ಅದು ೧೯೬೦ - ೬೮ ರ ಅವಧಿ. ಆಗ ನಮ್ಮ ಅಪ್ಪಯ್ಯ (ಐರೋಡಿ ಯಜ್ಞನಾರಾಯಣ ಉಡುಪರು) - ಇಂದಿನ ಉಡುಪಿ ಜಿಲ್ಲೆಯ ಕೋಟೇಶ್ವರದ ಬೋರ್ಡ್ ಹೈಸ್ಕೂಲಿನಲ್ಲಿ ಕನ್ನಡ ಅಧ್ಯಾಪಕರಾಗಿದ್ದರು. ಅದು ನಮ್ಮ ಬದುಕಿನ ಸುವರ್ಣ ಕಾಲ. ಆಗ... ನನ್ನ ಪಾಲಿಗೆ - ಬದುಕು ನಡೆಯುತ್ತಿರಲಿಲ್ಲ; ಓಡುತ್ತಿತ್ತು. ಮನೆಯೆಂಬ ಆನಂದದ ದೇವಳದಲ್ಲಿ, ಪರಸ್ಪರ ಪ್ರೀತಿಸುತ್ತ ಕುಟುಂಬವನ್ನು ಅಪ್ಪಿಕೊಂಡು ಏಗುತ್ತಿದ್ದ - ಅಪ್ಪ ಅಮ್ಮ ಎಂಬ ಗರುಡಗಂಬಕ್ಕೆ ಸುತ್ತುತ್ತಿದ್ದ ಸಿದ್ದೆ ಸೇರಿನಂಥ ಮಕ್ಕಳು; ಕೆಟ್ಟದು ಅನ್ನುವಂತಹ ಏನೊಂದೂ ಪರಿಚಯವಿಲ್ಲದ ಸರಳ ಮುಗ್ಧ ಬದುಕು ಮಾತ್ರ - ಅಂದು ನಮ್ಮನ್ನು ಸುತ್ತುತ್ತಿತ್ತು. ಭೂಮಿಯ ಮೇಲಿನ ಕಲ್ಲು ಮಣ್ಣೂ ಆಕರ್ಷಕವಾಗಿ ಕಾಣಿಸುತ್ತಿದ್ದ ಬಾಲ್ಯದ ರಮ್ಯ ಕಾಲ. ಇಂದಿನ ನಮ್ಮ ನಿತ್ಯದ ವೈಭೋಗಗಳನ್ನು ವಾಸ್ತವದಲ್ಲಿ ನೋಡುತ್ತ ಅನುಭವಿಸುತ್ತಿರುವಾಗಲೂ... ಇಂದು ನಾವು ಹಾಗೂ ನಮ್ಮ ಮಕ್ಕಳೂ ಕಳೆದುಕೊಂಡಿರುವ - ಅಂದಿನ ಬಾಲ್ಯಾವಸ್ಥೆಯ ಮನೋಸ್ಥಿತಿಯು ಎಲ್ಲ ವೈಭೋಗಕ್ಕಿಂತ ಅಮೂಲ್ಯ ಮತ್ತು ಅಂದಿನ ದಿನಗಳೇ ಹೆಚ್ಚು ಹಗುರ, ಶಾಂತ, ಸಮೃದ್ಧ, ಆಪ್ಯಾಯಮಾನವೆನ್ನಿಸುತ್ತದೆ.
ಅದು ಅಂದಿನ ಕೋಟೇಶ್ವರ. ಅಂದು ಅಲ್ಲಿ ಎಲ್ಲರೂ ಎಲ್ಲರಿಗೂ ಪರಿಚಿತರೇ. ಬಹುಪಾಲು ಜನರು ಸಭ್ಯ ಸಂಭಾವಿತ ಬದುಕನ್ನು ನಡೆಸುತ್ತಿದ್ದ ಕಾಲವದು. ಎಲ್ಲೋ ಬೆರಳೆಣಿಕೆಯ ಮಂದಿ ಏನಾದರೂ ಮಿತಿ ಮೀರಿದಂತೆ ವರ್ತಿಸಿದರೆ ಅದು ಊರಿನ ಜನರ ಮಾತಿಗೆ ದೊಡ್ಡ ವಿಷಯವಾಗಿ ಅಂತಹ ರಾವಣಪ್ರಾಯರಾದವರಿಗೆ ಮುಜುಗರದ ವಾತಾವರಣವು ಮೂಡಿಬಿಡುತ್ತಿತ್ತು. ಇಂದಿನಂತೆ ವಕ್ರ - - ತುಂಡರಿಗೆಲ್ಲ ಪ್ರಶಸ್ತಿ ಪ್ರದಾನ ಮಾಡಿ ತಪ್ಪುಗಳನ್ನು ವೈಭವೀಕರಿಸುವ ಕೆಟ್ಟ ಸಮಾಜವು ಆಗ ಇರಲಿಲ್ಲ. ಏಕೆಂದರೆ ಕಪಟಿಗಳ ಸಂಖ್ಯೆ ಕಡಿಮೆಯಿತ್ತು. "ಪರ ವಿರೋಧ"ಗಳನ್ನೇ ಉದ್ಯೋಗವಾಗಿಸಿಕೊಂಡ "ಮಾಧ್ಯಮ ತುಂಡರಸ"ರೂ ಇರಲಿಲ್ಲ. ಆದ್ದರಿಂದ ತಪ್ಪುಗಳನ್ನು ಹೊತ್ತು ಮೆರೆಸುವವರೂ ಇರಲಿಲ್ಲ. ಕದ್ದು ಮುಚ್ಚಿ ಮರೆಯಲ್ಲಿಯೇ ಯಾರಾದರೂ ತಪ್ಪು ಮಾಡಬೇಕಿತ್ತೇ ಹೊರತು ಇಂದಿನಂತೆ ರಾಜಾರೋಷಾಗಿ ಮಾಡಲು ಸಾಧ್ಯವೇ ಇರಲಿಲ್ಲ. ಮರ್ಯಾದೆಗೆ ಹೊಸ ವ್ಯಾಖ್ಯೆ ಬರೆಯುವ, ಪಾಶ್ಚಾತ್ಯ ಚಿಂತನೆಗಳನ್ನು ವಾಮಮಾರ್ಗದಲ್ಲಿ ತೂರಿಬಿಡುವ ಇಂದಿನ ಶೈಲಿಯ ವಿಕಾರಗಳಿಗೆ ಆಗ - ಇಂದಿನಂತೆ ಯಾವ ವೇದಿಕೆಯೂ ಇರಲಿಲ್ಲ. ಬದುಕನ್ನು ನೀರಸವಾಗಿಸುವ ಪ್ರಚಾರಪ್ರಿಯ ಹೋರಾಟಗಾರರಾಗಲೀ ಪ್ರತಿಭಟನಾ ಧಂದೆನಿರತರಾಗಲೀ - ಆಗ ಇರಲಿಲ್ಲ. ಕೆಲವೇ ಕಲಾವಿದರು ಮತ್ತು ಬಹು ಸಂಖ್ಯೆಯ ಶ್ರೋತೃಗಳಿದ್ದರು. ಆದ್ದರಿಂದ ಕಲೆ ಮತ್ತು ಕಲಾವಿದರಿಗೆ ವಿಶೇಷ ಮನ್ನಣೆಯಿತ್ತು. ಎಲ್ಲರೂ ಶ್ರದ್ಧೆಯಿಂದ ಅವರವರ ಬದುಕನ್ನು ಮಾತ್ರ ಸವಿಯುತ್ತಿದ್ದರು. ಸಾಮಾನ್ಯ ಜನರ "ಮರ್ಯಾದೆ" ಎಂಬ ವ್ಯಾಖ್ಯೆಗೆ ಅಂದು ವಿಶೇಷ ಮರ್ಯಾದೆಯಿತ್ತು. ಅಂದರೆ ಅಂದಿನ ಕೋಟೇಶ್ವರದ ಜನರೆಲ್ಲರೂ ದೇವತಾಸಂಭೂತರೆಂದು ಅರ್ಥವಲ್ಲ. "ಮನುಷ್ಯ ಪ್ರಾಣಿ"ಗಳು ಎಂಬ ವರ್ಗದಲ್ಲಿರುವ ಎಲ್ಲ ಕೊರತೆ, ದೌರ್ಬಲ್ಯಗಳೂ ಅಲ್ಲಲ್ಲಿ ಇದ್ದವು. ಆದರೆ ಭಯ ಭಕ್ತಿಯಿಂದ - ಪರಸ್ಪರ ಕೊಟ್ಟು ಪಡೆಯುವ, ಕೂಡಿ ಬಾಳುವ, ಕ್ಷಮಿಸಿ ಸ್ವೀಕರಿಸುವ, ಎಲ್ಲರೂ ಬದುಕಲಿ ಎಂಬ ಸಜ್ಜನಿಕೆಯಿಂದ ಬದುಕನ್ನು ಗೌರವಿಸುವ ಸಮಭಾವದ ಸೌಹಾರ್ದವು ಅಲ್ಲಿ ಬರಿಗಣ್ಣಿಗೇ ಕಾಣಿಸುವಂತಿತ್ತು. ಪುಣ್ಯದ ಅರಿವಿತ್ತು; ಪಾಪದ ಎಚ್ಚರವಿತ್ತು. ಮಾನವ ದೌರ್ಬಲ್ಯಜನ್ಯ ಅಪರಾಧಗಳು ಒಮ್ಮೊಮ್ಮೆ ಸಂಭವಿಸುತ್ತಿದ್ದರೂ ಕ್ರೌರ್ಯಜನ್ಯ ಅಪರಾಧಗಳು ಇರಲಿಲ್ಲ. ಅಂದಿನ ಬಹು ಪಾಲು ಹಳ್ಳಿಗಳೂ ಹೀಗೇ ಇದ್ದವು.
ಅಂತಹ ಕೋಟೇಶ್ವರದಲ್ಲಿ ಒಂದು ಹುಲ್ಲಿನ ಕುಟೀರ. ಅದೇ ನಮ್ಮ ಅರಮನೆಯಾಗಿತ್ತು. ಆ ಕುಟೀರದ ಎದುರಿನಲ್ಲೊಂದು ವಿಶಾಲವಾದ ಅಂಗಳ. ಹಿಂಬದಿಯಲ್ಲಿ ಹಿತ್ತಲು. ಮನೆಯ ಎಡಬದಿಯಲ್ಲಿ ದೊಡ್ಡ ಹಾಡಿ. ಸುತ್ತಲೂ ಬಗೆಬಗೆಯ ಮರಗಿಡಗಳು. ಬಾಗಿಲೇ ಇಲ್ಲದ, ಪ್ರಕೃತಿಗೆ ಪೂರ್ತಿಯಾಗಿ ತೆರೆದುಕೊಂಡ ಆ ಸರಳ ಮಂದಿರಕ್ಕೆ - ನಮ್ಮ ಅಪ್ಪಯ್ಯ ಮತ್ತು ಅಮ್ಮನು ತಮ್ಮ ಪ್ರೀತಿಯ ಉಸಿರಿನಿಂದಲೇ ವೈಭವವನ್ನು ತುಂಬಿಸಿದಂತಿತ್ತು. ಅದು ಮನೆಯಲ್ಲ; ಸಂಸಾರ ಪ್ರೀತಿಯ ತಪಸ್ಸು ನಡೆಯುತ್ತಿದ್ದ ಆಶ್ರಮದಂತಿತ್ತು. ಒಂದು ಬೆಂಚು, ಒಂದು ಮೇಜು, ಒಂದು ಕುರ್ಚಿ - ಇಷ್ಟನ್ನು ಬಿಟ್ಟರೆ ಬೇರೆ ಪೀಠೋಪಕರಣಗಳೂ ಆ ಮನೆಯಲ್ಲಿರಲಿಲ್ಲ. ಅವೆಲ್ಲವೂ ಅಪ್ಪಯ್ಯನು ಉಪಯೋಗಿಸುವ ವಸ್ತುಗಳಾಗಿದ್ದವು; ನಮಗೆ ಮಕ್ಕಳಿಗೆಲ್ಲ ಹತ್ತಿ ಹಾರಲು, ಸುತ್ತಲೂ ಓಡಲು ಬಳಕೆಯಾಗುತ್ತಿದ್ದ ವ್ಯವಸ್ಥೆಯಷ್ಟೇ ಆಗಿತ್ತು. ಕಪಾಟುಗಳ ತುಂಬ ರಾಶಿ ರಾಶಿ ಪುಸ್ತಕಗಳಿದ್ದವು. ದುಡ್ಡಿನ ವೈಭವ ಇಲ್ಲದಿದ್ದರೂ ಆ ಮನೆಯಲ್ಲಿ ದಾರಿದ್ರ್ಯ ಇದ್ದಿರಲಿಲ್ಲ. ಅಥವ - ಅಂದು ಅಲ್ಲಿ ವಾಸಿಸುತ್ತಿದ್ದವರ ಮನಸ್ಸಿನಲ್ಲಿ ದಾರಿದ್ರ್ಯವಿರಲಿಲ್ಲ ಅನ್ನಬಹುದು. ನಮ್ಮ ಪಾಲಿಗೆ - ಚೊಕ್ಕ ಸಂಸಾರದ ಚಿಕ್ಕ ವ್ಯಾಖ್ಯೆಯಂತೆ ಕೋಟೇಶ್ವರದ ಆ ನಮ್ಮ ಮನೆಯು ಶಾಂತವಾಗಿ ನಿಂತಿತ್ತು. ನಾವು ಅರಳಿದ್ದೇ ಆ ಮನೆಯ ಅಂಗಳ, ಹಿತ್ತಲಿನಲ್ಲಿ. ನನಗಂತೂ - ಮನೆಯೆಂಬುದು ಊಟ, ನಿದ್ದೆಗೆ ಮಾತ್ರ ಎಂಬಂಥ - ಪ್ರಕೃತಿಯಲ್ಲಿಯೇ ಮಗ್ನವಾಗಿದ್ದ ಚಟುವಟಿಕೆಯ ನನ್ನ ಬದುಕಿನ ಅವಧಿಯದು. ಆಕಾಶವನ್ನು ಮುಟ್ಟುವ ಉತ್ಸಾಹದ ನೆಗೆತ... ಪರಿಮಳದ ಗಾಳಿಯನ್ನು ತಬ್ಬಿಕೊಳ್ಳುವ ನೆಲೆಯಿಲ್ಲದ ಚಾಂಚಲ್ಯ... ಮಳೆಯಲ್ಲಿ ನೆನೆದು ಹಸಿಯಾಗುವ ಲೋಲಕ ಭಾವ... ಮಾಡಿನಿಂದ ಇಳಿಯುವ ನೀರನ್ನು ಬೊಗಸೆಯಲ್ಲಿ ತುಂಬಿಕೊಳ್ಳುವ ರೋಮಾಂಚ ತವಕ... ಮರವನ್ನು ಹತ್ತಿ ಇಳಿದು ತಬ್ಬಿಕೊಂಡು ಗರಗರ ಸುತ್ತುವ, ಹಾರುವ ಚಿಟ್ಟೆಯನ್ನು ಹಿಡಿಯುವ ಆಟ... ಹಸಿಬಾಲ್ಯದ ದೊಂಬರಾಟ.
ಅಂದು ಕೋಟೇಶ್ವರದ ಕೋಟಿಲಿಂಗನ ಮಡಿಲಲ್ಲಿ - ಪ್ರಕೃತಿಯ ತಡಿಯಲ್ಲಿ ವ್ಯಾಪ್ತಿ ಮೀರಿ ವಿಹರಿಸಿದ ಕೋಟಿ ಕೋಟಿ - ತುಂಡು ನೆನಪುಗಳು....
ಅಂದು ಕೋಟೇಶ್ವರದ ಸಿರಿವಂತರೆಂದು ಗುರುತಿಸಿಕೊಂಡಿದ್ದ ಕೆಲವರ ಮನೆಯಲ್ಲಿ ಮಾತ್ರ ಶೌಚಾಲಯವಿತ್ತು. 95% ನಿವಾಸಿಗಳು ಬಯಲು ಶೌಚವನ್ನೇ ಅವಲಂಬಿಸಿದ್ದರು. ಕೆಲವರ ಮನೆಯಲ್ಲಿ - ದೊಡ್ಡ ಹೊಂಡ ತೋಡಿ ಅದಕ್ಕೆ ಅಡ್ಡಲಾಗಿ ಎರಡು ಹಲಗೆಗಳನ್ನಿಟ್ಟು ಆ ಹಲಗೆಯ ಮೇಲೆ ಕೂತು ವಿಸರ್ಜನಾಕ್ರಿಯೆ ನಡೆಸುತ್ತಿದ್ದರು. ಆ "ವಿಸರ್ಗ ಭಾಗ್ಯ ಕ್ಷೇತ್ರ"ದ ಸುತ್ತಲೂ ಮಡಲಿನ ತಟ್ಟಿಯ ತಾತ್ಕಾಲಿಕ ಮರೆ; ಅದಕ್ಕೊಂದು ಲಡ್ಕಾಸು ಬಾಗಿಲೂ ಇರುತ್ತಿತ್ತು. ಆ ಹೊಂಡದಲ್ಲಿ ಸಂಗ್ರಹವಾದ ತ್ಯಾಜ್ಯವನ್ನು ಪ್ರತೀದಿನವೂ ಹೆಡಿಗೆಯಲ್ಲಿ ತುಂಬಿಸಿಕೊಂಡು ದೂರ ಕೊಂಡೊಯ್ಯುವ (ಅ)ವ್ಯವಸ್ಥೆಯು ಕೆಲವು ಊರುಗಳಲ್ಲಿತ್ತು. ಅಂತಹ ಬಲಿಷ್ಠರ ಅಂತಃ ಕಲ್ಮಷವನ್ನು ಗೋರುವ - ವಿಲೇವಾರಿ ಮಾಡುವ ಕನಿಷ್ಟ ಬಿಲ್ಲೆಗಳು ಒಮ್ಮೊಮ್ಮೆ ಗೈರುಹಾಜರಾದರೆ ಮನೆಮಂದಿಯೆಲ್ಲರೂ ಅದೇ ತ್ಯಾಜ್ಯದ ಪಳೆಯುಳಿಕೆಯ ಗುಡ್ಡೆಯನ್ನು (ಬೇಕಿದ್ದರೆ) ನೋಡುತ್ತ ಆಘ್ರಾಣಿಸುತ್ತ ಮರುದಿನದ ವಿಸರ್ಜನೆಯನ್ನೂ ನಡೆಸಬೇಕಿತ್ತು. ಈ ಯಾತನಾಮಯ ವ್ಯವಸ್ಥೆಗಿಂತ ಬಯಲು ಶೌಚವೇ ಒಳ್ಳೆಯದು ಅಂತ ನನಗೆ ಅಂದು ಗಾಢವಾಗಿ ಅನ್ನಿಸಿದ್ದಿದೆ. ಅಂತಹ ಭಾಗ್ಯವಂತ ಮನೆಗಳಲ್ಲಿ ಉಳಿದುಕೊಳ್ಳುವ ಸಂದರ್ಭ ಬಂದರೆ ನಾನು ತಪ್ಪಿಸಿಕೊಳ್ಳುತ್ತಿದ್ದುದೂ ನನಗೆ ನೆನಪಿದೆ. ಕೆಲವೊಮ್ಮೆ ಊಟ ತಿಂಡಿಯನ್ನೂ ಬಿಟ್ಟು ಉಪವಾಸದಲ್ಲಿದ್ದು ಅಂತಹ ಸಂದರ್ಭಗಳನ್ನು ವೇದನೆಯಿಂದ ನಿಭಾಯಿಸಿದ್ದೂ ಇದೆ. ಕುಂಬ್ಳೆ ಬದಿಯಡ್ಕದ ಸಮೀಪದ (ಕೇರಳದ ಕಾಸರಗೋಡು) "ನೂಜಿ" ಮನೆಯ ಶ್ರೀ ದಾಮೋದರ ಭಟ್ ಅವರೊಂದಿಗೆ ನನ್ನ ಮದುವೆ ನಿಶ್ಚಯವಾಗುವ ಮೊದಲು (1978) ನಾನು ಅವರನ್ನು ಕೇಳಿದ್ದು "ಶೌಚಾಲಯ ಇದೆಯಾ ?" ಎಂಬ ಒಂದೇ ಪ್ರಶ್ನೆ. ಅದು ನನ್ನ ಬೇಡಿಕೆಯೂ ಆದ್ದರಿಂದ ಮದುವೆಗಿಂತ ಮೊದಲು ನನ್ನ ಗಂಡನ ಮನೆಯಲ್ಲಿ ಶೌಚಾಲಯವು ನಿರ್ಮಾಣವಾಯಿತು. ಇವೆಲ್ಲವೂ ಅನಂತರದ ಕತೆ. ಆದರೆ ಬಾಲ್ಯದಲ್ಲಿ ಥೇಟು ಮರಕೋತಿಯಾಗಿದ್ದ ನಾನು - ಮರ ಗಿಡಗಳಿಂದ ತುಂಬಿದ ಹಾಡಿಗಳಲ್ಲಿ ನನ್ನಷ್ಟಕ್ಕೇ ಸಂವಹನ ನಡೆಸಿದ್ದು, ಒಮ್ಮೊಮ್ಮೆ ಜೊತೆಯಲ್ಲಿದ್ದ ಮಕ್ಕಳ ಟೀಮಿನೊಂದಿಗೆ ನಡೆಸಿದ ಸಮೂಹ ಪಾರುಪತ್ಯವು ಅಷ್ಟಿಷ್ಟಲ್ಲ.
ಬಾಲ್ಯದಲ್ಲಿ ನನ್ನಲ್ಲಿ ಸ್ವಾತಂತ್ರ್ಯದ ಭಾವವನ್ನು ತುಂಬುತ್ತಿದ್ದ ನಮ್ಮೂರಿನ ಹಾಡಿಗಳು ಅಂದು ನನಗೆ ಜೀವನ ದರ್ಶನವನ್ನೂ ಮಾಡಿಸಿದ್ದವು. ತುಂಬ ದುಃಖವಾದಾಗ ಹಾಡಿಯಲ್ಲಿ ಅತ್ತು ಹಗುರಾಗುತ್ತಿದ್ದವರನ್ನು ಹಾಡಿ ಸಂಚಾರದ ವೇಳೆಯಲ್ಲಿ ನಾನು ನೋಡಿದ್ದೇನೆ. ಕೂಡುಕುಟುಂಬಗಳೇ ಅಧಿಕವಾಗಿದ್ದ ಆ ಕಾಲದಲ್ಲಿ ಮನೆಯಲ್ಲಿ ಮನಬಿಚ್ಚಿ ಅಳುವುದಕ್ಕೂ ಅವಕಾಶವಿರಲಿಲ್ಲ. ಅಂತಹ ದುಗುಡಗಳಿಗೆಲ್ಲ ಅಂದಿನ ಹಾಡಿಗಳು ಮೂಕಸಾಕ್ಷಿಯಾಗಿದ್ದವು. ಕದ್ದು ಮುಚ್ಚಿ ನಡೆಸುವ ಕೆಲಸಗಳಿಗೆಲ್ಲ ಊರಿನ ಬಗೆಬಗೆಯ ಹಾಡಿಗಳ ಬೆಂಬಲವಿರುತ್ತಿತ್ತು. ವಿಜಾತಿಯ ಶಾಲಾಸ್ನೇಹಿತೆಯರು ಬಂದರೆ ಹಾಡಿಯ ಮೂಲೆಯಲ್ಲಿ ನಿಂತು ಮಾತನಾಡಿ ಕಳಿಸುತ್ತಿದ್ದವರಿದ್ದರು. ಬಡತನವು ವ್ಯಾಪಕವಾಗಿದ್ದ ಆ ಕಾಲದಲ್ಲಿ ಉರುವಲಿಗಾಗಿ ಇನ್ನೊಬ್ಬರ ಮನೆಯ ಹಾಡಿಯ ದರಲೆ, ರೆಂಬೆಕೊಂಬೆಗಳನ್ನೆಲ್ಲ ಕಡಿದು ಹೊತ್ತೊಯ್ಯುವವರೂ ಇದ್ದರು; ಅಕಸ್ಮಾತ್ ಸಿಕ್ಕಿ ಬಿದ್ದರೆ ಊರು ಒಂದಾಗುವಂತಹ ರಂಪ ರಾಮಾಯಣವಾಗುವುದೂ ಇತ್ತು. ಅಂತೂ ಅಂದಿನ ಬದುಕುಗಳನ್ನು ನಿರ್ದೇಶಿಸುವ, ಒಮ್ಮೊಮ್ಮೆ ಎಕ್ಕುಟ್ಟಿಸುವ - ಕಟ್ಟುವ, ಒಡೆಯುವ ಎಲ್ಲ ಬಗೆಯ ಕ್ರಿಯೆಗಳಿಗೂ ಹಾಡಿಗಳು ಆಶ್ರಯ ಸ್ಥಾನವಾಗಿದ್ದವು.
ನಮ್ಮ ಕೋಟೇಶ್ವರದ ಮನೆಯ ಪಕ್ಕದ ವಿಶಾಲವಾದ ಹಾಡಿಯು ಅಂದು ನಮಗೆಲ್ಲ ಶೌಚಾಲಯವಾಗಿತ್ತು. ಪುಟ್ಟ ಮಕ್ಕಳು "ನಾನು ಹಾಡಿಗೆ ಹೋಗ್ತೇನೆ...ಚಾಚಿ ಮಾಡಿ ಬರ್ತೇನೆ.." ಅಂತ ದಿನವೂ Announce ಮಾಡಿ ಹೋಗುತ್ತಿದ್ದರು. "ತುಂಬ ದೂರ ಹೋಗ್ಬೇಡ.." ಅಂತ ಎಚ್ಚರಿಸಿಯೇ ಅಮ್ಮಂದಿರು ಕಳಿಸುತ್ತಿದ್ದರು. ಅನಂತರ, ತುಂಬ ಹೊತ್ತು ಮಕ್ಕಳ ಸದ್ದಿಲ್ಲದಿದ್ದರೆ ಅವರನ್ನು ಹುಡುಕಿಕೊಂಡು ಹಾಡಿಗೇ ಬರುತ್ತಿದ್ದರು. ಕೈಯಲ್ಲಿ ಚೆಂಬನ್ನು ಹಿಡಿದುಕೊಂಡು ಹೋಗಿ ಹಾಡಿಯಲ್ಲೇ ಶುಚಿಯಾಗಿ ಬರಲು ಆಗದ ಪುಟ್ಟ ಮಕ್ಕಳು ಹಾಡಿಯಿಂದ ಮನೆಯವರೆಗೆ ಅಂಗಿ ಬಗರಿ ಹಿಡಿದುಕೊಂಡು ಮನೆಯಂಗಳದಲ್ಲಿ ನಿಂತು "ಅಮ್ಮಾ, ನಾ ಬಂದೆ.." ಅಂತ Annonce ಮಾಡುತ್ತಿದ್ದರು. ತಕ್ಷಣವೇ ತನ್ನ ಕೆಲಸ ಬಿಟ್ಟು ಓಡಿ ಬರುತ್ತಿದ್ದ ಅಮ್ಮ, ಬಾವಿ ಕಟ್ಟೆಯಲ್ಲಿ ಅವರನ್ನು ಕೂಡಿಸಿ ನೀರು ಹೊಯ್ದು ಸ್ವಚ್ಛಗೊಳಿಸಿ ಬಿಡುತ್ತಿದ್ದಳು.
ಸುಮಾರು ಒಂದೇ ವಯಸ್ಸಿನ ಪುಟ್ಟ ಮಕ್ಕಳಿದ್ದರೆ ಅವರೆಲ್ಲರೂ ಒಟ್ಟಿಗೆ ಹಾಡಿಗೆ ಹೋಗಿ ಮಜವಾಗಿ ಮಾತಾಡುತ್ತ ಶೌಚಕ್ರಿಯೆಯನ್ನು ನಡೆಸುತ್ತಿದ್ದುದೂ ಇತ್ತು; ಕೆಲವೊಮ್ಮೆ ಅಲ್ಲೇ ಜಗಳ ಶುರುವಾಗಿ ಅಂತಹ ವಾಗ್ಯುದ್ಧವು ದೃಷ್ಟಿ ಯುದ್ಧವಾಗಿ ಮುಷ್ಟಾಮುಷ್ಟಿಯಾಗಿ ಒಬ್ಬರನ್ನೊಬ್ಬರು ಹರಪಿ ಕಚ್ಚುವ ವರೆಗೂ ಹೋಗುತ್ತಿತ್ತು. ಸುಮಾರು ಏಳರಿಂದ ಹತ್ತು ವರ್ಷದ ಒಳಗಿನ ಮಕ್ಕಳ ಕತೆಯಿದು. ಶಾಲೆಗೆ ಎಪ್ರಿಲ್ ಮೇ ತಿಂಗಳ ದೊಡ್ಡ ರಜೆ ಬಂತೆಂದರೆ ಮನೆಗಳಲ್ಲಿ ಮಕ್ಕಳದೇ ಗೋಂಗುಲ್ಲು. ಆ ದಿನಗಳಲ್ಲಿ, ಬಂಧುಗಳ ಮಕ್ಕಳೆಲ್ಲರೂ ತಮ್ಮ ಅಥವ ಅವರಿವರ ಮನೆಯಲ್ಲಿ ಒಟ್ಟುಗೂಡುವುದು ಸಾಮಾನ್ಯವಾಗಿತ್ತು. ನನ್ನ ಅಪ್ಪಯ್ಯನ ತಮ್ಮನಾದ ದಿ. ಆನಂದರಾಮ ಉಡುಪರ ಮಕ್ಕಳು ಆಗ ನಮ್ಮ ಮನೆಗೆ ಬಂದು ಉಳಿಯುತ್ತಿದ್ದುದಿತ್ತು. ಆ ಮಕ್ಕಳು ಎಷ್ಟು "ಒಳ್ಳೆಯ" ಮಕ್ಕಳಾಗಿದ್ದರೆಂದರೆ...ಅಂದು ನನಗೆ ... ಬರೇ "ಸಪ್ಪೆ ಸಂಕ್ರಾಂತಿ" ಅನ್ನಿಸುವಷ್ಟು, ಅಸಹನೀಯವೆನಿಸುವಷ್ಟು ಅವರು ಒಳ್ಳೆಯವರಾಗಿದ್ದರು. ಅವರ ಅಮ್ಮ ನಮಗೆಲ್ಲ ದೊಡ್ಡ ಚಿಕ್ಕಿ ಆಗಿದ್ದರು. (ನಾವು ಅವರನ್ನು "ದೊಡ್ಡ ಚಿಕ್ಕಿ" ಅನ್ನುತ್ತಿದ್ದೆವು. ಅಪ್ಪಯ್ಯನ ಇನ್ನೊಬ್ಬರು ಚಿಕ್ಕ ತಮ್ಮ...ದಿ. ರಾಮಚಂದ್ರ ಉಡುಪರ ಪತ್ನಿಯು ನಮ್ಮ "ಸಣ್ಣ ಚಿಕ್ಕಿ"....) ಈ ದೊಡ್ಡ ಚಿಕ್ಕಿಯು "ಇಲ್ಲಿ ಕೂತಿರು..." ಅಂತ ತನ್ನ ಮಗನಿಗೆ ಹೇಳಿದರೆ ಮತ್ತೊಮ್ಮೆ ಅವರೇ ಬಂದು "ಏಳು..ಆಡಿಕೋ..ಹೋಗು" ಅನ್ನುವವರೆಗೂ ಆ ಮಕ್ಕಳು ಕೂತಲ್ಲಿಂದ ಅಲುಗದೆ ಪಿತೃವಾಕ್ಯ ಮಾತೃವಾಕ್ಯ ಪರಿಪಾಲನೆ ಮಾಡುತ್ತಿದ್ದರು. ನಾನು ಅವರನ್ನು ಬನ್ನಿರೋ ಅಂತ ಕರೆದರೂ ಅವರು ಕೂತಲ್ಲಿಂದ ಏಳುತ್ತಿರಲಿಲ್ಲ. ಆ ದಿನಗಳಲ್ಲಿ "ಭಯಂಕರ" ಕಿಲಾಡಿಯಾಗಿದ್ದ ನನಗೆ "ಇದೊಳ್ಳೆ ವಿಚಿತ್ರ" ಅನ್ನಿಸಿದ್ದೂ ಇತ್ತು. "ಬರೇ ಪಾಪ"ದ ಆ ಮಕ್ಕಳ ಸಂಚಿತ "ಪಾಪ"ವನ್ನು ಕೀಟಲೆಯ ಕಾಟದಿಂದ ಹರಿದು ತೆಗೆಯಲು - ನಮ್ಮಲ್ಲಿ ಕೆಲವರು ಪ್ರಯತ್ನಿಸಿದ್ದೂ ಇತ್ತು.
ಆದರೆ ಆಗ, ನಮ್ಮ ಮನೆಯಲ್ಲಿ ಅಮ್ಮನ ವ್ಯಾಪ್ತಿ ಪ್ರದೇಶದಲ್ಲಿ ಯಾವುದೇ ಅಧಿಕಪ್ರಸಂಗ ಮಾಡಲು ಆಗುತ್ತಿರಲಿಲ್ಲ. ಅಮ್ಮನ ಭಯವಿತ್ತು. ಅಮ್ಮನ ಪೆಟ್ಟಿನ ಭಯವಲ್ಲ. ಅವಳ ಉಪದೇಶ ಮಿಶ್ರಿತ ವಾಗ್ದಂಡನೆಯ ದೀರ್ಘ ವಾಗ್ಸಿಂಚನವು ಆಗ ನನಗೆ ತುಂಬ ಕಿರಿಕಿರಿ ಅನ್ನಿಸುತ್ತಿತ್ತು. ಆದ್ದರಿಂದ ಅಮ್ಮನಿಂದ ಕಣ್ಮರೆಯಾಗಿದ್ದುಕೊಂಡೇ ನಮ್ಮ ಸೃಜನಶೀಲ ಕೆಲಸಗಳು ನಡೆಯುತ್ತಿದ್ದವು.
ಹೀಗಿರುವಾಗ ಎಂದಿನಂತೆ ಒಂದು ದಿನ ಬೆಳಿಗ್ಗೆ ನಾವೆಲ್ಲರೂ ಒಟ್ಟಿಗೆ ಹಾಡಿಗೆ ಹೊರಟೆವು. ನಾನು, ನನ್ನ ತಂಗಿ, ದೊಡ್ಡ ಚಿಕ್ಕಿಯ ಮೂರು ಮಕ್ಕಳು...ಒಟ್ಟಿಗೆ ಐದು ಜನ ಹಾಡಿಗೆ ಹೋಗಿ ಸ್ವಲ್ಪ ಸ್ವಲ್ಪ ದೂರದಲ್ಲಿ ಕೂತು ಮಾತಾಡುತ್ತ ಶೌಚ ಕ್ರಿಯೆ ಮುಗಿಸಿದೆವು. ಆಗ ನನಗೆ ಗೊತ್ತಿದ್ದರೂ - ನಾನು ಅವರಲ್ಲಿ ಒಬ್ಬೊಬ್ಬರನ್ನೇ "ನಿನ್ನ ಹೆಸರೇನು? ನಿನ್ನ ಹೆಸರೇನು?" ಅಂತ ಕೇಳಿದೆ. ನನಗೆ ಗೊತ್ತಿದೆ ಎಂಬುದು ತಿಳಿದಿದ್ದರೂ ಅವರೆಲ್ಲರೂ ವಿಧೇಯತೆಯಿಂದ "ಶ್ರೀಧರ, ವಿದ್ಯಾಧರ, ಶಶಿಧರ..." ಅಂತ ವಿಧೇಯತೆಯಿಂದ ಉತ್ತರ ಕೊಟ್ಟರು. ಆಗ ನಾನು "ಆಮೇಲೆ?" ಅಂದೆ. "ಶ್ರೀಧರ ಉಡುಪ, ವಿದ್ಯಾಧರ ಉಡುಪ, ಶಶಿಧರ ಉಡುಪ.." ಅಂತ ಉಡುಪನನ್ನು ಹೆಸರಿಗೆ ಜೋಡಿಸಿದರು. ನಾನು ನಗುತ್ತ - ಪಕ್ಕದಲ್ಲೇ ಇದ್ದ ಒಂದು ಸಣ್ಣ ಕಲ್ಲನ್ನು ಅವರತ್ತ ಒಗೆದು - "ಆಮೇಲೆ" ಅಂದೆ. ಅವರು ಅಷ್ಟೇ ವಿಧೇಯತೆಯಿಂದ "ಅಷ್ಟೆ... ಅಷ್ಟೇ ಹೆಸರು.." ಅಂದರು. ಆ ಹುಡುಗರ ಮುಖದಲ್ಲಿ ಯಾವುದೇ ಒಂದು ನಗುವಿಲ್ಲ; ಕಿಲಾಡಿತನವಿಲ್ಲ; ಚೇಷ್ಟೆಯಿಲ್ಲ. ಪ್ರಶ್ನೆಗೆ ಗಂಭೀರವಾಗಿ ನಿರ್ಭಾವದಿಂದ ಉತ್ತರ ನೀಡುತ್ತಿದ್ದರು. ಆಗ ನನ್ನ ಮುಖಭಾವವನ್ನು ಕಂಡ ನನ್ನ ತಂಗಿಗೆ ಏನೋ ಕಿತಾಪತಿಯ ವಾಸನೆ ಬಡಿದು "ಬಾ...ಮನೆಗೆ ಹೋಗುವ...ಬಾ" ಅಂತ ನನ್ನನ್ನು ಎಳೆಯತೊಡಗಿದಳು. "ಶ್ರೀಧರ, ವಿದ್ಯಾಧರ, ಶಶಿಧರ, ದರದರ, ದುರುದುರು, ದರ ದರ, ದುರು ದುರು..ಬುರ್ರ್" ಅನ್ನುತ್ತ ಅವರತ್ತ ಕೈ ತೋರಿಸುತ್ತ ಅಂಗಳಕ್ಕೆ ಓಡಿ ಬಂದ ನಾನು, ಸ್ವಚ್ಛಗೊಳಿಸಲು ಕಾಯುತ್ತಿದ್ದ ಅಮ್ಮನಿಗೆ ನನ್ನನ್ನು ಒಪ್ಪಿಸಿಕೊಂಡೆ. ನನ್ನ ಹಿಂದಿನಿಂದಲೇ ಬಂದ ಆ ಸೋದರರನ್ನು ಮತ್ತೊಮ್ಮೆ ನೋಡುತ್ತ "ದರದರ...ದುರುದುರು.." ಅನ್ನುತ್ತಲೇ ಮನೆಯ ಒಳಗೆ ಓಡಿದ ನನ್ನನ್ನು ದೊಡ್ಡ ಚಿಕ್ಕಿ ಕರೆದರು. "ಎಂತ ಹೆಣೆ, ದರದರ, ದುರು ದುರು...?" ಅಂದರು. ತಮ್ಮ ಎಂದಿನ ಕಿಲಾಡಿ ನಗು ನಗುತ್ತಿದ್ದ ಅವರಿಗೆ ಏನೂ ಉತ್ತರಿಸದೆ - ನಾನು ನಗುತ್ತ ಅಲ್ಲಿಂದ ಓಡಿದೆ. ಅಷ್ಟರಲ್ಲಿ ಮಕ್ಕಳನ್ನೆಲ್ಲ ಸ್ವಚ್ಛಗೊಳಿಸಿದ ನನ್ನ ಅಮ್ಮ ಮನೆಯೊಳಗೆ ಬರುತ್ತ "ನಿಮ್ಮನ್ ಹುಡುಕ್ತಾ ನಾನೀಗ ಹಾಡಿಗೆ ಹೊರಟಿದ್ದೆ ಗೊತ್ತಾ ? ಅಲ್ಲೂ ಆಟ ಆಡ್ತಾ ಕೂತ್ರ್ಯಾ ? ಹೋದ್ ಕೆಲಸ ಮಾಡ್ಕಂಡ್ ರಪ್ಪ ಬಪ್ಪಕಾತ್ತಿಲ್ಯಾ ? ನೀವ್ ಹೋಯ್ ಎಷ್ಟು ಹೊತ್ತಾಯ್ತು ? ಅಲ್ಲಿ ಎಂತ ಮಾಡ್ತ್ರೀ ? ಚಪ್ ಹೆಕ್ತ್ರ್ಯಾ? ಎಂತಕ್ ಹೋದ್ರೂ ಸಾಬೀತಲ್ಲ್ ಮುಗಿಯುದಂತಿಲ್ಲೆ. ಎಂತಕ್ಹೋದ್ರೂ ರಗಳೆಯೇ..." ಅಂತ ಗೊಣಗುತ್ತ, ಸಿಡಿಸಿಡಿ ಅನ್ನುತ್ತ ಅಮ್ಮ ತನ್ನ ಕೆಲಸಕ್ಕೆ ಹೋದಳು. ಆಗ "ಅಯ್ಯೋ...ಹೋಗ್ಲಿ ಅಕ್ಕ; ಮಕ್ಕಳಂದ್ರೆ ಹಾಗೇ. ಮಕ್ಕಳ ನಗೆಚಾಟಿಕೆ ಇದ್ದದ್ದೇ..." ಅನ್ನುತ್ತ ದೊಡ್ಡ ಚಿಕ್ಕಿ ತನ್ನ ಎಂದಿನ ಕಿಲಾಡಿ ನಗು ಬೀರಿದಳು. ಆದರೆ ಇದೇ ನಮ್ಮ ದೊಡ್ಡ ಚಿಕ್ಕಿಗೆ ಅನಂತರ ಹುಟ್ಟಿದ ಮಕ್ಕಳಿಗೆ "ಧರ ಧರ ಧರ" ಎಂಬ ಅಂತ್ಯಪ್ರಾಸದ ಹೆಸರು ನಿಂತೇ ಹೋಯಿತು. ಆ ಮಕ್ಕಳೆಲ್ಲರೂ ಅನಂತರ ಒಳ್ಳೆಯ ವಿದ್ಯಾವಂತರಾಗಿ ಈಗಲೂ ನಿರುಪದ್ರವಿ ಜೀವನ ನಡೆಸುತ್ತಿದ್ದಾರೆ. ಅವರ ಸ್ವಭಾವ ಮತ್ತು ನೈಜಶಕ್ತಿಯಾದ ವಿನಯ ಮತ್ತು ಸಹನೆಯಿಂದಲೇ ಅವರೆಲ್ಲರೂ ತಂತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಸಂಯಮ ಮತ್ತು ತೃಪ್ತಿಯಿಂದ - ಬಂದ ಬದುಕನ್ನು ಬಂದಂತೆಯೇ ಸ್ವೀಕರಿಸಿದ್ದಾರೆ.
ರಜೆಗೆ ಅಜ್ಜನ ಮನೆಗೆ ಹೋಗುವ ಉತ್ಸಾಹ ನನಗಿದ್ದಷ್ಟು ನಮ್ಮ ಮನೆಯಲ್ಲಿ ಬೇರೆ ಯಾರಿಗೂ ಇರಲಿಲ್ಲ. ಬಿಸಿಲಲ್ಲಿ ಸೊಕ್ಕುವುದು ಅಂದಿನ ನನ್ನ ಇಷ್ಟದ ಕೆಲಸವಾಗಿತ್ತು. ಒಂದು ಬೇಸಿಗೆಯ ರಜದಲ್ಲಿ ಸಾಲಿಗ್ರಾಮದಲ್ಲಿದ್ದ ದೊಡ್ಡಪ್ಪಯ್ಯನ (ಅಪ್ಪಯ್ಯನ ಅಣ್ಣ ದಿ. ಕೃಷ್ಣ ಉಡುಪರು) ಮನೆಯಲ್ಲಿ ಒಂದು ವಾರ.....ಅನಂತರ ಅಜ್ಜನ ಮನೆ ಐರೋಡಿ (ಅಮ್ಮನ ತಂದೆಯ ಮನೆ) ಯಲ್ಲಿ ಒಂದು ವಾರ ಅಂತ 15 ದಿನದ ತಿರುಗಾಟಕ್ಕೆ - ಆಗ ನಾನು ತಯಾರಾಗಿದ್ದೆ. ಅಪ್ಪಯ್ಯನಿಗಾಗಲೀ ಅಮ್ಮನಿಗಾಗಲೀ ನನ್ನ ಈ ದೀರ್ಘ ತಿರುಗಾಟವು ಇಷ್ಟವಿರಲಿಲ್ಲ. "ಒಟ್ಟು ನಾಲ್ಕು ದಿನ ಸಾಕು. ಎಲ್ಲೆಲ್ಲಿಗೋ ಹೋಗಿ ಯಾಕೆ ಇರಬೇಕು ? ನೀನು ನಮ್ಮ ತಲೆ ಕೆಡಿಸಿದರೆ ಸಾಕು. ಅವರಿಗೂ ಯಾಕೆ ತೊಂದರೆ..." ಅಂತ ಏನೇನು ಹೇಳಿದರೂ ನನಗೆ ನನ್ನದೇ ಹಠ. ಕೊನೆಗೆ ನನ್ನನ್ನು ಕನ್ನಡಿ ಬಾಗಿಲಿನ CPC ಬಸ್ಸಿನಲ್ಲಿ ಕೂರಿಸಿ, ನನ್ನನ್ನು ಸಾಲಿಗ್ರಾಮದ ಮನೆಯ ಎದುರಿನಲ್ಲೇ ಇಳಿಸುವಂತೆ ಪರಿಚಿತ ಕಂಡಕ್ಟರನಿಗೆ ಹೇಳಿ - ಕಳಿಸಿಕೊಟ್ಟರು. ಎಲ್ಲ ಬಸ್ಸುಗಳಿಗೂ ಟರ್ಪಾಲಿನ ವ್ಯವಸ್ಥೆಯಿದ್ದ ಆ ಕಾಲದಲ್ಲಿ - CPC ಬಸ್ಸಿನಲ್ಲಿ ಮಾತ್ರ - ಮೊತ್ತಮೊದಲಿಗೆ ಗಾಜಿನ ತಡೆ ಹಾಕಿ ಕಿಟಕಿ ಬಾಗಿಲುಗಳನ್ನು ಸಿಂಗರಿಸಿದ್ದರು. ಆ CPC ಬಸ್ಸಿನಲ್ಲಿ ಪ್ರಯಾಣ ಮಾಡುವುದೇ ದೊಡ್ಡ ಸಾಧನೆ ಎಂದು ನಾನು ಭಾವಿಸಿದ್ದ ಕಾಲವದು. ಮನುಷ್ಯರು ಕೈ ಅಡ್ಡ ಹಾಕಿದಲ್ಲೆಲ್ಲ ಅಂದಿನ ಬಸ್ಸುಗಳು ನಿಲ್ಲುತ್ತಿದ್ದವು. ನಿಂತು ನಿಂತು - ಜನರನ್ನು ಕರೆಕರೆದು ಹತ್ತಿಸಿಕೊಳ್ಳುತ್ತಿದ್ದವು. ಜನರಿಗೆ ಇಳಿಯಬೇಕಾದ ಸ್ಥಳದಲ್ಲಿ ಅಲ್ಲಲ್ಲಿ ಬಸ್ಸನ್ನು ನಿಲ್ಲಿಸಿ ಜನರನ್ನು ಇಳಿಸುತ್ತಿದ್ದರು. ಒಟ್ಟಿನಲ್ಲಿ ಸಾರಿಗೆ ಎಂಬುದು ನಿಜವಾದ ಅರ್ಥದಲ್ಲಿ ಸೇವೆಯೇ ಆಗಿತ್ತು. ಕೋಟೇಶ್ವರದ ನಮ್ಮ ಮನೆಯ ಇದಿರಿನಲ್ಲಿಯೇ ಬಸ್ ಹತ್ತಿದ್ದ ನನ್ನನ್ನು ಸಾಲಿಗ್ರಾಮದ ದೊಡ್ಡಪ್ಪಯ್ಯನ ಮನೆಯ ಎದುರಿನಲ್ಲಿ (ಇಂದಿನ Divine Park) ಇಳಿಸಿದ ಕಂಡಕ್ಟರ್ರು ನನ್ನ ಕೈ ಹಿಡಿದುಕೊಂಡು ಮನೆಯ ಒಳಗೆ ಕರೆತಂದು ನನ್ನನ್ನೂ ನನ್ನ ಎರಡು ಅಂಗಿಗಳಿದ್ದ ಪುಟ್ಟ ಚೀಲವನ್ನೂ ದೊಡ್ಡಮ್ಮನ ವಶಕ್ಕೆ ಒಪ್ಪಿಸಿ ಹೊರಟು ಹೋಗಿದ್ದರು ! (ಆ ಬಸ್ಸು ಉಡುಪಿಯವರೆಗೆ ಹೋಗಿ ಮತ್ತೆ ಕುಂದಾಪುರಕ್ಕೆ ಹೋಗುವಾಗ ಕೋಟೇಶ್ವರದ ನಮ್ಮ ಮನೆಯೆದುರಿನಲ್ಲಿ ಇಳಿದು "ನಿಮ್ಮ ಮಗಳನ್ನು ಸಾಲಿಗ್ರಾಮ ತಲುಪಿಸಿದ್ದೇನೆ.." ಅಂತ ಆ ಕಂಡಕ್ಟರ್ರು ಹೇಳಿ ಹೋಗಿದ್ದರಂತೆ !) ಅಂದು ನನ್ನನ್ನು ಮನೆಯಲ್ಲಿಳಿಸಿ ಹೊರಟ ಆ ಕಂಡಕ್ಟರ್ ರ ಹಿಂದೇ ಓಡಿದ್ದ ನಾನು "ರೈಟ್ ರೈಟ್" ಅನ್ನುತ್ತ ಕಂಡಕ್ಟರ್ರು ಬಸ್ ಹತ್ತುವುದನ್ನು ನೋಡಿಕೊಂಡು ಒಳಗೆ ಬಂದಿದ್ದೆ. ಎಲ್ಲ ಮಕ್ಕಳಂತೆ - ಡ್ರೈವರ್ ಕಂಡಕ್ಟರ್ ಅಂತಹ ಸ್ಥಾನ ಮಾನ ಯಾರಿಗೂ ಎಲ್ಲೂ ಇಲ್ಲ ಎಂಬ ಭಾವನೆಯಿದ್ದ ನಾನು ಅಂದು ಅವರನ್ನೆಲ್ಲ ಆರಾಧಿಸುತ್ತಿದ್ದೆ.
ಕಂಡಕ್ಟರನ್ನು ಕಳಿಸಿಕೊಟ್ಟು ಹಿಂದಿರುಗುವಾಗ ಬಾಗಿಲಲ್ಲಿಯೇ ನನ್ನನ್ನು ಕಾಯುತ್ತಿದ್ದ ದೊಡ್ಡಮ್ಮ "ಬಂದ್ಯಾ ? ರಜೆ ಶುರುವಾಯ್ತಾ ಮಗೀಗೆ ? "ಬಿದ್ದಿಗೆ" ಬಂದ ಮಗುವಿಗೆ ಎಂತ ತಿಂಡಿ ಮಾಡುದೀಗ ? ಕಾರದಕಡ್ಡಿ ಮಾಡುದಾ?" ಅನ್ನುತ್ತ ನನ್ನನ್ನು ಎತ್ತಿಕೊಳ್ಳುತ್ತಿದ್ದರು. ದೊಡ್ಡಮ್ಮನನ್ನು ನಾನು ಅಮ್ಮಯ್ಯ ಅನ್ನುತ್ತಿದ್ದೆ... ಯಾವಾಗಲೂ ಸ್ವಚ್ಛವಾಗಿರುತ್ತಿದ್ದ ನನ್ನ ಅಮ್ಮಯ್ಯನಿಗೆ ನನಗೆ ಹಿತವೆನಿಸುತ್ತಿದ್ದ ಒಂದು ವಿಶೇಷ ಪರಿಮಳವಿತ್ತು. ನನಗೆ ಬಾಳೆಹಣ್ಣು, ಕಲ್ಲುಸಕ್ಕರೆ ಕೊಟ್ಟು ಅವರು ಖುಶಿ ಪಡಿಸುತ್ತಿದ್ದರು. ಅಡುಗೆ ಕೋಣೆಯಲ್ಲಿಯೇ ನನ್ನನ್ನು ಕೂರಿಸಿಕೊಂಡು ನನ್ನೊಡನೆ ಮಾತಾಡುತ್ತ, ನನ್ನಿಂದ ಹಾಡುಗಳನ್ನು ಹೇಳಿಸುತ್ತ ಅವರು ಅಡಿಗೆ ಕೆಲಸ ಮಾಡುತ್ತಿದ್ದರು. ಮಾತನಾಡುತ್ತ ಆಡುತ್ತ ಕೆಲಸ ಮಾಡುವುದನ್ನು ನನ್ನ ಅಮ್ಮಯ್ಯ ಮತ್ತು ನನ್ನ ಅಮ್ಮನಷ್ಟು ಚೆನ್ನಾಗಿ ಬಲ್ಲವರನ್ನು ನಾನು ಕಂಡಿಲ್ಲ. ಆದರೆ ಯಾವುದೇ ವಯಸ್ಸಿನವರನ್ನೂ ಅವರವರಿಗೆ ಇಷ್ಟವಾಗುವಂತೆ ಮಾತನಾಡಿಸಬಲ್ಲವರು "ಅಮ್ಮಯ್ಯ" ಅವರೊಬ್ಬರೇ ಆಗಿದ್ದರು. ಅಷ್ಟೊಂದು ಶಿಷ್ಟತೆ; ಎಚ್ಚರ; ಮುಖ ನೋಡಿಯೇ ಪರಭಾವವನ್ನು ಅರಿಯುವ ಪರಿಣತಿ. ಪ್ರೌಢಶಾಲೆಯನ್ನೂ ಕಾಣದಿದ್ದರೂ ಅವರು ಓದುಬರಹ ಬಲ್ಲವರಾಗಿದ್ದರು. ಸಂಸ್ಕೃತದ ಮಂತ್ರಗಳನ್ನು ಅರ್ಥ ಮಾಡಿಕೊಳ್ಳುವಷ್ಟು ಜಾಣರೂ ಆಗಿದ್ದರು! ನನ್ನ ಅಮ್ಮಯ್ಯನು ತಮ್ಮ ಬದುಕಿನಲ್ಲಿ ನುಗ್ಗುನುರಿಯಾದ ಮೇಲೆ ತೆಗೆದಿದ್ದ ಒಂದೇ ಒಂದು ಫೊಟೋ ಮಾತ್ರ ಈಗ ನನ್ನಲ್ಲಿ ಉಳಿದಿದೆ; ಸುಮಾರು 60 ರ ಹರೆಯದಲ್ಲಿ ಅವರ ಶಿಷ್ಟತೆ, ಮುಖದಲ್ಲಿ ಮೂಡಿದ್ದ ಒಂದೊಂದು ನೆರಿಗೆಯೂ ಅಮ್ಮಯ್ಯನು ದೇಹ ಸವೆಸಿದ ಪರಿಯನ್ನು ಪ್ರತಿಫಲಿಸುತ್ತಿವೆ.
(ನನ್ನ ಅಮ್ಮಯ್ಯ - ದೊಡ್ಡಮ್ಮ )
ಬೆಳಿಗ್ಗೆ ನಾಲ್ಕು ಗಂಟೆಗೆ ಎದ್ದು ಮನೆವಾರ್ತೆಗೆ ಶುರು ಮಾಡಿದರೆ ರಾತ್ರಿಯ ಊಟ ಮುಗಿಯುವವರೆಗೂ ವ್ಯವಸ್ಥಿತವಾಗಿ ಎಡೆಬಿಡದೆ ಕೆಲಸ ಮಾಡುವುದು ಹೇಗೆ ಎಂಬುದನ್ನು ನಾನು ನೋಡಿ, ಮಾಡಿ ಕಲಿತದ್ದೇ ಸಾಲಿಗ್ರಾಮದ ದೊಡ್ಡಪ್ಪಯ್ಯನ ಮನೆಯಲ್ಲಿ; ಅಮ್ಮಯ್ಯನ ಕಣ್ಣಳತೆಯಲ್ಲಿ. ರಜೆ ಕಳೆಯಲು ಹೋಗುತ್ತಿದ್ದ ನನ್ನ ಜೊತೆ ಮಾತಾಡುತ್ತ ಆಡುತ್ತಲೇ ನನ್ನ ಅಮ್ಮಯ್ಯ ನನಗೂ ಸಣ್ಣ ಸಣ್ಣ ಕೆಲಸ ಕೊಡುತ್ತಿದ್ದರು. ಅವರ ಹಿರಿಯ ಮಗ (ನನ್ನ ಅಣ್ಣಯ್ಯ ದಿ. ಸತ್ಯನಾರಾಯಣ ಉಡುಪರು) ಇಡೀ ತೆಂಗಿನಕಾಯಿಯ ಸಿಪ್ಪೆ ತೆಗೆದರೆ ಜುಟ್ಟು ಮಾತ್ರ ಉಳಿಸಿಕೊಳ್ಳುತ್ತಿದ್ದ ಆ ಕಾಯಿಗಳು ಫಳಫಳ ಹೊಳೆಯುವಂತೆ ಇರುತ್ತಿದ್ದವು. ಆ ಸುಂದರಾಂಗ ತೆಂಗಿನ ಕಾಯಿಗಳನ್ನು ಒಂದೊಂದಾಗಿ ಹೊತ್ತು ಒಳಗಿಡುವುದು ಆಗ ನನ್ನ ಕೆಲಸ. ಅಮ್ಮಯ್ಯನು ಮನೆಯನ್ನು ಗುಡಿಸಿದರೆ ಒದ್ದೆ ಬಟ್ಟೆಯಿಂದ ಒರೆಸುವುದು ನನ್ನ ಕೆಲಸ. ನೆಲ ಮತ್ತು ಗೋಡೆಯ ಕಾಲಂಶ ಭಾಗಕ್ಕೆ ಕಾವಿ ಹಾಕಿ ಒರೆದಂತಹ ಅಷ್ಟೂ ಭಾಗವನ್ನು ತಿಕ್ಕಿತಿಕ್ಕಿ ಒರೆಸಬೇಕಿತ್ತು. ಒಮ್ಮೆ ಉದ್ದಕ್ಕೆ ಒರೆಸಿ ಅನಂತರ ಅಡ್ಡಕ್ಕೆ ಒರೆಸಬೇಕು ಅಂತ ನನ್ನ ಕೈ ಹಿಡಿದು ಅಮ್ಮಯ್ಯ ತೋರಿಸಿ ಕೊಟ್ಟಿದ್ದರು. ಅಮ್ಮಯ್ಯನು ಪ್ರತೀ ದಿನವೂ ಹುಳಿ ಬೂದಿ ಹಾಕಿ ತಿಕ್ಕುತ್ತಿದ್ದ ನಿತ್ಯೋಪಯೋಗೀ ಪಾತ್ರೆಗಳನ್ನೆಲ್ಲ ತೊಳೆದ ಮೇಲೆ ಬಾವಿ ಕಟ್ಟೆಯಿಂದ ಮನೆಯ ಒಳಗೆ ಕೊಂಡೊಯ್ದು ಇಡುವ ಕೆಲಸವನ್ನೂ ಅಮ್ಮಯ್ಯನು ನನಗೆ ಕೊಡುತ್ತಿದ್ದರು. "ತೊಳೆದ ನಂತರ ಯಾವ ಪಾತ್ರೆಯನ್ನೂ ಮೈಗೆ ತಾಗಿಸಿಕೊಳ್ಳದೆ - ಒಳಗಿಡಬೇಕು.." ಅಂತ ಸೂಚನೆಯನ್ನೂ ಕೊಡುತ್ತಿದ್ದರು. ಅಂತೂ ಸಣ್ಣ ಸಣ್ಣ ಕೆಲಸಗಳನ್ನು ಮಾಡುತ್ತ - ಅರೆಯುವುದು, ಹೆರೆಯುವುದು..ಹೀಗೆ - ನನಗೆ ಮನೆವಾರ್ತೆಯ ಸಮೀಪ ದರ್ಶನವಾದದ್ದೇ ದೊಡ್ಡಪ್ಪಯ್ಯನ ಮನೆಯಲ್ಲಿ. ಕೆಲಸ ಮುಗಿದ ಮೇಲೆ ಅಮ್ಮಯ್ಯನ ಬಾಯುಪಚಾರವೂ ಇರುತ್ತಿತ್ತು. "ಕಂಡ್ಯಾ ? ಎಷ್ಟ್ ಚೆಂದ ಒರಸಿದೆ ? ಅದಕ್ಕೇ ಹೇಳೂದು...ಸಿದ್ದೆಯಂತ ಮಕ್ಕಳಿದ್ದರೆ ಎದ್ದು ಗೈಯು ಕೆಲಸ ಇಲ್ಲ...ಅಂತ...ಈಗ ನಮ್ ಮಗೀಗೆ ಎಂತ ಕೊಡೂದು ? ತಕೋ. ಬಾಳೆ ಹಣ್ಣು..." ಅನ್ನುತ್ತ ಸವಿ ಮಾತಿನಿಂದ ನಮ್ಮನ್ನು ಹಿಡಿದಿಟ್ಟುಕೊಳ್ಳುತ್ತಿದ್ದರು. ಆದರೆ ನಾನು ಊಟ ಮಾಡುವಾಗ ಮಾತ್ರ ಬೇಸರ ಪಟ್ಟುಕೊಳ್ಳುತ್ತಿದ್ದರು. "ನಮ್ಮ ಮನೆಯ ಬೆಕ್ಕೂ ಇದಕ್ಕಿಂತ ಹೆಚ್ಚು ತಿನ್ನುತ್ತದಲ್ಲ ನಾರಾಯಣೀ...ಈ ರುಕ್ಮಿಣಿ (ನನ್ನ ಅಮ್ಮ) ತನ್ನ ಮಕ್ಕಳಿಗೆ ಉಣ್ಣಲಿಕ್ಕೆ ಹೇಳಿಕೊಡಲೇ ಇಲ್ಲ..." ಅನ್ನುತ್ತ ಅಮ್ಮನಿಗೆ ನಯವಾಗಿ ಕಿರೀಟ ಇಡುತ್ತಿದ್ದರು. ನಾನು ಮನೆಗೆ ಹಿಂದಿರುಗಿದ ಮೇಲೆ ಅವರ ಮಾತನ್ನು ಯಥಾವತ್ತಾಗಿ ಅಮ್ಮನಿಗೆ ಹೇಳುತ್ತಿದ್ದೆ. ಆಗ ಮುಗುಳ್ನಗುತ್ತಿದ್ದ ಅಮ್ಮ "ಇದೊಳ್ಳೆ ಕತೆ ಆಯ್ತಲ್ಲ ? ಉಣ್ಣಲಿಕ್ಕೆ ಹೇಳಿ ಕೊಡುವುದು ಹೇಗಪ್ಪ ? ಯಾರಿಗಾದರೂ ಎಲ್ಲಿಯ ವರೆಗೆ ಒತ್ತಾಯದಿಂದ ಉಣ್ಣಿಸಲಿಕ್ಕಾಗತ್ತೆ ? ಎಲ್ಲರೂ ಅವರವರ ಹೊಟ್ಟೆ ತುಂಬುವಷ್ಟೇ ಉಣ್ಣಲಿಕ್ಕಾಗುವುದಲ್ವಾ ? ಅವರು ಏನೋ ಹೇಳಿರಬಹುದು. ನೀನು ಏನೋ ಕೇಳಿರಬಹುದು. ಅವನ್ನೆಲ್ಲ ಬಿಟ್ ಹಾಕು. ಅವರ ಹಿಂದೇ ಇದ್ದು, ಅವರು ಕೆಲಸ ಮಾಡುವ ರೀತಿಯನ್ನು ನೋಡಿ ಕಲಿತುಕೋ. ಆಗ ಮಾತ್ರ ನಿನ್ನ ತಿರುಗಾಟ ಸಾರ್ಥಕವಾಗುತ್ತದೆ..." ಅಂತ ನಕ್ಕು ಬಿಡುತ್ತಿದ್ದಳು. ಈಗ ಯೋಚಿಸಿದರೆ, ನನ್ನ ಅಮ್ಮಯ್ಯನು ಪ್ರಚಂಡ - ಮನಶ್ಶಾಸ್ತ್ರ ಪ್ರವೀಣರಾಗಿದ್ದರು ಎಂದು ಬಲವಾಗಿ ಅನ್ನಿಸುತ್ತದೆ. ಸ್ವತಹ ಕೆಲಸ ಮಾಡುವುದರಲ್ಲಿ ಮತ್ತು ಇನ್ನೊಬ್ಬರಿಂದ ಕೆಲಸ ಮಾಡಿಸಿಕೊಳ್ಳುವುದು ಹೇಗೆ ಎಂಬುದರಲ್ಲಿಯೂ ಅವರನ್ನು ಮೀರಿಸಿದವರನ್ನು ನನ್ನ ಬದುಕಿನಲ್ಲಿ ನಾನು ಕಂಡಿಲ್ಲ.
ನನ್ನ ಅಮ್ಮಯ್ಯ - ಅಂದರೆ ನನ್ನ ದೊಡ್ಡಮ್ಮ ಮತ್ತು ನನ್ನ ಅಮ್ಮ - ಇಬ್ಬರೂ ವಾವೆಯಲ್ಲಿ ಅಕ್ಕ ತಂಗಿಯರು. ಒಬ್ಬರು ಅಣ್ಣನ ಹೆಂಡತಿ; ಇನ್ನೊಬ್ಬರು ತಮ್ಮನ ಹೆಂಡತಿ. ಒಂದೇ ಮನೆಯಲ್ಲಿ ಬಹಳ ವರ್ಷ ಜೊತೆಯಲ್ಲಿಯೇ ಬದುಕಿದವರು. ಅಣ್ಣ ತಮ್ಮಂದಿರ ಹೆಂಡಿರ ಮಧ್ಯದಲ್ಲಿ ಪರಸ್ಪರ ಕಹಿ ಘಟನೆಗಳು, ಈರ್ಷ್ಯೆ..ಇತ್ಯಾದಿಗಳು ಸರ್ವೇ ಸಾಮಾನ್ಯ. ಅದೂ ಒಂದೇ ಮನೆಯಲ್ಲಿದ್ದರಂತೂ ಕೇಳುವುದೇ ಬೇಡ. ಆದರೆ ನನ್ನ ಅಮ್ಮಯ್ಯ ಮತ್ತು ಅಮ್ಮನ ಮಧ್ಯೆ ಅಂತಹ ಕಟುವಾದ ಸಂಬಂಧ ಇರಲಿಲ್ಲ ಅನ್ನುವುದು ನನ್ನ ಭಾವನೆ. ಯಾಕೆಂದರೆ ನನ್ನ ಅಮ್ಮನಂತೂ ಒಂದೇ ಒಂದು ದಿನವಾದರೂ ತನ್ನ ಅಕ್ಕನನ್ನು ನಿಂದಿಸಿ ಮಾತಾಡಿದ್ದು ನನಗೆ ಗೊತ್ತಿಲ್ಲ. ಬದಲಿಗೆ, "ಮಕ್ಕಳು ರಜೆಯಲ್ಲಿ ಸ್ವಲ್ಪ ದಿನ ಸಾಲಿಗ್ರಾಮದಲ್ಲಿ ಇದ್ದು ಬರಲಿ; ಅಕ್ಕನ ಜೊತೆಗಿದ್ದು ಮನೆಯ ಕೆಲಸಕಾರ್ಯದ ಶಾಸ್ತ್ರೀಯ ರೀತಿಯನ್ನು ಕಲಿಯಲಿ" ಅಂತ ಕೆಲವೊಮ್ಮೆ ಅಂದದ್ದನ್ನೂ ನಾನು ಕೇಳಿದ್ದೇನೆ. ಚಿಕ್ಕ ಪ್ರಾಯದಲ್ಲೇ ಮದುವೆಯಾಗಿ ಗಂಡನ ಮನೆಗೆ ಬಂದಿದ್ದ ತಾನೂ ಅಲ್ಲಿ ತನ್ನ ಈ ಅಕ್ಕನಿಂದಲೇ ಮನೆವಾರ್ತೆ ಕಲಿತದ್ದು ಅಂತ ಮೆಚ್ಚುಗೆಯ ಮಾತನ್ನಾಡುತ್ತಿದ್ದುದೂ ಇತ್ತು. ಆದರೆ ಅಮ್ಮಯ್ಯನು ಮಾತ್ರ, ಕೆಲವು ಸಾರಿ, ನಮ್ಮ ಮನೆಯ ಒಳಗಿನ ಕೆಲವು ಸಂಗತಿಗಳನ್ನು ಮುಗ್ಧ ಮಕ್ಕಳಾಗಿದ್ದ ನಮ್ಮ ಬಾಯಿಂದ ಕೇಳಿ ತಿಳಿದುಕೊಳ್ಳಲು ಪ್ರಯತ್ನಿಸಿದ್ದರು ಅಂತ ಮುಂದೊಂದು ದಿನ ನನಗೆ ಅನ್ನಿಸಿದ್ದುಂಟು. ಆದರೆ ಅವರ ಮಾತು, ವರ್ತನೆ, ಪ್ರತಿಕ್ರಿಯೆಗಳೆಲ್ಲದರಲ್ಲೂ ವಿಪರೀತ ನಿಯಂತ್ರಣವಿತ್ತು; ಒಂದು ರೀತಿಯ ಸ್ಪರ್ಧೆಯ ಮನೋಭಾವವೂ ಇತ್ತು. ಆದರೆ ಎಡವಟ್ಟಿನ ಮಾತನಾಡಿ ಎಂದೂ ಅವರು ಸಿಕ್ಕಿಕೊಂಡವರಲ್ಲ. ಅದಕ್ಕೇ ನಮ್ಮ ಅಜ್ಜ ಐರೋಡಿ ಶಿವರಾಮಯ್ಯನವರು ..."ಅವಳು ಕಾಲಿನಲ್ಲಿ ಕಟ್ಟಿದ ಗಂಟನ್ನು ಯಾರಿಗೂ ಕೈಯ್ಯಿಂದಲೂ ಬಿಡಿಸಲು ಸಾಧ್ಯವಿಲ್ಲ..." ಅನ್ನುತ್ತಿದ್ದರಂತೆ; ಅಮ್ಮಯ್ಯನಿಗಾಗಿ ಹೊಸ ಗಾದೆಯನ್ನೇ ಸೃಷ್ಟಿಸಿದ್ದರಂತೆ. ಆದರೂ ನನ್ನ ದೊಡ್ಡಮ್ಮ ಅಮ್ಮಯ್ಯನು ನಮ್ಮನ್ನು ಆಂತರ್ಯದಲ್ಲಿ ಮೆಚ್ಚಿದ್ದು, ಪ್ರೀತಿಸಿದ್ದು ಮಾತ್ರ ಸುಳ್ಳಲ್ಲ. ಅಂದಿನ ಸಮಾಜದ ಬಹು ಜನರಂತೆ ಅವರ ಬದುಕೂ ಬಡತನದಿಂದ ಜರ್ಜರಿತವಾಗಿತ್ತು; ಬದುಕಿನುದ್ದಕ್ಕೂ ಸಾಕಷ್ಟು ಸಾವು ನೋವುಗಳನ್ನು ಅವರು ಕಂಡು ಉಂಡಿದ್ದರು. ಬದುಕಿನ ಅಹಿತಗಳು, ಸಂಕಟಗಳು, ಹತ್ತಿಕ್ಕಿದ ಅಪೇಕ್ಷೆಗಳು, ಋಣಾತ್ಮಕ ಭಾವಗಳಿಗೆಲ್ಲ "ಗುಟ್ಟಿನ ಅರಮನೆ" ಕಟ್ಟಿ ಬಂಧಿಸಿ, ಅಲ್ಲಿ ಆಳ್ತನ ನಡೆಸಿದ್ದ - ಮತ್ತು - ಆ ಹೋರಾಟದ ಬೇಗೆಯ ಉಸಿರು ಚೆಲ್ಲುತ್ತಲೇ ಅವರ ಸಿರಿ ಮೊಗವು ನಕ್ಕಂತೆ ಇರುತ್ತಿದ್ದುದನ್ನು ನಾನು ಕಂಡಿದ್ದೇನೆ. ಎಷ್ಟೇ ಪರಿಣತರಾದರೂ ಪ್ರತಿಯೊಂದು ಬದುಕೂ ಪೂರ್ವ ನಿಶ್ಚಯದಂತಲ್ಲದೆ ಇನ್ನೊಂದು ರೀತಿಯಲ್ಲಿ ಸಾಗುವುದು ಅಸಾಧ್ಯ ಎಂಬುದಕ್ಕೆ ನಾನು ಹಾದು ಬಂದ ಅನೇಕ ಬದುಕುಗಳು ಸಾಕ್ಷಿ ನುಡಿಯುತ್ತವೆ.
ಸಾಲಿಗ್ರಾಮದಿಂದ ನನ್ನ ಅಜ್ಜನ ಮನೆ ಐರೋಡಿಗೆ ನಾಲ್ಕೈದು ಮೈಲುಗಳಷ್ಟೇ ದೂರ. ರಸ್ತೆಯ ಬದಿಯಲ್ಲಿಯೇ ನಡೆದುಕೊಂಡು ನಾನು ಎಷ್ಟೋ ಬಾರಿ ಅಲ್ಲಿಗೆ ಹೋದದ್ದಿದೆ. ಒಮ್ಮೆ, ದೊಡ್ಡಪ್ಪಯ್ಯನ ಮನೆಯ ಮೊದಲನೇ ಇನ್ನಿಂಗ್ಸ್ - ಔತಣದ ಬಿದ್ದನ್ನು - ಮುಗಿಸಿ ಅಜ್ಜನ ಮನೆ ಐರೋಡಿಗೆ ಹೊರಟಾಗ ನನ್ನ ಅಣ್ಣಯ್ಯನು ವಿದಾಯ ಹೇಳುತ್ತ, ದೊಡ್ಡ ಪೊಟ್ಟಣದ ತುಂಬ ನನಗೆ ಪೆಪ್ಪರಮಿಂಟು ಕೊಟ್ಟಿದ್ದ. "ಒಂದೇ ದಿನ ತಿನ್ನಬೇಡ; ಆಮೇಲೆ ನಿನ್ನ ಅಜ್ಜಿಯು ನಮಗೆಲ್ಲ ಶಾಪ ಹಾಕುವ ಹಾಗೆ ಮಾಡಬೇಡ..." ಎಂದೆಲ್ಲ ಹೇಳಿ ಬಸ್ ಹತ್ತಿಸಿ ಅಂದು ನನ್ನನ್ನು ಕಳಿಸಿದ್ದರು. ಆದರೆ ನಾನು ಬಸ್ಸಿನಲ್ಲೇ ಶಾಪ ಯಜ್ಞ ಆರಂಭಿಸಿ, ಅಜ್ಜನ ಮನೆ ತಲಪುವುದರೊಳಗೆ ಎಲ್ಲವನ್ನೂ ಕಟಕಟ ಅಗಿದು ಯಜ್ಞ ಕಾರ್ಯ ಮುಗಿಸಿಯೇ ಅಜ್ಜನ ಮನೆ ಹೊಕ್ಕಿದ್ದೆ. ಅಂದು ಅಜ್ಜನ ಮನೆಯ ಬಿದ್ದಿನ ಮೊದಲ ರಾತ್ರಿ. ರಾತ್ರಿಯ ಊಟದ ಹೊತ್ತಿನಲ್ಲಿ, ಯಾರ್ಯಾರು ಎಷ್ಟೆಷ್ಟು ಒತ್ತಾಯಿಸಿದರೂ ಒಲ್ಲದೆ "ನನಗೆ ಊಟ ಬೇಡ" ಅಂತ ಹೇಳಿ ಮಲಗಿಬಿಟ್ಟಿದ್ದೆ. (ಮಿತಿಮೀರಿ ಹೊಟ್ಟೆ ಸೇರಿದ್ದ ಪೆಪ್ಪರಮಿಂಟಿನ ಸೊಕ್ಕು !) ಅರ್ಧ ರಾತ್ರಿಯಾಗುವಾಗ ನನ್ನನ್ನು ಬಡಿದೆಬ್ಬಿಸಿದಂತೆ ಎಚ್ಚರವಾಯಿತು. ಹೊಟ್ಟೆಯು ಲಂಕಾ ಪಟ್ಟಣವಾಗಿತ್ತು. ವಿಪರೀತ ನೋವು. ಹೊಟ್ಟೆನೋವು; ಜೀವ ಸಂಕಟ. ಆಕಾಶ ಭೂಮಿ ಒಂದಾಗುವಂತೆ ಅಳತೊಡಗಿದೆ. ಅಜ್ಜಿ, ಚಿಕ್ಕಮ್ಮಂದಿರೆಲ್ಲರೂ ನಿದ್ದೆ ಬಿಟ್ಟು ಧಡಬಡ ಎದ್ದರು. ನನ್ನ ಸುತ್ತಲೂ ಸೇರಿದರು. ಓಡಿ ಬಂದ ಅಜ್ಜಿಯು "ಮೊದಲು ಆ ಹೆಣ್ಣಿಗೆ ಊಟ ಮಾಡಿಸು..." ಅಂತ ಚಿಕ್ಕಮ್ಮನಿಗೆ ಹೇಳಿ ನನ್ನನ್ನು ನೋಡುತ್ತ ಕೈಹಿಡಿದುಕೊಂಡು ಕುಳಿತರು. ರಾತ್ರಿ ಎಲ್ಲರೂ ಉಂಡು ಉಳಿದಿದ್ದ ಅನ್ನಕ್ಕೆ ನೀರು ಬೆರೆಸಿ ಎಂದಿನಂತೆ ತಂಗಳು ಮೂಲೆಯಲ್ಲಿಟ್ಟಿದ್ದರು. ಅದೇ ಅನ್ನವನ್ನು ಚಿಕ್ಕಮ್ಮ ತಿನ್ನಿಸಿದರು. ನಾಲ್ಕು ತುತ್ತು ತಿನ್ನುವಾಗ ಸ್ವಲ್ಪ ಜೀವ ಬಂದ ಹಾಗಾಯಿತು. ಊಟವಾದ ಮೇಲೆ ನನ್ನನ್ನು ತಮ್ಮ ಹತ್ತಿರವೇ ಮಲಗಿಸಿಕೊಂಡ ಅಜ್ಜಿ, "ಸಂಜೆ ಬರುವಾಗ ನೀನು ಏನು ತಿಂದೆ ?" ಅಂತ ಕೇಳಿದರು. "ಪೆಪ್ಪರಮಿಂಟು.." ಅಂದೆ. "ಎಷ್ಟು ತಿಂದೆ ?" ಅಂದರು. "ತುಂಬ ತಿಂದೆ.." ಅಂದೆ. "ಅಂದರೆ ಎಷ್ಟು ? ಐದಾ? ಆರಾ ? ಏಳಾ?" ಅಂದಾಗ "ನಲವತ್ತು ಐವತ್ತು ಇರಬಹುದು..." ಅಂದೆ. ಬೆಚ್ಚಿಬಿದ್ದ ಅಜ್ಜಿ "ನಿಂಗೆ ತಲೆ ಸಮ ಇತ್ತ ಹೆಣೆ ? ಹೊಟ್ಟೆ ನೋವು ಬರದೆ ಇನ್ನೇನಾತ್ತ..? ಅದೆಂತ ಆಂಕ್ರ (ಹೊಟ್ಟೆಬಾಕತನ) ? ತಡಿ. ನಾಳೆ ಕಂಯ್ (ಕಹಿ) ಕಷಾಯ ಕುಡಿಸ್ತೆ ಕಾಣ್...ಈ ಅಪರ ರಾತ್ರೀಲಿ ನಿಂಗೆ ಏನಾದ್ರೂ ಆದ್ರೆ ನಿನ್ ಅಪ್ಪಯ್ಯ ನಾಳೆ ನನ್ನನ್ ಬೆರಸ್ಕಂಡ್ (ಹೆದರಿಸುತ್ತ ಓಡಿಸಿಕೊಂಡು) ಬತ್ತಿಲ್ಯಾ ? ಅವರಿಗ್ ಎಂತ ಹೇಳುದ್ ನಾನ್ ? ಇಲ್ ಬಂದ್ಮೇಲೆ, ಇನ್ನು ನಾಳೆಯಿಂದ - ಕಂಡ್ ಕಂಡದ್ದೆಲ್ಲ ತಿಂದ್ರೆ ಜಾಗ್ರತೆ ಕಾಣ್. ಈಗ ಬಿದ್ಕೋ...ಬೆಳಿಗ್ಗೆ ಎದ್ದಲ್ಲಿಂದ ರಾತ್ರಿ ಮನೀಕ್ಕಂಬ್ ವರೆಗೆ ಬರೀ ಅಷಡ್ಡಾಳವೇ ಮಾಡುದ್; ಆಮೇಲೆ ಬಯ್ಸ್ಕಂಬ್ದ... ಆಮೇಲೆ ಅಲ್ಲಿ ಹೋಗಿ ಅಜ್ಜಿ ಕೆಟ್ಟವಳು ಅಂಬ್ದ.....ಅಲ್ದಾ ?" ಅನ್ನುತ್ತ ಬೆನ್ನಿಗೊಂದು ಗುದ್ದಿ, ನನಗೆ ಹೊದೆಸಿ ಅಪ್ಪಿಕೊಂಡು ಮಲಗಿದ್ದರು. ಅಂಥ ಅಜ್ಜಿ ಅವರು. ಬಾಯಿ ಮಾತ್ರ - ಬಲೇ ಖಾರ. ಆಗಿಂದಲೇ ಭಂಡಳಾಗಿದ್ದ ನನಗೆ ಆ ಅಮ್ಮಮ್ಮನು ಹೆಚ್ಚು ಅರ್ಥವಾಗಿದ್ದರು; ಆದ್ದರಿಂದಲೇ ಮೊಮ್ಮಕ್ಕಳ ಪೈಕಿ ಆ ಅಜ್ಜಿಗೆ ಹೆದರದಿದ್ದವಳು ಬಹುಶಃ ನಾನೊಬ್ಬಳೇ.
(ನನ್ನ ಅಮ್ಮಮ್ಮ - ಅಮ್ಮನ ಅಮ್ಮ )
ಅದೊಂದು ರಜೆಯಲ್ಲಿ ಒಬ್ಬಳು ಚಿಕ್ಕಮ್ಮನ ಮದುವೆ ಇತ್ತು. ನಾನೂ ಒಪ್ಪತ್ತು ಮುಂಚಿತವಾಗಿ ಅಮ್ಮನ ಸೆರಗು ಹಿಡಿದು, ಸೊಕ್ಕುವ ಹುಮ್ಮಸ್ಸಿನಿಂದ ಹೋಗಿದ್ದೆ. ಅದಾಗಲೇ ಉಳಿದ ಚಿಕ್ಕಮ್ಮನ ಮಕ್ಕಳು, ಮಾವನ ಮಕ್ಕಳು...ಎಲ್ಲರೂ ಅಜ್ಜನ ಮನೆಗೆ ಬಂದಿದ್ದರು. ಮಕ್ಕಳ ಪಟಲಾಂ ಗದ್ದೆ ಬಯಲಿನಲ್ಲಿ, ಹಾಡಿಯಲ್ಲೆಲ್ಲ ಸುತ್ತುತ್ತ ಯಾರ್ಯಾರದೋ ಮರಕ್ಕೆ ಕಲ್ಲು ಹೊಡೆದು ಮಾವಿನ ಕಾಯಿ ಉದುರಿಸುತ್ತ, ಗೋವೆ (ಗೇರು) ಹಣ್ಣು ಕಿತ್ತು ತಿನ್ನುತ್ತ ಊರವರಿಂದಲೂ ಬೈಸಿಕೊಳ್ಳುತ್ತ ಕೋತಿಯಾಟ ಶುರು ಹಚ್ಚಿಕೊಂಡಿದ್ದೆವು. ಅದು ಗುಂಪಿನ ಸೊಕ್ಕು. ಮದುವೆಯ ಗಡಿಬಿಡಿಯಲ್ಲಿದ್ದ ಯಾವ ಹಿರಿಯರಿಗೂ ನಮ್ಮತ್ತ ಗಮನಿಸಲು ಆಗ ಪುರಸೊತ್ತಿಲ್ಲದ್ದರಿಂದ ನಮಗೆ ಯಥೇಷ್ಟ ಸ್ವಾತಂತ್ರ್ಯ ಸಿಕ್ಕಿತ್ತು. ಸ್ವಂತ ಬಟ್ಟೆಬರೆಯ ಗೊಡವೆಯಿಲ್ಲದೆ ಅಂಗಿಯಲ್ಲಿ ಮಾವಿನ ಕಾಯಿಗಳನ್ನು ತುಂಬಿಸಿಕೊಂಡು ಮನೆಗೆ ಬಂದು ಅದನ್ನು ಕತ್ತರಿಸಿ, ಅದಕ್ಕೆ ಉಪ್ಪು ಹಸಿಮೆಣಸು ಬೆರಸಿ, ಪಚ್ಚುಟಿ ಮಾಡಿಕೊಂಡು ಆಗ ತಿಂದದ್ದೇ ತಿಂದದ್ದು. ಅಂಗಳದಲ್ಲಿ ಒಣಗಲು ಹಾಕಿದ್ದ ಕೊಬ್ಬರಿಯನ್ನು ಸಭ್ಯ ಮುಖ ಹೊತ್ತ ಮಕ್ಕಳೆಲ್ಲರೂ ಕಾಗೆ ಪಟಾಯಿಸದಂತೆ ಕಾಯುವುದಕ್ಕೆ ಸರದಿಯಲ್ಲಿ ಕೂತು, ಅವರವರ ಪಾಳಿ ಮುಗಿಸಿ ಅಲ್ಲಿಂದ ಹೊರಡುವ ಪ್ರತಿಯೊಂದು ಹಾರಲಾಗದ ಸಭ್ಯ ಕಾಗೆಗಳೂ ಎರಡು ಮೂರು ಕೊಬ್ಬರಿಯನ್ನು ಲಪಟಾಯಿಸಿ ತಿಂದದ್ದೇ ತಿಂದದ್ದು. ಅಟ್ಟದ ಮೇಲಿನ ಕೋಣೆಗೆ ಬೀಗ ಹಾಕಿ, ಮಕ್ಕಳಿಗೆ ಕಾಣಿಸದಂತೆ ಅಡಗಿಸಿಟ್ಟಿದ್ದ ಮಾವಿನ ಹಣ್ಣನ್ನು ಗೆದ್ದು ವಿಜಯ ಪತಾಕೆ ಹಾರಿಸುವ ಮನಸ್ಸಾಗಿ, ಅಂದು ಮಾಡಿದ ಸಾಹಸವನ್ನು ಮರೆಯಲು ಅಸಾಧ್ಯ. ಒಬ್ಬರ ಹೆಗಲ ಮೇಲೆ ಇನ್ನೊಬ್ಬರು ನಿಂತು, ಪಕ್ಕದ ಕೋಣೆಯ ಕಂಬವನ್ನು ಹತ್ತಿ ಅಟ್ಟದಲ್ಲೇ ನಡೆದು ಹೋಗಿ, ಮಾವಿನ ಹಣ್ಣಿನ ಕೋಣೆಯಲ್ಲಿ ಇಳಿದು, ಅಲ್ಲೇ ಹೊಟ್ಟೆ ತುಂಬ ಸಿಪ್ಪೆ ಸಹಿತ ಮಾವಿನ ಹಣ್ಣುಗಳನ್ನು ತಿಂದು, ಅಲ್ಲಿ ಜೋಪಾನವಾಗಿ ಒಣಗಿಸಿದ್ದ ಅಮ್ಮಮ್ಮನ ಮಡಿ ಸೀರೆಯಲ್ಲಿಯೇ ನಮ್ಮ ಕೈ ಮುಖವನ್ನೆಲ್ಲ ಒರೆಸಿಕೊಂಡು ಸದ್ದಾಗದಂತೆ ಬಂದ ದಾರಿಯಲ್ಲಿಯೇ ಎಲ್ಲರೂ ಹಿಂದಿರುಗಿದ್ದೆವು. ಮರುದಿನ, ಅಜ್ಜಿಯ ಮಡಿ ಸೀರೆಯು ಮುದ್ದೆ ಮುದ್ದೆಯಾಗಿದ್ದುದನ್ನು ಕಂಡಾಗ ಮನೆಮಂದಿಗೆ ಅನಾಹುತದ ಅಸ್ಪಷ್ಟ ಚಿತ್ರಣವು ಸಿಕ್ಕಿ, ಮನೆಯಲ್ಲಿ ಹಾಹಾಕಾರ ಎದ್ದಿತ್ತು. ಆ ಕೋಣೆಯ ಬೀಗದ ಕೈ ನನ್ನ ಕೊನೆಯ ಮಾವನ ಜನಿವಾರದಲ್ಲಿ ಭದ್ರವಾಗಿ ಆಶ್ರಯ ಪಡೆದಿತ್ತು. ಆದರೂ ಕೋಣೆಯ ಒಳಗೆ ಯಾರಾದರೂ ಹೋದದ್ದು ಹೇಗೆ ? ಅನ್ನುವ ಬೇತಾಳ ಪ್ರಶ್ನೆಗೆ ಉತ್ತರ ಹುಡುಕುತ್ತ ಎಲ್ಲರೂ ಸುಸ್ತಾಗಿದ್ದರು. ಮಕ್ಕಳೆಲ್ಲರೂ "ನಾನಲ್ಲ; ನಾನಲ್ಲ..." ಅನ್ನುವವರೇ. ಮದುವೆ ಮನೆ ಬೇರೆ. ಸದ್ಯ ಗದ್ದಲ ಬೇಡ ಅಂದುಕೊಂಡು ಅಂದು ಆ ಪ್ರಕರಣವು ಹೆಚ್ಚು ದೀರ್ಘ ಓಡಲಿಲ್ಲ. ಬರೇ ಗಾಳಿ ಗುದ್ದುವ ವಾಚಾಮಗೋಚರ ಬಾಯುಪಚಾರದಲ್ಲಿಯೇ ಮುಗಿದು ಹೋಯಿತು. ಅಮ್ಮಮ್ಮ ಮಾತ್ರ ತಮ್ಮ ಮಡಿಯ ಶಾಸ್ತ್ರಕ್ಕೆ ಅಂದು ಒದಗದ ಆ ಸೀರೆಯನ್ನು ಒದ್ದೆ ಮಾಡಿಕೊಂಡು "ಒದ್ದೆ ಮಡಿ" ಉಡುವಂತಾಯಿತು. ಆದರೆ ನಮ್ಮ ಗುಂಪಿನಲ್ಲೇ ಕೆಲವು ಮೀರ್ ಸಾದಕ್ ಗಳಿದ್ದರು. ಅವರಿಂದಲೇ ನಮ್ಮ ಸಾಹಸದ ವರದಿ (ಚಾಡಿ) ಯು ಹಿರಿಯರನ್ನು ತಲುಪಿಯೇ ಬಿಟ್ಟಿತು. ಆಮೇಲೆ ಕೆಲವರಿಗೆ ನಾಲ್ಕು ಏಟೂ ಬಿತ್ತು. ಆದರೆ ಅಂದು ನಾನು ಹಿಂದುಳಿದಿದ್ದೆ; ಆದ್ದರಿಂದ ಬಚಾವಾದೆ.
(ಕೊನೆಗಾಲದಲ್ಲಿ ಅಮ್ಮಮ್ಮನೊಂದಿಗೆ ಮಕ್ಕಳು ಮೊಮ್ಮಕ್ಕಳು ಅಳಿಯಂದಿರು - ದೊಡ್ಡ ಕುಟುಂಬದ ಸಣ್ಣ ಭಾಗ.)
ನಮ್ಮ ಚಿಕ್ಕಮ್ಮನ ಮದುವೆಯು ಏಳೆಂಟು ಮೈಲು ದೂರದ ದೇವಸ್ಥಾನದಲ್ಲಿ ನಡೆದಿತ್ತು. ಹಿರಿಯರಿಗೆಲ್ಲ ಅಂದು ಕುಂಡೆ ಹರಿಯುವಷ್ಟು ಓಡಾಟದ ಕೆಲಸವಿತ್ತು. ಆದರೆ ನಮ್ಮ "ಪ್ರಸನ್ನ ಪಟಲಾಂ"ಗೆ ತಂಟೆ ಹುಡುಕುವುದೇ ಕೆಲಸವಾಗಿತ್ತು. ನಾವಷ್ಟೇ ಅಲ್ಲದೆ ಹತ್ತಿರದ ಮನೆಯ ಕೆಲವು ಮಕ್ಕಳೂ ಅಂದು ನಮ್ಮ ಜೊತೆಗಿದ್ದರು. ಹಾಗಾಗಿ ನಮ್ಮ ಬಾಲ(?)ವೃಂದದ ಬಲಿಷ್ಠ ಸೇನೆಯೇ ತಯಾರಾಗಿತ್ತು.
ನನ್ನ ಒಬ್ಬ ಮಾವನು ತುಂಬ STYLE ಆಗಿ ಸಿಗರೇಟು ಸೇದುತ್ತ ಮೂಗು ಬಾಯಿಯಿಂದೆಲ್ಲ ಹೊಗೆ ಬಿಡುವ ಚಮತ್ಕಾರವನ್ನು ನಾವೆಲ್ಲರೂ ನೋಡಿದ್ದೆವು. ಆ ದೃಶ್ಯವು ನಮ್ಮೆಲ್ಲರ ಮನಸ್ಸಿನಲ್ಲಿ ಅಚ್ಚಾಗಿತ್ತು. ಅಂದು ಮದುವೆಯ ದಿನದಂದು ಮದುವೆ ಚಪ್ಪರದ ಕೆಲಸಗಳಲ್ಲಿ ರುಚಿಯಿಲ್ಲದ ನಮ್ಮನ್ನೆಲ್ಲ ಆ ದೇವಸ್ಥಾನದ ಸುತ್ತಲೂ ಇದ್ದ ಹಾಡಿಗಳು ಆಕರ್ಷಿಸಿದ್ದವು. ತಡಮಾಡದೆ, ಮಕ್ಕಳ ಹಿಂಡು ಹಾಡಿಗೆ ದಾಳಿಯಿಟ್ಟಿತು. ಅಂದು ಹೊಸ ಸಂಶೋಧನೆಗೆ ಲಗ್ಗೆಯಿಡುವ ಪ್ರಸ್ತಾಪವು ಒಂದು ಮೂಲೆಯಿಂದ ಮಂಡಿಸಲ್ಪಟ್ಟಿತು; ಬಹುಮತದಿಂದ ಅದು ಸ್ವೀಕಾರವೂ ಆಯಿತು. ಆಗ, ಆ ದೇವಸ್ಥಾನದ ಪಕ್ಕದ ಹಾಡಿಯಲ್ಲಿ ಬಿದ್ದ ಕೆಲವು ಕಡ್ಡಿಗಳ ತುದಿಗೆ ಬೆಂಕಿ ಹಚ್ಚಿ, ನಾವೆಲ್ಲರೂ ಹೊಗೆ ಬಿಡಲು ಪ್ರಯತ್ನಿಸಿದೆವು. ಆದರೆ ಅದರಿಂದ ಯಾವ ಹೊಗೆಯೂ ಬರಲಿಲ್ಲ. ಆಗ "ಸಾಧಿಸಿದರೆ ಸಬಳ ನುಂಗಬಹುದು" ಅಂತ ನಿರ್ಧರಿಸಿ, "ಯಾವುದೇ ಕೆಲಸವನ್ನೂ ಅರ್ಧಕ್ಕೇ ಬಿಡಬಾರದು" ಎಂದು ತೀರ್ಮಾನಿಸಿ, ದೇವಸ್ಥಾನಕ್ಕೆ ಓಡಿಹೋಗಿ, ತನ್ನ ಅಂಗಿ ಕಳಚಿಟ್ಟು ಓಡಾಟದಲ್ಲಿದ್ದ ಮಾವನ ಅಂಗಿಗಾಗಿ ಹುಡುಕಾಡಿದೆವು. ಕೊನೆಗೆ ಆ ಮಾವನ ಅಂಗಿಯ ಕಿಸೆಯಲ್ಲಿದ್ದ ಬೆಂಕಿ ಪೊಟ್ಟಣ ಮತ್ತು ಸಿಗರೇಟಿನ Pack ನ್ನು ಲಪಟಾಯಿಸಿ, ಹಾಡಿಗೆ ಓಡಿದೆವು. ಎಲ್ಲರೂ ಗತ್ತಿನಿಂದ ಮರದ ತಂಪಿನಲ್ಲಿ ಕೂತು ಒಂದಾದ ಮೇಲೆ ಒಂದು, ಸಿಗರೇಟು ಸೇದುತ್ತ ಕೆಮ್ಮತೊಡಗಿದೆವು. ಅಷ್ಟರಲ್ಲಿ ಅಲ್ಲಿನ ಭೀಭತ್ಸ ದೃಶ್ಯವನ್ನು ನೋಡಿದ, ನಮ್ಮ ಜೊತೆಗಿದ್ದೂ ಜೊತೆ ಸೇರದ ನನ್ನ ಚಿಕ್ಕಮ್ಮನ ಮಗಳು ಹೆದರಿಕೊಂಡು ಅಲ್ಲಿಂದ ಓಡತೊಡಗಿದಳು. ಆಗ ಅವಳನ್ನು ದರದರ ಎಳೆದುಕೊಂಡು ಬಂದು ಮತ್ತೆ ನಮ್ಮ ಜೊತೆಯಲ್ಲಿ ಕೂರಿಸಿಕೊಂಡೆವು. "ನಾನು ಅಜ್ಜಿಗೆ ಹೇಳಿಯೇ ಹೇಳ್ತೇನೆ..ತಡಿ. ನಿಮಗೆಲ್ಲ ಮಾಡಿಸ್ತೇನೆ..." ಅಂತ ಅವಳು ನಿರಂತರ ಗೊಣಗುಟ್ಟುತ್ತ ತನ್ನ ಮೂಗು ಮುಚ್ಚಿಕೊಂಡು ಕೂತಿದ್ದಳು. ಅಷ್ಟರಲ್ಲಿ ಮದುವೆಯ ಮನೆಗೆ ಬಂದ ಕೆಲವರು ನಾವು ಆಕ್ರಮಿಸಿದ್ದ ಹಾಡಿಯತ್ತ ಬರತೊಡಗಿದರು. ಆಗ ಗಾಬರಿಯಾದ ನಾವು ಒಬ್ಬೊಬ್ಬರು ಒಂದೊಂದು ಮರ ಹತ್ತಿ ಕೂತೆವು. ಆಗ ಅಷ್ಟೂ ಹೊತ್ತು ನಮ್ಮ ಒತ್ತೆಯಾಳಂತಿದ್ದ ನಮ್ಮ ಚಿಕ್ಕಮ್ಮನ ಮಗಳು ಸಮಯ ಸಾಧಿಸಿ ಅಲ್ಲಿಂದ ತಪ್ಪಿಸಿಕೊಂಡು ಓಡಿ ಹೋದಳು. ಆಗ ನಮಗೆ ಚಿಂತೆ ಶುರುವಾಯಿತು. "ಆ ಕತ್ತೆ ಓಡಿ ಹೋಗಿ ಈಗ ಎಲ್ಲರಿಗೂ ಕತೆ ಹೇಳತದೆ. ಎಲ್ಲರೂ ಬಾಯಿ ಮುಕ್ಕಳಿಸಿಕೊಂಡು ದೇವಸ್ಥಾನಕ್ಕೆ ಹೋಗಿ ಕೂತುಕೊಳ್ಳುವ.." ಅನ್ನುತ್ತ - ಹಾಡಿಯಲ್ಲಿ ಕೈಗೆ ಸಿಕ್ಕಿದ ಎಲೆಗಳನ್ನೆಲ್ಲ ನಾವೆಲ್ಲರೂ ಜಗಿದು ಉಗಿದು, ದೇವಸ್ಥಾನಕ್ಕೆ ಬಂದು, ನೀರಿನಲ್ಲಿ ಮುಖ ಬಾಯಿ ತೊಳೆದುಕೊಂಡು ಮದುವೆಯ ಜನಜಂಗುಳಿಯ ಮಧ್ಯ ಸೇರಿಕೊಂಡೆವು. ಊಟದ ಹೊತ್ತಿನಲ್ಲೂ ಮತ್ತು ಅನಂತರವೂ ನಮಗೂ ಆ ಚಿಕ್ಕಮ್ಮನ ಮಗಳಿಗೂ ನಡುವೆ ದೃಷ್ಟಿ ಯುದ್ಧ ನಡೆಯುತ್ತಲೇ ಇತ್ತು. "ಹೇಳಿದರೆ ಜಾಗ್ರತೆ..." ಅನ್ನುವ ಮೂಕ ಸಂದೇಶ ನಮ್ಮಿಂದ ಎಡೆಬಿಡದೆ ರವಾನೆಯಾಗುತ್ತಿತ್ತು. ಊಟವಾದ ಕೂಡಲೇ ಚಿಕ್ಕಮ್ಮನ ಮಗಳ ಕಣ್ಣು ತಪ್ಪಿಸಿ ಆ ಅಸುರಕ್ಷಿತ ಸ್ಥಳದಿಂದ ಉಳಿದವರೆಲ್ಲರೂ ಹೊರಟು ಮೊದಲ ವಾಹನದಲ್ಲಿಯೇ ಅಜ್ಜನ ಮನೆಗೆ ಬಂದು ತಲುಪಿಕೊಂಡೆವು.
ಆಗ ಮನೆಯಲ್ಲಿ ಅಜ್ಜನ ಮನೆಯನ್ನು ಕಾಯಲು ಕೂತಿದ್ದ ಒಬ್ಬರನ್ನು ಬಿಟ್ಟರೆ ಬೇರೆ ಯಾರೂ ಇರಲಿಲ್ಲ. ಮನೆಯಲ್ಲಿ ಮೌನವು ತಾಂಡವವಾಡುತ್ತಿತ್ತು. ಸುಮ್ಮನೆ ಆ ಮನೆಯಲ್ಲಿ ಕೂತುಕೊಳ್ಳುವುದು ಕೈಲಾಗದವರ ಕೆಲಸ ಅಂದುಕೊಂಡ ನಾವೆಲ್ಲರೂ ಮನೆಯಿಂದ ಒಂದೇ ಮೈಲು ದೂರದಲ್ಲಿದ್ದ ಸಮುದ್ರದ ಕಡೆಗೆ ಹೊರಟೆವು. ಗದ್ದೆಯ ಅಂಚಿನಲ್ಲಿಯೇ ನಡೆಯುತ್ತ ಒಕ್ಕಲು ಮನೆಯ ಕೋಳಿ ಹಿಕ್ಕೆಗಳನ್ನೆಲ್ಲ ಮೆಟ್ಟುತ್ತ ಸಮುದ್ರದ ತಡಿಯನ್ನು ಸೇರಿಕೊಂಡೆವು. ಸೂರ್ಯ ಮುಳುಗುವವರೆಗೂ ನೀರಿನಲ್ಲಿ, ಹೊಯಿಗೆಯಲ್ಲಿ ಹೊರಳಾಡಿ ಹೊತ್ತು ಕಂತುವ ಹೊತ್ತಿಗೆ ಮನೆ ಸೇರಿಕೊಂಡೆವು. ಆದರೆ ಅದಾಗಲೇ ಮದುವೆಯ ಸ್ಥಳದಿಂದ ಹಿಂದಿರುಗಿದ್ದ ಮನೆಯವರೆಲ್ಲರೂ ಗಾಬರಿಯಾಗಿದ್ದರು. ವಾಹನದ ಮೊದಲನೇ Trip ನಲ್ಲಿಯೇ ಮನೆಗೆ ಹೋಗಿದ್ದ ಮಕ್ಕಳೆಲ್ಲ ಎಲ್ಲಿಗೆ ಹೋದರು ? ಎಂಬ ಹುಡುಕಾಟದಲ್ಲಿ ಮನೆಮಂದಿಯೆಲ್ಲರೂ ಕಂಗಾಲಾಗಿದ್ದರು. ನಾವು ಮನೆ ತಲುಪಿದ ಕೂಡಲೇ ಹೆಬ್ಬಾಗಿಲಲ್ಲಿಯೇ ನಮ್ಮನ್ನು ತಡೆದ ಅಮ್ಮಮ್ಮನು ಅಂದು ರಣಚಂಡಿಯಾಗಿದ್ದರು. "ಈ ಮಕ್ಕಳ ಸಹವಾಸವೇ ಸಾಕಪ್ಪಾ ಸಾಕು. ಉಸಿರು ನಿಲ್ಲುವ ಹಾಗೆ ಮಾಡ್ತ್ವಲೆ..ನೀವು ಹೋದದ್ದಾದರೂ ಎಲ್ಲಿಗೆ ಮಕ್ಳೇ ? ಯಾರನ್ನು ಕೇಳಿ ಸಮುದ್ರದ ಹತ್ತಿರ ಹೋದದ್ದು ? ನಿಮಗೆ ಯಾರೂ ಹೇಳುವವರು ಕೇಳುವವರು ಇಲ್ಲವಾ ? ಬಾಸುಂಡೆ ಬರುವ ಹಾಗೆ ಬಾರಿಸ್ತೇನೆ..." ಅನ್ನುತ್ತ ನನ್ನತ್ತ ತಿರುಗಿ "ಎಂತ ಹೆಣೆ, ನೀನೇನು ಹೆಣ್ಣಾ ? ಗಂಡಾ ? ಆ ಗಂಡ್ಮಕ್ಕಳ ಒಟ್ಟಿಗ್ ಸೇರ್ಕಂಡ್ ಅದೆಷ್ಟ್ ಅಧಿಕಪ್ರಸಂಗ ಮಾಡ್ತೆ ? ನಿನ್ನನ್ ಹಿಡ್ಕಂಡ್ ಬಾರ್ಸಿರೆ ನಿನ್ನಪ್ಪಯ್ಯ ಹಿಡಿಸೂಡಿ ಹಿಡ್ಕಂಡ್ ಬಪ್ಪ. ಮಕ್ಳ ಸಂತಾನಕ್ಕೆಲ್ಲ ನಾನ್ ಶಾಪ ಹಾಕ್ತಾ ಸಾಯ್ಕಾ ? ಇನ್ನೊಂದ್ಸಾರಿ ಈ ಹೆಬ್ಬಾಗ್ಲಿನ ಒಳಗೆ ಕಾಲಿಟ್ಟರೆ ನಿನ್ನ ಕಾಲು ಮುರೀತೇನೆ..." ಅಂದರು. ಆಗ "ಆಹಾ...ನಾನ್ಯಾಕೆ ಬರಬಾರದು ? ನಾನು ಬಂದೇ ಬರ್ತೇನೆ..." ಅಂದೆ. "ಹೌದಾ ? ಹೆಬ್ಬಾಗ್ಲು ಮುಚ್ತೆ. ಹೇಂಗ್ ಬತ್ತೆ ಕಾಂಬ.." ಅಂದರು. "ನಾನು ಬಾಗಿಲು ದೂಡಿಕೊಂಡು ಬತ್ತೆ.." ಅಂದೆ. "ಈ ಹದಿನೈದು ಅಡಿ ಎತ್ತರದ ಬಾಗಿಲನ್ನು ನೀನು ದೂಡ್ತ್ಯಾ ? " ಅನ್ನುತ್ತ ಅವರೆದುರು ನಿಂತು ಮಾತಾಡುತ್ತಿದ್ದ ಪಿಣಕುಟಿಯನ್ನು ದಿಟ್ಟಿಸಿ ನೋಡುತ್ತ ಸ್ವಲ್ಪ ಹೊತ್ತು ನಿಂತಿದ್ದು, ಆಮೇಲೆ ಮುಖ ತಿರುಗಿಸಿ "ಓ ಪರಮಾತ್ಮಾ, ನನ್ನನ್ ಬೇಗ ಕರಸ್ಕೋ ಅಪ್ಪ...ಈ ಮಕ್ಳ ಹಿಂಡನ್ನು ಸುಧಾರಿಸಲಿಕ್ಕೆ ಇನ್ ನನ್ನಿಂದ ಆಪ್ದಲ್ಲ..." ಅನ್ನುವ ಅಮ್ಮಮ್ಮನ ಸ್ವಗತದಲ್ಲಿ ಅಂದಿನ ಅಧ್ಯಾಯವು ಸಮಾಪ್ತಿಯಾಗಿ, ಎಲ್ಲವೂ ಶಾಂತವಾಯಿತು. ಅಂದು ದೈಹಿಕವಾಗಿಯೂ ಬಳಲಿದ್ದ ಅಜ್ಜಿಗೆ "ಸಿಟ್ಟಿಗಿಂತ ಹೆಚ್ಚು ದುಃಖವಾಗಿದೆ; ಆತಂಕವಾಗಿದೆ.." ಅನ್ನಿಸಿ, ನಾವೆಲ್ಲರೂ ಸ್ವಲ್ಪ ಪೆಚ್ಚಾಗಿದ್ದೆವು.
ಅದರ ಮರುದಿನ ನನ್ನ ಮಾವನ ಸಿಗರೇಟು ಪೊಟ್ಟಣದ ಪ್ರಸಂಗವು ಎಲ್ಲರಿಗೂ ಗೊತ್ತಾಗಿತ್ತು. ನಮ್ಮ ತಂಗಿ -ಯಾನೆ- ಅಂದಿನ "ಒತ್ತೆಯಾಳು" ಹೇಳಿದ್ದೋ ಅಥವ ತನ್ನ ಕಿಸೆಯಲ್ಲಿಟ್ಟ ಸಿಗರೇಟು ಕಾಣೆಯಾಗಿದ್ದನ್ನು ಮಾವನೇ ಕಂಡು ಹಿಡಿದನೋ ಗೊತ್ತಿಲ್ಲ. ಅಂತೂ ನಮ್ಮ ಗುಟ್ಟೆಲ್ಲವೂ ರಟ್ಟಾಗಿ - ನಮ್ಮ ಉಪಾಯವು ಪೊಟ್ಟು ಚಟ್ಟಾಗಿ ಹೋಯಿತು. ಹಿಂದಿನ ದಿನ, ಅಜ್ಜಿಯ ನಸ್ಯದ ಡಬ್ಬದಿಂದ ನಾವೆಲ್ಲರೂ ಚಿಟಕಿ ನಸ್ಯ ಏರಿಸಿದಾಗ ಮಾತ್ರ - ತಕ್ಷಣವೇ ಸಿಕ್ಕಿ ಬಿದ್ದಿದ್ದೆವು. ಎಲ್ಲರೂ ಏಕಕಾಲದಲ್ಲಿ ಕಣ್ಣು ಮೂಗಿನಿಂದ ನೀರು ಸುರಿಸುತ್ತ ಸೀನತೊಡಗಿದಾಗ, ನಮ್ಮ ಮೂಗಿನಿಂದ ಬಣ್ಣದ ಸಿಂಬಳ ಇಳಿಯುವುದನ್ನು ಕಂಡ ಚಿಕ್ಕಮ್ಮನಿಗೆ ಗೊತ್ತಾಗಿ, ಅಂದು ಎಲ್ಲರಿಗೂ ಕೇಜಿಗಟ್ಟಲೆ ಪ್ರಸಾದ ಸಿಕ್ಕಿತ್ತು. ಸಿಗಬೇಕಾದ್ದು ಸಕಾಲದಲ್ಲಿ ಸಿಕ್ಕಿದರೆ ನಿಸ್ಸಂಶಯವಾಗಿ, ಅದರ ಬೆಲೆ ಮತ್ತು ಪರಿಣಾಮ ಹೆಚ್ಚುತ್ತದೆ. ಅಧಿಕಪ್ರಸಂಗದ ಯಾವುದೇ ಮಾನವು ಮೂರು ಕಾಸಾದರೆ ನಷ್ಟವೇನಿದೆ ? ಹೋಗಲಿ. ಹೋಗುವುದಕ್ಕೇ ಇರುವ ಮಾನ ಅದು.
ನನ್ನ ಅಜ್ಜನ ಮನೆಯಲ್ಲಿ ಮಕ್ಕಳ ವಿಷಯದಲ್ಲಿ ಗಂಡಸರು ಯಾರೂ ತಲೆ ಹಾಕುತ್ತಿರಲಿಲ್ಲ. ಅವೆಲ್ಲ ಹೆಂಗಸರ ವಿಭಾಗ ಎನ್ನುವ ಅಹಂಕಾರದ ಧೋರಣೆಯು ಅಲ್ಲಿತ್ತು. ಆದರೆ ಮದುವೆಯ ದಿನ ತನ್ನ ಸಿಗರೇಟು ಕಳಕೊಂಡ ಮಾವ ಮಾತ್ರ ಮರುದಿನ ನಮ್ಮ ಎದುರಿನಿಂದ ಹಾದು ಹೋಗುವಾಗ "ಹೂಂ...ಹೂಂ...ಎಷ್ಟು ಕುಣಿಯುವುದು ? ಹಡೆಗಳು..." ಅಂದಿದ್ದ. ಅಷ್ಟೆ. ಅಜ್ಜನ ಮನೆಯಲ್ಲಿನ ಗಂಡಸರ ಪ್ರತಿಕ್ರಿಯೆಗಳೆಲ್ಲವೂ ಯಾವಾಗಲೂ "ಹಾಂ...ಹೂಂ..." ಗಳಲ್ಲೇ ಮುಗಿದು ಹೋಗುತ್ತಿತ್ತು. "ಈ ಹೆಂಗಸರು ಮಕ್ಕಳ ಜತೆಯಲ್ಲೆಲ್ಲ ಎಂಥ ಮಾತು ?" ಎಂಬ ಡೌಲೂ ಕೂಡ ಅಂದಿನ ಹಲವು ಮನೆಗಳಲ್ಲಿ ಢಾಳಾಗಿತ್ತು.
ಅನಂತರ, ಎಷ್ಟೋ ವರ್ಷಗಳ ನಂತರ, ತೀರ ಇತ್ತೀಚೆಗೆ ಅದೇ ಅಜ್ಜಿಯ ಶ್ರಾದ್ಧಕ್ಕೆಂದು ನಾನು ಅಜ್ಜನ ಮನೆಗೆ ಹೋಗಿದ್ದೆ. ಆಗ ಊಟದ ಪಂಙ್ತಿಯಲ್ಲಿ ಕೂತವಳನ್ನು ಅನ್ನ ಬಡಿಸುತ್ತಿದ್ದ ಒಬ್ಬ ವ್ಯಕ್ತಿಯು ಮಾತನಾಡಿಸಿದರು. "ಗುರುತು ಸಿಕ್ಕಿತಾ ?" ಅಂದರು. ನನ್ನ ಮುಖ ನೋಡಿ "ಏನೋ" ಗೊತ್ತಿದ್ದಂತೆ ನಕ್ಕರು. "ಕ್ಷಮಿಸಿ...ಯಾರು ಅಂತ ನೀವೇ ಹೇಳಬೇಕು..." ಅಂದಾಗ "ಅವತ್ತು...ಮದುವೆಯ ದಿನ...ಅಲ್ಲಿ...ಹಾಡಿ...ಸಿಗರೇಟು..." ಅಂತ ತುಂಡು ತುಂಡಾಗಿ ನೆನಪಿಸಿದರು. ನನ್ನ ಬಾಯಲ್ಲಿದ್ದ ಅನ್ನವು ಹೊರಗೆ ಬೀಳದಂತೆ ಬಾಯಿಗೆ ಕೈಯನ್ನು ಅಡ್ಡವಿರಿಸಿಕೊಂಡು ನಾನು ಜೋರಾಗಿ ನಕ್ಕಿದ್ದೆ. ನನ್ನ ಆಚೆ ಈಚೆ ಊಟಕ್ಕೆ ಕೂತವರಿಗೆ ಆ ಮಾತಿನ ತಲೆಬುಡ ತಿಳಿಯಲಿಲ್ಲ. ಆ ಮದುವೆಯ ದಿನದಂದು ಬಡಿಸುತ್ತಿದ್ದ ವ್ಯಕ್ತಿಯೂ ನಮ್ಮ ಹಾಡಿ ಗ್ಯಾಂಗಿನಲ್ಲಿ ಇದ್ದರಂತೆ. ನನ್ನ ಊಟವಾದ ಮೇಲೆ ಅವರನ್ನು ಹುಡುಕಿಕೊಂಡು ಹೋಗಿ ಮತ್ತೊಮ್ಮೆ ನಾನು ಮಾತನಾಡಿಸಿ ಬಂದೆ. "ಮರೆಯಬೇಡಿ; ಕೊರಗಲೂ ಬೇಡಿ. ಕೆಲವು ಭಯಂಕರ ಅನುಭವಗಳೂ ಬೇಕಾಗುತ್ತವೆ..." ಅಂದೆ. ಆದರೆ ಸಿಗರೇಟು ಪ್ರಿಯನಾದ ಆ ನನ್ನ ಪ್ರೀತಿಯ ಮಾವ ಮತ್ತು ನನ್ನ Best friend ಕೂಡ ಆಗಿದ್ದ ನನ್ನ ಚಿಕ್ಕಮ್ಮನ ಮಗನು - ಮುಂದೆಯೂ ವ್ಯಸನದ ಬದುಕಿನಿಂದ ಎದ್ದು ಬರಲಾಗದಷ್ಟು ದೂರ ನಡೆದು, ಅರೆ ಆಯುಷ್ಯದಲ್ಲಿಯೇ ಮುಳುಗಿ ಹೋದರು...ಈಗ ಅವರೆಲ್ಲ ನೆನಪು ಮಾತ್ರ.
ಈ ಎಲ್ಲ ರಾದ್ಧಾಂತಗಳೂ ನನ್ನ ಅಮ್ಮನಿಗೆ ತಲುಪಿದ್ದು ತುಂಬ ತಡವಾಗಿ. ಕೇಳಿದ ಅವಳು ತುಂಬ ದುಃಖ ಪಟ್ಟಿದ್ದಳು. "ಕಳತವರ ಸಾಧನೆಯಾ ? ಕಾಯ್ತವರ ಸಾಧನೆಯಾ ?" ಅಂದಿದ್ದಳು. (ಕಳುವವರ ಸಾಧನೆಯಾ ಕಾಯುವವರ ಸಾಧನೆಯಾ ? ಅನ್ನುವುದು ಶುದ್ಧರೂಪ. ಕಳ್ಳತನ ಮಾಡಲೇ ಬೇಕೆಂದು ಹೊಂಚು ಹಾಕುವವರಿಗಿಂತ ಕಾಯುವವರು - ಯಾವಾಗಲೂ ಒಂದು ಹೆಜ್ಜೆ ಹಿಂದೇ ಇರುತ್ತಾರೆ; ಕಳ್ಳರು ಹೇಗಾದರೂ ತಮ್ಮ ಕಾರ್ಯ ಸಾಧಿಸಿಬಿಡುತ್ತಾರೆ - ಎಂಬ ಅರ್ಥ.) "ಎಲ್ಲವೂ ಅವರವರಿಗೇ ಅನ್ನಿಸಬೇಕು. ಹಾಗಾಗದೆ - ಬರೇ ಹೊರಗಿನ ಬೇಲಿ ಹಾಕಿ ಸುಕ ಇಲ್ಲ...ಹಾರಾಟ ನಿಲ್ಲುವುದೂ ಇಲ್ಲ...ಅಪ್ಪಯ್ಯನಿಗೆ ಹೇಳುವುದು ಬೇಡ ಮಕ್ಳೇ. ಅವರು ಕೊಂದೇ ಹಾಕ್ತಾರೆ..." ಅನ್ನುತ್ತ ಅಂದು ಅಮ್ಮ ಮರುಗಿದ್ದಳು.
(ನನ್ನ ಅಮ್ಮ - 52 ರ ಹರೆಯದಲ್ಲಿ )
ಹಾಗೆ ನೋಡಿದರೆ, ಒತ್ತಾಯದಿಂದ ಯಾರನ್ನಾದರೂ ಪರಿವರ್ತಿಸುವುದು ಕಷ್ಟ. ಹಾಗೆ ಹೊರಟರೆ, ನಮ್ಮ ಮಾನ್ಯ ಪ್ರಧಾನಿಗಳು ಇಂದಿನ ಸರಕಾರೀ ನೌಕರರನ್ನು ನೆಟ್ಟಗೆ ಮಾಡಲು ಹೊರಟಂತೆ, ಬಹುಶಃ ಹೊಳೆಯಲ್ಲಿ ಹುಣಿಸೇಹಣ್ಣು ತೊಳೆದಂತೆ ಆದೀತು. ಯಾವುದೇ ಬದಲಾವಣೆಯು ಆಂತರ್ಯದಿಂದ ಚಿಮ್ಮಬೇಕಾದರೆ ಕೆಲವೊಮ್ಮೆ - ಅದಕ್ಕೆ ಸಾಂಪ್ರದಾಯಿಕವಲ್ಲದ ಹೊಸ ಮಾರ್ಗವನ್ನೇ ಹುಡುಕಿ ಅಳವಡಿಸಬೇಕು. ರೋಗಿಯನ್ನು ಶಿಕ್ಷಿಸುವುದಕ್ಕಿಂತ ರೋಗಮೂಲಕ್ಕೆ ಚಿಕಿತ್ಸೆ ನಡೆಯಬೇಕು. ಆದರೆ ಅಪ್ಪಯ್ಯನಿಗೆ ಬಹುಶಃ ಕೊನೆಯ ವರೆಗೂ ನನ್ನ ವಿನೋದಾವಳಿಯ "ಅಧಿಕ" ಪ್ರಸಂಗವನ್ನು ಯಾರೂ ಹೇಳಲಿಲ್ಲ. ಅಥವ ಅವರು ಹೊಸ ಬಗೆಯ ಚಿಕಿತ್ಸೆಗೆ ಉದ್ದೇಶಿಸಿದ್ದರು. ನನ್ನ ಅಪ್ಪಯ್ಯನೂ ಎಂಥವರೆಂದರೆ ಅವರ ಇದಿರಿನಿಂದ ಒಂದು ಇರುವೆ ಹೋದರೂ ಅವರು ಗಮನಿಸುತ್ತಿದ್ದರು; ಹಿಂದಿನಿಂದ ಆನೆ ಹೋದರೂ ಅವರ ಗೋಷ್ಟಿಗೇ ಬರುತ್ತಿರಲಿಲ್ಲ. ಅಕಸ್ಮಾತ್, ಯಾರಾದರೂ ನನ್ನ ಚಂಚಲ ಆಸಕ್ತಿಗಳ ಸುಳಿವು ಕೊಟ್ಟಿದ್ದರೆ ... ತಕ್ಷಣದ ಪ್ರತಿಕ್ರಿಯೆಯಾಗಿ ನನ್ನ ಬೆನ್ನಿನ ಚರ್ಮವನ್ನು ಸುಲಿದು ಮನೆಯ ಮುಂದೆ ನೇತು ಹಾಕುತ್ತಿದ್ದರೇನೋ ? ಇತ್ತ, ನನ್ನ ಮಗನು ಒಮ್ಮೆ ಶಾಲೆಯಿಂದ ಹಿಂದಿರುಗುವಾಗ ತನ್ನ ಗೆಳೆಯರೊಂದಿಗೆ ಹರಟುತ್ತ ಸಿಗರೇಟು ಸೇದುತ್ತಿದ್ದ ಅಪ್ಪನನ್ನು ನೋಡಿ, ನೆಲದಿಂದ ಸಣ್ಣ ಕಲ್ಲೊಂದನ್ನು ಎತ್ತಿ ಅಪ್ಪನತ್ತ ಒಗೆದು, ತಾನು ನಿಮ್ಮನ್ನು ಕಂಡಿದ್ದೇನೆ ಎಂಬುದನ್ನು ತೋರಿಸಿ, ಅವರಲ್ಲಿ ಯಾವ ಮಾತನ್ನೂ ಆಡದೆ ಮನೆಗೆ ಬಂದು ನನ್ನಲ್ಲಿ ದೂರಿದ್ದ. ನನ್ನ ಅಪ್ಪಯ್ಯ ಅಮ್ಮನಂತಹ ಸರಳ ವ್ಯಕ್ತಿಗಳಿಗೆ ಎಂತಹ ಮಗಳು ! ನನ(ಮ)ಗೆ ಅದೆಂತಹ ಮಗ ! ಅದೇ ಈ ಸೃಷ್ಟಿಯ - ಬದುಕಿನ ವೈಚಿತ್ರ್ಯ ! ಈ ಸೃಷ್ಟಿಯ ಆರಂಭದಲ್ಲಿ ಪ್ರಜಾಪತಿಯು ಸಕಲ ಜೀವಿಗಳನ್ನುದ್ದೇಶಿಸಿ ಪ್ರತ್ಯೇಕವಾಗಿ ಹೇಳುವಾಗ - "ಮನುಷ್ಯರಿಗೆ ಅವರವರ ಮಕ್ಕಳಿಂದಲೇ ಮರಣ..." ಎಂದಿದ್ದನಂತೆ. ಆ ಮಾತು ನನ್ನ ಪಾಲಿಗೆ ಅ(ರ್ಧ)ಸತ್ಯ. ಮಗನಿಂದ, ಮಗನಿಗಾಗಿ ಅಥವ ನಮ್ಮ ಮಕ್ಕಳಿಗಾಗಿ - ನಮ್ಮ ಚಪಲದ ಬದುಕನ್ನು ಪುನರ್ನವೀಕರಿಸಿಕೊಳ್ಳಲು ಸಾಧ್ಯವಿದೆ ಎಂದು ಅನಂತರ ನನಗೆ ದೃಢವಾಗಿ ಅನ್ನಿಸಿತ್ತು. ನನ್ನ ಬಾಲ್ಯದ ಬದುಕಿನ ಮುಂದಿನ ಭಾಗದಲ್ಲಿ ಹೊಸ ಚಿಕಿತ್ಸೆಯ ಪ್ರಯೋಗದ ಭಾಗವಾಗಿ ಅಪ್ಪಯ್ಯನೇ ನನ್ನ ಲಗಾಮು ಹಿಡಿದದ್ದು, ಅವರಿಂದಾದಷ್ಟು ಪಳಗಿಸಿ ರಾಜಮಾರ್ಗ ಹಿಡಿಸಿದ್ದು - ಈ ಸ್ತ್ರೀ ಮೂಲದ ಉತ್ತರ ಕಾಂಡ.
ಆದರೆ ಬದುಕಿನ ಯಾವುದೇ ಘಟನೆಗಳಿಗೆ ಅಂಟಿಕೊಂಡು ಕೂರುವುದು ನನ್ನ ಜಾಯಮಾನವಾಗಿರಲಿಲ್ಲ. ಮೂಲ ಸ್ವಭಾವವು ಬದಲಾಗುವುದೂ ಇಲ್ಲ. ಧೂಳಿನಲ್ಲಿ ಹೊರಳಾಡಿ, ಅಲ್ಲಲ್ಲೇ ಕೊಡವಿಕೊಂಡು ಮುನ್ನಡೆಯುವುದು ನನಗೆ ಪ್ರಿಯವಾದ ದಾರಿ. ಹಾಗೆ ಕೊಡವಿದ ಧೂಳು ಕೆಲವೊಮ್ಮೆ ಸುತ್ತಮುತ್ತ ಉಸಿರು ಕಟ್ಟಿಸುತ್ತಿದ್ದುದೂ ಇತ್ತು. "ಬದುಕಿನ ಯಾವುದೇ ಅನುಭವಗಳನ್ನು ಕಚ್ಚುವುದಕ್ಕೆ ಚುಚ್ಚುವುದಕ್ಕೆ ಯಾರಿಗೂ ಸಂಕೋಚ ಬೇಡ; ಆದರೆ ತಟಪಟ ಅನುಭವಗಳೆಲ್ಲವೂ ಒಟ್ಟಾಗಿ ಸೇರಿಕೊಂಡು ತಿರುಗಿ ನಿಂತು, ನಮ್ಮ ಬದುಕನ್ನು ಕಚ್ಚಲು ಬಿಡದಂತಹ ಎಚ್ಚರ ಬೇಕು" ಎಂಬುದು ನಾನು ನಂಬಿ ನಡೆದ ದಾರಿ. "ಒಳ್ಳೆಯದು, ಕೆಟ್ಟದು...ಹೆಣ್ಣು ಗಂಡು, ಬಗೆಬಗೆಯ ಭೇದಭಾವ" ಎನ್ನುವ ಸಾಮಾಜಿಕ ಅಳತೆಗೋಲುಗಳೆಲ್ಲವೂ ಆಯಾ ಕಾಲ ಪರಿಸ್ಥಿತಿಗಳಲ್ಲಿ ಹುಟ್ಟಿ ಅನೂಚಾನವಾಗಿ ನಡೆದು ಬಂದ ಅಸ್ಥಿರ ಭೂತಗಳು. ಅಂತಹ ಅಸ್ಥಿರವನ್ನು ಭೂತದ ಮೆರವಣಿಗೆಯಂತೆ ವೈಭವೀಕರಿಸಿ ಖಾಲಿಯಿದ್ದಲ್ಲೆಲ್ಲ ಯಾರೂ ಹೇರಬಾರದು. ಬದುಕಿನ ಹಾದಿಯಲ್ಲಿ - ಕೊನೆಗೊಮ್ಮೆ "ಕಂಡಿದ್ದೇನೆ; ಹೋಗಯ್ಯ..." ಅನ್ನುವುದಕ್ಕೂ ಒಂದಷ್ಟು ವಿಭಿನ್ನ ಅನುಭವವು - ಪ್ರತೀ ಬದುಕಿಗೂ ಬೇಕು. ಬದುಕಿನ ದಾರಿಯಲ್ಲಿ ಎದುರಾಗುವ ಆಕಸ್ಮಿಕಗಳನ್ನು ಊಹಿಸಿ ಜಾಗ್ರತರಾಗುವುದಕ್ಕೂ ಅನುಭವಗಳು ಬೇಕು. ಕೆಲವೊಮ್ಮೆ ಸತ್ತಂತಹ ಹಂತದ ವರೆಗೂ ಹೋಗಿ ಹೋಗಿ ಬರಬೇಕು. ಆದರೆ ಬಿದ್ದು ಎದ್ದು ನಿಲ್ಲಲಾಗದವರು - ಎಂದೂ ಮುಳುಗುವ ಉಸಾಬರಿಗೆ ಹೋಗಲೇಬಾರದು. ಆದರೆ ಯಾವತ್ತೂ ಎಲ್ಲರಿಗೂ ಒಂದೇ ಮಾನದಂಡವು ಹೊಂದುವುದಿಲ್ಲ. ಅವರವರ ಅಳತೆಗೆ ತಕ್ಕಂತಹ ಬಟ್ಟೆಯು - ನಮ್ಮದಾಗಬೇಕು. ಬದುಕಿನ ಯಾವುದೂ - ಯಾರಿಗೂ - ಅನಿವಾರ್ಯ ಎಂದಾಗಲೇಬಾರದು. ಅದೇ ಬದುಕಿನ ಸೂಕ್ಷ್ಮ. ಮುಖ್ಯವಾಗಿ ಬದುಕು ಪೂರ್ಣವಾಗಲು - ತಪ್ಪು ಒಪ್ಪಿನ ಸಂಘರ್ಷದೊಳಗೇ ಮುಳುಗಿ ಮುಳುಗಿ ಸಾಯಬಾರದು ಎಂದಿದ್ದರೆ, ಬದುಕಿನ ಬಣ್ಣ ಬಟ್ಟೆ ಕೆಡಬಾರದು ಎಂಬ ಪ್ರಜ್ಞೆಯೊಂದಿದ್ದರೆ, ಅಪಾತ್ರರೊಂದಿಗೆಲ್ಲ ತಮ್ಮನ್ನು ಹೋಲಿಸಿಕೊಂಡು ನಿರಂತರ ನರಳದಿದ್ದರೆ... ಎಲ್ಲವೂ ಒಳ್ಳೆಯದೇ ಆಗಿಹೋಗುತ್ತದೆ. ಮಾತ್ರವಲ್ಲದೆ, ದಾರಿ ತಪ್ಪಿದರೂ ದಿಕ್ಕು ತಪ್ಪದಂತೆ - ಬೆನ್ನುಬಿಡದೆ ಬದುಕಿನುದ್ದಕ್ಕೂ ಕಾಪಾಡುವ ಅದೃಷ್ಟ ಶಕ್ತಿಗೆ - ಅಯಾಚಿತವಾಗಿ ತಲೆ ಬಾಗಿ ವಿನಮ್ರವಾಗುತ್ತದೆ. ....ಹುಟ್ಟಿದ ಪ್ರತಿಯೊಬ್ಬರೂ ಸಾಯುತ್ತಾರೆ. ಆದರೆ ವ್ಯತ್ಯಾಸ ಇಷ್ಟೇ. ಕೆಟ್ಟ ಬದುಕು ಅದನ್ನು ಅದೇ ಸಾಯಿಸಿಕೊಳ್ಳುತ್ತದೆ; ಒಳ್ಳೆಯ ಬದುಕನ್ನು ಇತರರು ಹೊಂಚು ಹಾಕಿ ಸಾಯಿಸುತ್ತಿರುತ್ತಾರೆ ಅನ್ನುವುದೇ ವಿಡಂಬನೆ.
ನಾವು ಕೋಟೇಶ್ವರದಲ್ಲಿದ್ದ ಅವಧಿಯಲ್ಲಿ ನಡೆದ, ಒಮ್ಮೊಮ್ಮೆ ನಾನೇ ನಡೆಸಿದ ಕ್ಷುಲ್ಲಕಗಳಿಗೆ ಇತಿಮಿತಿಯಿರಲಿಲ್ಲ. ಆದರೆ ನನ್ನ ಒಟ್ಟಾರೆ ಅನುಭವಗಳಿಂದ - ಬದುಕಿನಲ್ಲಿ ನಾನು ಕಳೆದುಕೊಂಡದ್ದಕ್ಕಿಂತ ಪಡೆದುದೇ ಹೆಚ್ಚು ಎಂಬುದರಲ್ಲಿ ಸಂಶಯವಿಲ್ಲ. ಇನ್ನೂ ಈಗಲೂ ನಾನು ತಂಟೆ ಮಾಡುತ್ತ ಬದುಕಿರುವುದೇ ಅದಕ್ಕೆ ಸಾಕ್ಷಿ. ಅದಕ್ಕೇ - ಕೋಟೇಶ್ವರವು ನನ್ನ ಒಳಗೆ ಭದ್ರವಾಗಿ ದಾಖಲಾಗಿದೆ. ಎಡವಿ ಬೀಳುತ್ತ ಬೀಳಿಸುತ್ತ ನಡಿಗೆ ಕಲಿತ ಆ ಅವಧಿಯನ್ನು ಆಗಾಗ ಮುಟ್ಟಿ ಬರುತ್ತ ನನ್ನೊಳಗೆ ಭದ್ರವಾಗಿ ಕೊರೆದಿಟ್ಟುಕೊಂಡುದರ ಹಿಂದೆಯೂ - ಮಥನ ಮಂಥನಕ್ಕೆ ಇಂಬು ಕೊಡುವ ಪ್ರೇರಣೆಯು ಸಿಗುತ್ತಲೇ ಇರಲಿ ಎಂಬ ಉದ್ದೇಶವಿದೆ.
ಒಮ್ಮೆ ಅಮ್ಮನ ಕರಿಮಣಿ ಸರ ತುಂಡಾಗಿ, ಅದನ್ನು ದುರಸ್ತಿಗೊಳಿಸುವ ಪ್ರಸಂಗ ಬಂದಿತ್ತು. ಅದಕ್ಕಾಗಿ, ಸಾಲಿಗ್ರಾಮದ ಒಬ್ಬರು ಅಕ್ಕಸಾಲಿಗರನ್ನು ಅಪ್ಪಯ್ಯನು ಕೋಟೇಶ್ವರದ ಮನೆಗೆ ಕರೆಸಿದ್ದರು. ಅಂದು ಚಿನ್ನದ ಕೆಲಸ ಮಾಡುವವರು ನಮ್ಮ ಮನೆಗೇ ಬಂದು, ಅಂಗಳದಲ್ಲಿ ಕೂತು ಆಭರಣ ತಯಾರಿಸಿ ಕೊಟ್ಟು ಹೋಗುತ್ತಿದ್ದರು. ಅದು ಚೂರುಪಾರು ಕೆಲಸವಾದರೂ ಇಂದಿನಂತೆ ಅಸಡ್ಡೆ ತೋರುತ್ತಿರಲಿಲ್ಲ. ಅಂದು ಅಕ್ಕಸಾಲಿಗರು ಕೆಲಸ ಮಾಡುತ್ತಿದ್ದಾಗ ನಾನು ಅಲ್ಲೇ ಕೂತು ಎರಡು ದಿನ ಪೂರ್ತಿ ನೋಡಿದ್ದೆ. ಎಂತಹ ಏಕಾಗ್ರತೆ, ಜಾಗ್ರತೆ, ಬೆಂಕಿಗೆ ಗಾಳಿ ಊದುವಾಗಲೂ ಅದೆಷ್ಟು ನಿಯಂತ್ರಣ, ನಿಗಿನಿಗಿ ಕುಣಿಯುತ್ತಿದ್ದ ಕೆಂಡ...ಇವನ್ನೆಲ್ಲ ನೋಡುತ್ತ ನೋಡುತ್ತ ಅಂದು ಬೆರಗಾಗಿದ್ದೆ. ನನಗೆ ನೆನಪಿದೆ. ಆ ಗಾಳಿ ಊದುವ ಪುಂಗಿಯ ರೀತಿಯ ವಸ್ತುವನ್ನು "ನನಗೆ ಕೊಡು; ನಾನು ಊದುತ್ತೇನೆ..." ಅನ್ನುತ್ತ ಅಂದು ಆ ಅಕ್ಕಸಾಲಿಗರನ್ನು ತುಂಬ ಬೇಡಿಕೊಂಡಿದ್ದೆ. ಕಂಡದ್ದೆಲ್ಲವನ್ನೂ ನಾನೂ ಮಾಡಬೇಕೆಂಬ ಉತ್ಕಟ ಹಂಬಲದ ನನ್ನ ತುರಕ್ಮಿಣಿ ವಿದ್ಯೆಯನ್ನು ನಾನು ಆಗಲೇ ತೋರಿಸತೊಡಗಿದ್ದೆ. ನನ್ನ ಪೀಡೆ ತಾಳಲಾರದೆ, ತನ್ನ ಎಲ್ಲ ಕೆಲಸ ಮುಗಿದ ಮೇಲೆ ಅವರು ಆ ಪುಂಗಿಯಂಹ ಊದುಕೊಳವೆಯನ್ನು ನನಗೆ ಊದಲು ಕೊಟ್ಟಿದ್ದರು. ಆದರೆ, ನಾನು ಎಷ್ಟು ಊದಿದರೂ ಅದರ ಪುಗ್ಗೆಯು ಉಬ್ಬಲೇ ಇಲ್ಲ. ನನ್ನ ಉಸಿರು ಕೊಳವೆ ದಾಟಿ ಹೊರಗೆ ಬರಲೂ ಇಲ್ಲ. "ನೀನು ದೊಡ್ಡವಳಾದ ಮೇಲೆ ಆಗುತ್ತದೆ; ಈಗ ನಿನಗೆ ಶಕ್ತಿಯಿಲ್ಲ. ಆಯ್ತಾ ?" ಅನ್ನುತ್ತ ಅವರು ತಮ್ಮ ಪುಂಗಿಯನ್ನು ನನ್ನ ಕೈಯ್ಯಿಂದ ಪಡೆದು ತಮ್ಮ ಚೀಲದೊಳಗೆ ಇಟ್ಟುಕೊಂಡಿದ್ದರು. ಆದರೆ ಈ ಎಲ್ಲ ಆವಾಂತರವನ್ನು ಒಳಗಿನಿಂದಲೇ ಗಮನಿಸಿದ್ದ ಅಮ್ಮ ನನ್ನನ್ನು ಬಚ್ಚಲಿಗೆ ಕರೆದೊಯ್ದು, ಬಾಯಿ ಮುಕ್ಕಳಿಸಿ ಉಗಿಯಲು ಹೇಳಿದ್ದಳು. ನನ್ನ ಇಡೀ ಮುಖವನ್ನೆಲ್ಲ ತೊಳೆದು ತನ್ನ ಸೆರಗಿನಿಂದ ಒರೆಸಿ "ಸೀದ ಒಳಗೆ ಹೋಗು. ಕಂಡ ಕಂಡದ್ದಕ್ಕೆಲ್ಲ ಬಾಯಿ ಹಾಕಬಾರದು.." ಅನ್ನುತ್ತ ಹೆದರಿಸುವಂತೆ ಕಣ್ಣು ಬಿಟ್ಟು, ಬೆನ್ನಿಗೆ (ನೋವಾಗದಂತೆ) ಗುದ್ದಿ ಕಳಿಸಿದ್ದಳು.
ಕಂಡ ಕಂಡದ್ದನ್ನೆಲ್ಲ ಬಾಯಿಗೆ ಹಾಕುವ, ಕಂಡದ್ದನ್ನೆಲ್ಲ ಮಾಡಿ ನೋಡುವ ಯಾವುದೇ ಚಾಳಿಯು ಒಟ್ಟಾರೆ ಆರೋಗ್ಯಕ್ಕೆ ಒಳ್ಳೆಯದಲ್ಲವಂತೆ. ಅಮ್ಮ ತನ್ನ ಬಾಯಿ ಹರಿದು ಬೀಳುವಷ್ಟು ಬಾರಿ ಹೇಳಿದ ಮಾತಿದು. ಹೌದು. ಆದರೆ ಅದು - ನಮ್ಮ ಕೈ ಬಾಯಿಯ ತಪ್ಪೆ ? ಹುಚ್ಚು ಕುದುರೆಯಂತಿರುವ ಮನಸ್ಸಿಗೆ ಲಗಾಮು ಬಿಗಿಯಲು ಪ್ರಯತ್ನಿಸುವ ಸಂಕಲ್ಪವು ಅಂತರಂಗದಲ್ಲಿಯೇ ಬಲಿಯುವವರೆಗೂ ಅವೆಲ್ಲ ಸಾಧ್ಯವೆ ? ಏನೇ ಆದರೂ ಬದುಕು ದೊಡ್ಡದು. ಬದುಕಿನ ಅದಮ್ಯ ಪ್ರೀತಿಯಿಂದ, ಸ್ವವಿಮರ್ಶೆಗೆ ನಮ್ಮನ್ನು ಒಡ್ಡಿಕೊಳ್ಳುವ ಮೂಲ ಸ್ವಭಾವದಿಂದ ಮತ್ತು ದೈವ ಕೃಪೆಯಿಂದ - ಬಹುಶಃ ಬದುಕಿನ ದಾರಿಯಲ್ಲಿ ಒಮ್ಮೊಮ್ಮೆ ಮುಗ್ಗರಿಸಿದ್ದರೂ ಕೆಲವರು - ಎಚ್ಚರಗೊಂಡು ಮೈಕೊಡವಿ ನಡುದಾರಿಯಲ್ಲಾದರೂ ಸಂಭಾಳಿಸಿಕೊಳ್ಳುತ್ತಾರೆ; ಬದುಕು ಬಾಡದಂತೆ ಜತನದಿಂದ ಉಳಿಸಿಕೊಳ್ಳುತ್ತಾರೆ...ಎಂದೂ ಅನಂತರ ನನಗೆ ಅನ್ನಿಸಿದ್ದಿದೆ.
ನೀರು ಇದ್ದಲ್ಲೆಲ್ಲ ಕೆಸರು ಇರುವುದೂ ಸ್ವಾಭಾವಿಕ. ಪ್ರತೀ ಜೀವನ ಪ್ರವಾಹದ ಆಳದಲ್ಲೂ ಹೊರಗಣ್ಣಿಗೆ ಕಾಣದ ಒಂದಷ್ಟು ಕತ್ತಲೂ ಇರುತ್ತದೆ. ಈ ನೆಲದಲ್ಲಿ, ಕೆಲಕೆಲವರಿಗೆ ಕೆಲಕೆಲವು ಪ್ರಸಂಗಗಳಲ್ಲಿ ಆಸಕ್ತಿ ಅವಲಂಬನೆಗಳು ಇದ್ದರೆ ನನಗೆ ಮಾತ್ರ - ಈ ಭೂಮಿಯ ಮೇಲಿರುವ ಎಲ್ಲ ಅಧಿಕಪ್ರಸಂಗಗಳಲ್ಲೂ ತನ್ಮಯತೆಯಿದ್ದದ್ದು ನನ್ನ ಭಾಗ್ಯ ಅಥವ ದೌರ್ಭಾಗ್ಯ ಅನ್ನಬಹುದು. (ಯಾಕೆಂದರೆ ಎರಡೂ ಕೊಡುವುದು ಉತ್ತರವಿರದ ಪರೀಕ್ಷೆಗಳನ್ನೇ.) ಅದಕ್ಕಾಗಿ, ನಮ್ಮ ಒಳ ಪ್ರಜ್ಞೆಯನ್ನು ಎಬ್ಬಿಸಿ, ಬ್ಯೂಟೀ ಪಾರ್ಲರ್ ಗೆ ಕಳಿಸದೆ - ಅದಾಗಲೇ ಇರುವ ವೇಷವನ್ನೆಲ್ಲ ಕಳಚಿ ನಗ್ನಗೊಳಿಸಬೇಕು; ಸಹಜವಾಗಬೇಕು. ನಮ್ಮ ವರ್ತನೆ, ಆಂಗಿಕ ಚರ್ಯೆ, ಉಸಿರಾಟ, ಆಹಾರ ಪದ್ಧತಿ, ಆಯ್ದ ಸ್ನೇಹ ಸಂಬಂಧಗಳು, ಕಾರ್ಯ ಶೈಲಿ, ಸಣ್ಣ ಅವಧಿಗೆ ಗುರಿ ಹೇರಿಕೊಳ್ಳುವುದು - ಇತ್ಯಾದಿಗಳೆಲ್ಲವೂ ಚಂಚಲ ವ್ಯಕ್ತಿತ್ವವನ್ನು ಕಟ್ಟಿ ನಿಲ್ಲಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ. ಇನ್ನೊಬ್ಬರನ್ನು ಗಮನಿಸುತ್ತ ಎಡೆಬಿಡದೆ ಟೀಕೆಟಿಪ್ಪಣಿ ಮಾಡುವುದಕ್ಕಿಂತ ನಮ್ಮನ್ನು ನಾವೇ ಪರಿಶೀಲಿಸಿಕೊಳ್ಳುತ್ತ, ಅವಶ್ಯ ಕಂಡಾಗ ಟೀಕಿಸಿಕೊಳ್ಳುವುದು ಸ್ವಂತ ವ್ಯಕ್ತಿತ್ವ ರೂಪಿಸಿಕೊಳ್ಳುವ ಉತ್ತಮ ಮಾರ್ಗ. ಮುಂದೆ ನಡೆಯುವ ಎಮ್ಮೆಯನ್ನು ನೋಡಿ ಹಿಂದಿನ ಎಮ್ಮೆಯು "ಪಿಸಿಕ್...ಬೆತ್ತಲೆ ಹೋಗುತ್ತಿದೆ.." ಅನ್ನುವ ಹಾಗೆ - "ಹಟ್ಟಿ ಹಣೆ ಹೋರಿ ತಲೆ" ಯಂತಹ ವ್ಯಕ್ತಿತ್ವಗಳು ಸ್ವಂತಕ್ಕೂ ಸಮಾಜಕ್ಕೂ ಒಳಿತನ್ನು ತರಲಾರದು. ಪದವಿ ಪತ್ರ ಮತ್ತು ಅಲಂಕರಿಸಿದ ಪದವಿಗಳಿಂದ ಯಾರನ್ನೂ ಅಳೆಯಲಾಗದು. ಉತ್ತಮ ಓದು ಬರಹಗಳು, ಸಚ್ಚಿಂತನೆಗಳು ಮತ್ತು ಏಕಾಗ್ರ ಲಯಬದ್ಧ ನಡಿಗೆಯು ಮಾತ್ರ ನಮ್ಮ ಬದುಕಿನ "ಅತಿ"ಗಳನ್ನೆಲ್ಲ ಸವರಿ ಮಿದುಗೊಳಿಸಿ - "ಸ್ಥಿತಿ ಗತಿ ಮತಿ" ನೀಡಿ - ಈ ನಿಟ್ಟಿನಲ್ಲಿ ಮುನ್ನಡೆಸುವ ಅದಮ್ಯ ಶಕ್ತಿಸ್ರೋತವಾಗಬಲ್ಲದು.
*****-----*****-----*****

No comments:
Post a Comment