Friday, August 28, 2015

ನಾನೊಲಿದಂತೆ (5) - ಕಲಿಗಾಲವಯ್ಯಾ..

ಬ್ರಹ್ಮಚಾರಿ, ಗೃಹಸ್ಥ, ವಾನಪ್ರಸ್ಥ, ಸನ್ಯಾಸ - ಈ ಚತುರಾಶ್ರಮಗಳು ಗೃಹಸ್ಥನಿಂದಲೇ ಹುಟ್ಟಿ ಗೃಹಸ್ಥನನ್ನೇ ಅವಲಂಬಿಸಿರುವಂತಹುದು. ಎಲ್ಲ ನದಿ - ನದಗಳು ಸಮುದ್ರವನ್ನು ಆಶ್ರಯಿಸಿರುವಂತೆ ಬ್ರಹ್ಮಚಾರಿ ಮೊದಲಾದ ಎಲ್ಲ ಆಶ್ರಮಿಗಳು ಗೃಹಸ್ಥನಲ್ಲಿ ಆಶ್ರಯವನ್ನು ಹೊಂದುತ್ತಾರೆ. ಎಲ್ಲ ಆಶ್ರಮಗಳಿಗೂ ಗೃಹಸ್ಥನೇ ಆಶ್ರಯವಾದುದರಿಂದ ಆಶ್ರಮಗಳಲ್ಲಿ ಗೃಹಸ್ಥಾಶ್ರಮವೇ ಶ್ರೇಷ್ಠವಾದದ್ದು. ಇತರ ಆಶ್ರಮಗಳ ಜೀವನವು ಗೃಹಸ್ಥನ ಅಧೀನವಿರುವುದರಿಂದ ಗೃಹಸ್ಥನು ಶ್ರೇಷ್ಠನಾಗುತ್ತಾನೆ. ಆದರೆ ಎಲ್ಲ ಆಶ್ರಮದವರಿಗೂ ಸಮಾನವಾಗಿ ನಿರ್ದೇಶಿತವಾದ ಹತ್ತು ಧರ್ಮಗಳಿವೆ.

                                      ಧೃತಿಃ ಕ್ಷಮಾ ದಮೋ~ಸ್ತೇಯಂ ಶೌಚಮಿಂದ್ರಿಯ ನಿಗ್ರಹಃ 
                                      ಧೀರ್ವಿದ್ಯಾ ಸತ್ಯಮಕ್ರೋಧೋ ದಶಕಂ ಧರ್ಮಲಕ್ಷಣಂ /

ಧೃತಿ ಎಂದರೆ ಸಂತೋಷ;
ಇನ್ನೊಬ್ಬರು ಅಪಕಾರ ಮಾಡಿದರೂ ತಾನು ಪ್ರತಿಯಾಗಿ ಅಪಕಾರ ಮಾಡದಿರುವುದೇ ಕ್ಷಮೆ (ಕ್ಷಾಂತಿ);
ಮನಸ್ಸನ್ನು ವಶಪಡಿಸಿಕೊಳ್ಳುವುದೇ ದಮ;
ಅನ್ಯಾಯದಿಂದ ಬೇರೊಬ್ಬರ ಹಣವನ್ನು ಅಪಹರಿಸದಿರುವುದೇ ಅಸ್ತೇಯ;
ನೀರು, ಮೃತ್ತಿಕೆಗಳಿಂದ ದೇಹವನ್ನು ಶುಚಿಯಾಗಿಡುವುದೇ ಶೌಚ;
ವಿಷಯಗಳತ್ತ ಓಡದಂತೆ ಕಣ್ಣು ಮೊದಲಾದ ಇಂದ್ರಿಯಗಳನ್ನು ಹಿಡಿತದಲ್ಲಿರಿಸಿಕೊಳ್ಳುವುದೇ ಇಂದ್ರಿಯ ನಿಗ್ರಹ;
ಶಾಸ್ತ್ರ ತತ್ತ್ವಜ್ಞಾನವೇ ಧೀ ಅಥವ ಬುದ್ಧಿ;
ಪರಮಾತ್ಮ ಜ್ಞಾನವೇ ವಿದ್ಯೆ;
ಇದ್ದುದನ್ನು ಇದ್ದಂತೆ ಹೇಳುವುದೇ ಸತ್ಯ;
ಕೋಪಕ್ಕೆ ಕಾರಣವಿದ್ದರೂ ಕೋಪ ಮಾಡದಿರುವುದೇ ಅಕ್ರೋಧ.

ಇವೇ - ಧರ್ಮದ ಹತ್ತು ಲಕ್ಷಣ ಸ್ವರೂಪ ಗಳು.

ಈ ನೀತಿ ಸೂತ್ರಗಳು ಆತ್ಮೋನ್ನತಿಯ ಜತೆಗೆ ಸಾಮಾಜಿಕ ನೆಮ್ಮದಿಗಾಗಿಯೂ - ಪ್ರತಿಯೊಬ್ಬರೂ ಅನುಸರಿಸಲು ಪ್ರಯತ್ನಿಸಬೇಕಾದ ದಾರಿದೀಪಗಳು. ಆದರೆ ಇಂದಿನ ಸ್ಥಿತಿ ಹೇಗಿದೆಯೆಂದರೆ - "ಅಂದು ಮನು (ಚಿಂತಕ) ಬರೆದಿಟ್ಟುದಿಂದೆಮಗೆ ಕಟ್ಟೇನು? ನಿನ್ನೆದೆಯ ದನಿಯೆ ಋಷಿ - ಮನು ನಿನಗೆ ನೀನು..." ಎನ್ನುತ್ತ ಸ್ವೇಚ್ಛಾಚಾರಕ್ಕಿಳಿಯುತ್ತಿರುವವರ ಮತ್ತು ಅಂತಹ ಸ್ಫೂರ್ತಿ ನೀಡುತ್ತಿರುವವರ ಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. "ಅಪ್ಪ ಲೂಸಾ? ಅಮ್ಮ ಲೂಸಾ?" ಎನ್ನುತ್ತ ಅಸಡ್ಡೆಯಿಂದ ತಿರುಗುವುದೇ "ಈ ನವೀನ ಯುಗದ ಜಗದ ಕೇತನ"ವೆನಿಸಿಬಿಟ್ಟಿದೆ! ಅಂದು ಧರ್ಮಾಧರ್ಮದ ಸೂಕ್ಷ್ಮವನ್ನರಿತ ನಂತರ, ಉಜ್ಜಿ ಬರೆಯುವ ಬುದ್ಧಿಯ ವ್ಯಾಯಾಮಕ್ಕೆ ತೊಡಗಿ, ಅಪ್ಪಟ ಚಾರ್ವಾಕರಾಗಿದ್ದವರು ಸ್ವಂತದ ಭವಸಾಗರ ದಾಟಿದ್ದರೂ - ಇಂದಿನ ಹಿಂದುಮುಂದಿಲ್ಲದ ಲೊಟ್ಟೆ ಚಾರ್ವಾಕರು - ಕಾವಲಿಯ ಅದೇ ಮರಗಟ್ಟಿದ ದೋಸೆಯನ್ನು ತಿರುತಿರುಗಿಸಿ ಹಾಕುತ್ತ ಕರಟಿಸುತ್ತಿರುವಂತೆ ಕಾಣುತ್ತದೆ. ಕಾವಲಿಯ ದೋಸೆಯನ್ನು ಹದವಾಗಿ ಬೇಯಿಸಿ ಎತ್ತಿಡುವ ಕರ್ಮವೂ ಗೊತ್ತಿಲ್ಲದೆ, ಇನ್ನೊಂದು ಹೊಸ ದೋಸೆ ಹೊಯ್ಯಲು ಬೇರೆ ಹಿಟ್ಟೂ ಇಲ್ಲದೆ, ಹೊಸ ಹಿಟ್ಟನ್ನು ತಯಾರಿಸುವ ಮರ್ಮವೂ ತಿಳಿಯದೆ, ಇನ್ನೊಬ್ಬರು ಮಾಡಿಟ್ಟ ದೋಸೆಯನ್ನು ಯಾರಿಗೂ ತಿನ್ನಲೂ ಬಿಡದೆ - ಇಂದಿನ ನವ ಚಾರ್ವಾಕ ರಕ್ಕಸರು ಸಮಾಜವನ್ನು ಹಿಂಡುತ್ತಿರುವಂತೆಯೂ ಕಾಣಿಸುವುದಿದೆ.

ಎಲ್ಲ ಸಂಬಂಧಗಳೂ ಅರ್ಥ ಕಳೆದುಕೊಳ್ಳುತ್ತಿರುವ ಪ್ರಸ್ತುತ ಸನ್ನಿವೇಶದಲ್ಲಿ ಯಾರು ಯಾರಿಗೂ ಏನನ್ನೂ ಹೇಳಲಾಗದ ದೃಶ್ಯಗಳು ದಿನವೂ ಕಾಣಸಿಗುತ್ತವೆ. "ಹೆಣ್ಣಿನ ಮೊದಲ ಗಂಡನ ಮೂರನೆಯ ಮಗಳಿಗೂ ಆಕೆಯ ನಾಲ್ಕನೆಯ ಗಂಡನ ಎರಡನೇ ಹೆಂಡತಿಯ ನಾಲ್ಕನೇ ಮಗನಿಗೂ ಅನಧಿಕೃತ ಸಂಬಂಧ; ಅದನ್ನು ಸಹಿಸಲಾಗದ ಹೆಣ್ಣಿನ ಎರಡನೇ ಗಂಡನಿಗೂ ಆಕೆಯ ಗಂಡನ ಮೂರನೇ ಹೆಂಡತಿಗೂ ಅಸಮಾಧಾನ...." - ಇತ್ಯಾದಿ ಸುದ್ದಿಗಳು ಇಂದು ವಿಚಿತ್ರವಾದ ಭಾವ ಸಂಚಾರವನ್ನು ಹುಟ್ಟಿಸುತ್ತಿರುವುದು ವಾಸ್ತವ. ಸಮಾಜದ ಕೆಲವು ವರ್ಗಕ್ಕೆ - ಹಿಂದಿನ ಅಥವ ಇಂದಿನ ಯಾವ ಕಾನೂನೂ ಲಗಾವಾಗುವುದಿಲ್ಲ ಮತ್ತು ಇಂದಿನ ನಮ್ಮ ಕೆಲವು ಕಾನೂನುಗಳು ಸಮಾಜದಲ್ಲಿ ಕ್ಷೋಭೆಯನ್ನು ತುಂಬುವಂತಿವೆ ಎಂಬುದಕ್ಕೆ ನಿತ್ಯವೂ ನಡೆಯುತ್ತಿರುವ ಹಲವು ರಾಕ್ಷಸ ಕೃತ್ಯಗಳೂ ಉದಾಹರಣೆಯಾಗುತ್ತಿವೆ. ಏಕೆಂದರೆ ನಮ್ಮ "ಮೇಲಿನ ಮಹಡಿ"ಯು ಅಶುಚಿಯಿಂದ ತುಂಬಿದೆ. ನಮ್ಮ ದೇಹವೆಂಬ ಬಹು ಮಹಡಿ ಕಟ್ಟಡದ ಕೆಳ ಅಂತಸ್ತಿನ ಎಲ್ಲ ನಲ್ಲಿಗಳೂ ತೆರೆದಿದ್ದರೆ ಮೇಲಿನ ಮಹಡಿಗೆ ನೀರು ಹೋಗುವುದಾದರೂ ಹೇಗೆ? ಅದು ಸ್ವಚ್ಛವಾಗಿ ಉಳಿಯುವುದಾದರೂ ಹೇಗೆ?

                                      ಪೃಥಿವ್ಯಾಂ ಪುತ್ರಾಸ್ತೇ ಜನನೀ ಬಹುವಃಸಂತಿ ಸರಲಾಃ
                                      ಪರಂ ತೇಷಾಂ ಮಧ್ಯೇ ವಿರಲತರಲೋ~ಹಂ ತವ ಸುತಃ / 
                                      ಮದಿಯೋ~ಯಂ ತ್ಯಾಗಃ ಸಮುಚಿತಮಿದಂ ನೋ ತವ ಶಿವೇ
                                      ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ //
                                     (ಶ್ರೀ ಶಂಕರಾಚಾರ್ಯರ ದೇವ್ಯಪರಾಧ ಕ್ಷಮಾಪಣಾ ಸ್ತೋತ್ರ)

 
                                      "ಹೇ ತಾಯಿಯೇ, ಈ ಪೃಥ್ವಿಯಲ್ಲಿ ನಿನಗೆ ಅನೇಕ ಜನ
                                       ಅತ್ಯಂತ ಸಜ್ಜನರಾದ ಪುತ್ರರಿದ್ದಾರೆ. ಅವರ ಮಧ್ಯದಲ್ಲಿ
                                       ನಾನೊಬ್ಬ ಅಲ್ಪನಾದವನು. ಹೇ ಶಿವೇ,
                                       ಹೀಗಿದ್ದರೂ ನೀನು ನನ್ನನ್ನು ತ್ಯಜಿಸುವುದು ನಿನಗೆ ಉಚಿತವಲ್ಲ.
                                       ಏಕೆಂದರೆ ಕೆಟ್ಟ ಮಗ ಹುಟ್ಟಬಹುದು; ಆದರೆ
                                       ಕೆಟ್ಟ ತಾಯಿಯು ಇರುವುದಿಲ್ಲ "

 ಶ್ರೀ ಶಂಕರಾಚಾರ್ಯರು ಹೀಗೆ ಶರಣಾದದ್ದು ತಮ್ಮ ಆರಾಧ್ಯ ದೇವತೆಯನ್ನು ತಾಯಿಯೆಂದು ಭಾವಿಸಿ.

                   ಭದ್ರಂ ಕರ್ಣೇಭಿಃ ಶೃಣುಯಾಮ ದೇವಾಃ ಭದ್ರಂ ಪಶ್ಯೇಮಾಕ್ಷಭಿರ್ಯಜತ್ರಾಃ /  
                   ಸ್ಥಿರೈರಂಗೈಸ್ತುಷ್ಟುವಾಂಸಸ್ತನೂಭಿರ್ವ್ಯಶೇಮ ದೇವಹಿತಂ ಯದಾಯುಃ // (ಋಗ್ವೇದ)

                 "ಓ ದೇವತೆಗಳೇ, ನಾವು ನಮ್ಮ ಕಿವಿಗಳಿಂದ ಶುಭವಾದುದನ್ನೇ ಕೇಳುವಂತಾಗಲಿ;
                  ಓ ಪೂಜಾರ್ಹರೇ, ನಮ್ಮ ಕಣ್ಣುಗಳ ಮೂಲಕ ನಾವು ಮಂಗಳವಾದುದನ್ನೇ ನೋಡುವಂತಾಗಲಿ;
                  ನಾವು ನಿಮ್ಮ ಗುಣಗಾನ ಮಾಡುವಂತಾಗಲಿ;
                  ಸ್ಥಿರವಾದ ಅಂಗಗಳಿಂದ ಕೂಡಿದವರಾಗಿ ನಮ್ಮ ಪಾಲಿನ ಆಯುಸ್ಸನ್ನು ಅನುಭವಿಸುವಂತಾಗಲಿ"

ಹೀಗೆ ವಿಶ್ವ ಹಿತವನ್ನು ಬಯಸುವ ಸಜ್ಜನಿಕೆಯು - ದುಸ್ಸಹ ಕಾಲ್ತುಳಿತಕ್ಕೆ ಸಿಲುಕಿ ಭರದಿಂದ ಕರಗುತ್ತ - ತಮ್ಮ ಗಂಡ / ಹೆಂಡತಿ, ಮಕ್ಕಳನ್ನೂ ಪ್ರತಿಸ್ಪರ್ಧಿಗಳಂತೆ ನಡೆಸಿಕೊಳ್ಳುತ್ತಿರುವವರು ಈಗ ಹೆಚ್ಚುತ್ತಿದ್ದಾರೆ. ಸಮಾಜದಲ್ಲಿ ಪ್ರತಿಷ್ಠಿತರೆಂದು ಅಚ್ಚೊತ್ತಿಸಿಕೊಂಡವರಲ್ಲೇ ಇಂತಹ ವಿಕ್ಷಿಪ್ತತೆಯು ಬಲಗೊಳ್ಳುತ್ತಿದೆ. ವಿಕ್ಷಿಪ್ತರಲ್ಲದವರು ಸನ್ಮಾನ್ಯರಾಗಿ ಪ್ರತಿಷ್ಠಿತರೆನ್ನಿಸಿಕೊಳ್ಳುವುದೇ ಅಸಾಧ್ಯವಾಗಿದೆ ! ಯಾವುದೇ ಸಂಬಂಧಗಳು ಅರ್ಥವೇ ಆಗದಷ್ಟು ಜಿಡುಕಾಗುತ್ತಿವೆ. ನಾವು ಕೆಟ್ಟು ನಮ್ಮ ಮಕ್ಕಳನ್ನೂ ಕೆಡಿಸುವಷ್ಟು ನಾವು ಚಿಗುರಿ ಬಿಟ್ಟಿದ್ದೇವೆ. ಕೆಟ್ಟ ಮಕ್ಕಳು ಅತಿಕೆಟ್ಟ ಮಕ್ಕಳಾಗುತ್ತಿರುವುದು ಒಂದು ದುರಂತವಾದರೆ ಅತಿ ಕೆಟ್ಟ ಅಮ್ಮ ಅಪ್ಪಂದಿರೇ ಅದಕ್ಕೆ ಕಾರಣರಾಗುತ್ತಿರುವುದು ಗಂಭೀರ ದುರಂತ. ಒಬ್ಬ ಮಗನು - "ತನ್ನ ಸೋದರಿಯ ಸಾವಿನಲ್ಲಿ ಅಮ್ಮನ ಪಾತ್ರವಿದೆ; ಅಮ್ಮನು ತನ್ನನ್ನೂ ಕೊಲ್ಲಲು ಸಂಚು ಮಾಡಿದ್ದಳು" - ಎನ್ನುವ ಹಂತಕ್ಕೆ ನಮ್ಮ ನೈತಿಕತೆ ಕುಸಿದಿದೆಯೆಂದರೆ ಮುಂದೆ ಘನಘೋರ ದಿನಗಳು ನಮಗಾಗಿ ಕಾದಿವೆ ಅನ್ನಿಸುವುದಿಲ್ಲವೆ ? ಮನುಷ್ಯರು ಮನುಷ್ಯರನ್ನು ಕೆಡೆದು ಮಲಗಿಸಿ, ಬಗೆದು ತಿನ್ನುತ್ತಿದ್ದ ಕಾಲಕ್ಕೆ ಸರಿಯುತ್ತಿದ್ದೇವೆಯೆ ?

ಮಕ್ಕಳನ್ನು ಹೆತ್ತವರೆಲ್ಲರೂ ತಾಯಿಯೇ ? ಅಮ್ಮ ತೋರಿಸಿದವರೆಲ್ಲರೂ ಅಪ್ಪನೆ ?  

ಸುಳ್ಳನ್ನೇ ಮನೆದೇವರನ್ನಾಗಿಸಿಕೊಂಡು ನಿತ್ಯ ಪೂಜೆ ನಡೆಸುತ್ತಿದ್ದವರ ಮೊನ್ನೆಮೊನ್ನೆಯವರೆಗಿನ "Success Story" ಗಳೆಲ್ಲ ಒಂದು ಬೆಳಿಗ್ಗೆ "Failure Story" ಯಾಗಿ ಧುತ್ತೆಂದು ಎದುರು ನಿಲ್ಲುತ್ತವೆ. ಏಕೆಂದರೆ ಸುಳ್ಳುಗಳಿಗೆ ಆಶ್ರಯ ಪಡೆಯುವುದು ಮಾತ್ರ ಗೊತ್ತಿರುತ್ತದೆ; ಆಶ್ರಯ ಕೊಡುವ ಶಕ್ತಿಯಾಗಲಿ, ಉದಾರತೆಯಾಗಲಿ ಇರುವುದಿಲ್ಲ. ಪರಸ್ಪರ ವಿಶ್ವಾಸವೇ ಕುಸಿಯುವಂತಹ ಇಂದಿನ ಸಾಮಾಜಿಕ ಸನ್ನಿವೇಶವನ್ನು ನಿರ್ಮಿಸಿ ದುಷ್ಟ ಪೀಳಿಗೆಯನ್ನು ರೂಪಿಸಿದ ಸೃಷ್ಟಿಕರ್ತರು ನಾವೇ. ನಮ್ಮ ವಕ್ರ ಚಿಂತನೆ, ವಿತಂಡ ವಾದ, ಸ್ವಾರ್ಥಕ್ಕಾಗಿ ನಿಯಮವನ್ನು ಮೀರುವ ಚಟ, ಕ್ಷಣಿಕ ಲಾಭಕ್ಕಾಗಿ ಎಡೆಬಿಡದೆ ಮಾಡುತ್ತಲೇ ಹೋಗುವ ಅಪರಾತಪರಾಗಳಿಂದ ಇಂದಿನ ಇಡೀ ಸಾಮಾಜಿಕ ವ್ಯವಸ್ಥೆಯೇ ನಲುಗುತ್ತಿದೆ. ನಮ್ಮ ಮಕ್ಕಳಿಗೆ ಇನ್ನು ಭವಿಷ್ಯವೇ ಇಲ್ಲದಂತೆ ನಾವು ಮಾಡಿದ್ದೇವೆ. ದುಷ್ಟರಾಗುವುದು ಅನಿವಾರ್ಯವಾಗುವಂತೆ ಮಾಡಿದ್ದೇವೆ. ಇಂದಿನ ದುಷ್ಟ ಪೀಳಿಗೆಯು ಯಾವುದೇ ಉದ್ಭವ ಮೂರ್ತಿಯಲ್ಲ. ಸಾಮಾಜಿಕ, ಕೌಟುಂಬಿಕ ಸಂಬಂಧಗಳ ಅಕರಾಳ ವಿಕರಾಳತೆಯಿಂದಾಗಿ ಇಂತಹ ದೃಶ್ಯಗಳು ಕಾಣಿಸುತ್ತಿವೆ. ನಿಜವಾಗಿಯೂ "ಅಮ್ಮ ಲೂಸಾ? ಅಪ್ಪ ಲೂಸಾ?" ಎಂಬ ಸ್ಥಿತಿಗೆ -  ನಾವು ಬಂದು ತಲುಪಿದ್ದೇವೆ.

ನಮ್ಮ ಅಪ್ಪ ಯಾರು? ಅಮ್ಮ ಯಾರು? ನಮ್ಮ ಮಗ ಯಾರು? ಮಗಳು ಯಾರು? ಅಂಕಲ್ ಯಾರು? ಜೀಜಾಜಿ ಯಾರು? ಇಂದಿನ High Class ನವರಿಗೆ ಯಾವುದೂ ಗೊತ್ತಿರುವುದಿಲ್ಲವಂತೆ. ಬಗಲಲ್ಲಿರುವ ಹೆಂಡತಿ / ಗಂಡನೆಂಬ ಆಕೃತಿಯು ಹೇಳುವುದನ್ನೆಲ್ಲ ನೂರಕ್ಕೆ ನೂರರಷ್ಟು ನಂಬುವ ಪ್ರೇಮೋನ್ಮತ್ತ (!!??) ಸ್ಥಿತಿಯಲ್ಲಿ ಒಂದು ವರ್ಗವು ನಡೆಯುತ್ತಿದೆಯಂತೆ ! ಅಂತಹ ವೈಭೋಗದಲ್ಲಿ ಓಲಾಡುವ ಮನೆಯೊಳಗಿನ ಒಬ್ಬ ಸದಸ್ಯ - ವರ್ಷಗಟ್ಟಲೆ ಮಾಯವಾಗಿದ್ದರೂ ಅವರ ಏನು ಎತ್ತಗಳನ್ನು ಯಾರೂ ವಿಚಾರಿಸುವುದೂ ಇಲ್ಲವಂತೆ ! ಸ್ವಕೇಂದ್ರಿತ ಬದುಕು, ಸ್ವಾರ್ಥದ ಪಾರುಪತ್ಯ ! ಅಂತಹ ಚೌಕಟ್ಟಿನಲ್ಲಿ ವರ್ಷಾನುಗಟ್ಟಲೆ ಹುಗಿದಿಟ್ಟ ಅಮೇಧ್ಯದ ದುರ್ವಾಸನೆಯು ಎಲ್ಲೋ ಒಮ್ಮೊಮ್ಮೆ ಧುತ್ತೆಂದು ಬಯಲಾದರೆ, ಆಗ ಒಂದಷ್ಟು ಗದ್ದಲ; ಕೆಲವರಿಗೆ ರಸದೂಟ ! ಪತ್ತೇದಾರಿ ಕತೆಯಂತೆ ಸಾಗುವ ಕೆಲವು ಹೈಕ್ಲಾಸ್ ಘಟನಾವಳಿಗಳು ಅತಿ ಪ್ರಚಂಡ ವಾರ್ತಾವಾಹಿನಿಯವರಿಗೂ ಬಿಡಿಸಲಾಗದ ಒಗಟಂತೆ ಕಾಡುವುದಿದೆ. ಇನ್ನೂ ನೂರಾರು ಅಂತೆಕಂತೆಗಳು ಆಗಾಗ ಜೊತೆಯಾಗುವುದೂ ಇದೆ. ...ಅರೆ ಬೆಂದ ಸುದ್ದಿಗಳು... ಸುದ್ದಿ ಕೆದಕುವವರಿಗೆ - ಸುದ್ದಿ ಹಬ್ಬಿಸುವವರಿಗೆ ಮಾತ್ರ ಹಬ್ಬ!

ಇತ್ತೀಚೆಗೆ ಒಂದು ಸುದ್ದಿಯು ಹೀಗೇ ಚಾಲ್ತಿಯಲ್ಲಿತ್ತು. ಯಾವುದೋ ಇಂದ್ರಾಣಿ ಮುಖರ್ಜಿ ಎಂಬ 9X ಮಾಧ್ಯಮ ಸಂಸ್ಥೆಯ ಮಾಜಿ ಮುಖ್ಯಸ್ಥೆಯ ಮಗಳು ಶೀನಾ ಬೋರಾ ಎಂಬ ಹುಡುಗಿಯನ್ನು ಹತ್ಯೆ ಮಾಡಲಾಗಿದೆ - - ಅಂತೆ. 2012 ರಲ್ಲಿ ನಡೆದಿದೆಯೆನ್ನಲಾದ ಈ ಘಟನೆಯು 2015 ರಲ್ಲಿ ಈಗ ದೊಡ್ಡ ಸುದ್ದಿ ಮಾಡುತ್ತಿದೆ! ಇದು ಸುಳ್ಳಿನ ಬಲದಲ್ಲಿಯೇ ಸ್ವಂತ ಬದುಕನ್ನು ರಂಜನೀಯಗೊಳಿಸಿಕೊಂಡ ಸುದ್ದಿ ಸರದಾರಳೊಬ್ಬಳ ಕಪ್ಪು ಕತೆಯೆ? ಒಂದು ಸುದ್ದಿ ಸಂಸ್ಥೆಯನ್ನು ಸುಳ್ಳಿನ ಜಾಲದಲ್ಲಿಯೇ ಕಟ್ಟಿ ಬೆಳೆಸಿದ ಅಪೂರ್ವ ಮಹಿಳೆಯ ಧಿಡೀರ್ ಯಶಸ್ಸಿನ - ತಪ್ಪು ಕತೆಯೆ ? ಒಂದು ಹೆಣವನ್ನು ತಿನ್ನಲು ನೂರಾರು ಹದ್ದುಗಳು ಎರಗುವಂತೆ, ಈ ಕತೆಯಲ್ಲಿ ಹಲವು ಪಾತ್ರಗಳು ಊಟಕ್ಕೆ ಕುಳಿತಂತೆಯೂ ಕಾಣಿಸುತ್ತದೆ. ಹಲವಾರು ವರ್ಷಗಳ ಕಾಲ ಎಳೆದಾಡಲು - ಆಡಿಕೊಳ್ಳಲು ಇನ್ನೊಂದು ಪ್ರಕರಣವು ಸಿಕ್ಕಿದ್ದಂತೂ ಸತ್ಯ. ಗುಡ್ಡ ಅಗೆದೂ ಅಗೆದು ಕೊನೆಗೆ ಹುಲಿ ಬಿಡಿ - ಇಲಿಯೂ ಸಿಗದಿರುವ ಸಾಧ್ಯತೆಯೂ ಇದೆ. ಈ ಭಾರತದಲ್ಲಿ ಯಾರಿಗೂ ತಕ್ಕಷ್ಟು ನ್ಯಾಯ ಸಿಗದಿರಬಹುದು; ಅದೊಂದು ಬಗೆಯ ಸಮಾನತೆ. ಅನ್ಯಾಯದಲ್ಲಿಯಂತೂ ತಕ್ಕಮಟ್ಟಿಗೆ ಸಮಾನತೆ ಇದ್ದಂತೆ ಅನ್ನಿಸುತ್ತಿರುತ್ತದೆ !

ಆದರೆ ಈ ಪ್ರಕರಣದಲ್ಲಿ ನನ್ನನ್ನು ತಲ್ಲಣಗೊಳಿಸಿದ್ದು ವಿಚಾರಣೆ, ಶಿಕ್ಷೆ, ನ್ಯಾಯ...ಇತ್ಯಾದಿಗಳಲ್ಲ. "ಈ ನ್ಯಾಯ ಎಂಬ ವೇದಿಕೆಯಲ್ಲಿ ಯಾರಿಗೂ ಪೂರ್ತಿ ನ್ಯಾಯ ಸಿಗುವುದಿಲ್ಲ. ಒಬ್ಬರಿಗೆ ಹೆಚ್ಚು ಶಿಕ್ಷೆ; ಇನ್ನೊಬ್ಬರಿಗೆ ಸ್ವಲ್ಪ ಕಡಿಮೆ ಶಿಕ್ಷೆ ಸಿಕ್ಕೀತು; ಒಟ್ಟಿನಲ್ಲಿ ನ್ಯಾಯದ ಹತ್ತಿರ ಸುಳಿದರೆ - ಶಿಕ್ಷೆ..." ಎಂಬುದು ನನ್ನ ಭಾವನೆ. ಈ ಪ್ರಕರಣದ ಹಿನ್ನೆಲೆಯಲ್ಲಿ ನೋಡಿದರೆ, ಒಂದು ಕುಟುಂಬದ ಹೆಣ್ಣು ಅಥವ ಗಂಡು - ಮಿತಿಮೀರಿದ ಮಹತ್ವಾಕಾಂಕ್ಷೆ, ವಿಕೃತ ದುರಾಸೆ, ಸ್ವಚ್ಛಂದ ಪ್ರವೃತ್ತಿ, ಸ್ವಾರ್ಥದ ಕರಿಮುಖವನ್ನು ಹೊಂದಿದ್ದರೆ ಏನೆಲ್ಲ ವಿಪರೀತದ ಅನಾಹುತಗಳಾಗಬಹುದು ? ಎಂಬ ವಿಷಯವು ಮಾತ್ರ ತಲ್ಲಣಗೊಳಿಸುವಂತಹದು.

ಎಂದೋ ಕಾಣೆಯಾಗಿರುವ ಶೀನಾ ಎಂಬ ಹುಡುಗಿಯ ಕತೆಯ ಬಹುಮುಖಗಳಿಗೆ ಪ್ರದಕ್ಷಿಣೆ ಬರುತ್ತಿರುವಾಗ - "Nation wants to know" ಎಂದು ಮೇಜು ಗುದ್ದುತ್ತಿದ್ದ ನಮ್ಮ ಸಮಾಜದ "ಪಟಾಪಟಿ ಮಂದಿ" ಯನ್ನೂ - ನಾವೆಲ್ಲರೂ ಮತ್ತೊಮ್ಮೆ ಗಮನಿಸುವಂತಾಗಿದೆ. ಜಗತ್ತಿನಲ್ಲಿರುವ ಎಲ್ಲ ದುರ್ಬಲರ "Body guard" ಗಳಂತೆ ವರ್ತಿಸುತ್ತಿರುವ ನಮ್ಮ ಎಲ್ಲ ವಾಕ್ ಶೂರರು ಈ ಶೀನಾ ಪ್ರಕರಣವನ್ನು ನಿಭಾಯಿಸುತ್ತಿರುವ ಶೈಲಿಯು "ಹೊಡೆದಂತೆ, ಅತ್ತಂತೆ" - ಆಗಾಗ ಸ್ವಲ್ಪ ಭಿನ್ನವಿದ್ದಂತೆಯೂ ಅನ್ನಿಸುತ್ತದೆ.

ಆದರೆ ಆಶ್ಚರ್ಯವೆಂದರೆ - "ಇಷ್ಟು ಚೆಂದದ ಹುಡುಗಿ ಹೊರಟೇ ಹೋದಳಲ್ಲ?" ಎನ್ನುತ್ತ ಇಂದಿನವರೆಗೆ ಯಾವುದೇ Candle ಮೆರವಣಿಗೆ ನಡೆದಿಲ್ಲ !!  ಘೋಷಣೆ ಇಲ್ಲ. ಜನ ಸೇರಿಸುವ ಸಂಸ್ಥೆಗಳಿಲ್ಲ; ಸದಾ ಮಹಿಳೆಯರ ಮುಖವಾಣಿಯಂತೆ ಪ್ರತ್ಯಕ್ಷವಾಗುತ್ತಿದ್ದ ಯಾವ ಪರಿಚಿತ ಲಲನಾಮಣಿಗಳದೂ ಸದ್ದಿಲ್ಲ. ಯಾವ ಆಯೋಗವೂ ಸ್ವಪ್ರೇರಣೆಯಿಂದ ಮೂಗು ತೂರಿಸಿಲ್ಲ. ಕೆಲವು "ವಾಕ್ ಮಣಿ"ಗಳು ಅತ್ಯಂತ ಸಂಯಮದಿಂದ, ಅಡ್ಡ ಗೋಡೆಯ ಮೇಲೆ ದೀಪವಿಟ್ಟಂತೆ ತಡೆತಡೆದು ಮಾತನಾಡುತ್ತಿದ್ದಾರೆ. "ಹೊಡಿ, ಬಡಿ, ಕಚ್ಚಿ, ಕೊಲ್ಲಿ..." ಎಂಬ ಯಾವ ಉದ್ವೇಗವೂ ಈ ಪ್ರಕರಣದಲ್ಲಿ ಕಾಣಿಸುತ್ತಿಲ್ಲ. ಸರಕಾರದ ಮೇಲೆ ಒತ್ತಡ ಹೇರುವ ಎಂದಿನ ಪ್ರಯತ್ನವೂ ಕಾಣುವುದಿಲ್ಲ. ಕೆಲವರು ಬೆನ್ನು ಬಿದ್ದಂತೆ ಕಂಡರೂ - ಹಲವರು ಮರ್ಯಾದೆಯ ಮುಸುಕನ್ನು ಹೊದೆದಂತೆ ಕಾಣುತ್ತದೆ. ಸಾಮಾಜಿಕ ಕಳಕಳಿಯುಳ್ಳವರೆಂಬಂತೆ ಸದಾ ತೋರಿಸಿಕೊಳ್ಳುವ ಯಾವ ರೆಡಿಮೇಡ್ ರಾಜಕೀಯ ಧುರೀಣರೂ ಕಮಕ್ ಕಿಮಕ್ ಅನ್ನುವುದಿಲ್ಲ; ಬದಲಿಗೆ - ಸಾಮಾಜಿಕ ಕಳಕಳಿಯ ಸ್ವಘೋಷಿತ CONTRACT ಪಡೆದಂತೆ ಮಾಧ್ಯಮಗಳಲ್ಲಿ ಬೊಬ್ಬೆ ಹೊಡೆಯುವವರೆಲ್ಲರೂ ಹೆಬ್ಬೆಟ್ಟು ಚೀಪುವ ಮಗುವಿನಂತೆ ಕಾಗಕ್ಕ ಗುಬ್ಬಕ್ಕನ ಕತೆಯನ್ನು ಅವರಿವರಿಂದ ಕೇಳುತ್ತ ತಾವೂ ಹೇಳುತ್ತ ಕುಸ್ತಿಯಾಡುತ್ತಿರುವಂತೆಯೂ ತೋರುತ್ತಿದೆ; ಎಲ್ಲೋ ಸ್ವಂತ ಮನೆಯ ವಿಷಯವನ್ನು ಆಡಿಕೊಳ್ಳಲು ಸಂಕೋಚಗೊಳ್ಳುವ ವರ್ತನೆಯಂತೆಯೂ ಒಮ್ಮೊಮ್ಮೆ ಕಾಣುತ್ತದೆ !! ಆದರೆ ವಿಚಾರಣೆ ನಡೆಸುತ್ತಿರುವ ಅಧಿಕೃತ ಅಧಿಕಾರಿಗಳು ಗಂಭೀರವಾಗಿ ಕಾರ್ಯತತ್ಪರರಾದಂತೆ ಹೊರ ನೋಟಕ್ಕೆ ಅನ್ನಿಸುತ್ತದೆ.

ತನ್ಮಧ್ಯೆ, ಶೀನಾ ಎಂಬ ಹುಡುಗಿಯ ಕೊಲೆ ಆಗಿರುವುದು ನಿಜವೆ ? ಎಂಬ ಮೂಲ ಪ್ರಶ್ನೆಯೊಂದಿದೆ. ಈ ಪ್ರಕರಣದ ಒಂದೊಂದೇ ಹಾವುಗಳು ಬುಟ್ಟಿಯಿಂದ ಇಣುಕುವ ಶಿಸ್ತನ್ನು ನೋಡಿದರೆ, ಬುದ್ಧಿಪೂರ್ವಕವಾಗಿ ಕತೆಕಟ್ಟಿದಂತೆಯೂ ಕಾಣಿಸುತ್ತದೆ. ಇನ್ನೂ ಎಷ್ಟೆಷ್ಟು ಅಸಂಗತ ಕತೆ ಕೇಳಲಿಕ್ಕಿದೆಯೋ ? ಬುದ್ಧಿವಂತರು ಆಡುವ ನಾಟಕಗಳೆಲ್ಲವೂ ಯಾವತ್ತೂ ಅಸಂಗತವೇ ಆಗಿರುತ್ತದೆ ! ಅಂತಿಮವಾಗಿ, ಯಾರನ್ನಾದರೂ ಜವಾಬ್ದಾರರನ್ನಾಗಿಸುವ ಅನಿವಾರ್ಯತೆಯಲ್ಲಿ - ತೆರೆಯ ಹಿಂದಿನ ಆಟದಲ್ಲಿ ಸೋತ ಯಾವುದೋ ಒಂದು ಆಕಾರಕ್ಕೆ ಹೊರೆ ಹೊರಿಸಲೂಬಹುದು. ಅಲ್ಲಿಗೆ ನಾಟಕದ ಮುಕ್ತಾಯ.

ನಮ್ಮ ನಿತ್ಯಬದುಕಿನಲ್ಲಿ ನಾವು ಕಾಣುತ್ತಿರುವ ಮತ್ತು ಕಾಣದಿರುವ ಸಾವಿರಾರು ದುರಂತಗಳಲ್ಲಿ ಇದೂ ಒಂದು. ಅಷ್ಟೇ. ಮಹಡಿಯಿಂದ ಬಿದ್ದು ಸತ್ತವರು, ನೀರಿನಲ್ಲಿ ಮುಳುಗಿ ಸತ್ತವರು, ಬೆಂಕಿಯಲ್ಲಿ ಉರಿದು ಸತ್ತವರು... ಹೀಗೆ ಬಗೆಬಗೆಯಿಂದ ಅಂತ್ಯ ಕಂಡವರು - ಅಂತ್ಯ ಕಾಣಿಸಿಕೊಂಡವರ ದೊಡ್ಡ ಪಟ್ಟಿಯೇ ಇದೆ ! ಇವೆಲ್ಲ ಸಂದರ್ಭಗಳಲ್ಲೂ ಆಯಾ ಸಂದರ್ಭವನ್ನು ಹಿಸಿದು ಸತ್ಯ ದರ್ಶನಕ್ಕೆ ನಡೆಸಿದ ಪ್ರಯತ್ನಗಳೂ ಲೆಕ್ಕವಿಲ್ಲದಷ್ಟು. ಆದರೆ ಪೂರ್ಣಸತ್ಯ ಕಾಣಿಸಿತ್ತೆ? ಏನೋ ಒಂದು ತಾರ್ಕಿಕ ಅಂತ್ಯ ದೊರೆತಿರಲೂಬಹುದು. ಅನೇಕ ಬಾರಿ, ತರ್ಕಾತೀತವಾಗಿ, "ಸಾವು" ವಿಜೃಂಭಿಸಿದ್ದೇ ಹೆಚ್ಚು. ಎಷ್ಟೋ ಬಾರಿ ನಡುದಾರಿಯಲ್ಲಿ ಸತ್ತವರಿಗೂ - ಸಾಯುವುದು ಏಕೆಂದು ಗೊತ್ತಿರುವುದಿಲ್ಲ; ತಾವು ಸಾವಿನ ಕಡೆಗೆ ಹೆಜ್ಜೆ ಇಡುತ್ತಿರುವುದರ ಸೂಚನೆಯನ್ನು ಅರ್ಥ ಮಾಡಿಕೊಳ್ಳಲೂ ಆಗುವುದಿಲ್ಲ. ಸಾಯುವವರು ಇರುವ ವರೆಗೂ ಸಾಯಿಸುವ ಸ್ವಾರ್ಥಿಗಳೂ ಇರುತ್ತಾರೆ ಎಂಬುದೂ ಹೊಳೆಯುವುದಿಲ್ಲ. ಸಾವಿನ ಅರ್ಥವನ್ನೇ ತಿಳಿಯದ ಬದುಕುಗಳ ದುರಂತವಿದು.

ನಮ್ಮಲ್ಲಿರುವ ಕಾನೂನಿನ ಪರಿಧಿಯಲ್ಲಿ ಯಾವುದೇ ಘಟನೆಯ ವಿಚಾರಣೆಯನ್ನು ಬಹು ದೀರ್ಘಕಾಲ ಎಳೆದಾಡುವ ಸದವಕಾಶ ಇರುವುದರಿಂದಾಗಿ "ಸತ್ಯವು ತಪ್ಪಿಸಿಕೊಳ್ಳುವ" ಸಾಧ್ಯತೆಯು ಹೆಚ್ಚಾಗಿ ಹೋಗಿದೆ. ಎಂದಿಗೂ ಬೆಣ್ಣೆ ಹುಟ್ಟದ ಮೊಸರನ್ನು ಕಡೆಯುವ - ಕಣ್ಕಟ್ಟಿನ ಅನೇಕ ಕರ್ಮಗಳಿಗೆ ನಾವು ಇದುವರೆಗೆ ಸಾಕ್ಷಿಯಾಗಿರುವುದರಿಂದ ನ್ಯಾಯ ಎಂಬ ಅಮೂರ್ತದ ನಿರೀಕ್ಷೆಯೂ "ಆಕರ್ಷಕ ಅಸಂಗತ" ಎನ್ನಿಸುವುದೂ ಇದೆ ... ರಂಗಿನ ಲೋಕದ ಇಂದ್ರಇಂದ್ರಾಣಿಯರ ಬದುಕಿನ "ಮದುವೆಗಳು, ಮಕ್ಕಳುಗಳು, ಗಂಡಗಳು - ಹೆಂಡಗಳು, ರಾಜಕೀಯಗಳು, ಸುಳ್ಳುಗಳು, ಮೋಸಗಳು, ಆಸೆಗಳು, ಜೀವನ ಶೈಲಿಗಳು, ನಡುವಿನ ನುಂಗಳಕಗಳು, ಬಿಕನಾಸಿಗಳು..." ಎಂಬ ಏಕಾದಶ "ಪಂಚರಂಗೀ ದರ್ಶನ"ವಿದು. ಸತ್ಯ ಸತ್ತಿದೆ! ಆದ್ದರಿಂದಲೇ ಹಸಿ ಹಸಿ ಬದುಕುಗಳು ಸಾಯುತ್ತಿವೆ ! ಬೂದಿಯೊಳಗಿನ ಮೂಳೆ ಎಣಿಸುವ ಕೆಲಸ ನಡೆಯುತ್ತಿದೆ ! ಆದ್ದರಿಂದಲೇ ಅಧರ್ಮದ ನೂರಾರು ಲಕ್ಷಣಗಳು ಪಾರುಪತ್ಯ ನಡೆಸುವಂತಾಗಿದೆ.

ನೂರು ಸುಳ್ಳು ಹೇಳಿಯಾದರೂ ಒಂದು ಮದುವೆ ಮಾಡು - ಎಂಬ ಮಾತೊಂದು ಹಿಂದೆ ಚಾಲ್ತಿಯಲ್ಲಿತ್ತು. ಅದು ಒಂದು ಬದುಕಿಗೆ ಒಂದೇ ಮದುವೆ ನಡೆಯುತ್ತಿದ್ದ ಕಾಲ; ಮಕ್ಕಳ ಮದುವೆಯನ್ನು ಇನ್ನ್ಯಾರೋ ಹಿರಿಯರು ನಿರ್ಧರಿಸುತ್ತಿದ್ದ ಕಾಲ. ಅಂತಹ ಮದುವೆಗಳು ಪರಸ್ಪರ ಕೊಂದುಕೊಳ್ಳದೆ ಆಗ ಯಶಸ್ವಿಯಾದ ಅನೇಕ ಉದಾಹರಣೆಗಳೂ ಇವೆ. ಆದರೆ ಇಂದು ಸಮಾಜವು ಬದಲಾಗಿದೆ. ಮದುವೆಯಾಗುವವರ ಒಪ್ಪಿಗೆಯಿಲ್ಲದೆ ಯಾವುದೇ ಮದುವೆಯು ನಡೆಯುವುದು ಈಗ ಸುಲಭವಲ್ಲ. ಅವರವರೇ ಮೆಚ್ಚಿ ಒಪ್ಪಿ ನಡೆಯುವ ಮದುವೆಗಳು ಪೇಟೆ ಪಟ್ಟಣಗಳಲ್ಲಿ ಹೆಚ್ಚುತ್ತಿವೆ. ವಸ್ತುತಃ "ಮದುವೆಯ ಆಟ"ದ ಒಲವು ಹೆಚ್ಚುತ್ತಿದೆ ! ಹೀಗಿದ್ದೂ ಹೊಂದಾಣಿಕೆಯು ಸಾಧ್ಯವಾಗದೆ ಮುರಿದು ಬೀಳುವ ಘಟನೆಗಳೂ ಹೆಚ್ಚುತ್ತಿವೆ. ಯಾವುದೇ ಬದ್ಧತೆಯಿಲ್ಲದ ನವೀನ ಪೀಳಿಗೆಯು ಹೂಂಕರಿಸುತ್ತಿದೆ. ಯಾರನ್ನಾದರೂ ಸುಮ್ಮನೆ ಮುಟ್ಟಿ OUT ಆಗಿಸುವ "ಕಬಡ್ಡಿ ಮದುವೆ " ಗಳ ಸಂಭ್ರಮವು ಒಂದೆಡೆ ಜನಪ್ರಿಯವಾಗುತ್ತಿದ್ದರೆ, High Society ಯ ಜನಗಳು "ಮದುವೆಯ ಸರಪಣಿ " ಎಂಬ ಹೊಸಹೊಸ ಚೆಲ್ಲಾಟ ನಡೆಸುತ್ತಿದೆ. ಇವನ್ನೆಲ್ಲ ನೋಡಿದರೆ ಅವರ "ಸುಳ್ಳು ಸರಪಣಿ ಪ್ರಪಂಚ"ವೇ ಬೇರೆ - ಎಂದೂ ಅನ್ನಿಸುವುದಿದೆ. ಅಷ್ಟು ಮಾತ್ರವಲ್ಲ, ಅಂತಹ ವರ್ಗವು ಇಡೀ ಸಮಾಜಕ್ಕೆ ಅಂತಹುದೇ ಅಂಟುರೋಗಗಳನ್ನು ಹಬ್ಬಿಸಬಲ್ಲ ಪ್ರಚಂಡ ಬ್ಯಾಕ್ಟೀರಿಯಗಳು - ಎಂದೂ ಒಪ್ಪಿಕೊಳ್ಳಬೇಕಾಗುತ್ತದೆ.

ತಾವು ಬಹಳ decent ಎಂದು ತೋರಿಸಿಕೊಳ್ಳುವ ಇಂತಹ High Class ಕಚಡಾ ಜನಗಳು ತಾವು ಪ್ರೀತಿಸಿದ ಕುಳಗಳ ಹಿನ್ನೆಲೆ, ಜಾತಕವನ್ನು ನೋಡದೆ ಕುರುಡರಂತೆ ಮದುವೆಯಾಗಿ ಬಿಡುತ್ತಾರೇನು ? ಇದು ಸತ್ಯವೆ ? Nation wants to know. ನಾಲ್ಕು ನಾಲ್ಕು ವರ್ಷಕ್ಕೆ ಗಂಡ / ಹೆಂಡತಿಯನ್ನು ಬದಲಾಯಿಸಿಕೊಳ್ಳುವ ಇವರೆಲ್ಲರೂ ಅಂತಹ ಶತದಡ್ಡರೆ ? Nation wants to know. ತನ್ನ ಹೆಂಡತಿಗೆ ಎಷ್ಟು ಗಂಡಗಳಿದ್ದರು ? ತನ್ನ ಗಂಡನಾಗುವವನಿಗೆ ಈ ಹಿಂದೆ ಎಷ್ಟು ಹೆಂಡಗಳಿದ್ದರು ? ಎಷ್ಟು ಮಕ್ಕಳಿದ್ದರು ? ಆ ಗಂಡ / ಹೆಂಡಗಳಿಂದ ಅಲ್ಲಲ್ಲಿ ಎಷ್ಟು ಮಕ್ಕಳಿದ್ದರು ? ಈ ಯಾವ ವಿವರವೂ High / Low Society ಯವರಿಗೆ ಬೇಕಾಗುವುದಿಲ್ಲವೆ ? ಅವರದು - High Class - ಅಮರ ಮಧುರ ಪ್ರೇಮ ಇರಬಹುದೆ ? ಹಾಗಲ್ಲ. ಇವೆಲ್ಲವೂ Time Pass ಪ್ರೇಮ ! ಅಮಲಿನ ಮಧುರ ಪ್ರೇಮ. ಯಾವುದೇ ಅಮಲ್ದಾರರುಗಳಲ್ಲಿ ಅಮಲು ಇರುವ ವರೆಗೂ ಪ್ರೇಮವೂ ಓಡುತ್ತದೆ; ಅಮಲು ಇಳಿದಾಗ ಮಾತ್ರ - ಜೀವ ಓಡುತ್ತದೆ. ಎಲ್ಲವೂ ಹಡಬಿಟ್ಟಿ ದುಡ್ಡಿನ ಆಟವಲ್ಲವೆ ? ಸಂಬಂಧಗಳನ್ನೂ ದುಡ್ಡಿನಲ್ಲಿ ತೂಗುವ ಬಿಕನಾಸಿ ಪ್ರೇಮಗಳಿಗೆ ಇಂತಹುದೇ ಅಂತ್ಯವು ಸ್ವಾಭಾವಿಕ. "ಕೋಟಿ ಕೋಟಿ" ಯ ದುರಾಸೆಯು ಒಂದು ಕುಟುಂಬದೊಳಗೆ ಕೋಟೆಯೆಬ್ಬಿಸಿ ನೂರಾರು ಕೋಟಲೆಗಳನ್ನು ತಂದಿಡುವುದು ಹೇಗೆ ? ಎಂಬುದಕ್ಕೆ ಇತ್ತೀಚೆಗೆ ನಿತ್ಯವೂ ಉದಾಹರಣೆಗಳು ಸಿಗುತ್ತಿವೆ. ಆದ್ದರಿಂದಲೇ ಕೆಟ್ಟ ತಾಯಿ - ತಂದೆ, ಕೆಟ್ಟ ಮಗ - ಮಗಳು ಎಲ್ಲವೂ ಸಾಧ್ಯವಾಗಿದೆ. ಧರ್ಮದ ಯಾವ ಲಕ್ಷಣವೂ ಇವರಿಗೆಲ್ಲ ಲಗಾವಾಗುವುದಿಲ್ಲ. ಏಕೆಂದರೆ ಇವರು ಧರ್ಮಾತೀತರು ! ನವೀನ ಶಿಕ್ಷಣದ ಅಸಂಗತಗಳು !

ಸುಮಾರು 20 ವರ್ಷಗಳ ಹಿಂದೆ ಒಂದು ಸಂಸ್ಥೆಯವರು ತಮ್ಮ ಸಂಸ್ಥೆಯ ಸದಸ್ಯರಾಗುವಂತೆ ನನ್ನನ್ನು ಆಹ್ವಾನಿಸಿದ್ದರು. ಅಲ್ಲಿ "ದೊಡ್ಡ ದೊಡ್ಡ" ಜನಗಳ ಸಂಪರ್ಕವಾಗುತ್ತದೆ; ಅದರಿಂದ Wide exposure ಸಿಗುತ್ತದೆ... ಎಂದೆಲ್ಲ ನನ್ನನ್ನು ಪ್ರಭಾವಿಸಲು ಪ್ರಯತ್ನಿಸಿದ್ದರು. ಆದರೆ ಆ ದೊಡ್ಡ ಜನಗಳು ಊರೂರಿಗೆ Picnic ನೆವನದಲ್ಲಿ ತಿರುಗುತ್ತ ಮಾಡುತ್ತಿದ್ದ High Class ಕೆಲಸಗಳನ್ನು ಅರಿತಿದ್ದ, ಅದರಿಂದಾಗಿಯೇ ಒಂದು ಸಂಸಾರವು ಒಡೆದು ಹೋದುದನ್ನೂ ಕಂಡಿದ್ದ ನಾನು ಅದೊಂದು ಹಳ್ಳದಿಂದ ಹೇಗೋ ಪಾರಾಗಿದ್ದೆ. ಕೆಳ ವರ್ಗದವರ ಹೋರಾಟದ ಸಮಸ್ಯೆಗಳೇ ಭಿನ್ನವಾಗಿದ್ದರೂ - ಇಂದಿನ High Society ಗಳಲ್ಲಿ ಮಾತ್ರ ಸಮಸ್ಯೆಗಳನ್ನು ನಿಭಾಯಿಸುವ ಕ್ರೌರ್ಯವು ಗಾಬರಿ ಹುಟ್ಟಿಸುವಂತಿದೆ. ಸಂಬಂಧಗಳು ನಿಜವಾಗಿಯೂ ಸಾಯುತ್ತಿವೆ. ಇಂತಹ ಕಳ್ಳರನ್ನೆಲ್ಲ ಆದರ್ಶವಾಗಿಸಿಕೊಂಡ ಕೆಲವು ಅಬ್ಬೇಪಾರಿಗಳು - ದೊಡ್ಡ ಇಕ್ಕಳದಿಂದ ಬಿಡಿಸಿಕೊಳ್ಳಲು ಅವರಷ್ಟು ಶಕ್ತಿಯೂ ಇಲ್ಲದೆ ಸಂಪೂರ್ಣ ನಾಶವಾಗುತ್ತಿದ್ದಾರೆ.

ದೇವಸ್ಥಾನಕ್ಕೆ ಎತ್ತನ್ನು ಬಿಟ್ಟಂತೆ - ಸಾರ್ವಜನಿಕ ಸೇವೆಗೆ ನಮ್ಮ ಮಕ್ಕಳನ್ನು ಸ್ವಚ್ಛಂದವಾಗಿ ಬಿಡುವ ಮೊದಲು ಪರಾಪರಗಳ ಯೋಚನೆ ಮಾಡಬೇಕು. ಯಾರಿಗಾದರೂ ಸ್ವಚ್ಛಂದತೆಯ ಹೊಸ ರುಚಿಯನ್ನು ಅನುಭವಿಸುವ ಅಭ್ಯಾಸವಾದ ಮೇಲೆ ಹಟ್ಟಿಯಲ್ಲಿ ದೊರಕುವ "ನಿತ್ಯದ ಕಲಗಚ್ಚು" ಯಾವ ಪಶುಗಳಿಗೂ ಹಿತವಾಗುವುದಿಲ್ಲ. ಸ್ವಂತ ಮನೆ ಬದುಕು ಇಷ್ಟವಾಗುವುದೇ ಇಲ್ಲ. ಬೀದಿ ಸುತ್ತುವ ಜನ್ಮತಃ ಪಶುಗಳೂ ಇಂದು ಅಪಾಯಕ್ಕೆ ಸಿಲುಕುತ್ತಿವೆ. ಭ್ರಷ್ಟಗೊಂಡಿರುವ ಮನಸ್ಸನ್ನೇ ಹಾಸಿ ಹೊದ್ದು ಮಲಗಿರುವ ಇಂದಿನ ಮನುಷ್ಯರಿಂದ ಅವರಿಗಾಗಲೀ ಸೃಷ್ಟಿಗಾಗಲೀ ಉಪಕಾರವನ್ನು ನಿರೀಕ್ಷಿಸಲೂ ಸಾಧ್ಯವಿಲ್ಲದಂತಾಗಿದೆ. ಆದ್ದರಿಂದ ಮನುಷ್ಯರು ಅಂದುಕೊಂಡವರು - ಎಚ್ಚರಗೊಳ್ಳಬೇಕಾದ ಸನ್ನಿವೇಶವಿದೆ. ತಮ್ಮ ಮನೆ - ಮನೆಮಂದಿಯನ್ನು ಪ್ರೀತಿಸಲಾಗದ ಜನರಿಗೆ ಪಕ್ಕದ ಮನೆಯವರನ್ನು ಪ್ರೀತಿಸುವ ಉಸಾಬರಿ ಯಾಕೆ ಬೇಕು ? ಅವರವರು ಅವರವರ ಕುಟುಂಬಕ್ಕಾಗಿ ದುಡಿದರೆ ಸಮಾಜವು ತನ್ನಿಂದ ತಾನೇ ಉದ್ಧಾರವಾಗುತ್ತದೆ ಎಂಬ ಸತ್ಯವನ್ನು ಆಯಾ ಮನೆಯ ಸದಸ್ಯರಿಗೆ ಮನದಟ್ಟು ಮಾಡಿಸಬೇಕು. ಅದಕ್ಕಾಗಿ Candle ಹಿಡಿದುಕೊಂಡು ರಸ್ತೆಗೆ ಓಡುವ ಯಾವ ಅಧಿಕಪ್ರಸಂಗದ ಅಗತ್ಯವೂ ಇಲ್ಲ.

ಪ್ರತೀ ಮನೆಯಲ್ಲೂ ಮುಕ್ತ ವಾತಾವರಣವಿದ್ದಾಗ ಸಮಸ್ಯೆಗಳು ಹೂವೆತ್ತಿದಂತೆ ಕರಗಿ ಹೋಗುತ್ತವೆ. ಯಾವುದೇ ಮನೆಯ ಪ್ರತಿಯೊಬ್ಬ ಸದಸ್ಯರ ಚಲನವಲನವೂ ಪರಸ್ಪರರಿಗೆ ತಿಳಿದಿರಲೇಬೇಕು. ಕಷ್ಟ ಸುಖಗಳಲ್ಲಿ ಭಾಗಿಯಾಗುವ ಒಂದು ಸಂಸಾರದ ಸದಸ್ಯರಲ್ಲಿ ಮುಚ್ಚುಮರೆಯಿದ್ದರೆ ಆ ಸಂಸಾರವು ಭದ್ರವಾಗಿ ಉಳಿಯುವುದಿಲ್ಲ ಮತ್ತು ನರಳುತ್ತದೆ. ನಮ್ಮ ಯಜಮಾನರು ಎಲ್ಲಿಗೆ ಹೋಗಿದ್ದಾರೆ ಎಂದು ಗೊತ್ತಿಲ್ಲ; ಎಷ್ಟು ಹೊತ್ತಿಗೆ ಬರುತ್ತಾರೆ ಎಂದು ಗೊತ್ತಿಲ್ಲ; ರಾತ್ರಿ ಎಂಟು ಗಂಟೆಗೆ ಸಿಗಬಹುದೇ? ಎಂದು ಕೇಳಿದರೂ ಗೊತ್ತಿಲ್ಲ...ಹೆಂಡತಿಯು Kitty Party ಗೆ ಹೋಗಿದ್ದಾಳೆ...ಎಲ್ಲಿ ಅಂತ ಗೊತ್ತಿಲ್ಲ; ಯಾವಾಗ ಬರುತ್ತಾಳೆ ಅಂತಲೂ ಗೊತ್ತಿಲ್ಲ...ಎಂದು ಗಿಣಿಮರಿಯಂತೆ "ಉಲಿಯುವ" ಯಾವುದೇ ಸಂಸಾರವು ಉಳಿದೀತೆ? ಎಂದು ಕೇಳಿದರೆ... -"ಗೊತ್ತಿಲ್ಲ; ಗೊತ್ತಿಲ್ಲ" ಎಂದಷ್ಟೇ ಉತ್ತರಿಸಬಹುದು..."ಒಮ್ಮೆ ಮದುವೆಯಾದ ಮೇಲೆ ಹೆಂಡತಿ / ಗಂಡ ಹೇಗಿದ್ದರೂ - ಅದನ್ನು ಪರಸ್ಪರರು ಹೇಗೋ HANDLE ಮಾಡ್ಬೇಕಪ್ಪ" ಅನ್ನುವವರದು - ಅದು ಪ್ರತ್ಯೇಕ ಕತೆ. Man handling, Woman handling ಅತಿಯಾದಾಗ ಒಮ್ಮೊಮ್ಮೆ ಗುಟ್ಟಿನಲ್ಲಿ Peddling ಕೂಡ ನಡೆದುಹೋಗುತ್ತದೆ ! ಬದುಕಿನಲ್ಲಿ ಸೊಯ ತಪ್ಪಿದಾಗ ಅನಾಮತ್ತಾಗಿ ಪತ್ತೇದಾರಿ ಕತೆಗಳು ಹುಟ್ಟಿಕೊಳ್ಳುತ್ತವೆ ! People Wants to Know... ಎನ್ನುವ ಅಸಂಗತಗಳು ರಂಜನೆ ನೀಡತೊಡಗುತ್ತವೆ.

ಇಂದು ಭಾರತೀಯ ಕುಟುಂಬಗಳ ಬುಡವೇ ಅಲುಗಾಡುತ್ತಿದೆ. "ದೇವಸ್ಥಾನಕ್ಕೆ ಹೋಗಿ ಬರುತ್ತೇನೆ ಮಗಳೇ; ಅನ್ನಕ್ಕೆ ಅಕ್ಕಿ ಹಾಕು.." ಎಂದ ತಾಯಿಯ ಮಾತಿಗೆ ಒಪ್ಪಿದ ಮಗಳು - ಮಧ್ಯಾಹ್ನ ಉಂಡು ಉಳಿದ ಅನ್ನಕ್ಕೆ ಒಂದು ಸಿದ್ದೆ ಅಕ್ಕಿಯನ್ನು ಹಾಕಿ ಇಟ್ಟಿದ್ದಳಂತೆ! ಇಂದು ದೃಶ್ಯ ಮಾಧ್ಯಮದಲ್ಲಿ ಬರುವ ಅಡುಗೆ ಕಾರ್ಯಕ್ರಮಗಳನ್ನು ಬಿಡದೆ ನೋಡುವವರಲ್ಲಿ ಎಷ್ಟು ಮಂದಿ ಇಂತಹ "ಅನ್ನಕ್ಕಿ"ಗಳಿದ್ದಾರೋ ? ಊಹಿಸುವುದೂ ಕಷ್ಟ. ತಾವು ಸ್ವತಃ ಅಡುಗೆ ಮಾಡದೆ ಯಾರಿಂದಲೋ ಅಡುಗೆ ಮಾಡಿಸಿ ಪುಷ್ಕಳವಾಗಿ ಊಟ ಮಾಡುವ High Class ಮನೋಸ್ಥಿತಿ ಇದು. ಅವರವರ ನಿತ್ಯದ ಕೆಲಸಗಳನ್ನು ಅವರವರೇ ನಿರ್ವಹಿಸುತ್ತ ಆತ್ಮನಿರ್ಭರರಾದಾಗ ಅಲ್ಲಸಲ್ಲದ ಕೆಲಸಗಳು ಇಣುಕಲು ಅವಕಾಶವಾಗದು. ಹೀಗೆ ಸತ್ಕರ್ಮಶೀಲರಾಗುವ ಪ್ರಯತ್ನ ನಡೆಸುವುದರಿಂದಲೇ ಹಲವು ಸಮಸ್ಯೆಗಳು ಪರಿಹಾರವಾಗುತ್ತವೆ. ಇಂದ್ರಿಯಗಳನ್ನು ಯುಕ್ತ ಕೆಲಸಗಳಲ್ಲಿ ನಿಯುಕ್ತಿಗೊಳಿಸದಿದ್ದರೆ ಅವು ನಿರುಪಯುಕ್ತ ಕೆಲಸಗಳತ್ತ ವಾಲುತ್ತವೆ. ಆದ್ದರಿಂದ ಸಾತ್ವಿಕ ಕೈ ಕೆಲಸಗಳು ಅತೀ ಅಗತ್ಯ. ಹೆತ್ತವರನ್ನು ಕೇಳಿದರೆ - "ನಮ್ಮ ಮಗಳೇನು ನಿಮಗೆಲ್ಲ ಅಡುಗೆ ಮಾಡಿ ಹಾಕಲಿಕ್ಕೆ ಮದುವೆ ಆದದ್ದಾ ??" ಎನ್ನುವ....,"ನನ್ನ ಮಗನೇಕೆ ಅಡುಗೆ ಮಾಡಬೇಕು? ಅದಕ್ಕಾ ಸೊಸೆಯನ್ನು ತಂದದ್ದು?" ಎನ್ನುವ ಗಟ್ಟಿಗಿತ್ತಿ ಹೆತ್ತವರೂ ಇದ್ದಾರೆ. ಕುರುಡು ಮೋಹದ ಅಸಂಬದ್ಧ ಅಹಂ ರಾಜ್ಯಭಾರ!


ಸಂಬಂಧಗಳು ಸುಸಂಬದ್ಧವಾಗದೆ ಅಸಂಬದ್ಧವಾದರೆ ಹೀಗೇ. ಯೋಚನೆಗಳ ಶ್ರುತಿ ತಪ್ಪುತ್ತದೆ. ಹಾಗೆ ನೋಡಿದರೆ...ಇಷ್ಟು ಉದ್ದಕ್ಕೆ ಬದುಕಿನ ಬಂಡಿಯನ್ನು ದೂಡಿ ದಣಿದಿರುವ ವೃದ್ಧರು, ತಮ್ಮ ಇಳಿವಯಸ್ಸಿನ ದೈಹಿಕ ಶ್ರಮದಲ್ಲಿ ತಮ್ಮದೇ ಮಕ್ಕಳ ಆಧಾರವನ್ನು ಅಪೇಕ್ಷಿಸುವುದರಲ್ಲಿ ತಪ್ಪೇನಿದೆ ? ಊರಿಗೊಂದು ವೃದ್ಧಾಶ್ರಮ ಕಟ್ಟಿಸಿ ಅಲ್ಲಿ "ಸಮಾಜ ಸೇವಾ ನಾಟಕ ಕಂಪೆನಿ" ಯನ್ನು ನಡೆಸುವುದಕ್ಕಿಂತ ಅವರವರ ಮನೆಯನ್ನು ಸುಸ್ಥಿತವಾಗಿ ಇರಿಸಿಕೊಳ್ಳುವುದು ಸುಲಭ ಮತ್ತು ಗೌರವಪ್ರದ - ಅಲ್ಲವೆ ?  ಆದರೆ ಸ್ವಾರ್ಥ - ಸ್ವಕೇಂದ್ರಿತ ಪಾಶ್ಚಾತ್ಯ ಶಿಕ್ಷಣದ ಪ್ರಸಾದಗಳಂತಿರುವ, ಪೊಳ್ಳು ಪ್ರತಿಷ್ಠೆಯನ್ನಷ್ಟೇ ಕಲಿತಿರುವ ಇತ್ತೀಚೆಗಿನ ಬೇಜವಾಬ್ದಾರಿಯ ಮಕ್ಕಳಿಗೆ ಭಾವ ಸಂವಹನವೆಂದರೇನೆಂದೇ ಗೊತ್ತಿಲ್ಲ; ಕ್ಷುಲ್ಲಕ ವಿಷಯಗಳೂ ಅವರ ಪಾಲಿಗೆ ಮನಸ್ತಾಪದ ಕಾರಣವಾಗುತ್ತಿವೆ. ಯಾವ ಹೊಸದನ್ನೂ ತಾವೇ ಮಾಡಿ ಕಲಿಯುವ ಶ್ರಮದ ಗೋಜಿಗೇ ಹೋಗದೆ ಕೇವಲ ಮನಸ್ಸಿನಲ್ಲಿಯೇ ಮಂಡಿಗೆ ತಿನ್ನುತ್ತ ಬಂದಳಿಕೆಗಳಂತಿರುವ ಇಂತಹ Short Cut ಇಂದ್ರ - ಇಂದ್ರಾಣಿಯರು ಎಲ್ಲಿ ಯಶಸ್ವಿಯಾದರೂ, ವೈಯ್ಯಕ್ತಿಕ ಬದುಕಿನಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗದು. ಅಂತ್ಯವಂತೂ ದುರಂತವೇ. ಇಂಥವರ ಸಹವಾಸದ ದೌರ್ಭಾಗ್ಯ ಒದಗಿದ ಬಡಪಾಯಿಗಳು ವಿಧಿಯನ್ನು ದೂರುತ್ತ ದಿನ ತಳ್ಳಬೇಕಾದ ಪರಿಸ್ಥಿತಿ ಇದೆ ! ಭಾರತದಲ್ಲಿಯೂ ವೋಟಿನ ರಾಜಕಾರಣದಲ್ಲಿ ತತ್ಪರವಾಗಿರುವ ಸರಕಾರಗಳ ಪರೋಕ್ಷ ಪ್ರೋತ್ಸಾಹದಿಂದಾಗಿ ಅನೇಕ ಪರಿವಾರಗಳು ಛಿದ್ರಗೊಳ್ಳುತ್ತಿವೆ. ಯಾವ ಗೊತ್ತುಗುರಿಯೂ ಇಲ್ಲದ ಅಂತಹ ಪಂಚತಾರಾ ಶೈಲಿಯ ಬದುಕುಗಳು ಈಗ ದಿನವೂ ಊಳಿಡುತ್ತಿವೆ. ಎಲ್ಲವೂ ಸುಲಭದಲ್ಲಿ ಸಿಗಬೇಕು ಎನ್ನುವ Modern ಶಚೀಂದ್ರರಿವರು. ಆದರೆ ಸುಲಭದಲ್ಲಿ ಸಿಗುವ ಯಾವ ಯಶಸ್ಸೂ ಈ ಭೂಮಿಯ ಮೇಲಿಲ್ಲವಲ್ಲ ?... ಯಾವುದೇ ಸ್ವಚ್ಛ ಬದುಕು ಒಂದಷ್ಟು ಸತ್ಕರ್ಮವನ್ನು ಬೇಡುತ್ತದೆ. ತೃಪ್ತಿಯನ್ನು ಬಯಸುತ್ತದೆ. ಆದರೆ ಮೂಢ ದುರಾಸೆಯ ಮರೀಚಿಕೆಯು ನಮ್ಮ ಬದುಕುಗಳನ್ನು ಅಡ್ಡದಾರಿ ಹಿಡಿಸುತ್ತದೆ ! ಅಡ್ಡಾದಿಡ್ಡಿ ನಡೆಸುತ್ತದೆ ! ಬಳಲಿಸುತ್ತದೆ !

ಇತ್ತ ಸಾರ್ವಜನಿಕ ಸೇವೆಯನ್ನು ದುಡಿಮೆಯ ಮಾರ್ಗವಾಗಿಸಿಕೊಂಡಿರುವ ಇಂದಿನ ಬೆರಳೆಣಿಕೆಯ ಮಂದಿಯಿಂದ ಇಡೀ ಭಾರತೀಯ ಸಮಾಜವೇ ತಲೆತಗ್ಗಿಸುವಂತಾಗಿದೆ. ಪಾಶ್ಚಾತ್ಯ ಅನುಕರಣೆ, ತಮ್ಮ ಯೋಗ್ಯತೆಯನ್ನು ಮೀರಿದ ಮಹತ್ವಾಕಾಂಕ್ಷೆ, ಸ್ವಾರ್ಥ ಸಾಧನೆಗಾಗಿ ಯಾವ ಮಟ್ಟಕ್ಕೂ ಏರಿಳಿಯಬಲ್ಲ ಕ್ಷುದ್ರತನವನ್ನು ರೂಢಿಸಿಕೊಂಡಿರುವ ಈ "ಸಂಪರ್ಕ ಕ್ರಾಂತಿ ಸೇವೇಂದ್ರ ವಿಭಾಗ"ವು ಇಡೀ ಭಾರತೀಯ ಸಂಸ್ಕೃತಿಯನ್ನೇ ಕುಲಗೆಡಿಸುತ್ತಿದೆ. ಅರ್ಥ, ಕಾಮದಲ್ಲಿಯೇ ಮೋಕ್ಷ ಹುಡುಕುತ್ತಿರುವ ಇಂತಹ ಪುರಸೊತ್ತಿಲ್ಲದ ಸಾಮಾಜಿಕ ಸೇವಾ ಧುರಂಧರರಿಂದ ನಮ್ಮ ಭವಿಷ್ಯವು ಅಂಗೈದರ್ಪಣದಂತೆ ಗೋಚರಿಸುತ್ತಿದೆ. ಎಡವಿದವರು ಎದ್ದು ಸಂಭಾಳಿಸಿಕೊಳ್ಳುವುದಕ್ಕೂ ಪುರಸೊತ್ತಿಲ್ಲದಂತೆ ಅಂತಹ Public Service ವಿಭಾಗವು ಈಗ ಕಾರ್ಯನಿರತವಾಗಿದೆ ! ತಾವು ಬೀಳುವುದಲ್ಲದೆ ತಮ್ಮೊಂದಿಗೆ ಇನ್ನೊಂದಷ್ಟು ಜನರು ಎಡವಿ ಬೀಳುವಂತಹ ವಾತಾವರಣವನ್ನು ಮೂಡಿಸುತ್ತಿರುವ ಈ ಹೈದ- ಹೈದಿಯರಿಗೆ ಏನೆನ್ನಬೇಕು ? ಅವರನ್ನೆಲ್ಲ ಆದರ್ಶ ಸಂತಾನವೆಂಬಂತೆ, ಅವರ ಮಾತುಗಳೆಲ್ಲವನ್ನೂ ಋಷಿವಾಕ್ಯವೆಂಬಂತೆ ಬಿಂಬಿಸುತ್ತಿರುವ ಇಂದಿನ ರಾಷ್ಟ್ರೀಯ ಮಾಧ್ಯಮಗಳಿಗೆ ಏನೆನ್ನಬೇಕು ? "ಅಂಕೆಯಿಲ್ಲದ ಕಪಿ ಲಂಕೆ ಸುಟ್ಟಿತು" ಎಂಬ ಗಾದೆಮಾತು ಇಂಥವರನ್ನು ನೋಡಿಯೇ "ಅಂಕೆಮೀರಿ" ವಿಕೃತವಾಗಿ ಹುಟ್ಟಿಕೊಂಡಿರಬೇಕು.

ಸಿರಿಗರ ಬಡಿದ ಇಂದಿನ ಸೀತೆಯರು ರಾಮನಂಥವರೊಂದಿಗೆ ಬಾಳಲಾಗದೆ ಅವರೆಲ್ಲರೂ "ಸುಂದರ ರಾವಣ"ನಂಥವರ ಹುಡುಕಾಟದಲ್ಲಿದ್ದಾರೆ !... ರೋಡ್ ರೋಮಿಯೋ ತರಹ ದಿನವೂ ಪುಷ್ಪಕ ವಿಮಾನದಲ್ಲಿ ಅಂದು ತಿರುಗುತ್ತಿದ್ದ, ರೌಡಿಯ ಎಲ್ಲ  ಲಕ್ಷಣವನ್ನೂ ಹೊಂದಿದ್ದ ಅಂದಿನ ಜನಕಂಟಕ ರಾವಣ ಪಾತ್ರವು - ಇಂದಿನ ಒಂದು ವರ್ಗದ ಮಣಿಕೂಟ ದ ಮನೋಧರ್ಮಕ್ಕೆ ಹೆಚ್ಚು ಹೊಂದುತ್ತಿದೆ; ಆಕರ್ಷಕನೆನ್ನಿಸುತ್ತಿದೆ. ರೌಡಿಯ ಲಕ್ಷಣವಿಲ್ಲದ ಸಭ್ಯ ಹುಡುಗರು ಅವರ ಪಾಲಿಗೆ ಹಾಸ್ಯದ ಸರಕಾಗುತ್ತಿದ್ದಾರೆ.  

ಇಂದು ಮತ್ತೊಮ್ಮೆ ಶ್ರೀರಾಮ ಹುಟ್ಟಿದರೆ ಅವನ ಆ ಸೀತೆಯು ಕೂಡ "ಈ ರಾಮನು ತುಂಬ ಸಪ್ಪೆ" ಎಂಬ ಪಟ್ಟಕಟ್ಟಿ, ಎರಡನೇ ಗಂಡನಾಗಿ ಬಣ್ಣದ ಮಾರೀಚನನ್ನು ಮೆಚ್ಚಿ ವರಿಸಿ, ಅದೂ ಬೇಸರವಾದ ಮೇಲೆ ಮೂರನೆಯ ಗಂಡನಾಗಿ ರಾವಣನನ್ನೇ ವರಿಸುತ್ತಿದ್ದಳೇನೋ ? ಇಂದಿನ ಶ್ರೀರಾಮಚಂದ್ರರೂ ಹಿಂದೆ ಬಿದ್ದಿಲ್ಲ. ತಮಗೆ ತಗಲಿ ಬೀಳುವ - ಸೀತೆಯೆನ್ನುವ ಕಿಸೆ ಖಾಲಿ ಮಾಡಿಸುವ ಹೊರೆಯನ್ನು ಜಾಗ್ರತೆಯಿಂದ ಜಾರಿಸಿಕೊಂಡು "ಬಂಗಾರದ ಜಿಂಕೆಯ ಹುಡುಕಾಟಕ್ಕೆ ಹೋಗಿಬರುತ್ತೇನೆ.." ಎಂದು ಅವಳಿಗೆ ಹೇಳಿ ಹೋದವರು - ತಾಟಕೆ, ಶೂರ್ಪಣಖಿಯರನ್ನು ಅರಸುತ್ತ ಹಾಗೇ ಕಾಣೆಯಾಗಿ ಬಿಡುತ್ತಿದ್ದರೇನೊ ?... ಹೊಸ ಹೊಸ ದೇವರನ್ನು ಆರಿಸಿಕೊಳ್ಳುವ ಹಕ್ಕು ತಮ್ಮಲ್ಲೇ ಇದ್ದರೂ - ಶ್ರೀ ರಾಮಚಂದ್ರ, ಶ್ರೀ ಕೃಷ್ಣನ ಮೇಲೂ Domestic violence Case ಜಡಿಯುತ್ತಿದ್ದರೇನೋ?

ಗಂಡು ಸಂತಾನಕ್ಕೆ ಅಂತಹ ರಾಜಾರೋಷಾಗಿ ನಡೆಸುವ Thrilling ಗಳಿಗೆ ಅವಕಾಶವಿಲ್ಲ. ಅಂತಹ ಕೆಲವರು ಗುಟ್ಟಿನಲ್ಲಿ ಬೇಟೆಯಾಡುತ್ತಾರೆ! ಅನಂತರ ಪ್ರದಕ್ಷಿಣೆ ಬಂದು, ದಕ್ಷಿಣೆ ಕೊಟ್ಟು, ಸರ್ವಾಂಗ ಅಭ್ಯಂಗ ಸ್ನಾನ ಮಾಡಿ, ಒದ್ದೆ ಬಟ್ಟೆಯಲ್ಲಿಯೇ ಕರ್ಮಾಂಗಗಳನ್ನು ಮುಗಿಸಿದರೆ ಸಾಕಾಗುತ್ತದೆ! ಮನೆಯೊಳಗೆ ಕೂಸಿಲ್ಲದಿದ್ದರೂ ನಡೆದೀತು; Case ಇಲ್ಲದಿರಬಾರದು ಎಂಬುದು - ಇಂದಿನ ಸಾಮಾಜಿಕ ನೀತಿಯಾಗಿರಬಹುದೆ? ಹೌದು. ನಾವು ಹೋಗುತ್ತಿರುವುದಾದರೂ ಎಲ್ಲಿಗೆ ? (ಅಂದಮಾತ್ರಕ್ಕೆ, ಇಂದಿನ ಸ್ತ್ರೀ ಪುರುಷರ ದುಗುಡ ದುಮ್ಮಾನಗಳೆಲ್ಲವೂ ಕಪೋಲಕಲ್ಪಿತ - ಎಂದೂ ಅರ್ಥೈಸಬೇಕಾಗಿಲ್ಲ. ...ತಿರುಪೋಕಿ ಆರೋಪ ಪ್ರತ್ಯಾರೋಪ ಹುಚ್ಚಾಟಗಳು ಲೆಕ್ಕವಿಲ್ಲದಷ್ಟಿವೆ; ಹಿಂದೆಂದೂ ಕಲ್ಪಿಸಲೂ ಆಗದಷ್ಟು - ತಿರುತಿರುಗಿ ನೋಡುವಷ್ಟು ಪ್ರಮಾಣದಲ್ಲಿ ಹಾರಾಟ, ಹೋರಾಟ, ದೊಂಬರಾಟಗಳು ನಡೆಯುತ್ತಿವೆ; ಧಾರ್ಷ್ಟ್ಯದ ಪುಕ್ಕಟೆ ರಂಜನೆಯನ್ನೂ ನೀಡುತ್ತಿವೆ - ಎಂದಷ್ಟೇ ಅರ್ಥ.)

ಎಲ್ಲೆಲ್ಲೂ ಕೆಟ್ಟ ಲಂಪಟ ಸಾಹಿತ್ಯ - ಸಂಗೀತಗಳು, ಕೆಟ್ಟ ಲಂಪಟ ವೇಷಗಳು, ಕೆಟ್ಟ ಲಂಪಟ ವರ್ತನೆಗಳು, ಕೆಟ್ಟ ಲಂಪಟ ಬದುಕುಗಳೇ ಇಂದಿನ Fashion. ಇದರ ಸುತ್ತಲೂ ಸುತ್ತುವ - ಬದುಕನ್ನು ಹಾಳುಗೆಡಹುವ - ದಾರಿ ತಪ್ಪಿಸುವ ಕೆಟ್ಟ ಕೆಟ್ಟ ಚರ್ಚೆಗಳು; ಮನೋವಿಕಾರಗಳು. ಎಲ್ಲ ಸಂಬಂಧಗಳೂ... ಸಂಶಯಾಸ್ಪದವಾಗಿ, ಮಜಾ ಉಡಾಯಿಸುವ ಹಂತಕ್ಕೆ ಬಂದು ನಿಂತಂತಿದೆ. ದಾರಿ ಯಾವುದಯ್ಯಾ? ದಾರಿ ತೋರಿಸಯ್ಯಾ... ಎಂದು ಹಲುಬುವ ಸ್ಥಿತಿಗೆ ಎಲ್ಲರನ್ನೂ ತಂದಿಟ್ಟವರು ಯಾರು ? ಇಂತಹ ವಿಚಾರಗಳನ್ನು ಓದುವಾಗ ಈಗಲೂ - "ಇನ್ನೂ ಪೂರ್ತಿ ಹಾಳಾಗಿಲ್ಲ... ಇದೇಕೋ ಅತಿಯಾಯಿತು.." ಎನ್ನುವವರೂ ಇದ್ದಾರೆ; ಪೂರ್ತಿ ಹಾಳಾಗುವುದನ್ನೇ ಕೆಲವರು ಕಾಯುತ್ತಿದ್ದಾರೆ ! ಯಾಕೆ? ಇದೆಂತಹ ಸ್ವಾತಂತ್ರ್ಯ? ಇದೆಂತಹ ಶಿಕ್ಷಣ ? 

ಚತುರಾಶ್ರಮಗಳಲ್ಲಿ ಉಳಿದ ಮೂರು ಆಶ್ರಮಗಳ ಜೀವನವೂ ಗೃಹಸ್ಥನ ಅಧೀನ ಎನ್ನುವುದಾದರೆ ಇಂದಿನ ಕೆಲವೇ ಕೆಲವು ಕುಲಗೆಟ್ಟ ಗೃಹಸ್ಥರಿಂದಾಗಿ ಪ್ರಸ್ತುತ ಯಾವುದೂ ಭದ್ರವಾಗಿಲ್ಲವೆಂದೇ ತಿಳಿಯುವಂತಾಗಿದೆ. ಇಂದಿನ ಭಾರತೀಯ - ಕೆಟ್ಟ ಸಿನೆಮಾಗಳ ಕೆಟ್ಟ ಅಭಿರುಚಿಯನ್ನು ಮನೆಯ ಚಾವಡಿಯಲ್ಲಿ ಪುನರ್ನಿರ್ಮಾಣ ಮಾಡಿ ಮಕ್ಕಳನ್ನು ಸ್ವೇಚ್ಛಾಚಾರದ ಕುಣಿತಕ್ಕೆ ಪ್ರೋತ್ಸಾಹಿಸುತ್ತ ತಮ್ಮ ಕಿಸೆಯ ಪ್ರತಿಭೆ - ಶಕ್ತಿ ಸಾಮರ್ಥ್ಯವನ್ನು ಊರಿಗೆ ತೋರಿಸುವುದರಲ್ಲಿ ಈಗ ಮಗ್ನವಾಗಿರುವ ನಾವು - ಅದರಿಂದಾಗಿ ನಮ್ಮ ಮಕ್ಕಳ ಮೇಲೆ ಆಗುವ ತತ್ಪರಿಣಾಮಗಳ ಕುರಿತು ಚಿಂತೆ ಮಾಡಲು ಇನ್ನೂ ಶುರು ಮಾಡಿಲ್ಲ. ಬಣ್ಣದ ಜಗತ್ತಿನ ಕೆಟ್ಟ ಅಭಿರುಚಿಯ ಅನುಕರಣೆ ಮತ್ತು - ಗೊತ್ತಿದ್ದು ಹಾಗೂ ಗೊತ್ತಿಲ್ಲದೆಯೂ - ಉತ್ತಮವನ್ನೆಲ್ಲ ಕುಟ್ಟಿ ಪುಡಿಗಟ್ಟುವುದರಲ್ಲಿ - ಇಡೀ ಸಮಾಜವೇ ತಲ್ಲೀನವಾಗಿರುವಂತಿದೆ.  

ಮನೆಯ ಒತ್ತು ಶ್ಯಾವಿಗೆಯು ಇಂದಿನ ಮಕ್ಕಳಿಗೆ ರುಚಿಸದು. ಪೇಟೆಯ ನೂಡಲ್ಸ್ ಗೇ ಈಗ ಹೆಚ್ಚು Demand . "ಮನೆ ಬಿಟ್ಟು ಬೀದಿ ಸುತ್ತುವ" ಪೊಕ್ಕು Fashion ಮತ್ತು ಕೆಲಸಗಳ್ಳತನದಿಂದಾಗಿ ಸಂಸ್ಕರಿತ ಭಾರತೀಯ ರುಚಿಗೂ ಹೊಡೆತ ಬೀಳುತ್ತಿದೆ. ಆರೋಗ್ಯವೂ ಕೆಡುತ್ತಿದೆ. ಮನೆಯ ಅಡುಗೆ ಕೋಣೆಯು ಅನಾಥವಾಗುತ್ತಿದೆ; ಮನೆಯ ಅಜ್ಜಿಯು ಮೌನಕ್ಕೆ ಜಾರುವಂತಾಗಿದೆ. ರೆಡಿಮೇಡ್ ಅರುಚಿಯನ್ನೂ "ರುಚಿ ರುಚಿ" ಎನ್ನುತ್ತ ಪರಕೀಯ ಗಂಡಾಂತರಗಳನ್ನು Handle ಮಾಡುವವರೆಲ್ಲರೂ "I am very happy" ಎನ್ನುತ್ತ ಪೆಚ್ಚು ಪೆಚ್ಚಾಗಿ ನಗುತ್ತಿರುತ್ತಾರೆ ! ಮಾನಸಿಕ ಸಂಘರ್ಷದಿಂದ ಒಳಗೊಳಗೇ ಬಳಲುವವರೂ ಇದ್ದಾರೆ. ಏನಿದ್ದರೂ ನಮ್ಮ ಸಂಸಾರವನ್ನು ನಾವು ನಿಸ್ಸಾರ ಮಾಡಿಕೊಂಡಾಗಿದೆ.

ಕೆಟ್ಟ ಮಗ - ಮಗಳು, ಕೆಟ್ಟ ತಾಯಿ - ತಂದೆ, ಕೆಟ್ಟ ಅಧ್ಯಾಪಕ, ಕೆಟ್ಟ ಶಿಷ್ಯ...ಎಲ್ಲವೂ ಈಗ ಸಾರಾಸಗಟಾಗಿ ಸಾಧ್ಯವಾಗಿದೆ. ಹಲವು ಗಂಡ - ಹೆಂಡ, ಹಲವು ಅಪ್ಪ - ಅಮ್ಮ, ಹಲವು ಅಜ್ಜ - ಅಜ್ಜಿಯರುಗಳ "ಸಂಬಂಧ ವೈಭವ"ದ ಕಾಲವಿದು ! (ಕುಟುಂಬ ಸಂಸ್ಕೃತಿಯ ಪಿಜ್ಜಾ ?) ಒಂದೇ ಬದುಕಿನಲ್ಲಿ ನೂರಾರು ವೇಷ! ಗೊಂದಲದ ಸರಮಾಲೆ. ಮಾನವ ಹಕ್ಕು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಅಶಿಸ್ತನ್ನು ಬೆಂಬಲಿಸುವ - ಪ್ರೋತ್ಸಾಹಿಸುವ ದ್ರೋಹ ಚಿಂತಕರು ಭಾರತದಲ್ಲಿ ವಿಜೃಂಭಿಸುತ್ತಿದ್ದಾರೆ ! ನಂಬಿಕೆ, ಕುಟುಂಬ, ವೃತ್ತಿ, ಜಾತಿ, ಗಂಡು - ಹೆಣ್ಣು... ಎಲ್ಲೆಂದರಲ್ಲಿ ಒಡಕಿನ ಬೀಜಪ್ರಸಾರ ನಡೆಯುತ್ತಿದೆ. ಹೆತ್ತವರ ವಿರುದ್ಧ ಮಕ್ಕಳನ್ನು, ಶಿಕ್ಷಣ ಸಂಸ್ಥೆ - ಅಧ್ಯಾಪಕರ ವಿರುದ್ಧ ವಿದ್ಯಾರ್ಥಿಗಳನ್ನು, ವೈದ್ಯರ ವಿರುದ್ಧ ರೋಗಿಗಳನ್ನು, ಗಂಡನ ವಿರುದ್ಧ ಹೆಂಡತಿ - ಹೆಂಡತಿಯ ವಿರುದ್ಧ ಗಂಡನನ್ನು ಎತ್ತಿಕಟ್ಟುವ ಹೊಸ ರಾಜಕೀಯವೂ ಢಾಳಾಗಿ ಕಾಣಿಸುತ್ತಿದೆ. ನಮ್ಮ ಶಾಲೆಗಳಲ್ಲಿ - "ಗಂಡನ ವಿರೋಧ ಪದವು - ಹೆಂಡತಿ" ಎಂದು ಪಾಠ ಮಾಡುವ ಶಿಕ್ಷಕರೂ ಇದ್ದಾರೆ. ಹಗಲು ವೇಷ ! ಹಕ್ಕು ಸ್ಥಾಪನೆಯ ಬೆಪ್ಪು ಕುಣಿತ ! ಸ್ವಾರ್ಥದ ರಿಂಗಣಗುಣಿತ! ಒಟ್ಟಾರೆ ವ್ಯವಸ್ಥೆಯ ದೃಶ್ಯ ವಿಡಂಬನೆ !

ಸುಮಾರು 35-40 ವರ್ಷಗಳ ಹಿಂದಿನ ವರೆಗೂ - ನಮ್ಮ ಊರಿನ ಶಾಲೆಗಳಲ್ಲಿ - ರಾಜಕೀಯ ಸುಳಿಯಿತೆಂದರೆ ಅದು ಶಿಕ್ಷಾರ್ಹ ಅಪರಾಧವಾಗಿತ್ತು; ಅಧ್ಯಾಪಕರಿಂದ ಬೈಗುಳ ತಿನ್ನಬೇಕಾಗುತ್ತಿತ್ತು. "ಮಕ್ಕಳಿಗೆ ಯಾಕೆ ಅಧಿಕಪ್ರಸಂಗ ? ನಿಮ್ಮ ಪಾಠ ಓದ್ಕೊಳ್ಳಿ...ನಡೀರಿ.." ಎನ್ನುವ ವಾತಾವರಣವಿತ್ತು. "ವಿದ್ಯಾರ್ಥಿ ದೆಸೆಯಲ್ಲಿ ವಿದ್ಯೆ ಸಂಪಾದಿಸುವುದಲ್ಲದೆ ಇನ್ನೊಂದರಲ್ಲಿ ಮನಸ್ಸನ್ನು ತೊಡಗಿಸಬಾರದು, ಹಸಿ ಮನಸ್ಸುಗಳು ಚಂಚಲವಾಗಿ ಕದಡಬಾರದು - ಗುಂಪುಗಾರಿಕೆಯು ಸಲ್ಲದು" ಎಂದೂ ಹಿರಿಯರು ಹೇಳುತ್ತಿದ್ದರು. ಕಪಟತನ, ಕುತಂತ್ರಗಳನ್ನು ಅಪೇಕ್ಷಿಸುವ ರಾಜಕೀಯ ಚಟುವಟಿಕೆಗಳಿಂದ ಯಾವುದೇ ಸ್ವಚ್ಛ ಮನಸ್ಸು ಬಗ್ಗಡವಾಗುತ್ತದೆ ಎಂಬ ಮುಂದಾಲೋಚನೆಯದು. ಬಗ್ಗಡಗೊಳಿಸಿಕೊಂಡ ಮನಸ್ಸು ವಿದ್ಯೆಯನ್ನು ಹೀರಿಕೊಳ್ಳುವುದು ಕಷ್ಟ... ಎಂಬ ಚಿಂತನೆಯು ಅಂದಿನ ಶಾಲೆಗಳಲ್ಲಿತ್ತು. ಆದರೆ ಅಂದೂ... ದಾರಿಬಿಟ್ಟ ಕೆಲವು Sample ಗಳು ಇದ್ದುವಾದರೂ ಅವುಗಳ ಆಟಗಳು ಸಮಾಜದ ಮೇಲೆ ಪ್ರಭಾವ ಬೀರುವಷ್ಟು ಇರಲಿಲ್ಲ; ಸಂಖ್ಯೆ ಕಡಿಮೆಯಿತ್ತು. ಇದರಿಂದಾಗಿ, ಅಂದು - ದಾರಿ ಬಿಟ್ಟವರು ನರಳುತ್ತಿದ್ದರು; ಶ್ರದ್ಧಾವಂತರು ಸುಖವಾಗಿದ್ದರು. ಆದರೆ ಇಂದು ? ಸಜ್ಜನರು ನರಳುವಂತೆ, ದುಷ್ಟರು ಸುಖವಾಗಿರುವಂತಹ ಸನ್ನಿವೇಶವಿಲ್ಲವೆ ? ಇಂದು ಚಾಲ್ತಿಯಲ್ಲಿರುವ - ರಾಜಕೀಯ ಪ್ರದೂಷಿತ, "ಶಿಕ್ಷಾರಹಿತ ಶಿಕ್ಷಣ ಶೈಲಿ"ಯು ಸಾಮಾಜಿಕ - ಶೈಕ್ಷಣಿಕ ಪರಿಸರದ "ರಕ್ಕಸ ಹಡಬಿಟ್ಟಿತನ"ಕ್ಕೆ ಒಂದು ಪ್ರಬಲ ಕಾರಣವೂ ಆಗುತ್ತಿದೆ. ಅಪ್ಪ ಅಮ್ಮ, ಶಿಕ್ಷಕರಿಗೆ ಹೊಡೆಯಿರಿ... ಎಂಬ ಹೊಸ ವರಸೆಯು - ಸರಕಾರೀ ಕೃಪಾಪೋಷಿತ ವಲಯದಲ್ಲಿ ಈಗ ಪ್ರಚಲಿತದಲ್ಲಿದೆ. "ಮಾಡಿ ಕಲಿ"ಯುವ ಜಾದೂ ಕಾರ್ಯದ ಶೈಕ್ಷಣಿಕ ಸುಪರ್ದಿಯಲ್ಲಿಯೇ ಅದಕ್ಕೆ ತದ್ವಿರುದ್ಧವಾದ "ಉರು ಹೊಡೆಯುವ" ಜಳ್ಳು ಶಿಕ್ಷಣದ ಮಾಯಕ ಮತ್ತು ದಾರಿ ತಪ್ಪಿದ - ತಪ್ಪಿಸಿದ ಯುವ ಶಕ್ತಿಯ ಪೊಳ್ಳು ಪ್ರತಿಷ್ಠೆಯಿಂದಾಗಿ ಇಂದು ಆಗುತ್ತಿರುವ ಅನಾಹುತಗಳು - ಇನ್ನು ಮುಂದೆ ನಮ್ಮೆದುರು ಬರಲಿರುವ - ಬ್ರಹ್ಮರಾಕ್ಷಸ ಗಂಡಾಂತರ ! ಎಲ್ಲವನ್ನೂ ವೈಜ್ಞಾನಿಕವಾಗಿ ಯೋಚಿಸುವಂತೆ ತೋರಿಸಿಕೊಳ್ಳುವ ಕೆಲವು ಬುದ್ಧಿಭಕ್ಷಕರು - ಸರಳ ವಿಷಯಗಳನ್ನೂ ಕಠಿಣಗೊಳಿಸಿ, ತಮ್ಮ ತಮ್ಮ ಬುದ್ಧಿಮತ್ತೆಯನ್ನು ಪ್ರದರ್ಶಿಸುವುದರಲ್ಲಿಯೇ ತನ್ಮಯರಾದರೆ ಸಾಕೆ ? ... ಪೂರ್ತಿ ಹಾಳಾಗುವ ವರೆಗೆ ಕಾಯುವುದಾದರೂ ಏಕೆ ?

Khosla Ka Ghosla ಎಂಬ ಹಿಂದಿ ಚಿತ್ರವೊಂದಿದೆ. ಈ ಮಹಾನ್ ಭಾರತದ ಕಾನೂನುಗಳ ಕಣ್ಣೆದುರಿನಲ್ಲೇ ನಡೆಯುವ Break Dance ಗಳ sample ಗಳನ್ನು ನೋಡಬೇಕಾದರೆ ಈ ಚಿತ್ರವನ್ನು ನೋಡಿದರೆ ಸಾಕು. ಇದು ಯಾವುದೇ ಅತಿಶಯೋಕ್ತಿಯ ಸಿನೆಮಾ ಅಲ್ಲ; ಹಸಿ ಹಸಿಯಾದ ವಾಸ್ತವ ! ಈ ದೇಶದ 75% ಭಾಗವು ತಲೆಹಿಡುಕರಿಂದಲೇ ತುಂಬಿಹೋಗಿದೆ !. ಇಲ್ಲಿ ದುರ್ಜನರಾಗದೇ ಇದ್ದರೆ ಬದುಕುವುದೇ ದುಸ್ತರವಾದಂತಹ ಸನ್ನಿವೇಶವಿದೆ. ಮುಳ್ಳನ್ನೇ ಹಾಸಿದ ಯಾವುದೇ ಹಾದಿಯಲ್ಲಿ ಮುಳ್ಳು ಚುಚ್ಚಿಸಿಕೊಳ್ಳುವ ಕರ್ಮವು ಇದ್ದೇ ಇರುತ್ತದೆ ಅಲ್ಲವೆ ? ಹಾಗೆ ಚುಚ್ಚಿದ ಮುಳ್ಳನ್ನು ಅದಕ್ಕಿಂತ ಬಲವಾದ ಮುಳ್ಳಿನಿಂದಲೇ ಕಿತ್ತು ಎಸೆಯುವುದು ಆಗ ಅನಿವಾರ್ಯವೂ ಆಗುತ್ತದೆ.

ಪರಿಣಾಮ : ಮುಳ್ಳಿನದೇ ಕಾರುಬಾರು !!

ಯಾವುದೇ ಸ್ವಸ್ಥ ಬದುಕಿಗೆ Positive ಮಾತುಗಳು - ಹೊಸ್ತಿಲ ಮೇಲೆ ದೀಪವಿಟ್ಟಂತಹ ಜಾಣ ಮಾತುಗಳು ಮಾತ್ರವೇ ಸಾಕಾಗುವುದಿಲ್ಲ. ವಸ್ತುಸ್ಥಿತಿಯನ್ನು ಮುಕ್ತವಾಗಿ ಅವಲೋಕಿಸಿ ತಕ್ಕಂತೆ ವರ್ತಿಸಲೂ ಬೇಕು. ಅದಕ್ಕೆ ತಕ್ಕಂತಹ ಪೂರಕ ವಾತಾವರಣವೂ ಬೇಕು.

ನಿಜವಾದ ಧರ್ಮದ ಹತ್ತು ಲಕ್ಷಣಗಳಲ್ಲಿ ಒಂದನ್ನಾದರೂ ನಾವೀಗ ಆಚರಿಸಲು ಪ್ರಯತ್ನಿಸುತ್ತಿದ್ದೇವೆಯೆ ? ಎಲ್ಲವೂ ಗಿಲೀಟು. ಬರಿಯ ಮಾತು; ವಿಚಾರ ಸಂಕಿರಣ; ಬಗೆಬಗೆಯ ಉಪಾಧಿಗಳು; ಅಹೋರಾತ್ರಿ ನಾಟಕ ! ಕೆಡುಗಾಲ ! ಬಹುಶಃ - ಕೊನೆಗೆ - ಒಮ್ಮೆಗೇ ಗಲ್ಲಿಗೇರಿಸುವುದಕ್ಕೆ ಬೇಕಾದಂತಹ ಮನುಷ್ಯರನ್ನು ನಾವೀಗ ತಯಾರಿಸುತ್ತಿದ್ದಿರಬೇಕು !

ಹೀಗೇಕಾಯಿತು ?...  ಯೋಚಿಸಬೇಕಾದವರು ಯೋಚಿಸುವುದಿಲ್ಲ. ಒಂದು ವೋಟಿನ ಬೆಲೆಯಷ್ಟೇ ಉಳ್ಳ ನಮ್ಮಂಥವರು ಸುಮ್ಮನೆ ಯೋಚಿಸುತ್ತಾರೆ.. ತಮ್ಮಷ್ಟಕ್ಕೇ ಅಂದುಕೊಳ್ಳುತ್ತಾರೆ - ಕಲಿಗಾಲವಯ್ಯಾ...ಕಲಿಗಾಲ ! ಕಲಿಗಾಲವೆಂದರೆ ಬೇರೇನಲ್ಲ. ಕೇಡುಗಾಲ - ಅಷ್ಟೆ.

Tuesday, August 18, 2015

ನಾನೊಲಿದಂತೆ (4) - ರಥಿಕನೋಡಿಸಿದಂತೆ ಓಡುವ ಬ್ರಹ್ಮರಥ !

                                     ರಥಿಕನೋಡಿಸಿದಂತೆ ಓಡುವ ಬ್ರಹ್ಮರಥ !

  ಈ ಜಗತ್ತಿನಲ್ಲಿ ಎಲ್ಲವೂ ಇದೆ. ಒಂದರ್ಥದಲ್ಲಿ ಇದಕ್ಕಿಂತ ದೊಡ್ಡ ಸ್ವರ್ಗವು ಮೇಲೆಲ್ಲೋ ಇದೆ ಎಂದುಕೊಳ್ಳುವುದೇ ಮೂರ್ಖತನ. ಒಳಿತು ಕೆಡುಕಿನ ಸಮಸ್ತವೂ ಈ ಭೂಮಿಯ ಮೇಲಿದೆ.

  ಆಕಸ್ಮಿಕವಾದ ಹುಟ್ಟಿನಿಂದ ಹಿಡಿದು ದೇಹಾಂತದವರೆಗೂ ನಮ್ಮ ಎದುರಿಗೆ ಬರುವ ಒಳ್ಳೆಯ ಮತ್ತು ಕೆಟ್ಟ ಅವಕಾಶಗಳು ಒಂದೆರಡಲ್ಲ. ಹಾಗೆ ಎದುರಾದ ಅವಕಾಶಗಳನ್ನು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಕೆಲವರು ಸೂಕ್ತವಾಗಿ ಆಯ್ದುಕೊಳ್ಳುತ್ತಾರೆ; ಕೆಲವರು ತಮ್ಮ ಆಯ್ಕೆಯಲ್ಲಿ ಸೋಲುತ್ತಾರೆ. ಅದನ್ನು "ಅದೃಷ್ಟ" ಎಂದು ವ್ಯಾಖ್ಯಾನಿಸುವುದೂ ಇದೆ. ಅವಕಾಶಗಳನ್ನು ಪಡೆಯುವ ವರೆಗೆ ಅದೃಷ್ಟವನ್ನು ಗುರುತಿಸುವವರು ತಮ್ಮ ಕೆಲಸದ ಶೈಲಿಯಿಂದಲೇ ಸೋತಾಗ ಅದೃಷ್ಟವನ್ನು ಜರಿಯುತ್ತ - ಗೆದ್ದಾಗ ತಮ್ಮ ಕರ್ತೃತ್ವ ಶಕ್ತಿಯನ್ನು ಮೆಚ್ಚಿ ಆಡಿಕೊಳ್ಳುವುದು ಸಾಮಾನ್ಯ. ಉತ್ತಮ ಅವಕಾಶಗಳನ್ನು ಹೋರಾಡಿ ಪಡೆದು ಅವನ್ನು ಸಮರ್ಥವಾಗಿ ನಿಭಾಯಿಸುವುದೇ ಶುಭ್ರ ಯಶಸ್ಸಿನ ಮುನ್ನುಡಿ.

  ಒಂದು ಬದುಕಿನ ಹಾದಿಯಲ್ಲಿ ಅಸಂಖ್ಯಾತ ಜೀವಿಗಳನ್ನು ನಾವು ಹಾದುಹೋಗುತ್ತೇವೆ. ಎಷ್ಟೋ ಬಾರಿ ಈ ಹಂತವು ನಮ್ಮ ಏಕಾಗ್ರ ನಡಿಗೆಗೆ ಭಂಗ ತರುವ ಕ್ಷಣಗಳು; ಇವು ನಮ್ಮ ಸ್ವಸ್ವರೂಪ ಪರಿಪೂರ್ಣತೆಯ ಅಭಿವ್ಯಕ್ತಿಗೆ ಇರುವ ತಡೆಗಳು; ಎಲ್ಲ ಬಗೆಯ ಮನುಷ್ಯರ ಒಡನಾಟವು ನಮ್ಮನ್ನು ಕೆಲವೊಮ್ಮೆ ದ್ವಂದ್ವದಲ್ಲಿ ನೂಕಿ, ಅರೆ ಪ್ರಜ್ಞಾವಸ್ಥೆಯಲ್ಲಿ ಇರಗೊಡಿಸಿ, ಚಾಂಚಲ್ಯಕ್ಕೆ ಎಡೆಮಾಡುವ ಸಂಧಿ ಕ್ಷಣಗಳೂ ಆಗಬಲ್ಲವು. ದೃಢವಾದ ಗುರಿಯಿರುವ ಯಾವುದೇ ಸುಪುಷ್ಟ ಕೆಲಸಗಳು ಪೂರ್ಣ ಪ್ರಜ್ಞಾವಸ್ಥೆಯಲ್ಲಿ ಮಾತ್ರ ನಡೆಯಬಲ್ಲದು; ಆಗಲೇ ನಮ್ಮ ಬಾಹ್ಯೇಂದ್ರಿಯಗಳು ಉಪಯುಕ್ತ ಉಪಕರಣಗಳಾಗಿ ಕೆಲಸಕ್ಕೆ ಒದಗುತ್ತವೆ. ಆದರೆ ಅವನ್ನು ನಿರ್ದೇಶಿಸುವ ಬುದ್ಧಿಸ್ಥಾನವೇ ಚಾಂಚಲ್ಯದಿಂದ ಹೊಯ್ದಾಡುವಂತಿದ್ದಾಗ ಇಂದ್ರಿಯಗಳೂ ಅಂತೆಯೇ ಅಡ್ಡಾದಿಡ್ಡಿ ಆಡುತ್ತವೆ. ಈ ಹಂತದಲ್ಲಿ ಬುದ್ಧಿಯ ಕೌಶಲ್ಯವು ಅನಿವಾರ್ಯವಾಗುತ್ತದೆ. ರಥಿಕನೋಡಿಸಿದಂತೆ ರಥವೂ ಓಡುತ್ತದೆ.

  ಇಂದು ಯಾವುದೇ ಸದುದ್ದೇಶವಿಲ್ಲದೆ ಗುಪ್ತ ಕಾರ್ಯಸೂಚಿಗನುಗುಣವಾಗಿ ಅಥವ "ಸುಮ್ಮನೆ" ಯಾರ್ಯಾರನ್ನೋ ಹೊಗಳುವುದು - ತೆಗಳುವುದನ್ನು ಆಗಾಗ ಗಮನಿಸಬಹುದು. "ಪಾಪ; ಅವರು ಬಹಳ ಒಳ್ಳೆಯವರು; ಏನೋ ಸ್ವಲ್ಪ ಜರ್ದಾ ಹಾಕುತ್ತಿದ್ದರು; ಏನೋ ಸ್ವಲ್ಪ ಮಾದಕ ವ್ಯಸನವಿತ್ತು; ಎಲ್ಲೋ ಒಮ್ಮೊಮ್ಮೆ ಪರಸಂಗವೂ ಇದ್ದಿರಬಹುದು; ಕಚೇರಿಯ ಕೆಲಸಕ್ಕೆ ದಿನವೂ ಅನಿಯಮಿತವಾಗಿ ಹಾಜರಾಗುತ್ತಿದ್ದಿರಬಹುದು; ಒಮ್ಮೊಮ್ಮೆ ಮತ್ತ - ಉನ್ಮತ್ತ ಸ್ಥಿತಿಯಲ್ಲಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದಿರಬಹುದು; ಕರ್ತವ್ಯದ ಹೊತ್ತಿನಲ್ಲಿ ನಿದ್ದೆ ಮಾಡಿ ಕೆಲವು ಬಾರಿ ಅಚಾತುರ್ಯಗಳೂ ನಡೆದಿರಬಹುದು; ತಮ್ಮ ಚಟಗಳ ಅವಶ್ಯಕತೆಗಾಗಿ ಕಚೇರಿಯ ಕೆಲವು ವಸ್ತುಗಳನ್ನು ಒಮ್ಮೊಮ್ಮೆ ಹೊತ್ತು ಒಯ್ದಿರಬಹುದು; ಮತ್ತ ಸ್ಥಿತಿಯಲ್ಲಿದ್ದಾಗ ಕುಳಿತಲ್ಲೇ ಮೂತ್ರ ವಿಸರ್ಜಿಸಿರಬಹುದು; ವಾಂತಿ ಮಾಡಿಕೊಂಡಿರಬಹುದು; ಪಾಪ...ಇನ್ನೂ ಎಷ್ಟೋ ದೋಷಗಳಿರಬಹುದು. ಆದರೆ ಅವಕ್ಕೆಲ್ಲ ಅವರು ಕಾರಣವೇ? ಅವರಿಗೆ ಸಿಕ್ಕಿದಂತಹ ಹೆಂಡತಿ ಸಿಕ್ಕಿದ್ದರೆ ನೀವು ಏನು ಮಾಡುತ್ತಿದ್ದಿರಿ? ಆ ಹೆಂಡತಿಯು ಅವರಿಗೆ ಬರೆ ಬೀಳುವಂತೆ ದಿನವೂ ಹೊಡೆಯುತ್ತಿದ್ದಳಂತೆ...ಪಾಪ...ಅವಳಿಗೆ ಹುಚ್ಚು.. ಆ ಇನ್ನೊಬ್ಬನಿಗೆ ದೊರೆತಂತಹ ನೆರೆಹೊರೆ ಇದ್ದಿದ್ದರೆ, ಅಥವ ಇನ್ನ್ಯಾವುದೋ ಭೌತ ಪರಿಸರವಿದ್ದಿದ್ದರೆ ನೀವಾದರೂ ಅಷ್ಟೇ; ಯಾರಾದರೂ ಅಷ್ಟೇ..." ಎನ್ನುತ್ತ ಒಬ್ಬ ವ್ಯಕ್ತಿಯಲ್ಲಿರುವ ಅಸಂಖ್ಯ ಕಲ್ಯಾಣಾದ್ಭುತ (?) ಗುಣಗಳಿಗೆಲ್ಲ ಇನ್ನ್ಯಾರೋ ಕಾರಣವೆಂದು ಡಂಗೂರ ಹೊಡೆಯಲು ಕೆಲವರು ಸತತ ಪ್ರಯತ್ನ ನಡೆಸುವುದು ಇಂದಿನ ಸಮಾಜದಲ್ಲಿ ಚಿರಪರಿಚಿತ. ಇಂತಹ ವಾದಮಂಡನೆಯು ಸಮಾನ ಅಭಿರುಚಿಯ ದ್ಯೋತಕವೂ ಹೌದು; ದೌರ್ಬಲ್ಯದ ಲಕ್ಷಣವೂ ಹೌದು.

  ಯಾಕೆ...?  ಕಟ್ಟಿಕೊಂಡ ಹೆಂಡತಿ ಅಥವ ಗಂಡನು ಹೊಂದಿಕೆಯಾಗದಿದ್ದರೆ ಯಾರಾದರೂ ಹೊಡೆತ ತಿನ್ನುತ್ತ ದಿನವೂ ಆತ್ಮಹತ್ಯೆ ಮಾಡಿಕೊಳ್ಳುವ ಅಗತ್ಯವುಂಟೆ? ಯಾವುದೇ ಬದುಕಿಗೆ ಪೂರ್ಣತೆಯ ಭಾವವನ್ನು ತರಲಾಗದ ಹೆಂಡತಿ ಅಥವ ಗಂಡನೆಂಬ ತುಂಬುವಿಕೆಯು ಅಷ್ಟೊಂದು ಅನಿವಾರ್ಯವೆ? ಯಾವುದೇ ಸಂಬಂಧವು ನಿತ್ಯ ಶೋಕದ ಸಾಧನವೆಂದು ಖಾತ್ರಿಯಾದರೆ ಶಿಷ್ಟ ಮಾರ್ಗದಲ್ಲಿಯೇ ಅಂತಹ ಸಂಬಂಧದಿಂದ ಕಳಚಿಕೊಳ್ಳುವುದು ವಿವೇಕ. ಯಾಕೆಂದರೆ ಬದುಕು ಎಲ್ಲಕ್ಕಿಂತ ದೊಡ್ಡದು. ಬದುಕನ್ನು ಹಾಳುಗೆಡಹುವ ಹೆಂಡತಿ, ಗಂಡ, ಮಕ್ಕಳಿಗಿಂತ ಬದುಕು ದೊಡ್ಡದು. ಸುಂದರ ಸಂಸಾರವು ಬದುಕನ್ನು ಅತ್ಯಂತ ಆಕರ್ಷಕವಾಗಿಸಬಹುದು. ಅದರಲ್ಲಿ ಸಂಶಯವಿಲ್ಲ. ಆದರೆ ಸಂಸಾರವೇ ಬದುಕಲ್ಲ.... ಆದ್ದರಿಂದ ನಮ್ಮ ಸ್ವಸ್ಥ ಬದುಕನ್ನು ಅನರ್ಥಕಾರೀ ಬಾಹ್ಯ ಸಂಬಂಧಗಳಿಗಾಗಿ ಬಲಿ ನೀಡುವುದು ಮೂರ್ಖತನ. ಹೊಂದಿಕೆಯಿಲ್ಲದ ದಾಂಪತ್ಯವೆಂದರೆ ತುತ್ತಿಟ್ಟು ಕಲ್ಲು ಕಡಿದಂತೆ - ಬಲು ಕಷ್ಟ. ಸಮಾನಾಂತರ ರೇಖೆಯು ಎಷ್ಟು ಕಾದರೂ ಎಲ್ಲಿಯೂ ಎಂದಿಗೂ ಒಂದಾಗದು ಎಂಬ ವಿವೇಚನೆಯು ಆಗ ನಮ್ಮನ್ನು ಕಾಪಾಡಬೇಕು. ಹೆಂಡತಿ ಅಥವ ಗಂಡನಿಂದ "ಪೀಡೆ" - ಎಂದು ಹೇಳಿಕೊಳ್ಳುತ್ತ ಅಂತಹ ಪೀಡಾ ಪರಿಹಾರಾರ್ಥವಾಗಿ ಹೊಸ ಸುಖಾನ್ವೇಷಣೆಗಿಳಿದು ತಮ್ಮ ಅಮೂಲ್ಯ ಬದುಕನ್ನು ದಿನವೂ ಗಾಯಗೊಳಿಸಿಕೊಳ್ಳುವ ದುರ್ಬಲರು ಯಾವುದೇ ಸಹಾನುಭೂತಿಗೆ ಅರ್ಹರಲ್ಲ. ಅಂತಹ ಪೀಡಿತ ಪೆದ್ದುಗಳಿಗೆ ಕರುಣಾ ವೈಚಿತ್ರ್ಯದ ಹೊಣೆಗೇಡಿ ಕಾಳಜಿಯನ್ನು ತೋರುವುದೆಂದರೆ ಎಡವಿದ ಜಾಗದಲ್ಲಿಯೇ ಪದೇಪದೇ ಬೀಳುವುದನ್ನು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಪ್ರೋತ್ಸಾಹಿಸಿದಂತೆ; ಕಾಳಜಿಯ ಅಪೂರ್ವ ಭಾವವನ್ನೂ ಪೀಡಿಸಿದಂತೆ. ಬದುಕಿಗೆ ಸಹ್ಯವಲ್ಲದ ಯಾವುದೇ ಸನ್ನಿವೇಶಗಳನ್ನು ಶಿಸ್ತಿನಿಂದಲೇ ನಿಭಾಯಿಸಲು ಸಾಧ್ಯವಿದೆ.

  ಪ್ರಸ್ತುತ ಸಾಮಾಜಿಕ ಸನ್ನಿವೇಶದಲ್ಲಿ ಹೆಂಡತಿ, ಮನೆ, ಮಕ್ಕಳು....ಎಲ್ಲವೂ ನಮ್ಮ ತಾತ್ಕಾಲಿಕ ವ್ಯವಸ್ಥೆಗಳು. ಸುಖೀ ಸಂಸಾರವು ನಿಜವಾಗಿಯೂ ದೊಡ್ಡ ಭಾಗ್ಯ... ಎಂಬುದರಲ್ಲಿ ಸಂಶಯವಿಲ್ಲ. ಆದರೆ ಅದನ್ನು ಒತ್ತಾಯದಿಂದ ಬೆದರಿಸಿ ಪಡೆಯಲಾಗುವುದಿಲ್ಲ. ಚೆಂದದ ಸಂಸಾರ ಯಾತ್ರೆಯು ಇಂದಿನ ಕುಟುಂಬಗಳಲ್ಲಿ ನಡೆಯುತ್ತಿದ್ದರೆ, ಅರಿತು ನಡೆಯುವ - ಕಷ್ಟ ಸುಖಗಳಲ್ಲಿ ಸಮಭಾಗಿಯಾಗುವ ದೇಹ - ಭಾವ ಸಂಗಾತಿಯು ದೊರೆತರೆ, ಅದನ್ನು ನಿಸ್ಸಂದೇಹವಾಗಿ ಅದೃಷ್ಟ ಎನ್ನಬಹುದು. ಅಕಸ್ಮಾತ್ ಹಾಗಿಲ್ಲದೆ ವ್ಯತಿರಿಕ್ತವಾದರೆ ತಮ್ಮ ಬದುಕೇ ಮುಗಿದುಹೋದಂತೆ ಎಂದು ಭಾವಿಸುತ್ತ - ಪ್ರತಿಕ್ರಿಯಾತ್ಮಕವಾಗಿ ಅಲ್ಲಸಲ್ಲದುದನ್ನೆಲ್ಲ ಮಾಡುತ್ತ ನಗೆಪಾಟಲಾಗಬೇಕೆ? ದುರದೃಷ್ಟವಶಾತ್... ಹೆಂಡತಿ ಅಥವ ಗಂಡನೆಂಬ "ಅಪಾಯ"ಕ್ಕೆ ಸಿಲುಕಿ ಯಾವುದೇ ಸಭ್ಯ ಬದುಕು ಪಾತಾಳಕೂಪಕ್ಕೆ ಬೀಳುತ್ತ ಹೋಗಬೇಕೆ? ಇಡೀ ಬದುಕನ್ನೇ ನಷ್ಟಗೊಳಿಸಿಕೊಳ್ಳಬೇಕೆ? ಅಥವ ಅಂತಹ ಮೃತ್ಯು ಕೂಪದಿಂದ ಹೊರಗೆ ಬಂದು ಹೊಸ ಬದುಕನ್ನು ಕಟ್ಟಿಕೊಳ್ಳಬೇಕೆ? ಇದು ಇಂದಿನ ಪರಿಸ್ಥಿತಿಯಲ್ಲಿ ಎಲ್ಲರೂ ಗಂಭೀರವಾಗಿ ಯೋಚಿಸಬೇಕಾದ ವಿಷಯ. ಇಂತಹ ಮನೋಭಾವವು ಬದುಕಿನ ಎಲ್ಲ ಬಗೆಯ ವೈಫಲ್ಯಗಳಿಂದಲೂ ಎದ್ದುಬರಲು ಸಹಕರಿಸುತ್ತದೆ.

  ನಾವು ಚಿಕ್ಕವರಾಗಿದ್ದಾಗ ಆಡುತ್ತಿದ್ದ ಆಟಗಳ ನಡುವೆ ಏನೋ ಅಚಾತುರ್ಯವು ನಮ್ಮಿಂದಲೇ ನಡೆದಿದ್ದರೂ ನಾವು ತಪ್ಪುಗಳಿಗೆಲ್ಲ ಇತರ ಗೆಳೆಯರತ್ತ ಬೊಟ್ಟು ಮಾಡುತ್ತಿದ್ದೆವು. "ನಾನಲ್ಲ; ಅವಳು... ಅವನು... " ಎನ್ನುತ್ತ ತಪ್ಪನ್ನು ಸ್ವಂತ ಹೆಗಲಿನಿಂದ ಜಾರಿಸುವ ಬಾಲಿಶ ಆಟವದು. ಮಕ್ಕಳ ಇಂತಹ ವರ್ತನೆಯಲ್ಲಿ ಧಾರ್ಷ್ಟ್ಯ ಮತ್ತು ಅವ್ಯಕ್ತ ಭಯವೂ ಅಡಗಿರುತ್ತದೆ. ತನ್ನ ಮಕ್ಕಳು ಅವರ ಗೆಳೆಯರಿಂದಲೇ ಕೆಟ್ಟ ಸಹವಾಸಕ್ಕೆ ಬಿದ್ದು ಹಾಳಾದರು ಎನ್ನುತ್ತ ಎಷ್ಟೋ ಹೆತ್ತವರು ಹಲುಬುವುದನ್ನೂ ನಾವು ನೋಡಿದ್ದೇವೆ. ಇದು - ತಾವು ಯಾವತ್ತೂ ಸರಿ ಎಂಬ ಅತಿ ಅಭಿಮಾನ ಮತ್ತು ತಮ್ಮ ಸಹವಾಸಿಗಳನ್ನು ದಬಾಯಿಸಿಯೇ ನಿವಾರಿಸಿಕೊಳ್ಳುವ ಕಿಲಾಡಿತನ. ಆದರೆ ಬದುಕಿನುದ್ದಕ್ಕೂ ಇದೇ ಬಾಲಿಶ ಆಟವಾಡಲು ತೊಡಗಿದರೆ ನಿಷ್ಪಕ್ಷಪಾತವಾಗಿ ಯೋಚಿಸುವ ಯಾರೂ ಒಪ್ಪಲು ಸಾಧ್ಯವಾಗದು. ಆದರೆ ನಮಗೆ ಸ್ವಾಪರಾಧಗಳಿಗೂ ಪರದೂಷಣೆ ನಡೆಸುವ ಅಭ್ಯಾಸವಾಗಿ ಹೋಗಿದೆ. ಯಾರೂ ಸಿಗದಿದ್ದರೆ ಮೂಕ ದೇವರನ್ನಾದರೂ ಆಡಿಕೊಳ್ಳುತ್ತ ಕುಳಿತುಕೊಳ್ಳುವ ಚಾಳಿ ನಮ್ಮದು. ನಾನು ಕಂಡ ಕೆಲವು ಬದುಕುಗಳನ್ನು ವಿಶ್ಲೇಷಿಸಿದಾಗ ಎಷ್ಟೋ ಬಾರಿ ಬೆರಗಾಗಿ ದಿಗ್ಭ್ರಮೆಯಿಂದ ನಿರುತ್ತರಳಾದದ್ದೂ ಇದೆ. ಉತ್ತರ ಸಿಗದೆ ನಾನು ತಡಕಾಡಿದ್ದೂ ಇದೆ. ಅಂತಹ ಘಳಿಗೆಗಳಲ್ಲಿ ಪ್ರಾರಬ್ಧದ ನೆನಪಾದದ್ದೂ ಇದೆ. "ಪ್ರಾರಬ್ಧ ಕರ್ಮವಿದು ಬೆನ್ನು ಬಿಡದು - ಎನ್ನುವುದನ್ನು ಪಲಾಯನ ವಾದವೆಂದು ಪೂರ್ಣವಾಗಿ ತಳ್ಳಿಹಾಕಲು ಸಾಧ್ಯವೆ?" ಎಂದೂ ಎಷ್ಟೋ ಬಾರಿ ಅನ್ನಿಸಿದ್ದಿದೆ. ಆದ್ದರಿಂದ ಯಾವುದೇ ಸಮಸ್ಯೆಗೆ ಸ್ವಸ್ಥ ಮನಸ್ಸಿನಿಂದ ಯೋಚಿಸದೆ "ಅನಿಷ್ಟಕ್ಕೆಲ್ಲ ಅಂಗಾರಕ" ಎಂಬಂತೆ ಪರಸ್ಪರ ದೂಷಿಸಿಕೊಂಡರೆ ನಮಗೆ ನಾವೇ ಮೋಸ ಮಾಡಿಕೊಂಡಂತೆ - ಅಲ್ಲವೆ?

  ಮನುಷ್ಯನ ಇಡೀ ವ್ಯಕ್ತಿತ್ವವೇ ಒಳಿತು ಮತ್ತು ಕೆಡುಕುಗಳ ಚೌಚೌ. ಕೆಟ್ಟ ಕೆಲಸಗಳನ್ನು ಮಾಡುವಾಗ ಅದು ಕೆಟ್ಟದ್ದು ಎಂಬ ಪರಿಜ್ಞಾನವು - ಪೂರ್ಣ ಹುಚ್ಚರನ್ನು ಬಿಟ್ಟು ಉಳಿದೆಲ್ಲರಿಗೂ ಇದ್ದೇ ಇರುತ್ತದೆ. ಏನೇನೋ ಆಸೆ, ಕುತೂಹಲ, ಮಹತ್ವಾಕಾಂಕ್ಷೆ, ಪರಾಕ್ರಮದ ಸುಳಿಗೆ ಸಿಲುಕಿ ಪ್ರತೀ ಬದುಕಿನಲ್ಲೂ ಕೆಟ್ಟದೆಂಬುದು ಇಣುಕದೇ ಬಿಡದು. ಇನ್ನು ಕೆಲವರಿದ್ದಾರೆ. ತಮ್ಮೊಳಗಿರುವ ಕೆಡುಕು ಉಳಿದವರಲ್ಲಿರುವ ಕೆಡುಕಿಗಿಂತ ಉತ್ತಮವಾದುದು ಎಂಬ ವರ್ತನೆಯನ್ನು ಅಂಥವರಲ್ಲಿ ನಾನು ನೋಡಿದ್ದೇನೆ. ಕೆಡುಕಿನಲ್ಲೂ ಒಳ್ಳೆಯ ಕೆಡುಕು ಮತ್ತು ಕೆಟ್ಟ ಕೆಡುಕು ಎಂಬ ಭೇದವುಂಟೆ? ಇವೆಲ್ಲವೂ Self  defence ನ Tricky Style ! ಆದರೆ ಪ್ರಪಂಚವನ್ನು ಮೋಸಗೊಳಿಸಿದಂತೆ ನಮ್ಮನ್ನು ನಾವು ಮೋಸಗೊಳಿಸಲು ಆಗುವುದಿಲ್ಲ. ಬದುಕಿನಲ್ಲಿ  ಶ್ರದ್ಧೆಯಿರುವ ಪ್ರತಿಯೊಬ್ಬ ವ್ಯಕ್ತಿಯೂ ಪ್ರಜ್ಞಾಪೂರ್ವಕವಾಗಿ ಕೆಡುಕನ್ನು ತರಾಟೆಗೆ ತೆಗೆದುಕೊಳ್ಳಲೇಬೇಕು; ಹಂತಹಂತವಾಗಿ ಕೆಟ್ಟ ಸಹವಾಸ ಮತ್ತು ಕೆಟ್ಟ ವೃತ್ತಿಯನ್ನು ನಿವಾರಿಸಿಕೊಂಡು ಒಳಿತಿಗೆ ದಾರಿ ಮಾಡಿಕೊಡಬೇಕು. ನಮ್ಮ ಬದುಕಿನ ಹಾದಿಯಲ್ಲಿ, ಮುನ್ನಡೆಯ ಹಂತದಲ್ಲಿ ಒಳಿತು ಕೆಡುಕುಗಳೆರಡೂ ನಮಗೆ ಮುಖಾಮುಖಿಯಾಗದೆ ಹೋಗುವುದಿಲ್ಲ. ದೋಷಗಳಿಂದ ಪಾಠ ಕಲಿಯುವ ಸಮಯವೂ ಬರುತ್ತದೆ. ಋಜುಮಾರ್ಗದಲ್ಲಿಯೇ ನಡೆಯುವ ಸಂಕಲ್ಪ ಮತ್ತು ನಿರಂತರ ಪ್ರಯತ್ನಕ್ಕೆ ಜೋತುಬಿದ್ದವರ ಬದುಕು ಹಳಿ ಹತ್ತುತ್ತದೆ. ಈ ಹಂತದಲ್ಲಿ ನಮ್ಮ ವಿಕಾಸಕ್ಕೆ ಅಡ್ಡಿಯಾಗುವ ಎಲ್ಲ ಕೆಡುಕುಗಳನ್ನೂ ನಿಷ್ಕರುಣೆಯಿಂದ ದೂರೀಕರಿಸಬೇಕು. ಒಮ್ಮೆ ಮಾಡಿದ ತಪ್ಪನ್ನು ಮತ್ತೊಮ್ಮೆ ಮಾಡುವುದಿಲ್ಲ ಎಂಬ ಎಚ್ಚರವು ಅತೀ ಅಗತ್ಯ. ಹೆಂಡತಿ ಅಥವ ಗಂಡನ ಕಾಟಕ್ಕೆ ಅಥವ ಕೂಟಕ್ಕೆ - ತಾವು ಅಮಲುಕೋರರಾಗಿ ಮನೆಯನ್ನು ರಣರಂಗ ಮಾಡುವುದನ್ನಾಗಲೀ ಪರಿಸರವನ್ನು ಸ್ಮಶಾನ ಸದೃಶವನ್ನಾಗಿಸುವುದನ್ನಾಗಲೀ ಒಪ್ಪಲು ಆಗುವುದಿಲ್ಲ. ಯಾವುದೇ ಆಟಕ್ಕೂ ಮಿತಿ ಬೇಕು. ಕುಟುಂಬವನ್ನು ಮುಳುಗಿಸುವ ಯಾವುದೇ ವ್ಯಸನದ ದೀರ್ಘಕಾಲದ ಸಹವಾಸವು ಯಾರಿಗೂ ಒಳ್ಳೆಯದಲ್ಲ. ಅದರಿಂದ ನಮ್ಮ ವ್ಯಕ್ತಿತ್ವವೇ ಸತ್ತು ಹೋಗುತ್ತದೆ. ಅನುಭವದ ಬೇಟೆಯ ನಮ್ಮ ತೆವಲು -  ವ್ಯಕ್ತಿತ್ವ ನಾಶಕ್ಕೆ ಕಾರಣವಾಗಬಾರದು. ನಮ್ಮ ಸಾಮರ್ಥ್ಯದ ಇತಿಮಿತಿಯಲ್ಲಿಯೇ ಯುಕ್ತಿಯಿಂದ ಬದುಕಿನ ಕಬಡ್ಡಿ ಆಡಬೇಕು. ಸ್ವಯಂ ಪ್ರೇರಿತವಾಗಿ ನಾವು ಮಾಡುವ Foul - ದುಷ್ಕರ್ಮಗಳಿಗೆ ಹೊರಗಿನ ಯಾರೂ ಯಾವತ್ತೂ ಹೊಣೆಯಾಗಲಾರರು. ನಮ್ಮ ಕರ್ಮಕ್ಕೆ ನಾವೇ ಹೊಣೆಗಾರರು ಎಂಬುದನ್ನು ಮೊದಲು ಒಪ್ಪಿಕೊಳ್ಳಬೇಕು. Foul ಆದ ಮೇಲೆ Out ಆಗಲೇಬೇಕು. ಸಲ್ಲದ ಉತ್ಸಾಹದಿಂದ ನಾವು ಬಿತ್ತಿ ಕೆತ್ತಿ ಎತ್ತಿದ್ದನ್ನು - ಇನ್ನ್ಯಾರಿಗೋ ಮೆತ್ತಲಾಗುವುದಿಲ್ಲ. "ನನ್ನದೇನಿಲ್ಲ; ಎಲ್ಲವೂ ನೀನೇ - ನಿನ್ನದೇ" ಎಂಬ ಆಗಾಗ ಇಣುಕುವ ಸ್ವಚ್ಛ ಚಿಂತನೆಯು - ನಮ್ಮಿಂದಾದ ತಪ್ಪನ್ನು ಜಾರಿಸಿಕೊಳ್ಳುವ ವ್ಯಾವಹಾರಿಕ ಜಾಣ್ಮೆಗೆ ಮಾತ್ರ ಸೀಮಿತವಾಗಬೇಕೇಕೆ? 

  ಕಷ್ಟ ಬಂದಾಗ ಏನಾದರೂ ಬಾಹ್ಯ ಅವಲಂಬನೆಯನ್ನು ಬಯಸುವುದು ಸಾಮಾನ್ಯ ವಿಚಾರ. ಅಂತಹ ವ್ಯಕ್ತಿಗಳು ಶ್ರದ್ಧೆಯಿಂದ ಆಧ್ಯಾತ್ಮಿಕ ಓದನ್ನು ಅವಲಂಬಿಸಬಹುದು; ಅರ್ಥಭರಿತ ಹಾಡುಗಳನ್ನು ಕೇಳಬಹುದು; ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಬಹುದು. ಇಚ್ಛೆಯೊಂದು ಪ್ರಬಲವಾಗಿದ್ದರೆ ಈ ಬದುಕಿನಲ್ಲಿ ನೂರಾರು ಉತ್ತಮ ಆಧಾರಗಳಿವೆ. ಮೌನದ ಅವಲಂಬನೆಯಿಂದಲೂ ಕುಣಿಯುವ ಮನಸ್ಸಿನ ಲಗಾಮು ಹಿಡಿಯಬಹುದು; ಸದ್ವಿಚಾರಗಳ ಚಿಂತನ ಮಂಥನದಿಂದ ಜಾರುತ್ತಿರುವ ಬದುಕಿಗೆ ಸ್ಥಿರತೆಯೂ ಸಿಕ್ಕೀತು. ನಾವು ಕಣ್ಣುಮುಚ್ಚಿ ನಂಬುತ್ತ - "ನಮ್ಮವರು" ಎಂದುಕೊಳ್ಳುವ ಸಮಾಜದ ವೇಷಧಾರಿಗಳಿಗಿಂತ - ಸುರಕ್ಷಿತ ಭಾವವನ್ನು ಮೂಡಿಸುವ ಅನಂತ ಶಕ್ತಿಯನ್ನು ಆಸರೆಯಾಗಿ ಅವಲಂಬಿಸಿ ನೆಮ್ಮದಿ ಉಂಡವರಿದ್ದಾರೆ. "ಜಿಸ್ ಕಾ ಕೋಯೀ ನಹೀಂ ಉಸ್ ಕಾ ತೋ ಖುದಾ ಹೇ ಯಾರೋಂ...ಹಮ್ ನಹೀಂ ಕೆಹತಾ, ಕಿತಾಬೋ ಮೇಂ ಲಿಖಾ ಹೇ ಯಾರೋಂ..." ಎಂಬ ಮಾತು ವಿಶ್ವಾಸವನ್ನು ಪ್ರತಿಪಾದಿಸುತ್ತದೆ. ವಿಶ್ವಾಸಕ್ಕಿಂತ ದೊಡ್ಡ ಆಸರೆ ಯಾವುದಿದೆ? ಆದರೆ ವಿಶ್ವಾಸ ಎಂಬ ಗ್ಯಾರಂಟಿ ಕಾರ್ಡನ್ನು ಕರ್ತವ್ಯ ನಿರ್ವಹಣೆ ಎಂಬ ಸುಂಕ ಕಟ್ಟಿ, ಕುಟುಂಬ ಛತ್ರದ ಅಧೀನದಲ್ಲಿ ಕಾಲಕಾಲಕ್ಕೆ ಪುನರ್ನವೀಕರಿಸುತ್ತ ಇರಬೇಕಾಗುತ್ತದೆ. ಕರ್ತವ್ಯ ಮರೆತಾಗ ವಿಶ್ವಾಸವೂ ಮರೆ (Lapse) ಆಗುತ್ತದೆ.

                             ******************--------------------******************
  ಬಾಲ್ಯದಲ್ಲಿ ನಮ್ಮ ಮನೆಗೆ ನನ್ನ ಅಕ್ಕನ ಬ್ಯಾಂಕಿನ ಸಹೋದ್ಯೋಗಿಯೊಬ್ಬರು ಆಗಾಗ ಬರುತ್ತಿದ್ದರು. ಅವರ ಹೆಸರು ಮುಕ್ತಾ ಬಾಯಿ. ಅವರ ಮನೆ ಮಾತು ಕೊಂಕಣಿ. ಅವರಿಗೆ ಆರೋಗ್ಯದ ಏನೋ ಸಮಸ್ಯೆಯಿದ್ದುದರಿಂದ ಮಧ್ಯಾಹ್ನದ ಊಟ ಮಾಡಲು ಅವರು ಹೋಟೆಲಿಗೆ ಹೋಗುತ್ತಿರಲಿಲ್ಲ. ದೂರದಿಂದ ಬರುತ್ತಿದ್ದ ಅವರು ಕೆಲವು ದಿನ ಬುತ್ತಿಯನ್ನು ಕಟ್ಟಿಕೊಂಡು ಬರುತ್ತಿದ್ದರು. ಆದರೆ ಮಧ್ಯಾಹ್ನದ ಹೊತ್ತಿಗೆ ತಣ್ಣಗಾಗಿರುತ್ತಿದ್ದ ಆ ಬುತ್ತಿಯುಣ್ಣಲು ಅವರಿಂದ ಸಾಧ್ಯವಾಗದೆ ಇಡೀ ದಿನ ಉಪವಾಸವಿದ್ದು ಬಿಡುತ್ತಿದ್ದರು. ಮೊದಲೇ ದುರ್ಬಲ ಶರೀರದ ಅವರು ಸಂಜೆಯ ಹೊತ್ತಿಗೆ ನಿಶ್ಶಕ್ತರಾಗಿರುತ್ತಿದ್ದರು. ನನ್ನ ಅಕ್ಕನ ಬಾಯಿಯಿಂದ ಮುಕ್ತಾಬಾಯಿಯ ನಿರಶನ ಕಥನವನ್ನು ಕೇಳಿಸಿಕೊಂಡ ನನ್ನ ಅಮ್ಮನು ಪ್ರತೀ ದಿನವೂ ಅವರನ್ನು ನಮ್ಮ ಮನೆಗೆ ಕರೆದುಕೊಂಡು ಬರಲು ಹೇಳಿದ್ದಳು. ಅನಂತರ ಅಕ್ಕನ ಜೊತೆಗೆ ಅವರೂ ನಮ್ಮ ಮನೆಗೆ ಬಂದು ಮಧ್ಯಾಹ್ನದ ಊಟ ಮಾಡಿ ಬ್ಯಾಂಕಿಗೆ ಹೋಗುತ್ತಿದ್ದರು. ನಮ್ಮ ಅಂದಿನ ಸ್ಥಿತಿ ಗತಿಯನ್ನು ಹತ್ತಿರದಿಂದ ನೋಡಿದ ಮೇಲೆ ಅವರು ಪ್ರತೀ ತಿಂಗಳೂ ಯತ್ಕಿಂಚಿತ್ ಹಣವನ್ನು ಅಮ್ಮನ ಕೈಯ್ಯಲ್ಲಿ ತುರುಕಲು ಆರಂಭಿಸಿದ್ದರು. ಅಂತಹ ಮುಕ್ತಾಬಾಯಿಯ ಬಾಯಿಂದ "ಖರ್ಮ ಖರ್ಮ..." ಎಂಬ ಮಾತನ್ನು ನಾನು ಬಹಳ ಸಾರಿ ಕೇಳಿದ್ದೇನೆ. ಊಟಮಾಡಿ ಹೋಗುವ ಅರ್ಧ ಗಂಟೆಯ ಒಳಗೆ ರಸವತ್ತಾಗಿ ಕೇಜಿಗಟ್ಟಲೆ ಮಾತಾಡುತ್ತಿದ್ದ ಮುಕ್ತಾಬಾಯಿ ಅವರ ಮಾತಿನ ನಡುವಿನಲ್ಲಿ ನುಸುಳುತ್ತಿದ್ದ "ಖರ್ಮ" ಗಳಿಗೆ ಲೆಕ್ಕ ಮಿತಿಯಿರಲಿಲ್ಲ. ಅವರು ಎಷ್ಟು ನಗಿಸುತ್ತಿದ್ದರು - ನಗುತ್ತಿದ್ದರು ಅಂದರೆ ಅವರು ಉಂಡು ಹೋಗುವಷ್ಟರಲ್ಲಿ ನಾವೆಲ್ಲ ನಕ್ಕು ನಕ್ಕು ಸುಸ್ತಾಗುತ್ತಿದ್ದೆವು. ಅಂದು ಹುಡುಗಾಟದ ಮನೋಭಾವದಲ್ಲಿದ್ದರೂ ನಗುವುದರಲ್ಲಿ ಸ್ವಲ್ಪ ಕಂಜೂಸುತನ ಮಾಡುತ್ತಿದ್ದ ನಾನು, ಮೌನವಾಗಿ ದೂರದಲ್ಲಿದ್ದು ಮುಕ್ತಾಬಾಯಿ ಅವರು ಹೊರಡಿಸುತ್ತಿದ್ದ "ಖರ್ಮ" ಗಳನ್ನು ಪ್ರತೀ ದಿನವೂ ಲೆಕ್ಕಮಾಡುತ್ತಿದ್ದೆ! ಆ ಮುಕ್ತಾ ಬಾಯಿಯವರಿಗೆ ದೈಹಿಕ ಮತ್ತು ಮಾನಸಿಕವಾಗಿಯೂ ಹಲವು ಬಗೆಯ ಕಿರಿಕಿರಿ, ಒತ್ತಡಗಳಿದ್ದವು. ಆದರೆ ಅವನ್ನೆಲ್ಲ ನುಂಗಿ ಜೀರ್ಣಿಸಿಕೊಳ್ಳುತ್ತಿದ್ದ ಅವರು ತಮ್ಮ ಮನಸ್ಸನ್ನು ಹಗುರ ಮಾಡಿಕೊಳ್ಳಲು ಒದಗುವ ಯಾವುದೇ ಸಂದರ್ಭವನ್ನೂ ವ್ಯರ್ಥಗೊಳಿಸುತ್ತಿರಲಿಲ್ಲ. ದುರ್ಬಲ ಶರೀರದ ಅವರೇ ನಡೆದುಕೊಂಡು ಬರುತ್ತಿದ್ದಾರಾ ಅಥವ ಅವರ ದೇಹವು ಗಾಳಿಯಲ್ಲಿ ಹಾರಿಕೊಂಡು ಬರುತ್ತಿದೆಯಾ ಎಂದು ಭಾವಿಸುವಷ್ಟು ಅವರು ಬಡಕಲಾಗಿದ್ದರು. ತಮ್ಮ ಬಾಲ್ಯದಿಂದ ಕೊನೆಯವರೆಗೂ ಹಲವಾರು ಕೌಟುಂಬಿಕ ಜವಾಬ್ದಾರಿಗಳಿಗೆ ಹೆಗಲುಕೊಟ್ಟು ಪಾಲಿಗೆ ಬಂದ ಕೆಲಸವನ್ನು ನಿಷ್ಠೆಯಿಂದ "ಮಾಡಿ ಮಾಡಿಯೇ" ಸವೆದು ಹೋದಂತಿದ್ದ ಮುಕ್ತಾ ಬಾಯಿ ಅವರು, ತಮ್ಮ ಕಷ್ಟಗಳಿಗಾಗಿ ತಮ್ಮ ಹೆತ್ತವರನ್ನೋ ಗಂಡನನ್ನೋ ಕುಟುಂಬವನ್ನೋ ಒಂದು ದಿನವೂ - ದಾರಿಯಲ್ಲಿ ನಿಂತು ದೂರಿದವರಲ್ಲ. ಸಿಹಿಯೆಲ್ಲ ನಿಮಗಿರಲಿ; ಕಹಿಯೆಲ್ಲ ನನಗಿರಲಿ... ಎನ್ನುತ್ತ ಇಡೀ ಜೀವನವನ್ನೇ ಸವೆಸಿದ ಮುಕ್ತಾ ಬಾಯಿ ಈಗಲೂ ನನಗೆ ನೆನಪಾಗುತ್ತಾರೆ. 

  "ನೀವ್ ಸುಮ್ನಿರಿ ಅಮ್ಮ; ಕಷ್ಟಗಳು ಮನುಷ್ಯರಿಗಲ್ಲದೆ ಮರಕ್ಕೆ ಬರತ್ತಾ? ಬರತ್ತೆ...ಹೋಗತ್ತೆ...ಅದ್ಕೆಲ್ಲ ತಲೆ ಬಿಸಿ ಮಾಡಿದ್ರೆ ಆಗತ್ತಾ?" ಎನ್ನುತ್ತ ತಮ್ಮ ದುರ್ಬಲ ದೇಹದಲ್ಲಿದ್ದ ಪ್ರಚಂಡ ಅಂತಃಶಕ್ತಿಯನ್ನು ಆ ಮುಕ್ತಾಬಾಯಿ ಆಗಾಗ ಪ್ರಕಟಿಸುತ್ತಿದ್ದರು. ಅವರು ಕೆಲವು ಶನಿವಾರಗಳಂದು ತುಂಬ ಹೊತ್ತು ನಮ್ಮ ಮನೆಯಲ್ಲಿ ಕೂತು ಹರಟೆ ಹೊಡೆಯುತ್ತಿದ್ದುದೂ ಇತ್ತು. ಆಗ, "ಸ್ವಲ್ಪ ಕಾಫಿ ಮಾಡ್ತೇನೆ.." ಎನ್ನುತ್ತ ಅಮ್ಮನು ಕೂತಲ್ಲಿಂದ ಎದ್ದರೆ "ನೀವ್ ಸುಮ್ಮನೆ ಕೂತ್ಕಣ್ಣಿ ಅಮ್ಮ; ಎಂತ ಖರ್ಮ...ಕಾಪಿಯಾ? ಕಟಪಾಡಿಯಾ? ಎಂತದೂ ಬೇಡ.." ಎನ್ನುತ್ತ ಹೊಸ ಹೊಸ ನುಡಿಗಟ್ಟುಗಳಿಂದ ನಮ್ಮನ್ನು ರಂಜಿಸುತ್ತಿದ್ದುದೂ ಇತ್ತು. (ಅವರು ಮೂಲತಃ ಕಟಪಾಡಿಯವರು) ತನ್ನ ಪಾಲಿನ ಕೆಲಸವನ್ನು ನಿಷ್ಠೆಯಿಂದ ಮಾಡುತ್ತೇನೆ - ಎಂಬ ಒಂದೇ ಸಾಲಿನ ಸೂತ್ರದಿಂದ ಅವರು ತಮ್ಮ ಬದುಕನ್ನು ಕಟ್ಟಿದಂತೆ ನನಗೆ ಕಂಡಿತ್ತು. ಹೀಗೆ ಎಲ್ಲರನ್ನು ನಗಿಸುತ್ತ ನಗುತ್ತ, ತಾನು ಹುಟ್ಟಿದ ಮತ್ತು ಇದ್ದ ಸ್ಥಳದಲ್ಲೆಲ್ಲ ತನ್ನಿಂದಾದಷ್ಟು ದುಡಿಯುತ್ತಿದ್ದ ಅವರ ದುರ್ಬಲ ಶರೀರವು ಹೆಚ್ಚು ಕಾಲ ಉಳಿಯಲಿಲ್ಲ. ತಮ್ಮ ಚಿಕ್ಕ ಪ್ರಾಯದಲ್ಲೇ (ಬಹುಶಃ ಸುಮಾರು 50 ವರ್ಷ) ಅವರು ನಿಧನರಾದರು. ನಿಜವಾದ ಸಹಾನುಭೂತಿಗೆ ಪಾತ್ರವಾಗಲು ಮುಕ್ತಾ ಬಾಯಿಯಂತಹ ಬದುಕುಗಳು ಅರ್ಹವೆನಿಸುತ್ತವೆ; ಸ್ಮರಣಾರ್ಹವೆನಿಸುತ್ತವೆ. ಸುಮಾರು 30 ವರ್ಷಗಳ ಹಿಂದಿನ ವರೆಗೂ ಪ್ರತೀ ಊರಿನಲ್ಲಿಯೂ ಹೀಗೆ ಕರ್ತವ್ಯವನ್ನು ಆರಾಧಿಸುತ್ತಿದ್ದ ಹಲವಾರು ಮುಕ್ತಾಬಾಯಿ ಕಾಣಸಿಗುತ್ತಿದ್ದರು. ಉಂಡುಂಡು ಸ್ವರ್ಗವನ್ನೈದುವ ಇಂದಿನ ಕನಸುಣಿಗಳಿಗೆ ಇವೆಲ್ಲ ಅರ್ಥವಾಗುವುದಿಲ್ಲ.

                                        ---------*********--------*********--------- 

  ಅಂದು ಅಂತಹ ಮುಕ್ತಾಬಾಯಿ ಇದ್ದರೆ, ಇಂದು "ಮುಕ್ತ BOY ಮತ್ತು ಮುಕ್ತ ಮುಕ್ತ GIRL"ಗಳು ಈ ಪ್ರಪಂಚದಲ್ಲಿ ಸಾಕಷ್ಟಿವೆ. ಅದಕ್ಕೇ ಮುಕ್ತಾಬಾಯಿಯವರು ಬಳಸುತ್ತಿದ್ದ "ಖರ್ಮ" ಎಂಬ ಉದ್ಗಾರವು ನನಗೆ ಹೆಚ್ಚು ನೆನಪಾಗುತ್ತದೆ. ಆಧ್ಯಾತ್ಮಿಕ ಭಾಷೆಯ ಕರ್ಮಕ್ಕೂ - ಆಡುಭಾಷೆಯಲ್ಲಿ ಅವರು ಬಳಸುತ್ತಿದ್ದ ಖರ್ಮಕ್ಕೂ ಬಹಳ ಅಂತರವಿದೆ. "ಖ" ಎಂದು ಅವರು ಒತ್ತಿ ಹೇಳುವಾಗ ವಿವಿಧ ಸಂದರ್ಭಗಳಲ್ಲಿ ಅದು ಹುಟ್ಟಿಸುತ್ತಿದ್ದ ಭಾವವೇ ವಿಭಿನ್ನವಾಗಿರುತ್ತಿತ್ತು ಎಂದು ನನಗೆ ಅನ್ನಿಸಿದೆ. ಖ ಎಂದರೆ ಆಕಾಶ. ಅನಂತ; ಅಗಮ್ಯ; ನಿಗೂಢ! ನಿತ್ಯ ಬದುಕಿನಲ್ಲಿ ನಾವು ನಡೆಸುವ ಅಪಾರ - ಅಪರಾತಪರಾ ಅಪಭ್ರಂಶಗಳನ್ನೆಲ್ಲ "ಖರ್ಮ"ವೆನ್ನುವುದೇ ಯೋಗ್ಯ ಎಂದು ನನಗೆ ಅನ್ನಿಸುತ್ತದೆ. ಸ್ವಂತದ ಎಲ್ಲ ಅವಘಡಗಳಿಗೂ ಇನ್ನೊಬ್ಬರನ್ನು ಬೊಟ್ಟಿಟ್ಟು ತೋರಿಸುವುದು ಇಂದಿನ ನಮಗೆ ಸುಲಭದ ದಾರಿಯಾಗಿ ಹೋಗಿದೆ. ಆದರೆ ಯಾವುದೇ ದೋಷವನ್ನು ನಮ್ಮ ಹೆಗಲಿನಿಂದ ಜಾರಿಸುವ ಮೊದಲು ಎಚ್ಚರದಿಂದ ಮನೋವಿಶ್ಲೇಷಣೆಗೆ ತೊಡಗಬೇಡವೆ? ಆದರೆ ನಾವು ನಮ್ಮ ವಿರುದ್ಧವಾಗಿ ಸಾಕ್ಷಿ ನುಡಿಯುವ ಎಲ್ಲವನ್ನೂ ದೂರವಿಡುವ ಜಾಣ್ಮೆ ಮೆರೆಸುತ್ತಿರುವುದರಿಂದ ನಮ್ಮ ಮನಸ್ಸು - ಬುದ್ಧಿಯು ಕೂಡ ಈಗ ನಮ್ಮ ಸ್ನೇಹಿತರಾಗಿ ಉಳಿದಿಲ್ಲ. ಆದ್ದರಿಂದ ನಮ್ಮ ನಡಿಗೆಯು ಏಕಮುಖಿಯಾಗಿ, ದಾರಿಯು ಕೊಂಡೊಯ್ದಲ್ಲಿಗೆ ದೇಹ ಹೋಗುವುದಲ್ಲದೆ ಹಿಂದಿರುಗುವ ಅವಕಾಶವೇ ನಮಗೆ ಇಲ್ಲದಂತಾಗಿದೆ. ಕರ್ಮ ಎಂಬುದು - ಖರ್ಮವಾಗುವುದು ಹೀಗೆ.

  ಬಾಲ್ಯದಲ್ಲಿಯೇ ಪೂರ್ವಾಗ್ರಹಪೀಡಿತವಾಗಿ ರೂಪುಗೊಳ್ಳುತ್ತಿರುವ ಇಂದಿನ ಸಮಾಜದ ಕೆಲವು ಮನಸ್ಸುಗಳು ಖತರ್ನಾಕ್ ಜಾಣ್ಮೆಯನ್ನು ಪ್ರದರ್ಶಿಸುತ್ತಿರುವುದೂ ನಿತ್ಯವ್ಯಾಪಾರವಾಗಿದೆ. ನಮ್ಮ ಮಕ್ಕಳನ್ನು "ಹೀಗೇ ಬದುಕಬೇಕು; ಬದುಕು ಹೀಗಿರಬೇಕು.." ಎಂದು ನಾವು ನಿರ್ದೇಶಿಸುತ್ತಿಲ್ಲ. "ಇಷ್ಟ ಬಂದಂತೆ ಬದುಕಬಹುದು" ಎಂಬ ಸ್ವಾತಂತ್ರವನ್ನು ಅವರಿಗೆ ಕೊಟ್ಟಿದ್ದೇವೆ. ಮಾತ್ರವಲ್ಲದೆ ಹೇಗಾದರೂ - ಯಾರ ಕೈಕಾಲು ಎಳೆದು ಬೀಳಿಸಿಯಾದರೂ - SHINE ಆಗುವಂತೆ ಬದುಕನ್ನು ಕಟ್ಟಿಕೋ...ಎಂದು ಅಡ್ದದಾರಿಯನ್ನೂ ತೋರಿಸುತ್ತಿದ್ದೇವೆ. ಅದಕ್ಕೇ ನಮ್ಮ ಪ್ರತಿಕ್ರಿಯೆಗಳಲ್ಲಿ ಎಲ್ಲಿಲ್ಲದ ಎಡಬಿಡಂಗಿತನವು ಇಣುಕುತ್ತದೆ. "ಅವರಲ್ಲಿ ಎಷ್ಟೋ ದೋಷಗಳಿರಬಹುದು; ಆದರೆ ಅವರು ಬಹಳ ಒಳ್ಳೆಯವರು; ಅವರ ಹೆಂಡತಿ / ಗಂಡ/ ಸನ್ನಿವೇಶದಿಂದಾಗಿ ಅವರು ಹಾಳಾಗಿಹೋದರು..." ಇತ್ಯಾದಿ ಮಾತುಗಳನ್ನು ವಿದ್ವಾಂಸರೆಂದು ಹೇಳಿಕೊಳ್ಳುವವರ ಬಾಯಿಂದ ಕೇಳುವಾಗ - ಬಹುಶಃ ಆದ್ದರಿಂದಲೇ - ನನಗೆ ಆಶ್ಚರ್ಯವಾಗುತ್ತದೆ. ಯಾವುದೇ ಕೌಟುಂಬಿಕ ವ್ಯವಹಾರದಲ್ಲಿ ಅಸಮಂಜಸ ಸನ್ನಿವೇಶವು ಏರ್ಪಟ್ಟರೆ - ಸಾಧ್ಯವಾದಷ್ಟು ಪರಿಸ್ಥಿತಿಯನ್ನು ಹದಗೊಳಿಸಲು ಅವರವರೇ ಪ್ರಯತ್ನಿಸುವುದು; ಅಂತಹ ಪ್ರಯತ್ನಗಳೆಲ್ಲವೂ ವಿಫಲವಾದಾಗ ಒಗ್ಗದ ವಾತಾವರಣದಿಂದ ಕಾನೂನು ಪ್ರಕಾರ ಹೊರಗೆ ಬರುವುದು...ಇವೆರಡೇ ಸಮಸ್ಯೆಗೆ ಪರಿಹಾರವಲ್ಲದೆ ಇನ್ನೊಂದಿಲ್ಲ. ಆತ್ಮಹತ್ಯೆಯಂತೂ ಯಾವ ಸಮಸ್ಯೆಗೂ ಪರಿಹಾರವಲ್ಲ. ನುಂಗಲಾಗದ - ಉಗುಳಲಾಗದ ಕೌಟುಂಬಿಕ ಸನ್ನಿವೇಶವನ್ನು ಸೃಷ್ಟಿಸುವಲ್ಲಿ ಎಲ್ಲರ ಪಾಲೂ ಇದ್ದೇ ಇರುತ್ತದೆ; ಆದ್ದರಿಂದ ಪರಿಣಾಮದಲ್ಲೂ ಪಾಲು ಪಡೆಯಬೇಕಾಗುತ್ತದೆ. ಸುಳ್ಳು ಪ್ರತಿಷ್ಠೆಗೆ ಬಲಿಬಿದ್ದು "ತನ್ನದು ಚೆಂದದ ಸಂಸಾರ" ಎಂದು ತೋರಿಸಿಕೊಳ್ಳುತ್ತ ಮನಸ್ಸನ್ನು ಕುರುಕ್ಷೇತ್ರ ಮಾಡಿಕೊಳ್ಳುವ ಹುಂಬರು "ಹೆಂಡತೀ ಪ್ರಾಣ ಹಿಂಡುತೀ.." ಎಂದೋ - " ಗಂಡನಲ್ಲೋ ಇದು ಗಂಡಾಂತರದ ಯಮಗಂಡ..." ಎಂದೋ - "ಇದು ಊರಲ್ಲ; ಕಾಡು.." ಎಂದೋ ತೊದಲುತ್ತ ಚರಂಡಿಯಲ್ಲಿ ಬಿದ್ದರೆ ಏನುಪಯೋಗ? ಅದು ಆತ್ಮಹತ್ಯೆಯಲ್ಲದೆ ಬೇರೇನು? ಈ ಜಗತ್ತಿನಲ್ಲಿ ಸಾಯುವುದಕ್ಕೆ ನೂರಾರು ಮಾರ್ಗಗಳಿರುವಂತೆ ಬದುಕುವುದಕ್ಕೂ ಸಾವಿರಾರು ಯೋಗ್ಯ ಮಾರ್ಗಗಳಿವೆ. ಬಗ್ಗದೆ ಕುಗ್ಗದೆ ಹಿಗ್ಗಿ ನಡೆಯುವ ಮನೋಬಲ ಬೇಕು - ಅಷ್ಟೆ.

  ಸಂಸಾರವೆಂದರೆ ರಣರಂಗವಲ್ಲ. ಪ್ರೀತಿ, ಕರುಣೆ, ವಾತ್ಸಲ್ಯಗಳಿಂದ ಕಟ್ಟಬೇಕಾದ ಸುಭದ್ರ ಕೋಟೆಯದು. ಪರಸ್ಪರ ಕಾಳಜಿಯೇ ಯಾವುದೇ ಸಂಸಾರದ ಜೀವಾಳ. ಸಹನೆ, ಕ್ಷಮಾ ಗುಣಗಳೇ ಉಸಿರು.

                                        ---------*********---------*********---------                                          

  ಸುಮಾರು 1969 - 70 ರ ಸುಮಾರಿಗೆ ನಮ್ಮ ಬಿಡಾರದ ಪಕ್ಕದಲ್ಲಿ ಮನೆ ಮಾಡಿಕೊಂಡಿದ್ದ ಒಂದು ಕುಟುಂಬದ ಕತೆ ಇದು. ಗಂಡ, ಹೆಂಡತಿ, ಮೂರು ಮಕ್ಕಳ ಆ ಸಂಸಾರಕ್ಕೆ ಬೇಕಾದುದನ್ನು ಮನೆಯ ಯಜಮಾನನಾಗಿದ್ದ ಗಂಡನು ದುಡಿದು ತರುತ್ತಿದ್ದರು. ಅವರು Medical Representative ಆಗಿದ್ದರು; ಆದ್ದರಿಂದ ತಿಂಗಳಲ್ಲಿ ಬಹಳ ದಿನಗಳ ಕಾಲ ಉದ್ಯೋಗದ ಭಾಗವಾಗಿ ಊರೂರು ತಿರುಗುತ್ತಿದ್ದರು. ಆದರೆ ಮರ್ಯಾದೆಯಿಂದ ಬದುಕುವುದಕ್ಕೆ ಆ ಮನೆಯಲ್ಲಿ ಯಾವ ತಾಪತ್ರಯವೂ ಇರಲಿಲ್ಲ. ಸ್ವಂತ ಮನೆ ಇತ್ತು. ಆದರೆ ಹೆಂಡತಿಯೆಂಬ ಸುಮತಿಗೆ ಯಾವಾಗಲೂ ಅತೃಪ್ತಿ. ತನ್ನ ಗಂಡ ಮತ್ತು ಮಕ್ಕಳ ಮೇಲೂ ಯಾಕೋ ಅಸಮಾಧಾನ. (ಇಂದಿನ ಕೆಲವರಿಗೆ ನನ್ನ ಈ ವಾಕ್ಯ ಓದಿದ ಕೂಡಲೇ ಕರುಣೆಯು ನವದ್ವಾರದಿಂದಲೂ ಚಿಲ್ಲನೆ ಸ್ರವಿಸಬಹುದು. ಸ್ವಲ್ಪ ನಿಧಾನಿಸಿ...) ಇದು ಬರಬರುತ್ತ ಜಾಸ್ತಿಯಾಗಿ - ತಿಂಗಳಲ್ಲಿ ಕೆಲವೇ ದಿನ ಮನೆಯಲ್ಲಿರುತ್ತಿದ್ದ ಗಂಡನಿಗೆ ದೈಹಿಕವಾಗಿ ಹಲ್ಲೆ ನಡೆಸುವಷ್ಟು ಬೆಳೆಯಿತು. ಅಪ್ಪನ ಮನೆಯಿಂದ ಆಕೆಯ ಸೋದರರು ಮನೆಗೆ ಬಂದರೆ - ತನಗೆ ಚಿನ್ನ ಕೊಡು; ದುಡ್ಡು ಕೊಡು; ಆಸ್ತಿ ಕೊಡು... ಇತ್ಯಾದಿ ವಿಷಯದಲ್ಲಿ ತಮ್ಮಂದಿರನ್ನು ಹರಿದು ತಿನ್ನುವಷ್ಟು ಜಗಳ ನಡೆಯುತ್ತಿತ್ತು. ತನ್ನ ಗಂಡನು ತನ್ನ ಬ್ರಹ್ಮಾಂಡದಷ್ಟು ಆಸೆಗಳನ್ನೆಲ್ಲ ಪೂರೈಸುವ ಶಕ್ತಿಯಿಲ್ಲದ ನಾಲಾಯಕ್ ಎಂಬ ಅತೃಪ್ತಿಯೂ ಇತ್ತು. ಅಂತಹ ಕೆಟ್ಟ ಆಸೆಯು ವಕ್ರ ಹಾದಿಯನ್ನು ಆಯ್ದುಕೊಂಡಿತ್ತು. ತನ್ನ ಹಠ ಸಾಧಿಸಲು - ಅವರಿವರ ಮನೆ ಬಾಗಿಲಿಗೆ ಹೋಗಿ ಕಿಟಕಿಯಿಂದ ಇಣುಕುತ್ತ ಅಸಂಬದ್ಧವಾಗಿ ಮಾತನಾಡುವುದೂ ಆರಂಭವಾಯಿತು. ಅದು ಪರೋಕ್ಷವಾಗಿ ತನ್ನ ಕುಟುಂಬದ ಮೇಲೆ ಒತ್ತಡ ಹೇರುವ ಆಕೆಯ ವೈಖರಿಯಾಗಿತ್ತು. ತಾನು ಹೇಳಿದಂತೆ ಎಲ್ಲವೂ ನಡೆಯದಿದ್ದರೆ ಕುಟುಂಬದ ಮಾನ(?)ವನ್ನು ಬೀದಿಗೆ ತರುತ್ತೇನೆ ಎಂದು ಹೆದರಿಸುವ ಮೊಂಡ ಶೈಲಿಯಾಗಿತ್ತು. ಒಂದು ದಿನ ನನ್ನ ಅಮ್ಮನು ಆಕೆಯನ್ನು ಮನೆಯ ಒಳಗೆ ಕರೆದು ಕೂಡಿಸಿಕೊಂಡು " ನೋಡಮ್ಮಾ, ನಿನಗೆ ಏನಾಗುತ್ತಿದೆ? ಯಾಕೆ ಹೀಗೆ ಮನೆಯವರ ಜೀವ ತಿಂತೀಯಾ?" ಎಂದು ಕೇಳಿದಾಗ "ಅಮ್ಮಾ, ನಾ ನಿಮ್ಮ್  ಹತ್ರ ಸುಳ್ ಹೇಳತ್ತಿಲ್ಲೆ. ನನ್ ಮಾಷ್ಟ್ರ ಹೆಂಡತಿ ಹತ್ರ ಸುಳ್ ಹೇಳೂಕಾತ್ತಾ? ಇಕಣಿ, ನಂಗ್ ಒಂದೊಂದ್ ಸರ್ತಿ ಹುಚ್ ಹಿಡಿತ್ತೇ..." ಅಂತ ಹೇಳಿದಾಗ ಅಮ್ಮನು "ಮತ್ತೇನಿಲ್ಯಾ? ನಿಂಗೆ ವಿಪರೀತ ಮತ್ಸರ ಇದೆ. ಯಾರಾದರೂ ಒಂದಷ್ಟು ಚಿನ್ನ ಹಾಕ್ಕೊಂಡು ಒಳ್ಳೆಯ ಸೀರೆ ಉಟ್ಕೊಂಡು ಹೋದ್ದನ್ನ್ ಕಂಡ್ರೂ ನಿನ್ ತಲೆ ಹಾಳಾತ್. ಏನಾದ್ರೂ ಒಳ್ಳೆ ಯೋಚನೆ ಮಾಡ್. ಅಷ್ಟ್ ಚೆಂದದ್ ಮಕ್ಳ್ , ಪ್ರೀತಿ ಮಾಡು ಗಂಡ ಇಪ್ಪತ್ತಿಗೆ ಹೀಂಗೆಲ್ಲ ತಿರ್ಗಾಡ್ತ ಅವ್ರ ಮಾನ ತೆಗಿತ್ಯಾ? ನಿನ್ ತಲೆಗ್ ಎಂತದೂ ಆಯ್ಲಿಲ್ಲೆ. ನಿಂಗ್ ನೀನೇ ಹುಚ್ ಅಂದ್ಕಂತ ತಿರ್ಗಿ ಗಂಡ ಮಕ್ಳಿಗೆ ಬರ್ದೆ ದುಃಖ ಕೊಡ್ಬೇಡ...ಮನೆಗ್ ಹೋಯ್ ಒಂದ್ ಮಿಂದ್ - ತಲೆ ಬಾಚ್ಕಂಡ್ ಮನೆ ಕೆಲ್ಸ ಮಾಡ್; ನಿಂಗ್ ಹುಚ್ಚ್ ಅಂತ ನಿಂಗೇ ಹೇಳ್ಕಂಬ್ಕೆ ನಾಚ್ಕೆಯೂ ಆತ್ತಿಲ್ಯಾ? ಊರ್ ಸುತ್ತಿದ್ ಸಾಕ್; ಮನೆಗ್ ಹೋಗ್ ..." ಎಂದು ಹೇಳಿ ಕಳಿಸಿದ್ದಳು.

  ಇಂತಹ ಅದೆಷ್ಟು ಹುಚ್ಚುಗಳಿಲ್ಲ? ಇವುಗಳೆಲ್ಲವೂ ಒಟ್ಟಾರೆಯಾದ ಅತೃಪ್ತಿ ಮತ್ತು ಮತ್ಸರದ ಇನ್ನೊಂದು ರೂಪವೇ ಆಗಿ ಆಗಾಗ ಪ್ರಕಟವಾಗುವ ಹುಚ್ಚುಗಳು. ಆದರೆ... ಮತ್ಸರವನ್ನು ಮೆಟ್ಟಿ ಗೆಲ್ಲುವುದು ಉಂಡು ತೇಗಿದಷ್ಟು ಸುಲಭವೆ? ಬುದ್ಧಿ ಹೇಳಿ ಮತ್ಸರವನ್ನು ಓಡಿಸಲು ಸಾಧ್ಯವೆ? ಬರಬರುತ್ತ ಆ ಸುಮತಿಗೆ - ತನ್ನ ಹುಚ್ಚಿನ ಪಾತ್ರವು ಅಚ್ಚುಮೆಚ್ಚೆನ್ನಿಸತೊಡಗಿತ್ತು. ಹುಚ್ಚಿನ ವೇಷ ಹಾಕಿಕೊಂಡರೆ ಮನೆಯ ಯಾವ ಕೆಲಸವನ್ನೂ ಮಾಡದೆ ಹಾಯಾಗಿರಬಹುದಿತ್ತು; ಎಲ್ಲರೂ "ಅಯ್ಯೋ ಪಾಪ" ಎನ್ನುತ್ತ ಸಂತೈಸುತ್ತಿದ್ದರು. "ಕಾಳನ ಕಾಟವಿಲ್ಲ - ಬೋಳನ ಭಯವಿಲ್ಲ" ಎಂಬಂತೆ ಅಂದಿನ ಸುಮತಿಯು ತನ್ನ ಸ್ವೇಚ್ಛೆಯ ಹುಚ್ಚು ನಡವಳಿಕೆಗಳನ್ನು ಹೆಚ್ಚಿಸಿಕೊಳ್ಳತೊಡಗಿದ್ದರು. ಹೀಗೆ ತನಗೆ ತಾನೇ ಹುಚ್ಚಿನ ಅಭಿನಯ ಮಾಡುತ್ತ ಮಾಡುತ್ತ, ಇತರರ ಗಮನವನ್ನು ತನ್ನತ್ತ ಸೆಳೆಯಲು ವಿಫಲವಾದಾಗ ಅವರ "ಹುಚ್ಚು" ರೌದ್ರವಾಗತೊಡಗಿತು. ತನ್ನ ಕುಟುಂಬದ, ಪರಿವಾರದ, ನೆರೆಹೊರೆಯ ಗಮನವನ್ನು ತನ್ನತ್ತ ಸೆಳೆಯಲು ಶುರು ಮಾಡಿದ್ದ ಹುಚ್ಚಿನ ಆಟವು ಕೊನೆಗೆ ನಿಜವಾದ ಹುಚ್ಚಿಗೆ ಪರಿವರ್ತನೆಗೊಳ್ಳತೊಡಗಿತು. ಅದೊಂದು ದಿನ ಮಧ್ಯಾಹ್ನದ ಊಟಕ್ಕೆಂದು ಮನೆಗೆ ಬಂದ ಅವರ ಮಕ್ಕಳು ಹೊರಗೆ ಬಂದು ಅಂಗಳದಲ್ಲಿ ಅಳುತ್ತ ನಿಂತಿದ್ದವು. ಅದನ್ನು ನೋಡಿದ ನನ್ನ ಅಮ್ಮ "ಏನಾಯಿತು ಮಕ್ಕಳೆ ?" ಎಂದು ವಿಚಾರಿಸಿದಾಗ "ನನ್ ಅಮ್ಮ ಅನ್ನ -  ಪದಾರ್ಥದಲ್ಲೆಲ್ಲ ಮಣ್ಣ್ ತುಂಬಿಸಿ ಇಟ್ಟಿದ್ಲ. ಈಗ ಉಂಡ್ ಶಾಲೆಗ್ ಹೋಯ್ಕಲೆ; ಹಸಿವೆ ಆತ್; ಹೇಂಗ್ ಉಂಬ್ದ?..." ಎನ್ನುತ್ತ ಆ ಮಕ್ಕಳು ಅಳುತ್ತಿದ್ದರು. ಅವತ್ತು ಆ ಮಕ್ಕಳಿಗೆ ಅನ್ನ ಹಾಕಿ ನನ್ನ ಅಮ್ಮನು ಪುಣ್ಯ ಕಟ್ಟಿಕೊಂಡಿದ್ದಳು. ಆಮೇಲೆ ಆ ಸುಮತಿಯನ್ನು ಕೂಗಿ ಕರೆದು ಒಂದಷ್ಟು ಬುದ್ಧಿ ಹೇಳುವ ವ್ಯರ್ಥ ಕೆಲಸವನ್ನೂ ಮಾಡಿದ್ದಳು. ಆಕೆಯು ಒಮ್ಮೊಮ್ಮೆ ಒಂದಷ್ಟು ಅಡಿಗೆ ಮಾಡಿ, ತಾನು ಊಟ ಮಾಡಿದ ನಂತರ - ಉಳಿದ ಆಹಾರಕ್ಕೆ ಒಂದು ಮುಷ್ಟಿ ಮಣ್ಣನ್ನು ಬೆರೆಸಿ ಇಡುತ್ತಿದ್ದರು. (ಇದೆಂಥ ಹುಚ್ಚು?) ಇದರಿಂದಾಗಿ ಅವರ ಮನೆಯ ಎಲ್ಲರೂ ಆಕೆಯು ಮಾಡಿದ ಅಡಿಗೆಯನ್ನು ಉಣ್ಣುವ ಮೊದಲು ಒಮ್ಮೆ ಪರೀಕ್ಷಿಸಿ ನೋಡುವ ಗತಿ ಬಂದಿತ್ತು. ಅನಂತರ ಆ ಮಕ್ಕಳ ಅಪ್ಪನು ತನ್ನ ಮಕ್ಕಳಿಗೆ ತೊಂದರೆಯಾಗದಂತೆ ಪ್ರತ್ಯೇಕ ಚಾಕರರ ವ್ಯವಸ್ಥೆ ಮಾಡಬೇಕಾಯಿತು.

  ಈ ಸುಮತಿಯ ಪ್ರಕರಣವನ್ನು ನಾನು ಯಾಕೆ ಹೇಳಿದೆನೆಂದರೆ - ನನ್ನ ಬಾಲ್ಯದಲ್ಲಿ ಇಂತಹ ಹಲವು ಹುಚ್ಚು ದೈವಗಳನ್ನು ನಾನು ನೋಡಿದ್ದೇನೆ. ಹೆಂಗಸರಿಗೆ ಆಗಾಗ ಹುಚ್ಚು ಹಿಡಿಯುವುದು, ಮೈಮೇಲೆ ದೈವ ಬರುವುದು... ಇಂತಹ ಹೆಚ್ಚಿನ ಛದ್ಮವೇಷಗಳು ದುರ್ಬಲ ಲಜ್ಜೆಗೆಟ್ಟ ಮಹಿಳೆಯರು ಪ್ರದರ್ಶಿಸುವ "ಹೆದರಿಸುವ ಆಟ"ದಂತೆ, ತಮ್ಮ ಇಡೀ ಕುಟುಂಬಕ್ಕೇ ಹುಚ್ಚು ಹಿಡಿಯುವಂತೆ ಮಾಡುವ ರೂಕ್ಷತೆಯಾಗಿಯೂ ನನಗೆ ಕಂಡಿದೆ. "ಶೋಷಣೆಗೆ ಒಳಗಾದವರೆಲ್ಲರಿಗೂ ಹುಚ್ಚಾಟ ನಡೆಸುವ ಪರವಾನಿಗೆ ಇದೆ" ಎಂದುಕೊಳ್ಳುವ ಸನ್ನಿಯನ್ನು ಯಾರೂ ಗಮನಿಸಬಾರದು; ಪ್ರೋತ್ಸಾಹಿಸಲೂ ಬಾರದು. ಸುತ್ತಲಿನವರನ್ನು ಹೆದರಿಸಿ ತನ್ನ ಇಷ್ಟವನ್ನು ಪೂರೈಸಿಕೊಳ್ಳುವ ಇಂತಹ ಲಜ್ಜೆಗೆಟ್ಟ ದಾರಿಯನ್ನು ಆಯ್ದುಕೊಂಡಿದ್ದ ಹಲವರು ಅಂದಿನ ಸಮಾಜದಲ್ಲಿಯೂ ಇದ್ದರು. (ಇಂತಹ ಮಾತನ್ನು ಓದಿದ ಕೂಡಲೇ ಸದಾ ಶೋಷಣೆಯ ಘೋಷಣೆ ಮೊಳಗಿಸುತ್ತ ಹೆಣ್ಣಿನ ವಕಾಲತ್ತಿಗೆ ನಿಲ್ಲುವವರ ಇಂದಿನ Vote Bank ಕರುಣೆಗೆ ಕಿಡಿ ತಾಗಿದಂತೆ ಇಂದಿನ ಕೆಲವು ಮಹಿಳಾ ಮಣಿಗಳಲ್ಲಿ ಜ್ವಾಲಾಮುಖಿ ಸಿಡಿಯುವುದಿದೆ!) ಅವರಿಗೆಲ್ಲ "ಸ್ವಲ್ಪ ಸಮಾಧಾನ..." ಎಂದು ನಾನು ಹೇಳಬಯಸುತ್ತೇನೆ. ಹುಚ್ಚಿನಲ್ಲಿಯೂ ಗಂಡು ಹುಚ್ಚು, ಹೆಣ್ಣು ಹುಚ್ಚು ಎಂಬ ಭೇದಭಾವ ತೋರುವುದು ಸರ್ವಥಾ ಸರಿಯಲ್ಲ. ಹುಚ್ಚಿಗೆ ಜಾತಿ - ಲಿಂಗ ಭೇದವಿರುವುದಿಲ್ಲ. ಅವು (ಗಂ. ಹು ಮತ್ತು ಹೆ. ಹು) ಒಂದಕ್ಕೊಂದು ಪೂರಕ ಮತ್ತು ಪ್ರೇರಕ.

  ಯಾರನ್ನಾದರೂ ಉದ್ಧರಿಸುವುದಕ್ಕೆ ನಿಜವಾಗಿಯೂ ಧನಾತ್ಮಕ ಶಕ್ತಿ - ಸಾಮರ್ಥ್ಯಗಳು ಬೇಕಾಗುತ್ತವೆ. ಆದರೆ ಹಾಳು ಮಾಡಲು ದೈಹಿಕ ಶಕ್ತಿಯೂ ಬೇಡ; ಮಾನಸಿಕ ಸಾಮರ್ಥ್ಯವೂ ಬೇಡ. ಸ್ಥಿಮಿತ ತಪ್ಪಿದ ಹುಚ್ಚು ಸಾಕಾಗುತ್ತದೆ. ಬಿಟ್ಟಿ ಕರುಣೆಯನ್ನು ತೋರಿಸಿದಷ್ಟೂ ಹೆಚ್ಚಾಗುವ ಹಲವಾರು ಹುಚ್ಚುಗಳಿವೆ. ಇಂದೂ... ಸುಳ್ಳು ದೂರುಗಳನ್ನು ದಾಖಲಿಸುವವರಲ್ಲಿ ಅಂತಹ ಹುಚ್ಚಿನ ಪರಿಷ್ಕರಿತ ರೂಪವು ಕಾಣಲು ಸಿಗುತ್ತದೆ. ಗೋಡೆಗೆ ತಲೆಯನ್ನು ಬಡಿದುಕೊಳ್ಳುತ್ತ ತಮ್ಮನ್ನೇ ಹಿಂಸಿಸಿಕೊಳ್ಳುವುದು, ಕೆರೆ ಬಾವಿಯತ್ತ ಓಡುತ್ತ ರೌದ್ರ ರೂಪ ಪ್ರದರ್ಶಿಸುವುದು, ಕೋಣೆಯ ಬಾಗಿಲು ಜಡಿದುಕೊಂಡು ಮನೆಮಂದಿಯನ್ನು ಆತಂಕಕ್ಕೆ ತಳ್ಳುವುದು, ಇಡೀ ರಾತ್ರಿ ಮನೆಗೆ ಬರದೆ ಮನೆಯಲ್ಲಿ ಕಾಯುವವರನ್ನು ತುದಿಗಾಲಲ್ಲಿ ನಿಲ್ಲಿಸುವುದು, ರಸ್ತೆಯಲ್ಲಿ ನಿಂತು ನ್ಯಾಯ ಕೇಳುವುದು... ಇವೆಲ್ಲವೂ ಸ್ಥಿಮಿತವಿಲ್ಲದ ಮನಸ್ಸಿನ ವರ್ತನೆಗಳು. ಆದರೆ ವಾಮ ಮಾರ್ಗದಿಂದ ತಮ್ಮ ಹಠ - ಆಸೆಯನ್ನು ಪೂರೈಸಿಕೊಳ್ಳಲು ತೊಡಗುತ್ತಿರುವ ಸುಮತಿಗಳಿಗೆ - ಬದುಕು ಎಂದರೇನು? ಬದುಕಿನ ಆದ್ಯತೆಗಳೇನು? ನೇರ ಮಾರ್ಗದಿಂದಲೇ ಅದನ್ನು ಪಡೆಯುವುದು ಸಾಧ್ಯವೆ? ಅಸಾಧ್ಯವೆಂದಾದರೆ ಮರ್ಯಾದೆಯ ಮಿತಿಯಲ್ಲಿ ಪ್ರತಿಭಟಿಸುವುದು ಹೇಗೆ? ಎಂಬ ಸಂಸ್ಕಾರವಿರುವುದಿಲ್ಲ. ಹುಚ್ಚು ಎಂದಾಗಿ ಬಿಟ್ಟರೆ ತಮಗೆ ಇಷ್ಟ ಬಂದಂತೆ ಇರಬಹುದು ಎಂಬ ಅಂಕೆ ತಪ್ಪಿದ ಕೆಲವರ ವರ್ತನೆಗಳು ಇಡೀ ಸಮಾಜಕ್ಕೇ ಕಳಂಕಪ್ರಾಯವಾಗಿ ನಿಲ್ಲುತ್ತವೆ. ಸುಮತಿಯು ದುರ್ಮತಿಯಾದರೆ ಸಮಸ್ಯೆಯನ್ನು ಹೆಚ್ಚಿಸಿಕೊಂಡಂತೆ. ಅಂತಹ ಬುದ್ಧಿಮಟ್ಟವನ್ನು ನೆಟ್ಟಗೆ ಮಾಡುವುದಕ್ಕೆ ಪ್ರಯತ್ನಿಸುವುದು ಅವಶ್ಯವಲ್ಲವೆ? ಆದರೆ ಎಲ್ಲ ಜೀವಿಗಳೂ ಒಂದೇ ಹದದಲ್ಲಿ, ಒಂದೇ ಕಾಲಮಿತಿಯಲ್ಲಿ ಬೇಯುವುದಿಲ್ಲ. ಕೆಲವು ಎಂದಿಗೂ ಬೇಯುವುದಿಲ್ಲ. ಹದವಾಗಿ ಬೆಂದ ಕಾಳು ನಮ್ಮ ಪಾಲಿಗೆ ಬಂದರೆ ಅದೇ ಅದೃಷ್ಟ ಪಂಚಾಮೃತ! - ಅಷ್ಟೆ. 

                                        ---------*********---------*********---------

  ಯಾವುದೇ ಕುಟುಂಬದ ಸಮಸ್ಯೆಯು ಬೀದಿಯಲ್ಲಿ ಪರಿಹಾರವಾಗುವುದು ಅಸಂಭವ. ಆದರೆ ಶೋಷಿತ ಗಂಡ / ಹೆಂಡತಿ ಮತ್ತು ಅವರ ಬಗೆಗೆ ಸಹಾನುಭೂತಿಯುಳ್ಳವರು (?) ತಂತಂಮ್ಮ ಸೊಂಡಿಲು ಚಾಚಿ ಇನ್ನೊಬ್ಬರ ಕುಟುಂಬದ ಸಮಸ್ಯೆಯಲ್ಲಿ ಮೂಗು ತೂರಿಸುವುದೂ ಇದೆ. ಅಂತಹ ಕಿತಾಪತಿ ದಾಸರಿಂದ ಅನೇಕ ಕುಟುಂಬದ ಘರ್ಷಣೆಗಳು ತಣಿಯುವ ಬದಲು ಹೆಚ್ಚಿದ ಸಂದರ್ಭಗಳಿವೆ. ಕುಟುಂಬದ ಹಿರಿಯರಿಂದಲೂ ಸಾಧ್ಯವಾಗದ ಪರಿಹಾರವು - Counselling ಎಂಬ (Fashion?) ಹುಡುಗಾಟದಿಂದಲೂ ಪರಿಹಾರವಾಗಲು ಸಾಧ್ಯವಿಲ್ಲ. ತನಗೆ ತನ್ನನ್ನು ಅರ್ಥ ಮಾಡಿಕೊಳ್ಳಲಾಗದೆ ಮಿಡುಕಾಡುತ್ತಿರುವ ಹುಲು ಮನುಷ್ಯರಿಗೆ ಇನ್ನೊಬ್ಬರ ಮಂಡೆಯೊಳಗಿನದೆಲ್ಲವನ್ನೂ ತಿಳಿದುಕೊಳ್ಳುವುದು ಅಸಂಭವ. "ನನ್ನ ಮಂಡೆಯದನ್ನೆಲ್ಲ ನಿನ್ನ ಮಂಡೆಯ ವಿಚಕ್ಷಣಾ ಜಾಡಿಯಲ್ಲಿ ಜಾಲಾಡಿ ತೂಗಿ ನೋಡುವಷ್ಟು ಬಲಿಷ್ಠ ಬುದ್ಧಿಪಾತ್ರೆಯು ನಿನ್ನ ಆ ಮಂಡೆಯ ಒಳಗೆ ಇದೆಯೆ?" ಎಂದು ಅಂತಹ ವಿಶ್ಲೇಷಕರನ್ನು ಕೇಳಬೇಕು. ಎಂತೆಂತಹ ಯೋಗಿಗಳಿಗೂ ನೂರಾರು ಬಾವಿಯ ನೀರು ಕುಡಿಸಿದಂತಹ ಬುದ್ಧಿಯದು. ಇಂದಿನ ತೇಪೆ ಮನೋವಿಜ್ಞಾನವು ತಿಪ್ಪರಲಾಗ ಹಾಕಿದರೂ ಮನೋರಂಗವು ಅದರ ಕೈವಶವಾಗುವುದು ಅಸಾಧ್ಯ. ರಸ್ತೆ ಬದಿಯಲ್ಲಿ ಅಂಗಡಿ ತೆಗೆದು ಬುದ್ಧಿ ರಿಪೇರಿ ಮಾಡಿಕೊಡುತ್ತಿದ್ದಾರೆಂದರೆ ಅದೊಂದು ವ್ಯಾಪಾರ - ಎಂದಷ್ಟೇ ಅರ್ಥೈಸಬೇಕು. ಒಮ್ಮೊಮ್ಮೆ ತಾತ್ಕಾಲಿಕ ಬದಲಾವಣೆ ಯು ಕಾಣಿಸಿ ಕಲಕಿದ ಮನಸ್ಸುಗಳು ಸ್ವಯಂ ನಿರೀಕ್ಷಣೆ ಮಾಡಿಕೊಂಡು ಏನೋ ಒಂದು ಬಗೆಯ ತೇಪೆಯ ಬದುಕನ್ನು ಕಟ್ಟಿಕೊಳ್ಳಬಹುದು. ಆಗ ಒಂದು ಮನಸ್ಸನ್ನು ರಿಪೇರಿ ಮಾಡಿದೆ ಎಂದಾಗಲೀ - ಮನಸ್ಸು ರಿಪೇರಿ ಆಯಿತು ಎಂದಾಗಲೀ ಅಂದುಕೊಳ್ಳಬಾರದು; ಸಾಮಾಜಿಕ ಮರ್ಯಾದೆ(?)ಗಾಗಿ ಹೇಗೋ ಬದುಕನ್ನು ತಳ್ಳುವ ಸಾಹಸವೊಂದು ನಡೆಯುತ್ತಿದೆ - ಅಂದುಕೊಳ್ಳಬೇಕು ಅಷ್ಟೆ! ಅಂತಹ ಸಂದರ್ಭಗಳನ್ನೆಲ್ಲ Counselling ನ ಸಾಧನೆ ಎಂದು ಬಿಂಬಿಸುವುದು - ಕೆಲವು ಬದುಕುವ ದಾರಿಗಳಿಗೆ ಧಕ್ಕೆ ತರಬಾರದು ಎಂಬ ಸದುದ್ದೇಶವಲ್ಲದೆ ಇನ್ನೊಂದಲ್ಲ.

  ಪಾಲಿಗ್ರಾಫ್ ಸೌಲಭ್ಯವನ್ನು ನಾವೀಗ ಕೇವಲ ಅಪರಾಧ ಪತ್ತೆಗೆ ಮಾತ್ರ ಉಪಯೋಗಿಸುತ್ತಿರುವಂತೆ ಕಾಣುತ್ತಿದೆ. ಆದರೆ Counselling ಗೂ ಪಾಲಿಗ್ರಾಫ್ (ಸುಳ್ಳು ಪತ್ತೆ) ನ ಸೌಲಭ್ಯವನ್ನು ಜೋಡಿಸಿದರೂ - ಅಂತಹ ಪತ್ತೆಗೆ ನಿಯುಕ್ತರಾದವರ ಬುದ್ಧಿಯ ಸಾಮರ್ಥ್ಯದಷ್ಟೇ ಪ್ರತಿಫಲವು ಸಿಕ್ಕೀತು. ಮನುಷ್ಯನ ಮನಸ್ಸು ಅಷ್ಟೊಂದು ಸಂಕೀರ್ಣವಾದದ್ದು! ನೀತಿ: ಸ್ವಂತ ಬೇಲಿಯ ಒಳಗೇ ಮೇಯುವ ಹಸುಗಳಿಗೆ ಅಪಾಯವು ಕಡಿಮೆ.

  ಆದರೆ ಮನಸ್ಸು - ಬುದ್ಧಿಯನ್ನು ಕುರಿತು - - ವಿಜ್ಞಾನಿಗಳ ನಿರಂತರ ಕುತೂಹಲವು ಎಷ್ಟು ಕವಲುಗಳನ್ನು ಮುಟ್ಟಿ ಬಂದರೂ ಸಮಗ್ರ ಮಿದುಳನ್ನು ಮತ್ತು ಮಿದುಳಿನ ಸಮಗ್ರತೆಯನ್ನು ಜಾಲಾಡಲು ಇನ್ನೂ ಸಾಧ್ಯವಾಗಿಲ್ಲ. ಆದ್ದರಿಂದಲೇ ಇತ್ತ -  ಮನಶ್ಶಾಸ್ತ್ರದತ್ತ ಮನುಷ್ಯನ ಆಕರ್ಷಣೆ ಬೆಳೆಯುತ್ತಲೇ ಇದೆ; ಅತ್ತ - ಮಿದುಳಿನ ಬುದ್ಧಿ ಸ್ಥಾನದಲ್ಲಿ ಹೊಸಹೊಸ ಕವಲುಗಳೂ ಮೊಳಕೆಯೊಡೆಯುತ್ತಿವೆ. "ಮನಯೇವ ಮನುಷ್ಯ" - ಬಂಧ ಮೋಕ್ಷಗಳಿಗೆ ಕಾರಣವಾದ ಮನಸ್ಸಿನಿಂದಲೇ ಮನುಷ್ಯ. ಆ ಮನುಷ್ಯ ಮನಸ್ಸನ್ನು ಹೊಕ್ಕು ಹೊರಡುವುದು ಅತ್ಯಂತ ಕಠಿಣ. ಅಡುಗೆಯ ಕೋಣೆಯಲ್ಲಿ ಒಮ್ಮೊಮ್ಮೆ ಸಿಡಿಯುವ ಸಾಸಿವೆಯನ್ನು ಸುಮ್ಮನೆ ಎಲ್ಲೆಲ್ಲೋ ಯಾರ್ಯಾರೋ ಹುಡುಕಿದರೆ ಸಿಡಿದ ಸಾಸಿವೆ ಸಿಕ್ಕೀತೆ? ಸಿಡಿಯುವುದನ್ನು ಕಂಡವರೇ ಅದನ್ನು ಎತ್ತಿ ಕೊಡಬೇಕು! ಕೆಲವೊಮ್ಮೆ ಹಾಗೆ ಕಂಡವರಿಗೂ ಅದು ಸಿಕ್ಕುವುದಿಲ್ಲ. ಧಿಡೀರೆಂದು ಎಂದೋ ಒಮ್ಮೆ ಗೋಚರವಾದರೂ ಆಗಬಹುದು. ಸ್ವಂತ ಮನೆಯನ್ನು ಶುಭ್ರವಾಗಿ ಇರಿಸಿಕೊಳ್ಳಲಾಗದೆ "ಸಿಡಿಯುವ ಅವ್ಯವಸ್ಥೆ" ಎಂಬ ಅಶುಭ್ರ ದುಗುಡ ದುಮ್ಮಾನಗಳಿಂದ ಅಸ್ತವ್ಯಸ್ತಗೊಳಿಸಿಕೊಂಡಾಗ ದೂರುದುಮ್ಮಾನಗಳ ಹೊಗೆ ಏಳುತ್ತದೆ. ತಮ್ಮ ಮನಸ್ಸಿನ ಮನೆಯಲ್ಲಿ ಅವರವರು ಓಡಾಡುವುದು ಸಹಜ ಮತ್ತು ಸುರಕ್ಷಿತ; ಅವರವರ ಮನೆಯಲ್ಲಿ ಅವರವಲ್ಲದೆ - ಯಾರ್ಯಾರೋ ಓಡಾಡತೊಡಗಿದರೆ ಅದು ಅಸಹಜ, ಅಶಾಶ್ವತ ಮತ್ತು ಅಸುರಕ್ಷಿತ. ಪ್ರೀತಿಯ ಪಸೆಯಿಲ್ಲದವರೆಲ್ಲ ಇನ್ನೊಂದು ಮನಸ್ಸಿನ ತೊಳೆಯನ್ನು ಬಿಡಿಸಲು ಕೂತರೆ ಅತ್ತಣ ಅಂಟನ್ನು ಇತ್ತ ಸರಿಸಿದಂತಾಗಬಹುದಲ್ಲದೆ ಹಲಸಿನ ತೊಳೆಯನ್ನು ಹದವಾಗಿ ಬಿಡಿಸಲಾದೀತೆ? ತೆರೆದ ಮನಸ್ಸಿನ ಪ್ರೀತಿಯ ಪಸೆಯೆಂಬ ನಂಟಿನಿಂದಲೇ - ಅಲ್ಲಲ್ಲಿ ಬಚ್ಚಿಟ್ಟುಕೊಂಡ ಅಶುಭ್ರ ಅಂಟನ್ನು ತೆಗೆಯಲು ಪ್ರಯತ್ನಿಸಬೇಕು. ಹೀಗಿದ್ದೂ... ಮನೋರೋಗಿಯ ಪೂರ್ಣ ಸಹಕಾರವಿಲ್ಲದೆ ಇದು ಸಾಧ್ಯವಾಗದು. ಮನೆಯ ಹಿರಿಯರಿಗಿಂತ ಹೊರಗಿನ ಗೆಳೆಯರೇ ಇಂದಿನ ಪೀಳಿಗೆಗೆ ಹತ್ತಿರವೆಂದಾಗುತ್ತಿರುವ ಈ ಸನ್ನಿವೇಶದಲ್ಲಿ ಅದಕ್ಕೆ ತಕ್ಕ ತೇಪೆಯ ಬುದ್ಧಿವಾದ ಕೇಂದ್ರಗಳೂ ಹುಟ್ಟಿಕೊಳ್ಳುತ್ತಿರುವುದರಲ್ಲಿ ಆಶ್ಚರ್ಯವಿಲ್ಲ.

  ನಾನು ದುಡಿಯುತ್ತಿದ್ದ ಸಂಸ್ಥೆಯಲ್ಲಿ ಸಂಜೆಯಾಗುವಾಗ ಹತ್ತಿರ ಬಂದು ಪಿಸುದನಿಯಲ್ಲಿ ಸಾಲ ಕೇಳುತ್ತಿದ್ದ - "ಕುಟುಂಬ ಶೋಷಿತ" ರೆಂದು ತಾವೇ ಹೇಳಿಕೊಳ್ಳುತ್ತ ದಿನವೂ ಅಳುತ್ತಿದ್ದ - ಕೆಲವು ಪೀಡಿತರನ್ನು ನಾನು ನೋಡಿದ್ದೇನೆ. ದುಶ್ಚಟದ ಹೊಂಡಕ್ಕೆ ಬೀಳುತ್ತಿದ್ದ ಅಂತಹ ವ್ಯಕ್ತಿಗಳ ಪೋಕು ಮಾತುಗಳಿಗೆ ತಲೆದೂಗುತ್ತ ಅವರಿಗೆ ಸಾಲ ಕೊಟ್ಟು ಒಳ್ಳೆಯವರು ಅನ್ನಿಸಿಕೊಳ್ಳುತ್ತಿದ್ದ ಕೆಲವರನ್ನೂ ಹಾದು ಬಂದಿದ್ದೇನೆ. ಅವೆಲ್ಲವೂ ಕರುಣೆಯಿಂದ ನಡೆಸುವ ಕರ್ಮವೆ? ಖರ್ಮ ಎನ್ನುವುದು ಅದನ್ನೇ. ಸಣ್ಣ ಹೊಂಡಕ್ಕೆ ಬಿದ್ದವರನ್ನು ಆಳವಾದ ಹೊಂಡಕ್ಕೆ ತಳ್ಳುವಂತಹ ಕರುಣೆಯ ಯಾವುದೇ ಮುಖವಾಡಕ್ಕಿಂತ ನಿಷ್ಠುರವೇ ಒಳ್ಳೆಯದು. ಹಾಗೆ ಕರುಣೆ (!) ತೋರಿಸಿದವರು ತಾವು ದುಡ್ಡು ಕೊಟ್ಟ ಸಂಗತಿಯನ್ನು ಗುಟ್ಟಾಗಿಯೂ ಇಡುತ್ತಿರಲಿಲ್ಲ. "ಅವರು ನನಗೆ ಎಷ್ಟು ದುಡ್ಡು ಕೊಡಬೇಕು ಗೊತ್ತುಂಟಾ? ಯಾಕಾದರೂ ಅವರಿಗೆ ಸಾಲವಾಗಿ ದುಡ್ಡು ಕೊಟ್ಟೆನೋ ಅನ್ನಿಸುತ್ತದೆ... ನನ್ನ ಗ್ರಹಚಾರ.." ಎಂದೆಲ್ಲ ಹಿಂದಿನಿಂದ ಮಾತಾಡಿಕೊಳ್ಳುತ್ತಿದ್ದರು. ಹಾಗಿದ್ದರೆ ಕಾಲಕಾಲಕ್ಕೆ ಅವರು ತೋರಿಸಿದ್ದು ಕರುಣೆಯಾ? ಇಂತಹ ಭಾನಗಡಿಗಳೆಲ್ಲ ಯಾಕೆ ಬೇಕು? ದಾರಿತಪ್ಪಿ, ಸ್ಥಿಮಿತ ತಪ್ಪಿ ಮುಳುಗುತ್ತಿರುವವರು ಮಾಡುವ ಅನರ್ಥಕಾರೀ ಕೆಲಸಗಳಿಗೆಲ್ಲ ದುಡ್ಡು ಕೊಡುವುದು - ಸಹಾನುಭೂತಿ ವ್ಯಕ್ತಪಡಿಸುವುದು ಎಂದರೆ ಅವರನ್ನು ನಾವೇ ಮುಳುಗಿಸಿದಂತೆ. ಅದು ಪ್ರೀತಿ - ಗೌರವ ತೋರಿಸುವ ರೀತಿ ಅಲ್ಲವೇ ಅಲ್ಲ. ಹಾಗೆ ಕುಗ್ಗಿದವರಿಗೆ ಯಾವ ಶಾಶ್ವತ ಪರಿಹಾರವನ್ನೂ ನೀಡಲಾಗದಂತಹ Time Pass ಜನಗಳ ಕರುಣೆಯೂ - Time Pass ನ ಇತರ ಚಟುವಟಿಕೆಗಳ ಭಾಗವಲ್ಲದೆ ಮತ್ತೇನೂ ಅಲ್ಲ. ಅವರ ದೂರುಗಳನ್ನು ಕಿವಿಗೊಟ್ಟು ಕೇಳುತ್ತ ಸುಳ್ಳು ಸಂತಾಪ ತೋರಿಸುತ್ತ  ಒಳಗೊಳಗೆ ಕೇವಲ ಆಸ್ವಾದಿಸುವ (Enjoy) ಬುದ್ಧಿಗೇಡಿಗಳು ಕೂಡ - ಸಾಮಾಜಿಕ ಕುಟುಂಬಗಳ ನಾಶದ ಪಾಲುದಾರರಾಗುವುದರಲ್ಲಿ ಸಂದೇಹ ಬೇಡ. ಯಾರದ್ದೋ ಬದುಕು - ಆಡಿಕೊಳ್ಳುವವರಿಗೆ ರಂಜನೆಯ ಕತೆ !

  ಅದೇ ಹೆಂಡತಿ, ಅದೇ ಗಂಡನ ಜತೆಗಿರುತ್ತ ಹೊರಗಿನ ಸಮಾಜದಲ್ಲಿ ಪರಸ್ಪರ ಒಬ್ಬರನ್ನು ಇನ್ನೊಬ್ಬರು ಭಾರತ - ಪಾಕಿಸ್ತಾನದಂತೆ ಎಡೆಬಿಡದೆ ದೂರುತ್ತ ಬದುಕುವ, ಮತ್ತೆ ಅದೇ ನರಕದಲ್ಲಿಯೇ ಅನಿವಾರ್ಯವಾಗಿ ಸಂಸಾರ ನಡೆಸುತ್ತಿರುವ ಅಸಂಖ್ಯಾತ ಮಂದಿ ಈಗಲೂ ನಮ್ಮ ನಡುವೆ ಇಲ್ಲವೆ? ಮಾತನಾಡದೆ ತಲೆತಗ್ಗಿಸಿ ಗುದ್ದು ತಿನ್ನುವ ಅಂತಹ ಸಂಸಾರಗಳನ್ನು "ನಿಜವಾದ ಹೊಂದಾಣಿಕೆಯ ಶೈಲಿ"ಎಂದು ಅನುಕರಿಸಲು ಸಾಧ್ಯವೆ? ಅದು ನಿತ್ಯ ಕುಸ್ತಿಯಲ್ಲದೆ ಇನ್ನೇನು? ಅದೆಂತಹ ಶೋಚನೀಯ ವಿಪರ್ಯಾಸ? ಇಂತಹ ಕೌಟುಂಬಿಕ ಗಂಟುಗಳಿಂದ ಬಿಡಿಸಿಕೊಳ್ಳಲು ATTITUDE ನಲ್ಲಿ ಬದಲಾವಣೆ ತಂದುಕೊಳ್ಳುತ್ತ ಪೀಡಿತರೇ ಪ್ರಯತ್ನಿಸಬೇಕಲ್ಲದೆ ಮೂರನೆಯವರಿಂದ ಅದು - ಸುತರಾಂ ಆಗದ ಕೆಲಸ.

  ಪ್ರತಿಯೊಂದು ವ್ಯಕ್ತಿಯಲ್ಲಿಯೂ ಅನಂತ ಶಕ್ತಿಯಿರುತ್ತದೆ. ಹೆಣ್ಣೂ ಅದಕ್ಕೆ ಹೊರತಲ್ಲ. ಒಂದು ಹೆಣ್ಣು ಸಂಭ್ರಮ ಪಡುವುದಕ್ಕೆ ತನ್ನ ಕೆಲಸಗಳು ಮಾತ್ರ ಆಗಬೇಕೆಂದಿಲ್ಲ. ತನಗೆ ಸಂಬಂಧವೇ ಇಲ್ಲದ ಇನ್ನೊಬ್ಬರ ಮನೆಯ ಸಂಭ್ರಮಗಳನ್ನೂ ತನ್ನದೇ ಸಂಭ್ರಮವೆಂಬಂತೆ ಅನುಭವಿಸುತ್ತ ತಾನಿದ್ದ ಇಡೀ ಸಮಾಜವೇ ತನ್ನದು ಎಂಬಂತೆ - ಸುಖ ದುಃಖದಲ್ಲಿ ಭಾಗಿಯಾಗುವ ಶಕ್ತಿಯು ಮುಕ್ತಾಬಾಯಿಯಂತಹ ಮಹಿಳೆಯರಿಗಿದೆ. ಈಗಲೂ ಅಂತಹ ಲಕ್ಷಾಂತರ ಉದಾಹರಣೆಗಳಿವೆ. ಕೌಟುಂಬಿಕ ನೆಮ್ಮದಿಗೆ "ಅಯ್ಯೋ..ಅದು ಹಾಗೇ...ಹೋಗಲಿ ಬಿಡಿ" ಎನ್ನುತ್ತ ಗಂಭೀರ ಸಂದರ್ಭಗಳನ್ನು ಕೆಲವೊಮ್ಮೆ ನಕ್ಕು ತೇಲಿಸುವ ATTITUDE ಬೇಕಾಗುತ್ತದೆ. ಹಾಗಾಗಲು - ತನ್ನಲ್ಲಿರುವ ಮಾನವೀಯ ಗುಣಗಳನ್ನು ಒಪ್ಪಗೊಳಿಸಿಕೊಂಡರೆ ಸಾಕಾಗುತ್ತದೆ. ಬಾಳನ್ನು ಓಡಿಸುವ ರಥಿಕ ಭಾಮೆಯು ಹೆಣ್ಣಾದರೆ ಆ ರಥವೇ ಗಂಡು. ಭದ್ರ ಬುದ್ಧಿಯ ಸತ್ಯರಥಿಕಳಿದ್ದಾಗ ಮಾತ್ರ ಬಂಡಿಯು ಓಡೆಂದ ಕಡೆಗೆ ಓಡುತ್ತದೆ; ಪದ ಕುಸಿಯುವವರೆಗೂ ಓಡುತ್ತದೆ. ಆದರೆ ತನ್ನ ಸುಖದ ಪ್ರಮಾಣವನ್ನು ಇತರರೊಂದಿಗೆ ಹೋಲಿಸಿಕೊಂಡು ತೂಗಿ ನೋಡುತ್ತ ರಥಿಕಳೇ ಎಡೆಬಿಡದೆ ಮರುಗುತ್ತಿದ್ದರೆ - ಕರುಬುತ್ತಿದ್ದರೆ - ದಿಕ್ಕಾಪಾಲಾಗಿ ನಿರ್ದೇಶಿಸುತ್ತಿದ್ದರೆ ಯಾವ ರಥವೂ ಓಡಲಾಗುವುದಿಲ್ಲ. ತನ್ನ ಪಾಲಿಗೆ ಬಂದ ರಥವನ್ನು ಆಕರ್ಷಕವಾಗಿ ಓಡಿಸುವುದರಲ್ಲಿಯೇ ಇಡೀ ಸಂಸಾರದ ಯಶಸ್ಸು ಅಡಗಿದೆ.
    
  ಪ್ರತೀ ಬದುಕಿನಲ್ಲೂ ಹೊಂದಾಣಿಕೆಯೆಂಬ ಗಟ್ಟಿ ಸೂತ್ರವು ಇರಲೇಬೇಕು. ಆ ಸೂತ್ರವನ್ನು ಕುಟುಂಬದ ಎಲ್ಲ ಸದಸ್ಯರೂ ಮನೋವಾಕ್ಕಾಯದಲ್ಲಿ ಭದ್ರಗೊಳಿಸಿಕೊಂಡಿರಬೇಕು. ಅದಕ್ಕೆ ಸ್ವಸ್ಥ ಮನಸ್ಸು - ಬುದ್ಧಿಯ ಸಮನ್ವಯವಿರಬೇಕು. ಉಗುಳು ನುಂಗುವುದನ್ನೂ ಅರಿತಿರಬೇಕು. ಆಗ ಪರಸ್ಪರ ಮೆಚ್ಚುತ್ತ, ಒಪ್ಪುತ್ತ, ಒಮ್ಮೊಮ್ಮೆ ಒಪ್ಪದಿರುತ್ತ, ಪ್ರತಿಭಟಿಸುತ್ತ ಬದುಕಿನ ಬಂಡಿಯು ಸರಾಗವಾಗಿ ಓಡುತ್ತದೆ. ಸಂಸಾರವನ್ನು ಸರಸ, ವಿರಸ, ಸಮರಸಗಳಿಂದ ಕಟ್ಟಿಕೊಳ್ಳಬಹುದು. ಅದೇ ಜೀವನ. ಆದರೆ ಒಂದೇ ಮಾಡಿನ ಕೆಳಗಿದ್ದುಕೊಂಡು ಕ್ಷಣಕ್ಷಣವೂ ಅಭಿನಯ ಮಾಡುತ್ತ ನಮ್ಮನ್ನು ನಾವೇ ವಂಚಿಸಿಕೊಳ್ಳುವ / Handle ಮಾಡುತ್ತಿರುವ ಎಲ್ಲ ಬದುಕುಗಳೂ ಅವ್ಯಕ್ತ ನೋವುಣ್ಣದೆ ಅನ್ಯ ಮಾರ್ಗವಿಲ್ಲ. ಕಿಲುಬು ಹಿಡಿದ ಕಪಟ ಯೋಚನೆ (THOUGHT) - ಯೋಜನೆ (PLAN) ಗಳಿಂದಾಗಿ ಅಂತಹ ಮಂದಿಯು ತಮ್ಮ ಸ್ವಂತ ಬದುಕಿಗೆ ಕೈಯ್ಯಾರೆ ವಿಷವೂಡುತ್ತಿರುತ್ತಾರೆ. ಆತ್ಮಸಾಕ್ಷಿ ಸತ್ತಂತಿರುವ ಅಂತಹ ವ್ಯಕ್ತಿಗಳು ಎಂತಹ ದೊಡ್ಡ ಪ್ರತಿಭಾವಂತರಾಗಿದ್ದರೂ ಅವರ ಸಹವಾಸದಿಂದ ಎಷ್ಟು ತಪ್ಪಿಸಿಕೊಂಡರೆ ಅಷ್ಟು ನೆಮ್ಮದಿ ಸಿಕ್ಕೀತು. ನೆಲೆಬೆಲೆಯಿಲ್ಲದ ವರ್ತನೆಯ ಜೊತೆಗಿದ್ದುಕೊಂಡೇ ಪರಸ್ಪರ ದೂರುತ್ತ ಪರಚಿಕೊಳ್ಳುತ್ತ ನಮ್ಮ ದಿನ ದೂಡುವುದಕ್ಕಿಂತ ಅಂತಹ ಮೈನುರಿಯುವ ಯಾವುದೇ ಸಂಬಂಧದಿಂದ ದೂರವಿರುವುದು ಉತ್ತಮ ಮಾರ್ಗವಲ್ಲವೆ?

  ನನ್ನ ಬದುಕಿನಲ್ಲಿ ತಮ್ಮ ಸಾಮಾಜಿಕ ಮತ್ತು ಕೌಟುಂಬಿಕ ಪರಿಸರವನ್ನು ಹಾಳುಗೆಡವಿಕೊಂಡ ಅನೇಕ ಸಂದರ್ಭಗಳನ್ನು ನಾನು ಕಂಡಿದ್ದೇನೆ; ಕಂಡು ಮರುಗಿದ್ದೇನೆ. ಎಲ್ಲೂ ಇಲ್ಲದ ದೋಷಕ್ಕಾಗಿ ಎಲ್ಲೆಲ್ಲೋ ಹುಡುಕುವ ಬದಲು ನಾವು ನಮ್ಮೊಳಗೇ ಹುಡುಕಾಡುವುದು ಒಳಿತು. ಎಷ್ಟೋ ಬಾರಿ ಬೀದಿಯಲ್ಲಿ ಹೋಗುವ ಮಾರಿಯನ್ನು ನಾವಾಗಿಯೇ ಮನೆಗೆ ತಂದಿರುತ್ತೇವೆ. "ಮನವೆಲ್ಲೋ ಮನೆ ಎಲ್ಲೋ" ಎಂಬ ಸನ್ನಿವೇಶವನ್ನು ಸೃಷ್ಟಿಸಿಕೊಂಡಿರುತ್ತೇವೆ! ಬಿದ್ದ ವೃತ್ತದಲ್ಲಿ ಸುತ್ತುತ್ತಲೇ ಇರುತ್ತೇವೆ!

  ಊರು ಸುತ್ತುವ ತಿರಪೋಕಿ ಮನಸ್ಸಿಗೆ ಎಂದಿಗೂ ಎಲ್ಲೂ ನೆಮ್ಮದಿಯಿರದು. ನಮ್ಮ ಮನೆಯಲ್ಲೇ ಮನಸ್ಸೂ ಇದ್ದಾಗ ಮಾತ್ರ ಮನೆಯು ಮಂತ್ರಾಲಯವಾಗುವುದು - ದೇಹವು ದೇವಾಲಯವಾಗುವುದು ಸಾಧ್ಯ. ಆಗ ಸೋತು ಗೆಲ್ಲುವುದು ಗೆದ್ದು ಸೋಲುವುದು ಎಲ್ಲವೂ ಸಹಜವಾಗುತ್ತದೆ; ಅತೃಪ್ತಿಯಂತೂ ಕಾಡುವುದಿಲ್ಲ. ನಮ್ಮ ಬದುಕೆಂಬ ಬ್ರಹ್ಮ ರಥವು ಆಯಾ ರಥಿಕನು ಓಡಿಸಿದಂತೇ ಓಡುತ್ತದೆ - ಅಲ್ಲವೆ?

                                                      -----*****-----*****-----


           

Monday, August 10, 2015

ನಾನೊಲಿದಂತೆ (3) - ಪ್ರಾರಬ್ಧ ಕರ್ಮ !




 




 ಇಂದಿನ ಇಂಟರ್ನೆಟ್ ಮಾಹಿತಿಯ ಯುಗದಲ್ಲಿ ಬಗೆಬಗೆಯ ಆಸಕ್ತಿ ಮತ್ತು ಆಸೆಯ ಜನರನ್ನು ಕೂತಲ್ಲೇ ನಾವು ನೋಡಬಹುದು. ಇವೆಲ್ಲವನ್ನೂ ಸಲಿಗೆಯಿಂದ ವಿಶ್ಲೇಷಿಸಿದರೆ "ಹುಚ್ಚು" (ಅತಿಯಾದ ಆಸಕ್ತಿ!) ಎಂದೂ ಅನ್ನಿಸಬಹುದು. ತಮ್ಮ ಸಾಮರ್ಥ್ಯದ ಪರಿಧಿಯಲ್ಲಿ ಒಂದಲ್ಲ ಒಂದು ಕರ್ಮವನ್ನು ಅವಲಂಬಿಸಿ ಪರಪೀಡೆಗೆಳಸದೆ ಬದುಕುವ ಹುಚ್ಚಿನ ಕೆಲವು ಮುಖಗಳು ಎಂದೂ ಅನ್ನಿಸುವುದಿದೆ. ಆದರೆ ಇಂತಹ ನಿತ್ಯಕಸರತ್ತಿನ ಬಹುಪಾಲು, ವಿಚಾರ ಸಾಮಗ್ರಿಗಳಾಗದೆ ಪ್ರಚಾರ ಸಾಮಗ್ರಿಗಳಾಗಿ ಮಿಂಚಿ ಮರೆಯಾಗುವ - ಹುಚ್ಚು ಮನಸ್ಸಿನ ಹಲವು ಮುಖಗಳು. ನಿತ್ಯ ಬಳಕೆಯ "ವಾಸ್ತವ" ಮತ್ತು "ಪೂರ್ಣ ಸತ್ಯ"ದ ತರತಮ ಅರಿವಿಲ್ಲದೆ - ಮನೋವಾಕ್ಕಾಯಗಳನ್ನು ಪಳಗಿಸಿಕೊಳ್ಳುವ ಸತತ ಪ್ರಯತ್ನವಿಲ್ಲದೆ (ಯಾರೂ) ಯಾವುದೂ ಸಾರ್ಥಕವಾಗದು. ಉತ್ತಮ ಓದು, ಬರಹ, ಏಕಾಂತ ಚಿಂತನೆಗಳು, ಮನನ, ಸದ್ಭಾವ, ವಿವೇಕ - ಮುಂತಾದವು ನಮ್ಮನ್ನು ಈ ನಿಟ್ಟಿನಲ್ಲಿ ಹರಿತಗೊಳಿಸುವ ಯುಕ್ತ ಉಪಕರಣಗಳು.
 
  ಬಗೆಬಗೆಯ ಹುಚ್ಚರ ಮೆಚ್ಚಿನ ಭೂಮಿಯಲ್ಲಿ ನಾವಿದ್ದೇವೆ. ದಕ್ಷಿಣೇಶ್ವರದಲ್ಲಿ ಶ್ರೀ ರಾಮಕೃಷ್ಣರು ದಿವ್ಯೋನ್ಮತ್ತರಾಗಿದ್ದಾಗ ಅವರ ಸುತ್ತಲಿನವರು ಪರಮಹಂಸರನ್ನೂ ಹುಚ್ಚರೆಂದು ಕರೆದಿದ್ದರು. ಅವರ ಆತ್ಮೀಯರೂ "ಹುಚ್ಚು ಇರಬಹುದೆ?" ಎಂದು ಒಮ್ಮೊಮ್ಮೆ ಸಂದೇಹಿಸಿದ್ದರು. ಇದರಿಂದ ಸ್ವತಹ ಪರಮಹಂಸರೂ "ಹುಚ್ಚು ಇರಬಹುದೆ?" ಎಂದುಕೊಂಡದ್ದೂ ಇತ್ತು. ಆಗ ರಾಮಕೃಷ್ಣರು ತಮ್ಮ ತಳಮಳವನ್ನು ಗುರುಗಳಲ್ಲಿ ಒಬ್ಬಳಾಗಿದ್ದ ಭೈರವಿ ಬ್ರಾಹ್ಮಣಿಗೆ ಹೇಳಿಕೊಂಡಾಗ, ಆಕೆಯು ಕೊಟ್ಟ ಉತ್ತರವು - ಸ್ವಾಮಿ ವಿವೇಕಾನಂದರ "ನನ್ನ ಗುರುದೇವ" ಎಂಬ ಉಪನ್ಯಾಸ ಪುಸ್ತಿಕೆಯಲ್ಲಿ ನಿರೂಪಿತವಾಗಿದೆ..."ಮಗೂ, ನಿನಗೆ ಹಿಡಿದಂತಹ ಹುಚ್ಚು ಯಾರನ್ನು ಹಿಡಿಯುತ್ತದೆಯೋ ಅವರೇ ಧನ್ಯರು. ಇಡೀ ಜಗತ್ತೇ ಹುಚ್ಚಾಗಿದೆ. ಕೆಲವರಿಗೆ ಸಂಪತ್ತಿನ ಹುಚ್ಚು, ಕೆಲವರಿಗೆ ಸುಖದ ಹುಚ್ಚು, ಕೆಲವರಿಗೆ ಕೀರ್ತಿಯ ಹುಚ್ಚು, ಚಿನ್ನ, ಪತಿ, ಸತಿ, ಇತರರ ಮೇಲೆ ದಬ್ಬಾಳಿಕೆ, ಇನ್ನೂ ನೂರಾರು - ಅಲ್ಪವಾದ ವಿಷಯ ವಸ್ತುಗಳ ಹುಚ್ಚಿನ ಲೋಕವಿದು. ದೇವರನ್ನುಳಿದು ಇತರ ಎಲ್ಲ ಮೂರ್ಖ ವಿಷಯಗಳ ಬಗ್ಗೆಯೂ ಜನರಿಗೆ ಹುಚ್ಚಿದೆ. ಸಮಾನ ಹುಚ್ಚುಗಳು ಮೈತ್ರಿಗೆ ಕಾರಣವಾಗುವುದೂ ಇದೆ. ಉದಾ: ಚಿನ್ನದ ಹುಚ್ಚಿನವರಿಗೆ ತನ್ನದೇ ಆಸಕ್ತಿಯ ಇನ್ನೊಬ್ಬರಲ್ಲಿ ಹುಚ್ಚೆಬ್ಬಿಸುವ ಮೈತ್ರಿಯೂ ಮೂಡುತ್ತದೆ. ತಮ್ಮಂತಹ ಇತರ ಹುಚ್ಚರಿಗೆ ಮಾತ್ರವೇ ಬುದ್ಧಿ ಸರಿಯಾಗಿರುವುದು ಎಂದು ಭಾವಿಸುವಂತೆ, ತಮ್ಮಂತೆಯೇ ಹಂದಾಡುವವರನ್ನು ಕಂಡು ಅಂತಹ ಹುಚ್ಚುಮಂದೆಯು "ಇವನೀಗ ಸರಿಯಾದವನು; ಒಳ್ಳೆಯ ಜನ..." ಎನ್ನುತ್ತದೆ. ತಮ್ಮ ಹುಚ್ಚಿಗೆ ಸಂವಾದಿಯಾಗಿ ಅಲೆದಾಡುವ ಹುಚ್ಚನ್ನು ಮಾತ್ರವೇ ಈ ಜನರು ಅರ್ಥ ಮಾಡಿಕೊಂಡು ಒಪ್ಪಿಕೊಳ್ಳಬಲ್ಲರು. ಬಹುಸಂಖ್ಯಾತರು ರೂಢಿಸಿಕೊಂಡು ಆಚರಿಸುವ ಹುಚ್ಚುಗಳು ಈ ಜಗತ್ತಿನಲ್ಲಿ ಜನಮನ್ನಣೆ ಗಳಿಸುತ್ತದೆ. ಆದರೆ ಮಗೂ, ನಿನ್ನದು ಅಪೂರ್ವ ಹುಚ್ಚು. ಆದ್ದರಿಂದ ಅದು ಜನರಿಗೆ ಅರ್ಥವಾಗುವುದಿಲ್ಲ. ಆದ್ದರಿಂದಲೇ ಅವರೆಲ್ಲ ನಿನ್ನನ್ನು ಹುಚ್ಚು ಎನ್ನುತ್ತಾರೆ. ಆದರೆ ನಿನ್ನದು ಮಾತ್ರವೇ ಸರಿಯಾದ ಹುಚ್ಚು ಮಗೂ. ಭಗವಂತನಿಗಾಗಿ ಹುಚ್ಚು ಹಿಡಿಸಿಕೊಂಡವನೇ ಧನ್ಯ. ನಿನ್ನಂಥವರು ವಿರಳ..." ಎಂದು ಭೈರವಿ ಬ್ರಾಹ್ಮಣಿಯು ರಾಮಕೃಷ್ಣರನ್ನು ಸಂತೈಸಿದ್ದಳು. ಕೆಲವರನ್ನು ಮಾತ್ರ ಬಾಧಿಸುವ - ಎಲ್ಲರಿಗೂ ಎಟುಕದ ಹುಚ್ಚನ್ನು ಮಾತ್ರ ಜನಸಂತೆಯು "ಹುಚ್ಚು ಹುಚ್ಚು" ಎಂದು ಬೊಟ್ಟಿಟ್ಟು - ಏಕಕಂಠದಲ್ಲಿ ಬೊಬ್ಬೆ ಹೊಡೆಯುತ್ತದೆ. ಈ ಪ್ರಪಂಚದಲ್ಲಿ ನಿರುಪದ್ರವಿ ದಿವ್ಯತೆಯೇನಾದರೂ ಅಲ್ಲಿ ಇಲ್ಲಿ ಉಳಿದಿದ್ದರೆ ಇಂತಹ ಹುಚ್ಚಿನಿಂದಲೇ ಅಲ್ಲವೆ?  

  ಅಂತೆಯೇ ಪ್ರಸ್ತುತದ ಹುಚ್ಚು ಸಮಾಜದ ಆದ್ಯತೆಯೂ ಭಿನ್ನವಾಗಿದೆ. ಹೊರ ಶೃಂಗಾರದ ಹುಚ್ಚಿನಲ್ಲೇ ನಮ್ಮ ದಿನಗಳು ಕಳೆದು ಹೋಗುತ್ತಿಲ್ಲವೆ? ನಿಜವಾಗಿ ಅಪೇಕ್ಷಿಸಬೇಕಾದುದನ್ನು ಉಪೇಕ್ಷಿಸುತ್ತ ಉಪೇಕ್ಷಿಸಬೇಕಾದುದನ್ನು ಹುಚ್ಚುಗಟ್ಟಿ ಅಪೇಕ್ಷಿಸುತ್ತಿರುವ ನಮ್ಮ ಇಂದಿನ ಬದುಕುಗಳು ನಿಂತ ನೀರಿನಂತೆ ನಾರುತ್ತಿವೆ. ಸಿನಿಕತನದ ಮೇರೆ ಮೀರುತ್ತಿದೆ. ಪ್ರತಿಯೊಬ್ಬರೂ ಪ್ರಥಮ ಸ್ಥಾನವನ್ನು ಪಡೆಯಲು ತಿಣುಕಾಡುತ್ತಿರುವ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಅನುಪಯುಕ್ತ ವಿಷಯಗಳೆಲ್ಲವೂ ಗಿನ್ನೆಸ್ ದಾಖಲೆಯ ಗರಿಯನ್ನು ಏರಿಸಿಕೊಳ್ಳಲು ತಹತಹಿಸುತ್ತ ಬದುಕಿನ ವಿಡಂಬನೆಯಲ್ಲಿ ತೊಡಗಿಕೊಂಡಿವೆ. ತೆಂಗಿನಕಾಯಿಯ ಹೊರ ಕವಚವನ್ನು ಹಲ್ಲಿನಿಂದ ಕಿತ್ತು ಮುಖವನ್ನೆಲ್ಲ ಹರಿದುಕೊಂಡು, ದಾಖಲೆಗಾಗಿ ಅಧ್ವಾನ ಮಾಡಿಕೊಳ್ಳುವವರೂ ಇದ್ದಾರೆ! ದಿನಗಟ್ಟಲೆ ಸತತ ಮಾತಾಡಿ, ಹಾಡಿ, ದಣಿಯುವವರೂ ಇದ್ದಾರೆ! 

  ನಮ್ಮ ಹಲ್ಲುಗಳಿರುವುದು ತೆಂಗಿನ ಸಿಪ್ಪೆ ಸುಲಿಯುವುದಕ್ಕಾ? ಎಷ್ಟು ಹೊತ್ತು ಮಾತಾಡಿದೆ - ಹಾಡಿದೆ ಎಂಬುದು ಮುಖ್ಯವೋ ಏನು ಮಾತಾಡಿದೆ - ಹಾಡಿದ್ದು ಏನು? ಅದರಲ್ಲಿ ಹೂರಣವೇನಿತ್ತು? ಎಂಬುದು ಮುಖ್ಯವೋ? ನಿಷ್ಕರುಣೆಯಿಂದ ಎದೆ ಗುದ್ದುವಂತಿರುವ ಸಂಗೀತವು ಯಾವ ಪುರುಷಾರ್ಥಕ್ಕೆ? ದೋಸೆ ತಿನ್ನುವ ಸ್ಪರ್ಧೆ ನಡೆಸುವುದು ಯಾಕಾಗಿ? ಇಂತಹ ಸ್ಪರ್ಧೆ - ದಾಖಲೆಗಳಿಂದ ಏನು ಪ್ರಯೋಜನ? ಇಂತಹ ದೊಂಬರಾಟವನ್ನು ಪ್ರಾಯೋಜಿಸಿ ಪ್ರೋತ್ಸಾಹಿಸುವುದಾದರೂ ಯಾಕೆ? ಯಾವುದೇ ಕ್ಷುಲ್ಲಕ ಮಜಾ ಮಾಡುವುದೆಂದರೆ ಬದುಕನ್ನು ಕೀಳಾಗಿಸುವುದು ಎಂದೇ ಅರ್ಥ. 

  ಅಂಬಿಗನಿಗೆ 4 ಕಾಸನ್ನು ಕೊಟ್ಟರೆ ಆತನು ಹುಟ್ಟುಹಾಕಿ ಸುಲಭದಲ್ಲಿ ನದಿಯನ್ನು ದಾಟಿಸುವಾಗ ಮೂಗುಹಿಡಿದು ವರ್ಷಾನುಗಟ್ಟಲೆ ಸಾಧನೆ ಮಾಡಿ ಹಠಯೋಗದಿಂದ ನದಿಯ ಮೇಲೆ ನಡೆದುಕೊಂಡು ದಾಟುವ ಚಮತ್ಕಾರ ಯಾಕೆ ಬೇಕು? - ಎಂದಿದ್ದರು ಪರಮಹಂಸರು. ನಮ್ಮ ಇಡೀ ಬದುಕೇ ಹೀಗಿದೆ. ಕೇವಲ ಚಮತ್ಕಾರಗಳಲ್ಲಿಯೇ ಮುಳುಗಿ ಹೋಗಿದೆ. ಕಣ್ಕಟ್ಟಿಗೆ ಮರುಳಾಗುವ ಹಾಗೆ ಋಜು ಮಾರ್ಗಗಳು ಅನೇಕರನ್ನು ಆಕರ್ಷಿಸುವುದಿಲ್ಲ. ಕನಸುಗಳೊಂದಿಗೆ ದೊಡ್ಡ ಚಿಂತನೆಗಳಿಗೂ ನಾವು ತೊಡಗಿಕೊಳ್ಳದಿದ್ದರೆ ಹಗಲೂ ರಾತ್ರಿಯೂ ಬರೇ "ದೂಮ ಕಾಮ"ನ ಚಿತ್ರಗಳನ್ನು ನೋಡುತ್ತ ಕನಸಿನಲ್ಲಿಯೇ ಮೈಮರೆಯುವ ಬಾಲಿಶ ಕರ್ಮಕ್ಕೆ ಬಲಿಯಾಗಬಹುದು. ಬಣ್ಣ ಬಣ್ಣದ ಚಿತ್ರಗಳನ್ನು ಮಾತ್ರ ನೋಡಿ ನಲಿಯುವ ಬಾಲಿಶ ಹಂತದಿಂದ ಮುನ್ನಡಿಯಿಡಲು ಮನುಷ್ಯರ ಒಳನೋಟವು ಸ್ವಸ್ಥವಾಗಬೇಕು; ಬಲಿಷ್ಠವಾಗಬೇಕು. ಮಿದುಳಿನ ಸದುಪಯೋಗಕ್ಕೆ ಸಿದ್ಧತೆಯೂ ಬೇಕು; ಬದ್ಧತೆಯೂ ಬೇಕು. ಆದರೆ ನಾವು - "ಏನು ಮಾಡುತ್ತಿದ್ದೇವೆ? ಏಕೆ ಮಾಡುತ್ತಿದ್ದೇವೆ?" ಎಂಬ ಪರಿಜ್ಞಾನವಿಲ್ಲದೆ, ಯಾವುದೇ ಆಂತರಿಕ ಇಣುಕುನೋಟವಿಲ್ಲದೆ ನಮ್ಮ ಇಡೀ ಬದುಕು ಹೀಗೇ ಸರಿದು ಹೋಗುತ್ತಿದೆ. ತಮ್ಮ ಮರುಳು ಚರ್ಯೆಗಳನ್ನು ಸರಿಯಾಗಿಯೇ ಗುರುತಿಸಿಕೊಂಡವರನ್ನು ಕಂಡರೆ ಇಂತಹ ದೊಂಬರಾಟದ ಮಂದಿಗೆ ಆಗಾಗ ಸಿಟ್ಟು ಬರುವುದೂ ಇದೆ! ಇಷ್ಟಕ್ಕೇ ನಿಲ್ಲುವುದಿಲ್ಲ. ತಮ್ಮ ಸಮಗ್ರ ವ್ಯರ್ಥ ಕರ್ಮಗಳಿಗೂ ಸುಫಲದ ನಿರೀಕ್ಷೆ ಮಾಡುತ್ತಾರೆ. ಜೊತೆಗೆ ಗೆಲುವನ್ನು ತಮ್ಮ ಖಾತೆಗೂ - ಸೋಲನ್ನು ದೇವರ ಖಾತೆಗೂ ಸೇರಿಸಿ ಗಿಣಿವಿದ್ಯೆ ತೋರುವವರೂ ಇದ್ದಾರೆ. ದೈವ ನಿಂದನೆಯಿಂದಲೇ ಉಪಜೀವನ ನಡೆಸುವವರೂ ಇದ್ದಾರೆ. "ಮಾ ಫಲೇಷು ಕದಾಚನ" ಎಂದ ದ್ವಾಪರದ ಮಹಾತ್ಮನನ್ನು ವಾಚಾಮಗೋಚರ ಅರ್ಚಿಸುವವರೂ ಇದ್ದಾರೆ. ಇಂತಹ ವಿಚಾರವ್ಯಾಧಿಯನ್ನೇ "ಪ್ರಾರಬ್ಧ ಕರ್ಮ" ಎನ್ನುವುದು.


  ನಿತ್ಯ ಬದುಕಿನಲ್ಲಿ ನಾವು ಆಗಾಗ ಉಚ್ಚರಿಸುವ ಮತ್ತು ಅತಿಯಾದ ಬಳಕೆಯಿಂದ ಸವುಕಳಿಗೆ ಒಳಗಾಗಿರುವ ಒಂದು ಶಬ್ದ - ಪ್ರಾರಬ್ಧ ಕರ್ಮ. ಇದು ಹಿಂದಿನ ಗಳಿಕೆ ಅಥವ ಪಳೆಯುಳಿಕೆಯನ್ನು ಸೂಚಿಸುವ ಒಂದು ಪದ. ಬಹು ದೀರ್ಘಕಾಲದ ಬದುಕಿನ ಚಕ್ರದಲ್ಲಿ ಆಯಾ ಬದುಕುಗಳಲ್ಲಿ ಮೂಡಿದ ಕರ್ಮಗಳ ಸಂಚಿತ ಮೊತ್ತ ಎಂಬ ಭಾವಾರ್ಥದಲ್ಲಿ ಈ ಶಬ್ದದ ಬಳಕೆಯಾಗುತ್ತಿದೆ. ವಿಧಿ, ದೈವ, ಹಣೆಬರಹ, ಅದೃಷ್ಟ...ಮುಂತಾದ ಶಬ್ದರೂಪದಲ್ಲಿಯೂ ಪರೋಕ್ಷವಾಗಿ ಪ್ರಾರಬ್ಧ ಕರ್ಮವನ್ನು ನಾವು ಮುಟ್ಟಿ ಬರುತ್ತೇವೆ. "ಪ್ರಾಕ್ ಲಬ್ಧ" - ಅಂದರೆ ಮೊದಲೇ ಆದದ್ದು. ಮನುಷ್ಯರ ಸಾವಿರ ಪ್ರಾರ್ಥನೆ, ಆಶಯ, ಪ್ರಪತ್ತಿಗೆ ಕೆಲವೊಮ್ಮೆ ಅನಿರೀಕ್ಷಿತ ಅಡ್ಡಿಗಳು ಎದುರಾಗುತ್ತವೆ. ಪ್ರಾರಬ್ಧ ಕರ್ಮಗಳ ಸೂತ್ರಧಾರಿಯಾದ ಅದನ್ನು "ದೇವ ಪ್ರಪತ್ತಿ" ಎನ್ನುತ್ತಾರೆ. ನಂಬಿಕಸ್ಥ ನಾಯಿಯಂತೆ ಜನ್ಮ ಜನ್ಮಾಂತರಗಳಲ್ಲೂ ನಮ್ಮನ್ನು ಹಿಂಬಾಲಿಸುವ "ಸ್ವಭಾವ, ವರ್ತನೆಯ ನೆರಳು" - ಪ್ರಾರಬ್ಧ ಕರ್ಮದ ಪ್ರತಿಬಿಂಬವೇ ಆಗಿರುತ್ತದೆ! ( "ನಾಯಿ ನೆರಳು" ಎಂಬುದು ಇದೇ ಹಿನ್ನೆಲೆಯ - ವೇದಾಂತದ ದೃಷ್ಟಿ.)

  Character is destiny...ಮನುಷ್ಯರ ಸ್ವಭಾವ-ವರ್ತನೆಯಲ್ಲೇ ಅವರ ಭವಿಷ್ಯವಿದೆ ಎಂಬ ವೇದಾಂತಿಕ ವೈಚಾರಿಕತೆಯೂ ಭಾರತೀಯ ಶಾಸ್ತ್ರದಲ್ಲಿದೆ. ಕೆಲವೊಂದು ಉದ್ದೇಶ ಸಾಧನೆಗಾಗಿಯೂ ಪ್ರಾರಬ್ಧ ಕರ್ಮಗಳು ಜನ್ಮ ತಳೆದು ಸಹಜೀವನವನ್ನು ನಡೆಸಬೇಕಾಗುವುದಿದೆ. ರಾಮಾಯಣದ ಭರತನಿಗೆ ಹದಿನಾಲ್ಕು ವರ್ಷ ಶ್ರೀರಾಮನ ಪಾದುಕೆಯ ಆಶ್ರಯದಲ್ಲಿರುವ ಪ್ರಾರಬ್ಧವಿದ್ದರೆ ಶ್ರೀ ರಾಮನಿಗೆ ಅರಣ್ಯವಾಸಿಯಾಗುವ ಪತ್ನೀವಿರಹದ ಶೋಕವು ನಿಗದಿಯಾಗಿತ್ತು. ಎಲ್ಲ ಸಣ್ಣ ಸಣ್ಣ ಕರ್ಮಗಳೂ ವರ್ತಮಾನ-ಭವಿಷ್ಯದ ಯಾವುದೋ ಗಂಭೀರ ಫಲಪ್ರಚೋದಕ ಪ್ರತಿನಿಧಿಯಾಗಿ ಬರುತ್ತವೆ. ಬದುಕಿನ ಸ್ವ- ನಿರೀಕ್ಷಣೆಗೆ ವಿಧೇಯವಾಗುವ ಕೆಲವು ಸಂದರ್ಭವನ್ನು ಬಿಟ್ಟರೆ ಉಳಿದಂತೆ, ಮನುಷ್ಯರಿಗೆ ಪ್ರಾಪಂಚಿಕದ ಗುದ್ದುಗಳು ಬಿದ್ದಾಗ ಮತ್ತು ಇತರರಿಗೆ ಉಪದೇಶಿಸುವಾಗ ಮಾತ್ರ ಇಂತಹ ಪ್ರಾರಬ್ಧ ಕರ್ಮದ ನೆನಪಾಗುತ್ತದೆ. ಯಾವುದೇ ದೃಢತೆಯಿಲ್ಲದ ಮನುಷ್ಯರ ವ್ಯರ್ಥ ಕುಸುಕಾಟವದು. ಯಾವುದೇ ಸತ್ಕರ್ಮದ ಸಂಕಲ್ಪವನ್ನು ಮಾಡಲೂ ಆರಂಭಿಕ ಅರ್ಹತೆ ಯೆಂಬುದಿದೆ. ಉತ್ತಮವಾದ ಕರ್ಮಫಲಕ್ಕೆ ತಕ್ಕಂತಹ ಉತ್ತಮ ಕರ್ಮಗಳನ್ನೇ ನಾವು ಮಾಡುತ್ತಿದ್ದೇವೆಯೆ? ಎಂದು ಯೋಚಿಸಲು ತೊಡಗಿದಾಗ, ಎಚ್ಚರದ ನೆಲೆಯಲ್ಲಿ, ಸಂಕಲ್ಪ ಶಕ್ತಿಯು ತಾನಾಗಿಯೇ ಒದಗುತ್ತದೆ.

  ನಮ್ಮ ಇಂದಿನ ನಿತ್ಯಬದುಕುಗಳೆಲ್ಲವೂ ಸಮೂಹ ಸನ್ನಿಯ ಕರ್ಮಗಳೇ ಆಗಿಹೋಗಿವೆ! "ಯಾವುದೋ ಸೇವಾ ಸಂಸ್ಥೆ ನಡೆಸುತ್ತಿದ್ದೇವೆ; ಬಟ್ಟೆ ಕೊಡಿ; ಧನ ಸಹಾಯ ಮಾಡಿ..." ಎಂದೆಲ್ಲ ಹೇಳಿಕೊಳ್ಳುತ್ತ ಸಾರ್ವಜನಿಕರಿಂದ ತ್ಯಾಜ್ಯಗಳನ್ನೆಲ್ಲ ಸಂಗ್ರಹಿಸಿ, ಯಾವುದೇ ಬಂಡವಾಳವಿಲ್ಲದೆಯೂ ಖಾಯಂ ಗದ್ದಲ ನಡೆಸುವ "ಸೇವೆ ಎಂಬ ಹುಡುಗಾಟ"ದಲ್ಲಿ ತೊಡಗಿಕೊಂಡವರು ಈಗೀಗ ಹೆಚ್ಚುತ್ತಿದ್ದಾರೆ. ವಂತಿಗೆ ಎತ್ತಿ ಸೇವೆ ನಡೆಸುವ ಚಾಳಿಯನ್ನು ಯಾರೂ ಪ್ರೋತ್ಸಾಹಿಸಬೇಕಿಲ್ಲ. ಅಂತಹ ಸೇವಾ ಧುರಂಧರರು ಗುಡ್ಡೆಹಾಕುವ ಕಾರುಣ್ಯದಿಂದ ಸದ್ಭಾವಪ್ರೇರಿತ ದಾನಗಳು ಶಾಶ್ವತವಾಗಿ ಘಾಸಿಗೊಂಡಂತಾದೀತು. ಅಡ್ಡಹಾದಿ ಹಿಡಿಯುವಂತಹ ಜಗ್ಗಿ ಎಳೆಯುವ "ಗುಂಪು ಸೇವೆ"ಯಿಂದಲೂ ದೂರವಿರುವುದು ಯಾವತ್ತೂ ಕ್ಷೇಮ. ಇಂತಹ ದಾನ ಅಥವ ಕರುಣೆಯ ಪ್ರದರ್ಶನದಿಂದ ಸಮಾಜದಲ್ಲಿ "ಅಗೋಚರ ಕರ್ಮ"ಗಳು ಹೆಚ್ಚಾಗಿ, ಭಾವ ದಾರಿದ್ರ್ಯಕ್ಕೆ ದಾರಿಮಾಡಿದಂತಾಗಿ, ಸದ್ಭಾವಕ್ಕೆ ಹಾನಿಯಾಗುವ ಎಲ್ಲ ಸಾಧ್ಯತೆಗಳಿವೆ. ನಮ್ಮ ಯಾವತ್ತೂ ಕರ್ಮಗಳು ಸದುದ್ದೇಶದ ಸ್ವ-ಇಚ್ಛೆಯಿಂದ ಕೂಡಿದ್ದು, ಸಪಾತ್ರರಿಗೆ ಉಪಕರಿಸಿ - ಅದು ಸ್ವಂತಕ್ಕೆ ಆನಂದವನ್ನು ನೀಡುವಂತಿರಬೇಕು. 

  ಒಂದು ದಳ ಶ್ರೀ ತುಳಸಿ ಬಿಂದು ಗಂಗೋದಕವನ್ನು ಹೃತ್ಪೂರ್ವಕವಾಗಿ ನೀಡಿಯೂ ಧನ್ಯರಾಗಬಹುದು. ಜೂಟಕತನ-ಜಿಪುಣ ಭಾವವಿಲ್ಲದೆ ಸ್ವಪ್ರೇರಣೆಯಿಂದ ಮಾಡುವ ಪ್ರಾಮಾಣಿಕ ದಾನ, ಕೊಡುಗೆಗಳು ಮಾತ್ರ ಆನಂದದ ಅನುಭವವನ್ನು ನೀಡುತ್ತವೆ. ಯಾವುದೇ ಉತ್ತಮ ಕಾರ್ಯವನ್ನು ವೈಯ್ಯಕ್ತಿಕವಾಗಿ ನಡೆಸುವುದರಿಂದಲೇ ಸುಖೀ ಸಮಾಜದ ನಿರ್ಮಾಣವು ಸಾಧ್ಯ. ಯಾವುದೇ ರೂಪದ ಕರುಣೆಯನ್ನಾಗಲೀ ಪ್ರೀತಿಯನ್ನಾಗಲೀ ಸಹಾನುಭೂತಿಯನ್ನಾಗಲೀ ವ್ಯಕ್ತಿಯಿಂದ ವ್ಯಕ್ತಿಗೆ ವೈಯ್ಯಕ್ತಿಕವಾಗಿ - ನೇರವಾಗಿ ವರ್ಗಾಯಿಸುವುದೇ ಉತ್ತಮ ಮಾರ್ಗ. ಗುಂಪು ಸೇವೆಗಳೆಲ್ಲವೂ ಸ್ವಾರ್ಥ ಸಾಧನೆಯ ಗುಪ್ತ ಕಾರ್ಯಸೂಚಿಯನ್ನು ಹೊಂದಿರುವುದರಲ್ಲಿ ಸಂದೇಹಬೇಡ. ಗುಂಪುಗಳಲ್ಲಿ ಖೊಟ್ಟಿ ರಾಜಕೀಯವು ಮೂಗು ತೂರಿಸುವುದೂ ಸಹಜ. ಇಂತಹ ಸೇವೆಗಳು ಸ್ವಾರ್ಥದ ಬೂಟಾಟಿಕೆಯ ಕೊಳೆತ ಹಣ್ಣಿನಂತೆ. ನಮ್ಮ ಕರ್ಮದ ಸಂಚಿಯಲ್ಲಿ "ಕೊಳೆತ ಫಲವನ್ನು ತುಂಬಿಸಿದರೆ ಕಳಿತ ಫಲಗಳೂ ನಷ್ಟ"ವಾಗುವಂತಾದೀತು. ಈ ಭೂಮಿಯು ಕರ್ಮದಲ್ಲಿಯೇ ಬದುಕನ್ನು ಸವೆಸುವ ಮತ್ತು ಅವರವರ ಕರ್ಮ ಫಲವನ್ನು ಅವರವರೇ ಅನುಭವಿಸುವ ಕರ್ಮ ಸ್ಥಾನ. ಆದ್ದರಿಂದ ಬದುಕಿನ ಕರ್ಮಭೂಮಿಯಲ್ಲಿ ಗುಂಪುಗಾರಿಕೆಗೆ - ಸಮೂಹ ಸನ್ನಿಗೆ ಅವಕಾಶವೇ ಇಲ್ಲ. ಈ ಹಿನ್ನೆಲೆಯಲ್ಲಿ, ಕರ್ಮದ ಆಯ್ಕೆ ಮತ್ತು ವಿಧಾನ ದಲ್ಲಿಯೂ ಎಚ್ಚರವಿರಲಿ.

  ನಾವು ಬಹುಪಾಲು ಅರೆ ಎಚ್ಚರದಲ್ಲಿಯೇ ಬದುಕನ್ನು ಸವೆಸುವವರು. ಅಜಾಗ್ರತ ಸ್ಥಿತಿಯಲ್ಲಿಯೇ ನಮ್ಮ ಬದುಕಿನ ಎಲ್ಲ ಕರ್ಮಗಳೂ ಮುಗಿದು ಹೋಗುತ್ತವೆ. ಅಂತಹ ಸುಪ್ತಾವಸ್ಥೆಯನ್ನೇ ಇಚ್ಛೆಯಿಂದ ನೆಚ್ಚಿಕೊಂಡು ಸ್ವರ್ಗ ಭ್ರಮಿತರಾಗಿರುವವರೂ ಇದ್ದಾರೆ.  ಕೆಲವರು ನಡುನಡುವೆ ಎಚ್ಚರಗೊಂಡು ಏನು ಎತ್ತ ಎನ್ನುವ ಕ್ಷಣಿಕ ಆತ್ಮ ನಿರೀಕ್ಷಣೆಗೆ ತೊಡಗುವುದೂ ಇದೆ. ಪ್ರಾರಬ್ಧದ ನುರಿತಕ್ಕೆ ಒಳಗಾಗಿ, ಪ್ರಜ್ಞೆ ತಪ್ಪಿದ ಸ್ಥಿತಿಯಿಂದ ಹೊರಗೇ ಬರಲಾರದ ಭವಬಂದಿಗಳೂ ಇದ್ದಾರೆ. ಕತ್ತಲಿನಲ್ಲಿ ತಡಕಾಡುವ ಅಂತಹ ಮೌಢ್ಯ ತುಂಬಿದ ಬದುಕುಗಳಲ್ಲಿ ಪ್ರಾರಬ್ಧವು ಸವೆಯುವುದಿಲ್ಲ. ಭಾರವು ಕಡಿಮೆಯಾಗುವುದೂ ಇಲ್ಲ. ಯಾವುದೇ ಜನ್ಮದಲ್ಲಿ ಪ್ರಾರಬ್ಧ ಪೀಡಿತರಿಗೆ - ನಷ್ಟ ಜಾಸ್ತಿ; ಲಾಭ ಕಡಿಮೆ. ಹೀಗೆ, ಅಲೆಗಳು ಹೊಡೆದುಕೊಂಡು ಹೋದಲ್ಲಿಗೆ ಹೋಗಿ ಬೀಳುವ ಇಂತಹ ಬದುಕುಗಳು ತಮ್ಮ ಕರ್ಮದ ಹೊರಲಾಗದ ಭಾರವನ್ನು ಹೊರುತ್ತ...  ಕರ್ಮವೀರರಾಗಲಾಗದೆ ಕರ್ಮಭಾರವಾಗಿ ಹೋಗುತ್ತಾರೆ! ಆದರೆ ನಮ್ಮ ಹಣೆ ಬರಹ ಅಥವ ಪೂರ್ವ ಸಂಸ್ಕಾರವನ್ನು ಇಚ್ಛಾ ಶಕ್ತಿ, ಜ್ಞಾನ ಶಕ್ತಿ ಮತ್ತು ಕ್ರಿಯಾಶಕ್ತಿಯಿಂದ ಉನ್ನತೀಕರಣ ಗೊಳಿಸಲು ಸಾಧ್ಯವಿದೆ. ಇಂದಿನ ನಿರುಪಯೋಗಿ ಶಾಲಾ ಪರೀಕ್ಷೆಗಳಿಗಾಗಿ ಏಕಾಗ್ರ ಕರ್ಮಶೀಲರಾಗುವುದು ನಮಗೆ ಸಾಧ್ಯವೆಂದಾದರೆ ಸಮಗ್ರ ಬದುಕಿನ ಅಂತಿಮ ಪರೀಕ್ಷೆಗಾಗಿ ತಲ್ಲೀನತೆಯ ಕರ್ಮಯುದ್ಧವೂ ಅಸಾಧ್ಯವೇನಲ್ಲ. ಆದರೆ ಅದಕ್ಕೂ ಪೂರ್ವ ಸಿದ್ಧತೆ ಬೇಕು.

  ಆದರೆ ನಮ್ಮ ಸುವಿಚಾರ ದಾರಿದ್ರ್ಯದಿಂದಾಗಿ, "ಕರ್ಮ" ಎಂಬುದರ ನಮ್ಮ ಪರಿಕಲ್ಪನೆಯು ಉದ್ಯೋಗ, ಹಣ ಸಂಪಾದನೆ, ಮನೆ, ಐಷಾರಾಮ...ಎಂಬ ಸೀಮಿತ ವ್ಯಾವಹಾರಿಕ ಪರಿಧಿಯಲ್ಲೇ ನಿಂತು ಹೋಗುತ್ತಿದೆ. ಕುಟುಂಬಕ್ಕಾಗಿ, ಸಂಸಾರಕ್ಕಾಗಿ, ಬಂಧು - ಸ್ನೇಹಿತರಿಗಾಗಿ ನಡೆಸುವ ಚಟುವಟಿಕೆ - ಎಂಬಲ್ಲಿಗೇ ನಮ್ಮ ಕರ್ಮ ಸಿದ್ಧಾಂತವು ಮುಗಿದು ಹೋಗುತ್ತದೆ. ಆದರೆ ದಿನಗೂಲಿಯ ಬದುಕಿನಂತೆ ಅಂದಂದಿಗೇ ಗಳಿಸಿ ಕಳೆದುಬಿಡುವ ಮತ್ತು ಪ್ರತಿಫಲಾಪೇಕ್ಷೆಯಿಂದಲೇ ನಡೆಸುವ ಇವೆಲ್ಲ ಚಟುವಟಿಕೆಗಳೂ ಹೊಟ್ಟೆಪಾಡಿನ ಕರ್ಮಚಾರೀ ಕರ್ಮಗಳು. ನಷ್ಟವನ್ನು ಹೆಚ್ಚಿಸುತ್ತ ಲಾಭ ಕ್ಷಯವಾಗುವಂತೆ ಮಾಡುವ ಹಲವು ನಿತ್ಯಕರ್ಮಗಳ ಸಾಲಿಗೆ ಇಂತಹ ಒಟ್ಟಾರೆ ಹೊಡಚಾಟಗಳನ್ನು ಸೇರಿಸಬಹುದು. ಬದುಕಿನ ಒಂದೊಂದು ಇನ್ನಿಂಗ್ಸ್ ಮುಗಿಸಿದಾಗ ನಮ್ಮೊಂದಿಗೆ ಬರುವುದು ಇಂತಹ ಯಾವ ಉದ್ಯೋಗ-ಸಂಬಂಧಗಳ ಸ್ಕೋರೂ ಅಲ್ಲ; ಆಗ ನಮ್ಮ ಹೆಗಲೇರುವುದು ಮನಸ್ಸನ್ನು ಸಂಸ್ಕರಿಸಿಕೊಳ್ಳುತ್ತ ನಾವು ಸಂಗ್ರಹಿಸಿಕೊಂಡ ಉತ್ತಮ-ನೀಚ ಕರ್ಮಭಾವ ಗಳ ಮೊತ್ತ.

  ಅತ್ಯುಚ್ಚ ಶುದ್ಧ ಕರ್ಮವು ಆಚಾರ - ವಿಚಾರಗಳೆರಡೂ ಸ್ವಚ್ಛವಾಗಿರುವುದನ್ನು ಬಯಸುತ್ತದೆ. ಅದು ಹೇಗೆಂದರೆ "ಆಹಾರವೂ ಆರೋಗ್ಯಕರ; ಅದನ್ನು ಇರಿಸಿದ ತಟ್ಟೆಯೂ ಪರಿಶುದ್ಧ" - ಎಂಬಂತೆ. ಆದರೆ ಬದುಕಿನ ಕಣ್ಣುಮುಚ್ಚಾಲೆಯಲ್ಲಿ ಸಿಲುಕಿದವರನ್ನು ಇನ್ನೊಂದು ಬಗೆಯ ತೊಳಲಾಟವೂ ಬಾಧಿಸುವುದಿದೆ. "ದೇಹವೆಂಬ ತಟ್ಟೆಯು ಕೊಳೆಯಾಗಿದ್ದರೆ ಏನು ಮಾಡಲಿ? ಮನದ ಆಹಾರವು ಮೈಲಿಗೆಯಾಗಿದ್ದರೆ ಏನು ಮಾಡಲಿ?" ಎಂಬ ಪರಿತಾಪದಲ್ಲಿ ಮುಳುಗಿಹೋಗುವವರೂ ಇದ್ದಾರೆ. ಆದರೆ ಯಾವುದೇ ಪಶ್ಚಾತ್ತಾಪಗಳನ್ನೂ ಆಧರಿಸುವ ಕರ್ಮಭಾಗವಿದೆ. ಆದ್ದರಿಂದ ಸತ್ಕರ್ಮಗಳ ನಡಿಗೆಯನ್ನು ಎಲ್ಲಿಂದಲೂ ಆರಂಭಿಸಬಹುದು. ಹಿಂದೆ ಆದದ್ದು ಆಗಿ ಹೋಯಿತು. ಮುಂದೇನು ಮಾಡಬೇಕು? ಬದುಕಿನಲ್ಲಿ ಎಂತಹ ಎಚ್ಚರ ಬೇಕು? - ಎಂಬ ಚಿಂತನೆಗೇ ಹೆಚ್ಚು ಮಹತ್ವ ಕೊಡಬೇಕಾಗುತ್ತದೆ. ಏಕೆಂದರೆ ನಮ್ಮ ಬದುಕು ಎಂಬುದು ಇರುವವರೆಗೂ ಸತ್ಕರ್ಮಗಳಿಗೆ ಹಲವು ಅವಕಾಶವಿದೆ. ಉದ್ಧಾರವಾಗಬೇಕು ಎಂಬ ಯಾವುದೇ ಸಂಕಲ್ಪಕ್ಕೆ ವಯಸ್ಸಿನ ಮಿತಿ ಎಂಬುದು ಇಲ್ಲವೇ ಇಲ್ಲ. ಆದ್ದರಿಂದ ಪಾಪಿ ಎಂದುಕೊಳ್ಳುವ ಪಾಪಧ್ಯಾನದ ನಿರಾಶೆಯ ಬದಲು ಪಾಪವನ್ನು ಹಿಂದೆ ಬಿಟ್ಟು ಹೊಸ ಬದುಕನ್ನು ಕಟ್ಟಲು ಸಾಧ್ಯವಾದರೆ - ಅದು - ಪ್ರಾರಬ್ಧವನ್ನು ಸಕಾರಾತ್ಮಕವಾಗಿ ಪೋಷಿಸಿದಂತೆ. ಸ್ವಾಮಿ ವಿವೇಕಾನಂದರು "ಕೊಳೆಯನ್ನು ಕೊಳೆಯಿಂದ ತೊಳೆಯಲಾದೀತೆ? ಪಾಪವು ಪಾಪವನ್ನು ಗುಣಪಡಿಸೀತೆ? ದೌರ್ಬಲ್ಯಕ್ಕೆ ದೌರ್ಬಲ್ಯವು ಪರಿಹಾರವೆ? ಅದಲ್ಲ..." ಎನ್ನುತ್ತಿದ್ದರು. ಅವಿರತ ಬದುಕಿನ ನಡಿಗೆ ಎಂಬುದು ಉತ್ತಮ ಗುರಿಯನ್ನೇ ದೃಷ್ಟಿಸುತ್ತ ನಡೆದಾಗ ಸಂಕಲ್ಪಿತ ಗುರಿಯನ್ನು ಸಮೀಪಿಸುವುದರಲ್ಲಿ ಸಂಶಯವಿಲ್ಲ. ಆದ್ದರಿಂದ ಕೆಲವು ಪ್ರಾಪಂಚಿಕ ವ್ಯಾಧಿಗಳಿಗೆ - ನಮ್ಮೊಳಗನ್ನೇ ಶೋಧಿಸುವಂತಹ ಧನಾತ್ಮಕ ಮಾರ್ಗ ವನ್ನು ಬಳಸಿಕೊಳ್ಳಲು ಪ್ರಯತ್ನಿಸಬಹುದು.   

  ಒಳಗೊಳಗೇ ಹದವಾಗಿ ಬೇಯುವ ಧ್ಯಾನಸ್ಥ ಸ್ಥಿತಿಯನ್ನು ಅಪೇಕ್ಷಿಸುವ ಅಂತಃನಿರೀಕ್ಷೆ ಎಂಬುದು ಸತತ ಅಭ್ಯಾಸದಿಂದಲ್ಲದೆ ತಾನಾಗಿಯೇ ವಶವಾಗಲಾರದು. ಆದರೆ ಈ ಇಳಾಸಂತೆಯಲ್ಲಿ ಏಕಾಂತದ ಬದುಕೆಂಬುದು ಅಪ್ರಾಯೋಗಿಕವೂ ಹೌದು; ದುಸ್ಸಹವೂ ಹೌದು. ನಾವು ಬದುಕಿರುವಷ್ಟು ದಿನವೂ ನಮಗೆ ಜನಜಾತ್ರೆಯಲ್ಲಿಯೇ ಇರಬೇಕಾದ ಅನಿವಾರ್ಯತೆಯಿದೆ ಎಂಬುದು ವಾಸ್ತವ. ಹೀಗಿರುವಾಗ ಇದ್ದಬಿದ್ದ ಕೆಲಸಗಳನ್ನೆಲ್ಲ ನಾವಾಗಿಯೇ ಮೈಮೇಲೆ ಎಳೆದುಕೊಳ್ಳದೆ ನಿತ್ಯ ಬದುಕಿನ ಅನಿವಾರ್ಯ ಕರ್ಮಗಳಲ್ಲಿ ಮಾತ್ರ ತೊಡಗಿಕೊಳ್ಳುವುದು ಅವಶ್ಯಕ. ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸುವಷ್ಟಕ್ಕೇ ಯಾವುದೇ ಬಂಧನಗಳನ್ನು ಮಿತವಾಗಿ ಇರಿಸಿಕೊಂಡರೆ ಕ್ಲೇಶಗಳು ಕಡಿಮೆಯಾಗುತ್ತವೆ. ಕ್ಲೇಶಕಾರೀ ಬಂಧನಗಳಿಂದ ಎಚ್ಚರದ ಅಂತರವನ್ನು ಕಾಯ್ದುಕೊಳ್ಳುವುದು ನಮ್ಮ ಮನಸ್ಸಿನ ಹೊಯ್ದಾಟಗಳನ್ನು ನಿಯಂತ್ರಿಸಲು ಸಹಕಾರಿ. ಈ ಪಯಣದಲ್ಲಿ, ಸತ್ಸಂಗವನ್ನು ಮಾತ್ರ ಆಯ್ದುಕೊಂಡು ನಾಜೂಕಾಗಿ ಬದುಕಿನ ಪ್ರದರ್ಶನವನ್ನು ( LIFE SHOW) ನಡೆಸಿಕೊಡುವ ಜವಾಬ್ದಾರಿಯು ಪ್ರತೀ ಬದುಕಿಗೂ ಇದೆ. "ಬದುಕು - ಬದುಕಲು ಬಿಡು"  ಎಂಬ ಸರಳ ಸೂತ್ರವು ಕರ್ಮ ಭಾರವನ್ನು ತಗ್ಗಿಸಲು - ತನಗೂ ಪರರಿಗೂ ಉಪಕರಿಸಬಲ್ಲುದು. ಸಮರ್ಥ ಗುರುವಿನ ಮಾರ್ಗದರ್ಶನದಲ್ಲಿ ಸಮರ್ಪಣಾಭಾವದಿಂದ ನಡೆಸುವ ಯಾವುದೇ ಕರ್ಮಗಳಿಂದ ಪ್ರಾರಬ್ಧಕರ್ಮದ ಹೊರೆಯು ತಗ್ಗುತ್ತದೆ. ಪ್ರಾರಬ್ಧ ಕರ್ಮವು ಅನಾದಿಯಾದರೂ ಅದು - ಅನಂತವಲ್ಲ. ಪೀಡಿಸುವ ಕರ್ಮಫಲಗಳೂ ಅನಿವಾರ್ಯವೇನಲ್ಲ; ಎಲ್ಲವೂ ನಿವಾರ್ಯವೇ. ಸತ್ಕರ್ಮದಿಂದ ದುಷ್ಕರ್ಮದ ಭಾರವನ್ನು ಇಳಿಸಿಕೊಳ್ಳುವುದೇ ಪ್ರಾರಬ್ಧ ನಿವಾರಣೆಯ ದಾರಿ. ದಿನವೂ ರಾಡಿಗೊಳ್ಳುವ ಮನಸ್ಸನ್ನು ವಿನಮ್ರ ಶರಣಾಗತಭಾವದಿಂದ ಏಕಾಗ್ರಗೊಳಿಸಿಕೊಳ್ಳುತ್ತ ಬದುಕನ್ನು ಹದವಾಗಿಸಿಕೊಳ್ಳಬಹುದು.

  ಸತ್ಕರ್ಮದ ಕಠಿಣ ಹಾದಿಯಲ್ಲಿ ನಡೆಯುವ ಜೀವಿಗಳಿಗೆ ದಾರಿಯ ಶ್ರಮವನ್ನು ಸಹಿಸುವಂತೆ ನೆರಳು ನೀಡುವುದು  - ಶರಣಾಗತ ಭಾವ. ಈ ಶರಣಾಗತಿಯ ಭಾವ ವು - ಪೂರ್ಣ ನಿಷ್ಠೆ ಯನ್ನೂ ಅಪೇಕ್ಷಿಸುತ್ತದೆ. ನಿತ್ಯವೂ ನಾವು ಹಾದು ಹೋಗುವ ನಾಸ್ತಿಕ ಲೌಕಿಕವೆಂಬ "ತಳ್ಳುಗಾಡಿಯ ವರ್ಗ"ಕ್ಕೆ - ಆತ್ಮವೂ ಇಲ್ಲ; ಪರಲೋಕವೂ ಇಲ್ಲ; ದೇವರೂ ಇಲ್ಲ; ಅಂದ ಮೇಲೆ ಕರ್ಮವೂ ಇಲ್ಲ; ಧರ್ಮವೂ ಇಲ್ಲ...! ಎಲ್ಲ ಬಲ್ಲಿದನೆಂಬ - ಗುಗ್ಗುರು ಭೌತವಾದದ ಒಣ ಪ್ರತಿಷ್ಠೆ (!!) ಯ ಹಾದಿಯು ಯಾವುದೇ ಕರ್ಮಭಾರವನ್ನು - ತಾವಾಗಿಯೇ ಇರಿಸುವ ಒರೆಸುವ ಅಹಂಕಾರಲೇಪಿತ ಹಾದಿ. ಇಂತಹ "ನೇತಿ ನೇತಿ" ವಾದದವರೂ ಅಂತಿಮವಾಗಿ ಒಂದೇ ಗುರಿಯನ್ನು ತಲುಪಿದರೂ ಇದು ಬಹಳ ಕಠಿಣವಾದ ಮತ್ತು ಸುತ್ತುಬಳಸಿನ ದಾರಿ. ಈ ದಾರಿಯು ಸಾಮಾನ್ಯರಿಗೆ ಪ್ರಶಸ್ತವಲ್ಲ. ಈ ಯುಗಕ್ಕೆ ಹೆಚ್ಚು ಹೊಂದುವ ಸರಳ ಮಾರ್ಗವೇ ಪೂರ್ಣ ನಿಷ್ಠೆಯ ಶರಣಾಗತ ಭಕ್ತಿಭಾವ.  ವೈರಾಗ್ಯವಿರಬೇಕು ಕರ್ಮ ಬಿಡದಿರಬೇಕು ;ಹಿತವಾಗಿ ಬೆರೆಸಿಯೇ ಭಾರ ತಗ್ಗಿಸಬೇಕು; ಶುಚಿಯ ಹಿಗ್ಗಿಸಬೇಕು...  

  ಯಾವುದೇ ಕರ್ಮವು ವ್ಯಕ್ತಿಯ ಚೈತನ್ಯದ ಮೇಲೆ ಪ್ರಭಾವ ಬೀರಿ ಆಳವಾದ ಗುರುತನ್ನು ಮೂಡಿಸಬೇಕಾದರೆ ಅದು ಹೃತ್ಪೂರ್ವಕವಾಗಿರಬೇಕು - ಅಥವ - ಭಗವತ್ ಪ್ರೇರಿತ ಮತ್ತು ಭಗವದರ್ಪಿತವಾಗಬೇಕು. ಆಗ ಕರ್ಮದ ನಡೆಯು ಸುಲಲಿತವಾಗುತ್ತದೆ. "ಪೂಜ್ಯರೇ, ಎಷ್ಟೇ ಯತ್ನಿಸಿದರೂ ಮನಸ್ಸು ಏಕಾಗ್ರವಾಗಲೊಲ್ಲದು. ಧ್ಯಾನಕ್ಕೆಂದು ಕೂತರೆ ನನ್ನ ಪ್ರೀತಿಯ ಮಗನೇ ಮನಸ್ಸಿನಲ್ಲಿ ಸುತ್ತುತ್ತಾನೆ. ಏನು ಮಾಡಲಿ?" ಎಂದ ಸಂಸಾರೀ ಭಕ್ತೆಯೊಬ್ಬರಿಗೆ ಶ್ರೀ ರಾಮಕೃಷ್ಣ ಪರಮಹಂಸರು "ಹಾಗಿದ್ದರೆ ಆ ಮಗನಲ್ಲೇ ನಿನ್ನ ಮನಸ್ಸನ್ನು ಕೇಂದ್ರೀಕರಿಸು; ಅವನನ್ನೇ ಭಗವಂತನೆಂದುಕೊಂಡು ಏಕಾಗ್ರತೆಯಿಂದ ಧ್ಯಾನಿಸು" ಎಂದು ಸರಳ ಮಾರ್ಗವನ್ನು ತೋರಿಸಿದ್ದರು. ಅದು ಭಕ್ತರ ಭಾವ ಜಗತ್ತು. ಸುಲಭಕ್ಕೇ ಜೋತುಬಿದ್ದಿರುವ ಇಂದಿಗೆ - ಭಕ್ತಿಮಾರ್ಗವೇ ಸುಲಭ ಅನುಕರಣೀಯ ಎನ್ನುವುದೂ ಇದಕ್ಕೇ.

  ಕೆಲವು ವರ್ಷಗಳ ಹಿಂದೆ ನಾನು ಒಬ್ಬ ಸಂತ(?)ನನ್ನು ನೋಡಿದ್ದೆ. ಆ ವ್ಯಕ್ತಿಯು ಪೂಜೆ ಮಾಡುವಾಗ ಮಣಮಣ ಹೇಳುತ್ತಿದ್ದ ಮಂತ್ರದ ನಡುನಡುವೆ "ಏನಪ್ಪ? ಇಲೆಕ್ಟ್ರಿಕ್ ಬಿಲ್ ಕಟ್ಟಿದ್ಯಾ?", "ಕಾರಿಗೆ ಪೆಟ್ರೋಲ್ ತುಂಬಿಸಿದ್ಯಾ?" ಎಂದು ತನ್ನ ಹಿಂಬಾಲಕರೊಂದಿಗೆ ಅಸಂಬದ್ಧ ಮಾತುಕತೆಯಾಡುತ್ತಿದ್ದರು. "ಕರ್ತೃ ಎಲ್ಲೋ - ಕರ್ಮ ಎಲ್ಲೋ - ಕ್ರಿಯೆ ಎಲ್ಲೋ" ಅನ್ನಿಸುವಂತೆ ಯಾವುದೇ ತನ್ಮಯತೆಯಿಲ್ಲದೆ ಆ ಮಹಾನುಭಾವರು ದೇವರಿಗೆ ಆರತಿಯನ್ನೂ ಬೆಳಗುತ್ತಿದ್ದರು. ಇದು ಲೌಕಿಕರ ಕರ್ಮಲೋಕದ ತ್ರಿಶಂಕು ಸ್ಥಿತಿ! ಯಾವುದೇ ಅಸ್ಥಿತ ಕರ್ಮಗಳು ಗೀಚಿದ ಗೆರೆಗಳಂತೆ; ಯಾವ ಸದರ್ಥವನ್ನೂ ಹುಟ್ಟಿಸಲಾರವು; ಆದರೆ ಒಮ್ಮೊಮ್ಮೆ ಅನರ್ಥಗಳನ್ನು ಹುಟ್ಟಿಸಬಲ್ಲವು! ಆದ್ದರಿಂದ ನಾವು ನಡೆಸುವ ಪ್ರತೀ ಕರ್ಮದಲ್ಲೂ ನಾವಿರಬೇಕು; ಶ್ರದ್ಧಾರೂಪದಲ್ಲಿ ನಾವು ಕಾಣಿಸಬೇಕು. ಅದೇ ನಿಜವಾದ ಕರ್ಮ. ಶ್ರದ್ಧಾಭಾವರಹಿತವಾದ ಕರ್ಮಗಳು ಕಾಲಹರಣವಲ್ಲದೆ ಮತ್ತೇನಲ್ಲ. ಅಂತಹ ವ್ಯರ್ಥ ಕರ್ಮಗಳು ತ್ಯಜಿಸುವುದಕ್ಕೆ ಯೋಗ್ಯ. ಪೂರ್ಣ ಗಮನವಿಟ್ಟು ಪ್ರೀತಿಯಿಂದ ಉಣ್ಣಿಸದಿದ್ದರೆ ನಮ್ಮ ಪುಟ್ಟ ಮಗುವೂ ಊಟಮಾಡುವುದಿಲ್ಲ - ಅಲ್ಲವೆ? ಪ್ರೇಮ ಭಕ್ತಿಯಿಂದ ಕೂಡಿದ ಕರ್ಮಗಳು ಮಾತ್ರ ಸ್ವೀಕೃತವಾಗುತ್ತವೆ; ಉಳಿದುದೆಲ್ಲವೂ ರದ್ದಿ. ಏಕನಿಷ್ಠೆಯಿಂದ ಮಾಡಲಾಗದ ಸೇವೆಯು ಸ್ವಂತಕ್ಕೆ ತೃಪ್ತಿ ನೀಡದು; ಎಲ್ಲೂ ಸ್ವೀಕಾರಾರ್ಹವೆನ್ನಿಸದು; ತೃಪ್ತಿಯೂ ಇಲ್ಲ; ಫಲವೂ ಸೊನ್ನೆ. ಸ್ವಹಿತಾಸಕ್ತಿರಹಿತವಾಗಿ ನಡೆಸುವ ಕರ್ಮಗಳಿಂದ ಯಾವುದೇ ದುಃಖವಿಲ್ಲ. ಇಂತಹ ನಿಷ್ಕಾಮ ಕರ್ಮನಿರತರಿಗೆ ಶ್ರದ್ಧೆ ಮತ್ತು ಏಕಾಗ್ರತೆ ಯು ಅತೀ ಅವಶ್ಯ.

  ಈ ಮನುಕುಲದಲ್ಲಿ ಮೂರು ಬಗೆಯ ಮಹಾತ್ಮರಿದ್ದಾರೆ. ಒಂದು - ಪಡೆದು ಬಂದವರು ಅಥವ ಪೂರ್ವ ಸುಕೃತದಿಂದ ಮಹಾತ್ಮರಾದವರು, ಇನ್ನೊಂದು - ತಮ್ಮ ಪ್ರಾಮಾಣಿಕ ಮತ್ತು ನಿಸ್ವಾರ್ಥ ಪರಿಶ್ರಮದಿಂದ ಉನ್ನತಿಗೇರಿದವರು, ಮೂರನೆಯದು - ಪತ್ರಿಕೆ ಮತ್ತು ಪ್ರಚಾರ ಮಾಧ್ಯಮಗಳ ಒತ್ತಾಸೆಯಿಂದ ಮಹಾತ್ಮರೆನ್ನಿಸಿಕೊಳ್ಳುವವರು. ಕೊನೆಯದು, ದುರ್ದೈವೀ ವರ್ಗ! ಶ್ರದ್ಧೆ, ಏಕಾಗ್ರತೆಯಿಂದಲೇ ಬದುಕನ್ನು ಕಟ್ಟಿಕೊಂಡ ಸುಬ್ರಹ್ಮಣ್ಯ ಭಾರತಿ, ರವೀಂದ್ರನಾಥ ಠಾಕೂರ್, ಅಂಬಿಕಾತನಯದತ್ತ, ಕುವೆಂಪು... ಇವರೆಲ್ಲರೂ ಮೊದಲನೆಯ ವರ್ಗಕ್ಕೆ ಸೇರಿದವರು. ಇವರು ಯಾವುದೇ ಫಲದ ಹಿಂದೆ ಓಡಲಿಲ್ಲ; ಫಲವೇ ಅವರನ್ನು ಹಿಂಬಾಲಿಸಿತು! "ಈ ವಿಶ್ವದಲ್ಲಿ ಚಲಿಸುವುದರಲ್ಲಿ ಎಲ್ಲದರಲ್ಲಿಯೂ ಭಗವಂತನು ನೆಲೆಸಿದ್ದಾನೆ; ಆತನು ನಿನಗೆ ಕೊಟ್ಟುದನ್ನು ನೀನು ಅನುಭವಿಸಿ ಆನಂದಿಸು; ಯಾರೊಬ್ಬರ ಐಶ್ವರ್ಯಕ್ಕೂ ಆಸೆ ಪಡಬೇಡ.." ಎಂಬ ಉಪನಿಷದ್ವಾಣಿಯನ್ನು ಬದುಕಿಸಿ -ಬದುಕಿ -ಸಾಧನೆ ಮಾಡಿದ ಯಾವುದೇ ಮಹಾತ್ಮರು ಕರ್ಮಯಜ್ಞಕ್ಕೆ ಮಾದರಿಯಾಗಬಲ್ಲರು.
 
  ಅಪೂರ್ವ ಅವಕಾಶಗಳೇ ಅದೃಷ್ಟ. ಯಾವುದೇ ಅದೃಷ್ಟದ ಹಿಂದೆ ಪ್ರಾರಬ್ಧದ ಕರಾಮತ್ತು ನಿಶ್ಚಿತ. ದ್ವೇಷ, ಠಕ್ಕು, ಅಹಂಕಾರ, ಮತ್ಸರ, ಮಮಕಾರಗಳಿಂದ ರಿಂಗಣಗುಡುತ್ತಿರುವ ನಮ್ಮ ಸಾಂಸಾರಿಕ ಮನಸ್ಸನ್ನು ಏಕಾಗ್ರಗೊಳಿಸಲು ಬಯಸುವವರು ಮೊದಲಿಗೆ ಹದವಾಗಿ, ಮಿದುವಾಗಬೇಕು. ಸಚ್ಚಿಂತನೆಗಳಿಂದ ಮನಸ್ಸನ್ನು ನಾದಬೇಕು. ಚಂಚಲತೆಯನ್ನು ತಹಬಂದಿಗೆ ತರಲು ಪ್ರಯತ್ನಿಸಬೇಕು. ಯೋಗಕ್ರಿಯೆಗಳ ಸಹಾಯವನ್ನೂ ಪಡೆದುಕೊಳ್ಳಬಹುದು. ಎಣ್ಣೆಯ ದೀಪವನ್ನು ಒಂದು ನಿಮಿಷ ಕಾಲ ನೋಡುತ್ತ ಆ ದೀಪದಲ್ಲೇ ಬುದ್ಧಿಯನ್ನು ನೆಲೆಗೊಳಿಸಲು ಪ್ರಯತ್ನಿಸುತ್ತ - ಮುಂದೆ ಆ ಅವಧಿಯನ್ನು ದೀರ್ಘಗೊಳಿಸುವ ವ್ಯಾಯಾಮದಿಂದ ಏಕಾಗ್ರತೆಯ ಶಕ್ತಿಯನ್ನು ಹೆಚ್ಚಿಸಬಹುದು. ಸ್ವಲ್ಪ ಹೊತ್ತು ಏನನ್ನೂ ಯೋಚಿಸದೆ ಮನಸ್ಸನ್ನು ಶೂನ್ಯಗೊಳಿಸುವ ಪ್ರಯತ್ನದ (ಅಸಾಧ್ಯ ಎನ್ನಿಸುವ?!) ಈ ವ್ಯಾಯಾಮವು ಎಲ್ಲ ವಯಸ್ಸಿನವರಿಗೂ ಉಪಯುಕ್ತ. ಈ ವ್ಯಾಯಾಮದಿಂದ ಮಿದುಳಿನ ಕೋಲಾಹಲ - ಉದ್ವೇಗಗಳು ತಗ್ಗುತ್ತವೆ. ಹೀಗೆ ಹದಗೊಳ್ಳುವ ಮನಸ್ಸನ್ನು ನಿಧಾನವಾಗಿ ಸಮೀಪಿಸಿ ನಿಷ್ಕಲ್ಮಷ ಸ್ನೇಹದ ಹಗ್ಗದಿಂದ ಬಂಧಿಸಿದಾಗ ಮನಸ್ಸಿನೊಂದಿಗೆ ಸ್ನೇಹವು ಸ್ಥಾಪನೆಯಾಗಿ, ತಳಮಳಗಳು ಹದಗೊಂಡು ಪ್ರಶಾಂತ ಭಾವವು ಹೊಮ್ಮುತ್ತದೆ. 

  ಇಂದು ದೊಡ್ಡ ದೊಡ್ಡವರೆಂದು ಸಾಮಾಜಿಕವಾಗಿ ಗುರುತಿಸಿಕೊಂಡ ಎಲ್ಲರೂ ಪ್ರಕ್ಷುಬ್ಧ ಭಾವಬುದ್ಧಿಯ ದೆಸೆಯಿಂದಲೇ ಬಳಲುತ್ತಿದ್ದಾರೆ. ಅದಕ್ಕೆ ಕಾರಣ - ಗೊತ್ತು ಗುರಿಯಿಲ್ಲದ ತಳಮಳ; ಅನುಪಯುಕ್ತ ಕಡ್ಡಿಗಳನ್ನು ಹೆಕ್ಕಿ ಹೆಕ್ಕಿ ರಾಶಿಹಾಕಲು ಅವರೆಲ್ಲರೂ ಪಡುತ್ತಿರುವ ಗುಡ್ಡದಂತಹ ಪರಿಶ್ರಮ. ತನ್ಮೂಲಕ ಎಷ್ಟೇ ಗಳಿಸಿ, ವಸ್ತುಗಳನ್ನು ಖರೀದಿಸಿ ರಾಶಿ ಹಾಕಿದ್ದರೂ ಅಶಾಂತಿಯ ಕೋಲಾಹಲದಲ್ಲಿ ಮುಳುಗಿರುವವರೆಲ್ಲರೂ ಸ್ವಸ್ಥ ಸುಖಕ್ಕಾಗಿ ಚಡಪಡಿಸುತ್ತಿದ್ದಾರೆ. ಅವರಿಗೆ ಹಸಿವೆಯಿಲ್ಲ; ಊಟ ಸೇರದು. ನಾಳೆಯ ಚಿಂತೆಯಲ್ಲಿ ನಿದ್ದೆಯೂ ಬಾರದು. ಅಪರಿಮಿತ ಆಸೆಯನ್ನು ನಿಗ್ರಹಿಸದೆ ಅಂತಹ ಮನಸ್ಸುಗಳ ತಧಿಗಿಣತ ತಪ್ಪದು. ಕಂಬಳಿಯ ಆಸೆಯಿಂದ ನುಗ್ಗಿ, ಕಂಬಳಿಯೆಂದುಕೊಂಡು ಕರಡಿಯನ್ನು ಹಿಡಿಯುವವರು ನಾವು. ಆಸೆಯ ಕರಡಿಯ ಹಿಡಿತಕ್ಕೆ ಸಿಲುಕಿದ ಮೇಲೆ - ಕರಡಿ ಕಂಬಳಿಗಿಂತ ಪ್ರಾಣವೇ ಶ್ರೇಷ್ಠವೆಂದು ಕೆಲವರಿಗೆ ಜ್ಞಾನೋದಯವಾಗುವುದೂ ಇದೆ.  ಒಟ್ಟಿನಲ್ಲಿ ಚಂಚಲ ಕ್ಷುದ್ರ ಆಸೆಗಳೇ ನಮ್ಮನ್ನು ಆಳುತ್ತಿವೆ. ಇಂತಹ ಯಾವುದೇ ತಳಮಳಗಳಿಲ್ಲದ ಸ್ವಸ್ಥ ಶಾಂತ ಮನಸ್ಸು ಮಾತ್ರವೇ ಸುಖವನ್ನು ಇಡಿಯಾಗಿ ಗ್ರಹಿಸಿ ಅನುಭವಿಸಬಲ್ಲದು ಎನ್ನುವ ಪ್ರಜ್ಞೆ ಉದಯಿಸುವುದಕ್ಕೂ ಪರಿಶ್ರಮ ಬೇಡವೆ?

  ಆದ್ದರಿಂದ ವ್ಯಾವಹಾರಿಕ ನಿತ್ಯ ಕರ್ಮಗಳಲ್ಲಿಯೂ ಸಂಯಮಪೂರ್ಣ, ಧ್ಯಾನಸ್ಥ, ಶುದ್ಧ ಭಾವ ದ ಪ್ರಜ್ಞೆಯನ್ನು ಮೂಡಿಸಿಕೊಳ್ಳುವ ಅಗತ್ಯವಿದೆ. ನಮ್ಮ ಒಂದೊಂದು ಉಸಿರೂ ಪ್ರಾರಬ್ಧದ ಪ್ರೇರಕ; ಪೂರಕ ಮತ್ತು  ನಿಯಂತ್ರಕನೂ ಹೌದು. ವರಾಹ - ನರಸಿಂಹ, ಶ್ರೀರಾಮಾವತಾರ, ಶ್ರೀ ಕೃಷ್ಣಾವತಾರಗಳಿಗೆ ಕಾರಣರಾದ ಹಿರಣ್ಯಾಕ್ಷ - ಹಿರಣ್ಯಕಶಿಪು, ರಾವಣ - ಕುಂಭಕರ್ಣ, ಶಿಶುಪಾಲ - ದಂತವಕ್ರ ಎಂಬ ರಕ್ಕಸರ ವಿಚಾರವು ಪೌರಾಣಿಕ ಕತೆಗಳು. ಸನಕ ಸನಂದನ ಮೊದಲಾದ ಮುನಿಗಳು ಶ್ರೀಮನ್ನಾರಾಯಣನ ದರ್ಶನಕ್ಕೆ ವೈಕುಂಠಕ್ಕೆ ಬಂದಾಗ ಶ್ರೀಮನ್ನಾರಾಯಣನ ದ್ವಾರಪಾಲಕರಾಗಿದ್ದ ಜಯವಿಜಯರೆಂಬ ದ್ವಾರಪಾಲಕರು ಅವರನ್ನು ತಡೆದು ನಿಲ್ಲಿಸಿ ಸಂಪಾದಿಸಿದ್ದ ಶಾಪದ ಫಲವಿದು - ಎಂಬುದು ಕತೆ. ಪುರಾಣವನ್ನು ಗೌರವಿಸುವವರು ಶಾಪ ವಿಶಾಪಗಳನ್ನೆಲ್ಲ ದೈವ ಸಂಕಲ್ಪ ಎಂದುಕೊಂಡರೂ ಅನಂತರ ಹರಿದ್ವೇಷಿಗಳಾಗಿ ಮೂರು ಜನ್ಮಗಳನ್ನು ಜಯವಿಜಯರು ಕಳೆದುದನ್ನು ಪ್ರಾರಬ್ಧದ ಸಾಲಿಗೇ ಸೇರಿಸಬಹುದು. ಕರ್ಮಮಾರ್ಗದಲ್ಲಿ ಯಾವುದೇ ಜೀವವು ಅಪ್ರಸ್ತುತ; ಇಲ್ಲಿ - ಕರ್ಮವೇ ನಿಯತಿಯನ್ನು  ನಿರ್ದೇಶಿಸುತ್ತದೆ. ಆದ್ದರಿಂದಲೇ ಕರ್ಮಮಾರ್ಗವು ಬಹಳ ಕಠಿಣವಾದ ಹಾದಿ. ಇಲ್ಲಿ. ಯಾವುದೇ ಕರ್ಮಗಳು ಸೃಷ್ಟಿಯ ನಿರ್ದೇಶಿತ ಚಲನೆಗೆ ಪೂರಕವಾಗಿ ನಡೆದಾಗ ಅದು ಸತ್ಕರ್ಮವಾಗುತ್ತದೆ; ನಿಯಮಾಂತರವಾದಾಗ ದುಷ್ಕರ್ಮವಾಗುತ್ತದೆ. ಇದೇ ಪ್ರಾರಬ್ಧದ ನೀತಿ.  

  ಪ್ರಕೃತಿಯ ಶ್ರುತಿಗೆ ಜೀವಜಗತ್ತಿನ ಶ್ರುತಿಯು ಪ್ರೀತಿಯಿಂದ ಹೊಂದಿಕೊಂಡರೆ ಆಗ ಅದು ಸುನಾದವಾಗುತ್ತದೆ; ಕರ್ಣಾಮೃತವಾಗುತ್ತದೆ. ಶ್ರುತಿಸೇರದ ಯಾವುದೇ ಹಾಡು ತಲೆನೋವನ್ನಲ್ಲದೆ ಆನಂದವನ್ನು ಕೊಟ್ಟೀತೆ? ಆದ್ದರಿಂದ ಪ್ರಕೃತಿಯೊಂದಿಗೆ ಹದವಾಗಿ ಶ್ರುತಿ ಸೇರಿಸುವಂತಹ ಕರ್ಮಭಾವವು ನಮ್ಮದಾಗಬೇಕು. ನಮ್ಮ ಕರ್ಮಗಳಿಗೆ ಶರಣಾಗತಿಯ - ಕರುಣೆ, ಪ್ರೀತಿಗಳೆಂಬ ಸಹಜತೆ ಯ ಭಾವಸಿಂಚನವಾಗಬೇಕು. ಬದುಕಿನ ಸುದೀರ್ಘ ಚಕ್ರದ ಹಲವು ಹಂತದಲ್ಲಿ ನಮ್ಮಿಂದ ಘಟಿಸಲ್ಪಡುವ ಸತ್ಕರ್ಮ ಮತ್ತು ದುಷ್ಕರ್ಮಗಳನ್ನು ತಾಳೆ ಹಾಕಿ, ಒಟ್ಟು ಮೊತ್ತದ ಆಧಾರದಲ್ಲಿ ಪ್ರಾರಬ್ಧ ಕರ್ಮಗಳ ಸಂಚಿಯು ತನ್ನ ಗಾತ್ರವನ್ನು ಹಿಗ್ಗಿಸುತ್ತ ಅಥವ ತಾನೇ ಕುಗ್ಗುತ್ತ ನಮ್ಮ ಬೆನ್ನೇರುತ್ತದೆ. "ಒಳ್ಳೆಯವರಾಗಿ; ಒಳ್ಳೆಯದನ್ನು ಮಾಡಿ; ಅದರಿಂದ ಒಳ್ಳೆಯದೇ ಲಭಿಸುತ್ತದೆ" - ಎಂಬುದೇ ಕರ್ಮ ಸಿದ್ಧಾಂತದ ಸಂದೇಶ; ಸುಲಭ ಎನ್ನಿಸುವ - ಆದರೆ ಅತಿ ಕಠಿಣ ಸಿದ್ಧಾಂತವಿದು. ಸಂಚಿತ ಕರ್ಮ ಶೇಷವು ನಿಶ್ಶೇಷವಾಗುವವರೆಗೂ ನಮ್ಮನ್ನು ಎಡೆಬಿಡದೆ ಹಿಂಬಾಲಿಸುವುದು - ಪ್ರಾರಬ್ಧ....! ಅವರವರ ಕರ್ಮಫಲವನ್ನು ಅವರವರೇ ಉಂಡು ಮುಗಿಸಬೇಕಾದ್ದು "ಆಧ್ಯಾತ್ಮಿಕ ಭೌತ ಶಾಸ್ತ್ರ" ದ ಕಟ್ಟುನಿಟ್ಟಿನ ನಿಯಮ. ಈ ಕರ್ಮ ಸಿದ್ಧಾಂತವು ಕ್ರಿಯಾ ಶುದ್ಧಿ ಯನ್ನು ಒತ್ತಿ ಹೇಳುತ್ತದೆ.

  ಒಬ್ಬಳು ಗೃಹಿಣಿಯು ಚಪಾತಿ ಮಾಡಲು ಅಣಿಯಾಗುತ್ತಾಳೆ. ಮೊದಲು ಹಿಟ್ಟನ್ನು ಸಿದ್ಧಪಡಿಸಿ ಒಂದೇ ಅಳತೆಯಲ್ಲಿ ಉಂಡೆ ಮಾಡಿ ಒಂದೊಂದಾಗಿ ಲಟ್ಟಿಸುತ್ತಾಳೆ. ಅನಂತರ ಬಿಸಿಯಾದ ಕಾವಲಿಯ ಮೇಲೆ ಲಟ್ಟಿಸಿದ ಹಿಟ್ಟನ್ನು ಒಂದೊಂದನ್ನೇ ಹಾಕಿ ಹದವಾಗಿ ಬೇಯಿಸುತ್ತಾಳೆ. ಅಷ್ಟರಲ್ಲಿ ಅದೆಲ್ಲಿಂದಲೋ ಕೆಲವು ಇರುವೆಗಳು ಲಟ್ಟಿಸಿ ಇಟ್ಟ ಹಿಟ್ಟಿನ ಸಮೀಪದಲ್ಲಿ ಸುಳಿಯತೊಡಗುತ್ತವೆ. ಕಾವಲಿಗೆ ಹಾಕುವ ಮೊದಲು ತನ್ನ ಕಣ್ಣಿಗೆ ಕಂಡ ಇರುವೆಗಳನ್ನು ಆಕೆಯು ದೂರ ಸರಿಸುತ್ತಾಳೆ. ಒಮ್ಮೊಮ್ಮೆ ಆಕೆಯ ಗಮನಕ್ಕೆ ಬಾರದೆ, ಕೆಲವು ಇರುವೆಗಳು ಕಾವಲಿಯ ಬಿಸಿಗೆ ಗತಪ್ರಾಣವಾಗುವುದೂ ಇದೆ. ಹೊಟ್ಟೆ ತುಂಬಿಸಿಕೊಳ್ಳುವ ಸಹಜ ಪ್ರಯತ್ನದಲ್ಲಿ ಅವುಗಳು ತಮ್ಮ ಜೀವನ ಯಾತ್ರೆಯನ್ನೇ ಮುಗಿಸಿಬಿಡುತ್ತವೆ. ಬದುಕುವ  ಸಹಜ ಆಸೆಯು ಕೆಲವು ಇರುವೆಗಳ ಅಂತ್ಯಕ್ಕೆ ಕಾರಣವಾದರೆ ಅದೇ ಸಂದರ್ಭದಲ್ಲಿ ಜೊತೆಯಾಗಿದ್ದ - ಕೆಲವು ಇರುವೆ ಬಂಧುಗಳು ಪಾರಾಗಿ ಬಿಡುತ್ತವೆ. ತಪ್ಪಿಸಿಕೊಂಡ ಇರುವೆಗಳದು ಒಂದು ಗುಂಪಾದರೆ ಸುಟ್ಟುಕೊಂಡ ಇರುವೆಗಳದ್ದು ಇನ್ನೊಂದು ಲೆಕ್ಕ. ಈ ಘಟನೆಗೆ ಸಾಕ್ಷಿಯಾದ ಗೃಹಿಣಿಯದ್ದು ಮಗದೊಂದು ಶೋಕ ಪ್ರಾರಬ್ಧ!  

  ಭೀಕರ ವಿಮಾನ ದುರಂತದಲ್ಲಿ ಎಲ್ಲ ಪ್ರಯಾಣಿಕರೂ ಪಾರಾಗುವುದಿದೆ; ಕೆಲವರು ಮಾತ್ರ ಸತ್ತು ಕೆಲವರು ಜೀವ ಉಳಿಸಿಕೊಳ್ಳುವುದೂ ಇದೆ. ಬರಿಗಣ್ಣಿಗೆ ಚಮತ್ಕಾರ ಎನ್ನಿಸುವ ಇಂತಹ ಸಂದರ್ಭಗಳಿಗೆ ವಿವರಣೆ ಕೊಡುವಲ್ಲಿ ಮನುಷ್ಯಮಾತ್ರರು - ಸೋಲುತ್ತಾರೆ. ನಿತ್ಯ ಕರ್ಮಗಳಲ್ಲಿಯೂ ಪ್ರಾರಬ್ಧವು ಇಣುಕಿ ವಿಜೃಂಭಿಸುವಾಗ - ಅದು ಅರ್ಥವಾದರೆ, ಮಾತು ನಿಲ್ಲುತ್ತದೆ. ಶ್ರೀ ರಾಮಕೃಷ್ಣ ಪರಮಹಂಸರು "ಸತ್ - ಅಸತ್, ಒಳ್ಳೆಯದು - ಕೆಟ್ಟದ್ದು, ಪಾಪ - ಪುಣ್ಯ ಇವೆಲ್ಲವೂ ಭಗವಂತನ ಮಾಯೆಯ ಐಶ್ವರ್ಯ; ಮೆಣಸಿನಕಾಯಿ ತಿಂದರೆ ಖಾರ ಹತ್ತಿಕೊಳ್ಳುವುದಿಲ್ಲವೆ? ಇವೆಲ್ಲವೂ ಹಾಗೇ... ಕರ್ಮಫಲ ಎಂಬುದು ಉಂಟು.. ಆದರೆ ಇದು ಬಹು ದೂರದ ವಿಷಯ. ಪಾಳು ಬಿದ್ದ ಹೊಲವನ್ನು ಕೃಷಿಗೈಯ್ಯಲು ತಿಳಿದಿರಬೇಕು. ಶ್ರದ್ಧಾಪೂರ್ಣ ಶುದ್ಧಭಕ್ತಿ ಉಂಟಾಗಿ ಸಂಶಯ ನಿವೃತ್ತಿಯಾಗಬೇಕು... ಯಾವುದೇ ಜೀವಕ್ಕೆ ಈ ಅವಸ್ಥೆಯು ಉಂಟಾದರೆ ಆಮೇಲೆ ಸಮಾಜ ಸಂಸಾರಗಳೆಲ್ಲ ಸಾಧ್ಯವಿಲ್ಲ... " ಎನ್ನುತ್ತಿದ್ದರು. ಪ್ರಾರಬ್ಧವು ನಿಲ್ಲದ ಓಟ. ಆಟದಲ್ಲಿ ಸ್ವತಃ ಸಿಲುಕಿದವರು "ಪ್ರಾರಬ್ಧ ವಾದ"ವನ್ನು ಕ್ಷಣಿಕವಾಗಿ ಒಪ್ಪಿದರೂ ಯಾವುದೇ ಮಾಯಕದ ಕಾಣದುದನ್ನು ಒಪ್ಪಲು ಹಲವು ಬುದ್ಧಿಗಳು ಸಮ್ಮತಿಸಲಾರವು. ಆದರೆ ಯಾವುದೇ ಜೀವಿಗಳ ಸಮ್ಮತಿಗೆ ಯಾವ ಪ್ರಾರಬ್ಧವೂ ಕಾಯುವುದಿಲ್ಲ.

  ಕರ್ಮ ಸಿದ್ಧಾಂತಕ್ಕೆ ಪ್ರಾಚೀನ ಋಷಿಗಳೂ ಮಾನ್ಯತೆ ನೀಡಿದ್ದಾರೆ. ಕರ್ತವ್ಯ ಬೇರೆ; ಉದ್ಯೋಗ ಬೇರೆ; ವೃತ್ತಿ ಬೇರೆ; ಪ್ರವೃತ್ತಿ ಬೇರೆ. ಇವೆಲ್ಲವೂ ನಿರ್ದಿಷ್ಟ ಪರಿಧಿಯಲ್ಲಿಯೇ ನಡೆಯುವ ಕೆಲಸಗಳಾದರೂ ನಿಷ್ಕಾಮ ಕರ್ಮದ ನೆಲೆಯಲ್ಲಿ ನಡೆಸುವ ಸತ್ಕರ್ಮ ಮತ್ತು ಸ್ವಾರ್ಥಯುಕ್ತ ದುಷ್ಕರ್ಮಗಳ ಒಟ್ಟು ಮೊತ್ತವೇ "ಸಂಚಿತ ಕರ್ಮ" ಎಂದು ಸ್ಥೂಲವಾಗಿ ಭಾವಿಸಬಹುದು. ಆಧ್ಯಾತ್ಮಿಕ ಮಾರ್ಗದ ಸಾಧಕರಿಗೆ ಜ್ಞಾನ ಮಾರ್ಗ, ಭಕ್ತಿ ಮಾರ್ಗಗಳಂತೆ ಕರ್ಮ ಮಾರ್ಗವೂ ಸಾಧನೆಯ ಪ್ರಮುಖ ಊರುಗೋಲಾಗಿದೆ. "ಮಾಡಿದ್ದುಣ್ಣೋ ಮಹಾರಾಯ", "ತಲೆಗೆ ಹೊಯ್ದ ನೀರು ಕಾಲಿಗೆ ಇಳಿಯುತ್ತದೆ" ಮುಂತಾದ ನುಡಿಗಟ್ಟುಗಳು ಕರ್ಮ ಸಿದ್ಧಾಂತವನ್ನೇ ಪ್ರತಿಪಾದಿಸುವಂಥವು. "ನಾ ಮಾಡಿದ ಕರ್ಮ ಬಲವಂತವಾದರೆ ನೀ ಮಾಡುವುದೇನು?...  ಅತಿಥಿಗಳಿಗೆ ಅನ್ನ ಕೊಟ್ಟವನಲ್ಲ; ಸತಿಯರ ಸಂಗ ಬಿಟ್ಟವನಲ್ಲ; ಅನ್ನ ಪಾನಂಗಳಿಗೆ ಅಗ್ರಗಣ್ಯನಾಗಿ ಸ್ನಾನ ಜಪ ಸಂಧ್ಯಾ ತಪವ ನೀಗಿ ಶ್ವಾನನಾಗಿ ಮನೆಮನೆ ತಿರುಗುತಲಿದ್ದೆ; ಮನ್ನಿಸಿ ಸಲಹಯ್ಯ - ಮತಿಹೀನ ನಾನು..." ಎಂಬ ದಾಸರ ಅನುಭಾವದಲ್ಲೂ ಪ್ರಾರಬ್ಧ ಕರ್ಮದ ಒಳಸುಳಿಯ ಅಂತರ್ಮಥನ ಮತ್ತು ಶರಣಾಗತಿಯ ಭಾವವಿದೆ. 

  ಬಸವಣ್ಣನ "ಕಾಯಕವೇ ಕೈಲಾಸ" ಎಂಬ ಮಾತಿನಲ್ಲೂ ಸತ್ಕರ್ಮಶೀಲರಾಗುವ ಕರೆಯಿದೆ. "ಇರುವ ಕೆಲಸವ ಮಾಡು ಕಿರಿದೆನದೆ ಮನವಿಟ್ಟು; ದೊರೆತುದ ಹಸಾದವೆಂದುಣ್ಣು ಗೊಣಗಿಡದೆ, ಧರಿಸು ಲೋಕದ ಭರವ ಪರಮಾರ್ಥವನು ಬಿಡದೆ; ಹೊರಡು ಕರೆ ಬರಲ್ ಅಳದೆ - ಮಂಕುತಿಮ್ಮ" ಎಂಬುದು ಕಗ್ಗದ ಡಿ. ವಿ. ಜಿ ಅವರು ಸರಳಗೊಳಿಸಿ ಹೇಳಿದ ಆತ್ಮಿಕ ಸತ್ಯ. ಸ್ವಚ್ಛ ದೃಷ್ಟಿಯ ಜೀವನಾನುಭವದಿಂದಲೇ ಹುಟ್ಟಿದ ಇಂತಹ ರಸಗಟ್ಟಿಗಳು ಇಂದಿಗೂ ಸಾಮಾನ್ಯ ಬದುಕುಗಳ ಮಡಿಲಲ್ಲಿ ಹೊರಳಾಡುತ್ತಿವೆ. ಇವೆಲ್ಲವೂ - ಪ್ರಾರಬ್ಧದ ಹೊರೆಯನ್ನು ಇಳಿಸಿಕೊಳ್ಳಲು ತೋರುವ ತತ್ವದೀಪಗಳು. (ನಿತ್ಯ ಬದುಕಿನ "ಲಾಭ-ನಷ್ಟ"ದ ಸಂದರ್ಭಗಳಲ್ಲೂ ಸೀಮಿತ ವಸ್ತು ಮತ್ತು ಸಂಕುಚಿತ ಗ್ರಹಿಕೆಯಿಂದ, ಜೀವಿತರನ್ನು ಗೋಜಲುಗೊಳಿಸುವಂತೆ, ವಿಡಂಬನಾತ್ಮಕವಾಗಿ ಇಂತಹ ನುಡಿಗಟ್ಟುಗಳು ಅಲ್ಲಲ್ಲಿ ಪ್ರಯೋಗಿಸಲ್ಪಡುವುದೂ ಇದೆ. ದೃಷ್ಟಿ ಸಾಮರ್ಥ್ಯದ ಬಹೂಪಯೋಗದ ತಿರುಚುವಿಕೆಯಿಂದ - ಇಂತಹ ಬಲಿಷ್ಠ ನುಡಿಗಟ್ಟುಗಳನ್ನು ಘರ್ಷಣೆಯ ಮಾತು ಪ್ರತಿಮಾತುಗಳಲ್ಲಿ ಕನಿಷ್ಠವೆಂಬಂತೆ ಪ್ರಯೋಗಿಸಿ ನಗೆಹಬ್ಬವಾಗಿಸುವುದು - ಮೂಡಿಮರೆಯಾಗುವ ಮತ್ತು ಹೊರೆ ಹೆಚ್ಚಿಸಿಕೊಳ್ಳುವ ಕೇವಲ ಕಸರತ್ತುಗಳಾದಾವು.) ಶುಚಿಯಾದ ಕರ್ಮಗಳಿಗೆ ಶುಚಿಯಾದ ದೃಷ್ಟಿ ಯೂ ಅಗತ್ಯ. ದೃಷ್ಟಿಯಂತೆ ಸೃಷ್ಟಿ; ಕರ್ಮದಂತೆ ಫಲ.

  ವ್ಯಾಕರಣದಲ್ಲಿ ಕ್ರಿಯೆಯು ಸಂಭವಿಸುವ ಸ್ಥಳ ವಿಷಯವನ್ನು ಕರ್ಮಪದ ಎನ್ನುತ್ತೇವೆ. ಕರ್ತೃ, ಕರ್ಮ, ಕ್ರಿಯಾಪದಗಳಿಗೆ ಅವಿನಾ ಸಂಬಂಧವಿದೆ. ಒಂದನ್ನು ಬಿಟ್ಟರೆ ಇನ್ನೊಂದು ಅಪೂರ್ಣ. ರ್ತೃವೊಂದಿಗೆ ಕರ್ಮ, ಕ್ರಿಯೆಗು  ಹೊಂದಿಕೊಂಡಾಗೇ ಅರ್ುಟ್ಟುವುದು ! ಅದು ಹೇಗೆಂದೆ... "ರಾಮನು ಶಾಲೆಗೆ ಹೋದನು" (ಕರ್ತೃ, ಕರ್ಮ, ಕ್ರಿಯಾ ಪದ) ಎಂಬ ವಾಕ್ಯದಲ್ಲಿ, ಕರ್ತೃವಿಗೆ ಕರ್ಮ ಮತ್ತು ಕ್ರಿಯೆಯ ಪರಸ್ಪರ ಹೊಂದಿಕೆಯಾಂತ. ಸತ್ಕರ್ಮದ ಮೂಲಕ ಕರ್ತೃವು ನಡೆಸುವ ಯಾವುದೇ ಕ್ರಿಯೆಯು ಪ್ರಾರಬ್ಧದ ಬಗ್ಗಡವನ್ನು ಒರೆಸಿ, ತಿಳಿಯಾಗಿಸಿ, ಅವಘಡರಹಿತ ಬದುಕನ್ನು ತೆರೆಯಬಲ್ಲದು.

  ಕರ್ಮನಿರತ ರಾಗುವುದು, ಕರ್ಮಣ್ಯರಾಗುವುದು, ಕರ್ಮಠ ರಾಗುವುದು...ಇವೆಲ್ಲವೂ ವಿಭಿನ್ನ ಸ್ತರದಲ್ಲಿ ನಡೆಸುವ ಸೂಕ್ಷ್ಮ ಕರ್ಮಗಳ ಸೂಚ್ಯ ವ್ಯಾಖ್ಯೆ. ಬದುಕನ್ನು ಕರ್ಮಶಾಲೆ ಎಂದುಕೊಂಡ ಕೆಲವು ಬದುಕುಗಳು ಯಾವುದೇ ಆಯ್ಕೆಯ ಉಸಾಬರಿಗೆ ಹೋಗದೆ, ನಮ್ರತೆಯಿಂದ ಎಡೆಬಿಡದೆ ಕರ್ಮನಿರತ ರಾಗುತ್ತಾರೆ. ಪಾಲಿಗೆ ಬಂದದ್ದೇ ಪಂಚಾಮೃತ ಎಂಬಂತೆ ಅಂತರ್ಭಾವ ತುಮುಲವನ್ನು ಅದುಮಿ, ಪಾಲಿಗೆ  ಬಂದ ಕೆಲಸಗಳನ್ನೆಲ್ಲ ತಲೆತಗ್ಗಿಸಿ ಮಾಡುತ್ತ ಬದುಕುವ ಪೈಕಿ ಇವರು. ತಮ್ಮ ನಿತ್ಯ ಬದುಕಿನ ಅಗತ್ಯಗಳಿಗೆ ಬೇಕಾದ ವಸ್ತು ಸಂಚಯಕ್ಕಾಗಿ ಪ್ರತಿಫಲಾಪೇಕ್ಷೆಯಿಂದ ನಡೆಸುವ - ಯಾವುದೇ ಭಾವಸ್ಪರ್ಶವಿಲ್ಲದ ಜಾಣ ಕರ್ಮವಿದು. ಮಹಾಭಾರತದ ಭೀಷ್ಮ ದ್ರೋಣರು ಹೀಗೆ ತಲೆ ತಗ್ಗಿಸಿ ಕರ್ಮನಿರತರಾಗಿದ್ದು ಅತೃಪ್ತ ಅಂತ್ಯವನ್ನು ಕಂಡವರು. ಇದು - ಅರೆ ಮತ್ತು ವಿಪರೀತ ಎಂಬ ಮಿಶ್ರ ಎಚ್ಚರ ದ ಕರ್ಮನಿರತ ಕಾರ್ಯಶೈಲಿ.

   ಕರ್ಮಠ ವರ್ಗದವರು ಆಚಾರಗಳನ್ನೇ ಧರ್ಮವೆಂದು ಭ್ರಮಿಸುವ ೋರ ಶ್ರದ್ಧಾಪಟುಗಳು; ೋರೆಯಿಂದಾಗಿ, ಒಮ್ಮೊಮ್ಮೆ, ಹಣ್ಣನ್ನು ಬಿಸುಟು ಸಿಪ್ಪೆಯನ್ನು ತಿನ್ನುವವರು. ಇವರು ಬದುಕಿನ "ಹಾವ" ಕ್ಕೆ ಕೊಡುವ ಮಹತ್ವವನ್ನು "ಭಾವ" ಕ್ಕೆ ನೀಡಲಾಗದ ಕರ್ಮಬಂದಿಗಳು. ಇವರು ತಮ್ಮ ಕರ್ಮದ ಇಂಗಿತವನ್ನಾಗಲೀ ಉದ್ದೇಶವನ್ನಾಗಲೀ ತ್ವಿಂದ ಅರ್ಥೈಸಿಕೊಳ್ಳದವರು. ಆಚಾರೋರೆಯಲ್ಲಿಯೇ ತನ್ಮಾಗಿ, ಚಿತ್ತವೃತ್ತಿಯ ರಸ ಪರಿಪೋಷಕ "ಭಾವಸಾಮಗ್ರಿ" ಗಳನ್ನು ಬತ್ತಿಸಿಕೊಂಡ, ಬುದ್ಧಿ ಭಾವ ವಿವೇಚನಾರಹಿತ ಯಾವುದೇ ಕ್ರಿಯೆಗಳು - ಪ್ರಾರಬ್ಧದ ಸುಕರ್ಮ ಎನ್ನಿಸಲಾರದು. ಮುರುಕು ಹಾವಗಳ ವಿವಿಧ ಚೇಷ್ಟೆಗಳನ್ನೇ "ಕರ್ಮ" ಎಂದುಕೊಳ್ಳುತ್ತ ದಣಿವು ಮಾಡಿಕೊಳ್ಳುವವರು - ಕರ್ಮಠರು. ನಿತ್ಯವೂ ಹುಟ್ಟುವ ಸೂರ್ಯನ ಹುಟ್ಟಿಗೆ ಪೂರ್ವ ದಿಕ್ಕು ಕಾರಣವೆ? ತನ್ನ ತರ್ಪಣದಿಂದಲೇ ಸೂರ್ಯನನ್ನು ಕರೆಸಿಕೊಂಡೆನೆನ್ನುವ "ಆಚಾರಿವಷ್ಟಿತ"ವಾದ ಕರ್ಮಠ - ಮುಮೂರ್ಷು ಭಾವ ದ ಯಾವುದೇ ಲೌಕಿಕ ಕ್ರಿಯೆಗಳು ಅಧ್ಯಾತ್ಮಕರ್ಮವಲ್ಲ; ವ್ಯರ್ಥ ದಣಿಿನ ವ್ಯಾವಾರಿಕರ್ಮ - ಅಷ್ಟೆ.

  ಇಂದ್ರಿಯ ಮನೋಬುದ್ಧಿಯ ಸಮನ್ವಯದ ಏಕಾಗ್ರ ಕರ್ಮಠನಿಷ್ಠೆ ಯಿಂದ ತಮ್ಮ ಕರ್ಮದಲ್ಲಿ ದಕ್ಷತೆಯನ್ನು ತುಂಬುವವರು ಕರ್ಮಣ್ಯರೆನಿಸುತ್ತಾರೆ. ತಮ್ಮ ಒಂದೊಂದು ಚಲನವಲನವನ್ನೂ ನಿತ್ಯಕರ್ಮಗಳನ್ನೂ ನಿರೀಕ್ಷಿಸುವ ಒಂದು ಕರ್ಮಸಾಕ್ಷಿಯಿದೆ ಎಂಬ ಎಚ್ಚರದಿಂದ - ಇವರು ಕಲಾತ್ಮಕವಾಗಿ, ಶ್ರದ್ಧೆಯಿಂದ ತಮ್ಮ ಇಂದ್ರಿಯಗಳನ್ನು ಕರ್ಮದಲ್ಲಿ ತೊಡಗಿಸುತ್ತಾರೆ. ಇವರಿಗೆ ಕರ್ಮವು ನಿರ್ಬಂಧವೆನ್ನಿಸದೆ ಅನುಬಂಧವೆನ್ನಿಸುತ್ತದೆ. ಇದು ಪ್ರಜ್ಞಾಪೂರ್ವಕ ವಾಗಿ, "ಕರ್ತವ್ಯಂ ದೈವಮಾಹ್ನಿಕಂ" ಎಂದುಕೊಂಡು ನಡೆಸುವ ಪೂರ್ಣ ಎಚ್ಚರ ದ ಕರ್ಮಶೈಲಿ. ವಸಿಷ್ಠ, ಶುನಶ್ಶೇಫ(ದೈವರಾತ)...ಮೊದಲಾದವರು ಇಂತಹ ಆಹ್ನಿಕವನ್ನು ನಡೆಸಿದವರು. ಬದುಕಿನ ಪೂರ್ವಾರ್ಧದಲ್ಲಿ ಐಹಿಕದ ಎಲ್ಲವನ್ನೂ ಕಂಡು, ಅನಂತರದ ಉತ್ತರಾರ್ಧದಲ್ಲಿ ಅದೇ ಐಹಿಕವನ್ನು ಅರ್ಥಹೀನವೆಂದು ತ್ಯಜಿಸಿ ಪರಿವ್ರಾಜಕನಾದ ಬ್ರಹ್ಮರ್ಷಿ ಯಾಜ್ಞವಲ್ಕ್ಯ - ಮೊದಲಾದವರು ಅಂತಹ ಾವೂರಿತ ಕರ್ಮಠನಿಷ್ಠೆಯ ದಕ್ಷ ಕರ್ಮಗಳಿಂದ ಮಾನ್ಯತೆ ಪಡೆದವರು. ನಿತ್ಯ ಬದುಕಿನ ಪ್ರತಿಯೊಂದು ಕ್ಷಣದಲ್ಲೂ ನಾವು ನಡೆಸುವ ಸಮರ್ಪಣಾ ಭಾವದ ಕರ್ಮಗಳಿಂದ ಯಾವುದೇ ಕರ್ಮಿಗೆ ನಿಜಾನಂದದ ಅನುಭೂತಿಯೂ ಆಗುತ್ತದೆ. ಅಂತ "ನಿಜಾನಂದ"ವೇ ಕರ್ಮೆತಕ್. ಆದ್ದಿಂದಾವುದರ್ಮ ಕ್ರಿಯೆಗಾವುದ್ಿ ಹೊಂದಿ, ಕರ್ಮಣ್ಯಗುವುದೇ  ಪ್ರಾರಬ್ಧವನ್ನು ಸಂಭಾಳಿಸುವ ಉತ್ತಮ ಮಾರ್ಗ. ಹಾವಭಾವ ಸಮನ್ವಯದ ಮೂರ್ತರೂಪವೇ ಕರ್ಮ. ಆಚಾರ ವಿಚಾರಗಳ ಸುಸಂಬದ್ಧ ಸಾಕ್ಷಾತ್ಕಾರವೇ ುದ್ ಕರ್ಮ. 

  ಪ್ರತಿಯೊಂದು ಜೀವಿಯಿಂದಲೂ ಆಜೀವಪರ್ಯಂತ ಒಂದಲ್ಲ ಒಂದು ಕರ್ಮವು ನಡೆಯುತ್ತಲೇ ಇರುತ್ತದೆ. ಹಾಗೆ ನಡೆಸುವ ಕರ್ಮಗಳನ್ನು ಸದ್ಭಾವದಿಂದ ಅಲಂಕರಿಸಿಕೊಳ್ಳುವುದು ಇಚ್ಛಾಶಕ್ತಿಯಿಂದ. ಅಬೋಧ ಕರ್ಮಗಳಿಗೆ ನಾವು ವಿಮುಖವಾಗಿ - ಸುಬೋಧ ಕರ್ಮನೀತಿಯನ್ನು ಆಚರಿಸಿದಾಗ ಕರ್ಮದ ಮೀಟರು (ಲೆಕ್ಕ ಚಕ್ರ) ಊರ್ಧ್ವಮುಖವಾಗಿ ಚಲಿಸತೊಡಗುತ್ತದೆ. ನಮ್ಮ ಧರ್ಮಕರ್ಮಗಳ ಢೋಂಗಿ ಮತ್ತು ಸಾಚಾತನವು ಅಂತರಂಗದ ಲೆಕ್ಕ ಚಕ್ರದಲ್ಲಿ ಯಾವತ್ತೂ ಸರಿಯಾಗಿಯೇ ದಾಖಲಾಗುತ್ತದೆ. ಹೆರೆದು ಮುರಿದು ನುರಿದು ಅರೆದು ಉರಿದ ಮೇಲೇ ಅಡುಗೆಯು ಸಿದ್ಧವಾಗುವುದು - ಅಲ್ಲವೆಅಂತೆಯೇ ಬದುಕಿನ ಚಕ್ರದ ಬಗೆಬಗೆಯ ಸ್ಥಿತ್ಯಂತರಗಳಲ್ಲಿ ಅವರವರ ಸಮಸ್ತ ಕರ್ಮಗಳ ಅಂತಿಮ ಮೊತ್ತವೇ ಘನ ಅಡುಗೆಯಾಗಿ, ಮಾಡಿದ್ದುಣ್ಣೋ ಮಹಾರಾಯರಾಗುವ ಆಟವು ನಡೆಯುತ್ತಲೇ ಬಂದಿದೆ.

  "ನಾವು ಹುಟ್ಟಿದ್ದೇ ವಸ್ತುಗಳನ್ನು, ಸಂಪತ್ತನ್ನು ಗಳಿಸಲಿಕ್ಕೆ ಮತ್ತು ಕೂಡಿಹಾಕಲಿಕ್ಕೆ" ಎಂಬ ಭ್ರಮೆ ಹುಟ್ಟಿಸುವ ಮೂಲ ಸ್ಥಾನವೇ ಆಸೆ. ಅಯೋಗ್ಯ ಆಸೆಯಿಂದಾಗಿ ಬೇಕುಬೇಡದ ವಸ್ತುಗಳನ್ನೆಲ್ಲ ಈಗ ಗುಡ್ಡೆ ಹಾಕಿಕೊಂಡು ನಮ್ಮ ಹೆಮ್ಮೆಯನ್ನು ಎಲ್ಲರಿಗೂ ವಿತರಿಸುವ ವ್ಯಾಪಾರವು ನಡೆಯುತ್ತಲೇ ಇದೆ. ಜತೆಗೆ ನಾವು ಕೊಟ್ಟದ್ದಕ್ಕೆ ಪ್ರತಿಯಾಗಿ ಏನೇನನ್ನೋ ಅಪೇಕ್ಷಿಸುತ್ತಲೂ ಇದ್ದೇವೆ. ಈ ವ್ಯರ್ಥ ಕೊಡುಕೊಳ್ಳುವಿಕೆಯ ದೃಶ್ಯವು ಮುಗಿದ ಮೇಲೆ ವಿರಾಮದಲ್ಲಿ ಕೂತು ನೋಡಿದರೆ, ಎಲ್ಲರೂ ಬರಿಗೈ ದಾಸರು. ಕರ್ಮದ ಮರ್ಮವನ್ನು ತಿಳಿಯದ ಗರ್ವಕ್ಕೆ ಆಗ - ಪ್ರಾರಬ್ಧದ ನೆನಪು!

  "ಪ್ರಕೃತಿಯ ಪರಿವರ್ತನೆಗೆ ಯಾವುದೇ ಕರ್ಮವು ನೇರವಾಗಿ ಕಾರಣವಾಗುವುದಿಲ್ಲ. ನಮ್ಮ ಸತ್ಕರ್ಮವು ಪ್ರಕೃತಿಯ ವಿಕಾಸಕ್ಕೆ ಇರುವ ಅಡ್ಡಿಗಳನ್ನು ನಿವಾರಿಸಬಹುದು..." (ಪತಂಜಲಿ) ಆದ್ದರಿಂದ ನಮ್ಮ ಸಾಧನೆಯ ದಾರಿಯಲ್ಲಿ ಎದುರಾಗುವ ತಡೆಗಳನ್ನು ನಿವಾರಿಸಿಕೊಳ್ಳಲು - ಕಾಯ, ಮನಸ್ಸು, ವಿದ್ಯೆಯ ಉನ್ನತಿಗಾಗಿ ಶುದ್ಧಕರ್ಮದ ಮೊರೆ ಹೋಗಬೇಕು. 

  ಸಂತ ನಾಮದೇವನ ಮನೆಯ ಕೆಲಸಗಳನ್ನು ಮಾಡುತ್ತಿದ್ದ ಆತನ ಶಿಷ್ಯಳೂ ಆಗಿದ್ದ ಜನಾಬಾಯಿ ಎಂಬಾಕೆಯ ಒಂದು ಕತೆಯಿದೆ. ದೈವಸ್ಮರಣೆಯನ್ನು ಮಾಡುತ್ತಲೇ ತನ್ನ ದೈನಂದಿನ ಕೆಲಸಗಳನ್ನು ಮಾಡುತ್ತಿದ್ದ ಮಹಾರಾಷ್ಟ್ರದ ಪ್ರಸಿದ್ಧ ಮಹಿಳಾ ಸಂತಳಿವಳು. ಒಂದು ದಿನ ಆಕೆಯು ಯಾರಲ್ಲೋ ಮಾತನಾಡುವುದನ್ನು ಕೇಳಿಸಿಕೊಂಡ ನಾಮದೇವನ ತಾಯಿಯು ಇಣುಕಿ ನೋಡಿದಾಗ, ಅಲ್ಲಿ ಇನ್ನೊಬ್ಬ ಮಹಿಳೆಯು ಇರುವುದನ್ನು ಕಂಡಳಂತೆ. "ಯಾರೀಕೆ?" ಎಂದು ಜನಾಬಾಯಿಯನ್ನು ಕೇಳಿದಾಗ, ಆಕೆಯು "ಈಕೆ ವಿಠಲಬಾಯಿ" ಎಂದಳಂತೆ. ವಿಠಲನ ಸಾಂಗತ್ಯದಲ್ಲಿಯೇ ಮನೋವಾಕ್ಕಾಯಗಳನ್ನು ಸ್ಥಾಪಿಸಿಕೊಂಡ ಸಂತ ಜನಾಬಾಯಿಯ ಕತೆಯಿದು! ಮನಸ್ಸಿನಂತೆಯೇ ಮಹದೇವ. ಭಾವದಂತೆಯೇ ಭವ. ಆ ಜನಾಬಾಯಿಯು ಮಾಡುತ್ತಿದ್ದ ಎಲ್ಲ ಕರ್ಮದಲ್ಲಿಯೂ ಸಮರ್ಪಣಾಭಾವವು ಒಡಮೂಡಿರುತ್ತಿದ್ದವು. "ಶ್ರದ್ಧೆಯೆಂಬ ಹಿಡಿ ಇರುವ, ವೈರಾಗ್ಯದ ಬೀಸುವ ಕಲ್ಲಿನಲ್ಲಿ, ನನ್ನ ಕರ್ಮವನ್ನು ದಿನವೂ ಪುಡಿಮಾಡುತ್ತಿರುವೆ..." ಎನ್ನುತ್ತಾಳೆ ಜನಾಬಾಯಿ! ಇದು ಶುದ್ಧ ಕರ್ಮದ ಉತ್ತಮ ದೃಷ್ಟಾಂತ. ಭಕ್ತಿಮಾರ್ಗದಲ್ಲಿ ಇಂತಹ ಅನೇಕ ದೃಷ್ಟಾಂತಗಳು ಕಾಣಸಿಗುತ್ತವೆ. ಪತಂಜಲಿಯು ಯೋಗಸೂತ್ರದಲ್ಲಿ ಹೇಳಿದ್ದೂ ಇದನ್ನೇ. ನೀರಿನ ಪ್ರವಾಹಕ್ಕೆ ಅಡ್ಡಿಯಾಗಿರುವ ತಡೆಯನ್ನು ಕೃಷಿಕರು ತೆಗೆದ ಕೂಡಲೇ ತನ್ನ ಸ್ವಭಾವಕ್ಕೆ ಅನುಗುಣವಾಗಿ ನೀರು ತಾನಾಗಿಯೇ ಹರಿಯಲು ತೊಡಗುವಂತೆ ಪ್ರಕೃತಿಯ ವಿಕಾಸಕ್ಕೆ ಇರುವ ಅಡ್ಡಿಯನ್ನು ಸದ್ಭಾವದ ಸತ್ಕರ್ಮಗಳು ನಿವಾರಿಸುತ್ತವೆ. ಆಗ ಪೂರ್ಣವು - ಸ್ವರೂಪವು ಪ್ರಕಟವಾಗುತ್ತದೆ. ನಿಷೇಧಾತ್ಮಕ ತಡೆಯನ್ನು ನಿವಾರಿಸಿಕೊಂಡಾಗ ದುಷ್ಟನೂ ಸಂತನಾಗುವುದು ಸಾಧ್ಯ. ಜನ್ಮತಳೆದ ಅಪೂರ್ವ ಅವಕಾಶವನ್ನು ಸುಮುಖಗೊಳಿಸುವುದೂ ಸಾಧ್ಯ.  

  ಲಕ್ಷದಲ್ಲಿ ಒಬ್ಬನಿಗಾದರೂ ಯಥಾವತ್ ಅನುಕರಿಸಲು ಕಷ್ಟಸಾಧ್ಯವಾದ ಇಂತಹ ಆದರ್ಶಗಳು ಬೇಕೆ? ಎಂದು ಕೇಳಿದರೆ "ಬೇಕು" ಎನ್ನಬೇಕು. ಸಹಜ ಮತ್ತು ಸರಳವಾಗಿರುವುದನ್ನು ಮರೆತವರಿಗೆ ಮಾತ್ರ ಶುದ್ಧ ಚಿಂತನೆ ಮತ್ತು ಕರ್ಮಗಳು ಅತಿ ಕಠಿಣವೆನ್ನಿಸುತ್ತದೆ. ಕಡಲಿನ ಉಪ್ಪಿನ ಗಾತ್ರದಷ್ಟು ಆಸೆಯನ್ನು ಹೊತ್ತಿರುವವರಿಗೆ ಶುದ್ಧ ಗಂಗೆಯ ಮಾತೆತ್ತಿದರೆ ಹಿತವೆನಿಸದು. ಉಪ್ಪು ನೀರನ್ನೇ ಕುಡಿಯುತ್ತ ಎಷ್ಟೆಂದು ಬದುಕುವುದು? ಮೌಢ್ಯದ ಗತಿಯಿದು; ಹೊರಲಾಗದ ಹೊರೆ ಹೊತ್ತ ಬಳಲಿಕೆಯ ಸ್ಥಿತಿಯದು. ಇಂತಹ ತೆವಳು ದಾರಿಯಲ್ಲಿ ಜಾರುತ್ತ - ಬಿದ್ದು ಏಳುತ್ತ ತಳಮಳಿಸುವಾಗ ವಿಶ್ರಾಂತಿ ನೀಡಿ ಉಪಕರಿಸುವ ಆದರ್ಶಗಳು ಆಪತ್ತಿನಲ್ಲಿ ಊರುಗೋಲಾಗುವ ಮಿತ್ರಾಸ್ತ್ರಗಳು. ದಾರಿ ತಪ್ಪಿದರೂ ನಮ್ಮ ದಿಕ್ಕು ತಪ್ಪದಂತೆ ಕಾಪಾಡುವ ನಿಜಬಂಧುಗಳು. ಆದ್ದರಿಂದ ಆದರ್ಶಗಳ ಅವಹೇಳನ ಮಾಡದೆ ಸ್ವಂತದ ಊರುಗೋಲಾಗಿ ಅವನ್ನು ಬಳಸಿಕೊಳ್ಳಲು ಪ್ರಯತ್ನಿಸಬಹುದು. ಮುಂದಿನ ಪೀಳಿಗೆಗೆಂದು ಆ ಊರುಗೋಲನ್ನು ಜತನದಿಂದ ರಕ್ಷಿಸಲೂ ಬೇಕು. ಅಡುಗೆಗೆಂದು ನಾವು ತಂದಿದ್ದ ವಸ್ತುಗಳನ್ನೆಲ್ಲ ಇವತ್ತಿನ ಅಡುಗೆಯ ಕಾರ್ಯವು ಮುಗಿಯಿತೆಂದು ಹೊರಗೆ ಚೆಲ್ಲುತ್ತೇವೆಯೆ? ಇಲ್ಲ. ಪೂರ್ತಿ ಕೆಟ್ಟುಹೋದ ಅಥವ ನಾಳೆಗೆ ಕೆಡಬಹುದಾದ ವಸ್ತುಗಳನ್ನಷ್ಟೇ ಹೊರಗೆ ಹಾಕಿ ಉಪಯೋಗಿಸಬಹುದಾದುದನ್ನು ಉಳಿಸಿಕೊಳ್ಳುವ ನಮ್ಮ ಜಾಣ್ಮೆಯು ಆತ್ಮಿಕ ಬದುಕಿಗೂ ಅವಶ್ಯಕ. ಗಳಿಸುವಷ್ಟೇ ಮಹತ್ವವು ಉಳಿಸುವುದಕ್ಕೂ ಇದೆ. ಆದರ್ಶಗಳು ನಾಳೆಗೆ ಬೇಕಾದೀತು ಎಂಬ ಎಚ್ಚರದಿಂದ ಅಷ್ಟಿಷ್ಟಾದರೂ ಉಳಿಸಿಕೊಳ್ಳಬೇಕು. ಸಂತಾನಕ್ಕೆಂದು ಮನೆ, ಆಸ್ತಿ, ಸಂಪತ್ತನ್ನು ಜೋಪಾನವಾಗಿ ಉಳಿಸಿಕೊಳ್ಳುವುದಿಲ್ಲವೆ? ಹಾಗೇ ಆದರ್ಶ ಗಳನ್ನೂ ಉಳಿಸಿಕೊಳ್ಳಬೇಕು. ಅದೂ ಮುಂದಿನ ಪೀಳಿಗೆಗೆಂದು ನಾವು ಉಳಿಸಿ ಹೋಗುವ ಅಮೂಲ್ಯ ಆಸ್ತಿ.

  ಕಟ್ಟುನಿಟ್ಟುಗಳಿಲ್ಲದ ಸ್ವಚ್ಛಂದ ಕರ್ತರಿಗಾಗಲೀ ಕರ್ಮಗಳಿಗಾಗಲೀ ಈ ಸೃಷ್ಟಿಯಲ್ಲಿ ಉಳಿಗಾಲವಿಲ್ಲ. ಆದರೆ ಗುಣವರ್ಧನೆಯ ದಾರಿಯು ಯಾವತ್ತೂ ದುರ್ಗಮವಾದದ್ದು. ಪ್ರತೀ ಕ್ಷಣವೂ ಉತ್ತಮಿಕೆಗಾಗಿ ಶ್ರಮಿಸುವುದು ಸುಲಭವೇನಲ್ಲ. ಅದಕ್ಕೆ ತಾಳ್ಮೆ ಬೇಕು. ಆದ್ದರಿಂದ ದೀರ್ಘಕಾಲದ ಸಂಚಿತ ಕರ್ಮಗಳ ಹೊರೆಯನ್ನು ಅವರವರೇ ಉಂಡು ಅರಗಿಸಿ ಪರಿಪಾಕಗೊಳ್ಳುವವರೆಗೂ ಮುಸುರೆ ತೊಳೆಯುವ ಕ್ರಿಯೆಯು ನಿರಂತರವಾಗಿ ನಡೆಯಲೇ ಬೇಕು. ಕರ್ತಾರನ ಈ ಕಮ್ಮಟದಲ್ಲಿ ಕರ್ತೃವಿಗೆ ವಿಧೇಯವಾಗಿ, ಶ್ರದ್ಧಾ ತನ್ಮಯತೆಯಿಂದ ಸತ್ಕರ್ಮಗಳನ್ನು ರೂಢಿಸಿಕೊಂಡರೆ "ಪ್ರಾರಬ್ಧ ಕರ್ಮ" ಎಂಬ ಭಾರವು ತಗ್ಗುತ್ತದೆ; ಹಿತಮಿತವಾದ  ಅಪೇಕ್ಷೆಗಳೊಂದಿಗೆ ತಳಮಳವಿಲ್ಲದೆ ಬದುಕಲು ಸಾಧ್ಯವಾದರೆ ಸತ್ - ಕ್ರಿಯಾಶೀಲರಾಗಿ ಸ್ವಚ್ಛ ಆನಂದವನ್ನೂ ಆಸ್ವಾದಿಸಬಹುದು. ನಮ್ಮ ಕರ್ಮಸ್ಥಾನಗಳು ನಮಗೆ ಶಿಕ್ಷೆಯಾಗದೆ ರಕ್ಷೆಯಾಗಬೇಕಾದರೆ ಸಮಷ್ಟಿಗೆ ಆನಂದ ನೀಡುವ ಸತ್ಕಾರ್ಯಗಳಲ್ಲಿ ತೊಡಗಬೇಕು. ರೊಚ್ಚುಮೆಚ್ಚುಗಳಿಗೆ ಬಲಿಯಾಗದ ಧ್ಯಾನಸ್ಥ ಸ್ಥಿತಿಯನ್ನು ಮಿದುಳಿಗೆ ರೂಢಿಸಬೇಕು. ದಿನದ ಕಷ್ಮಲವನ್ನು ಅಂದಂದೇ ಕೊಡವಿಕೊಂಡು ಹಗುರಾಗಬೇಕು. ಕರ್ತೃವಿಗೆ ಪೂರಕವಾದ ಸುಸಂಬದ್ಧ ಕರ್ಮ ಮತ್ತು ಕ್ರಿಯೆಗಳನ್ನು ಆಚರಿಸುತ್ತ ಬದುಕಿನ ವ್ಯಾಕರಣಕ್ಕೆ ವಿಧೇಯವಾಗಬೇಕು. ಮಾನವ ಜನ್ಮ ದೊಡ್ಡದು; ಅದ ಹಾನಿ ಮಾಡುವುದು ಬೇಡ...

  ಬುದ್ಧಿಯ ಕೃತಕ ಕಸರತ್ತಿನ ಕಾಲವಿದು. "ಪ್ರಾರಬ್ಧ" ಎಂಬ ಶಬ್ದವನ್ನೇ ನಿಘಂಟಿನಿಂದ ಹೊರಗೆಸೆಯಬೇಕೆನ್ನುವ ಒಂದು ಗುಂಪು ಈಗ ಸಕ್ರಿಯವಾಗಿದೆ. ಇವರೆಲ್ಲರೂ ಇಲ್ಲ - ಅಲ್ಲ ಎನ್ನುತ್ತಲೇ ಎಲ್ಲವನ್ನೂ ಪಡೆಯಬೇಕೆನ್ನುವ ಸಂಚುಗಾರ ಚಾರ್ವಾಕರು. ಇಂತಹ ಉಗ್ರ ಬುದ್ಧಿಯೂತದ ಪ್ರತಿವಾದಿ ಭಯಂಕರರನ್ನು ಒಪ್ಪಿಸಿ ಘರ್ಷಣೆಯಿಂದ ಪಾರಾಗಲು ಅವರಿಗೆಲ್ಲ ಒಂದೊಂದು K. G. ಪ್ರಾರಬ್ಧ ಕರ್ಮವನ್ನು ತೂಕಮಾಡಿ ಕಟ್ಟಿಕೊಡಲು ಅಥವ ಅವರಿಂದ ಪಡೆಯಲು ಯಾರಿಗೂ ಆಗುವುದಿಲ್ಲ. ಅನುಭವ, ವಿಶ್ವಾಸ, ಸ್ವಸಂತೋಷ ನೀಡುವ ಇಂತಹ ವಿಷಯಗಳಲ್ಲಿ ಯಾರನ್ನೂ ಯಾರೂ ಒಪ್ಪಿಸುವ ಅಥವ ಮೆಚ್ಚಿಸುವ ಅಗತ್ಯವೂ ಇಲ್ಲ. ಈ ಬದುಕುಗಳಲ್ಲಿ ಮುಸುಕಿನ ಗುದ್ದಿನಂತೆ ಎಲ್ಲರ ಅನುಭವಕ್ಕೂ ಬರುವ ಕರ್ಮ ಫಲದ ರುಚಿಯನ್ನು ಯಾರೂ ತಾವಾಗಿಯೇ ಬಯಲು ಮಾಡುವುದಿಲ್ಲ; ಸಾಮಾನ್ಯವಾಗಿ ಮುಚ್ಚಿಡುವುದೇ ಹೆಚ್ಚು. ತಾನು ಅತ್ಯಂತ ಸುಖಿ ಎಂದು ತೋರಿಸಿಕೊಳ್ಳುವ ಎಲ್ಲರೂ ಊರ ಸಂತೆಯಲ್ಲಿ ನಗುವನ್ನು ಮಾರುವವರೇ. ತಪ್ಪೇನಿಲ್ಲ. ಬಾಹ್ಯ ಶಿಷ್ಟತೆಯು ಒಳ್ಳೆಯದೇ. ಆದರೆ ಅಂತಹ ಅಪ್ರಾಮಾಣಿಕವಾದ ದೀರ್ಘ ನಡಿಗೆಯು ಸ್ವಂತದ ಭಾವಜಗತ್ತನ್ನು ನಲುಗಿಸುತ್ತಲೇ ಹೋಗುತ್ತದೆ. ದೀರ್ಘ ಕಾಲದ ವರೆಗೆ ನಡೆಸುವ ಅಂತಹ ಕಾಪಟ್ಯದ ಕಸರತ್ತಿನಿಂದ ತಾಮ್ರದ ಪಾತ್ರೆಗೆ ಕಿಲುಬು ಹಿಡಿಯುವಂತೆ ಮನುಷ್ಯನ ವ್ಯಕ್ತಿತ್ವವು ಘಾಸಿಗೊಳ್ಳುತ್ತದೆ. ತತ್ಪರಿಣಾಮವಾಗಿ ಅಸ್ವಸ್ಥ ಭಾವ ವಲಯವು ಹುಟ್ಟಿಕೊಂಡು ಅಸ್ವಸ್ಥ ಚಿಂತನೆಗಳನ್ನು ತೇಲಿಬಿಡುತ್ತ ಅಸ್ವಸ್ಥ ಕರ್ಮಗಳನ್ನು ನಮ್ಮಿಂದ ಮಾಡಿಸುವ ಎಲ್ಲ ಸಾಧ್ಯತೆಗಳೂ ಇವೆ. ಆದ್ದರಿಂದ ನಟ ಕೋವಿದರಂತೆ ತಮ್ಮನ್ನು ತಾವು ಮೋಸಪಡಿಸಿಕೊಳ್ಳುತ್ತ ಇಡೀ ಜನ್ಮವನ್ನೇ ಕಳೆದು ಬಿಡುವ ಬದಲು ಬದುಕಿನಲ್ಲಿ ಅಕಾರಣವಾಗಿ ಎರಗುವ ಸಂತಾಪ ಸಂಕಟಗಳ ಎದುರಲ್ಲಿ ಸಹಜ ವಿನಮ್ರ ರಾಗುವುದು ಮೇಲು. ಅದೇ ಭಗವದ್ವಿನಮ್ರತೆ. ಸುಭಗ ಬದುಕಿಗೆ ಸಹಜ ವಿನಮ್ರತೆಯು ಭೂಷಣ. ಬದುಕಿಗೆ ಉಚಿತವಾದುದನ್ನು ನಾವು ಆಯ್ಕೆ ಮಾಡಿಕೊಳ್ಳದಿದ್ದರೆ ಅನುಚಿತವಾದುದೆಲ್ಲವೂ ನಮ್ಮನ್ನು ಆಯ್ಕೆ ಮಾಡಿಕೊಳ್ಳುತ್ತವೆ.

  "ಭಗ ಎಂದರೆ ದೇವರು. ಸೂರ್ಯನ ಒಂದು ಅಂಶ. ಕಣ್ಣು ತೆರೆಯದೆ, ಕಣ್ಣಿನಿಂದ ಕಾಣದೆ, ಅವರವರ ಕರ್ಮದಂತೆ ಫಲ ವಿತರಿಸುವ ನಿಷ್ಪಕ್ಷಪಾತ ದೇವತೆಯೇ ಭಗ. ಭಗ ನೀಡುವುದು - ಭಾಗ್ಯ. ಭಾಗಕ್ಕೆ ಬಂದದ್ದು ಭಾಗದೇಯ. ಅದರಲ್ಲಿ ಕರ್ಮದ ತರ್ಕ ಇರುತ್ತದೆ. ಅಸೂಯೆಯ ಹೃದಯವುಳ್ಳವರಿಗೆ ಅಲ್ಲಿ ವೈಷಮ್ಯ ಕಾಣುತ್ತದೆ. ಭಗವಂತ ಎಂದರೆ ಜ್ಞಾನ, ವೀರ್ಯ, ಶಕ್ತಿ, ತೇಜಸ್ಸು, ಸಕಲ ಐಶ್ವರ್ಯದ ಒಡೆಯನಾದ, ಅಪಹರಿಸಲಾಗದ - ಅತಿಕ್ರಮಿಸಲಾಗದ ಸಮೃದ್ಧಿ ಇರುವ ದೇವರು ಎಂದರ್ಥ." (ಪ್ರೊ. ಕೆ. ಎಸ್. ನಾರಾಯಣಾಚಾರ್ಯ)

  ಕರ್ಮ ಶುದ್ಧಿಯನ್ನು ಪ್ರತಿಪಾದಿಸುವಾಗ "ಫಲದ ಭರವಸೆ" ಯನ್ನು ನಿರೀಕ್ಷಿಸುವುದು ಮತ್ತೊಂದು ಉದ್ಧಟತನ! ಕುತರ್ಕ! ವಿತಂಡವಾದದಿಂದ ಯಾವ ಹೊರೆಯೂ ಇಳಿಯಲಾರದು! ಅಮೃತವು ಹುಟ್ಟುವ ವರೆಗೂ ಮಥಿಸುವ ತಾಳ್ಮೆ ಬೇಕು. ವಿಷದರ್ಶನವಾದ ಕೂಡಲೇ ಓಡಿಹೋಗುವ - ಅಥವ - ವಿಷದರ್ಶನವಾಗುವಷ್ಟು ಹೊತ್ತು ಮಾತ್ರ ಮಥಿಸುವ ಟೊಳ್ಳುತನಕ್ಕೆ ಎಂದಿಗೂ ಅಮೃತದರ್ಶನವಾಗಲಾರದು. ಪೂರ್ಣತೆಯನ್ನು ಕಾಣಲಾಗದ ಯಾವುದೇ ಕರ್ಮವು ವ್ಯರ್ಥ. ಇಂದು - ಯಾವುದೇ ಗ್ಯಾರಂಟಿಯಿಲ್ಲದ ಈ ಲೋಕದಲ್ಲಿ ಎಲ್ಲವನ್ನೂ ನಿತ್ಯವೂ ಒಪ್ಪಿ ಸ್ವೀಕರಿಸುತ್ತಿರುವ ನಮಗೆ - ದೇವರು ಧರ್ಮ ಕರ್ಮಗಳ ವಿಷಯದಲ್ಲಿ ಮಾತ್ರ - "ಗ್ಯಾರಂಟಿ ಏನು? ಗ್ಯಾರಂಟಿ ಬೇಕಲ್ಲ?" ಅನ್ನಿಸುತ್ತದೆ! ಯಾವುದಕ್ಕೂ Guarantee ಎಂಬುದಿಲ್ಲದ ಈ ಭೂಮಿಯಲ್ಲಿ ನೆಮ್ಮದಿಯ ಗ್ಯಾರಂಟಿಯು ಸಿಗುವುದಿದ್ದರೆ ಅದು ದೇವರು - ಧರ್ಮ ಕರ್ಮಗಳಲ್ಲಿಯೇ. ಇಡೀ ಸೃಷ್ಟಿಯೇ ವಿಶ್ವಾಸದ ಮೇಲೆ ನಿಂತಿದೆ! ರಾತ್ರಿ ಮಲಗಿದವನು ಬೆಳಿಗ್ಗೆ ಏಳುವ ವಿಶ್ವಾಸದಿಂದಲೇ ನಿದ್ದೆಗೆ ತೊಡಗುತ್ತಾನೆ! "ನಿದ್ದೆಯಿಂದ ಎಚ್ಚರಾಗುವುದೆಂಬ ಗ್ಯಾರಂಟಿಯೇನು?" ಎನ್ನುವವರಿಗೆ (ಎಚ್ಚರವನ್ನು ಎಚ್ಚರಿಕೆಯಿಂದ ಕಾಯುತ್ತ) ನಿದ್ದೆಯಿಲ್ಲದ ರಾತ್ರಿಗಳನ್ನು ತೂಕಡಿಸುತ್ತ ಕಳೆಯುವ ಸ್ವಾತಂತ್ರ್ಯವಿದೆ. ಈ ಬದುಕಿನಲ್ಲಿ ಹೆಂಡತಿಯೂ ಗ್ಯಾರಂಟಿಯಲ್ಲ; ಗಂಡನೂ ಗ್ಯಾರಂಟಿಯಲ್ಲ; ಮಕ್ಕಳೂ ಗ್ಯಾರಂಟಿಯಲ್ಲ. ನಮ್ಮ ಮನೆ, ಅಂತಸ್ತು, ಪ್ರತಿಷ್ಠೆಗಳ್ಯಾವುವೂ ಗ್ಯಾರಂಟಿಯಲ್ಲ. ಎಲ್ಲವೂ ಬಣ್ಣ ಹೋಗುವ ಬಟ್ಟೆಗಳು! ಆದ್ದರಿಂದ ವಿಶ್ವಾಸವೆಂಬ ಬಣ್ಣಗೆಡದ ದೃಢತೆಯಿಂದ ಸತ್ಕರ್ಮವನ್ನು ಆಶ್ರಯಿಸದೆ ನಮಗೆ ಗತ್ಯಂತರವಿಲ್ಲ. ಅಲ್ಪ ಆಸೆಗಳಿಂದ ಪಾರಾಗುವುದು - ಪ್ರಾರಬ್ಧದ ನಿಟ್ಟಿನಲ್ಲಿ ಇಡಬಹುದಾದ ಮೊದಲ ಹೆಜ್ಜೆ. 

  ಮನುಷ್ಯನ ಮನಸ್ಸು ಯಾವಾಗಲೂ ಅರ್ಥ ಕಾಮಗಳ ಕಡೆಗೇ ವಾಲಿರುತ್ತದೆ. ಮಗುವು ಹುಟ್ಟುವುದಕ್ಕಿಂತ ಮುಂಚೆಯೇ ತಾಯಿಗೆ ಸ್ತನ್ಯವಿರುವಂತೆ ಪ್ರತಿಯೋರ್ವನನ್ನೂ ಕಾಯುವ, ಅವರವರ ಪ್ರಾರಬ್ಧಕ್ಕೆ ತಕ್ಕ ಕೆಲಸ ಮಾಡಿಸುವ ವಿಸ್ಮಯವೂ ಇದೆ. ಈ ಎಚ್ಚರವಿರಬೇಕು. ("ಮಾನವನೇ, ನಿನ್ನನ್ನು ನೀನು ತಿಳಿ" ಎನ್ನುವ ಪ್ರಾಚೀನ ಗ್ರೀಕ್ ಚಿಂತನೆಯು ಎಚ್ಚರದ ಅಂತರ್ಮುಖಿತ್ವವನ್ನು ಪ್ರತಿಪಾದಿಸುತ್ತದೆ; ಸ್ವಾನ್ವೇಷಣೆಗೆ ಉಪನಿಷತ್ತುಗಳಲ್ಲೂ ಯಥೇಷ್ಟ ಮಾರ್ಗದರ್ಶನವಿದೆ.) 

  ಕರ್ಮಗಳ ಫಲವು ಏನೇ ಇರಲಿ, ಸತ್ಕರ್ಮವನ್ನು ನಡೆಸುವ ನಮ್ಮ ಪ್ರಯತ್ನದಲ್ಲಿ ಮಾತ್ರ ಕೊರತೆಯಾಗದೆ ಕಾರ್ಯಕಾರಣಕ್ಕೆ ಬದ್ಧರಾಗಿ ಕರ್ಮಣ್ಯರಾಗುವ. "ಬದುಕುಗಳ ನಿರಂತರ ಉರುಳು ಚಕ್ರದಲ್ಲಿರುವಾಗ ಅವರವರ (ಋಣಾತ್ಮಕ ಅಥವ ಧನಾತ್ಮಕ) ಕರ್ಮಗಳ ಹೊರೆಯು ಅವರವರ ಬೆನ್ನನ್ನೇ ಏರಿರುತ್ತದೆ" - ಎಂಬ ಎಚ್ಚರವೇ ನಮ್ಮನ್ನು ಶುದ್ಧತೆಯತ್ತಲೂ ನಡೆಸಬಲ್ಲದು. "LESS LUGGAGE MORE COMFORT" - ಅಲ್ಲವೆ?

ಸಾರಾಂಶ : ಈ ಬದುಕಿನಲ್ಲಿ ನಮ್ಮ ನಿರೀಕ್ಷೆ - ಪ್ರತೀಕ್ಷೆಯಲ್ಲಿರುವುದು ನಮ್ಮ ಬಂಧು ಬಳಗವಲ್ಲ; ನಮ್ಮ ಪ್ರಾರಬ್ಧ !

(.....ಸ್ವಗತದಲ್ಲಿ ಒಂದಷ್ಟು ಹುಡುಕಾಟ?!)

                                                  ()()()()()()()()