Wednesday, October 21, 2015

ಆಕಾಶವಾಣಿಯ ಮೊದಲ ದಿನಗಳ - ನನ್ನ ನೆನಪಿನ ಪುಟಗಳು...

2009 ರಲ್ಲಿ ನಾನು ನೆನಪಿಸಿಕೊಂಡ - ಕೆಲವರು ಈಗಾಗಲೇ ಓದಿರುವ  "ಪುಟಗಳು..." ಮತ್ತು 2014 ರಲ್ಲಿ ಪ್ರಕಟಿಸಿದ "ಉದ್ಘೋಷಕ ಪೂರ್ವಾಪರ" ಬರಹಗಳ ಸಂಗ್ರಹಿತ ರೂಪ.

ಅದು 70 ರ ದಶಕ. ಆಕಾಶವಾಣಿಯು ಉಚ್ಛ್ರಾಯದಲ್ಲಿದ್ದ ಕಾಲ. ಯಾವುದೇ ಮನರಂಜನೆ ಅಥವಾ ಮಾಹಿತಿಗೆ ಇಡೀ ಸಮಾಜವು ಆಕಾಶವಾಣಿಯನ್ನೇ ಆಶ್ರಯಿಸಿದ್ದ ಕಾಲ. ಆಕಾಶವಾಣಿಯ ಸುವರ್ಣ ಕಾಲ!

ನನಗಾಗ 21 ವರ್ಷ ಪ್ರಾಯ. ಅದಾಗಲೇ ನಾಟಕ, ಸಂಗೀತ, ಹರಿಕಥೆ ಎಂದೆಲ್ಲ ಸಾರ್ವಜನಿಕ ಬದುಕಿನಲ್ಲಿ ತೊಡಗಿಕೊಂಡಿದ್ದ ನನಗೆ ಅಂದು ಬಡವನೊಬ್ಬ ಕಡವರವನ್ನೆಡಹಿದಂತಹ ಸಂತಸ. ಅಂದು ಮಂಗಳವಾರ. 1976 ನೇ ಇಸವಿಯ ಡಿಸೆಂಬರ್ 7 ನೇ ತಾರೀಕಿನಂದು ಮಂಗಳೂರು ಆಕಾಶವಾಣಿ ಕೇಂದ್ರದಲ್ಲಿ ಉದ್ಘೋಷಕಿ ಆಗಿ ಸೇರಿಕೊಳ್ಳಲು ನಾನು ಹೊರಟಿದ್ದೆ. ಜೊತೆಯಲ್ಲಿ ತಾನೂ ಬರುತ್ತೇನೆ - ಒಬ್ಬಳೇ ಹೋಗುವುದು ಬೇಡ ಎಂದ ಅಮ್ಮನಿಗೆ "ಚಿಂತೆ ಬೇಡ" ಎಂದು ಧೈರ್ಯದ ಮಾತು ಹೇಳಿ ಅವಳ ಆಶೀರ್ವಾದ ಪಡೆದು, ನಾನು ಕುಂದಾಪುರದಿಂದ ಮಂಗಳೂರಿಗೆ ಬಂದಿದ್ದೆ. ಅದು ಹೆಣ್ಣು ಮಕ್ಕಳು ಒಬ್ಬೊಬ್ಬರೇ ದೂರ ದೂರ ಓಡಾಡುತ್ತಿದ್ದ ಕಾಲವಾಗಿರಲಿಲ್ಲ. ಆದರೂ ಅಮ್ಮನಿಗೆ ಧೈರ್ಯ ಹೇಳಿ ಬಸ್ ಚಾರ್ಜ್ ಉಳಿಸುವ ಯೋಚನೆಯಿಂದ ನಾನೊಬ್ಬಳೇ ಕುಂದಾಪುರದಿಂದ ಸುಮಾರು 100 ಕಿ. ಮೀ. ದೂರದಲ್ಲಿದ್ದ ಮಂಗಳೂರಿಗೆ ಬಂದು ಬಿಟ್ಟಿದ್ದೆ. ರಾತ್ರಿ ಎಲ್ಲಿ ಠಿಕಾಣಿ ಎಂದು ನನಗೆ ಗೊತ್ತಿರಲಿಲ್ಲ. ಅಂತೂ ಬಂದಿದ್ದೆ ... ಮಂಗಳೂರಿನ ಏನು ಎತ್ತ ಗೊತ್ತಿಲ್ಲದೆ ಮಂಗಳೂರಿನ ಸರ್ವಿಸ್ ಬಸ್ ನಿಲ್ದಾಣದ ವರೆಗೂ ಹೋಗಿ - ಅಲ್ಲಿ ಇಳಿದೆ. ಅಲ್ಲೇ ಹೊರಗಿದ್ದ ಒಂದು ರಿಕ್ಷಾ ಹತ್ತಿ ಕೂತು ಆಕಾಶವಾಣಿಯತ್ತ ಹೊರಟೆ.


ಅಂದು ನನ್ನ ಎದುರಿಗಿತ್ತು ಕನಸಿನ ಆಕಾಶವಾಣಿ. ಒಂದೈದು ನಿಮಿಷ ಆ ಕಟ್ಟಡವನ್ನೇ ನೋಡುತ್ತ ನಾನು  ನಿಂತಿದ್ದೆ. ಮೈಮರೆತ ಪುಟ್ಟ ಕನಸು! ಅನಂತರ ನಿಧಾನವಾಗಿ ಆಕಾಶವಾಣಿಯ ದ್ವಾರಪಾಲಕರನ್ನು ದಾಟಿ ಒಳಗೆ ಹೆಜ್ಜೆ ಇಟ್ಟೆ. ನೇಮಕಾತಿಯ ಪತ್ರವನ್ನು ಕೈಯಲ್ಲಿ ಹಿಡಿದುಕೊಂಡು ನೇರವಾಗಿ accounts ವಿಭಾಗಕ್ಕೆ ಹೋದೆ. ಆಗ ಶ್ರೀ ಅಮಾನುಲ್ಲಾ ಖಾನ್ ಅಂತ ಒಬ್ಬ ಅಕೌಂಟೆಂಟ್ ಇದ್ದರು. ಅವರು "ಇವತ್ತೇ join ಆಗ್ತೀರಾ?" ಅಂದರು. ಹ್ಞೂಂ ಅಂದೆ. "ಸರಿ; formalities ಎಲ್ಲ ಮುಗ್ಸಿಬಿಡೀಪ್ಪ" ಅಂತ ಅವರು ಇನ್ನೊಬ್ಬರಿಗೆ ಹೇಳಿದರು. ಆ ಇನ್ನೊಬ್ಬರು ನನ್ನನ್ನು ತಮ್ಮ ಟೇಬಲ್ಲಿನ ಎದುರು ಕೂಡಿಸಿದರು. ನಾನು ಸುತ್ತಲೂ ನೋಡಿದೆ. ಹುಡುಗಿಯರು ಮತ್ತು ಹುಡುಗರು ಸೇರಿ ಎಂಟೋ ಹತ್ತೋ ಸಿಬ್ಬಂದಿಗಳು ಅಲ್ಲಿ ಇದ್ದರು. ಆಗ ಆ ಇನ್ನೊಬ್ಬರು ನನ್ನನ್ನು ಕೇಳಿದರು - "ಏನಮ್ಮ, ಇವತ್ತೇ join ಆಗ್ತೀರಾ ?" ಮತ್ತದೇ ಪ್ರಶ್ನೆ ಎಂದುಕೊಂಡ ನಾನು ಖಾನ್ ಸಾಹೇಬರ ಮುಖವನ್ನು ನೋಡಿ ನಕ್ಕೆ. "ಆಗ್ತಾರಂತೆ ... ಸೇರಿಸಿಕೊಂಡ್ಬಿಡಿ" ಅಂದರು ಖಾನ್. ಆಗ ಆ ಇನ್ನೊಬ್ಬರು ಮುಂದಕ್ಕೆ ಬಗ್ಗಿ ಮೆತ್ತಗೆ ಹೇಳಿದರು - "ಮೇಡಂ, ಇವತ್ತು ಮಂಗಳವಾರ; ಒಳ್ಳೆಯ ದಿನವಲ್ಲ; ಸ್ವಲ್ಪ ಯೋಚನೆ ಮಾಡಿ. ಏನೂ ಗಡಿಬಿಡಿ ಇಲ್ಲ; ನಾಳೆಯೂ ಸೇರಬಹುದು" ಅಂದರು. ಆಗ ಗಲಿಬಿಲಿಗೊಂಡ ನಾನು ಮತ್ತೊಮ್ಮೆ ಖಾನರನ್ನು ನೋಡಿದೆ. ಅವರು "Any problem ?" ಅಂದರು. ಅವರೊಡನೆ "ಏನಿಲ್ಲ ಸರ್" ಅಂತ ಹೇಳಿದರೂ ನನ್ನ ತಲೆಯೊಳಗೆ ಒಂದು ಸಂಶಯದ ಹುಳ ಹೊಕ್ಕಿತ್ತು. ಆಕಾಶವಾಣಿಯ ಭಾಗವಾಗುವ ಅವಸರದಲ್ಲಿದ್ದ ನಾನು ಆ ಹುಳವನ್ನು ಝಾಡಿಸಿ ಒದ್ದು ಅರೆ ಕ್ಷಣದಲ್ಲಿ ನನ್ನನ್ನು ಸಂಭಾಳಿಸಿಕೊಂಡುಬಿಟ್ಟೆ. ಹರಿಕಥೆ ಮಾಡಿ ಮಾಡಿ ದಾಸರ ಪದಗಳೆಲ್ಲ ಬಾಯಲ್ಲಿದ್ದವಲ್ಲಾ? ಅದನ್ನೇ ಒಂಚೂರು ಹೇಳಿಕೊಂಡೆ. "ಸಕಲ ಗ್ರಹ ಬಲ ನೀನೇ ಸರಸಿಜಾಕ್ಷಾ" ಅಂದುಕೊಂಡು - "ಇವತ್ತೇ join ಆಗ್ತೇನೆ ಸರ್..." ಅಂದುಬಿಟ್ಟೆ. ಮಂಗಳವಾರವನ್ನು ಪ್ರಸ್ತಾಪಿಸಿದ ವ್ಯಕ್ತಿಯು "ಸರಿ ಬಿಡಿ; ನಿಮ್ಮಿಷ್ಟ" ಎಂದು ಹೇಳಿ ಕಚೇರಿಯ ಎಲ್ಲಾ formalities ನ್ನೂ ಮುಗಿಸಿದರು. ಅಂತೂ ಇಂತೂ ಆ ಪ್ರಶಸ್ತವಾದ ಮಂಗಲಕಾರಕ ಮಂಗಳವಾರದಂದು ನಾನು ಮಂಗಳೂರು ಆಕಾಶವಾಣಿಯನ್ನು ಸೇರಿಕೊಂಡೆ. ಮಂಗಳೂರು ಆಕಾಶವಾಣಿಯನ್ನು ಮಂಗಳವಾರದಂದು ಹೊಕ್ಕ ನನ್ನ ಮಂಗಳದ ಕಥೆ ಇನ್ನು ಶುರುವಾಗಬೇಕಷ್ಟೇ.



ಒಂದು ಉದ್ಯೋಗ ಎಂದ ಮೇಲೆ ಅಲ್ಲಿ ಹತ್ತು ಹಲವು ಹಿನ್ನೆಲೆಯ ಮಂದಿ ಸೇರಿಕೊಂಡಿರುವುದು ಸಹಜ. ಅಂದಿನ ಆಕಾಶವಾಣಿಯು ಪ್ರತಿಭಾವಂತರಿಂದ ತುಂಬಿದ್ದ ವ್ಯವಸ್ಥೆಯಾಗಿತ್ತು. ಕಛೇರಿಯಲ್ಲಿ ಮಾಡಬೇಕಾದ ಆಡಳಿತಾತ್ಮಕ ಕರ್ಮಗಳನ್ನೆಲ್ಲ ಮುಗಿಸಿ ಅಲ್ಲಿಂದ ಹೊರಬಿದ್ದ ನಾನು ಆಮೇಲೆ ನೋಡಿದ್ದು ಆಗ ನಮ್ಮ ನಿರ್ದೇಶಕರಾಗಿದ್ದ ಶ್ರೀ ಎಸ್.ಕೃಷ್ಣಮೂರ್ತಿ ಅವರನ್ನು. ಇವರು ಕರ್ನಾಟಕ ಸಂಗೀತದ ವಾಗ್ಗೇಯಕಾರರಾದ ಮೈಸೂರು ವಾಸುದೇವಾಚಾರ್ಯರ ಮೊಮ್ಮಗ. ನನ್ನನ್ನು ಆಯ್ಕೆ ಮಾಡಿದ ಸಂದರ್ಶನ ಸಮಿತಿಯಲ್ಲೂ ಇವರಿದ್ದರು. ಅಂಥ ವಿದ್ವಾಂಸರಿಂದ ಶುಭ ಹಾರೈಕೆಯನ್ನು ಪಡೆಯುವ ಭಾಗ್ಯ ನನ್ನದಾಯಿತು. ಆಗ ಆಕಾಶವಾಣಿಯ ಬೆಂಗಳೂರು ಕೇಂದ್ರದ ನಿರ್ದೇಶಕರಾಗಿದ್ದ ಶ್ರೀ ಎಸ್. ಕೃಷ್ಣಮೂರ್ತಿ ಅವರು ಮಂಗಳೂರು ಕೇಂದ್ರದ ಉದ್ಘಾಟನೆಯ ವರೆಗೆ ಮೇಲುಸ್ತುವಾರಿ ನೋಡಿಕೊಳ್ಳುವ ಸಲುವಾಗಿ ಮಂಗಳೂರಿಗೆ ನಿಯೋಜಿತರಾಗಿ ಬಂದಿದ್ದರು...ಈಗ ಕಾಣುವ ಸ್ಟುಡಿಯೋ ಬ್ಲಾಕ್ ಆಗ ನಿರ್ಮಾಣವಾಗಿರಲಿಲ್ಲ. ಇಂದಿನ ಧ್ವನಿಮುದ್ರಣ ವಲಯದ ಹೊರಗಿರುವ ನೆಲ ಅಂತಸ್ತಿನ ಭಾಗದಲ್ಲೇ ಕಛೇರಿ, Studio ಎಲ್ಲವೂ ನಡೆಯುತ್ತಿತ್ತು. ಶ್ರೀ ಕೃಷ್ಣಮೂರ್ತಿಯವರನ್ನು ಕಂಡು ನಮಸ್ಕರಿಸಿದ ನಾನು Station Engineer ಆಗಿದ್ದ ಶ್ರೀ P. K. Pai ಅವರನ್ನುಭೇಟಿಯಾದೆ. ಸದಾ ಹಸನ್ಮುಖಿಯಾಗಿರುತ್ತಿದ್ದ ಅವರು ನನ್ನಿಂದ - "ಸಂಸ್ಥೆಗೆ ನಿಷ್ಠೆಯಿಂದ ದುಡಿಯುವೆ " ಎಂಬ ಪ್ರಮಾಣವಚನವನ್ನು ಭಾರತದ ರಾಷ್ಟ್ರಪತಿಗಳ ಹೆಸರಿನಲ್ಲಿ ಮಾಡಿಸಿದರು. ಆಮೇಲೆ ಸಹಾಯಕ ನಿರ್ದೇಶಕರಾಗಿದ್ದ ಶ್ರೀಮತಿ ಎಂ. ವಿ. ವಸಂತಕುಮಾರಿ ಅವರನ್ನು ಭೇಟಿಯಾದೆ. ಸದಾ ಹುಬ್ಬು ಗಂಟಿಕ್ಕಿಕೊಂಡು ಕನ್ನಡಕದ ಸಂದಿಯಿಂದಲೇ ನೋಡುತ್ತಿದ್ದ ಅವರನ್ನು ಕಂಡಾಗಲೇ ನನಗೆ ಪಕ್ಕನೆ ಮಂಗಳವಾರವು ನೆನಪಿಗೆ ಬಂತು. ಕೈಮುಗಿದು ನಮಸ್ಕರಿಸಿದೆ.

"ನೋಡಮ್ಮ, ರಾಮಚಂದ್ರ ಮೆನನ್ ಅಂತ Programme Executive ಒಬ್ಬರು ಅಲ್ಲಿದ್ದಾರೆ. ಅವರ ಜೊತೆ ಕೂತು ಬೇಗಬೇಗ ಕೆಲಸ ಕಲೀಬೇಕು. Announcer ಶಂಕರ ಭಟ್ ಅವರೂ ಇದ್ದಾರೆ. Studio ದ ಒಳಗಿನ ಎಲ್ಲ ಕೆಲಸವನ್ನೂ ಅವರು ಹೇಳಿಕೊಡ್ತಾರೆ. ಬರುವ ವಾರದಿಂದ ನಮ್ಮ Regular Transmission  ಆರಂಭವಾಗ್ತದೆ. ಆಮೇಲೆ Shift duty (ನಿಯಮಿತವಾದ ಪ್ರಸಾರದ ಪಾಳಿ) ಇರ್ತದೆ. ಚೆನ್ನಾಗಿ ಕೆಲಸ ಮಾಡಬೇಕು." ಅಂತ ಮೇಜಿನ ಮೇಲಿದ್ದ ಯಾವುದೋ ಫೈಲನ್ನು ನೋಡುತ್ತಲೇ ಹೇಳಿದರು. ಆಕಾಶವಾಣಿಯ A B C D ಗೊತ್ತಿಲ್ಲದ ನನಗೆ ಅವರ ಮಾತಿನ ತಲೆಬುಡ ಅರ್ಥವಾಗದೆ ಒಳಗೇ ಸಣ್ಣ ನಡುಕ ಹುಟ್ಟಿತು. "ನೀವಿನ್ನು ಹೋಗಬಹುದು" ಅಂತ ಅವರು ಹೇಳಿದಾಗ "ಬದುಕಿದೆಯಾ ಬಡ ಜೀವವೇ" ಅಂದುಕೊಂಡು ಹೊರಬಂದೆ. ಅಲ್ಲಿಂದ ಹೊರಬಂದ ನನಗೆ - ಅದಾಗಲೇ ಎರಡು ವರ್ಷಗಳ ಅನುಭವವಿದ್ದ ಸಹೋದ್ಯೋಗಿ ಶ್ರೀ ಶಂಕರ ಭಟ್ಟರು ನಗುತ್ತ ನಿಂತದ್ದು ಕಾಣಿಸಿತು. ನೇರವಾಗಿ ಅವರ ಬಳಿ ಹೋಗಿ "ಬೇಗ ಬೇಗ ಕೆಲಸ ಕಲೀಬೇಕಂತೆ. ನನಗೊಂದಿಷ್ಟು ಕೆಲಸ ಕಲಿಸಿ ಭಟ್ರೇ ..." ಅಂದೆ. "ಗಡಿಬಿಡಿ ಮಾಡ್ಬೇಡಿ ಮಾರಾಯ್ರೆ...ಎಲ್ಲ ಬರ್ತದೆ ..relax .." ಅಂತ ಹೇಳಿ Play back studio - ಪ್ರಸಾರ ಕೊಠಡಿತ್ತ ನನ್ನನ್ನು ಕರೆದೊಯ್ದರು . 
  

ಹೀಗೆ... ನಾನು ಇಂದಿಗೂ ಪವಿತ್ರವೆಂದು ಭಾವಿಸಿರುವ ಆ ಪ್ರಸಾರ ಕೊಠಡಿಯ ರಂಗಪ್ರವೇಶ ಆಯಿತು. ಅದು ಮಂಗಳವಾರ. 1976...ಡಿಸೆಂಬರ್ 7.


ಯಾವುದೇ ಸರಕಾರೀ ವೃತ್ತಿಯ ಹಿನ್ನೆಲೆಯಿಲ್ಲ. ಯಾವುದೇ ವೃತ್ತಿ ತರಬೇತಿಯೂ ಇಲ್ಲದ ನಾನು Studio ಪ್ರವೇಶಿಸಿದೆ. ಎಲ್ಲವೂ ಹೊಸತು; ವಿಸ್ಮಯ! ಒಂದೆರಡು ರೆಕಾರ್ಡಿಂಗ್ ಪೆಟ್ಟಿಗೆಗಳು, ಧ್ವನಿಮುದ್ರಿಕೆಗಳು ಸುತ್ತುವಂತಹ - ಚಕ್ರವನ್ನು ಹೊಂದಿದ ಮೇಜುಗಳು, ಹತ್ತಿರದಲ್ಲೇ ಧ್ವನಿ ಸುರುಳಿಯನ್ನು ಸುತ್ತಿಸುವ ಎರಡು ಯಂತ್ರಗಳು, ಎದುರಿನಲ್ಲಿ ಹತ್ತೋ ಹನ್ನೆರಡೋ ಫೇಡರುಗಳು ಎದುರಿನಲ್ಲಿ ಒಂದು ಮೈಕ್ ನೋಡಿದೆ. ಸಹೋದ್ಯೋಗಿ ಶಂಕರ ಭಟ್ಟರು ಜೊತೆಗಿದ್ದರು. "ಇದೇ ನಿಮ್ಮ ಕಾರ್ಯಕ್ಷೇತ್ರ" ಎಂದರು. ತಕ್ಷಣ, "ನನಗೆ ಕೆಲಸ ಕಲಿಸಿ ಭಟ್ರೇ " ಅಂದೆ. "ಅಯ್ಯೋ... ಅವಸರ ಮಾಡಬೇಡಿ; ನಾನು ಡ್ಯೂಟಿಯಲ್ಲಿರುವಾಗ ಇಲ್ಲೇ ಇದ್ದು ನೋಡಿಕೊಳ್ಳಿ; ನೀವೇ ಗ್ರಹಿಸ್ತೀರಿ" ಅಂದರು.

ಅಂದಿನಿಂದ ಒಂದೆರಡು ದಿನ ಭಟ್ಟರ ಹಿಂದ್ಹಿಂದೇ ತಿರುಗಿದೆ; ನಿಂತು ನೋಡಿದೆ. ವಿಷಯದ ಸ್ಥೂಲ ಪರಿಜ್ಞಾನವಾಯಿತು. ಎರಡನೆಯ ದಿನ ಸಂಜೆಯ ಪ್ರಸಾರದಲ್ಲಿದ್ದಾಗ "ನೋಡೋಣ, ಇವತ್ತು ಕಾರ್ಯಕ್ರಮಗಳ ವಿವರವನ್ನು ನೀವೇ ಹೇಳಿ. ನಾನು ಹೊರಗಿದ್ದು ಕೇಳಿಸಿಕೊಳ್ಳುತ್ತೇನೆ." ಅಂತ ಹೇಳಿ ಸಹೋದ್ಯೋಗಿ ಭಟ್ಟರು ಹೊರಗೆ ಹೋದರು. " ಸರಿ " ಅಂತ ಮೈಕ್ ಎದುರಿಗೆ ಕೂತೆ. ೫ ನಿಮಿಷದ ಅವಧಿಯಲ್ಲಿ ಆಯಾ ದಿನದ ಸಂಜೆಯ ಮತ್ತು ಮರುದಿನದ ಕಾರ್ಯಕ್ರಮಗಳ ವಿವರವನ್ನು ಹೇಳಬೇಕಿತ್ತು. ಅದರ ಮೊದಲು ದೆಹಲಿಯ ವಾರ್ತೆಗಳ ಸಹಪ್ರಸಾರವಿದ್ದುದರಿಂದ ನಮ್ಮ ಪ್ರಸಾರ ಕೊಠಡಿಯ ಸಂಪರ್ಕವು ಕಡಿದಿತ್ತು. (ಪ್ರಸಾರಕೊಠಡಿಯಿಂದಲೇ ಪ್ರಸಾರ ಕಾರ್ಯವು ನಡೆಯುತ್ತಿರುವಾಗ ಮಾತ್ರ ಆ ಕೊಠಡಿಯಲ್ಲಿ ಮತ್ತು ಕೊಠಡಿಯ ಹೊರಗೆ ಕೆಂಪು ದೀಪ ಉರಿಯುತ್ತಿರುತ್ತದೆ. ಪ್ರವೇಶ ನಿಷಿದ್ಧ - ಕಾರ್ಯನಿರತವಾಗಿದೆ - ಎಂಬ ಸೂಚನೆ ಅದು) ನಾನು ಆ ಕೆಂಪು ದೀಪದ ಆಗಮನವನ್ನೇ ನಿರೀಕ್ಷಿಸುತ್ತಾ ಕುಳಿತಿದ್ದೆ. "ಸ್ಟುಡಿಯೋ ಜೀವಂತವಾದ ಕೂಡಲೇ announcement ಕೊಟ್ಟುಬಿಡಿ" ಅಂತ ಭಟ್ಟರು ಹೇಳಿದ್ದಂತೆ ನಾನು ತಯಾರಾಗಿ ಕೂತಿದ್ದೆ.

 

ದೆಹಲಿಯ ವಾರ್ತೆ ಮುಗಿದ ಕೂಡಲೇ ಚಕ್ಕಂತ ಕೆಂಪುದೀಪ ಬೆಳಗಿತು. ಅದನ್ನೇ ಕಾದಿದ್ದ ನಾನು ಪಟಕ್ಕಂತ fader ತೆಗೆದು "ಆಕಾಶವಾಣಿ, ಮಂಗಳೂರು.... " ಅಂತ ಮೊದಲೇ ಬರೆದು ಇರಿಸಿಕೊಂಡಿದ್ದ ಕಾರ್ಯಕ್ರಮ ಪಟ್ಟಿಯನ್ನು ಓದತೊಡಗಿದೆ. ಒಂದರ್ಧ ನಿಮಿಷದಲ್ಲೇ ಭಟ್ಟರು ಹೊರಗಿಂದ ಓಡೋಡಿ ಬಂದರು. ಬಂದವರೇ, ವಾದ್ಯಸಂಗೀತದ ತಟ್ಟೆಯನ್ನು ಓಡಿಸಿ (Play), ತೆರೆದಿದ್ದ fader ನ್ನು ಮುಚ್ಚಿ, ಉಂಟಾಗಿದ್ದ ನಿಶ್ಶಬ್ದವನ್ನು ಮುರಿದು - "ಏನಾಯಿತು? ಏನೂ ಬರ್ತಾ ಇಲ್ಲ?" ಅಂತ ಬಗ್ಗಿ ನೋಡಿ, "ಅಯ್ಯೋ...ತಪ್ಪಾದ fader ತೆರೆದು ಮಾತಾಡ್ತಿದ್ದೀರಿ. ಅದಲ್ಲ; ಇದು." ಅಂತ ಇನ್ನೊಂದು fader ತೋರಿಸಿದರು. ನಾನು ಕಂಗಾಲಾಗಿದ್ದೆ. "ಹೆದರಬೇಡಿ. ಓದಿ." ಅಂತ ಹೇಳಿ ಅಲ್ಲೇ ನಿಂತರು. ಮತ್ತೆ ಮೊದಲಿನಿಂದ ಶುರುಮಾಡಿ super express ವೇಗದಲ್ಲಿ ಧಡಬಡ ಅಂತ ಎಲ್ಲವನ್ನೂ ಹೇಳಿಮುಗಿಸಿದೆ.

ಆಕಾಶವಾಣಿಯ ಈ ಮೊದಲ ಅನುಭವವನ್ನು ಈಗ ಯೋಚಿಸಿದರೆ, ಈಗಲೂ ನಗು ಬರುತ್ತದೆ.


ಹಾಗೆ ನೋಡಿದರೆ ನನಗೆ ಮೈಕ್ ಎಂಬುದು ಹೊಸತೇನಾಗಿರಲಿಲ್ಲ. ನನ್ನ ಹದಿನೈದನೆಯ ವರ್ಷ ಪ್ರಾಯದಲ್ಲೇ ನಾನು ಸಾರ್ವಜನಿಕ ಹರಿಕಥೆಗಳನ್ನು ಮಾಡಲು ಆರಂಭಿಸಿದ್ದೆ. ಸಭೆ, ಸಭಾಕಂಪದ ದೌರ್ಬಲ್ಯ ನನಗಿರಲಿಲ್ಲ. "ಆದರೆ ಇಂದೇಕೆ ಹೀಗಾಯಿತು?" ಎಂದು ಯೋಚನೆಗೆ ಬಿದ್ದೆ. "ನಾನು ಸಹಜ ನಾರಾಯಣಿಯಾಗಿರಲಿಲ್ಲವಲ್ಲಾ?" ಎಂದು ಯೋಚಿಸಿದೆ.


ಒಂದು ಮೈಕ್ ಎದುರು ನಿಂತುಕೊಂಡು, ಅಕ್ಕಪಕ್ಕದಲ್ಲಿ ವಾದ್ಯಮೇಳವನ್ನಿರಿಸಿಕೊಂಡು, ನೂರಾರು ಜನ ಸೇರಿರುವ ಸಭೆಯಲ್ಲಿ, ಗಂಟೆಗಟ್ಟಲೆ ಹರಿಕಥೆ ಮಾಡುವ ಮಂತ್ರ ತಂತ್ರ ಬೇರೆ; ಸ್ಟುಡಿಯೋದಲ್ಲಿ ಏಕಾಂತದಲ್ಲಿ ಕೂತು, ಜನರನ್ನು ಮುಟ್ಟುವ ತಂತ್ರವೇ ಬೇರೆ ಎಂಬುದು ನಿಧಾನವಾಗಿ ನನಗೆ ಅರ್ಥವಾಗತೊಡಗಿತು. ಇಲ್ಲಿ ಮಂತ್ರ ತಂತ್ರಗಳ ಜೊತೆಗೆ ಯಂತ್ರಗಳ ಉಪಯೋಗದ ಕುರಿತ ಪರಿಜ್ಞಾನವೂ ಅಗತ್ಯ. ಒಬ್ಬ ಉತ್ತಮ ಉದ್ಘೋಷಕನು ತುಂಬ ಆತ್ಮೀಯವಾಗಿ, ಸ್ಫುಟವಾಗಿ, ಚುಟುಕಾಗಿ, ಸಮಯಪ್ರಜ್ಞೆ ಉಳ್ಳವನಾಗಿರುವುದರ ಜೊತೆಗೆ ಸ್ಟುಡಿಯೊದಲ್ಲಿರುವ ಎಲ್ಲ ಯಂತ್ರಗಳನ್ನೂ ತನಗೆ ಬೇಕಾದಂತೆ ಜಾಣ್ಮೆಯಿಂದ ಉಪಯೋಗಿಸಲು ಸಮರ್ಥನಾಗಿರಬೇಕು. ಯಾವತ್ತೂ ವಿಪರೀತ Conscious ಆಗಲೇಬಾರದು; ಅದರಿಂದ ಕ್ಷುಲ್ಲಕ ತಪ್ಪುಗಳು ಸಂಭವಿಸುತ್ತವೆ. ಆದ್ದರಿಂದ ಯಾವುದೇ ಉದ್ವೇಗವಿಲ್ಲದ ಶಾಂತ ಮನಸ್ಥಿತಿಯು ತುಂಬ ಅವಶ್ಯಕ. ಅಂದಂದಿನ ಕಷ್ಟಗಳನ್ನೆಲ್ಲ ಉದ್ಘೋಷಕರು ತಾವೇ ನುಂಗಿ, ಶಿಷ್ಟವಾದುದನ್ನು ಮಾತ್ರ ಶ್ರೋತೃಗಳ ಮಡಿಲಿನಲ್ಲಿಡಬೇಕು.

 ಬಾನುಲಿಯ ಕೇಳುಗರಿಗೆ - ಉದ್ಘೋಷಕರು ಮಾತಾಡುವ ದನಿಯಷ್ಟೇ ಕೇಳುತ್ತಿರುತ್ತದೆ; ಮಾತ್ರವಲ್ಲ - ಅಷ್ಟೇ ಕೇಳಿಸಬೇಕು. ರೇಡಿಯೋದಲ್ಲಿ ತಡೆಯಿಲ್ಲದೆ - ಮಾತು, ಹಾಡು, ನಾಟಕ, ರೂಪಕ, ಚರ್ಚೆ....ಇತ್ಯಾದಿ ಬರುತ್ತಲೇ ಇರುತ್ತವೆ. ಆ ಹೊತ್ತಿನಲ್ಲಿ ಸ್ಟುಡಿಯೋದಲ್ಲಿರುವ Announcer ಎಂಬ ವ್ಯಕ್ತಿಯು ತಡೆಯಿಲ್ಲದ ಚಟುವಟಿಕೆಯಲ್ಲಿ ಇರುತ್ತಾರೆ. ಯಾವ ಹೊತ್ತಿನಲ್ಲಿ ಏನು ಹೇಳಬೇಕು, ಹೇಗೆ ಹೇಳಬೇಕು, ಧ್ವನಿಮುದ್ರಿತ ಕಾರ್ಯಕ್ರಮವಾದರೆ ಆ ಕಾರ್ಯಕ್ರಮದ ತಿರುಳೇನು? ಆಯಾ ಸಂದರ್ಭಕ್ಕೆ ಹೊಂದುವಂತೆ ಚುಟುಕಾಗಿ ಎಷ್ಟು ಹೇಳಬಹುದು? ಜೊತೆಜೊತೆಗೇ... ತಕ್ಷಣ ಮೂಡಿ ಬರಬೇಕಾದ ಮುಂದಿನ ಕಾರ್ಯಕ್ರಮಕ್ಕೆ ಮಾಡಬೇಕಾದ ಪೂರ್ವತಯಾರಿ... ಆಗಾಗ ಗಂಟೆ ನೋಡುತ್ತಾ, ನಿಗದಿತ ಸಮಯಕ್ಕೆ - ನಿಗದಿತ ಕಾರ್ಯಕ್ರಮಗಳು ಹೋಗುವಂತೆ ನೋಡಿಕೊಳ್ಳುವುದು... ಹೀಗೆ...ಅಂತೂ ಮೈಯೆಲ್ಲಾ ಎಚ್ಚರದಿಂದಿರಬೇಕಾದ್ದು Announcer ಗಳಿಗೆ ತೀರಾ ಅವಶ್ಯ ಎಂಬುದನ್ನು ಕಲಿಯಲು - ನನಗೆ ಸ್ವಲ್ಪ ಸಮಯ ಬೇಕಾಯಿತು.

"ಅಸ್ತವ್ಯಸ್ತ ದಿನಚರಿಯನ್ನೇ ಇಷ್ಟ ಪಡುತ್ತ, ಅಮ್ಮ ಎಷ್ಟು ಗುದ್ದಿದರೂ ಕೇಳದೆ, ಅಸ್ತವ್ಯಸ್ತವಾಗಿಯೇ ಒಂದಷ್ಟು ವರ್ಷವನ್ನು ಹಿತವಾಗಿ, ಅಶಿಸ್ತಿನಿಂದಲೇ ಸಾಗಿಸಿದ್ದ ನನ್ನನ್ನು ಪಳಗಿಸಲು, ಬಹುಶಃ ವಿಧಿಯು - ಈ ಆಕಾಶವಾಣಿಗೆ ನನ್ನನ್ನು ಕಟ್ಟಿ ಹಾಕಿದ್ದಿರಬಹುದೇ?" - ಎಂದು ನಾನು - ಅಂದು ಮತ್ತು ಈಗಲೂ ಅಂದುಕೊಳ್ಳುವುದಿದೆ. ಅದಕ್ಕೆ ನನ್ನ ಸೇವಾವಧಿಯ ಉದ್ದಕ್ಕೂ ನಾನು ಒಟ್ಟಾರೆಯಾಗಿ ಕಂಡುಂಡ ಹಲವು ಅನುಭವಗಳೂ ಸ್ವಲ್ಪಮಟ್ಟಿಗೆ ಕಾರಣವಿರಬಹುದು. 


ಆಕಾಶವಾಣಿಯ ವೃತ್ತಿಬದುಕಿನ ಆರಂಭದ ದಿನಗಳಲ್ಲಿ, ಬೆಳಗಿನ ಪಾಳಿಯ ಕೆಲಸಕ್ಕೆ ನಾನು ತುಂಬ ಹಿಂಜರಿಯುತ್ತಿದ್ದೆ. ಬೆಳಿಗ್ಗೆ ನಾಲ್ಕು ಗಂಟೆಗೇ ಎದ್ದು ತಯಾರಾಗಿ ಕರ್ತವ್ಯಕ್ಕೆ ಹೊರಡಬೇಕಾದ್ದರಿಂದ, ಬೆಳಗಿನ ಸುಖ ನಿದ್ದೆಯಿಂದ ಏಳುವಾಗ ಹಿಂಸೆ ಎನಿಸುತ್ತಿತ್ತು. ಆಮೇಲಾಮೇಲೆ ಹಿಂಸೆಗೂ ಹೊಂದಿಕೊಳ್ಳುತ್ತಾ ಬಂದೆ. 

ನನ್ನ ಬಾಲ್ಯದಲ್ಲಿ ಒಂಬತ್ತನೆಯ ತರಗತಿಯವರೆಗೆ, ಬೆಳಿಗ್ಗೆ ನಾಲ್ಕಕ್ಕೇ ಎದ್ದು ಓದಿಕೊಳ್ಳುತ್ತಿದ್ದ ನಾನು, ಯಾವಾಗ ರಂಗ ನಾಟಕದ ಪೂರ್ವತಯಾರಿ, ಹರಿಕಥೆ ಎಂದೆಲ್ಲಾ - ಅಪರರಾತ್ರಿಯಲ್ಲಿ ಊರು ಸುತ್ತಲು ಆರಂಭಿಸಿದೆನೋ ಆಮೇಲೆ, ಬರಬರುತ್ತ ಬೆಳಿಗ್ಗೆ ತಡವಾಗಿ ಏಳಲು ಆರಂಭಿಸಿದ್ದೆ. ಯಾವ್ಯಾವುದೋ ಊರಿನಲ್ಲಿ ಹರಿಕಥೆ ಮಾಡಿ ಮುಗಿಸಿ, ಮನೆಗೆ ಹಿಂದಿರುಗುವಾಗ ರಾತ್ರಿ ಕಳೆದು ಬೆಳಗಿನ ಜಾವ ಆಗಿರುತ್ತಿತ್ತು. ಆವಾಗೆಲ್ಲ "ಮಗಳು ಒಂದಿಷ್ಟು ನಿದ್ದೆ ಮಾಡಿ ಶಾಲೆಗೆ ಹೋಗಲಿ; ಇಲ್ಲವಾದರೆ ತರಗತಿಯ ಪಾಠದಲ್ಲಿ ಮನಸ್ಸು ನಿಲ್ಲದು" ಅಂತ ಅಂದುಕೊಂಡೋ ಏನೋ, ಮನೆಯಲ್ಲಿ ಯಾರೂ ನನ್ನನ್ನು ನಿದ್ದೆಯಿಂದ ಎಬ್ಬಿಸುತ್ತಿರಲಿಲ್ಲ. ಹೀಗೆ ನಿಧಾನವಾಗಿ..."ರಾತ್ರಿ ಎಚ್ಚರ ; ಹಗಲು ನಿದ್ದೆ" - ಎಂಬ ಹೊಸದಾದ, ಪ್ರಕೃತಿಗೆ ವಿರುದ್ಧವಾದ ಅಸುರ ಜೀವನ ಕ್ರಮಕ್ಕೆ ನಾನು ಅದಾಗಲೇ ಹೊಂದಿಕೊಂಡದ್ದರಿಂದ - ಆಕಾಶವಾಣಿಯ ಬೆಳಗಿನ ಪಾಳಿಯು ಪ್ರಾರಂಭದಲ್ಲಿ ನನ್ನನ್ನು ಕೆಣಕಿದ್ದು ಮತ್ತು ಕಿರಿಕಿರಿ ಎನ್ನಿಸಿದ್ದು ಸಹಜ. ಬರಬರುತ್ತ ಅದಕ್ಕೂ ಹೊಂದಿಕೊಂಡೆ. ಮಾತ್ರವಲ್ಲ, ಕೆಲವೇ ವರ್ಷಗಳಲ್ಲಿ... ಬೆಳಗಿನ ಪಾಳಿಯನ್ನು ನಾನು ಇಷ್ಟಪಟ್ಟು ಹಾಕಿಸಿಕೊಳ್ಳತೊಡಗಿದೆ. ಹೊಸತಾಗಿ ಸೇರಿದವರಿಗೆ - ಅದು ಶಾಲೆಯಿರಲಿ ; ಹಾಸ್ಟೆಲ್ ಇರಲಿ ; ಉದ್ಯೋಗವಿರಲಿ - ಎಲ್ಲಾ ಸ್ಥಳಗಳಲ್ಲೂ ಅದರದರದ್ದೇ ಆದ ಶೈಲಿಯ ಆರಂಭಿಕ ಹಿಂಸೆ ಇದ್ದೇ ಇರುತ್ತದೆ. ಆಕಾಶವಾಣಿಯೂ ಅದಕ್ಕೆ ಹೊರತಾಗಿರಲಿಲ್ಲ.

ಅದನ್ನು ಬೇಕಿದ್ದರೆ Starting Trouble ಅನ್ನಿ; ಅಥವ... Probationary Period ಅನ್ನಿ; ಅಥವಾ ಎಲ್ಲವನ್ನೂ (!) ಕಲಿತು, ಗಟ್ಟಿಯಾಗುವ ಕಾಲ - ಎಂದರೂ ತಪ್ಪಲ್ಲ. ಅದಾಗಲೇ - ಮೆಚ್ಚಿದ ಉದ್ಯೋಗದ ಅಚ್ಚಿಗೆ ಬಿದ್ದಾಗಿದ್ದ ನಾನು, ಅದೇ ವೃತ್ತದಲ್ಲಿ ಸುತ್ತುವುದು ಅನಿವಾರ್ಯವಿತ್ತು. ನಾನೂ ಸುತ್ತಿದೆ. ಮೂವತ್ತೆಂಟು ವರ್ಷಗಳಿಂದ ಬಿಡದೆ ಸುತ್ತಿದ್ದೇನೆ. ಈಗ ಒಂದೊಂದೇ ಸುತ್ತನ್ನು ಬಿಚ್ಚಿ, ನಿಮ್ಮೆದುರು ಹರವುತ್ತಿದ್ದೇನೆ. ಬೇವು - ಬೆಲ್ಲದ ಬಟ್ಟಲು... ಇವೆರಡೂ ನನ್ನ ಸಂಚಿಯಲ್ಲಿದೆ. ಆ ಸಂಚಿಯನ್ನು ಬಿಚ್ಚಿ  ಬೇವು ಹೆಚ್ಚೋ ಬೆಲ್ಲ ಹೆಚ್ಚೋ - ಎಂದು ಈಗ ಲೆಕ್ಕ ಹಾಕುತ್ತಿದ್ದೇನೆ. ನನ್ನ ಲೆಕ್ಕಾಚಾರ ಇನ್ನೂ ಶುರುವಾಗಬೇಕಷ್ಟೇ. (ನಡೆದು ಬಂದ ದಾರಿ....ಎಂಬ ಮಾಲಿಕೆಯಲ್ಲಿ ನನ್ನ ಅಂದಾಜು ಲೆಕ್ಕಾಚಾರವನ್ನು ಸಂಕ್ಷೇಪವಾಗಿ ಈಗಾಗಲೇ ದಾಖಲಿಸಿದ್ದೇನೆ. 2015 ರಲ್ಲಿ ದಾಖಲಿಸಿರುವ ಅದರ 18 ಕಂತುಗಳು ನನ್ನ Blog ನಲ್ಲಿ ಇವೆ. krishnachaitanyaa.blogspot.in)


ನನಗೆ ಈಗಲೂ ನೆನಪಾಗುತ್ತದೆ. ಕೆಲಸಕ್ಕೆ ಸೇರಿ ನಾಲ್ಕೈದು ತಿಂಗಳಾಗಿರಬಹುದು. ಅದೊಂದು ದಿನ ಸಂಜೆಯ ಪ್ರಸಾರಕಾರ್ಯದ ಪಾಳಿಯು ನನ್ನದಾಗಿತ್ತು. ಅಂದು..ಒಂದು ಕಾರ್ಯಕ್ರಮವು ಐದು ನಿಮಿಷದಷ್ಟು ಕಡಿಮೆ ಬಿದ್ದಿತ್ತು. ಹದಿನೈದು ನಿಮಿಷದ ಅವಧಿಗೆಂದು ಹತ್ತೇ ನಿಮಿಷದ ಕಾರ್ಯಕ್ರಮ ಒದಗಿಸಿದ್ದರು. ಹಾಗೆ ಕಡಿಮೆಯಾದಾಗ ಜಾಗ ತುಂಬಿಸಲಿಕ್ಕೆಂದೇ ಒಳ್ಳೊಳ್ಳೆಯ ವಾದ್ಯ ಸಂಗೀತಗಳ ಗ್ರಾಮೋಫೋನ್ ತಟ್ಟೆಗಳನ್ನು ನಾವು ಸಿದ್ಧವಾಗಿಟ್ಟುಕೊಂಡಿರುತ್ತಿದ್ದೆವು. ನನ್ನ ಮೆಚ್ಚಿನ - ಶಿವಕುಮಾರ್ ಶರ್ಮ ಅವರ ಸಂತೂರ್, ಹರಿಪ್ರಸಾದ್ ಚೌರಾಸಿಯಾ ಅವರ ಬಾನ್ಸುರಿ, ಬ್ರಿಜ್ ಭೂಷಣ್ ಕಾಬ್ರಾ ಅವರ ಗಿಟಾರ್ ವಾದನದ ಮುದ್ರಿಕೆಯೂ ಅಲ್ಲಿ ಸಿದ್ಧವಾಗಿತ್ತು. ಆದರೆ ಅದೆಲ್ಲಿಂದೋ ನನಗೊಂದು ಮೂಡ್ (mood) ಬಂತು ನೋಡಿ ! ನಾನೇ ಪಟ್ಟಾಗಿ ಕೂತು " ದಾಶರಥೇ ರಘುರಾಮನ ನೆನೆದರೆ ಈ ಭವಸಾಗರ ದಾಟುವುದೋ...ದೋಷರಹಿತ ಶ್ರೀ ರಾಮನ ನೆನೆದರೆ ಬಹು ಸುಖ ಸಂಪದ ದೊರಕುವುದೋ.." ಅಂತ ಒಂದು ಭಕ್ತಿ ಗೀತೆಯನ್ನು ಹಾಡಲು ಶುರು ಮಾಡಿದೆ. 

ನಮ್ಮ ವ್ಯವಸ್ಥೆಯಲ್ಲಿ ಪ್ರಸಾರದ ಮೊದಲ ಕೇಳುಗರಾಗಿ Studio ದ ಹೊರಗೆ ಕೂತು, ಪ್ರಸಾರದ ಒಟ್ಟಾರೆ ಉಸ್ತುವಾರಿ ಹೊರಬೇಕೆಂದು ವಿಧ್ಯುಕ್ತವಾಗಿ ನಿಯುಕ್ತರಾಗಿರುವ ಡ್ಯೂಟಿ ಆಫೀಸರ್ ಎನ್ನುವವರಿರುತ್ತಾರೆ. ಅವರಿಗೆ ಸ್ಟುಡಿಯೋದ ಹೊರಗೆ ಇರುವ ಡ್ಯೂಟಿ ರೂಂ ಎಂಬಲ್ಲಿ ಕುಳಿತು, ಪ್ರಸಾರವಾಗುವ ಎಲ್ಲವನ್ನೂ ಒಂದಕ್ಷರ ಬಿಡದೆ ರೇಡಿಯೋದಲ್ಲಿ ಕೇಳಿಸಿಕೊಳ್ಳುವುದೇ ಮುಖ್ಯ ಕೆಲಸ.

ಅಂದೂ.. ಹೊರಗೆ ಒಬ್ಬ ಡ್ಯೂಟಿ ಆಫೀಸರ್ ಕೂತಿದ್ದರು.


ನಾನು ಅತ್ಯುತ್ಸಾಹದಿಂದ ಯಾವಾಗ ಸ್ಟುಡಿಯೋದಲ್ಲಿ ರಾಮನಾಮ ಸ್ಮರಣೆ ಮಾಡತೊಡಗಿದೆನೋ - ಆಗ ಹೊರಗೆ ಕರ್ತವ್ಯದಲ್ಲಿದ್ದ ಆ ವ್ಯಕ್ತಿಯು ಓಡೋಡಿ ಬಂದು, ಧಡ್ ಅಂತ ಸ್ಟುಡಿಯೋದ ಬಾಗಿಲು ತೆಗೆದು ಕೈ ಬಾಯಿ ಸನ್ನೆ ಮಾಡತೊಡಗಿದರು. ಎನೌನ್ಸರ್ ಗಳು ಮಾತಾಡುವ fader ನ್ನು ತೆಗೆದು ಆಗ ನಾನು ಹಾಡುತ್ತಿದ್ದೆನಲ್ಲಾ! ಹಾಗೆ fader ತೆಗೆದಿದ್ದಾಗ ಅಲ್ಲಿ ಯಾರು ಮಾತಾಡಿದರೂ ಅದು ರೇಡಿಯೋ ಕೇಳುಗರಿಗೆಲ್ಲ ಕೇಳಿ ಬಿಡುತ್ತಿದ್ದುದರಿಂದ - ಪಾಪ, ಅವರು ಸನ್ನೆ ಭಾಷೆಯಲ್ಲೇ "ಏನು ಹೋಗುತ್ತಿದೆ?" ಅಂತ ಕೇಳುತ್ತಿದ್ದರು. "ಸಮಯ ತುಂಬಲು ನಾನೇ ಹಾಡುತ್ತಿದ್ದೇನೆ " - ಅಂತ ನಾನು ಸನ್ನೆ ಮಾಡಿದೆ. ಅವರು ಸನ್ನೆಯಲ್ಲಿಯೇ fader ಮುಚ್ಚಲು ಹೇಳಿದರು. ಆಗ ನನ್ನ ಹಾಡನ್ನು ಅರ್ಧದಲ್ಲೇ ನಿಲ್ಲಿಸಿ, fader ನ್ನು ಮುಚ್ಚಿ ವಾದ್ಯ ಸಂಗೀತವನ್ನು play ಮಾಡಿ, " ಏನಾಯ್ತು?" - ಅಂತ Transmission Executive / Duty Officer ಅವರ ಮುಖ ನೋಡಿದೆ.


"ಏನ್ ಮೇಡಂ ನೀವು? ನೀವ್ ಯಾಕೆ ಹಾಡೋಕ್ ಹೋದ್ರಿ? ಹಾಗೆಲ್ಲ ಹಾಡೋ ಹಂಗಿಲ್ಲ. ಎಷ್ಟು ಕೊಟ್ಟಿದ್ದಾರೋ ಅಷ್ಟೇ ಪ್ರೋಗ್ರಾಮ್ ಹಾಕ್ಬೇಕು. ನಿಮಗೆ ಹಾಡೋಕ್ ಬರತ್ತಂತ ನೀವೇ ಹಾಡಿ ಬಿಡೋದಾ?" ಅಂದರು. ಆಗ ನಾನು "ಹಾಗಲ್ಲ, ಅದದೇ ಸಂಗೀತವನ್ನು ಎಷ್ಟು ಸಾರಿ ಹಾಕುವುದು ಅಂದುಕೊಂಡು - ಒಂದು ಬದಲಾವಣೆ ಇರಲಿ ಅಂತ - ನಾನೇ ಹಾಡಿದೆ. ತಪ್ಪಾಯಿತಾ? ಹಾಡಬಾರದಿತ್ತಾ?" ಅನ್ನುವಾಗಲೇ This is All India Radio,The News, Read by spoorthi sinha...ಅಂತ ದೆಹಲಿಯಿಂದ ವಾರ್ತೆ ಬರತೊಡಗಿತು. ಆ ಪ್ರಸಾರಾಧಿಕಾರಿಯ ಜೊತೆಗೆ ಮಾತಾಡುತ್ತ ಮುಂದಿನ ಕಾರ್ಯಕ್ರಮಕ್ಕೆ announcement ಕೊಡುವುದನ್ನೂ ಮರೆತ ನನ್ನಿಂದ ಒಂದರ ಜೊತೆಗೆ ಇನ್ನೊಂದು ತಪ್ಪಾಗಿತ್ತು. "ಛೆ! ಇನ್ನೊಂದ್ ತಪ್ಪು ಮಾಡಿದ್ರಲ್ಲಾ? ಏನಾದರೂ ಮಾಡಿಕೊಳ್ಳಿ; ನಾಳೆ ಪ್ರೋಗ್ರಾಂ ಮೀಟಿಂಗಿನಲ್ಲಿ ನಿಮಗ್ ಮದ್ವೆ ಇದೆ. ನೋಡ್ತಾ ಇರಿ. ನಂಗೊತ್ತಿಲ್ಲ. ನಾನಂತೂ ಎಲ್ಲವನ್ನೂ detail ಆಗಿ transmission report ನಲ್ಲಿ ಬರದ್ ಹಾಕ್ತೇನೆ. ನಾಳೆ ಯುದ್ಧಕ್ಕೆ ತಯಾರಾಗಿ ಬನ್ನಿ; ಆಯ್ತಾ?" ಅಂತ ಸರಸರ ಹೊರಟುಹೋದರು. ಆಗ, ನಾನೂ ಅವರ ಹಿಂದೆಯೇ ಓಡಿದೆ.


ಹೊರಗೆ ಹೋದ ಅವರು ತಮ್ಮ ಸಿಂಹಾಸನದಲ್ಲಿ ಕೂತು ಒಂದು ಪುಟದ ತುಂಬ - ನನ್ನ ಪ್ರತಾಪವನ್ನೆಲ್ಲ ಬರೆದು, ದಂಡಯಾತ್ರೆ ಮಾಡಿದ ಅಲೆಕ್ಸಾಂಡರ್ ಮಹಾಶಯ - ಕೊನೆಗೊಮ್ಮೆ ನಿಟ್ಟುಸಿರು ಬಿಟ್ಟಂತೆ ಉಸಿರು ಚೆಲ್ಲಿ ಕುರ್ಚಿಯ ಹಿಂಬದಿಗೆ ಒರಗಿದರು .
ನಾನೂ ಅವರ ಹಿಂದೆ ಹೊರಗೆ ಓಡಿ ಬಂದಿದ್ದೆನಲ್ಲಾ? "ನನಗೆ ಗೊತ್ತಿರಲಿಲ್ಲ; ವೈವಿಧ್ಯತೆ ಇರಲಿ ಅಂತ ಹೀಗೆ ಮಾಡಿದೆ; ಅದನ್ನೆಲ್ಲಾ ರಿಪೋರ್ಟ್ ಮಾಡಲೇ ಬೇಕಾ? ಇನ್ನು ಮುಂದೆ ಹೀಗೆ ಆಗದಿದ್ದರೆ ಆಯ್ತಲ್ಲಾ ?...." ಎಂದೆಲ್ಲಾ ಅವರನ್ನು ಒಪ್ಪಿಸುವ ನನ್ನ ಎಲ್ಲ ಪ್ರಯತ್ನವೂ ವ್ಯರ್ಥವಾಯಿತು. "ಅದೆಲ್ಲ ನನಗ್ಗೊತ್ತಿಲ್ಲ. ನಿಮಗೆ ಏನು ಹೇಳಲಿಕ್ಕಿದೆಯೋ ಅದನ್ನೆಲ್ಲಾ ನಾಳೆಯ ಮೀಟಿಂಗಿನಲ್ಲಿ ಹೇಳಿ..." ಅಂತ ಅವರು ಮುಗುಮ್ಮಾಗಿ ಚಾಡಿ ಬರೆಯಲು
ಕೂತರು. (ಅದು ಅಂದಿನ ನನ್ನ ಅನ್ನಿಸಿಕೆ! ಆದರೆ  ಅವರು ತಮ್ಮ ಕರ್ತವ್ಯ ಮಾಡಿದ್ದರು.)

ನಾನು ಪೆಚ್ಚಾದೆ. ಅದಾಗಲೇ ಮೀಟಿಂಗಿನಲ್ಲಿ ದಿನವೂ ನಡೆಯುವ ಕದನಕುತೂಹಲ - ರಾಗ, ತಾನ, ಪಲ್ಲವಿಯನ್ನು ಬಹಳ ಸಾರಿ ಕಂಡದ್ದರಿಂದ ನಾಳೆಯ ಚಿಂತೆಯು ಆಗಲೇ ನನ್ನ ತಲೆಯನ್ನು ಹೊಕ್ಕು ತಲೆಯೊಳಗೆಲ್ಲ ಕೈಯಾಡಿಸತೊಡಗಿತು. ಅಂತಹ ಕೆದರಿದ ತಲೆಯಿಂದಾಗಿ ಆ ದಿನದ ಪ್ರಸಾರದಲ್ಲಿ ಇನ್ನೂ ಒಂದೆರಡು ತಪ್ಪುಗಳಾದವು. ತಪ್ಪು ಮಾಡಿದ ಕೂಡಲೇ ನನಗೇ ಗೊತ್ತಾಗುತ್ತಿತ್ತು. ತಕ್ಷಣವೇ ಹೊರಗೆ ಬಂದು, ಆ ಡ್ಯೂಟಿ ಆಫೀಸರನ್ನು ಇಣುಕಿ ನೋಡುತ್ತಿದ್ದೆ. ಅವರು ಇನ್ನೊಂದು ಬೇಟೆ ಸಿಕ್ಕಿದ ಖುಷಿಯಿಂದ, ತುಟಿಯ ಸಂದಿಯಲ್ಲೇ ನಗುತ್ತ, ತಲೆ ತಗ್ಗಿಸಿ ಸರಸರ ಬರೆಯುತ್ತಿದ್ದಂತೆ...ನನಗೆ ಕಾಣುತ್ತಿತ್ತು!


ಅಂತೂ ಇಂತೂ ಆ ದಿನದ ಪ್ರಸಾರವನ್ನು ನ ಭೂತೋ ನ ಭವಿಷ್ಯತಿ ಎಂಬಂತೆ ಹೇಗೋ - ಮುಗಿಸಿದೆ.


ಅನಂತರ ನಾಳೆಯ ಕನಸು ಕಾಣುತ್ತ ಹಾಸ್ಟೆಲ್ ಸೇರಿಕೊಂಡೆ. ರಾತ್ರಿ ಹನ್ನೆರಡು ಗಂಟೆ ಆಗಿತ್ತು.... ಆಫೀಸಿನ ಕಾರು ನನ್ನನ್ನು ಹಾಸ್ಟೆಲ್ಲಿನ ಮುಂದೆ ಇಳಿಸಿ ನಿಷ್ಕರುಣೆಯಿಂದ ಹೋದಂತೆ ಅನ್ನಿಸಿತು. ಒಳಗೆ ಬಂದೆ. ಎಲ್ಲರೂ ಹಾಯಾಗಿ ನಿದ್ದೆಯಲ್ಲಿದ್ದರು. ನನ್ನ ಕೋಣೆಯ ಮೇಜಿನ ಮೇಲೆ ನನ್ನ ಸಹವಾಸಿ ಗೆಳತಿಯು ನನ್ನ ಊಟ ತೆಗೆದು ಇಟ್ಟಿದ್ದಳು. ಅದನ್ನು ಮುಟ್ಟಿದರೆ...ತಣ್ಣಗೆ ಕೊರೆಯುತ್ತಿತ್ತು.


ಹಾಸ್ಟೆಲಿನ ನಾಯಿಯ ನೆನಪಾಯಿತು. ಎತ್ತಿಕೊಂಡು ಹೋಗಿ ಅದರೆದುರಿಗೆ ಸುರಿದೆ. ಹೊಟ್ಟೆಗೆ ಒಂದಿಷ್ಟು ನೀರು ಸುರಿದುಕೊಂಡು ಮಂಚದ ಮೇಲೆ ಒರಗಿದೆ. ಎಷ್ಟೋ ಹೊತ್ತು ಹೊರಳಾಟ. ಮತ್ತದೆಷ್ಟೋ ಹೊತ್ತಲ್ಲಿ...ಜೊಂಪು ಹತ್ತಿತು...
ಯಾವುದೋ ಲೋಕದಲ್ಲಿದ್ದಂತೆ....ಅಂದು ಕಸಿವಿಸಿಯ ನಿದ್ದೆ. "ಆಹಾ ನನ್ನ ಮದ್ವೆಯಂತೆ, ಓಹೋ ನನ್ನ ಮದ್ವೆಯಂತೆ..." ನಾಳೆಯ ಮದುವೆಯದ್ದೇ ರಾತ್ರಿಯೆಲ್ಲಾ ಕನಸು. ನನ್ನನ್ನು ಒದೆದು ಎತ್ತಿ ಒಗೆದಂತೆ ಏನೇನೋ ಕನವರಿಕೆ. ಚಿತ್ತು ಚಿತ್ತಾದ ಬಿಳಿಹಾಳೆಯನ್ನು ಉಜ್ಜಿ ಒರೆಸುವ ವ್ಯರ್ಥವಾದ ಹೋರಾಟದಲ್ಲಿ ಅಂತೂ ಬೆಳಗಾಯಿತು....
ಮರುದಿನ ಬೆಳಿಗ್ಗೆ ಆಫೀಸಿಗೆ ಹೋದೆ. ಒಳಗೆ ಹೊಗ್ಗುವಾಗಲೇ ಆಗ ಆಕಾಶವಾಣಿಯ ಮಂಗಳೂರು ನಿಲಯದಲ್ಲಿ ಮುಖ್ಯ ಪದವಿಯಲ್ಲಿದ್ದ, ಪ್ರಥಮ ದಿನದಿಂದಲೂ ನನ್ನನ್ನು ಕಂಡು ಮುಖ ಗಂಟಿಕ್ಕುತ್ತಿದ್ದ ಮಹಿಳಾ ಅಧಿಕಾರಿಯು ನನಗೆ ಎದುರಾದರು. "ಏನೇ, ಎಷ್ಟು ಹೊತ್ತಿಗೆ ಆಫೀಸಿಗೆ ಬರುವುದು? ಗಂಟೆ ಎಷ್ಟೀಗ?" ಅಂದರು. ಗಂಟೆ ನೋಡಿಕೊಂಡೆ. ಸರಿಯಾಗಿ ಒಂಬತ್ತು ಗಂಟೆ ಐವತ್ತೈದು ನಿಮಿಷವಾಗಿತ್ತು. "ಏನು ಗಂಟೆ ನೋಡ್ತೀ? ಆಫೀಸು ಹತ್ತು ಗಂಟೆಗೆ ಆರಂಭವಾದರೆ ಅದಕ್ಕಿಂತ ಹದಿನೈದು ನಿಮಿಷ ಮೊದಲೇ ಬಂದಿರಬೇಕು." ಎಂದು ಹೇಳಿ ಕನ್ನಡಕದ ಸಂದಿಯಿಂದ ನೋಡಿದರು. "ಸರಿ ಮೇಡಂ" ಅಂದೆ. ಬಹುಶಃ ನಾನು ಉತ್ತರ ನೀಡಿದ ಧಾಟಿಯು ನಮ್ರತೆಯಿಂದ ತೊಯ್ದಿರಲಿಲ್ಲವೋ ಏನೋ!!? ಕಣ್ಣು ಕೆಕ್ಕರಿಸಿ ನೋಡುತ್ತಾ "ಏನು ಇನ್ನೂ ನಿಂತಿದ್ದೀಯಾ? ಹೋಗುಹೋಗು" ಅಂದರು. "ಇದು ಯಾವ ಸೀಮೆಯ ಹೆಂಗಸಪ್ಪ? ಇವತ್ತು ನನಗೆ ಇನ್ನೂ ಏನೇನು ಕಾದಿದೆಯೋ?" ಅಂದುಕೊಳ್ಳುತ್ತಾ ಡ್ಯೂಟಿರೂಮಿನ ಕಡೆಗೆ ಹೆಜ್ಜೆ ಹಾಕಿದೆ. ಹಾಜರಿ ಪುಸ್ತಕದಲ್ಲಿ ಸಹಿ ಮಾಡಿ ಪಿಳಿಪಿಳಿ ಕಣ್ಣು ಬಿಡುತ್ತ ಕೂತೆ.

ಆಗ ಜವಾನನೊಬ್ಬ ಬಂದು "ಮೇಡಂ ಕರೀತಿದ್ದಾರೆ ಬನ್ನಿ" ಅಂತಂದ. ಆಗಲೇ ಅಧಿಕಾರಿಗಳ Program Meeting ಶುರುವಾಗಿತ್ತು. ಅದು ಒಂಥರ...ಒಡ್ಡೋಲಗ. ಬೆಳಿಗ್ಗೆ ೧೦ ಘಂಟೆಗೆ ಪ್ರತಿದಿನವೂ ನಡೆಯುತ್ತಿತ್ತು. ಆ ಒಡ್ಡೋಲಗಕ್ಕೆ ಆಗ Announcer ಗಳಿಗೆ ಪ್ರವೇಶವಿರಲಿಲ್ಲ. ಯಾವುದೇ ಶೈಕ್ಷಣಿಕ ಅರ್ಹತೆಯಿಲ್ಲದಿದ್ದರೂ ವಿದ್ಯಾಭ್ಯಾಸ ಕಡಿಮೆಯಾಗಿದ್ದರೂ ಅತ್ಯುತ್ತಮ ಧ್ವನಿಯುಳ್ಳ ನಿರೂಪಕರನ್ನು ಮಾತ್ರವೇ Announcer ಗಳಾಗಿ ಆಯ್ದುಕೊಳ್ಳುತ್ತಿದ್ದ ಆಕಾಶವಾಣಿಯ "ಒಂದಾನೊಂದು ಕಾಲದಲ್ಲಿ" ರೂಪಿಸಿದ್ದ ನಿಯಮಾವಳಿಯದು. ನಾವು ಪದವೀಧರರು ಆಯ್ಕೆಯಾಗುತ್ತಿದ್ದ ಕಾಲದಲ್ಲೂ ಅದೇ ನಿಯಮವೇ ಮುಂದುವರೆದಿತ್ತು. ಪ್ರಸಾರದ ಸಂದರ್ಭದಲ್ಲಿ ನಡೆದ ಘಟನೆಗಳಿಗೆ ಸಂಬಂಧಿಸಿದಂತೆ Announcer ಗಳ ವಿವರಣೆಯನ್ನು ಕೇಳಬೇಕಿದ್ದರೆ, ಮೀಟಿಂಗಿನ ಮಧ್ಯೆ ಅವರನ್ನು studio ದಿಂದ ಕರೆಸುತ್ತಿದ್ದರು. ಆಗ ಅಲ್ಲಿ ನೆರೆದಿದ್ದ ಸದಸ್ಯರಲ್ಲಿ, ಸೌಜನ್ಯವುಳ್ಳವರು ನಮಗೆ ಕುಳಿತುಕೊಳ್ಳುವಂತೆ ಸೂಚಿಸುತ್ತಿದ್ದರು. ಹಾಗೆ ಯಾರೂ ಸೌಜನ್ಯ ತೋರದಿದ್ದರೆ - ನಮ್ಮದು, ನಿಂತುಕೊಂಡೇ ಮಾತು-ಕತೆ. ಹಾಗೆ ನಿಂತುಕೊಂಡೇ ವಿವರಣೆ ಕೊಟ್ಟ ಮೇಲೆ "ನೀವಿನ್ನು ಹೋಗಬಹುದು" ಎಂದು ಹೇಳಿ - ಅಲ್ಲಿಂದ ನಮ್ಮನ್ನು ಅಟ್ಟುವಂತೆ ವರ್ತಿಸುತ್ತಿದ್ದವರೂ ಇದ್ದರು. ಒಟ್ಟಿನಲ್ಲಿ ಎನೌನ್ಸರ್ ಎಂದರೆ "ಯಃಕಶ್ಚಿತ್ " - ಎಂಬ ಭಾವವನ್ನು ದಿನವೂ ಉದ್ಘೋಷಕರಲ್ಲಿ ಮೂಡಿಸುತ್ತಿದ್ದ ಪವಿತ್ರ ತಾಣವೇ ಆ ಮೀಟಿಂಗ್. ಎನೌನ್ಸರುಗಳ ಜನಪ್ರಿಯತೆಯಿಂದ ಮೂಡಿದ ಮತ್ಸರವು ಒಂದು ವರ್ಗದಲ್ಲಿ ಮಡುಗಟ್ಟಿದ್ದೂ ಇಂಥ ವರ್ತನೆಗಳಿಗೆ ಕಾರಣವಿರಬಹುದು. ಇದು ನನ್ನ ಒಟ್ಟಾರೆ ಅನುಭವದಿಂದ ಹುಟ್ಟಿದ ಕಾರಣ ಭಾವ.

ಅಂದೂ ಹಾಗೇ ಆಯಿತು. ಕರೆಯಲು ಬಂದಿದ್ದ ಜವಾನನ ಹಿಂದೆ ನಾನು ಹೋದೆ. "ಬನ್ನಿ. ನಿನ್ನೆ ಏನು ಮಾಡಿದ್ರಿ?" ಅಂತ ನಿಲಯದ ಹಿರಿಯ ಮಹಿಳಾ ಅಧಿಕಾರಿ ಪ್ರಶ್ನಿಸಿದರು. "ಹೌದು ಮೇಡಂ. ನನಗೆ ಗೊತ್ತಿರಲಿಲ್ಲ. ಮುಂದಿನ ಕಾರ್ಯಕ್ರಮ ಪ್ರಾರಂಭಿಸಲು ಇನ್ನೂ 3 ನಿಮಿಷವಿತ್ತು. ಅದಕ್ಕೇ ಒಂದು ಸಣ್ಣ ಹಾಡನ್ನು ಹಾಡಿದೆ....ಹಾಡು ಚೆನ್ನಾಗಿಯೇ ಬಂತು.. " ಎನ್ನುವಾಗಲೇ ನನ್ನ ಮಾತನ್ನುತುಂಡರಿಸಿ "ಹೇಳಿದಷ್ಟು ಕೆಲಸ ಮಾಡ್ರೀ. ನಿಮ್ಮ ಬುದ್ಧಿ ಉಪಯೋಗಿಸಿ ಪ್ರತಿಭೆಯನ್ನೆಲ್ಲ ಪ್ರದರ್ಶಿಸುವ ಸಮಯ ಅದಲ್ಲ. ನಿಮ್ಮವಿವರಣೆಯನ್ನು ಬರೆಹದ ರೂಪದಲ್ಲಿ ಕೊಡಬೇಕಾಗುತ್ತದೆ. Give it in writing..." ಎಂದು ಹೇಳುತ್ತಾ, "ಇವರಿಗೊಂದು ನೋಟ್ Issue ಮಾಡ್ರೀ .." ಅಂತ ಇನ್ನೊಬ್ಬ ಅಧಿಕಾರಿಗೆ ಆಜ್ಞಾಪಿಸಿದರು. "ನೀವಿನ್ನು  ಹೊರಡಿ" ಅಂತ ನನಗೆ ಅಪ್ಪಣೆಯಾಯಿತು.


ನಾನು ಅಲ್ಲಿಂದ ಹೊರಬಂದೆ. "ನನ್ನನ್ನು ಕರೆಸಿ, ವಿಚಾರಣಾಧೀನ ಕ್ರಿಮಿನಲ್ ಖೈದಿಯಂತೆ ನಿಲ್ಲಿಸಿ, ಮುಖತಃ ವಿವರಣೆ ಪಡೆದ ಮೇಲೆ, ಪುನಃ ಬರವಣಿಗೆಯಲ್ಲಿ ವಿವರ ಪಡೆಯುವ ಉದ್ದೇಶ ಏನಿರಬಹುದು? ಇವರಿಗೆ ನಿಜವಾಗಿ ಬೇಕಾದ್ದೇನು?" ಎಂದು ನನಗೆ ಹೊಳೆಯಲಿಲ್ಲ . ಬೆಳಿಗ್ಗೆ ಬಂದಾಗಿನಿಂದ ಈ "ತಾಟಕಿ"ಯಿಂದ ಬರೇ ಪಾಠ ಕೇಳುವುದೇ ಆಗಿ, ಉತ್ಸಾಹ ತಗ್ಗಿ ಸಪ್ಪೆಯಾಗಿದ್ದೆ. ಹಾಗೆ ತಣ್ಣಗೆ ಕೂತಿರುವಾಗಲೇ ಜವಾನ ಬಂದು, ಒಂದು note ಕೊಟ್ಟು ಹೋದ. "ಓಹೋ ...ಬಹಳ ಚುರುಕಿನ ವ್ಯವಸ್ಥೆ..." ಅಂದುಕೊಂಡು, ನಾನೂ ಚುರುಕಾದೆ. ತಕ್ಷಣ, ಸಹೋದ್ಯೋಗಿಗಳ ಸಹಾಯ ಪಡೆದು, (ಆಗ ಇಂಗ್ಲಿಷಿನಲ್ಲಿ ಬರೆಯುವ ಸರಕಾರೀ ಭಾಷೆಯ ಅಭ್ಯಾಸವಿರಲಿಲ್ಲ) ಅಂತೂ ವಿವರಣೆಯನ್ನು ಬರೆದು ಕೊಟ್ಟೆ. ಅದರ ಮರುದಿನವೇ ಇನ್ನೊಂದು ಎಚ್ಚರಿಕೆಯ ಪತ್ರ (memo) ಕೊಟ್ಟರು. ನನ್ನಿಂದ ಗಂಭೀರ ಅಪರಾಧವಾಗಿದೆಯೆಂದು ಘೋಷಿಸಿ, ಅದನ್ನು ನನ್ನ Personal file ಗೆ ಸೇರಿಸಿ ಕೃತಾರ್ಥರಾದರು.


ಈಗ ಇದನ್ನೆಲ್ಲ ನೆನೆಸಿಕೊಂಡು ಮುಸಿಮುಸಿ ನಗುತ್ತೇನೆ. ನೀವೇ ಯೋಚಿಸಿ...ಈಗ ಹೇಗಿದೆ? ಕಾಲ ಎಷ್ಟೊಂದು ಬದಲಾಗಿದೆ? ನಮ್ಮನ್ನು ಅರೆದು ಉಜ್ಜಿ, ಮೊದಲೇ ಒಪ್ಪಿಗೆ ಪಡೆದ ಮಿತವಾದ ಶಬ್ದಗಳನ್ನಷ್ಟೇ ಹೇಳಲು, ಗಿಣಿಪಾಠ ಒಪ್ಪಿಸಲು ಕಲಿಸಿದ ಮಂದಿಯೇ ಇಂದು..."ಒಂದಿಷ್ಟು LIVELY ಯಾಗಿ ಮಾತಾಡ್ರೀ ... ಬರಲಿ ನಿಮ್ಮ ಹಾಡುಹಸೆ, ಕತೆ ಗಿತೆ ಚಾಟೂಕ್ತಿ ಸೂಕ್ತಿ ಎಲ್ಲ ... ಎಲ್ಲವೂ ಬರಲಿ. ನೋಡಿ, ಆ FM ನವರು ಮುಂದಕ್ಕೆ ಹೋಗಲು ನಾವು ಬಿಡಬಾರದು." ಅಂತಾರೆ. ಬೇರೆ ಖಾಸಗಿ Channel ಗಳ ಜೊತೆಗೆ ಆಕಾಶವಾಣಿಯೂ ಸ್ಪರ್ಧೆಗಿಳಿಯಬೇಕಾದ ಸನ್ನಿವೇಶ ಈಗ ನಿರ್ಮಾಣವಾಗಿದೆ. "ಆಡೂ.. ಆಡಿ ನೋಡೂ..." ಎಂಬ ಮೇಲಾಟದ ಕಸರತ್ತು ಶುರುವಾಗಿದೆ. ಅವತ್ತು ನನ್ನನ್ನು ಹಿಂದಕ್ಕೆ ಎಳೆದದ್ದೂ - ಹಳೆಯ ನಿಯಮಾವಳಿಯ ಪುಸ್ತಕದಲ್ಲಿ ಗೀಚಿದ್ದನ್ನು ಸರಿಯಾಗಿ ಅರ್ಥೈಸಲಾಗದ ಗೊಡ್ಡು ಸಂಪ್ರದಾಯಕ್ಕೆ ಬೆಲೆ ಕೊಟ್ಟೇ. ಇವತ್ತು ಹಿಂದಕ್ಕೆ ಎಳೆಯಲು, ನಾನಲ್ಲ - ಇನ್ಯಾರೋ...F M. ಎಂಬುದು ಸಿಕ್ಕಿದೆ. ಅಂತೂ...ಹಿಂದೆ ಎಳೆಯಲು ಒಂದಲ್ಲ ಒಂದು - ಗುರಿ; ಅದು ಆಕಾಶವಾಣಿಯ ಪರಿ. ಅಂತೂ ಯಾರೂ... ಮುಂದಕ್ಕೆ ಹೋಗಬಾರದು. ಹಿಂದೆಯೇ ಇರಬೇಕು. ತಮಗಿಂತ ಹಿಂದಿರಬೇಕು. ನಾವು ಎಲ್ಲರಿಗಿಂತ ನೂರು ಹೆಜ್ಜೆ ಮುಂದಿರಬೇಕು - ಅಂದುಕೊಂಡರೆ ತಪ್ಪೇನಿಲ್ಲ. ಅದಕ್ಕಾಗಿ ಧನಾತ್ಮಕವಾಗಿ ಪ್ರಯತ್ನಿಸಿದರೆ... ಅದು ಆರೋಗ್ಯಕರ ಸ್ಪರ್ಧೆಯೂ ಆದೀತು. ಆದರೆ "ಎಲ್ಲರೂ ನಮ್ಮ ಹಿಂದೆಯೇ ಇರಬೇಕು" ಅಂದುಕೊಂಡು ಮಾಡುವ ಹಿಂದಕ್ಕೆಳೆಯುವ ಕೆಲಸಗಳು ಯಶಸ್ಸು ಕಾಣುವುದು ಕಷ್ಟ. ಇಂಥ ಧೋರಣೆಯೇ ಇಂದಿನ ಆಕಾಶವಾಣಿಯ ಒಣ ವಾತಾವರಣಕ್ಕೆ ಮುಖ್ಯ ಕಾರಣ. ಪ್ರಯೋಗಶೀಲರಾಗುತ್ತ ಒಳ್ಳೆಯದನ್ನು ಪ್ರೋತ್ಸಾಹಿಸುತ್ತ "ಅಜ್ಜ ನೆಟ್ಟ ಆಲದಮರಕ್ಕೆ ಜೋತು ಬೀಳುವ" ಚಾಳಿಯನ್ನು ಬಹಳ ಹಿಂದೆಯೇ ಬಿಟ್ಟು ಬಿಡಬಹುದಿತ್ತು. ಆದರೆ ಅದಾಗಲಿಲ್ಲ.


ಮುವ್ವತ್ತು ವರ್ಷಗಳ ಹಿಂದೆ ನಾನು ಹಾಡಿದ್ದು, ಚಿತ್ರಗೀತೆಗಳನ್ನು ನಿರೂಪಣೆಯೊಂದಿಗೆ ಪ್ರಸ್ತುತಪಡಿಸಿದ್ದು...ಸಹಜತೆಗೆ ಒತ್ತುಕೊಟ್ಟದ್ದು...ಹೀಗೆ ಮಾಡಿದ್ದೆಲ್ಲವೂ - ಆಗ ಅಪರಾಧವಾಗಿತ್ತು. ಮುವ್ವತ್ತು ವರ್ಷಗಳ ಕಾಲ, ನಮ್ಮನ್ನು ಹಿಂಡಿ ಹಿಂಡಿ, ನೀರಸರನ್ನಾಗಿ ಮಾಡಿದ ಆ ಎಲ್ಲಾ ಕಸರತ್ತು ಮುಗಿಸಿ, ಈಗ ಹೊಸ ವರಸೆ ಶುರುವಾಗಿದೆ. "ಮೈಕಿನೆದುರಿಗೆ ನಿಮ್ಮ ಸ್ವಚ್ಚಂದ ಲಹರಿ ಬರಲಿ " ಎಂದು ಎನೌನ್ಸರುಗಳಿಂದ ಈಗ ನಿರೀಕ್ಷಿಸುತ್ತಿದ್ದಾರೆ. ಸಹಜ ಲಹರಿಯಲ್ಲಿದ್ದ ನಮ್ಮನ್ನೆಲ್ಲ ಗಿಣಿ ಪಾಠವನ್ನು ಒಪ್ಪಿಸುವ ಅರಗಿಣಿಗಳನ್ನಾಗಿ ದಶಕಗಳ ಕಾಲ ಅರೆದು ತೇದು ಕುಡಿಸಿ ರೂಪಿಸಿ, ಈಗ..."ಸ್ವಚ್ಛಂದವಾಗಿ ವಿಹರಿಸಿ " ಎಂದರೆ... ಎಷ್ಟೋ ಎನೌನ್ಸರ್ ಎಂಬ ಗಿಣಿಗಳಿಗೆ "ನಮಗೆ ರೆಕ್ಕೆಗಳಿವೆ; ನಾವೂ ಹಾರಬಲ್ಲೆವು" ಎನ್ನುವುದೇ ಮರೆತು ಹೋಗಿದೆ. ಎಲ್ಲರೂ ಸಾಕಿದ ಗಿಳಿಗಳಾಗಿ ಹೋಗಿದ್ದಾರೆ. ಸಭ್ಯತೆಯ ಎಲ್ಲೆ ಮೀರದೆ ಮೂಡಿ ಬರುವ ಸುಸಂಬದ್ಧ ಪ್ರಯೋಗಶೀಲ ಕಾರ್ಯಕ್ರಮಗಳನ್ನು ಅಂದೂ ಪ್ರೋತ್ಸಾಹಿಸಬಹುದಿತ್ತು. ಹೆದರಿಸಿ ತಟ್ಟಿ ಕುಟ್ಟಿ ಕೂರಿಸುವುದಕ್ಕಿಂತ, ಹಿತವೆನಿಸಿದ್ದನ್ನು ಒಪ್ಪಿ ಪ್ರೋತ್ಸಾಹಿಸಿ, ಅಸಂಬದ್ಧವೆನಿಸಿದ್ದಕ್ಕೆ ಮಾತ್ರ ತಡೆ ಹಾಕಬಹುದಿತ್ತು. ನೂರು ತಲೆಗಳಲ್ಲಿ ಸಾವಿರಾರು ಹೊಸ ಯೋಚನೆಗಳಿರುತ್ತವೆ - ಅಲ್ಲವೇ? ಸ್ಥಾನದ ಸೊಕ್ಕನ್ನು ಬಿಟ್ಟು, ಬಿಂಕ ಬಿಟ್ಟು
ಎಲ್ಲರೂ ಜತೆಯಾಗಿ ವಿಚಾರ ವಿನಿಮಯ ನಡೆಸಿ, ಅಂದೇ ಹೊಸ ಹೊಸ ರಸಗವಳವನ್ನು ಬಾನುಲಿಯಿಂದ ಪಸರಿಸಬಹುದಿತ್ತು. ಇನ್ನೂ ಬಲಿಷ್ಠವಾಗಿ ಸಂಸ್ಥೆಯನ್ನು ಕಟ್ಟಬಹುದಿತ್ತು. ಅದು ಇಂದಿಗೂ ಸಾಧ್ಯವಾಗುತ್ತಿಲ್ಲವಲ್ಲಾ...ಎಂಬ ನನ್ನ ನೋವಿಗೆ ಪರಿಹಾರವಿಲ್ಲ. ಅಂದು ನಾನಾಡಿದ ಆಟವೆಲ್ಲವೂ ಇತಿಮಿತಿಯಲ್ಲಿತ್ತು. ಕೇಳುಗರಿಂದ ಮೆಚ್ಚುಗೆಯ ಪತ್ರಗಳೂ ಬಂದಿದ್ದವು. ಆದರೂ ಅದು ಆಗ ಕೆಲವರಿಗೆ ಪಥ್ಯವಾಗಲಿಲ್ಲ. 

ಇಂದು ಹೊಸ ರಾಗವನ್ನು ಬಯಸುವ ಇವರೆಲ್ಲರೂ ನಿರೀಕ್ಷಿಸುತ್ತಿರುವುದು ಏನನ್ನು? ದುಡ್ಡು ಸಿಗುವುದಾದರೆ ವಾಣಿಜ್ಯ ಸಂಗ್ರಹದ ಹಪಹಪಿಗೆ ಬಿದ್ದು, ಎಲ್ಲಾ ಬಗೆಯ ಒಡಂಬಡಿಕೆ - ಒಮ್ಮತಕ್ಕೂ ಈಗ ಬರುತ್ತಿಲ್ಲವೇ? ಏನಿದೆಲ್ಲ ? ಒಮ್ಮೊಮ್ಮೆ "ಹಗಲು ವೇಷದ ಪರಮಾವಧಿ" ಎಂದು ಅನ್ನಿಸುವುದೂ ಇದೆ. ಏನೋ ಎಡಬಿಡಂಗಿತನ ಅನ್ನಿಸುವುದಿಲ್ಲವೆ? ಅತ್ತ ಸಿದ್ಧಾಂತವೆಂದುಕೊಳ್ಳಲು ಇದು ಸಿದ್ಧಾಂತವೂ ಅಲ್ಲ, ನೈತಿಕತೆಯೂ ಅಲ್ಲ ; ಯಾವ ಸಾಂಸ್ಕೃತಿಕ ಚಿಂತನೆಯೂ ಕಾಣುವುದಿಲ್ಲ. ಬಹುಜನ ಹಿತವೂ ಇಲ್ಲ; ಯಾರಿಗೂ ಸುಖವೂ ಇಲ್ಲ. ಕಾಣುವುದು ಒಂದೇ. ಅದು ವ್ಯಾಪಾರ. ಬೆಲೆಗಾಗಿ, ದುಡ್ಡಿಗಾಗಿ, ಯಾವುದೇ ಕಾರ್ಯಕ್ರಮದ ಮಾರಾಟಕ್ಕೆ ಸಿದ್ಧವಾಗಿರುವ "ರೇಡಿಯೋ ಮಾಲ್" - ಈಗ ನಮ್ಮ ರೇಡಿಯೋ. ಆಳುವ ಸರಕಾರದ "ಅಂಶಗಳ ಬಿತ್ತನೆ ಮತ್ತು ವಿತರಣೆ" ಎಂಬುದನ್ನು ಬಿಟ್ಟರೆ..."ಒಳ್ಳೆಯ ಚಿಂತನೆಗಳು ಎಲ್ಲ ಕಡೆಗಳಿಂದಲೂ ಬರಲಿ" ಎಂಬ ಸಹೃದಯತೆಯ ಕೊರತೆಯು ಆಗಲೂ ಕಾಣುತ್ತಿತ್ತು - ಈಗಲೂ ಕಾಣುತ್ತಿದೆ. ಆದ್ದರಿಂದಲೇ ಕೇಳುಗರಿಂದ ಆಕಾಶವಾಣಿಯು ದಿನದಿನಕ್ಕೂ ದೂರವಾಗುತ್ತಿದೆ.

ಕೇವಲ - ಅಧಿಕಾರದ ಶಾಸನ. ತೊಂದರೆ ಕೊಡುವ ಸಾಮರ್ಥ್ಯವಿದ್ದವರಿಗೆ ಮಾತ್ರ - ಅಧಿಕಾರದ ಮಜಾ ! ಇದು ಎಂಥಾ ಆಕಾಶ (ಅವಕಾಶ!) ಲೋಕವಯ್ಯಾ - ಅನ್ನಿಸುವುದಿಲ್ಲವೇ? ಆಕಾಶಲೋಕದ ಕಥೆ... ಇನ್ನೂ - ಎಷ್ಟೆಷ್ಟೋ ಇದೆ.


ನಾನು ಆಗಾಗ ಆತ್ಮ ವಿಮರ್ಶೆ ಮಾಡಿಕೊಳ್ಳುವುದಿದೆ. "ನನ್ನದು ಅತಿ ಉತ್ಸುಕತೆ ಇದ್ದಿರಬಹುದೆ? ಮಾದರಿಯಾದ - ಸರಕಾರೀ ವೃತ್ತಿಪರತೆಯನ್ನು ನಾನೂ ರೂಢಿಸಿಕೊಳ್ಳಬಹುದಿತ್ತಲ್ಲ?" ಅನ್ನಿಸುವುದೂ ಇದೆ. ಆದರೆ ಸರಕಾರೀ ಸಂಸ್ಕೃತಿಯೆಂಬುದು ಅಂದಿನ ನನ್ನ ಉತ್ಸಾಹದ ಯೌವ್ವನಕ್ಕೆ ಜೊತೆಯಾಗಲು ಒಪ್ಪಲೇ ಇಲ್ಲ. ಸರಕಾರೀ ವೇಗಕ್ಕೂ ನನ್ನ ವೇಗಕ್ಕೂ ತಾಳೆಯಾಗಲೇ ಇಲ್ಲ. ನನ್ನ ವೇಗಕ್ಕೆ ಉದ್ದಕ್ಕೂ ಬಿದ್ದದ್ದು ಬ್ರೇಕೋ ಬ್ರೇಕು. ಆದರೂ ಹೋರಾಡುತ್ತಲೇ ಮುನ್ನಡೆದೆ. "ಏನ್ ಮೇಡಂ, ನೀವು dance ಮಾಡಿದ್ದನ್ನೊಂದು ನಾವು ನೋಡಲಿಲ್ಲ. ಮತ್ತೆ ಎಲ್ಲ talent ಕಂಡಾಯ್ತು..." ಅಂತ ವ್ಯಂಗ್ಯವಾಗಿ ಮುಗುಳು ನಕ್ಕವರೂ ಇದ್ದರು. ಹೌದು. ನಿತ್ಯದ ಪ್ರಸಾರ ಕಾರ್ಯದ ಜೊತೆಗೆ, ನಾನು ಹರಿಕಥೆ ಮಾಡುತ್ತಿದ್ದೆ. ಭಕ್ತಿಗೀತೆ - ಭಾವಗೀತೆಗಳನ್ನು ಹಾಡುತ್ತಿದ್ದೆ. ನಾಟಕಗಳಲ್ಲಿ ಅಭಿನಯಿಸುತ್ತಿದ್ದೆ. ಈ ಎಲ್ಲ ವಿಭಾಗಗಳಲ್ಲೂ ಆಕಾಶವಾಣಿಯೇ ನಡೆಸುವ ಪರೀಕ್ಷೆಯಲ್ಲಿಯೂ ತೇರ್ಗಡೆಯಾಗಿದ್ದೆ. ಆದ್ದರಿಂದ, 1985 ರ ವರೆಗೆ ಹಲವಾರು ಕಾರ್ಯಕ್ರಮಗಳನ್ನು ನೀಡುವಂತೆ ನನ್ನನ್ನು  ಕೇಳಿಕೊಳ್ಳುತ್ತಿದ್ದರು. ನಾನೂ ಹುರುಪಿನಿಂದ ಕಾರ್ಯಕ್ರಮಗಳನ್ನು ಕೊಡುತ್ತಿದ್ದೆ. ಆ ಅವಧಿಯಲ್ಲಿಯೇ ಇತರ ಸಹೋದ್ಯೋಗಿಗಳಲ್ಲಿ ಅದಾಗಲೇ ಇದ್ದ ಅಸಹನೆಯು ಮೆಲ್ಲಗೆ ಪ್ರಕಟವಾಗಲು ಪ್ರಾರಂಭವಾಯಿತು."ನಾರಾಯಣಿಗೆ ಹೆಚ್ಚು ಅವಕಾಶ ಸಿಗುತ್ತಿದೆ; ನಮಗೂ ಅವಕಾಶ ಕೊಡಿ; ನಮಗೂ talent ಇದೆ." ಅಂತ ಗೊಣಗಾಟ ಶುರುವಾಯ್ತು. ಕೆಲವರು ಸಂಗೀತ class ಗೂ ಸೇರಿಕೊಂಡು, ಹಾಡುವ ಪೈಪೋಟಿಗೂ ಬಿದ್ದರು. Audition ಪರೀಕ್ಷೆಗೆ ಕೂತು ಪಾಸಾಗಿಯೂ ಬಿಟ್ಟರು. ಮೂರೋ ನಾಲ್ಕೋ ಭಾವಗೀತೆಗಳ ಕಾರ್ಯಕ್ರಮವನ್ನೂ ನೀಡಿದರು. ಅಷ್ಟರ ಮಟ್ಟಿಗೆ ನಾನೂ ಕೆಲವರಿಗೆ ಸ್ಪೂರ್ತಿಯಾಗಿದ್ದೆ ಎಂಬ ತೃಪ್ತಿ ನನಗಿದೆ. ಆದರೆ ಹರಿಕಥೆ ಮಾಡುವ ಸಾಹಸಕ್ಕೆ ಮಾತ್ರ ಯಾಕೋ...ಯಾರೂ ಮುಂದಾಗಲಿಲ್ಲ !!!

ನನ್ನ ಅರ್ಧ ನಡಿಗೆಯು ಮುಗಿಯುವ ಹೊತ್ತಿನಲ್ಲಿ, ಎಲ್ಲಾ ಮಾಧ್ಯಮಗಳಂತೆ ಆಕಾಶವಾಣಿಯೂ ವೇಗವಾಗಿ ಕಲುಷಿತಗೊಳ್ಳತೊಡಗಿತ್ತು. ಕಲಬೆರಕೆ ಶಿಕ್ಷಣದ ಸ್ವಕೇಂದ್ರಿತ ಮನಸ್ಸುಗಳ ದೊಡ್ಡ ಪಡೆಯೇ ಒಳ ಹೊಗ್ಗಿಬಿಟ್ಟಿತ್ತು. ಗುಂಪುಗಾರಿಕೆಯ ರಾಜಕಾರಣದಿಂದ ಲಾಭ ಪಡೆದು, ಅದನ್ನು ಹಂಚಿಕೊಳ್ಳುವ ಹೊಸ ವಿಧಾನದ ಪ್ರಯೋಗವು ಅಧಿಕೃತವಾಗಿ ಆಚರಣೆಗೆ ಬರಲಾರಂಭಿಸಿದ ಕಾಲ ಘಟ್ಟವದು. ಅದು 1986 -1987ರ ಸಮಯ. ಆಗಲೂ ನಾನು ಬಾಲವೃಂದ ಕಾರ್ಯಕ್ರಮವನ್ನು ನಿರ್ವಹಿಸುತ್ತಿದ್ದೆ. ಅದು ವಾರಕ್ಕೆ ಒಂದು ಕಾರ್ಯಕ್ರಮ. ಪ್ರತೀ ಭಾನುವಾರ ಬೆಳಿಗ್ಗೆ 8.30ಕ್ಕೆ ಪ್ರಸಾರವಾಗುತ್ತಿತ್ತು. ಜಿಲ್ಲೆಯ ಪ್ರತಿಭಾವಂತ ಶಾಲಾ ಮಕ್ಕಳಿರುವಂತಹ ಶಾಲೆಗಳನ್ನು ಸಂಪರ್ಕಿಸಿ, ನಮಗೆ ಬೇಕಾದ ಕಾರ್ಯಕ್ರಮದ ರೂಪುರೇಷೆಯನ್ನು ತಿಳಿಸಿ, ಯಾವ ದಿನದಂದು ಅವರು ಧ್ವನಿ ಮುದ್ರಣಕ್ಕೆ ಸಿದ್ಧವಾಗಿ ಬರಬೇಕೆಂದು ತಿಳಿಸಿ, contract ನ್ನು ಕಳಿಸುತ್ತಿದ್ದೆ. ವಾರದ ಏಳೂ ದಿನವೂ ಆಗ ನಾನು ಕೆಲಸ ಮಾಡಿದ್ದಿದೆ. ನನ್ನ ಪ್ರಸಾರದ Announcement ನ ನಿತ್ಯದ ಕರ್ತವ್ಯದ ಜೊತೆಗೆ ಈ ಕೆಲಸವೂ ನಡೆಯುತ್ತಿತ್ತು. ಶಾಲೆಗಳನ್ನು book ಮಾಡುವುದು, ಅವರ ಧ್ವನಿಮುದ್ರಣ ಮಾಡುವುದು, ಅನಂತರ ಅದನ್ನು ಸುಂದರಗೊಳಿಸುವ dubbing ಕೆಲಸ ಮುಗಿಸಿ, ಪ್ರತೀವಾರವೂ ಅರ್ಧ ಗಂಟೆಯ ಕಾರ್ಯಕ್ರಮವನ್ನು ಸಿದ್ಧಪಡಿಸಿ ಕೊಡುತ್ತಿದ್ದೆ. ರಾಷ್ಟೀಯ ಹಬ್ಬಗಳು ಬಂದರೆ, ವಿಶೇಷ ಕಾರ್ಯಕ್ರಮಗಳನ್ನೂ ಪ್ರಸ್ತುತ ಪಡಿಸುತ್ತಿದ್ದೆ. "ಇವರ ನೀವು ಬಲ್ಲಿರಾ?" ಎಂಬ ಶೀರ್ಷಿಕೆಯಲ್ಲಿ ಶಿವರಾಮ ಕಾರಂತ, ಕಯ್ಯಾರ ಕಿಂಞಂಣ್ಣ ರೈ, ಪ್ರೊ.ಲೀಲಾ ಭಟ್, ಕು.ಶಿ.ಹರಿದಾಸ ಭಟ್ ಮುಂತಾದ ಹಿರಿಯರ ಬಾಯಿಂದ, ಈ ಜಿಲ್ಲೆಯಲ್ಲಿ ಆಗಿ ಹೋದ ಕನ್ನಡದ ಮಹನೀಯರ ಪರಿಚಯವನ್ನು ಮಕ್ಕಳಿಗೆ ಮಾಡಿಸಿಕೊಟ್ಟಿದ್ದೆ.
ಇಂತಹ ಕಾರ್ಯಕ್ರಮಗಳನ್ನು ಕೇಳಿದ ಅಂದಿನ ಮಕ್ಕಳು ಪ್ರಕಾಂಡ ಪಂಡಿತರಾಗಿದ್ದ ಐರೋಡಿ ಶಿವರಾಮಯ್ಯ, ಪಂಜೆ ಮಂಗೇಶ ರಾವ್, ಉಡುಪಿ ಹೊನ್ನಯ್ಯ ಶೆಟ್ಟರು, ಎಂ.ಗೋವಿಂದ ಪೈ ಮುಂತಾದ ಹಿರಿಯರನ್ನು ಕುರಿತು ತಿಳಿದುಕೊಂಡರು. ಪಳಕಳ ಸೀತಾರಾಮ ಭಟ್ಟರಿಂದ ಪಂಚತಂತ್ರದ ಕತೆಗಳನ್ನು ನಾಟಕ ರೂಪದಲ್ಲಿ ಬರೆಸಿ, ಕೆಲವು ಶಾಲೆಗಳ ಆಯ್ದ ಮಕ್ಕಳಿಂದ, ನಾನೇ ನಿರ್ದೇಶಿಸಿ, ನಿರ್ಮಿಸಿ, ಪ್ರಸ್ತುತ ಪಡಿಸಿದೆ. "ಹಚ್ಚುವ ಜ್ಞಾನದ ಹಣತೆಯ" ಎಂಬ ಶೀರ್ಷಿಕೆಯಲ್ಲಿ ಒಂದು ಸರಣಿ ಕಾರ್ಯಕ್ರಮವನ್ನೂ ಪ್ರಸ್ತುತ ಪಡಿಸಿದ್ದೆ. ಅದಕ್ಕಾಗಿ, ಆಯ್ದ ಪ್ರಾಥಮಿಕ ಶಾಲೆಯ ಕೆಲವು ಮಕ್ಕಳ ಜೊತೆಗೆ ನವ ಮಂಗಳೂರು ಬಂದರು ಪ್ರಾಧಿಕಾರ (NMPT) ಕ್ಕೆ ಹೋಗಿ ಅಲ್ಲಿ ನಿಂತಿದ್ದ ಒಂದು ವಿದೇಶೀ ಹಡಗನ್ನು ತೋರಿಸಿ, ಪ್ರಾಧಿಕಾರದ ಮುಖ್ಯಸ್ಥರೊಂದಿಗೆ ಹಡಗಿನ ಒಳಗೆ ಹೋಗಿ, ಆ ಮಕ್ಕಳು ಕುತೂಹಲದಿಂದ ಕೇಳಿದ ಸಹಜ ಪ್ರಶ್ನೆಗಳು ಮತ್ತು ಆ ಅಧಿಕಾರಿಯು ಸಹಜವಾಗಿ ನೀಡಿದ ಉತ್ತರಗಳನ್ನೆಲ್ಲ ಧ್ವನಿ ಮುದ್ರಿಸಿಕೊಂಡು ಬಂದು, ಅದನ್ನು ಪ್ರಸಾರ ಮಾಡಿದ್ದೆ. ತನ್ಮೂಲಕ...ರೇಡಿಯೋ ಕೇಳಿದ ಎಲ್ಲರಿಗೂ ಬಂದರು ಮತ್ತು ಹಡಗಿನ ಸ್ಥೂಲ ಪರಿಚಯ ಮಾಡಿಸುವಲ್ಲಿ ನಾನು ಯಶಸ್ವಿಯಾಗಿದ್ದೆ. ಅನಂತರ...ವಿಮಾನ ನಿಲ್ದಾಣ, ಗೇರು ಬೀಜದ ಕಾರ್ಖಾನೆ (CASHEW FACTORY)ಗಳಿಗೂ ಮಕ್ಕಳ ಜೊತೆಗೆ ಹೋಗಿ, ಆಯಾ ವ್ಯವಸ್ಥೆಗಳ ಸ್ಥೂಲ ಪರಿಚಯಾತ್ಮಕ ರೂಪಕಗಳನ್ನು ಬಾಲವೃಂದದಲ್ಲಿ ಪೋಣಿಸಿ ಬಿತ್ತರಿಸಿದ್ದೆ. ಹೀಗೆ...ಮಕ್ಕಳಿಗೆ ಸುಲಭದಲ್ಲಿ ಕಾಣಲು ಸಿಗದ - ದೊಡ್ಡ ದೊಡ್ಡ ಮುಚ್ಚಿದ ಬಾಗಿಲ ಒಳಗಿನ ಕಾರ್ಯಶೈಲಿ ಮತ್ತು ವಿಶೇಷಗಳನ್ನು ಸರಳವಾಗಿ ತಿಳಿಸಿದ ರಸವತ್ತಾದ ಕಾರ್ಯಕ್ರಮಗಳೆಂದು - ಇವುಗಳೆಲ್ಲವೂ ಬಹಳ ಜನಮನ್ನಣೆ ಗಳಿಸಿದವು. ಇಷ್ಟೇ ಅಲ್ಲ, ಆಗಲೇ ನಾನು ಒಂದು ಹೊಸ ಅಲೆ ಎಬ್ಬಿಸಿದ್ದೆ. ಈಗ 2009 ರ ಹೊತ್ತಿನಲ್ಲಿ ಎಲ್ಲ ಮಾಧ್ಯಮಗಳು ನಡೆಸುತ್ತಿರುವ -  ಜನರನ್ನು ಸೆಳೆಯುವ ಮತ್ತು ಒಳಗೊಳ್ಳುವ ತಂತ್ರಗಾರಿಕೆಯನ್ನೂ ಆಗ ನಾನು ತೋರಿಸಿದ್ದೆ. ಅದು "ಜನ್ಮ ದಿನದ ಶುಭಾಶಯ" ಎಂಬ ಕಾರ್ಯಕ್ರಮ. 

ಬಾಲವೃಂದದ ಭಾಗವಾಗಿ - ಕೇವಲ 4 ನಿಮಿಷ +1 ನಿಮಿಷದ ಗುರುತು ಸಂಗೀತ (ಒಟ್ಟಿಗೆ 5 ನಿಮಿಷ) ಮಾತ್ರ ಮೂಡಿ ಬರುತ್ತಿದ್ದ ಚಿಣಕಿ ಕಾರ್ಯಕ್ರಮವದು. ಕೇಳುಗರಿಂದ ಬಂದ ಪತ್ರಗಳನ್ನು ಆಧರಿಸಿ, ಆಯಾ ವಾರದಲ್ಲಿ ಹುಟ್ಟಿದ ಮಕ್ಕಳ ಊರು- ಹೆಸರನ್ನು ಹೇಳಿ, "ಬಾನುಲಿ ಅಕ್ಕನ ಶುಭಾಶಯಗಳು" ಅಂತ ಹೇಳಿ, ಮಕ್ಕಳ ಸ್ನೇಹವನ್ನೂ ಸಂಪಾದಿಸಿದ್ದೆ. ತನ್ಮೂಲಕ ಆ ಮಕ್ಕಳ ಇಡೀ ಕುಟುಂಬ - ಪರಿವಾರವನ್ನೂ ನಮ್ಮ ಬಾನುಲಿಯ ಕೇಳುಗರಾಗುವಂತೆಯೂ ಮಾಡಿದ್ದೆ. "ಶುಭಾಶಯ ಶುಭಾಶಯ ಶುಭಾಶಯ..." ಎಂಬ ಒಂದೇ ಶಬ್ದದ ಆ ಹಾಡಿಗೆ ನಾನೇ ಸರಳ ರಾಗ ಸಂಯೋಜಿಸಿ, 30 ಸೆಕೆಂಡಿನ ಒಂದು ಗುರುತು ಸಂಗೀತವನ್ನೂ ಧ್ವನಿಮುದ್ರಿಸಿಕೊಂಡಿದ್ದೆ. ಆ ಹಾಡನ್ನು ಹತ್ತು ಮಂದಿ ಮಕ್ಕಳಿಗೆ ಹೇಳಿಕೊಟ್ಟು ಅವರಿಂದಲೇ ಹಾಡಿಸಿದ್ದೆ. ಕಾರ್ಯಕ್ರಮದ ಆರಂಭ ಮತ್ತು ಕೊನೆಯಲ್ಲಿ ಗುರುತು ಸಂಗೀತವನ್ನು (Signature Tune) ಪೋಣಿಸಿದ್ದೆ. ಹೀಗೆ, ಬಾಂಧವ್ಯ ಬೆಸುಗೆಯ ಸೇತುವಾಗಿ ಸಹಸ್ರಾರು ಕುಟುಂಬಗಳನ್ನು ಬಾನುಲಿಯ ತೆಕ್ಕೆಗೆ ತಂದದ್ದು ಅಂದಿನ ಬಾಲವೃಂದ ಕಾರ್ಯಕ್ರಮದ ಹೆಗ್ಗಳಿಕೆ.

ಒಂದೊಂದು ಬದುಕೂ ಒಂದೊಂದು ಕಾದಂಬರಿ.  ಆಕಾಶವಾಣಿಯ ನನ್ನ ಸುದೀರ್ಘ ಅನುಭವದ ಹಿನ್ನೆಲೆಯಲ್ಲಿ ನಾನು ಕಂಡ ಜನರನ್ನು 3 ವಿಧವಾಗಿ ವಿಂಗಡಿಸಬಹುದು. ಒಂದು ವರ್ಗ "ಆರಾಧಿಸುವ ವರ್ಗ". ಈಕೆ "ಏನು ಮಾಡಿದರೂ ಚೆಂದ" ಎನ್ನುವ ಸಣ್ಣ ವರ್ಗವದು. ಇನ್ನೊಂದು - "ಸಮತೂಕದಿಂದ ವಿಮರ್ಶಿಸಿ" ನನ್ನ ತಪ್ಪು ಸರಿಗಳನ್ನು ಮುಖದ ಎದುರಿಗಿಡುತ್ತಿದ್ದ ವರ್ಗ; ಇದೂ ಸಣ್ಣ ವರ್ಗವೇ. ಇನ್ನೊಂದು ವರ್ಗವಿದೆ. ನಾನು ಏನು ಮಾಡಿದರೂ "ತಪ್ಪನ್ನೇ ಹುಡಿಕ್ಯಾಡುತ್ತಿದ್ದ ವರ್ಗ." ನನ್ನ ಬೆನ್ನು ಬಿಡದೆ ಚುಚ್ಚಿ ಚುಚ್ಚಿ ಗಾಯಗೊಳಿಸಿದ ವರ್ಗವಿದು. ಈ ದೊಡ್ಡ ವರ್ಗವನ್ನು ನಾನು ನನ್ನ ಅಂತರಂಗದ ಬಂಧುಗಳಾಗಿ ನೋಡುತ್ತ ಬಂದಿದ್ದೇನೆ. ಏಕೆಂದರೆ ಈ ವರ್ಗದಿಂದಲೇ ನಾನು ವೇಗವಾಗಿ ಬೆಳೆಯುತ್ತ ಬಂದೆ; "ಬದುಕಿನ ಎಚ್ಚರ"ದ ಪಾಠಗಳನ್ನು ಕಲಿಯುತ್ತ ಬಂದೆ. ಹೀಗೆ ಆರಾಧಿಸುವ  ಸುಪುಷ್ಟ ವರ್ಗದ ಪೋಷಣೆಯ ಬೆಂಗಾವಲಿನಲ್ಲಿ ಸದಸದ್ ವಿಮರ್ಶೆಯ "ರೋಗ ನಿರೋಧಕ" ಗಳನ್ನು ಅವಶ್ಯ ಕಂಡಾಗ ಸೇವಿಸುತ್ತ, ತಪ್ಪನ್ನೇ ಎತ್ತಿ ಆಡುತ್ತಿದ್ದವರ ಹೊಡೆತದಿಂದ ರಕ್ಷಿಸಿಕೊಳ್ಳಲು ಸ್ವತಃ ಭದ್ರವಾದ ಬೇಲಿ ಕಟ್ಟಿಕೊಂಡೆ. ಸುರಕ್ಷಿತವೆನಿಸಿದಾಗ ಮಾತ್ರ ಥಟ್ಟಂತ ಹೊರಬಂದು ಪ್ರದರ್ಶನ ನೀಡಿ, ಪಟ್ಟಂತ ಚಿಪ್ಪಿನೊಳಗೆ ಹೋಗುತ್ತ ನನ್ನ ನೆಮ್ಮದಿ ನಾನೇ ಕಂಡುಕೊಂಡೆ. ಆದರೆ, ನಾನು ಈವರೆಗೆ ನನ್ನ ಕೇಳುಗರಿಗೇನಾದರೂ ಸಿಹಿ ಫಲಗಳನ್ನು ಕೊಟ್ಟಿದ್ದರೆ ಅದಕ್ಕೆ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಈ ಎಲ್ಲ ವರ್ಗದ ಹಿತೈಷಿಗಳು ಅಭಿನಂದನೆಗೆ ಅರ್ಹರು. ಆದ್ದರಿಂದ ನನ್ನ ಸಂಪರ್ಕಕ್ಕೆ ಬಂದ ವಿಭಿನ್ನ ಚಿಂತನೆಯ ಎಲ್ಲರಿಗೂ ನಾನು ಚಿರಋಣಿ.

Announcers ಎಂದರೆ ಏನು ಎತ್ತ ? ಎಂಬ ಕುತೂಹಲ - ಆ ಕಸುಬಿನ ಒಳ ಹೊರಗನ್ನು ಕಾಣುವ ಉತ್ಸುಕತೆಯು ಕೇಳುಗರಲ್ಲಿ ಮೂಡುವುದು ಸಾಮಾನ್ಯ...


ನಿಮಗೆ ಆಶ್ಚರ್ಯವಾಗಬಹುದು. ಎಷ್ಟೇ ಕಾಯಕಲ್ಪ ನಡೆಸಿದರೂ ಸಿಂಗರಿಸಿದರೂ ಅಚ್ಚುಕಟ್ಟಾಗಿ ಜೋಡಣೆಯಾಗದ ವಾದ್ಯದಿಂದ ಮಧುರ ಧ್ವನಿಯು ಹೇಗೆ ಹೊರಡಲಾರದೋ ಹಾಗೆ...ಉದ್ಘೋಷಕರಾದವರ ಬಾಯಿಯ ಸುಸ್ಥಿತಿ-ಆಕಾರವು [shape of the mouth] ಕೂಡ ಮಾತಿನ ಸೌಂದರ್ಯದಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಹಲ್ಲು, ನಾಲಗೆ, ಬಾಯಿಯು ಸುಸ್ಥಿರವಾಗಿದ್ದರೆ ಮಾತ್ರ ಅಕ್ಷರಗಳು ಲೀಲಾಜಾಲವಾಗಿ ನುಡಿಯುತ್ತವೆ. ಮಾತನ್ನು ಹೊರಡಿಸುವ ರೀತಿಯೂ ಅಷ್ಟೇ ಮುಖ್ಯ. ಕೆಲವರು ಚುಳ್ಳಿ ಮಾಡುತ್ತ, ಕೆಲವರು ಪಚಪಚ ನಾಲಗೆ ಹೊರ ಚಾಚುತ್ತ, ಕೆಲವರು ಹಲ್ಲು ಕಚ್ಚಿ ಹಿಡಿದು ಮಾತನಾಡುತ್ತಾರೆ. ಕೆಲವರು ಉಸಿರಿನ ನಿಯಂತ್ರಣವಿಲ್ಲದೆ ಅಕ್ಷರಗಳನ್ನು ತೇಲಿಸುತ್ತ ಮುಳುಗಿಸುತ್ತ ರಾಗವಾಗಿ ಮಾತನಾಡುತ್ತಾರೆ. ಕೆಲವರು ಎಲ್ಲ ಅಕ್ಷರಗಳನ್ನೂ ಎಗ್ಗಿಲ್ಲದೆ ಒತ್ತುತ್ತ "ಶಬ್ದೋಚ್ಚಾರವು ಎಷ್ಟು ಕಠಿಣ" ಎಂಬ ಪ್ರಾತ್ಯಕ್ಷಿಕೆ ನಡೆಸುತ್ತಿರುತ್ತಾರೆ. ಕೆಲವರು ಅಂತ್ಯದ ಅಕ್ಷರವನ್ನು ನುಂಗಿ ನೀರು ಕುಡಿಯುತ್ತಾರೆ. ಕೆಲವರು ಎಲ್ಲ ಅಕ್ಷರಗಳನ್ನೂ ನಾಸಿಕಕ್ಕೇ ಒರಗಿಸುತ್ತಾರೆ. ಇಂತಹ ಅಪಭ್ರಂಶಗಳಿಂದಾಗಿ ಮಾತನಾಡುವವರ ಉದ್ದೇಶವು "ತಂಗಾಳಿ" ಬೀಸುವುದಾದರೂ - ಪ್ರಬುದ್ಧ ಕೇಳುಗನಿಗೆ ಮಾತ್ರ ಉಬ್ಬೆಯಲ್ಲಿ ಹಾಕಿದಂತೆ...ಉಸಿರು ಕಟ್ಟಿದಂತಾಗುತ್ತದೆ. ಒಟ್ಟಾರೆಯಾಗಿ ಮಾತಿನ ಪರಿಣಾಮವೂ ಕ್ಷೀಣಿಸುತ್ತದೆ. ಇವೆಲ್ಲವೂ ಮಾತಿನ ಅವಲಕ್ಷಣಗಳು.

ಯಾವುದೇ ಮಾತುಗಾರನ ಮಾತುಗಳನ್ನು ಕೇಳಿದರೆ, ಅರೆ...ಎಷ್ಟು ಸುಲಭ, ಸರಳ, ಸಹಜ - ಎಂದು ಕೇಳುವವರಿಗೆ ಅನ್ನಿಸಬೇಕು. ಹಾಗಾದಾಗ ಮಾತಿನ ಹಾದಿಯು ಸುಗಮವಾಗುತ್ತದೆ; ನೇರವಾಗಿ ಕಿವಿಯಿಂದ ಹೃದಯವನ್ನೇ ತಲುಪುತ್ತದೆ. ಸ್ವಚ್ಚ ಮನಸ್ಸಿನ ಮಾತುಗಳು ಕೇಳುಗರನ್ನು ಮುಟ್ಟುತ್ತವೆ. ಕಡಿಮೆ ಪಕ್ಷ, ಧ್ವನಿವರ್ಧಕದ ಮುಂದೆ ಕುಳಿತಷ್ಟು ಹೊತ್ತಾದರೂ ಮನದ ಕೊಳೆಯನ್ನು ತೊಳೆದುಕೊಂಡಿರಬೇಕಾಗುತ್ತದೆ. ದ್ವೇಷ, ನೋವು, ಕುತಂತ್ರ ಕಾರಸ್ಥಾನ, ಮುಂತಾದ ನೇತ್ಯಾತ್ಮಕ ಭಾವಗಳಿಂದಲೇ ತುಂಬಿದ ಎದೆಯಿಂದ ಹೊರಡುವ ಮಾತುಗಳು ಮೊನಚನ್ನು ಕಳೆದುಕೊಳ್ಳುತ್ತವೆ. ಏಕಾಗ್ರತೆ, ಕರ್ತವ್ಯದಲ್ಲಿ ಭಕ್ತಿ ಮತ್ತು ಆತ್ಮೀಯ ರಕ್ತಿಯಿಂದಲೇ ಪ್ರತೀ ಅಕ್ಷರವೂ ಹೊರ ಹೊಮ್ಮಿದಾಗ ಅದರ ಪರಿಣಾಮವು ಅವರ್ಣನೀಯ. ಉದಾಹರಣೆಗೆ ಯಾರೊಂದಿಗೋ ಹರಟುತ್ತ ಬಾಯಿಂದ ನಂಜು ನಟ್ಟು ಒಸರುತ್ತ ಒಬ್ಬ ತಾಯಿಯು ಮಗುವಿಗೆ ಎದೆ ಹಾಲೂಡಿಸಿದರೆ ಆ ಮಗುವು ಹಾಲು ಕುಡಿಯುವುದಿಲ್ಲ; ಬದಲಿಗೆ ಅಳುತ್ತದೆ. ಏಕೆಂದರೆ ಆ ಏಕಾಂತದಲ್ಲಿ ತಾಯಿಯ ಏಕಾಗ್ರ ಪ್ರೀತಿಯನ್ನು ಮಗುವು ಅಪೇಕ್ಷಿಸುತ್ತದೆ. ಅಂತೆಯೇ ಪ್ರತೀ ಅಕ್ಷರವೆಂಬ ಮಗುವಿಗೂ ಪ್ರೀತಿಯ ಸ್ಪರ್ಶ ಬೇಕು. ಆಗಲೇ ಅಮೃತ ವಾಹಿನಿಯು ಎದೆಯಿಂದಲೆದೆಗೆ - ಸತತ ಹರಿಯಬಹುದು.

ಉದ್ಘೋಷಕರೆಂದರೆ ಪಳಗಿದ Event Managers. ಯಾವುದೇ ಸಂದರ್ಭವನ್ನೂ ಸುಲಲಿತವಾಗಿ ಪೋಣಿಸಿ ನಿಭಾಯಿಸಬಲ್ಲ ವಿಶಿಷ್ಟ ಕಲಾವಿದರು. ಧ್ವನಿಯ ಅಪಾರ ಸಾಧ್ಯತೆಗಳ ಅರಿವು ಮತ್ತು ಸಕಾಲದಲ್ಲಿ ಸೂಕ್ತವಾಗಿ ಆ ಧ್ವನಿಯನ್ನು ಪ್ರಯೋಗಿಸಬಲ್ಲ ಸಮಯ ಸ್ಫೂರ್ತಿಯು ಉದ್ಘೋಷಕರ ಅತೀ ಮುಖ್ಯ ಅರ್ಹತೆಗಳು.

ಇಷ್ಟೇ ಸಾಲದು. ಉದ್ಘೋಷಕರು ಜಗತ್ತಿನ ಆಗು ಹೋಗುಗಳ ಅರಿವನ್ನು ಹೊಂದಿರಲೇಬೇಕು. ಇತ್ತೀಚೆಗೆ ಚೀನಾದ ಶೀ (Xi) ಝಿನ್ಪಿಂಗ್ ಭಾರತಕ್ಕೆ ಬಂದಾಗ ಒಬ್ಬ ಉದ್ಘೋಷಕ ಮಹಾಶಯ (ಮಹಾಶಾಯಿ) ಅವರನ್ನು ಹನ್ನೊಂದು ಝಿನ್ಪಿಂಗ್ (ರೋಮನ್ ಅಂಕೆ - XI) ಅಂದರಂತೆ. ಇಂತಹ ಎಡವಟ್ಟುಗಳಾಗುವುದು ಉದ್ಘೋಷಕರ ಸಾಮಾನ್ಯ ಜ್ಞಾನದ ಕುರಿತ ಅಸಡ್ಡೆಯಿಂದ. ಆದ್ದರಿಂದ "ಉದ್ಘೋಷಕ ವೀರ"ರಾಗಲು ಬಯಸುವವರು ಸಮಾಜದ ನಿತ್ಯದ ಆಗು ಹೋಗುಗಳನ್ನು ಹಿಂಬಾಲಿಸುತ್ತಲೇ ಇರಬೇಕಾಗುತ್ತದೆ.

ಇಷ್ಟೇ ಸಾಕೇ ??  ಇನ್ನೂ ಇದೆ....ದಿನವೂ ಹೊಸತಾಗುವ , ಹೊಸತನ್ನು ಕಲಿಯುವ ಮತ್ತು ಕೇಳುಗರಿಗೆ ಹೊಸತನ್ನು ನೀಡುವ ತುಡಿತವಿದ್ದಾಗ ಮಾತ್ರ ಉದ್ಘೋಷಕರು ಜನರನ್ನು ಮುಟ್ಟಲು ಸಾಧ್ಯ. ಹಳೆಯದನ್ನೂ ಹೊಸರೂಪದಲ್ಲಿ ಸಿಂಗರಿಸುವ ಕಲಾ ತಾದಾತ್ಮ್ಯವು ಉದ್ಘೋಷಕರಲ್ಲಿ ಇರಬೇಕಾಗುತ್ತದೆ...ಒಂದೇ ವಸ್ತು - ವಿಷಯವನ್ನು ನೂರು ಬಗೆಯಿಂದ ಹೇಳಬಲ್ಲ ಚಾಕಚಕ್ಯತೆಯನ್ನು ಬೆಳೆಸಿಕೊಳ್ಳುತ್ತಲೇ ಇರಬೇಕಾಗುತ್ತದೆ...ಕಲಿಯುತ್ತಲೇ ಇರಬೇಕಾಗುತ್ತದೆ. ಒಮ್ಮೊಮ್ಮೆ ಪ್ರಯೋಗಗಳನ್ನೂ ಮಾಡಬೇಕಾಗುತ್ತದೆ. "ಹತ್ತಿರದ ತಗಣೆ ಕಚ್ಚುತ್ತದೆ" ಎಂದು ಹಿಂಜರಿಯದೆ - ತಗಣೆಗೆ ಮದ್ದನ್ನು ಸಿಂಪಡಿಸಿ, ನಮ್ಮ ಉತ್ಸಾಹದ ವೇಗ ತಗ್ಗದಂತೆ ಮತ್ತು ಕರ್ಮದಲ್ಲಿ ನಾವೀನ್ಯವನ್ನು ತುಂಬುವಂತೆ ಏಕಚಿತ್ತದಿಂದ ದುಡಿಯುತ್ತ ಸ್ವರಕ್ಷಣೆಯನ್ನೂ ಮಾಡಿಕೊಳ್ಳಬೇಕಾಗುತ್ತದೆ.

Sunday, October 18, 2015

ನಾನೊಲಿದಂತೆ (10) - ಕನ್ನಡ ರಾಜ್ಯೋತ್ಸವದ ನೆನಪುಗಳು



    ನವೆಂಬರ್ ತಿಂಗಳು ಬಂತೆಂದರೆ ಕನ್ನಡವನ್ನು “ಉಳಿಸಿ ಬೆಳೆಸುವ” ಕಲಿಗಳ ಗರ್ಜನೆಯು ಆರಂಭವಾಗುತ್ತದೆ. ವೇದಿಕೆಯಲ್ಲಿ ನಿಂತು - “ಉಲಿಸಿ ಬೆಲೆಸುವ ಕರೆಕೊಡುತ್ತ "ಖನ್ನಡಾಬಿಮಾನಿ" ಗಳೆಲ್ಲರೂ ತಮ್ಮ ಬಿಲದಿಂದ ಹೊರ ಬರುವ ಕಾಲವಿದು. ಸುಮಾರು 40 ವರ್ಷಗಳ ಹಿಂದಿನ ವರೆಗೂ ಸ್ವಲ್ಪ ಗಾಂಭೀರ್ಯದಿಂದಲೇ ಆಚರಿಸುತ್ತಿದ್ದ ರಾಷ್ಟ್ರೀಯ ಹಬ್ಬಗಳಾದ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ, ಕನ್ನಡ ರಾಜ್ಯೋತ್ಸವ... ಇವುಗಳೆಲ್ಲವೂ ಮೊದಲಿನ ಗಾಂಭೀರ್ಯವನ್ನು ಈಗ ಉಳಿಸಿಕೊಂಡಿಲ್ಲ. ದಿನ ಹೋದಂತೆ ನೆಲ, ಜಲ, ನಾಡು ನುಡಿಯ ಆತ್ಮಾಭಿಮಾನವು ನಮ್ಮಲ್ಲಿ ತಗ್ಗುತ್ತಿರುವಂತೆಯೂ ಕಾಣಿಸುತ್ತದೆ. ಯಾವುದೇ ಸಕಾರಣವಿಲ್ಲದೆ ಹೋರುವ ಗೋರುವ ಅಕ್ಷರಾಸುರರು ಹಿಂಡು ಹಿಂಡಾಗಿ ಉತ್ಪನ್ನವಾಗುತ್ತಿದ್ದಾರೆ. (ಈ ಪರಿವರ್ತನೆಯಲ್ಲಿ ವಾಣಿಜ್ಯ ಸಂಗ್ರಹಕ್ಕಾಗಿಯೇ ಖಣಖಣಿಸುತ್ತಿರುವ ಮಾಧ್ಯಮಗಳ ಪಾಲು ದೊಡ್ಡದು.) 

ಈಗ ಅದ್ದೂರಿಯ ಆಚರಣೆಯ ವ್ಯಾಖ್ಯೆಯೂ ಕೊಂಚ ಬದಲಾಗಿದೆ. “ಕಿವಿಗಡಚಿಕ್ಕುವ ಧ್ವನಿಮುದ್ರಿತ ಸಂಗೀತಕ್ಕೆ ಸೊಂಟ ತಿರುಗಿಸುತ್ತ ಬೀದಿಯಲ್ಲಿ ಕುಣಿಯುವುದು...” ಎಂಬಲ್ಲಿಗೆ ಆಚರಣೆಗಳು ಬಂದು ನಿಂತಂತೆಯೂ ಕಾಣುತ್ತದೆ. ಶಾಲೆಗಳಲ್ಲಂತೂ ರಾಜ್ಯೋತ್ಸವದ ರಸಗ್ರಹಣಕ್ಕೆ ಪೂರಕವಾದ ವಾತಾವರಣವಿದೆಯೆ? ಏನೋ ಸಂಶಯ. ಒಟ್ಟಿನಲ್ಲಿ ಎಲ್ಲವೂ “ಹರಕೆ ಒಪ್ಪಿಸುವಂತೆ” ಯಾಂತ್ರಿಕವಾಗಿ ನಡೆಯುತ್ತಿದೆ. ಇಂತಹ ಕ್ಷಣಗಳಲ್ಲಿ...ಅಂದಿನ ನಮ್ಮ ಬಾಲ್ಯದ ಶಾಲಾ ದಿನಗಳಲ್ಲಿ ನಡೆಯುತ್ತಿದ್ದಂತಹ ಗಂಭೀರ ಚಟುವಟಿಕೆಗಳು - ಬೇಡವೆಂದರೂ ನೆನಪಾಗುತ್ತವೆ. 


    ಸುಮಾರು 1969 – 70 ರಲ್ಲಿ, ಕುಂದಾಪುರದ ಬೋರ್ಡ್ ಹೈಸ್ಕೂಲಿನಲ್ಲಿ (ಈಗ ಸರಕಾರೀ ಪದವಿಪೂರ್ವ ಕಾಲೇಜು) ನಾನು 9 ನೆಯ ತರಗತಿಯ ವಿದ್ಯಾರ್ಥಿನಿಯಾಗಿದ್ದೆ. ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಆ ವರ್ಷ ನಡೆದ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಹೇಳಿ, ಪೂರ್ತಿಯಾಗಿ ವಿಷಯಗಳನ್ನು ಒದಗಿಸಿದ್ದ ಅಪ್ಪಯ್ಯನು (ದಿ. ಯಜ್ಞನಾರಾಯಣ ಉಡುಪ) ಆಗ ನನಗೆ ಸ್ವಲ್ಪ ತರಬೇತಿಯನ್ನೂ ನೀಡಿದ್ದರು. ಅಂದು ಅವರು ಸ್ವಹಸ್ತಾಕ್ಷರದಲ್ಲಿ ಬರೆದಿದ್ದ ತುಂಡು ಕಾಗದಗಳು ಮೊನ್ನೆ ಯಾಕೋ ಹಳೆಯ ಕಡತಗಳನ್ನು ಮೊಗಚುವಾಗ ಕಣ್ಣಿಗೆ ಬಿತ್ತು. ಅದನ್ನು ಓದುತ್ತ ಓದುತ್ತ ನಾನು ಹಿಂದೆ ಸರಿದಿದ್ದೆ. ಅಪ್ಪಯ್ಯನ ಅಕ್ಷರದಲ್ಲಿಯೇ ಇದ್ದ ಆ ಪುಟಗಳು ಅಂದಿನ ಕನ್ನಡ ರಾಜ್ಯೋತ್ಸವದ ಸಂಭ್ರಮದ ದಿನಗಳತ್ತ ನನ್ನನ್ನು ಕರೆದೊಯ್ದಿದ್ದವು; ಅಂದಿನ ದಿನಗಳನ್ನು ಮತ್ತೊಮ್ಮೆ ನೆನಪಿಸಿದ್ದವು. ನನ್ನ ತಂದೆಯವರ ಸರಳ ಭಾಷಾ ಶೈಲಿಯನ್ನು ಪರಿಚಯಿಸಲೋಸುಗ - ಅಂದು ನಾನು ಮಾಡಿದ ಆ ಭಾಷಣದ ಪುಟಗಳನ್ನು ಯಥಾವತ್ತಾಗಿ ನಿಮ್ಮ ಮುಂದೆ ಇಟ್ಟು, ಅನಂತರ ಎಂದಿನ ನನ್ನ ಪ್ರವರವನ್ನು ಬಿಚ್ಚುತ್ತೇನೆ.


                                                 
                                      ನವೆಂಬರ್ ೧ - ೧೯೭೦ 
““ಕ್ರಿಸ್ತಾಬ್ದ ೧೯೫೬ ನೆಯ ನವೆಂಬರ್ ೧ - ಕನ್ನಡಿಗರ ಬಾಳಿನಲ್ಲಿ ಚಿರಸ್ಮರಣೀಯವಾದ ದಿನ. ಅಂದು... ಶುಭವನ್ನು ಸೂಚಿಸುವ ವಿಹಂಗಮಗಳ ನುಣ್ಚರ, ತಳಿರ ನಡುವೆ ಸುಳಿದಾಡುವ ತಂಗಾಳಿಯ ಸುಯ್ದನಿ, ಮೂಡುವೆಣ್ಣಿನ ಮುಗುಳು ನಗೆಯಂತೆ ನರುಗೆಂಪನಾಂತ ಮುಂಬೆಳಗು ಮೂಡಣ ಬಾಂದಳದಲ್ಲಿ ಮಿರುಗುತ್ತಿತ್ತು. ಆಗ ಕಡಲ ಕರೆಯಲ್ಲಿ ನಿಬಿಡ ಕಲ್ಪದ್ರುಮ ವನ ಶ್ರೇಣಿಗಳ ಹರಿತ ಸೌಂದರ್ಯವು ಪ್ರಾತಃಸೂರ್ಯನ ದರಲೋಹಿತ ರಾಗದಲ್ಲಿ ನವಚೇತನ ಪಡೆದು ರಂಜಿಸುತ್ತಿತ್ತು. ಹಲವಾರು ವರ್ಷಗಳಿಂದ ಕನ್ನಡಿಗರು ಅಂತಹ ಸುಸ್ನಿಗ್ಧ ಸುಪ್ರಭಾತದ ಸರಳ ಸೌಂದರ್ಯವನ್ನು ಕಂಡೂ ಎಣಿಸಿಯೂ ಇರಲಿಲ್ಲ. ಕನ್ನಡಿಗರಿಗೇ ಒಂದು ರಾಜ್ಯವಾಗಬೇಕೆಂಬ ಹಂಬಲದಿಂದ ಪರಿತಪಿಸುತ್ತಿದ್ದ ಕನ್ನಡ ಪ್ರೇಮಿಗಳ ಹೃದಯಕ್ಕೆ ತಂಪನ್ನುಂಟು ಮಾಡುವಂತಹ ಅಮರ ದಿನವು ಅಂದು ಸ್ವರ್ಗದಿಂದ ಭೂಮಿಗಿಳಿಯಿತು. “ಕನ್ನಡಿಗರದೇ ಒಂದು ರಾಜ್ಯ ಉದಯಿಸಿದರೆ ಆ ರಾಜ್ಯದ ಅಭಿವೃದ್ಧಿಗಾಗಿ ತಮ್ಮ ತನು, ಮನ, ಧನ ಸರ್ವಸ್ವವನ್ನೂ ಅರ್ಪಿಸುತ್ತೇವೆ. ಕನ್ನಡ ತಾಯಿಯ ಮತ್ತು ಸಹೋದರರ ಉನ್ನತಿ ಧನ್ಯತೆಗಾಗಿ ದುಡಿದು ಮಡಿಯುತ್ತೇವೆ” ಎಂದು ಹಾರೈಸಿದ ಕನ್ನಡ ವೀರರ ಕನಸು ನೆನಸಾದ, ಕನ್ನಡ ಪ್ರೇಮಿಗಳ ಹೃದಯದಲ್ಲಿ ಎಂದೆಂದೂ ಅಚ್ಚೊತ್ತಿ ನಿಲ್ಲಬಹುದಾದಂತಹ ಉಜ್ವಲ ದಿನವು ಅಂದು ಉದಯಿಸಿತು.

“೧೯೫೬ ನೆಯ ನವೆಂಬರ್ ೧, ಎರಡು ಕೋಟಿ ಕನ್ನಡಿಗರ ಹೃದಯದಲ್ಲಿ ಆನಂದ ಸಾಗರವೇ ಭರದಿಂದ ಹರಿದು ಜನಮನದ ಹಿಂದಿನ ಅಶಾಂತಿಯನ್ನು ಹೋಗಲಾಡಿಸಿದ ಪವಿತ್ರ ದಿನವಾಯಿತು.

“ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು” ಎಂಬ ಕನ್ನಡಿಗರ ಹಾಡು ಕನ್ನಡಿಗರ ಗಾಯತ್ರಿಯಾಗಿ, ಕನ್ನಡದ ನವೋದಯ ಶಕ್ತಿಯಾಗಿ, ಕನ್ನಡಮ್ಮನ ಆವಾಹನೆಯ ಗೀತೆಯಾಗಿ ನಾಡಿನ ಹಳ್ಳಿಪಳ್ಳಿಗಳಲ್ಲೂ ಹಾಸುಹೊಕ್ಕಾಗಿ ಹರಡಿ ಕನ್ನಡದ ಒಕ್ಕೂಟವನ್ನು ಸಾಧಿಸಿದ ಸಾಧನೆಗೆ ೫೦ ವರ್ಷಗಳ ಹೋರಾಟ ಬೇಕಾಯಿತು. ಕನ್ನಡಿಗರ ಈ ಪ್ರಚಂಡ ಹೋರಾಟವು ಸಾವಿರ ವರ್ಷದ ಹಿಂದಿನ ಇತಿಹಾಸವನ್ನೇ ಬದಲಿಸಿಕೊಟ್ಟಿತು; ಕನ್ನಡಿಗರಿಗೆ ಹೊಸ ಚರಿತ್ರೆಯನ್ನು ಕಟ್ಟಿಕೊಟ್ಟಿತು. ಇಂತಹ ಪುಣ್ಯ ಶ್ರೇಯಸ್ಸನ್ನು ಹೊತ್ತು ತಂದ ೧೯೫೬ ನೇ ವರ್ಷದ ದೀಪಾವಳಿಯನ್ನು ಯಾವ ಒಳ್ಳೆಯ ಹೆಸರಿನಿಂದ ಕರೆಯಬೇಕಾಗಿದೆಯೋ ನನಗೆ ತಿಳಿಯದಾಗಿದೆ. ಭಾರತೀಯರ ಹೃದಯಾಕಾಶವನ್ನೇ ಬೆಳಗುವ ದೀಪಾವಳಿಯ ಈ ಉಜ್ವಲ ಕಾಲದಲ್ಲೇ ಕನ್ನಡಿಗರು ತಮ್ಮ ರಾಜ್ಯೋತ್ಸವವನ್ನು ಆಚರಿಸುವಂತಾದುದನ್ನು - ಧಮನಿಗಳಲ್ಲಿ ಕನ್ನಡಿಗರ ರಕ್ತ ಹರಿಯುವ ಕನ್ನಡಿಗನೆಂದೂ ಮರೆಯಲಾರ. ಕರ್ನಾಟಕ ಮಾತೆಗೆ ಜಯವಾಗಲಿ! ಕನ್ನಡಿಗರ ಈ ರಾಜ್ಯೋತ್ಸವವು ಅನಂತ ಕಾಲದ ವರೆಗೆ ಕನ್ನಡಿಗರ ಹೃದಯಮಂದಿರದ ದೀಪಾವಳಿಯಾಗಿ ವಿರಾಜಿಸುತ್ತಿರಲಿ!

ನಾವೆಂತಹ ಭಾಗ್ಯವಂತರು! ವರ್ತಮಾನಯುಗದ ೨ ಕೋಟಿ ಜನ ಕನ್ನಡಿಗರೂ ತಮ್ಮ ಬದುಕಿನಲ್ಲೇ ಕನ್ನಡದ ಒಕ್ಕೂಟವನ್ನು ನೋಡಿದರಲ್ಲಾ! ರಾಜಮಹಾರಾಜರುಗಳ ಸಾಮ್ರಾಜ್ಯವಾಗಿ ಸಹಸ್ರ ಸಹಸ್ರ ವರ್ಷ ಬಾಳಿ, ಬರಬರುತ್ತ ಛಪ್ಪನ್ನ ಚೂರುಗಳಾಗಿ ಹಂಚಿ, ಈಗ ನಮ್ಮನ್ನು ನಾವೇ ಆಳಿಕೊಳ್ಳುವಂತಹ ಏಕೀಕರಣದ ಎಂಥ ಪರ್ವ ಕಾಲದಲ್ಲಿ ನಾವಿದ್ದೇವೆ! ನಮ್ಮ ಹಿಂದಿನವರಿಗೆ ತಪ್ಪಿ ಹೋದ, ನಮ್ಮ ಮುಂದಿನವರಿಗೆ ಸಿಗದಂತಹ, ಅಮೃತದ ಗಳಿಗೆ ನಮ್ಮ ಪಾಲಿಗೆ ದೊರೆತಿದೆ!
ಭಾರತದ ರಾಷ್ಟ್ರಾಧ್ಯಕ್ಷರಾಗಿದ್ದ ಶ್ರೀ ರಾಜೇಂದ್ರಪ್ರಸಾದರು ಕನ್ನಡದ ಒಕ್ಕೂಟದ ಉದ್ಘಾಟನೆಯನ್ನು ಮಾಡಿದವರು. ಮೈಸೂರಿನ ರತ್ನ ಸಿಂಹಾಸನದ ಒಡೆಯರಾದ ಶ್ರೀ ಜಯಚಾಮರಾಜೇಂದ್ರರೇ ಕನ್ನಡ ಜನತಾ ರಾಜ್ಯದ ಮೊದಲ ರಾಜ್ಯಪಾಲರಾದವರು. ಏಕೀಕರಣದ ದಂಡನಾಯಕರಾಗಿದ್ದ ಶ್ರೀ ನಿಜಲಿಂಗಪ್ಪನವರೇ ಹೊಸ ರಾಜ್ಯದ ಮೊದಲ ಮುಖ್ಯಮಂತ್ರಿಗಳಾದವರು. ಹೀಗೆ ಒಂದು ಇನ್ನೊಂದರ ಘನತೆಯನ್ನು ಹೆಚ್ಚಿಸಿಕೊಟ್ಟ ಪುಣ್ಯ ಪ್ರಸಂಗಗಳ ಪವಿತ್ರ ಉದ್ಘಾಟನೆಯ ಸ್ಮರಣೆ ಮತ್ತು ಆಚರಣೆಗಳ ವಾಹಿನಿಯೇ ಇಂದಿನ ರಾಜ್ಯೋತ್ಸವದ ದಿನ!

ಇಂತಹ ಶುಭದ ಉನ್ಮಾದದಲ್ಲಿ “ಕನ್ನಡದ ಒಕ್ಕೂಟವೆನಗದೇ ಕಿರೀಟ” ಎನ್ನುತ್ತಿದ್ದ ಏಕೀಕರಣದ ಆಚಾರ್ಯರಾದ ಶ್ರೀ ಬೆನಗಲ್ ರಾಮರಾಯರು ಇಂದು ಬದುಕಿದ್ದಿದ್ದರೆ ಪೇಟ ಹಾರಿಸಿ ಕುಣಿಯುತ್ತಿದ್ದರು. ಇಂದಿನ ಉತ್ಸವವನ್ನು ನೋಡಿ ರೋಮಾಂಚನಗೊಳ್ಳುತ್ತಿದ್ದರು. ಕನ್ನಡದ ದಾಸಯ್ಯನಾಗಿ ಹಾಡಿದ ಶಾಂತ ಕವಿಗಳೂ, ಕನ್ನಡದ ಸಿಂಹವಾಗಿ ಗರ್ಜಿಸಿದ ಮುದವೀಡು ಕೃಷ್ಣರಾಯರೂ, ಕನ್ನಡದ ಸಾತ್ವಿಕ ಶಕ್ತಿಯಾಗಿ ಸೆಡೆದು ನಿಂತ ವೆಂಕಣ್ಣಯ್ಯ, ಬಿ. ಎಂ. ಶ್ರೀ., ಬಸವನಾಳರೂ ಮತ್ತು ಕರ್ನಾಟಕದ ಏಕೀಕರಣದ ಹೊಂಗನಸನ್ನು ಕಂಡು ಹೋರಾಡಿದ ಇನ್ನೆಷ್ಟೋ ಕನ್ನಡಿಗರೂ... ಕನ್ನಡ ಆಕಾಶದಲ್ಲಿ ಕಣ್ಮರೆಯಾಗಿ ನಿಂತು ಸಮಗ್ರ ಕರ್ನಾಟಕದಲ್ಲಿ ಅಲ್ಲಲ್ಲಿ ಜರಗುವ ಈ ಅಭೂತಪೂರ್ವ ಉತ್ಸವವನ್ನು ಕಂಡು ಆನಂದ ಬಾಷ್ಪವನ್ನುದುರಿಸುತ್ತಿರುವರು! ನಮ್ಮ ಈ ಉತ್ಸವವನ್ನು ಕಂಡು ತಲೆದೂಗದ ಕನ್ನಡಿಗರಿರುವರೆ? ಕನ್ನಡದ ಕುಲ ಪುರೋಹಿತರಾದ ಆಲೂರು ವೆಂಕಟರಾಯರು ಇಂದು ಬದುಕಿದ್ದಿದ್ದರೆ...? ಇಂದು ಇವರೆಲ್ಲರೂ ಎಲ್ಲರ ಕಣ್ಣಿಗೆ ಕಾಣಿಸದಿದ್ದರೂ ಅವರ ಕಣ್ಣುಗಳಿಗೆ ನಾವು ಆಚರಿಸುವ ಉತ್ಸವಗಳು ತೋರುತ್ತಿವೆ!

ಕರ್ನಾಟಕ ಭುವನೇಶ್ವರಿಯನ್ನು ಶ್ರೀ ಬಿ. ಎಂ. ಶ್ರೀ. ಯವರು ಅಂದೇ ರಥವನ್ನೇರಿಸಿ ಹೋಗಿದ್ದಾರೆ. ಇಂದು ಕರ್ನಾಟಕ ಮಾತೆಯ ಹಲವು ಮುಖದ ಸೇವೆಯಿಂದ ಕನ್ನಡಿಗರ ಯಶೋಬಾವುಟವನ್ನು ಧವಳಗಿರಿಯ ತುತ್ತತುದಿಯಲ್ಲಿ ಹಾರಿಸಲು ಸಾಹಿತ್ಯ ರಂಗದಲ್ಲಿ ನುಗ್ಗು ನುಗ್ಗಾಗುತ್ತಿರುವ ಶ್ರೀ ಕು ವೆಂ ಪು, ಬೇಂದ್ರೆ, ಕಾರಂತರ ಅಸಮ ಸಾಹಸವು ಅಕ್ಷಯವಾಗಲಿ! ಅಮರವಾಗಲಿ! – ಎಂದು ಈ ಸುಮುಹೂರ್ತದಲ್ಲಿ ಹಾರೈಸುವುದು ಪ್ರತಿಯೊಬ್ಬ ಕನ್ನಡಿಗನ ಆದ್ಯ ಕರ್ತವ್ಯ. ಪಂಪ, ರನ್ನ, ಜನ್ನ, ಲಕ್ಷ್ಮೀಶ, ಕುಮಾರವ್ಯಾಸ, ರುದ್ರಭಟ್ಟರಂತಹ ಮಹಾ ಕವಿಗಳನ್ನು ಸ್ಮರಿಸುವುದು ಪ್ರತಿಯೊಬ್ಬ ಕನ್ನಡಿಗನ ಪ್ರಥಮ ಕರ್ತವ್ಯ. ರಾಷ್ಟ್ರಕೂಟ ರಾಜ ನೃಪತುಂಗ, ಕೃಷ್ಣ, ಚಾಲುಕ್ಯರ ಪುಲಿಕೇಶಿ, ವಿಕ್ರಮ, ವಿಜಯನಗರದ ಕೃಷ್ಣದೇವರಾಯ... ಮೊದಲಾದ ರಾಜಮಹಾರಾಜರು ಕರ್ನಾಟಕಕ್ಕಾಗಿ ಏನು ಮಾಡಿದ್ದಾರೆಂಬುದನ್ನು ಈ ರಸ ಗಳಿಗೆಯಲ್ಲಿ ನೆನೆಯುವುದು ಕನ್ನಡಿಗರ ಇಂದಿನ ಕರ್ತವ್ಯ. ಶ್ರೀ ವಿದ್ಯಾರಣ್ಯರು, ಪುರಂದರದಾಸರು, ಕನಕದಾಸರು ಕರ್ನಾಟಕವನ್ನು ಹೇಗೆ ರೂಪಿಸಬೇಕೆಂದು ನಿರ್ಧರಿಸಿ ಅದಕ್ಕೆ ಪಟ್ಟ ಬವಣೆಯನ್ನು ಈ ಸುಂದರ ವೇಳೆಯಲ್ಲಿ ಪ್ರತಿಯೊಬ್ಬ ಕನ್ನಡಿಗನೂ ಸ್ಮರಣೆಗೆ ತಂದುಕೊಳ್ಳುವುದುತ್ತಮ. ಸಮಗ್ರ ಭಾರತದ ಆರಾಧ್ಯ ದೇವನಾದ ಆಂಜನೇಯನು ಶುದ್ಧ ಕನ್ನಡಿಗನೆಂಬುದನ್ನು ಪ್ರತಿಯೊಬ್ಬ ಕನ್ನಡಿಗನೂ ಈ ಶುಭದ ವೇಳೆಯಲ್ಲಿ ಸ್ಮರಿಸಬೇಕು.

ಈ ರಾಜ್ಯೋತ್ಸವದ ವೇಳೆಯಲ್ಲೇ ಕರ್ನಾಟಕ ಚಳವಳಿಯ ಸಿಂಹಾವಲೋಕನ ಮತ್ತು ಇದರ ವೈಶಿಷ್ಟ್ಯದ ಕುರಿತು ನಾಲ್ಕು ಮಾತನಾಡುವುದುತ್ತಮ. ಕರ್ನಾಟಕ ಪ್ರಾಂತ ರಚನೆಯ ಚಳವಳಿಯು ೨೦ – ೭ – ೧೮೯೦ ರಲ್ಲಿ ಧಾರವಾಡದಲ್ಲಿ ಜನ್ಮವೆತ್ತಿತು. ಕರ್ನಾಟಕ ಏಕೀಕರಣದ ಮೊತ್ತಮೊದಲಿನ ಗೊತ್ತುವಳಿಯು ೭ – ೧೦ – ೧೯೧೭ ರಂದು ಸ್ವೀಕೃತವಾಯಿತು. ೧೯೨೪ ರಲ್ಲಿ ಬೆಳಗಾವಿಯಲ್ಲಿ ಕರ್ನಾಟಕ ಏಕೀಕರಣದ ಸಂಘವು ಸ್ಥಾಪಿಸಲ್ಪಟ್ಟಿತು. ಅಂದಿನಿಂದ ಕನ್ನಡಿಗರ ಚಳವಳಿಯು ಭರದಿಂದ ನಡೆಯುತ್ತ ಬಂತು. ೧೯೨೭ ರಲ್ಲಿ ಅಖಿಲ ಭಾರತ ಕಾಂಗ್ರೆಸ್ಸು ಮುಂಬಯಿ ಅಧಿವೇಶನದಲ್ಲಿ ಮೊತ್ತಮೊದಲು - ಆಂಧ್ರ ಮತ್ತು ಸಿಂಧ್ ಗಳಂತೆ ಕರ್ನಾಟಕ ಪ್ರಾಂತ ರಚನೆಯನ್ನು ಮಾಡಬೇಕೆಂದು ನಿರ್ಧರಿಸಿತು. ಈ ಸಮಿತಿಗೆ ಕರ್ನಾಟಕದ ಪರವಾಗಿ ಕರ್ನಾಟಕ ಪ್ರಾಂತಿಕ ಕಾಂಗ್ರೆಸ್ಸು ಶ್ರೀ ರಂಗನಾಥ ರಾಮಚಂದ್ರ ದಿವಾಕರರನ್ನು ಕಳುಹಿಸಿತು. ಕನ್ನಡಿಗರ ಸಾಹಸದ ಫಲವಾಗಿ, ಈ ಸಮಿತಿಯು ಕರ್ನಾಟಕ ಪ್ರಾಂತ ರಚನೆಗೆ ತನ್ನ ಒಪ್ಪಿಗೆಯನ್ನು ಕೊಟ್ಟಿತು. ಮಹಾತ್ಮಾ ಗಾಂಧಿಯವರೂ ಕರ್ನಾಟಕ ಪ್ರಾಂತ ರಚನೆಗೆ ತನ್ನ ಬೆಂಬಲವುಂಟೆಂದು ಸಾರಿದ್ದರು. ೧೯ – ೧ - ೧೯೪೬ ರಲ್ಲಿ ನಡೆದ ಕರ್ನಾಟಕ ಏಕೀಕರಣ ಪರಿಷತ್ತಿನ ೧೦ ನೆಯ ಅಧಿವೇಶನವು ಮುಂಬಯಿಯಲ್ಲಿ ಶ್ರೀ ಬಿ. ಜಿ. ಖೇರರ ಅಧ್ಯಕ್ಷತೆಯಲ್ಲಿ ಜರುಗಿದಾಗ ಶ್ರೀ ವಲ್ಲಭಭಾಯಿ ಪಟೇಲರು ಈ ಪರಿಷತ್ತನ್ನು ಉದ್ಘಾಟಿಸುತ್ತಾ ಕರ್ನಾಟಕ ಪ್ರಾಂತ ರಚನೆ ಆಗಲೇಬೇಕೆಂದು ಒತ್ತಿ ಹೇಳಿದ್ದರು. ಈ ಎಲ್ಲಾ ಪ್ರಾತಃಸ್ಮರಣೀಯರ ನಾಮವನ್ನು ಇಂದಿನ ಈ ಶುಭ ಸನ್ನಿವೇಶದಲ್ಲಿ ನಾವೆಲ್ಲಾ ಸ್ಮರಿಸಬೇಕಾದುದು ನಮ್ಮ ಆದ್ಯ ಕರ್ತವ್ಯ. ಇನ್ನು ದರ್ ಸಮಿತಿ, ತ್ರಿಮೂರ್ತಿ ಸಮಿತಿ, ೨೭ – ೫ – ೧೯೫೩ ರಲ್ಲಿ ಶ್ರೀ ಕೆ. ಆರ್. ಕಾರಂತರ ಅಧ್ಯಕ್ಷತೆಯಲ್ಲಿ ದಾವಣಗೆರೆಯಲ್ಲಿ ಜರುಗಿದ ಅಖಿಲ ಕರ್ನಾಟಕ ರಾಜ್ಯ ನಿರ್ಮಾಣ ಪರಿಷತ್ತನ್ನೂ ಈಗ ಇಲ್ಲಿ ಸ್ಮರಿಸಬೇಕಾಗಿದೆ. ಈ ಎಲ್ಲಾ ಪರಿಷತ್ತು ಸಂಘಗಳ ಸಾಹಸದ ಫಲವಾಗಿ ಕರ್ನಾಟಕ ಪ್ರಾಂತ ರಚನೆಗೆ ೩೧ – ೮ – ೧೯೫೬ ರಲ್ಲಿ ರಾಷ್ಟ್ರಪತಿಗಳ ಒಪ್ಪಿಗೆ ದೊರೆತು ವಿಶಾಲ ಕರ್ನಾಟಕದ ನಿರ್ಮಾಣವು ಮಹಾ ಮೈಸೂರು ಎಂಬ ಹೆಸರಿನಿಂದ ಉದಯಿಸಿತು. 

ಕರ್ನಾಟಕ ಏಕೀಕರಣದ ಮುಖ್ಯವಾದ ಒಂದು ಗುರಿ – ಕನ್ನಡ ನುಡಿಯ ಅಭಿವೃದ್ಧಿ ಮತ್ತು ಕನ್ನಡಿಗರ ಉದ್ಧಾರ. ಈಗ ನವೋದಯವಾದ ಕರ್ನಾಟಕವು ಕನ್ನಡ ಭಾಷಾ ಪ್ರೇಮಿಗಳ ನರ ನಾಡಿಗಳಲ್ಲಿ ನುಡಿಯೆಂಬ ಪೀಯೂಷವಾಹಿನಿಯನ್ನು ಇತೋಪ್ಯಧಿಕವಾಗಿ ಪ್ರವಹಿಸುತ್ತ “ಸ್ವಾತಂತ್ರ್ಯಾ ನಂತರ – ಏಕೀಕರಣವಾದ ಮೇಲೆ – ಕರ್ನಾಟಕವು ಏನನ್ನು ಸಾಧಿಸಿಲ್ಲ?” ಎಂದು ವೀರ ಕನ್ನಡಿಗರ ಬಾಯಿಯಿಂದ ಕೇಳುವಂತೆ, ಸರ್ವತೋಮುಖ ಅಭಿವೃದ್ಧಿಯನ್ನು ಹೊಂದಲಿ ಎಂಬುದೇ ನಮ್ಮೆಲ್ಲರ ಆಶಯ ಮತ್ತು ಪ್ರಯತ್ನವಾಗಲಿ...”” 

    ಇದು ಸುಮಾರು 45 ವರ್ಷಗಳ ಹಿಂದೆ ನಾನು ಮುಂದಿಟ್ಟ - ಅಂದು ಪ್ರಥಮ ಬಹುಮಾನವನ್ನು ಪಡೆದ ಭಾಷಣ. ಆಗ ನಾನು ಯಂತ್ರವಾಗಿದ್ದೆ; ಅಪ್ಪಯ್ಯನು ಯಂತ್ರವಾಹಕರಾಗಿದ್ದರು. ಬಹುಶಃ ಭಾಷೆಯ ಭಾವ, ಅಕ್ಷರದ ಆತ್ಮವನ್ನು ಓಲೈಸುವಂತೆ....... ಅಂದು ಪ್ರಖರವಾಗಿ ಮಾತನಾಡುತ್ತಿದ್ದ ನನ್ನನ್ನು - ತಮ್ಮ ಕಣ್ಣಿನಲ್ಲಿಯೇ ಮುದ್ದಾಡುತ್ತ - ತಮ್ಮೊಳಗಿನ ಭಾವ ಪ್ರಕಟಣೆಯ ಮಾಧ್ಯಮವಾಗಿಯೂ ಅಪ್ಪಯ್ಯನು ನನ್ನನ್ನು ಆಗ ಬಳಸುತ್ತಿದ್ದರು ಎಂದೂ - ಒಮ್ಮೊಮ್ಮೆ ಅನ್ನಿಸುವುದಿದೆ. [ಅವರೇ ನೀಡಿದ ಸಾಹಿತ್ಯವನ್ನು ನನ್ನ ಬಾಯಿಂದ ಕೇಳಿಸಿಕೊಂಡು ಅಪ್ಪಯ್ಯ ಭಾವುಕರಾಗುತ್ತಿದ್ದುದೂ ಇತ್ತು.] ಯಾವ ವಿಷಯವನ್ನು ಒದಗಿಸಿದರೂ ಅದನ್ನು ಪೂರ್ತಿಯಾಗಿ ನನ್ನದಾಗಿಸಿಕೊಂಡು, ಸಮರ್ಥವಾಗಿ ಪ್ರಸ್ತುತಪಡಿಸುವ ಶಕ್ತಿಯು ಬಹುಶಃ ನನಗೆ ಜನ್ಮಜಾತವಾಗಿಯೇ ಬಂದಿತ್ತು. [ಅಮ್ಮನ ಬಳುವಳಿಯದು!!] ಅದನ್ನು ಗುರುತಿಸಿದ್ದ ಅಪ್ಪಯ್ಯನು ಆ ಶಕ್ತಿಯನ್ನು ವಿಧ ವಿಧದಿಂದ ಪಳಗಿಸಿ, ನುಣುಪುಗೊಳಿಸಿ, ಕ್ಲಿಷ್ಟ ಶಬ್ದಗಳನ್ನೆಲ್ಲ ನನ್ನ ನಾಲಗೆಯಲ್ಲಿ ಉರುಳಾಡಿಸಿ ಖುಷಿಯಿಂದ ಬೀಗುತ್ತಿದ್ದರು! ಅಪ್ಪಯ್ಯನು ಸಾಂದರ್ಭಿಕವಾಗಿ ನನ್ನನ್ನು ದಾಳವಾಗಿ ಉರುಳಿಸುತ್ತಿದ್ದ ಕಾಲವದು. ಬೇಸರವಿಲ್ಲದೆ ನನ್ನನ್ನು ಒಪ್ಪಗೊಳಿಸುತ್ತಿದ್ದ ಅವರ ನಿರ್ದೇಶನವನ್ನು ಪಾಲಿಸುವುದಷ್ಟೇ ನನ್ನ ಅಂದಿನ ಕೆಲಸವಾಗಿತ್ತು.

    ಪ್ರತೀ ವರ್ಷವೂ ರಾಜ್ಯೋತ್ಸವದ ದಿನದಂದು ನಮ್ಮ ಕುಂದಾಪುರದ ಶಾಲೆಯಲ್ಲಿ ಆಗ - ಭಾಷಣ ಸ್ಪರ್ಧೆ, ಕನ್ನಡ ಭಾವಗೀತೆಗಳ ಸ್ಪರ್ಧೆ, ಪ್ರಬಂಧ ಸ್ಪರ್ಧೆಗಳೆಲ್ಲವೂ ನಡೆಯುತ್ತಿದ್ದವು. ಅವುಗಳಲ್ಲಿ ಒಂದೆರಡಾದರೂ ಬಹುಮಾನ ಹೊಡೆಯುವ ಸ್ಪರ್ಧೆಯು ನಮ್ಮ ಮನೆಯ ಸದಸ್ಯರಲ್ಲೇ ಇತ್ತು. ಭಾವಗೀತೆಗಳಲ್ಲಿ ನನಗೆ ಬಹುಮಾನವು ಖಾತ್ರಿಯಾಗಿದ್ದರೆ ಪ್ರಬಂಧದಲ್ಲಿ ನನ್ನ ಅರುಣಕ್ಕನು ಮುಂದಿರುತ್ತಿದ್ದಳು. ಪ್ರೌಢ ಶಾಲೆಗೆ ಬಂದ ಹೊಸತರಲ್ಲಿ, ನಾನು 8 ನೇ ತರಗತಿಯಲ್ಲಿದ್ದಾಗ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿರಲಿಲ್ಲ. ಆದರೆ ಆ ಸ್ಪರ್ಧೆಯನ್ನು ನೋಡಲು ಹೋಗಿದ್ದೆ. ಅಂದು 10 ನೇ ತರಗತಿಯ ಒಬ್ಬಳು ವಿದ್ಯಾರ್ಥಿನಿಯು ಭಾಷಣದಲ್ಲಿ ಪ್ರಥಮ ಬಹುಮಾನ ಪಡೆದಿದ್ದಳು. ಅವಳ ಭಾಷಣವನ್ನು ಕೇಳಿದ್ದ ನಾನು ಮತ್ತು ನನ್ನ ಸಹೋದರಿಯು, ಮನೆಗೆ ಬಂದ ನಂತರವೂ ಆಕೆಯ ಭಾಷಣದ ಕುರಿತು ಮೆಚ್ಚುಗೆಯ ಮಾತನಾಡಿದ್ದೆವು. ಆಗ ನಮ್ಮ ಮಾತನ್ನು ಕೇಳಿಸಿಕೊಂಡ ಅಪ್ಪಯ್ಯನು “ಬರುವ ವರ್ಷದ ಸ್ಪರ್ಧೆಯಲ್ಲಿ ನೀವೂ ಭಾಗವಹಿಸಿ... ಅದೇ ನೆವನದಲ್ಲಿ ಒಂದಷ್ಟು ವಿಷಯಗಳನ್ನೂ ತಿಳಿದುಕೊಂಡಂತಾದೀತು...” ಅಂದಿದ್ದರು. ಮುಂದೆ... ಶಾಲೆಯಿಂದ ದಿನಕ್ಕೊಂದು ಸೊಟ್ಟ ಸುದ್ದಿಯನ್ನು ಸಂಪಾದಿಸುತ್ತ ಅನ್ಯ ಪ್ರಸಂಗಗಳಲ್ಲಿಯೇ ಮುಳುಗಿಹೋಗುತ್ತಿದ್ದ ನಮಗೆ ಅಪ್ಪಯ್ಯನ ಆ ಸೂಚನೆಯು ಮರೆತೇ ಹೋಗಿತ್ತು. ಮತ್ತೊಮ್ಮೆ ಅಕ್ಟೋಬರ್ ತಿಂಗಳು ಬರುವ ವರೆಗೂ ನಮಗೆ ಅಪ್ಪಯ್ಯ ಕೊಟ್ಟ "ಗುರಿಯ ಗಾಂಭೀರ್ಯ" ಇರಲಿಲ್ಲ. ಮುಂದಿನ ವರ್ಷದ ಅಕ್ಟೋಬರದಲ್ಲಿ ಒಂದು ದಿನ, “ರಾಜ್ಯೋತ್ಸವದ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸುವವರು ತಮ್ಮ ಹೆಸರನ್ನು ಕೊಡಬೇಕು...” ಎಂಬ ಸೂಚನೆಯು ತರಗತಿಗೆ ಬಂದಾಗ, ಅಪ್ಪಯ್ಯನ ಅನುಮತಿ ಪಡೆದು ನಾನೂ ಹೆಸರು ಕೊಟ್ಟೆ. ಅದೇ ದಿನ, ನಾನು 5 ನಿಮಿಷ ಮಾತನಾಡುವಷ್ಟು ವಿಷಯವನ್ನು ಅಪ್ಪಯ್ಯ ಒದಗಿಸಿದರು. ಅಕ್ಟೋಬರ್ ಅಂತ್ಯದಲ್ಲಿ ನನ್ನ ಬಾಯಿಂದ ಭಾಷಣವನ್ನು ಹೇಳಿಸಿಯೂ ಕೇಳಿದ್ದರು. ಆಮೇಲೆ, “ಈ ಬಾರಿಯ ಕಂಬಳದಲ್ಲಿ ಯಾವ ಕೋಣ ಗೆಲ್ಲುತ್ತದೆ – ನೋಡುವ...” ಎಂದೂ - ಮುಗುಮ್ಮಾಗಿ ಮುಗುಳ್ನಕ್ಕಿದ್ದರು.
 

    ಅಂದೂ... ಹಿಂದಿನ ವರ್ಷದ ಬಹುಮಾನ ವಿಜೇತೆಯು ಭಾಷಣ ಮಾಡುವವಳಿದ್ದಳು. ಸ್ಪರ್ಧಾಳುಗಳ ಪಟ್ಟಿಯಲ್ಲಿ, ಅವಳು ನನಗಿಂತ ಮೊದಲೇ ಮಾತನಾಡಬೇಕಿತ್ತು. ಆದರೆ ಅದಾಗಲೇ ಶಾಲೆಯಲ್ಲಿ ಸಾಕಷ್ಟು ಅಧಿಕಪ್ರಸಂಗ ಮಾಡಿ ಜೀರ್ಣಿಸಿಕೊಂಡಿದ್ದ ನಾನು - ಅಂದು ಸ್ಪರ್ಧಾಳುವಾಗಿ ನಿಂತದ್ದನ್ನು ಕಂಡ ಅವಳು, “ಸರ್, ನಾನು ಕೊನೆಯಲ್ಲಿ ಮಾತನಾಡುತ್ತೇನೆ..” ಎಂದು ಅಧ್ಯಾಪಕರಿಗೆ ಹೇಳಿ ತನ್ನ ಹೆಸರನ್ನು ಪಟ್ಟಿಯ ಕೊನೆಯಲ್ಲಿ ಹಾಕಿಸಿಕೊಂಡಿದ್ದಳು. ಯಾವುದೇ ಚೌಕಾಸಿಗೆ ಹೋಗದ ನನ್ನ ಸರದಿಯು ಬಂದಾಗ, ವೇದಿಕೆ ಹತ್ತಿದ್ದ ನಾನು, ಆ ತರಗತಿಯ Platform ನ್ನು ಪೂರ್ತಿಯಾಗಿ ಆವರಿಸಿಕೊಂಡು ಅಸ್ಖಲಿತವಾಗಿ 5 ನಿಮಿಷ ಪೂರ್ತಿ ಹಾವಭಾವದೊಂದಿಗೆ ಹಿಂದು ಮುಂದಿಲ್ಲದ ಒಡ್ಡು ಧೈರ್ಯದಿಂದ ಮಾತನಾಡಿ  ಕೆಳಗಿಳಿಯುವಾಗ - “ಆಕೆಯು” ಕಿಟಕಿಯಲ್ಲಿ ಇಣುಕುತ್ತಿದ್ದಳು. ಅನಂತರ ಅವಳ ಹೆಸರನ್ನು ಕರೆದಾಗ, “ನಾನು ಹೆಸರನ್ನು ಹಿಂದೆಗೆದುಕೊಳ್ಳುತ್ತೇನೆ...” ಎಂದು ಹೇಳಿ ಅವಳು ಹೊರಟೇ ಹೋಗಿದ್ದಳು! 
ಬಲು ಜಾಣೆ. 

  ಅಂದು ಪ್ರಥಮ ಬಹುಮಾನವು ನನಗೇ (ಅಪ್ಪಯ್ಯನಿಗೆ!) ಬಂತು. ಇದರಿಂದ ಆದ ಪರಿಣಾಮ ಏನೆಂದರೆ ಆ ಭಾಷಣಗಾರ್ತಿ ” ಯು ಮುಂದೆಂದೂ ನನ್ನ ಜೊತೆಗೆ ಸಹಜವಾಗಿರಲಿಲ್ಲ! ಅವಳೂ ಉತ್ತಮ ಮಾತುಗಾರಳೇ ಆಗಿದ್ದಳು. ಆದರೆ ಅಂದಿನ ನನ್ನ ಮಾತಿನ ಓಘವನ್ನು ಅವಳಲ್ಲ - ಯಾರೇ ಬಂದರೂ ತಡೆದುಕೊಳ್ಳಲು ಕಷ್ಟವಿತ್ತು. (ಪೂರ್ತಿ ಇಂಧನ ತುಂಬಿದ ಸುಸ್ಥಿತಿಯಲ್ಲಿದ್ದ ಅಂದಿನ ಗಾಡಿ ನನ್ನದು!) ಅವಳು... "ಒಂದು ವಿಧದ ಬುದ್ಧಿವಂತೆಯೂ ಆಗಿದ್ದಳು" - ಎಂದು ನನಗಾಗ ಅನ್ನಿಸಿತ್ತು. ಆದ್ದರಿಂದಲೇ ಸೋಲುವ ಆಟದಿಂದ ನಯವಾಗಿ ಹಿಂದೆ ಸರಿದಿದ್ದಳು. ಹೀಗೆ ಮನುಷ್ಯ ವರ್ತನೆಗಳೆಲ್ಲವೂ ಸಾಂದರ್ಭಿಕವಾಗಿ ಅನುಭವಕ್ಕೆ ಬರುವುದೂ ಕೂಡ ಬದುಕಿನ ಸಂಪಾದನೆಗಳೇ ಅಲ್ಲವೇ?

    ಅಂದು ನಾನು ಬಹುಮಾನ ವಿಜೇತೆಯಾಗಿ ಬಂದಾಗ - ಅಪ್ಪಯ್ಯನಿಗೆ (ಬಹುಶಃ) ನನಗಿಂತಲೂ ಹೆಚ್ಚು ಆನಂದವಾಗಿತ್ತು. ಅನಂತರ ಅಪ್ಪಯ್ಯನು... ನನ್ನ ಕನ್ನಡದ ಓದನ್ನು - ಗುಣಮಟ್ಟದ ಓದನ್ನಾಗಿ ಪರಿವರ್ತಿಸಲು ವಿಶೇಷ ಗಮನ ಹರಿಸಿದರು. ಜತೆಗೆ... ”ಗೆಲ್ಲುವುದಕ್ಕಾಗಿಯೇ ಬಾಲ್ಯದಲ್ಲಿ ಸ್ಪರ್ಧಿಸುವುದಲ್ಲ; ಪ್ರತಿಯೊಂದು ಸ್ಪರ್ಧೆಯಿಂದಲೂ ವಿಷಯ ಸಂಗ್ರಹದ ವ್ಯಾಪ್ತಿಯು ಹೆಚ್ಚಬೇಕು; ಅದಕ್ಕೆ ಯಾವುದೇ ಸ್ಪರ್ಧೆಯೆನ್ನುವುದು ಒಂದು ಕಾರಣವಾಗಬೇಕು; ಸ್ಪರ್ಧೆಯನ್ನು ವಿಷಯಾಂತರಗೊಳಿಸಿ ಅದನ್ನು ವೈಯ್ಯಕ್ತಿಕ ನೆಲೆಗೆ ತರಬಾರದು... ಒಮ್ಮೊಮ್ಮೆ ಸೋತರೂ ಕುಸಿಯಬಾರದು; ಸ್ಪರ್ಧೆಯು ಪ್ರಬುದ್ಧತೆಯನ್ನು ತರಬೇಕು...” ಎಂದಿದ್ದರು.

  ಅಪ್ಪಯ್ಯನು ನಡೆಸುತ್ತಿದ್ದ ಇಂತಹ ತಾಲೀಮಿನಿಂದಾಗಿ ವೈಯ್ಯಕ್ತಿಕವಾಗಿ ನನಗೆ ದೊರೆತ ಲಾಭವು ಅಪಾರ. ಉದಾಹರಣೆಗೆ “ದರಹಸಿತ” ಎಂಬಂತಹ ಶಬ್ದಗಳು ನನ್ನನ್ನು ಸಂಧಿಸಿದಾಗ, ಆರಂಭದಲ್ಲಿ, ಅಪ್ಪಯ್ಯನಲ್ಲೇ ಕೇಳಿ ಶಬ್ದಾರ್ಥವನ್ನು ಸುಲಭವಾಗಿ  ತಿಳಿದುಕೊಳ್ಳುತ್ತಿದ್ದೆ. ಕೆಲವೊಮ್ಮೆ ಅಪ್ಪಯ್ಯನು ನಮ್ಮೆದುರಿಗೆ ಶಬ್ದಕೋಶವನ್ನಿಟ್ಟು ಹುಡುಕುವಂತೆ ಹೇಳುತ್ತಿದ್ದರು. “ನಿಘಂಟನ್ನು ನೋಡಿ ಅರ್ಥವನ್ನು ತಿಳಿದುಕೊಳ್ಳುವ ಶಕ್ತಿ ಬೆಳೆಸಿಕೋ.. ನೀನೇ ಹುಡುಕಾಡು..” ಎನ್ನುತ್ತ ಪುಸ್ತಕಗಳನ್ನು ಒದಗಿಸುತ್ತಿದ್ದರು. ಆಗ ನಾನು ನಿಘಂಟನ್ನು ಆಶ್ರಯಿಸುತ್ತಿದ್ದೆ. 

  ನಿಘಂಟನ್ನು ಅವಲಂಬಿಸಿದಾಗ ಕೆಲವು ಉಚಿತ ಲಾಭಗಳೂ ಆಗುತ್ತಿದ್ದವು. ವಿಶೇಷಣವಾಗಿ ಉಪಯೋಗವಾದಾಗ...ದರ = ಸ್ವಲ್ಪ, ಕೊಂಚ, ಈಷತ್ ಎಂದು ಅರ್ಥ, ಬೇರೆ ಸಂದರ್ಭಗಳಲ್ಲಿ ಬೇರೆ ಅರ್ಥಗಳೂ ಇವೆ; ಹಸಿತ = ವಿಶೇಷಣವಾಗಿ ಬಂದಾಗ... ಅರಳಿದ, ನಕ್ಕ, ಬಿರಿದ...ಇತ್ಯಾದಿ. ದರ ಹಸಿತ = ನಸುನಕ್ಕ, ಅರೆಬಿರಿದ... ಎಂದು ಅರ್ಥವಾಗುತ್ತದೆ – ಎಂದು ಅರಿತುಕೊಳ್ಳತೊಡಗಿದೆ. ದರಲೋಹಿತ = ಸ್ವಲ್ಪ ಕೆಂಪಾದ – (ಮುಂಜಾನೆಯ) ಅರುಣ ಕಿರಣ ಎಂದು ಅರ್ಥವಾಯಿತು. ರಾಗ = ಸಾಂದರ್ಭಿಕವಾಗಿ ಬಣ್ಣ ಎಂದುಕೊಳ್ಳಬೇಕು; ಎಲ್ಲ ಸಂದರ್ಭಗಳಲ್ಲೂ ಅದು ಸ್ವರಾಲಾಪವಲ್ಲ ಎಂಬುದೂ ತಿಳಿಯಿತು. ಹರಿತ = ಸಂಸ್ಕೃತದಲ್ಲಿ ಹಸಿರು ಎಂದರ್ಥ – ಎಂದು.....ಹೀಗೇ...ನನಗೆ ಎದುರಾದ ಶಬ್ದಗಳಿಗೆ ಮತ್ತೆ ಮತ್ತೆ ಸುತ್ತು ಬರತೊಡಗಿದೆ. ಈ ಹುಡುಕಾಟದಲ್ಲಿ ಮುಳುಗಿದಾಗ, ದರಮೀಲಿತ, ದರಹಾಸ, ದರದರ ದುರುದುರು... ಇತ್ಯಾದಿಗಳೆಲ್ಲವೂ ನನ್ನ ತಂಟೆ ಕಣ್ಣಿಗೆ ಬಿದ್ದು ತಲೆ ಸೇರಿದವು. ನಿಘಂಟು ನನಗೆ ಪ್ರಿಯವೆನಿಸತೊಡಗಿತು. ಬರಬರುತ್ತ ಮನುಷ್ಯರಿಗಿಂತ ಅಕ್ಷರ, ಶಬ್ದಗಳೇ ಹೆಚ್ಚು ಪ್ರಿಯವೆನ್ನಿಸತೊಡಗಿದವು! (ಅದಕ್ಕೇ ನನ್ನ ಬದುಕಿನ 60 ವರ್ಷಗಳನ್ನು ನನಗೆ ಪ್ರಿಯವಾದ ಶಬ್ದ ವಾರಿಧಿಯಲ್ಲಿಯೇ ತೇಲಿಸಿದೆ! ಅದು ವರವಲ್ಲದೆ ಇನ್ನೇನು?)

    ತಮ್ಮ ಸ್ವಂತ ಮಕ್ಕಳನ್ನು ತರಬೇತುಗೊಳಿಸುವ ಹೊತ್ತಿನಲ್ಲಿ - "ಪಂಡಿತ ಪರಂಪರೆ" ಯ ಅಧ್ಯಾಪಕರಾಗಿದ್ದ ನನ್ನ ಅಪ್ಪಯ್ಯನು ನಿವೃತ್ತರಾಗುವ ಹಂತದಲ್ಲಿದ್ದರು. ಆರೋಗ್ಯದೊಂದಿಗೆ ಉತ್ಸಾಹವೂ ಕುಗ್ಗಿತ್ತು. ಆದರೆ ಅವರ ಅಧ್ಯಾಪಕ ವೃತ್ತಿಯ ಸೇವಾವಧಿಯಲ್ಲಿ ಅನೇಕ ವಿದ್ಯಾರ್ಥಿಗಳನ್ನು ಕಡೆದು ಶಿಲ್ಪವಾಗಿಸಲು ಅವರು ಪ್ರಯತ್ನಿಸಿದ್ದರು. ನನ್ನ ಅಮ್ಮನೂ ಅವರ ಶಿಷ್ಯಳೇ. ಅವಳನ್ನು ತರಬೇತುಗೊಳಿಸುವ ಹಂತದಲ್ಲಿ 32 ರ ಹರೆಯದಲ್ಲಿದ್ದ ಅಪ್ಪಯ್ಯನು, ಆಂಜನೇಯನ ಅನುಯಾಯಿಯಾಗಿ ಗೃಹಸ್ಥಾಶ್ರಮಕ್ಕೆ ಬೆನ್ನು ಹಾಕಿ ದೂರವುಳಿದಿದ್ದರು. ಆದರೆ 14 ರ ಹರೆಯದ ಅಮ್ಮನ ಸಂಗೀತ ಪ್ರತಿಭೆಗೆ ಒಲಿದು ತಮ್ಮ ವ್ರತಭಂಗಕ್ಕೆ ಮನಸ್ಸು ಮಾಡಿದ ಅಪ್ಪಯ್ಯ ಅವರು! ಅವರು ಅಕ್ಷರವನ್ನು ಪ್ರೀತಿಸಿದ್ದು ಮಾತ್ರವಲ್ಲ; ಅಕ್ಷರ ಹೊಮ್ಮಿಸುವ ಜೀವಂತ ಯಂತ್ರಗಳೆಲ್ಲವನ್ನೂ ಪ್ರೀತಿಸುತ್ತಿದ್ದರು. ಅವರ ಅನೇಕ ವಿದ್ಯಾರ್ಥಿಗಳ ಪ್ರಬಂಧಗಳನ್ನು ತಿದ್ದುವಾಗ, ಉತ್ಕೃಷ್ಟ ಅನ್ನಿಸಿದರೆ, ಮನೆಮಂದಿಗೆಲ್ಲ ಓದುವಂತೆ ಹೇಳುತ್ತಿದ್ದರು. 

  ತಮ್ಮ ವಿದ್ಯಾರ್ಥಿಗಳನ್ನು ಅಂತರ್ಶಾಲಾ ಸ್ಪರ್ಧೆಗಳಿಗೆ ಅಪ್ಪಯ್ಯನು ಸಿದ್ಧಗೊಳಿಸಿದ ಅನೇಕ ಉದಾಹರಣೆಗಳಿವೆ. ಅವೆಲ್ಲವೂ ಕೋಟೇಶ್ವರದಲ್ಲಿ ನಡೆದ ಅಪ್ಪಯ್ಯನ ಪಠ್ಯೇತರ ವ್ಯಾಯಾಮಗಳು. ಅವರ ಮಕ್ಕಳಾದ ನಾವು, ಆಗ ಕಿರಿಯ ವಯಸ್ಸಿನ ಬೇಜವಾಬ್ದಾರಿಯವರಾಗಿದ್ದು ಹುಡಿತಂಟೆಯಲ್ಲದೆ ಇನ್ನೊಂದರಲ್ಲಿ ಆಸಕ್ತಿಯಿಲ್ಲದವರಾದುದರಿಂದ ಅಂದಿನ ಆಗುಹೋಗುಗಳೆಲ್ಲವೂ ನಮ್ಮ ತಲೆಯಲ್ಲಿ ಗಟ್ಟಿಯಾಗಿ ದಾಖಲಾಗಿಲ್ಲ. ಆದರೆ ಅಮ್ಮನ ಬಾಯಿಂದ ಕೇಳಿದಂತೆ, ಅವರ ಒಬ್ಬ ವಿದ್ಯಾರ್ಥಿಯು ತನ್ನ ಸುಂದರ ಅಕ್ಷರ, ಪ್ರಬುದ್ಧ ಬರಹದಿಂದ ಅಪ್ಪಯ್ಯನನ್ನು ಮರುಳುಗೊಳಿಸಿದ್ದನಂತೆ. ಆದರೆ ಪರೀಕ್ಷೆಯಲ್ಲಿ ಎಲ್ಲ ಪ್ರಶ್ನೆಗಳಿಗೂ ಉತ್ತರಿಸದೆ, ಕೇವಲ ಪಾಸಾಗುವಷ್ಟು ಮಾತ್ರ ಬರೆದು ಎದ್ದುಹೋಗುವ ಅಭ್ಯಾಸದವನಂತೆ. ಅವನನ್ನು ಮನೆಗೆ ಕರೆದುಕೊಂಡು ಬಂದು ಉಪಚರಿಸಿ, “ಪರೀಕ್ಷೆಯನ್ನು ಹಗುರವಾಗಿ ಭಾವಿಸಬಾರದು” – ಎಂದು ಅಪ್ಪಯ್ಯನು ಕಿವಿ ಮಾತನ್ನೂ ಹೇಳಿದ್ದರಂತೆ. ಅವನ ಉತ್ತರ ಪತ್ರಿಕೆಯನ್ನು ಅಮ್ಮನಿಗೆ ತೋರಿಸಿ, “ಎಷ್ಟು ಪ್ರೌಢ ಪ್ರಬಂಧವನ್ನು ಬರೆದಿದ್ದಾನೆ ನೋಡು... ಆದರೆ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿಲ್ಲ. ಇವನಿಗೆ ತುಂಬ ಅಂಕಗಳನ್ನು ಕೊಡಬೇಕು ಅನ್ನಿಸಿದರೂ ಕೊಡುವುದಾದರೂ ಹೇಗೆ?” ಎಂದು ಅಲವತ್ತುಕೊಳ್ಳುತ್ತಿದ್ದರಂತೆ. ಅನಂತರ ಆ ಹುಡುಗನು ತನ್ನ ಓದನ್ನು ಮುಂದುವರಿಸದೆ ಭಾರತೀಯ ಸೇನೆಯನ್ನು ಸೇರಿಕೊಂಡನೆಂದೂ ಅಮ್ಮನಿಗೆ ಅಪ್ಪಯ್ಯ ಹೇಳಿದ್ದರಂತೆ.

                                   

    ತಮ್ಮ ಶಾಲಾ ದಿನಚರಿಗೂ ವೇಳಾ ಪಟ್ಟಿ, ವಿಷಯ ಪಟ್ಟಿಯನ್ನು ತಾವೇ ನಿಗದಿ ಪಡಿಸಿಕೊಂಡು ಶಿಸ್ತಿನಿಂದ ಪಾಠಕ್ರಮವನ್ನು ರೂಢಿಸಿ ಆಚರಿಸುತ್ತಿದ್ದ - ನಮ್ಮ ಅಪ್ಪಯ್ಯ ಅವರು. ಪಾಠವನ್ನು ಗ್ರಹಿಸುವಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಅವರೆಂದೂ ಶಿಕ್ಷಿಸಿದ್ದನ್ನು ನಾವು ಕಂಡಿಲ್ಲ; ಕೇಳಿಲ್ಲ. ಪಾಠದಲ್ಲಿ ಹಿಂದೆ ಬೀಳುವ - ಅಂತಹ ಮಕ್ಕಳನ್ನು ಪ್ರತ್ಯೇಕವಾಗಿ ಕರೆದು ಮತ್ತೊಮ್ಮೆ, ಮಗದೊಮ್ಮೆ ವಿವರಿಸುತ್ತಿದ್ದರು. ಆದರೆ ಶಾಲೆಯ ಶಿಸ್ತನ್ನು ಮತ್ತು ವಿದ್ಯಾರ್ಥಿಯ ಇತಿಮಿತಿಯನ್ನು ಮೀರುವ ವಿದ್ಯಾರ್ಥಿಗಳಿಗೆ ಮಾತ್ರ ಕಪಾಳಮೋಕ್ಷವಾಗುತ್ತಿತ್ತು. 

  ಶಾಲೆಯ ಅವಧಿಯು ಮುಗಿದ ನಂತರ ಪ್ರತೀ ದಿನವೂ ಅಪ್ಪಯ್ಯನು ದಪ್ಪದಪ್ಪದ ಪುಸ್ತಕಗಳನ್ನು ಓದುತ್ತಿದ್ದರು. ಓದಿ ಓದಿ ಕಣ್ಣಿಗೆ ಬಳಲಿಕೆಯಾದರೆ ಅದೇ ಸಪೂರದ ಮಂಚದ ಮೇಲೆ ಮಗ್ಗುಲಾಗಿ ಒರಗಿಕೊಂಡು ಕುಟುಕು ನಿದ್ದೆ ಮಾಡಿಬಿಡುತ್ತಿದ್ದರು. ಹತ್ತು ಹದಿನೈದು ನಿಮಿಷದಲ್ಲೇ - ಏನೋ ಅಪರಾಧ ಮಾಡಿದಂತೆ ದಡಬಡಿಸಿ ಏಳುತ್ತಿದ್ದುದೂ ನನಗೆ ನೆನಪಿದೆ. ರವಿವಾರದ ಬಹುಪಾಲು ಸಮಯವನ್ನು ಅವರು ಅಧ್ಯಯನದಲ್ಲಿಯೇ ಕಳೆಯುತ್ತಿದ್ದರು. ಯಾವುದೋ ಅಂಗಡಿಯ ಜಗಲಿಯಲ್ಲಿ ಕೂತು ಗೆಳೆಯರೊಂದಿಗೆ ಪಟ್ಟಾಂಗ ಹೊಡೆಯುತ್ತಿದ್ದ ಅಪ್ಪಯ್ಯನನ್ನು - ನಾವು ಕಂಡಿಲ್ಲ. ಯಾರ್ಯಾರದೋ ಮನೆಗೆ ಹೋಗಿ - "ಮತ್ತೆ ಹೇಗಿದ್ದೀರಿ? ಮಕ್ಕಳು, ಹಸು ಕರು... ಇತ್ಯಾದಿ ಚರ್ಚೆಗಳನ್ನು ನಡೆಸಿದ್ದಂತೂ ಇಲ್ಲವೇ ಇಲ್ಲ. 

  ಅಪ್ಪಯ್ಯನು ಗಂಭೀರವಾದ ಬರವಣಿಗೆಯಲ್ಲಿ ತೊಡಗಿಕೊಂಡಾಗ ನಾವು ಮಕ್ಕಳು ಮನೆಯಲ್ಲಿ ತರಲೆ ಎಬ್ಬಿಸಿದರೆ ಎರಡೇಟು ಬಿಗಿಯುತ್ತಿದ್ದುದೂ ಇತ್ತು. ಎಷ್ಟೇ ಕಾಡುಹರಟೆಗಳಿಂದ ದೂರವಾಗಿದ್ದರೂ ತಮ್ಮ ಮನೆಗೆ ಬಂದವರಲ್ಲಿ ಮಾತ್ರ ಅವರು ಸರಳವಾಗಿ ಬೆರೆಯುತ್ತಿದ್ದರು. ತಮಗೆ ಹೊಂದದ ವ್ಯಕ್ತಿ ಅನ್ನಿಸಿದರೆ, ಹೆಚ್ಚು ಮಾತಾಡುವ ಹೊಣೆಯನ್ನು ನಯವಾಗಿ ಅಮ್ಮನಿಗೆ ಒಪ್ಪಿಸಿ ಅಲ್ಲಿಂದ ಮಾಯವಾಗುತ್ತಿದ್ದರು. ಒಮ್ಮೊಮ್ಮೆ... ರಸವತ್ತಾಗಿ ಮಾತನಾಡುತ್ತ ತಮ್ಮ ವಿಚಾರಗಳತ್ತ ಅತಿಥಿಗಳನ್ನು ಸೆಳೆದು, ಅವರ ಹೋಕುಬಾರದ ಮಾತುಗಳ ದಾರಿತಪ್ಪಿಸುತ್ತಿದ್ದುದೂ ಇತ್ತು. ಯಾವುದೋ ಕಾರ್ಯಕ್ಕಾಗಿ ಮನೆಗೆ ಆಗಮಿಸಿದ್ದ ಅತಿಥಿಗಳು ತಾವು ಬಂದ ಕಾರ್ಯವನ್ನೇ ಮರೆತು ಅಪ್ಪಯ್ಯನ ಪ್ರವಚನವನ್ನು ಕೇಳಿಸಿಕೊಂಡು ಕೆಲವೊಮ್ಮೆ ಹಿಂದಿರುಗಿದ್ದೂ ಇದೆ; ಅದಕ್ಕಾಗಿ ಮತ್ತೊಮ್ಮೆ ಬರುವಂತಾದುದೂ ಇದೆ. “ಮೊನ್ನೆ ಬಂದಾಗ ನಾನು ಬಂದ ವಿಷಯವೊಂದನ್ನು ಬಿಟ್ಟು ಬೇರೆ ಎಲ್ಲವನ್ನೂ ಮಾತಾಡಿದ ಹಾಗಾಯ್ತು. ಮೊನ್ನೆ ಬಂದದ್ದು ಏಕೆಂದು ಈಗ ಹೇಳಿ ಹೋಗುತ್ತೇನೆ...” ಎನ್ನುತ್ತಿದ್ದ ಊರವರಿದ್ದರು. ಅತಿಥಿಗಳು ಹೋದ ನಂತರ ಅಮ್ಮನು ಅಪ್ಪಯ್ಯನನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಳು. “ಮನೆಗೆ ಬಂದವರು ಏನನ್ನೂ ಹೇಳಲು ಬಿಡದೆ ನಿಮ್ಮ ತತ್ವ ಸಿದ್ಧಾಂತವನ್ನೆಲ್ಲ ಅವರಿಗೆ ಯಾಕೆ ಹೇಳುತ್ತಿರಬೇಕು? ಅವರಿಗೆ ನಿಮ್ಮ ವಿಚಾರಗಳೆಲ್ಲ ಬೇಕಾ? ಅವರು ಬಂದ ಕೆಲಸವನ್ನು ಮಾಡಿಕೊಂಡು ಹೋಗಲು ಬಿಡಬೇಕಪ್ಪ...” ಎಂದು ಗೊಣಗುತ್ತಿದ್ದಳು. ಆಗ ಅಪ್ಪಯ್ಯ ನೀಡುತ್ತಿದ್ದ ಉತ್ತರ – “ನೋಡು, ಅವರಿಗೇ ಮಾತನಾಡಲು ಬಿಟ್ಟರೆ ನನ್ನ ದನ ಕರು ಹಾಕಿದೆ; ಮಗಳ ಹೆರಿಗೆ ಆಗಿದೆ; ಊಟಕ್ಕೆ ಸೌತೇ ಕಾಯಿಯ ಹುಳಿ ಮಾಡಿದ್ದೆ... ಎಂದೆಲ್ಲ ಶುರುಮಾಡುತ್ತಾರೆ. ಆಗ ನನ್ನ ಸಮಯ ವ್ಯರ್ಥವಾಗುತ್ತದೆ. ಅದಕ್ಕೇ ಒಂದಷ್ಟು ಉತ್ತಮ ವಿಷಯಗಳನ್ನು ಅವರಿಗೆ ಹೇಳಿದೆ. ಅವರೂ ಕೂತುಕೊಂಡು ಕೇಳಿದರಲ್ಲಾ? ಮಾತ್ರವಲ್ಲ, ಬೇಗ ಹೊರಟೂ ಹೋದರು... ಊರಿನ ಕೆಲವರು – ಹಟ್ಟಿ ಹಣೆ ಹೋರಿ ತಲೆ - ಎನ್ನುವಷ್ಟೇ ತಿಳಿದಿರಬೇಕೆಂದಿಲ್ಲ. ಎಲ್ಲರಿಗೂ ವಿಷಯಜ್ಞಾನ ಇರಲಿ ಬಿಡು. ಅಷ್ಟಾಗಿಯೂ ಅವರಿಗೆ ಆಸಕ್ತಿ ಹುಟ್ಟದಿದ್ದರೆ ಅದು ಅವರ ಕರ್ಮ... ಈಗ ನನಗೆ ನೀನು ಪಿರಿಪಿರಿ ಮಾಡಬೇಡ. ನಾನಿರುವುದು ಹೀಗೇ... ಏನು? ಸತ್ಯನಾರಾಯಣ ಪೂಜೆಗೆ ಆಹ್ವಾನ ಕೊಟ್ಟಿದ್ದಾರಲ್ವಾ? ನೀನು ಹೋಗಿ ಬಾ. ಅರಿವು ಎಂಬುದೇ ಪೂಜೆ. ಅದಿಲ್ಲದೆ ಎಂತಹ ಪೂಜೆ ಮಾಡಿದರೂ ಫಲವಿಲ್ಲ...” ಎನ್ನುತ್ತಿದ್ದರು. ಆದರೂ ಸಡಿಲವಾಗದ ಅಮ್ಮನ ಮುಖವನ್ನು ನೋಡುತ್ತ “ಹೋಗು, ನಿನ್ನ ಕೆಲಸ ಮಾಡು... ಊರಿನವರ ಚಿಂತೆಯಲ್ಲಿ ನೀನ್ಯಾಕೆ ಸೊರಗುವುದು?” ಎನ್ನುತ್ತ ಮುಗುಳ್ನಗುತ್ತಿದ್ದರು. ತಮಗೆ ಹಿತವೆನಿಸಿದ ಸಾಹಿತ್ಯಿಕ, ಧಾರ್ಮಿಕ ವಿಚಾರಗಳ ಮಾತು - ಚಿಂತನೆಯಲ್ಲಿ ಆಸಕ್ತಿಯಿಂದ ಮುಳುಗಿಹೋಗುತ್ತಿದ್ದ ಅಪ್ಪಯ್ಯನು ತೌಡು ಕುಟ್ಟುವ ನಿತ್ಯ ದುಃಖದ ಹರಟೆಯಿಂದ ಪ್ರಜ್ಞಾಪೂರ್ವಕವಾಗಿ ದೂರವಿರುತ್ತಿದ್ದರು. ತನ್ನ ಶಾಲೆಯ – ಮನೆಯ ಕೆಲಸಗಳು ಮತ್ತು ಸ್ವಂತ ಅಧ್ಯಯನದಲ್ಲಿಯೇ ಬದುಕನ್ನು ಸುಖಿಸಿದ ವ್ಯಕ್ತಿತ್ವವದು.




  ಶಾಲಾ ವಾರ್ಷಿಕೋತ್ಸವಗಳಿಗಾಗಿ ಅಪ್ಪಯ್ಯನು ಪ್ರತೀ ವರ್ಷವೂ ಪೌರಾಣಿಕ, ಚಾರಿತ್ರಿಕ, ಸಾಮಾಜಿಕ ನಾಟಕಗಳನ್ನು ಬರೆಯುತ್ತಿದ್ದುದನ್ನು ನಾನು ಕಂಡಿದ್ದೇನೆ. ಅದು ಹಿಂದಿನಿಂದಲೂ ನಡೆದುಕೊಂಡು ಬಂದ ಪದ್ಧತಿ. ತಾನು ಕನ್ನಡ ಅಧ್ಯಾಪಕನಾಗಿದ್ದ ಶಾಲೆಯ ಎಲ್ಲ ಸಾಹಿತ್ಯಿಕ ಅಗತ್ಯಗಳನ್ನೂ ಪೂರೈಸುವುದು ತನ್ನ ಕರ್ತವ್ಯವೆಂಬಂತೆ ಅವರು ಬದುಕಿದ್ದರು. ನಾನೂ ಕೂಡ ಅಪ್ಪಯ್ಯನು ಬರೆದ ಕೆಲವು ನಾಟಕಗಳಲ್ಲಿ ಅಭಿನಯಿಸಿದ್ದಿದೆ. (ಒಂದೆರಡು ಹಸ್ತಪ್ರತಿಗಳು ಈಗಲೂ ನನ್ನಲ್ಲಿವೆ. ಶೌರ್ಯ ಸಂಜೀವನ (ರಜಪೂತ ರಾಣಾ ಶಕ್ತಸಿಂಹ – ಮೊಗಲ್ ದೊರೆ ಅಕ್ಬರ್ ನ ನಡುವಿನ ಹೋರಾಟದ ಒಂದು ಕತೆ), ರಜಪೂತ ರಾಣಿ ಅಥವ ಭಕ್ತೆ ಮೀರೆ, ಮೋಹನಚಂದನ ಬಾಲ್ಯ... ಇತ್ಯಾದಿ.) ಅಂತೂ ವಿದ್ಯಾರ್ಥಿಗಳ ಪ್ರತಿಭೆಯ ಅನಾವರಣಕ್ಕಾಗಿ ತಮ್ಮ ಸೇವಾವಧಿಯ ಉದ್ದಕ್ಕೂ ಅಪ್ಪಯ್ಯ ತಮ್ಮಿಂದಾದಷ್ಟು ಶ್ರಮಿಸಿದ್ದರು. ಗುರಿತಪ್ಪದ ಬದುಕದು.


 

  ಅಪ್ಪಯ್ಯನು ಬರೆಯುತ್ತಿದ್ದ ನಾಟಕಗಳಲ್ಲಿ ಕೆಲವು ಪದ್ಯಗಳನ್ನೂ ಸೇರಿಸುತ್ತಿದ್ದರು. "ಶೌರ್ಯ ಸಂಜೀವನ" ಎಂಬ ನಾಟಕದಲ್ಲಿದ್ದ ಒಂದು ಪದ್ಯವು ನನಗಿನ್ನೂ ನೆನಪಿದೆ...ಸೂತ್ರಧಾರಳು ಹಾಡುವ ಹಾಡದು.

                        ಜೀವನದೊಳ್ ಪ್ರೇಮಮಿಲನ ಸದಾ ಮಹದಾನಂದಂ
                        ವಿಯೋಗ ದುಃಖ ಸ್ರೋತಂ ಮರ್ಮಾಹತ ನರಕ ಸದೃಶಂ
                        ಮೆಹರೆಯ ಜೀವನದಿ ಕಾಳರಾತ್ರಿಯ ದೃಶ್ಯಂ...//

  ಇದನ್ನು ಸಿಂಧು ಭೈರವಿ ರಾಗದಲ್ಲಿ ನಾನು ಹಾಡಿದ್ದೆ.

  ತಾವಿದ್ದ ಶಾಲೆಯಲ್ಲಿ ಯಾವುದೇ ವಿಶೇಷ ಸಂದರ್ಭಗಳ ಆಚರಣೆ ನಡೆದರೂ ಅಂತಹ ಸಂದರ್ಭಗಳ ಔಚಿತ್ಯ ಮತ್ತು ಮಹತ್ವವನ್ನು ತಮ್ಮ ವಿದ್ಯಾರ್ಥಿಗಳಿಗೆ ಅವರು ತಿಳಿಸುತ್ತಿದ್ದರು. ಉದಾಹರಣೆಗೆ : ದೀಪಾವಳಿ, ಯುಗಾದಿ, ಸ್ವಾತಂತ್ರ್ಯ ದಿನಾಚರಣೆ, ರಾಜ್ಯೋತ್ಸವ, ಕ್ರಿಸ್ ಮಸ್... ಇತ್ಯಾದಿ. ತರಗತಿಯ ಪಾಠದ ಅವಧಿಯಲ್ಲೇ ಸಂಕ್ಷೇಪವಾಗಿ ಹೇಳಿ ಭಾರತೀಯ ಸಂಸ್ಕೃತಿಯ ಪರಿಚಯವೂ ಇರುವಂತೆ ತಮ್ಮ ವಿದ್ಯಾರ್ಥಿಗಳನ್ನು ಪೋಷಿಸುತ್ತಿದ್ದರು. ವಾರ್ಷಿಕ ಪಠ್ಯ ಭಾಗದ ಜೊತೆಗೆ ಇತರ ಜ್ಞಾನಶಾಖೆಗಳತ್ತಲೂ ಮಕ್ಕಳು ಆಕರ್ಷಿತರಾಗುವಂತೆ ಮಾಡುತ್ತಿದ್ದ ನನ್ನ ಅಪ್ಪಯ್ಯನಿಂದ ನನಗಂತೂ ಮಹದುಪಕಾರವಾಗಿದೆ. ಕನ್ನಡ ರಾಜ್ಯೋತ್ಸವದ ದಿನದಂದು ನಮ್ಮ ಮನೆಯಲ್ಲಿ - ಕಡ್ಡಾಯವಾಗಿ,  ಪಾಯಸದೂಟವಿರುತ್ತಿತ್ತು!


                         ಊರಿನ ರಾಜ್ಯೋತ್ಸವದ ಹಬ್ಬದಲ್ಲೂ ನಮ್ಮ ಸಕ್ರಿಯ ಪಾತ್ರವಿರುತ್ತಿತ್ತು.




(ಕುಂದಾಪುರದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭ.
ಅತಿಥಿಗಳು : ಸರ್ವಶ್ರೀ ಎಂ.ಎಂ.ಹೆಗ್ಡೆ, ವೀರರಾಜೇಂದ್ರ ಹೆಗ್ಡೆ ಬಸ್ರೂರು, ಬನ್ನಂಜೆ ಗೋವಿಂದಾಚಾರ್ಯ.
ಕನ್ನಡ ಗೀತ ಗಾಯನ ; ಕುಮಾರಿ ಕಾತ್ಯಾಯನಿ, ನಾರಾಯಣಿ, ಪ್ರೇಮಲತ.
ಪಕ್ಕದಲ್ಲಿ ನಿಂತವರು ಆಯೋಜಕರಾದ ಶ್ರೀ A.S.N. ಹೆಬ್ಬಾರ್.)

    ಯಾವ ರಾಜಕೀಯಕ್ಕೂ ತಲೆ ಹಾಕದೆ - ಕನ್ನಡ ಕನ್ನಡ ಎನ್ನುತ್ತ ಕನ್ನಡವನ್ನು ಹೊತ್ತು ಮೆರೆಸಿದ, ಇನ್ನೆಷ್ಟೋ ಶಾಲಾ ವಿದ್ಯಾರ್ಥಿಗಳಿಗೂ ಕನ್ನಡದ ರುಚಿ ಹತ್ತಿಸಿ, ಬದುಕಿನುದ್ದಕ್ಕೂ ಕನ್ನಡವನ್ನು ಹೊತ್ತು ಕುಣಿದಾಡಿದವರು - ನನ್ನ ಅಪ್ಪಯ್ಯ. ಕನ್ನಡ ಭಾಷೆ, ಮಾತು, ನೆಲ-ಜಲದ ಸದಭಿಮಾನಿಗಳಾಗಿದ್ದ ಅಂದಿನ ಅನೇಕ ಕನ್ನಡೋಪಾಸಕರು ಮತ್ತು ಈಗಲೂ ಕನ್ನಡವನ್ನೇ ಆಶ್ರಯಿಸಿರುವ ಇಂತಹ ಎಲೆಮರೆಯ ಕೆಲವು ಕನ್ನಡ ಭಕ್ತರಿಂದಲೇ - ಕನ್ನಡವು ಉತ್ಕೃಷ್ಟ ಸುಭಗ ಭಾಷೆಯಾಗಿ ಇನ್ನೂ ಉಳಿದಿದೆ ಎಂದರೆ ಅದು ಅತಿಶಯೋಕ್ತಿಯಾಗದು. 
                                                    ***************

  “ಮೇಡಂ, ನಿವೃತ್ತರಾದ ಮೇಲೆ ಹೇಗೆ ಸಮಯ ಕಳೆಯುತ್ತೀರಿ?” ಎಂದು ಈಗ ನನ್ನನ್ನು ಎಷ್ಟೋ ಜನರು ಕೇಳುವುದಿದೆ. ಅವರ ಮಾತಿನಲ್ಲಿ - ಅದ್ಭುತವಾದ ಅಂತಹ (!) ಆಕಾಶವಾಣಿಯಿಂದ ಹೊರ ಬಂದರೆ ನೀರಿಂದ ಎತ್ತಿದ ಮೀನಿನಂತೆ ಚಡಪಡಿಸುವುದು ಸಹಜ – ಎಂಬ ಧ್ವನಿಯಿರುವುದನ್ನೂ ನಾನು ಗಮನಿಸಿದ್ದೇನೆ. ಇವರನ್ನೆಲ್ಲ - “ನಿವೃತ್ತಿಯು ನೌಕರಿಯ ಒಂದು ಭಾಗವೆಂದು ಯೋಚಿಸಲಾಗದ ಮುಗ್ಧರು” - ಎಂದು ತಿಳಿದುಕೊಳ್ಳುವ ಮುಗ್ಧತೆಯನ್ನು ನಾನು ಉಳಿಸಿಕೊಂಡಿದ್ದೇನೆ. ಅಂತಹ ಕುತೂಹಲಿಗಳಿಗೆ – “ನಾನು ನನ್ನದಲ್ಲದುದನ್ನು ಕೊಡವಿ ಬಿಸಾಡುವುದರಲ್ಲಿ ವಿಶೇಷ ಪರಿಣತಿ ಪಡೆದವಳು” - ಎಂದು ಹೇಳಿಕೊಳ್ಳಲು ಹೋಗುವುದಿಲ್ಲ. ಇದು ಹೆಮ್ಮೆಯಲ್ಲ; ನನ್ನ ಸ್ವಭಾವ. ಏಕೆಂದರೆ... ಎಂದಿಗೂ ವರ್ತಮಾನವು “ಭೂತ”ದ ಮೇಲೆ ಸವಾರಿ ಮಾಡಬೇಕೇ ಹೊರತು ಯಾವುದೇ “ಭೂತ”ವು ವರ್ತಮಾನದ ಹೆಗಲೇರಬಾರದು – ಎಂಬುದು ನನ್ನ ಮತ. ಆದ್ದರಿಂದ, ನನ್ನ ಕುರಿತು ಕುತೂಹಲದಿಂದ ಪ್ರಶ್ನೆ ಕೇಳಿದವರಿಗೆ ಹೇಗೆ ಅಂದುಕೊಂಡರೆ ತಮ್ಮಷ್ಟಕ್ಕೇ ಸುಖ ಸಿಗುತ್ತದೋ ಹಾಗೆ ಅಂದುಕೊಳ್ಳಲು ನಾನು ಬಿಟ್ಟುಬಿಡುತ್ತೇನೆ. ಆದರೆ ಅಪ್ಪಯ್ಯನು ರುಚಿ ಹತ್ತಿಸಿದ ಓದು-ಬರಹವು ನನ್ನ ಬೆನ್ನು ಬಿಡದೆ ಈಗಲೂ ನನ್ನೊಂದಿಗಿದೆ. ನಿಜವಾಗಿ ಹೇಳುವುದಾದರೆ ನಾನೀಗ ಮೊದಲಿಗಿಂತ Busy ಆಗಿದ್ದೇನೆ. ಉದ್ಯೋಗದ ಒತ್ತಡಗಳಿಲ್ಲದೆ ನಿರುಮ್ಮಳವಾಗಿ “ನಾನು, ನನ್ನ ಸಂಸಾರ ಮತ್ತು ನನ್ನ ಅಕ್ಷರ” ಎಂಬಂತಿದ್ದೇನೆ. ನನಗೆ ಅಕ್ಷರದ ರುಚಿ ಹತ್ತಿಸಿದ ಅಪ್ಪಯ್ಯನು ನನ್ನ ಜೊತೆಯಲ್ಲೇ ಇದ್ದು ಒಮ್ಮೊಮ್ಮೆ ಹೀಗೆಲ್ಲ ಪ್ರಕಟವಾಗಿ ಬಿಡುವುದೂ ಇದೆ. ತನ್ನ ಮಕ್ಕಳನ್ನು, ವಿದ್ಯಾರ್ಥಿಗಳನ್ನು - ಇಂತಹ ಸ್ವಸ್ಥ ಬದುಕಿಗೆ ಸಜ್ಜುಗೊಳಿಸುವ ಯಾವುದೇ ಅಧ್ಯಾಪಕರು ಆಪ್ತರಾಗುತ್ತಾರೆ. ಚಿರಸ್ಮರಣೀಯರಾಗುತ್ತಾರೆ.
                

  2014 ರಲ್ಲಿ ಕಾಂತಾವರ ಕನ್ನಡ ಸಂಘದವರು “ನಾಡಿಗೆ ನಮಸ್ಕಾರ” ಎಂಬ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥ ಮಾಲೆಯ ೯೭ ನೆಯ ಕುಸುಮವಾಗಿ ನನ್ನ ಅಪ್ಪಯ್ಯನನ್ನು ಕುರಿತು ಬರೆಯುವಂತೆ ಕೇಳಿದಾಗ ನಾನು “ಕೋಶ ಸಾಮ್ರಾಜ್ಯದ ಈಶ – ಯಜ್ಞನಾರಾಯಣ ಉಡುಪ” ಎಂಬ ಬರಹವನ್ನು ಅವರಿಗೆ ಒದಗಿಸಿದ್ದೆ. ಆ ಪುಸ್ತಕವು ಪ್ರಕಟವಾಗಿದೆ. ಕೇವಲ 40 ಪುಟಗಳ ಮಿತಿಯಿದ್ದುದರಿಂದ ಆ ಬರಹದಲ್ಲಿ ಅಪ್ಪಯ್ಯನ ಬದುಕಿನ ಹಲವು ಆಯಾಮಗಳನ್ನು ಸ್ಪರ್ಶಿಸುವುದಕ್ಕೆ ನನಗೆ ಸಾಧ್ಯವಾಗಿರಲಿಲ್ಲ. ಆ ಕೊರತೆಯನ್ನು ನೀಗಿಸಲು ಮತ್ತು ಮಗಳಾಗಿ, ಇದು ನನ್ನ ಕರ್ತವ್ಯದ ಭಾಗವೆಂದುಕೊಂಡು, ನನ್ನ ನೆನಪಿನಾಳದಲ್ಲಿ... ಹೇಳದೆ ಇನ್ನೂ ಉಳಿದುಕೊಂಡಿರುವ ಕೆಲವು ಸಂಗತಿಗಳನ್ನು ಈಗ ಬರೆಯುತ್ತಿದ್ದೇನೆ. ಆಸಕ್ತರು ಓದಲಿ ಎಂಬ ಉದ್ದೇಶದಿಂದ ಬರಹವನ್ನು ಆಗಿಂದಾಗ ನಿಮ್ಮ ಮುಂದಿಡುತ್ತಿದ್ದೇನೆ. 
                                              *****     *****     *****