Saturday, September 5, 2015

ನಾನೊಲಿದಂತೆ (6) - ಭೋಜನ ಕಾಲೇ ಮಧ್ಯೆ...

ಕೆಲವು ವರ್ತನೆ ವ್ಯವಹಾರಗಳು ಹಳ್ಳಹಿಡಿಯುತ್ತಿದೆಯೆಂದು ಅನ್ನಿಸಿದಾಗ ನಮ್ಮ ಮನಸ್ಸು ನಾವು ಹಾದು ಬಂದ ಕೆಲವು ಉತ್ತಮ ಕ್ಷಣಗಳೊಂದಿಗೆ ಹೋಲಿಸಲು ತೊಡಗುತ್ತದೆ... ಆಗ ಹಳೆಯದೆಲ್ಲವೂ ಮತ್ತೊಮ್ಮೆ ಇಣುಕಿ ಓಡುತ್ತದೆ. ತಮ್ಮ ಬದುಕಿನಲ್ಲಿ ಅಂತಹುದೇ ಅನುಭವಗಳನ್ನು ಹೊಂದಿದವರಿಗೆ ಕೆಲವು ಘಟನೆಗಳು ವಾಸ್ತವ ಅನ್ನಿಸಿದರೆ - ಮನೆ ಬಿಟ್ಟು ಊರಿನ ಕೇರಿಯಲ್ಲೇ ಅಡ್ಡಾಡುತ್ತ ಹೊರಹೊರಗೇ ಉಂಡು ತಿಂದು ದಿನ ಕಳೆಯುವ ವಿಶಿಷ್ಟ ಅನುಭವಿಗಳಿಗೆ - ಸಾಮಾನ್ಯವೆಂದು (ಏನ್ಮಹಾ?) ಅನ್ನಿಸುವುದೂ ಇದೆ.

ಬ್ರಾಹ್ಮಣನು ಭೋಜನಪ್ರಿಯ ಎಂದು ಹೇಳುತ್ತ...ಅವರು ಊಟ ಮಾಡುವುದರಲ್ಲಿ (ಮಾತ್ರ!) ಪರಿಣತರು ಎಂದು ವಿಡಂಬನಾತ್ಮಕವಾಗಿ ಆಡಿಕೊಳ್ಳುವ ಹಿಂದುಮುಂದಿಲ್ಲದವರನ್ನು ನಾನು ನೋಡಿದ್ದೇನೆ. ಹಿಂದೆ ಸುಸಂಸ್ಕೃತ ವಿದ್ಯಾ ಸಂಪನ್ನರನ್ನು ಮಾತ್ರ "ಬ್ರಾಹ್ಮಣ" ಎನ್ನುತ್ತಿದ್ದ ಅವಧಿಯಲ್ಲಿ ಅಂತಹ ಬ್ರಾಹ್ಮಣರು ಪ್ರಚುರಪಡಿಸಿದ್ದ ಸಮತೂಕದ ಭೋಜನದ ಶೈಲಿಯನ್ನು - "ಸಂಸ್ಕರಿತ" - ಎಂಬ ಅರ್ಥದಲ್ಲಿ ಬಳಕೆಯಲ್ಲಿದ್ದ ಅನುಭವೋಕ್ತಿಯಿದು. ಅಂತಹ ಶುಚಿ, ರುಚಿ, ಪೌಷ್ಟಿಕಯುಕ್ತ ಸಂಸ್ಕರಿತ ಭೋಜನವು ಪ್ರಿಯವೂ ಆಗುತ್ತಿದ್ದ ತೃಪ್ತಿಯಲ್ಲಿ ಈ ನುಡಿಗಟ್ಟು ಪಾರಂಪರಿಕವಾಗಿ ನಡೆಯುತ್ತ ಬಂದಿರಬಹುದು ! ಆದರೆ ನಮ್ಮ ಆಹಾರ ಸೇವನೆಯ ಶೈಲಿಯು ಪರಿಷ್ಕಾರಗೊಂಡು ಸ್ವೀಕಾರಾರ್ಹತೆ ಹೊಂದುವ ಹಂತವನ್ನು ತಲುಪಲು ದೀರ್ಘ ಅವಧಿಯನ್ನು ವ್ಯಯಿಸಿದೆ. ಬೆಂಕಿಯನ್ನು ಉತ್ಪತ್ತಿ ಮಾಡಿ ಜೋಪಾನ ಮಾಡುತ್ತಿದ್ದಲ್ಲಿಂದ ಹಿಡಿದು ಇಂದಿನವರೆಗೆ ಸಹಸ್ರಾರು ವರ್ಷಗಳೇ ಹಿಡಿದಿವೆ. ಬದುಕಿನೊಂದಿಗೆ ಊಟ ಉಡುಗೆಗಳೂ ಸುಸಂಸ್ಕಾರ ಹೊಂದುತ್ತ ಬಂದಿವೆ. ಕಾಲಕಾಲಕ್ಕೆ ಅನೇಕ ಪರೀಕ್ಷೆಗೆ ಒಳಪಟ್ಟು ಸಿದ್ಧವಾಗಿರುವ ಪಾಕಶಾಸ್ತ್ರವು "ಪರೀಕ್ಷಿಸಿಯೇ ಸ್ವೀಕರಿಸಿದ" ಸುರಕ್ಷಿತ ಆಹಾರ ವಿಜ್ಞಾನ. ಅತ್ಯಂತ ಶಾಸ್ತ್ರೀಯವಾದ ನೆಲೆಗೆ ಬ್ರಾಹ್ಮಣ ಶೈಲಿಯ ಊಟವು ಬಂದು ನಿಲ್ಲಲು ಆ ಕಲೆಯ ಹಿಂದೆ ದುಡಿದ ಅನೇಕ ಸಂಶೋಧಕರ ದೇಣಿಗೆಯಿದೆ. ಪಾಕಶಾಸ್ತ್ರದಿಂದ ಹಿಡಿದು ಊಟಕ್ಕೆ ಕುಳಿತುಕೊಳ್ಳುವ ಶೈಲಿ, ಬಡಿಸುವ ಶೈಲಿ, ಒಂದರ ನಂತರವೇ ಇನ್ನೊಂದನ್ನು ಉಣ್ಣುವ ಕ್ರಮ, ಎಲೆಯ ಮುಂದೆ ಕುಳಿತ ಹಸಿದವರ ಅತೃಪ್ತಿಯ ಬದುಕುಗಳಲ್ಲೂ ತೃಪ್ತಿಯ ನವರಸ ಕ್ಷಣಗಳನ್ನು ಎಳೆದು ತಂದಿಟ್ಟ ಬಗೆ ... ಇವೆಲ್ಲವೂ ಅಧ್ಯಯನ ಯೋಗ್ಯ ವಿಷಯಗಳು. ಕರ್ಮಭೂಮಿಯಲ್ಲಿ ಕರ್ಮ ಸವೆಸುವ ಕಠಿಣ ಹಾದಿಯಲ್ಲಿ ಬಸವಳಿದ ಜೀವಿಗಳು ನಡುನಡುವೆ ಆಹ್ಲಾದದ ಕ್ಷಣಗಳನ್ನು ಅನುಭವಿಸುತ್ತ ನವೋತ್ಸಾಹವನ್ನು ತುಂಬಿಕೊಳ್ಳುವ ಪ್ರಯತ್ನವೂ ಇದಾಗಿರಬಹುದು. ಬೆವರು ಸುರಿಸಿ ದುಡಿಯುವ ದೇಹಕ್ಕೆ ಶಕ್ತಿ ಮತ್ತು ಆರೋಗ್ಯದ ಅಂಶಗಳನ್ನು ಮರುಪೂರೈಕೆ ಮಾಡುವ ಶಾಸ್ತ್ರೀಯ ನೆಲೆಯಲ್ಲಿಯೇ ರೂಪುಗೊಂಡಿರುವುದು ಮಾತ್ರ ಭಾರತೀಯ ಭೋಜನ ಶೈಲಿಯ ವೈಶಿಷ್ಟ್ಯ. ಬ್ರಾಹ್ಮಣರ ಅದೃಷ್ಟವೋ ಅಥವ ಒಳಿತನ್ನು ಸ್ವೀಕರಿಸಲಾಗದ ಇತರ ವರ್ಗದ ಜನರಿಂದ ಅನುಸರಿಸಲಾಗದುದರಿಂದಲೋ - ಬ್ರಾಹ್ಮಣ ಭೋಜನ ಎಂಬುದು - "ಜಾತಿಯಲ್ಲಿ ಬ್ರಾಹ್ಮಣ" ಎಂದು ಕರೆಸಿಕೊಳ್ಳುವವರ ಸುಪರ್ದಿಯಲ್ಲಿಯೇ ಈಗಲೂ ಸುಭದ್ರವಾಗಿದೆ; ಸಂಸ್ಕರಣೆಗೊಳ್ಳುತ್ತಲೇ ಇದೆ !



ಆದ್ದರಿಂದಲೇ ರುಚಿ ಶುಚಿಯಾದ ಅಂದಿನ  "ಉಡುಪಿ ಹೋಟೆಲು"ಗಳು ಎಲ್ಲಿ ಹೋದರೂ ಜನಪ್ರಿಯವಾಗುತ್ತ, ನಂಬಿ ಅನುಸರಿಸಿದವರ ಕೈಬಿಡದೆ ರಕ್ಷಿಸುತ್ತ ಬಂದಿದೆ. (ಆದರೆ ಇಂದು ಉಡುಪಿಯಲ್ಲೂ ಅಂದಿನ ಗುಣಮಟ್ಟದ ಹೋಟೆಲುಗಳಿಲ್ಲ. ವ್ಯಾಪಾರವು ಧರ್ಮವಾಗಿದ್ದ ಕಾಲವು ಹೋಗಿದೆ!) ಎಲ್ಲರಿಗೂ ಎಲ್ಲ ಕಲೆಯೂ ಸಿದ್ಧಿಸಲಾರದು - ಆಕರ್ಷಣೆಯೂ ಸಿದ್ಧಿಸದು ಎಂಬುದಕ್ಕೆ ಶಾಸ್ತ್ರೀಯ ಪಾಕ ಕಲೆಯೂ ಉತ್ತಮ ದೃಷ್ಟಾಂತವಾಗಬಲ್ಲದು.

ಅಡುಗೆಯೂ ವಿಶಿಷ್ಟವಾದ ಕಲೆ. "ಅವಳು ಏನು ತಯಾರಿಸಿದರೂ ಅದರಲ್ಲಿ ಒಂದು ರುಚಿ ಇರುತ್ತದೆ...ಅವಳದು ಅಡುಗೆ ಕೈ..." ಎಂಬ ಶಿಫಾರಸ್ಸನ್ನು ಪಡೆಯುತ್ತಿದ್ದ ಅನೇಕರನ್ನು ನಾನೂ ಕಂಡಿದ್ದೇನೆ; ಉಂಡು ಅನುಭವಿಸಿದ್ದೇನೆ. ವೇದಿಕೆಯ ಮೇಲೆ ಪ್ರದರ್ಶಿಸುವುದು ಮಾತ್ರ ಕಲೆಯೆ? ಹಾಗೆ ಆಗಬಾರದು. ಜೀವನದ ರಂಗಭೂಮಿಯೇ ಅಡುಗೆಯ ಕೋಣೆ. ಮೂರು ಹೊತ್ತೂ ಉಣ್ಣುವುದಕ್ಕೆ ಮಾತ್ರ ಬಂದು ಕೂರುವವರಿಗೆ ಆ ಪಕ್ವಾನ್ನದ ಗುಟ್ಟನ್ನು ತಿಳಿಯುವ, ಅದನ್ನು ಮಾಡಿ ಕಲಿಯುವ ಆಸಕ್ತಿಯೂ ಇರಬೇಕು. ಜೀವನದಲ್ಲಿ ಯಶಸ್ಸು ಕಾಣಲು, ಅಡುಗೆಯ ರಂಗದಲ್ಲಿ ಸಶಕ್ತವಾಗಿ ಅಭಿನಯಿಸುವ ಕಲೆಯೂ ತಿಳಿದಿರಬೇಕು. ನಿತ್ಯಬದುಕಿನ ಪ್ರತಿಯೊಂದು ಕ್ಷಣವನ್ನೂ ಕಲಾತ್ಮಕವಾಗಿ ಸುಸಂಸ್ಕರಿತಗೊಳಿಸಿಕೊಳ್ಳುತ್ತ ಬಂದ ಬದುಕು ನಮ್ಮದು. ಬ್ರಾಹ್ಮಣ ಭೋಜನವು ನಾಗರಿಕತೆಯ ಉತ್ತುಂಗದ ಚಿಹ್ನೆಯೂ ಹೌದು.

ಈ "ಅಡುಗೆ" ಎನ್ನುವುದು ಮನೆಯ ಸದಸ್ಯರ ನಡುವೆ ಉತ್ತಮ ಬಾಂಧವ್ಯವನ್ನು ಬೆಸೆಯುವ ಒಂದು ಕರ್ಮೋಪಕರಣವೂ ಹೌದು. "ಒಬ್ಬರು ಒಳಗೆ ಬಂದರೆ - ಇಬ್ಬರು ಹೊರಗೆ ಹೋಗಬೇಕು" ಎನ್ನುವಂತಹ ಇಂದಿನ ಮನೆಗಳ ಕೋಳಿಗೂಡಿನಂತಹ ಅಡುಗೆ ಕೋಣೆಯಲ್ಲಿಯೂ - ಮನಸ್ಸಿದ್ದರೆ ಕೂಡಿ ದುಡಿಯುವುದು ಸಾಧ್ಯವಿದೆ. ಮಾತಾಡುತ್ತ ನಗುತ್ತ ನಿಷ್ಠೆಯಿಂದ ನಿತ್ಯಯಜ್ಞದಂತೆ ಅಡುಗೆಯನ್ನು ಮಾಡುತ್ತ, ಕೆಲವೊಮ್ಮೆ ಪರಸ್ಪರ ಮುಖ ಊದಿಸಿಕೊಳ್ಳುತ್ತ, ಮತ್ತೆ ರಾಜಿಯಾಗುತ್ತ ಜತೆಯಲ್ಲಿಯೇ ಕೆಲಸ ಮಾಡುವ - ಬದುಕುವ ಮಜವೇ ಬೇರೆ. ಹೊಂದಿಕೊಂಡು ಬದುಕುವ ಪಾಠವು ಸಿಗುವುದೇ ಮನೆಯ ಅಡುಗೆ ಕೋಣೆಯಲ್ಲಿ.

ಹೀಗೆ ಪ್ರತೀದಿನವೂ ಯಜ್ಞಕಾರ್ಯ ನಡೆಸುವ ಅಡುಗೆ ಕೋಣೆಯು ಇಡೀ ಮನೆಗೆ ಶೋಭೆ ನೀಡುವ ಒಂದು ಪವಿತ್ರ ಕರ್ಮಸ್ಥಾನ. ಆ ಯಜ್ಞ ಕ್ಷೇತ್ರವು ಅತ್ಯಂತ ಸ್ವಚ್ಛವಾಗಿರಬೇಕು. "ಅಡುಗೆಯನ್ನು ಮಾಡಿ ಮುಗಿಸಿ ಹೊರಗೆ ಬಂದಾಗ - ಆ ಅಡುಗೆಯ ಕೋಣೆಯಲ್ಲಿ ಅದುವರೆಗೆ ಗಂಟೆಗಟ್ಟಲೆ ಸೃಜನಶೀಲ ಕೆಲಸವೊಂದು ನಡೆದಿತ್ತು ಎಂಬ ಕುರುಹೂ ಕಾಣಿಸಬಾರದು. ಅಷ್ಟು ಸುವ್ಯವಸ್ಥಿತವಾಗಿಟ್ಟೇ ಅಲ್ಲಿಂದ ಹೊರಗೆ ಬರಬೇಕು..." ಎಂಬ ಮೇಲ್ಪಂಕ್ತಿಯನ್ನು ಹಾಕಿಕೊಟ್ಟವಳು ನನ್ನ ಅಮ್ಮ. ಅದು ಪ್ರತಿಯೊಬ್ಬ ಅಮ್ಮಂದಿರಿಂದ ಸಿಗಬೇಕಾದ ಪಾಠವೂ ಹೌದು.



ನನ್ನ ಬಾಲ್ಯ ಕಾಲದಲ್ಲಿ ನಮ್ಮ ಮನೆಯಲ್ಲಿ ವಿಶೇಷದ ಅಡುಗೆಯಿದ್ದಾಗ ಕುಪ್ಪಯ್ಯ ಮಧ್ಯಸ್ಥರೆಂಬ ಒಬ್ಬರು ಅಡುಗೆಯವರು ಬರುತ್ತಿದ್ದರು. ಆಗಲೇ ಅವರು ಸುಮಾರು 50 ವರ್ಷಕ್ಕೂ ಮಿಕ್ಕಿದ ವಯಸ್ಕರಾಗಿದ್ದರು. ಅವರ ಅಡುಗೆಯನ್ನೂ ಅಡುಗೆಯ ಶೈಲಿಯನ್ನೂ ನನ್ನ ಅಮ್ಮನು ಬಾಯ್ತುಂಬ ಹೊಗಳುತ್ತಿದ್ದಳು. ಅವರ ಕಾಲಾನಂತರ ಅಡುಗೆ ಮಾಡಲು ಬರುತ್ತಿದ್ದ ಕೆಲವು ಅಡುಗೆಯವರ ಮಾತು, ಕೆಲಸದ ಶೈಲಿಯನ್ನು ಕಂಡಾಗಲೆಲ್ಲ ನನ್ನ ಅಮ್ಮನು ಅಂದಿನ ಕುಪ್ಪಯ್ಯ ಮಧ್ಯಸ್ಥರನ್ನು ನೆನಪಿಸಿಕೊಳ್ಳುತ್ತ ಪಚಗುಟ್ಟುತ್ತಿದ್ದಳು. ಹಳೆಯ ಪುರಾಣ ಶುರುಮಾಡುತ್ತಿದ್ದಳು. ಯಾವುದೇ ಪುರಾಣವು ಸುಮ್ಮನೆ ನೆನಪಾಗುವುದಿಲ್ಲ. ಒಂದಕ್ಕೊಂದು ಹೋಲಿಸಿಕೊಳ್ಳುವ ಮನಸ್ಸಿಗೆ "ಪುರಾಣ ಕನವರಿಕೆ"ಯು ನೆಚ್ಚಿನ ಸಂಗಾತಿ. ಒಬ್ಬ ಅಡುಗೆಯವರು ಅಡುಗೆಗೆಂದು ಒಳಗೆ ಹೊಕ್ಕರೆಂದರೆ ಇಡೀ ಅಡುಗೆ ಕೋಣೆಯು ರಣರಂಗದಂತೆ "ಮುರಿದಟ್ಟೆಗಳ, ಸುರಿದ ಕರುಳ, ಒರೆದ ಬಸೆಯ, ಕೊರೆದ ಸುಂಟಿಗೆಯ, ಹರಿದ ಕೆನ್ನೀರ...ತ್ಯಾಜ್ಯದ ಸಾಲು - ಯಮನುಂಡು ಕಾರಿದಂತೆ..." ಪರಿವರ್ತಿತವಾದಾಗಲೆಲ್ಲ ನಮ್ಮ ಅಮ್ಮನ ಪುರಾಣವು ಶುರುವಾಗುತ್ತಿತ್ತು !!

ಅಂತೂ ಆಹ್ವಾನಿತ ಅಡುಗೆಯವರ ಕೆಲಸವೆಲ್ಲವೂ ಮುಗಿದು ಅವರು ನಿರ್ಗಮಿಸಿದ ನಂತರ, ಅಲ್ಲಿನ ದೃಶ್ಯವನ್ನು ಅದಾಗಲೇ ಕಂಡಿರುತ್ತಿದ್ದ ಅಮ್ಮನು ತನ್ನ ಅಡುಗೆ ಕೋಣೆಯನ್ನು ಪ್ರವೇಶಿಸಲು ಮನಸ್ಸಾಗದೆ "ಜಾನಿಸುತ್ತ" ಕೂರುತ್ತಿದ್ದಳು. ಸಂಜೆಯಾಗುವಾಗ ಆ ಅಡುಗೆಯ ಕೋಣೆಯೆಂಬ ರಣರಂಗವನ್ನು ಸಿಡುಕುತ್ತ ಪ್ರವೇಶಿಸುತ್ತಿದ್ದ ಅಮ್ಮನು... "ಮಾಡಿದ್ದನ್ ಈಗ ತೀಡ್ಕಣ್ಕ್... ಈ ರಾಮಾಯಣನ್ನ ಹೇಂಗ್ ಸರಿ ಮಾಡೂದಾ?" ಅಂತ ತಲೆಯ ಮೇಲೆ ಆಕಾಶವೇ ಬಿದ್ದ ಹಾಗೆ ನಿಂತುಕೊಳ್ಳುತ್ತಿದ್ದುದು ಈಗಲೂ ನೆನಪಾಗುತ್ತದೆ. ಅಟ್ಟ ಒಲೆಯ ಸುತ್ತಲೂ ಸಾಸಿವೆ, ಕರಿಬೇವು, ನೆಲದ ತುಂಬ ಹಳದಿ ಕೆಂಪು ಬಣ್ಣದ ರಸಗುರುತುಗಳು, ಒಲೆಯ ಮೇಲೆ - ಕೆಳಗೆಲ್ಲ ಉಕ್ಕಿ ಕರಟಿದ ಸಂಬಾರ ವಿಶೇಷಗಳು, ಬುಡ ಕರಟಿದ ಪಾತ್ರೆಗಳು, ಮಿಕ್ಸರ್ ನಲ್ಲಿ ಒಣಗಿ ಗಟ್ಟಿಯಾದ ಅವಶೇಷಗಳು, ಸಿಂಕಿನಲ್ಲಿ ಶೇಖರವಾದ ತ್ಯಾಜ್ಯ ವಸ್ತುಗಳ ಜೊತೆಗೆ ಗೋಡಂಬಿ-ದ್ರಾಕ್ಷಿಯ ತುಂಡುಗಳು, ಇಷ್ಟಿಷ್ಟು ಹಾಲನ್ನು ಉಳಿಸಿ ಬಿಸಾಡಿದ ಹಾಲಿನ ಪ್ಯಾಕೆಟ್ ಗಳು, ಬಾಣಲೆಯಲ್ಲಿ ಕೇಜಿಗಟ್ಟಲೆ ಉಳಿಸಿದ ಅಟ್ಟೆಣ್ಣೆ.... ಇವನ್ನೆಲ್ಲ ಹುಬ್ಬು ಗಂಟಿಕ್ಕಿಕೊಂಡು ನೋಡುತ್ತ... ಅಡುಗೆ ಕೋಣೆಗೆ ಎರಡು ಮೂರು ಸುತ್ತು ಬರುತ್ತಿದ್ದ ನಮ್ಮ ಅಮ್ಮ ಈಗಲೂ ನನಗೆ ನೆನಪಾಗುತ್ತಾಳೆ.

"ಚಿಂತೆ ಮಾಡುತ್ತ ಎಷ್ಟು ಸುತ್ತು ಬಂದರೂ ಕ್ರಿಯೆಗೆ ತೊಡಗದೆ ಉತ್ತರ ಕಾಂಡವು ಹೊಮ್ಮುವುದಾದರೂ ಹೇಗೆ? ಬರೇ ಯೋಚನೆ ಮಾಡಿದರೆ ಕೆಲಸ ಮುಂದೆ ಸಾಗುತ್ತದೆಯೆ? ಒಂದು ಕರ್ಮವನ್ನು ಇನ್ನೊಂದು ಕರ್ಮದಿಂದಲೇ ಸವೆಸಬೇಕು! ನಿವಾರಿಸಬೇಕು! ಕರ್ಮಭಾವವನ್ನು ಎತ್ತರಿಸಬೇಕು! ಸೀರೆಯ ನೆರಿಗೆ ಎತ್ತಿ ಕಟ್ಟಿ, ಕೆಲಸ ಶುರುಮಾಡು" ಎಂದೂ ಅಮ್ಮನೇ ದಾರಿ ತೋರಿಸುತ್ತಿದ್ದಳು. ಅದಾಗಲೇ ವಯಸ್ಸಾಗಿದ್ದ ಅಮ್ಮನನ್ನು ಆಗ ನಾವು ಸಂತೈಸುತ್ತಿದ್ದೆವು. "ಅಮ್ಮ, ನೀನು ಈಗ ಸುಮ್ಮನೆ ಹೊರಗೆ ಕೂತಿರು. ಒಂದು ಗಂಟೆ ಬಿಟ್ಟು ಒಳಗೆ ಬಾ... ಆಗ ನೋಡು..ನಿನ್ನ ಅಡುಗೆ ಕೋಣೆಯು ಥಳಥಳ ಹೊಳೆಯುತ್ತಿರುತ್ತದೆ..." ಎಂದು ಹೇಳಿ ಅವಳನ್ನು ಹೊರಗೆ ಕೂಡಿಸಿ ನಾವು ಒಟ್ಟಾಗಿ ಶುದ್ಧೀಕರಣ ಕಾರ್ಯದಲ್ಲಿ ಧುಮುಕುತ್ತಿದ್ದುದೂ ಈಗ ನೆನಪಾಗುತ್ತದೆ. ಹೊರಗೆ ಕೂತ ಅಮ್ಮನ ಬಾಯಿಂದ ಆಗ ಸಹಸ್ರ ನಾಮಾರ್ಚನೆ... ಪುರಾಣ ವಾಚನ ನಡೆಯುತ್ತಲೇ ಇರುತ್ತಿತ್ತು. ಅವಳ ಮಾತುಗಳನ್ನು ಕೇಳುತ್ತ ಕೆಲಸ ಮಾಡುತ್ತಿದ್ದ ನಮಗೆ ಸಮಯ ಸರಿದದ್ದೇ ತಿಳಿಯುತ್ತಿರಲಿಲ್ಲ. "ಅಡುಗೆ ಮಾಡುವುದು ಹೀಗಾ? "ಇನ್ನೊಬ್ಬರ ಮನೆಯ ಕೆಲಸ" ಎಂದುಕೊಂಡು ಮಾಡುವ ಕೆಲಸಗಳೆಲ್ಲವೂ ಹೀಗೇ ಆಗುವುದು. ಯಾರೇ ಆದರೂ ಒಂದು ಕೆಲಸ ಮಾಡಿ ಹೋದ ಮೇಲೆ ಅದನ್ನು ಮಾಡಿಸಿಕೊಂಡವರು ಹಿಡಿ ಶಾಪ ಹಾಕುವ ಹಾಗಿರಬಾರದು; ಮೆಚ್ಚಿಕೊಳ್ಳುವ ಹಾಗಿರಬೇಕು..." ಎನ್ನುತ್ತಲೇ - ಸುಮ್ಮನೆ ಕೂರಲಾರದೆ ತಾನೂ ಒತ್ತರೆಯಲ್ಲಿ ತೊಡಗಿಕೊಳ್ಳುತ್ತಿದ್ದ ಅಮ್ಮ ಈಗಲೂ ನನಗೆ ನೆನಪಾಗುತ್ತಾಳೆ. "ಅಮ್ಮ, ನಾವು ಅಪೇಕ್ಷಿಸುವ ಹಾಗೇ ಕೆಲಸ ಮಾಡುವವರು ನಮಗೆ ಕಾಣಿಸಿದರೆ ಅದು ನಮ್ಮ ಭಾಗ್ಯ. ಏನೋ... ನಾವು ಕರೆದಾಗ ನಮಗಾಗಿ ಬಂದು, ನಮ್ಮ ಕೆಲಸದ ಭಾರವನ್ನು ಒಂದು ದಿನದ ಮಟ್ಟಿಗೆ ಸುಧಾರಿಸಿ ಕೊಟ್ಟು ಹೋದರಲ್ಲ? ಈಗ ಮುಗಿಯಿತಲ್ಲ? ಬಿಟ್ಟುಬಿಡು..." ಎನ್ನುತ್ತ - ನಾವು ಮಕ್ಕಳು - ಅವಳನ್ನು ಸಂತೈಸುತ್ತಿದ್ದುದೂ ಇತ್ತು.

ಒಮ್ಮೆ, ಒಬ್ಬರು ಅಡುಗೆಯವರು ದೇವೀಪೂಜೆಯ ನೈವೇದ್ಯಕ್ಕೆ "ಗುಡಾನ್ನ" ಮಾಡಿದ್ದರು. ಅನಂತರ ಅಡುಗೆಕೋಣೆಯ ಸಿಂಕಿನಲ್ಲಿ ದ್ರಾಕ್ಷಿ, ಗೋಡಂಬಿ, ಉತ್ತುತ್ತೆ, ಬಾದಾಮು... ಎಲ್ಲವೂ ಇನ್ನೊಮ್ಮೆ ಗುಡಾನ್ನ ತಯಾರಿಸಲು ಸಾಕಾಗುವಷ್ಟು ಬಿದ್ದಿದ್ದವು!! ಈ ಅನ್ಯ ವಸ್ತುಗಳ ಒತ್ತಡದಿಂದ ಸಿಂಕಿನ ನೀರು ಹರಿದು ಹೋಗದಂತಾಗಿ ನೀರು ಕಟ್ಟಿಕೊಂಡಿತ್ತು!

ಹೀಗಾದಾಗಲೆಲ್ಲ ಅಮ್ಮ - ಮತ್ತೆ ಮತ್ತೆ ಹಿಂದೆ ಸರಿಯುತ್ತಿದ್ದಳು... ಯಾವುದೇ "ಉತ್ತಮ"ವನ್ನು ಸವಿದವರಿಗೆ "ಕನಿಷ್ಠ"ಗಳ ಜೊತೆಗೆ ಏಗುವಾಗ ಹೀಗೆಲ್ಲ ಆಗುವುದು ಸ್ವಾಭಾವಿಕ. ಅಮ್ಮನ ಕತೆಯೂ ಅದೇ ಆಗಿತ್ತು. ಅವಳಿಗೆ ಪುರಾಣ ನೆನಪಾಗುತ್ತಿದ್ದುದು ಇಂತಹ ಕ್ಷಣಗಳಲ್ಲಿ... "ಹೆಣೆ, ಸುಮ್ ಸುಮ್ನೆ ಮಾತಾಡುಕೆ ನಂಗೇನ್ ಮಂಡೆ ಕೆಟ್ಟಿತ್ತಾ? ಕೆಲಸ ಮಾಡುದ್ ಹೀಂಗಲ್ಲ.." ಎನ್ನುತ್ತ ಹಿಂದೆ ಸರಿಯುತ್ತಿದ್ದಳು.

"ಆ ಕುಪ್ಪಯ್ಯ ಮಧ್ಯಸ್ಥರು ಅಡುಗೆಗೆ ಬಂದರೆ ಎಷ್ಟು ನಿಶ್ಚಿಂತೆಯಿರುತ್ತಿತ್ತು... ಒಂಚೂರೂ ಹಾಳುಧೂಳು ಮಾಡದೆ ಅಚ್ಚುಕಟ್ಟಾಗಿ ಕೆಲಸ ಮಾಡುತ್ತಿದ್ದರು; ಮನೆಯವರು ಒದಗಿಸಿದ ಮಿತ ವಸ್ತುಗಳಿಂದಲೇ ಎಷ್ಟು ಬಗೆಯ ರುಚಿರುಚಿಯಾದ ವ್ಯಂಜನಗಳನ್ನು ಸಿದ್ಧಪಡಿಸುತ್ತಿದ್ದರು... ಒಂದು ಸೌತೆಕಾಯಿಯಿಂದ ವ್ಯಂಜನಗಳ ಗುರುತೇ ಸಿಗದ ಹಾಗೆ ಮೂರ್ನಾಲ್ಕು ಬಗೆಯ ಪಾಕವನ್ನು ಮಾಡಿಡುತ್ತಿದ್ದರು... ಇಲ್ನೋಡು... ಎಲ್ಲ ತರಕಾರಿಯನ್ನೂ ಅರ್ಧರ್ಧ ಕತ್ತರಿಸಿ ಉಪಯೋಗಿಸಿದ್ದಾರಲ್ಲ? ಕತ್ತರಿಸಿ ಉಳಿಸಿದ ತರಕಾರಿ ನಾಳೆಗೆ ಹಾಳಾಗುವುದಿಲ್ಲವಾ? ಕಸದ ರಾಶಿ ನೋಡು... ಕಾಲಿಡಲೂ ಜಾಗ ಇಲ್ಲ... ಇಡೀ ಅಡುಗೆಕೋಣೆಯ ಗುರುತು ಸಿಗದಿದ್ದ ಹಾಗೆ ಮಾಡಿ ಇಡುವುದು ಯಾಕೆ? ಆ ಕುಪ್ಪಯ್ಯ ಮಧ್ಯಸ್ಥರು ಅಡುಗೆ ಪೂರೈಸಿ ಹೊರಟುಹೋದ ಮೇಲೆ ಆ ಅಡುಗೆ ಕೋಣೆಯನ್ನು ಒಮ್ಮೆ ಗುಡಿಸಿ ಒರೆಸಿದರೆ ನನ್ನ ಅಡುಗೆ ಕೋಣೆಯು ಮತ್ತೊಮ್ಮೆ ತಯಾರಾಗಿ ಬಿಡುತ್ತಿತ್ತು. ಈಗಿನ ಅಡುಗೆಯವರು ಚೆಲ್ಲಿಹೋದ ವಸ್ತುಗಳಿಂದ - ಇನ್ನೊಂದು ಸಮಾರಂಭವನ್ನೇ ಮಾಡಬಹುದು; ಇನ್ನೊಂದಷ್ಟು ಜನರಿಗೆ ಊಟ ಹಾಕಬಹುದು... ಇದೆಂತಹ ಕೆಲಸಗಾರರು ಈಗ ಹುಟ್ಟಿಕೊಂಡಿದ್ದಾರೆ?... ಮಗಾ, ಇನ್ನು ಮುಂದೆ ನನ್ನಿಂದ ಆಗುವಷ್ಟು ಜನರಿಗೆ ನಾನೇ ಅಡುಗೆ ಮಾಡ್ತೇನೆ... ಯಾವ ಅಡುಗೆಯವರನ್ನೂ ಕರೆಸುವುದು ಬೇಡ. ಈ ಹಾಳು - ಧೂಳಾಗುವುದನ್ನು ನನಗೆ ನೋಡಲಿಕ್ಕೆ ಆಗುವುದಿಲ್ಲ. ನಮ್ಮಿಂದ ಅಡುಗೆ ಮಾಡಲು ಆಗುವಷ್ಟು ಜನರಿಗೆ ಮಾತ್ರ ಊಟ ಹಾಕಿದರೆ ಸಾಕು... ಈ ಅಡುಗೆಯವರ ಸಹವಾಸವೇ ಬೇಡ..." ಹೀಗೆ ಗೊಣಗುಟ್ಟುತ್ತ ಮುಂದಿನ ಎರಡು ದಿನಗಳವರೆಗೂ ಅಮ್ಮನ ಪುರಾಣಪ್ರವಚನ ನಡೆಯುತ್ತಿತ್ತು. ಮುಂದೂ... ಮತ್ತೊಮ್ಮೆ ಅಡುಗೆಯವರನ್ನು ನಾವು ಕರೆಸುವುದು, ಅನಂತರ ಅಮ್ಮನ ಗೊಣಗಾಟ... ಇವೆಲ್ಲವೂ ಮರುಕಳಿಸುತ್ತಲೇ ಇತ್ತು.



ಕೆಲವು ವರ್ಷಗಳ ನಂತರ ಇನ್ನೊಬ್ಬರು ಅಡುಗೆಯವರು ಬಂದಿದ್ದರು. ಮನೆಯ ಸುತ್ತಲೂ ಓಡಾಡಿ ಕೆಲವು ಎಲೆ, ಬೇರುಗಳನ್ನು ತಾವೇ ಕಿತ್ತು ತಂದು, ನಾವು ಸೂಚಿಸಿದ ವ್ಯಂಜನಗಳ ಜೊತೆಗೆ ಇನ್ನೊಂದು ಹೊಸ ವ್ಯಂಜನವನ್ನೂ ತಯಾರಿಸಿದ್ದ ಅವರು, "ಇದೇನು ಹೇಳಿ? ಉಂಡು ರುಚಿ ನೋಡಿ ಪತ್ತೆ ಮಾಡಿ ನೋಡುವ.." ಎನ್ನುತ್ತ, ಅವರೇ ಬಡಿಸುತ್ತ ಊಟದ ಪಂಙ್ತಿಯಲ್ಲಿ ಓಡಾಡುತ್ತಿದ್ದರು. "ತುಂಬ ರುಚಿಯಾಗಿದೆ; ಯಾವುದರದ್ದೆಂದು ಗೊತ್ತಾಗುವುದಿಲ್ಲ..." ಎನ್ನುತ್ತ ಎಲ್ಲರೂ ಮತ್ತೆ ಮತ್ತೆ ಅದನ್ನು ಕೇಳಿ ಹಾಕಿಸಿಕೊಂಡು ರುಚಿಯ ಸಂಶೋಧನೆಯಲ್ಲಿ ಮುಳುಗುವಂತಾಗಿತ್ತು. ಆಗ ಆ ಅಡುಗೆಯವರು - ಎರಡು ಎಲೆ, ಒಂದು ಬೇರನ್ನು ಹಿಡಿದುಕೊಂಡು ಊಟದ ಪಂಙ್ತಿಯಲ್ಲಿ ಪ್ರದರ್ಶಿಸುತ್ತ "ನೋಡಿ...ಇದರ ತಂಬುಳಿ; ಇದರ ಚಟ್ನಿ..." ಎನ್ನುತ್ತ ಖುಶಿ ಪಡುತ್ತಿದ್ದರು. ರುಚಿಯಾಗಿ ಅಡುಗೆ ತಯಾರಿಸುವುದು ಮಾತ್ರವಲ್ಲದೆ ತಾವು ಮಾಡಿದ ಹೊಸ ರುಚಿಯನ್ನು ಎಲ್ಲರಿಗೂ ಖುಶಿಯಾಗುವಂತೆ ತಲುಪಿಸುತ್ತಿದ್ದ ಅವರ ಅಡುಗೆ ಮತ್ತು ಕಾರ್ಯಶೈಲಿಯನ್ನು ನೋಡಿ ನಾವೂ ಖುಶಿಪಟ್ಟಿದ್ದೆವು.

ಅಡುಗೆಯಲ್ಲಿ ಆಸಕ್ತಿಯಿದ್ದರೆ ಮತ್ತು "ತನ್ನದೇ ಕಾರ್ಯಕ್ರಮ" ಎಂಬ ಸಜ್ಜನಿಕೆಯಿದ್ದರೆ ಮಾತ್ರ ಇವೆಲ್ಲವೂ ಸಾಧ್ಯ. 100 ಜನರಿಗೆ ಬೇಕಾದಷ್ಟು ಅಡುಗೆ ತಯಾರಿಸಲು ಹೇಳಿದರೆ ಅಲ್ಲಿಂದಲ್ಲಿಗೆ ಸರಿಹೊಂದುವಂತೆ ಅವರು ಅಡುಗೆಯ ಪ್ರಮಾಣವನ್ನು ನಿಯಂತ್ರಿಸುತ್ತಿದ್ದ ರೀತಿಯು ಮಾತ್ರ ನನ್ನನ್ನು ಅಚ್ಚರಿಯಲ್ಲಿ ಕೆಡವಿದ್ದೂ ಇದೆ. ತಮ್ಮ ಕರ್ತವ್ಯವನ್ನು ಪೂರೈಸಿ ಹಿಂದಿರುಗುವ ಮೊದಲು ಖರ್ಚಾಗದೆ ಉಳಿದ ಭಕ್ಷ್ಯವನ್ನು ಹೇಗೆ ಜೋಪಾನ ಮಾಡಬಹುದು ಎಂಬ ಕಿವಿಮಾತನ್ನೂ ಹೇಳುತ್ತಿದ್ದ ಅಡುಗೆಯವರು - ಆ ಅಡಿಗರು! "ನಿಮ್ಮ ಅಡುಗೆ ತುಂಬ ಚೆನ್ನಾಗಿತ್ತು.." ಎಂದು ಮನೆಯೊಡೆಯ ಹೇಳಿದರೆ "ನಾವಂತೂ ಎಲ್ಲ ಕಡೆಯೂ ಒಂದೇ ರೀತಿ ತಯಾರಿಸುತ್ತೇವೆ. ಕೆಲವು ಸಾರಿ ತುಂಬ ರುಚಿಯಾಗಿರುತ್ತದೆ; ಕೆಲವು ಸಾರಿ ಹಾಗಿರುವುದಿಲ್ಲ. ಎಲ್ಲವೂ ಮಾಡಿಸಿದವರ ಪುಣ್ಯ! ಅನ್ನದಾತಾ ಸುಖೀಭವ!.."ಎನ್ನುತ್ತ ಕೈಯೆತ್ತಿ ಆಶೀರ್ವದಿಸುತ್ತಿದ್ದರು. ಆಗ "ಅಯ್ಯೋ ಮಾರಾಯ್ರೇ, ಅನ್ನದಾತ ನೀವು... ನಾವು ಉಂಡವರು; ಆದ್ದರಿಂದ ನೀವೂ ಸುಖವಾಗಿರಿ..."

ಹೀಗೆ - "ನೀವು ದೊಡ್ಡವರು - ನೀವು ದೊಡ್ಡವರು..." ಎಂದು ಪರಸ್ಪರ ಶುಭ ಹಾರೈಸಿಕೊಳ್ಳುವ ಸಜ್ಜನಿಕೆಯೂ ಮನೆಯಲ್ಲಿ ಪ್ರಕಾಶಿಸುತ್ತಿದ್ದುದುಂಟು. ಯಾವುದೇ ಕ್ರಿಯೆಯಲ್ಲಿ ತೊಡಗಿಕೊಳ್ಳುವವರು ಹೀಗೆ "ಕರ್ಮಣ್ಯ" ರಾದರೆ - ನಿಷ್ಣಾತರಾದರೆ - ಕುಶಲರಾದರೆ - ಮುಖ್ಯವಾಗಿ ಸಜ್ಜನರಾದರೆ ಅವರ ಕರ್ಮವು ಅವರಿಗೂ ಇತರರಿಗೂ ಸುಖ ನೀಡುತ್ತದೆ.

ಆದರೆ ಇಂದಿನ ಕಾರ್ಯಶೈಲಿಯು ಬದಲಾಗಿದೆ. ಯಾವುದೇ ಪುರಾಣವಾಚನದಿಂದ ಸರಿಹೋಗಲಾರದಷ್ಟು ಬದಲಾಗಿದೆ. ಒಂದೆಡೆ... ಮಾಡುವ ಕೆಲಸಕ್ಕೂ ಪಡೆಯುವ ಸಂಬಳಕ್ಕೂ ಅರ್ಥಾತ್ ಹೊಂದಿಕೆಯಿಲ್ಲದ - ಧನರಾಶಿಯ ಮೇಲೆ ಕೂತು ಮೂಲೆಮೂಲೆಗೆ ಹಾಯುತ್ತಿರುವ ಜಂಬದ ಮ್ಯಾಜಿಕ್, ಇನ್ನೊಂದೆಡೆ...ಅಂತಹ ದುಡ್ಡನ್ನು ಬೆವರು ಸುರಿಸುತ್ತ ತೊಳೆದು ಬಳಿದು ಬಿಡುವ ಇನ್ನೊಂದು ಲಾಜಿಕ್. ಇಂತಹ ಸಾಮಾಜಿಕ ಅಸಮಂಜಸ ಭಾವನೆಲೆಯಿಂದಾಗಿ - ಕಲಾತ್ಮಕವಾಗಿ ಕೆಲಸಮಾಡುವ - "ಎಲ್ಲರೂ ನಮ್ಮವರು" ಎಂಬ ಇಚ್ಛಾಶಕ್ತಿಯಲ್ಲಿಯೇ ಲೋಪವಾದಂತಿದೆ. "ಇವರಿಗೇನು ಧಾಡಿಯಾ? ಎಲ್ಲೆಲ್ಲೋ ದುಡ್ಡು ಚೆಲ್ಲುವ ಜನ... ದಾರಿ ಬದಿಯ ಏನೇನನ್ನೋ ತಿಂದು ಸುಖಿಸುವ ಜನ; ಇವರಿಗೆಲ್ಲ ಏನು ಮಾಡಿಹಾಕಿದರೂ ನಡೆಯುತ್ತದೆ; ಏನೋ ಎತ್ತಿ ಬಡಿದು ಕುಕ್ಕಿ ಹೋಗಿಬಿಡುವ... ನಮಗೇನಂತೆ?" ಎಂಬ ಹುಚ್ಚು ಅಡುಗೆಯಾಟಗಳಿಂದ ತಾತ್ಕಾಲಿಕ ಉಪಕಾರವಾದರೂ - ವೃತ್ತಿ ಮತ್ತು ವ್ಯಕ್ತಿ - ಎರಡರದೂ ಗೌರವ ಕುಸಿಯುತ್ತದೆ. ಒಮ್ಮೊಮ್ಮೆ ಅಧ್ವಾನಗಳೂ ಸಂಭವಿಸುವುದಿದೆ.

ಇತ್ತೀಚೆಗೆ ಮಂಗಳೂರಿನ ಒಬ್ಬರು ಅಡುಗೆಯವರಲ್ಲಿ ಒಂದು ಭಕ್ಷ್ಯವನ್ನು ಸಿದ್ಧಪಡಿಸಲು ಕೇಳಿಕೊಂಡಿದ್ದೆ. "ಒಂದು ಸಣ್ಣ Function ಇದೆ; ತೆಂಗಿನಕಾಯಿಯ ಸುಕ್ಕಿನುಂಡೆ ಮಾಡಿಕೊಡಿ.." ಅಂದಾಗ, "ಹಾಗೆಂದರೇನು?" ಅಂದರು. ಆಗ ಅಚ್ಚುಕಟ್ಟಾಗಿ ಕೂತು "ತಯಾರಿಸುವ ವಿಧಾನ" ವನ್ನು ಅವರಿಗೆ ವಿವರಿಸಿದೆ. "ಬಹಳ ಸುಲಭದ ಸಾಂಪ್ರದಾಯಿಕ ತಿಂಡಿ ಇದು. ನಾನೇ ಮನೆಯಲ್ಲಿ ಮಾಡಿದರೆ, ಕರಿದು ಉಳಿದ ಎಣ್ಣೆಯನ್ನು ಮತ್ತೊಮ್ಮೆ ಉಪಯೋಗಿಸಲು ಮನಸ್ಸೊಪ್ಪದೆ, ಅದನ್ನು ಚೆಲ್ಲುವಾಗ ಪ್ರತೀ ಬಾರಿಯೂ ಬೇಸರವಾಗುತ್ತದೆ. ಅದಕ್ಕೇ ನಿಮಗೆ ಹೇಳುತ್ತಿದ್ದೇವೆ. ಹೊಸ ಎಣ್ಣೆಯಲ್ಲಿಯೇ ತಯಾರಿಸಿ. ನಿಮ್ಮ ವೆಚ್ಚವನ್ನು ದಾಕ್ಷಿಣ್ಯವಿಲ್ಲದೆ ವಸೂಲಿ ಮಾಡಬಹುದು.." ಎಂದಿದ್ದೆ.

ತಕ್ಕಷ್ಟು ಬೆಲ್ಲದ ಹದವಾದ ಪಾಕ ಮಾಡಿಕೊಂಡು ಅದಕ್ಕೆ 10-12 ತೆಂಗಿನಕಾಯಿಯ ತುರಿ, ಸ್ವಲ್ಪ ಬೊಂಬಾಯ್ ರವೆ, ಏಲಕ್ಕಿ ಹುಡಿ, ಮತ್ತು ಪರಿಮಳಕ್ಕೆ ಎರಡು ಚಮಚ ತುಪ್ಪವನ್ನು ಬೆರೆಸಿ ಇಡಿ. ಸ್ವಲ್ಪ ತಣಿದ ಮೇಲೆ ಉಂಡೆ ಕಟ್ಟಿ. ನೆನಸಿಟ್ಟ ಎರಡು ಸಿದ್ದೆ ಅಕ್ಕಿಯನ್ನು ನುಣ್ಣಗೆ ಅರೆದು ಹಿಟ್ಟನ್ನು ತಯಾರಿಸಿಕೊಳ್ಳಿ. ಎರಡು ಚಿಟಿಕೆ ಉಪ್ಪನ್ನು ಆ ಅಕ್ಕಿಯ ಹಿಟ್ಟಿಗೆ ಮಿಶ್ರಮಾಡಿ, ಕಟ್ಟಿ ಇರಿಸಿದ ಉಂಡೆಯನ್ನು ಅದ್ದಿ ಹಾಕುವಷ್ಟು ದಪ್ಪಕ್ಕೆ ಹಿಟ್ಟನ್ನು ಸಿದ್ಧಪಡಿಸಿಕೊಳ್ಳಿ. ಬಾಣಲೆಯಲ್ಲಿ ತೆಂಗಿನೆಣ್ಣೆಯನ್ನು ಹಾಕಿ ಕಾಯಿಸಿ, ಕಟ್ಟಿಟ್ಟ ಒಂದೊಂದೇ ಉಂಡೆಯನ್ನು ಆ ಆಕ್ಕಿಯ ಹಿಟ್ಟಿನಲ್ಲಿ ಅದ್ದಿ ಎಣ್ಣೆಗೆ ಹಾಕಿ. ಬೆಂದ ಬಣ್ಣ ಬಂದ ಮೇಲೆ ಎತ್ತಿಡುತ್ತ ಬನ್ನಿ ಅಷ್ಟೆ..." ಅಂದೆ.

ನನ್ನ ಕತೆಯನ್ನೆಲ್ಲ ಕೇಳಿದ ಮೇಲೆ ಆ ಮಹಾನುಭಾವರು "ನೋಡಿ, ಈ ಮಂಗಳೂರಿನಲ್ಲಿ ಯಾರೂ ಇದನ್ನು ತಯಾರಿಸುವುದಿಲ್ಲ. ಉಡುಪಿ - ಕುಂದಾಪುರದ ಕಡೆ ತಯಾರಿಸಬಹುದು...ಕೇಳಿ ನೋಡಿ.." ಅಂದರು. "ತಯಾರಿಸುವ ವಿಧಾನವನ್ನು ನಾನು ಹೇಳಿದ್ದೇನಲ್ಲ? ಹಾಗೇ ತಯಾರಿಸುವುದೂ ಕಷ್ಟವೆ?" ಎಂದು ನಾನು ಚೌಕಾಸಿಗಿಳಿದೆ. "ಇಲ್ಲ; ಇಲ್ಲ. ನಾವು ಅದನ್ನು ತಯಾರಿಸುವುದೇ ಇಲ್ಲ... ನಾವು ದಿನವೂ ತಯಾರಿಸುವ ಹಿಟ್ಟಿನ ಹೋಳಿಗೆ, ಚಿಕ್ಕಿ, ನೆಲಗಡಲೆ ಉಂಡೆ, ಎಳ್ಳಿನುಂಡೆ... ಬೇಕಿದ್ದರೆ ಹೇಳಿ... ಮಾಡಿಕೊಡುತ್ತೇವೆ..." ಅಂದರು!

ಹೇಗಿದೆ?... "ಸ್ವಾಮೀ, ನನಗೆ ತೊಕ್ಕೊಟ್ಟಿಗೆ ಹೋಗಬೇಕು.. ಬರ್ತೀರಾ?" ಎಂದು ರಿಕ್ಷಾದವರನ್ನು ಕೇಳಿದರೆ "ತೊಕ್ಕೊಟ್ಟಿಗೆ ಬರಲಾಗುವುದಿಲ್ಲ; ನಾನು ಕೂಳೂರಿಗೆ ಹೋಗುತ್ತಿದ್ದೇನೆ; ನೀವೂ ಕೂಳೂರಿಗೆ ಬರುವುದಾದರೆ ರಿಕ್ಷಾ ಹತ್ತಿ... " ಎನ್ನುವಂತಿಲ್ಲವೇ ಕಾರ್ಯಶೈಲಿ?!!!

"ಅದೇಕೋ ಸಾಯಲಾರೆ... ಅದಕ್ಕೇ ಬದುಕಿದ್ದೇನೆ" ಎನ್ನುವಂತಹ ಭಾವ-ಬದುಕುಗಳಿವು. ತಾವು ಮಾಡುವ ಕೆಲಸದಲ್ಲಿ ಪ್ರೀತಿಯಿಲ್ಲದಿದ್ದರೆ ಶ್ರದ್ಧೆಯಿಲ್ಲದಿದ್ದರೆ ಇಂತಹ ಹಾಸ್ಯಪ್ರಸಂಗಗಳೂ ಹುಟ್ಟುತ್ತಿರುತ್ತವೆ. ನಮ್ಮದೇ ಕ್ಷೇತ್ರದ ವಿಷಯ ನಮಗೇ ಗೊತ್ತಿಲ್ಲ ಎನ್ನುವಾಗ ಸಂಕೋಚವಾಗುವುದು ಸಹಜ. ಆದರೆ ಅವರ ಮುಖದಲ್ಲಿ ಅಂತಹ ಬದಲಾವಣೆಯೇನೂ ಕಾಣಿಸಲಿಲ್ಲ. ಅನಂತರ ಕಾಯಿ ಸುಕ್ಕಿನುಂಡೆಯನ್ನು ನಾವೇ ತಯಾರಿಸಿ ತಿಂದೆವು - ಅಷ್ಟೆ.

ಗೊತ್ತಿಲ್ಲ ಎನ್ನುವುದು - ಕೆಲಸಗಳ್ಳತನ, ಅಸಡ್ಡೆ, ಬೇಜವಾಬ್ದಾರಿತನ... ಮುಂತಾದವುಗಳ ಒಂದು ಲಕ್ಷಣವೂ ಹೌದು. ಈ ಬದುಕಿನಲ್ಲಿ - ಕಲಿಯುವುದು ಎಂಬುದು ಮುಗಿಯುವುದೇ ಇಲ್ಲ. ಆದರೆ ಕಲಿಯುವ ಮನಸ್ಸು ಬೇಕು. ಹೊಸಹೊಸತನ್ನು ಕಲಿಯುವ ಉತ್ಸಾಹವೇ ಇಲ್ಲದಿದ್ದರೆ ಹೊಸ ರಂಜನೆಯಾದರೂ ಸಿಗುವುದು ಹೇಗೆ? ಅಡುಗೆ ಎಂದರೆ - ನಿತ್ಯವೂ ಮನಸ್ಸಿಗೆ - ದೇಹಕ್ಕೆ ಕೊಡುವ ವ್ಯಾಯಾಮ. ಮನೆಯ ವಿಚಾರಕ್ಕೆ ಬಂದರೆ, ಅಡುಗೆಯು ಕುಟುಂಬದ ಸದಸ್ಯರನ್ನು ದಿನವೂ ಹತ್ತಿರ ತರುವ ಬ್ರಹ್ಮಾಸ್ತ್ರ! ಶ್ರದ್ಧೆಯಿಂದ ಮಾಡಿದ ಅಡುಗೆಗೆ ರುಚಿಯೂ ಜಾಸ್ತಿ! ದಿನವೂ "I love you" ಎನ್ನುತ್ತ ನಾಟಕ ಮಾಡುವ ಬದಲು, ಊಟಕ್ಕೆ ಕೂತ ಸದಸ್ಯರು ಚಪ್ಪರಿಸಿಕೊಂಡು ಉಣ್ಣುವಂತೆ ಮಾಡಿದರೆ ಅದರಿಂದ ಸಂಬಂಧಗಳು ಗಟ್ಟಿಯಾಗುತ್ತವೆ. ಹೊಟ್ಟೆಯ ಕಾಳಜಿಯ ನೀರೆರೆಯದೆ ಪ್ರೀತಿಯ ಬಳ್ಳಿ ಹಬ್ಬಲಾರದು. ಹೊಟ್ಟೆ ತಣಿಯದೆ ಯಾವ ತತ್ತ್ವೋಪದೇಶವೂ ರುಚಿಸುವುದಿಲ್ಲ! ಅಡುಗೆಯು ಬದುಕನ್ನು ರಸಮಯಗೊಳಿಸುವ ಕಲೆ. ರುಚಿಕಟ್ಟಾದ ಅಡುಗೆಯ ಮಧ್ಯಸ್ಥಿಕೆಯಲ್ಲಿ ಪ್ರೀತಿಯು ಸಹಜವಾಗಿ ಅರಳುತ್ತದೆ. ಸ್ವಚ್ಛ ಅಡುಗೆಯ ನಿತ್ಯ ಕರ್ಮವೀರರಿಗೆ - ತೃಪ್ತಿಯು ಸುಲಭದ ತುತ್ತು.

ಇಂದಿನ ಅಡುಗೆಯವರಿಗೆ ಹೊಸ ಸೌಲಭ್ಯಗಳೆಲ್ಲವೂ ಸಿಗುತ್ತಿವೆ. ಗ್ರೈಂಡರ್, ಮಿಕ್ಸರ್, ಗ್ಯಾಸ್ ಒಲೆ, ಕುಕ್ಕರ್... ಮುಂತಾದ ಸೌಲಭ್ಯಗಳಿಂದಾಗಿ ಅಡುಗೆಯ ಕೆಲಸದ ಅರ್ಧ ಭಾರವು ಇಳಿದುಹೋಗುತ್ತದೆ. ಇಂದಿನ ಅಡುಗೆಯವರಲ್ಲಿ - "ಅರೆಯುವ ಸಾಂಪ್ರದಾಯಿಕ ಕಲ್ಲಿನಲ್ಲಿ ಅರೆದರೆ ಅದರ ರುಚಿಯೇ ಬೇರೆ; ಕಲ್ಲಿನಲ್ಲೇ ಅರೆಯಿರಿ.." ಅಂದರೆ - "ಇಲ್ಲಮ್ಮ; ತಡ ಆಗ್ತದೆ; ಮಿಕ್ಸರ್ ಕೊಡಿ;  ಗ್ರೈಂಡರ್ ಕೊಡಿ..." ಅನ್ನುತ್ತಾರೆ. ಅದನ್ನು ಶಿಸ್ತಿನಿಂದ ಎಚ್ಚರದಿಂದ ಉಪಯೋಗಿಸಿದರೆ ಪರವಾಗಿಲ್ಲ. ಆದರೆ ಅಡುಗೆಯ ಯುದ್ಧ ಮುಗಿದ ಮೇಲೆ ಆ ಗ್ರೈಂಡರ್ ನ್ನು ತೊಳೆಯಲು ಗಂಡಾಳಿನ ಸಹಾಯವೇ ಬೇಕಾಗುವಂತೆ ಅದಕ್ಕೆ ಸರ್ವಾಂಗ ಸುಂದರವಾಗಿ ಮೆತ್ತಿ ಇಡುವವರೂ ಇದ್ದಾರೆ! ಇದು ಕೆಲಸದ ರೀತಿ ಅಲ್ಲ; ಬೇಕಾಬಿಟ್ಟಿ - ಕರ್ತವ್ಯಚ್ಯುತಿ!

ನಿತ್ಯದ ಅಡುಗೆಯು ಸುಲಭದ ಸಂತೋಷ ನೀಡುವ ಕ್ರಿಯೆ. ಆದರೆ "ಅಡುಗೆಯ ವೃತ್ತಿ" ಎಂಬುದು ಬಲು ಕಷ್ಟದ ಉದ್ಯೋಗವೂ ಹೌದು. ಅಡುಗೆಗೆಂದು ಎಲ್ಲೆಲ್ಲೋ ಸುತ್ತಬೇಕು; ವಿಭಿನ್ನ ಸಂಸ್ಕಾರದವರೊಂದಿಗೆ ಏಗಬೇಕು. ಗುರುತು ಪರಿಚಯವಿಲ್ಲದ ಸ್ಥಳ, ಸಂದರ್ಭಗಳನ್ನು ನಿಭಾಯಿಸುವುದು ಊಟ ಮಾಡುವಷ್ಟು ಸುಲಭವೇನಲ್ಲ. 100 ಜನರಿಗೆ ಅಡುಗೆ ಮಾಡಲು ಆದೇಶಿಸಿದಲ್ಲಿ 200 ಜನರು ಬಂದು ಊಟಕ್ಕೆ ಕುಳಿತುಕೊಳ್ಳುವುದೂ ಇದೆ. ಆಗ ಮನೆಯ ಯಜಮಾನರ ಮರ್ಯಾದೆಯನ್ನು ಉಳಿಸುವ ಕೆಲಸವನ್ನು ಅಡುಗೆಯವರು ದಕ್ಷತೆಯಿಂದ ನಿರ್ವಹಿಸಿದ್ದನ್ನು ನಾನು ಕಂಡಿದ್ದೇನೆ. ವಿಭಿನ್ನ ವರ್ತನೆಯ ಜನರೊಂದಿಗೆ ನಿತ್ಯವೂ ವ್ಯವಹರಿಸಬೇಕಾದ ಅನಿವಾರ್ಯತೆಯನ್ನು ಸಹಜವಾಗಿ ಸ್ವೀಕರಿಸುವ ಕ್ರೀಡಾ ಮನೋಭಾವವಿದ್ದಾಗ ಮಾತ್ರ ಅಡುಗೆಯ ವೃತ್ತಿಯನ್ನು ಸಮಾಧಾನದಿಂದ ನಿಭಾಯಿಸಬಹುದು.

ಗಂಟೆಗಟ್ಟಲೆ ಬೆಂಕಿಯ ಮುಂದೆ ನಿಂತು ಬೆವರು ಸುರಿಸಿ ದುಡಿಯುವ ಅಡುಗೆಯ ಕಾರ್ಮಿಕರು ಊಟ ಮಾಡುವುದನ್ನೂ ನಾನು ನೋಡಿದ್ದೇನೆ. ಹತ್ತಾರು ಬಗೆಯ ಪದಾರ್ಥಗಳನ್ನು ತಯಾರಿಸುವ ಇವರು ಯಾವುದೋ ಒಂದು ಸಾರನ್ನು ಸುರಿದುಕೊಂಡು ಉಂಡು ಎದ್ದು ಬಿಡುತ್ತಾರೆ. ಉಂಡವನಿಗೆ ಹಸಿವೆ ಜಾಸ್ತಿ; ಉಣ್ಣುವುದನ್ನಷ್ಟೇ ಮಾಡುವವರಿಗೆ ಇನ್ನೂ ಜಾಸ್ತಿ! ಆದರೆ ಅಡುಗೆಯನ್ನು ಸಿದ್ಧಪಡಿಸುವವರಿಗೆ ಹಸಿವೆ ಕಡಿಮೆ. ಊಟದ ಹೊತ್ತಿನಲ್ಲಿ ದೈಹಿಕವಾಗಿ, ಮಾನಸಿಕವಾಗಿ ಬಸವಳಿದ ಸ್ಥಿತಿಯಲ್ಲಿರುವ ವಿಶೇಷದ ಅಡುಗೆಯವರು ಊಟದ ಶಾಸ್ತ್ರ ಮಾಡಿ ಎದ್ದು ಬಿಡುತ್ತಾರೆ. ನಿತ್ಯವೂ ವಿಶೇಷದ ಅಡುಗೆಯನ್ನು ಮಾಡಿ, ಕಂಡು, ತಾವು ಮಾಡಿದ್ದನ್ನು ತಾವೇ ಉಂಡು, ಆ ಘಾಟನ್ನು ಅನುಭವಿಸುವ ಅಂತಹ ಮಂದಿಗೆ ಅಂತಹ ಭರ್ಜರಿ ಊಟವು ಬೇಕೆಂದು ಅನ್ನಿಸುವುದೇ ಇಲ್ಲ. ಕೆಲವರು "ನಾವು ರಾತ್ರಿ ಮನೆಗೆ ಹೋಗಿ ಹೆಂಡತಿ ಮಾಡಿ ಹಾಕುವ ಗಂಜಿ-ಉಪ್ಪಿನಕಾಯಿ ಊಟವನ್ನು ಹೊಟ್ಟೆ ತುಂಬ ಉಣ್ಣುತ್ತೇವೆ... ನಮಗೆ ಅದೇ ಇಷ್ಟ!..." ಎಂದು ಹೇಳಿದ್ದನ್ನು ನಾನು ಕೇಳಿದ್ದೇನೆ. ದೊಡ್ಡ ಪ್ರಮಾಣದಲ್ಲಿ ಅಡುಗೆ ಮಾಡುವ, ಅಡುಗೆಯನ್ನೇ ಅವಲಂಬಿಸಿರುವ ವೃತ್ತಿನಿರತರು - ನಿಷ್ಠೆಯನ್ನು ಮತ್ತು "ಅಗ್ನಿಕಾರ್ಯ" ಎಂಬ ಮನೋವಿನಮ್ರತೆಯನ್ನು ರೂಢಿಸಿಕೊಂಡರೆ ಆ ಉದ್ಯೋಗವು ಅವರಿಗೆ ಹಿಂಸೆಯೆನಿಸುವುದಿಲ್ಲ. ನೂರು ಊರು, ನೂರಾರು ಬಗೆಯ ಜನರನ್ನು ಕಂಡು ವ್ಯವಹರಿಸುವ ಅಡುಗೆಯ ವೃತ್ತಿಯನ್ನು ಮತ್ತು ಆ ವೃತ್ತಿಧರ್ಮವನ್ನು ಆಯಾ  ವೃತ್ತಿನಿರತರು, ಯಾವುದೇ ಕೀಳರಿಮೆಯಿಲ್ಲದೆ ಸ್ವತಃ ಗೌರವದಿಂದ ಕಾಣಲು ಸಾಧ್ಯವಾದರೆ - ಇತರರಿಗೂ ಗೌರವ ಮೂಡುತ್ತದೆ; ವೃತ್ತಿಗೂ ವೃತ್ತಿನಿರತರಿಗೂ ಗೌರವ ಹೆಚ್ಚುತ್ತದೆ; ಆತ್ಮತೃಪ್ತಿಯೂ ಸಿಗುತ್ತದೆ.

ಅಡುಗೆಯ ಕೆಲಸವು ಕೀಳಲ್ಲ. ಅದಕ್ಕಾಗಿ ಕೀಳರಿಮೆಯೂ ಸಲ್ಲ. ಅನೇಕ ವರ್ಷಗಳಿಂದ "ಲೋಕಾಸ್ಸಮಸ್ತಾಸ್ಸುಖಿನೋ ಭವಂತು" ಎನ್ನುತ್ತ ಜಗದ ಜೀವಿಗಳಿಗೆ ಉಣ್ಣಿಸುತ್ತ, ಶಕ್ತ್ಯೋತ್ಸಾಹಗಳನ್ನು ತುಂಬುತ್ತ ಬಂದಿರುವ ವರ್ಗವಿದು. ಬದಲಾದ, ಆಗುತ್ತಿರುವ ಸಾಮಾಜಿಕ ಸನ್ನಿವೇಶದಲ್ಲಿ ಯಜ್ಞವೆಂಬ ಭಾವದಿಂದ ಇಳಿದು - ವ್ಯವಹಾರದ ನೆಲೆಗೆ ಕುಸಿದಿರುವ ಆಹಾರ ತಯಾರಿಯ ವಿಭಾಗವು - ಪ್ರಾಮಾಣಿಕ, ಶುದ್ಧ ಆಹಾರವನ್ನು ನೀಡುವ ಸಂಕಲ್ಪ ಮಾಡಿ, ಸ್ಥಿತ್ಯಂತರದ ಸನ್ನಿವೇಶದಲ್ಲಿಯೂ ಸಾಮಾಜಿಕ ದೇಹಸ್ವಾಸ್ಥ್ಯದ ಉದ್ದೇಶವನ್ನೇ ಹೊಂದಿದ್ದರೆ - ಸ್ವಾಂತ ಸುಖ ನೆಮ್ಮದಿಯ ಜೊತೆಗೆ ಸಮಷ್ಟಿಯ ಸುಖವನ್ನೂ ಕಾಪಾಡಿದಂತಾದೀತು.

ಪಾಕಕಲೆಯನ್ನು ಉಪಾಸಿಸುವವರು ಎಂದೂ ಸೋಲುವುದಿಲ್ಲ. ಆದರೆ ಆತ್ಮವಿಶ್ವಾಸ ಬೇಕು. ಕಷ್ಟಸಹಿಷ್ಣುಗಳಾಗಬೇಕು. ಅಡುಗೆಯ ಕಲೆಯು ಮುಂದಿನ ದಿನಗಳಲ್ಲಿ ಅತ್ಯಂತ ಬೇಡಿಕೆಯುಳ್ಳ ಕಲೆಯಾಗಿ ಪರಿವರ್ತಿತವಾಗಲಿದೆ. "ಇಂಗು ತೆಂಗು ಇದ್ದರೆ ಮಂಗವೂ ಅಡುಗೆ ಮಾಡುತ್ತದೆ " ಎಂಬ ನಾಣ್ನುಡಿಯಿದೆ ! ಆದರೆ "ಕಲಿಯುವ ಮನಸ್ಸಿದ್ದರೆ..." ಎಂಬುದನ್ನು ಸೇರಿಸಿ ಆ ನುಡಿಗಟ್ಟನ್ನು ಓದಿಕೊಳ್ಳಬೇಕು. ಒಲೆಯ ಮೇಲೆ ಪಾತ್ರೆಯನ್ನು ಅಂಗಾತ ಇಡಬೇಕಾ? ಕವುಚಿ ಇಡಬೇಕಾ? ಎಂದೂ ಗೊತ್ತಿಲ್ಲದವರ ಸಂಖ್ಯೆಯೂ ಈಗೀಗ ಹೆಚ್ಚಾಗುತ್ತಿದೆ. ELECTRIC OVEN ನ ಮಾರ್ಗದರ್ಶನದಂತೆ ವಿಧೇಯವಾಗಿ ನಡೆಯುವ ಏಕಾಂಗವೀರರು ಹೆಚ್ಚುತ್ತಿದ್ದಾರೆ! ಪೇಟೆಯಲ್ಲಿ ಸಿಗುವ ಸಿದ್ಧ ಪ್ಯಾಕೇಟುಗಳ ಆಹಾರವನ್ನು OVEN ನ ಒಳಗಿಟ್ಟು ಕೇವಲ ರೂಪ ಬದಲಿಸಿಕೊಂಡು (!) ಮಾಡಿದ್ದುಣ್ಣುತ್ತ ದಿನದೂಡುವವರೂ ಹೆಚ್ಚುತ್ತಿದ್ದಾರೆ. ಇಂತಹ ಕಾಲಘಟ್ಟದಲ್ಲಿ, ಪಾಕ ಪ್ರವೀಣರು ಈ ದುರ್ದಿನಗಳ ದುರುಪಯೋಗ ಮಾಡಿಕೊಳ್ಳದೆ - ಸ್ವಾಮಿ ಕಾರ್ಯವೆಂಬ ಶ್ರದ್ಧೆಯಿಂದ - ಪಾಕಶಾಸ್ತ್ರದ ಸದುಪಯೋಗಪಡಿಸಿಕೊಂಡರೆ ಮುಂದಿನ ದಶಕವು ನಿಸ್ಸಂಶಯವಾಗಿ "ಪಾಕ ಶಾಸ್ತ್ರ"ದ ಮಡಿಲನ್ನು ಏರಲಿದೆ! ಏಕೆಂದರೆ ರುಚಿಗೆ ಒಲಿಯದ ಸೃಷ್ಟಿಯಿಲ್ಲ ! ಈ ಹಂತದಲ್ಲಿ ಅಡುಗೆಯನ್ನು ಬಲ್ಲವರು ತಮ್ಮ ಶಾಸ್ತ್ರೀಯ ರೀತಿ ನೀತಿ ಗಳನ್ನು ಅನುಸರಿಸಿ ಅದರ ನಿತ್ಯಾನುಷ್ಠಾನವನ್ನು ನಡೆಸಿದರೆ - ಅಡುಗೆಯವರೂ ಗೆಲ್ಲುತ್ತಾರೆ; ಅದನ್ನು ಸೇವಿಸಿದವರೂ ಉಳಿಯುತ್ತಾರೆ....     

ರೀತಿ ನೀತಿ - ಇದು ಜೋಡಿ ಪದ. ಪ್ರತಿಯೊಂದು ಕೆಲಸದ ನಿರ್ವಹಣೆಗೂ ರೀತಿಯಿರುವಂತೆ ನೀತಿಯೂ ಇರುತ್ತದೆ. "ನಾವು ಮಾಡುವ ಕೆಲಸ ಹೀಗಿರಲಿ ಜೀಯ; ನಿಸ್ಸೀಮ ನಿಸ್ಪೃಹತೆ ಗೆಲ್ಲುವುದು ತಿಳಿಯ..."

                                                              ()()()()()()()()   


    



No comments:

Post a Comment