ಸ್ತ್ರೀ ಸಮಾನತೆ, ಸ್ತ್ರೀ ಸ್ವಾತಂತ್ರ್ಯ, ಸ್ತ್ರೀ ಸಾಧನೆ, ಸ್ತ್ರೀಯರ ಮೇಲೆ ಮತ್ತು ಸ್ತ್ರೀಯರಿಂದ ಹಿಂಸೆ, ಸ್ತ್ರೀ ಶೋಷಣೆ, ಸ್ತ್ರೀ ಪರ....ಇತ್ಯಾದಿ ಶಬ್ದವ್ಯೂಹದಲ್ಲಿ ಸಿಲುಕಿಸಿ ಸ್ತ್ರೀಯರ ಮೇಲೆ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಶಾಬ್ದಿಕ ಮತ್ತು ದೃಶ್ಯ ರೂಪದ ಅತ್ಯಾಚಾರಗಳು....ಇವತ್ತಿನ ಸಮಾಜದಲ್ಲಿ ಮತ್ತೊಮ್ಮೆ "ಸಂಸ್ಕೃತ - ಸಂಸ್ಕೃತಿ" ಯತ್ತ ಹೊರಳಿ ನೋಡುವಂತೆ ಮಾಡಿದೆ. ಅಕ್ಷರ ಕಲಿತ ಇಂದಿನ ತುಂಡರಸ ಅರಸಿಯರನ್ನು ಬಗೆದು ನೋಡುವ ಅಗತ್ಯ ಎದುರಾಗಿದೆ.
"ಸಮಾನತೆ" - ಅದರಲ್ಲಿ ಸ್ತ್ರೀಯರೂ ಸೇರುವುದಿಲ್ಲವೇ ?
"ಸ್ವಾತಂತ್ರ್ಯ" - ಸ್ತ್ರೀಯರನ್ನು ಹೊರತು ಪಡಿಸಿ ಎಂದಿದೆಯೇ ?
ಸಾಧನೆಯಲ್ಲೂ ಸ್ತ್ರೀ ಪುರುಷ ಭೇದದ ಅಳತೆಗೋಲು ಬೇಕೇ ?
ಹಿಂಸೆಯಲ್ಲಿಯೂ "ಸ್ತ್ರೀ ಹಿಂಸೆ" ಮತ್ತು "ಪುರುಷ ಹಿಂಸೆ" ಎಂದಿದೆಯೇ ?
ಶೋಷಣೆ ಎಂದಾಗಲೂ "ಸ್ತ್ರೀ ಶೋಷಣೆ" ಮತ್ತು "ಪುರುಷ ಶೋಷಣೆ" ಎಂಬ ಪ್ರತ್ಯೇಕ ಮಣೆ ಇದೆಯೇ ?
ಸಮತೂಕದ ವಿಶ್ಲೇಷಣೆ ಯಾಕಿಲ್ಲ ?
ನಾವೀಗ "ಎಲ್ಲರೂ ಎಲ್ಲರಿಗಾಗಿ ಎಲ್ಲರನ್ನೂ" ಎಂಬ ಪದ ಬಳಕೆಯನ್ನು ಉದ್ದೇಶಪೂರ್ವಕ (?) ವಾಗಿ ಮರೆತಂತೆ ಏಕೆ ವ್ಯವಹರಿಸುತ್ತಿದ್ದೇವೆ ?
ಇದೇ ನೋಡಿ ಚಮತ್ಕಾರ.
ಹೊಟ್ಟೆ ಪಾಡಿನ ಹಣಸಂಪಾದನೆಗಾಗಿ ಅಕ್ಷರವನ್ನು ಬಳಸುವ ಸಹಸ್ರಾರು ಮಂದಿ ಇಂದು ಓಡಾಡುತ್ತಿದ್ದಾರೆ. ದಿನವೂ ಅಕ್ಷರಗಳನ್ನು ಪೋಣಿಸಲೇಬೇಕಾದ ದರ್ದು - ಇಂಥವರದ್ದು. ಶೀಘ್ರವಾಗಿ ಬೆಳಗಿ ತೊಳಗುವ ಅವಸರದಲ್ಲಿರುವ ಸುದ್ದಿ ಬೇಟೆಯ ಇಂತಹ ಶಬ್ದಬ್ರಹ್ಮರುಗಳಿಂದ ನಿತ್ಯವೂ ಪ್ರತಿಭಾ ಪ್ರದರ್ಶನ ನಡೆಯುತ್ತಿರುತ್ತದೆ. ಇವರ ವಿಚಾರಗಳು ಮತ್ತು ಅದಕ್ಕೆ ಪೂರಕವಾದ ದೃಶ್ಯಗಳನ್ನು ಕೇಳಿ ಓದಿ ನೋಡುತ್ತ ಸಾತ್ವಿಕ ಸ್ತ್ರೀ ವರ್ಗಕ್ಕೆ ಗರ ಬಡಿದಂತಾಗಿದೆ. ಸ್ತ್ರೀತ್ವಕ್ಕೆ ಹೊಂದದ "ಉಗ್ರ HORMONE" ನ್ನು ಚುಚ್ಚುಮದ್ದಿನಂತೆ ದಿನವೂ ಸಮಾಜದ ಸ್ತ್ರೀ ಬಳಗಕ್ಕೆ ಊಡಿಸಿ ಧನ್ಯರಾಗುತ್ತಿರುವ ಇಂತಹ ಪ್ರಚಂಡರು ಜಾಗ್ರತರಾಗಬೇಕಾದ ಕಾಲ ಬಂದಿದೆ.
ಇನ್ನು ಸ್ತ್ರೀಯರ ವಿಚಾರಕ್ಕೆ ಬಂದರೆ - "ನಮಗೆ ಗೌರವ ಕೊಡಿ" ಎಂದು ಕೇಳಿಕೊಳ್ಳುವ ಸ್ಥಿತಿ ಯಾರಿಗೂ ಬರಬಾರದು. ಗೌರವ ಎಂಬುದು ನಮ್ಮ ಮಾತು - ಕೃತಿಯಿಂದ ತಾನಾಗಿಯೇ ಹಿಂಬಾಲಿಸಿ ಬರಬೇಕಾದ ಸದ್ಭಾವ. ಕೋಲು ತೋರಿಸಿ ಗೌರವ ಸಂಪಾದಿಸುವುದೂ ಸ್ನೇಹ ಸಂಪಾದಿಸುವುದೂ ಭಯೋತ್ಪಾದನೆಯೇ ಅಲ್ಲವೆ ? ಕೆಲವರಿಗೇಕೆ ಇದು ಅರ್ಥವಾಗುವುದಿಲ್ಲ ? ಸುಲಭದ “ವೇದಿಕೆಯ ಸುಖ”ಕ್ಕಾಗಿ ದ್ರೋಹ ಚಿಂತನೆಯು ಒಳ್ಳೆಯದಲ್ಲ.
ಹೆಣ್ಣಿಗೆ ಆರ್ಥಿಕ ಸ್ವಾವಲಂಬನೆಯು ಬೇಕು. ಹಾಗೆಂದ ಮಾತ್ರಕ್ಕೆ ಆರ್ಥಿಕ ಸ್ವಾವಲಂಬನೆಗಾಗಿ ತಂತ್ರ - ಕುತಂತ್ರಗಳನ್ನೆಲ್ಲ ಮಾಡಬಹುದೆಂದಲ್ಲ. ಸಮಾಜದ ಹರಿವಿನಲ್ಲಿ ಸ್ವಸಾಮರ್ಥ್ಯದಿಂದಲೇ, ತನ್ನ ಇತಿಮಿತಿಯಲ್ಲಿಯೇ ಸ್ವಾವಲಂಬಿಯಾಗುವ ದಾರಿಯನ್ನು ಕಂಡುಕೊಳ್ಳಬೇಕಾಗುತ್ತದೆ. ಅವರವರ ಇತಿಮಿತಿಯನ್ನು ಮೀರಿದಾಗ ಪರಸ್ಪರ ಎಚ್ಚರಿಸುವುದಕ್ಕೂ ಹಿಂಜರಿಯಬಾರದು. ಆದರೆ ಇಂದಿನ ಸಾಮಜಿಕ ವರ್ತನೆಗಳು ವಿಕ್ಷಿಪ್ತವೆನ್ನಿಸುವಷ್ಟು ಆಘಾತಕಾರಿಯಾಗಿವೆ.
ತಪ್ಪು ಎಂದರೆ ತಪ್ಪು. ಸರಿ ಎಂದರೆ ಸರಿ. ಆದರೆ ಬುದ್ಧಿಕಲುಷಿತವಾದ ಇಂದಿನ ಸನ್ನಿವೇಶದಲ್ಲಿ - ಸತ್ಯಕ್ಕೆ ಹತ್ತಿರ, ಸತ್ಯಕ್ಕೆ ದೂರ, ಹೆಚ್ಚು ಸರಿ, ಸಣ್ಣ ತಪ್ಪು- ಇತ್ಯಾದಿ ತರತಮದ ಗೋಳಾಟ ಕಾಣುತ್ತಿದೆ. ಒಂದು ಹೆಣ್ಣು "ಗಂಡನನ್ನು ಹೊಡೆದು ಕೊಂದಳು" - ಎಂದು ಕೇಳಿದ ಕೂಡಲೆ "ಆ ಗಂಡ ಎಂಬ "ರಾಕ್ಷಸ"ನು ಆಕೆಯ ಜೀವ ಹಿಂಡಿರಬೇಕು; ಅದಕ್ಕೇ ಕೊಂದಳು " ಎನ್ನುವ ತಕ್ಷಣದ ಪೂರ್ವಾಗ್ರಹಪೀಡಿತ ಪ್ರತಿಕ್ರಿಯೆ ಸಾಮಾನ್ಯ. ಇದು ಪರೋಕ್ಷವಾಗಿ ಪ್ರತೀಕಾರದ ಜೈ ಜೈಕಾರವಲ್ಲವೇ? ಪ್ರತೀಕಾರಗಳೇ ಆದರ್ಶವೆಂದಾದರೆ ಡಕಾಯಿತ ಮಹಿಳೆಯರಿಗೂ ಗುಡಿ ಕಟ್ಟಿ ಪೂಜಿಸಬಹುದು. ಪ್ರತೀ ಊರಲ್ಲೂ "ಡಕಾಯತಿ ಶಾಸ್ತ್ರ" ಬೋಧಿಸಬಹುದು. ಬದುಕು ತಮಾಷೆಯ ವಸ್ತುವಲ್ಲ. ಒಡಕು ಚಿಂತನೆಗಳು ನಮ್ಮನ್ನು ಎಲ್ಲಿಗೆ ಒಯ್ಯುತ್ತಿವೆ ಎಂದೂ ಯೋಚಿಸಬೇಕಾಗುತ್ತದೆ.
ಜೀವ ಹಿಂಡುವ ಕಲೆಯು ಗಂಡುಗಳಿಗೇ ಮೀಸಲಾದುದೇನಲ್ಲವಲ್ಲ? ಅದು ಮನುಷ್ಯ ಸಹಜವಾದ ಪ್ರಾಣಿಮೂಲ ಗುಣ. ಒಂದು ಮನೆ, ಕಛೇರಿ, ಸಮಾಜದ ಯಾವುದೇ ವ್ಯಕ್ತಿಯೂ ತನ್ನ "ಶಕ್ತ್ಯಾನುಸಾರ" ಪರಸ್ಪರ ಜೀವ ಹಿಂಡುವುದು ಬದುಕಿನ ಸಾಮಾನ್ಯ ಅನುಭವವಲ್ಲವೇ? ಜೀವ ಹಿಂಡುವವರನ್ನೆಲ್ಲ ದೈಹಿಕವಾಗಿ ನಿವಾರಿಸಿಕೊಳ್ಳುತ್ತ ಹೋದರೆ - ಯಾರು ಉಳಿಯಬಹುದು? ಹೆಣ್ಣನ್ನು ವೈಭವೀಕರಿಸುವ ಭರದಲ್ಲಿ, ಸ್ತ್ರೀಭೂತ ಅನಿಷ್ಟಗಳೆಲ್ಲವನ್ನೂ "ಇಷ್ಟ ಇಷ್ಟ ಸಂತುಷ್ಟ" ಎನ್ನುತ್ತ ನಡೆದರೆ, ಸ್ತ್ರೀಯರನ್ನು ಘೋರ ಅಧಃಪತನಕ್ಕೆ ಸಜ್ಜುಗೊಳಿಸುತ್ತಿದ್ದಾರೆಂದೇ ತಿಳಿಯಬೇಕಾಗುತ್ತದೆ.
“ಪ್ರಕೄತಿಸಹಜ”ವಲ್ಲದ ಭೇದ ಭಾವಗಳನ್ನು ಕೃತಕ ಬಣ್ಣ ಹಚ್ಚಿ, ಸೃಷ್ಟಿಸಿ, ಸಮಾಜದ ಒಂದು ವರ್ಗದ ಮನಸ್ಸಿನಲ್ಲಿ ಸ್ತ್ರೀಯರನ್ನು ಖಳನಾಯಕಿಯರಂತೆ ಚಿತ್ರಿಸುತ್ತಿರುವವರು ಸಮಷ್ಟಿಯ ಹಿತಚಿಂತನೆಗೆ ತೊಡಗುವುದು ಯಾವಾಗ ?
ಭಾರತ ದೇಶದ ಬೆನ್ನೆಲುಬೇ ಕುಟುಂಬ. ಒಂದು ಕುಟುಂಬದ ಆಧಾರಸ್ತಂಭಗಳೇ - ಹೆಣ್ಣು ಮತ್ತು ಗಂಡು. ಸುಂದರ ಕುಟುಂಬದ ಕಣ್ಣುಗಳಂತಿರುವ ಇವರು, ಪರಸ್ಪರ ಪ್ರತಿಷ್ಠೆ, ಸಂಶಯದಿಂದ ಮೇಲಾಟ ನಡೆಸುವಂತಾದರೆ ಕುಟುಂಬಗಳ ಗತಿ ಏನು? ಸೄಜನಶೀಲ ಸ್ವಸ್ಥ ಹೆಣ್ಣಿನ ಸ್ವಚ್ಛ ಬದುಕಿನ ತುಂಬ ಕಪ್ಪು ಚಿತ್ತುಗಳನ್ನು ಮೂಡಿಸುವಲ್ಲಿ ಬಾಹ್ಯ ಕೈವಾಡದ ಪಾಲೆಷ್ಟು? ಸ್ವಯಂಕೄತವೆಷ್ಟು?....ಗಂಭೀರ ಚಿಂತನೆಯ ವಸ್ತುವಿದು.
ಗಂಡಾಗಲೀ ಹೆಣ್ಣಾಗಲೀ - ತಮ್ಮ ಶಕ್ತಿ ಸಾಮರ್ಥ್ಯವನ್ನು ಸ್ವಂತ ಮತ್ತು ಅವಲಂಬಿತರ ಉನ್ನತಿಗಾಗಿ ಬಳಸುವಂತಾದರೆ ಆ ಕುಟುಂಬ ಮಾತ್ರವಲ್ಲ; ತನ್ಮೂಲಕ ಸಮಾಜವೂ ಉಳಿಯುತ್ತದೆ. ನೋವುಗಳು, ಅಭಿಪ್ರಾಯ ಭೇದ, ಸಂತಸ ಸಂಭ್ರಮದ ಕ್ಷಣಗಳು, ಹೆಮ್ಮೆಯ ಅನುಭವಗಳು....ಇವೆಲ್ಲವೂ ಎಲ್ಲ ಬದುಕಿನಲ್ಲೂ ಬಂದು ಹೋಗುವ ಅತಿಥಿಗಳು. ಇಂತಹ ಏರಿಳಿತಗಳನ್ನು ನುಂಗಿ ಜೀರ್ಣಿಸಿಕೊಂಡರೆ ಯಾವ ಹೊರಳಾಟ ನರಳಾಟಗಳಿಗೂ ಆಸ್ಪದವಿರಲಾರದು. ಇದೇ ಬದುಕಿನ ಸೂತ್ರ. ನೋವಿನಿಂದ ಮುಕ್ತವಾದ, ನೋವಿನ ಹೋರಾಟವೇ ಇಲ್ಲದ - ಯಾವುದೇ ಯಶಸ್ವೀ ಬದುಕುಂಟೇ ? ಬದುಕಿನ ಕಾಗುಣಿತ ಕಲಿಸುವ ಶಿಕ್ಷಣದ ಕೊರತೆಯೇ ಹಲವಾರು ಸಾಮಾಜಿಕ ಅನಿಷ್ಟಗಳಿಗೆ ಮೂಲ ಹೇತು ಎಂದೂ ಅನ್ನಿಸುವುದಿಲ್ಲವೆ?
ಯಾವುದೇ ಸೂತ್ರದ ಅಳವಿಗೆ ಸಿಗದ ಸ್ವಚ್ಛಂದ ಬದುಕು ಸುಸೂತ್ರವಾಗುವುದಾದರೂ ಹೇಗೆ ? ಕರ್ತವ್ಯದ ಗೊಡವೆಗೇ ಹೋಗದೆ, ಕೇವಲ ಹಕ್ಕಿನ ಪ್ರತಿಪಾದನೆ ಮಾಡುವ ಧಾರ್ಷ್ಟ್ಯದ ಶಿಕ್ಷಣ ಪಡೆದಿರುವ ಇಂದಿನ ಒಂದಿಷ್ಟು ಮಕ್ಕಳು " ನನ್ನನ್ನು ಕೇಳಲು ನೀನ್ಯಾರು ?’ ಎಂದು - ವ್ಯವಸ್ಥಿತವಾಗಿ ಜಗಳ ಕಾಯುವ ಸರ್ವಾಂಗೀಣ ತರಬೇತಿ ಪಡೆಯುತ್ತಿದ್ದಾರೆ. ಕರ್ತವ್ಯಗಳನ್ನು ನೆನಪಿಸುವುದೂ ಶೋಷಣೆ ಎಂದಾಗಿ ಹೋಗಿದೆ. ಪಾಶ್ಚಾತ್ಯರಿಂದ ಏನನ್ನು- ಎಷ್ಟು ಕಲಿಯಬೇಕು ಎಂಬ ಪರಿಜ್ಞಾನವಿಲ್ಲದ ತರಬೇತುದಾರರು ಮತ್ತು ಏನನ್ನು - ಹೇಗೆ - ಎಲ್ಲಿ ಕಲಿಯುತ್ತಿದ್ದಾರೆಂದು ಬಿಲ್ ಕುಲ್ ಗಮನಿಸದ ಹೆತ್ತವರು ಒಟ್ಟಾಗಿ, ನಮ್ಮ ಮುಂದಿನ ಇಡೀ ಪೀಳಿಗೆಯನ್ನೇ ಕುರೂಪಗೊಳಿಸುತ್ತ ಚೆಂದ ನೋಡುತ್ತಿದ್ದಾರೆ.
"ಕಿತ್ತೂರು ಚೆನ್ನಮ್ಮ" ಅಂದರೆ - "ಪಕ್ಕದ ಮನೆಯ ಕೆಲಸದವಳಾ ? " ಎಂದು ಕೇಳುವ ಇಂದಿನ ಪೀಳಿಗೆಯು ನಮ್ಮ ಪುರಾಣ ಇತಿಹಾಸವನ್ನು ಓದಿ ತಿಳಿಯುವುದು ಬಹಳಷ್ಟಿದೆ. ಹೊಡೆದಾಡಿಕೊಳ್ಳುವುದನ್ನೇ ಎದ್ದೂಬಿದ್ದೂ ತೋರಿಸುವ ಒಂದಿಷ್ಟು ಮಾಧ್ಯಮಗಳು ಸುದ್ದಿಯ ಹೆಸರಿನಲ್ಲಿ ಹೆಸರು ಮಾಡುತ್ತ ಏನನ್ನು ಸಿದ್ಧಿಸಲು ಹೊರಟಿವೆಯೋ ಗೊತ್ತಿಲ್ಲ. ಶುದ್ಧತೆಯನ್ನು ವಿಕ್ರಯಕ್ಕಿಟ್ಟಂತಿದೆ. ಯಾರನ್ನು ನಂಬುವುದು, ಏನನ್ನು ನಂಬುವುದು ಎಂಬ ಗೊಂದಲದ ಸನ್ನಿವೇಶ ತುಂಬಿಕೊಂಡಿದೆ. ಮುಕ್ತವಾಗಿ ಭಿಕ್ಷೆ ನೀಡುವುದಕ್ಕೂ ಹಿಂಜರಿಯುವ ಸ್ಥಿತಿ ನಿರ್ಮಾಣವಾಗಿದೆ. ಎಲ್ಲರನ್ನೂ ಸಂಶಯದಿಂದಲೇ ನೋಡಬೇಕಾದ ಅವ್ಯಕ್ತ ಭಯ ಹುಟ್ಟಿದೆ. ಪ್ರಾಮಾಣಿಕತೆಯೆಂಬುದು ನಗೆಪಾಟಲಾಗುತ್ತಿದೆ. ಶಿಕ್ಷಣ ಎಲ್ಲಿ ಸೋತಿದೆ ? ಎಲ್ಲೋ ಕಳೆದು ಹೋಗಿದೆಯೇ ?
ಗುರುಹಿರಿಯರನ್ನು ಗೌರವಿಸುವುದು...ಅನುಭವವೆಂಬ ಜೀವನ ಪಾಠಕ್ಕೆ ಪೂರ್ಣ ಶರಣಾಗುವುದು ಏಕೆ ಮತ್ತು ಹೇಗೆ ಎಂದು ನಮ್ಮ ಮಕ್ಕಳಿಗೆ ಮನದಟ್ಟು ಮಾಡಿಸುವುದು ಬೇಡವೆ? ಶಿಕ್ಷೆ ಇಲ್ಲದ ಶಿಕ್ಷಣವು ಮುಳುಗುವುದನ್ನು ಮಾತ್ರ ಕಲಿಸಬಹುದು. ಶಿಕ್ಷೆ ಎನ್ನುವುದು ಲೈಫ಼್ ಜಾಕೆಟ್ ಇದ್ದಂತೆ. ಬದುಕಿನ ಮಡುವಿನಲ್ಲಿ ಸಿಗುವ ಸುಳಿಗಳಿರುವ ಸ್ಥಳ ಸನ್ನಿವೇಶಗಳನ್ನು ಬದುಕಿನುದ್ದಕ್ಕೂ ಮರೆಯದಂತೆ memoryಯಲ್ಲಿ save ಮಾಡಿಕೊಳ್ಳುವ ತಂತ್ರಾಂಶವೇ – ಹಿತಮಿತದ ಶಿಕ್ಷೆ. ಸಮರ್ಥ ಗುರುವೊಬ್ಬ – ಶಿಕ್ಷೆಯ dosage ನ್ನು ಸರಿಯಾಗಿಯೇ ನಿರ್ಧರಿಸಬಲ್ಲ. ಸಮರ್ಥ ಗುರುವಿನ ಆಯ್ಕೆಯಲ್ಲಿಯೇ ನಾವು ಸೋತಿದ್ದರೆ ಅದಕ್ಕೆ ಶಿಕ್ಷಣದ ಸ್ವರೂಪವನ್ನು ವಿರೂಪಗೊಳಿಸಿ, ಹೊಸಯುಗದ ಹೆಸರಿನಲ್ಲಿ ಅಡ್ಡದಾರಿ ಹಿಡಿಯುವುದು ಪರಿಹಾರವಲ್ಲ. ಅದರ ಅಗತ್ಯವೂ ಭಾರತ ದೇಶಕ್ಕೆ ಬಂದಿಲ್ಲ. ಶಿಕ್ಷಣದ ಬಲಿಷ್ಠ ಪರಂಪರೆಯುಳ್ಳ ನಮ್ಮ ದೇಶದ ಇಂದಿನ ಶಿಕ್ಷಣವು, ಪರದೇಶೀ ಫ಼್ಯಾಶನ್ನಿನ ಹಿಂದೆ ಬಿದ್ದು ನಮ್ಮ ನೆಲದ ಅಮೂಲ್ಯ "ಗುರುಪದ್ಧತಿ"ಯ ಉತ್ತಮಾಂಶಗಳನೆಲ್ಲ ಬದಿಗೆ ಸರಿಸಿ ಇಟ್ಟಿದೆ. ವಿದ್ಯಾ ಸಂಸ್ಕಾರ ಪಡೆಯುವಾಗ ದಯೆ ಕರುಣೆಗಳೆಲ್ಲವೂ ಹಿಂದೆ ಸರಿಯಲೇಬೇಕು. ಶಿಸ್ತು ಎಂಬುದು ವಿದ್ಯೆಯ ಆಧಾರ ಸ್ತಂಭ. ವಿದ್ಯಾರ್ಥಿದೆಸೆ ಎಂದರೆ ಗೌರವ ಕೊಡುವುದನ್ನು ಕಲಿಯುವ ಕಾಲ. ಪ್ರತಿಯಾಗಿ ತುಂಬು ಮನಸ್ಸಿನಿಂದ ಗುರುವು ನೀಡುವ ಜ್ಞಾನವನ್ನು ಪಡೆದುಕೊಳ್ಳುವ ಕಾಲ. ಆದರೆ ಪರಿಸ್ಥಿತಿ ಹಾಗಿಲ್ಲ. ಗುರು ಗುರುವಿನಂತಿಲ್ಲ. ಶಿಷ್ಯ ಶಿಷ್ಯನಂತೆಯೂ ಇಲ್ಲ. ಹೆತ್ತವರು - ಮಕ್ಕಳ ಸಂಬಂಧಗಳೂ - "ಹಲೋ ಹಲೋ" ಮಟ್ಟಕ್ಕೆ ಇಳಿದಿದೆ. ಹಕ್ಕುಗಳ ಅಡಾವುಡಿಯು ಊರೆಲ್ಲಾ ತುಂಬಿ, ಈಗ ಮನೆಮನೆಯ ಹೊಸ್ತಿಲೊಳಗೂ ತುಂಬುತ್ತಿದೆ. ತಂದೆಯೊಬ್ಬ ಸಕಾರಣವಾಗಿ ತನ್ನ ಮಗುವಿನ ಹಿತದೄಷ್ಟಿಯಿಂದ ಶಿಕ್ಷಿಸಿದರೆ, ಆ ಮಗುವು, ತನ್ನ ತಂದೆಯ ಮೇಲೇ ಕ್ರಿಮಿನಲ್ ಪ್ರಕರಣ ದಾಖಲಿಸುವಂತಹ ಪ್ರಸಂಗಗಳು ಈಗೀಗ ಭಾರತ ದೇಶದಲ್ಲಿಯೂ ಬಯಲಾಗುತ್ತಿದೆ. ಮೌಲ್ಯಗಳ ಅರಿವು ಮೂಡಿಸದ ಇಂದಿನ ಶಿಕ್ಷಣವು ನಮ್ಮನ್ನು ಎಲ್ಲಿಗೆ ಕೊಂಡೊಯ್ಯುತ್ತಿದೆ ? ಕಾನೂನನ್ನೇ ಕೊರೆದು ಸ್ವಚ್ಛಂದ ದಾರಿ ಕಂಡುಕೊಳ್ಳುವ ಅಥರ್ವಣ ವಿದ್ಯೆಯತ್ತ ತಳ್ಳುತ್ತಿದೆಯೇ?
ಇಷ್ಟೇ ಅಲ್ಲ "ಬಾಲಕಿಯ ಮೇಲೆ ಅತ್ಯಾಚಾರ ನಡೆಯಿತು " ಎಂದು ಮಕ್ಕಳಿಂದ ಸುಳ್ಳು ಹೇಳಿಸಿ, ಆ ಮಗುವಿನ ಹೆತ್ತವರ ಉಸ್ತುವಾರಿಯಲ್ಲಿಯೇ ಹೆದರಿಸಿ, ಹಣ ಮಾಡುವ ಧಂದೆಗೆ ಓನಾಮವಾಗಿದೆ ! ಶಿಕ್ಷಣದ ವ್ಯಾಪಾರವನ್ನು ಹತ್ತಿರದಿಂದ ಕಾಣುತ್ತಿರುವ ಮಕ್ಕಳು ಮತ್ತು ಸಮಾಜ – ಒಟ್ಟಾರೆಯಾಗಿ ಇಡೀ ಬದುಕನ್ನೇ “ವ್ಯಾಪಾರ” ವ್ಯವಹಾರದ ರಂಗಸ್ಥಳವಾಗಿ ಪರಿವರ್ತಿಸಿಕೊಳ್ಳುತ್ತಿವೆ. ಇಂತಹ ಒಂದೊಂದು ಘಟನೆಯೂ ಭವಿಷ್ಯದಲ್ಲಿ ಸಂಭವಿಸಬಹುದಾದ ಅನಾಹುತಗಳ ಪೂರ್ವ ಲಕ್ಷಣಗಳು. ಸಮಾಜವಿರೋಧೀ ಶಕ್ತಿಗಳಿಗೆ ಹುಲುಸಾದ ಆಡುಂಬೊಲವನ್ನು ಒದಗಿಸುವಂತೆ ಕಾಣುತ್ತಿದೆಯೇ !
"ಹೆಣ್ಣಿಗೆ ಲಜ್ಜೆಯೇ ಆಭರಣ! " ಹಾಗೆಂದು ಹೇಳಿ ನೋಡಿ...ನಿಮ್ಮನ್ನು ಕಚ್ಚಿ ಚೂರುಮಾಡಿ ಬಿಸಾಡುತ್ತಾರೆ. ನಾಚಿಕೆಯುಳ್ಳ ಹೆಣ್ಣಿಗೆ, ಮರ್ಯಾದೆಯ ವ್ಯಾಖ್ಯೆಯಂತೆ ಡೀಸೆಂಟ್ ಆಗಿ ಗದ್ದಲ ಮಾಡದೆ ಬದುಕುತ್ತಿರುವವರಿಗೆ ಈಗ ಯಾವ ಕಿಮ್ಮತ್ತೂ ಇಲ್ಲವೇನೋ...ಅನ್ನಿಸುವುದೂ ಇದೆ. ರಸ್ತೆಯಲ್ಲಿ ನಿಂತುಕೊಂಡು ಎರಡೂ ಕಾಲನ್ನೆತ್ತಿ ಒದೆಯುತ್ತ, ಸೊಂಟದ ಪಟ್ಟಿಯನ್ನು ಕಿತ್ತು ಅವರಿವರನ್ನು ಥಳಿಸುತ್ತ, ಅಂತಹ ಚಿತ್ರೀಕರಣವನ್ನು (ಪೂರ್ವ ಯೋಜಿತವೇ ಎಂಬ ಸಂಶಯ ಬಂದರೂ ಅದನ್ನೂ ಸ್ತ್ರೀ ವಿರೋಧಿ ಚಿಂತನೆಯೆಂದಾರು) ಆಧರಿಸಿ ದಿನಗಟ್ಟಲೆ ನಡೆಸುವ ಚರ್ವಿತಚರ್ವಣ ಚರ್ಚೆಗಳ ಪ್ರಧಾನ ಪಾತ್ರಧಾರಿಗಳಿಗೆ ಕೆಟ್ಟ ಪ್ರಚಾರ, ಪ್ರಶಸ್ತಿ, ಮುಂಬಡ್ತಿ(?) ಯೂ ಸಿಗುತ್ತದಂತೆ! ಸಾರಾಂಶ ಏನೆಂದರೆ, "ರಸ್ತೆಯಲ್ಲಿ “ಕ್ಯಾರೇ” ಎನ್ನುತ್ತ ಒದೆಯಿರಿ, ಥಳಿಸಿರಿ, ರಸ್ತೆಯನ್ನು ರಣರಂಗ ಮಾಡಿ" ಎಂಬ ಸಂದೇಶವನ್ನು ಸ್ತ್ರೀ ಜಗತ್ತಿಗೆ ನೀಡುತ್ತಿರಬಹುದೇ? ಇದೂ “ಓಲೈಕೆಯೆಂಬ ಹಿಂಸೆ”ಯ ವೈಭವೀಕರಣವಲ್ಲವೇ? ಸ್ತ್ರೀಯರನ್ನು ಉಗ್ರಗಾಮಿಗಳನ್ನಾಗಿಸಿ, ಗುರಾಣಿಯಂತೆ ಅವರ “ಉಪಯೋಗ” ಪಡೆಯುವ ಹುನ್ನಾರವೇ? ಅಥವ ತೂಕಡಿಸಿ ಬೀಳುತ್ತಿರುವ ಅಣ್ಣ ತಮ್ಮಂದಿರ ಸಗಟು ಬೇಜವಾಬ್ದಾರಿಯೇ?
ಎಲ್ಲರಿಗೂ ಎಲ್ಲ ಕಾಲಕ್ಕೂ ಉಗ್ರತನದಿಂದ ಗೆಲುವು ಸಿಗಬಹುದೇ? ಎದುರು ಪಕ್ಷವು ಪ್ರತೀಕಾರಕ್ಕೆ ಪ್ರಾರಂಭಿಸಿದರೆ ಆಗ ಏನಾಗಬಹುದು? ಪ್ರತೀ ಮನೆಯ ಎದುರಿನಲ್ಲೂ ಪೋಲೀಸರನ್ನು ಇಡುವುದು ಸಾಧ್ಯವೇ? ಒಬ್ಬ ಪೋಲೀಸ್ - ಎಷ್ಟು ಜನರನ್ನು ಕಾದಾನು?
ಸ್ವಂತ ರಕ್ಷಣೆ ಎಂಬ ಪದಕ್ಕೆ ಇಂದು ನೀಡುತ್ತಿರುವ ಸೌಲಭ್ಯಗಳ ಪಟ್ಟಿ (ಮೆಣಸಿನ ಹುಡಿ...ಇತ್ಯಾದಿ..) ನೋಡಿದರೆ, ಇವು ಯಾವುವೂ ಪೂರ್ಣರಕ್ಷಣೆಯ ಸಾಧನಗಳಲ್ಲ ಎಂಬುದು ಸ್ತ್ರೀಯರಿಗೆ ಅರ್ಥವಾಗಬೇಕು. ದೈಹಿಕವಾಗಿ ಗಂಡಿಗಿಂತ ದುರ್ಬಲವಾಗಿರುವ ಪ್ರಕೃತಿ ಹೆಣ್ಣಿನದು; ಮಾತ್ರವಲ್ಲ - ಮನುಷ್ಯ ಜಾತಿಯ ಹೆಣ್ಣಿಗೆ ಕ್ರೌರ್ಯವೆಂಬುದು ಒಗ್ಗುವುದಿಲ್ಲ. ಮೆತ್ತಿಕೊಂಡ ತನ್ನದಲ್ಲದ ಗುಣವೆಂಬ ಬಣ್ಣವು ಶಾಶ್ವತವಲ್ಲ ಎಂಬ ಸತ್ಯವನ್ನು ಒಪ್ಪಬೇಕು. ಆದರೆ ಬೌದ್ಧಿಕ ಸ್ಪರ್ಧೆಯಿಂದ ಹೆಣ್ಣನ್ನು ಯಾರೂ ಹಿಂದೆ ತಳ್ಳುವುದು ಸಾಧ್ಯವಿಲ್ಲ. ಬೌದ್ಧಿಕವಾಗಿ ಎಷ್ಟೋ ಬಾರಿ ಗಂಡಿಗಿಂತ ಒಂದು ಹೆಜ್ಜೆ ಮುಂದೆಯೇ ಇರುವ ಹೆಣ್ಣು, ಬುದ್ಧಿ ಸಂಬಂಧಿತ ಕ್ಷೇತ್ರಗಳಲ್ಲಿ ಹೆಚ್ಚು ಸುರಕ್ಷಿತವಾಗಿ ತನ್ನ ಪ್ರತಿಭೆ ತೋರಬಹುದು. ಈ ಹಂತದಲ್ಲೂ "ಎಚ್ಚರ"ದ ನಡೆ ನುಡಿಯ ಕ್ರಿಯಾಶೈಲಿಯನ್ನು ಬೆಳೆಸಿಕೊಂಡಾಗ ಮಾತ್ರ ಸ್ವರಕ್ಷಣೆಯ ನೆಮ್ಮದಿ ಕಾಣುವುದು ಸಾಧ್ಯ. ಬಾಹ್ಯ ರಕ್ಷಣೆಯನ್ನೇ ನಂಬಿ “ಹಾರುವ - ಹೋರುವ” ಪ್ರವೃತ್ತಿಯಿಂದ ಯಾವ ಹೆಣ್ಣಿಗೂ ಒಳಿತಾಗದು. ಪ್ರತಿಯೊಂದು ಕ್ರಿಯೆಗೂ ಪ್ರತಿಕ್ರಿಯೆ ನೀಡುತ್ತ ಬಂದರೆ - ಬಡ್ಡಿ ಬಿಡಿ ; ಅಸಲೂ ಇಲ್ಲದಂತಾದೀತು. ಅಹಂಕಾರಕ್ಕೆ – ಉದಾಸೀನಕ್ಕಿಂತ ದೊಡ್ಡ ಮದ್ದೇ ಇಲ್ಲ.
ಈಗ ಏನಾಗಿದೆ ಅಂದರೆ, ರೌಡಿಗಳು ಉಪಯೋಗಿಸುವ ಭಾಷೆ ಭಾವ ಚೇಷ್ಟೆಗಳನ್ನು ಕೆಲವು ಸ್ತ್ರೀಯರು ಪ್ರಯೋಗಿಸತೊಡಗಿದ್ದಾರೆ. “ಅರ್ಧ ರಾತ್ರಿಯಲ್ಲಿ ನಾವು ಒಬ್ಬೊಬ್ಬರೇ ಓಡಾಡುತ್ತೇವೆ.. ಏನೀಗ? ಏನು ಮಾಡುತ್ತೀರಿ? ನಮಗೂ ಸ್ವಾತಂತ್ರ್ಯವಿದೆ. ಕೇಳಲು ನೀವ್ಯಾರು?" ಇತ್ಯಾದಿ ಡುರಕಿ ಹಾರಿಸುತ್ತ, ಅದೇ ಉಸಿರಿನಲ್ಲಿ “ನಮಗೆ ರಕ್ಷಣೆ ಕೊಡುವುದು ನಿಮ್ಮ ಕರ್ತವ್ಯ”ಎಂದೂ ವಿರೋಧಾಭಾಸದ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಹೀಗೆ ಸ್ತ್ರೀಯರ ಮುಖವಾಣಿಯಂತೆ ಬಳಕೆಯಾಗುತ್ತಿರುವ ಕೆಲವು “ಗಟ್ಟಿಗಿತ್ತಿ ವಿದ್ವನ್ಮಣಿಗಳು” ಬಹಿರಂಗ ಸವಾಲನ್ನೂ ಹಾಕಿದಂತೆ ಕಾಣುವುದಿದೆ. (ತಮ್ಮ ಸ್ವರಕ್ಷಣೆಯನ್ನು ಮಜಬೂತಾಗಿ ಮಾಡಿಕೊಂಡು, ಇತರ ಮುಗ್ಧ ಸ್ತ್ರೀಯರನ್ನು ಎತ್ತಿ ಕಟ್ಟುತ್ತಿದ್ದಾರೆಯೆ?) ಇಂತಹ ಸವಾಲುಗಳಿಗೆ ಉತ್ತರವಾಗಿ, ಕೆಲವು ಪುರುಷಶ್ರೇಷ್ಠರೆಂದು ತಮಗೆ ತಾವೇ ಅಂದುಕೊಂಡಿರುವವರು "ನಾವು ನಿಮ್ಮನ್ನು ಹಾಡಹಗಲೇ ಹೊತ್ತೊಯ್ದು ಪೀಡಿಸುತ್ತೇವೆ" ಎಂದು ಪ್ರತಿಜ್ಞೆ ಮಾಡುತ್ತಾರೆ. (ಇಂತಹ ಮೂಢರಿಗೆ ಬಲಿಪಶುವಾಗುವುದು ಯಾವುದೋ ಬಡಪಾಯಿ!) ಎಲ್ಲೆಲ್ಲೂ ಪೌರುಷದ ಅಬ್ಬರ! ಸ್ತ್ರೀಯರು ತಮ್ಮ ಓಟವನ್ನು ಕ್ಷಣಕಾಲ ನಿಲ್ಲಿಸಿ, ನಾವೆಲ್ಲಿದ್ದೇವೆ ಎಂದು ನೋಡಿಕೊಳ್ಳಬೇಕಾದ ಕಾಲ ಬಂದಿದೆ. ಶಬ್ದಗಳನ್ನು ಒಡೆದು ಒಡೆದು ಕಟ್ಟುತ್ತ, ನವ್ಯಾರ್ಥಗಳನ್ನು ಅನ್ವೇಷಿಸುತ್ತ, ಮಾಧ್ಯಮಗಳಲ್ಲಿ ಗಂಟೆಗಟ್ಟಲೆ ಗಂಟಲು ಕೆರೆದುಕೊಳ್ಳುವ ಒಣಚರ್ಚೆಗಳಿಂದಲೂ ಸ್ತ್ರೀಯರು ತಮ್ಮನ್ನು ತಾವೇ ರಕ್ಷಿಸಿಕೊಳ್ಳಬೇಕಾಗಿದೆ. ಮಾತಿನಲ್ಲೇ ಮನೆ ಕಟ್ಟುತ್ತ "ಗೌರವಧನ" ದಿಂದ ಗೌರವ ಪಡೆದು ಬದುಕು ಸಾಗಿಸುತ್ತಿರುವ ಇಂತಹ "ಮುಖವಾಣಿ" ಗಳನ್ನು ನಾವು ಎಷ್ಟು ಸ್ವೀಕರಿಸಬೇಕು ಎಂಬ ಸ್ಪಷ್ಟತೆಯೂ ಬೇಕಾಗಿದೆ. ಈ ಎಲ್ಲ ಬವಣೆಗಳಿಂದ ಪಾರಾಗಿ ನಿತ್ಯದ ಬದುಕನ್ನು ಮೌನವಾಗಿ ಸಹನೆಯಿಂದ ಸುಂದರವಾಗಿ ಕಟ್ಟುತ್ತಿರುವ ಸ್ತ್ರೀಯರು ನಿಜವಾಗಿಯೂ "ಗಟ್ಟಿಗಿತ್ತಿ"ಯರಲ್ಲವೇ ?
ಸ್ವಾತಂತ್ರ್ಯಕ್ಕೆ ಬಿಡುಬೀಸಾದ ಸ್ವಚ್ಛಂದತೆಯೆಂಬ ಅರ್ಥ ಮಾಡಬಾರದು. ನಿಶ್ಚಯವಾಗಿ - ಧೈರ್ಯ ಎಂಬುದು ಬೇಕು; ಜೊತೆಗೆ ವಿವೇಕವೂ ಬೇಕು. ನಮ್ಮ ವರ್ತನೆಗಳ ತತ್ಪರಿಣಾಮಗಳ ಚಿಂತೆಯೂ ಬೇಕು. ಸುಮ್ಮನೆ ಸದ್ದುಗದ್ದಲ ಮಾಡಿ ಏನು ಪ್ರಯೋಜನ ?
ಶೋಷಣೆ ಅಂದರೆ - "ಶೋಷಣೆ". ಅಷ್ಟೆ. ಹೆಣ್ಣಿನ ಶೋಷಣೆ ಮಾತ್ರ ನಿಜವಾದ ವೇದನೆ; ಉಳಿದ ವೇದನೆಗಳು ನಗಣ್ಯ ಎಂದಾಗಬಾರದು. ಗಂಡಿನ ಶೋಷಣೆಯಲ್ಲೂ ವೇದನೆ ಇದೆ. ಹೆಚ್ಚು ಶೋಷಣೆ, ಕಡಿಮೆ ಶೋಷಣೆ, ನಿನ್ನೆ ಮೊನ್ನೆಯ ಶೋಷಣೆ, ಶತಶತಮಾನದ ಶೋಷಣೆ ಮತ್ತು ಅದಕ್ಕಾಗಿ ಅಧಿಕೃತವಾಗಿ ನಡೆಸುತ್ತಿರುವ ಪ್ರತಿಶೋಷಣೆ - ಮುಂತಾದ ಶಾಬ್ದಿಕ ಶೋಷಣೆಗೆ ಇಳಿದಿರುವ ಕ್ರೂರ ಮನಸ್ಸುಗಳಿಂದ ಪಾರಾಗುವುದು ಹೇಗೆ ಎಂಬ ವಿಚಾರವು ಮಾತ್ರ ಇಂದಿಗೆ ಹೆಚ್ಚು ಪ್ರಸ್ತುತ.
"ನಮ್ಮತನ"ವನ್ನು ಉಳಿಸಿಕೊಳ್ಳುವ ಇಚ್ಛೆಯೆಂಬುದು ಹೆಣ್ಣಿಗೆ ಇರುವುದೇ ಹೌದಾದರೆ ಹೆಣ್ತನ ಉಳಿಸಿಕೊಳ್ಳಲಿ. ಹೆಣ್ಣು ಹೆಣ್ಣಿನಂತೇ ಇರಲಿ; ಗಂಡು ಗಂಡಿನಂತೇ ಇರಲಿ. ಅಸಹಜಗಳ ವೈಭವೀಕರಣದಿಂದ ವಸ್ತುಸ್ಥಿತಿ ಬದಲಾಗಲಾರದು; ವಿಕೃತಿ ಹೆಚ್ಚಬಹುದು - ಅಷ್ಟೆ.
ಹೆಣ್ಣು ನೌಕರಿ ಮಾಡಿದರೆ ಗಂಡಾಗುವುದಿಲ್ಲ. ಗಂಡನಿಗೆ ಹೊಡೆದರೂ ಗಂಡಾಗುವುದಿಲ್ಲ. ಎಷ್ಟೇ ಕೂಗಾಡಿದರೂ ಗಂಡಾಗುವುದಿಲ್ಲ. ಮಂಗಳನನ್ನು ಮುಟ್ಟಿ ಬಂದರೂ ಗಂಡಾಗುವುದಿಲ್ಲ. ಅಂದ ಮಾತ್ರಕ್ಕೇ ಹೆಣ್ಣು ಕೀಳಾಗುವುದೂ ಇಲ್ಲ; ಗಂಡು ಮೇಲಾಗುವುದೂ ಇಲ್ಲ. ಅನಾರೋಗ್ಯಕರ ಸ್ಪರ್ಧೆಯಿಂದ ಸಮಾಜವು ಕಲುಷಿತವಾಗಬಹುದು; ದೀರ್ಘಕಾಲದವರೆಗೆ ದುಷ್ಪರಿಣಾಮವೆಂಬ ಹೊರೆಯನ್ನೂ ಹೊರಬೇಕಾಗಬಹುದು. ವಿಕಸಿತ ನಾಗರಿಕತೆಯನ್ನು ಮುಕ್ಕಾಗಿಸುವುದು ಬೇಡ.
ಬದುಕು ಎಂದರೆ Missed Call ಅಲ್ಲ. ಆದರೆ ಬದುಕಿನ Call ಮಾತ್ರ Miss ಆಗಬಾರದು; Miss ಮಾಡಿಕೊಳ್ಳಬಾರದು. ಸ್ವಚ್ಛ ಚಿಂತನೆಗಳಿಗೆ ಮುಕ್ತರಾಗಿರಬೇಕು. ನೇತ್ಯಾತ್ಮಕ ವಿಷಯಗಳ ಗೊಡವೆಯನ್ನೇ ಬಿಡಬೇಕು. ಸ್ತ್ರೀತ್ವದ ಒಂದೊಂದು ಕೋಟೆಯೂ ಭದ್ರವಾಗಿರಲು ಕೋಟೆಯ ಬಾಗಿಲಿನ ಕೀಲಿ ಕೈ ನಮ್ಮಲ್ಲೇ ಇರಬೇಕು. "ಶಕ್ತಿ ಸ್ವರೂಪಿಣಿ" ಎಂದು ಉಬ್ಬಿಸಿದರೆ ಅದರ ಅಂತರಾರ್ಥ ಮತ್ತು ವ್ಯಾಪಕ ಅರ್ಥವನ್ನು ತಿಳಿದುಕೊಳ್ಳುವಷ್ಟಾದರೂ ಪ್ರಬುದ್ಧತೆಯನ್ನು ಬೆಳೆಸಿಕೊಳ್ಳುವುದಕ್ಕೆ ನಮ್ಮ ಶಿಕ್ಷಣವೂ ಬೆಂಬಲಿಸಬೇಕು. ಇಂದಿನ ಶಿಕ್ಷಣ ರಂಗವು ದಿಕ್ಕು ದೆಸೆಯಿಲ್ಲದಂತಾಗಿ ಹಳಿ ತಪ್ಪಿದೆ. ಓದುವುದು ಯಾಕೆ? ಏನನ್ನು ಓದಬೇಕು? ಯಾರಿಗೂ ಗೊತ್ತಿಲ್ಲ. ಪ್ರತೀ ಮಗುವಿನ ಅಭಿರುಚಿಯನ್ನು ಅರಿತು ನೀರೆರೆಯುವವರೂ ಇಲ್ಲ. ಸಬಲ ವ್ಯಕ್ತಿತ್ವ ನಿರ್ಮಾಣಕ್ಕೆ ಪೂರಕವಾದ ಶಿಕ್ಷಣವಾದರೂ ಉಂಟೇ? ಗುಣಪ್ರೇರಕವಾದ ಶಿಕ್ಷಣ ಬೇಡವೆ? ಹಣ ಸಂಪಾದನೆಯ ಗುರಿ ಹೊತ್ತ ಶಿಕ್ಷಣ ಒಂದೇ ಸಾಕೆ? ಮೌಲ್ಯಗಳನ್ನೆಲ್ಲ ಕೆಟ್ಟ ರಾಜಕೀಯದೊಂದಿಗೆ ಪಾಣಿಗ್ರಹಣ ಮಾಡುತ್ತ ಹೋದರೆ ಗತಿಯೇನು? ಮಕ್ಕಳ ಮನಸ್ಸನ್ನು ಅರಳಿಸಬೇಕಾದ ನೆಲ - ನೆಲೆಗಳಲ್ಲಿ, ಮನಸ್ಸನ್ನು ಕೆರಳಿಸುವ ಸತತ ಹುನ್ನಾರಗಳು ನಡೆಯುತ್ತಿದ್ದರೆ ಭದ್ರ ಭವಿಷ್ಯವು ನನಸಾಗುವುದಾದರೂ ಹೇಗೆ? ತಾಂತ್ರಿಕ ಯಾಂತ್ರಿಕ ಉನ್ನತಿಯಿಂದ ಯಂತ್ರ ಮಾನವರುಗಳನ್ನೇ ನಿರ್ಮಿಸುತ್ತ, ಭಾವನಾತ್ಮಕವಾದ ಸೂಕ್ಷ್ಮ ಭಾವ, ಮಾನವೀಯ ಪ್ರವೃತ್ತಿಗಳನ್ನು ಚಿವುಟುತ್ತ ಹೋಗಿ, ಕೊನೆಯಲ್ಲಿ, ಹೆಣ್ಣು-ಗಂಡುಗಳ ಕುರಿತು ದಿನವಿಡೀ ಆಡಿಕೊಂಡು, ಗಂಟಲು ಹರಿದುಕೊಂಡು ಸಾಧಿಸುವುದಾದರೂ ಏನು ?
ಈಗೂ ತನ್ನ ಮಕ್ಕಳು, ತನ್ನ ಕುಟುಂಬವೆಂದು ಹಂಬಲಿಸುತ್ತ ಸ್ವಗೃಹದ ದೇವತೆಯಂತೆ ಬದುಕನ್ನು ಪ್ರೀತಿಯಿಂದ ಪೋಷಿಸುತ್ತಿರುವ ಲಕ್ಷಾಂತರ ಸ್ತ್ರೀಯರಿದ್ದಾರೆ. ಅಂತಹ ಸ್ತ್ರೀರತ್ನಗಳಿಂದಲೇ ಎಷ್ಟೋ ಬದುಕುಗಳು ಸ್ವರ್ಗವಾಗಿವೆ; ಆಗುತ್ತಿವೆ. ತನ್ನ ಸುತ್ತಲಿನ ಬದುಕುಗಳನ್ನೂ ಸಹನೀಯವಾಗಿಸುತ್ತ ನಿಃಸ್ವಾರ್ಥ "ಸೇವೆ" ನಡೆಸುತ್ತಿರುವ ಸ್ತ್ರೀಯರನ್ನು ದೇವತೆಯೆಂದರೆ ಯಾರೂ ಚಕಾರವೆತ್ತಲಾರರು; ಬದಲಿಗೆ ಕೈ ಮುಗಿದಾರು. ಸಹನೆ, ತ್ಯಾಗ, ಪ್ರೀತಿಯನ್ನೇ ಉಂಡು ಉಣಿಸುತ್ತಿರುವ ಇಂತಹ ಕಷ್ಟ ಸಹಿಷ್ಣು ಸ್ತ್ರೀಯರನ್ನೂ ಘರ್ಷಣೆಗೆ ಪ್ರಚೋದಿಸುವ ಅನುದ್ದೇಶಿತ ಹುನ್ನಾರವು ಈಗ, ಸದ್ದುಗದ್ದಲದೊಂದಿಗೆ ನಡೆಯುತ್ತಿದೆ. ಕಷ್ಟವಿಲ್ಲದೆ ಸುಖ ಬಾಚುವ, ಅವರ ಟೋಪಿ ತೆಗೆದು ಇವರಿಗೆ ಹಾಕುವ ಬಗೆಬಗೆಯ ದಾರಿಗಳನ್ನು ಪರೋಕ್ಷವಾಗಿ, ಸೋದಾಹರಣವಾಗಿಯೂ ನಿರೂಪಿಸಲಾಗುತ್ತಿದೆ. ದಿನಕ್ಕೊಂದು ನಾಟಕ ಪ್ರದರ್ಶನವೂ ನಡೆಯುತ್ತಿದೆ. ಬುದ್ಧಿ ಹೇಳುವ ಅಪ್ಪ ಅಮ್ಮ ಅಜ್ಜ ಅಜ್ಜಿ ಅತ್ತೆ ಮಾವ- ಯಾರೂ ಬೇಡವಾಗುತ್ತಿದೆ; ಅವರಿಗೆಲ್ಲ "OLD FURNITURE" ನ ಸ್ಥಾನಮಾನ ಕೊಟ್ಟಾಗಿದೆ. ಬುದ್ಧಿ ಜಿಡುಕಾಗಿ ಕಗ್ಗಂಟಾದ ಮೇಲೆ ಕರೆಸಿ, ಬುದ್ಧಿ ಹೇಳುವ ವ್ಯಾಪಾರ ನಡೆಸುವವರಿಗೆ (COUNSELLING) ಸುಭಿಕ್ಷ ಕಾಲ ಬಂದಿದೆ. ಪುರಂದರದಾಸರು ಹೇಳಿದ್ದ ಬುದ್ಧಿಮಾತು ಆಕ್ಷೇಪಾರ್ಹವೆಂದಾಗಿ, ಯಾರ್ಯಾರಿಗೋ ದುಡ್ಡು ಕೊಟ್ಟೇ ಬುದ್ಧಿ ಹೇಳಿಸಿಕೊಳ್ಳುವ ಗ್ರಹಚಾರವೂ ಬಡಿದಾಗಿದೆ; ತನ್ಮೂಲಕ ಬುದ್ಧಿಮಾತಿನ ಮೌಲ್ಯವರ್ಧನೆಯಾಗಿದೆ.
ಗೊಣಗಾಡುತ್ತ ದೂರುತ್ತ ತನ್ನೊಳಗಿನ ಹಿಂಸೆಯನ್ನು ಹಗುರಗೊಳಿಸಿಕೊಳ್ಳುವುದು ಸಾಮಾನ್ಯವಾಗಿ ಗಂಡಸಿನ ಜಾಯಮಾನವಲ್ಲ. ಅದು ಗಂಡಸಿನ ಸಹಜ ಸ್ವಭಾವವಾದರೂ ಒಳಗಿನ ಹಿಂಸೆಯ “ಒತ್ತಿನ ಮೊತ್ತ” ಮಿತಿಮೀರಿದಾಗ "ಸಮಾಜದ್ವೇಷಿ" ಗಂಡು ಸಮಾಜವು ರೂಪುಗೊಳ್ಳುವುದೂ ಅಸಹಜವೇನಲ್ಲ. ಇದರ ಆಂಶಿಕ ಪರಿಣಾಮ ಬಡಿದರೂ ಸಮಾಜಕ್ಕೆ ಒಳ್ಳೆಯದಾಗುವ ಸಂಭವವಿಲ್ಲ. ಆದುದರಿಂದ ಹೆಣ್ಣು ಗಂಡೆಂದು ಒಡೆದು ಆಳುವ ಚಟವನ್ನು ಇನ್ನಾದರೂ ಬಿಟ್ಟು ಬಿಡುವುದರಿಂದ ಸಮಾಜಕ್ಕೆ ಹಿತವಾದೀತು. ವಿದ್ಯೆಯನ್ನು ಒಡೆದು ಚೂರಾಗಿಸಿ, ಸಮಗ್ರ ಶಿಕ್ಷಣದ ಸಂಪತ್ತನ್ನು ಕಸಿದುಕೊಂಡಾಯಿತು. ಜಾತಿ ಧರ್ಮ ವರ್ಣವೆಂದು ಓಲೈಕೆಯ ವಿಷ ತುಂಬಿ ತರತಮದ ಲೇಪನ ಹಚ್ಚಿ ಸಮಾಜವನ್ನು ಒಡೆದಾಯಿತು. ಕೊನೆಯದಾಗಿ,” ಗಂಡು ಹೆಣ್ಣು” ಎಂಬ ವಿಷಯಕ್ಕೆ "ವಿಷ ಲೇಪನ" ನಡೆಸುತ್ತ ವಿಷಸಂತಾನವನ್ನು ಹುಟ್ಟು ಹಾಕಬೇಕೆ? ಈ ಬುದ್ಧಿಗೇಡಿ ಷಡ್ಯಂತ್ರದಿಂದ ಸಮಾಜವು ಎಂತೆಂತಹ ತಲ್ಲಣಗಳಿಗೆ ಒಡ್ಡಿಕೊಳ್ಳಬೇಕಾಗಬಹುದು ಎಂಬ ಕನಿಷ್ಠ ಪ್ರಜ್ಞೆಯನ್ನಾದರೂ ನಾವು ಬೆಳೆಸಿಕೊಳ್ಳುವುದು ಬೇಡವೇ ?
ನಾವು ಸ್ತ್ರೀ ಭಾವಕ್ಕೆ ಹೊಸ ಭಾಷ್ಯ ಬರೆಯುವ ಆಚಾರ್ಯರಾಗುವುದು ಬೇಡ. ನಾಗರಿಕ ಮನುಷ್ಯರಾಗಿ ಪರಸ್ಪರ ನೆರಳು ನೀಡುತ್ತ ಬದುಕಿದರೆ ಸಾಕು. ರಕ್ತಸಿಕ್ತ ಸಮಾಜವನ್ನು ಕಾಣುವ ಮೂರ್ಖ ದುರುಳತನ ((Perversion), ಯಾರಿಗೂ ಹಿತಕರವಲ್ಲ. ಸ್ತ್ರೀಪರವೂ ಬೇಡ; ಪುರುಷಪರವೂ ಬೇಡ. ಬದುಕಿನ ಪರವಾಗಿರೋಣ.
ಈಗ ಸ್ತ್ರೀಯರ ಸಮಸ್ಯೆ ಸವಾಲುಗಳ ಪ್ರತ್ಯೇಕ ಅಧ್ಯಯನ - ಸಂಶೋಧನೆಗಳ ಅಗತ್ಯಕ್ಕಿಂತ ಸಮಗ್ರ ಸಮಾಜದ ಸಮಸ್ಯೆ ಸವಾಲುಗಳನ್ನ ಇಡಿಯಾಗಿ ಚಿಂತಿಸತೊಡಗಿದರೆ ಸಮಸ್ತ ಕುಟುಂಬಕ್ಕೆ ನೆಮ್ಮದಿ ಸಿಗಬಹುದು. ತನ್ಮೂಲಕ ಸಮಾಜವೂ ಸ್ವಸ್ಥವಾಗಿ ಉಳಿಯಬಹುದು. ಅಂತಹ ಸಮಾಜದಲ್ಲಿ ಹೆಣ್ಣು ಗಂಡುಗಳೂ ನಿಸ್ಸಂದೇಹವಾಗಿ ಸ್ವಸ್ಥ ಬಾಳ್ವೆ ನಡೆಸಬಲ್ಲರು ಎಂಬುದು ಪ್ರಾಯೋಗಿಕವಾಗಿ ಸಿದ್ಧವಾದ ಸತ್ಯ.
ಗಂಡು ಹೆಣ್ಣಿನ ಮಧ್ಯೆ ಉದ್ದೇಶಿತವಾಗಿಯೋ ಅನುದ್ದೇಶಿತವಾಗಿಯೋ ಕಡ್ಡಿ ಹಾಕುವ ಕೆಲಸವನ್ನು ಸ್ವಸ್ಥ ಮನಸ್ಸುಗಳು ಮಾಡುವುದಿಲ್ಲ. ಬೇರೆ ಬೇರೆ ಎಂಬ ಪ್ರತ್ಯೇಕತೆಯ ಭಾವನೆಯು ಸಮಷ್ಟಿಯಿಂದ ಮರೆಯಾಗುವಂತಹ ನಡೆ ನುಡಿಯು ಇಂದಿನ ತುರ್ತು ಅಗತ್ಯ. ಇದು ಸಾಧ್ಯವಾದಾಗ ಮಾತ್ರ ಒಂದಾಗಿ ಉಳಿಯುವ ಸದಾಶಯದ ಕ್ರಿಯೆಯು ಸ್ವಯಂ ತತ್ಪರವಾಗತೊಡಗುತ್ತದೆ.
ಆದ್ದರಿಂದ ಎಚ್ಚರ ತಪ್ಪದಿರೋಣ. ಪಕ್ಕದ ಮನೆ ಹೊತ್ತಿ ಉರಿಯುವಾಗ ಬೀಡಿ ಹಚ್ಚಿಕೊಳ್ಳುವ "ಸುಧಾರಕ ವರೇಣ್ಯ"ರಿಂದಲೂ ಎಚ್ಚರದ ದೂರವನ್ನು ಕಾಯ್ದುಕೊಳ್ಳೋಣ. "ನಮ್ಮ ಬಾಳಿಗೆ ನಾವೇ ಶಿಲ್ಪಿ” ಎಂಬುದನ್ನು ನೆಚ್ಚಿ ನಡೆಯೋಣ.
ಕರ್ತವ್ಯ ಮರೆತು ಹಕ್ಕನ್ನು ಮಾತ್ರ "demand" ಮಾಡುವ ಇತ್ತೀಚಿನ ಸಾಮಾಜಿಕ ಸನ್ನಿವೇಶದಲ್ಲಿ ನಿಮ್ಮ ಲೇಖನ ಸಮಾಜಕ್ಕೆ ದರ್ಪಣ ದರ್ಶನದಂತಿದೆ.
ReplyDelete