Tuesday, March 14, 2017

ಉತ್ತರ ಕಾಂಡ

ನಾನು ಸನ್ಮಾನ್ಯ ಎಸ್. ಎಲ್. ಭೈರಪ್ಪನವರ ಅಭಿಮಾನಿ ಮತ್ತು ಅಖಂಡ ಅನುಯಾಯಿ. ಇತ್ತೀಚೆಗೆ ಬೆಳಕು ಕಂಡ ಅವರ "ಉತ್ತರ ಕಾಂಡ" ಕೃತಿಯನ್ನು ನಿಧಾನವಾಗಿ ಓದಿ ಮುಗಿಸಿದ್ದೇನೆ. ಕಾದಂಬರಿಕಾರರು ತಮ್ಮ ಮೊದಲ ಮಾತಿನಲ್ಲಿ - " ಇದು ವಾಲ್ಮೀಕಿ ರಾಮಾಯಣವನ್ನು ಅವಲಂಬಿಸಿದ ನನ್ನ ನೇರ ಸೃಜನಶೀಲ ಪ್ರತಿಕ್ರಿಯೆ... ನಾನು ಸ್ಥೂಲವಾಗಿ ತಿಳಿದಿದ್ದೇನೆಯೇ ಹೊರತು ರಾಮಾಯಣ ಪ್ರಪಂಚವನ್ನು ಅಭ್ಯಾಸ ಮಾಡಿಲ್ಲ..." ಎಂದಿದ್ದಾರೆ ! ಕೃತಿಕಾರರ ಈ ಸಜ್ಜನಿಕೆಗೆ ಮೊತ್ತಮೊದಲಿಗೆ ಪ್ರಣಾಮ.

ರಾಮಾಯಣ ಮಹಾಭಾರತಗಳು ವಿಶ್ವದಾದ್ಯಂತ ಇಂದಿಗೂ ಅನುರಣಿಸುತ್ತಿರಲು ಮುಖ್ಯ ಕಾರಣವೇ ಅದರ ಸರಳತೆಯೊಳಗಿನ ಸಂಕೀರ್ಣತೆ ಮತ್ತು ಸಭ್ಯ ಸಜ್ಜನಿಕೆಯಿಂದ ಬದುಕಲೋಸುಗ - ಯಾರೂ - ಹಂಸಕ್ಷೀರ ನ್ಯಾಯದಂತೆಯೂ ಸ್ವೀಕರಿಸುವಂತಿರುವ ಸಾರ್ವಕಾಲಿಕ ಮೌಲ್ಯಗಳು.



ಭೈರಪ್ಪನವರ ಉತ್ತರ ಕಾಂಡ "ಕಾದಂಬರಿ"ಯನ್ನು ಓದುಗರು ಓದಿ ಮುಗಿಸಿದ ಬಳಿಕ ಹಲವು ಬಗೆಯ ನಿಟ್ಟುಸಿರುಗಳು ಅಲ್ಲಿ ಇಲ್ಲಿ ಹೊಮ್ಮಿರಬಹುದು. ಕೆಲವು ವ್ಯಕ್ತವಾಗಿ; ಇನ್ನು ಕೆಲವು ತೆರೆಮರೆಯಲ್ಲಿ. ತನ್ಮಧ್ಯೆ, - "ಇವತ್ತು  ಜನ ಮೆಚ್ಚುಗೆ ಎಂಬುದು ಎಷ್ಟು ಸುಲಭವಲ್ಲವೆ ?" ಎಂದು ನನಗೆ ಅನ್ನಿಸಿದ್ದು ಮಾತ್ರ - ಸತ್ಯ.

ಯಾವತ್ತೂ ಒಂದು ವಿಷಯದ ಸಮಗ್ರ ಅಧ್ಯಯನ ನಡೆಸಿಯೇ ಬರಹಕ್ಕೆ ತೊಡಗುವ ಹಿನ್ನೆಲೆಯ ಭೈರಪ್ಪನವರು "ಉತ್ತರ ಕಾಂಡ"ದ ಸಂದರ್ಭದಲ್ಲಿ ಕೊಂಚ ಅವಸರಿಸಿದಂತೆಯೂ ನನಗೆ ಅನ್ನಿಸಿದೆ. ಈ ಅನ್ನಿಸಿಕೆಗೆ ಮೂಲ ಕಾರಣವೆಂದರೆ ಇಡೀ ಕಾದಂಬರಿಯಲ್ಲಿ ಪ್ರವಹಿಸುವ ಅಂತರ್ಭಾವಗಳ ಅಂಕೆಮೀರಿದ ಹುಚ್ಚು ಹರಿವು !

ಎಷ್ಟೆಂದರೆ... ಇದು - ಮೂಲ ರಾಮಾಯಣದ ಭಾವಭಿತ್ತಿಯನ್ನೇ ಘಾಸಿಗೊಳಿಸಿದಂತಿದೆ ! ತ್ರೇತಾಯುಗವನ್ನು ಕಲಿಯುಗದ ಜರಡಿಯಲ್ಲಿ ಹಾಕಿ ತಳಮಳಿಸಿದಂತಿದೆ ! ಕ್ಷುಲ್ಲಕ ಕಾರಣಕ್ಕೂ ವಿಚ್ಛೇದನಕ್ಕೆ ಹೊರಡುತ್ತಿರುವ ವರ್ತಮಾನದ ವಿಕ್ಷಿಪ್ತ ಮನಃಸ್ಥಿತಿಯ ಅನುಮೋದನೆ ಎಂಬಂತೆ - ಇಡೀ ಕಾದಂಬರಿಯ ಬಹುಪಾಲು ರೂಪುಗೊಂಡಂತಿದೆ !

"ಆದರ್ಶಗಳೆಲ್ಲವೂ ವ್ಯರ್ಥ ಮತ್ತು ಗಾಂಭೀರ್ಯವಿಲ್ಲದ ಕಟ್ಟುಕತೆಗಳು; ಅಪ್ರಾಯೋಗಿಕ ಅಸಂಭವನೀಯಗಳು..." ಎಂಬ ಸಂದೇಶವನ್ನು - ಉದ್ದೇಶಿತವಾಗಿಯೋ ಅನುದ್ದೇಶಿತವಾಗಿಯೋ ಭೈರಪ್ಪನವರು ನೀಡಿದಂತೆಯೂ ನನಗೆ ಕಂಡಿದೆ. ಈ ಕಾದಂಬರಿಯ ಕೊನೆಯ ಭಾಗದಲ್ಲಿ ಮೂಡುವ ಅಂತರ್ಮಥನದಲ್ಲಿ - ಸ್ವತಃ ಕೃತಿಕಾರರೇ ಕೃತಿಯ ಭಾರವನ್ನು ಹೊತ್ತು, ಪಶ್ಚಾತ್ತಾಪದ ಭಾವದಲ್ಲಿ ಮುಳುಗಿದಂತೆಯೂ ನನಗೆ ಕಂಡಿದೆ !! ಕಾದಂಬರಿಯಲ್ಲಿ ಹೊಮ್ಮಿದ ಲಗಾಮಿಲ್ಲದಂತಹ ಭಾವಪ್ರವಾಹವು ಸ್ವತಃ  ಕಾದಂಬರಿಕಾರರಿಗೂ ಸುಖ ನೀಡಲಾಗದೆ, ಕಕ್ಕಾಬಿಕ್ಕಿಗೊಳಿಸಿ, ನಿಲುಗಡೆಗೆ ಅವಸರಿಸಿ, ಕೊನೆಗೆ ಆತ್ಮಸಾಕ್ಷಿಗೆ ತಲೆಬಾಗಿದಂತೆಯೂ ಕಂಡಿದೆ. ಆದ್ದರಿಂದ ನನ್ನೊಳಗೇ ಹಿಂಜರಿಯುತ್ತ, ನನ್ನ ಪ್ರಿಯ ಕಾದಂಬರಿಕಾರರಾದ ಭೈರಪ್ಪನವರಲ್ಲಿ ಮತ್ತೊಮ್ಮೆ ಕ್ಷಮೆ ಯಾಚಿಸುತ್ತ - ನನ್ನ ಅಭಿಪ್ರಾಯ, ಅನ್ನಿಸಿಕೆಗಳನ್ನು ವ್ಯಕ್ತಪಡಿಸುತ್ತಿದ್ದೇನೆ ಮತ್ತು ನನ್ನೊಳಗೆ ಸುಳಿದಾಡುತ್ತ ಪೀಡಿಸುತ್ತಿರುವ ಕೆಲವು ಪ್ರಶ್ನೆಗಳನ್ನೂ ಮುಂದಿಡುತ್ತಿದ್ದೇನೆ.

ಹೌದು. ವಾಲ್ಮೀಕಿ ರಾಮಾಯಣವು ಆದರ್ಶದ ಒಂದು ಮಾದರಿ. ಬಹುಶಃ - ಅಂದು ಅದು ಬಹುಜನರ ಅನುಕರಣೀಯ ಬದುಕಾಗಿದ್ದರೆ - ಇಂದಿಗೂ ಹಲವರ ಆದರ್ಶವಾಗಿಯೇ ಉಳಿದುಕೊಂಡಿದೆ. ಹೀಗಿದ್ದೂ... ಇಂದಿನ ಕುತ್ಸಿತ ವರ್ತಮಾನದಲ್ಲಿ ನಿಂತು ಅವಲೋಕಿಸಿದರೆ... ಯಾವ ಸಾಮಾನ್ಯ ಬದುಕೂ ಆದರ್ಶಗಳೆಲ್ಲವನ್ನೂ ಪೊರೆಯಲಾರದು ಎಂಬುದೂ ವಾಸ್ತವ. ಬದುಕಿನ ದಾರಿಯಲ್ಲಿ ಎದುರಾಗುವ ಏರು ತಗ್ಗು ಹಳ್ಳದಿಣ್ಣೆಗಳು ಯಾವುದೇ ಸ್ವಸ್ಥ - ಆದರ್ಶ ನಡಿಗೆಗಳೂ ಒಮ್ಮೊಮ್ಮೆ ಮುಗ್ಗರಿಸುವಂತೆ ಮಾಡುವುದೂ ಸಹಜ. ಆದರೆ ಅಂತಹ ತಲ್ಲಣಗಳಿಗೆ ಕಾರಣವಾಗುವ ಅಡೆತಡೆಗಳ ಪ್ರಮಾಣ ಮತ್ತು ಸ್ವರೂಪಗಳು ಮಾತ್ರವಲ್ಲದೆ - ಅವನ್ನು ನಿಭಾಯಿಸುವ ಶೈಲಿಯೂ - ಪ್ರತಿಯೊಂದು ಬದುಕಿಗೂ ವಿಭಿನ್ನವಾಗಿರುವುದು ಇಂದಿಗೂ ವಾಸ್ತವ. ಇದಕ್ಕೆ ಪ್ರತಿಯೊಂದು ಜೀವಿಯಲ್ಲಿಯೂ ಪ್ರತ್ಯೇಕವಾಗಿರುವ ಗ್ರಹಿಕೆ, ಅವಲಂಬನೆ ಮತ್ತು ಕಾರ್ಯಶೈಲಿಗಳು ಮುಖ್ಯ ಕಾರಣ. 

ಆದ್ದರಿಂದಲೇ ಎಲ್ಲವನ್ನೂ - ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿಟ್ಟು ತೂಗಲಾಗುವುದಿಲ್ಲ. ಶ್ರೀ ರಾಮಕೃಷ್ಣರಿಗೆ ಆತ್ಮ ಸಾಕ್ಷಾತ್ಕಾರವಾಗಿತ್ತು. ಆದರೆ ಅಂದಿನ ಕೋಟ್ಯಂತರ ಜನರಿಗೆ ಆತ್ಮ ಪರಮಾತ್ಮಗಳ ಭಾಷೆಯೇ ಅರ್ಥವಾಗುತ್ತಿರಲಿಲ್ಲ. ಕೆಲವು ಅನುಭವಗಳು ಭಾಷೆಯ ಹಿಡಿತಕ್ಕೆ ಸಿಗುವುದೂ ಇಲ್ಲ. ಏಕೆಂದರೆ ತಾನು ಕಂಡದ್ದನ್ನು ಇತರರೂ ಕಂಡಿದ್ದಾಗ ಮಾತ್ರ - ಭಾಷೆಯ ಕಟ್ಟಿನಲ್ಲಿ ನಿಲ್ಲಿಸಲು ಸಾಧ್ಯ; ಸ್ವರೂಪ ಸಾಕ್ಷಾತ್ಕಾರ ಎಂಬುದು ಸಾಧ್ಯ. ಭಾಷೆಯ ಮಿತಿ ಇದು. ಆದ್ದರಿಂದಲೇ ಕೆಲವು ಅನುಭವಗಳನ್ನು ವ್ಯಕ್ತಗೊಳಿಸಲಾಗದೆ - ಅವು "ಅವ್ಯಕ್ತ"ವಾಗಿಯೇ ಉಳಿಯುತ್ತವೆ. ಅಂದಮಾತ್ರಕ್ಕೆ ಪರಮಹಂಸರಂತಹ ಬದುಕುಗಳನ್ನು - ತಮ್ಮ ಪ್ರಜ್ಞೆಗೆ ನಿಲುಕದೇಹೋದ ಮಾತ್ರಕ್ಕೇ "ಧೂಮ ಸೋಮ"ಗಳೊಂದಿಗೆ ಅನ್ವಯಿಸಿ, "ಅಂದಿನದೆಲ್ಲವೂ ಬುರುಡೆ; ರಾಮ, ರಹೀಮ, ಅರವಿಂದ, ಪರಮಹಂಸ... ಎಲ್ಲರೂ ಎಲ್ಲವೂ ನಮ್ಮಂತೆಯೇ..." ಎನ್ನಲಾದೀತೆ ? ಹೀಗೆ ಭಾವಿಸುತ್ತ "ಇಂದು ನಡೆಯಲಾಗದ್ದು ಅಂದೂ - ಎಂದೂ ನಡೆಯಲಾಗದು; ನಾನು ಕಾಣದ್ದನ್ನು ಯಾರೂ ಕಾಣಲಾರರು ಎಂದು ಸಾಮಾನ್ಯೀಕರಿಸಿದರೆ - ಅದು ಕಾದಂಬರಿಯೇ ಆದರೂ - ಸೃಜನಶೀಲತೆ ಅನ್ನಿಸಿಕೊಳ್ಳದೆ - ಪ್ರಶ್ನಾರ್ಹವಾಗುತ್ತದೆ.

ಹೌದು. ಎಟುಕದಷ್ಟು ಎತ್ತರದಲ್ಲಿರುವುದೇ - ಆದರ್ಶ. ಅಂತಹ ಎತ್ತರವನ್ನು ಎಟುಕಿಸಿಕೊಳ್ಳುವವನೇ ಸಾಧಕ. ಅಂತಹ ಆದರ್ಶಗಳನ್ನು ಬಿತ್ತುವವನೇ ಮಹಾಕವಿ. ಹೀಗೆ ಉತ್ತಮ ಪ್ರೇರಣೆಯ ಸಾಧನವಾಗಿ ಆದರ್ಶಗಳನ್ನು ಕಣ್ಣ ಮುಂದಿರಿಸಿಕೊಂಡು, ಎಲ್ಲ ಸ್ತ್ರೀಯರಲ್ಲೂ ಸೀತೆಯನ್ನು ಮತ್ತು ಎಲ್ಲ ಪುರುಷರಲ್ಲೂ ರಾಮನನ್ನು ನೋಡುವ ಉದ್ದೇಶವುಳ್ಳ ಪರಂಪರೆಯನ್ನು ನಾವು ಬೆಳೆಸಿಕೊಂಡು ಬಂದಿದ್ದೇವೆ. ಎತ್ತರಕ್ಕೆ ಏರಬೇಕೆಂದುಕೊಳ್ಳುವ ಬೀಜಗುಣ ಅಥವ ಆತ್ಮಭಾವ ಎಂದರೆ ಇದೇ.. ಏಕೆಂದರೆ ಅದೊಂದು - ದಾರಿ ತೋರಿಸುವ ಆದರ್ಶ. ಮನುಷ್ಯರು ತಮ್ಮನ್ನು ತಾವೇ ನಿಗ್ರಹಿಸಿಕೊಳ್ಳಲು ಉಪಕರಿಸುವ ಇಂತಹ ಅನೇಕ ಆದರ್ಶಗಳು ಜೀವಿಗಳ ಮುಂದಿವೆ. ಅಂತಹ ಎತ್ತರವನ್ನು ಎಟುಕಿಸಿಕೊಳ್ಳಲು ಹೆಜ್ಜೆ ಹೆಜ್ಜೆಗೂ ಮನಸ್ಸುಗಳನ್ನು ಪ್ರಚೋದಿಸುವುದು ಯಾವುದೇ ಆದರ್ಶ ಮೌಲ್ಯಗಳ ವ್ಯಾಪಕ ಅಸ್ತಿತ್ವದ ಉದ್ದೇಶ. ಆದ್ದರಿಂದ ಯಾವುದೇ ಆದರ್ಶಗಳನ್ನು Dissect ಮಾಡಲು ಹೋಗಬಾರದು; ಅದು ಆಗುವುದೂ ಇಲ್ಲ. ಏಕೆಂದರೆ ಆದರ್ಶ ಎಂದರೆ - ಅದೊಂದು "ಪೂರ್ಣ". ಸ್ವತಃ ಪೂರ್ಣವಾಗದೆ ಇದ್ದಾಗ - ಅಂತಹ ಪೂರ್ಣದ ಅರಿವು ಮೂಡುವುದೂ ಇಲ್ಲ; ಆದ್ದರಿಂದಲೇ ಆದರ್ಶಗಳೆಲ್ಲವೂ ಸಂಕೀರ್ಣ. 

ಆದರೆ ಇಂದು "ಸೃಜನಶೀಲತೆ" ಎಂಬ ಸ್ವಚ್ಛಂದ ಬಿರುಗಾಳಿಯ ಹೊಡೆತಕ್ಕೆ ಸಿಲುಕಿ - ಅಥವ - "ಬರಹಗಾರರು ಅನ್ನಿಸಿಕೊಂಡವರು ಏನನ್ನಾದರೂ ಬರೆಯುತ್ತಲೇ ಇರಬೇಕು.." ಎಂಬ ಒತ್ತಡಕ್ಕೆ ಸಿಲುಕಿ, ಸದಭಿರುಚಿಯನ್ನು ಅನಿವಾರ್ಯವಾಗಿ ಅಥವ ಉದ್ದೇಶಿತವಾಗಿ ಉಳಿಸಿಕೊಳ್ಳಲಾಗದೆ - ಲೇಖನ ಪ್ರಜ್ಞೆಯು ಮಂಕಾಗುತ್ತಿದೆಯೆ ? ಅದರಿಂದಾಗಿಯೇ ಪೀಚು ಶಿಶುಗಳು ಜನಿಸುವಂತಾಗಿದೆಯೆ ? - ಅನ್ನಿಸುವಂತಾಗಿದೆ ! ಧರ್ಮನೀತಿಗಳು ನೆಲೆಯೂರುವುದಕ್ಕಾಗಿ ಮಾತ್ರವೇ ಭಾರತೀಯ ಲೇಖನಿಗಳು ಹರಿದಾಡುತ್ತಿದ್ದ ಕಾಲವು ಸರಿದುಹೋಗಿ "ಶತಾಯಗತಾಯ ಹೊಸದನ್ನು ಸೃಷ್ಟಿಸುವ ಬ್ರಹ್ಮಗೀಳು" ವ್ಯಾಪಿಸುತ್ತಿದೆಯೇನೋ ಎನ್ನಿಸುವುದೂ ಸಾಮಾನ್ಯವಾಗಿದೆ ! ನಮ್ಮ ಅಜ್ಜ ಮುತ್ತಜ್ಜಂದಿರಿಗೆ ಹೊಸ Hair Style ಮಾಡಿ, ಅದನ್ನು ನೋಡಿ ನಗುವಂತೆಯೂ ಕಾಣಿಸುತ್ತದೆ. 

ಹಾಗೆ ನೋಡಿದರೆ, "ಉತ್ತರ ಕಾಂಡ" ಎಂಬ ವಾಲ್ಮೀಕಿ ರಾಮಾಯಣದ ಬಾಲಂಗೋಚಿಯು ಕೂಡ - ನಿಜವಾಗಿಯೂ ವಾಲ್ಮೀಕಿಯಿಂದಲೇ ರಚಿತಗೊಂಡಿತೇ ? - ಎಂಬುದೂ ಪ್ರಶ್ನಾರ್ಹವಾಗಿಯೇ ಇದೆ; ವಾಲ್ಮೀಕಿಯನ್ನು ಪುಷ್ಟಿಗೊಳಿಸಲು ಹೊರಟ - "ಅಂದಿನ ಇತರ ಸೃಜನಶೀಲರು" ವಾಲ್ಮೀಕಿ ರಾಮಾಯಣಕ್ಕೆ ಉತ್ತರಕಾಂಡವನ್ನು ಬೆಸೆದರೇ ? ಎಂಬುದಕ್ಕೆ - ಇನ್ನು ಉತ್ತರ ಸಿಗಲಾರದು. ಹೊಸದನ್ನು ಸೃಷ್ಟಿಸುವ ಮನುಷ್ಯರ ಗೀಳು - ಇಂದು ನಿನ್ನೆಯದಲ್ಲ; ಅದು ಮನುಷ್ಯರಿಗೆ ಅಂಟಿದ - ಆದಿವ್ಯಾಧಿಯೂ ಹೌದು. ಈ ವಾದವನ್ನು ಒಪ್ಪುವುದೇ ಆದರೆ, ವಾಲ್ಮೀಕಿಯನ್ನು ಪುಷ್ಟಿಗೊಳಿಸಲು ಹೊರಟ ಅನಂತರದ ಅಸಂಖ್ಯಾತ ಉಮೇದುವಾರರು ಮೂಲ ಋಷಿಭಾವವನ್ನು ವಿಸ್ತರಿಸಲು ಯತ್ನಿಸಿ, ಒಮ್ಮೊಮ್ಮೆ ಕುಲಗೆಡಿಸಿದಂತೆಯೂ ಕಾಣುತ್ತದೆ. ಆದರೆ... ಎಷ್ಟೇ ಎಕಡೆಮಿಕ್ ಚರ್ಚೆ ನಡೆಸಿದರೂ - ರಾಮಾಯಣದ ಭಾಗವೇ ಆಗಿ ಜನಮಾನಸದಲ್ಲಿ ಗಟ್ಟಿಯಾಗಿ ನಿಂತಿರುವ "ಉತ್ತರಕಾಂಡ"ವನ್ನು ಇನ್ನು ಬೇರ್ಪಡಿಸುವುದೂ ಆಗದಹೋಗದ ಮಾತು. ಭಾರತ ದೇಶ ಮತ್ತು ರಾಮಾಯಣದ ಬೆಸುಗೆಯೇ ಅಂಥದ್ದು !

ಹಾಗೆ ನೋಡಿದರೆ... ಶ್ರೀ ಭೈರಪ್ಪನವರ "ಉತ್ತರ ಕಾಂಡ" ಎಂಬ ಕಾದಂಬರಿಯು ತಂತ್ರಗಾರಿಕೆ ಮತ್ತು ಕಥನಕಲೆಯಲ್ಲಿ ಎಲ್ಲೂ ಸೋತಂತೆ ಕಾಣದಿದ್ದರೂ ಒಟ್ಟು ಕತೆಯ ಚೌಕಟ್ಟು ಮಾತ್ರ ಭದ್ರವಾಗಿ ಎಲ್ಲೂ ನಿಲ್ಲದೆ ಕಥೆಯು ಚೆಲ್ಲಾಪಿಲ್ಲಿಯಾಗಿ ಬೆಳೆಯುತ್ತ ಒಟ್ಟು ಬಂಧದಲ್ಲಿ ತನ್ನ "ಬಿಗಿತ"ವನ್ನು ಕಳೆದುಕೊಂಡಂತೆ ನನಗೆ ಅನ್ನಿಸಿದ್ದಂತೂ ಸತ್ಯ. ಮೂಲಭಾವಕ್ಕೆ ಹೊಂದುವಂತೆ ಪರಿಷ್ಕಾರಗೊಳ್ಳದ ಹಲವು ಮುಖ್ಯ ಕಥಾಪಾತ್ರಗಳ ಎಳಸು ಭಾವಗಳು ಓದುಗನನ್ನು ಕತೆಯಿಂದ ದೂರ ನಿಲ್ಲಿಸಿ, ಅತಂತ್ರಗೊಳಿಸುತ್ತವೆ; ಓದುಗನು ಕಾದಂಬರಿಯ ಪಾತ್ರಗಳಿಂದ ದೂರಸರಿದು, ಲೇಖಕನ ಕುರಿತು ಯೋಚಿಸುವಂತೆ ಮಾಡುತ್ತದೆ. ಯಾವುದೇ ಸಿದ್ಧ ಪ್ರಸಿದ್ಧ ಕತೆಯ ಜಾಡಿನಲ್ಲಿ ಸಾಗುವಾಗ "ಲೇಖಕರ ಅವಸರದ ಊಹೆಗಳು" ಎಂಬ ಭಾವವು ಓದುಗರಲ್ಲಿ ಆಗಾಗ ಮೂಡುತ್ತಿದ್ದರೆ ಓದಿನ ಸುಖವೂ ಕ್ಷಯಿಸುತ್ತದೆ. ಹೀಗಿದ್ದರೂ... ಪ್ರಸಿದ್ಧ ಕಾದಂಬರಿಕಾರರಾಗಿರುವುದರಿಂದ, ಭೈರಪ್ಪನವರ ರಾಮಾಯಣದ "ಹೊಸ ಅನ್ವೇಷಣೆ - ಹೊಸ ಭಾಷ್ಯ"ವು ಏನಿರಬಹುದು ? ಎಂಬ ಕುತೂಹಲದಿಂದಾಗಿ ಕಾದಂಬರೀ ಪ್ರಿಯರನ್ನು ಕೊನೆಯವರೆಗೂ ಓದಿಸಿಕೊಂಡು ಹೋಗುತ್ತದೆ... ಅಷ್ಟೆ. (ಇದು ನನ್ನ ಅನುಭವ.)

ಬರೆಯುವವರಿಗೂ ಓದುವವರಿಗೂ ನಡುವೆ ಭದ್ರವಾದ ಸೇತುವೆ ನಿರ್ಮಿಸಬಲ್ಲ ಪೌರಾಣಿಕ ಕತೆಗಳ ಮೋಹವು ಯಾವ ಬರಹಗಾರರನ್ನೂ ಬಿಟ್ಟಿಲ್ಲ. ಕೆಂಚ ಮಂಜನ ಕತೆಗಳನ್ನೇ ಬರೆಬರೆದು ಎಸೆಯುವುದರಲ್ಲೇ ಮುಳುಗಿಕೊಂಡವರೂ ಕೊನೆಗೊಮ್ಮೆ ರಾಮಾಯಣ ಮಹಾಭಾರತಗಳತ್ತ ಕಣ್ಣು ಹಾಯಿಸುವುದು ಇಂದು ನಿನ್ನೆಯ ಕತೆಯಲ್ಲ. ಕೊನೆಗೊಮ್ಮೆ ಪುರಾಣ ಪ್ರಪಂಚದಲ್ಲಿ ನೇತ್ಯಾತ್ಮಕವಾಗಿಯಾದರೂ ಕೈಕಾಲಾಡಿಸಿ ಬಂದುಬಿಡುವುದು ನಡೆಯುತ್ತಲೇ ಬಂದ ಸಂಗತಿ. ಆ ಪೌರಾಣಿಕ ಕತೆಗಳ ಚುಂಬಕ ಶಕ್ತಿಯೇ ಅಂತಹುದು. ಆದರೆ ನಮ್ಮ ಕನ್ನಡದ ಬರಹಗಾರರು - ಇಂತಹ  ಸಾಧನಾ ವಿಪರೀತಗಳಲ್ಲಿ ಮಾತ್ರ - ಇತರ ಎಲ್ಲರಿಗಿಂತಲೂ ವಿಶೇಷ ಎನ್ನಿಸಿಕೊಳ್ಳುತ್ತಾರೆ. ಏಕೆಂದರೆ ಅವರು - ಕೈಕಾಲು ಮಾತ್ರವಲ್ಲ - "ವಿಪರೀತ" ಸೃಜನಶೀಲತೆಯನ್ನು ಮೆರೆದಿರುವುದು ಮತ್ತು ಮೆರೆಯುತ್ತಲೇ ಇರುವುದು ಮಾತ್ರ - ಇಂದಿಗೂ ಬಹಳ ಆಸಕ್ತಿಯ ವಿಚಾರ.

ಹೀಗೆ ಕನ್ನಡಿಗರು ಪ್ರದರ್ಶಿಸುತ್ತ ಬಂದಿರುವ ಎಲ್ಲ ವಿಕಾರ ಬಿನ್ನಾಣಗಳಿಗೂ "ತನ್ನಂತೆ - ನೇತ್ಯಾತ್ಮಕವಾಗಿಯೇ ಪರರನ್ನು ಬಗೆಯುವ" ಅಥವ "ಧಿಡೀರೆಂದು ಪ್ರಸಿದ್ಧಿ ಪಡೆಯುವ" ಕೀಟಲೆತನವು ಒಂದು ಕಾರಣವಾದದ್ದೂ ಇದೆ. ಆದರೆ  ಸನ್ಮಾನ್ಯ ಭೈರಪ್ಪನವರು ಈ ಸಾಲಿನಲ್ಲಿ ಬರುವುದೇ ಇಲ್ಲ; ಭೈರಪ್ಪನವರಿಗೆ ಈ ಯಾವ ಒಳದಾರಿಗಳ ಅಗತ್ಯವೂ ಇರಲಿಲ್ಲ. ಹಾಗಿದ್ದೂ - ಸನ್ಮಾನ್ಯರು ಮೂಲ ರಾಮಾಯಣವನ್ನು ಸ್ವಚ್ಛಂದವಾಗಿ ಬಳಸಿಕೊಂಡ ಕಾರಣವನ್ನು ಅರ್ಥೈಸಿಕೊಳ್ಳುವುದು ಕಷ್ಟ. ಬಹುಶಃ ಮೂಲ ರಾಮಾಯಣದ ಸೀತೆಯನ್ನು ಚಿತ್ರಿಸುವಾಗ ತಮ್ಮ ಹೆತ್ತ ತಾಯಿ ಮತ್ತು ಆಕೆಯು ಬದುಕಿನಲ್ಲಿ ಪಟ್ಟ ಬವಣೆಗಳನ್ನು ಪರಿಭಾವಿಸುತ್ತ ಅದೇ ಹಿನ್ನೆಲೆಯು ಅವರನ್ನು ಪ್ರಭಾವಿಸಿರಬಹುದೆ ? ವಾಲ್ಮೀಕಿಯ ವೇಷದಲ್ಲಿ ತಮ್ಮ ರಾಮಾಯಣವನ್ನೇ ಬರೆದಿರಬಹುದೆ ? ಎಂಬುದೂ "ವಿಪರೀತದ" ಊಹೆಗೆ ಬಿಟ್ಟ ವಿಷಯ.

ಒಂದೊಮ್ಮೆ ತಾವೇ ಸ್ವತಃ ಕಂಡಂತೆ - ರಾಮಾಯಣದತ್ತ ಕುತ್ಸಿತ ನೋಟ ಬೀರುವುದಕ್ಕೆ ಯಾರೇ ಆದರೂ ಯಾವುದೇ ಕಾರಣ ನೀಡಿದರೂ - ಅದನ್ನು ಒಪ್ಪಲಾಗುವುದಿಲ್ಲ. ಏಕೆಂದರೆ ರಾಮಾಯಣವೂ ಪೌರಾಣಿಕ ಇತಿಹಾಸವೇ ಆಗಿದೆ ಎಂಬುದನ್ನು ಬಹುತೇಕ ಎಲ್ಲರೂ ಒಪ್ಪಿಯಾಗಿದೆ. "ಹಿಂದೆ... ಹೊನ್ನಿನಂತಹ ಜನರು ಇದ್ದರು" ಎಂಬುದನ್ನು ಇಂದಿನ ಅಕ್ಷರಸ್ಥರು - ಒಮ್ಮೊಮ್ಮೆ ಜಾಣತನದಿಂದ ಅಲ್ಲಗಳೆದರೂ - "ಅಂದು" ಎಂಬ ಹಿಂದಿನ ಭಾವವನ್ನು - ಎಂದಿಗೂ ಸುಳ್ಳಾಗಿಸಲಾಗುವುದಿಲ್ಲ ಮತ್ತು ತುಲನಾತ್ಮಕವಾಗಿಯೂ ಅದು ಮಧುರವಾಗಿಯೇ ಇರುತ್ತದೆ. 

ಕೇವಲ ಎರಡು ತಲೆಮಾರಿನಷ್ಟು ಹಿಂದೆ ಸರಿದು ನೋಡಿದರೂ ನಮಗಿಂತ ಹೆಚ್ಚು ಮೌಲ್ಯಯುತ ಸಮಾಜವು ದೃಗ್ಗೋಚರವಾಗುತ್ತಿದೆಯಲ್ಲವೆ ? ಹೀಗಿರುವಾಗ ಸಾವಿರಾರು ವರ್ಷಗಳ ಹಿಂದೆ ಹೇಗಿತ್ತು ? ಎಂಬುದನ್ನು ಇಂದಿನ ಬ್ರಹ್ಮ ಶಿಲ್ಪಿಗಳು ಕಲ್ಪಿಸಿಕೊಳ್ಳಲೂ ಆಗಲಾರದು. ಎಷ್ಟೇ ಕವಿ ಕಲ್ಪನೆಗಳಿದ್ದರೂ ಮನುಷ್ಯ ಸಹಜ ದೌರ್ಬಲ್ಯಗಳ ಪ್ರಮಾಣವಂತೂ ಇಂದಿನಷ್ಟಿರಲಾರದು ಎಂಬುದನ್ನು ಒಪ್ಪದವರು ಇರಲಾರರು. ಆದ್ದರಿಂದ ಅಂದಿನ ಬರಹಗಳನ್ನು ಯಥಾವತ್ ಸ್ವೀಕರಿಸುವುದಲ್ಲದೆ ನಮಗೆ ಅನ್ಯ ಮಾರ್ಗವೇ ಇಲ್ಲ. ಇನ್ನು... ಇತಿಹಾಸವನ್ನಾಗಲೀ ಪೌರಾಣಿಕ ಸಂಗತಿಗಳನ್ನಾಗಲೀ ಹೊಸದಾಗಿ ಕಟ್ಟಿ ನಿಲ್ಲಿಸುವ ಅಥವ ತೀರ ವ್ಯತಿರಿಕ್ತವಾದ ಹೊಸ ಆಯಾಮದಲ್ಲಿ ಚಿತ್ರಿಸುವ ಚಾತುರ್ಯಗಳ ಕುರಿತು ಸನ್ಮಾನ್ಯ ಭೈರಪ್ಪನವರೇ ಅನೇಕ ಸಂದರ್ಭಗಳಲ್ಲಿ ತಮ್ಮ ಅಸಮ್ಮತಿಯನ್ನು ತೋರಿದ್ದಿದೆ. ಅದು ಕಾದಂಬರಿಯೇ ಆಗಲಿ ಪೊಟ್ಟು ಕತೆಯೇ ಆಗಲಿ ಗಂಭೀರ ಸಂಶೋಧನೆಯೇ ಆಗಲಿ ... ಸಿದ್ಧ ಪಾತ್ರಗಳಿಗೆ ಹೊಸ ವೇಷ ಕಟ್ಟಿ ಪೂರ್ವಸ್ಥಿತ ಹೃದಾಂತರ್ಗತ ಭಾವನೆಗಳನ್ನೇ ಕುಟ್ಟಿ ಪುಡಿ ಮಾಡುವ ಯಾರದೇ - ಯಾವುದೇ "ಸೃಜನಶೀಲ ಸಾಹಸಗಳು" ಮೂಲ ಕರ್ತೃವಿಗೆ ತೋರುವ ಅಗೌರವವೂ ಆಗುತ್ತದೆ; ವಿಶಾಲ ಭಾವುಕ ಜನಸಾಗರದ ಭಾವನೆಗಳೊಂದಿಗೆ ನಡೆಸುವ ವಿಕೃತ ಚೆಲ್ಲಾಟವೂ ಆದೀತು.

"DISTORTING FACTS" ಎಂಬುದೇ ಮಾನಸಿಕ ವಿಕೃತಿ. ಇದು ಅನಕ್ಷರಸ್ಥರಿಗಿಂತ ಅಕ್ಷರಸ್ಥರನ್ನೇ ಹೆಚ್ಚು ಬಾಧಿಸಿದ್ದು ವಾಸ್ತವ. ತನ್ನ ದೊರೆ ವಿಕ್ರಮಾದಿತ್ಯನನ್ನು ಪ್ರಸನ್ನಗೊಳಿಸಲು "ವಿಕ್ರಮಾರ್ಜುನ ವಿಜಯ - ಪಂಪ ಭಾರತ" ವನ್ನು ಬರೆದು ಅರ್ಜುನನನ್ನು ವಿಜೃಂಭಿಸಿದ ಪಂಪ, ಭಕ್ತ ಭಾವುಕ ಕವಿಯಾದ ಕುಮಾರವ್ಯಾಸನು ಶ್ರೀಕೃಷ್ಣ - ಕರ್ಣನನ್ನು ವೈಭವೀಕರಿಸಿದಂತಹ ಅಂಕೆಮೀರುವ ಹವ್ಯಾಸೀ ಸೃಜನಶೀಲ ಪರಂಪರೆಯು ಈ ಕನ್ನಡದ ನೆಲದಲ್ಲಿ - ಬಹುಶಃ ಹೆಚ್ಚೇ ಇದೆ; ಕನ್ನಡದ ಸಾಹಿತ್ಯದ ಓಟ ನೋಟಗಳಿದ್ದರೆ ಇದನ್ನು ಪರಾಂಬರಿಸಲೂಬಹುದು. 

ಹೆತ್ತವರನ್ನು ಗುರುಹಿರಿಯರನ್ನು ಧಿಕ್ಕರಿಸುವಂತಹ ಆಧುನಿಕತೆಗೆ ಶಿಲಾನ್ಯಾಸವಾಗಿದ್ದು ಈಗ ಅಲ್ಲ; ಇದಕ್ಕೂ ಸುದೀರ್ಘ ಹಿನ್ನೆಲೆ ಇದೆ. ಬಹುಶಃ ಆದ್ದರಿಂದಲೇ - ಅಂಕೆಮೀರುವುದನ್ನೇ ಉದ್ಯೋಗವಾಗಿಸಿಕೊಂಡು ಒಳದಾರಿ ಹಿಡಿದ ಬುದ್ಧಿಸಂಕರದ ದೊಡ್ಡ ಹಿಂಡೇ ಈಗಲೂ ಕನ್ನಡದಲ್ಲಿದೆ. ಅದೇ ವಿಕೃತಿಯೇ - ಈಗ ಬೆಳೆದು, ಮಸಿ - ಚಪ್ಪಲಿಗಳನ್ನು ಪರಸ್ಪರ ತೂರಿಕೊಳ್ಳುವ ವರೆಗೂ ಬಂದು ನಿಂತಿದೆ ! ಇವೆಲ್ಲವೂ - ಪರೋಕ್ಷವಾಗಿ - ಹೆಚ್ಚು ಓದುಗರನ್ನು ಸೆಳೆದುಕೊಳ್ಳುವ  ಮತ್ತು "ತನ್ನದೆನ್ನುವ" ವಿಭಿನ್ನ ವೈಶಿಷ್ಟ್ಯವನ್ನು ಪ್ರದರ್ಶಿಸಿ ಪ್ರಚಾರ ಗಿಟ್ಟಿಸುವ ತಂತ್ರಗಾರಿಕೆಯ ಭಾಗವಾಗಿರುವ ಸಾಧ್ಯತೆಯೂ ಇದೆ ! ಇತ್ತೀಚೆಗೆ - ಸುಲಭದಲ್ಲಿ ಜಗತ್ತಿನ ದೃಷ್ಟಿಯನ್ನು ಸೆಳೆಯುವ ಉಪಾಯವಾಗಿ "ವಿಕೃತಿಗಳೂ" ಸ್ಥಾನ ಪಡೆದುಕೊಂಡಿವೆ. 

ಕನ್ನಡದ ಆಸ್ತಿ ಎಂಬ ಗೌರವಕ್ಕೆ ಪಾತ್ರರಾಗಿದ್ದ ದಿ. ಮಾಸ್ತಿ ವೆಂಕಟೇಶ ಐಯ್ಯಂಗಾರರು 1938 ಕ್ಕಿಂತ ಮೊದಲೇ ಮಂಡಿಸಿದ್ದ "ರಾಮಾಯಣದ ಕುರಿತ ವೈಚಾರಿಕ ಉಪನ್ಯಾಸಗಳು" ಒಟ್ಟಂದದಲ್ಲಿ ಸುಂದರವಾಗಿದ್ದರೂ ಅನಂತರದ ಕನ್ನಡದ ಬರಹಗಾರರಿಗೆ ಸ್ವಚ್ಛಂದತೆಯ ಸ್ಪೂರ್ತಿ ನೀಡಿರಬಹುದು ಅಂದುಕೊಳ್ಳುವಂತೆಯೂ ಆಗಿದೆ. ರಾಮಾಯಣವು "ಮತ ಗ್ರಂಥ ಆಗಿಹೋಗಿದೆ" ಎಂಬ ಭಾವವನ್ನು ಸೂಕ್ಷ್ಮವಾಗಿ ಹರಿಯಬಿಟ್ಟು, ತತ್ ಪರಿಣಾಮದ ಲಾಭ ನಷ್ಟಗಳನ್ನು ಅವರು ವಿಶ್ಲೇಷಿಸಿದ ಹಾದಿಯು - ಅನಾರೋಗ್ಯದ ಮನಸ್ಸುಗಳ ದಾರಿ ತಪ್ಪಿಸುವಂತಿದೆ - ಎಂದು ನನಗೆ ಅನ್ನಿಸಿದ್ದು ಸುಳ್ಳಲ್ಲ. ಮಾಸ್ತಿಯವರ ಸರ್ವಹಿತ ದೃಷ್ಟಿಯು ಪ್ರಶಂಸಾರ್ಹವಾದರೂ - ಕಾವ್ಯವಾಗಿ ಮಾತ್ರವೇ ನಿಂತ ಗ್ರಂಥಗಳೆಲ್ಲವೂ ಜಯಭೇರಿ ಹೊಡೆದಿವೆ - ಎಂಬ ಅವರ ಅಭಿಮತವನ್ನೂ ಒಪ್ಪಲಾಗುವುದಿಲ್ಲ. 

ಸೀತೆಗೆ ಕೊಂಚ "ಮಾಫಿ" ಕೊಟ್ಟು, ಗೌತಮಪತ್ನಿ ಅಹಲ್ಯೆಯನ್ನು ಮಾಸ್ತಿಯವರು ಮೆಟ್ಟಿದಂತೆ ಗೋಚರಿಸುತ್ತಾರೆ ! (ಶ್ರೀರಾಮನ ನಂತರ !) ತಮ್ಮ ಮಾತಿಗೆ ಸಾಕ್ಷಿಯಾಗಿ, ಅಹಲ್ಯೆಯನ್ನು ಕುರಿತು ಮೂಲಕವಿಯ "ದುರ್ಮೇಧಾ" ಎಂಬ ಶಬ್ದ ಪ್ರಯೋಗವನ್ನು ಉದಾಹರಿಸುತ್ತ - "ಕೆಡುಕಿಗೆ ಮನಸ್ಸನ್ನು ಕೊಟ್ಟ ಋಷಿಪತ್ನಿ" ಎಂಬ - ಸಾರ್ವಕಾಲಿಕ ಶಬ್ದಾರ್ಥದಲ್ಲಿ ಮಾಸ್ತಿಯವರು ವ್ಯಾಖ್ಯಾನಿಸಿದ್ದಾರೆ.. ಇದನ್ನು - "ದಂಪತಿ ಧರ್ಮದ ಕುರಿತ ಕವಿ ದೃಷ್ಟಿ" ಎಂದೂ ವಿಶ್ಲೇಷಿಸಿದ್ದಾರೆ. "ರವಿ ಕಾಣದ್ದನ್ನು ಕವಿ ಕಾಣಬಲ್ಲ" ಎಂಬ ಕವಿಭಾವವು ಅತಿಶಯೋಕ್ತಿಯಲ್ಲದೆ ಯಥಾರ್ಥವಾಗಿದ್ದರೆ - "ಕವಿ ಕಾಣದ್ದನ್ನೂ ವಿಮರ್ಶಕ ಕಾಣಬಲ್ಲ" ಎಂಬ ಅತಿ ರಮ್ಯತೆಯನ್ನೂ - ಈ ಹಂತದಲ್ಲಿ ಗಮನಿಸಬೇಕಾಗುತ್ತದೆ. ಇದಲ್ಲದೆ, "ದೃಷ್ಟಿಯಂತೆ ಸೃಷ್ಟಿ" ಎಂಬುದೇ ಕೃತಿ ಪರಂಪರೆಯ ಸಹಜ ವ್ಯಾಪಾರವಾದರೆ ಮೂಲ ಕೃತಿಕಾರ ವಾಲ್ಮೀಕಿಯ ಮೂಲ ದೃಷ್ಟಿಯನ್ನು ಸ್ವಚ್ಛಗೊಳಿಸುವಂತಹ ಅಗತ್ಯವಾದರೂ ಏನು ? ಎಂದಿನದೋ ರಾಮಾಯಣದಲ್ಲಿ - ಇವತ್ತಿನ ದಿನಮಾನದಲ್ಲಿ ಹಲವರಿಂದ ಸಾಧ್ಯವಾಗುವ ಆಗುಹೋಗುಗಳ ತದ್ಪ್ರತಿಯ ಹುಡುಕಾಟಕ್ಕೆ ಅರ್ಥವಿದೆಯೆ ? ಆಧುನಿಕ ಮನೋವೈಜ್ಞಾನಿಕ ನೆಲೆಗಟ್ಟಿನಲ್ಲಿ ಕೆಲವರು ಸ್ವಂತ ಬುದ್ಧಿಗೆ ನೀಡಿಕೊಳ್ಳುವ ಸಾಹಿತ್ಯಿಕ ವ್ಯಾಯಾಮಗಳನ್ನು ಜಾಗ್ರತೆಯಿಂದ ಅವಲೋಕಿಸುವುದೂ - ಮೂಲ ಕೃತಿಗೆ ಸಲ್ಲಿಸುವ ಗೌರವವೇ ಆಗುತ್ತದೆ ಅಲ್ಲವೆ ?

ಯಾವುದೇ ವಿಶ್ಲೇಷಣೆಗಳಲ್ಲಿ ಒಂದಕ್ಕಿಂತ ಹೆಚ್ಚು ಮನಸ್ಸಿನ ಭಾವಗಳು - ಆಯಾ ವಿಶ್ಲೇಷಕ ಪಾತಳಿಯಲ್ಲಿ, ಆಯಾ ಮನಸ್ಸಿನ ಪೂರ್ವಭಾವದೊಂದಿಗೇ ದುಡಿಯುತ್ತಿರುತ್ತವೆ ಎಂಬುದನ್ನು - ಸಮತೂಕದ ಓದುಗರು ಮರೆಯಬಾರದು. ಇದು, ನನ್ನ ಅಭಿಪ್ರಾಯಗಳಿಗೂ ಅನ್ವಯವಾಗುವ ಸೂತ್ರ. ಆದ್ದರಿಂದಲೇ ಬಹುತೇಕ ವಿಮರ್ಶೆಗಳು ಸದ್ದು ಮಾಡಿದರೂ - ಸರ್ವಮಾನ್ಯ ಆಗುವುದಿಲ್ಲ. 

ಮಾರ್ಗದರ್ಶಕ ಆದಿಕಾವ್ಯವಾಗಿ ರಾಮಾಯಣಕ್ಕೆ ಪೂಜ್ಯಸ್ಥಾನವನ್ನಿತ್ತು - ಮತ್ತು ಕವಿ ವಾಲ್ಮೀಕಿಗೆ ಆದಿ ಕವಿ ಎಂಬ ಪ್ರಶಸ್ತಿಯಿತ್ತು ಸನಾತನ ಭಾರತೀಯ ಧರ್ಮವು ರಾಮಾಯಣವನ್ನು ಅವಲಂಬಿಸಿ ಬಳಸಿಕೊಂಡುದರಿಂದಲೇ - ವಾಲ್ಮೀಕಿ ರಾಮಾಯಣ ಎಂಬ ಗ್ರಂಥಕ್ಕೆ ಮತ್ತು ಕವಿ ವಾಲ್ಮೀಕಿಗೆ "ವಿಶ್ವಮಾನ್ಯತೆ"ಯು ತಪ್ಪಿಹೋಗುವಂತಾಯಿತು - ಎಂಬ ಸಂದೇಹವನ್ನು ಅಂದೇ ಸೂಕ್ಷ್ಮವಾಗಿ ಮಂಡಿಸಿದವರು - ಮಾಸ್ತಿಯವರು ! ವಾಲ್ಮೀಕಿಯನ್ನು ಕವಿಯಾಗಿಯೇ ಉಳಿಯಲು ಬಿಟ್ಟಿದ್ದರೆ... ವಾಲ್ಮೀಕಿಯು ಇಂದಿಗಿಂತ ಬಹುಜನಪ್ರಿಯನಾಗಿ, ಆತನ ರಾಮಾಯಣ ಗ್ರಂಥವು ಜಗತ್ತಿನ ಮೂಲೆಮೂಲೆಯಲ್ಲೂ ಮನ್ನಣೆ ಗಳಿಸಬಹುದಾಗಿತ್ತು... ಎಂಬ ವಿಚಿತ್ರ ವಾದವಿದು !

ಮತ್ತೆ ಮತ್ತೆ - "ಮಾ ನಿಷಾದ" ಎನ್ನಬೇಕಾದ ಸ್ಥಿತಿಯಿದು ! ಏಕೆಂದರೆ ಹಿರಿಯರ ಸುಂದರ ಬರಹದ ಮೂಲೆಯಲ್ಲಿದ್ದ ಯಾವುದೋ ಒಂದು ಅಪಸ್ವರವನ್ನೇ ಗಟ್ಟಿಯಾಗಿ ಅನುಸರಿಸಿದ ಅನಂತರದ ಅರೆಬೆಂದ ಚಿಂತಕ, ಲೇಖಕರು - ಮಾಸ್ತಿಯವರ "ಇರಬಹುದೇನೋ.." ಎಂಬಂತಹ ಸಂದೇಹವನ್ನೇ - ಅವರವರ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುವ ಅವಕಾಶವನ್ನು ಒದಗಿಸಿದಂತಾಗಿತ್ತು !

ಹಾಗಿದ್ದರೆ... "ಧಾರ್ಮಿಕ" ಎಂಬ ಮಾನ್ಯತೆ ಪಡೆದ ಗ್ರಂಥಗಳೆಲ್ಲವೂ ಅಸಡ್ಡೆಗೆ ಒಳಗಾಗುತ್ತವೆ ಎಂದಾಗಿದ್ದರೆ - ಶ್ರೀಕೃಷ್ಣನು ಉಪದೇಶಿಸಿದ ಭಗವದ್ಗೀತೆಯು ಜಗತ್ತಿನಲ್ಲಿರುವ ಒಂದು ಧರ್ಮವನ್ನು ಮಾತ್ರ ಪ್ರಭಾವಿಸಿದೆ - ಅಥವ - ಒಂದು ವರ್ಗದ ಜನರು ಮಾತ್ರ ಗೀತೆಯನ್ನು ಓದಿದ್ದಾರೆ ಅಂದುಕೊಳ್ಳುವುದು ವಾಸ್ತವವೇ ? ಹಾಗಿದ್ದರೆ.. ವರ್ಡ್ಸ್ ವರ್ತ್, ಮಿಲ್ಟನ್, ಹೋವರ್, ಶೇಕ್ಸ್ ಪಿಯರ್, ಲೆವ್ ಟಾಲ್ ಸ್ಟಾಯ್, ಮ್ಯಾಕ್ಸಿಂ ಗೋರ್ಕಿ ಮುಂತಾದ ಪ್ರಸಿದ್ಧ ಬರಹಗಾರರಿಗೆ - ವಿಶ್ವಮಾನ್ಯತೆ ದೊರೆತೇ ಬಿಟ್ಟಿದೆ ಅಂದುಕೊಳ್ಳುವವರು - ಅವರ ಬರಹಗಳನ್ನು ಇಡೀ ವಿಶ್ವವು ಓದಿಕೊಂಡಿದೆಯೆ ? ಇಂಗ್ಲಿಷ್ ಬಲ್ಲವರೆಲ್ಲರೂ ಬೈಬಲ್ ಓದಿದಷ್ಟು ನಿಷ್ಠೆಯಿಂದ ಈ ಕವಿ ಸಾಹಿತಿಗಳನ್ನು ಹಿಂಬಾಲಿಸಿದಂತೆ ಕಾಣುತ್ತದೆಯೆ ? ಓದಿಕೊಂಡಿದ್ದಾರೆಯೆ ? ಎಂದು ಯೋಚಿಸಬಹುದು; ಈ ಪಾಶ್ಚಾತ್ಯ ಬರಹಗಾರರು - ವ್ಯಾಸ ವಾಲ್ಮೀಕಿಯರಷ್ಟು ಜನರನ್ನು ತಲುಪಿದ್ದಾರೆಯೆ ? - ಎಂದೂ ಯೋಚಿಸಬೇಕಾಗುತ್ತದೆ. ಇಂತಹ ಜನಗಣತಿಯನ್ನು ನಡೆಸಿದವರಾದರೂ ಯಾರು ?

"ವಿಶ್ವ ಮಾನ್ಯತೆ" ಎಂಬ ಕಲ್ಪನೆಯೇ - ನನ್ನ ದೃಷ್ಟಿಯಲ್ಲಿ - ಅನಂತ ಅಸಂಗತ. ಓದುವ ಉದ್ದೇಶ ಯಾವುದೇ ಇರಲಿ, ಕುರಾನ್ - ಬೈಬಲ್ ಗಳನ್ನು ಓದುವ ಆಸಕ್ತಿಯುಳ್ಳ ಯಾವ ಧಾರ್ಮಿಕ ನಂಬುಗೆಯುಳ್ಳವರೇ ಆಗಲಿ - ಅದೊಂದು ಮತದ ಗ್ರಂಥ ಎಂಬ ಕಾರಣದಿಂದಲೇ - ಅವನ್ನು ಓದದಿರುವುದು ಸಾಧ್ಯವೆ ? ಹಾಗೆ ನೋಡಿದರೆ... ರಾಮಾಯಣವು ಅಂತಹ - ಮತ ಪ್ರಚಾರದ ಪ್ರವಚನವೂ ಅಲ್ಲ; ಅದೊಂದು - ಮೇರು ಆದರ್ಶದ ಮೇರು ಕತೆ. ಅದನ್ನು - ಧಾರ್ಮಿಕ ಗ್ರಂಥ ಎಂಬ ಭಾವನೆಯಿಂದಲೇ ಬಂದಿರುವ ಶ್ರದ್ಧಾಪಾಠ ಎಂದು ಅಂದುಕೊಳ್ಳಬೇಕೆ ? ರಾಮ ಎಂಬ ಒಬ್ಬ ವ್ಯಕ್ತಿಯ ಬದುಕಿನ ಪ್ರಯಾಣಕ್ಕೆ ಸುತ್ತುಬರುವ ಒಂದು ಕತೆಯ ಮೂಲಕ - ವಾಲ್ಮೀಕಿ ಎಂಬ ಕವಿಯು ಅನಾವರಣಗೊಳಿಸಿದ ಆದರ್ಶ ಬದುಕಿನ ಕುರಿತು - ಪರಂಪರೆಯಿಂದ ಬಂದ ಮೆಚ್ಚುಗೆ, ಆಸ್ಥೆ ಎಂದೂ ಅರ್ಥೈಸಲು ಸಾಧ್ಯವಿದೆ ಅಲ್ಲವೆ ?

ಇಂತಹ ಸ್ವಸ್ಥ ಚಿಂತನೆಗಳೇ ಇಲ್ಲಿಯವರೆಗೂ ರಾಮಾಯಣವನ್ನು ಹೊತ್ತು ತಂದಿವೆ; ಮುಂದೆಯೂ ಹೀಗೇ ಸಾಗುತ್ತದೆ. "ಓದುಗರಿಗಾಗಿಯೇ ಗ್ರಂಥ ರಚನೆ" ಎಂಬುದು - ಆಧುನಿಕರು ಹುಟ್ಟು ಹಾಕಿದ ವ್ಯಾಪಾರೀ ಸಂಸ್ಕೃತಿ ಎಂಬುದನ್ನು ಯಾರೂ ಮರೆಯಬಾರದು.

ಹಾಗೆ ನೋಡಿದರೆ... ಭಾರತದ ಹಿಂದೂ ಮೂಲದವರಲ್ಲಿ ರಾಮಾಯಣ ಒಂದೇ - "ಧಾರ್ಮಿಕ ಗ್ರಂಥ" ಎಂಬ ಗೌರವಕ್ಕೆ ಪಾತ್ರವಾಗಿದೆಯೆ ? ಹಾಗಿಲ್ಲ. "ಲೋಕಾ ಸಮಸ್ತಾ ಸುಖಿನೋ ಭವಂತು..." ಎಂಬ ಉದಾತ್ತ ಧ್ಯೇಯದ ನೂರಾರು ಧಾರ್ಮಿಕ ಗ್ರಂಥಗಳಲ್ಲಿ ರಾಮಾಯಣವೂ ಒಂದು - ಅಷ್ಟೆ. ವೇದೋಪನಿಷತ್ತುಗಳು, ವ್ಯಾಸರ ಮಹಾಭಾರತ ಮುಂತಾದ ಹಲವಾರು ಗ್ರಂಥಗಳನ್ನು ಧಾರ್ಮಿಕ ಮಾರ್ಗದರ್ಶಕ ಸ್ರೋತಗಳೆಂದು ಒಪ್ಪಿ ಅನುಸರಿಸುತ್ತಿರುವ ಮನುಷ್ಯ ಸಂಸ್ಕೃತಿ - ಈ ನೆಲದಲ್ಲಿದೆಯಲ್ಲವೆ ? ಕರ್ಮ, ಭಕ್ತಿ, ಜ್ಞಾನ ಮಾರ್ಗದ ವಿಭಿನ್ನ ಉಪಾಸನಾ ಪದ್ಧತಿಗಳೂ ಇವೆ. ಹೀಗಿದ್ದೂ... ಯಾವ ಗ್ರಂಥವಾಗಲೀ ಮಾರ್ಗವಾಗಲೀ ಅಸ್ಪೃಶ್ಯವೆಂದಾಗದೆ, ಎಲ್ಲವೂ ತಮ್ಮ ತಮ್ಮ ಸ್ಥಾನವನ್ನೂ ಮಾನವನ್ನೂ ಶತಶತಮಾನಗಳಿಂದ ಉಳಿಸಿಕೊಂಡೇ ಬಂದಿವೆ. ಮಾತ್ರವಲ್ಲದೆ... ಕೃತಿಗಳ ಹೂರಣದಿಂದಾಗಿಯೇ ವಾಲ್ಮೀಕಿ, ವ್ಯಾಸರನ್ನು ಪೂಜ್ಯ ಸ್ಥಾನದಲ್ಲಿ ಇರಿಸಿದ್ದ ಜನಾಂಗವಿದು. ಇಂದಿಗೂ ಜನಸಾಮಾನ್ಯರಲ್ಲಿ ಯಾವುದೇ ಭಾವವ್ಯತ್ಯಾಸ ಕಾಣುವುದಿಲ್ಲ. ಆಕ್ರಮಿಸುವ ಸಂಸ್ಕೃತಿಯವರಿಗೆ ಅರ್ಥವಾಗದ ಸಂಗತಿಯಿದು. ಆದ್ದರಿಂದ ಭಾರತೀಯ ಧಾರ್ಮಿಕ ಗ್ರಂಥಗಳು ತಮ್ಮ "ಬಹು ಜನಪ್ರಿಯತೆಗಾಗಿ" ಅಸಂಬದ್ಧ ಟೀಕೆ ಅಥವ ಅನುಮೋದನೆಗಳನ್ನು ನಿರೀಕ್ಷಿಸುವ ಅಗತ್ಯವೇ ಇಲ್ಲ.. ಅಲ್ಲವೆ ?

ಆದರೆ ತನ್ನ ಚಿಂತನೆಯು ಹೆಚ್ಚು ಜನರನ್ನು ತಲುಪುವಂತಾಗಲಿ ಎಂಬಂತಹ - ಬರಹಗಾರರ ಅಪೇಕ್ಷೆಯು ತಪ್ಪಲ್ಲ; ವಾಲ್ಮೀಕಿಗೆ ಅಂತಹ ಅಪೇಕ್ಷೆ ಇತ್ತೋ ಇಲ್ಲವೋ...ಅಂದು ವಾಲ್ಮೀಕಿಗೆ ಜನಮನ್ನಣೆ ದೊರೆತಿತ್ತೋ ಇಲ್ಲವೋ... ಗೊತ್ತಿಲ್ಲ. ಆದರೆ "ಆದಿ ಕವಿ" ಎಂಬ ಬಿರುದಾಂಕಿತಗೊಂಡ ಮುಂದಿನ ಕಾಲಘಟ್ಟದಲ್ಲಿ, ವಾಲ್ಮೀಕಿಗೆ ಪ್ರದಕ್ಷಿಣೆ ಬರುತ್ತಿರುವವರಿಗೆ ಮಾತ್ರ, ಅಂತಹ ಜನಪ್ರಿಯತೆಯ ನಿರೀಕ್ಷೆ ಇದ್ದುದು ಮಾತ್ರ ಸುಳ್ಳಲ್ಲ. ಆದರೆ ಅದಕ್ಕಾಗಿ - ವಾಮಮಾರ್ಗ ಬಳಸಿ, ವಾಲ್ಮೀಕಿಯನ್ನೇ ಸವಾರಿ ಮಾಡುತ್ತ ದಿಕ್ಕು ತಪ್ಪಿಸುವಂತಹ ಸಾಹಿತ್ಯ ಶೈಲಿಗಳೇ ವಿಜೃಂಭಿಸತೊಡಗಿದರೆ - ಅವನ್ನೆಲ್ಲ ಒಪ್ಪಿಕೊಳ್ಳಲಾದೀತೆ ? ಕನ್ನಡದ ಮತ್ತು ಒಟ್ಟಾರೆಯಾಗಿ ಆಧುನಿಕ ಸಾಹಿತಿಗಳೆಂದುಕೊಂಡವರ ಮನೋಧರ್ಮವನ್ನು ವಿಶ್ಲೇಷಿಸಿದರೆ ಎಲ್ಲೋ ಕೊಂಡಿ ತಪ್ಪಿದೆ ಎಂದೂ ಅನ್ನಿಸುವುದಿಲ್ಲವೆ ? ಹಿಂದಿನ "ಪ್ರಕ್ಷಿಪ್ತ ವರ್ಗ"ವನ್ನೂ ಮೀರಿದ ಪ್ರಕ್ಷಿಪ್ತತೆ ಇಂದು ಕಾಣಿಸುತ್ತಿಲ್ಲವೆ ? ಕನ್ನಡದ ಬರಹಗಾರರಿಗೆ "ವಿಶ್ವಮಾನ್ಯತೆ(?)"ಯ ಗರ ಬಡಿದಂತೆಯೂ ಕಾಣುವುದಿಲ್ಲವೆ? ವಿಭಿನ್ನ ಚಿಂತನೆಯ ಮೂಲಕ ವಿಶಿಷ್ಟ ಅನ್ನಿಸಿಕೊಳ್ಳುವ ಮನುಷ್ಯರ ಕಾಲಯಾಪನೆಯ ಯತ್ನಗಳಿವು - ಎಂದೂ ಭಾವಿಸಬಹುದಲ್ಲವೆ ?

ಮಾಸ್ತಿಯವರ ಆದಿಕವಿ ವಾಲ್ಮೀಕಿ  ಎಂಬ ಪುಸ್ತಕವು ಓದಲೇಬೇಕಾದ ಪುಸ್ತಕದ ಸಾಲಿನಲ್ಲಿ ನಿಲ್ಲುವಂತಹುದು. ಕೃತಿಯ ಆರಂಭದಲ್ಲಿ ಸಂದೇಹದ ಕ್ಷೀಣ ಎಳೆಗಳನ್ನು ಹರಿಯಬಿಟ್ಟಿದ್ದರೂ ಅಂತ್ಯಭಾಗದಲ್ಲಿ ಸರ್ವಹಿತಭಾವದ ಭರಪೂರ ದಿಗ್ದರ್ಶನವಿದೆ. ಆರಂಭದಲ್ಲಿಯೇ ಬರುವ "ಮತ ಗ್ರಂಥ - ಈ ಸ್ಥಿತಿಯ ಲಾಭ ನಷ್ಟ" ಎಂಬ ಅಭಿಪ್ರಾಯಗಳ ಪ್ರಕರಣ ಮತ್ತು "ಕಾವ್ಯ ಚಿತ್ರಿಸುವ ಸಂಸ್ಕೃತಿ (ಶೀಲದ ಕಲ್ಪನೆ) ಎಂಬ ಭಾಗವನ್ನೂ ಗಮನಿಸಿದರೆ - ಈ ಬಗೆಯ ಚಿಂತನೆಗಳು ವಾಲ್ಮೀಕಿಯಷ್ಟೇ ಹಳೆಯದೇನೋ ಅನ್ನಿಸುವುದೂ ಸುಳ್ಳಲ್ಲ.. ಒಟ್ಟಾರೆಯಾಗಿ, ನಿಜವಾಗಿಯೂ ಕನ್ನಡದ ಆಸ್ತಿಯೇ ಆಗಿರುವ ಮಾಸ್ತಿಯವರ ಚಿಂತನೆಯ ಸಮತೂಕ, ಆಳವಿಸ್ತಾರ, ಭಾಷೆಯ ಸೌಂದರ್ಯ ಮತ್ತು ಕೃತಿಯ ಸಮಗ್ರತೆಯ ಪೂರ್ಣ ಪರಿಚಯವಾಗಲು ಈ ಪುಸ್ತಕವನ್ನು ಓದಲೇಬೇಕು. ಅಜ್ಜನೊಂದಿಗೆ ರಾಮಾಯಣದ ತೋಟದಲ್ಲಿ ವಿಹರಿಸಿದ ರಸಭಾವ ಪುಷ್ಟಿಯೂ ಇಲ್ಲಿದೆ. ಕೃತಿ ಮತ್ತು ಕೃತಿಕಾರರ ಬಗೆಗೆ ಉನ್ನತ ಭಾವೋದ್ದೀಪನಗೊಳಿಸುವ ಹೊತ್ತಗೆಯಿದು. 

ಭೈರಪ್ಪನವರ "ಉತ್ತರ ಕಾಂಡ" ಕಾದಂಬರಿಯನ್ನು ಓದಿದಾಗ ಓದುಗನಲ್ಲಿ ಉಳಿದುಹೋಗುವಂತಿರುವ ಪ್ರಕ್ಷಿಪ್ತಭಾವಗಳು - ಮಾಸ್ತಿಯವರ "ಆದಿಕವಿ ವಾಲ್ಮೀಕಿ" ಓದುಗನಲ್ಲಿ ಉಳಿದುಹೋಗುವುದಿಲ್ಲ; ಜಾರಿಹೋಗುತ್ತವೆ. ಮಾಸ್ತಿಯವರ ಕುರಿತು "ಕೃತಿಕಾರರ ವಾದ ಸೌಜನ್ಯ" ಎಂಬ ಕೆ. ವಿ. ಪುಟ್ಟಪ್ಪ ಅವರು ನೀಡಿರುವ ಪ್ರತಿಕ್ರಿಯೆಯನ್ನು - ಈ ಕೃತಿಯ ಜೀವಾಳ ಎಂದರೂ ತಪ್ಪಾಗದು. ಜ್ಞಾನಮೂಲದ ಸಜ್ಜನಿಕೆಯ ಮತ್ತು ಎಚ್ಚರದ ಜಿಜ್ಞಾಸೆಯ ಫಲಶ್ರುತಿ ಎಂದಷ್ಟೇ ಓದುಗರಿಗೆ ಅನ್ನಿಸುವುದು - ಮಾಸ್ತಿಯವರ ವಿಚಾರ ಸಂಪನ್ನತೆಯ ಹೆಗ್ಗಳಿಕೆ. ಯಾವುದೇ ಪ್ರಬುದ್ಧ ವಿಮರ್ಶಕಾರರ ಅಧ್ಯಯನ ಗ್ರಂಥದಂತೆ - "ಆದಿಕವಿ ವಾಲ್ಮೀಕಿ" ಎಂಬ ಈ ಕೃತಿಯು - ಎತ್ತರದಲ್ಲಿ ನಿಲ್ಲುವಂತೆಯೂ ಇದೆ.

ಆದರೆ ರಾಮಾಯಣದಂತಹ ಮಹತ್ತರ ಕೃತಿಯೊಂದನ್ನು ಮಾಸ್ತಿಯವರು ಲೀಲಾಜಾಲವಾಗಿ ನಿಭಾಯಿಸಿದ ಎತ್ತರ -ಉತ್ತರಗಳಿಲ್ಲದ  -... ಉತ್ತರ ಕಾಂಡದ ಸಂದರ್ಭಕ್ಕೆ ಬಂದರೆ - ಅದು ಕಾದಂಬರಿಯೇ ಆಗಿದ್ದರೂ... ಬಹುಶಃ ಭೈರಪ್ಪನವರಿಂದ ನಾನು ಇಂತಹ ಸೂತ್ರಹೀನತೆಯನ್ನು ನಿರೀಕ್ಷಿಸಿರಲಿಲ್ಲ. ಆದ್ದರಿಂದಲೇ ನನ್ನಂತಹ ಓದುಗರಿಗೆ ವಿಪರೀತ ಭ್ರಮನಿರಸನವಾಗಿದೆ. ಅಂದು ಸಾಮಾಜಿಕ ನ್ಯಾಯ - ಸಮಾನತೆಯ ಹೆಸರಿನ ದರ್ಶನದಲ್ಲಿ ಕುವೆಂಪು ಅವರು ವಾಲ್ಮೀಕಿಯನ್ನು ಗುದ್ದಿ ಗೆದ್ದು ಬಂದಿದ್ದರೆ - ಈಗ ಭೈರಪ್ಪನವರು ಅಸಾಮಾನ್ಯ ಅಸಹಜ ನ್ಯಾಯದ ಸೆರಗು ಹಿಡಿದು ವಾಲ್ಮೀಕಿಗೆ ತಪರಾಕಿ ಬಾರಿಸಿದಂತೆ - ನನ್ನಂತೆಯೇ ಯಾರಿಗಾದರೂ ಕಂಡರೆ - ಅದನ್ನು ಅಸಹಿಷ್ಣುತೆ ಎನ್ನುವುದು ಸರಿಯೆ ?

ಇಲ್ಲಿ - "ಅಯ್ಯೋ ಪಾಪ" -  ಯಾರು ? ಓದುವವರಲ್ಲ; ಬರೆದವರೂ ಅಲ್ಲ; ಸೃಜನಶೀಲತೆಯ ಚೆಂಡಾಟದಲ್ಲಿ ಗುದ್ದಿಸಿಕೊಳ್ಳುತ್ತಿರುವ ರಾಮಾಯಣ ಮಹಾಭಾರತಗಳು; ವಾಲ್ಮೀಕಿ ವ್ಯಾಸರು ! ಫಲಾನುಭವಿಗಳು ಯಾರು ? ಋಷಿತುಲ್ಯರ ಲೆಕ್ಕದಲ್ಲಿ ಬರಹ, ಪ್ರಚಾರ, ಪುನರ್ಮುದ್ರಣ ಮಾಡಿ - ದುಡ್ಡು ಗಬರುವ ಪ್ರಕಾಶಕರು ! ಪ್ರಸ್ತುತ, ಇವರ್ಯಾರೂ ರಾಮ ಕೃಷ್ಣ ಸೀತೆಯರನ್ನು ಆದರ್ಶವಾಗಿಸಿಕೊಳ್ಳಲೂ ಒಪ್ಪದವರು - ಎನ್ನಬೇಕಾಗುತ್ತದೆ ! ಆದ್ದರಿಂದಲೇ ವಾಸ್ತವ ಪರಿಸ್ಥಿತಿಯು - ರಾಮ ಸೀತೆಯರಿಗೆ ಪಾನೀಪುರಿ ತಿನ್ನಿಸುವ ಹಂತ ತಲುಪಿದೆ ! "ನನ್ನಂತೆಯೇ ಎಲ್ಲರೂ" - ಎಂಬ ಹುಚ್ಚಿದು. ಆದರೆ - ಯಾರೂ ಯಾರಂತೆಯೂ ಇಲ್ಲ ಮತ್ತು ಯಾರೂ ಯಾರಂತೆಯೂ ಅಲ್ಲ ಎಂಬುದನ್ನು ಒಪ್ಪಿಕೊಂಡೇ ಸೌಹಾರ್ದದಿಂದ ಬದುಕುವುದು ಬೇಕಿದ್ದರೆ... ಜನಮಾನಸದಲ್ಲಿ ಆಳವಾಗಿ ಬೇರೂರಿರುವ ಜೀವಪರ ಆದರ್ಶಗಳನ್ನು ತುಳಿಯುವ ಆಟವನ್ನು ನಿಲ್ಲಿಸುವುದು ಉತ್ತಮ. ರಾಮನನ್ನು ತದುಕಿ ಬಂದರೆ ರಾಮನಾಗುವುದು ಸಾಧ್ಯವೆ ? ಭೈರಪ್ಪನವರನ್ನು ಓದಿದವರಾಗಲೀ ಮೆಚ್ಚಿದವರಾಗಲೀ ಅಪಸ್ವರ ಎತ್ತಿದವರಾಗಲೀ ಭೈರಪ್ಪ ಆಗುವುದು ಸಾಧ್ಯವೆ ? ಆದ್ದರಿಂದ, "ಕೇವಲ ಆಡಿ - ಕೊಂಡು - ನಗುವ ಸಾಹಿತ್ಯಕ್ಕಿಂತ "ಆಗುವ ಸ್ಫೂರ್ತಿಯನ್ನು" ನೀಡಬಲ್ಲ ಕೃತಿಗಳು ಬದುಕಿಗೆ ಅವಶ್ಯ" ಎಂಬ ಪ್ರಜ್ಞೆಯು ಬರಹದ ಕ್ಷಣಗಳಲ್ಲಿ - ಲೇಖಕರಲ್ಲಿ ಜಾಗ್ರತವಾಗಿರಬೇಕಾಗುತ್ತದೆ. ಆದರ್ಶದ ವಿಕಾರಗಳಿಗೆ ಯಾವುದೇ ಸಾಹಿತಿಯ ಅಗತ್ಯ ಇರುವುದಿಲ್ಲ ಅಲ್ಲವೆ ? ತಮ್ಮ ಬರಹದ ರೂಪ ಚೌಕಟ್ಟು ಯಾವುದೇ ಇರಲಿ, ಓದುಬರಹ ಬಲ್ಲ ಹಿರಿಯರೆನ್ನಿಸಿಕೊಂಡವರು ತಮ್ಮ ಮುಂದಿನ ಪೀಳಿಗೆಗೆ ಮಾರ್ಗದರ್ಶಕರಾಗುವುದೂ ಅವಶ್ಯಕವಲ್ಲವೆ ?

ವಾಲ್ಮೀಕಿಯ 1st Hand Information ಅಥವ ಪ್ರಥಮ ಮಾಹಿತಿಯ ವಿವರವೇ - ರಾಮಾಯಣ . ಅಂದಮೇಲೆ, ಎಂದೋ ನಡೆದಿದ್ದ ಒಂದು ಘಟನೆಯನ್ನು "ಸಕಾಲಿಕ "ಗೊಳಿಸುವ ಸಂಭ್ರಮದಲ್ಲಿ ಮನ ಬಂದಂತೆ ವ್ಯಾಖ್ಯಾನಿಸಿ ತಿರುಚುವುದು ಸೃಜನಶೀಲತೆಯೆ ? ಯೋಚಿಸಬಹುದು. ಅಂದಿನ "ಉತ್ತರಕಾಂಡ"ವೇ ಪ್ರಕ್ಷಿಪ್ತ ಭಾಗ ಎನ್ನಿಸಿಕೊಂಡು ಪ್ರಶ್ನಾರ್ಹವಾಗಿರುವಾಗ - ಅಂತಹ ಕತೆಗೆ ಇನ್ನಷ್ಟು ಕಾಲುಬಾಲ ಜೋಡಿಸುವ ಅಗತ್ಯವಾದರೂ ಏನು ? ಇಂದು ಪ್ರತಿವಾದವನ್ನು ಮಂಡಿಸಲಾಗದ - ಯಾವುದೇ ಅಂಚೆ ವಿಳಾಸವಿಲ್ಲದ ವಾಲ್ಮೀಕಿ ಎಂಬ ಕವಿಗೆ ಬಗೆದಂತಹ ಅಪಚಾರವಲ್ಲವೇ ಇದು ? ಇದೂ ಸೃಜನಶೀಲತೆಯೇ ? ಕಸ ತುಂಬಿಸಿಕೊಂಡಂತಿರುವ - ಆಧುನಿಕ ಬರವಣಿಗೆಯ ವ್ಯಾವಹಾರಿಕ ಬುದ್ಧಿಗಳು ಮತ್ತು ವ್ಯಕ್ತಿನಿಷ್ಠವಾಗಿ ಓದುವ ಬುದ್ಧಿಗಳೂ - ಸಮಾಧಾನದಿಂದ ಯೋಚಿಸುವುದನ್ನು ನಿಲ್ಲಿಸಿದಂತೆಯೂ ಕಾಣುವುದಿದೆ. 

ಇನ್ನು, ಪ್ರಸ್ತುತದ ಭೈರಪ್ಪನವರ ಉತ್ತರಕಾಂಡದ ವಿಷಯಕ್ಕೆ ಬಂದರೆ, ಸೀತೆ ಲಕ್ಷ್ಮಣ ಊರ್ಮಿಳೆ ಮಂಡೋದರಿ... ಹೀಗೆ ಕೆಲಕೆಲವರಿಗೆ ಚೂರುಪಾರು ನ್ಯಾಯವನ್ನು ಎಳೆದೆಳೆದು ಕೊಟ್ಟರೆ ಸಾಕೆ ? ಯಾರದ್ದೋ ಆಸ್ತಿಯನ್ನು ಹಾಗೆ ಉದಾರವಾಗಿ ಕೊಟ್ಟಂತೆ ಕೈಯೆತ್ತಿ ಕೊಡುವಾಗ - ಮೂಲ ಆಸ್ತಿವಂತನು ನಿರ್ಗತಿಕನಾಗುವಂತಾದರೆ ಮತ್ತು ಇತರ ಸಹಜೀವಿಗಳ ಪಾಲಿನದನ್ನು ಕಿತ್ತುಕೊಂಡಂತಾದರೆ - ಅದು ನ್ಯಾಯವೆಂದಾಗದೆ - ಹೊಸ ಅನ್ಯಾಯ ಆಗದೇ ? ಅಂತೆಯೇ ಮೂಲಕತೆಯ ಪಾತ್ರಗಳ ವ್ಯಕ್ತಿತ್ವವನ್ನು ಮಸುಕಾಗಿಸಿದರೆ - ಅದು ಲೇಖನಿಯ ಅತಿಕ್ರಮಣ ಅನ್ನಿಸದೆ ? ? ಹಾಗಿದ್ದರೆ... ಹೀಗೆ ದೌರ್ಜನ್ಯಕ್ಕೊಳಗಾದ ಪಾತ್ರಗಳಿಗೆ ನ್ಯಾಯ ದಯಪಾಲಿಸಲೋಸುಗ ಇನ್ನೊಂದು ಧಾರಾವಾಹಿ ಬರಬೇಕೆ ? ಇದೇನು ಅಕ್ಷರ ಮಾರಾಟದ ಉದ್ಯೋಗವೆ ?

ಬರಹವೇ ಉದ್ಯೋಗವಾದಾಗ ಹೊಸ ಸಂದರ್ಭಗಳನ್ನೂ ದೃಶ್ಯಗಳನ್ನೂ ಬರಹಗಾರರೇ ಸೃಷ್ಟಿಸಿಕೊಳ್ಳುವ ಆಧುನಿಕ ಕಲೆ ಎಂಬುದು - ಇದೇ ಆಗಿರಬಹುದು. ಪೌರಾಣಿಕ ಗ್ರಂಥದ ಪಾತ್ರಗಳಿಗೆ ನ್ಯಾಯ ಹಂಚಿಕೆಯಲ್ಲಿಯೂ - ಇವತ್ತಿನ ಜನಪ್ರಿಯ ಶೈಲಿಯ "ಅತ್ತೆಗೊಂದು ಕಾಲ ಸೊಸೆಗೊಂದು ಕಾಲ"ದಂತಹ - ಪರಿಷ್ಕೃತ ರೂಪದ MUSICAL CHAIR ಪೈಪೋಟಿ ನಡೆಸಬೇಕೆ ? ಭ್ರಮೆ ಹುಟ್ಟಿಸುವ ಸಾಹಿತ್ಯಿಕ ಉಡಾಫೆಯ ಅಗತ್ಯವಾದರೂ ಏನು ? ಅದರಿಂದ - ಜನಮಾನಸದ ವಿಶ್ವಾಸವನ್ನು ಕಲಕುವುದಲ್ಲದೆ ಅನ್ಯ ಉಪಕಾರವಾದರೂ ಏನು ? ಮನುಷ್ಯರ ಆಂತರ್ಯದ ಶಕ್ತಿಯಾದ ವಿಶ್ವಾಸಕ್ಕಿಂತ ಇತರ ಯಾವ ಸಾಧನೆಯೂ ದೊಡ್ಡದಲ್ಲ ಅಲ್ಲವೆ ? ಆದ್ದರಿಂದ ಮನುಷ್ಯರ ವಿಶ್ವಾಸವನ್ನು ಕೆಣಕುವ ಯಾವುದೇ ಆಟಗಳು ಅಪೇಕ್ಷಣೀಯವಲ್ಲ; ಅನಿವಾರ್ಯವೂ ಅಲ್ಲ.

ಅನ್ಯಾಯ ಮತ್ತು ನ್ಯಾಯ ಎಂಬ ಪರಿಕಲ್ಪನೆಗಳು ಯಾವತ್ತೂ ಸಹಜೀವಿಗಳು. ಏಕಕಾಲದಲ್ಲಿ ಎಲ್ಲರಿಗೂ ನ್ಯಾಯ ಅಥವ ಎಲ್ಲರಿಗೂ ಅನ್ಯಾಯ ಎಂಬುದೂ ಈ ಭೂಮಿಯಲ್ಲಿ ಅಸಂಭವ. ಎಂದೋ ಘಟಿಸಿದ ಒಂದು ಘಟನೆಯ ಪಾತ್ರಧಾರಿಗಳಿಗೆ ಮುಂದೆಂದೋ ಒಂದು ದಿನ ಯಾರ್ಯಾರೋ ನ್ಯಾಯ ಒದಗಿಸುವುದಾದರೂ ಶಕ್ಯವೆ ? ಎಂತಹ ಕೋಟೆ ಕಟ್ಟಿ ಮೆರೆದ ಮಹನೀಯರಾದರೂ... ತನ್ನ ಪಾತ್ರದ ಮಿತಿಯಲ್ಲಿಯೇ ಸಂಚರಿಸಬೇಕಾದ ಅನಿವಾರ್ಯತೆಯನ್ನು ಬದುಕು ನಿರ್ಮಿಸುತ್ತದೆ ಎಂಬ ಸಂದೇಶವನ್ನು ರಾಮಾಯಣವು ಪ್ರತಿಪಾದಿಸಿದೆ ಎಂಬುದನ್ನೂ ಗಮನಿಸಬೇಕಾಗುತ್ತದೆ ಅಲ್ಲವೆ ? ಎಲ್ಲರಿಗೂ ಎಲ್ಲ ಕಾಲದಲ್ಲಿಯೂ ಸೂಕ್ತ ನ್ಯಾಯವು ಸಿಗುವುದಿಲ್ಲ ಎಂಬುದೇ ಭೂಮಿಯ ಸತ್ಯವಾಗಿರುವಾಗ ನಮ್ಮ ಬಾಹುಬಲಿ ಬರಹಗಾರರು ಎದ್ದೂ ಬಿದ್ದೂ ತಳಮಳಿಸುವುದರಿಂದ ಆಗುವುದಾದರೂ ಏನು ? ವಾಸ್ತವ ಏನೆಂದರೆ... ಒಂದು ನ್ಯಾಯವು ಸಂಭವಿಸುವಾಗಲೇ ಅಲ್ಲೊಂದು ಅನ್ಯಾಯವು ಹುಟ್ಟಿರುತ್ತದೆ ! ಬದುಕಿನ ಜೋಡಾಟದ ಈ ಋಜು ವಾಸ್ತವವನ್ನು ತೋಳ್ಬಲದಿಂದಾಗಲೀ ಅಕ್ಷರದಿಂದಾಗಲೀ ಪರಿವರ್ತಿಸಲು ಆಗದಿದ್ದರೂ - ಬರಹಗಾರರು ತಮ್ಮ ಬರಹದಲ್ಲಿ ಋಜುತ್ವವನ್ನುಳಿಸಿಕೊಂಡು ತಮ್ಮನ್ನು ತಾವೇ ಉದ್ಧರಿಸಿಕೊಳ್ಳುವ ಮಾರ್ಗದಲ್ಲಿದ್ದರೆ - ಕಾಲದ ಮನ್ನಣೆಯು ಅಂತಹ ಸಜ್ಜನಿಕೆಯ ಬರಹಗಳನ್ನು ಸಹಜವಾಗಿ ಹಿಂಬಾಲಿಸುತ್ತದೆ.

ನಮ್ಮ ಧಾರ್ಮಿಕ ಗ್ರಂಥಗಳ ವಿಷಯದಲ್ಲಿ - ಭಾರತೀಯ ನೆಲ ಮತ್ತು ನೆಲೆಯೇ ಸರ್ವೋಚ್ಛ ನ್ಯಾಯಾಲಯ. ಈ ವಿಷಯದಲ್ಲಿ ಭಾರತೀಯ ಜನಮಾನಸವು ಅದೆಂದೋ ಅಂತಿಮ ನಿರ್ಣಯವನ್ನು ನೀಡಿಯಾಗಿದೆ. ಹಾಗಿದ್ದ ಮೇಲೆ - ಯಾವುದೇ ಪರೀಕ್ಷಿಸಲ್ಪಟ್ಟ ಮತ್ತು ಬಹುಮತದಿಂದ ಒಪ್ಪಿತವಾದ ಭಾವನಾತ್ಮಕ ವಿಷಯಗಳ ಕುರಿತೇ ಆಗಾಗ "ನ್ಯಾಯಾಂಗ ನಿಂದನೆ "ಯಂತಹ ವಿಕೃತ ಚರ್ಯೆಗಳು ಕನ್ನಡದ ಬುದ್ಧಿ ಬರಹಗಳಲ್ಲಿ ಸುಳಿದಾಡುವುದಾದರೂ ಏಕೆ ? ಕಂಚು ಹಿತ್ತಾಳೆ ತಾಮ್ರದ ಪಾತ್ರೆಗಳನ್ನು ಹುಳಿ ಬೂದಿ ಹಾಕಿ ತಿಕ್ಕಿ ಅಲ್ಪಾವಧಿಗೆ ಹೊಳೆಯುವಂತೆ ಮಾಡಬಹುದು. ಆದರೆ ಈ ವಸ್ತುಗಳಂತೆ - ಬದುಕಿನಲ್ಲಿ ಸಂದುಹೋದ ಜೀವಂತ ಪಾತ್ರಗಳಿಗೆ ಹೊಸ ಬಣ್ಣ ತುಂಬಲು ಆದೀತೆ ? ಸೀರೆ ಉಟ್ಟ ಬದುಕಿನ ಹಳೆಯ ಪಾತ್ರಗಳಿಗೆ ಜೀನ್ಸ್ ತೊಡಿಸುವ ತುಂಟಾಟ ಬೇಕೆ ?     

ಉತ್ತರ ಕಾಂಡದ ಕೊನೆಯಲ್ಲಿ - "ಕಾವ್ಯದಲ್ಲಿಯೂ ಸುಖವನ್ನು ಸೃಷ್ಟಿಸುವುದು ಸಾಧ್ಯವಿಲ್ಲದಂತಾಯಿತಲ್ಲ..." ಎಂಬ ಉದ್ಗಾರವಿದೆ. ವಾಲ್ಮೀಕಿಯ ಪಾತ್ರದ ಈ ವಿಷಾದದ ಮಾತಿನೊಂದಿಗೆ ಕಾದಂಬರಿಯು ಮುಕ್ತಾಯವಾಗುತ್ತದೆ. ಈ ಮಾತು ಮನನೀಯವಾದುದು ಮತ್ತು ಯಾವುದೇ ಬರಹಗಾರನ ಇತಿಮಿತಿಯನ್ನೂ ಸೂಚಿಸುವಂತಿದೆ. ಯಾವುದೇ ಬರಹವು ವಾಸ್ತವದ ಹತ್ತಿರದಲ್ಲಿರಬೇಕು; ಲೇಖನಿಯು ಎಂತಹ ಶಕ್ತಿಶಾಲಿಯಾಗಿದ್ದರೂ ಯಾವುದೇ ಬರಹಗಾರರ ಸೃಜನಶೀಲತೆಗೂ ಇತಿಮಿತಿ ಇದೆ - ಎಂಬುದನ್ನು ವಾಲ್ಮೀಕಿಯೇ ಸಾರಿ ಹೇಳಿದಂತಿಲ್ಲವೆ ? 

ವಾಲ್ಮೀಕಿಯು ತಾನು ಹತ್ತಿರದಿಂದ ಕಂಡದ್ದನ್ನು ಕಂಡಂತೆಯೇ ಕಾವ್ಯಾತ್ಮಕವಾಗಿ ಚಿತ್ರಿಸಿದ ಕೃತಿಯೇ ರಾಮಾಯಣ; ತನ್ನ ಸ್ವಂತ ಅಭಿಪ್ರಾಯದ ಹೇರಿಕೆಯ ಸಾಮರ್ಥ್ಯವಿದ್ದರೂ ವಾಲ್ಮೀಕಿಯು ಬೇಲಿ ಹಾರಲಿಲ್ಲ. ಆದ್ದರಿಂದಲೇ ಸತ್ಯದ ನೆಲೆಗಟ್ಟಿನಲ್ಲಿ ವಾಲ್ಮೀಕಿ ರಾಮಾಯಣವು ಇಂದಿಗೂ ಭದ್ರವಾಗಿ ಉಳಿದುಕೊಂಡಿದೆ. 

ಬದುಕಿನಲ್ಲಿ ಇಲ್ಲದುದನ್ನು ಸೃಷ್ಟಿಸುವ ಮತ್ತು ಇರಬಾರದುದನ್ನು ವೈಭವೀಕರಿಸುವ ಯಾವುದೇ ಕೃತಿಯು ಬದುಕಿ ಉಳಿಯುವುದಿಲ್ಲ; ಸನ್ಮಾನ್ಯವಾಗುವುದೂ ಇಲ್ಲ. ಅಂದಿಗೂ ಇಂದಿಗೂ ಇದೇ ಸತ್ಯ. 

ಅಂದರೆ... "ಅಂದಿನ ಸತ್ಯವನ್ನು ಇಂದಿನ ಸತ್ಯಕ್ಕೆ ಬೆರೆಸುವುದು" ಎಂದು ಅರ್ಥವಲ್ಲ. ಬದುಕುಗಳ ಭಾವನಾತ್ಮಕ ವಿಚಾರಗಳಲ್ಲಿ ನಡೆಸಲಾಗುವ ಹಸ್ತಕ್ಷೇಪವಂತೂ - ಅದೆಂತಹ ಸೃಜನಶೀಲವಾಗಿದ್ದರೂ ಒಪ್ಪಲಾಗದ ವಿಷಯ. ಹೀಗಿದ್ದೂ... ಈ ಸಮಾಜದಲ್ಲಿ ಯಾವುದೇ ಘಟನೆಯನ್ನು ಒಪ್ಪುವುದಾಗಲೀ ಒಪ್ಪದಿರುವುದಾಗಲೀ ವಿಕೃತ ಅನುಕಂಪ ತೋರಿಸುವ ಅಗಸಗಿರಿಯಾಗಲೀ ಅನೂಚಾನವಾಗಿ ನಡೆದುಬಂದಿರುವ ಸಂಗತಿಯೇ ಆಗಿದೆ. ಆದರೆ ಪ್ರತಿಷ್ಠಿತ ಬರಹಗಾರರು ಅಂತಹ ಕ್ಷುದ್ರ ತುಂಟಾಟದ ರಂಧ್ರಾನ್ವೇಷಣೆಯಲ್ಲಿ ತೊಡಗುವುದರಿಂದ ಕೆಟ್ಟ ಮಾದರಿಯಾಗುವ ಅಪಾಯವಿದೆ - ಅಲ್ಲವೆ ? 

ಎಷ್ಟೇ ಕಾರ್ಯ ಕಾರಣಗಳ ಬೆನ್ನು ಹಿಡಿದರೂ.. ಈ ಭೂಮಿಯ ಬದುಕುಗಳಲ್ಲಿ ಸುಖವನ್ನಾಗಲೀ ದುಃಖವನ್ನಾಗಲೀ - ಬಹುಪಾಲು ಅವರವರೇ ಸೃಷ್ಟಿಸಿಕೊಳ್ಳಬಹುದಲ್ಲದೆ - ಯಾರು ಯಾರೋ ಸೃಷ್ಟಿಸಲು ಆಗದು; ಅದು ಒಮ್ಮೊಮ್ಮೆ ಸಂಭವಿಸಲೂ ಬಹುದು. ಅಷ್ಟೆ. ಆದರೆ ಸನ್ಮಾನ್ಯ ಭೈರಪ್ಪನವರು ತಮ್ಮ "ಉತ್ತರ ಕಾಂಡ"ದ ಕೆಲವು ಪಾತ್ರಗಳನ್ನು ಹೊಸದಾಗಿ ಕಟ್ಟಿ "ಅನುಕಂಪ" ಸ್ರೋತವನ್ನು ಕೃತಕವಾಗಿ ಸೃಷ್ಟಿಸಲು ಪ್ರಯತ್ನಿಸಿರುವಂತೆಯೂ - ತನ್ಮೂಲಕ ಕೆಲವು ಪಾತ್ರಗಳಿಗೆ ಯಾರೋ ಎಂದೋ ನೀಡಲಾಗದ "ಸುಖ"(?)ವನ್ನು ಸ್ವತಃ ತಾವೇ ನೀಡಲು ಯತ್ನಿಸಿದಂತೆಯೂ ಪದೇಪದೇ ಅನ್ನಿಸುವುದು ಈ ಕಾದಂಬರಿಯ ವೈಶಿಷ್ಟ್ಯ.

ತಮ್ಮ ಉತ್ತರಕಾಂಡದಲ್ಲಿ ಸುದೀರ್ಘವಾಗಿ ತಿಣುಕಿದ ನಂತರ ಕೃತಿಕಾರರ ಕೊನೆಯ ಮಾತಿನಲ್ಲಿ ಬರುವ - "ಸತ್ಯವನ್ನು ಮುರಿದು ಕಟ್ಟಲಾಗುವುದಿಲ್ಲ ಮತ್ತು ತಿರುಚಲಾಗುವುದಿಲ್ಲ" ಎಂಬ ನಿರೂಪಣೆಯಲ್ಲಿ - ಒಳಾರ್ಥವೂ ಅಡಗಿದೆ. (ಆತ್ಮನಿರೀಕ್ಷಣೆ ಮಾಡಿಕೊಂಡಂತೆ ?)

ಇಂದು - ವಿಭಿನ್ನತೆ ಮತ್ತು ಸೃಜನಶೀಲತೆಯ ಹೆಸರಿನಲ್ಲಿ "ಏನನ್ನು ಬೇಕಿದ್ದರೂ ಸೃಷ್ಟಿಸಬಹುದೇನೋ..." ಅನ್ನಿಸುವ ಹಾಗಾಗಿದೆ. ಮುಂದೊಂದು ದಿನ... "ಶ್ರೀ ರಾಮನ ನಿರ್ಯಾಣಾನಂತರ, ತನ್ನ ಇಚ್ಛೆಗೆ ವಿರುದ್ಧವಾಗಿ ರಾಮನ ಅಯೋಧ್ಯೆಯನ್ನು ಸೇರಿಕೊಂಡ ಮಕ್ಕಳಾದ ಲವ ಕುಶರನ್ನು ಸೀತಾಮಾತೆಯು ತಾನೇ ಕೊಂದು, ಅನಂತರ ತಾನೇ ಚಕ್ರವರ್ತಿಯಾಗಿ ದೀರ್ಘಕಾಲ ರಾಜ್ಯಭಾರ ನಡೆಸಿದಳು..." ಎಂಬಂತಹ ಕತೆಗಳೂ ಬರಬಹುದು !!! ಅಧಿಕಾರಕ್ಕಾಗಿ ಅಪ್ಪನನ್ನು ಕೊಂದ ಮಗ, ಸ್ಥಾನಕ್ಕಾಗಿ ಮಗನನ್ನು ಸೆರೆಯಲ್ಲಿಡಿಸಿದ ಐತಿಹಾಸಿಕ ಅಪ್ಪಂದಿರನ್ನು ವಿಜೃಂಭಿಸಲೋಸುಗ - ಸೃಜನಶೀಲ ಲೇಖನಿಗಳು ಮತ್ತೆ ಮತ್ತೆ ವಾಲ್ಮೀಕಿ ರಾಮಾಯಣದ ಚೌಕಟ್ಟಿನಲ್ಲಿ ಆಶ್ರಯ ಪಡೆಯಲಾರರು - ಎಂದೇನೂ ಹೇಳುವಂತಿಲ್ಲ. 

ಆದರೆ... ಇವೆಲ್ಲವೂ ಕಾಲನ ತುಳಿತವನ್ನು ಜೀರ್ಣಿಸಿಕೊಳ್ಳಲಾಗದ ಲಘು ಕಾಟಗಳು; ಇವೆಲ್ಲವೂ ಪೂರ್ವೋತ್ತರವಿಲ್ಲದ ಖಂಡ ತುಂಡ ಮೊಂಡ ಕಾಂಡಗಳಷ್ಟೆ.

"ಲೇಖನಿ ಭ್ರಮೆ" ಎಂಬುದೊಂದಿದೆ. ಭ್ರಮೆಯ ಕತ್ತಲಿನಲ್ಲಿ ಒಮ್ಮೊಮ್ಮೆ ಅನಾಹುತಗಳೂ ಆಗುತ್ತವೆ. ಅಂಧ ಅಭಿಮಾನಿಗಳು ವಿಸ್ತರಿಸಿದಂತೆ ಕೆಲವು ಅನಾಹುತಗಳೂ ಹೆಚ್ಚುತ್ತಲೇ ಹೋಗುತ್ತವೆ. ಹೀಗಿದ್ದೂ... ಭ್ರಮಾತೀತರಾಗಲು - "ಸೃಜನಶೀಲ" ಅಂದುಕೊಂಡ ಬರಹಗಾರರಿಗೂ ಒಮ್ಮೊಮ್ಮೆ ಸಾಧ್ಯವಾಗುವುದಿಲ್ಲ. ಆದರೆ ಎಂತಹ ದೊಡ್ಡ ಕ್ಷೇತ್ರವಾಗಲೀ ಅಥವ ವ್ಯಕ್ತಿಯಾಗಲೀ ವಿಶಾಲವಾದ ಈ ನೆಲದ ಅಂತರ್ಗತ ಸ್ಪಂದನೆಗಿಂತ ಎತ್ತರವಾಗುವುದಿಲ್ಲ. ಆದ್ದರಿಂದ ಪರಂಪರಾಗತ ವಿಷಯಗಳನ್ನು ಮರುಜೋಡಿಸುವ ಸಂದರ್ಭದಲ್ಲಿ ಎಷ್ಟು ಎಚ್ಚರವಿದ್ದರೂ ಕಡಿಮೆಯೇ ಆಗುತ್ತದೆ. ಪೂರ್ವದ ದಾಖಲೆಗಳು ಸತ್ಯಕ್ಕೆ ಅಪ್ಪಟ ದೂರವಾದವುಗಳು ಎಂಬುದನ್ನು ಪ್ರಮಾಣೀಕರಿಸಿಕೊಂಡಿದ್ದರೆ ಮಾತ್ರ ಯಾವುದೇ ಗಂಭೀರ ವ್ಯತ್ಯಾಸಗಳನ್ನು ದಾಖಲೆಯ ಜೊತೆಗೆ ಹೊರಗೆ ತರಬಹುದಲ್ಲದೆ - ಉಳಿದಂತೆ ಜವಾಬ್ದಾರಿಸಹಿತವಾಗಿಯೇ ಯಾವುದೇ ಲೇಖನಿಯು ಓಡಬೇಕಾಗುತ್ತದೆ. 

ಆದರೆ ಪೌರಾಣಿಕ ಸಾಹಿತ್ಯವನ್ನು ಪ್ರಮಾಣೀಕರಿಸಿಕೊಳ್ಳುವುದು ಕಷ್ಟ - ಅಸಾಧ್ಯ. ಹೀಗಿರುವಾಗ ತುಲನಾತ್ಮಕವಾಗಿ ಮಿಗಿಲಾದ ಯಾವುದೇ ಆದರ್ಶಗಳನ್ನು ಪರ್ಯಾಯವಾಗಿ ಊಡಿಸಿಕೊಳ್ಳದೆ - ಸ್ಥಿತ ವಿಶ್ವಾಸಗಳನ್ನು ಏಕಾಯೇಕಿ ಮುರಿಯುವ ಸಾಹಸಕ್ಕೆ ಯಾರೂ ಹೊರಡಬಾರದು. ಅಂತಹ ಯಾವುದೇ ಸಾಹಸಗಳು - "ಪರಂಪರೆಯನ್ನು ತುಳಿಯುವ ಬುದ್ಧಿ ಅಮಲು" ಎಂದೂ ಅನ್ನಿಸಿಕೊಳ್ಳುವ ಅಪಾಯವಿದೆ. ಯಾವುದೇ ಸೃಜನಶೀಲ ಬರಹವು ಏಕಮುಖಿಯಲ್ಲದುದರಿಂದ ಬರಹಗಾರರಿಗೆ ಸಮಷ್ಟಿಪ್ರಜ್ಞೆಯೂ ಇರಬೇಕಾಗುತ್ತದೆ. ಇದು ಭೈರಪ್ಪನವರಿಗೆ ತಿಳಿಯದ ವಿಷಯವೇನಲ್ಲ. ಹೀಗಿದ್ದೂ... ಭೈರಪ್ಪನವರ ಉತ್ತರಕಾಂಡದಲ್ಲಿ ಆಧುನಿಕ ಮಸಾಲೆ ಮತ್ತು ತುಷ್ಟೀಕರಣವೊಂದಲ್ಲದೆ ಸರ್ವಜನಹಿತದ ಮೂಲೋದ್ದೇಶವು ಎಲ್ಲಿಯೂ ಕಾಣುವುದಿಲ್ಲ. ಇವತ್ತಿನ ಸಮಾಜದ ಬಹುಜನರಿಗೆ ನಿತ್ಯ ಸುಖ ನೀಡುವಂತಹ ಇಂತಹ ಅಮಲಿನ ಸಾಹಿತ್ಯಕ್ಕೆ ಈಗ ಯಾವ ಬರವೂ ಇಲ್ಲ; ಈ ಸಾಧನೆಗೆ ಭೈರಪ್ಪನವರ ಅನಿವಾರ್ಯತೆಯು ಇರಲೇ ಇಲ್ಲ. ಪ್ರತಿಭಾವಂತರಾಗಿದ್ದು ಪಾಂಡಿತ್ಯವನ್ನೂ ಸಾಧಿಸಿಕೊಂಡಿರುವ ಭೈರಪ್ಪನವರು ಅನಾವಶ್ಯಕವಾಗಿ ಅಂತಹ ಪ್ರಯತ್ನಕ್ಕೆ ಎಳಸಿದಂತೆಯೂ ನನಗೆ ಕಂಡಿದೆ. ಪೌರಾಣಿಕ ಕಥಾ ಸಾಮಗ್ರಿಗಳನ್ನು ಬಳಸಿಕೊಳ್ಳುವ ಯಾವುದೇ ಲೇಖಕರು ಮೂಲ ಕತೆಯನ್ನು ವಿರೂಪಗೊಳಿಸದೆ - ಸಿದ್ಧ ಪರಿಧಿಯಲ್ಲಿ ಎಷ್ಟು ಸೃಜನಶೀಲತೆಯನ್ನು ಮೆರೆಯಬಹುದೋ ಅಷ್ಟನ್ನು ಪ್ರದರ್ಶಿಸುವ ಅವಕಾಶವಂತೂ ಇದ್ದೇ ಇರುತ್ತದೆ. ಭೈರಪ್ಪನವರ "ಪರ್ವ"ವೇ ಇದಕ್ಕೆ ಸಾಕ್ಷಿ.

ಭಾರತೀಯ - ಹಿಂದಿ ಚಿತ್ರರಂಗದಲ್ಲಿ ಸಂಜಯ್ ಲೀಲಾ ಬನ್ಸಾಲಿಯವರೂ - ಯಶಸ್ವೀ ಎಂಬ ಹಣೆಪಟ್ಟಿ ಹೊತ್ತ ಸೃಜನಶೀಲ ಚಿತ್ರ ನಿರ್ದೇಶಕರು. ಅವರಿಗೆ ತಮ್ಮ ಚಿತ್ರವೊಂದರಲ್ಲಿ - ಅಲ್ಲಾವುದ್ದೀನ್ ಖಿಲ್ಜಿಯ ಜೊತೆಗೆ ಚಿತ್ತೋರ್ ಗಢದ ರಾಣಿ ಪದ್ಮಿನಿಯ ಚೆಲ್ಲಾಟವನ್ನು ಚಿತ್ರಿಸಬೇಕೆಂದು ಅನ್ನಿಸಿತ್ತಂತೆ ! ಕನಸಿನ ರೂಪದಲ್ಲಾದರೂ ಅಂತಹ ಒಂದು ದೃಶ್ಯವು ಮೂಡಿಬರಬೇಕೆಂದು ಯಾರಿಗಾದರೂ ಅನ್ನಿಸಿದರೆ - ಅಂತಹ "ಕೀಟಲೆಯ ಸೃಜನಶೀಲತೆ"ಯನ್ನು ಸುಕೃತವೆನ್ನಲೆ ? ವಿಕೃತವೆನ್ನಲೆ ? ಪುರಾಣ ಇತಿಹಾಸಗಳಿಗೆ ಹೊಸವ್ಯಾಖ್ಯೆಯನ್ನು ಬರೆಯುವಾಗ - ಆಧಾರ ಸಾಕ್ಷಿಗಳು ಅನಿವಾರ್ಯ. ಯಾವುದೇ ಯಶಸ್ಸು ಎಂಬುದು ಉದ್ಧಟ ಹಂತದ ಎಲ್ಲೆಯನ್ನೂ ಮೀರಿದರೆ ಅನರ್ಥಗಳನ್ನೇ ಹಡೆಯುವಂತಾಗುತ್ತದೆ ಅಲ್ಲವೆ ? ಕೆಟ್ಟ ಹಾಹಾಕಾರವನ್ನು ಸೃಷ್ಟಿಸುವುದರ ಮೂಲಕವೇ ಸಿದ್ಧಿ ಪ್ರಸಿದ್ಧಿ ಗಳಿಸುವ ಯಾವುದೇ ಬಗೆಯ ವಾಮಾಚಾರಗಳು ಹೆಚ್ಚು ದಿನ ಉಳಿಯುವಂಥದ್ದಲ್ಲ. 

ಸೃಜನಶೀಲತೆಯು ಯಾವತ್ತೂ ವಿನಮ್ರವಾಗಿರಬೇಕು; ಅಂದಂದಿನ ಜನಪ್ರಿಯತೆಗಾಗಿ ಬೇಲಿ ಹಾರಬಾರದು. ಆದ್ದರಿಂದಲೇ ಬದುಕಿನ ಪೋಷಕ ದ್ರವ್ಯವಾದ ವಿಶ್ವಾಸ ಮತ್ತು ನಂಬಿಕೆಗಳನ್ನು ಬಲಪಡಿಸುವ ಯಾವುದೇ ಕ್ರಿಯೆಗಳನ್ನು ಮಾತ್ರವೇ - ಸಜ್ಜನರು "ಸೃಜನಶೀಲತೆ" ಎನ್ನುತ್ತಾರೆ; ಉಳಿದುವೆಲ್ಲ "ಕಿತಾಪತಿಗಳು !"

ರಾಕ್ಷಸರೆಂದರೆ ಕೋರೆ ದಾಡೆಗಳುಳ್ಳವರೇನಲ್ಲ; ಭಯೋತ್ಪಾದಕರೆಂದರೆ ಕೋವಿ ಪಿಸ್ತೂಲು ಹಿಡಿದವರು ಮಾತ್ರವಲ್ಲ. ಅಲ್ಲವೆ ? ಇಂದಿನ ಸಮಾಜದಲ್ಲಿ - ಲೇಖನಿಯ ಭಯೋತ್ಪಾದನೆಯೇ ದೊಡ್ಡ ಪಿಡುಗಾಗಿ ಸಂಭವಿಸಿದೆ. ವಿಶ್ವಾಸದ ಬುನಾದಿಯನ್ನು ಅಲುಗಿಸುವಂತಹ ಎಲ್ಲವೂ - ಭಯೋತ್ಪಾದಕತೆಯ ವಿಭಿನ್ನ ಮುಖಗಳು ಎನ್ನಬಹುದು. ಆದ್ದರಿಂದ ಹೊಸತನದ ಹೆಸರಿನಲ್ಲಿ ಹಳೆಯದನ್ನು ಅಳಿಸಿಹಾಕಲು ಅಥವ ಅವರವರ ನಾಸಿಕವನ್ನು ಹಿರಿದಾಗಿಸಿಕೊಳ್ಳಲು ನಡೆಸಲಾಗುವ ಯಾವುದೇ ಬೌದ್ಧಿಕ ಕರಾಮತ್ತುಗಳನ್ನು ಒಪ್ಪದಿರಲು, ಖಂಡಿಸಲು ಹಿಂಜರಿಯಬೇಕಾಗಿಲ್ಲ. ಯಾವುದೇ ಅಭಿಮಾನವು ಪರಸ್ಪರ ಬೆಳೆಯಲು ಸಹಕರಿಸುವಂತಿರಬೇಕು. ಸಹನಶೀಲತೆ ಎಂದರೆ ಕಚ್ಚಿ ತಿನ್ನಲು ಮುನ್ನುಗ್ಗುವ ಹೆಬ್ಬಾವಿಗೆ ನಮ್ಮನ್ನು ಒಡ್ಡಿಕೊಳ್ಳುವುದಲ್ಲ.

ರಸಸೃಷ್ಟಿಯೇ ಅಕ್ಷರಗಳ ಹುರುಳು. ಆದರೆ ಕಾಲಕ್ಕೆ ತಕ್ಕ ಕೋಲ ಎಂಬಂತಹ "ಸಾಮೂಹಿಕ ಸುಖ ಸೃಷ್ಟಿ"ಯ ಗೀಳು - ಯಾವುದೇ ಬರಹಗಳ ಉದ್ದೇಶವಾಗಬಾರದು. Gang Rape ನ್ನು ಸುಖ ಎಂದೋ ರಸಸೃಷ್ಟಿ ಎಂದೋ ಅನ್ನುವುದಿಲ್ಲ - ಅಲ್ಲವೆ ? ಸುದೀರ್ಘ ಕಾಲದವರೆಗೆ ತಮ್ಮನ್ನು ದೂಷಿಸುತ್ತ ತಮ್ಮ ಬೆನ್ನು ಬಿದ್ದಿದ್ದ  ಕನ್ನಡವಲಯದ ಬುದ್ಧಿ ಸಮೂಹವನ್ನು ತಮ್ಮ ಕೊನೆಗಾಲದಲ್ಲಿ ಕಿಂಚಿತ್ ತೃಪ್ತಿಪಡಿಸುವ ಉದ್ದೇಶದಿಂದಲೇ ಭೈರಪ್ಪನವರು "ಉತ್ತರ ಕಾಂಡ" ಬರೆದಿರಬಹುದೆ ? - ಎಂದು ಕೆಲವರಿಗಾದರೂ ಅನ್ನಿಸಿದರೆ ಆಶ್ಚರ್ಯವಿಲ್ಲ. ವಯಸ್ಸು ಎಂಬುದು ಬರಹವನ್ನೂ ಬರಹಗಾರನನ್ನೂ ಏಕಕಾಲದಲ್ಲಿ ದುರ್ಬಲಗೊಳಿಸಬಲ್ಲುದೆ ? ನಂಬಲಾಗುವುದಿಲ್ಲ.

ಸನ್ಮಾನ್ಯ ಭೈರಪ್ಪನವರೇ,

ಶಾಂತಿ, ಲಕ್ಕಿ, ರಮಣ್, ಹಿಮವಂತ್... ಎಂದೆಲ್ಲ ಪಾತ್ರಗಳನ್ನು ಹೆಸರಿಸಿ ದಕ್ಷಿಣಾಕಾಂಡ/ ಪಶ್ಚಿಮ ಕಾಂಡ/ ಪೂರ್ವ ಕಾಂಡ ಮುಂತಾದ ಶೀರ್ಷಿಕೆಯಲ್ಲಿ ಪೂರ್ತಿಯಾಗಿ ಸಾಮಾಜಿಕ ಕಾದಂಬರಿಯ ರೂಪವನ್ನೇ ನೀಡಿದ್ದರೆ - ತಮ್ಮ ಕಾದಂಬರಿಯು ಹೆಚ್ಚು ಅರ್ಥಪೂರ್ಣವಾಗುತ್ತಿರಲಿಲ್ಲವೆ ? ಸಾಮಾಜಿಕ ಕಥಾ ವಸ್ತುಗಳಿಗೇನು ಬರವೆ ? ಅಥವ ವಾಲ್ಮೀಕಿ ವ್ಯಾಸರಿಗೆ ಕಚಗುಳಿಯಿಡುವ ಸ್ವ ಸಾಮರ್ಥ್ಯದ ಸ್ವಂತ ಪರೀಕ್ಷೆಯೆ ? ವಾಲ್ಮೀಕಿಯ ರಾಮಾಯಣದ ಪಾತ್ರಗಳನ್ನೇ ಬಳಸಿಕೊಂಡು ಆಧುನಿಕ ರಾಮಾಯಣವನ್ನು "ಛಿನ್ನಭಿನ್ನವಾಗಿ" ಸೃಷ್ಟಿಸಿ, ಅಭಿನವ ವಾಲ್ಮೀಕಿಯಾಗುವ ಉತ್ಸಾಹವಾದರೂ ತಮಗೆ ಏಕೆ ಬಂತು ?

ಕಾದಂಬರಿಯೇ ಆಗಿದ್ದರೂ... ಉತ್ತಮ ಭವಿಷ್ಯವನ್ನು ಸೃಷ್ಟಿಸುವಂತಹ ವರ್ತಮಾನವನ್ನು ಸ್ಥಾಪಿಸುವ ಹೊಣೆಗಾರಿಕೆಯಿಂದ - ಅದು ತಪ್ಪಿಸಿಕೊಳ್ಳಲಾದೀತೆ ? ಭಾವನೆಗಳು ಕಾದಂಬರಿಗಳಲ್ಲೂ ಪರೋಕ್ಷವಾಗಿ ವಿಮರ್ಶೆಗೆ ಒಡ್ಡಿಕೊಳ್ಳುವುದಿಲ್ಲವೆ ? ಮೂಲ ರಾಮಾಯಣದ ಹೆಸರುಗಳನ್ನೇ ಹೊತ್ತಿರುವ ಕಾದಂಬರಿಯ ಪಾತ್ರಗಳಿಂದಾಗಿ ಓದುವ ಮನಸ್ಸುಗಳು ಮೂಲ ರಾಮಾಯಣದೊಂದಿಗೆ ಹೋಲಿಸದಿರಲು ಸಾಧ್ಯವೆ ? ಕೇವಲ ಸೃಜನಶೀಲತೆಯ ಹಂಬಲವಿದ್ದಿದ್ದರೆ ಮೂಲ ಚೌಕಟ್ಟಿನ ಪರಿಧಿಯಲ್ಲಿಯೇ ಅದನ್ನು ಸಾಧಿಸಬಹುದಿತ್ತಲ್ಲವೆ ? ಸಿದ್ಧ ಪರಿಪಾಕಗೊಂಡ ಒಂದು ಭಾವಸೆಲೆಯು ವಿಶ್ವಾಸವಾಗಿ ರೂಪುಗೊಂಡು ಶ್ರದ್ಧೆಯಾಗಿಯೂ ನೆಲೆಗೊಂಡು ಅಸಂಖ್ಯಾತರ ಆಸ್ಥೆಯ ಮತ್ತು ಜೀವನದ ಭಾಗವಾಗಿ - ಅನೇಕ ಭಾವುಕರ ಜೀವನದ ಆದರ್ಶವೇ ಆಗಿರುವ ಒಂದು ಕಥಾ ಪ್ರಸಂಗವನ್ನು ಸೃಜನಶೀಲತೆಯ ಹೆಸರಿನಲ್ಲಿ ಚಿತ್ತುಗೊಳಿಸುವುದಾದರೂ ಏಕೆ ? "ಕತೆಯು ಆಯಾ ಕಾಲಘಟ್ಟದವರಿಗೆ ರುಚಿಸಲಿ" ಎಂಬ ಕಲ್ಪನೆಯಿಂದ - ಅದಾಗಲೇ ಕಲ್ಪನೆಗಳ ಕಗ್ಗಂಟಿನಿಂದ ನರಳುತ್ತಿರುವ ಪ್ರಸಿದ್ಧ ಕತೆಯೊಂದನ್ನು ಅವರವರು ಭಾವಿಸಿದಂತೆ ವಿಸ್ತರಿಸುತ್ತಲೇ ಹೋಗುವುದು ಸರಿಯೇ ? ಅದಾಗಲೇ ಪೂರ್ತಿಯಾಗಿ ಸಿದ್ಧವಾಗಿದ್ದ ಒಂದು ಅಡುಗೆಗೆ ಹತ್ತು ಜನರು ಹತ್ತಾರು ಬಗೆಯ ಒಗ್ಗರಣೆಯನ್ನು ಹಾಕುತ್ತ ಬಂದರೆ, ಉಣ್ಣುವವರ ಗತಿಯೇನು ? ಒಗ್ಗರಣೆಯನ್ನೇ "ಪಾಕ ವ್ಯಂಜನ" ಅಂದುಕೊಳ್ಳಬೇಕೆ ? ಅಂತಹ ಅಡುಗೆಯನ್ನೂ "ಹೊಸ ರುಚಿ" ಅಂದುಕೊಳ್ಳುವಷ್ಟು ಪ್ರಾವೀಣ್ಯತೆಯ ದಾರಿದ್ರ್ಯವು ಓದುಗರಿಗಿದೆಯೆ ? ತಮಗಂತೂ ಇಲ್ಲ - ಎಂದು ನಾನು ನಂಬಿದ್ದೇನೆ.

ಸೀತೆ, ಮಂಡೋದರಿ, ತಾರಾ... ಮುಂತಾದ ಪಾತ್ರಗಳ ಸಂದಿನಲ್ಲಿ ರಂಡೆ ಮುಂಡೆ ಸೂಳೆ ಮುಂತಾದ ಅಪಶಬ್ದಗಳನ್ನು ಹೊರಳಾಡಿಸಿದ ಉದ್ದೇಶ ಏನಿರಬಹುದು ? ಯಾರನ್ನು ಮೆಚ್ಚಿಸಲು ? ಕಾದಂಬರಿಯಲ್ಲಿ ವಿದ್ಯೆಯ ಅಹಂ ಮತ್ತು ಅವಿದ್ಯೆಯ ಅಹಂಗಳ ಅಸಹ್ಯಕರ ಬೆರಕೆಯಾಗಿದ್ದು, ಓದುಗರ ಭಾವಹತ್ಯೆಗೊಳಿಸಲು ಕಾರಣವೇನಿರಬಹುದು ?

ಮರ್ಯಾದಾ ಪುರುಷೋತ್ತಮ ಎಂಬ ವಿಶಾಲ ನಂಬಿಕೆಯನ್ನೇ ಕಟಕಟೆಯಲ್ಲಿ ನಿಲ್ಲಿಸಿ - ಮರ್ಯಾದೆಗೆ ಹೊಸ ವ್ಯಾಖ್ಯೆ ನೀಡುವ ಕ್ರಾಂತಿಕಾರಿಯಾಗಲು ತಾವು ಹೊರಟದ್ದಾದರೂ ಏಕಿರಬಹುದು ?

ಸೀತೆ ಎಂಬಾಕೆಯು ತನ್ನ ಮೈದುನನಾದ ಲಕ್ಷ್ಮಣನತ್ತ ಹೆಚ್ಚು ಮೃದುವಾಗಿದ್ದಂತೆ (!), ತನ್ನ ಗಂಡ - "ಪೆದ್ದ ರಾಮ"ನನ್ನು ಜೀವನದುದ್ದಕ್ಕೂ ಅದು ಹೇಗೋ ನಿಭಾಯಿಸಿದಂತೆ ಅಸಹಜ ಚಿತ್ರಣ ನೀಡಲು ಸ್ವತಃ ವಾಲ್ಮೀಕಿಯೇ ತಮಗೆ ಪರೋಕ್ಷವಾಗಿ ನಿರ್ದೇಶಿಸಿದ್ದರೆ ? ತಾನು ಚಿತ್ರಿಸಲಾಗದ - ಆದರೂ ದಾಖಲಿಸಲೇಬೇಕಾದ ಕೆಲವು ಭಾವಗಳನ್ನು ಪಡಿಮೂಡಿಸಲು ಸ್ವತಃ ವಾಲ್ಮೀಕಿಯೇ ತಮ್ಮನ್ನು ಪ್ರೇರೇಪಿಸಿರಬಹುದೆ ? ಬ್ರಹ್ಮ, ನಾರದರು ವಾಲ್ಮೀಕಿಯನ್ನು ಪ್ರಚೋದಿಸಿ ಬರೆಸಿದಂತೆ - ವಾಲ್ಮೀಕಿ ಮುನಿಗಳು ಪರೋಕ್ಷವಾಗಿ ತಮಗೆ ಆದೇಶಿಸಿದ್ದರೆ ? ಲಕ್ಷ್ಮಣ ಎಂಬ - ಮರ್ಯಾದಾ ಪುರುಷೋತ್ತಮನ ಮರ್ಯಾದೆಯ ಸೋದರ ಮತ್ತು ತನ್ನ ಅಣ್ಣನ ಅಖಂಡ ಅನುಯಾಯಿಯನ್ನೂ ಸಂದೇಹಾಸ್ಪದಗೊಳಿಸಲಾಗಿದೆಯಲ್ಲ ?

ಹಿಂದೆ... ವಿಧವೆಯರಿಗೆ ಹೊಸ ಮದುಮಕ್ಕಳು ನಮಸ್ಕರಿಸುತ್ತಿರಲಿಲ್ಲ. ಏಕೆಂದರೆ ಆಕೆಯೇನಾದರೂ "ನನ್ನಂತೆಯೇ ನೀನೂ ಮುಂಡೆಯಾಗು..." ಎಂದು ಹರಸಬಹುದು ಎಂಬ ಕ್ಷುದ್ರ ಗುಮಾನಿ ! ಈ ಉತ್ತರ ಕಾಂಡವೂ ಅಂಥದ್ದೇ ಅನಾರೋಗ್ಯಕರ ಭಾವಮೂಲದಿಂದ ಹೊಮ್ಮಿದಂತೆ ಅನ್ನಿಸುತ್ತಿತ್ತಲ್ಲ ? "ಇವತ್ತಿನ ಪಿಜ್ಜಾ ಪಾನೀಪೂರಿ ಹುಡುಗಿಯರಂತೆಯೇ ಸೀತೆ ತಾರಾ ಮಂಡೋದರಿಯರೂ ಇದ್ದರು" ಎಂದು ಬಿಂಬಿಸಿ, ವಿಕೃತಿಯನ್ನು ಸಾರ್ವತ್ರೀಕರಿಸಿ, ಒಪ್ಪಿಗೆಯ ಮುದ್ರೆಯನ್ನು ಒತ್ತಿ, ವಿಕೃತ ಸಂತೋಷ ಹಂಚಿದಂತೆಯೂ ನನಗೆ ಕಂಡಿದೆ. ಕಾದಂಬರಿಯ ಭಾವಪಾತ್ರೆಯಲ್ಲಿ ವಿಪರೀತ ಕಲಮಲವಿದೆ.

ಕಾದಂಬರಿಯಲ್ಲಿ - ಸೀತೆಯು ವಾಲ್ಮೀಕಿ ಆಶ್ರಮದಲ್ಲಿರುವ ಭಾಗದಲ್ಲಿ ಸೀತೆಯ ಮನಃಸ್ವಾಸ್ಥ್ಯವು ಸಹನೀಯವೆನ್ನಿಸಿದರೂ ಸೀತೆಯ ಪೂರ್ವ ಕಥೆಯ ಪಾತ್ರ ಚಿತ್ರಣದಲ್ಲಿ ಲೇಖನಿಯ ಸೃಜನಶೀಲತೆಯು ಲಕ್ಷ್ಮಣರೇಖೆಯನ್ನು ದಾಟಿದಂತಿಲ್ಲವೆ ? ಸೀತೆಯ ಸ್ವಗತ ಎಂಬಂತೆ ಚಿತ್ರಿಸಿದ ಕೆಲವು ಭಾಗಗಳು ಸೀತೆಯನ್ನು ಕುರೂಪಗೊಳಿಸಿಲ್ಲವೆ ?

ಸೀತೆಯೇ ಕಾದಂಬರಿಯ ನಾಯಕಿಯಾದರೂ ಆಕೆಯ ಭೂಪಯಣದಲ್ಲಿ ಹನೂಮಂತನ ಭಾಗವಹಿಸುವಿಕೆಯು ಅತ್ಯಂತ ಮಹತ್ವದ ಭಾಗವಾಗಿದೆ. ಸ್ವತಃ ಸೀತೆಗೆ - ಅತ್ಯಂತ ಪ್ರಿಯವಾದ ಪಾತ್ರವದು. ಆದರೆ "ಉತ್ತರ ಕಾಂಡ"ದಲ್ಲಿ ಇಡೀ ರಾಮಾಯಣದ ಮೂಲಸ್ತಂಭದಂತಿರುವ ಹನೂಮಂತನಿಗೆ - ಮನೆ ಕೆಲಸದಾಳು ಅಥವ POSTMAN ವೇಷ ಕಟ್ಟಿದಂತಿಲ್ಲವೆ ? ಹನುಮನಿಲ್ಲದ ರಾಮ ಸೀತೆ ಸಾಧ್ಯವೆ ? ಅಥವ......

"ಆದರ್ಶಗಳು ಯಾವುವೂ ಪ್ರಾಯೋಗಿಕವಲ್ಲ; ಆದ್ದರಿಂದ ಅನನುಕರಣೀಯ" - ಎಂಬ ಸಂದೇಶ ನೀಡುವ ಉದ್ದೇಶವಿತ್ತೆ ?  

ನೀವು ಸೃಜನಶೀಲ ಬರಹಗಾರರು ಎಂಬುದನ್ನು ಎಲ್ಲರಿಗೂ ಮತ್ತೊಮ್ಮೆ PROVE ಮಾಡಿ ತೋರಿಸುವ ಉದ್ದೇಶ ನಿಮಗಿತ್ತೆ ? ಅಥವ "ಇನ್ನು ನಾನು ಏನು ಬರೆದರೂ ನಡೆಯುತ್ತದೆ.." ಎಂಬ ಪೂರ್ವ ಕಲ್ಪನೆಯೆ ? ಕುಶಲಕರ್ಮಿಯಾದ ನಿಮ್ಮಂತಹ ಲೇಖಕರಿಗೆ ವಸ್ತು, ಚೌಕಟ್ಟು, ಸಂಯಮ, ಸಮಯ ಪ್ರಜ್ಞೆ... ಎಲ್ಲವೂ ಇರುವುದಿಲ್ಲವೆ ? ಅಥವ Controversy ಗಳನ್ನು ಸೃಷ್ಟಿಸಿ ಪರೋಕ್ಷ ಲಾಭ ಗಿಟ್ಟಿಸಿಕೊಳ್ಳುವ ವ್ಯಾಪಾರೀ ತಂತ್ರದ ಇಂದಿನ ಹೊಸ ಫ಼್ಯಾಶನ್ನಿಗೆ ನೀವೂ ಒಳಗಾದಿರಾ ?

ಕ್ಷಮೆಯಿರಲಿ.

                                                               ****----****

ಒಟ್ಟಿನಲ್ಲಿ ಭೈರಪ್ಪನವರ "ಗಟ್ಟಿಗಿತ್ತಿ ಆಧುನಿಕ ಸೀತೆ "ಯ ಮರುಚಿತ್ರಣವನ್ನು ಪೂರ್ತಿ ಓದಿದ ಮೇಲೂ - ನನ್ನೊಳಗೆ ಏನೋ ನಿರ್ವಾತ. ಮಿಥ್ಯೆಯನ್ನೇ ತಬ್ಬಿಕೊಂಡ ಪಡಪೋಶಿಭಾವದ Myth ! ಮತ್ತಷ್ಟು ವಿಕಾರಗೊಂಡ - "ಉತ್ತರಕಾಂಡ" !

ರಾಮಾಯಣಕ್ಕೆ ಅಂಟಿಕೊಳ್ಳುವ ವೈಚಾರಿಕ ಯೋಗ್ಯತೆ ಇಲ್ಲದ ವಿಚಿತ್ರ ಕಾಂಡವೇ ಉತ್ತರ ಕಾಂಡ ! ಇದು ಹೇಗೆಂದರೆ... ಪುರಾತನ ಸ್ಥಳಮೌಲ್ಯಗಳಿರುವ ಸ್ಥಾನಕ್ಕೆ ಭೇಟಿ ಕೊಡುವ ಪ್ರವಾಸಿಗರು ತಮ್ಮ ತಮ್ಮ ಅಸ್ತಿತ್ವವನ್ನು ಸಾರಲು - ಗೋಡೆ ಮರಗಳ ಮೇಲೆಲ್ಲ " I Love You..." ಎಂದು ವಿಕಾರವಾಗಿ ಗೀಚಿ, ಕೆತ್ತಿ ಬರುತ್ತಿದ್ದಾರಲ್ಲ ? ಇದು ವಿಕೃತ ರಂಜನೆ ಅಲ್ಲವೆ ? ಉತ್ತರಕಾಂಡ ಮತ್ತು ಉತ್ತರಕಾಂಡದ ಚರ್ವಿತಚರ್ವಣವೂ ಅಂತಹುದೇ ಇನ್ನೊಂದು ಕ್ರಿಯೆ ಅನ್ನಿಸುತ್ತದೆ.

ಮೂಲ ವಾಲ್ಮೀಕಿ ರಾಮಾಯಣದಲ್ಲಿರುವ ರಾಮ ಪಟ್ಟಾಭಿಷೇಕದ ಕಾರ್ಯದ ನಿರೂಪಣೆಯ ನಂತರದಲ್ಲಿ - ಕಸಿ ಕಟ್ಟಿದಂತೆ ಈಗ ಬಳಕೆಯಲ್ಲಿರುವ "ಉತ್ತರ ಕಾಂಡ" ಭಾಗವೂ ಕೂಡ ಅಂಥದ್ದೇ ಒಂದು ವಿಕೃತಿ ಎಂದು ನನಗೂ ಅನ್ನಿಸಿದೆ. ಯಾರ್ಯಾರದೋ ವಿಚಾರ, ಪರಂಪರೆಯ ಹೊರೆಯನ್ನು ನಿಷ್ಪಾಪಿ ವಾಲ್ಮೀಕಿಯ ತಲೆಗೆ ಕಟ್ಟಿದಂತೆಯೂ ಭಾಸವಾಗುತ್ತದೆ. ಬಹುಶಃ ವಾಲ್ಮೀಕಿಯಂತಹ ಸ್ವೀಕೃತ ವ್ಯಕ್ತಿಯ ಬಲದಿಂದಲೇ - ಅಂದಿನ ಸಾಮಾಜಿಕ ಪಾರುಪತ್ಯಕ್ಕೆ ಅಧಿಕೃತತೆಯನ್ನು ತಂದುಕೊಳ್ಳುವ ಉದ್ದೇಶವೂ ಆಗ ಇದ್ದಿರಬಹುದು. ಕಾಲದೋಟದ ಕಲ್ಪನೆಗಳಿಗೆ ಮತ್ತೊಂದು ಮಗದೊಂದು ಕಲ್ಪನೆಯ ಜೋಡಣೆ ಎನ್ನಿಸದೆ ? ಹೊಸ ಅರ್ಥಗಳು ಬುದ್ಧಿ ಪ್ರಚೋದಿತವಾಗಿ ಸ್ಫುರಿಸದೇ ಹೋದರೆ ಗತಕಾಲದಲ್ಲಿಯೇ ಸಾಯಬೇಕಾಗುತ್ತದೆ ಎಂಬುದು ಅಲ್ಲಗಳೆಯಲಾಗದ ವಾಸ್ತವವೇ ಆದರೂ - ಯಾವುದೇ ಹೊಸ ಅರ್ಥಗಳು ಗತಕಾಲವನ್ನು ಸಾಯಿಸುವಂತಿರಬಾರದು ಎಂಬುದೂ ವಾಸ್ತವ. ಯಾವುದೇ ವಿಕೃತಿಯನ್ನು ಮರು ಚಿತ್ರಣಕ್ಕೆ ಮತ್ತೆ ಮತ್ತೆ ಒಳಪಡಿಸಿ, ಕಾಲುಬಾಲ ಸೇರಿಸಿ ವೈಭವೀಕರಿಸಿದರೆ - ಅದು ಮಗದೊಂದು ವಿಕೃತಿ ಅನ್ನಿಸುವುದಿಲ್ಲವೆ ? ಇಂತಹ "ಹೊಸತುಗಳು" ಅನಿವಾರ್ಯ ನಿರಂತರವೆ ? ಕನ್ನಡಕದ ಬಲ ಇದೆ ಎಂದ ಮಾತ್ರಕ್ಕೆ ಕೆಡುಕನ್ನೇ ದೃಷ್ಟಿಸಬೇಕೆ ? ಸ್ಫೂರ್ತಿ ನೀಡುವಂತಹ ಋಜುಮಾರ್ಗ ತೋರಿಸುವಂತಹ "ಹೊಸತನಗಳು" ಯಾವತ್ತೂ ಸ್ವೀಕೃತವೇ ಆಗುತ್ತವೆ. ಇದು - ಭೈರಪ್ಪನವರಿಗೆ ತಿಳಿಯದ ವಿಷಯವೇನಲ್ಲ. ಆದ್ದರಿಂದಲೇ ನನಗೆ - ಆಶ್ಚರ್ಯ ಮೂಲದ ಭಾವ ಪ್ರಕ್ಷುಬ್ಧತೆ !

ವಾಲ್ಮೀಕಿ ರಾಮಾಯಣವು ಒಂದು ಅನನ್ಯ ಕೃತಿ; ಕಾವ್ಯ ಶಾಸ್ತ್ರ. ಹಿಂದಿನ ಒಂದೊಂದು ತಲೆಮಾರಿನವರೂ ಸುತ್ತಲಿನ ಸೃಷ್ಟಿಯನ್ನು, ಪ್ರಪಂಚವನ್ನು ಅವಲೋಕಿಸುತ್ತ ತಮ್ಮ ತಮ್ಮ ಅನುಭವಕ್ಕೆ ದಕ್ಕಿದುದನ್ನು ಚಿಂತಿಸಿ, ದಾಖಲಿಸುತ್ತ ಬಂದಿದ್ದಾರೆ. ಪೃಕೃತಿಯ ನಾನಾ ವ್ಯಾಪಾರಗಳ ಹಿಂದೆ ಮನುಷ್ಯ ಶಕ್ತಿಯನ್ನು ಮೀರಿದ ಒಂದು ನಿಯಮವನ್ನೂ ಗಮನಿಸಿದ್ದಾರೆ. ಅಂತಹ ನಿಯಾಮಕ ಶಕ್ತಿಯ ಹುಡುಕಾಟವನ್ನೂ ನಡೆಸಿದ್ದಾರೆ. ಪ್ರಪಂಚದ ಸ್ವರೂಪವನ್ನು ಚಿಂತಿಸುವ ಕ್ರಿಯೆಯ ಭಾಗವಾಗಿ ವೇದ ವೇದಾಂತ ಪುರಾಣ ಕಾವ್ಯಗಳೂ ಅವತರಿಸಿದ್ದವು. ಅವರವರು ಕಂಡಂತೆ - ದೃಷ್ಟ ಪ್ರಪಂಚ ಮತ್ತು ಅದೃಷ್ಟ ಶಕ್ತಿ ಎಂಬ ಇವೆರಡೂ ಒಂದೇ - ಎಂದೂ ವ್ಯಾಖ್ಯಾನಿಸಿದರು; ಹಾಗಲ್ಲ. ಇವೆರಡೂ ಬೇರೆ ಬೇರೆ - ಎಂದೂ ಪರದಾಡಿದರು. ಒಟ್ಟಿನಲ್ಲಿ, ಅನಾದಿಯಾದ ಕೆಲವು ಪ್ರಶ್ನೆಗಳಿಗೆ ಉತ್ತರವನ್ನು ಹುಡುಕಾಡುವ ಯತ್ನವು ಇನ್ನೂ ಮುಗಿದಿಲ್ಲ; ಮುಗಿಯಲೂಬಾರದು. ಆದರೆ... ಯೋಗ್ಯ ಉತ್ತರವು - ವಾಲ್ಮೀಕಿಯ ರಾಮಾಯಣದಲ್ಲಲ್ಲದೆ ಉತ್ತರಕಾಂಡದಲ್ಲಿ ಸಿಗಲಾರದು.

ಯಾವುದೇ ಬರಹವು ಜನಮಾನಸದಲ್ಲಿ ಧನಾತ್ಮಕವಾಗಿ ನಿಂತ ಭಾವಸ್ಥಿತ ಪಾತ್ರಗಳ ರೂಪಗೆಡಿಸಲೂಬಾರದು. ಅಲ್ಲವೆ ? ಓದುಗರ ದೃಷ್ಟಿಯಿಂದ ಪ್ರಾಮಾಣಿಕ ವಿವೇಚನೆ ನಡೆಸುವುದು ಅಸಹಜವಲ್ಲ. ಆದರೆ ಅಂದಿನ ಮೂಲ ಕೃತಿಗಳಲ್ಲಿ ಸ್ಥಾಪಿತಗೊಂಡ ವ್ಯಕ್ತಿಗಳನ್ನು ಯಥಾವತ್ ಎತ್ತಿ ತಂದು - "ಇವರ ವೇಷವನ್ನು ಅವರಿಗೆ ತೊಡಿಸಿದಂತೆ" ಇಂದಿನ ಸಮಾಜದಲ್ಲಿಡುವುದು ಎಷ್ಟು ಸಮಂಜಸವೋ...? ಭಾವಘಾಸಿಯಲ್ಲದೆ ಇದರಿಂದ ಮತ್ತೊಂದು ಲಾಭವುಂಟೇ ?.. ಬಲ್ಲವರು ಚಿಂತಿಸಬೇಕು. ತಮಿಳರ ದ್ರಾವಿಡ ಶೈಲಿಯಲ್ಲಿ - ರಾಮಾಯಣಕ್ಕೆ ಪ್ರತಿಯಾಗಿ "ಕೀಮಾಯಣ" ಎಂಬ ಒಂದು ಕಥಾನಕವು ಹರಿದಾಡಿದೆಯಂತೆ. ಬಹು ಪ್ರಚಲಿತವಿದ್ದ ರಾಮಭಾವಕ್ಕೆ ಘಾಸಿಯುಂಟುಮಾಡಿ ರಾಮನ ಕುರಿತು ರೋಷ ಹುಟ್ಟುವಂತೆ ಮಾಡುವ ಇಂತಹ ಯತ್ನಗಳಿಗೆ - ಉದ್ದೇಶಿತ ಅಥವ ಅನುದ್ದೇಶಿತವಾದ ಸುದೀರ್ಘ ಹಿನ್ನೆಲೆಯೂ ಉಂಟು. ಇವೆಲ್ಲವೂ - ಸೃಜನಶೀಲತೆಯ ಹೆಸರಿನಲ್ಲಿ ನಡೆಸಿಕೊಳ್ಳುವ "ಆತ್ಮಹನನ" ಅಂದುಕೊಳ್ಳುವವರು ಎಂದಿನಿಂದಲೂ ಇದ್ದರು; ಇಂದೂ ಇದ್ದಾರೆ. ಹೀಗಿದ್ದೂ "ಆನಂದ, ಅದ್ಭುತ ರಸೋತ್ಪತ್ತಿ"ಗಾಗಿ ವಾಲ್ಮೀಕಿ ರಾಮಾಯಣದ ಹೆಗಲೇರಿ ಸಂಚರಿಸುವ ಮನುಷ್ಯರ ನಿರಂತರ ತುಡಿತವನ್ನು ಕಂಡರೆ, ಈ ರಾಮಾಯಣ ಎಂಬ ಕೃತಿಯು ಜನಮಾನಸದಲ್ಲಿ ಸೃಷ್ಟಿಸಿದ್ದ ಭಾವೋನ್ಮಾದ, ಧರ್ಮಾಧರ್ಮದ ಕುರಿತು ಆಯಾ ಕಾಲಘಟ್ಟದ ಮನಸ್ಸುಗಳ ಜಿಜ್ಞಾಸೆಯ ಪರಿಯ ಸೊಬಗು - ಬೆರಗಾಗುವಂತೆಯೂ ಮಾಡುತ್ತದೆ.

ಹೀಗಿದ್ದೂ... ಮೂಲಕೃತಿಗೆ ಪೂರಕವಾದ ಹೆಚ್ಚು ವಸ್ತುವಿವರಗಳು ಲಭ್ಯವಿಲ್ಲದ ಪ್ರಾಚೀನ ಗ್ರಂಥಗಳ ಸಂದರ್ಭಗಳಲ್ಲಿ ಲೇಖಕರ ಕಲ್ಪನೆಗಳಿಗೂ ಕಡಿವಾಣ ಬೇಕಾಗುತ್ತದೆಯಲ್ಲವೇ ? ಪೂರ್ವದ ಜಾಡನ್ನು ಬಿಟ್ಟು ಅಥವ ಕಟ್ಟು ಕತೆಯೊಂದನ್ನು ಸ್ಥಾಪಿತ ಮೂಲಪಾತ್ರಗಳಿಗೆ ಹೊಂದಿಸಿ ಸ್ವಚ್ಛಂದವಾಗಿ ವರ್ತಿಸುವ ಅವಕಾಶ ಅಥವ ಅಧಿಕಾರ ತಮಗಿದೆ ಎಂದು ಭಾವಿಸುವುದು - ಯಾವುದೇ ಲೇಖನಿಗೆ ಶೋಭೆ ತರದು ಎಂಬುದು ನನ್ನ ಅಭಿಪ್ರಾಯ.

ಯಾವುದೇ ಧರ್ಮ ಅಥವ ಸಾತ್ವಿಕ ನಂಬಿಕೆಯ ಮೂಲಕ್ಕೇ ಕೊಡಲಿಯೇಟು ನೀಡುವಂತಹ - ಯಾವುದೇ ಬಗೆಯ ಸಾಹಿತ್ಯವು - "ಸಾಹಿತ್ಯ" ಅನ್ನಿಸಿಕೊಂಡೀತೆ ? "ಸಜ್ಜನರು ಮತ್ತು ಸಜ್ಜನಿಕೆ ಎಂಬುದು ಎಂದೂ ಇರಲೇ ಇಲ್ಲ" ಎಂದು ಓದುಗರು ಯೋಚಿಸುವಂತೆ ಪ್ರತ್ಯಕ್ಷವಾಗಿ ದುಡಿಯುತ್ತ ಬಂದ ಚಾರ್ವಾಕ ಸಾಹಿತ್ಯ - ಅಥವ - "ಸಜ್ಜನರು ಮತ್ತು ಸಜ್ಜನಿಕೆಯು ಅದಲ್ಲ; ಇದು" ಎಂಬಂತಹ ಭಾವ ಚೆಲ್ಲಾಟಗಳ ಮಾನಸಿಕ ಗೊಂದಲ ಮೂಡಿಸುವ ಯಾವುದೇ ನಿರಾಧಾರ ಕಲ್ಪನೆಗಳಿಂದ "ವ್ಯರ್ಥ ಗದ್ದಲವಲ್ಲದೆ" ಬೇರೆ ಏನಾದರೂ ಸಾಧನೆ ಆದೀತೆ ? ಸಾಹಿತ್ಯಿಕ ಹಿರಿತನ ಎಂದರೆ... ಅದಾಗಲೇ ಇರುವ ಗೊಂದಲಗಳ ಅಗ್ನಿಗೆ ಮತ್ತಷ್ಟು ತುಪ್ಪ ಎರೆಯುವುದೆ ? ಸನ್ಮಾನ್ಯ ಮಾಸ್ತಿಯವರು ಈ ಸಮತೋಲನವನ್ನು ವಿನಮ್ರತಾಪೂರ್ವಕ ಎಚ್ಚರದಿಂದ ಕಾಯ್ದುಕೊಂಡಿದ್ದಾರೆ ಎಂಬುದು - ನನ್ನ ಅನ್ನಿಸಿಕೆ.

ಭೈರಪ್ಪನವರು ನಿಸ್ಸಂಶಯವಾಗಿ ಒಬ್ಬ ಶ್ರೇಷ್ಠ ಕಾದಂಬರಿಕಾರರು. ಅವರ ಎಲ್ಲ ಕಾದಂಬರಿಗಳನ್ನೂ ನಾನು ಕೊಂಡು ಓದಿದ್ದೇನೆ. ಅದರ ಅರ್ಥ - ಯಾವತ್ತೂ ತುಟಿ ಪಿಟಕ್ ಅನ್ನಬಾರದು ಎಂದೇನಲ್ಲ. "ಹೇಳಲು ಕೇಳಲು ನೀನ್ಯಾರು ? ನಿನ್ನ ಇರಸ್ಥಿಗೆ ಏನು ? ನೀನು ಎಷ್ಟು ಕಾದಂಬರಿ ಬರೆದಿದ್ದೀ ?..." ಎಂದೆಲ್ಲ ನನ್ನನ್ನು ಪ್ರಶ್ನಿಸಿದರೆ - ನಾನು ಸಂಯಮದಿಂದ ತಲೆ ತಗ್ಗಿಸಿ ನಿಲ್ಲುತ್ತೇನೆ. ಅಕಸ್ಮಾತ್ ಕೇಳಿಸಿಕೊಳ್ಳುವ ತಾಳ್ಮೆಯಿದ್ದರೆ... ಮೆಲ್ಲಗೆ ಹೇಳುತ್ತೇನೆ... "ಇತಿಹಾಸ ಪುರಾಣವೆಂದು ನೋಡದೆ - ಗಳಗನಾಥರಿಂದ ಹಿಡಿದು ಇಂದಿನ ಗಣೇಶಯ್ಯನ ವರೆಗೆ... ನಾನು ನೂರಾರು ಕಾದಂಬರಿಗಳನ್ನು ಓದಿದ್ದೇನೆ..." ಅಷ್ಟೆ.

ನನ್ನ ಮೆಚ್ಚಿನ ಬರಹಗಾರರಾದ ಭೈರಪ್ಪನವರ ಕೃತಿಯ ಬಗೆಗೆ ನಾನು ಇಷ್ಟೊಂದು ಬರೆಯುವಂತಾಗುತ್ತದೆ ಎಂದು ನಾನು ಎಂದೂ ಊಹಿಸಿರಲಿಲ್ಲ. ಯಾವುದೇ ಪೂರ್ವಾಗ್ರಹವಿಲ್ಲದೆ ಇಷ್ಟು ಅನ್ನಿಸಿಕೆಯನ್ನು ಬರೆದರೂ... ನನಗೆ ಗೊತ್ತಿದೆ; ಯಾವುದೇ ಬರಹಗಾರನ ದೃಷ್ಟಿ - ಸೃಷ್ಟಿಯ ಕುರಿತು ಪ್ರಶ್ನಿಸುವುದು ಸರಿಯಲ್ಲ. ಆದರೆ ರಾಮಾಯಣ ಮಹಾಭಾರತಗಳನ್ನು ಸುಮ್ಮಸುಮ್ಮನೆ ತದಕಿದಾಗ ಮಾತ್ರ ಸ್ವಲ್ಪ ವಿಚಲಿತಳಾಗುವುದು ನನ್ನದೇ ದೌರ್ಬಲ್ಯವೂ ಇರಬಹುದು. ಆದ್ದರಿಂದ ನನ್ನನ್ನು ನಾನೇ ಸಂತೈಸಿಕೊಂಡಿದ್ದೇನೆ. "ಇದು ತಲೆಬುಡವಿಲ್ಲದ ಉತ್ತರ ಕಾಂಡ. ಇದೊಂದು ಕಾದಂಬರಿ. ತಲೆ ಕೆಡಿಸಿಕೊಳ್ಳುವ ಬರಹವೇನಲ್ಲ. ವೇದವಾಕ್ಯವೂ ಅಲ್ಲ. ಆಯಾ ಲೇಖಕನ ಸೃಷ್ಟಿ; ಆಯಾ ಲೇಖಕನ ಇಚ್ಛೆ. ಯಾವುದೇ ಬರಹದಿಂದ ಎಲ್ಲರನ್ನೂ ತೃಪ್ತಿಪಡಿಸಲು ಆಗುವುದೂ ಇಲ್ಲ. ಬೇಕಿದ್ದರೆ - Time Pass ಗಾಗಿ ಇದನ್ನೂ ಓದಬಹುದು. ಕೊನೆಯದಾಗಿ, ಬರೆದವರಿಗೆ ಮತ್ತು ಪ್ರಕಾಶಕರಿಗೆ ತೃಪ್ತಿಯಾದರೆ ಬೇಕಾದಷ್ಟಾಯಿತು..."

ಹೀಗಿದ್ದೂ ಹೇಳುತ್ತೇನೆ. ನಾನು ಕಾದಂಬರಿಯನ್ನು ಖರೀದಿಸಿ ಓದಿದ್ದೇನೆ; ನೀವೂ ಸಾಧ್ಯವಾದರೆ ಖರೀದಿಸಿಯೇ ಓದಿ ಅಥವ ಎಲ್ಲಿಂದಾದರೂ ಎರವಲು ಪಡೆದಾದರೂ - ಒಮ್ಮೆ ಖಂಡಿತವಾಗಿ ಓದಿ. ಕೇವಲ ಓದಿದುದರಿಂದಲೇ ಯಾರದೇ ಸ್ವಂತ ಅಭಿಪ್ರಾಯಗಳು ಅಸ್ಥಿರಗೊಳ್ಳುವಷ್ಟು ದುರ್ಬಲವಲ್ಲ ಎಂಬ ನಂಬಿಕೆಯೂ ನನಗಿದೆ. ಸೃಜನಶೀಲತೆಯ ಮುಸುಕಿನೊಳಗಿಂದ ಬರೆಯುವ ಕೈಗಳು ರೀಮುಗಟ್ಟಲೆ ಏನೇ ಬರೆದರೂ - ಓದಿದಾಗ ಕ್ಷಣಿಕ ವಿಚಲತೆಗೊಳಗಾದರೂ - ಭಾರತೀಯರ ವಿಶ್ವಾಸವನ್ನು ಅಲುಗಿಸುವುದು ಸುಲಭವೇನಲ್ಲ.

                                                    *****-----*****-----*****

ನನ್ನ ಮನೆಯ ಸದಸ್ಯರು ಈ ಪ್ರತಿಕ್ರಿಯೆಯನ್ನು ಓದಿದ ನಂತರ "ವ್ಯಾವಹಾರಿಕ ದೃಷ್ಟಿಯಿಂದ" ನಮ್ಮೊಳಗೆ ನಡೆದ ಸಂಭಾಷಣೆ ... ...

- ಬರೆದ ವಿಚಾರಗಳು ಸರಿಯಾಗಿದ್ದರೂ ಜನಪ್ರಿಯ ಕಾದಂಬರಿಕಾರರನ್ನು ಪ್ರಶ್ನಿಸಿದಾಗ ಅವರ ಅಭಿಮಾನಿಗಳು ಒಪ್ಪಲಾರರು...
- ಆದರೆ... ಇದು ಒಂದು ಪುಸ್ತಕದ ಕುರಿತ ನನ್ನ ಅನ್ನಿಸಿಕೆ. ಯಾರನ್ನೂ ಒಪ್ಪಿಸುವ ಉದ್ದೇಶವೇ ನನಗಿಲ್ಲವಲ್ಲ ?
- ಅವರವರದೇ ಗುಪ್ತ ಕಾರಣಗಳಿಂದಾಗಿ ನಿನ್ನನ್ನು ಹಳಿಯುವ ಮತ್ತು ಹೊಗಳುವ - ನಿನಗೆ ಗುರಿಯಿಡುವ ಹಳೆ ಹೊಸ ತಲೆಗಳು ಒಂದಾಗಿ ಕಾಣಿಸಬಹುದು...
- ನನ್ನ ತಲೆಯಂತೂ ಸ್ಥಿರವಾಗಿರುತ್ತದೆ; ನನಗೆ ಪ್ರಿಯವೆನ್ನಿಸಿದ ವಿಷಯ ವಿಚಾರಗಳಲ್ಲದೆ ಇತರ ಯಾವುದೇ ವಾದ ವಿವಾದ ಕೊಂಕು ಡೊಂಕುಗಳು ನನ್ನನ್ನು ಹೊಗ್ಗುವುದೂ ಇಲ್ಲ; ಆದ್ದರಿಂದ ನನ್ನನ್ನು ಬಾಧಿಸುವುದೂ ಇಲ್ಲ. ಮಾತ್ರವಲ್ಲದೆ ನನ್ನ ಪ್ರತಿಕ್ರಿಯೆಯೂ ಇಲ್ಲಿಗೇ ಮುಗಿದಿದೆ. ಏಕೆಂದರೆ ನಾನು ಈಗಲೂ ಭೈರಪ್ಪನವರ - ಅಂದಿನ ಕಾದಂಬರಿಗಳ ಅಭಿಮಾನಿ.

                                                    *****-----*****-----*****