Tuesday, October 6, 2015

ನಾನೊಲಿದಂತೆ (8) - ಇಳಿಯುವ ಸ್ಪರ್ಧೆ !

                                                        

"ನನ್ನ ಗಂಡನು ಅತಿ ಚತುರನು; ಅವನು ಬರೆದದ್ದನ್ನು ಬೇರೆಯವರಾರೂ ಓದಲಾರರು" ಎಂದು ಒಬ್ಬಳು ಜಂಭ ಕೊಚ್ಚಿಕೊಂಡಳು. ಅದನ್ನು ಕೇಳಿದ ಗೆಳತಿಯು "ನನ್ನ ಗಂಡನು ಅದಕ್ಕಿಂತಲೂ ಚತುರನು; ಅವನು ತಾನು ಬರೆದುದನ್ನು ತಾನೇ ಓದಲಾರ.." ಎಂದಳಂತೆ. ಇದಕ್ಕೆ "ಚಟ್ಟು ಕಾಳುಗಳ ಪೊಟ್ಟು ಸ್ಪರ್ಧೆ" ಎನ್ನುತ್ತಾರೆ.  ಇಂತಹ "ಇಳಿಯುವ ಸ್ಪರ್ಧೆ"ಯಲ್ಲಿ ಗಂಭೀರವಾಗಿ ಮುಳುಗಿರುವ ಇಂದಿನ ಕಾಲಘಟ್ಟದಲ್ಲಿ ಭಾರತೀಯ ಸಂಸ್ಕೃತಿಯ ಆಧಾರಗಳಾದ ಬ್ರಹ್ಮ, ಬ್ರಾಹ್ಮಣ, ವೇದ, ಉಪನಿಷತ್ತು...ಇತ್ಯಾದಿ ವಿಚಾರಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲು "ಸ್ವಯಂಘೋಷಿತ ವಿಚಾರವ್ಯಾಧಿ ಗುಂಪಸುರರು" - (ಅಣಬೆಗಳಂತೆ)  ಹುಟ್ಟಿಕೊಳ್ಳುತ್ತಿರುವುದರಲ್ಲಿ ಆಶ್ಚರ್ಯವಿಲ್ಲ.

                                   ಅಸ್ಮಿನ್ ಕಲೌ ಖಲೋತ್ ಸೃಷ್ಟ ದುಷ್ಟ ವಾಗ್ಬಾಣದಾರುಣೇ/
                                   ಕಥಂ ಜೀವೇತ್ ಜಗನ್ನಸ್ಯುಃ  ಸನ್ನಾಹಾಃ ಸಜ್ಜನಾ ಯದಿ//

"ಈ ಕಲಿಯುಗದಲ್ಲಿ ದುಷ್ಟರು ತಮ್ಮ ಮಾತಿನ ಭಯಂಕರವಾದ ಬಾಣಗಳನ್ನು ಬಿಡುತ್ತಿರುತ್ತಾರೆ. ಹೀಗಿರುವಾಗ - ಸಜ್ಜನರು ಇಲ್ಲದಿದ್ದರೆ ಈ ಜಗತ್ತು ಹೇಗೆ ಬಾಳುತ್ತಿತ್ತು?"...ಆದ್ದರಿಂದ ಈ ಜಗತ್ತು ಕೆಲವು ಸಜ್ಜನರನ್ನಾದರೂ ಉಳಿಸಿಕೊಳ್ಳುತ್ತದೆ. ಆದರೆ ದುರ್ಜನರ ನಡುವೆ ಬದುಕುವ ಸಜ್ಜನರು ಹೋಗುತ್ತ ಬರುತ್ತ ಕೊಯ್ಯಿಸಿಕೊಳ್ಳುತ್ತಲೇ ಇರುವುದು ಅನಿವಾರ್ಯ. ಸಜ್ಜನರ ತಲೆಗೆ ದಿನವೂ ಜಪ್ಪುತ್ತ ಮಿಥ್ಯಾ ವಿಲಾಸದಲ್ಲಿ ತೊಡಗಿಕೊಂಡಿರುವ - ಮಂಗನ ಕಾಯಿಲೆಗೆ ತುತ್ತಾದಂತಿರುವ, ಲಂಗುಲಗಾಮಿಲ್ಲದ ಕೆಲವು ಕುತರ್ಕ ಥೂಕಾರಯೋಗ್ಯರಿಂದ ಇಂದಿಗೂ ನಮ್ಮನ್ನು ರಕ್ಷಿಸುತ್ತಿರುವುದು - ಸದ್ವೃತ್ತಿ ನಿರತರ ಸದಾಚಾರ - ಸದ್ವಿಚಾರ ಮತ್ತು ಸಜ್ಜನಿಕೆ. 

ಅನುಭವದ ಅಸ್ತಿವಾರವುಳ್ಳ ಜೀವನಾನುಭವದಿಂದ ಮೂಡಿ ಬಂದಿರುವ, ಪೂರ್ವದ ಸುಭಾಷಿತಗಳ ತತ್ವಾರ್ಥವು ಹೊಳೆದಾಗ ಯಾವುದೇ ಜೀವಕ್ಕೆ ತಾಳುವಿಕೆಯ ಶಕ್ತಿಯೊದಗಿ, ಜೀವಚೈತನ್ಯ ಸಂಚರಿಸಿ, ಮನಸ್ಸು ಸ್ವಚ್ಛ ಬೆಳದಿಂಗಳಾಗುತ್ತದೆ. ಪೂರ್ವದ ಅನೇಕ ಅಮೂಲ್ಯ ಚಿಂತನೆಗಳು ಇಂದಿಗೂ ಉಳಿದು ಬಂದಿರುವುದು - ಇಂತಹ ಚೈತನ್ಯವಂತ ಸ್ವಚ್ಛ ಸಜ್ಜನರ ಸ್ವಂತ ಬಲದಿಂದಲೇ ಹೊರತು ಯಾವುದೇ ಬಾಹ್ಯ "ಪ್ರಾಯೋಜಕ ಪಿತೂರಿ"ಯಿಂದಲ್ಲ.

ಕಾಲದೊಂದಿಗೆ ನಮ್ಮ ಅಭಿರುಚಿ, ಆಸಕ್ತಿಗಳೂ ಇಂದು ಬದಲಾಗುತ್ತಿವೆ. ಹಿತ್ತಲ "ತುಲಸೀ ಗಿಡವು ಮದ್ದಲ್ಲ - ತುರಿಕೆಯ ಗಿಡವೇ ಮದ್ದು" ಎನ್ನುವವರ ಪುಟ್ಟ ಸಂತೆಯೇ ಈಗ ನಮ್ಮ ಸುತ್ತಲೂ ನೆರೆದಿದೆ. "ಶಂಖದಿಂದ ಬಂದರೆ ವಿಷ - ಶಂಖಪಾಲವೇ ಅಮೃತ" ಎನ್ನುತ್ತ ಹೊಸ ವ್ಯಾಖ್ಯೆ ಬರೆಯಲು ಹೊರಟಿರುವ ಹಾಳು ಕಮಂಗಿಗಳು ಈಗೀಗ ಹೆಚ್ಚುತ್ತಿದ್ದಾರೆ. ಒಟ್ಟಿನಲ್ಲಿ, ಸದ್ದು ಮಾಡಿ ಗಮನ ಸೆಳೆಯುವ ಪೊಟ್ಟು ಸ್ಪರ್ಧೆಯ ಇಂತಹ ಚಟ್ಟು ಸೈನ್ಯಕ್ಕೆ ಅಲ್ಲಲ್ಲಿ ರಾಜಾಶ್ರಯವೂ ದೊರೆತಂತೆ ಕಾಣುತ್ತದೆ. ಇಂತಿಪ್ಪ ಹುಡಿ ಸ್ಪರ್ಧೆಯ ಹೊತ್ತಿನಲ್ಲಿ ವಾಗ್ - ಭೀಷಣರ ಪಟಾಪಟಿಯ ಪರಾಕ್ರಮದ ಧೂಳು - ಕೂಳು ನಮಗೆ ನಿತ್ಯದ ತುತ್ತಾಗುತ್ತಿದೆ. ಮಾನವ ಹಕ್ಕುಗಳ ವೇಷದಲ್ಲಿ ಅಶಿಸ್ತಿಗೆ ವಿಶೇಷ ಪರವಾನಿಗೆ ದೊರೆಯುತ್ತಿರುವುದರಿಂದ ವಿದ್ಯಾರ್ಥಿಗಳೂ ವಿದ್ಯಾರ್ಥಿಗಳಾಗಿ ಉಳಿಯುತ್ತಿಲ್ಲ. ಕೆಡುತ್ತಿರುವ ಬಾಲ್ಯ ಕಾಲದ ಮಕ್ಕಳ ಶಿಕ್ಷಣವು ನಮ್ಮನ್ನು ಇಲ್ಲಿಯ ವರೆಗೆ ತಂದು ನಿಲ್ಲಿಸಿದೆ. ಕಾನೂನನ್ನು ತಿರುಚುವ ಶಿಕ್ಷಣವೂ - ಎಲ್ಲ ಕಡೆಯಿಂದಲೂ ನಮ್ಮ ಮಕ್ಕಳಿಗೆ ದೊರೆಯುತ್ತಿದೆ. ಹೀಗೆ ಅಶಿಸ್ತಿನ ನೀರುಂಡ ಗಿಡವು ಈಗ ಬಲಿತು ಹೆಮ್ಮರವಾಗುತ್ತಿದೆ.

1966 ರ ಒಂದು ಘಟನೆ. ಕಲ್ಕತ್ತದ ಹುಗ್ಲಿಯ ಪ್ರಾಥಮಿಕ ಶಾಲೆಯ ಅಧ್ಯಾಪಕರೊಬ್ಬರು ಶಾಲೆಯ ಆರಂಭವನ್ನು ಸೂಚಿಸುವ ಗಂಟೆಯನ್ನು (Bell) ಕೇಳಿಸಿಕೊಳ್ಳದೆ ಸಮಯಕ್ಕೆ ಸರಿಯಾಗಿ ತರಗತಿಗೆ ಹೋಗಲಿಲ್ಲ. ಅದನ್ನು ಗಮನಿಸಿದ ಆ ಶಾಲೆಯ ಮುಖ್ಯೋಪಾಧ್ಯಾಯರು ತರಗತಿಯ ಒಬ್ಬ ವಿದ್ಯಾರ್ಥಿಯಿಂದಲೇ ಆ ತಪ್ಪಿತಸ್ಥ ಅಧ್ಯಾಪಕರ ಕಿವಿ ಹಿಂಡಿಸಿದರಂತೆ. ಅಂದಿನ ಪತ್ರಿಕೆಗಳಲ್ಲಿ ಈ ಸುದ್ದಿಯು ಮಹತ್ವವನ್ನು ಪಡೆದಿತ್ತು. ಜೊತೆಗೆ - "ಗುರುವೇನ್ ಮಹಾ?" ಎಂಬ ಇಂದಿನ ಕಲಿ ಚಿಂತನೆಗೂ ಆಗಲೇ ಬೀಜಾಂಕುರವಾದಂತಾಗಿತ್ತು.

ಗುರುಗಳ ಸ್ಥಾನವು ಅದಾಗಲೇ ಅಲುಗಾಡತೊಡಗಿತ್ತು. ಇತರರಿಗೆ ಬೋಧಿಸುವ ಗುರು ಸ್ಥಾನದಲ್ಲಿ ಕುಳಿತವನಿಗೆ ಅದೊಂದು ಎಚ್ಚರಿಕೆಯ ಗಂಟೆಯೂ ಆಗಿತ್ತು. ತಪ್ಪು ಮಾಡಿದವನು ಸ್ವತಹ "ಗುರು"ವೇ ಆಗಿದ್ದರೂ ಪ್ರಾಯಶ್ಚಿತ್ತವು ಅನಿವಾರ್ಯವಾಗಿತ್ತು. ಆದರೆ ಉಪಾಧ್ಯಾಯರಿಗೆ ಅಂದು ಶಿಕ್ಷೆ ನೀಡಿದ ಸ್ಥಳ ಮತ್ತು ವಿಧಾನವು ಮಾತ್ರ ಇಂದಿಗೂ ಪ್ರಶ್ನಾರ್ಹವಾಗಿದೆ.

ಇಂದಿನ ವ್ಯವಸ್ಥೆಯಲ್ಲಂತೂ ಯಾವುದೇ "ಮಹಾ ಗುರು"ಗಳು ಕಾಣಿಸುವುದಿಲ್ಲ. ಎಲ್ಲರೂ ಪಗಾರ ಪಡೆಯುವ ನೌಕರರೇ ಇದ್ದಾರೆ. ಇಂದು ಓಡಾಡುತ್ತಿರುವ ಅಂತಹ ವೃತ್ತಿ ನಿರತರನ್ನೆಲ್ಲ "ಗುರು" ಎನ್ನಲಾಗುವುದಿಲ್ಲ. ತಾವು ಎಂದೋ ಕಲಿತದ್ದನ್ನು ತರಗತಿಗೆ ಬಂದು ಕಾರಿಕೊಳ್ಳುವ ಅಧ್ಯಾಪಕ ಮಾತ್ರರಾದವರು ಎಂದಿಗೂ ಗುರು ಸ್ಥಾನವನ್ನು ತುಂಬಲಾರರು. ಹಾಗೆ ನೋಡಿದರೆ, ವಿದ್ಯಾರ್ಥಿಗಳ ಸರ್ವತೋಮುಖ ವಿಕಸನಕ್ಕೆ ಪೂರಕವಾದ ಶಿಕ್ಷಣವು ಮಾಯವಾಗಿ ಬಹಳ ವರ್ಷಗಳಾದವು. ಶಿಷ್ಯರ ಹೆಗಲ ಮೇಲೆ ಕೈಹಾಕಿಕೊಂಡು ಹೋಗಿ ಸಿಗರೇಟು ಸೇದುತ್ತಿದ್ದ ಅಧ್ಯಾಪಕರನ್ನು ಹಿಂದೆ ನಾನೇ ನೋಡಿದ್ದೇನೆ. ಅಂತಹ ಅಧ್ಯಾಪಕರನ್ನು "ಒಳ್ಳೆಯವರು" ಎಂದು ಹಾಡಿ ಹೊಗಳುತ್ತಿದ್ದ ಅಂದಿನ ಕೆಲವು ವಿದ್ಯಾರ್ಥಿಗಳನ್ನೂ ಕಂಡಿದ್ದೇನೆ. ಅಂದರೆ ಸುಮಾರು 45 ವರ್ಷಗಳ ಹಿಂದಿನಿಂದಲೇ - ಅಂದರೆ.....ಅರ್ಧ ರಾತ್ರಿಯ ಸ್ವಾತಂತ್ರ್ಯವು ನಮಗೆ ಲಭಿಸಿದ ನಂತರ ನಮ್ಮ "ಗುರು - ಶಿಷ್ಯ" ಮೌಲ್ಯವು ನಿಧಾನವಾಗಿ ಕುಸಿಯುತ್ತ ಬಂದಿದೆ ಎನ್ನಬಹುದು. ಯಾವುದೋ ಯಾರದೋ ಟೋಪಿಯನ್ನು ಅಳತೆ ಹೊಂದದ ಇನ್ನ್ಯಾರಿಗೋ ಇಟ್ಟು ಚೆಂದ ನೋಡುವ ಹುಸಿ ಸಮಾಜವಾದದ ಹೊಡೆತಕ್ಕೆ ಸಿಲುಕಿ, ಭಾರತೀಯ ಮೂಲ ಶಿಕ್ಷಣದ ಸ್ವರೂಪವೇ ಬಣ್ಣ ಕಳೆದುಕೊಂಡು, ರಸಹೀನವಾಗಿ, ಈಗ  ಜೊಗಟಿಯಾಗಿ ಬಿಟ್ಟಿದೆ. ಇಂದು ಕೇವಲ ದುಡ್ಡಿನ ಸಂಪಾದನೆಗಾಗಿ, ತಮ್ಮ ಆಸೆಗಳ ಪೂರ್ತಿಗಾಗಿ, ಸ್ಥಾನ ಗಿಟ್ಟಿಸಿಕೊಳ್ಳುವುದಕ್ಕಾಗಿ, ಪದವಿ - ಪ್ರಶಸ್ತಿ ಪತ್ರದ ನೆರಳಿನಲ್ಲಿ ಅಧ್ಯಾಪಕರು ಹೊರಳಾಡುವಂತಹ ಸನ್ನಿವೇಶವಿದೆ. ಇಂತಹ ಅನರ್ಹ ಸ್ವಾರ್ಥೀ ಶಿಕ್ಷಕ ವರ್ಗದವರು - ತಮ್ಮಂತಹ ಊಸರವಳ್ಳಿಗಳನ್ನೇ ಉತ್ಪಾದಿಸುತ್ತ ಭಾರತದ ಭವಿಷ್ಯವನ್ನು ಭೀಕರವಾಗಿ ರೂಪಿಸಲು ಹೆಣಗಾಡುತ್ತಿದ್ದಾರೆ! ಆದ್ದರಿಂದಲೇ ಪೂರ್ವಾಗ್ರಹಪೀಡಿತ ಮರ್ಕಟ ನ್ಯಾಯವು ಎಲ್ಲೆಂದರಲ್ಲಿ ರಾರಾಜಿಸುತ್ತಿದೆ.

                                            ಮಾರ್ಗಭೇದೀ ಸ್ವಾರ್ಥಪಾಕೀ ಯತಿ
                                                                              ಬ್ರಾಹ್ಮಣದೂಷಕಃ
                                            ಅತ್ಯಾಶೀ ವೇದ ವಿಕ್ರೇತಾ ಪಂಚೈತೇ
                                                                                ಬ್ರಹ್ಮಘಾತಕಾಃ //

"ಬೀದಿಗಳನ್ನು ಹಾಳು ಮಾಡುವವ, ಕೇವಲ ತನ್ನ ಹೊಟ್ಟೆಗಾಗಿಯೇ ಅಡುಗೆ ಮಾಡಿ ಉಣ್ಣುವವ, ಸನ್ಯಾಸಿಗಳನ್ನೂ ಬ್ರಾಹ್ಮಣರನ್ನೂ ನಿಂದಿಸುವವ, ಮಿತಿ ಮೀರಿದ ಆಶೆಯುಳ್ಳವ ಮತ್ತು ವೇದಗಳನ್ನು ಮಾರುವವ... - ಈ ಐವರು ಬ್ರಹ್ಮಹತ್ಯೆ ಮಾಡಿದ ಪಾತಕಿಗಳಿಗೆ ಸಮಾನರು" ಎಂಬುದು ಅಧ್ಯಾತ್ಮದೊಂದಿಗೆ ಸಾಮಾಜಿಕ ಚಿಂತನೆಯನ್ನೂ ಹೊಂದಿದ್ದ - "ಅಂದಿನ" ವಿದ್ವದ್ ಋಷಿಗಳ ಉವಾಚ. ಈ ಋಷಿ ವಾಕ್ಯದ ಪರಿಧಿಯಲ್ಲೇ ಅದರ ಅಂತರ್ಭಾವವನ್ನು ಗಮನಿಸುತ್ತ, ಇದು ಇಂದಿಗೆ ಎಷ್ಟು ಮತ್ತು ಹೇಗೆ ಪ್ರಸ್ತುತ? ಎಂದೂ ಚಿಂತಿಸಬಹುದು. 

"ಬೀದಿಗಳಲ್ಲಿ ಕಸ ಚೆಲ್ಲುವವರು ಮಾತ್ರ ಬೀದಿಗಳನ್ನು ಹಾಳು ಮಾಡುವವರು" ಎಂದುಕೊಂಡು ಸೀಮಿತ ಅರ್ಥದ ನೀತಿಗೇ ಅಂಟಿಕೊಂಡು ನಾವಿಂದು ತೃಪ್ತರಾದರೆ ಅದು "ಬಾಲ ಬದುಕು" ಅನ್ನಿಸಿಕೊಳ್ಳುವುದಿಲ್ಲವೆ? ಕೈಯ್ಯಿಂದ ಎಸೆಯುವ ಕಸದೊಂದಿಗೆ ಕುಟಿಲ ವೈಚಾರಿಕ ಕಸದಿಂದಲೂ ಬೀದಿಯನ್ನು ದಿನವೂ ರದ್ದಿಗೊಳಿಸುತ್ತಿರುವ ಮನುಷ್ಯರಿಂದ ಮುಕ್ತರಾಗಬೇಕಾದ ಸಂದಿಗ್ಧ ಪರಿಸ್ಥಿತಿಯಲ್ಲಿ ಈಗ ನಾವಿದ್ದೇವೆ. ಸಾಮಾಜಿಕ ವರ್ಜ್ಯದ ತ್ಯಾಜ್ಯ ರೂಪದಂತಿರುವ ಇಂದಿನ ಬೆರಳೆಣಿಕೆಯ "ಬುದ್ಧಿ ವ್ಯಾಧಿಗ್ರಸ್ತರು" - ತಮ್ಮ ಉಗ್ರಾಣದಲ್ಲಿ ಕೂಡಿಟ್ಟ ಬುಗುಟು ಬಂದ ಸರಕನ್ನು ವಿಕೃತ ವಿಚಾರದ ರೂಪದಲ್ಲಿ ದಿನವೂ ಬೀದಿವ್ಯಾಪಾರಕ್ಕಿಟ್ಟು ಸಭ್ಯ ಬುದ್ಧಿಗಳನ್ನು ಕಲುಕಲು ಪ್ರಯತ್ನಿಸುವುದೂ "ಬೀದಿಗಳನ್ನು ಹಾಳು ಮಾಡುವ ಕೃತ್ಯ"ವೆಂದೇ - ವಿಶಾಲಾರ್ಥದಲ್ಲಿ ಪರಿಗಣಿಸಬಹುದು.

ಯಾವುದೇ ಸದಾಚಾರ, ಸದ್ವಿಚಾರ, ಸಜ್ಜನಿಕೆಗಳಿಲ್ಲದೆ "ವೃತ್ತಿಭಾರ"ವನ್ನು ಹೊತ್ತುಕೊಂಡ ಗುರು ವೇಷದಿಂದ ಯಾವುದೇ ವಸ್ತು - ವಿಷಯಗಳು ಧನಾತ್ಮಕವಾಗಿ ಪ್ರಕಟವಾಗುವುದು ಕಷ್ಟ. ತಮ್ಮ ಗ್ರಹಿಕೆಯಲ್ಲಿಯೇ ಎಡವಿರುವ ಅಂತಹ ಉಪಾಧ್ಯಾಯರಿಂದ ಶಿಷ್ಯರಿಗೆ ಸುಜ್ಞಾನಸತ್ರ ನಡೆಸುವುದೂ ಅಸಾಧ್ಯ. "ಹೊರಗೆ ಥಳುಕು; ಒಳಗೆ ಹುಳುಕು" ಎಂಬಂತಹ ಬೋಧಕ ಸ್ಥಾನಗಳಿಂದ ಯಾವುದೇ ಸತ್ಕಾರ್ಯವು ಸಾಧ್ಯವಾಗದು. ಅಂತಹ ಸ್ಥಾನಗಳೆಲ್ಲವೂ ಲಾಭದ ಆಸೆಯಿಂದಲೇ ವರ್ತಿಸುವುದು ಸಹಜ. ಜ್ಞಾನದ ಗ್ರಹಿಕೆ ಮತ್ತು ಕಲಿಸುವಿಕೆಯಲ್ಲಿಯೂ ಭೇದಭಾವವನ್ನು ತೋರುವ - ಹೆಸರು ಉಳಿಸುವ ಸಭ್ಯ ಸಜ್ಜನನಾದ ಒಬ್ಬನೇ ಒಬ್ಬ ವಿದ್ಯಾರ್ಥಿಯನ್ನೂ ರೂಪಿಸಲಾಗದ ಅಧ್ಯಾಪಕನು ಎಂದಿಗೂ ಗುರುವೆನ್ನಿಸಿಕೊಳ್ಳಲಾರ. ತನ್ನ ಸ್ಥಾನದ ಬಲದಿಂದ ಸ್ವಂತದ "ಗುಪ್ತ ಕಾರ್ಯಸೂಚಿ"ಯನ್ನು ತನ್ನ ವಿದ್ಯಾರ್ಥಿಗಳ ಮೂಲಕ ಜಾರಿಗೆ ತರಲು ಶಿಕ್ಷಣ ಕ್ಷೇತ್ರದ ಉಪಯೋಗವಾಗಬಾರದು. ಹಾಗೆ ಗುಂಪುಗಾರಿಕೆಯ ತರಬೇತಿ ನೀಡುತ್ತ ಮುಂದಿನ ಪೀಳಿಗೆಯ ದಾರಿ ತಪ್ಪಿಸುವ ಹುನ್ನಾರ ನಡೆಸುವವರು ಅಧ್ಯಾಪಕ ಅನ್ನಿಸಿಕೊಳ್ಳಲೂ ಅರ್ಹರಲ್ಲ. ಇವರೆಲ್ಲರೂ ಮಿತಿಮೀರಿದ ಆಸೆಯುಳ್ಳ ಹೊಸ ಕಾಲದ ಬಂದಳಿಕೆಗಳು. ಬಲವಾದ ಮರದ ಸಾರವನ್ನೇ ಹೀರಿ ಬೆಳೆದು ಅದೇ ಮರವನ್ನು ನಿರ್ನಾಮ ಮಾಡುವ ಬಂದಳಿಕೆಗಳನ್ನು ಮೊಳಕೆಯಲ್ಲಿಯೇ ಗುರುತಿಸಿ ಚಿವುಟದಿದ್ದರೆ ಅನಾಹುತವಾದೀತು. ಅಂದಿನ ಕಾಲದ ಗುರುಸ್ಥಾನವು - ಅನಂತರ ಉಪಾಧ್ಯಾಯನಾಗಿ, ಅಧ್ಯಾಪಕನಾಗಿ, ಈಗ ಶಿಕ್ಷಕ ಎಂಬಲ್ಲಿಗೆ ಬಂದು ನಿಂತಿದೆ. ಜ್ಞಾನದ ಮಾರ್ಗದಲ್ಲಿ ಎಡವದಂತೆ ಕೈ ಹಿಡಿದು ನಡೆಸುತ್ತ ತನ್ನ ವಿದ್ಯಾರ್ಥಿಗಳಿಗೆ ಸನ್ಮಾರ್ಗದ ಪಾಠ ಹೇಳುವವನು - ಎಂಬ ಅರ್ಥದಲ್ಲಿ "ಅಂದಿನ ಗುರು" ವು ಕಾಣಿಸಿಕೊಂಡರೆ ಇಂದು ಅದು ಶಿಕ್ಷಕನೆಂಬ ಸಂಕುಚಿತ ವ್ಯಾಪ್ತಿಯ ಕಂಠಶೋಷಣೆಯ ವೃತ್ತಿಯಾಗಿದೆ. ಅಂತಹ ಸಾಮಾನ್ಯ ಶಿಕ್ಷಕ ಸ್ಥಾನದಲ್ಲಿರುವ ಇಂದಿನ ಕೆಲವು ಉದ್ದಾಮ ಶಿಕ್ಷಕರನ್ನು ನೋಡಿದರೆ "ವಿದ್ಯಾರ್ಥಿಗಳಿಗೆ, ಸಮಾಜಕ್ಕೆ ಇವರು ಶಿಕ್ಷೆಯ ರೂಪದಲ್ಲಿ ಅವತರಿಸಿರಬಹುದೇ?" ಎಂದೂ ಅನ್ನಿಸುವುದಿದೆ. ಅನೇಕ ಅಧ್ಯಯನ ನಿರತ ಸಜ್ಜನ ಅಧ್ಯಾಪಕರುಗಳು ಈಗಲೂ "ಕಲಿಕಾಟ"ಗಳಿಂದ ತಳಮಟ್ಟದಲ್ಲಿ ನರಳುತ್ತ ಉಳಿದುಕೊಂಡಿದ್ದರೂ ಆಸ್ಥಾನ ವಿದ್ವಾಂಸರೆಂದುಕೊಂಡಿರುವ ಬೆರಳೆಣಿಕೆಯ ಋಣಸಂತಾನವು ಸಭ್ಯರನ್ನೆಲ್ಲ ದಾರಿ ತಪ್ಪಿಸಬಲ್ಲ "ಮಾದರಿ"ಗಳಂತೆ ಭೋರ್ಗರೆಯುತ್ತಲೇ ಇದೆ.

ನನ್ನ 9 ಮತ್ತು 10ನೇ ತರಗತಿಯಲ್ಲಿ ನನ್ನ ತಂದೆ ದಿ. ಐರೋಡಿ ಯಜ್ಞನಾರಾಯಣ ಉಡುಪ ರು ನನಗೆ ಕನ್ನಡದ ಅಧ್ಯಾಪಕರಾಗಿದ್ದರು. ಅವರ ಸಮಯ ಪಾಲನೆಯ ಶೈಲಿಯು ಅನುಕರಣೀಯವಾಗಿತ್ತು. ತರಗತಿಯ ಆರಂಭವನ್ನು ಸೂಚಿಸುವ  ಗಂಟೆಯು ಹೊಡೆಯುವ ಮೊದಲೇ ಅವರು ನಮ್ಮ ತರಗತಿಯ ಹೊರಗೆ ನಿಂತಿರುತ್ತಿದ್ದರು. ಗಂಟೆಯು ಹೊಡೆದ ತಕ್ಷಣ ತರಗತಿಯ ಒಳಗೆ ಕಾಲಿಡುತ್ತಿದ್ದರು. "ಗಂಟೆಯು ಹೊಡೆದ ನಂತರ Staff Room ನಿಂದ ಹೊರಟರೆ 3 - 4 ನಿಮಿಷ ತಡವಾಗಬಹುದು; ಹಾಗಾಗಬಾರದು" ಎಂಬ ದೃಷ್ಟಿಯಿಂದ ತರಗತಿಯ ಹೊರಗೇ ನಿಂತು ಕಾಯುವುದು ಅವರ ಶೈಲಿಯಾಗಿತ್ತು. ಒಂದು ತರಗತಿಯು ಮುಗಿದ ನಂತರ ಇನ್ನೊಂದು ತರಗತಿಗೆ ಹೋಗುವ ಮೊದಲು ಹೆಚ್ಚಿನ ಅಧ್ಯಾಪಕರು Staff Room ಗೆ ಹೋಗಿ ತರಗತಿಗೆ ಬರುತ್ತಿದ್ದರೆ ದಿ. ಉಡುಪರು ಒಂದು ತರಗತಿಯಿಂದ ಇನ್ನೊಂದು ತರಗತಿಗೆ ನೇರವಾಗಿ ಹೋಗುತ್ತಿದ್ದರು. ಸಮಯಪಾಲನೆಗೆ ತುಂಬ ಮಹತ್ವವನ್ನು ಕೊಡುತ್ತಿದ್ದ ಕೆಲವೇ ಅಧ್ಯಾಪಕರುಗಳಿದ್ದ ಕಾಲವದು. ಅವರಲ್ಲಿ ಉಡುಪರು ಅತಿ  ವಿಶಿಷ್ಟವೆನಿಸಿದ್ದರು. ಆದರೆ ಎರಡು ತರಗತಿಯ ನಡುವಿನ ಕಿರು ಅವಧಿಯಲ್ಲಿ ಪುರಕ್ಕೆಂದು ಹೊರಗೆ ಓಡಿ ಹೋಗಿ ಬರುವುದನ್ನು ಅಭ್ಯಾಸ ಮಾಡಿಕೊಂಡಿದ್ದ ಕೆಲವು ಚಂಚಲ ಸ್ವಭಾವದ ವಿದ್ಯಾರ್ಥಿಗಳಿಗೆ ಇದೇ ಕಾರಣಕ್ಕೆ ಉಡುಪ್ರ್ ಮಾಷ್ಟ್ರ ಮೇಲೆ ಅಸಮಾಧಾನವೂ ಇತ್ತು. "ಈ ಕನ್ನಡ ಪಂಡಿತರಿಗೆ ಅಷ್ಟ್ ಅಮಸರ ಎಂತಕ್ಕಾ? ಎರಡ್ ನಿಮ್ಶ ತಡ ಆಯ್ ಕ್ಲಾಸಿಗ್ ಹೊಗ್ಗಿರೆ ಎಂತ ಆತ್ ? ಅವ್ರ್ ಬರ್ಲಿಲ್ಲೆ ಅಂತ್ ಇಲ್ಲ್ ಯಾರಾರು ಮರ್ಕತ್ರಾ ?" ಎಂದು ತಮಾಷೆ ಮಾಡುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ನನ್ನ ತರಗತಿಯಲ್ಲಿ ಇದ್ದರು. ಅದನ್ನು ಕೇಳಿಸಿಕೊಂಡ ನಾನು ಅವರ ಮಾತುಗಳನ್ನು ಅಪ್ಪಯ್ಯನಿಗೂ ಹೇಳಿದ್ದೆ. ಆಗ ಅವರು ನಕ್ಕಿದ್ದರು. "ಹುಡುಗಾಟ..." ಎಂದಷ್ಟೇ ಉತ್ತರಿಸಿದ್ದರು. ಅನಂತರವೂ ಅವರ ದಿನಚರಿಯಲ್ಲೇನೂ ಬದಲಾವಣೆಯಾಗಿರಲಿಲ್ಲ.

ದಿ. ಉಡುಪರು ತಮ್ಮ ತರಗತಿಯಲ್ಲಿ ಒಂದು ಕ್ಷಣವನ್ನೂ ವ್ಯರ್ಥ ಮಾಡದೆ ಕನ್ನಡ ಪಾಠದ ಜೊತೆಗೆ ಪೂರಕ ವಿಷಯಗಳನ್ನೂ ಹೇಳುತ್ತಿದ್ದರು. ವಿಭಿನ್ನ ವಿಷಯಗಳನ್ನು ಕೊಟ್ಟು ಒಂದು ವರ್ಷದಲ್ಲಿ ಕನಿಷ್ಠ 20 ಪ್ರಬಂಧಗಳನ್ನು ವಿದ್ಯಾರ್ಥಿಗಳಿಂದ ಬರೆಸುತ್ತಿದ್ದರು; ಅದನ್ನು ತಾವೇ ತಿದ್ದಿ, ಅನಂತರ ತರಗತಿಯಲ್ಲಿ ಪ್ರತಿಯೊಬ್ಬರನ್ನೂ ವೈಯ್ಯಕ್ತಿಕವಾಗಿ ಕರೆದು ಸಲಹೆ ಸೂಚನೆಗಳನ್ನೂ ಕೊಡುತ್ತಿದ್ದರು; ವಿದ್ಯಾರ್ಥಿಗಳನ್ನು ಮಾತನಾಡಿಸಿಯೂ ಅವರ ಭಾಷೆಯನ್ನು ತಿದ್ದುತ್ತಿದ್ದರು. ಕನ್ನಡ ಭಾಷೆಯ ಸೊಗಸು, ಸಾಹಿತ್ಯದ ರುಚಿಯನ್ನು ಸವಿಯುವ ಬಗೆ, ನೆಲ, ಜಲ, ಸದಭಿರುಚಿ, ದೇಶಭಕ್ತಿ...ಇಂತಹ ಹಲವಾರು ವಿಷಯಗಳನ್ನು ರಸವತ್ತಾಗಿ, ಸೋದಾಹರಣ ದೃಷ್ಟಾಂತಗಳೊಂದಿಗೆ ಹೇಳಿ, ಮಕ್ಕಳ ಹಸಿ ಮನಸ್ಸಿನಲ್ಲಿ ಚೈತನ್ಯವನ್ನು ತುಂಬುತ್ತಿದ್ದರು; ಭಾಷೆಯ ನೆಲೆಯಿಂದಲೇ ತನ್ನ  ವಿದ್ಯಾರ್ಥಿಗಳ ಬೌದ್ಧಿಕ ಸ್ತರವನ್ನು ಎತ್ತಲು ಸತತವಾಗಿ ಪ್ರಯತ್ನಿಸುತ್ತಿದ್ದರು. ತಮ್ಮ ತರಗತಿಯು ಮುಗಿದ ಗಂಟೆಯು ಕೇಳಿಸಿದ ತಕ್ಷಣ ಅಂದಿನ ಪಾಠವನ್ನು ಮುಗಿಸಿ, ಕರಿಹಲಗೆಯನ್ನು ಒರೆಸಿ ಸ್ವಚ್ಛಗೊಳಿಸಿ, ಮುಂದಿನ ತರಗತಿಗೆ ವೇದಿಕೆಯನ್ನು ಸಿದ್ಧಪಡಿಸಿ ಹೊರಟು ಬಿಡುತ್ತಿದ್ದರು.

ಮನೆ ಪಾಠ, Insurance Agency ... ಇತ್ಯಾದಿ ವ್ಯವಹಾರ ನಡೆಸಿ ತಮ್ಮ ಕುಟುಂಬವನ್ನು ತೃಪ್ತಿಪಡಿಸುತ್ತಿದ್ದ ಅಧ್ಯಾಪಕರು ಅಂದೂ ಇದ್ದರು. ಆದರೆ ನಮ್ಮ ಕನ್ನಡ ಪಂಡಿತರು ಉಪ ಉದ್ಯೋಗ ನಡೆಸಿ ತಮ್ಮ ವೃತ್ತಿನಿಯಮವನ್ನು ಎಂದೂ ಮೀರಿದವರಲ್ಲ. ಭಾಷೆ, ಸಾಹಿತ್ಯದ ವಿಷಯ ವಿಚಾರಗಳನ್ನು ತಿಳಿದುಕೊಳ್ಳಲು ಮನೆಗೂ ಬರುತ್ತಿದ್ದ ವಿದ್ಯಾರ್ಥಿಗಳಿಗೆ ತಮಗೆ ತಿಳಿದದ್ದನ್ನು ಮುಕ್ತವಾಗಿ ಹಂಚಿದವರಿವರು. ಅದಕ್ಕೆ ಪ್ರತಿಯಾಗಿ ತಮ್ಮಲ್ಲಿ ಬೆಳೆದ ಅಕ್ಕಿ, ತರಕಾರಿ, ಬೆಲ್ಲ...ಎಂದು ಹೇಳಿಕೊಂಡು ಮನೆಗೆ ಹೊತ್ತು ತಂದವರನ್ನು ನಯವಾಗಿ ಗದರಿಸಿ ಹಿಂದಿರುಗಿಸುತ್ತಿದ್ದ "ಅಧ್ಯಾಪಕ ಆದರ್ಶ" ಅವರಲ್ಲಿತ್ತು. ಅವರಿಗೆ ಅನುರೂಪಳಾದ ಪತ್ನಿಯೂ ಜೊತೆಗೂಡಿದ್ದು ಅವರ ಅದೃಷ್ಟ. ತಮ್ಮ ಬದುಕಿನುದ್ದಕ್ಕೂ ಯಾವುದೇ "ಇಳಿಸುವ ಸ್ಪರ್ಧೆ"ಗಳಲ್ಲಿ ತೊಡಗದೆ ತಮ್ಮ ಕರ್ತವ್ಯವನ್ನು ಹೃತ್ಪೂರ್ವಕವಾಗಿ ಮಾಡುವುದರಲ್ಲಿಯೇ ಇಡೀ ಆಯುಷ್ಯವನ್ನು ಮುಗಿಸಿ  ಮೇಲೇರಿದವರವರು. ತಮ್ಮ ಅತ್ಯಂತ ಬಡತನದ ದಿನಗಳಲ್ಲೂ ಯಾವುದೇ ಕ್ಷುಲ್ಲಕ ಆಮಿಷಗಳಿಗೆ ಬಲಿಯಾಗದ ಉಡುಪರಂತಹ ಕೆಲವು ಅಧ್ಯಾಪಕರುಗಳು ಆಗಿನ ಸಮಾಜದಲ್ಲಿ ಅಲ್ಲೊಂದು ಇಲ್ಲೊಂದು ಕಾಣಿಸುತ್ತಿದ್ದವು. ಅಂದೂ ಅಂಥವರು ಯಾವುದೇ ಪ್ರಶಸ್ತಿ ಗೌರವಗಳಿಗೆ ಪಾತ್ರರಾಗುತ್ತಿರಲಿಲ್ಲ. ಕರ್ನಾಟಕದ ಕರಾವಳಿಯ ಭಾಗದ ವಿದ್ವಾಂಸರನ್ನು ಮಲತಾಯಿಯ ಧೋರಣೆಯಿಂದ ನಡೆಸಿಕೊಳ್ಳುವ ಸಾರಸ್ವತ ಲೋಕವು ಆಗಲೇ ಅಸ್ತಿತ್ವದಲ್ಲಿತ್ತು. ಶ್ರೀ ಕೋಟ ಶಿವರಾಮ ಕಾರಂತರು ನನ್ನ ತಂದೆಯವರಲ್ಲಿ ಮಾತನಾಡುತ್ತಿದ್ದಾಗ ಈ ವಿಚಾರವು ಒಮ್ಮೊಮ್ಮೆ ನುಸುಳಿ ಹೋಗುವುದಿತ್ತು. ಆದರೆ ಯಾವುದೇ ವಿದ್ವತ್ತುಂಬಿಲರು ಮಾನ್ಯತೆಗಾಗಿ ಹಂಬಲಿಸುವುದೂ ಇಲ್ಲ; ಚಿಂತಿಸಿ ನೋಯುವುದೂ ಇಲ್ಲ. ಅದೇ ಕರಾವಳಿಯ ಶೈಲಿ ! ಆದರೆ ಉತ್ತಮಿಕೆಯನ್ನು ಗೌರವಿಸುವ, ವಿದ್ವತ್ತಿಗೆ ತಲೆಬಾಗುವ ಸಜ್ಜನಿಕೆಯು ಅಂದಿನ ಕರಾವಳಿಯ ಸಾಮಾಜಿಕ ಪರಿಸರದಲ್ಲಿತ್ತು; ಬೌದ್ಧಿಕ ಭಯೋತ್ಪಾದನೆ - ಗುಂಪುಗಾರಿಕೆಯು ಇನ್ನೂ ಬಲ ಪಡೆದುಕೊಂಡಿರಲಿಲ್ಲ; ಕಾಲುಕೆರೆದು ಜಗಳವಾಡುವವರಿರಲಿಲ್ಲ. ಆದ್ದರಿಂದ ವಿದ್ವಜ್ಜನರು ತಮ್ಮಷ್ಟಕ್ಕೆ ಸುಖವಾಗಿಯೇ ಇದ್ದರು.

ಈಗಲೂ ಸಮರ್ಪಣಾಭಾವದ ಮತ್ತು - "ರಾಜಕೀಯ ಕಡಿಮೆ; ಕೆಲಸ ಜಾಸ್ತಿ" ಎನ್ನುವ ಕೆಲವು ಅಧ್ಯಾಪಕರು ಇದ್ದಾರೆ. ಅಂಥವರಿಂದಲೇ ನಮ್ಮ ಬೀದಿಯು ಈಗಲೂ ಕಿಂಚಿತ್ತಾದರೂ ಸ್ವಚ್ಛವಾಗಿದೆ - ಅಂದುಕೊಳ್ಳಬಹುದು. ಆದರೆ ಎಂತಹ ದುರ್ಭಿಕ್ಷ ಕಾಲದಲ್ಲಿ ನಾವಿದ್ದೇವೆಂದರೆ, ಇಂದು ಸದ್ವಿದ್ಯೆಗೆ ಸುತರಾಂ ರಾಜಾಶ್ರಯವಿಲ್ಲ. ಆದ್ದರಿಂದ ರಾಜಾಶ್ರಯ ಪಡೆಯುತ್ತಿರುವ ಬೂಟಾಟಿಕೆಗಳು ಮಾತ್ರ ಏರುಗತಿಯಲ್ಲಿದೆ. ಇತ್ತ, ಸ್ಥಿರ ಸತ್ಯವಲ್ಲದ ನಿರಂತರ ಬದಲಾಗುತ್ತಿರುವ ಮಾಹಿತಿ ಶಾಸ್ತ್ರದ ಸುತ್ತಲೂ ಅಟಕಾಯಿಸುತ್ತ ಜ್ಞಾನದ ಪರಿಧಿಯನ್ನೇ ಮಿತ ಮತ್ತು ಏಕಮುಖಗೊಳಿಸಿಕೊಂಡಿದ್ದೇವೆ. ತನ್ಮೂಲಕ, ಅಂತಃಶೋಧನೆಗೆ ಒಳಗಾಗದ ಕಚ್ಚಾ ಅರಿವಿನಿಂದಾಗಿ ಆಂತರ್ಯದ ಕೊಳಕು - ಹುಳುಕು ಅಧೋಮುಖವಾಗಿ ಭರದಿಂದ ಇಳಿಯುತ್ತಿದೆ.   

ನಮ್ಮೊಳಗಿನ ವಿದ್ಯೆಯು ನಮ್ಮ ಮುಖದಲ್ಲಿ ನೆಲೆಸಿರುತ್ತದೆ; ವರ್ತನೆ ಮತ್ತು ಮಾತಿನಲ್ಲಿ ಪ್ರತಿಫಲಿಸುತ್ತದೆ. ಬೀಸುಮಾತಿನ ಹೊಣೆಗೇಡಿ ಚಾಟಿಯನ್ನು ಬೀಸುವುದು ನಿಜವಾದ ಶಾರದೋಪಾಸಕರಿಗೆ ಎಂದಿಗೂ ಸಾಧ್ಯವಾಗದ ಕಾರ್ಯ. ಯಾವುದೇ ಸಕಾರಣವಿಲ್ಲದೆ ಕಟುವಾಗಿ ವರ್ತಿಸುವುದೂ ವಿದ್ವಾಂಸರಿಂದ ಸಾಧ್ಯವಾಗದು. ಆದರೆ ಕೆಲವು ಸಡಿಲು ಮುಚ್ಚಳದ "ತುಳುಕಣ್ಣ"ಗಳು ತಮ್ಮೊಳಗನ್ನೆಲ್ಲ ತುಳುಕಿಸುತ್ತ ತಮ್ಮ ಬುದ್ಧಿ ಬೋಗುಣಿಯನ್ನು ಖಾಲಿ ಮಾಡಿಕೊಳ್ಳುವ ಅವಸರಕ್ಕೆ ಬಲಿಯಾಗುವುದಿದೆ. "ಎಲ್ಲರೂ ಕಾಲಿನಿಂದ ನಡೆದಾಡಿದರೆ ನಾನು ಕೈಯಿಂದ ನಡೆಯುತ್ತೇನೆ" ಎನ್ನುವ ಇಂಥವರನ್ನು "ಸಿದ್ಧ ಪುರುಷರು" ಅನ್ನದೆ - "ಮರುಳು" ಎಂದೇ ಗುರುತಿಸುತ್ತಾರೆ.

ಉತ್ತಮ ವಿಚಾರ - ಚಿಂತನೆಗಳು ಎಲ್ಲಿಂದ ಬಂದರೂ ಸ್ವೀಕರಿಸಿದ ಹಿರಿಮೆಯು ಭಾರತೀಯರದು. ನಮ್ಮ ಪೂರ್ವ ಸಾಹಿತ್ಯಗಳಿಗೆ ಹೊಸ ಭಾಷ್ಯವನ್ನು ವ್ಯಾಖ್ಯಾನವನ್ನು ಅನೇಕರು ಮಾಡಿದ್ದಿದೆ. ಯಾವುದೇ ಸಿಂಗಾರಕ್ಕೂ ತನ್ನನ್ನು ಒಡ್ಡಿಕೊಂಡ ಪ್ರಯೋಗಶೀಲ  ಸಂಸ್ಕೃತಿಯ ಹಿನ್ನೆಲೆಯು ಈ ನೆಲಕ್ಕಿದೆ. ಹೃದಯ ವೈಶಾಲ್ಯಕ್ಕೆ ಭಾರತೀಯ ಚಿಂತಕ - ಜ್ಞಾನಿಗಳು ಅನುಪಮ ಉದಾಹರಣೆಯಾಗಬಲ್ಲರು. ಚಾರ್ವಾಕನನ್ನೂ ಗೌರವಿಸಿದ ಭಾರತೀಯರು ನಾವು. ಅಭಿಪ್ರಾಯ ಸ್ವಾತಂತ್ರ್ಯಕ್ಕೆ ಹಿಂದುಸ್ತಾನದಲ್ಲಿ ದೊರೆತಷ್ಟು ಬಲವು ಜಗತ್ತಿನ ಯಾವುದೇ ಇತರ ದೇಶಗಳಲ್ಲಿ ಸಿಗಲಾರದು. ಆದ್ದರಿಂದ ಬರೆಯುವುದು ತಪ್ಪಲ್ಲ. ಆದರೆ ರಾಮನನ್ನು ಧೂಮ ಮಾಡಲು ಹೊರಟರೆ ತುಂಬು ನಾಮವಲ್ಲದೆ ಬೇರೇನೂ ಸಿಗಲಾರದು. ಯಾರೇ ಆಗಲಿ, ಬೇಲಿ ಹಾರಲು ಹೊರಟರೆ ಎಚ್ಚರಿಸುವುದು ಅನಿವಾರ್ಯವಾಗುತ್ತದೆ. ಇಂತಹ ವಿಕೃತ ಶಿಕ್ಷಣ ಸ್ಥಾನಗಳ, ಅಧ್ಯಾಪಕರ "ಕಪಿ" ಮುಷ್ಟಿಯಲ್ಲಿ ಸಿಲುಕಿದ ವಿದ್ಯಾರ್ಥಿಗಳೂ "ಪಿಕ" ವಾಗಲು ಸಾಧ್ಯವಿಲ್ಲ. ಮನಸ್ವಾಸ್ಥ್ಯವಿಲ್ಲದ ಅಧ್ಯಾಪಕರಿದ್ದರೆ - ಸಮಾಜವನ್ನು ಕೆಡಿಸಲು ಬೇರೆ ಆಯುಧಗಳೇ ಬೇಕಿಲ್ಲ. ತನ್ನ ಹೊಟ್ಟೆಪಾಡಿಗಾಗಿ ನಿರ್ವಹಿಸುವ ವೃತ್ತಿಯಿಂದ ಇನ್ನೊಂದು ಜೀವಿಗೆ ತೃಣಮಾತ್ರವೂ ಉಪಕಾರಿಯಾಗಿರದ ವ್ಯಕ್ತಿಗಳು ಒಂದು ಬಗೆಯ ಸಾಮಾಜಿಕ ಪಾತಕಿಗಳು. ರಣ ಹದ್ದು ಬಹಳ ಎತ್ತರವೇನೋ ಹೋಗುತ್ತದೆ; ಆದರೆ ಅದರ ದೃಷ್ಟಿ ಮಾತ್ರ ಕೆಳಗೆ; ಸತ್ತ ಪ್ರಾಣಿಗಳ ಕಡೆಗೆ. ಇದನ್ನೇ ಕೆಟ್ಟ ಅಭಿರುಚಿಯ ಅವಿದ್ಯಾ ಸಂಸಾರ -  ಎನ್ನುವುದು. ಇಂಥವರು ಪರೋಕ್ಷವಾಗಿ ಬೀದಿಗಳನ್ನು ಹಾಳು ಮಾಡುವುದರಲ್ಲಿ ಸಂದೇಹ ಬೇಡ.

ಇನ್ನು ಸನ್ಯಾಸದ ವಿಚಾರಕ್ಕೆ ಬಂದರೆ, ಸನ್ಯಾಸಿಗಳು ಎಂದರೆ ಸರ್ವ ಸಂಗ ಪರಿತ್ಯಾಗಿಗಳು. ಇಂದಿನ ಲಿಂಬೆ, ಮಿಡಿ, ಬೆಂಡೆ, ಮೆಣಸು, ಕೊತ್ತುಂಬರಿಗಳೆಲ್ಲವೂ ಸನ್ಯಾಸಿಗಳೆ?

"ದುಃಖಗಳಲ್ಲಿ ಉದ್ವೇಗವಿಲ್ಲದ ಮನಸ್ಸುಳ್ಳವನೂ ಸುಖದಲ್ಲಿ ಆಸೆಯಿಲ್ಲದವನೂ ಆಸಕ್ತಿ - ಭಯ - ಕ್ರೋಧಗಳಿಲ್ಲದವನೂ ಆದವನು ಸನ್ಯಾಸಿ." (ಭಗವದ್ಗೀತೆ)

"ಅಜ್ಞಾನಿಗಳು ಕರ್ಮದಲ್ಲಿ ಆಸಕ್ತರಾಗಿ ಹೇಗೆ ಕರ್ಮವನ್ನು ಮಾಡುವರೋ ಹಾಗೆಯೇ ಜ್ಞಾನಿಯು ಅನಾಸಕ್ತನಾಗಿ ಲೋಕಸಂಗ್ರಹದ ದೃಷ್ಟಿಯಿಂದ ಕರ್ಮವನ್ನು ಮಾಡಬೇಕು" (ಸಕ್ತಾಃ ಕರ್ಮಣ್ಯವಿದ್ವಾಂಸೋ ಯಥಾ ಕುರ್ವಂತಿ ಭಾರತ / ಕುರ್ಯಾದ್ವಿದ್ವಾನ್ ತಥಾಸಕ್ತಃ ಚಿಕೀರ್ಷುಃ ಲೋಕಸಂಗ್ರಹಮ್ - ಭಗವದ್ಗೀತೆ 3- 25)

ಬ್ರಹ್ಮಚರ್ಯ, ಗಾರ್ಹಸ್ಥ್ಯ, ವಾನಪ್ರಸ್ಥ, ಸನ್ಯಾಸ - ಎಂಬ ನಾಲ್ಕು ಆಶ್ರಮಗಳಿವೆ. ಸನ್ಯಾಸವನ್ನು ಬಿಟ್ಟು ಉಳಿದ ಮೂರು ಆಶ್ರಮಗಳಲ್ಲೂ ಕರ್ಮವನ್ನು ಮಾಡುತ್ತಲೇ ಇರಬೇಕಾಗುತ್ತದೆ. ಆದರೆ ಸನ್ಯಾಸಿಯು ಮಾತ್ರ ದಂಡಕಮಂಡಲುಧಾರಿಯಾಗಿ ಭಿಕ್ಷಾಪಾತ್ರೆಯನ್ನು ಹಿಡಿಯಬೇಕಾಗುತ್ತದೆ. ಸನ್ಯಾಸಿಯು ಕೆಲವು ನಿತ್ಯ ಕರ್ಮಗಳನ್ನು ಮಾಡಿದರೂ ಆತನ ಮನಸ್ಸು ಕರ್ಮಾಸಕ್ತವಾಗಿರುವುದಿಲ್ಲ. ತಾನು ಕರ್ಮಗಳನ್ನು ನಡೆಸುತ್ತಿದ್ದೇನೆ ಎನ್ನುವ ಭಾವನೆಯಾಗಲೀ ತನ್ಮಯತೆಯಾಗಲೀ ಸನ್ಯಾಸಿಗಿರುವುದಿಲ್ಲ. ಕೆಲವೊಮ್ಮೆ ಲೋಕ ಶಿಕ್ಷಣಕ್ಕಾಗಿ ಸನ್ಯಾಸಿಗಳು ನಿತ್ಯ ಕರ್ಮಗಳನ್ನು ಮಾಡುತ್ತಾರೆ. ಒಂದೊಂದು ಜೀವಿಯ ಪ್ರಕೃತಿಗೆ ಹೊಂದುವಂತಹ ವಿಭಿನ್ನ ಸತ್ಕರ್ಮಗಳಲ್ಲಿ ತೊಡಗುವ ಪ್ರೇರಣೆಯನ್ನು ಮತ್ತು ದಾರಿಯನ್ನು - ಗುರುವಾಗಿ  ತೋರಬಲ್ಲವನು ಸನ್ಯಾಸಿ. ಯಾವುದೇ ನಿಂದೆಯು ಸನ್ಯಾಸಿಯನ್ನು ವಿಚಲಿತಗೊಳಿಸುವುದಿಲ್ಲ. ತೀರ ಅನಿವಾರ್ಯವಾಗದೆ ಯಾವುದೇ ಸನ್ಯಾಸಿಯು ಸಾಮಾಜಿಕ ಗೊಂದಲಗಳಲ್ಲಿ ಪ್ರತ್ಯಕ್ಷವಾಗಿ ತೊಡಗಿಕೊಳ್ಳಬಾರದು. ರಾಜಧರ್ಮವನ್ನು ನಿಭಾಯಿಸುವವರ ಚರ್ಯೆಯು ದ್ರೋಹ ಚಿಂತನೆಯೆಂದು ದೃಢಪಟ್ಟಾಗಲೂ ಅದನ್ನು ತಿದ್ದಲು ನೇರವಾಗಿ ಆಜ್ಞಾಪಿಸುವ ಸಾಮರ್ಥ್ಯವಿಲ್ಲದೆ ಯಾವುದೇ ಸನ್ಯಾಸಿ ಎಂದುಕೊಳ್ಳುವವರು ಸಾಮಾಜಿಕ ತಳಮಳಗಳ ಭಾಗವಾಗಬಾರದು. ಸನ್ಯಾಸವು ನಿತ್ಯದ ಪ್ರತಿಭಟನೆಗಳ ಭಾಗವಾಗಲೇಬಾರದು. ಯಾವುದೇ ಸನ್ಯಾಸವನ್ನು ಗೌರವಿಸುವ ಆಯಾ ಸಮಾಜ ಬಂಧುಗಳು ತಮ್ಮ ಆರಾಧ್ಯ ಗುರುಗಳ ಚಿಂತನೆಯನ್ನು ಕಾರ್ಯರೂಪಕ್ಕೆ ತರುವ ಶಕ್ತಿಯನ್ನು ಹೊಂದಿರುವಂತೆ ಅವರನ್ನು ರೂಪಿಸಿದರೆ ಅಷ್ಟೇ ಸಾಕಾಗುತ್ತದೆ. ಆಗ ರಾಜಪೀಠವೇ ಸನ್ಯಾಸೀ ಗುರುವನ್ನು ಹುಡುಕಿಕೊಂಡು ಬರುತ್ತದೆ. ಆಗ ಸನ್ಯಾಸದ ಗೌರವವೂ ಉಳಿಯುತ್ತದೆ; ಹೆಚ್ಚುತ್ತದೆ. ಸಾಮಾಜಿಕ ಬದುಕಿನಿಂದ ಮತ್ತು ದೇಹಭಾವದಿಂದ ದೂರವಿದ್ದು ಸದಾಕಾಲವೂ ಸದನುಷ್ಠಾನ, ಅಧ್ಯಯನ, ಆಧ್ಯಾತ್ಮಿಕ ಚಿಂತನೆ, ಧ್ಯಾನ, ಏಕಾಂತದಲ್ಲಿರುವವನು - ಸನ್ಯಾಸಿ. ಸನ್ಯಾಸಿಯ ಅನುಪಮ ತ್ಯಾಗದ ಪರಿಯನ್ನು ನೋಡಿದ ಇತರ ಕೆಲವರಲ್ಲಾದರೂ ವೈರಾಗ್ಯ, ತ್ಯಾಗದ ಭಾವವು - ಕ್ಷಣಿಕವಾಗಿಯಾದರೂ ಮೂಡುವಂತಾದರೆ ಯಾವುದೇ ಸನ್ಯಾಸವು ಸಾರ್ಥಕವಾಗುತ್ತದೆ. ಕಾಮ ಕಾಂಚನವನ್ನು ತೃಣವಾಗಿ ಭಾವಿಸಿ, ಆಚರಿಸುವ ಸನ್ಯಾಸಿಯ ಶ್ರೇಷ್ಠ ಆಚರಣೆ ಮತ್ತು ಆದರ್ಶವು ಸಾಮಾನ್ಯ ಜೀವಿಗಳನ್ನು ಪ್ರೇರೇಪಿಸುವಂತಿದ್ದರೆ ಮಾತ್ರ ಸನ್ಯಾಸವು ಅರ್ಥಪೂರ್ಣವಾಗುತ್ತದೆ. ಹಾಗಿಲ್ಲದಾಗ, ಇಡೀ ಸನ್ಯಾಸಾಶ್ರಮ ವ್ಯವಸ್ಥೆಯೇ ಪ್ರಶ್ನಾರ್ಥಕವಾಗುತ್ತದೆ.
 
ನಮ್ಮ ದುರದೃಷ್ಟಕ್ಕೆ ಇಂದಿನ ಸನ್ನಿವೇಶದಲ್ಲಿ, ನಮ್ಮ ನಿರೀಕ್ಷೆಯ ಪರಿಪೂರ್ಣ ಸನ್ಯಾಸಿಯನ್ನು ಕಾಣುವುದು ದುರ್ಲಭವೆನ್ನಿಸಿದೆ. ಹೀಗಿರುವಾಗ ಧರ್ಮಾತೀತ ವಾಗಿ - ಸಮಗ್ರವಾಗಿ ನೋಡಿದರೆ, ಗೃಹಸ್ಥರಿಗಿಂತ ತೀವ್ರವಾಗಿ ಲೌಕಿಕದಲ್ಲಿ - ಸಂಸಾರದಲ್ಲಿ ಮುಳುಗಿರುವ ಸನ್ಯಾಸೀ ವೇಷದವರನ್ನು ನಾವು ನಿತ್ಯವೂ ನೋಡುತ್ತಿಲ್ಲವೆ?

ಇನ್ನು ಬ್ರಾಹ್ಮಣ್ಯದ ವಿಚಾರಕ್ಕೆ ಬಂದರೆ, ಬ್ರಾಹ್ಮಣನೆಂದರೆ ಬ್ರಹ್ಮ ಚಿಂತನೆ, ಕರ್ಮಾನುಷ್ಠಾನ, ದಾನ ಧರ್ಮ, ಆತ್ಮೋನ್ನತಿಯ ಚಿಂತನೆಯಲ್ಲಿ ತೊಡಗಿಕೊಂಡು ದುರಾಸೆಯನ್ನು ಮೀರಿದವನಾಗಿರಬೇಕು; ನಿರಪೇಕ್ಷವಾಗಿ ಜ್ಞಾನಪ್ರಸಾರದಲ್ಲಿ ತನ್ಮಯನಾಗಿರಬೇಕು. ದೇಹಬುದ್ಧಿಯು ನಿಯಂತ್ರಣದಲ್ಲಿರಬೇಕು. ನಿಜವಾದ ಬ್ರಾಹ್ಮಣನು ಮಿತ ಅಪೇಕ್ಷೆಗಳೊಂದಿಗೆ ದಾನಧರ್ಮಗಳನ್ನು ಪಾಲಿಸುತ್ತ ಸರಳ ಬದುಕಿನಲ್ಲಿಯೇ ತೃಪ್ತನಾಗಿರಬೇಕು.




ಸುಮಾರು 50 ವರ್ಷಗಳ ಹಿಂದೆ ನಡೆದ ಘಟನೆಯಿದು. ನನ್ನ ತಂದೆ ದಿ. ಯಜ್ಞನಾರಾಯಣ ಉಡುರು ಮತ್ತು ದಿ. ರುಕ್ಮಿಣೀ ಉಡುಪರು ಯಾವುದೋ ಕಾರ್ಯಕ್ಕಾಗಿ ವಢಭಾಂಡೇಶ್ವರಕ್ಕೆ ಹೋಗಿದ್ದರು. (ಉಡುಪಿಯ ಹತ್ತಿರದ ಸಮುದ್ರ ತಟದಲ್ಲಿರುವ ಶಿವ ಕ್ಷೇತ್ರ) ಅಂದಿನ ಸ್ಥಿತಿಗತಿಯಂತೆ - ನಡೆದಾಡಿಕೊಂಡೇ ಓಡಾಡುವ ಜನರು ಆಗ ಹೆಚ್ಚಾಗಿದ್ದರು. ನನ್ನ ಅಪ್ಪಯ್ಯ ಅಮ್ಮನೂ ಅಲ್ಲಿನ ತಮ್ಮ ಕೆಲಸವನ್ನು ಮುಗಿಸಿಕೊಂಡು ಮಧ್ಯಾಹ್ನದ ಹೊತ್ತಿಗೆ ಉಡುಪಿಯತ್ತ ಕಾಲ್ನಡಿಗೆಯಲ್ಲಿ ಬರುತ್ತಿದ್ದರು. ಆ ಮಟಮಟ ಮಧ್ಯಾಹ್ನದ ಬಿಸಿಲಿನಲ್ಲಿ ಅವರು ಬರುತ್ತಿರುವಾಗ ಊರಿನ ಅಂಚಿನಲ್ಲಿದ್ದ ಒಂದು ಮನೆಯ ಜಗಲಿಯಲ್ಲಿ ಮುದಿ ದಂಪತಿಗಳು ಕುಳಿತದ್ದನ್ನು ಕಂಡರು. ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ ಇವರನ್ನು ಕಂಡ ಕೂಡಲೇ ಆ ದಂಪತಿಗಳು ಜಗಲಿಯಿಂದ ಇಳಿದು ಬಂದು ದಾರಿಹೋಕ ದಂಪತಿಗಳ ಏನು ಎತ್ತಗಳನ್ನು ವಿಚಾರಿಸಿದರು. ಅನಂತರ ತಮ್ಮ ಮನೆಗೆ ಆಗಮಿಸಿ ಊಟಮಾಡಿ ಹೋಗಬೇಕು - ಎಂದು ವಿಧ್ಯುಕ್ತವಾಗಿ ಆಮಂತ್ರಿಸಿದರು. ಅಪ್ಪಯ್ಯ ಅಮ್ಮನನ್ನು ತಮ್ಮ ಮನೆಯ ಒಳಗೆ ಕರೆದುಕೊಂಡು ಹೋಗಿ ಕಾಲು ತೊಳೆದು, ಮಣೆ ಇಟ್ಟು ಕುಳ್ಳಿರಿಸಿ ಅವರ  ಬಾಯಾರಿಕೆಯನ್ನು ಪರಿಹರಿಸಿ, ಊಟಕ್ಕೆ ಇಕ್ಕಿದರು. ದಂಪತಿಗಳಿಬ್ಬರೂ ಎದುರಲ್ಲಿ ಕುಳಿತು ಉಪಚರಿಸುತ್ತ ಅಭ್ಯಾಗತರಿಗೆ ಬಡಿಸಿದರು. ಭೋಜನವು ಮುಗಿದ ಮೇಲೆ ತಾವೇ ಅವರ ಕೈ ತೊಳೆಸಿದರು. ಅನಂತರ ದಕ್ಷಿಣೆಯನ್ನು ನೀಡಿ ಸಾಷ್ಟಾಂಗ ನಮಸ್ಕರಿಸಿದರು. "ಇಂದು ನೀವು ದಂಪತಿಗಳು ಬಂದು ಭೋಜನವನ್ನು ಸ್ವೀಕರಿಸಿ ನಮ್ಮನ್ನು ಕೃತಾರ್ಥರನ್ನಾಗಿ ಮಾಡಿದಿರಿ...ಕೃಷ್ಣಾರ್ಪಣ..." ಎಂದು ಹೇಳುತ್ತ ಕಣ್ಣೀರು ಸುರಿಸಿದರು. ಆಗ ನನ್ನ ಅಪ್ಪಯ್ಯನು "ತಮ್ಮ ಊಟ ಮುಗಿಯಿತೆ?" ಎಂದು ಪ್ರಶ್ನಿಸಿದಾಗ - "ಸ್ವಾಮೀ, ಪ್ರತೀದಿನವೂ ನಡೆಸುವ ನಮ್ಮ ನಿತ್ಯಾನುಷ್ಠಾನ, ಅಡುಗೆ, ನೈವೇದ್ಯವನ್ನು ಮುಗಿಸಿದ ನಂತರ ಬ್ರಾಹ್ಮಣರಿಗಾಗಿ ಕಾಯುತ್ತ ನಾವು ಜಗಲಿಯಲ್ಲಿ ಕುಳಿತಿರುತ್ತೇವೆ; ಯಾರಾದರೊಬ್ಬರು ಸಿಗುತ್ತಾರೆ. ಅವರಿಗೆ ಭೋಜನವನ್ನು ಸಮರ್ಪಿಸಿ ಅನಂತರವೇ ನಾವು ಉಣ್ಣುತ್ತೇವೆ. ಇದು ನಮ್ಮ ಬದುಕಿನ ವ್ರತ...ನಮ್ಮ ಊಟವು ಇನ್ನು ಆಗಬೇಕು..." ಅಂದರು. ಆಗ ಅಪ್ಪಯ್ಯನು "ಮಹಾಶಯರೇ, ಈ ಕಾಲದಲ್ಲಿ ದಿನವೂ ಅತಿಥಿ ಅಭ್ಯಾಗತರು ಸಿಗುವುದು ಕಷ್ಟ. ಅಕಸ್ಮಾತ್ ಯಾರೂ ಸಿಗದಿದ್ದರೆ ಏನು ಗತಿ?" ಅಂದಾಗ - "ಅಯ್ಯಾ, ಹಾಗೆ ಆದದ್ದೂ ಇದೆ. ಅಂತಹ ದಿನಗಳಲ್ಲಿ ನಮಗೂ ಊಟವಿಲ್ಲ; ಅಷ್ಟೆ..." ಎಂದರು. ಅನಂತರ ಜಗಲಿಯ ತುದಿಯವರೆಗೆ ವಿನಮ್ರರಾಗಿ ಬಂದು ಅತಿಥಿಗಳನ್ನು ಬೀಳ್ಕೊಟ್ಟರು.

ಕೋಟೇಶ್ವರದಲ್ಲಿ ನಮ್ಮ ಬಿಡಾರವಿದ್ದಾಗ (ಸುಮಾರು 1960 - 65 ರ ಅವಧಿ) ಇಂತಹುದೇ ಪರಿಸರವು ನಮ್ಮ ಮನೆಯಲ್ಲೂ ಇತ್ತು. ಬೀದಿಯ ಬದಿಯಲ್ಲೇ ಇದ್ದ ನಮ್ಮ ಬಿಡಾರಕ್ಕೆ - ಒಂದು ರಾತ್ರಿ ಕಳೆದು ಹೋಗುವ ಇಚ್ಛೆಯಿಂದ - ಅರ್ಧ ರಾತ್ರಿಯಲ್ಲೂ ಕಾಲ್ನಡಿಗೆಯ ಅಭ್ಯಾಗತರು ಬರುತ್ತಿದ್ದರು. ನನ್ನ ಅಮ್ಮನು ಅಂತಹ ಅವೇಳೆಯಲ್ಲಿಯೂ ಕಟ್ಟಿಗೆ ಒಲೆ ಹಚ್ಚಿ ಅವರಿಗೆ ಅಡುಗೆ ಮಾಡಿ ಬಡಿಸುತ್ತಿದ್ದುದು ನನಗಿನ್ನೂ ನೆನಪಿದೆ; ಪಾಯಸದೂಟವನ್ನು ಬಡಿಸಿದ್ದೂ ನೆನಪಿದೆ. ಪಾಯಸ ಪ್ರೇಮಿಯಾದ ನಾನು ಮರುದಿನ ಅಮ್ಮ ಕೊಟ್ಟ ಆ ಹೆಸರು ಬೇಳೆಯ ಪಾಯಸವನ್ನು ಅನೇಕ ಬಾರಿ ಸವಿದ ನೆನಪೂ ಇದೆ. "ರಾತ್ರಿಯ ಹೊತ್ತಿನಲ್ಲಿ ಯಾರಾದರೂ ಅತಿಥಿಗಳು ಬಂದರೆ ಅಗತ್ಯಕ್ಕೆ ಇರಲಿ" -  ಎನ್ನುತ್ತ ಪ್ರತೀದಿನವೂ ಒಂದಷ್ಟು ಮಜ್ಜಿಗೆ ಮತ್ತು ಹಾಲನ್ನು ನನ್ನ ಅಮ್ಮನು ತಪ್ಪದೆ  ಉಳಿಸುತ್ತಿದ್ದುದೂ ನೆನಪಿದೆ. ಆಕೆಯ ದೇಹಾಂತದ ವರೆಗೂ ಇದೇ ಸದ್ಭಾವವನ್ನು, ಕರ್ತವ್ಯ ನಿಷ್ಠೆಯನ್ನು  ಆಕೆಯು ಉಳಿಸಿಕೊಂಡಿದ್ದಳು. ಮನೆಗೆ ಬಂದ ಯಾರೂ ತಮ್ಮ ಹಸಿವನ್ನು ತಣಿಸಿಕೊಳ್ಳದೆ ಹೋಗಬಾರದು ಎಂಬ ವಿಶ್ವ ಕುಟುಂಬದ ಭಾವವು ಅಂದಿನ ಬಹುತೇಕ ಬ್ರಾಹ್ಮಣ ಕುಟುಂಬಗಳಲ್ಲಿಯೂ ನೆಲೆಸಿತ್ತು. ನಮ್ಮ ಮನೆಯಲ್ಲಿ ಸ್ವಲ್ಪ ಹೆಚ್ಚೇ ಇತ್ತು ಎನ್ನಬಹುದು. ಏನನ್ನಾದರೂ ಕೈಯೆತ್ತಿ ಕೊಡುವುದಕ್ಕೆ ಬಡತನವು ಎಂದೂ ಅಡ್ಡಿಯಲ್ಲ; ಮನಸ್ಸು-ಪ್ರೀತಿಯ ಭಾವವು ಮಾತ್ರ ಬೇಕಾಗುತ್ತದೆ. ಆಗ ಪಡೆದವರಿಗೆ ಸಂತೃಪ್ತ ಭಾವ; ಕೊಟ್ಟವರಿಗೆ ಧನ್ಯತಾ ಭಾವ.

ಇಂತಹ ಬ್ರಾಹ್ಮಣ ಆಕಾರಗಳು ಈಗ ಎಲ್ಲಾದರೂ ಕಾಣುತ್ತವೆಯೆ? ಇನ್ನೂ SMART ಆಗದ ಎಲ್ಲೋ ಹಳ್ಳಿಯಲ್ಲಿ ಅಂತಹ ಸಜ್ಜನರು ಇದ್ದರೂ - ಅದು ಬೆರಳೆಣಿಕೆಯಷ್ಟು. ಪ್ರತಿಫಲಾಪೇಕ್ಷೆಯಿಲ್ಲದೆ ಮಾಡುವ ಒಂದಾದರೂ ಕರ್ಮವು ಇಂದಿನ ಸಮಾಜದಲ್ಲಿ ಕಾಣಿಸುತ್ತದೆಯೆ? ಅನ್ನವನ್ನು ಮಾರುವ ವೃತ್ತಿಯನ್ನು ಹಿಡಿದಿರುವವರಿಂದ ತೊಡಗಿ ಎಲ್ಲರೂ - ಇನ್ನೊಬ್ಬರಿಗೆ ಒಂದು ಕಾಳನ್ನೂ ಕೈಯೆತ್ತಿ ಕೊಡಲಾಗದ ಹಂತದಲ್ಲಿ ಬಹುಪಾಲು ಬ್ರಾಹ್ಮಣರು ಸಿಲುಕಿಕೊಂಡಿದ್ದಾರೆ. ನೇಮನಿಷ್ಠೆಗಳೂ ದೂರಾಗಿವೆ. ಯಾರೂ ಯಾರಾಗಿಯೂ ಉಳಿದುಕೊಂಡಿಲ್ಲ. ಇದರಿಂದಾಗಿ, ಕೆಟ್ಟ ಕಲಬೆರಕೆಯ ಕುರೂಪೀ ಸಂಸ್ಕೃತಿಯು ಹರಡುತ್ತಿದೆ. ಈಗ ನಿಜವಾದ ಬ್ರಾಹ್ಮಣರಾಗಲೀ ಸನ್ಯಾಸಿಗಳಾಗಲೀ ನಮ್ಮ ಸುತ್ತಮುತ್ತ ಕಾಣಿಸುವುದಿಲ್ಲ. ಕೆಲವರು ತಾತ್ಕಾಲಿಕ ಲಾಭ ಪಡೆಯಲು - ಇನ್ನು ಕೆಲವರು, ಅನಿವಾರ್ಯವಾಗಿ ನಷ್ಟವನ್ನೇ ಹೊಂದಲು - ಕೆಲಕೆಲವು ಹಣೆಪಟ್ಟಿಯಿಂದ ಗುರುತಿಸಿಕೊಳ್ಳಬೇಕಾದಂತಹ ಸಾಮಾಜಿಕ ವ್ಯವಸ್ಥೆಯಲ್ಲಿ ಈಗ ನಾವಿದ್ದೇವೆ.

ಇನ್ನು...ವೇದಗಳನ್ನು ಮಾರುವವನು ಬ್ರಹ್ಮ ಹತ್ಯೆ ಮಾಡಿದ ಪಾತಕಿಗೆ ಸಮಾನನು ಎನ್ನುವುದಾದರೆ ಈ ಸಾಲಿನಲ್ಲಿ ಸದ್ಯದ ಸಮಾಜದಲ್ಲಿಯಂತೂ ಯಾರೂ ಸಿಗಲಾರರು. ವೇದವನ್ನು ಓದಿದ ಬೆರಳೆಣಿಕೆಯ ಮಂದಿ ಮಾತ್ರವೇ ಇಂದಿನ ಸಮಾಜದಲ್ಲಿ ಕಾಣಸಿಗುತ್ತಾರೆ. ವೇದದ ಮೋಡಿಗೆ ನಿಜವಾಗಿಯೂ ಒಳಗಾದವರು ನಿತ್ಯದ ಜಂಜಾಟಗಳಿಂದ ಸಹಜವಾಗಿಯೇ ದೂರವಿರುತ್ತಾರೆ. ವಕ್ರ ಶುಕ್ರರ ವಾದ ವಿವಾದಗಳಿಂದ ಅಂತರವನ್ನು ಕಾಯ್ದುಕೊಳ್ಳುತ್ತಾರೆ. ಅಂತಹ ನಿಷ್ಠೆ ನೈಮಿತ್ತಿಕಗಳಿಲ್ಲದೆ ಯಾವ ವೇದವೂ ಒಲಿಯದು. ವೇದ ಪಾರಂಗತರು ಸಾಮಾನ್ಯವಾಗಿ ಹೆಚ್ಚು ಸದ್ದನ್ನು ಮಾಡುವುದಿಲ್ಲ. ತುಳುಕದಿರುವುದು ಜ್ಞಾನ (ವೇದ) ದ ಸಹಜ ಗುಣ. ಅಕಸ್ಮಾತ್ ವೇದಜ್ಞರು ಸದ್ದು ಮಾಡಿದರೆ "ಅದು ಅರೆಬರೆ ವಿದ್ಯೆ; ವೇದವನ್ನು ಮಾರಿ ಹೊಟ್ಟೆ ತುಂಬಿಸಿಕೊಳ್ಳುವ ಘಾತಕತನ" ಎಂದೂ ಅಂದುಕೊಳ್ಳಬಹುದು. ಈಗಲೂ ವೇದವನ್ನು ಮಾರುವ ಯೋಗ್ಯತೆಯುಳ್ಳವರು ಎಲ್ಲೋ ಕೆಲವರಿದ್ದರೆ ಕೊಳ್ಳುವ ಯೋಗ್ಯತೆಯುಳ್ಳವರು ದುರ್ಲಭ; ಅಕಸ್ಮಾತ್ ಕೊಳ್ಳುವವನಿದ್ದರೆ ಸಮರ್ಥವಾಗಿ ಮಾರಬಲ್ಲವನೇ ಇಲ್ಲ...  ಎಂಬಂತಾಗಿದೆ. ಈ ಹಿನ್ನೆಲೆಯಲ್ಲಿ ವೇದವು ಸದ್ಯಕ್ಕೆ ಸುರಕ್ಷಿತವಾಗಿದೆ! (ಅಂದುಕೊಳ್ಳಬಹುದು!) ಅಥವ ತನ್ಮೂಲಕ ಸ್ವತಹ ವೇದವೇ ತನ್ನನ್ನು ತಾನು ರಕ್ಷಿಸಿಕೊಂಡಿರಬಹುದೆ? ಎಂದೂ ಅನ್ನಿಸುವುದಿದೆ. ಏನೇ ಆದರೂ ಪಾತಕಕ್ಕೂ ಘಾತಕಕ್ಕೂ ವೇದವಿರುವಲ್ಲಿ ಎಂದಿಗೂ ಅವಕಾಶವಿಲ್ಲ.

ಸಾಮಾಜಿಕ ಚಿಂತನೆಯಿದ್ದ ಪೂರ್ವದ ಋಷಿವಾಕ್ಯಗಳನ್ನು ವಸ್ತು ನಿಷ್ಠವಾಗಿ ಪೂರ್ಣ ಗೌರವದಿಂದ ನೋಡಿ ಇಂದೂ ಅಳವಡಿಸಿಕೊಳ್ಳಲು ಸಾಧ್ಯವಿದೆ. ಅದು Improvisation (ಉನ್ನತೀಕರಣ) ಆಗಿರಬೇಕು; ಇಳಿಯುವ ಆಟವಾಗಬಾರದು. ಏಕೆಂದರೆ ಕಲಿಯುಗದಲ್ಲಿ ನಾವೀಗ ಬಹು ದೂರ ಬಂದಿದ್ದೇವೆ. "ಕಡಿಮೆ ದುಃಖ ಹೆಚ್ಚು ಸುಖ" - ಎಂಬ ಎಲ್ಲೂ ಅಸ್ತಿತ್ವವೇ ಇಲ್ಲದ ಮಾಯಾವಿಯನ್ನು ಮುಷ್ಟಿಯಲ್ಲಿರಿಸಿಕೊಳ್ಳಲು ನಾವೀಗ ತಿಣುಕಾಡುತ್ತಿದ್ದೇವೆ. ಕರ್ಮಶೀಲತೆ ಮತ್ತು ಸದ್ವಿಚಾರಗಳತ್ತ ನಮ್ಮ ಆಕರ್ಷಣೆ ತಗ್ಗುತ್ತಿದೆ. ಏಕೆಂದರೆ ನಮಗೀಗ ಎಲ್ಲವೂ ಸುಲಭದಲ್ಲಿ ಸಿಗಬೇಕು; ದೇವರೂ ಕೂಡ! (ಅದೂ ದೇವರಿಗೆ ಬೇಕಿದ್ದರೆ...) "ಒಂದು ಕಡೆ ಇಟ್ಟ ಅಂಡನ್ನು ಅಲುಗಾಡಿಸದೆ ಕೂತರೂ ನಮ್ಮ ಬದುಕು ಸಾಂಗವಾಗಿ ನಡೆಯಬೇಕು" - ಎಂಬ ದಿಕ್ಕಿನಲ್ಲಿ ನಾವೀಗ ಹೆಜ್ಜೆ ಹಾಕುತ್ತಿದ್ದೇವೆ. ಇಂದ್ರಿಯ, ಮನಸ್ಸು, ಬುದ್ಧಿಯನ್ನು ನಿಯಂತ್ರಿಸಿ ವಿದ್ಯೆಯ ಉಪಾಸಕರಾಗುವ ವಿದ್ಯಾ ಪರಿಸರದ ಕೊರತೆಯೂ ಇದೆ. ಭಾರತದ ಸಾಂಪ್ರದಾಯಿಕ ಶಿಕ್ಷಣಕ್ಕೆ ಪುನಶ್ಚೇತನ ನೀಡಿ ಗುಣವರ್ಧನೆ ಮಾಡುವ ಅಗತ್ಯವಿದೆ. ಇಂದಿನ ನಮ್ಮ ಶಿಕ್ಷಣ ಶಾಸ್ತ್ರವು ಅನಾಥಾಲಯದ ಶಿಶುವಿನಂತಿದೆ. ಪ್ರೀತಿಯಿಲ್ಲದೆ ಎಡೆಯಲಿಕ್ಕಿದ ಅನ್ನದಂತಿದೆ. ಇಂದಿನ ಶಿಕ್ಷಣವು ವ್ಯಕ್ತಿತ್ವ ನಿರ್ಮಾಣಕ್ಕೆ ಪೂರಕವಾಗಿ ಇಲ್ಲವೇ ಇಲ್ಲ. ಆದ್ದರಿಂದಲೇ ಕೆಟ್ಟ ಗುರು, ಕೆಟ್ಟ ಶಿಷ್ಯ, ಕೆಟ್ಟ ಸಾಮಾಜಿಕ ಪರಿಸರಕ್ಕೆ ನಾವೆಲ್ಲರೂ ಸಾಕ್ಷಿಯಾಗುತ್ತಿದ್ದೇವೆ. ಪದವಿ ಪತ್ರದ ಆಧಾರದಲ್ಲಿ ವಿದ್ಯೆಯ ಆಳ ಅಗಲಗಳನ್ನು ಅಳೆಯುವ ಕೆಟ್ಟ ಅಪ್ರಾಯೋಗಿಕ ಪ್ರಯೋಗದಿಂದಲೇ ನಾವಿಂದು ಸೋಲುತ್ತಿದ್ದೇವೆ. "ಅಳೆಯುವವನೂ ಲೊಳಲೊಟ್ಟೆ; ಅಳೆಸಿಕೊಳ್ಳುವವನು ಕೊಳೆತ ಮೊಟ್ಟೆ" - ಎಂಬ ಜೋಡಾಟ ಈಗ ನಡೆಯುತ್ತಿದೆ. ಆದ್ದರಿಂದಲೇ ಇಂದಿನ ಮಾತು ಕೃತಿಗಳು ಅಲ್ಲಲ್ಲಿ ಹಳಿ ತಪ್ಪುತ್ತಿವೆ.

                                        ಉದ್ದುರುಟು ಮಾತಾಡಿ ಇದ್ದುದನು ಹೋಗಾಡೆ
                                        ಉದ್ದನ ಮರದ ತುದಿಗೇರಿ ಕೈಜಾರಿ
                                        ಬಿದ್ದು ಸತ್ತಂತೆ ಸರ್ವಜ್ಞ

ವಿನಯ ವಿವೇಕವಿಲ್ಲದ ವಿದ್ಯೆಯಿಂದ ಅಪಾರ ನಷ್ಟವುಂಟಾಗುತ್ತದೆ. ಆದರೆ...ಶ್ವಾನದಂತಾನೆ ಬೊಗಳಿದರೆ ಆನೆಯ ಮಾನವೇ ಹಾನಿ. ಆದ್ದರಿಂದ ಪೂರ್ವಾಪರ ತಿಳಿಯದೆ ತೂರಿಬಿಡುವ ಯಾವುದೇ ಮಾತು - ವರ್ತನೆಯು ಅವಿವೇಕದ ಮಾದರಿಯಾಗಿ ಬಹುಕಾಲ ಪೀಡಿಸುತ್ತ ಉಳಿಯುತ್ತದೆ.

ಉಳಿಯೇಟು ಬೀಳದೆ ಯಾವುದೇ ಕಲ್ಲು ಶಿಲ್ಪವಾಗದು; ಅಂತೆಯೇ ಶಿಕ್ಷೆಯ ಭೀತಿಯಿಲ್ಲದೆ ವ್ಯಕ್ತಿತ್ವ ನಿರ್ಮಾಣ ಸಾಧ್ಯವಾಗದು. ಉಪಾಧ್ಯಾಯರಿಗೆ ತಮ್ಮ ವಿದ್ಯಾರ್ಥಿಗಳನ್ನು ಪ್ರೀತಿಯಿಂದ ನಡೆಸಿಕೊಳ್ಳುವ ಮತ್ತು ಶಿಕ್ಷಿಸುವ ಎರಡೂ ಹಕ್ಕುಗಳಿವೆ. ವಿದ್ಯಾರ್ಥಿಗಳಿಗೆ ತಮ್ಮ ಸಂಶಯಗಳನ್ನು ವಿಧೇಯತೆಯಿಂದ ಪ್ರಶ್ನಿಸಿ ತಿಳಿದುಕೊಳ್ಳುವ ಹಕ್ಕಿದೆ; ಅಷ್ಟೆ. ಆದರೆ ಇಂದಿನ ಪಾಶ್ಚಾತ್ಯ ತೆವಲಿನ ತಿರುಪೋಕಿತನದಿಂದಾಗಿ ಭಾರತದ ಸಂಪನ್ನ ವಿದ್ಯಾ ಕ್ಷೇತ್ರವು ರುಂಡವಿಲ್ಲದೆ ನಲುಗುವಂತಾಗಿದೆ. ವಿದ್ಯಾರ್ಥಿಯು ಅಧ್ಯಾಪಕನಿಗೆ ಹೊಡೆದರೆ "ಭೇಶ್" ಎನ್ನುವ, ಅದಕ್ಕೆ ತದ್ವಿರುದ್ಧವಾಗಿ ಶಿಕ್ಷಕರು ವಿದ್ಯಾರ್ಥಿಗೆ ಥಳಿಸಿದಾಗ ಹಾಹಾಕಾರವೆಬ್ಬಿಸುತ್ತ ಶಿಕ್ಷಕ ವೃಂದವನ್ನು ಮುತ್ತಿ ಪೀಡಿಸುವ ಇಂದಿನ ಮಾಧ್ಯಮಗಳು ವಿದ್ಯಾರ್ಥಿಗಳ ಬದುಕನ್ನು ನಿಶ್ಚಯವಾಗಿ ಹಾಳುಗೆಡವುತ್ತಿದ್ದಾರೆ. ಇಂತಹ ಘಟನೆಗಳು ಸ್ಥಳೀಯವಾಗಿ ಮುಗಿದು ಹೋದರೆ ತಕ್ಕಮಟ್ಟಿಗಾದರೂ ಸಾಮಾಜಿಕ ಸ್ವಾಸ್ಥ್ಯವು ಉಳಿಯುತ್ತದೆ. ಅದಲ್ಲದೆ ಇಂತಹ ಅನರ್ಥಕಾರೀ ಘಟನೆಗಳಿಗೆ "ಸಾಧನೆ" ಎಂಬಂತೆ ದೇಶವ್ಯಾಪೀ ಪ್ರಚಾರವು ದೊರೆತರೆ ಅಂತಹ ಅಪರಾಧಿಗಳಿಗೆ ಅಪರಾಧವೆಸಗುವ ಹೊಸಹೊಸ ದಾರಿಗಳನ್ನೂ ಸೂಚಿಸಿದಂತಾಗದೆ? ಆದ್ದರಿಂದಲೇ ಹುಚ್ಚು ಕುದುರೆಯೇರಿದಂತೆ - ದೇಶಪ್ರೇಮವಿಲ್ಲದಂತೆ ವರ್ತಿಸುತ್ತಿರುವ ಇಂದಿನ ಮಾಧ್ಯಮಗಳ ಕಾರ್ಯಸೂಚಿಯು ಯಾವುದೋ ಹೊರ ದೇಶದಲ್ಲಿ ರಹಸ್ಯವಾಗಿ ಸಿದ್ಧವಾಗುತ್ತಿರಬಹುದೆ? ಎಂದೂ ಬಲವಾಗಿ ಅನ್ನಿಸುತ್ತದೆ. "ತರಗತಿಯು ಮುಗಿಯುವ ವರೆಗೆ ನಿಂತಿರು" - ಎಂದು ತರಗತಿಯಲ್ಲಿ - ಶಿಕ್ಷಕರು ವಿದ್ಯಾರ್ಥಿಗೆ ಶಿಕ್ಷಾ ರೂಪದಲ್ಲಿ ಹೇಳಿದರೆ - ಅಷ್ಟಕ್ಕೇ ಅವಮಾನವಾಗಿ ಮುಂದೆಂದೂ ಅಂತಹ ತಪ್ಪನ್ನು ಹಿಂದಿನ ವಿದ್ಯಾರ್ಥಿಗಳು ಮಾಡುತ್ತಿರಲಿಲ್ಲ. ಆದರೆ ಇಂದಿನ ಮಾಧ್ಯಮಗಳಿಗೆ ತೆರೆದುಕೊಂಡಿರುವ ನಮ್ಮ ಮಕ್ಕಳು ಅಷ್ಟೊಂದು ಸಂವೇದನಾಶೀಲರಾಗಿಯೂ ಉಳಿದಿಲ್ಲ. ದಿನವೂ ಬಗೆಬಗೆಯ ದುಷ್ಟತನವನ್ನು ನೋಡುತ್ತಲೇ ಅವರೆಲ್ಲರೂ ಬೆಳೆಯುತ್ತಿದ್ದಾರೆ. ಆದ್ದರಿಂದಲೇ ಮಕ್ಕಳ ಭಾವತಂತುಗಳು ಸ್ಪಂದನಹೀನವಾಗಿ - ಜಡವಾಗಿ ಹೋಗಿವೆ. "ದುಷ್ಟತನವು ತಮ್ಮ ಜನ್ಮಸಿದ್ಧ ಹಕ್ಕು" ಎಂದು ಇಂದಿನ ವಿದ್ಯಾರ್ಥೀ ಸಮೂಹವು ತಿಳಿದುಕೊಂಡಂತೆಯೂ ಭಾಸವಾಗುತ್ತದೆ. "ಮಕ್ಕಳನ್ನು ಗಟ್ಟಿಗೊಳಿಸುವ ವಿಧಾನ" ಎನ್ನುತ್ತ Ragging ನ್ನೂ ಪ್ರೋತ್ಸಾಹಿಸುವ ನಷ್ಟಬುದ್ಧಿಯವರು ಈಗಲೂ ಇದ್ದಾರೆ! ಒಟ್ಟಿನಲ್ಲಿ ಮಾನವಂತರಾಗಿರುವುದು ಈಗ ಶ್ರೇಷ್ಠತೆಯ ಲಕ್ಷಣವಾಗಿ ಉಳಿದಿಲ್ಲ. ಇಷ್ಟಾಗಿಯೂ ಮಾನವಂತರಾಗಿ ಇನ್ನೂ ಉಳಿದಿರುವವರು ತಮ್ಮ ಶೈಕ್ಷಣಿಕ ಪರಿಸರದಲ್ಲಿ "ಪೆದ್ದು, ನಾಲಾಯಕ್" ಎಂಬ ಅವಹೇಳನಕ್ಕೂ ಒಳಗಾಗುತ್ತಿದ್ದಾರೆ. ಆದ್ದರಿಂದ "ಜಾಣ, ದೊಡ್ಡವರು" ಎಂದು ಹೇಳಿಸಿಕೊಳ್ಳಲು ಚಡಪಡಿಸುವವರು ಸ್ವತಹ ಸಂವೇದನಾರಹಿತರಾಗುವುದು, ಮಾನ ಬಿಡುವುದು - ಅನಿವಾರ್ಯವೆಂಬಂತಾಗಿದೆ. ಆದ್ದರಿಂದ ಮಾನಗೇಡಿಗಳಾಗುವಲ್ಲಿಯೂ ಎಡೆಬಿಡದೆ ಸ್ಪರ್ಧೆ ನಡೆಯುತ್ತಿದೆ. ಒಟ್ಟಿನಲ್ಲಿ, "ಮಾನ" ಎಂಬುದರ ವ್ಯಾಖ್ಯೆಯೇ ಬದಲಾಗಿ ಮಾನ - ಹೋಗಿದೆ.

ಆದ್ದರಿಂದ ಇಂದಿನ ಕಾಲಘಟ್ಟಕ್ಕೆ ಹೊಂದುವಂತೆ "ಅಂದಿನ" ವಿದ್ವದ್ ಋಷಿಗಳ ತತ್ವಗಳನ್ನು ಪುನರ್ನವೀಕರಿಸಿಕೊಳ್ಳಬೇಕು. ಅದು ಹೇಗೆಂದರೆ -

1. "ಯಾರನ್ನು ಯಾರು ನಿಂದಿಸಿದರೂ - ಅದು ಸರಿಯಲ್ಲ" ಎಂಬ ವಿಶಾಲಾರ್ಥದಲ್ಲಿ ಎಲ್ಲ ವರ್ಗಗಳನ್ನೂ ಸೇರಿಸಬಹುದು.

ಈ ರೀತಿಯ ಸಭ್ಯತೆಯು ದುರ್ಭರ - ಘೋರ - ಸ್ವಾತಂತ್ರ್ಯ ಹರಣವೆನ್ನಿಸಿದರೆ, ಯಾರೂ ಯಾರನ್ನೂ ನಿಂದಿಸದೆ ನಿಸ್ಸಾರವಾಗಿ ಬದುಕುವುದು ವ್ಯರ್ಥವೆನ್ನಿಸಿದರೆ...

2. "ಯಾರು ಯಾರನ್ನು ಬೇಕಾದರೂ ಮನಸೋ ಇಚ್ಛೆ ನಿಂದಿಸಬಹುದು.." ಎಂಬ ನಿರ್ಣಯಕ್ಕೆ ಬಂದು ನವ ಲಂಕಾಪುರಿಯನ್ನು ಕಟ್ಟಬಹುದು.

ಎಲ್ಲರಿಗೂ ನ್ಯಾಯ ಸಿಗಲು ಇವೆರಡೇ ದಾರಿ ಉಳಿದಿರುವುದು.

......ನಮಗಿರುವುದು ಇವೆರಡೇ ದಾರಿ.

"ಒಬ್ಬನು ಎಂತಹ ಮಹಾನ್ ವ್ಯಕ್ತಿಯಾದರೂ ಕಣ್ಣು ಮುಚ್ಚಿಕೊಂಡು ಯಾರನ್ನೂ ಅನುಸರಿಸಬೇಡಿ. ಪ್ರತೀ ಪ್ರಾಣಿಗೂ ಕಣ್ಣು, ಮೂಗು, ಬಾಯಿ, ಕಿವಿ, ತಲೆ - ಎಲ್ಲವನ್ನೂ ಪ್ರತ್ಯೇಕವಾಗಿ ಕೊಟ್ಟ ದೇವರ ಇಚ್ಛೆಯೂ ಇದೇ ಆಗಿದೆ" ಎಂದ ಸ್ವಾಮಿ ವಿವೇಕಾನಂದರ ಮಾತು - ಸದಾ ಎಚ್ಚರದಲ್ಲಿರುವಂತೆ, ಚಟ್ಟು ಸ್ಪರ್ಧೆಗಿಳಿಯದಂತೆ ನಮ್ಮನ್ನು ಪ್ರೇರೇಪಿಸುವಂತಿದೆ. ಸಂಪ್ರದಾಯ ಪರಂಪರೆಯ ತತ್ವರಥವನ್ನು ಎಳೆಯಲು ಮನಸ್ಸಿಲ್ಲದಿದ್ದರೆ ಬಿಟ್ಟುಬಿಡಿ; ಆದರೆ ಆ ರಥವನ್ನು ಇತರರೂ ಎಳೆಯಲು ಬಿಡದಿರುವುದು - ಆ ರಥವನ್ನೇ ಮುರಿಯುವಂತೆ ಅಪ್ಪಣೆ ಕೊಡಿಸುವುದು...ಇವೆಲ್ಲವೂ ಸಭ್ಯತೆಯಲ್ಲ. ಪರಂಪರೆಯೆಂಬುದು ದೀಪದ ಕಂಬದಂತೆ. ಚತುರ ವಿವೇಕಿಗಳು ಆ ಕಂಬವನ್ನು ತಮ್ಮ ಮಾರ್ಗದರ್ಶನಕ್ಕಾಗಿ ಯುಕ್ತಿಯಿಂದ  ಉಪಯೋಗಿಸುತ್ತಾರೆ. ಆದರೆ ಕುಡುಕರು ತಮ್ಮ ಅಸ್ಥಿರ ದೇಹವನ್ನು ಒರಗಿಸಲು ಆ ಕಂಬವನ್ನು ಹಿಡಿಯುತ್ತಾರೆ! ಆ "ಪರಮಾತ್ಮ"ನ ಸ್ವರ್ಗ ಸುಖದಲ್ಲಿ ಏನೇನೋ ಗಳಹುತ್ತಾರೆ! ಆದರೆ ನಹುಷಗಿರಿಯು ಹೆಬ್ಬಾವಾಗಲು ಎಷ್ಟು ಹೊತ್ತು ಬೇಕು?

ಹಾಗೆ ನೋಡಿದರೆ, ಈಗ ಎಲ್ಲರದೂ ಒಂದೇ ಆಶ್ರಮ ಧರ್ಮ. ಅದು "ವಿತ್ತ ಸಂಚಯ ಧರ್ಮ". ಅಂದಮೇಲೆ ತಮಗೆ ವಿಶ್ವಾಸವಿಲ್ಲದ ಎಂದಿನದೋ ಆಚಾರ ವಿಚಾರಗಳ ಕುರಿತು - ಅದರಲ್ಲಿ ಅಂತಹ ನಂಬಿಕೆಯಿಲ್ಲದವರು, ಅಧ್ಯಯನವೂ ಇಲ್ಲದವರು ತಮ್ಮ ಮೂಗು ತೂರಿಸುವ ಅಗತ್ಯವಾದರೂ ಏನಿದೆ? ಹೀಗಾದಾಗಲೇ ಕೂಟಾಸುರರ ಅವಿದ್ಯಾ ಸಂಸಾರದ ಅವತಾರವಾಗುವುದು. ನಿಜವಾದ ವಿದ್ವಾಂಸರಾದವರು ಕ್ಷೋಭೆಯನ್ನುಂಟುಮಾಡುವ ಯಾವುದೇ ಕ್ಷುದ್ರ ಉಪದ್ವ್ಯಾಪಗಳಲ್ಲಿ ಮುಳುಗುವುದಿಲ್ಲ. ವಿದ್ವಾಂಸರೆನ್ನಿಸಿಕೊಳ್ಳಲು ಬಯಸುವವರು ತಮ್ಮ ವಿದ್ಯಾ ಪರಿಧಿಯ ಶಿಷ್ಟತೆಗೆ ಬದ್ಧರಾಗಿ ಇತರರಿಗೂ ಮಾದರಿಯಾಗಿರುವುದು ಅಪೇಕ್ಷಣೀಯ.

ಕಾಲಾನುಕ್ರಮದಲ್ಲಿ ಯಾವುದೇ ಆಶ್ರಮದ ಕೆಟ್ಟ ಪರಿವರ್ತನೆಗೆ ಅವುಗಳ ಅನುಯಾಯಿಗಳ ಅಚಲವಾದ ನಂಬಿಕೆ ಮತ್ತು ಶ್ರದ್ಧೆಗಳು ಎಂದಿಗೂ ಕಾರಣವಾಗಲಾರದು. ನಂಬಿಕೆ ಮತ್ತು ಶ್ರದ್ಧೆಯಿಂದ ದೂರವುಳಿದಿರುವ ವಿಕೃತ ಮನೋಬುದ್ಧಿಯ ಹೊಟ್ಟೆಬಾಕ ತಲೆಹಿಡುಕರಿಂದಲೇ ಸಾಮಾಜಿಕ ಕ್ಷೋಭೆ ಮತ್ತು ಸಂಕಷ್ಟಗಳು ಹುಟ್ಟಿಕೊಳ್ಳುತ್ತವೆ ಎಂಬುದು ಸಿದ್ಧ ಸತ್ಯ. ತಮ್ಮ ತಮ್ಮ ಕರ್ತವ್ಯ ಕರ್ಮಗಳನ್ನು ಪ್ರತಿಯೊಬ್ಬರೂ ತಲೆತಗ್ಗಿಸಿ ಮಾಡುವ ಸಮಾಜದಲ್ಲಿ ಕೀಟಲೆ ತರಲೆಗಳು ಎಂದೂ ಹುಟ್ಟುವುದಿಲ್ಲ. ಆದರೆ ಕೀಟಲೆ ತರಲೆಗಳನ್ನು ಹುಟ್ಟಿಸುವವರಿಗೆ ವಿಶೇಷ ಸನ್ಮಾನ ನಡೆಸುವ ಸಮಾಜದಲ್ಲಿ ಪೀಡೆಯು ಎಂದೂ ತಪ್ಪುವುದಿಲ್ಲ. ಹದ ತಪ್ಪಿದ ಬುಧಜನರಿಂದ ಯಾವತ್ತೂ ಅಪಕಾರವೇ ಹೆಚ್ಚು. ಅಂತಹ ಜ್ಞಾನಿಗಳಿಗಿಂತ ಅಜ್ಞಾನಿಗಳೇ ನಿರಪಾಯಕಾರಿಗಳು.

ಹಗಲನ್ನು ಹಗಲು ಎಂದು, ಕತ್ತಲನ್ನು ಕತ್ತಲೆಂದು ಒಪ್ಪಿಕೊಳ್ಳುವುದು ಇಷ್ಟು ಕಷ್ಟವೆ? ಎಲ್ಲೋ ಕೊಂಡಿ ತಪ್ಪಿದೆ; ಅಥವ ತಪ್ಪಿಸಲಾಗಿದೆ. ತಿರುಳನ್ನು ಹೊರಚೆಲ್ಲಿ ಸಿಪ್ಪೆ ಮಾತ್ರ ತಿನ್ನುವ Zero Figure ನ ತೆವಲಿನವರಂತೆ ಇದೊಂದು ಶ್ರೀಮಂತ ಆವಾಹಿತ ರೋಗ. ನಿರೋಗಿಗಳಿಗೂ ರೋಗ ಅಂಟಿಸುವ ಉಚಿತ ಭೋಗ! ಇಂತಹ ಬೌದ್ಧಿಕ ರೋಗಿಗಳ "ತುತ್ತೂರಿ ಗಾಡಿ"ಯ ಶಬ್ದ ಮಾಲಿನ್ಯವು ಮಿತಿಮೀರಿದರೆ ಅದನ್ನು ಎತ್ತಂಗಡಿ ಮಾಡಿಸಿ Dump Yard ಗೆ ಸೇರಿಸುವುದು "ಬಹುಜನ ಹಿತಾಯ ಬಹುಜನ ಸುಖಾಯ" ಕಾರ್ಯವೆನಿಸುತ್ತದೆ. "ಅಡಿಬಿದ್ದರೂ ಮೂಗು ಮೇಲೆ" ಎನ್ನುತ್ತ, ದಿನಕ್ಕೊಂದು ಹಾಳು ವರಸೆ ತೋರಿಸಿ ಪರಪರ ಕೆರೆದುಕೊಳ್ಳುವ ಬಿಟ್ಟಿ ಮಾಗಧರಿಂದ ಬೀದಿಗಳಂತೂ ಹಾಳಾಗುವುದು ನಿಶ್ಚಯ. ಶ್ರುತಿ ಸೇರದ, ಪ್ರೇಮವಿಲ್ಲದ ಇವರ ನಿತ್ಯಗಾನವು - ....ಬಚ್ಚಿಟ್ಟ ಹಳಸಿದ ಅಡುಗೆಯಂತೆ - ಕರ್ಕಶ, ಕಠೋರ, ದುರ್ನಾತ. ಇಂತಹ ಇಳಿಯುವ - ಅಳಿಯುವ ಚಟ್ಟು ಪೊಟ್ಟು ಸ್ಪರ್ಧೆಯು ಬೇಕೆ? 
 

No comments:

Post a Comment