Tuesday, December 29, 2015

ಸುಮ್ಮನೆ ಕಥಾಮನೆ 2 - ಕಲಕುವ ಬಂಧನಗಳು.

                                                      ಕಲಕುವ  ಬಂಧನಗಳು...

 ಬೆಳಗಿನ ದಿನ ಪತ್ರಿಕೆಯ ಮೇಲೆ ಕಣ್ಣಾಡಿಸುತ್ತಿದ್ದ ಗಿರಿರಾಯರು - ಏನೋ ಕೇಳಲು ಚಡಪಡಿಸುತ್ತ ನಡುನಡುವೆ ತನ್ನತ್ತ ಇಣುಕಿ ಹೋಗುವ ಪತ್ನಿ ಶಾರದೆಯನ್ನು ಬೆಳಗಿನಿಂದಲೇ ಗಮನಿಸಿದ್ದರು. ಅವಳು ಹೇಳುವುದೇನು ಎಂಬುದೂ ಅವರಿಗೆ ಗೊತ್ತಿತ್ತು. ವ್ಯರ್ಥವಾಗಿ "ಮಾತು ಕಡೆಯುವ ಚರ್ಚೆ"ಯು ಬೇಡವೆಂದುಕೊಂಡೇ ಅವರು ಸುಮ್ಮನೆ ಪುಟ ತಿರುವುತ್ತ ಮೌನವಾಗಿ ಕೂತಿದ್ದರು. ಮದುವೆಯಾದ ಹದಿನೈದು ವರ್ಷಗಳಲ್ಲಿ ಶಾರದಮ್ಮನೂ ತನ್ನ ಗಂಡನ ಸ್ವಭಾವವನ್ನು ಅರ್ಥ ಮಾಡಿಕೊಂಡಿದ್ದರು. ಕಳೆದ ವರ್ಷ ತನ್ನ ಅಪ್ಪನ ಮನೆಯಲ್ಲಿ ಗಂಡನಿಗೆ ನೋವಾದದ್ದೂ ಅವರಿಗೆ ಗೊತ್ತಿತ್ತು. ಆದರೂ "ಒಂದು ಪೆಟ್ಟು; ಎರಡು ತುಂಡು" ಅನ್ನುವ ಹಾಗೆ ಬದುಕಲಿಕ್ಕೆ ಆಗುವುದಿಲ್ಲ; ಹಾಗೆ ಬದುಕಲೂ ಬಾರದು ಅನ್ನುವುದು ಶಾರದಮ್ಮನ ವಾದ. ಒಟ್ಟಿಗೆ ಬದುಕುವಾಗ ಏನೋ ಒಂದು ಮಾತು ಬರುತ್ತದೆ ಹೋಗುತ್ತದೆ...ಹಾಗಂತ ಅದಕ್ಕೇ ಅಂಟಿಕೊಂಡು ಬಂಧು - ಬಳಗವನ್ನೆಲ್ಲ ಕಳೆದುಕೊಳ್ಳಬಾರದು ಅನ್ನುವುದು ಶಾರದಮ್ಮನ ಮತವಾಗಿತ್ತು. ಆದರೆ ಈ ಗಿಣಿಪಾಠದಿಂದ ಗಿರಿರಾಯರನ್ನು ಮಾತ್ರ  ಬದಲಿಸಲಾಗಿರಲಿಲ್ಲ. ಗಂಡನಿಗೆ ಇಷ್ಟವಿಲ್ಲದ ಅದೇ ವಿಷಯವನ್ನು ಈಗ ನೇರಾನೇರ ಮಾತಾಡಲೇಬೇಕಾದ ಮತ್ತೊಂದು ಸಂದರ್ಭ ಅವರ ಎದುರಿಗೆ ಬಂದು ನಿಂತಿದೆ.

                                              **********----------**********


                                                                
ಕೇಶವಯ್ಯ ದಂಪತಿಗಳಿಗೆ ಶಾರದಮ್ಮನೇ ಹಿರಿಯ ಮಗಳು. ಶಾರದಮ್ಮನಿಗೆ ಏಳು ಜನ ತಂಗಿಯಂದಿರು; ಆರು ಜನ ತಮ್ಮಂದಿರು. ದೊಡ್ಡ ಮನೆ, ಡಜನುಗಟ್ಟಲೆ ಮಕ್ಕಳ ದೊಡ್ಡ ಸಂಸಾರವದು. ಕಳೆದ ವರ್ಷ ನಡೆದ ತನ್ನ ತಂಗಿ ವನಜಳ ಮದುವೆಗೆ ಗಂಡನ ಜೊತೆಗೇ ಹೋಗಿ ಬಂದಿದ್ದ ಶಾರದಮ್ಮ - ತನ್ನ ಅಮ್ಮನು ಅಂದು ವರ್ತಿಸಿದ ರೀತಿಗೆ ತಾನೂ ನೋವುಂಡಿದ್ದಳು. ನಿರಾಭರಣೆಯಾಗಿದ್ದ ತನ್ನೊಂದಿಗೆ ಐಷಾರಾಮಗಳಿಂದ ದೂರವಿದ್ದ ತನ್ನ ಗಂಡನನ್ನೂ ಪ್ರತ್ಯೇಕಿಸಿದಂತೆ - ಸ್ವಂತ ಅಮ್ಮನೇ ಅಂದು ಸಸಾರವಾಗಿ ಕಂಡದ್ದನ್ನು ಶಾರದಮ್ಮನು ತುಟಿ ಕಚ್ಚಿ ಸಹಿಸಿಕೊಂಡಿದ್ದರು. ಆದರೆ ಗಿರಿರಾಯರು ಮಾತ್ರ "ನಿನ್ನ ಅಮ್ಮ ಒಬ್ಬ ಅಸಭ್ಯ ಹೆಂಗಸು" ಎಂದು ಪ್ರಕಟವಾಗಿಯೇ ಹೇಳಿ ಹಗುರಾಗಿದ್ದರು. "ನಿನ್ನ ಮನೆಗೆ ಇನ್ನು ಮುಂದೆ ನನ್ನನ್ನು ಮಾತ್ರ ಕರೆಯಬೇಡ.." ಎಂದೂ...ಅಂದೇ ಘೋಷಿಸಿಯೂ ಬಿಟ್ಟಿದ್ದರು.

"ಸ್ವಂತ ಅಳಿಯನ ಪಕ್ಕದಲ್ಲಿ ಕೂತ ನಿನ್ನ ಮಾವ - ಆ ಬಚ್ಚಾಲಿ ದಾಸಯ್ಯನನ್ನು ಏಕಿಏಕಿ ನಗುತ್ತ ಮಾತನಾಡಿಸಿದ ನಿನ್ನ ಅಮ್ಮ - ಸರಕ್ಕಂತ ನನ್ನನ್ನು ದಾಟಿ - ಅಲ್ಲಿ ಕೂತವರನ್ನೆಲ್ಲ ಮಾತಾಡಿಸಿ - ನನ್ನನ್ನು ಗಮನಿಸಲೇ ಇಲ್ಲವೆಂಬಂತೆ ನಡೆದು ಹೋದರಲ್ಲ ?   ಮನೆಗೆ ಬಂದ ಅಳಿಯನನ್ನು "ಬಂದಿರಾ ?" ಅಂತ ಕೇಳುವ ಸೌಜನ್ಯವೂ ಅತ್ತೆಗೆ ಇಲ್ಲವೆಂದರೆ ಅವರಿಗೆ ನನ್ನ ಬಗೆಗೆ ತಿರಸ್ಕಾರವಿದೆ ಎಂದೇ ಅರ್ಥ. ಅವರು ನನ್ನನ್ನು ಇಷ್ಟ ಪಡಲಿ, ಮೆಚ್ಚಲಿ ಎಂದೇನೂ ನನಗೆ ಅಪೇಕ್ಷೆಯಿಲ್ಲ. ಆದರೆ ಅವರ ಸ್ಥಾನಕ್ಕೆ ಹೊಂದುವ ವರ್ತನೆ ಅದಲ್ಲ. ನೋಡು ಶಾರೂ, ನಾನು ನಿನ್ನನ್ನು ಮೆಚ್ಚಿಯೇ ಮದುವೆಯಾದದ್ದು; ಈಗಲೂ ನೀನು ನನ್ನ ಪ್ರೀತಿಯ ಅದೇ ಶಾರು. ಆದರೆ ನಿನ್ನ ಅಮ್ಮ ಹುಟ್ಟಿಸಿದ ಮೂರು ಮಕ್ಕಳಿಗೆ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ನಾಕು ದಿನವಾದರೂ ಅನ್ನ ಹಾಕಿದವನು ನಾನು - ಹೌದಾ ಅಲ್ವಾ ? ಅವರ ಮಕ್ಕಳಿಗೆ ನನ್ನ ಕೈಲಾದ ಎಲ್ಲ ಸಹಾಯವನ್ನೂ ಮಾಡಿದ್ದೆ; ಯಾವುದೂ ನನ್ನಲ್ಲಿ "ಇದ್ದು ಮಾಡಿದ ಸಹಾಯ" ಅಲ್ಲ. ಮಾಡಿದ್ದನ್ನೆಲ್ಲ ಡಂಗುರ ಹೊಡೆದು ಹೇಳಿಕೊಂಡವನೂ ನಾನಲ್ಲ. ಇಂತಹ ಅಧಿಕ ಪ್ರಸಂಗದ ನನ್ನ ದುರ್ಬುದ್ಧಿಯಿಂದಲೇ ನನ್ನ ಸಂಸಾರವನ್ನು ಐಶಾರಾಮದಿಂದ ಇರಿಸಲು ನನ್ನಿಂದಾಗಲಿಲ್ಲ. ಆಗಿಂದಲೂ "ನಾನು, ಮಾಣಿ, ಗೋವಿಂದ" ಅಂತ ಇದ್ದಿದ್ದರೆ ನಾನೂ ನಾಲ್ಕು ಕಾಸು ಕೂಡಿಡಬಹುದಿತ್ತು. ಸ್ವಾರ್ಥದಿಂದ ಹೊರಗೆ ನಿಂತು ನಾನು ಮಾಡಿದ್ದೆಲ್ಲವನ್ನೂ ಮರೆತು, ತನಗೆ ಕಾಸಿನ ಪ್ರಯೋಜನವನ್ನೂ ಮಾಡದ - ದುರ್ಮಾರ್ಗದಿಂದಲೇ ದುಡ್ಡು ಗಂಟು ಹಾಕಿದ ಮೂಢರನ್ನೆಲ್ಲ ನಿನ್ನ ಅಮ್ಮ ಕುಣಿದಾಡುತ್ತ ನೆಂಟರಂತೆ ಉಪಚರಿಸಿದರಲ್ಲ ? ಇದಕ್ಕೆ ಅವಿವೇಕ ಅನ್ನದೆ ಬೇರೇನೆನ್ನಲಿ ? ಆಕೆ ಯಾರನ್ನಾದರೂ ಮಾತಾಡಿಸಲಿ. ಆದರೆ ಸಭಾ ಮರ್ಯಾದೆಯ ಪ್ರಜ್ಞೆಯೂ ಇಲ್ಲದ ಮೂಢಳು ನಿನ್ನಮ್ಮ ಅಂತ ನೀನು ಒಪ್ಪಿಕೊಳ್ಳಲೇ ಬೇಕು...ನೀನು ಅಂದುಕೊಂಡಂತೆ ಅದು ಅವರ ಹೆಡ್ಡತನ ಅಲ್ಲ; ಶಿಷ್ಟಾಚಾರವೂ ಗೊತ್ತಿಲ್ಲದ ಅನಾಗರಿಕತನ ಅದು- ಆಯ್ತಾ ?" ಮದುವೆಯ ಮನೆಯಿಂದ ಹಿಂದಿರುಗಿದ ಮೇಲೆ ಗಿರಿರಾಯರು ಗರಂ ಆಗಿದ್ದರು.

"ನೋಡಿ, ನನ್ನ ಅಮ್ಮ ಹೆಚ್ಚು ಓದಿದವಳಲ್ಲ. ನನ್ನ ಅಪ್ಪಯ್ಯ ಇದ್ದಿದ್ದರೆ ಹೀಗೆಲ್ಲ ಆಗುತ್ತಿರಲಿಲ್ಲ..." ಅಂತ ಶಾರದಮ್ಮನು ತಿಪ್ಪೆ ಸಾರಿಸಲು ಪ್ರಯತ್ನಿಸಿದ್ದರು.

"ಅರೆ, ನಿನಗ್ಯಾಕೆ ಅರ್ಥವಾಗುವುದಿಲ್ಲ ? ನಮ್ಮ ಓದಿಗೂ ವರ್ತನೆಗೂ ನೇರ ಸಂಬಂಧ ಇರುವುದೇ ಇಲ್ಲ. ಓದದೇ ಇದ್ದವರೆಲ್ಲ ನಿಷ್ಕರುಣಿಗಳಾಗಿ ಅವಿವೇಕಿಗಳಾಗಿಯೇನೂ ಇರುವುದಿಲ್ಲ. ಅವೆಲ್ಲವೂ ಅವರವರ ಕುಸಂಸ್ಕಾರದ ಫಲ. ನಾಳೆ ನಾನು ಮದುವೆಗೆ ಹೋಗದಿದ್ದರೆ ಅವರಿಗೆ ಯಾವ ಬೇಸರವೂ ಆಗುವುದಿಲ್ಲ; ಬದಲಿಗೆ ಖುಶಿಯಾಗುತ್ತದೆ. ನೀನೇ ಹೇಳು. ಯಾರೇ ಆಗಲಿ, ತಮಗೆ ಇಷ್ಟವಿಲ್ಲದವರಿಗೆ "ಬನ್ನಿ ಬನ್ನಿ" ಅಂತ ಹೇಳಿಕೆ ಕೊಡುವುದಾದರೂ ಯಾಕೆ ? ನಾನು ಹೇಳುವ ಮಾತನ್ನು ಕಿವಿಗೊಟ್ಟು ಕೇಳು ಶಾರದಾ. ಪ್ರೀತಿ ಗೌರವವಿಲ್ಲದಲ್ಲಿಗೆ ಹೋಗಿ ಯಾರೂ ಊಟ ಮಾಡಬಾರದು ...ಅಂತಹ ಹುಂಬ  ಗೋಸುಂಬೆಗಳಿಂದ ದೂರ ಇರುವುದೇ ಕ್ಷೇಮ.."

"ಸರಿ; ಇನ್ನು ಈ ವಿಷಯವನ್ನು ಮಾತಾಡುವುದು ಬೇಡ. ಸುಮ್ಮನೆ ನಾವ್ಯಾಕೆ ಇವತ್ತಿನಿಂದಲೇ ಮನಸ್ಸನ್ನು ಕಹಿ ಮಾಡಿಕೊಳ್ಳುವುದು ? ಆದರೆ ಒಂದು ವಿಷಯ ಮಾತ್ರ ಸತ್ಯ. ನಾನು ಹೇಳುತ್ತೇನೆ ಕೇಳಿ...ದುಡ್ಡಿದ್ದವರಿಗೇ ಈ ಜಗತ್ತು ಮಣೆ ಹಾಕುವುದು. ನಾವಿಬ್ಬರು ಮಾತ್ರ - "ಅಲ್ಲ; ಅದು ಹಾಗಲ್ಲ" - ಅಂತೆಲ್ಲ ಅನ್ನುತ್ತಿದ್ದರೆ ಎಲ್ಲೂ ನಡೆಯುವುದಿಲ್ಲ...ನಾವೇ ಜಾತಿ ಬಿಟ್ಟ ಕಾಗೆ ಆಗ್ತೇವೆ..ಅಷ್ಟೆ."

"ಅಂದರೆ...ಏನು ನಿನ್ನ ಮಾತಿನ ಅರ್ಥ ? ನಿನ್ನ ಕಡೆಯವರನ್ನು ಮೆಚ್ಚಿಸಲಿಕ್ಕೆ ನಾನು ಅಡ್ಡದಾರಿಯಿಂದಾದರೂ ದುಡ್ಡು ಮಾಡಬೇಕಾ ? ಕಾಗಕ್ಕ ಗುಬ್ಬಕ್ಕನ ಹೆಸರಿನಲ್ಲಿ ಗಾದೆ ಕಟ್ಟುವವರ ಇಂತಹ "ಜಾತಿಯ ಮನೆ"ಗೆ ಮೂರು ಮುಷ್ಟಿ ಉಪ್ಪು...ಕಾಸಿನ ಜಾತಿಯನ್ನು ಮಾತ್ರ ಗುರುತಿಸುವವರ ಜೊತೆಗಿದ್ದುಕೊಂಡು "ಜಾತಿ ಕಾಗೆ"  ಆಗುವುದಕ್ಕಿಂತ ನನ್ನ ಹಾಗೆ "ಜಾತಿ ಬಿಟ್ಟ ಕಾಗೆ" ಆಗುವುದೇ ವಾಸಿ...ನೋಡು ಶಾರದಾ, ನಾನು ಹೀಗೇ ಇರುವುದು; ಇಷ್ಟವಿದ್ದರೆ ಹೊಂದಿಕೋ..."

"ಇಲ್ಲವಾದರೆ ಹೊರಡು ಅಂತಲೂ ಹೇಳಿಬಿಡಿಯಲ್ಲ..."

"ನನ್ನ ಜೊತೆಯಲ್ಲಿ ಸಂತೋಷದಿಂದ ಇರುವ ಹಾಗಿದ್ದರೆ ಎಲ್ಲವೂ ಗೊತ್ತಿದ್ದೂ ನೀನು ಚೌಕಾಸಿಗೆ ಇಳಿಯುತ್ತಿರಲಿಲ್ಲ; ಇಂತಹ ಮಾತಿನ ಕೊಕ್ಕೆಗಳನ್ನೆಲ್ಲ ಹಾಕುತ್ತಿರಲಿಲ್ಲ...ನಿನ್ನ ಮೀಸೆ ಬೆಳೆದ ತಮ್ಮಂದಿರು ದೇಶಾವರಿ ನಗುತ್ತ ಅವತ್ತು ಓಡಾಡುತ್ತಿದ್ದರಲ್ಲ ? ಅವರಿಗೇನು ಧಾಡಿಯಾಗಿತ್ತೆ ? ಅವರೇನು ಅಕ್ಷರ ಬಾರದ ಪ್ರಪಂಚ ಜ್ಞಾನವಿಲ್ಲದ ಒಡ್ಡರಾ ? ಅರ್ಥ ಮಾಡಿಕೋ. ಅದು ಅವರ ಸಂಸ್ಕಾರ. ಆದ್ದರಿಂದ ಬದಲಾಗುವುದೂ ಕಷ್ಟ. ಒಬ್ಬೊಬ್ಬರೂ ಸ್ವಾರ್ಥಿಗಳು, ಸಮಯ ಸಾಧಕರು, ಸಂಸ್ಕಾರಹೀನರು..ಅಷ್ಟೆ. ಒಬ್ಬೊಬ್ಬರ ರೋಮರೋಮದಲ್ಲೂ ಅಹಂಕಾರ. ವಿದ್ಯೆ ನಾಸ್ತಿ ಅನ್ನುವುದರ ಲಕ್ಷಣವೇ ಅದು. ನಿಮ್ಮ ವಂಶದಲ್ಲೇ ಸೊಕ್ಕು ಹುಟ್ಟಿದ್ದಾ ಅಥವಾ ಸೊಕ್ಕಿನಿಂದಲೇ ಆ ವಂಶ ಹುಟ್ಟಿದ್ದಾ ?" ಗಿರಿರಾಯರು ಇಡೀ ವಂಶವನ್ನೇ ಜಾಲಾಡಿಸಿದಾಗ ಶಾರದಮ್ಮ ಮೌನವಾದರು.

ಕ್ಷಣ ಬಿಟ್ಟು ರಾಯರೇ ಮಾತಾಡಿದರು. "ಅವತ್ತು ಮದುವೆಯ ದಿನ - ನಾನು ನಿನ್ನ ಫಜೀತಿಯನ್ನೆಲ್ಲ ನೋಡುತ್ತಲೇ ಇದ್ದೆ. ಆರತಿ ಎತ್ತುವುದಕ್ಕೆ ಹಿರಿಯ ಮಗಳು ಬರಲಿ ಅಂತ ಪುರೋಹಿತರು ಹೇಳಿದಾಗ ನೀನು ಸೆರಗು ಕಟ್ಟಿ ಮುಂದೆ ಬಂದೆ...ಹೌದಾ ?"

"ಅದೆಲ್ಲ ಯಾಕೀಗ ? ಅದಕ್ಕೆ ಏನಾಯಿತೀಗ ?" ಶಾರದಮ್ಮನ ದನಿಯಲ್ಲಿ ಬೇಸರವಿತ್ತು.

"ಏನಾಯಿತಾ ? ನಿನ್ನನ್ನು ಕೈಯ್ಯಿಂದ ಹಿಂದೆ ದೂಡಿ ನಿನ್ನ ತಂಗಿಯನ್ನು ಕಳಿಸಿದ್ದು ಯಾರು ?"

"ಹೋಗಲಿ ಬಿಡಿ. ಯಾರು ಆರತಿ ಎತ್ತಿದರೆ ಏನಂತೆ ?"

"ಅದು ನನಗೂ ಗೊತ್ತು. ಆದರೆ ಅದು ನನ್ನ ಪ್ರಶ್ನೆಗೆ ಉತ್ತರ ಅಲ್ಲ..ನಿನ್ನನ್ನು ಹೆತ್ತ ಅಮ್ಮನೇ ಅವತ್ತು ಮಂಟಪದಿಂದ ನಿನ್ನನ್ನು ಹಿಂದೆ ತಳ್ಳಿದ್ದನ್ನು ನಾನೇ ನೋಡಿದ್ದೆ. ಆದರೆ ಒಬ್ಬ "ಅಮ್ಮ" ಎಂಬ ವ್ಯಕ್ತಿ ಹೀಗೆಲ್ಲ ವರ್ತಿಸುವುದು ಸಾಧ್ಯವೆ ? ನೀನೂ ಯೋಚನೆ ಮಾಡು. ಅವತ್ತು ಅದಕ್ಕೆ ಕಾರಣವನ್ನೂ ನೀನೇ ಹೇಳಿದ್ದೆ. ನೂಲಿನ ಸೀರೆ ಉಟ್ಟವರು ಹಿಂದಿರಬೇಕು; ಜರಿ ಸೀರೆ ಉಟ್ಟವರು ಮುಂದೆ ಬರಬೇಕು ಅನ್ನುವ ಪಕ್ಕಾ ಲೌಕಿಕ ಹೆಂಗಸು ನಿನ್ನಮ್ಮ. ಬರೇ ತೋರಿಕೆಯ ತುರಿಕಡ್ಡಿ. ನಿದ್ದೆ ಬಾರದ ತುರಿಕೆಗೆ ಆಕೆಗೆ ಒಂದಷ್ಟು ಮಕ್ಕಳು ಹುಟ್ಟಿದ್ದು ಬಿಟ್ಟರೆ ಆ ಹೆಂಗಸಿನಲ್ಲಿ ಸಾಮಾನ್ಯ ಹೆಂಗಸರಲ್ಲಿರುವ ಪಸೆಯೇ ಇಲ್ಲ. ಬೇರೆ ಯಾರಾದರೂ ಆಗಿದ್ದರೆ ತನ್ನ ಸೋತ ಮಕ್ಕಳನ್ನು ಹೆಚ್ಚು ಆಧರಿಸುತ್ತಿದ್ದರು. ತನ್ನದೇ ಒಂದು ಒಳ್ಳೆಯ ಸೀರೆಯನ್ನು ಕೊಟ್ಟು "ಇವತ್ತು ನೀನು ನನ್ನ ಸೀರೆ ಉಡು" ಅಂತ ಪ್ರೀತಿಯಿಂದಲೇ ಸಂದರ್ಭವನ್ನು ಸಂಭಾಳಿಸುತ್ತಿದ್ದರು. ಯಾರದ್ದೋ ಸೀರೆ ಉಟ್ಟು ನೀನು ತಿರುಗುವುದು ನನಗೆ ಇಷ್ಟವಾಗದಿದ್ದರೂ ಅಮ್ಮನಾಗಿ ಅಂತಹ ವರ್ತನೆಯನ್ನು ಒಪ್ಪುವ. ಆದರೆ ನಿನ್ನ ಅಮ್ಮನ ವರ್ತನೆ ಮಾತ್ರ ಅತ್ಯಂತ ಕ್ರೂರವಾಗಿತ್ತು. ಇದು ಎಂಥ ವಿಚಿತ್ರ ? ತನ್ನ ಹೊಟ್ಟೆಯಿಂದ ಹುಟ್ಟಿದ ಮಕ್ಕಳಲ್ಲೇ ಭೇದಭಾವವನ್ನು ತೋರಿಸುವ ತಾಯಿಯೂ ಇರುತ್ತಾರಾ ? ಹೊರಗಿನ ವೇಷ, ಇರಸ್ತಿಕೆ ನೋಡಿ ಸ್ವಂತ ಮಕ್ಕಳನ್ನು ತೂಗಿ ನೋಡುವ ತಾಯಂದಿರೂ ಇರ್ತಾರಾ ? ನಾನು ಕಣ್ಣಾರೆ ಇಂಥದ್ದೆಲ್ಲ ನೋಡಿರದಿದ್ದರೆ "ಕೆಟ್ಟ ತಾಯಿ ಇರುತ್ತಾಳೆ" ಅಂತ ನಂಬುವುದು ಸಾಧ್ಯವೇ ಇರಲಿಲ್ಲ. ಆ ಮದುವೆಯ ದಿನ ನಿನಗೆ ಮಾಡಿದ ಅವಮಾನವನ್ನು ನಾನಂತೂ ಎಂದೂ ಕ್ಷಮಿಸಲಾರೆ...ಅದು ನಿನಗೆ ಮಾತ್ರವಲ್ಲ - ನನಗೂ ಮಾಡಿದ ಅವಮಾನ ಅಂತ - ನಿನಗೂ ಅನ್ನಿಸಬೇಕಿತ್ತು.."


"ನೋಡಿ, ಸುಮ್ಮನೆ ಕಡ್ಡಿಯನ್ನು ಗುಡ್ಡ ಮಾಡಬೇಡಿ. ನಿಮಗೆ ಎಲ್ಲ ವಿಷಯ ಗೊತ್ತಿಲ್ಲ. ನನ್ನ ಅಮ್ಮ ಎಷ್ಟು ಒಳ್ಳೆಯವಳಿದ್ದಳು... ಗೊತ್ತಾ ? ಅವಳನ್ನು ನಾನು ಕಂಡಷ್ಟು ನೀವು ಕಂಡಿಲ್ಲ. ನನ್ನ ಬಾಲ್ಯದಲ್ಲಿ ಬದುಕಿಗೆ ಬೇಕಾದ ಎಷ್ಟು ಆದರ್ಶಗಳನ್ನು ನನಗೆ ಹೇಳಿ ಕೊಟ್ಟಿದ್ದ ಅಮ್ಮ ಅವಳು...ದಾನ, ಧರ್ಮ, ಕರುಣೆ ಎಲ್ಲವೂ ಅವಳಲ್ಲಿ ಇತ್ತು. ನಾನು ನೋಡಿದ್ದೇನೆ. ಅವಳೇ ಬೆಳೆಸಿದ ಹುಡುಗಿ ನಾನು. ಆದರೆ ಈಗ ಯಾಕೆ ಹೀಗೆ ಬದಲಾದಳೋ...ಹೇಗೆ ಬದಲಾದಳೋ ಅದು ಮಾತ್ರ ನನಗೆ ಗೊತ್ತಿಲ್ಲ. ಆದರೆ ಈ ತಮ್ಮ ತಂಗಿಯರೆಲ್ಲ ಬೆಳೆದು ನಿಂತ  ಮೇಲೆ ಅವಳು ಪೂರ್ತಿ ಬದಲಾಗಿ ಬಿಟ್ಟದ್ದು ಮಾತ್ರ ಸುಳ್ಳಲ್ಲ. ಅವಳದ್ದು ಸ್ವಲ್ಪ ಹಿತ್ತಾಳೆ ಕಿವಿ ಮಾರಾಯ್ರೇ..." ಶಾರದಮ್ಮ ಗಂಡನನ್ನು ಶಾಂತಗೊಳಿಸುವ ಧಾಟಿಯಲ್ಲಿ - ಸಹಜವಾಗಿ ಅಮ್ಮನ ವಕಾಲತ್ತಿಗೆ ಹೊರಟಿದ್ದರು.

"ಓ ಶಾರೂ ಶಾರೂ, ನಿನಗೆ ಯಾಕೆ ಅರ್ಥ ಆಗುವುದಿಲ್ಲ ? ಆ ಮನೆಯಲ್ಲಿ ನೀನು ಮಾತ್ರ ಹೇಗೆ ಇಷ್ಟು ಒಳ್ಳೆಯವಳಾದೆ ? ನೀನು ಆಗ ನಿನ್ನ ಅಮ್ಮನಲ್ಲಿ ಕಂಡದ್ದು - ಅದು ಒಳ್ಳೆಯತನ ಅಲ್ಲ; ಅದು ಅಭಾವ ವೈರಾಗ್ಯ. ಆಗ ಅವರಿಗೂ ಕಷ್ಟಗಳಿದ್ದವು. ಅದಕ್ಕೇ ಹೆಚ್ಚು ಹರಾಹುರಿ ಇರಲಿಲ್ಲ. ಯಾವಾಗಲೂ ಶಕ್ತಿಯಿದ್ದಾಗಲೇ ಸಂಯಮದ ಪರೀಕ್ಷೆ ನಡೆಯಬೇಕು. ಬಲವಿಲ್ಲದಿದ್ದಾಗ ಅಲ್ಲ. ಅಥವ ವಿವೇಚನೆಯ ಸಂಸ್ಕಾರ ಇರಬೇಕು. ಹೋಗಲಿ ಬಿಡು...ನಿನ್ನ ಅಮ್ಮನದು ಹಿತ್ತಾಳೆ ಅಲ್ಲ; ಚಿನ್ನದ ಕಿವಿ...ಆಯ್ತಾ ? ಇಲ್ಲಿಗೆ ಸಾಕು ಮಾಡುವ. ಆದರೆ ಇನ್ನು ಮುಂದೆ ಆ ಮನೆಗೆ ನನ್ನನ್ನು ಮಾತ್ರ ಕರೆಯಬೇಡ. ಹಿತ್ತಾಳೆ - ತಾಮ್ರದ ಕಿವಿಯನ್ನು ಮಾತನಾಡಿಸಲು ನೀನು ಅಲ್ಲಿಗೆ ಹೋಗುವುದಾದರೆ ನನ್ನದೇನೂ ಅಭ್ಯಂತರವಿಲ್ಲ...ಸರಿಯಾ ? ಈಗ ಶಾಂತಿ ಮಂತ್ರ ಹೇಳುವ.."

                                                **********----------**********

ಒಂದು ವರ್ಷ ಕಳೆದಿತ್ತು. ಹಳೆಯ ಕಹಿಯನ್ನೆಲ್ಲ ಶಾರದಮ್ಮ ಮರೆತಿದ್ದರು. ಒಮ್ಮೊಮ್ಮೆ ಅಪ್ಪನ ಮನೆ, ಅಮ್ಮನ ನೆನಪೂ ಆಗುತ್ತಿತ್ತು. ತಾನು ಬಾಲ್ಯವನ್ನು ಕಳೆದ ಆ ಮನೆ, ಅಂಗಳ, ಕೆರೆ, ಗದ್ದೆ, ತೋಟ...ತೋಟದ ಮೇಲಿಂದ ಬೀಸುವ ಗಾಳಿ...ಎಲ್ಲವೂ ನೆನಪಾಗುತ್ತಿತ್ತು. ಬದುಕು ಓಡುತ್ತಿತ್ತು.

ಹೀಗಿರುವಾಗ ಶಾರದಮ್ಮನ ಐದನೆಯ ತಂಗಿಯಾದ ದುರ್ಗಿಯ ಮದುವೆ ನಿಶ್ಚಯವಾದ ಸುದ್ದಿ ಬಂದಿತ್ತು. ನಿನ್ನೆ ಅವರ ಹಿರಿಯ ತಮ್ಮನಾದ ಗೋವಿಂದ ಮನೆಗೆ ಬಂದು ಮದುವೆಯ ಹೇಳಿಕೆಯನ್ನು ಹೇಳಿ ಹೋದ ಮೇಲಂತೂ ಶಾರದಮ್ಮನ ಮನಸ್ಸು ಅಪ್ಪನ ಮನೆಯಲ್ಲೇ ಸುತ್ತುತ್ತಿತ್ತು. 
                                         
ಶಾರದಮ್ಮನು ತನ್ನ ಅಪ್ಪನ ಮನೆಯಲ್ಲಿ ನಾಲ್ಕು ದಿನ ಖುಶಿಯಾಗಿ ಓಡಾಡುವ ಕನಸನ್ನೂ ಕಾಣತೊಡಗಿದ್ದರು. ತನ್ನಲ್ಲಿದ್ದ ಒಂದೇ ಒಂದು ಜರಿಸೀರೆಯನ್ನು ಬಿಸಿಲಿಗೆ ಹಾಕಿ, ಗರಿಗರಿಯಾಗಿರುವಾಗಲೇ ಮಡಿಸಿ, ಸುಕ್ಕು ತೆಗೆಯಲು ಹಾಸಿಗೆಯ ದಿಂಬಿನ ಕೆಳಗೆ ಇಟ್ಟಾಗಿತ್ತು. ಕುತ್ತಿಗೆಯಲ್ಲಿದ್ದ ಒಂದೇ ಒಂದು ಚಿನ್ನ - "ಕರಿಮಣಿ ಸರ" ವನ್ನು ಅಂಟುವಾಳದ ನೀರಿನಲ್ಲಿ ನೆನಸಿ ತೊಳೆದು ಧರಿಸಿದ್ದರು. ತನ್ನ ಇಬ್ಬರು ಹೆಣ್ಣು ಮಕ್ಕಳು, ಮಗ ಕೃಷ್ಣನನ್ನೂ ಕರೆದುಕೊಂಡು ಗಂಡನ ಜೊತೆಗೆ ತನ್ನ ಅಪ್ಪನ ಮನೆಗೆ ಹೊರಡುವ ಸಂಭ್ರಮದ ಅಡಾವುಡಿಯು ಅವರ ನಡಿಗೆಯಲ್ಲೇ ಕಾಣುತ್ತಿತ್ತು.

ಬೆಳಗಿನಿಂದ ತನ್ನತ್ತ ಇಣುಕಿ ಇಣುಕಿ ಓಡುತ್ತಿರುವ ಹೆಂಡತಿಯ ಚಡಪಡಿಕೆ ಗಿರಿರಾಯರಿಗೆ ಅರ್ಥವಾಗಿತ್ತು. ಮುಖದ ಎದುರಿಗೆ ದಿನಪತ್ರಿಕೆಯಿದ್ದರೂ "ಜೊತೆಗೆ ನನ್ನನ್ನೂ ಬರುವಂತೆ ಇನ್ನು ಕೊರೆಯುತ್ತಾಳಲ್ಲ ? ಇವಳಿಗೆ ಯಾಕೆ ಅರ್ಥವಾಗುವುದಿಲ್ಲ ? ಈಗ ಹೇಗೆ ನಿಭಾಯಿಸುವುದು ?" ಅನ್ನುವ ಯೋಚನೆಯು ಮರಳಿ ಹೊರಳುತ್ತಿತ್ತು.

ಅಂದು ಭಾನುವಾರದ ಮಧ್ಯಾಹ್ನದ ಅಡುಗೆಯ ಕೆಲಸ ಮುಗಿಸಿದ ಶಾರದಮ್ಮ ಗಂಡನ ಎದುರಲ್ಲಿ ಬಂದು ಕೂತರು. "ಬೆಳಿಗ್ಗೆಯಿಂದ ಆ ಪತ್ರಿಕೆ ಹಿಡಕೊಂಡು ಕೂತಿದ್ದೀರಲ್ಲ ? ಅರ್ಧ ಗಂಟೆಯಲ್ಲಿ ಓದಿ ಬಿಸಾಡುವಂಥ ಅದನ್ನು ಏನಂತ ಇಡೀ ದಿನ ಓದುತ್ತೀರೋ ?" ಅನ್ನುತ್ತ ಮಾತಿಗೆ ಎಳೆದರು.

"ನೋಡು...ಸತ್ತ ಸುದ್ದಿ ತುಂಬ ಇದೆ. ಯಾರು ಸತ್ತರು; ಎಲ್ಲಿ ಸತ್ತರು; ಹೇಗೆ ಸತ್ತರು...ಇಲ್ಲಿ ನೋಡು..ಒಳ್ಳೆ ಚಡ್ಡಿಯ ಮಾರಾಟದ ಮಳಿಗೆ ಬಂದಿದೆ.." ಅನ್ನುತ್ತ ಗಂಡನು ಪತ್ರಿಕೆಯನ್ನು ತೋರಿಸುವಾಗ ಶಾರದಮ್ಮ ಸಿಡುಕಿದರು.

"ನೋಡಿ, ಸತ್ತ ವಿಷಯವೆಲ್ಲ ಈಗ ಬೇಡ. ನಾಡಿದ್ದು ಮದುವೆ ಉಂಟಲ್ಲ ? ಇಬ್ಬರೂ ಹೋಗಿ ಬರುವ...ಆಗದಾ ?" ಹೆಂಡತಿಯು ಮದುವೆಯ ಪ್ರಸ್ತಾಪ ಎತ್ತಿದ ಕೂಡಲೇ - ಗಿರಿರಾಯರು ಆಕಳಿಸುತ್ತ ಕೂತಲ್ಲಿಂದ ಎದ್ದು ಹೊರಟರು. "ಸ್ನಾನ ಮಾಡಿ ಬರುತ್ತೇನೆ.." ಅನ್ನುತ್ತ ನಡೆದು ಬಿಟ್ಟರು. ಶಾರದಮ್ಮನಿಗೆ ಗಂಡನ ಜೊತೆಗೆ ಅಪ್ಪನ ಮನೆಗೆ ಹೋಗುವ ಆಸೆ. ಆದರೆ ಗಿರಿರಾಯರು ಉಭಶುಭ ಅನ್ನುತ್ತಿರಲಿಲ್ಲ.

ಮಧ್ಯಾಹ್ನದ ಊಟ ಮುಗಿದ ಮೇಲೆ ಅಡಕೆ ಜಗಿಯುತ್ತ ಒರಗಿದ್ದ ಗಿರಿರಾಯರ ಪಕ್ಕದಲ್ಲಿ ಕೂತ ಶಾರದಮ್ಮನ ಬಾಯಲ್ಲಿ ಮತ್ತೊಮ್ಮೆ ಅದೇ ಮಾತು.

"ನೀವು ಹೀಗೆ ಮೌನೇಶ್ವರನ ಹಾಗೆ ಮಾಡಿದರೆ ಹೇಗೆ ? ನನ್ನ ತಮ್ಮನೇ ಬಂದು ಕ್ರಮಪ್ರಕಾರವಾಗಿ ಹೇಳಿ ಹೋಗಿದ್ದಾನಲ್ಲ...ಮದುವೆಗೆ ಒಟ್ಟಿಗೇ ಹೋಗುವ. ನನಗಾಗಿಯಾದರೂ ಬನ್ನಿ..ಒಂದು ಹೇಳಿಕೆ ಬಂದರೆ ಅದಕ್ಕೆ ಮರ್ಯಾದೆ ಅಂತ ಬೇಡವಾ ? ಹಳೆಯದನ್ನೆಲ್ಲ ಎಷ್ಟು ದಿನ ಅಂತ ಎಳೆದಾಡುವುದು ? ಬಂಧುಗಳಲ್ಲಿ ಏನೋ ಒಂದು ಕಟಿಪಿಟಿ ಬರುತ್ತದೆ...ಹೋಗುತ್ತದೆ. ಏನು ? ಮಾತಾಡಿ ಮಾರಾಯ್ರೇ. ನೀವು ಬರುವುದಿಲ್ಲ ಅಂತಾದರೆ ಯಾಕೆ ಅಂತಾದರೂ ಹೇಳಿ...ನನ್ನ ಅಪ್ಪನ ಮನೆಯವರು ಒಡ್ಡರು ಅಂತ ಅಂದುಕೊಂಡೇ ಬನ್ನಿ. ಅವರು ವರ್ತಿಸಿದಂತೆ ನಾವೂ ಒಡ್ಡರ ಹಾಗೆ ವರ್ತಿಸಿದರೆ ನಮಗೂ ಅವರಿಗೂ ವ್ಯತ್ಯಾಸ ಏನು ?" ಶಾರದಮ್ಮ ಗಂಡನ ಬೆನ್ನು ಬಿದ್ದಿದ್ದರು.

"ನೋಡೇ ಶಾರೂ, ನನ್ನ ಅಭಿಪ್ರಾಯ ಏನು ಅಂತ ನಿನಗೆ ಗೊತ್ತಿದೆ. ಯಾಕೆ ಯಾಕೆ ಅಂತ ಪದೇ ಪದೇ ಕೇಳಬೇಡ. ನಮಗೂ ನಿನ್ನ ಮನೆಯವರಿಗೂ ಬಹಳ ವ್ಯತ್ಯಾಸವಿದೆ. ಈಗ ಅವೆಲ್ಲ ವಾದಗಳು ಬೇಡವೇ ಬೇಡ. ಒಂದಂತೂ ಸತ್ಯ. ಯಾವಾಗಲೂ ಸಮಾನರ ನಡುವೆ ಮಾತ್ರ ಸಂಬಂಧ ಇರಿಸಿಕೊಳ್ಳಬೇಕು...ಅಂದರೆ ನಮ್ಮ ಯೋಚನೆಗಳು ಸಮಾನವಾಗಿ ಹೊಂದಬೇಕು..."

"ಹಾಗಂದರೆ ಹೇಗೆ? ಹೊಂದುವುದು, ಹೊಂದಿಸಿಕೊಳ್ಳುವುದು ಎಲ್ಲವುದೂ ಇರಬೇಕಪ್ಪ. ನನ್ನ ಅಪ್ಪನ ಮನೆ ನಿಮಗೆ ಏನೂ ಅಲ್ಲವಾ ? ಕಣ್ಣೆದುರಿಗೆ ಇರುವ ಸಂಬಂಧವನ್ನು ಇಲ್ಲ ಅಂತಂದರೆ ಅಥವ ಬೇಡ ಅಂತಂದರೆ ಅದು - ಅಲ್ಲ ಇಲ್ಲ ಅಂತಾಗುತ್ತದಾ ? ಗಂಡ ಇದ್ದೂ ನಾನೊಬ್ಬಳೇ ಅಪ್ಪನ ಮನೆಗೆ ಹೋದರೆ ನನ್ನ ನೆಂಟರಿಷ್ಟರು ಏನೆಂದುಕೊಳ್ಳುವುದಿಲ್ಲ ಹೇಳಿ ? ಗಂಡ ಬರಲಿಲ್ಲವಾ..ಗಂಡ ಬರಲಿಲ್ಲವಾ ? ಅಂತ ಮೆಟ್ಟುಮೆಟ್ಟಿಗೆ ಕೇಳುವವರಿಗೆಲ್ಲ ವಿವರಣೆ ಕೊಡುತ್ತ ನಾನು ಸಾಯಬೇಕಾ ?"

"ನೋಡು, ಒಂದೇ ಉಸಿರಿಗೆ ಏನೇನೋ ಹೇಳಿ ನನ್ನ ತಲೆ ಕೆಡಿಸಬೇಡ. ಹೌದು. ಗಂಡ ಬರಲಿಲ್ಲ ಅಂತ ಹೇಳು. ಏನೀಗ ? ನೋಡು, ನಿನ್ನ ಅಪ್ಪನ ಮನೆಯ ಬಗ್ಗೆ ನಾನು ಏನೂ ಮಾತಾಡಬಾರದು ಅಂದುಕೊಂಡಿದ್ದೇನೆ. ಆದರೆ ನೀನು ನನ್ನ ಬಾಯಿಗೆ ಕೋಲು ಹಾಕ್ತಾ ಇದ್ದೀಯಲ್ಲ ? ಮಾತಾಡಿ ನನ್ನ ಬಾಯಿಯನ್ನು ಹೊಲಸು ಮಾಡಿಕೊಳ್ಳಲಿಕ್ಕೆ ನನಗೆ ಇಷ್ಟವಿಲ್ಲ. ಆದರೆ ತಂಗಿಯ ಮದುವೆಗಂತ ನೀನು ನಿನ್ನ ಅಪ್ಪನ ಮನೆಗೆ ಹೋದರೆ, ಅದರಿಂದ ನಿನಗೆ ಸಂತೋಷವೂ ಆಗುವುದಾದರೆ ನೀನು ಧಾರಾಳವಾಗಿ ಹೋಗು. ಮಕ್ಕಳನ್ನೂ ಕರೆದುಕೊಂಡು ಹೋಗು. ಇಲ್ಲಿರುವ ನನ್ನ ಊಟತಿಂಡಿಯ ಬಗ್ಗೆ ನೀನು ಚಿಂತೆ ಮಾಡುವುದೇ ಬೇಡ. ನಾನು ನಿಶ್ಚಿಂತೆಯಿಂದ ಇರುತ್ತೇನೆ. ಆದರೆ ನನ್ನನ್ನು ಮಾತ್ರ ಜೊತೆಯಲ್ಲಿ ಬನ್ನಿ ಬನ್ನಿ ಅಂತ ಪೀಡಿಸಬೇಡ. ಗಂಡ ಇದ್ದವರೆಲ್ಲರೂ ತಾವು ಹೋಗುವಲ್ಲಿಗೆಲ್ಲ ತಮ್ಮ ಗಂಡನನ್ನು ಕಟ್ಟಿಕೊಂಡೇ ಹೋಗಿ ತಮ್ಮ ಗಂಡನ ಅಸ್ತಿತ್ವವನ್ನು ಹತ್ತು ಜನರ ಮುಂದೆ ಪ್ರಮಾಣೀಕರಿಸಬೇಕೆಂದೇನೂ ಇಲ್ಲ... ನೋಡು ಶಾರದಾ, ದಯವಿಟ್ಟು ನನ್ನನ್ನು ಬಿಟ್ಟು ಬಿಡು; ಒತ್ತಾಯ ಮಾಡಬೇಡ...ನನಗೆ ಅಲ್ಲಿನ ವಾತಾವರಣ ಹಿಡಿಸುವುದಿಲ್ಲ. ಅಕ್ಕಿ ಬೆಂದಿದೆಯಾ ಅಂತ ನೋಡುವುದಕ್ಕೆ ಬುದ್ಧಿ ಇರುವವರಿಗೆ ಒಂದು ಅಗಳು ಸಾಕಾಗುತ್ತದೆ. ಅದು ಸಾಕಾಗದಿದ್ದರೆ ಅವರು ಅಡುಗೆ ಕಲೆ ಸಿದ್ಧಿಸಿರದ ಹೆಡ್ಡರು ಅಂತ ಅರ್ಥ. ನೀನು ಹೆಡ್ಡಿ ಅಲ್ಲ ಅಂದುಕೊಂಡಿದ್ದೇನೆ." ಅನ್ನುತ್ತ ಕೂತಲ್ಲಿಂದ ಎದ್ದರು.

ಈಗ ಶಾರದಮ್ಮ ಕುಸುಕುಸು ಅಳತೊಡಗಿದರು. ಹೆಂಡತಿಯ ಕಣ್ಣೀರನ್ನು ನೋಡಿದ ಗಿರಿರಾಯರು ಮತ್ತೆ ಕೂತರು. ಹೆಂಡತಿಯ ಪಕ್ಕದಲ್ಲಿಯೇ ಕೂತು "ಯಾಕೆ ಸುಮ್ಮನೆ ಸುಸ್ತು ಮಾಡಿಕೊಳ್ತಿ ಮಾರಾಯ್ತೀ ? ನಾನೊಬ್ಬ ಸಾಮಾನ್ಯ ಗುಮಾಸ್ತ. ಬರೇ ಸಂಬಳದಿಂದ ಬದುಕುವ ಪ್ರಾಣಿ. ನಿನ್ನ ಕಡೆಯವರ ದೃಷ್ಟಿಯಲ್ಲಿ - ಅಡ್ಡ ದಾರಿಯಿಂದ ಕಮಾಯಿ ಮಾಡುವುದನ್ನೂ ತಿಳಿಯದ ಹೆಡ್ಡ ನಾನು. ಇರಲಿ. ಅವರ ಅಭಿಪ್ರಾಯ ಅವರಿಗೆ. ಇನ್ನು, ಮದುವೆ ಮನೆ ಅಂದ ಮೇಲೆ - ಅಲ್ಲಿ ನಿನ್ನ ಮನೆಯಲ್ಲಿ ದೊಡ್ಡ ದೊಡ್ಡ ನಗದು ಸಾಹುಕಾರರು ಸೇರುತ್ತಾರೆ. ನಿನ್ನ ಅಪ್ಪ ಅಮ್ಮ ತಮ್ಮ ತಂಗಿಯರೆಲ್ಲರೂ ಬಂದವರ ಮುಖ ನೋಡುವ ಮೊದಲು ಬಂದವರ ಕಿಸೆಯ ದಪ್ಪ ಅಳೆಯುವವರು. ಅವರ ಮರ್ಯಾದೆಯ ಅಳತೆಗೋಲಿಗೆ ನಾವಂತೂ ಸಿಕ್ಕುವುದಿಲ್ಲ. ನನ್ನ ದೃಷ್ಟಿಯಲ್ಲಿ, ಮರ್ಯಾದೆ ಇಲ್ಲದಲ್ಲಿಗೆ ಹೋಗಬಾರದು ಶಾರೂ. ಸತ್ಯ ಹೇಳುವುದಾದರೆ ನೀನು ಹೋಗುವುದೂ ನನಗೆ ಇಷ್ಟವಿಲ್ಲ. ಯಾಕೆಂದರೆ ಅಲ್ಲಿ ನಿನಗೂ ಪ್ರೀತಿ ಸಿಗುವುದಿಲ್ಲ; ಮರ್ಯಾದೆ ಕೊಡುವುದು ಯಾರಿಗೆ ಮತ್ತು ಹೇಗೆ ಅನ್ನುವುದು ಆ ಪಡಪೋಶಿಗಳಿಗೆ ಮೊದಲೇ ಗೊತ್ತಿಲ್ಲ. ಇಷ್ಟಾಗಿಯೂ ಹೋಗಲೇ ಬೇಕೆಂದಿದ್ದರೆ ನೀನು ಹೋಗು; ನನ್ನನ್ನು ಮಾತ್ರ ಎಳೆಯಬೇಡ. ಈಗ ಸದ್ಯಕ್ಕಂತೂ - ನನ್ನ ಎದುರಿಗೆ ಕೂತು ಅತ್ತು ಕರೆದು ರಂಪ ಮಾಡಬೇಡ ಮಾರಾಯ್ತಿ... ಆಯ್ತಾ ?" ಗಿರಿರಾಯರು ಹೆಂಡತಿಯ ಗಲ್ಲವನ್ನೆತ್ತಿ ಕೆನ್ನೆ ಹಿಂಡಿದರು.

ಗಂಡನ ಕೈಯನ್ನು ಬಿಗಿಯಾಗಿ ಹಿಡಿದುಕೊಂಡ ಶಾರದಮ್ಮ " ಸರಿ. ನಿಮಗೆ ಹಿಂಸೆ ಕೊಟ್ಟು ನಾನ್ಯಾಕೆ ನಿಮ್ಮನ್ನು ಎಳಕೊಂಡು ಹೋಗುವುದು ? ಆದರೆ ಮನೆಯಿಂದ ಯಾರೂ ಹೋಗದಿದ್ದರೆ ತಪ್ಪಾಗುತ್ತದೆ. ಆಡಿಕೊಳ್ಳುವವರಿಗೆ ಎಡೆಯಾಗುತ್ತದೆ. ಆದ್ದರಿಂದ ಇಬ್ಬರು ಮಕ್ಕಳನ್ನು ಮಾತ್ರ ಕಟ್ಟಿಕೊಂಡು ನಾನು ಹೋಗಿ ಬರುತ್ತೇನೆ...ಜಾನಕಿ ನಿಮ್ಮ ಜೊತೆ ಇರಲಿ. ಹೇಳಿದಷ್ಟು ಮನೆ ಕೆಲಸ ಮಾಡಲು ಅವಳಿಗೆ ಗೊತ್ತು. ನಾನು ಬರುವವರೆಗೆ ನಾಲ್ಕೈದು ದಿನ ನಿಮ್ಮ ಊಟಕ್ಕೆ..." ಅನ್ನುವಾಗಲೇ ತಡೆದ ಗಿರಿ, "ಅಯ್ಯೋ ಮಾರಾಯ್ತಿ, ನಿನಗೆ ಈಗ ಇರುವ ಚಿಂತೆಯೇ ಹೊರಲಾರದಷ್ಟಿದೆ. ಅದರ ಮಧ್ಯ ನನ್ನ ಚಿಂತೆಯನ್ನೂ ಸೇರಿಸಿಕೊಳ್ಳಬೇಡ. ನಾನು ಗಮ್ಮತ್ತಿನಲ್ಲಿ ಗಂಜಿ ಮಾಡಿಕೊಂಡು ಉಣ್ಣುತ್ತೇನೆ. ಜೊತೆಗಿರುವ ಜಾನಕಿಗೂ ಅದೇ ನಡೆಯುತ್ತದೆ. ನಾಲ್ಕು ದಿನ ಅಲ್ಲವಾ ? ನೀನು ನಿಶ್ಚಿಂತೆಯಿಂದ ಹೋಗಿ ಬಾ...ಹಾಂ...ಆದರೆ ಈಗ ಕಣ್ಣಿಂದ ಗಂಗಾ ಭಾಗೀರಥಿ ಹರಿಸಿದ ಹಾಗೆ, ಅಲ್ಲಿ ಅಪ್ಪನ ಮನೆಯಲ್ಲಿ ಯಾವುದೇ ಸಂದರ್ಭದಲ್ಲೂ ಅಳುವುದಿಲ್ಲ ಅಂತ ನನಗೆ ಮಾತುಕೊಡು...ಯಾಕೆಂದರೆ ಅಲ್ಲಿ ನಿನ್ನನ್ನು ಸಮಾಧಾನ ಪಡಿಸಲಿಕ್ಕೆ ಯಾರೂ ಇರುವುದಿಲ್ಲ...ನಗುವವರ ಎದುರು ಎಂದೂ ಅಳಬಾರದು. ಅತ್ತರೆ ನಗುವವರ ಎದುರು ಎಡವಿ ಬಿದ್ದಂತೆ ಆಗುತ್ತದೆ.."

ಗಂಡನ ಮಾತಿಗೆ ನಕ್ಕ ಶಾರದಮ್ಮ ಮಾತು ಕೊಡುವಂತೆ ಗಿರಿರಾಯರು ಚಾಚಿದ ಕೈಮೇಲೆ ತನ್ನ ಕೈಯ್ಯನ್ನಿರಿಸಿ "ಅಲ್ಲಿ ಯಾರಾದರೂ ಯಾಕೆ ನನ್ನನ್ನು ಅಳುವಂತೆ ಮಾಡುತ್ತಾರೆ ? ನಿಮಗೆ ಬರೀ ತಪ್ಪು ಅಭಿಪ್ರಾಯ ಅಚ್ಚಾಗಿ ಹೋಗಿದೆ...ಅಷ್ಟೆ. ದಿನ ಬದಲಾದ ಹಾಗೆ ಎಲ್ಲ ಜನರೂ ಬದಲಾಗ್ತಾರೆ..." ಅನ್ನುತ್ತ ಅಲ್ಲಿಂದ ಎದ್ದರು. "ಆಗಲಿ; ಆಗಲಿ..ಬದಲಾಗಲಿ..." ಅನ್ನುತ್ತ ಗಿರಿರಾಯರು ನಕ್ಕರು.

ಅಂತೂ ಶಾರದಮ್ಮ ಅಪ್ಪನ ಮನೆಗೆ ಹೊರಟರು. ನಾಲ್ಕು ವರ್ಷದ ಸಣ್ಣ ಮಗ ಕೃಷ್ಣ, ಐದನೇ ತರಗತಿ ಓದುತ್ತಿದ್ದ ಮಗಳು ಲಲಿತೆಯೊಂದಿಗೆ ಬಸ್ ನಿಲಾಣಕ್ಕೆ ಬಂದರು. ಅವರ ಬಟ್ಟೆಬರೆಯ ಪೆಟ್ಟಿಗೆ ಹಿಡಿದುಕೊಂಡು ಜೊತೆಗೆ ಬಂದ ಗಿರಿರಾಯರು ಅವರನ್ನು ಬಸ್ ಹತ್ತಿಸಿ, "ಒಂದೇ ಗಂಟೆಯ ಪ್ರಯಾಣ. ಕಂಡಕ್ಟರನಿಗೆ ಹೇಳಿದ್ದೇನೆ. ನಿಮ್ಮನ್ನು ಸರಿಯಾದ ಜಾಗದಲ್ಲಿ ಇಳಿಸುತ್ತಾರೆ. ಜಾಗ್ರತೆ. ಅಪ್ಪನ ಮನೆ ಅಂತ ಮೊದಲಿನ ಸಲಿಗೆ ತೋರಿಸಬೇಡ; ಸಣ್ಣ ಹುಡುಗಿಯಾಗುವ ಉಮ್ಮೇದು ಬೇಡ. ಗಂಭೀರವಾಗಿರು. ಮದುವೆಯ ದಿನ ಮಾತ್ರ ನೀನು ಸ್ವಲ್ಪ ದೂರದೂರದಲ್ಲೇ ಇರು. ಅತಿ ಉತ್ಸಾಹ ತೋರಿಸ್ಬೇಡ - ಆಯ್ತಾ ? ಮಕ್ಳು ಜಾಗ್ರತೆ. ಏನಾದರೂ ಬೇಸರವಾದರೆ ನನ್ನನ್ನು ನೆನಪಿಸಿಕೋ. ಹೇಗೆ ಗೊತ್ತಾ?" - ಅಂತ ಕಿವಿಯ ಹತ್ತಿರ ಬಾಗಿ "ಆಹಾ ನನ್ನ ಮದುವೆಯಂತೆ..." ಅಂತ ಹಾಡುತ್ತ ನಾನು ನಿನ್ನನ್ನು ಸುತ್ತುತ್ತಿದ್ದುದನ್ನು ನೆನಪಿಸಿಕೋ. ಅಪ್ಪನ ಮನೆಯ ಸುಖದಲ್ಲಿ ತೇಲ್ತಾ ತೇಲ್ತಾ ನಾನು ಮತ್ತು ಮಗಳು ಜಾನಕಿ ಇಲ್ಲಿ ನಿಮಗಾಗಿ ಕಾಯುತ್ತಿದ್ದೇವೆ ಅಂತ ಮರೀಬೇಡ ಮತ್ತೆ...ಏನು ? ಮಕ್ಕಳು ಜಾಗ್ರತೆ.." ಇನ್ನೂ ಹೇಳುತ್ತಿರುವಾಗಲೇ "ರೈಟ್ ರೈಟ್.." ಅನ್ನುವ ಕಂಡಕ್ಟರ್ ಕೂಗಿನೊಂದಿಗೆ ಬಸ್ ಹೊರಟಿತು.

                                          **********----------**********

"ಜಾನಕೀ..." ಗಿರಿರಾಯರು ಮಗಳನ್ನು ಕರೆಯುತ್ತ ಪಡಸಾಲೆಗೆ ಬಂದರು. "ಏನಮ್ಮ ? ಕರೆದರೂ ಕೇಳದಷ್ಟು ಯಾವ ಪುಸ್ತಕದಲ್ಲಿ ಮುಳುಗಿದ್ದೀ ?" ಕಿವಿಯ ಹತ್ತಿರದಲ್ಲಿಯೇ ಅಪ್ಪನ ದ್ವನಿ ಕೇಳಿ ಕುಮಟಿ ಬಿದ್ದ ಜಾನಕಿ "ಹೋಗಪ್ಪ; ನಾನು ಎಷ್ಟು ಹೆದರಿದೆ ಗೊತ್ತಾ ? ತ್ರಿವೇಣಿಯವರ ಕಾದಂಬರಿಯಲ್ಲಿ ಮುಳುಗಿದ್ದ ನನಗೆ ನೀನು ಕರೆದದ್ದು ಕೇಳಿಸಲೇ ಇಲ್ಲ..." ಅಂತ ಮಗಳು ಹುಸಿಮುನಿಸು ತೋರಿದಾಗ "ಓದುವವಳು ಉತ್ತಮ ವಿಷಯಗಳಿರುವ ಪುಸ್ತಕವನ್ನೇ ಓದು. ಸುಮ್ಮನೆ ಕಾಲಕ್ಷೇಪಕ್ಕಾಗಿ ಓದಿದರೆ ಯಾವ ಉಪಯೋಗವೂ ಆಗುವುದಿಲ್ಲ. ಹೋಗಲಿ; ನಿನ್ನ ಅಮ್ಮ ಮದುವೆಗಂತ ಹೋಗಿ ನಾಲ್ಕು ದಿನ ಆಯ್ತಲ್ಲ ? ಹೌದು. ಇವತ್ತು ಮದುವೆ. ಅಂದರೆ ನಾಳೆಯಾದರೂ ವಾಪಸ್ ಬರಬಹುದು. ಇವತ್ತು ರಾತ್ರಿಗೆ..ಊಟಕ್ಕೆ" ಅನ್ನುವಾಗಲೇ ಜಾನಕಿಯು ಅಪ್ಪನನ್ನು ತಡೆದು "ರಾತ್ರಿಗೆ ಅನ್ನ, ಬೇಳೆ ಸಾರು ಮಾಡ್ತೇನಪ್ಪ. ಸಾಕಲ್ಲವಾ ?" ಅಂದಳು. "ಸಾಕೇನು ? ಬೇಕಾದಷ್ಟಾಯಿತು ಜಾನಕೀ. ಮಜ್ಜಿಗೆ ಹೇಗೂ ಉಂಟಲ್ಲ.." ಅಂದರು.  ಮನಸ್ಸಿನಲ್ಲೇ "ಪರವಾಗಿಲ್ವೇ ? ನನ್ನ ಹೆಂಡತಿ ತನ್ನ ಮಗಳಿಗೆ ಒಂದಷ್ಟು ಅಡುಗೆ ಕಲಿಸಿದ್ದಾಳೆ. ಭೇಶ್; ಭೇಶ್..." ಅಂದುಕೊಳ್ಳುತ್ತ ರಾಯರು ಚಾವಡಿಗೆ ಬಂದರು.

ಅಷ್ಟರಲ್ಲಿ ಹಿತ್ತಲಿನಲ್ಲಿ ಹಸುಕರುವನ್ನು ಕಟ್ಟಿದ್ದು ನೆನಪಾಗಿ ಅವನ್ನು ಹಟ್ಟಿಯಲ್ಲಿ ಕಟ್ಟಿಬಿಡುವ ಅಂದುಕೊಂಡ ರಾಯರು ಹಿತ್ತಲಿಗೆ ನಡೆದರು. ಅವನ್ನು ಹಟ್ಟಿಯಲ್ಲಿ ಕಟ್ಟಿ ಬಾಣಿಗೆ ಒಂದಷ್ಟು ಕಲಗಚ್ಚು, ಎದುರಿಗೆ ಒಂದು ಹಿಡಿ ಒಣ ಹುಲ್ಲನ್ನು ಹಾಕಿ ಮನೆಯೊಳಗೆ ಹೆಜ್ಜೆಯಿಡುವಾಗ ಗೇಟು ತೆಗೆದ ಶಬ್ದವಾಗಿ ಹಿಂತಿರುಗಿ ನೋಡಿದರು. "ಅರೆ, ಶಾರದೆ ಮತ್ತು ಮಕ್ಕಳು ಬಂದೇ ಬಿಟ್ಟರಲ್ಲ ? ಅಂದರೆ ಮದುವೆಯ ದಿನ ಸಂಜೆಯೇ ಹೊರಟು ಬಂದಿದ್ದಾರೆ..." ಅಂದುಕೊಳ್ಳುತ್ತ "ಬನ್ನಿ ಬನ್ನಿ; ಮದುವೆಯ ಸಿಹಿ ಕಜ್ಜಾಯವನ್ನು Fresh ಆಗಿರುವಾಗಲೇ ಮನೆಯಲ್ಲಿದ್ದ ಬಡಪಾಯಿಗಳು ತಿನ್ನಲಿ ಅಂತ ಗಂಟು ಕಟ್ಟಿಕೊಂಡು, ಇವತ್ತೇ ಹೊರಟು ಬಂದರಾ ? ಅಥವ ನೀವು ಮಾತ್ರ ತಿಂದು ಬಂದಿರಾ ?" ಅನ್ನುತ್ತ ಹೆಂಡತಿಯ ಕೈಯಲ್ಲಿದ್ದ ಪೆಟ್ಟಿಗೆಯನ್ನು ತೆಗೆದುಕೊಂಡರು. ಎತ್ತಿಕೊಂಡಿದ್ದ ಕೃಷ್ಣನನ್ನು ಕೆಳಗಿಳಿಸಿ ಉಸ್ ಎನ್ನುತ್ತ ಜಗಲಿಯಲ್ಲೇ ಕೂತರು -  ಶಾರದಮ್ಮ. ಅಮ್ಮನ ಧ್ವನಿಯನ್ನು ಕೇಳಿದ ಜಾನಕಿಯು ಓಡಿಹೋಗಿ ಒಂದು ಚಂಬಿನಲ್ಲಿ ಕುಡಿಯುವ ನೀರನ್ನು ತಂದಿಟ್ಟಳು. ಗಟಗಟ ಕುಡಿದ ಶಾರದಮ್ಮ ಅಲ್ಲೇ ಒರಗಿ ಕೂತರು. ಆಗಲೇ ಕೃಷ್ಣ ಓಡಿಹೋಗಿ ಅಪ್ಪನ ತೊಡೆಯೇರಿದ್ದ. ಲಲಿತೆಯೂ ಅಪ್ಪನಿಗೆ ಅಂಟಿಕೊಂಡು ಕುಳಿತಿದ್ದಳು. ಹಿರಿಯ ಮಗಳು ಜಾನಕಿ ಮಾತ್ರ ಅಮ್ಮನ ಪಕ್ಕ ಸೇರಿಕೊಂಡಳು.

ರಾಯರು ಹೆಂಡತಿಯ ಮುಖವನ್ನೇ ನೋಡುತ್ತಿದ್ದರು. "ಏನು ಶಾರೂ, ನಿನ್ನನ್ನು ನೋಡಿದರೆ ಬಹಳ ಆಯಾಸವಾದ ಹಾಗೆ ತೋರುತ್ತಿದೆ...ಮದುವೆ ಮನೆಯಲ್ಲಿ ಸಿಕ್ಕಾಪಟ್ಟೆ ಓಡಾಟವಾ ? ನೀನೇ ತಿರುಗಣೆಯಾ ? ನಿನ್ನದೇ ಕಾರುಬಾರಾ ?" ಅನ್ನುತ್ತ ಕಣ್ಣು ಮಿಟುಕಿಸಿದರು. ಆಗ ಬಾಯಿ ಹಾಕಿದ ಚಿಕಣಿ ಲಲಿತೆಯು "ಇಲ್ಲ ಅಪ್ಪ, ನೀನು ಯಾವುದಕ್ಕೂ ಮುಂದೆ ಮುಂದೆ ಬರಬೇಡ ಅಂತ ಹೇಳಿ ಆ ಕೆಟ್ಟ ಅಜ್ಜಿಯು ಅಮ್ಮನಿಗೆ ಹೆದರಿಸಿತ್ತು. ಆಗ ಅಮ್ಮ ಎಷ್ಟು ಮರಕಿದಳು ಗೊತ್ತಾ ? ಪಾಪದ ಅಮ್ಮ ... ಆ ಅಜ್ಜಿಯ ಮನೆಗೆ ಹೋಗುವುದೇ ಬೇಡ... " ಅಂದಾಗ ಶಾರದಮ್ಮ ಮಗಳನ್ನು ಗದರಿದರು. "ದೊಡ್ಡವರ ವಿಷಯಕ್ಕೆಲ್ಲ ಮಕ್ಕಳು ತಲೆ ಹಾಕಬಾರದು; ನೀನು ಹೋಗಿ ಕೈಕಾಲು ತೊಳೆದು ಅಂಗಿ ಬದಲಾಯಿಸು...ಹೋಗು.." ಅಂತ ಲಲಿತೆಗೆ ಬೆದರಿಸುವಂತೆ ಕಣ್ಣು ಬಿಟ್ಟಳು. ಆದರೂ ಅಪ್ಪನನ್ನು ಬಿಟ್ಟು ಅಲುಗದ ಲಲಿತೆಯು "ಅಪ್ಪ, ನಾನೂ ಅತ್ತೆ. ಯಾಕೆ ಗೊತ್ತಾ ?" ಅಂದಳು. "ಯಾಕೆ ಮಗಳೇ ?" ಅನ್ನುತ್ತ ಗಿರಿರಾಯರು ಲಲಿತೆಯನ್ನು ಎತ್ತಿ ತಮ್ಮ ಇನ್ನೊಂದು ತೊಡೆಯ ಮೇಲೆ ಕೂರಿಸಿಕೊಂಡರು.

"ಅಪ್ಪ, ಅಜ್ಜಿಯ ಮನೆಯ ಹಟ್ಟಿಯಲ್ಲಿದ್ದ ಎಮ್ಮೆಯನ್ನು ಯಾರೋ ನಾಲ್ಕು ಜನರು ದರದರ ಎಳಕೊಂಡು ಹೋದರು. ಆಮೇಲೆ ಎದುರಿನ ಗದ್ದೆಯಲ್ಲಿ ಹಾಕಿ ಅದರ ಸುತ್ತಲೂ ಕೂತು ಅದರ ಚರ್ಮವನ್ನು ಕಿತ್ತರು. ಗದ್ದೆ ತುಂಬ ರಕ್ತ. ಆಮೇಲೆ ಆ ಎಮ್ಮೆಯನ್ನು ತುಂಡು ಮಾಡಿ ಚೂರು ಚೂರು ತಿಂದರು. ಚರ್ಮ ಸುಲಿಯುವಾಗ ಆ ಎಮ್ಮೆಯು ಜೋರಾಗಿ ಕೂಗಿತು. ಅಂಬಾ ಅಮ್ಮಾ ಅಂತ ಅರಚುತ್ತಿತ್ತು. ಆದರೂ ಅದನ್ನು ಬಿಡಲಿಲ್ಲ. ಆಮೇಲೆ ಎಮ್ಮೆ ಸತ್ತೇ ಹೋಯಿತು ಅಪ್ಪಾ...ಆ ಎಮ್ಮೆಯನ್ನು ಹಟ್ಟಿಯಿಂದ ಹೊರಗೆ ಹಾಕಿಸಿ ಎಳಕೊಂಡು ಹೋಗಲು ಕೊಟ್ಟ ಆ ಅಜ್ಜಿ, ಚಿಕ್ಕಮ್ಮ, ಮಾವ ...ಎಲ್ಲರೂ ಕೆಟ್ಟವರು...ನಾನು ಇನ್ನು ಮೇಲೆ ಅಲ್ಲಿಗೆ ಹೋಗುವುದಿಲ್ಲ..." ಅನ್ನುತ್ತ ಲಲಿತೆಯು ಮತ್ತೊಮ್ಮೆ ಬಿಕ್ಕಳಿಸಿದಳು. ಮಗಳನ್ನು ತಬ್ಬಿಕೊಂಡು ಸಂತೈಸಿದ  ಗಿರಿರಾಯರು ಹೆಂಡತಿಯತ್ತ ತೀಕ್ಷ್ಣವಾಗಿ ನೋಡುತ್ತ ಅಲ್ಲಿಂದ ಎದ್ದು ಹೋದರು.

                                                           *****-----*****

ರಾತ್ರಿಯ ಊಟದ ನಂತರದ ಕಸ ಮುಸುರೆಯನ್ನೆಲ್ಲ ಮುಗಿಸಿ ಶಾರದಮ್ಮ ಚಾವಡಿಗೆ ಬಂದು ಕೂತರು. ಮಕ್ಕಳೆಲ್ಲ ಮಲಗಿ ನಿದ್ರಿಸುತ್ತಿದ್ದರು. ಮೌನವಾಗಿ ಕೂತ ಹೆಂಡತಿಯತ್ತ ಸರಿದು ಆಕೆಗೆ ಒರಗಿಕೊಂಡೇ ಕೂತ ಗಿರಿರಾಯರು "ಮದುವೆಯ ಪುರಾಣ ಈಗ ಹೇಳು..." ಅಂದರು.


"ಅಲ್ಲ...ಎಂಥ ಕೆಲಸ ಮಾಡಿಬಿಟ್ಟರು ನೋಡಿ...ಮದುವೆಯ ದಿನ ಬೆಳಬೆಳಿಗ್ಗೆ ಆ ಎಮ್ಮೆಯನ್ನು ಹಿಸಿದು ಕಣ್ಣೆದುರೇ ತಿಂದು ಬಿಟ್ಟರಲ್ಲ ? ಮದುಮಗಳಾದ ನನ್ನ ತಂಗಿಗೆ ಆ ಶಾಪ ಬಡಿಯದಿದ್ದರೆ ಸಾಕು..."

"ಯಾಕೆ ? ಆ ಎಮ್ಮೆಯಿಂದ ಅವರಿಗೆಲ್ಲ ಏನು ತೊಂದರೆ ಆದದ್ದು ?"

"ನೋಡಿ, ಅದಕ್ಕೆ ಹುಶಾರಿರಲಿಲ್ಲ. ಅದರ ಕಾಲಿಗೆ ಏನೋ ಗಾಯವಾಗಿ ತುಂಬ ದಿನದಿಂದ ಆ ಎಮ್ಮೆ ಮಲಗಿದಲ್ಲಿಯೇ ಇತ್ತಂತೆ. ಮಲಗಿ ಮಲಗಿ ಎಮ್ಮೆಯ ಮೈಯಲ್ಲೆಲ್ಲ ವ್ರಣವಾಗಿ ಮೈಯೆಲ್ಲ ಕೆಂಪು ಕೆಂಪಾಗಿತ್ತು. ಸ್ವಲ್ಪ ವಾಸನೆಯೂ ಬರುತ್ತಿತ್ತು. ಅಂಗಳದಲ್ಲೇ ಹಾಕಿದ್ದ ಮದುವೆಯ ಚಪ್ಪರಕ್ಕೆ ಆ ಹಟ್ಟಿಯಿಂದ ಕೆಟ್ಟ ವಾಸನೆಯೂ ಬರುತ್ತಿತ್ತು. ಅದಕ್ಕೇ ಎಮ್ಮೆಯನ್ನು ಎತ್ತಿ ಹೊರಗೆ ಹಾಕಿಸಿ ಮದುವೆಯ ದಿನವೇ ವಿಲೇವಾರಿಯನ್ನೂ ಮಾಡಿಬಿಟ್ಟರು. ...ಎಂಥಾ ಎಮ್ಮೆ ? ಛೆ...ನೋಡಿ, ಆ ದಿನ ಬೆಳಿಗ್ಗೆಯೂ ಅದರ ಹಾಲು ಹಿಂಡಿದ್ದರು. ಆಗ ನಾನು ಅಲ್ಲೇ ಇದ್ದೆ. ಕಣ್ಣೀರು ಸುರಿಸುತ್ತ ಮಲಗಿದಲ್ಲಿಯೇ ಆ ಎಮ್ಮೆಯು ಹಾಲು ಕೊಟ್ಟಿತ್ತು..." ಶಾರದಮ್ಮ ಬಿಕ್ಕಿದರು. ಹೆಂಡತಿಯನ್ನು ಅಪ್ಪಿಕೊಂಡ ಗಿರಿರಾಯರು "ಛೆ...ಎಂತಹ ರಾಕ್ಷಸತನ...?" ಎಂದು ಗದ್ಗದರಾದರು.

"ಬೀಗರ ಕಡೆಯವರು ಬರುವಾಗ ರೋಗಿಷ್ಟವಾದ ಆ ಎಮ್ಮೆಯು ಅಲ್ಲಿದ್ದರೆ ಅದು ತಮ್ಮ ಘನತೆಗೆ ಕುಂದು ಅಂತ ನಮ್ಮವರೇ ಕೆಲವರು ತಕೊಂಡ ತೀರ್ಮಾನ ಅದು. ಅಷ್ಟಿದ್ದರೆ ಆ ಎಮ್ಮೆಯನ್ನು ನಾಲ್ಕು ದಿನ ಮೊದಲೇ ಸ್ವಲ್ಪ ದೂರದಲ್ಲಿ - ಪಕ್ಕದ ಮನೆಯ ಹಟ್ಟಿಯಲ್ಲಿ ಇರಿಸಬಹುದಿತ್ತು. ಹಾಲು ಕೊಟ್ಟ ಕೃತಜ್ಞತೆಗೆ ಕೊನೆಯ ವರೆಗೆ ಎಮ್ಮೆಗೆ ಚಿಕಿತ್ಸೆಯನ್ನಾದರೂ ಕೊಡಿಸಬಹುದಿತ್ತು...ಆದರೆ ಹಸಿಯಾಗಿ ತಿನ್ನುವವರಿಗೆ ಅದನ್ನು ಎತ್ತಿ ಕೊಟ್ಟರಲ್ಲ ? ಅದೂ ಮದುವೆಯ ಶುಭಕಾರ್ಯದ ಹೊತ್ತಿನಲ್ಲಿ ?..." ಹೊಟ್ಟೆ ತೊಳೆಸಿದಂತಾಗಿ ಬಚ್ಚಲಿಗೆ ಓಡಿದ ಶಾರದಮ್ಮ ಅತ್ತು ಹಗುರಾಗಿಯೇ ಬಂದರು. "ನೋಡಿ, ಅಲ್ಲಿ ಅಷಡ್ಡಾಳವೊಂದು ನಡೆಯುತ್ತಿದೆ ಅನ್ನಿಸಿದರೂ ನಾನು ಮಾತಾಡಲಿಲ್ಲ. ಮೊದಲೇ ವಕ್ರವಾಗಿ ನನ್ನನ್ನು ನೋಡುವವರಿಗೆ ಏನೇನೋ ಉಚಿತ ಸಲಹೆ ಕೊಟ್ಟು ನಾನ್ಯಾಕೆ ಅವರಿಂದ ಬೈಸಿಕೊಳ್ಳುವುದು ಅಂತ ನಾನು ಒಳಗೆ ಹೋಗಿ ಕಣ್ಣು ಮುಚ್ಚಿಕೊಂಡು ಕೂತುಬಿಟ್ಟೆ. ಒಂದು ಕಡೆ, ಈ ಮಾಣಿ ಕೃಷ್ಣನಂತೂ ಅಲ್ಲಿಗೆ ಹೋದ ಮೇಲೆ ಒಂದೇ ಸಮನೆ ಅಳುತ್ತಿತ್ತು. ನನಗೆ ಈ ಮಾಣಿಯನ್ನು ಸುಧಾರಿಸುವುದೇ ಆಗಿ ಹೋಯಿತು...ಅದರ ಮೇಲೆ "ನಿನ್ನ ಮಾಣಿಯದ್ದು ಎಂಥ ರಗಳೆ ಮಾರಾಯ್ತೀ ? ಅದಕ್ಕೆ ಎಂತ ಹುಶಾರಿಲ್ಯಾ ? ಅದು ಒರಲುದನ್ನು ಕೇಳಿ ಕೇಳಿ ಸಾಕಾಯ್ತು.." ಅಂತ ಎಲ್ಲರದೂ ಅಸಮಾಧಾನ. ನನ್ನ ಅಮ್ಮನಂತೂ - ಮಗುವನ್ನು ಎತ್ತಿಕೊಂಡು ಸಮಾಧಾನ ಪಡಿಸುವುದನ್ನು ಬಿಟ್ಟು "ನಿನ್ನ ಮಾಣಿನ ಕಟ್ಕಂಡ್ ನೀನು ಒಳಗೆ ಹೋಗು ಶಾರದಾ...ನನಗೆ ಈ ರಗಳೆ ಕೇಳಿ ಕೇಳಿ ಸಾಕಾಗಿದೆ.." ಅಂತ ಹೇಳಿಯೇ ಬಿಟ್ಟಳು. ಆಗ ನಿಜವಾಗಿ ನನಗೆ ನಿಮ್ಮ ಮಾತಿನ ನೆನಪಾಯಿತು ರೀ..."ಅಹಾ ನನ್ನ ಮದ್ವೆಯಂತೆ..." ಅಂತ ನೆನಸಿಕೊಂಡು ನಗು ಬರಿಸಿಕೊಂಡೆ. ಅಳಲಿಲ್ಲ. ಬಹುಶಃ ಅಳುವ ಬದಲು ನಕ್ಕೆ."  

ಕ್ಷಣಕಾಲ ಮೌನವಾಗಿದ್ದ ಗಿರಿರಾಯರು "ನೋಡು...ಮಾಡಿದವರ ಪಾಪ ಆಡಿದವರ ಬಾಯಲ್ಲಿ ಅಂತಾರೆ. ಅಲ್ಲಿನ ಹಣೆ ಬರಹ ನನಗೆ ಗೊತ್ತಿಲ್ಲದ್ದೇನಲ್ಲ. ಹೋಗಲಿ; ನಿನಗೀಗ ಸುಸ್ತಾಗಿದೆ... ವಿಶ್ರಾಂತಿ ತಕೋ, ನಾಳೆ ಮಾತಾಡುವ.." ಅಂದರು.

"ನನಗೆ ಇವತ್ತು ರಾತ್ರಿಯೆಲ್ಲ ನಿದ್ದೆ ಬರಲಿಕ್ಕಿಲ್ಲ ಮಾರಾಯರೇ. ಆ ಎಮ್ಮೆ, ಅದರ ಕಣ್ಣೀರು ಇಳಿಯುತ್ತಿದ್ದ ಮುಖವೇ ತಲೆ ತುಂಬ ತುಂಬಿದೆ...ಜೀವ ಇರುವಾಗಲೇ ಅದನ್ನು ಹರಿದು ತಿನ್ನಲು ಆ ಜನರಿಗೆ ಮನಸ್ಸಾದರೂ ಹೇಗೆ ಬಂತು ? "

"ನಿನ್ನ ವಾದವೇನೋ ಚೆನ್ನಾಗಿದೆ. ತಿಂದವರದ್ದೇ ತಪ್ಪು; ಬುದ್ಧಿ ಇಲ್ಲದವರಿಗೆ ಅದನ್ನು ಕೊಟ್ಟವರದ್ದಲ್ಲ...ಅಲ್ವಾ ? ಅವರಿಗೆಲ್ಲ ಇಂತಹ ಕೊಳೆತ, ಹಳಸಿದ ಆಹಾರವನ್ನೇ ಕೊಟ್ಟು ಕೊಟ್ಟು ಆ ಜನರನ್ನು ಅಲ್ಲೇ ಇಟ್ಟದ್ದು ನಮ್ಮಂತವರು. ಒಳ್ಳೆಯ ಆಹಾರ ಎಂದರೇನೆಂದು, ಒಳ್ಳೆಯ ರುಚಿಯೇ ಗೊತ್ತಿಲ್ಲದ ಹಾಗೆ ಅವರನ್ನು ಒತ್ತಿ ಇಟ್ಟದ್ದೂ ನಾವೇ. ಅವರಿಗೆಲ್ಲ ಒಳ್ಳೆಯ ಊಟ ಸಿಗುವಂತೆ ಮಾಡಿದ್ದರೆ ಅವರೂ ತಿನ್ನುತ್ತಿದ್ದರು. ಪಡೆದ ಸೇವೆಯನ್ನೂ ಮರೆತು ಆ ಎಮ್ಮೆಯನ್ನು ನಿರ್ದಾಕ್ಷಿಣ್ಯವಾಗಿ ಅವರಿಗೆ ಕೊಟ್ಟ ಕೆಟ್ಟ ಮನಸ್ಸುಗಳು ನಿನ್ನ ಮನೆಯ ಒಳಗೇ ಇತ್ತಲ್ಲ ? ಪಾಪ ಪುಣ್ಯದ ಭಯವೂ ಇಲ್ಲದ ಸೊಕ್ಕಿನ ಸಮಾಜ ಇದು. ಎಲ್ಲರೂ ಸ್ವಂತ ಲಾಭವನ್ನಷ್ಟೇ ನೋಡುವ ಸ್ವಾರ್ಥಿಗಳು. ತನ್ನ ಕರುವಿಗೂ ಕೊಡದೆ ಉಳಿಸಿಕೊಂಡು ಎಷ್ಟು ವರ್ಷ ನಮಗೆ ಹಾಲು ಕೊಟ್ಟು ಉಪಕರಿಸಿದ ಎಮ್ಮೆಯನ್ನು ಅದು ಬದುಕಿರುವಾಗಲೇ ಚಟ್ಟ ಕಟ್ಟಿ ಎತ್ತಿಕೊಂಡು ಹೋಗಲು ಕೊಟ್ಟವರಿಗೆ ಸಮಾ ಬಾರಿಸಬೇಕು; ಅದನ್ನು ತಿಂದವರಿಗಲ್ಲ. ಅದನ್ನು ತಿಂದವರಿಗೆ ಸಂಸ್ಕಾರ ಕೊಡುವ ಕೆಲಸ ನಮ್ಮಿಂದಲೇ ಆಗಬೇಕಿತ್ತು. ಆದರೆ ಅದರ ಬದಲಾಗಿ ನಾವೇ ಅವರಿಗೆ ಊರಿನ ಕೊಳೆಯನ್ನೆಲ್ಲ ತಿನ್ನಿಸುತ್ತಿದ್ದೇವೆ. ಆಮೇಲೆ ಅವರನ್ನು ಅಸಹ್ಯವೆಂಬಂತೆಯೂ ನಾವೇ ನೋಡುತ್ತಿದ್ದೇವೆ...ಅಲ್ಲವಾ ? ಯಾರಿಗಾದರೂ ಏನನ್ನಾದರೂ ಕೊಡುವ ಮನಸ್ಸಿದ್ದರೆ ನಾವು ತಿನ್ನುವ ಊಟವನ್ನೇ ಅವರಿಗೂ ಯಾಕೆ ಕೊಡಬಾರದು ? ಬೇಡವೆಂದು ಬಿಸಾಡುವಂಥದ್ದನ್ನು ಕೊಡುವುದೇಕೆ ?"

"ನಾವು ಉಂಡು ಬಿಸಾಟ ಎಲೆಯನ್ನು ಬಾಚಿ ಅದರಲ್ಲಿ ಸಿಕ್ಕಿದ್ದನ್ನೆಲ್ಲ ಒಟ್ಟು ಮಾಡಿ ಗಂಟು ಕಟ್ಟಿಕೊಂಡು ಆ ಎಮ್ಮೆಯ ತುಂಡುಗಳನ್ನೂ ಹೊತ್ತುಕೊಂಡು ಆಮೇಲೆ ಅವರೆಲ್ಲ ಖುಶಿಯಿಂದ ಹೋದರಂತೆ.."

"ಖುಶಿಯಿಂದ ಹೋದರು ಅಂತ ನಮ್ಮಂಥವರು ಕತೆ ಹೇಳಿ ಮುಗಿಸಬಹುದು...ಆದರೆ ಅವರಿಗೆ - "ಖುಶಿ ಅಂದರೆ ಏನು ? ಬದುಕುವುದು ಯಾಕೆ ? ಹೇಗೆ ?" ಅನ್ನುವುದೇ ಗೊತ್ತಿಲ್ಲ. ಅಯ್ಯೋ ದೇವರೇ, ನಮಗೆಲ್ಲ ಯಾವಾಗ ಬುದ್ಧಿ ಬರುವುದು ?"

"ಬಿಡಿ. ಮಿಂಚಿ ಹೋದ ಕಾರ್ಯಕ್ಕೆ ಚಿಂತಿಸಿ ಫಲವಿಲ್ಲ...ಸುಮ್ಮನೆ ನಾವು ನೋಯುವುದು ಯಾಕೆ ? ಈ ಹೆಣ್ಣು ಲಲಿತ ಮಾತ್ರ ಎಲ್ಲ ಮಕ್ಕಳ ಜತೆಗೆ ತಾನೂ ಗದ್ದೆಯ ಬದಿಗೆ ಹೋಗಿ ಆ ರೌದ್ರ ದೃಶ್ಯವನ್ನೆಲ್ಲ ನೋಡಿ ಬಂದಾಗಿನಿಂದ ಪೆಚ್ಚಾಗಿ ಹೋಗಿದೆ. "ನಮ್ಮಮನೆಗೆ ಹೋಗುವ, ಮನೆಗೆ ಹೋಗುವ" ಅಂತ ಅದರದ್ದು ಒಂದೇ ರಾಗ. ಎರಡು ಮಕ್ಕಳನ್ನು ಸಮಾಧಾನ ಮಾಡುವುದರಲ್ಲೇ ನಾನು ಸುಸ್ತಾಗಿ ಹೋದೆ."

"ಶಾರೂ...ಈಗ ನಿನಗೆ ಇನ್ನೆಷ್ಟು ಮದುವೆಯಾಗದ ತಂಗಿಯರಿದ್ದಾರೆ ?" ತುಟಿಯಂಚಿನಲ್ಲೇ ನಗುತ್ತ ರಾಯರು ಕೇಳಿದಾಗ ಶಾರದಮ್ಮನಿಗೆ ಯಾಕೆಂದು ತಿಳಿಯದೆ ಗಂಡನ ಮುಖವನ್ನೇ ನೋಡತೊಡಗಿದರು. "ಯಾಕೆಂದರೆ, ನನಗೆ - ನನ್ನ ಶಾರೂ ಮತ್ತು ಮಕ್ಕಳ ಚಿಂತೆಯಾಗಿದೆ. ಪೊಳ್ಳು ಪ್ರತಿಷ್ಠೆಯಲ್ಲದೆ ಬೇರೇನೂ ಅರ್ಹತೆಯಿಲ್ಲದ ಆ ನಿನ್ನ ಅಪ್ಪನ ಮನೆಯಲ್ಲಿ ಇನ್ನೂ ಏನೇನು ಕಾರ್ಯಕ್ರಮ ನಡೆಯಲಿಕ್ಕಿದೆಯೋ ಗೊತ್ತಿಲ್ಲ. ಯಾವುದೇ ಯಜಮಾನನ ಅಂಕೆಯಿಲ್ಲದ ರಾಜ್ಯ ಅದು. ಇನ್ನು ಮುಂದೆ ಅಲ್ಲಿಂದ ಯಾವುದೇ  ಹೇಳಿಕೆ ಬಂದರೂ ನನ್ನನ್ನು ಕರೆಯಬೇಡ. ಇಷ್ಟಾಗಿಯೂ ನಿನಗೆ ಹೋಗಬೇಕು ಅನ್ನಿಸಿದರೆ - ಅದೇ ದಿನ ಬೆಳಿಗ್ಗೆ ಹೋಗಿ ಸಂಜೆಗೆ ಮನೆಗೆ ಬಂದು ಬಿಡು. ನೋಡು, ಆ ಲಲಿತೆ ಸಹ ಹೆದರಿ ಹೋಗಿದೆ. ಪುಟ್ಟ ಮಕ್ಕಳು ಇಂತಹ ಕ್ರೌರ್ಯಗಳನ್ನೆಲ್ಲ ನೋಡಬಾರದು. ನಾಳೆ ನಮ್ಮ ಲಲಿತೆಯನ್ನು ಸ್ವಲ್ಪ ಮಾತನಾಡಿಸಿ ಸಮಾಧಾನ ಮಾಡಬೇಕು...ಬರುವ ರವಿವಾರ ಉಡುಪಿಗೆ ಹೋಗಿ ಸುತ್ತಾಡಿಕೊಂಡು ಬರುವ. ಕೃಷ್ಣನ ದರ್ಶನವನ್ನೂ ಮಾಡಬಹುದು. ಹೊಸತು ಬಿದ್ದೇ ಹಳೆಯದು ಮರೆಯಬೇಕು..." ಅನ್ನುವಾಗಲೇ ಶಾರದಮ್ಮ "ಕೃಷ್ಣಾ.." ಅನ್ನುತ್ತ ಹೊದಿಕೆಯ ಒಳಗೆ ಸೇರಿಕೊಂಡರು.

"ಇವೆಲ್ಲ ಎಂಥ ಸಂಬಂಧಗಳು ? ಬೇಡವೆಂದರೂ ಅಂಟಿಕೊಳ್ಳುವ ಬಗೆಬಗೆಯ ಬಂಧನಗಳು. ಪರಸ್ಪರ ಜೀವ ತಿನ್ನುವ ಬದುಕು...ಬಂಧನಗಳು... !" ಅಂದುಕೊಳ್ಳುತ್ತ ಗಿರಿರಾಯರು ಹೊರಳಿ ಮಲಗಿದರು.

ಗೋಡೆ ಗಡಿಯಾರದಲ್ಲಿ ಹನ್ನೆರಡು ಹೊಡೆಯಿತು. ಶಾರದಮ್ಮ ನಿದ್ರಿಸುತ್ತಿದ್ದರೂ - ಗಿರಿರಾಯರಿಗೆ ಮಾತ್ರ ನಿದ್ದೆಯೇಕೋ ಸತಾಯಿಸುತ್ತಿತ್ತು.
                                               *******-------*******

    





  

Wednesday, December 23, 2015

ಸುಮ್ಮನೆ ಕಥಾಮನೆ 1 - ತಳ್ಳುಗಾಡಿ.

ನಮ್ಮ ನಿತ್ಯದ ಮಾತುಗಳಲ್ಲಿ  "ಸುಮ್ಮನೆ" ಎಂಬ ಪದವನ್ನು ಆಗಾಗ ಉಪಯೋಗಿಸುತ್ತೇವೆ. ವಿನಾಕಾರಣ, ಅವಿರೋಧವಾಗಿ, ಪ್ರತಿಮಾತಿಲ್ಲದೆ, ವ್ಯರ್ಥವಾಗಿ, ಮೌನವಾಗಿ - ಮುಂತಾದ ಅನೇಕ ಪದಗಳಿಗೆ ಸಂವಾದಿಯಾಗಿ "ಸುಮ್ಮನೆ"ಯ ಬಳಕೆಯಾಗುವುದಿದೆ. ಕೆಲವರು ಸುಮ್ಮನೆ ಮಾತನಾಡುತ್ತಾರೆ; ಸುಮ್ಮನೆ ತಿನ್ನುತ್ತಾರೆ;  ಕೆಲವರು ಸುಮ್ಮನೆ ಪೀಡಿಸುತ್ತಾರೆ; ಕೆಲವರು ಸುಮ್ಮಸುಮ್ಮನೆ ಸಿಡಿದು ಬೀಳುತ್ತಾರೆ; ಕೆಲವರು ಸುಮ್ಮನೆ ನಗುತ್ತಾರೆ; ಕೆಲವರು ಸುಮ್ಮನೆ ಎಲ್ಲವನ್ನೂ ನೋಡುತ್ತ ಕೇಳುತ್ತ ಸುಮ್ಮನಿರುತ್ತಾರೆ. ಈ ತನ್ಮಧ್ಯೆ ಕೆಲವರು ಸುಮ್ಮನೆ ಹುಟ್ಟುತ್ತಾರೆ, ಉಸಿರು ಬಾಚಿ ಬದುಕುತ್ತಾರೆ ! ಕೆಲವರು ಸುಮ್ಮನೆ ಉಸಿರು ಹಾಸಿ ಸಾಯುತ್ತಾರೆ ! "ಸುಮ್ಮನೆ ಕಥಾಮನೆ"ಯಲ್ಲಿ ಒಮ್ಮೊಮ್ಮೆ ಕತೆಯಾಗಿ - ಸುಮ್ಮನೆ ಬಂದು ಹೋಗುತ್ತಾರೆ...

                                   ----------**********----------**********----------

                                                                ಳ್ಳುಗಾಡಿ...

ಗಂಗಮ್ಮ ಅಕ್ಕಿಯ ವಡೆ ಕಾಯಿಸುತ್ತ ಕುಳಿತಿದ್ದಳು. ಚಿಮಣಿ ಎಣ್ಣೆ ಇಂಧನದಿಂದ ಕೈಯ್ಯಿಂದ ತಿದಿ ಒತ್ತಿ ಉರಿಸುವ ದೊಡ್ಡ ರಕ್ಕಸ ಸ್ಟೌವ್ ಗಳ ರಣ ಕೋಲಾಹಲ. ನಾಲ್ಕು ಸ್ಟೌವ್ ಗಳಲ್ಲೂ ವಡೆ ಕಾಯುತ್ತಿತ್ತು. ಸಂಜೆ ಮೂರು ಗಂಟೆಯ ಒಳಗೆ ವಿಧವಿಧದ ೪೦೦ - ೫೦೦ ವಡೆ ಕಾಯಿಸಿ ಚಟ್ನಿ, ಸಾಂಬಾರ್ ಗಳನ್ನೂ ತಯಾರಿಸಿ ಇಡುವ ನಿತ್ಯದ ಅವಸರ. ಒಂದು ದಿನವೂ ಬಿಡುವಿರದ ಉದ್ಯೋಗ. ರವಿವಾರ ಬಂತೆಂದರೆ ಏಕಾಂಗಿಯಾಗಿ ೧೦೦೦ ವಡೆ ತಯಾರಿಸಬೇಕಿತ್ತು. ಗಂಗಮ್ಮನ ಮಗನು ತಳ್ಳು ಗಾಡಿಯಲ್ಲಿ ನಡೆಸುತ್ತಿದ್ದ  ವಡೆಯ ವ್ಯಾಪಾರವು ಬರಬರುತ್ತ ಜೋರಾಗಿಯೇ ನಡೆದಿತ್ತು.


ನಡುನಡುವೆ ಬೆನ್ನನ್ನು ನೆಟ್ಟಗೆ ಮಾಡುತ್ತ ಉಫ್ ಅಂದುಕೊಳ್ಳುತ್ತ ಸುತ್ತಲೂ ಇರಿಸಿಕೊಂಡಿದ್ದ ನಾಲ್ಕೂ ಬಾಣಲೆಯಲ್ಲಿ ಸಟ್ಟುಗ ಆಡಿಸುತ್ತ ಕೂತ ಗಂಗಮ್ಮ ಸೆರಗಿನಿಂದ ಮುಖವನ್ನು ಒರೆಸಿಕೊಂಡಳು. "ನನ್ನ ಅಕ್ಕ ತಂಗಿಯರೆಲ್ಲ ವೃದ್ಧಾಪ್ಯದ ವಿಶ್ರಾಂತಿಯ ಸುಖದಲ್ಲಿದ್ದರೆ ಈ ೭೦ ರ ಪ್ರಾಯದಲ್ಲೂ ನನಗೆ ಮಾತ್ರ ವಿಶ್ರಾಂತಿಯೆಂಬುದೇ ಇಲ್ಲವೇನೊ ? ಬೇಡ...ಎಲ್ಲವನ್ನೂ ಮುಗಿಸಿಯೇ ಹೋಗುತ್ತೇನೆ; ಕಟ್ಟಿಕೊಂಡು ಬಂದ ಕರ್ಮವನ್ನೆಲ್ಲ ಸವೆಸಿಯೇ ಹೋಗುತ್ತೇನೆ..." ವಡೆ ಕರಿಯುವಾಗ ಗಂಗಮ್ಮನ ಮನಸ್ಸು ಹಿಂದೆ ಸರಿಯುತ್ತ ಬೇಯುತ್ತಿತ್ತು.

ಅತ್ಯಂತ ಸಿರಿವಂತ ಮನೆಯಲ್ಲಿ ಬೆಳೆದಿದ್ದೆ. ಏನೆಲ್ಲ ಹಾದು ಬಂದೆ ? ಆ ಮದುವೆಯ ಮುಹೂರ್ತವು ನನ್ನ ಬದುಕಿನ
ಕನಸುಗಳನ್ನು ಅಳಿಸುವ ಮುಹೂರ್ತವೇ ಆಗಿ ಹೋಯ್ತಲ್ಲ ?

ಏನೋ ಸರಿದಂತಾಗಿ ಹಿಂದೆ ತಿರುಗಿದರೆ ಅಲ್ಲಿ ಮಗ ಅಶೋಕ ನಿಂತಿದ್ದ. ಹೆಗಲ ಮೇಲೆ ಕೈಯಿರಿಸಿ "ಅಮ್ಮಾ... ರೆಡಿ ಆದರೆ ತಕೊಂಡು ಹೊರಡ್ತೇನೆ.." ಅಂತ ಸನ್ನೆ ಮಾಡಿದ. ಬಾಣಲೆಯಲ್ಲಿ ಬೇಯುತ್ತಿದ್ದ ವಡೆಗಳನ್ನು ಎತ್ತಿ ಹಾಕುವಾಗಲೇ ಕೆಳಗೆ ರಾಶಿ ಹಾಕಿದ್ದ ಚಟ್ಟಂಬಡೆ, ಕಾಯಿ ಕಡುಬು, ಉದ್ದಿನ ವಡೆ ಎಲ್ಲವನ್ನೂ ಮಗನು ಡಬರಿಗೆ ತುಂಬಿಸುತ್ತಿದ್ದ. ಒಂದು ವಡೆಯನ್ನು ಮುರಿದು ಬಾಯಿಗೆ ಹಾಕಿಕೊಂಡು "ಸರಿಯಾಗಿದೆ.." ಎಂದು ಸನ್ನೆ ಮಾಡಿ ಹೊರಟೇಬಿಟ್ಟ.

ಮನೆಯಿಂದ ನಾಲ್ಕು ಮಾರು ದೂರದಲ್ಲಿ ರಸ್ತೆಯ ಬದಿಯಲ್ಲೇ ಕೂತು ವಡೆ ವ್ಯಾಪಾರ ಶುರು ಮಾಡಿ ಏಳೆಂಟು ವರ್ಷವಾದರೂ ಆಗಿರಬೇಕು. ಅದೇ ಆದಾಯದಲ್ಲೇ ನನ್ನ ಮನೆ ನಡೆಸುವುದಕ್ಕೆ ಶುರು ಮಾಡಿದ ಮೇಲೇ ನನ್ನ ಕಿವಿ ಕೆಪ್ಪಾದದ್ದಲ್ಲವಾ ? ಸ್ಟೌವ್ ನ ಗೂವ್ ಶಬ್ದವಲ್ಲದೆ ಈಗಂತೂ ಏನೂ ಕೇಳಿಸುವುದೇ ಇಲ್ಲ. ಹೌದು; ಈ ಜ್ವಾಲಾಮುಖಿಯ ಶಬ್ದ ಕೇಳಿಕೇಳಿಯೇ ನನ್ನ ಕಿವಿ ಕೆಪ್ಪಾದದ್ದು...

"ಈಗ ಒಂದು ವರ್ಷದಿಂದಂತೂ ಪೂರ್ತಿ ನಿಶ್ಶಬ್ದವಾಗಿದೆ; ಹೊರಗಿನ ಗದ್ದಲವಂತೂ ಕೇಳಿಸುವುದೇ ಇಲ್ಲ; ಒಳ್ಳೆಯದೇ ಆಯಿತು..." ಅಂದುಕೊಳ್ಳುವಾಗ ಗಂಗಮ್ಮನಿಗೆ ನಗು ಬಂತು. ಸೆರಗಿನಿಂದ ಮುಖ ಒರೆಸಿಕೊಳ್ಳುತ್ತ ಕೂತಲ್ಲಿಂದ ಎದ್ದು ಹೊರಬಾಗಿಲಿಗೆ ಬಂದ ಗಂಗಮ್ಮ ರಸ್ತೆಯನ್ನು ನೋಡುತ್ತ ಅಲ್ಲೇ ಕೂತಳು.


"ಎಷ್ಟು ಚೆಂದ ಇದ್ದೆ..ಬೆನ್ನ ಮೇಲಿನ ಜಡೆ ಮೊಣಗಂಟನ್ನು ತಲುಪುತ್ತಿತ್ತು...ಮುಷ್ಟಿಯಿಂದ ಹಿಡಿಯಲಾಗದಷ್ಟು ದಪ್ಪವಿತ್ತು...ಎಲ್ಲರೂ ನೀಲವೇಣೀ ಎಂದು ಅಡ್ಡಹೆಸರಿನಿಂದಲೇ ಕರೆಯುತ್ತಿದ್ದರಲ್ಲ? ಈಗ ಮಿಡಿನಾಗರ ಆಗಿದೆ...ಮೂರು ಜನ ಅಕ್ಕಂದಿರು ನಾಲ್ಕು ಜನ ತಮ್ಮಂದಿರು, ಒಬ್ಬ ಅಣ್ಣ.. ತುಂಬಿದ ಕುಟುಂಬದ ಪ್ರೀತಿಯ ಗಂಗಿಯಾಗಿದ್ದೆ..."

ನನ್ನ ಮದುವೆಯನ್ನು ಶ್ರೀಧರನೊಂದಿಗೆ ನಿಶ್ಚೈಸಿದ ಅಪ್ಪಯ್ಯ ಐದು ದಿನಗಳ ಮದುವೆಯ ಸಂಭ್ರಮಕ್ಕೆ ಅಂದು ತಯಾರಿ ನಡೆಸಿದ್ದರು. ಆ ದಿನಗಳ ಹುಡುಗಾಟ, ಕುಟುಂಬಸ್ಥರ ಕೀಟಲೆಗಳು, ನನ್ನ ಕನಸುಗಳು...
 
ಮದುವೆಯ ಹಿಂದಿನ ದಿನದ ವರೆಗೂ ಎಲ್ಲವೂ ಸುಂದರವಾಗಿಯೇ ಇತ್ತು. ಆ ಸಂಜೆ ಒಂದು ಸುದ್ದಿ ಬಂತಲ್ಲ ? "ಶ್ರೀಧರ್ ಗೆ ಬೇರೆ ಹುಡುಗಿಯನ್ನು ನಿಶ್ಚೈಸಿದ್ದಾರೆ. ನಿಮ್ಮ ಮಗಳಿಗೆ ಬೇರೆ ವರನನ್ನು ನಿಶ್ಚಯಿಸಿ..ನಮ್ಮನ್ನು ನಿರೀಕ್ಷಿಸಿ, ನಾಳೆ ಮದುವೆಯನ್ನು ಇಟ್ಟುಕೊಳ್ಳಬೇಡಿ..." ಸಿಡಿಲು ಬಡಿದಂತಿದ್ದ ಆ ಸುದ್ದಿ ತಂದವನನ್ನು ಕೊಲ್ಲದಂತೆ ನನ್ನ ಅಪ್ಪಯ್ಯನನ್ನು ತಡೆಯಲು ಆ ದಿನ ಅಡ್ಡ ಬಂದವರೆಷ್ಟು ? ಅಪ್ಪಯ್ಯ ಕೆಂಡಾಮಂಡಲವಾಗಿದ್ದರು. ಗಲಗಲ ಅನ್ನುತ್ತಿದ್ದ ಮದುವೆಯ ಮನೆಯಲ್ಲಿ ಅಂದು ನಿಶ್ಶಬ್ದ ಆವರಿಸಿತ್ತು. ಹಲವು "ಬಂಧು" ಗಳು ಸದ್ದಿಲ್ಲದೆ ಹೊರಟು ಹೋಗಿದ್ದರು ! ೫೦೦ ಜನರು ಕೂತುಣ್ಣುವಷ್ಟು ದೊಡ್ಡ ಚಪ್ಪರ, ತಳಿರು ತೋರಣವೆಲ್ಲ ನಿಶ್ಚಲವಾಗಿ ನಿಂತು ಬಿಟ್ಟಿದ್ದವು. ಮೂಲೆಹಿಡಿದು ಕೂತಿದ್ದ ನನ್ನನ್ನು ಅಪ್ಪಿಕೊಂಡು ಅಂದು ಅಮ್ಮ ಅತ್ತದ್ದಾದರೂ ಎಷ್ಟು ? ಆದರೆ ಬೊಬ್ಬಿರಿಯುತ್ತ ಒಳಗೆ ನುಗ್ಗಿದ ಅಪ್ಪಯ್ಯನು ಅಮ್ಮನನ್ನು ಎಳೆದು ನಿಲ್ಲಿಸಿ "ಏನಂದುಕೊಂಡಿದ್ದಾನೆ ? ಸೂ...ಮಗ. ಇವನು ಬೇಡವೆಂದರೆ ನನ್ನ ಮಗಳಿಗೆ ಬೇರೆ ಗಂಡು ಸಿಕ್ಕುವುದಿಲ್ಲವಾ ? ಕೇಳೇ...ಇದೇ ಚಪ್ಪರದಲ್ಲಿ ಇದೇ ಮುಹೂರ್ತದಲ್ಲಿ ನನ್ನ ಮಗಳಿಗೆ ನಾಳೆಯೇ ಮದುವೆ ಮಾಡದಿದ್ದರೆ ನಾನು ಅಪ್ಪನಿಗೆ ಹುಟ್ಟಿದ ಮಗನೇ ಅಲ್ಲ ಅಂದುಕೋ..." ಎಂದು ಕೂಗಾಡಿ ಹೊರಟೇ ಬಿಟ್ಟಾಗ "ಅಯ್ಯೋ, ಯಾವ ಹುಡುಗನನ್ನು ನೋಡಿದ್ದೀರಿ ? ಅದಾದರೂ ಹೇಳಿ..." ಎನ್ನುತ್ತ ಅಮ್ಮ ಚಡಪಡಿಸಿದ್ದಳು. ಅಪ್ಪಯ್ಯ ಆಗಲೇ ಹೊರಟು ಹೋಗಿದ್ದರು.

ಮರುದಿನ ಮದುವೆಯ ಮಂಟಪದಲ್ಲೇ ನಾನು ನನ್ನ ಗಂಡನನ್ನು ನೋಡಿದ್ದು. ತಪ್ಪಿಹೋದ ವರ ಶ್ರೀಧರನಷ್ಟು ಓದಿರದಿದ್ದರೂ ನೋಡುವುದಕ್ಕೆ ಕೆಂಪು ಕೆಂಪಾಗಿ - ಅವರಿಗಿಂತ ಚೆಂದ ಇದ್ದಾರೆ ಅನ್ನಿಸಿತ್ತು. ಬೊಂಬಾಯಿಯಲ್ಲಿ ಹೋಟೆಲ್ ಇಟ್ಟುಕೊಂಡಿದ್ದಾರೆ ಅಂತಲೂ ಗೊತ್ತಾಯಿತು. ಮದುವೆ ಗದ್ದಲವೆಲ್ಲವೂ ಮುಗಿದ ಕೆಲವೇ ದಿನಗಳಲ್ಲಿ ನಾನು ಬೊಂಬಾಯಿಯ ಪಾಲಾಗಿದ್ದೆ.

ಬೊಂಬಾಯಿಯಲ್ಲಿ ಎರಡು ಕೋಣೆಯ ಒಂದು ಪಂಜರದಲ್ಲಿ ನನ್ನ ಕಾಲಯಾಪನೆ ಶುರುವಾಯಿತು. ಯಾರದೋ ಹೋಟೆಲಿನಲ್ಲಿ ನನ್ನ ಗಂಡ ಉದ್ಯೋಗದಲ್ಲಿದ್ದರು ಎಂಬ ಸತ್ಯವೂ ಅಲ್ಲಿಗೆ ಹೋದ ಮೇಲೆಯೇ ನನಗೆ ಗೊತ್ತಾದದ್ದು. ಅಪ್ಪಯ್ಯನ ಅವಸರವನ್ನು ಕಂಡ ಒಬ್ಬರು "ಹುಡುಗನಿಗೆ ಸ್ವಂತ ಹೋಟೆಲಿದೆ" ಎಂಬ ಅಭಿಪ್ರಾಯ ಮೂಡುವಂತೆ ಅವರಿಗೆ ಸುಳ್ಳು ಹೇಳಿ ಹುಡುಗನ ಶಿಫಾರಸ್ಸು ಮಾಡಿದ್ದರು. ಅಥವ ಎಣಿಸಿದ್ದ ಮುಹೂರ್ತದಲ್ಲಿ ಮದುವೆ ಮಾಡಿಯೇ ಬಿಡುತ್ತೇನೆ ಅನ್ನುವ ಹಠಕ್ಕೆ ಬಿದ್ದಿದ್ದ ಅಪ್ಪಯ್ಯನು ಹುಡುಗನ ಹಿನ್ನೆಲೆಯನ್ನು ಕೂಲಂಕಷವಾಗಿ ವಿಚಾರಿಸಲೇ ಇಲ್ಲವೋ..ಅಂತೂ ಮದುವೆ ನಡೆದೇ ಹೋಯಿತು.


ನಾಲ್ಕು ಸುತ್ತಿನ ಮನೆಯಲ್ಲಿ ಕುಣಿದಾಡಿದ್ದ ನಾನು ಬೊಂಬಾಯಿಯ ಎರಡು ಕೋಣೆಯ ಮನೆ ಹೊಕ್ಕೆ. ಆಮೇಲೆ ಅಂಬಿಕಾ ಹುಟ್ಟಿದಳು. ಎರಡು ವರ್ಷ ಅಂತರದಲ್ಲಿಯೇ ಅಶೋಕನೂ ಹುಟ್ಟಿದ. ಯೌವ್ವನದ ಪ್ರೀತಿಯ ಅಮಲಿನಲ್ಲಿ ಮೊದಮೊದಲು ಯಾವುದೂ ಕಷ್ಟವೆಂದು ಕಾಣಲೇ ಇಲ್ಲ. ಬರಬರುತ್ತ ಬದುಕಿನ ಸತ್ಯವು ಬಿಚ್ಚಿಕೊಳ್ಳತೊಡಗಿತಲ್ಲ ? ನನ್ನ ಗಂಡನ ನಿಜರೂಪ ಕಾಣಲಿಕ್ಕೆ ಶುರುವಾದ್ದು ಆಮೇಲೇ. ಅವರು ಆಗ ಹೋಟೆಲ್ಲಿನ ಕ್ಯಾಶಿಯರ್ ಕೆಲಸವನ್ನೂ ಬಿಟ್ಟಾಗಿತ್ತು; ಇವರೇ ಬಿಟ್ಟರೋ ಹೋಟೆಲಿನವರೇ ಹೊರಗೆ ಕಳಿಸಿದರೋ ? ಅಂತೂ ನಿರುದ್ಯೋಗಿ ಆಗಿಬಿಟ್ಟರು. ಆದರೂ ದಿನವೂ ದೊಡ್ಡ ಆಫೀಸರ್ ಥರ ಡ್ರೆಸ್ಸ್ ಮಾಡಿಕೊಂಡು ಬೆಳಿಗ್ಗೆ ೯ ಕ್ಕೆ ಮನೆ ಬಿಟ್ಟರೆ ರಾತ್ರಿ ೯ ರವರೆಗೂ ಮನೆಗೆ ಬರುತ್ತಿರಲಿಲ್ಲ. ಕೆಲವು ದಿನ ಕಿಸೆ ತುಂಬ ದುಡ್ಡು ತರುತ್ತಿದ್ದರು. ಆದರೆ ತಮ್ಮ ಉದ್ಯೋಗ ಏನು ಅಂತ ಕೇಳಿದರೆ ನೆಟ್ಟಗಿನ ಉತ್ತರ ಕೊಡುತ್ತಿರಲಿಲ್ಲ. ರಹಸ್ಯಮಯ ಸಂಸಾರ ಎಂದು ನನಗೇ ಅನ್ನಿಸತೊಡಗಿತ್ತು; ಏನೋ ಭಯ, ಆತಂಕವೂ ಶುರುವಾಗಿತ್ತು.

ಬರಬರುತ್ತ ನನ್ನ ಗಂಡನನ್ನು ಕೇಳಿಕೊಂಡು ಕೆಲವರು ಮನೆಗೆ ಬರತೊಡಗಿದರು. ಮನೆಯಲ್ಲಿ ಅವರು ಇಲ್ಲವೆಂದು ತಿಳಿದಾಗ - ಕೆಲವರು "ನಾಳೆ ಬೆಳಿಗ್ಗೆ ಬರುತ್ತೇವೆ" ಎಂದು ಹೇಳಿ ಹೋಗುತ್ತಿದ್ದರು. ಮುಂದೆ, ನನ್ನ ಗಂಡನು ಮನೆಯಲ್ಲೇ ಇದ್ದರೂ "ಇಲ್ಲ" ಎಂದು ನನ್ನಿಂದ ಹೇಳಿಸಲು ತೊಡಗಿದಾಗ ನಾನು ಕಂಗಾಲಾಗಿರಲಿಲ್ಲವೆ ? ಜನರಿಗೆ ಅಗತ್ಯವಿದ್ದ - ತಮ್ಮಿಂದಾಗದ ಕೆಲಸಗಳನ್ನೂ ಮಾಡಿಸಿಕೊಡುತ್ತೇನೆಂದು ಹೇಳಿ ಕೆಲವರಿಂದ ಮುಂಗಡ ಪಡೆದು ಅವರಿಗೆ ಆ ಕೆಲಸವನ್ನು ಮಾಡಿಸಿಕೊಡದಿದ್ದಾಗ ಜನರು ಇವರ ಹಿಂದೆ ಬಿದ್ದರು. ಕೆಲವರು ಮನೆಬಾಗಿಲಿಗೆ ಬಂದು ಉಗಿದು ಹೋಗತೊಡಗಿದರು. ಯಾರೇ ಬಾಗಿಲು ತಟ್ಟಿದರೂ ಬಾಗಿಲು ತೆಗೆಯಲು ಭಯ. ಎಲ್ಲರ ಬೈಗುಳಗಳನ್ನೂ ಇದೇ ಕಿವಿಯಲ್ಲಿ ಸುಮ್ಮನೆ ಕೇಳಿಸಿಕೊಂಡೆನಲ್ಲ ? ಇಂಥದನ್ನೆಲ್ಲ ಕೇಳಿಸಿಕೊಳ್ಳುವ ಬದಲು ನನ್ನ ಕಿವಿಯಾದರೂ ಕೆಪ್ಪಾಗಬಾರದೇ ಅಂತ ನನ್ನ ಗಂಡನ ಜೊತೆ ಜಗಳ ಮಾಡುತ್ತ ಹೇಳಿದ್ದು ಅದೆಷ್ಟು ಬಾರಿ ?

ಜನರಿಂದ ಗಿಜಿಗುಡುವ ಈ ಬೊಂಬಾಯಿಯಲ್ಲಿ ನನ್ನವರು ಯಾರೂ ಇಲ್ಲ ಅನ್ನಿಸಿ ದಿನ ಕಳೆದಂತೆ ಗುಬ್ಬಚ್ಚಿಯಾಗುತ್ತಿದ್ದೆ. ಇಬ್ಬರು ಮಕ್ಕಳನ್ನು ಕಟ್ಟಿಕೊಂಡು ನಾನೆಲ್ಲಿಗೆ ಹೋಗಲಿ ? ಎಂದೂ ಯೋಚಿಸತೊಡಗಿದ್ದೆ. "ನೀವು ದುಡಿಯುವುದು ಬೇಡ; ನಾನೇ ದುಡಿಯುತ್ತೇನೆ; ಅಡುಗೆ ಮಾಡಿ ಕೊಡುತ್ತೇನೆ. ಕೆಲವು ಮನೆಗಳನ್ನು ಗೊತ್ತು ಮಾಡಿಕೊಂಡು ಅಲ್ಲಿಗೆ ತಲುಪಿಸುವ ಕೆಲಸ ಮಾತ್ರ ನೀವು ಮಾಡಿ; ಮರ್ಯಾದೆಯಿಂದಲೇ ಬದುಕುವ.." ಅಂತ ಗಿಣಿಗೆ ಹೇಳಿದ ಹಾಗೆ ಹೇಳಿದರೂ ಕೇಳಿದರಾ ? ಇಲ್ಲ. "ನೀನು ಕೆಲಸ ಮಾಡುವುದು ಬೇಡ; ಹೆಂಗಸರು ಮನೆಯಲ್ಲೇ ಇರಬೇಕು; ಸುಮ್ಮನಿರು..." ಅನ್ನುತ್ತಲೇ ಬಂದರಲ್ಲ ? ಸುಳ್ಳು ಪ್ರತಿಷ್ಠೆಯ ಹಿಂದೇ ಓಡಿದರಲ್ಲ ?

ನಿತ್ಯವೂ ಮನೆಯ ಮುಂದೆ ನಿಂತು ಬಯ್ದು ಅರಚಿ ಹೋಗುವವರ ಸಂಖ್ಯೆ ಬೆಳೆಯುತ್ತಲೇ ಹೋಯಿತು. ಬೆಳೆಯುತ್ತಿದ್ದ ಮಕ್ಕಳ ಎದುರಲ್ಲಿ ಅಂತಹ ನಿತ್ಯ ಪ್ರಹಸನವು ನನಗೆ ಇಷ್ಟವಾಗಲಿಲ್ಲ. ನನ್ನ ಸಹನೆಯ ಕಟ್ಟೆಯೊಡೆದಿತ್ತು. ಅದೊಂದು ದಿನ ಮಹಾಸಂಗ್ರಾಮವೇ ನಡೆದು ಹೋಯ್ತು. ಮಾತಿನಿಂದ ನನ್ನನ್ನು ಹಣಿಸಲಾಗದ ಅವರು ನನ್ನ ಜುಟ್ಟನ್ನು ಹಿಡಿದು ತಳ್ಳಿಬಿಟ್ಟರು. ಒಂದು ಹಳೆಯ ಪೆಟ್ಟಿಗೆಯ ಮೇಲೆ ಬಿದ್ದ ನನ್ನ ತಲೆಯಿಂದ ರಕ್ತ ಒಸರತೊಡಗಿತು. ಅದನ್ನು ನೋಡಿದ ಮಗಳು ಗಾಬರಿಯಿಂದ  ಓಡಿ ಬಂದು ಅಪ್ಪನನ್ನು ದೂರ ತಳ್ಳಿದಳು....

ಅದೇ ಕೊನೆ. ಆಗ ಬಿದ್ದವರು ಮತ್ತೆ ಏಳಲಿಲ್ಲ. ಪಕ್ಷವಾತ ಬಡಿದು ಹತ್ತೇ ದಿನದಲ್ಲಿ ತೀರಿಕೊಂಡರು.

ಆಗ ಮಗ ಅಶೋಕನು ಪದವಿಯ ಕೊನೆಯ ವರ್ಷದಲ್ಲಿದ್ದ. ಅಂಬಿಕಾ ಪದವಿ ಮುಗಿಸಿ ಕೂತಿದ್ದಳು. ಮುಂದೇನು ಎಂದು ಕಾಣುತ್ತಿರಲಿಲ್ಲ. ಅದೊಂದು ದಿನ, ಮಗನನ್ನು ಕೇಳಿದೆ..."ಮಗಾ, ಈ ತಿರುಕ ಸ್ಥಿತಿಯಲ್ಲಿ ಅಪ್ಪನ ಮನೆಗೆ ಹೋಗುವುದು ನನಗೆ ಇಷ್ಟವಿಲ್ಲ. ನಾನು ದುಡಿಯುತ್ತೇನೆ; ನೀವು ಸಹಾಯ ಮಾಡಿ. ನಾನು ತಿಂಡಿ ತಯಾರಿಸಿ ಕೊಡ್ತೇನೆ; ಕಾಲೇಜು ಮುಗಿಸಿ ಬಂದ ಮೇಲೆ ಅದನ್ನು ಕೊಂಡುಹೋಗಿ ನೀನು ಮಾರಬಹುದಾ ?"


ಮರು ಮಾತಾಡದೆ ಒಪ್ಪಿಕೊಂಡ ಮಗ ಅವನು. ತಿಂಡಿಯ ರುಚಿ, ಅಶೋಕನ ಸಭ್ಯ ವರ್ತನೆಯಿಂದಾಗಿ ನಮ್ಮ ವ್ಯಾಪಾರವು ದಿನದಿಂದ ದಿನಕ್ಕೆ ಏರುತ್ತ ಹೋಯಿತು. ಹೇಗೋ ಪದವಿಯೊಂದನ್ನು ಜತೆಜತೆಗೇ ಮುಗಿಸಿಕೊಂಡ ಮಗನು ಪೂರ್ತಿಯಾಗಿ ವ್ಯಾಪಾರದಲ್ಲೇ ತೊಡಗಿಕೊಂಡ. ದಿನವಿಡೀ ಸ್ಟೌವ್ ಎದುರಲ್ಲಿ ಕೂತು ರಕ್ಕಸ ಶಬ್ದವನ್ನು ನುಂಗಿ ನುಂಗಿ, ನನ್ನ ಕಿವಿ ಮಾತ್ರ ಸತ್ತೇ ಹೋಯಿತು. ನನ್ನ ಮಗನ ಧ್ವನಿಯನ್ನೂ ಕೇಳದೆ ಎಷ್ಟು ವರ್ಷವಾಯ್ತು ! ಎಲ್ಲವನ್ನೂ ಬರೆದು ತೋರಿಸಬೇಕು. ನನ್ನ ಅನುಕೂಲಕ್ಕೆಂದು ಎದುರಲ್ಲೇ ಸ್ಲೇಟು ಕಡ್ಡಿಯನ್ನು ಮಗನು ತಂದಿಟ್ಟಿದ್ದ. ಆ ಸ್ಲೇಟಿನ ಮೂಲಕವೇ ನಮ್ಮ ಮಾತುಕತೆ ನಡೆಯತೊಡಗಿ ಏಳು ವರ್ಷಗಳೇ ಕಳೆದಿರಬಹುದು !

ಕಳೆದ ನವರಾತ್ರಿಗೆ ಎರಡು ವರ್ಷ ಕಳೆಯಿತಲ್ಲ ? ಬಹಳ ಎಚ್ಚರದಿಂದ ಸಂಬಂಧವನ್ನು ಹುಡುಕಿ, ತನ್ನ ತಂಗಿಯ ಮದುವೆಯನ್ನೂ ಅಶೋಕನು ಮಾಡಿ ಮುಗಿಸಿಯೇ ಬಿಟ್ಟ; ಕಳೆದ ವರ್ಷ ಮಗಳ ಬಾಣಂತನವನ್ನೂ ಮಾಡಿ ಕಳಿಸಿದಾಗ ನಾನು ಗೆದ್ದೆ ಅನ್ನಿಸಲಿಲ್ಲವೆ ? ನನ್ನ ಮಗನು ನನ್ನನ್ನು ಗೆಲ್ಲಿಸಿದ. ಮರ್ಯಾದೆಯಿಂದ ಸಾಯುವಂತೆ ಮಾಡಿದ.

ನಾನು ಸಾಯುವ ಮೊದಲು ಅಶೋಕನ ಮದುವೆಯೂ ಆಗಬೇಕು. ನನ್ನ ಅಮ್ಮ ನನಗೆ ಕಲಿಸಿದಂತೆ - ಪಾಕ ಶಾಸ್ತ್ರವನ್ನು, ಅಡುಗೆಯ ಹದವನ್ನು ನನ್ನ ಸೊಸೆಗೂ ಕಲಿಸಿ ಸಾಯಬೇಕೆಂದಿದೆ. ಅದರಿಂದ ಮಗನ ಉದ್ಯೋಗಕ್ಕೂ ಬಲ ಬರುತ್ತದೆ. ಅವರಿಬ್ಬರೂ ಮರ್ಯಾದೆಯಿಂದ, ನೆಮ್ಮದಿಯಿಂದ ಬದುಕಬಹುದು. ಆದರೆ ನಾವು ಎಣಿಸಿದ್ದೆಲ್ಲ ನಡೆಯಲೇಬೇಕೆಂದಿದೆಯೆ ?  "ನನಗೆ ಮದುವೆ ಬೇಡವೇ ಬೇಡ...ಅಮ್ಮಾ, ನೀನು ಕಲಿಸಿದ್ದನ್ನೆಲ್ಲ ಕಲಿಯುವ ಹೆಣ್ಣು ಮಕ್ಕಳು ಈಗ ಸಿಗುವುದಿಲ್ಲ. ನಿನಗೆ - ನನಗೆ ಇಬ್ಬರಿಗೂ ಒಟ್ಟಿಗೆ ಪಾಠ ಮಾಡುವವರೇ ತುಂಬಿಹೋಗಿದ್ದಾರೆ. ಅವರು ಕಲಿಸಿದ್ದನ್ನು ಕಲಿಯುವ ದರ್ದು ನಮಗಿಲ್ಲ. ಈಗಷ್ಟೇ ನಾವು ಕಂಡಿರುವ ನೆಮ್ಮದಿಯನ್ನು ನಾವಾಗಿಯೇ ಹಾಳು ಮಾಡಿಕೊಳ್ಳುವುದು ಬೇಡ..." ಎನ್ನುತ್ತ ಹಠ ಮಾಡುತ್ತಿರುವ ಈ ಮಗನನ್ನು ಮೊದಲು ಒಪ್ಪಿಸಬೇಕು...

ಮಗನು ಹಿಂದೆ ಬಂದು ನಿಂತದ್ದು ಗೊತ್ತೇ ಆಗಲಿಲ್ಲ. "ಅಮ್ಮಾ, ಆಗಿನಿಂದ ಇಲ್ಲೇ ಕೂತಿದ್ದೀಯಲ್ಲ ? ಒಳಗೆ ನಡಿ.." ಎನ್ನುತ್ತ ಎಬ್ಬಿಸಿದ.

"ರಾತ್ರಿಯ ಅಡುಗೆ ಕೆಲಸ ಮುಗಿಸಿ ಬಂದು ನಿನ್ನನ್ನು ಕಾಯುತ್ತ ಹೊರಗೆ ಕೂತೆ ಮಗನೇ.." ಎನ್ನುತ್ತ ಒಳಗೆ ಹೆಜ್ಜೆ ಹಾಕಿದೆ. ಅವನ ಜತೆಯಲ್ಲಿ ಒಬ್ಬ ಹುಡುಗ ನಿಂತಿದ್ದ. "ಯಾರವರು ?" ಅಂತ ಸನ್ನೆಯಲ್ಲೇ ಕೇಳಿದೆ. "ಅಮ್ಮಾ, ನಮಗೆ ಕಿವಿ ಕೇಳಿಸುತ್ತದೆ. ನೀನು ಮಾತಾಡಮ್ಮಾ.." ಅಂತ ಎಂದಿನಂತೆ ಅಶೋಕನು ನನಗೆ ನೆನಪು ಮಾಡಿದರೂ ಅದೇಕೋ ನನ್ನ ಮಾತು ಮುರುಟಿದೆ. ಸನ್ನೆಯೇ ಹಿತವಾಗಿದೆ.

ನನ್ನ ಹಿಂದೇ ಬಂದ ಮಗ ಅಶೋಕನು ಸ್ಲೇಟನ್ನು ಹಿಡಿದುಕೊಂಡು ಬರೆಯುತ್ತಿದ್ದ. "ಅಮ್ಮಾ, ನಿನ್ನ ನೆರವಿಗೆ ನಾಳೆಯಿಂದ ಭಟ್ಟರು ಇರುತ್ತಾರೆ. ಇವರು ಮುಖ್ಯಪ್ರಾಣ ಭಟ್ಟರು. ನಿನ್ನ ಊರಿನವರೇ. ನಮ್ಮ ಜೊತೆಗೇ ಇರುತ್ತಾರೆ. ಇನ್ನು ಮುಂದೆ ತಿಂಡಿಯ ಹದದ ಮೇಲ್ತನಿಖೆಯನ್ನು ಮಾತ್ರ ನೀನು ನೋಡಿಕೋ. ಉಳಿದ ಎಲ್ಲವನ್ನೂ ಭಟ್ಟರು ಮಾಡುತ್ತಾರೆ...ನಾಳೆ ಗ್ಯಾಸ್ ಒಲೆಯನ್ನೂ ತರುತ್ತೇನೆ; ನಾಳೆಯಿಂದ ಶಬ್ದ - ರಣ ಕೋಲಾಹಲದ ರಗಳೆಯೂ ಇರುವುದಿಲ್ಲ...ಎಲ್ಲ ಸೌಕರ್ಯವಾದರೆ ನೀನೂ ಸ್ವಲ್ಪ ಆರಾಮಾಗಿರಬಹುದು..." ಅಂತ ಬರೆದು ತೋರಿಸಿದ.

"ನಿಂಗೆ ವರ್ಷ ಮುವ್ವತ್ತಾದರೂ ಸ್ಲೇಟಲ್ಲಿ ಬರೆಯುವುದು ಇನ್ನೂ ತಪ್ಪಲಿಲ್ಲ್ಯಲೆ ಮಗನೇ...ಈ ಕೆಪ್ಪಿ ಅಮ್ಮನ ದೆಸೆಯಿಂದ..."  ಅನ್ನುವಾಗಲೇ ಸ್ಲೇಟು ಕಡ್ಡಿ ಹಿಡಿದ ಮಗನನ್ನು ನೋಡಿ ಸುಮ್ಮನೆ ನಗು ಬಂತು. ಅಮ್ಮನ ನಗು ನೋಡಿದ ಅಶೋಕನು "ಇವಳು ಅಮ್ಮ; ನಾನು ಅಶೋಕ.." ಎಂದು ಬರೆದು ತೋರಿಸಿ ಜೋರಾಗಿ ನಕ್ಕ. "ಕೈ ಹಿಡಿದು ಬರೆಸಲಾ ?" ಅಂದಾಗ ನನ್ನನ್ನು ನೋಡಿ ಏನನ್ನಿಸಿತೋ... ಎದ್ದು ಬಂದು ಅಪ್ಪಿಕೊಂಡ.

ಸುಮ್ಮನೆ ಅಳು ಬಂತು..... ಬದುಕಿನ ನುರಿತವೇ ಹಾಗೆ. ಸುಮ್ಮನೆ ಬಂದು ಹೋಗುತ್ತಿರುತ್ತದೆ.

"ಭಾಗ್ಯವು ಯಾವಾಗ ಅಂಗಾತ ಬೀಳುತ್ತದೆ ಯಾವಾಗ ಕವುಚಿ ಬೀಳುತ್ತದೆ...ಯಾವಾಗ ತಿರುಗಿ ಓಡುತ್ತದೆ - ಯಾವಾಗ ಮರಳಿ ಹೊಗ್ಗುತ್ತದೆ...ಯಾರಿಗೂ ಗೊತ್ತಿಲ್ಲ. ಭಾಗ್ಯದ ಚಾಂಚಲ್ಯವನ್ನು ನನ್ನಷ್ಟು ಹತ್ತಿರದಿಂದ ಕಂಡವರು ಇರಲಿಕ್ಕಿಲ್ಲ. ಈಗಂತೂ ಬದುಕಿನ ೭೦ ರ ಹೊಸ್ತಿಲು ದಾಟಿ ಇನ್ನೊಂದು ಮಹಾನವಮಿಗೆ ಸಿದ್ಧಳಾಗಿ ಹೊರಡುವ ಹೊತ್ತು. ಈಗ "ಒಳಗೆ ಬರಲೆ ?" ಎಂದು ಕೇಳುತ್ತ ಕಣ್ಣು ಮಿಟುಕಿಸುತ್ತಿರುವ ಬೆಚ್ಚಗಿನ ಸೌಕರ್ಯವೇ...ನೀನು ಬರುವುದಾದರೆ ಬಾ. ಬಂದು ನನ್ನ ಮಗನೊಂದಿಗಿರು. ನಾನು ಮಾತ್ರ ನಿನ್ನನ್ನು ಕಾಯಲಾರೆ; ನಿನಗಾಗಿ ಬೇಯಲಾರೆ; ಇನ್ನು ನಿನ್ನನ್ನು ಅರಗಿಸಿಕೊಳ್ಳಲೂ ಆರೆ..."


ಮಗನಿಗೆ ಕಾಣದಂತೆ ಕಣ್ಣೊರೆಸಿಕೊಂಡೆ..."ಅಶೋಕಾ, ಮುಖ್ಯಪ್ರಾಣಾ..." ಮಕ್ಕಳನ್ನು ಊಟಕ್ಕೆ ಕರೆದೆ.....
                                                    



                                                                                                         ನಾರಾಯಣೀ ದಾಮೋದರ್


    

Tuesday, December 8, 2015

ನೆನಪು ತೂಗುಯ್ಯಾಲೆ

ಇತ್ತೀಚೆಗೆ ನವೆಂಬರ್ 29 ರಂದು ಕುಂದಾಪುರ ಎಂಬ ನಮ್ಮೂರಿನಲ್ಲಿ ಸುತ್ತಾಡಿ ಬಂದೆ. ನಾನು ಕುಂದಾಪುರ ಬಿಟ್ಟ ಈ 39 ವರ್ಷಗಳಲ್ಲಿ ಕುಂದಾಪುರದ ಅಂಚಿನ ಹೊಳೆಯಲ್ಲಿ ಹಳೆಯ ನೀರೆಲ್ಲ ಸರಿದು ಹೋಗಿದೆ. ಆಕಾಶದ ಸೂರ್ಯ ಚಂದ್ರರನ್ನು ಬಿಟ್ಟರೆ ಕುಂದಾಪುರ ಪರಿಸರದ ಮತ್ತೆಲ್ಲವೂ ಬದಲಾಗಿ ಹೋಗಿದೆ. ಈಗೀಗ ಅಲ್ಲಿಗೆ ಹೋದಾಗೆಲ್ಲ ನನ್ನ "ಅಂದಿನ ಕುಂದಾಪುರ" ವನ್ನು ಅಲ್ಲಿ ಇಲ್ಲಿ ಹುಡುಕುತ್ತೇನೆ. (ಬಹುಶಃ ನನ್ನ ಜನರನ್ನೂ ಹುಡುಕುತ್ತೇನೆ !) "ಇದು ಬೇರೆ ಕುಂದಾಪುರ" ಅನ್ನಿಸಿ ಒಮ್ಮೊಮ್ಮೆ ವಿಷಾದವಾದರೂ - ಅದೇಕೋ ಆ ಕುಂದಾಪುರಕ್ಕೆ ಹೋದರೆ ನಾನು ಮತ್ತದೇ ಕಲ್ಪನೆಯ ಹದಿಹರೆಯದ ಭಾವ ಲಹರಿಯ ಮನಃಸ್ಥಿತಿಗೆ ಬರುತ್ತೇನೆ ! ಒಮ್ಮೊಮ್ಮೆ ಹೋದ ಕೆಲಸವನ್ನೂ ಮರೆತು ನೆನಪಿನಾಳಕ್ಕೆ ಇಳಿಯುತ್ತೇನೆ.

" ಒಬ್ಬ ಮನುಷ್ಯ ತನ್ನ ನೆಲವನ್ನು ಯಾಕೆ ಪ್ರೀತಿಸುತ್ತಾನೆ ?...ಯಾಕೆಂದರೆ - ಅಲ್ಲಿ ರೊಟ್ಟಿಯು ಹೆಚ್ಚು ರುಚಿಯಾಗಿರುತ್ತದೆ; ಗಾಳಿಯು ಸುಗಂಧಮಯವಾಗಿರುತ್ತದೆ. ದನಿಗಳು ಹೆಚ್ಚು ಸಶಕ್ತವಾಗಿರುತ್ತವೆ; ಆಕಾಶವು ಬೇರೆಡೆಗಿಂತ ಎತ್ತರವಾಗಿರುತ್ತದೆ. ನೆಲದ ಮೇಲೆ ನಡೆಯುವುದು ಇನ್ನೂ ಸುಲಭವಾಗಿರುತ್ತದೆ..."   ಎನ್ನುತ್ತದೆ ಪಾಶ್ಚಾತ್ಯ ನಾಟಕಕಾರ ಬರ್ಟೊಲ್ಟ್ ಬ್ರೆಕ್ಟ್ ನ ನಾಟಕದ ಪಾತ್ರ !

ಈ ಮಾತುಗಳು ತರ್ಕಬದ್ಧವಲ್ಲ ಎಂದು ನಮ್ಮ ಮಿದುಳು ಹೇಳುತ್ತಿದ್ದರೂ ಹೃದಯವು ಮಾತ್ರ ಅದನ್ನು ಒಪ್ಪುವುದಿಲ್ಲ. ಯಾಕೆಂದರೆ ಮನುಷ್ಯನೆಂದರೆ ತರ್ಕ ನುರಿಯುವ ಯಂತ್ರವಲ್ಲ. ಯಾವುದೇ "   ಜೀವಂತ ಮಾನವನ ಬದುಕು "    ಎಂಬುದು ಘಟನಾವಳಿಗಳ ದೊಡ್ಡ ಮೂಟೆ ! ಭಾವನೆಗಳ ತೂಗುಯ್ಯಾಲೆ ! ನಮ್ಮ ಭಾವ ಸಾಮ್ರಾಜ್ಯದಲ್ಲಿ ಯಾವುದೇ ಬುದ್ಧಿಗತ ತರ್ಕಕ್ಕೆ  ಯಾವತ್ತೂ  ಸ್ಥಳವಿರುವುದಿಲ್ಲ.

ಭಾವನೆಗಳು ಅಂದರೆ - ಒಂದು ರೀತಿಯ ಹುಳಿ ಸಿಹಿ ಒಗರಿನ ವಿಚಿತ್ರ ಕಡಲು. ಸಾಮಾನ್ಯವಾಗಿ ಭಾವ ಜೀವಿಗಳು ಹೆಚ್ಚು ಸ್ಪಂದನಶೀಲರಾಗಿರುತ್ತಾರೆ. ಬದುಕಿನ ಕ್ಷಣಕ್ಷಣದ ಅನುಭವಗಳಿಗೂ ಸ್ಪಂದಿಸುತ್ತಲೇ ಇರುವ ಅವರ ಭಾವದಲೆಗಳ ಸಂಚಾರದ ಸ್ಥಾಯಿಯೇ ಬೇರೆ. ಅವರ ವಿಷಾದದ ನಿಷಾದದಲ್ಲೂ ಏನೋ ಮಾಧುರ್ಯದ ಹಸನಾದ ಅನುರಣನೆಯಿರುತ್ತದೆ. ತನ್ನ ಸ್ವಂತದ್ದು ಮಾತ್ರವಲ್ಲದೆ ತನ್ನ ಸುತ್ತಲಿನ ಎಲ್ಲ ಆಗುಹೋಗುಗಳನ್ನೂ ಆತ್ಮಿಕವಾಗಿ ಅನುಭವಿಸುವ ಭಾವುಕರು ಸಾಮಾನ್ಯವಾಗಿ ಸೂಕ್ಷ್ಮ ಪ್ರವೃತ್ತಿಯವರಾಗಿರುತ್ತಾರೆ. ಅವರು ತಮ್ಮ ಸ್ವಂತದ ಕಷ್ಟ ಸುಖಗಳಿಗೆ ಎಲ್ಲರಂತೆಯೇ ನಗುವ - ಮರುಗುವ ಜೊತೆಗೆ ಸಮಾಜದ ಇತರರ ಕಷ್ಟ ಸುಖಗಳಿಗೂ ಸ್ಪಂದಿಸುತ್ತಿರುತ್ತಾರೆ. ಇಂತಹ ಸ್ವಭಾವದಿಂದಾಗಿ ಭಾವುಕ ವ್ಯಕ್ತಿಗಳ ಸ್ವ-ಭಾಗಕ್ಕೆ ಆತಂಕ ಉಮ್ಮಳಗಳೇ ಹೆಚ್ಚು ಎದುರಾದರೂ ಇಂತಹ ಭಾವುಕರಿಂದ ಯಾವುದೇ ಊರಿಗಾಗಲೀ ದೇಶಕ್ಕಾಗಲೀ ದ್ರೋಹ ಚಿಂತನೆಯಂತೂ ಎಂದಿಗೂ ನಡೆಯಲಾರದು.

ಇಂತಹ ಸದ್ಭಾವ ಪ್ರೇರಿತರಿಂದ ಯಾವುದೇ ಸಮಾಜಕ್ಕೆ ಉಪಕಾರವಲ್ಲದೆ ಯಾವುದೇ ಅಪಾಯವಿಲ್ಲ. "ಸದ್ಭಾವ ಅಂದರೇನು ? " ಎಂದು ಕುತ್ಸಿತವಾಗಿ ಹೆಗಲು ಹಾರಿಸುವವರು ತುರ್ತಾಗಿ ನಮ್ಮ ಭಾರತದ ಹಳ್ಳಿಗಳನ್ನು ನೋಡಬೇಕು. ನಮ್ಮ ಭಾರತದ ಹಳ್ಳಿಗಳಲ್ಲಿ ಇಂದಿಗೂ ಸದ್ಭಾವಗಳು ಜೀವಂತವಾಗಿ ಉಳಿದುಕೊಂಡಿವೆ. ಜೀವನವನ್ನು ಸರಳ ಭಯಭಕ್ತಿಯಿಂದ ಅನುಭವಿಸುವ "ಸುಲಭ" ರನ್ನು ಅಲ್ಲಿ ಕಣ್ತುಂಬಿಕೊಳ್ಳಬಹುದು. ತರ್ಕದಿಂದ ಬದುಕುಗಳನ್ನು ಪುಡಿಗುಟ್ಟುವ ನಾಸ್ತಿಕ ಅಥವ ಆಸ್ತಿಕ ವಿಪರೀತಗಳು ಅಲ್ಲಿರುವುದಿಲ್ಲ. ಸಾಮಾನ್ಯವಾಗಿ, ನಾಸ್ತಿಕತೆಯನ್ನು ಪ್ರತಿಪಾದಿಸುವವರಿಗಿಂತ ಆಸ್ತಿಕರು ಹೆಚ್ಚು ಸಹನಶೀಲರು (ಸಹಿಷ್ಣುಗಳು) ಎಂಬುದಕ್ಕೂ - ಹಳ್ಳಿಯ ಬದುಕುಗಳಿಗಿಂತ ಬೇರೆಯಾದ ಹೊಸ ಸಾಕ್ಷಿಗಳು ಬೇಕಾಗಿಲ್ಲ. (ಆದರೆ ಇಂದಿನ ಹಳ್ಳಿಗಳೂ ಭರದಿಂದ ಕಲುಷಿತಗೊಳ್ಳುತ್ತಿವೆ !) ಆದರೆ ನಮ್ಮ ಸುತ್ತಲೂ ನೋಡಿದರೆ, ದೈವ ನಿಂದಕರಿಗಿಂತ ದೈವ ಭೀರುಗಳು ಕಡಿಮೆ ಕ್ರೂರಿಗಳು ಮತ್ತು ಸುಭಗರಾಗಿರುವುದು ಕಾಣುತ್ತದೆ. ಮುಚ್ಚಿದ ಬಾಗಿಲ ಒಳಗೆ ಗುಟ್ಟು ಗುಟ್ಟಾಗಿ ಸಂಪ್ರದಾಯಗಳನ್ನು ಅಚ್ಚುಕಟ್ಟಾಗಿ ಆಚರಿಸುತ್ತ - ಅನುಸರಿಸುತ್ತ, ಬಹಿರಂಗವಾಗಿ - ಎಲ್ಲರ ಸ್ವೀಕಾರಾರ್ಹತೆ ಗಳಿಸುವ ತಿಕಲಿಗೆ ಒಳಗಾಗಿ  - "ತಲೆ ತಿರುಗಿದ ಗುಂಪಿನ LEADER" ಎಂಬ ತೋರಿಕೆಯ ಆಟವಾಡುವ ಆಷಾಢಭೂತಿಗಳಿಗಿಂತ ತಾನು ಇರುವುದನ್ನು ಇರುವಂತೆ, ವಂಚನೆಯಿಲ್ಲದೆ ಬದುಕುವ ಹಳ್ಳಿಯ ಅಶಿಕ್ಷಿತರು ಹೆಚ್ಚು ನಿರಾಳವಾಗಿರುತ್ತಾರೆ. 

ತಮ್ಮ ಮಕ್ಕಳಿಗೆ "ನಮ್ಮ ದೇಶ, ನಮ್ಮ ಸಂಸ್ಕೃತಿ, ತಮ್ಮ ಕುಟುಂಬದ ಸಂಪ್ರದಾಯಗಳು..." ಇತ್ಯಾದಿ ತಿಳಿ ಹೇಳುತ್ತಿದ್ದ ಒಂದು ಕುಟುಂಬಕ್ಕೆ ನನ್ನ ಪರಿಚಿತ Public Figure ಒಬ್ಬರು ಒಮ್ಮೆ ಉಪದೇಶಿಸಿದ್ದನ್ನು ನಾನು ನೋಡಿದ್ದೇನೆ. "  ನೋಡಿ ಮಕ್ಕಳಿಗೆ ನಿಮ್ಮ ವಿಚಾರಗಳನ್ನೆಲ್ಲ ಹೇಳಿ ಅವರನ್ನು ದಾರಿ ತಪ್ಪಿಸಬೇಡಿ; ಅವರು ಅವರಾಗಿಯೇ ಬೆಳೆಯಲಿ..."   ಎಂದಿದ್ದರು ಆ ಮಹಾ ಪುರುಷ ! ಅವರು ಶಿಕ್ಷಕರು ಬೇರೆ !!! ಅಂದರೆ ನಮ್ಮ ಮಕ್ಕಳು ಏನನ್ನು ಕೇಳುತ್ತಾರೋ ಏನನ್ನು ನೋಡುತ್ತಾರೋ ಅದನ್ನೇ ಆಧರಿಸಿಕೊಂಡು ತಮ್ಮ ತಮ್ಮ ಬದುಕನ್ನು ಇಷ್ಟಬಂದಂತೆ (?) ಕಟ್ಟಿಕೊಳ್ಳಬೇಕೆಂದಾಯ್ತು ! ಅಂದರೆ - ಬದುಕಿನ ಏರುತಗ್ಗು, ತಿರುವು ಮುರುವುಗಳ ಬಗೆಗೆ ಮನೆಯಲ್ಲಿರುವ ಕುಟುಂಬದ ಅನುಭವಸ್ಥರು ತುಟಿಪಿಟಕ್ಕೆನ್ನುವಂತಿಲ್ಲ ಎಂದಾಯಿತು ! ಆದರೆ ಇದೇ ಶಿಕ್ಷಕರು ಊರಿನ ಸಭೆಗಳಲ್ಲೆಲ್ಲ ಭಾಗವಹಿಸುತ್ತ  ಊರಿನ ಮಕ್ಕಳಿಗೆ " ದಾರಿ - ದಿಕ್ಕು " ಗಳ ಬಗೆಗೆ ಪ್ರವಚನ ನೀಡುವುದನ್ನೂ ನಾನು ನೋಡಿದ್ದೇನೆ; ಹೊಂದಿಕೆಯ ಮಂತ್ರ ಜಪಿಸುತ್ತ  "  ಸೇವೆಯ ಆಟ "   ಆಡುವುದನ್ನೂ ನೋಡಿದ್ದೇನೆ. ಇಂತಹ ಕಪಟತನವು ನಮ್ಮ ಸುತ್ತಲೂ ನಡೆಯುತ್ತಲೇ ಬಂದಿದೆ ಮತ್ತು ಹಾಗೇ ಇರುತ್ತದೆ. ಇಂತಹ ವಿರೋಧಾಭಾಸದ  ವ್ಯವಹಾರ ಚತುರ ಜಡ ಶಿಕ್ಷಕರಿಂದ ಸಮಾಜಕ್ಕೆ ಯಾವುದೇ ಉಪಕಾರವಾಗದು.

"ಮಕ್ಕಳಿಸ್ಕೂಲ್ ಮನೇಲಲ್ವೆ ?" ಎಂದಿದ್ದರು ಕೈಲಾಸಂ. ಅಪ್ಪ ಅಮ್ಮಂದಿರು ಮಕ್ಕಳನ್ನು ರೂಪಿಸುವುದರಲ್ಲಿ ಬಹು ಮುಖ್ಯ ಪಾತ್ರವನ್ನು ವಹಿಸುವುದು ಅಪೇಕ್ಷಣೀಯ ಎಂಬುದು ಅನುಭವ ಸಿದ್ಧಾಂತ. ಮೂಲ ಶಿಕ್ಷಣ ಸಿಗಬೇಕಾದದ್ದು ಮನೆಯಲ್ಲಿಯೇ. ಊರಿನ ಭಾಷಣಗಳಿಂದ ಮಕ್ಕಳು ಪ್ರೇರಿತರಾಗಲು ಬೇಕಾದ ಪೂರ್ವ ತಯಾರಿಯು ಮನೆಯಲ್ಲಿಯೇ ನಡೆದಿರಬೇಕಲ್ಲವೆ ? ಅಂತಹ ಗಟ್ಟಿಯಾದ ತಳಪಾಯ ಬೀಳಬೇಕಾದ್ದೂ ಮನೆಯಲ್ಲಿಯೇ. ಆದರೆ ಇಂದು ಒಡಕು ಚಿಂತನೆಯ ಕುಟುಂಬಗಳು, ದಾರಿ ತಪ್ಪಿಸುವ ಶಿಕ್ಷಕರು ಮತ್ತು ಶೈಕ್ಷಣಿಕ ಪರಿಸರದಿಂದಾಗಿ ನಮ್ಮ ಮಕ್ಕಳನ್ನು ಅಶಾಂತಿಯ ದಾರಿಯಲ್ಲಿ ನಡೆಸಲಾಗುತ್ತಿದೆ. ನೇತಿ ನೇತಿ ಎನ್ನುತ್ತ ಸದಾ ಒಣ ಚಿಂತನೆಗಳನ್ನು ವೈಭವೀಕರಿಸುತ್ತ ಒಣ ಭವಿಷ್ಯತ್ತನ್ನು ನಿರ್ಮಿಸಲು ಕೆಲವರು ಹಗಲಿರುಳೂ ಕಾರ್ಯೋನ್ಮುಖರಾಗಿದ್ದಾರೆ. ಆದ್ದರಿಂದಲೇ ಇಂದು "ಅಪ್ಪ ಲೂಸಾ ? ಅಮ್ಮ ಲೂಸಾ ?" ಎಂಬ ಸಂತತಿಯು ಓಡಾಡುತ್ತಿದೆ. ವೃದ್ಧಾಶ್ರಮದ ಬಿಸಿನೆಸ್ ಜೋರಾಗಿದೆ. ಸೇವಾ ತತ್ಪರರ ಸಂಖ್ಯೆ ಬೆಳೆಯುತ್ತಿದೆ; ಬಹಿರಂಗ ಪ್ರೀತಿಯ ನಾಟಕವೂ ನಡೆಯುತ್ತಿದೆ ! ಅಂತೂ ಸ್ವಕಾರ್ಯ ಸಿದ್ಧಿ - ವೃದ್ಧಿಯಾಗುತ್ತಿದೆ. ಆದ್ದರಿಂದಲೇ ಸದ್ಭಾವಗಳೇ ಇಲ್ಲದ - ಎಲ್ಲವನ್ನೂ "ಲಾಭ - ನಷ್ಟ" ದ ಮೇಲೆಯೇ ತೂಗಿ ನೋಡುವ ನಿರ್ಭಾವದ ಸಂತತಿಯು ಹೆಗಲು ಕುಣಿಸುತ್ತಿದೆ.

ತಮ್ಮ ಮಕ್ಕಳ ಆರಂಭದ 10 ವರ್ಷಗಳ ಕಾಲ ಮನೆಯ ಮಕ್ಕಳೊಡನೆ ಅತ್ಯಂತ ನಿಕಟ ಸಂಪರ್ಕವಿರಿಸಿಕೊಳ್ಳುವುದು ಪ್ರತೀ ಕುಟುಂಬದ ಕರ್ತವ್ಯ ಎಂಬುದು ನನ್ನ ಭಾವನೆ. ಮಕ್ಕಳಿರುವ ಮನೆಯಲ್ಲಿ ನಿಶ್ಶಬ್ದವಿದ್ದರೆ ಮಕ್ಕಳ ದೈಹಿಕ ಅಥವ ಮಾನಸಿಕ ಆರೋಗ್ಯವು ಸರಿಯಿಲ್ಲವೆಂದೇ ಅರ್ಥ. ತಂಟೆ ತಕರಾರು ಕುಣಿತಗಳಿಂದ ಮನೆಯು ಕುಪ್ಪಳಿಸುತ್ತಿರಬೇಕು. ಮಕ್ಕಳ ದೇಹ ಮನಸ್ಸು ಅರಳುವ ಆ ಕಾಲದಲ್ಲಿ ಅವರನ್ನು ಮತ್ತೆಮತ್ತೆ ಮುಟ್ಟಿ ತಟ್ಟಿ - ಬಾಡುವಂತೆ ಮಾಡಬಾರದು. ಮಕ್ಕಳ ತಪ್ಪು ಕಂಡಲ್ಲಿ ಮಿತವಾಗಿ ಶಿಕ್ಷಿಸಿ, ಮೆಚ್ಚುಗೆಯ ವರ್ತನೆಗೆ ಸಂತೋಷವನ್ನೂ ವ್ಯಕ್ತಪಡಿಸುತ್ತಿರಬೇಕು. ನಮ್ಮ ಎಲ್ಲೆಲ್ಲಿಯದೋ ಸಿಟ್ಟು ಅಸಹನೆಗಳನ್ನು ಮಕ್ಕಳ ಮೇಲೆ ಎರಚದೆ - ಒಟ್ಟಿನಲ್ಲಿ ಅವರ ಚಟುವಟಿಕೆಯು ಸಹಜವಾಗಿ ಅರಳುವಂತೆ - ಆದರೆ ಯಾವುದೂ ಅತಿ ಬುದ್ಧಿವಂತಿಕೆಯಾಗದಂತೆ ಮಕ್ಕಳನ್ನು ಸದಾ ಗಮನಿಸುತ್ತಲೇ ಇರಬೇಕು. ಮನೆಯ ಹಿರಿಯರ ಮಾತು ಮತ್ತು ವರ್ತನೆಗಳನ್ನು ಮಕ್ಕಳು ತುಂಬ ಗಮನಿಸುತ್ತಾರೆ - ಕೊನೆಗೆ ಅನುಕರಿಸುತ್ತಾರೆ ಎಂಬ ಎಚ್ಚರದಿಂದ ಹಿರಿಯರೂ ತಮ್ಮನ್ನು ತಾವೇ ನಿಯಂತ್ರಿಸಿಕೊಳ್ಳಬೇಕು. ನೆನಪಿಡಿ. ಬಾಲ್ಯವೆಂದರೆ - ಹೊಸ ಕತೆಯ ಮುನ್ನುಡಿ.

                                                         ****----****----****



ಮಕ್ಕಳಾಟಿಕೆಯ ವಯಸ್ಸು. ಆಗ ನಾವು ಕುಂದಾಪುರದಲ್ಲಿದ್ದೆವು. ನಮ್ಮ ಇಬ್ಬರು ತಮ್ಮಂದಿರೂ ತುಂಬ ಚಿಕ್ಕವರು. ಬಹುಶಃ 6 - 8 ನೇ ತರಗತಿಯಲ್ಲಿದ್ದರು. ಇಬ್ಬರಿಗೂ ಕ್ರಿಕೆಟ್ಟಿನ ಹುಚ್ಚು. ತಮ್ಮ ಗೆಳೆಯರ ಜತೆಗೆ ಪ್ರತೀ ದಿನವೂ ಕ್ರಿಕೆಟ್ ಆಡುತ್ತಿದ್ದರು. ಅದೊಂದು ದಿನ ಬ್ಯಾಟಿಂಗ್ ಮಾಡುತ್ತಿದ್ದವನ ಹತ್ತಿರದಲ್ಲಿಯೇ ಕ್ಷೇತ್ರ ರಕ್ಷಣೆಗೆ ನಿಂತಿದ್ದ ನನ್ನ ತಮ್ಮನಿಗೆ ಬ್ಯಾಟ್ ಬೀಸಿದವನ BAT ತಾಗಿ ತಲೆ ಒಡೆದು ರಕ್ತ ಸುರಿಯತೊಡಗಿತು. ಎಲ್ಲ ಮಕ್ಕಳೂ ರಕ್ತ ನೋಡಿದ ಕೂಡಲೇ ಪರಾರಿಯಾಗಿ ಬಿಟ್ಟರು. ಅಲ್ಲೇ ಇದ್ದ ನನ್ನ ಇನ್ನೊಬ್ಬ ತಮ್ಮನು ಗಾಯಗೊಂಡ ತನ್ನ ತಮ್ಮನನ್ನು ಎಬ್ಬಿಸಿಕೊಂಡು ಮನೆಗೆ ಕರೆತಂದಿದ್ದ. ಮಗನ ಹಣೆಯಿಂದ ರಕ್ತ ಸುರಿಯುವುದನ್ನು ಕಂಡ ಅಮ್ಮನ ಗೋಳು ತುದಿ ಮುಟ್ಟಿತ್ತು. ಅವಳು ತಡ ಮಾಡದೆ ಅವನನ್ನು ಎತ್ತಿಕೊಂಡು ಸರಕಾರೀ ಆಸ್ಪತ್ರೆಗೆ ಓಡಿದಳು. ಅಲ್ಲಿ ನಾಲ್ಕೈದು ಹೊಲಿಗೆ ಹಾಕಿ ಅವನನ್ನು ರಿಪೇರಿ ಮಾಡಿ ಕಳಿಸಿದರು. ಮುಂದಿನ ಕೆಲವು ದಿನ ಇಬ್ಬರು ತಮ್ಮಂದಿರೂ ಮನೆಯಲ್ಲೇ ಆಡಿಕೊಂಡಿದ್ದರು. ಆಮೇಲೆ ಅಮ್ಮನು ಹೋಗಿ ಸ್ಥಳ ಪರಿಶೀಲನೆ ಮಾಡಿ ಬಂದಿದ್ದಳು. ಮಕ್ಕಳು ಆಡುತ್ತಿದ್ದ BAT ನ್ನೂ ಪರೀಕ್ಷಿಸಿ ನೋಡಿ ಬಂದಿದ್ದಳು. ಅದು ಯಾರದೋ ಮನೆಯ ಹಳೆ ಸಾಮಾನಿನ ಶಿಲ್ಕಿನಲ್ಲಿದ್ದ ಒಂದು ಪರಟು ! ಅಂದರೆ ಒಂದು ತೆಳ್ಳಗಿನ ಹಲಗೆ. ಅದರಲ್ಲಿ ಕೆಲವು ಮೊಳೆಗಳೂ ಇದ್ದವು. ಆ ಮೊಳೆ ಬಡಿದುದರಿಂದಾಗಿಯೇ ಅವನಿಗೆ ವಿಪರೀತ ರಕ್ತಸ್ರಾವವಾಗಿತ್ತು. ಆಮೇಲೆ ತನ್ನ ಮಕ್ಕಳ ಆಟದ ಗೆಳೆಯರನ್ನು ಮುಖತಃ ಭೇಟಿಯಾದ ಅಮ್ಮನು ಅವರನ್ನೆಲ್ಲ ಮಾತನಾಡಿಸಿಕೊಂಡು ಬಂದಿದ್ದಳು. "ಆಡುವಾಗ ಜೊತೆಗಾರರಿಗೆ ಗಾಯವಾದರೆ ಅವರನ್ನು ಬಿಟ್ಟು ಓಡಿ ಹೋಗಬಾರದು; ಒಂದೋ ಅವರನ್ನು ಡಾಕ್ಟರ್ ಬಳಿಗೆ ಒಯ್ಯಬೇಕು; ಇಲ್ಲವಾದರೆ ಅವರವರ ಮನೆಗಾದರೂ ಅವರನ್ನು ತಲುಪಿಸಬೇಕು. ದಿನವೂ ಒಟ್ಟಿಗೆ ಆಡುವವರಲ್ಲಿ ಅಂತಹ ಸ್ನೇಹ ಇರಬೇಕು..." ಎಂದೆಲ್ಲ ಆ ಮಕ್ಕಳಿಗೆ ತಿಳಿಹೇಳಿ ಬಂದಿದ್ದಳು. ಆದರೆ ಅವರೆಲ್ಲರೂ ಬರೇ ಹುಡುಗಾಟಿಕೆಯ ಮಕ್ಕಳು. ತಮ್ಮಿಂದಲೇ ಏನೋ ತಪ್ಪಾಗಿದೆಯೆಂದು ಹೆದರಿ ಅಂದು ಓಡಿ ಹೋಗಿದ್ದರು. ಆದರೆ ನನ್ನ ಅಮ್ಮನು ಅವರನ್ನು ಗದರಿಸಲಿಲ್ಲ ಎಂಬುದೇ ಅವರಿಗೆ ಸಮಾಧಾನ ತಂದಿತ್ತು. ಗಾಯ ಮಾಸುತ್ತ ಬಂದಂತೆ ನನ್ನ ತಮ್ಮಂದಿರಿಗೆ ಮತ್ತೆ ಕ್ರಿಕೆಟ್ಟಿನ ಸೆಳೆತ ಶುರುವಾಯಿತು. ಅಮ್ಮ ತಡೆಯಲಿಲ್ಲ. ಎಚ್ಚರದ ಪಾಠ ಹೇಳಿದ್ದಳು - ಅಷ್ಟೆ. ಬಾಲ್ಯದಲ್ಲಿ ಬೆವರು ಸುರಿಯುವಷ್ಟು ಆಡಬೇಕು. ಆಟದ ಹೊತ್ತಿನಲ್ಲಿ ಆಡಲೇಬೇಕು. ಮಕ್ಕಳ ಬಾಲ್ಯ ಅಂದರೆ - ಹಿರಿಯರ ತಾಳ್ಮೆಯ ಪರೀಕ್ಷೆಯ ಕಾಲ ! ಮಕ್ಕಳಿಗೆ -  ಎಚ್ಚರದ ಪಾಠ ಸಿಗುವ ಕಾಲ !

ಕುಂದಾಪುರದ ನಮ್ಮ ಮನೆಯ ಹಿಂದೆ - ಚಕ್ಕುಲಿ ತಯಾರಿಸಿ ಮಾರಿ, ಅದರಿಂದಲೇ ಜೀವನ ನಡೆಸುತ್ತಿದ್ದ ಒಂದು ಕುಟುಂಬವಿತ್ತು. ಅಂದು - ನಮ್ಮ ಕುಟುಂಬವು ಶಿವರಾತ್ರಿಯಾದರೆ ಆ ಗೆಳತಿಯ ಕುಟುಂಬವು ಏಕಾದಶಿಯಾಗಿತ್ತು. ಆ ಮನೆಯ ಒಬ್ಬಳು ಹುಡುಗಿಯು ನಮ್ಮ ಸಮವಯಸ್ಕಳಾಗಿದ್ದಳು. ಒಮ್ಮೆ ಆಕೆಯು ತಾನು ಪರೀಕ್ಷೆಗೆ ಓದಿಕೊಳ್ಳುವ ಕಷ್ಟವನ್ನು ಹೇಳುತ್ತ "ನಿದ್ದೆ ಓಡಿಸಲಿಕ್ಕೆ ರಾತ್ರಿ ಒಂದು ಕಾಫಿ ಕುಡಿದರೆ ಸ್ವಲ್ಪ ಹೆಚ್ಚು ಹೊತ್ತು ಓದಿಕೊಳ್ಳಬಹುದಿತ್ತು. ಆದರೆ ಮನೆಯಲ್ಲಿ ಕಾಫಿ ಹುಡಿಯೇ ಇಲ್ಲ ಮಾರಾಯ್ತಿ..." ಅಂದಾಗ ನಮ್ಮ ಮನೆಯಲ್ಲಿದ್ದ ಕಾಫಿ ಹುಡಿಯನ್ನು ನಾವು ಅವಳಿಗೆ ಕಟ್ಟಿ ಕೊಟ್ಟದ್ದು ನೆನಪಾಗುತ್ತದೆ. ಅದನ್ನು ನೋಡಿದ ಅಮ್ಮನು ಅಂದು ನಮ್ಮನ್ನು ತಡೆದಿರಲಿಲ್ಲ. ಆದರೆ - "ಯಾರಾದರೂ ಇನ್ನೊಬ್ಬರಿಗೆ ಎಷ್ಟು ಕೊಡಲು ಸಾಧ್ಯ ಮಗೂ ? ಈಗ ಕೊಡು..." ಎಂದಷ್ಟೇ ಹೇಳಿದ್ದಳು. ಕೊಡದಂತೆ ನಮ್ಮನ್ನು ತಡೆದಿರಲಿಲ್ಲ. ಮಕ್ಕಳ ಸಹಜ ಭಾವನೆಗಳನ್ನು ಸವರಿ ಹಾಕಿರಲಿಲ್ಲ. ಅಂದು ನಮ್ಮ ಗೆಳತಿಯ ಮುಖ ಅರಳಿತ್ತು. ನಮಗೂ ಖುಶಿಯಾಗಿತ್ತು. ಆದರೆ ಅನಂತರದ ಕೆಲವು ದಿನ ನಮ್ಮ ಮನೆಯ ಕಾಫಿಯು ಮಾತ್ರ ತೆಳುವಾಗಿತ್ತು ! ನಮ್ಮ ವಾಸ್ತವ ಸ್ಥಿತಿ, ನಾವು ನಡೆಸಿದ ಕ್ರಿಯೆ ಮತ್ತು ಅದರ ಪರಿಣಾಮವು ನಮ್ಮ ಅನುಭವಕ್ಕೇ ಬರಬೇಕು. ಆಗ ಬದುಕುಗಳ ಇತಿಮಿತಿಯ ದರ್ಶನವಾಗುತ್ತದೆ.    

ಸುಮಾರು 1983 -87 ರ ಅವಧಿ. ಮಂಗಳೂರಿನ ಒಂದು ಪುಟ್ಟ ಗೂಡಿನಲ್ಲಿ ನಮ್ಮ ಸಂಸಾರ ಅರಳುತ್ತಿತ್ತು. ಆಗ ನಮ್ಮ ಮಗನಿಗೆ ಮೂರು ವರ್ಷ. ನನ್ನ ಅಕ್ಕಂದಿರ ಮಕ್ಕಳೆಲ್ಲರೂ ಅವನಿಗಿಂತ ನಾಲ್ಕಾರು ವರ್ಷ ದೊಡ್ಡವರು; ತಂಗಿಯ ಮಗಳು ಒಂದು ವರ್ಷ ಚಿಕ್ಕವಳು. ವಾರ್ಷಿಕ ರಜೆ ಬಂತೆಂದರೆ ಈ ಮಕ್ಕಳು ಮಂಗಳೂರಿನ ಕುಲಶೇಖರದಲ್ಲಿದ್ದ ನಮ್ಮ ಬಾಡಿಗೆ ಮನೆಗೆ ಖುಶಿಯಿಂದ ಬರುತ್ತಿದ್ದರು. ಆಗ ನನ್ನಮ್ಮನೂ ನನ್ನ ಮಗನನ್ನು ಬೆಳೆಸುತ್ತ ನನ್ನ ಜೊತೆಗೇ ಇದ್ದಳು. ಆದ್ದರಿಂದ ಮಕ್ಕಳೆಲ್ಲರೂ ಅಜ್ಜಿಯ ಮನೆಗೆ ಬಂದ ಹುರುಪಿನಲ್ಲಿರುತ್ತಿದ್ದರು. ಚಿಕ್ಕಮ್ಮ ದೊಡ್ಡಮ್ಮ ಎನ್ನುತ್ತ ನನ್ನ ಸುತ್ತ - ಅಮ್ಮಮ್ಮ ಅಮ್ಮಮ್ಮ ಎನ್ನುತ್ತ ನನ್ನ  ಅಮ್ಮನ ಸುತ್ತ - ಮನೆತುಂಬ ಮಕ್ಕಳು ಸುತ್ತುತ್ತಿದ್ದರೆ ನನಗೆ ಸ್ವರ್ಗ ಸುಖ; ಇನ್ನಿಲ್ಲದ ಹಿಗ್ಗು. ಮಕ್ಕಳು ಇರುವಷ್ಟು ದಿನವೂ ಮನೆಯಲ್ಲಿ ದಿನಕ್ಕೊಂದು ತಿಂಡಿ, ಊಟದ ಸಂಭ್ರಮ. ಅದೊಂದು ದಿನ, ಗಾಂಧೀಜಿಯ ಮೇಜಿನ ಮೇಲೆ ಇರುತ್ತಿದ್ದ ಮೂರು ಮಂಗಗಳ ಚಿತ್ರದ ಕತೆಯನ್ನು ಮಕ್ಕಳಿಗೆ ಹೇಳಿ, ಆ ಪಾಪದ ಮಕ್ಕಳನ್ನೇ ನಾಲ್ಕು ಮಂಗಗಳಾಗಿಸಿ ನಾವೆಲ್ಲ ಖುಶಿ ಪಟ್ಟದ್ದೂ ಇತ್ತು ! ಮಕ್ಕಳೊಡನೆ ಮಕ್ಕಳಾಗುವ ಹುಡುಗಾಟ ! ಸಣ್ಣಾಟ - ದೊಡ್ಡಾಟ !



 ಮಧ್ಯಾಹ್ನದ ಊಟವಾದ ಮೇಲೆ ನಾನು ಆಗಾಗ ಮಕ್ಕಳಿಗೆ ಕತೆ ಹೇಳುತ್ತಿದ್ದುದೂ ಇತ್ತು. ಒಂದು ಕತೆ ಮುಗಿದ ಮೇಲೆ "ಇನ್ನೊಂದು ಕಥೆ ಮತ್ತೊಂದು ಕತೆ" ಎಂದು ನನ್ನ ಮಗನು ಒತ್ತಾಯಿಸಲು ಹೊರಟರೆ ಆಗ ನಾನು ಹಕ್ಕಲು ಕತೆಗಳನ್ನು ಹೇಳಿ ಅವರ ತಾಳ್ಮೆಯನ್ನು ಕೆಣಕುತ್ತ ಅವರ ಮುಖಭಾವವನ್ನು ಪರೀಕ್ಷಿಸುತ್ತಿದ್ದುದೂ ಇತ್ತು. "ಇನ್ನು ಕತೆ ಸಾಕು" - ಅಂತ ಮಕ್ಕಳೇ ಎದ್ದುಹೋಗುವ ಸನ್ನಿವೇಶ ಸೃಷ್ಟಿಸುತ್ತಿದ್ದುದೂ ಇತ್ತು. "ಹೇಳುವುದು ಶಾಸ್ತ್ರ - ತಿನ್ನುವುದು ಬದನೇ ಕಾಯಿ" ಅನ್ನುವ ಕತೆ ಗೊತ್ತಾ ? - ಅಂತ ಕೇಳುತ್ತ " ಅಂತೆ ಕಂತೆ " ಯ  ಕತೆ ಹೇಳಿದ್ದೂ ಇತ್ತು.

ಬಹಳ ಹಿಂದೆ ನಮ್ಮ ನೆಲದಲ್ಲಿ ಬದನೇ ಕಾಯಿ ಎಂಬುದು ಬೆಳೆಯುತ್ತಿರಲಿಲ್ಲವಂತೆ. ಅದು ಎಲ್ಲಿಂದ ಬಂತೋ - ಅದು ನನಗೆ ಗೊತ್ತಿಲ್ಲ ಮಕ್ಳೇ...ಬೀಜಗಳ ಸಂತೆಯೇ ತುಂಬಿಕೊಂಡಿರುವ ಬದನೇ ಕಾಯಿಯನ್ನು ಸಮಾಜದ ಒಂದು ವರ್ಗವಂತೂ ಆಗ ಉಪಯೋಗಿಸುತ್ತಲೇ ಇರಲಿಲ್ಲ. ಯಾಕೆ ? ಅಂತೀರಾ? ಯಾಕೆಂದರೆ ಅವರ ಪ್ರಕಾರ, ಅದು ತಾಮಸ ಆಹಾರ; ಮನಸ್ಸಿನ ಸ್ಥಿರತೆಗೆ ಅದು ಉಪಕಾರಿಯಲ್ಲ; ಅದನ್ನು ಸೇವಿಸಿದರೆ ಬುದ್ಧಿಗೆ ಯಾವ ಪ್ರಯೋಜನವೂ ಇಲ್ಲ...ಅಂತೆಲ್ಲ ಕೇಳಿದವರಿಗೆ ಕೆಲವು ಉತ್ತರವೂ ಸಿಕ್ಕುತ್ತಿತ್ತು.

ಪ್ರತೀ ಕತ್ತೆ ನಾಯಿಗೂ ಒಂದೊಂದು ಕಾಲ ಅಂತ ಬರ್ತದೆ ಅಂತಾರಲ್ಲ ? ಹಾಗಾಯ್ತು ನೋಡಿ...ಒಂದು ವರ್ಷ ಮಳೆ ಇಲ್ಲದೆ ಭಯಂಕರ ಬರಗಾಲ ಬಂತು. ಊರಲ್ಲಿ ನೀರೇ ಇಲ್ಲ. ನೀರಿಲ್ಲದೆ ಏನಾದರೂ ಬೆಳೆ ಬೆಳೆಸಲು ಸಾಧ್ಯವುಂಟಾ ? ಗದ್ದೆಯೆಲ್ಲ ಒಣಗಿ ಬಿರುಕು ಬಿಟ್ಟುಕೊಂಡಿತ್ತು. ಅಂದಿನ ಕಾಲದಲ್ಲಿ ಆಯಾ ಊರಲ್ಲಿ ಬೆಳೆದದ್ದನ್ನು ಮಾತ್ರ ಅಲ್ಲಲ್ಲಿನ ಜನರು ತಿನ್ನುತ್ತಿದ್ದರು. ತರಕಾರಿ ಹಣ್ಣು ಅಕ್ಕಿ ಬೇಳೆ ಎಲ್ಲವೂ ಇಂದಿನ ಹಾಗೆ ಎಲ್ಲೆಲ್ಲಿಂದಲೋ ಲಾರಿಯಲ್ಲಿ ಬರುತ್ತಿರಲಿಲ್ಲ. ಆದರೆ ಬರ ಬಂದ ಊರಲ್ಲಿ ಕುಡಿಯುವ ನೀರಿಗೂ ಹಾಹಾಕಾರವಿರುವಾಗ ಇನ್ನು ತರಕಾರಿ ಬೆಳೆಯುವುದಾದರೂ ಹೇಗೆ ? ಒಟ್ಟಿನಲ್ಲಿ ಆಹಾರಕ್ಕೇ ತತ್ವಾರ ಅನ್ನುವ ಸ್ಥಿತಿ.

ಆದರೆ...ಹುಟ್ಟಿಸಿದ ದೇವರು ಹುಲ್ಲು ಮೇಯಿಸ್ತಾನಾ ? ಅಂತಾರಲ್ಲ ? ಹಾಗೆ...ಒಮ್ಮೆ ಒಂದು ಸುದ್ದಿ ಬಂತು. ಪಕ್ಕದ ಒಂದು ಹಳ್ಳಿಯಲ್ಲಿ ಮೂಟೆಗಟ್ಟಲೆ ಬದನೇ ಕಾಯಿ ಬೆಳೆಯಾಗಿದೆ...ಅಂತ. ಆಗ ಬಹಳ ಜನರು ಓಡಿಹೋಗಿ ಆ ಬದನೇ ಕಾಯಿಯನ್ನೇ ಕೊಂಡು ತಂದು ಅಡುಗೆ ಮಾಡಿ, ಸುರಿಸುರಿದು ಉಂಡರು. ಆದರೆ ಊರಿನ ಒಂದು ಸಣ್ಣ ವರ್ಗವು ಮಾತ್ರ ಸರಿತಪ್ಪುಗಳ ಚಿಂತೆ ಮಾಡುತ್ತ ತಮ್ಮ ಹೊಟ್ಟೆ ಕಾಯಿಸಿಕೊಂಡು ಕೂತಿತ್ತು. ಯಾಕೆಂದರೆ ಅದುವರೆಗೆ ಅವರೆಲ್ಲ ಬದನೇ ಕಾಯನ್ನು ತಿಂದವರಲ್ಲ. ಅದನ್ನು ತಿನ್ನಬಾರದು ಅನ್ನುವ ನಿಷೇಧವನ್ನು ತಮಗೆ ತಾವೇ ಅವರೆಲ್ಲರೂ ಹಾಕಿಕೊಂಡಿದ್ದರು. ಈಗ ಬದುಕಿನ ಕಠಿಣ ಪ್ರಸಂಗವು ಎದುರಾದಾಗ ಪರಿಹಾರಕ್ಕಾಗಿ ಅವರೆಲ್ಲರೂ ತಮ್ಮ ಗುರುಗಳ ಹತ್ತಿರ ಓಡಿದರು. ಆ ಗುರುಗಳು ಜನರ ಕಷ್ಟವನ್ನು ಕಂಡು ಒಂದು ಪರಿಹಾರ ಸೂಚಿಸಿದರು. "ನೋಡೀ, ಈ  ಬದುಕಿನಲ್ಲಿ ಆಪದ್ಧರ್ಮ ಎಂಬುದೊಂದಿದೆ. ಯಾಕೆಂದರೆ - ಜೀವ ಉಳಿಸಿಕೊಂಡು ಬದುಕುವುದು ಎಲ್ಲ ಶಾಸ್ತ್ರಗಳಿಗಿಂತಲೂ ಬಹಳ ಮುಖ್ಯ" ಎನ್ನುತ್ತ - "ನಮ್ಮೂರಿನಲ್ಲಿ ನಿರ್ದಿಷ್ಟ ಜಾಗದಲ್ಲಿ ಬೆಳೆಯುವ ಬದನೆಯನ್ನು ತೀರ್ಥ ಪ್ರೋಕ್ಷಣೆ ಮಾಡಿ ಪವಿತ್ರಗೊಳಿಸುತ್ತೇನೆ. ಗೋಲಾಕಾರವಾಗಿರುವ ಆ ಬದನೆಯನ್ನು ಇನ್ನು ಮುಂದೆ ಗುಳ್ಳ ಎಂದು ಕರೆಯಿರಿ. ಅದರ ವ್ಯಂಜನವನ್ನು ಮೊದಲು ಇಷ್ಟದೈವಕ್ಕೆ ಸಮರ್ಪಿಸಿದ ಅನಂತರ ಎಲ್ಲರೂ ಉಪಯೋಗಿಸಬಹುದು; ಚಿಂತಿಸಬೇಡಿ." ಎಂದು ಸಮಾಧಾನ ಪಡಿಸಿದರು.

ಮುಂದೆ ಹಾಗೆ ಗುರುಗಳಿಂದ ಪವಿತ್ರಗೊಂಡು ನಮ್ಮ ಎಲ್ಲ ಜನರ ಬಳಕೆಗೆ ಒದಗಿದ ಆ " ಪರಮ ಪವಿತ್ರ ಗುಳ್ಳ "   ವು ಪಲ್ಯ, ಹುಳಿ, ಬೋಳು ಹುಳಿ, ಎಣ್ಣೆಗಾಯಿ - ಮುಂತಾದ ಬಗೆಬಗೆಯ ಅವತಾರಗಳನ್ನು ತಳೆದು ಮಳ್ಳ ಜನರನ್ನು ಬಗೆಬಗೆಯಿಂದ ತೃಪ್ತಿಪಡಿಸಿತು...." ಎಂದು ರಾಗವಾಗಿ ಹೇಳಿ ಅಂದಿನ ಕಥಾ ಪ್ರಸಂಗವನ್ನು ಮುಗಿಸಿದ್ದೆ.

"ಪವಿತ್ರ ಅಂದರೇನು ? ಬದನೆಯ ಮೇಲೆ ತೀರ್ಥ ಹಾಕಿದರೆ ಏನಾಗುತ್ತದೆ ?" ಇತ್ಯಾದಿ ಉತ್ತರವೇ ಇಲ್ಲದ ಪ್ರಶ್ನೆಗಳನ್ನೆಲ್ಲ ಮಕ್ಕಳು ಕೇಳದೆ ಬಿಟ್ಟಾರೆಯೆ ? ಅದೇ ಪ್ರಶ್ನೆ ಕೇಳಿದರು. " ಅದೆಲ್ಲ ನನಗೆ ಗೊತ್ತಿಲ್ಲ ಮಕ್ಕಳೇ. ನೀವು ದೊಡ್ಡವರಾದ ಮೇಲೆ ನಿಮ್ಮ ಚೂಪು ಬುದ್ಧಿಗೆ ಹೊಳೆದರೆ, ನನಗೂ ಹೇಳಿ; ಆಯ್ತಾ ?" ಎಂದು ಮಕ್ಕಳ ತಲೆ ತಟ್ಟಿ ನಾನು ಸುಮ್ಮನಾಗಿದ್ದೆ. ಈಗ ಉದ್ದಕ್ಕೆ ಬೆಳೆದಿರುವ ಆ ಮಕ್ಕಳಲ್ಲಿ "ಬದನೇ ಉತ್ತರ ಸಿಕ್ಕಿತಾ ?" ಅಂತ ಅಲುಗಿಸಿ ಕೇಳಿದರೆ - "ಬದನೇಕಾಯೈ ನಮಃ" ಎನ್ನುತ್ತ ಮುಖ ತಿರುಗಿಸುತ್ತಿದ್ದಾರೆ ! ಮಕ್ಕಳು ಪ್ರಬುದ್ಧರಾಗಿದ್ದಾರೆ. ಹಿರಿಯರಿಗೆ ಗೊತ್ತಿಲ್ಲದ ವಿಷಯಗಳನ್ನು ಮಕ್ಕಳು ಕೇಳಿದಾಗ ಸುಳ್ಳುಪಳ್ಳು ಹೇಳುವುದಕ್ಕಿಂತ ಅಥವ ಬಡಿದು ಅವರ ಬಾಯಿ ಮುಚ್ಚಿಸುವುದಕ್ಕಿಂತ - " ಗೊತ್ತಿಲ್ಲ " ಎಂದು ಪ್ರಾಂಜಲವಾಗಿ ಒಪ್ಪಿಕೊಳ್ಳುವುದು ಅತೀ ಅಗತ್ಯ.

ಇನ್ನು ಬದನೇ ಕಾಯಿಯ ವಿಷಯಕ್ಕೆ ಬಂದರೆ, ಈ ಬದನೇ ಕಾಯಿಯಲ್ಲಿ ಕಬ್ಬಿಣದ ಅಂಶವಿದೆ. ಒಮ್ಮೊಮ್ಮೆ ತಿಂದರೆ ಅದರಿಂದ ತೊಂದರೆಯೇನಿಲ್ಲ. ಆದರೆ ಕೆಲವರಿಗೆ ಅದು ಅಲರ್ಜಿ ಆಗುವುದಿದೆ. ಅವರು ಮಾತ್ರ ತಿನ್ನಬಾರದು. ಉದಾಹರಣೆಗೆ ನಾನು ತಿನ್ನಬಾರದು. ಬದನೆ ಅಂದರೆ ನನಗಂತೂ ಅಲರ್ಜಿ. ಆದ್ದರಿಂದ ಬದನೆಯ ಆಟ - ನನ್ನಲ್ಲಿ ನಡೆಯುವುದಿಲ್ಲ ! ಇನ್ನು, "ಬಾಣಂತಿಗೆ ಬದನೆಯ ಖಾದ್ಯಗಳನ್ನು ಹಾಕಬಾರದು. ಅದು ನಂಜು.." ಅಂತ ಅಮ್ಮ ಹೇಳುತ್ತಿದ್ದುದನ್ನು ನಾನು ಕೇಳಿದ್ದೇನೆ. ಆದರೆ ನನ್ನ ಅಮ್ಮನ ಸಾಮಾನ್ಯ ನಿರ್ದೇಶನವೇನಿತ್ತೆಂದರೆ "ಊಟ ತಿಂಡಿಯ ಹೊತ್ತಿನಲ್ಲಿ ಯಾರಿಗೂ "  ಷಡ "   ಇರಬಾರದು; ಕೇವಲ ಬಾಯಿರುಚಿಗಾಗಿ - ಅದು ಬೇಡ, ಇದು ಬೇಡ ಎಂಬ ಹೇವರಿಕೆಯೂ ಇರಬಾರದು" ಎಂಬುದು ಆ ಶಬ್ದದ ಭಾವಾರ್ಥ. ನನ್ನ ಅಮ್ಮ ಮತ್ತು ಅವಳ ಸಮವಯಸ್ಕರು ಉಪಯೋಗಿಸುತ್ತಿದ್ದ ಗ್ರಾಮ್ಯ ಶಬ್ದ ಅದು !

ತಾತ್ಪರ್ಯವೇನೆಂದರೆ ಒಂದು ಮಾಡಿನ ಕೆಳಗೆ ಒಟ್ಟಿಗೆ ಬದುಕುವವರು ಒಮ್ಮನಸ್ಸಿನಿಂದ ಕೂಡಿಬಾಳಲು ಊಟ ವ್ಯವಹಾರಗಳಲ್ಲಿಯೂ ಹೊಂದಾಣಿಕೆ ಮುಖ್ಯವಾಗುತ್ತದೆ. ಅಲ್ಲವೇ ? ಮನೆಯಲ್ಲಿ ಅಡುಗೆ ಸಿದ್ಧಪಡಿಸುವವರಿಗೂ ಆಗ ಸುಖವಾಗುತ್ತದೆ. ಮನೆಯ ಒಬ್ಬೊಬ್ಬರಿಗೆ ಒಂದೊಂದು ಬಗೆಯ ಅಡುಗೆ ತಯಾರಿಸುವುದೆಂದರೆ ಅದು ತುಂಬ ಬಳಲಿಕೆಯ ಕೆಲಸ. ಆದ್ದರಿಂದ ನಿತ್ಯವೂ ತಯಾರಿಸುವ ಅಡುಗೆಯನ್ನು ಎಲ್ಲರೂ ಜೊತೆಯಲ್ಲಿ ಕೂತು ಸಂತೋಷದಿಂದ ಭುಜಿಸಬೇಕು ಎಂಬ ಪ್ರಾಯೋಗಿಕ ಅಗತ್ಯವೂ ಈ ಭಾವದ ಹಿಂದೆ ಅಡಗಿರಬಹುದು. ಹೀಗೆ ಮನೆಯ ಇತರ ಸದಸ್ಯರ ಸುಖ ದುಃಖವನ್ನು ಪರಸ್ಪರ  ಗಮನಿಸುವ ಪ್ರಜ್ಞೆಯೂ ಬಾಲ್ಯದಲ್ಲಿಯೇ ಬೆಳೆಯಬೇಕು. ಈ ಬಗೆಯ ಪಾಠವೂ ಬಾಲ್ಯದಲ್ಲಿಯೇ ಸಿಗಬೇಕು.

ಆದರೆ ನಾನು ಹೇಳಿದ ಬದನೆಯ ಕತೆಯನ್ನು ಕೇಳಿದ ಅಂದಿನ ಮಕ್ಕಳ ಪ್ರಶ್ನೆಗಳು ಮಾತ್ರ ಅಮೂಲ್ಯವಾಗಿದ್ದವು ! ಈ ಕತೆಯನ್ನು ಮೊದಲು ನಾನು ಇನ್ನೊಬ್ಬರಿಂದ ಕೇಳಿಸಿಕೊಂಡಾಗ - "ಗುರುಗಳು ಇಡೀ ಗದ್ದೆಗೆ ತೀರ್ಥ ಹಾಕಿದ್ರಾ ಅಥವ ಒಂದು ಬದನೆಗೆ ಮಾತ್ರ ತೀರ್ಥ ಚಿಮುಕಿಸಿದ್ರಾ ?" ಅಂತ ನಾನೂ ಯೋಚನೆ ಮಾಡಿದ್ದಿದೆ. ಆದರೆ ನಿರಪಾಯಕಾರಿಯಾದ ಇಂತಹ ಕೆಲವು ವಿಷಯಗಳನ್ನು ಸುಮ್ಮನೆ ಕೇಳಿ ನಕ್ಕು, ಅಲ್ಲಿಗೇ ಬಿಟ್ಟುಬಿಡಬೇಕು ಅನ್ನುವುದು ನನ್ನ ಭಾವನೆ. ಅಂಥವನ್ನು ಕೆದಕುತ್ತ ಹೋಗುವುದಕ್ಕಿಂತ ಸುಮ್ಮನಿದ್ದು ಬಿಡುವುದೂ ಒಂದು ಜಾಣ ನಡೆಯೇ ಆಗುತ್ತದೆ. ಇವೆಲ್ಲವೂ ನಮ್ಮ ರೂಢಿ ಮತ್ತು ರುಚಿಗ್ರಹಣದ ಮಿತಿಯಿಂದ ಸ್ಥಾಪನೆಯಾಗುವ ಅವಲಂಬನೆ - ಅಷ್ಟೆ. ಉದಾಹರಣೆಗೆ : ನಮ್ಮ ಅಪ್ಪಯ್ಯ ಅನ್ನಿಸಿಕೊಂಡ ಮನೆಯ ಹಿರಿಯರು ಯಾವುದೋ ಹೊಸ ಆಹಾರವನ್ನು ನಮಗೆ ತಂದು ಕೊಟ್ಟಾಗ ನಾವು ನಿಶ್ಚಿಂತೆಯಿಂದ ಅದನ್ನು ತಿನ್ನುವುದಿಲ್ಲವಾ ? ಹಾಗೆ - ನಾವು ವಿಶ್ವಾಸವಿಟ್ಟ, ಸಜ್ಜನ ತಪಸ್ವೀ ವ್ಯಕ್ತಿಯೊಬ್ಬರು ನೀಡುವ ಆಶ್ವಾಸನೆ, ತೋರಿಸುವ ದಾರಿಯನ್ನು ಸಾಮಾನ್ಯರು ಮಾತಿಲ್ಲದೆ ಅನುಸರಿಸುತ್ತಾರೆ. ಅಂದರೆ ಅನುಸರಿಸುವವರೆಲ್ಲರೂ ಮೂಢರು ಎಂದರ್ಥವಲ್ಲ. ಅವರೆಲ್ಲರೂ ಕೂಡಿ ಬಾಳುವ ಸಭ್ಯತೆಗೆ ಮನ್ನಣೆ ಕೊಡುವವರು - ಅಂದುಕೊಳ್ಳಬೇಕು. ಈ ಪ್ರಪಂಚದಲ್ಲಿ ಬದುಕುವುದಕ್ಕೆ ಕೆಲವರಲ್ಲಾದರೂ ನಾವು ಸಹಭಾವ ವನ್ನು ಹೊಂದಿರಬೇಕಲ್ಲವೆ ? ಸಂಸಾರದಿಂದ ದೂರವಿದ್ದು ನಿಸ್ವಾರ್ಥ ತ್ಯಾಗವನ್ನು ಜೀವನ ಕ್ರಮವಾಗಿಸಿಕೊಂಡು, ಒಟ್ಟಾರೆ ಸಮಾಜದ ಒಳಿತಿಗಾಗಿ ದುಡಿಯುವವರನ್ನು - ಆಪದ್ಧರ್ಮದ ಅವಲಂಬನೆಯು ಅನಿವಾರ್ಯವಾದಾಗ, ನಿರಪಾಯಕಾರಿಯಾದ ವಿಷಯಗಳಲ್ಲಿ ಒಮ್ಮೊಮ್ಮೆ ಅನುಸರಿಸುವುದೆಂದರೆ - ಅದು ಒಂದರ್ಥದಲ್ಲಿ - ಆಯಾ ಕಾಲದ ಅಗತ್ಯಕ್ಕೆ ತಕ್ಕಂತೆ ನಮ್ಮ ಮನಸ್ಸನ್ನು ಪಳಗಿಸುವ ಸುರಕ್ಷಿತ ವ್ಯಾಯಾಮ - ಅಂದುಕೊಳ್ಳಬಹುದು. ಈ ಬದುಕಿನಲ್ಲಿ, ದೊಡ್ಡ ಅಥವ ಸಣ್ಣ ಟೋಪಿಗಳಲ್ಲಿ ಒಂದನ್ನು ಆರಿಸಿಕೊಳ್ಳುವುದು ನಮಗೆ ಅನಿವಾರ್ಯ ! ಸಾಮಾನ್ಯವಾಗಿ ಅವರದೇ ಕೌಟುಂಬಿಕ ಟೋಪಿಯು ಅವರವರ ತಲೆಗೆ ಹೊಂದುವಂತಿರುವುದರಿಂದ ಪ್ರಥಮ ಆಯ್ಕೆಯು ಅದೇ ಇರಲಿ. ಅಂದಿನಿಂದ ಇಂದಿನವರೆಗೂ - ನೆಮ್ಮದಿಯ ಬದುಕನ್ನು ಅರಸುವವರೆಲ್ಲರೂ ಹೀಗೆ - ಅವರವರ ನೆಲೆಬೆಲೆಯಲ್ಲಿ "   ಸುರಕ್ಷಿತ  "    ದಾರಿಗಳನ್ನು ಕಂಡುಕೊಳ್ಳುತ್ತಲೇ ಬಂದಿದ್ದಾರೆ.

ಆದರೆ ನಮ್ಮ ಸಮಸ್ಯೆಯೇನು ಗೊತ್ತಾ ? ವಿಶ್ವದ ಎಲ್ಲ ಆಗುಹೋಗುಗಳೂ ನಮ್ಮ ಕಣ್ಣೆದುರಿಗೇ ನಡೆಯಬೇಕು, ಎಲ್ಲದಕ್ಕೂ ಸಾಕ್ಷಿ ಬೇಕು  ಎಂದು ನಾವು ಅಪೇಕ್ಷಿಸುತ್ತೇವೆ. ಕಣ್ಣಿಗೆ ಕಾಣದ್ದನ್ನು ಒಪ್ಪಲು ನಮ್ಮ " ಅಹಂ " ಎಂಬುದು ಅಡ್ಡ ಬರುತ್ತದೆ. ಆದರೆ ನಮ್ಮ ಬದುಕಿನಲ್ಲಿ ನಮ್ಮ ಯಾವುದೇ ಅಪೇಕ್ಷೆಗೆ ಕವಡೆಯ ಕಿಮ್ಮತ್ತೂ ಸಿಗುವುದಿಲ್ಲ ಎಂಬುದು ಕಹಿಯಾದ ಸತ್ಯ. ಈ ಬದುಕಿನುದ್ದಕ್ಕೂ ನಮ್ಮ ಕಣ್ಣೆದುರಿನಲ್ಲಿ ನಡೆಯುವುದಕ್ಕಿಂತ ನಮ್ಮ ಬೆನ್ನ ಹಿಂದೆ ನಡೆಯುವ, ನಡೆಸುವ ವ್ಯಾಪಾರಗಳೇ ಹೆಚ್ಚು. ಎಲ್ಲವನ್ನೂ ಪರಾಂಬರಿಸಿ ನೋಡುವ ನಮ್ಮ ಚಟದ - ಆಚೆಗೂ ಈಚೆಗೂ - ಒಂದಷ್ಟು ಸತ್ಯವು ನಮಗೆ ಕಾಣದಂತೆ ಅಡಗಿಕೊಂಡು ಇದ್ದೇ ಇರುತ್ತದೆ. ಸತ್ಯವೆಂದು ಕಾಣುವ ಎಷ್ಟೋ ಪ್ರಸಂಗಗಳು ಲೋಕದ ಸಾಕ್ಷಿಯಿಲ್ಲದೆ ಸತ್ತು ಬೀಳುವುದು ನಮ್ಮ ನಿತ್ಯದ ಅನುಭವವಲ್ಲವೆ ? ಸುಳ್ಳು ಎಂದು ಖಾತ್ರಿಯಾಗಿ ಗೊತ್ತಿರುವ ಘಟನೆಗಳು ಸಾಕ್ಷಿಯ ಕಾಪಟ್ಯದಿಂದ ಸತ್ಯವಾಗಿ ಬಿಡುವುದನ್ನೂ ಕಾಣುತ್ತಿಲ್ಲವೆ ?

ಆದ್ದರಿಂದ ಯೋಚಿಸಬೇಕು. ನಾವು ಮನುಷ್ಯರು ಪರಾಂಬರಿಸುವುದಕ್ಕೂ ಒಂದು ಮಿತಿಯಿದೆ. ಯಾವುದೇ ತರ್ಕಕ್ಕೆ - ಸತ್ಯವು ಸಿಗುವುದಿಲ್ಲ. ಆದರೆ ಅನುಭವವನ್ನು ನಂಬಿ ನಡೆದರೆ ನಮ್ಮ ನಡಿಗೆಯು ಸುಲಭವಾಗುತ್ತದೆ; ಬದುಕು ಹಗುರವಾಗುತ್ತದೆ. ಸಂಶಯ ಪಡುತ್ತಲೇ ಇದ್ದಲ್ಲಿಂದ ಕದಲದೇ ಇದ್ದರೆ, ಮಣ ಭಾರ ಹೊತ್ತುಕೊಂಡು, ನಾವು ನಿಂತಲ್ಲೇ ನಿಲ್ಲಬೇಕು. ಆದ್ದರಿಂದ ಅನುಭವವನ್ನು ಗೌರವಿಸುವ ಶಿಕ್ಷಣವೂ ಬಾಲ್ಯದಲ್ಲಿಯೇ ಸಿಗಬೇಕು.

ಈ ಬದನೇ ಕತೆಯನ್ನು ಮೊದಲು ಕೇಳಿದಾಗ ನಾನೂ ಹೀಗೇ - ಮಕ್ಕಳಂತೇ ಪ್ರತಿಕ್ರಿಯಿಸಿದ್ದೆ. ನೂರು ಪ್ರಶ್ನೆಗಳು ಎದ್ದಿದ್ದವು. ಹಾಗೆ ನೋಡಿದರೆ, ಯಾವ ಮಕ್ಕಳೂ ಹೆಡ್ಡರಾಗಿರುವುದಿಲ್ಲ. ಪೂರ್ಣತೆಯನ್ನು ಹೊತ್ತ ಪುಟ್ಟ ರೂಪಗಳವು. ಬಾಲ್ಯದಲ್ಲಿ ಬಗೆಬಗೆಯ ಸಂಶಯ ಮೂಡುತ್ತ ಅವುಗಳನ್ನು ಸವರಿಕೊಳ್ಳುತ್ತ ಹೆಜ್ಜೆ ಹಾಕುವುದು ಆರೋಗ್ಯದ ಲಕ್ಷಣವೂ ಹೌದು. ಮಕ್ಕಳಿಗೆ ಸಂಶಯಗಳು ಬರಲಿ. ಬರುತ್ತಲೇ ಇರಲಿ. ಆದರೆ ವಿವೇಕ ಪ್ರಜ್ಞೆಯನ್ನು ಜಾಗ್ರತವಾಗಿರಿಸಿಕೊಂಡು ಯಾವುದೇ ಸಂಶಯದ ಹುಚ್ಚಿಗೆ - ಸಂದೇಹವೆಂಬ ಅಮಲಿಗೆ ಸಿಲುಕದಿದ್ದರೆ ಒಳ್ಳೆಯದು. ಸಂಶಯವನ್ನೇ ಬಂಡವಾಳವನ್ನಾಗಿಸಿಕೊಂಡು ತಮ್ಮ ವಕ್ರ ತರ್ಕಗಳಿಂದಲೇ ಎಲ್ಲರ ಶಿಫಾರಸ್ಸು ಪಡೆಯುವ ಗೀಳಿಗೆ ಮಾತ್ರ ನಮ್ಮ ಮಕ್ಕಳು ಒಳಗಾಗಲೇಬಾರದು. ತಮ್ಮ ಅಹಂ ತೃಪ್ತಿಗಾಗಿ ಮಕ್ಕಳು ನಡೆಸುವ ವಕ್ರವಾದಗಳನ್ನು ಮನೆಯವರೇ ಸೇರಿಕೊಂಡು - ಗಿಡವಾಗಿರುವಾಗಲೇ ಸೋಲಿಸಬೇಕು. ಮನೆಯ ಒಳಗೇ ಮಕ್ಕಳು ನೆಟ್ಟಗಾಗಬೇಕು. ದಿನವಿಡೀ ಶೀರ್ಷಾಸನ ಹಾಕಿ ನಿಲ್ಲುವುದು ಬದುಕಿನ ರೀತಿಯಲ್ಲ; ಬದುಕುವ ರೀತಿಯೂ ಅಲ್ಲ. ಅದು ಬದುಕನ್ನು ಅವಮಾನಿಸಿದಂತೆ ಎಂದು ಮಕ್ಕಳ ಅರಿವಿಗೆ ಬರಬೇಕಾದ್ದು - ಮನೆಯಲ್ಲಿಯೇ.

ನಿಜವಾಗಿಯೂ ತರ್ಕ ಅಂದರೆ ಏನು ? ಕ್ರಮಬದ್ಧವಾದ ವಿಶ್ಲೇಷಣೆ - ಅಷ್ಟೆ. ವಿಶ್ಲೇಷಣೆ ಅಂದರೆ ತರಿದು ಹರಿದು ನೋಡುವುದು. ಯಾವುದೇ ವಿಷಯವನ್ನು ಕಟಕಟ ತುಂಡರಿಸುತ್ತ ಹೋದರೆ ಕೊನೆಗೆ "ಅಣು" ಮಾತ್ರ ಉಳಿಯುತ್ತದೆ. ಅಣುವನ್ನು ವಿಭಜಿಸಲು ಆಗುವುದಿಲ್ಲ. ಅಲ್ಲಿಗೆ ತರ್ಕ ನಿಲ್ಲುತ್ತದೆ; ಆದರೆ ಅತೃಪ್ತಿ ಮಾತ್ರ ಉಳಿಯುತ್ತದೆ. ಕೊನೆಗೆ ಸಿಗುವುದೇನೂ ಇಲ್ಲ. ಇಂದಿಗೂ ನಾವು - " ಸನ್ ರೈಸ್ " " ಸನ್ ಸೆಟ್ " ಅನ್ನುತ್ತೇವಲ್ಲವೆ ? ಆದರೆ ಸೂರ್ಯನು ಉದಯಿಸುವುದೂ ಇಲ್ಲ; ಅಸ್ತಮಿಸುವುದೂ ಇಲ್ಲ; ಸೂರ್ಯನು ಇದ್ದಲ್ಲೇ ಇದ್ದಾನೆ; ನಾವೇ ಸುತ್ತುತ್ತಿದ್ದೇವೆ...ಎಂಬುದು ನಮಗೆ ಗೊತ್ತಿಲ್ಲವೆ ? ನಮಗೆ ಕಾಣುವುದೆಲ್ಲವೂ ಸತ್ಯವೆ ? ಅಂದಮೇಲೆ ಗದ್ದಲವೆಬ್ಬಿಸಿ ನಮಗೆ ಆಗಬೇಕಾದುದಾದರೂ ಏನು ? ಕೆಲವು ಸುಂದರವಾದ ಅಸತ್ಯಗಳೂ ಪ್ರಿಯವಾಗುತ್ತವೆ ಮತ್ತು ಹಿತ ನೀಡುತ್ತವೆ - ಅಲ್ಲವೆ ? ಆದ್ದರಿಂದ ತರ್ಕಕ್ಕಾಗಿ ಯಾರೂ ಸಾಯಬಾರದು. ವಾದವಿವಾದಕ್ಕೆ ಬಲಿಯಾಗಬಾರದು.  ಅಂದು ಗೆಲಿಲಿಯೋ ತೋರಿಸಿದ ವಿವೇಕವು ನಮಗೆ ಅನುಕರಣೀಯವಾಗಬೇಕು. ಯಾಕೆಂದರೆ ತರ್ಕದ ಕರ್ಕಶ ಅಂತ್ಯಕ್ಕಿಂತ - ಜೀವನವು ಅಮೂಲ್ಯ. ಆದ್ದರಿಂದ ಅನೇಕವಾಗುವ ತರ್ಕಕ್ಕಿಂತ - ಸಾಮರಸ್ಯದಿಂದ ಏಕವಾಗುವ ವಿಶ್ವಾಸವೇ ಹೆಚ್ಚು ಜೀವನ ಸ್ನೇಹಿಯಾಗಬಲ್ಲದು.

ನಮ್ಮ ಬಾಲ್ಯವೆಂದರೆ ಕೇವಲ ಕೇಳುವ ಕಾಲ. ಅನಂತರ ಬರುವುದು ಚಿಂತನೆಯ ಕಾಲ. ಯಾವುದೇ ದಿಕ್ಕುದೆಸೆಯಿರುವ ಗಟ್ಟಿ ಚಿಂತನೆಗಳು ಮಾತ್ರ ನಮ್ಮ ಮುಂದಿನ ಆಯುಸ್ಸಿನಲ್ಲಿ ತಾನಾಗಿಯೇ ಪ್ರಕಟವಾಗುವುದಾದರೆ ಆಗಲಿ. ಆದ್ದರಿಂದ ಮನೆಯ ಒಳಗಾಗಲೀ ಹೊರಗಾಗಲೀ ಯಾರಾದರೂ ಸ್ವತಃ ದೃಷ್ಟಾಂತವಾಗುತ್ತ - ಗುರಿಯಿಟ್ಟು ವಿಶಿಷ್ಟ ಮಾದರಿಗಳ ಸೃಷ್ಟಿಗೆ ತೊಡಗಿದರೆ ಅದು ಸಾಕಾಗುತ್ತದೆ.

ಹಳ್ಳಿಯ ಹೆಂಗಸರು ನೀರಿನ ಕೊಡಗಳನ್ನು ತಲೆಯ ಮೇಲೆ ಇಟ್ಟುಕೊಂಡು ಮಾತನಾಡುತ್ತ ನಗುತ್ತ ಲೀಲಾಜಾಲವಾಗಿ ನಡೆಯುವಂತೆ ಬದುಕಿನ ಸ್ಥಿರತೆ ಇರಬೇಕು. ಎಷ್ಟೇ ಹೊರ ಚಿಂತನೆಗಳು ನಡೆಯುತ್ತಿದ್ದರೂ ಆಂತರಿಕ ಸ್ಥಿರತೆಯು ಭದ್ರವಾಗಿರಬೇಕು. ಅಂತಹ ಸಮತೋಲನವು ಮೂಡುವ ವರೆಗೂ ವಿಶ್ವಾಸದ ಬಾಹ್ಯ ಅವಲಂಬನೆಯನ್ನು ಬಿಡಬಾರದು. ಬಿಟ್ಟರೆ -  ಕೊಡವೆಲ್ಲೋ ನಾವೆಲ್ಲೋ - ಹೆಜ್ಜೆಯೆಲ್ಲೋ ಗಮ್ಯವೆಲ್ಲೋ... ಎಂದಾದೀತು. ಬಾಲ್ಯದ ಅಡಿಪಾಯವು ಭದ್ರವಾಗಿದ್ದಾಗ  ಮಾತ್ರ ಭವಿಷ್ಯದಲ್ಲಿ ಎದುರಾಗುವ ಯಾವುದೇ ಸಮಸ್ಯೆಗಳನ್ನೂ ನುಂಗಿ ಜೀರ್ಣಿಸಿಕೊಳ್ಳುವ ಸಾಮರ್ಥ್ಯ - ಸ್ಥಿರತೆ ಮೂಡುತ್ತದೆ. ಆದ್ದರಿಂದ ನಮ್ಮ ಮಕ್ಕಳ ಮುಂದೆ ಅಪಾರ ವಿಷಯವನ್ನು ಹರವಿ ಇಡುವುದಷ್ಟೇ ನಮ್ಮ ಕೆಲಸ. ಯಾವುದೇ ತೀರ್ಪು ಕೊಡುವುದು ಬೇಡ. ನಮ್ಮನ್ನು ಕೇಳುತ್ತ, ನೋಡುತ್ತ, ಮಾಡುತ್ತ, ಬೀಳುತ್ತ ಏಳುತ್ತ ಮಕ್ಕಳು ಎಲ್ಲವನ್ನೂ ಕಲಿತು ಬಿಡುತ್ತಾರೆ. ತಮಗೆ ಎದುರಾಗುವ ವಿಷಯ ವಿಚಾರಗಳನ್ನು ಹಂಸಕ್ಷೀರ ನ್ಯಾಯದಂತೆ ಸ್ವೀಕರಿಸುವ ಶಕ್ತಿಯನ್ನು ಆಯಾ ಮಕ್ಕಳೇ ಬೆಳೆಸಿಕೊಳ್ಳುವ ವಿಪುಲ ಅವಕಾಶವನ್ನು ಮಾತ್ರ ನಾವು ಒದಗಿಸುತ್ತ ಹೋಗುವ. ನಮ್ಮ ಮೌಲಿಕ ಸಮಯವನ್ನು ಮಕ್ಕಳಿಗಾಗಿ ಮೀಸಲಿಡುವ. ಯಾವ ಕ್ಷಣದಲ್ಲಿಯೂ ತಾನು ಅಸಹಾಯಕ, ನಿಕೃಷ್ಟ ಎಂದು ಮಗುವಿಗೆ ಅನ್ನಿಸಲೇಬಾರದು. ಅದರಿಂದ ಮಕ್ಕಳಲ್ಲಿ ಭಯ ಹುಟ್ಟುತ್ತದೆ. ಭಯವು ಮಗುವಿನ ಬೆಳವಣಿಗೆಯನ್ನು ತೀವ್ರವಾಗಿ ಕುಂಠಿಸುವುದು. ಆದ್ದರಿಂದ ಪ್ರೀತಿ ಮತ್ತು ಶಿಕ್ಷೆಯಲ್ಲಿ ಸಮತೋಲನವನ್ನು ಕಾಯ್ದುಕೊಳ್ಳಬೇಕಾಗುತ್ತದೆ. ನಿಮಗೆ ಗೊತ್ತಿದೆ. ಈ ಪ್ರಕೃತಿಯಲ್ಲಿರುವುದು ಕೇವಲ ಶಿಸ್ತು. ಅಲ್ಲಿ ಪ್ರೇಮವಿಲ್ಲ. ಆದರೂ ಪ್ರಕೃತಿಯು ಮನುಷ್ಯನ ವೈರಿಯೇನಲ್ಲ. ಆದ್ದರಿಂದಲೇ ಪ್ರಕೃತಿಯ ಮಡಿಲಿನಲ್ಲಿ ಬೆಳೆದ ಮಕ್ಕಳ ಬುದ್ಧಿಯು ಆರೋಗ್ಯಕರವಾಗಿ ವಿಕಸಿಸುತ್ತದೆ. ಆಟ ಪಾಠ ಊಟ ಓಟ - ಎಲ್ಲವೂ ಸಮತೋಲನದಲ್ಲಿರಲಿ. ಬಾಲ್ಯದಲ್ಲಿ ಮಕ್ಕಳಿಗೆ ಸಿಗಬೇಕಾದ್ದು - ಇಂತಹ ನಿಷ್ಪಕ್ಷ ಆರೈಕೆ; ಬುದ್ಧಿಯನ್ನು ಉದ್ದೀಪನಗೊಳಿಸುವ ಪರಿಚಾರಿಕೆ ! ಸ್ವನಿರೀಕ್ಷಣೆಯ ಸಾಮರ್ಥ್ಯವನ್ನು ಹೆಚ್ಚಿಸುವ ಮನೆಪಾಠ ! ಹದಿಹರೆಯಕ್ಕೆ ಬರುವ ಮೊದಲೇ ನಮ್ಮ ಮಕ್ಕಳನ್ನು ಸರಿಯಾದ ಅಚ್ಚಿನಲ್ಲಿ ಎರಕ ಹೊಯ್ಯುವುದು ಕುಟುಂಬ ಮತ್ತು ಶಿಕ್ಷಕ ರ ಹೊಣೆ. "   ಪ್ರಳಯ - ಪ್ರಗತಿ ಎರಡೂ ಶಿಕ್ಷಕನ ಮಡಿಲಲ್ಲಿ ರೂಪುಗೊಳ್ಳುತ್ತದೆ ! "   ಎಂದ ಚಾಣಕ್ಯನ ಮಾತು ಇಂದಿಗೂ ಸ್ಮರಣೀಯ.

ನಮ್ಮ ಊರು, ಬಾಲ್ಯದ ಪೋಷಣೆ ಮತ್ತು ಮನೆಯ ವಾತಾವರಣವು ಆರೋಗ್ಯಪೂರ್ಣ ಮಕ್ಕಳನ್ನು ರೂಪಿಸುವ ಶಕ್ತಿಗಳು. ಅದಕ್ಕಾಗಿ - ಉತ್ತಮ ಕೌಟುಂಬಿಕ ಪರಿಸರವು ಬಹಳ ಮುಖ್ಯ. ಮಕ್ಕಳ ಜೊತೆಗೆ ಪ್ರತೀ ದಿನವೂ ಅವರ ಹೆತ್ತವರು ಮುಕ್ತ  ಸಂವಹನವನ್ನು ನಡೆಸಬೇಕು. ಕುಟುಂಬದ ಸದಸ್ಯರ ಮಧ್ಯೆ "SPACE" ಅನ್ನುವ " ಗುಟ್ಟು ಚಟ್ಟು " ಇರಲೇಬಾರದು. ಕೌಟುಂಬಿಕ ಸಂವಹನವು ಗಟ್ಟಿಯಾಗಿರಲೇಬೇಕು. ಮಕ್ಕಳ ಎಲ್ಲ ಚಟುವಟಿಕೆಗಳನ್ನೂ ಕುಟುಂಬದ ಹಿರಿಯರು ಕಂಡಂತೆಯೂ ಇರಬೇಕು; ಕಾಣದಂತೆಯೂ ಇರಬೇಕು ! ನನ್ನ ಅಮ್ಮನ ಭಾಷೆಯಲ್ಲಿ " ಒಂದು ಕಣ್ಣನ್ನು ಯಾವಾಗಲೂ ಮಕ್ಕಳ ಮೇಲೆ ಇಡಬೇಕು." (ಒಂದೇ ಕಣ್ಣು !) ಇಂದಿನ ದ್ವೀಪದಂತಾಗಿರುವ ಕುಟುಂಬಗಳಲ್ಲಿಯಂತೂ ಈಗ ವಿಶೇಷ ಕಾಳಜಿಯ ಅಗತ್ಯವಿದೆ. ಕೂಡಿ ಬಾಳುವ ಮನೆಯ ಪರಿಸರದಲ್ಲಿ, "ಸಮಾಜದ ವಿಶ್ವರೂಪ ದರ್ಶನ"ವು - ಮಕ್ಕಳಿಗೆ ಪರಿಚಿತವಾದರೆ ಅದಕ್ಕಿಂತ ದೊಡ್ಡ ನಿಧಿಯು ಇನ್ನೊಂದಿಲ್ಲ. ಜತೆಜತೆಗೆ ಮಕ್ಕಳ ಹಸಿ ಭಾವನೆಗಳು ಜಡವಾಗದಂತೆ ಎಚ್ಚರ ವಹಿಸುವುದೂ ಬಹಳ ಮುಖ್ಯ. ಸ್ನೇಹ ಪ್ರೀತಿ ಕರುಣೆ - ಮುಂತಾದ ಎಲ್ಲ ಸ್ನಿಗ್ಧ ಭಾವನೆಗಳೂ ನಮ್ಮ ಮಕ್ಕಳಲ್ಲಿ ಹಸಿಯಾಗಿರುವಂತೆ ಆಯಾ ಕುಟುಂಬವೇ ಕಾಯ್ದುಕೊಳ್ಳಬೇಕಾಗುತ್ತದೆ. ಮಕ್ಕಳಿಗೆ ಶಿಕ್ಷಾರೂಪದಲ್ಲಿ ನೀಡುವ ಪೆಟ್ಟುಗಳು ಅವರನ್ನು ದೈಹಿಕವಾಗಿ ಗಾಯಗೊಳಿಸದೆ ಕೇವಲ ಎಚ್ಚರಿಸುವಂತಿರಲಿ. ಹಾಗಾದಾಗ ಮಕ್ಕಳು ಬೆಳೆದಂತೆ ಅವರೊಳಗೆ ಒಂದೊಂದಾಗಿ ಬಂದು ಸೇರುವ ಸಣ್ಣಪುಟ್ಟ ಏರುಪೇರುಗಳನ್ನು ತಾವೇ ಸರಿಪಡಿಸಿಕೊಳ್ಳಲು ಮಕ್ಕಳಿಗೆ ಅನುಕೂಲವಾಗುತ್ತದೆ. ಜೊತೆಯಲ್ಲಿ ಲೋಕ ಸಂಚಾರ ಮತ್ತು ಉತ್ತಮ ಓದಿನ ಹವ್ಯಾಸವಿದ್ದರೆ ಮಕ್ಕಳ ಉತ್ತಮ ಬದುಕಿಗೆ ಅಷ್ಟೇ ಸಾಕಾಗುತ್ತದೆ - ಅಲ್ಲವೆ ?

ನಮ್ಮೂರಿಗೆ ಹೋಗಿ ಬಂದ ಮೇಲೆ - ತೂಗಿತ್ತು ನೆನಪುಗಳ ಜೋಕಾಲಿ ! ಮಕ್ಕಳ ರಾಜ್ಯದ ಖಯಾಲಿ ! ನಾವು ಎಷ್ಟೇ ದೊಡ್ಡ ಕುಂಬಳಕಾಯಿ ಅನ್ನಿಸಿಕೊಂಡರೂ ಬಾಲ್ಯ ಕಾಲವು ನಮ್ಮ ಬದುಕಿಗೆ ಅಂಟಿಕೊಂಡೇ ಇರುತ್ತದೆ. ಜನನ - ಜೀವನ - ಮರಣವೆಂಬ ಬದುಕಿನ ಪೂರ್ಣ ವೃತ್ತದಲ್ಲಿ ಬಾಲ್ಯವು ಮಾತ್ರ - ನಮ್ಮ ಬೆಂಬಿಡದ ಸಂಗಾತಿ. ಎಲ್ಲರ ಪ್ರಜ್ಞೆಗೂ ನಿಲುಕದ - ಕೆಲವೊಮ್ಮೆ ನಿಲುಕಿದರೂ ಅಭಿವ್ಯಕ್ತಗೊಳಿಸಲಾಗದ ಅನುಭವ ಅದು. ಮಕ್ಕಳ ಮುಗ್ಧತೆಯನ್ನು ಕಳೆದುಕೊಳ್ಳದಿರುವವರು ಬದುಕನ್ನು ಸವಿಯುತ್ತಾರೆ. ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀ...ಎಂದ ಶ್ರೀರಾಮನಿಗೂ ಅಯೋಧ್ಯೆಯ ಸೆಳೆತವಿತ್ತು. ಪ್ರತೀ ಬದುಕಿನ ಅಂತಿಮ ಭಾಗದಲ್ಲಿ ಅದು ಹೆಚ್ಚು ಕಾಡುತ್ತದೆ. ದೇವಭೂಮಿಯಲ್ಲಿ ಜನಿಸಿದ್ದ ಮಹಾಭಾರತದ ಪಂಚ ಪಾಂಡವರು ತಮ್ಮ ದೇಹತ್ಯಾಗ ಮಾಡಲು ತಾವು ಬಾಲ್ಯವನ್ನು ಕಳೆದ ಅದೇ ದೇವಭೂಮಿಯನ್ನು ಆಯ್ದುಕೊಂಡದ್ದು ನೆನಪಾಗುವುದಿಲ್ಲವೆ ? ಬದುಕಿಗೆ ಬೆನ್ನು ತಿರುಗಿಸಿದ ನಡಿಗೆಯದು. ಆದರೂ ಸ್ವರ್ಗಾರೋಹಣವೆನ್ನಿಸುವ, ಮಹಾನವಮಿ ಅನ್ನಿಸುವ - ಬಾಲ್ಯ ಕಾಲದ ಮಧುರ ಸೆಳೆತವದು.....

                                                                                                                      ನಾರಾಯಣೀ ದಾಮೋದರ್


Saturday, December 5, 2015

ಕನ್ನಡವೆನೆ...ಮನ ಕುಣಿದೀತೆ ?






ಪ್ರಿಯ ಕನ್ನಡಾಭಿಮಾನಿಗಳೇ,

೧೯೫೬ ನೇ ಇಸವಿಯ ನವೆಂಬರ್ ತಿಂಗಳ ೧ ನೇ ದಿನಾಂಕವು ಕನ್ನಡ ಭಾಷಿಕರ ರಾಜ್ಯವಾಗಿಕರ್ನಾಟಕವು - ಅಧಿಕೃತವಾಗಿ ಪ್ರತಿಷ್ಠಾಪನೆಗೊಂಡ ದಿನ. ಈ ದಿನದ ಆಚರಣೆಯು – ಅಂದಿನಿಂದಲೂ ನಡೆಯುತ್ತಲೇ ಬಂದಿದೆ. ಕನ್ನಡದ ಉಪಾಸಕರು ಅಂದು ಆಡುತ್ತಿದ್ದ ತೂಕದ ಮಾತುಗಳನ್ನು ಕೇಳುತ್ತಿದ್ದ ನಮಗೆ ಇಂದು ಅಂಕೆ ತಪ್ಪಿದ ನಾಲಗೆಯ ಹೊರಳಾಟವು ಕಾಣಿಸುತ್ತಿದೆ. ಕನ್ನಡವು ನರಳುತ್ತಿದೆ. ನವೆಂಬರ್ ತಿಂಗಳು ಮುಗಿದಿದೆ. ಇನ್ನು ಬರುವ ವರ್ಷದ ನವೆಂಬರ್ ವರೆಗೂ ಕನ್ನಡದ ಸುದ್ದಿಗೆ ಯಾರೂ ಬರುವುದಿಲ್ಲ. ಇಂದಿನ ವರೆಗಿನ ಅನುಭವದ ಆಧಾರದಲ್ಲಿ ಹೇಳುವುದಾದರೆ, ಯಾವುದೇ ನೆನಪುಗಳು ಸರಕಾರೀ ಆಚರಣೆಗೆ ಸಿಕ್ಕಿಕೊಂಡಿತೆಂದರೆ - ಅದರ ಕತೆ ಮುಗಿಯಿತೆಂದೇ ಅರ್ಥ. ರಾಜ್ಯೋತ್ಸವದ ಆಚರಣೆಯೂ ಈ ಮಾತಿಗೆ ಹೊರತಲ್ಲ.

ಕರ್ನಾಟಕವು ಕನ್ನಡದ ನೆಲ ಅನ್ನಿಸಿಕೊಂಡಾಗ ಮೊದಲು ಮಹಾ ಮೈಸೂರು ಉದಯಿಸಿ - ಅನಂತರ ಕರ್ನಾಟಕವೆಂದು ಕರೆಯಲಾಯಿತು. ನಮ್ಮ ಕನ್ನಡಿಗರಿಗೆಂದೇ...ಒಂದು ರಾಜ್ಯವು ಉದಯಿಸಿದರೆ ಆ ರಾಜ್ಯದ ಒಳಿತಿಗಾಗಿಕನ್ನಡ ತಾಯಿಯ ಸೇವೆಗಾಗಿತಮ್ಮ ತನು ಮನ ಧನವನ್ನು ಅರ್ಪಿಸುತ್ತೇವೆ – ಎಂದು ಕನ್ನಡಿಗರೆಲ್ಲರೂ ಅಂದು – ಪ್ರತಿಜ್ಞೆ ಮಾಡಿ  ೫೦ ವರ್ಷಗಳ ಕಾಲ ಹೋರಾಡಿದ್ದು ಸಾರ್ಥಕವಾಗಿ – ಅನಂತರ ೧೯೫೬ ನವೆಂಬರ್ ೧ ರಂದು - ಅಂದಿನ ೨ ಕೋಟಿ ಕನ್ನಡಿಗರ ಕನಸು ನೆನಸಾಯಿತು.

ಕರ್ನಾಟಕ ಮಾತೆಯ ಹಲವು ಮುಖದ ಸೇವೆಯಿಂದ ಕನ್ನಡಿಗರ ಯಶೋಬಾವುಟವನ್ನು ಹಾರಿಸಿ ಮೆರೆದವರು – ಶಾಂತ ಕವಿಬಿ. ಎಂ. ಶ್ರೀ.ಕಾರಂತಬೇಂದ್ರೆಡಿ. ವಿ. ಗುಂಡಪ್ಪಕುವೆಂಪು ಮೊದಲಾದ ಸಾಹಿತ್ಯ ಕುಸುಮಗಳು. ಬೆನಗಲ್ ರಾಮರಾಯರುಮುದವೀಡು ಕೃಷ್ಣರಾಯರುವೆಂಕಣ್ಣಯ್ಯಬಸವನಾಳರುಅ. ನ. ಕೃಷ್ಣರಾಯರು...ಹೀಗೆ ನಮ್ಮ ಹಲವಾರು ಹಿರಿಯರ ಅಸಾಧಾರಣ ಪರಿಶ್ರಮದ ಫಲವಾಗಿ ಕನ್ನಡಿಗರೆಲ್ಲರೂ ಒಂದುಗೂಡುವಂತಾಯಿತುಕನ್ನಡವನ್ನು ಕೊಂಡಾಡುವಂತಾಯಿತು.

ಈ ಕರ್ನಾಟಕ ಏಕೀಕರಣದ ಮುಖ್ಯ ಉದ್ದೇಶವೇ - ಕನ್ನಡ ಭಾಷೆನೆಲ - ಜಲದ ಉಸ್ತುವಾರಿಯ ಉನ್ನತೀಕರಣಕ್ಕಾಗಿ ನಾವು ಬಯಸಿದ್ದ ಪೂರ್ಣ ಸ್ವಾತಂತ್ರ್ಯತತ್ಪರಿಣಾಮವಾಗಿಕನ್ನಡಿಗರ ಸರ್ವತೋಮುಖ ಅಭಿವೃದ್ಧಿ. ಈಗ ಈ ೫೯೬೦ ವರ್ಷಗಳ ನಂತರ - ನಮ್ಮನ್ನು ನಾವೇ ನೋಡಿದರೆನಾವು ಎಷ್ಟು ಸಫಲರಾಗಿದ್ದೇವೆ ಅನ್ನಿಸುತ್ತದೆಎಷ್ಟು ಕನ್ನಡತನವನ್ನು ನಾವೀಗ ಉಳಿಸಿಕೊಂಡಿದ್ದೇವೆಎಷ್ಟು ಬೆಳೆಸಿಕೊಂಡಿದ್ದೇವೆಉದ್ದಕ್ಕೂ ಎಡವುತ್ತಾ ಎಲ್ಲವನ್ನೂ ಗೋಜಲು ಮಾಡಿಕೊಂಡಿದ್ದೇವೆಯೆ?..ಎಂಬ ಆತ್ಮ ಚಿಂತನೆ ನಡೆಸುವುದೂ ಒಮ್ಮೊಮ್ಮೆ ಅನಿವಾರ್ಯವಾಗುತ್ತದೆ. ಅಂತಹ ಸ್ವ-ನಿರೀಕ್ಷಣೆಯನ್ನು ನಡೆಸುವ ಅಗತ್ಯವೂ ಇದೆ.

ಒಂದು ಕಾಲದಲ್ಲಿ ಸೌಮ್ಯಸಜ್ಜನಪ್ರಾಮಾಣಿಕಪ್ರತಿಭಾವಂತಗುಣಪಕ್ಷಪಾತಿಗಳು...ಎಂದೆಲ್ಲ ಅಗ್ಗಳಿಕೆಗೆ ಪಾತ್ರರಾಗಿದ್ದ ಕರ್ನಾಟಕದ ಜನರು ಬರಬರುತ್ತ - ಮದಭರಿತ ಮತ್ಸರಿಅಪ್ರಾಮಾಣಿಕಅಸಹನೆಮೇಲಾಟದ ಪ್ರತೀಕಗಳಾಗುತ್ತಿದ್ದಾರೆಯೆಎಂಬ ಸಂದೇಹವು ಮೂಡುವಂತಹ ಸನ್ನಿವೇಶವು ಇಂದಿನ ಕರ್ನಾಟಕದಲ್ಲಿ ಇರುವಂತೆ ಈಗ ಕಾಣುತ್ತಿದೆ. ಇದು ನಮ್ಮ ಹಿರಿಯರ ಆಶಯವಂತೂ ಆಗಿರಲಿಲ್ಲ. ಕಾವೇರಿಯಿಂದ ಗೋದಾವರಿಯ ವರೆಗಿದ್ದ ಕನ್ನಡನಾಡುತ್ಯಾಗದ ಭೋಗದ ಅಕ್ಕರದ ಗೇಯದ ಸುಖ ನೆಮ್ಮದಿಯ ತಾಣವಾಗಿದ್ದ...ಆರಂಕುಸಮಿಟ್ಟೊಡಂ ನೆನೆವುದೆನ್ನ ಮನಂ” ಎಂದು ಕನವರಿಸುವಂತೆ ಮಾಡಿದ್ದ ಈ ಕನ್ನಡ ನಾಡು,...ಗಾಡಿಯ ಸೀಮೆಚೆಲ್ವೊಗೆವ ತಾಣಅಲಂಪಿನ ಸಂತೆಪೆಂಪು ಸಾರ್ದಾಡುವ ಭೂಮಿಸೌಖ್ಯದೆಡೆಪುಣ್ಯದ ಗೊತ್ತುವಿನೋದದಾಗರಂಮೋಡಿಯ ಮಂಟಪಂಸಿರಿಯ ಪೆರ್ಚುಗೆಗೊಳ್ಮನೆಮುಕ್ತಿಕಾಂತೆ ಕೈಗೂಡುವ ಬೀಡು... ಎಂದೆಲ್ಲ ಕವಿ ಚಿಕುಪಾಧ್ಯಾಯನಿಂದ ಬಣ್ಣಿಸಲ್ಪಟ್ಟ...ಮುತ್ತು ರತ್ನಗಳನ್ನು ಬಳ್ಳದಿಂದ ಅಳೆದು ಮಾರುತ್ತಿದ್ದ ಸಮೃದ್ಧ ಕನ್ನಡ ನಾಡು---ಈಗ ಹೇಗಿದೆಈಗ ಕಲ್ಲು ಮಣ್ಣು ಹೊಯಿಗೆ  ಮರಮಟ್ಟುಗಳನ್ನು ಮಾತ್ರವಲ್ಲದೆ ಜೊತೆಗೆ ಅಭಿಮಾನವನ್ನೂ ಮಾರಾಟಕ್ಕೆ ಇಟ್ಟುಕೊಂಡು ನಾವು ಕೂತಿದ್ದೇವೆ ಅನ್ನಿಸುವುದಿಲ್ಲವೆ ಬರೇ ಸ್ವಾರ್ಥದ ಕಮಾಯಿಯ ಯೋಚನೆಯನ್ನು ಬಿಟ್ಟರೆ ನಮ್ಮಲ್ಲಿ ಇರಲೇಬೇಕಿದ್ದ ಪ್ರಾಂತ್ಯಿಮಾನ, ಸ್ವಭಾಷಾಭಿಮಾನ...ಈಗ ಎಲ್ಲಿದೆ

ಇಂದಿನ ಕನ್ನಡ ನಾಡು ವಿದ್ಯೆಗೆ ತವರಾಗಿದೆಯೆ?...ಎಂತಹ ವಿದ್ಯೆ?  ಕಲೆಗಳ ನೆಲೆವೀಡಾಗಿದೆಯೆಎಂತಹ  ಕಲೆ ?ರಾಷ್ಟ್ರಾಭಿಮಾನಿಗಳ ಆಡುಂಬೊಲವಾಗಿದೆಯೆ ? ಧರ್ಮನೀತಿಗೆ ಆಶ್ರಯಸ್ಥಾನವಾಗಿದೆಯೆ ?... ಯೋಚಿಸಬೇಕಾದ ಸಮಯವಿದು. ಬಗೆಬಗೆಯ ವ್ಯಾವಹಾರಿಕ ಕಪಟ ನೀತಿಅನುಕರಣೆಯ ಕಲೆವಸ್ತುಗಳನ್ನು ಮಾತ್ರವಲ್ಲದೆ ಭಾವನೆಗಳನ್ನೂ ವಿದ್ಯೆಯನ್ನೂ ಮಾರುವ - ಕಲಾ ಪ್ರಾವೀಣ್ಯವು ಇಂದಿನ ಸಮಾಜವನ್ನು ಮುಸುಕಿಕೊಂಡಿದೆ. ಆದ್ದರಿಂದಲೇ ಬುದ್ಧಿಯ ಕಸರತ್ತು – ಕಾಸು ಮಾಡುವ ಕೊಸರಾಟವನ್ನು ಬಿಟ್ಟರೆ ಬೇರೇನೂ ಕಾಣಿಸುವುದಿಲ್ಲ. ಮುಖ್ಯವಾಗಿಭಾವೈಕ್ಯವು ಕಾಣಿಸುತ್ತಿಲ್ಲ. ಯಾವುದೇ ಭಾವ ಸಂವಹನವಿಲ್ಲದ ಸಮಾಜವು ಮೃಗತ್ವದತ್ತ ಹೊರಳುತ್ತದೆ. ಗುಣ ಮೌಲ್ಯಗಳೆನ್ನಿಸಿದ ಪ್ರೀತಿ, ಕುಣೆ, ಸಹೆ, ನಮ್ರತೆಗಳೆಲ್ಲವೂ - ಕಾಲಕ್ಕೆ ತಕ್ಕಂತೆ - ಇಂದುಬಿಕರಿಯಾಗುವ ವಸ್ತುಗಳಾಗಿಬಿಟ್ಟಿವೆ. ಕೆಲವರು ಸೇವೆಯನ್ನೇ ಕಸುಬಾಗಿಸಿಕೊಂಡು ಜೀವನಕ್ಕೆ ದಾರಿ ಮಾಡಿಕೊಂಡಂತೆಯೂ ಕಾಣಿಸುತ್ತದೆ. ನಮ್ಮ ಶಿಕ್ಷಣ ಕ್ಷೇತ್ರವಂತೂ ಗೊಂದಲದ ಗೂಡಾಗಿದೆ.

ನಾನು ಆಕಾಶವಾಣಿಗೆ ಹೊಗ್ಗುವ ಕಾಲದಲ್ಲಿ ರೇಡಿಯೋದ ಭಾಷೆಯನ್ನು ಕೇಳಿ ನಮ್ಮ ಉಚ್ಚಾರವನ್ನು ತಿದ್ದಿಕೊಳ್ಳುವ ಮಟ್ಟದಲ್ಲಿ ನಮ್ಮ ಬಾನುಲಿಯ ಭಾಷೆಯು ಶಿಷ್ಟವಾಗಿತ್ತು. ಈಗ ಹೇಗಿದೆ?...ಪರಿವರ್ತನೆಯಾಗಿದ್ದರೆ - ಕುಸಿದಿದ್ದರೆ ಅದಕ್ಕೆ ಯಾರು ಕಾರಣಬಾನುಲಿ ಕಾರಣವೆಇವತ್ತಿನ ಮಾಧ್ಯಮಗಳಲ್ಲಿ...ಪರಕೀಯ ಪತ್ರಿಕೋದ್ಯಮ ದ ಸಾರವನ್ನು ಉಂಡು ಬಂದಿರುವ ಮಾಧ್ಯಮ ಮಿತ್ರರು - ಅತಿ ವೇಗದಲ್ಲಿ ಎಲ್ಲರ ಗಮನ ಸೆಳೆಯುವ ತರಾತುರಿಯಲ್ಲಿ...ಬಿದ್ದದ್ದು ಎದ್ದದ್ದು ಎಲ್ಲವನ್ನೂ ಕತೆ ಕಟ್ಟಿ ಹೇಳತೊಡಗಿದ್ದಾರೆ. ನನ್ನದೊಂದು STORY ಇವತ್ತಿನ ಪತ್ರಿಕೆಯಲ್ಲಿ ಬಂದಿದೆನೋಡಿದ್ರಾ ಮೇಡಂ?” ಅಂತ ಕೇಳುತ್ತಾರೆ. ಹೀಗೆ ಕತೆ ಕಟ್ಟುವವರ ಸಂಖ್ಯೆಯು ಜಾಸ್ತಿಯಾಗಿಕತೆ ಕಟ್ಟುವ ಹುಮ್ಮಸ್ಸಿನಲ್ಲಿಕಟ್ಟು ಕತೆಗಳು ಪ್ರಾಧಾನ್ಯ ಪಡೆಯುತ್ತಿರುವುದೂ ಇದೆ. ಊಟಕ್ಕೆ ಉಪ್ಪಿದ್ದಂತೆ ಯಾವುದೇ ಕಥಾ ಪ್ರಯೋಗವಾದರೆ ಒಪ್ಪೋಣ. ಆದರೆ ಪತ್ರಿಕೆಯ ತುಂಬ ಅಧಿಕೃತವಲ್ಲದ ಕತೆಗಳೇ ತುಂಬುವಂತಾದರೆ...ಸುದ್ದಿಗಳಿಗೂ ಕತೆಯ ಬಣ್ಣ ಬಳಿದರೆಅದರಿಂದ ಸಮಾಜಕ್ಕೆ ಯಾವುದೇ ಉಪಕಾರವಿಲ್ಲದಂತಿದ್ದರೆ - ಅಂತಹ ಸುದ್ದಿಗಳನ್ನು ಉದ್ದಕ್ಕೆ ಎಳೆದು STORY ಮಾಡುವ ಅಗತ್ಯವಿದೆಯೆಹಸಿಯಾದ ಭಾವನೆಗಳುಸಂಬಂಧಗಳು - ಎಲ್ಲವನ್ನೂ ಮಾರಿಕೊಳ್ಳುವ ಇಂದಿನ “Big Boss” ನಂತಹ - ಸುಳ್ಳನ್ನೇ ಮನೆದೇವರನ್ನಾಗಿಸಿಕೊಂಡಂತಹ ಕಣ್ಕಟ್ಟಿನ ಕಾರ್ಯಕ್ರಮಗಳು ಕನ್ನಡದ ಸಂಸ್ಕೃತಿಯೆ

ನೋಡುಗರ - ಓದುಗರ ಅಭಿರುಚಿಯನ್ನು ಕೆಡಿಸುವ ಕಾರ್ಯದಲ್ಲಿ ಇಂದಿನ ಯಾವ ಖಾಸಗಿ ಮಾಧ್ಯಮಗಳೂ ಹಿಂದೆ ಬಿದ್ದಿಲ್ಲಇದ್ದುದರಲ್ಲಿ ನಮ್ಮ ಆಕಾಶವಾಣಿ ದೂರದರ್ಶನಗಳೇ ಅಂಕೆಯಲ್ಲಿದ್ದಂತೆ ನನಗೆ ಅನ್ನಿಸುತ್ತದೆ. ಇಂದಿಗೂ ಅಕಾಶವಾಣಿ ದೂರದರ್ಶನಗಳನ್ನು ಎಷ್ಟು ಹೊತ್ತು ಕೇಳಿದರೂ ನೋಡಿದರೂ ಮನಸ್ಸು ಬಗ್ಗಡವಾಗುವುದಿಲ್ಲ. ನೇತ್ಯಾತ್ಮಕ  ಪ್ರಚೋದನೆಯಂತೂ  ಸದ್ಯೋಭವಿಷ್ಯದಲ್ಲಿ - ಆಕಾಶವಾಣಿ,  ದೂರದರ್ಶನಗಳಿಂದ  ಸಿಗಲಾರದು. ಈಗಲೂ  ಈ  ಸರಕಾರೀ ಮಾಧ್ಯಮಗಳು  ಜೀವನ  ಸ್ನೇಹಿಯಾಗಿಯೇ ಉಳಿದುಕೊಂಡಿವೆ. ಸುಭಗತನವನ್ನು ಉಳಿಸಿಕೊಂಡಿವೆ. ಆದರೆ ಪ್ರಸ್ತುತದ ಕೆಟ್ಟ ಸ್ಪರ್ಧೆಗೆ ಒಡ್ಡಿಕೊಂಡು ಕಾಲಕ್ರಮೇಣತಮ್ಮ ಗಾಂಭೀರ್ಯವನ್ನು ಮರೆತರೆಇತರ ವಾಹಿನಿಗಳ ಜೊತೆಗೆ ಎಡಬಿಡಂಗಿ ಓಟದ ಸ್ಪರ್ಧೆ ಗೆ ಇಳಿದರೆ - ಈ ನಮ್ಮ ಹಿರಿಯಣ್ಣ ಬಾನುಲಿಯೂ - ಕೆಡುವ ದಾರಿಯನ್ನು ಹಿಡಿಯುವುದರಲ್ಲಿ ಯಾವುದೇ ಸಂದೇಹ ಬೇಡ.

ಒಂದನ್ನು ಅರ್ಥ ಮಾಡಿಕೊಳ್ಳಬೇಕು. ಇವತ್ತು ನಮಗೆ ಹೊಟ್ಟೆ ನೋವಾದರೆ ನಿನ್ನೆ ಏನನ್ನು ತಿಂದೆಎಂದು ಯೋಚಿಸಬೇಕು. ನಮ್ಮ ಸಮಾಜವು ತಯಾರಿಸಿ ಕೊಟ್ಟ ಅಡುಗೆಯನ್ನೇ ಈಗ ಎಲ್ಲರೂ ಉಣ್ಣುತ್ತಿದ್ದೇವಲ್ಲವೆ?

ಆದ್ದರಿಂದಲೇ ಹಿಂದಿರುಗಿ ನೋಡಬೇಕು. ನಮ್ಮ ರಾಜ್ಯದ ಪ್ರಾಥಮಿಕ ಶಿಕ್ಷಣ ಎಂಬುದು ದಿಕ್ಕು ದೆಸೆಯಿಲ್ಲದಂತೆ ಆಗಿ ಎಷ್ಟೋ ವರ್ಷಗಳಾಗಿವೆ. ಶಿಕ್ಷಣ ಮಟ್ಟವು ಇನ್ನಿಲ್ಲದಷ್ಟು ಸೊರಗಿದೆ. ಗುಣಮಟ್ಟದ ರಸ್ತೆಸೇವೆ...ಎಂದೆಲ್ಲ ಹೇಳುತ್ತೇವೆ.ಗುಣಮಟ್ಟದ ವಿದ್ಯುತ್  ಅನ್ನುತ್ತಾರೆ !!! ( ಸ್ವಿಚ್  ನೋಡಿದ  ಕೂಡಲೇ  shock  ಹೊಡೆಯುವಂಥದಿರಬೇಕು ! ) ಎಲ್ಲ  ಸೌಕರ್ಯಗಳ ಬಗೆಗೂ ಇಷ್ಟೆಲ್ಲ ಗುಣಮಟ್ಟ ನಿರೀಕ್ಷಿಸುವ ನಾವು - ಶಿಕ್ಷಣದ ಗುಣ ಮಟ್ಟದ ಬಗ್ಗೆ ಅಷ್ಟೇ ಗಮನ ಕೊಡುತ್ತಿದ್ದೇವೇನು ನಮ್ಮ ಕರ್ನಾಟಕ ರಾಜ್ಯವು ಉದಯಿಸಿದ ನಂತರಇಷ್ಟು ವರ್ಷಗಳಲ್ಲಿ ನಮ್ಮ ಶಿಕ್ಷಣದ ಮಟ್ಟವು ಅಂದಿಗಿಂತ  ಉಚ್ಚವಾಗಿದೆಯಾ ತುಚ್ಛವಾಗಿದೆಯಾ ಎಂದು  ನಮ್ಮನ್ನು  ನಾವೇ  ಪ್ರಶ್ನಿಸಿಕೊಳ್ಳಬೇಕು. ಜೀವನ ಮೌಲ್ಯಗಳಿಗೆ ಒತ್ತು ಕೊಡದ ಶಿಕ್ಷಣ ಕ್ರಮದಿಂದ ರಾಕ್ಷಸೀ ಭಾವಗಳಿಗೆ ನಾವು ನೀರೆರೆಯುತ್ತಿಲ್ಲವೆನಾವು ಯಾವತ್ತೂ ಇನ್ನೊಬ್ಬರೊಂದಿಗೆ ಹೋಲಿಸಿಕೊಳ್ಳಬಾರದು. ನಮಗೆ ನಮ್ಮನ್ನೇ ಹೋಲಿಸಿಕೊಳ್ಳುವುದು ಉದ್ಧಾರಕ್ಕೆ ಇರುವ ಸಭ್ಯ ಮಾರ್ಗ.

ಇವತ್ತಿನ ಸಮಾಜದಲ್ಲಿ ರುಜು ಹಾಕುವವರೆಲ್ಲರೂ ಸಾಕ್ಷರರುಶಿಕ್ಷಿತರು ಎಂದಾಗಿದೆ. ಇಂತಹ ಸರಕಾರೀ ಅಂಕಿ ಅಂಶಗಳ ಹೊಡೆತದಿಂದ ನಮ್ಮ ವಿದ್ಯಾ ಕ್ಷೇತ್ರವು ನಲುಗುತ್ತಿದೆ. ಹಿಂದಿನ ವಿದ್ಯೆಯು ಮೃಷ್ಟಾನ್ನ ಭೋಜನದಂತೆ  ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಒತ್ತು ಕೊಟ್ಟಿದ್ದ ಸಮತೂಕದ ಆಹಾರವಾಗಿದ್ದರೆ, ಇಂದು - ಕುಪೋಷಣೆಯಿಂದಾಗಿ ಶಿಕ್ಷಣದ ಗುಣಟ್ಟ ಇಳಿದಿದೆ; ಹೊರನೋಟಕ್ಕೆ ಶಿಕ್ಷಿತರಖ್ಯೆಯು ಬೆಳೆದಿದ್ದೂ ಗುಣಟ್ಟು ಮಾತ್ರ ಿಂದುಸಿಯುತ್ತಿದ್ದು - ಅದಿಂದಾಗಿಯೇ ಸಾಮಾಜಿಕಂಕು ಹೆಚ್ಚುತ್ತಿವೆ. 
  
ಕ್ರಮಬದ್ಧ ಕಲಿಯುವಿಕೆಯೇ ವಿದ್ಯೆಅಬದ್ಧಗಳನ್ನು ಕಲಿಯುವುದೇ ಅವಿದ್ಯೆ. ಎಲ್ಲರೂ ಕೆಲವು ಅಕ್ಷರವನ್ನು ಕಲಿತು ಸಾಕ್ಷರರು ಅನ್ನಿಸಿಕೊಂಡರೆ ಸಾಕೆಸಾಕ್ಷರರಾಗುವುದು ಎಷ್ಟು ಮುಖ್ಯವೋ - ಅವಿದ್ಯೆಯಿಂದ ಅಂಥವರನ್ನು ಪಾರುಮಾಡಿ ಅವರಿಗೆ ಉನ್ನತ ಚಿಂತನೆಗಳನ್ನು ಊಡಿಸುವುದೂ ಅಷ್ಟೇ ಮುಖ್ಯವಲ್ಲವೆಕಲಿಯುವ ತೃಷೆಕಲಿಸುವ ತೃಷೆ ಇವೆರಡೂ ಶಿಕ್ಷಣ ಕ್ಷೇತ್ರದಲ್ಲಿ ಬರಿಗಣ್ಣಿಗೆ ಕಾಣಿಸಬೇಕು. ಇಂತಹ ನಿಜವಾದ ವಿದ್ಯೆ ಅನ್ನುವುದು ಈಗ ಸಿಗುತ್ತಿದೆಯೆ? ಶಿಕ್ಷಿತರೆನ್ನಿಸಿಕೊಂಡವರು ದಿನನಿತ್ಯವೂ   ಮಾಧ್ಯಮಗಳಲ್ಲಿ ನಡೆಸುತ್ತಿರುವ ನಿಂದೆ-ಪ್ರತಿನಿಂದೆಗಳ ರೋಗವನ್ನು ಗಮನಿಸುವ ಪ್ರಾಜ್ಞರಿಗೆ - ನಮ್ಮ ಇಂದಿನ ಶಿಕ್ಷಣದ ಮಟ್ಟವನ್ನು ತೂಗುವುದು ಕಷ್ಟವೇನಲ್ಲ. ಒಟ್ಟಿನಲ್ಲಿ - ದಾರಿ ತೋರಿಸಬೇಕಾದವರೇ ವಿಕೃತ ತರ್ಕಗಳಿಗೆ ವಶವಾಗಿ ಸಮಾಜದ ದಾರಿ ತಪ್ಪಿಸುತ್ತಿರುವ ದುರಂತ ವಿದ್ಯಮಾನ - ಇಂದಿನ ಸಮಾಜದ್ದು.

ಇಂದಿನ ನಮ್ಮ ಶಿಕ್ಷಣದ ಕ್ಷೇತ್ರವು ತುಂಬ ಗೊಂದಲಮಯವಾಗಿದೆ. ಕರ್ನಾಟಕದ - ಸರಕಾರೀ ಪ್ರಾಯೋಜಿತವಾದ ಈ ವ್ಯವಸ್ಥೆಯಲ್ಲಿಕನ್ನಡದ ಬಗೆಗೆ ತೀರಾ ತಿರಸ್ಕಾರದ ಭಾವವೇ ಕಾಣುತ್ತದೆ. ಬಂದು ಹೋದ ಸರಕಾರಗಳ ಕಾರ್ಯ ವೈಖರಿಯನ್ನು ನೋಡಿದರೆ... ಕನ್ನಡ ಭಾಷೆಗೆ ಕೊನೆಯ ಪ್ರಾಶಸ್ತ್ಯವನ್ನು ಕೊಟ್ಟಂತೆ ಕಾಣುತ್ತದೆಇನ್ನಿಲ್ಲದಷ್ಟು ಕೆಲಸದ ಹೊರೆಯಿಂದ ಸರಕಾರವೇ ಸುಸ್ತಾಗಿ ಏದುಸಿರು ಬಿಡುತ್ತಿರುವಂತೆಯೂ ಕಾಣಿಸುತ್ತದೆ. ಏಕೀಕರಣದ ನಂತರತಮಿಳು ತೆಲುಗು ಮರಾಠಿ ಇಂಗ್ಲಿಷ್ ಮುಂತಾದ ಯಾವ ಕಿಸುರೂ ಇಲ್ಲದೆ ಕನ್ನಡವು ತಾನೇ ತಾನಾಗಿ ಹುಲುಸಾಗಿ ಬೆಳೆಯುವಂತಾಗುತ್ತದೆ ಎಂದು ನಂಬಿದ್ದ ಅಂದಿನ ನಮ್ಮ ಹಿರಿಯರ ನಂಬಿಕೆಯನ್ನು ಈಗ ನಾವು ಖಂಡಿತವಾಗಿಯೂ ಉಳಿಸಿಕೊಂಡಿಲ್ಲ. ಪುಣ್ಯತಿಥಿ,  ಜಯಂತಿಯ ಆಚರಣೆಗಾಗಿ ಹೊಡೆದಾಡುವುದನ್ನು ಬಿಟ್ಟರೆ ಹೆಚ್ಚಿನ ಸಾಧನೆಯೇನೂ ಕಾಣುವುದಿಲ್ಲ. ಸತ್ತವರನ್ನು ಹರಿಹರಿದು ತಿನ್ನುವಂತೆ ಕಾಣುವ ಮೇಲಾಟದ ಆಚರಣೆಗಳಿಂದ ಕರ್ನಾಟಕಕ್ಕೆ ಏನು ಬಂತು ನಮ್ಮ ಕನ್ನಡ ನಾಡು ನುಡಿಯ ಆರೋಗ್ಯವು ಕಳೆದ ೪೦ ವರ್ಷಗಳಲ್ಲಿ ಅತೀ ವೇಗದಿಂದ ಇಳಿಮುಖವಾಗುತ್ತಿದೆ.

ಇಂದು ದಿನಕ್ಕೆ ನೂರಾರು ಕನ್ನಡ ಪುಸ್ತಕಗಳು ಮುದ್ರಣಗೊಳ್ಳುತ್ತಿದ್ದರೂ ಅವು ಎಷ್ಟು ಜನರನ್ನು ತಲುಪುತ್ತಿವೆಅದದೇ ಓದುಗರುಅದದೇ ಬರಹಗಾರರ ವೃತ್ತದಲ್ಲಿ ವಿಪರೀತ ಸದ್ದೋ ಸದ್ದುಗದ್ದಲವೋ ಗದ್ದಲ. ಇವರ ಮಾತಿಗೆ ಅವರ ಚಪ್ಪಾಳೆಅವರ ಮಾತಿಗೆ ಇವರ ಚಪ್ಪಾಳೆ...ಘನಘೋರ ನಾಟಕವಂತೂ ನಡೆಯುತ್ತಿದೆ. ಇಂತಹ ನುರಿತ ನಾಟಕಪಟುಗಳಿಗೆ ಅದದೇ ವಿಮರ್ಶಕರಿಂದ ಪೂರ್ವ ನಿರ್ಧರಿತ ವಿಮರ್ಶೆಗಳು! ನಾವು ನೋಡುತ್ತಿರುವುದು ಅಷ್ಟೇ ತಾನೆಅಂದು ಗಳಗನಾಥರುದೇವುಡುತ. ರಾ. ಸು.. ವೀರಕೇಸರಿ ಸೀತಾರಾಮ ಶಾಸ್ತ್ರಿಕೈಲಾಸಂಅ. ನ. ಕೃ. ಇವರೆಲ್ಲರೂ ಕರ್ನಾಟಕದ ಬಹುಪಾಲು ಸಾಕ್ಷರರನ್ನು ತಲುಪುವಲ್ಲಿ ಯಶಸ್ವಿಯಾಗಿದ್ದರು. ಆದರೆ ಇಂದಿನ ಗದ್ದಲದ ಲೇಖಕರು ಅನ್ನಿಸಿಕೊಳ್ಳಲು ಹೆಮ್ಮೆ ಪಡುವವರ ಬರಹಗಳು ಮತ್ತು ಪ್ರಕಟಣೆಗಳು - ಅದದೇ ವೃತ್ತದಲ್ಲಿಯೇ ಗಿರಕಿ ಹೊಡೆಯುತ್ತನಿಂದೆ ಪ್ರತಿನಿಂದೆಗಳಿಂದಲೇ ಪ್ರಚಾರ ಪಡೆಯುತ್ತಕೊನೆಗೆ ಯಾವುದೋ ಗುಪ್ತ ಅಪೇಕ್ಷೆಯನ್ನು ಪೂರೈಸಿಕೊಳ್ಳುವವರೆಗೂ ನಡೆಯುತ್ತಲೇ ಇರುತ್ತದೆ. ಮರಳಿ ಮಣ್ಣಿಗೆಬೆಟ್ಟದ ಜೀವಮಹಾ ಕ್ಷತ್ರಿಯಮಹಾ ಬ್ರಾಹ್ಮಣಮಹಾ ದರ್ಶನಮಲೆಗಳಲ್ಲಿ ಮದುಮಗಳುರಕ್ತ ರಾತ್ರಿಸಂಧ್ಯಾರಾಗ...ಮುಂತಾದ ಎಲ್ಲರೂ ಓದಿ ಆನಂದಿಸಬಹುದಾದಂತಹ ಕಾದಂಬರಿಗಳು ಈಗ ಎಷ್ಟು ಬರುತ್ತಿವೆಇಂದಿನ ಕನ್ನಡದ ಬರಹಗಾರರಿಂದ ಕನ್ನಡದ ಸಮುದಾಯವನ್ನು ಪ್ರೇರೇಪಿಸುವಂತಹ - ಅಭಿಮಾನ ಮೂಡಿಸುವಂತಹ ಕೃತಿರಚನೆಯು ಆಗುತ್ತಿದೆಯೆ? “ಇವರು ಕನ್ನಡಿಗರನ್ನು ಒಂದಾಗಿಸುತ್ತಿದ್ದಾರಾಅಥವ ಒಡೆಯುತ್ತಿದ್ದಾರಾ?” ಎಂಬ ಸಂಶಯವೂ ಬರುವಂತಹ ಇಂದಿನ ಸಾಹಿತ್ಯದಿಂದಾಗಿಇಂದು ಎಂಥಾ ಪ್ರಶಸ್ತಿ ಗಿಟ್ಟಿಸಿಕೊಂಡರೂ ಜನರು ಅಂತಹ ಲೇಖಕರ ಪುಸ್ತಕಗಳನ್ನು ಓದುವುದಿಲ್ಲ. ವಿಕೃತ ಚಿಂತಕರು ತಮ್ಮ ವಿಕೃತಿಯನ್ನೇ ಬರಹಕ್ಕಿಳಿಸಿದರೆ ಅದನ್ನು ಓದಿ ಅನುಸರಿಸುವ "ಮೂಢ ನಂಬಿಕೆ" ಯು ಕರ್ನಾಟಕದ ಜನರಿಗಿಲ್ಲ. ಸಾರಾಂಶ :: ಸಾಹಿತ್ಯ ಸಂಗೀತ ಕಲಾ ವಿಹೀನರಾದ - ಹಾಳೂರ ಹದ್ದಿನಂತಹ ಪೀಳಿಗೆಗೆ ಈಗ ಚಾಲನೆ ಸಿಕ್ಕಿದೆ. ಇಂತಹ ಸನ್ನಿವೇಶದ ನಡುವೆಯೂ... ನಮ್ಮ ಕನ್ನಡವು ಇನ್ನೂ ಗಟ್ಟಿಯಾಗಿದೆ” ಎನ್ನುವ ಆಶಾಭಾವವು ಉಳಿಯುವಂತೆ ಮಾಡುವ ಕೆಲವು ಕೃತಿಗಳು ಒಮ್ಮೊಮ್ಮೆ ಈಗಲೂ ಬೆಳಕು ಕಾಣುತ್ತಿವೆ.

ಇದಕ್ಕೆ ನಾನು ಇತ್ತೀಚೆಗೆ ಓದಿದ ಒಂದು ಕಾದಂಬರಿಯೇ ಸಾಕ್ಷಿ. ಬೆಂಗಳೂರಿನ ಶ್ರೀಮತಿ ಆಶಾ ರಘು ಎಂಬ ಲೇಖಕಿಯ ಆವರ್ತ ಎಂಬ ಕಾದಂಬರಿಯನ್ನು ನಾನು ಮೊನ್ನೆ ಓದಿ ಮುಗಿಸಿದೆ. "ಆವರ್ತ" ಕಾದಂಬರಿಯಲ್ಲಿ ಈ ಲೇಖಕಿಯು – ನಮ್ಮನ್ನು ಪೌರಾಣಿಕ ಪರಿಸರದಲ್ಲಿ ಸುತ್ತಿಸುತ್ತಐತಿಹಾಸಿಕ ಕೋಟೆಕೊತ್ತಲಗಳ ನೆರಳಿನಲ್ಲಿ ಕೊಂಚ ನಿಲ್ಲಿಸಿಸಾಮಾಜಿಕ ಬದುಕೊಂದರ - ಅರಿಷಡ್ವೈರಿಗಳೊಂದಿಗಿನ ಹೋರಾಟವನ್ನು ಎಳೆಎಳೆಯಾಗಿ ಬಿಡಿಸಿ ಇಟ್ಟಿದ್ದಾರೆ. ಒಂದು ಮನಸ್ಸಿನ ನುರಿತ ಮುರಿತಗಳ ಸಂಘರ್ಷದ - ಅದ್ಭುತ ಚಿತ್ರಣವಿರುವ ಹೊಸ ಶೈಲಿಯ ಕಾದಂಬರಿ – "ಆವರ್ತ”. ಒಂದು ಸಾಮಾನ್ಯ ಬದುಕಿನ ತುಮುಲ ತಳಮಳಗಳ ಕತೆಯಾದರೂ – ಕಾದಂಬರಿಯ ಆಳದಲ್ಲಿ ಅಧ್ಯಾತ್ಮವೂ ಮಿಂಚುತ್ತದೆ. ಹೆಸರುಗಳುಸ್ಥಳಸನ್ನಿವೇಶಪಾತ್ರಪೋಷಣೆ ಎಲ್ಲವೂ ಅದ್ಭುತವಾಗಿದೆ. ಹಿನ್ನೋಟ ನಿರೂಪಣೆಯ - Flash Back ರಚನಾ ತಂತ್ರವಂತೂ ಆಕರ್ಷಕವಾಗಿದೆ. 480 ಪುಟಗಳ – 350 ರೂಪಾಯಿ ಬೆಲೆಯ ಪುಸ್ತಕವಿದು. ತಮ್ಮ ಈ ಪ್ರಥಮ ಕಾದಂಬರಿಯಲ್ಲಿ ಆಶಾ ರಘು ಅವರು ದೊಡ್ಡ ಸಾಧನೆಯನ್ನೇ ಮಾಡಿದ್ದಾರೆ. ನನಗೆ - ಲೇಖಕಿ ಅಶಾ ರಘು ಅವರ ಮುಖ ಪರಿಚಯವಿಲ್ಲ. ಅವರ ಹೆಸರನ್ನೂ ನಾನು ಕೇಳಿರಲಿಲ್ಲ. ಅವರು ನನಗೆ ಫೋನ್ ಮಾಡಿ, --“ನೀವು ಓದಬೇಕು” ಅಂತ ತಮ್ಮ ಕಾದಂಬರಿಯ ಒಂದು ಪ್ರತಿಯನ್ನೂ ಕಳಿಸಿದ್ದರು. ನಾನು ಓದಿ ಮುಗಿಸಿದ ಮೇಲೆ - ಈ ಕರ್ನಾಟಕದಲ್ಲಿ ಎಲೆಮರೆಯಲ್ಲಿ- ಇಂತಹ ಅದೆಷ್ಟು ಪ್ರತಿಭಾವಂತ ಕನ್ನಡೋಪಾಸಕರಿರಬಹುದು?” ಅಂದುಕೊಳ್ಳುವಂತಾಗಿದೆ ! ನೀವೂ ಓದಿ. ಎಷ್ಟೋ ವರ್ಷಗಳ ನಂತರ ಒಬ್ಬ ಲೇಖಕಿಯಿಂದ ನಡೆದಿರುವ ಈ ಸಾಧನೆಯನ್ನು ಕನ್ನಡಿಗರು ಕೊಂಡಾಡಿ ಪ್ರೋತ್ಸಾಹಿಸಬೇಕು. ಒಬ್ಬ ಲೇಖಕಿಯು ತನ್ನ ಮನಸ್ಸಂತೋಷಕ್ಕಾಗಿ ದೀರ್ಘಕಾಲ ಕನ್ನಡದ ಉಪಾಸನೆಯನ್ನು ನಡೆಸಿದ್ದನ್ನು ಆಕೆಯ ಬರಹವೇ ಹೇಳುತ್ತದೆ. ದಯವಿಟ್ಟು ಈ ಪುಸ್ತಕ ಆವರ್ತವನ್ನು ಓದಿ – ಅನ್ನುವುದು ನನ್ನ ಪ್ರಾರ್ಥನೆ. (ಪುಸ್ತಕದ ಪ್ರತಿ ಬೇಕಿದ್ದರೆ...ಲೇಖಕಿಯ ದೂ. ಸಂ. 080 41666911)



ನಾವು ರಾಜ್ಯೋತ್ಸವವನ್ನು ಶ್ರದ್ಧೆಯಿಂದ ಆಚರಿಸುವುದೇ ಹೌದಾದರೆ ನಮ್ಮ ಶಾಲೆಗಳ ಗುಣಮಟ್ಟವನ್ನು ಎತ್ತರಿಸುವುದರತ್ತ ಮೊತ್ತಮೊದಲು ಗಮನ ಹರಿಸಬೇಕಾಗಿದೆ. ಸರಕಾರದಿಂದ ಸಾಧ್ಯವಾಗದ ಕೆಲಸ ಇದು” ಎಂಬುದು ಈಗಾಗಲೇ ಸಿದ್ಧವಾಗಿದೆ. ಆದ್ದರಿಂದ ಈಗಪ್ರತಿಯೊಂದು ಊರಿನ ಹತ್ತು ಸಮಸ್ತರೇ ಈ ಹೊಣೆಯನ್ನು ಹೊತ್ತುಕೊಳ್ಳುವ ಕಾಲ ಬಂದಿದೆ. ನಮ್ಮ ಶಾಲೆಗಳಲ್ಲಿ ಬಿಸಿಯೂಟ ಮುಖ್ಯವೋಗ್ರಂಥಾಲಯವೋ?... ಶಾಲೆಯಲ್ಲಿ ಪ್ರಥಮ ಆದ್ಯತೆ ಯಾವುದಕ್ಕೆಶಾಲೆಯ ಪಾಠ ನಡೆಯುತ್ತಿರುವಾಗ ಊಟದ ಪರಿಮಳ ಹೊಡೆಯುತ್ತಿದ್ದರೆ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಉಳಿದೀತೆಊಟ ನಡೆಸುವುದಿದ್ದರೆ ಈಗ ಇರುವುದಕ್ಕಿಂತ ಪ್ರತ್ಯೇಕವಾದ ಒಂದು ವ್ಯವಸ್ಥೆಯನ್ನು ಮಾಡಬೇಕಾಗುತ್ತದೆ. ಶಾಲೆಗೆ ಬರುವುದು ಪಾಠ ಕಲಿಯಲು ಎಂಬುದನ್ನು ಮರೆಸುವಂತಹ ವ್ಯವಸ್ಥೆಯು ಶಾಲೆಯ ಆವರಣದಲ್ಲಿ ಇರಲೇ ಬಾರದು. ಹಸಿದಿರುವ ಬಡ ವಿದ್ಯಾರ್ಥಿಗಳಿಗೆ ಊಟವನ್ನು ವಿತರಿಸಲು ಇನ್ನೂ ಸುರಕ್ಷಿತವ್ಯವಸ್ಥಿತವಾದ ವ್ಯವಸ್ಥೆಯಾಗದೆ ಹೋದರೆ ಕೇವಲ ಉಣ್ಣಲಿಕ್ಕೆ ಶಾಲೆಗೆ ಬಂದಂತೆ ಆದೀತು. ಶಾಲೆಗಳ ಪ್ರಥಮ ಆದ್ಯತೆಬಾಧ್ಯತೆಗಳು ಬೌದ್ಧಿಕ ವ್ಯಾಯಾಮವೆಂಬುದು ಮರೆಯಾಗಿ ಶಾಲೆಗಳ ಪಾವಿತ್ರ್ಯವೇ ನಾಶವಾಗಬಹುದು. ನಮಗೆ ಈ ರಾಜ್ಯ ಭಾಗ್ಯ” ಒದಗಿ ೬೦ ವರ್ಷಗಳಾಗುತ್ತಿದ್ದರೂ ಒಂದೂ ಶೌಚಾಲಯವಿಲ್ಲದ - ಬಾಗಿಲುಗಳೂ ಇಲ್ಲದ - ಗ್ರಂಥಾಲಯವಿಲ್ಲದ - ಅಧ್ಯಾಪಕರುಗಳೂ ಇಲ್ಲದ - ಅನೇಕ ಮೂಲ ಸೌಲಭ್ಯಗಳಿಲ್ಲದ ಶಾಲೆಗಳು ಇನ್ನೂ ಇವೆ ಎಂದಾದರೆ ಕನ್ನಡದ ಶಿಕ್ಷಣವನ್ನೇ ನರಳಿಸುವಂತಹ ಇಂತಹ ಒಕ್ಕೂಟವೆಂಬ – “ರಾಜ್ಯ ಭಾಗ್ಯವು ನಮಗೆ ಬೇಕಿತ್ತೆಅನ್ನಿಸುವುದಿಲ್ಲವೆ? ಇಲ್ಲಿನ ಸಮಸ್ಯೆ – ದುಡ್ಡಿನ  ಕೊರತೆಯಲ್ಲ; ಪ್ರಾಮಾಣಿಕತೆ, ಸುಭಗತನದ ಕೊರತೆ. ಕೆಲಸದ ಪ್ರಾವೀಣ್ಯತೆಯ ಕೊರತೆ. ಆದರೆ ನಮ್ಮ ದೌರ್ಭಾಗ್ಯವೆಂದರೆ...ಇದು ನಮ್ಮದೇ ಸರಕಾರಮೇಲೆ ನೋಡಿ ಉಗಿದರೆ ಬೀಳುವುದು ಎಲ್ಲಿ ?

ಬಹುಮತಕ್ಕೆಜೋತುಬಿದ್ದ ಪ್ರಜಾಪ್ರಭುತ್ವದ ದುರ್ಬಲ ಸಂದಿಗಳಿವು. ಪ್ರಬುದ್ಧ ಮತದಾರರಿದ್ದಾಗ ಮಾತ್ರ ಪ್ರಜಾಪ್ರಭುತ್ವವು ಪ್ರಕಾಶಿಸಲು ಸಾಧ್ಯವ್ಯತಿರಿಕ್ತವಾದರೆ,  ಈಗ ನಾವು ಕಾಣುವ "--- ಮದುವೆಯಲ್ಲಿ ಉಂಡವನೇ ಜಾಣಎಂಬಂತಹ ಸಮಾಜದಲ್ಲಿ ಬದುಕಬೇಕಾಗುತ್ತದೆ. ಸೋರುತಿಹುದು ಮನೆಯ ಮಾಳಿಗಿ...ಅನ್ನಬೇಕಷ್ಟೆ.

ಇಂದು ನಮ್ಮ ಮಕ್ಕಳಿಗೆ ಸ್ವದೇಶೀ ಶಿಕ್ಷಣದ ಅಗತ್ಯವಿದೆ. ಆದರೆ ಮಕ್ಕಳಿಗೆ ಕಳಪೆ ಮಟ್ಟದ ಪ್ರಾಥಮಿಕ ಶಿಕ್ಷಣ ದೊರೆಯುತ್ತಿದೆ. ಬದುಕಿಗೆ ಕಿಂಚಿತ್ತೂ ಆಪ್ತವಲ್ಲದ - ಅನಗತ್ಯ ವಿದೇಶೀ DOSE ಗಳನ್ನು ಈಗ ಮಕ್ಕಳಿಗೆ ಊಡಿಸಲಾಗುತ್ತಿದೆ. ಇಂದು ಶಿಕ್ಷಣದಲ್ಲಿ ಅಳವಡಿಸುತ್ತಿರುವ ಪಠ್ಯದ ವಿಷಯಗಳೇ ಒಂದು ದೊಡ್ಡ ತೊಡಕಾದರೆಮೂಲದಲ್ಲಿ ಸರಿಯಾದ ಅಕ್ಷರಜ್ಞಾನವೇ ಮಕ್ಕಳಿಗೆ ಆಗುತ್ತಿಲ್ಲ ಎನ್ನುವುದು ಬಹಳ ದೊಡ್ಡ ಸಮಸ್ಯೆ. ಇಂದಿನ ಶಿಕ್ಷಣವು ಇಲ್ಲೇ ಸೋತಿದೆ. 

ವಿಶ್ವವಿದ್ಯಾಲಯಗಳಲ್ಲಿ ವರ್ಷಗಟ್ಟಲೆ ಸುತ್ತಾಡಿದವರನ್ನು ನಾನು ನೋಡಿದ್ದೇನೆ. ವಿವೇಕ ಎನ್ನುವ ಪದವನ್ನು ಇವೇಕ ಎನ್ನುತ್ತ...ಇಸಾಸುಬಸಂಕರಹಪ್ಪ ಹಮ್ಮ ಹೀಗೆಲ್ಲ ಅನ್ನುವವರಿಗೆ ಅಕ್ಷರ ಕಲಿಸಿದ್ದು ಯಾರಿರಬಹುದು? ಅನ್ನಿಸುತ್ತದೆಯಲ್ಲವೆ ?  ಕಿಂಞಂಣ ಅನ್ನಲಾಗದೆ ಕಿಂಕನ್ನ-ಕಿಂಗಣ್ಣ ಕಿಂಜನ್ನ-ಕೆಂಗಣ್ಣ ಎಂದೆಲ್ಲ ನಾಚಾರ ಮಾಡುತ್ತಿದ್ದವರನ್ನೂ ನಾನು ನೋಡಿದ್ದೇನೆ. ಮುಖಂಡ ಎಂಬ ಪದವನ್ನು ಸ್ತ್ರೀಲಿಂಗಕ್ಕೆ ಪರಿವರ್ತಿಸಿ ಮುಖಂಡಿ ಎಂದ ವಾರ್ತಾವಾಚಕರನ್ನೂ ಆಕಾಶವಾಣಿಯಲ್ಲಿ ನಾನು ಕಂಡಿದ್ದೇನೆ. ಕುಂಞಿ ಅನ್ನುವಾಗ ಕುಂಯಿ ಎಂದರೆ ಏನು ಮಾಡುವುದುಞ ಮತ್ತು ಯ ಅಕ್ಷರಗಳಿಗೆ ವ್ಯತ್ಯಾಸವಿಲ್ಲವೆ? "ನಾಲೆ ದೀಪಾವಲಿ ಅಬ್ಬ. ಅಬ್ಬ ಬಂತೆಂದರೆ ಎಣ್ಣು ಮಕ್ಕಲಿಗೆ ಇಗ್ಗೋ ಇಗ್ಗು. ನಮ್ಮ ಬಾರತ ದೇಸದ ಎಣ್ಣು ಮಕ್ಕಲು ಹಾದರ ಹಾತಿತ್ಯಕ್ಕೆ ಎಸರುವಾಸಿ.." ಅನ್ನುವವರಿಲ್ಲವೆ

ಇನ್ನೂ ಎಷ್ಟೋ ಇದೆ.. ಓರಾಟ, ಹಸಾಮಾನ್ಯ, ಹವಿರತ..ಹೇಳಿ ಮುಗಿಯುವ ಪಟ್ಟಿ ಇದಲ್ಲ. “ಅದು ಹಾಗಲ್ಲಅದು ಸರಿಯಲ್ಲ” ಎನ್ನುವವರನ್ನೇ ಗುಮಾನಿಯಿಂದ - ಕೆಲವೊಮ್ಮೆ ಹಾಸ್ಯಾಸ್ಪದವಾಗಿ ನೋಡುತ್ತಿರುವವರೂ ಇದ್ದಾರೆ. ಭಾಷಾ ಶುದ್ಧತೆಯ ಮಾತೆತ್ತಿದರೆ ಅದಕ್ಕೆ ಜಾತಿಯ ಬಣ್ಣ ಬಳಿಯುತ್ತಿರುವವರೂ ಇದ್ದಾರೆ. ಸಣ್ಣತನದ, ಮತ್ಸರದ, ಗುಂಪುಗಾರಿಕೆ, ಳರಾಜಕೀಯದಕ್ರೂರ ಚಿಂತನೆಯ ಇಂತಹ ಹಲವು ಮುಖಗಳನ್ನು ನೋಡಿದ ನನಗೆ ಈ ಕನ್ನಡದ ಮಣ್ಣಿನಲ್ಲಿ ಇಂತಹ ಅವಿದ್ಯಾಸುರರು ಆವಿರ್ಭವಿಸಲು ಕಾರಣವೇನುಎಂದು ಎಷ್ಟೋ ಬಾರಿ ಯೋಚಿಸುವಂತಾಗಿದೆ. ನಮ್ಮ ಪ್ರಾಥಮಿಕ ಶಿಕ್ಷಣವು ಕುಲಗೆಟ್ಟಿದೆ.

ಇವತ್ತಿನ ಶಿಕ್ಷಣವು ವ್ಯಕ್ತಿಯನ್ನು ಶಾಂತಗೊಳಿಸುತ್ತಿಲ್ಲಬದಲಾಗಿಅಶಾಂತಿಯ ಕೂಪಕ್ಕೆ ತಳ್ಳುತ್ತಿದೆ. ಅದರಿಂದಾಗಿಇಂದಿನ ಸಮಾಜದಲ್ಲಿರಾಕ್ಷಸ ಭಾವಗಳಿಗೆ ಪುಷ್ಟಿ ದೊರಕುತ್ತಿದೆಇನ್ನೊಬ್ಬರ ನಂಬಿಕೆಭಾವನೆಗಳನ್ನು ತುಳಿದು ವಿಜೃಂಭಿಸುವ ವಿಕೃತಿಯು ಹೆಚ್ಚಾಗುತ್ತಿದೆ. ರಾಮಕೃಷ್ಣಬುದ್ಧಮಹಾವೀರನಾನಕ್ಯೇಸುಪೈಗಂಬರ ಮುಂತಾದ ಅಧ್ಯಾತ್ಮದ ಹಾದಿ ತುಳಿದ ಯೋಗಿ - ದಾರ್ಶನಿಕರೆಲ್ಲರನ್ನೂ ಪರಸ್ಪರ ವೈರಿಗಳು ಎಂಬಂತೆ ಚಿತ್ರಿಸಲಾಗುತ್ತಿದೆ. ಅರೆಬರೆ ವಿದ್ಯೆಯೆಂಬ ಪೂರ್ವಾಗ್ರಹದಿಂದ ಪೀಡಿತವಾದ ಇಂತಹ ವಿಕಾರದ ಅವಿದ್ಯೆಯ ಪ್ರಚೋದನೆಯಿಂದ ಸಾಮಾಜಿಕ ಕ್ಷೋಭೆಯೂ ಹೆಚ್ಚುತ್ತಿದೆ; ಅನಾಹುತಗಳೂ ಸಂಭವಿಸುತ್ತಿವೆ. ವಿನಯವನ್ನು ಲೇಪಿಸಲಾಗದಸರ್ವರಿಗೂ ಒಳಿತನ್ನೇ ಬಯಸಲಾಗದಪರಪೀಡೆಗೆ ಮುಂದಾಗುವ ನಿಷ್ಕರುಣಿಯಾದ – ಇಂದಿನ ಅಪಭ್ರಂಶ ವಿದ್ಯೆಯಿಂದ – ನಮ್ಮ ಇಡೀ ಸಮಾಜವು ಈಗ ವಿರೂಪಗೊಳ್ಳುತ್ತಿದೆ. ಪಕ್ಷ - ಗುಂಪುಗಾರಿಕೆಗೆ ವಶವಾಗಿ ಸಮಷ್ಟಿಯ ಹಿತವನ್ನು ಕಡೆಗಣಿಸುವ ಅಹಂಕಾರದ "ವಿದ್ಯಾಸಾಗರವನ್ನೂ - "ಅವಿದ್ಯೆ" ಎಂದೇ ಗುರುತಿಸಬೇಕು. ಸಹಿಷ್ಣುತೆ ಎಂಬುದು ಪದೇಶಕ್ಕೇ ಸೀಮಿತವಾಗಬಾರದು.

ಈ ಶಾಪದಿಂದ ಮುಕ್ತರಾಗದೆ ಉತ್ಕೃಷ್ಟ ಕನ್ನಡದ – ಕರ್ನಾಟಕದ ಕನಸನ್ನು ಕಾಣಬಾರದು. ನಮ್ಮ ಶಿಕ್ಷಣದ ಗುಣಮಟ್ಟವನ್ನು ಎತ್ತರಿಸದೆ ಈ ಸಾಹಸಕ್ಕೆ ಹೊರಟರೂ ಉಪಯೋಗವಿಲ್ಲ. ಬದುಕಿಗೆ ಅಗತ್ಯವಾದ ಸಮಗ್ರ ವಿದ್ಯೆಯನ್ನು ನಾವು ಅಳವಡಿಸಿಕೊಳ್ಳುವುದು ಈಗ ಅನಿವಾರ್ಯ.

ಉತ್ಕೃಷ್ಟ ಕಲೆಉತ್ತಮ ಭಾಷೆಯ ಸದಭಿರುಚಿಯನ್ನು ನಾವು ಪದೇಪದೇ ಉಂಡರೆ ಕ್ರಮೇಣ...ಕೆಟ್ಟ ಭಾಷೆಯು ನಮಗೆ ಹಿತವೆನಿಸುವುದಿಲ್ಲ. ಮಾತ್ರವಲ್ಲ – ಅಂತಹುದೇ ಒಳ್ಳೆಯ ರುಚಿಗೆ ಮನಸ್ಸು ವಾಲುತ್ತದೆ. ಈ ರುಚಿ ಎಂಬುದಿದೆಯಲ್ಲಾಅದು ನಾವು ರೂಢಿಸಿಕೊಂಡಂತೆ. ಆದ್ದರಿಂದ ನಮ್ಮ ರುಚಿಯನ್ನು ನಾವೇ ಪಳಗಿಸಿ ಸುರುಚಿಗಳಾಗುವ ಯತ್ನವು ನಿರಂತರವಾಗಿ ನಡೆಯುತ್ತಲೇ ಇರಬೇಕಾಗುತ್ತದೆ. ಕೆಸರಿನ ವ್ಯಾಪಾರಿಯಾಗುವುದಕ್ಕಿಂತ ಮೊಸರಿನ ವ್ಯಾಪಾರಿಗಳಾಗುವುದು ಲೇಸು.

ನಮಗೀಗ ಮಾಂಸಹಾರಿಸಸ್ಯಹಾರಿ...ಎಂಬ ಪದಗಳು ಎಷ್ಟು ಆತ್ಮೀಯವಾಗಿೆ ಅಂದೆ - ಯಾರಾದಾಂಸಾಹಾರಿ, ಸಸ್ಯಾಹಾರಿ ಎಂದರೆ ಏನೋ ತಪ್ಪಾಗಿದೆ ಅನ್ನಿಸುವಷ್ಟು! ಅಂದರೆ ನಾವು ತಪ್ಪು ಪ್ರಯೋಗಗಳಿಗೇ ಒಗ್ಗಿಕೊಂಡಿದ್ದೇವೆ. ನಾವೀಗ ತಪ್ಪನ್ನೇ ಒಪ್ಪೆಂದು ಹೇಳುವ ಮಟ್ಟವನ್ನು ತಲುಪಿದ್ದೇವೆ. ಇದೂ ಒಂದು ತರಹದ ಮಿದುಳಿನ ಕಾಯಿಲೆ. ಹಿಂದೆ...ವಿದ್ಯೆಯು  ಎಲ್ಲರಿಗೂ ತಲುಪದಿದ್ದ ಕಾಲದಲ್ಲಿ ಅಯ್ಯೋ ಪಾಪ..ಗೊತ್ತಿಲ್ಲಅರಿವಿಲ್ಲ” ಎನ್ನಬಹುದಿತ್ತು. ಆದರೆ...ಈಗ ಹಾಗಿಲ್ಲ. ಇಂದು  ಅಸಡ್ಡೆಯೇ ಎದ್ದು ಕಾಣುತ್ತಿದೆ.

ನಾವು ಕೆಲವು ಭಾಷಾಪ್ರಯೋಗಗಳನ್ನು ಸಾಮಾನ್ಯರ ಆಡು ಭಾಷೆಗ್ರಾಮ್ಯ...ಎಂದೆಲ್ಲ ವರ್ಗೀಕರಿಸಿ ಅದಕ್ಕೂ ಸ್ಥಾನ ಮಾನ ನೀಡಿದ್ದುಂಟು. ಆದರೆ ಇಂದಿನ ಶಿಕ್ಷಿತರೆಂದುಕೊಳ್ಳುವವರು ಎಲ್ಲವನ್ನೂ ಮೀರಿ ಹೋದಂತೆ ಕಾಣುತ್ತದೆ. ಇವರೆಲ್ಲ... ದನಕ್ಕೂ ಧನ ಕ್ಕೂದರೆಗೂ ಧರೆ ಗೂಆದರಕ್ಕೂ ಹಾದರ ಕ್ಕೂ ಒಂದೇ ತೆರನಾದ ಗೌರವ ಸಲ್ಲಿಸುತ್ತಿದ್ದಾರೆ. ಅವರಿಗೆ ಏನೆನ್ನಬೇಕು? “ಇಂದಿನ ನಮ್ಮದು ಎಂತಹ ಶಿಕ್ಷಣ?” ಎಂದು ಯೋಚಿಸುವ ಸಮಯವಿದು. 

ಒಂದು ಭಾಷೆಯ ಕಲಿಕೆ ಎಂದರೆ ಒಂದು ಸಂಸ್ಕೃತಿಯ ಕಲಿಕೆ. ಭಾಷೆಯು ಸೊರಗಿದರೆ ಜೊತೆಜೊತೆಗೇ ಸಂಸ್ಕೃತಿಯೂ ಸೊರಗುತ್ತದೆ. ಸಂಸ್ಕೃತಿಯಿಲ್ಲದ ಜನಾಂಗವು ಹಿಂದೆ ಉಳಿಯುತ್ತದೆ – ಕೊನೆಗೆ ಅಳಿಯುತ್ತದೆ. ಅದು ಅನಿವಾರ್ಯ.

ನಮ್ಮ ಭಾಷೆಯನ್ನು ಓದಿದಾಗಕೇಳಿದಾಗ ಮನಸ್ಸು ಪ್ರಫುಲ್ಲಿತವಾಗಬೇಕು. ಭಾಷೆಯಲ್ಲಿ ಅಂತೀವಂಚಾರಿರೇಕ. ಪ್ರತಿಯೊಂದು ಅಕ್ಷರಕ್ಕೂ ಜೀವವಿದೆಆತ್ಮವಿದೆ...ಎಂಬುದನ್ನು ಮೊತ್ತಮೊದಲಿಗೆ ನಾವು ತಿಳಿಯಬೇಕಾಗಿದೆ. ಸಕಾಲದಲ್ಲಿ - ಅಂದರೆ ಬಾಲ್ಯದಲ್ಲಿಯೇ ಇದನ್ನು ಅರ್ಥ ಮಾಡಿಕೊಳ್ಳಬೇಕು. ಅದನ್ನು ಪ್ರಾಥಮಿಕ ಹಂತದಲ್ಲಿಯೇ ಕಲಿಯದಿದ್ದರೆ ಈ ಬದುಕಿನಲ್ಲಿ - ಮುಂದೆಂದೂ ಹಳಿ ಹತ್ತಲು ಬಿಡುವು ದೊರೆಯಲಾರದು. ಹೀಗೆ ಬಾಲ್ಯದಲ್ಲಿಯೇ ಹಳಿತಪ್ಪಿದುಕುಗಲ್ಲಿ ಅಮ್ಮಹೆಂಡತಿಸೋದರಿಅತ್ತೆಚಿಕ್ಕಮ್ಮ..ಎಲ್ಲರೂ ಒಂದೇ ಎಂಬ ಭಾಷಾವರ್ತನೆ ಯು ಸಹಜವಾಗಿ ಬಿಡುತ್ತದೆಆಗಲೇ ಆದರವು ಹಾದರವಾಗುತ್ತದೆ. ಅಂತಹ ಕನ್ನಡವನ್ನು ಕೇಳಿದಾಗ ಮನವು ಕುಣಿಯುವುದಾದರೂ ಹೇಗೆ?

ಕರ್ನಾಟಕದ ಇಂದಿನ ಎಲ್ಲ ಪಡಿಪಾಟಲುಗಳಿಗೂ ಭಾಷೆಯೇ ದಿವ್ಯೌಷಧ ! ಕರ್ನಾಟಕದ ಪ್ರತಿಯೊಬ್ಬ ನಿವಾಸಿಯೂ ಕನ್ನಡದ ಅಂತಃಸೊಬಗನ್ನು ಅರಿಯುವಂತಹ ಶೈಕ್ಷಣಿಕ ಪರಿಸರ ಮತ್ತು ಯೋಗ್ಯ ಅಧ್ಯಾಪಕರಿಂದ ಪ್ರತಿಯೊಬ್ಬರಿಗೂ ಕನ್ನಡದ ಭಾಷೆಯ ಅನುಭೂತಿಯಾಗುವಂತಹ ಸನ್ನಿವೇಶವು ನಿರ್ಮಾಣವಾದರೆ ರಾಜ್ಯೋತ್ಸವದ ಆಚರಣೆ ಎಂಬುದಕ್ಕೂ ಅರ್ಥವಿರುತ್ತದೆ. ಮಾತೃಭಾಷೆಯನ್ನು ಕಡೆಗಣಿಸುವ ಚಾಳಿಯನ್ನು ಮಕ್ಕಳ ಹೆತ್ತವರು ಬಿಡಲೇಬೇಕು. ಸರಕಾರಗಳು ಉಪಕಾರೀ ಕರ್ಮಗಳಲ್ಲಿ ತೊಡಗದೆಜನರ ದುಡ್ಡನ್ನು ಬೇಕಾಬಿಟ್ಟಿಯಾಗಿ ಹಂಚುತ್ತ ನಡೆಸುವ ಬಾಹ್ಯಾಡಂಬರದ ಯಾವುದೇ ಸರಕಾರೀ ಆಚರಣೆಗಳಿಂದಖೊಟ್ಟಿ ಪ್ರಶಸ್ತಿಗಳಿಂದ ಯಾವ ಪ್ರಯೋಜನವೂ ಇಲ್ಲ. ಆದರೆ ನೆಲಜಲಭಾಷಾಭಿಮಾನ - ಎಲ್ಲವೂ ಇವತ್ತಿನ ಸನ್ನಿವೇಶದಲ್ಲಿ ಬರೇ ಬಾಯುಪಚಾರ ಆಗಿದೆ. ಈಗ ನಡೆಯುತ್ತಿರುವುದು - ಗಿಲೀಟಿನ ರಾಜ್ಯಸಂಸಾರದ - ಶುದ್ಧ ವ್ಯಾಪಾರ.

ಇನ್ನು ಭಾಷಾ ಶುದ್ಧಿಪ್ರೌಢತೆಯ ಕಡೆಗೆ ಮುಖ ಮಾಡಿದರೆ...ಬರೇ ಅಪಸವ್ಯಗಳೇ ಕಾಣಿಸುತ್ತವೆ. ಖಾಸಗಿ ವಾಹಿನಿಯಲ್ಲಾಗಲೀ ಇಂದಿನ ಕನ್ನಡ ಸಿನೆಮಾಗಳಲ್ಲಾಗಲೀ ಮನೆ ಮಂದಿಯೆಲ್ಲರೂ ಒಟ್ಟಿಗೆ ಕೂತು ಚರ್ಚಿಸುವಒಟ್ಟಿಗೆ ಹಾಡುತ್ತ ಖುಶಿ ಪಡುವ ಒಂದಾದರೂ ಸಾಹಿತ್ಯವು ಕಾಣುತ್ತದೆಯೆಅಲ್ಲೊಂದು ಇಲ್ಲೊಂದು...ಜಯಂತ ಕಾಯ್ಕಿಣಿಯಂಥವರ ನಾಲ್ಕು ಸಾಲುಗಳಲ್ಲದೆ ಇನ್ನೊಂದು ದೃಷ್ಟಾಂತವು ನಮಗೆ ಸಿಗಲಾರದು. ಹೆಚ್ಚಿನವು "ಸಂತೆಯಲ್ಲಿ ಮೂರು ಮೊಳ" ಎಂಬಂತಹ ಗೀತೆಗಳೇ ಉರುಳಾಡುತ್ತಿವೆ. ಆ ಹಾಡುಗಳನ್ನೂ ದೃಶ್ಯರೂಪಕ್ಕೆ ತಂದಾಗ - ಅದನ್ನು ಕಣ್ಣಾರೆ ನೋಡಿದವರು - ಅಂತಹ ಹಾಡನ್ನು ಮತ್ತೊಮ್ಮೆ ಗುನುಗುನಿಸುವುದಕ್ಕೂ ಹಿಂಜರಿಯಬಹುದು. ಅಷ್ಟು ಕೆಟ್ಟದಾಗಿ ಮೈಮೇಲೆ ದೆವ್ವ ಬಂದಂತೆ ಪರದೆಯಲ್ಲಿ ಕುಣಿದಿರುತ್ತಾರೆ. ಒಟ್ಟಿನಲ್ಲಿ ಅಸಭ್ಯತೆಯ ಅಸಹಜತೆಯ ಪರಮಾವಧಿ... 

ಸೊಂಟದ ವಿಸ್ಯ ಬೇಕೇ ಸಿಸ್ಯಅಮ್ಮ ಲೂಸಾ ಅಪ್ಪ ಲೂಸಾ..ಜಿಂಕೆ ಮರೀನಾ...ಇಂತಹ ಹಾಡುಗಳಿಂದ ಕನ್ನಡದ ಉದ್ಧಾರವು ಸಾಧ್ಯವೆಶೃಂಗಾರವನ್ನೂ ಸಭ್ಯತೆಯ ಎಲ್ಲೆ ಮೀರದಂತೆ ಹೇಳಬಹುದು. ಹೇಳಲು ಸಾಧ್ಯವಿದೆ. ಎದೆ ಹಾರಿದೆಬಾಯಾರಿದೆಚಕೋರ ಚುಂಬನಾಬಾ ಚಕೋರೀ ಬಾ..” -  "ಕುಣಿಯೋಣು ಬಾರಾ ಕುಣಿಯೋಣು ಬಾ" , -“ಹಾರಗುದುರಿ ಬೆನ್ನ ಏರಿ ಸ್ವಾರರಾಗಿ ಕೂತು ಹಾಂಗ ದೂರ ದೂರ ಹೋಗೋಣಂತಾ ಯಾರಿಗೂ ಹೇಳೋಣು ಬ್ಯಾಡ” -“ಮೋಡದ ಮರೆಯ ಚಂದಿರ ಚೆಂದ ಸೆರಗಿನ ಮರೆಯ ಚೆಲುವೆಯ ಅಂದ”  “ನೀ ಮುಡಿದಾ ಮಲ್ಲಿಗೆ ಹೂವಿನ ಮಾಲೆ ನಿನಗೆಂದೇ ಬರೆದಾ ಪ್ರೇಮದ ಓಲೆಅದ ಓದಲು ಹರಿವುದು ಜೇನಿನಾ ಹೊಳೆ...”, ವಾಸಂತಿ ನಲಿವಾಗಹಸಿರುಟ್ಟು ನಡೆವಾಗ ವನದೇವಿ ಅಡಿಮೇಲೆ ಅಡಿಯಿಟ್ಟು ಬರುವಾಗಒಡಲಲ್ಲಿ ಹೊಸದೊಂದು ನವಜೀವ ಬಂದಾಗಕೈ ಕೈ ಸೋಕಾಗ ಮನವೆರಡು ಬೆಸೆದಾಗ ಎಂದೆಂದು ಹೊಸ ರಾಗ ಅದುವೇ ಅನುರಾಗ..ಬಾರಾ..”  "ಮೆಲ್ಲುಸಿರೇ ಸವಿಗಾನ ಎದೆ ಝಲ್ಲೆನೆ ಹೂವಿನ ಬಾಣ.."  ಇಂತಹ ಹಾಡುಗಳನ್ನು ನಾವು ಈಗಲೂ ಕೇಳಿ ಖುಶಿ ಪಡುವುದಿಲ್ಲವೆಆಕರ್ಷಕ ಉಪಮೆ ರೂಪಕ” ಗಳಿಂದ ಸಭ್ಯತೆಯ ಎಲ್ಲೆ ಮೀರದಂತೆ ಮೂಡಿ ಬರುತ್ತಿದ್ದ ಅಂದಿನ ಚಿತ್ರಗೀತೆಗಳು ಇಂದಿಗೂ ಜನಸಾಮಾನ್ಯರ ನೆನಪಿನಲ್ಲಿ ಉಳಿದಿವೆ. ದೂರದಿಂದ ಬಂದಂಥ ಸುಂದರಾಂಗ ಜಾಣ..” , “ಜೋಕೆ - ನಾನು ಬಳ್ಳಿಯ ಮಿಂಚು..ಕಣ್ಣು ಕತ್ತಿಯ ಅಂಚು.. ಮುಂತಾದ - ಅಂದಿನ ಕ್ಯಾಬರೇ ನೃತ್ಯಗಳ ಹಾಡುಗಳೂ ಎಲ್ಲರೂ ಹಾಡಿ ಕೇಳಿ ಸಂತೋಷಪಡುವ ಸಭ್ಯತೆಯನ್ನು ಮೀರಿರಲಿಲ್ಲ. ಆದರೆ ಇಂದಿನ ಮಕ್ಕಳಿಗೆ ಅಂತಹ ಸುಂದರವಾದ ಕನ್ನಡವು ಸಿಗುತ್ತಿಲ್ಲ. ಕಚ್ಚಿ ತಿನ್ನುತ್ತೇನೆನಿನ್ನ ಹರಿದು ಮುಕ್ಕುತ್ತೇನೆ...ಮುಟ್ಟಿ ನೋಡುಮೂಸಿ ನೋಡು..” ಇಂತಹ ಸಾಲುಗಳನ್ನು ಈಗ ಪದ್ಯ ಎನ್ನತೊಡಗಿದ್ದಾರೆ. ಅಂದರೆ - ಯಾರೂ ಕವನ ಹೊಸೆಯಬಹುದುಯಾರೂ ಸಂಗೀತ ನೀಡಬಹುದು...” ಎನ್ನುವಂತಹ ಧಾರ್ಷ್ಟ್ಯದ ವಿಲಕ್ಷಣ ವಾತಾವರಣವು ಈಗ ನಮ್ಮನ್ನು ಪೀಡಿಸುತ್ತಿದೆ. ಕೆಲವು ಸಾಧಾರಣವೆನ್ನಿಸುವ ಸಾಹಿತ್ಯ ಒಮ್ಮೊಮ್ಮೆ ಬಂದರೂ – ಅವನ್ನು ಕೇಳಲಾಗದ ಸಂಗೀತದಿಂದ ಕಟ್ಟಿ - ಕುಲಗೆಡಿಸಿಇಂದಿನ ಪ್ರಕಾಂಡ ಸಂಗೀತ ಪಂಡಿತರು ಶಬ್ದ ಮಾಲಿನ್ಯವನ್ನು ಹೆಚ್ಚಿಸುತ್ತಿರುವುದು ನಮ್ಮೆಲ್ಲರ ಇಂದಿನ ಅನುಭವ. ಇಂದಿನ ಚಿತ್ರದ ಸಂಗೀತದಲ್ಲೂ ಕನ್ನಡದ ವಾಸನೆಯಿಲ್ಲ. ಎಲ್ಲವೂ ಎರವಲು. ಇಂದಿನ ಕನ್ನಡ ಸಿನೆಮಾವನ್ನು ನೋಡಿದರೆಅದರ ಹಾಡುಗಳನ್ನು ಕೇಳಿದರೆ...ನರಕ ದರ್ಶನವಾದಂತೆ ಭಾಸವಾಗುತ್ತದೆ. ಆದರೆ ಅಂತಹ ಹಾಡುಗಳನ್ನು ಮೆಚ್ಚುವಅಂತಹ ಸಿನೆಮಾಗಳನ್ನು ನೋಡುವ ಅಭಿಮಾನೀ ಜನಾಂಗವನ್ನು ನಾವೇ ಕಟ್ಟಿ ನಿಲ್ಲಿಸಿದ್ದೇವೆ. ನಮ್ಮ ಮಕ್ಕಳು ನಮಗಿಂತ ಪ್ರಬುದ್ಧರಿದ್ದಾರೆ. ಆದರೆ ನಾವು ಸೋತಿದ್ದೇವೆ. ನಮ್ಮ ಮಕ್ಕಳಲ್ಲಿ ಉತ್ತಮ ಅಭಿರುಚಿಯನ್ನು ಬೆಳೆಸಲಾಗದ ನಮ್ಮ ದೌರ್ಬಲ್ಯವೇ ಕನ್ನಡ ಭಾಷೆಯ ಇಂದಿನ ಅವನತಿಗೆ ಕಾರಣ.  

ಆದರೆ ನಮ್ಮ ಇಂದಿನ ಶಿಕ್ಷಣವು ನಮ್ಮ ಮಕ್ಕಳನ್ನು ಎಲ್ಲಿಗೆ ತಂದಿಟ್ಟಿದೆಯೆಂದರೆ ಅವರಿಗೆ ವಾಚ್ಯವಲ್ಲದೆ ಇನ್ನೊಂದು ರೀತಿಯ ಭಾಷೆಯು ಅರ್ಥವೇ ಆಗುವುದಿಲ್ಲ. ಒಂದು ಭಾಷೆಯ  ಧ್ವನಿಯನ್ನು - ಅರ್ಥೈಸಲಾಗದವರಿಗೆ ಯಾವುದೇ ಭಾಷೆಯು ಆನಂದವನ್ನು ಕೊಡಲಾರದು. ಮಾತಿನ ಒಳಗಿನ ಭಾವದ ಅನುಭೂತಿಯಾಗಬೇಕು. ಆದರೆ ದೇಹಕೇಂದ್ರಿತವಾದ ಇಂದಿನ ವಾಚ್ಯ ಭಾಷೆಯಿಂದಾಗಿ ನಮ್ಮ ಕನ್ನಡದ ಹಾಡುಗಳು ಜನರ ಹೃದಯವನ್ನು ತಲಪುತ್ತಿಲ್ಲ. ಭಾವ ಸಂವಹನವೇ ನಡೆಯುತ್ತಿಲ್ಲ. ಅದರಿಂದಾಗಿ ಬಂದ ವೇಗದಲ್ಲಿಯೇ ಹಾಡುಗಳು - ಹಿಂದೆ ಸರಿದು - ಕಳೆದು ಹೋಗುತ್ತಿವೆ.

ಇಂದಿನ ಖಾಸಗಿ ಮಾಧ್ಯಮಗಳಲ್ಲಿ ಬಳಸುವ ಕನ್ನಡವನ್ನು ಕೇಳಿದರೆ ಬೇರೆ ಯಾವುದೇ ಭಾಷೆಯವರ ಅಧೀನದಲ್ಲಿದ್ದಿದ್ದರೂ ನಮ್ಮ ಕನ್ನಡವು ಇಷ್ಟೊಂದು ಸೊರಗುತ್ತಿರಲಿಲ್ಲವೇನೋ...” ಅನ್ನಿಸುವುದೂ ಇದೆ. ಮಾತಿನ ಏರಿಳಿತ – ಓಘ - ಸ್ಪಷ್ಟ ಉಚ್ಚಾರ...ಇವೆಲ್ಲವೂ ಏಕತ್ರಗೊಂಡಾಗ ಯಾವುದೇ ಭಾಷೆಯು ಸಂಗೀತವಾಗುತ್ತದೆ. ಗುರು ರಾಜರೆಂಬವರು ರೋಡಿನಲ್ಲಿ ವಾಕ್ ಮಾಡುತ್ತಿದ್ದಾಗ Back side ನಿಂದ ಬಂದ - neighbour ಮನೆಯ ಅಲ್ಸೇಶಿಯನ್ Dog ಕಚ್ಚಿ Hospital ಗೆ admit  ಆಗಿದ್ದಾರೆ.." ಹೀಗೆಲ್ಲ ಮಾತನಾಡುವ ಇಂದಿನ ಕನ್ನಡಾಸುರರು ಕನ್ನಡವನ್ನು ಉಳಿಸಿಯಾರೆಒಮ್ಮೆ...ಇಂತಹ ಖಾಸಗಿ ವಾಹಿನಿಯಲ್ಲಿ ಹೊಸದಾಗಿ ಸೇರಿಕೊಂಡ ಪರಿಚಿತಳೊಬ್ಬಳು ಕೃತಕವಾಗಿ ಮಾತನಾಡುತ್ತಿದ್ದುದನ್ನುಿಸಿದಾಗ, ಒಮ್ಮೊಮ್ಮ ಎಡಬಿಡಂಗಿಯಂತೆ ಹರಳು ಉರಿದಂತೆ” ಮಾತನಾಡುತ್ತಿದ್ದುದನ್ನು ಕೇಳಿದಾಗ ನಾನು ಆಕೆಯನ್ನು ಕೇಳಿದ್ದೆ. ಆಗ ಅವಳು ನೀಡಿದ ಉತ್ತರ ಏನು ಗೊತ್ತಾ? “ಏನು ಮಾಡಲಿ ಮೇಡಂಉದ್ಯೋಗಕ್ಕಾಗಿ ನಮ್ಮ ಸಂದರ್ಶನ ಮಾಡುವಾಗಲೇ ಸೂಚನೆ ಕೊಟ್ಟಿರುತ್ತಾರೆ...ಇಂಗ್ಲಿಷನ್ನು ಮತ್ತು ಇತರ ಭಾಷೆಗಳನ್ನು ಮಿಶ್ರ ಮಾಡಿ ಮಾತಾಡುವಂತೆ ನಮಗೆ ಸೂಚಿಸಿರ್ತಾರೆ..” ಅಂದಿದ್ದಳು. ಅಂದರೆ...ಕನ್ನಡವನ್ನು ಕೊಲ್ಲುವುದಕ್ಕಾಗಿಯೇ “ಸಕತ್ Hot” ಖಾಸಗಿ ವಾಹಿನಿಗಳು ಹುಟ್ಟಿಕೊಂಡಿವೆಯೆಈ ನೆಲದಲ್ಲಿ ವ್ಯವಸ್ಥಿತ ಪಿತೂರಿ ನಡೆಯುತ್ತಿದೆಯೆಎಂದು ಗಂಭೀರವಾಗಿ ಯೋಚಿಸಬೇಕಾದ ಸಮಯ ಬಂದಿದೆ. ಕರ್ನಾಟಕದ ರಾಜಧಾನಿ ಅನ್ನಿಸಿಕೊಂಡಿರುವ ಬೆಂಗಳೂರಿನ ರಸ್ತೆಯಲ್ಲಿ ೧೦ ನಿಮಿಷ ನಡೆದಾಡಿದರೆ ನಮ್ಮ ಕನ್ನಡನಾಡಿನ ಎನ್ನಡ – ಖನ್ನಡ ಕಂಗ್ಲೀಷಿನ ಪೂರ್ಣ ದರ್ಶನವಾಗುತ್ತದೆ. “ Temple  Back side ನಲ್ಲಿ ಒಬ್ಬ Beggar ಕೂತಿದ್ದ. ಪಾಪಅವನ Organs Work ಮಾಡ್ತಾ ಇರ್ಲಿಲ್ಲ...By seeing that I was very upset you know…” ಅಂತ ಶುದ್ಧವಾಗಿ” ಮಾತಾಡುವ – ಅಭಿಮಾನ ಶೂನ್ಯರಾದ ಕನ್ನಡಿಗರನ್ನು ಕನ್ನಡದತ್ತ ಸೆಳೆಯುವುದು ಸಾಧ್ಯವೆಮನಸ್ಸು ಕುಣಿಯುವುದಾದರೂ ಹೇಗೆ?

ಹರಿಕತೆ ಮಾಡುವಂತೆ ನನ್ನನ್ನು ಪ್ರೋತ್ಸಾಹಿಸಿತಿದ್ದಿ ತರಬೇತಿ ಕೊಟ್ಟವರು – ನನ್ನ ತಂದೆ ಪುರಾಣ ಭಾರತ ಕೋಶದ ಕರ್ತೃವಾದ - ದಿ. ಐರೋಡಿ ಯಜ್ಞನಾರಾಯಣ ಉಡುಪರು. ಅವರು ಕುಂದಾಪುರದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿದ್ದರು. ಕನ್ನಡ ಭಾಷೆಯನ್ನು ಸವಿಯುವ ಚಟವನ್ನು ನನಗೆ ಅಂಟಿಸಿದವರೂ ನನ್ನ ಅಪ್ಪಯ್ಯನೇ. ಬಾಲ್ಯದಿಂದಲೂ ಅಕ್ಷರದ ಜೊತೆಗೇ ಆಟವಾಡುತ್ತಿದ್ದ ನನಗೆ ಹಲವಾರು ಕಾವ್ಯ ಭಾಗವನ್ನು ಕೊಟ್ಟು ಸವಿಯುವಂತೆ ಮಾಡಿದ ಪೂಜ್ಯರವರು. ನನ್ನ ಹರಿಕತೆಗಳಲ್ಲಿ ಸಮಯೋಚಿತವಾಗಿ ಅಂತಹ ವರ್ಣನೆಗಳನ್ನು ನಾನು ಬಳಸಿಕೊಂಡದ್ದೂ ಇದೆ. ಅಪೂರ್ವವಾದ ಶಬ್ದಗಳನ್ನು ಉಚ್ಚರಿಸುವಾಗ ನನಗೇ ಆನಂದವಾಗುತ್ತಿತ್ತು. ಬಾಲ್ಯದಲ್ಲೇ ಮಾತೃಭಾಷೆ, ರಾಜ್ಯಭಾಷೆಯ ಪ್ರವೇಶವಾದರೆ ನಮ್ಮ ಮುಂದಿನ ಭಾಷಾ ಹಾದಿಯು ಸುಗಮವಾಗುತ್ತದೆ. ನಮ್ಮ ಗದ್ಯದಲ್ಲೂ ಪದ್ಯದ ಸೊಗಸಿರಬೇಕು. ಗದ್ಯಕ್ಕೂ ಲಯವಿದೆಗದ್ಯದಲ್ಲೂ ಸಂಗೀತವಿದೆ. ಪ್ರೀತಿಸುತ್ತ ಶ್ರದ್ಧೆಯಿಂದ ಉಪಾಸಿಸುವವರಿಗೆ ಮಾತ್ರ ಲಭ್ಯವಾಗುವ ಅಮೂಲ್ಯ ಆನಂದವದು. ನಿಜವಾಗಿಯೂ ಭಾಷೆಯನ್ನು ಉಪಾಸಿಸುವ ಭಾಷಾಳುಗಳು ಯಾವತ್ತೂ ಸಮಾಜದ ಸಂಪತ್ತಾಗುತ್ತಾರೆ.

ಆದ್ದರಿಂದ ನಮ್ಮ ಕನ್ನಡವನ್ನು ಯಾರಿಗೋ - ಯಾರ್ಯಾರಿಗೋ ಗುತ್ತಿಗೆಗೆ ಕೊಡುವುದು ಬೇಡ. ನಾವು ಒಬ್ಬೊಬ್ಬರೂ ನಮ್ಮ ಕನ್ನಡದ ಸೇನಾನಿಗಳಾಗುವ. ಅದಕ್ಕಾಗಿ – ಕನ್ನಡದ ಕೆಲಸದಲ್ಲಿ ತೊಡಗಿಕೊಳ್ಳುವ. ನಂನಮ್ಮ ಊರಿನಲ್ಲಿಅಲ್ಲಲ್ಲಿ ಕನ್ನಡದ ಚಟುವಟಿಕೆಗಳು ನಡೆಯುತ್ತಲೇ ಇರುವಂತೆ ನೋಡಿಕೊಳ್ಳುವ. ದೋಸೆ ತಿನ್ನುವ - ಇಡ್ಲಿ ತಿನ್ನುವ ಸ್ಪರ್ಧೆಗಳು ನಮಗೆ ಬೇಡ. ತಾಲೂಕಿನ ಎಲ್ಲ ಶಾಲೆಗಳನ್ನೂ ಒಳಗೊಂಡಂತೆ ಸಾಹಿತ್ಯಿಕ ಸ್ಪರ್ಧೆಗಳನ್ನು ಎಡೆಬಿಡದೆ ಹಮ್ಮಿಕೊಳ್ಳಿ., ಕುಮಾರವ್ಯಾಸ, ರನ್ನಮುದ್ದಣ ಮುಂತಾದ ಕವಿಗಳ ಕುರಿತು ರಸವತ್ತಾದ ಉಪನ್ಯಾಸಗಳನ್ನು ಏರ್ಪಡಿಸಿ. ಅಂತಹ ಹಳೆಗನ್ನಡ ಕವಿಗಳ ಕಾವ್ಯ ಭಾಗಗಳನ್ನು ಭಾವಪೂರ್ಣವಾಗಿ ತಪ್ಪಿಲ್ಲದಂತೆ ವಾಚಿಸಲು ಮಕ್ಕಳನ್ನು ಪ್ರೊತ್ಸಾಹಿಸಿ. ಆಕರ್ಷಕವಾಗಿ ಅದನ್ನು ಹೇಳುವ ಮಕ್ಕಳಿಗೆ ಬಹುಮಾನ ನೀಡಿ. ಅಡಿಗರುಬೇಂದ್ರೆಡಿ. ವಿ. ಜಿ.ಪು. ತಿ. ನ.ಕುವೆಂಪು ಮುಂತಾದ ಹೊಸಗನ್ನಡ ಕವಿಗಳ ಕಾವ್ಯದ ರಸಾಸ್ವಾದ ನಡೆಯುವಂತಹ ವಾತಾವರಣವನ್ನು ಶಾಲೆಗಳಲ್ಲಿ ಮೂಡಿಸಿ. ಅದಕ್ಕಾಗಿ ಸಂಘ ಸಂಸ್ಥೆಗಳ ಆಶ್ರಯದಲ್ಲಿ ವರ್ಷವಿಡೀ ಸ್ಪರ್ಧೆಗಳನ್ನು ಏರ್ಪಡಿಸಿ. ಬಾಲ್ಯಕಾಲದಲ್ಲಿ ಭಾಗವಹಿಸುವ ಸಾಹಿತ್ಯಿಕ ಸ್ಪರ್ಧೆಗಳು ಮಕ್ಕಳನ್ನು ಬೆಳೆಸುತ್ತವೆ ಎಂಬುದಕ್ಕೆ – ನಾನೂ ಒಂದು ಸಾಕ್ಷಿ. ಅಮ್ಮನು - ತನ್ನ ಮಗುವಿಗೆ ಚಂದ್ರನನ್ನು ತೋರಿಸುತ್ತ ಊಟ ಮಾಡಿಸುವಂತೆ...ಬಾಲ್ಯಕಾಲದ ಮಕ್ಕಳ ಸ್ಪರ್ಧೆಗಳ ಅನುಭವಗಳು – ಸ್ಪರ್ಧೆಯ ನೆಪದಲ್ಲಿ – ಅವರ ಅರಿವಿಗೇ ಬರದಂತೆ ಸುಲಲಿತವಾಗಿ ಮಕ್ಕಳಿಗೆ ಭಾಷೆಯನ್ನು ಊಡಿಸುತ್ತವೆಪುಷ್ಟಿಗೊಳಿಸುತ್ತವೆಮಕ್ಕಳನ್ನು ಬೆಳೆಸುತ್ತವೆ. ಅಂತಹ ಸಂದರ್ಭಗಳಲ್ಲಿ ಭಾಗಿಯಾಗುವ ಮಕ್ಕಳಿಗೆ ಅವರು ಓದಬಹುದಾದ ಉತ್ತಮ ಪುಸ್ತಕಗಳನ್ನು ಸೂಚಿಸಬಹುದು. ಮುಂದಿನ ಭೇಟಿಯಲ್ಲಿಅವರು ಓದಿದ ಪುಸ್ತಕದ ಮುಖ್ಯಾಂಶವನ್ನು ಅವರೆಲ್ಲರೂ ಎರಡು ಪುಟದಷ್ಟು ಬರೆದು ಒಪ್ಪಿಸುವಂತೆ ಪ್ರೋತ್ಸಾಹಿಸಿ. ಆ ಬರಹಗಳನ್ನು ಪರಾಂಬರಿಸಿಸಲಹೆ ಸೂಚನೆಗಳನ್ನೂ ಕೊಡಬಹುದು. ಉತ್ತಮನ್ನು - ಪ್ರತಿಭೆಗಳನ್ನು ಪುರಸ್ಕರಿಸಬೇಕು. ಇಂತಹ ಚಟುವಟಿಕೆಗಳು - ಮಕ್ಕಳು ಪ್ರೀತಿಯಿಂದಲೇ ಕನ್ನಡದೊಳಗೆ ಪ್ರವೇಶಿಸುವುದಕ್ಕೆ ಸಹಕಾರಿಗಳಾಗುತ್ತವೆ. ದೇಹ ಕುಣಿಸುವುದರಲ್ಲಿ ಮಿತಿಯಿರಲಿ; ಬುದ್ಧಿ ಕುಣಿಸುವ ಕಸರತ್ತುಗಳಿಗೆ ಹೆಚ್ಚಿನ ಪ್ರಾಧಾನ್ಯವಿರಲಿ. ಹೀಗೆ ವರ್ಷದಲ್ಲಿ ಬೆರಳೆಣಿಕೆಯಷ್ಟಾದರೂ ಶುದ್ಧ ಕನ್ನಡಾಭಿಮಾನಿಗಳನ್ನು ಪ್ರತೀ ಊರಿನಲ್ಲಿಯೂ ಬೆಳೆಸುವುದು ಅಸಾಧ್ಯವೆಊರಿನ ಆಸಕ್ತ ಹಿರಿಯರ ಮಾರ್ಗದರ್ಶನದ ಜೊತೆಗೆ ಶುದ್ಧ ಸಂಕಲ್ಪವೂ ಇದ್ದರೆ - ಯಾವುದೂ ಅಸಾಧ್ಯವಲ್ಲ. ಒಟ್ಟಿನಲ್ಲಿ, ನಮ್ಮ ಮಕ್ಕಳಿಗೆ ನ್ಯಾಯವಾದ ಕನ್ನಡ ವನ್ನು ಕಲಿಸಲು ಮತ್ತು ಪ್ರಾಂತ್ಯಾಭಿಮಾನ, ದೇಶಾಭಿಮಾನ ಮೂಡಿಸುವಂತೆ ಮಾಡಲು ಸಮಾಜವೇ ಮುಂದೆ ಬರಬೇಕು ಅನ್ನುವುದು ನನ್ನ ಪ್ರಾರ್ಥನೆ.

ಒಂದು ಭಾಷೆಯ ಅಧ್ಯಯನದಿಂದ ಹಲವು ಅನುಕೂಲಗಳಿವೆ. ಅದರಿಂದ ವ್ಯಕ್ತಿಯ ಇಡೀ ವ್ಯಕ್ತಿತ್ವವೇ ನಯವಾಗುತ್ತದೆ. ಯಾರಿಗೆ ಬಾಲ್ಯದಲ್ಲಿ ಸಾಹಿತ್ಯದ ಸಂಸ್ಕಾರವಾಗುತ್ತದೋ - ಅಂತಹ ಮಕ್ಕಳು - ಎಂದೋತ್ಪಾದಾಗುವುದಿಲ್ಲ; ಅಪರಾಧೀಕೃತ್ಯಗಳಲ್ಲಿ ಎಂದಿಗೂ ತೊಡಗುವುದಿಲ್ಲ. ಸಮಾಜಘಾತಕರಾಗುವುದಿಲ್ಲ. ಯಾಕೆಂದರೆ ಭಾಷೆಯಲ್ಲಿ ತೊಡಗಿಕೊಂಡವರಿಗೆ - ಆ ಭಾಷೆಯೇ ಸುಸಂಸ್ಕೃತ ಸಾಂತ್ವನ ನೀಡುತ್ತದೆ. ಅಂತಹ ಮಕ್ಕಳು ದೈಹಿಕ ಹಿಂಸೆಯ ಭಾವದಿಂದ ತಾವಾಗಿಯೇ ಮಾರು ದೂರ ಸರಿಯುತ್ತಾರೆ. ಅಕ್ಷರದಲ್ಲಿ ಆನಂದವನ್ನು ಕಾಣಲು ಸಫಲರಾದ ಯಾವುದೇ ಮಕ್ಕಳನ್ನು ಅವರ ಭಾಷಾ ಸಂಸ್ಕಾರವೇ ಕಾಪಾಡುತ್ತದೆ. ಅವರ ಸಾಕ್ಷೀ ಭಾವವು ಪ್ರಖರವಾಗಿವ್ಯಕ್ತಿತ್ವವು ನುಣುಪಾಗುತ್ತದೆ. ಆದ್ದರಿಂದ ಭಾಷೆಯಿಲ್ಲದ – ಭಾಷೆ ಬಾರದಅತೀ ಬುದ್ಧಿವಂತಿಕೆಯಿಂದ ಭಾಷೆ ತಿರುಚುವ ಸಮುದಾಯವನ್ನು ಎಂದಿಗೂ ಬೆಳೆಸಬಾರದು.

ತನ್ನ ಅಭ್ಯರ್ಥಿಗಳ ಆಯ್ಕೆಯಲ್ಲಿ ತುಂಬ ಶ್ರಮ ವಹಿಸದಿದ್ದರೆ ಬಾನುಲಿಯೂ ಕೂಡ ಅಪಭ್ರಂಶಕ್ಕೆ ತುತ್ತಾಗುವುದು ಅಸಂಭವವಲ್ಲ. ಈ ಹೊತ್ತಿನಲ್ಲಿಸಾಮಾಜಿಕ ತುಮುಲಗಳ ಅಸಹಾಯಕತೆಯನ್ನೂ ನಾವು ಅರ್ಥ ಮಾಡಿಕೊಳ್ಳಬೇಕು. ನಮ್ಮ ಬಾನುಲಿಯು ನಮ್ಮಂತೇ ಇರುತ್ತದೆ...ಅಲ್ಲವೆಇಂದಿನ ಬಾನುಲಿಯ ಭಾಷೆಯ ಬಗೆಗೆ ಸಣ್ಣಪುಟ್ಟ ಅಪಸ್ವರಗಳಿದ್ದರೂ ಅದನ್ನು ಸಮಗ್ರವಾಗಿ ತೂಗಿನೋಡಬೇಕು. ಬಾನುಲಿಗೆ ಕಚ್ಚಾ ಮಾಲನ್ನು ಒದಗಿಸುವುದು ಯಾರುಈ ಸಮಾಜವೇ ಅಲ್ಲವೆಕಳಪೆ ಬೇಳೆಯಿಂದ ತಯಾರಿಸಿದ ಸಾರು ತುಂಬ ರುಚಿಯಾಗಿರಬೇಕು ಎಂದು ಅಪೇಕ್ಷಿಸಬಾರದು. ಹೌದು. ನಾನು ಅಂದು ಕಂಡ ಬಾನುಲಿಗೂ ಇಂದಿನ ಬಾನುಲಿಗೂ ಬಹಳ ವ್ಯತ್ಯಾಸವಿದೆ. ಅಂದ ಮಾತ್ರಕ್ಕೆಅದಕ್ಕೆ ಸಂಪೂರ್ಣವಾಗಿ ಬಾನುಲಿಯೇ ಕಾರಣವೆಂದು ನನಗೆ ಅನ್ನಿಸುವುದಿಲ್ಲ. ಇಡೀ ಸಮಾಜದಲ್ಲಿ ಕನ್ನಡದ ಭಾಷೆನೆಲ – ಜಲದ ಅಭಿಮಾನವು ಮೈದೋರಿದರೆ ಸಮಾಜದ ಹಲವಾರು ಏರುಪೇರುಗಳಿಗೆ ತಾನಾಗಿಯೇ ಪರಿಹಾರ ದೊರೆಯುತ್ತದೆ. ಕರ್ನಾಟಕದ ಭಾಷಾ ಉತ್ಪನ್ನಗಳು ಉಚ್ಚ ಗುಣಮಟ್ಟದವುಗಳಾದಾಗ ಅಬದ್ಧಗಳೆಲ್ಲವೂ ತಾವಾಗಿಯೇ ಮರೆಯಾಗುತ್ತವೆ. ಆದ್ದರಿಂದಲೇ ನಾನು ಹೋದಲ್ಲೆಲ್ಲ – “ಶಾಲೆಗಳನ್ನು ಬಲಪಡಿಸಿ” ಅನ್ನುತ್ತಿದ್ದೇನೆ. 

ಒಂದು ಮಾವಿನ ಮರದ ಗೆಲ್ಲುಗಳನ್ನು ಅಲುಗಿಸಿದರೆ ಕೆಳಗೆ ಉದುರುವ ಹಣ್ಣುಗಳಲ್ಲಿ ಒಂದೆರಡು ಕೆಟ್ಟೆ” ಯಾದರೆ ತಲೆಬಿಸಿ ಇಲ್ಲಆದರೆ ಎಲ್ಲವೂ ಕೆಟ್ಟೆಯಾಗಿಒಂದೆರಡು ಮಾತ್ರ ಒಳ್ಳೆಯ ಹಣ್ಣು ಸಿಕ್ಕಿದರೆಅಂತಹ ಮರದ ಸಮೀಪಕ್ಕೆ ಯಾರಾದರೂ ಸುಳಿದಾರೆ? ಶಾಲೆಗಳೆಂದರೆ - ಉತ್ತಮ ಫಲಗಳನ್ನು ನೀಡುವ ಮರಗಳಂತಿರಬೇಕು. ಆಗಲೇ ಯಾವುದೇ ಸಮಾಜವು ಸುಭಿಕ್ಷಸುರಕ್ಷಿತ. ಆದ್ದರಿಂದ ತಮ್ಮೂರಿನ ಶಾಲೆಗಳನ್ನು ಗಮನಿಸುವುದು ಊರಿನ ಹತ್ತು ಸಮಸ್ತರ ಕರ್ತವ್ಯವೂ ಹೌದು. ಹೀಗೆ ತನು ಕನ್ನಡಮನ ಕನ್ನಡನುಡಿ ಕನ್ನಡ ಎನ್ನುವ ಕನ್ನಡಿಗರನ್ನು ರೂಪಿಸುವ ಕ್ರಿಯೆಯು - ನಿರಂತರವಾಗಿ ನಡೆಯುವಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ.
     
ಇಂತಹ ಸೃಜನಶೀಲ ಕಾರ್ಯಗಳನ್ನು ಬಿಟ್ಟುಧ್ವನಿ ಅರಿಯಲಾಗದ ಒಣ ವಾಚ್ಯಕ್ಕೇ ಗಂಟುಬಿದ್ದುಕೇವಲ ಸಾಹಿತ್ಯದ ತೇರು ಎಂಬ ಪ್ರತಿಕೃತಿಯನ್ನು ಎಳೆದುಗೋಡಂಬಿ ಪಲ್ಯ ತಿಂದರೆ ಕನ್ನಡ ಬೆಳೆಯುವುದೂ ಇಲ್ಲ. ಅದರಿಂದ ಕನ್ನಡವು ಉಳಿಯುವುದೂ ಇಲ್ಲ. ದೊಡ್ಡ ದೊಡ್ಡ ಉತ್ಸವ ಮಾಡಿ - ದೊಡ್ಡ ದೊಡ್ಡ ವೇದಿಕೆಯಲ್ಲಿ - ದೊಡ್ಡ ದಡ್ಡರೆಲ್ಲರೂ ಕನ್ನಡದ ಹೆಸರಿನಲ್ಲಿ ಬೈದಾಡಿಕೊಂಡರೆ - ಅದು ಸೇವೆಯೆಹೀಗೆ ಯುದ್ಧೋನ್ಮತ್ತ ಭಾಷೆಯ ಬಳಕೆಗೆ ಇಳಿಯುವುದು - ಕನ್ನಡದ ದುರುಪಯೋಗಅದು ಕನ್ನಡಕ್ಕೆ ಬಗೆಯುವ ದ್ರೋಹವಲ್ಲದೆ ಮತ್ತೇನುಪ್ರೀತಿಸುವುದಕ್ಕೆ - ನಮ್ಮ ಭಾಷೆಯ   ಬಳಕೆಯಾಗಲಿ.

ಇನ್ನು.....ಉತ್ಸವದ ಧೂಳಿನಲ್ಲಿ ಸಾವಿರಾರು ಜನರು ಉಂಡು ತೇಗಿದರೆ ಕನ್ನಡಕ್ಕೇನು ಬಂತುಕನ್ನಡಕ್ಕೆ ಏನನ್ನೂ ಕೊಡಲಾಗದವರು ಕನ್ನಡದ ಹೆಸರಿನಲ್ಲಿ ಉತ್ಸವದ ದೊಂಬರಾಟ ನಡೆಸಿದರೆನಾಡು – ನಾಡಿನ ಭಾಗ್ಯವು ಬೆಳಗದುನಿಸ್ಸಂದೇಹವಾಗಿ ಅದು ಕಂದಿಹೋಗುತ್ತದೆ. ಆದ್ದರಿಂದ ಕನ್ನಡದಿಂದ  ಸ್ವಂತಕ್ಕೆ ಸಂಪಾದಿಸುತ್ತ ಬದುಕಿದರೆ ಸಾಲದುಕನ್ನಡಕ್ಕಾಗಿ ಬದುಕುವವರು ಕ್ರಿಯಾಶೀಲರಾಗಬೇಕು. ಹೌದು. ಕನ್ನಡಕ್ಕಾಗಿ ಬದುಕುವ ವೀರ ಕನ್ನಡಿಗರು ಈಗ ಬೇಕಾಗಿದ್ದಾರೆ.

ಅಂತಹ ಭಾಷಾಭಿಮಾನಿಗಳು ಈಗಲೂ ಇದ್ದಾರೆ. ನಾನು Net ನಲ್ಲಿ ಬರೆಯುತ್ತಿರುವ BLOG ನ್ನು ನೂರಾರು ಜನರು ಓದುತ್ತಿದ್ದಾರೆಪ್ರತಿಕ್ರಿಯಿಸುತ್ತಿದ್ದಾರೆ ಅನ್ನುವುದೇ ಇದಕ್ಕೆ ಸಾಕ್ಷಿ. ತಮ್ಮ ಕನಿಷ್ಟ 10 ನಿಮಿಷದಷ್ಟು ಸಮಯವನ್ನು ಇಂತಹ ಗಂಭೀರ ಓದಿನಲ್ಲಿ ಕಳೆಯಬಲ್ಲ ಓದುಗರು ಈಗಲೂ ಇದ್ದಾರೆ ಎನ್ನುವುದು ಆಶ್ಚರ್ಯವಾದರೂ ಸಂತೋಷದ ಸಂಗತಿ ಅಲ್ಲವೆವಿದೇಶದಲ್ಲಿರುವ ಕನ್ನಡಿಗರ ಕನ್ನಡಾಭಿಮಾನವೂ ಗಮನಿಸುವಂತಿದೆ. ನಮ್ಮ ಇಂತಹ ಅಭಿಮಾನವು ಕ್ರಿಯಾರೂಪಕ್ಕೆ ಬಂದಾಗ ಮಾತ್ರ – ಪ್ರತೀ ನವೆಂಬರದಲ್ಲಿ (ಮಾತ್ರ !) ನಡೆಸುವ ಗಂಟು ಶೋಷಣೆ - ಕಂಠ ಶೋಷಣೆಯು ಸಾರ್ಥಕವಾಗುತ್ತದೆ. ಅಲ್ಲವೆ?

                ಕೇಯೂರಾ ನ ವಿಭೂಷಯಂತಿ ಪುರುಷಂ ಹಾರಾ ನ ಚಂದ್ರೋಜ್ವಲಾ
                ನ ಸ್ನಾನಂ ನ ವಿಲೇಪನಂ ನ ಕುಸುಮಂ ನಾಲಂಕೃತಾ ಮೂರ್ಧಜಾಃ
                ವಾಣ್ಯೇಕಾ ಸಮಲಂಕರೋತಿ ಪುರುಷಂ ಯಾ ಸಂಸ್ಕೃತಾಧಾರ್ಯತೇ
                ಕ್ಷೀಯಂತೇ ಖಲು ಭೂಷಣಾನಿ ಸತತಂ ವಾಗ್ಭೂಷಣಂ ಭೂಷಣಂ //

ಕಂಕಣಚಂದ್ರಹಾರಸ್ನಾನಗಂಧಲೇಪನಪುಷ್ಪಾಲಂಕಾರವೇಣೀ ಸಿಂಗಾರ – ಇವೆಲ್ಲವೂ ಮನುಷ್ಯನ ಅಲಂಕಾರಗಳಲ್ಲ. ಸುಸಂಸ್ಕೃತ ಮಾತುಗಳೇ ಮನುಷ್ಯನಿಗೆ ನಿಜವಾದ ಅಲಂಕಾರ. ಬಾಹ್ಯ ಸಿಂಗಾರಗಳುಮೆತ್ತಿಕೊಂಡ ಬಣ್ಣದಂತೆ ಕ್ಷಣಿಕಅವು ನಾಶವಾಗುತ್ತವೆ. ನಮ್ಮ ಮಾತುಗಳು ಮಾತ್ರ ನಿಜವಾದ ಅಂತಸ್ಸತ್ವವನ್ನು ಪ್ರಕಾಶಗೊಳಿಸುತ್ತವೆ. ಆದ್ದರಿಂದ - ಭೂಷಣಪ್ರಾಯವಾದ ಮಾತುಗಳು ನಮ್ಮಿಂದ ಬರುವಂತಾಗಲಿ.
    
ಒಟ್ಟಿನಲ್ಲಿಪರ ಭಾಷೆಗಳನ್ನು ದ್ವೇಷಿಸದೆ...ನಮ್ಮ ಕನ್ನಡವನ್ನು ಮನೋವಾಕ್ಕಾಯಗಳಲ್ಲಿ ಆರಾಧಿಸುವ ನಿಷ್ಠೆಯಿರುವ ಒಂದು ಕನ್ನಡ ಪಡೆಯು ಕರ್ನಾಟಕದ ನೆಲದಿಂದಲೇ ದಿಗ್ವಿಜಯಕ್ಕೆ ಹೊರಡಲಿ! ಪ್ರಾದೇಶಿಕ ಕನ್ನಡವನ್ನು ಉಳಿಸಿಕೊಂಡೇ ...ಜತೆಜತೆಗೆ ಶಿಷ್ಟ ಕನ್ನಡವನ್ನೂ ಜನಾಂತರಂಗಕ್ಕೆ ತಲುಪಿಸುವ ಕಾರ್ಯವು ಈ ಮಣ್ಣಿನಲ್ಲಿಯೇ ಚುರುಕಾಗಲಿ ! ಹೀಗೆ ತರಬೇತಾದ ಕನ್ನಡ ಯುವ ವಾಹಿನಿ” ಯು ಕರ್ನಾಟಕದ ಮಾಧ್ಯಮಗಳ ಎಲ್ಲ ಶಾಖೆಗಳನ್ನೂ ಸೇರಿಕೊಂಡು ಕನ್ನಡದ ಸೌಂದರ್ಯವನ್ನು ಎತ್ತಿ ಹಿಡಿಯಲಿ!

ಆದರೆಕನ್ನಡದ  ಹೆಸರಿನಲ್ಲಿ - "ಕೇವಲ" ನೆಪಕ್ಕಾಗಿ  ಒಂದಾದರೆ ಅದು ನವೆಂಬರಕ್ಕೇ ಮುಗಿದು ಹೋಗುತ್ತದೆ. ಆದ್ದರಿಂದ ಸಂಕಲ್ಪವು ದೃಢವಾಗಿರಲಿ. ನಿರಂತರವಾಗಿರಲಿ. ಹನಿ ಹನಿಗೂಡಿ ಹಳ್ಳ...ಸದ್ಭಾವಗಳು ಸಂಚಯವಾದಾಗಲೇ ಸತ್ಕಾರ್ಯಗಳು ಸಂಭವಿಸುತ್ತವೆ.

ಕನ್ನಡದ ಕುವರರಲ್ಲಿ ಸಂಚಯಗೊಳ್ಳುವ ಭಾವವು ಎಲ್ಲರನ್ನೂ ಪರಸ್ಪರ ಸಂಧಿಸಬೇಕು. ನ್ನ ಎಂಬುದು ಉಂಡುಂಡತ್ತಾಡ ಾತ್ರೆಯಲ್ಲ; ಾರಾಟೇದಿಕೆಯೂ ಅಲ್ಲ; ಉದತ್ಸಿಂತೂ ಅಲ್ಲೇ ಅಲ್ಲ. "ಮಂತ್ರಕ್ಕಿಂತ ಉಗುಳೇ ಜಾಸ್ತಿ" ಎಂಬ- ಕನ್ನೆಸಿನಲ್ಲಿ ಿಯಿತಾಗಿ ೆ ಒಪ್ಪಿುವ ಸಾಹಿತ್ಯ ಿಿಂದ ಕ್ಾತ್ರಲ್ಲಿ ರದ್ದಿಯಾಗುವುದ್ದಿಯಾಗುದಲ್ಲನ್ನಕ್ಕೆ ಯಾವ ೂ ಲಿಸು. "ಕೆ ಕೊಡುವ" ಕದ್ದಿಂದ ಕನ್ನ ೆ-ಬುಕನ್ನು ಪಷ್ಟಿಗೊಳಿಸಾಗುವುದಿಲ್ಲ. ುದ್ಿಂತೆ, ಿಲೀಟುರಿತ ಾತ ೆರಿನಲ್ಲಿ - ುದ್ ುಕಿನಿತ್ಯೂಜೆಯಾದಾಗೇ ಕನ್ನಮ್ಮಾದೀತು. ಆದ್ದರಿಂದ - ಉದ್ದೇಶಿತವಾಗಿಗುರಿಯಿಟ್ಟು, ನಿರ್ವ್ಯಾಜಿಷ್ೆಯಿಂದ ಕನ್ನಡದ ುಕಿನಲ್ಲಿ ತೊಡಗಿಕೊಳ್ಳುವ ಉತ್ಸಾಹವಿರಲಿ. ಇಂ ಕನ್ನಡದ ಾವಸ್ರೋತಲ್ಲಿ ಎಲ್ಲರೂ ಾಗಿಯಾಗುವಂತಾದ ಕನ್ನಡದ ಡಿಂಡಿಮದ ಮುರ ಮಾರ್ದನಿಯು ದೂರದೂರದವರೆ ಅನುರಣಿೀತು;ುರಿ ಹೋಗಿರುವ ನಾಡಿನ ಸಾವಿರ ಭಾವವು - ಕನ್ನಡದ ಛತ್ರಿಯಡಿಯಲ್ಲಿ ಪರಸ್ಪರ ಸಂಧಿೀತ! ಇದು ನನ್ನ ಆಸೆತ್ತ ಅಪೇಕ್ಷೆ. ನಾನಂತೂ ಯಾವತ್ತೂ ನ್ನ ಜೊತೆಗಿದ್ದೇನೆ; ಕನ್ನಡವು ನನ್ನೊಂದಿಗಿದೆ.



                                                                                   ನಾರಾಯಣೀ ದಾಮೋದರ್