ಯುಗಧರ್ಮ - ಕಾಲ ಧರ್ಮ ಎಂಬುದು ಎಲ್ಲದಕ್ಕೂ ಅನ್ವಯವಾಗುವ ಪ್ರಕೃತಿಸೂತ್ರ. ಚರಿತ್ರೆಯಲ್ಲಿ ಕತ್ತಲೆಯ ಖಂಡಗಳು - ಕತ್ತಲೆಯ ಯುಗಗಳು ಎಂದು ಗುರುತಿಸಲ್ಪಟ್ಟ ಕಾಲಘಟ್ಟಗಳಿವೆ. ಆದರೆ ಈ ಭರತಭೂಮಿಯಲ್ಲಿ ಮಾತ್ರ ಜ್ಞಾನ ಪ್ರೇಮದ ನಂದಾದೀಪವು ಎಂದೂ ನಂದಿಹೋಗಲಿಲ್ಲ; ಪೂರ್ಣ ಕತ್ತಲೆ ಕವಿದ ಯಾವುದೇ ಕಾಲವೂ ಈ ನೆಲದಲ್ಲಿ ದಟ್ಟವಾಗಿ ಪ್ರವೇಶಿಸಲಾಗಲಿಲ್ಲ. ಈ ಚಮತ್ಕಾರಕ್ಕೆ ಮೂಲ ಕಾರಣವೇ - ವಿನಮ್ರ ತೃಪ್ತಿಯ ಮರುಪೂರಣ ಮಾಡುತ್ತಿದ್ದ ಅಧ್ಯಾತ್ಮ; ಕತ್ತಲು ಕವಿಸುವ ಅಜ್ಞಾನ ಮತ್ತು ದ್ರಾಬೆ ದುರಾಸೆಗಳಿಂದ ಪಾರಾಗಲು ಜೀವಭಾವಕ್ಕೆ ಉಪಕರಿಸುತ್ತಿದ್ದ ಭಾರತೀಯ ಅಧ್ಯಾತ್ಮ. ಭಾರತದ ಅಧ್ಯಾತ್ಮ ಪರಂಪರೆಯು ತನ್ನ ನೆಲದ ಸತ್ವವು ಬರಡಾಗುತ್ತಿದ್ದ ಯಾವುದೇ ಹಂತದಲ್ಲಿ ಆಗಿಂದಾಗ ಅಧ್ಯಾತ್ಮದ ಜೀವಸತ್ವವನ್ನು ಉಣ್ಣಿಸುತ್ತ - ಶಕ್ತಿಯ ಮರುಪೂರಣ ಮಾಡುತ್ತ ಬಂದ ಹಲವಾರು ಸನ್ನಿವೇಶಗಳನ್ನು ಈ ಹಿನ್ನೆಲೆಯಲ್ಲಿ ಗಮನಿಸಬೇಕು. ಈ ನೆಲದ ವಚನಕಾರರು, ಸಂತರು, ಸೂಫಿ ಪಂಥದ ಚಿಂತನೆಗಳು, ಅವಧೂತ - ದಾಸ ಪರಂಪರೆಗಳು ಮುಂತಾದ ಆಧ್ಯಾತ್ಮಿಕ ಬಹುಧಾರೆಯು ಈ ನಿಟ್ಟಿನಲ್ಲಿ ಶ್ರಮಿಸಿದ ಪರಿಯು ಅಮೋಘ. ಯಾವುದೇ ಪಂಥ ಪಂಗಡಗಳನ್ನು ಮೀರಿದ - ವಿಶ್ವಚೈತನ್ಯದಾಯಿಯಾದ ಭಾರತೀಯ ಧರ್ಮಸಾರವನ್ನು ಪುನರಪಿ ಉಣ್ಣಿಸುತ್ತ - ನೆಲದ ಬದುಕನ್ನು ಎತ್ತರಿಸುವ ಕರ್ಮಯೋಗವು ಇಲ್ಲಿ ಅನೂಚಾನವಾಗಿ ನಡೆಯುತ್ತಲೇ ಬಂದಿದೆ. ಆದ್ದರಿಂದಲೇ ಆದಿಯಲ್ಲಾಗಲೀ ಮಧ್ಯದಲ್ಲಾಗಲೀ ಭಾರತವನ್ನು ಕತ್ತಲೆಯ ಭಯವು ಅಷ್ಟೊಂದು ಕಾಡಿಸಲಿಲ್ಲ; ವಿಚಲಿತಗೊಳಿಸಲಿಲ್ಲ.
ಭಾರತೀಯ ಋಷಿ ಪರಂಪರೆಯ ದೃಷ್ಟಾರರು ಜೀವಸಂಕುಲವನ್ನು ರಕ್ಷಿಸಿಕೊಳ್ಳುವ ಜೀವಮೌಲ್ಯಗಳನ್ನು ಮೂಲ ಆಧಾರವಾಗಿ ನಮಗಿತ್ತು - ಬದುಕನ್ನು ಸ್ವಯಂ ಪೋಷಿಸಿಕೊಳ್ಳುವ ಸನ್ಮಾರ್ಗ ದರ್ಶನವನ್ನು ನೀಡಿರುವುದು - ಇಂದಿಗೂ ಉಳಿದುಕೊಂಡ ಭಾರತದ ಶಾಶ್ವತ ಸಂಪತ್ತು ಎನ್ನಬಹುದು. ಆದ್ದರಿಂದಲೇ ವೇದಕಾಲದಿಂದ ಹಿಡಿದು ಇಂದಿನವರೆಗೂ ದರ್ಶನಮೌಲ್ಯಗಳ ಐಶ್ವರ್ಯದೋಪಾದಿಯಲ್ಲಿ ಅನೂಚಾನವಾಗಿ ಉಪದೇಶಿತಗೊಂಡ ಹೃದಾಂತರ್ಗತ ಮೂಲ ಸಂವೇದನೆಗಳು - ಜನಮಾನಸದಲ್ಲಿ ಚಿರಸ್ಥಾಯಿಯಾಗಿವೆ. ಸತ್ಯದಿಂದ ತೊಡಗಿ - ಜ್ಞಾನ, ಪ್ರೇಮ, ಶಕ್ತಿ, ಸೌಂದರ್ಯ, ಶರಣಾಗತ ಭಾವ ಮುಂತಾದ ಹಲವು ಆಧ್ಯಾತ್ಮಿಕ ಮೌಲ್ಯಗಳು ಕಾಲಧರ್ಮಕ್ಕೆ ಅನುಸಾರವಾಗಿ ಭಾರತೀಯ ಪರಿಸರವನ್ನು ರಕ್ಷಿಸಿ ಪೋಷಿಸುತ್ತಲೇ ಬಂದಿವೆ. 12 ನೇ ಶತಮಾನದಲ್ಲಿ ವಚನಕಾರರಿಂದ ಆಧರಿಸಲ್ಪಟ್ಟ ಜೀವ ಪರಿಸರವನ್ನು - ಅನಂತರದ ಅವಧಿಯಲ್ಲಿ - ಎಲ್ಲದರಿಂದ ಮುಕ್ತವಾಗಿ ಶರಣಾಗತವಾಗುವ ಆತ್ಮಿಕ ಸ್ಥಿತಿಯ ಪ್ರತ್ಯಕ್ಷ ದರ್ಶನವನ್ನು ಮಾಡಿಸಿದ್ದ ದಾಸ ಪಂಥವು ಆಧರಿಸಿತ್ತು. ಸುಮಾರು 16 - 17 ನೇ ಶತಮಾನದ ನಂತರ ಜೀವಪ್ರಜ್ಞೆಯು ಕುಸಿದು ಬೀಳದಂತೆ ಸುದೀರ್ಘಕಾಲ ನಿಭಾಯಿಸಿದ ಶಕ್ತಿ - ದಾಸ ಪಂಥದ್ದು. ಅನಂತರದ 17,18 ಮತ್ತು 19 ನೇ ಶತಮಾನದಲ್ಲಿ ಚೈತನ್ಯ, ನಾನಕ್, ಪರಮಹಂಸ, ದಯಾನಂದ ಸರಸ್ವತಿ, ವಿವೇಕಾನಂದರು, ಅರವಿಂದ ಘೋಷ್, ರಮಣ ಮಹರ್ಷಿಗಳು ಮುಂತಾದವರು - ಆಧುನಿಕತೆಯ ಬಿರುಗಾಳಿಗೆ ಸಿಲುಕಿ ನಾನಾ ಕಾರಣಗಳಿಂದ ಅಸ್ಥಿರಗೊಳ್ಳುತ್ತಿದ್ದ ಜೀವಚೈತನ್ಯವನ್ನು ಪುನರುಜ್ಜೀವಗೊಳಿಸಿ ಜೀವಜಡತೆಯನ್ನು ಯಥಾನುಶಕ್ತಿ ಹೊಡೆದೋಡಿಸುವ ಹಾದಿಯಲ್ಲಿ ಶ್ರಮಿಸಿದವರು. ಕಾಲಕಾಲಕ್ಕೆ ಅಧ್ಯಾತ್ಮದ ದೀವಟಿಗೆಯನ್ನು ಹಿಡಿದು, ಅಂಧಕಾರಯುಕ್ತ ಮಾನಸಕ್ಕೆ ಶ್ರೇಯದ ಬೆಳಕಿನ ಹಾದಿ ತೋರಿದ ಇಂತಹ ಮಹಾನ್ ಪರಂಪರೆಯು - ಸಮರ್ಥವಾಗಿ ಕಾಲದ ಪರೀಕ್ಷೆಗಳಿಗೂ ಎದೆಯೊಡ್ಡುತ್ತ ಇಂದಿಗೂ ತಮ್ಮ ಛಾಪು ಮೂಡಿಸಿದೆ. ಆದ್ದರಿಂದಲೇ ಇಂದಿಗೂ ಸ್ಮರಣೀಯವೂ ಆಗಿದೆ. ಒಳಿತಿನ ಮಾರ್ಗಗಳೆಲ್ಲವೂ ಈಗಾಗಲೇ ಪ್ರಪಂಚದ ಮುಂದಿದೆ; ಆಚರಣೆ ಮಾತ್ರ ಅಪೂರ್ಣವಾಗಿಯೇ ಉಳಿದುಕೊಂಡಿದೆ.
ಆಧ್ಯಾತ್ಮಿಕ ವಿಜ್ಞಾನಿ - ಆಧುನಿಕ ಸುಜ್ಞಾನಿ - ಶ್ರೀ ರಾಮಕೃಷ್ಣ
ಶಕ್ತಿ ಮತ್ತು ಸೌಂದರ್ಯದ ಸಾಧನೆಯ ಮಾರ್ಗವಾದ ತಾಂತ್ರಿಕ ಸಾಧನೆಗಳನ್ನೂ ನಡೆಸಿ ಅಧ್ಯಾತ್ಮದ ವಿಶ್ವರೂಪದೊಂದಿಗೆ ಸರಸವಾಡುತ್ತ ಸಕಲ ಬಗೆಯ ಸಾಧನೆಗಳ ಒಳಹೊರಗನ್ನು ಅರಿತುಕೊಂಡವರು - ಶ್ರೀ ರಾಮಕೃಷ್ಣ ಪರಮಹಂಸರು. ಆದ್ದರಿಂದಲೇ ಅವರು - ಜ್ಞಾನ ವಿಜ್ಞಾನ ಸುಜ್ಞಾನಗಳ ಅನನ್ಯ ದೃಷ್ಟಾಂತವೆನ್ನಿಸಿದರು; ಅನುಭಾವೀ ದೃಷ್ಟಾರರಾದರು. ತಂತ್ರ ಸಾಧನೆಯಿಂದ ಹಿಡಿದು ಅದ್ವೈತ ಸಾಕ್ಷಾತ್ಕಾರದ ವರೆಗೂ ಸುಮಾರು 12 ವರ್ಷಗಳ ಕಾಲ ನಾನಾ ಬಗೆಯ ಕಠಿಣ ಸಾಧನೆಗಳಿಗೆ ನಿರಂತರವಾಗಿ ತಮ್ಮನ್ನು ಒಡ್ಡಿಕೊಂಡು ಪ್ರಯೋಗಸಿದ್ಧ ಫಲಿತಾಂಶಗಳನ್ನೂ ಆಸ್ವಾದಿಸಿದ್ದ ಮಹಾನ್ ಆಧ್ಯಾತ್ಮಿಕ ವಿಜ್ಞಾನಿ ಇವರು. ಅಪಾರ ಶಕ್ತಿಸಂಪನ್ನರಾಗಿದ್ದರೂ ಎಂದೂ ತಮ್ಮ ಸ್ವ-ವೈಭವೀಕರಣಕ್ಕಾಗಿ - ಸಂಗ್ರಹಿತ ಶಕ್ತಿಯ ದುರುಪಯೋಗ ನಡೆಸದಿರುವುದೇ ರಾಮಕೃಷ್ಣರ ಸಂಯಮ ಮತ್ತು ಜಾಗ್ರತಿಯ ದ್ಯೋತಕ. ತಮ್ಮ ಯಾವತ್ತೂ ಶಕ್ತಿಯನ್ನು ಸಮರ್ಥ ಸಮನ್ವಯಕಾರರಂತೆ - ವಿಶ್ವಕಲ್ಯಾಣಕ್ಕಾಗಿ ಅವರು ಬಳಸಿಕೊಂಡ ರೀತಿಯೇ ಆಕರ್ಷಕ. ವೈವಿಧ್ಯದ ಲೋಕವನ್ನು ವೈರುದ್ಧ್ಯದ ಮುಷ್ಟಿಯಿಂದ ಬಿಡಿಸಿ ಆಧ್ಯಾತ್ಮಿಕ ಸುಗಂಧ ಪೂಸಿ, ಅವರು ಸುಗಮಗೊಳಿಸಿದ ಶೈಲಿಯೇ ಚಿತ್ತಾಪಹಾರಕ. ಶ್ರೀ ರಾಮಕೃಷ್ಣರಲ್ಲಿ ಒಬ್ಬ ಋಷಿಯಿದ್ದ; ಸಂತನಿದ್ದ; ದಾಸನಿದ್ದ; ಸೇವಕನಿದ್ದ; ಪ್ರೇಮಿಯಿದ್ದ; ರಾಜನೂ ಇದ್ದ ! ಸತ್ಯ, ಜ್ಞಾನ, ಪ್ರೇಮ, ಶಕ್ತಿ, ನ್ಯಾಯ, ಪರೇಂಗಿತಜ್ಞತೆ, ಮಾರ್ದವತೆಯೂ ಅವರಲ್ಲಿತ್ತು ! ಅಧ್ಯಾತ್ಮಪ್ರಸಾರದ ನಿರ್ವಹಣೆಗೆ ಪೂರಕವಾಗಬಲ್ಲ ಸುತರ್ಕಜ್ಞಾನವನ್ನು ರಾಮಕೃಷ್ಣರಷ್ಟು ಸಮರ್ಪಕವಾಗಿ ಪೋಷಿಸಿದವರು - ವೈಶ್ವಿಕವಾಗಿ ನೋಡಿದರೂ ಬಹುಶಃ ಇನ್ನೊಬ್ಬರು ಕಾಣಲಾರರು. ಮಂಕು ವ್ಯಾವಹಾರಿಕತೆಗಳ ಜೊತೆಜೊತೆಗೇ ಒಡನಾಡುತ್ತ, ತಪ್ಪುಒಪ್ಪುಗಳನ್ನು ಗ್ರಹಿಸಿ - ಸೋಸಿ, ಮಾನವಕುಲಕ್ಕೆ ಹಿತವಾದುದನ್ನು ಮಾತ್ರ ವಿತರಿಸುತ್ತ ಬಂದವರು - ರಾಮಕೃಷ್ಣರು. ಬುದ್ಧಿ ಹೃದಯಗಳ ಪ್ರಚಂಡ ಸಮನ್ವಯತೆಯನ್ನು ಸಾಧಿಸಿದ್ದ ರಾಮಕೃಷ್ಣರಂತಹ ಯೋಗಿಗಳು ಅಪೂರ್ವ !
ಅನನ್ಯ ಅನುಯಾಯಿಗಳು
ಶ್ರೀ ರಾಮಕೃಷ್ಣರ ಸಾಧನೆಯ ಅಸಾಧಾರಣ ಫಲಗಳಲ್ಲಿ - ಅವರ ಸಿದ್ಧಾಂತ ಮತ್ತು ಉಪದೇಶಗಳನ್ನು ತಲೆಯಲ್ಲಿ ಹೊತ್ತು ಉದಾರವಾಗಿ ಹಂಚುತ್ತಿರುವ ಶಿಷ್ಯಕೋಟಿಯೇ ಬಹು ಅಮೂಲ್ಯವಾದುದು ಎನ್ನಬಹುದು. "ಜಗತ್ತಿನಲ್ಲಿರುವ ಎಲ್ಲ ಮತಧರ್ಮಗಳು ಪರಸ್ಪರ ವಿರೋಧವಲ್ಲ. ಅವೆಲ್ಲವೂ ಒಂದೇ ಸನಾತನ ಧರ್ಮದ ಹಲವಾರು ಪ್ರತಿಬಿಂಬಗಳು..." ಎಂದ ಸ್ವಾಮಿ ವಿವೇಕಾನಂದರು - ಇದು ನನ್ನ ಗುರುದೇವನಿಂದ ನಾನು ಕಲಿತ ಮುಖ್ಯ ಭಾವನೆ... ಎಂದೂ ಅನಂತರ ಸ್ಮರಿಸಿಕೊಂಡಿದ್ದರು. ಶ್ರೀ ರಾಮಕೃಷ್ಣರು ಅಧ್ಯಾತ್ಮ ಚಿಂತಕರಲ್ಲಿ ಸಹಿಷ್ಣುತೆಯನ್ನು ಊಡಿಸಿದ ಬಗೆಯಿದು. ಪರಮಹಂಸರು ಬಹಳ ಎಚ್ಚರಿಕೆಯಿಂದ ಆಯ್ದುಕೊಂಡಿದ್ದ ಸನ್ಯಾಸೀ ಶಿಷ್ಯರ ಸಂಖ್ಯೆಯು ಅಂದು ಬೆರಳೆಣಿಕೆಯಷ್ಟಿದ್ದರೂ ಶ್ರೀ ರಾಮಕೃಷ್ಣರು ಆಗಲೇ ಅಪಾರ ಗೃಹಸ್ಥ ಶಿಷ್ಯರನ್ನೂ ಗಳಿಸಿಕೊಂಡದ್ದು ಅವರ ಸಾಮಾಜಿಕ ಕಳಕಳಿಯ ದ್ಯೋತಕ. ವೇದವ್ಯಾಸರ ಮಹಾಭಾರತವನ್ನು ತಾನು ಬರೆದು ಸಮಸ್ತರಿಗೆ ವ್ಯಾಸದರ್ಶನವನ್ನು ಮಾಡಿಸಿದ ಗಣಪತಿಯಂತೆ - ಶ್ರೀ ರಾಮಕೃಷ್ಣರ ಮಾತುಗಳನ್ನು ಯಥಾವತ್ ದಾಖಲಿಸಿದ ಮಹೇಂದ್ರನಾಥ ಗುಪ್ತ ("ಮ" ಎಂಬುದು ಅವರ ಗುಪ್ತನಾಮ; ಮಾಸ್ಟರ್ ಮಹಾಶಯ ಎಂಬುದು ಪರಿಚಿತರ ನೆಚ್ಚಿನ ನಾಮ) ಎಂಬ ಅವರ ಗೃಹಸ್ಥ ಶಿಷ್ಯನು "ಶ್ರೀ ರಾಮಕೃಷ್ಣ ವಚನವೇದ"ವನ್ನು ದಾಖಲಿಸಿ, ತನ್ಮೂಲಕ ಸಮಸ್ತ ಲೋಕಕ್ಕೆ ರಾಮಕೃಷ್ಣ ದರ್ಶನವನ್ನು ಮಾಡಿಸಿ "ವಚನ ವೇದವ್ಯಾಸ" ಎಂದೇ ಖ್ಯಾತರಾದವರು. "ಶ್ರೀ ರಾಮಕೃಷ್ಣ ವಚನವೇದ" (ಮೂಲ ಬಂಗಾಳಿ - ಕಥಾಮೃತ) ಎಂಬ ಹೆಸರಿನಿಂದ ಕನ್ನಡದಲ್ಲಿಯೂ ಪ್ರಖ್ಯಾತವಾಗಿರುವ ಮಾಸ್ಟರ್ ಜೀಯವರ ಈ ಹೊತ್ತಗೆಗಳು ಶ್ರೀ ರಾಮಕೃಷ್ಣರ ವಿರಾಟ್ ದರ್ಶನವನ್ನು ಮಾಡಿಸುತ್ತವೆ; ಶ್ರೀ ರಾಮಕೃಷ್ಣರನ್ನು ಸಜೀವವಾಗಿ - ಯಥಾವತ್ ನಮ್ಮ ಮುಂದಿರಿಸಿವೆ.
ಈ ಮಾಸ್ಟರ್ ಮಹಾಶಯರು ಶ್ರೀ ರಾಮಕೃಷ್ಣರಿಗಾಗಿ ವರ್ಷಕ್ಕೊಮ್ಮೆ ಉಡುವ ಪಂಚೆಗಳನ್ನೂ ಒದಗಿಸಿದ ದಾಖಲೆಯಿದೆ. ಒಮ್ಮೆ ಅವರು ಮೂರು ಪಂಚೆಗಳನ್ನು ತಂದಾಗ "ನನ್ನ ಉಪಯೋಗಕ್ಕೆ ಎರಡೇ ಸಾಕು.." ಎನ್ನುತ್ತ ಅದರಲ್ಲಿ ಒಂದನ್ನು ರಾಮಕೃಷ್ಣರು ಹಿಂದಿರುಗಿಸಿದ್ದೂ ಇದೆ ! ಜತೆಜತೆಗೇ ಯಾವುದೇ ಸದ್ದಿಲ್ಲದೆ ಮಾತೆ ಶಾರದಾದೇವಿಯವರ ಜೀವನೋಪಾಯಕ್ಕಾಗಿ ಆರ್ಥಿಕ ಬೆಂಬಲವನ್ನು ನೀಡುತ್ತಲೇ ಇದ್ದವರು - ಮಾಸ್ಟರ್ ಮಹಾಶಯರು. ಶ್ರೀ ರಾಮಕೃಷ್ಣರನ್ನು ಕುರಿತು ಮಾಸ್ಟರ್ ಜೀ ಬರೆದ ಕಥಾಮೃತ ಎಂಬ ಪುಸ್ತಕದ ಮಾರಾಟದಿಂದ ಅನಂತರ ಅವರು ಸಾಕಷ್ಟು ಹಣವನ್ನೂ ಸಂಪಾದಿಸಿದ್ದರು. ಮೊದಮೊದಲು ತನ್ನ ಮಾಸ್ಟರಿಕೆಯ ಸಂಬಳದಿಂದ ಮಾತೆಯವರಿಗೆ ತಿಂಗಳಿಗೆ 2 ರೂಪಾಯಿ ಕೊಡುತ್ತಿದ್ದ ಅವರು ಬರಬರುತ್ತ 10 - 20 ರೂಪಾಯಿಗಳನ್ನು ಕೊಡುತ್ತ ಬಂದಿದ್ದರು. ಮಾತೆಯವರು ತಮ್ಮ ಹುಟ್ಟಿದೂರು ಜಯರಾಂಬಾಟಿಯಲ್ಲಿ ಮನೆ ಕಟ್ಟಲು ತೊಡಗಿದಾಗ 1000 ರೂಪಾಯಿ ಒದಗಿಸಿದ್ದರು; ಮೇಲ್ಖರ್ಚಿಗೂ ತಪ್ಪದೆ ಹಣ ಒದಗಿಸುತ್ತಿದ್ದರು. ಹೀಗೆ ತನ್ನ ಗುರುಪತ್ನಿಯ ಅಗತ್ಯವನ್ನೂ ಅರ್ಥೈಸಿಕೊಂಡು ನಿಸ್ವಾರ್ಥದಿಂದ ಬೆಂಬಲಿಸಿದ ಗೃಹಸ್ಥ ಶಿಷ್ಯ - ಮಹೇಂದ್ರನಾಥ ಗುಪ್ತ ಅವರು. ಮುಂದೊಮ್ಮೆ ಈ ಎಲ್ಲ ಘಟನೆಗಳನ್ನೂ ಮೆಲುಕುಹಾಕುತ್ತ, ಮಾಸ್ಟರ್ ಜೀಯವರನ್ನು ಶ್ರೀಮಾತೆಯವರೇ ಹೃದಯದುಂಬಿ ಸ್ಮರಿಸಿಕೊಂಡದ್ದೂ ಇದೆ. ಋಣೀಭಾವವೂ ದೈವೀಕ ಗುಣ.
ಅಸಾಮಾನ್ಯ ಶ್ರೀಸಾಮಾನ್ಯ
ಶ್ರೀ ರಾಮಕೃಷ್ಣರು ಜೀವಿತಾವಧಿಯಲ್ಲಿ ದೊಡ್ಡ ದೊಡ್ಡ ಉಪನ್ಯಾಸಗಳನ್ನು ನೀಡಿದವರಲ್ಲ. ಸುದೀರ್ಘ ಪ್ರವಚನಗಳನ್ನೂ ನೀಡಲಿಲ್ಲ. ಬಿರುದುಬಾವಲಿಗಳಿಗಾಗಿ ಅಡ್ಡಾಡಿದವರಲ್ಲ. ಶುದ್ಧ ಭಕ್ತಿಯನ್ನು ಉಣ್ಣುತ್ತ, ಭಕ್ತಿಯ ಅಸಾಮಾನ್ಯ ಸ್ತರದಲ್ಲಿ ಸಂಚರಿಸುತ್ತ - ಶುದ್ಧ ಭಕ್ತಿಯನ್ನು ಹಂಚುತ್ತ ನಡೆದವರು ಶ್ರೀ ರಾಮಕೃಷ್ಣರು. ಕೊಲ್ಕತ್ತದ ದಕ್ಷಿಣೇಶ್ವರದಲ್ಲಿಯೇ ಸ್ಥಿತರಾಗಿದ್ದುಕೊಂಡು ತಮ್ಮ ಅಂತಃಶಕ್ತಿಯಿಂದಲೇ ಅಸಂಖ್ಯಾತ ಭಕ್ತರನ್ನು ತಮ್ಮತ್ತ ಸೂಜಿಗಲ್ಲಿನಂತೆ ಸೆಳೆದವರು - ಶ್ರೀ ರಾಮಕೃಷ್ಣರು. ಅವರು ತಮ್ಮ ಸಂಪರ್ಕಕ್ಕೆ ಬಂದ ಎಲ್ಲರೊಂದಿಗೂ ಮುಕ್ತವಾಗಿ ಸಂಭಾಷಿಸಿದರು. ಮಾಸಕ್ಕೊಮ್ಮೆಯೋ ಪಕ್ಷಕ್ಕೊಮ್ಮೆಯೋ ದಕ್ಷಿಣೇಶ್ವರದಿಂದ ಕಲ್ಕತ್ತಕ್ಕೆ ಹೋಗಿ ಅಂದಿನ ಆಧುನಿಕ ವಿದ್ವಾಂಸರು ಮತ್ತು ತಮ್ಮ ಶಿಷ್ಯಬಳಗವನ್ನು ಖುದ್ದಾಗಿ ಭೇಟಿ ಮಾಡಿ ಅವರು ಸಂಭಾಷಿಸುತ್ತಿದ್ದುದೂ ಇತ್ತು; ಅಲ್ಲಿ ಕೆಲವು ಇಂಗ್ಲಿಷ್ ಶಬ್ದಗಳನ್ನು ಕಲಿತು ಸೂಕ್ತವಾಗಿ ಪ್ರಯೋಗಿಸುತ್ತಿದ್ದುದೂ ಇತ್ತು ! ಹೊಸ ಚಿಂತನೆಗಳಿಗೆ ಮುಕ್ತವಾಗಿ ತೆರೆದುಕೊಂಡೇ ವಿನಮ್ರವಾಗಿ ತಮ್ಮ ವಿಚಾರಗಳನ್ನು ಅವರು ಮಂಡಿಸುತ್ತಿದ್ದ ರೀತಿಯೇ ಅನನ್ಯ. ಅಧ್ಯಾತ್ಮದ ಭಾವತಂತುವು ಕಡಿಯದಂತೆ ಧರ್ಮಪಿಪಾಸುಗಳೊಂದಿಗೆ ಅವರು ನಡೆಸಿದ್ದ ಅಂತಹ ಹಲವಾರು ಸಂಪರ್ಕ ಯಾತ್ರೆಯು ಜನಜಾಗ್ರತಿಯನ್ನು ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ತಮ್ಮ ಕ್ಷಣಮಾತ್ರದ ಸಾಂಗತ್ಯದಿಂದಲೇ ಅವರು ಹಲವಾರು ಪವಿತ್ರಾತ್ಮರನ್ನು ತಮ್ಮತ್ತ ಆಕರ್ಷಿಸುತ್ತಿದ್ದರು. ನೊಂದವರಿಗೆ ಸಾಂತ್ವನ ನೀಡಿ ದಾರಿ ತೋರಿಸುತ್ತ ಮೂಢರನ್ನು ಮೃದುವಾಗಿ ಗದರಿಸುತ್ತ ಸಂಸಾರಿಗಳಿಗೂ ಬದುಕಲು ಕಲಿಸಿದ ಅವಧೂತ - ಶ್ರೀ ರಾಮಕೃಷ್ಣ ಪರಮಹಂಸರು. ಪ್ರಾಪಂಚಿಕತೆಯ ಕೆಸರನ್ನು ಮೈತುಂಬ ಬಳಿದುಕೊಂಡಿದ್ದ ತಮ್ಮದೇ ಗೃಹಸ್ಥ ಬಳಗದಲ್ಲಿ - ಕೆಸರು ತೊಳೆದುಕೊಳ್ಳುವ ಎಚ್ಚರವನ್ನು ಮೂಡಿಸಿ - ದಿಕ್ಕೆಂಟ್ಟಂತೆ ಚದುರಿಹೋಗಿದ್ದ ಅಂದಿನ ಸಮಾಜದಲ್ಲಿ ಹೊಸ ರಂಗು ತುಂಬಿದ ಶ್ರೇಯವು ರಾಮಕೃಷ್ಣರಿಗೆ ಸಲ್ಲುತ್ತದೆ. ಮಹಾನ್ ವಿಜ್ಞಾನಿಯೊಬ್ಬನಿಗೆ ಒಂದನೇ ತರಗತಿಯ ಪಾಠವನ್ನು ನಿರ್ವಹಿಸುವಷ್ಟೇ ಕಠಿಣವೆನ್ನಿಸುವ ಸಾಧನೆಯಿದು. ಸಂಕ್ಷೇಪವಾಗಿ ಹೇಳುವುದಾದರೆ, ವಜ್ರದಷ್ಟು ಕಠೋರವೂ ಹೂವಿನಷ್ಟು ಮೃದುವೂ ಆಗುತ್ತ - ಪಾತ್ರೆಯ ಶಕ್ತ್ಯಾನುಸಾರದ ಪಾತ್ರವಾಗುತ್ತ - ಕಲ್ಕತ್ತೆಯಲ್ಲಿ ಆಧ್ಯಾತ್ಮಿಕ ಕ್ರಾಂತಿಯ ಹರಿಕಾರರಾದ ಶಕ್ತಿವಿಶೇಷತೆಯೇ ಶ್ರೀ ರಾಮಕೃಷ್ಣ. ಅನಂತರ ಈ ಸುಗಂಧವನ್ನು ವಿಶ್ವವ್ಯಾಪಿಗೊಳಿಸಿದ ಶ್ರೇಯವು - ಶ್ರೀ ರಾಮಕೃಷ್ಣರ ಕೃಪೆಗೆ ಪಾತ್ರರಾಗಿದ್ದ ಸ್ವಾಮಿ ವಿವೇಕಾನಂದರು ಮತ್ತು ಅವರಿಗೆ ಹೆಗಲೆಣೆಯಾಗಿ ಶ್ರಮಿಸಿದ ಸೋದರ ಸನ್ಯಾಸಿಗಳಿಗೆ ಸಲ್ಲುತ್ತದೆ.
ದಕ್ಷಿಣೇಶ್ವರದ ಯೋಗೀಂದ್ರ
ಶ್ರೀ ರಾಮಕೃಷ್ಣರಿಂದಲೇ - ತನ್ನ ಮಾನಸ ಪುತ್ರ ಎಂದು ಪ್ರೀತಿಸಲ್ಪಟ್ಟ (ಬ್ರಹ್ಮಾನಂದರು) ರಾಖಾಲ ಮತ್ತು - ಶಿವಸ್ವರೂಪಿ ಎಂದು ಕೊಂಡಾಡಲ್ಪಟ್ಟ ನರೇಂದ್ರ ಮುಂತಾದ ಹುಡುಗರು ಋಷಿಸದೃಶರಾದ ಶ್ರೀ ರಾಮಕೃಷ್ಣರನ್ನು ಭೇಟಿಯಾದ ಆರಂಭಿಕ ಅವಧಿಯಲ್ಲಿಯೇ - ರಾಮಕೃಷ್ಣರು ಪೂರ್ಣ ವಿಕಸನಗೊಂಡು ಭಾವ ವಿಕಾಸದ ಗುರುತ್ವದಲ್ಲಿದ್ದರು. ಸಾಕ್ಷಿ ಕೇಳುವ ಚತುರರಿಗೆ ಅವರು ನಿಂತಲ್ಲಿಯೇ ಸಾಕ್ಷಿ ನೀಡುವ ಹಂತದಲ್ಲಿದ್ದರು. ಈ ಹಂತದಲ್ಲಿ, "ಗುರುವಿಗೆ ತಕ್ಕ ಶಿಷ್ಯರು" ಮತ್ತು "ಶಿಷ್ಯರಿಗೆ ತಕ್ಕ ಗುರು" ಎಂಬ ಯುಕ್ತ ಸಮಾಗಮವಾದಾಗ ವಿಸ್ಮಯಗಳ ಸರಮಾಲೆಯೇ ಸಂಭವಿಸುವಂತಾಯಿತು. 18 - 19 ನೇ ಶತಮಾನವು ಅಂತಹ ಅನೇಕ ವಿಸ್ಮಯಗಳಿಗೆ ಸಾಕ್ಷಿಯಾಯಿತು. ಸಾವಿರಾರು ಕಾಟುಗಿಡಗಳನ್ನು ನಿವಾರಿಸಲು ಒಂದೇ ಒಂದು ಹರಿತವಾದ ಕತ್ತಿಯು ಸಾಕಾಗುವಂತೆ - ರಾಮಕೃಷ್ಣರೊಬ್ಬರೇ ತಮ್ಮ ದರ್ಶನದ ಅನಾವರಣದ ಕಾರ್ಯಕ್ಕಾಗಿ ರಂಗಪ್ರವೇಶ ಮಾಡಿ ಭಕ್ತ ಸಮಾಜವನ್ನು ನಿರ್ಮಾಣ ಮಾಡಿದರು. ತಮ್ಮ ಸುತ್ತಲಿನ ಹೊಟ್ಟನ್ನು ತೂರಿ, ಗಟ್ಟಿಕಾಳುಗಳನ್ನು ಮಾತ್ರ ಅಳೆದು ತೂಗಿ ಸ್ವೀಕರಿಸಿ ನೀರು ಗೊಬ್ಬರವೆರೆದು ಪೋಷಿಸಿದ್ದರು; ತನ್ಮೂಲಕ ಈಶ್ವರಕೋಟಿ ಎಂದು ಭಾವಿಸಿದ್ದ ತಮ್ಮ ಶಿಷ್ಯರುಗಳನ್ನು ರೂಪಿಸಿದರು; ಅವರಿಗೆ ಸಶಕ್ತ ಮಾರ್ಗದರ್ಶನ ಮಾಡಿದರು. ಹೀಗೆ ಪೂರ್ವ ಸಂಸ್ಕಾರವುಳ್ಳ ಮತ್ತು ಜ್ಞಾನವನ್ನು ಗ್ರಹಿಸಿ ಅನುಸರಿಸಬಲ್ಲ ಹದಿನಾರು ಅಪರಂಜಿಗಳನ್ನು ಶ್ರೀ ರಾಮಕೃಷ್ಣರು ತಮ್ಮ ಶಿಷ್ಯರನ್ನಾಗಿ ಆಯ್ದುಕೊಂಡು - ತಾವೇ ಕೈಹಿಡಿದು, ಅರಿವನ್ನು ಹೊಂದುವ ಮಾರ್ಗದಲ್ಲಿ ಅವರನ್ನು ಮುನ್ನಡೆಸುತ್ತ, ವೈಚಾರಿಕ ಕೋಡುಗಲ್ಲುಗಳನ್ನು ಕೆತ್ತಿ ಶಿಲ್ಪವಾಗಿಸಿ, ತನ್ಮೂಲಕ ಶ್ರೀ ರಾಮಕೃಷ್ಣ ಚೇತನವನ್ನು ವಿಶ್ವವ್ಯಾಪಿಯಾಗಿಸುವ ಓನಾಮವಾದಂತಾಯಿತು. ವಿಶ್ವಕಲ್ಯಾಣದ ದೀಕ್ಷೆಹೊತ್ತ ಸಮಾಜಮುಖೀ ಅಧ್ಯಾತ್ಮ ಪಿಪಾಸುಗಳಿಗೆ ಮತ್ತು ಆತ್ಮೋದ್ಧಾರದತ್ತಲೇ ದೃಷ್ಟಿ ನೆಟ್ಟಿದ್ದ ಬ್ರಹ್ಮಪಿಪಾಸುಗಳಿಗೆಲ್ಲ ಪರಮಯೋಗೀಂದ್ರರ ದಕ್ಷಿಣೇಶ್ವರವು ಅಂದು ಆಶ್ರಯತಾಣವಾಯಿತು; ಸಮೃದ್ಧ ಆಧ್ಯಾತ್ಮಿಕ ಹೊಲವಾಯಿತು.
ಮುಂದೇನು ?
ಸ್ಥಿತಿವಂತ ಕುಟುಂಬಗಳಿಂದ ಬಂದಿದ್ದ ಅನೇಕ ವಿದ್ಯಾವಂತ ತರುಣರು ರಾಮಕೃಷ್ಣರ ಅದ್ಭುತ ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿ, ಅವರ ಆಧ್ಯಾತ್ಮಿಕ ಸಾಧನೆಗಳಿಂದ ಪರವಶರಾಗಿ - ಅವರನ್ನು ಅದಾಗಲೇ ಅನುಸರಿಸತೊಡಗಿದ್ದರು. ತಮ್ಮ ಮನೆಮಠ ಬಿಟ್ಟು ಅವರೊಂದಿಗೇ ವಾಸ್ತವ್ಯವಿದ್ದು ಬೆಳಿಗ್ಗೆ 3 ಗಂಟೆಗೇ ಎದ್ದು ಸ್ನಾನ ಮಾಡಿ, ಧ್ಯಾನದಲ್ಲಿ ಮೈಮರೆಯುತ್ತಿದ್ದರು. ಕೆಲವರು ರಾತ್ರಿಯಿಡೀ ಧ್ಯಾನಾವಸ್ಥೆಯಲ್ಲಿದ್ದು ಹಗಲಿನಲ್ಲಿ ವಿರಮಿಸುತ್ತಿದ್ದರು. ಊಟತಿಂಡಿ ವಸ್ತ್ರಭೂಷಣ ಮುಂತಾದ ಅದುವರೆಗೆ ರೂಢಿಗತವಾಗಿದ್ದ ತಮ್ಮ ಸಮಸ್ತ ಜೀವನಕ್ರಮವನ್ನೇ ಸರಳಗೊಳಿಸಿಕೊಂಡು ಧೀಶಕ್ತಿಯನ್ನು ವೃದ್ಧಿಸಿಕೊಳ್ಳತೊಡಗಿದ್ದರು; ಚಿತ್ತೇಕಾಗ್ರತೆಯ ಮೂಲಕ ಶಕ್ತಿ ಸಂಚಯದಲ್ಲಿ ತೊಡಗಿರುತ್ತಿದ್ದರು. ಶ್ರೀ ರಾಮಕೃಷ್ಣರ ನಿರ್ಯಾಣಾನಂತರ ಈ ಗುರುಭಾವದ ನಿರಂತರ ಬೆಸುಗೆಯನ್ನು ಉಳಿಸಿಕೊಂಡು ಲೋಕಹಿತಕ್ಕೆ ಪೂರಕವಾಗುವಂತೆ ಅದನ್ನು ಬೆಳೆಸಿಕೊಳ್ಳಲು ನೆರವಾದವರು - ಸಿಡಿಲಮರಿ ನರೇಂದ್ರ. ತಮ್ಮ ಗುರುಬಂಧುಗಳ ಸ್ವಭಾವ, ಸಾಮರ್ಥ್ಯಗಳನ್ನೆಲ್ಲ ಅರಿತಿದ್ದ ನರೇಂದ್ರನು - ರಾಮಕೃಷ್ಣರ ನೆಚ್ಚಿನ ಭಕ್ತಿಗೂಡು ಚದುರಿಹೋಗದಂತೆ ಕಾಯ್ದುಕೊಂಡು, ರಾಮಕೃಷ್ಣಭಾವವನ್ನು ಶಾಶ್ವತಗೊಳಿಸಲೋಸುಗ ಅದೊಂದು ಸಾಂಘಿಕಶಕ್ತಿಯಾಗಿ ತಲೆಯೆತ್ತುವಂತೆ ಶ್ರಮಿಸಿದ್ದರು. ತಮ್ಮ ರುಚಿ ಮತ್ತು ಉದ್ದೇಶದ ಸಾಫಲ್ಯಕ್ಕಾಗಿ ಏಕಚಿತ್ತದಿಂದ ತತ್ಪರರಾಗಲು ಶಿಸ್ತುಬದ್ಧವಾದ ಒಂದು ಚೌಕಟ್ಟಿನ ಅಗತ್ಯವನ್ನು ಮನಗಂಡಿದ್ದ ಈ ಯುವಸಾಧಕರು 1887 ರಲ್ಲಿ ವಿಧ್ಯುಕ್ತವಾಗಿ ಸನ್ಯಾಸವನ್ನು ಸ್ವೀಕರಿಸಿದರು; ಮನೆ ಕುಟುಂಬ ಸಾಂಸಾರಿಕ ತಾಪತ್ರಯಗಳಿಂದ ಬಿಡುಗಡೆ ಕಂಡುಕೊಂಡರು. ಶ್ರೀ ರಾಮಕೃಷ್ಣರ ಮಹಾಸಮಾಧಿಯ ನಂತರ - "ಗುರುಗಳ ನಂತರ ಮುಂದೇನು ?" ಎಂದು ತಮ್ಮನ್ನು ಆಗಾಗ ಕೆಣಕುತ್ತಿದ್ದ ಬೃಹದಾಕಾರದ ಪ್ರಶ್ನೆಗೆ - 1886 ನೇ ಇಸವಿಯ ಅಗೋಸ್ತ್ 16 ರಂದು ಶ್ರೀ ರಾಮಕೃಷ್ಣರ ಮಹಾಸಮಾಧಿಯಾದ 5 ತಿಂಗಳ ನಂತರ... ಅವರ ಶಿಷ್ಯಗಡಣವು ಹೀಗೆ ಸನ್ಯಾಸದ ಶರಣುಹೋಗಿ, ಪರಿಣಾಮಕಾರಿಯಾದ ಉತ್ತರ ಕಂಡುಕೊಂಡಿತು.
ಅಂದಿನ ಸ್ವದೇಶೀಯರ ನಿರ್ವೀರ್ಯತೆ, ಆತ್ಮಶಕ್ತಿ ಕುಂದಿ ನರಳುತ್ತಿದ್ದ ಸನ್ನಿವೇಶಗಳನ್ನು ಕಣ್ಣಾರೆ ಕಂಡಿದ್ದ ಈ ಯುವಕರು ಸಮಾಜದಲ್ಲಿ ಹೊಸಹುರುಪನ್ನು ತುಂಬುವ ಸಂಕಲ್ಪ ಮಾಡಿಕೊಂಡರು. ಸಮಾಜವು ದಯನೀಯ ಸ್ಥಿತಿಯಲ್ಲಿದ್ದರೂ ಅಧ್ಯಾತ್ಮದ ಮಿಡಿತವು ಭಾರತದ ನೆಲದಲ್ಲಿ ಜೀವಂತವಾಗಿದ್ದುದನ್ನು ಗುರುತಿಸಿದ್ದ ಗುರುಸೋದರರು, ಅದೇ ಅಧ್ಯಾತ್ಮಕ್ಕೆ ಪ್ರಾಣಶಕ್ತಿಯನ್ನು ತುಂಬುವ ಕಾರ್ಯದಲ್ಲಿ ತತ್ಪರರಾಗಲು ನಿಶ್ಚಯಿಸಿಕೊಂಡರು. ತಪ್ತಚೇತನಗಳನ್ನು ತೃಪ್ತಚೇತನರಾಗಿಸಲೋಸುಗ ಅಧ್ಯಾತ್ಮದ ದೀವಿಗೆಯನ್ನು ಎತ್ತಿ ಹಿಡಿದರು. ಕ್ರಿಯಾಶೀಲರಾಗಲು ಕರೆಕೊಟ್ಟರು. ಜಗತ್ತಿನ ಹಿತವನ್ನು ಮತ್ತು ಆತ್ಮೋದ್ಧಾರವನ್ನು ಜೊತೆಯಾಗಿ ಸರಿದೂಗಿಸಿಕೊಂಡು ನಡೆಯುವ ವಿಶಾಲ ಚಿತ್ರಪಟವನ್ನು ಮುಂದಿಟ್ಟುಕೊಂಡು ತಮ್ಮ ಕಾರ್ಯಕ್ಷೇತ್ರವನ್ನು ಗುರುತಿಸಿಕೊಂಡರು. ಮೊದಲು ರಾಮಕೃಷ್ಣರ ನರೇಂದ್ರನಾಗಿ - ಅನಂತರ ವಿಶ್ವಕ್ಕೇ ವಿವೇಕಾನಂದರಾದ ಸ್ವಾಮೀಜಿಯವರು ತಮ್ಮ ಧ್ಯೇಯೋದ್ದೇಶಗಳ ನೀಲಿನಕ್ಷೆಯನ್ನು ಸ್ವತಃ ಸಿದ್ಧಪಡಿಸಿ ತಮ್ಮ ಸಂಘಕ್ಕೆ ಭದ್ರವಾದ ತಳಪಾಯವನ್ನು ಒದಗಿಸಿದ್ದರೂ ಅವರು ಅಲ್ಪಾಯುಷಿಗಳಾದರು; ಅವರು ಸಕ್ರಿಯರಾಗಿ ಗುಡುಗತೊಡಗಿದ ಕೇವಲ 16 ವರ್ಷಗಳ ಮಿತ ಅವಧಿಯಲ್ಲೇ ವಿವೇಕಾನಂದರ ಆಯುಷ್ಯ ಮುಗಿದಿತ್ತು. ಅವರ ಕಾಲಾನಂತರ, ವಿವೇಕಾನಂದರು ತೋರಿಸಿದ ದಾರಿಯಲ್ಲೇ ನಡೆದ ರಾಜಾ ಮಹಾರಾಜರು (ಪೂರ್ವದಲ್ಲಿ ರಾಖಾಲ; ಅನಂತರ ಸ್ವಾಮಿ ಬ್ರಹ್ಮಾನಂದರು) ಮತ್ತು ಸ್ವಾಮಿ ಶಾರದಾನಂದರು (ಶರಶ್ಚಂದ್ರ ಚಕ್ರವರ್ತಿ) ತಮ್ಮ ಸೋದರ ಸನ್ಯಾಸಿಗಳನ್ನು ಜೊತೆಗಿರಿಸಿಕೊಂಡು ವಿವೇಕಾನಂದರ ಆಶಯಗಳಿಗೆ ಚ್ಯುತಿ ಬರದಂತೆ ಶ್ರೀ ರಾಮಕೃಷ್ಣರಿಗೆ ದೃಢವಾದ ಸಾಂಸ್ಥಿಕ ರೂಪವನ್ನು ಕೊಟ್ಟ ವಿಸ್ಮಯಕಾರೀ ಪರಿಶ್ರಮವೂ ಇಲ್ಲಿ ಗಮನಾರ್ಹವಾದುದು.
ಶ್ರೀ ರಾಮಕೃಷ್ಣ ಮೂಲಸಾಮ್ರಾಜ್ಯ
ಶ್ರೀ ಶಂಕರಾಚಾರ್ಯರು ರೂಪಿಸಿದ ದಶನಾಮೀ ಪದ್ಧತಿಯಂತೆ ಮೊದಲು ಸನ್ಯಾಸ ಸ್ವೀಕರಿಸಿದವರು 8 ಮಂದಿ.
ಈ ಸಂದರ್ಭದಲ್ಲಿ ಮಠದಲ್ಲಿ ವಾಸ್ತವ್ಯವಿಲ್ಲದ ಉಳಿದ 8 ಮಂದಿ ಶಿಷ್ಯರು ಅನಂತರ ಒಬ್ಬೊಬ್ಬರಾಗಿ ವಿಧಿಪೂರ್ವಕವಾಗಿ ಸನ್ಯಾಸ ದೀಕ್ಷೆ ಪಡೆದುಕೊಂಡರು.
ಆದರೆ - ಶ್ರೀ ರಾಮಕೃಷ್ಣಾನಂದರು ಮಾತ್ರ (ಶಶಿಭೂಷಣ) ಶ್ರೀ ರಾಮಕೃಷ್ಣರ ಪವಿತ್ರ ಅಸ್ಥಿಯನ್ನು ಕಾಪಾಡುತ್ತ ಪೂಜೆಕೈಂಕರ್ಯಗಳನ್ನು ಅನೂಚಾನವಾಗಿ ನಡೆಸುತ್ತ ಬಾರಾನಾಗೋರಿನ ಮಠವನ್ನು ಬಿಟ್ಟು ಅಲುಗಿರಲಿಲ್ಲ. ಗರುಡಗಂಬದಂತೆ ಮಠದಲ್ಲೇ ಇದ್ದುಕೊಂಡು ತನ್ನ ಸಂಚಾರೀ ಸೋದರರ ಯೋಗಕ್ಷೇಮವನ್ನು ಪತ್ರಮುಖೇನ ತಿಳಿದುಕೊಳ್ಳುತ್ತ, ಇತರ ಸಂಚಾರೀ ಸೋದರಸನ್ಯಾಸಿಗಳಿಗೆ ಪರಸ್ಪರರ ದಿಕ್ಕುದೆಸೆಗಳನ್ನು ವರದಿಮಾಡುವಂತಹ ಭದ್ರ ಕೊಂಡಿಯಾಗಿ ಶ್ರೀ ರಾಮಕೃಷ್ಣಾನಂದರು ವಿಭಿನ್ನ ಪಾತ್ರ ವಹಿಸಿದ್ದರು. ಒಂದರ್ಥದಲ್ಲಿ - ಮನೆಯೊಂದನ್ನು ಕಟ್ಟಿ ಉಳಿಸುವಂತಹ "ತಾಯಿ"ಯ ಸಮನ್ವಯಭಾವದ ಪಾತ್ರವನ್ನು ಅಂದು - ರಾಮಕೃಷ್ಣಾನಂದರು ವಹಿಸಿದಂತೆ ತೋರುತ್ತದೆ. ಅಂದು ಯಾವುದೇ ಆರ್ಥಿಕ ಬಲವಿಲ್ಲದೆ ಭಾವ ಪೋಷಣೆಗೂ ದಿಕ್ಕಿಲ್ಲದೆ ಈ ಶಿಷ್ಯಗಡಣವು ಪಟ್ಟ ಬವಣೆಗಳಿಗೆ ಇತಿಮಿತಿಯಿರಲಿಲ್ಲ. ಆದರೆ - "ರಾಮಕೃಷ್ಣ ಭಾವ" ಎಂಬ ಅಂತಃಶಕ್ತಿಯು ಈ ತರುಣರ ಕೈಬಿಡಲಿಲ್ಲ. "ಗುರು ಮತ್ತು ಗುರಿ" ಎಂಬ ತತ್ಪರ ನಡಿಗೆಯು ಮಾತ್ರ ಸಂಕಲ್ಪಿತ ಯಶಸ್ಸನ್ನು ತೋರಿಸಬಲ್ಲದು ಎಂಬುದಕ್ಕೆ ಶ್ರೀ ರಾಮಕೃಷ್ಣ ಸಾಮ್ರಾಜ್ಯವೇ ಸಾಕ್ಷಿ.
ಹತಾಶ ನಿರಾಶ ಸಮುದಾಯಕ್ಕೂ ಅಧ್ಯಾತ್ಮದ ರಕ್ಷೆ ನೀಡುವಂತಹ ಪ್ರಾಯೋಗಿಕ ಸನ್ನಿವೇಶವನ್ನು ನಿರ್ಮಿಸಿ, "ಮನುಷ್ಯ ಜಾತಿ ತಾನೊಂದೆ ವಲಂ" ಎಂಬುದನ್ನು ಕ್ರಿಯಾನ್ವಯಗೊಳಿಸಿ, ಎಲ್ಲರ ಬದುಕನ್ನು ಎತ್ತರಿಸುವ ಕೆಲಸದಲ್ಲಿ ಅನೂಚಾನವಾಗಿ ತೊಡಗಿಕೊಂಡಿರುವುದು ರಾಮಕೃಷ್ಣ ವಲಯದ ವೈಶಿಷ್ಟ್ಯ.
ಭಕ್ತ - ಭಕ್ತಿ
ಭಕ್ತರಲ್ಲಿ ಹಲವು ಬಗೆಗಳಿವೆ. ಇದನ್ನು ಸ್ವಾರ್ಥಪೂರಿತ ಭಕ್ತಿ ಮತ್ತು ನಿಸ್ವಾರ್ಥ ಭಕ್ತಿ ಎಂದು ಸ್ಥೂಲವಾಗಿ ವಿಂಗಡಿಸಬಹುದು. ಏನನ್ನಾದರೂ ಕೊಟ್ಟಂತೆ ಮಾಡಿ, ಪ್ರತಿಯಾಗಿ ಪಡೆದುಕೊಳ್ಳುವ ಭಾವಭಕ್ತಿ ಮೂಲಗಳೆಲ್ಲವೂ ಸ್ವಾರ್ಥಪೂರಿತವೆನ್ನಿಸುತ್ತವೆ. ಅಧ್ಯಾತ್ಮದ ಹಾದಿಯಲ್ಲಿ ಒಂದಿಷ್ಟೂ ಮುನ್ನಡೆಸಲಾಗದ ವ್ಯಾವಹಾರಿಕವಾದ ಭಕ್ತಿಭಾವವಿದು. ನಿಂತಲ್ಲೇ ನಿಲ್ಲುವ ನೀರಿನಂತೆ ಕಶ್ಮಲಗೊಳ್ಳುವ ಅಂತಹ ಯಾವುದೇ ವ್ಯಾವಹಾರಿಕತೆಯನ್ನು ತಾವಾಗಿಯೇ ಮಿತಗೊಳಿಸಿಕೊಳ್ಳುತ್ತ ಮುಗ್ಧ ಶರಣಾಗತ ಭಾವವನ್ನು ಆವಾಹಿಸಿಕೊಂಡಲ್ಲದೆ ಸಾರ್ಥಕ ಭಕ್ತಿಯು ಒಡಮೂಡದು. ನಿಸ್ವಾರ್ಥದಿಂದಲೇ ಸಾರ್ಥಕ್ಯ.
ನಿಸ್ವಾರ್ಥದ ಪ್ರತಿರೂಪ
ನಿಸ್ವಾರ್ಥ ಎಂಬ ಶಬ್ದದ ಪ್ರತಿರೂಪವೇ ಶ್ರೀಮಾತೆಯವರು. ಶಾರದಾದೇವಿಯವರು ಗೃಹಿಣಿಯಾಗಿಯೇ ತಮ್ಮ ಬಹುಪಾಲು ಆಯುಷ್ಯವನ್ನು ಕಳೆದವರು. ಪ್ರತೀದಿನವೂ ಧ್ಯಾನ ಪ್ರಾರ್ಥನೆಗಳು ಎಲ್ಲರಿಗೂ ಅವಶ್ಯಕ ಎಂದು ಅವರು ಪ್ರತಿಪಾದಿಸುತ್ತಿದ್ದರು. ಒಮ್ಮೆ ತಮ್ಮನ್ನು ಭೇಟಿಯಾಗಲು ಬಂದಿದ್ದ ಮಹಿಳೆಯರು ಮನೆಗೆ ಹೊರಟಾಗ "ನಿಮ್ಮ ಮಕ್ಕಳಿಗೆ ಧ್ಯಾನ ಪ್ರಾರ್ಥನೆ ಮಾಡುವಂತೆ ಪ್ರೇರೇಪಿಸಿ" ಎಂದಿದ್ದರು. ಅನಂತರ ಅಲ್ಲಿಂದ ಹೊರಟಿದ್ದ ಆ ಮಹಿಳೆಯರು ಸ್ವಲ್ಪ ದೂರದಲ್ಲಿ ನಿಂತು ಹರಟೆ ಹೊಡೆಯುತ್ತಿದ್ದುದನ್ನು ನೋಡಿದಾಗ "ಸಂಜೆಯೊಳಗೆ ಮನೆ ತಲುಪಿ ಪ್ರಾರ್ಥನೆಯಲ್ಲಿ ತೊಡಗಿಕೊಳ್ಳುವ ಬದಲು ಇಲ್ಲಿ ನಿಂತು ಹರಟೆ ಹೊಡೆಯುತ್ತಿದ್ದಾರೆ..." ಎಂದು ತಮ್ಮಷ್ಟಕ್ಕೇ ಹೇಳಿಕೊಂಡಿದ್ದರು. ಭಕ್ತಿಯು ಇಚ್ಛಿಸದೆ ಒಲಿಯುವುದಿಲ್ಲ.
ಬರಬರುತ್ತ, ತಮ್ಮನ್ನು ಕಾಣಲು ಬರುತ್ತಿದ್ದ ವಿಭಿನ್ನ ಮನೋಸ್ತರದ ವ್ಯಕ್ತಿಗಳೊಂದಿಗೆ ಮಾತೆ ಶಾರದಾದೇವಿಯವರು ಅನಿವಾರ್ಯವಾಗಿ ವ್ಯವಹರಿಸಬೇಕಾಗುತ್ತಿತ್ತು. ತಮ್ಮ ಬದುಕಿನಲ್ಲಿ ಎಷ್ಟೇ ಕಷ್ಟಕಾರ್ಪಣ್ಯಗಳನ್ನು ಹಾದುಬಂದರೂ ಮನುಷ್ಯರ ವಕ್ರತೆಯಲ್ಲಿ ಪರಿವರ್ತನೆಯಾಗದಿರುವುದು ಮತ್ತು ಹೊಸಹೊಸ ವಕ್ರತೆಗಳನ್ನು ಅವರವರೇ ಸಂಶೋಧಿಸಿ ಅನುಸರಿಸುವುದನ್ನು ಕಂಡಿದ್ದ ಅವರು ಒಮ್ಮೊಮ್ಮೆ ದುಃಖಿಸುತ್ತಿದ್ದರು; ಕೆಲವೊಮ್ಮೆ ನಗುತ್ತಿದ್ದರು. ಏನೋ ಪ್ರತಿಫಲಾಪೇಕ್ಷೆಯಿಂದಲೇ ಧಾವಿಸಿ ಬರುತ್ತಿದ್ದ ಜನರನ್ನು ನೋಡಿ - "ಜನ ಎಷ್ಟು ಸ್ವಾರ್ಥ ಅಭಿಲಾಷೆಯಿಂದ ಬರುತ್ತಾರಲ್ಲ ? ಒಂದು ಸೌತೇಕಾಯಿಯನ್ನು ನೈವೇದ್ಯಕ್ಕೆಂದು ಕೊಟ್ಟು ತಮ್ಮ ಸಕಲ ಇಷ್ಟಾರ್ಥಗಳೂ ಫಲಿಸಬೇಕೆಂದು ಇಚ್ಛಿಸುತ್ತಾರೆ ! ಸಾಧಾರಣ ಮನುಷ್ಯರ ಸ್ವಭಾವವೇ ಹೀಗೆ..." ಎಂದುಕೊಳ್ಳುತ್ತಿದ್ದರು. "ಅನೇಕರು ಪ್ರಪಂಚದ ಪೆಟ್ಟಿನಿಂದ ನೊಂದಾದಮೇಲೆ ದೇವರ ಕಡೆಗೆ ತಿರುಗಬಹುದು. ಆದರೆ ಯಾರು ಬಾಲ್ಯದಿಂದಲೂ ಭಗವಂತನ ಕುರಿತು ಚಿಂತಿಸುವರೋ ಅವರೇ ಧನ್ಯರು !" - ಎಂದಿದ್ದರು ಶಾರದಾದೇವಿ. ನಮ್ಮ ಬದುಕಿನ ಅಭಿರುಚಿ ಆದ್ಯತೆಗಳೆಲ್ಲವೂ ಪೂರ್ವ ಸಂಸ್ಕಾರದಂತೆಯೇ ನಡೆಯುತ್ತದೆ ಎಂಬುದನ್ನೇ ಮಾತೆಯವರು ಸೂಚ್ಯವಾಗಿ ಹೇಳಿದಂತಿದೆ. ಪ್ರತಿಯೊಂದು ಜನ್ಮವೂ ಒರಟುಗಲ್ಲನ್ನು ನಯಗೊಳಿಸಿಕೊಳ್ಳಲು ಸಿಕ್ಕಿರುವ ಅಪೂರ್ವ ಅವಕಾಶಗಳಷ್ಟೇ !
ಶ್ರೀ ರಾಮಕೃಷ್ಣರನ್ನೂ ದರ್ಶಿಸಿ ಅವರ ಉಪದೇಶಗಳನ್ನು ಆಲಿಸಿದ್ದ ವೃದ್ಧ ಸ್ತ್ರೀಯೊಬ್ಬರು ಮುಂದೊಂದು ದಿನ ಮಾತೆಯವರನ್ನು ಭೇಟಿಯಾಗಿ "ರಾಮಕೃಷ್ಣರ ಉಪದೇಶದ ಕೆಲವನ್ನು ಕೂಡ ನಾವು ಅನುಷ್ಠಾನಕ್ಕೆ ತರಲಾಗಲಿಲ್ಲ. ಅವರ ಮಾತಿನಂತೆ ನಡೆದಿದ್ದರೆ ನಾವು ಪ್ರಪಂಚದಲ್ಲಿ ಇಷ್ಟು ಸಂಕಟಪಡಬೇಕಾಗಿರಲಿಲ್ಲ. ತಾಯೀ, ನಮಗೆ ಇನ್ನೂ ಪ್ರಪಂಚದ ಮೇಲೆ ಆಸೆ ಇದೆ. ಯಾವಾಗಲೂ ಏನನ್ನಾದರೂ ಕರ್ಮವನ್ನು ಮಾಡುತ್ತಲೇ ಇರುತ್ತೇವೆ..." ಎಂದು ಬೇಸರದಿಂದ ಹೇಳಿಕೊಂಡಿದ್ದರು.
ಆಗ ಮಾತೆಯವರು - "ಕೆಲಸ ಮಾಡಲೇಬೇಕು. ಕರ್ಮದಿಂದಲೇ ಕರ್ಮಬಂಧನವನ್ನು ಕಿತ್ತೊಗೆಯಬಹುದು. ಸಂಪೂರ್ಣ ಅನಾಸಕ್ತಿ ಎಂಬುದು ನಿಧಾನವಾಗಿ ಬರುವಂಥದ್ದು. ಆದ್ದರಿಂದ ಕ್ಷಣವೂ ಕೆಲಸವಿಲ್ಲದೆ ಇರಬಾರದು.." ಎಂದಿದ್ದರು. ಭಕ್ತರ ನಿತ್ಯ ಜಂಜಡದ ಪೋಕು ಮಾತುಗಳಿಗೂ ಪ್ರತಿಕ್ರಿಯಿಸಬೇಕಾಗಿ ಬಂದಾಗ, "ಮಹಾಮಾಯೆಯು ಒಂದು ಬೆಕ್ಕನ್ನು ಸಾಕುವಂತೆ ಮಾಡಿ - ಆ ಬೆಕ್ಕಿನೊಂದಿಗೆ - ಬದುಕನ್ನು ಮುಕ್ಕುವ ಆಸೆಗಳನ್ನೂ ಜೋಡಿಸಿ ದೇವರನ್ನು ಕಾಣುವ ಉದ್ದೇಶವನ್ನೇ ಮರೆಯುವಂತೆ ಮಾಡಿಬಿಡುತ್ತದೆ. ಪ್ರಪಂಚ ನಡೆಯುವುದೇ ಹೀಗೆ..." ಎನ್ನುತ್ತ ಮಾಯೆಗೆ ತಲೆಬಾಗುತ್ತಿದ್ದರು.
ಯಾವುದೇ ಮಹಾತ್ಮರ ಬಾಹ್ಯ ರೂಪದಲ್ಲಿಯೇ ವೈಶಿಷ್ಟ್ಯವನ್ನು ಕಂಡು ತಟ್ಟನೆ ಗುರುತಿಸಲು ಎಲ್ಲರಿಗೂ ಸಾಧ್ಯವಾಗದು; ಅದಕ್ಕೆ ದೃಷ್ಟಿಸಂಸ್ಕಾರವು ಅವಶ್ಯಕ. ಶ್ರೀ ರಾಮಕೃಷ್ಣ ಮತ್ತು ಶಾರದಾದೇವಿಯವರೂ - "ಅರಿಯದೇ ಅಳೆಯಲು ಯತ್ನಿಸುವ" ಅನೇಕ ಅಪಾತ್ರರನ್ನು ಹಾದುಬಂದಿದ್ದರು. ಯೋಗಿಯಾದವರ ನಡೆನುಡಿ, ಬದುಕು ಬವಣೆಗಳು ಹೊರಗಣ್ಣಿಗೆ ಎಲ್ಲರಂತೆಯೇ ಅನ್ನಿಸಿದರೂ - ಆಂತರ್ಯದಲ್ಲಿ ಇತರರಿಗಿಂತ ಭಿನ್ನವಾಗಿರುವುದು ಸ್ವಾಭಾವಿಕ. ಆದರೆ ಅಂತಹ ಯೋಗಿಗಳೂ ಬದುಕಿನ ನಿಯಮದಂತೆ, ಹಸಿವು ನಿದ್ರೆ ನೋವು ನಲಿವುಗಳನ್ನು ಇತರರಂತೆಯೇ ಹಾದುಬರುತ್ತಾರೆ; ಅವರ ಪ್ರತಿಕ್ರಿಯೆ ಮತ್ತು ಸ್ವೀಕೃತಿಯ ಶೈಲಿಯಲ್ಲಿ ಮಾತ್ರ ಭಿನ್ನತೆ ಇರುತ್ತದೆ. ಆದ್ದರಿಂದಲೇ ಅಧ್ಯಾತ್ಮದ ಸಂಸ್ಕಾರವುಳ್ಳವರಿಗೆ ಮಾತ್ರ ಯೋಗಿಗಳನ್ನು ಗುರುತಿಸುವುದು ಸುಲಭವಾಗುತ್ತದೆ; ಅದಿಲ್ಲದ ಭೋಗಕ್ಕೆ ಯಾವ ಯೋಗವು ಅರ್ಥವಾಗದು. ಯೋಗಿಗಳ ನಿತ್ಯದ ವರ್ತನೆಗಳ ಒಳಪದರದಲ್ಲಿರುವ ಭಾವ ಅನುಭಾವಗಳನ್ನು ಮಾನಸಿಕವಾಗಿ ಸ್ಪರ್ಶಿಸುವುದಕ್ಕೂ ಪೂರ್ವ ಸಂಸ್ಕಾರ ಅಗತ್ಯ.
ಸದಾ ತನ್ನ ಪ್ರಜ್ಞೆಯನ್ನು ಜಾಗ್ರತವಾಗಿ ಇರಿಸಿಕೊಳ್ಳಬಲ್ಲವರೇ ಯೋಗಿಗಳು. ಹೇಗಿದ್ದರೂ ಎಲ್ಲಿದ್ದರೂ ತೃಪ್ತ ಭಾವಸುಖದಲ್ಲಿ ಮುಳುಗಬಲ್ಲವನೇ ಯೋಗಿ. ರಾಮಕೃಷ್ಣ ಗುರುದಂಪತಿಗಳು ಅಂತಹ ಅಪೂರ್ವ ಯೋಗಿಗಳು.
ಶ್ರೀ ರಾಮಕೃಷ್ಣರು ಹೇಳುತ್ತಿದ್ದರು... "ಈ ಪ್ರಪಂಚವು ಮಿಥ್ಯೆ... ಇದು ಸತ್ಯ. ಇಲ್ಲದೇ ಇದ್ದರೆ ಕಾಮಾರಪುಕುರವನ್ನು (ಕಲ್ಕತ್ತದ ಸಮೀಪದಲ್ಲಿರುವ ರಾಮಕೃಷ್ಣರ ಜನ್ಮಭೂಮಿ ) ಚಿನ್ನದ ತಗಡಿನಿಂದ ನಾನು ಮುಚ್ಚುತ್ತಿದ್ದೆ. ಆದರೆ ಪ್ರಪಂಚ ಎಂಬುದು ಮಿಥ್ಯೆ ಎಂದು ನನಗೆ ಗೊತ್ತಿದೆ. ದೇವರೊಬ್ಬನೇ ಸತ್ಯ.." ಶ್ರೀ ರಾಮಕೃಷ್ಣರು ತಮ್ಮ ಬದುಕಿನ ಉತ್ತರಾರ್ಧದಲ್ಲಿ, ಹಣವನ್ನು ಮತ್ತು ಲೋಹಗಳನ್ನು ಕೈಯ್ಯಿಂದ ಮುಟ್ಟುತ್ತಲೂ ಇರಲಿಲ್ಲ. ಅಕಸ್ಮಾತ್ ಸ್ಪರ್ಶಿಸಿದಾಗಲೂ ದೈಹಿಕ ವೇದನೆ ಅನುಭವಿಸುತ್ತಿದ್ದರು ! ಕಾಮ ಕಾಂಚನಗಳು ಅನರ್ಥ ಸಾಧನಗಳು... ಎನ್ನುತ್ತಿದ್ದರು.
ಇಂತಹ ರಾಮಕೃಷ್ಣರ ಜೊತೆಯಲ್ಲಿ ಬದುಕನ್ನು ತೃಪ್ತಿಯಿಂದ ಸಾಗಿಸಿದವರು ಶ್ರೀಮಾತೆಯವರು ! ಒಬ್ಬ ಗೃಹಿಣಿಯಾಗಿ ಬದುಕಿನ ಬಿರುಗಾಳಿಗೆ ಶ್ರೀ ರಾಮಕೃಷ್ಣರಿಗಿಂತ ಹೆಚ್ಚು ಮೈಯೊಡ್ಡಿದವರು - ನಿಸ್ಸಂಶಯವಾಗಿ ಶ್ರೀಮಾತೆಯವರೇ. ಆದರೆ ಅವರೆಂದೂ ನಂಬಿಕೆ ವಿಶ್ವಾಸಗಳನ್ನು ಧಿಕ್ಕರಿಸಲಿಲ್ಲ; ಯಾರನ್ನೂ ಪ್ರಶ್ನಿಸಲೂ ಇಲ್ಲ. ಇದಕ್ಕಿಂತ ದೊಡ್ಡ ಯೋಗವುಂಟೆ ? ಶ್ರೀ ರಾಮಕೃಷ್ಣರ ಸಹವಾಸವು ಮಾತೆಯವರ ವ್ಯಕ್ತಿತ್ವಕ್ಕೆ ಹೊಳಪು ನೀಡಿ ಅವರನ್ನು - ಸುಂದರ ಶಾರದಾಶಿಲ್ಪವಾಗಿ ಕೆತ್ತಿ ನಿಲ್ಲಿಸಿತ್ತು. ಇಂತಹ ವ್ಯಕ್ತಿತ್ವಗಳು ಮಾತ್ರ "ಸಿದ್ಧ ಮಾದರಿ" ಗಳಾಗಲು ಸಾಧ್ಯ. ಸಹವಾಸ ದೋಷ ಗಳನ್ನು ಯಾವುದೇ ಸಂಕೋಚವಿಲ್ಲದೆ ಅನುಸರಿಸುವ ಪ್ರಸ್ತುತದ ಸಾಮಾಜಿಕರಿಗೆ ಸಹವಾಸ ಲಾಭ ದ ಅರಿವು ಮೂಡಿದಾಗ ಮಾತ್ರ - ಚೇತನವು ತಾನಾಗಿಯೇ ಜಾಗ್ರತಗೊಳ್ಳುವ ಅವಕಾಶವು ನಿರ್ಮಾಣವಾಗಬಹುದು. ಶ್ರೀಮಾತೆಯವರು - "ಎಲ್ಲಿದ್ದರೂ ಹೇಗಿದ್ದರೂ ಶಾಂತಿಯಿಂದ ಇರಬೇಕು; ತೃಪ್ತಿಯಿಂದ ಇರಬೇಕು.." ಎನ್ನುತ್ತಿದ್ದರು. ಇದೇ ನಿರ್ಲಿಪ್ತ ಸ್ಥಿತಿ ! ಸ್ಥಿತಪ್ರಜ್ಞ ಅವಸ್ಥೆ ! ತನ್ನೊಳಗೆ ತಾನು ಸದಾಕಾಲವೂ ಸಂತುಷ್ಟಿಯಿಂದ ಇರಬಲ್ಲವನೇ ಯೋಗಿ. ಯೋಗಿಗೆ ಸುಖವಿಲ್ಲ; ದುಃಖವಿಲ್ಲ. ಜ್ಞಾನವಿಲ್ಲ; ಅಜ್ಞಾನವೂ ಇಲ್ಲ. ಧರ್ಮವಿಲ್ಲ; ಅಧರ್ಮವೂ ಇಲ್ಲ. ಶುಭವಿಲ್ಲ; ಅಶುಭವೂ ಇಲ್ಲ. ಪಾಪವಿಲ್ಲ; ಪುಣ್ಯವೂ ಇಲ್ಲ. ಮಾನವಿಲ್ಲ; ಅಪಮಾನವೂ ಇಲ್ಲ. ಇವೆಲ್ಲವನ್ನೂ ಮೀರಿದ ಸ್ಥಿತಿಯದು ! ಸಾಕಾರವನ್ನು ದಾಟಿದ ನಿರಾಕಾರ ಸಿದ್ಧಿಯಿದು ! ಶ್ರೀ ರಾಮಕೃಷ್ಣರು ತಮ್ಮ ಆರಾಧ್ಯ ದೈವವಾದ ಕಾಳಿಕಾಮಾತೆಯಲ್ಲಿ ಸಲ್ಲಿಸುತ್ತಿದ್ದ ಪ್ರಾರ್ಥನೆಯು ಇದೇ ಆಗಿತ್ತು ! "ಇಟ್ಟ್ ಹಾಂಗೆ ಇರುವೆನು ಹರಿಯೇ.." ಎಂದ ದಾಸರೂ ಇದೇ ಯೌಗಿಕ ಸ್ಥಿತಿಯನ್ನು ತಲುಪಿ - ಲೋಕಕ್ಕೆ ತೃಪ್ತಿಯ ಸಂದೇಶವನ್ನು ಉಪದೇಶಿದ್ದರು. "ನಿಮ್ಮ ಚರಣಕಮಲದೊಳಗಾನು ದುಂಬಿ... ಅನ್ಯ ವಿಷಯಕ್ಕೆಳಸದಂತೆ ಇರಿಸು ಕೂಡಲಸಂಗಮದೇವಾ.. ದೇವಾ ಕೇಳಯ್ಯ - ನಿಮ್ಮುದರವ ಬಗಿದಾನು ಹೊಗುವ ಭರವೆನಗೆ..." ಎಂಬ ಬಸವಣ್ಣನ ವಚನಗಳು, "ನಿಮ್ಮ ದಾನವನುಂಡು ಅನ್ಯರ ಹೊಗಳುವ ಕುನ್ನಿಗಳನೇನೆಂಬೆ ರಾಮನಾಥಾ..." ಎಂಬ ದೇವರ ದಾಸಿಮಯ್ಯನ ವಚನಗಳೆಲ್ಲವೂ ಸಮರ್ಪಣೆಯ ಉತ್ಕಟತೆ, ಶರಣಾಗತಿಯ ಭಾವ ವೈಭವದೊಂದಿಗೆ ಹಾಸುಹೊಕ್ಕಾಗಿವೆ. ಮುಗ್ಧ ಸರಳತೆಯನ್ನು ಹಾಸಿಹೊದೆದಿರುವ ತೃಪ್ತ ಯೋಗ - ಭಕ್ತಿಯೋಗವೆಂದರೆ ಇದೇ !
ರಾಜ್ಯದ ಸಂರಕ್ಷಣೆಯ ಸಂದರ್ಭದಲ್ಲಿ ಬಳಕೆಯಾಗುವ ರಾಜಕಾರಣ ಎಂಬ ವಿದ್ಯೆಯಲ್ಲಿ ಸಾಮ ದಾನ ಭೇದ ದಂಡ... ಎಲ್ಲವೂ ಯುಕ್ತವೇ ಆಗಿದೆ ಎಂದಿದ್ದ ಚಾಣಕ್ಯನು - ಯಾವುದೇ ಸಂದರ್ಭದಲ್ಲೂ ಭ್ರಷ್ಟತೆಯು ನಿಷಿದ್ಧ - ಎಂದು ಸಾರಿದ್ದ. "ಶೀಲವಿಲ್ಲದ ಶಿಕ್ಷಣ, ತತ್ತ್ವರಹಿತ ರಾಜಕಾರಣ, ಮಾನವೀಯತೆ ಇಲ್ಲದ ವಿಜ್ಞಾನ, ನೀತಿಯಿಲ್ಲದ ವ್ಯಾಪಾರ... ಇವುಗಳಿಂದ ಅಪಾಯವು ನಿಶ್ಚಿತ" ಎಂದಿದ್ದ. ಆದರೆ ಇಂದು ಅದೇ ಅಪಾಯದ ದಾರಿಯಲ್ಲೇ ಓಡುತ್ತಿರುವ ಸಮಾಜದ ಚಾಣಕ್ಯಮಣಿಗಳನ್ನು ನೋಡಿದರೆ ಗಾಬರಿಯಾಗುವಂತಿದೆ. ಆಧುನಿಕತೆ ಎಂಬ ತಪ್ಪು ಕಲ್ಪನೆಯಲ್ಲಿ ಸಿಲುಕಿ, ಕಪಟತನದ ಉತ್ತುಂಗವನ್ನು ಮುಟ್ಟಿ ದುರ್ವಿಚಾರಗ್ರಸ್ತರಾಗಿರುವ ಇಂದಿನ ಕೆಲವು ಮನುಷ್ಯರಲ್ಲಿ ಎಷ್ಟೊಂದು ಪ್ರಜ್ಞೆನಷ್ಟಗೊಂಡಿದೆಯೆಂದರೆ... "ಮಂತ್ರಿಯಾದರೂ ಸೈ, ಮಂತ್ರಿಗಿರಿಗಾಗಿ ರೌಡಿಯಾಗಲೂ ಸೈ, ಕೊನೆಗೆ ಜೈಲುಪಾಲಾಗಲೂ ಸೈ..." - ಎಂಬಲ್ಲಿಗೆ ಭಂಡ ವ್ಯವಸ್ಥೆಯು ಬಂದು ಮುಟ್ಟಿದೆ ! ಅತ್ಯಂತ ಭ್ರಷ್ಟತೆಗೇ ಮಣೆಹಾಕುವ "ತಲೆ ಲೆಕ್ಕದ" ಧಾರ್ಷ್ಟ್ಯದ ಸನ್ನಿವೇಶಗಳು ರಾಜಾರೋಷಾಗಿ ಪ್ರಕಟಗೊಳ್ಳುತ್ತಿವೆ. ಇದು - ಸ್ವಯಂಕೃತ ದುರ್ಯೋಗಗಳು; ದುರಾಸೆಯ ತುತ್ತತುದಿ; ಸದವಕಾಶಗಳ ದುರುಪಯೋಗ; ಸುಯೋಗಗಳನ್ನು ಬಾಧಿಸುವ ದುರ್ವಿಧಿ ! ವಿನಾಶಕಾರೀ ವರ್ತನೆಗಳು ! ಭವಿಷ್ಯದಲ್ಲಿ - ಇವೇ ಬದುಕನ್ನು ಪೀಡಿಸುವ ಬಂಧನಗಳು.
ಯಾವುದೇ ಬಂಧನ ಎಂಬುದು ಮಂತ್ರಿಗಿರಿಯ ರೂಪದಲ್ಲೇ ಬರಬೇಕೆಂದಿಲ್ಲ; ಅದು - ಬೆಕ್ಕಿನ ಅಥವ ಇಲಿಯಂತಹ ನಗಣ್ಯ ರೂಪದಲ್ಲೂ ಬಂದು ಜೀವಿಗಳನ್ನು ಮುಕ್ಕಬಹುದು. ಸನ್ಯಾಸಿಯೊಬ್ಬನನ್ನು ಸಂಸಾರಿಯಾಗಿಸಬಲ್ಲ ಶಕ್ತಿಯುಳ್ಳ "ಬೆಕ್ಕಿನ ಮೋಹಬಂಧ" ಎಂಬ ಸಣ್ಣ ಹಗ್ಗವೇ ಸುಳಿಹಗ್ಗವಾಗಿ ಮೋಹಬಂಧಿಗಳನ್ನು ಸಂಸಾರದ ಕೊಚ್ಚೆಯೊಳಗೆ ಸುಲಭದಲ್ಲಿ ಸೆಳೆದುಕೊಳ್ಳಬಲ್ಲದು. ಅಂದಮೇಲೆ ದಿನಬೆಳಗಾದರೆ ಹಕ್ಕುಸೊಕ್ಕಿನ ಪ್ರದಕ್ಷಿಣೆ ಹಾಕುತ್ತ ಗುರಾಯಿಸುವ ಮನುಷ್ಯಮಾತ್ರರ ನೂರಾರು ಭಾವಬಂಧಗಳು ಇನ್ನೆಂತಹ ಸುಳಿಗಳಲ್ಲಿ ತಳ್ಳಬಹುದು ? ಅಪಾರ ದುಃಖಕ್ಕೆ ತಳ್ಳಿ ಆಯಾ ಅಂತರಾತ್ಮವನ್ನೇ ಸುಟ್ಟುಬಿಡುವ ಆಸೆಜನ್ಯವಾದ ಯಾವುದೇ ಮನೋರಕ್ಕಸತನಗಳು ಬದುಕಿನ ಸುಳಿಯಲ್ಲಿ ಅವಿಳಾಸಿಯಾಗುವುದು ಸಹಜ. ಪರಿಣಾಮವೇ - ಆತಂಕ, ಉದ್ವೇಗ, ನೋವು. ಸ್ವಾರ್ಥ ಕಾಪಟ್ಯವನ್ನು ತ್ಯಜಿಸದೆ - ಭಕ್ತನಾಗುವುದಂತೂ ಅಸಂಭವ; ಸಾಮಾನ್ಯ ತೃಪ್ತಬದುಕೂ ಸಿಗಲಾರದು.
ಸರಳತೆಯೇ ದೇವರು
ಮುಗ್ಧ ಸರಳತೆಯಲ್ಲಿಯೇ ಭಕ್ತಿ ಅರಳುತ್ತದೆ. ವ್ಯಾವಹಾರಿಕತೆಯ ನಾಟಕದಿಂದ ಹೊರಬಂದು ಮುಗ್ಧ ಸರಳತೆಯ ಸಾಕಾರವಾಗುವ ಹಾದಿಯು ಬಲು ದೀರ್ಘವಾದುದು. ಒಮ್ಮೆ ರಾಖಾಲ ಎಂಬ ಶಿಷ್ಯನು (ಸ್ವಾಮಿ ಬ್ರಹ್ಮಾನಂದ) ತಮಗೆ ತುಂಬ ಹಸಿವಾಗುತ್ತಿದೆ ಎಂದು ರಾಮಕೃಷ್ಣರಲ್ಲಿ ಹೇಳಿಕೊಂಡಾಗ ರಾಮಕೃಷ್ಣರು ಗಡಿಬಿಡಿಯಿಂದ ತಿಂಡಿ ಹುಡುಕಲು ಓಡಾಡತೊಡಗಿದರು. ನೆಟ್ಟಗೆ ಗಂಗಾತೀರಕ್ಕೆ ಬಂದು ಅಲ್ಲಿದ್ದ ಗೌರೀಮಾ (ಅಧ್ಯಾತ್ಮ ಸಾಧಕಿ) ಅವರಲ್ಲಿ ತಮ್ಮ ಕಷ್ಟವನ್ನು ತೋಡಿಕೊಂಡರು. "ಗೌರೀದಾಸೀ, ಇಲ್ಲಿ ಬಾ. ನನ್ನ ರಾಖಾಲನಿಗೆ ತುಂಬಾ ಹಸಿವು.." ಎಂದರು. ಆಗ ದಕ್ಷಿಣೇಶ್ವರದ ಸಮೀಪದಲ್ಲಿ ತಿಂಡಿತಿನಿಸುಗಳ ಅಂಗಡಿಗಳೂ ಇರಲಿಲ್ಲ. ರಾಮಕೃಷ್ಣರ ಚಡಪಡಿಕೆ ಏರುತ್ತಿತ್ತು. ಸ್ವಲ್ಪ ಹೊತ್ತಿನಲ್ಲಿ ರಾಮಕೃಷ್ಣರ ರಸದ್ದಾರ (ಪೋಷಕ) ಬಲರಾಮ ಬಸು ಮತ್ತು ಗೌರೀದಾಸಿ ಮುಂತಾದವರು ತಮ್ಮ ಕೋಣೆಯಲ್ಲಿ ಕೂತು ಚಡಪಡಿಸುತ್ತಿದ್ದ ರಾಮಕೃಷ್ಣರ ಬಳಿಗೆ ಬಂದರು. ಅವರು ಒಂದಷ್ಟು ತಿಂಡಿಯನ್ನೂ ತಂದಿದ್ದರು. ಅದನ್ನು ನೋಡಿದ ಪರಮಹಂಸರಿಗೆ ಪರಮಾನಂದವಾಗಿ ಅವರು ರಾಖಾಲನನ್ನು ಕೂಗಿ ಕರೆದರು. "ರಾಖಾಲಾ, ಬಾ ಇಲ್ಲಿ. ಹಸಿವು ಎಂದೆಯಲ್ಲ ? ತಿಂಡಿ ಇದೆ; ತಿನ್ನು.. ತಿನ್ನು.." ಎಂದು ಅವಸರಿಸಿದರು. ಆಗ ರಾಖಾಲನಿಗೆ ಸ್ವಲ್ಪ ಕೋಪ ಬಂತು. ದುಡ್ಡು ಕಾಸಿದ್ದ ಪ್ರತಿಷ್ಠಿತ ಕುಟುಂಬದಿಂದ ಬಂದಿದ್ದ ರಾಖಾಲನಿಗೆ ರಾಮಕೃಷ್ಣರ ಅಂದಿನ ವರ್ತನೆಯು ಕೋಪ ತರಿಸಿತ್ತು !
ಕೋಪದ ಮೂಲವೇ "ನಾನು" ಎಂಬ ಮಮಕಾರ. ಮನುಷ್ಯನಲ್ಲಿರುವ ಎಲ್ಲ ಬಗೆಯ ಪ್ರತಿಷ್ಠೆಗಳೂ ಅಹಂಭಾವದ ಪ್ರತಿಕೃತಿಗಳು. ಆ ಅವಧಿಯಲ್ಲಿ ತನ್ನ ಹಳೆಯ ಪ್ರತಿಷ್ಠೆಯ ವಾಸನೆಯಿಂದ ಇನ್ನೂ ಮುಕ್ತನಾಗಿರದಿದ್ದ ರಾಖಾಲನಿಗೆ - ರಾಮಕೃಷ್ಣರ ಸಹಜ ಮುಗ್ಧತೆಯು - ದಯನೀಯತೆ ಅನ್ನಿಸಿರಬಹುದು; ತನ್ನನ್ನೂ ಅಂತಹ ದಯನೀಯತೆಯಲ್ಲಿ ಒಳಗೊಳ್ಳುವಂತೆ ಮಾಡಿದರಲ್ಲ ಈ ಆಸಾಮಿ ? ಇವರು ತನ್ನ ಹಸಿವೆಯನ್ನು ಊರಲ್ಲೆಲ್ಲ ಡಂಗುರ ಹೊಡೆದುಕೊಂಡು ಬಂದದ್ದಾದರೂ ಯಾಕೆ ? - ಎಂದೆನ್ನಿಸಿದಾಗ ರಾಖಾಲನ ಅಹಂಭಾವಕ್ಕೆ ಘಾಸಿಯಾದಂತಾಗಿ ಸಿಟ್ಟು ಬಂದಿತ್ತು. ಆಗ ಅಹಂಭಾವವು ಸಿಡುಕುತ್ತದೆ. "ನನಗೆ ಹಸಿವಾಗಿದೆ ಎಂದು ಎಲ್ಲರಿಗೂ ನೀವೇಕೆ ಡಂಗುರ ಹೊಡೆಯುತ್ತೀರಿ ?" ಎಂದು ನೇರವಾಗಿಯೇ ಕೇಳುತ್ತಾನೆ. ಆಗ ಶ್ರೀ ರಾಮಕೃಷ್ಣರು ಮಗುವಿನಂತೆ "ಅದರಲ್ಲಿ ತಪ್ಪೇನು ? ನಿನಗೆ ಹಸಿವಾಗಿತ್ತು. ನಿನಗೆ ತಿನ್ನಲು ಏನಾದರೂ ಬೇಕಿತ್ತು. ಅದನ್ನು ಹೇಳಿದರೆ ಅಥವ ಯಾರಲ್ಲಾದರೂ ಕೇಳಿದರೆ - ತಪ್ಪೇನು ?" ಎಂದಿದ್ದರು. ಇದು ಶುದ್ಧ ಭಕ್ತನ ಮುಗ್ಧತೆ !
ಮುಂದೆ ಇದೇ ರಾಖಾಲನು ಆಧ್ಯಾತ್ಮದ ಹಾದಿಯಲ್ಲಿ ಮುನ್ನಡೆದ ಮೇಲೆ ಮುಗ್ಧ ಭಕ್ತನಾಗಿ ಪರಿವರ್ತಿತಗೊಂಡು ಸ್ವಾಮಿ ಬ್ರಹ್ಮಾನಂದರಾಗಿ ಸಾಫಲ್ಯ ಕಂಡುಕೊಂಡರು. ಶ್ರೀ ರಾಮಕೃಷ್ಣರು ತೋರಿದ ಅಧ್ಯಾತ್ಮದ ಹಾದಿಯಲ್ಲೇ ನಡೆಯುತ್ತ - ರಾಮಕೃಷ್ಣ ಸಂಘವನ್ನು ಬೃಹದಾಕಾರದಲ್ಲಿ ಕಟ್ಟಿ ನಿಲ್ಲಿಸಿ, ಅದನ್ನು ಬಹುದೀರ್ಘಕಾಲ ಸ್ವಾಮಿ ಬ್ರಹ್ಮಾನಂದರೇ ಮುನ್ನಡೆಸಿದ್ದು ಈಗ ಇತಿಹಾಸ. ಭಕ್ತಿಮಾರ್ಗದಲ್ಲಿ ಸರಳತೆಯೇ ಯಶಸ್ಸಿನ ಹಾದಿ.
ಅಧ್ಯಾತ್ಮವು ಶಾಸ್ತ್ರ ವಿದ್ಯೆಯಲ್ಲ; ಆತ್ಮ ವಿದ್ಯೆ
ಮುಗ್ಧತೆಯಾಗಲೀ ಸರಳತೆಯಾಗಲೀ ಅತ್ಯುಚ್ಛ ನೆಲೆಯನ್ನು ತಲುಪಿದಾಗ - ಒಮ್ಮೊಮ್ಮೆ - ಉನ್ಮತ್ತ ಎಂಬಂತೆಯೂ ಕಾಣುತ್ತದೆ. ಶ್ರೀ ರಾಮಕೃಷ್ಣರನ್ನು ಸಂಧಿಸುತ್ತಿದ್ದ ಮಹಾಶಯರುಗಳಲ್ಲಿ ವಿಭಿನ್ನ ಸ್ತರದ ಸಾಧಕ-ಆರಾಧಕರಿದ್ದರು. ಪೂರ್ಣ ಶರಣಾಗತಿ ಮತ್ತು ಉನ್ಮಾದ ಭಕ್ತಿಯ ನಿದರ್ಶನದಂತಿದ್ದ ನಾಗ ಮಹಾಶಯರೂ (ದುರ್ಗಾಚರಣ ನಾಗ) - ಶ್ರೀ ರಾಮಕೃಷ್ಣ ಮತ್ತು ಮಾತೆ ಶಾರದಾದೇವಿಯವರ ಪರಮ ಭಕ್ತರಾಗಿದ್ದರು ! ಬರಿಗಣ್ಣಿಗೆ "ಪವಾಡ" ಎಂದೆನ್ನಿಸುವ ಅನೇಕ ಘಟನೆಗಳು ನಾಗ ಮಹಾಶಯರ ಬದುಕಿನಲ್ಲಿ ಸಂಭವಿಸಿವೆ. ನೈವೇದ್ಯದ ಪ್ರಸಾದವನ್ನು ಇರಿಸಿ ಅವರಿಗೆ ಕೊಟ್ಟಿದ್ದ ಒಣದೊನ್ನೆಯನ್ನೂ ಪ್ರಸಾದವೆಂದೇ ಭಾವಿಸಿ ತಿಂದುಬಿಟ್ಟ ಅವಧೂತ ಶಿಖಾಮಣಿ - ನಾಗಮಹಾಶಯರು ! ಇದು ಭಕ್ತಿಯ ಪರಾಕಾಷ್ಠತೆ ! ಬಹುಸಂಖ್ಯಾತರಾಗಿರುವ ವ್ಯಾವಹಾರಿಕ ಭಕ್ತರು ಇಂತಹ ವರ್ತನೆಯನ್ನು "ಹುಚ್ಚು" ಎನ್ನಬಹುದು; ಆದರೆ ಭಕ್ತಿ ಮತ್ತು ಭಕ್ತನ ಭಾವಸಂಚಾರದ ನೆಲೆಯೇ ವಿಭಿನ್ನವಾದುದು. ಆದ್ದರಿಂದ ಭಕ್ತರ ಸತ್ವವನ್ನು ನಿಜವಾದ ಭಕ್ತರಲ್ಲದೇ ಇನ್ನೊಬ್ಬರು ತೂಗಲಾಗದು. ಅದು ಹೇಗೆಂದರೆ, ಕಲ್ಯಾಣಿ ರಾಗದ ಆರೋಹ ಅವರೋಹಗಳ ಪ್ರಾಥಮಿಕ ಪರಿಜ್ಞಾನವೂ ಇಲ್ಲದ ಸಾಮಾಜಿಕ ಸ್ವರೂಪಗಳು ಯಾವುದೇ ಕಲ್ಯಾಣಿಯ ವಿಮರ್ಶೆ ಮಾಡಲು ಆಗುವುದಿಲ್ಲ. ಹಾಗೊಮ್ಮೆ ಆಳ ವಿಸ್ತಾರದ ಯಾವುದೇ ಅರಿವಿಲ್ಲದೆ ಕಲ್ಯಾಣಿಯ ಸಂಶೋಧನೆಯಲ್ಲಿ ಮುಳುಗಿದರೆ ಶೂನ್ಯ ಸಂಪಾದನೆಯಷ್ಟೇ ಸಾಧ್ಯವಾದೀತು. ಶಾಸ್ತ್ರವಿದ್ಯೆಯೇ ಯಾವತ್ತೂ ಜ್ಞಾನವಲ್ಲ; ಪ್ರಾಯೋಗಿಕ ವಿದ್ಯೆಯು ಶಾಸ್ತ್ರಕ್ಕಿಂತ ಮುಂದಿನದು. ಅಧ್ಯಾತ್ಮ ಜ್ಞಾನ ಎಂದರೆ - ಶಾಸ್ತ್ರವನ್ನು ಶಾಸ್ತ್ರೀಯವಾಗಿ ದಾಟಿದ ಪ್ರಾಯೋಗಿಕ ಯೋಗವಿದ್ಯೆ.
ಶ್ರೀ ರಾಮಕೃಷ್ಣರನ್ನು ಬೆಂಬಿಡದೆ ಹಿಂಬಾಲಿಸಿದ ಅನ್ವರ್ಥಭಾವದ ಅರ್ಧಾಂಗಿ - ಮಾತೆ ಶಾರದಾದೇವಿ. ತಮ್ಮನ್ನು ಸುತ್ತಿಮುತ್ತುತ್ತಿದ್ದ ಜನಗಡಣದ ನಡುವೆ ಶ್ರೀ ರಾಮಕೃಷ್ಣರನ್ನು ಕಲ್ಪಿಸಿಕೊಳ್ಳುವ ಹಲವಾರು ಸಂದರ್ಭಗಳನ್ನು ಗಮನಿಸಿದರೆ - ಶ್ರೀಮಾತೆಯವರು ಅಪಾತ್ರರಾದ ಬಂಧುಗಳ ನಡುವೆ ನವೆಯುತ್ತ ಭಾವಸಾಂಗತ್ಯವಿಲ್ಲದೆ ನರಳುತ್ತಿದ್ದಂತೆಯೂ ಒಮ್ಮೊಮ್ಮೆ ಭಾಸವಾಗುವುದಿದೆ. ಅಂತಹ ಜಿಡುಕಿನ ಸಂಸಾರದಲ್ಲೇ ಈಜುತ್ತ ಕುತ್ಸಿತ ಕೋಟಲೆಗಳನ್ನೆಲ್ಲ ದಾಟಿಬಂದಿದ್ದರೂ ಮಾತೆಯವರೆಂದೂ ನಿಶ್ಶಕ್ತರಾಗಲಿಲ್ಲ; ನಿಸ್ಸತ್ವರೂ ಆಗಲಿಲ್ಲ. ಸಹನೆ ಸಂಯಮ ಮೀರಲಿಲ್ಲ. "ಕುಕ್ಕಿ ತಿಂದಂತೆ" ವರ್ತಿಸುತ್ತಿದ್ದ ತನ್ನ ಹೆತ್ತಮನೆಯ ಜವಾಬ್ದಾರಿಗಳನ್ನು ಅವರು ಕ್ರಮೇಣ ಕೊಡವಿಕೊಂಡಿದ್ದರೂ - ಅನಂತರ ತಮ್ಮನ್ನು ದರ್ಶಿಸಲು ಬರುತ್ತಿದ್ದ - ಬಂದು ಮುಕುರುತ್ತಿದ್ದ ಬಗೆಬಗೆಯ ಮನೋಭಾವದ ಭಕ್ತಶಿಷ್ಯರ ಉಪಟಳವನ್ನು ಸದ್ದುಮಾಡದೆ ಸಹಿಸಿಕೊಂಡಿದ್ದ ಮಾತೆಯಿವರು. ಒಮ್ಮೊಮ್ಮೆ ಬೇಸರವಾದಾಗ - "ಅಯ್ಯೋ... ಪರಮಹಂಸರು ಏನು ಮಾಡಿಬಿಟ್ಟರು ? ಒಂದು ಸೇರು ಹಾಲಿಗೆ ನಾಲ್ಕೈದು ಸೇರು ನೀರು ಬೆರೆಸಿದಂತಿರುವ ಭಕ್ತರನ್ನೇ ನನಗೆ ಬಿಟ್ಟು ಹೋಗಿರುವರಲ್ಲ ? ಈ ನೀರು ಬೆರೆತ ಹಾಲನ್ನು ಇಂಗಿಸಿ ಅದನ್ನು ಗಟ್ಟಿಗೊಳಿಸಲು - ಒಲೆ ಊದಿ ಊದಿಯೇ ನನಗೆ ಸಾಕಾಗಿಹೋಗುವುದಲ್ಲ ?" ಎಂದುಕೊಳ್ಳುತ್ತಿದ್ದರು ! ಹಲವು ಬಗೆಯ ಜನರನ್ನು ಶ್ರೀ ರಾಮಕೃಷ್ಣರು ಹೇಗೆ ನಿಭಾಯಿಸಿದರಪ್ಪಾ ? ಎಂದು ಒಮ್ಮೊಮ್ಮೆ ಯೋಚಿಸುತ್ತಿದ್ದುದೂ ಇತ್ತು.
"ದೇವರ ಹುಚ್ಚು" ಹಿಡಿದಿತ್ತೆಂದು ಭಾವಿಸಿ - ಅವರ ಅಧ್ಯಾತ್ಮದ ಹುಚ್ಚು ಬಿಡಿಸಲೋಸುಗವೇ ಶ್ರೀ ರಾಮಕೃಷ್ಣರಿಗೆ ಅವಸರದಿಂದ ಮದುವೆ ಮಾಡಿಸಿದ್ದ ಹೆಣ್ಣು - ಶಾರದಾದೇವಿ. ಆದರೆ ಅವರು ಗಂಡನ ಹುಚ್ಚು ಬಿಡಿಸಲಿಲ್ಲ; ಬದಲಾಗಿ ತಮಗೂ ಅದನ್ನು ಅಂಟಿಸಿಕೊಂಡರು. ಗಂಡನ ಅಧ್ಯಾತ್ಮ ಸಾಧನೆಗೆ ಅವರೆಂದೂ ಅಡ್ಡಿಯಾಗಲಿಲ್ಲ. ಮಾತ್ರವಲ್ಲದೆ, ಶ್ರೀ ರಾಮಕೃಷ್ಣರ ಮಹಾಸಮಾಧಿಯ ನಂತರವೂ ಅವರನ್ನು ಆರಾಧಿಸುತ್ತ ರಾಮಕೃಷ್ಣರ ಸಂದೇಶವನ್ನು ಸಾರುತ್ತಲೇ ತಮ್ಮ ಶೇಷಾಯುಷ್ಯವನ್ನು ಕಳೆದರು. ಈ ಭೂಮಿಯ ಮಾಯೆಗಳ ನಡುವೆ ಶ್ರೀಮಾತೆಯಂತಹ ಅರ್ಧಾಂಗಿಯಾಗುವುದು ಸುಲಭವೇ ? ಭಾರತೀಯ ಆಧ್ಯಾತ್ಮಿಕ ಪರಂಪರೆಯಲ್ಲಿ ಮಾತ್ರ ಇಂತಹ ವಿಸ್ಮಯಗಳು ಒಮ್ಮೊಮ್ಮೆ ಸಂಭವಿಸಿವೆ. ಬದುಕಿನಲ್ಲಿ ಯಾವುದೇ ಉಚ್ಚ ಆದರ್ಶಗಳನ್ನು ಒಪ್ಪಿ ಮುಚ್ಚಟೆಯಿಂದ ಪೋಷಿಸುವುದರಿಂದಲೂ ಸಹಜ ಅಧಃಪತನದ ವೇಗವನ್ನು ತಗ್ಗಿಸಿಕೊಳ್ಳಲು ಸಾಧ್ಯವಿದೆ.
ಶ್ರೀ ರಾಮಕೃಷ್ಣ ಭಾವವು - ಚಿಂತನೆಗೆ ಹೊಳಪು ನೀಡುತ್ತದೆ; ಸ್ವಚ್ಛ ಬದುಕು ಮತ್ತು ಶುದ್ಧ ಭಾವಾಭಿವ್ಯಕ್ತಿಯ ಜೊತೆಗೆ - ಸ್ವಸ್ವರೂಪ ದರ್ಶನಕ್ಕೂ ಪ್ರೇರಣೆ ನೀಡುತ್ತಲೇ ಬಂದಿದೆ.
*****-----*****-----*****

ನರೇಂದ್ರ - ಸ್ವಾಮಿ ವಿವೇಕಾನಂದ.
ರಾಖಾಲ - ಸ್ವಾಮಿ ಬ್ರಹ್ಮಾನಂದ
ಬಾಬುರಾಮ - ಸ್ವಾಮಿ ಪ್ರೇಮಾನಂದ
ಶಶಿಭೂಷಣ - ಸ್ವಾಮಿ ರಾಮಕೃಷ್ಣಾನಂದ
ಶರಶ್ಚಂದ್ರ - ಸ್ವಾಮಿ ಶಾರದಾನಂದ
ನಿರಂಜನ - ಸ್ವಾಮಿ ನಿರಂಜನಾನಂದ
ಕಾಳೀಪ್ರಸಾದ - ಸ್ವಾಮಿ ಅಭೇದಾನಂದ
ಶಾರದಾಪ್ರಸನ್ನ - ಸ್ವಾಮಿ ತ್ರಿಗುಣಾತೀತಾನಂದ
ಈ ಸಂದರ್ಭದಲ್ಲಿ ಮಠದಲ್ಲಿ ವಾಸ್ತವ್ಯವಿಲ್ಲದ ಉಳಿದ 8 ಮಂದಿ ಶಿಷ್ಯರು ಅನಂತರ ಒಬ್ಬೊಬ್ಬರಾಗಿ ವಿಧಿಪೂರ್ವಕವಾಗಿ ಸನ್ಯಾಸ ದೀಕ್ಷೆ ಪಡೆದುಕೊಂಡರು.
ಇವರೆಲ್ಲರೂ ಆರಂಭದಲ್ಲಿ ತಾವು ವಾಸ್ತವ್ಯವಿದ್ದ ಬಾರಾನಾಗೋರಿನ ಪುಟ್ಟ ಮನೆಯನ್ನೇ "ಮಠ"ವಾಗಿಸಿಕೊಂಡಿದ್ದರೂ ತದನಂತರ, ತಮ್ಮ ವ್ಯಕ್ತಿತ್ವದ ಪೂರ್ಣ ವಿಕಾಸಕ್ಕಾಗಿ ಮನೆಮಠದ ಮೋಹವನ್ನು ಕೊಡವಿಕೊಳ್ಳಲೋಸುಗವೋ ಎಂಬಂತೆ ಲೋಕ ಸಂಚಾರದ ನಿರ್ಧಾರ ಮಾಡಿದರು. ಇಬ್ಬಿಬ್ಬರು ಜೊತೆಯಾಗಿ ಮಠದಿಂದ ಹೊರಟರು. ಭಾರತದ ನಾಲ್ದೆಸೆಗಳಲ್ಲಿಯೂ ಸುತ್ತಾಡಿದರು. ಕರತಲ ಭಿಕ್ಷೆ, ತರುತಲ ವಾಸದ ಈ ಪರಿವ್ರಾಜಕ ವೃತ್ತಿಯಿಂದ ಆಗಾಗ ಅನಾರೋಗ್ಯದಿಂದಲೂ ಬಳಲಿದರು. ಈ ಭೂಮಿಯಲ್ಲಿ ಕಷ್ಟದ ಅರಿವಿಲ್ಲದೆ ಯಾರಿಗೂ ಸತ್ಯದ ಅರಿವಾಗದು. ಆದ್ದರಿಂದಲೇ ಈ ಶಿಷ್ಯ ಶಿರೋಮಣಿಗಳು ಬದುಕಿನ ಕಷ್ಟಕಾರ್ಪಣ್ಯಗಳ ಅಗ್ನಿಪರೀಕ್ಷೆಗೆ ತಮ್ಮನ್ನು ತಾವೇ ಒಡ್ಡಿಕೊಂಡು ಬದುಕಿನ ಸತ್ಯಮುಖದ ದರ್ಶನ ಮಾಡಿಕೊಂಡರು. ಕಷ್ಟಗಳ ಮೂಸೆಯಲ್ಲಿ ಇಚ್ಛಾಪೂರ್ವಕವಾಗಿ ಹಾದುಬಂದು ಪರಿಪಕ್ವ ವ್ಯಕ್ತಿತ್ವವನ್ನು ರೂಪಿಸಿಕೊಂಡರು.ತಾರಕ - ಸ್ವಾಮಿ ಶಿವಾನಂದ
ಹರಿನಾಥ - ಸ್ವಾಮಿ ತುರೀಯಾನಂದ
ಲಾಟು - ಸ್ವಾಮಿ ಅದ್ಭುತಾನಂದ
ಯೋಗೀಂದ್ರ - ಸ್ವಾಮಿ ಯೋಗಾನಂದ
ಸುಬೋಧ - ಸ್ವಾಮಿ ಸುಬೋಧಾನಂದ
ಹಿರಿಯ ಗೋಪಾಲ - ಸ್ವಾಮಿ ಅದ್ವೈತಾನಂದ
ಗಂಗಾಧರ - ಸ್ವಾಮಿ ಅಖಂಡಾನಂದ
ಹರಿಪ್ರಸನ್ನ - ಸ್ವಾಮಿ ವಿಜ್ಞಾನಾನಂದ

No comments:
Post a Comment