Friday, January 16, 2015

ನಡೆದು ಬಂದ ದಾರಿ - ಭಾಗ 1

                              ಸವಿವಣ್ಣಲ್ಲಿನಿ ಮಾವು ಸರ್ವರಸದೊಳ್ ಶೄಂಗಾರ ಸಂಭಾರದೊಳ್
                              ಲವಣಂ ಕೇಳಲು ಬಾಲಭಾಷೆ ಸಿರಿಯಲ್ಲಾರೋಗ್ಯ ದೈವಂಗಳೊಳ್
                              ಶಿವ ಬಿಲ್ಲಾಳ್ಗಳೊಳಂಗಜಂ ಜನಿಸುವಾ ಜನ್ಮಂಗಳೊಳ್ ಮಾನುಷಂ
                              ಕವಿತಾವಿದ್ಯೆ ಸುವಿದ್ಯೆಯೊಳ್ ಹರಹರಾ ಶ್ರೀ ಚೆನ್ನ ಸೋಮೇಶ್ವರಾ..

ಹಿಂದೆ ಸರಿದು ಬದುಕನ್ನು ಹಿಂದಿರುಗಿ ನೋಡುವ ಬಿಡುವು ದೊರೆತಿದೆ. ಬಾಲ್ಯದ ಅಂಗಳದಲ್ಲಿ ಕುಂಟಬಿಲ್ಲೆ ಆಡುವ ಭಾವತೇಲಿನಲ್ಲಿ ಸೋಮೇಶ್ವರ ಶತಕವೊಂದು ನೆನಪಾಯಿತು. ತೊದಲು ಮಾತಿನಿಂದ ಹದುಳ ಮಾತಿನವರೆಗೆ ಮಗುವೊಂದು ಸಾಗಿ ಬರುವಾಗ ಸಂಧಿಸುವ ವ್ಯಕ್ತಿವಿಶೇಷಗಳೆಷ್ಟು - ಎದುರಾಗುವ ಸಮಯ ಸನ್ನಿವೇಶಗಳೆಷ್ಟು ಎಂದು ನೋಡುತ್ತ ಹೋದರೆ ಬೆನ್ನಿನ ಹಿಂದೆ ಹಿಮಾಲಯವೇ ನಿಂತಂತೆ ಭಾಸವಾಗುತ್ತದೆ. ಅರುವತ್ತು ವರುಷಗಳ ನನ್ನ ದೀರ್ಘ ನಡಿಗೆಯಲ್ಲಿ ನಲ್ವತ್ತೈದು ವರ್ಷಗಳ ಕಾಲ ಸಾರ್ವಜನಿಕ ಬದುಕನ್ನೇ ಉಂಡು ಉಸಿರಾಡುತ್ತ ಲಕ್ಷಾಂತರ ಜನರೊಂದಿಗೆ ಪ್ರತ್ಯಕ್ಷವಾಗಿ ಅಥವ ಪರೋಕ್ಷವಾಗಿ ಸಂವಹನ ನಡೆಸಿದ್ದೇನೆ; "ತಕ್ಕ ಮಟ್ಟಿಗೆ ಯಶಸ್ವಿಯಾಗಿದ್ದೇನೆ" ಎಂದೂ ಕೆಲವೊಮ್ಮೆ ನನ್ನಷ್ಟಕ್ಕೇ ಅಂದುಕೊಂಡಿದ್ದೇನೆ. ಸಿಕ್ಕಿದ ಮಾನವ ಜನ್ಮವನ್ನು ನನ್ನ ಇತಿಮಿತಿಯಲ್ಲಿ ಬಹು ದೀರ್ಘಕಾಲ, ಯಥಾಶಕ್ತಿ ಸದುಪಯೋಗಪಡಿಸಿಕೊಂಡಿದ್ದೇನೆ ಎಂಬ ಸಾರ್ಥಕ ಭಾವವೂ ಇಣುಕಿ ಹೋಗುವುದಿದೆ. ಒಂದಲ್ಲ ಒಂದು ಸೄಜನಶೀಲ ಕೆಲಸದಲ್ಲಿ ತೊಡಗಿಕೊಂಡೇ ಬಂದ ನಾನೇ, ಈ ನನ್ನ "ಬದುಕಿನ ಉತ್ತರ ಪತ್ರಿಕೆ"ಯನ್ನು ಬರೆದು ಅದರ ಮೌಲ್ಯಮಾಪನವನ್ನೂ ಮಾಡಿಕೊಂಡರೆ ಅದು - ಕಿಲಾಡಿತನವಾದೀತು...! ಅಂಕಗಳನ್ನು ಕೊಟ್ಟು ಮೌಲ್ಯಮಾಪನ ಮಾಡುವ ಕೆಲಸ - ಕಾಲದ್ದು. ಕರೆ ಬಂದಾಗ ಹೊರಡುವ ಪೂರ್ವತಯಾರಿಯಲ್ಲಿ ಮುಳುಗಿರಬೇಕಾದ ನಾವೆಲ್ಲರೂ ನಮ್ಮ ಲೆಕ್ಕಪತ್ರವನ್ನು ಕಾಲದ ಮುಂದಿಡುವ ಕೆಲಸವನ್ನಷ್ಟೇ ಮಾಡಬಹುದು. 

ಾಗೆ ನೋಡಿದಪ್ರಿಯೊಂದುಕಿನ ಓನಾಮು ಬಾಲ್ಯಲ್ಲಆಗಿಹೋಗುತ್ತ. ನನ್ನ ದೀರ್ಘ ಹೊಡಚಾಟದ ಬದುಕಿನಲ್ಲೂ ಹಸಿಹಸಿಯಾದ ಒಂದು ಬಾಲ್ಯವಿತ್ತು.

ಬಾಲಭಾಷೆ ಮಾತ್ರವೇ ಸುಂದರವಲ್ಲ; ಬಾಲ್ಯದ ಪ್ರತೀ ಕ್ಷಣವೂ ಸುಂದರವಾಗಿರುತ್ತದೆ. ಅದನ್ನು ನೋಡುವ ಕಣ್ಣಿರಬೇಕು;  ಅನುಸರಿಸುವ ತಾಳ್ಮೆ ಮತ್ತು ಆಸ್ವಾದಿಸುವ ಮನಸ್ಸೂ ಇರಬೇಕು - ಅಷ್ಟೆ. ನನಗೆ ಅಂತಹ ಸೌಭಾಗ್ಯವಿತ್ತು. ಹೆತ್ತವರು, ಸೋದರ ಸೋದರಿಯರು, ಊರವರು ... ಎಲ್ಲರೂ ನನ್ನನ್ನು ಹೊತ್ತು ಮೆರೆಸಿದ್ದರು. ನನ್ನ ಬಾಲ್ಯವನ್ನು ನಾನೂ ಕಂಡೆ; ಸುತ್ತಿನವರೂ ಕಂಡರು.

ಯಶಸ್ಸಿನ ಮೇಲೆ ಯಶಸ್ಸನ್ನು ಪಡೆಯುತ್ತ ಬಂದ ನನ್ನ ಬಾಲ್ಯಕಾಲದಲ್ಲಿ "ಬಾಲಿಶ ಜ್ಞಾನದ ಅಹಮಿಕೆ"ಗೆ ತುತ್ತಾಗಿ - ಆಗಾಗ ಮೊಂಡುತನ ತೋರುತ್ತಿದ್ದುದ್ದೂ ಇತ್ತು. ಆಗ ನನ್ನ ಮನೆಮಂದಿಯೇ ಒಟ್ಟಾಗಿ, ಪ್ರಬುದ್ಧ ಶೈಲಿಯಲ್ಲಿ ನನ್ನನ್ನು ತಿವಿದು,  ತಿದ್ದುತ್ತಿದ್ದುದೂ ಇತ್ತು .
                                               
                                                "ಅನ್ನಮದ ಅರ್ಥಮದ ಅಖಿಳ ವೈಭವದ ಮದ 
                                                  ಮುನ್ನ ಪ್ರಾಯದ ಮದವು ರೂಪ ಮದವು
                                                  ತನ್ನ ಸತ್ವದ ಮದವು ಧಾತ್ರಿ ವಶವಾದ ಮದ
                                                  ಇನ್ನು ತನಗೆದುರಿಲ್ಲವೆಂತೆಂಬ ಮದದಿಂದ..
                                                  ಬಿನ್ನಹಕೆ ಬಾಯಿಲ್ಲವಯ್ಯಾ...
ಎಂದು ರಾಗವಾಗಿ ವ್ಯಂಗವಾಗಿ ಹೇಳುತ್ತ - ಅಂದು ಆಗಾಗ ನನ್ನನ್ನು ಎಚ್ಚರಿಸುತ್ತಿದ್ದವರೆಲ್ಲರೂ ನನ್ನ ಬಂಧುಗಳೇ. ಅಂತಹ ಬಂಧುಗಳೇ - ಅಂದಿಗೂ ಇಂದಿಗೂ - ದಿಕ್ಕು ತಪ್ಪದಂತೆ ನನ್ನನ್ನು ಕಾಪಾಡಿದವರು. ಬುದ್ಧಿಯ ಕೇರಿಯನ್ನು ಶುದ್ಧಗೊಳಿಸಿದ ಹಿತಚಿಂತಕರವರು.

ಅದೇನೋ ಹೇಳುತ್ತಾರಲ್ಲ...ಇಪ್ಪತ್ತರ ಯಜಮಾನಿಕೆ - ಅಂತ. ಹಾಗೇ.... ಬಾಲ್ಯದಲ್ಲೇ ಕೀರ್ತಿಯ ರುಚಿ ಸಿಕ್ಕುವುದೂ  ಅಪಾಯವೇ. ಬೇಜವಾಬ್ದಾರಿಯ ಆ ಎಳವೆಯಲ್ಲಿ, ಅನುಭವಶಾಲಿಗಳ ಅಧೀನದಲ್ಲಿದ್ದೇ ಹೆಜ್ಜೆ ಊರುವುದನ್ನು ಕಲಿಯುವುದು ಒಳ್ಳೆಯದು. ಅಕಾಲದಲ್ಲಿ "ಕೋಡು" ಬಂದರೆ ಸ್ವಂತಕ್ಕೂ ಸಮಷ್ಟಿಗೂ ಅಪಾಯ ತಪ್ಪಿದ್ದಲ್ಲ. ಕಲಿಯುವ ಹಾದಿಗೆ ದೊಡ್ಡ ಮುಳ್ಳಿನಂತಿರುವ "ಅಹಂಕಾರ"ವನ್ನು ಆಗಿಂದಾಗ ಕತ್ತರಿಸಿ, ಅಂದು ನನ್ನನ್ನು ಸಿಂಗರಿಸುತ್ತಿದ್ದ ಎಲ್ಲ ಹಿರಿಯರನ್ನೂ ನಾನೀಗಲೂ ನೆನಪಿಸಿಕೊಳ್ಳುತ್ತೇನೆ. ಈಗ ಅಹಂಕಾರ ಮುಕ್ತಳಾಗಿದ್ದೇನೆ ಎಂದಲ್ಲ. "ಅಹಂಕಾರ ಬಿಟ್ಟೆ" ಎನ್ನಲು ಅದೇನು.. ಬಟಾಟೆ ಅಂಬೊಡೆಯನ್ನು ಎತ್ತಿ ಆಚೆಗಿಟ್ಟಂತೆ ಸುಲಭವೆ? ಜೀವಂತ ಮನುಷ್ಯನ ದೇಹದಲ್ಲಿ  ಬೆಳೆಯುವ ಉಗುರಿನಂತೆ, ಕೂದಲಿನಂತೆ... ಬಿಟ್ಟೆನೆಂದರೂ ಬಿಡದ ಮಾಯೆಯಂತೆ... ದೇಹಭಾವವು ಇರುವವರೆಗೂ ಅಹಂಕಾರವು ನೂರಾರು ರೂಪದಲ್ಲಿ  ಬಂದು, ಆವರಿಸುತ್ತಲೇ ಇರುತ್ತದೆ; ಅದರಲ್ಲೂ ವಿಧಗಳಿವೆ. ಬಗೆಬಗೆಯ ಜಂಭಗಳಿವೆ. ಒಣ ಜಂಬ, ಹಸಿ ಜಂಬ, ಹುಸಿ ಜಂಬ... ಇತ್ಯಾದಿ. ಇಂತಹ ಒಣ ಡೌಲಿನ ವಕ್ರತೆಯು ಆವರಿಸಿದಾಗೆಲ್ಲ - ಎಚ್ಚರದಿಂದ, ಪದೇಪದೇ ಕತ್ತರಿಸುತ್ತ ಸವರಿಹಾಕುತ್ತ ನಿರಂತರವೂ ನಿಯಂತ್ರಿಸುತ್ತಲೇ ಇರಬೇಕಾದ ನಿತ್ಯ ಭಂಡಾಟವದು. ದೇಹವ್ಯಾಪಾರವು ಮುಗಿಯುವ ವರೆಗೂ ನಡೆಯುತ್ತಲೇ ಇರಬೇಕಾದ ನಿರಂತರ ಹೋರಾಟವಿದು. ಈಗಲೂ ನನ್ನಲ್ಲಿ ಈ  ಹೋರಾಟವಿದೆ. ಆತ್ಮಸ್ಥೈರ್ಯವನ್ನು ಬೆಳೆಸಿಕೊಳ್ಳಲು ಬೇಕಾಗುವಷ್ಟೇ ಅಹಂಕಾರವನ್ನು ಉಳಿಸಿಕೊಳ್ಳಲು ಒದ್ದಾಡುವ "ನಿತ್ಯಭಂಡಾಟ"ವು ಈಗಲೂ ಇದ್ದೇ ಇದೆ. ದೇಹವಿರುವರರೆಗೂ ಇರುತ್ತದೆ. ಆದರೆ ಒಟ್ಟಾರೆಯಾಗಿ ಸಿಂಹಾವಲೋಕನ ಮಾಡಿದರೆ, ಆಗಿಂದಾಗ ವಿವೇಕವನ್ನೂಡಿ, ನನ್ನನ್ನು ರಿಪೇರಿ ಮಾಡುತ್ತ ಬಂದ ಶ್ರೇಯವನ್ನು ಎಲ್ಲೋ ಇರುವ "ಕಾಣದ ದೈವ"ಕ್ಕೇ ನಾನು ಸಲ್ಲಿಸುತ್ತೇನೆ. ಅನಿರೀಕ್ಷಿತವಾಗಿ, ಎಲ್ಲೆಲ್ಲಿಂದಲೋ ಆಗೊಮ್ಮೆ ಈಗೊಮ್ಮೆ ಸಿಗುತ್ತಿದ್ದ ಬಿಸಿಬಿಸಿಯಾದ "ದೈವಿಕ ಗುದ್ದು"ಗಳೇ ನನ್ನನ್ನು ಆತ್ಮ ನಿರೀಕ್ಷಣೆಯತ್ತ ದೂಡಿ, ದಾರಿ ತಪ್ಪಿದರೂ ದಿಕ್ಕು ತಪ್ಪದಂತೆ, ಮತ್ತೊಮ್ಮೆ ಸರಿದಾರಿಗೆ ತಂದು ನಿಲ್ಲಿಸುತ್ತಿದ್ದವು - ಎಂದೇ ನನ್ನ ವಿಶ್ವಾಸ.

ನನ್ನ ಸಾರ್ವಜನಿಕ ಪ್ರದರ್ಶನಗಳ ಬದುಕು ಐದನೆಯ ವಯಸ್ಸಿಗೇ ಆರಂಭವಾಗಿತ್ತು. ಮನೆಯಲ್ಲಿ ಸದಾ ಹಾಡುತ್ತ ಕೆಲಸ ಮಾಡುತ್ತಿದ್ದ ನನ್ನ ಅಮ್ಮನು ಹೇಳುತ್ತಿದ್ದ ಹಾಡುಗಳೆಲ್ಲವೂ ನನಗೆ ಅನಾಯಾಸವಾಗಿ ಕಂಠಗತವಾಗಿತ್ತು. ಯಾವತ್ತೂ ಸಭಾಕಂಪವೆಂಬ ಭೂತವು ನನ್ನನ್ನು ಕಾಡಿದ್ದೇ ಇಲ್ಲ. ನಾನು ಅಂದಿನಿಂದಲೂ ಏಕಾಂಗಿ. ತುಂಬಿದ ಮನೆಯಲ್ಲಿ ಹುಟ್ಟಿ ಬೆಳೆದಿದ್ದರೂ ನನ್ನ ಆಟ ತಿರುಗಾಟಕ್ಕೆ ಯಾರನ್ನೂ ಅವಲಂಬಿಸಿದವಳು ನಾನಲ್ಲ. ಒಬ್ಬಳೇ ಆಡುತ್ತಿದ್ದೆ; ತಿರುಗುತ್ತಿದ್ದೆ ! ಖುಶಿಯಾಗಿಯೂ ಇರುತ್ತಿದ್ದೆ ! ಆಗಿಂದಲೂ ಸ್ವತಂತ್ರ ಹಕ್ಕಿಯಂತೆ ನನ್ನಷ್ಟಕ್ಕೇ ಆಟ ಆಡುತ್ತಿದ್ದ ನನಗೆ, ಸಮಯ ಕೊಲ್ಲುವ "ಲೊಳಲೊಟ್ಟೆ ಸ್ನೇಹ"ದ ವ್ಯಾಕರಣವೇ ಒಗ್ಗುತ್ತಿರಲಿಲ್ಲ. ಇದೇ ನಾರಾಯಣಿಯ ಸ್ವರೂಪವ್ಯಾಖ್ಯೆ ಆದುದರಿಂದ, ಇದುವರೆಗಿನ ನನ್ನ ಬದುಕಿನ ಪಯಣದಲ್ಲಿ ನಾನು ಇಷ್ಟ ಪಟ್ಟವರಿಗಿಂತ ಇಷ್ಟ ಪಡದವರ ಸಂಖ್ಯೆಯೇ ಜಾಸ್ತಿ. ಸುಮ್ಮಸುಮ್ಮನೆ ಯಾರನ್ನೋ ಮೆಚ್ಚಿಸುವ ಉಸಾಬರಿಗೆ ನಾನು ಹೊರಡಲೇ ಇಲ್ಲ. ಯಾಕೆಂದರೆ ಅದು ನನಗೆ ಗೊತ್ತಿಲ್ಲ. ಅದೊಂದು ಕಲಿಯಲೇ ಬೇಕಾದ "ಅಮೂಲ್ಯ ಕಲೆ" ಎಂದೂ ಅನ್ನಿಸಲಿಲ್ಲ. ಅಸಹಜವಾದ ಬಹುಪರಾಕುಗಳಿಂದಲೂ ಪಾರಾಗುತ್ತಲೇ ಬಂದ ದಾರಿಯಲ್ಲಿ - "ನೀನು ಈ ಕಾಲಕ್ಕೆ UNFIT" ಎಂದವರಿಗೆ "ಹಾಗಿದ್ದರೆ... ಬೇಗ ಕಳಿಸಿಕೊಡಿ.." ಅನ್ನುತ್ತ ಸಾಷ್ಟಾಂಗ ನಮಸ್ಕರಿಸಿದ್ದೇನೆ. ನನಗೆ ಅಂದಿನಿಂದ ಇಂದಿನವರೆಗೂ... ನನ್ನ ಅಪ್ಪಯ್ಯ ಅಮ್ಮನೇ - ನಂಬಬಹುದೆನಿಸಿದ, ಅವಲಂಬಿಸಲು ಯೋಗ್ಯರೆನ್ನಿಸಿದ ಸ್ನೇಹಿತ, ಗುರು, ಮಾರ್ಗದರ್ಶಕ ಮತ್ತು ಸ್ಫೂರ್ತಿಯ ಚೇತನಗಳು.

ನನ್ನ ನಾಲ್ಕು ವರ್ಷ ಪ್ರಾಯದ ನಂತರದ ಘಟನೆಗಳೆಲ್ಲವೂ ನನಗೆ ಬಹುತೇಕ ನೆನಪಿವೆ. ಅಂದಿನ ದಿನಗಳಲ್ಲಿ ನಾವು ವಾಸವಾಗಿದ್ದ ಕೋಟೇಶ್ವರದಲ್ಲಿನ ದಿನಗಳು ಈಗಲೂ ನೆನಪಾಗುತ್ತವೆ. ಶಾಲೆಗಳಲ್ಲಿ ವಿಜೃಂಭಣೆಯಿಂದ ನಡೆಯುತ್ತಿದ್ದ ಗಾಂಧಿಜಯಂತಿ, ನೆಹರೂ ಜಯಂತಿ, ಕರ್ನಾಟಕ ರಾಜ್ಯೋತ್ಸವ, ನವರಾತ್ರಿಯಲ್ಲಿ ನಡೆಯುತ್ತಿದ್ದ ಶಾರದಾಪೂಜೆ, ಊರಿನ ಹಬ್ಬ ಮುಂತಾದ ಸಂದರ್ಭಗಳಲ್ಲಿ... ಅಲ್ಲಿಗೆಲ್ಲ ನಾನೂ ಹೋಗಿ ಇಣುಕುತ್ತಿದ್ದೆ. ನೆಲದ ಮೇಲಿನ ಮೂರಡಿ ಎತ್ತರದ ಆಕಾಶವನ್ನು ಸುಖವಾಗಿ ಮುಟ್ಟುತ್ತಿದ್ದ ಪುಟಾಣಿಯಾಗಿದ್ದ ನನ್ನನ್ನು ಅಂದು ನೋಡಿದ ಕೆಲವರು ನನ್ನನ್ನು ಎತ್ತಿ ವೇದಿಕೆಯ ಮೇಲೆ ಇಟ್ಟು, ಹಾಡುವಂತೆ ಹೇಳುತ್ತಿದ್ದರು. ಆಗ "ಹಿಂದೆ ಮುಂದಿಲ್ಲದ ನಿರಂಜನಳಂತಿದ್ದ ನಾನು" - ನನಗೆ ತೋಚಿದ ಹಾಡನ್ನು ಹಾಡಿಯೇ ಬಿಡುತ್ತಿದ್ದೆ.

ಆಗ ನನ್ನ ತಂದೆ ದಿ. ಪಂಡಿತ ಐರೋಡಿ ಯಜ್ಞನಾರಾಯಣ ಉಡುಪರು ಕೋಟೇಶ್ವರದ ಬೋರ್ಡ್ ಹೈಸ್ಕೂಲಿನಲ್ಲಿ ಕನ್ನಡ ಪಂಡಿತರಾಗಿ ದುಡಿಯುತ್ತಿದ್ದರು. ಈ ಹಿನ್ನೆಲೆಯಲ್ಲಿ ಕೆಲವರು "ನಮ್ಮ ಪಂಡಿತರ ಮಗಳು" ಎಂದು ಗುರುತಿಸಿ ನನ್ನನ್ನು ತಮ್ಮ ಹತ್ತಿರದಲ್ಲಿ ಕೂರಿಸಿಕೊಳ್ಳುತ್ತಿದ್ದರು. ಇಡೀ ಊರೇ ಒಂದು ಮನೆಯಂತಿದ್ದ ಶಾಂತ ಪರಿಸರವಿದ್ದ 1959 - 60 ರ ಕಾಲಘಟ್ಟವದು. ಹೀಗೆ ಶಾಲೆ ಸೇರುವ ಮೊದಲೇ - ಅಂದರೆ ಯಾವುದೇ ಸಾಮಾಜಿಕ ವ್ಯವಸ್ಥೆಗಳ ಲೆಕ್ಕದಲ್ಲಿ ನೋಂದಾಯಿಸಿಕೊಳ್ಳುವ ಮೊದಲೇ, "ಹೊರಗಿನ ಸಾಂಬ್ರಾಣಿ"ಯಾಗಿರುವಾಗಲೇ, ನಾನು ಹಲವು ಬಹುಮಾನಗಳನ್ನೂ ಗೆದ್ದಿದ್ದೆ. Lemon spoon ಓಟ, ಪದ್ಯ ಹೇಳುವ ಸ್ಪರ್ಧೆಗಳಲ್ಲಿ, ಭಾಷಣ... ಮುಂತಾದ ಪಠ್ಯದ ಹೊರತಾದ ಹಾರಾಟಗಳಲ್ಲಿ ಅನಂತರವೂ.. ಹೈಸ್ಕೂಲಿನವರೆಗೂ ಎಡೆಬಿಡದೆ ಬಹುಮಾನ ಗಿಟ್ಟಿಸುತ್ತಿದ್ದೆ. ಜತೆಗೆ, ಇಡೀ ಊರನ್ನು ಕುತೂಹಲದಿಂದ ನೋಡುತ್ತಿದ್ದೆ. ನಯವಾದ ಉರುಟು ಕಲ್ಲು, ಮರದಿಂದ ಉದುರಿದ ಚೆಂದದ ಗೆಲ್ಲು, ಅಂಗಿಗೆ ಹೊಂದಿಸಿರುತ್ತಿದ್ದ ಬಣ್ಣ ಬಣ್ಣದ ಗುಬ್ಬಿಗಳು (ಬಟನ್), ನೀರು ಆಕಾಶ ಬೀಸುಗಾಳಿ ನಕ್ಷತ್ರ ಚಂದಮಾಮ... ಎಲ್ಲವೂ ಅಂದು ವಿಸ್ಮಯವೆನಿಸುವ ವಿಷಯಗಳಾಗಿದ್ದವು. ವಿಸ್ಮಯಗಳ ಹಿಂದೆ ಓಡುತ್ತಿದ್ದ ನನಗೆ "Curiosity Kills The Cat" ಎಂಬಂತಹ ಬಡಿಗೆಗಳು ಬಿದ್ದದ್ದು - ಅನಂತರ ಅದೆಷ್ಟೋ ಬಾರಿ. ಗಾಯಗಳನ್ನು ನೆಕ್ಕಿಕೊಂಡು ಮತ್ತೆ ಮತ್ತೆ - ಅಂತಹ ವಿಸ್ಮಯಗಳ ಹಿಂದೆ ಓಡುತ್ತಲೇ ಬಂದಿದ್ದೆ; ನನ್ನದೇ ಕನಸಿನ ಲೋಕದಲ್ಲಿ ನನ್ನಷ್ಟಕ್ಕೆ ಹಾಯಾಗಿದ್ದೆ....

ಕೋಟೇಶ್ವರದ ನಮ್ಮ ಮನೆಯ ಹತ್ತಿರದಲ್ಲೇ ಇದ್ದ ಅಪ್ಪಯ್ಯನ ಶಾಲೆಯಲ್ಲಿ ಅದೊಂದು ದಿನ ತುಂಬ ಗೌಜು ಗದ್ದಲವಿತ್ತು. ಆ ಗದ್ದಲವು ಕೂಗಳತೆಯಲ್ಲೇ ಇದ್ದ ನಮ್ಮ ಮನೆಗೂ ಕೇಳಿಸುತ್ತಿತ್ತು. ಆಗ ನಾಲ್ಕೋ ಐದೋ ವರ್ಷ ಪ್ರಾಯದ ನಾನು ಕುತೂಹಲದಿಂದ ಅಲ್ಲಿಗೆ ಓಡಿದ್ದೆ. ಮನೆ, ಹಿತ್ತಲು, ಹಾಡಿಯ ಕೆಲಸಗಳಲ್ಲೇ ದಿನವಿಡೀ ಮುಳುಗಿರುತ್ತಿದ್ದ ಅಮ್ಮನಿಗೆ ಅಂದು ನಾನು ಮನೆಯಿಂದ ಹೋದದ್ದು ಗೊತ್ತೇ ಆಗಿರಲಿಲ್ಲ. ಶಾಲೆಯಲ್ಲಿ ಅಂದು ಆಟೋಟಗಳ ಸ್ಪರ್ಧೆ ನಡೆಯುತ್ತಿತ್ತು. (ಶಾಲಾ ವಾರ್ಷಿಕೋತ್ಸವದ ಮೊದಲು ನಡೆಸುತ್ತಿದ್ದ ಸ್ಪರ್ಧೆಗಳವು) ಅಲ್ಲಿಗೆ ಹೋಗಿದ್ದ ನಾನು - ಮಕ್ಕಳೆಲ್ಲರೂ ಓಡುವುದು ಹಾರುವುದನ್ನು ಹತ್ತಿರದಿಂದಲೇ ನಿಂತುಕೊಂಡು ನೋಡತೊಡಗಿದೆ. ಬಗೆಬಗೆಯ ಓಟಗಳೆಲ್ಲವೂ ಮುಗಿದ ಮೇಲೆ, ಚಮಚದಲ್ಲಿ ಲಿಂಬೆಹಣ್ಣನ್ನು ಇಟ್ಟುಕೊಂಡು ಓಡುವ ಸ್ಪರ್ಧೆಗೆ ಎಲ್ಲರೂ ಅಣಿಯಾಗತೊಡಗಿದರು. ಸ್ವಲ್ಪ ಹೊತ್ತು ಆ ಮಕ್ಕಳ ಕಾಲುಬುಡದಲ್ಲೇ ನಿಂತಿದ್ದ ನಾನು, ಲಿಂಬೆಹಣ್ಣನ್ನು ಇಟ್ಟುಕೊಂಡ ಚಮಚವನ್ನು ಎಲ್ಲರೂ ಬಾಯಲ್ಲಿ ಕಚ್ಚಿ ಹಿಡಿದುಕೊಳ್ಳುವುದನ್ನು ಕಂಡ ಕೂಡಲೇ ಇನ್ನೂ ಹತ್ತಿರದಿಂದ ನೋಡುವ ಉತ್ಸುಕತೆಯಿಂದ ಇಣುಕಿ ಇಣುಕಿ ನೋಡತೊಡಗಿದೆ. ಸ್ಪರ್ಧಾಳುಗಳಿಗೆಲ್ಲರಿಗೂ ಒಂದೇ ಅಳತೆಯ ಚಮಚ ಮತ್ತು ಲಿಂಬೆಹಣ್ಣನ್ನು ಒದಗಿಸಿದ್ದರು. ಎಷ್ಟು ಸ್ಪರ್ಧಾಳುಗಳಿದ್ದರೋ ಅಷ್ಟೇ ಚಮಚಗಳನ್ನು ಇರಿಸಿದ್ದರು. ಬೇರೆ ಚಮಚಗಳು ಉಳಿದಿರಲಿಲ್ಲ. ಒಂದೆರಡು ಲಿಂಬೆಹಣ್ಣಗಳು ಮಾತ್ರ ಉಳಿದಿದ್ದವು. ಆಗ ಅಲ್ಲೇ ಕಾಲಿಗೆ ಎಡತಾಕುತ್ತಿದ್ದ ನನ್ನನ್ನು ನೋಡಿದ ಶಿಕ್ಷಕರು "ನೀನೂ ಓಡ್ತೀಯಾ?" ಅಂತ ಕೇಳುತ್ತ ನನ್ನನ್ನು ಉಪಚರಿಸುತ್ತ ಎತ್ತಿಕೊಂಡಿದ್ದರು. ಸ್ಪರ್ಧೆಯ ತಲೆಬುಡ ಗೊತ್ತಿಲ್ಲದ ನಾನು "ಹೋ..ಓಡ್ತೇನೆ" ಅಂದೆ. ಅವರು ಒಬ್ಬ ಹುಡುಗನನ್ನು ಅದೆಲ್ಲಿಗೋ ಕಳಿಸಿ, ಹೇಗೋ ಒಂದು ಚಮಚವನ್ನು ತರಿಸಿ, ಅದರಲ್ಲಿ ಲಿಂಬೆಯನ್ನಿರಿಸಿ, ನನ್ನ ಬಾಯಲ್ಲಿಟ್ಟರು. ಆಮೇಲೆ ನನಗೆ ಸೂಚನೆಯನ್ನೂ ಕೊಟ್ಟರು. "ನಾನು "ಈ" ವಿಸಲ್ (ಅದನ್ನು ನನಗೆ ತೋರಿಸುತ್ತ ಹೇಳಿದರು) ಊದುತ್ತೇನೆ. ಆಗ ನೀನು ಬೇಗ ಬೇಗ ಹೋಗಿ ಆ ತುದಿಯ ಗೆರೆಯನ್ನು ದಾಟಿ ನಿಲ್ಲಬೇಕು. ಲಿಂಬೆಹಣ್ಣು ಕೆಳಗೆ ಬೀಳಬಾರದು. ಹಾಗೆ ಜಾಗ್ರತೆಯಿಂದ ಓಡುತ್ತ ಹೋಗಿ, ಮುಂದಿರುವ ಗೆರೆಯನ್ನು ಮೊದಲು ತಲುಪಿದವರಿಗೆ ಪೆಪ್ಪರಮಿಂಟ್ ಉಂಟು." ಅಂತ ಹೇಳಿ (ಬಹುಶಃ) ತಮಾಷೆ ನೋಡುತ್ತ ನನ್ನ ಹಿಂದೆ ನಿಂತುಕೊಂಡು ವಿಸಲ್ ಊದಿದರು. ಕೂಡಲೇ ಮಕ್ಕಳೆಲ್ಲರೂ ಓಟ ಕಿತ್ತರು. ಆಗ ಹಿಂದಿನಿಂದ ನನ್ನನ್ನು ಮುಟ್ಟಿದ ಶಿಕ್ಷಕರು "ಓಡು ಓಡು"- ಅಂದರು. ನಾನು ಜಾಗ್ರತೆಯಿಂದ ಓಡಿದೆ.

ನನ್ನ ದೄಷ್ಟಿಯು ಲಿಂಬೆಹಣ್ಣಿನ ಮೇಲೇ ಇತ್ತು. ಅಂತಿಮ ಗೆರೆ ದಾಟಿದ್ದೂ ನನಗೆ ಗೊತ್ತಿಲ್ಲ. ಮತ್ತೂ ಓಡುತ್ತಲೇ ಇದ್ದೆ. ಆಗ ಅದಾಗಲೇ ಗುರಿ ತಲುಪಿ ಕುಣಿಯುತ್ತಿದ್ದ ಕೆಲವು ಮಕ್ಕಳು ಹಿಂದಿರುಗಿ ಓಡಿ ಬಂದು, ನನ್ನ ಬಾಯಿಯಿಂದ ಚಮಚವನ್ನು ತೆಗೆದು, ನನ್ನನ್ನು ಎತ್ತಿಕೊಂಡು ಹಿಂದೆ ಬಂದರು. ಓಟದ ಬಯಲಿನಲ್ಲಿ ಪುಕ್ಕಟೆಯಾಗಿ ರಂಜನೆ ತುಂಬಿಸಿದ ನನಗೆ ಅಂದು ವಿಶೇಷ  ಬಹುಮಾನವನ್ನೂ ಕೊಟ್ಟರು. ಎಲ್ಲರೂ ಚಪ್ಪಾಳೆ ತಟ್ಟಿದರು. ಅವರ ಜೊತೆಗೆ ನಾನೂ ಚಪ್ಪಾಳೆ ತಟ್ಟಿದ್ದೆ. ಸ್ವಲ್ಪ ಹೊತ್ತಿನಲ್ಲಿ ನನ್ನ ಕ್ರೀಡಾವಿನೋದದ ಸುದ್ದಿಯು ಆಗ ಶಾಲೆಯಲ್ಲಿಯೇ ಇದ್ದ ಅಪ್ಪಯ್ಯನಿಗೆ ತಲುಪಿದಾಗ, ಅವರು ಬಂದು ನನ್ನನ್ನು ಎತ್ತಿಕೊಂಡು ಮನೆಗೆ ತಂದು ಬಿಟ್ಟು "ಬಿಸಿಲಲ್ಲಿ ಕರಟುತ್ತಾ ಇದೆಯಲ್ಲ ಈ ಹೆಣ್ಣು? ಹೊರಗೆ ಬಿಡಬೇಡ." ಎಂದು ಅಮ್ಮನ ವಶಕ್ಕೆ ನನ್ನನ್ನು ಒಪ್ಪಿಸಿ, ಮತ್ತೆ ಶಾಲೆಗೆ ಹೋದರು. ಅದೇ ಶಾಲೆಯಲ್ಲಿ ಓದುತ್ತಿದ್ದ ನನ್ನ ಅಕ್ಕನು ಅಂದು ಸ್ವತಃ ನನ್ನ ಸ್ಪರ್ಧಾ ಓಟವನ್ನು ನೋಡದಿದ್ದರೂ ಅವಳ ಗೆಳತಿಯರು ಹೇಳಿದ "ನನ್ನ ಓಟದ ಕತೆ"ಯನ್ನು ಅವಳು ಮನೆಮಂದಿಗೆಲ್ಲ ಹೇಳಿದ್ದಳು. ಆಗ ಎಲ್ಲರೂ ನಕ್ಕದ್ದೂ ನನಗೆ ನೆನಪಿದೆ. ಅಕ್ಕನ ಅಂಬೋಣದಂತೆ - ಬೇರೆ ಸ್ಪರ್ಧಿಗಳಿಗೆ ಕೊಟ್ಟ ಚಮಚಕ್ಕಿಂತ ನನಗೆ ಕೊಟ್ಟ ಚಮಚವು ದೊಡ್ಡದಿತ್ತಂತೆ. "ಅದು ಚಮಚವಾ? ಶ್ಶೀ..ಅದು ಸೌಟು.."ಅಂತ ಹೇಳುತ್ತಲೇ ನನ್ನ ಬಹುಮಾನದ ಬಿಸ್ಕತ್ತಿನ ಪೊಟ್ಟಣವನ್ನು ಬಿಡಿಸಿ ಎಲ್ಲರೂ ತಿಂದದ್ದೂ ನನಗೆ ನೆನಪಿದೆ.

ಮತ್ತೊಂದು ಘಟನೆ ನೆನಪಾಗುತ್ತದೆ... ಮನೆಗೆಲಸದ ಅವಸರದಲ್ಲಿರುತ್ತಿದ್ದ ಅಮ್ಮನು ಸದಾಕಾಲವೂ ಬಾಗಿಲನ್ನು ಜಡಿದುಕೊಂಡೇ ಇರಲಾಗುತ್ತಿರಲಿಲ್ಲ. ಅವಳು ಹಿತ್ತಲಿಗೋ ಅಂಗಳಕ್ಕೋ ಹೋಗುವುದನ್ನು ನಾನು ಕಾಯುತ್ತ ಇರುತ್ತಿದ್ದೆ. ಎಷ್ಟು ಹೊತ್ತಿಗೆ ಈ ಜೈಲಿನ ಯಾವ ಬಾಗಿಲು ತೆಗೆಯುತ್ತಾರೆಂದು ಕಾಯುತ್ತಲೇ ಇರುತ್ತಿದ್ದ ನಾನು ಪುಸಕ್ಕೆಂದು ಹೊರಗೆ ಓಡಿಬಿಡುತ್ತಿದ್ದೆ. ಅಂದೂ ಹಾಗೇ ಆಯಿತು.
 
ಅಪ್ಪಯ್ಯನ ಹಿಂದೆಮುಂದೆ ಓಡಾಡಿಕೊಂಡಿರುವುದೇ ಆ ಎಳೆವಯಸ್ಸಿನಲ್ಲಿ ನಾನು ಇಷ್ಟಪಡುತ್ತಿದ್ದ ಕೆಲಸ. ಬೇರೆ ಎಲ್ಲಿಗೇ ಹೋಗುವುದಿದ್ದರೂ ಅಪ್ಪಯ್ಯನು ನನ್ನನ್ನು ಕರೆದುಕೊಂಡೇ ಹೋಗುತ್ತಿದ್ದರು. ಆದರೆ ಶಾಲೆಗೆ ಮಾತ್ರ ಒಬ್ಬರೇ ಹೋಗುತ್ತಿದ್ದರು. "ಮನೆಯಲ್ಲೇ ಇರು. ತಂಟೆ ಮಾಡಿ ಅಮ್ಮನಿಗೆ ತೊಂದರೆ ಕೊಡಬೇಡ..." ಎಂದೆಲ್ಲ ಉಪಚರಿಸಿ ಹೋಗಿಬಿಡುತ್ತಿದ್ದರು. ಅದೊಂದು ದಿನ ಹಾಗೇ ಹೇಳಿ, "ಇವತ್ತು ಬರುವಾಗ ಪೆಪ್ಪರಮಿಂಟ್ ತರುತ್ತೇನೆ" ಎಂದು ಆಸೆ ತೋರಿಸಿ, ನನ್ನನ್ನು ಒಪ್ಪಿಸಿ ಶಾಲೆಗೆ ಹೋಗಿದ್ದರು. "ಇವತ್ತು ನೆಹರೂ ಜಯಂತಿ. ಅಪ್ಪಯ್ಯ ಬೇಗ ಬರುತ್ತಾರೆ. ನೀನು ಆಟ ಆಡಿಕೊಂಡಿರು." ಅನ್ನುತ್ತ ಒಂದು ತಟ್ಟೆಯಲ್ಲಿ ನಾಲ್ಕಾರು ಒಣ ದ್ರಾಕ್ಷಿಯನ್ನು ಹಾಕಿ ನನ್ನ ಕೈಯಲ್ಲಿಟ್ಟು ನನಗೆ ತಿನ್ನುವ ಕೆಲಸ ಕೊಟ್ಟು, ಅಮ್ಮನೂ ತನ್ನ ಕೆಲಸದಲ್ಲಿ ತೊಡಗಿಕೊಂಡಿದ್ದಳು. ಆದರೆ ನನಗೋ - ಮನೆಯಲ್ಲಿ ಬೇಜಾರು. ಸ್ವಲ್ಪ ಹೊತ್ತಿನಲ್ಲಿ ದ್ರಾಕ್ಷಿಯ ತಟ್ಟೆ ಖಾಲಿಯಾಯಿತು. ಲೋಕಸಂಚಾರದ ಸ್ಫೂರ್ತಿ ಹೊಮ್ಮಿತು. ಸಮಯ ನೋಡಿಕೊಂಡು ಅಮ್ಮನ ಹಿಂದಿನಿಂದಲೇ ಮನೆಯಿಂದ ಹೊರಬಂದು ಶಾಲೆಗೆ ಓಡಿದೆ. ಅಂದು ಶಾಲೆಯ ಒಂದು ಕೊಠಡಿಯಲ್ಲಿ ಒಬ್ಬರಾದ ಮೇಲೆ ಒಬ್ಬರು ಬಂದು ಹಾಡುತ್ತಿದ್ದರು. ಬಾಗಿಲ ಸಂದಿಯಿಂದಲೇ ಅವನ್ನೆಲ್ಲ ನೋಡುತ್ತಿದ್ದ ನಾನು, ಸರಿಯಾಗಿ ನೋಡುವ ಆಸೆಯಾಗಿ ಕಿಟಕಿಯನ್ನು ಹತ್ತಿ ನಿಂತೆ. ಆಗ ಅಲ್ಲಿದ್ದವರೆಲ್ಲರೂ ನನ್ನನ್ನು ನೋಡಿದರು. ಕಿಟಕಿಯಲ್ಲಿ ನೇತಾಡುತ್ತಿದ್ದ ನನ್ನನ್ನು ಒಳಗೆ ಕರೆದುಕೊಂಡು ಹೋದರು. ಅಂದು ಆ ಕೋಣೆಯಲ್ಲಿ ಗಾಯನ ಸ್ಪರ್ಧೆ ನಡೆಯುತ್ತಿತ್ತು. ಪರೀಕ್ಷಕರಾಗಿ ಕೂತಿದ್ದ ಶಿಕ್ಷಕರಲ್ಲಿ ಒಬ್ಬರಾದ ರೋಸಿ ಟೀಚರ್ ಅವರು ಅಲ್ಲಿದ್ದ ಮಕ್ಕಳಿಂದ ನಾನು "ಕನ್ನಡ ಪಂಡಿತರ ಮಗಳು" ಎಂದು ತಿಳಿದುಕೊಂಡು..."ನೀನು ಹಾಡುತ್ತೀಯಾ" ಅಂತ ಔಪಚಾರಿಕವಾಗಿ ಕೇಳಿದ್ದರು. ಕೇಳಿದ್ದೇ ತಡ; ನಾನು ಪಟಕ್ಕಂತ ಎದ್ದು ವೇದಿಕೆ ಹತ್ತಿ ಪದ್ಯ ಹೇಳಲು ಶುರುಮಾಡಿದೆ.


ಪರಲೋಕದಲ್ಲಿರುವ ತಂದೆಯೇ, ನಿನ್ನ ಹೆಸರೀಗೆ ಆಗಲಿ ಪೂಜೆಯೇ
ನಿನ್ನ ನಿಜರಾಜ್ಯ ಬರಲೆಂದು ಬೇಡುವೆ, ನಾ ಮನದಲ್ಲಿ ನಿರ್ಮಲಳಾಗುವೆ
ದಿನನಿತ್ಯದ ಅನ್ನ ನಮಗೆಂದೂ ನೀಡಿ, ಹರಸೆಂದು ಕೈಜೋಡಿಸುವೆವು ಬೇಡಿ
ನಮ್ಮ ಕಡುಪಾಪಗಳನೆಲ್ಲ ಕ್ಷಮಿಸು, ಈ ಪ್ರಲೋಭನೆಯಿಂದೆಮ್ಮನುಳಿಸು
ನಿರತ ದಯದಿಂದ ನೀನೆಮ್ಮ ಸಲಹು, ಪ್ರಭು ತಥಾಸ್ತು ಎಂದು ನೀ ಹರಸು....
ಎಂದು ರಾಗವಾಗಿ ಹೇಳಿ ಕೆಳಗಿಳಿದು ರೋಸಿ ಟೀಚರ್ ಪಕ್ಕದಲ್ಲಿಯೇ ಹೋಗಿ ಕೂತುಕೊಂಡೆ. ಆ ಐದರ ಹರೆಯದ ಬಾಲ್ಯದಲ್ಲಿ ವಿಪರೀತ ಜ್ಞಾಪಕ ಶಕ್ತಿ ಹೊಂದಿದ್ದ ನನಗೆ, ನನ್ನ ಐರೋಡಿಯ ಅಜ್ಜನ ಮನೆಗೆ ಹೋಗಿದ್ದಾಗ ಯಾರೋ ಹಾಡಿದ್ದ ಈ ಹಾಡನ್ನು ಒಂದು ಸಾರಿ ಕೇಳಿದ್ದು ರಾಗ ಸಹಿತ ನೆನಪಿನಲ್ಲಿತ್ತು. ಅಂದು ಅದನ್ನೇ ಯಥಾವತ್ ಹಾಡಿ ಮುಗಿಸಿದ್ದೆ. ಎಲ್ಲರೂ ಚಪ್ಪಾಳೆ ತಟ್ಟಿದ್ದರು. ಆ ಪರೀಕ್ಷಕರೂ ನನ್ನನ್ನು ಹತ್ತಿರ ಕರೆದು ಕೂಡಿಸಿಕೊಂಡು ಉಪಚರಿಸಿದ್ದರು. ಅಂದು ಯಾರಿಗೆ ಬಹುಮಾನ ಸಿಕ್ಕಿತೋ ಗೊತ್ತಿಲ್ಲ. ಆದರೆ ಅಂದು ಆ ಪರೀಕ್ಷಕರು ನನಗೆಂದೇ ಒಂದು ವಿಶೇಷ ಬಹುಮಾನವನ್ನು ಸೃಷ್ಟಿಸಿ ಕೊಟ್ಟರು. ಆಮೇಲೆ ನನ್ನ ಅಪ್ಪಯ್ಯನನ್ನು ಕರೆದು ನನ್ನ ತಾರೀಫು ಮಾಡಿದ್ದರಂತೆ. ಆ ರೋಸೀ ಟೀಚರ್- ಮುಂದಿನ ದಿನಗಳಲ್ಲಿ ನಾನು ಕಾಣಿಸಿಕೊಂಡಾಗೆಲ್ಲ ನನ್ನನ್ನು ಎತ್ತಿಕೊಂಡು ಬಣ್ಣದ ಚಾಕ್ ಪೀಸ್ ಕೊಡುತ್ತಿದ್ದರು. ಅಂದು ಶಾಲೆಯಿಂದ ನನ್ನನ್ನು ಕರೆದುಕೊಂಡು ಮನೆಗೆ ಬಂದ ಮೇಲೆ ಅಪ್ಪಯ್ಯನು ನನ್ನ ಈ ಸಾಹಸವನ್ನು ನಿಂದಾಸ್ತುತಿಯ ರೂಪದಲ್ಲಿ ಅಮ್ಮನಿಗೂ ಹೇಳಿದ್ದರು. ಅಮ್ಮನಿಗೆ ಒಳಗೊಳಗೇ ಖುಷಿಯಾಗಿದ್ದರೂ "ಈ ಹೆಣ್ಣನ್ನ ಮನೆಯೊಳಗೇ ಇಟ್ಟುಕೊಂಡು ಕಾಯುವುದು ನನ್ನಿಂದಂತೂ ಸಾಧ್ಯವಿಲ್ಲ. ನೀವೇ ಏನಾದರೂ ವ್ಯವಸ್ಥೆ ಮಾಡಿ" ಅಂತ ಅಪ್ಪಯ್ಯನಿಗೆ ಹೇಳಿ, ಹುಸಿ ಮುನಿಸು ತೋರುತ್ತ ಅಂದು ನನ್ನ ತಲೆ ಸವರಿದ್ದಳು.




ಕೋಟೇಶ್ವರದಲ್ಲಿದ್ದಾಗ ನಮ್ಮ ಮನೆಯು ರಸ್ತೆಯ ಪಕ್ಕದಲ್ಲೇ ಇತ್ತು. ಆಗ ಬಾಡಿಗೆಗೆ ನಾವಿದ್ದ "ಬಿ. ಎಸ್.ಹತ್ವಾರ"ರ ಮನೆಯ ಎದುರಿನ ಭಾಗದಲ್ಲಿ ಉದ್ದಕ್ಕೂ ಸರಳಿನ ತಳಿ ಇತ್ತು. ಮನೆಯ ಎಲ್ಲ ಹಿರಿಯರೂ ಅವರವರ ಬೆಳಗಿನ ಕೆಲಸದಲ್ಲಿ ತೊಡಗಿಕೊಂಡ ಮೇಲೆ, ಮುಚ್ಚಿದ ಬಾಗಿಲಿನ ಒಳಗೆ ಕೂತು ಬೇಸರವಾದರೆ, ಆ ಸರಳಿಗೆ ಮುಖ ಒರಗಿಸಿ ರಸ್ತೆಯಲ್ಲಿ ನಡೆಯುವ ಚಟುವಟಿಕೆಗಳನ್ನು ನೋಡುತ್ತ ನಾನು ಒಂದಷ್ಟು ಹೊತ್ತು ಕಳೆಯುತ್ತಿದ್ದೆ.


[ಈಗಲೂ ಹೆಚ್ಚು ಬದಲಾವಣೆಗಳಿಲ್ಲದೆ ಹಾಗೇ ಉಳಿದುಕೊಂಡಿರುವ ಆ ಮನೆಗೆ ಇತ್ತೀಚೆಗೆ - ಸುಮಾರು 55 ವರ್ಷಗಳ ನಂತರ ಕುಟುಂಬ ಸಮೇತ ದಾಳಿ ಇಟ್ಟು ಮತ್ತೊಮ್ಮೆ ಬಾಲ್ಯವನ್ನು ಚಪ್ಪರಿಸಿಕೊಂಡಿದ್ದೆ.]
 ಎಲ್ಲೋ ಬೆಳಿಗ್ಗೆ ಒಮ್ಮೆ- ಸಂಜೆ ಒಮ್ಮೆ ಬಸ್ಸು ಹೋಗುವುದನ್ನು ಕಂಡರೆ ಮಹತ್ಸಾಧನೆ ಮಾಡಿದಂತಹ ಸಂತೋಷ. ಅಂದು ಆ ರಸ್ತೆಯಲ್ಲಿ ಆಗಾಗ ಎತ್ತಿನ ಗಾಡಿಗಳು ಓಡಾಡುತ್ತಿದ್ದವು. ಕಾಲ್ನಡಿಗೆಯಲ್ಲಿಯೇ ಬಹುಪಾಲು ಜನರು ಸಂಚರಿಸುತ್ತಿದ್ದರು. ಇಂತಹ ಚಲನಶೀಲವಾದರೂ ಶಾಂತವಾಗಿದ್ದ  ಹೊರಜಗತ್ತನ್ನು ನೋಡುತ್ತ ಮೈಮರೆತು ನಾನು ಸಮಯ ಕಳೆಯುತ್ತಿದ್ದುದೂ ಇತ್ತು. ಹೀಗೆ ಪ್ರಪಂಚದತ್ತ ಪಕ್ಷಿನೋಟ ಬೀರುತ್ತಿದ್ದ ಅಂದಿನ ಶುಭ್ರ ಬಾಲ್ಯಕಾಲದಲ್ಲಿ "ಉತ್ತಮ ಮಧ್ಯಮ ಅಧಮ" ಎನ್ನದೆ ಎಲ್ಲವೂ ಆಕರ್ಷಕವಾಗಿಯೇ ಕಾಣುತ್ತಿದ್ದವು.

ಆ ಹತ್ವಾರರ ಬಾಡಿಗೆ ಮನೆಯಲ್ಲಿ ನಾವಿದ್ದಾಗ ೧೯೫೯-೬೦ರ ಅವಧಿಯಲ್ಲಿ ನಮ್ಮ ಮನೆಯ ಎದುರಿನ ಮನೆಯಲ್ಲಿ ಒಬ್ಬರು ಪ್ರತಿಭಾವಂತ ಚಿತ್ರಕಲಾವಿದರಿದ್ದರು. ಬಹುಶಃ "ಅಪ್ಪು" ಅಂತ ಅವರ ಹೆಸರು. ಅವರು ಪ್ರತಿಭಾವಂತ ಚಿತ್ರ ಕಲಾವಿದರಾಗಿದ್ದರು. ದೊಡ್ಡ ಒಂದು ಸ್ಟ್ಯಾಂಡಿನ ಮೇಲೆ ದೊಡ್ಡ ಕಾಗದ ಜೋಡಿಸಿಕೊಂಡು, ತಮ್ಮ ಮನೆಯ ಹೊರಗಿನ ಅಂಗಳದಲ್ಲಿಟ್ಟುಕೊಂಡು ಅವರು ಆಗಾಗ ಚಿತ್ರ ಬಿಡಿಸುತ್ತಿದ್ದರು. ಅವರು ಸ್ಟ್ಯಾಂಡ್ ಎತ್ತಿಕೊಂಡು ಮನೆಯಿಂದ ಹೊರಗೆ ಬಂದ ಕೂಡಲೇ ಸದಾ ಕಿಟಕಿಗೆ ಮುಖವಿಟ್ಟು ಕಾಯುತ್ತಿದ್ದ ನಾನು ಓಡಿ ಹೋಗಿ ಅಲ್ಲಿ ನಿಲ್ಲುತ್ತಿದ್ದೆ. ಬಗೆ ಬಗೆಯ ಬಣ್ಣದ ನೀರನ್ನು ಕಾಗದದ ಮೇಲೆ ಅವರು ಬಳಿಯುತ್ತಿದ್ದುದನ್ನು ಕಣ್ಣು ಬಾಯಿ ಬಿಟ್ಟುಕೊಂಡು ನೋಡುತ್ತಿದ್ದೆ. ಅವರ ಹಿಂದೆ ಮುಂದೆ ಸುಳಿಯುತ್ತ ಕಾಗದದ ಮೇಲೆ ಅವರು ಮಾಡುವ ಮ್ಯಾಜಿಕ್ ನೋಡುತ್ತ ಅಚ್ಚರಿಗೊಳ್ಳುತ್ತಿದ್ದೆ. ಅವರ ಕೈಕಾಲಿನ ಬಳಿಯಲ್ಲೇ ನಾನು ಅಡ್ಡಡ್ಡ ಸುಳಿದಾಡಿದಾಗ, ಅವರು ಒಳಗಿಂದ ಒಂದು ಸ್ಟೂಲನ್ನು ಎತ್ತಿ ತಂದು ಸ್ವಲ್ಪ ದೂರದಲ್ಲಿಟ್ಟು ನನ್ನನ್ನು ಒಂದು ಕಡೆ ಕೂಡಿಸುತ್ತಿದ್ದರು. "ನೀನಿನ್ನು ಮನೆಗೆ ಹೋಗು" ಎಂದು ಅವರು ಹೇಳುವವರೆಗೂ ನಾನು ಅಲ್ಲೇ ಇರುತ್ತಿದ್ದೆ. ಈ ವ್ಯಕ್ತಿಯು ಒಳ್ಳೆಯ ಫೊಟೋಗ್ರಾಫರ್ ಕೂಡ ಆಗಿದ್ದರು. ಅವರ ಹತ್ತಿರ ಕೆಮೆರಾ ಇತ್ತು. ಅವರ ಮನೆಯ ಒಳಗೆ ಒಂದು ಕತ್ತಲೆಯ ಕೋಣೆಯೂ ಇತ್ತು. ಅವರು ತೆಗೆದ ಫೊಟೋಗಳನ್ನೆಲ್ಲ ಆ ಕೋಣೆಯಲ್ಲಿ ನೀರಿನಲ್ಲಿ ಅದ್ದಿ ಇಡುತ್ತಿದ್ದರು. ಆ ಮೇಲೆ ಬಟ್ಟೆ ಒಣಗಿಸಿದಂತೆ, ಕ್ಲಿಪ್ ಹಾಕಿ ಹಗ್ಗದಲ್ಲಿ ನೇತಾಡಿಸುತ್ತಿದ್ದರು. "ಅದು ಯಾಕೆ - ಇದು ಏನು" ಅಂತ ಕೇಳುತ್ತ ನಾನು ಅವರ ಹಿಂದೆ ಮುಂದೆ ಸುತ್ತುತ್ತಿದ್ದೆ. ಈಗ ಯೋಚಿಸಿದರೆ... ತುಂಬ ಕಿರಿಕಿರಿಯನ್ನು ಕೊಡುತ್ತಿದ್ದೆ. ಆದ್ದರಿಂದಲೇ ಅವರು - "ನೀನು ದೊಡ್ಡವಳಾದ ಮೇಲೆ ಎಲ್ಲವೂ ಗೊತ್ತಾಗುತ್ತದೆ" ಎಂದಷ್ಟೇ ಹೇಳುತ್ತ ನನ್ನನ್ನು ನಿವಾರಿಸಿಕೊಳ್ಳುತ್ತಿದ್ದರು.

ಆ ಚಿತ್ರ ಕಲಾವಿದರ "Photo Lab" ನೋಡಿದ್ದ ನಾನು ಒಂದುದಿನ ಅವರನ್ನು ಕೇಳಿದ್ದೆ.  "ನೀವು ನನ್ನ ಫೊಟೋ ತೆಗೀತೀರಾ?" ಎಂದು ಅವರನ್ನು ಕೇಳಿದ್ದೆ. "ಖಂಡಿತ ತೆಗೆದು ಕೊಡ್ತೇನೆ" - ಅಂದಿದ್ದರು. ಆಮೇಲೆ ಈ ಮಾತನ್ನು ಅವರು ಮರೆತರೂ ನಾನು ಮರೆಯಲಿಲ್ಲ. ಅವರನ್ನು ಕಂಡಾಗಲೆಲ್ಲ "ನನ್ನ ಫೊಟೋ ತೆಗೆಯಲೇ ಇಲ್ಲ" - ಅನ್ನುತ್ತ ಅವರನ್ನು ನಕ್ಷತ್ರಿಕನಂತೆ ಪೀಡಿಸತೊಡಗಿದೆ. ಅವರ ಮನೆಗೆ ಹೋದಾಗಲೆಲ್ಲ "ಬನ್ನಿ. ನನ್ನ ಫೊಟೋ ತೆಗೆಯಿರಿ" - ಎಂದು ಅವರ ಬೆನ್ನುಬೀಳುತ್ತಿದ್ದೆ. ಅವರಿಗೂ ಸಾಕುಸಾಕೆನ್ನಿಸಿರಬೇಕು.

ಒಂದು ದಿನ ಬೆಳಿಗ್ಗೆ ಅವರು ನಮ್ಮ ಮನೆಗೆ ಬಂದರು. ನನಗೆ ಒಳ್ಳೆಯ ಅಂಗಿ ಹಾಕಲು ಅಮ್ಮನಿಗೆ ಹೇಳಿದರು. ಇಡೀ ಪ್ರಕರಣದ ವಿಷಯವೇ ಗೊತ್ತಿಲ್ಲದ ಅಮ್ಮನಿಗೆ ಆಶ್ಚರ್ಯ. ಅವರು ನನ್ನಿಂದಾಗುತ್ತಿದ್ದ ನಕ್ಷತ್ರಿಕನ ಪೀಡೆಯ ಕತೆಯನ್ನು ಅಮ್ಮನಿಗೆ ಹೇಳಿ ಮುಗಿಸುವಾಗ, ನಾನು ಬಿಳೀ ಪೈಜಾಮ ಮತ್ತು ಜುಬ್ಬ ಧರಿಸಿ, ಮೇಲಿನಿಂದ ಕಪ್ಪು ಬಣ್ಣದ ಒಂದು ಸ್ವೆಟರ್ ಹಾಕಿಕೊಂಡು, ನನ್ನ ಬಣ್ಣದ ಕೊಡೆ ಹಿಡಿದುಕೊಂಡು, ಬಣ್ಣದ ಚಪ್ಪಲಿ ಸಿಕ್ಕಿಸಿಕೊಂಡು ತಯಾರಾಗಿಬಿಟ್ಟಿದ್ದೆ. (ನನ್ನ ಒಬ್ಬ ಅಣ್ಣನು ಹಾವು ಕಚ್ಚಿ ತೀರಿಕೊಂಡಿದ್ದ. ಅವನ ನೆನಪಿಗೆಂದು, ಅವನ ಪೈಜಾಮ ಜುಬ್ಬವನ್ನು, ಅಮ್ಮಅಡಗಿಸಿ ಇಟ್ಟುಕೊಂಡಿದ್ದಳು. ಎಲ್ಲೋ ಒಮ್ಮೊಮ್ಮೆ ಗುಟ್ಟಾಗಿ ಅದನ್ನು ಸವರುತ್ತಾ ಅಳುತ್ತಿದ್ದಳು. ಅಮ್ಮ ಅಳುವುದನ್ನು ಗಮನಿಸಿದ್ದ ನಾನು ಅಮ್ಮನಿಲ್ಲದಿದ್ದಾಗ ಆ ಪೆಟ್ಟಿಗೆಯನ್ನು ಹರಡಿ ನೋಡಿದ್ದೆ. ಆಗ ಈ ಪೈಜಾಮ, ಜುಬ್ಬ ಮತ್ತು ಸ್ವೆಟರ್ ನನ್ನ ಕಣ್ಣಿಗೆ ಬಿದ್ದಿತ್ತು. ಬೇರೆ ಹರುಬಿಲ್ಲದ ನಾನು ಹಿಂದೊಮ್ಮೆ ಅಣ್ಣನಿಗೆಂದು ಹೊಲಿಸಿದ್ದ ಪೈಜಾಮ ಜುಬ್ಬವನ್ನು ಅಮ್ಮನ ಪೆಟ್ಟಿಗೆಯಿಂದ ಒಮ್ಮೆ ಹುಡುಕಿ ತೆಗೆದು ಅದನ್ನು ಹಾಕಿಕೊಂಡೂ ನೋಡಿದ್ದೆ. ಅದು ನನಗೆಂದೇ ಹೊಲಿಸಿದಂತಿತ್ತು. ಅದನ್ನು ಹಾಕಿಕೊಳ್ಳುವುದಕ್ಕೆ ಇದೇ ಸಂದರ್ಭ ಎಂದುಕೊಂಡು ಅಂದಿನ ಫೊಟೋ ಸಮಾರಂಭಕ್ಕೆ ಅದೇ ವೇಷವನ್ನು ಧರಿಸಿಯೂ ಬಿಟ್ಟಿದ್ದೆ.)

ಆಗ ಐದು ವರ್ಷವೂ ಪೂರ್ತಿಯಾಗಿರದ ನನ್ನನ್ನು ಈ ಹೊಸ ವೇಷದಲ್ಲಿ ನೋಡಿದ ಅಮ್ಮನ ಕಣ್ಣಿನಲ್ಲಿ ಪಟ್ಟಂತ ಎರಡು ಹನಿ ನೀರು ಜಿನುಗಿತ್ತು. ಕಣ್ಣೊರಸಿಕೊಳ್ಳುತ್ತಲೇ ಹೋಗಿ ಒಂದು ಹಣಿಗೆ ತಂದು ನನ್ನ ತಲೆ ಬಾಚಿದ್ದಳು. ಆಗ ಹೆಚ್ಚು ಕೂದಲು ಇಲ್ಲದ ನನ್ನ ತಲೆಯನ್ನು ನೇರವಾಗಿ ಹಿಂದಕ್ಕೆ ಬಾಚಿ ಬಿಡುತ್ತಿದ್ದರು. ಅಮ್ಮನಿಂದ ತಲೆ ಬಾಚಿಸಿಕೊಂಡ ಮೇಲೆ, ನನ್ನನ್ನು ಕರೆದುಕೊಂಡು ಹೋಗಿ ಅಂಗಳದಲ್ಲಿ ಬಿಸಿಲು ಹೊಡೆಯದ ಜಾಗ ನೋಡಿ ನಿಲ್ಲಿಸಿದರು. ಒಂದು ಕಪ್ಪು ಬಟ್ಟೆಯೊಳಗೆ ತಲೆ ತೂರಿಸಿ "ಎದುರುಮನೆಯ ಜಾದೂಗಾರ"ರು ಕ್ಯಾಮರಾ ಚಾಲೂ ಮಾಡುತ್ತಿದ್ದಾಗ, ನಾನು ಸರ್ರಂತ ಒಳಗೆ ಓಡಿ, ನನ್ನ ಮೂರು ಚಕ್ರದ ಸೈಕಲ್ಲನ್ನು ದೂಡಿಕೊಂಡು ಬಂದೆ. ಅಲ್ಲಿಗೆ... ನನ್ನ ಅಂದಿನ ಎಲ್ಲ ಆಸ್ತಿಯೂ ಫೊಟೋದಲ್ಲಿ ಅವಕಾಶ ಪಡೆಯುವಂತೆ ನೋಡಿಕೊಂಡೆ. (ಅಂದು ಆ ಊರಿನಲ್ಲಿ ಮಕ್ಕಳ ಸೈಕಲ್ ಇದ್ದವಳೆಂದರೆ ನಾನೊಬ್ಬಳೇ. ನನ್ನ ತಂಟೆಗೆ ಒಂದು ಸಾಧನವಿರಲಿ; ಹಾಗಾದರೂ ಊರು ಸುತ್ತುವುದನ್ನು ನಿಲ್ಲಿಸಲಿ ಎಂದುಕೊಂಡೋ ಏನೋ... ಯಾವ ಮಕ್ಕಳಿಗಾಗಿಯೂ ತರದಿದ್ದ ಅಪ್ಪಯ್ಯ - ನನಗೆ ಒಂದು ಸೈಕಲ್ ತಂದು ಕೊಟ್ಟಿದ್ದರು. ಒಂದು "ಹೆಣ್ಣಿಗೆ" ಸೈಕಲ್ ಕೊಡಿಸಿದ್ದು ನಮ್ಮ ಬಳಗದ ಕೆಲವರಿಗೆ "ಅಪ್ಪನ ಅತಿ" ಎಂದು ಅನ್ನಿಸಿ "ಅಪ್ಪಯ್ಯ ಸೈಕಲ್ ಮತ್ತು ಹೆಣ್ಣು" - ಟೀಕೆಗೂ ಒಳಗಾಗಿತ್ತು. ಆದರೆ ಮನೆಗೆ ಸೈಕಲ್ ಬಂದ ಮೇಲೆ ನಾವು ಎಲ್ಲ ಮಕ್ಕಳೂ ಸೈಕಲ್ ಸವಾರಿ ಮಾಡುತ್ತ ಖುಶಿ ಪಟ್ಟಿದ್ದೆವು. ಆ ಸೈಕಲ್ಲು ಸುಮಾರು ಹತ್ತು ವರ್ಷಗಳ ಕಾಲ ನಮ್ಮ ಸೇವೆ ಮಾಡಿತ್ತು. ಅನಂತರ ಹುಟ್ಟಿದ್ದ ನನ್ನ ತಮ್ಮಂದಿರವರೆಗೂ ಅದೇ ಸೈಕಲ್ ಯಾತ್ರೆಯು ನಡೆದಿತ್ತು.)

ಅಂದು ಅದೇ ಸೈಕಲ್ಲನ್ನು ಎಳಕೊಂಡು ಬಂದು, ಅದರಮೇಲೆ ಕೂತುಕೊಂಡು - "ಈಗ ಫೊಟೋ ತೆಗೀರಿ" ಅಂದಿದ್ದೆ. ಆ ಅಪ್ಪು ಮೇಸ್ಟ್ರಿಗೆ ನಗು ತಡೆಯಲಾಗದೆ, ಕಪ್ಪು ಗುಮ್ಮನಿಂದ ತಲೆಯನ್ನು ಹೊರಗೆಳೆದುಕೊಂಡು, ಸೀದಾ ನನ್ನ ಹತ್ತಿರ ಬಂದು ಕೆನ್ನೆ ಹಿಂಡಿ, ನನ್ನನ್ನು ನೆಟ್ಟಗೆ ಕೂಡಿಸಿ, ಅತ್ಯಂತ ಆಸಕ್ತಿಯಿಂದ ಸೈಕಲ್ಲಿನ ಹ್ಯಾಂಡಲ್ಲಿನ ಮೇಲೆ ನನ್ನ ಒಂದು ಕೈಯನ್ನಿರಿಸಿ, ಇನ್ನೊಂದು ಕೈಯನ್ನು ಹಿಂದೆ ಇರಿಸಿ, ಕಾಲನ್ನು ಶಿಸ್ತಿನಲ್ಲಿರಿಸಿ, ನನ್ನ ಕೊಡೆಯನ್ನು ಹ್ಯಾಂಡಲ್ಲಿಗೆ ಸಿಕ್ಕಿಸಿ, "ಅಲುಗಾಡಬೇಡ...ಹಾಗೇ ಕೂತಿರು." ಎಂದು ಹೇಳುತ್ತ...."ರೆಡಿ....ತೆಗೀತೇನೆ ..." ಅಂದ ಕೂಡಲೆ, ನಾನು ಸರಸರ ಸೈಕಲ್ಲು ತುಳಿಯುತ್ತ ಅಂಗಳದಲ್ಲಿ ತಿರುಗತೊಡಗಿದೆ. ನಾನು ಸೈಕಲ್ಲು ತುಳಿಯುತ್ತಿರುವುದೆಲ್ಲವನ್ನೂ ಅವರು ಚಿತ್ರ ತೆಗೆದು ನನಗೆ ತೋರಿಸುತ್ತಾರೆ ಎಂದುಕೊಂಡಿದ್ದ ನಾನು, ಉತ್ಸಾಹದಿಂದ ಕಾರ್ಯಶೀಲಳಾಗಿದ್ದೆ. ಆಗ ಅವರು ಓಡಿಕೊಂಡು ಬಂದು ನನ್ನನ್ನು ಹಿಡಿದು ನಿಲ್ಲಿಸಿ ಮತ್ತೆ ಮೊದಲಿದ್ದ ಜಾಗಕ್ಕೇ ತಂದು ಸ್ಥಾಪಿಸಿ, ಅದೇ ರೀತಿಯಲ್ಲಿ ಕುಳಿತುಕೊಳ್ಳುವಂತೆ ಜೋರುಮಾಡಿ ಹೇಳಿ... ಓಡಿ ಹೋಗಿ, ಕಪ್ಪು ಗುಮ್ಮನೊಳಗಿಂದ ಫೊಟೋ ತೆಗೆದೇಬಿಟ್ಟರು. ಅಷ್ಟು ಹೊತ್ತೂ ಖುಶಿಯಿಂದ ನಗುತ್ತಿದ್ದ ನಾನು, ಅವರು ಜೋರು ಮಾಡಿದ ಕೂಡಲೆ ಗಲಿಬಿಲಿಯಾಗಿ ಗಂಭೀರವಾಗಿ ಬಿಟ್ಟಿದ್ದೆ.

ಅಪ್ಪಯ್ಯನು ಶಾಲೆಯಿಂದ ಮರಳಿ ಮನೆಗೆ ಬಂದಾಗ, ಅಮ್ಮನು ಅಂದಿನ ಘಟನೆಯ ವರದಿಯನ್ನು ಒಪ್ಪಿಸಿದ್ದಳು. ಆಗ ನನ್ನನ್ನು ನೋಡಿದ ಅಪ್ಪಯ್ಯ "ಅಧಿಕಪ್ರಸಂಗಿ" ಅಂತ.. - "ಪ್ರಸಂಗ"ದ ಕ್ರಿಯೆಯನ್ನು ಸ್ತ್ರೀಲಿಂಗವಾಚಕಕ್ಕೆ ಹೊಂದುವಂತೆ ಬಳಸಿ, ಹುಬ್ಬು ಚಿರುಟಿಸಿ ನನ್ನನ್ನು ನೋಡಿದ್ದು ಬಿಟ್ಟರೆ ಬೇರೇನೂ ಹೇಳಿರಲಿಲ್ಲ. ಎರಡು ಮೂರು ದಿನಗಳಲ್ಲಿ ಆ ಚಿತ್ರಕಾರರು ಫೊಟೋವನ್ನು ತಂದು ಅಪ್ಪಯ್ಯನಿಗೆ ಕೊಟ್ಟಿದ್ದರು. ಆ ವ್ಯಕ್ತಿಯು ತಮ್ಮ ಸಂಸಾರದ ಸದಸ್ಯರೊಂದಿಗೆ ತಾವಿಲ್ಲದ ಹೊತ್ತಿನಲ್ಲಿ ಮನೆಯೊಳಗೆ ಓಡಾಡಿದ್ದು, ಒಡನಾಡಿದ್ದು ಬಹುಶಃ ಅಪ್ಪಯ್ಯನಿಗೆ ಇಷ್ಟವಾಗಿರಲಿಲ್ಲ. ತನ್ನ ಅನುಮತಿ ಪಡೆಯದೆ ತನ್ನ ಮಗಳ ಫೊಟೋ ತೆಗೆದದ್ದು, ತಾನು ಮನೆಯಲ್ಲಿ ಇಲ್ಲದಿದ್ದಾಗ ಬಂದು ಫೊಟೊ ತೆಗೆದದ್ದು, ಅನಂತರವೂ ತನ್ನ ಜೊತೆಯಲ್ಲಿ ಈ ವಿಚಾರವನ್ನು ತಾವಾಗಿಯೇ ಹೇಳದಿದ್ದುದು... ಇವೆಲ್ಲವೂ ಅಪ್ಪಯ್ಯನ ದೃಷ್ಟಿಯಲ್ಲಿ ಅಸಭ್ಯತೆ. ಆದ್ದರಿಂದಲೇ ಕಲೆಯನ್ನು ಗೌರವಿಸುತ್ತಿದ್ದರೂ "ಆ" ವ್ಯಕ್ತಿಯೊಡನೆ ಮುಖ ಮುರಿದುಕೊಂಡಿದ್ದರು. ನನ್ನ ಫೊಟೊ ತೆಗೆದ ಮೇಲಂತೂ ಅವರನ್ನು ಸ್ವಲ್ಪ ಹೆಚ್ಚೇ ದೂರವಿಟ್ಟಿದ್ದರು.

ನನ್ನ "ಲೋಕಸಂಚಾರ"ದಿಂದಾಗಿ ಅಪ್ಪಯ್ಯನಿಗೆ ಸಿಟ್ಟು ಬಂದ ಪ್ರಕರಣವಿದು. ಒಟ್ಟಿನಲ್ಲಿ ಅಪ್ಪಯ್ಯನಿಗೆ ಖುಶಿಯಾಗಿರಲಿಲ್ಲ. ಅವರು ಆ ಅಪ್ಪು ಮೇಷ್ಟ್ರಿಗೆ ಧನ್ಯವಾದವನ್ನೂ ಹೇಳಲಿಲ್ಲ. ಆ ಫೊಟೋ ಬಾಬ್ತು ಎಷ್ಟು ಕೊಡಬೇಕೆಂದು ಖಡಕ್ಕಾಗಿ ಕೇಳಿ, ದುಡ್ಡು ಕೊಟ್ಟು ಕಳಿಸಿಬಿಟ್ಟಿದ್ದರು. ಅವರ ಮನೆಗೆ ನಾನು ಹೋಗಬಾರದೆಂದು ಅಂದೇ ಕಟ್ಟುನಿಟ್ಟಾಗಿ ಹೇಳಿದಮೇಲೂ ನಾನು ಮತ್ತೆ ಹೋದದ್ದು ತಿಳಿದಾಗ ಎಂದೂ ನನಗೆ ಹೊಡೆಯದ ಅಪ್ಪಯ್ಯನು ಮುಂದೊಂದು ದಿನ ಕಪಾಳಮೋಕ್ಷ ಮಾಡಿದ್ದರು. ಅದೇಕೋ ಅಪ್ಪಯ್ಯನ ಸಿಟ್ಟಿಗೆ ಮಾತ್ರ ನಾನು ಸ್ವಲ್ಪ ಹೆದರುತ್ತಿದ್ದೆ. ಅಲ್ಲಿಗೆ ನನ್ನ ಚಿತ್ರಾಯಣದ ಅಧ್ಯಾಯವು ಮುಗಿದೇ ಹೋಯಿತು. ತದನಂತರ ಒಂದು ವಾರಕಾಲ ನಮ್ಮ ಮನೆಯೊಳಗೆ ಗಂಭೀರ ವಾತಾವರಣವಿತ್ತು. ಎಲ್ಲರೂ ಪೆಚ್ಚಾಗಿದ್ದು ನೋಡಿ ನಾನೂ ಪ್ಯಾಚ್ ಆಗಿಬಿಟ್ಟಿದ್ದೆ. ಹೀಗಿದ್ದರೂ ಅಪ್ಪಯ್ಯನು ನನ್ನ ಫೊಟೋಗೆ ಕಟ್ಟುಹಾಕಿಸಿ ಇಟ್ಟಿದ್ದರು. ಐವತ್ತೈದು ವರ್ಷಗಳ ಹಿಂದಿನ ಫೊಟೋವಾದರೂ ಅದೇ ಫ್ರೇಮಿನೊಳಗೆ- ಆ ಫೊಟೋ ಈಗಲೂ ಕೂತಿದೆ. ಅದನ್ನು ಕಂಡಾಗಲೆಲ್ಲ...ನನ್ನ ಬೆನ್ನು ಬಿಡದೆ ಕಾಪಾಡಿದ ಅಪ್ಪಯ್ಯ ಅಮ್ಮ ನೆನಪಾಗುತ್ತಾರೆ.


img173

ಆಗ ನನಗೆ ಐದು ವರ್ಷ ಆಗಿರಬಹುದು. ಒಮ್ಮೆ ನನ್ನ ಅಮ್ಮನು ನನಗೆ ಸ್ನಾನಮಾಡಿಸಿ ತಲೆಬಾಚಿ, "ಹೊರಗಿರು...ನಾನು ಬೇಗ ಸ್ನಾನ ಮಾಡಿಕೊಂಡು ಬಂದು ನಿನಗೆ ಅಂಗಿ ಹಾಕುತ್ತೇನೆ. ಹೊರಗೆಲ್ಲೂ ಹೋಗಬೇಡ." ಎಂದು ಹೇಳಿ ನನ್ನನ್ನು ಬಚ್ಚಲಿನಿಂದ ಹೊರಗೆ ಬಿಟ್ಟಿದ್ದಳು. (ಹೋಗಬೇಡ.. ಮಾಡಬೇಡ... ಇಂತಹ ಪದಗಳೆಲ್ಲವೂ ಆಗ ನನಗೆ ವ್ಯತಿರಿಕ್ತವಾಗಿ ವರ್ತಿಸುವಂತೆ ಪ್ರೇರೇಪಿಸುತ್ತಿದ್ದ ಶಬ್ದ ಸಮೂಹಗಳು ! ಅವೆಲ್ಲವೂ "ಹೋಗು... ಮಾಡು... " ಎಂದಂತೆ ನನಗೆ ಕೇಳಿಸುತ್ತಿತ್ತು !) ಹೀಗಿರುವಾಗ ನನ್ನ ಕಿತಾಪತಿ ಬುದ್ಧಿಯು ಸುಮ್ಮನಿದ್ದೀತೇ? ನಾನೇನು ಮಾಡಿದೆ ಗೊತ್ತಾ? ಒಗೆಯಲಿಕ್ಕೆಂದು ಅಪ್ಪಯ್ಯ ಕಳಚಿ ಹಾಕಿಹೋಗಿದ್ದ ಅವರ ಒಳ ಬನಿಯನ್ ಒಂದು ಆಗ ನನ್ನ ಕಣ್ಣಿಗೆ ಬಿತ್ತು. ಅದನ್ನೇ ಕೊಳಸಿಕೊಂಡ ನಾನು ಮನೆಯ ಕಿಟಕಿಯ ತಳಿಯನ್ನು ಹತ್ತಿ ಬಾಗಿಲ ಚಿಲಕವನ್ನು ತೆಗೆದು ಮನೆಯಿಂದ ಹೊರಗೆ ಬಂದೆ. ಆ ಬನಿಯನ್ನಿನ ಕುತ್ತಿಗೆಯ ಭಾಗವು ನನ್ನ ಸೊಂಟದ ವರೆಗೂ ಬರುತ್ತಿತ್ತು. ಸೊಂಟದವರೆಗೂ ಯಾವುದೇ ಮರೆಯಿರಲಿಲ್ಲ. ಸಾಯಿಬಾಬಾರ ನಿಲುವಂಗಿಯಂತೆ ನೆಲವನ್ನು ಒರೆಸುತ್ತಿದ್ದ ಆ ಉದ್ದದ ಬನಿಯನ್ ಹಾಕಿಕೊಂಡು ಸೀದಾ ಅಪ್ಪಯ್ಯನ ಶಾಲೆಗೆ ಹೋದೆ. ಅಪ್ಪಯ್ಯಾ ಅಪ್ಪಯ್ಯಾ ಅಂತ ಕರೆಯುತ್ತ ಶಾಲೆಯ ಜಗಲಿಯ ಮೇಲೆ ಓಡಾಡುತ್ತ ಅಪ್ಪಯ್ಯನನ್ನು ಹುಡುಕತೊಡಗಿದೆ. ಕೊನೆಗೆ ಒಂದು ಕೋಣೆಯಲ್ಲಿ ಅಪ್ಪಯ್ಯ ನಿಂತುಕೊಂಡು ಮಾತಾಡುತ್ತಿದ್ದುದನ್ನು ಕಂಡ ಕೂಡಲೇ ಆ ಕೋಣೆಯ ಕಿಟಕಿಯನ್ನು ಹತ್ತಿ ನಿಂತುಕೊಂಡೆ. ಆಗ ಅಲ್ಲಿ ಕೂತಿದ್ದ ಮಕ್ಕಳೆಲ್ಲರೂ ನನ್ನನ್ನೇ ನೋಡುತ್ತ ಕುಸುಕುಸು ನಗತೊಡಗಿದರು. ಅದೇ ತರಗತಿಯಲ್ಲಿ ನನ್ನ ಹಿರಿಯ ಅಕ್ಕನೂ ವಿದ್ಯಾರ್ಥಿನಿಯಾಗಿದ್ದಳು. ಅವಳನ್ನು ಕಂಡ ನಾನು ಅಕ್ಕಾ ಅಕ್ಕಾ ಅಂತ ಕೂಗಿದೆ. ಆಗ ಕರಿಹಲಗೆಯ ಮೇಲೆ ಏನನ್ನೋ ಬರೆಯುತ್ತಿದ್ದ ಅಪ್ಪಯ್ಯ ಹಿಂದೆ ತಿರುಗಿ ನೋಡಿದರು.

ತಕ್ಷಣ ಹೊರಗೆ ಬಂದ ಅಪ್ಪಯ್ಯ, ನನ್ನ ಕೈಹಿಡಿದುಕೊಂಡು ತರಗತಿಯ ಒಳಗೆ ಕರೆದೊಯ್ದು ಒಂದು ಮೂಲೆಯಲ್ಲಿ ಕೂರಿಸಿದರು. "ಸುಮ್ಮನೆ ಕೂತಿರು. ತಂಟೆ ಮಾಡಬಾರದು." - ಎಂದು ಹೇಳಿ ಪಾಠವನ್ನು ಮುಂದುವರಿಸತೊಡಗಿದರು. ಒಂದು ನಿಮಿಷ ದೇವರ ಮರಿಯಂತೆ ಸುಮ್ಮನೆ ಕೂತಿದ್ದ ನನ್ನನ್ನು ನೋಡಿ, ಆಗ ಒಬ್ಬ ಹುಡುಗ ನಕ್ಕ... ಸನ್ನೆ ಮಾಡಿ ತನ್ನ ಹತ್ತಿರ ಕೂರುವಂತೆ ಕರೆದ. ನೆಲದಿಂದ ಧಡಕ್ಕನೆ ಎದ್ದ ನಾನು ಆತನ ಪಕ್ಕದಲ್ಲಿ ಬೆಂಚಿನ ಮೇಲೆ ಕೂತೆ. ಸ್ವಲ್ಪ ಹೊತ್ತು ಅಲ್ಲೇ ಮಿಸುಕಾಡುತ್ತಿದ್ದು ಮೆಲ್ಲನೆ ಅವನ ಎದುರಿಗಿದ್ದ ಡೆಸ್ಕಿನ ಮೇಲೆ ಕೂತೆ. ಅಪ್ಪಯ್ಯನ ಪಾಠವನ್ನು ಕೇಳುವುದನ್ನು ಮರೆತ ಇಡೀ ತರಗತಿಯ ಮಕ್ಕಳು ನನ್ನನ್ನೇ ನೋಡುತ್ತಿದ್ದರು. ಅಪ್ಪಯ್ಯನಿಗೆ ಕಿರಿಕಿರಿಯಾಗಿರಬಹುದು. ನನ್ನನ್ನು ಎತ್ತಿಕೊಂಡು ಹೋಗಿ ತಮ್ಮ ಕುರ್ಚಿಯ ಮೇಲೆ ಕೂಡಿಸಿ "ಸುಮ್ಮನೆ ಕೂತಿರು" ಎಂದು ಕಣ್ಣಲ್ಲೇ ಗದರಿಸಿ ಪಾಠ ಮುಂದುವರಿಸಿದರು. ಅದಾಗಲೇ ಅಶಿಸ್ತಿನತ್ತ ಹೊರಳುತ್ತಿದ್ದ ತರಗತಿಯನ್ನು ನಿಯಂತ್ರಣಕ್ಕೆ ತರುವ... ಮಕ್ಕಳ ದೄಷ್ಟಿಯನ್ನು ನನ್ನಿಂದ ಕದಲಿಸಿ, ಕರಿಹಲಗೆಯ ಮೇಲೆ ಕೀಲಿಸುವ ಪ್ರಯತ್ನದಲ್ಲಿ ತೊಡಗಿದ್ದ ಅಪ್ಪಯ್ಯನು ತರಗತಿಗೆ ಬೆನ್ನು ಹಾಕಿ ಬೋರ್ಡಿನ ಮೇಲೆ ಏನೋ ಬರೆಯತೊಡಗಿದರು. ಆಗ ಸುಮ್ಮನೆ ಕೂರಲಾಗದ ನನ್ನ ಮರ್ಕಟ ಮನಸ್ಸಿನ ಸೂಚನೆಯಂತೆ - ನಾನು ಕುರ್ಚಿಯಿಂದ ಎದ್ದು, ಎದುರಿಗಿದ್ದ ಮೇಜಿನ ಮೇಲೆ ಕೂತೆ. ಇಡೀ ತರಗತಿಯ ಮಕ್ಕಳು ಗೊಳ್ಳೆಂದು ನಕ್ಕು ಬಿಟ್ಟರು. ನಾನೂ ನಕ್ಕೆ. ನನ್ನ ಅಪ್ಪಯ್ಯನು ಆಗ ಹಿಂದಿರುಗಿ ನೋಡಿದರೆ ನಾನು ಮೇಜಿನ ಮೇಲಿದ್ದೆ. ಅಲ್ಲೇ ಇದ್ದ ನನ್ನ ಹಿರಿಯಕ್ಕನು ನಾಚಿಕೆಯಿಂದಲೋ ಏನೋ.. ತಲೆತಗ್ಗಿಸಿದ್ದಳು. ಆಗ ಗದ್ದಲ ಮಾಡದೆ ಮಕ್ಕಳಿಗೆ ಕೂತಿರಲು ಹೇಳಿದ ಅಪ್ಪಯ್ಯ, ನನ್ನನ್ನು ಹೊತ್ತುಕೊಂಡು ನಾಲ್ಕು ನಿಮಿಷದ ನಡಿಗೆಯಷ್ಟೇ ದೂರದಲ್ಲಿದ್ದ ಮನೆಗೆ ತಂದು ಬಿಟ್ಟು, ನನ್ನನ್ನು ಹೊರಗೆ ಬಿಡದಂತೆ ಅಮ್ಮನಿಗೆ ತಾಕೀತು ಮಾಡಿ ಹೋದರು. ಮಧ್ಯಾಹ್ನದ ಊಟಕ್ಕೆ ಮನೆಗೆ ಬಂದ ಅಪ್ಪಯ್ಯನು, ಮಗಳನ್ನು ಗಮನಿಸಲಾಗದ ವೈಫಲ್ಯಕ್ಕೆ ಅಮ್ಮನ ಮೇಲೆ ಗೂಬೆ ಕೂರಿಸಿದರೆ, ನನ್ನ ಅಕ್ಕನು ಅಲವತ್ತುಕೊಂಡ ಸಮಸ್ಯೆಯೇ ಬೇರೆ. ಸರಿಯಾದ ಬಟ್ಟೆಯನ್ನೂ ಹಾಕಿಕೊಳ್ಳದೆ ಶಾಲೆಗೆ ಬಂದ ಈ ಹೆಣ್ಣು, ಅಷ್ಟು ಮಕ್ಕಳ ಮುಂದೆ ಹತ್ತಿ ಹಾರುತ್ತ ಎಲ್ಲರೂ ನಗೆಯಾಡುವ ಹಾಗೆ ಮಾಡಿತಲ್ಲಾ? ಇನ್ನು ನನಗೆ ಈ ಶಾಲೆಗೆ ಹೋಗಲಿಕ್ಕೇ ನಾಚಿಕೆಯಾಗ್ತದೆ" ಅಂತ ಹೇಳುತ್ತ ಅಕ್ಕನು ಅತ್ತೇ ಬಿಟ್ಟಳು. ಆಮೇಲೆ ಅವಳನ್ನು ಸಮಾಧಾನಪಡಿಸಿದ್ದು ಅಮ್ಮನೇ. ಮಧ್ಯಾಹ್ನದ ಊಟದ ಅನಂತರ ಅಪ್ಪಯ್ಯನು ಮತ್ತೆ ಶಾಲೆಗೆ ಹೊರಟಾಗ ನಾನು ಮತ್ತೆ ಅವರ ಕಾಲಿಗೆ ಸುತ್ತು ಬರತೊಡಗಿದ್ದೆ. ಆಗ ನನ್ನನ್ನು ಎತ್ತಿಕೊಂಡ ಅವರು "ನೋಡು ಮರೀ, ಬರುವ ವರ್ಷದಿಂದ ನೀನೂ ಶಾಲೆಗೆ ಹೋಗಬಹುದು. ಇನ್ನು ಮುಂದೆ ದೊಡ್ಡ ಮಕ್ಕಳ ಶಾಲೆಗೆ ನೀನೊಬ್ಬಳೇ ಹಾಗೆಲ್ಲ ಬರಬಾರದು." ಎಂದು ಹೇಳಿ ಮುದ್ದಿಸಿ ಹೊರಟುಹೋಗಿದ್ದರು. ಆದರೆ ಮನೆಯ ಬಾಗಿಲಿನ ಚಿಲಕವನ್ನು ನನಗೆಟುಕದಷ್ಟು ಎತ್ತರದಲ್ಲಿ ಹೊಂದಿಸುವ ಕೆಲಸವೂ ಶೀಘ್ರದಲ್ಲಿ ನಡೆದುಹೋಯಿತು.

ಹೊಸ ವ್ಯವಸ್ಥೆಯ ನಂತರ... ಈಗ ನಾನು ಮನೆಯಲ್ಲೇ ಇರಬೇಕಾಗುತ್ತಿತ್ತು. ತನ್ನನ್ನು ಬಿಟ್ಟು ಆಚೀಚೆ ಕದಲದಂತೆ ಅಮ್ಮನು ನನ್ನನ್ನು ಕಾಯತೊಡಗಿದ್ದಳು. ಅಂತಹ ಒಂದು ದಿನ.. ಅಮ್ಮನು ಮನೆಯ ಹಿಂದಿದ್ದ ಬಾವೀಕಟ್ಟೆಯ ಹತ್ತಿರದಲ್ಲಿ ಬಟ್ಟೆ ಒಗೆಯುತ್ತ ಇದ್ದಳು. ನಾನೂ ಅಲ್ಲೇ ಸುತ್ತಾಡುತ್ತಿದ್ದೆ. ಆ ಬಾವೀಕಟ್ಟೆಯ ಹತ್ತಿರ ಒಂದಷ್ಟು ಮರಸಣಿಗೆಯ ಸಸಿಗಳು ಬೆಳೆದುಕೊಂಡಿದ್ದವು. ದೊಡ್ಡ ದೊಡ್ಡ ಎಲೆಗಳು ಹುಲುಸಾಗಿಯೇ ಬೆಳೆದಿದ್ದವು. ಅದನ್ನು ಕಂಡ ನನಗೆ ಏನೋ Flash Back ಮಿಂಚಿಹೋಯಿತು. ನನ್ನ ಅಜ್ಜನ ಮನೆಗೆ ಹೋದಾಗ, ಅಜ್ಜನು ಎಲೆ ಅಡಿಕೆ ತಿನ್ನುವುದನ್ನು ನಾನು ಕಂಡಿದ್ದೆ. ಮೊದಲು ಒಂದು ಅಡಕೆಯ ಹೋಳನ್ನು ಬಾಯಿಗೆ ಎಸೆದುಕೊಂಡು, ಆಮೇಲೆ ಎಲೆಯನ್ನು ಅಂಗೈ ಮೇಲೆ ಇಟ್ಟುಕೊಂಡು ಆ ಎಲೆಯ ಹಿಂದು ಮುಂದನ್ನು ಒರೆಸಿ, ಅದರ ಬೆನ್ನಿನ ನರಗಳನ್ನೆಲ್ಲ ಕಿತ್ತು, ಅದಕ್ಕೆ ಮೃದುವಾಗಿ ಸುಣ್ಣ ಸವರಿ, ಶಿಸ್ತಿನಿಂದ ಅದನ್ನು ಮಡಚಿ, ಅಜ್ಜನು ದವಡೆಗೆ ಸೇರಿಸಿಕೊಳ್ಳುವುದನ್ನು ಕಂಡಿದ್ದ ನನಗೆ, ಮರಸಣಿಗೆಯ ಎಲೆಯನ್ನು ನೋಡಿದಾಗ, ನಾನೂ ಹಾಗೇ ಠೀವಿಯಿಂದ ತಿನ್ನಬೇಕೆನಿಸಿತು. ಕೂಡಲೇ ಒಂದು ಎಲೆಯನ್ನು ಹರಿದು ಮಡಚಿ ಬಾಯಿಗೆ ತುರುಕಿಕೊಂಡು ಚೆನ್ನಾಗಿ ಜಗಿದುಬಿಟ್ಟೆ.

ತಗೊಳ್ಳಿ..ಶುರುವಾಯಿತಲ್ಲ... ತುರಿಕೆ, ನೋವು, ಅಸಾಧ್ಯ ಪೀಡೆ... ಮಂದ್ರದಿಂದ ಶುರುವಾಗಿ ವಿಳಂಬವಿಲ್ಲದೆ ತಾರಸ್ಥಾಯಿಗೆ ತಲುಪಿತ್ತು ನನ್ನ ಆಲಾಪ. ಜೋರಾಗಿ ಅಳತೊಡಗಿದೆ. ಬಟ್ಟೆ ಒಗೆಯುತ್ತಿದ್ದ ಅಮ್ಮನು ಗಾಬರಿಯಿಂದ ಓಡೋಡಿ ಬಂದಿದ್ದಳು. ಹಾವು ಕಚ್ಚಿ ಒಬ್ಬ ಮಗನನ್ನು ಕಳೆದುಕೊಂಡ ಅಮ್ಮನಿಗೆ ಅದೇ ದುಃಸ್ವಪ್ನ ಕಾಡುತ್ತಿತ್ತೋ ಏನೋ... ಓಡಿ ಬಂದವಳೇ ಸುತ್ತುಮುತ್ತಿನ ನೆಲದ ಮೇಲೆಲ್ಲ ಹುಡುಕಾಡುತ್ತಿದ್ದಳು. ಆಮೇಲೆ ನನ್ನನ್ನು ಎತ್ತಿಕೊಂಡು ಕೈಕಾಲನ್ನು ಪರೀಕ್ಷಿಸಿದ್ದಳು. ಕೊನೆಗೆ ಮುಖ ನೋಡುತ್ತಾಳೆ... ಬಾಯಿಯ ಸುತ್ತಲೂ ಬೀಗಿದ ಹಾಗಾಗಿತ್ತು. "ಏನು ತಿಂದೆ ಮಗಳೇ" ಎಂದಾಗ ನಾನು ಬಾಯಿ ತೆರೆದು ತೋರು ಬೆರಳಿನಿಂದ ನನ್ನ ಬಾಯನ್ನೂ ಆ ಮರಸಣಿಗೆಯ (ಮರ ಕೆಸು?) ಗಿಡವನ್ನೂ ತೋರಿಸಿದ್ದೆ. ಆಗಲೇ ಅಮ್ಮನಿಗೆ ವಿಷಯ ಅರ್ಥವಾಯಿತು. ಆಮೇಲೆ ಏನೇನೋ ಮನೆಮದ್ದು ಮಾಡಿದಳು. ಹುಣಿಸೆ ನೀರಲ್ಲಿ ಬಾಯಿ ಮುಕ್ಕಳಿಸುವಂತೆ ಹೇಳಿದಳು. ಹುಳಿ ಮಜ್ಜಿಗೆ ಕುಡಿಸಿದಳು. ಆದರೂ ಆ ದಿನವಿಡೀ ಊಟ ತಿಂಡಿ ಬಿಡಿ, ನೀರು ಕುಡಿಯುವುದೂ ಕಠಿಣವಾಗಿತ್ತು. ಅಪ್ಪಯ್ಯ ಅಮ್ಮ ಇಬ್ಬರೂ ಸಂಕಟಪಟ್ಟರು. "ಈ ಹೆಣ್ಣನ್ನ ಹೇಗಪ್ಪಾ ನಿಭಾಯಿಸುವುದು?" ಎಂದು ಹೇಳಿಕೊಳ್ಳುತ್ತಾ ಒದ್ದಾಡಿಬಿಟ್ಟರು. ಒಟ್ಟಿನಲ್ಲಿ ನನ್ನ ಬಾಲ್ಯದಲ್ಲಿ ನನ್ನಿಂದಾಗಿ ಮನೆಯಲ್ಲಿ "ಆಹಾ-ಕಾರ ಕಡಿಮೆ; ಹಾಹಾಕಾರವೇ ಜಾಸ್ತಿ" ಎಂಬಂತಾಗಿತ್ತು. ಏಕಾಂಗಿಯಾಗಿ ದಿನಕ್ಕೊಂದು ಸಾಹಸ ಪ್ರದರ್ಶಿಸುತ್ತಿದ್ದ ನನ್ನನ್ನು ಹಿರಿಯರೆಲ್ಲರೂ ಕ್ಷಣಬಿಡದೆ ಆತಂಕದಿಂದಲೇ ಕಾಯುವಂತಾಗಿತ್ತು.

ಈ ಯಾವ ಬಾಹ್ಯ ಕೋಲಾಹಲಗಳೂ ನನ್ನನ್ನು ಬಾಧಿಸಲಿಲ್ಲ. ಯಾಕೆಂದರೆ ಒಂದು ತಡೆ ಎದುರಾದರೆ ಆ ತಡೆಗೋಡೆಯನ್ನು ಹಾರಿಕೊಂಡಾದರೂ ಪ್ರತಿಬಂಧಿಸಿದ ಕೆಲಸವನ್ನು ಮಾಡಲೇಬೇಕೆಂಬ "ಚಂಡಿ"ಯ ಬುದ್ಧಿ ನನ್ನದಾಗಿರಲಿಲ್ಲ. ಅದಕ್ಕೆ ಬದಲಾಗಿ, ನಿಷೇಧಿತ ವಲಯಕ್ಕೆ ಬೆನ್ನು ತಿರುಗಿಸಿ, ಇನ್ನೊಂದು ಸಾಧ್ಯತೆಯನ್ನು ಹುಡುಕುವ ಬುದ್ಧಿ ನನ್ನದು. ಜಗತ್ತಿನಲ್ಲಿ ಅವಕಾಶಗಳಿಗೇನು ಕಡಿಮೆಯೆ ? ಮುಂದಿನ ದಿನಗಳಲ್ಲಿ ಮನೆಯೊಳಗೇ "ಹೊಸ ಹೊಸ ಕಿತಾಪತಿ" ಮಾಡುತ್ತ ಅಮ್ಮನಿಂದ "ಗುಡುಂ ಗುಡುಂ" ಗುದ್ದಿಸಿಕೊಂಡದ್ದು ಎಷ್ಟೋ ಬಾರಿ. ನನ್ನ ಅರುಣಕ್ಕನಂತೂ ಚಿಕ್ಕಂದಿನಲ್ಲಿ... ನಾನಿರುವ ಜಾಗದಲ್ಲೇ ಇರುತ್ತಿರಲಿಲ್ಲ. ಸದಾಕಾಲವೂ "ಹೊಡಿ ಬಡಿ ಹತ್ತು ಹಾರು ಕುಣಿ" ಜಾಯಮಾನದ ನನ್ನಿಂದ ತಪ್ಪಿಸಿಕೊಂಡು ಓಡಬಹುದಾದಷ್ಟು ಅಂತರವನ್ನು ಅವಳು ಯಾವಾಗಲೂ ಕಾಯ್ದುಕೊಂಡಿರುತ್ತಿದ್ದಳು. ದೈಹಿಕವಾಗಿಯೂ ಬದುಕಲು ಬೇಕಾದಷ್ಟೇ ಶಕ್ತಿ ಹೊಂದಿದ್ದ ಅವಳು ತನ್ನ ಜಾಗ್ರತೆಯನ್ನು ತಾನೇ ಮಾಡಿಕೊಳ್ಳುತ್ತಿದ್ದಳು. ನನ್ನ ಅಟಾಟೋಪವು ಜಾಸ್ತಿಯಾದಾಗ, ಓಡಿ ಹೋಗಿ ಅಮ್ಮನಿಗೆ ವರದಿ ಒಪ್ಪಿಸುತ್ತಿದ್ದುದೂ ಇತ್ತು.

ಇಂತಹ ನನ್ನನ್ನೂ ಒಳಗೊಂಡ ನಾಲ್ಕು ಮಕ್ಕಳ ದೊಡ್ಡ ಕುಟುಂಬವನ್ನು ತೂಗಿಸುವುದರಲ್ಲಿ ಹಣ್ಣುಗಾಯಿ ನೀರುಗಾಯಿಯಾಗುತ್ತಿದ್ದ ಅಮ್ಮನು ಆ ದಿನಗಳಲ್ಲಿ ಮನೆಯ ಗಡಿಯಾರದ ಜತೆಗೇ ಓಡುತ್ತಿದ್ದಳು. ಪ್ರತೀ ಕ್ಷಣವೂ ಅಮ್ಮನ ತಾಳ್ಮೆಯ ಪರೀಕ್ಷೆ ನಡೆಯುತ್ತಿತ್ತು. ಮಕ್ಕಳ ಶಬ್ದವೇ ಕೇಳಿಸದಿದ್ದರೆ ಅವಳು ಅದಕ್ಕೂ ಆತಂಕಪಡುತ್ತಿದ್ದಳು. "ಏನೋ ಬೇಡವಾದ ಕೆಲಸ ಮಾಡುತ್ತಿರಬೇಕು. ಅದಕ್ಕೇ ಸದ್ದಿಲ್ಲದೆ ಕೂತಿವೆ" ಅಂದುಕೊಂಡು ಹೆಸರು ಹಿಡಿದು ಕೂಗಿ ಕರೆಯುತ್ತ ಓಡಿ ಬರುತ್ತಿದ್ದಳು. ಅಂತೂ... ಅದು ಎಂಥ ಎಚ್ಚರದ ಸ್ಥಿತಿ ಅಂದರೆ - "ಮೈಯೆಲ್ಲ ಕಣ್ಣಾಗಿರುವುದು" ಅಂದಾಗ ಅಂದಿನ ನನ್ನ ಅಮ್ಮನೇ ನೆನಪಾಗುತ್ತಾಳೆ. ಇಷ್ಟೆಲ್ಲ ಗೋಟಾಳಿಗಳಿದ್ದರೂ ರಾತ್ರಿ ಮಲಗುವಾಗ, ಅಪ್ಪಯ್ಯ ಮತ್ತು ಅಮ್ಮನು ನಮ್ಮೆಲ್ಲರನ್ನು ಕೈಯಿಂದ ಸವರುತ್ತ, "ಆಡಿ ಓಡಿ ಕಾಲೆಲ್ಲ ನೋವಾಯ್ತಾ ಮಗೀಗೆ?" ಎನ್ನುತ್ತ ಮಕ್ಕಳ ಕೈಕಾಲು ಸವರುತ್ತ ನಿದ್ದೆ ಬರುವ ವರೆಗೂ ಚೆಂದ ಚೆಂದದ ಕತೆಗಳನ್ನು ಹೇಳುತ್ತ ನಮ್ಮನ್ನು ಪ್ರೀತಿಯಲ್ಲಿ ಮುಳುಗಿಸಿ ಮಲಗಿಸುತ್ತಿದ್ದರು. ಅಂದಿನ ನಮ್ಮ ಪ್ರತೀ ಬೆಳಗಿಗೂ ಒಂದು ಸುಖ ಸ್ಪರ್ಶ; ಪ್ರತೀ ದಿನಕ್ಕೂ ಒಂದು ಸುಖಾಂತ್ಯ. ಪ್ರೀತಿಯಿಂದಲೇ ಬದುಕನ್ನು ಕಟ್ಟುತ್ತಿದ್ದ ಜೀವಂತಿಕೆಯ ಸಾದೃಶ್ಯ! ಪುಟ್ಟ ಮಕ್ಕಳನ್ನು ಜೋಗುಳ ಹಾಡಿಯೇ ಅಮ್ಮನು ಮಲಗಿಸುತ್ತಿದ್ದರೆ, ಅಪ್ಪಯ್ಯನು ಗೋಡೆಗೊರಗಿಕೊಂಡು ಕೂತು, ಅಮ್ಮನ ರಾಗಕ್ಕೆ ತಲೆದೂಗುತ್ತ ಹಾಡಿನ ಅರ್ಥವನ್ನು ಅನುಭವಿಸುತ್ತಿದ್ದರು. ಒಮ್ಮೊಮ್ಮೆ, ಅಮ್ಮ ಹಾಡಿದ ಹಾಡಿನ ಹಿನ್ನೆಲೆ ಮುನ್ನೆಲೆಯನ್ನು ಅಮ್ಮನಿಗೆ ತಿಳಿಸಿ ಹೇಳುತ್ತಿದ್ದರು. ಕಾಲಿಗೆ ಚಕ್ರವನ್ನು ಕಟ್ಟಿಕೊಂಡಂತೆ, ಕರ್ತವ್ಯವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುವುದರಲ್ಲೇ ಅಂದು ಮಗ್ನಳಾಗಿದ್ದ "ನಮ್ಮ ಅಮ್ಮ"ನ ಮಕ್ಕಳು ದೊಡ್ಡವರಾಗುತ್ತ ಬಂದಂತೆ, ಅವಳ ಬದುಕಿನ ಓಟದ ವೇಗವು ತಗ್ಗಿ, ಅವಳಿಗೂ "ವಿರಾಮದ ಹಗಲಿನ" ದರ್ಶನವಾಗುವಾಗ, ನಾವೆಲ್ಲ ಉದ್ಯೋಗಕ್ಕೂ ಸೇರಿಯಾಗಿತ್ತು. ಬಹುಶಃ ನನಗೆ ನನ್ನ ಅಮ್ಮನ ಕಷ್ಟ ಸುಖ ಅರ್ಥ ಮಾಡಿಕೊಳ್ಳಲು - ನಾನು ಸ್ವತಃ "ಅಮ್ಮ"ನಾಗುವ ತನಕದ ಸುದೀರ್ಘ ಸಮಯ ಹಿಡಿಯಿತು. ಅದುವರೆಗೆ ನಾನು ಹಿಂದಿರುಗಿ ನೋಡಿರಲೇ ಇಲ್ಲ. ಅದಕ್ಕೇ ಇಂದು ..."ಅಪ್ಪಯ್ಯ ಅಮ್ಮ"- ಅಂದಿಗಿಂತ ಹೆಚ್ಚು ಅರ್ಥವಾಗುತ್ತ ಆಪ್ತರಾಗುತ್ತಿದ್ದಾರೆ.

ಶಾಲೆಗೆ ಸೇರಿಸುವ ಮೊದಲು ಬೇಡಬೇಡವೆಂದರೂ, ನನ್ನದಲ್ಲದ ಶಾಲೆಗೆ ಹೋಗಿ ಎಲ್ಲರಿಗೂ ಕಿರಿಕಿರಿ ಮಾಡಿದ್ದ ನನ್ನನ್ನು ಮರು ವರ್ಷ... ನನಗೆ ಆರು ವರ್ಷ ತುಂಬುವ ಮೊದಲೇ ಶಾಲೆಗೆ ಸೇರಿಸಿದರು. ನಾನು ಕೋಟೇಶ್ವರದ ಸರಕಾರಿ ಪ್ರಾಥಮಿಕ ಶಾಲೆಯ ಒಂದನೆಯ ತರಗತಿಗೆ ಸೇರ್ಪಡೆಗೊಂಡೆ. "ಇನ್ನು ತಾಪತ್ರಯವಿಲ್ಲ" ಅಂದುಕೊಡಿದ್ದ ಅಪ್ಪಯ್ಯ ಮತ್ತು ಅಮ್ಮನಿಗೆ ಅಂದಿನಿಂದ ಇನ್ನೊಂದು ಕಷ್ಟ ಶುರುವಾಗಿತ್ತು.... ನನಗೆ ಆ - "ನನ್ನ" ಎಂದು ಹೇಳಿದ ತರಗತಿಗೆ ಹೋಗಲು ಮನಸ್ಸಿರಲಿಲ್ಲ. ಶಾಲೆಗೆ ಹೋಗಲು ನಿತ್ಯವೂ ಗೋಳಾಟ. ಅಲ್ಲಿನ ಮಕ್ಕಳು ನನ್ನ "ಗೆಳೆಯರು" ಎಂದು ನನಗೆ ಯಾವತ್ತೂ ಅನ್ನಿಸಲೇ ಇಲ್ಲ. (ಒಣ ಪೊಗರು???) ತರಗತಿಯಲ್ಲಿ ಎಲ್ಲರೂ ಪಾಠ ಕೇಳುತ್ತಿದ್ದರೆ ನಾನು ಇನ್ನೇನೋ ಮಾಡುತ್ತಿರುತ್ತಿದ್ದೆ. ಎಲ್ಲರೂ ಆಟವಾಡುತ್ತಿದ್ದರೆ ನಾನು ದೂರ ನಿಂತು ಸುಮ್ಮನೆ ನೋಡುತ್ತಿದ್ದೆ. ಯಾರ್ಯಾರೋ ನಡೆಸುತ್ತಿದ್ದ "ಸಂತೆಯೊಳಗಿನ ಒಣ ಶಿಸ್ತು ಶಿಷ್ಟಾಚಾರ"ದ ಗೋಜಲಿನಂತೆ ನನಗೆ ಆ ಶಾಲೆಯು ಭಾಸವಾಗುತ್ತಿತ್ತು. ಒಟ್ಟಿನಲ್ಲಿ ನನಗೆ ಹಿತವಿಲ್ಲ. ಬೆಕ್ಕಿನ ಬಿಡಾರ ಬೇರೆ. ಇರುವುದೆಲ್ಲವ ಬಿಟ್ಟು ಇರದುದರೆಡೆಗೇ ತುಡಿತ...

ಪ್ರತೀದಿನವೂ ಅದೇ - ಅ ಆ ಇ ಈ, ಅದೇ ೧ ೨ ೩ ೪,  ಅದೇ ಕಮಲ - ಅದೇ ಬಸವ.... ಒಂದೇ ವಾರದಲ್ಲಿ ನನಗೆ ಆ ಶಾಲೆಯು ಬೇಸರ ತರಿಸಿತ್ತು. ಆದರೆ ಬೆಳಗಾದ ಕೂಡಲೇ ನನ್ನನ್ನು ತೊಳೆದು ಸಿಂಗರಿಸಿ ಶಾಲೆಗೆ ತಳ್ಳುವ ಕೆಲಸವನ್ನು ಅಪ್ಪಯ್ಯ ಅಮ್ಮ ಸೇರಿಕೊಂಡು ನಿಷ್ಠೆಯಿಂದ ಮಾಡುತ್ತಿದ್ದರು. ಈ ಅಂಕೆಯ ಬದುಕಿನ ಜಿಡುಕಿನಲ್ಲಿ ನನ್ನ ನಗು - ಮಜಾ ಎಲ್ಲವೂ ಹಾರಿ  ಹೋಗಿತ್ತು. ಬೆಳಗಾಯಿತೆಂದರೆ ಆಕಾಶವೇ ತಲೆಯ ಮೇಲೆ ಬಿದ್ದಂತಹ ಚಿಂತೆ. ಶಾಲೆಗೆ ಹೋಗುವುದೇ ದೊಡ್ಡ ಶಿಕ್ಷೆ. ಆದರೂ ತಲೆತಗ್ಗಿಸಿಕೊಂಡು ಶಾಲೆಗೆ ಹೋಗುತ್ತಿದ್ದೆ. ಚಟಾಕಿನಂತಿದ್ದ ನನ್ನನ್ನು ಸುಶೀಲ ಟೀಚರ್ರು ಎದುರಿನ ಬೆಂಚಿನಲ್ಲಿಯೇ ಕೂಡಿಸಿದರೆ, ಮತ್ತೆರಡು ನಿಮಿಷದಲ್ಲಿ ನಾನು ಹಿಂದಿನ ಸಾಲಿನಲ್ಲಿ ಸೇರಿಕೊಳ್ಳುತ್ತಿದ್ದೆ. ಟೀಚರ್ ಹೇಳಿದಂತೆ ಮಾಡದೆ ಇರುವುದನ್ನು, ಒರಟುತನವನ್ನೂ ಉದ್ದೇಶಿತವಾಗಿ ಆವಾಹನೆ ಮಾಡಿಕೊಂಡಿದ್ದೆ. ಆ ಟೀಚರ್ರು ಎಷ್ಟು ಮುದ್ದಿಸಿದರೂ ನಾನು ಪ್ರತಿಸ್ಪಂದಿಸುತ್ತಿರಲಿಲ್ಲ. ಬೇಕೆಂದೇ ಆ ಟೀಚರಿಗೆ ಸಿಟ್ಟು ಬರುವ ಕೆಲಸ ಮಾಡುತ್ತಿದ್ದೆ. ನನ್ನನ್ನು ಬಿಟ್ಟು ಇನ್ನ್ಯಾರನ್ನೂ ಅವರು ಗಮನಿಸದಷ್ಟು ನನ್ನ ಟೀಚರಿಗೆ ಕೆಲಸ ಕೊಟ್ಟೆ. ಕೆಲವೊಮ್ಮೆ ಈ ಕಿರಿಕಿರಿಯನ್ನು ಗಮನಿಸುತ್ತಿದ್ದ ಪಕ್ಕದ ತರಗತಿಯ ಮಚಾದೊ ಟೀಚರ್, ನನ್ನನ್ನು ಕರೆದುಕೊಂಡು ಹೋಗಿ ತಮ್ಮ ಹತ್ತಿರ ಕೂಡಿಸಿಕೊಳ್ಳುತ್ತಿದ್ದರು. (ಉದ್ದದ ಒಂದು ಕೋಣೆಯಲ್ಲಿ ಅಂದು - ಮೂರು ತರಗತಿಗಳು ನಡೆಯುತ್ತಿದ್ದವು. ಮಧ್ಯದಲ್ಲಿ ಮರೆಯಿರಲಿಲ್ಲ. ಒಂದು ತರಗತಿಯ ಎಲ್ಲ ಚಟುವಟಿಕೆಗಳೂ ಇನ್ನೊಂದು ತರಗತಿಗೆ ಕಾಣಿಸುತ್ತಿತ್ತು.)

ಎರಡನೆಯ ತರಗತಿಯ ಶಿಕ್ಷಕರಾಗಿದ್ದ ಮಚಾದೊ ಟೀಚರ್ ಬಂದು ತಮ್ಮ ಜೊತೆಯಲ್ಲಿ ನನ್ನನ್ನು ಕರೆದುಕೊಂಡು ಹೋದರೆ ಅಲ್ಲಿ ಜಾಣಮರಿಯಂತೆ ನಾನು ಕೂತಿರುತ್ತಿದ್ದೆ. ನನ್ನ ಸುಶೀಲ ಟೀಚರಿಗೆ ಆಗ ಸಿಟ್ಟೂ ಬರುತ್ತಿತ್ತು. ಈ ತರಲೆಗಳಿಂದ ಬೇಸತ್ತು ಹೋದ ಸುಶೀಲ ಟೀಚರು, ಒಂದು ದಿನ ನನ್ನ ಅಪ್ಪಯ್ಯನನ್ನು ಕರೆಸಿ ನನ್ನನ್ನು ದೂರಿದ ಮೇಲೆ - ನನ್ನ ವೈಖರಿಯೇ ಬದಲಾಯಿತು. ಅಂದಿನಿಂದ ತರಗತಿಯ ಒಳಗೆ ಟೀಚರ್ ಪ್ರವೇಶಿಸಿದ ಕೂಡಲೇ ನಾನು ತರಗತಿಯಿಂದ ಹೊರಗೆ ಬರುತ್ತಿದ್ದೆ. ಅಲ್ಲೇ ಹೊರಗಿನ ಜಗಲಿಯಲ್ಲೇ ಕೂತುಕೊಂಡು ಬುಗುರಿ ಬೀಜಗಳನ್ನು (ಮಕ್ಕಳು ಬುಗುರಿ ಹಣ್ಣನ್ನು ತಿಂದು ಅದರ ಬೀಜವನ್ನು ಜಗಲಿಯಲ್ಲೆಲ್ಲ ಬಿಸಾಡುತ್ತಿದ್ದರು) ಕಲ್ಲಿನಿಂದ ಗುದ್ದಿ ಒಡೆಯುತ್ತ ಅದರೊಳಗಿನ ತಿರುಳನ್ನು ತಿನ್ನುತ್ತ ಕಾಲ ಕಳೆಯತೊಡಗಿದೆ. ಬೀಜ ಒಡೆಯುವ ನನ್ನ ಲಯಬದ್ಧವಾದ ಕೊಟಕೊಟ ಶಬ್ದ ಮತ್ತು ವರ್ತನೆಯನ್ನು ಅಂದು ಎಲ್ಲರೂ ಹೇಗೆ ಸಹಿಸಿಕೊಂಡರೋ ದೇವರೇ ಬಲ್ಲ. ಪಾಠ ಮಾಡುವಾಗಲೂ ನಿಶ್ಶಬ್ದವಾಗದ ಬೀಜ ಗುದ್ದುವ ಗಲಾಟೆ ಶಾಲೆಯದು. "ಏನಾದರೂ ಮಾಡಿಕೊಳ್ಳಲಿ" ಎಂದುಕೊಂಡೋ ಏನೋ ಆ ಸುಶೀಲಾ ಟೀಚರ್ರು, ಅಂದಿನಿಂದ ನನ್ನ ಸುದ್ದಿಗೆ ಬರುವುದನ್ನೇ ಬಿಟ್ಟುಬಿಟ್ಟರು. ಮಾತ್ರವಲ್ಲ...ನನ್ನನ್ನು ಪಾಸ್ ಮಾಡಿ ಎರಡನೆಯ ಕ್ಲಾಸಿಗೆ ತಳ್ಳಿ ನಿಟ್ಟುಸಿರು ಬಿಟ್ಟರು.

ಒಟ್ಟಾರೆಯಾಗಿ ಅಂದು ನನಗಂತೂ ಆ ತರಗತಿಗಳ ವಾತಾವರಣವೇ ಹಿಡಿಸಿರಲಿಲ್ಲ. ಒಂದು ತರಹದ ಮಾನಸಿಕ Allergy. ಅರ್ಥವಾದ ಮೇಲೂ ಮತ್ತೆ ಮತ್ತೆ ಅದದನ್ನೇ ಹೇಳಿಸುವುದು, ಬರೆಸುವುದು... ಒಂದು ಕತೆಯಿಲ್ಲ ಖುಶಿಯಿಲ್ಲ, ಪ್ರೀತಿಯ ಪಸೆಯಿಲ್ಲದ ಶಿಸ್ತು - ಶಿಷ್ಟಾಚಾರದಿಂದಾಗಿ ಇಡೀ ಶಾಲಾ ಕಟ್ಟಡದ ಹೊಟ್ಟೆ ಉಬ್ಬರಿಸಿದಂತೆ ನನಗೆ ಕಾಣುತ್ತಿತ್ತು. ಶಾಲೆಗಳು ಇರಬೇಕಾದುದೇ ಹಾಗೆ - ಎಂಬುದು ನನಗೆ ಅರ್ಥವಾಗಿರಲಿಲ್ಲ. ಆದರೆ ಈಗ ಯೋಚಿಸಿದರೆ... ಆ ಸುಶೀಲ ಟೀಚರ್ ಒಳ್ಳೆಯವರೇ ಇದ್ದರು. ಒಂದು ದಿನವೂ ಅವರು ನನಗೆ ದೈಹಿಕ ಶಿಕ್ಷೆ ಕೊಟ್ಟವರಲ್ಲ. ತುಂಬ ಶಿಸ್ತಿನವರಾಗಿದ್ದರು ಅಷ್ಟೆ. ಬಹುಶಃ ಅವರ ಇದೇ ಗುಣವನ್ನೇ ನಾನು ಇಷ್ಟಪಟ್ಟಿರಲಿಕ್ಕಿಲ್ಲ ಅಂತ ಈಗ ಅನ್ನಿಸುತ್ತದೆ. ಒಂದು ವ್ಯವಸ್ಥೆಯ ವಿಚಿತ್ರ ಕಟ್ಟುಪಾಡುಗಳಿಗೆಲ್ಲ ಪೂರ್ತಿ ಶರಣಾಗಿ ಕಟ್ಟಿಹಾಕಿಸಿಕೊಳ್ಳಲು ಒಪ್ಪದ ಮನಃಸ್ಥಿತಿ ಅದು! (ಇಂತಹ ನಾನು.. ಕಪಟ ಶಿಸ್ತಿನ ಸರಕಾರದ ಸೇವೆಯಲ್ಲಿ ಮುವ್ವತ್ತೆಂಟು ವರ್ಷಗಳನ್ನು ಕಳೆದೇ ಬಿಟ್ಟೆನಲ್ಲಾ? ಅಥವ ಅಷ್ಟು ವರ್ಷಗಳನ್ನು ಕಳೆದುಕೊಂಡೆನೇ? ಉತ್ತರ ಹುಡುಕುತ್ತಿದ್ದೇನೆ..)

ಅಂತೂ ನನ್ನ ಅಂದಿನ ಶಾಲೆಯ ದಿನಗಳು ತ್ರಿಶಂಕುವಿನಂತೆ... ಎಡಬಿಡಂಗಿಯಂತಾಗಿ, ನೀರಸವಾಗಿ ಸಾಗುತ್ತಿದ್ದವು. ನನ್ನ ಶಾಲೆಯ ಅಧಿಕಪ್ರಸಂಗಗಳಿಂದ ಅಮ್ಮನಿಗೆ ಸಿಟ್ಟು ಬಂದು ಆಗಾಗ ಗುದ್ದುತ್ತಿದ್ದಳು. ಶಿಸ್ತಿಗೆ ವಿಶೇಷ ಪ್ರಾಶಸ್ತ್ಯ ಕೊಡುತ್ತಿದ್ದ ಅಮ್ಮನು, ನನ್ನನ್ನು ಗುದ್ದಿ ಗುದ್ದಿ ತಿದ್ದಲು ಹೆಣಗಾಡುತ್ತಿದ್ದಳು. ಆದರೆ ಶುದ್ಧ ಪ್ರೀತಿಯ ಹೃದಯದ ಭಾಷೆಯನ್ನು ಮಾತ್ರ ಮೆಚ್ಚುತ್ತಿದ್ದ ಅಪ್ಪಯ್ಯನು ಅಮ್ಮನಿಂದ ನನ್ನನ್ನು ರಕ್ಷಿಸುತ್ತ - "ಎಲ್ಲ ರೋಗಗಳಿಗೂ ಒಂದೇ ಔಷಧ ತಾಗುವುದಿಲ್ಲ" ಎನ್ನುತ್ತಿದ್ದರು. "ಜುಲುಮೆಯಿಂದ ಇವಳನ್ನು ಸರಿದಾರಿಗೆ ತರಲು ಆಗುವುದಿಲ್ಲ; ಒಲುಮೆಯಿಂದಲೇ ತರಬೇಕು. ನೀನು ಶಾಂತಳಾಗು." ಎಂದು ಅಪ್ಪಯ್ಯನು ಅಮ್ಮನಿಗೆ ಸಮಾಧಾನ ಮಾಡುತ್ತಿದ್ದರು. ಆದರೆ ತನ್ನ ದೈನಂದಿನ ಕೆಲಸಗಳಿಂದ ಬಳಲಿರುತ್ತಿದ್ದ ಅಮ್ಮನ ತಾಳ್ಮೆಯ ಪರೀಕ್ಷೆಯನ್ನು ದಿನವೂ ನಡೆಸುತ್ತಿದ್ದ ನನ್ನನ್ನು ಅಪ್ಪಯ್ಯನಷ್ಟು ಬಿಡುವಾಗಿ ಸುಧಾರಿಸಲು ಅವಳಿಗಾಗುತ್ತಿರಲಿಲ್ಲ. ಮಕ್ಕಳನ್ನು ಪ್ರೀತಿಸಲು ಅಮ್ಮನಿಗೆ ಅವಕಾಶ ಸಿಗುತ್ತಿದ್ದದ್ದು ರಾತ್ರಿ ಮಲಗುವಾಗ ಮಾತ್ರ. ಆದರೆ ಅವಳ ಪ್ರೀತಿಯನ್ನು ಪೂರ್ತಿ ಸವಿಯುವುದರೊಳಗೇ ನನಗೆ ನಿದ್ದೆ ಬಂದಿರುತ್ತಿತ್ತು.

ಮುಖ್ಯವಾಗಿ, ಶಾಲೆಗೆ ಹೋಗಲು ಚಂಡಿ ಹಿಡಿಯುವ ಮಕ್ಕಳನ್ನು ಕಂಡರೆ ಅಮ್ಮನಿಗೆ ಎಲ್ಲಿಲ್ಲದ ಸಿಟ್ಟು ಅಡರುತ್ತಿತ್ತು. ಆ ದಿನಗಳಲ್ಲಿ ನನ್ನ ಮತ್ತು ಅಮ್ಮನ ನಡುವಿನ ಕಾಳಗಕ್ಕೆ ಅದೇ ಕಾರಣವಾಗಿತ್ತು. "ಆ ಟೀಚರ್ ಬೇಡ..." ಎಂಬ ನನ್ನ ಭೈರವಿ ರಾಗದ ಹಠವನ್ನು ಅವಳು ಮೆಚ್ಚಲು-ಒಪ್ಪಲು ಸಿದ್ಧವಿರಲಿಲ್ಲ. ನನ್ನ ಅಂತಹ ಅಧಿಕಪ್ರಸಂಗಗಳಿಗೆಲ್ಲ ಪ್ರಾಸಂಗಿಕವಾಗಿ ಅವಳು ಗುದ್ದಿದ ಪ್ರಮಾಣಕ್ಕೆ ನನ್ನ ಬೆನ್ನು ತೂತಾಗದಿದ್ದುದೇ ಅಶ್ಚರ್ಯ. ಶಾಲೆ ತಪ್ಪಿಸಲು ನೆವನ ಹುಡುಕಿದಾಗೆಲ್ಲ ಬೆಳಬೆಳಿಗ್ಗೆಯೇ ನನಗೆ "ಷೋಡಶೋಪಚಾರ"ಗಳನ್ನೂ ಮಾಡುತ್ತಿದ್ದ ಅಮ್ಮನು ನನ್ನನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳುವಲ್ಲಿ ಸ್ವಲ್ಪ ಮಟ್ಟಿಗೆ ಯಶಸ್ವಿಯೂ ಆಗಿದ್ದಳು. ಅದಕ್ಕಾಗಿಯೇ ಬಾಲ್ಯದಲ್ಲಿ ನಮಗೆಲ್ಲರಿಗೂ ಅಪ್ಪಯ್ಯ ಒಳ್ಳೆಯವರು; ಅಮ್ಮ ಕೆಟ್ಟವಳು. ಕಹಿ ಔಷಧ ಕೊಟ್ಟು ನಮ್ಮ ರೋಗ ನಿವಾರಿಸುತ್ತಿದ್ದ ಅಮ್ಮನನ್ನು ಅರ್ಥ ಮಾಡಿಕೊಳ್ಳುವ ಪ್ರಬುದ್ಧತೆ ನಮಗೆ ಬರುವಾಗ - ಅಪ್ಪಯ್ಯನೇ ಇರಲಿಲ್ಲ; ಅಮ್ಮನನ್ನು ಅಪ್ಪಯ್ಯನಿಲ್ಲದ ದುಃಖ ಕವಿದುಕೊಂಡಿತ್ತು; ಅಮ್ಮ - "ಆ ಅಮ್ಮ" ಆಗಿರಲಿಲ್ಲ ! ಹೇಗಿದೆ ನೋಡಿ... ಇದೇ ಬದುಕಿನ ಮಜಾ.

ಮುಂದೊಮ್ಮೆ ಅದೇ ಸುಶೀಲ ಟೀಚರನ್ನು ನಾನು ಭೇಟಿಯಾದಾಗ ನನ್ನಿಂದಾದ ಪೀಡೆಯನ್ನೆಲ್ಲ ಅವರು ನೆನಪಿಸಿಕೊಂಡಿದ್ದರು. ನಾನು ತಲೆತಗ್ಗಿಸಿ ಕೇಳಿಸಿಕೊಂಡಿದ್ದೆ. ಆಗಲೇ ಕಲಾರಂಗದಲ್ಲಿ ಅಲ್ಪಸ್ವಲ್ಪ ಗುರುತಿಸಿಕೊಂಡಿದ್ದ ನನ್ನನ್ನು, ನನ್ನ "ಪೀಡಾಕಾಂಡ"ದ ಹಿನ್ನೆಲೆಯನ್ನೆಲ್ಲ ಮರೆತು, ಅಂದು ಅವರು ಹೄತ್ಪೂರ್ವಕವಾಗಿ ಆಶೀರ್ವದಿಸಿದ್ದರು. ಮಚಾದೊ ಟೀಚರಂತೂ ಹತ್ತು ವರ್ಷಗಳ ನಂತರ  ಕೋಟೇಶ್ವರದಲ್ಲಿ ನಾನು ಹರಿಕತೆ ಮಾಡಿದಾಗ (೧೯೭೨-೭೩) ಬಂದು, ಕೊನೆಯವರೆಗೂ ಕೂತು ಕೇಳಿ ಅಪ್ಪಿಕೊಂಡು ಮಾತಾಡಿಸಿ ಕಣ್ತುಂಬಿಕೊಂಡಿದ್ದರು. ನನ್ನ ಬದುಕಿನ ಧನ್ಯತೆಯ ಕ್ಷಣಗಳವು !

ಈ ಹಿನ್ನೆಲೆಯಲ್ಲಿ ಪುಟ್ಟ ಮಕ್ಕಳನ್ನು ನಿಭಾಯಿಸುವ ಶಿಕ್ಷಕರನ್ನು ಕಂಡರೆ ಇಂದಿಗೂ ನನಗೆ ವಿಶೇಷ ಗೌರವವಿದೆ. ಯಾಕೆಂದರೆ ಯಾರ್ಯಾರದೋ ಮಕ್ಕಳನ್ನು ನಿಭಾಯಿಸುವ, ಯಾರಿಗೂ ಇಲ್ಲದ ಕಷ್ಟಗಳನ್ನು ಅನುಭವಿಸುವ ಈ ಶಿಕ್ಷಕರಿಗೆ "ಹೆಚ್ಚು ತಲೆನೋವು; ಕಡಿಮೆ ಸಂಬಳ ಮತ್ತು ಗೌರವ" ಎಂಬ ಅಯೋಮಯವಾದ ಅವರ ಪರಿಸ್ಥಿತಿ. ಇಂದಿಗೂ ಅವರ ಸ್ಥಿತಿಗತಿಯಲ್ಲಿ ಮಹತ್ತರ ಬದಲಾವಣೆಯಾದಂತೆ ನನಗೆ ಕಾಣುವುದಿಲ್ಲ. ಒಂದಂತೂ ಸತ್ಯ. ವಿಭಿನ್ನ ಮನಃಸ್ಥಿತಿಗಳನ್ನು ಅರ್ಥಮಾಡಿಕೊಳ್ಳುವ ಶಕ್ತಿ ಮತ್ತು ತಾಳ್ಮೆ ಇಲ್ಲದಿದ್ದರೆ ಪ್ರಾಥಮಿಕ ತರಗತಿಯ ಶಿಕ್ಷಕರಿಗೂ ಬಲು ಕಷ್ಟ; ಮಕ್ಕಳಿಗೂ ಕಷ್ಟ. ಯಾರು ಬೇಕಿದ್ದರೂ ಪುಟ್ಟ ಮಕ್ಕಳ ಶಿಕ್ಷಕರಾಗಬಹುದು ಎಂಬ ನೀತಿಯು ಬದಲಾಗಲೇಬೇಕು. ಯಾವುದೇ ಪದವಿಪತ್ರಗಳು ಶಿಕ್ಷಕರಾಗುವ ಅರ್ಹತೆಯನ್ನು ತಂದುಕೊಡಲಾರವು. ಪುಟ್ಟ ತರಗತಿಗೆ ಶಿಕ್ಷಕರಾಗುವವರಿಗಾಗಿಯೇ ವಿಶೇಷ ಪರೀಕ್ಷೆ ನಡೆಸಿ ಪದವಿಯ ಅರ್ಹತೆಯ ಹೊರತಾಗಿ ಇರುವ ವ್ಯಕ್ತಿಗತ ಸಾಮರ್ಥ್ಯವನ್ನು ಅಳೆದು ಎಚ್ಚರದಿಂದ ಆಯ್ಕೆ ನಡೆಸಿ ಅನಂತರ ಅವರಿಗೆ ವಿಶೇಷ ತರಬೇತಿ ನೀಡಿ ಅಂತಹ ಮೃದು ವ್ಯಕ್ತಿತ್ವವುಳ್ಳವರನ್ನೇ ಆರಂಭಿಕ ತರಗತಿಗಳಿಗೆ ನೇಮಿಸಬೇಕು. ವೈಯ್ಯಕ್ತಿಕ ಗಮನ ಕೊಡಲು ಸಾಧ್ಯವಾಗುವಂತೆ -  ಒಂದೊಂದು ತರಗತಿಯಲ್ಲಿ 20 ಕ್ಕಿಂತ ಹೆಚ್ಚು ಮಕ್ಕಳು ಇರಲೇಬಾರದು. ಮನೋವೈಜ್ಞಾನಿಕ ತಳಹದಿಯಲ್ಲಿ ಸಂವಹನ ನಡೆಸಿ ಪುಟ್ಟ ಮಕ್ಕಳನ್ನು ನಿಭಾಯಿಸಬಲ್ಲ ಉತ್ತಮ ಶಿಕ್ಷಕರಿಗೆ ಇತರ ಅಧ್ಯಾಪಕರಿಗೆ ಸರಿಸಮವಾದ ಅಥವ ಸ್ವಲ್ಪ ಹೆಚ್ಚೇ ಸಂಬಳ ಸಿಗುವಂತಾಗಬೇಕು. ಮುಂದಿನ ಭವಿಷ್ಯವನ್ನೇ ನಿರ್ಮಾಣ ಮಾಡುವ, ಒಂದರಿಂದ ಆರನೆಯ ತರಗತಿಯವರೆಗಿನ ಶಿಕ್ಷಕರಿಂದಲೇ ಪ್ರತೀ ಕುಟುಂಬದ ಮತ್ತು ದೇಶದ ಭವಿಷ್ಯವು ನಿರ್ಣಯವಾಗುತ್ತದೆ. ನಮ್ಮ ಹಿರಿಯರಿಂದ "ಪರೀಕ್ಷಿಸಿ ಸಾಬೀತಾದ" ಪ್ರಾಚೀನ ಗುರುಕುಲದ ಪ್ರೇರಣೆಯಿಂದ ನಮ್ಮ ಹೊಸ ಬೆಳಗು ಮೂಡಬೇಕು.

ನನ್ನ ಅಮ್ಮನಿಂದ ದಿನವೂ ಆಗ ಹತ್ತಾರು ಬಾರಿ ಬೆನ್ನಿಗೆ ಗುದ್ದಿಸಿಕೊಳ್ಳುತ್ತಿದ್ದ ನನಗೆ ವಿಶೇಷ ಬೇಸರವೇನೂ ಆಗುತ್ತಿರಲಿಲ್ಲ. (ಬಹುಶಃ ಅಮ್ಮನ ಗುದ್ದುವಿಕೆಯಲ್ಲಿ ಹರಿತವಿರಲಿಲ್ಲ ಅಥವ ಗುದ್ದಿನಲ್ಲೂ ಪ್ರೀತಿಯಿತ್ತು!!!) ಅಮ್ಮನಿಗೆ ಬೆನ್ನು, ಅಪ್ಪಯ್ಯನಿಗೆ ನನ್ನ ಕೆನ್ನೆಗಳು ಸದಾ ಮುಕ್ತವಾಗಿದ್ದವು. ಸಾಮ ದಾನ ಭೇದದ ನಂತರ ಮೂಡಿ ಬರುತ್ತಿದ್ದ ಅಮ್ಮನ "ದಂಡ ಪ್ರಯೋಗ" ವು ನಿತ್ಯಯುದ್ಧದ ಅವಿಭಾಜ್ಯ ಅಂಗವೇ ಆಗಿಹೋಗಿ, ಅದು ನನ್ನ ಮತ್ತು ಅಮ್ಮನ ವಿಶೇಷ ಬಾಂಧವ್ಯದ ಸಂಕೇತವಾಗಿ, ಸತತ ನಡೆಯುತ್ತಿದ್ದ "ನಿತ್ಯಪೂಜೆ"ಯ ಭಾಗವಾಗಿ, ಬರಬರುತ್ತ ಬದುಕಿನ ಅವಿನಾ ಅಂಗವೇ ಆಗಿಹೋಗಿತ್ತು. ಆದರೆ ಅಪರೂಪಕ್ಕೊಮ್ಮೆ ಅಪ್ಪಯ್ಯನು ಕೊಡುತ್ತಿದ್ದ ತಪರಾಕಿಯನ್ನು ಮಾತ್ರ ಬಹಳ ದಿನಗಳ ಕಾಲ ಮರೆಯಲಾಗುತ್ತಿರಲಿಲ್ಲ. ಬೆರಳಿನ ಅಚ್ಚು ಮೂಡುವ ಹಾಗೆ ಮಕ್ಕಳ ಕೆನ್ನೆಗೇ ಬಾರಿಸುತ್ತಿದ್ದ ಅಪ್ಪಯ್ಯನನ್ನು ತಾನು ಎಲ್ಲಿದ್ದರೂ ಓಡಿ ಬಂದು ಅಮ್ಮನೇ ತಡೆಯುತ್ತಿದ್ದಳು - "ನಿಮ್ಮ ದಮ್ಮಯ್ಯ. ದಯವಿಟ್ಟು ಕೆನ್ನೆಗೆ ಹೊಡೆಯಬೇಡಿ. ಏನಾದರೂ ಹೆಚ್ಚುಕಮ್ಮಿಯಾದರೆ ಗತಿಯೇನು?" ಎಂಬುದಷ್ಟೇ ಅಮ್ಮನ ಕಳಕಳಿಯಾಗಿತ್ತು. ಅಂದರೆ...."ತಪ್ಪು ಕಂಡಾಗ ಶಿಕ್ಷಿಸಿ; ಆದರೆ ಸಾಯಿಸಬೇಡಿ" ಎನ್ನುತ್ತಿದ್ದ ಹೆತ್ತ ಕರುಳದು. ನನ್ನ ತಂಟೆ ಪೋಕರಿತನಗಳಿಗೆ ಮದ್ದು ಅರೆಯಲಾಗದ ಅಸಹಾಯಕತೆ ಮತ್ತು ಒಟ್ಟಾರೆಯಾಗಿ ಮೂಡುತ್ತಿದ್ದ ಅಮ್ಮನ ಹತಾಶೆಯೇ ಗುದ್ದುಗಳಾಗಿ ಆಗ ನನ್ನ ಬೆನ್ನನ್ನು ಪ್ರೀತಿಯಿಂದ ಮುದ್ದಿಸುತ್ತಿದ್ದುವೆಂದು - ಈಗ ಅನ್ನಿಸುತ್ತದೆ.

ಮತ್ತೆ ನನ್ನ ಒಂದನೇ ತರಗತಿಗೇ ಬರುವ. ಹೀಗೇ ಯಾಂತ್ರಿಕವಾಗಿ ಓಡುತ್ತಿದ್ದ ಒಂದು ದಿನ, ಸಂಜೆಯಾಗುತ್ತಲೇ ಶಾಲೆಯ ಕೊನೆಯ ಗಂಟೆ ಬಾರಿಸಿತು. ಎಲ್ಲರಿಗಿಂತ ಮೊದಲೇ ಮನೆಗೆ ಓಡಲು ತಯಾರಾಗಿ ಚೀಲವನ್ನು ಕುತ್ತಿಗೆಗೆ ಸಿಕ್ಕಿಸಿಕೊಂಡಿದ್ದ ನಾನು, ಗಂಟೆ ಬಾರಿಸಿದ ಕೂಡಲೇ ತರಗತಿಯಿಂದ ಹೊರಗೆ ಓಡಿ ಬಂದೆ. ಮನೆಗೆ ಹೋಗುವ ಅವಸರದಲ್ಲಿದ್ದ ನನ್ನ ಎದುರಿನಲ್ಲಿ ಕೆಲವು ಹಸುಗಳು ಮೇಯುತ್ತಿದ್ದವು. ಮೊದಲೇ ಶಾಲೆಯ ರಗಳೆಯಿಂದ ನನ್ನ ತಲೆ ಕೆಟ್ಟು ಹೋಗಿತ್ತು. ಹೊರಗೆ ಬಂದರೆ ಹಸುಮಂದೆಯ ರಗಳೆ. ದಾರಿಗೆ ಅಡ್ಡವಾಗಿ ನಿಂತಿದ್ದ ಹಸುಗಳನ್ನು ಓಡಿಸಲು ನನ್ನ ಕೈಚೀಲವನ್ನು ಅವುಗಳತ್ತ ಬೀಸಿದೆ. ಆದರೆ ಆ ಹಸುಗಳು ಎರಡಡಿಯ ನನ್ನನ್ನು ಕ್ಯಾರೇ ಮಾಡಲಿಲ್ಲ. ಆಗ ಬಹುಶಃ ನನಗೆ ಸಿಟ್ಟು ಬಂದಿದೆ. ನಾನು ಯುದ್ಧ ಸನ್ನದ್ಧಳಾದೆ.

ಸ್ವಲ್ಪ ಮುಂದೆ ಹೋಗಿ, ಒಂದು ಹಸುವಿನ ಬಾಲವನ್ನು ತಿರುಚಿದೆ. ಹೀಗೆ ನನ್ನ ಅಸಮಾಧಾನವನ್ನು ಬಾಲಕ್ಕೆ ವರ್ಗಾಯಿಸಿದ ತಕ್ಷಣವೇ ಆ ಹಸುವು ಹಿಂದೆ ತಿರುಗಿ, ತನ್ನ ಕೋಡಿಂದ ತಿವಿದು, ನನ್ನನ್ನು ನೆಲಕ್ಕೆ ಕೆಡವಿತು. ಅದಾಗಲೇ ಅಲುಗುತ್ತಿದ್ದ ನನ್ನ ಮುಂದಿನ ಎರಡು ಬಾಲಹಲ್ಲುಗಳು ಅಲ್ಲೇ ಉದುರಿ ಬಿದ್ದವು. ರಕ್ತ ಸುರಿಯತೊಡಗಿತು. ರಕ್ತ ನೋಡಿ ಕಂಗಾಲಾದ ನಾನು ಜೋರಾಗಿ ಅಳತೊಡಗಿದೆ. ಈ ಗಲಾಟೆ ಕೇಳಿಸಿಕೊಂಡ ನನ್ನ ಟೀಚರ್ರುಗಳೆಲ್ಲರೂ ಓಡಿ ಬಂದರು. ನನ್ನನ್ನು ಎತ್ತಿಕೊಂಡು ಹೋಗಿ ಮನೆಗೆ ತಲುಪಿಸಿದರು. ಅಮ್ಮನು ನನ್ನ ಟೀಚರ್ರುಗಳಿಗೆಲ್ಲ ಧನ್ಯವಾದಗಳನ್ನು ಸೂಚಿಸಿ, ಸೌಜನ್ಯದ ಮಾತುಗಳನ್ನಾಡಿ ಕಳಿಸಿದಮೇಲೆ, ನನ್ನನ್ನು ಹೊತ್ತುಕೊಂಡು ಬಾವಿಕಟ್ಟೆಯ ಬಳಿಗೆ ಕರೆತಂದು, ಬದಲಾವಣೆಗೊಂಡ ನನ್ನ ಮುಖವನ್ನೆಲ್ಲ ತೊಳೆದು, ಆ ಹಲ್ಲಿಲ್ಲದ ಮುಖ ನೋಡುತ್ತ, ಅಳುವುದೋ ನಗುವುದೋ ಗೊತ್ತಾಗದ ವಿಚಿತ್ರ ಮುಖಭಾವದಲ್ಲಿದ್ದ ಅಂದಿನ ಅಮ್ಮನು, ತನ್ನ ಅಸಹನೆಯನ್ನು ಅಡಗಿಸಿಕೊಳ್ಳುತ್ತ ಕರ್ತವ್ಯದಲ್ಲಿ ತೊಡಗಿಕೊಂಡಳು. ನನ್ನ ಹರಿದ ತುಟಿಯ ಭಾಗಕ್ಕೆ ಅರಿಸಿನದ ಹುಡಿಯನ್ನು, ಜೇನನ್ನೂ ಸವರಿದಳು. ಅಷ್ಟರಲ್ಲಿ ಅಪ್ಪಯ್ಯನೂ ಶಾಲೆಯಿಂದ ಮನೆಗೆ ಬಂದಿದ್ದರು. ಅದುವರೆಗೂ ತನ್ನ ಭಾವನೆಯನ್ನು ಅದುಮಿಟ್ಟುಕೊಂಡಿದ್ದ ಅಮ್ಮನು ಅಪ್ಪಯ್ಯನನ್ನು ಕಂಡ ಕೂಡಲೇ ಅಳತೊಡಗಿದಳು. "ಆಯ್ಯೋ, ಆ ಹೆಣ್ಣಿನ ಬಾಯಿ ನೋಡಿ; ವಸಡಿಗೇ ಪೆಟ್ಟಾಗಿದೆ. ಇನ್ನು ಹುಟ್ಟುವ ಹಲ್ಲುಗಳು ವಕ್ರವಾಗಿ ಬಂದರೆ ಏನು ಮಾಡುವುದು ? ಎಷ್ಟು ಚೆಂದ ಇದ್ದ ಬಾಯನ್ನು ಏನೇನೋ ಮಾಡಿಕೊಂಡಿತಲ್ಲ? ಡಾಕ್ಟರ್ ಹತ್ತಿರ ಕರಕೊಂಡು ಹೋಗಿ ಏನಾದರೂ ಔಷಧ ತಕೊಂಡು ಬನ್ನಿ." ಅನ್ನುತ್ತ ಅಮ್ಮನು ನನ್ನನ್ನು ಬಾಚಿ ತಬ್ಬಿಕೊಂಡದ್ದು, ಅಮ್ಮನ ಕುತ್ತಿಗೆಯನ್ನು ಬಳಸಿಕೊಂಡು ನಾನು ಅವಳ ಹೆಗಲ ಮೇಲೆ ತಲೆಯಿರಿಸಿದ್ದು... "ಅಮ್ಮನ ಪರಿಮಳ"ವು ಉಸಿರಿನೊಂದಿಗೆ ನನ್ನನ್ನು ಸವರಿ ಸಂತೈಸಿದ್ದು... ಎಲ್ಲ ನೆನಪುಗಳೂ ಹಚ್ಚಹಸಿರು.

ಅನಂತರ ಅಪ್ಪಯ್ಯನು ನನ್ನನ್ನು ಹೆಗಲ ಮೇಲೆ ಹಾಕಿಕೊಂಡು ಹೋಗಿ, ನಂಬಿಯಾರ್ ಡಾಕ್ಟರಿಗೆ ತೋರಿಸಿ ಔಷಧ ತೆಗೆದುಕೊಂಡು ಬಂದರು. "ನಾಳೆ ಶಾಲೆಗೆ ಹೋಗುವುದು ಬೇಡ. ವಿಶ್ರಾಂತಿ ಪಡೆಯಲಿ" ಎಂದು ಡಾಕ್ಟರ್ ಹೇಳಿದಾಗ, ನನಗಾದ ಸಂತೋಷವು ಅಷ್ಟಿಷ್ಟಲ್ಲ. ಅಲ್ಲಿಂದ ಮುಂದೆ ಶಾಲೆ ತಪ್ಪಿಸಲಿಕ್ಕೆ ಇದೇ "ಅನಾರೋಗ್ಯದ ಅಸ್ತ್ರ"ವನ್ನು ನಾನು ಉಪಯೋಗಿಸಿದ್ದು - ಎಷ್ಟೋ ಬಾರಿ. ನನ್ನ ಇಂತಹ ಹಗಲುವೇಷಗಳು ಅರ್ಥವಾದರೂ, ಶಾಲೆಯ ಪಾಠಗಳಲ್ಲಿ ಮುಂಚೂಣಿಯಲ್ಲೇ ಇದ್ದುದರಿಂದ ಮನೆಯಲ್ಲಿ ಯಾರೂ ಹೆಚ್ಚಿನ ಒತ್ತಡ ಹಾಕಲಿಲ್ಲ. ನಮ್ಮ ಮನೆಯ ಉಳಿದ ಸದಸ್ಯರನ್ನು - ಸೋದರ ಸೋದರಿಯರಿನ್ನು ಸಂಭಾಳಿಸಲು ಇಂತಹ ಯಾವುದೇ ನಿಯಂತ್ರಣದ ಅಗತ್ಯವೇ ಬಂದಿರಲಿಲ್ಲ. ಆದರೆ ನನಗೆ ಮಾತ್ರ ಕೊಂಚ ಉದ್ದದ ಹಗ್ಗವನ್ನು ಕುತ್ತಿಗೆಗೆ ಬಿಗಿದಿದ್ದರು. ನನ್ನನ್ನು ಅರೆಕ್ಷಣವೂ ಬಿಡದೆ ಒಬ್ಬರಲ್ಲ ಒಬ್ಬರು ಗಮನಿಸುತ್ತಲೇ ಇರುತ್ತಿದ್ದರು.

ಅಂತೂ ಅನಿವಾರ್ಯವಾಗಿ ಶಾಲೆಗೆ ಹೋಗುತ್ತಿದ್ದೆ; ಬರುತ್ತಿದ್ದೆ. ಹೀಗೆ ಒಂದು ವರ್ಷ ಕಳೆಯುವಾಗ... ಶಾಲೆ ಎಂಬುದೊಂದು "ಅನಿವಾರ್ಯ ಕರ್ಮ" ಎಂಬ ವಾಸ್ತವವನ್ನು ನಾನು ಜೀರ್ಣಿಸಿಕೊಂಡೆ. ಆಗ ಇದ್ದುದರಲ್ಲೇ ಸುಖ ಕಾಣುವ ಮಾರ್ಗೋಪಾಯಗಳು ಒಂದೊಂದಾಗಿ ನನಗೇ ಕಾಣತೊಡಗಿದವು.

ಅದೊಂದು ಮಳೆಗಾಲದ ದಿನ. ಓಲೆ ಕೊಡೆ ಹಿಡಿದುಕೊಂಡು ಶಾಲೆಗೆ ಹೋಗಿದ್ದ ನಾನು, ಶಾಲೆ ಬಿಟ್ಟ ಮೇಲೆ ಮನೆಗೆ ಹಿಂದಿರುಗುತ್ತಿದ್ದಾಗ, ಒಂದು ನೇರಳೆ ಮರದ ಕೆಳಗೆ - ತುಂಬ ಹಣ್ಣುಗಳು ಬಿದ್ದುದನ್ನು ಕಂಡೆ. ನನ್ನ ಕೊಡೆಯನ್ನು ಕೆಳಗಿಟ್ಟು ಆ ಹಣ್ಣುಗಳನ್ನು ಹೆಕ್ಕತೊಡಗಿದೆ. ನನ್ನ ಉದ್ದ ಲಂಗವನ್ನು ಮೇಲಕ್ಕೆ ಮಡಚಿ, ಅದರಲ್ಲಿ ಹೆಕ್ಕಿದ ಹಣ್ಣುಗಳನ್ನೆಲ್ಲ ಹಾಕಿಕೊಂಡೆ. ತೄಪ್ತಿಯಾಗುವಷ್ಟು ಹಣ್ಣುಗಳನ್ನು ಅಲ್ಲೇ ತಿಂದೂ ಮುಗಿಸಿದೆ. ಅಷ್ಟರಲ್ಲಿ ನನ್ನನ್ನು ಹುಡುಕಿಕೊಂಡು ನನ್ನ ಸೋದರಿಯರು ಬಂದರು. "ಕತ್ತಲೆ ಆಯ್ತಲೆ? ನೀ ಮನೆಗ್ ಬತ್ತಿಲ್ಲ್ಯಾ?" ಎನ್ನುತ್ತ ಅವರು ನನ್ನನ್ನು ಎಳೆದುಕೊಂಡೇ ಮನೆಗೆ ಹೊರಟರು. ಒಂದಷ್ಟು ದೂರ ಬಂದ ಮೇಲೆ - ಆಗ ನೆನಪಾಯಿತು. ಕೊಡೆಯನ್ನು ಆ ಮರದ ಹತ್ತಿರವೇ ಬಿಟ್ಟು ಬಂದಿದ್ದೆ. ತಕ್ಷಣ ಎಲ್ಲರೂ ಅಲ್ಲಿಗೆ ವಾಪಾಸ್ ಓಡಿದೆವು. ಆದರೆ ಅಷ್ಟರಲ್ಲಿ - ಆ ಕೊಡೆಯು ಅಲ್ಲಿ ಇರಲಿಲ್ಲ. ಯಾರೋ ಮಾಯಕ ಮಾಡಿ ಆಗಿತ್ತು. "ತಡಿ..ನಿಂಗ್ ಇವತ್ ಮದುವೆ ಇತ್" ಅನ್ನುತ್ತ..."ಅಂಗಿ ಕೆಳಗ್ ಬಿಡು." ಅಂತ ಅಕ್ಕನು ಹೇಳಿದಾಗ, "ಇಲ್ಲ. ಅದರಲ್ಲಿ ಹಣ್ಣಿದೆ. ಮನೆಗೆ ಹೋದ ಮೇಲೆ ಎಲ್ಲರೂ ತಿಂಬ.."  ಎನ್ನುತ್ತ ಸೋದರಿಯರೊಂದಿಗೆ ಮನೆಗೆ ಬಂದೆ.

ಗಂಟೆ ಆರಾಗುತ್ತಿತ್ತು. ಎರಡು ಗಂಟೆಗಳ ಕಾಲ ಊರಿನ ಸೌಂದರ್ಯೋಪಾಸನೆ ಮಾಡಿಕೊಂಡು ನಾನು ಮನೆಗೆ ಬಂದಿದ್ದೆ. ಅದಾಗಲೇ ಆತಂಕದಿಂದಿದ್ದ ಅಮ್ಮನು ನನ್ನನ್ನು ಕಂಡ ಕೂಡಲೇ ರುದ್ರಕಾಳಿಯಾದಳು. ನನ್ನ ಬೆನ್ನಿಗೆ ಗುದ್ದುತ್ತ ಬಾವಿಕಟ್ಟೆಗೆ ಎಳೆದೊಯ್ದಳು. ಕಾಲುಮುಖ ತೊಳೆಸಿದ ಮೇಲೂ ಅಂಗಿಯನ್ನು ಎತ್ತಿ ಹಿಡಿದುಕೊಂಡಿದ್ದ ನನ್ನ ಕೈಯನ್ನುನೋಡುತ್ತ "ಅಂಗಿ ಕೆಳಗೆ ಬಿಡು ಕತ್ತೆ. ಕೈ ತೊಳೆದುಕೋ" ಅಂದಳು. ನಾನು ಅಂಗಿ ಬಿಡಲಿಲ್ಲ. ಆಗ ಅಮ್ಮನು ತಾನೇ ನನ್ನ ಅಂಗಿಯನ್ನು ಕೆಳಗೆ ಎಳೆದುಬಿಟ್ಟಳು. ತುಂಬಿಕೊಂಡಿದ್ದ ನೇರಳೆ ಹಣ್ಣುಗಳೆಲ್ಲಾ ದುಡುಬುಡನೆ ಕೆಳಕ್ಕೆ ಬಿದ್ದವು. "ಅಯ್ಯೋ ದೇವರೇ, ಅಂಗಿಯಲ್ಲಿ ಈ ಹಣ್ಣನ್ನು ತುಂಬಿಸಿಕೊಂಡು ಬಂದಿದ್ದೀಯಲ್ಲಾ? ಅಂಗಿಯೆಲ್ಲ ಕಲೆಯಾಗಿ ಹೋಯ್ತಲ್ಲ..?" ಎಂದು ಹೇಳುತ್ತ ನನ್ನನ್ನು ದೂಡಿಕೊಂಡೇ ಮನೆಯೊಳಗೆ ಬಂದಳು.

ಅಷ್ಟರಲ್ಲಿ ನನ್ನ ಸೋದರಿಯೊಬ್ಬಳು ನಾನು ಕೊಡೆಯನ್ನೂ ಕಳೆದುಕೊಂಡ ವಿಷಯವನ್ನು ಹೇಳಿಬಿಟ್ಟಳು. ತಕ್ಷಣವೇ ಅಮ್ಮನು ನನ್ನನ್ನು ದರದರನೆ ಎಳೆದುಕೊಂಡು ಹೋಗಿ ಅಪ್ಪಯ್ಯನ ಎದುರಿಗೆ ನಿಲ್ಲಿಸಿದಳು. ಏನನ್ನೋ ಬರೆಯುತ್ತ ಕೂತಿದ್ದ ಅಪ್ಪಯ್ಯನು ಕನ್ನಡಕದ ಸಂದಿಯಿಂದಲೇ ಅಮ್ಮನನ್ನೂ ನನ್ನನ್ನೂ ನೋಡಿದರು. "ಅಪ್ಪಯ್ಯನೇ ಅಪರಾಧಿ" ಎಂಬ ಭಾವದಲ್ಲಿ "ನೀವು ಈ ಹೆಣ್ಣನ್ನು ಎಂತಾದ್ರೂ ಮಾಡ್ಕಣಿ... ನನ್ನ ಕೈಯಲ್ಲಿ ಅಡಬಳಿಸಲಿಕ್ಕೆ ಆಪ್ದೇ ಅಲ್ಲ" ಎಂದು ಹೇಳಿ ನನ್ನನ್ನು ಅವರತ್ತ ತಳ್ಳಿ ಅಡುಗೆ ಮನೆಯ ಕಡೆಗೆ ಹೋಗಿಯೇಬಿಟ್ಟಳು. ಅಪ್ಪಯ್ಯನು ಮೆಲ್ಲನೆ ಎದ್ದು ನನ್ನ ಕೈಹಿಡಿದುಕೊಂಡು ಅಮ್ಮನ ಹಿಂದೆಯೇ ಹೋಗುತ್ತ "ಏನಾಯಿತೀಗ? ಅದನ್ನಾದರೂ ಹೇಳು." ಅಂದರು. "ಈ ಹೆಣ್ಣನ್ನ ಬೆಳಿಗ್ಗೆ ಶಾಲೆಗೆ ಕಳಿಸುವಲ್ಲಿಂದ ಶುರುವಾದರೆ, ಸಾಯಂಕಾಲ ವಾಪಾಸು ಮನೆಗೆ ಬರುವವರೆಗೂ ನನಗೆ ಆತಂಕ ತಪ್ಪಿದ್ದಲ್ಲ. ಇವತ್ತು ಶಾಲೆ ಬಿಟ್ಟ ಮೇಲೆ ಎಲ್ಲಿಗೆ ಹೋದದ್ದಂತ ನೀವೇ ಕೇಳಿ... ಕೊಡೆಯನ್ನು ಬೇರೆ ಕಳಕೊಂಡು ಬಂದಿದೆ." ಅಪ್ಪಯ್ಯನ ಮುಖವನ್ನೂ ನೋಡದೆ ಇಷ್ಟನ್ನು ಮುಗುಮ್ಮಾಗಿ ಹೇಳಿದವಳೇ ರಾತ್ರಿಯ ಅಡಿಗೆಗೆ ಪೂರ್ವತಯಾರಿಯಾಗಿ ಹಸಿ ಸೌದೆಗೆ ಬೆಂಕಿ ತಾಗಿಸುವ ಸಾಹಸದಲ್ಲಿ ಅಮ್ಮನು ಮಗ್ನಳಾದಳು.

ಆಗ ನನ್ನಿಂದಲೇ ವಿಷಯವನ್ನೆಲ್ಲ ತಿಳಿದುಕೊಂಡ ಅಪ್ಪಯ್ಯ, - ಅಮ್ಮನ ಮಂಡೆಬಿಸಿ ತಣ್ಣಗಾಗುವವರೆಗೆ ಕಾದು... "ಆದದ್ದು ಆಯಿತು. ಈಗ ಸಿಟ್ಟು ಮಾಡಿಕೊಂಡರೆ ಏನೂ ಉಪಯೋಗವಿಲ್ಲ. ಜಾಣೆಯಾಗಿರಬೇಕೆಂದು ನಾನವಳಿಗೆ ಹೇಳಿದ್ದೇನೆ. ಆ ಕಲೆಯಾದ ಅಂಗಿಯನ್ನು ನೆಲ ಒರೆಸಲಿಕ್ಕೆ ಹಾಕಿಕೊ. ಅವಳಿಗೆ ಬೇರೆ ಅಂಗಿ ಹೊಲಿಸುವ. ಈಗ ಅವಳೊಬ್ಬಳಿಗೇ ಹೊಸ ಬಟ್ಟೆ ತಂದರೆ ಉಳಿದ ಮಕ್ಕಳು ಬೇಜಾರು ಮಾಡಿಕೊಳ್ಳುತ್ತವೆ. ಆದ್ದರಿಂದ ನಾಳೆ ಎಲ್ಲರಿಗೂ ಹೊಸ ಬಟ್ಟೆ ತರುತ್ತೇನೆ. ಒಂದು ಕೊಡೆಯನ್ನೂ ತಂದರಾಯಿತು." ಅಂದರು. ಹಸಿ ಸೌದೆಗೆ ಬೆಂಕಿ ತಾಗಿಸುವ ಹೋರಾಟದಿಂದ ಕಣ್ಣು ಮೂಗಿನಲ್ಲಿ ಹೊಗೆ ತುಂಬಿಕೊಂಡಿದ್ದ ಅಮ್ಮನು ತನ್ನ ಸೆರಗಿನಿಂದ ಮುಖ ಒರೆಸಿಕೊಳ್ಳುತ್ತಿದ್ದಳು. ಬಹುಶಃ ಅಳುತ್ತಿದ್ದಳು. ಎಂಜಲು ನುಂಗಿಕೊಳ್ಳುತ್ತ - "ಸಂಬಳ ಬರಲಿಕ್ಕೆ ಇನ್ನೂ ಹದಿನೈದು ದಿನ ಇದೆ. ಇರುವ ದುಡ್ಡನ್ನೆಲ್ಲ ನೀವು ಬಟ್ಟೆಗೆ ಸುರಿದರೆ ಈ ತಿಂಗಳನ್ನು ದೂಡುವುದು ಹೇಗೆ?" ಎಂದಷ್ಟೇ ಪ್ರತಿಕ್ರಿಯಿಸಿದ್ದಳು. ಅಮ್ಮನಿಗೆ ಎಲ್ಲರ ಹೊಟ್ಟೆಯ ಚಿಂತೆ. ಅಪ್ಪಯ್ಯನು - "ಆಟಕೆರೆಯವರಲ್ಲಿ ಸಾಲ ಮಾಡಿ ಜವುಳಿ ತರುತ್ತೇನೆ. ಸಂಬಳ ಬಂದ ಮೇಲೆ ಕೊಟ್ಟರಾಯಿತು..." ಎಂದಾಗ - "ಇದೆಂಥ ಲೆಕ್ಕಾಚಾರ? ನಿಮಗೆ ಬಂದ ಸಂಬಳವೆಲ್ಲ ಸಾಲಕ್ಕೆ ಹೋದರೆ ಮುಂದಿನ ತಿಂಗಳಿಗೆ ಏನು ಗತಿ?" ಅಂದಿದ್ದಳು. ಅಮ್ಮನ ಮುಂದಾಲೋಚನೆಯ ಪ್ರಶ್ನೆಗಳಿಗೆಲ್ಲ ಅಪ್ಪಯ್ಯನಲ್ಲೂ ಉತ್ತರವಿರಲಿಲ್ಲ. "ಚಿಂತೆ ಮಾಡಬೇಡ. ಒಳಗೊಬ್ಬ ಮುದುಕ ಕುಳಿತಿದ್ದಾನಲ್ಲಾ... ಅವನಿಗೆ ಕಷ್ಟ; ನಮಗಲ್ಲ..." ಎನ್ನುತ್ತ ದೇವರ ಕೋಣೆಯಲ್ಲಿ ನಗುತ್ತ ಕುಳಿತಿದ್ದ ಶ್ರೀ ರಾಮಕೃಷ್ಣ ಪರಮಹಂಸರತ್ತ ದೄಷ್ಟಿ ಹರಿಸಿದ್ದರು. ಅಮ್ಮನು ಅಪ್ಪಯ್ಯನ ಮಾತಿಗೆ ಪ್ರತಿಮಾತಾಡದೆ ಕಣ್ಣೊರೆಸಿಕೊಂಡಿದ್ದಳು. ಆದರೆ ಫೂ ಫೂ ಎಂದು ಒಲೆಯನ್ನು ಊದುತ್ತ ತನ್ನ ಉದ್ವೇಗವನ್ನೆಲ್ಲ ಹೊರಚೆಲ್ಲತೊಡಗಿದ್ದಳು. ಅಡಿಗೆಕೋಣೆಯ ತುಂಬ ಕೆಟ್ಟ ಹೊಗೆ ತುಂಬಿಕೊಂಡಾಗ ಅಪ್ಪಯ್ಯನು ನನ್ನ ಕೈ ಹಿಡಿದುಕೊಂಡು ಹೊರ ಬಂದಿದ್ದರು.

ಕೋಟೇಶ್ವರದಲ್ಲಿ ಎರಡು ಬಾಡಿಗೆ ಮನೆಗಳಲ್ಲಿ ನಮ್ಮ ಸಂಸಾರ ಬೆಳೆದಿತ್ತು. ನಾವು ನಾಲ್ವರು ಸಹೋದರಿಯರು ಮತ್ತು ಇಬ್ಬರು ಪುಟ್ಟ ತಮ್ಮಂದಿರು ಇದ್ದ ಸಂಸಾರ ನಮ್ಮದು. ನನ್ನ ದೊಡ್ಡ ಅಕ್ಕ- ವಸಂತಕುಮಾರಿ ನಮ್ಮೆಲ್ಲರಿಗಿಂತ  ಒಂಬತ್ತು ಹತ್ತು ವರ್ಷ ದೊಡ್ಡವಳು. ಉಳಿದವರೆಲ್ಲ ಎರಡು ಮೂರು ವರ್ಷಗಳಷ್ಟೇ ಅಂತರವಿದ್ದವರು. ಹಾಗಾಗಿ ದೊಡ್ಡ ಅಕ್ಕನು ನಮ್ಮ Gang ನಲ್ಲಿ ಹೆಚ್ಚು ಸೇರುತ್ತಿರಲಿಲ್ಲ. ನನ್ನ ಅಕ್ಕ ಅರುಣ, ತಂಗಿ ಕಾತ್ಯಾಯನಿ ಮತ್ತು ನಾನು... ಸರಸ ವಿರಸದಲ್ಲೆಲ್ಲ ಒಟ್ಟಿಗೇ ಇರುತ್ತಿದ್ದೆವು. ಎಲ್ಲಿಗೆ ಹೋಗುವುದಿದ್ದರೂ ಕೈಕೈಹಿಡಿದುಕೊಂಡು ರಸ್ತೆಯ ಬದಿಯಲ್ಲೇ ಹೋಗುತ್ತಿದ್ದೆವು. ಕೋಟೇಶ್ವರದ ಜನರು ನಮ್ಮನ್ನು "ಲಲಿತ, ಪದ್ಮಿನಿ, ರಾಗಿಣಿ"- ಎನ್ನುತ್ತಿದ್ದರು.(ಅಂದಿನ ಪ್ರಸಿದ್ಧ ನಟಿ- ನರ್ತಕಿ ಸೋದರಿಯರು) ಅದರಲ್ಲೂ ನನ್ನ ತಂಗಿ ಕಾತ್ಯಾಯನಿಯ ಜೊತೆಯಲ್ಲಿಯೇ ನಾನು ಕಷ್ಟ ಸುಖವನ್ನೆಲ್ಲ ಹಂಚಿಕೊಳ್ಳುತ್ತಿದ್ದೆ; ಯಾಕೆಂದರೆ ಅವಳೂ ಕಷ್ಟಸುಖಗಳಲ್ಲಿ ನನ್ನನ್ನು ಅವಲಂಬಿಸುತ್ತಿದ್ದಳು. ಸಣ್ಣಪುಟ್ಟ "ಹುಡುಗಾಟದ ಸುಳ್ಳು ಸಾಕ್ಷ್ಯ" ಹೇಳೆಂದರೆ ನಿಷ್ಠೆಯಿಂದ ಪರಸ್ಪರರು ಹೇಳುತ್ತಿದ್ದೆವು; ಇಂದಿಗೂ ಈ ಭಾವ ಸಂಬಂಧವು ಹೀಗೇ ಉಳಿದುಕೊಂಡಿದೆ. ಒಟ್ಟಿನಲ್ಲಿ ಅಪ್ಪಯ್ಯ ಅಮ್ಮನ ಜೇನುಗೂಡಿನಲ್ಲಿ ನಾವೆಲ್ಲರೂ ವಾತ್ಸಲ್ಯದ ಏಕಸ್ವರದಲ್ಲಿ ಝೇಂಕರಿಸುತ್ತಿದ್ದೆವು. "ಬಡತನದಲ್ಲಿಯೇ ಪ್ರೀತಿ ಇರುವುದು" ಎಂಬ ಮಾತಿಗೆ ನಮ್ಮ ಕುಟುಂಬವು ಆಗ ದೄಷ್ಟಾಂತದಂತಿತ್ತು.

ಮನೆಯ ಕಷ್ಟಸುಖ- ಒಳಗುಟ್ಟುಗಳೆಲ್ಲವೂ ಅರ್ಥವಾಗುವ ವಯಸ್ಸೂ ಅಂದು ನಮ್ಮದಾಗಿರಲಿಲ್ಲ. ಅಪ್ಪಯ್ಯನಿಗೆ ಆಗಲೇ ಐವತ್ತು ದಾಟಿತ್ತು. ಮೊದಮೊದಲು ಮೂರಂಕೆಯ ಸಂಬಳವೂ ಇರಲಿಲ್ಲ. ಇಷ್ಟು ಮಂದಿಯ ಊಟ, ಬಟ್ಟೆ, ಔಷಧ, ನೆಂಟರಿಷ್ಟರನ್ನು ಸುಧಾರಿಸುವುದರಲ್ಲಿ ಅಮ್ಮನಿಗೆ ಸಾಕುಸಾಕಾಗುತ್ತಿತ್ತು. ವರ್ಷಕ್ಕೊಮ್ಮೆ ದೀಪಾವಳಿ ಹಬ್ಬಕ್ಕೆ ಎಲ್ಲರಿಗೂ ಎರಡೆರಡು ಅಂಗಿ ಹೊಲಿಸುತ್ತಿದ್ದರು. ಅದರಲ್ಲೇ ಶಾಲೆ, ಮನೆ, ಸಭೆ, ಶುಭಸಮಾರಂಭ... ಎಲ್ಲವೂ ಸುಧಾರಣೆಯಾಗುತ್ತಿತ್ತು. ಪದೇಪದೇ ಹೊಸ ಬಟ್ಟೆ ಹೊಲಿಸಿಕೊಳ್ಳುವ ಪ್ರಶ್ನೆಯೇ ಇರಲಿಲ್ಲ. ಇನ್ನು ಜೂನ್ ತಿಂಗಳು ಬರುವ ಮೊದಲೇ ಮನೆಯಲ್ಲಿ ದುಡ್ಡು ಹೊಂದಾಣಿಸುವ ಯೋಚನೆ ಶುರುವಾಗುತ್ತಿತ್ತು. ನಾಲ್ಕು ಮಕ್ಕಳ ಪುಸ್ತಕ, ಕೊಡೆ... ಇತ್ಯಾದಿ ಹೆಚ್ಚಿನ ಖರ್ಚುಗಳ ಹೊಡೆತ ಬರುತ್ತಿದ್ದ ತಿಂಗಳದು. ಖರ್ಚು ವೆಚ್ಚದ ವಿಷಯದಲ್ಲಿ ಅಮ್ಮನು ಅಕ್ಷರಶಃ ಕುಸ್ತಿ ನಡೆಸುತ್ತಿದ್ದ ಕಾಲವದು. ಸಂಸಾರವನ್ನು ದಡಮುಟ್ಟಿಸುವ ಹೋರಾಟದಲ್ಲಿ ಹೈರಾಣಾಗಿದ್ದ ಅಂದಿನ ಅಮ್ಮನ "ಹೊರವೇಷದ ಬಡತನ"ದಿಂದಾಗಿ, ಅವಳು ತನ್ನ ತೌರುಮನೆಯಿಂದಲೂ ಸತತವಾಗಿ ತಿರಸ್ಕಾರಕ್ಕೆ ಒಳಗಾಗಿದ್ದಳು. "ಅಳಿಯ ಚೆಂದ ಇದ್ದರೆ ಸಾಕಾ? ನನ್ನ ಮಗಳ ಮೈಮೇಲೆ ಒಂದು ಒಳ್ಳೆಯ ಸೀರೆಯುಂಟಾ? ಚಿನ್ನವುಂಟಾ? ಬರೇ ಬಾಯಲ್ಲಿ ತತ್ವೋಪದೇಶ, ಪಂಡಿತಗಿರಿ... ಇದೆಲ್ಲ ಯಾರಿಗೆ ಬೇಕು? ನಾಲಾಯಕ್ಕಾದ ಅಳಿಯ" ಅಂತ ಅವರೆಲ್ಲರೂ ಅಳಿಯನಾದ ಅಪ್ಪಯ್ಯನನ್ನು ಹಿಂದಿನಿಂದ ದೂಷಿಸುತ್ತ ತಮ್ಮ ಲೆಕ್ಕದ ಹೊರಗೇ ಇಟ್ಟಿದ್ದರು. ಅಪ್ಪಯ್ಯ ಮಾತ್ರ ಅವರ ಮಾತನ್ನು ಗಂಭೀರವಾಗಿ ತೆಗೆದುಕೊಂಡವರೇ ಅಲ್ಲ. ಅಮ್ಮನ ಮನೆಯವರನ್ನು "ಮೂಢೋ ಮೂರ್ಖೋ ಗಾರ್ದಭೋ ಏಕರಾಶಿ... ಪ್ರೀತಿಯಿಲ್ಲದವರಿಂದ ದೂರವಿರಿ. ದುಡ್ಡನ್ನು ಮಾತ್ರ ಪ್ರೀತಿಸುವವರಿಂದ ಎಷ್ಟು ದೂರವಿದ್ದರೆ ಅಷ್ಟು ಕ್ಷೇಮ.." ಎಂದು ಮುಗುಮ್ಮಾಗಿ ಹೇಳಿ ಸುಮ್ಮನಾಗುತ್ತಿದ್ದರು. ಇಂತಹ ಮಾತನಾಡಿ ತನ್ನ ಮಕ್ಕಳ ಎದುರಿನಲ್ಲಿ ತನ್ನ ತವರು ಮನೆಯನ್ನು ಸಣ್ಣದಾಗಿಸುತ್ತಿದ್ದರು ಎಂದುಕೊಳ್ಳುತ್ತಿದ್ದ ಅಮ್ಮನು - ಅಪ್ಪಯ್ಯನನ್ನು ಮಾತಿನಲ್ಲೇ ಪ್ರತಿಭಟಿಸುತ್ತಿದ್ದಳು. "ನಿಜವಾದ ವಿಚಾರವನ್ನೇ ಅವರು ಹೇಳುತ್ತಿರುವಾಗ ನನ್ನ ಅಪ್ಪನ ಮನೆಯನ್ನು ಮಕ್ಕಳ ಎದುರಿನಲ್ಲಿ ಸುಮ್ಮನೆ ತಿರಸ್ಕಾರದಿಂದ ನೋಡುವುದು ಸರಿಯಲ್ಲ. ಇಡೀ ಸಮಾಜವೇ ದುಡ್ಡನ್ನು ಗೌರವಿಸುವಾಗ ನೀವೊಬ್ಬರು "ಅದಲ್ಲ - ಇದಲ್ಲ" ಅಂದರೆ ಯಾರಿಗಾದರೂ ವಿಚಿತ್ರ ಅನ್ನಿಸುವುದು ಸಹಜ. ನಾವು ಬಡವರು; ಅದೇ ಸತ್ಯ. ಸತ್ಯವನ್ನು ಆಡಿಕೊಳ್ಳುವವರನ್ನು ದೂರುವುದೇಕೆ? ಮಾತೆತ್ತಿದರೆ "ಪ್ರೀತಿ ವಿಶ್ವಾಸ" ಅನ್ನುತ್ತೀರಲ್ಲ ? ಪ್ರೀತಿ ಇರುವಾಗ ದುಡ್ಡು ಕಾಸು ಇರಬಾರದು ಎಂದಿದೆಯಾ? ಆಯಿತಪ್ಪ. ನಮಗೆ ಪ್ರೀತಿಯೇ ದೊಡ್ಡದು - ಅಂತಿರಲಿ. ಎಲ್ಲರಿಗೂ ಹಾಗೇ ಇರಬೇಕಾ ? ಆಡಿಕೊಳ್ಳುವುದು ಜನರ ಬುದ್ಧಿ. ಅದಕ್ಕೆಲ್ಲ ಉತ್ತರಿಸುವ ಅಗತ್ಯ ಉಂಟಾ? ನಮ್ಮಲ್ಲಿ ಪ್ರೀತಿ ಇದೆ. ದುಡ್ಡು ಕಾಸು ಇಲ್ಲ. ಇದು ವಾಸ್ತವ. ನಾನು ಒಪ್ಪುತ್ತೇನೆ. ಅದಕ್ಕೆ ನಮ್ಮ ಕನ್ನಡ ಪಂಡಿತರು "ಗಾರ್ದಭ" ಎಂದೆಲ್ಲ ಸಂಸ್ಕೃತದಲ್ಲಿ ಮೂದಲಿಸುವುದೇಕೆ?" ಅಂತ ವ್ಯಂಗ್ಯದ ಒಗ್ಗರಣೆ ಬೆರೆಸಿ ಅಮ್ಮನು ಪ್ರತಿಕ್ರಿಯಿಸುತ್ತಿದ್ದಳು.

ಪೂರ್ವಾಶ್ರಮದಲ್ಲಿ ಶಿಷ್ಯಳೂ ಆಗಿದ್ದ ನಮ್ಮ ಅಮ್ಮನ ವಕಾಲತ್ತಿನ ಮಾತು ಕೇಳಿದ ಅಪ್ಪಯ್ಯನು ಮುಗುಳ್ನಗುತ್ತ - "ನೋಡು.. ಪ್ರೀತಿ ಇರುವಲ್ಲಿ ದುಡ್ಡು ಕಾಸು ಇರುತ್ತದೋ ಇಲ್ಲವೋ... ಆದರೆ ದುಡ್ಡು ಕಾಸು ಇರುವಲ್ಲಿ ಪ್ರೀತಿ ಇರುವುದು ಕಡಿಮೆ. ವಿವೇಕ ತಂದುಕೋ. ನಿನ್ನ ಹಿತಚಿಂತಕರು ದೊಡ್ಡವರು ಎಂದಾದರೆ ಅವರು ಅದನ್ನು ಕೃತಿಯಲ್ಲಿ ತೋರಿಸಲಿ. ನಮಗೆ ಅವರ ಯಾರ  ಸಹಾಯವೂ ಬೇಡ. ಅನುಕಂಪವೂ ಬೇಡ. ಅವರಲ್ಲಿಲ್ಲದ ಉತ್ತಮಿಕೆ ಏನಾದರೂ ನಮ್ಮಲ್ಲಿದ್ದರೆ ಅದನ್ನು - ಅವರು ಸಹೃದಯರಾದರೆ ಗುರುತಿಸಲಿ. ಇಲ್ಲವಾದರೆ ಅವರವರ ಮರ್ಯಾದೆಯ ಇತಿಮಿತಿಯಲ್ಲಿರಲಿ. ಆಗ ಎಲ್ಲರ ಗೌರವವೂ ಉಳಿಯುತ್ತದೆ. ಅಲ್ಪತೃಪ್ತಿಯಲ್ಲಿಯೇ ಬದುಕಿನ ಸುಖ ಕಾಣುವವರೆಲ್ಲರೂ ಅಲ್ಪರಲ್ಲ. ನಾವೇನು ಅವರ ಮನೆಗೆ ಹೋಗಿ ಊಟಕ್ಕೆ ಕುಳಿತಿಲ್ಲವಲ್ಲಾ? ನನ್ನ ಹೆಂಡತಿ ಮಕ್ಕಳನ್ನು ನಿರ್ವಂಚನೆಯಿಂದ ನೋಡಿಕೊಳ್ಳುವ ಶಕ್ತಿ ನನಗಿದೆ; ನಾನು ನಂಬಿದ ದೈವಕ್ಕೂ ಇದೆ. ನಿನ್ನ ಅಪ್ಪನ ಮನೆಯವರ ಹೆಸರಿನಲ್ಲಿ ನಾವ್ಯಾಕೆ ಮನಸ್ತಾಪ ಮಾಡಿಕೊಳ್ಳುವುದು? ಅವರು ಅವಮಾನ ಮಾಡುತ್ತಾರೆಂದು ನಿನಗೆ ಅನ್ನಿಸಿದರೆ - ಅಲ್ಲಿಗೆ ಹೋಗದಿದ್ದರಾಯಿತು. ಎಲ್ಲವೂ ಸನ್ಮಾನ ಅನ್ನಿಸಿದರೆ - ಹೋಗು... ನಿನ್ನಿಷ್ಟ. ಪರಶಿವನು ಬೇಡಬೇಡವೆಂದರೂ ಕೇಳದೆ, ತನ್ನ ಅಪ್ಪನ ಮನೆಗೆ ಓಡಿದ ದಾಕ್ಷಾಯಿಣಿಯ ಕತೆ ಏನಾಯಿತು ಅಂತ ಗೊತ್ತುಂಟಲ್ಲಾ?" ಎಂದು ಅಪ್ಪಯ್ಯನೂ ನಯವಾಗಿ ಮಾತಿನ ಚಾಟಿ ಬೀಸುತ್ತಿದ್ದರು.

ಒಟ್ಟಿನಲ್ಲಿ ದುಡ್ಡಿನ ಕೊರತೆಯೆಂಬ ಮೂಲ ಸಮಸ್ಯೆಯಿಂದಾಗಿ - ಅನಾವಶ್ಯಕವಾದ ಸಣ್ಣಪುಟ್ಟ ಘರ್ಷಣೆಗಳೂ ಪುರಾಣಕಥಾವಳಿಗಳೂ ನಮ್ಮ ಮನೆಯಲ್ಲಿ ನಡೆದುಹೋಗುತ್ತಿದ್ದವು. ನನ್ನ ಕಿತಾಪತಿಯಿಂದಾಗಿ ಶುರುವಾಗುತ್ತಿದ್ದ ಸಂವಾದವು ಅನೇಕ ಬಾರಿ ಹಾದಿತಪ್ಪಿ, ಅಪ್ಪಯ್ಯ ಅಮ್ಮನ ಮನಸ್ತಾಪದಲ್ಲಿ ಮುಗಿಯುತ್ತಿದ್ದುದೂ ಇತ್ತು. ಹಗ್ಗದ ಮೇಲೆ ನಡೆದಂತೆ ಸಾಗುತ್ತಿದ್ದ ನಮ್ಮ ಬದುಕಿನ ಚಕ್ರದ "ಕಡ್ಡಿ ಮುರಿದು" ಆಗಾಗ ಚೆಂದ ನೋಡುತ್ತಿದ್ದ ನನ್ನಂಥ ಬುದ್ಧಿಗೇಡಿ ತಲೆಹರಟೆ ಮಕ್ಕಳನ್ನು ಅಪ್ಪಯ್ಯ ಅಮ್ಮ ಅದು ಹೇಗೆ ಸಹಿಸಿಕೊಂಡರೋ? ನನಗೆ ಗುದ್ದಿದ ಅಮ್ಮನು ಅದೆಷ್ಟೋ ಬಾರಿ ಅಸಹಾಯಕಳಾಗಿ ತಾನೇ ಅತ್ತದ್ದನ್ನು ನಾನು ನೋಡಿದ್ದೇನೆ. ಆಗ ಅರ್ಥವಾಗಿರಲಿಲ್ಲ. "ನನಗೆ ಹೊಡೆದು ಅವಳ್ಯಾಕೆ ಅಳುತ್ತಾಳೆ? ನಾನೇ ಅಳುತ್ತಿಲ್ಲ... ಇವಳದ್ದೊಂದು ವೇಷ.. " ಅಂತ ಗೊಣಗಿಕೊಂಡದ್ದೂ ಇತ್ತು. ನನ್ನ ಹಿರಿಯಕ್ಕನು ಅಂತಹ ಸಂದರ್ಭಗಳಲ್ಲೆಲ್ಲ ನನ್ನನ್ನು ದೂರಕ್ಕೆ ಎಳೆದುಕೊಂಡು ಹೋಗಿ ನನ್ನ ಕಿವಿ ತಿಪ್ಪಿ "ಕೆಟ್ಟ ಮಂಗ" ಅಂತ ಬೈದದ್ದೂ ಇದೆ. (ನಮ್ಮೂರಿನ ಮರ್ಯಾದಸ್ಥರಿಗೆ ಇಂತಹ ಬೈಗುಳಗಳು ಸಾಕಾಗುತ್ತಿತ್ತು.)

ಹೀಗಿದ್ದರೂ, ನನ್ನ ಅಮ್ಮನು ಎಂದೂ ಆತ್ಮಸ್ಥೈರ್ಯ ಕಳೆದುಕೊಂಡವಳಲ್ಲ. ಒಮ್ಮೊಮ್ಮೆ ಭಾವುಕಳಾದಾಗ ಅನ್ನಿಸುತ್ತದೆ... "ಬರೇ ಕಷ್ಟವನ್ನೇ ಪಟ್ಟರಲ್ಲ ನನ್ನ ಅಪ್ಪ ಅಮ್ಮ? ಅವರ ಋಣವನ್ನು, ಮನಸ್ಸಿಗೆ ತೃಪ್ತಿಯಾಗುವಷ್ಟು ತೀರಿಸಲಿಕ್ಕಾದರೂ ನಾನು ಇನ್ನೊಂದು ಜನ್ಮ ಪಡೆಯಲೇ ಬೇಕಲ್ಲವೆ?" ಅಮ್ಮನಾದರೋ - ತನ್ನ ಮಕ್ಕಳ "ಕೆಲವು" ಯಶಸ್ಸನ್ನಾದರೂ ಕಣ್ಣಾರೆ ಕಂಡಳು. ಆದರೆ ಅಪ್ಪಯ್ಯ ಮಾತ್ರ ಭೌತಿಕ ಸುಖದ ಲವಲೇಶವನ್ನೂ ಸ್ಪರ್ಶಿಸದೆ ಅವಿಳಾಸಿಯಾದರು. ನನ್ನ ಮನಸ್ಸು ಎಷ್ಟೋ ಸಾರಿ ಅಳುತ್ತದೆ - "ಎಲ್ಲಿದ್ದೀರಿ ಅಪ್ಪಯ್ಯಾ..? ಅಂದು ಒಂದೇ ಒಂದು ಪಂಕವೂ ಇಲ್ಲದೆ ಸೆಕೆಯಲ್ಲಿ ನಲುಗಿ ಹೋದಿರಲ್ಲಾ? ಏಳೆಂಟು ವರ್ಷಗಳ ಕಾಲ ಮಲಗಿಯೇ ಕಳೆದಿರಲ್ಲ? ಈಗ ನಮ್ಮಲ್ಲಿ ಎಲ್ಲ ವ್ಯವಸ್ಥೆ ಇದೆ. ಮಕ್ಕಳಲ್ಲಿಯೂ ಕೊಡುವಷ್ಟು ಸುಖವಿದೆ; ಮನಸ್ಸೂ ಇದೆ. ಆದರೆ ನೀವೇ ಇಲ್ಲವಲ್ಲಾ? ನನ್ನನ್ನು ಎಷ್ಟೊಂದು ಪ್ರೀತಿಸಿದಿರಿ...? ನನಗೂ ನಿಮ್ಮನ್ನು ಪ್ರೀತಿಸಬೇಕೆಂಬ ಪ್ರಬುದ್ಧತೆ ಬರುವಾಗ - "ಈ ಲೋಕದ ಹಂಗೇ ಬೇಡ"ವೆಂದು ನೀವು ಹೋದದ್ದಾದರೂ ಎಲ್ಲಿಗೆ?"  ಯಾರನ್ನು ಕೇಳಲಿ ?

ಇದೆಂಥ ನ್ಯಾಯ? ಹೌದು. ಇದೇ ಭೂಮಿಯ ನ್ಯಾಯ. ಇನ್ನೊಂದು ನ್ಯಾಯವನ್ನು ಇಲ್ಲಿಗೆ ಎಳೆದು ತರಲಾಗದು. ಶುದ್ಧ ನ್ಯಾಯವು ತಾನಾಗಿಯೇ ಸಿಗಬೇಕು. ಅದು ಸಿಗುವವರೆಗೆ ತಾಳ್ಮೆಯಿಂದ ಕಾಯಬೇಕು. ಆದರೆ ಅಷ್ಟರೊಳಗೆ ವ್ಯಕ್ತಿಯ ಆಯುಷ್ಯವೇ ಮುಗಿದುಹೋದರೆ? ಜನ್ಮಾಂತರದ ನಂಬಿಕೆ ಇದ್ದರೆ, ಆಗ ಅದನ್ನು ಒಪ್ಪಿ, ಸುಮ್ಮನಾಗಬೇಕು. ಯಾವುದೇ ನಂಬಿಕೆಗಳು ಉಪಯೋಗಕ್ಕೆ ಬರುವುದೇ ಇಂತಹ ಹತಾಶೆಯ ಸ್ಥಿತಿಗಳಲ್ಲಿ. ಈ ಜಗತ್ತಿನ ನ್ಯಾಯಕ್ಕಾಗಿ ವೃಥಾ ತಲೆ ಘಟ್ಟಿಸಿಕೊಂಡರೆ ಏನೇನೂ ಫಲವಿಲ್ಲ. ಹೀಗೆಲ್ಲ ನನ್ನಷ್ಟಕ್ಕೇ ಅಂದುಕೊಂಡರೂ ಅಪ್ಪಯ್ಯಾ.. ಅಪ್ಪಯ್ಯಾ.. ಯಾಕೋ ಮನವು ಅಳುತಿದೆ. ಈಗಲೂ ನವನವೀನವೆನ್ನಿಸುತ್ತಿರುವ "ಮುಗಿದ ಗೀತೆ"ಯನ್ನು ಮತ್ತೊಮ್ಮೆ ಹಾಡುವುದಾದರೂ ಹೇಗೆ?

ಪ್ರೀತಿಯಿಂದಲೇ ಸಂಸಾರವನ್ನು ಕಟ್ಟಿದ, ಋಷಿಸದೄಶ ಜೀವನ ನಡೆಸಿದ ನನ್ನ ಅಪ್ಪಯ್ಯ ಅಮ್ಮನ ಜೀವನ ತಪಸ್ಸು- ಅನನ್ಯ. ಆ ಬಗೆಗೆ, ಸಾಧ್ಯವಾದರೆ ಮುಂದೆ ಹೇಳುತ್ತೇನೆ. ಆಗ ಮತ್ತೊಮ್ಮೆ ಕೋಟೇಶ್ವರಕ್ಕೂ ಪ್ರದಕ್ಷಿಣೆ ಬರುವ. (ಸರ್ವಾವಸ್ಥೆಯೊಳ್ ಬಾಲ್ಯಾವಸ್ಥೆ - ಭಾಗ 1 ಮತ್ತು 2 ನೋಡಿ)

ಮನಸ್ಸು ಭಾವುಕವಾದಾಗಲೆಲ್ಲ ಹೀಗೇ... ತನ್ನಷ್ಟಕ್ಕೇ ತಳಮಳಿಸುತ್ತಲೇ ಇರುತ್ತದೆ. ವಾಸ್ತವವು ಗದರಿಸಿ, ತನ್ನತ್ತ ಸೆಳೆಯುವವರೆಗಷ್ಟೇ - ಭಾವಲೋಕ. ಮತ್ತೆ ಹಿಂದಿರುಗಿ ಬರಲೇಬೇಕಲ್ಲವೇ.. ವಾಸ್ತವದ ತೆಕ್ಕೆಗೆ ? ಬದುಕಿನ ಬಿಕ್ಕಿಗೆ..! ಹಾಗಾದಾಗಲೆಲ್ಲ ಕೋಟೇಶ್ವರವು ನನ್ನನ್ನು ಸಂತೈಸುತ್ತದೆ.

ಕೋಟೇಶ್ವರದಲ್ಲಿ - ಒಟ್ಟಾರೆ ಹೇಗೋ ಆರನೆಯ ತರಗತಿಯನ್ನು ದಾಟಿದೆ. ಅದೇ ವರ್ಷ, ಅಪ್ಪಯ್ಯನಿಗೆ ಕುಂದಾಪುರದ ಬೋರ್ಡ್ ಹೈಸ್ಕೂಲಿಗೆ ವರ್ಗವಾದ್ದರಿಂದ, ನನ್ನ ಹನ್ನೊಂದನೆಯ ವರ್ಷದಲ್ಲಿ ನಾವೆಲ್ಲರೂ ಕುಂದಾಪುರಕ್ಕೆ ಬಂದು ನೆಲೆಸಿದೆವು. ಏಳನೆಯ ತರಗತಿಯಿಂದ ತೊಡಗಿ, ನನ್ನ ಮುಂದಿನ ವಿದ್ಯಾಭ್ಯಾಸವೆಲ್ಲವೂ ಕುಂದಾಪುರದಲ್ಲಿದ್ದಾಗಲೇ ನಡೆಯಿತು. ಕುಂದಾಪುರಕ್ಕೆ ಬಂದ ನಂತರ ನನ್ನ ಬದುಕು ಮತ್ತು ವರ್ತನೆಯಲ್ಲಿಯೂ ತೀವ್ರ ಬದಲಾವಣೆಯು ಕಾಣಿಸತೊಡಗಿತು. ನನ್ನ ಹುಚ್ಚು ಹುಡುಗಾಟವು ಮರೆಯಾಗುತ್ತ ನಾನು ನನ್ನಷ್ಟಕ್ಕೇ ಗಂಭೀರವಾಗತೊಡಗಿದೆ. (ಸಂತೋಷವನ್ನೂ ಕಳೆದುಕೊಂಡೆ) ನನ್ನ ವ್ಯಕ್ತಿತ್ವ ನಿರ್ಮಾಣದ ಕಡೆಗೆ ನಾನೇ ಗಮನ ಕೊಡಲಾರಂಭಿಸಿದ ದಿನಗಳವು. ಅಪ್ಪಯ್ಯ ಅಮ್ಮಹೇಳಿದ ಮಾತುಗಳನ್ನೆಲ್ಲ ಅರಿತು ಆಚರಿಸತೊಡಗಿದೆ. ಬೆಳಿಗ್ಗೆ ನಾಲ್ಕು ಗಂಟೆಯಿಂದ ರಾತ್ರಿ ಒಂಬತ್ತು ಗಂಟೆಯವರೆಗೆ ಎಡೆಬಿಡದೆ ಅರ್ಥಪೂರ್ಣ ಕೆಲಸಗಳನ್ನಷ್ಟೇ - ಮಾಡತೊಡಗಿದೆ. ಅದಕ್ಕಾಗಿ ನಾನೇ ಒಂದು TIME TABLE ನ್ನೂ ತಯಾರಿಸಿಕೊಂಡೆ. (ಶಾಲೆಯ Time Table ನಂತಹುದೆ!) ನನ್ನ Time Table ಗೆ ಚಾಚೂ ತಪ್ಪದೆ ವಿಧೇಯಳಾಗಿ ನಡೆದುಕೊಳ್ಳತೊಡಗಿದೆ.

ದಿನವೂ ಬೆಳಿಗ್ಗೆ ನಾಲ್ಕಕ್ಕೆ ಎದ್ದು ಮುಖ ತೊಳೆದು ಹಲ್ಲುಜ್ಜಿ ನೀರು ಕುಡಿದು ಗಂಭೀರ ಓದಿಗೆ ತೊಡಗುತ್ತಿದ್ದೆ. ಮುಖ್ಯವಾಗಿ ಶಾಲೆಯ ಪಾಠವನ್ನು ಓದುತ್ತಿದ್ದೆ. ಆರು ಗಂಟೆಗೆ ರೇಡಿಯೋ ಮಾತನಾಡಲು ಆರಂಭಿಸುತ್ತಿತ್ತು. ಮರಾಠಿ ಅಭಂಗಗಳನ್ನು (ಮುಂಬೈ) ಕೇಳುತ್ತ ಮನೆ ಕೆಲಸ ಆರಂಭಿಸುತ್ತಿದ್ದೆವು. ಮೊದಲು ದೇವರ ಪೂಜೆಗೆ ಉಪಯೋಗವಾಗುವ ಪಾತ್ರೆಗಳನ್ನೆಲ್ಲ ಹುಳಿ ಬೂದಿ ಹಾಕಿ ಫಳಫಳ ಹೊಳೆಯುವಂತೆ ತೊಳೆಯುವ ಕೆಲಸ. (ನಾನು ಹುಣಿಸೆ ಹಣ್ಣನ್ನು ಉಜ್ಜಿದ ಕೂಡಲೆ ಅರುಣಕ್ಕನು ಬೂದಿ ಹಾಕಿ ತಿಕ್ಕುತ್ತಿದ್ದಳು. ಅದನ್ನು ಇಬ್ಬರೂ ಸೇರಿ ನೀರಿನಿಂದ ತೊಳೆದು, ದೇವರ ಕೋಣೆಯಲ್ಲಿ ಆ ತೊಳೆದ ಪಾತ್ರೆಗಳನ್ನಿಟ್ಟರೆ ಅಲ್ಲಿಗೆ ಆ ಕೆಲಸ ಮುಗಿಯಿತು.) ಅಷ್ಟು ಹೊತ್ತಿಗೆ ಸೂರ್ಯನಮಸ್ಕಾರಗಳನ್ನು ಮುಗಿಸಿರುತ್ತಿದ್ದ ನನ್ನ ಅಪ್ಪಯ್ಯನು ನನ್ನನ್ನು ಕರೆದು ಬೆಳಗಿನ ಸೂರ್ಯನನ್ನು ತೋರಿಸುತ್ತಿದ್ದರು. (ಸೂರ್ಯನ ಮಧ್ಯಭಾಗವನ್ನು ಎರಡೂ ಕೈಗಳ ಬೆರಳನ್ನು ಜೊತೆ ಸೇರಿಸಿ ನೋಡುವ ಬಗೆಯನ್ನು ನನಗೆ ಕಲಿಸಿಕೊಟ್ಟಿದ್ದರು."ಸೂರ್ಯನು ಪ್ರತ್ಯಕ್ಷ ದೇವರು. ಭ್ರೂಮಧ್ಯದಲ್ಲಿ ಅವನ ತೇಜಸ್ಸನ್ನು ಧ್ಯಾನಿಸು" ಎಂದೂ ಉಪದೇಶಿಸಿದ್ದರು.) ಆಮೇಲೆ ಮನೆಯನ್ನು ಗುಡಿಸಿ, ಒರೆಸಿ ಒಬ್ಬೊಬ್ಬರಾಗಿ ಸ್ನಾನ ಮುಗಿಸುತ್ತಿದ್ದೆವು. ಅನಂತರ ಸಮಯ ಮೀರುತ್ತಿದೆ ಅನ್ನಿಸಿದರೆ - ನಾವು ಊಟ ಮಾಡುವಾಗಲೇ ಅಮ್ಮನು ನಮ್ಮ ಹಿಂದೆ ಕೂತು ಜಡೆ ಕಟ್ಟಿ ಮುಗಿಸುತ್ತಿದ್ದಳು. ಆಗ ಗಂಟೆ ಒಂಬತ್ತು ದಾಟುತ್ತಿತ್ತು. ನೇರವಾಗಿ ಶಾಲೆಗೆ ಓಟ.

ಮಧ್ಯಾಹ್ನದ ಊಟಕ್ಕೆ ಮನೆಗೆ ಓಡಿಕೊಂಡೇ ಬಂದು ಹೋಗುತ್ತಿದ್ದೆವು. ಸಂಜೆ ಮನೆಗೆ ಬಂದ ಕೂಡಲೇ ಕುಡಿಯಲಿಕ್ಕೆ ಜೀರಿಗೆ ಬಿಸಿನೀರು... ತಿನ್ನಲು ಅವಲಕ್ಕಿಯೋ ಮುಂಡಕ್ಕಿಯೋ... ಏನಾದರೂ ಇರುತ್ತಿತ್ತು. ಆ ಹೊತ್ತಿನಲ್ಲಿ ಪುಸ್ತಕ ಓದುತ್ತಲೇ ತಿಂಡಿ ತಿನ್ನುವ ಮಜಾ ಅನುಭವಿಸುತ್ತಿದ್ದೆವು. ಚಂದಾಹಣವನ್ನು ಮೊದಲೇ ಕಟ್ಟುತ್ತಿದ್ದ ಅಪ್ಪಯ್ಯನು ಪಂಚಾಮೄತ, ಕಸ್ತೂರಿ, ಚಂದಮಾಮ ಸಂಚಿಕೆಗಳನ್ನು ಅಂಚೆಯಲ್ಲಿ ಬರುವಂತೆ ಮಾಡಿದ್ದರು. ಒಂದು ಕನ್ನಡದ ದಿನಪತ್ರಿಕೆಯೂ ಬರುತ್ತಿತ್ತು. ಶಾಲೆಯಿಂದ ಮನೆಗೆ ಬಂದ ಕೂಡಲೇ, ಕಾಲು ತೊಳೆಯುವುದಕ್ಕೂ ಮೊದಲೇ ನಮನಮಗೆ ಓದಬೇಕೆಂದಿರುವ ಪುಸ್ತಕವನ್ನು ಕಂಕುಳಲ್ಲಿ ಸಿಕ್ಕಿಸಿಕೊಂಡೇ ಬಚ್ಚಲಿಗೆ ಹೋಗುತ್ತಿದ್ದೆವು. ಯಾಕೆಂದರೆ ನಮಗೆ ಬೇಕಿದ್ದ ಪುಸ್ತಕವನ್ನು ಹಿಂದಿನಿಂದ ಬಂದ ಇನ್ನೊಬ್ಬಳು ವಶಪಡಿಸಿಕೊಂಡು ಬಿಟ್ಟರೆ, ಮತ್ತೆ ಕೇಳಿದರೂ ಯಾರಿಗೆ ಯಾರೂ ಕೊಡುತ್ತಿರಲಿಲ್ಲ. ಆದ್ದರಿಂದ ಪುಸ್ತಕವನ್ನು ಮೊದಲು ಸ್ವಾಧೀನಪಡಿಸಿಕೊಳ್ಳುತ್ತಿದ್ದೆವು. ಹೀಗೆ ತಿಂಡಿಯ ಜತೆಗೆ, ಅಕ್ಷರ ಮನೋವಿಹಾರವನ್ನೂ ನಡೆಸುತ್ತ ಸುಮಾರು ಒಂದು ಗಂಟೆಯ ಕಾಲ ಎಲ್ಲರೂ ಸ್ವಾತಂತ್ರ್ಯ ಅನುಭವಿಸುತ್ತಿದ್ದೆವು. ಅನಂತರ ಐದು ಗಂಟೆಗೆ ನಾನು ಸಂಗೀತ ತರಗತಿಗೆ ಓಡುತ್ತಿದ್ದೆ.

ಸಂಗೀತ ಕ್ಲಾಸಿನಿಂದ ಆರು ಗಂಟೆಗೆ ಹಿಂದಿರುಗಿದರೆ ಎಲ್ಲರೂ ಕೂತುಕೊಂಡು ಒಂದಿಷ್ಟು ಲೋಕಾಭಿರಾಮ ಹರಟೆ (ದಿನದ ಮುಖ್ಯಾಂಶಗಳು), ಅನಂತರ ಏಳು ಗಂಟೆಯಿಂದ ಒಂದು ಗಂಟೆಯ ಕಾಲ ಭಜನೆ, ಅನಂತರ ರಾತ್ರಿಯ ಊಟ, ಉಂಡಲ್ಲಿ ಗೋಮಯದಿಂದ ಸಾರಿಸಿ ಬಟ್ಟೆಯಿಂದ ಒರೆಸಿ, ಆಮೇಲೆ ಊಟದ ತಟ್ಟೆ-ಪಾತ್ರೆಗಳನ್ನೆಲ್ಲ ತೊಳೆದು, ಬೆಳಗಿನ ಸ್ನಾನಕ್ಕೆ ಹಂಡೆಗೆ ನೀರು ತುಂಬಿಸಿ ನಿರಾಳವಾಗುತ್ತಿದ್ದೆವು. ಆಮೇಲೆ ಮರುದಿನದ ಶಾಲೆಯ ಪಾಠದ ತಯಾರಿಯನ್ನು ಮಾಡಿ ಮುಗಿಸಿ, ಹಾಸಿಗೆ ಸೇರುತ್ತಿದ್ದೆವು. ಮನೆ ಕೆಲಸವನ್ನು ಎಲ್ಲ ಮಕ್ಕಳೂ ಸೇರಿಕೊಂಡೇ ಮಾಡುತ್ತಿದ್ದೆವು. ಅದೂ ಇದೂ ಮಾತಾಡುತ್ತ, ಕೆಲವೊಮ್ಮೆ ಜಗಳವನ್ನೂ ಮಾಡಿಕೊಳ್ಳುತ್ತ, ಮತ್ತೆ ಮತ್ತೆ ದೋಸ್ತಿಯಾಗುತ್ತ... ಅಂತೂ ಚೆಂದದಲ್ಲಿಯೇ ದಿನ ಓಡುತ್ತಿತ್ತು. ಭಾನುವಾರದಂದು ಮಾತ್ರ, ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಅಮ್ಮನ ಜೊತೆಗೇ ಸುತ್ತುತ್ತಿದ್ದೆವು. ಅಡಿಗೆಯಲ್ಲಿ, ಬಟ್ಟೆ ಒಗೆಯುವುದರಲ್ಲಿ ಅಮ್ಮನಿಗೆ ಸಹಾಯಮಾಡುತ್ತ, ಅಮ್ಮನ ಅನುಭವದ ರೋಚಕ ಕತೆಗಳನ್ನು ಕೇಳುತ್ತ ಕೆಲವೊಮ್ಮೆ ಬೈಸಿಕೊಳ್ಳುತ್ತ ಪರೋಕ್ಷವಾಗಿ ಬದುಕಿನ ಪಾಠವನ್ನೂ ಕಲಿಯುತ್ತಿದ್ದೆವು. ಸಂಜೆಯ ಹೊತ್ತಿನಲ್ಲಿ ಆಟ ಆಡುತ್ತಿದ್ದೆವು. ಕುಂಟಾಬಿಲ್ಲೆ, ಗಜಗದ ಆಟ, ರಿಂಗ್ ಟೆನ್ನಿಸ್, ಕೇರಂ, ಚೆಸ್, ಲೂಡೊ... ಇತ್ಯಾದಿ. ಅವೆಲ್ಲ ಆಟಿಕೆಗಳನ್ನೂ ಅಪ್ಪಯ್ಯನು ನಮಗೆ ಒದಗಿಸಿದ್ದರು. ಆಟಕ್ಕಾಗಿ ಬೇರೆ ಮನೆಗಳನ್ನು ಸುತ್ತಬಾರದೆಂಬ ಮುಂಜಾಗ್ರತೆಯದು. ಸುತ್ತಲಿನ ಗೆಳತಿಯರೂ ನಮ್ಮ ಮನೆಗೆ ಬಂದು ಆಟವಾಡಲು ಸೇರಿಕೊಂಡ ದಿನಗಳಂದು ಗೋಂಗುಲ್ಲೆಬ್ಬಿಸುತ್ತಿದ್ದುದೂ ಇತ್ತು. ಕತ್ತಲಾದದ್ದೂ ಗೊತ್ತಾಗುತ್ತಿರಲಿಲ್ಲ."ಆಟ ಸಾಕು. ಒಳಗೆ ಬನ್ನಿ" ಎಂದು ಮನೆಯೊಳಗಿಂದ ಸಂದೇಶ ಬರುವ ವರೆಗೂ ಎಚ್ಚರ ತಪ್ಪಿದಂತೆ ಆಡುತ್ತಿದ್ದೆವು. ಮುಂದಿನ ಇಡೀ ವಾರಕ್ಕೆ ಸಾಕಾಗುವಷ್ಟು ಹೊಟ್ಟೆ ಹುಣ್ಣಾಗುವಂತೆ ನಗುತ್ತಿದ್ದೆವು. ಬಲು ಸುಂದರವಾದ ಬಾಲಜಗತ್ತಿನ, ಚೆಂದದ ಕ್ರಮಬದ್ಧ ಕಾಲವದು.
ನನಗೆ ನೆನಪಾಗುತ್ತದೆ...


ಆಗ ನಾನು ಕುಂದಾಪುರದ ಬೋರ್ಡ್ ಹೈಸ್ಕೂಲಿನ ಒಂಬತ್ತನೆಯ ತರಗತಿಯ ವಿದ್ಯಾರ್ಥಿನಿ. ಊರಿಗೆ ಯಾರೇ ಹಿರಿಯ ವ್ಯಕ್ತಿಗಳು ಬರಲಿ, ಸಮಾರಂಭಗಳು ನಡೆಯಲಿ - ಅಲ್ಲೆಲ್ಲ ನನ್ನ ಉಪಸ್ಥಿತಿ ಇರುತ್ತಿತ್ತು. ಪ್ರಾರ್ಥನಾಗೀತೆಯನ್ನು ಹಾಡುವ ಜವಾಬ್ದಾರಿಯಂತೂ ನನ್ನ ಹೆಗಲಿಗೇ ಬೀಳುತ್ತಿತ್ತು. ಈ ನೆವನದಲ್ಲಿ ಹಲವಾರು ಗಣ್ಯ ವ್ಯಕ್ತಿಗಳನ್ನು ಕಂಡು ಮಾತನಾಡುವ ಅವಕಾಶವೂ ಲಭಿಸುತ್ತಿತ್ತು. ಸರ್ವಶ್ರೀ ಡಾ.ಕೆ.ಶಿವರಾಮ ಕಾರಂತ, ಟಿ.ಎಂ.ಎ.ಪೈ, ಟಿ.ಎ.ಪೈ, ಕೆ.ಕೆ.ಪೈ, ಎಸ್.ವಿ.ಪರಮೇಶ್ವರ ಭಟ್, ಎಂ.ಗೋಪಾಲಕೄಷ್ಣ ಅಡಿಗ, ಪಿ.ಸೂರ್ಯನಾರಾಯಣ ಚಡಗ, ಸಂತೋಷಕುಮಾರ್ ಗುಲ್ವಾಡಿ, ಭದ್ರಗಿರಿ ಕೇಶವದಾಸ್, ವಿಶುಕುಮಾರ, ಪಿ.ಗುರುರಾಜ ಭಟ್, ಚಲನಚಿತ್ರ ನಟರಾದ ವೆಂಕಟ್ರಾವ್ ತಲಗೇರಿ, ಚಿತ್ರ ನಟಿ ಆರತಿ.. ಮುಂತಾದ ಹಲವಾರು ಸಾಧಕರನ್ನು ಕಂಡು ಮಾತಾಡುವ ಅವಕಾಶವು ನನಗೆ ಸಿಕ್ಕಿತ್ತು. ಇವರಲ್ಲಿ ಹೆಚ್ಚಿನವರು ನಮ್ಮ ಮನೆಗೂ ಬಂದಿದ್ದರು. ಶ್ರೀ ಎಸ್. ವಿ. ಪರಮೇಶ್ವರ ಭಟ್ಟರು ಮಂಗಳೂರು ವಿಶ್ವವಿದ್ಯಾಲಯದ ಪ್ರಮುಖರಾಗಿದ್ದ ಅವಧಿಯಲ್ಲಿ ಹಲವು ಬಾರಿ ನಮ್ಮ ಮನೆಗೆ ಬಂದು ಅಪ್ಪಯ್ಯನ ಜತೆ ಸಾಹಿತ್ಯ ಸಂಬಂಧಿತ ಸಂಭಾಷಣೆಯನ್ನು ನಡೆಸಿದ್ದರು. ಅದೊಂದು ಭಾನುವಾರದಂದು ಅವರೊಂದಿಗೆ ನನ್ನ ಮಾವ ಶ್ರೀ A. S. N. ಹೆಬ್ಬಾರ್ ಮತ್ತು ಶ್ರೀ ಬನ್ನಂಜೆ ರಾಮಾಚಾರ್ಯ ಅವರೂ ಬಂದಿದ್ದರು; ಭಾನುವಾರದ ಕೆಲವು ನೆಂಟರೂ ಅಂದು ನಮ್ಮ ಮನೆಯಲ್ಲಿದ್ದರು. ಆ ದಿನಗಳಲ್ಲಿ, ಸಾಮಾನ್ಯವಾಗಿ ಭಾನುವಾರದಂದು ನಮ್ಮ ಮನೆಯಲ್ಲಿ ನೆಂಟರು ತಪ್ಪುತ್ತಿರಲಿಲ್ಲ. ಆದ್ದರಿಂದ ಪ್ರತೀ ಭಾನುವಾರವೂ ಒಂದಲ್ಲ ಒಂದು ವಿಶೇಷ ತಿಂಡಿಯನ್ನು ಅಮ್ಮನು ತಯಾರಿಸುತ್ತಿದ್ದಳು. ಪರಮೇಶ್ವರ ಭಟ್ಟರು ಬಂದ ದಿನ ಅಮ್ಮನು ತಯಾರಿಸಿದ್ದ ಕೆಸುವಿನ ಎಲೆಯ ಪತ್ರೊಡೆಯನ್ನು ಅತಿಥಿಗಳ ಜತೆಗೆ ನಾವೆಲ್ಲರೂ ಸವಿದಿದ್ದೆವು.


                                                      
(ನಮ್ಮ ಕುಟುಂಬದೊಂದಿಗೆ - ಸರ್ವಶ್ರೀ ಎಸ್. ವಿ. ಪರಮೇಶ್ವರ ಭಟ್, ಬನ್ನಂಜೆ ರಾಮಾಚಾರ್ಯ, ಎ. ಎಸ್. ಎನ್. ಹೆಬ್ಬಾರ್...ಮತ್ತಿತರರು)

ಪುಟ್ಟಣ್ಣ ಕಣಗಾಲ್ ಅವರು "ಧರ್ಮ ಸೆರೆ" ಚಿತ್ರದ ಚಿತ್ರೀಕರಣಕ್ಕಾಗಿ ಕುಂದಾಪುರಕ್ಕೆ ಬಂದಾಗ, ಚಿತ್ರೀಕರಣದ ಅಗತ್ಯವನ್ನು ಪೂರೈಸಲು ನಮ್ಮ ಮನೆಯಿಂದ ಹಳೆಯ ಕಾಲದ ಕೆಲವು ಹಿತ್ತಾಳೆ, ಕಂಚಿನ ಪಾತ್ರೆಗಳನ್ನು ಕೊಂಡುಹೋಗಿ, ಹಿಂದಿರುಗಿಸಿದ್ದರು. ಆಗ ನಟಿ ಆರತಿ ಮತ್ತು ಅವರ ಸೋದರನೂ ಮನೆಗೆ ಬಂದಿದ್ದರು.






ನಟ ಶ್ರೀ ವೆಂಕಟ್ರಾವ್ ತಲಗೇರಿ ಅವರು " ನಮ್ಮ ಉಡುಪರು ನೋಡಲು ನಿಮ್ಮ ಹಾಗೇ ಇದ್ದಾರೆ... ನಿಮ್ಮ ತದ್ಪ್ರತಿ" ಎಂದು ಯಾರೋ ಹೇಳಿದ್ದನ್ನು ಕೇಳಿ ನನ್ನ ಅಪ್ಪಯ್ಯನನ್ನು ನೋಡಲು ನಮ್ಮ ಮನೆಗೆ ಬಂದಿದ್ದರು. ಆಗ ಅನಾರೋಗ್ಯದಿಂದಿದ್ದ ಅಪ್ಪಯ್ಯನ ಜತೆ ತುಂಬ ಹೊತ್ತು ಕುಳಿತು ಮಾತನಾಡಿ ಹೋಗಿದ್ದರು. ಮುಂಬೈ ನಾಟಕ ತಂಡದೊಂದಿಗೆ ಬಂದಿದ್ದ ಸಂಗೀತ ಸಂಯೋಜಕರಾದ ಶ್ರೀ ವಸಂತ ಅವರೂ ಅಂದು ನಮ್ಮ ಮನೆಯಲ್ಲಿದ್ದರು. ನನಗೆ ಹಾಡುಗಳ ಧಾಟಿಯನ್ನು ಕಲಿಸಲೋಸುಗ ಅಂದು ಮನೆಗೆ ಬಂದಿದ್ದ ಶ್ರೀ ವಸಂತ ಅವರೂ ಶ್ರೀ ತಲಗೇರಿ ಅವರ ಜತೆಗೆ ನಮ್ಮ ಫೊಟೊದಲ್ಲಿ ಉಳಿದುಕೊಂಡಿದ್ದಾರೆ. ಅಂದಿನ ನೆನಪಾಗಿ ಆ ಫೊಟೋಗಳು ಈಗಲೂ ನನ್ನಲ್ಲಿವೆ.

ಪುರುಷಾಮೃಗ ಎಂಬ ಶಬ್ದದ ಜಿಜ್ಞಾಸೆಗೆಂದು ಅಪ್ಪಯ್ಯನನ್ನು ಹುಡುಕಿಕೊಂಡು ಕುಂದಾಪುರಕ್ಕೆ ಬಂದಿದ್ದ ಸಾಹಿತಿ ಶ್ರೀ ವಿಶುಕುಮಾರ್ ಅವರು ಅನಂತರ ಅಪ್ಪಯ್ಯನ "ಪುರಾಣ ಭಾರತ ಕೋಶ" ಗ್ರಂಥವನ್ನು ಪ್ರಕಟಿಸುವಲ್ಲಿಯೂ ನೆರವಾದರು. ತಮ್ಮ ಸಂದೇಹ ನಿವಾರಣೆಗೆಂದು ಬಂದಿದ್ದ ವಿಶುಕುಮಾರ್ ಅವರು ಕೋಶದ ಹಸ್ತಪ್ರತಿಯನ್ನು ನೋಡಿ ದಂಗಾಗಿ, "ಇದು ಪ್ರಕಟವಾಗಲೇಬೇಕಾದ ಪುಸ್ತಕ" ಎಂದದ್ದು ಮಾತ್ರವಲ್ಲದೆ "ಪುರಾಣ ಭಾರತ ಕೋಶ" ಗ್ರಂಥದ ಹಸ್ತಪ್ರತಿಯನ್ನು - ಅವರು ತಾವೇ ಹೊತ್ತುಕೊಂಡು ಹೋಗಿ ಪ್ರಕಾಶಕರಾದ ಮೈಸೂರಿನ ಗೀತಾ ಬುಕ್ ಹೌಸ್ ನ ಶ್ರೀ ಸತ್ಯನಾರಾಯಣ ರಾವ್ ಅವರಿಗೆ ತಲುಪಿಸಿ ಬಂದಿದ್ದರು. 1975 ರಲ್ಲಿ ಡಾ. ಕೆ. ಶಿವರಾಮ ಕಾರಂತರ ಮುನ್ನುಡಿಯೊಡನೆ "ಪುರಾಣ ಭಾರತ ಕೋಶ"ವು ಮೊತ್ತಮೊದಲು ಪ್ರಕಟಗೊಂಡಿತು. ಅನಂತರ ಆ ಪುಸ್ತಕವು 7 ಮುದ್ರಣಗಳನ್ನು ಕಂಡಿದೆ. ಕನ್ನಡ ಪುಸ್ತಕ ಪ್ರಾಧಿಕಾರದವರು ಹಾಗೂ ಸಪ್ನಾ ಬುಕ್ ಹೌಸ್ ನವರೂ ಪುನರ್ಮುದ್ರಿಸಿ ಪುರಾಣಾಸಕ್ತರಿಗೆ ಉಪಕರಿಸಿದ್ದಾರೆ. ಆದರೆ ಈ ಸಂಭ್ರಮವನ್ನು ಅಪ್ಪಯ್ಯನು ಅಂದು ಅನುಭವಿಸುವ ಸ್ಥಿತಿಯಲ್ಲಿರಲಿಲ್ಲ. ಅದಾಗಲೇ (1973 ರಲ್ಲಿ) ಪಾರ್ಶ್ವವಾಯು ಪೀಡಿತರಾಗಿದ್ದ ಅಪ್ಪಯ್ಯನು ಅಂದು ತಮ್ಮ ಪ್ರಕಟಿತ ಪುಸ್ತಕವನ್ನು ಎದೆಗೊತ್ತಿಕೊಂಡು ಬಹುಕಾಲ ಕುಳಿತಿದ್ದರು; ಸಾರ್ಥಕ್ಯ ಭಾವದಿಂದ ಕಣ್ಣು ತೇವವಾಗಿತ್ತು. ಅಪ್ಪಯ್ಯನ ಭಂಗಿಯನ್ನು ನೋಡಿದ ಅಮ್ಮನು ಹಟ್ಟಿಯ ಕಡೆಗೆ ಓಡಿ - ಗುಟ್ಟಾಗಿ ಅತ್ತಿದ್ದಳು. ಶ್ರೀ ವಿಶುಕುಮಾರ್ ಅವರ ವಿಶೇಷ ಆಸಕ್ತಿಯಿಂದಾಗಿಯೇ "ಪುರಾಣ ಭಾರತ ಕೋಶ"ವು ಅಂದು ಬೆಳಕು ಕಾಣುವಂತಾಯಿತು ಎಂಬುದರಲ್ಲಿ ಸಂಶಯವಿಲ್ಲ.

ಅಂದು ಫೊಟೋ ತೆಗೆದ ನಂತರ ನಾನು ಶ್ರೀ ವಿಶುಕುಮಾರ್ ಅವರನ್ನು ಕೇಳಿದ್ದೆ. "ನೀವು ನಿಮ್ಮ ಕಿವಿಯಿಂದಲೇ ಮುಖ ಮುಚ್ಚಿಕೊಳ್ಳಲು ವಿಫಲ ಯತ್ನ ಮಾಡಿದಂತೆ ಕಂಡಿತ್ತು... ಅದೇನು ಆನೆ ಕಿವಿಯಾ? " ಅಂದಾಗ ಅವರು ನಕ್ಕಿದ್ದರು. ಅವರು ಮುಖ ಮರೆಸಿಕೊಂಡದ್ದು ಯಾಕೆಂದು ನನಗೆ ಇನ್ನೂ ಅರ್ಥವಾಗಿಲ್ಲ! (ನನಗೆ ಕೆಲವು ವಿಚಾರಗಳು ಅರ್ಥವಾಗುವುದೇ ಇಲ್ಲ! ಆದ್ದರಿಂದಲೇ ಹಿಂದುಳಿದಿದ್ದೇನೆ.)




ಹೀಗೆ ಇನ್ನೂ ಕೆಲವರು ಪದೇಪದೇ ನಮ್ಮ ಮನೆಗೆ ಬಂದು ಅಪ್ಪಯ್ಯನೊಂದಿಗೆ ತುಂಬ ಆತ್ಮೀಯವಾಗಿ ವಿಚಾರವಿನಿಮಯ ನಡೆಸುತ್ತಿದ್ದರು. ರವಿವಾರ ಬಂತೆಂದರೆ ನಮ್ಮ ಮನೆಯು ಆಗ ತುಂಬಿ ತುಳುಕುತಿತ್ತು. ಇದನ್ನು ಗಮನಿಸಿಯೋ ಏನೋ... ಪ್ರತೀ ರವಿವಾರದಂದು ಏನಾದರೊಂದು ವಿಶೇಷ ಸಾಂಪ್ರದಾಯಿಕ ತಿಂಡಿಯನ್ನು ಅಮ್ಮನು ತಯಾರಿಸುತ್ತಿದ್ದಳು. ಅಂತಹ ರವಿವಾರಗಳನ್ನು ತೂಗಿಸಲೋಸುಗವೇ ಮನೆಮಂದಿಯೆಲ್ಲರೂ ಇಡೀ ವಾರ - ಸ್ವಯಂ ನಿಯಂತ್ರಣದ ಅಚ್ಚುಕಟ್ಟಿನಲ್ಲಿ ಬದುಕಬೇಕಾಗುತ್ತಿತ್ತು. ಅವನ್ನೆಲ್ಲ ಕಷ್ಟವೆಂದು ಅಂದುಕೊಳ್ಳದ ಮುಗ್ಧತೆಯೇ ಅಂದು ನಮ್ಮನ್ನು ಯಶಸ್ವಿಯಾಗಿ ನಡೆಸುತಿತ್ತು. ಕುಂದಾಪುರದ ನಮ್ಮ ಮನೆಯ ಅಂದಿನ ಆರ್ಥಿಕ ಬಡತನದಲ್ಲೂ - ಧಾರ್ಮಿಕ ಸಜ್ಜನಿಕೆಯಿತ್ತು. ಸುಸಂಸ್ಕಾರವಿತ್ತು. ವಾತ್ಸಲ್ಯದ ಸ್ಪರ್ಶವಿತ್ತು. ಸರಳತೆಯಿತ್ತು. ಸಹಜತೆಯಿತ್ತು. ಪಾವು ಚಟಾಕು ಸೇರಿನಂತಹ - ಪುಟಿಯುವ ಬೊಂಬೆಯಂತಹ ಮಕ್ಕಳಿದ್ದರು. ಜೀವನೋತ್ಸಾಹವಿತ್ತು. ಪ್ರೀತಿಯಿತ್ತು. ಇನ್ನೇನು ಬೇಕು? ನನ್ನ ದೃಷ್ಟಿಯಲ್ಲಿ, ಸುಂದರ ಗೃಹವೊಂದರ ನಿಖರ ವ್ಯಾಖ್ಯೆಯಂತಿತ್ತು - ಅಂದಿನ ನಮ್ಮ ಮನೆ. ಇಂದಿಗೂ ನಾನು ಕುಂದಾಪುರಕ್ಕೆ ಹೋದಾಗಲೆಲ್ಲ ನಮ್ಮ ಮನೆಯಿದ್ದ ಜಾಗವನ್ನೊಮ್ಮೆ ಕಣ್ಣಿನಿಂದ ನೋಡಿ ಬರುತ್ತೇನೆ. ಸವಿ ನೆನಪುಗಳನ್ನು ಮನದಲ್ಲಿಯೇ ಚಪ್ಪರಿಸುತ್ತೇನೆ. (ನಾವಿದ್ದ ಮನೆಯ ಗುರುತೂ ಈಗ ಅಲ್ಲಿ ಉಳಿದಿಲ್ಲ. ದೊಡ್ಡ ಕಟ್ಟಡವೊಂದು ಅಲ್ಲಿ ಎದ್ದು ನಿಂತಿದೆ.)

ಹೀಗೆ ಸಮಾಜದ ವಿಭಿನ್ನ ವರ್ಗದ ಜನ ಸಂಪರ್ಕದಿಂದಾಗಿ ನನ್ನ ಓರಗೆಯ ಹಲವು ಸ್ನೇಹಿತರಿಗಿಂತ ನನ್ನ ವ್ಯಾಪ್ತಿಯೂ ಅಂದು  ಸಾಕಷ್ಟು ಹಿಗ್ಗಿತ್ತು. ನನ್ನ ಓಡಾಟ ಒಡನಾಟ, ಸಾಂಸ್ಕೄತಿಕ ಹಿಗ್ಗುವಿಕೆಯನ್ನು ಕಂಡ ನನ್ನ ಅಪ್ಪಯ್ಯ ಅಮ್ಮ ಸೋದರ ಸೋದರಿಯರೆಲ್ಲರೂ ನನ್ನ ಬೆನ್ನಾರೆ ನಿಂತಿದ್ದರೂ ಯಾವುದೇ ಮುಲಾಜಿಲ್ಲದೆ ಪರಾಮರ್ಶಿಸುತ್ತ, ದಿಕ್ಕು ತಪ್ಪದಂತೆ ನನ್ನನ್ನು ಕಾಯುತ್ತಿದ್ದರು. ನಾನು ಎಲ್ಲಿಗೆ ಹೊರಟರೂ ಒಬ್ಬರಲ್ಲ ಒಬ್ಬರು ನನ್ನ ಜೊತೆಗೇ ಇರುತ್ತಿದ್ದರು. ಕಾರ್ಯಕ್ರಮವನ್ನು ಮುಗಿಸಿ ಬಂದ ಮೇಲೆ, ಇಡೀ ಕುಟುಂಬದೊಂದಿಗೆ ಕುಳಿತು ಅಂದಿನ ನನ್ನ ಪಾತ್ರ ಮತ್ತು ಇಡೀ ಕಾರ್ಯಕ್ರಮದ ಪರಾಮರ್ಶೆ ನಡೆದು ಹೋಗುತ್ತಿತ್ತು. ಗುಣಾವಗುಣಗಳ ಮುಕ್ತ ಚರ್ಚೆ ನಡೆಸುತ್ತಿದ್ದೆವು. ನಾನು - ಬಾರ್ ರೆಸ್ಟೋರೆಂಟಿನ ಉದ್ಘಾಟನೆಗೂ ಹೋಗಿ ಪ್ರಾರ್ಥನೆ ಮಾಡಿ ಬಂದಾಗ, "ಸ್ಥಳಗಳ ಆಯ್ಕೆಯಲ್ಲಿ ವಿವೇಚನೆ ಬೇಕು" ಎಂಬ ಪಾಠವೂ ನನಗೆ ದೊರಕಿತ್ತು. ಹೀಗೇ ನನ್ನ ಭವಿಷ್ಯವನ್ನು ಹುಡುಕುತ್ತ, ಕುಂದಾಪುರದ ಹೊಳೆ ಬದಿಯಿಂದ ಕಾಲೇಜಿನವರೆಗಿನ ಸುಮಾರು ಎರಡು - ಮೂರು ಕಿಲೋಮೀಟರ್ ವ್ಯಾಪ್ತಿಯಲ್ಲಿ ಅಂದು ನಾನು ಬದುಕಿದ ಎಂಟೋ ಹತ್ತೋ ವರ್ಷಗಳೇ... ಮುಂದೆ ನನ್ನ ಕೈಹಿಡಿದು ನಡೆಸಿದ ಕಾಲಘಟ್ಟ. ಕುಂದಾಪುರದ ಸಜ್ಜನರು ಅಂದು ತೋರಿಸಿದ ಆ ಪ್ರೀತಿ ವಾತ್ಸಲ್ಯವನ್ನು ಮರೆಯುವುದಾದರೂ ಹೇಗೆ?


 ಚಿತ್ರದಲ್ಲಿ
ಕುಳಿತವರು: [ಎಡದಿಂದ]
ತಂದೆ ದಿ.ಯಜ್ಞನಾರಾಯಣ ಉಡುಪ, ತಾಯಿ ರುಕ್ಮಿಣೀ ಉಡುಪ, ಹಿರಿಯ ಭಾವ ಎಸ್.ಜನಾರ್ದನ, ಹಿರಿಯ ಅಕ್ಕ ವಸಂತಕುಮಾರಿ.
ನಿಂತವರು : [ಎಡದಿಂದ]
ಅಕ್ಕ ಅರುಣಕುಮಾರಿ, ತಮ್ಮ ರಾಮಕೃಷ್ಣ, ತಂಗಿ ಕಾತ್ಯಾಯನಿ, ತಮ್ಮ ನರೇಂದ್ರನಾಥ, ನಾನು.


ನನ್ನ ಹರಿಕತೆಯ ರಂಗಪ್ರವೇಶವಾದದ್ದೂ ಕುಂದಾಪುರದಲ್ಲಿದ್ದಾಗಲೇ. "ಸತ್ಸಂಗ"ಎಂದರೇನು ಎಂಬ ಬಾಲಪಾಠವೂ ಅದಾಗಲೇ ನನಗಾಗಿತ್ತು. ದೇಶ, ದೇಶಭಕ್ತಿ, ವಿಚಾರವಿನಿಮಯ, ಮೌಲ್ಯಗಳ ಮಹತ್ವ, ಸದುದ್ದೇಶಕ್ಕಾಗಿ ನಿಸ್ವಾರ್ಥ ಹೋರಾಟ, ಸಾಂಘಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಹುಮ್ಮಸ್ಸು...ಇವೆಲ್ಲವೂ ಸಹವಾಸದ ಫಲವಾಗಿ ನನ್ನ ಮೇಲೂ ಅಂದು ಗಾಢವಾದ ಪರಿಣಾಮವನ್ನು ಬೀರಿತ್ತು. ಅಂದಿನ ದಿನಗಳಲ್ಲಿ ಅಂಬಾಬಾಯಿ ಎಂಬ ಹಿರಿಯರೊಬ್ಬರು ಆಗಾಗ ನಮ್ಮ ಮನೆಗೆ ಬರುತ್ತಿದ್ದರು. ಅವರ ಹಿನ್ನೆಲೆ ಮುನ್ನೆಲೆ ಏನೂ ನಮಗೆ ಗೊತ್ತಿಲ್ಲ. ಆದರೆ "ಬದುಕನ್ನು ಕಂಡುಂಡ ಮಾಗಿದ ಜೀವ" ಎಂಬ ಗೌರವವು ನಮ್ಮಲ್ಲಿತ್ತು. ಸುಮಾರು 50 ವಯಸ್ಸು ದಾಟಿದ ಅತ್ಯಂತ ಸುಸಂಸ್ಕೃತ ಸ್ತ್ರೀ ಅವರು. ಏಕಾಂಗಿ. ತನ್ನವರೆನ್ನುವ ಯಾರೂ ಅವರ ಜೊತೆ ಇರಲಿಲ್ಲ. ಆಗ ಅವರ ಬಿಡಾರದಲ್ಲಿ ಪ್ರತೀದಿನವೂ ಚೆಂದದ ಭಜನೆ ನಡೆಯುತ್ತಿತ್ತು. ಅಂಬಕ್ಕನಿಗೆ ಕಾಲಿನಲ್ಲಿ ತೊಂದರೆಯಿದ್ದು ಕುಂಟಿಕೊಂಡೇ ನಡೆಯುತ್ತಿದ್ದರೂ ಗಂಟೆಗಳಷ್ಟು ಹೊತ್ತು ಚಟ್ಟಾಮುಟ್ಟ ಹಾಕಿ ಕೂತು ಭಜನೆ ಮಾಡುತ್ತಿದ್ದರು. ಆಸಕ್ತಿಯಿರುವ ಯಾರು ಬೇಕಾದರೂ ಆ ಭಜನೆಯಲ್ಲಿ ಭಾಗಿಯಾಗಬಹುದಿತ್ತು. ನಾವೂ ಆಗಾಗ ಹೋಗಿ ಭಜನೆಯಲ್ಲಿ ಸೇರಿಕೊಂಡು ಹಾಡಿದ್ದಿದೆ. ಅಂಬಕ್ಕ ಹಾಡುತ್ತಿದ್ದ - ಅಂದಿನ ಭಜನೆಗಳಲ್ಲಿ ಕಲಿತಿದ್ದ ಕೆಲವು ಹಾಡುಗಳನ್ನು ನಾನು ಹರಿಕತೆಯಲ್ಲಿಯೂ ಅಳವಡಿಸಿಕೊಂಡಿದ್ದೇನೆ. ಈ ಅಂಬಕ್ಕ ಒಂಟಿಯಾಗಿದ್ದರೂ ಅವರದು ಮುದುಡಿದ ವ್ಯಕ್ತಿತ್ವವಲ್ಲ. ಇರುವುದನ್ನು ಇರುವಂತೆಯೇ - ಬದುಕನ್ನು ಇಡಿಯಾಗಿ ಒಪ್ಪಿಕೊಂಡ ತುಂಬು ವ್ಯಕ್ತಿತ್ವ - ಅಂಬಕ್ಕನದು.

ಆಗಷ್ಟೇ ನಾನು ಹರಿಕತೆ ಮಾಡಲು ಆರಂಭಿಸಿದ್ದೆ. ಅಂಬಕ್ಕ ಮನೆಗೆ ಬಂದು ನನ್ನನ್ನು ಆಶೀರ್ವದಿಸಿದ್ದರು. ಅನಂತರ ಕೆಲವೇ ವರ್ಷಗಳಲ್ಲಿ ಅವರು ಮಂಗಳೂರಿನಲ್ಲಿರುವ "ರಮಾ ಶಕ್ತಿ ಮಿಶನ್" ಸೇರಿಕೊಂಡು ಅಲ್ಲಿಯೇ ತಮ್ಮ ಶೇಷಾಯುಷ್ಯವನ್ನು ಕಳೆದರು. ನಾನು ಮಂಗಳೂರು ಆಕಾಶವಾಣಿಯನ್ನು ಸೇರಿಕೊಂಡ ಮೇಲೆ, ಒಮ್ಮೆ ಅಲ್ಲಿಗೆ ಹೋಗಿ ಅಂಬಕ್ಕನನ್ನು ಮಾತಾಡಿಸಿಕೊಂಡು ಬಂದಿದ್ದೆ. ಅದಾಗಲೇ ಅವರನ್ನು ವಯಸ್ಸು ತಿಂದು ಮುಗಿಸಿತ್ತು. ನನ್ನ ಬಾಲ್ಯವನ್ನು ಹಿಡಿಯುವ ಭಾಗವಾಗಿ ಮತ್ತೊಮ್ಮೆ ನಾನು ಅಂಬಕ್ಕನನ್ನು ನೋಡಿದ್ದು, ಅವರೊಂದಿಗೆ ವಿಚಾರವಿನಿಮಯ ಮಾಡಿಕೊಂಡದ್ದು, ಅವರ ಏಕಾಂತದ ದರ್ಶನವಾದದ್ದು... ಇವೆಲ್ಲವೂ ಅನನ್ಯ ಅನುಭವ. "ಹರಿಕತೆಯಲ್ಲಿ ನಮ್ಮ ಇಂದಿನ ಬದುಕಿಗೆ ಅಗತ್ಯವಾದ ವಿಷಯಗಳನ್ನು ಹೊಂದಿಸಿಕೊಂಡು ಮಾತನಾಡುತ್ತ ಹೋಗು.." ಎಂದು ಅಂಬಕ್ಕ ಅಂದು ಹೇಳಿದ ಮಾತುಗಳು ನನ್ನ ಮುಂದಿನ ಎಲ್ಲ ಚಟುವಟಿಕೆಗಳ ಪ್ರೇರಕಶಕ್ತಿಯಾಗಿ ಉಳಿದುಕೊಂಡಿವೆ. ಯಥಾರ್ಥವಾಗಿ, ಇಡೀ ಬದುಕನ್ನೇ ಮೌನ ಯಜ್ಞದಂತೆ ಕಂಡುಂಡ ಅಂಬಕ್ಕನಂತಹ ಅಂತರ್ಮುಖೀ ವನಸುಮಗಳು ಈ ನೆಲದಲ್ಲಿ ಎಷ್ಟು ಆಗಿ ಹೋಗಿವೆಯೋ?

Running Race ನಲ್ಲಿ ಮೊದಲಿಗರಾಗಿ "ಸ್ಪರ್ಧೆಯ ದಿನದಂದು" ಗೆರೆಯನ್ನು ದಾಟಿದ ಎರಡೋ ಮೂರೋ ಜನರಿಗೆ ಮಾತ್ರ ಬಹುಮಾನ ಸಿಗುವುದು ಸಾಮಾನ್ಯ. ಆದರೆ ಭಾಗವಹಿಸಿದ ಎಲ್ಲರೂ ಅಂದಿನ ಕ್ರೀಡೆಯ ಯಶಸ್ಸಿಗೆ ಒಟ್ಟಾರೆಯಾಗಿ ಕಾರಣೀಭೂತರಾಗಿರುತ್ತಾರೆ. ಸುಸಂಸ್ಕೄತ ತಂದೆತಾಯಿಯನ್ನು ಪಡೆಯುವ ಆಕಸ್ಮಿಕದಿಂದ ತೊಡಗಿ, ಸ್ವಂತ ಪರಿಶ್ರಮ, ದಾರಿ ತೋರಿಸುವ ಗುರುಹಿರಿಯರು, ಅವಕಾಶಗಳು, ಸೂಕ್ತ ಪರಿಸರ, ಬುದ್ಧಿಯನ್ನು ಪ್ರಚೋದಿಸುವ ದೈವಕೄಪೆ- ಎಲ್ಲವೂ ಒಟ್ಟಾಗಿ ದಕ್ಕುವುದಕ್ಕೆ ಯಾವ ಸಿದ್ಧಸೂತ್ರವೂ ಇದುವರೆಗೆ ಯಾರಿಗೂ ಕಂಡಿಲ್ಲ. ಬದುಕಿನಲ್ಲಿ ಎದುರಾಗುವ ಕೆಲವು ಜಟಿಲ ಪ್ರಶ್ನೆಗಳಿಗೆ - ಕುರುಡರು ಆನೆಯನ್ನು ಮುಟ್ಟಿ ಪ್ರತಿಕ್ರಿಯಿಸಿದಂತೆ - ಪ್ರಶ್ನೆಒಂದಾದರೆ ಉತ್ತರಗಳು ಹಲವು. ಅರಿವಿನ ಜ್ಞಾನಚಕ್ಷುವು ತೆರೆಯುವವರೆಗೂ ಸಿದ್ಧ ಉತ್ತರ ಕಾಣುವುದಿಲ್ಲ. ಅಲ್ಲೊಂದು ಇಲ್ಲೊಂದು ಅಂಬಕ್ಕನನ್ನು ಕಂಡಾಗಲೆಲ್ಲ ಹೀಗೇ... ನಾನು ಬದುಕಿನ ಆಳಕ್ಕೆ ಇಳಿಯುತ್ತೇನೆ. ಕಳೆದು ಹೋಗುತ್ತೇನೆ.

ನಮ್ಮ ಸುತ್ತಲೂ ಕಾಣಿಸುವುದು - ಹೀಗೆ, ಹಾಗೆ, ಹೇಗೆ? ಎಂಬ "ಪ್ರಶ್ನೆಯ ಬದುಕು"ಗಳು; "ಉತ್ತರದ ಬದುಕು"ಗಳು ಬಲು ವಿರಳ. ಕಾಣುವ ಪ್ರಯತ್ನ, ಇಚ್ಛೆಯಿದ್ದರೂ ಇದುವರೆಗೆ ನಾನಂತೂ ಕಂಡಿಲ್ಲ. ಒಂದು ಬದುಕಿನ ಪ್ರಶ್ನೆಗೆ ಅದೇ ಬದುಕಿನ ಅವಧಿಯಲ್ಲಿ ಸಮರ್ಪಕ ಉತ್ತರ ಸಿಗಬಹುದೆ? ಇದು ಯಕ್ಷನಿಗೂ ಹೊಳೆಯದ ಪ್ರಶ್ನೆಯೆ? ನಮ್ಮ ಬದುಕನ್ನು ಕಾಡುತ್ತ ಬಂದಿರುವ ಪ್ರಶ್ನೆಗಳಿಗೆಲ್ಲ ಉತ್ತರಿಸಬಲ್ಲ ಯುಧಿಷ್ಠಿರನನ್ನು ಎಲ್ಲಿಂದ ತರಲಿ?
                            ಅನಂತ ರಾಗ ತಾಳಗಳಲ್ಲಿ ಸ್ವರ ಹೊಮ್ಮಿಸುತ್ತಿರುವ ಅನಂತ ಬದುಕುಗಳು ! 
                            ಮುನ್ನೀರು ಹಿನ್ನೀರಿನ ತಾಕಲಾಟ !
                            ಮಾತು ನೊರೆತೆರೆಯಾಟ ! ಬದುಕು ಮಾಯೆಯ ಮಾಟ !
                                                *****-----*****-----*****