Friday, May 3, 2019

ಹೇಳಿ ನೀವಾದರೂ...

        ಹೇಳಿ ನೀವಾದರೂ...

ದೀಪ ಹಚ್ಚಿದ ಮಗಳಾಕೆ ಗುಣವಂತೆ
ಸ್ನೇಹಸುಖ ಪ್ರೀತಿಸುಖ ಮೊಗೆದ ಸಿರಿವಂತೆ
ನನ್ನ ಬದುಕಿನ ಕೆನೆಯ ಸುರಿದುಂಡ ಗೀತೆ
ಪೋಷಿಸಿದ ದೇಹವನು ಕಳಿಸಿಕೊಡುವಾಗ-
"ಹೋಗಿಯೇ ಬಿಟ್ಟಳೆ? ಸುಖ ಮರಣವಮ್ಮ,
ಚಿಂತೆ ನಿಶ್ಚಿಂತೆ"... ...
ಕೊಡವಿ ಬಿಟ್ಟಂತೆ ಹೇಳಿದೆಯಲ್ಲ ಮಗಳೆ?

ಅಂದು ಮುಂಡಾಡಿದ ಮಗನೊಬ್ಬನಿದ್ದ
ಬದುಕಿಗೆನ್ನನು ಬಿಗಿದ ಬಂಧದಂತಿದ್ದ
ಸತ್ವತತ್ವವನೆಲ್ಲ ಹೀರಿಯೇ ಬೆಳೆದಿದ್ದ
ನಿನ್ನ ಬಿಟ್ಟಿರಲಾರೆ ಎನ್ನುತ್ತಲಿದ್ದ
ಬದುಕು ಓಡಿತ್ತು......   .....
ಆ ಮಗನ ಕಣ್ಣೆದುರೇ ಜೀವ ಹೊರಟಿತ್ತು
ಕಣ್ಣಂತೆ ಕಾದವಳ ದೇಹ ಮಲಗಿತ್ತು
ಪ್ರೀತಿಸಿದ ದೇಹಕ್ಕೆ ಹೆಗಲು ಕೊಡುವಾಗ
"ಹಾಸಿಗೆ ಹಿಡಿಯದ್ದೆ ಭಾಗ್ಯ" ವೆನಿಸಿತೆ ಮಗನೆ?
  ಸುಖ ಮರಣ ಪಲ್ಲವಿಗೆ ತಲೆಯಾಡಿಸಿದಿಯೇಕೆ?

ನೀನೆನ್ನ ಬದುಕು ಬಂಗಾರ ಸಂಪತ್ತು
ಎಂದೆಲ್ಲ ಪರಿಪರಿಯಿಂದ ಓಲೈಸಿ
ಕೈಹಿಡಿದು ಸಂಸಾರದಲಿ ಮುಳುಗೇಳಿಸಿದ ಗಂಡ
ಕೂತಿದ್ದ ತಲೆ ನೇವರಿಸುತ್ತ ಬಿಕ್ಕುತ್ತ
ಬಿಡೆನೆಂದು ಆ - ವರಿಸಿದ್ದ ದೇಹ
ಕೊಡವಿ ಮಲಗಿತ್ತು ಜಡವಾಗಿ ಮೋಹ
ಅಸ್ತಿತ್ವ ಮರೆಯಾದ ಮರುಕ ಧಾವಂತ
"ಮರಣ ಸುಖ" - ಎದುರಲ್ಲೇ; ಸಾಕ್ಷಾತ್ತು ಕುಣಿತ

ಸುಖವೋ ದುಃಖವೋ ಎಲ್ಲವೂ ದಿಗ್ಭ್ರಾಂತ
ಈಗಿತ್ತು ಈಗಿಲ್ಲ - ಕಣ್ಣುಮಾಯಕ - ಅಂತ

ಸುಖ ಮರಣ ಮಂತ್ರ ಘಮ; ಸಂಭ್ರಮದ ಜಳಕ
ನೆಂಟರಿಷ್ಟರ ವೇದಾಂತ ಪುಳಕ
ಮಾತಿನಲೆ ಹೇತುವ ಮರುಕ ಪದಚಳಕ
ಹೊಸದು ಹುಡುಕಾಟ ಸುಡುಗಾಡ ಸುಖ ಪಾವಕ!

ಬದುಕಿದ್ದು ಗದ್ದಲದೂರು; ಮಗುಚಿದ್ದು ಶಾಂತ ಸ್ಮಶಾನ?
ಶಾಂತಿ - ಬರಿ ಶಬ್ದ...; ಇರದುದರ ಹುಡುಕಾಟ
ಆಯ್ಕೆಗುಂಟೇ ಅನುವು? ಹೊಂಚಿದರೆ ಸಾವು?

ಉಕ್ಕು ಬಿಕ್ಕುಗಳಿರದ ಜಡ ಒಡಲು ಸುಖವೆ?
ಸುಖವೋ ದುಃಖವೋ ಬಯಕೆಯೋ ಹೇರಿಕೆಯೋ...
ಏನಿದೇನಿದು ಅಯ್ಯೋ ಮರಣ ಸುಖವೆ?!
ಉಂಡುಟ್ಟು ಅಲೆದ ನಲಿದಾಟಗಳು ದುಃಖವೆ?

***** *****

ಚಕ್ರ ಸವೆದಿತ್ತು; ಬಂಡಿ ನಿಂತಿತ್ತು ... ...
ನಿಂತದ್ದು ಬದುಕೆ?? ...
ಸ್ವಪ್ನ ಕಳಚಿದ್ದೆ? ಕವಿದದ್ದೆ?
ಏಳಲಾಗದೆ ಒರಗಿದುದಷ್ಟೆ ಗೊತ್ತು
ಕನಸೋ? ನನಸೋ? ನುಂಗಲಾಗದ ಹೊತ್ತು

ಹೇಳಿ ನೀವಾದರೂ ಸುಖದ ವ್ಯಾಪಾರಿಗಳೇ...
ಮರಣ ಸುಖವೇ?
ನಾನಾದ "ನಾನು" ಸತ್ತ ಸುಖ ಸತ್ಯವೇ?
ಸತ್ಯ - ಸುಖವೇ?
ಸುಖವೆಲ್ಲ - ಸತ್ಯವೆ?




              

Saturday, January 5, 2019

ನಾ ಕಂಡ ಬದರೀ ಕೇದಾರ

ನಮ್ಮ ಭಾರತದ ನೆಲದಲ್ಲಿ ಹುಟ್ಟಿದ ಪ್ರತಿಯೊಬ್ಬರಿಗೂ ಒಮ್ಮೆಯಾದರೂ ಹಿಮಾಲಯದ ರುದ್ರ ರಮಣೀಯತೆಯನ್ನು ಕಣ್ತುಂಬ ತುಂಬಿಕೊಳ್ಳಬೇಕೆಂಬ ಆಸೆಯೊಂದು ಸುಪ್ತವಾಗಿ ಸಂಚರಿಸುವುದು ಸಾಮಾನ್ಯ. ಅಂಥ ಒಂದು ಸಂದರ್ಭ ನನಗೆ ಒದಗಿ ಬಂದದ್ದು ೨೦೧೮ ರ ಅಕ್ಟೋಬರ್ ೨೧ ರಂದು.


ಆಕಾಶಗಮನ
ಅಕ್ಟೋಬರ್ ೧೯ರ ವಿಜಯದಶಮಿಯ ರಾತ್ರಿ ಮಂಗಳೂರಿನಿಂದ ಆಕಾಶಮಾರ್ಗದಲ್ಲಿ ಹೊರಟಿದ್ದ ನಮ್ಮ ತಂಡವು, ಬೆಂಗಳೂರು ದೆಹಲಿ ಮಾರ್ಗದಲ್ಲಿ, ೨೦ರ ಬೆಳಿಗ್ಗೆ ೭.೨೫ಕ್ಕೆ ಡೆಹರಾಡೂನ್ ನಿಲ್ದಾಣ ತಲುಪಿದ್ದೆವು. 



ಅಲ್ಲಿಂದ ಸುಮಾರು ೮.೨೦ಕ್ಕೆ ನೇರವಾಗಿ ಕೇದಾರದ ಕಡೆಗೆ ನೆಲಮಾರ್ಗದಲ್ಲಿ ಹೊರಟೆವು.


ಹೋಗುವಾಗ ಹರಿದ್ವಾರ, ಹೃಷೀಕೇಶದ ಹೊರ ಹೊರಗಿನಿಂದಲೇ ನಮ್ಮ ಪ್ರಯಾಣ ಸಾಗಿತ್ತು. ಕೇದಾರದ ಬುಡದಲ್ಲಿರುವ ಹಳ್ಳಿಯಾದ ಸೆರ್ಸಿಯ ವರೆಗೆ ಸುಮಾರು ೨೪೫ ಕಿ.ಮೀ. ದೂರವನ್ನು ೮ ಗಂಟೆಗಳ ಕಾಲ ಪ್ರಯಾಣಿಸುವಾಗ - ದಾರಿಯುದ್ದಕ್ಕೂ ಒಂದು ಬದಿಯಲ್ಲಿ ನದಿ, ಇನ್ನೊಂದು ಬದಿಯಲ್ಲಿ "ಈಗ ಕುಸಿಯಲೆ? ಈಗ ಕುಸಿಯಲೆ?" ಎಂದು ಕೇಳುತ್ತಿದ್ದಂತೆ ಕಾಣುತ್ತಿದ್ದ ಹಿಸುಕು ಬೆಟ್ಟಗಳನ್ನು ಭಯಾಶ್ಚರ್ಯಗಳಿಂದ ನೋಡುತ್ತ ಸಾಗಿದ್ದ ನಾವು - ಸೆರ್ಸಿ ಎಂಬ ಸ್ಥಳ ತಲುಪುವಾಗ ಸಂಜೆ ೪ ಗಂಟೆ ದಾಟಿತ್ತು.


ರುದ್ರಪ್ರಯಾಗ ಜಿಲ್ಲೆಯ ಉಖೀಮಠ ತಹಸೀಲು-ಕಂದಾಯ ವ್ಯಾಪ್ತಿಯಲ್ಲಿರುವ ಸೆರ್ಸಿ ಎಂಬ ಈ ಹಳ್ಳಿಯು ಕೇದಾರದ ತಪ್ಪಲು. ಅಂದಿನ ಹೆಲಿಕಾಪ್ಟರ್ ಸೇವೆಯು ಮುಗಿದುಹೋದುದರಿಂದಾಗಿ, ಮರುದಿನಕ್ಕಾಗಿ ಹೆಲಿಕಾಪ್ಟರ್ ಸೀಟುಗಳನ್ನು ಕಾಯ್ದಿರಿಸುವ ಕೆಲಸವನ್ನು ಆಗಲೇ ಅಲ್ಲೇ ಮುಗಿಸಿ, ೧೬ ಜನರಿಗೆ ರಾತ್ರಿ ಠಿಕಾಣಿ ಹೂಡಲು ಸೂಕ್ತವಾದ ಹೋಟೆಲ್‌ಗಾಗಿ ಹುಡುಕಾಡಿದ್ದಾಯ್ತು.
ಅಂತೂ ಸಾಕಷ್ಟು ಸುವ್ಯವಸ್ಥಿತವಾದ ಒಂದು ಅತಿಥಿ ಗೃಹದಲ್ಲಿ ರಾತ್ರಿ ಕಳೆಯಿತು. ಸೆರ್ಸಿಯ ಈ ನಿಲ್ದಾಣದ "ಆಕಾಶ ಸೇವೆ"ಯು ಎಪ್ರಿಲ್‌ನಿಂದ ಜೂನ್, ಅನಂತರ ಸೆಪ್ಟೆಂಬರ್‌ನಿಂದ ದೀಪಾವಳಿಯ ವರೆಗೆ ಮಾತ್ರ ಲಭ್ಯ. ಮರುದಿನ ನಮಗೆ ಕೊಟ್ಟ ಸಮಯಕ್ಕೆ ಸರಿಯಾಗಿ ಮಧ್ಯಾಹ್ನ ೧೧ ಗಂಟೆಯ ಸುಮಾರಿಗೆ "ಹಿಮಾಲಯನ್ ಹೆಲಿ ಸರ್ವಿಸಸ್"  ಎಂಬ ಸಂಸ್ಥೆಯ ಹೆಲಿಕಾಪ್ಟರ್ ನಿಲ್ದಾಣಕ್ಕೆ ಹೋದೆವು.

ಆಯಾ ದಿನದ ಹವಾಮಾನಕ್ಕೆ ಅನುಗುಣವಾಗಿ ಹಾರಾಟಗಳಲ್ಲಿ ವ್ಯತ್ಯಯ ಆಗುವುದಂತೂ ಅಲ್ಲಿ ಸರ್ವೇಸಾಮಾನ್ಯ. ಪ್ರತಿಯೊಬ್ಬ ವ್ಯಕ್ತಿ, ಅವರ ಲಗೇಜು ಇತ್ಯಾದಿಗಳ ತೂಕ, ಬಿಗಿ ಪರೀಕ್ಷೆಯ ನಂತರವೇ - ಅಪೇಕ್ಷಿತ ಒಟ್ಟು ತೂಕಕ್ಕೆ ಹೊಂದುವಂತೆ ೫-೬ ಜನರನ್ನಷ್ಟೇ ಹೆಲಿಕಾಪ್ಟರ್‌ನಲ್ಲಿ ಕರೆದೊಯ್ಯುತ್ತಿರುತ್ತಾರೆ. ಈ ಪೂರ್ವತಯಾರಿಗಳೆಲ್ಲವೂ ಮುಗಿದು ನಾವು ಆಕಾಶ ಸೇರುವಾಗ ಸುಮಾರು ೧೨ ಗಂಟೆ ಆಗಿಹೋಗಿತ್ತು. "Photography not allowed" ಎಂದು ಇಂಗ್ಲಿಷ್‌ನಲ್ಲಿ ಬರೆದದ್ದು - ಬಹುಶಃ ಮರ್ಕಟ ಮನಸ್ಸಿನ ದೊಡ್ಡ ಮಕ್ಕಳಿಗೆ ಅರ್ಥವಾಗಲಿಲ್ಲ!


ಆಕಾಶಮಾರ್ಗದಲ್ಲಿ ಕೇವಲ ೮ ನಿಮಿಷ ಪ್ರಯಾಣಿಸಿ ಕೇದಾರನಾಥನ ಭೂಮಿ ಸ್ಪರ್ಶಿಸಿಬಿಟ್ಟೆವು.

ಸೃಷ್ಟಿಯ ನಗ್ನ ಸೌಂದರ್ಯ, ನಿಗೂಢ ಚೋದ್ಯವನ್ನು ಆಗಸದಿಂದಲೇ ಕಣ್ದುಂಬಿಕೊಂಡ ಈ ಅನುಭವವು ರಸಸೃಷ್ಟಿಪಾನದ ಸಾರ್ಥಕ ಕ್ಷಣಗಳೆನ್ನಿಸುವುದು ಆಶ್ಚರ್ಯವೇನಲ್ಲ. ಆಕಾಶಗಮನವು ಮುಗಿದೇ ಹೋಯಿತಲ್ಲ? ಅನ್ನಿಸಿಬಿಡುತ್ತದೆ. ಇಷ್ಟು ಸಂಕ್ಷೇಪದ ಆನಂದಕ್ಕಾಗಿ ತಲಾ ೯-೧೦,೦೦೦ ರೂಪಾಯಿ ವ್ಯರ್ಥಗೊಳಿಸಿದೆಯಾ? ಎಂದು ವ್ಯಾವಹಾರಿಕ ಬುದ್ಧಿಯು ಪ್ರಶ್ನಿಸಿದ್ದೂ ಇದೆ! ಎಲ ಎಲಾ ಬುದ್ಧಿಯೇ! ಹಾಗಿದ್ದರೆ...ಸುಖಕ್ಕೂ ಒಂದು ಬೆಲೆ ತೆರದೆ ಆದೀತೆ? ಯಾವುದೇ ಸುಖ ಎಂಬುದೇ ಒಂದು ಕ್ಲೀಷೆ, ಯಾವತ್ತೂ ಅಶಾಶ್ವತ ಅಲ್ಲವೆ? ಆದರೆ...ಕ್ಷಣಿಕ ಸುಖಕ್ಕೂ ಬಲ ಇದೆ!

ನನಸಾದ ಕೇದಾರ
ಆಹಾ ಓಹೋ ಅನ್ನುವಷ್ಟರಲ್ಲಿ ಕೇದಾರದ ಹೆಲಿಪ್ಯಾಡ್‌ನಲ್ಲಿ ಇಳಿದಾಗಿತ್ತು! ಇಳಿದ ತಕ್ಷಣವೇ ದೃಷ್ಟಿಗ್ರಾಹ್ಯವಾದ ಎಲ್ಲವನ್ನೂ ಗಬಗಬನೆ ತುಂಬಿಸಿಕೊಳ್ಳುವ ಆತುರ - ದಿನಗಟ್ಟಲೆ ಊಟ ಸಿಗದ ಜೀವಿಗಳಂತೆ! ಇಳಿದ ತಕ್ಷಣವೇ - ಕೇದಾರದ ವಿಶ್ವರೂಪ ದರ್ಶನವೂ ಆಗತೊಡಗಿತ್ತು. ನಮ್ಮನ್ನೇ ಕಾಯುತ್ತಿದ್ದಂತೆ ಅಲ್ಲಿ ಮುತ್ತಿಟ್ಟು ಸ್ವಾಗತಿಸಿದ್ದು - ಘಂಟಾನಾದವೂ ಅಲ್ಲ; ತುತ್ತೂರಿ ತಮಟೆಗಳೂ ಅಲ್ಲ. ವೈರಿಗಳನ್ನು ಮುತ್ತಿದಂತೆ ನಖಶಿಖಾಂತ ನಮ್ಮನ್ನು ನಡುಗಿಸಿ ಆವರಿಸಿದ ಶೀತಗಾಳಿಯ ಮುತ್ತಿನಾರತಿ! ಹಿಂದೆಂದೂ ನಾವು ಕಂಡರಿಯದ ಆಲಿಕಲ್ಲುಗಳ ಹೂಮಳೆ! ನಮ್ಮ ಗುಂಪಿನ ಕೆಲವರನ್ನು ಬಿಟ್ಟು ಉಳಿದ ಎಲ್ಲರ ಮೈಮೇಲೂ ಒಂದೊಂದು ಕತ್ತೆ ಹೊರುವಷ್ಟು ಬಟ್ಟೆ ಹೇರಿಕೊಂಡು - ಸ್ವೆಟರ್, ಜರ್ಕಿನ್ ಇತ್ಯಾದಿ ಮುನ್ನೆಚ್ಚರಿಕೆಯಿಂದ ಹಿಮಾಲಯದ ನೆಲದಲ್ಲಿ ಧೈರ್ಯದಿಂದ ಕಾಲಿಟ್ಟಿದ್ದರೂ ನಮ್ಮ ಬೆನ್ನು ಹುರಿಯೊಳಗೆ ಅಂದು ಚಳಿ ಹೊಕ್ಕಿತ್ತು ಅಂದರೆ... ಅದೆಂಥ ಚಳಿ ಇರಬಹುದು? ಕರಾವಳಿಯ ಮಂದಿಗಂತೂ ಕನಸಿನಲ್ಲೂ ಊಹಿಸಲಾಗದ ಥ್ರಿಲ್ ಅದು!
   
ಹಿಮಾಲಯದ ಕುರಿತ ಅತೀವ ಪ್ರೀತಿ ಎಂಬ ಪೂರ್ವಾಗ್ರಹವಿದ್ದ ನಾನು ಕ್ರಮೇಣ - ಈ ಬಗೆಯ ದೈಹಿಕ ಹಿಂಸಾಭಾವದಿಂದ ಹೊರಬರಲು ಬುದ್ಧಿಪೂರ್ವಕವಾಗಿ ಯತ್ನಿಸುತ್ತಿದ್ದೆ. ಹೊಕ್ಕೊಡನೆ ರೋಮಾಂಚನಗೊಳಿಸಿದ್ದ ಹಿಮಾನ್ವಿತ ಪರಿಸರವು, ಅಲ್ಲಿಂದ ಸುಮಾರು ಅರ್ಧ ಕಿ.ಮೀ. ನಡೆದು ಕೇದಾರನಾಥನ ಮಂದಿರವನ್ನು ತಲುಪುವಾಗ... ನಮ್ಮನ್ನು ನಖಶಿಖಾಂತ ನಡುಗಿಸತೊಡಗಿತ್ತು!

ನಿರೀಕ್ಷಿತ ಶೀತಲ ಸಮರಕ್ಕೆ ಸಜ್ಜಾಗಿ ಹೊಸ ವೇಷದಲ್ಲಿಯೇ ಹೋಗಿದ್ದ ನಮ್ಮ ಬೂಟುಗಳನ್ನು ಕೇದಾರನಾಥನ ಮಂದಿರದ ಹೊರಗೆ ಕಳಚಿಟ್ಟು ಬರಿಗಾಲಲ್ಲಿ ಕೆಲವು ಹೆಜ್ಜೆ ನಡೆದದ್ದನ್ನೂ ನಮ್ಮ ಸಾಧನೆಯ ಸಾಲಿಗೆ ಸೇರಿಸಿಕೊಳ್ಳಬೇಕು ಅನ್ನಿಸಿದ್ದ - ವಿಶ್ವರೂಪದರ್ಶನದ ಚಳಿಯ ಕ್ಷಣವದು! ಕೇದಾರದಲ್ಲಿ ಕಾಲಿಟ್ಟ ಕೇವಲ ೫ ನಿಮಿಷದಲ್ಲಿ ಕರುಳಿನ ಒಳಗೆಲ್ಲ ಹಿಮ ತುಂಬಿದಂತೆ ಕಟ್ ಕಟಾ ಕಟ್...!

ಅಂತೂ ದೇವಾಲಯ ಪ್ರವೇಶಿಸಿದೆವು. ಅಕ್ಟೋಬರ್‌ನ ಅಂತಿಮ ದಿನಗಳಾದ್ದರಿಂದ ವಿಶೇಷ ನೂಕುನುಗ್ಗಲೇನೂ ಇರಲಿಲ್ಲ. ಕೇದಾರನಾಥ ಲಿಂಗದ ಸಮೀಪ ದರ್ಶನವೂ ಆಯಿತು. 


ಈ ಭಾರತದ ಪುಣ್ಯಭೂಮಿಯಲ್ಲಿ ಜನಿಸಿದ ಮೇಲೆ ಒಮ್ಮೆಯಾದರೂ ಕೇದಾರನಾಥನ ದರ್ಶನ ಮಾಡಲೇಬೇಕು ಎಂಬ ಕನಸನ್ನು ಭಕ್ತಿಭಾವದಿಂದ ಕಾಣುತ್ತ ಬಂದವರಿಗೆ ಜನ್ಮ ಸಾರ್ಥಕ್ಯದ ಅನುಭವ ಅದು. ಆಗ ಮನಸ್ಸು ಧ್ಯಾನಿಸುತ್ತಿತ್ತು - ಹಿಮಾಲಯ ರಾಯನ ಪೌರಾಣಿಕ ಹಿನ್ನೆಲೆಗಳು; ಆದಿ ಶಂಕರಾಚಾರ್ಯರು, ಋಷಿ ಮುನಿಗಳು-ಪ್ರಜಾಪಿತರು... ಇವರೆಲ್ಲರೂ ಇದೇ ನೆಲದಲ್ಲಿ ಅಂದೊಮ್ಮೆ ಓಡಾಡಿದ್ದರೆ? ... ಸಿಹಿ ಸಿಹಿ ಮೆಲುಕು.

ಪಾಂಡವರು ಈ ಕೇದಾರದ ದೇಗುಲವನ್ನು ನಿರ್ಮಿಸಿದರು ಎಂಬ ಪೌರಾಣಿಕ ಹಿನ್ನೆಲೆ ಇದ್ದರೂ ಕೂಡ ಈಗ ಕಾಣುತ್ತಿರುವ ದೇವಳವನ್ನು ಶ್ರೀ ಆದಿ ಶಂಕರಾಚಾರ್ಯರು ೮ನೇ ಶತಮಾನದಲ್ಲಿ ಪುನಃ ಸ್ಥಾಪಿಸಿ, ಪುನರುಜ್ಜೀವಗೊಳಿಸಿ, ಗತ ವೈಭವವನ್ನು ಚಿರಸ್ಥಾಯಿಗೊಳಿಸಿದರು... ಎನ್ನುತ್ತಾರೆ. ವೈಶಿಷ್ಟ್ಯಪೂರ್ಣ ಅನ್ನಿಸಿದ ಕೇದಾರನಾಥನ ದೇಗುಲವನ್ನು ಹೊಕ್ಕು ಲಿಂಗ ದರ್ಶನ-ಶಿರ ಸ್ಪರ್ಶನದ ಆನಂದವಂತೂ ದಕ್ಕಿತು.

ವಿಸ್ತಾರದಲ್ಲಿ ಚಿಕ್ಕದೆನಿಸಿದರೂ ಬುಡದಿಂದ ತಲೆಯವರೆಗೆ ಆ ಇಡೀ ದೇವಳವೇ ಶಿಲಾಮಯ. ಆ ಪರಿಸರದಲ್ಲಿ ಕಾಣದ ಅಂಥ ಶಿಲೆಗಳೆಲ್ಲ ಅಲ್ಲಿಗೆ ಬಂದದ್ದಾದರೂ ಹೇಗೆ? ಅವನ್ನು ಸಾಗಿಸಿದ್ದು ಹೇಗಿರಬಹುದು? ಅಂತಹ ಹಿಮ ತುಂಬಿದ ವಾತಾವರಣದಲ್ಲಿ ಗುಡಿ ನಿರ್ಮಿಸಲು ಎಷ್ಟು ದೀರ್ಘಕಾಲ - (ಬೆವರು ಸುರಿಸದೆ) ದುಡಿದಿರಬಹುದು? ಶಿವಭಾವದಲ್ಲೇ ತೇಲಾಡುತ್ತ ಅಲ್ಲಿಂದ ಹೊರಬಂದು ನಿಂತೆವು. ಕಣ್ಣು ಹಾಯಿಸುವಷ್ಟು ದೂರದವರೆಗಿನ ಪ್ರಕೃತಿಯ ಅಸೀಮ ಗಾಂಭೀರ್ಯವನ್ನು ಕಣ್ತುಂಬಿಕೊಳ್ಳುತ್ತ ಹೋದಾಗ, ಅದು - ಶಿವನ ಸಮ್ಯಕ್ ದರ್ಶನದ ಪ್ರತಿಮೆಯೇನೋ...ಎಂಬಂಥ ಅವಿಸ್ಮರಣೀಯ ಅನುಭವ. ಆ ಭೂಮ್ಯಾಕಾಶದ ಭೂಮ ದೃಶ್ಯದ ವರ್ಣನೆಯು ಶಬ್ದಗಳ ಅಳವಿಗೆ ದಕ್ಕುವಂಥದ್ದಲ್ಲ.

೨೦೧೩ರಲ್ಲಿ ಅಲಕಾನಂದೆಯು ಮುನಿದಾಗ ಅಪ್ಪಳಿಸಿದ್ದ ಭೀಕರ ಚಂಡಪ್ರವಾಹಕ್ಕೆ ಎದೆಯೊಡ್ಡಿ ನಿಂತಿದ್ದ ಆ ದೇಗುಲವು - ೨೦೧೮ರಲ್ಲಿ ನಾವು ನೋಡುವಾಗ - "ತನಗೇನೂ ಆಗಿಯೇ ಇಲ್ಲ" ಎನ್ನುವಂತಿತ್ತು! ಪೇಟೆ ಬೀದಿಯು ಮುಂಚಿಗಿಂತ ವಿಶಾಲ, ಅಚ್ಚುಕಟ್ಟಾಗಿ ಪುನರ್ರೂಪಿತಗೊಂಡಿತ್ತು! ಅಂದಿನ ಪ್ರವಾಹದೊಂದಿಗೆ ಉರುಳಿ ಬಂದು, ಪ್ರವಾಹದ ಹೊಡೆತದಿಂದ ದೇವಸ್ಥಾನವನ್ನು ರಕ್ಷಿಸಿತೆಂದು ಹೇಳಲಾಗುವ ದೊಡ್ಡ ಕಲ್ಲೊಂದು ದೇವಳದ ಹಿಂದೆ - ಸುಮಾರು ೩೫-೪೦ ಅಡಿ ದೂರದಲ್ಲಿ ಮೌನವಾಗಿ ನಿಂತಿತ್ತು! ಜನರ ಓಡಾಟವೂ ಸಾಕಷ್ಟಿತ್ತು; ಭಕ್ತಿ ಸಂಚಲನವಿತ್ತು. ಅವ್ಯಕ್ತ ಮೌನವೇ ಅಲ್ಲಿ ಪಾರುಪತ್ಯ ನಡೆಸಿದಂತೆಯೂ ಇತ್ತು! ಭಾವತೇಲುಗಳು ಒಳಸರಿದಂತಿದ್ದವು! ಧ್ಯಾನವು ಹಿಮಗಟ್ಟುವಂತಿತ್ತು!

ಅಲ್ಲಿಯೂ ಲೌಕಿಕ ವ್ಯಾಪಾರ ವಹಿವಾಟುಗಳಿದ್ದರೂ ಕೂಡ - ಎಲ್ಲೂ ದ್ರೋಹ ಚಿಂತನೆಯ ವ್ಯಾಪಾರ  ಕಾಣಲಿಲ್ಲ. ಕದಿಯುವ ಸಾಹಸವನ್ನು ಅಪ್ಪ ಅಮ್ಮನ ಎದುರಿನಲ್ಲೇ ಎಸಗಲು ಹೆದರುವ ಸುಭಗ ಮಕ್ಕಳಂತಿತ್ತು ಅಲ್ಲಿನ ಸನ್ನಿವೇಶ! ಹಿಮಾಲಯದೊಡೆಯನ  ರುದ್ರ ರಮಣೀಯ ಸ್ಮಾರಕದಂತೆ ವಾಚ್ಯವಾಗಿಯೂ ರೂಪಕವಾಗಿಯೂ ಕೇದಾರವು ಸ್ಮರಣೀಯವೆನ್ನಿಸಿತ್ತು. ಇಡೀ ದೇವಸ್ಥಾನದ ಸುತ್ತಲೂ ಒಂದು ಸುತ್ತು ಹೊಡೆದು ಮುಗಿಸುವಾಗ ದೈಹಿಕವಾಗಿ ಮರಗಟ್ಟತೊಡಗಿದ್ದ ನಾವು, ಯಾವುದೋ ಬೆಚ್ಚಗಿನ ಆಶ್ರಯವೊಂದನ್ನು ಹಂಬಲಿಸತೊಡಗಿದ್ದೆವು.

ಹಿಮಾದ್ರಿಯ ಪುರುಷರೂಪ!
ಜೀವಕ್ಕೆ ಉಸಿರಿನ ಆಸೆ! ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗಂಜಿದೊಡೆಂತಯ್ಯ? ಬದರೀ ಕೇದಾರ ದರ್ಶನಕ್ಕೆಂದು ಹೊರಟ ಮೇಲೆ ಚಳಿ ಚಳಿ ಎಂದರೆ ಹೇಗಯ್ಯ? ಒಂದಷ್ಟು ಸಮಯ ಅಲ್ಲೇ ಇದ್ದು ಆನಂದಿಸುವ ಯೋಗವನ್ನು ಹೊಂದಿಸಲಾಗದಷ್ಟು - ಮೈಮನಗಳನ್ನು ಬಡಿದು ಜಡವಾಗಿಸುತ್ತಿತ್ತು - ಈ ಕೇದಾರ ಹೊತ್ತ ಹಿಮಾಲಯ. ಜಡಭರತರಾಗದೆ ಋಷಿ ತಪಸ್ವಿಗಳಾಗಲು ಅಸಾಧ್ಯ ಎನ್ನಿಸುತ್ತದೆ!  ಹಿಮಾಲಯದ ಗರ್ಭದಲ್ಲಿ ಇನ್ನೂ ಎಂತೆಂಥ ಬಾಣಗಳಿವೆಯೋ... ಏನೇನು ರಹಸ್ಯಗಳು ಅಡಗಿವೆಯೋ? ಎಂಬ ವಿಸ್ಮಯಭಾವ; ಜೊತೆಜೊತೆಗೆ, ನಾವು ಬಹುಪಾಲು ಮನುಷ್ಯರು ಎಷ್ಟು ದುರ್ಬಲರು, ಎಷ್ಟು ಸಣ್ಣವರು... ಎಂಬ ವಿನೀತ ಭಾವವೂ ಮೂಡುತ್ತಿತ್ತು. ನಮ್ಮ ಮನಸ್ಸಿನ ವೇಗದೊಂದಿಗೆ ಹಿಮಾಲಯದ ಭಾವಬಣ್ಣಗಳು ಸ್ಪರ್ಧೆಗೆ ಬಿದ್ದಂತೆ - ಅಂದು ನಮಗೆ ಕಾಣಿಸುತ್ತಿತ್ತು!

ಬಹುಶಃ ಹಿಮಾಲಯದ ಸುತ್ತಲಿನ ಪ್ರವಾಸಕ್ಕೆ ಅಗೋಸ್ತ್-ಸೆಪ್ಟೆಂಬರ್ ತಿಂಗಳು ಹೆಚ್ಚು ಪ್ರಶಸ್ತ. ನಾವು ಹೋದದ್ದು ಅಕ್ಟೋಬರದ ಕೊನೆಯ ಭಾಗದಲ್ಲಿ; ದೇವಸ್ಥಾನ ಮುಚ್ಚುವುದಕ್ಕಿಂತ ಕೇವಲ ೧೦ ದಿನ ಮುಂಚೆ. ಆಗ ಹಿಮಾದ್ರಿಯ ಅಟ್ಟಹಾಸ ಶುರುವಾಗಿಬಿಟ್ಟಿತ್ತು. ಆದರೂ... ಹಿಮಾಲಯದ ಪರಿಸರದಲ್ಲಿ ಗುಡ್ಡ ಜರಿಯುವುದಕ್ಕೆ ಮಳೆ ಸುರಿಯುವುದಕ್ಕೆ ಹಿಮಗಾಳಿ ಬೀಸುವುದಕ್ಕೆ - ತಿಂಗಳು, ತಿಥಿ, ನಕ್ಷತ್ರಗಳೆಂಬ ಯಾವ ಡೊಣ್ಯಪ್ಪನ ಆಜ್ಞೆಯೂ ಬೇಕಾಗುವುದಿಲ್ಲ ಎಂಬುದು ಸ್ಥಳೀಯರ ಮತ್ತು ಪ್ರವಾಸಿಗರ ಅನುಭವ. ಆದ್ದರಿಂದ - "ನಸೀಬಿದ್ದರೆ ಸುರಕ್ಷಿತ ಪ್ರವಾಸ" ಎಂದುಕೊಂಡು ಇಂತಹ ಪ್ರವಾಸಗಳಿಗೆ ಹೊರಡುವುದೇ ಹೆಚ್ಚು ಸೂಕ್ತ.



ವಿಸ್ಮಯ - ತನ್ಮಯ 
ಕೇದಾರನ ಅಂಗಳದಲ್ಲಿ ನಿಂತು ತಲೆಯೆತ್ತಿ ಒಂದು ಸುತ್ತು ದೃಷ್ಟಿ ಹಾಯಿಸಿದರೆ ಭಕ್ತರಿಗೆ ಅಲ್ಲಿ ಕಾಣುವುದು ಸೃಷ್ಟಿಯ ಅದ್ಭುತ ಪ್ರತಿಮಾ ರೂಪ. ಬೆಳಗಿನ ಸೂರ್ಯನ ಜೊತೆಗೆ ಸರಸವಾಡುವ ಶಿಖರಶ್ರೇಣಿಗಳು, ಶ್ವೇತ-ಪೀತ-ರಕ್ತ-ಭಸ್ಮರಂಜಿತ ಬಗೆಬಗೆಯ ಉಡುಗೆ ತೊಟ್ಟು ಸೌಂದರ್ಯ ಮೆರವಣಿಗೆ ನಡೆಸಿದಂತೆ ಕಾಣುವ ಹಿಮಸ್ನಾತ ಗಿರಿಪಂಙ್ತಿಗಳು, ಹಿಮಾಚ್ಛಾದಿತ ಬೆಟ್ಟಗಳ ನಡುವಿನಿಂದ ಇಣುಕಲು ಯತ್ನಿಸುವ ಭಾನುವಿಗೆ ಕಚಗುಳಿಯಿಡುವಂತೆ ತೋರುತ್ತಿದ್ದ ಬಣ್ಣದೋಕುಳಿಯಾಟ, ಕ್ಷಣಕ್ಕೊಂದು ವೇಷ ತೊಡುತ್ತಿದ್ದ ಆಕಾಶ ಮಂದಿರ, ಮೃಡನ ಮೃಗಯಾ ವಿಹಾರದಿಂದ ಬಳಲಿದ ಬೇಟೆಯಂತೆ ಹಿಮ ಹೊದ್ದು ತಣ್ಣಗೆ ಒರಗಿದ್ದ ಇಳೆಯ ವಿಧೇಯ ದೃಶ್ಯವು ಮೂಕ ವಿಸ್ಮಿತರನ್ನಾಗಿಸುತ್ತದೆ; ಗಗನವು ಎಲ್ಲೋ ಭೂಮಿಯು ಎಲ್ಲೋ ಒಂದೂ ಅರಿಯೆ... ಎಂಬಂತಹ ಅಮೂರ್ತ ಸ್ಥಿತಿಗೆ ನಮ್ಮನ್ನು ಕೊಂಡೊಯ್ಯುತ್ತದೆ. ಈ ದೃಶ್ಯವನ್ನು ಭಾವ ನೆಲೆಯಲ್ಲಿ ಆಸ್ವಾದಿಸುವ ಸ್ಪಂದನಶೀಲತೆಯೊಂದಿದ್ದರೆ... ಕೇದಾರದ ಸರ್ವಸ್ವವೂ ವಿಸ್ಮಯವೇ ಆಗಿದೆ. 


ಅಂತಹ ಕೇದಾರದಲ್ಲಿ ನಿಂತುಕೊಂಡು - ಬೆಟ್ಟದ ಎತ್ತರ ಎಷ್ಟು? ಅದರ ಒಳಗೆ ಯಾವ ಖನಿಜ ಸಿಗುತ್ತದೆ? ನೀರಿನ ಗುಣಮಟ್ಟ ಹೇಗಿದೆ? ಪರಿಸರ "ರಕ್ಷಣೆ"(?)ಗಾಗಿ ಹೋರಾಡುವುದಾದರೆ ಹೇಗೆ? ಅಲ್ಲಿನ "ಬಿಡಿ" ವಾಸ್ತವಗಳನ್ನು ರಾಜಕೀಯಗೊಳಿಸುವುದು ಹೇಗೆ? ಅಲ್ಲಿರುವ ಯೋಗಿಗಳು ಕೆಲಸಗಳ್ಳರೆ? ಭಂಡರೆ? ಕೇದಾರನದು ಉಲ್ಕಾಪಾತವಾಗಿ ಬಿದ್ದ ಒಂದು ಕಲ್ಲಿನ ತುಂಡಷ್ಟೇ... ಇತ್ಯಾದಿಯಾಗಿ ಮೃಣ್ಮಯ ಭಾವ ಪೋಷಿಸುತ್ತ ಅಲ್ಲಿ ನೆರೆದ ಭಕ್ತರ ಮತ್ತು ಭಗವಂತನದೂ ಸರ್ವೇಕ್ಷಣೆ ನಡೆಸುತ್ತ ಅಲ್ಲಿ ನೆರೆದವರನ್ನು ಅಳೆದು ತೂಗುವುದರಲ್ಲಿ ಮಗ್ನರಾಗುವವರನ್ನೂ ಕೂಡ ಕೇದಾರದಂತಹ ತೀರ್ಥಕ್ಷೇತ್ರಗಳು ಪ್ರಭಾವಿಸದೆ ಬಿಡವು. ಬಾಲರ ಕತೆಯೊಂದರಲ್ಲಿ - ಇಂಗ್ಲೆಂಡಿಗೆ ಹೋದ ಇಲಿಯನ್ನು "ನೀನಲ್ಲಿ ಏನನ್ನು ಕಂಡೆ?" ಎಂದು ಕೇಳಿದರೆ...ಅದು - "ರಾಣಿಯ ಮಂಚದ ಕೆಳಗೆ ಚಿಲಿಪಿಲಿ ಇಲಿಯೊಂದನ್ನು ಕಂಡೆ" ಎಂದಿತ್ತಂತೆ. ಸಂಕ್ಷೇಪವಾಗಿ - ಅವರವರ ಭಾವ ಭಕುತಿಯ ಮಿತಿ ಎಂದಷ್ಟೇ ಹೇಳಬಹುದು. ಎಲ್ಲಿಗೆ ಹೋದರೂ ಅವರವರ ಬೊಗಸೆಯಷ್ಟೇ ಅನುಭವವನ್ನು ಹೊತ್ತು ತರುವುದು ಸಾಧ್ಯವಲ್ಲವೆ? ತೀರ್ಥಕ್ಷೇತ್ರಗಳ ಯಾತ್ರೆಯು ಯಾವುದೇ ವ್ಯಕ್ತಿಯ ಅಂತಃದರ್ಶನಕ್ಕೆ ಪ್ರೇರೇಪಿಸಲಾಗದೆ ಹೋದರೆ ಅದು ವಿಹಾರಯಾತ್ರೆಯಷ್ಟೇ ಆಗಬಹುದೇನೋ.

ಕೇದಾರನಾಥನ ದೇವಸ್ಥಾನದ ಸುತ್ತಲೂ ಸ್ವಲ್ಪ ಹೊತ್ತು ಸುತ್ತಿದ ಮೇಲೆ, ಅಲ್ಲಿಂದ ಮತ್ತೆ ಕೆಳಗಿಳಿದು, ಹೆಲಿಪ್ಯಾಡಿನ ಸಮೀಪವಿದ್ದ ಒಂದು ಹೋಟೆಲಿನಲ್ಲಿ ಮಧ್ಯಾಹ್ನ ೩ ಗಂಟೆಗೆ ಬಿಸಿಬಿಸಿ ಊಟ ಮುಗಿಸಿಕೊಂಡು, ಏದುಸಿರು ಬಿಡುತ್ತ ಇರುವೆಯ ವೇಗದಲ್ಲಿ ಮತ್ತೊಮ್ಮೆ ಮೇಲೆ ಹತ್ತುತ್ತ... ಸುಮಾರು ೫ ಗಂಟೆಯ ಹೊತ್ತಿಗೆ ದೇವಸ್ಥಾನದ ಸಮೀಪದಲ್ಲಿಯೇ ಗೊತ್ತುಪಡಿಸಿದ್ದ ನಮ್ಮ ತಾತ್ಕಾಲಿಕ ಗೂಡನ್ನು ಸೇರಿಕೊಂಡೆವು. 



ಅಂದು ಸಂಜೆ ೫.೧೫ಕ್ಕೇ ಕತ್ತಲೆ ಆಗಿಹೋಗಿತ್ತು. ಈ ಯಾತ್ರೆಯ ಆಯೋಜಕ-ಪ್ರಾಯೋಜಕರಾಗಿದ್ದ ಶ್ರೀ ಎ.ಕೆ. ರಾವ್ ಅವರು ನಮ್ಮ ಗುಂಪಿನ ಕೆಲವು ಯಾತ್ರಿಕರಿಗೆ ಬೂಟು, ಕಾಲುಚೀಲ, ತಲೆಟೋಪಿ... ಇತ್ಯಾದಿ ವಸ್ತುಗಳನ್ನು ತಾವೇ ಖರೀದಿಸಿ ಕೊಟ್ಟಿದ್ದರು. ಆದರೆ ಅತಿಯಾದ ಆತ್ಮಸ್ಥೈರ್ಯಕ್ಕೆ ಬಲಿಯಾಗಿ, ಕೇದಾರಕ್ಕೆ ಹೊರಡುವಾಗ ಅವನ್ನೆಲ್ಲ ಸೆರ್ಸಿಯಲ್ಲೇ ಇಟ್ಟು ಕೈಬೀಸಿಕೊಂಡು ಹಾರಿ ಬಂದವರು - ಅಂದು ಸ್ವಲ್ಪ ಕಷ್ಟ ಎದುರಿಸಬೇಕಾಯ್ತು; ಅದರಿಂದಾಗಿ ಜತೆಯಲ್ಲಿದ್ದವರೂ ಸ್ವಲ್ಪ ಆತಂಕ ಪಡುವಂತಾಯ್ತು. ಹಿಮವನ್ನೇ ಹಾಸಿ, ಹಿಮವನ್ನೇ ಹೊದೆದು ಮಲಗಿದಂತಿದ್ದ ಅಂದಿನ ರಾತ್ರಿಯು "-೧೦ ಡಿಗ್ರಿ" ಶೈತ್ಯದ ಭೀಕರ ಅನುಭವವನ್ನೇ ಕೊಟ್ಟಿತ್ತು. ಹಾಗೋ ಹೀಗೋ... ಆ ಇರುಳಿನ ಕ್ಷಣಕಾಲವೂ ಕೇದಾರನನ್ನು ಮರೆಯದಂತೆ ಜಾಗ್ರತವಾಗಿರಿಸಿದ್ದಂತೂ ಸತ್ಯ. ಕಮ್ಮೆಲರಿನ ತಾಡನ! ಶೈತ್ಯ ತಾಂಡವ ಸನ್ನಿಧಾನ!

ರಾತ್ರಿಯಿಡೀ ಚಳಿರಾಯನ ಅಪ್ಪುಗೆಯಿಂದ ಬೆಂಡಾಗಿ, ಮರುದಿನ ಬೆಳಗಾಗುವುದನ್ನೇ ಕಾದಂತಿದ್ದ ನಾವು ಕಂಡದ್ದು ನೆಲದ ಮೇಲೆ ಎರಡಿಂಚು ದಪ್ಪಕ್ಕೆ ಅಂಟಿಕೊಂಡಿದ್ದ ಹಿಮಗಡ್ಡೆ! ಕಾಲಿಟ್ಟಲ್ಲೆಲ್ಲ ಜಾರುತ್ತಿತ್ತು. ಮರುದಿನ ಬೆಳಿಗ್ಗೆ ೬.೩೦ರ ಹೊತ್ತಿಗೆ ಕೇದಾರನಿಗೆ ಹೊರಗಿನಿಂದಲೇ ಒಂದು ಸುತ್ತು ಬಂದು ನಮಸ್ಕರಿಸಿ, ಹಿಮ ಜಾರಿಕೆಯ ಹಳವಂಡದಿಂದಲೂ ಪಾರಾದ ನಾವು ಹೆಲಿಪ್ಯಾಡ್ ತಲುಪಿ ಬಿಟ್ಟಿದ್ದೆವು. ಅದಾಗಲೇ ಅಲ್ಲಿ ಜನಸಂದಣಿಯಿತ್ತು. ರುಮುರುಮು ಬೀಸುತ್ತಿದ್ದ ಹಿಮಗಾಳಿಗೆ ಸುಮಾರು ೧ ಗಂಟೆ ಕಾಲ ಎದೆಯೊಡ್ಡಿದ  ಮೇಲೆ - ನಮ್ಮ ಗುಂಪಿನ ಜನರನ್ನು ಸರದಿಯಲ್ಲಿ ೪-೫ ಮಂದಿಯಂತೆ ಹೊತ್ತು ತಂದ ಹೆಲಿಕಾಪ್ಟರ್, ಸೆರ್ಸಿ ಊರಿಗೆ ತಂದು ಇಳಿಸಿತ್ತು. 

ಸುತ್ತಿ ಇಳಿದದ್ದು ಮತ್ತದೇ ಸೆರ್ಸಿಯಲ್ಲಿ
ಮರಳಿ ಡೆಹ್ರಾಡೂನ್‌ಗೇ ನಮ್ಮನ್ನು ತಲುಪಿಸುವವರೆಗೆ ಡೆಹ್ರಾಡೂನ್‌ನಲ್ಲೇ ಗೊತ್ತು ಮಾಡಿಕೊಂಡು ಬಂದಿದ್ದ ಬಸ್ಸು, ನಮ್ಮನ್ನು ಹೊತ್ತು ತಿರುಗಲು ಸಿದ್ಧವಾಗಿ ರಾತ್ರಿಯಿಡೀ ಸೆರ್ಸಿಯಲ್ಲೇ ಕಾದು ನಿಂತಿತ್ತು. ಕೇದಾರದಿಂದ ಹಾರಿ ಬಂದ ನಾವು, ಸೆರ್ಸಿಯಲ್ಲಿ ಒಂದು ಬಾಡಿಗೆ ಕೋಣೆಯನ್ನು ಪ್ರವೇಶಿಸಿ ಸ್ನಾನ ಉಪಾಹಾರ ಮುಗಿಸಿದ ಮೇಲೆ, ನಮ್ಮನ್ನೆಲ್ಲ ತುಂಬಿಸಿಕೊಂಡ ನಮ್ಮ ಮಿನಿ ಬಸ್ಸು ಬದರೀ ಕ್ಷೇತ್ರದತ್ತ ಹೊರಟಿತು. ಸೆರ್ಸಿಯಿಂದ ಬದರಿಯ ವರೆಗಿನ ಸುಮಾರು ೨೧೦ ಕಿ.ಮೀ ಉದ್ದಕ್ಕೂ ನಮ್ಮ ಬೆನ್ನು ಬಿಡದೆ ಇಣುಕಿ ಓಡುತ್ತ ಕಚಗುಳಿಯಿಡುತ್ತಿದ್ದವಳು - ಗೆಳತಿ ಅಲಕಾನಂದಾ!

ಕೇದಾರ ಮತ್ತು ಬದರೀ ಕ್ಷೇತ್ರಗಳಿಗೆ ಹೋಗುವ ರಸ್ತೆಗಳು ಸದಾಕಾಲ ದುರಸ್ತಿಯಲ್ಲೇ ಇರುವಂಥ "ನಿರ್ವಿಕಲ್ಪ ಸ್ಥಿತಿ" ನೋಡಿದರೆ - ಇಂಥ ದುರ್ಗತಿಯೆ? ಅನ್ನಿಸದಿರದು. ಆದರೆ ಮನುಷ್ಯ ಶಕ್ತಿಯನ್ನು ಅಣಕಿಸುವಂತೆ ಕಾಣುವ ಅಲ್ಲಿನ ಭೌಗೋಳಿಕ ಪರಿಸರವು ಆಧುನಿಕ ವಿಜ್ಞಾನವನ್ನು ನಿರಂತರ ಕೆಣಕುತ್ತ ನಿಂತಂತೆಯೂ ಕಂಡದ್ದುಂಟು. ಏನೇನೂ ಕಸುವಿಲ್ಲದ ಅಲ್ಲಿನ ಅಸ್ಥಿರ ಮಣ್ಣಿನಿಂದ ಕೂಡಿದ ಬೆಟ್ಟಗಳ ನಿತ್ಯ ನರ್ತನದಿಂದಾಗಿ, "ಬೆಟ್ಟ ಕುಸಿಯುವುದು, ಮಣ್ಣೆತ್ತುವುದು" ಎಂಬ ಕ್ರಿಯೆಯು ಅವ್ಯಾಹತವಾಗಿ ನಡೆಯುತ್ತಲೇ ಇರಬೇಕಾದ ಸನ್ನಿವೇಶವಾಗಿ ಹೋಗಿದೆ! 

ಚಾಲಕ ಭೀಮ -- ಭೀಮ್ ಸಿಂಗ್ ಥಾಪಾ
ನಮ್ಮ ಚಾಲಕಭೀಮ - ಥಾಪಾ ಸಾಹೇಬರು ಮಾತೇ ಆಡದ ಮೌನೀಬಾಬಾ. ಯಾತ್ರೆಯ ಅಂತ್ಯ ಭಾಗದಲ್ಲಿ ನಾನೇ ಮಾತಾಡಿಸಿದಾಗ ಅವರಿಗೊಂದು ಸಂಸಾರವಿದೆ; ಇಬ್ಬರು ಮಕ್ಕಳಿದ್ದಾರೆ; ಅವರೂ ದುಡಿಯುತ್ತಿದ್ದಾರೆ; ಮನೆಯಿರುವುದು ಡೆಹರಾಡೂನ್‌ನಲ್ಲಿ; ಚಾಲಕ ವೃತ್ತಿ ಎಂಬಷ್ಟು ವಿವರ ಗೊತ್ತಾಯಿತು. ಭೀಮಸಿಂಗರನ್ನು ನೋಡುತ್ತಿದ್ದಾಗ, ತಂಪು ಪ್ರದೇಶದಲ್ಲಿದ್ದರೆ - ಮನುಷ್ಯರು ಬಹುಶಃ ಇಷ್ಟು ತಣ್ಣಗಿರುತ್ತಾರೆ ಅನ್ನಿಸಿದ್ದೂ ಇದೆ. 



ಡೆಹರಾಡೂನ್‌ನಿಂದ ಹರಿದ್ವಾರದ ಪರಿಧಿಯನ್ನು ದಾಟಿದ ನಂತರ ಸೆರ್ಸಿಯ ವರೆಗಿನ ಮತ್ತು ಸೆರ್ಸಿಯಿಂದ ಬದರಿಯ ವರೆಗಿನ ಮೆದು ರಸ್ತೆಯಲ್ಲಿ ನಮ್ಮ ಭೀಮ್ ಸಿಂಗ್ ಥಾಪಾ ಅವರ ನಿರಾತಂಕದ ಡ್ರೈವಿಂಗ್ ಮಾತ್ರ ಕಣ್ಬಾಯಿ ತೆರೆದು ನೋಡುವಂತಿತ್ತು. ಡವಡವ ಹೊಡೆಯುತ್ತಿದ್ದ ನಮ್ಮ ಎದೆಬಡಿತಕ್ಕೆ ಕ್ಷಣಕ್ಷಣಕ್ಕೂ ಪರಶಿವನ ಕೈಲಾಸವೊಂದೇ ಕಾಣುತ್ತಿದ್ದರೆ - "ಸ್ಟೇರಿಂಗ್ ಚಕ್ರಧಾರಿ"ಯಾಗಿದ್ದ ಭೀಮ ಸಿಂಗರಿಗೆ ಕಾಯಕವೇ ಕೈಲಾಸವಾದಂತಿತ್ತು! 

ಅತ್ಯಂತ ಕಡಿಮೆ ಅಗಲವಿರುವ ರಸ್ತೆಗಳಲ್ಲಿ, ತಿರುವು ಮುರುವುಗಳಲ್ಲಿ, ಇನ್ನೊಂದು ವಾಹನಕ್ಕೆ ದಾರಿ ಬಿಟ್ಟುಕೊಡುವ ಸಂದರ್ಭಗಳಲ್ಲಿ - ಥಾಪಾ ಅವರ ನಿಖರ ಅಂದಾಜಿನ ಶಕ್ತಿಗೆ ನಿಬ್ಬೆರಗಾಗುವಂತಾಗಿತ್ತು. ಬಸ್ಸಿನ ಒಳಗಿರುವ ಸದಸ್ಯರು ಕೆಲವೊಮ್ಮೆ "ಹಾರ್ನ್ ಹಾರ್ನ್- ಹಾರ್ನ್ ಮಾಡಣ್ಣಾ..." ಎಂದು ಆತಂಕದಿಂದ ಕೂಗಿಕೊಳ್ಳುವಂತಾದರೂ... ನಮ್ಮ ಭೀಮಸೇನರು ಹಾರ್ನ್‌ಗೆ ಬೆರಳು ತಾಗಿಸುವ ಉಸಾಬರಿಗೆ ಹೋಗಿರಲೇ ಇಲ್ಲ! ಬಹುಶಃ ಶಬ್ದದ ಅಲರ್ಜಿ ಇದ್ದಿರಬಹುದೇನೋ ಎಂದು ಅಸಹನೆಯಿಂದ ಗೊಣಗಿಕೊಳ್ಳುವಂತಾಗಿದ್ದೂ ಇದೆ! ಅದೆಂತಹ ಆತ್ಮಸ್ಥೈರ್ಯ!  ಚಾಲನಾ ಕುಶಲತೆ! ಎರಡು ಕಾರುಗಳು ಮಾತ್ರ ಹೋಗಬಹುದಾದ ಇಕ್ಕಟ್ಟಿನ  ರಸ್ತೆಗಳಲ್ಲಿ ಥಟ್ಟಂತ ಎದುರಿನಿಂದ ಒಂದು ವಾಹನವು ಎದುರಾದಾಗಲೂ ನಮ್ಮ ಭೀಮಸೇನರು ಧೃತಿಗೆಡದೆ, ತಮ್ಮ ವಾಹನವನ್ನು ಪೂರ್ತಿ ನಿಷ್ಕ್ರಿಯಗೊಳಿಸಿ, ನಿಲ್ಲಿಸಿ ಬಿಡುತ್ತಿದ್ದರು. ತಮ್ಮ ಸೀಟಿನಿಂದ ಧುಡುಮ್ಮೆಂದು ಕೆಳಗೆ ಜಿಗಿದು ಸ್ಥಳ ಪರೀಕ್ಷೆ ನಡೆಸಿದ ನಂತರ ತಮ್ಮ ಬಸ್ಸನ್ನು ವಿರುದ್ಧ ದಿಕ್ಕಿನಲ್ಲಿರುತ್ತಿದ್ದ ಪ್ರಪಾತದ ಅಂಚಿಗೇ ತಂದು ನಿಲ್ಲಿಸಿ, ಎದುರಿನ ವಾಹನಗಳು ಸುಸೂತ್ರವಾಗಿ ದಾಟಿ ಹೋಗುವಂತೆ ಎಡೆ ಮಾಡಿ ಕೊಡುತ್ತಿದ್ದರು! ಆ ಹೊತ್ತಿನಲ್ಲಿ ಪ್ರಪಾತದ ಬಾಯಿಗೆ ಬಿದ್ದೇ ಬಿಡುವ ಆಹಾರದಂತಿರುತ್ತಿದ್ದ ಬಸ್ಸಿನೊಳಗಿದ್ದವರ ಥ್ರಿಲ್ - ಅವರಿಗಷ್ಟೇ ಗೊತ್ತು. "ಬಸ್ಸಿನ 
ಅತ್ತ ಕಡೆಯಿಂದ ಹೊರಗೆ ಜಿಗಿಯಲೇ? ಒಳಗೇ ಕೂರಲೆ?" ಎಂಬಂಥ ಎದೆ ಹಾರುವ ತಳಮಳ!

ಆ ಜೀವನ್ಮರಣದ ಹೊತ್ತಿನಲ್ಲೂ ಯೋಗರಾಜ ಭಟ್ಟರ ಪಂಚರಂಗಿ ಸಿನೆಮಾದ ಡೈಲಾಗ್ ಸ್ಫೂರ್ತಿಯಿಂದ "ಚಿತ್ರವಿಚಿತ್ರ - ಗಳು..ಗಳನ್ನು" ಸಿಕ್ಕ ಸಿಕ್ಕ ಶಬ್ದಗಳಿಗೆ ಸಿಕ್ಕಿಸುತ್ತ ಗುನುಗುನಿಸುತ್ತಿದ್ದ ಕೆಲವರಿಗೆ, ಇತರ ಸದಸ್ಯರೆಲ್ಲರೂ "ತಂ...ತಂ...ಗಳು"ಗಳನ್ನು ಸೇರಿಸುತ್ತ ಹೋಗುತ್ತಿದ್ದರು. ಕೊರಕಲು ದಾರಿಗಳೂ, ಹಾರ್ನ್ ಮಾಡದ ಬಸ್ಸುಗಳೂ ಪುಸುಪುಸು ಕುಸಿಯುವ ಬೆಟ್ಟಗಳೂ ಬೆನ್ನು ಬಿಡದ ನದಿಗಳೂ ಕರುಳು ನಡುಗಿಸುವ ಚಳಿಗಳೂ ಕೋಡುಬಳೆ ಗೋಡಂಬಿ ಕುರುಂ ಕಟುಂಗಳೂ ಚೆಂದದ ದೃಶ್ಯಗಳೂ ಎತ್ತರಗಳೂ ತಗ್ಗುಗಳೂ ... ಎಂಬಂತಹ ಒಂದಷ್ಟು ಶಾಬ್ದಿಕ ಮನರಂಜನೆಗಳೂ ನಡೆದುಹೋಗಿದ್ದವು. ಭಯ ನಿವಾರಣೆಗೆ ಹಾಸ್ಯವೇ ಪರಮೌಷಧ...?

ರಾತ್ರಿಯಲ್ಲಿ ಕಂಡ  - ಪಿಪ್ಪಲ್‌ಕೋಟ್‌ 
ದೇವ ಪ್ರಯಾಗದ ವರೆಗೆ ಭಾಗೀರಥಿ, ಅಲ್ಲಿಂದ ಮುಂದೆ ಶ್ರೀನಗರ - ರುದ್ರ ಪ್ರಯಾಗದ ವರೆಗೆ ಅಲಕನಂದಾ, ಅನಂತರ ಮಂದಾಕಿನಿ ನದಿಯ ಜೊತೆಜೊತೆಗೇ ನಮ್ಮ ಪ್ರಯಾಣ ಸಾಗಿತ್ತು. ಕೇದಾರ, ಬದರಿಯ ಮಾರ್ಗದಲ್ಲಿ ಸಿಗುವುದು ಬಹುಪಾಲು ಹಳ್ಳಿಗಳೆನ್ನಿಸುವ ಊರುಗಳೇ. ನಮ್ಮ ಸಾರಥಿ ಭೀಮ್ ಸಿಂಗ್ ಥಾಪಾ ಅವರು ತಮ್ಮದೇ ಶೈಲಿಯಲ್ಲಿ ವಾಹನ ಚಲಾಯಿಸುತ್ತ ಅತ್ಯಂತ ಸಾವಧಾನದಿಂದ ಅಂದು ೨೨ನೇ ತಾರೀಕಿನ ಸಂಜೆ ನಮ್ಮನ್ನು ಕರೆತಂದು ಇಳಿಸಿದ್ದು ಪಿಪ್ಪಲ್‌ಕೋಟ್‌ ನಲ್ಲಿ. (ನಾವು ಮರುದಿನ ಬದರಿಯಿಂದ ಹಿಂದಿರುಗುವಾಗ ರಾತ್ರಿ ವಾಸ್ತವ್ಯ ಇದ್ದದ್ದು ಕೂಡ ಇದೇ ಸ್ಥಳದಲ್ಲಿ)

ಪಿಪ್ಪಲ್‌ಕೋಟ್‌ನಿಂದ ಜೋಗಿ(ಜೋಶಿ)ಮಠದ ಮೂಲಕ ಬದರಿಗೆ ಕ್ರಮಿಸುವ ದಾರಿ - ಸುಮಾರು ೩ ಗಂಟೆಗಳ ಕಾಲ, ೭೭ ಕಿ. ಮೀ. ನಷ್ಟು ಮಾತ್ರ ಉಳಿದಿತ್ತು. ನಮ್ಮಿಂದ ೩೬ ಕಿ. ಮೀ. ಮುಂದಿದ್ದ ಜೋಗಿಮಠದ ವರೆಗಾದರೂ ಅಂದೇ ಹೋಗಿ ತಲುಪಿಬಿಡುವ ಇಚ್ಛೆ ಇದ್ದಿದ್ದರೂ ಕೂಡ ಕತ್ತಲಾದ ಮೇಲೆ ಸಂಚರಿಸುವ ರಸ್ತೆಯೇ ಅದಾಗಿರಲಿಲ್ಲ. ಆದ್ದರಿಂದ ಎಲ್ಲರ ಸುರಕ್ಷೆಯ ದೃಷ್ಟಿಯಿಂದ ಆ ದುರ್ಗಮ ದಾರಿಯಲ್ಲಿ ರಾತ್ರಿ ಸಂಚಾರ ನಡೆಸಲಿಲ್ಲ. ಅಂದು ಪಿಪ್ಪಲ್ ಕೋಟ್‌ನಲ್ಲಿಯೇ ವಿಶ್ರಾಂತಿ ಪಡೆದೆವು.

ಜೋಗಿಮಠವು ಪ್ರವಾಸಿಗಳ ತಂಗುದಾಣವಾಗಿ ಪೂರ್ವದಿಂದಲೂ ಪ್ರಸಿದ್ಧಿ ಪಡೆದಿದ್ದರೂ ಕೂಡ, ಅಲ್ಲಿಂದ ಕೇವಲ ೩೬ ಕಿ.ಮೀ. ದೂರದಲ್ಲಿರುವ ಪಿಪ್ಪಲ್ ಕೋಟ್ ಎಂಬ ಊರು - ತನ್ನ  ಸ್ಪರ್ಧಾತ್ಮಕ ಬೆಲೆಯ ಮೂಲಕ ಇತ್ತೀಚಿನ ವರ್ಷಗಳಲ್ಲಿ ಪ್ರವಾಸಿಗಳನ್ನು ಆಕರ್ಷಿಸುತ್ತಿದೆ. ನಾವು ಅಲ್ಲಿ ತಂಗಿದ್ದ ಎರಡು ರಾತ್ರಿಗಳಲ್ಲೂ ಊರ ಹಿರಿಕಿರಿಯರೆಲ್ಲರ ಸಹಭಾಗಿತ್ವದಲ್ಲಿ ರಾಮಲೀಲಾ ಪ್ರದರ್ಶನ ನಡೆಯುತ್ತಿತ್ತು. ರಸ್ತೆಯನ್ನೆಲ್ಲ ಆವರಿಸಿದಂತೆ ಸ್ಥಳೀಯರು ನಿಂತು, ಕೂತು,  ಆ ಪ್ರದರ್ಶನವನ್ನು ನೋಡಿ ಆನಂದಿಸುತ್ತಿದ್ದರು. 



ಆಧುನಿಕತೆಯ ಭೂತಕ್ಕೆ ಇನ್ನೂ ಹೆಚ್ಚು ಬಲಿಯಾಗದ, ಸಣ್ಣ ಸಣ್ಣ ಸುಖಗಳಿಗೂ ಸ್ಪಂದಿಸುವ ಶಕ್ತಿಯನ್ನು  ಉಳಿಸಿಕೊಂಡಿರುವ ಅಲ್ಲಿನ ಜನರ ಸಹಜೀವನ, ಸೌಜನ್ಯ, ಸರಳತೆಗಳು ನೆನಪಿಸಿಕೊಳ್ಳುವಂತಿತ್ತು. ಹಿಮರಾಯನ ಸನ್ನಿಧಿಯಲ್ಲೇ ಇದ್ದರೂ ಅಲ್ಲಿನ ಜನರಲ್ಲಿ ಭಾವ ಶೈತ್ಯ ಕಾಣಲಿಲ್ಲ. ರಾಮಲೀಲಾ ನಡೆಯುತ್ತಲೇ ಇತ್ತು; ಊರಿನ ಹತ್ತು ಜನರ ಸಹಭಾಗಿತ್ವ ಎಂಬುದಷ್ಟೇ ಆ ಪ್ರದರ್ಶನದಲ್ಲಿದ್ದ ವಿಶೇಷ. ರಾತ್ರಿಯ ವಿಶ್ರಾಂತಿಗಾಗಿ ನಾವು ಬೇಗನೆ ಹೋಟೆಲ್ ಸೇರಿಕೊಂಡೆವು. ಮರುದಿನ ೨೩ನೇ ತಾರೀಕು, ಬೆಳಿಗ್ಗೆ ಸುಮಾರು ೫.೩೦ರ ಸುಮಾರಿಗೆ ನಾವು ಬದರೀ ದರ್ಶನಕ್ಕಾಗಿ ಹೊರಟೆವು.

ಬದರೀ
"-೩ ಡಿಗ್ರಿ" ರೋಮಾಂಚನವನ್ನು ಹಿಂದಿನ ರಾತ್ರಿ ಕಂಡುಂಡಿದ್ದ ಬದರೀ ಕ್ಷೇತ್ರವು ಸ್ವಲ್ಪ ಬೆಚ್ಚಗಾದ ಮೇಲೆ - ಮರುದಿನ ಬೆಳಿಗ್ಗೆ ೯ ಗಂಟೆಯ ಹೊತ್ತಿಗೆ ನಾವು  ಬದರಿಯನ್ನು ತಲುಪಿದ್ದೆವು. ಅದಾಗಲೇ ಅಲ್ಲಿ ಸೂರ್ಯದರ್ಶನವಾಗಿದ್ದರೂ ಕೂಡ... "ಹಿಮಾಲಯದ ಸೂರ್ಯ"ನಿಗೆ ತಾಪ-ತಾಪತ್ರಯಗಳೇ ಇಲ್ಲವೇನೋ ಅನ್ನಿಸುವಷ್ಟು ತಂಪಿತ್ತು! ಸೂರ್ಯನೂ ತಣ್ಣಗಿದ್ದ! ಈ ಬದರಿಯ ಸೂರ್ಯನನ್ನು ಮಾತ್ರವಲ್ಲ, ವಾಯು ವರುಣನನ್ನೂ ನಂಬಲಾಗದು ಅಂದುಕೊಂಡ ನಾವು - ದೇಗುಲ ದರ್ಶನಕ್ಕೆ ಅವಸರಿಸತೊಡಗಿದ್ದೆವು. ನಮ್ಮ ಸಾಮಾನು ಸರಂಜಾಮುಗಳನ್ನೆಲ್ಲ ಪೇಜಾವರ ಮಠದ ಛತ್ರದಲ್ಲಿರಿಸಿ, ನೇರವಾಗಿ ಬದರೀನಾಥನ ದರ್ಶನಕ್ಕಾಗಿ ಹೊರಟೆವು. 



ಭಕ್ತವೃಂದವು ಹೊತ್ತು ತರುತ್ತಿದ್ದ ತಾಪ-ತ್ರಯಗಳನ್ನೆಲ್ಲ ಮರೆಸುವಂತಿತ್ತು - ತಪ್ತಕುಂಡ! ಮಿಂದು ಹಗುರಾದ ಮೇಲೆ ಬದರೀನಾಥನ ಅನನ್ಯ ದರ್ಶನವನ್ನೂ ಪಡೆದೆವು. ದೇಗುಲದಲ್ಲಿ ಜನಸಂದಣಿಯು ಸಾಕಷ್ಟಿದ್ದರೂ ಸುಮಾರು ೧೦ ನಿಮಿಷಗಳ ಕಾಲ ಬದರೀ ನಾರಾಯಣನ ಸನ್ನಿಧಿಯಲ್ಲಿದ್ದು ಸರ್ವಾಲಂಕಾರ ಭೂಷಿತನನ್ನು ನೋಡುವ ಅಪೂರ್ವ ಅವಕಾಶವೂ ಲಭಿಸಿತು!

ಪ್ರತೀ ವರ್ಷವೂ ಲಕ್ಷಾಂತರ ಜನರು ಭಕ್ತಿಯಿಂದ ದರ್ಶನ ಮಾಡುವ ಭಾರತದ ಒಂದು ಪ್ರಸಿದ್ಧ ಯಾತ್ರಾ ಸ್ಥಳ - ಬದರೀನಾಥ. ಇದು ವಿಷ್ಣುವಿನ ಸ್ವಯಂ ವ್ಯಕ್ತ ಕ್ಷೇತ್ರ ಎನ್ನುತ್ತಾರೆ. ಕೇರಳದ ನಂಬೂದರಿ ಬ್ರಾಹ್ಮಣರು ಇಲ್ಲಿನ ಪೂಜಾರಿಗಳು. ವೇದಗಳಲ್ಲಿಯೂ ಪ್ರಾಚೀನ ಧಾರ್ಮಿಕ ಗ್ರಂಥಗಳಾದ ವಿಷ್ಣು ಪುರಾಣ, ಸ್ಕಂದ ಪುರಾಣಗಳಲ್ಲಿಯೂ ಬದರಿಯ ಉಲ್ಲೇಖವಿದೆ. ತಮಿಳಿನ ಆಳ್ವಾರರ ಪವಿತ್ರ "ದಿವ್ಯ ಪ್ರಬಂಧ"ದಲ್ಲಿ ಬದರಿಯನ್ನು ಹಾಡಿಹೊಗಳಲಾಗಿದೆ. ವೈಷ್ಣವ ಪಂಥದವರ ಪವಿತ್ರ ಯಾತ್ರಾ ಸ್ಥಳವೆಂದು ಹೇಳಲಾಗುವ ಇಲ್ಲಿನ ಸುಂದರ ದೇವಾಲಯದಲ್ಲಿ ಬದರೀನಾರಾಯಣನೇ ಆರಾಧ್ಯಮೂರ್ತಿ.


ಭಾರತದ ಇತರ ಹಿಂದೂ ದೇವಾಲಯಗಳಿಗಿಂತ ಬದರೀ ದೇವಳದ ಶಿಲ್ಪ ವಿನ್ಯಾಸ ಮತ್ತು ಕಡು ಬಣ್ಣದ ಮುಂಭಾಗದ ಮೆರುಗು ವಿಭಿನ್ನವಾಗಿ ಕಾಣುತ್ತದೆ. ಬದರೀನಾಥನ ಇಂದಿನ ಸ್ಥಾವರವನ್ನೂ ಶ್ರೀ ಆದಿ ಶಂಕರರೇ ೯ ನೇ ಶತಮಾನದಲ್ಲಿ ಪ್ರತಿಷ್ಠಾಪಿಸಿದರೆಂಬ ಐತಿಹ್ಯವಿದೆ. ೮೧೪-೮೨೦ ರ ಅವಧಿಯಲ್ಲಿ ೬ ತಿಂಗಳು ಕೇದಾರದಲ್ಲೂ ೬ ತಿಂಗಳ ಕಾಲ ಬದರಿಯಲ್ಲೂ ಶ್ರೀ ಶಂಕರರು ವಾಸವಾಗಿದ್ದರು ಎನ್ನುವ ಆಧಾರಗಳಿವೆ. ಹಿಂದೂ ನಂಬಿಕೆಯಂತೆ, ಅಲಕಾನಂದಾ ನದಿಯಲ್ಲಿ ತಮಗೆ ದೊರಕಿದ ನಾರಾಯಣನ (೧ ಮೀಟರ್ / ೩.೩ ಅಡಿ) ವಿಗ್ರಹವನ್ನು ಬಿಸಿನೀರಿನ ಬುಗ್ಗೆಯಿರುವ ತಪ್ತಕುಂಡದ ಸಮೀಪದ ಗುಹೆಯಲ್ಲಿ ಅವರು ಪ್ರತಿಷ್ಠಾಪಿಸಿದರು ಮತ್ತು ಆ ಪ್ರದೇಶದಲ್ಲಿ ಆಗ ತುಂಬಿಕೊಂಡಿದ್ದ ಹಿಂದೂ ದ್ವೇಷಿಗಳಾಗಿದ್ದ ಬೌದ್ಧರನ್ನು - ಅಂದು ಆಳುತ್ತಿದ್ದ ಪರ್ಮಾರ್ ಅರಸ ಕನಕಪಾಲ ಎಂಬವನ ಸಹಾಯದಿಂದ ದೇಶಭ್ರಷ್ಟರನ್ನಾಗಿಸಿದರು ಎಂಬ ಉಲ್ಲೇಖವಿದೆ. ಪರ್ವತವಾಸಿಗಳು - ಈ ಅರಸ ಪೀಳಿಗೆಯವರನ್ನು "ಮಾತನಾಡುವ ಬದರೀನಾಥ" (ಬೋಲಾಂಡ ಬದ್ರೀನಾಥ್) ಎಂಬಂಥ ಹಲವಾರು  ಬಹುಪರಾಕಿನ ಸಂಬೋಧನೆಯ ಮೂಲಕ ಭಕ್ತಿ ತೋರುತ್ತ ಬಂದಿದ್ದಾರೆ.

೧೬ನೇ ಶತಮಾನದ ಗಢವಾಲ್‌ನ ರಾಜನು ಈಗ ಕಾಣುವ ಸ್ಥಳಕ್ಕೆ ಬದರೀನಾರಾಯಣನ ಮೂರ್ತಿಯನ್ನು ಸ್ಥಳಾಂತರಿಸಿದನು ಮತ್ತು ೧೭ನೇ ಶತಮಾನದಲ್ಲಿ ಇದೇ ಪರ್ಮಾರ್ ಅರಸ ಪರಂಪರೆಯವರು ಗುಡಿಯನ್ನು ವಿಸ್ತರಿಸಿದರೆಂದೂ ಹೇಳುತ್ತಾರೆ. ಅನಂತರವೂ ದೇಗುಲ ಪರಿಸರದಲ್ಲಿ ಸಾಕಷ್ಟು ರೂಪಾಂತರಗಳಾಗಿವೆ. ಅಂದೊಮ್ಮೆ ಬೆರಳೆಣಿಕೆಯ ವಾಸ್ತವ್ಯವಿದ್ದಿದ್ದ ಈ ಬದರಿಯಲ್ಲಿ ಹಿಮವಿಲ್ಲದ ೬ ತಿಂಗಳ ಅವಧಿಯ ಜನವಾಸ್ತವ್ಯವೂ ಈಗ ಸ್ವಲ್ಪ ಹೆಚ್ಚಿದೆ. ಹತ್ತಿಪ್ಪತ್ತು ಗುಡಿಸಲು ಮತ್ತು ವರ್ಷಕ್ಕೆ ೮-೧೦ ಸಾವಿರ ಯಾತ್ರಿಗಳು ಮಾತ್ರ ಬಂದು ಹೋಗುತ್ತಿದ್ದ ಸುಮಾರು ೧೫೦ ವರ್ಷಗಳ ಹಿಂದಿನ ಬದರಿಯು - ಈಗ ಲಕ್ಷಾಂತರ ಯಾತ್ರಿಗಳನ್ನು ಸೆಳೆಯುತ್ತಿದೆ! ವರ್ಷದಿಂದ ವರ್ಷಕ್ಕೆ ಯಾತ್ರಿಗಳ ಸಂಖ್ಯೆ ಏರುತ್ತಿದೆ! ಪ್ರವಾಸೀಮೂಲದ ಸಂಪಾದನೆಗಾಗಿ, ದಾರಿಯುದ್ದಕ್ಕೂ ತಾತ್ಕಾಲಿಕ ವ್ಯಾಪಾರೀ ಮಳಿಗೆಗಳನ್ನಿಟ್ಟುಕೊಂಡಿರುವ ಬೆಟ್ಟದ ಜನರೂ ಕಾಣುತ್ತಾರೆ.


ಅಲಕಾನಂದಾ ನದಿಯ ದಡದಲ್ಲೇ ಸ್ಥಾಪಿತವಾಗಿರುವ ಬದರೀನಾಥ ದೇವಾಲಯವು ಸಮುದ್ರಮಟ್ಟಕ್ಕಿಂತ ಸುಮಾರು ೧೦,೨೭೯ ಅಡಿಗಳಷ್ಟು ಎತ್ತರದಲ್ಲಿದೆ. ಕೇದಾರ ಮತ್ತು ಬದರಿ ಕ್ಷೇತ್ರದ ಸುತ್ತಮುತ್ತಲೂ ಇನ್ನೂ ಅನೇಕ ಪ್ರೇಕ್ಷಣೀಯ ಸ್ಥಳಗಳಿವೆ. ಹಿಮಾಲಯನ ಅನಿರೀಕ್ಷಿತ ಅಟ್ಟಹಾಸವನ್ನು ತಾಳಿಕೊಂಡು ಸೈರಿಸಿಕೊಳ್ಳಬಲ್ಲ ಶಕ್ತಿವಂತರಾದವರು ಈ ಕ್ಷೇತ್ರಗಳಲ್ಲಿ ಕೆಲವು ದಿನ ಇದ್ದು, ಅಂತಹ ಸ್ಥಳಗಳಿಗೂ ಭೇಟಿಯಿತ್ತು ತಮ್ಮ ಆಸೆ ಪೂರೈಸಿಕೊಳ್ಳಬಲ್ಲರು. 



ಎಷ್ಟೇ ಪ್ರೇಕ್ಷಣೀಯವಾಗಿದ್ದರೂ ಎಷ್ಟೇ ಭಕ್ತಿಭಾವವಿದ್ದರೂ ಕೂಡ ತಮ್ಮ ಒಂದೇ ಯಾತ್ರೆಯ ಅವಧಿಯಲ್ಲಿ ಬದರಿ ಮತ್ತು ಕೇದಾರದ ಸುತ್ತಲಿನ ಎಲ್ಲ ಸಂಗತಿ-ಸ್ಥಳಗಳನ್ನು ಕಣ್ತುಂಬಿಕೊಳ್ಳುವ ಭಾಗ್ಯವು ದೈಹಿಕ ಮಿತಿ ಮತ್ತು ಸಮಯಾನುಕೂಲದ ಇತಿಮಿತಿಗಳಿಂದಾಗಿ ಎಲ್ಲರಿಗೂ ದೊರಕಲಾರದು. ಮುಖ್ಯವಾಗಿ ಸೂಕ್ಷ್ಮ ಪ್ರಕೃತಿಯವರೆಲ್ಲರೂ - ಸಹನೀಯವಾದ ಹವಾಮಾನ ಇರುವ ಸಮಯದಲ್ಲಿಯೇ ಹಿಮಾಲಯದ ಅಂಚಿನ ಯಾತ್ರೆ ಕೈಗೊಂಡರೆ ಅನುಕೂಲ. "ಎಲ್ಲೆಂದರಲ್ಲಿ ಊರು-ಕೋಟೆಗಳಲ್ಲಿ "ಇಲ್ಲದುದನ್ನು ಹುಡುಕುತ್ತ" ದಿನವಿಡೀ ಅಡ್ಡಾಡುವುದಷ್ಟೇ - ಬದುಕು ಭಾವಗಳಿಗೆ ಸಾಲದು; ಊರ ದೇವರನ್ನೂ ಕೋಟೆಯೊಡೆಯನನ್ನೂ ತನ್ನೊಳಮನೆಗೆ ಕರೆದು ಕುಳ್ಳಿರಿಸಿ ಆನಂದ ಕಂಡುಕೊಳ್ಳುವ ಭಾವಶಕ್ತಿಯನ್ನೂ ಹೊಂದಿರಬೇಕು" ಎಂದು ಭಾವಿಸಿ ಬದುಕುವಂತಹ ಭಕ್ತರಿಗೆ ಬದರೀನಾರಾಯಣನು ತೋರುವ ಪ್ರೀತಿ, ನೀಡುವ ತೃಪ್ತಿ-ಅಭಯಗಳು ಅನೂನವಾದುದು.

ಈ ಭೂಮಿಯ ಲೆಕ್ಕದಿಂದ ಪ್ರಕಟವಾಗಿ ಪ್ರತ್ಯೇಕ ಉಳಿದಿರುವ  ಬದರಿ-ಕೇದಾರಗಳಲ್ಲಿ ವರ್ಷದ ೬ ತಿಂಗಳ ಕಾಲ - ಸೃಷ್ಟಿಯೇ ಯೋಗನಿದ್ರೆಗೆ ಜಾರುವ ಸನ್ನಿವೇಶ ಇದೆ. ಪಹಾಡಿಗಳಲ್ಲದ ಭಾರತೀಯರ ಖಾತೆಯಲ್ಲಿ ಹೆಚ್ಚುವರಿಯಾಗಿ ಜಮೆಯಾದಂತೆ ಕಾಣುವ ವರ್ಷದ "+೬ ತಿಂಗಳ ಅವಧಿಯಲ್ಲಿ"ಯಲ್ಲಿ ನಮ್ಮ ಲೌಕಿಕ ವ್ಯಾಪಾರಗಳು ಅನೂಚಾನವಾಗಿ ನಡೆಯುತ್ತಿದ್ದರೂ - ಬದರಿ ಕೇದಾರಗಳಲ್ಲಿ ಮಾತ್ರ ನಿರ್ಜನ, ಗಾಢ ಮೌನ! ಸುಮಾರು ಅಕ್ಟೋಬರ್-ನವೆಂಬರ್ ತಿಂಗಳಿನಿಂದ ಮಾರ್ಚ್-ಎಪ್ರಿಲ್ ವರೆಗೂ ಅಲ್ಲಿ ಹಿಮಗರ್ಭಧ್ಯಾನ! 

ಮನಾ...[Mana]
ಮನಾ  ಭೇಟಿ ಎಂಬುದು ನನ್ನ ಕುತೂಹಲದ ಕನಸಾಗಿತ್ತು. ಬದರಿಯಿಂದ ಸುಮಾರು ೩ ಕಿ. ಮೀ. ದೂರದಲ್ಲಿ ಇಂಡಿಯಾ ಮತ್ತು ಟಿಬೇಟಿನ ಗಡಿ ಪ್ರದೇಶವಾದ "ಮನಾ" ಎಂಬ ಗ್ರಾಮ ಇದೆ. ಸಮುದ್ರ ಮಟ್ಟದಿಂದ ಸುಮಾರು ೧೫,೧೦೦ ಅಡಿ ಎತ್ತರವಿರುವ ಪ್ರದೇಶವಿದು. ಉತ್ತರಾಖಂಡದ ಪ್ರವಾಸೀ ತಾಣವಾದ ಇದು ಭಾರತದ ಕೊನೆಯಲ್ಲಿರುವ ಹಳ್ಳಿ. ಇಲ್ಲಿಗೆ ನಡೆದು ಹೋಗಬಹುದಾದಂತಹ ಸಪುರದ ಕಾಲ್ದಾರಿ ಮಾತ್ರ ಇದೆ.


ಜಗಲಿಯಂತೆ ಕಾಣುವ ಹಳೆಯ ಇಳಿಮಾಡಿನಡಿಯಲ್ಲಿ ದಾರಿಯ ಇಕ್ಕಡೆಗಳಲ್ಲಿ ಕಾಣಿಸುವುದು ಸಣ್ಣ ಸಣ್ಣ ವ್ಯಾಪಾರ ಮಾಡುತ್ತ ಕುಳಿತಿರುವ ಮಂಗೋಲಿಯನ್ ಬುಡಕಟ್ಟಿನ ಜನರು. ಇವರ ಸಂಖ್ಯೆ ಈಗ ಸುಮಾರು ೨೦೦ರಷ್ಟಿರಬಹುದಷ್ಟೆ ಎಂಬುದು ಒಂದು ಅಂದಾಜು. ಬದರೀನಾಥ ದೇವಸ್ಥಾನವು ತೆರೆಯುವ ಎಪ್ರಿಲ್-ಮೇ ತಿಂಗಳಿನಿಂದ ತೊಡಗಿ ೬ ತಿಂಗಳುಗಳಷ್ಟು ಕಾಲ ಈ ಜನರು ಮನಾ ಗ್ರಾಮಕ್ಕೆ ಬಂದು, ಅಲ್ಲಿ ವಾಸವಿದ್ದು, ತಮ್ಮ ಮೂಲ ಉದ್ಯೋಗಕ್ಕೆ ಪೂರಕವಾಗುವ ಸಂಸ್ಕೃತಿ ಮತ್ತು ಬುಡಕಟ್ಟಿನ ಪೂರ್ವ ಪರಂಪರೆಯನ್ನು ಜೀವಂತವಾಗಿರಿಸಿಕೊಳ್ಳುತ್ತಿದ್ದಾರೆ. ಬದರೀ ದೇವಾಲಯವು ಮುಚ್ಚಿದ ಮೇಲೆ, ಹವಾಮಾನ ವೈಪರೀತ್ಯದ ೬ ತಿಂಗಳ ಯಾಪನೆಗಾಗಿ - ಬದರೀನಾಥದಿಂದ ೧೦೦ ಕಿ. ಮೀ. ದೂರದಲ್ಲಿರುವ ಚಮೌಲಿ ಎಂಬ ಸ್ಥಳಕ್ಕೆ ಹೋಗಿ ವಾಸಿಸುತ್ತಿದ್ದಾರೆ. ಸರಳ, ಪ್ರಾಮಾಣಿಕ ಮತ್ತು ತೃಪ್ತ ಪಹಾಡಿ ಜನರಿವರು. ಅವರು ತಮ್ಮ ನಿತ್ಯೋಪಜೀವನಕ್ಕಾಗಿ ತರಕಾರಿ ಬೆಳೆಯುತ್ತಾರೆ; ಪಶು ಸಾಕಾಣಿಕೆ, ಸ್ವೆಟ್ಟರ್ ನೆಲಹಾಸುಗಳನ್ನು ಹೆಣೆದು ಮಾರುತ್ತಾರೆ. ಅವರ ಬಹುಪಾಲು ಸಂಪಾದನೆಯು ಪ್ರವಾಸಿಗರನ್ನೇ ಆಶ್ರಯಿಸಿದ್ದು - ಬದರೀ ದೇವಾಲಯ ತೆರೆದುಕೊಂಡ ಮೇಲೇ ಗರಿಗೆದರುವಂತೆ ತೋರುತ್ತದೆ.

ಮನಾ - ಗಡಿ ಪ್ರವೇಶ
ಬದರೀ ಪೇಟೆಯಿಂದ ಸುಮಾರು ೪ ಕಿ.ಮೀ. ವಾಹನದಲ್ಲಿ ಸಾಗಿದರೆ - ಮಾನ ಎಂಬ ಗಡಿಭಾಗಕ್ಕೆ ಪ್ರವೇಶಿಸುವ ಕಾಲ್ದಾರಿ ಕಾಣುತ್ತದೆ. ವಾಹನದಲ್ಲಿ ಬರೇ ೧೦ ನಿಮಿಷ ಸಾಕು. ಅಲ್ಲಿಂದ ಕಿರುದಾರಿಯಲ್ಲಿ ಸುಮಾರು ಮುಕ್ಕಾಲು ಕಿ.ಮೀ. ಹತ್ತಿ ಹೋದರೆ ವ್ಯಾಸ ಗುಹೆ ಇದೆ. ವ್ಯಾಸರು ಧ್ಯಾನಕ್ಕೆ ಬಳಸಿದ ಮತ್ತು ಮಹಾಗ್ರಂಥವಾದ ಮಹಾಭಾರತವನ್ನು ಇದೇ ಗುಹೆಯಲ್ಲಿ ಕೂತು ಬರೆದರೆನ್ನಲಾಗುತ್ತಿದೆ. ಅಲ್ಲಿ - ೫೦೦೦ ವರ್ಷಗಳಷ್ಟು ಹಳೆಯದೆನ್ನಲಾಗುವ "ವ್ಯಾಸ ಗುಹೆ" ಎಂಬ ಹೆಸರನ್ನು ಹೊತ್ತ ಚಿಕ್ಕ ಗುಹೆಯು ಈಗಲೂ ಇದೆ.




ಹಳೆಯ ಕಾಲದ ತಾಳೆಗರಿಗಳ ಕಟ್ಟನ್ನು ಹೋಲುವಂತೆ ಹೊರಗಣ್ಣಿಗೆ ಕಾಣುವ ಈ ಗುಹೆಯು ಪ್ರವಾಸಿಗರನ್ನು ಕ್ಷಣಕಾಲ ವ್ಯಾಸಭಾವಕ್ಕೆ ಕರೆದೊಯ್ಯುತ್ತದೆ! ಸ್ವಲ್ಪ ದೂರದಲ್ಲೇ ಕೆಳಗೆ - ಲಿಪಿಕಾರ ಗಣೇಶನ ಗುಹೆಯೂ ಇದೆ! 





ವೇದವ್ಯಾಸ ಗುಹೆಯ ಸಮೀಪದಲ್ಲೇ - ಬೃಹತ್ ಬಂಡೆಗಳ ಇಕ್ಕಟ್ಟಿನ ಎಡೆಯಿಂದ ಪ್ರಸವಿಸಿದಂತೆ ಕಾಣಿಸುವ ಸರಸ್ವತೀ ನದಿಯು ಭೋರಿಡುತ್ತ ರಭಸದಿಂದ ಧುಮ್ಮಿಕ್ಕುತ್ತಿದೆ. ಸುಮಾರು ೧೦೦ ಮೀಟರಿನಷ್ಟು ದೂರದ ವರೆಗೆ ಮಾತ್ರ ಪ್ರಕಟವಾಗಿರುವ ಸರಸ್ವತಿಯು ಅನಂತರ ಅಂತರ್ಗಾಮಿಯಾಗಿ, ಮುಂದೆ ಅಲಹಾಬಾದಿನಲ್ಲಿ ಗಂಗೆ ಯಮುನೆಯರನ್ನು ಸಂಗಮಿಸುತ್ತಾಳೆ. ಈ ನದಿಯ ದಡದಲ್ಲಿಯೇ ನಾರದ, ಭೃಗು, ಶ್ರೀಕೃಷ್ಣ, ಸಗರ, ಪಾಂಡವರು ಮುಂತಾದ ಅನೇಕ ಪುರಾಣಪುರುಷರು ತಪಸ್ಸು ನಡೆಸಿದರೆಂದು ಪುರಾಣಗಳಲ್ಲಿ ಹೇಳಲಾಗುತ್ತಿದೆ. 



ಬೃಹತ್ ಬಂಡೆಗಳನ್ನು ಸೀಳಿಕೊಂಡು ಧುಮ್ಮಿಕ್ಕುವಂತೆ ಕಾಣುವ ಜಲಧಾರೆಯ ಸರಸ್ವತಿಯು ಸ್ವಲ್ಪ ದೂರದಲ್ಲೇ ಕಾಣದಂತಾಗುವ ವೈಚಿತ್ರ್ಯಕ್ಕೆ "ವೇದವ್ಯಾಸರ ಶಾಪ"ವೇ ಕಾರಣ ಎಂಬ ದಂತಕತೆಯೂ ಇದೆ! ಸರಸ್ವತಿಯ ಅವ್ಯಾಹತ ಭೋರ್ಗರೆತದಿಂದಾಗಿ ಮಹಾಭಾರತದ ಬರವಣಿಗೆಯಲ್ಲಿ ಮಗ್ನರಾಗಿದ್ದ ವ್ಯಾಸರ ಏಕಾಗ್ರತೆಗೆ ಭಂಗವುಂಟಾದಾಗ, ಮೊರೆತವನ್ನು ತಗ್ಗಿಸುವಂತೆ ವ್ಯಾಸರು ಹೇಳಿದ ಮೇಲೂ ಅದು ತಗ್ಗದೇ ಹೋದಾಗ, ವೇದವ್ಯಾಸರು ಸರಸ್ವತಿಗೆ - "ಅಂತರ್ಗಾಮಿಯಾಗು" -ಎಂದು ಆಜ್ಞಾಪಿಸಿದರು ಎಂಬುದು ಕತೆ. 



ವ್ಯಾಸ ಗುಹೆಗೂ ಗಣಪ ಬರೆಯಲು ಕೂತ ಜಾಗ ಎನ್ನುವ "ಗಣೇಶನ ಗುಹೆ" ಸ್ಥಳಕ್ಕೂ ಒಂದಷ್ಟು ಅಂತರ ಇದೆ; ಅವು ಬಾಯಲ್ಲಿ ಹೇಳಿ ಬರೆಸುವಷ್ಟು ಸಮೀಪ ಇಲ್ಲವೇ ಇಲ್ಲ ಅಥವ ಅಲ್ಲಿ ಕೂತು ಹೇಳಿ ಇಲ್ಲಿ ಕೂತು ಬರೆಯುವಷ್ಟು - ಈಗಂತೂ ಆ ಗುಹೆಗಳು ಸಮೀಪವಿಲ್ಲ. ಆದರೆ ವ್ಯಾಸರ ಧ್ವನಿ ಎಷ್ಟು ಶಕ್ತಿಶಾಲಿಯಿತ್ತೋ ಗಣಪನ ಕಿವಿಯು ಎಷ್ಟು ಸೂಕ್ಷ್ಮವಾಗಿತ್ತೋ ಎಂದೆಲ್ಲ - ಈಗ ಊಹಿಸುವುದು ಕಷ್ಟ. ಒಂದೊಮ್ಮೆ ಕೂಗಿ ಹೇಳಿ ವ್ಯಾಸರು ಬರೆಸುತ್ತಿದ್ದರೆ, ತನ್ಮಧ್ಯೆ ಸರಸ್ವತಿಯ ನಿರಂತರ ಬೊಬ್ಬೆಯೂ ಅಡ್ಡಿಪಡಿಸುವಂತಾದಾಗ ವೇದವ್ಯಾಸರ ಯೋಚನಾ ಲಹರಿಗೆ ತಡೆಯಾದಂತಾಗಿರಬಹುದು. ವ್ಯಾಸರ ಕೋಪ ನೇರವಾಗಿ ಕಂಡದ್ದು ಸರಸ್ವತಿಯನ್ನು! ಪಾಪದ ಹೆಣ್ಣು ಸರಸ್ವತಿಗೆ ಉಚಿತ ಶಾಪ! ಆ ಗಣಪನನ್ನೇ "ಸ್ವಲ್ಪ ಹತ್ತಿರ ಬಾರಪ್ಪಾ.." ಅನ್ನಬಾರದಿತ್ತೆ? ಅಥವ ತಾವೇ ಗಣೇಶನತ್ತ ಸ್ವಲ್ಪ ಸರಿಯಬಾರದಿತ್ತೆ? ಬಾ ಅಂದರೆ ಓಡೋಡಿ ಬರುವ ಗಣಪನ ಮಂಡೆ ಸವರಿ, ಕರೆದು ಕೂಡಿಸಿಕೊಂಡಿದ್ದರೆ ಮಹಾಭಾರತವೂ ಹುಟ್ಟುತ್ತಿತ್ತು; ಸರಸ್ವತಿಯೂ ಬದುಕುತ್ತಿದ್ದಳಲ್ಲ! ವ್ಯಾಸರು ಹೀಗೇಕೆ ಮಾಡಿದರು?... ಗಣಪತಿ ಸುಭಗ. "ನಂಗೊತ್ತಿಲ್ಲಪ್ಪ; ಅವರು ಹೇಳಿದರು, ನಾನು ಬರೆದೆ. ಮತ್ತೆಂಥದ್ದೂ ನಂಗೊತ್ತಿಲ್ಲ..." ಅನ್ನುವ ಜಾಣ. ಹೀಗೆಲ್ಲ ಮನಸ್ಸಿನಲ್ಲೇ ಅಂದುಕೊಳ್ಳುತ್ತ ಖುಶಿ ಪಡುತ್ತಿದ್ದೆ. ಗಣಪತಿಯ ಸುದ್ದಿಗೆ ಹೋಗದೆ, ರೋದಿಸುವ ಸರಸೋತಿಯ ಧ್ಯಾನ ಮಾಡುತ್ತ ವೇದವ್ಯಾಸರಲ್ಲಿ ಅಹವಾಲು ಮಂಡಿಸುತ್ತಿದ್ದೆ! 



ಮನೋಲಹರಿ ಅಲ್ಲಿರಲಿ. ಆದರೆ ಅಷ್ಟೊಂದು ಸುಪುಷ್ಟ ಜಲರಾಶಿಯು ಇದ್ದಕ್ಕಿದ್ದಂತೆ ಕಣ್ಮರೆಯಾಗಿರುವುದಂತೂ ಈಗಲೂ ಕಣ್ಣಿಗೆ ಕಾಣುವ ಸಂಗತಿ. ಅದಕ್ಕೆ ಭೌಗೋಳಿಕ ಕಾರಣಗಳೂ ಇರಬಹುದು. 

ಎತ್ತರದ ಎರಡು ಬಂಡೆಗಳನ್ನು ಆಧರಿಸಿ, ಸರಸ್ವತಿಗೆ ನೆರಳು ನೀಡುವಂತೆ ಹಾಸಿದಂತಿರುವ ಒಂದು ಬಂಡೆಯನ್ನು ಭೀಮ್ ಫುಲ್ ಎನ್ನುತ್ತಿದ್ದಾರೆ. ಸುಮಾರು ೧೦-೧೫ ಅಡಿಗಳಷ್ಟು ಅಗಲವಾಗಿರುವ ಆ ನದೀ ಭಾಗವನ್ನು ಸ್ವರ್ಗಾರೋಹಣದ ಹೊತ್ತಿನಲ್ಲಿ ದಾಟಲಾಗದ, ತೀರ ಬಸವಳಿದಿದ್ದ ದ್ರೌಪದಿಗಾಗಿ ಆ ಬಂಡೆಯನ್ನು ಭೀಮನು ಅಲ್ಲಿ ಎತ್ತಿ ಇಟ್ಟು ಸೇತುವೆಯಂತೆ ನಿರ್ಮಿಸಿದನು ಎಂಬ ದಂತಕತೆ(?)ಯೂ ಇದೆ.



ಈ ಇಡೀ ಪ್ರದೇಶವು ತಮ್ಮ ಪೂರ್ವ ಪಿತಾಮಹರನ್ನು ಹೆಮ್ಮೆಯಿಂದ ಸ್ಮರಿಸಿಕೊಳ್ಳುವ ಮತ್ತು ನೆಲದ ಸಂಸ್ಕೃತಿಯ ಕುರಿತ ಅಭಿಮಾನ ಉಳ್ಳವರಿಗೆಲ್ಲರಿಗೂ ರೋಮಾಂಚನಗೊಳಿಸುವಂತಿದೆ. ಹತ್ತಿದ ಏಣಿಯನ್ನು ಖಡಖಡ ಖಂಡಿಸುವ ಕೆಲವು ವಿಚಾರವಾದಗಳು ಆ ಹೊತ್ತಿನಲ್ಲಿ  ಮನಸ್ಸಿನ ತೂತಿನಲ್ಲಿ ಹುಟ್ಟಿಕೊಂಡರೆ... ಅವೆಲ್ಲವೂ ವಾಸ್ತವ ಸುಖದಿಂದ ನಮ್ಮನ್ನು ವಂಚಿತರನ್ನಾಗಿಸುವ ಸಾಮಗ್ರಿಗಳಾದಾವು ಅಷ್ಟೇ. ಈ ಭರತಭೂಮಿಯಲ್ಲಿ ಆಳವಾಗಿ ನೆಟ್ಟುಹೋಗಿರುವ ನಮ್ಮ ಪೂರ್ವದ ಋಷಿ-ರಾಜರುಗಳ ಅಸಂಖ್ಯ ಸ್ಮಾರಕಗಳನ್ನು ಭೌತಿಕವಾಗಿಯೂ ಮಾನಸಿಕವಾಗಿಯೂ ಕುತರ್ಕಗಳಿಂದ ಉಜ್ಜಲು ಯತ್ನಿಸುವ ಆಧುನಿಕ ದೇಶಭಕ್ತರಿಗೆ - ಹಿಮಾಲಯದ  ಕಲ್ಲು, ಮಣ್ಣು, ಮರ, ಗಿಡ, ಜಲ, ಸ್ಥಲಗಳೆಲ್ಲವೂ ಸವಾಲೆಸೆಯುತ್ತ ನಿಂತಂತೆ ನನಗೆ ಕಂಡಿತ್ತು!

ವ್ಯಾಸಗುಹೆಗಿಂತ ಮುಂದೆಯೂ ಅದೇ ಕಾಲ್ದಾರಿ ಮುನ್ನಡೆದಿತ್ತು. ಮಾನಾ ಗ್ರಾಮದ ಮೂಲಕ ಸತೋಪಂತ್ ಸರೋವರದ ವರೆಗೆ ಹೋಗಬಹುದು. ಹಿಮಾಚ್ಛಾದಿತ ಗಿರಿಶೃಂಗಗಳ ಮಧ್ಯದಲ್ಲಿ ತ್ರಿಕೋನಾಕೃತಿಯಲ್ಲಿರುವ ಸ್ಫಟಿಕ ಶುಭ್ರದ ತಿಳಿಹಸಿರು ಬಣ್ಣದ ಸರೋವರವಿದು. ಸ್ಥಳೀಯರು ಪವಿತ್ರ ಎಂದುಕೊಳ್ಳುವ ಜಲ ಇದು. ಸತೋ-ಪಂತ್ ಅಂದರೆ ಸತ್ಯದ ದಾರಿ. ಈ ಸರೋವರದ ಮೂರು ಭುಜಗಳನ್ನು ಬ್ರಹ್ಮ, ವಿಷ್ಣು, ಮಹೇಶ್ವರ ಎಂಬ ಹೆಸರಿನಿಂದ ಗುರುತಿಸುತ್ತಾರೆ. ಬದರಿಯಿಂದ ೨೨ ಕಿ.ಮೀ. ದೂರದಲ್ಲಿರುವ ಈ ಸರೋವರಕ್ಕೆ "ಸ್ಪರ್ಶಿಸದ ಸರೋವರ" (Untouched Lake) ಎಂಬ ಖ್ಯಾತಿ ಇದೆ! ಚಾರಣಿಗರನ್ನು ವಿಶೇಷವಾಗಿ ಆಕರ್ಷಿಸುತ್ತಿರುವ ತಾಣ ಸತೋಪಂತ್. ಸತೋಪಂತ್ ವೀಕ್ಷಿಸಲು - ಮೇ, ಜೂನ್, ಸೆಪ್ಟೆಂಬರ್, ಅಕ್ಟೋಬರ್ ತಿಂಗಳು ಪ್ರಶಸ್ತ ಸಮಯ. ಆದರೆ ಅದಾಗಲೇ ಆಕಾಶದ ತುಂಬ ಮೋಡ - ಮಬ್ಬು ಕವಿಯಲಾರಂಭಿಸಿತ್ತು. ಮಳೆಗೆ ಅಗತ್ಯವಾದ ಯಾವುದೇ ಸಾಧನವಿಲ್ಲದೆ ಭಂಡ ಧೈರ್ಯದಿಂದ ಹತ್ತುತ್ತ ಬಂದಿದ್ದ ನಾವು, ಇನ್ನು ಹಿಂದಿರುಗುವುದೇ ಸೂಕ್ತ ಎಂದುಕೊಂಡು - ಕಂಡದ್ದನ್ನಷ್ಟು ಒಳಗಿಳಿಸಿಕೊಳ್ಳುತ್ತ - ಹಾದಿ ಇಳಿಯಲಾರಂಭಿಸಿದೆವು. ನೋಡುವ ಮನಸ್ಸಿದ್ದಿದ್ದರೂ ನಮ್ಮ ಕಾರ್ಯಸೂಚಿಗೆ ಹೊಂದಲಾರದೆಂಬ ಭಾವನೆಯಿಂದ ಈ ಸರೋವರದ ವರೆಗೆ ನಾವು ಹೋಗಲಿಲ್ಲ. 

ಮುಂದೆ ಮುಂದೆ ಹೋದಂತೆ... ದೇವಭೂಮಿ ಇದೆ ಎನ್ನುತ್ತಾರೆ! ಸ್ವರ್ಗದ ಕನಸು ಕಾಣುವ ಲಕ್ಷಾಂತರ ಮಂದಿ ಈಗಲೂ ಇದ್ದಾರೆ. ದೇವಭೂಮಿ ಎಂದು ಕರೆಸಿಕೊಳ್ಳುವ ಹಿಮಾಲಯದಲ್ಲಿ ಅಂತಹ ಕಲ್ಪನೆಗಳನ್ನು ವಾಸ್ತವ ಎಂದು ಒಪ್ಪಲೇಬೇಕಾದಂತೆ ಮಾಡುವ ಅನೇಕ ಕಿಂಡಿಗಳಿವೆ! ಸಂಸಾರದಿಂದ ದೂರವಾಗಿ ಅಧ್ಯಾತ್ಮ ಕಾಣುವ ಕಿಂಡಿಗಳವು. ಸ್ವರ್ಗಾರೋಹಣದ ಕಾಲದಲ್ಲಿ ಪಾಂಡವರು ಇದೇ ಮಾರ್ಗದಲ್ಲಿ ಮುನ್ನಡೆದರು ಎಂಬುದಕ್ಕೆ ಅಲ್ಲಲ್ಲಿ ಸಾಕ್ಷಿಗಳೂ ಕಾಣುತ್ತವೆ! ಸ್ವರ್ಗಾರೋಹಣದ ಕಾಲದಲ್ಲಿ ಮೊದಲು ದೇಹತ್ಯಾಗ ಮಾಡಿದವಳು ದ್ರೌಪದಿ. ಮಾನಾ ಹಳ್ಳಿಯ ಸಮೀಪದಲ್ಲೇ ದ್ರೌಪದಿ ಸತ್ತು ಬಿದ್ದ ತಾಣವಿದೆಂದು ತೋರಿಸುತ್ತಾರೆ! ಅಲ್ಲೊಂದು ಗುಡಿಯೂ ಇದೆ!



ಕುಬೇರ ಶೃಂಗ, ನೀಲಕಂಠ ಶೃಂಗ, ನಚಿಕೇತ ಸರೋವರ... ಹಿಮಾಲಯದ ವೈಭವಕ್ಕೆ ಎಂತೆಂಥ ಹೆಸರಿನ ಮೋಡಿ ನೋಡಿ!

ಪ್ರಚಂಡ  ವಿಚಾರ ವ್ಯಭಿಚಾರಿಗಳನ್ನೂ - ಹಿಮಾಲಯವು ತಡಬಡಾಯಿಸುವಂತೆ ಮಾಡಿಬಿಡುತ್ತದೆ. ಸ್ವಂತ ತಮ್ಮನ್ನು ತಾವು ನಂಬಬಲ್ಲವರು ಮಾತ್ರ ಇನ್ನೊಂದನ್ನೂ ನಂಬುವ ಶಕ್ತಿಯನ್ನು ಹೊಂದಿರುತ್ತಾರೆ. ಸ್ವಂತ-ಪರ ಎಂಬ ಏನನ್ನೂ ನಂಬದವರಿಗೆ ಮತ್ತು "selective" ಆಗಿ ತಂತಂಮ್ಮ ಅನುಕೂಲಕ್ಕೆ ತಕ್ಕಂತೆ ನಂಬುವವರಿಗೆ - ನಾಕವೂ ಒಂದೇ; ನರಕವೂ ಒಂದೇ. ಪಾತಾಳವೂ ಒಂದೇ; ಕೈಲಾಸವೂ ಒಂದೇ. ನಮ್ಮ ಕಣ್ಣಿಗೆ ಕಾಣದ ಸತ್ಯಗಳೂ ಕೆಲವಿವೆ ಎಂದು ಪ್ರಾಂಜಲವಾಗಿ ಒಪ್ಪುವುದು ಮತ್ತು ಅಂತಹ ಮುಕ್ತ ಭಾವನೆಯನ್ನು ಬೆಳೆಸಿಕೊಳ್ಳುವುದೂ ಸುಲಭವೇನಲ್ಲ. ವಿಚಾರ ಕಿಚಾರಗಳಿಗೆಲ್ಲ don't care ಎಂಬಂತಿರುವ ಹಿಮಾಲಯವು ಮಾತ್ರ - ಪುರಾಣಗಳ, ಪುರಾಣಪ್ರಿಯರ ಪಾಲಿಗೆ ಸಾಕ್ಷಿಗಳ ಭಂಡಾರದಂತಿದೆ.



ಯಾವುದೇ "ವಿಕಾಸ" ಎಂದರೆ... ಪರಕೀಯ ಅನುಕರಣೆಯಲ್ಲ; ಹಿಂದಿನ ಸಾಧನೆಗಳನ್ನು ಕುಟ್ಟಿ ಪುಡಿ ಮಾಡಿ ಹೊಸತನ್ನು ಹೇರುವುದೂ ಅಲ್ಲ. ಬದಲಿಗೆ, ಇಂದಿನೊಂದಿಗೆ ಹಿಂದನ್ನು ಜೋಡಿಸುವುದು; ಮುಂದನ್ನು ಹಸನುಗೊಳಿಸುವುದು. ಹಾಗಾದಾಗ ಮಾತ್ರವೇ ಅಭಿವೃದ್ಧಿಯ ಸಮಗ್ರ ನೋಟ ಕಾಣಲು ಸಾಧ್ಯ. 

ಹಿಮನದಿಗಳಿಂದ ವಿದ್ಯುತ್ ಉತ್ಪಾದಿಸುವ ಘಟಕಗಳನ್ನು ಮತ್ತು ಸಾಧ್ಯವಿರುವಲ್ಲೆಲ್ಲ ರಸ್ತೆಯ ಅಗಲೀಕರಣ ನಡೆಸುತ್ತಿರುವುದನ್ನು ದಾರಿಯುದ್ದಕ್ಕೂ ಕಂಡಾಗ - ಸರಕಾರಗಳು ಹಿಮಾಲಯದ ವಲಯದಲ್ಲಿ ಅಭಿವೃದ್ಧಿ ನಡೆಸಲೇ ಬೇಕೆಂಬ ಸಂಕಲ್ಪ ತೊಟ್ಟಂತೆ ಅನ್ನಿಸಿತ್ತು. ಸಮುದ್ರ ಮಟ್ಟದಿಂದ ಸುಮಾರು ೧೧,೮೦೦ ಅಡಿ ಎತ್ತರದಲ್ಲಿರುವ ಕೇದಾರನಾಥ ಕ್ಷೇತ್ರದಲ್ಲೂ ಬಿ.ಎಸ್.ಎನ್.ಎಲ್. ಸಂಪರ್ಕ ಜಾಲ ಮತ್ತು ವೈಫೈ ಸಿಗುತ್ತಿತ್ತು! ಅಂತಹ ಸೂಕ್ಷ್ಮ ವಲಯಗಳಲ್ಲಿ ಸಂಪರ್ಕ ಸೌಲಭ್ಯ ಒದಗುವಂತೆ ಮಾಡಿದ ಸರಕಾರಗಳ ಸಾಧನೆಯು ಶ್ಲಾಘನೀಯ.

ಈ ದೇಶದ ಕಲ್ಲು ಕಲ್ಲುಗಳಿಗೂ ಪುರಾಣದ ನಂಟಿರುವುದನ್ನು ಕಣ್ಣಾರೆ ನೋಡಿದ ಮೇಲೂ - ಕಣ್ಣಾರೆ ಕಂಡದ್ದೆಲ್ಲವನ್ನೂ ಮೂಢನಂಬಿಕೆ-ಕಟ್ಟುಕಥೆ ಎನ್ನುವುದಾದರೂ ಹೇಗೆ? ನಮ್ಮ ಹಿರಿಯರನ್ನು, ಅವರ ಸಾಧನೆಗಳನ್ನು ಜರಿದು ದೂಷಿಸುವುದನ್ನೇ ಧಂದೆಯಾಗಿಸಿಕೊಂಡ  ಚಾರ್ವಾಕರನ್ನೂ ಈ ನೆಲವು ಸೈರಣೆಯಿಂದ ಪೋಷಿಸುತ್ತಲೇ ಬಂದಿದೆ. ಅದೇ ಹಿಂದೂ ಸಂಸ್ಕೃತಿಯ ವೈಶಿಷ್ಟ್ಯ ಮತ್ತು ದೌರ್ಬಲ್ಯವೂ. 

ಭಾರತದ ಗಡಿಗ್ರಾಮವಾದ ಮಾನ್‌ನಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಮುಕ್ಕಾಲು ಮೈಲಿ ಹತ್ತುವಾಗಲೇ ಮುಕ್ಕಾಲು ಮೈಲಿ ಓಡಿದ ಅನುಭವ ಆಗುತ್ತದೆ. ಹಾಗೆ ನಡೆಯಲಾಗದವರನ್ನು ಬೆನ್ನಿನ ಮೇಲೆ ಹೊತ್ತೊಯ್ಯುವ ಸ್ಥಳೀಯರ ಉದ್ಯೋಗದಿಂದಾಗಿ, ಅಶಕ್ತ ಪ್ರವಾಸಿಗಳಿಗೆ ಬಹಳ ಅನುಕೂಲವಾಗುತ್ತಿದೆ. ನಡುನಡುವೆ ಕಾಫಿ, ಟೀ, ಬ್ರೆಡ್, ಬಿಸ್ಕತ್ತು ಮುಂತಾದ ಲಘು ಉಪಾಹಾರಕ್ಕೆ ದಾರಿಯುದ್ದಕ್ಕೂ ವ್ಯವಸ್ಥೆಯಿದೆ. ಸ್ವಚ್ಛ ಟಾಯ್ಲೆಟ್‌ಗಳಿವೆ. ಹಿಂದೊಂದು ಕಾಲದಲ್ಲಿ - ಇದು ಉತ್ತರಾಖಂಡ್ ಮತ್ತು ಟಿಬೇಟ್ ನಡುವೆ ವ್ಯಾಪಾರ ವಹಿವಾಟು ನಡೆಸಲು ಬಳಸುತ್ತಿದ್ದ ಮಾರ್ಗವಾಗಿತ್ತಂತೆ. ಚೀನಾದ ಆಡಳಿತವು ಈ ಹಾದಿಯನ್ನು ಮುಚ್ಚಿದ ೧೯೫೧ರ ವರೆಗೂ ಈ ಹಾದಿಯು ತಕ್ಕಮಟ್ಟಿಗೆ ಬಳಕೆಯಾಗುತ್ತಿತ್ತು. ಸಡಿಲು ಮಣ್ಣಿನ ಪ್ರಾಕೃತಿಕ ರಸ್ತೆಯಾದರೂ ಕೂಡ - ನಡೆದು ಹೋಗುವಷ್ಟು ಸುಸ್ಥಿತಿಯಲ್ಲಿ ಈಗಲೂ ಇದೆ. ತಣ್ಣಗಿನ ಗಾಳಿ, ಮೋಡ ತುಂಬಿದ ವಾತಾವರಣ ಇದ್ದರೂ ಕೂಡ - ನಮ್ಮ ಮಾನ್ ಸಂಚಾರದ ೩ ಗಂಟೆ ಕಾಲ ಮಳೆ ಸುರಿಯದಿದ್ದುದು ಮಾತ್ರ ನಮ್ಮ ಅದೃಷ್ಟ ಎನ್ನಬೇಕು. 

ತಮ್ಮ ಪೂರ್ವಜರ ಹೆಜ್ಜೆಜಾಡನ್ನು ಹುಡುಕುತ್ತ ಮಾನಾ ಗ್ರಾಮಕ್ಕೆ ಬರುವ ಪ್ರವಾಸಿಗಳಿಗೆ ಮುಜುಗರವುಂಟುಮಾಡುವ ಸಂದರ್ಭಗಳೂ ಇಲ್ಲವೆಂದೇನಿಲ್ಲ. ಪ್ರಾಚೀನ ಸ್ಮಾರಕಗಳ ಜೀರ್ಣೋದ್ಧಾರದ ಹೆಸರಿನಲ್ಲಿ ಆಧುನಿಕ ಸಿಮೆಂಟ್, ಬಣ್ಣಗಳನ್ನು ಬಳಿದು, ವ್ಯಾಸಗುಹೆಯ ಅಂದಗೆಡಿಸಿದಂತೆಯೂ ಭಾಸವಾಗುತ್ತದೆ. ಭಾರತದ ಪುರಾತನ ಸಂಸ್ಕೃತಿಯ ಗಾಢ ನೆರಳಿರುವ ಇಂತಹ ಪ್ರವಾಸೀ ತಾಣಗಳನ್ನು ಕಾಯ್ದುಕೊಳ್ಳುವಾಗ ಪೂರ್ಣ ಎಚ್ಚರ ಬೇಕಿತ್ತು ಅನ್ನಿಸುತ್ತದೆ. ಸ್ಥಳೀಯರು ಮತ್ತು ಪ್ರವಾಸಿಗರು ಸ್ವಚ್ಛತೆಯ ಕಡೆಗೆ ಇನ್ನೊಂದಿಷ್ಟು ಗಮನ ಹರಿಸಬೇಕಾಗಿದೆ. ಇಡೀ ಮಾನ್ ಎಂಬ ಹಳ್ಳಿಯನ್ನು - ಪ್ರವಾಸಿಗಳಿಗೆ ಸುಖವೆನಿಸುವಂತೆ, ಪ್ರಕೃತಿ ಸಂಪತ್ತನ್ನು ಸುತರಾಂ ದೋಚದೆ, ಸುಂದರವಾಗಿ ಪುನರುಜ್ಜೀವಗೊಳಿಸಿ ಕಟ್ಟಿ ನಿಲ್ಲಿಸುವ ಇಚ್ಛಾಶಕ್ತಿ ಮತ್ತು ಕ್ರಿಯಾಶಕ್ತಿಯ ಕೊರತೆಯೊಂದು ಅಲ್ಲಿ ಎದ್ದು ಕಾಣುತ್ತದೆ. ಸಾಕಷ್ಟು ಅಭಿವೃದ್ಧಿ ಆಗುತ್ತಿದ್ದರೂ ಕೂಡ ಇನ್ನೂ ಆಗಬೇಕಾಗಿರುವುದೇ ಬೃಹತ್ತಾಗಿದೆ ಅನ್ನಿಸುತ್ತದೆ. ವ್ಯವಸ್ಥಿತಗೊಳಿಸುವ ಕ್ರಿಯೆ ಎಂಬುದು ನಿರಂತರವಾಗಿ ಇರಬೇಕಾದ್ದು. ಸಂಕಲ್ಪದೊಂದಿಗೆ ಸಂಸ್ಕೃತಿಯ ಪ್ರಜ್ಞೆಯೂ ಆಳುವ ಸರಕಾರ ಮತ್ತು ಪ್ರಜೆಗಳಲ್ಲಿಯೂ ಇದ್ದಾಗ ಮಾತ್ರ ಮನ ಸೆಳೆಯುವಂತೆ ಇಂತಹ ತಾಣಗಳನ್ನು ಪರಿವರ್ತಿಸಬಹುದೆನ್ನುವ ಅಂಶವನ್ನೂ ಮನಗಾಣಬೇಕಾಗಿದೆ. 

ಯಾವುದೇ ತಪ್ಪುಗಳನ್ನು ಆಯಾ ಕ್ಷಣವೇ ತಿದ್ದಿ ದಾಖಲಿಸಿಕೊಳ್ಳುವ ವಿಶೇಷ ಸಿದ್ಧ ವ್ಯವಸ್ಥೆಯಿರುವ ಆರೋಗ್ಯವಂತ ಮಿದುಳುಗಳು - ಎಷ್ಟೋ ಋಣಾತ್ಮಕ ಸಂಗತಿಗಳನ್ನು ತಮ್ಮ ದಾಖಲೆಗಳಲ್ಲಿ ತಾವೇ ಉಜ್ಜಿ ಸರಿಪಡಿಸಿಕೊಂಡು ಬಿಡುತ್ತವಲ್ಲವೆ?

ಏನೇ ಇದ್ದರೂ... ಪುರಾಣ ಇತಿಹಾಸಗಳ ಪೂರ್ವ ಪರಿಚಯವಿದ್ದ ಪ್ರವಾಸಿಗರಿಗೆ ಹಿಮಾಲಯವು ಕೊಡುವ ಅನುಭವವು ಬೇರೆಯೇ ತೆರನಾದ್ದು. ಮಾನ್‌ನಲ್ಲಿ ಸರಸ್ವತೀ ನದಿಯ ಉಗಮ ಸ್ಥಾನದ ವರೆಗೆ ಹೋಗಿದ್ದ ನಮ್ಮ ಗುಂಪಿನ ಹಲವು ಸದಸ್ಯರು ಅವ್ಯಕ್ತ ಆನಂದದ ಅನುಭೂತಿ ಹೊಂದಿದ್ದು ಸತ್ಯ. ಯಾವುದೇ ವಿಘ್ನ ತಂದೊಡ್ಡದೇ ಮಾನ್‌ನಲ್ಲಿ ಮನಸಾರ ಸಂಚರಿಸಲು ಉಪಕರಿಸಿದ ವರುಣನಿಗೆ ಕೃತಜ್ಞತೆ ಸಲ್ಲಿಸಿದ ನಾವು - ಹಿಂದಿರುಗಿ ಬಸ್ ಹತ್ತಿದೆವು. ಸುಮಾರು - ಸಂಜೆ ೫ ಗಂಟೆಯ ಹೊತ್ತಿಗೆ ಬದರಿಯಿಂದ ಹರಿದ್ವಾರದ ಕಡೆಗೆ ನಮ್ಮ ಪ್ರಯಾಣ ಶುರುವಾಯಿತು. ಆ ರಾತ್ರಿಯನ್ನು ಮತ್ತೆ ಪಿಪ್ಪಲ್‌ಕೋಟ್‌ನಲ್ಲೇ ಕಳೆದೆವು. ಮರುದಿನ, ಅಕ್ಟೋಬರ್ ೨೪ ನೇ ತಾರೀಕಿನ ಬೆಳಿಗ್ಗೆ ಸುಮಾರು ೮.೩೦ ಗಂಟೆಗೆ ಹರಿದ್ವಾರದತ್ತ ಹೊರಟೆವು. ಇಳಿದಿಳಿದು, ಉಖಿಮಠ ಮತ್ತು ಚಮೋಲಿಯನ್ನು ದಾಟಿ - ಸುಮಾರು ೫೦ ಕಿ. ಮೀ. ಪ್ರಯಾಣಿಸಿ, ೧೦.೩೦ರ ಸುಮಾರಿಗೆ ಕರ್ಣಪ್ರಯಾಗ ತಲುಪಿದೆವು.



ಅಲ್ಲಿನ ಶ್ರೀ ಕೃಷ್ಣ ಪ್ಯಾಲೇಸ್ ಎಂಬ ಹೋಟೆಲಿನಲ್ಲಿ ಹಸಿವು ಇಂಗಿಸಿಕೊಂಡೆವು. ಆಗ ನಾವು ನಿಂತ ಜಾಗ - ಕರ್ಣ ಪ್ರಯಾಗ. ವಿಷ್ಣುಪ್ರಯಾಗ, ನಂದಪ್ರಯಾಗ, ಕರ್ಣಪ್ರಯಾಗ, ರುದ್ರಪ್ರಯಾಗ, ದೇವಪ್ರಯಾಗ ಎಂಬ ಪಂಚ ಪ್ರಯಾಗಗಳಲ್ಲಿ ಇದೂ ಒಂದು. ಮಹಾಭಾರತದ ದುರಂತ ನಾಯಕ ಕರ್ಣನು ಇಲ್ಲೇ ತಪಸ್ಸು ಮಾಡಿ ಸೂರ್ಯನನ್ನು ಒಲಿಸಿಕೊಂಡು ಭೇದಿಸಲಾಗದ ಕವಚವನ್ನು ಸಂಪಾದಿಸಿದನು ಎಂಬ ಕಾರಣಕ್ಕೇ - ಈ ಸ್ಥಳವು ಕರ್ಣಪ್ರಯಾಗ ಎಂದು ಕರೆಯಲ್ಪಟ್ಟಿದೆ ಎಂಬ ಕತೆಯಿದೆ. ಪ್ರಯಾಗ ಅಂದರೆ ನದಿಗಳ ಸಂಗಮ ಸ್ಥಳ ಎಂದರ್ಥ. ಕರ್ಣಪ್ರಯಾಗದಲ್ಲಿ ಅಲಕಾನಂದ ಮತ್ತು ಪಿಂಡಾರಿ ನದಿಗಳ ಸಂಗಮವಾಗುತ್ತದೆ. ನಾವು ಹೊಕ್ಕ ಹೋಟೆಲಿನಿಂದಲೇ ಕಂಡ - ಪ್ರತ್ಯೇಕ ಬಣ್ಣದ ಆ ನದಿಗಳ ಸಂಗಮ ಸ್ಥಳ, ಸ್ನಾನ ಘಟ್ಟವು ಸುಂದರವಾಗಿದೆ. 



ಕರ್ಣಪ್ರಯಾಗದಿಂದ ಹೊರಟು ಮಧ್ಯಾಹ್ನ ಸುಮಾರು ೩ ಗಂಟೆಯ ವರೆಗೂ ತಡೆಯಿಲ್ಲದ ಪ್ರಯಾಣ. ಚುರುಗುಟ್ಟುತ್ತಿದ್ದ ಹೊಟ್ಟೆ ಸೇವೆಗಾಗಿ - ರಸ್ತೆಯ ಪಕ್ಕದಲ್ಲೇ ಇದ್ದ ಒಂದು ಹೋಟೆಲ್ ಹೊಕ್ಕೆವು. ಅಲಕಾನಂದೆಯ ಜುಳುಜುಳು, ಪ್ರಕೃತಿಯ ಹಸಿರು ವಿಭ್ರಮದ ನಡುವೆ ಆಧುನಿಕ ಶೈಲಿಯಲ್ಲಿ ನಿರ್ಮಿಸಲಾಗಿದ್ದ ಹೋಟೆಲ್ ಅದು.

ಅಲ್ಲೊಬ್ಬ ವಿಶೇಷ ವ್ಯಕ್ತಿಯನ್ನು ಭೇಟಿ ಮಾಡುವಂತಾಯಿತು. ಅವರೇ ಶ್ರೀ ಜ್ಯೋತಿ ಸೇಠ್. ಆ ಹೋಟೆಲ್ ವ್ಯವಹಾರವನ್ನು ಕಟ್ಟಿ ನಿಲ್ಲಿಸಿದ ಈ ವ್ಯಕ್ತಿಯು ಒಬ್ಬ ಮಾಜಿ ಸೈನಿಕರು. ಗ್ರಾಹಕರೊಂದಿಗೆ ವ್ಯವಹರಿಸುತ್ತಲೇ ಬಾಂಗ್ಲಾ ಯುದ್ದದಲ್ಲಿ ತಾವು ಭಾಗವಹಿಸಿದ ಕತೆ ಹೇಳಿದ ಅವರು, ಈಗಲೂ ತಮ್ಮ ಮಗನೊಂದಿಗೆ ವ್ಯಾಪಾರದಲ್ಲಿ ತೊಡಗಿಕೊಂಡಿದ್ದಾರೆ. 



"ವಯಸ್ಸು ಎಷ್ಟು ಸರ್?" ಎಂದಾಗ, ೮೩ ಅಂದರು! "One rank One pension" ಲಾಭವು ಸೈನಿಕರಿಗೆ ಕೊಟ್ಟೇ ಇಲ್ಲ; ಎಲ್ಲವೂ ಪ್ರಚಾರಕ್ಕಾಗಿ ನಡೆಸಿದ ಗುಲ್ಲು" ಎಂಬಂತಹ ಪ್ರತಿಪ್ರಚಾರಗಳನ್ನು ಕೇಳಿ ಕಂಗಾಲಾಗಿದ್ದ ನಾವು ಆ ಸೈನಿಕರನ್ನು "ನಿಮಗೆ ಬರಬೇಕಾಗಿದ್ದ ಹಣ - ಕೊನೆಗಾದರೂ ಬಂತೆ?" ಎಂದು ಸಂಶಯದಿಂದಲೇ ಕೇಳಿದಾಗ, ಆ ವ್ಯಕ್ತಿಯು ಸದ್ಯದ ಬಿ.ಜೆ.ಪಿ. ನಡೆಸುತ್ತಿರುವ ಕೇಂದ್ರ ಸರಕಾರವನ್ನು ಮನಬಿಚ್ಚಿ ಸ್ತುತಿಸಲಿಕ್ಕೇ ಆರಂಭಿಸಿದ್ದರು. "ನನಗೆ ಲಕ್ಷಗಟ್ಟಲೆ ಹಣ ಬಂದಿದೆ; ಈ ಬಿ.ಜೆ.ಪಿ. ಪಕ್ಷವೇ ಇನ್ನೂ ೨ ಬಾರಿಯಾದರೂ ಆಡಳಿತ ನಡೆಸುವಂತಾದರೆ ಮಾತ್ರ ಈ ದೇಶ ಉದ್ಧಾರ ಆದೀತು. ನಮ್ಮ ಉತ್ತರಾಖಂಡದಲ್ಲಿ ಸುಭಿಕ್ಷ ಬದುಕಿದೆ; ನೆಮ್ಮದಿಯಿದೆ..." ಎಂದೆಲ್ಲ ಮುಕ್ತವಾಗಿ ಹೇಳುತ್ತ ತೃಪ್ತಿಯ ನಗೆಸೂಸಿದವರು - ಶ್ರೀ ಜ್ಯೋತಿ ಸೇಠ್. 



ಸಾಕಷ್ಟು ವ್ಯವಸ್ಥಿತವಾಗಿದ್ದ ಆ ಹೋಟೆಲಿನ ಹೆಸರು ಮಾತ್ರ ನೆನಪಾಗುತ್ತಿಲ್ಲ! ಹೊಟ್ಟೆ ಸೇವೆಯನ್ನು ಸಾಂಗವಾಗಿ ಮುಗಿಸಿ, ಕೊಂಚ ಪಟ್ಟಾಂಗವನ್ನೂ ನಡೆಸಿ, ಮತ್ತೆ ಬಸ್ ಹತ್ತಿದೆವು. 

ಹರಿದ್ವಾರ
ಥಾಪಾ ಅವರ ತಾಳ್ಮೆಯ ಚಾಲನೆಗೆ ನಾವೀಗ ಒಗ್ಗಿ ಹೋಗಿದ್ದೆವು. ಹರಿದ್ವಾರ ತಲುಪುವಾಗ ಸಂಜೆ ಜಾರಿತ್ತು. ಹರಿದ್ವಾರದ ಪೇಜಾವರ ಮಠದ ಶಾಖೆಯೊಂದರಲ್ಲಿ ಇರುಳು ಕಳೆಯಲು ವ್ಯವಸ್ಥೆಯಾಯಿತು. ಮರುದಿನ ೨೫ರಂದು ಬೆಳಿಗ್ಗೆ ಗಂಗೆಯಲ್ಲಿ ಮುಳುಗಿ, ಪಿತೃತರ್ಪಣಾದಿಗಳನ್ನು ಮುಗಿಸಿಕೊಂಡೆವು. ನನ್ನ ಸೋದರ ನರೇಂದ್ರನಾಥನು ಬದರಿಯಲ್ಲಿ ಮತ್ತು ಹರಿದ್ವಾರದಲ್ಲಿ ಈ ವೈದಿಕ ಕರ್ಮಗಳನ್ನು ಶ್ರದ್ಧೆಯಿಂದ ನೆರವೇರಿಸಿದ. 



ಪ್ರವಾಸದ ಕೊನೆಯ ಹಂತದಲ್ಲಿ - ಹರಿದ್ವಾರ ನಗರದ ದರ್ಶನಕ್ಕೆ ಹೊರಟೆವು. ಹರಿದ್ವಾರದ ಪ್ರಾಚೀನ ಹೆಸರು - ಗಂಗಾದ್ವಾರ. ಸಮೃದ್ಧ ಜಲಗಂಗೆಯನ್ನು ತನ್ನ ಜಟೆಯಿಂದ ಶಿವನು ಮುಕ್ತಗೊಳಿಸಿದ ಸ್ಥಳವಿದು ಎಂಬುದು ಈ ಹೆಸರಿಗೆ ಪೂರಕವಾದ ಪುರಾಣ ಕತೆ. ಪ್ರಾಚೀನ ಗ್ರಂಥಗಳಲ್ಲಿ ಹರಿದ್ವಾರವನ್ನು ಕಪಿಲಸ್ಥಾನ, ಮಾಯಾಪುರಿ ಎಂದೂ ವಿಶಿಷ್ಟವಾಗಿ ಗುರುತಿಸಿದ್ದಾರೆ. ಶೈವ ಸಂಪ್ರದಾಯದವರು ಇದನ್ನು "ಹರದ್ವಾರ" ಎಂದು ಸಂಬೋಧಿಸುತ್ತಾರೆ.

ಅಯೋಧ್ಯಾ ಮಥುರಾ ಮಾಯಾ ಕಾಶೀ ಕಾಂಚೀ ಅವಂತಿಕಾ
ಪುರಿ ದ್ವಾರಾವತೀ ಚೈವ ಸಪ್ತೈತಾ ಮೋಕ್ಷದಾಯಿಕಾಃ (ಗರುಡ ಪುರಾಣ  I XVI.14)

ಮೋಕ್ಷ ನೀಡುವ ತಾಣಗಳೆಂದು ಬಣ್ಣಿತವಾಗಿರುವ ೭ ಕ್ಷೇತ್ರಗಳೆಂದರೆ - ಅಯೋಧ್ಯೆ, ಮಥುರಾ, ಕಾಶಿ, ಕಾಂಚೀ, ಅವಂತಿಕಾ ಪುರಿ (ಉಜ್ಜಯಿನಿ ಪಟ್ಟಣ), ದ್ವಾರಾವತಿ (ದ್ವಾರಕೆ), ಮಾಯಾ (ಇಂದಿನ ಹರಿದ್ವಾರ). ಹೀಗೆ - ಹಿಂದೂಗಳ ಸಪ್ತ ಪುರಿ(೭ ಪವಿತ್ರ ಸ್ಥಳ)ಗಳಲ್ಲಿ ಒಂದೆಂದು ಪರಿಗಣಿತವಾಗಿರುವ ಹರಿದ್ವಾರದಲ್ಲಿ ೧೨ ವರ್ಷಕ್ಕೊಮ್ಮೆ ಕುಂಭಮೇಳವೂ ನಡೆಯುತ್ತಿದೆ. 

ಮೊದಲಿಗೆ ಬೆಟ್ಟದ ತುದಿಯಲ್ಲಿರುವ ಪ್ರಾಚೀನ ಹಿಂದೂ ದೇವಾಲಯ ಸಮೂಹದ ದರ್ಶನಕ್ಕಾಗಿ ಹೊರಟೆವು. ತೂಗು ತೊಟ್ಟಿಲ (Cable Car Ropeway) ಮಾರ್ಗದಲ್ಲಿ ಗುಡ್ಡ ಏರಿದೆವು. ಭಕ್ತರ ಮನೋಕಾಮನೆಗಳನ್ನು ಪೂರೈಸುವ "ಸಿದ್ಧಪೀಠ"ವೆಂದು ಹೆಸರುವಾಸಿಯಾದ ಚಂಡಿಕಾದೇವಿಯ ದರ್ಶನವೂ ಆಯಿತು. ಈಗ ಕಾಣುವ ಚಂಡಿಕಾ ಗುಡಿಯು ೧೯೨೯ರಲ್ಲಿ ಕಾಶ್ಮೀರದ ರಾಜನಿಂದ ನಿರ್ಮಾಣವಾದಂತೆ ದಾಖಲೆಗಳಿದ್ದರೂ... ಶ್ರೀ ಆದಿ ಶಂಕರಾಚಾರ್ಯರಿಂದ ಮೂಲಮೂರ್ತಿಯು ಪ್ರತಿಷ್ಠಾಪನೆಗೊಂಡದ್ದು ೮ನೇ ಶತಮಾನದಲ್ಲಿ ಎನ್ನುತ್ತಾರೆ. ದೇವಿಯು ಇದೇ ಸ್ಥಳದಲ್ಲಿ ಶುಂಭ ನಿಶುಂಭ ಎಂಬ ರಕ್ಕಸರನ್ನು ಸದೆಬಡಿದ ಕೀರ್ತಿಯು ಸ್ಥಳಪುರಾಣಗಳಲ್ಲಿವೆ. ಚಂಡಿಕಾದೇವಿ ಮತ್ತು ಪರಿವಾರ ದೇವರುಗಳ ಸಮುಚ್ಚಯವನ್ನು ಕಂಡಾಗ, ಮೂಲ ಚಂಡಿಕಾದೇವಿಯ ಗುಡಿಗೆ ಪರಿವಾರ ಪ್ರಸಾಧನಗಳನ್ನು ಜೋಡಿಸುತ್ತ ಕಾಲಕಾಲಕ್ಕೆ ವಿಸ್ತಾರಗೊಂಡ ಕಟ್ಟಡದಂತೆ, ಇಡಿ-ಬಿಡಿಗಳ ಮಿಶ್ರಣದಂತೆ ಭಾಸವಾಗುತ್ತದೆ.



ಹಿಮಾಲಯದ ದಕ್ಷಿಣದ ತುದಿಯಲ್ಲಿರುವ ಶಿವಾಲಿಕ್ ಪರ್ವತದ ಪೂರ್ವ ಶಿಖರದ ನೀಲ್ ಬೆಟ್ಟದ ಮೇಲೆ ಈ ಚಂಡಿಕಾ ದೇವಾಲಯವಿದೆ. ಈ ಬೆಟ್ಟವು ಹರಿದ್ವಾರದ ನಾಲ್ದೆಸೆಗಳ ಪಕ್ಷಿನೋಟ ಒದಗಿಸುವ ಸುಂದರ ತಾಣ. 



ಚಂಡಿಕಾದೇವಿಯ ದೇವಳದ ಸುತ್ತಿನಲ್ಲೇ ಅಂಜನಾದೇವಿ ಮತ್ತು ಆಂಜನೇಯನ ಗುಡಿಗಳಿವೆ. ಈ  ಪುರಾಣ ಪ್ರಸಿದ್ಧ ತಾಯಿ ಮಗನ ಸುತ್ತಮುತ್ತಲೆಲ್ಲ ಬಲಿಷ್ಠ ಕಪಿಸೈನ್ಯವು ಈಗಲೂ ಇದೆಯಲ್ಲ... ಅಂದುಕೊಳ್ಳುವಂತಿತ್ತು ಅಲ್ಲಿನ ದೃಶ್ಯ. ಹಿರಿ ಕೋತಿ, ಮರಿ ಕೋತಿ, ಬಿಳಿ ಕೋತಿ, ಕರಿ ಕೋತಿ, ಬಗೆಬಗೆಯ ಕೋತಿಗಳೆಲ್ಲವೂ ಯಾವುದೇ ಪರಪೀಡೆಗೆಳಸದೆ ಸ್ವಚ್ಛಂದವಾಗಿ ವಿಹರಿಸುತ್ತಿದ್ದ ದೃಶ್ಯವು - ಅದುವರೆಗೆ  ಪುರಾಣದಲ್ಲಿ ಮುಳುಗಿದವರನ್ನು ರೋಮಾಂಚಗೊಳಿಸುತ್ತಲೇ ವಾಸ್ತವಕ್ಕೆ ಸೆಳೆಯುವಂತಿತ್ತು. 



ಬದುಕುವುದಕ್ಕಾಗಿ ದೈವವನ್ನೇ ಆಶ್ರಯಿಸಿದ್ದ ಇವುಗಳಂತೆಯೇ... ಮನುಷ್ಯರಿಂದ ಗಿಜಿಗುಟ್ಟುತ್ತಿದ್ದ ಅನೇಕ ವ್ಯಾಪಾರೀ ಮಳಿಗೆಗಳು ದೇವಸ್ಥಾನದ ಹೊರ ಪೌಳಿಯ ಸುತ್ತಲೂ ತುಂಬಿಕೊಂಡಿದ್ದವು. ಪ್ರವಾಸಿಗಳನ್ನೇ ಆಧರಿಸಿದ ಬದುಕುಗಳವು. 



ಕಂಖಾಲ್‌ನಲ್ಲಿರುವ ಅತ್ಯಂತ ಪುರಾತನ ಎಂಬ ಹಿನ್ನೆಲೆಯ ದಕ್ಷೇಶ್ವರ ಮಹಾದೇವ ಮಂದಿರವನ್ನೂ ಪ್ರದಕ್ಷಿಣೆ ಹಾಕಿದೆವು. ದಕ್ಷ ಪ್ರಜಾಪತಿ ನಡೆಸಿದ್ದ ಯಜ್ಙಕುಂಡ ಎಂದು ಹೇಳಲಾಗುವ ಸಣ್ಣ ಕುಂಡದ ದರ್ಶನವೂ ಆಯಿತು. (ಅದಕ್ಕಿಂತ ದೊಡ್ಡ ದೊಡ್ಡ ಯಜ್ಞಕುಂಡಗಳಲ್ಲಿ ಯಾಗ ನಡೆಸುವ ಇಂದಿನ ರಾಜಕಾರಣಿಗಳೆದುರಿಗೆ ಆ ದಕ್ಷನು ಏನೇನೂ ಅಲ್ಲ ಅನ್ನಿಸಿದ್ದುಂಟು!) 



ಮೂರ್ತಿ ಸ್ಥಾಪಿಸುವುದರಲ್ಲಿ ಮೇಲಾಟ ನಡೆಸುತ್ತಿರುವ ಆಧುನಿಕ ಪುರಾಣಿಕರುಗಳ ಇಂದಿನ ಕಾರುಬಾರಿನಲ್ಲಿ - ದಕ್ಷ ಮಂದಿರದ ಪ್ರವೇಶದ್ವಾರದಲ್ಲೇ - ಅಗ್ನಿಗೆ ಆಹುತಿಯಾದ ದಾಕ್ಷಾಯಿಣಿಯ ಶವವನ್ನು ಹೊತ್ತ ಶಿವನ ಸಿಮೆಂಟಿನಲ್ಲಿ ಅಚ್ಚು ಹಾಕಿದ ವಿಗ್ರಹವೊಂದನ್ನು ಯಾವ ಉದ್ದೇಶದಿಂದ ಕೆತ್ತಿ ಇಟ್ಟಿರುವರೋ ತಿಳಿಯಲಿಲ್ಲ! 



ಮೂರ್ತಿಯ ಬೃಹತ್ತಿಕೆಯಿಂದಲೇ ಭಕ್ತರನ್ನು ಆಕರ್ಷಿಸುವ ಉದ್ದೇಶದಿಂದಲೋ ಏನೋ... ಸತಿಯಾದ ದಾಕ್ಷಾಯಿಣಿಯ ಮೃತ ಪಾರ್ಥಿವವನ್ನು ಹೊತ್ತ ಶಿವನ ದೊಡ್ಡ "ಕಾಂಕ್ರೀಟ್ ಮೂರ್ತಿ"ಯೊಂದನ್ನು ಬಿಸಿಲು ಮಳೆಗೆ ಒಡ್ಡಿದಂತೆ ಅಲ್ಲಿ ಸ್ಥಾಪಿಸಿಬಿಟ್ಟಿರುವುದನ್ನು ನೋಡಿದಾಗ, ದಕ್ಷನ ಕಾಲಕ್ಕೆ ಸರಿಯಲು ಯತ್ನಿಸುತ್ತಿದ್ದ ನಮ್ಮನ್ನು ಎತ್ತಿ ಕುಕ್ಕಿದಂತಾಗಿತ್ತು.! ಕೆದರಿದ ಭಾವದ ಶಿವನನ್ನು ನೋಡಿ ಉಗುಳು ನುಂಗಿಕೊಳ್ಳುವಂತಾಗಿತ್ತು! ಪ್ರಾಚೀನ ಹಿನ್ನೆಲೆಯುಳ್ಳ ಯಾವುದೇ ಗುಡಿ ಸಂಕೀರ್ಣಗಳಲ್ಲಿ ಕೈಯ್ಯಾಡಿಸುವಾಗ ಅವುಗಳ ಪ್ರಾಚೀನತೆಗೆ ಕುಂದಾಗದಂತೆ ಉದ್ಧರಿಸುವ ಹೊಣೆ ಯಾರದೋ... !?
ಅಲ್ಲಿಂದ ಮುಂದೆ, ಹಳೆಯದೊಂದು ರುದ್ರಾಕ್ಷಿ ಮರದ ದರ್ಶನವೂ ಆಯಿತು.



ಅದಾಗಲೇ ಸುತ್ತಿ ಬಸವಳಿದಿದ್ದ ನಾವು, ರುದ್ರಾಕ್ಷಿ ಮರಕ್ಕೆ ಸುತ್ತು ಹೊಡೆದು ಹೊರಗೆ ಬಂದವರೇ - ದಾರಿ ಬದಿಯ ಆಹಾರ ಎಂಬ ಯಾವುದೇ ಕೊಂಯ್‌ಸಣಿಯಿಲ್ಲದೆ - "ಹರಿದ್ವಾರದ ಹೊಸರುಚಿ" ಎಂದು ಹೇಳಲಾಗುವ ಮಸಾಲೆ ಶರಬತ್‌ನ್ನು ಹೊಟ್ಟೆ ತುಂಬ ಕುಡಿದೆವು. ಆ ಕ್ಷಣಕ್ಕೆ ಪರಮಾನಂದ ನೀಡಿದ್ದ ಪೇಯವದು! 



ಪವನ್ ಧಾಮ್‌
ಹೊಟ್ಟೆ ತಣ್ಣಗಾಗಿಸಿಕೊಂಡ ಮೇಲೆ ನಮ್ಮ ಸವಾರಿ ಸಾಗಿದ್ದು ಪವನ್ ಧಾಮ್‌ನತ್ತ. ಆಧುನಿಕ ಶೈಲಿಯಲ್ಲಿ ನಿರ್ಮಿಸಿದ ಶೀಷ್ ಮಹಲ್-ದರ್ಪಣ ಬೊಂಬೆಮನೆ - ಇದು. ಅಲ್ಲಿದ್ದದ್ದು ಒಂದಷ್ಟು ಪುರಾಣ ಪ್ರಸಿದ್ಧ ಮೂರ್ತಿಗಳು ಮತ್ತು ದರ್ಪಣಗಳ ಮೂಲಕ ಅವುಗಳ ಅನಂತ ಪ್ರತಿಬಿಂಬಗಳ ಹುಯ್ಯಲು! 



ಆಶ್ಚರ್ಯವೆಂದರೆ... ತುಂಬ ಸ್ವಚ್ಛ ಮತ್ತು ಅಚ್ಚುಕಟ್ಟಾಗಿ, ಚಮತ್ಕಾರ ಪ್ರಿಯರಿಗೆಂದೇ ಸಿದ್ಧಗೊಳಿಸಲಾದ ಹೊಸರುಚಿಯ ಸಂಗ್ರಹಾಲಯದಂತಿರುವ ಇಲ್ಲೂ - ತೀರ್ಥ ಪ್ರಸಾದ ನೀಡುತ್ತಿದ್ದರು! ಪಂಜಾಬ್ ಮೂಲದ ಗೀತಾ ಭವನ ಟ್ರಸ್ಟ್ ಸೊಸೈಟಿಯ ಶಾಖೆಯಾಗಿರುವ ಈ ಪವನ್ ಧಾಮವು ತಾವು ನಡೆಸುವ ಸಂತ ಸೇವೆ, ಸಂತ ಮತ್ತು ಭಕ್ತರಿಗೆ ಉಚಿತ ಭೋಜನ, ಗೋಸೇವೆ ಮುಂತಾದ ಸಾಮಾಜಿಕ ಕಾರ್ಯಗಳಿಗಾಗಿ ದಾನದ ರೂಪದಲ್ಲಿ ಚಂದಾ ಸ್ವೀಕರಿಸುತ್ತಿದ್ದಾರಂತೆ! 

ಹರ್ ಕೀ ಪೌರಿ 
ಪವನ್ ಧಾಮ್ ನಿಂದ ಹರ್ ಕೀ ಪೌರಿ (Footsteps of the lord) ಘಾಟ್‌ನತ್ತ ಹೊರಟೆವು. ಗಂಗಾ ಆರತಿಯನ್ನು ಕಣ್ಣಾರೆ ನೋಡುವ ಕನವರಿಕೆಯ ಬಯಕೆ ಪೂರ್ಣವಾಗುವ ಸಂಭ್ರಮದಲ್ಲಿ ನಾವಿದ್ದೆವು. 



ಹತ್ತು ಸಮಸ್ತರ ನೆರವಿನಿಂದ ಸಂಜೆಯ ಹೊತ್ತಿನಲ್ಲಿ ಸುವ್ಯವಸ್ಥಿತವಾಗಿ ನಡೆಸಲಾಗುತ್ತಿರುವ - ಈ ಸಮಾರಂಭವು ಅತ್ಯಂತ ಮನೋಹರ. 



ತಣ್ಣಗಿನ ಕುಳಿರ್ಗಾಳಿ, ಹಿಮಾಲಯನ ಪಾದ ಚುಂಬಿಸುತ್ತ ವೈಯ್ಯಾರದಿಂದ ಚಲಿಸುತ್ತಿದ್ದ ಗಂಗೆ, ಹಿನ್ನೆಲೆಯಲ್ಲಿ ಭಕ್ತಿ ಸಂಗೀತ, ಭಕ್ತ ಸಮೂಹದ "ಹರ್ ಹರ್ ಗಂಗೇ ಶಿವ್ ಶಿವ್ ಗಂಗೇ" ಉದ್ಘೋಷದ ನಡುವೆ ಸಾಲುದೀಪಗಳ ಆರತಿಯ ವೈಭವವು ಕಣ್ಮನಗಳಿಗೆ ಹಬ್ಬದಂತಿತ್ತು.



ಹೀಗೆ - ಅಕ್ಟೋಬರ್ ೨೪ರ ಮುಸ್ಸಂಜೆ ಹೊತ್ತಿನಲ್ಲಿ ಹರಿದ್ವಾರ ಹೊಕ್ಕ ನಾವು ಮರುದಿನವಿಡೀ ನಗರ ಸಂಚಾರ ನಡೆಸಿದಂತಾಗಿತ್ತು. ಹರಿದ್ವಾರದಲ್ಲಿ ನಾವು ಇದ್ದ ಎರಡು ರಾತ್ರಿಯನ್ನು ಶ್ರೀ ಪೇಜಾವರ ಮಠದ ಅತಿಥಿ ಗೃಹದಲ್ಲಿಯೇ ಕಳೆದಿದ್ದೆವು. ಮರುದಿನ ೨೬ರಂದು ಬೆಳಿಗ್ಗೆ ಸುಮಾರು ೯ ಗಂಟೆಗೆ ಭೀಮ ಸಿಂಗರ ಬಸ್ ಹತ್ತಿ, ಸುಮಾರು ೫೫ ಕಿ. ಮೀ. ಪ್ರಯಾಣಿಸಿ - ೧೦.೪೫ರ ಸುಮಾರಿಗೆ ಡೆಹ್ರಾಡೂನ್ ವಿಮಾನ ನಿಲ್ದಾಣ ಸೇರಿಕೊಂಡೆವು. 



ಮಧ್ಯಾಹ್ನ ೧ ಗಂಟೆಯ ಜೆಟ್ ಏರ್‌ವೇಸ್ ಹೊಕ್ಕು ೩.೩೦ಕ್ಕೆ ಮುಂಬೈ ತಲುಪಿದೆವು. ಅಲ್ಲಿ ೨ ಗಂಟೆ ಕೂತು  ಆಕಳಿಸಿದ ಮೇಲೆ ಇನ್ನೊಂದು ಜೆಟ್‌ನಲ್ಲಿ ನಮ್ಮನ್ನು ತುಂಬಿಸಿದರು. ಅಂತೂ ೭ ದಿನಗಳ ಯಾತ್ರೆ ಮುಗಿಸಿ, ಅಕ್ಟೋಬರ್ ೨೬ ಶುಕ್ರವಾರದಂದು ರಾತ್ರಿ ೭.೪೦ಕ್ಕೆ ನಮ್ಮ ಮಂಗಳೂರು ತಲುಪಿದೆವು. 



ಎಲ್ಲರೂ ಅಂದೇ ತಮ್ಮ ತಮ್ಮ ಬೆಚ್ಚಗಿನ ಗೂಡು ಸೇರಿಕೊಂಡರೆ, ನನ್ನ ತಮ್ಮ ಮಾತ್ರ ಅದೇ ರಾತ್ರಿಯ ಬಸ್ಸಿನಲ್ಲಿ ಬೆಂಗಳೂರಿಗೆ ಹೊರಟು, ಮರುದಿನ ತನ್ನ ಮನೆ ಸೇರಿಕೊಂಡ.

ಪ್ರವಾಸದ ಆಯೋಜಕ ಮತ್ತು ಪ್ರಾಯೋಜಕರಾಗಿದ್ದ ಮೂಡಬಿದ್ರೆಯ ಶ್ರೀ ಎ.ಕೆ. ರಾವ್



ಪ್ರವಾಸದ ಆಯೋಜಕ ಮತ್ತು ಪ್ರಾಯೋಜಕರಾಗಿದ್ದ ಮೂಡಬಿದ್ರೆಯ ಶ್ರೀ ಎ.ಕೆ. ರಾವ್ ಅವರು ನಮ್ಮ ೧೬ ಜನರ ತಂಡದ ಪೂರ್ಣ ಭಾರವನ್ನು ಹೊತ್ತದ್ದು ಮಾತ್ರವಲ್ಲದೆ, ಮಾರ್ಗದರ್ಶಕರೂ ಆಗಿದ್ದರು. ಮೂಡಬಿದ್ರೆಯಲ್ಲಿ "ವಿಜಯಲಕ್ಷ್ಮೀ ಗೇರುಬೀಜದ ಉದ್ಯಮ" ನಡೆಸುತ್ತಿರುವ ಇವರು, ಸಾಂಸ್ಕೃತಿಕ, ಧಾರ್ಮಿಕ ಮತ್ತು ಸಾಮಾಜಿಕ ಕಾಳಜಿಯನ್ನು ಬಲಪಡಿಸುವ ದೃಷ್ಟಿಯಿಂದ ಶ್ರೀ ವಿಜಯಲಕ್ಷ್ಮೀ ಫೌಂಡೇಶನ್ ಎಂಬ ಅಂಗ ಸಂಸ್ಥೆಯೊಂದನ್ನು ತಮ್ಮ ನಿತ್ಯ ವ್ಯವಹಾರದ ಜತೆಜತೆಗೆ ರೂಪಿಸಿಕೊಂಡು, ಅದರ ಮೂಲಕ ಅನೇಕ ಜನಪರ ಕೆಲಸಗಳನ್ನು ನಡೆಸುತ್ತ ಬಂದಿದ್ದಾರೆ. ಅವುಗಳಲ್ಲಿ ಒಂದು, ತಮ್ಮ ಭಾರತೀಯ ಬಂಧುಗಳನ್ನು ಬದರೀ ಕೇದಾರ ಯಾತ್ರೆಗೆ ಕರೆದೊಯ್ಯುವ ಕಾರ್ಯಕ್ರಮ.

ಮಹದಾಸೆ ಇದ್ದರೂ ಆರ್ಥಿಕ ಕಾರಣದಿಂದ ತಮ್ಮ ಆಸೆ ಪೂರೈಸಿಕೊಳ್ಳಲಾಗದ ತಮ್ಮ ಸುತ್ತಲಿನ ಕೆಲವರನ್ನು ಮತ್ತು ಮುಖ್ಯವಾಗಿ ಯುವಜನರನ್ನೂ ಅವರು ತಮ್ಮ ಈ ಯಾತ್ರೆಯ ಗುಂಪಿಗೆ ಸೇರಿಸಿಕೊಳ್ಳುತ್ತ ಬಂದಿದ್ದಾರೆ. ಈ ನಿಟ್ಟಿನಲ್ಲಿ ಆರಂಭದಲ್ಲಿ, ೫ ಯಾತ್ರೆಯ ಗುರಿ ಇಟ್ಟುಕೊಂಡಿದ್ದರೂ ಇದು ಅವರ ೬ನೇ ಯಾತ್ರೆಯಾಗಿ ಹೋಗಿತ್ತು. ಈ ಬಾರಿಯ ನಮ್ಮ ಪ್ರವಾಸದಲ್ಲಿ, ೧೩ರ ವಯಸ್ಸಿನಿಂದ ತೊಡಗಿ, ಸುಮಾರು ೭೩ ವಯಸ್ಸಿನವರೆಗಿನ ಸದಸ್ಯರಿದ್ದರು. ಎಂಟು ಪ್ರತ್ಯೇಕ ಕುಟುಂಬಗಳ ಸಹ ಸಂಚಾರ ಇದಾಗಿತ್ತು.

ಪರಂಧಾಮದಿಂದ ಇಹ ಧಾಮಕ್ಕೆ...
ಎಲ್ಲಿಗೇ ಹೋದರೂ ಮನೆಗೆ ಹಿಂದಿರುಗಿದಾಗ ಅನುಭವಕ್ಕೆ ಬರುವ ಸುಖವೇ ಬೇರೆ. ಇಹದಲ್ಲಿ ಮುಳುಗಿದವರು ಸಾಮಾನ್ಯವಾಗಿ ಹಂಬಲಿಸುವ "ನಿಜ ಸುಖ" ಅಂದರೆ ಅದೇ; ಲೋಗರ ಆಟದ ಕ್ಷೇತ್ರವೇ ಬೇರೆ! ಬಹುತೇಕ ತೀರ್ಥ ಯಾತ್ರೆಗಳ ಫಲಶ್ರುತಿಯೂ ಇದೇ ಆಗಿಹೋದರೂ... ಮನುಷ್ಯರನ್ನು ಅಂತಃದರ್ಶನಕ್ಕೆ ಹುರಿದುಂಬಿಸುವಂತಾಗಿ ಅಧ್ಯಾತ್ಮ ನಿಜಧಾಮದ ಕಿಂಚಿತ್ ಸ್ಮರಣೆಯಾದರೂ ಆದಾಗ ಮಾತ್ರವೇ - ಯಾವುದೇ ಯಾತ್ರೆಗಳಿಗೊಂದು ಅರ್ಥ. ನಾನು ಮೂರು ತಿಂಗಳ ಕಾಲ ಯಾತ್ರಾಭಾವವನ್ನು ಚಪ್ಪರಿಸಿದ ಮೇಲೇ - ಅದಕ್ಕೊಂದು ಅಕ್ಷರರೂಪ ಕೊಟ್ಟಿದ್ದೇನೆ. 

ಯಾತ್ರೆ ಅಂದರೆ ಗಮನ. ವ್ಯಾವಹಾರಿಕ ಬದುಕಿನಲ್ಲಿ "ಗಮನ" ಎಂದಾಗ - ಸಂಚಾರ, ದೃಷ್ಟಿ.... ಎಂಬಷ್ಟೇ ಅರ್ಥಗಳು ಹೆಚ್ಚಾಗಿ ಬಳಕೆಯಲ್ಲಿದ್ದರೂ - ಕಂಪು, ಸುವಾಸನೆ ಎಂಬ ಅರ್ಥವೂ ಗಮನಕ್ಕಿದೆ. ಶ್ರದ್ಧಾಳುಗಳ ತೀರ್ಥಯಾತ್ರೆ ಅಂದರೆ - ಅದು ಆಧ್ಯಾತ್ಮಿಕ ಕಂಪಿನ ಪಯಣ. ಅದು - ಅಂತಃಪಯಣ ಆದಾಗಲೇ ಸಾರ್ಥಕ. "ಹತ್ತು ಮಂದಿ ಭಕ್ತಿಯಿಂದ ಕೈಮುಗಿಯುವಲ್ಲೆಲ್ಲ ವಿಶೇಷ ಶಕ್ತಿ ಇದ್ದೇ ಇರುತ್ತದೆ" ಎನ್ನುತ್ತಿದ್ದರು ಶ್ರೀ ರಾಮಕೃಷ್ಣ ಪರಮಹಂಸರು. ತೀರ್ಥಯಾತ್ರೆಗೆಂದೇ ಹೊರಟ ಯಾತ್ರಿಗರ ಭಾವದಾಳದಲ್ಲಿ ನಿಜಧಾಮದ ಹುಡುಕಾಟ - ಎಷ್ಟೇ ಇಲ್ಲವೆಂದರೂ ಇದ್ದೇ ಇರುತ್ತದೆ. 

ಈ ಹಿಮಾಲಯವು ಎಂದಿನಿಂದಲೂ ಯಾತ್ರಾ ತಾಣವಾಗಿಯಷ್ಟೇ ಉಳಿದಿಲ್ಲ. ಬಗೆಬಗೆಯ ಕುತೂಹಲಿಗಳು, ಚಾರಣವೀರರನ್ನೆಲ್ಲ ಆಕರ್ಷಿಸುತ್ತ ಬಂದ ಗಿರಿ ಶಿಖರವಿದು. ಸಮುದ್ರ ಮಟ್ಟದಿಂದ ಸುಮಾರು ೧೧,೭೬೦ ಅಡಿಗಳಷ್ಟು ಎತ್ತರದಲ್ಲಿರುವ ಕೇದಾರವನ್ನು ದಾಟಿ, ಇನ್ನೂ ಮೇಲಕ್ಕೆ ನಡೆದು ಹೋಗಿ, ಅಲ್ಲೇ ನಿಗೂಢ ಏಕಾಂತದಲ್ಲಿರುವ ಯೋಗಿಗಳು ಇದ್ದರೂ ಇರಬಹುದು. ಆದರೆ ಆ ವಾತಾವರಣಕ್ಕೆ ಹೊಸದಾಗಿ ಪ್ರವೇಶಿಸುವವರು ಮಾತ್ರ - ತೀರಾ ಅಪರಿಚಿತವಾದ ಅಲ್ಲಿನ ಹವಾಮಾನವನ್ನು ಗೌರವಿಸಿ, ಯಾವುದೇ ಸಾಹಸ ಪ್ರದರ್ಶನಕ್ಕಿಳಿಯದಿರುವುದೇ ಒಳ್ಳೆಯದು. ಅದಮ್ಯ ಕುತೂಹಲದಿಂದ ಅಸಮ ಸಾಹಸವೆಸಗಲು ಹಿಮಾಲಯವು ಸುರಕ್ಷಿತ ತಾಣವಲ್ಲದಿದ್ದರೂ ಅಂತಹ ಸಾಹಸಕ್ಕೆ ಮುಂದಾಗಿ ಹುತಾತ್ಮರಾದವರೂ ಕಡಿಮೆಯೇನಿಲ್ಲ. ಹಿಮಾಲಯವೇ ಒಂದು ರಹಸ್ಯ. ಆಧುನಿಕ ಜಿಜ್ಞಾಸುಗಳಿಗೆ ಇನ್ನೂ ಕಾಣಲಾಗದ ಅನೇಕ ರಹಸ್ಯಗಳು ಹಿಮಾಲಯದ ಗರ್ಭದಲ್ಲಿದೆ. ಹಿಮಾಲಯವು ತನ್ನ ಪೂರ್ಣ ಗುಟ್ಟನ್ನು ಬಿಟ್ಟು ಕೊಡುತ್ತಿಲ್ಲ. ಇತ್ತ, ಛಲ ಬಿಡದ ತ್ರಿವಿಕ್ರಮರು ಖಂಡತುಂಡವಾಗಿ ಪುಟ ತಿರುಗಿಸುತ್ತಲೇ ಇದ್ದಾರೆ! ಆದರೆ ನನ್ನ ಮಿತಿಗಳಿಂದಾಗಿ ಈ ಯಾತ್ರೆಯ ಫಲಾನುಭವದಲ್ಲಿ ನನಗೆ ಮಹದಾಸೆ ಏನೂ ಇರಲಿಲ್ಲ. ಭಾರತದಲ್ಲಿ ಹುಟ್ಟಿದ ಮೇಲೆ ಹಿಮಾಲಯದ ಸಮೀಪ ದರ್ಶನ ಆಗಬೇಕೆಂಬ ಒಂದು ಅಪೇಕ್ಷೆ ಇತ್ತು. ಅದೀಗ ಪೂರೈಸಿದೆ! 



"ನೀನು ಕಂಡ ಹಿಮಾಲಯ ಹೇಗಿತ್ತು?" ಎಂದು ಯಾರೇ ಕೇಳಿದರೂ "ಶಿವನಿಗೆ ಥಟ್ಟಂತ ಬರುವ ಸಿಟ್ಟಿನಂತಿತ್ತು" ಎನ್ನಬೇಕೆನಿಸುತ್ತದೆ! ಎಂದೋ ಆಗಿಹೋದ ಅನೇಕ ಮಹಾಚೇತನಗಳು ಹಿಮಾಲಯದ ಚಂಚಲತೆಯನ್ನು ಸಹಿಸಿಕೊಂಡು ಹೇಗೆ ಸಾಧನೆಗೈದರೋ ಎಂಬ ಸೋಜಿಗವೊಂದು ಮಾತ್ರ ಕೊನೆಗೂ ಉಳಿದೇ ಹೋಯಿತು. ಅಗೋಚರ ಮಹಾಸಾಧಕರ ತಪೋಭೂಮಿಯಾಗಿ ಇಂದಿಗೂ ಉಳಿದಿರುವ ಹಿಮಾಲಯದ ವಿಶಾಲ ಅಂಗಣದಲ್ಲಿ - ಅಂತೂ - ನಾನೂ ಆಡಿ ಬಂದೆನಲ್ಲ! ಇಷ್ಟು ಕಾಲವೂ ಬೆಚ್ಚಗಿನ ಮನೆಯೊಳಗಿದ್ದೇ ಭುಜಪ್ರತಾಪ ತೋರುತ್ತಿದ್ದ ನಾನು, ಅದೂ ವೃದ್ಧಾಪ್ಯದ ಅಂಚಿನಲ್ಲಿದ್ದಾಗ - ಕೇದಾರ ಬದರಿಯ ವಿಷಮ ಹವೆಯಲ್ಲಿ ನಾನೂ ಓಡಾಡಿದೆ ಎಂಬ ತೃಪ್ತಿಯೇ ನನಗೆ ದೊಡ್ಡ ಹೊಂಗೊಪ್ಪರಿಗೆ. ಆದ್ದರಿಂದ ನನ್ನ ಮಟ್ಟಿಗೆ - ಆತ್ಮಸ್ಥೈರ್ಯ ಹೆಚ್ಚಿಸಿದ ಸಾಹಸ ಯಾತ್ರೆ ಇದು ಎಂದರೂ ತಪ್ಪಾಗದು. ಭಾರತೀಯ ಇತಿಹಾಸ ಪ್ರಿಯರಿಗೆ, ಹಿಂದೂ ಪೌರಾಣಿಕ ಸಾಹಿತ್ಯದ ಒಲವುಳ್ಳವರಿಗೆ ಮತ್ತು "ಬುದ್ಧಿಜೀವಿ ಪರಿಧಿ"ಯ ಹೊರಗಿರುವ ನನ್ನಂಥ ಪುರಾಣಮತಿಗಳಿಗೆ ಹಿಮಾಲಯದ ಮಡಿಲಿನ ಕ್ಷೇತ್ರಗಳೆಲ್ಲವೂ ಭಾವರಸೋದ್ದೀಪಕ ಆಗುವುದರಲ್ಲಿ ಸಂದೇಹವಿಲ್ಲ.   

ಕಿವಿ ಮಾತು:
ಹಿಮಾಲಯದತ್ತ ಹೊರಡುವವರು, ಬೇರೆ ಪ್ರವಾಸಕ್ಕಿಂತ ಭಿನ್ನವಾದ ಒಂದಷ್ಟು ಪೂರ್ವತಯಾರಿ ಮಾಡಿಕೊಳ್ಳಲೇಬೇಕು.
ದೈಹಿಕ ಕ್ಷಮತೆ ಅತ್ಯಂತ ಮುಖ್ಯ. ಆದ್ದರಿಂದ ಬದರೀ ಕೇದಾರನಾಥ ಯಾತ್ರೆಗೆಂದು ಸಂಕಲ್ಪಿಸಲು ವಾನಪ್ರಸ್ಥದ ಅವಧಿಯ ವರೆಗೆ ಕಾಯದಿರುವುದೇ ಲೇಸು.

ಆಹಾರ ಸೇವನೆಯಲ್ಲಿ ಎಚ್ಚರವಿರಲಿ. ಎತ್ತರದ ಚಳಿ ಪ್ರದೇಶದಲ್ಲಿ ಸಂಚರಿಸುವಾಗ ಸ್ಥಳೀಯರ ಆಹಾರವಾದ ದಾಲ್, ರೋಟಿ ಮಾತ್ರ ಹೆಚ್ಚು ಸುರಕ್ಷಿತ. ಆದ್ದರಿಂದ ನಾವು ಬಹುಪಾಲು ಅದನ್ನೇ ಆಶ್ರಯಿಸಿದ್ದೆವು. ಅನ್ನ, ಬಟಾಟೆ ಪಲ್ಯ ಇತ್ಯಾದಿ ದೊರೆತರೂ ಕೂಡ ಈ ಬಗೆಯ ಅಡುಗೆಯು ತೃಪ್ತಿಕರವಾಗಿರುವುದಿಲ್ಲ. ಮುಖ್ಯವಾಗಿ ಅಲ್ಲಿನ ವಾತಾವರಣಕ್ಕೆ ದಾಲ್, ರೋಟಿಯೇ ಹೆಚ್ಚು ಹೊಂದುತ್ತದೆ. ಆದರೆ ರುಚಿಯಾದ ಗಟ್ಟಿ ಮೊಸರು ಬೇಕಾದಷ್ಟು ಸಿಗುತ್ತದೆ; ಶೀತ ಪ್ರಕೃತಿ ಅಲ್ಲದವರು - ಮಿತವಾಗಿ ಮೊಸರು ಸವಿಯಬಹುದು.

ಚಳಿ ತಡೆದುಕೊಳ್ಳಲು ಸಹಕರಿಸುವ ಬಟ್ಟೆಬರೆಗಳು, ದಿನಂಪ್ರತಿ ಬಳಸುವ ಔಷಧಗಳನ್ನು ಮರೆಯದೆ ಇರಿಸಿಕೊಳ್ಳಬೇಕು; ಜೊತೆಗೆ ವೈದ್ಯರ ಸಲಹೆಯಂತೆ - ಜ್ಡರ ಶೀತ ಕೆಮ್ಮು ನೋವು-ಜೀರ್ಣಕ್ರಿಯೆಗೆ ಸಂಬಂಧಿಸಿದ ಮಾತ್ರೆಗಳು, ಗಾಯಕ್ಕೆ ಸವರುವ ಮುಲಾಮು,antibioticsಗಳು... ಇತ್ಯಾದಿ ಆಪತ್ಕಾಲಕ್ಕೆ ಅಗತ್ಯವಾದ ಔಷಧಗಳೂ ಇರಲಿ. ದೀರ್ಘವಾದ ಪ್ರಯಾಣದ ನಡುವೆ ಅವಶ್ಯಕವಾದ ಶುದ್ದ ನೀರು, ಡ್ರೈಫ್ರುಟ್ಸ್‌ನಂತಹ ಆಹಾರ ಪದಾರ್ಥಗಳೂ ಕೈಚೀಲದಲ್ಲಿರಲಿ.

ಸಮಾನ ಮನಸ್ಕ - ಅಭಿರುಚಿಯವರು ಜೊತೆಯಾಗಿದ್ದರೆ ಯಾವುದೇ ಯಾತ್ರೆಯು ಸುಖಮಯವಾಗುತ್ತದೆ.

                                                  *****-----*****-----*****-----*****