Saturday, November 4, 2017

ಕಾಡುವ ರೋಗಿಗಳು, ವೈದ್ಯರು ಮತ್ತು ಕಾಡಿನ ನ್ಯಾಯದ ಪ್ರತೀಕವೆನಿಸುತ್ತಿರುವ ಸರಕಾರಗಳು.


ನಮ್ಮ  ಕರ್ನಾಟಕವು ಕಲೆ, ಸಾಹಿತ್ಯ, ಸಂಸ್ಕೃತಿ, ಸಜ್ಜನಿಕೆ, ಶಿಕ್ಷಣದ ಮಜಲಿನಲ್ಲಿ ವಿಶ್ವದಲ್ಲೇ ಪ್ರಸಿದ್ಧಿ ಪಡೆದಿದ್ದ ರಾಜ್ಯ. ಆದರೆ ಈ ನವೆಂಬರ ೩ ರಂದು - ಅಂತಹ ಭವ್ಯ ಪರಂಪರೆಗೆ ಮಸಿ ಬಳಿದ ದಿನವಾಗಿ ದಾಖಲಾಗುವಂತಾಯಿತು. ಸರ್ವಜ್ಞನ ಕಾಲದ ಮೇಟಿ ವಿದ್ಯೆಗೂ ಇವತ್ತಿನ ಮೇಟಿ ವಿದ್ಯೆಗೂ ಅರ್ಥಾತ್ ಸಂಬಂಧವಿಲ್ಲ ಎಂಬುದನ್ನು ಪ್ರದರ್ಶಿಸಲು ಕಾರಣವಾದದ್ದು - ಇಂದಿನ ಕರ್ನಾಟಕ ಸರಕಾರವು ತರಾತುರಿಯಿಂದ ಜ್ಯಾರಿಗೆ ತರಲು ಮುಂದಾಗಿದ್ದ KPME(A) - (ಖಾಸಗಿ ಆಸ್ಪತ್ರೆಗಳ ನಿಯಂತ್ರಣ ತಿದ್ದುಪಡಿ) ಕಾಯಿದೆಯ - ನಡೆ.


"ಜನೋಪಕಾರಿ" ಎಂದು ಸರಕಾರವು ಬಣ್ಣಿಸುತ್ತಿರುವ ಈ ಕಾಯಿದೆಯು ಏನು ಹೇಳುತ್ತದೆ ?

೧. ವೈದ್ಯರ ಫೀಸನ್ನು ನಿರ್ಧರಿಸುವುದು ಸರಕಾರ. ಈಗ ಮುಂದಿಡಲಾದ ವೈದ್ಯರ Consultation ಶುಲ್ಕ...  ತಾಲೂಕು ಮಟ್ಟದಲ್ಲಿ - ೫೦, ಜಿಲ್ಲಾ ಮಟ್ಟದಲ್ಲಿ - ೧೦೦, ಮೆಟ್ರೋ ನಗರಗಳಲ್ಲಿ - ೧೫೦. ಶಸ್ತ್ರ ಚಿಕಿತ್ಸೆಯ ದರವನ್ನೂ ಸರಕಾರವೇ ನಿರ್ಧರಿಸಿ, ಹೇರಲಾಗುತ್ತದೆ. ಉದಾ: Appendectomy ನಡೆಸಿದರೆ - ತಾಲೂಕು ಮಟ್ಟದ ವೈದ್ಯರಿಗೆ ಕೇವಲ ೯೦೦ ರೂಪಾಯಿ ನೀಡಬೇಕಂತೆ. (ಶರಿ ಸರ್.)

೨. ಅಕಸ್ಮಾತ್, "ವೈದ್ಯರು ೯೦೦ ರೂ.ಗಿಂತ ಹೆಚ್ಚು ಪಡೆದುಕೊಂಡಿದ್ದಾರೆ" ಎಂದು ಯಾವುದೇ ಒಬ್ಬ ರೋಗಿಯು ದೂರು ನೀಡಿದರೆ, ಅಥವ - ವೈದ್ಯರು ತನ್ನೊಂದಿಗೆ ಯುಕ್ತ ರೀತಿಯಲ್ಲಿ (properly) ಮಾತನಾಡಿಲ್ಲ ಎಂಬ ದೂರು ಸಲ್ಲಿಸಿದರೆ - ಅಂತಹ "ಅಪರಾಧಿ ವೈದ್ಯರಿಗೆ" ೫ ವರ್ಷ ಜೈಲು ಶಿಕ್ಷೆ ಮತ್ತು ೫ ಲಕ್ಷ ದಂಡ ವಿಧಿಸಲಾಗುವುದು.
(ಕಾನೂನಿನ ದುರುಪಯೋಗದಲ್ಲಿ ತಮ್ಮ ತಮ್ಮ ಮತದಾರ ಬಂಧುಗಳನ್ನು ಈಗಾಗಲೇ ಪಳಗಿಸಿಬಿಟ್ಟಿರುವ ನಮ್ಮ "ಕಾನೂನು ನಿರ್ಮಾತೃ ದೊಣ್ಣೆನಾಯಕರು" - ಈ ಕಾನೂನು ಜ್ಯಾರಿಯಾದರೆ.. ಏನೇನೆಲ್ಲ ಮಾಡಿಸಬಹುದು ಎಂಬುದನ್ನು -  ಪ್ರಜ್ಞಾವಂತರಾದ ನಾಗರಿಕರಿಗೆ ಹೇಳುವ ಅಗತ್ಯವಿಲ್ಲ. ಸಣ್ಣ ಪುಟ್ಟ ಕಾರಣಗಳು ಇಲ್ಲದಿರುವಾಗಲೂ - ಬಿಟ್ಟಿ ಸೇವೆ ಪಡೆಯುವ ದುರುದ್ದೇಶದಿಂದಲೇ - ವೈದ್ಯರನ್ನು "Blackmail" ಮಾಡುವ ಧಂದೆಯನ್ನೇ ನಡೆಸುವ ಹೊಸ ರಾಕ್ಷಸೀ ಕೇಂದ್ರಗಳು ಸಮಾಜದಲ್ಲಿ ಅಟ್ಟಹಾಸಗೈಯ್ಯಲು ತೊಡಗಬಹುದು.)
ಇಷ್ಟೇ ಅಲ್ಲ...
ಅಪರಾಧೀ ಸ್ಥಾನಕ್ಕೆ ತಳ್ಳಲ್ಪಡುವ ಯಾವುದೇ ವೈದ್ಯನಿಗೆ ತನ್ನ ವಾದವನ್ನು ಮಂಡಿಸಲು ಯಾವುದೇ ವಕೀಲರ ನೆರವನ್ನು ನಿರಾಕರಿಸಲಾಗುತ್ತದೆ; ವೈದ್ಯರು ಏಕಾಂಗಿಯಾಗಿ ಕ್ರೂರ ವಿಚಾರಣೆಯನ್ನು ಎದುರಿಸಿ, ತಮ್ಮ ಅಹವಾಲನ್ನು ತಾವೇ ಮಂಡಿಸಬೇಕಾಗುತ್ತದೆ.

೩. ವೈದ್ಯರ ಮೇಲ್ವಿಚಾರಣೆಗೆ ೫ ಸದಸ್ಯರ ಒಂದು ಕಮಿಟಿಯನ್ನು ಸ್ಥಾಪಿಸುತ್ತಾರಂತೆ. ಅದರಲ್ಲಿ ಅವಿದ್ಯಾವಂತನೂ ಆಗಿರಬಹುದಾದ - ಜಿಲ್ಲಾ ಪಂಚಾಯತ್ ನ ಅಧ್ಯಕ್ಷ, ಜಿಲ್ಲಾ ಆರೋಗ್ಯ ಅಧಿಕಾರಿ (DHO), ಜಿಲ್ಲಾ ದಂಡಾಧಿಕಾರಿ (DC) ಹಾಗೂ ಒಬ್ಬ ಆಯುರ್ವೇದ ವೈದ್ಯರು ಒಳಗೊಂಡಿರುತ್ತಾರಂತೆ. ಈ ೫ ಮಂದಿ ಸೇರಿಕೊಂಡು ಖಾಸಗಿ ವೈದ್ಯರಿಗೆ - ಸರಕಾರೀ ಮದ್ದು ಅರೆಯುತ್ತಾರಂತೆ ! ಈ ಯಾವುದೇ ಮಹಾನುಭಾವರು (ತಮಗೆ ಆರ್ಥಿಕ ಸಂಕಟ ಒದಗಿದಾಗೆಲ್ಲ) ಯಾವುದೇ ಖಾಸಗಿ ವೈದ್ಯರ ಆಸ್ಪತ್ರೆಗೆ ಹೋಗಿ, ಅವರವರಿಗೆ ಖುಶಿ ಕಂಡಂತೆ ಯಾವುದೇ ದಾಖಲೆ ಪತ್ರಗಳನ್ನು ಕೇಳಬಹುದು; ಓದಬಹುದು; ಧಮಕಿ ಹಾಕಬಹುದು ! ಯಾವುದೇ ಕೋರ್ಟಿನಲ್ಲೂ ಈ ಬಗೆಯ ಸರ್ವಾಧಿಕಾರವನ್ನು ವೈದ್ಯರು ಪ್ರಶ್ನಿಸುವ ಅಧಿಕಾರ - ಬಹುಶಃ - ಹೇಗೂ ಇರುವುದಿಲ್ಲ !.

೪. ಇವತ್ತಿನ RTI activists ಎಂಬ ಹೆಸರಿನಲ್ಲಿ ಅದನ್ನೇ ತಮ್ಮ ಜೀವನೋಪಾಯ ಮಾಡಿಕೊಂಡಿರುವ ಕೆಲವು ಮಂದಿಯಂತೆ, ..ಈ KPMEA act ಗೆ ಒಪ್ಪಿಗೆ ದೊರೆತರೆ ಇನ್ನೊಂದಷ್ಟು "ಬಿಲ್ವಿದ್ಯಾ ಪರಿಣತರು" ಉದ್ಯೋಗ ಸಂಪಾದಿಸುವಂತಾಗಬಹುದು. ನಮ್ಮ ಸರಕಾರಗಳು ಉದ್ಯೋಗ ಸೃಷ್ಟಿಸುವ ರೀತಿ ಇದು ! ಪ್ರತೀ ಆಸ್ಪತ್ರೆಯಲ್ಲೂ ಹೀಗೆ "ಮೇಯಲು ಬರುವವರನ್ನು" ಮೇಯಿಸುವುದಕ್ಕೆಂದೇ ಒಂದು ವಿಭಾಗವನ್ನು ತೆರೆಯಬೇಕಾಗಬಹುದು.

೫. ಯಾವುದೇ "ಸರಕಾರೀ ಕಿರಿಕಿರಿ" ಇಲ್ಲದೆ ವೈದ್ಯ ವೃತ್ತಿ ನಡೆಸಬೇಕಾದರೆ - ತಿಂಗಳು ತಿಂಗಳು - "ಹಫ಼್ತಾ" ಸಲ್ಲಿಸುವ ಸಂಪ್ರದಾಯವನ್ನು ಬೆಳೆಸಿಕೊಳ್ಳಲೇಬೇಕಾಗುತ್ತದೆ. ತತ್ಪರಿಣಾಮವಾಗಿ, ಅಡ್ಡದಾರಿಯಿಂದ ಹಣದೋಚುವ ಕ್ರಿಯೆಯನ್ನು ನಡೆಸುತ್ತಿದ್ದಾರೆಂದು ಹೇಳಲಾಗುವ ವೈದ್ಯ ಮಹಾಶಯರುಗಳ ವ್ಯವಹಾರಗಳನ್ನೆಲ್ಲ ಶಾಸನಬದ್ಧಗೊಳಿಸಿದಂತಾಗಬಹುದು - ಅಷ್ಟೆ. ಔಷಧದ ಮಳಿಗೆಯನ್ನು (Pharma) ಈಗಾಗಲೇ ಈ ಚಾಳಿಗೆ ಒಗ್ಗಿಸಿದಂತೆಯೇ, ವೈದ್ಯವಲಯಕ್ಕೂ ಶಾಸನದ ಬಡಿಗೆ ತೋರಿಸಿ, ಹಫ಼್ತಾರಾಧನೆಗೆ ವಿಶೇಷ ಪಡೆಯನ್ನು ಸಿದ್ಧಪಡಿಸುತ್ತಿರುವ ಸರಕಾರೀ ಅಟ್ಟಹಾಸದಂತೆಯೂ - ಈ ಸರಕಾರೀ ಘೋಷವು ಕೇಳಿಸಿದಂತಾಗುತ್ತಿದೆ.

ಆದರೆ... ಬಹುಪಾಲು ವಿಕಲ ಚೇತನ ಸ್ಥಿತಿಯಲ್ಲಿರುವ ಸರಕಾರೀ ಆಸ್ಪತ್ರೆಗಳು ಈ ಕಾಯಿದೆಯ ಅಡಿಯಲ್ಲಿ ಬರುವುದಿಲ್ಲವಂತೆ !

ತನ್ಮಧ್ಯೆ, ಪ್ರತಿಯೊಬ್ಬ ಪ್ರಜೆಗೂ "Universal Health Card" ತರುತ್ತಾರಂತೆ. ಇದು - ರೋಗಿಯೊಬ್ಬ ಅತ್ತೆ ಮನೆಗೆ ಅಳಿಯ ಬಂದಂತೆ ಯಾವುದೇ ಆಸ್ಪತ್ರೆಗಳಿಗೆ ಬಂದು, ಚಿಕಿತ್ಸೆಯ ಉಪಚಾರ ಪಡೆದುಕೊಂಡು ಹೋಗುವ ಕ್ರಮವಂತೆ ! ಸರಕಾರವೇ ಅಂತಹ ರೋಗಿಗಳ ವೆಚ್ಚವನ್ನು ಅನಂತರ (?) ಆಸ್ಪತ್ರೆಗಳಿಗೆ ಪಾವತಿಸುವುದಂತೆ. ಆಸ್ಪತ್ರೆಗಳಿಗೆ ಇಂತಹ "ಸರಕಾರೀ ಬಾಕಿಗಳು" ಬಂದು ತಲುಪುವಾಗ ವರ್ಷಗಳು ಕಳೆಯುವುದೂ ಇದೆಯಂತೆ ! ಸಣ್ಣ ಸಣ್ಣ ಆಸ್ಪತ್ರೆಗಳು ಬದುಕುವುದಾದರೂ ಹೇಗೆ ? ಎಂದು ಅಲವತ್ತುಕೊಳ್ಳುವ ವೈದ್ಯರೂ ಇದ್ದಾರೆ. ಹೀಗೆ ಎಲ್ಲರೂ ಬಂದು ಹೋಗುವ ಅತಿಥಿಗಳಾದರೆ, ತಮ್ಮ ಆಸ್ಪತ್ರೆ ಸಿಬ್ಬಂದಿಗಳ ಸಂಬಳ, ಮೇಲ್ಖರ್ಚುಗಳನ್ನೆಲ್ಲ ನಿಭಾಯಿಸುವುದಾದರೂ ಹೇಗೆ ? ಎಂಬ ಚಿಂತೆಯು ಯಾವುದೇ ವೈದ್ಯರನ್ನು ಕಾಡಿದರೆ ಅದರಲ್ಲಿ ಆಶ್ಚರ್ಯ ಪಡಬೇಕಾದ ಕಾರಣವು ಕಾಣುವುದಿಲ್ಲ. ತನಗೆ ಸಂಬಂಧವಿಲ್ಲದ ಅಥವ ತಕ್ಷಣ ಗಮನ ಹರಿಸಬೇಕಾದ ಉಳಿದೆಲ್ಲ ಕೆಲಸಗಳನ್ನು ಬದಿಗೊತ್ತಿ, ಇಂತಹ ಗೋಷ್ಬಾರಿ ವ್ಯವಹಾರಗಳನ್ನು ಯಾವುದೇ ಸರಕಾರ ಯಾಕೆ ನಡೆಸಬೇಕು ? ತಮ್ಮಿಂದ  ಆಸ್ಪತ್ರೆಗಳಿಗೆ ಸಲ್ಲಬೇಕಾದ ಹಣವನ್ನು ತಕ್ಷಣ Digital Transfer ಮಾಡಬಾರದೇಕೆ ? ಈ ಸರಕಾರೀ ಬಾಬುಗಳು ಕೊಡಬೇಕಾದ ಹಣವನ್ನು ಬಾಕಿಯಿರಿಸಿಕೊಂಡು, ಮೀನಮೇಷ ನೋಡುತ್ತಿದ್ದರೆ... ಈ ಬಿಲ್ಲ್ ಗಳನ್ನೆಲ್ಲ ಮಂಜೂರು ಮಾಡಿಸಿಕೊಳ್ಳಲು, ಅಕಸ್ಮಾತ್, Suitcase ಹಿಡಿದುಕೊಂಡು ಓಡಾಡಬೇಕಾದೀತೆ ? (Development, ಸಾಮಾಜಿಕ ನ್ಯಾಯ ಮುಂತಾದ ಹೆಸರಿನಲ್ಲಿ ಇತ್ತೀಚೆಗೆ ದಿನನಿತ್ಯವೂ ಸೃಷ್ಟಿಸಲ್ಪಡುತ್ತಿರುವ ಇಂತಹ "ಮಾಯಾ ಜಿಂಕೆ"ಗಳನ್ನು, ಅವುಗಳ ಮಾಯಕಗಳನ್ನು ಒಪ್ಪಿ ಸ್ವೀಕರಿಸುವಂತೆ ಪ್ರಜೆಗಳನ್ನು ರೂಪಿಸುತ್ತಿರುವುದರಿಂದಾಗಿ, ಎಲ್ಲಬಗೆಯ ಅಪರಾತಪರಾಗಳೂ "ಪ್ರಜಾಭಾಗ್ಯ" ಆಗಿ ಹೋಗುವಂತಾಗಿರುವುದರಿಂದ - ವಿಶ್ವಾಸ ಭಾಗ್ಯವೇ ಕ್ಷೀಣಿಸುವಂತಾಗಿದೆ ! ) ಅಕಸ್ಮಾತ್, ದೊಡ್ಡ ಆಸ್ಪತ್ರೆಗಳು ಇಂತಹ ಬೆನ್ನುಬೀಳುವ ಓಡಾಟಗಳನ್ನು ಹೇಗೋ ನಿಭಾಯಿಸಿದರೂ... ಸಣ್ಣ ಕ್ಲಿನಿಕ್ ಗಳನ್ನಿಟ್ಟುಕೊಂಡವರೇ ಈ ಕಾಯ್ದೆಯ ಬಲಿಪಶುವಾಗುವ ಸಾಧ್ಯತೆಯೂ ಹೆಚ್ಚು.

ಈ ಸರಕಾರಗಳಿಗೆ ಸಮಾಜದ ಯಾವುದೇ ವ್ಯವಸ್ಥೆಗಳು ಪೂರ್ತಿ ಸುವ್ಯವಸ್ಥಿತವಾಗಿಬಿಟ್ಟರೆ... ಏನೇನೂ ಸಮಾಧಾನವಿಲ್ಲ ಅನ್ನಿಸುವುದಿಲ್ಲವೇ ? ಸರಕಾರಗಳಿಗೆ ನಿಜವಾಗಿಯೂ ಜನಪರ ಕಾಳಜಿ ಇದ್ದರೆ - ಅನೇಕ ಮಾರ್ಗಗಳೂ ಇದ್ದೇ ಇರುತ್ತವೆ. ಸರಕಾರೀ ಆಸ್ಪತ್ರೆಗಳನ್ನು ಖಾಸಗಿಯವರ ಆಸ್ಪತ್ರೆಗಳಿಗಿಂತ - ಎಲ್ಲ ವಿಭಾಗಗಳಲ್ಲೂ ಉತ್ತಮಗೊಳಿಸಿ, ತದನಂತರ ಹುಟ್ಟುಹಾಕುವ ಆರೋಗ್ಯಕರ ಸ್ಪರ್ಧೆಯ ಮೂಲಕವೇ ವ್ಯವಸ್ಥೆಯನ್ನು ಸರಿಪಡಿಸುವುದನ್ನು ಬಿಟ್ಟು, ಅರೆಬೆಂದ "ಬಿಲ್ವಿದ್ಯೆ" ಪ್ರದರ್ಶಿಸಲು ಹೊರಟದ್ದು - ಶಿಷ್ಟತೆ ಅನ್ನಿಸದು. ಜನರ ತೆರಿಗೆ ದುಡ್ಡನ್ನು ತಮ್ಮ ವೋಟ್ ಬ್ಯಾಂಕ್ ರಾಜಕೀಯದ ತೆವಲಿನಲ್ಲಿ - ಪುಕ್ಕಟೆ ಜನಪ್ರಿಯತೆಗಾಗಿ ದುರುಪಯೋಗ ಪಡಿಸುತ್ತಿರುವುದರ ಉತ್ತಮ ಮಾದರಿ ಇದು. ಬಿಟ್ಟಿ ತಿನ್ನುವ "Subsidy ಜನಾಂಗ"ವನ್ನು ರೂಪಿಸುತ್ತಿರುವ ಬುದ್ಧಿಗೇಡಿಗಳನ್ನು ಶಾಸಕರನ್ನಾಗಿ ಆಯ್ಕೆಮಾಡಿ ಕಳಿಸಿರುವ ಬುದ್ಧಿಗೇಡಿ ಪ್ರಜೆಗಳು ಇದಕ್ಕಿಂತ ಹೆಚ್ಚೇನನ್ನೂ ಪಡೆಯುವ ಅರ್ಹತೆ ಹೊಂದಿರಲಾರರು - ಎಂಬುದೂ ವಾಸ್ತವ.

ಸರಕಾರೀ ಸೇವೆಗೆ ವೈದ್ಯರನ್ನು ಆಕರ್ಷಿಸುವಂತಹ ವಾತಾವರಣವನ್ನು ಸರಕಾರೀ ಆಸ್ಪತ್ರೆಗಳ ವಲಯದಲ್ಲಿ - ಗುಣಮಟ್ಟವನ್ನು ಎತ್ತರಿಸುವುದರ ಮೂಲಕವೇ ಯಾಕೆ ಮೂಡಿಸಬಾರದು ? ಗುಲಾಮರಂತೆ ನಡೆಸಿಕೊಳ್ಳುವ ಸರಕಾರೀ ಸಂಸ್ಕೃತಿಗೆ ಹೇಸಿಕೊಂಡೇ ಅನೇಕ ವೈದ್ಯರು ಸರಕಾರಗಳತ್ತ ಸುಳಿಯುತ್ತಿಲ್ಲ ಎಂಬುದು - ಈ ಭಂಡರಿಗೆ ಅರ್ಥವಾಗದೇ ಏನಲ್ಲ. ಇನ್ನು, ಏನೂ ದಿಕ್ಕಿಲ್ಲದವರನ್ನು ಅಥವ ಅನಿವಾರ್ಯತೆಯ ಸಂದರ್ಭವನ್ನು ಬಿಟ್ಟು, ಉಳಿದಂತೆ - ಅನೇಕ ದಿನಗೂಲಿ ವರ್ಗದವರೂ - ತಮಗೆ ಕಷ್ಟವಾದರೂ ಖಾಸಗಿ ಆಸ್ಪತ್ರೆಗಳಿಗೇ ಏಕೆ ಹೋಗುತ್ತಿದ್ದಾರೆ ? ಏಕೆಂದರೆ - ಬದುಕುವ ಆಸೆ. ಸರಕಾರೀ ಆಸ್ಪತ್ರೆಗಳ ಸ್ಥಿತಿಗತಿ ಹೇಗಿರಬಹುದೆಂಬುದಕ್ಕೆ ಇದೇ ಜೀವಂತ ನಿದರ್ಶನ. ತನ್ನ ಮೂಗಿನ ಸಿಂಬಳ ತೆಗೆಯಲು ಬಾರದವರು ಊರಿನವರ ಸಿಂಬಳವನ್ನು ಒರೆಸಲು ಹೋದರೆ - ಅದು - ಅಧಿಕಪ್ರಸಂಗ ಎನ್ನಿಸುತ್ತದೆ. ಅದಕ್ಕೆ ಉದಾಹರಣೆಯೇ ಈಗ ತರಲು ಹೊರಟಿರುವ KPME(A) - ಕಾನೂನು. ಶತಾಯಗತಾಯ - ತಮ್ಮ ಅಧಿಕಾರಬಲದಿಂದಾದರೂ ವೈದ್ಯರನ್ನು "ಕ್ರಿಮಿನಲ್ ಗಳಂತೆ" ಬಿಂಬಿಸಿ, ತಮ್ಮ ಕೊಳಕು ಸಾಮ್ರಾಜ್ಯದ ಗುಲಾಮರನ್ನಾಗಿಸುತ್ತೇವೆ ಎಂದು ಪಣತೊಟ್ಟಂತೆ - ಆಳುವ ವರ್ಗವು ಹೀಗೇ ವ್ಯವಹರಿಸುತ್ತ ಹೋದರೆ - ಅದು "ಹಿಟ್ಲರ್ ರಾಜ್ಯ" ಆಗುತ್ತದೆ.

ಐಶಾರಾಮಿ ವೈದ್ಯಕೀಯ ಕಾಲೇಜುಗಳನ್ನು ನಡೆಸುತ್ತ, ಡೊನೇಶನ್ ರೂಪದಲ್ಲಿ ವಿದ್ಯಾರ್ಥಿಗಳನ್ನು ಸಾಲಗಾರರನ್ನಾಗಿಸುತ್ತ, ಪ್ರತಿಭಾವಂತ ವಿದ್ಯಾರ್ಥಿಗಳ ಕುಟುಂಬಗಳನ್ನು ಭಿಕಾರಿಗಳಾಗಿಸುತ್ತಿರುವ ರಾಜಕೀಯ ಧುರೀಣರು - ತಮ್ಮ ಸ್ವಂತ ಕಮಾಯಿಯ ಕಾಲೇಜುಗಳಲ್ಲಿ - ಪ್ರತಿಭಾವಂತರಾದ ವಿದ್ಯಾರ್ಥಿಗಳಿಗೆಲ್ಲರಿಗೂ ಉಚಿತವಾಗಿ ಓದಲು ಯಾಕೆ ಅನುವು ಮಾಡಿಕೊಡಬಾರದು ? ಬದಲಾವಣೆ ಆಗುವುದಿದ್ದರೆ - ಇಲ್ಲಿಂದಲೇ - ಅವರಿಂದಲೇ - ಹೀಗೆ ಶುರುವಾಗಲಿ. ಈಗ ತರಬೇಕೆಂದು ಹೊರಟ ಕಾಯಿದೆಯ ಅನುಸಾರವೇ ವೈದ್ಯರು ತಮ್ಮ ಶುಲ್ಕವನ್ನು ಪಡೆಯುತ್ತ ಹೋಗಬೇಕಾದ ಸ್ಥಿತಿಯೊಂದು ಒದಗಿದರೆ, ಇಡೀ ಜೀವನಪರ್ಯಂತ - ವೈದ್ಯರೆಂಬವರು ತಮ್ಮ ಸ್ವಂತ ಬದುಕನ್ನು ನಿಭಾಯಿಸುವುದನ್ನು ಬಿಡಿ; ವಿದ್ಯಾಭ್ಯಾಸಕ್ಕೆಂದು ಅವರು ವ್ಯಯಿಸಿದ ಹಣವನ್ನು ಕೂಡ - ಮರಳಿ ಗಳಿಸಿಕೊಳ್ಳುವುದು ಅಸಾಧ್ಯವಾಗಬಹುದು ! ಸರಕಾರೀ ವೈದ್ಯರು, ಶಾಸಕರು, ಸಂಸದರಿಗೆ ಈಗ ಒದಗಿಸುತ್ತಿರುವ... ತತ್ಕಾಲೀನ ಆರ್ಥಿಕ ಸೌಲಭ್ಯಗಳಿಂದ ಹಿಡಿದು, ಪೆನ್ಶನ್ ನ ವರೆಗಿನ ಎಲ್ಲ ಸೌಲಭ್ಯಗಳನ್ನು ಖಾಸಗಿ ವೈದ್ಯರಿಗೂ ಒದಗಿಸುತ್ತಾರಂತೇನು ? ಯಾವುದೇ ಹಕ್ಕು ಚಲಾಯಿಸುವವರು - ಮೊತ್ತಮೊದಲು ತಮ್ಮ ಕರ್ತವ್ಯಗಳನ್ನು ನಿಭಾಯಿಸಿರಬೇಕಾಗುತ್ತದೆ ಅಲ್ಲವೇ ?

ಯಾವುದೇ ಬಗೆಯಲ್ಲಿ ಸಾಬೀತಾಗುವ - ಬೇಜವಾಬ್ದಾರಿಯ ವೈದ್ಯವರ್ತನೆಗಳಿಗೆ - ಈಗಾಗಲೇ ಇರುವ ಅಪರಾಧ ದಂಡಸಂಹಿತೆಯ ಅಡಿಯಲ್ಲಿ ಬರುವಂತಹ ಸಾಮಾನ್ಯ ಶಿಕ್ಷೆಯ ಪರಿಧಿಯಲ್ಲಿ ಎಲ್ಲ ವೈದ್ಯರೂ ಬರುತ್ತಾರೆ; ಸಾಬೀತಾಗುವ ಅಪರಾಧಗಳಿಗೆ ಎಲ್ಲ ವೈದ್ಯರೂ ಬಾಧ್ಯರು ಮತ್ತು ಅದರಲ್ಲಿ ಯಾವುದೇ ವಿನಾಯಿತಿಯ ಅಗತ್ಯವೂ ಇರಬಾರದು. ಆದರೆ, ಜೊತೆಜೊತೆಗೆ, ... ಯಾವುದೇ ನಾಗರಿಕ ಸಮಾಜದಲ್ಲಿ ಸಜ್ಜನಿಕೆಯೂ ಸಂಚರಿಸುತ್ತಿರುವಂತಿರಬೇಕು. ಅಲ್ಲವೆ ?  ಮನೋಪೀಡೆಗಳನ್ನು ಕೊಡುವ ಮನುಷ್ಯ ವರ್ಗಗಳಿಂದ ಹಿಡಿದು ಸಮಾಜದ ಎಲ್ಲರೂ - "ಕೇವಲ ದೇಹವಾಗುವ ಹಂತದಲ್ಲಿ" ಅಂತಹ ಧರಾಶಾಯಿಯಾಗುವ ದೇಹಗಳನ್ನು ಎದ್ದು ನಿಲ್ಲುವಂತೆ ಮಾಡುತ್ತ ಬಂದಿರುವ, ಈಗಲೂ ಮಾಡುತ್ತಿರುವ ವೈದ್ಯವರ್ಗವನ್ನು - ಕೇವಲ ಬೆರಳೆಣಿಕೆಯ ಘಟನೆಗಳನ್ನು ಆಧರಿಸಿ, ಉದ್ಧಟತನದಿಂದ ನಿಭಾಯಿಸಲು ಹೊರಟಿರುವುದು ಸಮಂಜಸವೇ ? ಸರಕಾರಗಳಿಗೂ ನೈತಿಕ ಬದ್ಧತೆಗಳಿಲ್ಲವೆ ? ಸರಕಾರ ನಡೆಸುವುದೆಂದರೆ - ಸ್ವೇಚ್ಛಾಚಾರವೆ ? ಯೋಚಿಸಬೇಕು. ಸುವ್ಯವಸ್ಥಿತಗೊಳಿಸುವುದು ಅಂದರೆ - "ಒಂದು ಕಡೆಯ ಅವ್ಯವಸ್ಥೆಯನ್ನು ಇನ್ನೊಂದು ಕಡೆಗೆ ವರ್ಗಾಯಿಸುವುದು" ಎಂಬ ಅರ್ಥವೇ ? "ವಿವಿಧ ಅವ್ಯವಸ್ಥೆಗಳಲ್ಲಿ ಏಕತೆಯನ್ನು " ತರಲು ಹೊರಟಂತೆ ಕಾಣುವುದಿಲ್ಲವೆ ? ಆದ್ದರಿಂದಲೇ ಇಂದಿನ ವ್ಯವಹಾರಗಳು - ಹೊಳೆಯಪ್ಪನಿಗೆ ದೊಣ್ಣೆಯಪ್ಪನ ಆಜ್ಞೆ ಯಂತೆ ಕಾಣುತ್ತಿದೆ !

ಸರಕಾರದ ಮೂಗಿನ ಅಡಿಯಲ್ಲಿಯೇ ನಾಯಿಕೊಡೆಗಳಂತೆ ಹುಟ್ಟಿಕೊಂಡಿರುವ ಹಲವಾರು ಲೂಟಿಕೋರ ಕಾಲೇಜುಗಳ ಸಾಮ್ರಾಜ್ಯಗಳನ್ನು ಸರಕಾರಕ್ಕೆ ನಿಯಂತ್ರಿಸಲು ಏಕೆ ಸಾಧ್ಯವಾಗುವುದೇ ಇಲ್ಲ ? ಇದರಿಂದಾಗಿ, ಬಹುಶಃ ಒಳ ಒಳ ವ್ಯವಹಾರದಲ್ಲಿ ಎಲ್ಲೋ ಕಮಿಶನ್ ಸಂದಾಯವಾಗುತ್ತಿರಬಹುದು - ಅಂದುಕೊಳ್ಳುವಂತಾಗಿದೆ; ದರಿದ್ರ Party Fund ರೋಗ - ಇದ್ದರೂ ಇರಬಹುದು. "ಯಾವುದೇ ಮೆಡಿಕಲ್ ಕಾಲೇಜಿನ ತರಗತಿಯನ್ನು ಪ್ರವೇಶಿಸಬೇಕೆಂದಿದ್ದರೆ... ಲಕ್ಷ ಲಕ್ಷ  ಕಕ್ಕು.." ಎಂಬ ನೀತಿಯನ್ನು ಪ್ರಸನ್ನಚಿತ್ತರಾಗಿ ನೋಡುತ್ತ, ದುಡ್ಡು ಎಣಿಸುತ್ತ ಆನಂದಿಸುತ್ತಿರುವ ಸರಕಾರಗಳು - ಅಲ್ಲಿಂದ ಹೊರಬಂದ ವೈದ್ಯರುಗಳಿಂದ - "ಈಗ ನೀವು ಮಾತ್ರ ಚಿಲ್ಲರೆ ಪುಡಿಗಾಸಿಗೇ ತೃಪ್ತರಾಗಿಬಿಡಿ.." ಎಂಬ ನಿರೀಕ್ಷೆಯನ್ನು ಮಾಡುತ್ತಿರುವುದನ್ನು ನೋಡಿದರೆ - ನಮ್ಮ ಆಡಳಿತ ಸೂತ್ರವನ್ನು ಹಿಡಿದವರು ಎಂತಹ ಮೂಢರೆನ್ನುವುದು ಅರ್ಥವಾಗುತ್ತದೆ ! ಇವರಿಗೆಲ್ಲ - ರಾಜಕೀಯ ಶಾಸ್ತ್ರವೂ ಗೊತ್ತಿಲ್ಲ; ಅರ್ಥಶಾಸ್ತ್ರವೂ ಗೊತ್ತಿಲ್ಲ; ಗೊತ್ತಿರುವುದು ಕೇವಲ ಜನಮರಳು ಶಾಸ್ತ್ರ - ಅಂದುಕೊಳ್ಳುವಂತಾಗಿದೆ.

ಸ್ವಾಮೀ, ತಮ್ಮ ಯಾವುದೇ ವಿರಾಟ್ ಸಾಮರ್ಥ್ಯವನ್ನು - ಮೂಲದಲ್ಲಿ, ಶೈಕ್ಷಣಿಕ ಹಂತದಲ್ಲಿಯೇ ನೀವು ಪ್ರದರ್ಶಿಸಿಬಿಡಿ; ನಿಮ್ಮ ನ್ಯಾಯಪರತೆ, ಜನಪರ ಕಾಳಜಿಯ ಕೈಚಳಕಗಳನ್ನು ಅಲ್ಲೇ ತೋರಿಸಿ. ವೈದ್ಯಕೀಯ ಶಿಕ್ಷಣವು ಯಾವುದೇ ಪ್ರತಿಭಾವಂತರಿಗೆ ಹೊರೆ ಎನ್ನಿಸದಂತಹ ವಾತಾವರಣವನ್ನು - ಮೊದಲು ನಿರ್ಮಿಸಿ. ಇಷ್ಟನ್ನು ಮಾಡಿದ ಮೇಲೆ, ಯಾವುದೇ ಪುಳಕಯ್ಯಂದಿರುಗಳು ಊರಿನ ಶುದ್ಧೀಕರಣಕ್ಕೆ ಹೊರಟರೆ ಸಾಕಾಗುತ್ತದೆ. ಹೀಗಾದಾಗ - ಸಮರ್ಥ ವೈದ್ಯಪಡೆಯನ್ನು ತರಬೇತುಗೊಳಿಸಿ, ಸಮಾಜಕ್ಕೆ ಉಪಕರಿಸಿದಂತೆಯೂ ಆದೀತು; ಪ್ರತಿಭಾಪಲಾಯನವೂ ನಿಂತೀತು; ಆರೋಗ್ಯ ಕ್ಷೇತ್ರವು ಸುಭಿಕ್ಷವಾದೀತು. ಹೀಗಾದಾಗ ಮಾತ್ರ - ಊರಿಗೆ ಬುದ್ಧಿ ಹೇಳಲು ಹೊರಟವರಿಗೆಲ್ಲ ನೈತಿಕ ಅಧಿಕಾರವೂ ಬರುತ್ತದೆ; ಈಗ ರಾಜಕಾರಣಿಗಳ ಕುರಿತು ಕೆಲವರಲ್ಲಿರುವ ಮೂಢನಂಬಿಕೆಯು ತೊಲಗುವಂತಾಗಿ, ಜನರೂ ಅವರನ್ನು ನಂಬುವಂತಾಗಿ, ಪ್ರೀತಿಯಿಂದಲೇ - ಆಗ ಗೌರವಿಸತೊಡಗುತ್ತಾರೆ. ಆದರೆ... ಈಗಿರುವ ಕಲಕಿದ ಕಕಮಕ ಸ್ಥಿತಿಯಲ್ಲಿಯೇ ಅಧಿಕಪ್ರಸಂಗಕ್ಕೆ ಹೊರಟರೆ - ನನ್ನಂತಹ ಯಾರ್ಯಾರೋ ಹೇಳುವುದನ್ನೆಲ್ಲ ಕೇಳಿಸಿಕೊಳ್ಳಬೇಕಾಗುತ್ತದೆ. ಅಷ್ಟೆ.

"ನೀವು ಯಾವುದೇ ವಿಷಯ ಎತ್ತಿದರೂ ರಾಜಕಾರಣಿಗಳಿಗೇ ಯಾಕೆ ಗುರಿಯಿಡುತ್ತೀರಿ ?" ಎಂದು - ಅತೀ ಮುಗ್ಧರಂತೆ ನನ್ನನ್ನು ಪ್ರಶ್ನಿಸುವವರೂ ಇದ್ದಾರೆ. ನಾನು ಹೇಳುವುದಿಷ್ಟೆ. ಈ ರಾಜಕಾರಣಿಗಳ ಮುಂದಾಲೋಚನೆಯಿಲ್ಲದ ನೀತಿಯಿಂದಾಗಿ ಭಾರತದ ಶಿಕ್ಷಣ ಕ್ಷೇತ್ರವು ಸದ್ಯೋಭವಿಷ್ಯದಲ್ಲಿ ಸರಿಪಡಿಸಲಾಗದಷ್ಟು ಕುಲಗೆಟ್ಟು ಹೋಗಿದೆ. ಇದರಿಂದಾಗಿಯೇ ಹೃದಯಹೀನ ಸಂತಾನವು ಈಗ ಬೆಳೆದು ನಿಲ್ಲುವಂತಾಗಿದೆ. ಇಂದಿನ ಹಲವಾರು ಸಮಸ್ಯೆಗಳಿಗೆ - ಭಾವಶೂನ್ಯತೆಯ ಪೀಳಿಗೆಗಳನ್ನು ಬೆಳೆಸಿ ನಿಲ್ಲಿಸಿರುವುದೇ ಕಾರಣ. ಶಿಕ್ಷಣ ಪಡೆಯುವುದೇ ದುಡ್ಡು ಸಂಪಾದಿಸಲು - ಎಂಬ ನೀತಿಯನ್ನು ಪ್ರಚುರಪಡಿಸುವಂತಿರುವ ಸರಕಾರಗಳ ಅಪರೋಕ್ಷ / ಪರೋಕ್ಷ ನಡೆಗಳಿಂದಾಗಿ, ಅವರಿವರೆನ್ನದೆ ಎಲ್ಲರೂ ಅರೆಹುಚ್ಚರಂತೆ, ಬೀದಿ ಮೆರವಣಿಗೆಗಳಲ್ಲಿ ನಾಚಿಕೆ ಬಿಟ್ಟು - ಹೀಗೆಲ್ಲ ತೊಡಗಿಕೊಳ್ಳಬೇಕಾದ ಪರಿಸ್ಥಿತಿ - ಈಗ ಬಂದಿದೆ. ಬೆರಳೆಣಿಕೆಯ ಮಂದಿ ನಡೆಸುತ್ತಿರುವ "ಕೊಳಕು ರಾಜಕಾರಣಕ್ಕೆ" - ಎಲ್ಲರೂ ಬಲಿಯಾಗುವಂತಾಗಿದೆ.

ಒಂದೊಂದು ಶೈಕ್ಷಣಿಕ ಸಂಸ್ಥೆಗಳ ಒಳಗೂ - ಸಕ್ರಿಯವಾಗಿರುವ ಪಕ್ಷ ರಾಜಕಾರಣವನ್ನು ಪ್ರೋತ್ಸಾಹಿಸುತ್ತ ಬಂದಿರುವ ಇಂತಹ ಅಲ್ಪಮತಿ ರಾಜಕಾರಣಿಗಳಿಗೆ ಯಾರೂ ಮಂಗಳಾರತಿ ಮಾಡಬಾರದೇ ? ಯಾಕೆ ? ಸ್ವಾಮೀ, ಆಳಲು ಹೊರಟವರಿಗೆ ಅಹಂಕಾರವೊಂದೇ ಸಾಕಾಗುವುದಿಲ್ಲ; ಭವಿಷ್ಯದ ಕುರಿತ ಚಿಂತನೆಯನ್ನು ಹೊಂದಿದ ಪ್ರಬುದ್ಧತೆಯು ಬೇಡವೇ ? ಸಂಬಂಧಿತ ಪ್ರಜಾ ವರ್ಗದ ಜೊತೆಯಲ್ಲಿ ಕೂತು ಸಮಗ್ರ ವಿಚಾರ ವಿಮರ್ಶೆ ನಡೆಸಿ ಯೋಗ್ಯ ನಿರ್ಧಾರಗಳನ್ನು ಕೈಗೊಳ್ಳುವ ಕುಶಲ ಮತಿಯು ಬೇಡವೇ ? ತಾವು ತೆಗೆದುಕೊಂಡ ನಿರ್ಧಾರಗಳನ್ನು ಆಗಿಂದಾಗ ಪರಾಮರ್ಶಿಸಿ ಸೂಕ್ತ ಕಾಲದಲ್ಲಿ ಸೂಕ್ತ ಬದಲಾವಣೆಗಳನ್ನು ತರಬೇಡವೇ ? ಈ ಸರಕಾರಗಳು ಹಂಚುತ್ತಿರುವುದು ಯಾವುದೇ ಶಾಸಕ / ಸಂಸದರ ಖಾಸಗಿ ಆಸ್ತಿಯನ್ನೇನೂ ಅಲ್ಲವಲ್ಲ ? ಅವೆಲ್ಲವೂ ನಮ್ಮ - ಪ್ರಜೆಗಳ ತೆರಿಗೆಯ ದುಡ್ಡು ತಾನೇ ? ಅಡುಗೆ ಮಾಡಿದವ ಅಥವ ಮಾಡಿದ ಅಡುಗೆಯನ್ನು ಬಡಿಸಿದವನು - ತಾನೇ ಆ ಮನೆಯ ಒಡೆಯ ಅಂದುಕೊಂಡರೆ - ಅಂಥವರನ್ನು ತಕ್ಷಣವೇ ಮನೆಯಿಂದ ಹೊರದಬ್ಬುವ ಅನಿವಾರ್ಯತೆ ಮೂಡುತ್ತದೆಯಲ್ಲವೆ ? ಇವತ್ತಿನ ಸರಕಾರಗಳ ಮರುಳುತನವು ಈಗ ಈ ಹಂತ ತಲುಪಿದಂತಾಗಿದೆ. ಕೇವಲ ವೋಟಿನಲ್ಲಿಯೇ ದೃಷ್ಟಿ ನೆಟ್ಟು ಪಕ್ಷ ರಾಜಕಾರಣ ಮಾಡುವುದರಲ್ಲಿಯೇ ಮುಳುಗಿಕೊಂಡು, ತೋಳು ತಟ್ಟುತ್ತ, ತೊಡೆ ತಟ್ಟುತ್ತ, ಅಸಂಬದ್ಧ "ಮೀಟರ್" ಓಡಿಸುತ್ತ, ಕೂತು ಆಕಳಿಸುತ್ತ, ಅಸಹ್ಯ ದೇಹಭಾಷೆಯನ್ನು ಪ್ರದರ್ಶಿಸುತ್ತ - ಕೊನೆಗೆ ... ತಮ್ಮನ್ನು ಎಲ್ಲರೂ ಹಾಡಿಹೊಗಳಬೇಕೆಂದು ಈ ಮಂತ್ರಿಮಾಗಧರೆಲ್ಲ ಅಪೇಕ್ಷಿಸುವುದಾದರೂ ಹೇಗೆ ? ಭಂಡತನ.  ಆದ್ದರಿಂದಲೇ ಶ್ರುತಿ ತಪ್ಪಿದ ಹಾಡಿನ "ತಪ್ಪಿನ ಮೀಟರ್"ಗಳು - ರಾಜಕಾರಣಿಗಳತ್ತಲೇ ತಿರುಗಿ, ಸ್ಥಬ್ಧವಾಗಿ ಅಲ್ಲೇ ನಿಂತು ಹೋಗುತ್ತಿವೆ; ಒಮ್ಮೊಮ್ಮೆ ಅಪಸ್ವರವನ್ನೂ ಹೊಮ್ಮಿಸುತ್ತವೆ ! 

ಇನ್ನು, ಈ ವೈದ್ಯಕೀಯ ಕ್ಷೇತ್ರವು Business ಆಗಿದ್ದು - ರಾತ್ರಿ ಬೆಳಗಾಗುವಾಗ ಪರಿವರ್ತಿತವಾದ ಪವಾಡವೇನಲ್ಲ. "ಇಂದಿನ ವೈದ್ಯರು ಸಾವಿರ ಪರೀಕ್ಷೆಗಳನ್ನು ಮಾಡಿಸಿ, ದುಡ್ಡು ಗಬರುತ್ತಾರೆ" ಎಂಬ ದೂರು ಜನಜನಿತವಾಗುವಂತಾದುದಕ್ಕೆ ಸುಮಾರು ೪೦ ವರ್ಷಗಳ ಇತಿಹಾಸವಿದೆ. ವಿದೇಶಗಳೊಂದಿಗೆ ಹೋಲಿಸದೆ, ಕೇವಲ ಭಾರತೀಯ ದೃಷ್ಟಿಕೋನದಿಂದ ಮಾತ್ರ ನೋಡಿದರೆ... ವೈದ್ಯ ಪರಿಸರದಲ್ಲಿ "ದುಡ್ಡು ಗಬರುವ" ಮಾತುಗಳಲ್ಲಿ ಸತ್ಯಾಂಶವೂ ಇದೆ. ಇತ್ತೀಚಿನ ಸುಮಾರು ೩೦ ವರ್ಷಗಳಲ್ಲಿ ಆಗಿರುವ ಚಮತ್ಕಾರಿಕ ಬದಲಾವಣೆ ಇದು. ಇದರ ಕಾರಣವೂ - ಮುಖ್ಯವಾಗಿ, ನೀತಿವೈಫಲ್ಯದಿಂದಾಗಿರುವ ಶಿಕ್ಷಣದ ವ್ಯಾಪಾರೀಕರಣವೇ ಆಗಿದೆ.

ಶಿಕ್ಷಕ ಮತ್ತು ವೈದ್ಯರನ್ನು ಅತ್ಯಂತ ಪೂಜ್ಯಭಾವದಿಂದ ನೋಡುತ್ತಿದ್ದ ಸಾಮಾಜಿಕ ದೃಷ್ಟಿಯು ಬದಲಾಗುತ್ತ ಬಂದಿರುವುದನ್ನೂ ಇಲ್ಲಿ ಗಮನಿಸಬೇಕು. ಇದಕ್ಕೆ - ಜನರಲ್ಲಿ (ವೈದ್ಯ ವರ್ಗದ ಸಹಿತ) ಸ್ವಾಭಾವಿಕವಾಗಿ ಪರಂಪರಾಗತವಾಗಿ ಬೇರೂರಿದ್ದ - Moral Ethics ಕುಂಠಿತಗೊಳ್ಳುವಂತಾದುದೇ ಕಾರಣ. ಆಧುನಿಕ ಶಿಕ್ಷಣದ ಹೊಡೆತದಿಂದಾಗಿ, ಸ್ವ ಇಚ್ಛೆಯಿಂದ ಜನರು ಅನುಸರಿಸುತ್ತಲೇ ಬಂದಿದ್ದ ಹಲವಾರು ಭಾರತೀಯ ಮೌಲ್ಯಗಳನ್ನು - ನಮ್ಮ ನೀತಿ ನಿರೂಪಕರು - ಸ್ವತಃ - ತುಷ್ಟೀಕರಣ ಎಂಬ ಮೂಢನಂಬಿಕಾ ರೋಗಗ್ರಸ್ತರಾಗಿ, ಉದ್ದೇಶಿತವಾಗಿ ಕಡೆಗಣಿಸುತ್ತ ಬಂದಿಲ್ಲವೇ ? ಹೀಗೆ ಸರ್ವತೋಮುಖವಾಗಿ, ವ್ಯಾಪಾರಕ್ಕೇ ಕುಳಿತಂತೆ ವರ್ತಿಸತೊಡಗಿದ ಕೊಳಕು ರಾಜಕೀಯವೇ - ವೈದ್ಯಕೀಯ ಕ್ಷೇತ್ರದ ಇಂದಿನ ಗೊಂದಲಗಳಿಗೂ ಮೂಲ ಕಾರಣ ಮತ್ತು ನೇರ ಕಾರಣ. ಇದನ್ನು - ಪ್ರಜೆಗಳ ಆರೋಗ್ಯದ ಜತೆಗೆ ನಮ್ಮ ಸರಕಾರಗಳು ನಡೆಸಿದ ಕ್ರೂರ ಚೆಲ್ಲಾಟ ಎಂದೂ ವರ್ಣಿಸಬಹುದು.

ಇನ್ನು, ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರವೇ ರೋಗಿಗಳು ಸಾಯುತ್ತಾರೇನು ? ಬಳಲುತ್ತಾರೇನು ? ಶೋಷಣೆಗಳಿಗೆ ಒಳಗಾಗುತ್ತಾರೇನು ? ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರವೇ ಬೇಜವಾಬ್ದಾರಿಯ ವರ್ತನೆಗಳು ಸಂಭವಿಸುತ್ತವೇನು ? ಸತ್ತ ಹೆಣವನ್ನೂ ಹೆಕ್ಕಿಕೊಂಡು ಹೋಗುವ, ಸತ್ತವರ / ಬದುಕಿದ್ದವರ ಅಂಗಾಂಗಗಳನ್ನೂ ಮಾರಿ ತಿನ್ನುವ ರಕ್ಕಸತನಗಳಿಗೆ ಸರಕಾರೀ / ಖಾಸಗಿ ಎಂಬ ಭೇದಭಾವ ಇರುತ್ತದೇನು ? ಸರಕಾರಿ ಆಸ್ಪತ್ರೆಗಳಲ್ಲಿದ್ದ ರೋಗಿಗಳು ಅಜರಾಮರರೇ ? ಸರಕಾರೀ ವೈದ್ಯರು ಮಾತ್ರ - ದೇವರೆ ? ಸರಕಾರೀ ಆಸ್ಪತ್ರೆಗಳಲ್ಲಿ ಅಮೃತ ಹಂಚುತ್ತಿದ್ದಾರೇನು ? ಸರಕಾರೀ ಆರೋಗ್ಯ ವಲಯದ Infrastructure ಯಾಕಿಷ್ಟು ಹಾಸ್ಯಾಸ್ಪದವಾಗಿದೆ ? ನಾಲ್ಕು ನೋಟು ಕಿಸೆಯಲ್ಲಿದ್ದವರು ಯಾರೂ - ತೀರ ಅನಿವಾರ್ಯವಾಗದೆ - ಸರಕಾರದ ಬೋರ್ಡ್ ಇರುವಲ್ಲಿ ಇಣುಕಿಯೂ ನೋಡುವುದಿಲ್ಲವಲ್ಲ - ಯಾಕೆ ? ಯೋಚಿಸಬೇಕು. ಅದು ಅಲ್ಲಿನ ವೈದ್ಯರ ದೋಷವೆ ? ಅಥವ ಸರಕಾರದ ಕಾರ್ಯವಿಧಾನದ ವೈಫಲ್ಯವೆ ? ಅಥವ ಕಾಡಿಗೆಯ ಡಬ್ಬದಲ್ಲಿ ಮುಳುಗಿ ಎದ್ದವರೆಲ್ಲರೂ ಕಪ್ಪು  ಕಪ್ಪಾಗುವಂತಹ ಸಹಜ ಸ್ಥಿತ್ಯಂತರವೆ ? ಯಾವುದೇ ಮನೆಯ ಮಕ್ಕಳು ಕೆಟ್ಟುಹೋದರೆ, ಆಗ - ಆಯಾ ಕುಟುಂಬದ ಹಿರಿಯರೂ ಆತ್ಮನಿರೀಕ್ಷಣೆ ಮಾಡಿಕೊಳ್ಳಬೇಕಾಗುತ್ತದಲ್ಲವೆ ?

ಇವತ್ತು, ನಮ್ಮ ಸಮಾಜದ ಕೆಲವು ವರ್ಗಕ್ಕೆ - ಅಸಂಬದ್ಧ ಕೆಲಸಗಳನ್ನು ಮಾಡುತ್ತ ತಿಂಗಳಿಗೆ ಲಕ್ಷಾಂತರ ಸಂಬಳ ಎಣಿಸುವ ವಿಚಿತ್ರ ಅವಕಾಶ ದೊರೆಯುತ್ತಿದೆ; ಅದರಿಂದಾಗಿ ವಿಚಿತ್ರ ಸನ್ನಿವೇಶಗಳೂ ಏರ್ಪಡುತ್ತಿವೆ.

ದುಡ್ಡು ಸೊಕ್ಕಿದ ಇಂದಿನ - ಅಂತಹ ಕೆಲವರು, ತಮ್ಮ ಮನೆಯ ಹಿರಿಯರನ್ನು ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳಿಗೇ ಏಕೆ ಸೇರಿಸಬೇಕು ? ಎಂಬ ಪ್ರಶ್ನೆಗೆ - "ದುಡ್ಡಿದೆ; ಆದ್ದರಿಂದ" ಎಂಬುದೇ - ಕೆಲವು ಸಂದರ್ಭಗಳಲ್ಲಿ - ಸರಿಯುತ್ತರ. ಹೀಗೆ ದೊಡ್ಡ ಆಸ್ಪತ್ರೆಗಳಿಗೆ ಸೇರಿಸಿ ಸಂಭ್ರಮದಿಂದ ಓಡಾಡುತ್ತ, ತಮ್ಮ ಹಿರಿಯರಿಗೆ "Rich - Dignified death" ಒದಗಿಸಿದ್ದೇವೆ ಎಂಬ ಸಂಭ್ರಮದಲ್ಲಿದ್ದ ಕೆಲವರನ್ನು ನಾನೂ ನೋಡಿದ್ದೇನೆ. ಇಂತಹ hi-fi ಆಸ್ಪತ್ರೆಗಳು - ಕೆಲವರಿಗೆ ತಮ್ಮ ಮನೆಯ ಮುದಿಗೂಬೆಗಳನ್ನು ಸಾಗಹಾಕಲು ಇರುವ Safe Exit ಆಗಿಯೂ ಉಪಕರಿಸುತ್ತಿವೆ ಎಂಬುದು ಗೊತ್ತೇ ? ದುಡ್ಡು ಬಿಸಾಟರೆ - ಅಪ್ಪ ಅಮ್ಮನೂ ದೊರಕುತ್ತಿರುವಂತಹ ಕಾಲ ಇದು ! ಆದ್ದರಿಂದ ಬದಲಾಗಿದ್ದು ವೈದ್ಯರು ಮಾತ್ರವಲ್ಲ; ಎಲ್ಲರೂ. ಹಲವಾರು Star Value ಹೊಂದಿರುವ ಇಂದಿನ Multi Speciality Hospital ಗಳಲ್ಲಿ ದೋಚುವ ವ್ಯವಹಾರಗಳು ನಡೆಯುತ್ತಿದೆ ಎಂಬ ಜನರ ಕೂಗಿನಲ್ಲಿ ಸತ್ಯಾಂಶವೂ ಇದೆ. ಒಬ್ಬ ರೋಗಿಯನ್ನು I C U ಎಂಬ ಭದ್ರ ಕೋಣೆಗೆ ಒಯ್ದರೆಂದರೆ - ಅಂತಹ ರೋಗಿಯ ಕುಟುಂಬವು ಸರ್ವನಾಶವಾದಂತೆಯೇ ಎಂಬುದೂ ಸತ್ಯ. ಸಾಮಾನ್ಯ ಆದಾಯದ ಕುಟುಂಬಗಳು - ಇಂದಿನ ವೈದ್ಯರನ್ನು ದುಡ್ಡಿನಲ್ಲಿ ನಿಭಾಯಿಸುವುದು - ಭಾರತದ ದೊಡ್ಡ ಸಮಸ್ಯೆಯೇ ಆಗುತ್ತಿದೆ. ಉತ್ತಮ ಚಿಕಿತ್ಸೆಯನ್ನು ಪಡೆದುಕೊಳ್ಳುವಂತಹ ಸಂಬಳವನ್ನು ದುಡಿಯುವ ವರ್ಗಕ್ಕೆ ಕೊಡಲಾಗದ ಸರಕಾರಗಳು - ಪರೋಕ್ಷವಾಗಿ ಲಂಚಗುಳಿತನವನ್ನು ಪ್ರೋತ್ಸಾಹಿಸುತ್ತಲೇ ಬಂದಿವೆ. ತನ್ನ ಕಾಲಿನ ಕೆಳಗೆ ನೂರಾರು ಹೋರಿಗಳು ಸತ್ತು ಬಿದ್ದಿರುವಾಗ - ಇತ್ತ ನಮ್ಮ ಕಾಲಿನ ಕೆಳಗೆ ಬಿದ್ದಿರುವ ನೊಣವನ್ನು ಎತ್ತುವ ಕೆಲಸಕ್ಕಿಳಿದಿರುವ ಈ ಸರಕಾರವನ್ನು ಏನೆನ್ನಲಿ ? ಪರಿಣಾಮ ಏನೆಂದರೆ - "ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯಿತು" ಎಂಬಂತಾಗುವ ಎಲ್ಲ ಲಕ್ಷಣಗಳಿವೆ ! ಮನುಷ್ಯತ್ವವುಳ್ಳ ವೈದ್ಯರು ಮತ್ತು ಸರಕಾರಗಳು - ಆತ್ಮನಿರೀಕ್ಷಣೆ ಮಾಡಿಕೊಳ್ಳುವ ಸಂದರ್ಭವೂ ಈಗ ಬಂದಿದೆ.

ಆದರೆ ಈಗ ಇರುವ ವೈದ್ಯಕೀಯ ಕ್ಷೇತ್ರವನ್ನು ಶುದ್ಧೀಕರಣಗೊಳಿಸಲು, ಸರಕಾರವು ತರಲು ಹೊರಟಿರುವ ಈ ಕಾಯಿದೆಯಿಂದ ಸಾಧ್ಯವೇ ? ಆಗದು. ಎಂದಿಗೂ ಸಾಧ್ಯವಾಗದು. ಇದರ ಪರೋಕ್ಷ ಪರಿಣಾಮವು ರೋಗಿಗಳಿಗೇ ಆಗುವಂತಾಗಿ, ಅದರಿಂದ ರೋಗಿಗಳು ಇನ್ನಷ್ಟು ಸಂಕಟಗಳನ್ನೆದುರಿಸಬೇಕಾಗಬಹುದು. ವೈದ್ಯಕೀಯ ಸೇವೆಯು ಇನ್ನಷ್ಟು ಜಟಿಲವಾಗಬಹುದು.

ಆದ್ದರಿಂದ, ಮೊದಲಿಗೆ, ಪ್ರತಿಭಾವಂತ ವಿದ್ಯಾರ್ಥಿಗಳು ತಮ್ಮ ವೈದ್ಯಕೀಯ ಶಿಕ್ಷಣವನ್ನು  ಕಡಿಮೆ ವೆಚ್ಚದಲ್ಲಿ ಪೂರೈಸಿಕೊಳ್ಳಬಹುದಾದಂತಹ ನಿರ್ಮಲ ವಾತಾವರಣವನ್ನು - ಸರಕಾರಗಳು ನಿರ್ಮಿಸಲಿ. ಅನಂತರ ಅಗತ್ಯ ಕಂಡಾಗ,  ಪಡಪೋಶಿ ವಿದ್ಯೆಯನ್ನು ಪ್ರದರ್ಶಿಸಿದರೆಂದು ಸಾಬೀತಾದ ವೈದ್ಯರಿಗೆ - ಅಧಿಕಾರದಿಂದಲೇ ಸಾಮಾಜಿಕ ಕರ್ತವ್ಯದ ಪಾಠ ಮಾಡಬಯಸಿದರೆ... ಮಾಡಲಿ. ಆಗ ಪಾಠ ಮಾಡುವವರಿಗೆ ಹೆಚ್ಚು ಗೌರವವು ಸಲ್ಲುತ್ತದೆ; ಪಾಠ ಕೇಳಿಸಿಕೊಳ್ಳುವವರು - ಮರುಮಾತನಾಡದೆ, ಕೆಲವರು "ಉಪಕರಿಸಿದ ಸರಕಾರ" ಎಂಬ ಕೃತಜ್ಞತೆಯಿಂದಾದರೂ - ಸರಕಾರಗಳು ಹೇಳುವ ಮಾತಿಗೆ ಮನ್ನಣೆ ನೀಡಿಯಾರು. ಯಾವುದೇ ಸಮಾಜವನ್ನು ನಡೆಸಬೇಕಾದ, ನಡೆಸಿಕೊಳ್ಳಬೇಕಾದ ರೀತಿ ಇದು.

ಇನ್ನು, ಇವತ್ತು ಉದ್ದೇಶಿತವಾಗಿ "ಅರೆಹೊಟ್ಟೆ ಮಾತ್ರ - ತುಂಬಿಸಿ ಕಳಿಸುವ" ಪಡಪೋಶಿ M.B.B.S ಎನ್ನಿಸುವಂತಹ ವೈದ್ಯಕೀಯ ಶಿಕ್ಷಣದ ಪರಿಧಿಯಲ್ಲಿ - ವಿದ್ಯಾರ್ಥಿಗಳಿಗೆ ಏನನ್ನು ಕಲಿಸುತ್ತಿದ್ದಾರೋ ಅದನ್ನು ಅವರು - ತಮ್ಮ  ವೃತ್ತಿಬದುಕಿನ ಕಾರ್ಯಶೈಲಿಯಾಗಿ ಅಳವಡಿಸಿಕೊಳ್ಳುತ್ತಲೇ ಬಂದಿದ್ದಾರೆ - ಅಲ್ಲವೇ ? M.B.B.S ನ Syllabus ಎಂಬುದನ್ನು Dilute ಗೊಳಿಸುತ್ತ ಬಂದಿಲ್ಲವೆ ? ಹೀಗೆ.. ಬಡಕಲು ವೈದ್ಯರುಗಳನ್ನು ತಯಾರಿಸಿ, ಸಮಾಜಕ್ಕೆ ನೀಡುತ್ತಿರುವವರು ಯಾರು ? ಇತ್ತ, ಕುಟುಂಬ ವೈದ್ಯ ಪದ್ಧತಿ ಎಂಬ - ನಮ್ಮಲ್ಲಿದ್ದ ಅದ್ಭುತ ವ್ಯವಸ್ಥೆಯು ಎಂದೋ ಹಿಂದೆ ಸರಿದಾಗಿದೆ ಅಥವ ಹಿಂದೆ ಸರಿಸಲಾಗಿದೆ. ದುಡ್ಡು ಗಬರುವ ಇವತ್ತಿನ ಶಿಕ್ಷಣ ಸಂಸ್ಥೆಗಳು ತಮ್ಮ ವಿದ್ಯಾರ್ಥಿಗಳನ್ನು ತಮ್ಮಂತೆಯೇ "ಧನಪಿಶಾಚಿ"ಗಳಾಗಿ ರೂಪಿಸುತ್ತ ಬಂದಿದ್ದಾರೆ ಮತ್ತು ಅದರ ದುಷ್ಪರಿಣಾಮಗಳಿಂದ ಸಮಾಜವನ್ನು ನರಳಿಸುವಂತೆಯೂ ಆಗುತ್ತಿದೆ - ಎಂಬುದು ಇಲ್ಲಿರುವ ಒಂದು ಪ್ರಮುಖ ಅಂಶ.

ಮುಖ್ಯವಾಗಿ ರೋಗಿಗಳು - ತಮಗೆ ನಂಬಿಕೆ, ವಿಶ್ವಾಸ, ಗುರುತು ಪರಿಚಯವಿಲ್ಲದ ವೈದ್ಯರಲ್ಲಿಗೆ ತಾವೇ ಹೋಗಿ... ಅನಂತರ ಅಲ್ಲಿ ಆಕಸ್ಮಿಕವಾಗಿಯೋ/ಬೇಜವಾಬ್ದಾರಿಯಿಂದಲೋ ಏನಾದರೂ ಅವಘಡಗಳಾದಾಗ - ಅಂತಹ ವೈದ್ಯರನ್ನು "ಕೊಲೆಗಾರ" ಎಂಬಂತೆ ನೋಡುತ್ತ, ವೈದ್ಯರ ಮೇಲೆ ಹಲ್ಲೆ ನಡೆಸುವ ಪ್ರವೃತ್ತಿಯು ಇತ್ತೀಚೆಗೆ ಹೆಚ್ಚುತ್ತಿದೆ. ಇದು ಅತ್ಯಂತ ಕುಸಂಸ್ಕೃತ ಸಮಾಜವೊಂದು ಮಾತ್ರ ನಡೆಸುವಂತಹ ಕ್ರಿಯೆ. ಹೀಗೆ ಕಾನೂನನ್ನು ಕೈಗೆತ್ತಿಕೊಳ್ಳುವ ವ್ಯಕ್ತಿಯು ಸಂಸದನಾಗಲೀ ಶಾಸಕನಾಗಲೀ ಸಾಮಾನ್ಯನೇ ಆಗಲಿ... ಅದು ಅಪರಾಧವೇ ಆಗುತ್ತದೆ ಅಲ್ಲವೇ ? ಕೊಂದವನನ್ನು ಕೊಲ್ಲುವುದು, ಹೊಡೆದವನಿಗೆ ಹೊಡೆಯುವುದು, ಕಚ್ಚಿದವನನ್ನು ಹಿಂದಿರುಗಿ ಕಚ್ಚುವುದು... ಇವೆಲ್ಲವೂ ಮೃಗೀಯ ವರ್ತನೆಗಳೆಂದು ಹೇಳಬೇಕಾದ ಅಗತ್ಯ ಬಂದಿರುವುದೇ ಅವಮಾನಕರ ಸಂಗತಿ ಅಲ್ಲವೇ ?



ಮನುಷ್ಯಮಾತ್ರರ ಬದುಕಿನಲ್ಲಿ "ಸಾತ್ವಿಕ ನಂಬಿಕೆ" - ಎಂಬುದೊಂದಿದೆ; ಇರಲೇಬೇಕು. ಅದು - ವೈದ್ಯಕೀಯ ವಲಯದಲ್ಲೂ ಬಲು ದೊಡ್ಡ ಸಂಪತ್ತು. ಆದರೆ... ಇವತ್ತಿನ ರಾಜನೀತಿಗಳ ವೈಫಲ್ಯಗಳಿಂದಾಗಿ, ಜನರೆಲ್ಲರೂ ಪರಸ್ಪರರಲ್ಲಿ ವಿಶ್ವಾಸ ಮಾತ್ರವಲ್ಲ - ಅವರವರ ಮೇಲಿನ ವಿಶ್ವಾಸಗಳನ್ನೂ ನಾಶ ಮಾಡಿಕೊಂಡು ಕುಳಿತಂತಿದ್ದಾರೆ. ಜನರ ಸ್ವಾಭಾವಿಕ ನಂಬಿಕೆಗಳನ್ನು ತಮ್ಮ ಮತಗಳಿಕೆಯ ಉದ್ದೇಶದಿಂದ ಬಗೆಬಗೆದು, ಮೂಢರನ್ನಾಗಿಸುತ್ತಿದ್ದಂತೆಯೂ - ಈಗ ಕಾಣುತ್ತಿದೆ. "ವಿಶ್ವಾಸ" ಎಂಬುದು - ಮನುಷ್ಯರಲ್ಲಿರಬೇಕಾದ Inbuilt ಚಿಕಿತ್ಸೆ ಎಂಬುದನ್ನು ಧಿಕ್ಕರಿಸುವಂತಹ ಮೂಢರ ಮೂಢನಂಬಿಕೆಗಳಿಂದಾಗಿ, ತಲೆಕೆದರಿದಂತಾಗಿರುವ ಕೆಲವು ಮನುಷ್ಯರು ಪ್ರಾಣಿಗಳಂತೆಯೂ ವರ್ತಿಸತೊಡಗಿದ್ದಾರೆ !

ಯಾವ ವೈದ್ಯನೂ ರೋಗಿಯನ್ನು ಮಂತ್ರಾಕ್ಷತೆ ಕೊಟ್ಟು ಕರೆಯುವುದಿಲ್ಲ ಮತ್ತು ಉದ್ದೇಶಿತವಾಗಿ ಕೊಲ್ಲುವುದೂ ಇಲ್ಲ ಎಂಬ ಸಾಮಾನ್ಯ ಜ್ಞಾನವು ಎಲ್ಲರಿಗೂ ಅವಶ್ಯಕ. ನಂಬಿಕೆ ಇಲ್ಲದ ಯಾವುದೇ ವೈದ್ಯರಲ್ಲಿ ಚಿಕಿತ್ಸೆ ಪಡೆಯಲೇಬಾರದು. ಚಿಕಿತ್ಸೆಗೆಂದು ಬಂದವರಿಗೆ ವೈದ್ಯರಲ್ಲಿ ನಂಬಿಕೆ ಬೇಡವೇ ? ಇವತ್ತಿನ ವೈದ್ಯರುಗಳು ಹಲವು ಪರೀಕ್ಷೆಗಳನ್ನು ಮಾಡಿಸಿ, Laboratory ಗಳ ದಾಖಲೆಯನ್ನು ತಮ್ಮಲ್ಲಿ ಸಿದ್ಧವಾಗಿ ಇರಿಸಿಕೊಳ್ಳುತ್ತಿರುವುದರ ಹಿಂದೆ, ಈ ರೋಗಿ ಪ್ರಪಂಚದ ಅಸಂಗತ ವರ್ತನೆಗಳೂ ಕಾರಣವಿರಬಹುದೇ ? ಯೋಚಿಸಬಹುದು. ತಾವು ಉದ್ದೇಶಿತವಾಗಿ ಮಾಡದ ತಪ್ಪನ್ನು - ಯಾರೋ ಒಬ್ಬ ತಮ್ಮ ಮೇಲೆ ಹೊರಿಸುವಂತಾಗಬಾರದು ಎಂಬ "ಸ್ವರಕ್ಷಣೆಯ" ಮುಂಜಾಗ್ರತೆಯೂ ವೈದ್ಯರದಾಗಿರಬಹುದು. ಪ್ರತಿಯೊಬ್ಬ ಪ್ರಜೆಗೂ ಸ್ವರಕ್ಷಣೆಯ ಹಕ್ಕು ಇದೆಯೆಂದಾದರೆ ವೈದ್ಯರಿಗೆ ಇಲ್ಲವೇ ? ಇರುತ್ತದೆ. ಆದರೆ, ವೈದ್ಯರು ತಮ್ಮ ಸ್ವರಕ್ಷಣೆಯ ಚಿಂತೆಯಿಂದ - ಹೀಗೆ ಯರ್ರಾಬಿರ್ರಿಯಾಗಿ ಪೂರ್ವತಯಾರಿಯನ್ನು ಮಾಡಿಕೊಳ್ಳುವಂತಹ ಸನ್ನಿವೇಶವನ್ನು ನಿರ್ಮಿಸಿದವರು ಯಾರು ? ಯೋಚಿಸಿದರೆ ಅದಕ್ಕೂ ಉತ್ತರ ಸಿಗುತ್ತದೆ. ಹೌದು. ಯಾರೋ ಮಾಡಿದ ಅಧಿಕಪ್ರಸಂಗಗಳಿಗೆ ಈಗ, ಎಲ್ಲರೂ ಬೆಲೆ ತೆರಬೇಕಾಗಿರುವುದು ಸತ್ಯವಾದರೂ - ವೈದ್ಯರ ದೃಷ್ಟಿಯಿಂದ ಇದು ಅನಿವಾರ್ಯ ತಾನೆ ? ಹಕ್ಕು - ಅಧಿಕಾರದ ಬಲದಿಂದಲೇ ಎಲ್ಲವನ್ನೂ ಪಡೆಯಲಾಗುವುದಿಲ್ಲ ಎಂಬುದನ್ನು - ಅರ್ಥ ಮಾಡಿಕೊಳ್ಳಬೇಕಾದ ಕಾಲ ಎಲ್ಲರಿಗೂ ಬಂದಿದೆ.


ನಮ್ಮ ಸುತ್ತಮುತ್ತಲೂ - ತಮ್ಮ ಸ್ವಂತ ಬದುಕಿನ ರಸನಿಮಿಷಗಳನ್ನು ಕಣ್ಣಿನಲ್ಲಿಯಾದರೂ ನೋಡಿ ಅನುಭವಿಸಲಾಗದಂತೆ ರಾತ್ರಿ ಹಗಲೆನ್ನದೆ ಕಾರ್ಯತತ್ಪರರಾಗಿರುವ ಎಷ್ಟು ವೈದ್ಯರಿಲ್ಲ ? ವೈದ್ಯರ ಉಡುಗೆತೊಡುಗೆ, ನಗುಮುಖ, ವಾಹನ .. ಇತ್ಯಾದಿ ಹೊರಭಾವವನ್ನು ಮಾತ್ರ ನೋಡುತ್ತ "ವೈದ್ಯರೆಲ್ಲರೂ ಪರಮ ಸುಖದ ಸ್ವರ್ಗದಲ್ಲಿದ್ದಾರೆ" ಎಂದು ಭಾವಿಸುತ್ತ, ತಮ್ಮ ಒಳಗೊಳಗೇ ವೈದ್ಯವರ್ಗವನ್ನು ಕಂಡು ಕರುಬುತ್ತಿರುವ "ಅಧಿಕಾರದ ಹಮ್ಮಿನ ರೋಗಿಗಳು" ಇದ್ದರೆ -  ಅವರು ಪರೋಕ್ಷವಾಗಿ ತಮ್ಮ ಕಾಲಿನ ಮೇಲೆ ತಾವೇ ಚಪ್ಪಡಿ ಕಲ್ಲು ಹಾಕಿಕೊಳ್ಳುತ್ತಿದ್ದಾರೆ ಎಂದೇ ಅರ್ಥ.... ತಮ್ಮ ಬದುಕಿನ ೮-೧೦ ವರ್ಷಗಳನ್ನು ವೈದ್ಯಕೀಯ ಜ್ಞಾನ ಸಂಗ್ರಹಣೆಯ ಅಜ್ಞಾತವಾಸದಲ್ಲಿ ಕಳೆಯುವ ವೈದ್ಯರೊಂದಿಗೆ ತಮ್ಮನ್ನು ಹೋಲಿಸಿಕೊಳ್ಳುವಷ್ಟು ದೊಡ್ಡ ಹುಂಬತನ ಇನ್ನೊಂದಿಲ್ಲ. ಮತ್ಸರವೂ ಗೌರವಯುತವಾಗಿರಲಿ. "ಮಿತಿಮೀರುವ ಮತ್ಸರ ರೋಗದ ಕೇಸುಗಳು" - ಒಂದಿಷ್ಟೂ ಗೊಣಗದೆ ಅದರ ಪರಿಣಾಮವನ್ನೂ ಅನುಭವಿಸಲು ಸಿದ್ಧವಾಗಿರಬೇಡವೇ ?

ರಾಜಕಾರಣಿಗಳಿಗಾದರೆ ರೋಗ ಬಂದರೆ - ವಿದೇಶಗಳಿವೆ; ಜನರ ತೆರಿಗೆ ದುಡ್ಡೂ ಇದೆ....
ನಮಗೆ ? ನಮ್ಮ ತಲೆ; ನಮ್ಮ ಕೈ. ಇಷ್ಟೆ.
ಇದನ್ನು - ಬುದ್ಧಿ ಇರುವವರು ಮರೆಯಬಾರದು.

ಆದರೆ - ಈಗ ನಡೆದಿರುವ "ಸರಕಾರೀ ಷಡ್ಯಂತ್ರದ ಕಾಯ್ದೆಯ" ಹಿನ್ನೆಲೆಯಲ್ಲಿ ಯಾವ ಬಗೆಯ ವಿಕಾಸದ ಕನಸೂ ಕಾಣುವುದಿಲ್ಲ; ಇದು - ಗಂಟು ಹುಟ್ಟುಹಾಕಲು ಇರುವ ಆಯುಧದಂತೆ ಮಾತ್ರ ಕಾಣಿಸುತ್ತದೆ. ಅಷ್ಟೆ. ಆದ್ದರಿಂದ ಈ ಕಾಯ್ದೆಯನ್ನು "ಗಂಟು ಕಳ್ಳರ ಕಾಯಿದೆ" ಎಂದೂ ಹೆಸರಿಸಬಹುದು. ಸರಕಾರವು ನಿಯೋಜಿಸಲು ಹೊರಟಿರುವ ಕಮಿಟಿಯ ಸದಸ್ಯರಿಗೆ ಎಲ್ಲ ವೈದ್ಯರೂ "ತಿಂಗಳ ಕಪ್ಪ" ಸಲ್ಲಿಸುವಂತೆ ಮಾಡಲು ಹಾಕಿರುವ ಬುನಾದಿ ಇದು ಎಂದು ಅನ್ನಿಸಿದರೆ - ಅದೂ ತಪ್ಪಾಗದು.  ಇಂತಹ ನಾಝೀಗಳು, ಝಾರ್ ದೊರೆಗಳು ಕರ್ನಾಟಕಕ್ಕೆ ಬೇಕೆ ? ತಲೆಯೊಳಗೆ ಬೈಹುಲ್ಲು ತುಂಬಿದ ಮನುಷ್ಯ ರೂಪದ ವ್ಯಾಘ್ರಗಳನ್ನು ದಂಡಿಗೆ ಏರಿಸಿದರೆ - ಆತಂಕ, ಆಪತ್ತು - ಪ್ರಜೆಗಳ ನಿತ್ಯದೂಟವಾಗುವುದು ಅನಿವಾರ್ಯ. ಕಾಡುವ ರೋಗಿಗಳು, ವೈದ್ಯರು ಮತ್ತು ಕಾಡಿಸುವ ಸರಕಾರಗಳು... ಎಂದೆಲ್ಲ ಅನ್ನಿಸುವುದು ಆಗಲೇ.

ಕೊನೆಯದಾಗಿ...

ಅನಿಲ್ ಕಪೂರ್ ನಾಯಕನಾಗಿ ಅಭಿನಯಿಸಿದ - "ನಾಯಕ್" ಎಂಬ ಹಿಂದಿ ಸಿನೆಮಾ ನೋಡಿದ್ದೀರಾ ? ಕೆಟ್ಟು ಕೆರ ಹಿಡಿದ ರಾಜಕೀಯ ವ್ಯವಸ್ಥೆಯೊಂದನ್ನು ಶುಚಿಗೊಳಿಸುವ ಕನಸು ಕಾಣುವ ಯುವಕನೊಬ್ಬನ ಕತೆ ಇದು. ಪರಿಣಾಮವಾಗಿ, ಆ ಯುವಕನು ಅನುಭವಿಸಬೇಕಾಗಿ ಬಂದ ಶೋಷಣೆಯ ನರಕವನ್ನು ಈ ಚಿತ್ರದಲ್ಲಿ ವಿಡಂಬನಾತ್ಮಕವಾಗಿ ಚಿತ್ರಿಸಲಾಗಿದೆ. ಇವತ್ತಿನ ದೇಶದ ರಾಜಕಾರಣಕ್ಕೆ ಹಿಡಿದ ಕನ್ನಡಿಯಂತಿರುವ ಚಿತ್ರವಿದು. ರೋಗಿಷ್ಟ ಮತದಾರರೇ ನಿರ್ಣಾಯಕರೆಂದಾದಾಗ, ಅಸಮರ್ಥ ವೈದ್ಯರಂತಹ ನೇತಾರ ವರ್ಗದಿಂದ ಹೀಯಾಳಿಸಿಕೊಳ್ಳಿಸುತ್ತ ಆಳಿಸಿಕೊಳ್ಳಬೇಕಾದ ಸ್ಥಿತಿ ಒದಗದೇ ಹೋದೀತೇ ? ಬೆತ್ತ ಕೊಟ್ಟು ಹೊಡೆಸಿಕೊಳ್ಳುವುದೆಂದರೆ ಹೀಗೇ. ಇದು, ಇವತ್ತಿನ ಕರ್ನಾಟಕದ ಸ್ಥಿತಿ.

ನಾನು ವೈದ್ಯಳಲ್ಲ; ಯಾವುದೇ ವೈದ್ಯರ ಪ್ರತಿನಿಧಿಯೂ ಅಲ್ಲ. ಆದರೆ ಪ್ರಜ್ಞಾವಂತ ನಾಗರಿಕರಾದವರು - ಬದುಕಿನ ಯಾವುದೇ ಓಟವು ಹಳಿ ತಪ್ಪಿದ್ದರೆ, ತಪ್ಪುತ್ತಿದ್ದರೆ... ತಪ್ಪಿದ್ದಾದರೂ ಎಲ್ಲಿ ? ಯಾಕೆ ? - ಎಂದು - ಸ್ಥಿರ ಬುದ್ಧಿಯಿಂದ ಯೋಚಿಸುವ ಅಗತ್ಯವಿಲ್ಲವೇ ? ಪ್ರಾಣೋತ್ಕ್ರಮಣ ಸ್ಥಿತಿಯಂತಹ ಆಪತ್ತು ನಮಗೆ ಬಂದೊದಗಿದಾಗ ನಮ್ಮಿಂದ ಸುಖ ಸಂತೋಷ ಅನುಭವಿಸಿದ - ಸುಖ ದುಃಖಗಳನ್ನು ಪರಸ್ಪರ ಹಂಚಿಕೊಂಡ ನಮ್ಮ ಬಂಧುಗಳು, ಸ್ನೇಹಿತರು... ಎಲ್ಲರೂ ನಿಸ್ಸಹಾಯಕರಾಗುವ ಅಂಥ ಕಾಲದಲ್ಲಿ - "ನನ್ನಿಂದಾದ ಪ್ರಯತ್ನ ಮಾಡುತ್ತೇನೆ; ಮುಂದೆ ದೈವೇಚ್ಛೆ..." ಎನ್ನುತ್ತ ಭರವಸೆ ತುಂಬುವ ವೈದ್ಯರು ನಮಗೆ ಬೇಡವೆ ? ಅಪರಾಧವೊಂದು ಯಾವುದೇ ವೈದ್ಯರಿಂದ ಅಥವ ವೈದ್ಯಕೀಯ ಕ್ಷೇತ್ರದಲ್ಲಿ ಅಲ್ಲಲ್ಲಿ ನಡೆಯುತ್ತಿದ್ದರೆ ಅದನ್ನು ಸೂಕ್ಷ್ಮವಾಗಿ, ಸುಸಂಸ್ಕೃತ ಶೈಲಿಯಿಂದ ನಿಭಾಯಿಸಬೇಕೇ ಹೊರತು - ಯಾವುದೇ ಬಗೆಯ ದಬ್ಬಾಳಿಕೆಯ ಮಾರ್ಗವು ಸುತರಾಂ ಸರಿಯಲ್ಲ. ಕಣ್ಣಿಗೆ ಹೊಡೆಯುವಂತೆ ಯಥೇಷ್ಟ ಕಮಾಯಿಯಿರುವ ಇತರ ಹಲವಾರು ವೃತ್ತಿಗಳಿಗಿಲ್ಲದ ನಿಯಂತ್ರಣ ಸೂತ್ರವನ್ನು ವೈದ್ಯವಲಯಕ್ಕೆ ಮಾತ್ರ ಬಿಗಿಯುತ್ತಿರುವ ಹಿಂದಿನ ಷಡ್ಯಂತ್ರವಾದರೂ ಏನಿರಬಹುದು ? ಎಂಬುದೂ ಯೋಚಿಸಬೇಕಾದ ವಿಷಯ.

ತಮ್ಮ ತಮ್ಮ ಅಧಿಕಾರ ಸಾಮ್ರಾಜ್ಯದ ಒಡ್ಡೋಲಗವನ್ನು ವಿಜೃಂಭಣೆಯಿಂದ  ನಡೆಸುವ ಸಲುವಾಗಿ - ಸಾಮಾಜಿಕ ಪರಿಸರದಲ್ಲಿ ಜಾತಿ, ಮತ, ಧರ್ಮ, ವರ್ಗ, ವೃತ್ತಿ... ಇತ್ಯಾದಿ ಬಗೆಬಗೆಯ ವಿಷಪ್ರಸಾರ ಮಾಡಿ, ಪರಸ್ಪರರನ್ನು ಎತ್ತಿಕಟ್ಟುತ್ತ ಬಂದಿರುವ ಈ ರಾಜಕಾರಣಿಗಳು - ನಮ್ಮ ಬದುಕಿಗೆ ಬಿಡಿ; ನಮ್ಮ ಹೆಣಕ್ಕೂ ಹೆಗಲು ಕೊಡಲಾರರು - ಎಂಬುದನ್ನು ನಾವು ಮರೆಯಬಾರದಲ್ಲವೇ ? ಯಾರನ್ನು ನಂಬುತ್ತೀರಿ ? ವೈದ್ಯರನ್ನೇ ? ಅಥವ - ಇಂತಹ ಕುಟಿಲ ನೀತಿ ನಿರೂಪಕರನ್ನೇ ?

ಯಾವುದೇ ಚುನಾವಣೆಗಳ ಪೂರ್ವದಲ್ಲಿ, ಯಾವುದೇ ಸರಕಾರಗಳು ಕೈಗೊಳ್ಳುವ - "ಜನಪರವೆಂಬ ಹೆಸರಿನ" ಬಹುಪಾಲು ಜನಮಾಯಕದ ನಿರ್ಧಾರಗಳು - ಒಂದೋ ಓಟಿಗಾಗಿ; ಇಲ್ಲವೇ ಆಯ್ದ ವರ್ಗದ ಕಾಟಕ್ಕಾಗಿ - ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿಯೇ ಆಗಿದೆ. ತತ್ಕಾಲೀನ ವ್ಯವಸ್ಥೆಗಳ ದಯನೀಯತೆಗೆ ಇಂತಹ ಬಾಲಿಶ ನಿರ್ಧಾರಗಳು ಮತ್ತು ತತ್ಪರಿಣಾಮಗಳೇ ಕಾರಣ ಎಂಬುದು - ನೀತಿ ನಿರೂಪಕರಿಂದ ಹಿಡಿದು ಎಲ್ಲರಿಗೂ ತಿಳಿದಿರುವ ಸಂಗತಿ. ಅಸಹಾಯಕ ವ್ಯಕ್ತಿತ್ವಗಳನ್ನು ತಮ್ಮ ಸಹಾಯಕರಾಗಿ ನೇಮಿಸಿಕೊಂಡಿರುವ ಪ್ರಜೆಗಳು - ತಮ್ಮ ಮತಿಹೀನ ಕೆಲಸಕ್ಕೆ  ಬಗೆಬಗೆಯ ತೆರಿಗೆ ಕಟ್ಟಬೇಕಾಗುತ್ತದೆ ಎಂಬುದಕ್ಕೆ - ಈಗ ಉದ್ದೇಶಿತವಾದ - ಕರ್ನಾಟಕದ ಕಾನೂನೂ ಒಂದು ದೃಷ್ಟಾಂತ.

ಒಮ್ಮೆ ಗೆದ್ದು ಆರಿಸಿ ಬಂದ ಮೇಲೆ - ಹೀಗೆ ಗೊಂದಲಾಪುರಗಳನ್ನೇ ನಿರ್ಮಿಸುತ್ತ, ಹುಬ್ಬು ಹಾರಿಸುತ್ತ, ಪೆದಂ ಮಾತನಾಡುತ್ತ,  ಉಂಡು ಉಟ್ಟು, ಮೆರೆದಾಡುತ್ತಿರುವ ಈ ಮಂದಿ - "ಪ್ರಜೆಗಳನ್ನು ಪ್ರಭುಗಳಾಗಲು ಎಂದಿಗೂ ಬಿಡಬಾರದು" ಎಂಬ ಪಂಥ ಕಟ್ಟಿದಂತೆಯೂ ಕಾಣುತ್ತದೆ. ಆದ್ದರಿಂದ ಪ್ರಜೆಗಳು - ಅವರವರ ಹಿತವನ್ನು ಅವರವರೇ ಕಾಪಾಡಿಕೊಳ್ಳಬೇಕಾದ ಸನ್ನಿವೇಶವಿದೆ. ಆದರೆ ಈ ಪ್ರಜಾಪ್ರಭುತ್ವದಲ್ಲಿ - ಪ್ರಜೆಗಳ ಕೈಯ್ಯಲ್ಲಿರುವ ಶಕ್ತಿ "ಮತ ಪ್ರಯೋಗ" ಮಾತ್ರ. ಆದ್ದರಿಂದ ಪ್ರತೀ ಚುನಾವಣೆಯ ಹಂತದಲ್ಲಿ - ನಾವು ಮತದಾನ ಮಾಡುವ ಮೊದಲು - ಪ್ರತೀ ವ್ಯಕ್ತಿ ಮತ್ತು ಪಕ್ಷಗಳ ಧೋರಣೆಗಳನ್ನು ತುಲನಾತ್ಮಕವಾಗಿ ಮಥಿಸಿ, ಪಕ್ಷಾತೀತರಾಗಿ ನಿರ್ಧರಿಸಬೇಕಾದ್ದು ಅತೀ ಅಗತ್ಯ.

                                             *****     *****     *****     *****