ಇಷ್ಟು ವರ್ಷ "ನಿಮ್ಮ ಜೊತೆ" ಯಾಗಿ ಇದ್ದ ನಾರಾಯಣೀ ದಾಮೋದರ್ 2015 ರ ಮಾರ್ಚ್ 1ರಿಂದ "ನಿವೃತ್ತ ಸುಖ" ದತ್ತ ಹೊರಳುತ್ತಿದ್ದಾಳೆ. ಬಹುಶಃ ಈ 60 ವರ್ಷಗಳಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಕಲಾ ಕ್ಷೇತ್ರದ ಸೊತ್ತಾಗಿಯೇ ಸಾರ್ವಜನಿಕವಾಗಿ "ಹುಡುಗಾಟ" ನಡೆಸಿದ್ದ ನಾನು, ನನ್ನ ಸಹಜ ಪ್ರವೃತ್ತಿಯಾದ "ಹುಡುಕಾಟ"ದಿಂದ ಇನ್ನೂ ನಿವೃತ್ತಳಾಗಿಲ್ಲ; ಆಗಬಾರದು ಎಂಬ ಇಚ್ಛೆಯೂ ಇದೆ.
ಬದುಕಿನ ಸಂವತ್ಸರ ಚಕ್ರವನ್ನು ಇಡಿಯಾಗಿ ಸುತ್ತಿ ನಿಲ್ಲುತ್ತಿರುವ ಈ ಕಾಲಘಟ್ಟದಲ್ಲಿ ನನ್ನನ್ನು ಪ್ರೋತ್ಸಾಹಿಸಿ ಬೆಳೆಸಿದ, ಮೆಚ್ಚಿ ಬೆನ್ನು ತಟ್ಟಿದ, ತಪ್ಪುಗಳನ್ನು ಗುರುತಿಸಿ ತಿದ್ದಿ ತೀಡಿದ ಅಸಂಖ್ಯಾತ ಅಭಿಮಾನೀ ಕೇಳುಗರನ್ನು ಕಂಡು ಋಣೀ ಭಾವವನ್ನು ಪ್ರಕಟಪಡಿಸುವ ಆಸೆಯಿದೆ. ಆದರೆ ಅದು ಪ್ರಾಯೋಗಿಕವಾಗಿ ಸಾಧ್ಯವಾಗದು ಎಂಬ ಕಾರಣದಿಂದ ಬಹು ದೀರ್ಘಕಾಲದ ನನ್ನ - ನಿಮ್ಮ ಬೌದ್ಧಿಕ ಸಂಬಂಧವನ್ನು ಸ್ಮರಿಸಿಕೊಳ್ಳುವ ಮನಸ್ಸಾಗಿದೆ.
ನನ್ನ ಹುಟ್ಟೂರು ಐರೋಡಿ. ನನ್ನನ್ನು ಬಹಿಃಪ್ರಕಾಶಕ್ಕೆ ತಂದ ಊರು ಕುಂದಾಪುರ. ಕುಂದಾಪುರದಲ್ಲಿ ನಾನು ಸಾಗಿ ಬಂದ ಬಾಲ್ಯ ಮತ್ತು ಹದಿಹರೆಯವು ಪ್ರಚಂಡ ಉತ್ಸಾಹ ತುಂಬಿದ್ದ ಕಾಲ. ಪುಟ್ಟ ಪುಟ್ಟ ಹೆಜ್ಜೆಯನ್ನಿಡುತ್ತ ಸಾರ್ವಜನಿಕ ಬದುಕಿನತ್ತ ನಡೆಯತೊಡಗಿದ ಆ ದಿನಗಳಲ್ಲಿ ನನ್ನನ್ನು ಹುರಿದುಂಬಿಸಿದ, ಪಕ್ಕೆಗೆ ತಿವಿಯುತ್ತ ದಾರಿ ತಪ್ಪದಂತೆ ನನ್ನನ್ನು ಮುನ್ನಡೆಸಿದ ನನ್ನ ಹೆತ್ತವರು, ಒಡಹುಟ್ಟಿದವರು, ಹಿರಿಯ ಹಿತೈಷಿಗಳಿಗೆಲ್ಲ ನನ್ನ ಬದುಕಿನಲ್ಲಿ ಯಾವತ್ತೂ ಸ್ಥಿರವಾದ ಸ್ಥಾನವಿದೆ.
ಮುಂದೆ ಹರಿಕತೆಗಳನ್ನು ಮಾಡಲು ಆರಂಭಿಸಿದ ಮೇಲೆ ತಮ್ಮ ಮಗುವಿನ ಆಟಗಳನ್ನು ನೋಡಿ ಹೆತ್ತವರು ಹಿಗ್ಗುವಂತೆ ನನ್ನನ್ನು ಹೊತ್ತು ಮೆರೆಸಿದ ಕರ್ನಾಟಕದ ಜನತೆಗೆ ನಾನು ತಲೆ ಬಾಗುತ್ತೇನೆ.
ಈ ಹಂತದಲ್ಲಿ, ನನ್ನ 38 ವರ್ಷಗಳ ಸರಕಾರೀ ಸೇವಾವಧಿಯ ಚಟುವಟಿಕೆಯ ಸ್ಥೂಲ ವರದಿಯನ್ನು ನಿಮಗೆ ಒಪ್ಪಿಸುವುದು ನನ್ನ ಕರ್ತವ್ಯ ಎಂದು ತಿಳಿದು ನಿಮ್ಮ ಮುಂದೆ ಇರಿಸುತ್ತಿದ್ದೇನೆ.
ಮಂಗಳೂರು ಆಕಾಶವಾಣಿಯ ಉದ್ಘಾಟನೆಯಾದದ್ದು 1976 ಡಿಸೆಂಬರ್ 11ರಂದು. ಈ ಸಂಸ್ಥೆಗೆ ನನ್ನ ಪ್ರವೇಶವಾದದ್ದು 1976 ಡಿಸೆಂಬರ್ 7ರಂದು. ನನ್ನ ಅಭಿರುಚಿಗೆ ದಕ್ಕಿದ ಈ ದೊಡ್ಡ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡು ಮುಂದೆ 38 ವರ್ಷಗಳ ಕಾಲ ಈ ಸಂಸ್ಥೆಯ ಭಾಗವಾಗಿ ದುಡಿದೆ; "ದೊರೆತುದ ಹಸಾದ" ವೆಂದು ಉಣ್ಣುತ್ತ ಬಂದೆ. ತಾವು ಮುಂದೆ ನುಗ್ಗಬೇಕೆಂಬ "ಏಕೋದ್ದೇಶ" ದ ಭರದಲ್ಲಿ, ಇತರರನ್ನು ಹಿಂದೆ ತಳ್ಳುತ್ತಿದ್ದ ಕೈಗಳ ಸಂದಿಗೊಂದಿಗಳಲ್ಲೇ ಮುನ್ನುಗ್ಗಿ ನಾನೂ ಕೇಳುಗರ ಮನೆ - ಮನದ ಬಾಗಿಲು ತಟ್ಟಿದೆ.
1977 ರಲ್ಲಿ ಮಂಗಳೂರು ಆಕಾಶವಾಣಿಯಲ್ಲಿ ಚೌತಿಯ ಸಂದರ್ಭದಲ್ಲಿ ಪ್ರಸಾರವಾದ "ವಿಘ್ನರಾಜ ಗಣಪತಿ" ಎಂಬ ಸಂಗೀತ ರೂಪಕವು ನನ್ನ ಮೊದಲ ಅಧಿಕೃತ ಕಾರ್ಯಕ್ರಮ. 1978 ರಲ್ಲಿ ಯುಗಾದಿಯ ಸಂದರ್ಭದಲ್ಲಿ ಸಂಗೀತ ರೂಪಕವನ್ನು ಬರೆದು ನಿರ್ಮಿಸಿದ್ದೆ..... ಇನ್ನೂ ಅದೆಷ್ಟೋ ಸಂಗೀತ ರೂಪಕಗಳು ಸಾಂದರ್ಭಿಕವಾಗಿ ಮೂಡಿಬಂದಿವೆ.
ವೃತ್ತಿ ಜೀವನದ ಆರಂಭದಲ್ಲಿ ನನಗೆ ನೀಡಿದ್ದ - ಬಾಲವೃಂದ, ವನಿತಾವಾಣಿ, ಯಕ್ಷಗಾನ ಮುಂತಾದ ಕಾರ್ಯಕ್ರಮಗಳ ಜವಾಬ್ದಾರಿ ವಹಿಸಿದೆ. ಅನಂತರ 1980-81 ರಲ್ಲಿ ಸಂಸ್ಥೆಯಲ್ಲಿ ನಡೆದ ನಾಟಕದ ಕಾರ್ಯಾಗಾರದಲ್ಲಿ ಡಾ.ವಸಂತ ಕವಲಿಯವರ ಮಾರ್ಗದರ್ಶನದಲ್ಲಿ "ಉಂಗುರ" ಎಂಬ ನಾಟಕವನ್ನು ನಿರ್ದೇಶಿಸಿ, ನಿರ್ಮಿಸಿದೆ.
ನನಗೆ ವಹಿಸಿದ ಪ್ರತಿಯೊಂದು ಕಾರ್ಯಕ್ರಮದಲ್ಲೂ ಏನಾದರೂ "ಹೊಸತನ" ತರುವ ಭಗೀರಥ ಪ್ರಯತ್ನ ನಡೆಸುತ್ತಿದ್ದೆ. 1977 ರಿಂದಲೇ ಬಾಲವೃಂದ ಕಾರ್ಯಕ್ರಮದ ಭಾಗವಾಗಿ ಪ್ರತೀ ವಾರವೂ ಅರ್ಧ ಘಂಟೆಯ ಕಾರ್ಯಕ್ರಮವನ್ನು ತಯಾರಿಸಿ ಪ್ರಸ್ತುತ ಪಡಿಸುತ್ತಿದ್ದೆ. "ವೈವಿಧ್ಯಮಯ ಕಾರ್ಯಕ್ರಮ" ಎನ್ನುವ ಏಕತಾನತೆಯನ್ನು ತಪ್ಪಿಸಲು ಹೊಸ ಹೊಸ ಪ್ರಯೋಗಗಳನ್ನು ಮಾಡಿದೆ. ಕರಾವಳಿಯಲ್ಲಿ ಆಗಿಹೋದ ಬಾಲ ಸಾಹಿತ್ಯದ ಹಿರಿಯ ಬರಹಗಾರರನ್ನು ಮಕ್ಕಳಿಗೆ ಪರಿಚಯಿಸುವ ದೃಷ್ಟಿಯಿಂದ "ಇವರ ನೀವು ಬಲ್ಲಿರಾ ?" ಎಂಬ ಸರಣಿಯನ್ನು ಆರಂಭಿಸಿದೆ. ಡಾ.ಕೆ ಶಿವರಾಮ ಕಾರಂತರು, ಕು.ಶಿ.ಹರಿದಾಸ ಭಟ್ಟರು, Prof. ಲೀಲಾ ಭಟ್, ಕಯ್ಯಾರ ಕಿಂಞಂಣ ರೈ, ಮುಂತಾದ ಹಿರಿಯರ ಬಾಯಿಂದಲೇ - ಕರಾವಳಿಯಲ್ಲಿ ಮಕ್ಕಳ ಸಾಹಿತ್ಯ ಕೃಷಿ ಮಾಡಿದವರ ಕುರಿತು ಸರಳವಾಗಿ ಪರಿಚಯಿಸುವ ಪ್ರಯತ್ನ ಮಾಡಿದೆ. ಪಂಜೆ ಮಂಗೇಶರಾಯರು, ಐರೋಡಿ ಶಿವರಾಮಯ್ಯ, ಉಗ್ರಾಣ ಮಂಗೇಶರಾಯರು - ಮುಂತಾದ ಬಾಲಸಾಹಿತ್ಯಕಾರರ ಪರಿಚಯವನ್ನು ಮಕ್ಕಳಿಗೆ ಮಾಡಿಸಿದಾಗ ಡಾ.ಕಾರಂತರು "ಒಳ್ಳೆಯ ಪ್ರಯತ್ನ" ಎಂದು ಮುಗುಮ್ಮಾಗಿ ತಮ್ಮ ವಿಶಿಷ್ಟ ಶೈಲಿಯಲ್ಲಿ ಹೇಳಿದ್ದರು.
ಸಾರ್ಥಕ ಭಾವ ಪ್ರಚೋದಕವಾದ ಇಂಥ ಪ್ರತಿಕ್ರಿಯೆಗಳು ಇನ್ನಷ್ಟು ಕಾರ್ಯಕ್ರಮಗಳನ್ನು ರೂಪಿಸುವ ಪ್ರೇರಣೆ ನೀಡಿದ್ದವು. ಅನಂತರ "ಹಚ್ಚುವ ಜ್ಞಾನದ ಹಣತೆಯ" ಎಂಬ ಸರಣಿ ಆರಂಭಿಸಿದೆ. ಮಕ್ಕಳಲ್ಲಿ ಸ್ವಾಭಾವಿಕವಾಗಿ ಇರುವ "ಪ್ರಶ್ನೆಗಳನ್ನು ಕೇಳುವ" ಶಕ್ತಿಯನ್ನು ಉತ್ತೇಜಿಸುವ, ಮಕ್ಕಳಿಂದಲೇ ಸಂದರ್ಶನ ನಡೆಸುವ ಪ್ರಯತ್ನ ಇದಾಗಿತ್ತು. ಬೇರೆ ಬೇರೆ ಶಾಲೆಗಳ ಐದಾರು ಮಕ್ಕಳನ್ನು ಕೂಡಿಕೊಂಡು ನವಮಂಗಳೂರು ಬಂದರು, ವಿಮಾನ ನಿಲ್ದಾಣ, ಗೋಡಂಬಿ ಕಾರ್ಖಾನೆ.... ಮುಂತಾದ ಸ್ಥಳಗಳಿಗೆ ಹೋಗಿ ಅಧಿಕಾರಿಗಳೊಂದಿಗೆ ಸುತ್ತಾಡುತ್ತ, ಅಲ್ಲಿನ ಕಾರ್ಯಶೈಲಿಯನ್ನು ಬೆರಗುಗಣ್ಣಿನಿಂದ ನೋಡುತ್ತಿದ್ದ ಮಕ್ಕಳು ಸಹಜವಾಗಿ ಕೇಳುವ ಪ್ರಶ್ನೆ - ಉತ್ತರಗಳನ್ನು ಧ್ವನಿ ಮುದ್ರಿಸಿ, ಅದಕ್ಕೆ ರೂಪಕೊಟ್ಟು ಪ್ರಸಾರ ಮಾಡುತ್ತಿದ್ದೆ. ಇಂತಹ ಕಾರ್ಯಕ್ರಮಗಳನ್ನು ಕೇಳುತ್ತಿದ್ದ ಕೇಳುಗರಿಗೆ ತಾವೇ ಸುತ್ತಾಡಿ ಬಂದಂತಹ ಪೂರ್ಣ ಚಿತ್ರಣ ಸಿಗುತ್ತಿತ್ತು.
ಆಹ್ವಾನಿತ ಶ್ರೋತೃಗಳ ಸಮ್ಮುಖದಲ್ಲಿ 1986 ಜನವರಿ 24 ರಂದು ಮಂಗಳೂರಿನ ಪುರಭವನದಲ್ಲಿ ನಡೆದ ಮಕ್ಕಳ ಕಾರ್ಯಕ್ರಮ "ಚಿಣ್ಣರ ಚಿಲುಮೆ" ಗಾಗಿ, ಎರಡು ಹಾಡುಗಳಿಗೆ ರಾಗ ಸಂಯೋಜಿಸಿ, ಮಕ್ಕಳಿಗೆ ಹಾಡಲು ಕಲಿಸಿ, ವೇದಿಕೆಯಲ್ಲಿ ಹಾಡಿಸಿದೆ.
ಮುಂದೆ, ಒಂದಿಷ್ಟು ಮಕ್ಕಳ ನಾಟಕಗಳನ್ನು ಆಯ್ದುಕೊಂಡು, ಕೆಲವು ಶಾಲೆಗಳಿಗೆ ಆ ನಾಟಕದ ಪ್ರತಿಗಳನ್ನು ಮುಂಚಿತವಾಗಿಯೇ ತಲುಪಿಸಿ, ಒಂದಿಷ್ಟು ತರಬೇತಾದ ಮಕ್ಕಳಿಗೆ ಇನ್ನಷ್ಟು ತರಬೇತಿ ಕೊಟ್ಟು, ಅವರನ್ನು Studioಕ್ಕೆ ಕರೆಸಿ, ಧ್ವನಿ ಮುದ್ರಿಸಿ, ಸಾಂದರ್ಭಿಕ ಶಬ್ದ (Sound Effects) ಗಳನ್ನು ಸೇರಿಸಿ ಪ್ರಸಾರ ಮಾಡಿದೆ.
ಮಕ್ಕಳ ಯಕ್ಷಗಾನಕ್ಕೆ ಬಾಲವೃಂದದಲ್ಲಿ ವಿಶೇಷ ಪ್ರಾಶಸ್ತ್ಯವಿತ್ತು. ಬಾಲವೃಂದದ ಕೊನೆಯಲ್ಲಿ ಸಣ್ಣ ಸಣ್ಣ ಕತೆಗಳನ್ನೂ ಹೇಳುತ್ತಿದ್ದೆ. ಒಟ್ಟಿನಲ್ಲಿ ಸಾಹಿತ್ಯ, ಸಂಸ್ಕೃತಿ, ಸಂಗೀತ, ಮಾಹಿತಿ, ಮನರಂಜನೆ..... ಎಲ್ಲವೂ ಮಕ್ಕಳಿಗೆ ತಲುಪಬೇಕೆಂಬ ಉದ್ದೇಶದಿಂದ ಸುಮಾರು 10- 12 ವರ್ಷ "ಬಾಲವೃಂದ"ದಲ್ಲಿ ಪರದಾಡಿದೆ.
1980ರಲ್ಲೇ ವನಿತಾವಾಣಿಯಲ್ಲಿ ನೇರಪ್ರಸಾರದಲ್ಲಿ ಭಾಗಿಯಾಗುತ್ತಿದ್ದೆ. ಅಡುಗೆ ಮಾಹಿತಿ, ಸೌಂದರ್ಯ ಮಾಹಿತಿ... ಇತ್ಯಾದಿ ಬಾಲಂಗೋಚಿಗಳು ಪ್ರತೀ ವಾರವೂ ಸಮಯ ಬೇಡುತ್ತಿದ್ದ ವಿಷಯಗಳು. ಧ್ವನಿ ಮುದ್ರಣದ ಗೊಡವೆಗೇ ಹೋಗದೆ ನೇರವಾಗಿ ಮಾತನಾಡಿ ಇಂತಹ ಚುಟುಕುಗಳಿಂದ ಅಂದೇ ನಾನು ಪಾರಾಗುತ್ತಿದ್ದೆ. ಸಾಂದರ್ಭಿಕವಾಗಿ "ಕಿತ್ತೂರು ಚೆನ್ನಮ್ಮ" ಎಂಬ ಕಥೆಯನ್ನು ಹರಿಕಥೆಯ ಶೈಲಿಯಲ್ಲಿ ವನಿತಾವಾಣಿಯಲ್ಲಿ ಪ್ರಸ್ತುತ ಪಡಿಸಿದ್ದೆ.
ಯಕ್ಷಗಾನದ ಗುಂಪುಗಳು ಬಂದರೆ ಆ ಧ್ವನಿ ಮುದ್ರಣ ಮಾಡಿ, ನಿಗದಿತ ದಿನಕ್ಕೆ ಪ್ರಸಾರಕ್ಕಾಗಿ ಒದಗಿಸುತ್ತಿದ್ದೆ. ಕೆಲವು ವರ್ಷಗಳ ಕಾಲ ಈ ವಿಭಾಗದಲ್ಲೂ ಕೆಲಸ ಮಾಡಿದೆ. ಎಷ್ಟೋ ಗುಂಪುಗಳನ್ನು ದ್ವನಿ ಮುದ್ರಣದ ನಂತರ ಮನೆಯವರೆಗೂ ಬರುವಂತೆ ಆಹ್ವಾನಿಸಿ, ನನ್ನ ಮನಸ್ಸಂತೋಷಕ್ಕಾಗಿ ಉಪಚಾರ ಮಾಡಿದ್ದೆ. ಹೀಗೆ ಧ್ವನಿಮುದ್ರಣಕ್ಕಾಗಿ ಬಂದಿದ್ದ ದಿ. ಸದಾನಂದ ಹೆಬ್ಬಾರ್, ದಿ. ಕಾಳಿಂಗ ನಾವುಡರೂ ಕೆಲವು ಬಾರಿ ನನ್ನ ಮನೆಯವರೆಗೂ ಬಂದಿದ್ದರು.
ಮಾನ್ಯತೆ ಪಡೆದ ಆಕಾಶವಾಣಿಯ ಕಲಾವಿದೆಯಾಗಿ ಆಗಾಗ ಹರಿಕಥೆ, ಭಾವಗೀತೆ, ಭಕ್ತಿಗೀತೆಗಳನ್ನು ಹಾಡುತ್ತ ಬಂದೆ. ಮಾನ್ಯತೆ ಪಡೆದ ನಾಟಕ ಕಲಾವಿದೆಯಾಗಿ ಅಭಿನಯಿಸಿದೆ; ನಾಟಕಗಳನ್ನು ನಿರ್ದೇಶಿಸಿ, ನಿರ್ಮಿಸಿದೆ.
ಆಕಾಶವಾಣಿಯ ಯಾವುದೇ ವಿಭಾಗದಲ್ಲಿ ನಾನು ಭಾಗವಹಿಸದಿದ್ದ ಉದಾಹರಣೆಯಿಲ್ಲ. ಯುವವಾಣಿ, ಕೃಷಿರಂಗಕ್ಕಾಗಿಯೂ ಸಂದರ್ಶನಗಳನ್ನು ನಡೆಸಿದ್ದೆ. "ನೀವು ನರ್ತಿಸಿದ್ದನ್ನು ಮಾತ್ರ ನೋಡಲಿಲ್ಲ, ಬೇರೆ ಎಲ್ಲವನ್ನೂ ನೋಡಿಯಾಯಿತು....." ಎಂದು - ಬಹುಶಃ ಮೆಚ್ಚಿಯೇ ಹೇಳಿದ್ದ ಸಹೋದ್ಯೋಗಿಗಳಿಗೆ ಚಹಾ ಕುಡಿಸಿ ಸಮಾಧಾನ ಪಡಿಸಿದ್ದೂ ಇದೆ.
2007 ರ ಸುಮಾರಿಗೆ "ಒಂದಾನೊಂದು ಕಾಲದಲ್ಲಿ" ಎಂಬ ಶೀರ್ಷಿಕೆಯಲ್ಲಿ, ಪುರಾಣ ಉಪನಿಷತ್ತುಗಳಿಂದ ಆಯ್ದ ಎರಡು ಕಥೆಗಳನ್ನು ಪ್ರತೀ ಶನಿವಾರ ಮತ್ತು ಭಾನುವಾರ ಬೆಳಿಗ್ಗೆ ಪುಟ್ಟದಾಗಿ (5-6 ನಿಮಿಷ) ಹೇಳತೊಡಗಿದೆ. ಅಂದಿನ ಕಥೆಗಳಲ್ಲಿ ಅಡಗಿರುವ ನೀತಿಯು ಇಂದಿಗೂ ಹೇಗೆ ಮತ್ತು ಎಷ್ಟು ಪ್ರಸ್ತುತ ? ಎಂಬ ಸಂದೇಶ ಪ್ರಸಾರವೇ ಈ ಕಾರ್ಯಕ್ರಮದ ಉದ್ದೇಶವಾಗಿತ್ತು. ಈ ಜನಪ್ರಿಯ ಕಾರ್ಯಕ್ರಮವು 28-29 ಕಂತುಗಳನ್ನು ಕಾಣುವಾಗ "ಅವ್ಯಕ್ತ" ಕಾರಣದಿಂದ "ಕಂತಿ" ಹೋಯಿತು. ಅದನ್ನು ಅಲ್ಲಿಯೇ ಕೊಡವಿಕೊಂಡ ನಾನು ಈ ಕಥೆಗಳ ಸಾಲಿಗೆ ಇನ್ನಷ್ಟು ಕಥೆಗಳನ್ನು ಸೇರಿಸಿ ಎರಡು ಪುಸ್ತಕಗಳನ್ನು ಹೊರತಂದೆ. "ಒಂದಾನೊಂದು ಕಾಲದಲ್ಲಿ" ಮತ್ತು "ಬೆಳಕು ನೀಡುವ ಕಥೆಗಳು" ಎಂಬ ಈ ಪುಸ್ತಕಗಳನ್ನು ಬೆಂಗಳೂರಿನ "ಅಂಕಿತ ಪುಸ್ತಕ" ಸಂಸ್ಥೆಯು ಪ್ರಕಟಿಸಿತು. 2009ರಲ್ಲಿ ಮುದ್ರಣಗೊಂಡ ಈ ಪುಸ್ತಕಗಳು ಮರುವರ್ಷವೇ ದ್ವಿತೀಯ ಮುದ್ರಣ ಕಂಡದ್ದು ನನಗೆ ಸಂತಸ ತಂದ ವಿಷಯ. "ಬೆಳಕು ನೀಡುವ ಕಥೆಗಳು" ಎಂಬ ಸಂಕಲನದಲ್ಲಿರುವ "ತಾಳ್ಮೆಗೆ ಒಲಿದ ಅದೃಷ್ಟ" ಎಂಬ ಸಣ್ಣ ಕತೆಯು ಈಗ ಪಠ್ಯಪುಸ್ತಕದಲ್ಲಿ ಸೇರ್ಪಡೆಯಾಗುತ್ತಿದೆ. ದೆಹಲಿಯ ಇಂಡಿಯನ್ ಸರ್ಟಿಫಿಕೇಟ್ ಆಫ್ ಸೆಕೆಂಡರಿ ಎಜುಕೇಷನ್ (I C S E) ನವರು, 10 ನೇ ತರಗತಿಯಲ್ಲಿ ಓದುವ ಇಂಗ್ಲಿಷ್ ಮಾಧ್ಯಮದ ವಿದ್ಯಾರ್ಥಿಗಳಿಗೆ ಕನ್ನಡ ಎರಡನೇ ಭಾಷೆಯ ಪಠ್ಯ ಪುಸ್ತಕವಾಗಿ ಸಿದ್ಧಪಡಿಸಿರುವ "ಸಾಹಿತ್ಯ ಸಂಗಮ" ದಲ್ಲಿ ಈ ಕತೆಯನ್ನು ಬಳಸಿಕೊಂಡಿದ್ದಾರೆ. ಇನ್ನು "ಚಂದ್ರವಂಶ"ದ ವಂಶಾವಳಿಯ ಸ್ಥೂಲ ವಿವರಗಳನ್ನು ಹೊಂದಿದ ಕಥಾರೂಪದಲ್ಲಿರುವ ನನ್ನ ಪುಸ್ತಕವು ಈಗ ಪ್ರಕಟನೆಯ ಹಂತದಲ್ಲಿದೆ.
https://sapnaonline.com/belaku-needuva-kathegalu-narayani-damodhar-ankita-pustaka-310606
https://sapnaonline.com/ondanondu-kaladalli-narayani-damodhar-ankita-pustaka-310607
ಇದಕ್ಕೂ ಮೊದಲು National Book Trust Of India- ಇವರ ಕೋರಿಕೆಯಂತೆ The Money Lender ಎಂಬ ಪುಸ್ತಕವನ್ನು "ಬಡ್ಡಿ ಸಾಹುಕಾರ" ಎಂಬ ಹೆಸರಲ್ಲಿ ಅನುವಾದಿಸಿ ಕೊಟ್ಟಿದ್ದೆ. ಅದು 2000 ನೇ ಇಸವಿಯಲ್ಲಿ ಪ್ರಕಟವಾಗಿತ್ತು.
1997 ರಲ್ಲಿ ಮಂಗಳೂರಿನಲ್ಲಿ ನಡೆದ ಅಖಿಲ ಭಾರತ 66ನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭವನ್ನು ನಾನು ನಿರೂಪಕಿಯಾಗಿ ನಿರ್ವಹಿಸಿದ್ದೆ. ಇತರ ಸಾರ್ವಜನಿಕ ಸಮಾರಂಭಗಳನ್ನು ನಿರ್ವಹಿಸಿದ್ದು ಅದೆಷ್ಟೋ ಬಾರಿ.
ಇವೆಲ್ಲದರ ನಡುವೆಯೂ ನಿತ್ಯದ "ಉದ್ಘೋಷಕಿ" ಯ ಕರ್ತವ್ಯವನ್ನು ಅತ್ಯಂತ ನಿಷ್ಠೆಯಿಂದ ನಿರ್ವಹಿಸುತ್ತ ಬಂದಿದ್ದೇನೆ. ಕರ್ತವ್ಯನಿರತಳಾಗಿ ಮೈಕಿನ ಮುಂದೆ ಕುಳಿತಾಗ ನನ್ನ ಸರ್ವಸ್ವವನ್ನೂ ನನ್ನ ಕೇಳುಗರಿಗೆ ಧಾರೆಯೆರೆದಿದ್ದೇನೆ. ನನ್ನ ವೈಯ್ಯಕ್ತಿಕ ನೋವನ್ನೆಲ್ಲ STUDIO ದ ಹೊರಗೇ ಬಿಟ್ಟು ಪ್ರಸನ್ನಚಿತ್ತದಿಂದ ದುಡಿದಿದ್ದೇನೆ. ಅನೇಕ ಹಿರಿಯ ವ್ಯಕ್ತಿಗಳ ಕುರಿತು ಸಂಯೋಜಿತ ಕಾರ್ಯಕ್ರಮಗಳನ್ನು ನೇರಪ್ರಸಾರದಲ್ಲಿ ಕೊನೆಯ ದಿನದವರೆಗೂ ನೀಡುತ್ತ ಬಂದಿದ್ದೇನೆ. ಚಿತ್ರಗೀತೆಗಳ ಕಾರ್ಯಕ್ರಮದ ಏಕತಾನತೆಯನ್ನು (ಕೇಳುಗರ ಮತ್ತು ನನ್ನ !!!) ತಪ್ಪಿಸಲು ಸಂಗೀತ ನಿರ್ದೇಶಕರು, ರಚನಕಾರರು, ಗಾಯಕ- ಗಾಯಕಿಯರನ್ನು ಸಾಂದರ್ಭಿಕವಾಗಿ ಆಯ್ದುಕೊಂಡು ನನ್ನದೇ ಶೈಲಿಯ ನಿರೂಪಣೆಯೊಂದಿಗೆ ಜನರಂಜನೆಗಾಗಿ ಸತತ ಶ್ರಮಿಸಿದ್ದೇನೆ. ಮೊನ್ನೆ 2015 ರ ಫೆಬ್ರುವರಿ 18 ರಂದು ಗೀತರಚನಕಾರರಾದ ಚಿ. ಉದಯಶಂಕರ್ ಅವರ ಜನ್ಮದಿನದಂದು, ಅವರದೇ ಗೀತೆಗಳನ್ನು ಪೋಣಿಸಿ, ಶಾಬ್ದಿಕ ನಮನ ಸಲ್ಲಿಸಿ, ಸರಕಾರೀ ಸೇವೆಗೆ ಸಾಂಕೇತಿಕವಾಗಿ ಮಂಗಳ ಹಾಡಿದ್ದೇನೆ. ಪಂ.ರವಿಶಂಕರ್, M.L.ವಸಂತ ಕುಮಾರಿ, M.S.ಸುಬ್ಬುಲಕ್ಷ್ಮಿ ಮುಂತಾದ ಹಿರಿಯ ಶಾಸ್ತ್ರೀಯ ಸಂಗೀತ ಮೇರುಗಳನ್ನು ಆಧಾರವಾಗಿಟ್ಟುಕೊಂಡೂ ನಾನು ಸೋದಾಹರಣ ಕಾರ್ಯಕ್ರಮ ನೀಡಿದ್ದಿದೆ.
ಪುರಂದರ - ಕನಕದಾಸರ ಸಂಸ್ಮರಣೆಯ ಸಂದರ್ಭದಲ್ಲಿ ದಾಸಕೀರ್ತನೆಗಳನ್ನು ಆಧರಿಸಿದ ಸಂಯೋಜಿತ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿದ್ದೇನೆ. "ಮೊಹರಂ" ಹಬ್ಬದ ಕುರಿತ ರೂಪಕವನ್ನೂ... ಗೆಳೆಯರೊಂದಿಗೆ ನಿರೂಪಿಸಿ ಪ್ರಸ್ತುತಪಡಿಸಿದ್ದೆ.
"Chit Chat ಅತಿಥಿ" ಎಂಬ ನೇರಪ್ರಸಾರದ ಕಾರ್ಯಕ್ರಮದಲ್ಲಿ ಸಮಾಜದ ಅನೇಕ ಗಣ್ಯರನ್ನು ಸಂದರ್ಶಿಸುತ್ತ ಒಂದು ಗಂಟೆಯ ಕಾಲ ಪ್ರಸಾರ ಕಾರ್ಯವನ್ನು ನಿಭಾಯಿಸುತ್ತಿದ್ದುದು ಮರೆಯಲಾಗದ ಅನುಭವ. ಈ "Circus" ಕಾರ್ಯಕ್ರಮವು ಒಂದೆರಡು ವರ್ಷಗಳ ಕಾಲ ಓಡಿ ಜನಪ್ರಿಯವೂ ಆಗಿತ್ತು.
"ರಸಗಂಗಾ" ಎಂಬ ಹೆಸರಿನಿಂದ ಚಿತ್ರಗೀತೆಗಳನ್ನು ಆಧರಿಸಿ ಚಿತ್ರ ರೂಪಕದಂತೆ ಮೂಡಿಬರುತ್ತಿದ್ದ ನಾನೇ ನಿರ್ಮಿಸುತ್ತಿದ್ದ ಕಾರ್ಯಕ್ರಮವೂ ಜನಮನ್ನಣೆ ಗಳಿಸಿತ್ತು. ಅದರ ಗುರುತು ಸಂಗೀತಕ್ಕೆ ನಾನೇ ಧ್ವನಿ ಸಂಯೋಜನೆ ಮಾಡಿದ್ದೆ. (ನನ್ನ ಸಹೋದ್ಯೋಗಿಯಾಗಿದ್ದ ದಿ.ಕೆ.ಆರ್.ರೈ ಅವರು - ಈ ಕಾರ್ಯಕ್ರಮವನ್ನು "ಗಂಗಸರ" (ಗ್ರಾಮೀಣ ಮದ್ಯ !) ಎಂದು ತಿರುಗಾಮುರುಗಾ ಮಾಡಿ ನನ್ನನ್ನು ಕಿಚಾಯಿಸುತ್ತಿದ್ದರು..!)
ಮುಂದಿನ ದಿನಗಳಲ್ಲಿ, ನಿಲಯದಿಂದ ಹೊರಗೆ ಹೋಗಿ ಜನರನ್ನು ಸಂದರ್ಶಿಸಿ, ಅವರ ಮೆಚ್ಚಿನ ಗೀತೆಯ ಬಗ್ಗೆ ಅವರ ಅನ್ನಿಸಿಕೆಗಳನ್ನು ಕೇಳಿ ಧ್ವನಿ ಮುದ್ರಿಸಿಕೊಂಡು, ಸಂದರ್ಶನ ಆಧರಿತ "ಜನರಂಜನಿ" ಎಂಬ ಕಾರ್ಯಕ್ರಮವನ್ನು ನಿರ್ಮಿಸಿ ಪ್ರಸ್ತುತಪಡಿಸಿದ್ದೆ.
ಸಮಾಜದ ವಿಭಿನ್ನ ವರ್ಗದ ಹಿರಿಯ ಸಾಧಕರಾದ ಚಿತ್ರನಟಿ ವೈಶಾಲಿ, ಉಳ್ಳೂರು ಮೂಕಾಂಬಿಕಮ್ಮ, ಕದ್ರಿ ಗೋಪಾಲನಾಥ್, ಡಾ.ಶಾಂತಾರಾಮ್ ಶೆಟ್ಟಿ, ಅಷ್ಟಾವಧಾನಿ ಆರ್.ಗಣೇಶ್, ಸಾಹಿತಿ ವೈದೇಹಿ.... ಹೀಗೆ ಸಾಂದರ್ಭಿಕವಾಗಿ ಹಲವಾರು ಸಾಹಿತಿಗಳೂ, ಶಿಕ್ಷಕರೂ, ಪತ್ರಕರ್ತರು, ಬ್ಯಾಂಕಿಂಗ್ ಪರಿಣತರು..... ನೇಕಾರ, ಗೂಡಂಗಡಿಯವರು, ಚಪ್ಪಲಿ ರಿಪೇರಿಯವರು, ಹೊಲಿಗೆ - ಅಡುಗೆ ಮುಂತಾದ ವೃತ್ತಿ ನಿರತರು, ರಸ್ತೆ ಗುಡಿಸುವವರನ್ನೂ ಮಾತನಾಡಿಸಿ, ಕೇಳುಗರಿಗೆ ಮುಟ್ಟಿಸಿದ್ದೇನೆ.
ಬಸರೂರಿನಂತಹ ಕೆಲವು ಸ್ಥಳ ವಿಶೇಷಗಳನ್ನು ಸಂದರ್ಶನಗಳನ್ನಾಧರಿತ ಶಬ್ದ ರೂಪಕವಾಗಿ ನಿರ್ಮಿಸಿದ್ದೇನೆ. ಹಲವಾರು ಚರ್ಚೆಗಳನ್ನು ಸೂತ್ರಧಾರಿಯಾಗಿ ನಡೆಸಿಕೊಟ್ಟಿದ್ದೇನೆ. 15 ವರ್ಷಗಳಿಗೂ ಹೆಚ್ಚು ಕಾಲ ಶ್ರೋತೃಗಳ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದಿಸುವ "ಪತ್ರೋತ್ತರ" ಕಾರ್ಯಕ್ರಮವನ್ನು, ಆಕರ್ಷಕ - ಪೂರ್ಣ ಸ್ವತಂತ್ರ ಕಾರ್ಯಕ್ರಮದಂತೆ ನಿರ್ವಹಿಸಿ ಜನಪ್ರಿಯಗೊಳಿಸಿದ್ದೇನೆ.
ಮುಂಗಾರು, ಹೊಸದಿಗಂತ ಪತ್ರಿಕೆಗಳಲ್ಲಿ ಅಂಕಣ ಬರಹದ ಜೊತೆಗೆ ಇತರ ಮಾಧ್ಯಮಗಳಾದ ಉದಯವಾಣಿ, ಪ್ರಜಾವಾಣಿ, ಕನ್ನಡಪ್ರಭ, ಸುಧಾ, ತರಂಗ,ಕರ್ಮವೀರ, ಕಸ್ತೂರಿ, ಮುಂತಾದ - ದಿನ, ವಾರ, ಮಾಸಪತ್ರಿಕೆಗಳಿಗೆ ಆಗಾಗ ಬರೆದು ಕಳಿಸಿದ ಲೇಖನ, ಕವನ, ಕಥೆ, ವ್ಯಕ್ತಿ ಪರಿಚಯ, ಪ್ರವಾಸ ಕಥನ, ಹಾಸ್ಯ ಲೇಖನ, ವಿಡಂಬನಾ ಬರಹಗಳು, ಕಾಲ ಕಾಲಕ್ಕೆ ಪ್ರಕಟವಾಗಿದ್ದವು.
ಕಾಸರಗೋಡಿನಿಂದ ಬೈಂದೂರಿನವರೆಗೆ - ಮಂಗಳೂರಿನ ವಿಶ್ವವಿದ್ಯಾನಿಲಯದಿಂದ ಪ್ರಾಥಮಿಕ ಶಾಲೆಯವರೆಗೂ ಹಲವಾರು ಕಡೆ ಅತಿಥಿಯಾಗಿ ಹೋಗಿ ಅಭಿಪ್ರಾಯ ಹಂಚಿಕೊಂಡಿದ್ದೇನೆ. ಹಲವಾರು ಸಾರ್ವಜನಿಕ ಸಮಾರಂಭಗಳಲ್ಲೂ ಆಹ್ವಾನಿತಳಾಗಿ ಭಾಗವಹಿಸಿದ್ದೇನೆ.
ಹರಿಕಥೆಗಳನ್ನು ಮಾಡುತ್ತ ಹಲವಾರು ಧಾರ್ಮಿಕ ಸಂಸ್ಥೆ, ದೇವಳಗಳನ್ನು ಸಂದರ್ಶಿಸುವ, ಹಲವಾರು ಸಂಘ ಸಂಸ್ಥೆಗಳೊಂದಿಗೆ ಒಡನಾಡುವ, ವಿಭಿನ್ನ ಭಾವ - ಭಕ್ತಿಯ ಜನರೊಂದಿಗೆ ಬೆರೆಯುವ ಸಂದರ್ಭಗಳೂ ಒದಗಿದ್ದವು. "ಹೀಗೂ ಉಂಟೇ ?" ಎನ್ನಿಸುವ ನೂರಾರು ವಿಶಿಷ್ಟ ಅನುಭವಗಳೂ ಆಗಿಹೋದವು. ಹೊಗಳಿಕೆ - ತೆಗಳಿಕೆ ಎರಡನ್ನೂ ಕಂಡುಂಡೆ. ಇದರಿಂದ ಕಾರ್ಯಕಾರಣದ ಇತಿಮಿತಿಗೆ ನನ್ನನ್ನು ನಾನೇ ಅಚ್ಚರಿಯಿಂದ ತೆರೆದುಕೊಂಡೆ; ಸಿಲುಕಿಕೊಂಡೆ.
ಆಕಾಶವಾಣಿಯು ಆಯೋಜಿಸಿದ ಆಹ್ವಾನಿತ ಶ್ರೋತೃಗಳ ಹಲವಾರು ಸಭಾ ಕಾರ್ಯಕ್ರಮದಲ್ಲಿ ವೇದಿಕೆಯ ನಿರೂಪಣೆ ಮತ್ತು ನಿರ್ವಹಣೆಯನ್ನು ನಿಭಾಯಿಸಿದ್ದೇನೆ. ಶ್ರೀಮತಿ ಗಂಗೂಬಾಯಿ ಹಾನಗಲ್ ಅವರ ಗಾಯನದ ಸಭಾ ಕಾರ್ಯಕ್ರಮವು ಮುಗಿದ ನಂತರ, ಸಹಗಾಯಕಿಯಾಗಿದ್ದ ಶ್ರೀಮತಿ ಕೃಷ್ಣಾ ಹಾನಗಲ್ ಅವರು ನನ್ನನ್ನು ಆಲಂಗಿಸಿಕೊಂಡು "ಎಷ್ಟು ಸುಂದರ ಧ್ವನಿ !! ಅಚ್ಚುಕಟ್ಟಾದ ನಿರೂಪಣೆ..." ಎಂದಾಗ - "ಆಶೀರ್ವದಿಸಿ...." ಎಂದಿದ್ದೆ. ಆಗ ಪಕ್ಕದಲ್ಲೇ ಇದ್ದ ಗಂಗೂಬಾಯಿ ಅವರು ಮುಗುಳುನಕ್ಕಿದ್ದರು. ಭಾವಗೀತೆಗಳ ವೇದಿಕೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶ್ರೀಮತಿ ಕಸ್ತೂರಿ ಶಂಕರ್ ಅವರು ಕೊನೆಯಲ್ಲಿ ನನ್ನನ್ನು ಕರೆದು, "ನೀವು ಹಾಡಬೇಕು. ಇದು ಹಾಡುವ ಧ್ವನಿ" ಎಂದಾಗ ಕೃತಜ್ಞತೆಯಿಂದ ನನ್ನ ಹೆತ್ತವರನ್ನು ಸ್ಮರಿಸಿಕೊಂಡಿದ್ದೆ. ಬಹುಶಃ 1978-79 ರಲ್ಲಿ ಮಂಗಳೂರಿನ C.V.ನಾಯಕ್ ಸಭಾಂಗಣದಲ್ಲಿ ಆಹ್ವಾನಿತ ಶ್ರೋತೃಗಳ ಸಮ್ಮುಖದಲ್ಲಿ ಸಿತಾರ್ ವಾದನ ಪ್ರಸ್ತುತ ಪಡಿಸಿದ ಉಸ್ತಾದ್ ಅಬ್ದುಲ್ ಹಲೀಂ ಜಾಫ಼ರ್ ಖಾನ್ ಅವರು, ನಮ್ಮ ನಿಲಯದ ಅಧಿಕಾರಿಯ ಮೂಲಕ ನನ್ನನ್ನು ಕರೆಸಿಕೊಂಡು "ಬಹುತ್ ಸುಂದರ್ ಆವಾಜ್....ಖುದಾ ಭಲಾ ಕರೇಂ" ಎಂದು ಆಶೀರ್ವದಿಸಿದ್ದು.... ನಾನು ಅವರ ಪಾದ ಸ್ಪರ್ಶಿಸಿ ಆಶೀರ್ವಾದ ಪಡೆದದ್ದು.... ಇವನ್ನೆಲ್ಲ ಮರೆಯಲು ಸಾಧ್ಯವೇ ? ಇದರ ಜೊತೆಗೇ ತಾಯಿ ಶಾರದೆಯನ್ನು ಸನಿಹದಿಂದ ಆರಾಧಿಸುವ ನಮ್ಮ ನಿಲಯದ ಕಲಾವಿದರ "ಬಹುಮುಖೀ ಪ್ರೀತಿ" ಮತ್ತು "ಪ್ರಚಂಡ ಪ್ರತಿಭೆ"ಯನ್ನೂ - ಸೇವಾವಧಿಯ ಉದ್ದಕ್ಕೂ ಕಂಡು ಉಂಡು ಆನಂದಿಸಿದ್ದೇನೆ.
ಏನೇನು ಹೇಳಲಿ ? ಏನನ್ನು ಬಿಡಲಿ ? ತುಂ ತುಂ ತುಂ ತುಂ ತುಂ ತುಂ ತುಂ ತುಂ ತುಂಬಿ ಬಂದಿತ್ತ.....ಈಗ ಸಂಜೆಯಾಗಿತ್ತ...
ನಾನು ನಿಮ್ಮೆಲ್ಲರ ಕೂಸು. ನೀವೇ ಪೋಷಿಸಿ ಕಟ್ಟಿ ಬೆಳೆಸಿದ ಪ್ರತಿಮೆ. ನನ್ನ ಹೆತ್ತವರು, ಹುಟ್ಟಿದ - ಹೊಕ್ಕ ಕುಟುಂಬ, ನಾನು ಕಲಿತ ಶಾಲೆಗಳು - ಗುರುಗಳು, ನನ್ನ ಪತಿ ಶ್ರೀ ದಾಮೋದರ ಭಟ್ ನೂಜಿ ಮತ್ತು ಮಗನಾದ ಡಾ.ರೋಹಿತ್ ಅವರಿಗೆ, ಹೊತ್ತು ಮೆರೆಸಿದ ಅಸಂಖ್ಯ ಅಭಿಮಾನಿಗಳಿಗೆ ನಾನು ಋಣಿ. ನನ್ನ ಎಲ್ಲ ಕುಣಿತವನ್ನೂ ಸಹಿಸಿಕೊಂಡು ಪ್ರೋತ್ಸಾಹಿಸಿದ ನನ್ನ ಕುಟುಂಬದ ಋಣವನ್ನು ನಾನು ತೀರಿಸಬಲ್ಲೆನೇ ? ಸಂಶಯ.
ನನ್ನ ಸೂಕ್ಷ್ಮ ಪ್ರವೃತ್ತಿ, ಅತಿಭಾವುಕತೆ, ಅತಿನಿಷ್ಠುರತೆ ಎಂಬ ಸ್ವಭಾವಸಿದ್ಧ ಗುಣಗಳನ್ನು ಸಾಧ್ಯವಾದಷ್ಟು ಪಳಗಿಸಿಕೊಂಡು ಸಮಾಜದಲ್ಲಿ ಬೆರೆಯುವ ಪ್ರಯತ್ನ ಮಾಡಿದ್ದೇನೆ; ಒಮ್ಮೊಮ್ಮೆ ಎಡವಿದ್ದರೂ ಎದ್ದು ಸಂಭಾಳಿಸಿಕೊಂಡಿದ್ದೇನೆ. ನನ್ನ ಎಲ್ಲ ಸುಖ ದುಃಖಗಳಲ್ಲಿ ಎಲ್ಲಿಯೂ ಕುಸಿದುಬೀಳದಂತೆ ಬೆನ್ನಹಿಂದೆ ನಿಂತು ಕಾಪಾಡಿದ ಹಿತೈಷೀ ಅಭಿಮಾನಿಗಳಿಂದಲೇ ನಾನೀಗ "ಸಹಜ ನಿವೃತ್ತಿ" ಎಂಬ ಭಾಗ್ಯ ಹೊಂದುತ್ತಿದ್ದೇನೆ.
ನನ್ನ ಪ್ರಿಯ ಬಂಧುಗಳೇ, ಒಂದಿಷ್ಟು ಭಾವ ಸಂವಹನ ನಡೆಸಿದ್ದೇನೆ. ಆಡದೇ ಉಳಿದುಕೊಂಡ, ಗಂಟಲಲ್ಲೇ ಸಿಕ್ಕಿಕೊಂಡ ದೊಡ್ಡ ಗಂಟು ನನ್ನೊಳಗೇ ಇದೆ. ಹಂಚಿಕೊಳ್ಳಬೇಕೇ? ಬೇಡವೇ? ಎಂಬ ತುಮುಲವಿದೆ. ಬುದ್ಧಿಯ ಕಡೆಯಿಂದ ಏನಪ್ಪಣೆ ಸಿಗುವುದೋ ನೋಡೋಣ. ಮುಂದಿನ ದಿನಗಳಲ್ಲಿ ಇನ್ನಷ್ಟು ರಸಮಯ ವಿಷಯಗಳು ಹೊರಬಂದರೂ ಬರಬಹುದು. ಈಗ FACEBOOK ಮತ್ತು BLOG ನಲ್ಲೂ ಮೂಗು ತೂರಿಸಿದ್ದೇನೆ.
1976 ರಲ್ಲಿ - "ಮಂಗಳೂರಿನಲ್ಲಿ ಆಕಾಶವಾಣಿ ಬರುತ್ತದಂತೆ....ಅದಕ್ಕೆ ಉದ್ಘೋಷಕರು ಬೇಕಂತೆ....ಉದಯವಾಣಿ ಪೇಪರಿನಲ್ಲಿ ಪ್ರಕಟಣೆ ಬಂದಿದೆ; ನೀನು ಅರ್ಜಿ ಹಾಕು..." ಎಂದು ಅಮ್ಮನು ಸೂಚಿಸಿದಾಗ ಯಾಂತ್ರಿಕವಾಗಿ ನಾನೂ ಅರ್ಜಿ ಹಾಕಿದ್ದೆ. ಲಿಖಿತ ಪರೀಕ್ಷೆಗೆ ಕರೆದಾಗ ಮಂಗಳೂರಿಗೆ ಹೋಗಿದ್ದೆ. ನೂರಾರು ಆಸಕ್ತ ಅಭ್ಯರ್ಥಿಗಳು ಅಲ್ಲಿದ್ದರು. ಇದ್ದದ್ದು ಬರೇ 3 ಹುದ್ದೆ. ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾದ ಏಳೆಂಟು ಹೆಸರುಗಳನ್ನು ಅದೇ ದಿನ ಅಪರಾಹ್ನ ಘೋಷಿಸಿದರು. ಅವರಲ್ಲಿ ನಾನೂ ಒಬ್ಬಳಾಗಿದ್ದೆ. ಅನಂತರ ಧ್ವನಿ ಪರೀಕ್ಷೆ ನಡೆಯಿತು. ಶಹಬ್ಬಾಶ್, ದೃಷ್ಟದ್ಯುಮ್ನ,ಶಾಂರ್ಙರವ, ಸಂಜ್ಞಾ, ಪೃಥೆ, ಶುನಶ್ಯೇಫ, ಫೇನಪ.. ಮುಂತಾದ ಪದಗಳನ್ನು... "ತರಿಕೆರೆ ಏರಿ ಮೇಲೆ ಮೂರು ಕರಿ ಕುರಿಮರಿ ಮೇಯ್ತಿತ್ತು" ಎಂಬ ವಾಕ್ಯವನ್ನು ವೇಗವಾಗಿ ಹೇಳುವ ಪರೀಕ್ಷೆಗಳನ್ನು ಒಡ್ಡಿದ್ದೂ ನೆನಪಾಗುತ್ತದೆ. ಆಗ ಉತ್ತೀರ್ಣರಾದವರು ಜಯಶ್ರೀ ಶಾನುಭಾಗ್, ಕೃಷ್ಣಕಾಂತ್ ಮತ್ತು ಎ.ನಾರಾಯಣಿ. (ಮೂಲವು ಎ. ನಾರಾಯಣಿ; ಊರಿನ ಮೋಹದಿಂದಾಗಿ - ಆಕಾಶವಾಣಿಯಲ್ಲಿ ಪ್ರವೇಶಿಸಿದ ನಂತರ - ಮೊದಲು ನಾರಾಯಣೀ ಕುಂದಾಪುರ ಎಂದು, ವಿವಾಹವಾದ ನಂತರ ನಾರಾಯಣೀ ದಾಮೋದರ್ ಎಂದೂ ಬಣ್ಣ ಬದಲಿಸಿಕೊಂಡಿದ್ದೆ.)
ಉದ್ಘೋಷಕಿಯಾಗಿ ಆಯ್ಕೆಯಾದ ತಿಂಗಳೊಳಗೇ Appointment Letter ಬಂತು. 1976 - ಡಿಸೆಂಬರ್ 7 ರಂದು ಬಯಸಿದ ಭಾಗ್ಯವು ದೊರೆತ ರೋಮಾಂಚನದಲ್ಲಿ ಮಂಗಳೂರು ಆಕಾಶವಾಣಿಯನ್ನು ಪ್ರವೇಶಿಸಿದೆ. ಆ ಮಂಗಳವಾರದಂದು ಒಳಗಿಟ್ಟ ಹೆಜ್ಜೆಯನ್ನು 28-2-2015 ರ ಶನಿವಾರದಂದು ಹೊರಗಿಡುತ್ತಿದ್ದೇನೆ. ದೀರ್ಘ "ಹರಿಕತೆ"ಯ ನಡುವಿನ ಒಂದು ನಿಲುಗಡೆ ! ಶ್ರೀಮದ್ರಮಾರಮಣ ಗೋವಿಂದ...ಗೋ...ವಿಂದ.
ಆಕಾಶವಾಣಿಯೆಂಬ ಅಸಾಧ್ಯ ಸಾಧ್ಯತೆಗಳಿರುವ ವಿಶಾಲ ಸಂಸ್ಥೆಯೊಂದು ನನ್ನನ್ನು ನಿಮ್ಮೆಲ್ಲರ ಮನೆಮಗಳನ್ನಾಗಿ ಬೆಳೆಸಿದೆ; ನನ್ನ ಅರ್ಧ ಆಯುಷ್ಯವನ್ನು ತನ್ನ ರಾಜಛತ್ರದ ನೆರಳಲ್ಲಿ ಪೋಷಿಸಿದೆ. ತನ್ಮೂಲಕ... ಸಮಾಜದ ಮುಂದೆ ನನ್ನನ್ನಿಟ್ಟು, ಸ್ವಾಮಿಕಾರ್ಯವನ್ನು ನಿಷ್ಠೆಯಿಂದ ನಿರ್ವಹಿಸುವಂತೆ ರೂಪಿಸಿದೆ. ಆಕಾಶವಾಣಿಗೆ ನಾನೇನೋ ಕೊಟ್ಟೆ ಎಂದುಕೊಳ್ಳುವುದು ಪೊಳ್ಳು ಹೆಮ್ಮೆ. ಆಕಾಶವಾಣಿಯಿಂದ ನಾನು ಎಷ್ಟೊಂದು ಪಡೆದೆ ಎಂದುಕೊಳ್ಳುತ್ತಿರುವುದು ಅಂತರಂಗದ ಸಹಜಭಾವ. ನನ್ನೊಳಗಿನ ಸೃಜನಶೀಲತೆಗೆ ವೇದಿಕೆಯೊದಗಿಸಿದ ಆಕಾಶವಾಣಿಯ ಹಿರಿಮೆಗೆ ನತಮಸ್ತಕಳಾಗುವಾಗ ಹೃದಯ ತುಂಬಿ ಬರುತ್ತದೆ. ಸಂಸ್ಥೆಗೆ ಮತ್ತು ಸಹೋದ್ಯೋಗಿಗಳೆಲ್ಲರಿಗೂ ಋಣೀಭಾವದ ಪ್ರಣಾಮಗಳನ್ನು ಅರ್ಪಿಸುತ್ತ - ಎಲ್ಲ ತಲ್ಲಣಗಳಿಂದಲೂ ಮುಕ್ತವಾದ ಭಾವಘನಕ್ಕೆ ಜಾರುತ್ತಿದ್ದೇನೆ.
ಈ ಸುದೀರ್ಘ ಸೇವಾವಧಿಯ ಕೊನೆಯ ಕೆಲವು ವರ್ಷಗಳ ಕಾಲ ನಾನು ಸ್ವ-ಇಚ್ಛೆಯಿಂದಲೇ ಚಿಪ್ಪಿನೊಳಗೆ ಸರಿದದ್ದು ವಾಸ್ತವ. ಸರಕಾರೀ ಪ್ರವಾಹದ ವಿರುದ್ಧ ಈಜಿ ಈಜಿ ರೆಟ್ಟೆಗಳು ಬಳಲಿದ್ದೂ ಸತ್ಯ. ಆದ್ದರಿಂದಲೇ - ಸೇವಾವಧಿಯ ಉದ್ದಕ್ಕೂ ನನ್ನದಲ್ಲದ ಕುದುರೆಗಳನ್ನೂ ಪಳಗಿಸಿ, ಹತ್ತಿ ಇಳಿದು, ಚಟುವಟಿಕೆಯ ಪ್ರತೀಕವಾಗಿಯೇ ಸಾಗಿ ಬಂದಿದ್ದರೂ - ಕೊನೆಯ ಅವಧಿಯಲ್ಲಿ ಮಾತ್ರ ಕೊಟ್ಟ ಕುದುರೆಯನ್ನು ಮಾತ್ರ ನಿಷ್ಠೆಯಿಂದ ಸಂಭಾಳಿಸುವುದರಲ್ಲಿ ಆತ್ಮತೃಪ್ತಿ ಕಂಡುಕೊಂಡಿದ್ದೇನೆ. ಕಾಲಾಯ ತಸ್ಮೈ ನಮಃ .
ಮನುಷ್ಯ ಸಹಜವಾದ ಭಾವನಾತ್ಮಕ ಏರಿಳಿತಗಳ ನಡುವೆಯೂ ನನ್ನ ಶ್ರೋತ್ರಗಳ ಬಲದಿಂದಾಗಿ ಎಲ್ಲಿಯೂ ಕುಸಿಯದೆ, ಈಗ ವಿದಾಯದ ಕ್ಷಣಗಳನ್ನು ಎದುರು ನೋಡುತ್ತಿದ್ದೇನೆ. ಯಾವುದೇ "ಪ್ರಾಯೋಜಕತ್ವ" ಎಂಬ ಗೊಣಗೊಂಡೆ ಹೊಯ್ದಾಟಗಳ ತಂಟೆ ತಕರಾರಿಲ್ಲದ - "ಆಕಾಶವಾಣಿಯ ಸುವರ್ಣ ಕಾಲ ಘಟ್ಟ"ದಲ್ಲಿ ನಾನೂ ಆಕಾಶವಾಣಿಯಲ್ಲಿದ್ದೆ - ಎಂಬ ವಿನಮ್ರ ಹೆಮ್ಮೆಯು ನಾನಿರುವವರೆಗೂ ನನ್ನೊಂದಿಗೆ ಇರುತ್ತದೆ.
ಪ್ರಿಯ ಬಂಧುಗಳೇ,
ನನ್ನೊಳಗಿನ ಚೈತನ್ಯವು ಇನ್ನೂ ಬತ್ತಿಲ್ಲ. ಸದ್ದಿಲ್ಲದೆ ಬದುಕುವುದೂ ನನಗೆ ಗೊತ್ತಿಲ್ಲ. ಆಟದ ಬಯಲು ಬದಲಾಗಬಹುದು-ಅಷ್ಟೆ. ಸುಲಭದಲ್ಲಿ ಎಡವಿ ಬೀಳಿಸಬಲ್ಲ ಮಾತುಗಳನ್ನೇ ಆಶ್ರಯಿಸಿ ನಾನು ಬದುಕಿದ ಈ ಸುದೀರ್ಘ ವಾಕ್-ಯಾತ್ರೆಯಲ್ಲಿ, ಪ್ರತ್ಯಕ್ಷ ಅಥವ ಪರೋಕ್ಷವಾಗಿ ಯಾವುದೇ ಅಹಿತಗಳು ಸಂಭವಿಸಿದ್ದರೆ ಅದರ ಪೂರ್ಣ ಹೊಣೆಯು ನನ್ನದು. ಮಾತು ಮುಗಿಸುವ ಹೊತ್ತಾಗಿದೆ. ಕರೆ ಬಂದಿದೆ. "ಹೊರಡು ಕರೆ ಬರಲ್"- ಎಂಬುದು ಸಾರ್ವತ್ರಿಕ ನ್ಯಾಯ. ಅಲ್ಲವೆ? ಮಂಕು ತಿಮ್ಮಿಯ ಕಗ್ಗವಿದು. ಮಂಕುತಿಮ್ಮನನ್ನು ಹಿಂಬಾಲಿಸಿ ಹೊರಟಿದ್ದೇನೆ... ನಿಮ್ಮ ಪ್ರೀತಿ ವಿಶ್ವಾಸದ ಹೊರತು ನನಗಿನ್ನೇನು ಬೇಕು?
ಇಂತಿ ನಿಮ್ಮ,
ನಾರಾಯಣೀ ದಾಮೋದರ್

ತುಂಬಾ ಚೆನ್ನಾಗಿ ಬರೆದಿದ್ದೀರಿ.ನಾನು ಒಂದನೇ ತರಗತಿಯಿಂದ(1986) ಇಲ್ಲಿವರೆಗೆ ನಿಮ್ಮ ಧ್ವನಿಯನ್ನು ಕೇಳಿ ಬೆಳೆದಿದ್ದೇನೆ.ಆಕಾಶವಾಣಿಯೊಳಗೆ ಹೊಗಬೇಕು.ನಾನೂ ನಿಮ್ಮೆಲ್ಲರಂತೆ ಉಲಿಯಬೇಕು ಎಂದು ಕನಸು ಕಂಡಿದ್ದೆ.2005ರಲ್ಲೇನೋ ಪರೀಕ್ಷೆ ಬರೆದು ಉತ್ತೀರ್ಣನಾಗಿ ಮೌಖಿಕ ಪರೀಕ್ಷೆಯಲ್ಲೂ ಸೈ ಅನ್ನಿಸಿ ಪ್ರವೇಶಿಸಿದ್ದೆ.ಆದರೆ ಬದಲಾದ ಸರ್ಕಾರೀ ನಿಯಮಗಳಿಂದಾಗಿ ಹೊಸಬರಿಗೆ ಇದರಿಂದ ಹೊಟ್ಟೆ ಹೊರೆಯುವುದು ಅಸಾಧ್ಯವೆನಿಸಿ 3-4 ತಿಂಗಳಲ್ಲೇ ಬಿಟ್ಟೆ.ನಿಮ್ಮನ್ನು ಅನೇಕ ಬಾರಿ ಕಂಡಿದ್ದರೂ ಮಾತನಾಡಿಸಲು ಅವ್ಯಕ್ತ ಭಯವಾಗುತ್ತಿತ್ತು.
ReplyDeleteಇರಲಿ, ನಿಮ್ಮ ನಿವೃತ್ತ ಜೀವನ ಚಟುವಟಿಕಂಯಿಂದ ಕೂಡಿರಲಿ..:)
ಆಖ್ಯಾಯಿಕೆಗಳ ಮಾಲೆಯಲ್ಲಿ ಬಾಲ್ಯ ರೂಪಿಸಿದವರು, ಇದ್ದಕ್ಕಿದ್ದಂತೆ ಕೇವಲ ವೃತ್ತಿ ಕಲಾಪಗಳ ಪಟ್ಟಿ ಕೊಟ್ಟು ವಂದನಾರ್ಪಣೆ ಮಾಡಿದ್ದು ಸರಿಯಾಗಲಿಲ್ಲ. ಫೇಸ್ ಬುಕ್ಕಿಗಾದರೆ ಸ್ಥಳ ಸಂಕೋಚ, ಶೀಘ್ರ ಮರೆವು (ಹಳತನ್ನು ಅದು ಕಳೆದುಬಿಡುತ್ತದೆ) ಪುಟ ಕಟ್ಟುವಲ್ಲಿ ಮಿತಿಗಳೆಲ್ಲ ಕಾಡುವುದಿದೆ. ಆದರೆ ಜಾಲತಾಣ ಹಾಗಲ್ಲವಲ್ಲ. ವಿವರಣೆಗೆ ಯಾಕೆ ಸಂಕೋಚಮಾಡಿಕೊಂಡಿರಿ???
ReplyDeleteಶ್ರೀ ಅಶೋಕವರ್ಧನ ಅವರೇ, ಸದ್ಯದ ಮಟ್ಟಿಗೆ ಸಾಕು ಎಂದುಕೊಂಡಿದ್ದೇನೆ. ಮುಂದೆ, ನಡೆದು ಬಂದ ಹಾದಿಯ ಇತಿಶ್ರೀ ಹಂತದಲ್ಲಿ ಈ ಲೇಖನದ ವಿಸ್ತ್ರತ ರೂಪವು ರಕ್ತ ಮಾಂಸ ತುಂಬಿಕೊಂಡು ಬಂದೀತು.ಇದೊಂದು ಸಾಂಕೇತಿಕ ಸದ್ಭಾವ ಮಾತ್ರ.ಬೇಕಿದ್ದರೆ ಪೀಠಿಕಾ ಪ್ರಕರಣ ಅಂದುಕೊಳ್ಳಿ.ಒಮ್ಮೆ ಸರಕಾರೀ ಉದ್ಯೋಗದ ಜಂಜಾಟದಿಂದ ಹೊರಗೆ ಬಂದು ಶುದ್ಧವಾದ OXYGEN ಸೇವಿಸಿ, ಸುಧಾರಿಸಿಕೊಳ್ಳುತ್ತೇನೆ.- ಆಗದೆ?
ReplyDeleteಆಕಾಶವಾಣಿಯ ಅನೇಕರೊಡನೆ ಸಂಪರ್ಕವಿದ್ದರೂ ತಪ್ಪು-ಒಪ್ಪು , ಸಲಹೆ ಸೂಚನೆಗಳನ್ನು ಯಾವುದೇ ವಿಳಂಬವಿಲ್ಲದೆ ನೇರ studioಗೇ ಫೋನ್ ಮಾಡಿ ತಿಳಿಸುವಷ್ಟು ಸಲುಗೆ-ಸ್ವಾತಂತ್ರ್ಯ ನಿಮ್ಮೊಡನೆ ಮಾತ್ರ ಇತ್ತು. ನಿಮ್ಮ ಇನ್ನು ಮುಂದಿನ ಪೂರ್ತಿ ರೆಕ್ಕೆ ಬಿಚ್ಚಿದ ಬಂಧನ ರಹಿತ ಪಯಣ ಬಹು ಕಾಲ ಸಾಗುತ್ತಿರಲಿ.
ReplyDeleteನಿಮ್ಮ ಆ ಮಾತಿನಲ್ಲಿರುವ ಸೆಳೆತ ಯಾರಿಗೆ ಇಷ್ಟ ಆಗಲ್ಲ ಹೇಳಿ, ಅದರಲ್ಲೂ ನನಗೆ ನೀವು ಶನಿವಾರ ಬೆಳಿಗ್ಗೆ ಪ್ರಸಾರವಾಗುತ್ತಿದ್ದ ಆಶಾ ಗ್ರೈಂಡರ್ ಪ್ರಾಯೋಜಿತ ಕೆ.ಟಿ.ಗಟ್ಟಿ ಅವರ ಕಥೆ ಆಧಾರಿತ ಕಾರ್ಯಕ್ರಮದಲ್ಲಿ (2005-06 ನೇ ಇಸವಿಯಲ್ಲಿ ಅನ್ಸತ್ತ್ ಸಮಾ ನೆನ್ಪಿಲ್ಲ, ಕಾರ್ಯಕ್ರಮದ ಹೆಸ್ರು ನೆನ್ಪಾತಿಲ್ಲ) ಕುಂದಾಪ್ರ ಕನ್ನಡ ಮಾತಾಡುದ್ ಕಂಡ್ ಮತ್ತು ಜಾಸ್ತಿ ಇಷ್ಟ ಆಯ್ತ್, ಅದ್ರ್ ಮೇಲೆ ಫೋನ್ ಇನ್ ಕಾರ್ಯಕ್ರಮದಲ್ಲಿ ನಿಮ್ಮೊಟ್ಟಿಗ್ ಮಾತಾಡಿದ್, ಆ ಕಥೆಯಲ್ಲಿ ಬತ್ತಿದ್ದ ಹೆಬ್ಬಾರರ ಹೋಟೆಲ್ ಬಗ್ಗೆ ಪ್ರಸ್ತಾಪ ಮಾಡದ್ದ್ ಎಲ್ಲಾ ಒಂದೇ ಸಲ ನೆನ್ಪ್ಆಯ್ತ್, ಆ ಕಾರ್ಯಕ್ರಮದ ನಂತರ ಆಕಾಶವಾಣಿಯಲ್ಲಿ ಕುಂದಾಪ್ರ ಕನ್ನಡದ ಬಳಕೆ ಸಲ್ಪ ಜಾಸ್ತಿ ಆಯ್ತ್ ಅನ್ಸತ್ತ್.
ReplyDeleteನೀವೇ ಹೇಳಿದಂತೆ ಆಟದ ಅಂಗಳ ಬದಲಾಗಿದೆ ಹಾಗೆಯೇ ಆ ಅಂಗಳದಲ್ಲಿ ಮಾತಿನ ಮೋಡಿಯಿಂದ ನಮಗೆ ಹತ್ತಿರವಾದ್ರಿ ಇಗ ಈ ಅಂಗಳದಲ್ಲೂ ನಿಮ್ಮ ಬರವಣಿಗೆಯ ಮೂಲಕ ಸದ್ದು ಮಾಡುತ್ತಿರಿ ಅನ್ನುವ ಆಶಯ ನನ್ನದು.
ನನ್ನ ಎಲ್ಲ ಕೇಳುಗ ಬಂಧುಗಳಿಗೂ...ಓದಿ ಸ್ಪಂದಿಸಿದ ಸಮಸ್ತರಿಗೂ ಹೃತ್ಪೂರ್ವಕ ಕೃತಜ್ಞತೆಗಳು.
ReplyDeleteಶುದ್ಧ ಕನ್ನಡ ಭಾಷೆ, ಸ್ಪಷ್ಟ ಉಚ್ಛಾರಣೆ, ಅಮೋಘ ಭಾಷಾ ಪಾಂಡಿತ್ಯ, ಸಾಹಿತ್ಯ, ಸಂಗೀತ, ಕಲೆಗಳ ಅಪಾರ ಜ್ಞಾನ, ಕರ್ತ್ಯವ್ಯದಲ್ಲಿ ತನ್ಮಯತೆ, ಮಿಗಿಲಾಗಿ ಒಂದು ಉತ್ತಮ ಸಂಸ್ಕಾರದ ಹಿನ್ನೆಲೆಯಿಂದ ರೂಪುಗೊಂಡ ನಿಮ್ಮ ನುಡಿ, ಸ್ವರಗಳನ್ನು ಆಕಾಶವಾಣಿಯಲ್ಲಿ ಕಳೆದ ನಾಲ್ಕು ದಶಕಗಳಿಗೂ ಮಿಗಿಲಾಗಿ ಕೇಳುತ್ತಾ ಆಸ್ವಾದಿಸಿ ಆನಂದಿಸಿದ ನನಗೆ ನಿಮ್ಮ ಸ್ವರ ಕೇಳುವುದರಲ್ಲಿಯೇ ಏನೋ ಒಂದು ಮುದವಿತ್ತು. ನಿವೃತ್ತಿ ನಿಮಗೆ ಹೊಸಸುಖ(?) ನೀಡಿದ್ದರೂ ನನ್ನಂತಹ ಅನೇಕ ಬಾನುಲಿ ಕೇಳುಗರಿಗೆ ಈ ವಿದಾಯ ಅಸಹನೀಯ ಎಂದರೆ ಉತ್ಪ್ರೇಕ್ಷೆಯಾಗದು. ನಿಮ್ಮ ಗೈರುಹಾಜರಿಯಿಂದಾಗಿ ಮಂಗಳೂರು ಆಕಾಶವಾಣಿಯ ಚೈತನ್ಯ ಕುಂದದಿರಲಿ.
ReplyDeleteಬಾನುಲಿ ಕಾರ್ಯಕ್ರಮ ನಿರೂಪಣೆಯಲ್ಲಿ ನಿಮ್ಮ ವೈಯಕ್ತಿಕ ನೋವು-ನಲಿವುಗಳನ್ನು ನಿಮ್ಮ ಸ್ವರದಲ್ಲಿ ಎಲ್ಲೂ ಎಂದೂ ತೋರ್ಪಡಿಸದೆ ಕರ್ತವ್ಯ ಪ್ರಜ್ಞೆ ಮೆರೆದಿರುವಿರಿ. ಸಹೃದಯಿ ಅಭಿಮಾನಿಗಳ ಹೃದಯದಲ್ಲಿ 'ಸ್ವರ ಸರಸ್ವತಿ' ಯಾಗಿ ನೆಲೆ ನಿಂತಿರುವಿರಿ. ಇಂತಹ ಸಂಸ್ಕಾರವನ್ನು ನೀಡಿದ ನಿಮ್ಮ ಹಿರಿಯರೆಲ್ಲರಿಗೂ ನನ್ನ ನಮನಗಳು.
ನಿಮ್ಮ ಮುಂದಿನ ಜೀವನವನ್ನು ಪರಮಾತ್ಮನು ಹರಸಿ, ಮನೆ ಮನವನ್ನು ಬೆಳಗಿಸಿ ಜೀವನ ಸಾರ್ಥಕ್ಯವನ್ನು ಕರುಣಿಸಲಿ.
ನಿಮ್ಮಂತಹ ಸಜ್ಜನರ ಆಶೀರ್ವಾದವೇ ನನಗೆ ಶ್ರೀರಕ್ಷೆ.
Delete