Friday, May 3, 2019

ಹೇಳಿ ನೀವಾದರೂ...

        ಹೇಳಿ ನೀವಾದರೂ...

ದೀಪ ಹಚ್ಚಿದ ಮಗಳಾಕೆ ಗುಣವಂತೆ
ಸ್ನೇಹಸುಖ ಪ್ರೀತಿಸುಖ ಮೊಗೆದ ಸಿರಿವಂತೆ
ನನ್ನ ಬದುಕಿನ ಕೆನೆಯ ಸುರಿದುಂಡ ಗೀತೆ
ಪೋಷಿಸಿದ ದೇಹವನು ಕಳಿಸಿಕೊಡುವಾಗ-
"ಹೋಗಿಯೇ ಬಿಟ್ಟಳೆ? ಸುಖ ಮರಣವಮ್ಮ,
ಚಿಂತೆ ನಿಶ್ಚಿಂತೆ"... ...
ಕೊಡವಿ ಬಿಟ್ಟಂತೆ ಹೇಳಿದೆಯಲ್ಲ ಮಗಳೆ?

ಅಂದು ಮುಂಡಾಡಿದ ಮಗನೊಬ್ಬನಿದ್ದ
ಬದುಕಿಗೆನ್ನನು ಬಿಗಿದ ಬಂಧದಂತಿದ್ದ
ಸತ್ವತತ್ವವನೆಲ್ಲ ಹೀರಿಯೇ ಬೆಳೆದಿದ್ದ
ನಿನ್ನ ಬಿಟ್ಟಿರಲಾರೆ ಎನ್ನುತ್ತಲಿದ್ದ
ಬದುಕು ಓಡಿತ್ತು......   .....
ಆ ಮಗನ ಕಣ್ಣೆದುರೇ ಜೀವ ಹೊರಟಿತ್ತು
ಕಣ್ಣಂತೆ ಕಾದವಳ ದೇಹ ಮಲಗಿತ್ತು
ಪ್ರೀತಿಸಿದ ದೇಹಕ್ಕೆ ಹೆಗಲು ಕೊಡುವಾಗ
"ಹಾಸಿಗೆ ಹಿಡಿಯದ್ದೆ ಭಾಗ್ಯ" ವೆನಿಸಿತೆ ಮಗನೆ?
  ಸುಖ ಮರಣ ಪಲ್ಲವಿಗೆ ತಲೆಯಾಡಿಸಿದಿಯೇಕೆ?

ನೀನೆನ್ನ ಬದುಕು ಬಂಗಾರ ಸಂಪತ್ತು
ಎಂದೆಲ್ಲ ಪರಿಪರಿಯಿಂದ ಓಲೈಸಿ
ಕೈಹಿಡಿದು ಸಂಸಾರದಲಿ ಮುಳುಗೇಳಿಸಿದ ಗಂಡ
ಕೂತಿದ್ದ ತಲೆ ನೇವರಿಸುತ್ತ ಬಿಕ್ಕುತ್ತ
ಬಿಡೆನೆಂದು ಆ - ವರಿಸಿದ್ದ ದೇಹ
ಕೊಡವಿ ಮಲಗಿತ್ತು ಜಡವಾಗಿ ಮೋಹ
ಅಸ್ತಿತ್ವ ಮರೆಯಾದ ಮರುಕ ಧಾವಂತ
"ಮರಣ ಸುಖ" - ಎದುರಲ್ಲೇ; ಸಾಕ್ಷಾತ್ತು ಕುಣಿತ

ಸುಖವೋ ದುಃಖವೋ ಎಲ್ಲವೂ ದಿಗ್ಭ್ರಾಂತ
ಈಗಿತ್ತು ಈಗಿಲ್ಲ - ಕಣ್ಣುಮಾಯಕ - ಅಂತ

ಸುಖ ಮರಣ ಮಂತ್ರ ಘಮ; ಸಂಭ್ರಮದ ಜಳಕ
ನೆಂಟರಿಷ್ಟರ ವೇದಾಂತ ಪುಳಕ
ಮಾತಿನಲೆ ಹೇತುವ ಮರುಕ ಪದಚಳಕ
ಹೊಸದು ಹುಡುಕಾಟ ಸುಡುಗಾಡ ಸುಖ ಪಾವಕ!

ಬದುಕಿದ್ದು ಗದ್ದಲದೂರು; ಮಗುಚಿದ್ದು ಶಾಂತ ಸ್ಮಶಾನ?
ಶಾಂತಿ - ಬರಿ ಶಬ್ದ...; ಇರದುದರ ಹುಡುಕಾಟ
ಆಯ್ಕೆಗುಂಟೇ ಅನುವು? ಹೊಂಚಿದರೆ ಸಾವು?

ಉಕ್ಕು ಬಿಕ್ಕುಗಳಿರದ ಜಡ ಒಡಲು ಸುಖವೆ?
ಸುಖವೋ ದುಃಖವೋ ಬಯಕೆಯೋ ಹೇರಿಕೆಯೋ...
ಏನಿದೇನಿದು ಅಯ್ಯೋ ಮರಣ ಸುಖವೆ?!
ಉಂಡುಟ್ಟು ಅಲೆದ ನಲಿದಾಟಗಳು ದುಃಖವೆ?

***** *****

ಚಕ್ರ ಸವೆದಿತ್ತು; ಬಂಡಿ ನಿಂತಿತ್ತು ... ...
ನಿಂತದ್ದು ಬದುಕೆ?? ...
ಸ್ವಪ್ನ ಕಳಚಿದ್ದೆ? ಕವಿದದ್ದೆ?
ಏಳಲಾಗದೆ ಒರಗಿದುದಷ್ಟೆ ಗೊತ್ತು
ಕನಸೋ? ನನಸೋ? ನುಂಗಲಾಗದ ಹೊತ್ತು

ಹೇಳಿ ನೀವಾದರೂ ಸುಖದ ವ್ಯಾಪಾರಿಗಳೇ...
ಮರಣ ಸುಖವೇ?
ನಾನಾದ "ನಾನು" ಸತ್ತ ಸುಖ ಸತ್ಯವೇ?
ಸತ್ಯ - ಸುಖವೇ?
ಸುಖವೆಲ್ಲ - ಸತ್ಯವೆ?




              

No comments:

Post a Comment