Saturday, December 13, 2014

ನೆನಪು - ಮೆಲುಕು


ಈಗ ನಿಂತು ಹಿಂದಿರುಗಿ ನೋಡುತ್ತಿದ್ದರೆ....ಒಂದೊಂದು ಘಟನೆಯೂ ಮಿಶ್ರ ಭಾವಗಳನ್ನು ಮೂಡಿಸುತ್ತಿದೆ.

ನಡೆವರೆಡಹದೆ ಕುಳಿತವರೆಡಹುವರೇ ?

ಹೌದು. ಮೌನವಾಗಿರುವವರಿಂದ ಅಸಂಬದ್ಧ ವಾಕ್ ಪ್ರಲಾಪ - ಹೇಗೂ ಆಗಲಾರದು. ಮಾತನಾಡುವವರಿಂದಲೇ ಅಂತಹ ಚಮತ್ಕಾರಗಳು ಸಂಭವಿಸುತ್ತವೆ.

ಸಂಗೀತ - ಸಾಹಿತ್ಯಕ್ಕೆ ಸಂಬಂಧಿಸಿದ ಮತ್ತು ಪ್ರಚಲಿತ ವಿದ್ಯಮಾನಗಳನ್ನು ತಕ್ಕ ಮಟ್ಟಿಗೆ ತಿಳಿದುಕೊಂಡಿದ್ದರೆ ಉದ್ಘೋಷಕರಿಗೆ ಭೀಮ ಬಲ ಬಂದಂತೆ ಆಗುತ್ತದೆ. ಉದಾಹರಣೆಗೆ : ಹಿಂದುಸ್ತಾನಿ ಶೈಲಿಯಲ್ಲಿ ರಾಗ - ಕಾಫಿ ಅಂದರೆ, ಕರ್ಣಾಟಕೀ ಶೈಲಿಯಲ್ಲಿ - ಕಾಪಿ ಎಂದು ಹೇಳುತ್ತಾರೆ. ಇವೆರಡೂ ಬೇರೆಯೇ ಆದ -  ಎರಡು ರಾಗಗಳು.  ಒಬ್ಬ ಉದ್ಘೋಷಕರಿಗೆ, ತಾವು ಕೇಳಿಸಲಿರುವ ಸಂಗೀತವು ಯಾವ ಶೈಲಿಯದ್ದು ಎಂಬ ಪರಿಜ್ಞಾನವಿದ್ದರೆ, ಆ ವ್ಯತ್ಯಾಸವು, ಹೇಳುವ ಉಚ್ಚಾರದಲ್ಲಿಯೂ ಸ್ಪಷ್ಟವಾಗಿ ಹೊರಹೊಮ್ಮಿದರೆ, ಆಗ ಕೇಳುವವರಿಗೆ ಹಿತವೆನಿಸುತ್ತದೆ. ಖರಹರಪ್ರಿಯ ಎಂಬ ರಾಗವನ್ನು "ಕರಕರಪ್ರಿಯ"(?) ಎಂದು ಬರಹದಲ್ಲಿ ಸೂಚಿಸಿದ್ದರೂ ಅದನ್ನು ತಿದ್ದಿಕೊಂಡು ಸರಿಯಾದ ರೂಪವನ್ನೇ ಉಚ್ಚರಿಸಬಲ್ಲವರು ಉದ್ಘೋಷಕರಾಗಿ ಯಶಸ್ಸು ಕಾಣುತ್ತಾರೆ. ಬೇರೆ ಬೇರೆ ಭಾಷೆಯ ಶಬ್ದಪುಂಜಗಳು ಎದುರಾದಾಗ ಅದನ್ನು ಉಚ್ಚರಿಸುವ ರೀತಿಯನ್ನು ಕೇಳಿ ತಿಳಿದುಕೊಂಡೇ ಕರ್ತವ್ಯಕ್ಕೆ ಅಣಿಯಾಗಬೇಕು. ದ.ರಾ. ಬೇಂದ್ರೆಯವರನ್ನು "ದಾರ ಬೇಂದ್ರೆ" ಎಂದರೆ ಆಭಾಸವಾಗುತ್ತದೆ. ಆಳವಾದ ವಿಷಯಜ್ಞಾನವಲ್ಲದಿದ್ದರೂ ತಪ್ಪೆಂದು ಗುರುತಿಸುವಷ್ಟಾದರೂ, ಕೊನೇಪಕ್ಷ ಸಣ್ಣ ಸಂಶಯ ಬರುವಷ್ಟಾದರೂ ಸಾಹಿತ್ಯ - ಸಂಗೀತದ ತಿಳುವಳಿಕೆಯು ಉದ್ಘೋಷಕರಿಗೆ ಇರಲೇ ಬೇಕು.

ಎಲ್ಲರೊಡನೊಂದೊಂದು ಪಾಠವನ್ನು ಕಲಿಯಲೇಬೇಕಾದ ಪೀಠ - ಉದ್ಘೋಷಕ ಪೀಠ.
                                           
ನಾನು ಬಾಲ್ಯದಲ್ಲಿ ಹಿಂದುಸ್ಥಾನಿ ಸಂಗೀತವನ್ನು ಸ್ವಲ್ಪ ಕಾಲ ಅಭ್ಯಾಸ ಮಾಡಿದ್ದೆ. ಕುಂದಾಪುರದಲ್ಲಿದ್ದ... ಈಗ ದಿವಂಗತರಾಗಿರುವ ವಾಸುದೇವ ನಾಯಕ್  ಅವರು ನನ್ನ ಗುರುಗಳಾಗಿದ್ದರು. ಕೊಟ್ಟ ಪಾಠವನ್ನು ಅಭ್ಯಾಸಮಾಡದೆ ಮುಂದಿನ ತರಗತಿಗೆ ಹೋದರೆ, ನಾನು ಬಾಯಿ ತೆಗೆದ ಕೂಡಲೇ, ಅವರು ಕನ್ನಡಕದ ಸಂದಿಯಿಂದ ಕೆಕ್ಕರಿಸಿ ನೋಡುತ್ತಿದ್ದರು. ಇಂದಿಗೂ ನಾನು ಭಯಭಕ್ತಿಯಿಂದ ನೆನಸಿಕೊಳ್ಳುವ ಗುರು - ಶ್ರೀ ವಾಸುದೇವ ನಾಯಕ್ ಅವರು. ಒಮ್ಮೆ ಆ ಗುರುಗಳಿಗೆ ಹೆದರಿ ತರಗತಿಯಿಂದ ಹೊರಗೆ ಓಡಿ ಬಂದದ್ದು ನನಗೆ ಇನ್ನೂ ನೆನಪಿದೆ. ಆದರೆ ಅವರು ತಿದ್ದಿ ತೀಡಿದ ಪಾಠವು ಇನ್ನೂ ನನ್ನಲ್ಲಿ ಉಳಿದುಕೊಂಡಿದೆ; ಬಹುಶಃ ಅಷ್ಟೇ ಉಳಿದುಕೊಂಡಿರುವುದು !  ಅನಂತರ ನಾನು ಹರಿಕಥೆಗಳನ್ನು ಮಾಡಲು ಹೊರಟಾಗ, ಹರಿಕಥೆಗಾಗಿ ನಾನು ಆಯ್ದುಕೊಂಡ ಹೆಚ್ಚಿನ ಪದ್ಯಗಳಿಗೆ ರೂಪ ಕೊಟ್ಟವರೂ ನನ್ನ ಗುರುಗಳೇ. ಅಂದು ನನ್ನ ತಂದೆಯಾದ ದಿವಂಗತ ಯಜ್ಞನಾರಾಯಣ ಉಡುಪ ಅವರು ಚಂದ್ರಹಾಸ ಎಂಬ ಹರಿಕಥೆಯನ್ನು ಬರೆದು ನನ್ನ ಒಳಗಿಳಿಸಿದ್ದರು. ಅದರಲ್ಲಿ ಭಾಮಿನಿ ಷಟ್ಪದಿ ಮತ್ತು ವಾರ್ಧಿಕ ಷಟ್ಪದಿಯ ಹಲವು ಪದ್ಯಗಳೂ ಇದ್ದುವು. ಕನ್ನಡ ಪಂಡಿತರಾಗಿದ್ದ ನನ್ನ ತಂದೆ ಸಾಹಿತ್ಯದ ಸೊಗಡನ್ನು ಆ ಕಥೆಯಲ್ಲಿ ತುಂಬಿಬಿಟ್ಟಿದ್ದರು. ವಾರ್ಧಿಕ ಷಟ್ಪದಿಯನ್ನು ತಾಳಕ್ಕೆ ಹೊಂದಿಸುವುದು ಸ್ವಲ್ಪ ಕಷ್ಟ; ಅಲ್ಲಿ ಇಲ್ಲಿ ಎಳೆದಾಡಬೇಕಾಗುತ್ತದೆ. ಈ ವಾರ್ಧಿಕ ಷಟ್ಪದಿಯ ಭಾಗಕ್ಕೆ ರಾಗ ಸಂಯೋಜಿಸುವ ಪ್ರಸಂಗ ಬಂದಾಗಲೆಲ್ಲ ನನ್ನ ಗುರುಗಳು ಸಿಡಿಮಿಡಿಗುಟ್ಟುತ್ತಿದ್ದರು. "ಹೋಗು, ನಿನ್ನ ಅಪ್ಪಯ್ಯನಿಗೇ ರಾಗ ಹಾಕಲು ಹೇಳು..." ಎಂದು ಎದ್ದು ಹೋಗಿ ಒಂದು ಎಲೆ ಅಡಿಕೆಯ ಶಾಸ್ತ್ರ ಮುಗಿಸುತ್ತಿದ್ದರು. ನಾನು ಕಾಯುತ್ತ ಸುಮ್ಮನೆ ಕೂತಿರುತ್ತಿದ್ದೆ. ಸ್ವಲ್ಪ ಹೊತ್ತಾದ ಮೇಲೆ ಹಿಂದಿರುಗಿ ಬಂದ ಗುರುಗಳು ಅದ್ಭುತವಾದ ರಾಗ ಸಂಯೋಜನೆ ಮಾಡಿಬಿಡುತ್ತಿದ್ದರು. ಅಂತಹ ಅದ್ಭುತ ಸಂಯೋಜನೆಯ ಹಲವು ವಾರ್ಧಿಕ ಷಟ್ಪದಿಗಳು ನನ್ನ ಚಂದ್ರಹಾಸ ಹರಿಕಥೆಯಲ್ಲಿವೆ. ನನ್ನ ಗುರುಗಳನ್ನು ನೆನೆಸಿಕೊಂಡರೆ ನಾನು ಈಗಲೂ ಭಾವುಕಳಾಗುತ್ತೇನೆ. ಅವರು ನನಗಾಗಿ ಏನೆಲ್ಲ ಮಾಡಿದರು!! ನನ್ನ ಜೊತೆಗೆ ಹಾರ್ಮೋನಿಯಂ ವಾದಕರಾಗಿಯೂ ಬಂದು, ಆಗಿಂದಾಗ ನನ್ನನ್ನು ತಿದ್ದುತ್ತ, ಪ್ರೋತ್ಸಾಹಿಸಿದವರು - ನನ್ನ ಗುರುಗಳು. ೧೯೭೧ - ೧೯೭೨ ರ ಹೊತ್ತಿನಲ್ಲಿ ಹಾರ್ಮೋನಿಯಂ ತಬಲಾ ಹೊತ್ತುಕೊಂಡು, ಬಸ್ಸಿನಲ್ಲೇ ಊರೂರಿಗೆ ಹೋಗಿ ಹರಿಕಥೆ ಮಾಡಬೇಕಿತ್ತು. ನನಗಾಗ ೧೬ - ೧೭ ವರ್ಷ ಪ್ರಾಯ. ನನ್ನ ಗುರುಗಳು ಹಾರ್ಮೋನಿಯಂ ಹಿಡಿದುಕೊಂಡರೆ, ಪ್ರತಿಭಾವಂತ ಕಲಾವಿದರಾಗಿದ್ದ ಶ್ರೀ ಆನಂದ ಬಸ್ರೂರು ಎಂಬವರು ತಬ್ಲಾ ವಾದಕರಾಗಿ ನನ್ನೊಡನೆ ಬರುತ್ತಿದ್ದರು. ನನ್ನ ಗುರುಗಳಿಗೆ ಅದಾಗಲೇ ೫೫ ವರ್ಷ ದಾಟಿತ್ತು. ಈ ಲಗ್ಗೇಜುಗಳನ್ನೆಲ್ಲ ಹೊತ್ತುಕೊಂಡು ಕೆಲವೊಮ್ಮೆ ೧ - ೨ ಕಿ .ಮೀ. ನಡೆದುಕೊಂಡು ಹೋಗಬೇಕಾಗುತ್ತಿತ್ತು. ತಮ್ಮ ವಾದ್ಯವನ್ನು ಬೇರೆ ಜನರ ಕೈಯಲ್ಲಿ ಹೊರೆಸುವುದು ಗುರುಗಳಿಗೆ ಇಷ್ಟವಿರಲಿಲ್ಲ. ಕೆಲವೊಮ್ಮೆ ಹೆಗಲ ಮೇಲೆ, ಕೆಲವೊಮ್ಮೆ ತಲೆಯ ಮೇಲೂ ಹಾರ್ಮೋನಿಯಂ ಇರಿಸಿಕೊಳ್ಳುತ್ತಿದ್ದರು. ೨ -೩ ಗಂಟೆಗಳ ಹರಿಕತೆ ಮುಗಿಸಿ, ಹಿಂದೆ ಬರುವಾಗ ಗುರುಗಳು ಸುಸ್ತಾಗುತ್ತಿದ್ದರು. ಕೆಲವೊಮ್ಮೆ ನನ್ನ ಮೇಲೆ ಸಿಡುಕುತ್ತಿದ್ದರು. ಕೆಲವೊಮ್ಮೆ "ಹರಿದಾಸರ ಸಂಗ ದೊರಕಿತು ನಮಗಿನ್ನೇನು " - ಅನ್ನುತ್ತಿದ್ದರು. ಅವರು ನಗುತ್ತಿದ್ದುದು ಕಡಿಮೆ. ಅವರಿರುವಲ್ಲಿ ಉಳಿದವರೂ ನಗುವ "ಅಧಿಕಪ್ರಸಂಗ" ಮಾಡುತ್ತಿರಲಿಲ್ಲ. ಅಂತೂ... ಗುರುಗಳ ಜೊತೆಗಿದ್ದು ಶಾಸ್ತ್ರೀಯ ಅಭ್ಯಾಸದ ಜೊತೆಗೆ  ಹಲವಾರು ರಾಗಭಾವಗಳ ಹೊರ ದರ್ಶನವೂ ಆಗಿಹೋಯಿತು. ಅನಂತರ ನಾನು ಆಕಾಶವಾಣಿ ಸೇರಿಕೊಂಡಾಗ ಗುರುಗಳಲ್ಲಿ ಆಶೀರ್ವಾದ ಪಡೆಯಲು ಹೋಗಿದ್ದೆ. "ಕಲಾವಿದರ ಕ್ಷೇತ್ರದಲ್ಲಿ ಎಚ್ಚರದಿಂದಿರು" ಎಂದು ಬುದ್ದಿಮಾತು ಹೇಳಿ ನನ್ನನ್ನು ಹರಸಿ ಕಳಿಸಿದ್ದರು. ನನ್ನ ಗುರುಗಳನ್ನು ಇಂದಿಗೂ ನಾನು ದಿನವೂ ನೆನಪಿಸಿಕೊಳ್ಳುತ್ತೇನೆ. ಅವರು ಕಲಿಸಿದ ಹಾಡುಗಳನ್ನು ಹಾಡುವಾಗ ಮತ್ತೊಮ್ಮೆ ಬಾಲ್ಯಕ್ಕೆ ಜಾರುತ್ತೇನೆ.

ಕಲಿತದ್ದು  ಬಾಲಪಾಠ. ಆದರೆ ಅದು ಬರೇ ಸಂಗೀತ ಪಾಠವಾಗಿರಲಿಲ್ಲ. ಆ ಅವಧಿಯುದ್ದಕ್ಕೂ ನನಗೆ ಸಿಕ್ಕಿದ್ದು ಬದುಕಿನ ಪಾಠ.

ಆದರೆ ಆಕಾಶವಾಣಿಗೆ ಈ ವಿದ್ಯೆಯ ಅನುಭವವು ಸಾಕಾಗಲಿಲ್ಲ.

ನಾನು ಉದ್ಘೋಷಕಿಯಾಗಿ ಆಕಾಶವಾಣಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಕರ್ನಾಟಕ ಸಂಗೀತದ ಹಿರಿಯ ಕಲಾವಿದರೊಬ್ಬರ ಹಾಡುಗಾರಿಕೆಯನ್ನು ಪ್ರಸಾರ ಮಾಡುವಾಗ ನನ್ನಿಂದ ಒಂದು ತಪ್ಪಾಯಿತು. ಅದು ಆರಂಭದ ಕಾಲ. (೧೯೭೭ ಇರಬಹುದು) ಅಂದು ನಿಗದಿಯಾಗಿದ್ದ LP ಧ್ವನಿ ಮುದ್ರಿಕೆಯ ಹೊರ ಭಾಗದಲ್ಲಿ, ರಾಗ - Bahaduri ಎಂದು print  ಆಗಿತ್ತು. ಅದನ್ನು ನಾನು ಬಹಾದುರಿ ಎಂದು ಹೇಳಿಬಿಟ್ಟೆ. ಆದರೆ ಆ ವಿವರವು print ಆಗುವಾಗಲೇ ತಪ್ಪಾಗಿತ್ತು. ರಾಗ ಬಹುದಾರಿ ಎಂಬುದು ಅಕ್ಷರ ತಪ್ಪಿನಿಂದ ಬಹಾದುರಿಯಾಗಿ ಹೋಗಿತ್ತು. ನಾನು ಹಾಗೇ ಹೇಳಿಬಿಟ್ಟೆ. ಹೇಳಿದ್ದು ಗಾಳಿಯಲ್ಲಿ ಹಾರಿಯೇ ಹೋಗಿತ್ತು. ಇದನ್ನು ಕೇಳಿದ ಅಂದಿನ ನಿಲಯದ ಉಪನಿರ್ದೇಶಕರಾಗಿದ್ದ M.V.ವಸಂತಕುಮಾರಿ ಅವರು ನನ್ನನ್ನು ಕರೆಸಿ ಉಗಿದು ಉಪ್ಪಿನಕಾಯಿ ಹಾಕಿದರು. "ನಿಮ್ಮ ಯಾವ ವಿವರಣೆಯೂ ನನಗೆ ಬೇಡ. ನನ್ನನ್ನು ಕೇಳಿದ್ದರೆ ಸರಿಯಾದ ರೂಪ ಏನೆಂದು ನಾನು ಹೇಳುತ್ತಿರಲಿಲ್ಲವೇ ?" ಎಂದಿದ್ದರು. ಅಂದಿನ ಅಧಿಕಾರಿಗಳು ಸಾಹಿತ್ಯ ಸಂಗೀತದ ಪೂರ್ವಾನುಭವ ಇರುವವರೇ ಆಗಿರುತ್ತಿದ್ದ ಸುಪುಷ್ಟ ಆಕಾಶವಾಣಿಯ ಕಾಲವದು. ನಾನು ಸುಮ್ಮನಿರಲಿಲ್ಲ. "ನನಗೆ ಸಂಶಯವೇ ಬರಲಿಲ್ಲ. ಬಂದಿದ್ದರೆ ಕೇಳುತ್ತಿದ್ದೆ..." ಅಂದಾಗ ಅವರಿಗೆ ತೃಪ್ತಿಯಾಗಲಿಲ್ಲ; ತನ್ನೆದುರು ನಿಂತು ವಾದಿಸುತ್ತಿದ್ದಾಳೆ ಅಂತ ಸಿಟ್ಟೂ ಬಂದಿತ್ತು. ಅದೇ ಪೂರ್ವಾಗ್ರಹದಿಂದ ಆ ದಿನವಿಡೀ ನನ್ನ ಬೆನ್ನು ಬಿದ್ದ ಅವರು "ನಿಮಗೆ ಆ ರಾಗ ಗೊತ್ತಿಲ್ಲ - ಈ ರಾಗ ಗೊತ್ತಿಲ್ಲ ಎಂದೆಲ್ಲ ಹೇಳಿ ನೀವು ತಪ್ಪಿಸಿಕೊಳ್ಳುವಂತಿಲ್ಲ. ಆಕಾಶವಾಣಿಯ ಮುಖ ಉಳಿಸುವ ಜವಾಬ್ದಾರಿಯೂ ನಿಮ್ಮ ಮೇಲಿದೆ. ಪ್ರಸಾರದ ಅವಧಿಯಲ್ಲಿ ನಡೆಯುವ ತಪ್ಪುಗಳಿಗೆ ಕ್ಷಮೆಯಿಲ್ಲ. ಉದ್ಘೋಷಕರಿಗೆ ಸಾಮಾನ್ಯ ಜ್ಞಾನ ಇರಲೇ ಬೇಕು.." ಇತ್ಯಾದಿ ಮಂಗಳಾರತಿ ಮಾಡುತ್ತ ಬೆವರಿಳಿಸಿದ್ದರು.




ನನ್ನ ಬಹಾದುರಿತನಕ್ಕೆ ಆ ಕ್ಷಣಕ್ಕೆ ಮುಖ ಭಂಗವಾಗಿದ್ದರೂ ಮುಂದಿನ ದಿನಗಳಲ್ಲಿ ಜಾಗರೂಕಳಾಗಿರಲು ಈ ಘಟನೆಯೇ ನನಗೆ ಬೆಂಬಲವಾಯಿತು. ಯಾವುದೇ ಸಂಗೀತದ ಪ್ರಸಾರಕ್ಕೂ ಮೊದಲು ಅದಕ್ಕದಕ್ಕೆ ಸಂಬಂಧಿಸಿದ ನಿಲಯದ ಕಲಾವಿದರನ್ನು ಕೇಳಿಯೇ ನಾನು ಪ್ರಸಾರಿಸತೊಡಗಿದೆ; ಗೊತ್ತಿದ್ದರೂ ಮತ್ತೊಮ್ಮೆ ಕೇಳಿ ದೃಢಪಡಿಸಿಕೊಳ್ಳುತ್ತಿದ್ದೆ. ಮಾತ್ರವಲ್ಲ - ನಮ್ಮ ನಿಲಯದ ಕಲಾವಿದರಾಗಿದ್ದ ದಿವಂಗತ M. ಶ್ರೀನಾಥ ಮರಾಠೆಯವರಲ್ಲಿ ಕರ್ನಾಟಕ ಸಂಗೀತದ ಅಭ್ಯಾಸಕ್ಕೂ ತೊಡಗಿದೆ. ಎರಡು ಮೂರು ವರ್ಷಗಳ ಕಾಲ ರಾಗ ವರ್ಣಗಳ ವರಸೆಯಲ್ಲಿ ಧ್ವನಿ ವ್ಯಾಯಾಮ ನಡೆಸಿದೆ. ಸಂಗೀತ ಎಷ್ಟು ಒಲಿಯಿತೋ ಗೊತ್ತಿಲ್ಲ; ಆದರೆ ಸಂಗೀತ ವಿಷಯದಲ್ಲಿ ನನ್ನ ಖರ್ಚಿಗೆ ಬೇಕಾದಷ್ಟು ಜ್ಞಾನವಂತೂ ಆಯಿತು. ಹೀಗೆ ಕಲಿಸುವವರ ಮಧ್ಯೆ ಇದ್ದುಕೊಂಡು ಕಲಿಯುತ್ತ ಕಲಿಯುತ್ತ, ನಾನು ಎಚ್ಚರದ ಹೆಜ್ಜೆ ಹಾಕತೊಡಗಿದ್ದೆ.

ಆದ್ದರಿಂದ ಉದ್ಘೋಷಕರಿಗೆ ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ. ಸಂದೇಹಗಳು ಬಂದರೇ - ಒಳ್ಳೆಯದು. ಬಂದ ಸಂದೇಹಗಳನ್ನು ತಡ ಮಾಡದೆ ಪರಿಹರಿಸಿಕೊಳ್ಳಲು ಪ್ರಯತ್ನಿಸಬೇಕು. ಆಗ ಕೊನೇ ಕ್ಷಣದಲ್ಲಿ ಅಪಹಾಸ್ಯಕ್ಕೀಡಾಗುವುದು ತಪ್ಪುತ್ತದೆ; ಚೆನ್ನಾಗಿ ಕರ್ತವ್ಯ ನಿರ್ವಹಿಸಿದ ತೃಪ್ತಿಯೂ ಸಿಗುತ್ತದೆ.

ಉದ್ಘೋಷಕರು ಪ್ರಸ್ತುತರಾಗಬೇಕೆಂದಿದ್ದರೆ ಸದಾ ಕಾಲ ಕಲಿಯುವ ತುಡಿತ ಹೊಂದಿರಲೇಬೇಕು. ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ಸುಲಭದಲ್ಲಿ ಎಲ್ಲವನ್ನೂ ಪಡೆಯುವ ಹಪಹಪಿಕೆಯ ಹೊಸಪೀಳಿಗೆಯು ಎದ್ದು ನಿಂತಿದೆ. ಆದರೆ ಒಂದಂತೂ ಸತ್ಯ. ಈ ಬದುಕಿನಲ್ಲಿ ಯಾವುದೂ ಸುಲಭವಲ್ಲ. ಸುಲಭವಾದದ್ದು ಯಾವುದೂ ಶ್ರೇಷ್ಠವಲ್ಲ. ಕಷ್ಟಪಟ್ಟೇ ಸುಲಭವನ್ನೂ ವಶಪಡಿಸಿಕೊಳ್ಳಬೇಕು. ಆಗ ಮಾತ್ರ ಸುಲಭವೂ ಶ್ರೇಷ್ಠವಾಗುತ್ತದೆ. ಪೂರ್ವ ತಯಾರಿಯುಳ್ಳ ಉದ್ಘೋಷಕರಿಗೆ ಎಲ್ಲ ಸಂದರ್ಭವನ್ನೂ ಶ್ರೇಷ್ಠಗೊಳಿಸಲು ಸಾಧ್ಯವಿದೆ. ಈ ಸತ್ಯವು ಅರಿವಿಗೆ ಬಂದರೆ ಉದ್ಯೋಗವು ಕಠಿಣವೆನ್ನಿಸದು; ಯಾವುದೇ ಗೊಂದಲಗಳು ಪೀಡಿಸಲಾರವು.

                                                *****-----*****-----*****



No comments:

Post a Comment