Friday, October 14, 2016

ಶ್ರೀ ರಾಮಕೃಷ್ಣ ಭಾವಮಂಜರಿ - 1


   ದೇವಿ ದೇವತಾ ಭಾವತೀರ್ಥದ ಭದ್ರ ದಂಡೆಯ ಮೇಲೆ ನಿಂತಿರುವ ಭಾರತೀಯ ಪರಂಪರೆಯನ್ನು ಆಧರಿಸಿ ಆವರಿಸಿರುವ - ತ್ರೇತಾಯುಗದ ಶ್ರೀ ರಾಮ, ದ್ವಾಪರದ ಶ್ರೀ ಕೃಷ್ಣರ ಸಾಲಿನಲ್ಲಿ ವಿರಾಜಮಾನರಾಗಿರುವ - ಕಲಿಯುಗದ ವಿಸ್ಮಯವೇ ಶ್ರೀ ರಾಮಕೃಷ್ಣ. ಮನಸ್ಸಿದ್ದರೂ ಕಠಿಣವೆನ್ನಿಸಿ ಅರ್ಥೈಸಿಕೊಳ್ಳಲಾಗದ ನಮ್ಮ ವೇದ, ಉಪನಿಷತ್ತು, ಪುರಾಣಗಳು ಎಲ್ಲರಿಗೂ ತಲುಪುವಂತೆ - ಅವುಗಳ ಸಾರವನ್ನು ಸರಳವಾಗಿ ಉಪದೇಶಿಸಿದ ಮಹಾನ್ ಚೇತನವೇ ಶ್ರೀ ರಾಮಕೃಷ್ಣ ಪರಮಹಂಸ.


"ಜ್ಞಾನ, ಕರ್ಮ, ಭಕ್ತಿಯೋಗಗಳೆಲ್ಲವೂ ಬಿಡುಗಡೆಯ ಕಡೆಗೊಯ್ಯುವ ಸುದೀರ್ಘ ದಾರಿಗಳು; ವಿವೇಕಪೂರ್ಣರಾಗಿ, ಮಮಕಾರರಹಿತರಾಗಿ "ಸಾಕ್ಷಿಯ" ಅರಿವಿನಲ್ಲಿದ್ದರೆ ಯೋಗಸಾಧನೆಯ ಹಂಗಿಲ್ಲದೆ - ಈ ಕ್ಷಣವೇ ಬಿಡುಗಡೆ ಪಡೆಯಬಹುದು..."  ಎಂಬುದು - ಒಂದೇ ನೆಗೆತಕ್ಕೆ ಗುರಿ ತಲುಪಿಸುವ ಸನಾತನ ದರ್ಶನ. ಅಷ್ಟಾವಕ್ರನು ಜನಕನಿಗೆ ಬೋಧಿಸಿದ ಬೋಧನೆಯ ಸಾರವಿದು. ಸಾಂಖ್ಯಮತವೂ ಇದೇ. ಈ ದೇಹವು ನೀರು, ಬೆಂಕಿ, ಗಾಳಿ, ಭೂಮಿ, ಆಕಾಶದಿಂದ ಆಗಿದ್ದರೂ ಇವು ಯಾವುವೂ ನಾವಲ್ಲ. ಈ ಪಂಚಭೂತಗಳ ದೀಪಸಾಕ್ಷಿಗಳಂತಿರುವ ದೇಹಿಗಳು ಅರಿವಿನ ಸಾಕ್ಷಿಯಾದಾಗಲೇ ನಿಜವಾದ ಬಿಡುಗಡೆ... ಅದೇ ಸಮಾಧಿ. ನಾನು ಭೂಮಿಯಲ್ಲ; ಗಾಳಿಯಲ್ಲ; ನೀರು, ಆಕಾಶವೂ ಅಲ್ಲ. ಬಿಡುಗಡೆ ಬೇಕಾದರೆ ನಿನಗೆ ನೀನೇ ಸಾಕ್ಷಿಯಾಗು... 

ಇಂತಹ ಉಪದೇಶಗಳು ಪಾಮರರಿಗೆ ಕಬ್ಬಿಣದ ಕಡಲೆ ಅನ್ನಿಸುತ್ತವೆ. ನೀರಿಳಿಯದ ಗಂಟಲಿನಲ್ಲಿ ಕಡುಬನ್ನು ತುರುಕಿದಂತಹ ಫಜೀತಿಯನ್ನು ಒಡ್ಡುತ್ತವೆ. ಸಾಕ್ಷಿ ಎಂದರೇನು ? ಅರಿವು ಎಂದರೇನು ? ಬಿಡುಗಡೆ ಎಂದರೇನು ? ಯಾವುದರಿಂದ ಬಿಡುಗಡೆ ? ಇಂತಹ ನಿಗೂಢವೆನ್ನಿಸುವ ಆಧ್ಯಾತ್ಮಿಕ ರಹಸ್ಯಗಳನ್ನು ಪಾಮರರಿಗೂ ತಲುಪುವಂತೆ ಉಪದೇಶಿಸಿದ ಸಾಕ್ಷ್ಯಾವತಾರಿಯೇ ಶ್ರೀ ರಾಮಕೃಷ್ಣರು.

ಶ್ರೀ ರಾಮಕೃಷ್ಣ ಪರಮಹಂಸರು ದೈವಶಕ್ತಿಯ ಪೂರ್ಣತ್ವವನ್ನು ಹಾರ್ದಿಕವಾಗಿ ಭಾವಿಸಿ, ಸ್ವತಃ ಅನುಭವಿಸಿ, ಸಾಕ್ಷಾತ್ಕಾರದವರೆಗೂ ಸಂಚರಿಸಿ, ತಮ್ಮ ಅರಿವನ್ನು ಸುಂದರ ಉಪಮೆಗಳೊಂದಿಗೆ ಶಾಬ್ದಿಕವಾಗಿಯೂ ಸಶಕ್ತವಾಗಿ ವಿವರಿಸಿದವರು. ಯಾವತ್ತೂ ಗಹನ ವಿಚಾರಗಳನ್ನು ಸರಳವಾಗಿ ಬೋಧಿಸುವುದು ಅತ್ಯಂತ ಕಠಿಣ. ಅಂತಹ ಯಾವುದೇ ಬೋಧನೆಯು ಗಾಢವಾದ ಪ್ರಭಾವವನ್ನು ಉಂಟುಮಾಡುವುದಾದರೆ ಅದೊಂದು ಮಹತ್ಸಾಧನೆ. ಆದ್ದರಿಂದಲೇ ಶ್ರೀ ರಾಮಕೃಷ್ಣರ ಸರಳ ಬೋಧನೆಗಳು ಸಾರ್ವಕಾಲಿಕ ದಾರಿದೀಪಗಳಾಗಿ ಉಳಿದುಹೋಗಿವೆ. ರಾಮಕೃಷ್ಣರಿಗೆ ಸ್ವತಃ ಶಿಕ್ಷಣದಲ್ಲಿ ಪದವೀ ಪತ್ರಗಳಿಲ್ಲದಿದ್ದರೂ ಘನ ವಿದ್ವಾಂಸರೂ ಮರವಟ್ಟು ನಿಲ್ಲುವಂತಹ ಘನ ವಿಚಾರಗಳನ್ನು ನಡೆದು ನುಡಿದು - ರಾಮಕೃಷ್ಣ ಗುಂಜನದ ಸಾಕ್ಷಿಯಾಗಿ, ಲಕ್ಷಾಂತರ ಸಾಕ್ಷೀಗುಂಜನಗಳ ಸಾಕ್ಷ್ಯವೊದಗಿಸಿದವರು ಶ್ರೀ ಪರಮಹಂಸರು. ವೇದ ಉಪನಿಷತ್ತುಗಳನ್ನು ನೇರವಾಗಿ ಪ್ರವೇಶಿಸಲಾಗದ ಪಾಮರರಿಗೂ ಶ್ರೀ ರಾಮಕೃಷ್ಣರ ಸಾರರೂಪೀ ಬೋಧನೆಗಳು ಸರಳ ಪ್ರವೇಶಿಕೆಗಳಂತಿವೆ; ಇಂದಿಗೂ ಕೈದೀವಿಗೆಯಾಗಿವೆ. ಇಂತಹ ಭೂಮ ವ್ಯಕ್ತಿತ್ವಗಳು - ಕೇವಲ ಆಧ್ಯಾತ್ಮವಾದಿಗಳು, ಸನ್ಯಾಸಿಗಳು ಮತ್ತು ವಿದ್ವಾಂಸರಿಗೆ ಮಾತ್ರವಲ್ಲದೆ ಸಂಸಾರೀ ಗೃಹಸ್ಥರಿಗೆ ವಿಶೇಷವಾಗಿ ಅನುಕರಣೀಯರು; ಆದರ್ಶಪ್ರಾಯರು; ಪೂಜ್ಯರು. ಆದ್ದರಿಂದಲೇ ಈ ಸಂಸಾರವು ರಾಮಕೃಷ್ಣರನ್ನು ಮನೆಯ ಸದಸ್ಯರನ್ನಾಗಿಸಿಕೊಂಡಿದೆ. ಸಾಂಸಾರಿಕ ಜಂಜಡಗಳು ಎದುರಾದಾಗ ದಿಕ್ಕುಗಾಣದೆ ಚಡಪಡಿಸುವವರಿಗೆ "ರಾಮಕೃಷ್ಣ ವಚನವೇದ"ದಲ್ಲಿ ಅನಿರ್ವಚನೀಯ ಸಾಂತ್ವನ ಸಿಗುತ್ತದೆ. ಲೋಕ ಶಿಕ್ಷಕನ ಬದುಕು ಮತ್ತು ಲೋಕ ಶಿಕ್ಷಣದ ಶೈಲಿಯ ಒಂದು ಪರಿಪೂರ್ಣ ಮಾದರಿಯೇ ಶ್ರೀ ರಾಮಕೃಷ್ಣ ಪರಮಹಂಸರು. ಉಪದೇಶಕನ ಆಚರಣೆಗಳೇ ಶಿಕ್ಷಣವಾಗಬೇಕು; ಆಗಲೇ ಯಾವುದೇ ಉಪದೇಶವು ಪರಿಣಾಮಕಾರಿಯಾಗಬಹುದು ಎಂಬುದಕ್ಕೆ ಶ್ರೀ ರಾಮಕೃಷ್ಣರೇ ಸಾಕ್ಷಿ.

ಇಂದು ಸರಳತೆಯನ್ನು ಆನಂದಿಸುವ ಶಕ್ತಿಯನ್ನು ಮನುಷ್ಯರು ಕಳೆದುಕೊಳ್ಳುತ್ತಿದ್ದಾರೆ. ಕೃತಕವಾದ ಬಾಹ್ಯ ವೇಷಗಳನ್ನೇ ಸತ್ಯವೆಂದು ಆರಾಧಿಸುವ ನಿತ್ಯದ ದೊಂಬರಾಟದ ಭ್ರಮಾರೋಗವು ಇಂದಿನ ಸಮಾಜವನ್ನು ಪೀಡಿಸುತ್ತಿದೆ. ಇಂತಹ ಮರೀಚಿಕೆಯ ಬೆನ್ನು ಹತ್ತಿದವರೆಲ್ಲರೂ ಕ್ರಮೇಣ ಮಾನಸಿಕ ಕ್ಷೋಭೆಗೊಳಗಾಗಿ ಅಶಾಂತಿಗೆ ತುತ್ತಾಗುತ್ತಿದ್ದಾರೆ. ಯಾವುದೇ ತೋರಿಕೆಯ ಆಡಂಬರಗಳೂ ಜೀವಕ್ಕೆ ತೃಪ್ತಿ, ನೆಮ್ಮದಿಯನ್ನು ಕೊಡಲಾರವು.

"ಜಗವೇ ನಾಟಕ ರಂಗ" ಎಂದಾಗ ಯಾವುದೇ ಬದುಕನ್ನು ಕೃತಕ - ಜಟಿಲಗೊಳಿಸಿಕೊಳ್ಳಬೇಕೆಂದು ಅರ್ಥವಲ್ಲ. ನಟನೆಯು ಸಹಜವಾಗಿರಬಾರದೆಂದೂ ಅರ್ಥವಲ್ಲ. ನಟನೆಯು ಸಹಜವಾದಷ್ಟೂ ಪಾತ್ರಗಳು ಶೋಭಿಸುತ್ತವೆ. ಆದರೆ ಸಹಜ ಸರಳವಾಗಿರುವುದು ಸುಲಭವಲ್ಲ. ಸರಳತೆಯು ತ್ಯಾಗವನ್ನು ಸತ್ಯವನ್ನು ಅಪೇಕ್ಷಿಸುತ್ತದೆ. ಸಹಜತೆಯು ನಿರ್ಭಯತೆಯನ್ನು ಅಪೇಕ್ಷಿಸುತ್ತದೆ. ಯಾವುದೇ ಭೂಮತೆಯು ಸರಳ-ಸಹಜವಾಗಿದ್ದರೆ - ಮೊದಲಿಗೆ ವಿಸ್ಮಯಗೊಳಿಸುತ್ತದೆ; ಕ್ರಮೇಣ ಆಕರ್ಷಿಸುತ್ತದೆ; ತನ್ನ ಸರಳತೆಯಿಂದಲೇ ಎಲ್ಲರನ್ನೂ ಸೆಳೆದುಕೊಳ್ಳುತ್ತದೆ !

"ಕನ್ನಡಿಯ ಮೇಲೆ ಧೂಳು ಕವಿದಿದ್ದರೆ ಮುಖ ಕಾಣಿಸದು. ಚಿತ್ತಶುದ್ಧವಿಲ್ಲದಿದ್ದರೆ ಸ್ವಸ್ವರೂಪದ ದರ್ಶನವು ದೊರೆಯದು. ನೋಡಿ, ಎಲ್ಲಿ ಅವತಾರಪುರುಷರು ಜನ್ಮವೆತ್ತುವರೋ ಅಲ್ಲಿ ಸರಳತೆಯು ನಲಿಯುತ್ತದೆ. ನಂದ, ದಶರಥ, ವಸುದೇವ - ಇವರೆಲ್ಲರೂ ಸರಳಜೀವಿಗಳೇ ಆಗಿದ್ದರು... ಚಿತ್ತ ಶುದ್ಧವಿಲ್ಲದಲ್ಲಿ ಶುದ್ಧ ಇಚ್ಛೆಯೇ ಬರುವುದಿಲ್ಲ... ಜನ್ಮಜನ್ಮಾಂತರದ ತಪಸ್ಸಿಲ್ಲದೆ ಸರಳತೆ ಉದಾರತೆಗಳು ಉಂಟಾಗುವುದಿಲ್ಲ... ಮಣ್ಣನ್ನು ಚೆನ್ನಾಗಿ ಹದ ಮಾಡಿಕೊಂಡಲ್ಲದೆ ಮಡಿಕೆ ಕುಡಿಕೆಗಳನ್ನು ಮಾಡಲಾಗುವುದಿಲ್ಲ. ಮಣ್ಣಿನೊಳಗೆ ಮರಳು, ಕಲ್ಲು ಸೇರಿಕೊಂಡಿದ್ದರೆ ಮಡಕೆಯು ಬಿರುಕು ಬಿಡುತ್ತದೆ. ಶ್ರಮವೆಲ್ಲವೂ ವ್ಯರ್ಥವಾಗುತ್ತದೆ. ಆದ್ದರಿಂದಲೇ ಕುಂಬಾರರು ಮಡಕೆಯನ್ನು ಮಾಡುವ ಮೊದಲು ಮಣ್ಣನ್ನು ಹದಗೊಳಿಸಿಕೊಳ್ಳುತ್ತಾರೆ. ಅಂತೆಯೇ ಉದಾರತೆ, ಸರಳತೆಗಳಿಂದ ಹದಗೊಳಿಸಿಕೊಂಡ ಅಂತರಂಗದಲ್ಲಿ ಮಾತ್ರ ಅರಿವಿನ ಬಿಂಬವು - ಸತ್ಯದ ಬೆಳಕು ಮೂಡಬಲ್ಲದು. ಅದಿಲ್ಲದೆ ಹೋದರೆ ಬದುಕು ಎಂಬುದು ಧೂಳು ಕವಿದ ಕನ್ನಡಿಯಂತೆ; ಬಿರುಕು ಮೂಡಿದ ಮಡಕೆಯಂತೆ. ಎಲ್ಲವೂ ಅಯೋಮಯ; ವ್ಯರ್ಥ." ಹೀಗೆ ಶ್ರೀ ರಾಮಕೃಷ್ಣರು ನೀಡಿದ್ದ ದೃಷ್ಟಾಂತಗಳೆಲ್ಲವೂ ನಿತ್ಯ ಬದುಕಿಗೆ ಹತ್ತಿರವಾಗಿವೆ. ಲೋಕವೆಂಬ ಕಬ್ಬುನದ ಅಂಗಡಿಯ ಸರಕುಗಳಾದ ಮನುಷ್ಯ ಜೀವಿಗಳು ಶ್ರದ್ಧೆ ಭಕ್ತಿ ವೈರಾಗ್ಯಗಳಿಂದ ತಮ್ಮ ಅಂತರಂಗಕ್ಕೆ ದಿನವೂ ಹಿಡಿಯುವ ತುಕ್ಕನ್ನು ನಿವಾರಿಸಿಕೊಂಡು ಸರಳಗೊಳ್ಳಲು ರಾಮಕೃಷ್ಣರ ವಚನ ಸುಧೆಯೇ ದಿವ್ಯೌಷಧ. ಶ್ರೀ ರಾಮಕೃಷ್ಣರು ಅಂತಹ ಲೋಹ ಶುದ್ಧಕ ! ಲೋಹಚುಂಬಕ !

"ಸ್ವಲ್ಪ ಗೀತೆ, ಸ್ವಲ್ಪ ಭಾಗವತ, ಸ್ವಲ್ಪ ವೇದಾಂತ ಓದಿದ ಜನರು ತಾವು ಎಲ್ಲವನ್ನೂ ಅರೆದು ಕುಡಿದು ಬಿಟ್ಟಿದ್ದೇವೆ ಎಂದು ಭಾವಿಸುತ್ತಾರೆ. ಸಕ್ಕರೆ ಗುಡ್ಡಕ್ಕೆ ಒಂದು ಇರುವೆ ಹೋಯಿತು. ಒಂದು ಕಣ ಸಕ್ಕರೆಯನ್ನು ತಿನ್ನುವುದರಲ್ಲಿಯೇ ಅದರ ಹೊಟ್ಟೆ ತುಂಬಿ ಹೋಯಿತು. ಇನ್ನೊಂದು ಕಣ ಸಕ್ಕರೆಯನ್ನು ಬಾಯಿಯಲ್ಲಿ ಕಚ್ಚಿಕೊಂಡು ಇರುವೆಯು ತನ್ನ ಗೂಡಿಗೆ ಹಿಂದಿರುಗುತ್ತಿತ್ತು. ಹಿಂದಿರುಗುವಾಗ ತನ್ನ ಮನಸ್ಸಿನಲ್ಲಿ "ಮುಂದಿನ ಸಲ ಬಂದು ಇಡೀ ಗುಡ್ಡವನ್ನೇ ಗೂಡಿಗೆ ಸಾಗಿಸಿ ಬಿಡುತ್ತೇನೆ !" ಎಂದು ಯೋಚಿಸಿತು..."  ... ಶ್ರೀ ರಾಮಕೃಷ್ಣರು ತಮ್ಮ ಭಕ್ತರೊಂದಿಗೆ ಸಂಭಾಷಿಸುತ್ತ ಆಡಿದ್ದ ಮಾತಿದು. ಅಜ್ಞರೆಲ್ಲರೂ ತಮ್ಮನ್ನು ತಾವೇ ಪ್ರಾಜ್ಞರೆಂದುಕೊಂಡು ಬುಸುಗುಡುತ್ತಿರುವ ಇಂದಿನ ಸನ್ನಿವೇಶದಲ್ಲಿ ರಾಮಕೃಷ್ಣರು ನೀಡಿದ ಇರುವೆಯ ಈ ದೃಷ್ಟಾಂತವು ಮನನೀಯವಾಗಿದೆ. ನಿಜವಾದ ಜ್ಞಾನವು ಯಾವತ್ತೂ ಮೌನವಾಗುತ್ತದೆ; ವಿನಮ್ರವಾಗುತ್ತದೆ. ಕಿವಿದೆರೆದು ಕೇಳಿಸಿಕೊಳ್ಳುತ್ತದೆ; ಮಥಿಸುತ್ತದೆ; ಅನುಭವಿಸುತ್ತದೆ; ಅಂತರ್ಮುಖಿಯಾಗುತ್ತದೆ...

ವೇದಕಾಲದಲ್ಲಿ ಭರದ್ವಾಜ ಎಂಬ ಒಬ್ಬ ಋಷಿಯಿದ್ದರು. ಇವರು ಬೃಹಸ್ಪತಿಯಿಂದ ತಾರೆಯಲ್ಲಿ ಜನಿಸಿದ - ಶಂಯು - ಎಂಬ ಅಗ್ನಿಯ ಮಗ. ಪುರಾಣಕಾಲದಲ್ಲಿ ಮಹಾಭಾರತದ ವರೆಗೂ ಭರದ್ವಾಜರ ಪ್ರಸ್ತಾಪವಿದ್ದರೂ ಈಗ ಪ್ರಸ್ತಾಪಿಸುತ್ತಿರುವ ಭರದ್ವಾಜರು ವೇದ ಕಾಲದವರು. ಇವರು ಬಹು ದೀರ್ಘಕಾಲ ಗುರುಕುಲದಲ್ಲಿದ್ದು ಶ್ರದ್ಧೆ ನಿಷ್ಠೆಯಿಂದ ವೇದಾಭ್ಯಾಸ ನಡೆಸಿದ್ದರು. ಅಂದೂ - ಪ್ರತಿಯೊಂದು ವಿದ್ಯೆಯ ಅಭ್ಯಾಸಕ್ಕೂ ನಿಗದಿತ ಅವಧಿಯಿರುತ್ತಿತ್ತು. ಒಮ್ಮೊಮ್ಮೆ ಗುರುಗಳು ತಮ್ಮ ಭಂಡಾರವು ಖಾಲಿಯಾದ ಮೇಲೆ ಶಿಷ್ಯರನ್ನು ಬಿಡುಗಡೆ ಮಾಡಿಬಿಡುವುದೂ ಇತ್ತು. ಒಮ್ಮೊಮ್ಮೆ ವಿದ್ಯೆಯ ತಾಪವನ್ನು ಸಹಿಸಲಾಗದ ಕೆಲವು ಶಿಕ್ಷಾರ್ಥಿಗಳು ತಾವಾಗಿಯೇ ಗುರುಕುಲದಿಂದ ಬಿಡುಗಡೆ ಹೊಂದುವುದೂ ಇತ್ತು.

ಆದರೆ ಭರದ್ವಾಜರು ಬಹು ದೀರ್ಘಕಾಲ ಅಧ್ಯಯನ ನಡೆಸಿದರು; ಸ್ವಾಧ್ಯಾಯವನ್ನೂ ನಡೆಸಿದ್ದರು. ಹೀಗಿದ್ದೂ ಅವರ ಜ್ಞಾನದಾಹವು ತಣಿಯಲೇ ಇಲ್ಲ; ಪೂರ್ಣತೆಯ ತೃಪ್ತಿಯೂ ಸಿಗಲಿಲ್ಲ. ವೇದಾಭ್ಯಾಸವು ನಿರಂತರವಾಗಿ ನಡೆಯುತ್ತಲೇ ಇತ್ತು. ತಿಳಿದಷ್ಟೂ "ಇನ್ನೂ ಉಳಿದಿದೆ" ಎಂಬ ಭಾವವೇ ಭರದ್ವಾಜರನ್ನು ಆವರಿಸುತ್ತಿತ್ತು. "ಒಂದೇ ಬ್ರಹ್ಮವು ವಿಶ್ವವನ್ನು ವ್ಯಾಪಿಸಿದೆ" ಎಂಬ ಆಧ್ಯಾತ್ಮ ತತ್ತ್ವದ ಹಿಂದೆ ಭರದ್ವಾಜರು ಸಂಚರಿಸತೊಡಗಿದ್ದರು. ಭರದ್ವಾಜರಿಗೆ ಬ್ರಹ್ಮದರ್ಶನದ ರವಷ್ಟು ರುಚಿ ಸಿಕ್ಕಿದೊಡನೆಯೇ ಅವರು ಬ್ರಹ್ಮಜ್ಞಾನದ ಆಳಕ್ಕೆ ಇಳಿಯತೊಡಗಿದ್ದರು. ಸ್ತೋತ್ರ, ಉಪಾಸನೆ, ಯಜ್ಞ, ಧ್ಯಾನ, ಚಿಂತನೆ, ನಿರಂತರ ಅಧ್ಯಯನಗಳ ನಂತರವೂ ಭರದ್ವಾಜರಿಗೆ ವೇದದ ಪೂರ್ಣ ಸಾಕ್ಷಾತ್ಕಾರವಾಗಲಿಲ್ಲ. ವೇದವು ತನ್ನ ಕೈಹಿಡಿಯಿತು - ಅನ್ನಿಸಲೇ ಇಲ್ಲ. ಅರಿವನ್ನು ಅರಸುವ ಪಯಣಕ್ಕೆ ಅಂತ್ಯವಿದೆಯೆ ? ಭರದ್ವಾಜರೂ ಇಂತಹುದೇ ಕಠಿಣ ಹಾದಿಯಲ್ಲಿ ಮುನ್ನಡೆಯುತ್ತಿದ್ದರು. ಹೀಗೆ ಒಂದೇ ಸವನೆ 300 ವರ್ಷಗಳು ಕಳೆದು ಹೋದವು. ಭರದ್ವಾಜರ ಮುಗಿಯದ ವೇದಾಭ್ಯಾಸವು ನಡೆಯುತ್ತಲೇ ಇತ್ತು.

ಹೀಗಿರುವಾಗ ಭರದ್ವಾಜರ ಆಯುಷ್ಯವು ತೀರುತ್ತ ಬಂತು. ಅವರು ಹಣ್ಣು ಹಣ್ಣು ಮುದುಕರಾಗಿದ್ದರು. ಅವರ ಬಾಲ್ಯ - ಯೌವ್ವನವು ಉರುಳಿ ಹೊರಳಿ ವೃದ್ಧಾಪ್ಯವು ಆವರಿಸಿದ್ದೂ ಅವರಿಗೆ ತಿಳಿಯಲಿಲ್ಲ. ಭರದ್ವಾಜರು ಮುದುಕರಾಗಿ ಹೋಗಿದ್ದರು ! ವೇದದ ಬೆನ್ನು ಬಿದ್ದಿದ್ದ ಅವರು ಬ್ರಹ್ಮಚರ್ಯಾಶ್ರಮದಿಂದ ಮುಂದೆ ಹೆಜ್ಜೆಯನ್ನೇ ಇಟ್ಟಿರಲಿಲ್ಲ. ಏಕಗಮ್ಯ ಜ್ಞಾನಯೋಗಾನಂದದಲ್ಲಿ - ಜ್ಞಾನಪಾನ ರೋಮಾಂಚನದ ಮೈಮರೆವಿನಲ್ಲಿಯೇ ಭರದ್ವಾಜರು ಮುದುಕರಾಗಿಬಿಟ್ಟಿದ್ದರು !

ಹೀಗಿರುವಾಗ, ಸುದೀರ್ಘಕಾಲ ವೇದಸಂಸಾರ ನಡೆಸಿದ ಭರದ್ವಾಜರ ಸ್ಥಿತಿಯನ್ನು ದೇವೇಂದ್ರನೂ ಗಮನಿಸುತ್ತಿದ್ದ. ಒಂದು ದಿನ ಜ್ಞಾನಪಿಪಾಸು ಭರದ್ವಾಜರನ್ನು - ಕುತೂಹಲ, ಆಶ್ಚರ್ಯ, ಮೆಚ್ಚುಗೆಗಳ ಸಮ್ಮಿಶ್ರ ಭಾವದಿಂದಲೇ ದೇವೇಂದ್ರನು ಮಾತನಾಡಿಸುತ್ತಾನೆ.... "ಭರದ್ವಾಜ ಮುನಿಗಳೇ, ನಿಮಗೆ ಇನ್ನೂ ನೂರು ವರ್ಷ ಆಯುಸ್ಸನ್ನು ದೇವತೆಗಳು ಅನುಗ್ರಹಿಸಿದರೆ ತಾವು ಏನು ಮಾಡುತ್ತೀರಿ.. ?"

" ದೇವೇಂದ್ರಾ, ನಾನು ವೇದಮಾತೆಯ ಪರಿಚಾರಕ. ಜ್ಞಾನಾರ್ಜನೆಯೇ ನನ್ನ ಉಸಿರು; ಗುರಿ. ಈಗ ಒಂದಷ್ಟು ಅಧ್ಯಯನ ನಡೆಸಿದ್ದರೂ ಇನ್ನೂ ಬಹಳಷ್ಟು ಅಧ್ಯಯನವು ಉಳಿದುಕೊಂಡಿದೆ... ಆಯುಷ್ಯ ದೊರೆತರೆ ನಾನು ವೇದಾಧ್ಯಯನವನ್ನು ಮುಂದುವರಿಸುತ್ತೇನೆ..." ಎಂದರು ಭರದ್ವಾಜರು.

ಆಗ ಇಂದ್ರನು ಭರದ್ವಾಜರಿಗೆ 4 ಪರ್ವತಗಳನ್ನು ತೋರಿಸುತ್ತಾನೆ. "ಮುನಿಶ್ರೇಷ್ಠರೇ ನೋಡಿ...  ಇವು ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವಣವೇದ - ಎಂಬ ನಾಲ್ಕು ಜ್ಞಾನ ಪರ್ವತಗಳು." ಎನ್ನುತ್ತ, ಆ ನಾಲ್ಕೂ ಪರ್ವತಗಳಿಂದ ಒಂದೊಂದು ಮುಷ್ಟಿಯಷ್ಟನ್ನು ತೆಗೆದುಕೊಂಡು ಬಂದು ತೋರಿಸುತ್ತ... "ಇಲ್ಲಿ ನೋಡಿ... ನಾಲ್ಕು ಮುಷ್ಟಿ ಜ್ಞಾನ... ನೀವು ಈ ಮುನ್ನೂರು ವರ್ಷಗಳ ಅವಧಿಯಲ್ಲಿ ಅರಿತುಕೊಂಡದ್ದು ಈ ನಾಲ್ಕು ಮುಷ್ಟಿಯಷ್ಟು ಮಾತ್ರ. ಅಲ್ಲಿರುವ ಪರ್ವತದಷ್ಟು ಭಾಗದ ವೇದಾಧ್ಯಯನವು ಇನ್ನೂ ಉಳಿದುಕೊಂಡಿದೆ. ನೀವು ಜೀರ್ಣಿಸಿಕೊಂಡದ್ದು ಇರುವೆಯಷ್ಟು. ಅಧ್ಯಯನ ಮಾಡದೆ ಉಳಿದಿರುವ  ವೇದಶರ್ಕರದ ಗುಡ್ಡವು ಬೃಹತ್ತಾಗಿ ನಿಂತಿದೆ. ನಾನು ಇನ್ನೊಂದು ನೂರು ವರ್ಷ ಆಯುಷ್ಯವನ್ನು ಕೊಟ್ಟರೂ - ನಿಮ್ಮೆದುರಿಗಿರುವ ಈ ಇಡೀ ಗುಡ್ಡವನ್ನು ನೀವು ಅರೆದು ಕುಡಿಯಬಲ್ಲಿರೇ ? ನಿಮ್ಮ ಅಧ್ಯಯನವು ಮುಗಿದೀತೆ ?"

ದೇವೇಂದ್ರನ ಮಾತುಗಳನ್ನು ಕೇಳುತ್ತಿದ್ದ ಭರದ್ವಾಜರು ದಿಙ್ಮೂಢರಾಗಿ ನಿಂತಿದ್ದರು. "ಆಯುಷ್ಯದ ಮಿತಿಯುಳ್ಳ ಯಾವುದೇ ಬದುಕಿನ ಸಾಧನೆಗಳಿಗೂ ಇತಿಮಿತಿ ಇರಲೇಬೇಕಲ್ಲವೆ ?" ಹೀಗೆ ಯೋಚಿಸುತ್ತ ಮೌನವಾಗಿದ್ದ ಭರದ್ವಾಜರನ್ನು ದೇವೇಂದ್ರನೇ ಸಂತೈಸುತ್ತಾನೆ. "ಸಾಕು ಭರದ್ವಾಜರೇ. ಈ ಜನ್ಮಕ್ಕೆ ಇಷ್ಟು ಸಾಕು. ಈಗ ಅರಿತಿರುವುದರಲ್ಲಿಯೇ ತೃಪ್ತರಾಗಿ. ಸಾಮಾನ್ಯ ಬದುಕಿನತ್ತ ಹೊರಳಿಕೊಳ್ಳಿ..."

ಇಂದ್ರನ ಸೂಚನೆಯಲ್ಲಿದ್ದ ವಾಸ್ತವವನ್ನು ಅರಿತ ಭರದ್ವಾಜರು - ಅನಂತರ ವೀರಾ ಎಂಬಾಕೆಯನ್ನು ವಿವಾಹವಾಗಿ, ವೀರ ಎಂಬ ಪುತ್ರನನ್ನೂ ಪಡೆದು, ಗೃಹಸ್ಥ ಜೀವನವನ್ನು ನಡೆಸುತ್ತ, ಜ್ಞಾನಪ್ರಸಾರದಲ್ಲಿಯೂ ತೊಡಗಿಕೊಂಡು ತಮ್ಮಶೇಷಾಯುಷ್ಯವನ್ನು ಕಳೆದರು. ಇದು ವೇದಕಾಲದ ಒಂದು ಕಥೆ.

ನಮ್ಮ ವೈದಿಕ ಋಷಿಮುನಿಗಳು ಮೂಗು ಹಿಡಿದು ಕುಳಿತ ಶುಷ್ಕ ಸನ್ಯಾಸಿಗಳಲ್ಲ; ಬ್ರಹ್ಮಾಂಡವನ್ನೇ ಮನೆ ಎಂದು ತಿಳಿದು ಬದುಕನ್ನು ಯಜ್ಞ ಎಂದು ಆದರಿಸಿ, ಸಮಷ್ಟಿಯನ್ನು ಇಡಿಯಾಗಿ ಪ್ರೀತಿಸಿ ಗೌರವಿಸಿದವರು. ಧರ್ಮ, ಅರ್ಥ, ಕಾಮ, ಮೋಕ್ಷವನ್ನು ಬ್ರಹ್ಮಚರ್ಯ, ಗಾರ್ಹಸ್ಥ್ಯ, ವಾನಪ್ರಸ್ಥ, ಸನ್ಯಾಸಾಶ್ರಮಗಳಲ್ಲಿ ತೊಡಗಿಕೊಂಡು ಆಯಾ ಆಶ್ರಮ ಧರ್ಮದ ಮೂಲಕವೇ ವಿಧೇಯವಾಗಿ ಸಂಯಮದಿಂದ ಅನುಸರಿಸಿದವರು. ಸಹಜತೆ ಮತ್ತು ಸರಳತೆಯಲ್ಲಿ ಪ್ರಕೃತಿ-ಸತ್ಯವನ್ನು ಕಂಡವರು. ಸುತ್ತ ಚೆಲ್ಲಿರುವ ಆನಂದಾನುಭೂತಿಯನ್ನು ಪ್ರಸನ್ನ ಚಿತ್ತದಿಂದ ಸಜ್ಜನಿಕೆಯಿಂದ ಉಂಡವರು; ಉಣ್ಣಿಸಿದವರು.

ಇದು ವೇದದ ಪ್ರತಿಫಲ. ವೇದತತ್ತ್ವವು ಅರಿವಾದಾಗ ಎಲ್ಲೆಲ್ಲೂ ಪ್ರೇಮವೇ ಕಾಣುತ್ತದೆ. ನಾವು ಒರಗಿಕೊಂಡ ಅರಗಿಸಿಕೊಂಡ ಜ್ಞಾನವೇ ನಮ್ಮ ಕೈಹಿಡಿದು ನಡೆಸುತ್ತದೆ. ಮನುಷ್ಯ ಮನುಷ್ಯರ ನಡುವೆ ಅಡ್ಡಗೋಡೆಗಳು ಏಳುವುದಕ್ಕಿಂತ ಎಷ್ಟೋ ಸಹಸ್ರ ವರ್ಷಗಳ ಹಿಂದೆ, ಜೀವಸಂಕುಲವೆಲ್ಲವೂ ಪರಸ್ಪರ ಸೌಹಾರ್ದದಿಂದ ಬದುಕಿದ್ದು ಅಂದಿನ ವಾಸ್ತವ.

ವೇದ ಎಂದರೆ ಜ್ಞಾನ. ಅದು - ಅರ್ಥ ಮತ್ತು ಕಾಮದ ಸುತ್ತಲೂ ಪ್ರದಕ್ಷಿಣೆ ಹಾಕುವಂತಹ - ಇಂದು ನಾವು ಕಾಣುವ ಶಿಕ್ಷಣವಲ್ಲ. ಅದು ಶುದ್ಧ ಜ್ಞಾನ; ಯಾವುದೇ ಅಂಟುನಂಟಿಲ್ಲದ ದಿಗಂಬರ. ಶುದ್ಧ ಜ್ಞಾನವು ಬೇಕಿದ್ದರೆ - ಅಂತಹ ಬೆಳಕಿನ ಬಯಲು ಕಾಣುವ ಹಂಬಲದಲ್ಲಿ ಬತ್ತಲಾಗಬೇಕು; ಬತ್ತದ ದಿಗಂಬರವಾಗಬೇಕು. ಲೋಕಶಿಕ್ಷಣ ನೀಡುವವರು ಸ್ವತಃ ದಿಗಂಬರ ಸದೃಶರಾಗಿರಬೇಕು. ಶುಕ, ನಾರದ, ಜನಕರಂತಾಗಬೇಕು. ಇದನ್ನೇ ಶ್ರೀ ರಾಮಕೃಷ್ಣರು ಹಲವಾರು ದೃಷ್ಟಾಂತಗಳ ಮೂಲಕ ವಿವರಿಸಿದ್ದರು.  

ಯಾವುದನ್ನೂ ಖಂಡಿಸಬಾರದು. ಈ ಸೃಷ್ಟಿಯಲ್ಲಿರುವ ಎಲ್ಲವೂ ಭಗವಂತನ ವಿಭಿನ್ನ ರೂಪಗಳು. ಸಾಕಾರ ನಿರಾಕಾರದ ಗೊಂದಲವು ಅನಾವಶ್ಯಕ. ತಂತ್ರ ಮಂತ್ರಗಳೆಲ್ಲವೂ ವಿಭಿನ್ನ ದಾರಿಗಳು. ಆದರೆ ಗಮ್ಯವು ಒಂದೇ. ವಸ್ತು ಮಾತ್ರ ಒಂದೇ. ಅಭೇದ ಸ್ವರೂಪ. ಈ ಸೃಷ್ಟಿಯಲ್ಲಿರುವ ಎಲ್ಲ ವಸ್ತುಗಳೂ ಚೈತನ್ಯಮಯ. ಚಿಕ್ಕಮಗುವು ಅದನ್ನು ಸಹಜವಾಗಿ ಅನುಭವಿಸಬಲ್ಲದು. ಮುಗಿಲಿನ ಆರ್ಭಟ, ಗುಡುಗು ಮಿಂಚನ್ನು ಕಂಡಾಗ "ಅಲ್ಲಿ ಯಾರೋ ಬೆಂಕಿ ಕಡ್ಡಿ ಗೀಚಿ ಹೋದ..." ಎನ್ನುವ ಮಗುವಿನ ಪ್ರತಿಕ್ರಿಯೆಯನ್ನು - ಸರಳತೆಯನ್ನು ಕಳೆದುಕೊಂಡ ಹಿರಿಯರು ಬಾಲಿಶವೆನ್ನಬಹುದು. ಬಾಲ್ಯದಲ್ಲಿ ಚಿಟ್ಟೆ ಹಿಡಿಯುವ ಆಟದಲ್ಲಿ ಮುಳುಗಿದ ಬಾಲಕರು ಎಲೆಗಳೊಂದಿಗೆ, ಚಿಟ್ಟೆಗಳೊಂದಿಗೂ ಸಂಭಾಷಿಸುತ್ತಾರೆ. "ಅಲುಗಬೇಡ; ನಾನು ಚಿಟ್ಟೆ ಹಿಡಿಯುತ್ತಿದ್ದೇನೆ; ಓಡಬೇಡ; ಹಾರಬೇಡ..." ಎನ್ನುತ್ತ ಮಕ್ಕಳು ಸೃಷ್ಟಿಯೊಂದಿಗೆ ಸಂಭಾಷಿಸುವುದಿಲ್ಲವೆ ? ಏಕೆಂದರೆ ಮಕ್ಕಳಿಗೆ ಪ್ರಕೃತಿಯು ಚೈತನ್ಯಮಯವಾಗಿ ಕಾಣುತ್ತದೆ. ಇದೇ ಆಧ್ಯಾತ್ಮಭಾವ. ಇಂತಹ ಸರಳ ವಿಶ್ವಾಸ, ಮುಗ್ಧ ವಿಶ್ವಾಸಗಳು ಇಲ್ಲದಿದ್ದರೆ ಭಗವಂತನ ಅನುಭವ ಆಗುವುದಿಲ್ಲ. ಇದೇ ಚಿತ್ತಶುದ್ಧಿ.

ಆಧುನಿಕ ವಿಜ್ಞಾನವು ಎಲ್ಲಿ ನಿಲ್ಲುತ್ತದೋ ಅಲ್ಲಿಂದಲೇ ಅಧ್ಯಾತ್ಮವು ಆರಂಭವಾಗುವುದು. ಆದ್ದರಿಂದಲೇ ಕುತರ್ಕ ಬೇಡ; ಸಂಶಯವು ಒಳ್ಳೆಯದಲ್ಲ. ಸತ್ಯವನ್ನು ಅರಿಯುವ ಹಂಬಲವಿರಲಿ; ಮುಗ್ಧತೆಯೂ ಇರಲಿ. ಕೃತಕ ಢಂಬಾಚಾರಗಳು ಮನುಷ್ಯನ ಹಾದಿಯ ಮುಳ್ಳುಗಳು ಎಂಬ ಎಚ್ಚರವಿರಲಿ. ಪ್ರಸ್ತುತದ ಭಂಡ ಜಗತ್ತಿನಿಂದ ಪಾರಾಗಲು - ದೊಡ್ಡ ಸುಳ್ಳುಗಳ ರಾಶಿಯ ನಡುವಿನಲ್ಲಿರುವ ಗುಲಗಂಜಿಯಷ್ಟು ಸತ್ಯವನ್ನು ಆಯ್ದುಕೊಳ್ಳಲು ಮನೋವಾಕ್ಕಾಯಗಳನ್ನು ಪಳಗಿಸಿಕೊಳ್ಳಿ. ವಿಶ್ವಾಸದ ಭದ್ರನೆಲೆಯಲ್ಲಿ ನಿಂತಲ್ಲದೆ ಸತ್ಯದ ಶೋಧನೆಯು ಅಸಾಧ್ಯ - ಎಂದು ಸಾರಿ ಸಾರಿ ಹೇಳಿದ ಶ್ರೀ ರಾಮಕೃಷ್ಣರು ಶತಮಾನದಷ್ಟು ಹಿಂದೆ ನಮ್ಮ ಜೊತೆಯಲ್ಲಿಯೇ ಬದುಕಿದ್ದರು ! ಸಂಸಾರದಲ್ಲಿದ್ದುಕೊಂಡೇ ಋಷಿಜೀವನ ನಡೆಸಲು ಸಾಧ್ಯವಿದೆ ಎಂಬುದನ್ನೂ ಆಚರಿಸಿ ತೋರಿದವರು - ಶ್ರೀ ರಾಮಕೃಷ್ಣರು. ಆದ್ದರಿಂದಲೇ ಸಂಸಾರಿಗಳಿಗೆ - ಗತಿ ಮತಿ ಸ್ವಾಮಿಯಾಗಿ ಸರ್ವದಾ ವಿರಾಜಮಾನರಾಗಿದ್ದಾರೆ.
                                                  *****-----*****-----*****

 

No comments:

Post a Comment