Friday, August 28, 2015

ನಾನೊಲಿದಂತೆ (5) - ಕಲಿಗಾಲವಯ್ಯಾ..

ಬ್ರಹ್ಮಚಾರಿ, ಗೃಹಸ್ಥ, ವಾನಪ್ರಸ್ಥ, ಸನ್ಯಾಸ - ಈ ಚತುರಾಶ್ರಮಗಳು ಗೃಹಸ್ಥನಿಂದಲೇ ಹುಟ್ಟಿ ಗೃಹಸ್ಥನನ್ನೇ ಅವಲಂಬಿಸಿರುವಂತಹುದು. ಎಲ್ಲ ನದಿ - ನದಗಳು ಸಮುದ್ರವನ್ನು ಆಶ್ರಯಿಸಿರುವಂತೆ ಬ್ರಹ್ಮಚಾರಿ ಮೊದಲಾದ ಎಲ್ಲ ಆಶ್ರಮಿಗಳು ಗೃಹಸ್ಥನಲ್ಲಿ ಆಶ್ರಯವನ್ನು ಹೊಂದುತ್ತಾರೆ. ಎಲ್ಲ ಆಶ್ರಮಗಳಿಗೂ ಗೃಹಸ್ಥನೇ ಆಶ್ರಯವಾದುದರಿಂದ ಆಶ್ರಮಗಳಲ್ಲಿ ಗೃಹಸ್ಥಾಶ್ರಮವೇ ಶ್ರೇಷ್ಠವಾದದ್ದು. ಇತರ ಆಶ್ರಮಗಳ ಜೀವನವು ಗೃಹಸ್ಥನ ಅಧೀನವಿರುವುದರಿಂದ ಗೃಹಸ್ಥನು ಶ್ರೇಷ್ಠನಾಗುತ್ತಾನೆ. ಆದರೆ ಎಲ್ಲ ಆಶ್ರಮದವರಿಗೂ ಸಮಾನವಾಗಿ ನಿರ್ದೇಶಿತವಾದ ಹತ್ತು ಧರ್ಮಗಳಿವೆ.

                                      ಧೃತಿಃ ಕ್ಷಮಾ ದಮೋ~ಸ್ತೇಯಂ ಶೌಚಮಿಂದ್ರಿಯ ನಿಗ್ರಹಃ 
                                      ಧೀರ್ವಿದ್ಯಾ ಸತ್ಯಮಕ್ರೋಧೋ ದಶಕಂ ಧರ್ಮಲಕ್ಷಣಂ /

ಧೃತಿ ಎಂದರೆ ಸಂತೋಷ;
ಇನ್ನೊಬ್ಬರು ಅಪಕಾರ ಮಾಡಿದರೂ ತಾನು ಪ್ರತಿಯಾಗಿ ಅಪಕಾರ ಮಾಡದಿರುವುದೇ ಕ್ಷಮೆ (ಕ್ಷಾಂತಿ);
ಮನಸ್ಸನ್ನು ವಶಪಡಿಸಿಕೊಳ್ಳುವುದೇ ದಮ;
ಅನ್ಯಾಯದಿಂದ ಬೇರೊಬ್ಬರ ಹಣವನ್ನು ಅಪಹರಿಸದಿರುವುದೇ ಅಸ್ತೇಯ;
ನೀರು, ಮೃತ್ತಿಕೆಗಳಿಂದ ದೇಹವನ್ನು ಶುಚಿಯಾಗಿಡುವುದೇ ಶೌಚ;
ವಿಷಯಗಳತ್ತ ಓಡದಂತೆ ಕಣ್ಣು ಮೊದಲಾದ ಇಂದ್ರಿಯಗಳನ್ನು ಹಿಡಿತದಲ್ಲಿರಿಸಿಕೊಳ್ಳುವುದೇ ಇಂದ್ರಿಯ ನಿಗ್ರಹ;
ಶಾಸ್ತ್ರ ತತ್ತ್ವಜ್ಞಾನವೇ ಧೀ ಅಥವ ಬುದ್ಧಿ;
ಪರಮಾತ್ಮ ಜ್ಞಾನವೇ ವಿದ್ಯೆ;
ಇದ್ದುದನ್ನು ಇದ್ದಂತೆ ಹೇಳುವುದೇ ಸತ್ಯ;
ಕೋಪಕ್ಕೆ ಕಾರಣವಿದ್ದರೂ ಕೋಪ ಮಾಡದಿರುವುದೇ ಅಕ್ರೋಧ.

ಇವೇ - ಧರ್ಮದ ಹತ್ತು ಲಕ್ಷಣ ಸ್ವರೂಪ ಗಳು.

ಈ ನೀತಿ ಸೂತ್ರಗಳು ಆತ್ಮೋನ್ನತಿಯ ಜತೆಗೆ ಸಾಮಾಜಿಕ ನೆಮ್ಮದಿಗಾಗಿಯೂ - ಪ್ರತಿಯೊಬ್ಬರೂ ಅನುಸರಿಸಲು ಪ್ರಯತ್ನಿಸಬೇಕಾದ ದಾರಿದೀಪಗಳು. ಆದರೆ ಇಂದಿನ ಸ್ಥಿತಿ ಹೇಗಿದೆಯೆಂದರೆ - "ಅಂದು ಮನು (ಚಿಂತಕ) ಬರೆದಿಟ್ಟುದಿಂದೆಮಗೆ ಕಟ್ಟೇನು? ನಿನ್ನೆದೆಯ ದನಿಯೆ ಋಷಿ - ಮನು ನಿನಗೆ ನೀನು..." ಎನ್ನುತ್ತ ಸ್ವೇಚ್ಛಾಚಾರಕ್ಕಿಳಿಯುತ್ತಿರುವವರ ಮತ್ತು ಅಂತಹ ಸ್ಫೂರ್ತಿ ನೀಡುತ್ತಿರುವವರ ಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. "ಅಪ್ಪ ಲೂಸಾ? ಅಮ್ಮ ಲೂಸಾ?" ಎನ್ನುತ್ತ ಅಸಡ್ಡೆಯಿಂದ ತಿರುಗುವುದೇ "ಈ ನವೀನ ಯುಗದ ಜಗದ ಕೇತನ"ವೆನಿಸಿಬಿಟ್ಟಿದೆ! ಅಂದು ಧರ್ಮಾಧರ್ಮದ ಸೂಕ್ಷ್ಮವನ್ನರಿತ ನಂತರ, ಉಜ್ಜಿ ಬರೆಯುವ ಬುದ್ಧಿಯ ವ್ಯಾಯಾಮಕ್ಕೆ ತೊಡಗಿ, ಅಪ್ಪಟ ಚಾರ್ವಾಕರಾಗಿದ್ದವರು ಸ್ವಂತದ ಭವಸಾಗರ ದಾಟಿದ್ದರೂ - ಇಂದಿನ ಹಿಂದುಮುಂದಿಲ್ಲದ ಲೊಟ್ಟೆ ಚಾರ್ವಾಕರು - ಕಾವಲಿಯ ಅದೇ ಮರಗಟ್ಟಿದ ದೋಸೆಯನ್ನು ತಿರುತಿರುಗಿಸಿ ಹಾಕುತ್ತ ಕರಟಿಸುತ್ತಿರುವಂತೆ ಕಾಣುತ್ತದೆ. ಕಾವಲಿಯ ದೋಸೆಯನ್ನು ಹದವಾಗಿ ಬೇಯಿಸಿ ಎತ್ತಿಡುವ ಕರ್ಮವೂ ಗೊತ್ತಿಲ್ಲದೆ, ಇನ್ನೊಂದು ಹೊಸ ದೋಸೆ ಹೊಯ್ಯಲು ಬೇರೆ ಹಿಟ್ಟೂ ಇಲ್ಲದೆ, ಹೊಸ ಹಿಟ್ಟನ್ನು ತಯಾರಿಸುವ ಮರ್ಮವೂ ತಿಳಿಯದೆ, ಇನ್ನೊಬ್ಬರು ಮಾಡಿಟ್ಟ ದೋಸೆಯನ್ನು ಯಾರಿಗೂ ತಿನ್ನಲೂ ಬಿಡದೆ - ಇಂದಿನ ನವ ಚಾರ್ವಾಕ ರಕ್ಕಸರು ಸಮಾಜವನ್ನು ಹಿಂಡುತ್ತಿರುವಂತೆಯೂ ಕಾಣಿಸುವುದಿದೆ.

ಎಲ್ಲ ಸಂಬಂಧಗಳೂ ಅರ್ಥ ಕಳೆದುಕೊಳ್ಳುತ್ತಿರುವ ಪ್ರಸ್ತುತ ಸನ್ನಿವೇಶದಲ್ಲಿ ಯಾರು ಯಾರಿಗೂ ಏನನ್ನೂ ಹೇಳಲಾಗದ ದೃಶ್ಯಗಳು ದಿನವೂ ಕಾಣಸಿಗುತ್ತವೆ. "ಹೆಣ್ಣಿನ ಮೊದಲ ಗಂಡನ ಮೂರನೆಯ ಮಗಳಿಗೂ ಆಕೆಯ ನಾಲ್ಕನೆಯ ಗಂಡನ ಎರಡನೇ ಹೆಂಡತಿಯ ನಾಲ್ಕನೇ ಮಗನಿಗೂ ಅನಧಿಕೃತ ಸಂಬಂಧ; ಅದನ್ನು ಸಹಿಸಲಾಗದ ಹೆಣ್ಣಿನ ಎರಡನೇ ಗಂಡನಿಗೂ ಆಕೆಯ ಗಂಡನ ಮೂರನೇ ಹೆಂಡತಿಗೂ ಅಸಮಾಧಾನ...." - ಇತ್ಯಾದಿ ಸುದ್ದಿಗಳು ಇಂದು ವಿಚಿತ್ರವಾದ ಭಾವ ಸಂಚಾರವನ್ನು ಹುಟ್ಟಿಸುತ್ತಿರುವುದು ವಾಸ್ತವ. ಸಮಾಜದ ಕೆಲವು ವರ್ಗಕ್ಕೆ - ಹಿಂದಿನ ಅಥವ ಇಂದಿನ ಯಾವ ಕಾನೂನೂ ಲಗಾವಾಗುವುದಿಲ್ಲ ಮತ್ತು ಇಂದಿನ ನಮ್ಮ ಕೆಲವು ಕಾನೂನುಗಳು ಸಮಾಜದಲ್ಲಿ ಕ್ಷೋಭೆಯನ್ನು ತುಂಬುವಂತಿವೆ ಎಂಬುದಕ್ಕೆ ನಿತ್ಯವೂ ನಡೆಯುತ್ತಿರುವ ಹಲವು ರಾಕ್ಷಸ ಕೃತ್ಯಗಳೂ ಉದಾಹರಣೆಯಾಗುತ್ತಿವೆ. ಏಕೆಂದರೆ ನಮ್ಮ "ಮೇಲಿನ ಮಹಡಿ"ಯು ಅಶುಚಿಯಿಂದ ತುಂಬಿದೆ. ನಮ್ಮ ದೇಹವೆಂಬ ಬಹು ಮಹಡಿ ಕಟ್ಟಡದ ಕೆಳ ಅಂತಸ್ತಿನ ಎಲ್ಲ ನಲ್ಲಿಗಳೂ ತೆರೆದಿದ್ದರೆ ಮೇಲಿನ ಮಹಡಿಗೆ ನೀರು ಹೋಗುವುದಾದರೂ ಹೇಗೆ? ಅದು ಸ್ವಚ್ಛವಾಗಿ ಉಳಿಯುವುದಾದರೂ ಹೇಗೆ?

                                      ಪೃಥಿವ್ಯಾಂ ಪುತ್ರಾಸ್ತೇ ಜನನೀ ಬಹುವಃಸಂತಿ ಸರಲಾಃ
                                      ಪರಂ ತೇಷಾಂ ಮಧ್ಯೇ ವಿರಲತರಲೋ~ಹಂ ತವ ಸುತಃ / 
                                      ಮದಿಯೋ~ಯಂ ತ್ಯಾಗಃ ಸಮುಚಿತಮಿದಂ ನೋ ತವ ಶಿವೇ
                                      ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ //
                                     (ಶ್ರೀ ಶಂಕರಾಚಾರ್ಯರ ದೇವ್ಯಪರಾಧ ಕ್ಷಮಾಪಣಾ ಸ್ತೋತ್ರ)

 
                                      "ಹೇ ತಾಯಿಯೇ, ಈ ಪೃಥ್ವಿಯಲ್ಲಿ ನಿನಗೆ ಅನೇಕ ಜನ
                                       ಅತ್ಯಂತ ಸಜ್ಜನರಾದ ಪುತ್ರರಿದ್ದಾರೆ. ಅವರ ಮಧ್ಯದಲ್ಲಿ
                                       ನಾನೊಬ್ಬ ಅಲ್ಪನಾದವನು. ಹೇ ಶಿವೇ,
                                       ಹೀಗಿದ್ದರೂ ನೀನು ನನ್ನನ್ನು ತ್ಯಜಿಸುವುದು ನಿನಗೆ ಉಚಿತವಲ್ಲ.
                                       ಏಕೆಂದರೆ ಕೆಟ್ಟ ಮಗ ಹುಟ್ಟಬಹುದು; ಆದರೆ
                                       ಕೆಟ್ಟ ತಾಯಿಯು ಇರುವುದಿಲ್ಲ "

 ಶ್ರೀ ಶಂಕರಾಚಾರ್ಯರು ಹೀಗೆ ಶರಣಾದದ್ದು ತಮ್ಮ ಆರಾಧ್ಯ ದೇವತೆಯನ್ನು ತಾಯಿಯೆಂದು ಭಾವಿಸಿ.

                   ಭದ್ರಂ ಕರ್ಣೇಭಿಃ ಶೃಣುಯಾಮ ದೇವಾಃ ಭದ್ರಂ ಪಶ್ಯೇಮಾಕ್ಷಭಿರ್ಯಜತ್ರಾಃ /  
                   ಸ್ಥಿರೈರಂಗೈಸ್ತುಷ್ಟುವಾಂಸಸ್ತನೂಭಿರ್ವ್ಯಶೇಮ ದೇವಹಿತಂ ಯದಾಯುಃ // (ಋಗ್ವೇದ)

                 "ಓ ದೇವತೆಗಳೇ, ನಾವು ನಮ್ಮ ಕಿವಿಗಳಿಂದ ಶುಭವಾದುದನ್ನೇ ಕೇಳುವಂತಾಗಲಿ;
                  ಓ ಪೂಜಾರ್ಹರೇ, ನಮ್ಮ ಕಣ್ಣುಗಳ ಮೂಲಕ ನಾವು ಮಂಗಳವಾದುದನ್ನೇ ನೋಡುವಂತಾಗಲಿ;
                  ನಾವು ನಿಮ್ಮ ಗುಣಗಾನ ಮಾಡುವಂತಾಗಲಿ;
                  ಸ್ಥಿರವಾದ ಅಂಗಗಳಿಂದ ಕೂಡಿದವರಾಗಿ ನಮ್ಮ ಪಾಲಿನ ಆಯುಸ್ಸನ್ನು ಅನುಭವಿಸುವಂತಾಗಲಿ"

ಹೀಗೆ ವಿಶ್ವ ಹಿತವನ್ನು ಬಯಸುವ ಸಜ್ಜನಿಕೆಯು - ದುಸ್ಸಹ ಕಾಲ್ತುಳಿತಕ್ಕೆ ಸಿಲುಕಿ ಭರದಿಂದ ಕರಗುತ್ತ - ತಮ್ಮ ಗಂಡ / ಹೆಂಡತಿ, ಮಕ್ಕಳನ್ನೂ ಪ್ರತಿಸ್ಪರ್ಧಿಗಳಂತೆ ನಡೆಸಿಕೊಳ್ಳುತ್ತಿರುವವರು ಈಗ ಹೆಚ್ಚುತ್ತಿದ್ದಾರೆ. ಸಮಾಜದಲ್ಲಿ ಪ್ರತಿಷ್ಠಿತರೆಂದು ಅಚ್ಚೊತ್ತಿಸಿಕೊಂಡವರಲ್ಲೇ ಇಂತಹ ವಿಕ್ಷಿಪ್ತತೆಯು ಬಲಗೊಳ್ಳುತ್ತಿದೆ. ವಿಕ್ಷಿಪ್ತರಲ್ಲದವರು ಸನ್ಮಾನ್ಯರಾಗಿ ಪ್ರತಿಷ್ಠಿತರೆನ್ನಿಸಿಕೊಳ್ಳುವುದೇ ಅಸಾಧ್ಯವಾಗಿದೆ ! ಯಾವುದೇ ಸಂಬಂಧಗಳು ಅರ್ಥವೇ ಆಗದಷ್ಟು ಜಿಡುಕಾಗುತ್ತಿವೆ. ನಾವು ಕೆಟ್ಟು ನಮ್ಮ ಮಕ್ಕಳನ್ನೂ ಕೆಡಿಸುವಷ್ಟು ನಾವು ಚಿಗುರಿ ಬಿಟ್ಟಿದ್ದೇವೆ. ಕೆಟ್ಟ ಮಕ್ಕಳು ಅತಿಕೆಟ್ಟ ಮಕ್ಕಳಾಗುತ್ತಿರುವುದು ಒಂದು ದುರಂತವಾದರೆ ಅತಿ ಕೆಟ್ಟ ಅಮ್ಮ ಅಪ್ಪಂದಿರೇ ಅದಕ್ಕೆ ಕಾರಣರಾಗುತ್ತಿರುವುದು ಗಂಭೀರ ದುರಂತ. ಒಬ್ಬ ಮಗನು - "ತನ್ನ ಸೋದರಿಯ ಸಾವಿನಲ್ಲಿ ಅಮ್ಮನ ಪಾತ್ರವಿದೆ; ಅಮ್ಮನು ತನ್ನನ್ನೂ ಕೊಲ್ಲಲು ಸಂಚು ಮಾಡಿದ್ದಳು" - ಎನ್ನುವ ಹಂತಕ್ಕೆ ನಮ್ಮ ನೈತಿಕತೆ ಕುಸಿದಿದೆಯೆಂದರೆ ಮುಂದೆ ಘನಘೋರ ದಿನಗಳು ನಮಗಾಗಿ ಕಾದಿವೆ ಅನ್ನಿಸುವುದಿಲ್ಲವೆ ? ಮನುಷ್ಯರು ಮನುಷ್ಯರನ್ನು ಕೆಡೆದು ಮಲಗಿಸಿ, ಬಗೆದು ತಿನ್ನುತ್ತಿದ್ದ ಕಾಲಕ್ಕೆ ಸರಿಯುತ್ತಿದ್ದೇವೆಯೆ ?

ಮಕ್ಕಳನ್ನು ಹೆತ್ತವರೆಲ್ಲರೂ ತಾಯಿಯೇ ? ಅಮ್ಮ ತೋರಿಸಿದವರೆಲ್ಲರೂ ಅಪ್ಪನೆ ?  

ಸುಳ್ಳನ್ನೇ ಮನೆದೇವರನ್ನಾಗಿಸಿಕೊಂಡು ನಿತ್ಯ ಪೂಜೆ ನಡೆಸುತ್ತಿದ್ದವರ ಮೊನ್ನೆಮೊನ್ನೆಯವರೆಗಿನ "Success Story" ಗಳೆಲ್ಲ ಒಂದು ಬೆಳಿಗ್ಗೆ "Failure Story" ಯಾಗಿ ಧುತ್ತೆಂದು ಎದುರು ನಿಲ್ಲುತ್ತವೆ. ಏಕೆಂದರೆ ಸುಳ್ಳುಗಳಿಗೆ ಆಶ್ರಯ ಪಡೆಯುವುದು ಮಾತ್ರ ಗೊತ್ತಿರುತ್ತದೆ; ಆಶ್ರಯ ಕೊಡುವ ಶಕ್ತಿಯಾಗಲಿ, ಉದಾರತೆಯಾಗಲಿ ಇರುವುದಿಲ್ಲ. ಪರಸ್ಪರ ವಿಶ್ವಾಸವೇ ಕುಸಿಯುವಂತಹ ಇಂದಿನ ಸಾಮಾಜಿಕ ಸನ್ನಿವೇಶವನ್ನು ನಿರ್ಮಿಸಿ ದುಷ್ಟ ಪೀಳಿಗೆಯನ್ನು ರೂಪಿಸಿದ ಸೃಷ್ಟಿಕರ್ತರು ನಾವೇ. ನಮ್ಮ ವಕ್ರ ಚಿಂತನೆ, ವಿತಂಡ ವಾದ, ಸ್ವಾರ್ಥಕ್ಕಾಗಿ ನಿಯಮವನ್ನು ಮೀರುವ ಚಟ, ಕ್ಷಣಿಕ ಲಾಭಕ್ಕಾಗಿ ಎಡೆಬಿಡದೆ ಮಾಡುತ್ತಲೇ ಹೋಗುವ ಅಪರಾತಪರಾಗಳಿಂದ ಇಂದಿನ ಇಡೀ ಸಾಮಾಜಿಕ ವ್ಯವಸ್ಥೆಯೇ ನಲುಗುತ್ತಿದೆ. ನಮ್ಮ ಮಕ್ಕಳಿಗೆ ಇನ್ನು ಭವಿಷ್ಯವೇ ಇಲ್ಲದಂತೆ ನಾವು ಮಾಡಿದ್ದೇವೆ. ದುಷ್ಟರಾಗುವುದು ಅನಿವಾರ್ಯವಾಗುವಂತೆ ಮಾಡಿದ್ದೇವೆ. ಇಂದಿನ ದುಷ್ಟ ಪೀಳಿಗೆಯು ಯಾವುದೇ ಉದ್ಭವ ಮೂರ್ತಿಯಲ್ಲ. ಸಾಮಾಜಿಕ, ಕೌಟುಂಬಿಕ ಸಂಬಂಧಗಳ ಅಕರಾಳ ವಿಕರಾಳತೆಯಿಂದಾಗಿ ಇಂತಹ ದೃಶ್ಯಗಳು ಕಾಣಿಸುತ್ತಿವೆ. ನಿಜವಾಗಿಯೂ "ಅಮ್ಮ ಲೂಸಾ? ಅಪ್ಪ ಲೂಸಾ?" ಎಂಬ ಸ್ಥಿತಿಗೆ -  ನಾವು ಬಂದು ತಲುಪಿದ್ದೇವೆ.

ನಮ್ಮ ಅಪ್ಪ ಯಾರು? ಅಮ್ಮ ಯಾರು? ನಮ್ಮ ಮಗ ಯಾರು? ಮಗಳು ಯಾರು? ಅಂಕಲ್ ಯಾರು? ಜೀಜಾಜಿ ಯಾರು? ಇಂದಿನ High Class ನವರಿಗೆ ಯಾವುದೂ ಗೊತ್ತಿರುವುದಿಲ್ಲವಂತೆ. ಬಗಲಲ್ಲಿರುವ ಹೆಂಡತಿ / ಗಂಡನೆಂಬ ಆಕೃತಿಯು ಹೇಳುವುದನ್ನೆಲ್ಲ ನೂರಕ್ಕೆ ನೂರರಷ್ಟು ನಂಬುವ ಪ್ರೇಮೋನ್ಮತ್ತ (!!??) ಸ್ಥಿತಿಯಲ್ಲಿ ಒಂದು ವರ್ಗವು ನಡೆಯುತ್ತಿದೆಯಂತೆ ! ಅಂತಹ ವೈಭೋಗದಲ್ಲಿ ಓಲಾಡುವ ಮನೆಯೊಳಗಿನ ಒಬ್ಬ ಸದಸ್ಯ - ವರ್ಷಗಟ್ಟಲೆ ಮಾಯವಾಗಿದ್ದರೂ ಅವರ ಏನು ಎತ್ತಗಳನ್ನು ಯಾರೂ ವಿಚಾರಿಸುವುದೂ ಇಲ್ಲವಂತೆ ! ಸ್ವಕೇಂದ್ರಿತ ಬದುಕು, ಸ್ವಾರ್ಥದ ಪಾರುಪತ್ಯ ! ಅಂತಹ ಚೌಕಟ್ಟಿನಲ್ಲಿ ವರ್ಷಾನುಗಟ್ಟಲೆ ಹುಗಿದಿಟ್ಟ ಅಮೇಧ್ಯದ ದುರ್ವಾಸನೆಯು ಎಲ್ಲೋ ಒಮ್ಮೊಮ್ಮೆ ಧುತ್ತೆಂದು ಬಯಲಾದರೆ, ಆಗ ಒಂದಷ್ಟು ಗದ್ದಲ; ಕೆಲವರಿಗೆ ರಸದೂಟ ! ಪತ್ತೇದಾರಿ ಕತೆಯಂತೆ ಸಾಗುವ ಕೆಲವು ಹೈಕ್ಲಾಸ್ ಘಟನಾವಳಿಗಳು ಅತಿ ಪ್ರಚಂಡ ವಾರ್ತಾವಾಹಿನಿಯವರಿಗೂ ಬಿಡಿಸಲಾಗದ ಒಗಟಂತೆ ಕಾಡುವುದಿದೆ. ಇನ್ನೂ ನೂರಾರು ಅಂತೆಕಂತೆಗಳು ಆಗಾಗ ಜೊತೆಯಾಗುವುದೂ ಇದೆ. ...ಅರೆ ಬೆಂದ ಸುದ್ದಿಗಳು... ಸುದ್ದಿ ಕೆದಕುವವರಿಗೆ - ಸುದ್ದಿ ಹಬ್ಬಿಸುವವರಿಗೆ ಮಾತ್ರ ಹಬ್ಬ!

ಇತ್ತೀಚೆಗೆ ಒಂದು ಸುದ್ದಿಯು ಹೀಗೇ ಚಾಲ್ತಿಯಲ್ಲಿತ್ತು. ಯಾವುದೋ ಇಂದ್ರಾಣಿ ಮುಖರ್ಜಿ ಎಂಬ 9X ಮಾಧ್ಯಮ ಸಂಸ್ಥೆಯ ಮಾಜಿ ಮುಖ್ಯಸ್ಥೆಯ ಮಗಳು ಶೀನಾ ಬೋರಾ ಎಂಬ ಹುಡುಗಿಯನ್ನು ಹತ್ಯೆ ಮಾಡಲಾಗಿದೆ - - ಅಂತೆ. 2012 ರಲ್ಲಿ ನಡೆದಿದೆಯೆನ್ನಲಾದ ಈ ಘಟನೆಯು 2015 ರಲ್ಲಿ ಈಗ ದೊಡ್ಡ ಸುದ್ದಿ ಮಾಡುತ್ತಿದೆ! ಇದು ಸುಳ್ಳಿನ ಬಲದಲ್ಲಿಯೇ ಸ್ವಂತ ಬದುಕನ್ನು ರಂಜನೀಯಗೊಳಿಸಿಕೊಂಡ ಸುದ್ದಿ ಸರದಾರಳೊಬ್ಬಳ ಕಪ್ಪು ಕತೆಯೆ? ಒಂದು ಸುದ್ದಿ ಸಂಸ್ಥೆಯನ್ನು ಸುಳ್ಳಿನ ಜಾಲದಲ್ಲಿಯೇ ಕಟ್ಟಿ ಬೆಳೆಸಿದ ಅಪೂರ್ವ ಮಹಿಳೆಯ ಧಿಡೀರ್ ಯಶಸ್ಸಿನ - ತಪ್ಪು ಕತೆಯೆ ? ಒಂದು ಹೆಣವನ್ನು ತಿನ್ನಲು ನೂರಾರು ಹದ್ದುಗಳು ಎರಗುವಂತೆ, ಈ ಕತೆಯಲ್ಲಿ ಹಲವು ಪಾತ್ರಗಳು ಊಟಕ್ಕೆ ಕುಳಿತಂತೆಯೂ ಕಾಣಿಸುತ್ತದೆ. ಹಲವಾರು ವರ್ಷಗಳ ಕಾಲ ಎಳೆದಾಡಲು - ಆಡಿಕೊಳ್ಳಲು ಇನ್ನೊಂದು ಪ್ರಕರಣವು ಸಿಕ್ಕಿದ್ದಂತೂ ಸತ್ಯ. ಗುಡ್ಡ ಅಗೆದೂ ಅಗೆದು ಕೊನೆಗೆ ಹುಲಿ ಬಿಡಿ - ಇಲಿಯೂ ಸಿಗದಿರುವ ಸಾಧ್ಯತೆಯೂ ಇದೆ. ಈ ಭಾರತದಲ್ಲಿ ಯಾರಿಗೂ ತಕ್ಕಷ್ಟು ನ್ಯಾಯ ಸಿಗದಿರಬಹುದು; ಅದೊಂದು ಬಗೆಯ ಸಮಾನತೆ. ಅನ್ಯಾಯದಲ್ಲಿಯಂತೂ ತಕ್ಕಮಟ್ಟಿಗೆ ಸಮಾನತೆ ಇದ್ದಂತೆ ಅನ್ನಿಸುತ್ತಿರುತ್ತದೆ !

ಆದರೆ ಈ ಪ್ರಕರಣದಲ್ಲಿ ನನ್ನನ್ನು ತಲ್ಲಣಗೊಳಿಸಿದ್ದು ವಿಚಾರಣೆ, ಶಿಕ್ಷೆ, ನ್ಯಾಯ...ಇತ್ಯಾದಿಗಳಲ್ಲ. "ಈ ನ್ಯಾಯ ಎಂಬ ವೇದಿಕೆಯಲ್ಲಿ ಯಾರಿಗೂ ಪೂರ್ತಿ ನ್ಯಾಯ ಸಿಗುವುದಿಲ್ಲ. ಒಬ್ಬರಿಗೆ ಹೆಚ್ಚು ಶಿಕ್ಷೆ; ಇನ್ನೊಬ್ಬರಿಗೆ ಸ್ವಲ್ಪ ಕಡಿಮೆ ಶಿಕ್ಷೆ ಸಿಕ್ಕೀತು; ಒಟ್ಟಿನಲ್ಲಿ ನ್ಯಾಯದ ಹತ್ತಿರ ಸುಳಿದರೆ - ಶಿಕ್ಷೆ..." ಎಂಬುದು ನನ್ನ ಭಾವನೆ. ಈ ಪ್ರಕರಣದ ಹಿನ್ನೆಲೆಯಲ್ಲಿ ನೋಡಿದರೆ, ಒಂದು ಕುಟುಂಬದ ಹೆಣ್ಣು ಅಥವ ಗಂಡು - ಮಿತಿಮೀರಿದ ಮಹತ್ವಾಕಾಂಕ್ಷೆ, ವಿಕೃತ ದುರಾಸೆ, ಸ್ವಚ್ಛಂದ ಪ್ರವೃತ್ತಿ, ಸ್ವಾರ್ಥದ ಕರಿಮುಖವನ್ನು ಹೊಂದಿದ್ದರೆ ಏನೆಲ್ಲ ವಿಪರೀತದ ಅನಾಹುತಗಳಾಗಬಹುದು ? ಎಂಬ ವಿಷಯವು ಮಾತ್ರ ತಲ್ಲಣಗೊಳಿಸುವಂತಹದು.

ಎಂದೋ ಕಾಣೆಯಾಗಿರುವ ಶೀನಾ ಎಂಬ ಹುಡುಗಿಯ ಕತೆಯ ಬಹುಮುಖಗಳಿಗೆ ಪ್ರದಕ್ಷಿಣೆ ಬರುತ್ತಿರುವಾಗ - "Nation wants to know" ಎಂದು ಮೇಜು ಗುದ್ದುತ್ತಿದ್ದ ನಮ್ಮ ಸಮಾಜದ "ಪಟಾಪಟಿ ಮಂದಿ" ಯನ್ನೂ - ನಾವೆಲ್ಲರೂ ಮತ್ತೊಮ್ಮೆ ಗಮನಿಸುವಂತಾಗಿದೆ. ಜಗತ್ತಿನಲ್ಲಿರುವ ಎಲ್ಲ ದುರ್ಬಲರ "Body guard" ಗಳಂತೆ ವರ್ತಿಸುತ್ತಿರುವ ನಮ್ಮ ಎಲ್ಲ ವಾಕ್ ಶೂರರು ಈ ಶೀನಾ ಪ್ರಕರಣವನ್ನು ನಿಭಾಯಿಸುತ್ತಿರುವ ಶೈಲಿಯು "ಹೊಡೆದಂತೆ, ಅತ್ತಂತೆ" - ಆಗಾಗ ಸ್ವಲ್ಪ ಭಿನ್ನವಿದ್ದಂತೆಯೂ ಅನ್ನಿಸುತ್ತದೆ.

ಆದರೆ ಆಶ್ಚರ್ಯವೆಂದರೆ - "ಇಷ್ಟು ಚೆಂದದ ಹುಡುಗಿ ಹೊರಟೇ ಹೋದಳಲ್ಲ?" ಎನ್ನುತ್ತ ಇಂದಿನವರೆಗೆ ಯಾವುದೇ Candle ಮೆರವಣಿಗೆ ನಡೆದಿಲ್ಲ !!  ಘೋಷಣೆ ಇಲ್ಲ. ಜನ ಸೇರಿಸುವ ಸಂಸ್ಥೆಗಳಿಲ್ಲ; ಸದಾ ಮಹಿಳೆಯರ ಮುಖವಾಣಿಯಂತೆ ಪ್ರತ್ಯಕ್ಷವಾಗುತ್ತಿದ್ದ ಯಾವ ಪರಿಚಿತ ಲಲನಾಮಣಿಗಳದೂ ಸದ್ದಿಲ್ಲ. ಯಾವ ಆಯೋಗವೂ ಸ್ವಪ್ರೇರಣೆಯಿಂದ ಮೂಗು ತೂರಿಸಿಲ್ಲ. ಕೆಲವು "ವಾಕ್ ಮಣಿ"ಗಳು ಅತ್ಯಂತ ಸಂಯಮದಿಂದ, ಅಡ್ಡ ಗೋಡೆಯ ಮೇಲೆ ದೀಪವಿಟ್ಟಂತೆ ತಡೆತಡೆದು ಮಾತನಾಡುತ್ತಿದ್ದಾರೆ. "ಹೊಡಿ, ಬಡಿ, ಕಚ್ಚಿ, ಕೊಲ್ಲಿ..." ಎಂಬ ಯಾವ ಉದ್ವೇಗವೂ ಈ ಪ್ರಕರಣದಲ್ಲಿ ಕಾಣಿಸುತ್ತಿಲ್ಲ. ಸರಕಾರದ ಮೇಲೆ ಒತ್ತಡ ಹೇರುವ ಎಂದಿನ ಪ್ರಯತ್ನವೂ ಕಾಣುವುದಿಲ್ಲ. ಕೆಲವರು ಬೆನ್ನು ಬಿದ್ದಂತೆ ಕಂಡರೂ - ಹಲವರು ಮರ್ಯಾದೆಯ ಮುಸುಕನ್ನು ಹೊದೆದಂತೆ ಕಾಣುತ್ತದೆ. ಸಾಮಾಜಿಕ ಕಳಕಳಿಯುಳ್ಳವರೆಂಬಂತೆ ಸದಾ ತೋರಿಸಿಕೊಳ್ಳುವ ಯಾವ ರೆಡಿಮೇಡ್ ರಾಜಕೀಯ ಧುರೀಣರೂ ಕಮಕ್ ಕಿಮಕ್ ಅನ್ನುವುದಿಲ್ಲ; ಬದಲಿಗೆ - ಸಾಮಾಜಿಕ ಕಳಕಳಿಯ ಸ್ವಘೋಷಿತ CONTRACT ಪಡೆದಂತೆ ಮಾಧ್ಯಮಗಳಲ್ಲಿ ಬೊಬ್ಬೆ ಹೊಡೆಯುವವರೆಲ್ಲರೂ ಹೆಬ್ಬೆಟ್ಟು ಚೀಪುವ ಮಗುವಿನಂತೆ ಕಾಗಕ್ಕ ಗುಬ್ಬಕ್ಕನ ಕತೆಯನ್ನು ಅವರಿವರಿಂದ ಕೇಳುತ್ತ ತಾವೂ ಹೇಳುತ್ತ ಕುಸ್ತಿಯಾಡುತ್ತಿರುವಂತೆಯೂ ತೋರುತ್ತಿದೆ; ಎಲ್ಲೋ ಸ್ವಂತ ಮನೆಯ ವಿಷಯವನ್ನು ಆಡಿಕೊಳ್ಳಲು ಸಂಕೋಚಗೊಳ್ಳುವ ವರ್ತನೆಯಂತೆಯೂ ಒಮ್ಮೊಮ್ಮೆ ಕಾಣುತ್ತದೆ !! ಆದರೆ ವಿಚಾರಣೆ ನಡೆಸುತ್ತಿರುವ ಅಧಿಕೃತ ಅಧಿಕಾರಿಗಳು ಗಂಭೀರವಾಗಿ ಕಾರ್ಯತತ್ಪರರಾದಂತೆ ಹೊರ ನೋಟಕ್ಕೆ ಅನ್ನಿಸುತ್ತದೆ.

ತನ್ಮಧ್ಯೆ, ಶೀನಾ ಎಂಬ ಹುಡುಗಿಯ ಕೊಲೆ ಆಗಿರುವುದು ನಿಜವೆ ? ಎಂಬ ಮೂಲ ಪ್ರಶ್ನೆಯೊಂದಿದೆ. ಈ ಪ್ರಕರಣದ ಒಂದೊಂದೇ ಹಾವುಗಳು ಬುಟ್ಟಿಯಿಂದ ಇಣುಕುವ ಶಿಸ್ತನ್ನು ನೋಡಿದರೆ, ಬುದ್ಧಿಪೂರ್ವಕವಾಗಿ ಕತೆಕಟ್ಟಿದಂತೆಯೂ ಕಾಣಿಸುತ್ತದೆ. ಇನ್ನೂ ಎಷ್ಟೆಷ್ಟು ಅಸಂಗತ ಕತೆ ಕೇಳಲಿಕ್ಕಿದೆಯೋ ? ಬುದ್ಧಿವಂತರು ಆಡುವ ನಾಟಕಗಳೆಲ್ಲವೂ ಯಾವತ್ತೂ ಅಸಂಗತವೇ ಆಗಿರುತ್ತದೆ ! ಅಂತಿಮವಾಗಿ, ಯಾರನ್ನಾದರೂ ಜವಾಬ್ದಾರರನ್ನಾಗಿಸುವ ಅನಿವಾರ್ಯತೆಯಲ್ಲಿ - ತೆರೆಯ ಹಿಂದಿನ ಆಟದಲ್ಲಿ ಸೋತ ಯಾವುದೋ ಒಂದು ಆಕಾರಕ್ಕೆ ಹೊರೆ ಹೊರಿಸಲೂಬಹುದು. ಅಲ್ಲಿಗೆ ನಾಟಕದ ಮುಕ್ತಾಯ.

ನಮ್ಮ ನಿತ್ಯಬದುಕಿನಲ್ಲಿ ನಾವು ಕಾಣುತ್ತಿರುವ ಮತ್ತು ಕಾಣದಿರುವ ಸಾವಿರಾರು ದುರಂತಗಳಲ್ಲಿ ಇದೂ ಒಂದು. ಅಷ್ಟೇ. ಮಹಡಿಯಿಂದ ಬಿದ್ದು ಸತ್ತವರು, ನೀರಿನಲ್ಲಿ ಮುಳುಗಿ ಸತ್ತವರು, ಬೆಂಕಿಯಲ್ಲಿ ಉರಿದು ಸತ್ತವರು... ಹೀಗೆ ಬಗೆಬಗೆಯಿಂದ ಅಂತ್ಯ ಕಂಡವರು - ಅಂತ್ಯ ಕಾಣಿಸಿಕೊಂಡವರ ದೊಡ್ಡ ಪಟ್ಟಿಯೇ ಇದೆ ! ಇವೆಲ್ಲ ಸಂದರ್ಭಗಳಲ್ಲೂ ಆಯಾ ಸಂದರ್ಭವನ್ನು ಹಿಸಿದು ಸತ್ಯ ದರ್ಶನಕ್ಕೆ ನಡೆಸಿದ ಪ್ರಯತ್ನಗಳೂ ಲೆಕ್ಕವಿಲ್ಲದಷ್ಟು. ಆದರೆ ಪೂರ್ಣಸತ್ಯ ಕಾಣಿಸಿತ್ತೆ? ಏನೋ ಒಂದು ತಾರ್ಕಿಕ ಅಂತ್ಯ ದೊರೆತಿರಲೂಬಹುದು. ಅನೇಕ ಬಾರಿ, ತರ್ಕಾತೀತವಾಗಿ, "ಸಾವು" ವಿಜೃಂಭಿಸಿದ್ದೇ ಹೆಚ್ಚು. ಎಷ್ಟೋ ಬಾರಿ ನಡುದಾರಿಯಲ್ಲಿ ಸತ್ತವರಿಗೂ - ಸಾಯುವುದು ಏಕೆಂದು ಗೊತ್ತಿರುವುದಿಲ್ಲ; ತಾವು ಸಾವಿನ ಕಡೆಗೆ ಹೆಜ್ಜೆ ಇಡುತ್ತಿರುವುದರ ಸೂಚನೆಯನ್ನು ಅರ್ಥ ಮಾಡಿಕೊಳ್ಳಲೂ ಆಗುವುದಿಲ್ಲ. ಸಾಯುವವರು ಇರುವ ವರೆಗೂ ಸಾಯಿಸುವ ಸ್ವಾರ್ಥಿಗಳೂ ಇರುತ್ತಾರೆ ಎಂಬುದೂ ಹೊಳೆಯುವುದಿಲ್ಲ. ಸಾವಿನ ಅರ್ಥವನ್ನೇ ತಿಳಿಯದ ಬದುಕುಗಳ ದುರಂತವಿದು.

ನಮ್ಮಲ್ಲಿರುವ ಕಾನೂನಿನ ಪರಿಧಿಯಲ್ಲಿ ಯಾವುದೇ ಘಟನೆಯ ವಿಚಾರಣೆಯನ್ನು ಬಹು ದೀರ್ಘಕಾಲ ಎಳೆದಾಡುವ ಸದವಕಾಶ ಇರುವುದರಿಂದಾಗಿ "ಸತ್ಯವು ತಪ್ಪಿಸಿಕೊಳ್ಳುವ" ಸಾಧ್ಯತೆಯು ಹೆಚ್ಚಾಗಿ ಹೋಗಿದೆ. ಎಂದಿಗೂ ಬೆಣ್ಣೆ ಹುಟ್ಟದ ಮೊಸರನ್ನು ಕಡೆಯುವ - ಕಣ್ಕಟ್ಟಿನ ಅನೇಕ ಕರ್ಮಗಳಿಗೆ ನಾವು ಇದುವರೆಗೆ ಸಾಕ್ಷಿಯಾಗಿರುವುದರಿಂದ ನ್ಯಾಯ ಎಂಬ ಅಮೂರ್ತದ ನಿರೀಕ್ಷೆಯೂ "ಆಕರ್ಷಕ ಅಸಂಗತ" ಎನ್ನಿಸುವುದೂ ಇದೆ ... ರಂಗಿನ ಲೋಕದ ಇಂದ್ರಇಂದ್ರಾಣಿಯರ ಬದುಕಿನ "ಮದುವೆಗಳು, ಮಕ್ಕಳುಗಳು, ಗಂಡಗಳು - ಹೆಂಡಗಳು, ರಾಜಕೀಯಗಳು, ಸುಳ್ಳುಗಳು, ಮೋಸಗಳು, ಆಸೆಗಳು, ಜೀವನ ಶೈಲಿಗಳು, ನಡುವಿನ ನುಂಗಳಕಗಳು, ಬಿಕನಾಸಿಗಳು..." ಎಂಬ ಏಕಾದಶ "ಪಂಚರಂಗೀ ದರ್ಶನ"ವಿದು. ಸತ್ಯ ಸತ್ತಿದೆ! ಆದ್ದರಿಂದಲೇ ಹಸಿ ಹಸಿ ಬದುಕುಗಳು ಸಾಯುತ್ತಿವೆ ! ಬೂದಿಯೊಳಗಿನ ಮೂಳೆ ಎಣಿಸುವ ಕೆಲಸ ನಡೆಯುತ್ತಿದೆ ! ಆದ್ದರಿಂದಲೇ ಅಧರ್ಮದ ನೂರಾರು ಲಕ್ಷಣಗಳು ಪಾರುಪತ್ಯ ನಡೆಸುವಂತಾಗಿದೆ.

ನೂರು ಸುಳ್ಳು ಹೇಳಿಯಾದರೂ ಒಂದು ಮದುವೆ ಮಾಡು - ಎಂಬ ಮಾತೊಂದು ಹಿಂದೆ ಚಾಲ್ತಿಯಲ್ಲಿತ್ತು. ಅದು ಒಂದು ಬದುಕಿಗೆ ಒಂದೇ ಮದುವೆ ನಡೆಯುತ್ತಿದ್ದ ಕಾಲ; ಮಕ್ಕಳ ಮದುವೆಯನ್ನು ಇನ್ನ್ಯಾರೋ ಹಿರಿಯರು ನಿರ್ಧರಿಸುತ್ತಿದ್ದ ಕಾಲ. ಅಂತಹ ಮದುವೆಗಳು ಪರಸ್ಪರ ಕೊಂದುಕೊಳ್ಳದೆ ಆಗ ಯಶಸ್ವಿಯಾದ ಅನೇಕ ಉದಾಹರಣೆಗಳೂ ಇವೆ. ಆದರೆ ಇಂದು ಸಮಾಜವು ಬದಲಾಗಿದೆ. ಮದುವೆಯಾಗುವವರ ಒಪ್ಪಿಗೆಯಿಲ್ಲದೆ ಯಾವುದೇ ಮದುವೆಯು ನಡೆಯುವುದು ಈಗ ಸುಲಭವಲ್ಲ. ಅವರವರೇ ಮೆಚ್ಚಿ ಒಪ್ಪಿ ನಡೆಯುವ ಮದುವೆಗಳು ಪೇಟೆ ಪಟ್ಟಣಗಳಲ್ಲಿ ಹೆಚ್ಚುತ್ತಿವೆ. ವಸ್ತುತಃ "ಮದುವೆಯ ಆಟ"ದ ಒಲವು ಹೆಚ್ಚುತ್ತಿದೆ ! ಹೀಗಿದ್ದೂ ಹೊಂದಾಣಿಕೆಯು ಸಾಧ್ಯವಾಗದೆ ಮುರಿದು ಬೀಳುವ ಘಟನೆಗಳೂ ಹೆಚ್ಚುತ್ತಿವೆ. ಯಾವುದೇ ಬದ್ಧತೆಯಿಲ್ಲದ ನವೀನ ಪೀಳಿಗೆಯು ಹೂಂಕರಿಸುತ್ತಿದೆ. ಯಾರನ್ನಾದರೂ ಸುಮ್ಮನೆ ಮುಟ್ಟಿ OUT ಆಗಿಸುವ "ಕಬಡ್ಡಿ ಮದುವೆ " ಗಳ ಸಂಭ್ರಮವು ಒಂದೆಡೆ ಜನಪ್ರಿಯವಾಗುತ್ತಿದ್ದರೆ, High Society ಯ ಜನಗಳು "ಮದುವೆಯ ಸರಪಣಿ " ಎಂಬ ಹೊಸಹೊಸ ಚೆಲ್ಲಾಟ ನಡೆಸುತ್ತಿದೆ. ಇವನ್ನೆಲ್ಲ ನೋಡಿದರೆ ಅವರ "ಸುಳ್ಳು ಸರಪಣಿ ಪ್ರಪಂಚ"ವೇ ಬೇರೆ - ಎಂದೂ ಅನ್ನಿಸುವುದಿದೆ. ಅಷ್ಟು ಮಾತ್ರವಲ್ಲ, ಅಂತಹ ವರ್ಗವು ಇಡೀ ಸಮಾಜಕ್ಕೆ ಅಂತಹುದೇ ಅಂಟುರೋಗಗಳನ್ನು ಹಬ್ಬಿಸಬಲ್ಲ ಪ್ರಚಂಡ ಬ್ಯಾಕ್ಟೀರಿಯಗಳು - ಎಂದೂ ಒಪ್ಪಿಕೊಳ್ಳಬೇಕಾಗುತ್ತದೆ.

ತಾವು ಬಹಳ decent ಎಂದು ತೋರಿಸಿಕೊಳ್ಳುವ ಇಂತಹ High Class ಕಚಡಾ ಜನಗಳು ತಾವು ಪ್ರೀತಿಸಿದ ಕುಳಗಳ ಹಿನ್ನೆಲೆ, ಜಾತಕವನ್ನು ನೋಡದೆ ಕುರುಡರಂತೆ ಮದುವೆಯಾಗಿ ಬಿಡುತ್ತಾರೇನು ? ಇದು ಸತ್ಯವೆ ? Nation wants to know. ನಾಲ್ಕು ನಾಲ್ಕು ವರ್ಷಕ್ಕೆ ಗಂಡ / ಹೆಂಡತಿಯನ್ನು ಬದಲಾಯಿಸಿಕೊಳ್ಳುವ ಇವರೆಲ್ಲರೂ ಅಂತಹ ಶತದಡ್ಡರೆ ? Nation wants to know. ತನ್ನ ಹೆಂಡತಿಗೆ ಎಷ್ಟು ಗಂಡಗಳಿದ್ದರು ? ತನ್ನ ಗಂಡನಾಗುವವನಿಗೆ ಈ ಹಿಂದೆ ಎಷ್ಟು ಹೆಂಡಗಳಿದ್ದರು ? ಎಷ್ಟು ಮಕ್ಕಳಿದ್ದರು ? ಆ ಗಂಡ / ಹೆಂಡಗಳಿಂದ ಅಲ್ಲಲ್ಲಿ ಎಷ್ಟು ಮಕ್ಕಳಿದ್ದರು ? ಈ ಯಾವ ವಿವರವೂ High / Low Society ಯವರಿಗೆ ಬೇಕಾಗುವುದಿಲ್ಲವೆ ? ಅವರದು - High Class - ಅಮರ ಮಧುರ ಪ್ರೇಮ ಇರಬಹುದೆ ? ಹಾಗಲ್ಲ. ಇವೆಲ್ಲವೂ Time Pass ಪ್ರೇಮ ! ಅಮಲಿನ ಮಧುರ ಪ್ರೇಮ. ಯಾವುದೇ ಅಮಲ್ದಾರರುಗಳಲ್ಲಿ ಅಮಲು ಇರುವ ವರೆಗೂ ಪ್ರೇಮವೂ ಓಡುತ್ತದೆ; ಅಮಲು ಇಳಿದಾಗ ಮಾತ್ರ - ಜೀವ ಓಡುತ್ತದೆ. ಎಲ್ಲವೂ ಹಡಬಿಟ್ಟಿ ದುಡ್ಡಿನ ಆಟವಲ್ಲವೆ ? ಸಂಬಂಧಗಳನ್ನೂ ದುಡ್ಡಿನಲ್ಲಿ ತೂಗುವ ಬಿಕನಾಸಿ ಪ್ರೇಮಗಳಿಗೆ ಇಂತಹುದೇ ಅಂತ್ಯವು ಸ್ವಾಭಾವಿಕ. "ಕೋಟಿ ಕೋಟಿ" ಯ ದುರಾಸೆಯು ಒಂದು ಕುಟುಂಬದೊಳಗೆ ಕೋಟೆಯೆಬ್ಬಿಸಿ ನೂರಾರು ಕೋಟಲೆಗಳನ್ನು ತಂದಿಡುವುದು ಹೇಗೆ ? ಎಂಬುದಕ್ಕೆ ಇತ್ತೀಚೆಗೆ ನಿತ್ಯವೂ ಉದಾಹರಣೆಗಳು ಸಿಗುತ್ತಿವೆ. ಆದ್ದರಿಂದಲೇ ಕೆಟ್ಟ ತಾಯಿ - ತಂದೆ, ಕೆಟ್ಟ ಮಗ - ಮಗಳು ಎಲ್ಲವೂ ಸಾಧ್ಯವಾಗಿದೆ. ಧರ್ಮದ ಯಾವ ಲಕ್ಷಣವೂ ಇವರಿಗೆಲ್ಲ ಲಗಾವಾಗುವುದಿಲ್ಲ. ಏಕೆಂದರೆ ಇವರು ಧರ್ಮಾತೀತರು ! ನವೀನ ಶಿಕ್ಷಣದ ಅಸಂಗತಗಳು !

ಸುಮಾರು 20 ವರ್ಷಗಳ ಹಿಂದೆ ಒಂದು ಸಂಸ್ಥೆಯವರು ತಮ್ಮ ಸಂಸ್ಥೆಯ ಸದಸ್ಯರಾಗುವಂತೆ ನನ್ನನ್ನು ಆಹ್ವಾನಿಸಿದ್ದರು. ಅಲ್ಲಿ "ದೊಡ್ಡ ದೊಡ್ಡ" ಜನಗಳ ಸಂಪರ್ಕವಾಗುತ್ತದೆ; ಅದರಿಂದ Wide exposure ಸಿಗುತ್ತದೆ... ಎಂದೆಲ್ಲ ನನ್ನನ್ನು ಪ್ರಭಾವಿಸಲು ಪ್ರಯತ್ನಿಸಿದ್ದರು. ಆದರೆ ಆ ದೊಡ್ಡ ಜನಗಳು ಊರೂರಿಗೆ Picnic ನೆವನದಲ್ಲಿ ತಿರುಗುತ್ತ ಮಾಡುತ್ತಿದ್ದ High Class ಕೆಲಸಗಳನ್ನು ಅರಿತಿದ್ದ, ಅದರಿಂದಾಗಿಯೇ ಒಂದು ಸಂಸಾರವು ಒಡೆದು ಹೋದುದನ್ನೂ ಕಂಡಿದ್ದ ನಾನು ಅದೊಂದು ಹಳ್ಳದಿಂದ ಹೇಗೋ ಪಾರಾಗಿದ್ದೆ. ಕೆಳ ವರ್ಗದವರ ಹೋರಾಟದ ಸಮಸ್ಯೆಗಳೇ ಭಿನ್ನವಾಗಿದ್ದರೂ - ಇಂದಿನ High Society ಗಳಲ್ಲಿ ಮಾತ್ರ ಸಮಸ್ಯೆಗಳನ್ನು ನಿಭಾಯಿಸುವ ಕ್ರೌರ್ಯವು ಗಾಬರಿ ಹುಟ್ಟಿಸುವಂತಿದೆ. ಸಂಬಂಧಗಳು ನಿಜವಾಗಿಯೂ ಸಾಯುತ್ತಿವೆ. ಇಂತಹ ಕಳ್ಳರನ್ನೆಲ್ಲ ಆದರ್ಶವಾಗಿಸಿಕೊಂಡ ಕೆಲವು ಅಬ್ಬೇಪಾರಿಗಳು - ದೊಡ್ಡ ಇಕ್ಕಳದಿಂದ ಬಿಡಿಸಿಕೊಳ್ಳಲು ಅವರಷ್ಟು ಶಕ್ತಿಯೂ ಇಲ್ಲದೆ ಸಂಪೂರ್ಣ ನಾಶವಾಗುತ್ತಿದ್ದಾರೆ.

ದೇವಸ್ಥಾನಕ್ಕೆ ಎತ್ತನ್ನು ಬಿಟ್ಟಂತೆ - ಸಾರ್ವಜನಿಕ ಸೇವೆಗೆ ನಮ್ಮ ಮಕ್ಕಳನ್ನು ಸ್ವಚ್ಛಂದವಾಗಿ ಬಿಡುವ ಮೊದಲು ಪರಾಪರಗಳ ಯೋಚನೆ ಮಾಡಬೇಕು. ಯಾರಿಗಾದರೂ ಸ್ವಚ್ಛಂದತೆಯ ಹೊಸ ರುಚಿಯನ್ನು ಅನುಭವಿಸುವ ಅಭ್ಯಾಸವಾದ ಮೇಲೆ ಹಟ್ಟಿಯಲ್ಲಿ ದೊರಕುವ "ನಿತ್ಯದ ಕಲಗಚ್ಚು" ಯಾವ ಪಶುಗಳಿಗೂ ಹಿತವಾಗುವುದಿಲ್ಲ. ಸ್ವಂತ ಮನೆ ಬದುಕು ಇಷ್ಟವಾಗುವುದೇ ಇಲ್ಲ. ಬೀದಿ ಸುತ್ತುವ ಜನ್ಮತಃ ಪಶುಗಳೂ ಇಂದು ಅಪಾಯಕ್ಕೆ ಸಿಲುಕುತ್ತಿವೆ. ಭ್ರಷ್ಟಗೊಂಡಿರುವ ಮನಸ್ಸನ್ನೇ ಹಾಸಿ ಹೊದ್ದು ಮಲಗಿರುವ ಇಂದಿನ ಮನುಷ್ಯರಿಂದ ಅವರಿಗಾಗಲೀ ಸೃಷ್ಟಿಗಾಗಲೀ ಉಪಕಾರವನ್ನು ನಿರೀಕ್ಷಿಸಲೂ ಸಾಧ್ಯವಿಲ್ಲದಂತಾಗಿದೆ. ಆದ್ದರಿಂದ ಮನುಷ್ಯರು ಅಂದುಕೊಂಡವರು - ಎಚ್ಚರಗೊಳ್ಳಬೇಕಾದ ಸನ್ನಿವೇಶವಿದೆ. ತಮ್ಮ ಮನೆ - ಮನೆಮಂದಿಯನ್ನು ಪ್ರೀತಿಸಲಾಗದ ಜನರಿಗೆ ಪಕ್ಕದ ಮನೆಯವರನ್ನು ಪ್ರೀತಿಸುವ ಉಸಾಬರಿ ಯಾಕೆ ಬೇಕು ? ಅವರವರು ಅವರವರ ಕುಟುಂಬಕ್ಕಾಗಿ ದುಡಿದರೆ ಸಮಾಜವು ತನ್ನಿಂದ ತಾನೇ ಉದ್ಧಾರವಾಗುತ್ತದೆ ಎಂಬ ಸತ್ಯವನ್ನು ಆಯಾ ಮನೆಯ ಸದಸ್ಯರಿಗೆ ಮನದಟ್ಟು ಮಾಡಿಸಬೇಕು. ಅದಕ್ಕಾಗಿ Candle ಹಿಡಿದುಕೊಂಡು ರಸ್ತೆಗೆ ಓಡುವ ಯಾವ ಅಧಿಕಪ್ರಸಂಗದ ಅಗತ್ಯವೂ ಇಲ್ಲ.

ಪ್ರತೀ ಮನೆಯಲ್ಲೂ ಮುಕ್ತ ವಾತಾವರಣವಿದ್ದಾಗ ಸಮಸ್ಯೆಗಳು ಹೂವೆತ್ತಿದಂತೆ ಕರಗಿ ಹೋಗುತ್ತವೆ. ಯಾವುದೇ ಮನೆಯ ಪ್ರತಿಯೊಬ್ಬ ಸದಸ್ಯರ ಚಲನವಲನವೂ ಪರಸ್ಪರರಿಗೆ ತಿಳಿದಿರಲೇಬೇಕು. ಕಷ್ಟ ಸುಖಗಳಲ್ಲಿ ಭಾಗಿಯಾಗುವ ಒಂದು ಸಂಸಾರದ ಸದಸ್ಯರಲ್ಲಿ ಮುಚ್ಚುಮರೆಯಿದ್ದರೆ ಆ ಸಂಸಾರವು ಭದ್ರವಾಗಿ ಉಳಿಯುವುದಿಲ್ಲ ಮತ್ತು ನರಳುತ್ತದೆ. ನಮ್ಮ ಯಜಮಾನರು ಎಲ್ಲಿಗೆ ಹೋಗಿದ್ದಾರೆ ಎಂದು ಗೊತ್ತಿಲ್ಲ; ಎಷ್ಟು ಹೊತ್ತಿಗೆ ಬರುತ್ತಾರೆ ಎಂದು ಗೊತ್ತಿಲ್ಲ; ರಾತ್ರಿ ಎಂಟು ಗಂಟೆಗೆ ಸಿಗಬಹುದೇ? ಎಂದು ಕೇಳಿದರೂ ಗೊತ್ತಿಲ್ಲ...ಹೆಂಡತಿಯು Kitty Party ಗೆ ಹೋಗಿದ್ದಾಳೆ...ಎಲ್ಲಿ ಅಂತ ಗೊತ್ತಿಲ್ಲ; ಯಾವಾಗ ಬರುತ್ತಾಳೆ ಅಂತಲೂ ಗೊತ್ತಿಲ್ಲ...ಎಂದು ಗಿಣಿಮರಿಯಂತೆ "ಉಲಿಯುವ" ಯಾವುದೇ ಸಂಸಾರವು ಉಳಿದೀತೆ? ಎಂದು ಕೇಳಿದರೆ... -"ಗೊತ್ತಿಲ್ಲ; ಗೊತ್ತಿಲ್ಲ" ಎಂದಷ್ಟೇ ಉತ್ತರಿಸಬಹುದು..."ಒಮ್ಮೆ ಮದುವೆಯಾದ ಮೇಲೆ ಹೆಂಡತಿ / ಗಂಡ ಹೇಗಿದ್ದರೂ - ಅದನ್ನು ಪರಸ್ಪರರು ಹೇಗೋ HANDLE ಮಾಡ್ಬೇಕಪ್ಪ" ಅನ್ನುವವರದು - ಅದು ಪ್ರತ್ಯೇಕ ಕತೆ. Man handling, Woman handling ಅತಿಯಾದಾಗ ಒಮ್ಮೊಮ್ಮೆ ಗುಟ್ಟಿನಲ್ಲಿ Peddling ಕೂಡ ನಡೆದುಹೋಗುತ್ತದೆ ! ಬದುಕಿನಲ್ಲಿ ಸೊಯ ತಪ್ಪಿದಾಗ ಅನಾಮತ್ತಾಗಿ ಪತ್ತೇದಾರಿ ಕತೆಗಳು ಹುಟ್ಟಿಕೊಳ್ಳುತ್ತವೆ ! People Wants to Know... ಎನ್ನುವ ಅಸಂಗತಗಳು ರಂಜನೆ ನೀಡತೊಡಗುತ್ತವೆ.

ಇಂದು ಭಾರತೀಯ ಕುಟುಂಬಗಳ ಬುಡವೇ ಅಲುಗಾಡುತ್ತಿದೆ. "ದೇವಸ್ಥಾನಕ್ಕೆ ಹೋಗಿ ಬರುತ್ತೇನೆ ಮಗಳೇ; ಅನ್ನಕ್ಕೆ ಅಕ್ಕಿ ಹಾಕು.." ಎಂದ ತಾಯಿಯ ಮಾತಿಗೆ ಒಪ್ಪಿದ ಮಗಳು - ಮಧ್ಯಾಹ್ನ ಉಂಡು ಉಳಿದ ಅನ್ನಕ್ಕೆ ಒಂದು ಸಿದ್ದೆ ಅಕ್ಕಿಯನ್ನು ಹಾಕಿ ಇಟ್ಟಿದ್ದಳಂತೆ! ಇಂದು ದೃಶ್ಯ ಮಾಧ್ಯಮದಲ್ಲಿ ಬರುವ ಅಡುಗೆ ಕಾರ್ಯಕ್ರಮಗಳನ್ನು ಬಿಡದೆ ನೋಡುವವರಲ್ಲಿ ಎಷ್ಟು ಮಂದಿ ಇಂತಹ "ಅನ್ನಕ್ಕಿ"ಗಳಿದ್ದಾರೋ ? ಊಹಿಸುವುದೂ ಕಷ್ಟ. ತಾವು ಸ್ವತಃ ಅಡುಗೆ ಮಾಡದೆ ಯಾರಿಂದಲೋ ಅಡುಗೆ ಮಾಡಿಸಿ ಪುಷ್ಕಳವಾಗಿ ಊಟ ಮಾಡುವ High Class ಮನೋಸ್ಥಿತಿ ಇದು. ಅವರವರ ನಿತ್ಯದ ಕೆಲಸಗಳನ್ನು ಅವರವರೇ ನಿರ್ವಹಿಸುತ್ತ ಆತ್ಮನಿರ್ಭರರಾದಾಗ ಅಲ್ಲಸಲ್ಲದ ಕೆಲಸಗಳು ಇಣುಕಲು ಅವಕಾಶವಾಗದು. ಹೀಗೆ ಸತ್ಕರ್ಮಶೀಲರಾಗುವ ಪ್ರಯತ್ನ ನಡೆಸುವುದರಿಂದಲೇ ಹಲವು ಸಮಸ್ಯೆಗಳು ಪರಿಹಾರವಾಗುತ್ತವೆ. ಇಂದ್ರಿಯಗಳನ್ನು ಯುಕ್ತ ಕೆಲಸಗಳಲ್ಲಿ ನಿಯುಕ್ತಿಗೊಳಿಸದಿದ್ದರೆ ಅವು ನಿರುಪಯುಕ್ತ ಕೆಲಸಗಳತ್ತ ವಾಲುತ್ತವೆ. ಆದ್ದರಿಂದ ಸಾತ್ವಿಕ ಕೈ ಕೆಲಸಗಳು ಅತೀ ಅಗತ್ಯ. ಹೆತ್ತವರನ್ನು ಕೇಳಿದರೆ - "ನಮ್ಮ ಮಗಳೇನು ನಿಮಗೆಲ್ಲ ಅಡುಗೆ ಮಾಡಿ ಹಾಕಲಿಕ್ಕೆ ಮದುವೆ ಆದದ್ದಾ ??" ಎನ್ನುವ....,"ನನ್ನ ಮಗನೇಕೆ ಅಡುಗೆ ಮಾಡಬೇಕು? ಅದಕ್ಕಾ ಸೊಸೆಯನ್ನು ತಂದದ್ದು?" ಎನ್ನುವ ಗಟ್ಟಿಗಿತ್ತಿ ಹೆತ್ತವರೂ ಇದ್ದಾರೆ. ಕುರುಡು ಮೋಹದ ಅಸಂಬದ್ಧ ಅಹಂ ರಾಜ್ಯಭಾರ!


ಸಂಬಂಧಗಳು ಸುಸಂಬದ್ಧವಾಗದೆ ಅಸಂಬದ್ಧವಾದರೆ ಹೀಗೇ. ಯೋಚನೆಗಳ ಶ್ರುತಿ ತಪ್ಪುತ್ತದೆ. ಹಾಗೆ ನೋಡಿದರೆ...ಇಷ್ಟು ಉದ್ದಕ್ಕೆ ಬದುಕಿನ ಬಂಡಿಯನ್ನು ದೂಡಿ ದಣಿದಿರುವ ವೃದ್ಧರು, ತಮ್ಮ ಇಳಿವಯಸ್ಸಿನ ದೈಹಿಕ ಶ್ರಮದಲ್ಲಿ ತಮ್ಮದೇ ಮಕ್ಕಳ ಆಧಾರವನ್ನು ಅಪೇಕ್ಷಿಸುವುದರಲ್ಲಿ ತಪ್ಪೇನಿದೆ ? ಊರಿಗೊಂದು ವೃದ್ಧಾಶ್ರಮ ಕಟ್ಟಿಸಿ ಅಲ್ಲಿ "ಸಮಾಜ ಸೇವಾ ನಾಟಕ ಕಂಪೆನಿ" ಯನ್ನು ನಡೆಸುವುದಕ್ಕಿಂತ ಅವರವರ ಮನೆಯನ್ನು ಸುಸ್ಥಿತವಾಗಿ ಇರಿಸಿಕೊಳ್ಳುವುದು ಸುಲಭ ಮತ್ತು ಗೌರವಪ್ರದ - ಅಲ್ಲವೆ ?  ಆದರೆ ಸ್ವಾರ್ಥ - ಸ್ವಕೇಂದ್ರಿತ ಪಾಶ್ಚಾತ್ಯ ಶಿಕ್ಷಣದ ಪ್ರಸಾದಗಳಂತಿರುವ, ಪೊಳ್ಳು ಪ್ರತಿಷ್ಠೆಯನ್ನಷ್ಟೇ ಕಲಿತಿರುವ ಇತ್ತೀಚೆಗಿನ ಬೇಜವಾಬ್ದಾರಿಯ ಮಕ್ಕಳಿಗೆ ಭಾವ ಸಂವಹನವೆಂದರೇನೆಂದೇ ಗೊತ್ತಿಲ್ಲ; ಕ್ಷುಲ್ಲಕ ವಿಷಯಗಳೂ ಅವರ ಪಾಲಿಗೆ ಮನಸ್ತಾಪದ ಕಾರಣವಾಗುತ್ತಿವೆ. ಯಾವ ಹೊಸದನ್ನೂ ತಾವೇ ಮಾಡಿ ಕಲಿಯುವ ಶ್ರಮದ ಗೋಜಿಗೇ ಹೋಗದೆ ಕೇವಲ ಮನಸ್ಸಿನಲ್ಲಿಯೇ ಮಂಡಿಗೆ ತಿನ್ನುತ್ತ ಬಂದಳಿಕೆಗಳಂತಿರುವ ಇಂತಹ Short Cut ಇಂದ್ರ - ಇಂದ್ರಾಣಿಯರು ಎಲ್ಲಿ ಯಶಸ್ವಿಯಾದರೂ, ವೈಯ್ಯಕ್ತಿಕ ಬದುಕಿನಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗದು. ಅಂತ್ಯವಂತೂ ದುರಂತವೇ. ಇಂಥವರ ಸಹವಾಸದ ದೌರ್ಭಾಗ್ಯ ಒದಗಿದ ಬಡಪಾಯಿಗಳು ವಿಧಿಯನ್ನು ದೂರುತ್ತ ದಿನ ತಳ್ಳಬೇಕಾದ ಪರಿಸ್ಥಿತಿ ಇದೆ ! ಭಾರತದಲ್ಲಿಯೂ ವೋಟಿನ ರಾಜಕಾರಣದಲ್ಲಿ ತತ್ಪರವಾಗಿರುವ ಸರಕಾರಗಳ ಪರೋಕ್ಷ ಪ್ರೋತ್ಸಾಹದಿಂದಾಗಿ ಅನೇಕ ಪರಿವಾರಗಳು ಛಿದ್ರಗೊಳ್ಳುತ್ತಿವೆ. ಯಾವ ಗೊತ್ತುಗುರಿಯೂ ಇಲ್ಲದ ಅಂತಹ ಪಂಚತಾರಾ ಶೈಲಿಯ ಬದುಕುಗಳು ಈಗ ದಿನವೂ ಊಳಿಡುತ್ತಿವೆ. ಎಲ್ಲವೂ ಸುಲಭದಲ್ಲಿ ಸಿಗಬೇಕು ಎನ್ನುವ Modern ಶಚೀಂದ್ರರಿವರು. ಆದರೆ ಸುಲಭದಲ್ಲಿ ಸಿಗುವ ಯಾವ ಯಶಸ್ಸೂ ಈ ಭೂಮಿಯ ಮೇಲಿಲ್ಲವಲ್ಲ ?... ಯಾವುದೇ ಸ್ವಚ್ಛ ಬದುಕು ಒಂದಷ್ಟು ಸತ್ಕರ್ಮವನ್ನು ಬೇಡುತ್ತದೆ. ತೃಪ್ತಿಯನ್ನು ಬಯಸುತ್ತದೆ. ಆದರೆ ಮೂಢ ದುರಾಸೆಯ ಮರೀಚಿಕೆಯು ನಮ್ಮ ಬದುಕುಗಳನ್ನು ಅಡ್ಡದಾರಿ ಹಿಡಿಸುತ್ತದೆ ! ಅಡ್ಡಾದಿಡ್ಡಿ ನಡೆಸುತ್ತದೆ ! ಬಳಲಿಸುತ್ತದೆ !

ಇತ್ತ ಸಾರ್ವಜನಿಕ ಸೇವೆಯನ್ನು ದುಡಿಮೆಯ ಮಾರ್ಗವಾಗಿಸಿಕೊಂಡಿರುವ ಇಂದಿನ ಬೆರಳೆಣಿಕೆಯ ಮಂದಿಯಿಂದ ಇಡೀ ಭಾರತೀಯ ಸಮಾಜವೇ ತಲೆತಗ್ಗಿಸುವಂತಾಗಿದೆ. ಪಾಶ್ಚಾತ್ಯ ಅನುಕರಣೆ, ತಮ್ಮ ಯೋಗ್ಯತೆಯನ್ನು ಮೀರಿದ ಮಹತ್ವಾಕಾಂಕ್ಷೆ, ಸ್ವಾರ್ಥ ಸಾಧನೆಗಾಗಿ ಯಾವ ಮಟ್ಟಕ್ಕೂ ಏರಿಳಿಯಬಲ್ಲ ಕ್ಷುದ್ರತನವನ್ನು ರೂಢಿಸಿಕೊಂಡಿರುವ ಈ "ಸಂಪರ್ಕ ಕ್ರಾಂತಿ ಸೇವೇಂದ್ರ ವಿಭಾಗ"ವು ಇಡೀ ಭಾರತೀಯ ಸಂಸ್ಕೃತಿಯನ್ನೇ ಕುಲಗೆಡಿಸುತ್ತಿದೆ. ಅರ್ಥ, ಕಾಮದಲ್ಲಿಯೇ ಮೋಕ್ಷ ಹುಡುಕುತ್ತಿರುವ ಇಂತಹ ಪುರಸೊತ್ತಿಲ್ಲದ ಸಾಮಾಜಿಕ ಸೇವಾ ಧುರಂಧರರಿಂದ ನಮ್ಮ ಭವಿಷ್ಯವು ಅಂಗೈದರ್ಪಣದಂತೆ ಗೋಚರಿಸುತ್ತಿದೆ. ಎಡವಿದವರು ಎದ್ದು ಸಂಭಾಳಿಸಿಕೊಳ್ಳುವುದಕ್ಕೂ ಪುರಸೊತ್ತಿಲ್ಲದಂತೆ ಅಂತಹ Public Service ವಿಭಾಗವು ಈಗ ಕಾರ್ಯನಿರತವಾಗಿದೆ ! ತಾವು ಬೀಳುವುದಲ್ಲದೆ ತಮ್ಮೊಂದಿಗೆ ಇನ್ನೊಂದಷ್ಟು ಜನರು ಎಡವಿ ಬೀಳುವಂತಹ ವಾತಾವರಣವನ್ನು ಮೂಡಿಸುತ್ತಿರುವ ಈ ಹೈದ- ಹೈದಿಯರಿಗೆ ಏನೆನ್ನಬೇಕು ? ಅವರನ್ನೆಲ್ಲ ಆದರ್ಶ ಸಂತಾನವೆಂಬಂತೆ, ಅವರ ಮಾತುಗಳೆಲ್ಲವನ್ನೂ ಋಷಿವಾಕ್ಯವೆಂಬಂತೆ ಬಿಂಬಿಸುತ್ತಿರುವ ಇಂದಿನ ರಾಷ್ಟ್ರೀಯ ಮಾಧ್ಯಮಗಳಿಗೆ ಏನೆನ್ನಬೇಕು ? "ಅಂಕೆಯಿಲ್ಲದ ಕಪಿ ಲಂಕೆ ಸುಟ್ಟಿತು" ಎಂಬ ಗಾದೆಮಾತು ಇಂಥವರನ್ನು ನೋಡಿಯೇ "ಅಂಕೆಮೀರಿ" ವಿಕೃತವಾಗಿ ಹುಟ್ಟಿಕೊಂಡಿರಬೇಕು.

ಸಿರಿಗರ ಬಡಿದ ಇಂದಿನ ಸೀತೆಯರು ರಾಮನಂಥವರೊಂದಿಗೆ ಬಾಳಲಾಗದೆ ಅವರೆಲ್ಲರೂ "ಸುಂದರ ರಾವಣ"ನಂಥವರ ಹುಡುಕಾಟದಲ್ಲಿದ್ದಾರೆ !... ರೋಡ್ ರೋಮಿಯೋ ತರಹ ದಿನವೂ ಪುಷ್ಪಕ ವಿಮಾನದಲ್ಲಿ ಅಂದು ತಿರುಗುತ್ತಿದ್ದ, ರೌಡಿಯ ಎಲ್ಲ  ಲಕ್ಷಣವನ್ನೂ ಹೊಂದಿದ್ದ ಅಂದಿನ ಜನಕಂಟಕ ರಾವಣ ಪಾತ್ರವು - ಇಂದಿನ ಒಂದು ವರ್ಗದ ಮಣಿಕೂಟ ದ ಮನೋಧರ್ಮಕ್ಕೆ ಹೆಚ್ಚು ಹೊಂದುತ್ತಿದೆ; ಆಕರ್ಷಕನೆನ್ನಿಸುತ್ತಿದೆ. ರೌಡಿಯ ಲಕ್ಷಣವಿಲ್ಲದ ಸಭ್ಯ ಹುಡುಗರು ಅವರ ಪಾಲಿಗೆ ಹಾಸ್ಯದ ಸರಕಾಗುತ್ತಿದ್ದಾರೆ.  

ಇಂದು ಮತ್ತೊಮ್ಮೆ ಶ್ರೀರಾಮ ಹುಟ್ಟಿದರೆ ಅವನ ಆ ಸೀತೆಯು ಕೂಡ "ಈ ರಾಮನು ತುಂಬ ಸಪ್ಪೆ" ಎಂಬ ಪಟ್ಟಕಟ್ಟಿ, ಎರಡನೇ ಗಂಡನಾಗಿ ಬಣ್ಣದ ಮಾರೀಚನನ್ನು ಮೆಚ್ಚಿ ವರಿಸಿ, ಅದೂ ಬೇಸರವಾದ ಮೇಲೆ ಮೂರನೆಯ ಗಂಡನಾಗಿ ರಾವಣನನ್ನೇ ವರಿಸುತ್ತಿದ್ದಳೇನೋ ? ಇಂದಿನ ಶ್ರೀರಾಮಚಂದ್ರರೂ ಹಿಂದೆ ಬಿದ್ದಿಲ್ಲ. ತಮಗೆ ತಗಲಿ ಬೀಳುವ - ಸೀತೆಯೆನ್ನುವ ಕಿಸೆ ಖಾಲಿ ಮಾಡಿಸುವ ಹೊರೆಯನ್ನು ಜಾಗ್ರತೆಯಿಂದ ಜಾರಿಸಿಕೊಂಡು "ಬಂಗಾರದ ಜಿಂಕೆಯ ಹುಡುಕಾಟಕ್ಕೆ ಹೋಗಿಬರುತ್ತೇನೆ.." ಎಂದು ಅವಳಿಗೆ ಹೇಳಿ ಹೋದವರು - ತಾಟಕೆ, ಶೂರ್ಪಣಖಿಯರನ್ನು ಅರಸುತ್ತ ಹಾಗೇ ಕಾಣೆಯಾಗಿ ಬಿಡುತ್ತಿದ್ದರೇನೊ ?... ಹೊಸ ಹೊಸ ದೇವರನ್ನು ಆರಿಸಿಕೊಳ್ಳುವ ಹಕ್ಕು ತಮ್ಮಲ್ಲೇ ಇದ್ದರೂ - ಶ್ರೀ ರಾಮಚಂದ್ರ, ಶ್ರೀ ಕೃಷ್ಣನ ಮೇಲೂ Domestic violence Case ಜಡಿಯುತ್ತಿದ್ದರೇನೋ?

ಗಂಡು ಸಂತಾನಕ್ಕೆ ಅಂತಹ ರಾಜಾರೋಷಾಗಿ ನಡೆಸುವ Thrilling ಗಳಿಗೆ ಅವಕಾಶವಿಲ್ಲ. ಅಂತಹ ಕೆಲವರು ಗುಟ್ಟಿನಲ್ಲಿ ಬೇಟೆಯಾಡುತ್ತಾರೆ! ಅನಂತರ ಪ್ರದಕ್ಷಿಣೆ ಬಂದು, ದಕ್ಷಿಣೆ ಕೊಟ್ಟು, ಸರ್ವಾಂಗ ಅಭ್ಯಂಗ ಸ್ನಾನ ಮಾಡಿ, ಒದ್ದೆ ಬಟ್ಟೆಯಲ್ಲಿಯೇ ಕರ್ಮಾಂಗಗಳನ್ನು ಮುಗಿಸಿದರೆ ಸಾಕಾಗುತ್ತದೆ! ಮನೆಯೊಳಗೆ ಕೂಸಿಲ್ಲದಿದ್ದರೂ ನಡೆದೀತು; Case ಇಲ್ಲದಿರಬಾರದು ಎಂಬುದು - ಇಂದಿನ ಸಾಮಾಜಿಕ ನೀತಿಯಾಗಿರಬಹುದೆ? ಹೌದು. ನಾವು ಹೋಗುತ್ತಿರುವುದಾದರೂ ಎಲ್ಲಿಗೆ ? (ಅಂದಮಾತ್ರಕ್ಕೆ, ಇಂದಿನ ಸ್ತ್ರೀ ಪುರುಷರ ದುಗುಡ ದುಮ್ಮಾನಗಳೆಲ್ಲವೂ ಕಪೋಲಕಲ್ಪಿತ - ಎಂದೂ ಅರ್ಥೈಸಬೇಕಾಗಿಲ್ಲ. ...ತಿರುಪೋಕಿ ಆರೋಪ ಪ್ರತ್ಯಾರೋಪ ಹುಚ್ಚಾಟಗಳು ಲೆಕ್ಕವಿಲ್ಲದಷ್ಟಿವೆ; ಹಿಂದೆಂದೂ ಕಲ್ಪಿಸಲೂ ಆಗದಷ್ಟು - ತಿರುತಿರುಗಿ ನೋಡುವಷ್ಟು ಪ್ರಮಾಣದಲ್ಲಿ ಹಾರಾಟ, ಹೋರಾಟ, ದೊಂಬರಾಟಗಳು ನಡೆಯುತ್ತಿವೆ; ಧಾರ್ಷ್ಟ್ಯದ ಪುಕ್ಕಟೆ ರಂಜನೆಯನ್ನೂ ನೀಡುತ್ತಿವೆ - ಎಂದಷ್ಟೇ ಅರ್ಥ.)

ಎಲ್ಲೆಲ್ಲೂ ಕೆಟ್ಟ ಲಂಪಟ ಸಾಹಿತ್ಯ - ಸಂಗೀತಗಳು, ಕೆಟ್ಟ ಲಂಪಟ ವೇಷಗಳು, ಕೆಟ್ಟ ಲಂಪಟ ವರ್ತನೆಗಳು, ಕೆಟ್ಟ ಲಂಪಟ ಬದುಕುಗಳೇ ಇಂದಿನ Fashion. ಇದರ ಸುತ್ತಲೂ ಸುತ್ತುವ - ಬದುಕನ್ನು ಹಾಳುಗೆಡಹುವ - ದಾರಿ ತಪ್ಪಿಸುವ ಕೆಟ್ಟ ಕೆಟ್ಟ ಚರ್ಚೆಗಳು; ಮನೋವಿಕಾರಗಳು. ಎಲ್ಲ ಸಂಬಂಧಗಳೂ... ಸಂಶಯಾಸ್ಪದವಾಗಿ, ಮಜಾ ಉಡಾಯಿಸುವ ಹಂತಕ್ಕೆ ಬಂದು ನಿಂತಂತಿದೆ. ದಾರಿ ಯಾವುದಯ್ಯಾ? ದಾರಿ ತೋರಿಸಯ್ಯಾ... ಎಂದು ಹಲುಬುವ ಸ್ಥಿತಿಗೆ ಎಲ್ಲರನ್ನೂ ತಂದಿಟ್ಟವರು ಯಾರು ? ಇಂತಹ ವಿಚಾರಗಳನ್ನು ಓದುವಾಗ ಈಗಲೂ - "ಇನ್ನೂ ಪೂರ್ತಿ ಹಾಳಾಗಿಲ್ಲ... ಇದೇಕೋ ಅತಿಯಾಯಿತು.." ಎನ್ನುವವರೂ ಇದ್ದಾರೆ; ಪೂರ್ತಿ ಹಾಳಾಗುವುದನ್ನೇ ಕೆಲವರು ಕಾಯುತ್ತಿದ್ದಾರೆ ! ಯಾಕೆ? ಇದೆಂತಹ ಸ್ವಾತಂತ್ರ್ಯ? ಇದೆಂತಹ ಶಿಕ್ಷಣ ? 

ಚತುರಾಶ್ರಮಗಳಲ್ಲಿ ಉಳಿದ ಮೂರು ಆಶ್ರಮಗಳ ಜೀವನವೂ ಗೃಹಸ್ಥನ ಅಧೀನ ಎನ್ನುವುದಾದರೆ ಇಂದಿನ ಕೆಲವೇ ಕೆಲವು ಕುಲಗೆಟ್ಟ ಗೃಹಸ್ಥರಿಂದಾಗಿ ಪ್ರಸ್ತುತ ಯಾವುದೂ ಭದ್ರವಾಗಿಲ್ಲವೆಂದೇ ತಿಳಿಯುವಂತಾಗಿದೆ. ಇಂದಿನ ಭಾರತೀಯ - ಕೆಟ್ಟ ಸಿನೆಮಾಗಳ ಕೆಟ್ಟ ಅಭಿರುಚಿಯನ್ನು ಮನೆಯ ಚಾವಡಿಯಲ್ಲಿ ಪುನರ್ನಿರ್ಮಾಣ ಮಾಡಿ ಮಕ್ಕಳನ್ನು ಸ್ವೇಚ್ಛಾಚಾರದ ಕುಣಿತಕ್ಕೆ ಪ್ರೋತ್ಸಾಹಿಸುತ್ತ ತಮ್ಮ ಕಿಸೆಯ ಪ್ರತಿಭೆ - ಶಕ್ತಿ ಸಾಮರ್ಥ್ಯವನ್ನು ಊರಿಗೆ ತೋರಿಸುವುದರಲ್ಲಿ ಈಗ ಮಗ್ನವಾಗಿರುವ ನಾವು - ಅದರಿಂದಾಗಿ ನಮ್ಮ ಮಕ್ಕಳ ಮೇಲೆ ಆಗುವ ತತ್ಪರಿಣಾಮಗಳ ಕುರಿತು ಚಿಂತೆ ಮಾಡಲು ಇನ್ನೂ ಶುರು ಮಾಡಿಲ್ಲ. ಬಣ್ಣದ ಜಗತ್ತಿನ ಕೆಟ್ಟ ಅಭಿರುಚಿಯ ಅನುಕರಣೆ ಮತ್ತು - ಗೊತ್ತಿದ್ದು ಹಾಗೂ ಗೊತ್ತಿಲ್ಲದೆಯೂ - ಉತ್ತಮವನ್ನೆಲ್ಲ ಕುಟ್ಟಿ ಪುಡಿಗಟ್ಟುವುದರಲ್ಲಿ - ಇಡೀ ಸಮಾಜವೇ ತಲ್ಲೀನವಾಗಿರುವಂತಿದೆ.  

ಮನೆಯ ಒತ್ತು ಶ್ಯಾವಿಗೆಯು ಇಂದಿನ ಮಕ್ಕಳಿಗೆ ರುಚಿಸದು. ಪೇಟೆಯ ನೂಡಲ್ಸ್ ಗೇ ಈಗ ಹೆಚ್ಚು Demand . "ಮನೆ ಬಿಟ್ಟು ಬೀದಿ ಸುತ್ತುವ" ಪೊಕ್ಕು Fashion ಮತ್ತು ಕೆಲಸಗಳ್ಳತನದಿಂದಾಗಿ ಸಂಸ್ಕರಿತ ಭಾರತೀಯ ರುಚಿಗೂ ಹೊಡೆತ ಬೀಳುತ್ತಿದೆ. ಆರೋಗ್ಯವೂ ಕೆಡುತ್ತಿದೆ. ಮನೆಯ ಅಡುಗೆ ಕೋಣೆಯು ಅನಾಥವಾಗುತ್ತಿದೆ; ಮನೆಯ ಅಜ್ಜಿಯು ಮೌನಕ್ಕೆ ಜಾರುವಂತಾಗಿದೆ. ರೆಡಿಮೇಡ್ ಅರುಚಿಯನ್ನೂ "ರುಚಿ ರುಚಿ" ಎನ್ನುತ್ತ ಪರಕೀಯ ಗಂಡಾಂತರಗಳನ್ನು Handle ಮಾಡುವವರೆಲ್ಲರೂ "I am very happy" ಎನ್ನುತ್ತ ಪೆಚ್ಚು ಪೆಚ್ಚಾಗಿ ನಗುತ್ತಿರುತ್ತಾರೆ ! ಮಾನಸಿಕ ಸಂಘರ್ಷದಿಂದ ಒಳಗೊಳಗೇ ಬಳಲುವವರೂ ಇದ್ದಾರೆ. ಏನಿದ್ದರೂ ನಮ್ಮ ಸಂಸಾರವನ್ನು ನಾವು ನಿಸ್ಸಾರ ಮಾಡಿಕೊಂಡಾಗಿದೆ.

ಕೆಟ್ಟ ಮಗ - ಮಗಳು, ಕೆಟ್ಟ ತಾಯಿ - ತಂದೆ, ಕೆಟ್ಟ ಅಧ್ಯಾಪಕ, ಕೆಟ್ಟ ಶಿಷ್ಯ...ಎಲ್ಲವೂ ಈಗ ಸಾರಾಸಗಟಾಗಿ ಸಾಧ್ಯವಾಗಿದೆ. ಹಲವು ಗಂಡ - ಹೆಂಡ, ಹಲವು ಅಪ್ಪ - ಅಮ್ಮ, ಹಲವು ಅಜ್ಜ - ಅಜ್ಜಿಯರುಗಳ "ಸಂಬಂಧ ವೈಭವ"ದ ಕಾಲವಿದು ! (ಕುಟುಂಬ ಸಂಸ್ಕೃತಿಯ ಪಿಜ್ಜಾ ?) ಒಂದೇ ಬದುಕಿನಲ್ಲಿ ನೂರಾರು ವೇಷ! ಗೊಂದಲದ ಸರಮಾಲೆ. ಮಾನವ ಹಕ್ಕು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಅಶಿಸ್ತನ್ನು ಬೆಂಬಲಿಸುವ - ಪ್ರೋತ್ಸಾಹಿಸುವ ದ್ರೋಹ ಚಿಂತಕರು ಭಾರತದಲ್ಲಿ ವಿಜೃಂಭಿಸುತ್ತಿದ್ದಾರೆ ! ನಂಬಿಕೆ, ಕುಟುಂಬ, ವೃತ್ತಿ, ಜಾತಿ, ಗಂಡು - ಹೆಣ್ಣು... ಎಲ್ಲೆಂದರಲ್ಲಿ ಒಡಕಿನ ಬೀಜಪ್ರಸಾರ ನಡೆಯುತ್ತಿದೆ. ಹೆತ್ತವರ ವಿರುದ್ಧ ಮಕ್ಕಳನ್ನು, ಶಿಕ್ಷಣ ಸಂಸ್ಥೆ - ಅಧ್ಯಾಪಕರ ವಿರುದ್ಧ ವಿದ್ಯಾರ್ಥಿಗಳನ್ನು, ವೈದ್ಯರ ವಿರುದ್ಧ ರೋಗಿಗಳನ್ನು, ಗಂಡನ ವಿರುದ್ಧ ಹೆಂಡತಿ - ಹೆಂಡತಿಯ ವಿರುದ್ಧ ಗಂಡನನ್ನು ಎತ್ತಿಕಟ್ಟುವ ಹೊಸ ರಾಜಕೀಯವೂ ಢಾಳಾಗಿ ಕಾಣಿಸುತ್ತಿದೆ. ನಮ್ಮ ಶಾಲೆಗಳಲ್ಲಿ - "ಗಂಡನ ವಿರೋಧ ಪದವು - ಹೆಂಡತಿ" ಎಂದು ಪಾಠ ಮಾಡುವ ಶಿಕ್ಷಕರೂ ಇದ್ದಾರೆ. ಹಗಲು ವೇಷ ! ಹಕ್ಕು ಸ್ಥಾಪನೆಯ ಬೆಪ್ಪು ಕುಣಿತ ! ಸ್ವಾರ್ಥದ ರಿಂಗಣಗುಣಿತ! ಒಟ್ಟಾರೆ ವ್ಯವಸ್ಥೆಯ ದೃಶ್ಯ ವಿಡಂಬನೆ !

ಸುಮಾರು 35-40 ವರ್ಷಗಳ ಹಿಂದಿನ ವರೆಗೂ - ನಮ್ಮ ಊರಿನ ಶಾಲೆಗಳಲ್ಲಿ - ರಾಜಕೀಯ ಸುಳಿಯಿತೆಂದರೆ ಅದು ಶಿಕ್ಷಾರ್ಹ ಅಪರಾಧವಾಗಿತ್ತು; ಅಧ್ಯಾಪಕರಿಂದ ಬೈಗುಳ ತಿನ್ನಬೇಕಾಗುತ್ತಿತ್ತು. "ಮಕ್ಕಳಿಗೆ ಯಾಕೆ ಅಧಿಕಪ್ರಸಂಗ ? ನಿಮ್ಮ ಪಾಠ ಓದ್ಕೊಳ್ಳಿ...ನಡೀರಿ.." ಎನ್ನುವ ವಾತಾವರಣವಿತ್ತು. "ವಿದ್ಯಾರ್ಥಿ ದೆಸೆಯಲ್ಲಿ ವಿದ್ಯೆ ಸಂಪಾದಿಸುವುದಲ್ಲದೆ ಇನ್ನೊಂದರಲ್ಲಿ ಮನಸ್ಸನ್ನು ತೊಡಗಿಸಬಾರದು, ಹಸಿ ಮನಸ್ಸುಗಳು ಚಂಚಲವಾಗಿ ಕದಡಬಾರದು - ಗುಂಪುಗಾರಿಕೆಯು ಸಲ್ಲದು" ಎಂದೂ ಹಿರಿಯರು ಹೇಳುತ್ತಿದ್ದರು. ಕಪಟತನ, ಕುತಂತ್ರಗಳನ್ನು ಅಪೇಕ್ಷಿಸುವ ರಾಜಕೀಯ ಚಟುವಟಿಕೆಗಳಿಂದ ಯಾವುದೇ ಸ್ವಚ್ಛ ಮನಸ್ಸು ಬಗ್ಗಡವಾಗುತ್ತದೆ ಎಂಬ ಮುಂದಾಲೋಚನೆಯದು. ಬಗ್ಗಡಗೊಳಿಸಿಕೊಂಡ ಮನಸ್ಸು ವಿದ್ಯೆಯನ್ನು ಹೀರಿಕೊಳ್ಳುವುದು ಕಷ್ಟ... ಎಂಬ ಚಿಂತನೆಯು ಅಂದಿನ ಶಾಲೆಗಳಲ್ಲಿತ್ತು. ಆದರೆ ಅಂದೂ... ದಾರಿಬಿಟ್ಟ ಕೆಲವು Sample ಗಳು ಇದ್ದುವಾದರೂ ಅವುಗಳ ಆಟಗಳು ಸಮಾಜದ ಮೇಲೆ ಪ್ರಭಾವ ಬೀರುವಷ್ಟು ಇರಲಿಲ್ಲ; ಸಂಖ್ಯೆ ಕಡಿಮೆಯಿತ್ತು. ಇದರಿಂದಾಗಿ, ಅಂದು - ದಾರಿ ಬಿಟ್ಟವರು ನರಳುತ್ತಿದ್ದರು; ಶ್ರದ್ಧಾವಂತರು ಸುಖವಾಗಿದ್ದರು. ಆದರೆ ಇಂದು ? ಸಜ್ಜನರು ನರಳುವಂತೆ, ದುಷ್ಟರು ಸುಖವಾಗಿರುವಂತಹ ಸನ್ನಿವೇಶವಿಲ್ಲವೆ ? ಇಂದು ಚಾಲ್ತಿಯಲ್ಲಿರುವ - ರಾಜಕೀಯ ಪ್ರದೂಷಿತ, "ಶಿಕ್ಷಾರಹಿತ ಶಿಕ್ಷಣ ಶೈಲಿ"ಯು ಸಾಮಾಜಿಕ - ಶೈಕ್ಷಣಿಕ ಪರಿಸರದ "ರಕ್ಕಸ ಹಡಬಿಟ್ಟಿತನ"ಕ್ಕೆ ಒಂದು ಪ್ರಬಲ ಕಾರಣವೂ ಆಗುತ್ತಿದೆ. ಅಪ್ಪ ಅಮ್ಮ, ಶಿಕ್ಷಕರಿಗೆ ಹೊಡೆಯಿರಿ... ಎಂಬ ಹೊಸ ವರಸೆಯು - ಸರಕಾರೀ ಕೃಪಾಪೋಷಿತ ವಲಯದಲ್ಲಿ ಈಗ ಪ್ರಚಲಿತದಲ್ಲಿದೆ. "ಮಾಡಿ ಕಲಿ"ಯುವ ಜಾದೂ ಕಾರ್ಯದ ಶೈಕ್ಷಣಿಕ ಸುಪರ್ದಿಯಲ್ಲಿಯೇ ಅದಕ್ಕೆ ತದ್ವಿರುದ್ಧವಾದ "ಉರು ಹೊಡೆಯುವ" ಜಳ್ಳು ಶಿಕ್ಷಣದ ಮಾಯಕ ಮತ್ತು ದಾರಿ ತಪ್ಪಿದ - ತಪ್ಪಿಸಿದ ಯುವ ಶಕ್ತಿಯ ಪೊಳ್ಳು ಪ್ರತಿಷ್ಠೆಯಿಂದಾಗಿ ಇಂದು ಆಗುತ್ತಿರುವ ಅನಾಹುತಗಳು - ಇನ್ನು ಮುಂದೆ ನಮ್ಮೆದುರು ಬರಲಿರುವ - ಬ್ರಹ್ಮರಾಕ್ಷಸ ಗಂಡಾಂತರ ! ಎಲ್ಲವನ್ನೂ ವೈಜ್ಞಾನಿಕವಾಗಿ ಯೋಚಿಸುವಂತೆ ತೋರಿಸಿಕೊಳ್ಳುವ ಕೆಲವು ಬುದ್ಧಿಭಕ್ಷಕರು - ಸರಳ ವಿಷಯಗಳನ್ನೂ ಕಠಿಣಗೊಳಿಸಿ, ತಮ್ಮ ತಮ್ಮ ಬುದ್ಧಿಮತ್ತೆಯನ್ನು ಪ್ರದರ್ಶಿಸುವುದರಲ್ಲಿಯೇ ತನ್ಮಯರಾದರೆ ಸಾಕೆ ? ... ಪೂರ್ತಿ ಹಾಳಾಗುವ ವರೆಗೆ ಕಾಯುವುದಾದರೂ ಏಕೆ ?

Khosla Ka Ghosla ಎಂಬ ಹಿಂದಿ ಚಿತ್ರವೊಂದಿದೆ. ಈ ಮಹಾನ್ ಭಾರತದ ಕಾನೂನುಗಳ ಕಣ್ಣೆದುರಿನಲ್ಲೇ ನಡೆಯುವ Break Dance ಗಳ sample ಗಳನ್ನು ನೋಡಬೇಕಾದರೆ ಈ ಚಿತ್ರವನ್ನು ನೋಡಿದರೆ ಸಾಕು. ಇದು ಯಾವುದೇ ಅತಿಶಯೋಕ್ತಿಯ ಸಿನೆಮಾ ಅಲ್ಲ; ಹಸಿ ಹಸಿಯಾದ ವಾಸ್ತವ ! ಈ ದೇಶದ 75% ಭಾಗವು ತಲೆಹಿಡುಕರಿಂದಲೇ ತುಂಬಿಹೋಗಿದೆ !. ಇಲ್ಲಿ ದುರ್ಜನರಾಗದೇ ಇದ್ದರೆ ಬದುಕುವುದೇ ದುಸ್ತರವಾದಂತಹ ಸನ್ನಿವೇಶವಿದೆ. ಮುಳ್ಳನ್ನೇ ಹಾಸಿದ ಯಾವುದೇ ಹಾದಿಯಲ್ಲಿ ಮುಳ್ಳು ಚುಚ್ಚಿಸಿಕೊಳ್ಳುವ ಕರ್ಮವು ಇದ್ದೇ ಇರುತ್ತದೆ ಅಲ್ಲವೆ ? ಹಾಗೆ ಚುಚ್ಚಿದ ಮುಳ್ಳನ್ನು ಅದಕ್ಕಿಂತ ಬಲವಾದ ಮುಳ್ಳಿನಿಂದಲೇ ಕಿತ್ತು ಎಸೆಯುವುದು ಆಗ ಅನಿವಾರ್ಯವೂ ಆಗುತ್ತದೆ.

ಪರಿಣಾಮ : ಮುಳ್ಳಿನದೇ ಕಾರುಬಾರು !!

ಯಾವುದೇ ಸ್ವಸ್ಥ ಬದುಕಿಗೆ Positive ಮಾತುಗಳು - ಹೊಸ್ತಿಲ ಮೇಲೆ ದೀಪವಿಟ್ಟಂತಹ ಜಾಣ ಮಾತುಗಳು ಮಾತ್ರವೇ ಸಾಕಾಗುವುದಿಲ್ಲ. ವಸ್ತುಸ್ಥಿತಿಯನ್ನು ಮುಕ್ತವಾಗಿ ಅವಲೋಕಿಸಿ ತಕ್ಕಂತೆ ವರ್ತಿಸಲೂ ಬೇಕು. ಅದಕ್ಕೆ ತಕ್ಕಂತಹ ಪೂರಕ ವಾತಾವರಣವೂ ಬೇಕು.

ನಿಜವಾದ ಧರ್ಮದ ಹತ್ತು ಲಕ್ಷಣಗಳಲ್ಲಿ ಒಂದನ್ನಾದರೂ ನಾವೀಗ ಆಚರಿಸಲು ಪ್ರಯತ್ನಿಸುತ್ತಿದ್ದೇವೆಯೆ ? ಎಲ್ಲವೂ ಗಿಲೀಟು. ಬರಿಯ ಮಾತು; ವಿಚಾರ ಸಂಕಿರಣ; ಬಗೆಬಗೆಯ ಉಪಾಧಿಗಳು; ಅಹೋರಾತ್ರಿ ನಾಟಕ ! ಕೆಡುಗಾಲ ! ಬಹುಶಃ - ಕೊನೆಗೆ - ಒಮ್ಮೆಗೇ ಗಲ್ಲಿಗೇರಿಸುವುದಕ್ಕೆ ಬೇಕಾದಂತಹ ಮನುಷ್ಯರನ್ನು ನಾವೀಗ ತಯಾರಿಸುತ್ತಿದ್ದಿರಬೇಕು !

ಹೀಗೇಕಾಯಿತು ?...  ಯೋಚಿಸಬೇಕಾದವರು ಯೋಚಿಸುವುದಿಲ್ಲ. ಒಂದು ವೋಟಿನ ಬೆಲೆಯಷ್ಟೇ ಉಳ್ಳ ನಮ್ಮಂಥವರು ಸುಮ್ಮನೆ ಯೋಚಿಸುತ್ತಾರೆ.. ತಮ್ಮಷ್ಟಕ್ಕೇ ಅಂದುಕೊಳ್ಳುತ್ತಾರೆ - ಕಲಿಗಾಲವಯ್ಯಾ...ಕಲಿಗಾಲ ! ಕಲಿಗಾಲವೆಂದರೆ ಬೇರೇನಲ್ಲ. ಕೇಡುಗಾಲ - ಅಷ್ಟೆ.

No comments:

Post a Comment