Wednesday, September 21, 2016

ಮಾತಾಪಿತರ ಮಹಾಲಯ

ಮಾತಾಪಿತರ ಮಹಾಲಯದಲ್ಲಿ ನಾವಿದ್ದೇವೆ....
ಒಡಲ ಭಾವ - ಮಡಿಲ ಭಾವಗಳು ಎಲ್ಲ ಜೀವಿಗಳಲ್ಲಿಯೂ ಸಮಾನವಾಗಿದ್ದು - ಸ್ವಂತ ಅನುಭವಕ್ಕೆ ಮಾತ್ರ ದಕ್ಕುವ ವಿಶಿಷ್ಟ ಅನುಭೂತಿ. ಆದರೆ ಭಾರತೀಯರು - "ಮಾತೆಗೆ ಮಿಗಿಲಾದ ದೇವರಿಲ್ಲ" ಎನ್ನುವ ಸುಸಂಸ್ಕೃತ ಮಾತೃಭಾವ ಬಂದಿಗಳು. ಒಂದು ಜೀವನವು ತನ್ನ ಹರಿವಿನ ಯಾವುದೇ ಮುಖ್ಯ ಘಟ್ಟವನ್ನು ತಲುಪಿದಾಗ ತಮ್ಮ ಜನ್ಮದಾತರನ್ನು ಕೃತಜ್ಞತೆಯಿಂದ ಸ್ಮರಿಸಿಕೊಳ್ಳುವ ಸತ್ಸಂಪ್ರದಾಯವೂ ಇದೆ. ಮಾತ್ರವಲ್ಲದೆ ಯಾವ ಆಧ್ಯಾತ್ಮಿಕ ಸಾಧಕರೂ ಮಾತೆಯ ಸೆಳೆತದಿಂದ ಮುಕ್ತವಾಗಿಲ್ಲ. ಅದ್ವೈತಾಚಾರ್ಯರಾದ ಶ್ರೀ ಶಂಕರಾಚಾರ್ಯರು, ಆಧುನಿಕ ದಾರ್ಶನಿಕ ಸಂತ ಶ್ರೀ ರಾಮಕೃಷ್ಣ ಪರಮಹಂಸರೂ ತಮ್ಮ ಮಾತಾಪಿತೃಭಾವದಲ್ಲಿ ಮಿಂದೆದ್ದವರೇ. ಕರುಳ ಭಾವವು ಜೀವ ಸಂಕುಲವನ್ನು - ಸದೇಹಿಯಾಗಿಯೂ ವಿದೇಹಿಯಾಗಿಯೂ, ಸಾಕಾರವಾಗಿಯೂ ನಿರಾಕಾರವಾಗಿಯೂ - ಆವರಿಸಿಕೊಂಡಿರುವ ನಂಟು.

ನಮ್ಮನ್ನು ಹೆತ್ತವರು - ನಮ್ಮ ಕಣ್ಣಿಗೆ ಕಾಣುವ ಸಂರಕ್ಷಕ ಶಕ್ತಿ. ಧ್ವನಿ, ಚಿತ್ರ, ಬರಹ ಮುಂತಾದ ಯಾವುದೇ ಪ್ರಕಟ ಮಾಧ್ಯಮದಲ್ಲಿಯೂ ಅಂತಃಕರಣವನ್ನು ಲೀಲಾಜಾಲವಾಗಿ ಮುಟ್ಟುವ ಅಭಿವ್ಯಕ್ತಿ - ಮಾತಾಪಿತೃಭಾವ. ಶ್ರುತಿ ಯಲ್ಲಿ - "ಕಾಣಿಸದ ಪರಬ್ರಹ್ಮ"ವನ್ನು ಗುರುತಿಸಲು "ಅಸ್ಥೂಲಂ, ಅನಣು, ಅಹ್ರಸ್ವಂ, ಅದೀರ್ಘಂ, ಅಶಬ್ದಂ, ಅಸ್ಪರ್ಶಂ, ಅರೂಪಂ, ಅರಸಂ, ಅಗಂಧಂ" ಎಂದು ವರ್ಣಿಸುತ್ತ - "ಅದಲ್ಲ, ಇದಲ್ಲ" ಎಂಬ ನೇತ್ಯಾತ್ಮಕ ಮಾರ್ಗದಲ್ಲಿ ಸೃಷ್ಟಿಕರ್ತೃ ಬ್ರಹ್ಮನ "ಗುರುತು ಪತ್ರ"ವನ್ನು ಕಟ್ಟಿಡುವ ಶಾಬ್ದಿಕ ಹೆಣಗಾಟ ನಡೆದಿದೆ. ಈ ವಿಶ್ವದಲ್ಲಿ ಉಚ್ಛಿಷ್ಟವಾಗದ ವಸ್ತುವೊಂದು ಇದ್ದರೆ - ಅದು - ಅನಿಶ್ಚಯದ ವೈಶ್ವಿಕ ಬ್ರಹ್ಮ; ಇನ್ನಿಲ್ಲದಷ್ಟು ಉಚ್ಛಿಷ್ಟವಾದ ವಸ್ತುವೊಂದಿದ್ದರೆ - ಅದು - ಬ್ರಹ್ಮರೂಪೀ ಸಾಕ್ಷಾತ್ ಮಾತಾಪಿತರು. ಅಣುವನ್ನು ಮಹತ್ತಾಗಿಸಬಲ್ಲ ಸೃಷ್ಟಿ ಸೇತುವೆಯ ಈ ಎರಡು ಕೊಂಡಿಗಳ ನಡುವೆ ಅಸಂಖ್ಯ ಬದುಕುಗಳು ಹೊರಳುತ್ತವೆ. ಒಂದೆಡೆ ಸಕಲ ಬ್ರಹ್ಮಾಂಡದ ಸೃಷ್ಟಿಕರ್ತ ಮತ್ತು ಇನ್ನೊಂದೆಡೆ ಸಾಂಸಾರಿಕ ಮಾತಾಪಿತರು. ಈ ಎರಡು ಧ್ರುವಗಳ ನಡುವೆ - ಭೂಮಿಯ ಸಮಸ್ತ ಭಾವ ಚಲನೆಯು ಬಂಧಿಸಲ್ಪಟ್ಟಿದೆ. "ಕಂಡವರು ಹೇಳಲಾರರು; ಕಾಣದವರಿಗೆ ಗೊತ್ತಿಲ್ಲ" ಎಂಬಂತಹ - ಮನೋಬುದ್ಧಿಗಳಿಗೆ ಅತೀತವಾದ ಪರಮಾತ್ಮವೆಂಬ ಬ್ರಹ್ಮವಸ್ತುವಿಗೆ - "ಅಸ್ಥೂಲ, ಅನಣು..." ಮುಂತಾದ ನಿರಾಕರಣೆಯ ಸೂತ್ರವು ಅನಿವಾರ್ಯ. ಆದರೆ ಈ ಭೂಮಿಯ ಭಾವ ವಲಯದಲ್ಲಿ ಸಹಜೀವಿಗಳಾಗಿರುವ ಜೀವಭಾವದ ಮಾತಾಪಿತರು "ಸ್ಪರ್ಶ, ಶಬ್ದ, ರಸ, ಗಂಧ, ರೂಪ" ಗಳಿಗೆ ಅಷ್ಟಿಷ್ಟು ದಕ್ಕುವಂಥವರು. ಆದ್ದರಿಂದಲೇ ಮಾತಾಪಿತರ ಭಾವಾರ್ಣವವು ವರ್ಣನೆಗೆ ನಿಲುಕುವಂತಹುದು. ಆದ್ದರಿಂದ ಮಾತಾಪಿತರನ್ನು "ಸಾಕ್ಷಾತ್ ದೈವ" ಎಂದೂ - ಮುಟ್ಟಿ ಅರ್ಥೈಸಲಾಗಿದೆ. ನಮ್ಮ ಜನ್ಮದಾತರ ಅನುಭವವು ಅವರ ಕಾಯವಳಿದ ಮೇಲೂ ಚಿತ್ತವೃತ್ತಿಯಿಂದ ಮಾಸುವುದಿಲ್ಲ.

ದೇಹಭಾವವನ್ನು ವಿಧೇಯವಾಗಿ ಅನುಸರಿಸುವ ದೇಹಧಾರೀ ಮಾತಾಪಿತರು - ಭೂಮಿಯ ಕರ್ಮನಿಷ್ಠ ಬದುಕಿಗೆ ಜೋತುಬಿದ್ದು ಸಾಂಸಾರಿಕ ನಿಯಮಗಳ ಚೌಕಟ್ಟಿಗೆ ಬದ್ಧರಾಗಿಯೇ ಸಂಸಾರದ ನೊಗಕ್ಕೆ ಹೆಗಲು ಕೊಡುತ್ತಾರೆ. ಸಂಸಾರದ ಎಲ್ಲ ದುಃಖಗಳಿಗೂ ಕಾರಣವಾದ "ಮಮತೆ"ಯನ್ನು ತಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ - ಮುಗ್ಧವಾಗಿ ಅಪ್ಪಿಕೊಳ್ಳುತ್ತಾರೆ; ಬಹುತೇಕ ಬಾಹ್ಯ ವಸ್ತುಗಳನ್ನೇ ನೆಚ್ಚಿಕೊಂಡು, ಸಂಸಾರದ ಬಂಡಿಯನ್ನು ಏಕಮನಸ್ಸಿನಿಂದ ಎಳೆಯುತ್ತ, ಪೋಷಿಸುತ್ತ ಬದುಕನ್ನು ಹಿಂಡುತ್ತಾರೆ. ರೆಕ್ಕೆ ಬಲಿತೊಡನೆ ಹಾರಿಹೋಗುವ ಸಂತಾನ ಸದಸ್ಯರಿಂದ ತುಂಬಿರುವ ಈ ಸಂಸಾರದ ಗೂಡಿನಲ್ಲಿ ಜೊತೆಯಾಗಿದ್ದು - ಹೊಸ ಪಥಿಕರಿಗೆ ಧರ್ಮಾರ್ಥವಾಗಿ ಗುಟುಕು ನೀಡುವವರೇ ಈ ಮಮತಾಮಯಿಗಳು . ಮನೆ ಎಂದರೆ - ಬಂದು ಹೋಗುವ ಪಥಿಕರಿಗೆ ಧರ್ಮಾರ್ಥವಾಗಿ ನೀರು ಹಂಚುವ ಮತ್ತು ಸ್ವತಃ ದಣಿವಾರಿಸಿಕೊಳ್ಳುವ ಅರವಟ್ಟಿಗೆ. ಸಂಸಾರಕ್ಕೆ ಆಗಮಿಸುವ ಹೊಸ ಪಥಿಕರು ಕಿರು ಅವಧಿಯವರೆಗೆ ಹೆತ್ತವರ ಜೊತೆಗಿದ್ದರೂ ತಮ್ಮ ಬಾಯಾರಿಕೆಯು ತಣಿದ ಕೂಡಲೇ ಹಿಂದೆ ತಿರುಗಿ ನೋಡದೆ ಕೈಕೊಡವಿಕೊಂಡು ಮುನ್ನಡೆಯುವುದು ಈ ಸಂಸಾರದ ನೀತಿ ಎಂಬುದನ್ನು ತಿಳಿದೂ - ಮಮತೆಯ ಮೋಹಕ್ಕೆ ಕಟ್ಟುಬಿದ್ದು, ಬ್ರಹ್ಮಸೃಷ್ಟಿಯ ಪರಾವರ್ತಿತ ಕೊಂಡಿಯು ಮುರಿಯದಂತೆ ಸೃಷ್ಟಿಗೆ ನಿರಂತರವಾಗಿ ಮೋಹದ ಉಸಿರು ನೀಡುತ್ತಿರುವವರೇ ಮಾತಾಪಿತರು; ಮಾಯಾವಿದರು ! ಇವರೇ ನಮ್ಮ ಕಣ್ಣಿಗೆ ಕಾಣುವ - ಪ್ರಜಾಪಿತರು.

ದ್ವೇಷವಾಗಲೀ ಮೋಹವಾಗಲೀ ಎರಡೂ ರಕ್ತಪಿಪಾಸುಗಳೇ. ಒಂದು ತಾಮಸ; ಇನ್ನೊಂದು ಸಾತ್ವಿಕ - ಅಷ್ಟೇ ವ್ಯತ್ಯಾಸ. ಆದ್ದರಿಂದ ಒಂದು ಆರಕ್ತ; ಇನ್ನೊಂದು ಅನುರಕ್ತ. ದ್ವೇಷದಷ್ಟೇ ಮಮತೆಯೂ ಪೀಡಿಸಬಲ್ಲದು; ಹೋಗುತ್ತ ಬರುತ್ತ ನಯವಾಗಿ ಕೊಯ್ಯಬಲ್ಲದು. ಒಂದು ಬಹಿರಂಗವಾದರೆ ಇನ್ನೊಂದು ಮುಸುಕಿನ ಗುದ್ದು ! ಹೀಗಿದ್ದೂ ಮಮತಾಭಾವ ಎಂಬುದು ಭೂಮಿಯನ್ನು ಆವರಿಸಿರುವ - ಮೀರಲಾಗದಂತಹ ಮಾಯೆ. ಮನುಷ್ಯರು ಮಾಡುವ ಎಲ್ಲ ಮಮತಾಮಯ ಕಾರ್ಯಗಳೂ ಕೊನೆಗೆ ದುಃಖದಲ್ಲಿಯೇ ಪರ್ಯವಸಾನವಾಗುತ್ತದೆ. ಇದನ್ನು ತಿಳಿದವರೂ ಸಂಸಾರಕ್ಕೆ ಒಡ್ಡಿಕೊಳ್ಳುತ್ತ ಸೃಷ್ಟಿಗೆ ವಿಧೇಯರಾಗಿರುವುದೇ ಈ ಸೃಷ್ಟಿ ರಹಸ್ಯದ ಜಿಡುಕು; ಒಗಟು. ಹಾಗೆಂದು "ಸಂಸಾರ ಸುಖ ಎಂಬುದು ಸಾಪೇಕ್ಷ; ಅದನ್ನು ತ್ಯಜಿಸು" ಎನ್ನಲಾಗದು. ಇಚ್ಛಿಸಿದರೂ - ಎಲ್ಲರಿಗೂ ತ್ಯಜಿಸಲಾಗದ ಪಾಶವಿದು. ಇದೂ ಸೃಷ್ಟಿಯ ನಿಯಮವೇ ಆಗಿದೆ.

ಜನಿಸಿದಾಗಲೇ ಆತ್ಮಜ್ಞಾನ ಸಿದ್ಧರಾಗಿದ್ದ ಶುಕ ಮಹರ್ಷಿಗಳು ಲೋಕವ್ಯಾಪಾರಕ್ಕೆ ವಿಮುಖರಾಗಿ, ಪರಿವ್ರಾಜಕರಾಗಿ ಹೊರಟಾಗ ಮಹಾಜ್ಞಾನಿಯಾಗಿದ್ದ ತಂದೆ ವೇದವ್ಯಾಸರು "ಮಗೂ ಮಗೂ" ಎಂದು ಕೂಗುತ್ತ ಅವರ ಹಿಂದೆ ಧಾವಿಸಿ ಹೋದರಂತೆ ! ಪುತ್ರಮೋಹ ! ಮಹರ್ಷಿಯಾಗಿದ್ದ ಮಹಾಜ್ಞಾನಿಗೂ ಪುತ್ರ ಮೋಹ! ಬ್ರಹ್ಮರ್ಷಿ ವಸಿಷ್ಠರು ಪುತ್ರನಾದ ಶಕ್ತಿಯ ಮರಣದಿಂದ ವಿಹ್ವಲರಾಗಿ ಆತ್ಮಹತ್ಯೆಗೂ ಎಳಸಿದ್ದರು ! ದೇಹಪ್ರಜ್ಞೆ ಮತ್ತು ಮೋಹಪ್ರಜ್ಞೆಯಿಂದ ಮುಕ್ತರಾಗುವುದು ಎಂತಹ ಜ್ಞಾನಿಗೂ ಸುಲಭದ ಮಾತಲ್ಲ. ಆದರೆ ತಾತ್ವಿಕ ನೆಲೆಯಲ್ಲಿ ಯೋಚಿಸಬಲ್ಲ ಜ್ಞಾನಿಗಳಾದವರು ಈ ಬದುಕು ತಮ್ಮ ಮುಂದೊಡ್ಡುವ ಯಾವುದೇ ಆಘಾತದಿಂದ ಕುಸಿಯದೆ, ಅದನ್ನು ಜೀರ್ಣಿಸಿಕೊಂಡು ನಿಭಾಯಿಸಬಲ್ಲರು. ಅಂತಹ ಜ್ಞಾನಿಗಳನ್ನು ಜ್ಞಾನವೇ ಆಧರಿಸುತ್ತದೆ. ಆದರೆ ಪೂರ್ವಸಂಸ್ಕಾರವಿಲ್ಲದ ಸಾಮಾನ್ಯರಿಗೆ ಮಾತ್ರ - ಬದುಕಿನ ಯಾವುದೇ ಆಘಾತಗಳಿಂದಲೂ ಹೊರಬರುವುದು ಕಠಿಣವಾಗಿ ಬಿಡುತ್ತದೆ. ಇಲ್ಲಿ ಯಾವುದೇ ಮೀಸಲಾತಿಯೂ ಉಪಯೋಗಕ್ಕೆ ಬರುವುದಿಲ್ಲ. ಪರಿಹಾರಧನವೂ ಉಪಕರಿಸುವುದಿಲ್ಲ. ಏಕಾಗ್ರ ತಪಸ್ಸಿನಿಂದ ವಿಮುಖವಾಗಿರುವ ಸಾಮಾನ್ಯ ಸಂಸಾರಸ್ಥರನ್ನು ಜ್ಞಾನದ ಹಾದಿಯು ಆಕರ್ಷಿಸುವುದೂ ಇಲ್ಲ; ಜ್ಞಾನಕ್ಕೆ ಒಳಮಾರ್ಗಗಳೂ ಇಲ್ಲ; ದುರ್ಗಮವಾದ ಹಾದಿಯಿದು. ಒಬ್ಬರ ಬೆನ್ನನ್ನು ಇನ್ನೊಬ್ಬರು ತುರಿಸುವಂತಹ ಹಾಸ್ಯ, ಚುಟುಕು, ಕುಟುಕುಗಳಂತಹ ಸಾಂಸಾರಿಕ ದೊಂಬರಾಟಗಳೆಲ್ಲವೂ ಜ್ಞಾನಶಾಖೆಗಳೆ ? ಕಾಲಹರಣದ ತೇರನೆಳೆಯುವ ಯಾವುದೇ ಪುಡಿ ಉತ್ಸವಗಳಿಗೆ ಸಿದ್ಧ ಜ್ಞಾನವು ಒಲಿಯುವುದಿಲ್ಲ. ಆದ್ದರಿಂದಲೇ ಶುಕ ಮಹರ್ಷಿಗಳಂತಹ - ಶುದ್ಧ ಜ್ಞಾನನಿಧಿಗಳನ್ನು ತುರಿಕೆಯ ಸಂಸಾರವು ಆಕರ್ಷಿಸಲಿಲ್ಲ. ಹಾಗಿದ್ದರೆ ಸಾಮಾನ್ಯರ ಪಾಡೇನು ?

ಮಾತಾಪಿತರ ಈ ಮಹಾಲಯದಲ್ಲಿ ಬಹುಪಾಲು ಸಂಸಾರಗಳೆಲ್ಲವೂ ಪಾಚಿ ಕಟ್ಟಿದ ನೀರಿನಂತೆ; ಜೀವದ್ರವವೇ ಮರೆಯಾದಂತೆ ಗೋಚರಿಸುತ್ತವೆ. ನಿಧಾನವಾಗಿ ಪಾಚಿ ಸರಿಸಿ ನೀರನ್ನು ಎತ್ತಿದರೆ ಮಾತ್ರ ತಿಳಿನೀರು ಸಿಕ್ಕೀತು. ಅವಸರಿಸಿದರೆ ನೀರು ಬಗ್ಗಡವಾಗುವುದು ನಿಸ್ಸಂಶಯ. ಅವಸರದ ಬದುಕಿನಲ್ಲಿ ದಿನವೂ ಕದಡುವ ಅಂತಹ ಕಲುಷಿತ ನೀರನ್ನೇ ಸೇವಿಸುತ್ತ ಮನೋವಾಕ್ಕಾಯಗಳನ್ನು ಸದೃಢಗೊಳಿಸುವುದಾದರೂ ಹೇಗೆ ? ಆದ್ದರಿಂದ ಪಾಚಿಯು ಕದಡದಂತೆ ಎಚ್ಚರದಿಂದ ಅದನ್ನು ಬದಿಗೆ ಸರಿಸಿ, ತಿಳಿನೀರನ್ನು ಸಂಗ್ರಹಿಸುವ ಶ್ರಮವು ಯಾವುದೇ ಸಂಸಾರದಲ್ಲಿ ಅನಿವಾರ್ಯ. ಬುದ್ಧಿಯು ಕಲಕಬಾರದು; ಕುಲುಕಬಾರದು; ತುಳುಕಲೂ ಬಾರದು. ಹದವಿಲ್ಲದ ವೇಗಕ್ಕೆ ಒಲಿಯದ ಮತ್ತು ಹದವರಿತ ಸಂಯಮಕ್ಕೆ ಒಲಿಯುವ ಸೂತ್ರವಿದು. ಆದ್ದರಿಂದಲೇ - ಪುಣ್ಯಫಲಭರಿತ "ಶುಕವೃಕ್ಷಗಳು" ಆಧುನಿಕ Smart City ಗಳಲ್ಲಿ ಕಾಣುವಂತಹುದಲ್ಲ.

ಪ್ರಾರಬ್ಧದಿಂದ ಬಸವಳಿದು ಬಾಯಾರಿ, ಪುನರಪಿ ಜನ್ಮ ತಳೆದು ಭೂಮಿಗೆ ಆಗಮಿಸುವ ಚಿತ್ತುಚಿತ್ತಾದ ಜೀವವೃಕ್ಷದ ಬೀಜಗಳು, ನಿಗದಿತ ಅರವಟ್ಟಿಗೆಯಲ್ಲಿ ಬಂದು ಬಿದ್ದು ಅಲ್ಲೇ ಚಿಗುರಿದಾಗ, ಜೀವವೃಕ್ಷದ ಬೇರಿಗೆ "ನೀರೂಡಿಸಿ" ಬೇಲಿಯೊಳಗೆ ಸುರಕ್ಷಿತವಾಗಿ ಲಾಲಿಸಿ ಪಾಲಿಸುವವರು ಮಾತಾಪಿತರು. ಅವರು ಕಾಲಕಾಲಕ್ಕೆ ಬೌದ್ಧಿಕ ಪುಷ್ಟಿಯನ್ನೂ ನೀಡಬಲ್ಲವರಾದರೆ ಜೀವಸಸಿಯು ಹೆಮ್ಮರವಾದೀತು. ಫಲಪುಷ್ಪಭರಿತವಾಗಿ ಹೊಸ ಪಥಿಕರಿಗೆ ನೆರಳನ್ನೂ ನೀಡೀತು. ಹೊಸ ಜನ್ಮ ಪಡೆದ ಪಥಿಕರಿಗೆ ಕೈಮರವಾಗಿ, ಪಥ ತಪ್ಪದಂತೆ ರಕ್ಷಣೆಯೂ ಸಿಕ್ಕೀತು.

ಸಂಸಾರದಲ್ಲಿ ಬಿದ್ದ ಉದ್ದೇಶವು ಜೀವಿಗಳಿಗೆ ಮರವೆಯಾಗದಂತೆ ಕಾಪಾಡಬಲ್ಲವರು - ಮಾತಾಪಿತರು. ತಮ್ಮ ನಡೆನುಡಿಯ ಮೂಲಕವೇ ದೇಹಜೀವಭಾವದ ಸ್ಥೂಲ ಕಲ್ಪನೆಯನ್ನು ತಮ್ಮ ಸಂತಾನದಲ್ಲಿ ಮೂಡಿಸಬೇಕಾದವರೂ ಹೆತ್ತವರೇ. ಆದರೆ ದುರ್ದೈವವೆಂದರೆ, ಇಂದಿನ ಎಷ್ಟೋ ಅರವಟ್ಟಿಗೆಗಳು ಬತ್ತಿಹೋಗಿವೆ. ಅಲ್ಲಿ ನೆಲವೇ ಕಿತ್ತು ಹೋಗಿದೆ. ಗೋಡೆಗಳು ಬಿರುಕು ಬಿಟ್ಟಿವೆ.. ತಿಂದುಣ್ಣುವ ಸ್ಪರ್ಧೆಯಲ್ಲದೆ ಅಂತಹ ಸಂಸಾರಗಳಲ್ಲಿ ಯಾವುದೇ ಪಥ ದರ್ಶನವಾಗುವುದಿಲ್ಲ; ತಾವೇ ದಿಕ್ಕುಗೆಟ್ಟು ನಿಂತಿರುವ ನತದೃಷ್ಟ ಹೆತ್ತವರು, ಸಹಜೀವಿಗಳ ಭೌತಿಕ ಅವಶ್ಯಕತೆಗಳನ್ನಷ್ಟೇ ಯಾಂತ್ರಿಕವಾಗಿ ಅಷ್ಟಿಷ್ಟು ಪೂರೈಸುತ್ತಿರುತ್ತಾರೆ. ಇತ್ತ, ಬಾಯಾರಿ ಬಂದ ಹಲವು ಹುಟ್ಟುಗಳಿಗೆ ಆಯಾ ಸಂಚಿತ ಸಂಸ್ಕಾರದಿಂದಾಗಿ, ಉದ್ದೇಶಿತ ಗುರಿಯಾಗಲೀ ಸತ್ಪಥದ ಗೊಡವೆಯಾಗಲೀ ಸೊಗಸುವುದಿಲ್ಲ. ಇಂತಹ "ವೈರುಧ್ಯ ಸಂಧಿ"ಯ - ಮಾತಾಪಿತ ಮತ್ತು ಸಂತಾನಗಳ ಮಾಯಾಪರದೆಯನ್ನು ಹರಿಸಲು ನೆರವಿಗೆ ಬರುವುದೇ - ಸಚ್ಚಿಂತನೆ ಮತ್ತು ಸತ್ಸಂಗ.


ದಿನಯಾಮಿನ್ಯೌ ಸಾಯಂ ಪ್ರಾತಃ ಶಿಶಿರವಸಂತೌ ಪುನರಾಯಾತಃ
ಕಾಲಃ ಕ್ರೀಡತಿ ಗಚ್ಛತ್ಯಾಯುಸ್ತದಪಿ ನ ಮುಂಚತ್ಯಾಶಾವಾಯುಃ

ಹಗಲು-ರಾತ್ರಿ, ಸಂಜೆ-ಬೆಳಿಗ್ಗೆ, ಶಿಶಿರ-ವಸಂತ ಮುಂತಾದ ಕಾಲಗಳು ಬಂದು ಹೋಗುತ್ತಿರುವುವು. ಕಾಲವು ಆಡುತ್ತಲೂ ವಯಸ್ಸು ಕಳೆಯುತ್ತಲೂ ಇರುವುವು. ಇಷ್ಟಾದರೂ ಆಶಾಪಾಶವು ಬಿಡುವುದಿಲ್ಲ.


ಕಾ ತೇ ಕಾಂತಾ ಧನಗತಚಿಂತಾ ವಾತುಲ ಕಿಂ ತವ ನಾಸ್ತಿ ನಿಯಂತಾ
ತ್ರಿಜಗತಿ ಸಜ್ಜನಸಂಗತಿರೇಕಾ ಭವತಿ ಭಪಾರ್ಣವತರಣೇ ನೌಕಾ

ಹಣ, ಹೆಂಡತಿ ಇವರ ಚಿಂತೆಯು ನಿನಗೆ ಯಾಕೆ ? ಅಯ್ಯಾ ಮೂಢ, ನಿನ್ನನ್ನು ತಡೆಯುವವರು ಯಾರೂ ಇಲ್ಲವೆ? ಸತ್ಪುರುಷರ ಸಹವಾಸವೊಂದೇ ಸಂಸಾರ ಸಾಗರವನ್ನು ದಾಟಿಸುವ ಹರಿಗೋಲು ಎಂದು ತಿಳಿ.


ಪುನರಪಿ ಜನನಂ ಪುನರಪಿ ಮರಣಂ ಪುನರಪಿ ಜನನೀ ಜಠರೇ ಶಯನಂ
ಇಹ ಸಂಸಾರೇ ಬಹುದುಸ್ತಾರೇ ಕೃಪಯಾ~ಪಾರೇ ಪಾಹಿ ಮುರಾರೇ

ಜನನ, ಮರಣ, ತಾಯಿಯ ಗರ್ಭವಾಸ - ಎಂಬ ಚಕ್ರವು ... ಸುತ್ತುತ್ತಲೇ ಇರುತ್ತದೆ. ಹೇ ಮುರಾರಿ, ನನ್ನಲ್ಲಿ ದಯೆತೋರಿ ದಾಟಲು ಅಸಾಧ್ಯವಾದ ಈ ಸಂಸಾರ ಚಕ್ರದಿಂದ ನನ್ನನ್ನು ಪಾರುಗಾಣಿಸು.

ಶ್ರೀ ಶಂಕರಾಚಾರ್ಯರ "ಮೋಹ ಮುದ್ಗರಃ" ಎಂಬ ಸ್ತೋತ್ರ ಸಾಹಿತ್ಯದ ಭಾಗವಿದು. "ಭಜ ಗೋವಿಂದಂ ಮೂಢಮತೇ" ಎಂದು ಆರಂಭವಾಗುವ ಈ ಸ್ತೋತ್ರವು ಮೌಢ್ಯದಿಂದ ಆವೃತವಾದ ಜೀವಿಗಳಿಗೆ ಮಾರ್ಗದರ್ಶಕ ಕೈಪಿಡಿಯಂತಿದೆ. ಈ ಸ್ತೋತ್ರದಲ್ಲಿ -  ಗುರುಗಳು, ಮಾತಾಪಿತರು ತಮ್ಮ ಸಂತಾನಕ್ಕೆ ತೋರಬೇಕಾದ ಮಾರ್ಗದರ್ಶನವಿದೆ. "ಬ್ರಹ್ಮ ಸತ್ಯ- ಜಗನ್ಮಿಥ್ಯಾ" ಎಂಬ ವ್ಯಾಸ ವಾಣಿಯ ಸೂಕ್ಷ್ಮ, ಅವಿದ್ಯೆ ಮುಂತಾದ ಭವಪಾಶಗಳಿಂದ ಮುಕ್ತವಾಗುವ ದಿಗ್ದರ್ಶನವಿದೆ. ಜನರ ಜೀವನವನ್ನು ಸುಖ ಸಂಪದ್ಭರಿತ ಸದ್ಗುಣಪೂರಿತವಾಗಿಸಿಕೊಳ್ಳಬೇಕು ಎನ್ನುವ ಕಳಕಳಿಯೂ ಇದೆ.


ಅರ್ಥ ಮನರ್ಥಂ ಭಾವಯ ನಿತ್ಯಂ ನಾಸ್ತಿತತಃ ಸುಖಲೇಶಃ ಸತ್ಯಮ್
ಪುತ್ರಾದಪಿ ಧನಭಾಜಾಂ ಭೀತಿಃ ಸರ್ವತ್ರೈಷಾ ವಿಹಿತಾ ರೀತಿಃ

ಹಣವು ಎಂದೆಂದಿಗೂ ಅನರ್ಥವನ್ನುಂಟುಮಾಡುವುದು. ಹಣದಿಂದ ಸುಖವೆಂಬುದು ಇಲ್ಲವೇ ಇಲ್ಲ. ಇದು ನಿಜ. ಧನಿಕನಿಗೆ ಮಗನಿಂದಲೂ ಭಯವುಂಟು. ಇದು ಸರ್ವತ್ರವಾದ ರೀತಿ ಎಂಬುದನ್ನು ತಿಳಿದುಕೋ..

ಇಂತಹ ಸ್ವಸ್ಥ ಸುಖಚಿಂತನೆಯನ್ನು ಊಡಿಸಬಲ್ಲ ಮಾತಾಪಿತರು ಮತ್ತು ಇಂತಹ ಸಚ್ಚಿಂತನೆಯ ಪ್ರಭಾವಕ್ಕೊಳಗಾಗುವ ಸಂತಾನಗಳು ಯಾವುದೇ ಸ್ವಸ್ಥ ಸಮಾಜದ ಶಾಶ್ವತ ಸಂಪತ್ತುಗಳಾಗುತ್ತವೆ. ಇಂದಿಗೂ ಈ ಸಂಪತ್ತು ಭಾರತದ ನೆಲದಲ್ಲಿದೆ.

ಬಾಲ ಸನ್ಯಾಸತ್ವ ಸ್ವೀಕರಿಸಿ, ಅನೇಕ ಮಹತ್ಕಾರ್ಯಗಳನ್ನು ಸಾಧಿಸಿ, ಕೇವಲ 32 ವರ್ಷ ಬದುಕಿದ್ದರೂ ತಮ್ಮ ಅಲ್ಪ ಆಯುರ್ಮಾನದಲ್ಲಿ ಭಾರತದ ಉದ್ದಗಲಕ್ಕೂ ಸಂಚರಿಸಿ ಜನರು ತಮ್ಮನ್ನು ತಾವೇ ತಿದ್ದಿಕೊಳ್ಳುವಂತೆ, ತನ್ಮೂಲಕ ಸನ್ಮಾರ್ಗಾವಲಂಬಿಗಳಾಗುವಂತೆ ಜನರನ್ನು ಉದ್ದೀಪಿಸಿದವರು - ಆದಿ ಶಂಕರಾಚಾರ್ಯರು. ಸುಮಾರು 1250 ವರ್ಷಗಳ ಹಿಂದೆ - ಅಧ್ಯಾತ್ಮ ಪಥದ ಕಠಿಣ ಆಯ್ಕೆಯಾದ ಜ್ಞಾನ ಮಾರ್ಗದಲ್ಲಿ - ಯಶೋದುಂದುಭಿ ಮೊಳಗಿಸಿದ್ದ ಅದ್ವೈತಾಚಾರ್ಯರಿವರು. ಜಟಿಲ ವಿಷಯಗಳನ್ನೂ ಲಾಲಿತ್ಯಪೂರ್ಣವಾಗಿ, ಹೃತ್ಪೂರ್ವಕವಾಗಿ, ಮೃದುಮಧುರವಾದ ಮಾತುಗಳಲ್ಲಿ ತಿಳಿ ಹೇಳಿದ ಜ್ಞಾನನಿಧಿ ಇವರು. ಮನಸ್ಸು- ಬುದ್ಧಿಯ ಅಪಾರ ಸಾಧ್ಯತೆಗಳನ್ನು ಪ್ರಾಯೋಗಿಕವಾಗಿ ಸಿದ್ಧಪಡಿಸಿದ ಮಹಾಮಹಿಮರು - ಶ್ರೀ ಶಂಕರಾಚಾರ್ಯರು.



ಶ್ರೀ ಶಂಕರಾಚಾರ್ಯರಿದ್ದ ಕಾಲ ಘಟ್ಟವು ವೈಚಾರಿಕ ತತ್ವ ಸಿದ್ಧಾಂತಗಳ ಸಂಘರ್ಷವಿದ್ದ ಅವಧಿ. ಬಹುತೇಕ ಸಿದ್ಧಾಂತಗಳು ವಿದ್ವಾಂಸರ ಅಹಂಘರ್ಷಣೆಗೆ ಸಿಲುಕಿ ತತ್ತರಿಸುತ್ತಿದ್ದ ಕಾಲವದು. ಸಿದ್ಧಾಂತದ ಜುಲುಮೆಯ ಹೇರಿಕೆಯೂ ಆಗ ಎಗ್ಗಿಲ್ಲದೆ ನಡೆಯುತ್ತಿತ್ತು. ಅಂತಹ ವಿಷಮ ಸ್ಥಿತಿಯಲ್ಲಿ ಶ್ರೀ ಶಂಕರರು ಭಾರತದ ಉದ್ದಗಲಕ್ಕೂ ಸಂಚರಿಸಿ ವಿದ್ವಾಂಸರಲ್ಲಿ ಚರ್ಚಿಸಿ, ಧರ್ಮಚಿಂತನೆಯನ್ನು ನಡೆಸಿ, ಸೈದ್ಧಾಂತಿಕ ಐಕಮತ್ಯವನ್ನು ಸಾಧಿಸಿದ್ದು ಮಹತ್ಸಾಧನೆಯೆಂದೇ ಪರಿಗಣಿಸಲ್ಪಟ್ಟಿದೆ.

"ಬ್ರಹ್ಮ ಸತ್ಯ, ಜಗನ್ಮಿಥ್ಯಾ" ಎಂದು ಪ್ರತಿಪಾದಿಸಿದ್ದ ಗುರು ವ್ಯಾಸರ ಶಿಷ್ಯರಾಗಿದ್ದವರು ಜೈಮಿನಿ ಋಷಿ. ಈ ಶಿಷ್ಯೋತ್ತಮರು ತಮ್ಮ ಗುರುಗಳ ಮಾತನ್ನು ಪೂರ್ತಿಯಾಗಿ ಒಪ್ಪಲಿಲ್ಲ. ಜೈಮಿನಿ ಋಷಿಯು ಸ್ವರ್ಗ ನರಕಗಳ ಅಸ್ತಿತ್ವವನ್ನು ಪ್ರತಿಪಾದಿಸಿ, ಸ್ವರ್ಗ ನರಕಗಳು ಕರ್ಮಫಲ ಸ್ವರೂಪಿಗಳು - ಎಂದು ಪ್ರತಿಪಾದಿಸಿ ತನ್ನ ಸಿದ್ಧಾಂತವನ್ನು ದಿಟ್ಟವಾಗಿ ಪ್ರಚುರಪಡಿಸಿದ್ದರು. ಈ ಕರ್ಮವಾದವು ಹಲವಾರು ವಿದ್ವಾಂಸರನ್ನೂ ಆಕರ್ಷಿಸಿತ್ತು. "ಬ್ರಹ್ಮ ಸತ್ಯ. ಆದರೆ ಜಗತ್ತು ಮಿಥ್ಯವಲ್ಲ; ಜಗತ್ತಿನಲ್ಲಿ ನಡೆಸುವ ಕರ್ಮಗಳಿಗೆ ತಕ್ಕ ಫಲವೂ ಪ್ರಾಪ್ತವಾಗುತ್ತದೆ" ಎಂದು ಜೈಮಿನಿ ಋಷಿಯು ಜನಪ್ರಿಯಗೊಳಿಸಿದ ವಾದವನ್ನು - ಕಠೋರ ಕರ್ಮವಾದಿಯಾಗಿದ್ದ ವಿದ್ವಾಂಸ - ಮಂಡನಮಿಶ್ರರೂ ಒಪ್ಪಿ ಅನುಸರಿಸುತ್ತಿದ್ದರು. ಮಂಡನಮಿಶ್ರರು ವೈದಿಕ ಕರ್ಮನಿಷ್ಠರಾಗಿದ್ದು "ಕರ್ಮಠ"ರಾಗುವಂತೆ ಇತರರನ್ನೂ ಪ್ರಚೋದಿಸುತ್ತಿದ್ದರು. "ಕರ್ಮವನ್ನು ಮಾಡಲು ಸಮರ್ಥರಾಗಿರುವವರು - ಸನ್ಯಾಸಿಯಾಗಿ ಕರ್ಮಗಳನ್ನು ತ್ಯಜಿಸುವುದು ಶಾಸ್ತ್ರ ಸಮ್ಮತವಲ್ಲ" ಎಂದೂ ಪ್ರತಿಪಾದಿಸುತ್ತಿದ್ದರು. ಇಂತಹ ಮಂಡನಮಿಶ್ರರು ಶ್ರೀ ಶಂಕರಾಚಾರ್ಯರೊಂದಿಗೆ ಸುದೀರ್ಘವಾಗಿ ವಾದಿಸಿ ಪರಾಭವಗೊಂಡ ನಂತರ ಶ್ರೀ ಶಂಕರ ಭಗವತ್ಪಾದರ ಶಿಷ್ಯನಾಗಿ ಆತ್ಮತತ್ವದ ಉಪದೇಶವನ್ನು ಪಡೆದು "ಸುರೇಶ್ವರ" ಎಂದು ಪ್ರಖ್ಯಾತರಾದರು. ಇವರೇ ಮುಂದೆ ಶೃಂಗಗಿರಿ ಪೀಠವನ್ನು ಅಲಂಕರಿಸಿದರು ಎಂದೂ ಪ್ರಸಿದ್ಧಿಯಾಗಿದೆ. ಮಂಡನಮಿಶ್ರ ಮುಂತಾದ ಕರ್ಮಾವಲಂಬಿಗಳನ್ನು ಜ್ಞಾನದ ಒರೆಗಲ್ಲಿಗೆ ತಿಕ್ಕಿ ಹೊಸ ಬೆಳಕಿನಿಂದ ಪ್ರಕಾಶಿಸುವಂತೆ ಮಾಡಿ, ಅದ್ವೈತದ ತೆಕ್ಕೆಗೆ ತಂದವರು - ಶ್ರೀ ಶಂಕರಾಚಾರ್ಯರು. ಅಂದಿನ ಸಮಾಜದಲ್ಲಿ ವ್ಯಾಪಕವಾಗಿ ರೂಢಿಯಲ್ಲಿದ್ದ ಜೈಮಿನಿಯ ಕರ್ಮಕಾಂಡವನ್ನು ಹಿಂದೆ ಸರಿಸಿ, ವೇದವನ್ನು ಪುನರುಜ್ಜೀವಗೊಳಿಸಿ, ಜ್ಞಾನ ಕಾಂಡವನ್ನು - ಭಕ್ತಿಯೋಗವನ್ನು ಪ್ರಕಾಶಕ್ಕೆ ತಂದು, ವೈದಿಕ ಧರ್ಮವನ್ನು ಪುನರುತ್ಥಾನಗೊಳಿಸಲು ಶಂಕರರು ವ್ಯಯಿಸಿದ್ದು ಕೇವಲ 24 ವರ್ಷ ! ದೈವಾನುಗ್ರಹ, ಪೂರ್ವ ಸಂಸ್ಕಾರವಿಲ್ಲದೆ ಈ ಚಮತ್ಕಾರವು ಸಾಧ್ಯವೆ ?


ಗೇಯಂ ಗೀತಾ ನಾಮಸಹಸ್ರಂ ಧ್ಯೇಯಂ ಶ್ರೀಪತಿ ರೂಪಮಜಸ್ರಂ
ನೇಯಂ ಸಜ್ಜನ ಸಂಗೇ ಚಿತ್ತಂ ದೇಯಂ ದೀನಜನಾಯ ಚ ವಿತ್ತಮ್

ಭಗವದ್ಗೀತೆಯನ್ನು ಶ್ರದ್ಧೆಯಿಂದ ಸ್ವಲ್ಪ ಮಾತ್ರವೇ ಓದಿದ್ದರೂ ಗಂಗೆಯ ಒಂದೆರಡು ಹನಿಯನ್ನಷ್ಟೇ ಪಾನ ಮಾಡಿದ್ದರೂ ಸಜ್ಜನ ಸಂಗ, ದಾನಧರ್ಮ, ಶ್ರೀ ಕೃಷ್ಣನ ಪೂಜೆಯನ್ನು ಒಮ್ಮೆಯಾದರೂ ಮಾಡಿದ್ದರೆ ಅಂತಹ ಮನುಷ್ಯರಿಗೆ ಯಮನ ಭಯ ಇರುವುದಿಲ್ಲ ಎಂಬ ಭರವಸೆಯನ್ನು ಸಂಸಾರಕ್ಕೆ ನೀಡಿ, ಕರ್ಮಮಾರ್ಗದ ಮೂಲಕವೇ ಅದರ ಮುಂದಿನ ಹೆಜ್ಜೆಯಾದ ಜ್ಞಾನಮಾರ್ಗದತ್ತ ಸಮಾಜವನ್ನು ಆಕರ್ಷಿಸಿದವರು ಶ್ರೀ ಶಂಕರರು. ಜ್ಞಾನದ ಬಲದಿಂದಲೇ ನಿರ್ಭಯನಾಗಿದ್ದು - ಬದುಕನ್ನು ಸವಿಯುವಂತೆ ಸಂತ ಸನ್ಯಾಸಿಯು ನೀಡಿದ್ದ ಈ ಭರವಸೆಯು ಸಮಸ್ತ ಪಥಿಕರನ್ನು ಮುಟ್ಟಬೇಕು. ಪ್ರತಿಯೊಂದು ಅರವಟ್ಟಿಗೆಯೂ ಮತದ ಸಂಕುಚಿತ ಸಂಕೋಲೆಯಿಂದ ಬಿಡಿಸಿಕೊಂಡು ಸತ್ಪಥ, ಸದ್ವಿಚಾರಗಳನ್ನು ಊಡಿಸುತ್ತ - ನಿರ್ಭಯ ಸಮಾಜದ ನಿರ್ಮಾಣದಲ್ಲಿ ಕೈಜೋಡಿಸಬೇಕು. ಅದಕ್ಕಾಗಿ ಸುಶಿಕ್ಷಣ, ಸುಸಂಸ್ಕಾರಗಳ ಮೂಲಪಾಠವು - ಮನೆ ಎಂಬ ಮೊದಲ ಪಾಠಶಾಲೆಯಲ್ಲಿಯೇ ಎಲ್ಲರಿಗೂ ದೊರಕುವಂತಾಗಬೇಕು. ... ಸ್ವಪ್ರಯತ್ನದಿಂದಲಾದರೂ ಅಭಿರುಚಿಯನ್ನು ಸಂಸ್ಕರಿಸಿಕೊಳ್ಳಬೇಕು.

ಸಂಸ್ಕಾರವುಳ್ಳ ಗರ್ಭದಲ್ಲಿಯೇ ಉತ್ತಮ ಅಭಿರುಚಿಯ ಶಿಶು ಜನ್ಮ ತಾಳುತ್ತದೆ ಎಂಬ ಮಾತಿಗೆ - ಶಿವಗುರು ಮತ್ತು ಆರ್ಯಾಂಬೆಯರ ಪುತ್ರನಾದ ಶ್ರೀ ಶಂಕರಾಚಾರ್ಯ ರಂತೆಯೇ - ಕ್ಷುದಿರಾಮ ಚಟ್ಟೋಪಾಧ್ಯಾಯ ಮತ್ತು ಚಂದ್ರಮಣೀದೇವಿಯ ಕಿರಿಯ ಮಗನಾದ ಶ್ರೀ ರಾಮಕೃಷ್ಣ ರೂ ಉತ್ತಮ ದೃಷ್ಟಾಂತ. ಶ್ರೀ ರಾಮಕೃಷ್ಣರ ತಾಯಿ ಚಂದ್ರಮಣೀ ದೇವಿಯವರು ತಮ್ಮ ಬದುಕಿನ ಉತ್ತರಾರ್ಧದಲ್ಲಿ ಮಗನಾದ ರಾಮಕೃಷ್ಣರ ಜೊತೆಯಲ್ಲಿದ್ದರು. ದಕ್ಷಿಣೇಶ್ವರದ ನಹಬತ್ ನ ಮೇಲಿನ ಅಂತಸ್ತಿನಲ್ಲಿ ಅವರು ವಾಸಿಸುತ್ತಿದ್ದರು. ಪ್ರತೀದಿನ ಪ್ರಾತಃಕಾಲ ಶ್ರೀ ರಾಮಕೃಷ್ಣರು ತಾಯಿಗೆ ನಮಸ್ಕರಿಸಿ, ತಾವೇ ಸ್ವತಃ ಆಕೆಯ ಸೇವೆಯನ್ನು ಮಾಡುತ್ತಿದ್ದರು. ಅಮ್ಮನ ಯೋಗಕ್ಷೇಮವನ್ನು ತಾವೇ ಗಮನಿಸುತ್ತಿದ್ದರು. ಅವರು - ತನ್ನ ಪತ್ನಿಗೋ ಶಿಷ್ಯರಿಗೋ ತಮ್ಮ ತಾಯಿಯ ಸೇವೆಯ ಭಾಗ್ಯವನ್ನು ದಾಟಿಸಿರಲಿಲ್ಲ. ಹೆತ್ತ ಅಮ್ಮನಲ್ಲೂ - "ಹೆಣ್ಣು, ಹೆಂಗಸು" ಎಂಬ ಭೇದವನ್ನು ಗುರುತಿಸಿ ಸೇವಕರಿಂದಲೋ ಪತ್ನಿ ಅಥವ ಬಳಗದ ಸುಪರ್ದಿಗೋ ಆಕೆಯನ್ನು ಒಪ್ಪಿಸಿ - ಸ್ವಂತ ಸುಖಕ್ಕೆ ಯಾವುದೇ ಪ್ರಯೋಜನವಿಲ್ಲದ - "ಸೇವೆಯೆಂಬ ಕಿರಿಕಿರಿ"ಯಿಂದಲೂ ನುಣುಚಿಕೊಳ್ಳುವ ಆಧುನಿಕ "ಹಣವಂತ" ಪುತ್ರ ಪುತ್ರಿಯರಿಗೆ ಶ್ರೀ ರಾಮಕೃಷ್ಣರು ಮಾದರಿಯಾಗಬೇಕು. ಏಕೆಂದರೆ - ತಾಯಿಯು ಹೆಣ್ಣೂ ಅಲ್ಲ; ಹೆಂಗಸೂ ಅಲ್ಲ. ಆಕೆ ತಾಯಿ.... ತಂದೆಯು ಗಂಡೂ ಅಲ್ಲ; ಗಂಡಸೂ ಅಲ್ಲ. ಆತ ತಂದೆ... ಧನೋಪಚಾರವು ಎಂದಿಗೂ ಸಂತಾನೋಪಚಾರವಾಗದು . ಮಾತಾಪಿತರು ವೃದ್ಧಾಪ್ಯದಿಂದ ಬಾಧೆ ಪಡುವ ಹಂತದಲ್ಲಂತೂ ಯಾವುದೇ ಸಂತಾನವು "ಸ್ತ್ರೀ ಪುರುಷ" ಎಂಬ ಕ್ಷುದ್ರ ಭೇದಗಳಲ್ಲಿ ಮುಳುಗಲೇಬಾರದು. ಪುರುಷ ಪ್ರತಿಷ್ಠೆಯಾಗಲೀ ಸ್ತ್ರೀ ಲಜ್ಜೆಯಾಗಲೀ ಮಾತಾಪಿತರ ಸೇವೆಗೆ ಅಡ್ಡಿಯಲ್ಲ. ಹೊಸ ಚಿಂತನೆಗಳಲ್ಲಿ ಸ್ಪಷ್ಟತೆ ಮೂಡಬೇಕಾಗಿದೆ. ಅಭೇದವನ್ನು ಸಾಕ್ಷಾತ್ಕರಿಸಿಕೊಳ್ಳಲು ಜ್ಞಾನದ ಪರಿಧಿಯನ್ನು ವಿಸ್ತರಿಸಿಕೊಳ್ಳುವುದೊಂದೇ ಮಾರ್ಗ.

ಎಷ್ಟೇ ಬಿಡುವಿರದ ಉದ್ಯೋಗದಲ್ಲಿದ್ದರೂ - ಒಂದೇ ಮನೆಯಲ್ಲಿರುವ ತಮ್ಮ ಹೆತ್ತವರ ಜತೆಯಲ್ಲಿ ಪ್ರತೀ ದಿನವೂ ಸ್ವಲ್ಪ ಸಮಯವನ್ನಾದರೂ - ಮಕ್ಕಳಂತೆ ಕಳೆಯುವುದೂ ಋಣಸಂದಾಯದ ಅಭಿವ್ಯಕ್ತಿಯೇ ಆಗುತ್ತದೆಯಲ್ಲವೆ ? ವೃದ್ಧ ಮಾತಾಪಿತರನ್ನು ತಮ್ಮ ಸ್ವಂತ ಸುಖಕ್ಕಾಗಿ ದೂರವಿಟ್ಟು, ಅಮಾವಾಸ್ಯೆ ಹುಣ್ಣಿಮೆ ಬಂದಾಗ ನೆನಪಿಸಿಕೊಂಡರೆ ಸಾಕೆ ? ಹೆತ್ತವರು ಜೀವಿಸಿರುವಾಗ Detachment ಎಂಬುದೇ ಅವರ ಸಂತಾನಕ್ಕೆ ಆಪ್ಯಾಯವೆನ್ನಿಸಿ, ಸತ್ತಮೇಲೆ ಪಿತೃಗಳಿಗೆ ಉಪಕರಿಸುವ ಹೆಮ್ಮೆಯಲ್ಲಿ - ಅದ್ದೂರಿಯಾಗಿ ನಡೆಸುವ ಯಾವುದೇ ಕರ್ಮಗಳು ಪ್ರಾಮಾಣಿಕವಾದೀತೆ ? Attachment ಮತ್ತು Detachment ಕುರಿತು ಲೌಕಿಕದ ಸಕಲ ಸೌಭಾಗ್ಯಗಳನ್ನೂ ಉಣ್ಣುತ್ತ ಬೋಧಿಸಲೂ ಆಗುವುದಿಲ್ಲ; ಲೋಕವ್ಯಾಪಾರದಲ್ಲಿ ಕುತ್ತಿಗೆಯವರೆಗೆ ಮುಳುಗಿಕೊಂಡು Detachment ನ್ನು ಸ್ವತಃ ಆಚರಿಸಲೂ ಆಗುವುದಿಲ್ಲ. ಆದರೆ... ಹಾಗೆ ಅಂದುಕೊಳ್ಳುತ್ತ ಅಸ್ಥಿರ ಮನಸ್ಸನ್ನು ಸ್ಥಿರಗೊಳಿಸಲು ಸತತ ಪ್ರಯತ್ನಿಸುತ್ತಲೇ ಇರಬಹುದು ! ವೃದ್ಧಾಶ್ರಮ ಮುಂತಾದ ಯಾವುದೇ "ಅಸಹಾಯ ಅನಿವಾರ್ಯ Detachment" ನ್ನು - "ಸಂತಾನದಿಂದ ತ್ಯಕ್ತ " ಎನ್ನಬಹುದಲ್ಲದೆ - ಅದು ಸ್ವೇಚ್ಛೆಯಿಂದ ಸಂಭವಿಸುವ ತ್ಯಾಗವಲ್ಲ. ಆದ್ದರಿಂದ ಅಂತಹ ಭಂಗಿಗಳೆಲ್ಲವೂ ನೋಯಿಸುತ್ತಲೇ ಇರುವ ತೋರಿಕೆಗಳೇ. ಲೌಕಿಕ Smartness ಗಳಲ್ಲಿಯೇ ಉರುಳಾಡುತ್ತ ಯಾರೂ ವಿರಕ್ತಿಯನ್ನು ಕಾಣಲು ಆಗುವುದಿಲ್ಲ. ಇತ್ತ ಹೆತ್ತವರೂ ವ್ಯಾವಹಾರಿಕ ಪೊಳ್ಳು ಪ್ರತಿಷ್ಠೆಗಾಗಿ - ತಮ್ಮ ದುಃಖಕ್ಕೆ "ಧೃತರಾಷ್ಟ್ರ ಮುಖವಾಡ"ದ ಉಪಾಯವನ್ನು ತೊಡಿಸುವುದರಿಂದ ಏನೂ ಉಪಯೋಗವಿಲ್ಲ; ಒಡಲು ಸುಡುತ್ತಲೇ ಇರುತ್ತದೆ. ಅಕಸ್ಮಾತ್ - ಸ್ವೇಚ್ಛೆಯ ಸಂಸಾರ ತ್ಯಾಗವಾಗಿದ್ದರೆ - ಅದು ನಿರಂಜನ ಅವಸ್ಥೆಯಾಗಿದ್ದರೆ - ಆಗ ಅದು ಗೌರವಾರ್ಹವೇ. ಲಿಪ್ತ, ಅನುಲಿಪ್ತ, ನಿರ್ಲಿಪ್ತಗಳೆಲ್ಲವೂ ಅವರವರ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುವ ಸದರದ ಮೌಲ್ಯವಲ್ಲ. ಯಾರನ್ನೋ ಮೆಚ್ಚಿಸಲು ಇರುವ ಸಾಧನಗಳೂ ಅಲ್ಲ. ಪ್ರಬುದ್ಧತೆಯ ತಪಸ್ಸಿನ ಜತೆಗೆ ತಾನಾಗಿ ಸ್ಥಾಪಿತವಾಗುವ ಸಾಂದ್ರಭಾವವದು. ನಮ್ಮ ಅನುಸರಣೆ-ಸ್ಮರಣೆಯು ಶುದ್ಧ ಪ್ರಾಮಾಣಿಕವಾಗಿದ್ದರೆ ಪ್ರಬುದ್ಧತೆಯು ತಾನಾಗಿಯೇ ಹಿಂಬಾಲಿಸುತ್ತದೆ; Detachment ಮಾಡುವುದೂ ಅಲ್ಲ; ಮಾಡಿಕೊಳ್ಳುವುದೂ ಅಲ್ಲ. ಅದು ಸಂಭವಿಸುತ್ತದೆ.

ಇನ್ನು... Attachment in Detachment ಎನ್ನುವ ಒಂದು ಹಂತವಿದೆ. ಅದನ್ನು - ಇದ್ದೂ ಇಲ್ಲದಂತೆ - ಅಥವ "ಪದ್ಮಪತ್ರದ ಮೇಲಿನ ಜಲಬಿಂದುವಿನಂತೆ" ಎಂಬ ರೂಪಕದ ಮೂಲಕ ಅಭಿವ್ಯಕ್ತಗೊಳಿಸಲಾಗುತ್ತದೆ. ಇವೆಲ್ಲವೂ - ಅಧ್ಯಾತ್ಮದ ಹಾದಿಯಲ್ಲಿಯೇ ಬಹುಪಾಲು ಮುಳುಗಿಕೊಂಡವರಿಗೆ ಅರ್ಥವಾಗುವ ದರ್ಶನ. ಲೋಕವ್ಯಾಪಾರದಿಂದ ಪೂರ್ತಿಯಾಗಿ ಹಿಂದೆ ಸರಿಯದ, ಲೋಕವ್ಯಾಪಾರದಲ್ಲಿಯೇ ಮೂಗಿನವರೆಗೆ ಮುಳುಗಿದಂತಹ ಜೀವಗಳು ಇಂತಹ ಶಾಬ್ದಿಕ ಚಮತ್ಕಾರದ ಸೂಕ್ಷ್ಮಗಳನ್ನು ಆಡಂಬರದ ಇನ್ನೊಂದು ಗರಿಯಂತೆ ಸಿಕ್ಕಿಸಿಕೊಂಡು, ಮೆಚ್ಚಬಹುದು; Attachment in Detachment ಎಂದು ಕನವರಿಸುತ್ತ ಚಪ್ಪರಿಸಬಹುದು. ಅಷ್ಟೆ. ಆದರೆ ಅಹಂ ಬುದ್ಧಿಯು ಇರುವವರೆಗೆ ಜೀವ ಮತ್ತು ಜಗತ್ತು ಎರಡನ್ನೂ ಸಮಾನವಾಗಿ ಹಿಡಿದಿರಲೇ ಬೇಕಾಗುತ್ತದೆ. ಎಂತೆಂತಹ ಅವಧೂತರಿಗೂ "ಪದ್ಮಪತ್ರದ ಜಲಬಿಂದು" ವಾಗಲು ತಿಣುಕಬೇಕಾಗುತ್ತದೆ. ದೈವಕೃಪೆಯಿದ್ದರೆ ಮಾತ್ರ ಲೌಕಿಕ ಮತ್ತು ಅಲೌಕಿಕ ವ್ಯಾಪಾರಗಳನ್ನು ನಿರಾಳವಾಗಿ ನಿಭಾಯಿಸಬಲ್ಲ ಸವ್ಯಸಾಚಿತ್ವವೂ ಒಮ್ಮೊಮ್ಮೆ - ಶಂಕರ ರಾಮಕೃಷ್ಣರಂತೆ ಸಂಭವಿಸಬಹುದು ! 

ಹೀಗಿದ್ದೂ ಸುಭಗರಾಗಿ ಬದುಕುವ ಇಚ್ಛಾಶಕ್ತಿಯನ್ನು ರೂಢಿಸಿಕೊಳ್ಳುವ ಪ್ರಯತ್ನವು ಮಾತ್ರ  ನಿಲ್ಲಬಾರದು. ಇವತ್ತಿನ ಸಮಾಜದಲ್ಲಿ, ಒಂದೆಡೆ ಅನಾಥಾಶ್ರಮ - ವೃದ್ಧಾಶ್ರಮಗಳು ಹೆಚ್ಚುತ್ತಿದ್ದರೆ, ಇನ್ನೊಂದೆಡೆ ತ್ಯಾಗಭಂಗಿಗಳೂ ಭಾವರಹಿತ ಆಚರಣೆಗಳೂ ಹೆಚ್ಚುತ್ತಿವೆ. Attachment ನ್ನು ಬಿಡಲಾಗದ ಮತ್ತು Detachment ನ್ನು ಬಲಾತ್ಕಾರವಾಗಿ ಹೇರಲಾಗುತ್ತಿರುವ ಕ್ರೂರ ಸನ್ನಿವೇಶವೊಂದು ಈಗ ಸುಳಿದಾಡುತ್ತಿದೆ ! ಕೇವಲ ಕುತೂಹಲದಿಂದ ಹಿಂದೊಮ್ಮೆ ಒಂದು ವೃದ್ಧಾಶ್ರಮವನ್ನು ನಾನು ಸಂದರ್ಶಿಸಿದ್ದೆ. ಅಲ್ಲಿ ತುಟಿಕಚ್ಚಿ ನೋವು ನುಂಗುತ್ತಿರುವ ಕೆಲವು ವೃದ್ಧರನ್ನು ನೋಡಿ ತಲ್ಲಣಗೊಂಡಿದ್ದೆ. ಇಂದಿನ ಸಮಾಜದಲ್ಲಿ ಹೆತ್ತವರು ಎಂಬ ವರ್ಗವು "ಮಾನವ ಹಕ್ಕು" ಎಂಬ ದೊಂಬರಾಟದ ವ್ಯಾಪ್ತಿಗೂ ಬರುವುದಿಲ್ಲವಲ್ಲವೆ ? - ಅಂದುಕೊಂಡಿದ್ದೆ.  "ಹೆತ್ತವರು ಮಾನವರಲ್ಲ; ದೇವರು !" ಎನ್ನುತ್ತಲೇ ನಡೆಯಬಾರದ್ದೆಲ್ಲವೂ ನಡೆದುಹೋಗುತ್ತಿದೆಯಲ್ಲ ? ... ಹೀಗಿದ್ದೂ ನಮ್ಮ ಸಮಾಜದಲ್ಲಿ - ಶ್ರಾದ್ಧ, ಸಮಾರಾಧನೆ ಮುಂತಾದ ನಯನಾಜೂಕು ಡಂಬರದ ಸಂಭ್ರಮಗಳಿಗೇನೂ ಕೊರತೆಯಾಗಿಲ್ಲ. ನಿಜವಾಗಿಯೂ ಇಂತಹ ಕರ್ಮಗಳು ಭಾವರಹಿತ ಕಾಟಾಚಾರದ ಸಾಮಾಜಿಕ ಲೀಲೆಗಳೆ ? 

ವೇದಾಂಗದ ಯಾವುದೇ ಕರ್ಮಾಚರಣೆಗೆ ಒಂದು ಗಾಂಭೀರ್ಯವಿರುತ್ತದೆ; ಇರಬೇಕು. ಪಡಪೋಶಿ ಆಚರಣೆಗಳಿಂದ - ಆಯಾ ದಿನ ಉಂಡ ಸುಖ, ಕೆಲವರಿಗೆ ಪ್ರವಾಸದ ಸುಖ ಸಿಗಬಹುದಲ್ಲದೆ ಉದಾತ್ತ ಉದ್ದೇಶವು ಸಾಧನೆಯಾಗದು. ಈ ಬದುಕಿನ ಮಹಾಲಯಕ್ಕೆ ಪ್ರೀತಿ, ಕರುಣೆ, ನಂಬಿಕೆ, ವಿಶ್ವಾಸ, ಶ್ರದ್ಧೆಗಳೇ ತಳಪಾಯ. ತಲ ಉರುಳಿಸಿದರೆ ಮನೆಯೂ ಉಳಿಯದು; ಭಾವವು ಕಮರಿಹೋದರೆ ಮನಸ್ಸಿನ ನೆಮ್ಮದಿಯೂ ಉಳಿಯದು. ಆದ್ದರಿಂದ ಮನಸ್ಸಿನ ಸ್ವಾಸ್ಥ್ಯವನ್ನು ರಕ್ಷಿಸಿಕೊಳ್ಳುವಂತಹ ಬದುಕನ್ನು ಕಟ್ಟಿಕೊಳ್ಳಬೇಕಾಗಿದೆ. ಶ್ರೀ ಶಂಕರ, ಶ್ರೀ ರಾಮಕೃಷ್ಣರು ನಮಗಾಗಿ ಉಳಿಸಿಹೋದ ಉನ್ನತ ಚಿಂತನೆಗಳು ಎಂತಹ ಪ್ರತಿಕೂಲ ಪರಿಸ್ಥಿತಿಯಲ್ಲೂ ಮನುಷ್ಯರನ್ನು ಆಧರಿಸಬಲ್ಲವು. 

ಮರಣಾನಂತರ ನಿರ್ವಹಿಸುವ ಶ್ರಾದ್ಧಕರ್ಮಗಳು - ಮಾತಾಪಿತರು ಬದುಕಿರುವಾಗ ಅವರಿಗೆ ಸಲ್ಲಿಸುತ್ತಿದ್ದ ಹೃತ್ಪೂರ್ವಕವಾದ ಮಾನಸಿಕ ಮತ್ತು ದೈಹಿಕ ಬೆಂಬಲದ ಸಂದು ಕಡಿಯದ ಭಾವಕ್ರಿಯೆ; ಪಿತೃಗಳ ನಿರಂತರ ಸ್ಮರಣೆಯ ಪ್ರತೀಕ. ಶ್ರಾದ್ಧದ ಹೂರಣವೇ ಶ್ರದ್ಧೆ.



ತಮ್ಮ ಇಳಿ ವಯಸ್ಸಿನಲ್ಲಿ ಶ್ರೀ ರಾಮಕೃಷ್ಣ ಪರಮಹಂಸರ ಜೊತೆಯಲ್ಲಿ ದಕ್ಷಿಣೇಶ್ವರದಲ್ಲಿಯೇ ವಾಸವಾಗಿದ್ದ ಚಂದ್ರಮಣಿಯವರ ಸಾವು ಸಮೀಪಿಸುತ್ತಿದ್ದಾಗ ಅವರನ್ನು "ಅಂತರ್ ಜಲಿ ಸಂಸ್ಕಾರ" ಕ್ಕಾಗಿ (ಸಾಯುತ್ತಿರುವ ವ್ಯಕ್ತಿಯ ಶರೀರದ ಕೆಳಭಾಗವನ್ನು ನೀರಿನಲ್ಲಿ ಮುಳುಗಿಸುವ ಸಂಸ್ಕಾರವಿದು; ಬಹುಶಃ - ಪಂಚಭೂತಗಳಲ್ಲಿ ಒಂದಾಗಲು ಮಾನಸಿಕವಾಗಿ ಸಿದ್ಧಗೊಳಿಸುವ ಪೂರ್ವ ತಾಲೀಮು ! ಮರಣವನ್ನು ಬುದ್ಧಿಪೂರ್ವಕವಾಗಿ ಸ್ವೀಕರಿಸುವಂತಹ ವೀರವಿಧಿ !) ಚಂದ್ರಮಣೀ ದೇವಿಯವರನ್ನು ಸಮೀಪದಲ್ಲಿದ್ದ ಬಕುಲ್ ತಾಲಾ ಘಾಟ್ ಗೆ ಕರೆದೊಯ್ಯಲಾಯಿತು. ತನ್ನ ತಾಯಿಯು ಶಾಶ್ವತವಾಗಿ ಪರಲೋಕ ಯಾತ್ರೆಗೆ ಹೊರಟಿದ್ದಾಳೆ ಎಂಬುದು ಅರ್ಥವಾಗಿದ್ದರೂ ಆ ಕ್ಷಣದಲ್ಲಿ, ಶ್ರೀ ರಾಮಕೃಷ್ಣರೂ ವಿಚಲಿತರಾಗಿದ್ದರು. ಮಾಯೆಯು ಯಾರನ್ನು ಬಿಟ್ಟಿದೆ ? ಮಮತೆಯ ಪಾಶವು ಜೀವವನ್ನು ಕಟ್ಟುವಾಗಲೂ ನೋವು; ಬಿಡಿಸಿಕೊಳ್ಳುವಾಗಲೂ ನೋವು ಕೊಡುತ್ತದೆ! ಅದನ್ನೇ "ಕರುಳಿನ ಬಂಧ" ಎನ್ನುವುದು! ಆದರೆ.. ಈ ಸಂಸಾರವನ್ನು ನಿಲ್ಲದಂತೆ ಓಡಿಸುತ್ತಿರುವುದೂ ಅದೇ ಬಂಧ; ಸಂಸಾರಗಳು ಮುಗ್ಗರಿಸುವುದೂ ಅದೇ ಮಮತೆಯಿಂದ !

ಅಂದು ಅಂತಿಮ ಯಾತ್ರೆಗೆ ಸಿದ್ಧಳಾಗಿದ್ದ ತಮ್ಮ ತಾಯಿಯ ಕಾಲು ಹಿಡಿದು "ಅಮ್ಮಾ, ನನ್ನನ್ನು ನಿನ್ನ ಗರ್ಭದಲ್ಲಿ ಹೊತ್ತ ನೀನು ಯಾರು? ಇಲ್ಲಿಯ ವರೆಗೆ ನನ್ನನ್ನು ನೀನು ನೋಡಿಕೊಂಡೆ. ಇನ್ನೂ ಹಾಗೇ ನೋಡಿಕೋ.." ಎಂದು ಮನಸಾರ ಅತ್ತುಬಿಟ್ಟಿದ್ದರಂತೆ - ಶ್ರೀ ರಾಮಕೃಷ್ಣರು. ಭಾವತರ್ಪಣ ! ಅದಕ್ಕಿಂತ ಶ್ರೇಷ್ಠ ತರ್ಪಣವುಂಟೆ ? ಶ್ರೀ ರಾಮಕೃಷ್ಣರು ಅದಾಗಲೇ "ಗಲಿತ ಕರ್ಮಾವಸ್ಥೆ" ಯನ್ನು ತಲುಪಿದ್ದರು. ಅಂದರೆ, ಎಲ್ಲ "ಕರ್ಮ"ವನ್ನು ಮೀರಿದ ಅವಧೂತ ಸ್ಥಿತಿಯನ್ನು ತಲುಪಿದ್ದ ಕಾರಣ, 1282(-83?) ರಲ್ಲಿ ಚಂದ್ರಮಣೀ ದೇವಿಯವರು ದೈವಾಧೀನರಾದಾಗ ತಮ್ಮ ತಾಯಿಗೆ ದೈಹಿಕವಾಗಿ ತರ್ಪಣ ನೀಡಲೂ ಅವರಿಗೆ ಅಸಾಧ್ಯವಾಯಿತು. ಅವರ ಬೊಗಸೆಯಲ್ಲಿ ನೀರೂ ನಿಲ್ಲುತ್ತಿರಲಿಲ್ಲವಂತೆ. (ಸಂಗ್ರಹಕ್ಕೆ ವಿಮುಖವಾದ ಭಾವಸ್ಥಿತಿ ?) ತಮ್ಮ ಸುದೀರ್ಘ ತಾಂತ್ರಿಕ ಸಾಧನೆಗಳಿಂದಾಗಿ ಪರಮಹಂಸರು ಆಗ ದೈಹಿಕವಾಗಿಯೂ ದುರ್ಬಲರಾಗಿದ್ದರು. ಅನಂತರ ರಾಮಕೃಷ್ಣರ ಸೂಚನೆಯಂತೆಯೇ ಅವರ ಸೋದರಳಿಯ ರಾಮಲಾಲನು ಚಂದ್ರಮಣೀದೇವಿಯವರ ಅಂತ್ಯ ಕರ್ಮಗಳನ್ನು ನಿರ್ವಹಿಸಿದ್ದನು.

ಶ್ರೀ ರಾಮಕೃಷ್ಣರು ಹೇಳುತ್ತಿದ್ದರು : "ಈ ಪ್ರಪಂಚದಲ್ಲಿ ತಂದೆ ತಾಯಿಗಳಿಬ್ಬರೂ ಮಹಾನ್ ಗುರುಗಳು. ಅವರು ಬದುಕಿರುವ ವರೆಗೆ ಅವರ ಸೇವೆಯನ್ನು ಮಾಡುವುದು ಮಕ್ಕಳ ಕರ್ತವ್ಯ ಮತ್ತು ಅವರ ಮರಣಾನಂತರ ಅವರವರ ಶಕ್ತ್ಯಾನುಸಾರ ಶ್ರಾದ್ಧ ಮಾಡಬೇಕು." ಶ್ರದ್ಧೆಯ ಪರಿಧಿಯಲ್ಲಿ ಬರುವ "ಲೋಕ ಮರ್ಯಾದೆ"ಯನ್ನು ಯಾರೂ ಉಲ್ಲಂಘಿಸಬಾರದು ಮತ್ತು ತಾಪತ್ರಯಗಳಲ್ಲಿ ಸಿಲುಕಿ, ನಿತ್ಯ ಸ್ಮರಣೆಯಿಂದ ವಂಚಿತರಾಗುವ ಸಾಂಸಾರಿಕರು ವರ್ಷಕ್ಕೊಮ್ಮೆಯಾದರೂ ಪಿತೃಗಳನ್ನು ಕೃತಜ್ಞತೆಯಿಂದ ಸ್ಮರಿಸಿಕೊಳ್ಳುವುದನ್ನು ರಾಮಕೃಷ್ಣರು ಅನುಮೋದಿಸಿದ್ದರು. ಸ್ವತಃ ತಾವು ಆಚರಿಸಿ, ಬೋಧಿಸಿದ್ದರು.

ಪಿತೃಭಕ್ತರಾಗಿದ್ದ ಶ್ರೀ ಶಂಕರ ಮತ್ತು ಶ್ರೀ ರಾಮಕೃಷ್ಣರಲ್ಲಿ ಹಲವು ಸಾಮ್ಯತೆಗಳಿದ್ದರೂ ಪ್ರತ್ಯೇಕವೆನಿಸುವ ವೈಶಿಷ್ಟ್ಯಗಳೂ ಇದ್ದವು. ಶ್ರೀ ಶಂಕರರು ಜ್ಞಾನಿಗಳಿಗೆ ಅರ್ಥವಾಗುವಂತೆ ಅದ್ವೈತವನ್ನು ಸಾಕಾರಗೊಳಿಸಿಕೊಂಡಿದ್ದರೆ ಶ್ರೀ ಪರಮಹಂಸರು ಪಾಮರರಿಗೂ ತಿಳಿಯುವಂತೆ ಅದ್ವೈತವನ್ನು ಉಂಡು ಉಟ್ಟು ಉಸಿರಾಗಿಸಿಕೊಂಡು ಬದುಕಿದರು ! ಒಬ್ಬರು ಅಲ್ಪಾವಧಿಯ ಬದುಕಿನಲ್ಲೇ ಸಾಗರೋಪಮವಾಗಿ ಬೋಧಿಸಿ ಸನಾತನ ವೇದವನ್ನು ಬದುಕಿಸಿದರು; ಇನ್ನೊಬ್ಬರು ಉನ್ನತ ಚಿಂತನೆಗಳೆಲ್ಲವನ್ನೂ ಸ್ವತಃ ಬದುಕಿ ಬೋಧಿಸಿ ಜೀವಸಾಗರವನ್ನು ಬದುಕಿಸಿದರು ! ಶಂಕರರು ತಮ್ಮ ಪಾಂಡಿತ್ಯದ ಜ್ಞಾನ ಖಡ್ಗದಿಂದ ಅನ್ಯ ಶಾಸ್ತ್ರೋಕ್ತಿಗಳನ್ನು ತುಂಡರಿಸುತ್ತ ತಮ್ಮ ಮತವನ್ನು ಪ್ರತಿಪಾದಿಸುತ್ತ ನಡೆದರೆ, ರಾಮಕೃಷ್ಣರು - ಲೋಕರೂಢಿಯನ್ನು ನಯವಾಗಿ ತಿದ್ದುತ್ತ ಒಯನಾಗಿ ಒಪ್ಪಿಸಿ ಮೆಚ್ಚಿಸಿದರು ! ಶಂಕರರು ಜ್ಞಾನಮಾರ್ಗಾವಲಂಬಿಯಾದರೆ ಪರಮಹಂಸರು ಜ್ಞಾನ, ಕರ್ಮ, ಭಕ್ತಿಮಾರ್ಗಗಳೆಲ್ಲವನ್ನೂ ಅನುಮೋದಿಸಿದರು; ಎಷ್ಟು ಮತವೋ ಅಷ್ಟು ಪಥ ಎಂದರು. "ಸರ್ವಮಾರ್ಗಗಳೊಂದೆ ನಿಲಯಕೆ ಹೋಗುವಂಥವು" - ಎಂದು ಭರವಸೆ ನೀಡಿದರು; ಪಾತ್ರ - ಪಾತ್ರೆಯ ರುಚಿಭೇದ ಮತ್ತು ಸಾಮರ್ಥ್ಯವನ್ನು ಅರಿತು ತಕ್ಕಂತೆ ಉಪದೇಶಿಸಿದರು; ಮುಳುಗುವವರನ್ನು ಹಿಡಿದೆತ್ತಿದರು. ಮುಖ್ಯವಾಗಿ, ಶ್ರೀ ಶಂಕರ ಪ್ರಣೀತ ಅದ್ವೈತವು ಜನಸಾಮಾನ್ಯರನ್ನೂ ಮುಟ್ಟುವಂತೆ ಮಾಡಿದರು. ಪಂಡಿತರಿಂದ ಹಿಡಿದು ಪಾಮರರ ವರೆಗೆ ಎಲ್ಲರನ್ನೂ ಶ್ರೀ ರಾಮಕೃಷ್ಣರು ಸಮಾನವಾಗಿ ಪೋಷಿಸಿದರು. ಹೀಗಿದ್ದೂ - "ಈ ಯುಗಕ್ಕೆ ಭಕ್ತಿಮಾರ್ಗವೇ ಸುಲಭ" ಎಂದೂ ಪರಮಹಂಸರು ದಾರಿ ತೋರಿದರು. ಅದಕ್ಕೆ ಸಕಾರಣವನ್ನೂ ಕೊಟ್ಟರು. "ಜ್ಞಾನದ ಪ್ರಖರತೆಯನ್ನು ಹಿಡಿದಿಟ್ಟುಕೊಳ್ಳುವ ಶಕ್ತಿಯು ಇಂದಿನ ಪಾಮರರಿಗಿಲ್ಲ. ಆದುದರಿಂದ ಸೇವಕ ಶರಣಾಗತ ಭಾವದ ಶುದ್ಧ ಭಕ್ತಿ - ವೈರಾಗ್ಯವು ಸಾಮಾನ್ಯರನ್ನೂ ಆಧರಿಸಬಲ್ಲದು" ಎಂದು ರಾಮಕೃಷ್ಣರು ಸರಳತೆಯ ಹಾದಿ ತೋರಿದರು.

ಪರಮಹಂಸರು ರಾಖಾಲ(ಸ್ವಾಮಿ ಬ್ರಹ್ಮಾನಂದ), ಶರತ್(ಸ್ವಾಮಿ ಶಾರದಾನಂದ), ತಾರಕ(ಸ್ವಾಮಿ ಶಿವಾನಂದ) ಮುಂತಾದ ತಮ್ಮ ಬೆರಳೆಣಿಕೆಯ ಅಂತರಂಗ ಶಿಷ್ಯರು ಮತ್ತು ಸ್ವಾಮಿ ವಿವೇಕಾನಂದ ಎಂದೇ ಜಗದ್ವಿಖ್ಯಾತರಾದ ನರೇಂದ್ರನಂತಹ ಜ್ಞಾನ ಖಡ್ಗಗಳನ್ನು ರೂಪಿಸಿದರೆ, ಶಂಕರರು - ಪದ್ಮಪಾದ, ಸುರೇಶ್ವರ, ಹಸ್ತಾಮಲಕ, ತೋಟಕರಂತಹ ಶಿಷ್ಯರನ್ನು ರೂಪಿಸಿದರು. ಶ್ರೀ ಶಂಕರಾಚಾರ್ಯರು ಭಾರತದ ನಾಲ್ದೆಸೆಗಳಲ್ಲಿ ನಾಲ್ಕು ಅದ್ವೈತ ಪೀಠಗಳನ್ನು ಸ್ಥಾಪಿಸಿದರೆ, ಶ್ರೀ ರಾಮಕೃಷ್ಣರ ಕಾಲಾನಂತರ ಅವರ ಶಿಷ್ಯವೃಂದವು ಸ್ವಾಮಿ ವಿವೇಕಾನಂದರ ಮಾರ್ಗದರ್ಶನದಲ್ಲಿ ವಿಶ್ವದಾದ್ಯಂತ ರಾಮಕೃಷ್ಣ ಮಠಗಳನ್ನು ಸ್ಥಾಪಿಸಿ ರಾಮಕೃಷ್ಣ ಚಿಂತನೆಗಳ ಪ್ರಸಾರದಲ್ಲಿ ತೊಡಗಿಕೊಂಡರು. ಇಬ್ಬರೂ ಯುಗಪುರುಷರು ಸುಮಾರು 1000 ವರ್ಷಗಳ ಅಂತರದಲ್ಲಿ ಆಯಾ ಸಮಾಜವನ್ನು ಬಲವಾಗಿ ಪ್ರಭಾವಿಸಿದರು. ಶಂಕರರು ಜ್ಞಾನದ ಕಿಡಿಯ ರೂಪದಲ್ಲಿಯೇ ಅವತರಿಸಿ, ತಮ್ಮ 3 ನೇ ವಯಸ್ಸಿನಲ್ಲಿಯೇ ಅಕ್ಷರದ ಸಹವಾಸದಲ್ಲಿದ್ದು 8 ನೇ ವಯಸ್ಸಿನಲ್ಲಿಯೇ ವೇದವಿದರಾಗಿದ್ದರೆ, ರಾಮಕೃಷ್ಣರು ಪ್ರಾಥಮಿಕ ಕೆಲವು ತರಗತಿಗಳನ್ನು ಕಂಡದ್ದು ಬಿಟ್ಟರೆ ಗ್ರಂಥಪಂಥಗಳನ್ನು ಓದಿದವರೇ ಆಗಿರಲಿಲ್ಲ ! ಲೋಕಾನುಭವ ಮತ್ತು ಸ್ವಂತ ಸಾಧನೆಯೇ ಪರಮಹಂಸರ ಬಂಡವಾಳ. ಹೀಗಿದ್ದೂ ವೇದೋಪನಿಷತ್ತು ದ್ವೈತಾದ್ವೈತಗಳನ್ನು ರಾಮಕೃಷ್ಣರು ಸರಳವಾಗಿ ಸಮರ್ಥವಾಗಿಯೇ ಬೋಧಿಸಿದ್ದರು. ... ಶ್ರೀ ಶಂಕರರು ಸಾಕ್ಷಾತ್ ಶಂಕರನ ಅವತಾರವೆನಿಸಿಕೊಂಡರೆ ಶ್ರೀ ರಾಮಕೃಷ್ಣರು ಅವತಾರ ವರಿಷ್ಠರೆನಿಸಿಕೊಂಡರು ! ಒಬ್ಬರು ವೇದಗಳನ್ನು ವಚನವಾಗಿಸಿದರೆ ಇನ್ನೊಬ್ಬರ ವಚನಗಳೆಲ್ಲವೂ ವೇದವಾದವು ! "ಇದು ಹೇಗೆ ಸಾಧ್ಯ ? ಹೇಗೆ ಸಾಧ್ಯ ?" ಅನ್ನಿಸಿದರೂ - ಲೋಕದಲ್ಲಿ ನವನೀತದ ಕೊರತೆಯಾದಾಗಲೆಲ್ಲ "ದೈವಾಂಶ ಸಂಭೂತ ಅಸಾಧ್ಯಗಳು" ಎಂಬ ಅಘಟಿತ ಘಟನೆಗಳು ಸಂಭವಿಸುತ್ತವೆ, ಅಸಾಧ್ಯಗಳೂ ಸುಸಾಧ್ಯವಾಗುತ್ತವೆ ಎಂದುಕೊಂಡು -  ಸುಮ್ಮನಿರಬಹುದು !

ಮಹಾನ್ ವ್ಯಕ್ತಿಗಳೆಲ್ಲರೂ ಪಿತೃಭಕ್ತರೇ ಆಗಿರುವುದು ಸೋಜಿಗವೇನಲ್ಲ. ಶ್ರೀ ಶಂಕರಾಚಾರ್ಯರೂ ತಮ್ಮ ತಾಯಿ ಆರ್ಯಾಂಬೆಯನ್ನು ಅನ್ಯಾದೃಶವಾಗಿ ಗೌರವಿಸಿದ - ತಾಯಿಯ ಮಮತೆಗೆ ಪ್ರತಿಸ್ಪಂದಿಸಿದ ಆದರ್ಶವು ನಮ್ಮ ಮುಂದಿದೆ. ತಾಯಿಯನ್ನು ಪೂರ್ತಿಯಾಗಿ ಒಪ್ಪಿಸಿಯೇ ಸನ್ಯಾಸ ಸ್ವೀಕರಿಸಿದ್ದ ಆಚಾರ್ಯರು ಆಕೆಯ ಮರಣವು ಸನ್ನಿಹಿತವಾದಾಗ ಅಂತಃಶಕ್ತಿಯಿಂದಲೇ ಅದನ್ನು ಅರಿತುಕೊಂಡರು. ಆಗ ತಮ್ಮ ಶಿಷ್ಯರೊಂದಿಗೆ ಶೃಂಗಗಿರಿಯಲ್ಲಿದ್ದ ಶಂಕರಾಚಾರ್ಯರು ತಾಯಿಯು ವ್ಯಾಧಿಪೀಡಿತಳಾಗಿರುವುದನ್ನು ಯೋಗಶಕ್ತಿಯಿಂದಲೇ ತಿಳಿದುಕೊಂಡು ತಕ್ಷಣವೇ ತಾಯಿಯನ್ನು ನೋಡಲು ಧಾವಿಸುತ್ತಾರೆ. ಕಾಲಟಿಯಲ್ಲಿದ್ದ ಅಮ್ಮನ ದರ್ಶನ ಮಾಡುತ್ತಾರೆ.

"ಅಮ್ಮಾ, ನಾನು ಶಂಕರ ಬಂದಿದ್ದೇನೆ. ನಿನಗಾಗಿ ಏನು ಮಾಡಲಿ ? ಹೇಳಮ್ಮಾ..." ಎಂದು ಮರಣಶಯ್ಯೆಯಲ್ಲಿದ್ದ ತಾಯಿಯನ್ನು ಸಂತೈಸುತ್ತಾರೆ. ಆ ತಾಯಿಯಾದರೋ ಎಂತಹ ಪುಣ್ಯಾತ್ಮಳು ? "ಈ ನನ್ನ ಅಂತ್ಯಕಾಲದಲ್ಲಿ ನೀನು ಕುಶಲನಾಗಿರುವುದನ್ನು ಕಾಣುವಂತಾಯಿತಲ್ಲ ? ಅದೇ ನನ್ನ ಭಾಗ್ಯ ಮಗೂ. ಇನ್ನು ನನಗೇನು ಬೇಕು ? ಮುಪ್ಪಿನಿಂದ ಜರ್ಜರಿತವಾಗಿರುವ ಈ ದೇಹವನ್ನು ಇನ್ನೂ ಧರಿಸಲು ನನಗೆ ಶಕ್ತಿಯಿಲ್ಲ. ನನ್ನ ಮಗನಾದ ನೀನು ಶಾಸ್ತ್ರವಿಹಿತವಾದ ಮಾರ್ಗದಲ್ಲಿ ಈ ದೇಹವನ್ನು ಸಂಸ್ಕರಿಸಿ ನಾನು ಪುಣ್ಯಲೋಕವನ್ನು ಸೇರುವಂತೆ ಮಾಡು." ಎಂದು ಆರ್ಯಾಂಬೆಯು ಕ್ಷೀಣ ಧ್ವನಿಯಲ್ಲಿ ಹೇಳುತ್ತಾಳೆ. ಆಗ ಆಚಾರ್ಯರು ತಮ್ಮ ತಾಯಿಗೆ ಪರತತ್ವವನ್ನು ಉಪದೇಶಿಸಿದರು. ಆದರೆ ಆಚಾರ್ಯರ ನಿರ್ಗುಣ ಬ್ರಹ್ಮತತ್ವದಲ್ಲಿ ಆಕೆಯ ಮನಸ್ಸು ನಿಲ್ಲಲಿಲ್ಲ. "ಮಗೂ, ಕುಲಗೋತ್ರವಿಲ್ಲದ ಈ ಅದ್ವಿತೀಯ ನಿರ್ಗುಣ ತತ್ವವು ನನ್ನ ಅರಿವಿಗೆ ಮೀರಿದುದು. ಆದ್ದರಿಂದ ಸಗುಣನಾದ ದೇವತೆಯ ಕುರಿತು ನನಗೆ ತಿಳಿಹೇಳು.." ಎಂದು ಕೇಳಿಕೊಂಡಳು. ಆಗ ಆಚಾರ್ಯರು ಭುಜಂಗೋಪವೃತ್ತಗಳಿಂದ ಭಕ್ತಿಪೂರ್ವಕವಾಗಿ ಸ್ತುತಿಸಲು ಆ ದಯಾಮಯನಾದ ಶಿವನು ತ್ರಿಶೂಲ, ಧನುಸ್ಸುಗಳಿಂದ ಕೂಡಿದ ದೂತರನ್ನು ಕಳುಹಿಸಿಕೊಟ್ಟನು. ಆ ದೃಶ್ಯವನ್ನು ನೋಡಿ ಬೆದರಿದ ಆರ್ಯಾಂಬೆಯು "ಇವರೊಂದಿಗೆ ನಾನು ಹೋಗಲಾರೆ.." ಎಂದು ನಡುಗಿದಳು. ಆಗ ಆಚಾರ್ಯರು ಶಿವದೂತರನ್ನು ಹಿಂದಕ್ಕೆ ಕಳಿಸಿ ಮಹಾವಿಷ್ಣುವನ್ನು ಭಕ್ತಿಯಿಂದ ಸ್ತುತಿಸಿದರು. ಮಹಾವಿಷ್ಣುವು ಪ್ರಸನ್ನನಾಗಿ ಆಚಾರ್ಯರ ಪ್ರಾರ್ಥನೆಯಂತೆ ಆರ್ಯಾಂಬೆಯ ಹೃದಯದಲ್ಲಿ ನೆಲೆಯೂರಿದನು. ಆರ್ಯಾಂಬೆಯು ನಿರ್ಭಯದಿಂದ ತನ್ನ ದೇಹವನ್ನು ತ್ಯಜಿಸಿದಳು.

ಅನಂತರ ತಾಯಿಯ ಅಂತ್ಯ ಕ್ರಿಯೆಯನ್ನೂ ಶಂಕರರೇ ನೆರವೇರಿಸಿದರು. "ಸನ್ಯಾಸಿಯಾಗಿ ಸರ್ವಸಂಗ ಪರಿತ್ಯಾಗಿಯಾದವನಿಗೆ ಉತ್ತರಕ್ರಿಯೆ ಮಾಡುವ ಅಧಿಕಾರವಿಲ್ಲ" ಎಂದು ಅಡ್ಡಿ ಮಾಡಿದ ಬಂಧುಗಳನ್ನು ತಿರಸ್ಕರಿಸಿದ ಶಂಕರರು ಏಕಾಂಗಿಯಾಗಿ, ತಾವೇ - ತಮ್ಮ ತಾಯಿಯ ಅಂತ್ಯಕ್ರಿಯೆಗಳನ್ನು ಶುದ್ಧಚಿತ್ತದಿಂದ ನೆರವೇರಿಸುತ್ತಾರೆ. ಯಾವುದೇ ಇತಿಹಾಸವು ವರ್ಷವುರುಳಿದಂತೆ ಪುರಾಣವಾದಾಗ, ಅದರಲ್ಲಿ ಅಲ್ಲಲ್ಲಿ ನಾಟಕೀಯತೆ- ಅತಿಶಯೋಕ್ತಿಯ ಸ್ಪರ್ಶವಾಗುವುದೂ ಸಹಜ. ಆದರೆ ಅಧ್ಯಾಯಿಗೆ ಯಾವುದೇ ಪೂರ್ವಾಗ್ರಹವಿಲ್ಲದಿದ್ದರೆ ಮೂಲ ಕತೆಯನ್ನು - ಕತೆಯ ಭಾವವನ್ನು ಗ್ರಹಿಸುವುದು ಸಾಧ್ಯವಾಗುತ್ತದೆ.

ಸನ್ಯಾಸಿಗಳು ಮಾತೃಸಂಸ್ಕಾರವನ್ನು ಮಾಡುವುದು ಅಶಾಸ್ತ್ರೀಯವಾದರೂ ಸನ್ಯಾಸಪೂರ್ವದ 8 ರ ಎಳೆ ಹರೆಯದಲ್ಲಿ ತಾಯಿಗೆ ಕೊಟ್ಟ ಮಾತಿನಂತೆ, ಶ್ರೀ ಶಂಕರರು ತಮ್ಮ ತಾಯಿಯ ಅಂತ್ಯಕಾಲದಲ್ಲಿ ಆಕೆಯ ಜೊತೆಗಿದ್ದು, "ಮಾತೃಭಕ್ತಿಗಿಂತ ಶಾಸ್ತ್ರವು ಮೇಲಲ್ಲ" ಎಂಬುದನ್ನು ನಿರೂಪಿಸಿದರು. ಜ್ಞಾನವು ಕೊಡುವ ಶಕ್ತಿ ಇದು; ಭಾವಪ್ರಪಂಚದಲ್ಲಿ ನಿಯಮಗಳನ್ನು ಪಳಗಿಸಿಕೊಳ್ಳುವ ಪರಾಪರ ವಿವೇಚನೆ, ವಿವೇಕ..! ಇದೇ ಜ್ಞಾನಿಯ ಸಂಪತ್ತು.

"ಜೀವಾತ್ಮಕ್ಕೂ ಪರಮಾತ್ಮಕ್ಕೂ ಭೇದವಿಲ್ಲ - ಚಿದ್ವಸ್ತು ಚೈತನ್ಯವು ಒಂದೇ; ಮನುಷ್ಯನು ಸದಾ ವಿಹಿತವಾದುದನ್ನೇ ಆಚರಿಸುವುದರಿಂದಲೂ ನಿಷಿದ್ಧವಾದುದನ್ನು ತ್ಯಜಿಸುವುದರಿಂದಲೂ ತನಗೆ ಬೇಕಾದ ಪುರುಷಾರ್ಥವನ್ನು ಪಡೆಯುತ್ತಾನೆ..ಕರ್ಮಗಳಲ್ಲಿಯೇ ತೊಡಗಿಕೊಂಡಿರುವ ಕರ್ಮನಿಷ್ಠರಿಗೆ ದೇಹವೇ ಆತ್ಮವೆಂಬ ಬುದ್ಧಿಯು ಮೂಡುತ್ತದೆ; ಇದರಿಂದ ಉನ್ನತಿಗೆ ತೊಡಕಾಗುವುದು; ಪರಮಾತ್ಮನೇ ನಾನು ಎಂಬ ವಿವೇಚನೆಯಿಂದ - ಆತ್ಮಸ್ಥೈರ್ಯದಿಂದ  ಧ್ಯಾನಿಸುವುದರಿಂದಲೇ ವಿಮುಕ್ತಿ..." ಎಂಬುದನ್ನು ಶಂಕರಾಚಾರ್ಯರೂ ರಾಮಕೃಷ್ಣರೂ - ಬದುಕಿ ತೋರಿದರು. ಆದ್ದರಿಂದಲೇ ಇವರ ವಚನಗಳು ಆದೇಶಗಳಾದವು; ಮಹಾವಾಕ್ಯಗಳಾದವು; ಆಧುನಿಕ ಶ್ರುತಿ ಸ್ಮೃತಿಗಳಾದವು ! ಇಂತಹ ಮಹಾತ್ಮರ ನಡೆನುಡಿಗಳು ಸಾಂಸಾರಿಕರಿಗೂ ಪ್ರೇರಣೆ ನೀಡಬಲ್ಲವು.

ಮಾತಾಪಿತರು ಬದುಕಿರುವಾಗ ಅವರ ಸೇವೆ ಮತ್ತು ಸತ್ತ ನಂತರ ಅವರ ಶ್ರಾದ್ಧ - ಇವೆರಡೂ ಶ್ರದ್ಧೆ ಮತ್ತು ಕೃತಜ್ಞತೆಯ ಕರ್ಮಗಳು . ಇವು ಮನುಷ್ಯಮಾತ್ರರ ಕರ್ತವ್ಯಗಳು. ಮಹಾಪುರುಷರನ್ನು ಅಧ್ಯಯನ ಮಾಡಿದರೆ ಅವರ ಬದುಕಿನ ಉತ್ತಮ ವಿಷಯಗಳು ಪ್ರೇರಣೆ ನೀಡುತ್ತವೆ. ಪ್ರಪಂಚದ ಯಾವ ಜ್ಞಾನಿಯೂ ಪ್ರಾಪಂಚಿಕ ಕರ್ತವ್ಯದಿಂದ ವಿಮುಖವಾಗಿಲ್ಲ. ಕರ್ತವ್ಯವೆಂದರೆ ತಲೆತಗ್ಗಿಸಿ ಆಚರಿಸುವ ಕೃತಜ್ಞತೆ. ಗಮ್ಯವನ್ನು ತಲುಪಿಸಲಾಗದ - ನಡುಹಾದಿಯವರೆಗೆ ಮಾತ್ರ ತಲುಪಿಸಬಲ್ಲ ಕರ್ಮ ಕರ್ಮಠ ಹಾದಿಗಿಂತ ಜೀವಭಾವದ ಕರ್ತವ್ಯ ಸ್ಪಂದನೆಯೇ ಶ್ರೇಷ್ಠ; ಪೂರ್ಣತೆಯತ್ತ ಕರೆದೊಯ್ಯುವ ಜ್ಞಾನಮಾರ್ಗವು ಪರಮ ಶ್ರೇಷ್ಠ.

ಆದರೆ ವಿಕಾಸದ (!) ಹಾದಿಯಲ್ಲಿ ದಾಪುಗಾಲಿಡುತ್ತಿರುವ ಈ ಉದ್ಧಟ "ಹಕ್ಕಿನ ಯುಗದಲ್ಲಿ" - ಕರ್ತವ್ಯ ಎಂಬ ಮಾತೇ ಬೆಲೆ ಕಳೆದುಕೊಳ್ಳುತ್ತಿರುವ ನಾಣ್ಯವಾಗುತ್ತಿದೆ. ಜ್ಞಾನದ ವ್ಯಾಖ್ಯೆಯು ಸೀಮಿತಗೊಂಡಿದೆ. ಹೆತ್ತವರು ಬದುಕಿರುವಾಗ - ತೋರಿಕೆಯ ಸೇವೆಯ ಪ್ರದರ್ಶನ, ಫೊಟೋಗ್ರಾಫರ್ ನ ಸಮ್ಮುಖದಲ್ಲಿ ಅಮ್ಮನಿಗೆ ನಮಸ್ಕರಿಸುವ ಕೋಲಾಹಲ, ಸೆಲ್ಫೀಗಳು, ಸತ್ತನಂತರ ವಿದ್ಯುತ್ ಚಿತೆಯಲ್ಲಿ ವಿಲೇವಾರಿ, ಅದ್ದೂರಿಯ ಶ್ರಾದ್ಧಗಳು ನಡೆಯುತ್ತಲೇ ಇವೆ ! ಅದ್ದೂರಿಯೇ ಮುಂದೆ ಮುಂದೆ; ಭಾವ ? ನಾಸ್ತಿ! ಯಾವುದೇ ಅದ್ದೂರಿತನವು ಏಕಾಗ್ರತೆಯನ್ನು ಉಳಿಸಗೊಡುವುದಿಲ್ಲ; ಏಕಾಗ್ರ ಚಿತ್ತದಿಂದ ನಡೆಸದ ಯಾವುದೇ ಕರ್ಮಗಳಿಗೆ ಫಲವಿಲ್ಲ. ನಮ್ಮನ್ನು ಬಹಿರ್ಮುಖಗೊಳಿಸುವ ಯಾವುದೇ ನಿಷ್ಫಲ ಕರ್ಮಗಳು - ಸದ್ಭಾವಗಳ ವಿಡಂಬನೆಯಷ್ಟೇ ಆಗಬಲ್ಲದು. ಮಾತಾಪಿತರಲ್ಲಿ ತೋರುವ ಯಾವುದೇ ವರ್ತನೆಯು ಶುದ್ಧಭಾವದ ಪ್ರತೀಕವಾಗಿರುವುದು ಅತೀ ಅಗತ್ಯ. ಭಾವಭಕ್ತಿಯಿಲ್ಲದ ಕರ್ಮಗಳೆಲ್ಲವೂ ವ್ಯರ್ಥವೇ. ಮಾತಾಪಿತರ ಸೇವೆಯು ಯಾರನ್ನೋ ಮೆಚ್ಚಿಸುವ ಕೆಲಸವಲ್ಲ. ನಮ್ಮ ಸ್ವಾತ್ಮಕ್ಕೆ ವಿಧೇಯವಾಗುವ ಕರ್ಮ. ನಮ್ಮ ಯಾವುದೇ ಕರ್ಮಗಳು ಬಂಧನ ಆಗಬಾರದು; ಬಿಡುಗಡೆಯ ಹಾದಿಯನ್ನು ತೋರಬೇಕು. ಭಯ ಬಂಧನ ಶೋಕಿ ತೋರಿಕೆಗಳ ನಡುವೆ ಯಾವುದೇ ಕರ್ಮಾಚರಣೆಯು ನರಳುವಂತಾಗಬಾರದು. ಭಕ್ತಿ ಶ್ರದ್ಧೆಯಿಲ್ಲದ - ತಂತ್ರ ಮಂತ್ರಗಳು ವ್ಯರ್ಥ. ನಮ್ಮ ಪಿತೃಗಳು ಭಕ್ತಿ-ಭಾವದಿಂದಲೇ ಕಟ್ಟಿದ ಈ ಲೋಕದಲ್ಲಿ ಸದ್ಭಾವಗಳು ಎಂದಿಗೂ ಬತ್ತಬಾರದು. ನಮ್ಮ ಯಾವುದೇ ಕರ್ಮದಿಂದ ಅಜ್ಞಾನದ ಪರಿಧಿಯು ವಿಸ್ತರಿಸುವಂತಾಗಬಾರದು.



ಪಿತೃಗಳು ಎಂದಿಗೂ ಪರರಲ್ಲ; ಶ್ರದ್ಧೆಯು ಯಾವತ್ತೂ ಅಪರವೂ ಅಲ್ಲ. ನಮ್ಮೊಳಗೇ ಇರುವವರನ್ನು ವೈದಿಕ ಕರ್ಮಾಂಗದ - ವಾರ ತಿಥಿ ಮಾಸ ಕುತಪ ಕಾಲದ ಹೊರತಾಗಿಯೂ ನೋಡಬಲ್ಲೆವಾದರೆ - ವರ್ಷಕ್ಕೊಮ್ಮೆ ನಡೆಸುವ ಶ್ರಾದ್ಧ, ತರ್ಪಣದ ಕ್ರಿಯೆಯು ಹೆಚ್ಚು ಅರ್ಥಪೂರ್ಣವಾದೀತು. ಅರ್ಥವಾಗದೆ ನಡೆಸುವ ಯಾವುದೇ ಅರ್ಥವಿಲ್ಲದ ಕರ್ಮಗಳು ವ್ಯರ್ಥ. ವೇದೋಕ್ತ ಮಂತ್ರಗಳನ್ನು ಅರ್ಥೈಸಿಕೊಂಡಾಗ ಸಮಗ್ರ ಕರ್ಮಾಂಗವು ಭಾವಪ್ರಧಾನವಾದುದು ಎಂಬ ಅನುಭವವೂ ಆಗುತ್ತದೆ.

ಇಂತಹ ಭಾವಬದುಕಿನಲ್ಲಿ - ಆಕಾಶರೂಪೀ ತಂದೆ, ಭೂಮಿರೂಪೀ ತಾಯಿಯನ್ನು ಸ್ಮರಿಸಿಕೊಳ್ಳಲು ಅಮಾವಾಸ್ಯೆ ಹುಣ್ಣಿಮೆಗಳನ್ನು ಕಾಯಬೇಕೆ ? ಜೀವಿಗಳ ಬದುಕಿನ ಯಾತ್ರೆಯ "ಸರಪಣಿ ಓಟ"ದಲ್ಲಿ ತಾವೂ ಭಾಗವಾಗಿ, ಸಂತಾನಗಳೂ ಭಾಗವಹಿಸುವಂತೆ ಮಾಡಿದ ಪಿತೃಗಳು - ಈ ಸೃಷ್ಟಿಯ ಚಾಲಕರು. ಬದುಕಿ ಬದುಕಿಸುವವರು. ನಿಸ್ಸಂದೇಹವಾಗಿ - ಪ್ರಾತಃಸ್ಮರಣೀಯರು; ನಿತ್ಯ ವಂದ್ಯರು.

                                                        ******************                                                     

Sunday, September 4, 2016

ವೈದ್ಯೋ ನಾರಾಯಣೋ ಹರಿಃ

                                                ವೈದ್ಯೋ ನಾರಾಯಣೋ ಹರಿಃ

ಸುಮ್ಮನೆ ಕುಳಿತಾಗ ಎಷ್ಟೋ ಬಾರಿ ಯೋಚಿಸುತ್ತೇನೆ. ಮನುಷ್ಯ ಜೀವಿಯು ಯಾಕಿಷ್ಟು ಸಂಕೀರ್ಣ? ಸೃಷ್ಟಿಯ ಇತರ ಜೀವಿಗಳಿಗಿಂತ ಮನುಷ್ಯರು ಯಾಕಿಷ್ಟು ಭಿನ್ನ? ಇತರ ಜೀವಿಗಳಿಗಿಲ್ಲದ ಬುದ್ಧಿ ಸಂಪತ್ತು ಎಂಬುದೇ ಮನುಷ್ಯನ ಯಶಸ್ಸು ಮತ್ತು ಅಪಯಶಸ್ಸುಗಳಿಗೂ ಕಾರಣವಾಗುತ್ತಿದೆಯಲ್ಲ ?

ಮನುಷ್ಯರ ಅದೃಷ್ಟವೋ ದುರದೃಷ್ಟವೋ ಅನಿವಾರ್ಯತೆಯೋ - ಅಂತೂ ಬದುಕಿನ ಪಯಣದಲ್ಲಿ ಹಲವು ಬಗೆಯ ಬುದ್ಧಿವಸ್ತುಗಳೊಂದಿಗೆ ವ್ಯವಹರಿಸಲೇಬೇಕಾದುದು ಸ್ವಾಭಾವಿಕ. ನಿತ್ಯ ಬದುಕಿನ ಯಾವುದೇ ಬುದ್ಧಿವಸ್ತುವು ಪರಸ್ಪರ ಹೊಂದಿಕೆಯಾದರೆ ಸುಗಮ; ಹೊಂದದೇ ಹೋದರೆ ತುಮುಲ - ತಳಮಳ; ಇನ್ನು, ಪರಸ್ಪರ ಹೊಂದದೇ ಹೋದರೂ ಹೊಂದಿದಂತೆ ಅಭಿನಯಿಸುವವರ ಪಾಡನ್ನಂತೂ ಕೇಳುವುದೇ ಬೇಡ. ಹೀಗೆ ಸೃಷ್ಟಿಯಲ್ಲಿ ಈ ಮೂರೂ ಬಗೆಯಲ್ಲಿ ಬುದ್ಧಿವಸ್ತುಗಳು ಯಜಮಾನಿಕೆ ನಡೆಸುತ್ತಿವೆ ! ಸಣ್ಣ ಪುಟ್ಟ - ತಂತಮ್ಮ ಸಂಸಾರಗಳನ್ನು ತೂಗಿಸುವುದಕ್ಕಾಗಿ ಬುದ್ಧಿಯ ಕೊಸರಾಟದ ಇಷ್ಟೊಂದು ಯಮ ಸ್ಪರ್ಧೆಗಳೆ ?

ನನ್ನ ಸುದೀರ್ಘ ಸಾರ್ವಜನಿಕ ಬದುಕಿನಲ್ಲಿ ನಾನು ಹಾದು ಬಂದ ಸಹಸ್ರಾರು ಮಂದಿಯನ್ನು ದರ್ಪಣವಾಗಿಸಿಕೊಂಡು ನನ್ನನ್ನೇ ಕಾಣಲು ನಾನು ಪ್ರಯತ್ನಿಸಿದ್ದೂ ಇದೆ. ನನ್ನದೇ ದರ್ಪಣದಲ್ಲಿ ಇತರರನ್ನು ಗುರುತಿಸಲು ತಿಣುಕಿದ್ದೂ ಇದೆ! "ಯಾರಿಗೂ ಹೇಳ್ಬೇಡಿ " ಎನ್ನುವವರಿಂದ ಹಿಡಿದು "ಎಲ್ಲರಿಗೂ ಕೂಗಿ ಕೂಗಿ ಹೇಳಿ " ಎನ್ನುತ್ತ ಬಿಂಬಿಸಿಕೊಳ್ಳುವ ಹಲವು ಬಗೆಯ ಬುದ್ಧಿಸ್ರಾವಗಳನ್ನು ಮೆಟ್ಟಿ ನಡೆದಿದ್ದೇನೆ; ಮೈಲಿಗೆಯಾಗಿದ್ದೇನೆ; ನವಚೈತನ್ಯವನ್ನೂ ತುಂಬಿಕೊಂಡಿದ್ದೇನೆ. ನನ್ನ ಹಾದಿಯಲ್ಲಿ ಎದುರಾದ ವಿಭಿನ್ನ ಶೈಲಿಯ, ವಿಭಿನ್ನ ವೃತ್ತಿಯ ಜನರನ್ನು ನನ್ನದೇ ಶೈಲಿಯಲ್ಲಿ ಪರಾಂಬರಿಸಲು ನಾನು ಪ್ರಯತ್ನಿಸುತ್ತ ಬಂದಿದ್ದೇನೆ.

ಸಾಂಪ್ರದಾಯಿಕ ಕುಲಕಸುಬುಗಳನ್ನೇ ಶೃದ್ಧೆಯಿಂದ ನಿರ್ವಹಿಸುತ್ತಿದ್ದ ಅನೇಕ ಪರಿವಾರ ಪರಂಪರೆಗಳನ್ನು - ನಾನು ಬಾಲ್ಯದಲ್ಲಿ ನೋಡಿದ್ದೆ. ಪ್ರತೀ ಊರಿನಲ್ಲಿ ಕುಂಬಾರರು, ಗಾಣಿಗರು, ಕಮ್ಮಾರರು, ಕೃಷಿಕರು, ವರ್ತಕರು, ಪಾತ್ರೆಗಳಿಗೆ ಕಲಾಯಿ ಹಾಕುವವರು, ಮರಗೆಲಸದವರು, ಬೆಸ್ತರು, ವೈದ್ಯರು, ಪುರೋಹಿತರು, ಅಡುಗೆಯವರು, ನಾಗಪಾತ್ರಿಗಳು, ವಿದ್ಯಾಗುರುಗಳು... ಎಲ್ಲರೂ ಇರುತ್ತಿದ್ದರು. ಅಗತ್ಯಕ್ಕೆ ತಕ್ಕಂತೆ ಪರಸ್ಪರ ಅವಲಂಬಿಸುತ್ತ ಸಾಂಘಿಕ ಬದುಕನ್ನು ತಕ್ಕಮಟ್ಟಿಗೆ ನಡೆಸುತ್ತಿದ್ದ ಅಂತಹ ಸಮಾಜವನ್ನು ಕಂಡು ಬೆಳೆದ ಆ ತಲೆಮಾರು - ಪುರಾಣದ ಸಾಲಿಗೆ ಸೇರಿ ಹೋಗುತ್ತಿರುವ ಕಾಲಘಟ್ಟವಿದು.

ಒಂದು ಮಗುವು ಹುಟ್ಟಿದಂದಿನಿಂದ ನೋಡುತ್ತ ಬೆಳೆದ ಯಾವುದೇ ವೃತ್ತಿ ಪರಿಸರವು ಮಕ್ಕಳ ಮೇಲೆ ಗಾಢ ಪ್ರಭಾವವನ್ನು ಮೂಡಿಸುತ್ತದೆ ಎಂಬುದನ್ನು ವಿಜ್ಞಾನವೂ ಒಪ್ಪುತ್ತದೆ. ನಾನೂ ಅದಕ್ಕೆ ಹೊರತಲ್ಲ. ಯಾವುದೇ ಕೌಶಲ - ದೃಶ್ಯವನ್ನು ಅರಿತು ಅರ್ಥೈಸಿಕೊಳ್ಳಲು ಬಾಲ್ಯದಲ್ಲಿ ಸುಲಭವಾಗುತ್ತದೆ. ಮಕ್ಕಳು ಅಂತಹ ನಿತ್ಯವೃತ್ತಿಯ - ವೃತ್ತಿನಿರತರ ಸಾಂಗತ್ಯದಲ್ಲಿ ಬೆಳೆದಾಗ ಇತರರಿಗಿಂತ ಪ್ರಾವೀಣ್ಯತೆ ಪಡೆಯಲು ಅದೇ ಪರಿಸರವು ಪೂರಕವಾಗುತ್ತದೆ. ಇದನ್ನೇ ತಳಮಟ್ಟದ ವಿದ್ಯೆ ಎನ್ನುವುದು.

ಅಂದು ನಮ್ಮೂರಿನ ಪಟೇಲರ ಮಗನೊಬ್ಬ ಸಿವಿಲ್ ಇಂಜಿನಿಯರ್ ಆಗಿ ಬಂದಾಗ, ಊರಿನವರಿಗೆ ಅದೇನೋ ವಿಚಿತ್ರ ಎಂದೇ ಅನ್ನಿಸಿತ್ತು. "ಮನೆ ಕಟ್ಸುದಕ್ಕೆ ಆ ಶಾಲೆಗ್ ಯಾಕ್ ಮಣ್ ಹೊರ್ಕಾ?" ಅಂದವರೂ ಇದ್ದರು. ಏಕೆಂದರೆ ಚಳಿ ಮಳೆ ಗಾಳಿಗಳಿಂದ ರಕ್ಷಿಸುವಂತಹ ಸುಭದ್ರ ಮನೆಗಳನ್ನು ತಮ್ಮ ಅನುಭವದ ವಿದ್ಯೆಯಿಂದಲೇ ಸಾಕಾರಗೊಳಿಸಿದವರು ಆಗ ಪ್ರತೀ ಊರಲ್ಲಿರುತ್ತಿದ್ದರು. ಅಂತಹ ಅನುಭವಿಗಳು ಕಟ್ಟಿಸಿದ್ದ ಇನ್ನೂ ಕದಲದೆ ಉಳಿದಿರುವ ಹಲವು ಕಟ್ಟಡಗಳು, ಕೆರೆಬಾವಿಗಳು ಈಗಲೂ ಮನಸೂರೆಗೊಳ್ಳುವಂತಿವೆ. ಆದರೆ ಆಧುನಿಕ ಇಂಜಿನಿಯರಿಂಗ್ ನಲ್ಲಿ ಅದಕ್ಕಿಂತಲೂ ವಿಶಾಲವಾದ ಕಾರ್ಯ ಪ್ರಾವೀಣ್ಯತೆ ಗಳಿಸಿಕೊಳ್ಳಬಹುದು ಎಂಬ ಅರಿವು ಇದ್ದಿರಲಿಲ್ಲ. ನದಿಗೆ ಸೇತುವೆ ಕಟ್ಟುವಂತಹ ಜಿಡುಕಿನ ಕೆಲಸಗಳಿಗೆ ವೇಗ ದೊರೆತದ್ದು ಹೊಸ ಇಂಜಿನಿಯರುಗಳು ಆವಿರ್ಭವಿಸಿದ ನಂತರವೇ ಎಂಬುದು ಒಪ್ಪಲೇಬೇಕಾದ ಸಂಗತಿ.

ಅನಂತರ ಆಧುನಿಕರ ವೈಜ್ಞಾನಿಕ ಚಿಂತನೆಯು ಬೆಳೆದಂತೆಲ್ಲ ಪಾರಂಪರಿಕ ಅನುಭವ ಜ್ಞಾನವು ಪೂರ್ತಿಯಾಗಿ ಹಿಂದೆ ಸರಿದು, ಇಂಜಿನಿಯರ್ ಸಾಹೇಬರುಗಳ ವಿಜ್ಞಾನವು ಮಾತ್ರ ಚಲಾವಣೆಯಲ್ಲಿ ಉಳಿದಿತ್ತು. ಇತ್ತೀಚೆಗೆ "ವಾಸ್ತು" ಎಂಬ ಹೆಸರಿನಲ್ಲಿ ಅದೇ ಪಾರಂಪರಿಕ ವಿದ್ಯೆಯು ವಿಭಿನ್ನವಾಗಿ ಹೆಸರು ಮಾಡುತ್ತಿದೆ. ಆದರೆ... ಇತರರ ನಾಲ್ಕು ಮನೆ ಕಟ್ಟಿಸುವಾಗ ಇಂದಿನ ನಮ್ಮ ಇಂಜಿನಿಯರುಗಳ ಸ್ವಂತದ ಒಂದು ಜಾಗ, ಮನೆ - ಸುಲಲಿತವಾಗಿ ಎದ್ದು ನಿಲ್ಲುತ್ತಿದೆ ! ಯಶಸ್ಸು ಎಂಬುದಕ್ಕೆ ಆಗಲೇ ಪಡಪೋಶಿಯ ದೈತ್ಯರೂಪ ಬಂದಾಗಿತ್ತು. "ಸರಳ ಅನುಭವ"ದ ತಿರಸ್ಕಾರದೊಂದಿಗೇ ಪಾಪ ಪುಣ್ಯಗಳೆಲ್ಲವೂ ಹಿಂದೆ ಸರಿದಿದ್ದವು; ಭಾವ ಜಗತ್ತು ಮರೆಯಾಗುತ್ತ ಯಾಂತ್ರಿಕತೆಯು ಯಜಮಾನಿಕೆಗೆ ಸಿದ್ಧವಾಗಿತ್ತು. ಮನುಷ್ಯರು ಪರಸ್ಪರ ಮುಖ ನೋಡುವುದನ್ನು ಬಿಟ್ಟು, ಕಿಸೆ ನೋಡುವುದನ್ನು ಆಶ್ರಯಿಸಿಬಿಟ್ಟಿದ್ದರು. ಈಗಂತೂ ಎಲ್ಲರೂ ವಿಜ್ಞಾನ ಪಶುಗಳು ! ಅರ್ಥಾತ್ ಯಂತ್ರಮಾನವರು ! "ವೈಜ್ಞಾನಿಕವಾಗಿ ಹಣ ಸಂಪಾದನೆ " ಎಂಬ ಸೂತ್ರದ ಶಿಕ್ಷಣಕ್ಕೆ ಮೊರೆ ಹೋಗುವವರಿಂದಲೇ ಇವತ್ತಿನ ಸಮಾಜವು ತುಂಬಿಹೋಗಿದೆ. ಈ ಹಾದಿಯಲ್ಲಿ ಕೆಲವರು - ಅವರವರು ಅಂದುಕೊಂಡಂತಹ ಅಪಾರ ಯಶಸ್ಸನ್ನೂ ಗಳಿಸುತ್ತಿದ್ದಾರೆ ! ಆದರೆ ಪ್ರಾಮಾಣಿಕತೆಯ ಪ್ರಾವೀಣ್ಯತೆಯಲ್ಲಿ ಮಾತ್ರ - ಶುದ್ಧ ಕಲಬೆರಕೆ.

ಅಂದೂ - ಉತ್ತಮ, ಮಧ್ಯಮ ಎಂಬ ತರತಮಗಳಿದ್ದವು. ಆದರೆ ಅದರ ಮಾನದಂಡವು ಬೇರೆಯೇ ಇತ್ತು; ನೀತಿಯ ಪರಿಧಿಯಲ್ಲಿತ್ತು. ಇಷ್ಟು ತೆಂಗಿನಕಾಯಿಗೆ ಇಷ್ಟೇ ಎಣ್ಣೆ ಸಿಗಬೇಕು ಎಂಬ ನಿಖರವಾದ ಅಂದಾಜಿನ ಲೆಕ್ಕವಿದ್ದ ಆ ಸಮಯದಲ್ಲೂ ಕೆಲವು ವ್ಯಕ್ತಿಗಳು ಒಂದೆರಡು ಸಿದ್ದೆಯಷ್ಟು ಕಡಿಮೆ ಎಣ್ಣೆ ಕೊಟ್ಟು ತಲೆಬಿಸಿ ಮಾಡುತ್ತಿದ್ದಾಗ, ಯಾವುದೇ ಗಪಳಾಸು ನಡೆಯದಂತೆ ಕಣ್ಣಿಡುತ್ತ, ತಾವೇ ಸ್ವತಃ ಗಾಣದ ಮನೆಯಲ್ಲಿ ನಿಂತು ಎಣ್ಣೆ ಮಾಡಿಸಿಕೊಂಡು ಬರುವವರೂ ಇದ್ದರು. ಇವೆಲ್ಲವೂ ಅಡಕೆ ಕಳ್ಳರ ಕತೆ. ಅಂತಹ ಅಪ್ರಾಮಾಣಿಕತೆಯಿಂದ ಪಾರಾಗಲು ಸ್ವಲ್ಪ ದೂರವಾದರೂ ಪ್ರಾಮಾಣಿಕ ವ್ಯಕ್ತಿಗಳತ್ತಲೇ ಆಗ ನೂಕುನುಗ್ಗಲು ಹೆಚ್ಚಿರುತ್ತಿತ್ತು. ಕಣ್ಣಿಗೆ ಕಾಣಿಸುವ ಪ್ರಾಮಾಣಿಕತೆಯೂ ಊರುಗಳಲ್ಲಿತ್ತು. ಆದ್ದರಿಂದ ಪ್ರಾಮಾಣಿಕತೆಯುಳ್ಳ ಇನ್ನೊಂದು ಆಯ್ಕೆ ಸುಲಭವಾಗಿತ್ತು.


ಅಂದು ನಾವು ಕೋಟೇಶ್ವರದಲ್ಲಿದ್ದಾಗ ಅದು ನಮ್ಮ ಬಾಲ್ಯಕಾಲ. ನಮ್ಮ ಹಿತ್ತಲಿನಲ್ಲಿ ಒಂದಷ್ಟು ತೆಂಗಿನ ಮರಗಳಿದ್ದವು. ನಾವು ಉಪಯೋಗಿಸಿ ಮಿಗುತ್ತಿದ್ದ ತೆಂಗಿನಕಾಯಿಗಳನ್ನು ಒಣಗಿಸಿ, ಕೊಬ್ಬರಿ ಮಾಡಿಡುತ್ತಿದ್ದರು. ಹಾಗೆ ಒಣಗಿಸುವಾಗ ಕಾಗೆ ಕಾಯಲು ಕೂತ ಕಾಗೆಪ್ರಾಯ ಮಕ್ಕಳು ತಿಂದು ಉಳಿಸಿದ ಕೊಬ್ಬರಿಯನ್ನು ನಿತ್ಯದ ಉಪಯೋಗಕ್ಕಾಗಿ ಎಣ್ಣೆ ಮಾಡಿಸುತ್ತಿದ್ದರು. ಅಂತಹ ದಿನಗಳಲ್ಲಿ ಅಮ್ಮನ ಜೊತೆಗೆ ನಾನೂ ಗಾಣದ ಮನೆಗೆ ಹೋದದ್ದಿದೆ. ಅಲ್ಲಿ... ಗಾಣದ ಕಂಬಕ್ಕೆ ಕಟ್ಟಿದ್ದ ಎತ್ತುಗಳು ನಿರ್ಭಾವದಿಂದ ಸುತ್ತು ಬರುತ್ತಿದ್ದುದನ್ನು ನೋಡಿದ್ದೆ; ಆ ಎತ್ತುಗಳ ಬದಿಯಲ್ಲೇ ನಾನೂ ಸುತ್ತುತ್ತ, ಕಾಯಿ ನುರಿದು ಎಣ್ಣೆ ಇಳಿಯುವುದನ್ನು ನೋಡಿ ಖುಶಿಪಟ್ಟಿದ್ದೆ. ಆ ಗಾಣದ ಮನೆಯ ಎಲ್ಲ ಸದಸ್ಯರೂ ಅಲ್ಲಿದ್ದು ಒಟ್ಟಾಗಿ ದುಡಿಯುತ್ತಿದ್ದರು. ನುರಿಯುವ ಭಾಗಕ್ಕೆ ಕೊಬ್ಬರಿಯನ್ನು ಆಗಾಗ ತಳ್ಳುತ್ತ ಎತ್ತನ್ನು ಹುರಿದುಂಬಿಸುತ್ತ ತಮ್ಮ ಮನೆಯ ಮಕ್ಕಳನ್ನೂ ಗಮನಿಸುತ್ತ, ಪುಟ್ಟ ಮಗುವಿಗೆ ನಡುನಡುವೆ ಹಾಲೂಡಿಸುತ್ತ  - ಏಕಕಾಲದಲ್ಲಿ ಅನೇಕ ಕೆಲಸಗಳನ್ನು ಮಾಡುತ್ತಿದ್ದ ಸಂಸಾರಗಳನ್ನೂ ನಾನು ನೋಡಿದ್ದೆ. ಕೊನೆಯಲ್ಲಿ, ಎಣ್ಣೆಯನ್ನು ನಮ್ಮ ಪಾತ್ರೆಯಲ್ಲಿ ತುಂಬಿಸಿ ಕೊಡುತ್ತಿದ್ದರು.

ಗಾಣದವರಿಗೆ ದುಡ್ಡು ಕೊಡುವಾಗ ಚೌಕಾಸಿಯೂ ನಡೆಯುತ್ತಿತ್ತು. "ಎಷ್ಟ್ ಎಣ್ಣೆ ಅಲ್ಲೇ ಅಂಟ್ಕಂಡಿತ್... ಅದೆಲ್ಲ ನಿಮ್ಗೇ ಅಲ್ದಾ ? ಒಂಚೂರ್ ಕಡ್ಮೆ ಮಾಡ್ಕೊ; ಹೋಯ್ಲಿ.. ನಾಕಾಣೆ ಕೊಡ್ತೆ; ತಕೋ.." ಇಂತಹ ಚಿಲ್ಲರೆ ವ್ಯವಹಾರವು ಮಾಮೂಲಾಗಿತ್ತು. 5 ಪೈಸೆಗೂ ಬೆಲೆಯಿದ್ದ ಕಾಲವದು. ಆದರೂ ತರಕಾರಿ ಕೊಂಡುಕೊಂಡರೆ ಮುಷ್ಟಿ ತುಂಬ ಕೊತ್ತುಂಬರಿ ಸೊಪ್ಪನ್ನು ಎತ್ತಿ ಕೊಡುವ ಧಾರಾಳತನವಿದ್ದ ಸನ್ನಿವೇಶವಿತ್ತು. ಮಾರುವ ಕಾಯಕದಲ್ಲಿಯೂ ತೃಣರೂಪದಲ್ಲಿ ಧರ್ಮ ಸ್ಮರಣೆ! ಅಂತಹ ಕಾಲದಲ್ಲೂ ಗಾಣದ ಮನೆಯಲ್ಲಿ ಚೌಕಾಸಿ ನಡೆಯುತ್ತಿತ್ತು. ಸಣ್ಣ ಆದಾಯದವರೇ ಹೆಚ್ಚಾಗಿದ್ದುದರಿಂದ ಆಗ ಸಣ್ಣ ಸಣ್ಣ ಚೌಕಾಸಿಗೂ ಬೆಲೆಯಿತ್ತು. ಎಣ್ಣೆಯ ಜೊತೆಗೆ - ಲವಲೇಶವೂ ಉಳಿಯದಂತೆ ಕೊಬ್ಬರಿಯ ಜೊಗಟಿಯನ್ನೂ ಗಂಟು ಕಟ್ಟಿಕೊಂಡು ಬರುತ್ತಿದ್ದರು. ಆ ಕೊಬ್ಬರಿಯ ಜೊಗಟಿಯನ್ನು ಮನೆಯ ಹಸುಗಳಿಗೆ ಆಹಾರದ ಜೊತೆಗೆ ಮಿಶ್ರ ಮಾಡಿ ಕೊಡುತ್ತಿದ್ದರು. ಕೊಬ್ಬರಿಯ ಪರಿಮಳಕ್ಕೆ ಮನಸೋಲುತ್ತಿದ್ದ ಹಸುಗಳು ಹಟ್ಟಿಯ ಬಾಣಿಯು ಸವೆದು ಹೋಗುವಂತೆ ನೆಕ್ಕುತ್ತಿದ್ದವು. ಅಂತೂ ಬೆಳೆಸಿದ ಮರಗಳಿಂದ - ಪಶುಸಹಿತ ಮನೆಯ ಎಲ್ಲ ಸದಸ್ಯರಿಗೂ ಫಲ ಲಭಿಸುತ್ತಿತ್ತು ! ಕಾಯಕದ ಪರಸ್ಪರ ಅವಲಂಬನೆಯಿಂದಾಗಿ, ಊರಿನ ಕುಟುಂಬಗಳಿಗೆಲ್ಲ ಪರಸ್ಪರ ಉದ್ಯೋಗ, ಪ್ರತಿಫಲವೂ ದೊರೆಯುತ್ತಿತ್ತು. ಪರಿಚಯ, ಸಂಬಂಧವೂ ಬಲಿಯುತ್ತಿತ್ತು.


ಬಹುಪಾಲು ಕಸುಬುದಾರರು, ಕೃಷಿಕರೇ ತುಂಬಿದ್ದ ಅಂದಿನ ಸಮಾಜದಲ್ಲಿ - ಮನುಷ್ಯರು ಗಾಣದೆತ್ತಿನಂತೆಯೇ ದುಡಿಯುತ್ತಿದ್ದರು. ಶ್ರಮದ ದುಡಿಮೆಯು ಅನಿವಾರ್ಯವೂ ಆಗಿತ್ತು. ಸಾಂಸಾರಿಕ ಒತ್ತಡಗಳನ್ನು ನಿಭಾಯಿಸುವ ಭರದಲ್ಲಿ ಅವರ ಕುಲಕರ್ಮವು ಒಮ್ಮೊಮ್ಮೆ ಅಲ್ಪಸ್ವಲ್ಪ ಕಲುಷಿತವಾಗುತ್ತಿದ್ದರೂ ಅವೆಂದೂ ಯೋಜಿತ ಅಪರಾಧಗಳಾಗಿರುತ್ತಿರಲಿಲ್ಲ; ಅವಶ್ಯಕತೆಯ ಒತ್ತಡವಾಗಿರುತ್ತಿತ್ತು. ಆದ್ದರಿಂದಲೇ ತಂತಮ್ಮ ಚೌಕಾಸಿಯ ಎಚ್ಚರದ ಪರಿಧಿಯಲ್ಲಿ ಎಲ್ಲರೂ ಸಹಜ ಸಹಜೀವನ ನಡೆಸುತ್ತಿದ್ದರು. ಯಾರಿಗೆ ಯಾರುಂಟು ? ಎನ್ನುವ ಹಾಗಂತೂ ಇರಲಿಲ್ಲ. ಬಡತನ ಎಂಬ ಸಾಮಾನ್ಯ ಅಂಶವೇ ಊರನ್ನು ಒಂದಾಗಿಸುತ್ತಿತ್ತು. ಒಟ್ಟಿನಲ್ಲಿ ಅಂದು - ಪರಸ್ಪರ ಅವಲಂಬಿತ ಬದುಕುಗಳದೇ ರಾಜ್ಯಭಾರ.

"ಗಾಣದೆತ್ತಿನಂತಹ ದುಡಿಮೆ" ಎಂಬ ಪ್ರಸಿದ್ಧ ನುಡಿಗಟ್ಟು - ಅಕ್ಷರಶಃ ಗಾಣದ ಎತ್ತುಗಳ ಕರ್ಮಫಲ. ಅದು ಅರ್ಥವಾಗಬೇಕಾದರೆ ಅಂತಹ ದುಡಿಮೆಯನ್ನು ಪ್ರತ್ಯಕ್ಷ ನೋಡಿದ್ದರೆ ಮಾತ್ರ ಸಾಧ್ಯ. ಗಾಣದ ಎತ್ತುಗಳಿಗೆ - ತಾವು ಏಕೆ ಸುತ್ತುತ್ತಿದ್ದೇವೆ ? ಏನು ಮಾಡುತ್ತಿದ್ದೇವೆ ? ಎಂಬ ಅರಿವು ಇತ್ತೆ ? ಇರಲಿಲ್ಲ. ಹಾಗೆ ಸುತ್ತುವುದರಿಂದ ತಮಗೇನು ಪ್ರಯೋಜನ ? ಎಷ್ಟು ಲಾಭ ? ಎಂದು ಯೋಚಿಸುವ ಶಕ್ತಿಯೂ ಅವುಗಳಿಗಿರಲಿಲ್ಲ. ಅವುಗಳಿಗೆ ಅಗತ್ಯವೂ ಇರಲಿಲ್ಲ. ಏಕೆಂದರೆ ಹೊಟ್ಟೆ ತುಂಬುತ್ತಿತ್ತು. ಬೆಳಗಿನಿಂದ ಸಂಜೆಯವರೆಗೆ ಸುಮ್ಮನೆ ಸುತ್ತುತ್ತಿದ್ದವು. ಯಜಮಾನನ ಆಜ್ಞೆಯನ್ನು ಪಾಲಿಸುತ್ತಿದ್ದವು. ಸುತ್ತುತ್ತ ಸುತ್ತುತ್ತ ಬದುಕು ಸವೆದು, ಕೊನೆಗೆ ಸತ್ತೇ ಹೋಗುತ್ತಿದ್ದವು. ತಲೆ ತಗ್ಗಿಸಿ ಕರ್ಮ ಸವೆಸುವುದೆಂದರೆ ಇದೇ. ಬುದ್ಧಿಯಿದೆ ಎಂದುಕೊಂಡ ಮನುಷ್ಯರ ಬದುಕೂ ಇದಕ್ಕಿಂತ ಭಿನ್ನವೇನಲ್ಲ. ಮುಷ್ಟಿ ಬಿಡಿಸಿ ನೋಡಿದರೆ ತಾನೇ ವಾಸ್ತವ ಕಾಣುವುದು ? ಆದರೆ ನಾವು ಮಾತ್ರ - ಪಶುಗಳಿಗಿಂತ ಭಿನ್ನ ಎಂದು ಅಂದುಕೊಂಡಿದ್ದೇವೆ; ಅಷ್ಟೇ.

ಅಂದು, ತಮ್ಮ ಬದುಕಿಗೆ ಆಧಾರವಾದ ಪಶುಗಳನ್ನು ಮನೆಯ ಸದಸ್ಯರಂತೆಯೇ ಪ್ರೀತಿಯಿಂದ ಮಾತನಾಡಿಸುತ್ತ ಅವುಗಳಿಗೆ ದೈಹಿಕ ಕಷ್ಟ ಬಂದರೆ ತಾವೂ ಕಣ್ಣೀರು ಸುರಿಸುತ್ತಿದ್ದವರನ್ನೂ ನಾನು ನೋಡಿದ್ದೇನೆ. ಗಂಗೆ, ಗೌರಿ, ರಾಮ, ಕೃಷ್ಣ ಎಂದೆಲ್ಲ ಪಶುಗಳಿಗೆ ಹೆಸರಿಟ್ಟು ನಿಷ್ಠೆಯಿಂದ ಪಶುಸೇವೆ ಮಾಡುತ್ತಿದ್ದ ಕಾಲವದು. ಪಶುಗಳೊಂದಿಗೆ ಸಂಭಾಷಣೆ ನಡೆಸುತ್ತ ಪಶು ಸೇವೆ ಮಾಡುತ್ತಿದ್ದ ಪ್ರೀತಿಭಾವದ ರಸಗಟ್ಟಿಗಳೂ ಅಂದು ಸಾಕಷ್ಟಿದ್ದರು. ಹಟ್ಟಿಯಲ್ಲಿದ್ದ ಹಸುಗಳಿಗೆ ಉಣ್ಣಿಸಿದ ನಂತರವೇ ಊಟ ಮಾಡುತ್ತಿದ್ದ ಮನೆಯ ಹಿರಿಯರನ್ನು ನಾನು ಕಂಡಿದ್ದೇನೆ. ಉಪಕಾರ ಸ್ಮರಣೆಯ ಸಹಬಾಳ್ವೆಯ, ಸುಸಂಸ್ಕೃತಿಯ ಪರಿಸರವದು. ಮನುಷ್ಯರು ತಮ್ಮ ಪಶು ಸಂಪತ್ತನ್ನು ಪ್ರತ್ಯಕ್ಷವಾಗಿಯೂ ಪೂಜಿಸಿ, ಸಿಹಿಯೂಟ ಕೊಟ್ಟು ವರ್ಷಕ್ಕೊಮ್ಮೆ ವಿಶೇಷವಾಗಿ ಕೃತಜ್ಞತೆ ಸಲ್ಲಿಸುತ್ತಲೇ ಬಂದಿದ್ದಾರೆ. ಪಶುಗಳ ದುಡಿಮೆಗೆ ಪ್ರತಿಫಲವಾಗಿ ಅವುಗಳಿಗೆ ಸಿಗುತ್ತಿದ್ದ ನಿತ್ಯದ ಕೂಳು ಯಾವುದೇ ಹಕ್ಕಿನಿಂದ ಪಡೆದುದಲ್ಲ. ಪ್ರೀತಿಯಿಂದಲೇ ಗಳಿಸಿದ್ದು. ತಮ್ಮ ಹಕ್ಕುಗಳಿಗಾಗಿ ಸಾಕುಪಶುಗಳು ಎಂದೂ ಕಾಳಗಕ್ಕೆ ಇಳಿದದ್ದಿಲ್ಲ. ಆದ್ದರಿಂದಲೇ ಮನುಷ್ಯರೊಂದಿಗೆ ಇತರ ಪ್ರಾಣಿಗಳು ಸಹಜೀವನ ನಡೆಸಲು ಸಾಧ್ಯವಾದದ್ದು ! ತಾವು ಬದುಕಿ ಮನುಷ್ಯರನ್ನೂ ಬದುಕಿಸಿದ ಪಶು ಸಂತಾನದ ಋಣವನ್ನು ಮನುಷ್ಯರು ಎಂದಿಗೂ ತೀರಿಸಲಾರರು. ಈ ಭೂಮಿಯಲ್ಲಿ, ಯಾವುದೇ ಹಕ್ಕು ಸ್ಥಾಪನೆಯ ಹೋರಾಟವು ಸಹಜೀವನದ ವೈರಿ; ಹಕ್ಕು ಸ್ಥಾಪನೆಯ ಘರ್ಷಣೆಯು ಅಂತರವನ್ನು ಹೆಚ್ಚಿಸುತ್ತದೆ. ಒಮ್ಮೊಮ್ಮೆ ರಕ್ತವನ್ನೂ ಬೇಡುತ್ತದೆ ! ಇದು ನಿಸ್ವಾರ್ಥದ ಪ್ರತೀಕದಂತಿರುವ ಎಲ್ಲ ಪಶುಗಳಿಗೂ ಅರ್ಥವಾಗಿರುವ ಸತ್ಯ. ಮನುಷ್ಯರು ಇನ್ನೂ ಹಿಂದುಳಿದಿದ್ದಾರೆ.

ಸುಮಾರು 55 ವರ್ಷಗಳ ಹಿಂದೆ ನಾನು ಕಂಡ ಸಾಮಾಜಿಕ ವ್ಯವಸ್ಥೆಯಲ್ಲಿ ಸಾತ್ವಿಕ ದುಡಿಮೆಯಿತ್ತು; ಸಹಜೀವನದ ದರ್ಶನವಿತ್ತು. ಅಲ್ಲಿಂದ ಹೊರಟಿದ್ದ ನಾನು ಅನಂತರದ ಬದುಕಿನಲ್ಲಿ ಕಂಡುಂಡ ಅನುಭವಗಳ ಹಿನ್ನೆಲೆಯಲ್ಲಿ, ಪೂರ್ವದ ದೃಶ್ಯಗಳ ತುಲನೆಗೆ ಹೊರಟಾಗ ಒಮ್ಮೊಮ್ಮೆ ಕಕ್ಕಾಬಿಕ್ಕಿಯಾಗುವುದಕ್ಕೂ ಇದೇ ಕಾರಣ. "ಸಹಜೀವನವು ಇನ್ನೂ ಒಂದಷ್ಟು ಉಳಿದಿದೆಯೆ ?... ಯಾವುದೇ ದುಡಿತವು ತಾಮಸ ಹೋರಾಟದ ಸ್ತರಕ್ಕೆ ಏರಿದೆಯೆ ? ಜಾಗ್ರತೆಯಿಂದ ಅವಲೋಕಿಸಿ ಪೂರಕ ವಾತಾವರಣವನ್ನು ನಿರ್ಮಿಸದಿದ್ದರೆ ಎಲ್ಲವೂ ಹೀಗೇ ಉಳಿದೀತೆ ? ಆಗಾಗ ಸಾಮಾಜಿಕ ಕೆರೆಯ ಕೆಸರೆತ್ತುವ ಕೆಲಸವೂ ನಡೆಯಬೇಕಲ್ಲವೆ ? ಇಂದಿನ ಮಕ್ಕಳಿಗೆ, ಹಿಂದಿನಂತೆ - ಪ್ರಕೃತಿ ಸಾಮೀಪ್ಯದ ತಳಮಟ್ಟದ ಪ್ರಾಯೋಗಿಕ ವಿದ್ಯೆಯು ಸಿಗಬೇಕಲ್ಲವೆ ?" ಎಂದು Upper Compartment ನಲ್ಲಿ ಒಮ್ಮೊಮ್ಮೆ ಚರ್ಚೆ ನಡೆಯುವುದೂ ಇದೆ. ಬಾಂಬ್ ತಯಾರಿಸುವುದನ್ನು ಕಲಿತು ನಮಗೆ ಆಗಬೇಕಾದುದಾದರೂ ಏನು ? ಅಂಟಿಸುವ ವಿದ್ಯೆ ಇರಲಿ; ಸ್ಫೋಟಿಸುವ ವಿದ್ಯೆ ಯಾಕೆ ? ಅನ್ನಿಸುವುದೂ ಇದೆ. (ಸುಖ ವಿರಾಮದ ಪರಿಣಾಮ ?) ಆದರೆ ಒಂದಂತೂ ಸತ್ಯ. ಯಾವುದೇ ಉತ್ತಮ ಮೌಲ್ಯಗಳನ್ನು ತ್ಯಜಿಸುವುದು ಸುಲಭ; ರೂಢಿಸಿಕೊಳ್ಳುವುದು ಸುಲಭವಲ್ಲ. ಆದರೆ... ಒಪ್ಪಿ ಗೌರವಿಸುವ ಸೌಜನ್ಯವಾದರೂ ಬೇಡವೆ ? ಅಂದುಕೊಳ್ಳುವುದೂ ಇದೆ.


ಯಾವುದೇ ವೃತ್ತಿಯ ಆಳದಲ್ಲಿ ಧರ್ಮದ ಪಸೆ ಇಲ್ಲದೆ ಹೋದರೆ ಅಂತಹ ವೃತ್ತಿಯು ನಿರ್ಜೀವವಾಗುತ್ತದೆ; ಆತ್ಮ ತೃಪ್ತಿಯನ್ನೂ ನೀಡಲಾರದು. ಆದರೆ ಕಲುಷಿತವಾಗದೆ ಉಳಿದ ಯಾವುದಾದರೂ ವೃತ್ತಿಯು ಈಗ ಕಾಣಲು ಸಿಗಬಹುದೆ ? ಇದು ನಮ್ಮ ಸ್ವಚ್ಛಂದ ಸ್ವಾತಂತ್ರ್ಯದ ಫಲವೇ ಆಗಿದೆ; ಜಾಗತೀಕರಣದ ಪ್ರತಿಫಲ. ಪಾಶ್ಚಾತ್ಯ ಸಂಸ್ಕೃತಿಯ ಕಾಲು ತೊಳೆದು ತೀರ್ಥವೆಂದು ಸೇವಿಸುವ ವೈಶಿಷ್ಟ್ಯದ ಸಾದೃಶ್ಯ. ಹೀಗಿದ್ದೂ - ಸತ್ಸಂಕಲ್ಪವುಳ್ಳ ಹಲವಾರು ಆಧುನಿಕ ಕಾಯಕ ನಿರತರನ್ನು ಈಗಲೂ ನಾನು ಸಂಧಿಸುತ್ತಿದ್ದೇನೆ ಎನ್ನುವುದು ಸಂತೋಷದ ಸಂಗತಿಯಲ್ಲವೆ ? ಇಂದಿಗೂ ವೃತ್ತಿ ನಿಷ್ಠೆ, ನೈತಿಕತೆಯನ್ನು ಉಳಿಸಿಕೊಂಡಿರುವ ಸಜ್ಜನರನ್ನು ಕಂಡಾಗ - ಆದ್ದರಿಂದಲೇ ವಿಸ್ಮಯವೂ ಆಗುತ್ತದೆ; ಸಮಾಧಾನವೂ ಆಗುತ್ತದೆ. ತಾವಾಯಿತು, ತಮ್ಮ ವೃತ್ತಿಯಾಯಿತು ಎಂಬಂತೆ - ಗಾಣದೆತ್ತಿನಂತೆ ದುಡಿಯುವ ಹಲವರನ್ನು ನಾನು ಈಗಲೂ ಭೇಟಿಯಾಗುವುದಿದೆ.

ಅಂದೂ ಇಂದೂ ಗೌರವಯುತ ಬದುಕಿನೊಂದಿಗೆ ಅಯಾಚಿತವಾಗಿ ಪುಣ್ಯ ಸಂಪಾದಿಸುವ ವೃತ್ತಿಯೇ - ವೈದ್ಯ ವೃತ್ತಿ. ಮಂಗಳೂರಿನಲ್ಲಂತೂ ಬರಬರುತ್ತ ವೈದ್ಯರು ತುಂಬಿ ತುಳುಕುತ್ತಿದ್ದಾರೆ. ಇದರಿಂದ ಆರೋಗ್ಯದ ಸಮಸ್ಯೆ ಪರಿಹರಿಸಿಕೊಳ್ಳಲು ವೈದ್ಯರ ದರ್ಶನ ಮಾಡುವುದು ತುಂಬ ಸುಲಭವಾಗಿದೆ. ಸುಮಾರು 40 ವರ್ಷಗಳಿಂದ ನಾನು - ಚಿಕಿತ್ಸೆಗೆಂದು ಹೋದಾಗಲೂ ನನ್ನ ಪರಿಧಿಯ ಆಚೆ ಈಚೆ ಇಣುಕಿ ಬರುವ ಅಭ್ಯಾಸವಿತ್ತು. ಹೀಗಾಗಿ ನನ್ನ ಆಸಕ್ತಿಯ ಕ್ಷೇತ್ರವಾದ ಈ ವೈದ್ಯ ವಲಯವನ್ನು ಹತ್ತಿರದಿಂದಲೇ ಗಮನಿಸುತ್ತ ಬಂದಿದ್ದೇನೆ. (ಆದ್ದರಿಂದ ನನ್ನಂತಹ ಅಧಿಕಪ್ರಸಂಗಿಗಳು ಇರುತ್ತಾರೆ ಎಂಬ ಎಚ್ಚರವು ಎಲ್ಲ ವೃತ್ತಿಗಳವರಿಗೂ ಇರಬೇಕಾಗುತ್ತದೆ !) 

ಇಲ್ಲಿ ಜಯಶ್ರೀ ಹಾಸ್ಪಿಟಲ್ (ಮೊದಲು - ಜಯಶ್ರೀ ನರ್ಸಿಂಗ್ ಹೋಮ್ ) ಎಂಬ ಚಿಕಿತ್ಸಾಲಯವಿದೆ. ಶ್ರದ್ಧೆ ಮತ್ತು ಸೇವಾ ಮನೋಭಾವದ ಆಶಯದಿಂದ ಡಾ. ಮನೋರಮಾ ರಾವ್  ಅವರು ಆರಂಭಿಸಿದ್ದ ಈ ವ್ಯವಸ್ಥೆಯು ಈಗ ಸುಸಜ್ಜಿತವಾಗಿ ವಿಶಾಲವಾಗಿ ಬೆಳೆದು ನಿಂತಿದೆ. ಪ್ರೊಫೆಸರ್ ಆಗಿದ್ದು ವೈದ್ಯಕೀಯ ವಿದ್ಯಾರ್ಥಿಗಳಿಗೆ ಪಾಠವನ್ನೂ ಮಾಡಿರುವ ವಿಶಿಷ್ಟ ವ್ಯಕ್ತಿ ಡಾ. ಮನೋರಮಾ ರಾವ್. ಮನೋರಮಾ ಅವರು ತಮ್ಮ ವೈಯ್ಯಕ್ತಿಕ ಬದುಕಿನ ಅವಘಡವನ್ನು ಮೆಟ್ಟಿನಿಲ್ಲಲು ವೈದ್ಯಕೀಯ ಶಿಕ್ಷಣದ ಮೊರೆಹೊಕ್ಕು ಜನಸೇವೆಯ ಮೂಲಕ ದುಃಖವನ್ನು ದಾಟಿ ಬಂದ - ಯಶಸ್ಸಿನ ಕತೆಯಿದು. ಡಾ. ಮನೋರಮಾ ಅವರು ವೈದ್ಯಕೀಯ ಕಾಲೇಜಿಗೆ ಸೇರಿಕೊಂಡು ಶಿಕ್ಷಣವನ್ನು ಪಡೆದು, ತಾವು ದುಡಿದು, ಅನಂತರ ತಮ್ಮ ಇಬ್ಬರು ತಂಗಿಯಂದಿರನ್ನೂ ಒಬ್ಬ ತಮ್ಮನನ್ನೂ ವೈದ್ಯರನ್ನಾಗಿಸಲು ಸಹಕರಿಸಿ, ತಮ್ಮೊಂದಿಗೇ ಕುಟುಂಬವನ್ನೂ ಬೆಳೆಸಿದ - "ವಿಸ್ಮಯವಾದರೂ ಸತ್ಯ" ವೆನ್ನಿಸುವ ಪ್ರಸಂಗವಿದು. ಇಂದು ಚಿಲ್ಲರೆ ವಿಷಯಗಳಿಗೆಲ್ಲ ಪ್ರಾಣವನ್ನು ಬಲಿಗೊಡುವ "ಆತ್ಮಹತ್ಯಾ ಶೂರರು" ಶ್ರದ್ಧೆಯಿಂದ ಅನುಸರಿಸಬೇಕಾದ ಜೀವನ ಪಥವಿದು ! ಅರ್ಥಾತ್ - ಸಾಹಸ, ಭಕ್ತಿ, ಶ್ರದ್ಧೆ, ವಿವೇಕ, ಏಕಾಗ್ರತೆಗಳ - ನವೀನ "ಸುಂದರ ಕಾಂಡ" !

ಮಂಗಳೂರು ಆಕಾಶವಾಣಿಯ Chit Chat ಅತಿಥಿಯಾಗಿ ಡಾ. ಮನೋರಮಾ ಅವರನ್ನು ಸಂದರ್ಶಿಸುವ ಸದವಕಾಶವು ನನಗೆ ಲಭಿಸಿತ್ತು. ಮಂಗಳೂರಿನ Medical college ನಲ್ಲಿ ಪ್ರೊಫೆಸರ್ ಆಗಿದ್ದ ಅವರು, ಅಂದು ತಮ್ಮ ವೈಯ್ಯಕ್ತಿಕ ವಿಚಾರಗಳನ್ನೂ ಮುಕ್ತವಾಗಿ ಹಂಚಿಕೊಂಡು - ಸ್ವಲ್ಪ ಭಾವುಕರೂ ಆಗಿದ್ದರು. ನಡೆದು ಬಂದ ಯಾವುದೇ ಕಠಿಣ ದಾರಿಯು ಅಸಾಧಾರಣ ತೃಪ್ತಿಯ ಜೊತೆಗೆ ಒಮ್ಮೊಮ್ಮೆ ಭಾವುಕತೆಯನ್ನೂ ತುಂಬುವುದು ಸಹಜ. ಯಾವುದೇ ಶ್ರಮವು ಸಾರ್ಥಕವಾಗುವ ಭಾವ ಸ್ಥಾನಗಳವು. ಡಾ. ಮನೋರಮಾ ಅವರ ಇಡೀ ಕುಟುಂಬವು ಮಂಗಳೂರಿನಲ್ಲಿ ವೈದ್ಯಕೀಯ ಸೇವೆ ಸಲ್ಲಿಸುತ್ತ ಬಂದಿರುವುದಕ್ಕೆ ಹಲವಾರು ದಶಕಗಳ ಇತಿಹಾಸವಿದೆ. ಇದನ್ನು ನಾನು "ಸೇವೆ " ಎಂದು ಏಕೆ ಹೇಳುತ್ತಿದ್ದೇನೆಂದರೆ - ಅವರು ಪುಕ್ಕಟೆಯಾಗಿ ಕೆಲಸ ಮಾಡುತ್ತಿದ್ದಾರೆ ಎಂದಲ್ಲ. ಆದರೆ ಅಸಹಾಯಕ ರೋಗಿಗಳನ್ನು ಎಂದೂ ದುರುಪಯೋಗ ಪಡಿಸಿಕೊಳ್ಳುತ್ತಿಲ್ಲ ಎಂಬುದಕ್ಕಾಗಿ. ಅನಾವಶ್ಯಕ ಪರೀಕ್ಷೆಗಳಿಗಾಗಿ ಸೂಚಿಸುವುದಾಗಲೀ ತಾವೇ ದಾರಿ ತಪ್ಪಿಸಿ ಕೊನೆಯಲ್ಲಿ ದೇವರಂತೆ ಬಂದು ರಕ್ಷಿಸುವ ಮಾಯಕವಾಗಲೀ ಇಲ್ಲಿ ನಡೆದುದು ನನಗೆ ತಿಳಿದಿಲ್ಲ. ನಾನೂ ನನ್ನ ಕುಟುಂಬವೂ ಇಲ್ಲಿ ಚಿಕಿತ್ಸೆ ಪಡೆದಿರುವುದರಿಂದ ಇದು ನಮ್ಮ ತೃಪ್ತಿಯ ಅನುಭವವೂ ಹೌದು.

ಹೀಗಿದ್ದೂ ಈ ಭವ್ಯ ಭಾರತದಲ್ಲಿ ಒಂದು ದೊಡ್ಡ ಸಂಸ್ಥೆಯನ್ನು ನಡೆಸಬೇಕಾದರೆ ನಿಷ್ಪಾಪಿಯಾಗಿರುತ್ತೇನೆಂದರೆ ಅದು ಅಸಾಧ್ಯ. ವ್ಯಾವಹಾರಿಕ ನೆಲೆಯಲ್ಲಿ ಆಡಳಿತಾತ್ಮಕ ನೆಲೆಯಲ್ಲಿ ಕೆಲವು ಹೊಂದಾಣಿಕೆಗಳು ಇಲ್ಲದಿರಲು ಸಾಧ್ಯವಿಲ್ಲ. ವ್ಯಾವಹಾರಿಕ ಹೊಂದಾಣಿಕೆ ಎಂದರೆ - ಅಲ್ಪ ಪ್ರಮಾಣದ ಪಾಪ ಎಂದೇ ಅರ್ಥ. ಯಾವುದೇ ವೃತ್ತಿಯು ವ್ಯವಹಾರವಾದಾಗ ಎದುರಾಗುವ ಸಂದಿಗ್ಧವಿದು. ವ್ಯವಹಾರಗಳಲ್ಲಿ ಕೊಡುಕೊಳ್ಳುವಿಕೆಯು ಅನಿವಾರ್ಯ. ಒಮ್ಮೊಮ್ಮೆ ಮನುಷ್ಯಸಹಜ ಎಡವುಗಳೂ ಘಟಿಸಬಹುದು. ಆದರೆ ವೃತ್ತಿಯಲ್ಲಿ ಮಾತ್ರ ಅಧರ್ಮವು ನುಸುಳದಂತೆ ಕಟ್ಟುನಿಟ್ಟಾಗಿ ನೋಡಿಕೊಂಡರೆ ಅದೇ ದೊಡ್ಡ ಸಾಧನೆ. ಇಂದಿನ ಸಮಾಜದ ಧೃತರಾಷ್ಟ್ರ, ದುರ್ಯೋಧನ, ದುಶ್ಶಾಸನ, ಶಕುನಿ, ಮಂಥರೆಗಳೊಂದಿಗೆ ವ್ಯವಹರಿಸುವಾಗ ಅಪ್ಪಟ ಧರ್ಮರಾಯನಾದರೆ - ವ್ಯವಹಾರದ ಚಕ್ರವು ಓಡುವುದಿಲ್ಲ; ನಿಂತು ಬಿಡುತ್ತದೆ. ಆಗ ಶ್ರೀಕೃಷ್ಣನ "ಅಧರ್ಮಕ್ಕೆ ಅಧರ್ಮ; ಧರ್ಮಕ್ಕೆ ಧರ್ಮ" ಎಂಬ ದಾರಿಯನ್ನು ಹಿಡಿಯಲೇಬೇಕಾಗುತ್ತದೆ. ಆದರೆ ಆಡಳಿತ ಮತ್ತು ವ್ಯವಹಾರಗಳ ತರಲೆಗಳು ರೋಗಿಗಳಿಗೆ ಸಂಬಂಧಿಸಿದ್ದಲ್ಲ. ರೋಗಿಗಳ ಪಾಲಿಗೆ ಚಿಕಿತ್ಸೆ, ಉಪಚಾರ, ಪರಿಣಾಮ - ಇವಿಷ್ಟೇ ಮುಖ್ಯ. ಈ ನಿಟ್ಟಿನಲ್ಲಿ ಜಯಶ್ರೀ ಹಾಸ್ಪಿಟಲ್ ಎಂಬುದು - ಅಂದಿನಿಂದಲೂ ಮಾನವೀಯ, ನಂಬಲರ್ಹ ಸಂಸ್ಥೆ ಎಂಬುದು ನನ್ನ ಸ್ವಂತ ಅನುಭವ.

ಈಗ ಸುಮಾರು 80 ರ ಸನಿಹದಲ್ಲಿರುವ ಡಾ. ಮನೋರಮಾ ಅವರು ಈಗಲೂ ಪಟಪಟ ನಡೆದುಕೊಂಡು ಆಸ್ಪತ್ರೆಗೆ ಬರುತ್ತಾರೆ. ಕೆಲವು ರೋಗಿಗಳನ್ನು ಪರೀಕ್ಷಿಸಿ ಸಲಹೆ ನೀಡುತ್ತಾರೆ. ಅದೇ ಜೀವನೋತ್ಸಾಹ, ಚಟುವಟಿಕೆಯಿಂದ ಇದ್ದಾರೆ. ಅವರ ತಮ್ಮ ಡಾ. ಜಯಪ್ರಕಾಶ್ ಅವರು ಪ್ರೀತಿಯಿಂದಲೇ ಅಕ್ಕನ ಆಡಳಿತಾತ್ಮಕ ಭಾರವನ್ನುಇಳಿಸಿದ್ದಾರೆ. Medical College ನಲ್ಲಿ ಈಗಲೂ ಪ್ರೊಫೆಸರ್ ಆಗಿದ್ದು ಭಾವೀ ವೈದ್ಯರಿಗೆ ಮಾರ್ಗದರ್ಶನ ನೀಡುತ್ತಿರುವ ಡಾ. ಜಯಪ್ರಕಾಶ್ ಅವರಲ್ಲಿ ಮಾತಾಡಿದರೆ ಅರ್ಧ ರೋಗವು ಗುಣವಾದಂತೆ ಭಾಸವಾಗುತ್ತದೆ. ಡಾ. ಜಯಪ್ರಕಾಶ್ ಅವರ ಮಗನೂ (ಡಾ. ಅನಂತಪ್ರಸಾದ್) ವೈದ್ಯರಾಗಿದ್ದು ಈಗ ಅಪ್ಪನಿಗೆ ಸಹಕರಿಸುತ್ತಿದ್ದಾರೆ. ಈ ಇಡೀ ಕುಟುಂಬವು ವೈದ್ಯಮಯವಾಗಿದೆ; ಮಂಗಳೂರಿನ ಹೃದಯ ಭಾಗದಲ್ಲಿರುವ ತಮ್ಮ ವೈದ್ಯ ಸಾಮ್ರಾಜ್ಯವನ್ನು ಮುನ್ನಡೆಸುತ್ತಿದೆ. ಯಾವುದೇ ಸಂಶಯ ಸಮಸ್ಯೆಗಳನ್ನು ತಮ್ಮೊಳಗೇ ಪರಸ್ಪರ ಚರ್ಚಿಸಿ ಪರಿಹರಿಸಿಕೊಳ್ಳುತ್ತಿರುವ ಈ ಕುಟುಂಬವು - "ಭಾವನಾತ್ಮಕವಾಗಿ ಕೂಡಿ ಬಾಳಿದರೆ ಸ್ವರ್ಗ ಸುಖ" - ಎಂಬ ಮಾತಿಗೆ ಜೀವಂತ ಸಾಕ್ಷಿಯಾಗಿದೆ.


ಡಾ. ಮನೋರಮಾ ರಾವ್ ಅವರದು ಮೂಲತಃ ವೈದ್ಯ ಕುಟುಂಬವಲ್ಲದಿದ್ದರೂ ಮುಂದಿನ ಪೀಳಿಗೆಯು "ವೈದ್ಯ ಕುಟುಂಬ" ಎಂದೇ ಗುರುತಿಸುವಂತೆ ತಮ್ಮ ಕುಟುಂಬದ ಚಿತ್ರವನ್ನೇ ಅವರು ಬದಲಿಸಿಬಿಟ್ಟಿದ್ದಾರೆ ! ಬದುಕಿನ ಯಾವುದೇ ಅವಘಡವನ್ನೂ ಒರೆಸಿಹಾಕಿ, ಹೊಸ ಚಿತ್ರವನ್ನು ಮೂಡಿಸಲು ಸಾಧ್ಯವಿದೆ ಎಂಬುದನ್ನು ಡಾ. ಮನೋರಮಾ ಅವರು ನಿರೂಪಿಸಿದ್ದಾರೆ. ಅಕ್ಕನ ಹಾದಿಯಲ್ಲೇ ನಡೆದ ಸೋದರ ಸೋದರಿಯರೇ - ಈಗ ಅವರ ನಿಜವಾದ ಆಸ್ತಿ ! ಆ ಸೋದರಿಯರ ಪ್ರೀತಿಯನ್ನು ಕಣ್ಣಾರೆ ನೋಡಿದ್ದ ನಾನು, ಮನೋರಮಾ ಅವರನ್ನು ಅಭಿನಂದಿಸಿದ್ದೆ. ಸ್ವಂತ ಪ್ರಯತ್ನದಿಂದ, ಸಮರ್ಪಣಾ ಭಾವದಿಂದ - ವೈದ್ಯ ಸಂಸ್ಕೃತಿ, ವೈದ್ಯನೀತಿಯನ್ನು ಆವಾಹನೆ ಮಾಡಿಕೊಂಡ ಡಾ. ಮನೋರಮಾ ರಾವ್ ಅವರ ಕುಟುಂಬವು ಈಗಂತೂ ವೈದ್ಯಕೀಯವನ್ನೇ ಉಸಿರಾಗಿಸಿಕೊಂಡಿದೆ. ವೃತ್ತಿಯಲ್ಲಿ ಪ್ರಾಮಾಣಿಕತೆಯನ್ನೂ ಉಳಿಸಿಕೊಂಡಿದೆ. ಪ್ರಾವೀಣ್ಯತೆಯನ್ನೂ ಗಳಿಸಿಕೊಂಡಿದೆ. ಆದ್ದರಿಂದಲೇ ಈ ಕುಟುಂಬದ ವೈದ್ಯವೃತ್ತಿಯ ಚಿತ್ರವು - "ಪಾರಂಪರಿಕ ಕುಲಕಸುಬು" ಇರಬಹುದೆ ? ಎನ್ನುವಂತಹ ವಿಸ್ಮಯವು ಸಾಧ್ಯವಾಗಿದೆ.

ಇನ್ನೊಬ್ಬ ವೈದ್ಯರಿದ್ದಾರೆ. ಡಾ.  ಮುಳ್ಳಂಕೊಚ್ಚಿ ಗಣಪತಿ ಭಟ್.



 

ಇವರು ಮಕ್ಕಳ ಚಿಕಿತ್ಸಾ ತಜ್ಞರು. ಸರಕಾರೀ ಆಸ್ಪತ್ರೆಯ ವೈದ್ಯಾಧಿಕಾರಿಯೂ ಆಗಿದ್ದವರು. ಪ್ರೊಫ಼ೆಸರ್ ಆಗಿ ವೈದ್ಯ ವಿದ್ಯಾರ್ಥಿಗಳಿಗೆ ಪಾಠವನ್ನೂ ಮಾಡಿದವರು. ಡಾಕ್ಟರನ್ನು ನೋಡಿ ಮಾತಾಡಿದರೇ ಅರ್ಧ ರೋಗ ಗುಣವಾಗುವಂತಹ ವೈದ್ಯರಿವರು. ನನ್ನ ಮಗನಿಗೆ 10  ವರ್ಷಗಳಾಗುವ ವರೆಗೂ ಆತನ ಅನಾರೋಗ್ಯಗಳಿಗೆ ಚಿಕಿತ್ಸೆ ನೀಡಿದ ವೈದ್ಯರಿವರು. "ಒಂದು Metacin ಮಾತ್ರೆಯನ್ನು ನಾಲ್ಕು ಪಾಲು ಮಾಡಿ ಒಂದು ತುಂಡನ್ನು ಹುಡಿ ಮಾಡಿ ಜೇನಿನಲ್ಲಿ ಕರಗಿಸಿ ತಿನ್ನಿಸಿಬಿಡಿ. ಎರಡೇ ದಿನದಲ್ಲಿ ಎಲ್ಲವೂ ಸರಿಹೋಗುತ್ತದೆ. ಮೂರು ದಿನ ಬಿಟ್ಟು ಮತ್ತೊಮ್ಮೆ ಮಗುವನ್ನು ಕರೆತನ್ನಿ. ನೋಡುವ. ಏನಿಲ್ಲ; ಗಾಬರಿಯಾಗಬೇಡಿ. ಬೇಕಿದ್ದರೆ ಹಣೆಗೆ ತಣ್ಣೀರಿನ ಪಟ್ಟಿ ಇಡಿ." ಇಷ್ಟೇ ಚಿಕಿತ್ಸೆಯಲ್ಲೇ ನನ್ನ ಮಗ ಬೆಳೆದು ನಿಂತ. ರೋಗಿಯ ಕುಟುಂಬದೊಂದಿಗೆ ಉತ್ತಮ ಸಂಬಂಧವಿರಿಸಿಕೊಳ್ಳುತ್ತಿದ್ದ ಈ ವೈದ್ಯರು ಕೂಡ ಡಾ. ಜಯಪ್ರಕಾಶ್ ಅವರಂತೆಯೇ "ಕುಟುಂಬ ವೈದ್ಯ"ರ ಹಳೆಯ ಪರಂಪರೆಯ ಉತ್ತಮ ಅಂಶಗಳನ್ನು ಅಳವಡಿಸಿಕೊಂಡಿದ್ದರು. ಲೋಕಾಭಿರಾಮವಾಗಿ ಮಾತನಾಡುತ್ತ ರೋಗದ ಕಾರಣವನ್ನೂ ಗ್ರಹಿಸುತ್ತಿದ್ದರು. ಯಾವ ರಕ್ತ ಪರೀಕ್ಷೆ, X ray, Scanning, ಮೂತ್ರ ಪರೀಕ್ಷೆ... ಇತ್ಯಾದಿ ಪರೀಕ್ಷೆಗಳ ಗೋಟಾಲೆಗಳಿಗೆ ಸುಮ್ಮನೆ ನೂಕಿ, ರೋಗಿಗಳನ್ನು ಇನ್ನಿಲ್ಲದ ಸಂಕಷ್ಟಗಳಿಗೆ ಇವರು ತಳ್ಳುತ್ತಿರಲಿಲ್ಲ. ರೋಗಿಯ ಹಿನ್ನೆಲೆ ಮತ್ತು ರೋಗದ ಕಾರಣವನ್ನು ಸರಿಯಾಗಿಯೇ ಗ್ರಹಿಸುತ್ತಿದ್ದ - ಮತ್ತು ತಮ್ಮ ಶೋಧನೆಯಲ್ಲಿ ಪೂರ್ಣ ವಿಶ್ವಾಸವಿದ್ದ ವೈದ್ಯರಿವರು. ಆದ್ದರಿಂದಲೇ ಅವರೂ ಶಾಂತವಾಗಿದ್ದರು; ಅವರ ರೋಗಿಗಳೂ ನೆಮ್ಮದಿಯಿಂದಿರುತ್ತಿದ್ದರು.

ಇಷ್ಟೇ ಅಲ್ಲ; ಭೇಟಿಯ ಕೊನೆಯ ಹಂತದಲ್ಲಿ, "ಎಷ್ಟು ಕೊಡಲಿ ಡಾಕ್ಟ್ರೇ?" ಎಂದು ಕೇಳಿದರೆ "ಕೊಡಿಯಪ್ಪ; 10 ಅಥವ 20 ಎಷ್ಟಾದರೂ ಕೊಡಿ.." ಎನ್ನುತ್ತಿದ್ದುದನ್ನು ನಾನು ನೋಡಿದ್ದೇನೆ. (ಇತರೆಡೆಗಳಲ್ಲಿ 50 ರೂಪಾಯಿ ಪಡೆಯುತ್ತಿದ್ದ ಕಾಲವದು.) ನಮ್ಮಿಂದ ಮಾತ್ರ ದುಡ್ಡು ಪಡೆಯಲು ನಿರಾಕರಿಸುತ್ತಿದ್ದ ಆ ವೈದ್ಯರನ್ನು ಕಷ್ಟಪಟ್ಟು ಒಪ್ಪಿಸಿ, - ಜೇನು, ಅಕ್ಕಿ ಮುಂತಾದ ರೂಪದಲ್ಲಿ ತಲುಪಿಸಿ - ನಾವು ನಿಟ್ಟುಸಿರು ಬಿಟ್ಟದ್ದಿದೆ ! ಅಂತಹ ವೈದ್ಯರು ಡಾ. ಮುಳ್ಳಂಕೊಚ್ಚಿ ಗಣಪತಿ ಭಟ್ಟರು ! ನನ್ನ ಮಗನ ದಂತ ಚಿಕಿತ್ಸಾಲಯದ ಉದ್ಘಾಟನೆಯ ದಿನದಂದು ಬಂದು, ಅವನನ್ನು ಹರಸಿದ್ದರು ! ವೈದ್ಯನೊಬ್ಬ Patient ನ್ನು "ತನ್ನ ಮಗು" ಎಂದು ಅಂದುಕೊಂಡ ದೃಶ್ಯವದು ! ದುರಾಸೆ ಎಂಬುದು ಇಲ್ಲದಿದ್ದರೆ ವೈದ್ಯ ವೃತ್ತಿಯಷ್ಟು ಸಮಾಧಾನ ಕೊಡುವ - ಗೌರವವುಳ್ಳ ವೃತ್ತಿಯು ಇನ್ನೊಂದುಂಟೆ ?

ಇನ್ನೊಬ್ಬ ಫಿಸಿಶಿಯನ್ ಇದ್ದಾರೆ. ಡಾ. ಕೇಶವ ಭಟ್. ಇವರೂ ಪ್ರೊಫೆಸರ್ ಆಗಿದ್ದವರು. ಸಂಜೆ ಸ್ವಲ್ಪ ಹೊತ್ತು ತಮ್ಮ ಸ್ವಂತ ಮನೆಯ ಹೊರಭಾಗದ ಒಂದು ಕೋಣೆಯಲ್ಲಿ ರೋಗಿಗಳನ್ನು ಪರೀಕ್ಷಿಸುತ್ತಿದ್ದರು. ಅತ್ಯಂತ ಸರಳ ಸಜ್ಜನ. ತಮ್ಮ ಸಾಮಾನ್ಯ ಪರೀಕ್ಷೆಗಳ ಮೂಲಕವೇ ರೋಗಾಸುರರನ್ನು ಪತ್ತೆ ಹಚ್ಚುತ್ತಿದ್ದ ಡಾ. ಕೇಶವ ಭಟ್ಟರು ಸುಲಭದ ಔಷಧಗಳಿಂದಲೇ ಸಮಸ್ಯೆಗಳನ್ನು ಪರಿಹರಿಸುವುದರಲ್ಲಿ ನಿಸ್ಸೀಮರಾಗಿದ್ದರು. ಇವರನ್ನು ನಮಗೆ ಪರಿಚಯಿಸಿದವರು ಡಾ. ಮುಳ್ಳಂಕೊಚ್ಚಿ ಗಣಪತಿ ಭಟ್ಟರೇ. ಮುಳ್ಳಂಕೊಚ್ಚಿ ಅವರಂತೆಯೇ ಡಾ. ಕೇಶವ ಭಟ್ಟರೂ ವೈದ್ಯ ವೃತ್ತಿಯ ಒಂದು ಆದರ್ಶವಾಗಿ ಉಳಿದುಕೊಳ್ಳುತ್ತಾರೆ. ಡಾ. ಕೇಶವ ಭಟ್ಟರಲ್ಲಿ ಚಿಕಿತ್ಸೆ ಪಡೆದ ನಂತರ ಅವರಿಗೆ ಸಂಭಾವನೆ ಕೊಡುವುದು ಮಾತ್ರ ಅತಿ ಕಠಿಣವೆನಿಸುತ್ತಿತ್ತು. ಅಂದರೆ ಇಂದಿನ ಶೈಲಿಯ ಬರಿದಾಗುವ ಕಠಿಣತೆಯಲ್ಲ ! ಎಷ್ಟೇ ಒತ್ತಾಯಿಸಿದರೂ ವೈದ್ಯರು "ಇಷ್ಟು ಫೀಸ್ ಕೊಡಿ" ಎನ್ನುತ್ತಿರಲಿಲ್ಲ. "ಯತ್ಕಿಂಚಿತ್, ಯಥಾನುಶಕ್ತಿ, ಏನೋ ಒಂದು.." ಇಷ್ಟೇ ಹೇಳುವುದನ್ನು ಬಿಟ್ಟರೆ ಇನ್ನೊಂದು ಮಾತಿಲ್ಲ. ಇಪ್ಪತ್ತು ಕೊಟ್ಟರೂ ಅದೇ ಪ್ರತಿಕ್ರಿಯೆ; ಐವತ್ತು ಕೊಟ್ಟರೂ ಅದೇ. ನೋಟನ್ನು ಬಿಡಿಸಿ ನೋಡುತ್ತಲೂ ಇರಲಿಲ್ಲ. ಇತರರೊಂದಿಗೆ ಅವರು ವ್ಯವಹರಿಸುವಾಗಲೂ ಅವರ ಸೌಜನ್ಯದ ಶೈಲಿಯಲ್ಲೇನೂ ವ್ಯತ್ಯಾಸವಿರುತ್ತಿರಲಿಲ್ಲ.

ಆ 80 ರ ದಶಕದಲ್ಲಿ - ಈಗಲೂ ಪ್ರಸಿದ್ಧವಾಗಿರುವ ಮಂಗಳೂರು ನರ್ಸಿಂಗ್ ಹೋಮ್ ನ ಡಾ. ಅನಂತಲಕ್ಷ್ಮಿ, ಡಾ. ಕೃಷ್ಣ ಖಂಡಿಗೆ, ಡಾ. ಸತೀಶ್ ಭಂಡಾರಿ, ಡಾ. ಜಯಪ್ರಕಾಶ್ ಖಂಡಿಗೆ, ಡಾ. ರತ್ನಾಕರ್, ಡಾ. ರಾಮ್ ಮೋಹನ್ ರಾವ್ ಮುಂತಾದ ಸಮರ್ಪಣಾ ಭಾವದ ಹಲವು ವೈದ್ಯರು ಮಂಗಳೂರಿನಲ್ಲಿದ್ದರು. ಈಗಲೂ ಇವರೆಲ್ಲರೂ ಹಾಗೇ ಇದ್ದಾರೆ ! ತಲೆ ತಗ್ಗಿಸಿ ತಮ್ಮ ಕೆಲಸದಲ್ಲಿ ನಿರತರಾಗಿದ್ದಾರೆ. ಮಾನವೀಯವಾಗಿ ಸ್ಪಂದಿಸುತ್ತಾರೆ. ಎಲ್ಲೋ ಒಮ್ಮೊಮ್ಮೆ ಇವರನ್ನೆಲ್ಲ ಭೇಟಿಯಾದಾಗ "ಇದೆಂತಹ ತಪಸ್ಸು ! ಗಾಣದೆತ್ತಿನಂತೆ ದುಡಿಯುತ್ತಿದ್ದಾರಲ್ಲ ? " ಅನ್ನಿಸುತ್ತದೆ. ಗೌರವ ಮೂಡುತ್ತದೆ. ಇಂತಹ ವೈದ್ಯರು ಈಗ ವಿರಳವಾಗುತ್ತಿದ್ದಾರೆಯೆ? 

ಅದೇ ಅವಧಿಯಲ್ಲಿಯೇ ನಿಷ್ಕರುಣೆಯಿಂದ ಹಣ ಬಾಚುತ್ತಿದ್ದ ಕೆಲವು ವೈದ್ಯರೂ ಇದ್ದರು. ಬಾಚಿ ಬಾಚಿ ಸುಸ್ತಾದ ನಂತರ ಮುಂದೆ ವೃತ್ತಿಯಿಂದ ನಿವೃತ್ತರಾಗಿದ್ದ ಅಂತಹುದೇ ಒಬ್ಬ ವೈದ್ಯರು ತಾವು ಕ್ಷೇತ್ರದಿಂದ ದೂರವಾದ ಅನಂತರ "ವೈದ್ಯರಿಂದ ರೋಗಿಗಳ ಬಗೆಬಗೆಯ ಶೋಷಣೆ "ಯನ್ನು ಕುರಿತು ಇತರ ವೈದ್ಯರಿಗೆ ಆಕರ್ಷಕ ಉಪದೇಶ ನೀಡುತ್ತಿದ್ದುದನ್ನೂ ನಾನು ನೋಡುತ್ತ ಬಂದಿದ್ದೇನೆ. ಆಶ್ಚರ್ಯವೇನಿಲ್ಲ. ಎಲ್ಲ ಕಾಲದಲ್ಲಿಯೂ ಮಾತಿನ ಶೂರರು ಇರುತ್ತಾರೆ. ಆದರೆ ಅಧ್ಯಾತ್ಮವು - ಮೌನಕ್ಕೆ ಒಲಿದಷ್ಟು, ಸತ್ಕರ್ಮಕ್ಕೆ ಒಲಿದಷ್ಟು - ಮಾತಿಗೆ ಒಲಿಯುವುದಿಲ್ಲ.

                                                     ********--------********


BABUSHKA DOLL ಅಥವ MATRYOSHKA DOLL ಎಂಬ ಆಟಿಕೆಯೊಂದಿದೆ. ರಶ್ಯಾದ ಗುಡಿ ಕೈಗಾರಿಕೆಯ ಉತ್ಪನ್ನವಿದು. ರಶ್ಯನ್ ಜಾನಪದ ಕಲಾವಿದರು ರೂಪಿಸಿ ಬಣ್ಣ ತುಂಬಿದ ಆಟಿಕೆಯ ಕಲಾರೂಪವಿದು. ಚೀನಾ, ಜಪಾನ್ ಗಳಲ್ಲಿ ಇಂತಹ ಬೊಂಬೆಗಳ ಕಲ್ಪನೆಯು ಬಹಳ ಪೂರ್ವದಿಂದಲೇ ಬಳಕೆಯಲ್ಲಿತ್ತು. ಜಪಾನ್ ನಲ್ಲಿ "ಫುಕುರುಮಾ" ಎಂದು ಗುರುತಿಸುವ ಈ ಬೊಂಬೆಯು "God of Happiness" ಎಂಬ ಪೌರಾಣಿಕ ಗೌರವಕ್ಕೂ ಪಾತ್ರವಾಗಿದೆ. ಆದರೆ ರಶ್ಯನ್ನರು ಈ ಬೊಂಬೆಯನ್ನು ಜಾಗತಿಕ ಮಂಚಕ್ಕೆ ತಂದು - ದೊಡ್ಡ ಮಟ್ಟದಲ್ಲಿ ಜಗತ್ತಿಗೆ ಪರಿಚಯಿಸಿದರು.

ಈ Matryoshka Doll ಒಂದು ಮರದ ಬೊಂಬೆ. ಗಾತ್ರದ ಇಳಿಕೆಯ ಕ್ರಮದಲ್ಲಿ 7 ಬೊಂಬೆಗಳನ್ನು ಒಂದರೊಳಗೊಂದನ್ನು ಅಚ್ಚುಕಟ್ಟಾಗಿ ಜೋಡಿಸಿರುವ ಆಟಿಕೆಯಿದು. ಹೊರಗಿನ ಗೊಂಬೆಯ ತಲೆಯನ್ನು ಹಿಡಿದು ಎತ್ತಿದರೆ ಅರ್ಧಭಾಗವು ಬೇರೆಯಾಗಿ, ಅದರೊಳಗಿನ ಇನ್ನೊಂದು ಬೊಂಬೆ ಇಣುಕುತ್ತದೆ... ಹೀಗೇ 7 "ಕಳ್ಳ ಬೊಂಬೆ"ಗಳನ್ನೂ ದರ್ಶಿಸಬಹುದು. ಮಕ್ಕಳು ಒಂದೊಂದನ್ನೇ ಎತ್ತಿ ನೋಡುತ್ತ, ಮತ್ತೆ ತಿರುಗಿ ಬೊಂಬೆಗೂಡಿನಲ್ಲಿ ಜೋಡಿಸುತ್ತ ಆಟವಾಡುತ್ತಾರೆ. ಪೂರ್ತಿ ಸಿಂಗರಿಸಲ್ಪಟ್ಟ ಪ್ರಸನ್ನ ಮುಖಭಾವದ ತರುಣಿಯೊಬ್ಬಳ ರಂಗು ತುಂಬಿದ ಬೊಂಬೆಗಳ ಬಾಹ್ಯ ಸೊಬಗೂ ಆಕರ್ಷಕವಾಗಿದೆ.

ಈ ಬೊಂಬೆ ಕಲ್ಪನೆಯು ಬೌದ್ಧಿಕ ವಲಯದಲ್ಲೂ ಗಮನ ಸೆಳೆದಿದೆ; ಆಟದ ಸ್ತರವನ್ನು ಮೀರಿದ ಜಿಜ್ಞಾಸೆಗಳಿಗೂ ವಸ್ತುವಾಗಿದೆ ! ನನಗೆ ಕಂಡಂತೆ ಈ ಬೊಂಬೆ ಕಲ್ಪನೆಯ ಹಿಂದೆ ಅದ್ಭುತ ಆಧ್ಯಾತ್ಮವಿದೆ. ಈ ವಿಶಾಲ ಸೃಷ್ಟಿ, ಸೃಷ್ಟಿಯ ಅಪಾರ ಅಚ್ಚುಗಳು, ಅಚ್ಚುಗಳ ಪುನರಾವರ್ತನೆ - ರೂಪಾಂತರ ಮುಂತಾದ ಕುತೂಹಲವನ್ನು ಪ್ರೇರೇಪಿಸುವ ಬೊಂಬೆಯಿದು. ಶ್ರೀ ರಾಮಕೃಷ್ಣರು ಈರುಳ್ಳಿ ಸಿಪ್ಪೆಯ ದೃಷ್ಟಾಂತವನ್ನು ಕೊಡುತ್ತಿದ್ದರು. ಒಂದೊಂದು ಸಿಪ್ಪೆಯೂ ಇನ್ನೊಂದರ ಪಡಿಯಚ್ಚು ! ಸುಲಿಯುತ್ತ ಹೋದರೆ ಕೊನೆಗೆ ಈರುಳ್ಳಿಯೇ ಮಾಯ ! ತ್ರಿಗುಣಗಳನ್ನೂ ಅರಿಷಡ್ವೈರಿಗಳನ್ನೂ - ಸುಲಿದು ಬಿಸುಡುವ ಸಂಕೇತವದು. ನಿರಾಕಾರದ ಸ್ಮರಣೆಯ ಹಂತವೂ ಆಗಬಹುದು. 

Matryoshka ಬೊಂಬೆಯಲ್ಲೂ ಅಂತಹುದೇ ಈರುಳ್ಳಿ ಚಮತ್ಕಾರವಿದೆ ! ಮನುಷ್ಯ ಜೀವಿಗಳ ಮತ, ತರ್ಕ, ಶಾಸ್ತ್ರ, ವಿದ್ಯೆ, ಮೂಲತತ್ವ, ನೀತಿ, ಪುನರ್ಸಂಭವ, ಕ್ರಿಯಾಮಾಲೆ, ಅಪೂರ್ಣತೆ, ಅವಿಳಾಸೀ ಭಾವ... ಇವೆಲ್ಲವನ್ನೂ ಹಿಡಿದಿಟ್ಟುಕೊಂಡಿರುವ Nesting Doll - ನಮ್ಮದೇ ಪ್ರತೀಕ ! ಆತ್ಮನಿರೀಕ್ಷಣೆಗೆ ಪ್ರಚೋದಿಸುವ ಆಟಿಕೆ !

Matryoshka ಎಂದರೆ ಪುಟ್ಟ ಮುತ್ತೈದೆ, ಗೃಹಿಣಿ, ಮನೆಯ ಯಜಮಾನಿ, ಹಲವು ಮಕ್ಕಳಿಗೆ ಜನ್ಮ ನೀಡುವ ಕುಟುಂಬದ ಬಲಿಷ್ಠ ಮಹಿಳೆ - ಎಂದರ್ಥ. Matryoshka ಬೊಂಬೆಯು ಕುಟುಂಬ ಮತ್ತು ಮಾತೃತ್ವದ ಪ್ರತೀಕವೂ ಹೌದು. ಕಾಲಕಾಲಕ್ಕೆ ತನ್ನ ಅರ್ಥ ವ್ಯಾಪ್ತಿಯನ್ನು ಹಿಗ್ಗಿಸಿಕೊಂಡಿರುವ ಬೊಂಬೆಯಿದು. ಒಂದು ಮಗುವು ಭೂಮಿಗೆ ಆಗಮಿಸುವ ಪ್ರಸವ ಕಾಲದಲ್ಲಿ ತಾಯಿ ಮತ್ತು ಮಗುವು ಅತೀವ ಸಂಕಟದ ಹಾದಿಯಲ್ಲಿ ಜೊತೆಯಾಗಿ ಪಯಣಿಸುತ್ತಾರೆ. ಭೂ ಸ್ಪರ್ಶವಾಗುತ್ತಲೇ ಮಗುವು ಹೊಟ್ಟೆ ಬಿರಿಯುವಷ್ಟು ಅಳುತ್ತದೆ. ಅತ್ತು ಅತ್ತು ಸುಮ್ಮನಾಗುತ್ತದೆ. ಏಕೆ ? ಸ್ವಂತ ಮನೆಯಿಂದ ಬಾಡಿಗೆ ಮನೆಗೆ ಬಂದ ಸಂಕಟವದು ! ಭೂಮಿಯ ಪಡಿಪಾಟಲುಗಳನ್ನೆಲ್ಲ ಒಲ್ಲದ ಮನಸ್ಸಿನಿಂದಲೇ ಒಪ್ಪುವ ದೃಶ್ಯವದು. ಅಲ್ಲಿಂದ ಮುಂದೆ ಬಾಡಿಗೆ ಭೂಮಿಯ ದೃಶ್ಯಗಳೆಲ್ಲವನ್ನೂ ಅಚ್ಚುಕಟ್ಟಾಗಿ ಅಭಿನಯಿಸಲೇಬೇಕಾಗುತ್ತದೆ ! "ಕ್ರಮವಾಗಿ ಕುಬ್ಜಗೊಳ್ಳುವ ಅಚ್ಚುಗಳ ಪುನರಾವರ್ತನೆ" ಎಂಬ - Babushka Doll ನ ಅಧ್ಯಾತ್ಮವನ್ನೂ ಅರಿಯಬೇಕಾಗುತ್ತದೆ !

ವೃತ್ತಿ, ವೃತ್ತಿ ಧರ್ಮ, ವೈದ್ಯ - ರೋಗಿಯ ಪ್ರಸ್ತಾಪ ಮಾಡುತ್ತಿದ್ದ ನನಗೆ - ಈ ಬೊಂಬೆಯು ಸಕಾಲಿಕವಾಗಿ, ಕೆಲವು ಪರಿಹಾರಗಳನ್ನೂ ಸೂಚಿಸುವಂತೆ ಕಂಡಿದೆ. ರೋಗಿಗಳನ್ನು ನಯವಾಗಿ ಸುಲಿಯುವ ವರ್ಗಕ್ಕೆ ಮತ್ತು ಚಿಕಿತ್ಸೆ ಪಡೆದ ಮೇಲೆ ರಕ್ಕಸರಂತೆ ವ್ಯವಹರಿಸಿ ಪ್ರತೀಕಾರಕ್ಕೆ ಮುನ್ನುಗ್ಗುವ ವರ್ಗಕ್ಕೆ ಈ ಬೊಂಬೆ ಅಧ್ಯಾತ್ಮ ವು ಉಪಕರಿಸುತ್ತದೆ. ವಿಶಾಲ ಸೃಷ್ಟಿ ಎಂಬ ಬಾಡಿಗೆ ಮನೆಯಲ್ಲಿದ್ದೇವೆ ಎಂಬುದನ್ನು ನೆನಪಿಸುತ್ತದೆ. ಈ ಸ್ಮರಣೆಯು ಪ್ರತಿಯೊಂದು ವೃತ್ತಿ - ಪ್ರವೃತ್ತಿಯಲ್ಲಿ ಮೂಡಲು Matryoshka ಬೊಂಬೆಯು ನೆನಪಿಸುತ್ತದೆ. ಮಕ್ಕಳಿಗಾಗಿ ಎಚ್ಚರದಿಂದ ಯಾವುದೇ ಆಟಿಕೆಯನ್ನು ಆಯ್ದುಕೊಳ್ಳುವಂತೆಯೇ ವೈದ್ಯರನ್ನು ಆಯ್ದುಕೊಳ್ಳುವ ಆಯ್ಕೆಯ ಸ್ವಾತಂತ್ರ್ಯವೂ ಮನುಷ್ಯರಿಗಿದೆ. ಇದು ಮುಖ್ಯ ಘಟ್ಟ. ನಂಬಿ ತನ್ನನ್ನು ಆಯ್ದುಕೊಂಡ ಯಾವುದೇ ಆಟಗಾರನ ಬೇಸರ ನೀಗುವಂತೆ ತೃಪ್ತಿ ಪಡಿಸುವ ಧರ್ಮವು - ವೈದ್ಯಬೊಂಬೆಯದು. ಒಮ್ಮೆ ಬೊಂಬೆಯನ್ನು ಆಯ್ದುಕೊಂಡ ಮೇಲೆ ಏನೇನೂ ಹಿತ ನೀಡಲಾಗದ ಅಸಮರ್ಥ ಬೊಂಬೆಯನ್ನು ಮತ್ತೊಮ್ಮೆ ಆಟಕ್ಕೆ ಸೇರಿಸಿಕೊಳ್ಳದಿರುವ ಸ್ವಾತಂತ್ರ್ಯವು ಆಯ್ದುಕೊಂಡವರಿಗಿದೆ. ಗೌರವದಿಂದಲೇ ಎತ್ತಿ ಮೂಲೆ ಸೇರಿಸುವ ಅವಕಾಶವೂ ಇದ್ದೇ ಇದೆ. ಆದರೆ ಬೊಂಬೆಯನ್ನು ಕುಟ್ಟಿ ಪುಡಿಮಾಡುವ ರೂಕ್ಷ ವರ್ತನೆಯು ಸಾಧುವಲ್ಲ.

ಈ ಬದುಕಿನ ಬೊಂಬೆಯಾಟದಲ್ಲಿ ಎಲ್ಲರೂ ಭಾಗಿಗಳೇ. ಮಾತು, ಘರ್ಷಣೆಗಿಂತ - ಮೌನ, ಸತ್ಕರ್ಮಗಳು ಬದುಕಿನ ಯಾವುದೇ ಆಟವನ್ನು ರಸವತ್ತಾಗಿಸಬಲ್ಲದು ಎಂಬುದು - ಬೊಂಬೆಯಾಟದ ತಿರುಳು. ವೈದ್ಯರನ್ನು ಹಿಗ್ಗಾಮುಗ್ಗಾ ಥಳಿಸುವುದಾಗಲೀ ಅದನ್ನು ಮಹತ್ಸಾಧನೆಯಂತೆ ಬಿಂಬಿಸುವುದಾಗಲೀ ನಾಗರಿಕ ಲಕ್ಷಣವಲ್ಲ.

                                                      ********---------********   

ಎಲ್ಲ ವಿದ್ಯೆಯು - ಎಲ್ಲರಿಗೂ ಅಲ್ಲ. ಬೊಂಬೆಯನ್ನು ಕುಟ್ಟಿ ಒಡೆಯುವ ಮಕ್ಕಳು ಬದುಕಿನ ಬೊಂಬೆಯಾಟಕ್ಕೆ ಯೋಗ್ಯರಲ್ಲ. ವೈದ್ಯರೂ ಕೂಡ ಎಚ್ಚರ ಮತ್ತು ಅನುಕಂಪಪೂರಿತ ಚಿಕಿತ್ಸೆಗೆ ಬದ್ಧರಾಗುವುದು ಅವಶ್ಯಕ. ಪರೋಪಕಾರಕ್ಕೆ ಒದಗದ - ಅಂತರಂಗವನ್ನು ಸ್ಪರ್ಶಿಸದ ಯಾವುದೇ ವಿದ್ಯೆಯು ವ್ಯರ್ಥ. ಕುಣಿಯಲು ಬಾರದವರು, ಕ್ರೀಡೆಗಳಲ್ಲಿ ಪರಿಣತಿಯಿಲ್ಲದವರು ಚರಿಗೆ ಭರ್ತಿಗೆ Olympics ಗೆ ಹೋಗಬಾರದು. "ಅಂದಿನ ಲೆಕ್ಕ ಬೇರೆ; ಇಂದಿನ ಲೆಕ್ಕವೇ ಬೇರೆ" ಅಂದುಕೊಳ್ಳುವುದು ಸರ್ವಥಾ ಸರಿಯಲ್ಲ. ಲೆಕ್ಕವು ಅಲ್ಲೇ ಇದೆ. ಲೆಕ್ಕ ಮಾಡುವವರು ಮಾತ್ರ ಎಡವುತ್ತಿರುವುದಲ್ಲವೆ ? ಸಣ್ಣ ಮೀನನ್ನು ಇಳಿಬಿಟ್ಟು ದೊಡ್ಡ ಮೀನನ್ನು ಎತ್ತುವ - ಜಾಗತೀಕರಣದ ವಿಷಗಾಳಿ ಸೇವಿಸಿರುವ - ವೃತ್ತಿಧರ್ಮವನ್ನು ಹೊಡೆದಟ್ಟಿರುವ ಇಂದಿನ ಕೆಲವು ವೈದ್ಯ EMPIRE ಗಳ ವ್ಯಾಪಾರ ವು ಸುಲಭದಲ್ಲಂತೂ ಅರ್ಥವಾಗುವುದಿಲ್ಲ. ದುರಾಸೆಯು ಪ್ರಾಣದ ಜೊತೆಗೂ ಚೆಲ್ಲಾಟವಾಡುವ ಹಂತದಲ್ಲಿ ನಿಯತ್ತಿನ ಯಾವುದೇ ಮಾತುಗಳೂ - ಅಪ್ರಸ್ತುತವೇ ಆಗಿಹೋಗುವುದು ಸಾಮಾನ್ಯ.

ಭಾರತದ ದೊಡ್ಡ ದೊಡ್ಡ ನಗರಗಳಲ್ಲಿಯಂತೂ ಭೀಭತ್ಸ ವೈದ್ಯಕೀಯ ಸನ್ನಿವೇಶವಿದೆ ! ಮನೆಯ ಮುದುಕರನ್ನು ಅಂತ್ಯಗೊಳಿಸುವುದಕ್ಕೆ ಈಗ ಹೆಚ್ಚು ಕಷ್ಟವೇ ಇಲ್ಲ. ಕೆಲವು ಹೆಸರಾಂತ ಆಸ್ಪತ್ರೆಗಳಿಗೆ ಸೇರಿಸಿದರೆ ಸಾಕು. ವ್ಯವಸ್ಥಿತ ಸಾವು ನಿಶ್ಚಿತ. ಚಿಕಿತ್ಸೆಗೆಂದು ಒಳಗೆ ಹೋದವರು ಹೊರಗೆ ಬರುವುದು ಶುದ್ಧ ಹೆಣವಾಗಿಯೇ. ಕೆಲವು ಸುದ್ದಿಯಾಗುತ್ತವೆ; ಕೆಲವು ಸುದ್ದಿಯೂ ಆಗುವುದಿಲ್ಲ ! ವೈಜ್ಞಾನಿಕವಾಗಿಯೇ ಮುದುಕರ ವಿಲೇವಾರಿಯಾದಾಗ ಕೆಲವು ಮಕ್ಕಳಿಗೂ ಒಂಥರಾ ಖುಶಿಯಾಗಿ, ಅವರೂ ಸುದ್ದಿ ಮಾಡಲು ಹೋಗುವುದಿಲ್ಲ. 8-10 ದಿನಗಳ ಕಾಲ ಸುಮ್ಮನೆ  ICU ನಲ್ಲಿ ರೋಗಿಯನ್ನು ಇಟ್ಟು ತಮ್ಮಲ್ಲಿರುವ ಬಗೆಬಗೆಯ ಉಪಕರಣಗಳಿಗೆಲ್ಲ ಲಾಭದ ಪಾಲು ಕೊಟ್ಟು, ರೋಗಿಯ ಪರಿವಾರವನ್ನು ಪೂರ್ತಿ ಹಿಂಡಿ, ಮನೆಯವರನ್ನೂ ರೋಗಿಯನ್ನೂ ಒಟ್ಟಿಗೆ ಹೆಣವಾಗಿಸುವ ನವೀನ ಶೈಲಿಯಿದು. ಅನಂತರ Bill ನ್ನೂ ತೆತ್ತು - ಹೆಣವನ್ನೂ ಆಸ್ಪತ್ರೆಗೇ ಕೊಟ್ಟರೆ ಸೂಕ್ತ  ಗೌರವದಿಂದ ಬೀಳ್ಕೊಡುವುದೂ ಇದೆ! ಹ್ರಸ್ವ ದೀರ್ಘ ಭಾವ ಭಕ್ತಿಯ ಸಂಕೀರ್ಣತೆ ! ನೋಡುವವರಿಗೆ - ಸಂಬಂಧ ಕಳಚಿಕೊಳ್ಳುವ ಕ್ರೂರ ವಿಧಾನ ಅನ್ನಿಸುತ್ತದೆ ! ಇದರಿಂದ, ಪರೋಪಕಾರದ ಹೆಸರಿನಲ್ಲಿ - ರೋಗಿಯ ಕುಟುಂಬಕ್ಕೆ ಹೊರೆ ಇಳಿದಂತಾಗಿ ಹೊಸ ವೈದ್ಯರ ಶೋಧನೆಗಳಿಗೆ ಹೆಣ ಒದಗಿಸಿ ಉಪಕರಿಸಿದಂತಾಗಿ... ಎರಡೂ ಕಡೆಯವರಿಗೂ ಲಾಭ ! ಕೆಲವೊಮ್ಮೆ "ಉತ್ತರ ಕ್ರಿಯೆ"ಯ ಶಾಸ್ತ್ರ ಪೂರೈಸಲು ಹೆಣದ ಒಂದು ಬೆರಳನ್ನು ತುಂಡರಿಸಿ, "ವಡೆ ಕಟ್ಟಿ ಕೊಟ್ಟಂತೆ" ಬಂಧುಗಳಿಗೆ ಒದಗಿಸುವುದೂ ಇದೆ ! ಇಂತಹ ಸಂದರ್ಭಗಳನ್ನು ಕಂಡಾಗ, ಇಂದಿನ ಕೆಲವು ಆಸ್ಪತ್ರೆಗಳಲ್ಲಿ ಹೆಣಗಳಿಗೆ ಇರುವಷ್ಟು Demand ಮನುಷ್ಯರಿಗಿದೆಯೆ ? ಅನ್ನಿಸುವುದಿದೆ. ಇಂತಹ ಲೋಕೋಪಕಾರಗಳೆಲ್ಲವೂ ಭಾವ ಬರಡಾಗಿಸಿಕೊಂಡ ಉತ್ತಮೋತ್ತಮ ಚಾರ್ವಾಕ ಭಕ್ತರಿಂದ ಮಾತ್ರ ಸಾಧ್ಯ. ಅಸಹಾಯಕತೆಯಿಂದ ಕೈ ಹೊಸಕಿಕೊಳ್ಳುತ್ತ ಬದುಕಿನ ದೊಂಬರಾಟದ ಹಲವು ದೃಶ್ಯಗಳಲ್ಲಿ ಇದೂ ಒಂದು ದೃಶ್ಯ - ಎಂದುಕೊಳ್ಳಬೇಕು. ಅಷ್ಟೆ.

ತನ್ಮಧ್ಯೆ, ಹಗಲೂ ಇರುಳೂ ಜನಸೇವೆಯ ಚಿಂತೆ ಮಾಡುವ ಸರಕಾರವು ಕೆಲವು ಔಷಧಗಳಿಗೆ ಕೆಲವು ಪೈಸೆಗಳಷ್ಟು ದರ ಇಳಿಸಿ ಒಂದು ವಾರ ಕಾಲ ಅದನ್ನೇ "ಟಂ ಟಂ" ಸುದ್ದಿ ಮಾಡುವುದೂ ಇದೆ ! ಅಸಹಾಯಕ ರೋಗಿಗಳಿಗೆ ಉತ್ಸಾಹದಿಂದ ರಕ್ತ ನೀಡುವವರು ಸಮಾಜದ ಒಂದೆಡೆ; ಜೀವ ಹಿಂಡುವವರು ಇನ್ನೊಂದೆಡೆ. ಸರಕಾರೀ ಆಸ್ಪತ್ರೆಗಳಂತೂ ಭ್ರಷ್ಟತೆಯ ಕೂಪವಾಗಿವೆ; ಇತ್ತ ಉದ್ಧಾರಕ ವೇಷದವರು ಹೆಚ್ಚಿದಷ್ಟೂ ಅತ್ತ ಅಂತಕರೂ ಎರಡು ಪಟ್ಟು ಹೆಚ್ಚುತ್ತಿದ್ದಾರೆ ! ಅದೃಷ್ಟವಶಾತ್ , ಆಯುಷ್ಯ ಇದ್ದವರು ಮಾತ್ರ ಏನು ಮಾಡಿದರೂ ಸಾಯದೆ ಎಲ್ಲಿಯೂ ಬದುಕಿ ಬಿಡುತ್ತಾರೆ !

ಬಡವರು, ದುರ್ಬಲರಿಗೆ - ಭ್ರಷ್ಟ ಸರಕಾರೀ ಆಸ್ಪತ್ರೆಗಳ ದಾರಿ ತೋರಿಸುವ ನಮ್ಮ ಜನ ಪ್ರತಿನಿಧಿಗಳು ತಾವು ಮಾತ್ರ ಪಂಚತಾರಾ ಆಸ್ಪತ್ರೆಗಳಲ್ಲಿ, ವಿದೇಶಗಳಲ್ಲಿಯೂ ಚಿಕಿತ್ಸೆ ಪಡೆಯುತ್ತಿರುವ ಘೋರ ವಿಡಂಬನೆಗೆ ನಾವೀಗ ಸಾಕ್ಷಿಯಾಗುತ್ತಿದ್ದೇವೆ. ಇತ್ತ - ವರ್ಷಕ್ಕೆ ಸಾವಿರಾರು - ಲಕ್ಷಾಂತರ ರೂಪಾಯಿಯನ್ನು ವೈದ್ಯಕೀಯ ವೆಚ್ಚಕ್ಕಾಗಿ ಈ ಜನಪ್ರತಿನಿಧಿಗಳು ಕಿಸೆಗಿಳಿಸುತ್ತಿದ್ದಾರೆ ! ಅವರಿಗೆಲ್ಲ ಅಂತಹ ದೊಡ್ಡ ರೋಗ ಏನೆಂಬುದು ಯಾರಿಗೂ ಗೊತ್ತಿಲ್ಲ. ಅಂತಹ ಕೆಟ್ಟ ರೋಗಿಷ್ಟರು ಜನ ಸೇವೆ ಮಾಡುವುದಾದರೂ ಹೇಗೆ ? ಅಥವ ಎಲ್ಲವೂ ನಕಲೀ ರಶೀದಿ ಪತ್ರಗಳೇ ? ಅಕಸ್ಮಾತ್ ನಕಲಿಯಾಗಿದ್ದರೆ, ಅಂತಹ ರಶೀದಿಗಳನ್ನು ಕೊಟ್ಟವರೇನು ಉತ್ತಮರೆ ? ಭರ್ಜರಿ ಜೋಡಾಟ ನಡೆಯುತ್ತಿದೆ. ಊರಿಗೆಲ್ಲ ನೀತಿ ನಿಯಮ ಬೋಧಿಸುತ್ತ ಅಲ್ಲಿ ಇಲ್ಲಿ ಕಲ್ಲು ನೆಡುವ ಭೂಪರು ನಿಕೃಷ್ಟ "ತಕಲಿತನ"ವನ್ನು ತೋರಿಸುವುದಾದರೂ ಹೇಗೆ ? ಅಷ್ಟೊಂದು ಭಂಡತನವೆ ? ಹೇಗಿದ್ದರೂ ಕೊನೆಯುಸಿರಿನವರೆಗೂ "ಸೇವೆ  ಮಾಡುವ ಪ್ರತಿಗ್ನೆ (ಜ್ಞೆ)" ಹೊತ್ತ ವರ್ಗವಿದು ! ಒಟ್ಟಿನಲ್ಲಿ ಸೇವೆಯ ಹೆಸರಿನಲ್ಲಿ - ಜನರ ದುಡ್ಡಿನಲ್ಲಿ ಮಜಾ ಉಡಾಯಿಸುವ, ಜನರ ದುಡ್ಡನ್ನು ಪೋಲು ಮಾಡುವ, ಬಡವರ ಕುರಿತು ಮೊಸಳೆ ಕಣ್ಣೀರಿಡುವ ನಿತ್ಯ ವಿದೂಷಕರಿವರು ! ನಾವೇ ಆರಿಸಿ ಕಳಿಸಿದ ದುಷ್ಕರ್ಮಕ್ಕೆ - ನಮ್ಮ ಮೇಲೆ ನಾವೇ ಉಗಿದುಕೊಳ್ಳುವ ಇಂತಹ ವಿಪರ್ಯಾಸಕ್ಕೆ ನಾವೀಗ ಸಾಕ್ಷಿಯಾಗಿದ್ದೇವೆ. ದುರಂತ ಎಂಬುದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕಾ ? ಇದು ಜನರ ದುಡ್ಡನ್ನು ದೋಚುವ ವೈಜ್ಞಾನಿಕ ಶೈಲಿಯೆ ? ಭ್ರಷ್ಟ ವೈದ್ಯ ವ್ಯವಸ್ಥೆಯ ಮೂಲಕ ಭಾರತದ ಬೃಹತ್ ಜನಸಂಖ್ಯೆಯನ್ನು ಮಿತಗೊಳಿಸುವ ಪರಿಯೆ ? ಅಥವ ನಮ್ಮ ಸರಕಾರಗಳ ಗಂಭೀರ ಸೋಲೆ ? ಅಥವ ಅರೆ ಆಯುಷ್ಯದಲ್ಲಿಯೇ "ಸಾಯುವ ಭಾಗ್ಯ" ಕರುಣಿಸಿದ ಸರಕಾರಗಳ ಉದಾರ ಕೃಪೆ ಇರಬಹುದೆ ?  "ಸಾಯುವ ಸಿಹಿಯೆಲ್ಲ ಜನರಿಗಿರಲಿ - ಬದುಕುವ ಕಹಿಯೆಲ್ಲ ತಮಗಿರಲಿ" ಎಂಬ "ತ್ಯಾಗ ಕಾಪಟ್ಯ"ದ ಮಾದರಿ ದೃಶ್ಯ ಇರಬಹುದೆ ?

ನೋವಿನಿಂದ ನರಳುವವರನ್ನು ವೈದ್ಯ ಜಗತ್ತು ಹೇಗೆ ನಡೆಸಿಕೊಳ್ಳಬೇಕು ? ಕರುಣೆ, ಸ್ನೇಹ, ಮಾನವೀಯತೆ, ಅನುಕಂಪ... ಇತ್ಯಾದಿ ಕಿರೀಟಗಳೆಲ್ಲವೂ ಒಬ್ಬ ವೈದ್ಯನಿಗಿರಬೇಕು ಎಂದು ಅಪೇಕ್ಷಿಸುವುದು ಸಹಜ. ಆದರೆ ಇಂದು ಪರಿಸ್ಥಿತಿ ಹೇಗಿದೆ ? ವೈದ್ಯರ ತುಮುಲಗಳೇನು ? ದುಡ್ಡು ಸುರಿಯದೆ ಯಾವುದೇ ಪದವಿಪತ್ರವು ಸಿಗಲಾರದ ಸನ್ನಿವೇಶವಿಲ್ಲವೆ ? ಕನಿಷ್ಟ ಅಂಕ ಗಳಿಸಿದವನೂ ಜಾತಿ ಮತ್ತು ದುಡ್ಡಿನ ಬಲದಿಂದ ವೈದ್ಯರಾಗಬಹುದಾದ ವಿಘ್ನಾನುಕೂಲ ಸನ್ನಿವೇಶವೇ ಇಂದಿನ ಹಲವು ಸಮಸ್ಯೆಗಳ ಮೂಲವಲ್ಲವೆ ?

ಇಂದು - ಬೆರಳಿಗೆ, ಉಗುರಿಗೆ, ರೋಮಗಳಿಗೆ ಎಲ್ಲದಕ್ಕೂ ಪ್ರತ್ಯೇಕ ವೈದ್ಯ ಸುಖ ! ಬೆರಳಿಗೆ ಚಿಕಿತ್ಸೆ ಕೊಟ್ಟರೆ ಉಗುರು ಉದುರುವಂತಾಗಿದೆ ! ಉಗುರಿಗೆ ಚಿಕಿತ್ಸೆ ಮಾಡಿದರೆ ಬೆರಳು ಬೀಗುತ್ತದೆ ! ಸಮಗ್ರ ವೈದ್ಯಕೀಯದ ರುಚಿಯೇ ಸತ್ತುಹೋಗಿದೆ. ಇವೆಲ್ಲವೂ ದುಡ್ಡು ಸಂಪಾದಿಸುವುದಕ್ಕಾಗಿಯೇ ಮೂಡಿರುವ ವೈದ್ಯಕೀಯ ರೆಂಬೆ ಕೊಂಬೆಗಳು. ಪಾಶ್ಚಾತ್ಯ ಅಂಧ ಅನುಕರಣೆಯ ಶುದ್ಧ ಭಾನಗಡಿಗಳು ! ಇಡೀ ವೈದ್ಯಕೀಯ ವ್ಯವಸ್ಥೆಯೇ ಪಟ್ಟಾಗಿ ಊಟಕ್ಕೆ ಕುಳಿತಂತೆಯೂ ಕಾಣಿಸುತ್ತದೆ.

ಶಿಕ್ಷಣದ ಹಂತದಲ್ಲಿಯೇ ಮಕ್ಕಳಿಂದ ಲಕ್ಷಗಟ್ಟಲೆ ದರೋಡೆ ಮಾಡುವ ವೈದ್ಯಕೀಯ ವಿದ್ಯಾ ಸಂಸ್ಥೆಗಳಿಗೆ ಹೀಗೆ ಸ್ವಚ್ಛಂದ ಅಟ್ಟಹಾಸ ನಡೆಸಲು ಅನುಮತಿ ಕೊಟ್ಟವರಾದರೂ ಯಾರು ? Air Condition ಕೋಣೆಯಲ್ಲಿ ಪಾಠ ಮಾಡುವ ಪಂಚತಾರಾ ಶೈಲಿಯ ಅವಶ್ಯಕತೆಯಾದರೂ ಏನು ? ವಿದ್ಯೆಗೆ ಅಟ್ಟಹಾಸ ಬೇಕೆ ? ಅಂತಹ ಅಟ್ಟಹಾಸಗಳಿಗೆ ಬೆಲೆ ತೆತ್ತು, ದುಡ್ಡು ಸುರಿದು, ಅಟ್ಟಹಾಸದಿಂದಲೇ ಪದವಿಪತ್ರ ಸಂಪಾದಿಸಿಕೊಂಡ "ವೈದ್ಯ" ಎಂಬ ಪಡ್ಡೆ ವ್ಯಕ್ತಿಯು ಅನಂತರ ವೃತ್ತಿಗೆ ತೊಡಗಿದಾಗ ಮುಖಮೂತಿ ನೋಡದೆ ಹಣ ಸಂಪಾದಿಸಲು ಇಳಿದರೆ ಅದು ತಪ್ಪಾಗುವುದಾದರೂ ಹೇಗೆ ? ಇದೂ ಒಂಥರ ನ್ಯಾಯವೇ ಆಗಿದೆ. ಆದ್ದರಿಂದಲೇ ರೋಗಿಗಳಿಗೆ ಸಾಂತ್ವನ ಹೇಳುತ್ತ ಕಷ್ಟಸುಖ ವಿಚಾರಿಸುವಂತಹ ಮೃದು ಹೃದಯವಾಗಲೀ ಮನೋಶಿಷ್ಟತೆಯನ್ನಾಗಲೀ ಇಂದಿನ ಕೆಲವು ವೈದ್ಯರು ಉಳಿಸಿಕೊಂಡಿರುವುದಿಲ್ಲ. ತಾನು Invest ಮಾಡಿದ ದುಡ್ಡು ಇಂತಿಷ್ಟು ಅವಧಿಯಲ್ಲಿ ತನಗೆ ಹಿಂದಿರುಗಬೇಕು ಎಂಬ ಒತ್ತಡ ! "ಬದುಕುವ ಸಾಮಾನ್ಯ ಲೆಕ್ಕಾಚಾರವು" ತಪ್ಪೆ ? ವೈದ್ಯರೂ ಬದುಕಬೇಕಲ್ಲ ? ಅದೂ ಸರಿ. ಇತ್ತ, ಅಂತಹ ಮಂದಿಯಿಂದ ಶಿಕ್ಷಣದ ಹೆಸರಿನಲ್ಲಿ ದುಡ್ಡು ವಸೂಲಿ ಮಾಡಿದವರಿಗೆ "ಹಳ್ಳಿಗೆ ಹೋಗಿ ಸೇವೆ ಮಾಡಿ" ಎನ್ನುವ ನೀತಿಪಾಠವನ್ನು ಹೇಳುವ ಅಥವ ಹೇಳಿದಂತೆ ನಟಿಸುವ ಅರ್ಹತೆಯು ಹೇಗೂ ಯಾರಿಗೂ ಇರುವುದಿಲ್ಲ. ಪ್ರತಿಯಾಗಿ "ಹೋಗಲೇ..." ಎಂದರೆ - ನೀತಿ ಬೋಧಿಸಿದ ಗುಮ್ಮಣ್ಣಗಳು ಸುಮ್ಮನೆ ಕೇಳಿಸಿಕೊಳ್ಳಬೇಕಾದೀತು. ಎಲ್ಲರಿಗೂ ಒಂದೇ ನೀತಿ ಒಂದೇ ರೀತಿಯಿರಲಿ. ಮೊದಲು LIVE; ಆಮೇಲೆ LET LIVE. ಈ ಸೂತ್ರವನ್ನು ಅವಲಂಬಿಸಲು ಜನಪ್ರತಿನಿಧಿಗಳಂತೆ ವೈದ್ಯರಿಗೂ ಅವಕಾಶವಿಲ್ಲವೆ ?

ಹಾಗಿದ್ದರೆ ಮುಂದೇನು ?

ನಮ್ಮ ಸರಕಾರಗಳು ಕಾಗೆ ಶಾಸ್ತ್ರ ಓದುವುದನ್ನು ಬಿಟ್ಟು, ಭಾಗ್ಯ ಹಂಚುವ ಕೆಲಸ ನಿಲ್ಲಿಸಿ, ಮೌಢ್ಯವನ್ನು ಕೊಡವಿಕೊಂಡು ಎಚ್ಚರಗೊಳ್ಳಬೇಕು. ವೈದ್ಯ ಶಿಕ್ಷಣವನ್ನು ಅರ್ಹತೆಯಿರುವ ವಿದ್ಯಾರ್ಥಿಗಳಿಗೇ ಕೊಡುವುದು ಉತ್ತಮವಲ್ಲವೆ ? ಶಿಕ್ಷಣ ಪಡೆದು ಹೊರಬರುವ ಯಾವ ವಿದ್ಯಾರ್ಥಿಯೂ ಬೃಹತ್ ಸಾಲಗಾರನಾಗದಂತೆ ನೋಡಿಕೊಳ್ಳಲು ಸಾಧ್ಯವಿಲ್ಲವೆ ? ಆಳವಾದ ಜ್ಞಾನವಿಲ್ಲದವರಿಗೆಲ್ಲ ಕೋಸುಂಬರಿ ಹಂಚಿದಂತೆ ಪದವಿಪತ್ರಗಳನ್ನು ಕೊಡುವ ಉದಾರತೆ ತೋರಿದರೆ ರೋಗಿಗಳ ಗತಿ ಏನಾಗಬಹುದು ? ದಯಾ ಸಾವೆ ? ನಿರ್ದಯ ಸಾವೆ ? ಅಂತಹ ಅಪಕ್ವ ವೈದ್ಯರುಗಳಿಗಿಂತ ಅಳಲೇಕಾಯಿ ಪಂಡಿತರೇ ಕ್ಷೇಮವಲ್ಲವೆ ?... ರೋಗ ಗುಣವಾಗದಿದ್ದರೂ ರೋಗಿಯು ಪಟ್ಟಂತ ಗೊಟಕ್ಕೆನ್ನುವುದಿಲ್ಲ. ಸತ್ತದ್ದು ಏಕೆ - ಹೇಗೆ ಎಂದಾದರೂ ತಿಳಿಯುತ್ತದೆ.

ವೈದ್ಯರ ಇಡೀ ವೃತ್ತಿಯನ್ನೇ ಇತ್ತೀಚೆಗೆ ಹಾಸ್ಯದ ವಸ್ತುವಾಗಿಸುತ್ತಿರುವುದರಲ್ಲಿ ಸರಕಾರವು ಅನುಸರಿಸುತ್ತಿರುವ ಶಿಕ್ಷಣದ ನಿಲುವೇ ಮುಖ್ಯ ಕಾರಣವಲ್ಲವೆ ? ಸುಸಂಬದ್ಧ ವ್ಯವಸ್ಥೆಯೊಂದು ಸ್ಥಾಪಿತವಾಗುವುದು ಇಂದಿನ ತುರ್ತು ಅಗತ್ಯ. "ಅರ್ಹತೆಗೆ ಸ್ಥಾನ " ಎಂಬ ನಿಲುವಿಗೆ ಸರಕಾರಗಳು ಬದ್ಧವಾದರೆ ಯಾವ ಜನರಿಗೂ ಜೀವವಿಮೆ ಮಾಡಿಸುವಂತಹ ವೋಟಿನ ನಾಟಕದ ಅಗತ್ಯವೂ ಬರಲಾರದು. ಆರೋಗ್ಯ ವಿಮೆಯಂತಹ ಹಂತಕ್ಕೆ ನಮ್ಮ ದೇಶವು ಇನ್ನೂ ತಲುಪಿಲ್ಲ. ಸಾಯಿಸುವುದಕ್ಕೆ ಮತ್ತು ಸಾಯುವುದಕ್ಕೆ ವಿಮೆಯ ಧೈರ್ಯ ತುಂಬಿಕೊಳ್ಳುವಷ್ಟು ಭಾರತದ ಜನರು ಪ್ರಬುದ್ಧರಾಗಿಲ್ಲ. ಇಲ್ಲಿ ತುಂಬಿಕೊಂಡಿರುವ ದುರುಪಯೋಗ ಪಟುಗಳನ್ನು ಮೊದಲು ಹಾದಿಗೆ ತಂದು ಅನಂತರ ಇಂತಹ ಪ್ರಯತ್ನ ನಡೆಸಿದರೆ ಆಗ ಮಾತ್ರ ಉತ್ತಮ ಪರಿಣಾಮ ಕಾಣಬಹುದು. ಆರೋಗ್ಯ ವಿಮೆಗಿಂತ ಮೊದಲು ಆಗಬೇಕಿರುವ ಕೆಲಸಗಳೇ ಸಾಕಷ್ಟಿವೆ. ಮೊದಲು ಆಡಳಿತವು ಸಮರ್ಪಕವಾಗಲಿ. ಅಪರಾಧಿಗಳು ನೀತಿ ನಿರೂಪಿಸುತ್ತಿರುವ ದುಸ್ಥಿತಿಯು ತೊಲಗಲಿ. ಅನಂತರವೇ ತಪ್ಪಿತಸ್ಥರೆನ್ನಿಸಿದ ಜನರನ್ನು ಹೆಡಮುರಿ ಕಟ್ಟಲು ಸರಕಾರಗಳಿಗೂ ನೈತಿಕ ಬಲ ಬಂದೀತು.

ಯಾವುದೇ ವೃತ್ತಿಯು ಪವಿತ್ರವಾಗಿ ಉಳಿಯಬೇಕಾದರೆ ಸಾಮಾಜಿಕರ ಮನಸ್ಸು ಕೆಡಬಾರದು. ಇಂದು ದುಡ್ಡು ಗಳಿಕೆಯಲ್ಲಿ ಮಾತ್ರ ನಾವು ಭ್ರಷ್ಟರಾಗಿರುವುದಲ್ಲ. ನಮ್ಮನ್ನು ಆಮೂಲಾಗ್ರವಾಗಿ ಭ್ರಷ್ಟತನ ಅಂಟಿಕೊಂಡಿದೆ. ಭ್ರಷ್ಟರಾಗದೆ ಅನ್ಯ ಮಾರ್ಗವೇ ಇಲ್ಲ ಎಂಬಂತಹ ವಾತಾವರಣವಿದೆ. ದುಡ್ಡು ಸುರಿದು ದುಡ್ಡು ಗೋರುವ ಉದ್ದೇಶದಿಂದಲೇ ತಮ್ಮ ಮಕ್ಕಳನ್ನು ಓದಿಸುವ ಹೆತ್ತವರೂ ಯೋಚಿಸಬೇಕು. ಅಂತಹ "ದುಡ್ಡಪ್ಪ ಮಕ್ಕಳು" ಮನೆಗೂ ಉಪಕಾರಿಯಾಗುವುದಿಲ್ಲ; ಸಮಾಜಕ್ಕೂ ಉಪಕಾರಿಯಾಗುವುದಿಲ್ಲ. ತಮ್ಮ ಮಕ್ಕಳನ್ನು ಇಂಜಿನಿಯರ್ - ಡಾಕ್ಟರ್ ಆಗಿಸುವ ಉತ್ಸಾಹದಿಂದ ಹೆತ್ತವರು ಪಡುವ ಪಡಿಪಾಟಲು, ಆ ಮಕ್ಕಳು ಅಡಕತ್ತರಿಯಲ್ಲಿ ಸಿಕ್ಕಿದಂತೆ ಅನುಭವಿಸುವ ಸಂಕಷ್ಟಗಳು - ಎದುರಾಗುವ ಭ್ರಷ್ಟ ಕಿರಿಕಿರಿಗಳು ಕಡಿಮೆಯಾಗದೆ - ಪ್ರಸ್ತುತದ ಸಾಮಾಜಿಕ ಮನೋಭ್ರಷ್ಟತೆಯನ್ನು ಅಳಿಸಲು ಸಾಧ್ಯವೇ ಇಲ್ಲ.

ನಮ್ಮ ಮಗನೂ ದಂತವೈದ್ಯ. ಡಾ. ರೋಹಿತ್. ಮಂಗಳೂರಿನ ಯೆಯ್ಯಾಡಿಯಲ್ಲಿ ಸ್ವಂತ Clinic ನಡೆಸುತ್ತಿದ್ದಾನೆ. Chaithanya Speciality Dental Clinic. ಅವನು 2005 ರಲ್ಲಿ ತನ್ನ ವೃತ್ತಿಯನ್ನು ಆರಂಭಿಸುವ ದಿನದಂದು ನಾವು ಅವನಿಗೆ ಹೇಳಿದ್ದು ಇಷ್ಟೇ. "ಮಗೂ, ಇನ್ನೊಬ್ಬರ ನೋವನ್ನು ಶಮನಗೊಳಿಸುವ ಉತ್ತಮ ಅವಕಾಶವು ನಿನಗೆ ಒದಗಿದೆ. ಮಾನವೀಯತೆಯನ್ನು ಎಂದೂ ಮರೆಯದೆ ನಿನ್ನ ವೃತ್ತಿಯನ್ನು ಉಪಾಸಿಸು. ವ್ಯವಹಾರದ ಸ್ಥಳದಲ್ಲಿ ದಾನಧರ್ಮ ಮಾಡುವಂತೆ ನಿನಗೆ ನಾವು ಹೇಳುವುದಿಲ್ಲ. ಅದು ಅಪ್ರಾಯೋಗಿಕ. ಆದರೆ ತಲೆ ಒಡೆದ ದುಡ್ಡು ಮಾತ್ರ ನಮಗೆ ಬೇಡ. ಇರುವುದರಲ್ಲಿಯೇ ಸಂತೋಷದಿಂದ ಬದುಕಲು ಸಾಧ್ಯವಿದೆ. ನಾವು - ನೀನು ಬೇರೆಯಲ್ಲ. ನಮಗೂ ನೀನಲ್ಲದೆ ಬೇರೆ ಯಾರೂ ಇಲ್ಲ. ಕಷ್ಟವೋ ಸುಖವೋ - ಒಟ್ಟಿಗೇ ಅನುಭವಿಸುವ. ಆದ್ದರಿಂದ ಶ್ರದ್ಧೆಯಿಂದಲೇ ವೃತ್ತಿ ನಡೆಸು. ಯಾವತ್ತೂ - ದುಡ್ಡಿಗಾಗಿ ರೋಗಿಗಳನ್ನು ಸುಲಿಯಬೇಡ... ದುಡ್ಡಿನ ಹಿಂದೆ ಓಡಬೇಡ. ವೈದ್ಯ ವೃತ್ತಿಯು ಪವಿತ್ರವಾದದ್ದು. ಈ ವೃತ್ತಿಯಲ್ಲಿ ಪ್ರೀತಿ ವಿಶ್ವಾಸದ ಸ್ಪರ್ಶವಿರಲೇಬೇಕು... ಯಾವುದೇ ಪರಿಶ್ರಮದ ಹಿಂದೆ ಪ್ರತಿಫಲವು ಬಂದೇ ಬರುತ್ತದೆ. ಅದು ತಕ್ಷಣ ಸಿಗುವ ದುಡ್ಡೇ ಆಗಬೇಕೆಂದಿಲ್ಲ. ಆದ್ದರಿಂದ ಪ್ರತಿಫಲಕ್ಕಾಗಿಯೇ ಹೆಣಗಾಡುತ್ತ ನಿನ್ನ ವೃತ್ತಿಯನ್ನು ಕೆಡಿಸಬೇಡ... ರೋಗಿಗಳ ನಿಟ್ಟುಸಿರು ತಟ್ಟದಿರಲಿ.." ಎಂದಿದ್ದೆವು. ನಾನು ಗಮನಿಸಿದಂತೆ ಆತನೂ Principled ಆಗಿದ್ದಾನೆ. ಕಿರಿದೆನದೆ, ಮನವಿಟ್ಟು ಇರುವ ಕೆಲಸವ ಮಾಡುತ್ತ, ದೊರೆತುದ ಹಸಾದವೆಂದುಕೊಂಡು ಯಾವ ಗೊಣಗಾಟವೂ ಇಲ್ಲದೆ - ನನ್ನ ಮಗ ತೃಪ್ತನಾಗಿದ್ದಾನೆ ! ಬಂಧನ, ಗುಲಾಮಗಿರಿಯಿಲ್ಲದ ಸ್ವತಂತ್ರ ವೃತ್ತಿಯಲ್ಲಿ ನಿರಾಳವಾಗಿದ್ದಾನೆ ! 

ವೈದ್ಯ ವೃತ್ತಿಯು ಕೆಟ್ಟ ಬಿಸಿನೆಸ್ ಆಗಲೇಬಾರದು. ಅದರಿಂದ ಸಾಮಾಜಿಕ ಸ್ವಾಸ್ಥ್ಯವೇ ಕೆಡಬಹುದು. ಅದಕ್ಕಾಗಿ ಸಾತ್ವಿಕ ಸಮನ್ವಯತೆಯನ್ನು ರೂಢಿಸಿಕೊಳ್ಳಬೇಕು. ಮೌಲ್ಯ ಮತ್ತು ಪದ್ಧತಿ - ಎರಡರಲ್ಲೂ ಹಳೆ ಬೇರು ಹೊಸ ಚಿಗುರು ಹೊಂದಿಕೊಂಡಾಗಲೇ ಸುಂದರ ಪರಿಸರವೊಂದು ಅನಾವರಣಗೊಳ್ಳಬಲ್ಲದು. ಆದ್ದರಿಂದ ಭಾರತೀಯ ಮೂಲಶಿಕ್ಷಣದ ಸತ್ವವು ಬತ್ತಿ ಹೋಗದಂತಹ ಶೈಕ್ಷಣಿಕ ನಿಲುವುಗಳತ್ತ ಮುಖ ಮಾಡಬೇಕು.  

ಕ್ಷೇಮ ಎಂಬುದು - ಕೇವಲ ಉಪಚಾರದ ಅಥವ ಘೋಷಣೆಯ ಮಾತಾದರೆ ಉಪಯೋಗವಿಲ್ಲ. ಅದಾಗಲೇ ಕ್ಷೇಮವಾಗಿರುವವರು ಮತ್ತಷ್ಟು ಕ್ಷೇಮವಾಗುವುದರಿಂದ ಏನೂ ಸಾಧನೆಯಾಗದು. ಪರಮಹಂಸರು ಹೇಳುತ್ತಿದ್ದರು. "ಕ" ಎಂಬ ಅಕ್ಷರಕ್ಕೆ "ಆ" ಎಂಬ ಅಕ್ಷರವನ್ನು ಸೇರಿಸಿದರೆ "ಕಾ" ಎಂದಾಗುತ್ತದೆ. "ಕಾ" ಎಂಬುದಕ್ಕೆ ಮತ್ತೆ ಮತ್ತೆ "ಆ ಆ " ಎಂದು ಸೇರಿಸುತ್ತ ಹೋದರೂ ಅದು "ಕಾ" ಆಗಿಯೇ ಇರುತ್ತದೆ. ಬದಲಾವಣೆ ಏನೂ ಆಗುವುದಿಲ್ಲ. ಅಂತೆಯೇ ಕ್ಷೇಮವಾಗಿರುವವರನ್ನು ಮತ್ತಷ್ಟು ಕ್ಷೇಮಗೊಳಿಸುವ ಯಾವುದೇ ವ್ಯವಸ್ಥೆಯು ವ್ಯರ್ಥ. ಇಂದು ನಡೆಯುತ್ತಿರುವುದು ಕ್ಷೇಮವಾಗಿರುವವರನ್ನೇ ತಿರುತಿರುಗಿ ಕ್ಷೇಮಗೊಳಿಸುವ, ಸಾಮಾಜಿಕ ಅಸಮತೋಲನಕ್ಕೆ ಇಂಬು ಕೊಡುವ ವ್ಯರ್ಥ ಕಣ್ಕಟ್ಟು. ಆಯಾ ವೃತ್ತಿಗೆ ಶೋಭೆ ನೀಡುವ ಮತ್ತು ಪೂರ್ವದ ಭಾರತೀಯ ಮೌಲ್ಯಗಳೊಂದಿಗೆ ಇಂದಿಗೆ ಯುಕ್ತವಾದ ಹೊಸ ಚಿಂತನೆಗಳನ್ನು ಸಮನ್ವಯಗೊಳಿಸಿಕೊಳ್ಳುವ ವಿವೇಕವನ್ನು - ವೈದ್ಯ ವ್ಯವಸ್ಥೆ ಮತ್ತು ಅವುಗಳ ಉಸ್ತುವಾರಿ ನೋಡಿಕೊಳ್ಳುವ ವರ್ಗವು ಶ್ರದ್ಧೆಯಿಂದ ರೂಢಿಸಿಕೊಳ್ಳುವುದೂ ಉತ್ತಮವಲ್ಲವೆ ?

ಸಂಜೆಯ ಹೊತ್ತಿಗೆ ತಮ್ಮ ಹೊಟ್ಟೆಗೆ ಸುರಿದುಕೊಳ್ಳುವ ಬಣ್ಣಬಣ್ಣದ ನೀರಿಗೆ ನಿತ್ಯವೂ ಶ್ರದ್ಧೆಯಿಂದ ದುಡ್ಡು ಸುರಿಯುವವರೂ - ತಮಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಕಾಸು ಕೊಡುವಾಗ ಲಜ್ಜೆಗೆಟ್ಟು ಚೌಕಾಸಿ ಮಾಡುವುದನ್ನು ನಾನು ನೋಡಿದ್ದೇನೆ. "ಡಾಕ್ಟರಿಗೇನು ಧಾಡಿ ? ಪುಕ್ಕಟೆ ಸೇವೆ ನಡೆಸಲಿ..." ಎಂದುಕೊಳ್ಳುವ ಸಣ್ಣತನಗಳು ತಮ್ಮನ್ನು ತಾವೇ ಕುಗ್ಗಿಸಿಕೊಂಡಂತೆ. ಈಗಾಗಲೇ ಹತ್ತಿಸಿಕೊಂಡ ಉಚಿತವೆಂಬ ಸಾಮಾಜಿಕ ರೋಗದ ಮತ್ತು ಕೊಂಚ ಧಾರ್ಷ್ಟ್ಯದ ಹಂಬಲವಿದು; ಎಸೆದುದನ್ನು ಹೆಕ್ಕಿಕೊಂಡು ತಿನ್ನುವಂತೆ ಜನರನ್ನು ಪ್ರೇರೇಪಿಸುತ್ತ ಬಂದ ಸ್ವಾತಂತ್ರ್ಯೋತ್ತರ ಭಾರತದ ಘನ ಸರಕಾರಗಳ ಸಾಧನೆಗಳಲ್ಲಿ ಇದೂ ಒಂದು ! ಬುದ್ಧಿ ಭಂಡತೆಯ ಉಚಿತ ಕೊಡುಗೆ !

ಸಮಾಜ ಮತ್ತು ವೈದ್ಯರ ಸಂಬಂಧವು ಹಾಲು ಜೇನಿನಂತಿರಬೇಕು. ವೈದ್ಯರೊಂದಿಗೆ ಮಾತ್ರವಲ್ಲ - ಎಲ್ಲಿಯೂ ರೌಡಿತನವನ್ನು ಪ್ರದರ್ಶಿಸುವುದು ಅಪ್ಪಟ ಅನಾಗರಿಕತನ; ಅಂತಹ ದುಂಡಾವರ್ತಿ ಘಟನೆಗಳನ್ನು ವೈಭವೀಕರಿಸುವಂತೆ ಪ್ರಚಾರ ಮಾಡಿ ಇತರರಿಗೂ ಪರೋಕ್ಷವಾಗಿ, ಅರಾಜಕ ಶಿಕ್ಷಣದ ಪ್ರೇರಣೆ ನೀಡುತ್ತಿರುವುದಂತೂ ಸಾಮಾಜಿಕ ಬೇಜವಾಬ್ದಾರಿಯ - ಕೀಳುತನದ "ಸುದ್ದಿ ಸಂಕಟ"ದ ಪರಮಾವಧಿ !

ಇವತ್ತಿನ ಸಮಾಜವು ಹೆತ್ತವರನ್ನು ನಂಬುವುದಿಲ್ಲ; ಶಿಕ್ಷಕರನ್ನು ನಂಬುವುದಿಲ್ಲ. ವೈದ್ಯರನ್ನು ನಂಬುವುದಿಲ್ಲ. ಯಾರನ್ನೂ ನಂಬುವುದಿಲ್ಲ. (ಸ್ವತಃ ತಮ್ಮನ್ನಾದರೂ ನಂಬುವುದೂ ಸಂಶಯ !) ಸ್ನೇಹಿತರನ್ನು ಮಾತ್ರ ನಂಬಬಾರದಷ್ಟು ನಂಬಿ, ತಾವಾಗಿಯೇ ಮಾಡಿಕೊಳ್ಳುವ ಅವಾಂತರಗಳಿಗೆ ಮಾತ್ರ ಲೆಕ್ಕವಿಲ್ಲ. ವೈದ್ಯರಿಂದ ಪರಿಹರಿಸಲಾಗದ ಇದೂ ಒಂದು ರೋಗವೇ. ಅತ್ತ ತಾವು ನಂಬದ ಕೌಟುಂಬಿಕ ಮೂಲೆಗಳಿಂದಲೇ - ಜೀವಮಾನಪರ್ಯಂತ ಉಪಯೋಗವನ್ನಂತೂ ಪಡೆಯುತ್ತಲೇ ಇರುತ್ತಾರೆ ! ಇತ್ತ - ನಂಬಬಾರದವರನ್ನೆಲ್ಲ ಕಣ್ಣುಮುಚ್ಚಿ ನಂಬುತ್ತಲೂ ಇರುತ್ತಾರೆ; ಅನಂತರ ಹಳಹಳಿಸುತ್ತಾರೆ ! ಮುಂದುವರಿದು, ಬಗೆಬಗೆಯಲ್ಲಿ ಆತ್ಮಹತ್ಯೆಯನ್ನೂ ಮಾಡಿಕೊಳ್ಳುತ್ತಾರೆ ! ಇಂತಹ ಸಾಮಾಜಿಕ ರೋಗಗಳಿಗೆ ಮದ್ದಿಲ್ಲ. ಸೀಸೆಯಲ್ಲಿ ಕೊಡುವ ಮದ್ದಿಗೆಲ್ಲ ಬಗ್ಗುವ ರೋಗವಲ್ಲ ಇದು. ಸಪಾತ್ರರಲ್ಲಿ ಮುಕ್ತ ಸಂವಹನ, ವಿಶ್ವಾಸವಿರಿಸುವ ವಾತಾವರಣವಿಲ್ಲದೆ ಹೋದರೆ ಯಾವುದೇ ಸ್ವಸ್ಥ ಮನಸ್ಸುಗಳು ಮೂಡುವುದಿಲ್ಲ. ನೈಜ ಪರಿಸ್ಥಿತಿಯ ಅರಿವಿಲ್ಲದ, ಸ್ವಾರ್ಥಪ್ರೇರಿತವಾದ ನಮ್ಮ ಉಡಾಫೆ ಮನಸ್ಸುಗಳ ಯಾವುದೇ ಬಗೆಯ ಉಡಾಫೆ ವರ್ತನೆಗಳು - ಕಪ್ಪು ಕಳಂಕವಾಗಿ ಇಡೀ ಸಮಾಜಕ್ಕೇ ಅಂಟಬಹುದು. ಆದರೆ ಕಲುಷಿತ ಮನಸ್ಸಿನಲ್ಲಿ ವಿಶ್ವಾಸದ ವಾತಾವರಣವು ಮೂಡುವುದಾದರೂ ಹೇಗೆ ? ಎಲ್ಲಿಂದ ? ಯಾವುದೇ ಸಂಕಲ್ಪ ಅಥವ ಚಿಕಿತ್ಸೆಯು ಫಲಕಾರಿಯಾಗಲು ಸಂಪೂರ್ಣ ನಂಬಿಕೆಯು ಅನಿವಾರ್ಯ. ಇಂತಹ ಸಮಾಜದಲ್ಲಿ  ವೈದ್ಯರಾಗಬಯಸಿ ಈ ಕ್ಷೇತ್ರಕ್ಕೆ ಪ್ರವೇಶಿಸ ಬಯಸುವವರೂ ಸಜ್ಜನಿಕೆಯನ್ನು ರೂಢಿಸಿಕೊಂಡು ಮಾನವೀಯತೆಯ ಶಿಸುಬದ್ಧ ಪ್ರತಿನಿಧಿಗಳಾಗುವ ಅರ್ಹತೆಯನ್ನು ಹೊಂದಿರುವುದು ಅನಿವಾರ್ಯ. ಆಗ ವೃತ್ತಿಗೂ ಕ್ಷೇಮ; ವ್ಯಕ್ತಿಗೂ ಕ್ಷೇಮ; ಸಮಷ್ಟಿಗೂ ಕ್ಷೇಮ.

ಶ್ರದ್ಧೆಯಿಂದ ವೃತ್ತಿ ನಿರ್ವಹಿಸುವ ಲಕ್ಷಾಂತರ ವೈದ್ಯರು ಸಮಾಜದಲ್ಲಿದ್ದಾರೆ. ಅಂತಹ ವೈದ್ಯರೊಂದಿಗೆ ಸಂಯಮದಿಂದ ವ್ಯವಹರಿಸುವ. ವೈದ್ಯ ವೃತ್ತಿ ಎಂಬುದು - ಸಮಯ ಬೇಡುವ ವೃತ್ತಿ. ಸ್ವಂತ ಬದುಕನ್ನು ಒಂದಷ್ಟು ಕಳೆದುಕೊಳ್ಳುವ ವೃತ್ತಿ. ಹಗಲು ರಾತ್ರಿಯೆನ್ನದೆ ಒತ್ತಡವಿರುವ ವೃತ್ತಿ. ಇಂತಹ ಕ್ಷೇತ್ರದಲ್ಲಿರುವವರಿಗೆ ಮಾನಸಿಕ ಶಾಂತಿ ಸಮಾಧಾನಗಳಿಲ್ಲದೆ ಹೋದರೆ - ವೈದ್ಯರಾದವರು ತಮ್ಮ ವೃತ್ತಿಗೆ ಪೂರ್ಣ ನ್ಯಾಯವನ್ನು ಒದಗಿಸಲಾರರು. ರೋಗಿಯ ಅನಾರೋಗ್ಯದೊಂದಿಗೆ ಸೆಣಸುವ ವೈದ್ಯರಿಗೆ ಸಾಂಸಾರಿಕ ನೆಮ್ಮದಿಯು ಅತೀ ಮುಖ್ಯ. ರೋಗಿ, ಆಸ್ಪತ್ರೆ ಎನ್ನುತ್ತ - ಸ್ವಂತ ಬದುಕಿಗೆ ಗಮನವನ್ನೇ ಕೊಡಲಾಗದಷ್ಟು ವೃತ್ತಿಯಲ್ಲೇ ಮುಳುಗಿ ಏಳುತ್ತಿರುವ ಅನೇಕಾನೇಕ ವೈದ್ಯರಿದ್ದಾರೆ. ಸಮಾಜದ ಆರೋಗ್ಯಕ್ಕಾಗಿ ಗಾಣದೆತ್ತಿನಂತೆ ದುಡಿಯುವ ನಮ್ಮ ವೈದ್ಯರನ್ನು ಆಯಾ ಕುಟುಂಬಗಳು ಮತ್ತು ಸಮಾಜವು ಜತನದಿಂದ ಪೋಷಿಸಬೇಕಾಗುತ್ತದೆ. ಸಾಮಾಜಿಕ ಹಿತವನ್ನು ಬಯಸುವವರೆಲ್ಲರ ಸಾಮಾಜಿಕ ಜವಾಬ್ದಾರಿಯಿದು. ವೈದ್ಯರು ನೆಮ್ಮದಿಯಿಂದಿದ್ದರೆ ರೋಗಿಗಳಿಗೂ ನೆಮ್ಮದಿಯ ಸುಖ ಸಿಗಬಹುದು. ತನ್ನಲ್ಲಿ ಇರುವುದನ್ನು ಮಾತ್ರ ಇತರರಿಗೂ ಕೊಡಲು ಸಾಧ್ಯವಾಗುತ್ತದೆಯಲ್ಲವೆ ?

ವೈದ್ಯ ವೃತ್ತಿಯು ನಿವೃತ್ತಿಯೇ ಇರದ ಶಾಶ್ವತ ವಿದ್ಯೆ ! ದೈವೀಕ ವಿದ್ಯೆ. ವೈದ್ಯರಾದವರು ವೃತ್ತಿಯಲ್ಲಿ ಆಸಕ್ತಿ ಮತ್ತು ದೈಹಿಕ ಆರೋಗ್ಯವನ್ನು ಜೀವನಪರ್ಯಂತ ಉಳಿಸಿಕೊಂಡಿದ್ದರೆ - ವೈದ್ಯ ವೃತ್ತಿಯು - ಅವರ ಪ್ರತಿದಿನವನ್ನೂ ಹೊಸ ದಿನವನ್ನಾಗಿಸುವಂತಹುದು. ನಾನು ಹೆಸರಿಸಿದ ವೈದ್ಯರೆಲ್ಲರೂ ಈಗಲೂ ಪೂರ್ಣ ವಿರಾಮಕ್ಕೆ ಒಳಗಾಗಿಲ್ಲ ! ಇಂತಹ ಅಸಂಖ್ಯ ವೈದ್ಯರಿದ್ದಾರೆ.

ಸಣ್ಣ ಪ್ರತಿಫಲಕ್ಕಾಗಿ ಗಾಣದೆತ್ತಿನಂತೆ ಜನರು ದುಡಿಯುತ್ತಿದ್ದರೂ ಅಂದಿನ ಸಮಾಜದಲ್ಲಿ ಸುಖವಿತ್ತು; ಶಾಂತಿಯಿತ್ತು; ಜೀವನೋತ್ಸಾಹವಿತ್ತು. ಏಕೆಂದರೆ ಬದುಕು ಸರಳವಾಗಿತ್ತು. ಆದ್ದರಿಂದಲೇ ಸುಲಭವಾಗಿತ್ತು. ಆದರೆ ಇಂದು ಹಾಗಿಲ್ಲ. ಗಾಣದೆತ್ತಿನಂತೆ ದುಡಿದರೂ ಸುಖವಿಲ್ಲ; ಜೀವನೋತ್ಸಾಹವಿಲ್ಲ. ಒತ್ತಡ; ಅಸಮಾಧಾನ; ಅತೃಪ್ತಿ ! ಏಕೆಂದರೆ ಇಂದಿನ ಸಮಾಜದ - ಸಂಬಂಧ, ವ್ಯವಹಾರ, ಅಪೇಕ್ಷೆ, ವರ್ತನೆಗಳೆಲ್ಲವೂ ಜಟಿಲ; ನಿಗೂಢ. ನಾವು ಸುಲಭರಾಗಬೇಕು. ಈ ಬದುಕಿನಲ್ಲಿ ಪರಾವಲಂಬಿಯಾಗದೆ ಬದುಕುವಷ್ಟು ದುಡ್ಡು ಎಲ್ಲರಿಗೂ ಬೇಕು. ಆದರೆ ನಾವು ಇನ್ನೂ ಮುಂದುವರಿದಿದ್ದೇವೆ. ನಮಗೆ ದುಡ್ಡಿನ ಗುಡ್ಡದ ಆಸೆ ! ಗುಡ್ಡೆಹಾಕುವ ಬಕಮಾರಿ ದುಡ್ಡು ಎಲ್ಲಿಂದಾದರೂ ನಮಗೆ ಸುಖವನ್ನು ತಂದೀತೆ ? ಜೀವನೋತ್ಸಾಹ ತಂದೀತೆ ? ಹೆಚ್ಚೆಂದರೆ ICU ನಲ್ಲಿ ತಿಂಗಳುಗಟ್ಟಲೆ ಮಲಗಿ ಮಲಗಿ ಸಾಯುವಂತಹ ಶಕ್ತಿಯನ್ನು ಅಥವ ಪರದೇಶಿಯಾಗಿ ಎಲ್ಲೋ ಸತ್ತು ಹೆಣವಾಗಿ ವಾಯುಮಾರ್ಗದಲ್ಲಿ ಊರು ಸೇರುವ ಶಕ್ತಿಯನ್ನೂ ಕೊಡಬಹುದು ! (ದುಡ್ಡಿಲ್ಲದವರನ್ನು ಸಾಮಾನ್ಯವಾಗಿ, ICU ನಲ್ಲಿ ಹೆಚ್ಚು ದಿನ ಇಡುವುದಿಲ್ಲ. ವಿಲೇವಾರಿ ಮಾಡಿ ಬಿಡುತ್ತಿದ್ದಾರೆ !) ರಾಶಿಹಾಕಿದ ದುಡ್ಡನ್ನು ಇಲ್ಲೇ ಬಿಟ್ಟು ಸತ್ತು ಹೋದವರು, ಅವರು ಬದುಕಿದ್ದಾಗ ಸಂಗ್ರಹಿಸಿಟ್ಟ "ದುಡ್ಡಿನ ಗುಡ್ಡೆಯನ್ನು ಕರಗಿಸಲು", ಸಾಯದೆ ಬದುಕಿರುವ ಕೌಟುಂಬಿಕ ಬಳಗಕ್ಕೂ - ಅನಂತರ, ICU ಸೇರುವ ಸಾಮರ್ಥ್ಯ ಸುಖವನ್ನು ಅದೇ ದುಡ್ಡು ಕೊಟ್ಟೀತು. ಮುಂದೆ ? ದುಡ್ಡಿಲ್ಲೇ. ನಾವೆಲ್ಲೋ ?

ಯಾವುದೇ "ಸುಭಗ ವಿದ್ಯೆಯ ಅಥರ್ವಣ" ಎಂದರೆ ಹೀಗೇ. ಹಣಕ್ಕೆ ಮಂಡಿಯೂರುವುದೆಂದರೆ ದೈವಿಕ ವಿದ್ಯೆಗಳಿಗೆ ಬಗೆಯುವ ದ್ರೋಹ. ವೈದ್ಯರು ತಾವೂ ಬದುಕಿ ರೋಗಿಗಳೂ ಬದುಕುವಂತಹ ವಾತಾವರಣವು ಮೂಡುವಂತಾಗಬೇಕು. ಸ್ವಾತಂತ್ರ್ಯ ಬಂದು 70 ವರ್ಷಗಳೇ ಕಳೆದಿವೆ. ಇಡೀ ವಿಶ್ವಕ್ಕೇ "ಆಧ್ಯಾತ್ಮಿಕ ಗುರು" ಎಂದುಕೊಳ್ಳುವ ಈ ಭಾರತವು ನಿಜವಾಗಿಯೂ ಆಧ್ಯಾತ್ಮಿಕ ಗುರುವಾಗಿ ಉಳಿದುಕೊಂಡಿದೆಯೆ ? ಅಥವ ಭ್ರಷ್ಟ ಗುರುವಾಗಲು ಪೈಪೋಟಿ ನಡೆಸುತ್ತಿದೆಯೆ ? ಅಧ್ಯಾತ್ಮದ ಮಾತೆತ್ತಿದರೆ ಸಿಡಿದು ಬೀಳುವ ರಕ್ಕಸರನ್ನು ತಯಾರು ಮಾಡುತ್ತಿದ್ದೇವೆಯೆ ? ಯೋಚಿಸಬಹುದು. ಅಧ್ಯಾತ್ಮವಿಲ್ಲದ ಯಾವುದೇ ವೃತ್ತಿಯಲ್ಲೂ ನೆಮ್ಮದಿ ಇರಲಾರದು. ಅಧ್ಯಾತ್ಮವಿಲ್ಲದ ಯಾವುದೇ ವೃತ್ತಿ ರಾಜ್ಯವು ಇಡೀ ಸಮಾಜವನ್ನೇ ಹಳಿ ತಪ್ಪಿಸಬಲ್ಲದು !

ರೋಗವಿದೆ. ರೋಗದ ಲಕ್ಷಣ ಮತ್ತು ಕಾರಣಗಳಲ್ಲೇ ಅವಕ್ಕೆ ಪರಿಹಾರವನ್ನೂ ಹುಡುಕಬೇಕು. ಎಲ್ಲೆಲ್ಲೋ ಹುಡುಕಿದರೆ ಕಳೆದುದು ಸಿಕ್ಕೀತೆ ? ಮಿಡಿ, ಹೂವು, ಕಾಯಿ, ಹಣ್ಣು... ಎಲ್ಲದರ ಆಮೂಲಾಗ್ರ Check up ನಡೆಸಬೇಕಾಗಿದೆ.

ಕೇವಲ ವೈದ್ಯರನ್ನೇ ದೂರುತ್ತಿದ್ದರೆ ಏನಾದರೂ ಪರಿಹಾರ ಸಿಕ್ಕೀತೆ ? "ವೈದ್ಯೋ ನಾರಾಯಣೋ ಹರಿಃ" ಎಂದು ಉಚ್ಚರಿಸುತ್ತಿದ್ದರೆ ಸಾಲದು.

ಯಾವ ವೃತ್ತಿಯೂ ಉಚ್ಚವೂ ಅಲ್ಲ; ಯಾವುದೂ ನೀಚವಲ್ಲ. ಬದುಕಿನ ಪುಷ್ಟಿಗೆ ಎಲ್ಲ ವೃತ್ತಿಗಳೂ ಪರಸ್ಪರ ಪೂರಕ. ಸಮಾಜದಲ್ಲಿರುವ ಎಲ್ಲ ವೃತ್ತಿಗಳಲ್ಲೂ ಕಪ್ಪು ಮತ್ತು ಬಿಳುಪಿನ ಮುಖಗಳಿರುತ್ತವೆ. ಆದರೆ ಋಣಾತ್ಮಕ ಅಂಶಗಳೇ ಅಧಿಕವಾದಾಗ ಸಮಗ್ರ ವೃತ್ತಿಯನ್ನೇ ದೂಷಿಸುವ ವಾತಾವರಣ ಮೂಡುತ್ತದೆ. ಯಾವುದೇ ವೃತ್ತಿಯನ್ನು ಆ ಹಂತಕ್ಕೆ ತಳ್ಳಬಾರದು. ಯಾವುದೇ ವೃತ್ತಿಯ ಗೌರವವು ಹೆಚ್ಚುವುದು ಅಥವ ಕುಸಿಯುವುದು - ಅದನ್ನು ನಿರ್ವಹಿಸುವ ವ್ಯಕ್ತಿಗಳ ಪ್ರಾವೀಣ್ಯತೆ ಮತ್ತು ವರ್ತನೆಗಳಿಂದ.

                                                               ()()()()()()()()