Tuesday, January 26, 2010

ಸಿ.ಅಶ್ವಥ್ - ಒಂದು ನೆನಪು

ಅದು 2009 ರ ಡಿಸೆಂಬರ್ 29 . ಅಂದು ನಾನು ಮಧ್ಯಾಹ್ನದ ಪಾಳಿಯಲ್ಲಿದ್ದೆ. ಒಂದು ವಾರದಿಂದ ಸಂಗೀತ ಕ್ಷೇತ್ರದ ಘನ ಗಂಭೀರ ಗಜವೊಂದು ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿದೆಯೆಂದು ಪತ್ರಿಕೆಗಳಲ್ಲಿ ಓದುತ್ತಲೇ ಇದ್ದೆ. ಆ ಹಿನ್ನೆಲೆಯಲ್ಲಿ ಮತ್ತು ಅಂದು ಅವರ ಜನ್ಮದಿನವೂ ಆದುದರಿಂದ ಅಂದು ಮಧ್ಯಾಹ್ನದ ಚಿತ್ರಗೀತೆಗಳ ಅರ್ಧ ಘಂಟೆಯ ಪ್ರಸಾರವನ್ನು ಅಶ್ವಥ್ ಅವರಿಗೇ ಸಮರ್ಪಿಸಬೇಕೆಂದು ನಿರ್ಧರಿಸಿಕೊಂಡು ತಯಾರಾಗುತ್ತಿದ್ದೆ. ಅದೇ ಹೊತ್ತಿಗೆ ಕನ್ನಡ ವಾರ್ತೆ ಬರತೊಡಗಿತು. "ಸಂಗೀತಲೋಕದ ಮೇರು ವೃಕ್ಷ ಇನ್ನಿಲ್ಲ. ಇಂದು ಬೆಳಿಗ್ಗೆ ಅಶ್ವಥ್ ನಿಧನರಾದರು " ಎಂಬ ಸುದ್ದಿ ಕೇಳಿ ಒಂದು ಕ್ಷಣ ಭಾವುಕಳಾದೆ. ಅದಾಗಲೇ ನಾನು, ಶ್ರೀ ಸಿ.ಅಶ್ವಥ್ ಅವರು ಹಾಡಿದ ಮತ್ತು ಸಂಗೀತ ಸಂಯೋಜಿಸಿದ ಒಂದಿಷ್ಟು ಚಿತ್ರಗೀತೆಗಳನ್ನು ಆ ಮಧ್ಯಾಹ್ನದ ಪ್ರಸಾರಕ್ಕೆಂದು ಜೋಡಿಸಿ ಇಟ್ಟುಕೊಂಡಿದ್ದೆ. ಈಗ ಸುದ್ದಿ ಕೇಳಿದ ಮೇಲೆ ಅವರಿಗೆ ನುಡಿನಮನವನ್ನೂ ಸಲ್ಲಿಸಬೇಕೆಂದು ನಿರ್ಧರಿಸಿದೆ. ಕಾಕನಕೋಟೆ, ಸ್ಪಂದನ, ಚಿನ್ನಾರಿ ಮುತ್ತ, ಮೈಸೂರು ಮಲ್ಲಿಗೆ, ನಾಗಮಂಡಲ, ಭೂಲೋಕದಲ್ಲಿ ಯಮರಾಜ, ಶಿಶುನಾಳಶರೀಫ್ ಮುಂತಾದ ಗೀತೆಗಳ ಮಧ್ಯದಲ್ಲಿ ನಾನು ಶೃಂಗರಿಸಿದ ನುಡಿ ಸ್ಮರಣಿಕೆಯನ್ನು ಇಟ್ಟು, ಭಾವಪೂರ್ಣ ಶ್ರಧ್ಹಾಂಜಲಿ ಸಲ್ಲಿಸಿದೆ . ಅದು 29-12-2009 .




ಅಂದು ನಾನಾಡಿದ ಮಾತುಗಳ ಸಂಕ್ಷಿಪ್ತ ಪಾಠ ಹೀಗಿದೆ:

ಇಂದು ನಿಧನರಾದ ಕನ್ನಡದ ಅಶ್ವತ್ಹ್ಹ ಪ್ರತಿಭೆ - ಸಿ. ಅಶ್ವಥ್ ಅವರ ಅಗಲುವಿಕೆಯ ಈ ಹೊತ್ತಿನಲ್ಲಿ ಅವರೇ ಹೆಣೆದು ಮಾಲೆಯಾಗಿಸಿದ ಹಾಡುಗಳ ಅರ್ಪಣೆ....ಇನ್ನಿಲ್ಲದ ಅಶ್ವಥ್ ನೆನಪಿನಲ್ಲಿ ಎರಡು ಹನಿ ಕಂಬನಿ... (ಎಂಥ ಮರುಳಯ್ಯ ಇದು ಎಂಥಮರುಳು -ಸ್ಪಂದನ ಚಿತ್ರದ ಹಾಡು) ಇಂದಿನ ತಮ್ಮ ಎಪ್ಪತ್ತನೇ ಜನ್ಮ ದಿನವನ್ನು ಆಚರಿಸಿದರೆ ಬಾಳ ಸಂಗೀತದ ಲಯ ತಪ್ಪಿ ಹೋದೀತೆಂದೋ ಏನೋ ಸಿ.ಅಶ್ವಥ್ ಇಂದೇ ಹೊರಟುಬಿಟ್ಟರು ಅನ್ನಿಸುತ್ತಿದೆ. ಇಂದಿಗೆ ಎಪ್ಪತ್ತು ವರ್ಷವೆಂಬ ಎಪ್ಪತ್ತು ಆವರ್ತಗಳನ್ನು ಪೂರ್ತಿಗೊಳಿಸಿ ನಡೆದೇ ಬಿಟ್ಟರು. ಯಾವುದೇ ಶೇಷವಿಲ್ಲ. ತಾಳ ತಪ್ಪದ ಕಲಾ ಬಾಳ್ವೆ! ಮೈಮನದೊಳಗೆಲ್ಲ ಸಂಗೀತವನ್ನೇ ತುಂಬಿಕೊಂಡಿದ್ದ ನಾದ ಚೇತನಕ್ಕೆ ತಲೆ ಬಾಗಿ ನಮಿಸುವ.(ನಿನ್ನ ಪ್ರೇಮದ ಪರಿಯ- ಮೈಸೂರು ಮಲ್ಲಿಗೆ)

ಇಂದು ನಿಜವಾಗಿಯೂ ಸಿ.ಅಶ್ವಥ್ ಅವರ ಜನ್ಮ ದಿನ. ಅವರ ಜನ್ಮ ದಿನಾಚರಣೆಗೆ ಸಾಕಷ್ಟು ತಯಾರಿಯೂ ನಡೆದಿತ್ತು. ಆದರೆ ಅದೇನು ಕಾಕತಾಳಿಯವೋ? ಇದೇ ದಿನವೇ ಅವರ ಪುಣ್ಯ ತಿಥಿಯ ದಿನವೂ ಆಗಿ ಹೋಗಿದೆ. ಬಾಳಿನ ಸಂಗೀತ ಕಚೇರಿಗೆ ಇಂದು ಮಂಗಳ ಹಾಡಿದ ನಾದಋಷಿಗೆ ನಮೋ ನಮಃ. (ಗೆದಿಯಬೇಕು ಮಗಳ - ನಾಗ ಮಂಡಲ)

"ಕಾಕನ ಕೋಟೆ"ಯಲ್ಲಿ ಚಿತ್ರ ರಂಗ ಪ್ರವೇಶಿಸಿ ಅಲ್ಲಿ ತನ್ನದೇ ವಿಶಿಷ್ಟ ಶೈಲಿಯ ಸಂಗೀತದ ಛಾಪು ಮೂಡಿಸಿದ ಅಶ್ವಥ್, ಅನಂತರ ಅಶ್ವಥ್ ಶೈಲಿಯ "ಬೃಹತ್ ಕೋಟೆ" ನಿರ್ಮಿಸಿ ಅದಕ್ಕೆ ತಾನೇ ರಾಜನಾಗಿ ಆಳ್ವಿಕೆ ನಡೆಸಿ ಈಗ ಅದನ್ನೆಲ್ಲಾ ಅಜರಾಮರವಾಗಿ ಉಳಿಸಿ ಹೊರಟೇ ಹೋಗಿದ್ದಾರೆ . ಅಶ್ವಥ್ ಭೌತಿಕವಾಗಿ ಇನ್ನಿಲ್ಲವಾದರೂ ಸಂಗೀತದ ಚೈತನ್ಯ ರೂಪಿಯಾಗಿ ಎಂದೆಂದಿಗೂ ಉಳಿಯಬಲ್ಲರು. ( ಸೋರುತಿಹುದು ಮನೆಯ ಮಾಳಿಗೆ - ಶಿಶುನಾಳ ಷರೀಫ್)

ಕನ್ನಡ ಭಾವ ಲೋಕದ ಸ್ವಚ್ಛಂದ ಹಕ್ಕಿಯಾಗಿ ಮೂರು ದಶಕಗಳಿಗೂ ಹೆಚ್ಹು ಕಾಲ ವಿಹರಿಸಿದ ಸಿ.ಅಶ್ವಥ್ ಈಗ ಬರೀ ಸವಿ ನೆನಪು. ಕನ್ನಡದ ಸಾಹಿತ್ಯವೆಂಬ ರಥಕ್ಕೆ ಸಂಗೀತದ ಹಗ್ಗ ಕಟ್ಟಿ ಕರ್ನಾಟಕದ ಉದ್ದಗಲಕ್ಕೂ ಎಳೆದು ಎಲ್ಲರಿಗೂ " ಸಂಗೀತ ಸುಗ್ಗಿ "ಯ ಹುಗ್ಗಿ ಹಂಚಿದ, ಕನ್ನಡದ ತೇರನ್ನು ಕನ್ನಡಿಗರ ಮನೆ ಮನದಲ್ಲಿ ನಿಲ್ಲಿಸಿ ಸಂಗೀತೋತ್ಸವದ ಸಂಭ್ರಮದ ಕಜ್ಜಾಯವನ್ನು ಎಲ್ಲರಿಗೂ ಹಂಚಿ ತಿಂದ ಸಿ.ಅಶ್ವಥ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವಾಗ ಸಹಜವಾಗಿಯೇ ದನಿ ಗದ್ಗದವಾಗುತ್ತದೆ, ಕಣ್ಣು ಹನಿಗೂಡುತ್ತದೆ. ( ರೆಕ್ಕೆಇದ್ದಾರೆ ಸಾಕೆ - ಚಿನ್ನಾರಿ ಮುತ್ತ )

ಬದುಕಿಡೀ ಸಂಗೀತ ಸರಸ್ವತಿಯ ಉಪಾಸನೆಗೈದು, ಸಂಗೀತ ರಸಿಕರ ಹೃನ್ಮನದಲ್ಲಿ ಭದ್ರ ಸ್ಥಾನವನ್ನು ಅಲಂಕರಿಸಿ, ಭಾವ ಗೀತೆ, ಭಕ್ತಿ ಗೀತೆ, ಜನಪದ ಗೀತೆ, ತತ್ವ ಪದ, ಚಿತ್ರಗೀತೆಗಳನ್ನು ಸಂಯೋಜಿಸಿ, ಹಾಡಿ, ಕರ್ನಾಟಕದಾದ್ಯಂತ ಸಂಚರಿಸಿ ಕನ್ನಡ ಕಾವ್ಯದ ಇಂಪನ್ನು " ಕನ್ನಡವೇ ಸತ್ಯ" ಎನ್ನುತ್ತ ಕನ್ನಡಿಗರ ಎದೆ ಬಾಗಿಲಿಗೆ ಕೊಂಡೊಯ್ದು ಕನ್ನಡದ ಪೆಂಪನ್ನು ತಲೆಯ ಮೇಲೆ ಹೊತ್ತು ಮೆರೆದಾಡಿದ, ಚಿತ್ರ ಸಂಗೀತಕ್ಕೆ ಹೊಸ ಧಾಟಿ, ಲಯವನ್ನು ತಂದು ಕೊಟ್ಟು, ಹೊಸ ಮಾರ್ಗಪ್ರವರ್ತಕನಾಗಿ ಮೆರೆದ ಸದಾ ಪ್ರಯೋಗಶೀಲನಾದ ಅಪೂರ್ವ ಕಲಾವಿದ, ಸಂಗೀತೋಪಾಸಕ ಸಿ.ಅಶ್ವಥ್ ಎಂಬ ಉತ್ಸಾಹದ ಬುಗ್ಗೆ " ಇನ್ನಿಲ್ಲ" ಎಂದರೆ ಈ ಕ್ಷಣಕ್ಕೆ ನಂಬುವುದು ಕಷ್ಟ. ಆದರೆ ಇದು ಸತ್ಯ. "ಅಳಿಯುವುದು ಕಾಯ, ಉಳಿಯುವುದು ಕೀರ್ತಿ" ಎಂಬ ಮಾತಿಗೆ ಇನ್ನೊಂದು ದೃಷ್ಟಾಂತವಾದ ಅಗಲಿದ ಚೇತನ ಸಿ.ಅಶ್ವಥ್ ಅವರಿಗೆ ಇದೋ- ಆಕಾಶವಾಣಿಯ ಶ್ರದ್ಧಾಂಜಲಿ. (ಬಾಳಿನ ಸುತ್ತಲೂ - ಭೂಮಿಗೆಬಂದ ಭಗವಂತ)

ಹೀಗೆ... ನನ್ನ ಕರ್ತವ್ಯದ ಅವಧಿಯಲ್ಲೇ ಸಿ.ಅಶ್ವಥ್ ಅವರಿಗೆ ನುಡಿನಮನ ಸಲ್ಲಿಸಿದೆ. ಕೆಲವು ಅಭಿಮಾನಿ ಕೇಳುಗರು ಆ ಕಾರ್ಯಕ್ರಮವನ್ನು ಕೇಳಿ "ನಮ್ಮೆಲ್ಲರ ಪರವಾಗಿ ಸೂಕ್ತ ಗೌರವ ಸಲ್ಲಿಸಿದ ನಿಮಗೆ ತುಂಬ ಥ್ಯಾಂಕ್ಸ್. ನಿಮ್ಮ ಮಾತನ್ನು ಕೇಳುವಾಗ ನಾವೂ ಅರೆಕ್ಷಣ ಭಾವುಕರಾದೆವು " ಎಂದು ನನ್ನನ್ನು ಅಭಿನಂದಿಸಿದರು.

ಇಂತಹ ಸಾರ್ಥಕ ಭಾವವನ್ನು ಮೂಡಿಸುವ ಕೆಲವು ಕ್ಷಣಗಳು - ವೃತ್ತಿ ಜೀವನದಲ್ಲಿ ತೃಪ್ತಿ ನೀಡುವುದು ಸಹಜ .

ಆಕಾಶವಾಣಿ ಎಂಬ ವೇದಿಕೆಯು ಇಂತಹ ಹಲವು ಸಂದರ್ಭಗಳನ್ನು ನನಗೆ ಒದಗಿಸಿ ಕೊಟ್ಟಿದೆ; ಹಲವಾರು ಅಪೂರ್ವ ಪ್ರತಿಭೆಗಳನ್ನು ಭೇಟಿ ಮಾಡಿಸಿದೆ. 1978 - 1988 ರ ಮಧ್ಯದಲ್ಲಿ, ಬಹುಖ್ಯಾತರಾದ ಹಲವಾರು ಸಾಹಿತಿಗಳನ್ನು, ಸಂಗೀತ ವಿದ್ವಾಂಸರನ್ನೂ ಮಂಗಳೂರು ಆಕಾಶವಾಣಿಯಲ್ಲಿ ನಾನು ಮುಖತಃ ಭೇಟಿಯಾದೆ; ಮಾತಾಡಿದೆ; ಅಂತಹ ವಿಶೇಷಗಳಲ್ಲಿ ಸಿ.ಅಶ್ವಥ್ ಕೂಡ ಒಬ್ಬರು .

ಡಾ.ಶಿವರಾಮ ಕಾರಂತ, ಕಯ್ಯಾರ ಕಿಂಜಣ್ಣ ರೈ, ಕು.ಶಿ.ಹರಿದಾಸ ಭಟ್, ವೈಶಾಲಿ, ಕದ್ರಿ ಗೋಪಾಲನಾಥ್, ಕುಂಬ್ಳೆ ಸುಂದರ ರಾವ್, ಉಳ್ಳೂರು ಮೂಕಾಂಬಿಕ ಅಮ್ಮ (ಮೂಕಜ್ಜಿ ), ಪದ್ಮ ಶೆಣೈ, ವೈದೇಹಿ, ಶಶಿಧರ ಕೋಟೆ...ಹೀಗೆ ನೂರಾರು ಸಾವಿರಾರು ಪ್ರತಿಭಾವಂತರನ್ನು ಸಂದರ್ಶಿಸಿದೆ; ಒಡನಾಡಿದೆ. ಇಂತಹ ಸಂದರ್ಭಗಳನ್ನು ಒದಗಿಸಿದ ಆಕಾಶವಾಣಿಗೆ ನಾನು ಸದಾ ಋಣಿಯಾಗಿದ್ದೇನೆ.