Sunday, October 11, 2015

ನಾನೊಲಿದಂತೆ (9) - ಹಿಂದ ನೋಡದ... !



ಪ್ರತಿಯೊಂದು ಬದುಕಿಗೂ ಒಂದು ಬಾಲ್ಯ ಇರುತ್ತದೆ. ಅದು ಬಹು ವೇಗದಲ್ಲಿ ಜಾರಿ ಹೋಗುವ ಅಥವ ಮುಂದೊಂದು ದಿನ ಹಾಗೆ ಅನ್ನಿಸುವ ಕಾಲ. ಯಾವುದೇ ಗಂಭೀರ ಹೊಣೆಗಾರಿಕೆಯಿಲ್ಲದೆ ಬದುಕನ್ನು ಸವಿಯಬಹುದಾದ ಸಮಯವದು. ತಮ್ಮ ಹೆತ್ತವರು ಬಿಗಿದ ಗೂಟಕ್ಕೆ ಸುತ್ತುಬರುತ್ತ ಅವರು ನಿಗದಿ ಪಡಿಸಿದಷ್ಟು ದೂರ ಸಂಚರಿಸುತ್ತ ಶುಭ್ರವಾಗಿ ಮೇಯುವ ಕಾಲವದು. ತಮ್ಮ ಹೆತ್ತವರ ಬಳಿಯಲ್ಲೇ ಇದ್ದು ಬದುಕಿನ ಕಷ್ಟ ಸುಖಗಳನ್ನು ನೋಡುತ್ತ ಕೇಳುತ್ತ ಒಮ್ಮೊಮ್ಮೆ ಭಾವನಾತ್ಮಕವಾಗಿ ಭಾಗಿಯಾಗುತ್ತ ಸರಿದು ಹೋಗುವ ಈ ಬಾಲ್ಯ ಕಾಲವು ಪ್ರತೀ ಬದುಕಿನ ಮಿತಿ - ಗತಿಯನ್ನು ಭದ್ರವಾಗಿ ರೂಪಿಸುವ ಕಾಲವೂ ಹೌದು. ಮಕ್ಕಳಿಗೆ ಸ್ಥೂಲವಾಗಿ ಸಮಾಜ ದರ್ಶನವಾಗುವ ಅವಧಿಯೂ ಬಾಲ್ಯ ಕಾಲವೇ. ಬಾಲ್ಯವು ಸುಂದರವಾಗಿದ್ದರೆ ಭವಿಷ್ಯವು ಸ್ಥಿರವಾಗಿರುವುದು. ಭವಿಷ್ಯದಲ್ಲಿ ಎದುರಾಗುವ ಬದುಕಿನ ಎಲ್ಲ ಎಡರು ತೊಡರುಗಳನ್ನು ಸ್ವೀಕರಿಸಿ ಜೀರ್ಣಿಸಿಕೊಳ್ಳುವ ಶಕ್ತಿವರ್ಧನೆ ಮತ್ತು ಭವರೋಗ ನಿರೋಧಕ ಶಕ್ತಿ ಸಂಚಯವಾಗುವುದೂ ನಮ್ಮ ಬಾಲ್ಯ ಕಾಲದಲ್ಲಿಯೇ. ಆದ್ದರಿಂದ ಮನುಷ್ಯನ ಆರಂಭದ 15 ವರ್ಷಗಳು ನಿಜವಾಗಿಯೂ ವ್ಯಕ್ತಿತ್ವ ನಿರ್ಮಾಣದ ಕಾಲ. ಸುಂದರ ಯೌವ್ವನ ಮತ್ತು ನಿಶ್ಚಿಂತ ವೃದ್ಧಾಪ್ಯಕ್ಕೆ ಸಮೃದ್ಧ ಬಾಲ್ಯವೇ ನೆಲೆಗಟ್ಟು.



ನನ್ನ ಬಾಲ್ಯದ ಬಹುಪಾಲು ಕೋಟೇಶ್ವರದಲ್ಲಿಯೇ ಸರಿದುಹೋಯಿತು. ಸುಮಾರು 1959 - 1967 ರ ಅವಧಿಯಲ್ಲಿ ನಮ್ಮ ಕುಟುಂಬವು ಕೋಟೇಶ್ವರದಲ್ಲಿ ನೆಲೆಸಿತ್ತು. ಕೋಟೇಶ್ವರದ ಬೋರ್ಡ್ ಹೈಸ್ಕೂಲಿನಲ್ಲಿ ಆಗ ನನ್ನ ತಂದೆ ಯಜ್ಞನಾರಾಯಣ ಉಡುಪರು ಕನ್ನಡ ಭಾಷೆಯ ಅಧ್ಯಾಪಕರಾಗಿದ್ದರು. ಸುಮಾರು 4 ರಿಂದ 13 ರ ವಯಸ್ಸಿನ ವರೆಗೆ ಕೋಟೇಶ್ವರದಲ್ಲಿಯೇ ನನ್ನ ಬಾಲ್ಯವು ನಡೆದಾಡಿತ್ತು. ಆಗ ಅಪ್ಪ ಅಮ್ಮನು ಕಟ್ಟಿದ ಗೂಟಕ್ಕೆ ಸುತ್ತುತ್ತಿದ್ದ ನಾನು ನೆಗೆದಾಡುವ ಕರುವಾಗಿದ್ದೆ. ಮನೆಯಲ್ಲಿ ಇಬ್ಬರು ಅಕ್ಕಂದಿರು, ಒಬ್ಬಳು ತಂಗಿಯ ಜೊತೆಗೆ ನಾನೂ ಬೆಳೆಯುತ್ತಿದ್ದೆ. ಆಗ ನಾನು ನಿತ್ಯವೂ ಕಾಣುತ್ತಿದ್ದ ದೃಶ್ಯವೆಂದರೆ - ಸೂರ್ಯನ ಚಲನೆಯೊಂದಿಗೇ ಹೆಜ್ಜೆ ಹಾಕುತ್ತ ನಿತ್ಯಕರ್ಮಗಳಲ್ಲಿಯೇ ಮುಳುಗಿರುತ್ತಿದ್ದ ನನ್ನ ಅಪ್ಪಯ್ಯ ಮತ್ತು ಅಮ್ಮನನ್ನು. ಸೂರ್ಯೋದಯಕ್ಕೂ ಮೊದಲೇ ಆರಂಭವಾಗುತ್ತಿದ್ದ ಅವರ ಚಟುವಟಿಕೆಗಳು ರಾತ್ರಿ ಏಳೆಂಟು ಗಂಟೆಯವರೆಗೂ ಎಡೆಬಿಡದೆ ಪ್ರತಿನಿತ್ಯವೂ ಸಾಗುತ್ತಿತ್ತು. ಇಂದಿನ ವಿರಾಮದ ಸಂಸಾರಗಳನ್ನು ನೋಡಿದಾಗಲೆಲ್ಲ ನನಗೆ ಅಂದಿನ "ಕಾರ್ಮಿಕ" ಹಿರಿಯರು ನೆನಪಾಗುತ್ತಾರೆ.

ಇಂದಿನವರ ಬಾಯಿಂದ ಹೊರಬೀಳುವ SPACE ಎನ್ನುವ ಶಬ್ದವು ಆಗ ಪ್ರಚಾರದಲ್ಲಿ ಇರಲೇ ಇಲ್ಲ. ಆದರೆ ಎಲ್ಲರೂ ತಮ್ಮ ನಿತ್ಯ ಕರ್ಮಗಳನ್ನು ಮುಗಿಸಿ, ದಿನದ ಒಂದಷ್ಟು ಹೊತ್ತು ಹಾಯಾಗಿ ಕೂತು ನಗುತ್ತ ಹರಟೆ ಹೊಡೆಯುತ್ತಿದ್ದುದನ್ನು ನಾನು ನೋಡಿದ್ದೇನೆ. ಒಬ್ಬರೇ ಮೂಲೆಮೂಲೆಯಲ್ಲಿ ನಿಂತು ಗುಸುಗುಸು ನಡೆಸುತ್ತಿದ್ದ ಕೆಲವು ಜನರು ಹಿಂದೆಯೂ ಇದ್ದರು. ಅವರನ್ನು ಆಗ "ಮಾನಸಿಕ ಸಮಸ್ಯೆ" ಎಂದು ಗುರುತಿಸಿ ಆಡಿಕೊಳ್ಳುವುದನ್ನು ನಾನು ಕೇಳಿದ್ದೆ. ಸುಖ ದುಃಖಗಳನ್ನು ಹಂಚಿಕೊಳ್ಳುತ್ತ ಪರಸ್ಪರ ಸಮಭಾಗಿಗಳಾಗುತ್ತ ಹಾಗೆ ಹಗುರಾಗುವ "ವಿರಾಮದ ಸ್ವಸ್ಥ SPACE" ನ್ನು ಹೊಂದಿದವರು ನಾನು ಕಂಡ ಅಂದಿನ ಪರಿಸರದಲ್ಲಿ ಇದ್ದರು.

ಇಂದು ಪರಿಸ್ಥಿತಿ ಬದಲಾಗಿದೆ. ಸ್ವಂತ ಹೆತ್ತವರನ್ನೂ ದೂರವಿಡುವಷ್ಟು ಪ್ರಬಲವಾಗಿ SPACE ಎಂಬ ಮಂತ್ರವು ಬಾಯಿ ಬಿಟ್ಟಿದೆ. ಅಂತಹ (ಹಳ್ಳಕ್ಕೆ ಬೀಳಿಸುವ) ಕೃತಕ SPACE ಎಂಬ - ಇಂದಿನ ಮಕ್ಕಳ Fashion ಗೆ ತುತ್ತಾಗಿ ಸ್ವಂತ ಅಪ್ಪ ಅಮ್ಮನೂ ಬಳಲುತ್ತಿರುವುದನ್ನು ನೋಡುತ್ತಿದ್ದೇವೆ! ಈ SPACE ಎಂಬ ಗಂಡಾಂತರದಿಂದಾಗಿ ತಮ್ಮ ಮಕ್ಕಳ ಚಲನವಲನದ ಜ್ಞಾನವು ಇಂದಿನ ಹೆತ್ತವರಿಗೆ ಇರುವುದಿಲ್ಲ. Friends ಜತೆಗೆ ಎಲ್ಲಿಗೋ ಹೋಗಿದ್ದಾರೆ...ಎಂಬುದಷ್ಟೇ ತಿಳಿದಿರುವ ಹೆತ್ತವರು ಮಕ್ಕಳು ಯಾವಾಗ ಹಿಂದಿರುಗಿದರೂ ಪ್ರಶ್ನಿಸುವಂತೆಯೂ ಇಲ್ಲ. ಹಾಗೆ ಪ್ರಶ್ನಿಸಿದರೆ ಸ್ವಂತ Space ನ ಅತಿಕ್ರಮಣವೆನಿಸುತ್ತಿದೆ !!!



ಹೀಗೆ Space ಎಂಬುದು ಮಿತಿಮೀರಿ, ಕೆಲವೊಮ್ಮೆ ಜೀವಂತ ಹೊರಗೆ ಹೋದ ಮಕ್ಕಳು ಶವವಾಗಿ ಬಂದ ದುರ್ಘಟನೆಯೂ ಸಂಭವಿಸಿದೆ. "ಹೆತ್ತವರು ಇರುವುದೇ ತಮ್ಮ ಅವಶ್ಯಕತೆಗಳನ್ನು ಪೂರೈಸಲು" (ATM) ಎಂದು ಭಾವಿಸುವ ಕೆಲವು ಮಕ್ಕಳ ತಿಕ್ಕಲುತನದಿಂದಾಗಿ ಮಕ್ಕಳ ಬಾಲ್ಯವು ಹಾಳಾಗಿ - ವರ್ತಮಾನದ ಮಾನಹೋಗಿ - ಭವಿಷ್ಯವು ಮಾಯವಾಗಿ ಬಿಡುತ್ತಿದೆ. SPACE ಎನ್ನುವ ತಿರುಪೆ ಏಕಾಂತದಲ್ಲಿ ಕುಳಿತು, ಅನಂತ ಧ್ಯಾನಸ್ಥ ಸ್ಥಿತಿಯಲ್ಲಿ ಈ ಮಕ್ಕಳು ಯಾವ ಮಹಾಜ್ಞಾನವನ್ನು ಸಿದ್ಧಿಸಿಕೊಂಡಿರುವರೋ? ಅವರನ್ನೇ ಕೇಳಬೇಕು.

ಹಿಂದೆ ನಮ್ಮ ಮನೆ ಮಾತ್ರವಲ್ಲದೆ ನಾನು ನೋಡುತ್ತಿದ್ದ ಇತರ ಬಂಧುಗಳ ಮನೆಗಳಲ್ಲೂ ಕೆಲಸ ಕಾರ್ಯಗಳಲ್ಲೇ ಮುಳುಗಿರುತ್ತಿದ್ದ ಹಿರಿಯರನ್ನು ಗಮನಿಸಿದ್ದೇನೆ. ಎಲ್ಲರೂ ಜೊತೆಗೂಡಿ ಮಾಡುವ ಕೆಲಸದ ಹೊತ್ತಿನಲ್ಲೇ ಅವರು ತಮ್ಮ ಆಂತರ್ಯದ ತುಮುಲಗಳನ್ನೆಲ್ಲ ಪರಸ್ಪರ ಹೇಳಿಕೊಳ್ಳುತ್ತ ಹಗುರವಾಗುತ್ತಿದ್ದುದನ್ನೂ ನಾನು ನೋಡಿದ್ದೇನೆ. ಸಹಯೋಗದ ಸಹಬಾಳ್ವೆಯ ಅಂತಹ ಕಾಯಕನಿಷ್ಠೆಯನ್ನೂ - "ಮಮ" ಎಂಬ ಆಸಕ್ತಿಯನ್ನು ಹೊರತು ಪಡಿಸಿದರೆ ಸಾಂಸಾರಿಕ ಕರ್ಮಯೋಗವೆಂದೇ ಹೇಳಬಹುದು.


ಅಂದಿನ ಸ್ತ್ರೀಯರನ್ನು ನೆನಸಿಕೊಳ್ಳುತ್ತ ಇಂದಿನವರು "ಅಯ್ಯೋ...ಶೋಷಣೆ" ಎನ್ನುತ್ತ ಶಾಬ್ದಿಕ ಸಂತಾಪ ತೋರುವುದನ್ನು ನಾವು ಆಗಾಗ ನೋಡುತ್ತೇವೆ. ಆದರೆ ಇಂದಿನ ಅಸ್ಥಿರ ಮತ್ತು ಕೀಟಲೆಯ ಕರ್ಮತ್ಯಾಗಿಗಳಿಗಿಂತ ಅಂದಿನ ಸ್ತ್ರೀಯರು ಸಹಜ ಸಜ್ಜನರಾಗಿದ್ದರು. ಇಂದಿನ ಕೃತಕ ಬೊಜ್ಜುಗಳಿಗಿಂತ ಅವರೆಲ್ಲರೂ ಎಷ್ಟು ಲವಲವಿಕೆಯಿಂದ ಇದ್ದರು, ಜೀವನೋತ್ಸಾಹವನ್ನು ಹೊಂದಿದ್ದರು ಎನ್ನುವ ಅರಿವೇ ಇಲ್ಲದೆ ಯಾವುದೇ ಹರಕು ಅಭಿಪ್ರಾಯಗಳನ್ನು ಸಿಕ್ಕಸಿಕ್ಕಲ್ಲಿ ಉದುರಿಸಬಾರದು. ಹಿಂದಿನ ಅಜ್ಜಿಯಂದಿರು ಯಾರಾದರೂ ಇಂದಿನವರಲ್ಲಿ ಆರೋಪ ಮಾಡಿದ್ದುಂಟೆ? ತಮ್ಮ ಬದುಕನ್ನು ಸೌಂದರ್ಯ ಸ್ಪರ್ಧೆಯಾಗಿಸದೆ, ಅದನ್ನು ಗಂಭೀರವಾಗಿ ಈಸಿ ಜಯಿಸಿ ಹೋದ ಹಿರಿಯರವರು. ಸಂಸಾರವೆಂದರೆ ಅದರಲ್ಲಿ  ಹುಳಿ - ಸಿಹಿ, ಖಾರ - ಕಹಿ...ಎಲ್ಲವೂ ಇದ್ದೇ ಇರುತ್ತದೆ ಎಂಬ ಕಿಂಚಿತ್ತಾದರೂ ಪ್ರೌಢತೆಯಿಲ್ಲದವರು - ಅವರ ಕಲ್ಪನೆಯ "ಶೋಷಣೆ "ಯ ಸಂಸಾರದಿಂದ ದೂರವುಳಿಯುವುದೇ ಕ್ಷೇಮ. ಆಗ "ಶೋಷಣೆ ಬ್ಯಾಕ್ಟೀರಿಯ" ದ ಸೋಂಕಿನಿಂದ ಇತರ ಸ್ವಸ್ಥ ಸಂಸಾರಗಳಿಗೆ Infection ಆಗುವುದು ತಪ್ಪುತ್ತದೆ.  

ಅಂತಿಕ್ಕು ಇಂತಿಕ್ಕು ಎಂತಿಕ್ಕು ಎನಬೇಡ; ಚಿಂತಿಸಿ ದೇಹ ಬಡವಕ್ಕು...ಅಷ್ಟೆ. ಕರ್ಮದಲ್ಲಿ ಗಂಭೀರವಾಗಿ ತೊಡಗದೆ ವ್ಯರ್ಥವಾದ ಪ್ರಚೋದನೆಯ ಮಾತುಗಳನ್ನಾಡಿ - ಕೇಳಿಸಿಕೊಂಡು ಆಗುವುದೇನು? ಬದುಕೇ ಬಡವಾಗಬಹುದು. CHAT ಮಾಡುವುದರಲ್ಲೇ ತನ್ಮಯರಾದವರಿಗೆ ಬದುಕಿನ ಗಾಂಭೀರ್ಯದ ಅರಿವು ಇರುವುದಿಲ್ಲ. ಅಂತಹ ಚಟ್ಟು (CHAT) ತಟ್ಟುವ SPACE ಧಾರೀ ಸೈನ್ಯದ ಸದಸ್ಯರು ಗೆಲ್ಲುವ ಕುದುರೆಗಳನ್ನು ಬೆಳೆಸಲಾರರು; ಓಡಿಸಲಾರರು; ಗೆಲ್ಲುವ ಕುದುರೆ ಆಗಲೂ ಆರರು. ಕಷ್ಟಗಳನ್ನು ಮೆಟ್ಟಿ ನಿಯಂತ್ರಿಸಿ ಗೆಲ್ಲಲಾರದವರೆಲ್ಲರೂ ಸೋಲುವ - ಸೋಲಿಸುವ ಕುದುರೆಗಳೇ ಆಗಿರುತ್ತಾರೆ.

ಹೌದು. ನಮ್ಮ ಹಿರಿಯರು ಬೆವರು ಸುರಿಸಿ ದುಡಿಯುತ್ತಿದ್ದರು; ಅಂದು ಬಹುಪಾಲು ಬಡತನವೂ ಇತ್ತು. ಆದರೆ ಮನಸ್ಸು ಮಾತ್ರ  ಆರೋಗ್ಯದಿಂದ ಇರುತ್ತಿತ್ತು. ತನ್ನ ಮನೆಮಂದಿ, ನೆರೆಯವರು, ಊರವರು...ಎನ್ನುವಷ್ಟು ವಿಶಾಲ ವ್ಯಾಪ್ತಿಯಲ್ಲಿ ಹಂಚಿ ಉಣ್ಣುತ್ತ - ಯಾವ ಅಪೇಕ್ಷೆಯೂ ಇಲ್ಲದೆ ಉಪಕರಿಸುವ ಹೃದಯ ವೈಶಾಲ್ಯವೂ ಇತ್ತು. "ಹೋಗಲಿ ಬಿಡು; ಅವರ ಸ್ವಭಾವವೇ ಹಾಗೆ..", "ಹುಟ್ಟು ಗುಣ ಘಟ್ಟ ಹತ್ತಿದರೂ ಬಿಡದು...", ಮೂಢೋ ಮೂರ್ಖೋ ಗಾರ್ದಭೋ..." ಎನ್ನುತ್ತ ಎಲ್ಲ ಬಗೆಯ ಸಂದರ್ಭಗಳನ್ನೂ ನಿಭಾಯಿಸುವ ಶಕ್ತಿಯನ್ನು - ಕಷ್ಟ ಸಹಿಷ್ಣುತೆಯನ್ನು ಅವರ ಬದುಕಿನ ಶೈಲಿಯೇ ಅವರಿಗೆ ನೀಡಿದಂತೆ ಕಾಣುತ್ತದೆ. ನಮ್ಮ ಹಿರಿಯರು ಇಂದಿನವರಂತೆ ಪರರನ್ನು ಆರೋಪಿಸುತ್ತ ತಮ್ಮ ಬದುಕನ್ನು ಕಟ್ಟಿದವರಲ್ಲ. ಬೀದಿಗಿಳಿದು ಯಾವುದೇ ಪ್ರತಿಭಟನೆಯನ್ನು ನಡೆಸದೆ ಇದ್ದುದರಿಂದ ನಮ್ಮ ಹಿರಿಯರು ಕಳೆದುಕೊಂಡದ್ದು ಏನೂ ಇಲ್ಲ; ಬದಲಾಗಿ ಪಡೆದುಕೊಂಡದ್ದೇ ಹೆಚ್ಚು. ತಾನು ದುಡಿದು ತನ್ನಲ್ಲಿ ಇದ್ದುದರಲ್ಲಿಯೇ ನಾಲ್ಕು ಜನರಿಗೆ ಆಶ್ರಯ ಕೊಡುತ್ತಿದ್ದ ಪರೋಪಕಾರೀ ಬದುಕುಗಳವು. ಯಾವುದೋ ಕಠಿಣ ಸಂದರ್ಭವು ಎದುರಾದರೆ ಸುತ್ತುಮುತ್ತಿನವರೆಲ್ಲರೂ ಪರಸ್ಪರ ಸಹಕರಿಸುತ್ತಿದ್ದ ಪರಿಸರವು ಅಂದಿನ ಸಮಾಜದಲ್ಲಿತ್ತು. ಅದರಿಂದ ಅವರು ಪಡೆಯುತ್ತಿದ್ದುದು ಕೇವಲ ತೃಪ್ತಿ. ತೃಪ್ತಿಯೇ ದೊಡ್ಡ ಐಶ್ವರ್ಯ. ಚಾಡಿ ಹೇಳಿ ಪರಸ್ಪರ ಹಿಡಿಸಿಹಾಕುವ, ಜಗಳದ ಬೆಂಕಿಗೆ ಗಾಳಿ ಹಾಕುವ ಕೆಲವರು ಅಂದೂ ಇದ್ದರೂ ಅವರು ಅಲ್ಪಸಂಖ್ಯಾಕರಾಗಿದ್ದರು. ಆಗ ಅವರಿಗೆ ಬೆಲೆಯೂ ಇರಲಿಲ್ಲ. ಮುಖ್ಯವಾಗಿ...ಜನರಿಗೆ ದೇವರ ಭಯವಿತ್ತು. ತಪ್ಪು ಮಾಡಲು ಹೆದರುತ್ತಿದ್ದರು. ಲಕ್ಷ್ಮೀಪುತ್ರರೂ ಶಾರದೋಪಾಸಕರಿಗೆ ಬಹಿರಂಗದಲ್ಲಿಯಂತೂ ಕೈ ಮುಗಿಯುತ್ತಿದ್ದರು.

ಇಂತಹ ಸಮಾಜದಲ್ಲಿ ನಾನು ಬಾಲ್ಯ ಕಾಲವನ್ನು ಸವಿದೆ. ಅಂದಿನ ನಮ್ಮ ಕೋಟೇಶ್ವರದ ಮನೆಯು ಆಗ ನಿಜಾರ್ಥದಲ್ಲಿ ಋಷ್ಯಾಶ್ರಮದಂತಿತ್ತು. ತಮ್ಮದಲ್ಲದ ಆ ಬಾಡಿಗೆ ಮನೆಯನ್ನು ದೇವಸ್ಥಾನದಂತೆ ರೂಪಿಸಿದ ಶ್ರೇಯಸ್ಸು ನನ್ನ ಹೆತ್ತವರದು. ಕಾಲು ನೀಡಿ ಕೂತರೆ ಅರ್ಧ ಕಾಲು ಹೊರಗೆ ಬೀಳುವಷ್ಟು ಅಗಲದ ಒಂದು ಸಪೂರದ ಜಗಲಿ, ಅದಕ್ಕೆ ಹೊಂದಿಕೊಂಡು ನೆಟ್ಟಗೆ 6 ಜನರು  ಮಲಗಬಹುದಾದಷ್ಟು ದೊಡ್ಡ ಒಂದು ಚಾವಡಿ ಮತ್ತು ಅದೇ ಉದ್ದದ ಜಗಲಿಯಿಂದಲೇ ಪ್ರವೇಶವಿರುವ ಒಂದು ಅಡುಗೆಯ ಕೋಣೆ, ಚಾವಡಿಯಿಂದ ಪ್ರವೇಶವಿರುವಂತಹ ಇಬ್ಬರು ಮಲಗಬಹುದಾದಂತಹ ಮೂರು ಕೋಣೆಗಳು. ಹುಲ್ಲಿನ ಮಾಡಿನ ಆ ಪುಟ್ಟ ಕುಟೀರದ ನೆಲಕ್ಕೆ ಕೆಂಪುಕಾವಿ ಹಾಕಿದ ಮಣ್ಣಿನ ನೆಲವಿತ್ತು. ಮನೆಯ ಎಡಭಾಗದಲ್ಲಿ ಹಸುಗಳಿಗಾಗಿ ಕೊಟ್ಟಿಗೆ, ಅದಕ್ಕೆ ಹೊಂದಿಕೊಂಡಂತೆ ಸ್ನಾನದ ಮನೆ, ಕೊಟ್ಟಿಗೆಯ ಹಿಂಭಾಗದಲ್ಲಿ ನಮ್ಮ ಶೌಚಾಲಯವಾಗಿದ್ದ ದೊಡ್ಡ ಹಾಡಿ ಇತ್ತು. ಮನೆಯ ಎದುರಿನಲ್ಲಿ 200 ಗಜ ದೂರದಲ್ಲಿ ಒಂದು ಬಾವಿ. ಬಾವಿಯ ಬಲ ಭಾಗದಲ್ಲಿ ಮನೆಯಂಗಳಕ್ಕೆ ಪ್ರವೇಶ ದ್ವಾರವಿತ್ತು.  ವರ್ಷದ ಋತು ಬದಲಾವಣೆಗಳನ್ನು - ಋತು ಸಂಭ್ರಮ, ಪ್ರಕೃತಿಯ ಸೌಮ್ಯ ರೌದ್ರ ರೂಪಗಳಿಗೆಲ್ಲ ನಾನು ಅದೇ ಮನೆಯಲ್ಲಿ ಮುಖಾಮುಖಿಯಾಗಿದ್ದೆ...ಸವಿದಿದ್ದೆ. ಮನೆಯ ಹುಲ್ಲಿನ ಮಾಡಿನ ಸಂದಿಯಲ್ಲಿ ಹಾವು, ಎರಣೆ..ಮುಂತಾದ ಉಪಜೀವಿಗಳೂ  ಅಂದು ನಮ್ಮ ಜತೆಗಿರುತ್ತಿದ್ದವು. ಅವನ್ನು ನೋಡಿದ ನಾವು ಮಕ್ಕಳು - ಕುಮಟಿ ಬಿದ್ದು ಅಪ್ಪಯ್ಯನನ್ನು ಕರೆಯುತ್ತಿದ್ದೆವು. ಆ ಹಾವನ್ನು ಮಾಡಿನಿಂದ ಕೆಳಕ್ಕೆ ಬೀಳಿಸಿ ಅಪ್ಪಯ್ಯನು ಒಂದು ಕೋಲಿನಲ್ಲಿ ಅದನ್ನು ಎತ್ತಿಕೊಂಡು ಹೋಗುತ್ತಿದ್ದರು. ಆಗ "ಅಯ್ಯೋ, ಅದನ್ನು ಕೊಲ್ಲಬೇಡಿ..." ಎನ್ನುತ್ತ ಅಮ್ಮನು ಕೂಗಿ ಹೇಳುತ್ತಿದ್ದಳು. ಆ ಹೊತ್ತಿನಲ್ಲಿ ಗಂಡು ಸಂತಾನವಿಲ್ಲದೆ ದುಃಖಿತರಾಗಿದ್ದ ಅವರಿಬ್ಬರೂ "ಸರ್ಪ ದೋಷ"ಕ್ಕೆ ಹೆದರುತ್ತಿದ್ದಿರಬೇಕು. "ನಿನ್ನ ಬಿಲದಲ್ಲಿ ಇರುವುದನ್ನು ಬಿಟ್ಟು ಇನ್ನೊಂದು ಸಾರಿ ನನ್ನ ಬಿಲಕ್ಕೆ ಬಂದರೆ ನಾನು ನಿನ್ನನ್ನು ಕೊಲ್ಲುತ್ತೇನೆ...ನಿನ್ನ ಬಿಲಕ್ಕೆ ನಾನು ಎಂದಾದರೂ ಬಂದು ಪೀಡಿಸಿದ್ದೇನೆಯೆ? ನನ್ನ ಸಂಸಾರವನ್ನು ನೀನು ಯಾಕೆ ಪೀಡಿಸುತ್ತೀ? ನಿನಗೆ ಏನು ಬೇಕಾಗಿದೆ?..." ಎಂದು ಆ ಹಾವಿನಲ್ಲಿ ಮಾತನಾಡುತ್ತ ಅದನ್ನು ದೂರದ ಹಾಡಿಯಲ್ಲಿ ಬಿಡುತ್ತಿದ್ದ ಅಪ್ಪಯ್ಯನೇ ಸಂಕಟಮೋಚಕ ಹನುಮನಂತೆ ನಮಗೆ ಆಗ ಕಾಣಿಸುತ್ತಿದ್ದರು.

ಆ ಕೋಟೇಶ್ವರದಲ್ಲಿದ್ದ ಮನೆಯನ್ನು ಅಮ್ಮನು ಉಪಚರಿಸಿದ ಬಗೆಯನ್ನು ನಾನೆಂದೂ ಮರೆಯಲಾರೆ. ಮನೆ, ನೆಲ, ಗೋಡೆ, ಮಾಡು, ಅಂಗಳ, ಬಾವಿ ಕಟ್ಟೆ, ಕೊಟ್ಟಿಗೆ...ಎನ್ನುತ್ತ ಇಡೀ ದಿನವನ್ನು ಕಳೆದುಬಿಡುತ್ತಿದ್ದ ಅಮ್ಮ ಅವಳು. ಅಡುಗೆಯ, ಮಕ್ಕಳ ಜವಾಬ್ದಾರಿಯ ಜೊತೆಗೆ ಗುಡಿಸುವುದು, ಒರೆಸುವುದು, ಅಂಗಳಕ್ಕೆ ಸೆಗಣಿ ಸಾರಿಸುವುದು, ಹಟ್ಟಿಯನ್ನು ಶುಚಿಗೊಳಿಸುವುದು, ಬಾವಿಯಿಂದ ನೀರೆತ್ತಿ ಬಚ್ಚಲು-ತೋಡುಗಳನ್ನು ಸ್ವಚ್ಛಗೊಳಿಸುವುದು...ಒಂದೇ ಎರಡೆ? ಕೆಲಸದ ನಡುವೆ ಮಕ್ಕಳು ಪಿರಿಪಿರಿ ಮಾಡಿದರೆ ಕೆಲಸವನ್ನು ಅಲ್ಲೇ ಬಿಟ್ಟು ಓಡೋಡಿ ಬಂದು "ಉಂಡಾಯ್ತ್..ತಿಂದಾಯ್ತ್..ಸ್ನಾನ ಆಯ್ತ್..ಆಡ್ತ ಇಪ್ಕಾತ್ತಿಲ್ಯಾ? ನಂಗಿಲ್ಲಿ ಕುಂಡೆ ಊರುಕ್ ಪುರಸತ್ತಿಲ್ಲೆ..ನಿಂದೆಂತ ರಗಳೆ ಹೆಣೆ..?" ಎನ್ನುತ್ತ ಮಕ್ಕಳನ್ನೂ ಪ್ರೀತಿಯಿಂದ ನಿಭಾಯಿಸುವುದು...ನನಗೆ ಆ ಅಮ್ಮ ಈಗಲೂ ನೆನಪಾಗುತ್ತಾಳೆ. ಆದರೂ ಅಮ್ಮನ ಬದುಕಿನ ಸಂತೃಪ್ತ ದಿನಗಳವು ಎಂದೂ ನನಗೆ ಅನ್ನಿಸುತ್ತದೆ. ಏಕೆಂದರೆ ತಾನು ಮಾಡುತ್ತಿದ್ದ ಕರ್ಮಗಳನ್ನು ಅವಳು ಅಷ್ಟೊಂದು ತನ್ಮಯತೆಯಿಂದ - ಪ್ರೀತಿಯಿಂದ ಆಗ ಮಾಡುತ್ತಿದ್ದಳು. ಅಪ್ಪಯ್ಯ ಮತ್ತು ಅಮ್ಮನು ಪರಸ್ಪರ ಅನನ್ಯವಾಗಿ ಪ್ರೀತಿಸುತ್ತಿದ್ದು ತಮ್ಮ  ಮಕ್ಕಳಿಗೂ ಪ್ರೀತಿಯ ಸ್ನಾನ ಮಾಡಿಸುತ್ತಿದ್ದುದರಿಂದಲೇ ನನ್ನ ಬಾಲ್ಯವು ಇಂದಿಗೂ ಚಪ್ಪರಿಸುವಂತಿದೆ ಎಂದೂ ಅನ್ನಿಸುವುದಿದೆ. "ಪ್ರೀತಿ ಇದ್ದಲ್ಲಿ ತೃಪ್ತಿಯೂ ಇರುತ್ತದೆ" ಎಂಬ ನನ್ನ ಮಾತಿಗೆ - ಅಂದಿನ ನನ್ನ ಅಪ್ಪಯ್ಯ ಮತ್ತು ಅಮ್ಮನ ಬದುಕು - "ಹೌದು" ಎಂದು ತಲೆಯಾಡಿಸಿದಂತೆ ನನಗೆ ಕಾಣುತ್ತದೆ. ಅದು ಎಂತಹ ಪ್ರೀತಿ? ಹೇಳಲಾಗದ ಅದೃಶ್ಯ ಅನುಭವ...ಅಷ್ಟೆ.

ತನ್ನ ಮನೆ, ಹಿತ್ತಲು, ಹಟ್ಟಿಯ ಕೆಲಸಗಳನ್ನೆಲ್ಲ ಏಕಾಂಗಿಯಾಗಿ ಅಮ್ಮನು ಹೇಗೆ ನಿಭಾಯಿಸುತ್ತಿದ್ದಳೆಂದು ನನಗೆ ಆಶ್ಚರ್ಯವಾಗುತ್ತದೆ. ಅಪ್ಪಯ್ಯನು ಗಂಡಾಳಿನ ಕೆಲಸವನ್ನು, ಅಮ್ಮನು ಹೆಣ್ಣಾಳಿನ ಕೆಲಸವನ್ನು - ಮುಚ್ಚಟೆಯಿಂದ, ಉತ್ಸಾಹದಿಂದ ಮಾಡುತ್ತಿದ್ದ ದಿನಗಳವು. ಸಹಾಯಕ್ಕೆಂದು ಆಳನ್ನು ನೇಮಿಸಿಕೊಳ್ಳುವ ಆರ್ಥಿಕ ಚೈತನ್ಯವೂ ಆಗ ಇರಲಿಲ್ಲ. ಅಪ್ಪಯ್ಯನ ಅಧ್ಯಾಪಕ ವೃತ್ತಿಯ ಸಣ್ಣ ಸಂಬಳದ ಗಳಿಕೆಯನ್ನು ಪುಷ್ಟಿಗೊಳಿಸಲು ಮನೆಯ ಹಿತ್ತಲಿನಲ್ಲಿ ಸೊಪ್ಪು, ತರಕಾರಿಯನ್ನೂ ಬೆಳೆಸಿಕೊಳ್ಳುತ್ತಿದ್ದರು. ದಿನವೂ ಬೆಳಿಗ್ಗೆ ತೆಂಗು, ತರಕಾರಿ ಮತ್ತು ಹೂವಿನ ಗಿಡಗಳಿಗೆ ಬಾವಿಯಿಂದ ನೀರು ಸೇದಿ, ಹೊತ್ತು ಗಿಡಗಳಿಗೆ ಉಣ್ಣಿಸುತ್ತಿದ್ದರು. ತಮ್ಮ ಎರಡು ಕೈಯ್ಯಲ್ಲಿ ಕೊಡಪಾನಗಳನ್ನಿಟ್ಟುಕೊಂಡು ಓಡುತ್ತ ಅಪ್ಪಯ್ಯ ನೀರುಣಿಸುವುದು ನನಗಿನ್ನೂ ನೆನಪಿದೆ. ಅದು ಅವರ ನಿತ್ಯ ಕರ್ಮಗಳಲ್ಲಿ ಒಂದಾಗಿತ್ತು. ಕೊನೆಯಲ್ಲಿ ನೀರುಂಡ ಎಲ್ಲ ಗಿಡ ಮರಗಳನ್ನೂ ಒಮ್ಮೆ ನಿಂತು ನೋಡುತ್ತ ಖುಶಿ ಪಡುವ ಭಾವುಕ ಮನಸ್ಸು ಅಪ್ಪಯ್ಯನದಾಗಿತ್ತು. ಇಷ್ಟಾದ ಮೇಲೆ ಅಪ್ಪಯ್ಯನ ಸ್ನಾನ, ಪೂಜೆ, ಊಟ, ಶಾಲೆಗೆ ಓಟ. ಅಪ್ಪಯ್ಯನ ಮನೆಕೆಲಸಗಳು ಹೀಗೆ ಚದುರಿದಂತೆ ಕಂಡರೂ ಒಂದಲ್ಲ ಒಂದು ಕರ್ಮದಲ್ಲಿ ವ್ಯಸ್ತಳಾಗಿರುತ್ತಿದ್ದ ಅಮ್ಮನ ಕೆಲಸಗಳು ಮಾತ್ರ ಮುಗಿಯದ್ದು ಅನ್ನಿಸುತ್ತಿತ್ತು. ಆದರೆ ಅಮ್ಮನು ಕೆಲಸಕ್ಕೆ ಹಿಂಜರಿದದ್ದನ್ನು ಅಥವ ಕೆಲಸದ ಹೊರೆಯಿಂದ ಬಳಲಿಕೆಯಾದಾಗ ತನ್ನ ಬಡತನಕ್ಕಾಗಿ ಅಪ್ಪಯ್ಯನನ್ನು ಮೂದಲಿಸಿದ್ದನ್ನು ನಾನು ನೋಡಿಲ್ಲ. ಅದು ರೇಶನ್ ಅಕ್ಕಿ - ಬೇಳೆಯ ಕಾಲ. ಪ್ರತೀ ಬಾರಿಯೂ ಆ ಗಲೀಜು ಅಕ್ಕಿಯನ್ನು ಗೆರಸಿಯಲ್ಲಿ ಒಮ್ಮೆ ಗೇರಿ ಅವಳು ನಮ್ಮೆದುರಿಗೆ ಸುರಿಯುತ್ತಿದ್ದಳು. ಅನಂತರ ಅದನ್ನು ಹೆಕ್ಕಿ ಶುಚಿಗೊಳಿಸುವ ಕೆಲಸದಲ್ಲಿ ಕೆಲವೊಮ್ಮೆ ದೊಡ್ಡ ಮಕ್ಕಳ ಸಹಾಯವನ್ನೂ ಪಡೆಯುತ್ತಿದ್ದಳು. ಆ ಕಾಲದಲ್ಲಿ ಅಂಗಡಿಯಿಂದ ತರುತ್ತಿದ್ದ ಅಡುಗೆಯ ವಸ್ತುಗಳೆಲ್ಲವೂ ಕಲಬೆರಕೆಯ, ಕಡಿಮೆ ಗುಣಮಟ್ಟದವುಗಳೇ ಆಗಿರುತ್ತಿದ್ದವು. ಸ್ವಚ್ಚಗೊಳಿಸಿದ ವಸ್ತುಗಳು ಸಿಗುತ್ತಿರಲೇ ಇಲ್ಲ. "ಈ ಅಕ್ಕಿ, ಕೊತ್ತುಂಬರಿ, ಹುರುಳಿಯ ಕಸ ಕಲ್ಲುಗಳನ್ನು ಹೆಕ್ಕಿ ಹೆಕ್ಕಿ ಶುಚಿಗೊಳಿಸುವುದರಲ್ಲಿಯೇ ನನ್ನ ಕಣ್ಣಿನ ಅರ್ಧ ಶಕ್ತಿ ಹಾಳಾಯಿತು..." ಎಂದು ಅನಂತರದ ದಿನಗಳಲ್ಲಿ ಅಮ್ಮ ನೆನಪಿಸಿಕೊಳ್ಳುತ್ತಿದ್ದುದೂ ಇತ್ತು.

ಮಳೆಗಾಲಕ್ಕೆ ಬೇಕಾಗುವ ಸೌದೆಯನ್ನು ಆಗ ಬಿರು ಬೇಸಿಗೆಯ ಮೇ ತಿಂಗಳಿನಲ್ಲಿಯೇ ಸಂಗ್ರಹ ಮಾಡುತ್ತಿದ್ದರು. ಎತ್ತಿನ ಗಾಡಿಯಲ್ಲಿ ದೊಡ್ಡ ದಿಮ್ಮಿಗಳಂತಹ ಮರದ ತುಂಡುಗಳನ್ನು ತರಿಸುತ್ತಿದ್ದರು. ಆ ಮರದ ಇಡಿಯಾದ ಭಾಗವನ್ನು ತಮ್ಮ ಶಾಲೆ ಮುಗಿಸಿ ಬಂದ ಮೇಲೆ ಅಪ್ಪಯ್ಯನೇ ಕೊಡಲಿಯಿಂದ ಒಡೆಯುತ್ತಿದ್ದರು. ಒಲೆಗೆ ಹಾಕುವಷ್ಟು ದೊಡ್ಡ ತುಂಡುಗಳನ್ನು ಮಾಡುವ ಈ ಕೆಲಸವು ಏಳೆಂಟು ದಿನಗಳ ಕಾಲ - ಅಪ್ಪಯ್ಯನ ಬಿಡುವಿನ ಹೊತ್ತಿನಲ್ಲಿ ನಡೆಯುತ್ತಿತ್ತು. ಅಪ್ಪಯ್ಯನು ಒಡೆದು ರಾಶಿ ಹಾಕಿದ ಸೌದೆಯ ತುಂಡನ್ನು ನಾವು ಮಕ್ಕಳೆಲ್ಲರೂ ಅಟ್ಟದಲ್ಲಿ ಕೂಡಿಡಲು ಸಹಾಯ ಮಾಡುತ್ತಿದ್ದೆವು. ಅಮ್ಮನು ಅಟ್ಟದಲ್ಲಿ ಕೂತು ಆ ತುಂಡುಗಳನ್ನು ಶಿಸ್ತಿನಿಂದ ಕೂಡಿಸುತ್ತಿದ್ದಳು. ನಮ್ಮ ಕೈಯ ಅಳತೆಗೆ ಮತ್ತು ವಯಸ್ಸಿನ ಯೋಗ್ಯತೆಗೆ ತಕ್ಕಂತೆ ಅಪ್ಪಯ್ಯನು ಎರಡೋ ಮೂರೋ ಸೌದೆ ತುಂಡನ್ನು ನಾವು ಚಾಚಿದ ಎರಡೂ ಕೈಗಳ ಮೇಲೆ ಇಡುತ್ತಿದ್ದರು. ಅವನ್ನು ಅಮ್ಮನಿಗೆ ಕೊಡುವ ಕೆಲಸ ನಮ್ಮದಾಗಿತ್ತು. "ಸೌದೆಯ ಚೂರನ್ನು ಕೊಡುವಾಗ ಕೈಮೇಲಿಂದ ಜಾರಿಸಿ ತೆಗೆಯಬಾರದು. ಸಿಬಿರು (ಕೊಡಲಿಯಿಂದ ಒಡೆದ ಸೌದೆಯ ಮೈಯ್ಯಲ್ಲಿರುವ ಚೂಪಾದ ಬಿರುಸಾದ ಭಾಗ) ಚುಚ್ಚಬಹುದು. ಜಾಗ್ರತೆಯಿಂದ ಕೈಯಿಂದ ಎತ್ತಿ ಅಮ್ಮನಿಗೆ ಕೊಡಬೇಕು..." ಅಂತ ನಮಗೆ ಅಪ್ಪಯ್ಯನು ಎಚ್ಚರಿಕೆಯನ್ನೂ ಹೇಳುತ್ತಿದ್ದರು. (ಹಸುವಿಗಾಗಿ ಒಣಹುಲ್ಲನ್ನು ಅಟ್ಟದಲ್ಲಿ ಪೇರಿಸಿ ಇಡುವಾಗಲೂ ಹೀಗೆ ನಾವೆಲ್ಲರೂ ಸಾಂಘಿಕವಾಗಿ ದುಡಿಯುತ್ತಿದ್ದೆವು.)


ಹೀಗೆ ಸಂಜೆಯ ಹೊತ್ತಿನಲ್ಲಿ ದೇಹಶ್ರಮದ ಕೆಲಸವನ್ನು ನಡೆಸಿದಾಗ, ಕೆಲಸವು ಮುಗಿದ ಮೇಲೆ ಎಲ್ಲರೂ ಸ್ನಾನ ಮಾಡಿ ಅನಂತರ ನಿತ್ಯದ ಭಜನೆ, ಊಟ. ಅಂತಹ ದಿನಗಳಲ್ಲಿ ರಾತ್ರಿ ಮಲಗುವ ಮುನ್ನ ಅಪ್ಪಯ್ಯನು ಮಕ್ಕಳ ಕೈಯ್ಯನ್ನು ನೋಡುತ್ತಿದ್ದರು. "ಅಯ್ಯೋ, ಕೆಂಪಾಗಿದೆಯಲ್ಲ? ಭಾರ ಹೊತ್ತು, ಸೌದೆ ಹೊತ್ತು ನನ್ನ ಮಗಳ ಕೈಗೆ ನೋವಾಯಿತಲ್ಲ? ನೋವಿದೆಯಾ ಮಗಳೇ?.." ಎನ್ನುತ್ತಿದ್ದರು. ಆಗ ಸರಕ್ಕಂತ ಬಾಯಿ ಹಾಕುತ್ತಿದ್ದ ಅಮ್ಮನು - "ನಿಮ್ಮ ಮಗಳಿಗೆ ಏನೂ ಆಗುವುದಿಲ್ಲ. ನಾಳೆ ಎಲ್ಲವೂ ಸರಿಯಾಗಿರುತ್ತದೆ. ನೀವು ಸುಮ್ಮನೆ ಮಲಗಿ...ಅತಿ ಪ್ರೀತಿ ಮಾಡಿ ಮಕ್ಕಳನ್ನು ಬೆಳೆಸಬಾರದು. ಮಕ್ಕಳು ಕೆಲಸ ಮಾಡಿ ಮಾಡಿಯೇ ಗಟ್ಟಿಯಾಗಬೇಕು..." ಎಂದು ಹೇಳುತ್ತಲೇ ನಮ್ಮ ಮೈಕೈ ಸವರುತ್ತ ಅಮ್ಮನೇ ನಿದ್ದೆ ಮಾಡಿಸುತ್ತಿದ್ದಳು!

ಮನೆಗೆಲಸ ಮಾಡಿದಾಗ ಅಪ್ಪಯ್ಯನು ಅನುಕಂಪ ತೋರಿಸಿದಾಗೆಲ್ಲ ಅಮ್ಮನು ಸಿಡುಕುತ್ತಿದ್ದುದು ನನಗೆ ನೆನಪಾಗುತ್ತದೆ. ಅಂದು "ಅಪ್ಪಯ್ಯ ಒಳ್ಳೆಯವರು; ಅಮ್ಮ ಜೋರು..." ಅನ್ನಿಸಿದ್ದರೂ ಅಮ್ಮನ ಆ ಸಿಡುಕಿನ ಹಿಂದೆ ಮಹಾ "ಭಾವಯುದ್ಧ"ವೇ ನಡೆದಿರಬಹುದು ಎಂದು ಈಗ ನನಗನ್ನಿಸುತ್ತದೆ. "ಯಾರೇ ಆದರೂ ತಮ್ಮ ಮನೆಗೆಲಸವನ್ನು ಮಾಡಿದಾಗ ಅದು ಅವರ ಕರ್ತವ್ಯವೇ ಹೊರತು ಉಪಕಾರವಲ್ಲ. ಕುಟುಂಬದಲ್ಲಿ ಪ್ರತಿಯೊಬ್ಬರೂ ತಮಗೆ ಸಾಧ್ಯವಿರುವ ಕೆಲಸವನ್ನು ಮಾಡಲೇಬೇಕು. ಅವರವರ ವಯಸ್ಸಿಗೆ ತಕ್ಕಂತೆ ಕುಟುಂಬದ ಪಾಲುದಾರರಾಗಬೇಕು. ಹಾಗೆ ಕೆಲಸವನ್ನು ನಿರ್ವಹಿಸುವವರಿಗೆ ತಾವು ಕರ್ತವ್ಯವನ್ನು ನಿಭಾಯಿಸುತ್ತಿದ್ದೇವೆ ಎಂಬ ಭಾವನೆ ಇರಬೇಕು. ಮನೆಯ ಹಿರಿಯರು ತಮ್ಮ ಸಂತಾನ - ಕುಟುಂಬದ ಸದಸ್ಯರು  ಮಾಡುವ ನಿತ್ಯದ ಗೃಹಕೃತ್ಯಗಳಿಗೆಲ್ಲ ಮೆಚ್ಚುಗೆಯ ಅನುಮೋದನೆ ನೀಡುತ್ತ ಅಥವ ಕರುಣೆ ತೋರುತ್ತ - ದಿನವೂ ಉಪಚಾರಕ್ಕೆ ತೊಡಗಿದರೆ - ಅದು ಪರೋಕ್ಷವಾಗಿ ಕ್ಷಮಾಪಣೆ ಕೇಳಿದಂತೆಯೂ ಧ್ವನಿಸುತ್ತದೆ. ಹಾಗೆ ಉಪಚಾರ ಮಾಡಿದಾಗ ಕರ್ತವ್ಯದ ಭಾವವು ಹಿಂದೆ ಸರಿದು ಉಪಕಾರ ಮಾಡಿದ್ದೇವೆನ್ನುವ ಭಾವವು ಎಳೆಯ ಮನಸ್ಸಿನಲ್ಲಿ ಗಟ್ಟಿಯಾಗುತ್ತದೆ. ಮುಂದೆ ಅಂಥ ಮಕ್ಕಳು ತಾವು ಮಾಡುವ ಕೆಲಸಗಳಿಗೆಲ್ಲ ಇತರ ಎಲ್ಲರಿಂದಲೂ ಹೊಗಳಿಕೆ - ಉಪಕಾರ ಸ್ಮರಣೆಯೆಂಬ ಪ್ರತಿಫಲವನ್ನು ನಿರೀಕ್ಷಿಸುತ್ತಾರೆ. ಅಂತಹ ಮಕ್ಕಳಿಗೆ "ಇದು ನನ್ನ ಮನೆ" ಎಂಬ ಭಾವವು ಬಲಿಯುವುದೇ ಇಲ್ಲ. ಹೆತ್ತ ಅಪ್ಪ ಅಮ್ಮಂದಿರು ತಮ್ಮ ಮಕ್ಕಳನ್ನು ಹಾಗೆ ನೆಂಟರಂತೆ ನಡೆಸಿಕೊಂಡು ಕೊಬ್ಬಿಸಿ ಬೆಳೆಸಿದರೆ ಮುಂದೆ ಇನ್ನೊಬ್ಬರ ಮನೆಗೆ ಹೋಗುವ ಹೆಣ್ಣು ಮಕ್ಕಳು ಅಲ್ಲಿ ಬಾಳ್ವೆ ನಡೆಸುವುದು ಸಾಧ್ಯವೆ? ನಮ್ಮ ಮಕ್ಕಳು ಮಾಡಿದ್ದನ್ನೆಲ್ಲ ಹೊಗಳಿ ಎತ್ತರಿಸುವವರೇ ಸಂಗಾತಿಯಾಗಿ ಒದಗುವ ಭರವಸೆ ಯಾರಿಗಾದರೂ ಇದೆಯೆ? ನಾವಿಬ್ಬರೂ ಒಬ್ಬರಿಗೊಬ್ಬರು ದಿನವೂ ಉಪಕಾರಸ್ಮರಣೆ ಮಾಡುತ್ತಿದ್ದೇವೇನು? ನಾನು ನಿಮ್ಮಿಂದ ಅದನ್ನು ನಿರೀಕ್ಷಿಸಿದರೆ ದಿನವೂ ಅಂತಹ ನಾಟಕ ಮಾಡಲು ನಿಮಗೆ ಸಾಧ್ಯವಿದೆಯೆ? ಆದ್ದರಿಂದ ಹೊಗಳಿಕೆಯನ್ನು ನಿರೀಕ್ಷಿಸುವಂತೆ ಮಕ್ಕಳನ್ನು ರೂಪಿಸಬಾರದು. ಪ್ರೀತಿ ತೋರಿಸುವ ರೀತಿಯು ಅದಲ್ಲ. ಮನೆಯ ಮಕ್ಕಳಿಗೆ ತಮ್ಮ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದನ್ನು ಮಾತ್ರ ಕಲಿಸಬೇಕು..." ಎಂಬ ದೂರದೃಷ್ಟಿಯು ಅಮ್ಮನಲ್ಲಿತ್ತು. "ನಮ್ಮ ನಮ್ಮ ಮನೆಯ ಕೆಲಸವನ್ನು ಶ್ರದ್ಧೆಯಿಂದ ಮಾಡುವುದು; ಎದ್ದು ಹೋಗುವುದು" ಎಂಬ ನಿರ್ಲಿಪ್ತ ಶೈಲಿಯು ಅಮ್ಮನು ಒಪ್ಪಿ ಆಚರಿಸಿದ ಗೃಹಕೃತ್ಯದ ವಿಧಾನವಾಗಿತ್ತು.


ಆದರೆ ತನ್ನ ಮಕ್ಕಳ ಶೈಕ್ಷಣಿಕ ಏಳ್ಗೆ, ಕಲಾ ಕ್ಷೇತ್ರದ ಯಶಸ್ಸುಗಳನ್ನು ಕಂಡಾಗ - ಪ್ರೋತ್ಸಾಹದ ಭಾವದಲ್ಲಿ ಅಮ್ಮನೂ ನಮ್ಮನ್ನು ಪ್ರೀತಿಯಿಂದ ಅಪ್ಪಿಕೊಂಡದ್ದಿದೆ. ಅದು ಮೌನ ಸಂವಹನ - ಅಷ್ಟೆ. ಮನೆಯ ಮಕ್ಕಳನ್ನು ಹೊಗಳಲು ಅವಳು ಎಂದೂ ಅಷ್ಟಾಗಿ ಮಾತನ್ನು ಬಳಸಿದವಳಲ್ಲ. ತನ್ನ ಮಕ್ಕಳ ಕುರಿತ ಅಭಿಮಾನವನ್ನು ಮಕ್ಕಳ ಎದುರಿನಲ್ಲಂತೂ ಅಮ್ಮನು ಎಂದೂ ಬಯಲುಗೊಳಿಸುತ್ತಿರಲಿಲ್ಲ. ಅಪ್ಪಯ್ಯನ ಕಾಲಾನಂತರ ಎಲ್ಲ ಮಕ್ಕಳಲ್ಲೂ ಪರಸ್ಪರ ಸೌಹಾರ್ದವಿರುವಂತೆ ಮಾಡಲು ತನ್ನ ಶೈಲಿಯನ್ನು ಸ್ವಲ್ಪ ಸುಧಾರಿಸಿಕೊಂಡಿದ್ದಳು. ತನ್ನ ಇನ್ನೊಬ್ಬಳು ಮಗಳನ್ನು ನನ್ನೆದುರು ಮೆಚ್ಚಿಕೊಳ್ಳುತ್ತಿದ್ದಳು; ನನ್ನನ್ನು ಕುರಿತು  ಇನ್ನೊಬ್ಬಳೆದುರು ಹೇಳುತ್ತಿದ್ದಳು. "ನೀನೊಬ್ಬಳೇ ಜಾಣೆಯಲ್ಲ; ಬೇರೆ ಮಕ್ಕಳೂ ವಿಭಿನ್ನ ವಿಷಯಗಳಲ್ಲಿ ಬುದ್ಧಿವಂತರಿದ್ದಾರೆ. ನಿನ್ನಲ್ಲಿ ಒಂದು ವಿಶೇಷತೆಯಿದೆ; ಅವರಲ್ಲಿ ಇನ್ನೊಂದಿದೆ..." ಎನ್ನುತ್ತಲೇ - ಅವಳು ಎಲ್ಲ ಮಕ್ಕಳ ತಲೆಯನ್ನು ಮೊಟಕುತ್ತ ಸವರುತ್ತ ತನ್ಮೂಲಕ ಎಲ್ಲ ಮಕ್ಕಳೂ ಸೌಹಾರ್ದದ ಬಳಕೆಯನ್ನು ಉಳಿಸಿಕೊಳ್ಳುವಂತೆಯೂ ಮಾಡಿ, ತನ್ನ ವಿಸ್ತೃತ ಸಂಸಾರವನ್ನು ಅಲುಗದಂತೆ ಕಟ್ಟಿದ್ದಳು. ಅಪ್ಪಯ್ಯನಿಗೆ ವಯಸ್ಸಾದ ನಂತರ - ಕೆಲವೊಮ್ಮೆ - ಭಾರೀ ತೂಕದ ಶಬ್ದಗಳನ್ನು ಉಪಯೋಗಿಸುತ್ತ "ನಮ್ಮ ನಾರಾಯಣಿ.." ಎನ್ನುತ್ತ ಹೊಗಳುವಾಗಲೂ ಅಮ್ಮನು ಅವರನ್ನು ಆಗ ತಡೆಯುತ್ತಿದ್ದುದು ನನಗೆ ನೆನಪಿದೆ. "ನಮ್ಮ ಮಕ್ಕಳನ್ನು ನಾವೇ ಹೊಗಳಬಾರದು" ಎಂಬ ಸೂತ್ರವನ್ನು ಅಮ್ಮನು ಕೊನೆಯವರೆಗೂ ಪಾಲಿಸಿದ್ದಳು. ಮುಖಸ್ತುತಿಯು ಅಧಃಪತನದತ್ತ ಕೊಂಡೊಯ್ಯುವ ಸಾಧನ ಎಂಬುದು ಅಮ್ಮನ ಸಿದ್ಧಾಂತವಾಗಿತ್ತು. ಹಾಗೆಂದು ಅಮ್ಮನ ಪ್ರೀತಿಯಲ್ಲಿ ಮಾತ್ರ ನಮಗೆ ಯಾವ ಕೊರತೆಯೂ ಆದಂತೆ ಅನ್ನಿಸಿರಲಿಲ್ಲ. ತನ್ನ ಪೂರ್ಣತೆಯ ಸ್ಪರ್ಶದಲ್ಲೋ ಮಕ್ಕಳ ದೈಹಿಕ ಸೇವೆ ಮಾಡುವುದರಲ್ಲೋ ನಮಗೆ ಪ್ರಿಯವಾದ ಅಡುಗೆ ಮಾಡಿ ಉಣ್ಣಿಸುವುದರಲ್ಲೋ ಮಕ್ಕಳ ಭವಿಷ್ಯದ ಚಿಂತೆಯಲ್ಲೋ...ಅಂತೂ - ಅದು ಹೇಗೋ ಅಮ್ಮನು ನಮ್ಮ ಪ್ರೀತಿಯ ಆಧಾರವಾಗಿಯೇ ಇದ್ದಳು. ಅಮ್ಮನ ನಿಖರ ಲೆಕ್ಕಾಚಾರದ ಬದುಕಿನ ಶೈಲಿಯನ್ನು ನೋಡುತ್ತಿದ್ದ ಅಪ್ಪಯ್ಯನು ಒಮ್ಮೊಮ್ಮೆ ಮೆಚ್ಚುಗೆಯ ಮುಗುಳ್ನಗೆ ಸೂಸುತ್ತಿದ್ದುದೂ ಇತ್ತು.   ಅಂತೂ ಹೇಗೋ ತನ್ನ ಲೆಕ್ಕದ ಅಳತೆಯಲ್ಲಿಯೇ ಸಂಸಾರವನ್ನು ಗಟ್ಟಿಗೊಳಿಸಿದ ಅಮ್ಮ ಅವಳು. ಹೀಗೆ ಪ್ರತ್ಯಕ್ಷ ಪ್ರೀತಿ ತೋರುತ್ತಿದ್ದ ಭಾವುಕ ಅಪ್ಪಯ್ಯ, ಪರೋಕ್ಷ ಪ್ರೀತಿ ತೋರುತ್ತಿದ್ದ ವ್ಯಾವಹಾರಿಕ ಅಮ್ಮನ ಆಶ್ರಯದಲ್ಲಿ ನಮ್ಮ ಬಾಲ್ಯವು ಬೆಳದಿಂಗಳಾಗಿತ್ತು.

ಅಮ್ಮನು ರಾತ್ರಿ ನಿದ್ರಿಸುವಾಗ ತನ್ನ ಅತೀ ಸಣ್ಣ ಮಗುವನ್ನು ತನ್ನ ಹತ್ತಿರವೇ ಮಲಗಿಸಿಕೊಳ್ಳುತ್ತಿದ್ದಳು. ಅದಕ್ಕಿಂತ ದೊಡ್ಡ ಮಗುವು ಅಪ್ಪಯ್ಯನ ಹತ್ತಿರ, ಉಳಿದವರೆಲ್ಲರೂ ಅನಂತರ - ಸಾಲಾಗಿ ಚಾವಡಿಯಲ್ಲಿ ಮಲಗಿ ನಿದ್ರಿಸುತ್ತಿದ್ದೆವು. ಅಪ್ಪಯ್ಯನನ್ನು ಬಿಟ್ಟರೆ ನಾವೆಲ್ಲರೂ ಹೆಂಗಸರು. ಬಾಗಿಲೇ ಇಲ್ಲದ ಆ ಚಾವಡಿಯಲ್ಲಿ ಅಷ್ಟು ನಿಶ್ಚಿಂತೆಯಿಂದ ನಾವು ನಿದ್ರಿಸುತ್ತಿದ್ದುದಾದರೂ ಹೇಗೆ? ಎಂದು ಈಗಲೂ ಆಶ್ಚರ್ಯವಾಗುತ್ತದೆ; ಯೋಚಿಸಿದರೆ ಒಮ್ಮೊಮ್ಮೆ ಭಯವೂ ಆಗುತ್ತದೆ. ಆ ಚಾವಡಿಯಲ್ಲಿ ಮಲಗಿಕೊಂಡೇ ನಾವು ರಾಜಬೀದಿಯನ್ನು ನೋಡಬಹುದಾಗಿತ್ತು! ಹಾಗಿತ್ತು ಆ ಮನೆ. ಆದ್ದರಿಂದಲೇ ಉಡುಪ ದಂಪತಿಗಳ ಮುಚ್ಚು ಮರೆಯಿಲ್ಲದ ಮನಸ್ಸಿನ ಪ್ರತೀಕದಂತೆ - ಜೇನುಗೂಡಿನಂತಿದ್ದ ಆ ಮನೆಯು ಈಗಲೂ ನನ್ನೊಳಗೆ ಭದ್ರವಾಗಿ ಕೂತಿದೆ. ಮನುಷ್ಯರ ಭಯವಿಲ್ಲದೆ ಬದುಕಬಹುದಾದ ಯಾವುದೇ ಪರಿಸರವಿದೆಯೆಂದಾದರೆ ಅದಕ್ಕಿಂತ ಹೆಚ್ಚಿನ ಸ್ವಾತಂತ್ರ್ಯ ಸುಖವು ಬೇಕೆ? ಬಹುಶಃ ಅಂದು ದುರಾಸೆಗೂ ಅಂಕೆಯಿದ್ದ ಸಮಾಜವಿತ್ತು. ಯಾರೂ ಭಯಂಕರ SMART ಆಗಿರಲಿಲ್ಲ. ಆದ್ದರಿಂದ ಅಂದಿನ ಜನರು ಬದುಕಿಕೊಂಡರು. ಅಂಕೆಯುಳ್ಳ ಸಭ್ಯ ಸಮಾಜದಲ್ಲಿ ಮಾತ್ರ ಸ್ವಚ್ಛ ಸ್ವಾತಂತ್ರ್ಯದ ರುಚಿಯು ಅನುಭವಕ್ಕೆ ಬರುತ್ತದೆ! ಅಲ್ಲವೆ?

ನನ್ನ ಬಾಲ್ಯಕಾಲದಲ್ಲಿ, ಭಾನುವಾರ ಎಂದರೆ ಎಲ್ಲರೂ ನಿರಾಳವಾಗಿ ಮನೆಯಲ್ಲಿಯೇ ಇರುತ್ತಿದ್ದ ದಿನ. ಆದರೆ ಅಮ್ಮನ ಪಾಲಿಗೆ ಮಾತ್ರ ಹೆಚ್ಚು ಕೆಲಸವಿರುತ್ತಿದ್ದ ದಿನವೇ ಭಾನುವಾರ. ಆಟದ ಸಮಯವೆಲ್ಲವೂ ವ್ಯರ್ಥವಾಗುತ್ತಿದೆ...ಎಂದು ಭಾವಿಸುತ್ತಿದ್ದ -  ತಂಟೆಮಂಡೆಯಾಗಿದ್ದ ನನಗಂತೂ ಅಂದಿನ ದಿನಗಳಲ್ಲಿ, ಭಾನುವಾರವು ಬಂತೆಂದರೆ ಅದು ಶಿಕ್ಷೆಯ ದಿನ - ಎಂದೂ ಅನ್ನಿಸುತ್ತಿತ್ತು. ಭಾನುವಾರದಂದು ಒಳ್ಳೆಯ Ring master ರಂತೆ ಅಮ್ಮನು ವರ್ತಿಸುತ್ತಿದ್ದಳು. ತಿಂಗಳಲ್ಲಿ ಎರಡು ಭಾನುವಾರಗಳಂದು ಬೆಳಿಗ್ಗೆ ಎದ್ದ ಕೂಡಲೇ ಒಂದಷ್ಟು ಕಹಿ ಬೇವಿನ ಕಷಾಯವನ್ನು ಕುಡಿಸುತ್ತಿದ್ದಳು. ನಮ್ಮ ಮನೆಯಲ್ಲಿ ಅಮ್ಮನನ್ನು ಬಿಟ್ಟು ಉಳಿದ ಎಲ್ಲರೂ ವಿಪರೀತವೆನ್ನುವಷ್ಟು ಬೆಲ್ಲದೋಪಾಸಕರಾಗಿದ್ದರು. ಆದ್ದರಿಂದ ಆಗಾಗ ಕಹಿ ಕುಡಿಯಬೇಕು - ಎಂಬುದು ಅಮ್ಮನ ವೈದ್ಯಶಾಸ್ತ್ರವಾಗಿತ್ತು. ಕಹಿ ಕುಡಿಯುವಾಗ ಅಪ್ಪಯ್ಯನೇ ನಮ್ಮ ಪ್ರತಿಭಟನೆಯ ನೇತೃತ್ವ ವಹಿಸುತ್ತಿದ್ದರು. ಆದರೆ ಯಾರ ಆಟವೂ ನಡೆಯುತ್ತಿರಲಿಲ್ಲ. ಮೊದಲು ಅಪ್ಪಯ್ಯನೇ ಕಹಿಯನ್ನು ಕುಡಿಯಬೇಕಿತ್ತು. ಪಾಪ. ಗಟಗಟ ಕುಡಿದು ತಾವು ಉಡುತ್ತಿದ್ದ ಪಾಣಿಪಂಚೆಯಲ್ಲಿಯೇ ಅಪ್ಪಯ್ಯನು ಮನೆಯಿಂದ ದೂರ ಹೋಗಿ ಸ್ವಲ್ಪ ಹೊತ್ತು ನಿಂತು ಸುಧಾರಿಸಿಕೊಂಡು ಬರುತ್ತಿದ್ದರು. ಅಷ್ಟರೊಳಗೆ ದೊಡ್ಡ ಮಕ್ಕಳಿಗೆ ಹೆದರಿಸಿ, ಸಣ್ಣ ಮಕ್ಕಳನ್ನು ರಮಿಸಿ ಅಂತೂ ಅಮ್ಮನ ಕಷಾಯದ ಸಮಾರಾಧನೆ ಮುಗಿಯುತ್ತಿತ್ತು. ಕೊನೆಯಲ್ಲಿ ತಾನೂ ಕುಡಿಯುತ್ತಿದ್ದಳು. ಆಮೇಲೆ ಕಹಿ ಕುಡಿದು ಸುಸ್ತಾಗಿ ಅಳುತ್ತಿದ್ದ ಸಣ್ಣ ಮಕ್ಕಳನ್ನು ಎತ್ತಿಕೊಂಡು ಸಮಾಧಾನವನ್ನೂ ಮಾಡುತ್ತಿದ್ದಳು. ಎತ್ತಿಕೊಂಡು ತೋಟದಲ್ಲೆಲ್ಲ ತಿರುಗಾಡಿಸಿ ಅಳುವನ್ನು ಮರೆಸುತ್ತಿದ್ದಳು. ಇಷ್ಟಾದರೂ ತೋಟದ ಮೂಲೆ ಸೇರಿದ್ದ ಅಪ್ಪಯ್ಯನು ಮನೆಗೆ ಹಿಂದಿರುಗದಿದ್ದರೆ ತಾನೇ ಹೋಗಿ ಕರೆತರುತ್ತಿದ್ದಳು. ಆಗ ಮುಖ ಊದಿಸಿಕೊಂಡು ಬರುವ ಅಪ್ಪಯ್ಯನ ಮುಖ ಈಗಲೂ ನೆನಪಾಗುತ್ತದೆ. (ಕೆಲವೇ ವರ್ಷಗಳಲ್ಲಿ ಅಪ್ಪಯ್ಯನಿಗೆ ಮಧುಮೇಹವು ಪೀಡಿಸತೊಡಗಿದಾಗ ತಮಗಾಗಿ ಅಪ್ಪಯ್ಯನೇ ಕೊಂಡು ತರುತ್ತಿದ್ದ ಹಾಗಲಕಾಯಿಯಿಂದ - ಅಮ್ಮನು ರಸವನ್ನು ತೆಗೆದು  ಕೊಡುತ್ತಿದ್ದಾಗ ಯಾವ ಪ್ರತಿಕ್ರಿಯೆಯನ್ನೂ ತೋರಿಸದೆ ಅಪ್ಪಯ್ಯ ಕುಡಿಯುತ್ತಿದ್ದರು; ಆಗ ಮರೆಯಲ್ಲಿ ನಿಂತು ಅಮ್ಮ ಅಳುತ್ತಿದ್ದಳು. ಸಿಹಿಯನ್ನು ತುಂಬ ಇಷ್ಟ ಪಡುತ್ತಿದ್ದ ಅಪ್ಪಯ್ಯನು ಮುಂದೆಂದೂ ಸಿಹಿಗಾಗಿ ಬಯಸಲಿಲ್ಲ. ಕೊನೆಯ ಭಾಗದಲ್ಲಿ ಬರೇ ಕಹಿಯನ್ನೇ ಉಂಡು ಉಂಡು ಅವರು ಹೊರಟು ಹೋದರು.)

ಮುಂದೆ...ಅಮ್ಮನು ಕಾಲಮೇಘ, ಕುಟಜಾರಿಷ್ಟ...ಇತ್ಯಾದಿ ಆಯುರ್ವೇದದ ಕಷಾಯಗಳನ್ನು ತರಿಸಿಕೊಂಡು ಬೇವಿನ ಕಷಾಯದ ಬದಲು ಒಮ್ಮೊಮ್ಮೆ ಅದನ್ನೂ ಕೊಡುತ್ತಿದ್ದಳು. ಒಂದು ಎರಡು ಚಮಚದಷ್ಟು ಮಾತ್ರ ಕೊಡುತ್ತಿದ್ದ ಆ ಸಿದ್ಧ ಔಷಧಗಳನ್ನು ಹೆಚ್ಚು ನರಳದೆ ನಾವು ಕುಡಿಯುತ್ತಿದ್ದೆವು. ಹೇಗಿದ್ದರೂ ಕಷ್ಟವು ತಪ್ಪಿದ್ದಲ್ಲ ಎಂದ ಮೇಲೆ ಅದನ್ನು ಅನುಭವಿಸಿ ಜೀರ್ಣಿಸಿಕೊಳ್ಳುವುದೇ ಜಾಣತನ ಎಂಬ ನಿರ್ಧಾರಕ್ಕೆ ಆಗ ನಾವೆಲ್ಲರೂ ಬಂದಿದ್ದೆವು.   

ಇನ್ನು ವಾರಕ್ಕೊಮ್ಮೆ ಮಕ್ಕಳಿಗೆ ಎಣ್ಣೆಸ್ನಾನ ಮಾಡಿಸುವುದು ಅಮ್ಮ ಕೈಗೊಂಡ ವ್ರತದಂತೆ ನನಗೆ ಕಂಡಿದೆ. ಅದಿತ್ಯವಾರದಂದು ಅಭ್ಯಂಜನ ಸ್ನಾನವು ನಮಗೆ ತಪ್ಪುತ್ತಿರಲಿಲ್ಲ. ನಮ್ಮ 5 - 6 ನೇ ತರಗತಿಯ ವರೆಗೂ ನಮ್ಮ ಮನೆಯಲ್ಲಿ ಪ್ರತೀ ಭಾನುವಾರ ಎಣ್ಣೆ ಸ್ನಾನದ ಪದ್ಧತಿ ಇತ್ತು. ಅದು ಅಮ್ಮನೇ ಮಾಡಿಸುವ ಎಣ್ಣೆ ಸ್ನಾನ. ಅಪ್ಪಯ್ಯನಿಂದ ಹಿಡಿದು ಎಲ್ಲ ಮಕ್ಕಳಿಗೂ ಅದು ಕಡ್ಡಾಯವಾಗಿತ್ತು. ಅಮ್ಮನು ಎಲ್ಲರ ಮೈ - ತಲೆಗೂ ಎಣ್ಣೆ ಬಳಿದ ಮೇಲೆ ಅರ್ಧ ಗಂಟೆ ಕಾಲ ಸುಮ್ಮನೆ ಕುಳಿತಿರಬೇಕಿತ್ತು. ಆಮೇಲೆ ಎಣ್ಣೆ ಹಾಕಿದ Seniority ಯಂತೆ ಒಬ್ಬೊಬ್ಬರಿಗೇ ಸ್ನಾನ ಮಾಡಿಸುತ್ತಿದ್ದಳು. ಬಚ್ಚಲಿನ ಒಲೆಯಲ್ಲಿ  ಸೌದೆಯ ಬೆಂಕಿಯಲ್ಲಿ ನೀರು ಕಾಯಿಸಿ, ಒಬ್ಬೊಬ್ಬರನ್ನೇ ಸ್ನಾನ ಮಾಡಿಸಿ ಅಮ್ಮನು ಹೊರಗೆ ಕಳಿಸುತ್ತಿದ್ದಳು. ಆ ಸೌದೆಯ ಬೆಂಕಿಯ ಪರಿಮಳ, ಹಸಿ ಸೌದೆಯಾದರೆ ಅದರ ಹೊಗೆ ಮಿಶ್ರಿತ ಘಾಟು...ಎಲ್ಲವೂ ಈಗಲೂ ಹಸಿಯಾಗಿವೆ. ಈ ಭೂಮಿಯನ್ನು ನಾವು ಪ್ರೀತಿಸುವಂತೆ ಮಾಡುತ್ತಿದ್ದ ಕ್ಷಣಗಳವು. ತನಗೆ ದೈಹಿಕವಾಗಿ ಸುಸ್ತು ಅನ್ನಿಸಿದರೂ ಅಮ್ಮನು ಯಾವತ್ತೂ ಈ ಎಣ್ಣೆ ಸ್ನಾನವನ್ನು ನಿಲ್ಲಿಸಿದವಳಲ್ಲ. ಆದರೆ ಅಂತಹ ದಿನಗಳಲ್ಲಿ ಮಕ್ಕಳಿಗೆ ಎಣ್ಣೆ ಹಾಕುವಾಗ, ಸ್ನಾನ ಮಾಡಿಸುವಾಗ ಅವಳಿಗೆ ಸಹಕರಿಸದೆ ಮಕ್ಕಳು ಅತ್ತಿತ್ತ ಸರಿದಾಡಿದರೆ ಒಮ್ಮೊಮ್ಮೆ ಗದರಿಸುವುದು, ಬೆನ್ನಿಗೆ ಗುದ್ದುವುದೂ ಇತ್ತು. ಮಕ್ಕಳ ಪ್ರಾಯಕ್ಕೆ ಹೊಂದಿಕೊಂಡು ಅಪ್ರಚೋದಿತವಾಗಿ ಅಮ್ಮನ ಶಿಕ್ಷೆಯ ಶೈಲಿಯು ಬದಲಾಗುತ್ತಿತ್ತು!

ನಾವು ದೊಡ್ಡವರಾದ ನಂತರವೂ ಎಣ್ಣೆಸ್ನಾನ ಮಾಡುವಂತೆ ಒಂದೆರಡು ಬಾರಿ ನೆನಪಿಸಿ - ಅವಳ ಮಾತನ್ನು ಅನಂತರವೂ  ಕಾರ್ಯಗತಗೊಳಿಸದೆ ದಿನದೂಡುತ್ತಿರುವ ಸಂಶಯ ಬಂದಾಗ, ಕೊನೆಗೊಮ್ಮೆ ನಮಗೆ ಗದರಿಸುತ್ತಿದ್ದುದೂ ಇತ್ತು. ಅಪ್ಪಯ್ಯನು ಪಕ್ಷವಾತಕ್ಕೆ ತುತ್ತಾಗಿ ಸುಮಾರು ಐದು ವರ್ಷಗಳ ಕಾಲ ಪರಾವಲಂಬಿಯಾಗಿದ್ದಾಗ, ಅವರಿಗೆ ಪ್ರತೀ ದಿನವೂ ಎಣ್ಣೆ ಸ್ನಾನವನ್ನು ಮಾಡಿಸುತ್ತಿದ್ದ ಅಮ್ಮನು ಎಂದೂ ಅದನ್ನು ತಪ್ಪಿಸಿದವಳಲ್ಲ. ಹಿರಿಯರನ್ನು ಸ್ನಾನ ಮಾಡಿಸುವುದು ಎಂತಹ ಆಯಾಸದ ಕೆಲಸ - ಎಂಬುದನ್ನು ಹಾಗೆ ದುಡಿದವರು ಮಾತ್ರ ಬಲ್ಲರು.

ಮಿತಿ ಮೀರಿದ ಸಂಬಳವನ್ನು ಎಣಿಸುತ್ತಿರುವ ಇಂದಿನ ಕೆಲವು ಉದ್ಯೋಗಿಗಳು ತಮ್ಮ ಮನೆಯಲ್ಲೇ Nurse ಇರಿಸಿ ಅಥವ ಯಾವುದೋ ಆಸ್ಪತ್ರೆಯಲ್ಲಿ ಖಾಯಂ ಕೊಠಡಿಯನ್ನು ಏರ್ಪಡಿಸಿ - ತಮ್ಮ ಹೆತ್ತವರನ್ನು ವೈಭವದಿಂದ ಇರಿಸಿದ್ದೇನೆ - ಎಂದುಕೊಳ್ಳುತ್ತಿರುವ ಕಲಿಗಾಲ ಇದು. ಎಷ್ಟು ದುಡ್ಡಿದ್ದರೂ "ಸಾಕು" ಅನ್ನಿಸದ ಈ ದಿನಗಳಲ್ಲಿ ಮನೆಯ ಎಲ್ಲರೂ ದುಡಿಮೆಗೆ ಇಳಿಯುತ್ತಿರುವುದರಿಂದ ಮುದುಕರ ಸೇವೆಗೆ ಆಳನ್ನು ನೇಮಿಸಿಕೊಳ್ಳುವುದೂ ಸಹಜವಾಗುತ್ತಿದೆ! ತಮ್ಮ ಹೆತ್ತವರನ್ನು ವೃದ್ಧಾಶ್ರಮಕ್ಕೆ ಸೇರಿಸದೆ "ಅಷ್ಟಾದರೂ" ನೋಡಿಕೊಳ್ಳುತ್ತಿರುವ ಅಂತಹ ಮಕ್ಕಳು - ಅವರ ಬೆನ್ನನ್ನು ಅವರೇ ತಟ್ಟಿಕೊಳ್ಳುತ್ತ ಉಪಕಾರ ಮಾಡಿದಂತೆ ಬೀಗುವ ದೃಶ್ಯವೂ ಅಲ್ಲಲ್ಲಿ ಕಾಣಿಸುತ್ತಿರುತ್ತದೆ. ಅದೊಂದು ಕಾಲದಲ್ಲಿ ಬೆನ್ನುಬಿಡದೆ ತಮ್ಮನ್ನು ರಕ್ಷಿಸಿದ್ದ ಹೆತ್ತವರ ವೃದ್ಧಾವಸ್ಥೆಯು ಹೊರೆಯಾದಂತೆ ಭಾವಿಸಿ, ಕೇವಲ ಪ್ರತಿಷ್ಠೆ ಮೆರೆಸುವ ಸಾಧನದಂತೆ - ಪ್ರೀತಿಯಿಲ್ಲದೆ ನಡೆಸುವ ಅಂತಹ ಯಾವುದೇ ವೈಭವದ ಸೇವೆಯು - ಹೊರ ಕಣ್ಣುಗಳಿಗೆ ಉಪಕಾರ ಸ್ಮರಣೆಗೆ ಯೋಗ್ಯವೆಂದು ಅನ್ನಿಸಿದರೂ ಅಂತಹ ಸ್ಥಳದಲ್ಲಿ ಸೇವೆಯನ್ನು ಪಡೆಯುವ ಹಿರಿಯರು ಕ್ಷಣಕ್ಷಣವೂ ನೋಯುತ್ತಿರುತ್ತಾರೆ. ದೈಹಿಕವಾಗಿ, ಮಾನಸಿಕವಾಗಿ ದುರ್ಬಲವಾಗುವ ವೃದ್ಧಾಪ್ಯದ ಹೊತ್ತಿನಲ್ಲಿ ಅವರ ಮಕ್ಕಳೇ ತಮ್ಮ ಕೈಯ್ಯಿಂದ ಆ ಹಿರಿಯ ಜೀವಿಗಳ ಆರೈಕೆ ಮಾಡಿದರೆ ಸಿಗುವ ಸುಖವು "ಪಂಚತಾರಾ ವೈಭವ"ದಲ್ಲಿ ಎಂದೂ ಸಿಗಲಾರದು. ಪ್ರತೀದಿನವೂ ಸ್ವಲ್ಪ ಹೊತ್ತು ವೃದ್ಧ ಹೆತ್ತವರ ಜೊತೆಯಲ್ಲಿ ಕೂತು ಮೈಕೈ ನೇವರಿಸುತ್ತ ಪ್ರಿಯವಾದ ಮಾತನಾಡುವುದೂ "ಸಾತ್ವಿಕ ಭರವಸೆಯ ಸೇವೆ" ಅನ್ನಿಸಿಕೊಳ್ಳುತ್ತದೆ. ಮಕ್ಕಳಲ್ಲಿರುವ ಸಂಸ್ಕಾರ - ಸಂಸ್ಕೃತಿಯ ಸತ್ತ್ವಪರೀಕ್ಷೆಯ ಕಾಲವದು. ಮಕ್ಕಳು ತಮ್ಮ ದಿನಚರಿಯನ್ನು ಆಮೂಲಾಗ್ರವಾಗಿ ಪುನಃ  ರೂಪಿಸಿಕೊಳ್ಳಬೇಕಾದ ಸಮಯವದು. ದೈಹಿಕ ಬವಣೆಗೆ ಒಳಗಾದವರಲ್ಲಿ ಅವರ ಮಕ್ಕಳು ಮೂಡಿಸುವ ಭದ್ರ, ಸಾರ್ಥಕ ಭಾವವು - ಹಿಂದಿರುಗಿಸಲಾಗದ ಸೇವಾ ಪ್ರಶಸ್ತಿ.

ಅಂದು ನನ್ನ ಅಪ್ಪಯ್ಯನು ಅನಾರೋಗ್ಯದಲ್ಲಿದ್ದಾಗ ಪ್ರೀತಿಯಿಂದ ಸೇವೆ ಮಾಡುತ್ತಿದ್ದ ಅಮ್ಮನ ರೂಪದಲ್ಲಿ - ಅಂತಹ ಅದೃಷ್ಟವನ್ನು ಪಡೆದಿದ್ದರು. ಹಾಗೆ ದುರ್ಬಲರಾಗಿ ಮಲಗಿದವರನ್ನು ವಾರಕ್ಕೊಮ್ಮೆ, ಹದಿನೈದು ದಿನಕ್ಕೊಮ್ಮೆ ಸ್ನಾನ ಮಾಡಿಸುತ್ತಿದ್ದುದನ್ನು - ಕ್ಷೌರ ಮಾಡುತ್ತಿದ್ದುದನ್ನು ನಾನು ನನ್ನ ಬಾಲ್ಯ ಕಾಲದಲ್ಲಿ ನೋಡಿದ್ದೇನೆ; ಅವರನ್ನು "ಸಾಯುವುದಕ್ಕೆ ಬಿಟ್ಟಂತೆ" ನನಗೆ ಆಗ ಕಾಣಿಸಿದ್ದಿದೆ. ಅಪ್ಪಯ್ಯನು ಪರಾವಲಂಬಿಯಾಗಿದ್ದಾಗ ತನ್ನ ಮಕ್ಕಳನ್ನೂ ಜತೆಗಿರಿಸಿಕೊಂಡು ತನ್ನ ದೇಹವು ಹುಡಿಯಾಗುವಷ್ಟು ದುಡಿದ ಅಮ್ಮ - ಎಂದೂ "ಕಷ್ಟ" ಎಂಬ ಶಬ್ದವನ್ನೂ ಉಸುರಿದವಳಲ್ಲ. ಅಮ್ಮನು ಪ್ರೀತಿಯಿಂದಲೇ ತನ್ನ ಕರ್ತವ್ಯವನ್ನು ನಿಭಾಯಿಸಿದ ಪರಿಯನ್ನು ಈಗ ನೆನಪಿಸಿಕೊಂಡಾಗಲೆಲ್ಲ ಅಮ್ಮನ ಕರ್ಮಯೋಗಕ್ಕೆ ನನ್ನ ತಲೆಬಾಗುತ್ತದೆ. ತನ್ನ ಆಸೆಗಳನ್ನು ಹೂತು ಹಾಕಿ ಕುಟುಂಬದ ಪ್ರೀತಿಯ ನೆಲೆಗಟ್ಟು ಕುಸಿಯದಂತೆ ಹೊಣೆಯರಿತು ನಡೆಯಲೇಬೇಕಾದ - ಅಂದಿನ ತನ್ನ ಕುಟುಂಬದ ವಾಸ್ತವವನ್ನು ಸರಿಯಾಗಿ ಅರ್ಥೈಸಿಕೊಂಡು ಬದುಕಿದ ಅಮ್ಮ ಅವಳು; ಅದು ಬದುಕಿನ ನಿಷ್ಠೆ. ವೃದ್ಧಾಪ್ಯದಲ್ಲಿ ನನ್ನ ಅಮ್ಮನಿಗೂ ಅಂತಹ ಪ್ರೀತಿಯ ಆರೈಕೆಯು ಸಿಕ್ಕಿತ್ತು. (ಅಥವ ನಾವು ಹಾಗೆ ಅಂದುಕೊಂಡಿದ್ದೇವೆ ! ಏಕೆಂದರೆ ಈ ಅಮ್ಮನು ಏನನ್ನೂ ಹೇಳುವವಳಲ್ಲ; ಹೇಳಿಯೂ ಇಲ್ಲ...)


ಮತ್ತೆ ಬಾಲ್ಯಕ್ಕೆ - ಬಾಲ್ಯದ ಭಾನುವಾರದ ಸಡಗರಕ್ಕೆ ಬಂದರೆ,  ಸ್ನಾನದ ನಂತರ ಅಮ್ಮನು ಮಕ್ಕಳ ಕಣ್ಣಿಗೆ ಕಾಡಿಗೆ ಹಾಕುವ ಒಂದು ಕ್ರಮವಿತ್ತು. ಅದು ಅಂಗಡಿಯ ಕಾಡಿಗೆಯಲ್ಲ. ಯಾವುದೋ ಎಣ್ಣೆಯಲ್ಲಿ ಅದ್ಯಾವುದೋ (ಬಹುಶಃ ಹೊನ್ನೆ? ಮಾಡುವ ಕ್ರಮವು ನನಗೆ ನೆನಪಿಲ್ಲ.) ಫಲ..ಇತ್ಯಾದಿ ಬಳಸಿ ಅಮ್ಮನೇ ತಯಾರಿಸುತ್ತಿದ್ದ ಕಾಡಿಗೆ ಅದು. (ಅಮ್ಮನ ಅಪ್ಪಯ್ಯನು - ಅಂದರೆ ನನ್ನ ಅಜ್ಜ - ಆಯುರ್ವೇದ ವೈದ್ಯಶಾಸ್ತ್ರದಲ್ಲಿ ಅನುಭವಿಗಳಾಗಿದ್ದರು. ಅವರ ಜೊತೆಗಿದ್ದ ನನ್ನ ಅಜ್ಜಿಯೂ ಅವನ್ನೆಲ್ಲ ಕಲಿತು ತಮ್ಮ ಮಕ್ಕಳಿಗೆ ಕಹಿ ಔಷಧ ಕೊಡುವುದರಲ್ಲಿ, ಮನೆಮದ್ದಿನಲ್ಲಿ ಅಗ್ರಗಣ್ಯರಾಗಿದ್ದರು. ಅವರಿಂದ ನನ್ನ ಅಮ್ಮನೂ ಕಹಿ ಪ್ರಯೋಗವನ್ನೆಲ್ಲ ಕಲಿತು ನಮ್ಮ ಮೇಲೆ ನಿರ್ದಯವಾಗಿ ಪ್ರಯೋಗಿಸುತ್ತಿದ್ದಳು.) ಭಾನುವಾರದ ಬಿಸಿ ಬಿಸಿಯಾದ ಸ್ನಾನವನ್ನು ಮುಗಿಸಿಯೇ ಅರ್ಧ ಜೀವವಾಗಿರುತ್ತಿದ್ದ ನಮ್ಮನ್ನು ಒಬ್ಬೊಬ್ಬರನ್ನೇ ಕರೆದು ಒತ್ತಿ ಹಿಡಿದುಕೊಂಡು - (ಏಕೆಂದರೆ ಆ ಕಾಡಿಗೆಯ ರುಚಿ ಅರಿತಿದ್ದ ನಾವು ತಪ್ಪಿಸಿಕೊಂಡು ಓಡಲು ಯತ್ನಿಸುತ್ತಿದ್ದೆವು.) ಆ ಕಾಡಿಗೆಯನ್ನು ಕಣ್ಣುಗಳಿಗೆ ತುಂಬುತ್ತಿದ್ದಳು. ತಾನೂ ಹಚ್ಚಿಕೊಳ್ಳುತ್ತಿದ್ದಳು. ಆ ಕಾಡಿಗೆಯಿಂದ ಕಣ್ಣು ಸ್ವಚ್ಛವಾಗುತ್ತದೆ - ಅನ್ನುತ್ತಿದ್ದಳು. ಆದರೆ ಆ ಬಾಲ್ಯದಲ್ಲಿ, ನಮ್ಮ ಕಣ್ಣುಗಳು ಸ್ವಚ್ಛವೇ ಇದ್ದವು. ಏನೂ ತಾಪತ್ರಯವಿರಲಿಲ್ಲ. ಆದರೂ ಕಾಡಿಗೆಗೆ ಕಣ್ಕೊಡಲೇ ಬೇಕಿತ್ತು! "ಅಯ್ಯೋ ಮಕ್ಕಳನ್ನು ಕಾಡಿಗೆ ಹಾಕಿ ಸಿಂಗರಿಸಿದರೆ ಏನು ಕಷ್ಟ?"  ಎಂದುಕೊಳ್ಳುವಂತಿಲ್ಲ. ಏಕೆಂದರೆ, ಅದು ಅಂತಿಂಥ ಕಾಡಿಗೆಯಲ್ಲ. ಕೆಟ್ಟ ಉರಿ! ಅದನ್ನು ಹಚ್ಚಿದ ನಂತರ 10 - 15 ನಿಮಿಷಗಳಷ್ಟು ಹೊತ್ತು ಕಣ್ಣಿನಿಂದ ಧಾರಾಕಾರವಾಗಿ ನೀರು ಸುರಿಯುತ್ತಿತ್ತು. ಹೀಗೆ ವಾರಕ್ಕೊಮ್ಮೆ ಕಣ್ಣೀರು ಸುರಿಸುವ ಅಂಕವು ನಮಗೆ ತಪ್ಪುತ್ತಿರಲಿಲ್ಲ. ತನ್ನ ಮಕ್ಕಳು ಯಾರ ಮೈಮೇಲೂ ಬೆಳ್ಳಿಯಾಗಲೀ ಚಿನ್ನವಾಗಲೀ ಇಲ್ಲದ ಆ ಕಾಲದಲ್ಲಿ ಆ ದುಷ್ಟ ಕಾಡಿಗೆಯನ್ನು ತುಂಬಿಡಲು ಮಾತ್ರ - ಅಮ್ಮನಲ್ಲಿ ಬೆಳ್ಳಿಯ ಕರಡಿಗೆ ಇತ್ತು! ಏಕೆಂದರೆ...ಅಮ್ಮನ ಪಾಲಿಗೆ ಆ ಕಾಡಿಗೆಯು ಅಷ್ಟು ಅಮೂಲ್ಯ!

ಅಲ್ಲಿಗೆ ಅಮ್ಮನ ಭಾನುವಾರದ ಒಂದು ಹಂತದ ಕೆಲಸ ಮುಗಿಯುತ್ತದೆ. ನಮ್ಮ ಇಷ್ಟು ಕೆಲಸಗಳು ಮುಗಿಯುವಾಗ, ಅದಾಗಲೇ ಒಲೆಯಲ್ಲಿ ಬೇಯಲು ಇಟ್ಟ ಅಕ್ಕಿಯು ಅನ್ನವಾಗಿ ತನ್ನ ಪರಿಮಳದಿಂದಲೇ ನಮ್ಮನ್ನು ಕರೆಯುತ್ತಿತ್ತು. ಗಂಟೆಯು ಬೆಳಗಿನ 8 ದಾಟಿರುತ್ತಿತ್ತು. ಸೋತು ಹೈರಾಣಾದ ಎಲ್ಲರಿಗೂ ಆಮೇಲೆ ಗಂಜಿ ಸಮಾರಾಧನೆ. ಕೊಚ್ಚಿಗೆ ಅಕ್ಕಿಯ ಗಂಜಿ, ಒಂದು ಚಮಚ ತುಪ್ಪ, ಅಮ್ಮನೇ ಮಾಡಿದ ಮಿಡಿ ಉಪ್ಪಿನ ಕಾಯಿ. ನೆನಪಾದರೆ ಈಗಲೂ ಬಾಯಲ್ಲಿ ನೀರೂರುತ್ತದೆ. ಅಂದಿನ ಊಟಕ್ಕೆ ಅದೆಂತಹ ರುಚಿ! ಅಥವ ನಮ್ಮ ಬಾಲ್ಯದ ಹಸಿವು ಹಾಗೆ ಅನ್ನಿಸುವಂತೆ ಮಾಡುತ್ತಿತ್ತೆ? ಗೊತ್ತಿಲ್ಲ. ಸೌದೆಯ ಒಲೆಯಲ್ಲಿ, ಮಡಕೆಯಲ್ಲಿ ಗಂಜಿಯು ಬೇಯುವಾಗಲೇ ಬಾಯಲ್ಲಿ ಲಾಲಾರಸವು ಸ್ರವಿಸಲು ಆರಂಭವಾಗುತ್ತಿತ್ತು. ಕಮಕ್ ಕಿಮಕ್ ಅನ್ನದೆ ಹೊಟ್ಟೆ ತುಂಬ ಉಂಡು ಏಳುತ್ತಿದ್ದೆವು. ಕೆಲವೊಮ್ಮೆ ಅಲ್ಲೂ ಅಮ್ಮನ ದಾದಾಗಿರಿ ನಡೆಯುತ್ತಿತ್ತು. ನಮ್ಮ ಮನೆಯಲ್ಲಿ ಎಲ್ಲ ಹೆಣ್ಣು ಮಕ್ಕಳೂ ಊಟದ ಪ್ರಮಾಣದಲ್ಲಿ ಸ್ವಲ್ಪ ಹಿಂದೆ. ಆದರೆ 10 - 11 ವಯಸ್ಸಾದವರು ಉಂಡದ್ದು ಕಡಿಮೆಯಾಯಿತೆಂದು ಅಮ್ಮನಿಗೆ ಅನ್ನಿಸಿದರೆ ಅವಳು ಒತ್ತಾಯದಿಂದ ಅವರಿಗೆ ಬಡಿಸುತ್ತಿದ್ದಳು. "ನಿನ್ ಪ್ರಾಯ ಎಷ್ಟ್ ? ಹಾಕಿದ್ದಷ್ಟ್ ಉಂಡ್ ಏಳ್ .." ಅನ್ನುವ ಜಬರ್ದಸ್ತೂ ಅಮ್ಮನಲ್ಲಿ ಇತ್ತು.

ವರ್ಷಕ್ಕೊಮ್ಮೆ - ಕಡು ಬೇಸಿಗೆಯ ಯಾವುದಾದರೂ ಭಾನುವಾರದಂದು ಅಮ್ಮನು ನಮ್ಮನ್ನೆಲ್ಲ ಗೋಳೋ ಎಂದು ಅಳುವಂತೆ ಮಾಡುತ್ತಿದ್ದಳು. ಅದಕ್ಕೆ ಕಾರಣ - ಹರಳೆಣ್ಣೆಯ ಪ್ರಯೋಗ! ನಮ್ಮ ಮನೆಯಲ್ಲಿ ರಾತ್ರಿಯ ಊಟದ ನಂತರ ಹಾಲು ಕುಡಿಯುವುದು ಕಡ್ಡಾಯವಾಗಿದ್ದರೂ - ಬೆಳಿಗ್ಗೆ ಎದ್ದ ಕೂಡಲೇ ಚಹಾ, ಕಾಫಿ, ಹಾಲು... ಇತ್ಯಾದಿಗಳೆಲ್ಲ ಇರಲಿಲ್ಲ. ನೇರವಾಗಿ ಗಂಜಿ ಊಟ - ಅಷ್ಟೆ. ಆದರೆ ಹರಳೆಣ್ಣೆಯ ಪ್ರಯೋಗದ ದಿನದಂದು ಮಾತ್ರ ದಿನಚರಿಯು ಬದಲಾಗುತ್ತಿತ್ತು. ಮಕ್ಕಳು ಏಳುವಾಗಲೇ ಹಸುವಿನ ಹಾಲು ಕರೆದು ಕಾಯಿಸಿರುತ್ತಿದ್ದ ಅಮ್ಮನು ನಾವು ಹಲ್ಲುಜ್ಜಿ ಬರುವಾಗಲೇ ಬಿಸಿ ಹಾಲಿನ ಪಾತ್ರೆಯನ್ನು ಚಾವಡಿಯಲ್ಲಿ ಇಟ್ಟುಕೊಂಡು ಕೂತಿರುತ್ತಿದ್ದಳು. ಅದರ ಪಕ್ಕದಲ್ಲಿ ದೊಡ್ಡದೊಂದು ಹರಳೆಣ್ಣೆಯ ಸೀಸೆ. ಆ ದೃಶ್ಯವನ್ನು ನೋಡಿದ ಕೂಡಲೇ ಸಂಭವಿಸಬಹುದಾದ ಸಂಕಟವನ್ನು ಗ್ರಹಿಸುತ್ತಿದ್ದ ನಾನು ಅಲ್ಲಿಂದ ಪರಾರಿಯಾಗುತ್ತಿದ್ದೆ. ಮನೆಯ ಹಿಂದಿನ ಹಾಡಿಯ ಯಾವುದೋ ಮರದ ಹಿಂದೆ ಹೋಗಿ ಅಡಗಿಕೊಳ್ಳುತ್ತಿದ್ದೆ. ಆಗ ಅಮ್ಮನು "ಅಯ್ಯೋ ದೇವರೇ, ಆ ಹೆಣ್ಣನ್ ಎಳ್ ಕಂಡ್ ಬಾ; ಓಡ್.." ಅಂತ ನನ್ನ ಅಕ್ಕನನ್ನು ಕಳಿಸುತ್ತಿದ್ದಳು. ಅವಳು ನನ್ನನ್ನು ಹುಡುಕಿ ದರದರ ಎಳೆದುಕೊಂಡು ಬರುತ್ತಿದ್ದಳು. ಅಷ್ಟರಲ್ಲಿ ಬಿಸಿ ಮಾಡಿದ ಹಾಲು ಸ್ವಲ್ಪ ತಣಿದಿರುತ್ತಿತ್ತು. "ಓಡಿದ್ ಎಲ್ಲಿಗ್ ಹೆಣೆ? ಸಮಾ ಗುದ್ದತೆ ಕಾಣ್; ಇದೇನ್ ವಿಷವಾ?...ಸುಮ್ನೆ ಕೂತ್ಕೋ.." ಅಂತ ನನ್ನನ್ನು ಗದರಿಸುತ್ತ, ಆ ಹಾಲನ್ನು ಮತ್ತೊಮ್ಮೆ ಬಿಸಿ ಮಾಡಿಕೊಂಡು ಬರುತ್ತಿದ್ದ ಅಮ್ಮನು - ಅರ್ಧ ಲೋಟ ಬಿಸಿ ಹಾಲಿಗೆ ಒಂದು ದೊಡ್ಡ ಚಮಚ ಹರಳೆಣ್ಣೆ ಸುರಿದು ಪ್ರತಿಯೊಬ್ಬರಿಗೂ ಕುಡಿಯಲು ಕೊಡುತ್ತಿದ್ದಳು. ನಾವು ಒಬ್ಬರ ನಂತರ ಒಬ್ಬರು ಅದನ್ನು  ಕುಡಿಯುವಂತಿರಲಿಲ್ಲ. ಎಲ್ಲರೂ ಒಟ್ಟಿಗೇ ಗಟಗಟ ಕುಡಿಯಬೇಕಿತ್ತು. ಯಾಕೆಂದರೆ ಒಬ್ಬರು ಕುಡಿಯುವಾಗ ಇನ್ನೊಬ್ಬರು ನೋಡಿದರೆ - ಮೊದಲು ಕುಡಿದವರ ಹರಳೆಣ್ಣೆ ಮುಖಭಾವವನ್ನು ನೋಡಿ ತಾವು ಕುಡಿಯಲು ಹಿಂದೇಟು ಹೊಡೆಯಬಹುದು; ಅದರಿಂದ ಅಮ್ಮನ ಕೆಲಸವು ಉದ್ದವಾಗುತ್ತದೆ ಅನ್ನುವ Plan ಅದು. ಅಯ್ಯೋ...ಆ ಹಿಂಸೆಯನ್ನು ಏನೆಂದು ಹೇಳಲಿ? ಆ ದಿನವಿಡೀ ಎಲ್ಲರಿಗೂ ಹಾಡಿಗೆ ಹೋಗುವ Extra ಕೆಲಸ; ಕೆಲವು ಪೆದ್ದು ಮೊದ್ದು ಹೊಟ್ಟೆ ಹುಳಗಳಿಗೂ ಅಂದು ಹರಳೆಣ್ಣೆಯ ಮೋಕ್ಷ ಸಿಗುತ್ತಿತ್ತು. ಆದರೆ ಆ ದಿನ, ಯಾರಿಗೂ ಊಟ ತಿಂಡಿ ಏನೂ ಸೇರುತ್ತಿರಲಿಲ್ಲ; ಏನೋ ಮೈಯೆಲ್ಲ ಅಸಹ್ಯದ...ಅನ್ನಿಸಿಕೆ. ಪ್ರತೀ ವರ್ಷದ ಆ ಹರಳೆಣ್ಣೆಯ ದಿನ ಮಾತ್ರ - ಅದು ಭಾನುವಾರವಾದರೂ ನಮ್ಮ ಮನೆಯು ಯಾವುದೇ ಸದ್ದು ಗದ್ದಲವಿಲ್ಲದೆ ತಣ್ಣಗಿರುತ್ತಿತ್ತು. ನನ್ನ ತಂಗಿಯ ಗಂಟಿಕ್ಕಿದ ಮುಖದ ಹುಬ್ಬುಗಳು - ಕ್ಲಿಪ್ ಹಾಕಿ ಎತ್ತರಿಸಿದಂತೆ ತಲೆಭಾರವನ್ನು ದಿನವಿಡೀ ಆ ಹುಬ್ಬುಗಳೇ ಹೊತ್ತಂತೆ ಇರುತ್ತಿದ್ದವು. ಎಲ್ಲರಿಗೂ ದೈಹಿಕ ಬಳಲಿಕೆಗಿಂತ ಬಹುಶಃ ಅಮ್ಮನ ಮೇಲೆ ವಿಪರೀತ ಸಿಟ್ಟು ಬಂದಿರುತ್ತಿತ್ತು. ನಮ್ಮನ್ನು ಬಲಿಪಶು ಮಾಡಿದಳಲ್ಲಾ...ಎಂಬ ಅಸಹಾಯಕ ಭಾವವದು.

ಆದರೆ ಮರುದಿನ ನಮ್ಮ ದೇಹ, ಮನಸ್ಸು ಎಷ್ಟು ಲವಲವಿಕೆಯಿಂದ ಕೂಡಿರುತ್ತಿತ್ತೆಂದರೆ ಹೊಸ ಉತ್ಸಾಹದ ಅಧ್ಯಾಯವೇ ಆರಂಭವಾದಂತೆ ಅನ್ನಿಸುತ್ತಿತ್ತು. ತನ್ನ ಗಂಡ - ಮಕ್ಕಳ ಆರೋಗ್ಯ, ಹೊಟ್ಟೆಯ ವ್ಯವಸ್ಥೆ ಮುಗಿದ ಕೂಡಲೇ ಅಮ್ಮನು ಎಂದಿನಂತೆ ತನ್ನ ದೈನಂದಿನ ಮನೆವಾರ್ತೆಗೆ ಹೊರಳುತ್ತಿದ್ದಳು. ಅಪ್ಪಯ್ಯನ ಮಿತವಾದ ಗಳಿಕೆ, ಅದಕ್ಕೆ ಪೂರಕವಾಗಿ - ಅಮ್ಮನ ಕಠಿಣ ದೈಹಿಕ ದುಡಿಮೆಯಿಂದಲೇ ಒಂದಷ್ಟು ಉಳಿಕೆ - ಪರಸ್ಪರ ಹೊಂದಾಣಿಕೆ, ಪ್ರೀತಿಯಿಂದಲೇ ನೆಮ್ಮದಿಯ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಿದೆ ಎಂಬುದಕ್ಕೆ ಜ್ವಲಂತ ದೃಷ್ಟಾಂತವಾಗಿ ನಿಂತವರು ನನ್ನ ಹೆತ್ತವರು. ಹಿತ್ತಲು, ಅಂಗಳ, ಹಟ್ಟಿ, ದನಕರು...ಹೀಗೆ ವರ್ಷಗಟ್ಟಲೆ ನಿಯಮಿತವಾಗಿ ತನ್ನ ಸಂಸಾರದ - ಪರೋಕ್ಷವಾಗಿ ಸೃಷ್ಟಿಯ ಯೋಗಕ್ಷೇಮವನ್ನು ಅಚ್ಚುಕಟ್ಟಾಗಿ ನೋಡಿಕೊಳ್ಳುವುದು ಈ ಬ್ರಹ್ಮಾಂಡದ ಯಾವ ದೇವ ಗಣಕ್ಕಾದರೂ ಸಾಧ್ಯವೆ? ತಮ್ಮ ನಿರುಪದ್ರವಿ ನಿಷ್ಠಾಪೂರ್ಣ ಬದುಕಿನಿಂದ, ಸ್ಥಿತಿಕಾರಕನೆಂಬವನಿಗೆ ಸಹಕರಿಸಿ ಉಪಕರಿಸುವ ಇಂತಹ ವಿಶಿಷ್ಟ ಬದುಕುಗಳಿಂದ - ಪರೋಕ್ಷವಾಗಿ ದೈವ ಕಾರ್ಯವೇ ನಡೆಯುತ್ತಿರುತ್ತದೆ. ದೇವರ ಕೈ ಬಲಪಡಿಸಲೆಂದೇ ಪ್ರೀತಿಸುವ ಅಮ್ಮ ಮತ್ತು ಅಪ್ಪ - ನಮಗೆ ಸಿಕ್ಕಿದ್ದು; ನಾವೆಲ್ಲರೂ "ಮೋಹ ಮಮತಾ ಪ್ರಿಯ"ರಾದದ್ದು! ಭೂಮಿಯಲ್ಲಿ ಸಂಸಾರಗಳು ಉಳಿದದ್ದು.

ಅಂದು ಅಪ್ಪಯ್ಯ ಅಮ್ಮನ ಮುಷ್ಟಿಯಲ್ಲಿ ತಿಣುಕಾಡುತ್ತಿದ್ದ ನಮಗೂ ಅಂದು ಕ್ಷಣಿಕವಾಗಿ "ಒತ್ತಾಯ, ಜುಲುಮೆ"ಗಳು ಕಷ್ಟವೆನ್ನಿಸಿರಬಹುದು. ಆದರೆ ಒಂದು ಹಂತದವರೆಗೆ ಮುಷ್ಟಿಯಲ್ಲಿ ಇದ್ದುದರಿಂದಲೇ ನಮ್ಮ ಇಂದಿನ ಬದುಕು ತಕ್ಕಮಟ್ಟಿಗೆ ನೆಟ್ಟಗಿದೆ. SPACE ಎನ್ನುವ Fashion ಗಾಗಿ ಆಕಾಶ ಭೂಮಿಯನ್ನು ಒಂದು ಮಾಡುವ ಇಂದಿನ ನವಜನಾಂಗದ ಎಷ್ಟು ಜನರು ಅವರ Space ನಲ್ಲಿ ಕೂತು ತಪಸ್ಸು ಮಾಡಿ - ಐನ್ ಸ್ಟೈನ್ ಆಗಿದ್ದಾರೆ? ಪೋಕುಬಾರದ CHAT ಗಳಿಗಾಗಿ Space ಜಪ ಮಾಡುವುದು ವ್ಯರ್ಥ ವ್ಯಾಯಾಮ. ಇಂದಿನ SPACE ಜನಾಂಗಕ್ಕೆ ಇವೆಲ್ಲ ಅರ್ಥವಾಗುವುದಿಲ್ಲ. ಅವರಿಗೆ ಎಷ್ಟು Space ಇದ್ದರೂ ಸಾಕಾಗುವುದಿಲ್ಲ. ತಾವು ಇರುವ Space ಒಂದನ್ನು ಬಿಟ್ಟು ಅವರೆಲ್ಲರೂ ಇನ್ನೆಲ್ಲೆಲ್ಲೋ Space ನ್ನು ಹುಡುಕುತ್ತಿರುತ್ತಾರೆ. ಅಸ್ತಿತ್ವದಲ್ಲಿಯೇ ಇಲ್ಲದ ಆ ಗುಂಡಾಂತರದ Space ಸಿಗುವುದಾದರೂ ಹೇಗೆ? ಹುಡುಕಾಟದಲ್ಲಿಯೇ ಅರ್ಧ ಆಯುಷ್ಯವನ್ನು ಕಳೆದುಕೊಂಡ ಮೇಲೆ ಕೊರಗುತ್ತಾರೆ; ಅನಂತರ ನರಳುತ್ತಾರೆ. ಈಗಂತೂ ಪ್ರತಿಫಲಾಪೇಕ್ಷೆಯಿಲ್ಲದೆ ಒಂದು ಕಡ್ಡಿಯನ್ನೂ ಎತ್ತಿಡಲು ಒಲ್ಲದೆ "Selfish Space" ಗಾಗಿ ಹಲುಬುವವರ ಆಲಾಪವು ತಾರಸ್ಥಾಯಿಯಲ್ಲಿದೆ. ಬುದ್ಧಿಯನ್ನು ಕಲುಷಿತಗೊಳಿಸುವ ಈ Space ನ ಚಟವು ಬದುಕನ್ನು ನಷ್ಟಗೊಳಿಸುತ್ತಿರುವ ವ್ಯಾಧಿ. ಬರೇ ಕೂತು ಹೊರಳಾಡುವ, ದೇಹಶ್ರಮಕ್ಕೆ ಹಿಂಜರಿಯುವ ಜನರಿಗೆ ಬದುಕು ಒಲಿಯುವುದಿಲ್ಲ. ಇಂದ್ರಿಯಗಳನ್ನು ಪಳಗಿಸಿ ಸತ್ಕರ್ಮದಲ್ಲಿ ಬಂಧಿಸಲಾಗದವರು - ಸೋಲುವ ಮತ್ತು ಸೋಲಿಸುವ ಬದುಕಿಗೂ ಉದಾಹರಣೆಗಳಾಗಿ ನಿಲ್ಲುತ್ತಾರೆ. ಬದುಕನ್ನು ಶ್ರದ್ಧೆಯಿಂದಲೂ ಕಟ್ಟಬಹುದು ಎಂಬುದಕ್ಕೆ ತನ್ನ 86 ಸಂವತ್ಸರಗಳನ್ನು ಸಾತ್ವಿಕ ಲೆಕ್ಕಾಚಾರದಲ್ಲಿಯೇ ನಿರ್ವಹಿಸಿದ ಅಮ್ಮ ಮತ್ತು ತಮ್ಮ 68 ವರ್ಷಗಳನ್ನು ಮುಗ್ಧ - ವಿನಮ್ರವಾಗಿ ತೂಗಿಸಿದ ಅಪ್ಪಯ್ಯನೇ ಸಾಕ್ಷಿ. ಭೂಮಿಯ ಬದುಕಿನಿಂದ ನಿರ್ಗಮಿಸುವುದರಲ್ಲೂ ಅವರಿಬ್ಬರಲ್ಲಿ ಎಂತಹ ತಾಳಮೇಳವಿತ್ತಲ್ಲ?.....68 - 86 ! ಏರಿಳಿತದಲ್ಲೂ ಹೊಂದಿಕೆಯ ಜೋಕಾಲಿಯಾಟ...ಅಲ್ಲೂ ಲೆಕ್ಕ ಹೊಂದಿಸಿ ಸರಿದೂಗಿಸಿ ನಕ್ಕದ್ದು - ಕೊನೆಗೆ ಹೊರಟ ನನ್ನ ಅಮ್ಮನೇ.




No comments:

Post a Comment