Saturday, August 1, 2015

ನಾನೊಲಿದಂತೆ (2) - ಹಳೆಯ ಕತೆಗೆ ಹೊಸ ಉಡುಗೆ

                                                  
                                                    ಜೀವಂತೋ~ಪಿ ಮೃತಾಃ ಪಂಚ
                                                                 ವ್ಯಾಸೇನ ಪರಿಕೀರ್ತಿತಾಃ
                                                     ದರಿದ್ರೋ ವ್ಯಾಧಿತೋ ಮೂರ್ಖಃ
                                                                 ಪ್ರವಾಸೀ ನಿತ್ಯಸೇವಕಃ // - (ಪಂಚತಂತ್ರ)

  ವ್ಯಾಸ ಮಹರ್ಷಿಗಳು ಹೇಳಿದಂತೆ - ದರಿದ್ರರು, ರೋಗಿಗಳು, ಮೂರ್ಖರು, ನಿತ್ಯ ಪ್ರವಾಸಿಗಳು, ನಿತ್ಯ ಸೇವಕರು...ಈ ಐವರು ಇದ್ದರೂ ಸತ್ತಂತೆ! ಆತ್ಮಾಭಿಮಾನವನ್ನು ಕಳೆದುಕೊಂಡು ಅಥವ ಅದರ ಅರಿವೇ ಇಲ್ಲದಂತೆ (ದಯನೀಯವಾಗಿ) ಬದುಕನ್ನು ತಳ್ಳಬೇಕಾದ ಅನಿವಾರ್ಯತೆಗೆ ಸಿಲುಕುವ ಅಂತಹ ಬದುಕುಗಳು ಜೀವಚ್ಛವಗಳು!

  ಈ ಹೇಳಿಕೆಯು ಪೂರ್ವದ ದಿನಗಳಲ್ಲಿ ಅಸ್ತಿತ್ವದಲ್ಲಿದ್ದ ಸಾಮಾಜಿಕ ಬದುಕಿನ ಪ್ರತಿಬಿಂಬ. ಅಂದು ಆರ್ಥಿಕವಾಗಿ ದರಿದ್ರರು, ಅರಿವಿನ ಕೊರತೆಯಿಂದಾಗಿ ರೋಗಿಗಳು, ಜ್ಞಾನದ ಮಿತ ಪ್ರಸಾರದಿಂದಾಗಿ ಮೂರ್ಖರು, ಬದುಕಿಗಾಗಿ ಅಲೆಯುತ್ತಿದ್ದ ಪ್ರವಾಸಿಗರು, ಉಳ್ಳವರ ಸೇವೆಯಿಂದಲೇ ಹಸಿವನ್ನು ನೀಗಿಸಿಕೊಳ್ಳುತ್ತಿದ್ದ ನಿತ್ಯ ಸೇವಕರುಗಳಿಂದಲೇ ತುಂಬಿದ್ದ ಸಮಾಜವು ಅಸ್ತಿತ್ವದಲ್ಲಿತ್ತು. ಈಗಲೂ ಇಂತಹ ವರ್ಗವು ನಮ್ಮ ಸಮಾಜದಲ್ಲಿದೆ. ಅಂದು ಇಂತಹ ಮಂದಿಯನ್ನು ದಯಾಪೂರ್ಣ ದೃಷ್ಟಿಯಿಂದ ನೋಡುತ್ತಿದ್ದರೆ ಇಂದು ಅಂತಹ ದೌರ್ಬಲ್ಯಗಳದ್ದೇ ಪ್ರಚಾರ ನಡೆಸಿ ಲಾಭ ಗಿಟ್ಟಿಸಿಕೊಳ್ಳಲು ಉಪಯೋಗವಾಗುತ್ತಿದೆ.

  1. ಸಮಾಜಸೇವೆಯ ಹೆಸರಿನಲ್ಲಿ ಇಂದಿನ "ನಿತ್ಯ ಸೇವಕರು"  NGO ಮುಂತಾದ ರೂಪತೊಟ್ಟು ಪಂಚತಾರಾ ಶೈಲಿಯಲ್ಲಿರುವುದನ್ನು ಕಾಣಬಹುದು. ದಾರಿದ್ರ್ಯದ ಛಾಯಾಚಿತ್ರ - ಕತೆಗಳ ಮೂಲಕ ಕೆಲವರು ನಾನಾ ವಿಧದ ಧಂದೆ ನಡೆಸುತ್ತಿರುವುದೂ ಇಂದಿನ ನಿತ್ಯ ವ್ಯಾಪಾರವಾಗಿದೆ. 

2. ನಿತ್ಯ ಪ್ರವಾಸ ವನ್ನು ಮೆಚ್ಚಿ ಅವಲಂಬಿಸಿದವರೂ ಹೆಚ್ಚುತ್ತಿದ್ದಾರೆ. ತಾವು ಬಿಟ್ಟಿಯಾಗಿ ಗಳಿಸಿದ ಮೂರುಕಾಸನ್ನು ಬೇಕಾಬಿಟ್ಟಿಯಾಗಿ ಸುಖದ ಅನ್ವೇಷಣೆಯಲ್ಲಿ ಉಡಾಯಿಸುತ್ತ, ದುಡ್ಡು ಕೊಟ್ಟು ಕಷ್ಟವನ್ನು ಮೈಮೇಲೆ ಎಳೆದುಕೊಳ್ಳುವ ಶಕ್ತಿಯು ಇಂದಿನ ಸಮಾಜದ ವಿಶಿಷ್ಟ ದರ್ಶನ; ಎಲ್ಲೆಲ್ಲೂ ಸೆಲ್ಫೀ, ಜನಸಾಗರ. (ಉದ್ಯೋಗ ಧರ್ಮದಂತೆ ನಿತ್ಯ ಸಂಚಾರಿಯಾಗಿರುವ ಒಂದು ವರ್ಗವು ಅದನ್ನು ಅನಿವಾರ್ಯವಾಗಿ ಒಪ್ಪಿಕೊಳ್ಳದೆ ಬೇರೆ ಗತಿಯಿಲ್ಲದ ಉದರಂಭರಣದ ಸನ್ನಿವೇಶವೂ ಇದೆ..)

3. ಇಂದು ಎಲ್ಲೆಲ್ಲೂ - ಅಶಾಂತಿಯನ್ನು ಹುಡುಕಿಕೊಂಡು ಓಡುವಂತೆ ಕಾಣುತ್ತಿರುವ ನಮ್ಮ ಸುತ್ತಲಿನ ಪರಿಸರವು "ಮೂರ್ಖರಿಂದ ಮೂರ್ಖರಿಗಾಗಿ ಮೂರ್ಖರೇ"  ಕೈಹಿಡಿದು ನಡೆಸಿದಂತೆ ಗೋಚರಿಸುವುದೂ ಇದೆ! ಬಾಹ್ಯ ವಸ್ತುಗಳ ಆಕರ್ಷಣೆಯಿಂದ ಪರಿವೃತಗೊಂಡಿರುವ ಬದುಕುಗಳ ಗೊತ್ತು ಗುರಿಯಿಲ್ಲದ ಓಟ! ಕಡುಮೂರ್ಖಂ ಹಿತ ಕೇಳ್ವನೆ?

 4. ವೈಜ್ಞಾನಿಕ ಅನ್ವೇಷಣೆಯಲ್ಲಿ ಮಿಂದು ಏಳುತ್ತಿರುವಾಗಲೂ ಬಗೆಬಗೆಯ ಹೊಸ ರೋಗ ಗಳು ಇಂದೂ ಛದ್ಮವೇಷದಲ್ಲಿ ನಮ್ಮನ್ನು ಆಕ್ರಮಿಸುತ್ತಿವೆ. ಬಡದೇಶಗಳ ಔಷಧಜಾಲವು ರೋಗಿಗಳನ್ನು ಪ್ರಯೋಗ ಪಶುಗಳನ್ನಾಗಿಯೂ ಮಾಡುತ್ತಿವೆ. ಶ್ರೀಮಂತ ರೋಗಗಳೂ ಬಡ ರೋಗಿಗಳೂ ವೈರುಧ್ಯದ ಕಾವನ್ನು ಉಣಿಸುತ್ತ ಉಣ್ಣುತ್ತ ಈಗಲೂ ಇದ್ದಾರೆ.

  5. ದರಿದ್ರ ರನ್ನು ಭಾಗ್ಯವಂತರೆಂದು ಮಾತಿನಲ್ಲೇ ವೈಭವೀಕರಿಸಿ, ಭಾಗ್ಯವನ್ನು ವಿತರಿಸಿ, ಭ್ರಮಾಧೀನಗೊಳಿಸುತ್ತಿರುವ ಚಮತ್ಕಾರವೂ ನಡೆಯುತ್ತಿದೆ. ತನ್ಮೂಲಕ ದಾರಿದ್ರ್ಯ ಮತ್ತು ದರಿದ್ರರಿಗೆ ಯಾವುದೇ ಮುಕ್ಕಾಗದಂತೆ, ಯಥಾಸ್ಥಿತಿಯನ್ನು ನಾಜೂಕಾಗಿ ಕಾಪಿಡಲಾಗುತ್ತಿದೆ! ನೀತಿಗೆ ನೆಲೆಯಿಲ್ಲ; ಪ್ರೀತಿಯ ಸುಳಿವಿಲ್ಲ.

  ಇದು ಲಾಭ- ಲೋಭಕ್ಕೆ ಒಳಗಾದ ಲೋಕ ರೀತಿ; ನೀತಿ! ಸಂಗ್ರಹವಾಗಿ: ವ್ಯಾಸರು ಹೇಳಿದ ಮಾತುಗಳು ಇಂದಿಗೂ ಪ್ರಸ್ತುತವೇ ಆಗಿದೆ! ಸಾಮಾಜಿಕ ಚೌಕಟ್ಟು - ಕಾರ್ಯತಂತ್ರಗಳು ಬದಲಾಗಿದ್ದರೂ ಮನುಷ್ಯನ ಸ್ವಭಾವ ಜಗತ್ತು ಮಾತ್ರ ಹಾಗೇ ಉಳಿದಿದೆ; ಗೊತ್ತುಗುರಿಯಿಲ್ಲದ ಜೀವಚ್ಛವ ಬದುಕುಗಳು ಈಗಲೂ ಅಡ್ಡಾಡುತ್ತಿವೆ. ಆತ್ಮಾಭಿಮಾನವನ್ನು ಕಳೆದುಕೊಂಡು ಬದುಕನ್ನು ದೂಡುತ್ತಿರುವ ಭ್ರಮಾಧೀನರು ಈಗಲೂ ಅಸಂಖ್ಯ ಮಂದಿಯಿದ್ದಾರೆ. ಆದರೆ ನಾವು ಮುಂದುವರಿದಿದ್ದೇವೆ ಎಂದು ಹೇಳುತ್ತಲೇ ಇದ್ದೇವೆ... ಅಭಿವೃದ್ಧಿಯ ಹಾದಿಯಲ್ಲಿದ್ದೇವೆ - ಎನ್ನುತ್ತೇವೆ. ಆದರೆ ನಮ್ಮ ಅಭಿವೃದ್ಧಿಯ ಅಳತೆಗೋಲು - "ಅಪರಿಮಿತ ಸಂಪತ್ತು ಸಂಗ್ರಹ" ಎಂಬಲ್ಲಿಗೇ ಸೀಮಿತಗೊಂಡು ಅದನ್ನೇ ನಾವೀಗ - ಅಭಿವೃದ್ಧಿ ಎನ್ನುತ್ತಿದ್ದೇವೆ. ಸಂಪತ್ತಿನ ಸಂಗ್ರಹಕ್ಕಾಗಿ ಪಡಬಾರದ ಯಾತನೆಗಳನ್ನೆಲ್ಲ ನಾವು ಪಡುತ್ತಿದ್ದೇವೆ. ಇಂದಿನ ಒಟ್ಟಾರೆ ಸ್ಥಿತಿಯನ್ನು ನೋಡಿದರೆ, ಇತಿಮಿತಿಯಿಲ್ಲದ ಭೌತಿಕ ಆಕರ್ಷಣೆಗೆ ಬಲಿಯಾಗಿ "ಈ ಭೂಮಿಗೆ ನಮ್ಮನ್ನು ಬಿಟ್ಟರೆ ಬೇರೆ ಗತಿಯಿಲ್ಲ" ಎಂಬ ಭ್ರಮೆಯಲ್ಲಿ ಜನಸಾಗರವು ಕರಗುತ್ತಿರುವಂತೆಯೂ ಅನ್ನಿಸುತ್ತದೆ.

  ಆದರೆ ಕಾಲಧರ್ಮಕ್ಕನುಸರಿಸಿ ಬದುಕಲು ಅಗತ್ಯವಿರುವಷ್ಟು ಸಂಪಾದನೆಯಲ್ಲಿ ತೊಡಗಿಕೊಳ್ಳುವುದು ಗೃಹಸ್ಥನ ಧರ್ಮ.  ಅಗತ್ಯಕ್ಕಿಂತ ಹೆಚ್ಚು ಕೂಡಿಹಾಕಿದಾಗ ಮಾತ್ರ ಅದರ ಪಾರ್ಶ್ವ ಪರಿಣಾಮಗಳು ಬಯಲಾಗತೊಡಗುತ್ತವೆ. ಅಪಾತ್ರರಲ್ಲಿ ಸೇರಿಕೊಳ್ಳುವ ಐಶ್ವರ್ಯಕ್ಕೆ - ಪೊಕ್ಕು ಅಹಂಕಾರವನ್ನು ತುಂಬಿ ಸಮಾಜದಲ್ಲಿ ವಿಷಗಾಳಿ ಹರಡುವಂತೆ ಮಾಡುವ ರಾವಣ ಶಕ್ತಿಯಿದೆ. ಸ್ವಂತಕ್ಕೂ ಇತರರಿಗೂ ಕಂಟಕಪ್ರಾಯವಾದ ಐಶ್ವರ್ಯಪ್ರೇರಿತ ಶಕ್ತಿಯನ್ನು ನಿಗ್ರಹಿಸಲು ಸರಳತೆಯೊಂದೇ ದಾರಿ. ಆತ್ಮಾಭಿಮಾನವುಳ್ಳ ಸಾತ್ವಿಕ ವಿಧೇಯತೆಯು ಪ್ರಕಟವಾಗಿ ಕಾಣುವುದು - ಕೇವಲ ಸರಳತೆಯಲ್ಲಿ. ಸರಳ ವಿಧೇಯ ಬದುಕುಗಳಲ್ಲಿ ಆತ್ಮಾಭಿಮಾನವುಳ್ಳ ಚೈತನ್ಯವು ಅರಳಲೂಬಲ್ಲದು.

  ಆದರೆ ತಮ್ಮನ್ನು ಸಲ್ಲದ ಸ್ಪರ್ಧೆಗೆ ಒಡ್ಡಿಕೊಂಡು, ಒಲ್ಲದ ಕಾರ್ಯಗಳನ್ನೆಲ್ಲ ಮಾಡುತ್ತ, ಇಲ್ಲದ ಸುಖವನ್ನು ಅರಸುವ ಇಂದಿನ ಪರಿಯೇ ವಿಚಿತ್ರವಾಗಿದೆ! ತನ್ನ ವಿದ್ಯೆಯಿಂದ ಇನ್ನೊಂದು ಜೀವವನ್ನು ಮೇಲೆತ್ತಲಾಗದ, ತನ್ನ ಸಂಪತ್ತಿನಿಂದ ಇನ್ನೊಂದು ಹೊಟ್ಟೆಯ ಹಸಿವನ್ನು ನೀಗಿಸಲಾಗದ, ತನ್ನ ಸೇವೆಯಿಂದ ಇನ್ನೊಂದು ಜೀವಿಯ ಕಷ್ಟಕ್ಕೆ ಸ್ಪಂದಿಸಲಾಗದ, ತನ್ನ ಭಕ್ತಿಯಿಂದ ತನ್ನೊಳಗನ್ನು ನಿರೀಕ್ಷಿಸಲಾಗದ ವಿಶೇಷಗಳೆಲ್ಲವೂ ನಾಶವಾಗುವಂತಹ ವ್ಯರ್ಥ ಸ್ವಾರ್ಥಗಳು; ಹೊರ ಶರೀರದ ಜೊತೆಗೆ ಇಂದು ನಾವು ಮಿತಿಮೀರಿದ ಸ್ನೇಹವನ್ನು ಬೆಳೆಸಿಯಾಗಿದೆ. ಹೊಸಬಗೆಯ ಜೀವನಕ್ರಮಕ್ಕೆ ಒಗ್ಗಿಕೊಂಡಾಗಿದೆ. ಆದರೆ ಸ್ವನಿರೀಕ್ಷಣೆಗೆ ತೊಡಗಿಕೊಂಡು ಸ್ವ-ದೋಷಗಳ ಮೆರವಣಿಗೆ ನಡೆಸಿ, ಹೊಸದಾಗಿ ನಿರ್ದೋಷ ಹೆಜ್ಜೆಯನ್ನು ಹಾಕತೊಡಗಲು ನಾವು ಯಾವ ಕ್ಷಣದಲ್ಲೂ ಮನಸ್ಸು ಮಾಡಬಹುದು. ನಾಶವಾಗುವ ಶರೀರಕ್ಕೆ ವಿಪರೀತದ ವೇಷ ಕಟ್ಟಿದರೆ ಶೇಷವುಳಿದೀತೆ?? "ಶರೀರೋ ಕ್ಷಣವಿಧ್ವಂಸಿ ಕಲ್ಪಾಂತಸ್ಥಾಯಿನೋ ಗುಣಾಃ//" - ಶರೀರವು ನಾಶವಾದರೂ ಗುಣ-ಮೌಲ್ಯಗಳು ಎಂದಿಗೂ ನಾಶವಾಗುವುದಿಲ್ಲ! - ಎಂಬುದನ್ನು ಯಾರೂ ಮರೆಯಬಾರದು. ಆದ್ದರಿಂದ ಒಣಸ್ನೇಹಕ್ಕಿಂತ ಗುಣಸ್ನೇಹವೇ ಹಿತಕರ.

  ಪ್ರತಿಯೊಂದು ಬದುಕಿಗೂ ವಿಧೇಯತೆ ಬೇಕು; ವಿಧೇಯತೆಯ ಮಡಿಲಿನಿಂದಲೇ ಬದುಕುಗಳು ಚಿಗುರಬೇಕು. ಆದರೆ ಅರ್ಥಾನ್ವೇಷಿಯಾಗಿ ಥಳುಕಿನ ವಿನಮ್ರತೆಯನ್ನು ಮೆರೆದರೆ ಅದು ಕೇವಲ ಛದ್ಮ ವಿಧೇಯತೆ ಅನ್ನಿಸೀತು. ವಿಧೇಯತೆಯೆಂದರೆ ತೋರಿಕೆಯ ವೇಷವಲ್ಲ; ಯಾರನ್ನಾದರೂ ಮೆಚ್ಚಿಸುವ ಆಯುಧವೂ ಅಲ್ಲ. ನಂಬಿಕೆಗೆ, ಗುರುವಿಗೆ, ಕರ್ತವ್ಯಕ್ಕೆ, ವಿದ್ವತ್ತಿಗೆ, ಜೀವನಾನುಭವಕ್ಕೆ ಸಂದರ್ಭೋಚಿತವಾಗಿ ಸಲ್ಲಿಸುವ ನಿರಪೇಕ್ಷ ಗೌರವವೇ ವಿಧೇಯತೆ. ಆದರೆ ಈಗ ನಾವು ಈ ಭೂಮಿಯ ಮೇಲೆ ಕಾಣುತ್ತಿರುವುದೆಲ್ಲವೂ ಪ್ರತಿಫಲಾಪೇಕ್ಷೆಯ ವಿಧೇಯತೆ. (ಅಪೇಕ್ಷೆಯ ಪ್ರಮಾಣದಲ್ಲಿ ಮತ್ತು ಅಪೇಕ್ಷಿಸುವ ವಸ್ತುವಿನಲ್ಲಿ ಮಾತ್ರ ಅಲ್ಲಲ್ಲಿ ವ್ಯತ್ಯಾಸವಿರಬಹುದು) ನಿಸ್ವಾರ್ಥ ಕರ್ತವ್ಯ ಬದ್ಧತೆಯಿಂದ ನಡೆಸುವ ವಿವೇಚನಾಪೂರ್ಣ ಕ್ರಿಯೆಗಳಲ್ಲಿ ಮಾತ್ರ ಮುಕ್ತ ವಿಧೇಯತೆಯು ಅಡಗಿರುತ್ತದೆ! (ನಮ್ಮ ಪೂರ್ವ ರಾಷ್ಟ್ರಪತಿ ದಿ. A.P.J ಅಬ್ದುಲ್ ಕಲಾಂ ಅವರೂ ಇಂತಹ ವಿಧೇಯತೆಗೆ ಉತ್ತಮ ದೃಷ್ಟಾಂತವಾಗಬಲ್ಲರು.)

   ಬದುಕುಗಳ ಪರಸ್ಪರ ವಿಧೇಯ ಸಂವಹನವು ಸಮುದಾಯದ ಯಶಸ್ಸಿನ ಕೀಲಿಕೈ. ಮುಗ್ಧತೆಯನ್ನೂ ಅಪೇಕ್ಷಿಸುವ ವಿಧೇಯತೆಯ ಉತ್ತಮ ದೃಷ್ಟಾಂತಗಳು ಭಾರತ ದೇಶದ ಹಳ್ಳಿಗಳ ಅಶಿಕ್ಷಿತರಲ್ಲಿ ಇನ್ನೂ ಸಾಕಷ್ಟು ಉಳಿದುಕೊಂಡಿವೆ. ಇಂದಿನ ಶಿಕ್ಷಿತರಿಗಿಂತ ಅಶಿಕ್ಷಿತರೇ ಸ್ವಚ್ಛ ವಿಧೇಯತೆಯನ್ನು ಉಳಿಸಿಕೊಂಡಿರುವುದು ಗಮನಿಸಬೇಕಾದ ಸಂಗತಿ.

  ವಿಧೇಯತೆ ಎಂಬ ಆದರ್ಶಕ್ಕೆ ಶ್ರೇಷ್ಠ ಉದಾಹರಣೆ - ಶ್ರೀಮದ್ರಾಮಾಯಣದ ಸ್ವಾಮಿ ಹನೂಮಂತ. ಗುಣಸ್ನೇಹಿಯಾದ ತನ್ನ ಒಡೆಯನ ಸೇವಕನಾಗಿ, ಸಖನಾಗಿ, ಮಿತ್ರನಾಗಿ, ರಕ್ಷಕನಾಗಿ, ಆಪ್ತನಾಗಿ - ವಿಧೇಯತೆಯ ಭಾಷ್ಯವನ್ನೇ ಬರೆದಂತೆ, ರಾಮಾಯಣದಲ್ಲಿ ಆಂಜನೇಯನು ಪ್ರಕಟಗೊಂಡಿದ್ದಾನೆ! ತಾನೇ ಒಡೆಯನಾಗುವ ಎಲ್ಲ ಸಾಮರ್ಥ್ಯವಿದ್ದರೂ ಹನುಮನು ಯಾವುದೇ ಯಜಮಾನಿಕೆಗಾಗಿ ಹಂಬಲಿಸಿದವನಲ್ಲ. ಸ್ಥಾನ ಮಾನಕ್ಕಾಗಿ ಎಂದೂ ನಿರೀಕ್ಷಿಸಿದವನಲ್ಲ. ಅಣ್ಣನಾದ ವಾಲಿಯ ಶೋಷಣೆಗೆ ಬಲಿಯಾಗಿ ಸಂಕಟಪಡುತ್ತಿದ್ದ ಆತನ ತಮ್ಮನಾದ ಸುಗ್ರೀವನ ಬೆನ್ನು ಬಿಡದೆ ರಕ್ಷಿಸಿದವನು ಹನೂಮಂತ; ಅದಕ್ಕೆ ಪ್ರತಿಯಾಗಿ ಆತನಿಗೆ ಯಾವ ನಿರೀಕ್ಷೆಯೂ ಇರಲಿಲ್ಲ. ಅಟ್ಟಹಾಸಗೈಯುತ್ತಿದ್ದ ವಾಲಿಯ ಯಾವ ಕುತಂತ್ರಗಳಿಗೂ ಆಂಜನೇಯನು ಬಲಿಯಾಗಲಿಲ್ಲ; ಪ್ರತಿತಂತ್ರವನ್ನು ಹೆಣೆದು ಅವನನ್ನು ಮಟ್ಟಹಾಕಲೂ ಇಲ್ಲ. ಶಾಂತ ಎಚ್ಚರದ ಪ್ರತಿರೂಪವಾಗಿದ್ದ ಆಂಜನೇಯನ ಕೂದಲನ್ನು ಕೊಂಕಿಸಲೂ ಮಹಾ ಬಲಿಷ್ಠನಾಗಿದ್ದ ವಾಲಿಗೆ ಸಾಧ್ಯವಾಗಲಿಲ್ಲ. ಮೊದಲು ಸುಗ್ರೀವನ ರಕ್ಷಣೆಯ ಭಾರವನ್ನು ವಹಿಸಿಕೊಂಡು, ಅನಂತರ ಶ್ರೀರಾಮನನ್ನು ಸಂಧಿಸಿದ ನಂತರ ಸುಗ್ರೀವ ಸಹಿತನಾಗಿ ರಾಮನಲ್ಲಿ ಶರಣಾಗತನಾಗಿದ್ದ ವಾಯುಸುತನೀತ. ಕೇಸರಿಯು ಈತನ ತಂದೆಯಾದರೂ ವಾಯ್ವಂಶ ಸಂಜಾತನಾದ ಕಿಷ್ಕಿಂಧೆಯ ವೀರ ಹನುಮನು ಬಲು ಪರಾಕ್ರಮಿ. ತನ್ನಲ್ಲಿದ್ದ ಶಕ್ತಿಯನ್ನು ತನ್ನ ಸ್ವಂತಕ್ಕಾಗಿ ಎಂದೂ ಅಪವ್ಯಯ ಮಾಡದ ಮಾರುತಿಯು ಆದ್ದರಿಂದಲೇ ದೈವಾನುಗ್ರಹಕ್ಕೆ ಪಾತ್ರನಾದನೋ ಅಥವ ದೈವಾನುಗ್ರಹದಿಂದಲೇ ಜನಿಸಿದವನಾದುದರಿಂದ ಜ್ಞಾನ ಗುಣಸಾಗರನೆಂದು ಗೌರವಿಸಲ್ಪಟ್ಟನೋ ಎಂಬುದು ಅವರವರ ಭಕ್ತಿ-ಭಾವಕ್ಕೆ ಬಿಟ್ಟ ವಿಷಯ. ರಾಮಾಯಣದ ಸುಂದರ ಕಾಂಡದಲ್ಲಿ - ರಘುವೀರನ ಪದಾನುರಕ್ತ ನಿಜ ಗುಣಜ್ಞನಾದ ಮಾರುತಿಯ ಭಕ್ತಿಪೂರಿತ, ನಿರ್ಭಯ ವಿಧೇಯತೆಯ ಪೂರ್ಣ ದರ್ಶನವೂ ಆಗುತ್ತದೆ.

  ಪಂಚಭೂತಗಳಲ್ಲಿ ಒಂದು - ವಾಯು. ಆ ವಾಯು ಪುತ್ರನಾದ ಹನುಮಂತನು ಪಂಚಭೂತಗಳಲ್ಲಿ ಒಂದಾದ ಆಕಾಶ ಮಾರ್ಗದಲ್ಲಿ, ಪಂಚಭೂತಗಳಲ್ಲಿ ಇನ್ನೊಂದಾದ ಜಲ ಎಂಬ ಸಮುದ್ರದ ಮೇಲಿಂದ ಹಾರಿ ಲಂಕೆಯನ್ನು ತಲುಪಿ, ಅಲ್ಲಿ ಪಂಚಭೂತಗಳಲ್ಲಿ ಮತ್ತೊಂದಾದ ಭೂಮಿ ತತ್ವದ ಭೂದೇವಿಯ ಅಂಶವಾದ ಸೀತಾಮಾತೆಗೆ ವಂದಿಸಿ, ಆ ಪಂಚಭೂತಗಳಲ್ಲಿ ಐದನೆಯದಾದ ಅಗ್ನಿಯನ್ನು ಲಂಕೆಯಲ್ಲಿ ಇಟ್ಟು - ಸುಟ್ಟು ಬೂದಿಮಾಡಿದನು.

  ಚಮತ್ಕಾರಪೂರ್ಣವಾದ ಈ ನಿರೂಪಣೆಯನ್ನು ಓದುವ ಕವಿಭಾವವು ಪುಳಕಗೊಳ್ಳುತ್ತದೆ. ಪಂಚಭೂತಗಳನ್ನೂ ಒಲಿಸಿ ಕೈವಶ ಮಾಡಿಕೊಂಡಿದ್ದ ಹನುಮನ ವೀರತ್ವದ ಹಿಂದೆ ದುಡಿದದ್ದು ಆತನ ನಿಷ್ಕಳಂಕ ಮುಗ್ಧತೆ! ನಿಷ್ಕಾಮ ಸೇವಾಭಾವ! ಭಕ್ತಿ ನಿಷ್ಠೆ! ಉಪಕರಿಸಿದವರಿಗೆ ಪ್ರತ್ಯುಪಕರಿಸುವ, ಸಜ್ಜನರ ಸಂಕಟಗಳ ಪರಿಹಾರಕ್ಕೆ ಸ್ವೇಚ್ಛೆಯಿಂದ ತನ್ನ ಶಕ್ತಿಯನ್ನು ವಿನಿಯೋಗಿಸುವ ಶುದ್ಧ ಸಂಕಲ್ಪ! ವಿಧೇಯ ಸದ್ಭಾವ!



  ಬಾಲ್ಯದಿಂದಲೂ ವಿನಯ, ಮೇಧಾಶಕ್ತಿ, ಅರ್ಥ- ಅನುಭವ ಜ್ಞಾನವನ್ನು ಹೊಂದಿದ್ದ ಮಾರುತಿಯು ತನ್ನ ವಾಗ್ವೈಖರಿಯಿಂದಲೇ ಶತ್ರುಗಳನ್ನೂ ಮಿತ್ರರನ್ನಾಗಿಸಬಲ್ಲ ಶಕ್ತಿಯನ್ನು ಹೊಂದಿದ್ದ. ತನ್ನ ಸಂಯಮಪೂರ್ಣ ಸನ್ನಡತೆ ಮತ್ತು ವಾಕ್ಕಿನಿಂದಲೇ ಸಕಲ ಶಾಸ್ತ್ರ ಪಾರಂಗತನಾದ ಶ್ರೀರಾಮನನ್ನೂ ಮಾರುತಿಯು ಪ್ರಭಾವಿತಗೊಳಿಸಿದ್ದ. ದೈವ ಬಲವೇ ಆತನ ದೇಹಬಲವಾಗಿತ್ತು. ಮಾತ್ರವಲ್ಲದೆ - ತನ್ನ ವರ್ತನೆ ವ್ಯವಹಾರದಲ್ಲಿ ಒಂದೇ ಒಂದು ಅಪಶಬ್ದವನ್ನು ಬಳಸದೆ ಪರೇಂಗಿತವನ್ನು ಗ್ರಹಿಸಿ ಮಾತನಾಡಬಲ್ಲ ಶಕ್ತಿಯನ್ನು ಆತನು ಸಿದ್ಧಿಸಿಕೊಂಡಿದ್ದ. "ಸೂರ್ಯನಿಂದಲೇ ಪಾಠ ಹೇಳಿಸಿಕೊಂಡ ಮಹಾ ಮೇಧಾವಿ ನವವ್ಯಾಕರಣ ಪಂಡಿತನಾದ ಅಂಜನಾಸುತ"  ಎಂದು ಸ್ತುತಿಸಲ್ಪಟ್ಟ ಆಂಜನೇಯನೀತ. ಯಾಜ್ಞವಲ್ಕ್ಯರನ್ನು ಬಿಟ್ಟರೆ ಸೂರ್ಯನಿಂದಲೇ ವ್ಯಾಕರಣ ಶಾಸ್ತ್ರವನ್ನು ಕಲಿತು ಅರಗಿಸಿಕೊಂಡ ಹನೂಮಂತನಂತಹ ಇನ್ನೊಂದು ದೃಷ್ಟಾಂತವು ಪುರಾಣಗಳಲ್ಲಿ ಸಿಗುವುದಿಲ್ಲ.

  ಸೂರ್ಯನಿಂದ ಪಾಠ ಹೇಳಿಸಿಕೊಳ್ಳುವುದೆಂದರೇನು? ಸೂರ್ಯನ ಚಲನೆಯು - ಕಾಲದ ಪ್ರತೀಕ. ವ್ಯಾಕರಣ ಛಂದಸ್ಸುಗಳೂ ಕಾಲದೊಡನೆ ಹೆಜ್ಜೆ ಹಾಕುವ "ಗತಿ ಸೂತ್ರ" ಗಳು. ಸಾಹಿತ್ಯ ಸಂಗೀತದಂತೆ ನಮ್ಮ ಒಟ್ಟಾರೆ ಬದುಕಿಗೂ ಒಂದು ಗತಿಯಿರುತ್ತದೆ; ಇರಬೇಕು. ಗತಿಹೀನ ಚಲನೆಯ ಯಾವುದೇ ಕ್ರಿಯಾಂಗವೂ ಶೋಭಿಸಲಾರದು. ಅವಿಶ್ರಾಂತ ನಿರಪೇಕ್ಷ ಕ್ರಿಯಾಶೀಲತೆಗೂ ಪ್ರತಿಮೆಯಾಗಿರುವ ಸೂರ್ಯನಿಂದ ಸೃಷ್ಟಿಯ ವ್ಯಾಕರಣವನ್ನು ಅರ್ಥೈಸಿಕೊಂಡ ಮಹಾನುಭಾವ - ಸ್ವಾಮಿ ಹನೂಮಂತ. ಈ ನೆಲೆಯಲ್ಲಿ ಯೋಚಿಸಿದರೆ ಯಾಜ್ಞವಲ್ಕ್ಯರಂತೆ ನಮ್ಮ ಆಂಜನೇಯನೂ ಸಂತುಲಿತ ನಡೆನುಡಿಯ ಗತಿಶೀಲ ಪ್ರಖರ ವ್ಯಕ್ತಿತ್ವವನ್ನು ಹೊಂದಿದವನಾದುದರಿಂದ "ಸೂರ್ಯನಿಂದಲೇ ಪಾಠ ಹೇಳಿಸಿಕೊಂಡಿದ್ದ" ಎಂಬ ವಿಶೇಷೋಕ್ತಿಯನ್ನು ಬಳಸಿರಬಹುದು. (ಕವಿಸಮಯ) ಪರೋಕ್ಷವಾಗಿ ಪ್ರತಿಯೊಂದು ಮತಿಯೂ ಗತಿಗೆ ಬಂಧಿಸಲ್ಪಟ್ಟಾಗಲೇ ಸದ್ವೃತ್ತಿ ಮತ್ತು ಸದ್ಗತಿಯು ಸಾಧ್ಯ - ಎಂಬ ಭಾವವು ಈ ವಿವರಣೆಯಲ್ಲಿ ಸೂಚ್ಯವಾಗಿದೆ. ಆದ್ದರಿಂದಲೇ - ಶಿಷ್ಟ ಚೌಕಟ್ಟಿನಲ್ಲಿ ಗತಿ ಮಿತಿ ಮೀರದ ಶಿಸ್ತುಬದ್ಧ ವಿಧೇಯತೆಯ ಆದರ್ಶವನ್ನು ತನ್ನೊಳಗೆ ಅನ್ವಯಗೊಳಿಸಲು ಹನುಮನು ಸಮರ್ಥನಾದ. ತತ್ಫಲವಾಗಿ - ಕಾಲಸ್ಥಿತನಾದ ಶ್ರೀರಾಮನಿಂದಲೇ "ನ ಸಮಃಸ್ಯಾತ್ ಹನೂಮತಃ" (ಹನೂಮಂತನಿಗೆ ಸಮನಾದವರು ಬೇರೆ ಯಾರೂ ಇಲ್ಲ) ಎಂದು ಸ್ತುತ್ಯನಾದ!



  ಯಾವ ಲೌಕಿಕ ಆಮಿಷಗಳಿಗೂ ಆಕರ್ಷಿತನಾಗದ ಜಿತೇಂದ್ರಿಯನಾಗಿದ್ದ ಹನುಮನು ಬಲ ಪರಾಕ್ರಮಗಳ ಮೂರ್ತರೂಪ.  ಸದ್ವೃತ್ತಿವಂತ ಮಹಾಜ್ಞಾನಿ. ದುಃಖಿತ ಆರ್ತ ಅಸಹಾಯ ಜನರ ಅಳಲಿಗೆ ಶೀಘ್ರ ಸಾಂತ್ವನ ನೀಡುವ ಮನೋಧರ್ಮದ ಭಾವುಕ. ಆದ್ದರಿಂದಲೇ ಮಾರುತಿಯು "ಸಂಕಟಮೋಚಕ" ಎಂದೂ ಸ್ತುತಿಸಲ್ಪಡುತ್ತಿದ್ದಾನೆ. ಕಾವ್ಯದ ವರ್ಣನೆಗಳಿಗೆ ಹೊಂದುವಂತಹ - ಇಂದಿನ ಬದುಕುಗಳಿಗೂ ಪ್ರೇರಣೆ ನೀಡಬಲ್ಲ ಆತನ ಸಾಕಾರ ರೂಪವು - ನಿರಹಂಕಾರ, ಶಾಂತ ಸಜ್ಜನಿಕೆಯ ಆನಂದವನ್ನು ಪ್ರಕಟಪಡಿಸುತ್ತದೆ. ಆಧ್ಯಾತ್ಮಿಕ ನಮ್ರತೆ, ವೀರ್ಯವಂತ ಶರೀರ ಸಂಪತ್ತು, ವಿಜ್ಞಾನಿಯ ಮನೋಬಲ, ಉಪಮಾತೀತ ಏಕಾಗ್ರತೆ...ಇವೆಲ್ಲವೂ ಏಕತ್ರಗೊಂಡ ವಿರಾಟ್ ವ್ಯಕ್ತಿತ್ವವದು. ಇಂತಹ ವ್ಯಕ್ತಿತ್ವದಿಂದ ಪ್ರಕಟವಾಗುವ ದಿವ್ಯ ವಿಧೇಯತೆಯು ಸರ್ವಮಾನ್ಯವೆನ್ನಿಸುತ್ತದೆ. ಸ್ವಂತ ದೇಹ ಬುದ್ಧಿ ಮನಸ್ಸುಗಳ ಸ್ವಾಧೀನವಿಲ್ಲದೆ ಯಾವುದೇ ವಿಧೇಯತೆಯು ಹೊರಹೊಮ್ಮದು. ಅಬಲರ ವಿಧೇಯತೆಯು ದೌರ್ಬಲ್ಯದ ಪ್ರತೀಕವಾದರೆ ಸಬಲರ ವಿಧೇಯತೆಯು ಸಜ್ಜನಿಕೆಯ ದ್ಯೋತಕವೆನಿಸುತ್ತದೆ.

  ಸಾಮಾನ್ಯ ಬದುಕುಗಳಿಗೆ ಅಸಾಧ್ಯವೆನ್ನಿಸುವ ವಿಧೇಯತೆಯ ಮಾದರಿಯು - ಮಾರುತಿಯದು. ಆದರೆ ವಿಧೇಯತೆಗೆ ಇದಕ್ಕಿಂತ ಉತ್ತಮವಾದ ಅಥವ ಪರ್ಯಾಯವಾದ ಮಾದರಿಯು ಇನ್ನೊಂದಿಲ್ಲ. ತೃಪ್ತ ಸಾಹುಕಾರನಂತಿದ್ದ ರಾಮಾಯಣದ ಹನೂಮಂತನಿಗೆ ಭಿಕಾರಿ ಆಸೆಗಳಿಂದ ಮೂಡುವ ಸ್ವಂತ ಸಮಸ್ಯೆಗಳು ಎಂದೂ ತೊಡರಲಿಲ್ಲ. ಸಾತ್ವಿಕ ಬದುಕಿಗೆ ಮಾದರಿಯಾದಂತೆ - ಸಂತೃಪ್ತ ಭಾವಕ್ಕೂ ಹನೂಮಂತನು ಅಪೂರ್ವ ಉದಾಹರಣೆಯಾಗಿ ನಿಲ್ಲುತ್ತಾನೆ. ಕೇಸರಿ ಅಂಜನಾದೇವಿಯರ ಪ್ರಿಯ ಪುತ್ರನಾಗಿ, ಸುಗ್ರೀವನ ಮಹಾಮಂತ್ರಿಯಾಗಿ, ಅನಂತರ ಶ್ರೀ ರಾಮದೂತನಾಗಿ ಆತನು ತನ್ನ ಪಾಲಿಗೆ ಬಂದ ಕಾರ್ಯಭಾರಗಳನ್ನು - ಪದ್ಮಪತ್ರದ ಮೇಲಿನ ಜಲ ಬಿಂದುವಿನಂತೆ ನಿರ್ವಹಿಸಿದ ಪ್ರಬುದ್ಧ ಶೈಲಿಯು ಅನುಕರಣೀಯವೂ ಆಗಿದೆ.

  ವಾಲಿಯ ವಧೆಯ ನಂತರ ದೊರೆಯಾಗಿ ಮೈಮರೆತಿದ್ದ ಸುಗ್ರೀವನು ರಾಮ ಲಕ್ಷ್ಮಣರನ್ನು ಪೂರ್ತಿಯಾಗಿ ಮರೆತು ತನ್ನ ಸ್ವಂತದ ಸುಖಭೋಗದಲ್ಲೇ ಮುಳುಗಿ ಹೋಗಿದ್ದ. ಸೀತೆಯ ವಿಯೋಗದಿಂದ ದುಃಖಿತರಾಗಿ ವಾನರರ ಬೆಂಬಲಕ್ಕಾಗಿ ನಿರೀಕ್ಷಿಸುತ್ತ ಕಿಷ್ಕಿಂಧೆಯಲ್ಲಿ ವ್ಯರ್ಥ ಕಾಲಹರಣದ ಶಿಕ್ಷೆಯನ್ನು ಅನುಭವಿಸುತ್ತಿದ್ದಂತೆ ಮಿಡುಕಾಡುತ್ತಿದ್ದ ರಾಮ ಲಕ್ಷ್ಮಣರನ್ನು ಮರೆತೇ ಬಿಟ್ಟಂತೆ - ಆಗ ಸುಗ್ರೀವನು ಸುಖಲೋಲುಪತೆಯಲ್ಲಿ ಮುಳುಗಿದ್ದ. ಅದು ಸುಖದ ಸ್ವಭಾವ. ಸುಗ್ರೀವನು ತನ್ನ ಪತ್ನಿಯಾದ ರುಮೆ ಮತ್ತು ಗತಿಸಿದ ಅಣ್ಣನಾದ ವಾಲಿಯ ಪತ್ನಿಯಾದ ತಾರೆಯ ಜೊತೆಗೆ ಸುಖದ ಸುಪ್ಪತ್ತಿಗೆಯಲ್ಲಿ ಹೊರಳಾಡುತ್ತಿದ್ದ; ಕಾಮದ ಉಪೋತ್ಪನ್ನವಾದ ಹುಂಬ ದರ್ಪದಿಂದಲೇ ರಾಜಗಿರಿಯ ಕಾಲಯಾಪನೆ ಮಾಡುತ್ತಿದ್ದ. ಹೀಗೇ ಋತುಗಳು ಉರುಳುತ್ತಿದ್ದವು. ಇತ್ತ ಸೀತಾನ್ವೇಷಣೆಗೆ ತೊಡಗದೆ ವ್ಯರ್ಥವಾಗಿ ತಮ್ಮ ಕಾಲಹರಣವಾಗುತ್ತಿದ್ದ ಆ ಸನ್ನಿವೇಶದಲ್ಲಿ ಸುಗ್ರೀವನ ಹಾದಿಕಾಯುತ್ತಿದ್ದ ರಾಮನು ಸಂಕಟಪಡುತ್ತಿದ್ದ. ಇತ್ತ ಸುಗ್ರೀವನಿಗೆ - ವಾಲಿಯ ದೌರ್ಜನ್ಯದಿಂದ ತನ್ನನ್ನು ಪಾರುಮಾಡಿ ಸಿಂಹಾಸನದಲ್ಲಿ ಕುಳ್ಳಿರಿಸಿದ್ದ ರಾಮನ ವಿಸ್ಮರಣೆ ಅಡರಿತ್ತು. ಋಣೀ ಭಾವವನ್ನೇ ಮರೆತಂತೆ ಅಂದು ವರ್ತಿಸಿದ್ದ ಕಿಷ್ಕಿಂಧೆಯ ದೊರೆಯಾದ ಸುಗ್ರೀವನ ಬೇಜವಾಬ್ದಾರಿಯ ವರ್ತನೆಯಿಂದ ರಾಮ ಲಕ್ಷ್ಮಣರ ಸಹನೆಯೂ ಕರಗತೊಡಗಿತ್ತು. ಆಗ ಇವೆಲ್ಲವನ್ನೂ ಮೌನವಾಗಿ ಗಮನಿಸುತ್ತಿದ್ದ ಹನೂಮಂತನು ರಾಮ ಲಕ್ಷ್ಮಣರ ಕೋಪಕ್ಕೆ ಇಡೀ ಕಿಷ್ಕಿಂಧೆಯು ಬಲಿಯಾಗದಂತೆ ಸಕಾಲದಲ್ಲಿ ಕಾರ್ಯಶೀಲನಾಗಿದ್ದ.

  "ನಮ್ಮ ಅತಿಥಿಗಳಾದ ರಾಮ ಲಕ್ಷ್ಮಣರಿಗೆ ಕೊಟ್ಟ ಮಾತನ್ನು ನೆರವೇರಿಸಲು ನಾವಿನ್ನೂ ಪ್ರಯತ್ನವನ್ನೇ ಆರಂಭಿಸಿಲ್ಲ. ಯಾರದೇ ಸಹನೆಗೂ ಒಂದು ಮಿತಿಯೆಂಬುದಿದೆ. ಹೀಗೇ ಉದಾಸೀನ ಮಾಡಿದರೆ ಕಿಷ್ಕಿಂಧೆಗೆ ಆಪತ್ತು ತಪ್ಪಿದ್ದಲ್ಲ. ಏಕಾಂಗಿಯಾಗಿ ವಾಲಿಯನ್ನು ಕೊಂದ ರಾಮನೆಂಬ ವೀರನಿಗೆ ನಾವೆಲ್ಲರೂ ತೃಣ ಸಮಾನರು ಎಂಬುದನ್ನು ಮರೆಯಬಾರದು. ಆದ್ದರಿಂದ ಇದುವರೆಗೆ ನಿಷ್ಕ್ರಿಯರಾದುದಕ್ಕೆ ಶ್ರೀರಾಮನಲ್ಲಿ ಕ್ಷಮೆ ಯಾಚಿಸಿ, ತಕ್ಷಣವೇ ಸೀತಾನ್ವೇಷಣೆಯ ಕಾರ್ಯವನ್ನು ಕೈಗೆತ್ತಿಕೊಳ್ಳುವುದು ಉಚಿತ.  ವಾನರರ ಆಪದ್ಬಂಧುಗಳಂತೆ ಬಂದು ವಾಲಿಯನ್ನು ವಧಿಸಿ ನಮಗೆ ಉಪಕರಿಸಿದ ನಮ್ಮ ಅತಿಥಿಗಳಾದ ರಾಮಲಕ್ಷ್ಮಣರನ್ನು ಬಹಳ ಕಾಲ ಉಪೇಕ್ಷಿಸಿದ ತಪ್ಪಿಗೆ ಪ್ರಾಯಶ್ಚಿತ್ತವಾಗಿ ಅವರಿಗೆ ಪೂರ್ಣ ಶರಣಾಗತರಾಗದೆ ನಮಗೀಗ ಅನ್ಯ ಮಾರ್ಗವಿಲ್ಲ" ಎಂದು ದೊರೆಯಾದ ಸುಗ್ರೀವನಿಗೆ ಚತುರೋಪಾಯಗಳಿಂದ - ವಿಧೇಯವಾಗಿಯೇ ತಿಳಿಹೇಳಿದವನು ಮಹಾಮಂತ್ರಿಯಾಗಿದ್ದ ಹನುಮ.

  ಹನುಮನ ಬೋಧನೆಯಿಂದ ಸುಗ್ರೀವನ ಮೌಢ್ಯವು ಕರಗಿ ತಕ್ಷಣ ಎಚ್ಚತ್ತುಕೊಂಡು ಚುರುಕಾಗಿದ್ದ. ಅದೊಂದು ದಿನ ಸಹನೆಯ ಕಟ್ಟೆಯೊಡೆದು, ತನ್ನ ಭೇಟಿಗೆಂದು ಸಿಟ್ಟಿನಿಂದಲೇ ಬಂದಿದ್ದ ಲಕ್ಷ್ಮಣನನ್ನು ಸಮಾಧಾನಿಸುವ ಉಪಾಯವನ್ನು ಆಗ ಸುಗ್ರೀವನು ಚಿಂತಿಸುತ್ತಾನೆ. ಸ್ತ್ರೀ ಜನರೆದುರು ಮುಖಮುರಿದಂತೆ ಮಾತನಾಡಲು ಸಭ್ಯರು ಹಿಂಜರಿಯುವುದು ಸಹಜ. ಅದೇ ಮಾರ್ಗವು ಉಚಿತ ಎಂದುಕೊಂಡ ಸುಗ್ರೀವನು ಸಿದ್ಧನಾಗುತ್ತಾನೆ.

  "ಶ್ರೀ ರಾಮನೊಡನೆ ದ್ವೇಷವು ತರವಲ್ಲ" ಎಂದು ತನ್ನ ಗಂಡನಾದ ವಾಲಿಗೆ ಬೋಧಿಸಿದ ಪತ್ನಿ - ತಾರೆ. ಮೊದಲ ನೋಟದಲ್ಲೇ ಶ್ರೀರಾಮನನ್ನು ಮಹಾತ್ಮನೆಂದು ಗುರುತಿಸಿ ಶರಣಾದ ಸ್ತ್ರೀ ಆಕೆ. ಅಂತಹ ಪತ್ನಿಯ ಮಾತನ್ನು ಕೊಡವಿ ರಾಮನೊಂದಿಗೆ ಸ್ಪರ್ಧೆಗಿಳಿದು ಹತನಾದವನು - ವಾಲಿ. ಇವೆಲ್ಲವೂ ರಾಮಲಕ್ಷ್ಮಣರಿಗೆ ಗೊತ್ತಿತ್ತು. ತನ್ನ ಯೋಜನೆಯನ್ನು ಕುರಿತು ಮಾರುತಿಯೊಂದಿಗೆ ಮಂತ್ರಾಲೋಚಿಸಿದ ಸುಗ್ರೀವನು - ತಾರೆಯನ್ನೂ ತನ್ನ ಜೊತೆಗಿರಿಸಿಕೊಂಡು ಮುಂದಾಗಿ ಹೋಗಿ ಲಕ್ಷ್ಮಣನನ್ನು ಭೇಟಿಯಾಗುವಂತೆ ಹನುಮನಿಗೇ ಆಜ್ಞಾಪಿಸಿದ.

  ರಾಮನಿಂದಲೇ ಹತನಾದ ವಾಲಿಯ ಪತ್ನಿಯಾದ ತಾರೆಯನ್ನು ರಾಮಾನುಜನ ಎದುರಿನಲ್ಲಿ ನಿಲ್ಲಿಸಿ - ಸಹಾನುಭೂತಿ ಮೂಡುವಂತೆ ಮಾಡಿ, ಆ ಲಕ್ಷ್ಮಣನ ಕೋಪದ ತೀವ್ರತೆಯನ್ನು ಶಮನಗೊಳಿಸುವ ಚಾಣಾಕ್ಷ ಕ್ರಮಕ್ಕೆ ಮುಂದಾದದ್ದೂ ಹನುಮ ಸುಗ್ರೀವರ ವಿವೇಕಪೂರ್ಣ ನಡೆ ಎನ್ನಬೇಕು. ಗಂಭೀರವಾಗಿದ್ದ ಪರಿಸ್ಥಿತಿಯನ್ನು ತಿಳಿಗೊಳಿಸಲು ಕೈಗೊಂಡ ಈ ನಡೆಯನ್ನು - ಹನುಮ ಸುಗ್ರೀವರು ಪ್ರಯೋಗಿಸಿದ ವಿವೇಚನೆ - ಸಭ್ಯ ರಾಜಕಾರಣವೆನ್ನದೆ ಅನ್ಯ ಮಾರ್ಗವಿಲ್ಲ. ಅನಾಹುತಗಳನ್ನೆಬ್ಬಿಸುವ ಉಗ್ರಕೋಪವನ್ನು ಶಾಂತಗೊಳಿಸಿದ ನಂತರವೇ ಎದುರಾಗುವುದೂ ಜಾಣ ನಡೆಯೇ. ಸುಗ್ರೀವನೇ ಮೊದಲು ಎದುರಾಗಿದ್ದರೆ ಲಕ್ಷ್ಮಣನ ಕೋಪವು ಎಂತಹ ಅನಾಹುತವನ್ನು ಮಾಡುತ್ತಿತ್ತೋ ಊಹಿಸುವುದೂ ಕಷ್ಟ. ರಾಮಾಯಣದ ಈ ಸನ್ನಿವೇಶವು ಅತಿ ರಮ್ಯವಾಗಿದೆ.



  ರಾಮನ ಪ್ರತಿನಿಧಿಯಾಗಿ ಕೋಪದಿಂದ ಉರಿಯುತ್ತ ಅರಮನೆಗೆ ಬಂದಿದ್ದ ಲಕ್ಷ್ಮಣನನ್ನು ಹನೂಮಂತ ಮತ್ತು ತಾರೆಯು - ವಿನಯದಿಂದ ಸಂಧಿಸಿ ನಮಸ್ಕರಿಸಿ ಸವಿ ನುಡಿಗಳಿಂದ ಉಪಚರಿಸಿ ಗೌರವಿಸುತ್ತಾರೆ. ಪತಿ ವಾಲಿಯನ್ನು ಕಳೆದುಕೊಂಡಿದ್ದ ತಾರೆಯು ತನ್ನ ದುಃಖವನ್ನು ಬದಿಗಿಟ್ಟು ತಾನೇ ಬಂದು ಲಕ್ಷ್ಮಣನ ಎದುರಲ್ಲಿ ನಿಂತಾಗ ಲಕ್ಷ್ಮಣನ ಸಿಟ್ಟು ಆಗಲೇ ಹಿಂದೆ ಸರಿಯತೊಡಗಿತ್ತು. ಅನಂತರ ದೊರೆ ಸುಗ್ರೀವನು ಪ್ರವೇಶಿಸಿ ಪೂರ್ಣ ಶರಣಾಗತ ಭಾವದಿಂದ ಲಕ್ಷ್ಮಣನಿಗೆ ಸಾಷ್ಟಾಂಗವೆರಗುತ್ತಾನೆ. "ಪ್ರಭುವೇ, "ವಿಷಯ ಮದ" ಎಂಬುದು ಋಷಿಗಳನ್ನೂ ಬಿಟ್ಟಿಲ್ಲ. ನಾನೋ ಬುದ್ಧಿ ನಷ್ಟವಾಗಿರುವ ಪಾಮರ... ವಾನರ..." ಎನ್ನುವಾಗಲೇ ಮಂತ್ರಿಯಾದ ಮಾರುತಿಯು ಮುಂದೆ ಬಂದು ಲಕ್ಷ್ಮಣನೊಡನೆ ಮಾತಿಗೆ ತೊಡಗುತ್ತಾನೆ. "ಈಗಾಗಲೇ ಸುಗ್ರೀವನ ಕಟ್ಟಪ್ಪಣೆಯ ಮೇರೆಗೆ ರಾಮಕಾರ್ಯ ನಿರ್ವಹಣೆಗಾಗಿ ಸುತ್ತಲೂ ದೂತರನ್ನು ಕಳಿಸಿ ಸೈನ್ಯವನ್ನು ಕಲೆಹಾಕುವ ಪ್ರಯತ್ನ ನಡೆಸಲಾಗಿದೆ" ಎಂದು ಮಾರುತಿಯು ಹೇಳಿದಾಗ ಲಕ್ಷ್ಮಣನು ಶಾಂತನಾಗಿ ಕಪಿವೀರರನ್ನೆಲ್ಲ ಕೂಡಿಕೊಂಡು ರಾಮನಿರುವಲ್ಲಿಗೆ ಬರುತ್ತಾನೆ. ಕಟುವಾಗಬಹುದಾಗಿದ್ದ ಒಂದು ಸಂದರ್ಭವನ್ನು - ಕಪಿವೀರರು ತಮ್ಮ ಪ್ರಬುದ್ಧವಾದ ರಾಜ್ಯಶಾಸ್ತ್ರೀಯ ವಿವೇಕಪೂರ್ಣ ವಿಧೇಯತೆಯ ಮೂಲಕವೇ ಪರಿಹರಿಸಿಕೊಂಡ ಪರಿ ಇದು.



  ತಕ್ಷಣ ಲಕ್ಷ್ಮಣನೊಂದಿಗೆ ಅಲ್ಲಿಂದ ಹೊರಟು ರಾಮನಿರುವಲ್ಲಿಗೆ ಬಂದ ಸುಗ್ರೀವ, ಹನುಮ ಮುಂತಾದ ಕಪಿವೀರರು ಸ್ವಾಮಿ ಭಕ್ತಿಯಿಂದ ಕೈಮುಗಿದು ತಲೆಬಾಗಿ ನಿಂತರು. ಆಗ ಸುಗ್ರೀವನು "ಸ್ವಾಮೀ, ಅಪರಾಧಿ ನಾನಲ್ಲ; ನಿನ್ನ ಮಾಯೆಯೇ ಪ್ರಬಲವಾಗಿದ್ದರೆ ನಾನೇನು ಮಾಡಲಿ? ಹೇಳಿ ಕೇಳಿ ನಾನೊಬ್ಬ ಕಪಿ; ಪಾಮರ; ಪಶು! ಆದ್ದರಿಂದಲೇ ಕಾಮುಕನೂ ಆಗಿದ್ದೇನೆ. ನಿನ್ನ ದಯೆಯಿಲ್ಲದೆ ಜೀವಿಗಳ ಕ್ಷುದ್ರ ಭಾವವು ನಷ್ಟವಾಗದು ಪ್ರಭೂ. ಹಾಗೇನಾದರೂ ಆದರೆ - ನನಗೂ ನಿನಗೂ ವ್ಯತ್ಯಾಸವೇನು? ಸ್ವಂತ ಬಲದಿಂದಲೇ ರಾಮಭಾವಪೂರ್ಣರಾದ ಅಂತಹ ಮಹಿಮೆಯುಳ್ಳವರು ಈ ಭೂಮಿಯಲ್ಲಿ ಯಾರಾದರೂ ಇದ್ದರೆ ಅವರು ರಘುವೀರನಾದ ನಿನಗೆ ಸಮಾನರೆಂದೇ ನಾನು ಭಾವಿಸುತ್ತೇನೆ. ನಿನ್ನ ಕೃಪೆಯಿಲ್ಲದೆ ಜೀವಿಗಳು ನಡೆಸುವ ಯಾವುದೇ ಪ್ರಯತ್ನವು ಮಾಯೆಯಿಂದ ನಮ್ಮನ್ನು ಪಾರುಮಾಡಲಾರದು. ಆದ್ದರಿಂದ ನಾನೇನೂ ಅಲ್ಲ; ನೀನೇ ಎಲ್ಲ... ನೀನೇ ಮತಿ; ನೀನೇ ಗತಿ; ನೀನೇ ಸ್ವಾಮಿ; ನಮ್ಮನ್ನು ನೀನೇ ಉದ್ಧರಿಸು.." ಎಂದು ಪೂರ್ಣ ಶರಣಾಗತನಾದಾಗ - ರಾಮನು "ಸುಗ್ರೀವಾ, ನನ್ನ ಸೋದರನಾದ ಭರತನಂತೆಯೇ ನೀನೂ ನನಗೆ ಪ್ರಿಯನು. ಇನ್ನಾದರೂ ಸೀತೆಯ ಶೋಧಕ್ಕೆ ಮನಮುಟ್ಟಿ ಪ್ರಯತ್ನಿಸು.." ಎಂದ. "ಇದುವರೆಗೆ ನೀನು ಮನಃಪೂರ್ವಕವಾಗಿ ಪ್ರಯತ್ನಿಸಲಿಲ್ಲ.." ಎಂಬುದನ್ನು ರಾಮನು ಸೂಚ್ಯವಾಗಿ ಹೇಳಿ ಸುಗ್ರೀವನಿಗೆ ಚುರುಕು ಮುಟ್ಟಿಸಿ ಕಪಿಗಡಣವನ್ನು ಕ್ರಿಯಾಶೀಲಗೊಳಿಸುತ್ತಾನೆ; ಶ್ರೀರಾಮನ ಕ್ಷಮಾಕಟಾಕ್ಷದಿಂದ ಸಂಸ್ಕರಿತಗೊಂಡ ಕಪಿಗಳ ಪಶುಭಾವವು ರಾಮಕಾರ್ಯದಲ್ಲಿ ವಿಧೇಯವಾಗಿ ತೊಡಗಿಕೊಳ್ಳುತ್ತದೆ. ಸುಸಂಸ್ಕಾರಗೊಂಡ ಕರ್ತವ್ಯ ಬದ್ಧತೆಯು ವಿಧೇಯತೆಯ ಪ್ರಧಾನ ಅಂಗ.

  ರಾಮನ ಮಾತಿನಿಂದ ಚುರುಕುಗೊಂಡ ಸುಗ್ರೀವನು ತನ್ನ ಕಪಿಗಡಣಕ್ಕೆ ಆಜ್ಞಾಪಿಸುತ್ತಾನೆ. "ಪ್ರಿಯ ವಾನರವೀರರೇ, ಮುಂದಿನ ಒಂದು ತಿಂಗಳ ಅವಧಿಯು ಮೀರುವುದರೊಳಗೆ ಸೀತಾಶೋಧದ ಕಾರ್ಯವನ್ನು ಮುಗಿಸಿಕೊಂಡು ನೀವೆಲ್ಲರೂ ಹಿಂದಿರುಗಬೇಕು; ವಿಫಲರಾದವರನ್ನು ನನ್ನ ಕೈಯಿಂದಲೇ ಕೊಂದು ಹಾಕುವೆ. ಈ ನಿರ್ಣಾಯಕ ಆಜ್ಞೆಯಲ್ಲಿ ಲವಲೇಶವಾದರೂ ದಯೆಯಿಲ್ಲ; ಮಾಯೆಯೂ ಇಲ್ಲ.." ಎಂದುಬಿಟ್ಟ. ಸುಗ್ರೀವನ ಕಟ್ಟುನಿಟ್ಟಿನ ಆಜ್ಞೆಯನ್ನು ಪಾಲಿಸಲು ಕಪಿವೀರರೆಲ್ಲರೂ ಬದ್ಧರಾದರು. ನಿರೀಕ್ಷೆಯನ್ನು ಪೂರೈಸಲು ಕಷ್ಟಕರವಾದ ಆಜ್ಞೆಯೇ ಸುಗ್ರೀವಾಜ್ಞೆ. ಕಡಿಮೆ ಮಾತಿನಲ್ಲಿ ಅಪಾರ ನಿರೀಕ್ಷೆಗಳಿರುವ ಆಜ್ಞೆಯೇ ಸುಗ್ರೀವಾಜ್ಞೆ. ಅಂದು ಸ್ವತಃ ಸುಗ್ರೀವನ ಸುಗ್ರೀವಾಜ್ಞೆಯನ್ನು ಪಾಲಿಸುವುದು ಕಠಿಣ ಕಾರ್ಯವಾಗಿತ್ತು. ಅಂತಹ ಕಠಿಣವಾದ ಸುಗ್ರೀವಾಜ್ಞೆಗೆ ತಲೆಬಾಗಿ ಶ್ರೀರಾಮನ ಅನುಮತಿಯನ್ನೂ ಪಡೆದ ಕಪಿವೀರರು - ಸೈನ್ಯ ಸಂಗ್ರಹ ಮತ್ತು ಸೀತೆಯ ಸಮಾಚಾರವನ್ನು ಸಂಗ್ರಹಿಸಲು - ದಿಕ್ಕು ದಿಕ್ಕಿಗೆ ಹೊರಟುಹೋಗಿದ್ದರು.

  ಆಗ ಅಲ್ಲೇ ಮೌನವಾಗಿ ಹಿಂದೆ ನಿಂತಿದ್ದು, ಅಲ್ಲಿನ ಆಗುಹೋಗುಗಳನ್ನೆಲ್ಲ ಗಮನಿಸುತ್ತಿದ್ದ ಮಾರುತಿಯು ಕೊನೆಯದಾಗಿ ಮುಂದೆ ಬಂದು ಶ್ರೀರಾಮನ ಸಮ್ಮುಖದಲ್ಲಿ ನಡುಬಾಗಿಸಿ ನಿಂತು ಆತನ ಆದೇಶದ ನಿರೀಕ್ಷೆಯಲ್ಲಿ ಶ್ರೀರಾಮನ ಚರಣವನ್ನು ಸ್ಪರ್ಶಿಸಿದ್ದ. ಪ್ರೀತಿಯಿಂದ ಮಾರುತಿಯ ಮಸ್ತಕವನ್ನು ಸ್ಪರ್ಶಿಸಿದ್ದ ರಾಮನು ತನ್ನ ಬೆರಳಿನ ಮುದ್ರೆಯುಂಗುರವನ್ನು ತೆಗೆದು ಅಭಯದ ಸಂಕೇತದಂತೆ ಆಗ ಆತನ ಕೈಯಲ್ಲಿಟ್ಟಿದ್ದ. "ಮಾರುತೀ, ನೀನು ಸೀತೆಯನ್ನು ಕಂಡು ಈ ಉಂಗುರವನ್ನು ನೀಡಿ ಅವಳನ್ನು ಸಾಂತ್ವನಗೊಳಿಸು. ಆಕೆಗೆ ನನ್ನ ಪರಾಕ್ರಮವನ್ನು ನೆನಪಿಸಿ ಸೀತೆಯಲ್ಲಿ ಧೈರ್ಯ ತುಂಬು. ಈ ಸೀತಾರಾಮನ ವಿರಹಾವಸ್ಥೆಯನ್ನೂ ವಿವರಿಸಿ ಹೇಳು. ಶೀಘ್ರದಲ್ಲಿ ಹಿಂದಿರುಗು." ಎಂದು ಹೇಳಿ ಹನುಮನನ್ನು ಆಶೀರ್ವದಿಸಿದ್ದ. ರಾಮನ ವಿಶೇಷ ಕೃಪೆಯ ಅನುಭವದಿಂದ ಆಗ ರೋಮಾಂಚನಗೊಂಡ ಆಂಜನೇಯನು ರಾಮಧ್ಯಾನ ಮಾಡುತ್ತ ಸೀತಾನ್ವೇಷಣೆಗೆ ಹೊರಟಿದ್ದ.

  ಬಾಲ್ಯದಲ್ಲಿಯೇ ತನ್ನ ದೇಹ ಶಕ್ತಿಯ ಮೂಲಕ ಚೆಲ್ಲಾಟವಾಡುತ್ತಿದ್ದ ಮಾರುತಿಯು ಅತ್ಯುತ್ಸಾಹದ ಭರದಲ್ಲಿ ಋಷಿ ಮುನಿಗಳನ್ನೂ ಪೀಡಿಸುತ್ತಿದ್ದನಂತೆ. ಇದರಿಂದಾಗಿ ತಪಸ್ವೀಮುನಿಗಳ ಆಗ್ರಹಕ್ಕೂ ತುತ್ತಾಗಿದ್ದ. ಹೀಗಿದ್ದರೂ ಹನೂಮಂತನ ಜನ್ಮದ ಉದ್ದೇಶ ಮತ್ತು ಭವಿಷ್ಯವನ್ನು ಋಷಿಗಳು ತಮ್ಮ ಅಂತಃದೃಷ್ಟಿಯಿಂದ ತಿಳಿದುಕೊಂಡು -"ಶ್ರೀರಾಮನ ಸಂದರ್ಶನವಾಗುವವರೆಗೂ ನಿನ್ನ ಶಕ್ತಿಯ ಅರಿವು ನಿನಗೆ ಆಗದಿರಲಿ" - ಎಂಬ ಶಾಪದ ಮೂಲಕ ಆತನನ್ನು ನಿಗ್ರಹಿಸಿದ್ದರು. ರಾಮ ದರ್ಶನವಾದ ನಂತರ ಹನುಮನು ಋಷಿಗಳ ಶಾಪದಿಂದಲೂ ಮುಕ್ತನಾಗಿದ್ದ.

  ವಾಲಿಯ ಭಯದಿಂದ ಸುಗ್ರೀವನನ್ನು ಕಟ್ಟಿಕೊಂಡು ನಿಂತಲ್ಲಿ ನಿಲ್ಲದೆ ತಲೆ ತಪ್ಪಿಸಿಕೊಂಡು ಅದುವರೆಗೂ ಹನುಮನೂ ಓಡುತ್ತಿದ್ದ. ಓಡುತ್ತಿದ್ದ ಸುಗ್ರೀವನ ಹಿಂದಿನಿಂದ - ತನ್ನೊಳಗಿನ ಶಕ್ತಿಯ ಅರಿವಿಲ್ಲದ ಮಾರುತಿಯೂ ಓಡುತ್ತಿದ್ದ. ಋಷ್ಯಮೂಕ ಪರ್ವತದಲ್ಲಿ ಇವರಿಬ್ಬರೂ ತಮ್ಮ ಸಹಚರರೊಂದಿಗೆ ಬಹು ಕಾಲ ತಲೆಮರೆಸಿಕೊಂಡಂತೆ ಬಳಲಿದ್ದರು.  ಆಗ ಸಂದರ್ಭದ ಕಟ್ಟಿಗೆ ಸಿಲುಕಿದಂತೆ ತನಗೆ ತಾನು ಅಪರಿಚಿತನಂತೆ ಮಹಾಬಲಿ ಹನುಮನೂ ದಿಙ್ಮೂಢ ಸ್ಥಿತಿಯಲ್ಲಿರಲು ಋಷಿ ಶಾಪವೇ ಕಾರಣ. ಭಯನಿವಾರಕನಾದ ಶ್ರೀರಾಮನ ಸ್ಪರ್ಶನ-ದರ್ಶನದ ನಂತರ ಋಷಿ ಶಾಪ ಮುಕ್ತವಾಗಿ, ಮಾರುತಿಯ ಭಯ ಹಿಂಜರಿಕೆಗಳು ತೊಲಗಿ ಸುರಕ್ಷಿತ ಭಾವ ಮೂಡಿ, ಕರ್ತೃತ್ವಶಕ್ತಿಯು ಜಾಗ್ರತವಾಗಿತ್ತು. ಶ್ರೀರಾಮನ ಭೇಟಿಯ ನಂತರ ಪೂರ್ಣ ಹನುಮನ ಆವಿರ್ಭಾವವಾಗಿತ್ತು! ಆತನು ತನ್ನ ಶಕ್ತಿ ಜ್ಞಾನವೆಲ್ಲವನ್ನೂ ರಾಮ ಕಾರ್ಯಕ್ಕೇ ಏಕತ್ರಗೊಳಿಸಿಕೊಂಡ; ತನ್ನ ಜನ್ಮದ ಉದ್ದೇಶ ಸಾಧನೆಯಲ್ಲಿ ಸಂಪೂರ್ಣವಾಗಿ ತೊಡಗಿಕೊಂಡ. ಮುಂದೆ ಜಾಂಬವಂತ, ಅಂಗದ ಮತ್ತು ಹಿರಿಯ ಕಿರಿಯ ಕಪಿಸಮೂಹದ ಪೂರ್ಣ ವಿಶ್ವಾಸಕ್ಕೆ ತಲೆಬಾಗಿ ಮಿತ್ರಭಾವದ ಬದ್ಧತೆಯ ಜೊತೆಗೆ ರಾಮಕಾರ್ಯದಲ್ಲಿಯೇ ತತ್ಪರನಾದ.



  ತನ್ನ ಸಾಗರೋಲ್ಲಂಘನದ ಹಾದಿಯಲ್ಲಿ ಮೈನಾಕನ ಆತಿಥ್ಯವನ್ನು ಪಡೆದು, ಸುರಸೆಯನ್ನು ಮೆಚ್ಚಿಸಿ, ಸಿಂಹಿಕೆಯನ್ನು ಕೊಂದು - (ಸತ್ವ ರಜ ತಮೋಗುಣಗಳನ್ನು ಮೀರಿ) ಸಾಗರೋಲ್ಲಂಘನಗೈದು, ಲಂಕಿಣಿಯನ್ನು ಗೆದ್ದು, ಅಶೋಕವನದಲ್ಲಿ ಸೀತೆಯನ್ನು ಕಂಡು ಅದೇ ಅಶೋಕ ವೃಕ್ಷವನ್ನೇರಿ ಅಲ್ಲಿನ ವಿದ್ಯಮಾನವನ್ನು ಗ್ರಹಿಸುತ್ತ ಒಂದು ಪ್ರಹರದಷ್ಟು ಕಾಲ (3 ಗಂಟೆ) ಅಲ್ಲೇ ತಾಳ್ಮೆಯಿಂದ ಕುಳಿತು ಹನೂಮಂತನು ಯೋಚಿಸಿದ್ದ; ತನ್ನ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬಹುದಾದ ರೀತಿಯನ್ನು ರೂಪಿಸಿಕೊಂಡಿದ್ದ. ವಿಭೀಷಣನಿಂದ ಸೀತೆಯ ವಿಳಾಸವನ್ನು ಅದಾಗಲೇ ಪಡೆದಿದ್ದ ಹನೂಮಂತನು ನೇರವಾಗಿ ಹೋಗಿ ಸೀತೆಯ ಎದುರಲ್ಲಿ ನಿಲ್ಲಬಹುದಿತ್ತು. ಆದರೆ ಮಾರುತಿಯ ಕಾರ್ಯಶೈಲಿಯು ನವೀನವಾಗಿತ್ತು.

  ಅಶೋಕವನದಲ್ಲಿ ಪರಿತಪಿಸುತ್ತಿದ್ದ ಸೀತಾಮಾತೆಯನ್ನು ಮಾರುತಿಯು ಸಂಧಿಸಿದ ಸಂದರ್ಭವು ಶಕ್ತಿಯ ನಿಯಂತ್ರಣ ಮತ್ತು ಸದುಪಯೋಗದ ವಿಧೇಯ ಮಾದರಿಯನ್ನು ನಮ್ಮ ಮುಂದಿಡುತ್ತದೆ. ಮೊದಲೇ ಬಸವಳಿದು ಬೆಂಡಾಗಿ ಅಶೋಕವನದಲ್ಲಿದ್ದ ಸೀತೆಯೆದುರಲ್ಲಿ ಯಾವುದೋ ಅಪರಿಚಿತ ಕಪಿಯು ಧುತ್ತೆಂದು ಹಾರಿ ನಿಂತಿದ್ದರೆ - ರಾಕ್ಷಸರ ಇನ್ನೊಂದು ಮಾಯಾಜಾಲ - ಎಂದೇ ಭಾವಿಸಿ ಸೀತೆಯು ಮತ್ತಷ್ಟು ಕಂಗಾಲಾಗಬಹುದಿತ್ತು. ಆದ್ದರಿಂದ ಭೇಟಿಯಾಗುವ ವ್ಯಕ್ತಿಯ ಮನೋಸ್ಥಿತಿಯನ್ನು ಅರ್ಥೈಸಿಕೊಂಡು ಸೂಕ್ತ ಸಮಯವನ್ನು ಸೃಷ್ಟಿಸಲು ಮಾರುತಿಯು ಉದ್ಯುಕ್ತನಾಗಿದ್ದ.

ಮರದ ಮೇಲಿದ್ದ ಹನುಮನು, ರಾಮನು ಕೊಟ್ಟ ಉಂಗುರವನ್ನು ಸೀತೆಯ ಎದುರಿನಲ್ಲಿ ಮೊದಲು ಬೀಳಿಸಿದ. ಆಕೆಯ ಮುಖಭಾವದಿಂದಲೇ ಆ ಉಂಗುರವನ್ನು ಆಕೆಯು ಗುರುತಿಸಿದಂತೆ ಕಂಡಾಗ, ತಾನು ಕುಳಿತ ಜಾಗದಿಂದಲೇ ರಾಮನ ಗುಣಗಾನ ಮಾಡತೊಡಗಿದ; ಸೀತಾಪಹಾರದ ವರೆಗಿನ ರಾಮಾಯಣದ ಸೂಕ್ಷ್ಮ ಭಾಗಗಳ ಗಾಯನದಲ್ಲಿ ಆಗ ಮಗ್ನನಾಗಿದ್ದ ಹನುಮನನ್ನು ತಲೆಯೆತ್ತಿ ನೋಡಿದ ಸೀತೆಯೂ - ಆಗ ಭಾವುಕಳಾದಳು. "ಶ್ರೀರಾಮನ ಶ್ರವಣಾಮೃತ ಸುಧೆಯನ್ನು ತನಗೆ ಕೇಳಿಸಿದ ರಾಮ ಭಕ್ತನು ತನ್ನೆದುರಿಗೆ ಪ್ರತ್ಯಕ್ಷವಾಗಬಾರದೆ?" ಎಂಬ ಭಾವಾಬ್ಧಿಯಲ್ಲಿ ಸೀತೆಯು ಮುಳುಗಿದಾಗ - ಪರೇಂಗಿತವನ್ನು ಅರಿಯಬಲ್ಲವನಾಗಿದ್ದ ಮಾರುತಿಯು ಮರದಿಂದ ಇಳಿದು ಸೀತಾಮಾತೆಗೆ ಕೈಮುಗಿದು ನಿಂತ.



  ಅನಂತರ ಸೀತಾಮಾತೆಗೆ ತನ್ನಲ್ಲಿ ವಿಶ್ವಾಸ ಮೂಡುವಂತೆ ಸಾಧಾರವಾಗಿ ಮಾತನಾಡಿ, ಭರವಸೆಯ ಧೈರ್ಯವನ್ನು ತುಂಬಿ ಶ್ರೀರಾಮನ ಸಾಮರ್ಥ್ಯವನ್ನು ಪುನರಪಿ ನೆನಪಿಸಿ, ಸೀತೆಯು ರಾಮಭಾವದಲ್ಲಿ ಮುಳುಗುವಂತೆ ಮಾಡಿ, ಮಾತೆಯ ಆಶೀರ್ವಾದವನ್ನು ಪಡೆದುಕೊಂಡ. ಸೀತೆಯನ್ನು ತಾನು ಕಂಡ ಗುರುತಿಗಾಗಿ ಏನನ್ನಾದರೂ ಪಡೆದುಕೊಳ್ಳುವ ಇಚ್ಛೆ ವ್ಯಕ್ತಪಡಿಸಿದಾಗ, ಆಕೆಯು ನೀಡಿದ - ಮುಡಿಮಣಿಯಾದ ಚೂಡಾಮಣಿಯನ್ನು ಪಡೆದುಕೊಂಡ. ರಾಮಶರಣಾಗತಿಯ ಸಂಕೇತವಾಗಿ ಸೀತಾಮಾತೆಯು ನೀಡಿದ್ದ ಆ ಚೂಡಾಮಣಿಯನ್ನು ಜೋಪಾನವಾಗಿ ತನ್ನ ಬೆರಳಿಗೇ ಸಿಕ್ಕಿಸಿಕೊಂಡು ಆಕೆಗೆ ನಿಶ್ಚಿಂತೆಯಿಂದ ಇರುವಂತೆ ಮತ್ತೊಮ್ಮೆ ಅಭಯ ನೀಡಿದ್ದ. "ರಾಮನ ಬಂಟನಾದ ಈ ಹನೂಮಂತನು ಏಕಾಂಗಿಯಾಗಿ - ರಕ್ಕಸ ಲಂಕೆಯನ್ನು ಇಂದೇ ಅಲುಗಾಡಿಸಿ ಹೊರಡುತ್ತಾನೆ; ತಾಯೀ, ಇನ್ನು ಯಾವ ಭಯವೂ ಇರುವುದಿಲ್ಲ; ಹನುಮನಾಣೆ..." ಎಂದು ಹೇಳಿ - ಆಕೆಯ ಆಶೀರ್ವಾದವನ್ನು ಪಡೆದು ಮಾರುತಿಯು ಮುಂದಿನ ಕಾರ್ಯದ ಯೋಚನೆಗೆ ತೊಡಗಿದ್ದ.


(ರಾವಣನು ಸೀತೆಯನ್ನು ಬಂದಿಯಾಗಿಟ್ಟಿದ್ದ ಸ್ಥಳವೆಂದು - ಇಂದು ತೋರಿಸುವ ಅಶೋಕವನ !)
  "ಯುದ್ಧವಂತೂ ನಿಶ್ಚಯವಾದಂತಿದೆ. ಹೇಗೂ ಸಮುದ್ರವನ್ನು ದಾಟಿ ಇಷ್ಟು ದೂರ ಬಂದಾದ ಮೇಲೆ ರಾವಣ ಪಕ್ಷದವರ ಶಕ್ತಿಯನ್ನು ತೂಗಿನೋಡಲೇಬೇಕು. ರಾಮ ಪಕ್ಷದ ಪೂರ್ವಸಿದ್ಧತೆಗಾಗಿ ಲಂಕಾ ಪಟ್ಟಣದ ಅವಸ್ಥೆ ವ್ಯವಸ್ಥೆಗಳನ್ನೆಲ್ಲ ಒಮ್ಮೆ ನೋಡಿಯೇ ಹೋಗಬೇಕು" - ಎಂದು ಮಾರುತಿಯು ನಿಶ್ಚಯಿಸಿದ. ಹನುಮನು ಅನಂತರ ನಡೆಸಿದ್ದು - ರಾವಣನನ್ನು ಕೆಣಕುವ ಗಂಭೀರ ಕಪಿಚೇಷ್ಟೆ. ರಾವಣನ ಗಮನವನ್ನು ಸೆಳೆಯಲು ಘನಘೋರ ರಾದ್ಧಾಂತಕ್ಕೆ ಹನುಮನು ಮುಂದಾಗುತ್ತಾನೆ. ರಾವಣನ ಹೆಮ್ಮೆಯ ಪ್ರತೀಕವಾಗಿದ್ದ ಅಶೋಕ ವನವನ್ನು ಶೋಕವನವನ್ನಾಗಿ ಮಾರುತಿಯು ಪರಿವರ್ತಿಸಿ ಬಿಡುತ್ತಾನೆ. ಅಶೋಕವನದಲ್ಲಿ ಯುದ್ಧೋಪಾದಿಯಲ್ಲಿ ತಳಮಳವನ್ನು ಎಬ್ಬಿಸಿ, ರಾವಣ ಮಂದೋದರಿಯರ ಪ್ರಿಯ ಪುತ್ರನಾದ ಅಕ್ಷಕುಮಾರನನ್ನು ಕೊಂದು ತನ್ಮೂಲಕ ರಾವಣನ ಅಹಂಕಾರವನ್ನು ಗಾಯಗೊಳಿಸುತ್ತಾನೆ. ಅನಂತರ ಇಂದ್ರಜಿತುವಿನ ಬ್ರಹ್ಮಾಸ್ತ್ರಕ್ಕೆ ತಾನಾಗಿಯೇ ಸಿಲುಕಿಕೊಂಡು ಬಂದಿಯ ರೂಪದಲ್ಲಿ ರಾವಣನನ್ನು ಸಂಧಿಸುವ ಸಂದರ್ಭವನ್ನು ಸೃಷ್ಟಿಸುತ್ತಾನೆ.



  ಮುಂದೆ ಆ ರಾವಣನನ್ನು ರಾವಣನ ಸಭೆಯಲ್ಲಿಯೇ ದರ್ಶಿಸಿದ್ದ ಮಾರುತಿಯು ರಾವಣನನ್ನು ತೂಗಿ ನೋಡುತ್ತಾನೆ. ಬಂದಿಯಾಗಿ ಕರೆತಂದಿದ್ದ ಮಾರುತಿಯನ್ನು ತನ್ನೆದುರಿಗೆ ನಿಲ್ಲಿಸಿಕೊಂಡ ರಾವಣನು ಆತನನ್ನು "ನೀಚ, ಉದ್ಧಟ, ಮೂಢ" ಎಂದೆಲ್ಲ ಜರಿದ; "ಎಲವೋ ಕಪಿ" ಎಂದು ತುಚ್ಛೀಕರಿಸಿದ. "ಜೀವದ ಬಾಯಿಯಲ್ಲಿ ಬರಬಾರದ ಮಾತುಗಳನ್ನೆಲ್ಲ ಆಡಿಸುವ, ಮಾಡಬಾರದ ಕೆಲಸಗಳನ್ನೆಲ್ಲ ಮಾಡಿಸುವ ಅವಿವೇಕವೇ - ರಾವಣ " - ಎಂದು ನಿಶ್ಚೈಸಿದ ಮಾರುತಿಯು, ತನ್ನ ಕರ್ತವ್ಯದ ಭಾಗವಾಗಿ, ರಾವಣನ ಅಹಂಕಾರ ಮೂಲದ ಇತರ ದೌರ್ಬಲ್ಯಗಳನ್ನೂ ಗಮನಿಸುತ್ತಲೇ ಆತನೊಂದಿಗೆ ಸಂಭಾಷಿಸುತ್ತಾನೆ. "ರಾವಣಾ! ಶ್ರೀರಾಮನ ನಿಸ್ಸೀಮ ದೂತ ನಾನು. ಅದೇ ನನ್ನ ಬಲ. ಚರಾಚರ ವಿಶ್ವ ಸಂಹಾರಕನಾಗಬಲ್ಲ ನನ್ನ ಪ್ರಭುವಿನ ದ್ವೇಷ ಕಟ್ಟಿಕೊಳ್ಳಬೇಡ. ಪ್ರಭುವಾದ ಶ್ರೀರಾಮನ ರಾಯಭಾರಿಯಾಗಿ ನಿನಗೆ ಕೈಮುಗಿದು ಕೇಳಿಕೊಳ್ಳುತ್ತೇನೆ. ಪ್ರಣತ ಪಾಲಕ, ದಯಾಸಾಗರ, ಖರವೈರಿ, ರಘುನಾಯಕನಾದ ನನ್ನ ಪ್ರಭುವಿಗೆ ಶರಣಾಗಿ ಸೀತಾಪಹಾರವೆಂಬ ನಿನ್ನ ಅಪರಾಧದ ಪ್ರಕ್ಷಾಲನ ಮಾಡಿಕೋ. ಶ್ರೀರಾಮನು ಶರಣಾಗತ ರಕ್ಷಕನು... ಅದಿಲ್ಲವಾದರೆ ನಿನ್ನನ್ನು ತ್ರಿಮೂರ್ತಿಗಳೂ ರಕ್ಷಿಸಲಾರರು..." ಎಂದು ಹಿತವಾದವನ್ನು ಹೇಳುತ್ತಾನೆ.

  ಆದರೆ ಅಜ್ಞಾನದ ಅಭಿಮಾನದಲ್ಲಿ ಅಟ್ಟಹಾಸಗೈಯುತ್ತಿದ್ದ ಉದ್ಧಟ ರಾವಣನು ದುಃಖಪ್ರದವಾದ ಮೋಹಭಾವದಿಂದ ಬಲವಾಗಿ ಬಂಧಿತನಾಗಿದ್ದ; ಹೇಸಿಗೆ ಭವ ಸುಖದಲ್ಲಿ ಮಗ್ನನಾಗಿ ಬುದ್ಧಿಭ್ರಮಿಷ್ಠನಾಗಿದ್ದ. ಸಂಸ್ಕೃತಿ, ನೀತಿ, ನಿಯಮ, ಮಾನವೀಯತೆ, ಲೋಕಮರ್ಯಾದೆಯನ್ನು ಕಡೆಗಣಿಸಿದ್ದ ಲಂಕಾಧಿಪ ರಾವಣನ ನಿರ್ದೇಶದಂತೆ, ತನಗೆ ಸರಿದಾರಿಯನ್ನು ತೋರಿದ ಮಾರುತಿಯನ್ನು ಅಂದು ಅವಮಾನಿಸಿ ಕಳಿಸುವ ವ್ಯವಸ್ಥೆಯನ್ನು ರಾವಣ ಸಭೆಯು ಮಾಡಿಬಿಟ್ಟಿತ್ತು. ಅಂದಿನ ರಾವಣನ ಸಭೆಯ ಗುಣಕ್ಷಯದ ಕ್ರೌರ್ಯದಿಂದಾಗಿ ಸ್ವತಃ ರಾವಣನ ಮತ್ತು ರಕ್ಕಸ ಸಂತಾನದ ಕುಲಕ್ಷಯಕ್ಕೆ ಬೀಜಾಂಕುರವಾಯಿತು; "ಸಂತತಿ ಸಹಿತ ರಾವಣ ಬಲವ ತರಿದ ಹೊಂತಕಾರಿ ಹನುಮಂತ " ನಿಂದ - ಲಂಕೆಯು ಮುಂದೆ ನಿರ್ನಾಮವಾಗುವಂತಾಯಿತು.

  ವಿಕ್ಷಿಪ್ತ ಕ್ರೌರ್ಯವಿರುವಲ್ಲಿ ಯಾವುದೇ ಕಾರುಣ್ಯವು ಇರುವುದಿಲ್ಲ! ಕ್ರೌರ್ಯದಿಂದ ಕಾರುಣ್ಯವನ್ನು ಪಡೆಯಲೂ ಆಗುವುದಿಲ್ಲ. ವಿನಾಶ ಕಾಲೇ ವಿಪರೀತ ಬುದ್ಧಿ - ಎನ್ನುವಂತೆ ತನ್ನ ಸಭೆಯಲ್ಲಿ ಮಾರುತಿಯನ್ನು ಅಪಮಾನಿಸಲು ರಾವಣನು ಮುಂದಾದ; ಕಪಿಗಳ ಅಸ್ತಿತ್ವ ಮತ್ತು ಪ್ರತಿಷ್ಠೆಯ ಸಂಕೇತವಾದ ಕಪಿಬಾಲವನ್ನು ಊನಗೊಳಿಸಿ ಹನೂಮಂತನನ್ನು ಅಪಮಾನಿಸಲು ತನ್ನ ಬಳಗದ ರಾಕ್ಷಸರಿಗೆ ಆದೇಶಿಸಿದ. ಹುಂಬ ರಾಕ್ಷಸರಿಗೆ ಯಾವ ಪ್ರತಿರೋಧವನ್ನೂ ತೋರದೆ ಬೆಂಕಿಹಚ್ಚಲೋಸುಗ ತನ್ನ ಬಾಲವನ್ನು ರಕ್ಕಸರ ಕೈಗಿತ್ತು ರಕ್ಕಸರ ಸಂಭ್ರಮ, ಬೆಂಕಿಯ ಚೆಂದ ನೋಡುತ್ತ ಮಾರುತಿಯು ನಿಶ್ಚಿಂತೆಯಿಂದಿದ್ದ. ಎಲ್ಲರೂ ನೋಡನೋಡುತ್ತಿದ್ದಂತೆಯೇ ಉರಿಯುತ್ತಿದ್ದ ತನ್ನ ಬಾಲದೊಂದಿಗೇ ಆಕಾಶಕ್ಕೆ ಜಿಗಿದ.



                "ಬಿರಬಿರನೆ ಕಣ್ಬಿಡುತ ಬಿಂಕದಲಿ ಲಂಕೆಯನು - ಸುರಸುರನೆ ಬಾಲದಲಿ ಸುಟ್ಟ ಬಲು ದಿಟ್ಟ!"
ಮಾರುತಿಯು, ತನ್ನ ಲಾಂಗೂಲಕ್ಕೆ ರಾವಣನ ಬಂಟರು ಹಚ್ಚಿದ ಅಗ್ನಿಯಿಂದಲೇ ಅವರದೇ ಲಂಕೆಯನ್ನು ವಿರೂಪಗೊಳಿಸಿದ. ತನ್ಮೂಲಕ ರಾವಣನಿಗೆ ಭವಿಷ್ಯದ ಅನಾಹುತಗಳ ಮುನ್ಸೂಚನೆಯನ್ನು ಪ್ರಕಟವಾಗಿಯೇ ಕೊಟ್ಟ. "ರಾಮನ ಒಬ್ಬನೇ ಒಬ್ಬ ಬಂಟನು ನಿನಗೆ ಸಾಕು.." ಎಂಬ ಸಂದೇಶವನ್ನೂ ರಾವಣನ ಲಂಕೆಯಲ್ಲಿ ಬಿತ್ತಿಬಿಟ್ಟ; ಶಿಷ್ಟ ವಿಧೇಯತೆಯ ಉಳಿವಿಗಾಗಿ ಪ್ರಕಟಗೊಳಿಸಲಾಗುವ ಅಶಿಷ್ಟ ವಿಧೇಯತೆಯ ರೂಪ ದರ್ಶನವನ್ನೂ ರಕ್ಕಸರಿಗೆ ಅರ್ಥವಾಗುವಂತೆ ಮಾಡಿಸಿದ. ಭಕ್ತಿಯ ನಯವಿನಯವಿಲ್ಲದ ರಾವಣನ ಲಂಕೆಯ ಭಯೋತ್ಪಾದಕ ರಕ್ಕಸರೊಂದಿಗೆ ಭವಿಷ್ಯದಲ್ಲಿ ಯುದ್ಧವು ಅನಿವಾರ್ಯವೆಂದು ಊಹಿಸಿದ್ದ ಮಾರುತಿಯು ಲಂಕಾನಗರದ ಪರಿಚಯವನ್ನು ತಾನು ಮಾಡಿಕೊಳ್ಳುವುದು ಯುಕ್ತವೆಂಬ ಮುಂದಾಲೋಚನೆಯಿಂದ ಉರಿಯುತ್ತಿದ್ದ ತನ್ನ ಲಾಂಗೂಲದ ಬೆಳಕಿನಲ್ಲಿ ಇಡೀ ಲಂಕಾ ಪಟ್ಟಣವನ್ನು ಸೂಕ್ಷ್ಮವಾಗಿ ಪರೀಕ್ಷಿಸುತ್ತ ಆಯಕಟ್ಟಿನ ಸ್ಥಳಗಳನ್ನು, ಪ್ರವೇಶದ್ವಾರಗಳನ್ನು - ಅಂದೇ ಸರಿಯಾಗಿ ಗುರುತಿಸಿಕೊಳ್ಳುತ್ತಾನೆ. "ಫಳಫಳನೆ ಆರ್ಭಾಟದಿಂದಲಾ ರಾವಣನ - ನಳನಳನೆ ಬೆಳೆದ ನಂದನವ ಕಿತ್ತು, ಖೊಳಖೊಳನೆ ನಗುತ ದಶಕಂಧರನ ಗುದ್ದಿ ಬಂದೆ, ಹಯವದನ ದಾಸ ನಿರ್ದೋಷ - ಭಳಿಭಳಿರೆ ! ...ಎಣೆ ಯಾರೊ ನಿನಗೆ ಹನುಮಂತರಾಯ?" ... 

  ಹೀಗೆ ಯುದ್ಧಕ್ಕೆ ಪೂರ್ವ ಸಿದ್ಧತೆಯೊಂದಿಗೆ ಮಾರುತಿಯು ಕಿಷ್ಕಿಂಧೆಯತ್ತ ಮುಖ ಮಾಡುತ್ತಾನೆ. 

  ಲಂಕಾದಹನದ ನಂತರ ಸಮುದ್ರದ ತಡಿಗೆ ಬಂದು ತನ್ನ ಮೈತೊಳೆದುಕೊಂಡು ಹನುಮನು ಕಿಷ್ಕಿಂಧೆಯತ್ತ ಹಾರುತ್ತಾನೆ. ಹೀಗೆ ಸುರಕ್ಷಿತವಾಗಿ ಹಿಂದಿರುಗಿ ಬಂದ ಮಾರುತಿಯು - ಸೀತೆಯು ಗುರುತಿಗೆಂದು ನೀಡಿದ್ದ ಚೂಡಾಮಣಿಯನ್ನು ಶ್ರೀರಾಮನಿಗೆ ನೀಡಿ - ಸಮುದ್ರೋಲ್ಲಂಘನದಿಂದ ತೊಡಗಿ ಲಂಕಾದಹನದ ವರೆಗಿನ ಸಕಲ ವೃತ್ತಾಂತವನ್ನು, ಲಂಕೆಯ ರಾಕ್ಷಸರ ಬಲಾಬಲಗಳನ್ನು, ರಾವಣನ ಸಾತ್ವಿಕ ಸೋದರನಾದ ವಿಭೀಷಣನ ಸುದ್ದಿಯನ್ನು - ರಾಮ ಲಕ್ಷ್ಮಣರಿಗೂ ಸುಗ್ರೀವಾದಿ ಕಪಿವೀರರಿಗೂ ರಸವತ್ತಾಗಿ ಅರುಹುತ್ತಾನೆ. "ಸೀತೆಯು ಬಳಲಿದ್ದಾಳೆ; ರಾವಣನು ನೀತಿಮಾತಿಗೆ ಬಗ್ಗುವವನಲ್ಲ; ಲಂಕೆಯು ಅನೀತಿಯ ಗೂಡಾಗಿದೆ; ಬಾಹು ಬಲ ಪ್ರಯೋಗಿಸದೆ ಈಗ ಅನ್ಯ ಮಾರ್ಗವಿಲ್ಲ. ಆ ನೀಚ ರಾವಣನ ಸೈನ್ಯವನ್ನೆಲ್ಲ ಮಣ್ಣು ಮುಕ್ಕಿಸಿ ಸೀತೆಯನ್ನು ಕರೆತರಲು ಇನ್ನೂ ವಿಲಂಬ ಮಾಡುವುದು ಸರಿಯಲ್ಲ.." ಎಂದೂ - ಪ್ರಭು ರಾಮಚಂದ್ರನಲ್ಲಿ ಬಿನ್ನವಿಸಿಕೊಳ್ಳುತ್ತಾನೆ.

  ಸೀತಾನ್ವೇಷಣೆಗೆಂದು ಹೊರಟ ಮಾರುತಿಯು ಯಾವ ನಿರ್ದೇಶನವನ್ನು ಹೊತ್ತು ಹೊರಟಿದ್ದ?

  "ಸೀತೆಯನ್ನು ಹುಡುಕಿ, ಅವಳಿಗೆ ಸಾಂತ್ವನ ನೀಡಿ ಧೈರ್ಯ ತುಂಬಿ, ಶೀಘ್ರದಲ್ಲಿ ಹಿಂದಿರುಗು" ಎಂಬ ಶ್ರೀರಾಮನ ಆಣತಿಯಲ್ಲಾಗಲೀ "ಒಂದು ತಿಂಗಳ ಅವಧಿಯಲ್ಲಿ ಸೀತಾಶೋಧದ ಕಾರ್ಯವನ್ನು ಮುಗಿಸಿಕೊಂಡು ಹಿಂದಿರುಗಬೇಕು" ಎಂಬ ಸುಗ್ರೀವನ ಆಜ್ಞೆಯಲ್ಲಾಗಲೀ - ಎಲ್ಲೂ... ಹನುಮನಿಗೆ ಹೆಜ್ಜೆ ಹೆಜ್ಜೆಯ ನಿರ್ದೇಶನವಿರಲಿಲ್ಲ. ರಾಮನಾಗಲೀ ಸುಗ್ರೀವನಾಗಲೀ - ರಾವಣನನ್ನು ಸಂಧಿಸಿ ರಾಯಭಾರ ಮಾಡು ಎಂದಾಗಲೀ ಲಂಕಾದಹನ ನಡೆಯಲಿ ಎಂದಾಗಲೀ ಹನುಮನಿಗೆ ಆದೇಶಿಸಿದ್ದರೆ? ಆದರೆ ತಾನು ಸ್ವೀಕರಿಸಿದ ಆಣತಿಯನ್ನು ಸಮಗ್ರವಾಗಿ ಅರ್ಥೈಸಿಕೊಂಡು ಪಾಲಿಸಿದ ಹನುಮನ ಕಾರ್ಯಶೈಲಿಯು ಇಂದಿಗೂ ಪ್ರೇರಣೆ ನೀಡುವಂತಿದೆ. ವಿಧೇಯ ಸೇವಕನು ತನ್ನ ಒಡೆಯನ ಆಜ್ಞೆಯ ಪರಿಧಿಯಲ್ಲಿಯೇ ಹಲವಾರು ಸಾಧ್ಯತೆಗಳನ್ನು ಅನ್ವೇಷಿಸಿ ತನ್ನ ಕಾರ್ಯಸಾಧನೆಗೆ ಪೂರಕವಾದ ಎಲ್ಲವನ್ನೂ ಸಾಧ್ಯವಾಗಿಸಿಕೊಳ್ಳಲು ಅರ್ಹನಾಗಿರಬೇಕು. ಸೀತಾಶೋಧಕ್ಕಾಗಿ ಹೋಗಿದ್ದ ಮಾರುತಿಯು, ರಾಮ ಮತ್ತು ಸುಗ್ರೀವನು ತನಗೆ ಕುರಿತಾಗಿ ಹೇಳಿದ್ದು ಮಾತ್ರವಲ್ಲದೆ - ಹೇಳದೆ ಉಳಿದ, ಹೇಳಲು ಮರೆತ, ಸಾಂದರ್ಭಿಕವಾಗಿ ತನ್ನ ಒಡೆಯನಿಗೆ ಉಪಯುಕ್ತವೆನ್ನಿಸಿದ ಎಲ್ಲ ಕಾರ್ಯವನ್ನೂ ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಬಂದ. ಹನುಮನ ವಿಧೇಯತೆಗೆ ಎಣೆಯುಂಟೆ? ವಿಧೇಯತೆಯ ಪೂರ್ಣರೂಪವದು!

  ಸುಗ್ರೀವನ ಆಡಳಿತದಲ್ಲಿ ಯಾವುದೇ ತಲೆಹರಟೆಗಳಿಗೆ ಸ್ಥಾನವಿರಲಿಲ್ಲ. ಒಡೆಯನ ಉದ್ದೇಶ ಮತ್ತು ಭಾವನೆಯನ್ನು ಅರಿತು ನಡೆಯುವ ಸಮಯ ಪ್ರಜ್ಞೆಯುಳ್ಳ ಜಾಗ್ರತರು ಮಾತ್ರ ಕಿಷ್ಕಿಂಧೆಯಲ್ಲಿ ಗೌರವಕ್ಕೆ ಪಾತ್ರರಾಗುತ್ತಿದ್ದರು; ವಿಪರೀತಮತಿಗಳನ್ನು ಅಲ್ಲಿ ನಿರ್ದಯವಾಗಿ ವಧಿಸುತ್ತಿದ್ದರು. ಕೋತಿಯ ಚಾಂಚಲ್ಯ ಹೊಂದಿರುವ ಇಂದಿನ ನಾವು - ಅಂತಹ ಶಿಸ್ತಿನ ಸಿಪಾಯಿಗಳನ್ನೆಲ್ಲ "ಕಪಿಗಳು" ಎಂದು ಹಗುರವಾಗಿ ಎನ್ನುತ್ತೇವೆ! (ಅರ್ಥ ಜೀವಿಗಳು, ಅನರ್ಥ ಜೀವಿಗಳು, ಸ್ವಾರ್ಥ ಜೀವಿಗಳು, ವ್ಯರ್ಥ ಜೀವಿಗಳಾದ ಇಂದಿನ ಪ್ರದೂಷಿತ ವಾಯುಪುತ್ರರ ಪ್ರಲಾಪವೆ?!)  

  ಮಾರುತಿಯ ದೈಹಿಕ - ವೈಚಾರಿಕ ಬಲಾಢ್ಯತೆ, ಪ್ರತ್ಯುತ್ಪನ್ನಮತಿ, ಪರೇಂಗಿತಜ್ಞತೆ, ಕರ್ತವ್ಯಪರತೆ, ಅನುಕರಣೀಯ ಸಂಯಮ - ಸಮಯಪ್ರಜ್ಞೆ, ವಿಧೇಯತೆಯ ಭೂಮ ಶಕ್ತಿ - ಯುಕ್ತಿ, ನಿಷ್ಕಾಮ ಭಕ್ತಿಗೆ ಮನಸೋತ ರಾಮನು ಹನುಮನ ಸುಭಗ ಭಾವಕ್ಕೆ ಒಲಿದಿದ್ದ. "ಮಾರುತಿ, ತ್ರಿಕರಣಪೂರ್ವಕವಾಗಿ ನನ್ನಲ್ಲಿ ಅನುರಕ್ತರಾದವರಿಗೆ ಸ್ವಪ್ನದಲ್ಲಿಯೂ ಯಾವುದೇ ವಿಪತ್ತುಗಳ ಬಾಧೆಯು ಉಂಟಾಗಲಾರದು. ಈ ಭೂಮಿಯಲ್ಲಿ ನಿನ್ನಂತೆ ದೈವೀ ಭಾವದ ಉಜ್ವಲತೆಯನ್ನು ನಾನು ಕಂಡಿಲ್ಲ. ನಿನ್ನ ಉಪಕಾರದ ಋಣಭಾರವನ್ನು ನಾನು ಹೇಗೆ ತೀರಿಸಲಿ? ಈಗ ಕಾಡುಪಾಲಾಗಿ ನಿರ್ಧನನಾಗಿರುವ ಈ ದಶರಥಾತ್ಮಜ ರಾಮನು ನಿನಗೆ ಹೇಗೆ ಕೃತಜ್ಞತೆಯನ್ನು ಅರ್ಪಿಸಲಿ ಮಾರುತಿ? ತೀರಿಸಲಾಗದ ಋಣಭಾರವಿದು..." ಎನ್ನುತ್ತ ದೈವವೇ ಶರಣಾದ ಪ್ರಸಂಗವಿದು! ಕೃತಜ್ಞತೆಯ ದ್ಯೋತಕವಾಗಿ ಶ್ರೀರಾಮನು ಆಂಜನೇಯನನ್ನು ಹಾರ್ದಿಕವಾಗಿ ಆಲಿಂಗಿಸಿದ್ದು - ರಾಮನ ಬಂಟ ಮಾರುತಿಯ ವಿಧೇಯ ಸದ್ಗುಣಗಳಿಗೆ ಸಂದ ಬಹು ದೊಡ್ಡ ಪ್ರಶಸ್ತಿ. ಇಡೀ ರಾಮಾಯಣದಲ್ಲಿ ಶ್ರೀ ರಾಮನಿಂದ ಋಣೀಭಾವಕ್ಕೆ ಪಾತ್ರನಾದ ಏಕೈಕ ಭಕ್ತಸಖನೆಂದರೆ - ಅವನು ಹನೂಮಂತ.

 "ಹನುಮನು ಒಲಿಯಲು - ಸುಗ್ರೀವನು ಗೆದ್ದ; ಹನುಮನು ಒಲಿದ - ವಿಭೀಷಣ ಗೆದ್ದ; ಹನುಮನು ಪುರಂದರ ವಿಠಲನ ದಾಸ; ಪುರಂದರ ವಿಠಲನು ಹನುಮನೊಳ್ವಾಸ !" ಭಕ್ತ ಭಗವಂತನ ಅದ್ವೈತ ! ಆದ್ದರಿಂದಲೇ - ತ್ರಾಣಗೊಟ್ಟು ಸಲಹುವ ಜಾಣ ಗುರು ಮುಖ್ಯಪ್ರಾಣ ಹನುಮ!



  ಉತ್ತಮ ವಾಗ್ಮಿಯೂ ವಿದ್ವಾಂಸನೂ ನೇರ ನಡೆನುಡಿಯ ಪ್ರತಿಭಾವಂತನೂ ನಿರ್ದೇಶವನ್ನು ಅರಿತು ವ್ಯವಹರಿಸುವ ಚಾಣಾಕ್ಷನೂ ನಿರ್ಭೀತನೂ ಮುಗ್ಧ ಭಾವಭಕ್ತಿಯ ಸಂಗಮವೂ ಆಗಿದ್ದ ಹನುಮನು ಶ್ರೀರಾಮನ ಸೇವೆಗೈದ ಪರಿಯು ವಿಧೇಯ ಸೇವೆಗೆ ಆದರ್ಶ ಮಾದರಿ. ಆದ್ದರಿಂಲೇ ಗುಣಸಾಗರನೆನಸಿದ ಶ್ರೀರಾಮನಿಗೆ ತಕ್ಕ ಸೇವಕನೆಂದು ನಿರೂಪಿಸಿದ ಖ್ಯಾತಿಗೆ ಮಾರುತಿಯು ಪಾತ್ರನಾದ. ಮುಖ್ಯಪ್ರಾಣ ಮೂಲ ಗುರುಯೋಗಿಯಾದ ಮಾರುತಿಯು - ಸುಜ್ಞಾನದೊಂದಿಗೆ ವಿನಮ್ರತೆಯನ್ನು ಉಳಿಸಿಕೊಂಡ ಸಂಯಮದ ಪ್ರತಿಮೂರ್ತಿಯಾಗಿ - ಪೂಜಾರ್ಹನೂ ಆದ.

  ಸಾಕ್ಷಾತ್ ಸೂರ್ಯದೇವನನ್ನೇ ವಿದ್ಯಾ ಗುರುವಾಗಿಸಿಕೊಂಡ, - ಭಕ್ತಿ ಯೋಗವನ್ನು ಸಾಕ್ಷಾತ್ ಪರಶಿವನಿಂದ, ಜ್ಞಾನ ಯೋಗವನ್ನು ಸಾಕ್ಷಾತ್ ಸರಸ್ವತೀ ಮಾತೆಯಿಂದ, ಕರ್ಮ ಯೋಗವನ್ನು ಸಾಕ್ಷಾತ್ ಮಹಾ ವಿಷ್ಣುವಿನಿಂದ ಪಡೆದುಕೊಂಡು ದೇವಕಾರ್ಯಕ್ಕಾಗಿಯೇ ಸಜ್ಜುಗೊಂಡ ಆದರ್ಶ ಗುಣಮೂರ್ತಿಯು ನಮ್ಮ ಹನುಮ. 

  ಶ್ರೀಮದ್ರಾಮಾಯಣವು ಶುದ್ಧ ಆದರ್ಶದ ಜೀವಂತ ಪ್ರತಿಮೆ! ಅದು ಪರಮ ತ್ಯಾಗ, ಚರಮ ಶೋಕದ ಕಥೆಯಾದರೂ ಅವ್ಯಕ್ತ ಆನಂದ ಮತ್ತು ನೆಮ್ಮದಿಯನ್ನು ನೀಡುವ ಮೌಲ್ಯಗಳ ಭಂಡಾರ. ದೈವಬಲವಿಲ್ಲದ ಸಾಮಾನ್ಯ ಮನುಷ್ಯ ಹುಟ್ಟುಗಳು ತಮ್ಮ ಮೂಢತನವನ್ನು ಬುದ್ಧಿಪೂರ್ವಕವಾಗಿ ಕಳೆದುಕೊಳ್ಳಲು ಪ್ರೇರೇಪಿಸುವ ಕಥಾಮೃತ ! ಇಚ್ಛೆಯನ್ನು ಪಳಗಿಸಿಕೊಳ್ಳಲು ಸ್ಪೂರ್ತಿನೀಡುವ ಅಮೃತ ವಾರಿಧಿ ! ಇಚ್ಛಿಸದಿದ್ದರೆ ಯಾವುದೇ ಮೌಢ್ಯತೆಯು ತಾನಾಗಿಯೇ ತೊಲಗುವುದಿಲ್ಲ.

  ಬೃಹತ್ ಜನ ಸಮೂಹದ ಸಮ್ಮುಖದಲ್ಲಿ - ಮೂಢರನ್ನೇ ಹೆಕ್ಕಿ ಹೆಕ್ಕಿ ಆದರಿಸಿ ಗೌರವಿಸುವ ಪ್ರಸ್ತುತದ ಥಳುಕು ಬಳುಕಿನಿಂದ ಯಾವುದೇ ಮೂಢತನವು ಮಾನ್ಯವಾಗಲಾರದು. ಬದಲಿಗೆ ತಾತ್ಕಾಲಿಕವಾಗಿ ಮೂಢಸೈನ್ಯವನ್ನೇ ಕಟ್ಟಿ ಬೆಳೆಸಬಹುದು. ತನ್ಮೂಲಕ, ವಿನಾಶಕಾರಿಯಾದ ಹೊಸಹೊಸ ಲಂಕೆಗಳನ್ನು ಹುಟ್ಟುಹಾಕಬಹುದು. ಮೂಢತೆ ಮತ್ತು ಅವಿಧೇಯತೆಗಳು ಒಂದೇ ನಾಣ್ಯದ ಎರಡು ಮುಖಗಳು. ಇಂದಿನ ಸಮಾಜದಲ್ಲಿ ಭಯೋತ್ಪಾದನೆ, ಕಳ್ಳ ವ್ಯವಹಾರ ನಡೆಸುವವರಲ್ಲಿ ಮಾತ್ರ ಪರಸ್ಪರ ಮೂಢವಿಧೇಯತೆಯು ಕಟ್ಟುನಿಟ್ಟಾಗಿ ಪಾಲನೆಯಾಗುತ್ತಿದೆ! ಕೊಡುಕೊಳ್ಳುವ ವಿದ್ರೋಹದ ಅಂತಹ ರಾಕ್ಷಸ ಜಾಲದಲ್ಲಿ ಉದರಂಭರಣದ ವಿಧೇಯತೆಯ ವಿಡಂಬನೆಯು ವಿಜೃಂಭಿಸುತ್ತಿದೆ! ಇದು ಮೂರ್ಖ ಅಟ್ಟಹಾಸದ ವಿಧೇಯರೂಪ - ಅಷ್ಟೆ; ವಿಧೇಯತೆ ಎಂಬ ಮೌಲ್ಯದ ಶಾಸ್ತ್ರೀಯ ದುರುಪಯೋಗವಲ್ಲದೆ ಮತ್ತೇನೂ ಅಲ್ಲ. ಸದುದ್ದೇಶವಿಲ್ಲದ ಯಾವುದೇ ಲಾಭಬಡುಕ ವಿಧೇಯತೆಯಿಂದ ಅಪಾರ ಹಾನಿಯಾದೀತು. ಬಹಿರಂಗದಲ್ಲಿಯೇ ಕಳೆದು ಹೋಗುವಷ್ಟು ಸಂಸಾರದಲ್ಲಿ ಮುಳುಗಿರುವ ಇಂದಿನ ನಮಗೆ -  ಅಂತರಂಗ ಶುದ್ಧಿಯ ಸಂಗತಿಯೇ ಹಾಸ್ಯಾಸ್ಪದವೆನ್ನಿಸುತ್ತಿದೆ. ಮನುಷ್ಯರ ಅಂತರಂಗದಲ್ಲಿರುವ ರಾವಣ, ಖರ, ಶೂರ್ಪನಖಿ, ತಾಟಕೆಯರೆಂಬ ರಕ್ಕಸರನ್ನು ಸವರದಿದ್ದರೆ ಶುದ್ಧ ವಿಧೇಯತೆ ಎಂಬುದರ ಸಾಕ್ಷಾತ್ಕಾರವಾಗದು. ಯಾವುದೇ ಅವಿಧೇಯ ಸಮಾಜದಲ್ಲಿ ಯಾರೂ ನೆಮ್ಮದಿಯನ್ನು ಕಾಣಲಾರರು. ಮೂಢ ಮೂರ್ಖ ಮತ್ತು ಗಾರ್ದಭಗಳಲ್ಲಿ ಯಾವ ವ್ಯತ್ಯಾಸವೂ ಇರುವುದಿಲ್ಲ. ಇಂತಹ ಕತ್ತೆತನದಲ್ಲಿಯೇ ಹೊರಳುವವರು ಗುಲಾಮರಾಗಬಹುದಲ್ಲದೆ ವಿಧೇಯರಾಗಲು ಸಾಧ್ಯವಿಲ್ಲ. ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ಸಿದ್ಧಾಂತಗಳನ್ನು ಪಾಲಿಸುತ್ತ ಸಾಮಾನ್ಯರೂ ಬಾಳಬಹುದೆಂಬುದನ್ನೇ ಅಲ್ಲಗಳೆಯುವ ಇಂದಿನ ಸಾಮಾಜಿಕ ಅವಸ್ಥೆಯಲ್ಲಿ - "ಆದರ್ಶಗಳು ಅನುಕರಿಸುವುದಕ್ಕಲ್ಲ" ಎಂಬ ಅಪಪ್ರಚಾರದ ಬೋಧನೆಗಳು ಅವಿರತವಾಗಿ ನಡೆಯುತ್ತಿದ್ದರೆ ಯಾವುದೇ ಮೌಲ್ಯಗಳನ್ನು ಊಡಿಸುವುದಾದರೂ ಹೇಗೆ? ಉಣ್ಣುವುದಾದರೂ ಹೇಗೆ? ಎಡವಿದವರು ತಮ್ಮನ್ನು ಸಂಭಾಳಿಸಿಕೊಳ್ಳುವುದಾದರೂ ಹೇಗೆ? ಬ್ರಹ್ಮರಾಕ್ಷಸರ ಸಂತಾನವನ್ನು ಬೆಳೆಸಿ ಭಸ್ಮಾಸುರರಾಗುವ ತಿಳಿಗೇಡಿತನವು ನಮಗೆ ಬೇಕೆ?

  ಭಾಗವತದಲ್ಲಿ "ಯಾರ ಕರ್ಮವು ಧಾರ್ಮಿಕವಲ್ಲವೋ ವೈರಾಗ್ಯಕ್ಕೆ ಪೂರಕವಲ್ಲವೋ ಭಗವಂತನ ಸೇವಾ ಕರ್ಮ ಆಗುವುದಿಲ್ಲವೋ ಅಂತಹ ವ್ಯಕ್ತಿಯು ಬದುಕಿದ್ದೂ ಸತ್ತಂತೆ " ಎಂದಿದೆ. ನಾವೇ ಸೃಷ್ಟಿಸಿಕೊಳ್ಳುವ, ಇತರರಿಂದ ಉಂಟಾಗುವ ಮತ್ತು ಪ್ರಾಕೃತಿಕ ಅನಾಹುತಗಳಿಂದ ಸಂಭವಿಸುವ ದುಃಖಗಳು - ಇವು ಮೂರು - ಮನುಷ್ಯರ ಬದುಕಿನ ವೇಗವನ್ನು ತಗ್ಗಿಸಿ ಅವರನ್ನು ನಿರ್ಬಂಧಕ್ಕೆ ಒಳಪಡಿಸುವ ಶಕ್ತಿಗಳು. ಇವುಗಳನ್ನು ತಾಪತ್ರಯ ಅಥವ ತ್ರಿತಾಪಗಳು ಎನ್ನುತ್ತೇವೆ. ಅಂತಹ ತಾಪತ್ರಯದ ನಿರ್ಬಂಧವಿರುವಲ್ಲಿ ಪ್ರಸನ್ನ ಬದುಕು ಅರಳಲಾರದು. ಆದ್ದರಿಂದ ತಾಪತ್ರಯಗಳನ್ನು ಮಿತಗೊಳಿಸುವತ್ತ ನಮ್ಮ ಚಿಂತನೆ ನಡೆಯಬೇಕು. ಸಂಬಂಧ ಸೂತ್ರಗಳಿಲ್ಲದ ಸಾಮಾಜಿಕ ಕರ್ಮಗಳನ್ನೆಲ್ಲ ನಾವಾಗಿಯೇ ಮೈಮೇಲೆ ಎಳೆದು ಹಾಕಿಕೊಳ್ಳುವುದಕ್ಕೆ ಹೋಗಬಾರದು. ಸತ್ಯವನ್ನು ಸುಳ್ಳು ಎನ್ನುತ್ತ - ಸುಳ್ಳನ್ನು ಸತ್ಯವೆನ್ನುತ್ತ - ಲೋಕ ಮೆಚ್ಚಿಸಲೋಸುಗ ನಮಗೆ ನಾವೇ ಮೋಸಮಾಡಿಕೊಂಡರೆ ಮನುಷ್ಯರ ಮನೋಲೋಕವೇ ಹಾಳಾದೀತು. ನೆನಪಿರಲಿ... ಮನಸ್ಸಿನಂತೆ ಮಹದೇವ! ಅಂತರಂಗದ ಚೈತನ್ಯವನ್ನು ಅರಿಯುವ ಸತತ ಪ್ರಯತ್ನದ ಭಾಗವಾಗಿ - ಆತ್ಮೋದ್ಧಾರದ ಜೊತೆಗೆ ಬದುಕಿಗೆ ಉಪಕರಿಸುವ ಉದಾತ್ತ ಮೌಲ್ಯಗಳನ್ನು ಸ್ವೀಕರಿಸಿ ಮುನ್ನಡೆದರೆ ನಾವೂ ಚೇತನಾಂಶರಾಗಬಹುದು.

 ವಿವೇಕದಲ್ಲಿ ವಿಧೇಯತೆ ಇರುತ್ತದೆ. ಚಿತ್ತಶುದ್ಧಿಯಲ್ಲಿ ವಿಧೇಯತೆಯಿರುತ್ತದೆ. ನಿಷ್ಕಾಮ ಕರ್ಮದಲ್ಲಿ ವಿಧೇಯತೆ ಇರುತ್ತದೆ. ಶರಣಾಗತ ಭಾವದ ಉತ್ತುಂಗ ಹನುಮ ಭಕ್ತಿ ಯು ಜಡ ಮಾನವರಿಗೆ ಸುಲಭದಲ್ಲಿ ಎಟುಕದ ದೈವ ಕೃಪೆಯಾದರೂ ಹನುಮನ ಮೂಲಕ  ಪ್ರಕಟಗೊಂಡ ಇತರ ಅನೇಕ ಗುಣ ಮೌಲ್ಯಗಳನ್ನು ಸಾಮಾನ್ಯರೂ ಅಳವಡಿಸಿಕೊಳ್ಳುವ ಸತತ ಪ್ರಯತ್ನದಲ್ಲಿಯೂ -  ಶಾಶ್ವತ ನೆಮ್ಮದಿಯಿದೆ.
   
  ಈ ಹಿಂದೆ (ನಾನೊಲಿದಂತೆ (1) ರಲ್ಲಿ) ನಿರೂಪಿಸಿದ್ದ ವಕೀಲರ ಸೇವಕನ ವಿಧೇಯತೆ ಮತ್ತು ರಾಮಾಯಣದ ಮಾರುತಿಯ ವಿಧೇಯತೆ - ಇವೆರಡೂ ವಿಭಿನ್ನ - ಉತ್ತರ-ದಕ್ಷಿಣ ಧ್ರುವಗಳು. ಒಂದು ನಿಕೃಷ್ಟದ ಮಾದರಿಯೆನಿಸಿದರೆ ಇನ್ನೊಂದು ಉತ್ಕೃಷ್ಟ ಆದರ್ಶದ ತುತ್ತ ತುದಿ. ಯಾವುದೇ ಉತ್ಕೃಷ್ಟವನ್ನು ಪೂರ್ತಿಯಾಗಿ ಅನುಕರಿಸಲು ಅಸಾಧ್ಯವೇ ಆದರೂ ಒಂದಷ್ಟು ಆದರ್ಶಗಳು ನಮ್ಮೊಂದಿಗೆ ಇರಲಿ. ನಮ್ಮ ಆದರ್ಶವು ಯಾವಾಗಲೂ ಉನ್ನತವಾದುದೇ ಆಗಿರಲಿ. ನಿಕೃಷ್ಟ ಮತ್ತು ಉತ್ಕೃಷ್ಟ ಎಂಬ ಎರಡರ ನಡುವಿನ - ಯಥಾಶಕ್ತಿಯ ವಿಧೇಯತೆಯನ್ನು, ಹನುಮ ಗುಣ ಪ್ರತೀಕಗಳನ್ನು - ನಿಷ್ಕಾಮ ಕರ್ಮದ ಮೂಲಕ ನಮ್ಮ ಇತಿಮಿತಿಯಲ್ಲಿ, ಸದ್ಭಾವದಿಂದ ನಾವು ಅಳವಡಿಸಿಕೊಂಡರೆ - ನಮಗೂ ಸಮಸ್ತ ಜೀವಸಂಕುಲಕ್ಕೂ ಶುಭ, ಕ್ಷೇಮ.

                             ಬುದ್ಧಿರ್ಬಲಂ ಯಶೋಧೈರ್ಯಂ ನಿರ್ಭಯತ್ವಂ ಅರೋಗತಾ
                             ಅಜಾಡ್ಯಂ ವಾಕ್ಪಟುತ್ವಂ ಚ ಹನೂಮತ್ ಸ್ಮರಣಾದ್ಭವೇತ್ //

  ದೈವಕ್ಕೆ ಸಂಯಮಕ್ಕೆ ಜ್ಞಾನಕ್ಕೆ ಕರ್ತವ್ಯಕ್ಕೆ ವಿಧೇಯರಾಗಿರುವ ನಿಷ್ಕಲ್ಮಷ ಹನುಮ ಸಂಕಲ್ಪವು ನಮ್ಮದಾಗಲಿ. ಅಂತಹ ದೈವ ಕೃಪೆಯು ನಮಗೆ ಒದಗಲಿ.




                                ಯತ್ರಯತ್ರ ರಘುನಾಥ ಕೀರ್ತನಂ
                                ತತ್ರತತ್ರ ಕೃತಮಸ್ತಕಾಂಜಲಿಂ
                                ಬಾಷ್ಪವಾರಿ ಪರಿಪೂರ್ಣಲೋಚನಂ
                                ಮಾರುತಿಂ ನಮತ ರಾಕ್ಷಸಾಂತಕಂ// (ತುಲಸೀದಾಸ)
                                                               ()()()()()()()() 

  

No comments:

Post a Comment