Wednesday, December 23, 2015

ಸುಮ್ಮನೆ ಕಥಾಮನೆ 1 - ತಳ್ಳುಗಾಡಿ.

ನಮ್ಮ ನಿತ್ಯದ ಮಾತುಗಳಲ್ಲಿ  "ಸುಮ್ಮನೆ" ಎಂಬ ಪದವನ್ನು ಆಗಾಗ ಉಪಯೋಗಿಸುತ್ತೇವೆ. ವಿನಾಕಾರಣ, ಅವಿರೋಧವಾಗಿ, ಪ್ರತಿಮಾತಿಲ್ಲದೆ, ವ್ಯರ್ಥವಾಗಿ, ಮೌನವಾಗಿ - ಮುಂತಾದ ಅನೇಕ ಪದಗಳಿಗೆ ಸಂವಾದಿಯಾಗಿ "ಸುಮ್ಮನೆ"ಯ ಬಳಕೆಯಾಗುವುದಿದೆ. ಕೆಲವರು ಸುಮ್ಮನೆ ಮಾತನಾಡುತ್ತಾರೆ; ಸುಮ್ಮನೆ ತಿನ್ನುತ್ತಾರೆ;  ಕೆಲವರು ಸುಮ್ಮನೆ ಪೀಡಿಸುತ್ತಾರೆ; ಕೆಲವರು ಸುಮ್ಮಸುಮ್ಮನೆ ಸಿಡಿದು ಬೀಳುತ್ತಾರೆ; ಕೆಲವರು ಸುಮ್ಮನೆ ನಗುತ್ತಾರೆ; ಕೆಲವರು ಸುಮ್ಮನೆ ಎಲ್ಲವನ್ನೂ ನೋಡುತ್ತ ಕೇಳುತ್ತ ಸುಮ್ಮನಿರುತ್ತಾರೆ. ಈ ತನ್ಮಧ್ಯೆ ಕೆಲವರು ಸುಮ್ಮನೆ ಹುಟ್ಟುತ್ತಾರೆ, ಉಸಿರು ಬಾಚಿ ಬದುಕುತ್ತಾರೆ ! ಕೆಲವರು ಸುಮ್ಮನೆ ಉಸಿರು ಹಾಸಿ ಸಾಯುತ್ತಾರೆ ! "ಸುಮ್ಮನೆ ಕಥಾಮನೆ"ಯಲ್ಲಿ ಒಮ್ಮೊಮ್ಮೆ ಕತೆಯಾಗಿ - ಸುಮ್ಮನೆ ಬಂದು ಹೋಗುತ್ತಾರೆ...

                                   ----------**********----------**********----------

                                                                ಳ್ಳುಗಾಡಿ...

ಗಂಗಮ್ಮ ಅಕ್ಕಿಯ ವಡೆ ಕಾಯಿಸುತ್ತ ಕುಳಿತಿದ್ದಳು. ಚಿಮಣಿ ಎಣ್ಣೆ ಇಂಧನದಿಂದ ಕೈಯ್ಯಿಂದ ತಿದಿ ಒತ್ತಿ ಉರಿಸುವ ದೊಡ್ಡ ರಕ್ಕಸ ಸ್ಟೌವ್ ಗಳ ರಣ ಕೋಲಾಹಲ. ನಾಲ್ಕು ಸ್ಟೌವ್ ಗಳಲ್ಲೂ ವಡೆ ಕಾಯುತ್ತಿತ್ತು. ಸಂಜೆ ಮೂರು ಗಂಟೆಯ ಒಳಗೆ ವಿಧವಿಧದ ೪೦೦ - ೫೦೦ ವಡೆ ಕಾಯಿಸಿ ಚಟ್ನಿ, ಸಾಂಬಾರ್ ಗಳನ್ನೂ ತಯಾರಿಸಿ ಇಡುವ ನಿತ್ಯದ ಅವಸರ. ಒಂದು ದಿನವೂ ಬಿಡುವಿರದ ಉದ್ಯೋಗ. ರವಿವಾರ ಬಂತೆಂದರೆ ಏಕಾಂಗಿಯಾಗಿ ೧೦೦೦ ವಡೆ ತಯಾರಿಸಬೇಕಿತ್ತು. ಗಂಗಮ್ಮನ ಮಗನು ತಳ್ಳು ಗಾಡಿಯಲ್ಲಿ ನಡೆಸುತ್ತಿದ್ದ  ವಡೆಯ ವ್ಯಾಪಾರವು ಬರಬರುತ್ತ ಜೋರಾಗಿಯೇ ನಡೆದಿತ್ತು.


ನಡುನಡುವೆ ಬೆನ್ನನ್ನು ನೆಟ್ಟಗೆ ಮಾಡುತ್ತ ಉಫ್ ಅಂದುಕೊಳ್ಳುತ್ತ ಸುತ್ತಲೂ ಇರಿಸಿಕೊಂಡಿದ್ದ ನಾಲ್ಕೂ ಬಾಣಲೆಯಲ್ಲಿ ಸಟ್ಟುಗ ಆಡಿಸುತ್ತ ಕೂತ ಗಂಗಮ್ಮ ಸೆರಗಿನಿಂದ ಮುಖವನ್ನು ಒರೆಸಿಕೊಂಡಳು. "ನನ್ನ ಅಕ್ಕ ತಂಗಿಯರೆಲ್ಲ ವೃದ್ಧಾಪ್ಯದ ವಿಶ್ರಾಂತಿಯ ಸುಖದಲ್ಲಿದ್ದರೆ ಈ ೭೦ ರ ಪ್ರಾಯದಲ್ಲೂ ನನಗೆ ಮಾತ್ರ ವಿಶ್ರಾಂತಿಯೆಂಬುದೇ ಇಲ್ಲವೇನೊ ? ಬೇಡ...ಎಲ್ಲವನ್ನೂ ಮುಗಿಸಿಯೇ ಹೋಗುತ್ತೇನೆ; ಕಟ್ಟಿಕೊಂಡು ಬಂದ ಕರ್ಮವನ್ನೆಲ್ಲ ಸವೆಸಿಯೇ ಹೋಗುತ್ತೇನೆ..." ವಡೆ ಕರಿಯುವಾಗ ಗಂಗಮ್ಮನ ಮನಸ್ಸು ಹಿಂದೆ ಸರಿಯುತ್ತ ಬೇಯುತ್ತಿತ್ತು.

ಅತ್ಯಂತ ಸಿರಿವಂತ ಮನೆಯಲ್ಲಿ ಬೆಳೆದಿದ್ದೆ. ಏನೆಲ್ಲ ಹಾದು ಬಂದೆ ? ಆ ಮದುವೆಯ ಮುಹೂರ್ತವು ನನ್ನ ಬದುಕಿನ
ಕನಸುಗಳನ್ನು ಅಳಿಸುವ ಮುಹೂರ್ತವೇ ಆಗಿ ಹೋಯ್ತಲ್ಲ ?

ಏನೋ ಸರಿದಂತಾಗಿ ಹಿಂದೆ ತಿರುಗಿದರೆ ಅಲ್ಲಿ ಮಗ ಅಶೋಕ ನಿಂತಿದ್ದ. ಹೆಗಲ ಮೇಲೆ ಕೈಯಿರಿಸಿ "ಅಮ್ಮಾ... ರೆಡಿ ಆದರೆ ತಕೊಂಡು ಹೊರಡ್ತೇನೆ.." ಅಂತ ಸನ್ನೆ ಮಾಡಿದ. ಬಾಣಲೆಯಲ್ಲಿ ಬೇಯುತ್ತಿದ್ದ ವಡೆಗಳನ್ನು ಎತ್ತಿ ಹಾಕುವಾಗಲೇ ಕೆಳಗೆ ರಾಶಿ ಹಾಕಿದ್ದ ಚಟ್ಟಂಬಡೆ, ಕಾಯಿ ಕಡುಬು, ಉದ್ದಿನ ವಡೆ ಎಲ್ಲವನ್ನೂ ಮಗನು ಡಬರಿಗೆ ತುಂಬಿಸುತ್ತಿದ್ದ. ಒಂದು ವಡೆಯನ್ನು ಮುರಿದು ಬಾಯಿಗೆ ಹಾಕಿಕೊಂಡು "ಸರಿಯಾಗಿದೆ.." ಎಂದು ಸನ್ನೆ ಮಾಡಿ ಹೊರಟೇಬಿಟ್ಟ.

ಮನೆಯಿಂದ ನಾಲ್ಕು ಮಾರು ದೂರದಲ್ಲಿ ರಸ್ತೆಯ ಬದಿಯಲ್ಲೇ ಕೂತು ವಡೆ ವ್ಯಾಪಾರ ಶುರು ಮಾಡಿ ಏಳೆಂಟು ವರ್ಷವಾದರೂ ಆಗಿರಬೇಕು. ಅದೇ ಆದಾಯದಲ್ಲೇ ನನ್ನ ಮನೆ ನಡೆಸುವುದಕ್ಕೆ ಶುರು ಮಾಡಿದ ಮೇಲೇ ನನ್ನ ಕಿವಿ ಕೆಪ್ಪಾದದ್ದಲ್ಲವಾ ? ಸ್ಟೌವ್ ನ ಗೂವ್ ಶಬ್ದವಲ್ಲದೆ ಈಗಂತೂ ಏನೂ ಕೇಳಿಸುವುದೇ ಇಲ್ಲ. ಹೌದು; ಈ ಜ್ವಾಲಾಮುಖಿಯ ಶಬ್ದ ಕೇಳಿಕೇಳಿಯೇ ನನ್ನ ಕಿವಿ ಕೆಪ್ಪಾದದ್ದು...

"ಈಗ ಒಂದು ವರ್ಷದಿಂದಂತೂ ಪೂರ್ತಿ ನಿಶ್ಶಬ್ದವಾಗಿದೆ; ಹೊರಗಿನ ಗದ್ದಲವಂತೂ ಕೇಳಿಸುವುದೇ ಇಲ್ಲ; ಒಳ್ಳೆಯದೇ ಆಯಿತು..." ಅಂದುಕೊಳ್ಳುವಾಗ ಗಂಗಮ್ಮನಿಗೆ ನಗು ಬಂತು. ಸೆರಗಿನಿಂದ ಮುಖ ಒರೆಸಿಕೊಳ್ಳುತ್ತ ಕೂತಲ್ಲಿಂದ ಎದ್ದು ಹೊರಬಾಗಿಲಿಗೆ ಬಂದ ಗಂಗಮ್ಮ ರಸ್ತೆಯನ್ನು ನೋಡುತ್ತ ಅಲ್ಲೇ ಕೂತಳು.


"ಎಷ್ಟು ಚೆಂದ ಇದ್ದೆ..ಬೆನ್ನ ಮೇಲಿನ ಜಡೆ ಮೊಣಗಂಟನ್ನು ತಲುಪುತ್ತಿತ್ತು...ಮುಷ್ಟಿಯಿಂದ ಹಿಡಿಯಲಾಗದಷ್ಟು ದಪ್ಪವಿತ್ತು...ಎಲ್ಲರೂ ನೀಲವೇಣೀ ಎಂದು ಅಡ್ಡಹೆಸರಿನಿಂದಲೇ ಕರೆಯುತ್ತಿದ್ದರಲ್ಲ? ಈಗ ಮಿಡಿನಾಗರ ಆಗಿದೆ...ಮೂರು ಜನ ಅಕ್ಕಂದಿರು ನಾಲ್ಕು ಜನ ತಮ್ಮಂದಿರು, ಒಬ್ಬ ಅಣ್ಣ.. ತುಂಬಿದ ಕುಟುಂಬದ ಪ್ರೀತಿಯ ಗಂಗಿಯಾಗಿದ್ದೆ..."

ನನ್ನ ಮದುವೆಯನ್ನು ಶ್ರೀಧರನೊಂದಿಗೆ ನಿಶ್ಚೈಸಿದ ಅಪ್ಪಯ್ಯ ಐದು ದಿನಗಳ ಮದುವೆಯ ಸಂಭ್ರಮಕ್ಕೆ ಅಂದು ತಯಾರಿ ನಡೆಸಿದ್ದರು. ಆ ದಿನಗಳ ಹುಡುಗಾಟ, ಕುಟುಂಬಸ್ಥರ ಕೀಟಲೆಗಳು, ನನ್ನ ಕನಸುಗಳು...
 
ಮದುವೆಯ ಹಿಂದಿನ ದಿನದ ವರೆಗೂ ಎಲ್ಲವೂ ಸುಂದರವಾಗಿಯೇ ಇತ್ತು. ಆ ಸಂಜೆ ಒಂದು ಸುದ್ದಿ ಬಂತಲ್ಲ ? "ಶ್ರೀಧರ್ ಗೆ ಬೇರೆ ಹುಡುಗಿಯನ್ನು ನಿಶ್ಚೈಸಿದ್ದಾರೆ. ನಿಮ್ಮ ಮಗಳಿಗೆ ಬೇರೆ ವರನನ್ನು ನಿಶ್ಚಯಿಸಿ..ನಮ್ಮನ್ನು ನಿರೀಕ್ಷಿಸಿ, ನಾಳೆ ಮದುವೆಯನ್ನು ಇಟ್ಟುಕೊಳ್ಳಬೇಡಿ..." ಸಿಡಿಲು ಬಡಿದಂತಿದ್ದ ಆ ಸುದ್ದಿ ತಂದವನನ್ನು ಕೊಲ್ಲದಂತೆ ನನ್ನ ಅಪ್ಪಯ್ಯನನ್ನು ತಡೆಯಲು ಆ ದಿನ ಅಡ್ಡ ಬಂದವರೆಷ್ಟು ? ಅಪ್ಪಯ್ಯ ಕೆಂಡಾಮಂಡಲವಾಗಿದ್ದರು. ಗಲಗಲ ಅನ್ನುತ್ತಿದ್ದ ಮದುವೆಯ ಮನೆಯಲ್ಲಿ ಅಂದು ನಿಶ್ಶಬ್ದ ಆವರಿಸಿತ್ತು. ಹಲವು "ಬಂಧು" ಗಳು ಸದ್ದಿಲ್ಲದೆ ಹೊರಟು ಹೋಗಿದ್ದರು ! ೫೦೦ ಜನರು ಕೂತುಣ್ಣುವಷ್ಟು ದೊಡ್ಡ ಚಪ್ಪರ, ತಳಿರು ತೋರಣವೆಲ್ಲ ನಿಶ್ಚಲವಾಗಿ ನಿಂತು ಬಿಟ್ಟಿದ್ದವು. ಮೂಲೆಹಿಡಿದು ಕೂತಿದ್ದ ನನ್ನನ್ನು ಅಪ್ಪಿಕೊಂಡು ಅಂದು ಅಮ್ಮ ಅತ್ತದ್ದಾದರೂ ಎಷ್ಟು ? ಆದರೆ ಬೊಬ್ಬಿರಿಯುತ್ತ ಒಳಗೆ ನುಗ್ಗಿದ ಅಪ್ಪಯ್ಯನು ಅಮ್ಮನನ್ನು ಎಳೆದು ನಿಲ್ಲಿಸಿ "ಏನಂದುಕೊಂಡಿದ್ದಾನೆ ? ಸೂ...ಮಗ. ಇವನು ಬೇಡವೆಂದರೆ ನನ್ನ ಮಗಳಿಗೆ ಬೇರೆ ಗಂಡು ಸಿಕ್ಕುವುದಿಲ್ಲವಾ ? ಕೇಳೇ...ಇದೇ ಚಪ್ಪರದಲ್ಲಿ ಇದೇ ಮುಹೂರ್ತದಲ್ಲಿ ನನ್ನ ಮಗಳಿಗೆ ನಾಳೆಯೇ ಮದುವೆ ಮಾಡದಿದ್ದರೆ ನಾನು ಅಪ್ಪನಿಗೆ ಹುಟ್ಟಿದ ಮಗನೇ ಅಲ್ಲ ಅಂದುಕೋ..." ಎಂದು ಕೂಗಾಡಿ ಹೊರಟೇ ಬಿಟ್ಟಾಗ "ಅಯ್ಯೋ, ಯಾವ ಹುಡುಗನನ್ನು ನೋಡಿದ್ದೀರಿ ? ಅದಾದರೂ ಹೇಳಿ..." ಎನ್ನುತ್ತ ಅಮ್ಮ ಚಡಪಡಿಸಿದ್ದಳು. ಅಪ್ಪಯ್ಯ ಆಗಲೇ ಹೊರಟು ಹೋಗಿದ್ದರು.

ಮರುದಿನ ಮದುವೆಯ ಮಂಟಪದಲ್ಲೇ ನಾನು ನನ್ನ ಗಂಡನನ್ನು ನೋಡಿದ್ದು. ತಪ್ಪಿಹೋದ ವರ ಶ್ರೀಧರನಷ್ಟು ಓದಿರದಿದ್ದರೂ ನೋಡುವುದಕ್ಕೆ ಕೆಂಪು ಕೆಂಪಾಗಿ - ಅವರಿಗಿಂತ ಚೆಂದ ಇದ್ದಾರೆ ಅನ್ನಿಸಿತ್ತು. ಬೊಂಬಾಯಿಯಲ್ಲಿ ಹೋಟೆಲ್ ಇಟ್ಟುಕೊಂಡಿದ್ದಾರೆ ಅಂತಲೂ ಗೊತ್ತಾಯಿತು. ಮದುವೆ ಗದ್ದಲವೆಲ್ಲವೂ ಮುಗಿದ ಕೆಲವೇ ದಿನಗಳಲ್ಲಿ ನಾನು ಬೊಂಬಾಯಿಯ ಪಾಲಾಗಿದ್ದೆ.

ಬೊಂಬಾಯಿಯಲ್ಲಿ ಎರಡು ಕೋಣೆಯ ಒಂದು ಪಂಜರದಲ್ಲಿ ನನ್ನ ಕಾಲಯಾಪನೆ ಶುರುವಾಯಿತು. ಯಾರದೋ ಹೋಟೆಲಿನಲ್ಲಿ ನನ್ನ ಗಂಡ ಉದ್ಯೋಗದಲ್ಲಿದ್ದರು ಎಂಬ ಸತ್ಯವೂ ಅಲ್ಲಿಗೆ ಹೋದ ಮೇಲೆಯೇ ನನಗೆ ಗೊತ್ತಾದದ್ದು. ಅಪ್ಪಯ್ಯನ ಅವಸರವನ್ನು ಕಂಡ ಒಬ್ಬರು "ಹುಡುಗನಿಗೆ ಸ್ವಂತ ಹೋಟೆಲಿದೆ" ಎಂಬ ಅಭಿಪ್ರಾಯ ಮೂಡುವಂತೆ ಅವರಿಗೆ ಸುಳ್ಳು ಹೇಳಿ ಹುಡುಗನ ಶಿಫಾರಸ್ಸು ಮಾಡಿದ್ದರು. ಅಥವ ಎಣಿಸಿದ್ದ ಮುಹೂರ್ತದಲ್ಲಿ ಮದುವೆ ಮಾಡಿಯೇ ಬಿಡುತ್ತೇನೆ ಅನ್ನುವ ಹಠಕ್ಕೆ ಬಿದ್ದಿದ್ದ ಅಪ್ಪಯ್ಯನು ಹುಡುಗನ ಹಿನ್ನೆಲೆಯನ್ನು ಕೂಲಂಕಷವಾಗಿ ವಿಚಾರಿಸಲೇ ಇಲ್ಲವೋ..ಅಂತೂ ಮದುವೆ ನಡೆದೇ ಹೋಯಿತು.


ನಾಲ್ಕು ಸುತ್ತಿನ ಮನೆಯಲ್ಲಿ ಕುಣಿದಾಡಿದ್ದ ನಾನು ಬೊಂಬಾಯಿಯ ಎರಡು ಕೋಣೆಯ ಮನೆ ಹೊಕ್ಕೆ. ಆಮೇಲೆ ಅಂಬಿಕಾ ಹುಟ್ಟಿದಳು. ಎರಡು ವರ್ಷ ಅಂತರದಲ್ಲಿಯೇ ಅಶೋಕನೂ ಹುಟ್ಟಿದ. ಯೌವ್ವನದ ಪ್ರೀತಿಯ ಅಮಲಿನಲ್ಲಿ ಮೊದಮೊದಲು ಯಾವುದೂ ಕಷ್ಟವೆಂದು ಕಾಣಲೇ ಇಲ್ಲ. ಬರಬರುತ್ತ ಬದುಕಿನ ಸತ್ಯವು ಬಿಚ್ಚಿಕೊಳ್ಳತೊಡಗಿತಲ್ಲ ? ನನ್ನ ಗಂಡನ ನಿಜರೂಪ ಕಾಣಲಿಕ್ಕೆ ಶುರುವಾದ್ದು ಆಮೇಲೇ. ಅವರು ಆಗ ಹೋಟೆಲ್ಲಿನ ಕ್ಯಾಶಿಯರ್ ಕೆಲಸವನ್ನೂ ಬಿಟ್ಟಾಗಿತ್ತು; ಇವರೇ ಬಿಟ್ಟರೋ ಹೋಟೆಲಿನವರೇ ಹೊರಗೆ ಕಳಿಸಿದರೋ ? ಅಂತೂ ನಿರುದ್ಯೋಗಿ ಆಗಿಬಿಟ್ಟರು. ಆದರೂ ದಿನವೂ ದೊಡ್ಡ ಆಫೀಸರ್ ಥರ ಡ್ರೆಸ್ಸ್ ಮಾಡಿಕೊಂಡು ಬೆಳಿಗ್ಗೆ ೯ ಕ್ಕೆ ಮನೆ ಬಿಟ್ಟರೆ ರಾತ್ರಿ ೯ ರವರೆಗೂ ಮನೆಗೆ ಬರುತ್ತಿರಲಿಲ್ಲ. ಕೆಲವು ದಿನ ಕಿಸೆ ತುಂಬ ದುಡ್ಡು ತರುತ್ತಿದ್ದರು. ಆದರೆ ತಮ್ಮ ಉದ್ಯೋಗ ಏನು ಅಂತ ಕೇಳಿದರೆ ನೆಟ್ಟಗಿನ ಉತ್ತರ ಕೊಡುತ್ತಿರಲಿಲ್ಲ. ರಹಸ್ಯಮಯ ಸಂಸಾರ ಎಂದು ನನಗೇ ಅನ್ನಿಸತೊಡಗಿತ್ತು; ಏನೋ ಭಯ, ಆತಂಕವೂ ಶುರುವಾಗಿತ್ತು.

ಬರಬರುತ್ತ ನನ್ನ ಗಂಡನನ್ನು ಕೇಳಿಕೊಂಡು ಕೆಲವರು ಮನೆಗೆ ಬರತೊಡಗಿದರು. ಮನೆಯಲ್ಲಿ ಅವರು ಇಲ್ಲವೆಂದು ತಿಳಿದಾಗ - ಕೆಲವರು "ನಾಳೆ ಬೆಳಿಗ್ಗೆ ಬರುತ್ತೇವೆ" ಎಂದು ಹೇಳಿ ಹೋಗುತ್ತಿದ್ದರು. ಮುಂದೆ, ನನ್ನ ಗಂಡನು ಮನೆಯಲ್ಲೇ ಇದ್ದರೂ "ಇಲ್ಲ" ಎಂದು ನನ್ನಿಂದ ಹೇಳಿಸಲು ತೊಡಗಿದಾಗ ನಾನು ಕಂಗಾಲಾಗಿರಲಿಲ್ಲವೆ ? ಜನರಿಗೆ ಅಗತ್ಯವಿದ್ದ - ತಮ್ಮಿಂದಾಗದ ಕೆಲಸಗಳನ್ನೂ ಮಾಡಿಸಿಕೊಡುತ್ತೇನೆಂದು ಹೇಳಿ ಕೆಲವರಿಂದ ಮುಂಗಡ ಪಡೆದು ಅವರಿಗೆ ಆ ಕೆಲಸವನ್ನು ಮಾಡಿಸಿಕೊಡದಿದ್ದಾಗ ಜನರು ಇವರ ಹಿಂದೆ ಬಿದ್ದರು. ಕೆಲವರು ಮನೆಬಾಗಿಲಿಗೆ ಬಂದು ಉಗಿದು ಹೋಗತೊಡಗಿದರು. ಯಾರೇ ಬಾಗಿಲು ತಟ್ಟಿದರೂ ಬಾಗಿಲು ತೆಗೆಯಲು ಭಯ. ಎಲ್ಲರ ಬೈಗುಳಗಳನ್ನೂ ಇದೇ ಕಿವಿಯಲ್ಲಿ ಸುಮ್ಮನೆ ಕೇಳಿಸಿಕೊಂಡೆನಲ್ಲ ? ಇಂಥದನ್ನೆಲ್ಲ ಕೇಳಿಸಿಕೊಳ್ಳುವ ಬದಲು ನನ್ನ ಕಿವಿಯಾದರೂ ಕೆಪ್ಪಾಗಬಾರದೇ ಅಂತ ನನ್ನ ಗಂಡನ ಜೊತೆ ಜಗಳ ಮಾಡುತ್ತ ಹೇಳಿದ್ದು ಅದೆಷ್ಟು ಬಾರಿ ?

ಜನರಿಂದ ಗಿಜಿಗುಡುವ ಈ ಬೊಂಬಾಯಿಯಲ್ಲಿ ನನ್ನವರು ಯಾರೂ ಇಲ್ಲ ಅನ್ನಿಸಿ ದಿನ ಕಳೆದಂತೆ ಗುಬ್ಬಚ್ಚಿಯಾಗುತ್ತಿದ್ದೆ. ಇಬ್ಬರು ಮಕ್ಕಳನ್ನು ಕಟ್ಟಿಕೊಂಡು ನಾನೆಲ್ಲಿಗೆ ಹೋಗಲಿ ? ಎಂದೂ ಯೋಚಿಸತೊಡಗಿದ್ದೆ. "ನೀವು ದುಡಿಯುವುದು ಬೇಡ; ನಾನೇ ದುಡಿಯುತ್ತೇನೆ; ಅಡುಗೆ ಮಾಡಿ ಕೊಡುತ್ತೇನೆ. ಕೆಲವು ಮನೆಗಳನ್ನು ಗೊತ್ತು ಮಾಡಿಕೊಂಡು ಅಲ್ಲಿಗೆ ತಲುಪಿಸುವ ಕೆಲಸ ಮಾತ್ರ ನೀವು ಮಾಡಿ; ಮರ್ಯಾದೆಯಿಂದಲೇ ಬದುಕುವ.." ಅಂತ ಗಿಣಿಗೆ ಹೇಳಿದ ಹಾಗೆ ಹೇಳಿದರೂ ಕೇಳಿದರಾ ? ಇಲ್ಲ. "ನೀನು ಕೆಲಸ ಮಾಡುವುದು ಬೇಡ; ಹೆಂಗಸರು ಮನೆಯಲ್ಲೇ ಇರಬೇಕು; ಸುಮ್ಮನಿರು..." ಅನ್ನುತ್ತಲೇ ಬಂದರಲ್ಲ ? ಸುಳ್ಳು ಪ್ರತಿಷ್ಠೆಯ ಹಿಂದೇ ಓಡಿದರಲ್ಲ ?

ನಿತ್ಯವೂ ಮನೆಯ ಮುಂದೆ ನಿಂತು ಬಯ್ದು ಅರಚಿ ಹೋಗುವವರ ಸಂಖ್ಯೆ ಬೆಳೆಯುತ್ತಲೇ ಹೋಯಿತು. ಬೆಳೆಯುತ್ತಿದ್ದ ಮಕ್ಕಳ ಎದುರಲ್ಲಿ ಅಂತಹ ನಿತ್ಯ ಪ್ರಹಸನವು ನನಗೆ ಇಷ್ಟವಾಗಲಿಲ್ಲ. ನನ್ನ ಸಹನೆಯ ಕಟ್ಟೆಯೊಡೆದಿತ್ತು. ಅದೊಂದು ದಿನ ಮಹಾಸಂಗ್ರಾಮವೇ ನಡೆದು ಹೋಯ್ತು. ಮಾತಿನಿಂದ ನನ್ನನ್ನು ಹಣಿಸಲಾಗದ ಅವರು ನನ್ನ ಜುಟ್ಟನ್ನು ಹಿಡಿದು ತಳ್ಳಿಬಿಟ್ಟರು. ಒಂದು ಹಳೆಯ ಪೆಟ್ಟಿಗೆಯ ಮೇಲೆ ಬಿದ್ದ ನನ್ನ ತಲೆಯಿಂದ ರಕ್ತ ಒಸರತೊಡಗಿತು. ಅದನ್ನು ನೋಡಿದ ಮಗಳು ಗಾಬರಿಯಿಂದ  ಓಡಿ ಬಂದು ಅಪ್ಪನನ್ನು ದೂರ ತಳ್ಳಿದಳು....

ಅದೇ ಕೊನೆ. ಆಗ ಬಿದ್ದವರು ಮತ್ತೆ ಏಳಲಿಲ್ಲ. ಪಕ್ಷವಾತ ಬಡಿದು ಹತ್ತೇ ದಿನದಲ್ಲಿ ತೀರಿಕೊಂಡರು.

ಆಗ ಮಗ ಅಶೋಕನು ಪದವಿಯ ಕೊನೆಯ ವರ್ಷದಲ್ಲಿದ್ದ. ಅಂಬಿಕಾ ಪದವಿ ಮುಗಿಸಿ ಕೂತಿದ್ದಳು. ಮುಂದೇನು ಎಂದು ಕಾಣುತ್ತಿರಲಿಲ್ಲ. ಅದೊಂದು ದಿನ, ಮಗನನ್ನು ಕೇಳಿದೆ..."ಮಗಾ, ಈ ತಿರುಕ ಸ್ಥಿತಿಯಲ್ಲಿ ಅಪ್ಪನ ಮನೆಗೆ ಹೋಗುವುದು ನನಗೆ ಇಷ್ಟವಿಲ್ಲ. ನಾನು ದುಡಿಯುತ್ತೇನೆ; ನೀವು ಸಹಾಯ ಮಾಡಿ. ನಾನು ತಿಂಡಿ ತಯಾರಿಸಿ ಕೊಡ್ತೇನೆ; ಕಾಲೇಜು ಮುಗಿಸಿ ಬಂದ ಮೇಲೆ ಅದನ್ನು ಕೊಂಡುಹೋಗಿ ನೀನು ಮಾರಬಹುದಾ ?"


ಮರು ಮಾತಾಡದೆ ಒಪ್ಪಿಕೊಂಡ ಮಗ ಅವನು. ತಿಂಡಿಯ ರುಚಿ, ಅಶೋಕನ ಸಭ್ಯ ವರ್ತನೆಯಿಂದಾಗಿ ನಮ್ಮ ವ್ಯಾಪಾರವು ದಿನದಿಂದ ದಿನಕ್ಕೆ ಏರುತ್ತ ಹೋಯಿತು. ಹೇಗೋ ಪದವಿಯೊಂದನ್ನು ಜತೆಜತೆಗೇ ಮುಗಿಸಿಕೊಂಡ ಮಗನು ಪೂರ್ತಿಯಾಗಿ ವ್ಯಾಪಾರದಲ್ಲೇ ತೊಡಗಿಕೊಂಡ. ದಿನವಿಡೀ ಸ್ಟೌವ್ ಎದುರಲ್ಲಿ ಕೂತು ರಕ್ಕಸ ಶಬ್ದವನ್ನು ನುಂಗಿ ನುಂಗಿ, ನನ್ನ ಕಿವಿ ಮಾತ್ರ ಸತ್ತೇ ಹೋಯಿತು. ನನ್ನ ಮಗನ ಧ್ವನಿಯನ್ನೂ ಕೇಳದೆ ಎಷ್ಟು ವರ್ಷವಾಯ್ತು ! ಎಲ್ಲವನ್ನೂ ಬರೆದು ತೋರಿಸಬೇಕು. ನನ್ನ ಅನುಕೂಲಕ್ಕೆಂದು ಎದುರಲ್ಲೇ ಸ್ಲೇಟು ಕಡ್ಡಿಯನ್ನು ಮಗನು ತಂದಿಟ್ಟಿದ್ದ. ಆ ಸ್ಲೇಟಿನ ಮೂಲಕವೇ ನಮ್ಮ ಮಾತುಕತೆ ನಡೆಯತೊಡಗಿ ಏಳು ವರ್ಷಗಳೇ ಕಳೆದಿರಬಹುದು !

ಕಳೆದ ನವರಾತ್ರಿಗೆ ಎರಡು ವರ್ಷ ಕಳೆಯಿತಲ್ಲ ? ಬಹಳ ಎಚ್ಚರದಿಂದ ಸಂಬಂಧವನ್ನು ಹುಡುಕಿ, ತನ್ನ ತಂಗಿಯ ಮದುವೆಯನ್ನೂ ಅಶೋಕನು ಮಾಡಿ ಮುಗಿಸಿಯೇ ಬಿಟ್ಟ; ಕಳೆದ ವರ್ಷ ಮಗಳ ಬಾಣಂತನವನ್ನೂ ಮಾಡಿ ಕಳಿಸಿದಾಗ ನಾನು ಗೆದ್ದೆ ಅನ್ನಿಸಲಿಲ್ಲವೆ ? ನನ್ನ ಮಗನು ನನ್ನನ್ನು ಗೆಲ್ಲಿಸಿದ. ಮರ್ಯಾದೆಯಿಂದ ಸಾಯುವಂತೆ ಮಾಡಿದ.

ನಾನು ಸಾಯುವ ಮೊದಲು ಅಶೋಕನ ಮದುವೆಯೂ ಆಗಬೇಕು. ನನ್ನ ಅಮ್ಮ ನನಗೆ ಕಲಿಸಿದಂತೆ - ಪಾಕ ಶಾಸ್ತ್ರವನ್ನು, ಅಡುಗೆಯ ಹದವನ್ನು ನನ್ನ ಸೊಸೆಗೂ ಕಲಿಸಿ ಸಾಯಬೇಕೆಂದಿದೆ. ಅದರಿಂದ ಮಗನ ಉದ್ಯೋಗಕ್ಕೂ ಬಲ ಬರುತ್ತದೆ. ಅವರಿಬ್ಬರೂ ಮರ್ಯಾದೆಯಿಂದ, ನೆಮ್ಮದಿಯಿಂದ ಬದುಕಬಹುದು. ಆದರೆ ನಾವು ಎಣಿಸಿದ್ದೆಲ್ಲ ನಡೆಯಲೇಬೇಕೆಂದಿದೆಯೆ ?  "ನನಗೆ ಮದುವೆ ಬೇಡವೇ ಬೇಡ...ಅಮ್ಮಾ, ನೀನು ಕಲಿಸಿದ್ದನ್ನೆಲ್ಲ ಕಲಿಯುವ ಹೆಣ್ಣು ಮಕ್ಕಳು ಈಗ ಸಿಗುವುದಿಲ್ಲ. ನಿನಗೆ - ನನಗೆ ಇಬ್ಬರಿಗೂ ಒಟ್ಟಿಗೆ ಪಾಠ ಮಾಡುವವರೇ ತುಂಬಿಹೋಗಿದ್ದಾರೆ. ಅವರು ಕಲಿಸಿದ್ದನ್ನು ಕಲಿಯುವ ದರ್ದು ನಮಗಿಲ್ಲ. ಈಗಷ್ಟೇ ನಾವು ಕಂಡಿರುವ ನೆಮ್ಮದಿಯನ್ನು ನಾವಾಗಿಯೇ ಹಾಳು ಮಾಡಿಕೊಳ್ಳುವುದು ಬೇಡ..." ಎನ್ನುತ್ತ ಹಠ ಮಾಡುತ್ತಿರುವ ಈ ಮಗನನ್ನು ಮೊದಲು ಒಪ್ಪಿಸಬೇಕು...

ಮಗನು ಹಿಂದೆ ಬಂದು ನಿಂತದ್ದು ಗೊತ್ತೇ ಆಗಲಿಲ್ಲ. "ಅಮ್ಮಾ, ಆಗಿನಿಂದ ಇಲ್ಲೇ ಕೂತಿದ್ದೀಯಲ್ಲ ? ಒಳಗೆ ನಡಿ.." ಎನ್ನುತ್ತ ಎಬ್ಬಿಸಿದ.

"ರಾತ್ರಿಯ ಅಡುಗೆ ಕೆಲಸ ಮುಗಿಸಿ ಬಂದು ನಿನ್ನನ್ನು ಕಾಯುತ್ತ ಹೊರಗೆ ಕೂತೆ ಮಗನೇ.." ಎನ್ನುತ್ತ ಒಳಗೆ ಹೆಜ್ಜೆ ಹಾಕಿದೆ. ಅವನ ಜತೆಯಲ್ಲಿ ಒಬ್ಬ ಹುಡುಗ ನಿಂತಿದ್ದ. "ಯಾರವರು ?" ಅಂತ ಸನ್ನೆಯಲ್ಲೇ ಕೇಳಿದೆ. "ಅಮ್ಮಾ, ನಮಗೆ ಕಿವಿ ಕೇಳಿಸುತ್ತದೆ. ನೀನು ಮಾತಾಡಮ್ಮಾ.." ಅಂತ ಎಂದಿನಂತೆ ಅಶೋಕನು ನನಗೆ ನೆನಪು ಮಾಡಿದರೂ ಅದೇಕೋ ನನ್ನ ಮಾತು ಮುರುಟಿದೆ. ಸನ್ನೆಯೇ ಹಿತವಾಗಿದೆ.

ನನ್ನ ಹಿಂದೇ ಬಂದ ಮಗ ಅಶೋಕನು ಸ್ಲೇಟನ್ನು ಹಿಡಿದುಕೊಂಡು ಬರೆಯುತ್ತಿದ್ದ. "ಅಮ್ಮಾ, ನಿನ್ನ ನೆರವಿಗೆ ನಾಳೆಯಿಂದ ಭಟ್ಟರು ಇರುತ್ತಾರೆ. ಇವರು ಮುಖ್ಯಪ್ರಾಣ ಭಟ್ಟರು. ನಿನ್ನ ಊರಿನವರೇ. ನಮ್ಮ ಜೊತೆಗೇ ಇರುತ್ತಾರೆ. ಇನ್ನು ಮುಂದೆ ತಿಂಡಿಯ ಹದದ ಮೇಲ್ತನಿಖೆಯನ್ನು ಮಾತ್ರ ನೀನು ನೋಡಿಕೋ. ಉಳಿದ ಎಲ್ಲವನ್ನೂ ಭಟ್ಟರು ಮಾಡುತ್ತಾರೆ...ನಾಳೆ ಗ್ಯಾಸ್ ಒಲೆಯನ್ನೂ ತರುತ್ತೇನೆ; ನಾಳೆಯಿಂದ ಶಬ್ದ - ರಣ ಕೋಲಾಹಲದ ರಗಳೆಯೂ ಇರುವುದಿಲ್ಲ...ಎಲ್ಲ ಸೌಕರ್ಯವಾದರೆ ನೀನೂ ಸ್ವಲ್ಪ ಆರಾಮಾಗಿರಬಹುದು..." ಅಂತ ಬರೆದು ತೋರಿಸಿದ.

"ನಿಂಗೆ ವರ್ಷ ಮುವ್ವತ್ತಾದರೂ ಸ್ಲೇಟಲ್ಲಿ ಬರೆಯುವುದು ಇನ್ನೂ ತಪ್ಪಲಿಲ್ಲ್ಯಲೆ ಮಗನೇ...ಈ ಕೆಪ್ಪಿ ಅಮ್ಮನ ದೆಸೆಯಿಂದ..."  ಅನ್ನುವಾಗಲೇ ಸ್ಲೇಟು ಕಡ್ಡಿ ಹಿಡಿದ ಮಗನನ್ನು ನೋಡಿ ಸುಮ್ಮನೆ ನಗು ಬಂತು. ಅಮ್ಮನ ನಗು ನೋಡಿದ ಅಶೋಕನು "ಇವಳು ಅಮ್ಮ; ನಾನು ಅಶೋಕ.." ಎಂದು ಬರೆದು ತೋರಿಸಿ ಜೋರಾಗಿ ನಕ್ಕ. "ಕೈ ಹಿಡಿದು ಬರೆಸಲಾ ?" ಅಂದಾಗ ನನ್ನನ್ನು ನೋಡಿ ಏನನ್ನಿಸಿತೋ... ಎದ್ದು ಬಂದು ಅಪ್ಪಿಕೊಂಡ.

ಸುಮ್ಮನೆ ಅಳು ಬಂತು..... ಬದುಕಿನ ನುರಿತವೇ ಹಾಗೆ. ಸುಮ್ಮನೆ ಬಂದು ಹೋಗುತ್ತಿರುತ್ತದೆ.

"ಭಾಗ್ಯವು ಯಾವಾಗ ಅಂಗಾತ ಬೀಳುತ್ತದೆ ಯಾವಾಗ ಕವುಚಿ ಬೀಳುತ್ತದೆ...ಯಾವಾಗ ತಿರುಗಿ ಓಡುತ್ತದೆ - ಯಾವಾಗ ಮರಳಿ ಹೊಗ್ಗುತ್ತದೆ...ಯಾರಿಗೂ ಗೊತ್ತಿಲ್ಲ. ಭಾಗ್ಯದ ಚಾಂಚಲ್ಯವನ್ನು ನನ್ನಷ್ಟು ಹತ್ತಿರದಿಂದ ಕಂಡವರು ಇರಲಿಕ್ಕಿಲ್ಲ. ಈಗಂತೂ ಬದುಕಿನ ೭೦ ರ ಹೊಸ್ತಿಲು ದಾಟಿ ಇನ್ನೊಂದು ಮಹಾನವಮಿಗೆ ಸಿದ್ಧಳಾಗಿ ಹೊರಡುವ ಹೊತ್ತು. ಈಗ "ಒಳಗೆ ಬರಲೆ ?" ಎಂದು ಕೇಳುತ್ತ ಕಣ್ಣು ಮಿಟುಕಿಸುತ್ತಿರುವ ಬೆಚ್ಚಗಿನ ಸೌಕರ್ಯವೇ...ನೀನು ಬರುವುದಾದರೆ ಬಾ. ಬಂದು ನನ್ನ ಮಗನೊಂದಿಗಿರು. ನಾನು ಮಾತ್ರ ನಿನ್ನನ್ನು ಕಾಯಲಾರೆ; ನಿನಗಾಗಿ ಬೇಯಲಾರೆ; ಇನ್ನು ನಿನ್ನನ್ನು ಅರಗಿಸಿಕೊಳ್ಳಲೂ ಆರೆ..."


ಮಗನಿಗೆ ಕಾಣದಂತೆ ಕಣ್ಣೊರೆಸಿಕೊಂಡೆ..."ಅಶೋಕಾ, ಮುಖ್ಯಪ್ರಾಣಾ..." ಮಕ್ಕಳನ್ನು ಊಟಕ್ಕೆ ಕರೆದೆ.....
                                                    



                                                                                                         ನಾರಾಯಣೀ ದಾಮೋದರ್


    

2 comments: