ಸಸ್ಯ, ಬೀಜ - ಈ ಎಲ್ಲದರಲ್ಲಿಯೂ ಜೀವನ ಮೂಲ ಎಂಬುದು ಕೆಲಸ ಮಾಡುತ್ತಿರುತ್ತದೆ. ಆದರೆ ಮಾನವನಲ್ಲಿರುವ ಈ ಜೀವನದ ಮೂಲವು ಹೆಚ್ಚು ಪ್ರಾಮುಖ್ಯತೆಯನ್ನು ಹೊಂದಿದೆ... ಭೌತಿಕ ಸೃಷ್ಟಿಯ ಅತೀ ಆತ್ಮೀಯ ಭಾಗವು ಮಾನವ ದೇಹವೇ ಆಗಿದೆ. ಇದು ಮನುಷ್ಯರ ಅರಿವಿನಲ್ಲಿರುವ ಮೊದಲ ಉಡುಗೊರೆಯಾದರೂ - ದೇಹವೊಂದೇ ನಮಗೆ ದಕ್ಕಿರುವ ಉಚಿತ ಉಡುಗೊರೆ - ಎಂಬ ಸತ್ಯವನ್ನು ತಿಳಿಯಿರಿ..." (ಯಾವುದೇ ಉಡುಗೊರೆಯ ಸದುಪಯೋಗ ಮತ್ತು ದುರುಪಯೋಗಗಳೆರಡಕ್ಕೂ ಉಡುಗೊರೆ ನೀಡಿದವರು ಸರ್ವಥಾ ಬಾಧ್ಯರಲ್ಲ... ಉಚಿತವನ್ನು - ಉಚಿತ/ಅನುಚಿತವಾಗಿಸುವ ದೇಹಧಾರಿಯೇ ಅದಕ್ಕೆ ಬಾಧ್ಯ .) 

"ಭೌತಿಕದ ಪರಿಧಿಯ ಹೊರಗಿನದನ್ನು ಪ್ರವೇಶಿಸುವುದು - ಎಂದರೆ ಅದು ಕಾರ್ಯವಿಧಾನವನ್ನು ಪ್ರವೇಶ ಮಾಡಿದಂತೆಯೇ. ಆದ್ದರಿಂದ ಯಾವ ಜೀವನದ ಅನುಭವಗಳು ಭೌತಿಕದ ಪರಿಮಿತಿಯಿಂದ ಅತೀತವಾಗಬಲ್ಲುದಾದರೆ, ಅಂತಹ ದೇಹಗಳು ಕಾರ್ಯವಿಧಾನಕ್ಕೆ ಸಹಜವಾಗಿ ಸಿಗಬಲ್ಲವು. ಅಂತಹ ದೇಹಗಳು ಮ್ಯಾಜಿಕ್ ನಂತೆ ಕೆಲಸ ಮಾಡಬಲ್ಲವು. ಇಂತಹ Super power ಗಳು ಇತರರಿಗೆ ಮ್ಯಾಜಿಕ್ ನಂತೆ ತೋರಿದರೂ ಆಯಾ ಜೀವಕ್ಕೆ - ಇನ್ನೊಂದು ಆಯಾಮವನ್ನು ಗ್ರಹಿಸಲು ಆರಂಭಿಸಿರುವ ಅನುಭವವನ್ನು ಕೊಡುತ್ತದೆ. ಈ ಸಾಧ್ಯತೆಯು ಪ್ರತಿಯೊಂದು ಮನುಷ್ಯ ದೇಹಕ್ಕೂ ಮುಕ್ತವಾಗಿದೆ. ಜೀವನವು ಪ್ರತಿಯೊಬ್ಬರಿಗೂ ವಿಶಾಲವಾಗಿ ತೆರೆದುಕೊಂಡಿದೆ; ಪ್ರತಿಯೊಂದನ್ನೂ ತೆರೆದಿಟ್ಟಿದೆ. ಅಸ್ತಿತ್ವವು ಯಾರಿಗೂ ಏನನ್ನೂ ತಡೆಹಿಡಿದಿಲ್ಲ. ಮನಸ್ಸು ಮಾಡಿದರೆ ಇಡೀ ವಿಶ್ವವನ್ನೇ ಹೊಂದಬಹುದು. ದಾರ್ಶನಿಕರು - "ಬಾಗಿಲು ಬಡಿ; ಅದು ತೆರೆದುಕೊಳ್ಳುತ್ತದೆ " ಎಂದಿದ್ದರು. ಆದರೆ ವಿಶ್ವ ಎಂಬ ಸಮಸ್ತಕ್ಕೆ ಬಾಗಿಲೇ ಇಲ್ಲ. ಅದು ವಿಶಾಲವಾಗಿ ತೆರೆದುಕೊಂಡಿದೆ; ಆದ್ದರಿಂದ ಬಾಗಿಲು ಬಡಿಯುವುದೂ ಬೇಡ. ಆದರೆ ಅವರವರೇ ಒಳಕ್ಕೆ ನಡೆಯಲು ಇಚ್ಛಿಸಬೇಕು... ಅಷ್ಟೆ.."  
                                                                                                           (ಸದ್ಗುರು - ಅಮೃತಧಾರೆ )

ಹೌದು. ಇಚ್ಛಿಸಬೇಕು. ಇಚ್ಛಿಸುವುದೇ ದೊಡ್ಡ ಸಾಧನೆ . ಆಗ ಉಳಿದವುಗಳು ಆ ಇಚ್ಛೆಯನ್ನು ಅನುಸರಿಸುತ್ತವೆ. ಇಚ್ಛೆ ಎಂಬುದನ್ನು ಬೆತ್ತ ತೋರಿಸದೇ ಪಳಗಿಸಲಾಗುವುದಿಲ್ಲ. ಅದನ್ನೇ ಸ್ವ ನಿಯಂತ್ರಣ ಎನ್ನುವುದು. ಯಾವುದೇ ಗುರುಭಾವಗಳನ್ನು ಓದಿ ಚಪ್ಪರಿಸುವವರಿಗೆ ಈಗ ಬರಗಾಲವಿದೆಯೆ ? ಇಲ್ಲ ; ಆದರೆ ಅರಿತು ಆಚರಿಸುವವರಿಗೆ - ಅಂದಿನಿಂದಲೂ ಬರಗಾಲವೇ . ಏಕೆಂದರೆ ಅಧ್ಯಾತ್ಮವು - ಕಡಿವಾಣವಿಲ್ಲದ, ಮಾಗದ ಪೀಚುಜೀವವನ್ನು ಒಳಗೆ ಬಿಟ್ಟುಕೊಳ್ಳುವುದಿಲ್ಲ ! ಅದು ಸುರಕ್ಷಿತ ವಲಯ !

ಸಾಮಾಜಿಕ ಧರ್ಮ...

ಧರ್ಮ ಎಂದರೆ ಸಜ್ಜನಿಕೆ, ಕರುಣೆ, ಸಮಾನತೆ, ಅಹಿಂಸೆ, ಶಿಸ್ತು, ಸಂಯಮ, ಕರ್ತವ್ಯಬದ್ಧತೆ... ಮುಂತಾದ ಅನೇಕ ಜೀವೋದ್ಧಾರಕ ಮೌಲ್ಯಗಳ ಸಂಗ್ರಹಿತ ಸಂವಿಧಾನ. ಇಂತಹ ಜೀವ ಭಾವಪೋಷಕ ಗುಣಗಳನ್ನು ರೂಢಿಸಿಕೊಳ್ಳಲು ಸಹಾಯ ಮಾಡುವುದು - ಅಧ್ಯಾತ್ಮ ಚಿಂತನೆ; ಓದು; ಸತ್ಸಂಗ ಮತ್ತು ದೈವೀಕ ಭಾಷೆಯಾದ "ಮೌನ" ಎಂಬ ಏಕಾಂತ. ಸಚ್ಚಿಂತನೆಯು ಕೂಡ ಮೌನಧ್ಯಾನವೇ ಆಗಿದೆ. ಜೀವಕೋಟಿಗಳ ಸ್ವಪ್ರಯತ್ನವಿಲ್ಲದೆ ಎಂದಿಗೂ ಧರ್ಮಪ್ರಜ್ಞೆಯು ಜಾಗ್ರತವಾಗದು. ಅದೊಂದು ಬಗೆಯ ಅಂತಃ ಚಿಕಿತ್ಸೆ. ಗುಣಪೋಷಣೆ ಎಂಬ ಅಂತಹ ಚಿಕಿತ್ಸೆಯಿಂದಲೇ ಧಾರ್ಮಿಕ ವ್ಯಕ್ತಿತ್ವವನ್ನು ಕಡೆದುಕೊಳ್ಳುವುದು ಸಾಧ್ಯ. ಆದರೆ - ಅಲ್ಲೇ ಇರುವುದು ಸಮಸ್ಯೆ !

ಆಗಿಂದಾಗ ಸಿಗುವ "ನಗದು ಲಾಭ"ವನ್ನು ಮಾತ್ರ ರೂಢಿಸಿಕೊಂಡಿರುವ ಲೌಕಿಕ ಮನಸ್ಸುಗಳಿಗೆ ತತ್ಕಾಲದ ಪ್ರತಿಫಲದ ಹುಡುಕಾಟದಲ್ಲೇ ಮಗ್ನವಾಗಿರುವ ರೂಢಿಯಾಗಿಬಿಟ್ಟಿದೆ. ಆದ್ದರಿಂದಲೇ ವ್ಯಕ್ತಿತ್ವವನ್ನು ಸಂಪನ್ನಗೊಳಿಸುವ "ನಗದ ನಗಿಸದ ವ್ಯಾಪಾರ" ಎಂದರೆ ಅಷ್ಟಕ್ಕಷ್ಟೆ. ಆದ್ದರಿಂದಲೇ ಗುಣ ಪೋಷಣೆ - ಧರ್ಮ ಎಂದರೆ ಹೇವರಿಕೆ. ಗುಣಗಳೇ ಸಂಪತ್ತು ಎಂದುಕೊಳ್ಳಲಾಗದ ಪ್ಲಾಸ್ಟಿಕ್ ಮನಸ್ಸುಗಳಿಗೆ ಸಹಜವಾಗಿ, ಅಧ್ಯಾತ್ಮದ ಹಾದಿಯು ಒಗ್ಗಲಾರದು. ಸದಿಚ್ಛೆಯು ದೃಢವಾಗಿ ಸ್ಪಂದಿಸದಿದ್ದರೆ ಯಾವ ಸಾಧನೆಯೂ ಅಸಾಧ್ಯ. ಇಚ್ಛಾ ಶಕ್ತಿಯಿಂದ ಅಸಂಭವಗಳೂ ಸಂಭವಿಸಬಹುದು ಎಂಬುದು ತಿಳಿದಿದ್ದರೂ ಕೂಡ ಇಚ್ಛಾ ಶಕ್ತಿಯನ್ನು ರೂಢಿಸಿಕೊಳ್ಳಲಾಗದ ಆಲಸ್ಯ ಮತ್ತು ಬಿಟ್ಟಿ ಸುಖದ ಅನುಚಿತ ಅಪೇಕ್ಷೆಗಳು ಮನುಷ್ಯರು ಮುನ್ನಡೆಯಲಾಗದಂತೆ ಅವರನ್ನು ಆಸೆಗಳ ಕಂಬಕ್ಕೆ ಕಟ್ಟಿಬಿಟ್ಟಿವೆ. ಕೇವಲ ಅನರ್ಥಗಳಿಗೆ ಮೂಲಹೇತುವಾದ ಅರ್ಥ - ಪದಾರ್ಥಗಳ ಸಂಗ್ರಹದ ಹಿಂದೆ ಬಿದ್ದಿರುವ ಮನುಷ್ಯ ಸಂಕುಲವು - ಬದುಕಿನ ನಿಜಾರ್ಥ ಸೌಂದರ್ಯವನ್ನೇ ಕಳೆದುಕೊಳ್ಳುತ್ತ ಬಂದಿದೆ.

ಹಾಗಿದ್ದರೆ ಅರ್ಥಭಾಗ್ಯವನ್ನು ಬಯಸುವುದು ಅಸಮಂಜಸವೆ ?

ಹಾಗೆ ತೀರ್ಮಾನಿಸಿದರೆ ಅದೂ ಅನರ್ಥವೇ ಆದೀತು. ಅರ್ಥ ಎಂಬುದು ಸರ್ವಾರ್ಥಗಳ ಮೂಲವೂ ಹೌದು; ಹಾಗೇ - ಅನರ್ಥಗಳ ಹೇತುವೂ ಆಗಬಲ್ಲದು ! ಹೋಗುವಾಗಲೂ ಬರುವಾಗಲೂ ಕೊಯ್ಯಬಲ್ಲ ಹರಿತವಾದ ಆಯುಧವನ್ನು ಬಳಸುವಂತೆ ಎಚ್ಚರದಿಂದ ಬಳಸಿಕೊಂಡರೆ ಮಾತ್ರ - ಅರ್ಥವು ಜೀವಮುಖಿ. ಅತ್ಯಂತ ಶಿಸ್ತಿಗೆ ಒಳಪಟ್ಟಾಗ ಮಾತ್ರ - ಅರ್ಥದಿಂದ ಸದರ್ಥಗಳು ಸಂಭವಿಸುತ್ತವೆ. ಹಿತ - ಮಿತದಲ್ಲೇ ಅರ್ಥ ಫಲವು ಅಡಗಿದೆ.

ಶ್ರೀ ರಾಮಕೃಷ್ಣರು ಬದುಕಿನುದ್ದಕ್ಕೂ ನಡೆಸಿದ್ದ ಸಂಭಾಷಣೆಗಳು - ಕಾಮ ಕಾಂಚನಗಳ ಪಕ್ಷದಲ್ಲಿ ಇರಲಿಲ್ಲ. ಹಾಗೆಂದು... ಪ್ರಾಪಂಚಿಕರು ಧರ್ಮದ ವ್ಯಾಪ್ತಿಯಲ್ಲಿ ಅತ್ಯಾಸೆಗೆ ಒಳಗಾಗದೆ ಸೌಭಾಗ್ಯಗಳನ್ನು ಬಳಸುವುದಕ್ಕೆ ಅವರ ವಿರೋಧವೂ ಇರಲಿಲ್ಲ. ಪ್ರಾಪಂಚಿಕದೊಂದಿಗೆ ಪರಮಾರ್ಥವನ್ನು ಶಿಸ್ತಿನಿಂದ ಪೋಣಿಸಿದ ಚತುರಮತಿಗೆ ಶ್ರೀ ರಾಮಕೃಷ್ಣರು ಉಜ್ವಲ ದೃಷ್ಟಾಂತವಾಗಿ ನಿಲ್ಲುತ್ತಾರೆ. ಆದ್ದರಿಂದಲೇ ಆಧುನಿಕತೆ ಎಂಬ ಭ್ರಾಂತಿಗೊಳಗಾಗುತ್ತಿದ್ದ ಅಂದಿನ ಯುವಜನರನ್ನು ಪ್ರಭಾವಿಸಲು ಅವರು ಸಮರ್ಥರಾದರು. ಉತ್ಕೃಷ್ಟ ಗುರುವೊಬ್ಬ ಅಸಾಧ್ಯಗಳನ್ನು ಸಾಧಿಸಿದ ಅನೇಕ ದೃಷ್ಟಾಂತಗಳು ಭಾರತೀಯರ ಮುಂದಿವೆ. ಕಟ್ಟುನಿಟ್ಟಿನ ಶಿಸ್ತಿನ ಸಾಧನೆ ಮತ್ತು ಯೋಜನೆಯಿಂದ - ಮನುಷ್ಯಮಾತ್ರರಿಗೆ ಅಸಾಧ್ಯವೆಂದು ಕಾಣುವುದನ್ನೂ ಸಾಧ್ಯಗೊಳಿಸಬಹುದು ಎಂಬುದನ್ನು ಭಾರತೀಯ ಚರಿತ್ರೆಯಲ್ಲಿ - ಹಂಪೆಯ ಇತಿಹಾಸದಲ್ಲಿ ಸಾಧಿಸಿ ತೋರಿದ ವಿದ್ಯಾರಣ್ಯರೂ  ಸಿದ್ಧಸಾಧ್ಯ ಗುರು ಪಙ್ಕ್ತಿಯಲ್ಲಿ ನಿಂತಿರುವ ಯತಿವರೇಣ್ಯರು.

13 ನೆಯ ಶತಮಾನದ ಉತ್ತರಾರ್ಧದಲ್ಲಿ ದೇವಗಿರಿ ಸಂಸ್ಥಾನವನ್ನು ಯಾದವ ಕುಲದ ಸಂಗಮರಾಜರು ಆಳುತ್ತಿದ್ದಾಗ ಅವರ ಬಳಿಯಲ್ಲಿ ಮಾಯಣ ಎಂಬ ಬ್ರಾಹ್ಮಣನು ಮಂತ್ರಿಯಾಗಿದ್ದ; ಅನಂತರ ತನ್ನ ಮಂತ್ರಿಪದವಿಯನ್ನು ತ್ಯಾಗ ಮಾಡಿದ್ದ. ಅನಂತರ ದೇವಗಿರಿಯಿಂದ ಹೊರಟು ಕರ್ನಾಟಕದ ಪಂಪಾಕ್ಷೇತ್ರದಲ್ಲಿ ನೆಲೆಯೂರಿ ತನ್ನ ಪತ್ನಿ ಶ್ರೀಮತೀ ದೇವಿಯೊಂದಿಗೆ ಸಂಸಾರ ಸಾಗಿಸುತ್ತ ಅಧ್ಯಾತ್ಮ ಚಿಂತನೆಯಲ್ಲಿ ತೊಡಗಿಕೊಂಡಿದ್ದ. ವೇದವೇದಾಂಗ ಪಾರಂಗತನಾಗಿದ್ದ ಮಾಯಣನು ಸಕಲರಿಂದಲೂ ಸನ್ಮಾನಿತನಾಗಿದ್ದ. ಈತನಿಗೆ ಕಾಲಕ್ರಮದಲ್ಲಿ ಮಾಧವ, ಸಾಯಣ, ಭೋಗನಾಥ ಎಂಬ ಮೂವರು ಮಕ್ಕಳು ಜನಿಸಿದರು. ಅವರಲ್ಲಿ ಹಿರಿಯ ಮಗನೇ ಮಾಧವ. ಇವರೇ ಮುಂದೆ "ವಿದ್ಯಾರಣ್ಯರು" ಎಂದು ಪ್ರಸಿದ್ಧರಾದವರು. ಹರಿಹರ (ಹುಕ್ಕ), ಬುಕ್ಕ ಎಂಬ ವೀರರನ್ನು ಅನುಗ್ರಹಿಸಿ ಪಂಪಾಕ್ಷೇತ್ರದಲ್ಲಿ ಅವರನ್ನು ಪ್ರತಿಷ್ಠಾಪಿಸಿ "ಕರ್ನಾಟಕ ಸಿಂಹಾಸನ ಸ್ಥಾಪನಾಚಾರ್ಯ" ಎಂಬ ಸಾರ್ಥಕ ಬಿರುದಿಗೆ ಪಾತ್ರರಾದವರು - ಶ್ರೀ ವಿದ್ಯಾರಣ್ಯರು.



ಈ ಹರಿಹರ ಮತ್ತು ಬುಕ್ಕಣ್ಣ ಸೋದರರು ಸಂಗಮರಾಜನ ಮಕ್ಕಳು. ಸುಮಾರು 1327 ರಲ್ಲಿ ಮೊಹಮ್ಮದ್ ಬಿನ್ ತೊಗ್ಲಕ್ ಎಂಬ ದಾಳಿಕೋರನು ಹೊಯ್ಸಳ ರಾಜ್ಯವನ್ನು ಧ್ವಂಸಮಾಡಿ ದಕ್ಷಿಣದತ್ತ ಮುಂದುವರಿಯುತ್ತಿದ್ದ. ಆಗ ಈ ಹುಕ್ಕ ಬುಕ್ಕ ಸೋದರರು ಮೊಹಮ್ಮದ್ ಬಿನ್ ತೊಗ್ಲಕ್ ನ ಕಣ್ಣು ತಪ್ಪಿಸಿ ಓಡುತ್ತ ಬಂದು - ಆಗ ಪಂಪಾಕ್ಷೇತ್ರದಲ್ಲಿದ್ದ ವಿದ್ಯಾರಣ್ಯರಲ್ಲಿ ಶರಣಾಗುತ್ತಾರೆ. ಹತಾಶ ಸ್ಥಿತಿಯಲ್ಲಿದ್ದ ಇದೇ ಸೋದರರಲ್ಲಿ ಪ್ರೇರಣೆಯನ್ನು ತುಂಬಿದ ವಿದ್ಯಾರಣ್ಯರು - ಅವರಲ್ಲಿ ಹೊಸ ಕನಸುಗಳನ್ನು ಬಿತ್ತುತ್ತಾರೆ. ಅನಂತರ ವಿದ್ಯಾರಣ್ಯರು ಸೂಚಿಸಿದ ಸ್ಥಳದಲ್ಲಿಯೇ ಹುಕ್ಕ ಬುಕ್ಕರು ಹೊಸ ಪಟ್ಟಣವನ್ನು ಕಟ್ಟಿದರು. "ಈ ಸ್ಥಳದಲ್ಲಿ ಕಟ್ಟಲ್ಪಡುವ ಪಟ್ಟಣವು ಅತ್ಯಂತ ಪ್ರಬಲವಾದುದೂ ಅಷ್ಟೈಶ್ವರ್ಯ ಸಂಪನ್ನವಾದುದೂ ಕೀರ್ತಿಶಾಲಿಯಾದುದೂ ಆಗುವುದು..." ಎಂದು ಅಂದೇ ಭವಿಷ್ಯ ನುಡಿದಿದ್ದ ವಿದ್ಯಾರಣ್ಯರ ವಾಣಿಯಂತೆ ಅನತಿ ಕಾಲದಲ್ಲೇ ಹುಕ್ಕ ಬುಕ್ಕರು ಸೌಭಾಗ್ಯ ಶಿಖರದ ಕೋಡುಗಲ್ಲನ್ನೇರಿದರು. ಕ್ರಿ. ಶ. 1336 ರಲ್ಲಿ ಹುಕ್ಕ ಬುಕ್ಕರನ್ನು ಹಿಂದಿರಿಸಿಕೊಂಡು ವಿದ್ಯಾರಣ್ಯರು ವಿಜಯನಗರವನ್ನು (ವಿದ್ಯಾ ನಗರಿ) ನಿರ್ಮಾಣ ಮಾಡಿದರು. ವಿಜಯನಗರದ - ಅನಂತರದ ಮೂರು ಮಂದಿ ರಾಜರ ಆಳ್ವಿಕೆಯಲ್ಲೂ ಶ್ರೀ ವಿದ್ಯಾರಣ್ಯರು ಪ್ರತ್ಯಕ್ಷ ಸೂತ್ರಧಾರರಾಗಿದ್ದರು. ಹುಕ್ಕನ ಕಾಲಾನಂತರ, ಬುಕ್ಕರಾಯನ ನಿರ್ಯಾಣದ ವೇಳೆಗೆ 108 ಸಂವತ್ಸರಗಳನ್ನು ಕಂಡ ವೃದ್ಧರಾಗಿದ್ದ ವಿದ್ಯಾರಣ್ಯರು ಮುಂದೆ 10 ವರ್ಷಗಳ ಕಾಲ ಬದುಕಿದ್ದರು. ಕ್ರಿ. ಶ. 1387 ನೇ ಕ್ಷಯ ಸಂವತ್ಸರದಂದು ತಮ್ಮ 118 ಸಂವತ್ಸರಗಳ ಜೀರ್ಣ ಶರೀರವನ್ನು ವಿದ್ಯಾರಣ್ಯರು ವಿಸರ್ಜಿಸಿದರು.

ಸನ್ಯಾಸಿಗಳಾಗಿದ್ದರೂ ಲೌಕಿಕದಲ್ಲಿ ಉಪೇಕ್ಷೆಯನ್ನು ಹೊಂದದೆ ದೇಶ - ಧರ್ಮ ರಕ್ಷಣೆಗಾಗಿ ದೀಕ್ಷಾಬದ್ಧರಾಗಿದ್ದು - ಕುಲಗುರು, ಮಂತ್ರಿಮುಖ್ಯರಾಗಿಯೂ ಪರಿಶ್ರಮಿಸಿ ಅಂದಿನ ಸಾಮಾಜಿಕ, ಧಾರ್ಮಿಕ, ರಾಜಕೀಯ, ವ್ಯಾವಹಾರಿಕ, ವಾಣಿಜ್ಯ, ದೇಶೀಯ ಮತ್ತು ವಿದೇಶೀಯ ಸಮಸ್ತ ವ್ಯವಹಾರಗಳ ಸೂತ್ರಧಾರರಾಗಿದ್ದು ನಿಜಾರ್ಥದಲ್ಲಿ - "ಕರ್ನಾಟಕ ಸಿಂಹಾಸನ ಸ್ಥಾಪನಾಚಾರ್ಯ" ರಾದವರು - ವಿದ್ಯಾರಣ್ಯರು. ತಮ್ಮ ವಿದ್ಯೆ ಸಕಲೈಶ್ವರ್ಯಗಳನ್ನೂ ಸ್ವರಾಜ್ಯದ ಕೀರ್ತಿ ಪ್ರತಿಷ್ಠೆಗಳಿಗಾಗಿ ಮುಡಿಪಾಗಿಟ್ಟ ವಿದ್ಯಾರಣ್ಯರು ಸ್ವತಃ ರಾಜರಾಗಿ ಮೆರೆಯಲಿಲ್ಲ; ಅದಕ್ಕಾಗಿ ಹಂಬಲಿಸಲೂ ಇಲ್ಲ.  ಅದೇ ಗುರುತ್ವ.

ಇತ್ತ, ಶೃಂಗೇರಿಯ ಶಾರದಾ ಪೀಠಕ್ಕೂ ವಿದ್ಯಾರಣ್ಯರ ಸಂಬಂಧವಿದೆ. ಮಾಧವನು ವಿದ್ಯಾರಣ್ಯರಾಗಿ ಬೆಳೆದಾಗ - ಅವರು ಶೃಂಗೇರಿಯಲ್ಲಿದ್ದರು. ಮೊಗಲರ ದೌರ್ಜನ್ಯವು ಮಿತಿಮೀರಿದ್ದ ಆ ಕಾಲಘಟ್ಟದಲ್ಲಿ - ಸನ್ಯಾಸವು - ಧರ್ಮದೊಂದಿಗೆ ದೇಶವನ್ನೂ ರಕ್ಷಿಸಿಕೊಳ್ಳಲು ಹೆಣಗಾಡಬೇಕಾಗಿದ್ದ ಸನ್ನಿವೇಶವಿತ್ತು. ಪೂರ್ವಾಶ್ರಮದಲ್ಲಿ ಮಾಧವಾಚಾರ್ಯರಾಗಿದ್ದಾಗ ಗ್ರಂಥಗಳನ್ನು ಬರೆಯುತ್ತ, ಅದನ್ನು ದೇಶದ ವಿದ್ಯಾಧಿಕರ ಪರಿಶೀಲನೆಗೆ ಒಳಪಡಿಸುತ್ತ ಅವರು ದೇಶಾದ್ಯಂತ ಸಂಚರಿಸಿದ್ದರು. ಅಂದಿನ ಸಾಮಾಜಿಕ ಸಂಕಷ್ಟಗಳು ಅಂದಿನಿಂದಲೂ ವಿದ್ಯಾರಣ್ಯರನ್ನು ವಿಚಲಿತರನ್ನಾಗಿಸಿತ್ತು. ಇಂತಹ ಪೂರ್ವಾನುಭವದಿಂದಾಗಿಯೇ ಅನಂತರದ ಅವಧಿಯಲ್ಲಿ - ಒಂದು ಕೈಯಲ್ಲಿ ಕತ್ತಿ ಇನ್ನೊಂದು ಕೈಯಲ್ಲಿ ಜಪಮಾಲೆ ಧರಿಸಿದ್ದ ವಿದ್ಯಾರಣ್ಯ ಭಾವವು ಅವತರಿಸಿತು. ತಮ್ಮ ಸನ್ಯಾಸವನ್ನು ಶೃಂಗೇರಿ ಪೀಠಕ್ಕೆ ವಹಿಸಿ, ಅಂದು ಅಲ್ಲಿಂದ ಹೊರಟಿದ್ದ ವಿದ್ಯಾರಣ್ಯರು ಪಂಪಾಕ್ಷೇತ್ರದಲ್ಲಿ ನೆಲೆಗೊಂಡು ತಮ್ಮ ತಪಶ್ಶಕ್ತಿ ಮತ್ತು ವಿದ್ಯಾಬಲದಿಂದಲೇ ಕರ್ನಾಟಕ ರಾಜ್ಯ ಸ್ಥಾಪನೆ ಮಾಡಿದುದರಿಂದಲೇ ಶ್ರೀ ಶೃಂಗೇರಿಯ ಮಠಾಧಿಪತಿಗಳ ಬಿರುದಾವಳಿಗಳಲ್ಲಿ ಇಂದಿಗೂ - "ವೈದಿಕ ಮಾರ್ಗ ಪ್ರವರ್ತಕ, ಸರ್ವತಂತ್ರಸ್ವತಂತ್ರಾದಿ ರಾಜಧಾನೀ ಕರ್ನಾಟಕ ಸಿಂಹಾಸನ ಪ್ರತಿಷ್ಠಾಪನಾಚಾರ್ಯ ಶ್ರೀಮದ್ರಾಜಾಧಿರಾಜ ಗುರು ಭೂಮಂಡಲಾಚಾರ್ಯ" ಎಂಬ ಪರಾಕುಗಳು ಸೇರಲು ಅವಕಾಶವಾಯಿತು. ವಿಜಯನಗರದ ಹೆಸರಿನಲ್ಲಿ ಕರ್ನಾಟಕದ ಚರಿತ್ರೆಯನ್ನು ಸುವರ್ಣಾಕ್ಷರಗಳಲ್ಲಿ ಬರೆಯುವಂತೆ ಮಾಡಿದ ಗುರು ವಿದ್ಯಾರಣ್ಯರು ವಂದನೀಯರು. ಸುಮಾರು 95 ಕ್ಕೂ ಮಿಕ್ಕಿದ ಗ್ರಂಥರಚನೆಗಳನ್ನೂ ಮಾಡಿದ ಜ್ಞಾನನಿಧಿಯಾಗಿದ್ದರು - ವಿದ್ಯಾರಣ್ಯರು. ಪೂರ್ವಾಶ್ರಮದ ಮಾಧವಾಚಾರ್ಯ ಎಂಬ ಹೆಸರಿನಿಂದಲೂ ಮುಂದೆ ಸನ್ಯಾಸದ ನಂತರ ವಿದ್ಯಾರಣ್ಯರು ಎಂಬ ಹೆಸರಿನಿಂದಲೂ ಅವರು ಗ್ರಂಥಗಳನ್ನು ಬರೆದಂತೆ ತೋರುತ್ತದೆ. ಅವುಗಳಲ್ಲಿ ಎಷ್ಟು - ಈಗ ಉಪಲಬ್ಧವಿವೆ ಎಂಬುದು ಕುತೂಹಲದ ವಿಷಯ.    

ಅದಕ್ಕೂ ಪೂರ್ವದಲ್ಲಿದ್ದ ಇನ್ನೊಬ್ಬ ಮಹಾನ್ ಗುರುವೇ - ವಿಷ್ಣು ಶರ್ಮ ಅಥವ ಚಾಣಕ್ಯ. ಚಾಣಕ್ಯ ಎಂಬುದು ಆತನ ಹೆಸರಲ್ಲ; ಆತನ ಚತುರಮತಿಗೆ ಸಂದ ಅಮೂಲ್ಯ ಪ್ರಶಸ್ತಿ. ಒಬ್ಬ ಸಮರ್ಥ ಗುರುವು - ಗರಿಕೆ ಹುಲ್ಲನ್ನೂ ಹೇಗೆ ವಟವೃಕ್ಷವಾಗಿಸಬಲ್ಲ ಎಂಬುದಕ್ಕೆ ಭಾರತದ ಚಾಣಕ್ಯನು ಉತ್ತಮ ದೃಷ್ಟಾಂತ.



"ನೀನು ಏನನ್ನಾದರೂ ಕೇಳಬಯಸುತ್ತೀಯಾ ?" ಎಂಬ ಪ್ರಶ್ನೆಯನ್ನು ಯಾರು ಯಾರನ್ನು ಬೇಕಾದರೂ ಕೇಳಲಾಗುವುದಿಲ್ಲ. ಏನೇ ಕೇಳಿದರೂ ಉತ್ತರಿಸಬಲ್ಲ ಸಮರ್ಥ ಗುರುವು ಮಾತ್ರ ಕೇಳಬಲ್ಲ ಮತ್ತು ಕೇಳಬಹುದಾದ ಪ್ರಶ್ನೆಯಿದು. ಗುರಿಕೇಂದ್ರದಲ್ಲಿ ವ್ಯತ್ಯಾಸವಿದ್ದರೂ - ಪರಮಹಂಸರಂತೆ ವಿಷ್ಣು ಶರ್ಮನೂ - ಆದರ್ಶ ಗುರುವಾಗಿದ್ದ ಮಹಾನುಭಾವ. ಚಂದ್ರಗುಪ್ತ ಎಂಬ ಅನಾಮಿಕನನ್ನು ತಿದ್ದಿ ತೀಡಿ ಸಾಮ್ರಾಟನಾಗಿ ಪ್ರತಿಷ್ಠಾಪಿಸಿ ಮೌರ್ಯ ಸಾಮ್ರಾಜ್ಯವನ್ನು ಸ್ಥಾಪಿಸಿದ್ದ ಚಾಣಕ್ಯನನ್ನು "ಸಾಹಸಿ ಗುರು" ಎಂದೂ ಸ್ಮರಿಸಿಕೊಳ್ಳಬಹುದು. ವೇದೋಪನಿಷತ್ತುಗಳ ಆಳವಾದ ಅಧ್ಯಯನದ ಜೊತೆಗೆ ರಾಜ್ಯಶಾಸ್ತ್ರದಲ್ಲಿ ವಿದ್ವಾಂಸನಾಗಿದ್ದ ಚಾಣಕ್ಯನು ಅರ್ಥ ಶಾಸ್ತ್ರಕ್ಕೂ ಕಿರೀಟಪ್ರಾಯನಾಗಿ ಇಂದಿಗೂ ಗೌರವಾರ್ಹನಾಗಿದ್ದಾನೆ. ಅಂದಿನ ಕಲುಷಿತ ಸಾಮಾಜಿಕ ವ್ಯವಸ್ಥೆ, ಅರಾಜಕತೆ, ಪರಕೀಯ ಆಕ್ರಮಣ ಮತ್ತು ಅಧರ್ಮದ ವಿಜೃಂಭಣೆಯನ್ನು ಬಗ್ಗುಬಡಿದು ಅತ್ಯಾಚಾರಿಗಳಾಗಿದ್ದ ನಂದರನ್ನು ಹೊಡೆದೋಡಿಸಿ, ಪಶುಪ್ರಾಯವಾಗಿದ್ದ ಜನಸಮೂಹವನ್ನು ಸಂಘಟಿಸಿ, ಮೌರ್ಯಯುಗವನ್ನು ಅನಾವರಣಗೊಳಿಸಿದ ಕೀರ್ತಿಯು ಚಾಣಕ್ಯನಿಗೇ ಪೂರ್ತಿಯಾಗಿ ಸಲ್ಲುತ್ತದೆ. ಕೇವಲ ಒಂದು ಜೀವಮಾನದ ಅವಧಿಯಲ್ಲಿ ನಂದರ ರಾಜ್ಯವನ್ನು ಅಳಿದು ಹೊಸದಾಗಿ ಮೌರ್ಯ ಸಾಮ್ರಾಜ್ಯವನ್ನು ಕಟ್ಟುವುದು ಸಾಧಾರಣದ ಸಾಧನೆಯೇನಲ್ಲ. ಕ್ಷಿಪ್ರವಾಗಿ ಸತ್ಫಲವನ್ನು ಹೊಂದುವ ಉದ್ದೇಶಕ್ಕೆ ಕುಟಿಲ ಮಾರ್ಗಗಳೂ ಸಮ್ಮತವೇ ಆಗಿವೆ ಮತ್ತು ಧರ್ಮರಕ್ಷಣೆಗಾಗಿ ಕಾಲಕಾಲಕ್ಕೆ ನಡೆಸುವ ಉಚಿತ ಜನಹಿತ ಕಾರ್ಯಗಳು ಎಂದಿಗೂ ಅನುಚಿತವಲ್ಲ - ಎಂಬ ಮುಕ್ತ ಧೋರಣೆಯನ್ನು ಅನುಸರಿಸಿದುದರಿಂದಲೇ ಆತನನ್ನು "ಕೌಟಿಲ್ಯ" ಎಂದೂ ಗುರುತಿಸಿದ್ದಿರಬಹುದು. ತನ್ನ ಸಮಸ್ತ ಶಕ್ತಿಯನ್ನೂ ಶಿಷ್ಯನಾದ ಚಂದ್ರಗುಪ್ತನಿಗೆ ಧಾರೆಯೆರೆದು ಅವನನ್ನು ದೊರೆಯಾಗಿ ಕುಳ್ಳಿರಿಸಿದ ಗುರು ಚಾಣಕ್ಯನು - ತಾನು ಮಾತ್ರ ಊರ ಹೊರಗಿನ ಜೋಪಡಿಯಲ್ಲಿ ಧಾರ್ಮಿಕ ವಿಧಿಗಳನ್ನು ಆಚರಿಸುತ್ತ ಗ್ರಂಥಾಧ್ಯಯನ, ಗ್ರಂಥ ನಿರ್ಮಾಣದಲ್ಲಿ ತೊಡಗಿಕೊಂಡು ಸಾಮಾನ್ಯರಂತೆ ಬದುಕಿದ್ದ ಎಂಬುದೂ ಗಮನಿಸಬೇಕಾದ ಅಂಶ. ತನ್ನ ಶಿಷ್ಯನಾದ ಚಂದ್ರಗುಪ್ತನಿಗೆ ರಾಜ್ಯಭಾರ ನಿರ್ವಹಿಸಲು ಆಗಿಂದಾಗ ಚಾಣಕ್ಯನು ನೀಡುತ್ತಿದ್ದ ಮಾರ್ಗದರ್ಶನಗಳೇ ಆತನ - ಅರ್ಥಶಾಸ್ತ್ರ ಗ್ರಂಥದ ಸಾರ. ಕೌಟಿಲ್ಯನ "ಅರ್ಥಶಾಸ್ತ್ರ"ವು ಇಂದಿಗೂ ಅರ್ಥಶಾಸ್ತ್ರಿಗಳ ಭಗವದ್ಗೀತೆಯಂತಿದೆ. ಇಂದಿಗೂ ಸಕಾಲಿಕವೆನ್ನಿಸುವ ಚಾಣಕ್ಯನ ವಿಚಾರಧಾರೆಯನ್ನು ಗಮನಿಸಬೇಕು.

ಚಾಣಕ್ಯ - ಚಂದ್ರಗುಪ್ತ

ರಕ್ಷಕ ಸ್ಥಾನದಲ್ಲಿರುವ ರಾಜನು ಯಾವುದೇ ರಾಗದ್ವೇಷಗಳಿಂದ ಮುಕ್ತನಾಗಿ ಹೇಗೆ ಎಚ್ಚರದಿಂದ ಆಡಳಿತವನ್ನು ನಡೆಸಬೇಕು ಎಂಬ ಪಾಠವನ್ನು - ಗುರು ಚಾಣಕ್ಯನು ತನ್ನ ಶಿಷ್ಯನಾದ ಚಂದ್ರಗುಪ್ತನಿಗೆ ಹೇಳಬೇಕಾದ ಪ್ರಸಂಗವೊಂದು ಒದಗಿತ್ತು. ಒಬ್ಬ ಗುರುವಾದವನು ಕೂಡ ಯಾವುದೇ ಸಂದರ್ಭದಲ್ಲಿ - ಸಮಸ್ತರ ಸುಖ ನೆಮ್ಮದಿಯ ಚಿಂತನೆಯನ್ನು ಮಾತ್ರ ಯೋಚಿಸಬೇಕಲ್ಲದೆ ತನ್ನ ಶಿಷ್ಯಪ್ರೀತಿ ಎಂಬ ಸ್ವಮೋಹದಿಂದ ಶಿಷ್ಯನ ರಾಗಗಳಿಗೆಲ್ಲ ತಾಳ ಹಾಕುವಂತಿಲ್ಲ - ಎಂಬ ಕಟ್ಟುನಿಟ್ಟಿನ ಪಾಠವನ್ನು ಹೇಳಿದ್ದ ಪ್ರಸಂಗವಿದು.


ಒಮ್ಮೆ...
ನಂದರ ಹುಟ್ಟಡಗಿಸಿ ತಾನು ಪಟ್ಟಾಭಿಷಿಕ್ತನಾಗುವ ಮೊದಲು ಪಾಟಲೀಪುರದತ್ತ ಪಯಣಿಸುತ್ತ ರಾಜಧಾನಿಯ ಸಮೀಪದ ನಂದಿಗ್ರಾಮದಲ್ಲಿ ಬೀಡುಬಿಟ್ಟಿದ್ದ ಚಂದ್ರಗುಪ್ತನನ್ನು ಅಲ್ಲಿನ ನಿವಾಸಿಗಳು ವೈಭವೋಪೇತವಾಗಿ ಉಪಚರಿಸುತ್ತಾರೆ. ಗೆದ್ದವರನ್ನು ಓಲೈಸುವುದು ಸಾಮಾನ್ಯ ಜನರ ಸ್ವಭಾವ. ಅಂತಹ ಪ್ರಜಾಜನರ ವಿಶೇಷ ಉಪಚಾರವನ್ನು ಹಿಗ್ಗಿನಿಂದಲೇ ಸ್ವೀಕರಿಸಿದ ಚಂದ್ರಗುಪ್ತನು ಅಲ್ಲಿ ತನ್ನನ್ನು ಸೇವಿಸಿದ ಕೆಲವರಿಗೆ ಕರ (ತೆರಿಗೆ) ವಿನಾಯಿತಿಯನ್ನು ನೀಡುವ ಸಂಕಲ್ಪ ಮಾಡುತ್ತಾನೆ. ಚಂದ್ರಗುಪ್ತನ ಈ ನಿರ್ಧಾರವು ಗುರುವಾದ ಚಾಣಕ್ಯನಿಗೆ ತಿಳಿಯುತ್ತದೆ. ಅಂತಹ ಏಕಮುಖೀ ನಿರ್ಧಾರವನ್ನು ಚಾಣಕ್ಯನು ಒಪ್ಪುವುದಿಲ್ಲ. ಚಾಣಕ್ಯನ ಅಸಮ್ಮತಿಯಿಂದಾಗಿ ನೊಂದುಕೊಂಡ ಚಂದ್ರಗುಪ್ತನಿಗೆ - "ಚಂದ್ರಗುಪ್ತ ಮತ್ತು ಆತನ ಅಧಿಕಾರ" - ಎರಡೂ ಅಪಮಾನಿತಗೊಂಡಂತೆ ಭಾಸವಾಗುತ್ತದೆ. ಯಾವುದೇ ಅಧಿಕಾರೀ ಭಾವವು ಅಪಮಾನವನ್ನು ಸಹಿಸಲಾರದು. ಅಧಿಕಾರದತ್ತ ದಾಪುಗಾಲಿಡುತ್ತಿದ್ದ ಚಂದ್ರಗುಪ್ತನು ಅಧಿಕಾರದ ಭಾವದಲ್ಲಿ ಮುಳುಗಿದ್ದುದರಿಂದಲೇ - ಕೋಪಾವಿಷ್ಟನಾದ. "ರಾಜನಾಗುವವನಿಗೆ ಒಂದು ಸಣ್ಣ ವಿನಾಯಿತಿಯನ್ನು ಕೊಡುವ ಅಧಿಕಾರವೂ ಇಲ್ಲವೆಂದಾದರೆ, ...ಎಲ್ಲ ವಿಚಾರಗಳನ್ನೂ ಅವರಿವರಲ್ಲಿ ಚರ್ಚಿಸಿ ಪರಾಮರ್ಶಿಸಿ ನಿರ್ಧಾರ ತೆಗೆದುಕೊಳ್ಳುವುದಾದರೆ... ಅಂತಹ ರಾಜಪದವಿಯೇ ನನಗೆ ಬೇಡ.." ಎಂದು ಹೇಳಿ ಮುಖ ಉಬ್ಬಿಸಿಕೊಂಡು ಕುಳಿತುಕೊಳ್ಳುತ್ತಾನೆ; ಚಂದ್ರಗುಪ್ತನು ಪಟ್ಟಾಭಿಷೇಕಕ್ಕೆ ಒಪ್ಪುವುದಿಲ್ಲ. ಈ ಪುಂಡುತನದ ವರ್ತಮಾನವನ್ನು ತಿಳಿದ ಚಾಣಕ್ಯನು ನೇರವಾಗಿ ಹೋಗಿ ಚಂದ್ರಗುಪ್ತನನ್ನು ಭೇಟಿ ಮಾಡುತ್ತಾನೆ. "ನಿನ್ನ ಸಮಸ್ಯೆ ಏನು ? ನೀನು ನನ್ನಲ್ಲಿ ಏನನ್ನಾದರೂ ಕೇಳಬಯಸುತ್ತೀಯಾ ?" ಎಂದು ಪ್ರಶ್ನಿಸುತ್ತಾನೆ. 

"ಗುರುಗಳೇ, ನಿಮ್ಮ ಛಲ ಸಾಧನೆಗಾಗಿ ನೀವು ಹೋರಾಡಿ ಸಫಲರಾಗಿದ್ದೀರಿ. ನಾನು ಕೇವಲ ನಿಮ್ಮ ದಾಳ. ಎಲ್ಲವೂ ನೀವು ತೀರ್ಮಾನಿಸಿದಂತೆಯೇ ನಡೆಯುವುದಾದರೆ ನೀವೇ ರಾಜ್ಯಭಾರ ನಡೆಸಿ; ನಾನೇಕೆ ?..." ಎಂಬ ಧಾಟಿಯಲ್ಲಿ ಗುರುಗಳೊಂದಿಗೆ ಸಲ್ಲಾಪಿಸಿದ ಚಂದ್ರಗುಪ್ತನನ್ನು ಚಾಣಕ್ಯನು ತರಾಟೆಗೆ ತೆಗೆದುಕೊಳ್ಳುತ್ತಾನೆ. ರಾಜಭಾವ ಮುಸುಕಿಕೊಂಡಿದ್ದರೂ ಭಾವ ದ್ವಂದ್ವದಲ್ಲಿ ತೊಳಲಾಡುತ್ತಿದ್ದ ಚಂದ್ರಗುಪ್ತನು ತನ್ನ ಪ್ರಶ್ನೆಯನ್ನು ಚಾಣಕ್ಯನತ್ತ ಎಸೆದು ತಲೆತಗ್ಗಿಸಿ ಕುಳಿತಿದ್ದ. ಆಗ...

ಚಾಣಕ್ಯನು ಮಾತಿಗೆ ತೊಡಗುತ್ತಾನೆ; ಚಂದ್ರಗುಪ್ತನ ಬುದ್ಧಿಗೆ ತನ್ನ ಅಸ್ಖಲಿತ ವಾಗ್ಬಾಣದ ಮೂಲಕ ಎಚ್ಚರದ ಸೂಜಿಮದ್ದನ್ನು ನೀಡುತ್ತಾನೆ.

"ಚಂದ್ರಗುಪ್ತಾ, ಇದು - ನಿನ್ನ ಸಾಮ್ರಾಟಗಿರಿ ಎಂಬುದು ಭಾವಾವೇಶದ ಸ್ಥಾನವಲ್ಲ. ನನಗೆ ವ್ಯಕ್ತಿ ಮುಖ್ಯವಲ್ಲ. ದೇಶ ಮುಖ್ಯ. ಸಮಾಜದ ಉತ್ಕರ್ಷದ ಬಗೆಗೆ ಮಾತ್ರ ನಾನು ಚಿಂತಿಸುತ್ತೇನೆ. ನಂದಿಗ್ರಾಮವಾಸಿಗಳಿಂದ ನೀವು ಅನ್ನವನ್ನು ಸ್ವೀಕರಿಸಿ ಅದಕ್ಕೆ ಪ್ರತಿಯಾಗಿ ಮೌಲ್ಯವನ್ನು ನೀಡಿದ್ದೀರಾ ? ಹೌದು ಅಥವ ಇಲ್ಲ ... ಇಷ್ಟೇ ಉತ್ತರವನ್ನು ಅಪೇಕ್ಷಿಸುತ್ತೇನೆ..." ಎಂದು ದನಿಯೇರಿಸಿ ಕೇಳಿದ್ದ ಚಾಣಕ್ಯ. (ಚಂದ್ರಗುಪ್ತನು ಮೌನವಾಗಿದ್ದ..)...

"ಇಲ್ಲ. ಅಲ್ಲವೆ ? ಹಾಗಿದ್ದರೆ ಅದನ್ನು ಹೇಗೆ ಸ್ವೀಕರಿಸಿದಿರಿ ? ದಾನವೆಂದೆ ? ದಕ್ಷಿಣೆಯೆಂದೆ ?.. ದಾನವೆಂದರೆ ಸಾಮಾಜಿಕ ಕರ್ತವ್ಯದ ರೂಪದಲ್ಲಿ ನೀಡಲಾಗುವ ಮೌಲ್ಯ. ದಕ್ಷಿಣೆಯು ಸೇವೆಯ ಬದಲಾಗಿ ನೀಡುವ ಮೌಲ್ಯ. ಪ್ರತಿಯೊಂದು ವಸ್ತುವಿಗೂ ಸೇವೆಗೂ ಅದರದರದ್ದೇ ಆದ ಮೌಲ್ಯವಿದೆ. ಅದು ಊಟ ತಿಂಡಿ ವಸ್ತು ಮುಂತಾದ ಯಾವುದೇ ರೂಪದಲ್ಲಿರಲಿ - ಅದು ಅರ್ಥಗ್ರಾಹ್ಯ ಮೌಲ್ಯವೇ ಆಗಿರುತ್ತದೆ. ಧರ್ಮ ಮತ್ತು ಕಾಮವು ಅರ್ಥವನ್ನೇ ಅವಲಂಬಿಸಿದೆ. ಆದ್ದರಿಂದ ಯಾವುದೇ ಅರ್ಥ ವ್ಯವಹಾರವು ಧರ್ಮಬದ್ಧವಾಗಿಯೇ ನಡೆಯಬೇಕು. ಯಾವುದೇ ಬೆಲೆ ಸಂದಾಯ ಮಾಡದೆ ಇನ್ನೊಬ್ಬರ ಅರ್ಥದ್ರವ್ಯ ಪಡೆಯುವುದೆಂದರೆ ಅದು - ಅಪಹರಣ. ಅದೂ... ಅಧಿಕಾರ ನಿರ್ವಹಿಸುವ ಸಾಮ್ರಾಟನೊಬ್ಬನಿಂದ ಇನ್ನೊಬ್ಬರ ದ್ರವ್ಯದ ಅಪಹರಣವೆಂದರೆ - ಅದು  ಸ್ವಂತ ದ್ರವ್ಯದ ನಾಶವೆಂದೇ ಅರ್ಥ. ಸಾಮ್ರಾಟ್, ಅನ್ನದೊಂದಿಗೆ ಪ್ರಜೆಗಳ ಸಂಬಂಧವಿದೆ. ನೆನಪಿರಲಿ. ಅನ್ನ ಮತ್ತು ಪ್ರಜೆಗಳೇ ನಿನ್ನ ಸಂಪತ್ತು. "

ಚಂದ್ರಗುಪ್ತ - "ನಾನು ನಂದಿಗ್ರಾಮದ ನಿವಾಸಿಗಳಿಗೆ ಅವರ ಆದರಾತಿಥ್ಯದ ಮೌಲ್ಯವನ್ನು ತಲುಪಿಸುತ್ತೇನೆ..."

ಚಂದ್ರಗುಪ್ತನ ಮಾತನ್ನು ತುಂಡರಿಸಿದ ಚಾಣಕ್ಯ - "ಪ್ರತಿಯೊಂದು ಸೇವೆಗೂ ಮೌಲ್ಯವಿದೆ. ಮೌಲ್ಯ ಸಂದಾಯ ಮಾಡದೆ ಏನನ್ನಾದರೂ ಪರಿಗ್ರಹಿಸಿದರೆ ಅದು - ದಕ್ಷಿಣೆ. ದಕ್ಷಿಣೆಯನ್ನು ಪರಿಗ್ರಹಿಸಲೂ ಪ್ರತ್ಯೇಕ ಅರ್ಹತೆಯಿದೆ. ನಂದಿಗ್ರಾಮವಾಸಿಗಳಿಂದ ನೀನು ಪಡೆದ ಯಾವತ್ತೂ ಉಪಚಾರಗಳು ಧರ್ಮಬಾಹಿರ; ಅನುಚಿತ. ಯಾವುದೇ ಅರ್ಥ ವ್ಯವಹಾರವು ಧರ್ಮಪೂರ್ವಕವಾಗಿಯೇ ನಡೆಯಬೇಕು. ನಿನಗೆ ಸುಖ ಬೇಕಿದ್ದರೆ ಮೊದಲಿಗೆ ನಿನ್ನ ಪ್ರಜೆಗಳನ್ನು ಸುಖವಾಗಿರಿಸು. ಈಗ ಸಾಮ್ರಾಜ್ಯ ಪಡೆದಿದ್ದೀ. ಸುಖ ಪಡೆಯುವ ಮಾರ್ಗವೂ ನಿನಗೆ ತೆರೆದಿದೆ. ಈಗ ನೀನೇ ರಾಜ್ಯದ ಸಂಚಾಲಕ ನಿಯಾಮಕನಾಗಿದ್ದೀ. ಈ ಅಧಿಕಾರವು - ಪ್ರಜೆಗಳ ರಕ್ಷಣೆ ಪೋಷಣೆಗಾಗಿ ಮಾತ್ರ ನಿನಗೆ ಕೊಡಲಾಗುತ್ತಿದೆ.

ಚಂದ್ರಗುಪ್ತನು ತಲೆತಗ್ಗಿಸಿ ಆಲಿಸುತ್ತಿದ್ದ.

"ಸಾಮ್ರಾಟ್, ನಿನಗೆ ಸ್ಪಷ್ಟಪಡಿಸುತ್ತಿದ್ದೇನೆ; ಕೇಳು.... ಕರ ಅಂದರೆ ಏನು ? ಅದು ರಾಜ್ಯಕ್ಕೆ ಪ್ರಜೆಗಳು ನೀಡುವ ದಾನ. ರಾಜ್ಯದ ಸುಭದ್ರತೆಗೆ ಕರವೇ (ತೆರಿಗೆ) ಆಧಾರ. ನನ್ನ ನಿಷ್ಠೆಯು ನಿನಗಲ್ಲ; ಚಂದ್ರಗುಪ್ತನಿಗಲ್ಲ; ರಾಜ್ಯದ ಪ್ರಜೆಗಳಿಗೆ. ಪ್ರಜಾಭ್ಯುದಯಕ್ಕೆ ತೆರಿಗೆಯ ಸಂಗ್ರಹವು ಅನಿವಾರ್ಯ. ಆದ್ದರಿಂದಲೇ ನಾನು ತೆರಿಗೆಯ ಚಿಂತನೆ ಮಾಡುತ್ತೇನೆ. ಸಮುದ್ರದ ನೀರು ಆವಿಯಾಗಿ ಆಕಾಶದಲ್ಲಿ ಮೋಡವಾಗಿ ಘನಗೊಂಡು ಭೂಮಿಗೆ ಮಳೆಯಾಗಿ ಬಿದ್ದು - ಆ ನೀರು ನದಿಯಾಗಿ ಹರಿದು ಪ್ರಜೆಗಳನ್ನು ತಣಿಸಿ ಮತ್ತೆ ಸಮುದ್ರವನ್ನು ಸೇರಲೇಬೇಕು. ಈ ಪ್ರಕೃತಿಚಕ್ರದಲ್ಲಿ ಯಾವುದೇ ವ್ಯತ್ಯಯವಾಗಕೂಡದು. ಅರ್ಥದ ಆರೋಗ್ಯಕರ ಹರಿವೂ ಅಂತಹುದೇ. ರಾಜ್ಯದ ಅರ್ಥವ್ಯವಸ್ಥೆಗೂ ಇದೇ ನಿಯಮ. ತೆರಿಗೆ ಎಂಬ ದಾನರೂಪದಲ್ಲಿ ಪ್ರಜೆಗಳಿಂದ ಸಂಗ್ರಹಿಸುವ ಅರ್ಥವೇ ಸಮಾಜ ಮತ್ತು ಸಾಮ್ರಾಜ್ಯದ ಆಧಾರ. ಮಳೆಯಾಗಿ ಸುರಿದ ನೀರು ನದಿಯಾಗಿ ಹರಿದು ಸಮುದ್ರವನ್ನು ಸೇರದೇ ಹೋದರೆ -  ಅಸಮತೋಲನವುಂಟಾಗಿ ಸಮುದ್ರದ ನೀರು ಬತ್ತಿ ಹೋದರೆ ಘನಘೋರ ನಾಶವಾದೀತು. ಆದ್ದರಿಂದ ಸಮುದ್ರವು ಸಮುದ್ರದಂತೆಯೇ ಇರಬೇಕು. ಆದ್ದರಿಂದಲೇ ನಾನು ದಾನದ (ತೆರಿಗೆ) ಚಿಂತೆ ಮಾಡುತ್ತೇನೆ. ಇಳೆ ಬೆಳೆಗಳೆಲ್ಲವೂ ದಾನವೇ; ಪ್ರಕೃತಿ ನೀಡುವ ದಾನ. ಪ್ರಕೃತಿಯೇ ನಮ್ಮ ಗುರು. ಆದ್ದರಿಂದ ದಾನವೆಂಬುದು ಪ್ರತಿಯೊಂದು ಜೀವಿಗಳ ಬದುಕಿನ ಕರ್ತವ್ಯ ಭಾಗ. ಆದ್ದರಿಂದ ಸಮಾಜವು ಕರ ನೀಡುತ್ತದೆ; ನೀಡಲೇಬೇಕು. ಇತ್ತ ಆಡಳಿತವು ಯಾವುದೇ ಪಕ್ಷಪಾತವಿಲ್ಲದೆ ತೆರಿಗೆಯ ಮೂಲಕ ರಾಜಧನವನ್ನು ಬಲಗೊಳಿಸಬೇಕು. ರಾಜ್ಯದ ಬೊಕ್ಕಸವು ಸದಾ ತುಂಬಿರಬೇಕು; ಅದರಿಂದ ಜನೋಪಯೋಗೀ ಕೆಲಸಗಳು ನಡೆಯಬೇಕು. ಈ ಸಮಾಜ ಎಂಬುದು ಹಲವಾರು ನದಿಗಳ ಶಾಖೆಗಳಿದ್ದಂತೆ. ಎಲ್ಲ ನದಿಗಳ ನೀರೂ ಮರಳಿ ಹೊರಳಿ ಭೂಮಿಗೆ ತಂಪುಣಿಸಿ - ಮತ್ತೊಮ್ಮೆ ರಾಜಸಾಗರವನ್ನೇ ಸೇರದಿದ್ದರೆ ಘೋರ ಅನಾಹುತವಾದೀತು; ಯಾವತ್ತೂ ಕೃತಕವಾಗಿ ಅಲ್ಲಲ್ಲಿ ತುಂಬಿಕೊಳ್ಳುವ - ಸಂಗ್ರಹಿಸುವ ನೀರು ಅಪಾಯಕಾರಿ. ಅಂತೆಯೇ ಅರ್ಥ ಎಂಬುದೂ ಸಮಹಂಚಿಕೆಯಾಗದಿದ್ದರೆ ಅನರ್ಥವಾದೀತು. ಸಮಷ್ಟಿಯ ಹಿತವನ್ನು ಪೋಷಿಸಬಲ್ಲ ನೀರಿನ ಸಮಸ್ಥಿತಿಯನ್ನು ಕಾಪಿಟ್ಟುಕೊಳ್ಳಲು -  ಸಮಷ್ಟಿಗೆ ಸಮಪಾಲು ಸಿಗುವಂತಿರಬೇಕು. ಆದ್ದರಿಂದಲೇ ಸಾಗರೋಪಮೆಯ ಪ್ರತೀಕವಾದ ರಾಜನು ಕರ ಪಡೆಯುತ್ತಾನೆ; ಸಮಾಜವು ಕರ ನೀಡುತ್ತದೆ. ಆದ್ದರಿಂದ - ಪ್ರತಿಷ್ಠಿತರೆಂಬ ಕಾರಣಕ್ಕಾಗಲೀ ಸ್ವಜನರೆಂಬ ಕಾರಣಕ್ಕಾಗಲೀ ಯಾರಿಗೂ ಕರ ವಿನಾಯಿತಿಯನ್ನು ನೀಡುವಂತಿಲ್ಲ. ನೀತಿನಿಯಮದ ಅನುಷ್ಠಾನದ ಯಾವುದೇ ಸಂದರ್ಭದಲ್ಲಿ - ರಾಜಪದವಿಗೆ ಎಲ್ಲರೂ ಸಮಾನರು...."  ಮಾತು ನಿಲ್ಲಿಸಿದ ಚಾಣಕ್ಯನು ಚಂದ್ರಗುಪ್ತನ ಮುಖ ನೋಡುತ್ತಿದ್ದ; ಮುಖಭಾವವನ್ನು ಓದುತ್ತಿದ್ದ.

"ಇಚ್ಛೆಯಂತೆ ನಡೆಯಲಾಗದ ವ್ಯಕ್ತಿಯು ಸಾಮ್ರಾಟನಾಗಿ ಏನು ಪ್ರಯೋಜನ ?.." ಎಂದು ಮನಸ್ಸಿನಲ್ಲೇ ಅಂದುಕೊಳ್ಳುತ್ತಿದ್ದ ಚಂದ್ರಗುಪ್ತನ ಅಭಿಮಾನವು ಒಳಗೊಳಗೇ ಮುಲುಕುತ್ತ - ಸಂಶಯಗಳನ್ನು ಎಳೆದು ತರುವಂತಿತ್ತು. ತನ್ನ ಒಂದು ಸಣ್ಣ ನಿರ್ಧಾರದಿಂದ ಮುಳುಗಿ ಹೋಗುವುದೇನಿದೆ ? ಎಂಬ ಭಾವವದು. ಆದ್ದರಿಂದಲೇ ಆತ ಮತ್ತೊಮ್ಮೆ ಚಾಣಕ್ಯನನ್ನು ಪ್ರಶ್ನಿಸುತ್ತಾನೆ... "ಹಾಗಿದ್ದರೆ ನಾನು ನೌಕರನೆ ? "

ಚಾಣಕ್ಯ - ಸರಿಯಾಗಿ ಹೇಳಿದೆ. ನೀನು ಕೇವಲ ನೌಕರ. ಅದಕ್ಕಿಂತ ಹೆಚ್ಚೇನೂ ಇಲ್ಲ.

ಚಂದ್ರಗುಪ್ತ - ಹಾಗಿದ್ದರೆ ನನಗೆ ರಾಜನಾಗಬೇಕಿಲ್ಲ. ನಿಮ್ಮ ರಾಜ್ಯವನ್ನು ನೀವೇ ಇಟ್ಟುಕೊಳ್ಳಿ.

ಚಾಣಕ್ಯ - ಚಂದ್ರಗುಪ್ತಾ, ನಿನಗೆ ಸುಖಿಯಾಗಬೇಕೆ ? (ದನಿಯೇರಿಸಿ ಕೇಳಿದ್ದ.)

ಚಂದ್ರಗುಪ್ತ - ಸಾಮ್ರಾಟನಿಗೆ ಸುಖವಾಗಿರುವ ಅಧಿಕಾರವಿಲ್ಲವೆ ?

ಚಾಣಕ್ಯ - ಮೂರ್ಖ, ನಿನ್ನ ಸಾಮ್ರಾಜ್ಯದಲ್ಲಿ ಒಬ್ಬನಾದರೂ ಹಸಿವಿನಿಂದ ಇರುವವರೆಗೂ ನೀನು ಸುಖಿಯಾಗಬಲ್ಲೆಯಾ ? ಸುಖವು - ಶಿಕ್ಷಕ ಮತ್ತು ಸಾಮ್ರಾಟರ ಭಾಗ್ಯದಲ್ಲಿ ಇರುವುದಿಲ್ಲ. ನಾನು ನಿನಗೆ "ಸಾಮ್ರಾಟನಾಗಿಸುವೆ" ಎಂದು ಹೇಳಿದ್ದೆನಲ್ಲದೆ ನಿನ್ನನ್ನು ಸುಖಿಯಾಗಿರಿಸುವೆ ಎಂದು ಹೇಳಿಲ್ಲ. ತಿಳಿದುಕೋ. ಪ್ರಜೆಗಳ ಸುಖದಲ್ಲೇ ರಾಜನ ಸುಖವಿದೆ. ಅಶುಚಿಯಾದ ದೇಶವನ್ನು ಆಚಾರವಂತರು ತ್ಯಜಿಸುವಂತೆ, ಗೂಬೆ ಹೊಕ್ಕ ಮನೆಯನ್ನು ಶ್ರೇಯೋವಂತರು ಬಿಡುವಂತೆ, ನ್ಯಾಯ ನೀತಿಯನ್ನು ತಪ್ಪಿ ನಡೆಯುವವರು ಎಂಥ ಸಾಹಸಿಗಳಾದರೂ ಗುಣವಂತರಾದರೂ ಭಾಗ್ಯನಿಧಿಯು ಅಂತಹ ಸ್ಥಾನಗಳಲ್ಲಿ ನಿಲ್ಲುವುದಿಲ್ಲ... ಆದ್ದರಿಂದ ಸುಖದ ಹಿಂದೆ ಎಂದೂ ಓಡಬೇಡ. ನಂದರ ದೌರ್ಭಾಗ್ಯಕ್ಕೆ ಇದೇ ಕಾರಣ ಎಂಬುದನ್ನು ಮರೆಯಬೇಡ...

ಚಾಣಕ್ಯನ ಸಂಧಾನದಿಂದ ವಿವೇಕೋದಯವಾಗಿ ಮಿದುವಾದ ಚಂದ್ರಗುಪ್ತನು ಅನಂತರ ಗುರುವಿಗೆ ವಂದಿಸಿ ಪಟ್ಟಾಭಿಷಿಕ್ತನಾಗಲು ಸಿದ್ಧನಾಗಿದ್ದ. ಚಂದ್ರಗುಪ್ತ ಎಂಬ ಮಹಾನ್ ಶಿಷ್ಯನು ತನ್ನ ಮಹಾಗುರು ಚಾಣಕ್ಯನು ಬೋಧಿಸಿದ ಪಾಠಗಳನ್ನು ಅನಂತರವೂ ಎಷ್ಟು ಗಾಢವಾಗಿ ಅನುಸರಿಸಿದನೆಂದರೆ - ತನ್ನ ಅಂತ್ಯ ಕಾಲದಲ್ಲಿ ಚಂದ್ರಗುಪ್ತನು 40 ದಿನಗಳ ಕಾಲ ಅನ್ನಗ್ರಹಣ ಮಾಡಲಿಲ್ಲ. ಏಕೆಂದರೆ ಭೀಷಣ ಬರಗಾಲದಿಂದಾಗಿ ಅಂದು ಚಂದ್ರಗುಪ್ತನ ರಾಜ್ಯದಲ್ಲಿ ಜನರಿಗೆ ಉಣ್ಣಲು ಅನ್ನವಿಲ್ಲದ ಹಾಹಾಕಾರವಿತ್ತು. ಪ್ರಜೆಗಳಿಗಿಲ್ಲದ ಸುಖವು ತನಗೂ ಬೇಡ ಎಂಬ ವ್ರತಧಾರಿಯಾಗಿದ್ದ ಚಂದ್ರಗುಪ್ತನು - ಗುರುಮಂತ್ರದ ಮೌಲ್ಯವನ್ನು ಶಿರದಲ್ಲಿ ಹೊತ್ತು - ರಾಜ ಮತ್ತು ಪ್ರಜೆಗಳ ಅನ್ಯೋನ್ಯ ಸಂಬಂಧದ ಮಾದರಿಯಾಗಿ - ಇಡೀ ಬದುಕನ್ನು ಸಂಯಮದಿಂದ ಸಾಗಿಸಿದ ಮೌರ್ಯನಾಗಿ, ಶ್ರೇಷ್ಠ ಗುರುವಿನ ಶ್ರೇಷ್ಠ ಶಿಷ್ಯ ಎಂಬುದನ್ನು ಸಾಧಿಸಿ - ಮೌರ್ಯ ಸಾಮ್ರಾಜ್ಯಕ್ಕೆ ಭದ್ರ ಬುನಾದಿ ಹಾಕಿದ; ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ಉಳಿದುಹೋದ. ಇವೆಲ್ಲ ಸಾಕ್ಷಿ ಕೇಳುವಂತಹ ಪುರಾಣವಲ್ಲ. ವಿಜಯನಗರ ಮತ್ತು ಮೌರ್ಯ ಸಾಮ್ರಾಜ್ಯದ ಐತಿಹಾಸಿಕ ಘಟನೆಗಳು. ವಿದ್ಯಾರಣ್ಯ ಮತ್ತು ಚಾಣಕ್ಯ ಎಂಬ ಅಪ್ರತಿಮ ಸಾಹಸೀ ಗುರುಗಳ ಕತೆಗಳು "ಗುರುಶಕ್ತಿ"ಯ ಪರಿಚಯ ಮಾಡಿಸುವಂತಿವೆ. ಆದ್ದರಿಂದಲೇ "ಧರ್ಮವಿದ್ದರೆ ಅರ್ಥ; ಅಧರ್ಮವಿದ್ದಲ್ಲಿ ಅನರ್ಥ" ಎಂಬ ನೆಲೆಗಟ್ಟಿನಲ್ಲಿ ರಾಜ್ಯವನ್ನು ಕಟ್ಟಿದ ಕೌಟಿಲ್ಯನ "ಅರ್ಥಶಾಸ್ತ್ರ"ವು ಇಂದಿಗೂ ದಾರಿದೀಪದಂತಿದೆ. ಇಂದಿನ ವ್ಯವಸ್ಥೆಯಲ್ಲಿ ಸರ್ವಾಂಗಗಳಿಂದಲೂ "ಸರಕಾರಕ್ಕಿಷ್ಟು; ಮನೆಗಿಷ್ಟು" ಎಂಬಂತೆ ಗಬರಿ ಸಂಗ್ರಹಿಸುತ್ತ ಕರ್ಕಶ ಸದ್ದು ಮಾಡುತ್ತಿರುವ "ಅಪವಿತ್ರ ದಾನ ದಕ್ಷಿಣೆ"ಗಳ ಚಾಂಡಾಲತ್ವವನ್ನು ಪ್ರಶ್ನಿಸುವ ಕೌಟಿಲ್ಯ ಮಾತ್ರ - ಈಗ ಕಾಣುವುದಿಲ್ಲ. ಮಾತ್ರವಲ್ಲ; ಅಂದಿನ ನಮ್ಮ ಚಾಣಕ್ಯನನ್ನು ಇಂದಿನ ಮಕ್ಕಳಿಗೆ ಅಪರಿಚಿತನನ್ನಾಗಿಸಿಬಿಟ್ಟಿದ್ದಾರೆ. ಆದ್ದರಿಂದ ಇಂದಿನ ಸಾಮಾಜಿಕ ಸನ್ನಿವೇಶದಲ್ಲಿ, ನೀತಿನಿಯಮಗಳಿಗೆ ಕಿವಿಗೊಡುವ ಚಂದ್ರಗುಪ್ತರಾಗಲೀ - ಕೈ ಹಿಡಿದು ನಡೆಸಬಲ್ಲ ಚಾಣಕ್ಯರನ್ನಾಗಲೀ ಕೆಲವರು ನೆನಪಿಸಿಕೊಂಡರೂ - ಹಲವರಿಗೆ ತಲುಪದಂತಾಗಿದೆಯಲ್ಲವೆ ?

ಇಂತಹ ಅದೆಷ್ಟೋ ಗುರುಮಂತ್ರಿಗಳ ಉಲ್ಲೇಖಗಳು ಇತಿಹಾಸ ಪುಟಗಳಲ್ಲಿವೆ. ವಿಜಯನಗರದಲ್ಲಿ ವಿದ್ಯಾರಣ್ಯರ ಅನುಗ್ರಹಕ್ಕೆ ಪಾತ್ರನಾಗಿದ್ದ - ಶ್ರೀ ಕೃಷ್ಣದೇವರಾಯನ ಪ್ರಧಾನ ಹಿತಚಿಂತಕ, ಗುರು, ಮಂತ್ರಿಯಾಗಿದ್ದ ತಿಮ್ಮರಸನೂ ಅಂತಹ ಚಾಣಾಕ್ಷ ಗುರುಗಳಲ್ಲಿ ಒಬ್ಬ. ಯಾವುದೇ ರಾಜನ ಯಶಸ್ಸು - ಅಪಯಶಸ್ಸು ಎಂಬುದು ಆತನ ಮಂತ್ರಿಯ ಮಿದುಳಿನಲ್ಲಿ ಅಡಗಿರುತ್ತದೆ. ಚಂದ್ರಗುಪ್ತನ ಯಶಸ್ಸಿಗೆ ಚಾಣಕ್ಯ, ಹುಕ್ಕ ಬುಕ್ಕರ ಯಶಸ್ಸಿಗೆ ವಿದ್ಯಾರಣ್ಯರು, ಶ್ರೀ ಕೃಷ್ಣದೇವರಾಯನ ಯಶಸ್ಸಿಗೆ ವಿದ್ಯಾರಣ್ಯರ ನಿರ್ದೇಶನದಂತೆ ನಡೆಯುತ್ತಿದ್ದ ಮಂತ್ರಿ ತಿಮ್ಮರಸ, ವಿವೇಕಾನಂದರ ಯಶಸ್ಸಿಗೆ ರಾಮಕೃಷ್ಣರು.... ಹೀಗೆ ಸೂತ್ರಧಾರರಾದ ಗುರು ಪರಂಪರೆಯೇ ನಮ್ಮ ಹಿಂದಿದೆ. ಅಧ್ಯಾತ್ಮದಂತಲ್ಲದೆ - "ಆಡಳಿತದ ರಾಜಕೀಯ" ಎಂಬ ವಿಶಾಲ ವ್ಯಾಪ್ತಿಯಲ್ಲಿ ತಂತ್ರಗಾರಿಕೆಗೂ ಹಲವು ಆಯಾಮಗಳಿರುವುದು ಮತ್ತು ಅವು ಅನಿವಾರ್ಯವೂ ಆಗಿರುವುದು ಸ್ವಾಭಾವಿಕ. ಆದ್ದರಿಂದಲೇ ಉಪಾಯ ಅಥವ ತಂತ್ರಗಾರಿಕೆಯ ಚಿಂತನಭಂಡಾರದಲ್ಲಿ ಕುತಂತ್ರಗಾರಿಕೆಯ ಕೆಲವು ವಿಷ ಬಾಣಗಳೂ ಜೋಪಾನವಾಗಿರುತ್ತವೆ. ಕುತಂತ್ರಗಳು ಅಂದರೆ - ಸೂಕ್ತ ಕಾಲ ಸೂಕ್ತನಿರ್ಣಯದೊಂದಿಗೆ ಸೂಕ್ತಸನ್ನಿವೇಶ ಮುಂತಾದ ಅನೇಕ ವ್ಯಂಜನಗಳನ್ನು ಬೆರೆಸಿ ತಯಾರಿಸಿರುವ "ಇಲಿ ಪಾಷಾಣ" ಅದು. ಅದನ್ನು ಸೇವಿಸಿದವರಿಗೆ ನಿಶ್ಚಯವಾಗಿಯೂ - ಮುಕ್ತಿ.

ಕುತಂತ್ರವೂ ಒಂದು ಬಗೆಯ ರಾಜಕೀಯ ಆಯುಧ. ಸ್ವದೇಶಭಾವದ ಗುರಿಸಾಧನೆಗಾಗಿ ನಡೆಸಲಾಗುವ "ಬೇಲಿ ಹಾರುವ ಮಾಯಕದ ವ್ಯಾಯಾಮ"ವೇ - ರಾಜಕೀಯ ತಂತ್ರಗಾರಿಕೆ. ಸಾಮಾನ್ಯ ಬದುಕುಗಳ ಸಣ್ಣ ಉದ್ಯೋಗದ ವ್ಯಾವಹಾರಿಕ ಸಂದರ್ಭಗಳಲ್ಲಿ ಅದನ್ನೇ -" ಕುತಂತ್ರ - ಕುಮ್ಮಣ್ಣಮಂತ್ರಿತನ" ಎನ್ನಲಾಗುತ್ತದೆ. ಆದರೆ... ಮಹತೋಭಾರದ ಯಾವುದೇ ಸ್ವರಾಜ್ಯ ಸಂಬಂಧಿತ ಬೃಹತ್ ರಾಜಕೀಯ ಕಾರ್ಯವಲಯದಲ್ಲಿ - ಕ್ಷಿಪ್ರ ಪ್ರಭಾವ ಬೀರುವ ತಂತ್ರಗಾರಿಕೆಯ ಚುಚ್ಚುಮದ್ದಿನ ಪ್ರಯೋಗವು ಒಮ್ಮೊಮ್ಮೆ ಅನಿವಾರ್ಯವಾಗುವುದಿದೆ. ಆಡಳಿತದ ಸೂತ್ರಧಾರಿಗಳಲ್ಲಿ - ತಂತ್ರಗಾರಿಕೆಯನ್ನೇ ನಿತ್ಯಮಂತ್ರ ಮಾಡಿಕೊಳ್ಳದ ಗಾಂಭೀರ್ಯ ಮತ್ತು ಸಂಯಮಪೂರ್ಣ ಎಚ್ಚರವಿದ್ದಾಗ ರಾಜಕೀಯ ಶಾಸ್ತ್ರ ಮತ್ತು ತಂತ್ರಗಾರಿಕೆಗಳು ಗೌರವಕ್ಕೆ ಪಾತ್ರವಾಗುತ್ತ ಪ್ರಜಾಹಿತಕಾರಿ ಎಂದೆನ್ನಿಸುವುದೂ ಇದೆ.



                                                      ಶ್ರೀ ಕೃಷ್ಣದೇವರಾಯ

ಕುತಂತ್ರಗಾರಿಕೆಯಲ್ಲಿ ಪಳಗಿದವರನ್ನು ಜನಪದದ ಆಡುಮಾತಿನಲ್ಲಿ - "ಕುಮ್ಮಣ್ಣ ಮಂತ್ರಿ" ಎನ್ನುತ್ತಾರೆ ! ಈ ನುಡಿಗಟ್ಟಿನ ಕಾರಣೀಪುರುಷನೇ - ವಿಜಯನಗರದ ತಿಮ್ಮಣ್ಣ ಮಂತ್ರಿ ! ಮಂತ್ರಿ ತಿಮ್ಮರಸ. ಆತನು ಸಮರ್ಥ ಸಜ್ಜನನಾಗಿ, ಧರ್ಮಾಧಾರಿತ ಆಡಳಿತ ಶಾಸ್ತ್ರದಲ್ಲಿ ನಿಪುಣನಾಗಿದ್ದರೂ ತನ್ನ ರಾಜ್ಯದ ಹಿತ ದೃಷ್ಟಿಯಿಂದ ಸಾಂದರ್ಭಿಕವಾಗಿ ಕುಟಿಲ ಮಾರ್ಗಗಳನ್ನೂ ಅನುಸರಿಸುತ್ತ ಬಂದಿದ್ದ; ವಿಜಯನಗರ ಸಾಮ್ರಾಜ್ಯವನ್ನು ವಿಸ್ತರಿಸುತ್ತ ಆಡಳಿತದಲ್ಲಿ ಬಿಗಿಯನ್ನೂ ಇರಿಸಿಕೊಂಡಿದ್ದ. ಮಂತ್ರಿ ತಿಮ್ಮರಸನು ಇದೇ ತಂತ್ರಬಲದಿಂದಲೇ ವಿಜಯನಗರದ ಸುದೀರ್ಘ ಕಾಲದ ವೈಭವಕ್ಕೆ ಮೂಲಕಾರಣನೂ ಆಗಿದ್ದ. ಶ್ರೀ ಕೃಷ್ಣದೇವರಾಯ ಮತ್ತು ಮಂತ್ರಿ ತಿಮ್ಮರಸನ ಆಡಳಿತದ ಅವಧಿಯು ವಿಜಯನಗರದ ಉಚ್ಛ್ರಾಯ ಕಾಲವಾಗಿ ಇತಿಹಾಸದಲ್ಲಿ ದಾಖಲಾಗಿದೆ. ಯಾವುದೇ ತಂತ್ರಗಾರಿಕೆಯ ಬಲವಿಲ್ಲದೆ ಆತ್ಮೋನ್ನತಿಯನ್ನು ಪಡೆಯಬಹುದು; ಆದರೆ ದೇಶ ಕಟ್ಟುವುದು ಅಸಾಧ್ಯ. ಸಮಷ್ಟಿಯನ್ನು ಮುನ್ನಡೆಸಲು ಹೊರಡುವ "ಇಲಿಗಳ ಥಕಥೈ" ಕಿಂದರಿಜೋಗಿಗೆ ಮಾಯಾತಂತ್ರದ ಕಿನ್ನುರಿಯು ಅನಿವಾರ್ಯ. ಆದ್ದರಿಂದಲೇ ಆಡಳಿತಾತ್ಮಕ ರಾಜಕೀಯದ ಅಭಿನ್ನ ಭಾಗವಾಗಿ "ತಂತ್ರ"ವು ರಾರಾಜಿಸುತ್ತಲೇ ಬಂದಿದೆ. ದುರದೃಷ್ಟವೆಂದರೆ, ಅದು - ಅಂಟುರೋಗದಂತೆ ಎಲ್ಲೆಲ್ಲೂ ಹಬ್ಬುವಂತಾಗಿರುವುದು ಮತ್ತು ನಯನಾಜೂಕುಗಳಿಲ್ಲದ ಅಪಾತ್ರ ತಂತ್ರಪ್ರಯೋಗಗಳಿಂದ "ವಿಷ ವಿದ್ಯೆ"ಯೊಂದು ಹಾಸ್ಯಾಸ್ಪದವಾಗುತ್ತಿರುವುದು !

"ಮುಳ್ಳಿನಿಂದಲೇ ಮುಳ್ಳನ್ನು ತೆಗೆಯುವ ವಿದ್ಯೆ"ಗೇ ಕುತಂತ್ರ ಅನ್ನುವುದು. ಸ್ವಚ್ಛ ಬದುಕಿಗೆ ಕುತಂತ್ರಗಳ ಅಗತ್ಯವಿಲ್ಲದಿದ್ದರೂ - ರಾಜಕಾರಣದಲ್ಲಿ ಮಾತ್ರ ಕುತಂತ್ರಗಳಿಗೆ ವಿಶೇಷ ಮಹತ್ವ ಮತ್ತು ಮರ್ಯಾದೆಯಿದೆ. ರಾಜಕಾರಣದಲ್ಲಿ "ಗೆದ್ದವರು" ಎಂದು ದಾಖಲಾದವರೆಲ್ಲರೂ ಪ್ರಚಂಡ ತಂತ್ರಗಾರರಾಗಿದ್ದರು ಎಂದೇ ಅರ್ಥ. ಆದರೆ ರಾಜಕೀಯದ ಭಾಷೆಗೆ ಬಳಸುವ ಮುಳ್ಳಿನ ಉಪಮೆಗಳು ಅಧ್ಯಾತ್ಮವಲಯದಲ್ಲಿ ಹೊಸ ರೂಪ ಹೊಂದುತ್ತವೆ. ಕುತಂತ್ರಗಳ ಯಾವುದೇ "ಹೈದರಮಿಣಿ ವಿದ್ಯೆಯು" ಅಧ್ಯಾತ್ಮ ರಾಜ್ಯದಲ್ಲಿ ಅಪಮೌಲ್ಯಗೊಳ್ಳುತ್ತವೆ. ಶ್ರೀ ರಾಮಕೃಷ್ಣರೂ ಎಷ್ಟೋ ಬಾರಿ "ಮುಳ್ಳಿನ ಮಂತ್ರ "ವನ್ನು ಉಚ್ಛರಿಸಿದ್ದರು. ಆದರೆ ರಾಜಕೀಯದಿಂದ ಮಾರುದೂರವಿದ್ದ ಅವರು ಮುಳ್ಳಿನ ಉಪಮೆಯನ್ನು ಬಳಸಿದ್ದ ಸಂದರ್ಭವು ಮಾತ್ರ ಬೇರೆಯಾಗಿತ್ತು. ಅಧ್ಯಾತ್ಮದ ಅಸೀಮ ಒಲವು ಮತ್ತು ಪ್ರೇಮಭಾವದಲ್ಲಿ ಮುಳುಗಿರುತ್ತಿದ್ದ ಅವರು ಅಜ್ಞಾನ ಅವಿದ್ಯೆಗಳೆಂಬ "ಮುಳ್ಳಿನ ಭಾವ " ವನ್ನು ಅಂತಿಮವಾಗಿ ಪರಿತ್ಯಜಿಸಬೇಕು - ಎನ್ನುತ್ತಿದ್ದರು; ದ್ವೇಷದ ಅಥವ ಯಾವುದೇ ಚುಚ್ಚಿ ಪೀಡಿಸುವ ಭಾವವನ್ನು ಮನಸ್ಸಿನಲ್ಲೇ ಇಟ್ಟುಕೊಂಡು ಪಾಲಿಸಿ ಪೋಷಿಸಬಾರದು; ಕ್ಷಿಪ್ರವಾಗಿ, ಜಾಣ್ಮೆಯಿಂದ - ಅದನ್ನು ಕಿತ್ತೆಸೆಯಬೇಕು... ಎಂಬುದು ಈ ಮಾತಿನ ಪ್ರಾಪಂಚಿಕ ಭಾವಾರ್ಥ. ಪ್ರೇಮ ಭಕ್ತಿಯ ಸಾಕಾರವಾಗಿದ್ದ ಪರಮಹಂಸರು ಪ್ರಪಂಚವೆಂಬ ಹಗ್ಗದಲ್ಲಿ ಪರಮಾತ್ಮ ಪುಷ್ಪವನ್ನು ನೇಯುವುದರಲ್ಲಿ ನಿಸ್ಸೀಮರಾಗಿದ್ದರು ! ಲೌಕಿಕ ದೃಷ್ಟಾಂತಗಳಲ್ಲಿಯೂ ಪರಮಾರ್ಥವನ್ನು ತುಂಬುತ್ತ ಉಪಮೆ ಪ್ರತಿಮೆಗಳ ಶಿಲ್ಪವನ್ನು ಕೆತ್ತುವುದರಲ್ಲಿ ಅವರು ಅದ್ವಿತೀಯರಾಗಿದ್ದರು !

"ಯಾರಲ್ಲಿ ಜ್ಞಾನವಿದೆಯೋ ಅವರಲ್ಲಿ ಅಜ್ಞಾನವೂ ಇರುತ್ತದೆ. ಜ್ಞಾನ ಅಜ್ಞಾನಗಳೆರಡನ್ನೂ ದಾಟಿ ಹೋಗು. ಅದು ಹೇಗೆಂದರೆ... ಕಾಲಿಗೆ ಮುಳ್ಳು ಚುಚ್ಚಿಕೊಂಡರೆ ಹುಡುಕಿಕೊಂಡು ಹೋಗಿ ಬೇರೊಂದು ಮುಳ್ಳನ್ನು ಸಂಪಾದಿಸಿಕೊಳ್ಳಬೇಕಾಗುತ್ತದೆ. ಆಗ ದೊರೆತ ಮುಳ್ಳಿನಿಂದ ಕಾಲಿಗೆ ಚುಚ್ಚಿಕೊಂಡಿರುವ ಮುಳ್ಳನ್ನು ತೆಗೆದುಹಾಕಿ, ಬಳಿಕ - ತೆಗೆದ ಮುಳ್ಳು ಮತ್ತು ತೆಗೆಯಲು ತಂದ ಮುಳ್ಳು - ಎರಡು ಮುಳ್ಳನ್ನೂ ಎಸೆಯಬೇಕಾಗುತ್ತದೆ. ಅದಕ್ಕಾಗಿಯೇ ಅಜ್ಞಾನದ ಮುಳ್ಳನ್ನು ತೆಗೆದು ಹಾಕಲೋಸುಗ  - ಮೊದಲು ಜ್ಞಾನದ ಮುಳ್ಳನ್ನು ಸಂಪಾದಿಸಿಕೊಳ್ಳಬೇಕು. ಬಳಿಕ, ಜ್ಞಾನಾಜ್ಞಾನಗಳೆರಡನ್ನೂ ಎಸೆದು ಅದನ್ನೂ ದಾಟಿಹೋಗಬೇಕು." ಎನ್ನುತ್ತ ಸಾಕ್ಷಾತ್ಕಾರದ ಗಮ್ಯದೆಡೆಗೆ ಎಳೆದೊಯ್ಯುತ್ತಿದ್ದರು ! ಹೀಗೆ ಶ್ರೀ ರಾಮಕೃಷ್ಣರು - ಮನಸ್ಸಿನ ಕಸಮುಸುರೆ ತೊಳೆದುಕೊಳ್ಳಲು "ಮುಳ್ಳು ಚುಚ್ಚಿ" ಪ್ರೇರೇಪಿಸುತ್ತಿದ್ದರು.

ರಾಜಕಾರಣದಲ್ಲಿಯೂ ಇಂತಹ - ಉದಾತ್ತ ಭಾವ ಪ್ರಚೋದಕ ಅಧ್ಯಾತ್ಮ ಇರಬೇಕು; ವಿವೇಚನೆಯಿಲ್ಲದೆ ವಿಷಬಾಣವನ್ನು  ಪ್ರಯೋಗಿಸುವಂತಹ ಬಾಲಿಶತನವು ಯಾವುದೇ ಆಡಳಿತದ ರಾಜಕಾರಣಕ್ಕೆ ಶೋಭಿಸುವುದಿಲ್ಲ. ಅಧ್ಯಾತ್ಮವು ವಿವೇಚನೆಯನ್ನು ಬೆಳೆಸುತ್ತದೆ. ಆದ್ದರಿಂದ ಅಧ್ಯಾತ್ಮಸಹಿತವಾದ ರಾಜಕಾರಣವಿದ್ದರೆ - ದಿನನಿತ್ಯದ "ಕುತಂತ್ರ ಮಸಿ"ಯನ್ನು ಉಜ್ಜಿಕೊಳ್ಳಲು ಆಧಾರ ಸಿಗುತ್ತದೆ. ಅದರಿಂದಾಗಿ ರಾಜಕಾರಣದ ಸ್ವಾಸ್ಥ್ಯ ಮತ್ತು ಪ್ರಜಾವರ್ಗದ ನೆಮ್ಮದಿಯು ಪ್ರಪಾತದ ಹಾದಿ ಹಿಡಿಯದೆ, ತಕ್ಕಮಟ್ಟಿಗೆ ಸ್ಥಿರಗೊಳ್ಳುತ್ತದೆ. ಹಾಗೆಂದು ಅಧ್ಯಾತ್ಮದ ಪರಿವೇಶದಲ್ಲಿ ಮಾತ್ರ ಯಾವುದೇ ರಾಜಕೀಯಕ್ಕೆ ಅವಕಾಶವಿಲ್ಲ; ಅಧ್ಯಾತ್ಮದಲ್ಲಿ ರಾಜಕೀಯವು ನಡೆಯುವುದೂ ಇಲ್ಲ. ನಿಜವಾದ ಆಧ್ಯಾತ್ಮಿಕ ನಡಿಗೆಗೆ - ಯಾವ ಬಾಹ್ಯ ಅವಲಂಬನೆಯ ಹಂಗು ಇರುವುದೂ ಇಲ್ಲ. ಅಕಸ್ಮಾತ್ ಅಧ್ಯಾತ್ಮ ವಲಯದಲ್ಲಿ ರಾಜಕೀಯದ ಕಲಬೆರಕೆಯಾಗಿಹೋದರೆ - ಆಗ ಅದು ಅಧ್ಯಾತ್ಮವಾಗಿ ಉಳಿಯಲಾರದು; ವೇಷ ಮಾತ್ರವಾದೀತು.

ಹೀಗೆ ಪೂರ್ವದಲ್ಲಿ ಸರ್ವಾರ್ಪಣಭಾವದಿಂದ ಕ್ರೋಡೀಕರಿಸಿ ಕಾಯ್ದುಕೊಂಡ ಭಾರತದ ಲೌಕಿಕ ಮತ್ತು ಅಲೌಕಿಕ ಸಂಪತ್ತು -  ತದನಂತರದ ಕಾಲಘಟ್ಟದಲ್ಲಿ ಎಂತೆಂತಹ ಆಘಾತಗಳನ್ನೆಲ್ಲ ಎದುರಿಸಿತು ? ಅದಕ್ಕೆ ಕಾರಣವೇನು ? ಎಂಬುದನ್ನೂ ಯೋಚಿಸಬೇಕು. ಸುಮಾರು 18 ನೆಯ ಶತಮಾನದ ಶ್ರೀ ರಾಮಕೃಷ್ಣರ ಕಾಲಘಟ್ಟದಲ್ಲಿ - ಭರತಖಂಡದಲ್ಲಿ ಸಾಮಾಜಿಕ ಭಾವಸಂಕರಗೊಂಡ ವಿಷಮ ಸನ್ನಿವೇಶವಿತ್ತು. ಅಂತಹ ತುರ್ತಿನ ಅವಧಿಯಲ್ಲಿ ಶ್ರೀ ರಾಮಕೃಷ್ಣರು ಸಂಭವಿಸಿದರು. ಭಾವ ವಕ್ರತೆಯಿಂದ ಘಾಸಿಗೊಂಡಿದ್ದ ಜನಮಾನಸವನ್ನು ಪುನರ್ನವೀಕರಿಸಲು ತೊಡಗಿದರು. ಧೀಮಂತ ಶಿಷ್ಯಪಡೆಯನ್ನು ತರಬೇತುಗೊಳಿಸಿದರು. ಭಕ್ತಿ ಪ್ರೇಮದ ವಿರಾಟ್ ದರ್ಶನ ಮಾಡಿಸಿದರು.

ಪರಮಹಂಸರ ಶಿಷ್ಯ ನರೇಂದ್ರನು - ಗುರುವಿನಂತೆ ಪ್ರೇಮ ಭಕ್ತಿಯನ್ನು ಅವಲಂಬಿಸಲಿಲ್ಲ; ನರೇಂದ್ರನದು ಜ್ಞಾನಭಕ್ತಿ ಪಥ. ಸ್ವಾಮಿ ವಿವೇಕಾನಂದರು ಅಮೆರಿಕಕ್ಕೆ ಹೋಗುವ ಮೊದಲು "ಅರಿವಿನ ಹಸಿವಿನಿಂದ" - ಪರಿವ್ರಾಜಕರಾಗಿ ಭಾರತದ ಉದ್ದಗಲಕ್ಕೂ ಓಡಾಡಿದ್ದರು. ತನ್ನ ಮತ್ತು ತನ್ನ ನೆಲದ ಅನ್ವೇಷಣೆಯಲ್ಲಿ ಕೆಲವು ವರ್ಷಗಳನ್ನು ಒಬ್ಬಂಟಿಯಾಗಿ ಸವೆಸಿದ್ದರು. ನರೇಂದ್ರನು ಸನ್ಯಾಸ ಸ್ವೀಕರಿಸಿ ವಿವೇಕಾನಂದ ಎಂಬ ರೂಪಿನಿಂದ ಅನಾಮಿಕನಂತೆ ಅಂದು ದೇಶಾದ್ಯಂತ ಸಂಚರಿಸಿದ್ದು - ಲೋಕಜ್ಞಾನ ಸಂಚಯದ ಪೂರ್ವ ಸಜ್ಜಿಕೆ.  

"ದುರ್ಬಲತೆಯೇ ನಮ್ಮ ಗುಲಾಮಗಿರಿಗೆ ಕಾರಣ" ಎಂಬುದನ್ನು ವಿವೇಕಾನಂದರು ಆಗ ಅರ್ಥಮಾಡಿಕೊಂಡಿದ್ದರು. ಆದ್ದರಿಂದಲೇ - "ನಮ್ಮ ಸುತ್ತಲೂ ಕೋಟ್ಯಂತರ ದುಃಖಕಾರಕ ಕ್ರಿಮಿಗಳು ಹಾರಾಡುತ್ತಿರಬಹುದು. ಆದರೂ ಚಿಂತಿಸಬೇಕಾಗಿಲ್ಲ. ನಮ್ಮ ಮನಸ್ಸು ದುರ್ಬಲವಾಗುವವರೆಗೆ ನಮ್ಮನ್ನು ಮೆಟ್ಟಿಕೊಳ್ಳುವ ಶಕ್ತಿ - ಯಾವ ಕ್ರಿಮಿಗಳಿಗೂ ಇಲ್ಲ. ಶಕ್ತಿಯೇ ಜೀವನ. ಅಶಕ್ತಿಯೇ ಮರಣ. ಶಕ್ತಿಯೇ ಪರಮಾನಂದ; ಅಶಕ್ತಿಯೇ ದುಃಖ ಮತ್ತು ಕಳವಳ " - ಎಂಬುದನ್ನು ಸ್ವಾಮೀಜಿಯವರು ಘಂಟಾಘೋಷವಾಗಿ ಸಾರಿದರು. ತನ್ಮೂಲಕ, ಆರೋಗ್ಯಕರ ಗುರಿಯ ಸ್ಪಷ್ಟ ಚಿತ್ರವನ್ನು ತಮ್ಮಲ್ಲೇ ಕೊರೆದುಕೊಂಡು ಅವರು ಮುನ್ನಡೆದರು. ಗುರು ಶ್ರೀ ರಾಮಕೃಷ್ಣರನ್ನು ಲೌಕಿಕ ಮತ್ತು ಅಲೌಕಿಕ ನೆಲೆಯಲ್ಲಿ ಸಮರ್ಥವಾಗಿ ಪ್ರತಿನಿಧಿಸುವ ಮಹಾಪಂಥದಲ್ಲಿಯೂ ಸ್ವಾಮೀಜಿಯವರು ಯಶಸ್ವಿಯಾದರು !                                                                                                                                                                                                
ಗುರು ಎಂದರೆ ಗುರಿಯತ್ತ ಕರೆದೊಯ್ಯುವ ದೈವ. "ಗುರುಸ್ಸಾಕ್ಷಾತ್ ಪರಬ್ರಹ್ಮ" ಆಗುವ ಅರ್ಹತೆಯುಳ್ಳವರಿಂದಲೇ ಪೂರ್ವದಲ್ಲಿ ಅನೇಕ ಸಾಧಕ ಶಿಷ್ಯರೂ ಹೊರಹೊಮ್ಮಿದ್ದಾರೆ. ಶ್ರೀ ರಾಮಕೃಷ್ಣ ಪರಮಹಂಸರು ಅಂತಹ - ಅವತಾರ ಗುರುವರಿಷ್ಠರು. ಪ್ರೀತಿಯಿಂದ ಜೀವನ ಪಾಠ ಕಲಿಸುವ ತಾಯ್ತಂದೆಯರೂ ಒಂದರ್ಥದಲ್ಲಿ ಗುರುಗಳೇ. ಆದರೆ ಅಲ್ಲಿ - ಸ್ವಜನಭಾವಕ್ಕೆ ಎಡೆಯಿರುವುದರಿಂದಾಗಿ ಅಂತಹ ಗುರುಸ್ಥಾನಗಳು - ಸಾಮಾನ್ಯವಾಗಿ ಪೂರ್ಣ ಯಶಸ್ಸು ಕಾಣಲಾಗದೆ - ಪರಿಪೂರ್ಣ ಎನ್ನಿಸುವುದಿಲ್ಲ. ಯಾವುದೇ ಭಾವ ದೌರ್ಬಲ್ಯಕ್ಕೆ ಒಳಗಾಗದೆ ತಮ್ಮ ಶಿಷ್ಯರನ್ನು ಜನ್ಮ ಸಾರ್ಥಕ್ಯದ ದಾರಿಯಲ್ಲಿ ನಿಷ್ಠುರವಾಗಿ ನಡೆಸಬಲ್ಲವರನ್ನು ಮಾತ್ರ ಅಂದಿನಿಂದಲೂ "ಗುರು" ಎನ್ನಲಾಗುತ್ತಿದೆ. ಹೀಗಿದ್ದೂ ಪೂರ್ವದ ಕೆಲವು ಗುರುಗಳ ಕುರಿತು ಅಪಸ್ವರಗಳಿಗಾಗಿ ಹುಡುಕಾಡುವುದೂ ಇಂದಿನ ಒಂದು ಫ್ಯಾಶನ್ ಆಗಿದೆ. ಆದರೆ ಪೂರ್ವದಲ್ಲಿ ದಾಖಲಾದ ಮತ್ತು ಇಂದಿಗೂ ಲಭ್ಯವಿರುವ ಎಲ್ಲ ವಿಷಯ ವಿಚಾರಗಳೂ ಅಂದಿನ ವಿಸ್ತೃತ ವಾಸ್ತವದ ಸಂಗ್ರಹಿತ ರೂಪವಾದುದರಿಂದ ಲಭ್ಯವಿರುವ ಯಾವುದೋ ಒಂದೆರಡು ಅಪಥ್ಯ ಘಟನೆಗಳನ್ನು ಇಂದು ಹೆಕ್ಕಿ ಹೊಸೆಯುತ್ತ ಕೂರುವುದು - ಬೆಳವಣಿಗೆಯ ಲಕ್ಷಣವಾಗದು. ಋಣೀ ಭಾವವು ಈ ಸಂಸ್ಕೃತಿಯ ಬಹುಮೂಲ್ಯ ನಿಧಿ ! ಉಪಕೃತ ಭಾವವಿಲ್ಲದಲ್ಲಿ ರಕ್ಕಸತನ ಅಡರುವುದು ಸ್ವಾಭಾವಿಕ. ಆದ್ದರಿಂದ ಯಾವುದೇ ಕ್ಷಣಿಕ ಲಾಭಕ್ಕಾಗಿ ದ್ರೋಹೀ ಸೃಜನಶೀಲತೆಯ ಸುಳಿಯಲ್ಲಿ ಸಿಲುಕದೆ ಇರುವುದು ಮನುಷ್ಯತ್ವ. ರಕ್ಕಸತನವನ್ನು ಹೊಕ್ಕು ಬಳಸುವ ಅಭಿರುಚಿಗಳು ಕಾಲಕ್ಕೆ ಸ್ವೀಕೃತವಾಗದ ನಿಷಿದ್ಧಗಳು. ಆದ್ದರಿಂದ ಯಾವುದೇ ಉತ್ತಮಿಕೆಯನ್ನು ಗೌರವಿಸಿ, ಹಂಸಕ್ಷೀರ ನ್ಯಾಯದಂತೆ ಸೌಮ್ಯವಾಗಿ ಸ್ವೀಕರಿಸುವುದೇ ಸದ್ವಿದ್ಯೆಯ ಸುಭಗತನ.

                                               *****-----*****-----*****