ಕಲಕುವ ಬಂಧನಗಳು...
ಬೆಳಗಿನ ದಿನ ಪತ್ರಿಕೆಯ ಮೇಲೆ ಕಣ್ಣಾಡಿಸುತ್ತಿದ್ದ ಗಿರಿರಾಯರು - ಏನೋ ಕೇಳಲು ಚಡಪಡಿಸುತ್ತ ನಡುನಡುವೆ ತನ್ನತ್ತ ಇಣುಕಿ ಹೋಗುವ ಪತ್ನಿ ಶಾರದೆಯನ್ನು ಬೆಳಗಿನಿಂದಲೇ ಗಮನಿಸಿದ್ದರು. ಅವಳು ಹೇಳುವುದೇನು ಎಂಬುದೂ ಅವರಿಗೆ ಗೊತ್ತಿತ್ತು. ವ್ಯರ್ಥವಾಗಿ "ಮಾತು ಕಡೆಯುವ ಚರ್ಚೆ"ಯು ಬೇಡವೆಂದುಕೊಂಡೇ ಅವರು ಸುಮ್ಮನೆ ಪುಟ ತಿರುವುತ್ತ ಮೌನವಾಗಿ ಕೂತಿದ್ದರು. ಮದುವೆಯಾದ ಹದಿನೈದು ವರ್ಷಗಳಲ್ಲಿ ಶಾರದಮ್ಮನೂ ತನ್ನ ಗಂಡನ ಸ್ವಭಾವವನ್ನು ಅರ್ಥ ಮಾಡಿಕೊಂಡಿದ್ದರು. ಕಳೆದ ವರ್ಷ ತನ್ನ ಅಪ್ಪನ ಮನೆಯಲ್ಲಿ ಗಂಡನಿಗೆ ನೋವಾದದ್ದೂ ಅವರಿಗೆ ಗೊತ್ತಿತ್ತು. ಆದರೂ "ಒಂದು ಪೆಟ್ಟು; ಎರಡು ತುಂಡು" ಅನ್ನುವ ಹಾಗೆ ಬದುಕಲಿಕ್ಕೆ ಆಗುವುದಿಲ್ಲ; ಹಾಗೆ ಬದುಕಲೂ ಬಾರದು ಅನ್ನುವುದು ಶಾರದಮ್ಮನ ವಾದ. ಒಟ್ಟಿಗೆ ಬದುಕುವಾಗ ಏನೋ ಒಂದು ಮಾತು ಬರುತ್ತದೆ ಹೋಗುತ್ತದೆ...ಹಾಗಂತ ಅದಕ್ಕೇ ಅಂಟಿಕೊಂಡು ಬಂಧು - ಬಳಗವನ್ನೆಲ್ಲ ಕಳೆದುಕೊಳ್ಳಬಾರದು ಅನ್ನುವುದು ಶಾರದಮ್ಮನ ಮತವಾಗಿತ್ತು. ಆದರೆ ಈ ಗಿಣಿಪಾಠದಿಂದ ಗಿರಿರಾಯರನ್ನು ಮಾತ್ರ ಬದಲಿಸಲಾಗಿರಲಿಲ್ಲ. ಗಂಡನಿಗೆ ಇಷ್ಟವಿಲ್ಲದ ಅದೇ ವಿಷಯವನ್ನು ಈಗ ನೇರಾನೇರ ಮಾತಾಡಲೇಬೇಕಾದ ಮತ್ತೊಂದು ಸಂದರ್ಭ ಅವರ ಎದುರಿಗೆ ಬಂದು ನಿಂತಿದೆ.
**********----------**********
ಕೇಶವಯ್ಯ ದಂಪತಿಗಳಿಗೆ ಶಾರದಮ್ಮನೇ ಹಿರಿಯ ಮಗಳು. ಶಾರದಮ್ಮನಿಗೆ ಏಳು ಜನ ತಂಗಿಯಂದಿರು; ಆರು ಜನ ತಮ್ಮಂದಿರು. ದೊಡ್ಡ ಮನೆ, ಡಜನುಗಟ್ಟಲೆ ಮಕ್ಕಳ ದೊಡ್ಡ ಸಂಸಾರವದು. ಕಳೆದ ವರ್ಷ ನಡೆದ ತನ್ನ ತಂಗಿ ವನಜಳ ಮದುವೆಗೆ ಗಂಡನ ಜೊತೆಗೇ ಹೋಗಿ ಬಂದಿದ್ದ ಶಾರದಮ್ಮ - ತನ್ನ ಅಮ್ಮನು ಅಂದು ವರ್ತಿಸಿದ ರೀತಿಗೆ ತಾನೂ ನೋವುಂಡಿದ್ದಳು. ನಿರಾಭರಣೆಯಾಗಿದ್ದ ತನ್ನೊಂದಿಗೆ ಐಷಾರಾಮಗಳಿಂದ ದೂರವಿದ್ದ ತನ್ನ ಗಂಡನನ್ನೂ ಪ್ರತ್ಯೇಕಿಸಿದಂತೆ - ಸ್ವಂತ ಅಮ್ಮನೇ ಅಂದು ಸಸಾರವಾಗಿ ಕಂಡದ್ದನ್ನು ಶಾರದಮ್ಮನು ತುಟಿ ಕಚ್ಚಿ ಸಹಿಸಿಕೊಂಡಿದ್ದರು. ಆದರೆ ಗಿರಿರಾಯರು ಮಾತ್ರ "ನಿನ್ನ ಅಮ್ಮ ಒಬ್ಬ ಅಸಭ್ಯ ಹೆಂಗಸು" ಎಂದು ಪ್ರಕಟವಾಗಿಯೇ ಹೇಳಿ ಹಗುರಾಗಿದ್ದರು. "ನಿನ್ನ ಮನೆಗೆ ಇನ್ನು ಮುಂದೆ ನನ್ನನ್ನು ಮಾತ್ರ ಕರೆಯಬೇಡ.." ಎಂದೂ...ಅಂದೇ ಘೋಷಿಸಿಯೂ ಬಿಟ್ಟಿದ್ದರು.
"ಸ್ವಂತ ಅಳಿಯನ ಪಕ್ಕದಲ್ಲಿ ಕೂತ ನಿನ್ನ ಮಾವ - ಆ ಬಚ್ಚಾಲಿ ದಾಸಯ್ಯನನ್ನು ಏಕಿಏಕಿ ನಗುತ್ತ ಮಾತನಾಡಿಸಿದ ನಿನ್ನ ಅಮ್ಮ - ಸರಕ್ಕಂತ ನನ್ನನ್ನು ದಾಟಿ - ಅಲ್ಲಿ ಕೂತವರನ್ನೆಲ್ಲ ಮಾತಾಡಿಸಿ - ನನ್ನನ್ನು ಗಮನಿಸಲೇ ಇಲ್ಲವೆಂಬಂತೆ ನಡೆದು ಹೋದರಲ್ಲ ? ಮನೆಗೆ ಬಂದ ಅಳಿಯನನ್ನು "ಬಂದಿರಾ ?" ಅಂತ ಕೇಳುವ ಸೌಜನ್ಯವೂ ಅತ್ತೆಗೆ ಇಲ್ಲವೆಂದರೆ ಅವರಿಗೆ ನನ್ನ ಬಗೆಗೆ ತಿರಸ್ಕಾರವಿದೆ ಎಂದೇ ಅರ್ಥ. ಅವರು ನನ್ನನ್ನು ಇಷ್ಟ ಪಡಲಿ, ಮೆಚ್ಚಲಿ ಎಂದೇನೂ ನನಗೆ ಅಪೇಕ್ಷೆಯಿಲ್ಲ. ಆದರೆ ಅವರ ಸ್ಥಾನಕ್ಕೆ ಹೊಂದುವ ವರ್ತನೆ ಅದಲ್ಲ. ನೋಡು ಶಾರೂ, ನಾನು ನಿನ್ನನ್ನು ಮೆಚ್ಚಿಯೇ ಮದುವೆಯಾದದ್ದು; ಈಗಲೂ ನೀನು ನನ್ನ ಪ್ರೀತಿಯ ಅದೇ ಶಾರು. ಆದರೆ ನಿನ್ನ ಅಮ್ಮ ಹುಟ್ಟಿಸಿದ ಮೂರು ಮಕ್ಕಳಿಗೆ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ನಾಕು ದಿನವಾದರೂ ಅನ್ನ ಹಾಕಿದವನು ನಾನು - ಹೌದಾ ಅಲ್ವಾ ? ಅವರ ಮಕ್ಕಳಿಗೆ ನನ್ನ ಕೈಲಾದ ಎಲ್ಲ ಸಹಾಯವನ್ನೂ ಮಾಡಿದ್ದೆ; ಯಾವುದೂ ನನ್ನಲ್ಲಿ "ಇದ್ದು ಮಾಡಿದ ಸಹಾಯ" ಅಲ್ಲ. ಮಾಡಿದ್ದನ್ನೆಲ್ಲ ಡಂಗುರ ಹೊಡೆದು ಹೇಳಿಕೊಂಡವನೂ ನಾನಲ್ಲ. ಇಂತಹ ಅಧಿಕ ಪ್ರಸಂಗದ ನನ್ನ ದುರ್ಬುದ್ಧಿಯಿಂದಲೇ ನನ್ನ ಸಂಸಾರವನ್ನು ಐಶಾರಾಮದಿಂದ ಇರಿಸಲು ನನ್ನಿಂದಾಗಲಿಲ್ಲ. ಆಗಿಂದಲೂ "ನಾನು, ಮಾಣಿ, ಗೋವಿಂದ" ಅಂತ ಇದ್ದಿದ್ದರೆ ನಾನೂ ನಾಲ್ಕು ಕಾಸು ಕೂಡಿಡಬಹುದಿತ್ತು. ಸ್ವಾರ್ಥದಿಂದ ಹೊರಗೆ ನಿಂತು ನಾನು ಮಾಡಿದ್ದೆಲ್ಲವನ್ನೂ ಮರೆತು, ತನಗೆ ಕಾಸಿನ ಪ್ರಯೋಜನವನ್ನೂ ಮಾಡದ - ದುರ್ಮಾರ್ಗದಿಂದಲೇ ದುಡ್ಡು ಗಂಟು ಹಾಕಿದ ಮೂಢರನ್ನೆಲ್ಲ ನಿನ್ನ ಅಮ್ಮ ಕುಣಿದಾಡುತ್ತ ನೆಂಟರಂತೆ ಉಪಚರಿಸಿದರಲ್ಲ ? ಇದಕ್ಕೆ ಅವಿವೇಕ ಅನ್ನದೆ ಬೇರೇನೆನ್ನಲಿ ? ಆಕೆ ಯಾರನ್ನಾದರೂ ಮಾತಾಡಿಸಲಿ. ಆದರೆ ಸಭಾ ಮರ್ಯಾದೆಯ ಪ್ರಜ್ಞೆಯೂ ಇಲ್ಲದ ಮೂಢಳು ನಿನ್ನಮ್ಮ ಅಂತ ನೀನು ಒಪ್ಪಿಕೊಳ್ಳಲೇ ಬೇಕು...ನೀನು ಅಂದುಕೊಂಡಂತೆ ಅದು ಅವರ ಹೆಡ್ಡತನ ಅಲ್ಲ; ಶಿಷ್ಟಾಚಾರವೂ ಗೊತ್ತಿಲ್ಲದ ಅನಾಗರಿಕತನ ಅದು- ಆಯ್ತಾ ?" ಮದುವೆಯ ಮನೆಯಿಂದ ಹಿಂದಿರುಗಿದ ಮೇಲೆ ಗಿರಿರಾಯರು ಗರಂ ಆಗಿದ್ದರು.
"ನೋಡಿ, ನನ್ನ ಅಮ್ಮ ಹೆಚ್ಚು ಓದಿದವಳಲ್ಲ. ನನ್ನ ಅಪ್ಪಯ್ಯ ಇದ್ದಿದ್ದರೆ ಹೀಗೆಲ್ಲ ಆಗುತ್ತಿರಲಿಲ್ಲ..." ಅಂತ ಶಾರದಮ್ಮನು ತಿಪ್ಪೆ ಸಾರಿಸಲು ಪ್ರಯತ್ನಿಸಿದ್ದರು.
"ಅರೆ, ನಿನಗ್ಯಾಕೆ ಅರ್ಥವಾಗುವುದಿಲ್ಲ ? ನಮ್ಮ ಓದಿಗೂ ವರ್ತನೆಗೂ ನೇರ ಸಂಬಂಧ ಇರುವುದೇ ಇಲ್ಲ. ಓದದೇ ಇದ್ದವರೆಲ್ಲ ನಿಷ್ಕರುಣಿಗಳಾಗಿ ಅವಿವೇಕಿಗಳಾಗಿಯೇನೂ ಇರುವುದಿಲ್ಲ. ಅವೆಲ್ಲವೂ ಅವರವರ ಕುಸಂಸ್ಕಾರದ ಫಲ. ನಾಳೆ ನಾನು ಮದುವೆಗೆ ಹೋಗದಿದ್ದರೆ ಅವರಿಗೆ ಯಾವ ಬೇಸರವೂ ಆಗುವುದಿಲ್ಲ; ಬದಲಿಗೆ ಖುಶಿಯಾಗುತ್ತದೆ. ನೀನೇ ಹೇಳು. ಯಾರೇ ಆಗಲಿ, ತಮಗೆ ಇಷ್ಟವಿಲ್ಲದವರಿಗೆ "ಬನ್ನಿ ಬನ್ನಿ" ಅಂತ ಹೇಳಿಕೆ ಕೊಡುವುದಾದರೂ ಯಾಕೆ ? ನಾನು ಹೇಳುವ ಮಾತನ್ನು ಕಿವಿಗೊಟ್ಟು ಕೇಳು ಶಾರದಾ. ಪ್ರೀತಿ ಗೌರವವಿಲ್ಲದಲ್ಲಿಗೆ ಹೋಗಿ ಯಾರೂ ಊಟ ಮಾಡಬಾರದು ...ಅಂತಹ ಹುಂಬ ಗೋಸುಂಬೆಗಳಿಂದ ದೂರ ಇರುವುದೇ ಕ್ಷೇಮ.."
"ಸರಿ; ಇನ್ನು ಈ ವಿಷಯವನ್ನು ಮಾತಾಡುವುದು ಬೇಡ. ಸುಮ್ಮನೆ ನಾವ್ಯಾಕೆ ಇವತ್ತಿನಿಂದಲೇ ಮನಸ್ಸನ್ನು ಕಹಿ ಮಾಡಿಕೊಳ್ಳುವುದು ? ಆದರೆ ಒಂದು ವಿಷಯ ಮಾತ್ರ ಸತ್ಯ. ನಾನು ಹೇಳುತ್ತೇನೆ ಕೇಳಿ...ದುಡ್ಡಿದ್ದವರಿಗೇ ಈ ಜಗತ್ತು ಮಣೆ ಹಾಕುವುದು. ನಾವಿಬ್ಬರು ಮಾತ್ರ - "ಅಲ್ಲ; ಅದು ಹಾಗಲ್ಲ" - ಅಂತೆಲ್ಲ ಅನ್ನುತ್ತಿದ್ದರೆ ಎಲ್ಲೂ ನಡೆಯುವುದಿಲ್ಲ...ನಾವೇ ಜಾತಿ ಬಿಟ್ಟ ಕಾಗೆ ಆಗ್ತೇವೆ..ಅಷ್ಟೆ."
"ಅಂದರೆ...ಏನು ನಿನ್ನ ಮಾತಿನ ಅರ್ಥ ? ನಿನ್ನ ಕಡೆಯವರನ್ನು ಮೆಚ್ಚಿಸಲಿಕ್ಕೆ ನಾನು ಅಡ್ಡದಾರಿಯಿಂದಾದರೂ ದುಡ್ಡು ಮಾಡಬೇಕಾ ? ಕಾಗಕ್ಕ ಗುಬ್ಬಕ್ಕನ ಹೆಸರಿನಲ್ಲಿ ಗಾದೆ ಕಟ್ಟುವವರ ಇಂತಹ "ಜಾತಿಯ ಮನೆ"ಗೆ ಮೂರು ಮುಷ್ಟಿ ಉಪ್ಪು...ಕಾಸಿನ ಜಾತಿಯನ್ನು ಮಾತ್ರ ಗುರುತಿಸುವವರ ಜೊತೆಗಿದ್ದುಕೊಂಡು "ಜಾತಿ ಕಾಗೆ" ಆಗುವುದಕ್ಕಿಂತ ನನ್ನ ಹಾಗೆ "ಜಾತಿ ಬಿಟ್ಟ ಕಾಗೆ" ಆಗುವುದೇ ವಾಸಿ...ನೋಡು ಶಾರದಾ, ನಾನು ಹೀಗೇ ಇರುವುದು; ಇಷ್ಟವಿದ್ದರೆ ಹೊಂದಿಕೋ..."
"ಇಲ್ಲವಾದರೆ ಹೊರಡು ಅಂತಲೂ ಹೇಳಿಬಿಡಿಯಲ್ಲ..."
"ನನ್ನ ಜೊತೆಯಲ್ಲಿ ಸಂತೋಷದಿಂದ ಇರುವ ಹಾಗಿದ್ದರೆ ಎಲ್ಲವೂ ಗೊತ್ತಿದ್ದೂ ನೀನು ಚೌಕಾಸಿಗೆ ಇಳಿಯುತ್ತಿರಲಿಲ್ಲ; ಇಂತಹ ಮಾತಿನ ಕೊಕ್ಕೆಗಳನ್ನೆಲ್ಲ ಹಾಕುತ್ತಿರಲಿಲ್ಲ...ನಿನ್ನ ಮೀಸೆ ಬೆಳೆದ ತಮ್ಮಂದಿರು ದೇಶಾವರಿ ನಗುತ್ತ ಅವತ್ತು ಓಡಾಡುತ್ತಿದ್ದರಲ್ಲ ? ಅವರಿಗೇನು ಧಾಡಿಯಾಗಿತ್ತೆ ? ಅವರೇನು ಅಕ್ಷರ ಬಾರದ ಪ್ರಪಂಚ ಜ್ಞಾನವಿಲ್ಲದ ಒಡ್ಡರಾ ? ಅರ್ಥ ಮಾಡಿಕೋ. ಅದು ಅವರ ಸಂಸ್ಕಾರ. ಆದ್ದರಿಂದ ಬದಲಾಗುವುದೂ ಕಷ್ಟ. ಒಬ್ಬೊಬ್ಬರೂ ಸ್ವಾರ್ಥಿಗಳು, ಸಮಯ ಸಾಧಕರು, ಸಂಸ್ಕಾರಹೀನರು..ಅಷ್ಟೆ. ಒಬ್ಬೊಬ್ಬರ ರೋಮರೋಮದಲ್ಲೂ ಅಹಂಕಾರ. ವಿದ್ಯೆ ನಾಸ್ತಿ ಅನ್ನುವುದರ ಲಕ್ಷಣವೇ ಅದು. ನಿಮ್ಮ ವಂಶದಲ್ಲೇ ಸೊಕ್ಕು ಹುಟ್ಟಿದ್ದಾ ಅಥವಾ ಸೊಕ್ಕಿನಿಂದಲೇ ಆ ವಂಶ ಹುಟ್ಟಿದ್ದಾ ?" ಗಿರಿರಾಯರು ಇಡೀ ವಂಶವನ್ನೇ ಜಾಲಾಡಿಸಿದಾಗ ಶಾರದಮ್ಮ ಮೌನವಾದರು.
ಕ್ಷಣ ಬಿಟ್ಟು ರಾಯರೇ ಮಾತಾಡಿದರು. "ಅವತ್ತು ಮದುವೆಯ ದಿನ - ನಾನು ನಿನ್ನ ಫಜೀತಿಯನ್ನೆಲ್ಲ ನೋಡುತ್ತಲೇ ಇದ್ದೆ. ಆರತಿ ಎತ್ತುವುದಕ್ಕೆ ಹಿರಿಯ ಮಗಳು ಬರಲಿ ಅಂತ ಪುರೋಹಿತರು ಹೇಳಿದಾಗ ನೀನು ಸೆರಗು ಕಟ್ಟಿ ಮುಂದೆ ಬಂದೆ...ಹೌದಾ ?"
"ಅದೆಲ್ಲ ಯಾಕೀಗ ? ಅದಕ್ಕೆ ಏನಾಯಿತೀಗ ?" ಶಾರದಮ್ಮನ ದನಿಯಲ್ಲಿ ಬೇಸರವಿತ್ತು.
"ಏನಾಯಿತಾ ? ನಿನ್ನನ್ನು ಕೈಯ್ಯಿಂದ ಹಿಂದೆ ದೂಡಿ ನಿನ್ನ ತಂಗಿಯನ್ನು ಕಳಿಸಿದ್ದು ಯಾರು ?"
"ಹೋಗಲಿ ಬಿಡಿ. ಯಾರು ಆರತಿ ಎತ್ತಿದರೆ ಏನಂತೆ ?"
"ಅದು ನನಗೂ ಗೊತ್ತು. ಆದರೆ ಅದು ನನ್ನ ಪ್ರಶ್ನೆಗೆ ಉತ್ತರ ಅಲ್ಲ..ನಿನ್ನನ್ನು ಹೆತ್ತ ಅಮ್ಮನೇ ಅವತ್ತು ಮಂಟಪದಿಂದ ನಿನ್ನನ್ನು ಹಿಂದೆ ತಳ್ಳಿದ್ದನ್ನು ನಾನೇ ನೋಡಿದ್ದೆ. ಆದರೆ ಒಬ್ಬ "ಅಮ್ಮ" ಎಂಬ ವ್ಯಕ್ತಿ ಹೀಗೆಲ್ಲ ವರ್ತಿಸುವುದು ಸಾಧ್ಯವೆ ? ನೀನೂ ಯೋಚನೆ ಮಾಡು. ಅವತ್ತು ಅದಕ್ಕೆ ಕಾರಣವನ್ನೂ ನೀನೇ ಹೇಳಿದ್ದೆ. ನೂಲಿನ ಸೀರೆ ಉಟ್ಟವರು ಹಿಂದಿರಬೇಕು; ಜರಿ ಸೀರೆ ಉಟ್ಟವರು ಮುಂದೆ ಬರಬೇಕು ಅನ್ನುವ ಪಕ್ಕಾ ಲೌಕಿಕ ಹೆಂಗಸು ನಿನ್ನಮ್ಮ. ಬರೇ ತೋರಿಕೆಯ ತುರಿಕಡ್ಡಿ. ನಿದ್ದೆ ಬಾರದ ತುರಿಕೆಗೆ ಆಕೆಗೆ ಒಂದಷ್ಟು ಮಕ್ಕಳು ಹುಟ್ಟಿದ್ದು ಬಿಟ್ಟರೆ ಆ ಹೆಂಗಸಿನಲ್ಲಿ ಸಾಮಾನ್ಯ ಹೆಂಗಸರಲ್ಲಿರುವ ಪಸೆಯೇ ಇಲ್ಲ. ಬೇರೆ ಯಾರಾದರೂ ಆಗಿದ್ದರೆ ತನ್ನ ಸೋತ ಮಕ್ಕಳನ್ನು ಹೆಚ್ಚು ಆಧರಿಸುತ್ತಿದ್ದರು. ತನ್ನದೇ ಒಂದು ಒಳ್ಳೆಯ ಸೀರೆಯನ್ನು ಕೊಟ್ಟು "ಇವತ್ತು ನೀನು ನನ್ನ ಸೀರೆ ಉಡು" ಅಂತ ಪ್ರೀತಿಯಿಂದಲೇ ಸಂದರ್ಭವನ್ನು ಸಂಭಾಳಿಸುತ್ತಿದ್ದರು. ಯಾರದ್ದೋ ಸೀರೆ ಉಟ್ಟು ನೀನು ತಿರುಗುವುದು ನನಗೆ ಇಷ್ಟವಾಗದಿದ್ದರೂ ಅಮ್ಮನಾಗಿ ಅಂತಹ ವರ್ತನೆಯನ್ನು ಒಪ್ಪುವ. ಆದರೆ ನಿನ್ನ ಅಮ್ಮನ ವರ್ತನೆ ಮಾತ್ರ ಅತ್ಯಂತ ಕ್ರೂರವಾಗಿತ್ತು. ಇದು ಎಂಥ ವಿಚಿತ್ರ ? ತನ್ನ ಹೊಟ್ಟೆಯಿಂದ ಹುಟ್ಟಿದ ಮಕ್ಕಳಲ್ಲೇ ಭೇದಭಾವವನ್ನು ತೋರಿಸುವ ತಾಯಿಯೂ ಇರುತ್ತಾರಾ ? ಹೊರಗಿನ ವೇಷ, ಇರಸ್ತಿಕೆ ನೋಡಿ ಸ್ವಂತ ಮಕ್ಕಳನ್ನು ತೂಗಿ ನೋಡುವ ತಾಯಂದಿರೂ ಇರ್ತಾರಾ ? ನಾನು ಕಣ್ಣಾರೆ ಇಂಥದ್ದೆಲ್ಲ ನೋಡಿರದಿದ್ದರೆ "ಕೆಟ್ಟ ತಾಯಿ ಇರುತ್ತಾಳೆ" ಅಂತ ನಂಬುವುದು ಸಾಧ್ಯವೇ ಇರಲಿಲ್ಲ. ಆ ಮದುವೆಯ ದಿನ ನಿನಗೆ ಮಾಡಿದ ಅವಮಾನವನ್ನು ನಾನಂತೂ ಎಂದೂ ಕ್ಷಮಿಸಲಾರೆ...ಅದು ನಿನಗೆ ಮಾತ್ರವಲ್ಲ - ನನಗೂ ಮಾಡಿದ ಅವಮಾನ ಅಂತ - ನಿನಗೂ ಅನ್ನಿಸಬೇಕಿತ್ತು.."
"ನೋಡಿ, ಸುಮ್ಮನೆ ಕಡ್ಡಿಯನ್ನು ಗುಡ್ಡ ಮಾಡಬೇಡಿ. ನಿಮಗೆ ಎಲ್ಲ ವಿಷಯ ಗೊತ್ತಿಲ್ಲ. ನನ್ನ ಅಮ್ಮ ಎಷ್ಟು ಒಳ್ಳೆಯವಳಿದ್ದಳು... ಗೊತ್ತಾ ? ಅವಳನ್ನು ನಾನು ಕಂಡಷ್ಟು ನೀವು ಕಂಡಿಲ್ಲ. ನನ್ನ ಬಾಲ್ಯದಲ್ಲಿ ಬದುಕಿಗೆ ಬೇಕಾದ ಎಷ್ಟು ಆದರ್ಶಗಳನ್ನು ನನಗೆ ಹೇಳಿ ಕೊಟ್ಟಿದ್ದ ಅಮ್ಮ ಅವಳು...ದಾನ, ಧರ್ಮ, ಕರುಣೆ ಎಲ್ಲವೂ ಅವಳಲ್ಲಿ ಇತ್ತು. ನಾನು ನೋಡಿದ್ದೇನೆ. ಅವಳೇ ಬೆಳೆಸಿದ ಹುಡುಗಿ ನಾನು. ಆದರೆ ಈಗ ಯಾಕೆ ಹೀಗೆ ಬದಲಾದಳೋ...ಹೇಗೆ ಬದಲಾದಳೋ ಅದು ಮಾತ್ರ ನನಗೆ ಗೊತ್ತಿಲ್ಲ. ಆದರೆ ಈ ತಮ್ಮ ತಂಗಿಯರೆಲ್ಲ ಬೆಳೆದು ನಿಂತ ಮೇಲೆ ಅವಳು ಪೂರ್ತಿ ಬದಲಾಗಿ ಬಿಟ್ಟದ್ದು ಮಾತ್ರ ಸುಳ್ಳಲ್ಲ. ಅವಳದ್ದು ಸ್ವಲ್ಪ ಹಿತ್ತಾಳೆ ಕಿವಿ ಮಾರಾಯ್ರೇ..." ಶಾರದಮ್ಮ ಗಂಡನನ್ನು ಶಾಂತಗೊಳಿಸುವ ಧಾಟಿಯಲ್ಲಿ - ಸಹಜವಾಗಿ ಅಮ್ಮನ ವಕಾಲತ್ತಿಗೆ ಹೊರಟಿದ್ದರು.
"ಓ ಶಾರೂ ಶಾರೂ, ನಿನಗೆ ಯಾಕೆ ಅರ್ಥ ಆಗುವುದಿಲ್ಲ ? ಆ ಮನೆಯಲ್ಲಿ ನೀನು ಮಾತ್ರ ಹೇಗೆ ಇಷ್ಟು ಒಳ್ಳೆಯವಳಾದೆ ? ನೀನು ಆಗ ನಿನ್ನ ಅಮ್ಮನಲ್ಲಿ ಕಂಡದ್ದು - ಅದು ಒಳ್ಳೆಯತನ ಅಲ್ಲ; ಅದು ಅಭಾವ ವೈರಾಗ್ಯ. ಆಗ ಅವರಿಗೂ ಕಷ್ಟಗಳಿದ್ದವು. ಅದಕ್ಕೇ ಹೆಚ್ಚು ಹರಾಹುರಿ ಇರಲಿಲ್ಲ. ಯಾವಾಗಲೂ ಶಕ್ತಿಯಿದ್ದಾಗಲೇ ಸಂಯಮದ ಪರೀಕ್ಷೆ ನಡೆಯಬೇಕು. ಬಲವಿಲ್ಲದಿದ್ದಾಗ ಅಲ್ಲ. ಅಥವ ವಿವೇಚನೆಯ ಸಂಸ್ಕಾರ ಇರಬೇಕು. ಹೋಗಲಿ ಬಿಡು...ನಿನ್ನ ಅಮ್ಮನದು ಹಿತ್ತಾಳೆ ಅಲ್ಲ; ಚಿನ್ನದ ಕಿವಿ...ಆಯ್ತಾ ? ಇಲ್ಲಿಗೆ ಸಾಕು ಮಾಡುವ. ಆದರೆ ಇನ್ನು ಮುಂದೆ ಆ ಮನೆಗೆ ನನ್ನನ್ನು ಮಾತ್ರ ಕರೆಯಬೇಡ. ಹಿತ್ತಾಳೆ - ತಾಮ್ರದ ಕಿವಿಯನ್ನು ಮಾತನಾಡಿಸಲು ನೀನು ಅಲ್ಲಿಗೆ ಹೋಗುವುದಾದರೆ ನನ್ನದೇನೂ ಅಭ್ಯಂತರವಿಲ್ಲ...ಸರಿಯಾ ? ಈಗ ಶಾಂತಿ ಮಂತ್ರ ಹೇಳುವ.."
**********----------**********
ಒಂದು ವರ್ಷ ಕಳೆದಿತ್ತು. ಹಳೆಯ ಕಹಿಯನ್ನೆಲ್ಲ ಶಾರದಮ್ಮ ಮರೆತಿದ್ದರು. ಒಮ್ಮೊಮ್ಮೆ ಅಪ್ಪನ ಮನೆ, ಅಮ್ಮನ ನೆನಪೂ ಆಗುತ್ತಿತ್ತು. ತಾನು ಬಾಲ್ಯವನ್ನು ಕಳೆದ ಆ ಮನೆ, ಅಂಗಳ, ಕೆರೆ, ಗದ್ದೆ, ತೋಟ...ತೋಟದ ಮೇಲಿಂದ ಬೀಸುವ ಗಾಳಿ...ಎಲ್ಲವೂ ನೆನಪಾಗುತ್ತಿತ್ತು. ಬದುಕು ಓಡುತ್ತಿತ್ತು.
ಹೀಗಿರುವಾಗ ಶಾರದಮ್ಮನ ಐದನೆಯ ತಂಗಿಯಾದ ದುರ್ಗಿಯ ಮದುವೆ ನಿಶ್ಚಯವಾದ ಸುದ್ದಿ ಬಂದಿತ್ತು. ನಿನ್ನೆ ಅವರ ಹಿರಿಯ ತಮ್ಮನಾದ ಗೋವಿಂದ ಮನೆಗೆ ಬಂದು ಮದುವೆಯ ಹೇಳಿಕೆಯನ್ನು ಹೇಳಿ ಹೋದ ಮೇಲಂತೂ ಶಾರದಮ್ಮನ ಮನಸ್ಸು ಅಪ್ಪನ ಮನೆಯಲ್ಲೇ ಸುತ್ತುತ್ತಿತ್ತು.
ಶಾರದಮ್ಮನು ತನ್ನ ಅಪ್ಪನ ಮನೆಯಲ್ಲಿ ನಾಲ್ಕು ದಿನ ಖುಶಿಯಾಗಿ ಓಡಾಡುವ ಕನಸನ್ನೂ ಕಾಣತೊಡಗಿದ್ದರು. ತನ್ನಲ್ಲಿದ್ದ ಒಂದೇ ಒಂದು ಜರಿಸೀರೆಯನ್ನು ಬಿಸಿಲಿಗೆ ಹಾಕಿ, ಗರಿಗರಿಯಾಗಿರುವಾಗಲೇ ಮಡಿಸಿ, ಸುಕ್ಕು ತೆಗೆಯಲು ಹಾಸಿಗೆಯ ದಿಂಬಿನ ಕೆಳಗೆ ಇಟ್ಟಾಗಿತ್ತು. ಕುತ್ತಿಗೆಯಲ್ಲಿದ್ದ ಒಂದೇ ಒಂದು ಚಿನ್ನ - "ಕರಿಮಣಿ ಸರ" ವನ್ನು ಅಂಟುವಾಳದ ನೀರಿನಲ್ಲಿ ನೆನಸಿ ತೊಳೆದು ಧರಿಸಿದ್ದರು. ತನ್ನ ಇಬ್ಬರು ಹೆಣ್ಣು ಮಕ್ಕಳು, ಮಗ ಕೃಷ್ಣನನ್ನೂ ಕರೆದುಕೊಂಡು ಗಂಡನ ಜೊತೆಗೆ ತನ್ನ ಅಪ್ಪನ ಮನೆಗೆ ಹೊರಡುವ ಸಂಭ್ರಮದ ಅಡಾವುಡಿಯು ಅವರ ನಡಿಗೆಯಲ್ಲೇ ಕಾಣುತ್ತಿತ್ತು.
ಬೆಳಗಿನಿಂದ ತನ್ನತ್ತ ಇಣುಕಿ ಇಣುಕಿ ಓಡುತ್ತಿರುವ ಹೆಂಡತಿಯ ಚಡಪಡಿಕೆ ಗಿರಿರಾಯರಿಗೆ ಅರ್ಥವಾಗಿತ್ತು. ಮುಖದ ಎದುರಿಗೆ ದಿನಪತ್ರಿಕೆಯಿದ್ದರೂ "ಜೊತೆಗೆ ನನ್ನನ್ನೂ ಬರುವಂತೆ ಇನ್ನು ಕೊರೆಯುತ್ತಾಳಲ್ಲ ? ಇವಳಿಗೆ ಯಾಕೆ ಅರ್ಥವಾಗುವುದಿಲ್ಲ ? ಈಗ ಹೇಗೆ ನಿಭಾಯಿಸುವುದು ?" ಅನ್ನುವ ಯೋಚನೆಯು ಮರಳಿ ಹೊರಳುತ್ತಿತ್ತು.
ಅಂದು ಭಾನುವಾರದ ಮಧ್ಯಾಹ್ನದ ಅಡುಗೆಯ ಕೆಲಸ ಮುಗಿಸಿದ ಶಾರದಮ್ಮ ಗಂಡನ ಎದುರಲ್ಲಿ ಬಂದು ಕೂತರು. "ಬೆಳಿಗ್ಗೆಯಿಂದ ಆ ಪತ್ರಿಕೆ ಹಿಡಕೊಂಡು ಕೂತಿದ್ದೀರಲ್ಲ ? ಅರ್ಧ ಗಂಟೆಯಲ್ಲಿ ಓದಿ ಬಿಸಾಡುವಂಥ ಅದನ್ನು ಏನಂತ ಇಡೀ ದಿನ ಓದುತ್ತೀರೋ ?" ಅನ್ನುತ್ತ ಮಾತಿಗೆ ಎಳೆದರು.
"ನೋಡು...ಸತ್ತ ಸುದ್ದಿ ತುಂಬ ಇದೆ. ಯಾರು ಸತ್ತರು; ಎಲ್ಲಿ ಸತ್ತರು; ಹೇಗೆ ಸತ್ತರು...ಇಲ್ಲಿ ನೋಡು..ಒಳ್ಳೆ ಚಡ್ಡಿಯ ಮಾರಾಟದ ಮಳಿಗೆ ಬಂದಿದೆ.." ಅನ್ನುತ್ತ ಗಂಡನು ಪತ್ರಿಕೆಯನ್ನು ತೋರಿಸುವಾಗ ಶಾರದಮ್ಮ ಸಿಡುಕಿದರು.
"ನೋಡಿ, ಸತ್ತ ವಿಷಯವೆಲ್ಲ ಈಗ ಬೇಡ. ನಾಡಿದ್ದು ಮದುವೆ ಉಂಟಲ್ಲ ? ಇಬ್ಬರೂ ಹೋಗಿ ಬರುವ...ಆಗದಾ ?" ಹೆಂಡತಿಯು ಮದುವೆಯ ಪ್ರಸ್ತಾಪ ಎತ್ತಿದ ಕೂಡಲೇ - ಗಿರಿರಾಯರು ಆಕಳಿಸುತ್ತ ಕೂತಲ್ಲಿಂದ ಎದ್ದು ಹೊರಟರು. "ಸ್ನಾನ ಮಾಡಿ ಬರುತ್ತೇನೆ.." ಅನ್ನುತ್ತ ನಡೆದು ಬಿಟ್ಟರು. ಶಾರದಮ್ಮನಿಗೆ ಗಂಡನ ಜೊತೆಗೆ ಅಪ್ಪನ ಮನೆಗೆ ಹೋಗುವ ಆಸೆ. ಆದರೆ ಗಿರಿರಾಯರು ಉಭಶುಭ ಅನ್ನುತ್ತಿರಲಿಲ್ಲ.
ಮಧ್ಯಾಹ್ನದ ಊಟ ಮುಗಿದ ಮೇಲೆ ಅಡಕೆ ಜಗಿಯುತ್ತ ಒರಗಿದ್ದ ಗಿರಿರಾಯರ ಪಕ್ಕದಲ್ಲಿ ಕೂತ ಶಾರದಮ್ಮನ ಬಾಯಲ್ಲಿ ಮತ್ತೊಮ್ಮೆ ಅದೇ ಮಾತು.
"ನೀವು ಹೀಗೆ ಮೌನೇಶ್ವರನ ಹಾಗೆ ಮಾಡಿದರೆ ಹೇಗೆ ? ನನ್ನ ತಮ್ಮನೇ ಬಂದು ಕ್ರಮಪ್ರಕಾರವಾಗಿ ಹೇಳಿ ಹೋಗಿದ್ದಾನಲ್ಲ...ಮದುವೆಗೆ ಒಟ್ಟಿಗೇ ಹೋಗುವ. ನನಗಾಗಿಯಾದರೂ ಬನ್ನಿ..ಒಂದು ಹೇಳಿಕೆ ಬಂದರೆ ಅದಕ್ಕೆ ಮರ್ಯಾದೆ ಅಂತ ಬೇಡವಾ ? ಹಳೆಯದನ್ನೆಲ್ಲ ಎಷ್ಟು ದಿನ ಅಂತ ಎಳೆದಾಡುವುದು ? ಬಂಧುಗಳಲ್ಲಿ ಏನೋ ಒಂದು ಕಟಿಪಿಟಿ ಬರುತ್ತದೆ...ಹೋಗುತ್ತದೆ. ಏನು ? ಮಾತಾಡಿ ಮಾರಾಯ್ರೇ. ನೀವು ಬರುವುದಿಲ್ಲ ಅಂತಾದರೆ ಯಾಕೆ ಅಂತಾದರೂ ಹೇಳಿ...ನನ್ನ ಅಪ್ಪನ ಮನೆಯವರು ಒಡ್ಡರು ಅಂತ ಅಂದುಕೊಂಡೇ ಬನ್ನಿ. ಅವರು ವರ್ತಿಸಿದಂತೆ ನಾವೂ ಒಡ್ಡರ ಹಾಗೆ ವರ್ತಿಸಿದರೆ ನಮಗೂ ಅವರಿಗೂ ವ್ಯತ್ಯಾಸ ಏನು ?" ಶಾರದಮ್ಮ ಗಂಡನ ಬೆನ್ನು ಬಿದ್ದಿದ್ದರು.
"ನೋಡೇ ಶಾರೂ, ನನ್ನ ಅಭಿಪ್ರಾಯ ಏನು ಅಂತ ನಿನಗೆ ಗೊತ್ತಿದೆ. ಯಾಕೆ ಯಾಕೆ ಅಂತ ಪದೇ ಪದೇ ಕೇಳಬೇಡ. ನಮಗೂ ನಿನ್ನ ಮನೆಯವರಿಗೂ ಬಹಳ ವ್ಯತ್ಯಾಸವಿದೆ. ಈಗ ಅವೆಲ್ಲ ವಾದಗಳು ಬೇಡವೇ ಬೇಡ. ಒಂದಂತೂ ಸತ್ಯ. ಯಾವಾಗಲೂ ಸಮಾನರ ನಡುವೆ ಮಾತ್ರ ಸಂಬಂಧ ಇರಿಸಿಕೊಳ್ಳಬೇಕು...ಅಂದರೆ ನಮ್ಮ ಯೋಚನೆಗಳು ಸಮಾನವಾಗಿ ಹೊಂದಬೇಕು..."
"ಹಾಗಂದರೆ ಹೇಗೆ? ಹೊಂದುವುದು, ಹೊಂದಿಸಿಕೊಳ್ಳುವುದು ಎಲ್ಲವುದೂ ಇರಬೇಕಪ್ಪ. ನನ್ನ ಅಪ್ಪನ ಮನೆ ನಿಮಗೆ ಏನೂ ಅಲ್ಲವಾ ? ಕಣ್ಣೆದುರಿಗೆ ಇರುವ ಸಂಬಂಧವನ್ನು ಇಲ್ಲ ಅಂತಂದರೆ ಅಥವ ಬೇಡ ಅಂತಂದರೆ ಅದು - ಅಲ್ಲ ಇಲ್ಲ ಅಂತಾಗುತ್ತದಾ ? ಗಂಡ ಇದ್ದೂ ನಾನೊಬ್ಬಳೇ ಅಪ್ಪನ ಮನೆಗೆ ಹೋದರೆ ನನ್ನ ನೆಂಟರಿಷ್ಟರು ಏನೆಂದುಕೊಳ್ಳುವುದಿಲ್ಲ ಹೇಳಿ ? ಗಂಡ ಬರಲಿಲ್ಲವಾ..ಗಂಡ ಬರಲಿಲ್ಲವಾ ? ಅಂತ ಮೆಟ್ಟುಮೆಟ್ಟಿಗೆ ಕೇಳುವವರಿಗೆಲ್ಲ ವಿವರಣೆ ಕೊಡುತ್ತ ನಾನು ಸಾಯಬೇಕಾ ?"
"ನೋಡು, ಒಂದೇ ಉಸಿರಿಗೆ ಏನೇನೋ ಹೇಳಿ ನನ್ನ ತಲೆ ಕೆಡಿಸಬೇಡ. ಹೌದು. ಗಂಡ ಬರಲಿಲ್ಲ ಅಂತ ಹೇಳು. ಏನೀಗ ? ನೋಡು, ನಿನ್ನ ಅಪ್ಪನ ಮನೆಯ ಬಗ್ಗೆ ನಾನು ಏನೂ ಮಾತಾಡಬಾರದು ಅಂದುಕೊಂಡಿದ್ದೇನೆ. ಆದರೆ ನೀನು ನನ್ನ ಬಾಯಿಗೆ ಕೋಲು ಹಾಕ್ತಾ ಇದ್ದೀಯಲ್ಲ ? ಮಾತಾಡಿ ನನ್ನ ಬಾಯಿಯನ್ನು ಹೊಲಸು ಮಾಡಿಕೊಳ್ಳಲಿಕ್ಕೆ ನನಗೆ ಇಷ್ಟವಿಲ್ಲ. ಆದರೆ ತಂಗಿಯ ಮದುವೆಗಂತ ನೀನು ನಿನ್ನ ಅಪ್ಪನ ಮನೆಗೆ ಹೋದರೆ, ಅದರಿಂದ ನಿನಗೆ ಸಂತೋಷವೂ ಆಗುವುದಾದರೆ ನೀನು ಧಾರಾಳವಾಗಿ ಹೋಗು. ಮಕ್ಕಳನ್ನೂ ಕರೆದುಕೊಂಡು ಹೋಗು. ಇಲ್ಲಿರುವ ನನ್ನ ಊಟತಿಂಡಿಯ ಬಗ್ಗೆ ನೀನು ಚಿಂತೆ ಮಾಡುವುದೇ ಬೇಡ. ನಾನು ನಿಶ್ಚಿಂತೆಯಿಂದ ಇರುತ್ತೇನೆ. ಆದರೆ ನನ್ನನ್ನು ಮಾತ್ರ ಜೊತೆಯಲ್ಲಿ ಬನ್ನಿ ಬನ್ನಿ ಅಂತ ಪೀಡಿಸಬೇಡ. ಗಂಡ ಇದ್ದವರೆಲ್ಲರೂ ತಾವು ಹೋಗುವಲ್ಲಿಗೆಲ್ಲ ತಮ್ಮ ಗಂಡನನ್ನು ಕಟ್ಟಿಕೊಂಡೇ ಹೋಗಿ ತಮ್ಮ ಗಂಡನ ಅಸ್ತಿತ್ವವನ್ನು ಹತ್ತು ಜನರ ಮುಂದೆ ಪ್ರಮಾಣೀಕರಿಸಬೇಕೆಂದೇನೂ ಇಲ್ಲ... ನೋಡು ಶಾರದಾ, ದಯವಿಟ್ಟು ನನ್ನನ್ನು ಬಿಟ್ಟು ಬಿಡು; ಒತ್ತಾಯ ಮಾಡಬೇಡ...ನನಗೆ ಅಲ್ಲಿನ ವಾತಾವರಣ ಹಿಡಿಸುವುದಿಲ್ಲ. ಅಕ್ಕಿ ಬೆಂದಿದೆಯಾ ಅಂತ ನೋಡುವುದಕ್ಕೆ ಬುದ್ಧಿ ಇರುವವರಿಗೆ ಒಂದು ಅಗಳು ಸಾಕಾಗುತ್ತದೆ. ಅದು ಸಾಕಾಗದಿದ್ದರೆ ಅವರು ಅಡುಗೆ ಕಲೆ ಸಿದ್ಧಿಸಿರದ ಹೆಡ್ಡರು ಅಂತ ಅರ್ಥ. ನೀನು ಹೆಡ್ಡಿ ಅಲ್ಲ ಅಂದುಕೊಂಡಿದ್ದೇನೆ." ಅನ್ನುತ್ತ ಕೂತಲ್ಲಿಂದ ಎದ್ದರು.
ಈಗ ಶಾರದಮ್ಮ ಕುಸುಕುಸು ಅಳತೊಡಗಿದರು. ಹೆಂಡತಿಯ ಕಣ್ಣೀರನ್ನು ನೋಡಿದ ಗಿರಿರಾಯರು ಮತ್ತೆ ಕೂತರು. ಹೆಂಡತಿಯ ಪಕ್ಕದಲ್ಲಿಯೇ ಕೂತು "ಯಾಕೆ ಸುಮ್ಮನೆ ಸುಸ್ತು ಮಾಡಿಕೊಳ್ತಿ ಮಾರಾಯ್ತೀ ? ನಾನೊಬ್ಬ ಸಾಮಾನ್ಯ ಗುಮಾಸ್ತ. ಬರೇ ಸಂಬಳದಿಂದ ಬದುಕುವ ಪ್ರಾಣಿ. ನಿನ್ನ ಕಡೆಯವರ ದೃಷ್ಟಿಯಲ್ಲಿ - ಅಡ್ಡ ದಾರಿಯಿಂದ ಕಮಾಯಿ ಮಾಡುವುದನ್ನೂ ತಿಳಿಯದ ಹೆಡ್ಡ ನಾನು. ಇರಲಿ. ಅವರ ಅಭಿಪ್ರಾಯ ಅವರಿಗೆ. ಇನ್ನು, ಮದುವೆ ಮನೆ ಅಂದ ಮೇಲೆ - ಅಲ್ಲಿ ನಿನ್ನ ಮನೆಯಲ್ಲಿ ದೊಡ್ಡ ದೊಡ್ಡ ನಗದು ಸಾಹುಕಾರರು ಸೇರುತ್ತಾರೆ. ನಿನ್ನ ಅಪ್ಪ ಅಮ್ಮ ತಮ್ಮ ತಂಗಿಯರೆಲ್ಲರೂ ಬಂದವರ ಮುಖ ನೋಡುವ ಮೊದಲು ಬಂದವರ ಕಿಸೆಯ ದಪ್ಪ ಅಳೆಯುವವರು. ಅವರ ಮರ್ಯಾದೆಯ ಅಳತೆಗೋಲಿಗೆ ನಾವಂತೂ ಸಿಕ್ಕುವುದಿಲ್ಲ. ನನ್ನ ದೃಷ್ಟಿಯಲ್ಲಿ, ಮರ್ಯಾದೆ ಇಲ್ಲದಲ್ಲಿಗೆ ಹೋಗಬಾರದು ಶಾರೂ. ಸತ್ಯ ಹೇಳುವುದಾದರೆ ನೀನು ಹೋಗುವುದೂ ನನಗೆ ಇಷ್ಟವಿಲ್ಲ. ಯಾಕೆಂದರೆ ಅಲ್ಲಿ ನಿನಗೂ ಪ್ರೀತಿ ಸಿಗುವುದಿಲ್ಲ; ಮರ್ಯಾದೆ ಕೊಡುವುದು ಯಾರಿಗೆ ಮತ್ತು ಹೇಗೆ ಅನ್ನುವುದು ಆ ಪಡಪೋಶಿಗಳಿಗೆ ಮೊದಲೇ ಗೊತ್ತಿಲ್ಲ. ಇಷ್ಟಾಗಿಯೂ ಹೋಗಲೇ ಬೇಕೆಂದಿದ್ದರೆ ನೀನು ಹೋಗು; ನನ್ನನ್ನು ಮಾತ್ರ ಎಳೆಯಬೇಡ. ಈಗ ಸದ್ಯಕ್ಕಂತೂ - ನನ್ನ ಎದುರಿಗೆ ಕೂತು ಅತ್ತು ಕರೆದು ರಂಪ ಮಾಡಬೇಡ ಮಾರಾಯ್ತಿ... ಆಯ್ತಾ ?" ಗಿರಿರಾಯರು ಹೆಂಡತಿಯ ಗಲ್ಲವನ್ನೆತ್ತಿ ಕೆನ್ನೆ ಹಿಂಡಿದರು.
ಗಂಡನ ಕೈಯನ್ನು ಬಿಗಿಯಾಗಿ ಹಿಡಿದುಕೊಂಡ ಶಾರದಮ್ಮ " ಸರಿ. ನಿಮಗೆ ಹಿಂಸೆ ಕೊಟ್ಟು ನಾನ್ಯಾಕೆ ನಿಮ್ಮನ್ನು ಎಳಕೊಂಡು ಹೋಗುವುದು ? ಆದರೆ ಮನೆಯಿಂದ ಯಾರೂ ಹೋಗದಿದ್ದರೆ ತಪ್ಪಾಗುತ್ತದೆ. ಆಡಿಕೊಳ್ಳುವವರಿಗೆ ಎಡೆಯಾಗುತ್ತದೆ. ಆದ್ದರಿಂದ ಇಬ್ಬರು ಮಕ್ಕಳನ್ನು ಮಾತ್ರ ಕಟ್ಟಿಕೊಂಡು ನಾನು ಹೋಗಿ ಬರುತ್ತೇನೆ...ಜಾನಕಿ ನಿಮ್ಮ ಜೊತೆ ಇರಲಿ. ಹೇಳಿದಷ್ಟು ಮನೆ ಕೆಲಸ ಮಾಡಲು ಅವಳಿಗೆ ಗೊತ್ತು. ನಾನು ಬರುವವರೆಗೆ ನಾಲ್ಕೈದು ದಿನ ನಿಮ್ಮ ಊಟಕ್ಕೆ..." ಅನ್ನುವಾಗಲೇ ತಡೆದ ಗಿರಿ, "ಅಯ್ಯೋ ಮಾರಾಯ್ತಿ, ನಿನಗೆ ಈಗ ಇರುವ ಚಿಂತೆಯೇ ಹೊರಲಾರದಷ್ಟಿದೆ. ಅದರ ಮಧ್ಯ ನನ್ನ ಚಿಂತೆಯನ್ನೂ ಸೇರಿಸಿಕೊಳ್ಳಬೇಡ. ನಾನು ಗಮ್ಮತ್ತಿನಲ್ಲಿ ಗಂಜಿ ಮಾಡಿಕೊಂಡು ಉಣ್ಣುತ್ತೇನೆ. ಜೊತೆಗಿರುವ ಜಾನಕಿಗೂ ಅದೇ ನಡೆಯುತ್ತದೆ. ನಾಲ್ಕು ದಿನ ಅಲ್ಲವಾ ? ನೀನು ನಿಶ್ಚಿಂತೆಯಿಂದ ಹೋಗಿ ಬಾ...ಹಾಂ...ಆದರೆ ಈಗ ಕಣ್ಣಿಂದ ಗಂಗಾ ಭಾಗೀರಥಿ ಹರಿಸಿದ ಹಾಗೆ, ಅಲ್ಲಿ ಅಪ್ಪನ ಮನೆಯಲ್ಲಿ ಯಾವುದೇ ಸಂದರ್ಭದಲ್ಲೂ ಅಳುವುದಿಲ್ಲ ಅಂತ ನನಗೆ ಮಾತುಕೊಡು...ಯಾಕೆಂದರೆ ಅಲ್ಲಿ ನಿನ್ನನ್ನು ಸಮಾಧಾನ ಪಡಿಸಲಿಕ್ಕೆ ಯಾರೂ ಇರುವುದಿಲ್ಲ...ನಗುವವರ ಎದುರು ಎಂದೂ ಅಳಬಾರದು. ಅತ್ತರೆ ನಗುವವರ ಎದುರು ಎಡವಿ ಬಿದ್ದಂತೆ ಆಗುತ್ತದೆ.."
ಗಂಡನ ಮಾತಿಗೆ ನಕ್ಕ ಶಾರದಮ್ಮ ಮಾತು ಕೊಡುವಂತೆ ಗಿರಿರಾಯರು ಚಾಚಿದ ಕೈಮೇಲೆ ತನ್ನ ಕೈಯ್ಯನ್ನಿರಿಸಿ "ಅಲ್ಲಿ ಯಾರಾದರೂ ಯಾಕೆ ನನ್ನನ್ನು ಅಳುವಂತೆ ಮಾಡುತ್ತಾರೆ ? ನಿಮಗೆ ಬರೀ ತಪ್ಪು ಅಭಿಪ್ರಾಯ ಅಚ್ಚಾಗಿ ಹೋಗಿದೆ...ಅಷ್ಟೆ. ದಿನ ಬದಲಾದ ಹಾಗೆ ಎಲ್ಲ ಜನರೂ ಬದಲಾಗ್ತಾರೆ..." ಅನ್ನುತ್ತ ಅಲ್ಲಿಂದ ಎದ್ದರು. "ಆಗಲಿ; ಆಗಲಿ..ಬದಲಾಗಲಿ..." ಅನ್ನುತ್ತ ಗಿರಿರಾಯರು ನಕ್ಕರು.
ಅಂತೂ ಶಾರದಮ್ಮ ಅಪ್ಪನ ಮನೆಗೆ ಹೊರಟರು. ನಾಲ್ಕು ವರ್ಷದ ಸಣ್ಣ ಮಗ ಕೃಷ್ಣ, ಐದನೇ ತರಗತಿ ಓದುತ್ತಿದ್ದ ಮಗಳು ಲಲಿತೆಯೊಂದಿಗೆ ಬಸ್ ನಿಲಾಣಕ್ಕೆ ಬಂದರು. ಅವರ ಬಟ್ಟೆಬರೆಯ ಪೆಟ್ಟಿಗೆ ಹಿಡಿದುಕೊಂಡು ಜೊತೆಗೆ ಬಂದ ಗಿರಿರಾಯರು ಅವರನ್ನು ಬಸ್ ಹತ್ತಿಸಿ, "ಒಂದೇ ಗಂಟೆಯ ಪ್ರಯಾಣ. ಕಂಡಕ್ಟರನಿಗೆ ಹೇಳಿದ್ದೇನೆ. ನಿಮ್ಮನ್ನು ಸರಿಯಾದ ಜಾಗದಲ್ಲಿ ಇಳಿಸುತ್ತಾರೆ. ಜಾಗ್ರತೆ. ಅಪ್ಪನ ಮನೆ ಅಂತ ಮೊದಲಿನ ಸಲಿಗೆ ತೋರಿಸಬೇಡ; ಸಣ್ಣ ಹುಡುಗಿಯಾಗುವ ಉಮ್ಮೇದು ಬೇಡ. ಗಂಭೀರವಾಗಿರು. ಮದುವೆಯ ದಿನ ಮಾತ್ರ ನೀನು ಸ್ವಲ್ಪ ದೂರದೂರದಲ್ಲೇ ಇರು. ಅತಿ ಉತ್ಸಾಹ ತೋರಿಸ್ಬೇಡ - ಆಯ್ತಾ ? ಮಕ್ಳು ಜಾಗ್ರತೆ. ಏನಾದರೂ ಬೇಸರವಾದರೆ ನನ್ನನ್ನು ನೆನಪಿಸಿಕೋ. ಹೇಗೆ ಗೊತ್ತಾ?" - ಅಂತ ಕಿವಿಯ ಹತ್ತಿರ ಬಾಗಿ "ಆಹಾ ನನ್ನ ಮದುವೆಯಂತೆ..." ಅಂತ ಹಾಡುತ್ತ ನಾನು ನಿನ್ನನ್ನು ಸುತ್ತುತ್ತಿದ್ದುದನ್ನು ನೆನಪಿಸಿಕೋ. ಅಪ್ಪನ ಮನೆಯ ಸುಖದಲ್ಲಿ ತೇಲ್ತಾ ತೇಲ್ತಾ ನಾನು ಮತ್ತು ಮಗಳು ಜಾನಕಿ ಇಲ್ಲಿ ನಿಮಗಾಗಿ ಕಾಯುತ್ತಿದ್ದೇವೆ ಅಂತ ಮರೀಬೇಡ ಮತ್ತೆ...ಏನು ? ಮಕ್ಕಳು ಜಾಗ್ರತೆ.." ಇನ್ನೂ ಹೇಳುತ್ತಿರುವಾಗಲೇ "ರೈಟ್ ರೈಟ್.." ಅನ್ನುವ ಕಂಡಕ್ಟರ್ ಕೂಗಿನೊಂದಿಗೆ ಬಸ್ ಹೊರಟಿತು.
**********----------**********
"ಜಾನಕೀ..." ಗಿರಿರಾಯರು ಮಗಳನ್ನು ಕರೆಯುತ್ತ ಪಡಸಾಲೆಗೆ ಬಂದರು. "ಏನಮ್ಮ ? ಕರೆದರೂ ಕೇಳದಷ್ಟು ಯಾವ ಪುಸ್ತಕದಲ್ಲಿ ಮುಳುಗಿದ್ದೀ ?" ಕಿವಿಯ ಹತ್ತಿರದಲ್ಲಿಯೇ ಅಪ್ಪನ ದ್ವನಿ ಕೇಳಿ ಕುಮಟಿ ಬಿದ್ದ ಜಾನಕಿ "ಹೋಗಪ್ಪ; ನಾನು ಎಷ್ಟು ಹೆದರಿದೆ ಗೊತ್ತಾ ? ತ್ರಿವೇಣಿಯವರ ಕಾದಂಬರಿಯಲ್ಲಿ ಮುಳುಗಿದ್ದ ನನಗೆ ನೀನು ಕರೆದದ್ದು ಕೇಳಿಸಲೇ ಇಲ್ಲ..." ಅಂತ ಮಗಳು ಹುಸಿಮುನಿಸು ತೋರಿದಾಗ "ಓದುವವಳು ಉತ್ತಮ ವಿಷಯಗಳಿರುವ ಪುಸ್ತಕವನ್ನೇ ಓದು. ಸುಮ್ಮನೆ ಕಾಲಕ್ಷೇಪಕ್ಕಾಗಿ ಓದಿದರೆ ಯಾವ ಉಪಯೋಗವೂ ಆಗುವುದಿಲ್ಲ. ಹೋಗಲಿ; ನಿನ್ನ ಅಮ್ಮ ಮದುವೆಗಂತ ಹೋಗಿ ನಾಲ್ಕು ದಿನ ಆಯ್ತಲ್ಲ ? ಹೌದು. ಇವತ್ತು ಮದುವೆ. ಅಂದರೆ ನಾಳೆಯಾದರೂ ವಾಪಸ್ ಬರಬಹುದು. ಇವತ್ತು ರಾತ್ರಿಗೆ..ಊಟಕ್ಕೆ" ಅನ್ನುವಾಗಲೇ ಜಾನಕಿಯು ಅಪ್ಪನನ್ನು ತಡೆದು "ರಾತ್ರಿಗೆ ಅನ್ನ, ಬೇಳೆ ಸಾರು ಮಾಡ್ತೇನಪ್ಪ. ಸಾಕಲ್ಲವಾ ?" ಅಂದಳು. "ಸಾಕೇನು ? ಬೇಕಾದಷ್ಟಾಯಿತು ಜಾನಕೀ. ಮಜ್ಜಿಗೆ ಹೇಗೂ ಉಂಟಲ್ಲ.." ಅಂದರು. ಮನಸ್ಸಿನಲ್ಲೇ "ಪರವಾಗಿಲ್ವೇ ? ನನ್ನ ಹೆಂಡತಿ ತನ್ನ ಮಗಳಿಗೆ ಒಂದಷ್ಟು ಅಡುಗೆ ಕಲಿಸಿದ್ದಾಳೆ. ಭೇಶ್; ಭೇಶ್..." ಅಂದುಕೊಳ್ಳುತ್ತ ರಾಯರು ಚಾವಡಿಗೆ ಬಂದರು.
ಅಷ್ಟರಲ್ಲಿ ಹಿತ್ತಲಿನಲ್ಲಿ ಹಸುಕರುವನ್ನು ಕಟ್ಟಿದ್ದು ನೆನಪಾಗಿ ಅವನ್ನು ಹಟ್ಟಿಯಲ್ಲಿ ಕಟ್ಟಿಬಿಡುವ ಅಂದುಕೊಂಡ ರಾಯರು ಹಿತ್ತಲಿಗೆ ನಡೆದರು. ಅವನ್ನು ಹಟ್ಟಿಯಲ್ಲಿ ಕಟ್ಟಿ ಬಾಣಿಗೆ ಒಂದಷ್ಟು ಕಲಗಚ್ಚು, ಎದುರಿಗೆ ಒಂದು ಹಿಡಿ ಒಣ ಹುಲ್ಲನ್ನು ಹಾಕಿ ಮನೆಯೊಳಗೆ ಹೆಜ್ಜೆಯಿಡುವಾಗ ಗೇಟು ತೆಗೆದ ಶಬ್ದವಾಗಿ ಹಿಂತಿರುಗಿ ನೋಡಿದರು. "ಅರೆ, ಶಾರದೆ ಮತ್ತು ಮಕ್ಕಳು ಬಂದೇ ಬಿಟ್ಟರಲ್ಲ ? ಅಂದರೆ ಮದುವೆಯ ದಿನ ಸಂಜೆಯೇ ಹೊರಟು ಬಂದಿದ್ದಾರೆ..." ಅಂದುಕೊಳ್ಳುತ್ತ "ಬನ್ನಿ ಬನ್ನಿ; ಮದುವೆಯ ಸಿಹಿ ಕಜ್ಜಾಯವನ್ನು Fresh ಆಗಿರುವಾಗಲೇ ಮನೆಯಲ್ಲಿದ್ದ ಬಡಪಾಯಿಗಳು ತಿನ್ನಲಿ ಅಂತ ಗಂಟು ಕಟ್ಟಿಕೊಂಡು, ಇವತ್ತೇ ಹೊರಟು ಬಂದರಾ ? ಅಥವ ನೀವು ಮಾತ್ರ ತಿಂದು ಬಂದಿರಾ ?" ಅನ್ನುತ್ತ ಹೆಂಡತಿಯ ಕೈಯಲ್ಲಿದ್ದ ಪೆಟ್ಟಿಗೆಯನ್ನು ತೆಗೆದುಕೊಂಡರು. ಎತ್ತಿಕೊಂಡಿದ್ದ ಕೃಷ್ಣನನ್ನು ಕೆಳಗಿಳಿಸಿ ಉಸ್ ಎನ್ನುತ್ತ ಜಗಲಿಯಲ್ಲೇ ಕೂತರು - ಶಾರದಮ್ಮ. ಅಮ್ಮನ ಧ್ವನಿಯನ್ನು ಕೇಳಿದ ಜಾನಕಿಯು ಓಡಿಹೋಗಿ ಒಂದು ಚಂಬಿನಲ್ಲಿ ಕುಡಿಯುವ ನೀರನ್ನು ತಂದಿಟ್ಟಳು. ಗಟಗಟ ಕುಡಿದ ಶಾರದಮ್ಮ ಅಲ್ಲೇ ಒರಗಿ ಕೂತರು. ಆಗಲೇ ಕೃಷ್ಣ ಓಡಿಹೋಗಿ ಅಪ್ಪನ ತೊಡೆಯೇರಿದ್ದ. ಲಲಿತೆಯೂ ಅಪ್ಪನಿಗೆ ಅಂಟಿಕೊಂಡು ಕುಳಿತಿದ್ದಳು. ಹಿರಿಯ ಮಗಳು ಜಾನಕಿ ಮಾತ್ರ ಅಮ್ಮನ ಪಕ್ಕ ಸೇರಿಕೊಂಡಳು.
ರಾಯರು ಹೆಂಡತಿಯ ಮುಖವನ್ನೇ ನೋಡುತ್ತಿದ್ದರು. "ಏನು ಶಾರೂ, ನಿನ್ನನ್ನು ನೋಡಿದರೆ ಬಹಳ ಆಯಾಸವಾದ ಹಾಗೆ ತೋರುತ್ತಿದೆ...ಮದುವೆ ಮನೆಯಲ್ಲಿ ಸಿಕ್ಕಾಪಟ್ಟೆ ಓಡಾಟವಾ ? ನೀನೇ ತಿರುಗಣೆಯಾ ? ನಿನ್ನದೇ ಕಾರುಬಾರಾ ?" ಅನ್ನುತ್ತ ಕಣ್ಣು ಮಿಟುಕಿಸಿದರು. ಆಗ ಬಾಯಿ ಹಾಕಿದ ಚಿಕಣಿ ಲಲಿತೆಯು "ಇಲ್ಲ ಅಪ್ಪ, ನೀನು ಯಾವುದಕ್ಕೂ ಮುಂದೆ ಮುಂದೆ ಬರಬೇಡ ಅಂತ ಹೇಳಿ ಆ ಕೆಟ್ಟ ಅಜ್ಜಿಯು ಅಮ್ಮನಿಗೆ ಹೆದರಿಸಿತ್ತು. ಆಗ ಅಮ್ಮ ಎಷ್ಟು ಮರಕಿದಳು ಗೊತ್ತಾ ? ಪಾಪದ ಅಮ್ಮ ... ಆ ಅಜ್ಜಿಯ ಮನೆಗೆ ಹೋಗುವುದೇ ಬೇಡ... " ಅಂದಾಗ ಶಾರದಮ್ಮ ಮಗಳನ್ನು ಗದರಿದರು. "ದೊಡ್ಡವರ ವಿಷಯಕ್ಕೆಲ್ಲ ಮಕ್ಕಳು ತಲೆ ಹಾಕಬಾರದು; ನೀನು ಹೋಗಿ ಕೈಕಾಲು ತೊಳೆದು ಅಂಗಿ ಬದಲಾಯಿಸು...ಹೋಗು.." ಅಂತ ಲಲಿತೆಗೆ ಬೆದರಿಸುವಂತೆ ಕಣ್ಣು ಬಿಟ್ಟಳು. ಆದರೂ ಅಪ್ಪನನ್ನು ಬಿಟ್ಟು ಅಲುಗದ ಲಲಿತೆಯು "ಅಪ್ಪ, ನಾನೂ ಅತ್ತೆ. ಯಾಕೆ ಗೊತ್ತಾ ?" ಅಂದಳು. "ಯಾಕೆ ಮಗಳೇ ?" ಅನ್ನುತ್ತ ಗಿರಿರಾಯರು ಲಲಿತೆಯನ್ನು ಎತ್ತಿ ತಮ್ಮ ಇನ್ನೊಂದು ತೊಡೆಯ ಮೇಲೆ ಕೂರಿಸಿಕೊಂಡರು.
"ಅಪ್ಪ, ಅಜ್ಜಿಯ ಮನೆಯ ಹಟ್ಟಿಯಲ್ಲಿದ್ದ ಎಮ್ಮೆಯನ್ನು ಯಾರೋ ನಾಲ್ಕು ಜನರು ದರದರ ಎಳಕೊಂಡು ಹೋದರು. ಆಮೇಲೆ ಎದುರಿನ ಗದ್ದೆಯಲ್ಲಿ ಹಾಕಿ ಅದರ ಸುತ್ತಲೂ ಕೂತು ಅದರ ಚರ್ಮವನ್ನು ಕಿತ್ತರು. ಗದ್ದೆ ತುಂಬ ರಕ್ತ. ಆಮೇಲೆ ಆ ಎಮ್ಮೆಯನ್ನು ತುಂಡು ಮಾಡಿ ಚೂರು ಚೂರು ತಿಂದರು. ಚರ್ಮ ಸುಲಿಯುವಾಗ ಆ ಎಮ್ಮೆಯು ಜೋರಾಗಿ ಕೂಗಿತು. ಅಂಬಾ ಅಮ್ಮಾ ಅಂತ ಅರಚುತ್ತಿತ್ತು. ಆದರೂ ಅದನ್ನು ಬಿಡಲಿಲ್ಲ. ಆಮೇಲೆ ಎಮ್ಮೆ ಸತ್ತೇ ಹೋಯಿತು ಅಪ್ಪಾ...ಆ ಎಮ್ಮೆಯನ್ನು ಹಟ್ಟಿಯಿಂದ ಹೊರಗೆ ಹಾಕಿಸಿ ಎಳಕೊಂಡು ಹೋಗಲು ಕೊಟ್ಟ ಆ ಅಜ್ಜಿ, ಚಿಕ್ಕಮ್ಮ, ಮಾವ ...ಎಲ್ಲರೂ ಕೆಟ್ಟವರು...ನಾನು ಇನ್ನು ಮೇಲೆ ಅಲ್ಲಿಗೆ ಹೋಗುವುದಿಲ್ಲ..." ಅನ್ನುತ್ತ ಲಲಿತೆಯು ಮತ್ತೊಮ್ಮೆ ಬಿಕ್ಕಳಿಸಿದಳು. ಮಗಳನ್ನು ತಬ್ಬಿಕೊಂಡು ಸಂತೈಸಿದ ಗಿರಿರಾಯರು ಹೆಂಡತಿಯತ್ತ ತೀಕ್ಷ್ಣವಾಗಿ ನೋಡುತ್ತ ಅಲ್ಲಿಂದ ಎದ್ದು ಹೋದರು.
*****-----*****
ರಾತ್ರಿಯ ಊಟದ ನಂತರದ ಕಸ ಮುಸುರೆಯನ್ನೆಲ್ಲ ಮುಗಿಸಿ ಶಾರದಮ್ಮ ಚಾವಡಿಗೆ ಬಂದು ಕೂತರು. ಮಕ್ಕಳೆಲ್ಲ ಮಲಗಿ ನಿದ್ರಿಸುತ್ತಿದ್ದರು. ಮೌನವಾಗಿ ಕೂತ ಹೆಂಡತಿಯತ್ತ ಸರಿದು ಆಕೆಗೆ ಒರಗಿಕೊಂಡೇ ಕೂತ ಗಿರಿರಾಯರು "ಮದುವೆಯ ಪುರಾಣ ಈಗ ಹೇಳು..." ಅಂದರು.
"ಅಲ್ಲ...ಎಂಥ ಕೆಲಸ ಮಾಡಿಬಿಟ್ಟರು ನೋಡಿ...ಮದುವೆಯ ದಿನ ಬೆಳಬೆಳಿಗ್ಗೆ ಆ ಎಮ್ಮೆಯನ್ನು ಹಿಸಿದು ಕಣ್ಣೆದುರೇ ತಿಂದು ಬಿಟ್ಟರಲ್ಲ ? ಮದುಮಗಳಾದ ನನ್ನ ತಂಗಿಗೆ ಆ ಶಾಪ ಬಡಿಯದಿದ್ದರೆ ಸಾಕು..."
"ಯಾಕೆ ? ಆ ಎಮ್ಮೆಯಿಂದ ಅವರಿಗೆಲ್ಲ ಏನು ತೊಂದರೆ ಆದದ್ದು ?"
"ನೋಡಿ, ಅದಕ್ಕೆ ಹುಶಾರಿರಲಿಲ್ಲ. ಅದರ ಕಾಲಿಗೆ ಏನೋ ಗಾಯವಾಗಿ ತುಂಬ ದಿನದಿಂದ ಆ ಎಮ್ಮೆ ಮಲಗಿದಲ್ಲಿಯೇ ಇತ್ತಂತೆ. ಮಲಗಿ ಮಲಗಿ ಎಮ್ಮೆಯ ಮೈಯಲ್ಲೆಲ್ಲ ವ್ರಣವಾಗಿ ಮೈಯೆಲ್ಲ ಕೆಂಪು ಕೆಂಪಾಗಿತ್ತು. ಸ್ವಲ್ಪ ವಾಸನೆಯೂ ಬರುತ್ತಿತ್ತು. ಅಂಗಳದಲ್ಲೇ ಹಾಕಿದ್ದ ಮದುವೆಯ ಚಪ್ಪರಕ್ಕೆ ಆ ಹಟ್ಟಿಯಿಂದ ಕೆಟ್ಟ ವಾಸನೆಯೂ ಬರುತ್ತಿತ್ತು. ಅದಕ್ಕೇ ಎಮ್ಮೆಯನ್ನು ಎತ್ತಿ ಹೊರಗೆ ಹಾಕಿಸಿ ಮದುವೆಯ ದಿನವೇ ವಿಲೇವಾರಿಯನ್ನೂ ಮಾಡಿಬಿಟ್ಟರು. ...ಎಂಥಾ ಎಮ್ಮೆ ? ಛೆ...ನೋಡಿ, ಆ ದಿನ ಬೆಳಿಗ್ಗೆಯೂ ಅದರ ಹಾಲು ಹಿಂಡಿದ್ದರು. ಆಗ ನಾನು ಅಲ್ಲೇ ಇದ್ದೆ. ಕಣ್ಣೀರು ಸುರಿಸುತ್ತ ಮಲಗಿದಲ್ಲಿಯೇ ಆ ಎಮ್ಮೆಯು ಹಾಲು ಕೊಟ್ಟಿತ್ತು..." ಶಾರದಮ್ಮ ಬಿಕ್ಕಿದರು. ಹೆಂಡತಿಯನ್ನು ಅಪ್ಪಿಕೊಂಡ ಗಿರಿರಾಯರು "ಛೆ...ಎಂತಹ ರಾಕ್ಷಸತನ...?" ಎಂದು ಗದ್ಗದರಾದರು.
"ಬೀಗರ ಕಡೆಯವರು ಬರುವಾಗ ರೋಗಿಷ್ಟವಾದ ಆ ಎಮ್ಮೆಯು ಅಲ್ಲಿದ್ದರೆ ಅದು ತಮ್ಮ ಘನತೆಗೆ ಕುಂದು ಅಂತ ನಮ್ಮವರೇ ಕೆಲವರು ತಕೊಂಡ ತೀರ್ಮಾನ ಅದು. ಅಷ್ಟಿದ್ದರೆ ಆ ಎಮ್ಮೆಯನ್ನು ನಾಲ್ಕು ದಿನ ಮೊದಲೇ ಸ್ವಲ್ಪ ದೂರದಲ್ಲಿ - ಪಕ್ಕದ ಮನೆಯ ಹಟ್ಟಿಯಲ್ಲಿ ಇರಿಸಬಹುದಿತ್ತು. ಹಾಲು ಕೊಟ್ಟ ಕೃತಜ್ಞತೆಗೆ ಕೊನೆಯ ವರೆಗೆ ಎಮ್ಮೆಗೆ ಚಿಕಿತ್ಸೆಯನ್ನಾದರೂ ಕೊಡಿಸಬಹುದಿತ್ತು...ಆದರೆ ಹಸಿಯಾಗಿ ತಿನ್ನುವವರಿಗೆ ಅದನ್ನು ಎತ್ತಿ ಕೊಟ್ಟರಲ್ಲ ? ಅದೂ ಮದುವೆಯ ಶುಭಕಾರ್ಯದ ಹೊತ್ತಿನಲ್ಲಿ ?..." ಹೊಟ್ಟೆ ತೊಳೆಸಿದಂತಾಗಿ ಬಚ್ಚಲಿಗೆ ಓಡಿದ ಶಾರದಮ್ಮ ಅತ್ತು ಹಗುರಾಗಿಯೇ ಬಂದರು. "ನೋಡಿ, ಅಲ್ಲಿ ಅಷಡ್ಡಾಳವೊಂದು ನಡೆಯುತ್ತಿದೆ ಅನ್ನಿಸಿದರೂ ನಾನು ಮಾತಾಡಲಿಲ್ಲ. ಮೊದಲೇ ವಕ್ರವಾಗಿ ನನ್ನನ್ನು ನೋಡುವವರಿಗೆ ಏನೇನೋ ಉಚಿತ ಸಲಹೆ ಕೊಟ್ಟು ನಾನ್ಯಾಕೆ ಅವರಿಂದ ಬೈಸಿಕೊಳ್ಳುವುದು ಅಂತ ನಾನು ಒಳಗೆ ಹೋಗಿ ಕಣ್ಣು ಮುಚ್ಚಿಕೊಂಡು ಕೂತುಬಿಟ್ಟೆ. ಒಂದು ಕಡೆ, ಈ ಮಾಣಿ ಕೃಷ್ಣನಂತೂ ಅಲ್ಲಿಗೆ ಹೋದ ಮೇಲೆ ಒಂದೇ ಸಮನೆ ಅಳುತ್ತಿತ್ತು. ನನಗೆ ಈ ಮಾಣಿಯನ್ನು ಸುಧಾರಿಸುವುದೇ ಆಗಿ ಹೋಯಿತು...ಅದರ ಮೇಲೆ "ನಿನ್ನ ಮಾಣಿಯದ್ದು ಎಂಥ ರಗಳೆ ಮಾರಾಯ್ತೀ ? ಅದಕ್ಕೆ ಎಂತ ಹುಶಾರಿಲ್ಯಾ ? ಅದು ಒರಲುದನ್ನು ಕೇಳಿ ಕೇಳಿ ಸಾಕಾಯ್ತು.." ಅಂತ ಎಲ್ಲರದೂ ಅಸಮಾಧಾನ. ನನ್ನ ಅಮ್ಮನಂತೂ - ಮಗುವನ್ನು ಎತ್ತಿಕೊಂಡು ಸಮಾಧಾನ ಪಡಿಸುವುದನ್ನು ಬಿಟ್ಟು "ನಿನ್ನ ಮಾಣಿನ ಕಟ್ಕಂಡ್ ನೀನು ಒಳಗೆ ಹೋಗು ಶಾರದಾ...ನನಗೆ ಈ ರಗಳೆ ಕೇಳಿ ಕೇಳಿ ಸಾಕಾಗಿದೆ.." ಅಂತ ಹೇಳಿಯೇ ಬಿಟ್ಟಳು. ಆಗ ನಿಜವಾಗಿ ನನಗೆ ನಿಮ್ಮ ಮಾತಿನ ನೆನಪಾಯಿತು ರೀ..."ಅಹಾ ನನ್ನ ಮದ್ವೆಯಂತೆ..." ಅಂತ ನೆನಸಿಕೊಂಡು ನಗು ಬರಿಸಿಕೊಂಡೆ. ಅಳಲಿಲ್ಲ. ಬಹುಶಃ ಅಳುವ ಬದಲು ನಕ್ಕೆ."
ಕ್ಷಣಕಾಲ ಮೌನವಾಗಿದ್ದ ಗಿರಿರಾಯರು "ನೋಡು...ಮಾಡಿದವರ ಪಾಪ ಆಡಿದವರ ಬಾಯಲ್ಲಿ ಅಂತಾರೆ. ಅಲ್ಲಿನ ಹಣೆ ಬರಹ ನನಗೆ ಗೊತ್ತಿಲ್ಲದ್ದೇನಲ್ಲ. ಹೋಗಲಿ; ನಿನಗೀಗ ಸುಸ್ತಾಗಿದೆ... ವಿಶ್ರಾಂತಿ ತಕೋ, ನಾಳೆ ಮಾತಾಡುವ.." ಅಂದರು.
"ನನಗೆ ಇವತ್ತು ರಾತ್ರಿಯೆಲ್ಲ ನಿದ್ದೆ ಬರಲಿಕ್ಕಿಲ್ಲ ಮಾರಾಯರೇ. ಆ ಎಮ್ಮೆ, ಅದರ ಕಣ್ಣೀರು ಇಳಿಯುತ್ತಿದ್ದ ಮುಖವೇ ತಲೆ ತುಂಬ ತುಂಬಿದೆ...ಜೀವ ಇರುವಾಗಲೇ ಅದನ್ನು ಹರಿದು ತಿನ್ನಲು ಆ ಜನರಿಗೆ ಮನಸ್ಸಾದರೂ ಹೇಗೆ ಬಂತು ? "
"ನಿನ್ನ ವಾದವೇನೋ ಚೆನ್ನಾಗಿದೆ. ತಿಂದವರದ್ದೇ ತಪ್ಪು; ಬುದ್ಧಿ ಇಲ್ಲದವರಿಗೆ ಅದನ್ನು ಕೊಟ್ಟವರದ್ದಲ್ಲ...ಅಲ್ವಾ ? ಅವರಿಗೆಲ್ಲ ಇಂತಹ ಕೊಳೆತ, ಹಳಸಿದ ಆಹಾರವನ್ನೇ ಕೊಟ್ಟು ಕೊಟ್ಟು ಆ ಜನರನ್ನು ಅಲ್ಲೇ ಇಟ್ಟದ್ದು ನಮ್ಮಂತವರು. ಒಳ್ಳೆಯ ಆಹಾರ ಎಂದರೇನೆಂದು, ಒಳ್ಳೆಯ ರುಚಿಯೇ ಗೊತ್ತಿಲ್ಲದ ಹಾಗೆ ಅವರನ್ನು ಒತ್ತಿ ಇಟ್ಟದ್ದೂ ನಾವೇ. ಅವರಿಗೆಲ್ಲ ಒಳ್ಳೆಯ ಊಟ ಸಿಗುವಂತೆ ಮಾಡಿದ್ದರೆ ಅವರೂ ತಿನ್ನುತ್ತಿದ್ದರು. ಪಡೆದ ಸೇವೆಯನ್ನೂ ಮರೆತು ಆ ಎಮ್ಮೆಯನ್ನು ನಿರ್ದಾಕ್ಷಿಣ್ಯವಾಗಿ ಅವರಿಗೆ ಕೊಟ್ಟ ಕೆಟ್ಟ ಮನಸ್ಸುಗಳು ನಿನ್ನ ಮನೆಯ ಒಳಗೇ ಇತ್ತಲ್ಲ ? ಪಾಪ ಪುಣ್ಯದ ಭಯವೂ ಇಲ್ಲದ ಸೊಕ್ಕಿನ ಸಮಾಜ ಇದು. ಎಲ್ಲರೂ ಸ್ವಂತ ಲಾಭವನ್ನಷ್ಟೇ ನೋಡುವ ಸ್ವಾರ್ಥಿಗಳು. ತನ್ನ ಕರುವಿಗೂ ಕೊಡದೆ ಉಳಿಸಿಕೊಂಡು ಎಷ್ಟು ವರ್ಷ ನಮಗೆ ಹಾಲು ಕೊಟ್ಟು ಉಪಕರಿಸಿದ ಎಮ್ಮೆಯನ್ನು ಅದು ಬದುಕಿರುವಾಗಲೇ ಚಟ್ಟ ಕಟ್ಟಿ ಎತ್ತಿಕೊಂಡು ಹೋಗಲು ಕೊಟ್ಟವರಿಗೆ ಸಮಾ ಬಾರಿಸಬೇಕು; ಅದನ್ನು ತಿಂದವರಿಗಲ್ಲ. ಅದನ್ನು ತಿಂದವರಿಗೆ ಸಂಸ್ಕಾರ ಕೊಡುವ ಕೆಲಸ ನಮ್ಮಿಂದಲೇ ಆಗಬೇಕಿತ್ತು. ಆದರೆ ಅದರ ಬದಲಾಗಿ ನಾವೇ ಅವರಿಗೆ ಊರಿನ ಕೊಳೆಯನ್ನೆಲ್ಲ ತಿನ್ನಿಸುತ್ತಿದ್ದೇವೆ. ಆಮೇಲೆ ಅವರನ್ನು ಅಸಹ್ಯವೆಂಬಂತೆಯೂ ನಾವೇ ನೋಡುತ್ತಿದ್ದೇವೆ...ಅಲ್ಲವಾ ? ಯಾರಿಗಾದರೂ ಏನನ್ನಾದರೂ ಕೊಡುವ ಮನಸ್ಸಿದ್ದರೆ ನಾವು ತಿನ್ನುವ ಊಟವನ್ನೇ ಅವರಿಗೂ ಯಾಕೆ ಕೊಡಬಾರದು ? ಬೇಡವೆಂದು ಬಿಸಾಡುವಂಥದ್ದನ್ನು ಕೊಡುವುದೇಕೆ ?"
"ನಾವು ಉಂಡು ಬಿಸಾಟ ಎಲೆಯನ್ನು ಬಾಚಿ ಅದರಲ್ಲಿ ಸಿಕ್ಕಿದ್ದನ್ನೆಲ್ಲ ಒಟ್ಟು ಮಾಡಿ ಗಂಟು ಕಟ್ಟಿಕೊಂಡು ಆ ಎಮ್ಮೆಯ ತುಂಡುಗಳನ್ನೂ ಹೊತ್ತುಕೊಂಡು ಆಮೇಲೆ ಅವರೆಲ್ಲ ಖುಶಿಯಿಂದ ಹೋದರಂತೆ.."
"ಖುಶಿಯಿಂದ ಹೋದರು ಅಂತ ನಮ್ಮಂಥವರು ಕತೆ ಹೇಳಿ ಮುಗಿಸಬಹುದು...ಆದರೆ ಅವರಿಗೆ - "ಖುಶಿ ಅಂದರೆ ಏನು ? ಬದುಕುವುದು ಯಾಕೆ ? ಹೇಗೆ ?" ಅನ್ನುವುದೇ ಗೊತ್ತಿಲ್ಲ. ಅಯ್ಯೋ ದೇವರೇ, ನಮಗೆಲ್ಲ ಯಾವಾಗ ಬುದ್ಧಿ ಬರುವುದು ?"
"ಬಿಡಿ. ಮಿಂಚಿ ಹೋದ ಕಾರ್ಯಕ್ಕೆ ಚಿಂತಿಸಿ ಫಲವಿಲ್ಲ...ಸುಮ್ಮನೆ ನಾವು ನೋಯುವುದು ಯಾಕೆ ? ಈ ಹೆಣ್ಣು ಲಲಿತ ಮಾತ್ರ ಎಲ್ಲ ಮಕ್ಕಳ ಜತೆಗೆ ತಾನೂ ಗದ್ದೆಯ ಬದಿಗೆ ಹೋಗಿ ಆ ರೌದ್ರ ದೃಶ್ಯವನ್ನೆಲ್ಲ ನೋಡಿ ಬಂದಾಗಿನಿಂದ ಪೆಚ್ಚಾಗಿ ಹೋಗಿದೆ. "ನಮ್ಮಮನೆಗೆ ಹೋಗುವ, ಮನೆಗೆ ಹೋಗುವ" ಅಂತ ಅದರದ್ದು ಒಂದೇ ರಾಗ. ಎರಡು ಮಕ್ಕಳನ್ನು ಸಮಾಧಾನ ಮಾಡುವುದರಲ್ಲೇ ನಾನು ಸುಸ್ತಾಗಿ ಹೋದೆ."
"ಶಾರೂ...ಈಗ ನಿನಗೆ ಇನ್ನೆಷ್ಟು ಮದುವೆಯಾಗದ ತಂಗಿಯರಿದ್ದಾರೆ ?" ತುಟಿಯಂಚಿನಲ್ಲೇ ನಗುತ್ತ ರಾಯರು ಕೇಳಿದಾಗ ಶಾರದಮ್ಮನಿಗೆ ಯಾಕೆಂದು ತಿಳಿಯದೆ ಗಂಡನ ಮುಖವನ್ನೇ ನೋಡತೊಡಗಿದರು. "ಯಾಕೆಂದರೆ, ನನಗೆ - ನನ್ನ ಶಾರೂ ಮತ್ತು ಮಕ್ಕಳ ಚಿಂತೆಯಾಗಿದೆ. ಪೊಳ್ಳು ಪ್ರತಿಷ್ಠೆಯಲ್ಲದೆ ಬೇರೇನೂ ಅರ್ಹತೆಯಿಲ್ಲದ ಆ ನಿನ್ನ ಅಪ್ಪನ ಮನೆಯಲ್ಲಿ ಇನ್ನೂ ಏನೇನು ಕಾರ್ಯಕ್ರಮ ನಡೆಯಲಿಕ್ಕಿದೆಯೋ ಗೊತ್ತಿಲ್ಲ. ಯಾವುದೇ ಯಜಮಾನನ ಅಂಕೆಯಿಲ್ಲದ ರಾಜ್ಯ ಅದು. ಇನ್ನು ಮುಂದೆ ಅಲ್ಲಿಂದ ಯಾವುದೇ ಹೇಳಿಕೆ ಬಂದರೂ ನನ್ನನ್ನು ಕರೆಯಬೇಡ. ಇಷ್ಟಾಗಿಯೂ ನಿನಗೆ ಹೋಗಬೇಕು ಅನ್ನಿಸಿದರೆ - ಅದೇ ದಿನ ಬೆಳಿಗ್ಗೆ ಹೋಗಿ ಸಂಜೆಗೆ ಮನೆಗೆ ಬಂದು ಬಿಡು. ನೋಡು, ಆ ಲಲಿತೆ ಸಹ ಹೆದರಿ ಹೋಗಿದೆ. ಪುಟ್ಟ ಮಕ್ಕಳು ಇಂತಹ ಕ್ರೌರ್ಯಗಳನ್ನೆಲ್ಲ ನೋಡಬಾರದು. ನಾಳೆ ನಮ್ಮ ಲಲಿತೆಯನ್ನು ಸ್ವಲ್ಪ ಮಾತನಾಡಿಸಿ ಸಮಾಧಾನ ಮಾಡಬೇಕು...ಬರುವ ರವಿವಾರ ಉಡುಪಿಗೆ ಹೋಗಿ ಸುತ್ತಾಡಿಕೊಂಡು ಬರುವ. ಕೃಷ್ಣನ ದರ್ಶನವನ್ನೂ ಮಾಡಬಹುದು. ಹೊಸತು ಬಿದ್ದೇ ಹಳೆಯದು ಮರೆಯಬೇಕು..." ಅನ್ನುವಾಗಲೇ ಶಾರದಮ್ಮ "ಕೃಷ್ಣಾ.." ಅನ್ನುತ್ತ ಹೊದಿಕೆಯ ಒಳಗೆ ಸೇರಿಕೊಂಡರು.
"ಇವೆಲ್ಲ ಎಂಥ ಸಂಬಂಧಗಳು ? ಬೇಡವೆಂದರೂ ಅಂಟಿಕೊಳ್ಳುವ ಬಗೆಬಗೆಯ ಬಂಧನಗಳು. ಪರಸ್ಪರ ಜೀವ ತಿನ್ನುವ ಬದುಕು...ಬಂಧನಗಳು... !" ಅಂದುಕೊಳ್ಳುತ್ತ ಗಿರಿರಾಯರು ಹೊರಳಿ ಮಲಗಿದರು.
ಗೋಡೆ ಗಡಿಯಾರದಲ್ಲಿ ಹನ್ನೆರಡು ಹೊಡೆಯಿತು. ಶಾರದಮ್ಮ ನಿದ್ರಿಸುತ್ತಿದ್ದರೂ - ಗಿರಿರಾಯರಿಗೆ ಮಾತ್ರ ನಿದ್ದೆಯೇಕೋ ಸತಾಯಿಸುತ್ತಿತ್ತು.
*******-------*******