ಶ್ರೀ ರಾಮಕೃಷ್ಣ ಪ್ರಪಂಚವನ್ನು ಸುತ್ತುವುದೇ ಒಂದು ರೋಮಾಂಚಕ
ಅನುಭವ. ಈ ದಿವ್ಯಪ್ರಪಂಚವನ್ನು ಇದುವರೆಗೆ ಕೋಟ್ಯಾಂತರ ಮಂದಿ ಸುತ್ತಿ ಮುಗಿದಿದೆ;
ನಿತ್ಯೋತ್ಸವದಂತೆ ಇಂದಿಗೂ ಸುತ್ತುತ್ತಲೇ ಇದ್ದಾರೆ. ದಿನನಿತ್ಯದ ಬರಹ ಉಪನ್ಯಾಸ ಸಂಭಾಷಣೆ
ಮತ್ತು ಬದುಕಿನ ಜೀವಪ್ರಜ್ಞೆಯಲ್ಲಿ ಅವರು ಸರ್ವದಾ ನಮ್ಮೊಂದಿಗೇ ಬದುಕಿದ್ದಾರೆ. ಶ್ರೀ
ರಾಮಕೃಷ್ಣ ಚಿಂತನೆಗಳಿಂದ ಸ್ಫೂರ್ತಿ ಪಡೆಯದ ಯಾವುದೇ ಚಿಂತಕರಿಲ್ಲ. ಏಕೆಂದರೆ ಅದೊಂದು
ಚುಂಬಕ ಶಕ್ತಿ ! ಪೂರ್ತಿ ಮುಳುಗೇಳುವಂತೆ ಸೆಳೆಯಬಲ್ಲ ಅವ್ಯಕ್ತ ಅನುಭವ ಮಾತ್ರವಲ್ಲ;
ನಿತ್ಯಾನುಭೂತಿಯನ್ನು ಪುಷ್ಟಿಗೊಳಿಸುವ ದಿವ್ಯೌಷಧವೂ ಆಗಿಹೋಗಿದೆ. ಶ್ರೀ ರಾಮಕೃಷ್ಣ
ತತ್ವದ ವ್ಯಾಪ್ತಿಯೇ ಅಂತಹುದು. ಅದು ಅನಂತ; ಅಗಾಧ ! ಜೀವ ಜಗತ್ತಿನ ಯಾವುದೇ ಕಠಿಣ ಸವಾಲುಗಳೂ
ಶ್ರೀ ರಾಮಕೃಷ್ಣ ಸನ್ನಿಧಿಯಲ್ಲಿ ಸರಳವಾಗುವುದೇ - ರಾಮಕೃಷ್ಣ ಭಾವದಲ್ಲಿರುವ ವ್ರಜಮೋಡಿ.
ಶ್ರೀ ರಾಮಕೃಷ್ಣರ ಬದುಕಿನಂತೆಯೇ - ಅವರು ಕಂಡು ಉದಾಹರಿಸಿದ ಸಾದೃಶ್ಯಗಳೂ ಮೋಡಿ
ಹಾಕುವಂತಿವೆ. ಶ್ರೀ ರಾಮಕೃಷ್ಣರು ಸ್ಪರ್ಶಿಸಿದ ದೃಷ್ಟಾಂತಗಳನ್ನಷ್ಟೇ ಅನುಭಾವಿಸಿದರೂ
ಸಾಕು; ರಾಮಕೃಷ್ಣ ಭಾವದ ವಿರಾಟ್ ದರ್ಶನವಾಗುತ್ತದೆ; ಬದುಕು ಅರಳುತ್ತದೆ..
ಶ್ರೀ ರಾಮಕೃಷ್ಣರನ್ನು ಕುರಿತು ಅಕ್ಷರ ಜೋಡಿಸುವುದೆಂದರೆ ಅದೊಂದು ಪ್ರಯಾಸದ ಕೆಲಸ ಎಂಬುದು - ಎಲ್ಲರಂತೆ ನನ್ನ ಅರಿವಿಗೂ ಬಂದಿದೆ. ಏಕೆಂದರೆ ಶ್ರೀ ರಾಮಕೃಷ್ಣ ಪರಮಹಂಸರು ಸ್ಪರ್ಶಿಸದ ಲೋಕವಾಗಲೀ ಅಲೋಕವಾಗಲೀ ಕಾಣುವುದಿಲ್ಲ. ಅವರ ಚಿಂತನೆಯ ವೈಶಾಲ್ಯದಲ್ಲಿ ಸುಳಿದಾಡದ ವಸ್ತು ವಿಚಾರಗಳಿಲ್ಲ. ಶ್ರೀ ರಾಮಕೃಷ್ಣ ಎಂಬ ಪೂರ್ಣಭಾವದಲ್ಲಿ ಯಾವುದೇ ಅಭಾವದ ಸೋಂಕೇ ಇಲ್ಲ. ಹೊಸದಾಗಿ ಭಾವಬಾಂಧವ್ಯ ಬಯಸುವವರಿಗೆ ಕಣ್ಣಿಗೊತ್ತಿಕೊಳ್ಳಲು ಸಿಗುವುದು ಪೂಜಿಸಿ ಉಳಿದ ನೈರ್ಮಾಲ್ಯ ಮಾತ್ರ. ಆದ್ದರಿಂದಲೇ ನಮ್ಮ ರಾಮಾಯಣ ಮಹಾಭಾರತಗಳಂತೆ - ರಾಮಕೃಷ್ಣ ಭಾವದ ಪುನರ್ನಿರ್ಮಾಣವು ಕಠಿಣವೆನ್ನಿಸುತ್ತಲೇ ನಾವೀನ್ಯವನ್ನೂ ಸೃಷ್ಟಿಸಬಲ್ಲದು ! ಆದ್ದರಿಂದಲೇ - "ಇನ್ನು ಹೊಸದಾಗಿ ಹೇಳುವುದು ಏನೂ ಇಲ್ಲವೇ ಇಲ್ಲ" ಎಂಬಷ್ಟು ರಾಮಕೃಷ್ಣ ಸ್ಮರಣೆಯು ಈಗಾಗಲೇ ನಡೆದು ಹೋಗಿದ್ದರೂ ಹೊಸತಿನ ಅನ್ವೇಷಣೆಗೆ ನಿರಂತರ ಪ್ರೇರಣೆಯನ್ನು ನೀಡುತ್ತ ಇಂದಿಗೂ ಹೊಸ ಹೊಳಹು ಹೊಮ್ಮುತ್ತಿರುವುದು - ಶ್ರೀ ರಾಮಕೃಷ್ಣ ಭಾವಸತ್ವದ ಹಿರಿಮೆಯ ದ್ಯೋತಕ. ಹೊಸ ಸಾಮಾಜಿಕರ ದೃಷ್ಟಿ, ಭಾಷೆ ಮತ್ತು ಪರಿವರ್ತಿತ ದೇಶಕಾಲದ ವಿಚಾರಸ್ಪರ್ಷದ ವೈಖರಿಯಲ್ಲಿ ಮಾತ್ರವೇ ಹೊಸದೇನನ್ನಾದರೂ ಕಾಣಬಹುದು - ಎಂಬ ಭಾವಸಂಯಮವನ್ನೂ ಹುಟ್ಟಿಸಬಲ್ಲ ಶಕ್ತಿಯು "ಶ್ರೀ ರಾಮಕೃಷ್ಣ ಅಧ್ಯಾತ್ಮ"ಕ್ಕಿದೆ ! ಹೀಗಿದ್ದೂ... ಯಾವುದೇ ಚೌಕಟ್ಟಿನಲ್ಲಿಟ್ಟರೂ ಒಂದೋ ಅದು ಶ್ರೀ ರಾಮಕೃಷ್ಣರ ನೋಟದ ಪುನರ್ದೃಷ್ಟಿಯಾಗುತ್ತದೆ ಅಥವ ಅವರು ನೀಡಿದ ದೃಷ್ಟಾಂತಗಳ ಪುನರ್ನಿರ್ಮಾಣವಾಗುವ ಸಂಭಾವ್ಯದಿಂದ ತಪ್ಪಿಸಿಕೊಳ್ಳಲಾಗುವುದಿಲ್ಲ. ಇದೇ - ಪೂರ್ಣತೆಯ ಚಮತ್ಕಾರ ! ಯಾವುದೇ ಪೂರ್ಣತೆಯು ಕೆತ್ತಲು ಸಿಗದು; ಜೋಡಿಸಲೂ ಆಗದು ! ಭಾಗ ವಿಭಾಗಗಳಿಲ್ಲದ ಪರಿಪೂರ್ಣತೆಯ ಸೊಗಸಿನ - ಸ್ವಭಾವ ರಹಸ್ಯವಿದು !
ಜೀವ ಜೀವನದ ಮಹಾಮಥನಗೈದ ಶ್ರೀ ರಾಮಕೃಷ್ಣ, ಮಾತೆ ಶಾರದಾದೇವಿ ಮತ್ತು ಸ್ವಾಮಿ ವಿವೇಕಾನಂದರೆಂಬ ಗುರುತ್ರಯರ ಬದುಕುಗಳು ಮತ್ತು ಅವರ ಉಪದೇಶಗಳ ಮಹಾಸಾಗರದಲ್ಲಿ ಮುಳುಗಿ ಎದ್ದವರು - ಶಾಂತಿ ನೆಮ್ಮದಿಗಾಗಿ ಅಂಡಲೆಯುವ ತುರ್ತಿನಿಂದ ಬಿಡುಗಡೆಗೊಳ್ಳುತ್ತಲೇ ಬಂದಿದ್ದಾರೆ; ದಿಕ್ಕೆಟ್ಟ ಹುಡುಕಾಟವು ಕೊನೆಯಾಗಿ ಜೀವಿಗಳ ನಡಿಗೆಗೆ ದಿಕ್ಕು ದೊರೆತಿದೆ; ಬದುಕುಗಳಿಗೆ ಒಳನೋಟವು ಸಾಧ್ಯವಾಗಿದೆ. ಅತ್ಯಂತ ಸಾಮಾನ್ಯ ಬದುಕುಗಳಿಂದ ಹಿಡಿದು ಆಧ್ಯಾತ್ಮಿಕ ಮಹಾಸಾಧಕರ ವರೆಗೆ ಎಲ್ಲರಿಗೂ ಶ್ರೀ ರಾಮಕೃಷ್ಣ ವಿಚಾರಸನ್ನಿಧಿಯಲ್ಲಿ ದಡ ಸೇರಿಸಬಲ್ಲ ತೋರುಬೆಳಕು ಗೋಚರಿಸುತ್ತದೆ. ಅಧ್ಯಾತ್ಮವು ಪರಿತ್ಯಾಗೀ ಸನ್ಯಾಸಿಗಳಿಗೆ ಮಾತ್ರವಲ್ಲ - ಅಧ್ಯಾತ್ಮವು ಪ್ರತಿಯೊಂದು ಬದುಕಿನ ಅನಿವಾರ್ಯ ಜೀವಜಲ ಎಂಬ ಸತ್ಯವು - ಶ್ರೀ ರಾಮಕೃಷ್ಣ ವಚನವೇದದ ಸುಭಗ ಅಂತರಂಗದಲ್ಲಿ ವಿಧೇಯವಾಗಿ ಅನಾವರಣಗೊಳ್ಳುತ್ತದೆ !
ಶ್ರೀ ರಾಮಕೃಷ್ಣರು ಪೂರ್ಣತೆಯ ಶುದ್ಧ ಪ್ರತಿನಿಧಿಯಾದರೆ ಮಾತೆ ಶಾರದಾದೇವಿಯವರು ಭಕ್ತಿ, ಕರುಣೆ, ಸರಳತೆ ಮತ್ತು ಅನುಕರಣೀಯ ಸೌಮ್ಯತೆಯ ಪ್ರತಿನಿಧಿಯಾಗಿ - ಪೂರ್ಣತೆಯ ತೃಪ್ತಮಾರ್ಗವನ್ನು ತಾವೇ ಬದುಕಿ ತೋರಿ, ಸ್ತ್ರೀತ್ವದ ಸಾತ್ವಿಕ ಪ್ರತಿನಿಧಿಯಾಗಿಯೂ ಅನಾವರಣಗೊಂಡಿದ್ದರು. ಅಧ್ಯಾತ್ಮದ ಅಮೃತವನ್ನು ತಾವೂ ಸವಿದು ಇತರರಿಗೂ ಹಂಚಿದ್ದ ಮಾತೆ ಶಾರದಾದೇವಿಯವರು - ಲೌಕಿಕ ಮಾಯೆಯ ಸಾಮಾನ್ಯ ಪ್ರತಿನಿಧಿಯಂತೆ ದೂರುವ ಹೆಂಡತಿಯಾಗದೆ, ತಮಗೆ ಲೋಕದ ಗಂಡನಾಗಿದ್ದ ಶ್ರೀ ರಾಮಕೃಷ್ಣರ ದಾರಿಯನ್ನು ಸುಗಮಗೊಳಿಸಿದ್ದರು. ತಪಸ್ವೀ ಪತಿಯ ಭಾವತಪಸ್ಸಿಗೆ ಆಜ್ಯವನ್ನೆರೆದಿದ್ದರು ! ತಪಸ್ಸನ್ನು ಪೋಷಿಸುವುದೂ ತಪಸ್ಸೇ ಅಲ್ಲವೆ ?
ಶರೀರದಲ್ಲಿದ್ದೂ ಶರೀರ ಭಾವದಿಂದ ವಿಮುಕ್ತವಾಗಿದ್ದ ತಮ್ಮ ಗುರು ದಂಪತಿಗಳ "ಅಭೂತಪೂರ್ವ ಅಪೂರ್ವ"ಗಳನ್ನು - ಅಂದು ನರೇಂದ್ರನಾಗಿ ಸಂಧಿಸುತ್ತಿದ್ದ ಸ್ವಾಮಿ ವಿವೇಕಾನಂದರೂ - ಅಚ್ಚರಿಯಿಂದಲೇ ಗಮನಿಸಿದ್ದರು. ಭಾರತೀಯ ಸನಾತನ ಆಧ್ಯಾತ್ಮಕ್ಕಿಂತ ಹೆಚ್ಚಾಗಿ - ಬ್ರಹ್ಮ ಸಮಾಜ, ಪಾಶ್ಚಾತ್ಯ ತತ್ವ ಚಿಂತನೆಗಳೆಂಬ ವೈಚಾರಿಕ ಪೂರ್ವಾಗ್ರಹಗಳಿಗೆ ಅದಾಗಲೇ ಒಳಗಾಗಿದ್ದ ಅಂದಿನ ನರೇಂದ್ರನು - ವಿಗ್ರಹಾರಾಧನೆ, ಬ್ರಹ್ಮಚರ್ಯ, ಸನ್ಯಾಸ, ಪೂಜೆಪುನಸ್ಕಾರಗಳೆಂಬ ಬಾಹ್ಯ ಆಚರಣೆಗಳನ್ನೆಲ್ಲ ಆರಂಭದಲ್ಲಿ ಸಂಶಯಿಸಿದ್ದರೂ - ಬರಬರುತ್ತ ಶ್ರೀ ರಾಮಕೃಷ್ಣ ಭಾವದತ್ತ ಆಕರ್ಷಿತರಾಗಿದ್ದರು ಮತ್ತು ಅವೇ ಹೆಜ್ಜೆಗಳನ್ನು ಮೆಚ್ಚಿ ಒಪ್ಪಿ ಅನುಸರಿಸಿದ್ದರು. ಭಾವರಹಿತ "ಅಧ್ಯಾತ್ಮದ ಆಧುನಿಕತೆ" ಎಂಬ "ತಾಮಸದ ನಾಶಕ್ಕಾಗಿಯೇ ಶ್ರೀ ರಾಮಕೃಷ್ಣರು ಅವತರಿಸಿದ್ದು..." ಎಂಬುದನ್ನು ಬಹಳ ಬೇಗ ಅರಿತು, "ಯಾರು ನಮ್ಮ ದೇಶದ ಕಲ್ಯಾಣಕ್ಕಾಗಿ ಬಂದರೋ ಅವರ ವಿಷಯವೇ ಜನರಿಗೆ ಗೊತ್ತಿಲ್ಲದೆ ಹೋದರೆ ಜನರ ಕಲ್ಯಾಣವಾಗುವುದಾದರೂ ಹೇಗೆ ? ರಾಮಕೃಷ್ಣರನ್ನು ತಿಳಿದಾಗಲೇ ಮನುಷ್ಯರು ನಿಜವಾದ ಮನುಷ್ಯರಾಗಬಲ್ಲರು.." ಎಂದುಕೊಂಡು ಶ್ರೀ ರಾಮಕೃಷ್ಣ ಭಾವಪ್ರಸಾರದಲ್ಲಿ ತೊಡಗಿಕೊಂಡರು. ಶ್ರೀ ರಾಮಕೃಷ್ಣರ ಮಹಾಸಮಾಧಿಯ ನಂತರ ದೇಶಾದ್ಯಂತ ಬರಿಗಾಲಿನಲ್ಲಿ ಸುತ್ತಿದರು. ಶಿಷ್ಯವರ್ಗವನ್ನು ಸಂಘಟಿಸಿದರು. ರಾಮಕೃಷ್ಣರ ಬದುಕು ಮತ್ತು ಸಂದೇಶಗಳು ಅಳಿಸಿಹೋಗದಂತೆ - ಅವನ್ನು ವ್ಯವಸ್ಥಿತವಾಗಿ ಕ್ರೋಢೀಕರಿಸಿ, ಶ್ರೀ ರಾಮಕೃಷ್ಣ ಭಾವ ಸನ್ನಿಧಿಗೆ ಮತ್ತು ಪರಂಪರೆಗೆ ದೃಢವಾದ ರೂಪ ನೀಡುವ ಕೈಂಕರ್ಯದಲ್ಲಿ ಸನ್ಯಾಸೀ ಶಿಷ್ಯರಾಗಿದ್ದ ವಿವೇಕಾನಂದ ಮತ್ತು ಗೃಹಸ್ಥ ಶಿಷ್ಯ ಮಹೇಂದ್ರನಾಥ ಗುಪ್ತರ ಸಕ್ರಿಯ ಪಾತ್ರವು ಮಹತ್ವಪೂರ್ಣವೆನ್ನಿಸುತ್ತವೆ.
ಸ್ವಾಮಿ ವಿವೇಕಾನಂದರು ಆತ್ಮೋದ್ಧಾರವನ್ನು ಹೊಂದಲು ಸಮಾಜವನ್ನು ಸಿದ್ಧಪಡಿಸುವ ಪ್ರಾಥಮಿಕ ಅಗತ್ಯವನ್ನು ಮನಗಂಡು ಅಂದಿನ ಸಮಾಜದ ತುರ್ತು ಅಗತ್ಯಗಳ ಸಂಪೂರ್ತಿಗೆ ಮೊದಲ ಆದ್ಯತೆಯನ್ನು ನೀಡಿ ಸಾಮಾಜಿಕ ಮೌಢ್ಯತೆಯನ್ನು ಹೋಗಲಾಡಿಸಲು ಅಪಾರವಾಗಿ ತುಡಿಯುತ್ತಿದ್ದರು. ಹೊಟ್ಟೆಗೆ ಆಹಾರ, ಉಟ್ಟುಕೊಳ್ಳಲು ಬಟ್ಟೆ, ದೈಹಿಕ ಅನಾರೋಗ್ಯಕ್ಕೆ ಚಿಕಿತ್ಸೆ - ಇವನ್ನು ಮೊದಲ ಆದ್ಯತೆಯಾಗಿ ಗುರುತಿಸಿ, ತಮ್ಮ ಮುಂದಿನ ಹೆಜ್ಜೆಯು ಚಾರಿತ್ರ್ಯ ನಿರ್ಮಾಣದ ಶಿಕ್ಷಣ - ಎಂದು ಸ್ವಾಮಿ ವಿವೇಕಾನಂದರು ತೀರ್ಮಾನಿಸಿದ್ದರು. ಅಜ್ಞಾನದ ಬಾಧೆಗೆ ಸಿಲುಕಿ ಅಂದಿನ ಭಾರತದಲ್ಲಿ ತುಂಬಿಹೋಗಿದ್ದ "ದರಿದ್ರ ನಾರಾಯಣ" ವರ್ಗದ ಬವಣೆಗಳಿಗೆ ಸ್ಪಂದಿಸಬೇಕಾದ ಸಾಮಾಜಿಕ ಹೊಣೆಯನ್ನು ಪುನರಪಿ ನೆನಪಿಸಿದ್ದರು; "ಏಳಿ ಎದ್ದೇಳಿ.." ಎನ್ನುತ್ತ ತಳಮಟ್ಟದಲ್ಲಿದ್ದ ಸಾಮಾಜಿಕ ಸಂಕಷ್ಟಗಳಿಗೆ ಸ್ಪಂದಿಸುವಂತೆ ತಮ್ಮ ಅಧ್ಯಾತ್ಮದ ಪರಿಧಿಯ ಆದ್ಯತೆಯನ್ನು ಏಕಪಕ್ಷೀಯವಾಗಿ ವಿಸ್ತರಿಸಿದ್ದರು. ಹಸಿವಿನ ಹೊಟ್ಟೆಗೆ ಅಧ್ಯಾತ್ಮವನ್ನು ಸುರಿಯುವುದು ವ್ಯರ್ಥ - ಎಂದೂ ಅಬ್ಬರಿಸಿದ್ದರು. ಅಧ್ಯಾತ್ಮಕ್ಕೆ ಹೊಸ ವ್ಯಾಖ್ಯೆ ಬರೆದಿದ್ದರು. ಜತೆಜತೆಗೆ, ಅಂದಿನ ಚೈತನ್ಯಹೀನ ಸಮಾಜವನ್ನು ಕಂಡು ಮರುಗುತ್ತ, ಆತ್ಮವಿಶ್ವಾಸವಿಲ್ಲದೆ ನರಳುತ್ತಿರುವವರಲ್ಲಿ ಧೈರ್ಯ ಉತ್ಸಾಹ ಕರ್ಮಶೀಲತೆಯನ್ನು ತುಂಬಿಕೊಳ್ಳಲು ಹುರಿದುಂಬಿಸಿದವರು - ಸ್ವಾಮಿ ವಿವೇಕಾನಂದರು. ಮೈಕೊಡವಿಕೊಂಡು "ಪುರುಷ ಸಿಂಹ"ರಾಗುವ ಚೈತನ್ಯವನ್ನು ಅಂದಿನ ಯುವ ಜನಾಂಗದಲ್ಲಿ ತುಂಬಿ, ಈಗಲೂ ಪ್ರೇರಣೆಯ ಸ್ರೋತವಾಗಿರುವ - ಶ್ರೀ ರಾಮಕೃಷ್ಣರಿಂದಲೇ ನೇಮಿಸಲ್ಪಟ್ಟ "ಶಿಷ್ಯ ನೇತಾರ"ರಿವರು. ಹೀಗೆ ಶ್ರೀ ರಾಮಕೃಷ್ಣ ಭಾವಕ್ಕೆ ಭದ್ರ ಚೌಕಟ್ಟನ್ನು ರೂಪಿಸಿದವರು - ಸ್ವಾಮಿ ವಿವೇಕಾನಂದರು. ಶ್ರೀ ರಾಮಕೃಷ್ಣರ "ಭರವಸೆಯ ಪ್ರತೀಕ"ದಂತಿದ್ದ - "ಅವರ ನರೇಂದ್ರ"ನು - ಹೀಗೆ ನಿಜಾರ್ಥದಲ್ಲಿ, ಹೊಸ ಚಿಗುರು ಹಳೆಬೇರು ಕೂಡಿದ್ದ ಸುಂದರ ಎರಕದಂತಿದ್ದರು. ಇದು - 18 ನೇ ಶತಮಾನದ ಅಂತ್ಯದಲ್ಲಿ ಸಾಮಾಜಿಕ ಮೂಲದಲ್ಲಿ ಸಂಭವಿಸಿದ್ದ - ಆಧ್ಯಾತ್ಮಿಕ ಕ್ರಾಂತಿ !
ಅಂದು ಶ್ರೀ ರಾಮಕೃಷ್ಣರ ನೇರ ಶಿಷ್ಯರೆಲ್ಲರೂ ತಮ್ಮ ಸೋದರಸನ್ಯಾಸಿ ನರೇಂದ್ರನಲ್ಲಿ ಸಾಂದ್ರವಾಗಿದ್ದ ಗುರುಭಾವ, ವೈಚಾರಿಕತೆ ಮತ್ತು ಸಾಂಘಿಕ ಶಕ್ತಿಯನ್ನು ಏಕಮನಸ್ಸಿನಿಂದ ಅನುಸರಿಸಿ ಬಲಪಡಿಸಿದ್ದರು. ಹೀಗೆ ಶತಮಾನಪೂರ್ವದಲ್ಲಿ ಶ್ರೀ ರಾಮಕೃಷ್ಣ ಸಂಸಾರದ ಅಸ್ತಿವಾರವು ಬಲಿಷ್ಠವಾಗಿಯೇ ಸ್ಥಾಪಿತವಾಗಿತ್ತು. ಅನಂತರದ ತ್ಯಾಗೀ ಶಿಷ್ಯವರ್ಗವೂ ತಮ್ಮ ಗುರುವರ್ಯರ ಹಾದಿಯಲ್ಲೇ ಹೆಜ್ಜೆಯಿಡುತ್ತ - ಗೃಹಸ್ಥ ಭಕ್ತರನ್ನೂ ಒಳಗೊಂಡು ಮುನ್ನಡೆಸುತ್ತ - 'ಜಗದ್ಧಿತಾಯ ಚ..." ಎಂಬ ಉದಾತ್ತ ಧ್ಯೇಯವುಳ್ಳ ಸಂಘದ ಮೂಲಭಾವವನ್ನು ಪುಷ್ಟಿಗೊಳಿಸುವಲ್ಲಿ ಸಮರ್ಪಣಾಭಾವದಿಂದ ತೊಡಗಿಕೊಂಡಿರುವುದು ಶ್ರೀ ರಾಮಕೃಷ್ಣ ವಲಯದ ವೈಶಿಷ್ಟ್ಯವೂ ಹೌದು. ಆದ್ದರಿಂದಲೇ - ಚಿಂತನೆ ಸಿದ್ಧಾಂತಗಳ ಮೌಲಿಕ ಬಲದಿಂದಲೇ ಶ್ರೀ ರಾಮಕೃಷ್ಣ ಭಾವವು ಜನಮಾನಸವನ್ನು ಇಂದಿಗೂ ಸಮರ್ಥವಾಗಿ ತಲುಪುತ್ತಿದೆ.
ಆದರೆ ಪ್ರತಿನಿತ್ಯವೂ "ಗಿಲೀಟು ಸುದ್ದಿ"ಗಳನ್ನು ಕೇಳುವ, ನೋಡುವ, ಮಾತನಾಡುವ ಅಮಲಿಗೆ ಬಿದ್ದಿರುವ ಮನುಷ್ಯರು ತಮ್ಮ ಬುದ್ಧಿಭಾವಗಳ "ಶುಚಿ ರುಚಿ" ಯನ್ನು ಕೆಡಿಸಿಕೊಳ್ಳುತ್ತಲೇ ಬಂದಿದ್ದಾರೆ. ಇಂದಿಗೂ ಅಂತೆಕಂತೆಗಳ ಗೊಂತೆಯಲ್ಲಿಯೇ ಮುಳುಗಿ ಏಳುತ್ತಿರುವ ಜನಸಮೂಹದ ನಿತ್ಯ ದೃಶ್ಯವೇ ಇದಕ್ಕೆ ಸಾಕ್ಷಿ. ಇದು - ತಮ್ಮ ಸದಸದ್ವಿವೇಕವನ್ನು ಮೊಂಡುಗೊಳಿಸಿಕೊಂಡು ದಿಕ್ಕುದೆಸೆ ತಪ್ಪಿಸಿಕೊಳ್ಳುತ್ತಿರುವ ಕ್ರಿಯೆ; ದಿನನಿತ್ಯವೂ - ಮನಸ್ಸು ಬುದ್ಧಿ ಬಾವದಲ್ಲಿ "ಕಸ ತುಂಬಿಸಿಕೊಳ್ಳುತ್ತಿರುವ" ನಮ್ಮ ದೈನಂದಿನ ಕ್ರಿಯೆಗಳನ್ನು ತುರ್ತಾಗಿ ಗಮನಿಸಿಕೊಳ್ಳದೆ ಹೋದರೆ ಅದು - ನಮ್ಮನ್ನು ನಮ್ಮಿಂದ ದೂರಗೊಳಿಸಿಕೊಳ್ಳುವಂತಹ - ಆತ್ಮಹತ್ಯೆಯ ಕ್ರಿಯೆಯೇ ಆಗುತ್ತದೆ.
ಶ್ರೀ ರಾಮಕೃಷ್ಣರು 1885 ರ ಮಾರ್ಚ್ 11 ರಂದು ಗಿರೀಶ್ಚಂದ್ರ ಘೋಷರ ಮನೆಗೆ ಬರುತ್ತಾರೆ. ಅಲ್ಲಿ ತಮಗಾಗಿ ಮೀಸಲಾಗಿಟ್ಟಿದ್ದ ಆಸನದ ಮೇಲೆ ಕುಳಿತುಕೊಳ್ಳಲು ಹೋದಾಗ ಅದರ ಹತ್ತಿರವೇ ಒಂದು ವಾರ್ತಾಪತ್ರಿಕೆ ಬಿದ್ದಿರುವುದು ಅವರಿಗೆ ಕಾಣಿಸಿತು. ತಕ್ಷಣ ಅದನ್ನು ಬೇರೆ ಕಡೆಗೆ ತೆಗೆದಿಡುವಂತೆ ಅವರು ಸಂಜ್ಞೆ ಮಾಡಿದರು. ಪ್ರಾಪಂಚಿಕ ವಿಷಯಗಳು, ಪರ ನಿಂದೆ, ಪರ ಚರ್ಚೆಗಳನ್ನು ಒಳಗೊಂಡಿರುವ ವಾರ್ತಾಪತ್ರಿಕೆಗಳು - "ಅಪವಿತ್ರ ವಸ್ತು " ಎಂಬುದು ಶ್ರೀ ರಾಮಕೃಷ್ಣರ ದೃಷ್ಟಿ. ಏಕೆಂದರೆ "ಪರ ವ್ಯಕ್ತಿ - ವಸ್ತುಗಳ ಚರ್ಚೆ, ಸುದ್ದಿಗಳನ್ನು ಕೇಳಬಾರದು; ನೋಡಬಾರದು; ಮಾತಾಡಬಾರದು; ಅದರಿಂದ ವ್ಯಕ್ತಿ ಮತ್ತು ವ್ಯಕ್ತಿತ್ವಗಳು ಮುಕ್ಕಾಗುತ್ತವೆ; ಆಂತರಿಕ ಶಕ್ತಿ ಕುಂದುತ್ತದೆ; ಜೀವಿಗಳ ಉದ್ದೇಶಿತ ನಿಜಪಯಣದ ಅರಿವಿನ - ಪ್ರಜ್ಞೆ ತಪ್ಪುತ್ತದೆ. ಮಿತಿಮೀರಿದ ಲೌಕಿಕ ತಾಕಲಾಟದ ವೈಚಾರಿಕತೆಗಳು "ವಿಚಾರ ವಿಕಾರ ವ್ಯಾಧಿ"ಯಾಗಿ ಬಿಡುತ್ತವೆ..." - ಎಂಬುದು ಶ್ರೀ ರಾಮಕೃಷ್ಣರ ಬೋಧನೆ. ಅಂದು - ಆ ವಾರ್ತಾಪತ್ರಿಕೆಯನ್ನು ಅಲ್ಲಿಂದ ಸ್ಥಳಾಂತರಗೊಳಿಸಿದ ನಂತರವೇ ಅವರು ಆಸನಗ್ರಹಣ ಮಾಡಿದ್ದರು.
ಎಲ್ಲಿಯ ವರೆಗೆ ಮನುಷ್ಯರು ಕುತರ್ಕ ಕುವಿಚಾರದಲ್ಲಿಯೇ ಆಸಕ್ತರಾಗಿರುವರೋ ಆಗ ಭಾವಮೌಢ್ಯವೊದಗಿ, ಭಗವತ್ (ಅಂತಃ) ಶಕ್ತಿಯು ಕ್ಷೀಣಿಸುತ್ತ ಇಡೀ ವ್ಯಕ್ತಿತ್ವವೇ ದುರ್ಬಲವಾಗುತ್ತದೆ; ಬುದ್ಧಿಭಾವವನ್ನು ಕಲುಕುತ್ತ ಗಮ್ಯ ಮತ್ತು ಗಮನದಿಂದ ವ್ಯಕ್ತಿಯನ್ನು ವಿಚಲಿತವಾಗಿಸುವ ಯಾವುದೇ ಸಾಧನಗಳಿಂದ ದೂರವಿರಿ; ಸಹಜ ಶುದ್ಧ ಭಾವಕೊಳದಲ್ಲಿ ರಾಡಿಯೆಬ್ಬಿಸಿಕೊಂಡು ಅಂತಃಶಕ್ತಿಯನ್ನು ಕುಗ್ಗಿಸಿಕೊಳ್ಳಬೇಡಿ... ಎಂದು ಹೇಳುತ್ತ ಶ್ರದ್ಧೆಯ ಬೇರಿಗೆ ನೀರೆರೆದವರು ಶ್ರೀ ರಾಮಕೃಷ್ಣರು. (ಶ್ರೀ ರಾಮಕೃಷ್ಣ ವಚನವೇದ ಭಾಗ 2 ಪುಟ 259)
(ಶ್ರೀ ರಾಮಕೃಷ್ಣ ವಚನವೇದ - ಭಾಗ 2 ಪುಟ 264)
"ಭಗವನ್ಮುಖವಾಗುವವರೆಗೂ ಪ್ರಾಪಂಚಿಕ ಸದ್ದು ಗದ್ದಲಗಳು ಕಡಿಮೆಯಾಗಲಾರವು. ಗದ್ದಲದ ಆಕರ್ಷಣೆಯೂ ಕ್ಷೀಣಿಸದು. ಭಗವದೌತಣದ ಸವಿಯು ಅನುಭವಕ್ಕೆ ಬಂದ ಒಡನೆಯೇ ಸದ್ದು ಗದ್ದಲ ನಿಲ್ಲುತ್ತದೆ.
ಆದ್ದರಿಂದ ಭಗವದೌತಣವಲ್ಲದ ಯಾವ ಮನೋಗರವನ್ನೂ ಸೇವಿಸಬಾರದು.
ಸಾಧನೆಯ ಹಾದಿಯಲ್ಲಿ ಕ್ರಮಿಸಲು ಇಚ್ಛಿಸುವವರು - ಕ್ಷುದ್ರ ಭಾವಪ್ರಸಾರದ ಯಾವುದೇ ಕ್ಷೇತ್ರದಿಂದ ದೂರವಿರಬೇಕು..."
ಇದು ಶ್ರೀ ರಾಮಕೃಷ್ಣ ಭಾವ.
ಆಧ್ಯಾತ್ಮಿಕ ವಿಷಯವನ್ನು ಇದಕ್ಕಿಂತ ಸರಳವಾಗಿ ಹೇಳುವುದು ಸಾಧ್ಯವೆ ? ಹೀಗಿದ್ದರೂ ಶ್ರೀ ರಾಮಕೃಷ್ಣರನ್ನು ಇದುವರೆಗೂ ಕಿಂಚಿತ್ತಾದರೂ ಪ್ರವೇಶಿಸಲಾಗದ ಬಹು ದೊಡ್ಡ - ನತದೃಷ್ಟ ವರ್ಗವೇ ಸಮಾಜದಲ್ಲಿದೆ. ಆದ್ದರಿಂದಲೇ ಹೊಸ ತಲೆಮಾರುಗಳ ಹೊಸ ಪ್ರವೇಶಿಗರನ್ನು ತಟ್ಟಿ ಎಬ್ಬಿಸುವ ನಿರಂತರ ಕ್ರಿಯೆಯೂ ಅನಿವಾರ್ಯ ಆಗುತ್ತದೆ. "ದುರ್ಮಾರ್ಗಕ್ಕೆ ಉಪದೇಶಕರು ಬೇಕಾಗುವುದಿಲ್ಲ; ಸನ್ಮಾರ್ಗಕ್ಕೆ ಎಷ್ಟು ಉಪದೇಶಕರಿದ್ದರೂ ಸಾಕಾಗುವುದಿಲ್ಲ !"
ಯಾವುದೇ ಉಪದೇಶಕ ವರ್ಗದವರಿಗೂ ಕನಿಷ್ಠ ಅರ್ಹತೆ ಎಂಬುದು ಅನಿವಾರ್ಯ. ಚಾರಿತ್ರ್ಯ ನಿರ್ಮಾಣದ ಶಿಕ್ಷಣದಿಂದ ಮಾತ್ರ ಇದು ಸಾಧ್ಯ. ಇಂದಿನ ಸಾಮಾಜಿಕ "ಕಪಿತನ"ಕ್ಕೆ ಶೈಕ್ಷಣಿಕ ವಲಯದ ನಮ್ಮ ಸೋಲೇ ಕಾರಣ. ತತ್ಪರಿಣಾಮವಾಗಿ, ಕುತಂತ್ರಿಗಳು ಜನಪ್ರತಿನಿಧಿಗಳಾಗಿ ಅನಂತರ ಮಂತ್ರಿಗಳೂ ಆಗುತ್ತಿರುವುದು ಇಂದಿನ ಸಮಾಜದ ಒಟ್ಟಾರೆ ಮೂರ್ಖತನಕ್ಕೆ ಜ್ವಲಂತ ನಿದರ್ಶನ. ಇತ್ತೀಚೆಗೆ ಕರ್ನಾಟಕದ ಹೆಸರಿಗೆ ಮಸಿ ಬಳಿಯುವಂತೆ ಬೆಳಕಿಗೆ ಬಂದ ಪಶು ಸ್ವಭಾವದ "ಮೇಟಿ ವಿದ್ಯೆ" ಗೆ ಯಾವುದಾದರೂ ಗುರೂಪದೇಶ ಬೇಕೆ ? ಅನಗತ್ಯ ಎಂಬುದು ಅಕ್ಷರಶಃ ನಿರೂಪಿತವಾಗುತ್ತಲೇ ಇರುತ್ತದೆ. ಪಶುಭಾವದಿಂದ ಬಿಡುಗಡೆಯಾಗದ ದಯನೀಯ ಸ್ಥಿತಿಯದು. ದೇಹ ಮುಪ್ಪಾದರೂ ಭಾವಪ್ರಬುದ್ಧತೆಯನ್ನು ಹೊಂದಲಾಗದ ಜನ್ಮಜಾತ ಕಲೆಯನ್ನಷ್ಟೇ ಬಲ್ಲ ಯಾವುದೇ ನೀತಿ ನಿರೂಪಕರು ಉಪದೇಶಕರಾಗಲಾರರು; ಆಗಬಾರದು. ಯಾವುದೇ ಸಿದ್ಧಾಂತದಲ್ಲಿ ಬದ್ಧತೆ, ಪ್ರಾಮಾಣಿಕತೆ, ನೈತಿಕತೆ ಇದ್ದಾಗ ಮಾತ್ರ ನಾಯಕ ಅನ್ನಿಸಿಕೊಳ್ಳಬಹುದು; ಅದಿಲ್ಲದೆ "ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೆ ಮೇಲು" ಎಂದುಕೊಳ್ಳುವ - ತನ್ಮೂಲಕ ನವ್ಯಾಧಮ ಶೈಲಿಯಲ್ಲಿ "ಸರ್ವಜ್ಞ"ನನ್ನು ಅಣಕಿಸುವಂತೆ ಕಾಣುವ ಖೂಳ ಖಳನಾಯಕರಿಂದಾಗಿ ಇಡೀ ಮನುಷ್ಯ ಸಮೂಹವೇ ಹಾಸ್ಯಾಸ್ಪದವಾಗುತ್ತದೆ. ಇದು ಸದ್ಯದ ಲೋಕಸ್ಥಿತಿ ! ಮರುಳು ಮಾಯಾಮತಿ ! ಕುಸಂಸ್ಕೃತಿ !
ಯಾವುದೇ ದುರಾಚಾರಿಗಳಿಗೆ ನೀತಿನಿರೂಪಕರಾಗುವ ಅರ್ಹತೆ ಇರುವುದಿಲ್ಲ. ಅಂತಹ ಮಂದಿಗೆ ಕುರ್ಚಿಯನ್ನು ಒರೆಸಿ ಕೊಟ್ಟರೂ ಅವರು ಅದನ್ನು ಹೊಲಸೆಬ್ಬಿಸದೆ ಬಿಡರು. ಯಾರನ್ನೂ ತಲುಪಬಾರದ ಗಲೀಜು ಮೇಲ್ಪಂಙ್ತಿಯಲ್ಲದೆ ಅವರಿಂದ ಇನ್ನೇನು ಸಿಕ್ಕೀತು ? ಇಂದು ದಿನನಿತ್ಯವೂ ಸಿಗುತ್ತಿರುವ ಇಂತಹ ಉದಾಹರಣೆಗಳನ್ನೆಲ್ಲ ಸುದ್ದಿ ಮಾಧ್ಯಮಗಳು ಚಪಲ ಚೆನ್ನಿಗರಂತೆ ಬಿತ್ತರಿಸುತ್ತಲೇ ಇರುತ್ತವೆ; ಜನರು ಓದಿ, ನೋಡಿ ಧನ್ಯರಾಗುತ್ತಿದ್ದಾರೆ !! ಇವೆಲ್ಲವೂ ರುಚಿ ಕೆಡಿಸಿಕೊಳ್ಳುವ ಮಾರ್ಗಗಳು; ಚಾರಿತ್ರ್ಯಹೀನ ಶಿಕ್ಷಣದ ಸರಕುಗಳು.
ದೌರ್ಭಾಗ್ಯವೆಂದರೆ ಸುವಿಚಾರ ಸಚ್ಚಿಂತನೆಗಳನ್ನು ಭಾವಿಸಿ ಅನುಸರಿಸುವವರು ಸಮಾಜದಲ್ಲಿ ವಿರಳವಾಗುತ್ತಲೇ ಇದ್ದಾರೆ. ಹಾಗೆ ನೋಡಿದರೆ - ಸನ್ಮಾರ್ಗಕ್ಕೆ ಎಂದಿನಿಂದಲೂ ಬೇಡಿಕೆ ಕಡಿಮೆಯೇ. "ಅಂದು ಶ್ರೀ ರಾಮಕೃಷ್ಣರನ್ನು ಸಂದರ್ಶಿಸಿದ್ದ ಕೆಲವರು ಅವರ ಮಹತ್ವವನ್ನು ಅರಿಯಲಾರದವರಾಗಿದ್ದರು..." ಎಂದು ಸ್ವಾಮಿ ವಿವೇಕಾನಂದರು ಸ್ಮರಿಸಿಕೊಂಡದ್ದಿದೆ. ಇದನ್ನೇ ದೌರ್ಭಾಗ್ಯ ಎನ್ನುವುದು. ಮೌಢ್ಯವೇ ದೌರ್ಭಾಗ್ಯದ ಹೇತು. ನಮ್ಮ ಕಣ್ಣೆದುರಿನಲ್ಲೇ ಇರುವ ಎಷ್ಟೋ ಮೌಲ್ಯಾದ್ಭುತಗಳನ್ನು ಅವಗಣಿಸುವುದು ಮತ್ತು ಯಾವುದೇ ಗುರಿಯಿಲ್ಲದ ಓಟದಲ್ಲಿ ತೊಡಗಿಕೊಳ್ಳುವುದು ಮನುಷ್ಯರ ಜನ್ಮಜಾತ ಸ್ವಭಾವ ಮತ್ತು ದೌರ್ಭಾಗ್ಯ. ಅದು ಎಂದಿನಿಂದಲೂ ಹಾಗೇ ಇದೆ. ಜನ್ಮಜಾತ ಸ್ವಭಾವದ ಸಂಸ್ಕರಣೆಗಾಗಿ ಯೋಗ್ಯ ಉಪದೇಶಕರನ್ನು ಆಶ್ರಯಿಸುವುದೇ ಜನ್ಮವನ್ನು ಸಾರ್ಥಕಗೊಳಿಸಿಕೊಳ್ಳುವ ಸುಲಭ ಮಾರ್ಗ. ಶ್ರೀ ರಾಮಕೃಷ್ಣ ಪರಮಹಂಸರನ್ನು ಸುತ್ತುವವರು ಎಡವಿ ಬೀಳಲಾರರು; ಒಂದೊಮ್ಮೆ ಎಡವುವಂತಾದರೂ ತಮ್ಮನ್ನು ತಾವೇ ಸಂಭಾಳಿಸಿಕೊಳ್ಳಬಲ್ಲರು.
ಯಾವುದೇ ಉನ್ನತ ಸ್ಮರಣೆಯು ನಿರಂತರವಾಗಿ ನಡೆಯುತ್ತಲೇ ಇರುವಂತೆ ಪ್ರೇರೇಪಿಸುವುದೂ ಸುಲಭವೇನಲ್ಲ. ಶ್ರೀ ರಾಮಕೃಷ್ಣ ವಲಯವು ಅಂತಹ ಕಠಿಣವಾದ ಸವಾಲನ್ನು ಶತಮಾನ ಪೂರ್ವದಿಂದಲೇ ಲೀಲಾಜಾಲವಾಗಿ ನಿಭಾಯಿಸುತ್ತ - "ಜನತೆ ಮತ್ತು ಜನಾರ್ದನ" ಎಂಬ ಜೀವ - ಭಾವದ ದ್ವಿಮುಖ ಸೇವೆಯಲ್ಲಿ ಭೇದವನ್ನೆಣಿಸದೆ - ಶ್ರೀ ರಾಮಕೃಷ್ಣ ಭಾವ ಪ್ರಸಾರವನ್ನು ನಿರಂತರವಾಗಿ ನಿರ್ವಹಿಸುತ್ತ ಬಂದ ಹಿರಿಮೆಯನ್ನೂ ಹೊಂದಿದೆ.
ಉತ್ತಿಷ್ಠತ, ಜಾಗ್ರತ, ಪ್ರಾಪ್ಯವರಾನ್ನಿಬೋಧತ...
ಶ್ರೀ ರಾಮಕೃಷ್ಣ ಭಾವವು - ಮಲಗಿದವರನ್ನು ಎಬ್ಬಿಸುವ ಸುಶ್ರಾವ್ಯ ಸುಪ್ರಭಾತ. "ಸಮಯವನ್ನು ವ್ಯರ್ಥಗೊಳಿಸಬೇಡಿ; ಯೌವ್ವನವನ್ನು ಹಾಳುಗೆಡಿಸಬೇಡಿ..." ಎಂದು - ತಮ್ಮ ಸುತ್ತ ನೆರೆಯುತ್ತಿದ್ದ ಆಯ್ದ ಭಕ್ತರ ಆತ್ಮೋದ್ಧಾರಕ್ಕಾಗಿ ಶ್ರೀ ರಾಮಕೃಷ್ಣರು ಬೋಧಿಸಿದ್ದ ಸಂದೇಶಗಳನ್ನೇ ಸ್ವಾಮಿ ವಿವೇಕಾನಂದರು ಸಮಷ್ಟಿಗೇ ಕೇಳುವಂತೆ ಉದ್ಘೋಷಿಸಿದ್ದರು ! ಶ್ರೀ ರಾಮಕೃಷ್ಣರು "ಆತ್ಮ ಸಾಕ್ಷಾತ್ಕಾರವೇ ಬದುಕಿನ ಪರಮಗುರಿ " ಎಂದಿದ್ದರು. ಅವರ ಶಿಷ್ಯ ನರೇಂದ್ರನು - "ಆತ್ಮ ಸಾಕ್ಷಾತ್ಕಾರವೇ ಪರಮ ಗುರಿ ಎಂಬುದು ಸತ್ಯವಾದರೂ ಮೊತ್ತಮೊದಲು ಎಲ್ಲರೂ ಆತ್ಮಗೌರವದಿಂದ ಬದುಕಿ ; ಅನಂತರ ಆತ್ಮೋದ್ಧಾರದ ಚಿಂತನೆ ನಡೆಯಲಿ..." ಎಂದರು. ಇಲ್ಲಿ ಭಾಷೆ ಬೇರೆಯಾದರೂ ಭಾವ ಒಂದೇ. ಶ್ರೀ ರಾಮಕೃಷ್ಣರು ಅತ್ಯುಚ್ಛ ಹಂತದ ಬೆರಳೆಣಿಕೆಯ ವಿದ್ಯಾರ್ಥಿಗಳನ್ನಷ್ಟೇ ಆಯ್ದುಕೊಂಡು ಸಾಕ್ಷಾತ್ಕಾರದತ್ತ ನಡೆಸಿದ್ದರು; ಆದರೆ ಸ್ವಾಮಿ ವಿವೇಕಾನಂದರು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಹಿಂದುಳಿದವರನ್ನೂ ಪ್ರಭಾವಿಸಲು ಯತ್ನಿಸಿದರು ಮತ್ತು ಅನುತ್ತೀರ್ಣರಾದವರಿಗೂ ಸಹಾನುಭೂತಿ ತೋರಿಸಿದ್ದರು. ಹೀಗೆ ಸಕಾಲಿಕವಾಗಿ ಸಾಂದರ್ಭಿಕವಾಗಿ ಶ್ರೀ ರಾಮಕೃಷ್ಣರ ಸಂದೇಶಗಳನ್ನು ಹಿಂಜಿ - ಹಿಗ್ಗಿಸಿ ತನ್ಮೂಲಕ "ಬಹುಜನರು" ಶ್ರೀ ರಾಮಕೃಷ್ಣ ಭಾವಾಂತರ್ಗತವಾಗುವಂತೆ ಮಾಡಿ, "ವಿವೇಕಾನಂದ ಛಾಪನ್ನು" ಒತ್ತಿದವರು ಸ್ವಾಮಿ ವಿವೇಕಾನಂದರು; ಶ್ರೀ ರಾಮಕೃಷ್ಣ - ಶಾರದಾಮಾತೆಯ ಬದುಕು ಮತ್ತು ಚಿಂತನೆಗಳ ವರ್ಣರಂಜಿತ ರಾಯಭಾರಿಯಾಗಿ, ವೇದೋಪನಿಷತ್ತುಗಳೊಂದಿಗೆ ಬುದ್ಧನನ್ನೂ ಉದಾಹರಿಸುತ್ತ - ತಮ್ಮ ಅತ್ಯುಚ್ಛ ಗುರುಸ್ಥಾನವನ್ನು ಭಾವಪೂರ್ಣವಾಗಿ ಹೊತ್ತು ವಿಸ್ತರಿಸಿದವರು ಸ್ವಾಮಿ ವಿವೇಕಾನಂದರು. "ಆತ್ಮನೋ ಮೋಕ್ಷಾರ್ಥಂ ಜಗದ್ಧಿತಾಯ ಚ " ಎಂಬ ಸಮಷ್ಟಿಯ ಉದ್ಧಾರದ ಉನ್ನತ ಧ್ಯೇಯಪ್ರಸಾರದ ವಿಶಾಲ ಛತ್ರದಡಿಯಲ್ಲಿ ಶ್ರೀ ರಾಮಕೃಷ್ಣ ಮಹಾಸಂಘವನ್ನು ಕಟ್ಟಿ ಸಮಾಜವನ್ನು ತತ್ಪರಗೊಳಿಸಿದವರು - ಸ್ವಾಮಿ ವಿವೇಕಾನಂದರು. ಉದ್ದೇಶ ಮತ್ತು ಕ್ರಿಯೆ - ಎರಡೂ - ಸಮರ್ಪಕ ಮತ್ತು ಸಮರ್ಪಿತವಾಗಿದ್ದರೆ ಮಾತ್ರ ಅಘಟಿತಗಳು ಘಟಿಸುತ್ತವೆ. ಶ್ರೀ ರಾಮಕೃಷ್ಣ, ಮಾತೆ ಶಾರದಾದೇವಿ ಮತ್ತು ಸ್ವಾಮಿ ವಿವೇಕಾನಂದರ ಮಾತು ಮತ್ತು ಕ್ರಿಯೆಗಳು ಜನಮಾನಸವನ್ನು ತಲುಪಿದ್ದು - ಅಂತಹುದೇ ವಿಶಿಷ್ಟ ಅಸಾಮಾನ್ಯ.
ಶ್ರೀ ರಾಮಕೃಷ್ಣರು - "ಯಾವುದೇ ಮಹತ್ಕಾರ್ಯಗಳು ದೈವಕೃಪೆಯಿಲ್ಲದೆ ದೈವ ಸಂಕಲ್ಪವಿಲ್ಲದೆ ಸಂಭವಿಸಲಾರವು " - ಎನ್ನುತ್ತಿದ್ದರು. ಗುರು ರಾಮಕೃಷ್ಣರಿಂದ ನಿಯುಕ್ತರಾಗಿದ್ದ ಸ್ವಾಮಿ ವಿವೇಕಾನಂದರು ಮತ್ತು ಶ್ರೀ ರಾಮಕೃಷ್ಣ ಬಳಗದ ಸಾಧನೆಯನ್ನು ಇದೇ ಹಿನ್ನೆಲೆಯಿಂದಲೇ ಅರ್ಥೈಸಿಕೊಳ್ಳಬಹುದು. ಆದ್ದರಿಂದಲೇ... ಆತ್ಮೋದ್ಧಾರವಾಗಲೀ ಜಗದೋದ್ಧಾರವಾಗಲೀ "ಗುರುತಿಸಲ್ಪಟ್ಟ" ಶಕ್ತಿಗಳಿಂದ ಮಾತ್ರ ಸಂಭವ.... ಆದ್ದರಿಂದಲೇ ಕೆಲವರ ಮಾತು ಕೃತಿಗಳು ನೇರವಾಗಿ ಹೃದಯವನ್ನು ತಲುಪುತ್ತವೆ; ಇನ್ನು ಕೆಲವು ಹಾರಾಟಗಳು ಎಲ್ಲೆಲ್ಲೋ ಹಾರಿಹೋಗುತ್ತವೆ; ಮತ್ತೊಂದಿಷ್ಟು... ಹಾಸ್ಯಾಸ್ಪದವಾಗುತ್ತಿವೆ !
ಆದರೂ "ಹೀಗೇಕೆ ?" ಎಂದು ಸಾಮಾನ್ಯರಿಗೆ ಅನ್ನಿಸುವುದು ಸಹಜ. ಹೌದು. ಇನ್ನೊಬ್ಬರ ಅದೇ ವಿಚಾರಗಳನ್ನು - ತಾನು ಹೇಳಿದರೆ ಅದೇ ಸಾಮಾಜಿಕ ಪರಿಣಾಮ ಏಕಾಗುವುದಿಲ್ಲ ? ಎಂದುಕೊಳ್ಳುವವರಿದ್ದಾರೆ. ಏಕೆಂದರೆ ಯಾವುದೇ ವಿಚಾರಗಳು ಆತ್ಮಿಕ ಅನುಭವದ ಮೂಸೆಯಲ್ಲಿ ಹೊರಳಿ ಅಪರಂಜಿಯಾಗಿ, ತಾನೇ ತಾನಾಗಿ ಹೊಮ್ಮಿದಾಗ ಮಾತ್ರ ಅವು ಇನ್ನೊಂದು ಹೃದಯವನ್ನು ಮುಟ್ಟುತ್ತವೆ. ಆದ್ದರಿಂದಲೇ ಅವರಿವರ ಮಾತನ್ನು ಉದ್ಧರಿಸಿಕೊಂಡು ಯಾರೂ ಭಾಷಣಕಾರರಾಗಬಹುದು; ಆದರೆ ಆಧ್ಯಾತ್ಮಿಕ ಚಿಂತಕರಾಗುವುದು ಅಸಾಧ್ಯ. ಏಕೆಂದರೆ ಅಧ್ಯಾತ್ಮದ ಭಾಷೆಯೇ ಬೇರೆ; ಅದು ಹೃದಯದ ಭಾಷೆ. ಹೃದಯದ ಭಾಷೆಯನ್ನು ಅನುಭಾವಿಸಬಲ್ಲ ಅನುಭಾವಿಗಳ ಮಾತು ವಿಚಾರಗಳನ್ನು ಮಾತ್ರವೇ ಇನ್ನೊಂದು ಹೃದಯವು ಸ್ವೀಕರಿಸುತ್ತದೆ. ಇದೇ ಜೀವಾತ್ಮ ಪರಮಾತ್ಮ ಸಂವಹನದ ಅಧ್ಯಾತ್ಮ ಕಲೆ ! ಇದೊಂದು ನಿಗೂಢ ಕಲೆ ! ಅನುಗ್ರಹಿತ ಕಲೆ ! ಹೃದಯ ವ್ಯಾಪಾರ ಎಂಬುದು ಮೂಲತಃ ಪ್ರದರ್ಶನ ಕಲೆಯಲ್ಲ; ಅನುಭಾವದ ಕಲೆ ! ಅಂತರಂಗವೇ ಅದರ ನೆಲೆ ! ಆದ್ದರಿಂದಲೇ ಈ ಜೀವಜಗತ್ತಿನಲ್ಲಿ - ಎಲ್ಲವೂ ಎಲ್ಲರಿಗೂ ಹೊಂದುವುದಿಲ್ಲ.
ಹೊರನೋಟಕ್ಕೆ ನಾವೆಲ್ಲರೂ ಮನುಷ್ಯರು; ಎಲ್ಲರ ರಕ್ತವೂ ಕೆಂಪು ಬಣ್ಣದ್ದು ಎಂದು ಗುರುತಿಸಲ್ಪಟ್ಟರೂ ಆಂತರ್ಯದಲ್ಲಿ ನಾವೆಲ್ಲರೂ ಒಂದೇ ಸ್ವಭಾವ-ಸಂಸ್ಕಾರದವರೆ ? ದಿಕ್ಕೆಟ್ಟು ಓಡುತ್ತಿರುವಂತಹ ಸಾಮಾನ್ಯ ಜನಸಮೂಹದ ಆಸಕ್ತಿ, ಆದ್ಯತೆ, ಸಂಸ್ಕಾರ, ಗುರಿ - ಯಾವತ್ತೂ ಒಂದೇ ಆಗಿರುವುದು ಸಾಧ್ಯವೆ ? ಅಸಾಧ್ಯ... ಆದ್ದರಿಂದಲೇ ಒಂದೇ ಗುಂಪಿನ ರಕ್ತದವರೆಲ್ಲರೂ "ಒಂದೇ" ಆಗಲಾರರು; ಒಂದೇ ಉದ್ದೇಶದ ಗುರಿಯನ್ನು ಹೊಂದಿದವರೂ "ಒಂದೇ" ಆಗಲಾರರು. ನಿತ್ಯ ಬದುಕಿನಲ್ಲಿ ವಿಕಾರ ಸಾಮೀಪ್ಯವು ಸಂಭವನೀಯವಾದರೂ ವಿಚಾರಸಾಮೀಪ್ಯವು ಅಪೂರ್ವಕ್ಕೊಮ್ಮೆ ಮಾತ್ರ ಸಂಭವಿಸುವಂಥದ್ದು. ವಿಚಾರ ಸಾಮೀಪ್ಯವಿಲ್ಲದೆ - ಹೃದ್ಭಾವವು ಒಂದಾಗುವುದು ಯಾವತ್ತೂ ಅಸಾಧ್ಯ; ವಿಚಾರಸಾಮೀಪ್ಯವಿದ್ದರೂ ದಾರಿ ಅನುಸರಣೆಗಳು ಒಂದೇ ಆಗಿರಲಾರದು; ಆಗಲೂ ವಿಭಿನ್ನ ಭಾವ ಹುಟ್ಟುತ್ತದೆ; ಅಂತರ ಏರ್ಪಡುತ್ತದೆ. ಆದ್ದರಿಂದಲೇ ಬಾಹ್ಯದಲ್ಲಿ "ಒಂದೇ ಗುಂಪು" ಎಂದು ಕಾಣುವ ಎಡೆಗಳಲ್ಲಿಯೂ ಏಕಭಾವವು ಚದುರಿಹೋಗಿರುವುದರಿಂದಲೇ ಒಬ್ಬೊಬ್ಬರು ಒಂದೊಂದು ದಿಕ್ಕಿಗೆ ಓಡುವವರಾಗಿರುವುದು ಮತ್ತು ಕಾಲಕ್ರಮೇಣ ಗುಂಪುಗಳು ಕ್ಷೀಣಿಸುವುದು - ವಾಸ್ತವ; ಸಹಜ. ಆದ್ದರಿಂದಲೇ ಒಂದೇ ವರ್ಗದ ರಕ್ತವು ದೇಹಭಾವಕ್ಕೆ ಹೊಂದಿದರೂ ಅದರಿಂದ ಸ್ವಾತ್ಮಭಾವಕ್ಕೆ ಜೀವ ತುಂಬಲಾದೀತೆ ? ಎಳೆಯ ಯೌವ್ವನದ ರಕ್ತವನ್ನು ಸ್ವೀಕರಿಸಿದವರೆಲ್ಲ ಕನಿಷ್ಠ - ದೈಹಿಕವಾಗಿಯಾದರೂ ಯೌವ್ವನಿಗರಾಗುವುದು ಸಾಧ್ಯವೆ? ಎಂಬುದನ್ನೂ ದೇಹಕೇಂದ್ರಿತ ಮನಸ್ಸುಗಳು ಯೋಚಿಸಬಹುದು. ಅದು ಅಸಾಧ್ಯ. ಏಕೆಂದರೆ, ಯೌವ್ವನದ ಸತ್ವ ಮತ್ತು ಸತ್ಯವು ಭಾವದಲ್ಲಿದೆ; ದೇಹದಲ್ಲಿಲ್ಲ. ಆದ್ದರಿಂದಲೇ ಪ್ರತಿಯೊಂದು ಬದುಕೂ ಆತ್ಮರೂಪೀ ಭಾವಜೀವ ; ಸ್ವಭಾವಜೀವ ; ಯಾವುದೇ ಬದುಕು - ನಾವೆಂದುಕೊಂಡಂತೆ ದೇಹಜೀವವಲ್ಲ. ಆದ್ದರಿಂದ ದೇಹಪೋಷಣೆಯನ್ನು ಭಾವಮೂಲದಿಂದ ನಡೆಸುವುದು - ಬದುಕಿನ ಸುಪುಷ್ಟ ಪೋಷಣೆಗೆ ಅನಿವಾರ್ಯ. ಭಾವ ಸಂವಹನ ಮತ್ತು ಸಮನ್ವಯವೇ ಅನೇಕವು ಏಕವಾಗುವ ತಂತ್ರ; ಇದೇ ಸಮತ್ವದ ಮತ್ತು ಪರಿಪೂರ್ಣ ಆರೋಗ್ಯ ಭಾವದ ಸರಳ ಸೂತ್ರ.
ಆದರೆ ಮನುಷ್ಯಬಾವಿಗಳು ಎಂಬ ದೇಹಮೂಲಗಳಲ್ಲಿ ನಾನಾ ಕಾರಣಗಳಿಂದ ಭಾವ - ಸ್ವಭಾವಜಲವು ಬತ್ತಿ ಹೋಗಿರುತ್ತದೆ; ಬಾವಿಯ ಆಕೃತಿಗಳಷ್ಟೇ ಇರುತ್ತವೆ; ಆದ್ದರಿಂದ ಕನಸಿನಲ್ಲಿ ಚಲಿಸುವಂತೆ ದೇಹಗಳಷ್ಟೇ ಚಲಿಸುತ್ತಿರುತ್ತವೆ. ಇನ್ನಷ್ಟು ಭಾವಬಾವಿಗಳು ಬಳಕೆಯೇ ಆಗದೆ, ಜನ್ಮಜನ್ಮಾಂತರದಿಂದ ಹಾಳು ಬಿದ್ದಿದ್ದು - ಅದರಲ್ಲಿನ ಭಾವಜಲವು ವಿಷಪೂರಿತವಾಗಿರುತ್ತದೆ.
ಆದ್ದರಿಂದಲೇ ಶಾಬ್ದಿಕವಾದ ಆತ್ಮೀಯರೆಲ್ಲರೂ ಭಾವನಾತ್ಮಕವಾಗಿ ಆತ್ಮೀಯರಾಗುತ್ತಿಲ್ಲ. ಜೀವಿಗಳ ಭಾವ ಸಂಧಿಸಿದಾಗ ಮಾತ್ರ - "ಆತ್ಮೀಯ"ವಾಗಲು ಸಾಧ್ಯ. ಇತರ "ಸಂಧಿ"ಗಳೆಲ್ಲವೂ ಲೋಪ ಸಂಧಿಗಳೇ; ವ್ಯರ್ಥ ಕಾಲಕ್ಷೇಪ. ಇಂತಹ ಲೋಪಜಾತ್ರೆಯ ಇವತ್ತಿನ ನಮ್ಮ ಭಾವರಹಿತ ಬದುಕುಗಳು ದಿಕ್ಕು ತಪ್ಪಿರುವುದರಿಂದಾಗಿ ಕ್ಷುಲ್ಲಕ ಕಾರಣಗಳಿಗೂ ವ್ಯಗ್ರಗೊಳ್ಳುತ್ತಿದ್ದು - ನಿಜ ಬದುಕಾಗಿಯೇ ಉಳಿದಿಲ್ಲ. ತಳಮಳಿಸುತ್ತಿರುವ ಭಾವಜಲವು ಕಲುಷಿತಗೊಳ್ಳುತ್ತಿದೆ. ಇದರಿಂದಾಗಿ ಬಳಕೆಯ ಬಹುಪಾಲು ನೀರೂ - ಈಗ ನಾರಾಯಣವಾಗಿಲ್ಲ; ವ್ಯರ್ಥ ಓಟ ಒಳತೋಟಿಗಳ ಬಿಸಿಯಿಂದ ಜೀವಿಗಳ ಭಾವಜಲವು ಬತ್ತಿಹೋಗುತ್ತಿದೆ. ಬಾಹ್ಯದ ಗೊಂದಲಗಳೆಂಬ ನಿದ್ದೆ ಕೆಡಿಸುವ ಭೋಜನವನ್ನು ಯಥೇಷ್ಟ ತಿನ್ನುತ್ತಿರುವ ಮನೋದೇಹಗಳ ಲೌಕಿಕ ದಾಹವು ಹೆಚ್ಚುತ್ತಲೇ ಇದೆ; ಆದರೆ ದಾಹ ತೀರಿಸಬಲ್ಲ ಅಂತರಂಗದ ಭಾವಜಲಸ್ಥಾನಗಳು ಬರಡಾಗಿವೆ. ಸಂದು ತಪ್ಪಿದ ಅಸಮತೋಲನ ! ಹೀಗೆ ಸ್ವಾತ್ಮವನ್ನು ನಗಣ್ಯಗೊಳಿಸಿ, ಅದನ್ನು ನೇಪಥ್ಯಕ್ಕೆ ಸರಿಸಿ, ಮೆಟ್ಟಿ ಮೇಲೇಳಲಾಗದಂತೆ ಬರಡು ಮಾಡಿಕೊಂಡಿರುವ ಬದುಕುಗಳು ಒಣಗಿ ಬತ್ತಿಹೋಗುತ್ತಿರುವುದು ಸಹಜ. ಆದ್ದರಿಂದಲೇ "ಬಾವಿಯ ಜಲ ಬತ್ತಿ ಬರಿದಾಯ್ತೋ ಹರಿಯೇ..." ಎನ್ನುತ್ತ ಹಲುಬುವಂತಾಗಿದೆ. ಆಂತರಿಕ ಮಾರ್ದವತೆಯಿಲ್ಲದಾದಾಗ ಒಳದನಿಯು ಒಣಗಿ ಸ್ಪಂದಿಸಲಾಗದೆ ಕೈಚೆಲ್ಲುವಂತಾಗುತ್ತದೆ. "ಸ್ವಾತ್ಮದ ಮೊರೆ"ಯು ನಮಗೆ ಕೇಳದಂತೆ ನಾವೇ ಮಾಡಿಕೊಂಡಿದ್ದೇವೆ. ಆದ್ದರಿಂದಲೇ ಸಮಾಜದಲ್ಲಿ ಭೂತ ಪ್ರೇತಸಂಚಾರವು ಹೆಚ್ಚಿದಂತೆ ಭಾಸವಾಗುತ್ತದೆ. ಇದೂ ಭ್ರಮೆಯೇ. ಗಲಿಬಿಲಿ ತಳಮಳಗಳ ಅಸು ಬಳಲಿಕೆಯ ಸ್ಥಿತಿಯದು ! ಅಧ್ಯಾತ್ಮದ ಶುದ್ಧ ಜಲಸ್ಥಾನವನ್ನು ಪುನರುಜ್ಜೀವಗೊಳಿಸದೆ ಜೀವದ ದಾಹವು ತೀರುವುದಿಲ್ಲ; ಭ್ರಾಂತಿ ಅಳಿಯುವುದಿಲ್ಲ; ಅಪೇಕ್ಷಿತ ಔಷಧ ಕೊಡದೆ ರೋಗ ಗುಣವಾಗುವುದಿಲ್ಲ; ನೆಮ್ಮದಿ ಕಾಣುವುದಿಲ್ಲ.
ನಿರಂತರವಾಗಿ ಗೊಂದಲ ಗೋಟಾಳಿಗಳ ಭ್ರಮೆಗೆ ತಾವೇ ಸಿಲುಕಿಕೊಳ್ಳುತ್ತ - ನಡುನಡುವೆ ಒಮ್ಮೊಮ್ಮೆ ಪ್ರೇತೋಚ್ಛಾಟನೆ ಮಾಡಿಕೊಳ್ಳುವ ಇಚ್ಛೆಯನ್ನೂ ಹೊಂದಿರುವ ಭವ-ಭಾವ ಗೊಂದಲಿಗರು - ಮೊತ್ತಮೊದಲಿಗೆ ಅಮೂರ್ತ ಪ್ರೇತಗಳ ಗುಂಪಿನಿಂದ ಹೊರಬಂದು ಧ್ಯಾನಸ್ಥರಾಗುವುದು ಅನಿವಾರ್ಯ. ಬದುಕನ್ನೇ ವಿಕಟ ರಾಜಕೀಯವಾಗಿಸಿಕೊಂಡು ಪರಕೀಯ ಆಕರ್ಷಣೆಗಳ ಭ್ರಾಂತಿಯೆಂಬ ಅಮಲಿಗೆ ವಶವಾದರೆ ಅಸು ಬಳಲಿಸುವ ಜೀವನ ಸಂಘರ್ಷವು ತಪ್ಪುವುದೇ ಇಲ್ಲ. ವ್ಯರ್ಥವಾದ ಕತ್ತೆ ದುಡಿತ; ಹೆಸರು ದುಡ್ಡು ಖ್ಯಾತಿಯ ಮುಳ್ಳುಗಳ ಆಘಾತ, ಮತ್ಸರ ಪ್ರತೀಕಾರಗಳ ಧೀಂಗುಣಿತ, ಸ್ವಪ್ರತಿಷ್ಠೆಯ ವ್ಯಾವಹಾರಿಕ ಮಿಥ್ಯಾಪೊರೆ.... ಇವೆಲ್ಲವೂ ಆತ್ಮಭಾವವಿಲ್ಲದಲ್ಲಿ ಮಾತ್ರ ನಡೆಸಲಾಗುವ ಯಥೇಚ್ಛ ಕಾರುಬಾರುಗಳು ! ಆದರೆ ಇದೇ ಬದುಕಲ್ಲ; ಶಾಂತ ಬದುಕಂತೂ ಅಲ್ಲವೇ ಅಲ್ಲ. ಇದು ನಿಜವಾಗಿಯೂ ರಂಗಿನ ಕನಸು; "ಭಯೋಚ್ಛಾದಿತ - ಭಯೋತ್ಪಾದಕ ಬದುಕು !".
ಅರಿವಿಗೆ ಏಳ್ಗತಿ ಇಲ್ಲದಂತೆ ನಿತ್ಯವೂ ತಮ್ಮನ್ನು ತಾವೇ ಕೊಂದುಕೊಳ್ಳುತ್ತ ಆತ್ಮಹತ್ಯೆಗೆ ಸ್ವೇಚ್ಛೆಯಿಂದ ಒಳಗಾಗುವ ಪುಂಡರ ಕ್ಷೇತ್ರವನ್ನು ಬದುಕು ಎನ್ನಲಾಗದು; ಧರ್ಮರಹಿತ - ರಾಜಕೀಯ ಕಲಬೆರಕೆಯ ಬದುಕಿನ ವೇಷ ಎನ್ನಬಹುದು.. ದೇಹದ ಗಿರಕಿ ಹೊಡೆಯುತ್ತ ದೇಹವನ್ನೇ ತಾವೆಂದುಕೊಂಡು ಸೊತ್ತುಗಳ ಸಂಗ್ರಹದಲ್ಲಿಯೇ ತನ್ಮಯವಾಗುವ ಎಲ್ಲವೂ - ಇದೇ ಅಧರ್ಮೀ ರಾಜಕೀಯ ವರ್ಗಕ್ಕೆ ಸೇರುತ್ತವೆ. ಇಂತಹ ಬದುಕುಗಳು - ಸ್ವಾರ್ಥಕ್ಕಾಗಿ ಪರಸ್ಪರ ಸ್ಪರ್ಧಿಸುವುದರಲ್ಲಿಯೇ ತಮ್ಮ ಬದುಕನ್ನು ಕಳೆದುಕೊಂಡು ಬಿಡುತ್ತವೆ. ಇಂತಹ ಸ್ಪರ್ಧಿಗಳು ತಾವು ಏನನ್ನೋ ಪಡೆದುಕೊಂಡೆವು ಎಂದುಕೊಳ್ಳುತ್ತಿದ್ದರೂ ಯಾವುದೂ ಅವರನ್ನು ನಿಜಾರ್ಥದಲ್ಲಿ ಪೊರೆಯುವ ಸರಕುಗಳಲ್ಲ; ಆದ್ದರಿಂದಲೇ ಅವು ಕಿಂಚಿತ್ ತೃಪ್ತಿಯನ್ನೂ ನೀಡದೆ ನಿರಂತರ ಸತಾಯಿಸುತ್ತವೆ.
ನಾವು ಹುಟ್ಟುವ ಮೊದಲು ಇದ್ದದ್ದು ಮತ್ತು ಸತ್ತ ನಂತರವೂ ನಮ್ಮೊಂದಿಗೆ ಇರುವುದು ಮಾತ್ರ "ನಮ್ಮದು" - ಎಂಬ ಆಧ್ಯಾತ್ಮಿಕ ದೃಷ್ಟಿಯು ಬಲವಾಗುತ್ತ ಹೋದಂತೆ ತೃಪ್ತಿಯು ಸಹಜವಾಗಿ ನೆಲೆಗೊಳ್ಳುತ್ತದೆ; "ಕೊಳ್ಳುಬಾಕ, ಕೂಡುಬಾಕತನಗಳು" ಮರೆಯಾಗುತ್ತವೆ. ಸುಖಜೀವಿಗಳನ್ನು ಆಧರಿಸುವುದು - "ನ ಮಮ " - "ಇದು ನನ್ನದಲ್ಲ" ಎಂಬ ಭಾವನೆಯೇ ಆಗಿದೆ. ಈ ಬಗೆಯ ಸುಖತೃಪ್ತಿಯಿಂದ ಹೊಮ್ಮುವ - "ನಮ್ಮದು" ಎಂಬ ನಿಜಾತ್ಮಾನಂದವನ್ನು ಯಾವುದೇ ಹೊರದೇಹಗಳಿಗೆ ನೋಡಲಾಗುವುದಿಲ್ಲ. ಆಯಾ ಅನುಭೂತಿಗೆ ಮಾತ್ರ ಎಟಕುವ ವಸ್ತುವಿದು; ಎಚ್ಚರದ ಸಾಕ್ಷಿಯು ಮಾತ್ರ ಕಾಣುವ ಸತ್ಯವಿದು.
ಸತ್ಸಂಗದಲ್ಲಿರುವಾಗ, ಸಾತ್ವಿಕ ಸತ್ಕಾರ್ಯಗಳಲ್ಲಿ ತೊಡಗಿಕೊಂಡಾಗ ಸದ್ಭಾವಗಳು ಎಚ್ಚರಗೊಳ್ಳತೊಡಗುತ್ತವೆ. ಆದರೆ ಅದು - ತಾತ್ಕಾಲಿಕ. ಹಳೆಯ ವೃತ್ತಕ್ಕೆ ಹಿಂದಿರುಗಿದೊಡನೆಯೇ - ಮತ್ತೆ ಎಚ್ಚರ ತಪ್ಪುತ್ತದೆ. ರಾಗ ರಕ್ತಿಗಳ ಡೋಲುಬಾರಿಸುತ್ತ ನಡೆಸುವ ಮನುಷ್ಯರ ಯಾವತ್ತೂ ಸುಕರ್ಮಗಳು ನಾಯಿಯ ಬಾಲಕ್ಕೆ ನಳಿಕೆ ಸಿಕ್ಕಿಸಿ ನೇರಗೊಳಿಸುವ ಪ್ರಯತ್ನಗಳಂತೆಯೇ - ಅಸ್ಥಾಯೀ ಚಿತ್ರವನ್ನು ಮಾತ್ರ ತೋರಬಲ್ಲವು. ಭ್ರಮೆಯಂತೆ ಮೂಡಿ ಮಾಯವಾಗುತ್ತ ಆಳವಾದ ಗೊಂದಲಕ್ಕೆ ತಳ್ಳುವ ಸಂಚಾರೀ ಭ್ರಮಾಚಿತ್ರಗಳವು. ಆದ್ದರಿಂದ ವಿರಕ್ತಿ - ವೈರಾಗ್ಯ ಭಾವವಿಲ್ಲದ ಯಾವುದೇ ಕರ್ಮಗಳು ಶಾಂತಿ ನೆಮ್ಮದಿಯ ಸ್ಥಾಯೀ ಭಾವವನ್ನು ಮೂಡಿಸಲಾರವು. ಇದು ಸಾಮಾನ್ಯ ಸಾಂಸಾರಿಕರ ತ್ರಿಶಂಕು ಅವಸ್ಥೆ. ಅದಕ್ಕಾಗಿಯೇ ಆಧ್ಯಾತ್ಮಿಕ ಅಧಿಕಾರವಿಲ್ಲದವರು ಸೇವೆ (ಯ ಆಟ) ನಡೆಸುವುದು ಮತ್ತು ಉಪದೇಶಿಸುವುದನ್ನು - ಪರಮಹಂಸರು "ವ್ಯರ್ಥ ಕರ್ಮಗಳು" ಎನ್ನುತ್ತಿದ್ದರು; "ಅಂತಹ ಸೇವೆಗಳಿಂದ ಯಾವುದೇ ಪ್ರಯೋಜನವಾಗದು; ಅಂತಹ ಉಪದೇಶಗಳು ಯಾವುದೇ ಹೃದಯವನ್ನು ತಲುಪವು" - ಎನ್ನುತ್ತಿದ್ದರು. "ನಮ್ಮನ್ನು ನಾವು ಉದ್ಧರಿಸಿಕೊಂಡರೆ ಬೇಕಾದಷ್ಟಾಯಿತು; ಶಕ್ತಿಯಿಲ್ಲದೆ ಬೆಟ್ಟ ಎತ್ತಲು ಹೊರಡಬಾರದು..." ಎನ್ನುತ್ತಿದ್ದರು; "ಶ್ರುತಿಗಳಾಗಿ; ಸ್ಮೃತಿಗಳಾಗಿ; ಅನುಸ್ಮೃತಿಗಳಾಗಿ; ಅಪಶ್ರುತಿಗಳಾಗಬೇಡಿ; ವಿಸ್ಮೃತಿಗಳಾಗಬೇಡಿ; ಅಪಸ್ಮೃತಿಗಳಾಗಬೇಡಿ... ಅಧಿಕೃತ ಅಧಿಕಾರವಿಲ್ಲದ ಉಚಿತ ಉಪದೇಶಗಳೆಲ್ಲವೂ ಅಲ್ಪಾಯುಷಿ ಪಟಾಕಿಗಳಂತೆ; ಅದರಿಂದಾಗುವ ಉಪಯೋಗ - ತಾತ್ಕಾಲಿಕ ರಂಜನೆಯಷ್ಟೇ..." ಎಂದೂ ತಮ್ಮ ಭಕ್ತರನ್ನು ಎಚ್ಚರಿಸುತ್ತಿದ್ದರು; ಸಾಧನೆಯಲ್ಲಿ ತೊಡಗಿಕೊಳ್ಳಲು ಪ್ರೇರೇಪಿಸುತ್ತಿದ್ದರು.
ಮಿದುವಾದ ಮಣ್ಣು ತನ್ನನ್ನು ಸಂಧಿಸಿದ ಬೀಜವನ್ನು ಸಸಿಯಾಗಿಸುವಂತೆ ಮಿದುವಾದ ಹೃದಯಗಳು ಮಾತ್ರ ಸದ್ಭಾವಗಳನ್ನು ಹೀರಿಕೊಳ್ಳಬಲ್ಲವು ಮತ್ತು ಬೆಳೆಸಬಲ್ಲವು. ಅಂತೆಯೇ ಒಣಗಿ ಹೋಗಿರುವ ಭಾವನೆಲೆಯಲ್ಲಿ ಸಚ್ಚಿಂತನೆಗಳು ನಮ್ಮೊಳಗನ್ನು ಸ್ಪರ್ಶಿಸಿ ಅರಳಲು ಅವಕಾಶವೇ ಇರುವುದಿಲ್ಲ; ಅಂತಹ ಇಂದ್ರಿಯಗಳು ಕೇಳಿದ್ದು ನೋಡಿದ್ದೆಲ್ಲವೂ ಅಲ್ಲಲ್ಲೇ ಹಾರಿ ಹೋಗಿರುತ್ತದೆ; ಮುಖಕ್ಕೆ ಬಡಿದು ಹಿಂದೆ ಹೋಗಿರುತ್ತದೆ; ಸಾಂಸಾರಿಕ ಕೋಟಲೆಯ ತ್ಯಾಜ್ಯ ನಿಬಿಡತೆಯೆಂಬ ಗಿಜಿಗಿಜಿ ಕಾಳುಗಳಿಂದ ಅದಾಗಲೇ ತುಂಬಿಹೋಗಿರುವ ಗಂಟಲನ್ನು ದಾಟಿ ಸದ್ವಿಚಾರಗಳು ಮುಂದೆ ಹೋಗಲು ಯಾವುದೇ ಅವಕಾಶವಿರುವುದಿಲ್ಲ. ಆದ್ದರಿಂದಲೇ ಉದಾತ್ತ ಉಪದೇಶಗಳು ಕಿವಿಗೆ ಬಿದ್ದರೂ ಹೃದಯವನ್ನು ತಲುಪುವುದೇ ಇಲ್ಲ. ಭವರೋಗವು ಪರಿಹಾರವಾಗುವುದೂ ಇಲ್ಲ. ಅಂತಹ ಭಕ್ತಿಯಾತ್ರಿಗಳು ಎಷ್ಟೇ ಸಚ್ಚಿಂತನೆಗಳಲ್ಲಿ ಪಾಲ್ಗೊಂಡರೂ ತಾವು ನಿಂತಲ್ಲಿಂದ ಒಂದು ಹೆಜ್ಜೆಯೂ ಮುಂದೆ ಸರಿಯುವುದಿಲ್ಲ.
ಕೆಲವರು ಎಷ್ಟು ಆಯಾಸಗೊಂಡಿರುತ್ತಾರೆಂದರೆ ನಿದ್ರಿಸುವುದಕ್ಕಾಗಿಯೇ ಧಾರ್ಮಿಕ ಸಭೆಗಳಿಗೆ ಬರುವವರೂ ಇದ್ದಾರೆ ! ಒಮ್ಮೆ ಉಪನಿಷತ್ತಿನ ಕುರಿತು ನಡೆಸಿದ್ದ ಒಂದು ವಿಚಾರ ಗೋಷ್ಠಿಯಲ್ಲಿ ನಾನೂ ಭಾಗವಹಿಸಿದ್ದೆ. ಅಂದು ನನ್ನ ಪಕ್ಕದಲ್ಲಿ ಕುಳಿತಿದ್ದ ಇಬ್ಬರು ಮಾತೆಯರು ಅಕ್ಷರಶಃ ಗೊರಕೆ ಹೊಡೆಯುತ್ತ ನಿದ್ರಿಸಿದ್ದರು ! ಅಂದು ನನ್ನ ಏಕಾಗ್ರತೆಗಾಗಿ ನಾನು ಸ್ಥಳ ಬದಲಿಸಿ ಕುಳಿತುಕೊಳ್ಳುವಂತಾಗಿತ್ತು. ಇದು ಅಸು ಬಳಲಿಕೆಯ ಸ್ಥಿತಿ ! ನಿದ್ದೆ ಮಾಡುವುದು ತಪ್ಪೇನಲ್ಲ; ಆಯಾಸವಾದಾಗ ನಿದ್ರೆ ಬರುವುದೂ ಸಹಜ. ಆದರೆ ನಿರೀಕ್ಷಿಸಿಕೊಳ್ಳಬೇಕಾದ್ದು ಅದಲ್ಲ. ಬಳಲಿಕೆಯ ಗಿಜಿಗಿಜಿಯು ಯಾವತ್ತೂ ನಿಷ್ಕ್ರಿಯತೆಯನ್ನೇ ಅವಲಂಬಿಸುತ್ತದೆ; ಎಚ್ಚರ ತಪ್ಪಿಸುತ್ತದೆ; ಆದ್ದರಿಂದಲೇ ನಿದ್ದೆ ಬರುತ್ತದೆ. ಇದು - ಗ್ರಹಿಸಬೇಕಾದ ವಿಷಯ. ಹೀಗೆ ನಿದ್ರೆ ಬರುವಂತಿದ್ದರೆ - ಗಂಭೀರ ಸಭೆಗಳನ್ನು ನಿದ್ದೆಗಾಗಿ ಆಯ್ದುಕೊಳ್ಳುವ ಅಗತ್ಯವಿದೆಯೆ ? ಇತರರಿಗೆ "ಇಲ್ಲ" ಅನ್ನಿಸಿದರೂ ಅದೇನೋ ಅವ್ಯಕ್ತ ಆಕರ್ಷಣೆಯು ಜ್ಞಾನನದಿಯವರೆಗೆ ಅವರನ್ನು ಸೆಳೆದೊಯ್ದಿರುತ್ತದೆ; ಆದರೆ ಬಳಲಿರುವ ಪ್ರಜ್ಞೆಯು ತನ್ನ ದಾಹ ತೀರಿಸಿಕೊಳ್ಳಲಾಗದೆ ದಡದಲ್ಲಿಯೇ ನಿದ್ರಿಸುತ್ತದೆ; ಜ್ಞಾನಪಾನ ಸಾಧ್ಯವಾಗುವುದಿಲ್ಲ. ಇಂತಹ ಅಸ್ಥಿರ ದೇಹಮನಸ್ಸುಗಳ ಒಡೆಯರ ಗಿಜಿಗಿಜಿ ಭಾವಚಿಂತನೆಗಳಿಂದಾಗಿ - ಅವರ ಅಪೇಕ್ಷೆ ಮತ್ತು ಉದ್ದೇಶಗಳು ಒಳ್ಳೆಯದೇ ಇದ್ದರೂ ಯಾವುದೇ ಉದ್ದೇಶ ಸಾಧನೆಯಾಗಲು ಅವರ ಇಂದ್ರಿಯಗಳೇ ಸಹಕರಿಸಲಾರವು. ದೇಹ ಮನಸ್ಸು ಬುದ್ಧಿಗಳನ್ನು ತರಬೇತುಗೊಳಿಸಿಕೊಳ್ಳದೆ ಯಾವ ಗೋಷ್ಠಿಗಳಲ್ಲಿ ಎಷ್ಟು ಭಾಗವಹಿಸಿದರೂ ಅರ್ಥ ಹುಟ್ಟುವುದಿಲ್ಲ; ವ್ಯರ್ಥವೇ ಆಗುತ್ತದೆ. ಎಷ್ಟೋ ಲಕ್ಷ ಜನರನ್ನು ಗುಡ್ಡೆಹಾಕಿದ ದೃಶ್ಯಾವಳಿಯಿಂದ ಸಂಘಟಕರ ಅಹಂ ತುಂಬಿಕೊಳ್ಳಬಹುದಲ್ಲದೆ ಬೇರೇನೂ ಪರಿಣಾಮ ಆಗುವುದಿಲ್ಲ. ಇದನ್ನೇ ಗೊಂದಲದ ಸಂಸಾರ ಎನ್ನುವುದು. ಭಕ್ತಿಯು Fashion ಸರಕಲ್ಲ. ಸಂಸಾರದ ಸಂತೆಯನ್ನು ಗಂಟಲಿಗೆ ಸಿಕ್ಕಿಸಿಕೊಂಡು ಪಾಲ್ಗೊಳ್ಳುವಂತಹ ಭಕ್ತಿ ಶ್ರವಣದಿಂದ ಯಾವುದೇ ಉಪಯೋಗವಿಲ್ಲ ಎಂಬುದು ಶ್ರೀ ರಾಮಕೃಷ್ಣರ ಭಾವವಾಗಿತ್ತು.
"ಪೂಜೆಗಿಂತ ಮೇಲಾದುದು ಜಪ, ಜಪಕ್ಕಿಂತ ಮೇಲಾದುದು ಧ್ಯಾನ, ಧ್ಯಾನಕ್ಕಿಂತ ಮೇಲಾದುದು ಭಾವ, ಭಾವಕ್ಕಿಂತ ಮೇಲಾದುದು ಮಹಾಭಾವ. ಅದೇ ಪ್ರೇಮ. ಒಮ್ಮೆ ಪ್ರೇಮ ಉಂಟಾಯಿತೆಂದರೆ ಭಗವಂತನನ್ನು ಕಟ್ಟಿ ಇಡಲು ಒಂದು ಹಗ್ಗ ದೊರಕಿದಂತೆ.."
ಪ್ರೇಮ ಅಂದರೆ - ಇವತ್ತು ಎಲ್ಲೆಂದರಲ್ಲಿ ಬಿದ್ದು ಹೊರಳುತ್ತಿರುವ - "I love you..." ಪ್ರೇಮವಲ್ಲ. ಭಗವಂತನಲ್ಲಿ ಮೂಡುವ ಪ್ರೇಮವು - ಸ್ವಾತ್ಮವನ್ನು ಸಂಸ್ಕರಿಸಿಕೊಳ್ಳುವ ಅವ್ಯಾಜ ನಿರ್ಮಮ ಅಂತರಂಗದ ಪೂಜೆ; ಭಾವಪುಷ್ಪಗಳಿಂದ ನಡೆಸುವ ನಿಶ್ಶಬ್ದ ಆತ್ಮಾರಾಧನೆ; ಸ್ವಾತ್ಮ ಮತ್ತು ಸೃಷ್ಟಿಯ ಸಕಲ ಪರಮಾತ್ಮರೂಪಿಗಳನ್ನು ಗೌರವಿಸಿ ಆದರಿಸಿ ಆಧರಿಸಬಲ್ಲ ವಿಶ್ವಪ್ರೇಮ. ಅಂತಹ ಸುಭಗ ಪ್ರೇಮದಿಂದಲೇ ನಿಜಭಾವದರಿವು ಎಂಬುದನ್ನು ಶ್ರೀ ರಾಮಕೃಷ್ಣರು ಪ್ರತಿಪಾದಿಸಿದ್ದರು. ಅದೇ ಭಗವಂತನ ಪ್ರೇಮ; ಭಗವಂತನನ್ನು ಕಟ್ಟಿಹಾಕುವ "ಭಾವ ಪಾಶ...". ಬಗೆಬಗೆಯ ರೂಪಕೊಟ್ಟು ತಮ್ಮ ಇಷ್ಟಾರ್ಥಗಳನ್ನೆಲ್ಲ ಪೂರೈಸುವ ಒಂದು ಯಂತ್ರದಂತೆ ಭಗವಂತ ಭಾವವನ್ನು ಉಪಚರಿಸುತ್ತಲೇ ಬಂದಿರುವವರು ನಿಜವಾಗಿಯೂ ಭಕ್ತರೆ ? ಭಕ್ತ ಎಂದು ಅಂದುಕೊಂಡವರ ಇಚ್ಛೆಯನ್ನೆಲ್ಲ ಪೂರೈಸುವ ATM - ಭಗವಂತನೆ ? ನಾವು ಹಾಗೆ ಅಂದುಕೊಂಡು ನರಳುತ್ತಿದ್ದೇವೆ - ಅಷ್ಟೆ. ಇಂತಹ ವ್ಯಾವಹಾರಿಕ ಪ್ರೇಮಗಳೊಂದೂ ಶಾಶ್ವತವಲ್ಲ. ಸ್ಥಿರವಾದ ನಿರಪೇಕ್ಷ ಪ್ರೇಮವೊಂದೇ ಶಾಶ್ವತ. ವಸ್ತು ಸೊತ್ತುಗಳ ಅಪೇಕ್ಷೆಯ - ಸ್ಥಿತ್ಯಂತರ ಹೊಂದುವಂತಹ ಅಸ್ಥಿರ ಪ್ರೇಮಕ್ಕೆ ಭಗವಂತನನ್ನು ಒಲಿಸಿಕೊಳ್ಳುವ ಶಕ್ತಿ ಇರುವುದಿಲ್ಲ. ಮಾಯೆಯ ನಾಟಕದಿಂದ ಭಗವಂತನನ್ನು ಮರುಳುಗೊಳಿಸಲು ಆಗುವುದಿಲ್ಲ. ಆದ್ದರಿಂದಲೇ "ಪ್ರೇಮೋನ್ಮತ್ತನಾಗದೆ ಇರುವ ಭಕ್ತನ ಹೊರೆಯನ್ನು ಭಗವಂತನು ಹೊರಲಾರ " ಎನ್ನುತ್ತಿದ್ದರು - ಶ್ರೀ ರಾಮಕೃಷ್ಣರು. ಅವರು ಅದಕ್ಕೂ ಸರಳ ದೃಷ್ಟಾಂತವನ್ನು ಕೊಟ್ಟರು.
"ಚಿಕ್ಕ ಮಕ್ಕಳನ್ನು ಮಾತ್ರವೇ ಅವುಗಳ ಕೈಹಿಡಿದುಕೊಂಡು ಹೋಗಿ ಊಟಕ್ಕೆ ಕುಳ್ಳಿರಿಸುತ್ತಾರೆ. ದೊಡ್ಡವರ ವಿಷಯವಾಗಿ ಯಾರು ತಾನೇ ಹಾಗೆ ವರ್ತಿಸುತ್ತಾರೆ ? ಭಕ್ತನು ತನ್ನ ಯೋಗಕ್ಷೇಮವನ್ನು ತಾನೇ ನೋಡಿಕೊಳ್ಳಲಾರದಷ್ಟು ಭಗವತ್ ಚಿಂತನೆಯಲ್ಲಿ ತನ್ಮಯನಾಗಿಬಿಟ್ಟರೆ, ಆಗ ಮಾತ್ರ, ಆತನ ಸಂಪೂರ್ಣ ಹೊರೆಯನ್ನು ಭಗವಂತನೇ ಹೊತ್ತುಕೊಳ್ಳುತ್ತಾನೆ..."
ತನ್ನ ಯೋಗಕ್ಷೇಮವನ್ನು ತಾನೇ ಮಾಡಿಕೊಳ್ಳಲಾಗದಷ್ಟು ಉತ್ಕಟತೆಯಿಂದ ಯಾರು ಧ್ಯಾನಿಸುತ್ತಿದ್ದಾರೆ ? ಭಗವಂತನನ್ನು ದೂರುವವರು ತಾವೇ ಪ್ರಶ್ನಿಸಿಕೊಳ್ಳಬೇಕು. ನಿತ್ಯದ ಬದುಕಿನಲ್ಲಿ - ತಮ್ಮ ಮತ್ತು ಭಗವಂತನ ಯೋಗಕ್ಷೇಮವನ್ನೂ ತಾವೇ ನೋಡಿಕೊಳ್ಳುತ್ತಿದ್ದೇವೆ - ಎಂಬಂತಹ ಹಮ್ಮಿನ ಕ್ರಿಯೆಗಳು ಎಡೆಬಿಡದೆ ನಡೆಯುತ್ತಿಲ್ಲವೆ ? ದಿನಕ್ಕೊಮ್ಮೆ ದೇವಸ್ಥಾನದೆದುರು ನಿಂತು ಯಾರಿಗೋ ಹೊಡೆಯುವಂತೆ ಕೈ ಎತ್ತುವವರೆಲ್ಲರೂ ಭಕ್ತರೆ ? ಹುಂಡಿಗೆ ಕಂತೆ ಕಂತೆ ಸುರಿಯುವವರೆಲ್ಲರೂ ಭಕ್ತರೆ ? ಇವೆಲ್ಲವೂ - ಭಗವಂತನಿಗೇ ಉಪಕರಿಸುವಂತೆ ನಡೆಸುವ ಹುಂಬ ಕ್ರಿಯೆಗಳು. ಭಾವಪೂರ್ಣ ಪ್ರೇಮಭಕ್ತಿಯು ಸ್ಥಾಯೀ ಭಾವವಾಗದ ಯಾವುದೇ ಹೃದಯದಲ್ಲಿ ಭಗವಂತನಿರುವುದಿಲ್ಲ; ಆದ್ದರಿಂದಲೇ ಜೀವಿಗಳ ತಳಮಳಗಳು ನಿಲ್ಲುವುದೇ ಇಲ್ಲ. ಸಮಸ್ಯೆ - ನಮ್ಮೊಳಗೇ ಇದೆ. ತಮ್ಮ ಯಾವುದೇ ನಿತ್ಯದ ಪಡಿಪಾಟಲುಗಳು "ಸಮಸ್ಯೆಗಳು - ಅಲ್ಲ; .. ಸಮಸ್ಯೆಗಳೇ ಇಲ್ಲ.." ಎಂಬ ಅರಿವು ಮೂಡಿದಾಗಲೇ ಎಲ್ಲ ಸಮಸ್ಯೆಗಳೂ ಪರಿಹಾರವಾಗುವುದು. ಇದೇ ಅರಿವು. ಪ್ರಾಯೋಗಿಕವಾಗಿ ಕಷ್ಟದ ಹಾದಿ; ನಿಸ್ಸಂಶಯ. ಆದರೆ ಈ ಕರ್ಮಭೂಮಿ ಇರುವುದೇ ಜೀವಿಗಳ ಪ್ರಯತ್ನಶೀಲತೆಯನ್ನು ಸಾಣೆಹಿಡಿಯುವುದಕ್ಕೆ...
ಸಾಧನೆಯ ಹಾದಿಗಳೆಲ್ಲವೂ ಕಠಿಣತಮವೇ ಆಗಿರುತ್ತದೆ ಎಂಬ ಸತ್ಯವನ್ನು ಬಲ್ಲವರು ಭಗವತ್ಪ್ರೇಮದ ಹಾದಿಯನ್ನೂ ಅಂತೆಯೇ ಸ್ವೀಕರಿಸಬಲ್ಲರು. ಬರಿಗೈದಾಸರ ಭಕ್ತಿಯ ಹಾದಿಯಲ್ಲಿ "ಕೊಡುಕೊಳುವ" ಯಾವುದೇ ಜಂಜಾಟಗಳಿರುವುದಿಲ್ಲ. ಆದ್ದರಿಂದಲೇ ಅಂತಹ ಭಕ್ತಿಭಾವವು ಯಾರನ್ನೂ ಪೀಡಿಸುವುದಿಲ್ಲ. ಸ್ವಚ್ಛ ಭಕ್ತಿಯು ಎಂದಿಗೂ ಅಮಾನ್ಯೀಕರಣಗೊಳ್ಳುವುದಿಲ್ಲ. ಇದಕ್ಕೆ ಹೊರತಾದ "ಸೇವೆಗಳು- ರಿಸೀಟುಗಳು" ಎಂಬ ಯಾವುದೇ ಬಾಹ್ಯ ಹೋರಾಟ ಹಾರಾಟ ತೋರಾಟಗಳಿಂದ ಜೀವರ ಸಮಸ್ಯೆಗಳು ನಾಶವಾಗುವುದಿಲ್ಲ. ಲೌಕಿಕ ಸುಖಕ್ಕಾಗಿ ಮನಸ್ಸಿನೊಂದಿಗೆ ಹೋರಾಟಕ್ಕಿಳಿದು ಬದುಕಿನ ಸಹಜ ಸೌಂದರ್ಯವನ್ನು ದೂರಗೊಳಿಸುತ್ತ ಬಂದರೆ ಅಂತಹ ಯಾವುದೇ ಜೀವಸಮಸ್ಯೆಗಳಿಗೆ ಪರಿಹಾರವು ಸಿಗುವುದೇ ಇಲ್ಲ. ಮನಸ್ಸನ್ನು ಶಾಂತಗೊಳಿಸಿ ದಿಗಂಬರವಾದಾಗ ಯಾವ ಸಂದರ್ಭವೂ ಸಮಸ್ಯೆಯೇ ಆಗುವುದಿಲ್ಲ. ಎಷ್ಟೇ ಪ್ರಯತ್ನಿಸಿದರೂ ಒಂದೇ ಬದುಕಿನಲ್ಲಿ ಸಾಧಿಸಲಾಗದ ದಿವ್ಯ ಸ್ಥಿತಿಯಿದು. "ತಮ್ಮ ಗಂಡ ಹೆಂಡತಿ ಮಕ್ಕಳಿಗಾಗಿ ಅರ್ಥವಿಲ್ಲದ ಅರ್ಥಸಂಚಯದ ಪಡಿಪಾಟಲು ಪಡುತ್ತ ನಿತ್ಯವೂ ಕಣ್ಣೀರಕೋಡಿ ಹರಿಸುವ ಜನರು ಭಗವಂತನಿಗಾಗಿ ಕಣ್ಣೀರು ಹರಿಸುವುದುಂಟೆ ?" ಎಂದು ಶ್ರೀ ರಾಮಕೃಷ್ಣರು ತಲ್ಲಣಿಸುತ್ತಿದ್ದರು. ಹೀಗಿದ್ದೂ ತಮ್ಮ ಕಷ್ಟಗಳಿಗೆಲ್ಲ ಭಗವಂತನೇ ಕಾರಣ - ಎನ್ನುವ ಭಕ್ತವೇಷಗಳಿಗೆ ಕಡಿಮೆಯಿಲ್ಲ. ಮಗುವಿನಂತೆ ತನ್ನನ್ನೇ ಆಶ್ರಯಿಸುವ ಪ್ರೇಮಾಭಕ್ತಿಗೆ ಮಾತ್ರ ಭಗವಂತನು ಸ್ಪಂದಿಸುತ್ತಾನೆ; "ನನ್ನ ಕಾಲ ಮೇಲೆ ನಾನು ನಿಂತಿದ್ದೇನೆ" ಎನ್ನುವ ಜೀವಬಳಗವು ತಮ್ಮ ಸ್ವಂತ ಯೋಗಕ್ಷೇಮಕ್ಕೆ ಆಗೊಮ್ಮೆ ಈಗೊಮ್ಮೆ ಮಾತ್ರ "ದೇವರ ಮರಿ"ಯನ್ನು ಅವಲಂಬಿಸುವಂತಿಲ್ಲ. ಪರಮಾತ್ಮವೇ ತನ್ನ ಪರಮಗಂತವ್ಯ ಎಂಬ ಪೂರ್ಣ ಶ್ರದ್ಧೆ ಇದ್ದಾಗ ಮಾತ್ರ - ಕರೆಯದೇ ಬಂದು ರಕ್ಷಿಸುವ "ಕಾಣದ ಕೈ" - ಮನುಷ್ಯರ ಅನುಭವಕ್ಕೆ ಬರುತ್ತದೆ. ಶ್ರದ್ಧೆಯಿಂದ ನಡೆಸುವ ಪ್ರಯತ್ನದ ಹಾದಿಯಲ್ಲಿ ತೊಡಗಿಕೊಂಡ ಹೃದಯವು ಆರ್ತವಾಗಿ ರೋದಿಸುತ್ತದೆ; ಪೂರ್ಣತೆಯ ಭಾವೈಕ್ಯಕ್ಕಾಗಿ ಅತ್ತು ಹಂಬಲಿಸುತ್ತದೆ; ಭಗವಂತನಿಗಾಗಿ ಅಳುವ ಹೃದಯವನ್ನು ಮಾತ್ರ ಭಗವಂತನೇ ಸಂತೈಸುತ್ತಾನೆ. ಸಂಕಟ ಬಂದಾಗ ಮಾತ್ರ ಆಗೊಮ್ಮೆ ಈಗೊಮ್ಮೆ ಇಣುಕಿ ಓಡುವ ಜೀವಿಗಳು ತಮ್ಮ ಕಾಲ ಮೇಲೆ ತಾವು ನಿಲ್ಲುವುದು ಅನಿವಾರ್ಯ. ಭಗವಂತನ ಭಾವವನ್ನು "Use & Throw" ಶೈಲಿಯಲ್ಲಿ ಉಪಯೋಗಿಸುವವರ ಗಳಿಕೆ ಹೆಗ್ಗಳಿಕೆ ಹೀಗಳಿಕೆಗಳಿಗೆಲ್ಲ ಅವರವರೇ ಹೊಣೆ; ಭಗವಂತನಲ್ಲ. ಭಗವಂತನ ನಿಜ ಅರಿವಿಗೆ ಪ್ರೇಮಾಭಕ್ತಿಯೇ ದಿವ್ಯೌಷಧ.
"ದೇಹವೊಂದು ಯಂತ್ರ; ಅದನ್ನು ನಡೆಸುವವನು ಯಂತ್ರಿ" ಎಂಬ ವಿಶ್ವಾಸದ ನೆಲೆಯಲ್ಲಿ ಆತ್ಮನಿರೀಕ್ಷಣೆಯಲ್ಲಿರುತ್ತ ಸಂಚರಿಸುವವರಿಗೆ ಕಲುಷಿತ ಭಾವಬಾವಿಯನ್ನು ಸ್ವಚ್ಛಗೊಳಿಸುವ ಇಚ್ಛೆಯುಂಟಾಗುತ್ತದೆ. ಆಗಲೇ... ನಿದ್ರೆ ಹರಿದು ಎಚ್ಚರವಾಗುತ್ತದೆ. ಗಾಯಗೊಳಿಸಬಲ್ಲ ಹಲ್ಲುಗಳ ನಡುವೆಯೇ ಇರುತ್ತ ತನ್ನನ್ನು ತಾನು ಸುರಕ್ಷಿತವಾಗಿರಿಸಿಕೊಳ್ಳುವ ನಾಲಗೆಯು ನಮಗೆ ಅಂತಹ ಎಚ್ಚರದ ಪಾಠವನ್ನು ನಿತ್ಯವೂ ಹೇಳುತ್ತದೆ. ನಾಲಗೆಯದು ಧ್ಯಾನಸ್ಥ ಸ್ಥಿತಿ; ಅದು ಏಕಗಮ್ಯ. ಸಂಘರ್ಷಕ್ಕೆ ವಿಮುಖವಾದ ಸ್ಥಿತಿಯದು. ಹೀಗಿದ್ದೂ ಅಲ್ಲಿ ಕರ್ತವ್ಯ ವಿಮುಖತೆ ಇರುವುದಿಲ್ಲ. "ಮನೋಯಂತ್ರದ ದೋಷ"ದಿಂದಾಗಿ ಅಕಸ್ಮಾತ್ ನಾಲಗೆಯು ಸ್ವಚ್ಛಂದ ಸುಖಕ್ಕೆಳಸಿದರೆ ಅದರ ಹದ ತಪ್ಪಿದ ಹಂದಾಟದಿಂದ ಇಡೀ ದೇಹಯಂತ್ರವು ನೋವುಣ್ಣುವುದುಂಟು. ನಾಲಗೆಯ ದೋಷಪೂರಿತ ಚಲನೆಯಿಂದಾಗಿ ಹಲ್ಲು ಉದುರಿಸಿಕೊಂಡವರೂ ಇದ್ದಾರೆ ! ನಾಲಗೆಯ ಕುಣಿತದಿಂದ ಹಲ್ಲುಗಳು ಅಪಾಯಕ್ಕೊಳಗಾಗಬಹುದೇ ಹೊರತು ನಾಲಗೆಯಲ್ಲ ಎಂದು ಹೊರಕಣ್ಣಿಗೆ ಕಾಣಿಸಬಹುದು. ಆದರೆ ಪಕ್ಕದ ಮನೆಗೆ ಬೆಂಕಿ ಹತ್ತಿದರೆ ಸ್ವಂತ ಮನೆಯೂ ಭಯಭೀತವಾಗಬೇಕಾಗುತ್ತದೆ. ಅಸ್ವಸ್ಥ ಹಲ್ಲುಗಳ ನಡುವೆ ಸಿಲುಕಿದಾಗ ನಾಲಗೆಯೂ ಉಪವಾಸ ಬೀಳಬೇಕಾಗುತ್ತದೆ. ಹೀಗೆ ಸಮಗ್ರವಾಗಿ ನೋಡಬಲ್ಲ ಅಧ್ಯಾತ್ಮವಾದಿಗಳಿಗೆ ಹಲ್ಲು ಬೇರೆ; ನಾಲಗೆ ಬೇರೆ ಅಲ್ಲ. ಎಲ್ಲ ಅಂಗಗಳೂ ಒಂದಕ್ಕೊಂದು ಅವಿಭಾಜ್ಯ ಸಂಬಂಧದಿಂದ ಕೂಡಿರುವಂತಹ ದೇಹವನ್ನು ಅಂತಹ ದಾರ್ಶನಿಕರು ಭಾವಿಸಬಲ್ಲರು. ನಾವು ಸವಾರಿ ಮಾಡುವ ವಾಹನದ ಯಾವುದೇ ಭಾಗವು ನಿಶ್ಚಲವಾದರೂ ವಾಹನವು ಓಡಲಾರದು ಅಥವ ಅದರ ವೇಗ ತಗ್ಗಬಹುದು. ನಮ್ಮ ಉದ್ದೇಶಿತ ಪ್ರಯಾಣವು ನಿಲ್ಲುತ್ತದೆ ಅಥವ ವಿಳಂಬವಾಗುತ್ತದೆ. ಯಾವುದೇ ಯಂತ್ರದ ದುರ್ಬಳಕೆಯಿಂದಲೂ ಯಂತ್ರವು ಬಳಲುತ್ತದೆ; ಬಳಲಿದ ಯಂತ್ರವು ಸಹಕರಿಸುವುದಿಲ್ಲ. ಯಂತ್ರಿಯು ತನ್ನ ಅಂತರ್ಭಾವವನ್ನು ಅವಗಣಿಸಿದಾಗಲೂ ಜಡಯಂತ್ರಕ್ಕೆ ಅಪಾಯವು ತಪ್ಪಿದ್ದಲ್ಲ; ದೇಹಯಂತ್ರವು ಸುಸ್ಥಿತಿಯಲ್ಲಿದ್ದು ಚಾಲಕನು ನಿದ್ರಿಸಿದರೂ ಅಪಘಾತ ನಿಶ್ಚಯ. ಯಂತ್ರಿ ಮತ್ತು ಯಂತ್ರ ಇವೆರಡರ ಸಮನ್ವಯಶೀಲ ಚಲನೆಯಿಂದ ಮಾತ್ರವೇ ಯಾವುದೇ ಪಯಣವು ಸುಗಮವಾಗುತ್ತದೆ. ಈ ಬದುಕು ಎಂಬುದು - ನಾಲಗೆ ಮತ್ತು ಹಲ್ಲುಗಳ ದಾಂಪತ್ಯವಿದ್ದಂತೆ. ಆದುದರಿಂದ ದೇಹವಾಹನವನ್ನು ಚಲಾಯಿಸುವಾಗ ಅಹಂಕಾರವಿರದ ಪೂರ್ಣ ಎಚ್ಚರವು ಅನಿವಾರ್ಯ. ದೇಹ ಮನೋಬುದ್ಧಿ ಆತ್ಮಗಳ ಸಮನ್ವಯವಾಗಬೇಕು ಎಂಬ ಇಚ್ಛೆ ಮತ್ತು ಪೂರ್ಣ ಎಚ್ಚರ ಬೇಕು. ಆಗ ಗುರು-ಗುರಿ ಕಾಣುತ್ತದೆ.
ಆದರೆ ಇಚ್ಛೆಯಾಗಲೀ ಎಚ್ಚರವಾಗಲೀ ತ್ಯಾಗಭಾವವಿಲ್ಲದೆ ಸಿದ್ಧಿಸಲಾರದು. ಕೇವಲ ಬಾಯಿಯಲ್ಲಿ ತ್ಯಾಗದ ಮಾತನಾಡುತ್ತ ನಾವು ನಡೆಸುತ್ತಿರುವ ಸ್ವಾರ್ಥದ ಕಾರುಬಾರುಗಳು ಒಂದೇ ಎರಡೆ ? ಇಂತಹ ಪಡಪೋಶಿ ತ್ಯಾಗದ ಸದ್ದಿನಲ್ಲೂ ಇಷ್ಟ ವಿಶಿಷ್ಟಗಳ ಸ್ಪರ್ಧೆ ನಡೆಯುತ್ತಿರುತ್ತದೆ. ಇವೆಲ್ಲವೂ ಪೈಪೋಟಿ ರಾಜಕೀಯದ ಪಕ್ಕಾ ಪಡಪೋಶಿತನಗಳು. ನಾವು ನಮ್ಮನ್ನೇ ಮೋಸಗೊಳಿಸಿಕೊಳ್ಳುವ ಬಾಲಿಶ ಆಟವಿದು. ಇಂತಹ ಆಟ ಓಟಗಳಿಂದ ಮನಸ್ಸು ಜಿಡುಕಾಗುತ್ತದೆ; ಬುದ್ಧಿ ಮಂಕಾಗುತ್ತದೆ. ಹಗ್ಗವೂ ಹಾವಿನಂತೆ ಕಾಣಿಸತೊಡಗುತ್ತದೆ. ಇಂತಹ ಪಡಪೋಶಿ ಸಂಸಾರಗಳನ್ನು ಕಟ್ಟುವವರು ಮಾತ್ರವಲ್ಲದೆ - ಅನಿವಾರ್ಯವಾಗಿ ಅಂತಹ ಸಂಸಾರದ ಸದಸ್ಯರಾಗಿರುವವರೂ ಮಾನಸಿಕ ಖಿನ್ನತೆಗೆ ಒಳಗಾಗುವ ಅಪಾರ ಸಾಧ್ಯತೆಗಳಿವೆ. ಅಂತಹ ಮೋಸಗಳ ಬಲೆಯಲ್ಲಿ ಸಿಲುಕಿ ಜಡವಾಗಿ ಹೋಗುತ್ತಿರುವ ಮನುಷ್ಯರ ಅಂತಃಸಾಕ್ಷಿಯು ಪ್ರತಿಸ್ಪಂದಿಸಲಾಗದ ಮೌಢ್ಯದ ಸ್ಥಿತಿಯಲ್ಲಿರುತ್ತದೆ; ಅಲ್ಲಿ ಕತ್ತಲೆ ಕವುಚಿರುತ್ತದೆ. ಆದ್ದರಿಂದ ಅನರ್ಥದ ಹಾದಿಯಲ್ಲಿ ನಡೆಸುತ್ತಿರುವ ಗುರಿಯಿಲ್ಲದ ಓಟವನ್ನು ಕೊನೆಗಾಣಿಸದೆ ಯಾವುದೇ ಬದುಕಿನ ರೋಗವು ಗುಣವಾಗದು. ಸ್ವಚ್ಛ ಚಿಂತನೆಗಳಿಂದ ಮೂಡುವ ಸ್ವಚ್ಛ ಇಚ್ಛೆ ಮತ್ತು ತದನುರೂಪೀ ಸ್ವಚ್ಛ ಕಾರ್ಯಗಳಿಂದ ಮಾತ್ರವೇ ನೆಮ್ಮದಿಯ ಬದುಕಿನ ಸಾಕ್ಷಾತ್ಕಾರವು ಸಾಧ್ಯ.
ಪ್ರತಿಯೊಂದು ಬದುಕೂ - ದೈಹಿಕ ಮಾನಸಿಕವಾಗಿ ಇಚ್ಛಾಪೂರ್ವಕವಾಗಿ ಮಾಡುವುದು ಮತ್ತು ಸ್ವಾಭಾವಿಕವಾಗಿ ಉಂಟಾಗುವುದು - ಇವೆರಡರ ಸಂಭವನೀಯ ಅನೂಹ್ಯ ಮಿಶ್ರಣ. ಈ ಸಂಭಾವ್ಯಕ್ಕೆ ವೇಗವರ್ಧಕದಂತೆ ತೊಡಗಿಕೊಳ್ಳುವ ಸಾಧನವೇ - ಇಚ್ಛಾಸ್ಪಂದನ. ಇಚ್ಛಾಶಕ್ತಿಯಿಂದ ಆಂತರ್ಯವು ಸ್ವಚ್ಛಗೊಳ್ಳುತ್ತ ಬಂದಂತೆ ಅಂತಃದರ್ಪಣದಲ್ಲಿ ಸ್ವಚ್ಛ ಪ್ರತಿಬಿಂಬವು ಮೂಡತೊಡಗುತ್ತದೆ. ವಿಚಾರಗಳು ಸ್ಫುಟಗೊಳ್ಳುತ್ತ ಭಾವಶುದ್ಧಿಯಾಗುತ್ತದೆ. ಬಾಹ್ಯದಲ್ಲಿ ಜೀವಿಗಳೆಲ್ಲವೂ ಪ್ರತ್ಯೇಕವಾದರೂ ಆಂತರ್ಯದಲ್ಲಿ ಒಂದೇ ಗುರಿಯ ಪಯಣಿಗರು ಎಂಬ ಅರಿವು ಮೂಡುತ್ತದೆ; ಸಾಮಾಜಿಕ ತಲ್ಲಣಗಳ ಶಮನವಾಗುತ್ತದೆ. ಸಾಗರದ ದಂಡೆಯಲ್ಲಿ ವಿಪರೀತ ಅಲೆಗಳು ಕಾಣಿಸಿದರೂ ಎಲ್ಲ ಅಲೆಗಳೂ ಮತ್ತದೇ ಸಾಗರದಲ್ಲಿ ಐಕ್ಯವಾಗಿ ಸಾಗರೋಪಮವಾಗುವ ಸತ್ಯ ಮತ್ತು ಸಾಗರದ ಮೇಲ್ಪದರದಲ್ಲಿ ಅಲೆಗಳ ಕೋಲಾಹಲವು ತಳಮಳಿಸುತ್ತಿದ್ದರೂ ಆಳದ ಸಾಗರವು ಧ್ಯಾನಸ್ಥ ಸ್ಥಿತಿಯಲ್ಲಿರುವುದೂ ನಾವು ಕಾಣುತ್ತಿರುವ ಸತ್ಯ. ಅಪ್ಪನಂತೇ ಮಕ್ಕಳು; ಬಾಹ್ಯದಂತೇ ಆಂತರ್ಯ; ಸೃಷ್ಟಿಯಂತೆಯೇ ಜೀವಿಗಳು ! ಅಂತೆಯೇ ಕಣ್ಣಿಗೆ ಕಾಣಿಸುವ ತಳಮಳಗಳ ಅಲೆಗಳೆಲ್ಲವೂ ಸತ್ಯವಲ್ಲ; ಬಂದು ಹೋಗುವ ವ್ಯಾವಹಾರಿಕ ಸತ್ಯ ಅಥವ ಖದೀಮ ಮಿಥ್ಯೆ. ನಿತ್ಯಸತ್ಯವು ಧ್ಯಾನಸ್ಥ ಆಳದಲ್ಲಿದೆ. ಪ್ರೇಮೋನ್ಮತ್ತರಾಗದೆ ಆಳವು ಸಿಗದು. ದೇಹ ಮನಸ್ಸುಗಳನ್ನು ದಾಟಬಲ್ಲ, ಲೌಕಿಕದಲ್ಲಿ ಅಲ್ಪತೃಪ್ತರಾಗಿರಬಲ್ಲ ಮತ್ತು ಇಚ್ಛಾಶಕ್ತಿಯನ್ನು ದುಡಿಸಿಕೊಳ್ಳುವಂತಹ ಯೋಗ್ಯರಿಗೆ-ಯೋಗಿಗಳಿಗೆ ಮಾತ್ರ ಅಧ್ಯಾತ್ಮದ ಆಳದ ಅನುಭವವಾಗುತ್ತದೆ. ಪ್ರೇಮೋನ್ಮತ್ತರಾಗಿ ಭಗವದ್ಭಾವದಲ್ಲಿ ಮುಳುಗುವವರಿಗೆ ಭಗವಂತನು ಬಹಳ ಸುಲಭನೂ ಹೌದು.
*****-----*****-----*****

"ಔತಣದ ಮನೆಯ ಜನಸಂದಣಿಯ ಗದ್ದಲವು ಎಲ್ಲಿಯವರೆಗೆ ಕೇಳಿಸುತ್ತದೆ ?
ಊಟಕ್ಕೆ ಕರೆಯುವವರೆಗೆ ಮಾತ್ರ.
ಯಾವಾಗ ಎಲೆಗೆ ಅನ್ನ ಸಾರು ಬೀಳುವುದೋ ಆಗ ಮುಕ್ಕಾಲು ಭಾಗ ಶಬ್ದವು ಅಡಗಿ ಹೋಗುತ್ತದೆ.
ಉಳಿದ ಭಕ್ಷ್ಯ ಭೋಜ್ಯಗಳು ಬಿದ್ದ ನಂತರ ಇನ್ನೂ ಕಡಿಮೆಯಾಗಿಬಿಡುತ್ತದೆ.
ಮಜ್ಜಿಗೆ ಹಾಕುವಾಗ ಕೇವಲ "ಸುಪ್ ಸುಪ್" ಶಬ್ದ ಮಾತ್ರ ಕೇಳುತ್ತದೆ.
ಊಟ ಮುಗಿಯಿತು ಎಂದರೆ - ನಿದ್ರೆ.
ಭಗವಂತನ ಕಡೆಗೆ ಮುಂದುವರಿದಂತೆಲ್ಲ ಆತನ ಸಂಬಂಧವಾಗಿ ನಡೆಸುವ ವಿಚಾರಗಳೂ ಕಡಿಮೆಯಾಗಿ ಬಿಡುತ್ತದೆ..
ಆತನ ಸಾಕ್ಷಾತ್ಕಾರವು ದೊರೆಯಿತೆಂದರೆ ಮತ್ತೆ - ಶಬ್ದ, ವಿಚಾರ ಏನೂ ಇರುವುದಿಲ್ಲ. ಆಗ ನಿದ್ರೆ - ಸಮಾಧಿ.. "

"ಎಲ್ಲ ನೀರೂ ನಾರಾಯಣನೇ ಆದರೂ ಕೆಲವನ್ನು ಕುಡಿಯಬಹುದು; ಕೆಲವು ನೀರಿನಲ್ಲಿ ಮುಖ ಮಾತ್ರ ತೊಳೆಯಬಹುದು. ಇನ್ನೂ ಕೆಲವು - ಮುಸುರೆ ತೊಳೆಯುವುದಕ್ಕೆ ಮಾತ್ರ ಉಪಯೋಗವಾಗುತ್ತವೆ.."(ಶ್ರೀ ರಾಮಕೃಷ್ಣ ವಚನವೇದ - ಭಾಗ 2, ಪುಟ - 129)
ಆದ್ದರಿಂದಲೇ ಶಾಬ್ದಿಕವಾದ ಆತ್ಮೀಯರೆಲ್ಲರೂ ಭಾವನಾತ್ಮಕವಾಗಿ ಆತ್ಮೀಯರಾಗುತ್ತಿಲ್ಲ. ಜೀವಿಗಳ ಭಾವ ಸಂಧಿಸಿದಾಗ ಮಾತ್ರ - "ಆತ್ಮೀಯ"ವಾಗಲು ಸಾಧ್ಯ. ಇತರ "ಸಂಧಿ"ಗಳೆಲ್ಲವೂ ಲೋಪ ಸಂಧಿಗಳೇ; ವ್ಯರ್ಥ ಕಾಲಕ್ಷೇಪ. ಇಂತಹ ಲೋಪಜಾತ್ರೆಯ ಇವತ್ತಿನ ನಮ್ಮ ಭಾವರಹಿತ ಬದುಕುಗಳು ದಿಕ್ಕು ತಪ್ಪಿರುವುದರಿಂದಾಗಿ ಕ್ಷುಲ್ಲಕ ಕಾರಣಗಳಿಗೂ ವ್ಯಗ್ರಗೊಳ್ಳುತ್ತಿದ್ದು - ನಿಜ ಬದುಕಾಗಿಯೇ ಉಳಿದಿಲ್ಲ. ತಳಮಳಿಸುತ್ತಿರುವ ಭಾವಜಲವು ಕಲುಷಿತಗೊಳ್ಳುತ್ತಿದೆ. ಇದರಿಂದಾಗಿ ಬಳಕೆಯ ಬಹುಪಾಲು ನೀರೂ - ಈಗ ನಾರಾಯಣವಾಗಿಲ್ಲ; ವ್ಯರ್ಥ ಓಟ ಒಳತೋಟಿಗಳ ಬಿಸಿಯಿಂದ ಜೀವಿಗಳ ಭಾವಜಲವು ಬತ್ತಿಹೋಗುತ್ತಿದೆ. ಬಾಹ್ಯದ ಗೊಂದಲಗಳೆಂಬ ನಿದ್ದೆ ಕೆಡಿಸುವ ಭೋಜನವನ್ನು ಯಥೇಷ್ಟ ತಿನ್ನುತ್ತಿರುವ ಮನೋದೇಹಗಳ ಲೌಕಿಕ ದಾಹವು ಹೆಚ್ಚುತ್ತಲೇ ಇದೆ; ಆದರೆ ದಾಹ ತೀರಿಸಬಲ್ಲ ಅಂತರಂಗದ ಭಾವಜಲಸ್ಥಾನಗಳು ಬರಡಾಗಿವೆ. ಸಂದು ತಪ್ಪಿದ ಅಸಮತೋಲನ ! ಹೀಗೆ ಸ್ವಾತ್ಮವನ್ನು ನಗಣ್ಯಗೊಳಿಸಿ, ಅದನ್ನು ನೇಪಥ್ಯಕ್ಕೆ ಸರಿಸಿ, ಮೆಟ್ಟಿ ಮೇಲೇಳಲಾಗದಂತೆ ಬರಡು ಮಾಡಿಕೊಂಡಿರುವ ಬದುಕುಗಳು ಒಣಗಿ ಬತ್ತಿಹೋಗುತ್ತಿರುವುದು ಸಹಜ. ಆದ್ದರಿಂದಲೇ "ಬಾವಿಯ ಜಲ ಬತ್ತಿ ಬರಿದಾಯ್ತೋ ಹರಿಯೇ..." ಎನ್ನುತ್ತ ಹಲುಬುವಂತಾಗಿದೆ. ಆಂತರಿಕ ಮಾರ್ದವತೆಯಿಲ್ಲದಾದಾಗ ಒಳದನಿಯು ಒಣಗಿ ಸ್ಪಂದಿಸಲಾಗದೆ ಕೈಚೆಲ್ಲುವಂತಾಗುತ್ತದೆ. "ಸ್ವಾತ್ಮದ ಮೊರೆ"ಯು ನಮಗೆ ಕೇಳದಂತೆ ನಾವೇ ಮಾಡಿಕೊಂಡಿದ್ದೇವೆ. ಆದ್ದರಿಂದಲೇ ಸಮಾಜದಲ್ಲಿ ಭೂತ ಪ್ರೇತಸಂಚಾರವು ಹೆಚ್ಚಿದಂತೆ ಭಾಸವಾಗುತ್ತದೆ. ಇದೂ ಭ್ರಮೆಯೇ. ಗಲಿಬಿಲಿ ತಳಮಳಗಳ ಅಸು ಬಳಲಿಕೆಯ ಸ್ಥಿತಿಯದು ! ಅಧ್ಯಾತ್ಮದ ಶುದ್ಧ ಜಲಸ್ಥಾನವನ್ನು ಪುನರುಜ್ಜೀವಗೊಳಿಸದೆ ಜೀವದ ದಾಹವು ತೀರುವುದಿಲ್ಲ; ಭ್ರಾಂತಿ ಅಳಿಯುವುದಿಲ್ಲ; ಅಪೇಕ್ಷಿತ ಔಷಧ ಕೊಡದೆ ರೋಗ ಗುಣವಾಗುವುದಿಲ್ಲ; ನೆಮ್ಮದಿ ಕಾಣುವುದಿಲ್ಲ.
ನಿರಂತರವಾಗಿ ಗೊಂದಲ ಗೋಟಾಳಿಗಳ ಭ್ರಮೆಗೆ ತಾವೇ ಸಿಲುಕಿಕೊಳ್ಳುತ್ತ - ನಡುನಡುವೆ ಒಮ್ಮೊಮ್ಮೆ ಪ್ರೇತೋಚ್ಛಾಟನೆ ಮಾಡಿಕೊಳ್ಳುವ ಇಚ್ಛೆಯನ್ನೂ ಹೊಂದಿರುವ ಭವ-ಭಾವ ಗೊಂದಲಿಗರು - ಮೊತ್ತಮೊದಲಿಗೆ ಅಮೂರ್ತ ಪ್ರೇತಗಳ ಗುಂಪಿನಿಂದ ಹೊರಬಂದು ಧ್ಯಾನಸ್ಥರಾಗುವುದು ಅನಿವಾರ್ಯ. ಬದುಕನ್ನೇ ವಿಕಟ ರಾಜಕೀಯವಾಗಿಸಿಕೊಂಡು ಪರಕೀಯ ಆಕರ್ಷಣೆಗಳ ಭ್ರಾಂತಿಯೆಂಬ ಅಮಲಿಗೆ ವಶವಾದರೆ ಅಸು ಬಳಲಿಸುವ ಜೀವನ ಸಂಘರ್ಷವು ತಪ್ಪುವುದೇ ಇಲ್ಲ. ವ್ಯರ್ಥವಾದ ಕತ್ತೆ ದುಡಿತ; ಹೆಸರು ದುಡ್ಡು ಖ್ಯಾತಿಯ ಮುಳ್ಳುಗಳ ಆಘಾತ, ಮತ್ಸರ ಪ್ರತೀಕಾರಗಳ ಧೀಂಗುಣಿತ, ಸ್ವಪ್ರತಿಷ್ಠೆಯ ವ್ಯಾವಹಾರಿಕ ಮಿಥ್ಯಾಪೊರೆ.... ಇವೆಲ್ಲವೂ ಆತ್ಮಭಾವವಿಲ್ಲದಲ್ಲಿ ಮಾತ್ರ ನಡೆಸಲಾಗುವ ಯಥೇಚ್ಛ ಕಾರುಬಾರುಗಳು ! ಆದರೆ ಇದೇ ಬದುಕಲ್ಲ; ಶಾಂತ ಬದುಕಂತೂ ಅಲ್ಲವೇ ಅಲ್ಲ. ಇದು ನಿಜವಾಗಿಯೂ ರಂಗಿನ ಕನಸು; "ಭಯೋಚ್ಛಾದಿತ - ಭಯೋತ್ಪಾದಕ ಬದುಕು !".
ಅರಿವಿಗೆ ಏಳ್ಗತಿ ಇಲ್ಲದಂತೆ ನಿತ್ಯವೂ ತಮ್ಮನ್ನು ತಾವೇ ಕೊಂದುಕೊಳ್ಳುತ್ತ ಆತ್ಮಹತ್ಯೆಗೆ ಸ್ವೇಚ್ಛೆಯಿಂದ ಒಳಗಾಗುವ ಪುಂಡರ ಕ್ಷೇತ್ರವನ್ನು ಬದುಕು ಎನ್ನಲಾಗದು; ಧರ್ಮರಹಿತ - ರಾಜಕೀಯ ಕಲಬೆರಕೆಯ ಬದುಕಿನ ವೇಷ ಎನ್ನಬಹುದು.. ದೇಹದ ಗಿರಕಿ ಹೊಡೆಯುತ್ತ ದೇಹವನ್ನೇ ತಾವೆಂದುಕೊಂಡು ಸೊತ್ತುಗಳ ಸಂಗ್ರಹದಲ್ಲಿಯೇ ತನ್ಮಯವಾಗುವ ಎಲ್ಲವೂ - ಇದೇ ಅಧರ್ಮೀ ರಾಜಕೀಯ ವರ್ಗಕ್ಕೆ ಸೇರುತ್ತವೆ. ಇಂತಹ ಬದುಕುಗಳು - ಸ್ವಾರ್ಥಕ್ಕಾಗಿ ಪರಸ್ಪರ ಸ್ಪರ್ಧಿಸುವುದರಲ್ಲಿಯೇ ತಮ್ಮ ಬದುಕನ್ನು ಕಳೆದುಕೊಂಡು ಬಿಡುತ್ತವೆ. ಇಂತಹ ಸ್ಪರ್ಧಿಗಳು ತಾವು ಏನನ್ನೋ ಪಡೆದುಕೊಂಡೆವು ಎಂದುಕೊಳ್ಳುತ್ತಿದ್ದರೂ ಯಾವುದೂ ಅವರನ್ನು ನಿಜಾರ್ಥದಲ್ಲಿ ಪೊರೆಯುವ ಸರಕುಗಳಲ್ಲ; ಆದ್ದರಿಂದಲೇ ಅವು ಕಿಂಚಿತ್ ತೃಪ್ತಿಯನ್ನೂ ನೀಡದೆ ನಿರಂತರ ಸತಾಯಿಸುತ್ತವೆ.
ನಾವು ಹುಟ್ಟುವ ಮೊದಲು ಇದ್ದದ್ದು ಮತ್ತು ಸತ್ತ ನಂತರವೂ ನಮ್ಮೊಂದಿಗೆ ಇರುವುದು ಮಾತ್ರ "ನಮ್ಮದು" - ಎಂಬ ಆಧ್ಯಾತ್ಮಿಕ ದೃಷ್ಟಿಯು ಬಲವಾಗುತ್ತ ಹೋದಂತೆ ತೃಪ್ತಿಯು ಸಹಜವಾಗಿ ನೆಲೆಗೊಳ್ಳುತ್ತದೆ; "ಕೊಳ್ಳುಬಾಕ, ಕೂಡುಬಾಕತನಗಳು" ಮರೆಯಾಗುತ್ತವೆ. ಸುಖಜೀವಿಗಳನ್ನು ಆಧರಿಸುವುದು - "ನ ಮಮ " - "ಇದು ನನ್ನದಲ್ಲ" ಎಂಬ ಭಾವನೆಯೇ ಆಗಿದೆ. ಈ ಬಗೆಯ ಸುಖತೃಪ್ತಿಯಿಂದ ಹೊಮ್ಮುವ - "ನಮ್ಮದು" ಎಂಬ ನಿಜಾತ್ಮಾನಂದವನ್ನು ಯಾವುದೇ ಹೊರದೇಹಗಳಿಗೆ ನೋಡಲಾಗುವುದಿಲ್ಲ. ಆಯಾ ಅನುಭೂತಿಗೆ ಮಾತ್ರ ಎಟಕುವ ವಸ್ತುವಿದು; ಎಚ್ಚರದ ಸಾಕ್ಷಿಯು ಮಾತ್ರ ಕಾಣುವ ಸತ್ಯವಿದು.
ಸತ್ಸಂಗದಲ್ಲಿರುವಾಗ, ಸಾತ್ವಿಕ ಸತ್ಕಾರ್ಯಗಳಲ್ಲಿ ತೊಡಗಿಕೊಂಡಾಗ ಸದ್ಭಾವಗಳು ಎಚ್ಚರಗೊಳ್ಳತೊಡಗುತ್ತವೆ. ಆದರೆ ಅದು - ತಾತ್ಕಾಲಿಕ. ಹಳೆಯ ವೃತ್ತಕ್ಕೆ ಹಿಂದಿರುಗಿದೊಡನೆಯೇ - ಮತ್ತೆ ಎಚ್ಚರ ತಪ್ಪುತ್ತದೆ. ರಾಗ ರಕ್ತಿಗಳ ಡೋಲುಬಾರಿಸುತ್ತ ನಡೆಸುವ ಮನುಷ್ಯರ ಯಾವತ್ತೂ ಸುಕರ್ಮಗಳು ನಾಯಿಯ ಬಾಲಕ್ಕೆ ನಳಿಕೆ ಸಿಕ್ಕಿಸಿ ನೇರಗೊಳಿಸುವ ಪ್ರಯತ್ನಗಳಂತೆಯೇ - ಅಸ್ಥಾಯೀ ಚಿತ್ರವನ್ನು ಮಾತ್ರ ತೋರಬಲ್ಲವು. ಭ್ರಮೆಯಂತೆ ಮೂಡಿ ಮಾಯವಾಗುತ್ತ ಆಳವಾದ ಗೊಂದಲಕ್ಕೆ ತಳ್ಳುವ ಸಂಚಾರೀ ಭ್ರಮಾಚಿತ್ರಗಳವು. ಆದ್ದರಿಂದ ವಿರಕ್ತಿ - ವೈರಾಗ್ಯ ಭಾವವಿಲ್ಲದ ಯಾವುದೇ ಕರ್ಮಗಳು ಶಾಂತಿ ನೆಮ್ಮದಿಯ ಸ್ಥಾಯೀ ಭಾವವನ್ನು ಮೂಡಿಸಲಾರವು. ಇದು ಸಾಮಾನ್ಯ ಸಾಂಸಾರಿಕರ ತ್ರಿಶಂಕು ಅವಸ್ಥೆ. ಅದಕ್ಕಾಗಿಯೇ ಆಧ್ಯಾತ್ಮಿಕ ಅಧಿಕಾರವಿಲ್ಲದವರು ಸೇವೆ (ಯ ಆಟ) ನಡೆಸುವುದು ಮತ್ತು ಉಪದೇಶಿಸುವುದನ್ನು - ಪರಮಹಂಸರು "ವ್ಯರ್ಥ ಕರ್ಮಗಳು" ಎನ್ನುತ್ತಿದ್ದರು; "ಅಂತಹ ಸೇವೆಗಳಿಂದ ಯಾವುದೇ ಪ್ರಯೋಜನವಾಗದು; ಅಂತಹ ಉಪದೇಶಗಳು ಯಾವುದೇ ಹೃದಯವನ್ನು ತಲುಪವು" - ಎನ್ನುತ್ತಿದ್ದರು. "ನಮ್ಮನ್ನು ನಾವು ಉದ್ಧರಿಸಿಕೊಂಡರೆ ಬೇಕಾದಷ್ಟಾಯಿತು; ಶಕ್ತಿಯಿಲ್ಲದೆ ಬೆಟ್ಟ ಎತ್ತಲು ಹೊರಡಬಾರದು..." ಎನ್ನುತ್ತಿದ್ದರು; "ಶ್ರುತಿಗಳಾಗಿ; ಸ್ಮೃತಿಗಳಾಗಿ; ಅನುಸ್ಮೃತಿಗಳಾಗಿ; ಅಪಶ್ರುತಿಗಳಾಗಬೇಡಿ; ವಿಸ್ಮೃತಿಗಳಾಗಬೇಡಿ; ಅಪಸ್ಮೃತಿಗಳಾಗಬೇಡಿ... ಅಧಿಕೃತ ಅಧಿಕಾರವಿಲ್ಲದ ಉಚಿತ ಉಪದೇಶಗಳೆಲ್ಲವೂ ಅಲ್ಪಾಯುಷಿ ಪಟಾಕಿಗಳಂತೆ; ಅದರಿಂದಾಗುವ ಉಪಯೋಗ - ತಾತ್ಕಾಲಿಕ ರಂಜನೆಯಷ್ಟೇ..." ಎಂದೂ ತಮ್ಮ ಭಕ್ತರನ್ನು ಎಚ್ಚರಿಸುತ್ತಿದ್ದರು; ಸಾಧನೆಯಲ್ಲಿ ತೊಡಗಿಕೊಳ್ಳಲು ಪ್ರೇರೇಪಿಸುತ್ತಿದ್ದರು.
"ಪ್ರಾಪಂಚಿಕರು ಸಾಧುಗಳ ಹತ್ತಿರಕ್ಕೆ ಬಂದಾಗ ತಮ್ಮ ಪ್ರಾಪಂಚಿಕ ಭಾವನೆ, ವಿಷಯಚಿಂತನೆಗಳನ್ನೆಲ್ಲ ತಮ್ಮ ಹೃದಯದಲ್ಲಿ ಬಚ್ಚಿಟ್ಟುಕೊಂಡು ಕುಳಿತಿರುತ್ತಾರೆ. ಅಲ್ಲಿಂದ ಹಿಂದಿರುಗಿದ ನಂತರ ಅವನ್ನೆಲ್ಲ ಹೊರಕ್ಕೆ ತರುತ್ತಾರೆ. ಹೇಗೆಂದರೆ... ಪಾರಿವಾಳವು ಬಟಾಣಿಯನ್ನು ತಿನ್ನುತ್ತದೆ. ಅದು ಗುಳುಂ ಗುಳುಂ ಎಂದು ನುಂಗುವುದನ್ನು ನೋಡುವಾಗ ಅವನ್ನೆಲ್ಲ ಅರಗಿಸಿಕೊಂಡುಬಿಟ್ಟಂತೆಯೇ ಕಾಣುತ್ತದೆ. ಆದರೆ ಆ ಕಾಳುಗಳನ್ನೆಲ್ಲ ಅದು ತನ್ನ ಗಂಟಲಿನೊಳಗೇ ಇಟ್ಟುಕೊಂಡಿರುತ್ತದೆ. ಕಾಳು ಜಠರ ತಲುಪುವುದೇ ಇಲ್ಲ; ಆಂತರ್ಯಕ್ಕಿಳಿಯುವುದೇ ಇಲ್ಲ. ಗಂಟಲಿನಲ್ಲಿಯೇ ಗಿಜಿಗಿಜಿ ಗಿಜಿಗಿಜಿ ಅನ್ನುತ್ತಿರುತ್ತದೆ..." ತಮ್ಮ ಸಂಸಾರದ ತಾಪತ್ರಯಗಳನ್ನು ಸಾಧು ಸಂಗದಲ್ಲಿರುವಾಗಲೂ ಬದಿಯಲ್ಲಿ ಎತ್ತಿಡಲಾಗದಂತಹ ಭವಬಂಧನದಲ್ಲಿ ಸಿಲುಕಿರುವವರನ್ನು ಕುರಿತು ಶ್ರೀ ರಾಮಕೃಷ್ಣರು ನೀಡಿದ್ದ ದೃಷ್ಟಾಂತವಿದು.
ಮಿದುವಾದ ಮಣ್ಣು ತನ್ನನ್ನು ಸಂಧಿಸಿದ ಬೀಜವನ್ನು ಸಸಿಯಾಗಿಸುವಂತೆ ಮಿದುವಾದ ಹೃದಯಗಳು ಮಾತ್ರ ಸದ್ಭಾವಗಳನ್ನು ಹೀರಿಕೊಳ್ಳಬಲ್ಲವು ಮತ್ತು ಬೆಳೆಸಬಲ್ಲವು. ಅಂತೆಯೇ ಒಣಗಿ ಹೋಗಿರುವ ಭಾವನೆಲೆಯಲ್ಲಿ ಸಚ್ಚಿಂತನೆಗಳು ನಮ್ಮೊಳಗನ್ನು ಸ್ಪರ್ಶಿಸಿ ಅರಳಲು ಅವಕಾಶವೇ ಇರುವುದಿಲ್ಲ; ಅಂತಹ ಇಂದ್ರಿಯಗಳು ಕೇಳಿದ್ದು ನೋಡಿದ್ದೆಲ್ಲವೂ ಅಲ್ಲಲ್ಲೇ ಹಾರಿ ಹೋಗಿರುತ್ತದೆ; ಮುಖಕ್ಕೆ ಬಡಿದು ಹಿಂದೆ ಹೋಗಿರುತ್ತದೆ; ಸಾಂಸಾರಿಕ ಕೋಟಲೆಯ ತ್ಯಾಜ್ಯ ನಿಬಿಡತೆಯೆಂಬ ಗಿಜಿಗಿಜಿ ಕಾಳುಗಳಿಂದ ಅದಾಗಲೇ ತುಂಬಿಹೋಗಿರುವ ಗಂಟಲನ್ನು ದಾಟಿ ಸದ್ವಿಚಾರಗಳು ಮುಂದೆ ಹೋಗಲು ಯಾವುದೇ ಅವಕಾಶವಿರುವುದಿಲ್ಲ. ಆದ್ದರಿಂದಲೇ ಉದಾತ್ತ ಉಪದೇಶಗಳು ಕಿವಿಗೆ ಬಿದ್ದರೂ ಹೃದಯವನ್ನು ತಲುಪುವುದೇ ಇಲ್ಲ. ಭವರೋಗವು ಪರಿಹಾರವಾಗುವುದೂ ಇಲ್ಲ. ಅಂತಹ ಭಕ್ತಿಯಾತ್ರಿಗಳು ಎಷ್ಟೇ ಸಚ್ಚಿಂತನೆಗಳಲ್ಲಿ ಪಾಲ್ಗೊಂಡರೂ ತಾವು ನಿಂತಲ್ಲಿಂದ ಒಂದು ಹೆಜ್ಜೆಯೂ ಮುಂದೆ ಸರಿಯುವುದಿಲ್ಲ.
ಕೆಲವರು ಎಷ್ಟು ಆಯಾಸಗೊಂಡಿರುತ್ತಾರೆಂದರೆ ನಿದ್ರಿಸುವುದಕ್ಕಾಗಿಯೇ ಧಾರ್ಮಿಕ ಸಭೆಗಳಿಗೆ ಬರುವವರೂ ಇದ್ದಾರೆ ! ಒಮ್ಮೆ ಉಪನಿಷತ್ತಿನ ಕುರಿತು ನಡೆಸಿದ್ದ ಒಂದು ವಿಚಾರ ಗೋಷ್ಠಿಯಲ್ಲಿ ನಾನೂ ಭಾಗವಹಿಸಿದ್ದೆ. ಅಂದು ನನ್ನ ಪಕ್ಕದಲ್ಲಿ ಕುಳಿತಿದ್ದ ಇಬ್ಬರು ಮಾತೆಯರು ಅಕ್ಷರಶಃ ಗೊರಕೆ ಹೊಡೆಯುತ್ತ ನಿದ್ರಿಸಿದ್ದರು ! ಅಂದು ನನ್ನ ಏಕಾಗ್ರತೆಗಾಗಿ ನಾನು ಸ್ಥಳ ಬದಲಿಸಿ ಕುಳಿತುಕೊಳ್ಳುವಂತಾಗಿತ್ತು. ಇದು ಅಸು ಬಳಲಿಕೆಯ ಸ್ಥಿತಿ ! ನಿದ್ದೆ ಮಾಡುವುದು ತಪ್ಪೇನಲ್ಲ; ಆಯಾಸವಾದಾಗ ನಿದ್ರೆ ಬರುವುದೂ ಸಹಜ. ಆದರೆ ನಿರೀಕ್ಷಿಸಿಕೊಳ್ಳಬೇಕಾದ್ದು ಅದಲ್ಲ. ಬಳಲಿಕೆಯ ಗಿಜಿಗಿಜಿಯು ಯಾವತ್ತೂ ನಿಷ್ಕ್ರಿಯತೆಯನ್ನೇ ಅವಲಂಬಿಸುತ್ತದೆ; ಎಚ್ಚರ ತಪ್ಪಿಸುತ್ತದೆ; ಆದ್ದರಿಂದಲೇ ನಿದ್ದೆ ಬರುತ್ತದೆ. ಇದು - ಗ್ರಹಿಸಬೇಕಾದ ವಿಷಯ. ಹೀಗೆ ನಿದ್ರೆ ಬರುವಂತಿದ್ದರೆ - ಗಂಭೀರ ಸಭೆಗಳನ್ನು ನಿದ್ದೆಗಾಗಿ ಆಯ್ದುಕೊಳ್ಳುವ ಅಗತ್ಯವಿದೆಯೆ ? ಇತರರಿಗೆ "ಇಲ್ಲ" ಅನ್ನಿಸಿದರೂ ಅದೇನೋ ಅವ್ಯಕ್ತ ಆಕರ್ಷಣೆಯು ಜ್ಞಾನನದಿಯವರೆಗೆ ಅವರನ್ನು ಸೆಳೆದೊಯ್ದಿರುತ್ತದೆ; ಆದರೆ ಬಳಲಿರುವ ಪ್ರಜ್ಞೆಯು ತನ್ನ ದಾಹ ತೀರಿಸಿಕೊಳ್ಳಲಾಗದೆ ದಡದಲ್ಲಿಯೇ ನಿದ್ರಿಸುತ್ತದೆ; ಜ್ಞಾನಪಾನ ಸಾಧ್ಯವಾಗುವುದಿಲ್ಲ. ಇಂತಹ ಅಸ್ಥಿರ ದೇಹಮನಸ್ಸುಗಳ ಒಡೆಯರ ಗಿಜಿಗಿಜಿ ಭಾವಚಿಂತನೆಗಳಿಂದಾಗಿ - ಅವರ ಅಪೇಕ್ಷೆ ಮತ್ತು ಉದ್ದೇಶಗಳು ಒಳ್ಳೆಯದೇ ಇದ್ದರೂ ಯಾವುದೇ ಉದ್ದೇಶ ಸಾಧನೆಯಾಗಲು ಅವರ ಇಂದ್ರಿಯಗಳೇ ಸಹಕರಿಸಲಾರವು. ದೇಹ ಮನಸ್ಸು ಬುದ್ಧಿಗಳನ್ನು ತರಬೇತುಗೊಳಿಸಿಕೊಳ್ಳದೆ ಯಾವ ಗೋಷ್ಠಿಗಳಲ್ಲಿ ಎಷ್ಟು ಭಾಗವಹಿಸಿದರೂ ಅರ್ಥ ಹುಟ್ಟುವುದಿಲ್ಲ; ವ್ಯರ್ಥವೇ ಆಗುತ್ತದೆ. ಎಷ್ಟೋ ಲಕ್ಷ ಜನರನ್ನು ಗುಡ್ಡೆಹಾಕಿದ ದೃಶ್ಯಾವಳಿಯಿಂದ ಸಂಘಟಕರ ಅಹಂ ತುಂಬಿಕೊಳ್ಳಬಹುದಲ್ಲದೆ ಬೇರೇನೂ ಪರಿಣಾಮ ಆಗುವುದಿಲ್ಲ. ಇದನ್ನೇ ಗೊಂದಲದ ಸಂಸಾರ ಎನ್ನುವುದು. ಭಕ್ತಿಯು Fashion ಸರಕಲ್ಲ. ಸಂಸಾರದ ಸಂತೆಯನ್ನು ಗಂಟಲಿಗೆ ಸಿಕ್ಕಿಸಿಕೊಂಡು ಪಾಲ್ಗೊಳ್ಳುವಂತಹ ಭಕ್ತಿ ಶ್ರವಣದಿಂದ ಯಾವುದೇ ಉಪಯೋಗವಿಲ್ಲ ಎಂಬುದು ಶ್ರೀ ರಾಮಕೃಷ್ಣರ ಭಾವವಾಗಿತ್ತು.
"ಪೂಜೆಗಿಂತ ಮೇಲಾದುದು ಜಪ, ಜಪಕ್ಕಿಂತ ಮೇಲಾದುದು ಧ್ಯಾನ, ಧ್ಯಾನಕ್ಕಿಂತ ಮೇಲಾದುದು ಭಾವ, ಭಾವಕ್ಕಿಂತ ಮೇಲಾದುದು ಮಹಾಭಾವ. ಅದೇ ಪ್ರೇಮ. ಒಮ್ಮೆ ಪ್ರೇಮ ಉಂಟಾಯಿತೆಂದರೆ ಭಗವಂತನನ್ನು ಕಟ್ಟಿ ಇಡಲು ಒಂದು ಹಗ್ಗ ದೊರಕಿದಂತೆ.."
ಪ್ರೇಮ ಅಂದರೆ - ಇವತ್ತು ಎಲ್ಲೆಂದರಲ್ಲಿ ಬಿದ್ದು ಹೊರಳುತ್ತಿರುವ - "I love you..." ಪ್ರೇಮವಲ್ಲ. ಭಗವಂತನಲ್ಲಿ ಮೂಡುವ ಪ್ರೇಮವು - ಸ್ವಾತ್ಮವನ್ನು ಸಂಸ್ಕರಿಸಿಕೊಳ್ಳುವ ಅವ್ಯಾಜ ನಿರ್ಮಮ ಅಂತರಂಗದ ಪೂಜೆ; ಭಾವಪುಷ್ಪಗಳಿಂದ ನಡೆಸುವ ನಿಶ್ಶಬ್ದ ಆತ್ಮಾರಾಧನೆ; ಸ್ವಾತ್ಮ ಮತ್ತು ಸೃಷ್ಟಿಯ ಸಕಲ ಪರಮಾತ್ಮರೂಪಿಗಳನ್ನು ಗೌರವಿಸಿ ಆದರಿಸಿ ಆಧರಿಸಬಲ್ಲ ವಿಶ್ವಪ್ರೇಮ. ಅಂತಹ ಸುಭಗ ಪ್ರೇಮದಿಂದಲೇ ನಿಜಭಾವದರಿವು ಎಂಬುದನ್ನು ಶ್ರೀ ರಾಮಕೃಷ್ಣರು ಪ್ರತಿಪಾದಿಸಿದ್ದರು. ಅದೇ ಭಗವಂತನ ಪ್ರೇಮ; ಭಗವಂತನನ್ನು ಕಟ್ಟಿಹಾಕುವ "ಭಾವ ಪಾಶ...". ಬಗೆಬಗೆಯ ರೂಪಕೊಟ್ಟು ತಮ್ಮ ಇಷ್ಟಾರ್ಥಗಳನ್ನೆಲ್ಲ ಪೂರೈಸುವ ಒಂದು ಯಂತ್ರದಂತೆ ಭಗವಂತ ಭಾವವನ್ನು ಉಪಚರಿಸುತ್ತಲೇ ಬಂದಿರುವವರು ನಿಜವಾಗಿಯೂ ಭಕ್ತರೆ ? ಭಕ್ತ ಎಂದು ಅಂದುಕೊಂಡವರ ಇಚ್ಛೆಯನ್ನೆಲ್ಲ ಪೂರೈಸುವ ATM - ಭಗವಂತನೆ ? ನಾವು ಹಾಗೆ ಅಂದುಕೊಂಡು ನರಳುತ್ತಿದ್ದೇವೆ - ಅಷ್ಟೆ. ಇಂತಹ ವ್ಯಾವಹಾರಿಕ ಪ್ರೇಮಗಳೊಂದೂ ಶಾಶ್ವತವಲ್ಲ. ಸ್ಥಿರವಾದ ನಿರಪೇಕ್ಷ ಪ್ರೇಮವೊಂದೇ ಶಾಶ್ವತ. ವಸ್ತು ಸೊತ್ತುಗಳ ಅಪೇಕ್ಷೆಯ - ಸ್ಥಿತ್ಯಂತರ ಹೊಂದುವಂತಹ ಅಸ್ಥಿರ ಪ್ರೇಮಕ್ಕೆ ಭಗವಂತನನ್ನು ಒಲಿಸಿಕೊಳ್ಳುವ ಶಕ್ತಿ ಇರುವುದಿಲ್ಲ. ಮಾಯೆಯ ನಾಟಕದಿಂದ ಭಗವಂತನನ್ನು ಮರುಳುಗೊಳಿಸಲು ಆಗುವುದಿಲ್ಲ. ಆದ್ದರಿಂದಲೇ "ಪ್ರೇಮೋನ್ಮತ್ತನಾಗದೆ ಇರುವ ಭಕ್ತನ ಹೊರೆಯನ್ನು ಭಗವಂತನು ಹೊರಲಾರ " ಎನ್ನುತ್ತಿದ್ದರು - ಶ್ರೀ ರಾಮಕೃಷ್ಣರು. ಅವರು ಅದಕ್ಕೂ ಸರಳ ದೃಷ್ಟಾಂತವನ್ನು ಕೊಟ್ಟರು.
"ಚಿಕ್ಕ ಮಕ್ಕಳನ್ನು ಮಾತ್ರವೇ ಅವುಗಳ ಕೈಹಿಡಿದುಕೊಂಡು ಹೋಗಿ ಊಟಕ್ಕೆ ಕುಳ್ಳಿರಿಸುತ್ತಾರೆ. ದೊಡ್ಡವರ ವಿಷಯವಾಗಿ ಯಾರು ತಾನೇ ಹಾಗೆ ವರ್ತಿಸುತ್ತಾರೆ ? ಭಕ್ತನು ತನ್ನ ಯೋಗಕ್ಷೇಮವನ್ನು ತಾನೇ ನೋಡಿಕೊಳ್ಳಲಾರದಷ್ಟು ಭಗವತ್ ಚಿಂತನೆಯಲ್ಲಿ ತನ್ಮಯನಾಗಿಬಿಟ್ಟರೆ, ಆಗ ಮಾತ್ರ, ಆತನ ಸಂಪೂರ್ಣ ಹೊರೆಯನ್ನು ಭಗವಂತನೇ ಹೊತ್ತುಕೊಳ್ಳುತ್ತಾನೆ..."
ತನ್ನ ಯೋಗಕ್ಷೇಮವನ್ನು ತಾನೇ ಮಾಡಿಕೊಳ್ಳಲಾಗದಷ್ಟು ಉತ್ಕಟತೆಯಿಂದ ಯಾರು ಧ್ಯಾನಿಸುತ್ತಿದ್ದಾರೆ ? ಭಗವಂತನನ್ನು ದೂರುವವರು ತಾವೇ ಪ್ರಶ್ನಿಸಿಕೊಳ್ಳಬೇಕು. ನಿತ್ಯದ ಬದುಕಿನಲ್ಲಿ - ತಮ್ಮ ಮತ್ತು ಭಗವಂತನ ಯೋಗಕ್ಷೇಮವನ್ನೂ ತಾವೇ ನೋಡಿಕೊಳ್ಳುತ್ತಿದ್ದೇವೆ - ಎಂಬಂತಹ ಹಮ್ಮಿನ ಕ್ರಿಯೆಗಳು ಎಡೆಬಿಡದೆ ನಡೆಯುತ್ತಿಲ್ಲವೆ ? ದಿನಕ್ಕೊಮ್ಮೆ ದೇವಸ್ಥಾನದೆದುರು ನಿಂತು ಯಾರಿಗೋ ಹೊಡೆಯುವಂತೆ ಕೈ ಎತ್ತುವವರೆಲ್ಲರೂ ಭಕ್ತರೆ ? ಹುಂಡಿಗೆ ಕಂತೆ ಕಂತೆ ಸುರಿಯುವವರೆಲ್ಲರೂ ಭಕ್ತರೆ ? ಇವೆಲ್ಲವೂ - ಭಗವಂತನಿಗೇ ಉಪಕರಿಸುವಂತೆ ನಡೆಸುವ ಹುಂಬ ಕ್ರಿಯೆಗಳು. ಭಾವಪೂರ್ಣ ಪ್ರೇಮಭಕ್ತಿಯು ಸ್ಥಾಯೀ ಭಾವವಾಗದ ಯಾವುದೇ ಹೃದಯದಲ್ಲಿ ಭಗವಂತನಿರುವುದಿಲ್ಲ; ಆದ್ದರಿಂದಲೇ ಜೀವಿಗಳ ತಳಮಳಗಳು ನಿಲ್ಲುವುದೇ ಇಲ್ಲ. ಸಮಸ್ಯೆ - ನಮ್ಮೊಳಗೇ ಇದೆ. ತಮ್ಮ ಯಾವುದೇ ನಿತ್ಯದ ಪಡಿಪಾಟಲುಗಳು "ಸಮಸ್ಯೆಗಳು - ಅಲ್ಲ; .. ಸಮಸ್ಯೆಗಳೇ ಇಲ್ಲ.." ಎಂಬ ಅರಿವು ಮೂಡಿದಾಗಲೇ ಎಲ್ಲ ಸಮಸ್ಯೆಗಳೂ ಪರಿಹಾರವಾಗುವುದು. ಇದೇ ಅರಿವು. ಪ್ರಾಯೋಗಿಕವಾಗಿ ಕಷ್ಟದ ಹಾದಿ; ನಿಸ್ಸಂಶಯ. ಆದರೆ ಈ ಕರ್ಮಭೂಮಿ ಇರುವುದೇ ಜೀವಿಗಳ ಪ್ರಯತ್ನಶೀಲತೆಯನ್ನು ಸಾಣೆಹಿಡಿಯುವುದಕ್ಕೆ...
ಸಾಧನೆಯ ಹಾದಿಗಳೆಲ್ಲವೂ ಕಠಿಣತಮವೇ ಆಗಿರುತ್ತದೆ ಎಂಬ ಸತ್ಯವನ್ನು ಬಲ್ಲವರು ಭಗವತ್ಪ್ರೇಮದ ಹಾದಿಯನ್ನೂ ಅಂತೆಯೇ ಸ್ವೀಕರಿಸಬಲ್ಲರು. ಬರಿಗೈದಾಸರ ಭಕ್ತಿಯ ಹಾದಿಯಲ್ಲಿ "ಕೊಡುಕೊಳುವ" ಯಾವುದೇ ಜಂಜಾಟಗಳಿರುವುದಿಲ್ಲ. ಆದ್ದರಿಂದಲೇ ಅಂತಹ ಭಕ್ತಿಭಾವವು ಯಾರನ್ನೂ ಪೀಡಿಸುವುದಿಲ್ಲ. ಸ್ವಚ್ಛ ಭಕ್ತಿಯು ಎಂದಿಗೂ ಅಮಾನ್ಯೀಕರಣಗೊಳ್ಳುವುದಿಲ್ಲ. ಇದಕ್ಕೆ ಹೊರತಾದ "ಸೇವೆಗಳು- ರಿಸೀಟುಗಳು" ಎಂಬ ಯಾವುದೇ ಬಾಹ್ಯ ಹೋರಾಟ ಹಾರಾಟ ತೋರಾಟಗಳಿಂದ ಜೀವರ ಸಮಸ್ಯೆಗಳು ನಾಶವಾಗುವುದಿಲ್ಲ. ಲೌಕಿಕ ಸುಖಕ್ಕಾಗಿ ಮನಸ್ಸಿನೊಂದಿಗೆ ಹೋರಾಟಕ್ಕಿಳಿದು ಬದುಕಿನ ಸಹಜ ಸೌಂದರ್ಯವನ್ನು ದೂರಗೊಳಿಸುತ್ತ ಬಂದರೆ ಅಂತಹ ಯಾವುದೇ ಜೀವಸಮಸ್ಯೆಗಳಿಗೆ ಪರಿಹಾರವು ಸಿಗುವುದೇ ಇಲ್ಲ. ಮನಸ್ಸನ್ನು ಶಾಂತಗೊಳಿಸಿ ದಿಗಂಬರವಾದಾಗ ಯಾವ ಸಂದರ್ಭವೂ ಸಮಸ್ಯೆಯೇ ಆಗುವುದಿಲ್ಲ. ಎಷ್ಟೇ ಪ್ರಯತ್ನಿಸಿದರೂ ಒಂದೇ ಬದುಕಿನಲ್ಲಿ ಸಾಧಿಸಲಾಗದ ದಿವ್ಯ ಸ್ಥಿತಿಯಿದು. "ತಮ್ಮ ಗಂಡ ಹೆಂಡತಿ ಮಕ್ಕಳಿಗಾಗಿ ಅರ್ಥವಿಲ್ಲದ ಅರ್ಥಸಂಚಯದ ಪಡಿಪಾಟಲು ಪಡುತ್ತ ನಿತ್ಯವೂ ಕಣ್ಣೀರಕೋಡಿ ಹರಿಸುವ ಜನರು ಭಗವಂತನಿಗಾಗಿ ಕಣ್ಣೀರು ಹರಿಸುವುದುಂಟೆ ?" ಎಂದು ಶ್ರೀ ರಾಮಕೃಷ್ಣರು ತಲ್ಲಣಿಸುತ್ತಿದ್ದರು. ಹೀಗಿದ್ದೂ ತಮ್ಮ ಕಷ್ಟಗಳಿಗೆಲ್ಲ ಭಗವಂತನೇ ಕಾರಣ - ಎನ್ನುವ ಭಕ್ತವೇಷಗಳಿಗೆ ಕಡಿಮೆಯಿಲ್ಲ. ಮಗುವಿನಂತೆ ತನ್ನನ್ನೇ ಆಶ್ರಯಿಸುವ ಪ್ರೇಮಾಭಕ್ತಿಗೆ ಮಾತ್ರ ಭಗವಂತನು ಸ್ಪಂದಿಸುತ್ತಾನೆ; "ನನ್ನ ಕಾಲ ಮೇಲೆ ನಾನು ನಿಂತಿದ್ದೇನೆ" ಎನ್ನುವ ಜೀವಬಳಗವು ತಮ್ಮ ಸ್ವಂತ ಯೋಗಕ್ಷೇಮಕ್ಕೆ ಆಗೊಮ್ಮೆ ಈಗೊಮ್ಮೆ ಮಾತ್ರ "ದೇವರ ಮರಿ"ಯನ್ನು ಅವಲಂಬಿಸುವಂತಿಲ್ಲ. ಪರಮಾತ್ಮವೇ ತನ್ನ ಪರಮಗಂತವ್ಯ ಎಂಬ ಪೂರ್ಣ ಶ್ರದ್ಧೆ ಇದ್ದಾಗ ಮಾತ್ರ - ಕರೆಯದೇ ಬಂದು ರಕ್ಷಿಸುವ "ಕಾಣದ ಕೈ" - ಮನುಷ್ಯರ ಅನುಭವಕ್ಕೆ ಬರುತ್ತದೆ. ಶ್ರದ್ಧೆಯಿಂದ ನಡೆಸುವ ಪ್ರಯತ್ನದ ಹಾದಿಯಲ್ಲಿ ತೊಡಗಿಕೊಂಡ ಹೃದಯವು ಆರ್ತವಾಗಿ ರೋದಿಸುತ್ತದೆ; ಪೂರ್ಣತೆಯ ಭಾವೈಕ್ಯಕ್ಕಾಗಿ ಅತ್ತು ಹಂಬಲಿಸುತ್ತದೆ; ಭಗವಂತನಿಗಾಗಿ ಅಳುವ ಹೃದಯವನ್ನು ಮಾತ್ರ ಭಗವಂತನೇ ಸಂತೈಸುತ್ತಾನೆ. ಸಂಕಟ ಬಂದಾಗ ಮಾತ್ರ ಆಗೊಮ್ಮೆ ಈಗೊಮ್ಮೆ ಇಣುಕಿ ಓಡುವ ಜೀವಿಗಳು ತಮ್ಮ ಕಾಲ ಮೇಲೆ ತಾವು ನಿಲ್ಲುವುದು ಅನಿವಾರ್ಯ. ಭಗವಂತನ ಭಾವವನ್ನು "Use & Throw" ಶೈಲಿಯಲ್ಲಿ ಉಪಯೋಗಿಸುವವರ ಗಳಿಕೆ ಹೆಗ್ಗಳಿಕೆ ಹೀಗಳಿಕೆಗಳಿಗೆಲ್ಲ ಅವರವರೇ ಹೊಣೆ; ಭಗವಂತನಲ್ಲ. ಭಗವಂತನ ನಿಜ ಅರಿವಿಗೆ ಪ್ರೇಮಾಭಕ್ತಿಯೇ ದಿವ್ಯೌಷಧ.
"ದೇಹವೊಂದು ಯಂತ್ರ; ಅದನ್ನು ನಡೆಸುವವನು ಯಂತ್ರಿ" ಎಂಬ ವಿಶ್ವಾಸದ ನೆಲೆಯಲ್ಲಿ ಆತ್ಮನಿರೀಕ್ಷಣೆಯಲ್ಲಿರುತ್ತ ಸಂಚರಿಸುವವರಿಗೆ ಕಲುಷಿತ ಭಾವಬಾವಿಯನ್ನು ಸ್ವಚ್ಛಗೊಳಿಸುವ ಇಚ್ಛೆಯುಂಟಾಗುತ್ತದೆ. ಆಗಲೇ... ನಿದ್ರೆ ಹರಿದು ಎಚ್ಚರವಾಗುತ್ತದೆ. ಗಾಯಗೊಳಿಸಬಲ್ಲ ಹಲ್ಲುಗಳ ನಡುವೆಯೇ ಇರುತ್ತ ತನ್ನನ್ನು ತಾನು ಸುರಕ್ಷಿತವಾಗಿರಿಸಿಕೊಳ್ಳುವ ನಾಲಗೆಯು ನಮಗೆ ಅಂತಹ ಎಚ್ಚರದ ಪಾಠವನ್ನು ನಿತ್ಯವೂ ಹೇಳುತ್ತದೆ. ನಾಲಗೆಯದು ಧ್ಯಾನಸ್ಥ ಸ್ಥಿತಿ; ಅದು ಏಕಗಮ್ಯ. ಸಂಘರ್ಷಕ್ಕೆ ವಿಮುಖವಾದ ಸ್ಥಿತಿಯದು. ಹೀಗಿದ್ದೂ ಅಲ್ಲಿ ಕರ್ತವ್ಯ ವಿಮುಖತೆ ಇರುವುದಿಲ್ಲ. "ಮನೋಯಂತ್ರದ ದೋಷ"ದಿಂದಾಗಿ ಅಕಸ್ಮಾತ್ ನಾಲಗೆಯು ಸ್ವಚ್ಛಂದ ಸುಖಕ್ಕೆಳಸಿದರೆ ಅದರ ಹದ ತಪ್ಪಿದ ಹಂದಾಟದಿಂದ ಇಡೀ ದೇಹಯಂತ್ರವು ನೋವುಣ್ಣುವುದುಂಟು. ನಾಲಗೆಯ ದೋಷಪೂರಿತ ಚಲನೆಯಿಂದಾಗಿ ಹಲ್ಲು ಉದುರಿಸಿಕೊಂಡವರೂ ಇದ್ದಾರೆ ! ನಾಲಗೆಯ ಕುಣಿತದಿಂದ ಹಲ್ಲುಗಳು ಅಪಾಯಕ್ಕೊಳಗಾಗಬಹುದೇ ಹೊರತು ನಾಲಗೆಯಲ್ಲ ಎಂದು ಹೊರಕಣ್ಣಿಗೆ ಕಾಣಿಸಬಹುದು. ಆದರೆ ಪಕ್ಕದ ಮನೆಗೆ ಬೆಂಕಿ ಹತ್ತಿದರೆ ಸ್ವಂತ ಮನೆಯೂ ಭಯಭೀತವಾಗಬೇಕಾಗುತ್ತದೆ. ಅಸ್ವಸ್ಥ ಹಲ್ಲುಗಳ ನಡುವೆ ಸಿಲುಕಿದಾಗ ನಾಲಗೆಯೂ ಉಪವಾಸ ಬೀಳಬೇಕಾಗುತ್ತದೆ. ಹೀಗೆ ಸಮಗ್ರವಾಗಿ ನೋಡಬಲ್ಲ ಅಧ್ಯಾತ್ಮವಾದಿಗಳಿಗೆ ಹಲ್ಲು ಬೇರೆ; ನಾಲಗೆ ಬೇರೆ ಅಲ್ಲ. ಎಲ್ಲ ಅಂಗಗಳೂ ಒಂದಕ್ಕೊಂದು ಅವಿಭಾಜ್ಯ ಸಂಬಂಧದಿಂದ ಕೂಡಿರುವಂತಹ ದೇಹವನ್ನು ಅಂತಹ ದಾರ್ಶನಿಕರು ಭಾವಿಸಬಲ್ಲರು. ನಾವು ಸವಾರಿ ಮಾಡುವ ವಾಹನದ ಯಾವುದೇ ಭಾಗವು ನಿಶ್ಚಲವಾದರೂ ವಾಹನವು ಓಡಲಾರದು ಅಥವ ಅದರ ವೇಗ ತಗ್ಗಬಹುದು. ನಮ್ಮ ಉದ್ದೇಶಿತ ಪ್ರಯಾಣವು ನಿಲ್ಲುತ್ತದೆ ಅಥವ ವಿಳಂಬವಾಗುತ್ತದೆ. ಯಾವುದೇ ಯಂತ್ರದ ದುರ್ಬಳಕೆಯಿಂದಲೂ ಯಂತ್ರವು ಬಳಲುತ್ತದೆ; ಬಳಲಿದ ಯಂತ್ರವು ಸಹಕರಿಸುವುದಿಲ್ಲ. ಯಂತ್ರಿಯು ತನ್ನ ಅಂತರ್ಭಾವವನ್ನು ಅವಗಣಿಸಿದಾಗಲೂ ಜಡಯಂತ್ರಕ್ಕೆ ಅಪಾಯವು ತಪ್ಪಿದ್ದಲ್ಲ; ದೇಹಯಂತ್ರವು ಸುಸ್ಥಿತಿಯಲ್ಲಿದ್ದು ಚಾಲಕನು ನಿದ್ರಿಸಿದರೂ ಅಪಘಾತ ನಿಶ್ಚಯ. ಯಂತ್ರಿ ಮತ್ತು ಯಂತ್ರ ಇವೆರಡರ ಸಮನ್ವಯಶೀಲ ಚಲನೆಯಿಂದ ಮಾತ್ರವೇ ಯಾವುದೇ ಪಯಣವು ಸುಗಮವಾಗುತ್ತದೆ. ಈ ಬದುಕು ಎಂಬುದು - ನಾಲಗೆ ಮತ್ತು ಹಲ್ಲುಗಳ ದಾಂಪತ್ಯವಿದ್ದಂತೆ. ಆದುದರಿಂದ ದೇಹವಾಹನವನ್ನು ಚಲಾಯಿಸುವಾಗ ಅಹಂಕಾರವಿರದ ಪೂರ್ಣ ಎಚ್ಚರವು ಅನಿವಾರ್ಯ. ದೇಹ ಮನೋಬುದ್ಧಿ ಆತ್ಮಗಳ ಸಮನ್ವಯವಾಗಬೇಕು ಎಂಬ ಇಚ್ಛೆ ಮತ್ತು ಪೂರ್ಣ ಎಚ್ಚರ ಬೇಕು. ಆಗ ಗುರು-ಗುರಿ ಕಾಣುತ್ತದೆ.
ಆದರೆ ಇಚ್ಛೆಯಾಗಲೀ ಎಚ್ಚರವಾಗಲೀ ತ್ಯಾಗಭಾವವಿಲ್ಲದೆ ಸಿದ್ಧಿಸಲಾರದು. ಕೇವಲ ಬಾಯಿಯಲ್ಲಿ ತ್ಯಾಗದ ಮಾತನಾಡುತ್ತ ನಾವು ನಡೆಸುತ್ತಿರುವ ಸ್ವಾರ್ಥದ ಕಾರುಬಾರುಗಳು ಒಂದೇ ಎರಡೆ ? ಇಂತಹ ಪಡಪೋಶಿ ತ್ಯಾಗದ ಸದ್ದಿನಲ್ಲೂ ಇಷ್ಟ ವಿಶಿಷ್ಟಗಳ ಸ್ಪರ್ಧೆ ನಡೆಯುತ್ತಿರುತ್ತದೆ. ಇವೆಲ್ಲವೂ ಪೈಪೋಟಿ ರಾಜಕೀಯದ ಪಕ್ಕಾ ಪಡಪೋಶಿತನಗಳು. ನಾವು ನಮ್ಮನ್ನೇ ಮೋಸಗೊಳಿಸಿಕೊಳ್ಳುವ ಬಾಲಿಶ ಆಟವಿದು. ಇಂತಹ ಆಟ ಓಟಗಳಿಂದ ಮನಸ್ಸು ಜಿಡುಕಾಗುತ್ತದೆ; ಬುದ್ಧಿ ಮಂಕಾಗುತ್ತದೆ. ಹಗ್ಗವೂ ಹಾವಿನಂತೆ ಕಾಣಿಸತೊಡಗುತ್ತದೆ. ಇಂತಹ ಪಡಪೋಶಿ ಸಂಸಾರಗಳನ್ನು ಕಟ್ಟುವವರು ಮಾತ್ರವಲ್ಲದೆ - ಅನಿವಾರ್ಯವಾಗಿ ಅಂತಹ ಸಂಸಾರದ ಸದಸ್ಯರಾಗಿರುವವರೂ ಮಾನಸಿಕ ಖಿನ್ನತೆಗೆ ಒಳಗಾಗುವ ಅಪಾರ ಸಾಧ್ಯತೆಗಳಿವೆ. ಅಂತಹ ಮೋಸಗಳ ಬಲೆಯಲ್ಲಿ ಸಿಲುಕಿ ಜಡವಾಗಿ ಹೋಗುತ್ತಿರುವ ಮನುಷ್ಯರ ಅಂತಃಸಾಕ್ಷಿಯು ಪ್ರತಿಸ್ಪಂದಿಸಲಾಗದ ಮೌಢ್ಯದ ಸ್ಥಿತಿಯಲ್ಲಿರುತ್ತದೆ; ಅಲ್ಲಿ ಕತ್ತಲೆ ಕವುಚಿರುತ್ತದೆ. ಆದ್ದರಿಂದ ಅನರ್ಥದ ಹಾದಿಯಲ್ಲಿ ನಡೆಸುತ್ತಿರುವ ಗುರಿಯಿಲ್ಲದ ಓಟವನ್ನು ಕೊನೆಗಾಣಿಸದೆ ಯಾವುದೇ ಬದುಕಿನ ರೋಗವು ಗುಣವಾಗದು. ಸ್ವಚ್ಛ ಚಿಂತನೆಗಳಿಂದ ಮೂಡುವ ಸ್ವಚ್ಛ ಇಚ್ಛೆ ಮತ್ತು ತದನುರೂಪೀ ಸ್ವಚ್ಛ ಕಾರ್ಯಗಳಿಂದ ಮಾತ್ರವೇ ನೆಮ್ಮದಿಯ ಬದುಕಿನ ಸಾಕ್ಷಾತ್ಕಾರವು ಸಾಧ್ಯ.
ಪ್ರತಿಯೊಂದು ಬದುಕೂ - ದೈಹಿಕ ಮಾನಸಿಕವಾಗಿ ಇಚ್ಛಾಪೂರ್ವಕವಾಗಿ ಮಾಡುವುದು ಮತ್ತು ಸ್ವಾಭಾವಿಕವಾಗಿ ಉಂಟಾಗುವುದು - ಇವೆರಡರ ಸಂಭವನೀಯ ಅನೂಹ್ಯ ಮಿಶ್ರಣ. ಈ ಸಂಭಾವ್ಯಕ್ಕೆ ವೇಗವರ್ಧಕದಂತೆ ತೊಡಗಿಕೊಳ್ಳುವ ಸಾಧನವೇ - ಇಚ್ಛಾಸ್ಪಂದನ. ಇಚ್ಛಾಶಕ್ತಿಯಿಂದ ಆಂತರ್ಯವು ಸ್ವಚ್ಛಗೊಳ್ಳುತ್ತ ಬಂದಂತೆ ಅಂತಃದರ್ಪಣದಲ್ಲಿ ಸ್ವಚ್ಛ ಪ್ರತಿಬಿಂಬವು ಮೂಡತೊಡಗುತ್ತದೆ. ವಿಚಾರಗಳು ಸ್ಫುಟಗೊಳ್ಳುತ್ತ ಭಾವಶುದ್ಧಿಯಾಗುತ್ತದೆ. ಬಾಹ್ಯದಲ್ಲಿ ಜೀವಿಗಳೆಲ್ಲವೂ ಪ್ರತ್ಯೇಕವಾದರೂ ಆಂತರ್ಯದಲ್ಲಿ ಒಂದೇ ಗುರಿಯ ಪಯಣಿಗರು ಎಂಬ ಅರಿವು ಮೂಡುತ್ತದೆ; ಸಾಮಾಜಿಕ ತಲ್ಲಣಗಳ ಶಮನವಾಗುತ್ತದೆ. ಸಾಗರದ ದಂಡೆಯಲ್ಲಿ ವಿಪರೀತ ಅಲೆಗಳು ಕಾಣಿಸಿದರೂ ಎಲ್ಲ ಅಲೆಗಳೂ ಮತ್ತದೇ ಸಾಗರದಲ್ಲಿ ಐಕ್ಯವಾಗಿ ಸಾಗರೋಪಮವಾಗುವ ಸತ್ಯ ಮತ್ತು ಸಾಗರದ ಮೇಲ್ಪದರದಲ್ಲಿ ಅಲೆಗಳ ಕೋಲಾಹಲವು ತಳಮಳಿಸುತ್ತಿದ್ದರೂ ಆಳದ ಸಾಗರವು ಧ್ಯಾನಸ್ಥ ಸ್ಥಿತಿಯಲ್ಲಿರುವುದೂ ನಾವು ಕಾಣುತ್ತಿರುವ ಸತ್ಯ. ಅಪ್ಪನಂತೇ ಮಕ್ಕಳು; ಬಾಹ್ಯದಂತೇ ಆಂತರ್ಯ; ಸೃಷ್ಟಿಯಂತೆಯೇ ಜೀವಿಗಳು ! ಅಂತೆಯೇ ಕಣ್ಣಿಗೆ ಕಾಣಿಸುವ ತಳಮಳಗಳ ಅಲೆಗಳೆಲ್ಲವೂ ಸತ್ಯವಲ್ಲ; ಬಂದು ಹೋಗುವ ವ್ಯಾವಹಾರಿಕ ಸತ್ಯ ಅಥವ ಖದೀಮ ಮಿಥ್ಯೆ. ನಿತ್ಯಸತ್ಯವು ಧ್ಯಾನಸ್ಥ ಆಳದಲ್ಲಿದೆ. ಪ್ರೇಮೋನ್ಮತ್ತರಾಗದೆ ಆಳವು ಸಿಗದು. ದೇಹ ಮನಸ್ಸುಗಳನ್ನು ದಾಟಬಲ್ಲ, ಲೌಕಿಕದಲ್ಲಿ ಅಲ್ಪತೃಪ್ತರಾಗಿರಬಲ್ಲ ಮತ್ತು ಇಚ್ಛಾಶಕ್ತಿಯನ್ನು ದುಡಿಸಿಕೊಳ್ಳುವಂತಹ ಯೋಗ್ಯರಿಗೆ-ಯೋಗಿಗಳಿಗೆ ಮಾತ್ರ ಅಧ್ಯಾತ್ಮದ ಆಳದ ಅನುಭವವಾಗುತ್ತದೆ. ಪ್ರೇಮೋನ್ಮತ್ತರಾಗಿ ಭಗವದ್ಭಾವದಲ್ಲಿ ಮುಳುಗುವವರಿಗೆ ಭಗವಂತನು ಬಹಳ ಸುಲಭನೂ ಹೌದು.
ಮಲಗಿ ಪರಮಾದರದಿ ಪಾಡಲು
ಕುಳಿತು ಕೇಳುವ ಕುಳಿತು ಪಾಡಲು
ನಿಲುವ ನಿಂತರೆ ನಲಿವ ನಲಿದರೆ ಒಲಿವ ನಿಮಗೆಂಬ //
ಸುಲಭನೋ ಹರಿ ತನ್ನವರನರೆ
ಘಳಿಗೆ ಬಿಟ್ಟಗಲನು ರಮಾಧವ
ನೊಲಿಸಲರಿಯದೆ ಪಾಮರರು ಬಳಲುವರು ಭವದೊಳಗೆ //
*****-----*****-----*****
ಅಭಾವದ ಬದುಕಿಗೆ ಭಾವ ತುಂಬುವ ಲೇಖನ
ReplyDelete