Sunday, October 18, 2015

ನಾನೊಲಿದಂತೆ (10) - ಕನ್ನಡ ರಾಜ್ಯೋತ್ಸವದ ನೆನಪುಗಳು



    ನವೆಂಬರ್ ತಿಂಗಳು ಬಂತೆಂದರೆ ಕನ್ನಡವನ್ನು “ಉಳಿಸಿ ಬೆಳೆಸುವ” ಕಲಿಗಳ ಗರ್ಜನೆಯು ಆರಂಭವಾಗುತ್ತದೆ. ವೇದಿಕೆಯಲ್ಲಿ ನಿಂತು - “ಉಲಿಸಿ ಬೆಲೆಸುವ ಕರೆಕೊಡುತ್ತ "ಖನ್ನಡಾಬಿಮಾನಿ" ಗಳೆಲ್ಲರೂ ತಮ್ಮ ಬಿಲದಿಂದ ಹೊರ ಬರುವ ಕಾಲವಿದು. ಸುಮಾರು 40 ವರ್ಷಗಳ ಹಿಂದಿನ ವರೆಗೂ ಸ್ವಲ್ಪ ಗಾಂಭೀರ್ಯದಿಂದಲೇ ಆಚರಿಸುತ್ತಿದ್ದ ರಾಷ್ಟ್ರೀಯ ಹಬ್ಬಗಳಾದ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ, ಕನ್ನಡ ರಾಜ್ಯೋತ್ಸವ... ಇವುಗಳೆಲ್ಲವೂ ಮೊದಲಿನ ಗಾಂಭೀರ್ಯವನ್ನು ಈಗ ಉಳಿಸಿಕೊಂಡಿಲ್ಲ. ದಿನ ಹೋದಂತೆ ನೆಲ, ಜಲ, ನಾಡು ನುಡಿಯ ಆತ್ಮಾಭಿಮಾನವು ನಮ್ಮಲ್ಲಿ ತಗ್ಗುತ್ತಿರುವಂತೆಯೂ ಕಾಣಿಸುತ್ತದೆ. ಯಾವುದೇ ಸಕಾರಣವಿಲ್ಲದೆ ಹೋರುವ ಗೋರುವ ಅಕ್ಷರಾಸುರರು ಹಿಂಡು ಹಿಂಡಾಗಿ ಉತ್ಪನ್ನವಾಗುತ್ತಿದ್ದಾರೆ. (ಈ ಪರಿವರ್ತನೆಯಲ್ಲಿ ವಾಣಿಜ್ಯ ಸಂಗ್ರಹಕ್ಕಾಗಿಯೇ ಖಣಖಣಿಸುತ್ತಿರುವ ಮಾಧ್ಯಮಗಳ ಪಾಲು ದೊಡ್ಡದು.) 

ಈಗ ಅದ್ದೂರಿಯ ಆಚರಣೆಯ ವ್ಯಾಖ್ಯೆಯೂ ಕೊಂಚ ಬದಲಾಗಿದೆ. “ಕಿವಿಗಡಚಿಕ್ಕುವ ಧ್ವನಿಮುದ್ರಿತ ಸಂಗೀತಕ್ಕೆ ಸೊಂಟ ತಿರುಗಿಸುತ್ತ ಬೀದಿಯಲ್ಲಿ ಕುಣಿಯುವುದು...” ಎಂಬಲ್ಲಿಗೆ ಆಚರಣೆಗಳು ಬಂದು ನಿಂತಂತೆಯೂ ಕಾಣುತ್ತದೆ. ಶಾಲೆಗಳಲ್ಲಂತೂ ರಾಜ್ಯೋತ್ಸವದ ರಸಗ್ರಹಣಕ್ಕೆ ಪೂರಕವಾದ ವಾತಾವರಣವಿದೆಯೆ? ಏನೋ ಸಂಶಯ. ಒಟ್ಟಿನಲ್ಲಿ ಎಲ್ಲವೂ “ಹರಕೆ ಒಪ್ಪಿಸುವಂತೆ” ಯಾಂತ್ರಿಕವಾಗಿ ನಡೆಯುತ್ತಿದೆ. ಇಂತಹ ಕ್ಷಣಗಳಲ್ಲಿ...ಅಂದಿನ ನಮ್ಮ ಬಾಲ್ಯದ ಶಾಲಾ ದಿನಗಳಲ್ಲಿ ನಡೆಯುತ್ತಿದ್ದಂತಹ ಗಂಭೀರ ಚಟುವಟಿಕೆಗಳು - ಬೇಡವೆಂದರೂ ನೆನಪಾಗುತ್ತವೆ. 


    ಸುಮಾರು 1969 – 70 ರಲ್ಲಿ, ಕುಂದಾಪುರದ ಬೋರ್ಡ್ ಹೈಸ್ಕೂಲಿನಲ್ಲಿ (ಈಗ ಸರಕಾರೀ ಪದವಿಪೂರ್ವ ಕಾಲೇಜು) ನಾನು 9 ನೆಯ ತರಗತಿಯ ವಿದ್ಯಾರ್ಥಿನಿಯಾಗಿದ್ದೆ. ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಆ ವರ್ಷ ನಡೆದ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಹೇಳಿ, ಪೂರ್ತಿಯಾಗಿ ವಿಷಯಗಳನ್ನು ಒದಗಿಸಿದ್ದ ಅಪ್ಪಯ್ಯನು (ದಿ. ಯಜ್ಞನಾರಾಯಣ ಉಡುಪ) ಆಗ ನನಗೆ ಸ್ವಲ್ಪ ತರಬೇತಿಯನ್ನೂ ನೀಡಿದ್ದರು. ಅಂದು ಅವರು ಸ್ವಹಸ್ತಾಕ್ಷರದಲ್ಲಿ ಬರೆದಿದ್ದ ತುಂಡು ಕಾಗದಗಳು ಮೊನ್ನೆ ಯಾಕೋ ಹಳೆಯ ಕಡತಗಳನ್ನು ಮೊಗಚುವಾಗ ಕಣ್ಣಿಗೆ ಬಿತ್ತು. ಅದನ್ನು ಓದುತ್ತ ಓದುತ್ತ ನಾನು ಹಿಂದೆ ಸರಿದಿದ್ದೆ. ಅಪ್ಪಯ್ಯನ ಅಕ್ಷರದಲ್ಲಿಯೇ ಇದ್ದ ಆ ಪುಟಗಳು ಅಂದಿನ ಕನ್ನಡ ರಾಜ್ಯೋತ್ಸವದ ಸಂಭ್ರಮದ ದಿನಗಳತ್ತ ನನ್ನನ್ನು ಕರೆದೊಯ್ದಿದ್ದವು; ಅಂದಿನ ದಿನಗಳನ್ನು ಮತ್ತೊಮ್ಮೆ ನೆನಪಿಸಿದ್ದವು. ನನ್ನ ತಂದೆಯವರ ಸರಳ ಭಾಷಾ ಶೈಲಿಯನ್ನು ಪರಿಚಯಿಸಲೋಸುಗ - ಅಂದು ನಾನು ಮಾಡಿದ ಆ ಭಾಷಣದ ಪುಟಗಳನ್ನು ಯಥಾವತ್ತಾಗಿ ನಿಮ್ಮ ಮುಂದೆ ಇಟ್ಟು, ಅನಂತರ ಎಂದಿನ ನನ್ನ ಪ್ರವರವನ್ನು ಬಿಚ್ಚುತ್ತೇನೆ.


                                                 
                                      ನವೆಂಬರ್ ೧ - ೧೯೭೦ 
““ಕ್ರಿಸ್ತಾಬ್ದ ೧೯೫೬ ನೆಯ ನವೆಂಬರ್ ೧ - ಕನ್ನಡಿಗರ ಬಾಳಿನಲ್ಲಿ ಚಿರಸ್ಮರಣೀಯವಾದ ದಿನ. ಅಂದು... ಶುಭವನ್ನು ಸೂಚಿಸುವ ವಿಹಂಗಮಗಳ ನುಣ್ಚರ, ತಳಿರ ನಡುವೆ ಸುಳಿದಾಡುವ ತಂಗಾಳಿಯ ಸುಯ್ದನಿ, ಮೂಡುವೆಣ್ಣಿನ ಮುಗುಳು ನಗೆಯಂತೆ ನರುಗೆಂಪನಾಂತ ಮುಂಬೆಳಗು ಮೂಡಣ ಬಾಂದಳದಲ್ಲಿ ಮಿರುಗುತ್ತಿತ್ತು. ಆಗ ಕಡಲ ಕರೆಯಲ್ಲಿ ನಿಬಿಡ ಕಲ್ಪದ್ರುಮ ವನ ಶ್ರೇಣಿಗಳ ಹರಿತ ಸೌಂದರ್ಯವು ಪ್ರಾತಃಸೂರ್ಯನ ದರಲೋಹಿತ ರಾಗದಲ್ಲಿ ನವಚೇತನ ಪಡೆದು ರಂಜಿಸುತ್ತಿತ್ತು. ಹಲವಾರು ವರ್ಷಗಳಿಂದ ಕನ್ನಡಿಗರು ಅಂತಹ ಸುಸ್ನಿಗ್ಧ ಸುಪ್ರಭಾತದ ಸರಳ ಸೌಂದರ್ಯವನ್ನು ಕಂಡೂ ಎಣಿಸಿಯೂ ಇರಲಿಲ್ಲ. ಕನ್ನಡಿಗರಿಗೇ ಒಂದು ರಾಜ್ಯವಾಗಬೇಕೆಂಬ ಹಂಬಲದಿಂದ ಪರಿತಪಿಸುತ್ತಿದ್ದ ಕನ್ನಡ ಪ್ರೇಮಿಗಳ ಹೃದಯಕ್ಕೆ ತಂಪನ್ನುಂಟು ಮಾಡುವಂತಹ ಅಮರ ದಿನವು ಅಂದು ಸ್ವರ್ಗದಿಂದ ಭೂಮಿಗಿಳಿಯಿತು. “ಕನ್ನಡಿಗರದೇ ಒಂದು ರಾಜ್ಯ ಉದಯಿಸಿದರೆ ಆ ರಾಜ್ಯದ ಅಭಿವೃದ್ಧಿಗಾಗಿ ತಮ್ಮ ತನು, ಮನ, ಧನ ಸರ್ವಸ್ವವನ್ನೂ ಅರ್ಪಿಸುತ್ತೇವೆ. ಕನ್ನಡ ತಾಯಿಯ ಮತ್ತು ಸಹೋದರರ ಉನ್ನತಿ ಧನ್ಯತೆಗಾಗಿ ದುಡಿದು ಮಡಿಯುತ್ತೇವೆ” ಎಂದು ಹಾರೈಸಿದ ಕನ್ನಡ ವೀರರ ಕನಸು ನೆನಸಾದ, ಕನ್ನಡ ಪ್ರೇಮಿಗಳ ಹೃದಯದಲ್ಲಿ ಎಂದೆಂದೂ ಅಚ್ಚೊತ್ತಿ ನಿಲ್ಲಬಹುದಾದಂತಹ ಉಜ್ವಲ ದಿನವು ಅಂದು ಉದಯಿಸಿತು.

“೧೯೫೬ ನೆಯ ನವೆಂಬರ್ ೧, ಎರಡು ಕೋಟಿ ಕನ್ನಡಿಗರ ಹೃದಯದಲ್ಲಿ ಆನಂದ ಸಾಗರವೇ ಭರದಿಂದ ಹರಿದು ಜನಮನದ ಹಿಂದಿನ ಅಶಾಂತಿಯನ್ನು ಹೋಗಲಾಡಿಸಿದ ಪವಿತ್ರ ದಿನವಾಯಿತು.

“ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು” ಎಂಬ ಕನ್ನಡಿಗರ ಹಾಡು ಕನ್ನಡಿಗರ ಗಾಯತ್ರಿಯಾಗಿ, ಕನ್ನಡದ ನವೋದಯ ಶಕ್ತಿಯಾಗಿ, ಕನ್ನಡಮ್ಮನ ಆವಾಹನೆಯ ಗೀತೆಯಾಗಿ ನಾಡಿನ ಹಳ್ಳಿಪಳ್ಳಿಗಳಲ್ಲೂ ಹಾಸುಹೊಕ್ಕಾಗಿ ಹರಡಿ ಕನ್ನಡದ ಒಕ್ಕೂಟವನ್ನು ಸಾಧಿಸಿದ ಸಾಧನೆಗೆ ೫೦ ವರ್ಷಗಳ ಹೋರಾಟ ಬೇಕಾಯಿತು. ಕನ್ನಡಿಗರ ಈ ಪ್ರಚಂಡ ಹೋರಾಟವು ಸಾವಿರ ವರ್ಷದ ಹಿಂದಿನ ಇತಿಹಾಸವನ್ನೇ ಬದಲಿಸಿಕೊಟ್ಟಿತು; ಕನ್ನಡಿಗರಿಗೆ ಹೊಸ ಚರಿತ್ರೆಯನ್ನು ಕಟ್ಟಿಕೊಟ್ಟಿತು. ಇಂತಹ ಪುಣ್ಯ ಶ್ರೇಯಸ್ಸನ್ನು ಹೊತ್ತು ತಂದ ೧೯೫೬ ನೇ ವರ್ಷದ ದೀಪಾವಳಿಯನ್ನು ಯಾವ ಒಳ್ಳೆಯ ಹೆಸರಿನಿಂದ ಕರೆಯಬೇಕಾಗಿದೆಯೋ ನನಗೆ ತಿಳಿಯದಾಗಿದೆ. ಭಾರತೀಯರ ಹೃದಯಾಕಾಶವನ್ನೇ ಬೆಳಗುವ ದೀಪಾವಳಿಯ ಈ ಉಜ್ವಲ ಕಾಲದಲ್ಲೇ ಕನ್ನಡಿಗರು ತಮ್ಮ ರಾಜ್ಯೋತ್ಸವವನ್ನು ಆಚರಿಸುವಂತಾದುದನ್ನು - ಧಮನಿಗಳಲ್ಲಿ ಕನ್ನಡಿಗರ ರಕ್ತ ಹರಿಯುವ ಕನ್ನಡಿಗನೆಂದೂ ಮರೆಯಲಾರ. ಕರ್ನಾಟಕ ಮಾತೆಗೆ ಜಯವಾಗಲಿ! ಕನ್ನಡಿಗರ ಈ ರಾಜ್ಯೋತ್ಸವವು ಅನಂತ ಕಾಲದ ವರೆಗೆ ಕನ್ನಡಿಗರ ಹೃದಯಮಂದಿರದ ದೀಪಾವಳಿಯಾಗಿ ವಿರಾಜಿಸುತ್ತಿರಲಿ!

ನಾವೆಂತಹ ಭಾಗ್ಯವಂತರು! ವರ್ತಮಾನಯುಗದ ೨ ಕೋಟಿ ಜನ ಕನ್ನಡಿಗರೂ ತಮ್ಮ ಬದುಕಿನಲ್ಲೇ ಕನ್ನಡದ ಒಕ್ಕೂಟವನ್ನು ನೋಡಿದರಲ್ಲಾ! ರಾಜಮಹಾರಾಜರುಗಳ ಸಾಮ್ರಾಜ್ಯವಾಗಿ ಸಹಸ್ರ ಸಹಸ್ರ ವರ್ಷ ಬಾಳಿ, ಬರಬರುತ್ತ ಛಪ್ಪನ್ನ ಚೂರುಗಳಾಗಿ ಹಂಚಿ, ಈಗ ನಮ್ಮನ್ನು ನಾವೇ ಆಳಿಕೊಳ್ಳುವಂತಹ ಏಕೀಕರಣದ ಎಂಥ ಪರ್ವ ಕಾಲದಲ್ಲಿ ನಾವಿದ್ದೇವೆ! ನಮ್ಮ ಹಿಂದಿನವರಿಗೆ ತಪ್ಪಿ ಹೋದ, ನಮ್ಮ ಮುಂದಿನವರಿಗೆ ಸಿಗದಂತಹ, ಅಮೃತದ ಗಳಿಗೆ ನಮ್ಮ ಪಾಲಿಗೆ ದೊರೆತಿದೆ!
ಭಾರತದ ರಾಷ್ಟ್ರಾಧ್ಯಕ್ಷರಾಗಿದ್ದ ಶ್ರೀ ರಾಜೇಂದ್ರಪ್ರಸಾದರು ಕನ್ನಡದ ಒಕ್ಕೂಟದ ಉದ್ಘಾಟನೆಯನ್ನು ಮಾಡಿದವರು. ಮೈಸೂರಿನ ರತ್ನ ಸಿಂಹಾಸನದ ಒಡೆಯರಾದ ಶ್ರೀ ಜಯಚಾಮರಾಜೇಂದ್ರರೇ ಕನ್ನಡ ಜನತಾ ರಾಜ್ಯದ ಮೊದಲ ರಾಜ್ಯಪಾಲರಾದವರು. ಏಕೀಕರಣದ ದಂಡನಾಯಕರಾಗಿದ್ದ ಶ್ರೀ ನಿಜಲಿಂಗಪ್ಪನವರೇ ಹೊಸ ರಾಜ್ಯದ ಮೊದಲ ಮುಖ್ಯಮಂತ್ರಿಗಳಾದವರು. ಹೀಗೆ ಒಂದು ಇನ್ನೊಂದರ ಘನತೆಯನ್ನು ಹೆಚ್ಚಿಸಿಕೊಟ್ಟ ಪುಣ್ಯ ಪ್ರಸಂಗಗಳ ಪವಿತ್ರ ಉದ್ಘಾಟನೆಯ ಸ್ಮರಣೆ ಮತ್ತು ಆಚರಣೆಗಳ ವಾಹಿನಿಯೇ ಇಂದಿನ ರಾಜ್ಯೋತ್ಸವದ ದಿನ!

ಇಂತಹ ಶುಭದ ಉನ್ಮಾದದಲ್ಲಿ “ಕನ್ನಡದ ಒಕ್ಕೂಟವೆನಗದೇ ಕಿರೀಟ” ಎನ್ನುತ್ತಿದ್ದ ಏಕೀಕರಣದ ಆಚಾರ್ಯರಾದ ಶ್ರೀ ಬೆನಗಲ್ ರಾಮರಾಯರು ಇಂದು ಬದುಕಿದ್ದಿದ್ದರೆ ಪೇಟ ಹಾರಿಸಿ ಕುಣಿಯುತ್ತಿದ್ದರು. ಇಂದಿನ ಉತ್ಸವವನ್ನು ನೋಡಿ ರೋಮಾಂಚನಗೊಳ್ಳುತ್ತಿದ್ದರು. ಕನ್ನಡದ ದಾಸಯ್ಯನಾಗಿ ಹಾಡಿದ ಶಾಂತ ಕವಿಗಳೂ, ಕನ್ನಡದ ಸಿಂಹವಾಗಿ ಗರ್ಜಿಸಿದ ಮುದವೀಡು ಕೃಷ್ಣರಾಯರೂ, ಕನ್ನಡದ ಸಾತ್ವಿಕ ಶಕ್ತಿಯಾಗಿ ಸೆಡೆದು ನಿಂತ ವೆಂಕಣ್ಣಯ್ಯ, ಬಿ. ಎಂ. ಶ್ರೀ., ಬಸವನಾಳರೂ ಮತ್ತು ಕರ್ನಾಟಕದ ಏಕೀಕರಣದ ಹೊಂಗನಸನ್ನು ಕಂಡು ಹೋರಾಡಿದ ಇನ್ನೆಷ್ಟೋ ಕನ್ನಡಿಗರೂ... ಕನ್ನಡ ಆಕಾಶದಲ್ಲಿ ಕಣ್ಮರೆಯಾಗಿ ನಿಂತು ಸಮಗ್ರ ಕರ್ನಾಟಕದಲ್ಲಿ ಅಲ್ಲಲ್ಲಿ ಜರಗುವ ಈ ಅಭೂತಪೂರ್ವ ಉತ್ಸವವನ್ನು ಕಂಡು ಆನಂದ ಬಾಷ್ಪವನ್ನುದುರಿಸುತ್ತಿರುವರು! ನಮ್ಮ ಈ ಉತ್ಸವವನ್ನು ಕಂಡು ತಲೆದೂಗದ ಕನ್ನಡಿಗರಿರುವರೆ? ಕನ್ನಡದ ಕುಲ ಪುರೋಹಿತರಾದ ಆಲೂರು ವೆಂಕಟರಾಯರು ಇಂದು ಬದುಕಿದ್ದಿದ್ದರೆ...? ಇಂದು ಇವರೆಲ್ಲರೂ ಎಲ್ಲರ ಕಣ್ಣಿಗೆ ಕಾಣಿಸದಿದ್ದರೂ ಅವರ ಕಣ್ಣುಗಳಿಗೆ ನಾವು ಆಚರಿಸುವ ಉತ್ಸವಗಳು ತೋರುತ್ತಿವೆ!

ಕರ್ನಾಟಕ ಭುವನೇಶ್ವರಿಯನ್ನು ಶ್ರೀ ಬಿ. ಎಂ. ಶ್ರೀ. ಯವರು ಅಂದೇ ರಥವನ್ನೇರಿಸಿ ಹೋಗಿದ್ದಾರೆ. ಇಂದು ಕರ್ನಾಟಕ ಮಾತೆಯ ಹಲವು ಮುಖದ ಸೇವೆಯಿಂದ ಕನ್ನಡಿಗರ ಯಶೋಬಾವುಟವನ್ನು ಧವಳಗಿರಿಯ ತುತ್ತತುದಿಯಲ್ಲಿ ಹಾರಿಸಲು ಸಾಹಿತ್ಯ ರಂಗದಲ್ಲಿ ನುಗ್ಗು ನುಗ್ಗಾಗುತ್ತಿರುವ ಶ್ರೀ ಕು ವೆಂ ಪು, ಬೇಂದ್ರೆ, ಕಾರಂತರ ಅಸಮ ಸಾಹಸವು ಅಕ್ಷಯವಾಗಲಿ! ಅಮರವಾಗಲಿ! – ಎಂದು ಈ ಸುಮುಹೂರ್ತದಲ್ಲಿ ಹಾರೈಸುವುದು ಪ್ರತಿಯೊಬ್ಬ ಕನ್ನಡಿಗನ ಆದ್ಯ ಕರ್ತವ್ಯ. ಪಂಪ, ರನ್ನ, ಜನ್ನ, ಲಕ್ಷ್ಮೀಶ, ಕುಮಾರವ್ಯಾಸ, ರುದ್ರಭಟ್ಟರಂತಹ ಮಹಾ ಕವಿಗಳನ್ನು ಸ್ಮರಿಸುವುದು ಪ್ರತಿಯೊಬ್ಬ ಕನ್ನಡಿಗನ ಪ್ರಥಮ ಕರ್ತವ್ಯ. ರಾಷ್ಟ್ರಕೂಟ ರಾಜ ನೃಪತುಂಗ, ಕೃಷ್ಣ, ಚಾಲುಕ್ಯರ ಪುಲಿಕೇಶಿ, ವಿಕ್ರಮ, ವಿಜಯನಗರದ ಕೃಷ್ಣದೇವರಾಯ... ಮೊದಲಾದ ರಾಜಮಹಾರಾಜರು ಕರ್ನಾಟಕಕ್ಕಾಗಿ ಏನು ಮಾಡಿದ್ದಾರೆಂಬುದನ್ನು ಈ ರಸ ಗಳಿಗೆಯಲ್ಲಿ ನೆನೆಯುವುದು ಕನ್ನಡಿಗರ ಇಂದಿನ ಕರ್ತವ್ಯ. ಶ್ರೀ ವಿದ್ಯಾರಣ್ಯರು, ಪುರಂದರದಾಸರು, ಕನಕದಾಸರು ಕರ್ನಾಟಕವನ್ನು ಹೇಗೆ ರೂಪಿಸಬೇಕೆಂದು ನಿರ್ಧರಿಸಿ ಅದಕ್ಕೆ ಪಟ್ಟ ಬವಣೆಯನ್ನು ಈ ಸುಂದರ ವೇಳೆಯಲ್ಲಿ ಪ್ರತಿಯೊಬ್ಬ ಕನ್ನಡಿಗನೂ ಸ್ಮರಣೆಗೆ ತಂದುಕೊಳ್ಳುವುದುತ್ತಮ. ಸಮಗ್ರ ಭಾರತದ ಆರಾಧ್ಯ ದೇವನಾದ ಆಂಜನೇಯನು ಶುದ್ಧ ಕನ್ನಡಿಗನೆಂಬುದನ್ನು ಪ್ರತಿಯೊಬ್ಬ ಕನ್ನಡಿಗನೂ ಈ ಶುಭದ ವೇಳೆಯಲ್ಲಿ ಸ್ಮರಿಸಬೇಕು.

ಈ ರಾಜ್ಯೋತ್ಸವದ ವೇಳೆಯಲ್ಲೇ ಕರ್ನಾಟಕ ಚಳವಳಿಯ ಸಿಂಹಾವಲೋಕನ ಮತ್ತು ಇದರ ವೈಶಿಷ್ಟ್ಯದ ಕುರಿತು ನಾಲ್ಕು ಮಾತನಾಡುವುದುತ್ತಮ. ಕರ್ನಾಟಕ ಪ್ರಾಂತ ರಚನೆಯ ಚಳವಳಿಯು ೨೦ – ೭ – ೧೮೯೦ ರಲ್ಲಿ ಧಾರವಾಡದಲ್ಲಿ ಜನ್ಮವೆತ್ತಿತು. ಕರ್ನಾಟಕ ಏಕೀಕರಣದ ಮೊತ್ತಮೊದಲಿನ ಗೊತ್ತುವಳಿಯು ೭ – ೧೦ – ೧೯೧೭ ರಂದು ಸ್ವೀಕೃತವಾಯಿತು. ೧೯೨೪ ರಲ್ಲಿ ಬೆಳಗಾವಿಯಲ್ಲಿ ಕರ್ನಾಟಕ ಏಕೀಕರಣದ ಸಂಘವು ಸ್ಥಾಪಿಸಲ್ಪಟ್ಟಿತು. ಅಂದಿನಿಂದ ಕನ್ನಡಿಗರ ಚಳವಳಿಯು ಭರದಿಂದ ನಡೆಯುತ್ತ ಬಂತು. ೧೯೨೭ ರಲ್ಲಿ ಅಖಿಲ ಭಾರತ ಕಾಂಗ್ರೆಸ್ಸು ಮುಂಬಯಿ ಅಧಿವೇಶನದಲ್ಲಿ ಮೊತ್ತಮೊದಲು - ಆಂಧ್ರ ಮತ್ತು ಸಿಂಧ್ ಗಳಂತೆ ಕರ್ನಾಟಕ ಪ್ರಾಂತ ರಚನೆಯನ್ನು ಮಾಡಬೇಕೆಂದು ನಿರ್ಧರಿಸಿತು. ಈ ಸಮಿತಿಗೆ ಕರ್ನಾಟಕದ ಪರವಾಗಿ ಕರ್ನಾಟಕ ಪ್ರಾಂತಿಕ ಕಾಂಗ್ರೆಸ್ಸು ಶ್ರೀ ರಂಗನಾಥ ರಾಮಚಂದ್ರ ದಿವಾಕರರನ್ನು ಕಳುಹಿಸಿತು. ಕನ್ನಡಿಗರ ಸಾಹಸದ ಫಲವಾಗಿ, ಈ ಸಮಿತಿಯು ಕರ್ನಾಟಕ ಪ್ರಾಂತ ರಚನೆಗೆ ತನ್ನ ಒಪ್ಪಿಗೆಯನ್ನು ಕೊಟ್ಟಿತು. ಮಹಾತ್ಮಾ ಗಾಂಧಿಯವರೂ ಕರ್ನಾಟಕ ಪ್ರಾಂತ ರಚನೆಗೆ ತನ್ನ ಬೆಂಬಲವುಂಟೆಂದು ಸಾರಿದ್ದರು. ೧೯ – ೧ - ೧೯೪೬ ರಲ್ಲಿ ನಡೆದ ಕರ್ನಾಟಕ ಏಕೀಕರಣ ಪರಿಷತ್ತಿನ ೧೦ ನೆಯ ಅಧಿವೇಶನವು ಮುಂಬಯಿಯಲ್ಲಿ ಶ್ರೀ ಬಿ. ಜಿ. ಖೇರರ ಅಧ್ಯಕ್ಷತೆಯಲ್ಲಿ ಜರುಗಿದಾಗ ಶ್ರೀ ವಲ್ಲಭಭಾಯಿ ಪಟೇಲರು ಈ ಪರಿಷತ್ತನ್ನು ಉದ್ಘಾಟಿಸುತ್ತಾ ಕರ್ನಾಟಕ ಪ್ರಾಂತ ರಚನೆ ಆಗಲೇಬೇಕೆಂದು ಒತ್ತಿ ಹೇಳಿದ್ದರು. ಈ ಎಲ್ಲಾ ಪ್ರಾತಃಸ್ಮರಣೀಯರ ನಾಮವನ್ನು ಇಂದಿನ ಈ ಶುಭ ಸನ್ನಿವೇಶದಲ್ಲಿ ನಾವೆಲ್ಲಾ ಸ್ಮರಿಸಬೇಕಾದುದು ನಮ್ಮ ಆದ್ಯ ಕರ್ತವ್ಯ. ಇನ್ನು ದರ್ ಸಮಿತಿ, ತ್ರಿಮೂರ್ತಿ ಸಮಿತಿ, ೨೭ – ೫ – ೧೯೫೩ ರಲ್ಲಿ ಶ್ರೀ ಕೆ. ಆರ್. ಕಾರಂತರ ಅಧ್ಯಕ್ಷತೆಯಲ್ಲಿ ದಾವಣಗೆರೆಯಲ್ಲಿ ಜರುಗಿದ ಅಖಿಲ ಕರ್ನಾಟಕ ರಾಜ್ಯ ನಿರ್ಮಾಣ ಪರಿಷತ್ತನ್ನೂ ಈಗ ಇಲ್ಲಿ ಸ್ಮರಿಸಬೇಕಾಗಿದೆ. ಈ ಎಲ್ಲಾ ಪರಿಷತ್ತು ಸಂಘಗಳ ಸಾಹಸದ ಫಲವಾಗಿ ಕರ್ನಾಟಕ ಪ್ರಾಂತ ರಚನೆಗೆ ೩೧ – ೮ – ೧೯೫೬ ರಲ್ಲಿ ರಾಷ್ಟ್ರಪತಿಗಳ ಒಪ್ಪಿಗೆ ದೊರೆತು ವಿಶಾಲ ಕರ್ನಾಟಕದ ನಿರ್ಮಾಣವು ಮಹಾ ಮೈಸೂರು ಎಂಬ ಹೆಸರಿನಿಂದ ಉದಯಿಸಿತು. 

ಕರ್ನಾಟಕ ಏಕೀಕರಣದ ಮುಖ್ಯವಾದ ಒಂದು ಗುರಿ – ಕನ್ನಡ ನುಡಿಯ ಅಭಿವೃದ್ಧಿ ಮತ್ತು ಕನ್ನಡಿಗರ ಉದ್ಧಾರ. ಈಗ ನವೋದಯವಾದ ಕರ್ನಾಟಕವು ಕನ್ನಡ ಭಾಷಾ ಪ್ರೇಮಿಗಳ ನರ ನಾಡಿಗಳಲ್ಲಿ ನುಡಿಯೆಂಬ ಪೀಯೂಷವಾಹಿನಿಯನ್ನು ಇತೋಪ್ಯಧಿಕವಾಗಿ ಪ್ರವಹಿಸುತ್ತ “ಸ್ವಾತಂತ್ರ್ಯಾ ನಂತರ – ಏಕೀಕರಣವಾದ ಮೇಲೆ – ಕರ್ನಾಟಕವು ಏನನ್ನು ಸಾಧಿಸಿಲ್ಲ?” ಎಂದು ವೀರ ಕನ್ನಡಿಗರ ಬಾಯಿಯಿಂದ ಕೇಳುವಂತೆ, ಸರ್ವತೋಮುಖ ಅಭಿವೃದ್ಧಿಯನ್ನು ಹೊಂದಲಿ ಎಂಬುದೇ ನಮ್ಮೆಲ್ಲರ ಆಶಯ ಮತ್ತು ಪ್ರಯತ್ನವಾಗಲಿ...”” 

    ಇದು ಸುಮಾರು 45 ವರ್ಷಗಳ ಹಿಂದೆ ನಾನು ಮುಂದಿಟ್ಟ - ಅಂದು ಪ್ರಥಮ ಬಹುಮಾನವನ್ನು ಪಡೆದ ಭಾಷಣ. ಆಗ ನಾನು ಯಂತ್ರವಾಗಿದ್ದೆ; ಅಪ್ಪಯ್ಯನು ಯಂತ್ರವಾಹಕರಾಗಿದ್ದರು. ಬಹುಶಃ ಭಾಷೆಯ ಭಾವ, ಅಕ್ಷರದ ಆತ್ಮವನ್ನು ಓಲೈಸುವಂತೆ....... ಅಂದು ಪ್ರಖರವಾಗಿ ಮಾತನಾಡುತ್ತಿದ್ದ ನನ್ನನ್ನು - ತಮ್ಮ ಕಣ್ಣಿನಲ್ಲಿಯೇ ಮುದ್ದಾಡುತ್ತ - ತಮ್ಮೊಳಗಿನ ಭಾವ ಪ್ರಕಟಣೆಯ ಮಾಧ್ಯಮವಾಗಿಯೂ ಅಪ್ಪಯ್ಯನು ನನ್ನನ್ನು ಆಗ ಬಳಸುತ್ತಿದ್ದರು ಎಂದೂ - ಒಮ್ಮೊಮ್ಮೆ ಅನ್ನಿಸುವುದಿದೆ. [ಅವರೇ ನೀಡಿದ ಸಾಹಿತ್ಯವನ್ನು ನನ್ನ ಬಾಯಿಂದ ಕೇಳಿಸಿಕೊಂಡು ಅಪ್ಪಯ್ಯ ಭಾವುಕರಾಗುತ್ತಿದ್ದುದೂ ಇತ್ತು.] ಯಾವ ವಿಷಯವನ್ನು ಒದಗಿಸಿದರೂ ಅದನ್ನು ಪೂರ್ತಿಯಾಗಿ ನನ್ನದಾಗಿಸಿಕೊಂಡು, ಸಮರ್ಥವಾಗಿ ಪ್ರಸ್ತುತಪಡಿಸುವ ಶಕ್ತಿಯು ಬಹುಶಃ ನನಗೆ ಜನ್ಮಜಾತವಾಗಿಯೇ ಬಂದಿತ್ತು. [ಅಮ್ಮನ ಬಳುವಳಿಯದು!!] ಅದನ್ನು ಗುರುತಿಸಿದ್ದ ಅಪ್ಪಯ್ಯನು ಆ ಶಕ್ತಿಯನ್ನು ವಿಧ ವಿಧದಿಂದ ಪಳಗಿಸಿ, ನುಣುಪುಗೊಳಿಸಿ, ಕ್ಲಿಷ್ಟ ಶಬ್ದಗಳನ್ನೆಲ್ಲ ನನ್ನ ನಾಲಗೆಯಲ್ಲಿ ಉರುಳಾಡಿಸಿ ಖುಷಿಯಿಂದ ಬೀಗುತ್ತಿದ್ದರು! ಅಪ್ಪಯ್ಯನು ಸಾಂದರ್ಭಿಕವಾಗಿ ನನ್ನನ್ನು ದಾಳವಾಗಿ ಉರುಳಿಸುತ್ತಿದ್ದ ಕಾಲವದು. ಬೇಸರವಿಲ್ಲದೆ ನನ್ನನ್ನು ಒಪ್ಪಗೊಳಿಸುತ್ತಿದ್ದ ಅವರ ನಿರ್ದೇಶನವನ್ನು ಪಾಲಿಸುವುದಷ್ಟೇ ನನ್ನ ಅಂದಿನ ಕೆಲಸವಾಗಿತ್ತು.

    ಪ್ರತೀ ವರ್ಷವೂ ರಾಜ್ಯೋತ್ಸವದ ದಿನದಂದು ನಮ್ಮ ಕುಂದಾಪುರದ ಶಾಲೆಯಲ್ಲಿ ಆಗ - ಭಾಷಣ ಸ್ಪರ್ಧೆ, ಕನ್ನಡ ಭಾವಗೀತೆಗಳ ಸ್ಪರ್ಧೆ, ಪ್ರಬಂಧ ಸ್ಪರ್ಧೆಗಳೆಲ್ಲವೂ ನಡೆಯುತ್ತಿದ್ದವು. ಅವುಗಳಲ್ಲಿ ಒಂದೆರಡಾದರೂ ಬಹುಮಾನ ಹೊಡೆಯುವ ಸ್ಪರ್ಧೆಯು ನಮ್ಮ ಮನೆಯ ಸದಸ್ಯರಲ್ಲೇ ಇತ್ತು. ಭಾವಗೀತೆಗಳಲ್ಲಿ ನನಗೆ ಬಹುಮಾನವು ಖಾತ್ರಿಯಾಗಿದ್ದರೆ ಪ್ರಬಂಧದಲ್ಲಿ ನನ್ನ ಅರುಣಕ್ಕನು ಮುಂದಿರುತ್ತಿದ್ದಳು. ಪ್ರೌಢ ಶಾಲೆಗೆ ಬಂದ ಹೊಸತರಲ್ಲಿ, ನಾನು 8 ನೇ ತರಗತಿಯಲ್ಲಿದ್ದಾಗ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿರಲಿಲ್ಲ. ಆದರೆ ಆ ಸ್ಪರ್ಧೆಯನ್ನು ನೋಡಲು ಹೋಗಿದ್ದೆ. ಅಂದು 10 ನೇ ತರಗತಿಯ ಒಬ್ಬಳು ವಿದ್ಯಾರ್ಥಿನಿಯು ಭಾಷಣದಲ್ಲಿ ಪ್ರಥಮ ಬಹುಮಾನ ಪಡೆದಿದ್ದಳು. ಅವಳ ಭಾಷಣವನ್ನು ಕೇಳಿದ್ದ ನಾನು ಮತ್ತು ನನ್ನ ಸಹೋದರಿಯು, ಮನೆಗೆ ಬಂದ ನಂತರವೂ ಆಕೆಯ ಭಾಷಣದ ಕುರಿತು ಮೆಚ್ಚುಗೆಯ ಮಾತನಾಡಿದ್ದೆವು. ಆಗ ನಮ್ಮ ಮಾತನ್ನು ಕೇಳಿಸಿಕೊಂಡ ಅಪ್ಪಯ್ಯನು “ಬರುವ ವರ್ಷದ ಸ್ಪರ್ಧೆಯಲ್ಲಿ ನೀವೂ ಭಾಗವಹಿಸಿ... ಅದೇ ನೆವನದಲ್ಲಿ ಒಂದಷ್ಟು ವಿಷಯಗಳನ್ನೂ ತಿಳಿದುಕೊಂಡಂತಾದೀತು...” ಅಂದಿದ್ದರು. ಮುಂದೆ... ಶಾಲೆಯಿಂದ ದಿನಕ್ಕೊಂದು ಸೊಟ್ಟ ಸುದ್ದಿಯನ್ನು ಸಂಪಾದಿಸುತ್ತ ಅನ್ಯ ಪ್ರಸಂಗಗಳಲ್ಲಿಯೇ ಮುಳುಗಿಹೋಗುತ್ತಿದ್ದ ನಮಗೆ ಅಪ್ಪಯ್ಯನ ಆ ಸೂಚನೆಯು ಮರೆತೇ ಹೋಗಿತ್ತು. ಮತ್ತೊಮ್ಮೆ ಅಕ್ಟೋಬರ್ ತಿಂಗಳು ಬರುವ ವರೆಗೂ ನಮಗೆ ಅಪ್ಪಯ್ಯ ಕೊಟ್ಟ "ಗುರಿಯ ಗಾಂಭೀರ್ಯ" ಇರಲಿಲ್ಲ. ಮುಂದಿನ ವರ್ಷದ ಅಕ್ಟೋಬರದಲ್ಲಿ ಒಂದು ದಿನ, “ರಾಜ್ಯೋತ್ಸವದ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸುವವರು ತಮ್ಮ ಹೆಸರನ್ನು ಕೊಡಬೇಕು...” ಎಂಬ ಸೂಚನೆಯು ತರಗತಿಗೆ ಬಂದಾಗ, ಅಪ್ಪಯ್ಯನ ಅನುಮತಿ ಪಡೆದು ನಾನೂ ಹೆಸರು ಕೊಟ್ಟೆ. ಅದೇ ದಿನ, ನಾನು 5 ನಿಮಿಷ ಮಾತನಾಡುವಷ್ಟು ವಿಷಯವನ್ನು ಅಪ್ಪಯ್ಯ ಒದಗಿಸಿದರು. ಅಕ್ಟೋಬರ್ ಅಂತ್ಯದಲ್ಲಿ ನನ್ನ ಬಾಯಿಂದ ಭಾಷಣವನ್ನು ಹೇಳಿಸಿಯೂ ಕೇಳಿದ್ದರು. ಆಮೇಲೆ, “ಈ ಬಾರಿಯ ಕಂಬಳದಲ್ಲಿ ಯಾವ ಕೋಣ ಗೆಲ್ಲುತ್ತದೆ – ನೋಡುವ...” ಎಂದೂ - ಮುಗುಮ್ಮಾಗಿ ಮುಗುಳ್ನಕ್ಕಿದ್ದರು.
 

    ಅಂದೂ... ಹಿಂದಿನ ವರ್ಷದ ಬಹುಮಾನ ವಿಜೇತೆಯು ಭಾಷಣ ಮಾಡುವವಳಿದ್ದಳು. ಸ್ಪರ್ಧಾಳುಗಳ ಪಟ್ಟಿಯಲ್ಲಿ, ಅವಳು ನನಗಿಂತ ಮೊದಲೇ ಮಾತನಾಡಬೇಕಿತ್ತು. ಆದರೆ ಅದಾಗಲೇ ಶಾಲೆಯಲ್ಲಿ ಸಾಕಷ್ಟು ಅಧಿಕಪ್ರಸಂಗ ಮಾಡಿ ಜೀರ್ಣಿಸಿಕೊಂಡಿದ್ದ ನಾನು - ಅಂದು ಸ್ಪರ್ಧಾಳುವಾಗಿ ನಿಂತದ್ದನ್ನು ಕಂಡ ಅವಳು, “ಸರ್, ನಾನು ಕೊನೆಯಲ್ಲಿ ಮಾತನಾಡುತ್ತೇನೆ..” ಎಂದು ಅಧ್ಯಾಪಕರಿಗೆ ಹೇಳಿ ತನ್ನ ಹೆಸರನ್ನು ಪಟ್ಟಿಯ ಕೊನೆಯಲ್ಲಿ ಹಾಕಿಸಿಕೊಂಡಿದ್ದಳು. ಯಾವುದೇ ಚೌಕಾಸಿಗೆ ಹೋಗದ ನನ್ನ ಸರದಿಯು ಬಂದಾಗ, ವೇದಿಕೆ ಹತ್ತಿದ್ದ ನಾನು, ಆ ತರಗತಿಯ Platform ನ್ನು ಪೂರ್ತಿಯಾಗಿ ಆವರಿಸಿಕೊಂಡು ಅಸ್ಖಲಿತವಾಗಿ 5 ನಿಮಿಷ ಪೂರ್ತಿ ಹಾವಭಾವದೊಂದಿಗೆ ಹಿಂದು ಮುಂದಿಲ್ಲದ ಒಡ್ಡು ಧೈರ್ಯದಿಂದ ಮಾತನಾಡಿ  ಕೆಳಗಿಳಿಯುವಾಗ - “ಆಕೆಯು” ಕಿಟಕಿಯಲ್ಲಿ ಇಣುಕುತ್ತಿದ್ದಳು. ಅನಂತರ ಅವಳ ಹೆಸರನ್ನು ಕರೆದಾಗ, “ನಾನು ಹೆಸರನ್ನು ಹಿಂದೆಗೆದುಕೊಳ್ಳುತ್ತೇನೆ...” ಎಂದು ಹೇಳಿ ಅವಳು ಹೊರಟೇ ಹೋಗಿದ್ದಳು! 
ಬಲು ಜಾಣೆ. 

  ಅಂದು ಪ್ರಥಮ ಬಹುಮಾನವು ನನಗೇ (ಅಪ್ಪಯ್ಯನಿಗೆ!) ಬಂತು. ಇದರಿಂದ ಆದ ಪರಿಣಾಮ ಏನೆಂದರೆ ಆ ಭಾಷಣಗಾರ್ತಿ ” ಯು ಮುಂದೆಂದೂ ನನ್ನ ಜೊತೆಗೆ ಸಹಜವಾಗಿರಲಿಲ್ಲ! ಅವಳೂ ಉತ್ತಮ ಮಾತುಗಾರಳೇ ಆಗಿದ್ದಳು. ಆದರೆ ಅಂದಿನ ನನ್ನ ಮಾತಿನ ಓಘವನ್ನು ಅವಳಲ್ಲ - ಯಾರೇ ಬಂದರೂ ತಡೆದುಕೊಳ್ಳಲು ಕಷ್ಟವಿತ್ತು. (ಪೂರ್ತಿ ಇಂಧನ ತುಂಬಿದ ಸುಸ್ಥಿತಿಯಲ್ಲಿದ್ದ ಅಂದಿನ ಗಾಡಿ ನನ್ನದು!) ಅವಳು... "ಒಂದು ವಿಧದ ಬುದ್ಧಿವಂತೆಯೂ ಆಗಿದ್ದಳು" - ಎಂದು ನನಗಾಗ ಅನ್ನಿಸಿತ್ತು. ಆದ್ದರಿಂದಲೇ ಸೋಲುವ ಆಟದಿಂದ ನಯವಾಗಿ ಹಿಂದೆ ಸರಿದಿದ್ದಳು. ಹೀಗೆ ಮನುಷ್ಯ ವರ್ತನೆಗಳೆಲ್ಲವೂ ಸಾಂದರ್ಭಿಕವಾಗಿ ಅನುಭವಕ್ಕೆ ಬರುವುದೂ ಕೂಡ ಬದುಕಿನ ಸಂಪಾದನೆಗಳೇ ಅಲ್ಲವೇ?

    ಅಂದು ನಾನು ಬಹುಮಾನ ವಿಜೇತೆಯಾಗಿ ಬಂದಾಗ - ಅಪ್ಪಯ್ಯನಿಗೆ (ಬಹುಶಃ) ನನಗಿಂತಲೂ ಹೆಚ್ಚು ಆನಂದವಾಗಿತ್ತು. ಅನಂತರ ಅಪ್ಪಯ್ಯನು... ನನ್ನ ಕನ್ನಡದ ಓದನ್ನು - ಗುಣಮಟ್ಟದ ಓದನ್ನಾಗಿ ಪರಿವರ್ತಿಸಲು ವಿಶೇಷ ಗಮನ ಹರಿಸಿದರು. ಜತೆಗೆ... ”ಗೆಲ್ಲುವುದಕ್ಕಾಗಿಯೇ ಬಾಲ್ಯದಲ್ಲಿ ಸ್ಪರ್ಧಿಸುವುದಲ್ಲ; ಪ್ರತಿಯೊಂದು ಸ್ಪರ್ಧೆಯಿಂದಲೂ ವಿಷಯ ಸಂಗ್ರಹದ ವ್ಯಾಪ್ತಿಯು ಹೆಚ್ಚಬೇಕು; ಅದಕ್ಕೆ ಯಾವುದೇ ಸ್ಪರ್ಧೆಯೆನ್ನುವುದು ಒಂದು ಕಾರಣವಾಗಬೇಕು; ಸ್ಪರ್ಧೆಯನ್ನು ವಿಷಯಾಂತರಗೊಳಿಸಿ ಅದನ್ನು ವೈಯ್ಯಕ್ತಿಕ ನೆಲೆಗೆ ತರಬಾರದು... ಒಮ್ಮೊಮ್ಮೆ ಸೋತರೂ ಕುಸಿಯಬಾರದು; ಸ್ಪರ್ಧೆಯು ಪ್ರಬುದ್ಧತೆಯನ್ನು ತರಬೇಕು...” ಎಂದಿದ್ದರು.

  ಅಪ್ಪಯ್ಯನು ನಡೆಸುತ್ತಿದ್ದ ಇಂತಹ ತಾಲೀಮಿನಿಂದಾಗಿ ವೈಯ್ಯಕ್ತಿಕವಾಗಿ ನನಗೆ ದೊರೆತ ಲಾಭವು ಅಪಾರ. ಉದಾಹರಣೆಗೆ “ದರಹಸಿತ” ಎಂಬಂತಹ ಶಬ್ದಗಳು ನನ್ನನ್ನು ಸಂಧಿಸಿದಾಗ, ಆರಂಭದಲ್ಲಿ, ಅಪ್ಪಯ್ಯನಲ್ಲೇ ಕೇಳಿ ಶಬ್ದಾರ್ಥವನ್ನು ಸುಲಭವಾಗಿ  ತಿಳಿದುಕೊಳ್ಳುತ್ತಿದ್ದೆ. ಕೆಲವೊಮ್ಮೆ ಅಪ್ಪಯ್ಯನು ನಮ್ಮೆದುರಿಗೆ ಶಬ್ದಕೋಶವನ್ನಿಟ್ಟು ಹುಡುಕುವಂತೆ ಹೇಳುತ್ತಿದ್ದರು. “ನಿಘಂಟನ್ನು ನೋಡಿ ಅರ್ಥವನ್ನು ತಿಳಿದುಕೊಳ್ಳುವ ಶಕ್ತಿ ಬೆಳೆಸಿಕೋ.. ನೀನೇ ಹುಡುಕಾಡು..” ಎನ್ನುತ್ತ ಪುಸ್ತಕಗಳನ್ನು ಒದಗಿಸುತ್ತಿದ್ದರು. ಆಗ ನಾನು ನಿಘಂಟನ್ನು ಆಶ್ರಯಿಸುತ್ತಿದ್ದೆ. 

  ನಿಘಂಟನ್ನು ಅವಲಂಬಿಸಿದಾಗ ಕೆಲವು ಉಚಿತ ಲಾಭಗಳೂ ಆಗುತ್ತಿದ್ದವು. ವಿಶೇಷಣವಾಗಿ ಉಪಯೋಗವಾದಾಗ...ದರ = ಸ್ವಲ್ಪ, ಕೊಂಚ, ಈಷತ್ ಎಂದು ಅರ್ಥ, ಬೇರೆ ಸಂದರ್ಭಗಳಲ್ಲಿ ಬೇರೆ ಅರ್ಥಗಳೂ ಇವೆ; ಹಸಿತ = ವಿಶೇಷಣವಾಗಿ ಬಂದಾಗ... ಅರಳಿದ, ನಕ್ಕ, ಬಿರಿದ...ಇತ್ಯಾದಿ. ದರ ಹಸಿತ = ನಸುನಕ್ಕ, ಅರೆಬಿರಿದ... ಎಂದು ಅರ್ಥವಾಗುತ್ತದೆ – ಎಂದು ಅರಿತುಕೊಳ್ಳತೊಡಗಿದೆ. ದರಲೋಹಿತ = ಸ್ವಲ್ಪ ಕೆಂಪಾದ – (ಮುಂಜಾನೆಯ) ಅರುಣ ಕಿರಣ ಎಂದು ಅರ್ಥವಾಯಿತು. ರಾಗ = ಸಾಂದರ್ಭಿಕವಾಗಿ ಬಣ್ಣ ಎಂದುಕೊಳ್ಳಬೇಕು; ಎಲ್ಲ ಸಂದರ್ಭಗಳಲ್ಲೂ ಅದು ಸ್ವರಾಲಾಪವಲ್ಲ ಎಂಬುದೂ ತಿಳಿಯಿತು. ಹರಿತ = ಸಂಸ್ಕೃತದಲ್ಲಿ ಹಸಿರು ಎಂದರ್ಥ – ಎಂದು.....ಹೀಗೇ...ನನಗೆ ಎದುರಾದ ಶಬ್ದಗಳಿಗೆ ಮತ್ತೆ ಮತ್ತೆ ಸುತ್ತು ಬರತೊಡಗಿದೆ. ಈ ಹುಡುಕಾಟದಲ್ಲಿ ಮುಳುಗಿದಾಗ, ದರಮೀಲಿತ, ದರಹಾಸ, ದರದರ ದುರುದುರು... ಇತ್ಯಾದಿಗಳೆಲ್ಲವೂ ನನ್ನ ತಂಟೆ ಕಣ್ಣಿಗೆ ಬಿದ್ದು ತಲೆ ಸೇರಿದವು. ನಿಘಂಟು ನನಗೆ ಪ್ರಿಯವೆನಿಸತೊಡಗಿತು. ಬರಬರುತ್ತ ಮನುಷ್ಯರಿಗಿಂತ ಅಕ್ಷರ, ಶಬ್ದಗಳೇ ಹೆಚ್ಚು ಪ್ರಿಯವೆನ್ನಿಸತೊಡಗಿದವು! (ಅದಕ್ಕೇ ನನ್ನ ಬದುಕಿನ 60 ವರ್ಷಗಳನ್ನು ನನಗೆ ಪ್ರಿಯವಾದ ಶಬ್ದ ವಾರಿಧಿಯಲ್ಲಿಯೇ ತೇಲಿಸಿದೆ! ಅದು ವರವಲ್ಲದೆ ಇನ್ನೇನು?)

    ತಮ್ಮ ಸ್ವಂತ ಮಕ್ಕಳನ್ನು ತರಬೇತುಗೊಳಿಸುವ ಹೊತ್ತಿನಲ್ಲಿ - "ಪಂಡಿತ ಪರಂಪರೆ" ಯ ಅಧ್ಯಾಪಕರಾಗಿದ್ದ ನನ್ನ ಅಪ್ಪಯ್ಯನು ನಿವೃತ್ತರಾಗುವ ಹಂತದಲ್ಲಿದ್ದರು. ಆರೋಗ್ಯದೊಂದಿಗೆ ಉತ್ಸಾಹವೂ ಕುಗ್ಗಿತ್ತು. ಆದರೆ ಅವರ ಅಧ್ಯಾಪಕ ವೃತ್ತಿಯ ಸೇವಾವಧಿಯಲ್ಲಿ ಅನೇಕ ವಿದ್ಯಾರ್ಥಿಗಳನ್ನು ಕಡೆದು ಶಿಲ್ಪವಾಗಿಸಲು ಅವರು ಪ್ರಯತ್ನಿಸಿದ್ದರು. ನನ್ನ ಅಮ್ಮನೂ ಅವರ ಶಿಷ್ಯಳೇ. ಅವಳನ್ನು ತರಬೇತುಗೊಳಿಸುವ ಹಂತದಲ್ಲಿ 32 ರ ಹರೆಯದಲ್ಲಿದ್ದ ಅಪ್ಪಯ್ಯನು, ಆಂಜನೇಯನ ಅನುಯಾಯಿಯಾಗಿ ಗೃಹಸ್ಥಾಶ್ರಮಕ್ಕೆ ಬೆನ್ನು ಹಾಕಿ ದೂರವುಳಿದಿದ್ದರು. ಆದರೆ 14 ರ ಹರೆಯದ ಅಮ್ಮನ ಸಂಗೀತ ಪ್ರತಿಭೆಗೆ ಒಲಿದು ತಮ್ಮ ವ್ರತಭಂಗಕ್ಕೆ ಮನಸ್ಸು ಮಾಡಿದ ಅಪ್ಪಯ್ಯ ಅವರು! ಅವರು ಅಕ್ಷರವನ್ನು ಪ್ರೀತಿಸಿದ್ದು ಮಾತ್ರವಲ್ಲ; ಅಕ್ಷರ ಹೊಮ್ಮಿಸುವ ಜೀವಂತ ಯಂತ್ರಗಳೆಲ್ಲವನ್ನೂ ಪ್ರೀತಿಸುತ್ತಿದ್ದರು. ಅವರ ಅನೇಕ ವಿದ್ಯಾರ್ಥಿಗಳ ಪ್ರಬಂಧಗಳನ್ನು ತಿದ್ದುವಾಗ, ಉತ್ಕೃಷ್ಟ ಅನ್ನಿಸಿದರೆ, ಮನೆಮಂದಿಗೆಲ್ಲ ಓದುವಂತೆ ಹೇಳುತ್ತಿದ್ದರು. 

  ತಮ್ಮ ವಿದ್ಯಾರ್ಥಿಗಳನ್ನು ಅಂತರ್ಶಾಲಾ ಸ್ಪರ್ಧೆಗಳಿಗೆ ಅಪ್ಪಯ್ಯನು ಸಿದ್ಧಗೊಳಿಸಿದ ಅನೇಕ ಉದಾಹರಣೆಗಳಿವೆ. ಅವೆಲ್ಲವೂ ಕೋಟೇಶ್ವರದಲ್ಲಿ ನಡೆದ ಅಪ್ಪಯ್ಯನ ಪಠ್ಯೇತರ ವ್ಯಾಯಾಮಗಳು. ಅವರ ಮಕ್ಕಳಾದ ನಾವು, ಆಗ ಕಿರಿಯ ವಯಸ್ಸಿನ ಬೇಜವಾಬ್ದಾರಿಯವರಾಗಿದ್ದು ಹುಡಿತಂಟೆಯಲ್ಲದೆ ಇನ್ನೊಂದರಲ್ಲಿ ಆಸಕ್ತಿಯಿಲ್ಲದವರಾದುದರಿಂದ ಅಂದಿನ ಆಗುಹೋಗುಗಳೆಲ್ಲವೂ ನಮ್ಮ ತಲೆಯಲ್ಲಿ ಗಟ್ಟಿಯಾಗಿ ದಾಖಲಾಗಿಲ್ಲ. ಆದರೆ ಅಮ್ಮನ ಬಾಯಿಂದ ಕೇಳಿದಂತೆ, ಅವರ ಒಬ್ಬ ವಿದ್ಯಾರ್ಥಿಯು ತನ್ನ ಸುಂದರ ಅಕ್ಷರ, ಪ್ರಬುದ್ಧ ಬರಹದಿಂದ ಅಪ್ಪಯ್ಯನನ್ನು ಮರುಳುಗೊಳಿಸಿದ್ದನಂತೆ. ಆದರೆ ಪರೀಕ್ಷೆಯಲ್ಲಿ ಎಲ್ಲ ಪ್ರಶ್ನೆಗಳಿಗೂ ಉತ್ತರಿಸದೆ, ಕೇವಲ ಪಾಸಾಗುವಷ್ಟು ಮಾತ್ರ ಬರೆದು ಎದ್ದುಹೋಗುವ ಅಭ್ಯಾಸದವನಂತೆ. ಅವನನ್ನು ಮನೆಗೆ ಕರೆದುಕೊಂಡು ಬಂದು ಉಪಚರಿಸಿ, “ಪರೀಕ್ಷೆಯನ್ನು ಹಗುರವಾಗಿ ಭಾವಿಸಬಾರದು” – ಎಂದು ಅಪ್ಪಯ್ಯನು ಕಿವಿ ಮಾತನ್ನೂ ಹೇಳಿದ್ದರಂತೆ. ಅವನ ಉತ್ತರ ಪತ್ರಿಕೆಯನ್ನು ಅಮ್ಮನಿಗೆ ತೋರಿಸಿ, “ಎಷ್ಟು ಪ್ರೌಢ ಪ್ರಬಂಧವನ್ನು ಬರೆದಿದ್ದಾನೆ ನೋಡು... ಆದರೆ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿಲ್ಲ. ಇವನಿಗೆ ತುಂಬ ಅಂಕಗಳನ್ನು ಕೊಡಬೇಕು ಅನ್ನಿಸಿದರೂ ಕೊಡುವುದಾದರೂ ಹೇಗೆ?” ಎಂದು ಅಲವತ್ತುಕೊಳ್ಳುತ್ತಿದ್ದರಂತೆ. ಅನಂತರ ಆ ಹುಡುಗನು ತನ್ನ ಓದನ್ನು ಮುಂದುವರಿಸದೆ ಭಾರತೀಯ ಸೇನೆಯನ್ನು ಸೇರಿಕೊಂಡನೆಂದೂ ಅಮ್ಮನಿಗೆ ಅಪ್ಪಯ್ಯ ಹೇಳಿದ್ದರಂತೆ.

                                   

    ತಮ್ಮ ಶಾಲಾ ದಿನಚರಿಗೂ ವೇಳಾ ಪಟ್ಟಿ, ವಿಷಯ ಪಟ್ಟಿಯನ್ನು ತಾವೇ ನಿಗದಿ ಪಡಿಸಿಕೊಂಡು ಶಿಸ್ತಿನಿಂದ ಪಾಠಕ್ರಮವನ್ನು ರೂಢಿಸಿ ಆಚರಿಸುತ್ತಿದ್ದ - ನಮ್ಮ ಅಪ್ಪಯ್ಯ ಅವರು. ಪಾಠವನ್ನು ಗ್ರಹಿಸುವಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಅವರೆಂದೂ ಶಿಕ್ಷಿಸಿದ್ದನ್ನು ನಾವು ಕಂಡಿಲ್ಲ; ಕೇಳಿಲ್ಲ. ಪಾಠದಲ್ಲಿ ಹಿಂದೆ ಬೀಳುವ - ಅಂತಹ ಮಕ್ಕಳನ್ನು ಪ್ರತ್ಯೇಕವಾಗಿ ಕರೆದು ಮತ್ತೊಮ್ಮೆ, ಮಗದೊಮ್ಮೆ ವಿವರಿಸುತ್ತಿದ್ದರು. ಆದರೆ ಶಾಲೆಯ ಶಿಸ್ತನ್ನು ಮತ್ತು ವಿದ್ಯಾರ್ಥಿಯ ಇತಿಮಿತಿಯನ್ನು ಮೀರುವ ವಿದ್ಯಾರ್ಥಿಗಳಿಗೆ ಮಾತ್ರ ಕಪಾಳಮೋಕ್ಷವಾಗುತ್ತಿತ್ತು. 

  ಶಾಲೆಯ ಅವಧಿಯು ಮುಗಿದ ನಂತರ ಪ್ರತೀ ದಿನವೂ ಅಪ್ಪಯ್ಯನು ದಪ್ಪದಪ್ಪದ ಪುಸ್ತಕಗಳನ್ನು ಓದುತ್ತಿದ್ದರು. ಓದಿ ಓದಿ ಕಣ್ಣಿಗೆ ಬಳಲಿಕೆಯಾದರೆ ಅದೇ ಸಪೂರದ ಮಂಚದ ಮೇಲೆ ಮಗ್ಗುಲಾಗಿ ಒರಗಿಕೊಂಡು ಕುಟುಕು ನಿದ್ದೆ ಮಾಡಿಬಿಡುತ್ತಿದ್ದರು. ಹತ್ತು ಹದಿನೈದು ನಿಮಿಷದಲ್ಲೇ - ಏನೋ ಅಪರಾಧ ಮಾಡಿದಂತೆ ದಡಬಡಿಸಿ ಏಳುತ್ತಿದ್ದುದೂ ನನಗೆ ನೆನಪಿದೆ. ರವಿವಾರದ ಬಹುಪಾಲು ಸಮಯವನ್ನು ಅವರು ಅಧ್ಯಯನದಲ್ಲಿಯೇ ಕಳೆಯುತ್ತಿದ್ದರು. ಯಾವುದೋ ಅಂಗಡಿಯ ಜಗಲಿಯಲ್ಲಿ ಕೂತು ಗೆಳೆಯರೊಂದಿಗೆ ಪಟ್ಟಾಂಗ ಹೊಡೆಯುತ್ತಿದ್ದ ಅಪ್ಪಯ್ಯನನ್ನು - ನಾವು ಕಂಡಿಲ್ಲ. ಯಾರ್ಯಾರದೋ ಮನೆಗೆ ಹೋಗಿ - "ಮತ್ತೆ ಹೇಗಿದ್ದೀರಿ? ಮಕ್ಕಳು, ಹಸು ಕರು... ಇತ್ಯಾದಿ ಚರ್ಚೆಗಳನ್ನು ನಡೆಸಿದ್ದಂತೂ ಇಲ್ಲವೇ ಇಲ್ಲ. 

  ಅಪ್ಪಯ್ಯನು ಗಂಭೀರವಾದ ಬರವಣಿಗೆಯಲ್ಲಿ ತೊಡಗಿಕೊಂಡಾಗ ನಾವು ಮಕ್ಕಳು ಮನೆಯಲ್ಲಿ ತರಲೆ ಎಬ್ಬಿಸಿದರೆ ಎರಡೇಟು ಬಿಗಿಯುತ್ತಿದ್ದುದೂ ಇತ್ತು. ಎಷ್ಟೇ ಕಾಡುಹರಟೆಗಳಿಂದ ದೂರವಾಗಿದ್ದರೂ ತಮ್ಮ ಮನೆಗೆ ಬಂದವರಲ್ಲಿ ಮಾತ್ರ ಅವರು ಸರಳವಾಗಿ ಬೆರೆಯುತ್ತಿದ್ದರು. ತಮಗೆ ಹೊಂದದ ವ್ಯಕ್ತಿ ಅನ್ನಿಸಿದರೆ, ಹೆಚ್ಚು ಮಾತಾಡುವ ಹೊಣೆಯನ್ನು ನಯವಾಗಿ ಅಮ್ಮನಿಗೆ ಒಪ್ಪಿಸಿ ಅಲ್ಲಿಂದ ಮಾಯವಾಗುತ್ತಿದ್ದರು. ಒಮ್ಮೊಮ್ಮೆ... ರಸವತ್ತಾಗಿ ಮಾತನಾಡುತ್ತ ತಮ್ಮ ವಿಚಾರಗಳತ್ತ ಅತಿಥಿಗಳನ್ನು ಸೆಳೆದು, ಅವರ ಹೋಕುಬಾರದ ಮಾತುಗಳ ದಾರಿತಪ್ಪಿಸುತ್ತಿದ್ದುದೂ ಇತ್ತು. ಯಾವುದೋ ಕಾರ್ಯಕ್ಕಾಗಿ ಮನೆಗೆ ಆಗಮಿಸಿದ್ದ ಅತಿಥಿಗಳು ತಾವು ಬಂದ ಕಾರ್ಯವನ್ನೇ ಮರೆತು ಅಪ್ಪಯ್ಯನ ಪ್ರವಚನವನ್ನು ಕೇಳಿಸಿಕೊಂಡು ಕೆಲವೊಮ್ಮೆ ಹಿಂದಿರುಗಿದ್ದೂ ಇದೆ; ಅದಕ್ಕಾಗಿ ಮತ್ತೊಮ್ಮೆ ಬರುವಂತಾದುದೂ ಇದೆ. “ಮೊನ್ನೆ ಬಂದಾಗ ನಾನು ಬಂದ ವಿಷಯವೊಂದನ್ನು ಬಿಟ್ಟು ಬೇರೆ ಎಲ್ಲವನ್ನೂ ಮಾತಾಡಿದ ಹಾಗಾಯ್ತು. ಮೊನ್ನೆ ಬಂದದ್ದು ಏಕೆಂದು ಈಗ ಹೇಳಿ ಹೋಗುತ್ತೇನೆ...” ಎನ್ನುತ್ತಿದ್ದ ಊರವರಿದ್ದರು. ಅತಿಥಿಗಳು ಹೋದ ನಂತರ ಅಮ್ಮನು ಅಪ್ಪಯ್ಯನನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಳು. “ಮನೆಗೆ ಬಂದವರು ಏನನ್ನೂ ಹೇಳಲು ಬಿಡದೆ ನಿಮ್ಮ ತತ್ವ ಸಿದ್ಧಾಂತವನ್ನೆಲ್ಲ ಅವರಿಗೆ ಯಾಕೆ ಹೇಳುತ್ತಿರಬೇಕು? ಅವರಿಗೆ ನಿಮ್ಮ ವಿಚಾರಗಳೆಲ್ಲ ಬೇಕಾ? ಅವರು ಬಂದ ಕೆಲಸವನ್ನು ಮಾಡಿಕೊಂಡು ಹೋಗಲು ಬಿಡಬೇಕಪ್ಪ...” ಎಂದು ಗೊಣಗುತ್ತಿದ್ದಳು. ಆಗ ಅಪ್ಪಯ್ಯ ನೀಡುತ್ತಿದ್ದ ಉತ್ತರ – “ನೋಡು, ಅವರಿಗೇ ಮಾತನಾಡಲು ಬಿಟ್ಟರೆ ನನ್ನ ದನ ಕರು ಹಾಕಿದೆ; ಮಗಳ ಹೆರಿಗೆ ಆಗಿದೆ; ಊಟಕ್ಕೆ ಸೌತೇ ಕಾಯಿಯ ಹುಳಿ ಮಾಡಿದ್ದೆ... ಎಂದೆಲ್ಲ ಶುರುಮಾಡುತ್ತಾರೆ. ಆಗ ನನ್ನ ಸಮಯ ವ್ಯರ್ಥವಾಗುತ್ತದೆ. ಅದಕ್ಕೇ ಒಂದಷ್ಟು ಉತ್ತಮ ವಿಷಯಗಳನ್ನು ಅವರಿಗೆ ಹೇಳಿದೆ. ಅವರೂ ಕೂತುಕೊಂಡು ಕೇಳಿದರಲ್ಲಾ? ಮಾತ್ರವಲ್ಲ, ಬೇಗ ಹೊರಟೂ ಹೋದರು... ಊರಿನ ಕೆಲವರು – ಹಟ್ಟಿ ಹಣೆ ಹೋರಿ ತಲೆ - ಎನ್ನುವಷ್ಟೇ ತಿಳಿದಿರಬೇಕೆಂದಿಲ್ಲ. ಎಲ್ಲರಿಗೂ ವಿಷಯಜ್ಞಾನ ಇರಲಿ ಬಿಡು. ಅಷ್ಟಾಗಿಯೂ ಅವರಿಗೆ ಆಸಕ್ತಿ ಹುಟ್ಟದಿದ್ದರೆ ಅದು ಅವರ ಕರ್ಮ... ಈಗ ನನಗೆ ನೀನು ಪಿರಿಪಿರಿ ಮಾಡಬೇಡ. ನಾನಿರುವುದು ಹೀಗೇ... ಏನು? ಸತ್ಯನಾರಾಯಣ ಪೂಜೆಗೆ ಆಹ್ವಾನ ಕೊಟ್ಟಿದ್ದಾರಲ್ವಾ? ನೀನು ಹೋಗಿ ಬಾ. ಅರಿವು ಎಂಬುದೇ ಪೂಜೆ. ಅದಿಲ್ಲದೆ ಎಂತಹ ಪೂಜೆ ಮಾಡಿದರೂ ಫಲವಿಲ್ಲ...” ಎನ್ನುತ್ತಿದ್ದರು. ಆದರೂ ಸಡಿಲವಾಗದ ಅಮ್ಮನ ಮುಖವನ್ನು ನೋಡುತ್ತ “ಹೋಗು, ನಿನ್ನ ಕೆಲಸ ಮಾಡು... ಊರಿನವರ ಚಿಂತೆಯಲ್ಲಿ ನೀನ್ಯಾಕೆ ಸೊರಗುವುದು?” ಎನ್ನುತ್ತ ಮುಗುಳ್ನಗುತ್ತಿದ್ದರು. ತಮಗೆ ಹಿತವೆನಿಸಿದ ಸಾಹಿತ್ಯಿಕ, ಧಾರ್ಮಿಕ ವಿಚಾರಗಳ ಮಾತು - ಚಿಂತನೆಯಲ್ಲಿ ಆಸಕ್ತಿಯಿಂದ ಮುಳುಗಿಹೋಗುತ್ತಿದ್ದ ಅಪ್ಪಯ್ಯನು ತೌಡು ಕುಟ್ಟುವ ನಿತ್ಯ ದುಃಖದ ಹರಟೆಯಿಂದ ಪ್ರಜ್ಞಾಪೂರ್ವಕವಾಗಿ ದೂರವಿರುತ್ತಿದ್ದರು. ತನ್ನ ಶಾಲೆಯ – ಮನೆಯ ಕೆಲಸಗಳು ಮತ್ತು ಸ್ವಂತ ಅಧ್ಯಯನದಲ್ಲಿಯೇ ಬದುಕನ್ನು ಸುಖಿಸಿದ ವ್ಯಕ್ತಿತ್ವವದು.




  ಶಾಲಾ ವಾರ್ಷಿಕೋತ್ಸವಗಳಿಗಾಗಿ ಅಪ್ಪಯ್ಯನು ಪ್ರತೀ ವರ್ಷವೂ ಪೌರಾಣಿಕ, ಚಾರಿತ್ರಿಕ, ಸಾಮಾಜಿಕ ನಾಟಕಗಳನ್ನು ಬರೆಯುತ್ತಿದ್ದುದನ್ನು ನಾನು ಕಂಡಿದ್ದೇನೆ. ಅದು ಹಿಂದಿನಿಂದಲೂ ನಡೆದುಕೊಂಡು ಬಂದ ಪದ್ಧತಿ. ತಾನು ಕನ್ನಡ ಅಧ್ಯಾಪಕನಾಗಿದ್ದ ಶಾಲೆಯ ಎಲ್ಲ ಸಾಹಿತ್ಯಿಕ ಅಗತ್ಯಗಳನ್ನೂ ಪೂರೈಸುವುದು ತನ್ನ ಕರ್ತವ್ಯವೆಂಬಂತೆ ಅವರು ಬದುಕಿದ್ದರು. ನಾನೂ ಕೂಡ ಅಪ್ಪಯ್ಯನು ಬರೆದ ಕೆಲವು ನಾಟಕಗಳಲ್ಲಿ ಅಭಿನಯಿಸಿದ್ದಿದೆ. (ಒಂದೆರಡು ಹಸ್ತಪ್ರತಿಗಳು ಈಗಲೂ ನನ್ನಲ್ಲಿವೆ. ಶೌರ್ಯ ಸಂಜೀವನ (ರಜಪೂತ ರಾಣಾ ಶಕ್ತಸಿಂಹ – ಮೊಗಲ್ ದೊರೆ ಅಕ್ಬರ್ ನ ನಡುವಿನ ಹೋರಾಟದ ಒಂದು ಕತೆ), ರಜಪೂತ ರಾಣಿ ಅಥವ ಭಕ್ತೆ ಮೀರೆ, ಮೋಹನಚಂದನ ಬಾಲ್ಯ... ಇತ್ಯಾದಿ.) ಅಂತೂ ವಿದ್ಯಾರ್ಥಿಗಳ ಪ್ರತಿಭೆಯ ಅನಾವರಣಕ್ಕಾಗಿ ತಮ್ಮ ಸೇವಾವಧಿಯ ಉದ್ದಕ್ಕೂ ಅಪ್ಪಯ್ಯ ತಮ್ಮಿಂದಾದಷ್ಟು ಶ್ರಮಿಸಿದ್ದರು. ಗುರಿತಪ್ಪದ ಬದುಕದು.


 

  ಅಪ್ಪಯ್ಯನು ಬರೆಯುತ್ತಿದ್ದ ನಾಟಕಗಳಲ್ಲಿ ಕೆಲವು ಪದ್ಯಗಳನ್ನೂ ಸೇರಿಸುತ್ತಿದ್ದರು. "ಶೌರ್ಯ ಸಂಜೀವನ" ಎಂಬ ನಾಟಕದಲ್ಲಿದ್ದ ಒಂದು ಪದ್ಯವು ನನಗಿನ್ನೂ ನೆನಪಿದೆ...ಸೂತ್ರಧಾರಳು ಹಾಡುವ ಹಾಡದು.

                        ಜೀವನದೊಳ್ ಪ್ರೇಮಮಿಲನ ಸದಾ ಮಹದಾನಂದಂ
                        ವಿಯೋಗ ದುಃಖ ಸ್ರೋತಂ ಮರ್ಮಾಹತ ನರಕ ಸದೃಶಂ
                        ಮೆಹರೆಯ ಜೀವನದಿ ಕಾಳರಾತ್ರಿಯ ದೃಶ್ಯಂ...//

  ಇದನ್ನು ಸಿಂಧು ಭೈರವಿ ರಾಗದಲ್ಲಿ ನಾನು ಹಾಡಿದ್ದೆ.

  ತಾವಿದ್ದ ಶಾಲೆಯಲ್ಲಿ ಯಾವುದೇ ವಿಶೇಷ ಸಂದರ್ಭಗಳ ಆಚರಣೆ ನಡೆದರೂ ಅಂತಹ ಸಂದರ್ಭಗಳ ಔಚಿತ್ಯ ಮತ್ತು ಮಹತ್ವವನ್ನು ತಮ್ಮ ವಿದ್ಯಾರ್ಥಿಗಳಿಗೆ ಅವರು ತಿಳಿಸುತ್ತಿದ್ದರು. ಉದಾಹರಣೆಗೆ : ದೀಪಾವಳಿ, ಯುಗಾದಿ, ಸ್ವಾತಂತ್ರ್ಯ ದಿನಾಚರಣೆ, ರಾಜ್ಯೋತ್ಸವ, ಕ್ರಿಸ್ ಮಸ್... ಇತ್ಯಾದಿ. ತರಗತಿಯ ಪಾಠದ ಅವಧಿಯಲ್ಲೇ ಸಂಕ್ಷೇಪವಾಗಿ ಹೇಳಿ ಭಾರತೀಯ ಸಂಸ್ಕೃತಿಯ ಪರಿಚಯವೂ ಇರುವಂತೆ ತಮ್ಮ ವಿದ್ಯಾರ್ಥಿಗಳನ್ನು ಪೋಷಿಸುತ್ತಿದ್ದರು. ವಾರ್ಷಿಕ ಪಠ್ಯ ಭಾಗದ ಜೊತೆಗೆ ಇತರ ಜ್ಞಾನಶಾಖೆಗಳತ್ತಲೂ ಮಕ್ಕಳು ಆಕರ್ಷಿತರಾಗುವಂತೆ ಮಾಡುತ್ತಿದ್ದ ನನ್ನ ಅಪ್ಪಯ್ಯನಿಂದ ನನಗಂತೂ ಮಹದುಪಕಾರವಾಗಿದೆ. ಕನ್ನಡ ರಾಜ್ಯೋತ್ಸವದ ದಿನದಂದು ನಮ್ಮ ಮನೆಯಲ್ಲಿ - ಕಡ್ಡಾಯವಾಗಿ,  ಪಾಯಸದೂಟವಿರುತ್ತಿತ್ತು!


                         ಊರಿನ ರಾಜ್ಯೋತ್ಸವದ ಹಬ್ಬದಲ್ಲೂ ನಮ್ಮ ಸಕ್ರಿಯ ಪಾತ್ರವಿರುತ್ತಿತ್ತು.




(ಕುಂದಾಪುರದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭ.
ಅತಿಥಿಗಳು : ಸರ್ವಶ್ರೀ ಎಂ.ಎಂ.ಹೆಗ್ಡೆ, ವೀರರಾಜೇಂದ್ರ ಹೆಗ್ಡೆ ಬಸ್ರೂರು, ಬನ್ನಂಜೆ ಗೋವಿಂದಾಚಾರ್ಯ.
ಕನ್ನಡ ಗೀತ ಗಾಯನ ; ಕುಮಾರಿ ಕಾತ್ಯಾಯನಿ, ನಾರಾಯಣಿ, ಪ್ರೇಮಲತ.
ಪಕ್ಕದಲ್ಲಿ ನಿಂತವರು ಆಯೋಜಕರಾದ ಶ್ರೀ A.S.N. ಹೆಬ್ಬಾರ್.)

    ಯಾವ ರಾಜಕೀಯಕ್ಕೂ ತಲೆ ಹಾಕದೆ - ಕನ್ನಡ ಕನ್ನಡ ಎನ್ನುತ್ತ ಕನ್ನಡವನ್ನು ಹೊತ್ತು ಮೆರೆಸಿದ, ಇನ್ನೆಷ್ಟೋ ಶಾಲಾ ವಿದ್ಯಾರ್ಥಿಗಳಿಗೂ ಕನ್ನಡದ ರುಚಿ ಹತ್ತಿಸಿ, ಬದುಕಿನುದ್ದಕ್ಕೂ ಕನ್ನಡವನ್ನು ಹೊತ್ತು ಕುಣಿದಾಡಿದವರು - ನನ್ನ ಅಪ್ಪಯ್ಯ. ಕನ್ನಡ ಭಾಷೆ, ಮಾತು, ನೆಲ-ಜಲದ ಸದಭಿಮಾನಿಗಳಾಗಿದ್ದ ಅಂದಿನ ಅನೇಕ ಕನ್ನಡೋಪಾಸಕರು ಮತ್ತು ಈಗಲೂ ಕನ್ನಡವನ್ನೇ ಆಶ್ರಯಿಸಿರುವ ಇಂತಹ ಎಲೆಮರೆಯ ಕೆಲವು ಕನ್ನಡ ಭಕ್ತರಿಂದಲೇ - ಕನ್ನಡವು ಉತ್ಕೃಷ್ಟ ಸುಭಗ ಭಾಷೆಯಾಗಿ ಇನ್ನೂ ಉಳಿದಿದೆ ಎಂದರೆ ಅದು ಅತಿಶಯೋಕ್ತಿಯಾಗದು. 
                                                    ***************

  “ಮೇಡಂ, ನಿವೃತ್ತರಾದ ಮೇಲೆ ಹೇಗೆ ಸಮಯ ಕಳೆಯುತ್ತೀರಿ?” ಎಂದು ಈಗ ನನ್ನನ್ನು ಎಷ್ಟೋ ಜನರು ಕೇಳುವುದಿದೆ. ಅವರ ಮಾತಿನಲ್ಲಿ - ಅದ್ಭುತವಾದ ಅಂತಹ (!) ಆಕಾಶವಾಣಿಯಿಂದ ಹೊರ ಬಂದರೆ ನೀರಿಂದ ಎತ್ತಿದ ಮೀನಿನಂತೆ ಚಡಪಡಿಸುವುದು ಸಹಜ – ಎಂಬ ಧ್ವನಿಯಿರುವುದನ್ನೂ ನಾನು ಗಮನಿಸಿದ್ದೇನೆ. ಇವರನ್ನೆಲ್ಲ - “ನಿವೃತ್ತಿಯು ನೌಕರಿಯ ಒಂದು ಭಾಗವೆಂದು ಯೋಚಿಸಲಾಗದ ಮುಗ್ಧರು” - ಎಂದು ತಿಳಿದುಕೊಳ್ಳುವ ಮುಗ್ಧತೆಯನ್ನು ನಾನು ಉಳಿಸಿಕೊಂಡಿದ್ದೇನೆ. ಅಂತಹ ಕುತೂಹಲಿಗಳಿಗೆ – “ನಾನು ನನ್ನದಲ್ಲದುದನ್ನು ಕೊಡವಿ ಬಿಸಾಡುವುದರಲ್ಲಿ ವಿಶೇಷ ಪರಿಣತಿ ಪಡೆದವಳು” - ಎಂದು ಹೇಳಿಕೊಳ್ಳಲು ಹೋಗುವುದಿಲ್ಲ. ಇದು ಹೆಮ್ಮೆಯಲ್ಲ; ನನ್ನ ಸ್ವಭಾವ. ಏಕೆಂದರೆ... ಎಂದಿಗೂ ವರ್ತಮಾನವು “ಭೂತ”ದ ಮೇಲೆ ಸವಾರಿ ಮಾಡಬೇಕೇ ಹೊರತು ಯಾವುದೇ “ಭೂತ”ವು ವರ್ತಮಾನದ ಹೆಗಲೇರಬಾರದು – ಎಂಬುದು ನನ್ನ ಮತ. ಆದ್ದರಿಂದ, ನನ್ನ ಕುರಿತು ಕುತೂಹಲದಿಂದ ಪ್ರಶ್ನೆ ಕೇಳಿದವರಿಗೆ ಹೇಗೆ ಅಂದುಕೊಂಡರೆ ತಮ್ಮಷ್ಟಕ್ಕೇ ಸುಖ ಸಿಗುತ್ತದೋ ಹಾಗೆ ಅಂದುಕೊಳ್ಳಲು ನಾನು ಬಿಟ್ಟುಬಿಡುತ್ತೇನೆ. ಆದರೆ ಅಪ್ಪಯ್ಯನು ರುಚಿ ಹತ್ತಿಸಿದ ಓದು-ಬರಹವು ನನ್ನ ಬೆನ್ನು ಬಿಡದೆ ಈಗಲೂ ನನ್ನೊಂದಿಗಿದೆ. ನಿಜವಾಗಿ ಹೇಳುವುದಾದರೆ ನಾನೀಗ ಮೊದಲಿಗಿಂತ Busy ಆಗಿದ್ದೇನೆ. ಉದ್ಯೋಗದ ಒತ್ತಡಗಳಿಲ್ಲದೆ ನಿರುಮ್ಮಳವಾಗಿ “ನಾನು, ನನ್ನ ಸಂಸಾರ ಮತ್ತು ನನ್ನ ಅಕ್ಷರ” ಎಂಬಂತಿದ್ದೇನೆ. ನನಗೆ ಅಕ್ಷರದ ರುಚಿ ಹತ್ತಿಸಿದ ಅಪ್ಪಯ್ಯನು ನನ್ನ ಜೊತೆಯಲ್ಲೇ ಇದ್ದು ಒಮ್ಮೊಮ್ಮೆ ಹೀಗೆಲ್ಲ ಪ್ರಕಟವಾಗಿ ಬಿಡುವುದೂ ಇದೆ. ತನ್ನ ಮಕ್ಕಳನ್ನು, ವಿದ್ಯಾರ್ಥಿಗಳನ್ನು - ಇಂತಹ ಸ್ವಸ್ಥ ಬದುಕಿಗೆ ಸಜ್ಜುಗೊಳಿಸುವ ಯಾವುದೇ ಅಧ್ಯಾಪಕರು ಆಪ್ತರಾಗುತ್ತಾರೆ. ಚಿರಸ್ಮರಣೀಯರಾಗುತ್ತಾರೆ.
                

  2014 ರಲ್ಲಿ ಕಾಂತಾವರ ಕನ್ನಡ ಸಂಘದವರು “ನಾಡಿಗೆ ನಮಸ್ಕಾರ” ಎಂಬ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥ ಮಾಲೆಯ ೯೭ ನೆಯ ಕುಸುಮವಾಗಿ ನನ್ನ ಅಪ್ಪಯ್ಯನನ್ನು ಕುರಿತು ಬರೆಯುವಂತೆ ಕೇಳಿದಾಗ ನಾನು “ಕೋಶ ಸಾಮ್ರಾಜ್ಯದ ಈಶ – ಯಜ್ಞನಾರಾಯಣ ಉಡುಪ” ಎಂಬ ಬರಹವನ್ನು ಅವರಿಗೆ ಒದಗಿಸಿದ್ದೆ. ಆ ಪುಸ್ತಕವು ಪ್ರಕಟವಾಗಿದೆ. ಕೇವಲ 40 ಪುಟಗಳ ಮಿತಿಯಿದ್ದುದರಿಂದ ಆ ಬರಹದಲ್ಲಿ ಅಪ್ಪಯ್ಯನ ಬದುಕಿನ ಹಲವು ಆಯಾಮಗಳನ್ನು ಸ್ಪರ್ಶಿಸುವುದಕ್ಕೆ ನನಗೆ ಸಾಧ್ಯವಾಗಿರಲಿಲ್ಲ. ಆ ಕೊರತೆಯನ್ನು ನೀಗಿಸಲು ಮತ್ತು ಮಗಳಾಗಿ, ಇದು ನನ್ನ ಕರ್ತವ್ಯದ ಭಾಗವೆಂದುಕೊಂಡು, ನನ್ನ ನೆನಪಿನಾಳದಲ್ಲಿ... ಹೇಳದೆ ಇನ್ನೂ ಉಳಿದುಕೊಂಡಿರುವ ಕೆಲವು ಸಂಗತಿಗಳನ್ನು ಈಗ ಬರೆಯುತ್ತಿದ್ದೇನೆ. ಆಸಕ್ತರು ಓದಲಿ ಎಂಬ ಉದ್ದೇಶದಿಂದ ಬರಹವನ್ನು ಆಗಿಂದಾಗ ನಿಮ್ಮ ಮುಂದಿಡುತ್ತಿದ್ದೇನೆ. 
                                              *****     *****     *****

1 comment: