Sunday, November 20, 2016

ಶ್ರೀ ರಾಮಕೃಷ್ಣ ಭಾವಮಂಜರಿ - 3




ಎಷ್ಟೋ ಬಾರಿ ನಮ್ಮ ಚಿಂತನೆಯ ಶೈಲಿಯೇ ಸತ್ಯಾನ್ವೇಷಣೆಗೆ ಪೂರಕವಾಗಿರುವುದಿಲ್ಲ; ಮುಖ್ಯವಾಗಿ ಬುದ್ಧಿವ್ಯಾಪಾರಿಗಳಲ್ಲಿ ಸತ್ಯವನ್ನು ಚೆಂಡಾಡುವ ಹುಮ್ಮಸ್ಸು ಜಾಸ್ತಿ. ಅದು ದೇಹದೋಷವೇನಲ್ಲ; ಭಾವ ದೋಷ; ವಿನಮ್ರತಾ ಭಾವದ ನಷ್ಟದಿಂದ ಭ್ರಷ್ಟಗೊಂಡು ಅಡ್ಡಾದಿಡ್ಡಿಯಾಗುವ ಬುದ್ಧಿಯ ಪೊಗರಿನ ಪ್ರಭಾವವದು. ದೇಹದಂತೆ - ಬುದ್ಧಿ ಕೊಬ್ಬಿದಾಗಲೂ ಕಂಡಕಂಡಲ್ಲಿ ಹಾಯುವ ಉಮೇದು ಹುಟ್ಟಿಕೊಳ್ಳುವುದು ಸಹಜ. ಉದಾರವಾದಿಗಳು ಎಂದುಕೊಳ್ಳುವವರು "ಹಾಯುವ ಕ್ರಿಯೆಗಳನ್ನು" ವೈಚಾರಿಕ ಘರ್ಷಣೆ ಎಂದು ಹೇಳುತ್ತ ಜಾಣ್ಮೆಯಿಂದ ಕೊಡವಿಕೊಳ್ಳುತ್ತಿದ್ದರೂ ವಾಸ್ತವವು ಅದಲ್ಲ. ಹಾದಿ ತಪ್ಪಿಸಿರುವ ಇವತ್ತಿನ ಶಿಕ್ಷಣದ ಫಲಿತವಿದು. ಉದಾಹರಣೆಗೆ : ಬ್ರಹ್ಮ ಸತ್ಯ ಜಗನ್ಮಿಥ್ಯಾ ಎಂಬ ವೇದಾಂತದ ಮಾತು ಕಿವಿಗೆ ಬಿದ್ದ ಕೂಡಲೇ ಕೆಲವು ಉದ್ಬುದ್ಧಿಗಳು ತೊನೆಯಲು ಆರಂಭಿಸುತ್ತವೆ. ಬುದ್ಧಿಯ ಕೊಸರಾಟ ಶುರುವಾಗುತ್ತದೆ; ಮುಖ ಕೆಂಪಾಗುತ್ತದೆ; ಬಾಲ ನಿಮಿರಿ ನಿಲ್ಲುತ್ತದೆ ! ಸೊಟ್ಟಗಿನ ಬುದ್ಧಿಯ ಪೊಗರು "ಋಣೇಧ್ವಂ.." ಎನ್ನುತ್ತ ಯುದ್ಧಕ್ಕೆ ಸಜ್ಜಾಗುತ್ತದೆ; ಅಮಲೇರಿಸಿಕೊಂಡ ಬುದ್ಧಿಗಳಿಂದ  ಪ್ರಶ್ನೆಗಳ ವೃಷ್ಟಿಯಾಗುತ್ತದೆ.  "ಬ್ರಹ್ಮ... ಹಾಗೆಂದರೇನು ? ಯಾವುದೋ ಅವಾಸ್ತವ ಲೋಕದಲ್ಲಿರುವ ಬ್ರಹ್ಮನ ಪಕ್ಷದವರಿಂದ ಹೊರಬಂದ ಹೇಳಿಕೆಯಿದು; ಜಗತ್ತಿನವರಾದ ನಾವು ನಮಗೆ ಕಂಡದ್ದನ್ನು ಕಂಡಂತೆ - ಜಗತ್ಸತ್ಯ ಬ್ರಹ್ಮ ಮಿಥ್ಯ - ಎನ್ನುತ್ತೇವೆ; ಅದನ್ನು ಅಲ್ಲಗಳೆಯಲು ಸಾಕ್ಷಿ ಇದ್ದರೆ ಕೊಡಿ..." ಎನ್ನುವಂತಹ ಕರಾರುವಾಕ್ ಕರ್ಕರೆ ಶಿರೋಮಣಿಗಳ ಅವಸರವು ಅಂದಿನಿಂದಲೂ ಮನುಷ್ಯರನ್ನು ಹಿಂಬಾಲಿಸುತ್ತಿದೆ. ಇದನ್ನು ಅಸಹಜ ಅಸಹನೀಯ ವಕ್ರತೆ ಎಂದೂ ಹೇಳಬಹುದು. "ನಾನೇ ಸತ್ಯ; ನಾನು ಕಾಣದ್ದು ಮತ್ತು ಹೇಳದುದೆಲ್ಲವೂ ಅಸತ್ಯ" ಎಂದುಕೊಳ್ಳುವುದೇ ಅಸಹಿಷ್ಣುತೆ.

ಬೌದ್ಧಿಕ ತರ್ಕದ ಅಸಮಂಜಸತೆಗಳು ಕೇವಲ ಇಂದು ನಿನ್ನೆಯದಲ್ಲ. ಅದೂ ಮನುಷ್ಯನಷ್ಟೇ ಅನಾದಿ. ಆದರೆ ಯಾವುದೇ ತಾರ್ಕಿಕ ಮಥನದಿಂದ ಅಮೃತವನ್ನು ದೊರಕಿಸಿ ಕೊಡಲಾಗದೆ ಕೇವಲ ವಿಷವನ್ನು ಮಾತ್ರ ಹುಟ್ಟಿಸುವುದಾದಾಗ ಅದನ್ನು "ಪೊಗರು" ಎನ್ನಬಹುದು. ದುರದೃಷ್ಟವೆಂದರೆ, ಶೀಘ್ರದಲ್ಲಿ ಅಮಲೇರಿಸುವ ಈ ತೆರನ ಕೆಲವು ಕುತರ್ಕ ವಿತರ್ಕ ಅಪತರ್ಕಗಳಿಂದಲೇ ಜೀವನೋಪಾಯವನ್ನು ಕಂಡುಕೊಳ್ಳುವಂತಹ ಗೀಚುಬುದ್ಧಿಗಳ ಪ್ರಮಾದದಿಂದ ಹಲವು ಮುಗ್ಧರು ಪ್ರಭಾವಿತರಾಗುತ್ತ ದ್ವಂದ್ವದಲ್ಲಿ ಸಿಲುಕುತ್ತಿರುವುದೂ ನಡೆಯುತ್ತಲೇ ಬಂದ ವಿದ್ಯಮಾನ. ಇವೆಲ್ಲವೂ ಜಗತ್ತಿನ ಸಂತೆಯಲ್ಲಿ ನಡೆಸುತ್ತಲೇ ಬಂದಿರುವ ವ್ಯಾಪಾರೀ ಬುದ್ಧಿಹಬ್ಬ - ಎಂಬ ಅರಿವಿಲ್ಲದೆ, ಚಾರುವಾಕ್ಕುಗಳಿಗೆ ಮರುಳಾದ ಬಾಯಾರಿದವರು - ಎಂದಿಗೂ ಬಾಯಾರಿಕೆ ತಣಿಸದ ನೀರಿಲ್ಲದ ಬಾವಿಯಲ್ಲಿ ಬೀಳುತ್ತಲೇ ಇದ್ದಾರೆ...

ಸತ್ಯವು ಯಾವತ್ತೂ ನಿರಾಡಂಬರ. ಅದು ಯಾವತ್ತೂ ಕಣ್ಮನ ತಣಿಸುವ ವಸ್ತುವಲ್ಲ. ನಗ್ನಸತ್ಯವು ರಂಜನೆಯ ಸರಕೂ ಅಲ್ಲ. ಅಲಂಕೃತ ಸುಳ್ಳುಗಳು ನೀಡುವಂತಹ ಸುಲಭದ ರಂಜನೆಯನ್ನೇ ಅಪೇಕ್ಷಿಸುವ ಮನುಷ್ಯರಿಗೆ ಮಿಥ್ಯೆಯ ಉತ್ಸವ ಮತ್ತು ಹಸರವು ಅಂತಹ ನಿತ್ಯರಂಜನೆಯನ್ನು ಅನೂಚಾನವಾಗಿ ನೀಡುತ್ತಲೇ ಬಂದಿದೆ. ಭ್ರಾಂತಿ ಭ್ರಮೆಗಳಿಗೆ ವಿಸ್ಮಯಗೊಳ್ಳುವಂತಹ  ಬಾಲ್ಯದ ಅಪ್ರಬುದ್ಧ ಹಂತದಲ್ಲಿ ಕಾಣಿಸಿಕೊಳ್ಳುವ ರಂಜನೆಯ ಆಟವಿದು. ಕೋಟಿಗೊಬ್ಬ ವಿಭೂತಿಪುರುಷರನ್ನು ಹೊರತುಪಡಿಸಿದರೆ ಇತರ ಎಲ್ಲರೂ ತಮ್ಮ ಬಾಲ್ಯಕಾಲದಲ್ಲಿ ಬೊಂಬೆಯಾಟದ ರಂಜನೆಗೆ ಮರುಳಾಗುವವರೇ . ನಮಗೆ ಕಾಣಿಸುವ ಮತ್ತು ರಂಜಿಸುವ ಮಿಥ್ಯೆಯನ್ನೇ ಸತ್ಯವೆಂದುಕೊಳ್ಳುವ ಬಾಲ್ಯದ ಬದುಕಿನ ಈ ಹಂತವನ್ನು ಬಹುತೇಕ ಎಲ್ಲ ಜೀವಗಳೂ ಹಾದು ಹೋಗುತ್ತವೆ - ಎಂಬ ಸೂಕ್ಷ್ಮವನ್ನೂ ಗಮನಿಸಬಹುದು. ಇದು ಆರಂಭಿಕ ಹಂತದ ಬಾಲಿಶಾವಸ್ಥೆ. ಆದ್ದರಿಂದಲೇ ಇದು "ಎಚ್ಚರ" ಎಂಬ ಸ್ವಂತಚಿಕಿತ್ಸೆಯಿಂದಲೂ ಗುಣಪಡಿಸಬಹುದಾದ ರೋಗ.

ಆದರೆ, ಕೇವಲ ಅಕ್ಷರಗಳನ್ನು ಕಲಿತವರೆಲ್ಲರೂ "ವಿದ್ಯಾವಂತರು" ಎಂದು ಕರೆಸಿಕೊಳ್ಳುತ್ತ ಸಮಾಜವನ್ನು ಆವರಿಸಿಕೊಳ್ಳತೊಡಗಿದಾಗ ವೈಚಾರಿಕ ಕ್ಯಾನ್ಸರ್ ಉಲ್ಬಣಗೊಳ್ಳುತ್ತದೆ. ಸಂಸ್ಕರಿತಗೊಳ್ಳದ ಬಾಲ್ಯವನ್ನು ದಾಟಿದ ಯಾವುದೇ ಬದುಕು, ದಿಕ್ಕುದೆಸೆ ತಪ್ಪಿದ ತತ್ಪರಿಣಾಮದಿಂದ ತನ್ನ ಬುದ್ಧಿಯನ್ನು ಅನಿಯಂತ್ರಿತವಾಗಿ ಬೆಳೆಸಿಕೊಳ್ಳುವ ಸಾಧ್ಯತೆ ಹೆಚ್ಚು. ನಿಯಂತ್ರಣವಿಲ್ಲದಲ್ಲಿ "ರಂಜನೆಯ ರೋಗ"ವು ಸಹಜವಾಗಿ ಕೈಮೀರಿರುತ್ತದೆ. ಶ್ರೀ ಮೋದಿ ಸರಕಾರದ 500 - 1000 ಮುಖಬೆಲೆಯ ನೋಟುಗಳ ರದ್ದಿನ ಕ್ರಾಂತಿಹೆಜ್ಜೆಯ ನಂತರ ತಮ್ಮ ತಮ್ಮ ದುಡ್ಡಿನ ವಹಿವಾಟಿಗಾಗಿ ಬ್ಯಾಂಕುಗಳಿಗೆ ಹೋಗುವ ಜನರನ್ನು ತಮ್ಮ ವಿವಿಧ ವಿನೋದಾವಳಿಗಳಿಂದ ರಂಜಿಸುವ ಕಲಾಹುಚ್ಚನ್ನೂ ಇತ್ತೀಚೆಗೆ ನೋಡುತ್ತಿದ್ದೇವೆ. ಡಾರ್ವಿನ್ ನ ಸಿದ್ಧಾಂತದಂತೆಯೇ ವಿಕಾಸಗೊಂಡ ಪೈಕಿಯ ಇಂತಹ ಜನರ ಡೊಂಬರಾಟವು ಯಾವ ಪುರುಷಾರ್ಥಕ್ಕಾಗಿ ? ಸಾಧ್ಯವಿದ್ದರೆ, ಗಂಟೆಗಟ್ಟಲೆ ಸರತಿಯ ಸಾಲಿನಲ್ಲಿ ನಿಂತಿರುವವರಿಗಾಗಿ ಕುಡಿಯುವ ನೀರು, ನೆರಳಿನ ವ್ಯವಸ್ಥೆ ಮುಂತಾದ ಅನುಕೂಲಗಳನ್ನು ಒದಗಿಸುವುದಕ್ಕೆ ಮುಂದಾಗದೆ, ಅವಸರವನ್ನು ನಿಗ್ರಹಿಸಿಕೊಳ್ಳುತ್ತ ಅಶಾಂತವಾಗಿ ನಿಂತಿರುವವರ ಮುಂದೆ ಕುಣಿದು ಕುಪ್ಪಳಿಸುವ ಬುದ್ಧಿಗೇಡಿಗಳಿಂದ ಈ ಭೂಮಿಯು ಸುತ್ತುವರಿದಿರುವುದು ವಾಸ್ತವ. ಮೊದಲೇ ಅಶಾಂತವಾಗಿರುವ ಮನಸ್ಸಿಗೆ ಇನ್ನಷ್ಟು ಗದ್ದಲದ ಒಗ್ಗರಣೆ ಹಾಕುವ ಇಂತಹ ಅಗ್ಗದ ಹುಂಬತನಗಳು ಬುದ್ಧಿಯ ಅಸ್ವಸ್ಥತೆಯ ಪ್ರತೀಕ. ಅಂತಹ "ರೋಗಗ್ರಸ್ಥ ರಂಜನಾ ಪಟು ಬದುಕು"ಗಳಿಗೆ ಎಷ್ಟೋ ಬಾರಿ ನಿರಂಜನ ನಿರೋಗಿಗಳೂ ಆಹಾರವಾಗುವುದಿದೆ. ಕೆಲವು ಬುದ್ಧಿಗಳು ಅಂತಹ ರೋಗದ ಅಮಲೇರಿಸಿಕೊಂಡು ತಾವೂ ನರಳುತ್ತವೆ; ರೋಗ ವಿಕ್ಷಿಪ್ತತೆಯಿಂದಾಗಿ ರೋಗಪ್ರಸಾರಕ್ಕೆಳಸುವ ಹಂತವನ್ನೂ ತಲುಪಿ ಸುತ್ತಲನ್ನೂ ನರಳಿಸುವುದಿದೆ. ಶಾಂತ ಪರಿಸರವೂ ರಂಜನೆಯನ್ನು ಕೊಡಬಲ್ಲುದು ಎಂಬ ಸತ್ಯವನ್ನು ತಿರಸ್ಕರಿಸಿ ಗದ್ದಲದ ರಂಜನೆ ಎಂಬ ಮಿಥ್ಯೆಯನ್ನು ಪಸರಿಸುವುದೂ ರೋಗವೇ. ಅಂತಹ ಬುದ್ಧಿಗಳನ್ನು ಕಳೆರೋಗ ವ್ಯಾಪಾರಿಗಳೆಂದೂ ಗುರುತಿಸಬಹುದು.

ಬುದ್ಧಿಪೂರ್ವಕವಾಗಿ ನಡೆಸುವ ಕುತರ್ಕಗಳೆಂಬ ಮನರಂಜನಾ ರೋಗವನ್ನು ಗುಣಪಡಿಸುವುದು ಯಾವತ್ತೂ ಕಷ್ಟ. ಏಕೆಂದರೆ ಇದೊಂದು ರೀತಿಯ "ಪ್ರೇಮ ವಿವಾಹ" ಇದ್ದಂತೆ. ತಾವೇ ಆವಾಹನೆ ಮಾಡಿಕೊಂಡ ವಿವಾಹರೋಗವನ್ನು ವಿನಾಕಾರಣ ಪ್ರೀತಿಸುತ್ತ ಆರಾಧಿಸುವವರಿಗೆ ರೋಗಪರಿಹಾರವು ಬೇಕೆನಿಸುವುದಿಲ್ಲ; ಅಥವ ಎಷ್ಟೇ ವೈಚಾರಿಕ ವೈರುದ್ಧ್ಯಗಳಿದ್ದರೂ ಸಾಮಾಜಿಕ ಪ್ರತಿಷ್ಠೆಗಾಗಿ ತನ್ನ ಮತ - ಆಯ್ಕೆಯನ್ನು ಜೀವನಪರ್ಯಂತ ಸಮರ್ಥಿಸಿಕೊಳ್ಳುವ ವೈಚಾರಿಕ ಖೆಡ್ಡದಲ್ಲಿ ಸಿಲುಕಿರುವ ಬದುಕಿನ ಸ್ಥಿತಿಯದು ! ಭಾವನಷ್ಟಗೊಂಡಿರುವ ಅಂತಹ ಶುಷ್ಕ ಪ್ರತಿಷ್ಠೆಯ ಕಾರ್ಖಾನೆಗಳಲ್ಲಿ ಬುದ್ಧಿಯ ನಟನೆಯೇ ಬದುಕಿನ ವ್ಯಾಖ್ಯೆಯಾಗುವ ಸ್ಥಿತಿ ರೂಪುಗೊಳ್ಳುತ್ತದೆ. ಇದು ಮನರಂಜನೆಯ ತ್ರಿಶಂಕು ಸ್ಥಿತಿ; ಅತಂತ್ರ ಗತಿ.

ಯಾವತ್ತೂ ನಿದ್ದೆ ಬಂದವರನ್ನು ಎಚ್ಚರಿಸಬಹುದು. ನಿದ್ದೆ ಬಂದಂತೆ ನಟಿಸುವವರನ್ನು ಎಚ್ಚರಿಸಲು ಸಾಧ್ಯವೆ ?

ತಮ್ಮ ಸ್ವಂತ ಲಾಭಕ್ಕಾಗಿ ಬೇಜವಾಬ್ದಾರಿಯಿಂದ ವಿಷವನ್ನೂ ಮಾರಿ ದುಡ್ಡನ್ನು ಗಂಟುಕಟ್ಟುವ ವ್ಯಾಪಾರೀ ಬುದ್ಧಿಗಳಲ್ಲಿ ಅಂತಹ ಕುಟಿಲತೆಯು ಸಹಜ. ಬೇಡಿಕೆಯಿಲ್ಲದಲ್ಲೂ ಮಿಥ್ಯಾವ್ಯಾಪಾರದ ಹೊಸ ಮಾರುಕಟ್ಟೆಯನ್ನು ಹುಟ್ಟುಹಾಕಬಲ್ಲ ನಾಜೂಕಯ್ಯಗಳು ತಮ್ಮ ಸಂಖ್ಯೆಯು ಕುಸಿದಾಗೆಲ್ಲ ವಿಷಪ್ರಸಾರವನ್ನು ಹೆಚ್ಚಿಸಿಕೊಳ್ಳಲು ಹೆಣಗಾಡುತ್ತಲೇ ಬಂದಿದ್ದಾರೆ. ಅಂತಹ ನಾಜೂಕಯ್ಯಗಳ ಉಪಟಳವು ಅತಿಯಾದಾಗಲೆಲ್ಲ ತೃಪ್ತಿಯ ಬದುಕಿನತ್ತ ಮಾರ್ಗದರ್ಶನ ನೀಡುವಂತಹ ವಿಭೂತಿಪುರುಷರು ಈ ನೆಲದಲ್ಲಿ ಜನ್ಮತಾಳಿದ್ದಾರೆ.

ನಾಜೂಕಯ್ಯಗಳ ಆಕ್ರೋಶ !

2016 ರಲ್ಲಿ ಇನ್ನೂ ಉಸಿರಾಡುತ್ತ ಬದುಕಿರುವವರಿಗೆ - ಭಾರತದ ರಾಜಕೀಯದಲ್ಲಿ ಸಂಭವಿಸಿದ "ವಿಭೂತಿ ವಿಸ್ಮಯ"ದ ಅಪೂರ್ವ ಮಾದರಿಯ ಪ್ರತ್ಯಕ್ಷ ದರ್ಶನವಾಗಿ ಹೋಗಿದೆ; ಆದರೆ ಕೆಲವರಿಗೆ ಇನ್ನೂ ಕನಸಿನಂತೆ ಕಾಣುತ್ತಿದೆ. ಅಂದು ರಾವಣನಿಗೆ ಕನಸಿನಂತೆ ಕಂಡುದೆಲ್ಲವೂ ಹನೂಮಂತನಿಗೆ ಸತ್ಯ ದರ್ಶನವಾಗಿತ್ತು. ವಿನಾಶ ಕಾಲದಲ್ಲಿ ನನಸುಗಳೂ ಕನಸಾಗಿ ಕಾಣಿಸುವ ವಿಪರೀತ ಬುದ್ಧಿಯು - ಸಂಭವಿಸುತ್ತದೆ !

"ಭಾರತದ ಹಿರಿಯ ರಾಜಕಾರಣಿಗಳು ಹಾಹಾಕಾರವೆಬ್ಬಿಸಿದ ತಿಂಗಳು" ಎಂದು - ಈ ನವೆಂಬರ್ ತಿಂಗಳು ಇತಿಹಾಸದಲ್ಲಿ ದಾಖಲಾಗಿ ಹೋಗಲಿದೆ. ದಿನಕ್ಕೊಂದು ನಾಟಕ ! ಖರ ದೂಷಣ, ತಾಟಕಿಯರ ಆಕ್ರೋಶದ ಫೂತ್ಕಾರ ! ಅಂಬರವನ್ನು ಸಿಗಿಯುವಂತಹ ಅಬ್ಬರ ! ಎಲ್ಲೆಲ್ಲೋ ಇರುವೆ ಕಡಿದಂತಹ ಚಡಪಡಿಕೆ ! ಯಾರಿಗೂ ಕೊಡದೆ, ಎಲ್ಲರಿಂದಲೂ ಕಿತ್ತುಕೊಂಡು, ಎಲ್ಲೆಲ್ಲೋ ಕೂಡಿಟ್ಟ ನೋಟುಗಳು ರಾತ್ರಿ ಬೆಳಗಾಗುವಾಗ ರದ್ದಿಯಾದರೆ ಅದೆಂತಹ ಆಕ್ರೋಶ ಏಳಬಹುದು ? ಜನರು -  ಸಹಾನುಭೂತಿಯಿಂದಲೇ ಎಲ್ಲವನ್ನೂ ಊಹಿಸಬಲ್ಲರು. ಕೋಟಿ ರೂಪಾಯಿಯ ವಾಹನದಲ್ಲಿ ಬಂದು  2000 ರೂಪಾಯಿ ಕೊಂಡೊಯ್ಯುವ ನಾಟಕಗಳೂ ಎಗ್ಗಿಲ್ಲದೆ ನಡೆಯಿತು. "ಉದ್ದದ ಕ್ಯೂ" ಎಂಬ ಮಾಯಕವನ್ನು ಸೃಷ್ಟಿಸುವ ಕಲಾತ್ಮಕ ಚಟುವಟಿಕೆಗಳೂ ನಡೆದವು. ಲಕ್ಷ್ಮೀಮಾತೆಯ ದರ್ಶನದ ಕ್ಯೂನಲ್ಲಿ "ದೊಡ್ಡ ದೊಡ್ಡ ಡಕಾಯತರು" ಉರುಳು ಸೇವೆ ಮಾಡುತ್ತ ಜಗನ್ನಾಟಕವಾಡುತ್ತಿರುವಂತೆಯೂ ಕಾಣಿಸಲಿಲ್ಲವೆ ?

ಏಕೆಂದರೆ "ಕೆಲವು ಕೇವಲರು" ಮುಂಚೆ ಎಂದೂ ಕ್ಯೂನಲ್ಲಿ ನಿಂತವರೇ ಅಲ್ಲ; ಇಡೀ ದೇಶವಾಸಿಗಳನ್ನು 70 ವರ್ಷಗಳ ಕಾಲ ಕ್ಯೂ ನಲ್ಲಿ ನಿಲ್ಲಿಸಿದವರು ಇವರೇ ! ಐದು ವರ್ಷಕ್ಕೊಮ್ಮೆ ದುಡ್ಡು ಚೆಲ್ಲಿ "ಮತಗಳ ವ್ಯಭಿಚಾರ" ನಡೆಸುತ್ತ ಬಂದವರು ಇವರೇ ! (ವ್ಯಭಿಚಾರಿಗಳ ನಡುನಡುವೆಯೂ ಕೆಲವು ಸಂತರೂ ಇರುತ್ತಿದ್ದರಂತೆ; ಇದ್ದಾರು... ಆದರೆ ಅಂತಹ ಮಾದರಿಗಳು ಇತ್ತೀಚಿನ ವರ್ಷಗಳಲ್ಲಿ ನನ್ನ ದೃಷ್ಟಿಗೆ ಯಾರೂ ಕಂಡಿಲ್ಲ. ನನಗೆ ಕಂಡದ್ದು ಎರಡೇ ವಿಧ. ಒಂದು - ಸಣ್ಣ ವ್ಯಾಪಾರಿ; ಇನ್ನೊಂದು - ದೊಡ್ಡ ವ್ಯಾಪಾರಿ.) ರೇಶನ್ ಅಂಗಡಿ, ದೇವಸ್ಥಾನ, ಮತದಾನ ಕೇಂದ್ರ, ಪಾಸ್ಪೋರ್ಟ್ ಕಛೇರಿ, ಮುನ್ಸಿಪಾಲಿಟಿ... ಹೀಗೆ ಎಲ್ಲೆಂದರಲ್ಲಿ ಸಾಮಾನ್ಯ ಜನರನ್ನು ಸಾಲಾಗಿ ನಿಲ್ಲಿಸಿ 70 ವರ್ಷಗಳ ಕಾಲ ಚೆಂದ ನೋಡಿದ "ಸೇವಾ ಧುರಂಧರ ಪುಳಕಯ್ಯ"ಗಳಿಗೆ ಈಗ ಜೇನು ನೊಣ ಕಡಿದಂತಾಗಿದೆ. ರೈತಬಂಧುಗಳು ತಮ್ಮ ಬಿತ್ತನೆಗೆ ಬೇಕಾದ ಬೀಜ - ಯೂರಿಯಾಗಳನ್ನು ಪಡೆದುಕೊಳ್ಳಲು ಸರತಿಯ ಸಾಲಿನಲ್ಲಿ ಬಿಸಿಲಿನಲ್ಲಿ ಕರಟುತ್ತ ನಿಂತಾಗ ಈ ಸೇವೆಯ ಮುಖಗಳು ಎಲ್ಲಿದ್ದವು ? ರೈತರ ಬದುಕಿನೊಂದಿಗೆ ಆಟವಾಡುತ್ತ ತಿಜೋರಿ ತುಂಬಿಸಿಕೊಳ್ಳುತ್ತಿದ್ದ ರಕ್ಕಸ ವರ್ತನೆಯು ಅಸಹನೀಯವೆನ್ನಿಸಿ ತಾಳ್ಮೆಯ ಕಟ್ಟೆಯೊಡೆದು ಪ್ರತಿಭಟಿಸಿದವರೊಂದಿಗೆ ಅಮಾಯಕರೂ ಗುಂಡಿನೇಟು ತಿಂದಾಗ ಜನಪ್ರತಿನಿಧಿಗಳ ಆಕ್ರೋಶ ಎಲ್ಲಿತ್ತು ? ಪೆನ್ಶನ್ ದಾರರು ತಮ್ಮ ಪಿಂಚಣಿಯ ಹಣಕ್ಕಾಗಿ ಸರಕಾರೀ ಕಚೇರಿಗಳ ಬಾಗಿಲುಗಳನ್ನು ತಟ್ಟುತ್ತ ಅಂಡಲೆಯುವಂತೆ ಮಾಡಿದಾಗ ಯಾವುದಾದರೂ ಜನಪ್ರತಿನಿಧಿಗಳು ಮಾನವ ಸೇತುವೆ ನಿರ್ಮಿಸಿದ್ದು ಉಂಟೆ ? ಆಕ್ರೋಶ ದಿನಕ್ಕಾಗಿ ಕರೆ ಕೊಟ್ಟದ್ದು ಉಂಟೆ ? ಪಾಪದ ಕೊಡ ತುಂಬಿದಾಗ ಮುಖವಾಡಗಳು ಒಂದೊಂದಾಗಿ ಕಳಚಿ ಬೀಳಲೇಬೇಕು.

2016 ರ ನವೆಂಬರ್ 8 ನೇ ತಾರೀಕು ರಾತ್ರಿ 8 ಗಂಟೆಗೆ ಮುಖವಾಡಗಳನ್ನು ಕಿತ್ತೆಸೆಯುವ ಪ್ರಾಮಾಣಿಕ ಪ್ರಯತ್ನವೊಂದು ಭಾರತದಲ್ಲಿ ನಡೆದಿದೆ. ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ತನ್ನ ಸರ್ವಸ್ವವನ್ನೂ ದೇಶಕ್ಕಾಗಿ ಪಣವಿಟ್ಟು "ನ ಭೂತೋ ನ ಭವಿಷ್ಯತಿ" ಎಂಬಂತಹ ಭೀಮಹೆಜ್ಜೆಯನ್ನು ಇಟ್ಟಿದ್ದಾರೆ ! ಇನ್ನಿಲ್ಲದಷ್ಟು ಆತಂಕಗಳಿಗೆ ಪ್ರೇರಣೆ ನೀಡುತ್ತ ದೇಶದ ಆರ್ಥಿಕ ಬುನಾದಿಯನ್ನೇ ಅಲುಗಿಸುವಷ್ಟು ಸೊಕ್ಕಿ - ಹಿರಿಯ (?) ಸ್ಥಾನವನ್ನು ಆಕ್ರಮಿಸಿಕೊಂಡಿದ್ದ 500, 1000 ಮುಖಬೆಲೆಯ ನೋಟುಗಳ ಸೇವಾ ಹಿರಿತನವನ್ನು ಧಿಕ್ಕರಿಸಿ, ಅವುಗಳಿಗೆ ವ್ಯಭಿಚಾರೀ ಲಕ್ಷ್ಮಿಯ ಪಟ್ಟ ಕಟ್ಟಿ, ಸೊಂಟ ಮುರಿದಿದ್ದಾರೆ. ಕಾಂಚಾಣದ ಅಟ್ಟಹಾಸವನ್ನು ಅದುಮಿದ್ದಾರೆ ! ತನ್ಮೂಲಕ, ಅವೇ ನೋಟುಗಳ ಬಲದಿಂದಲೇ ಹಿರಿಯ ಸ್ಥಾನಗಳನ್ನು ಆಕ್ರಮಿಸಿಕೊಂಡು ದೇಶವನ್ನು ಅಧಃಪತನಕ್ಕೆ ತಳ್ಳುತ್ತಿದ್ದ ಪ್ರಭಾವಿಗಳ ಕತ್ತು ಮುರಿದಿದ್ದಾರೆ. ಆದ್ದರಿಂದಲೇ "ಅನಂತ ಸೇವಾ ವ್ಯಾಪಾರ" ಎಂಬ ಹೊಟ್ಟೆಪಾಡಿನಲ್ಲಿ ಅವ್ಯಾಹತವಾಗಿ ಮುಳುಗಿದ್ದ ಮುಖಗಳೆಲ್ಲವೂ ಈಗ ವಿಕಾರ ದರ್ಶನ ನೀಡುತ್ತಿವೆ; ಆಕ್ರೋಶ ಎಂಬ ಹೊಸ - ಬದಲೀ ಮುಖವಾಡ ತೊಟ್ಟುಕೊಂಡಿವೆ. ತಮ್ಮ ಪಾಲಿನ "ಸಹಿ ಹೊಂದಿದ ಖಾಲಿ ಚೆಕ್ಕುಗಳು" ಎಂಬ ನೆಲೆಯಲ್ಲಿ ಪ್ರಜೆಗಳನ್ನು ಬೇಕಾಬಿಟ್ಟಿಯಾಗಿ ಬಳಸಿಕೊಳ್ಳುತ್ತ, ಸ್ವಾತಂತ್ರ್ಯಾನಂತರದ ಭಾರತದಲ್ಲಿ ಅಸಹಾಯಕ, ಅಶಿಕ್ಷಿತ, ಸಂತಪ್ತ ಜನಸಂಖ್ಯೆಯು ಎಂದಿಗೂ ಕಡಿತಗೊಳ್ಳದಂತೆ ನೋಡಿಕೊಂಡು ಮತ್ತು ಸಾಮಾನ್ಯ ಭಾರತೀಯರ ಆತ್ಮವಿಶ್ವಾಸವೇ ನಾಶವಾಗುವಂತೆ ಸುದೀರ್ಘ ಕಾಲ ಕಾರ್ಯಭಾರ ನಡೆಸಿದ್ದ "ದೇಶ - ಜನ ವಿರೋಧೀ" ತತ್ವಗಳು 2016 ರ ನವೆಂಬರದಲ್ಲಿ - "ಇದೇ ನಮ್ಮ ಕೊನೆಯ ನಾಟಕ" ಎಂಬಂತೆ, ಗಲ್ಲಿ ಗಲ್ಲಿಯಲ್ಲಿ ನಿಂತು ಬಡವರ ಹೆಸರು ಹೇಳುತ್ತ ಕಣ್ಣೀರು ಸುರಿಸುವುದನ್ನೂ ನೋಡುತ್ತಿದ್ದೇವೆ. ಇದುವರೆಗೆ ಮುರಿಮುರಿದು ಕೊರೆಕೊರೆದು ತಿಂದವರು ಮತ್ತು ಅಂತಹ ಎಂಜಲಿನ ಉತ್ತರಾಧಿಕಾರಿಗಳಲ್ಲಿ ಕೆಲವರು - ಪಾಪದ ಕೊಡ ಪೂರ್ಣ ತುಂಬಿದವರಾದರೆ - ಇನ್ನು ಕೆಲವರಿಗೆ ಇನ್ನು ಕೆಲವೇ ಅವಕಾಶವೂ ಸಿಗಬಹುದು. ಅಂತೂ ಇಂತೂ ಕುಂತೀ ಮಕ್ಕಳ ವನವಾಸವು ಮುಗಿಯುತ್ತಿದೆ; ಪ್ರಜೆಗಳನ್ನು ತುಳಿಯುತ್ತ ಪ್ರಭುತ್ವ ನಡೆಸುತ್ತಿದ್ದ ಪುಂಡು-ಪುಢಾರಿ ಮಕ್ಕಳು ಆತ್ಮನಿರೀಕ್ಷಣೆ ಮಾಡಿಕೊಳ್ಳುವ ಕಾಲವು ಬಂದೇಬಿಟ್ಟಿದೆ. ಆದರೆ ನಾಜೂಕಯ್ಯಗಳು ಪ್ರಾಮಾಣಿಕರಾಗಲು ಈಗಲೂ ಮುಕ್ತ ಅವಕಾಶವಿದೆ.

ನಾಜೂಕಯ್ಯಗಳ ಹಾವಳಿಯು ಮಿತಿ ಮೀರಿದಾಗ "ವಿಭೂತಿ ಪುರುಷ"ರು ಸಂಭವಿಸುವುದು ಪ್ರಕೃತಿ ಸಹಜ. ಸತ್ಯ ಧರ್ಮ ನ್ಯಾಯ ಪ್ರಾಮಾಣಿಕತೆಗಳು "ಅಧ್ಯಾತ್ಮದ ಬುರುಡೆ" ಎಂದು ತಳ್ಳಿಹಾಕುವ ಕ್ಷುಲ್ಲಕವೇನಲ್ಲ. ಅದು ಪ್ರಕೃತಿಯ ಸ್ವಭಾವ. ಯಾವತ್ತೂ ಸ್ವಂತದ ಮತ್ತು ಸ್ವಾರ್ಥ ಭಾವಗಳಿಂದ ವಿಮುಕ್ತವಾದ ಶುದ್ಧ ವಸ್ತುವಿನ ಸನ್ನಿಧಿಯಲ್ಲಿಯೇ ಸತ್ಯದ ಮಿಂಚು ಸಂಭವಿಸುತ್ತದೆ; ಸತ್ಯವು ಕೈ ಹಿಡಿಯುತ್ತದೆ; ಸತ್ಯವೇ ಮುನ್ನಡೆಸುತ್ತದೆ. ಸತ್ಯಕ್ಕೆ ಯಾವುದೇ ರೂಪಾಯಿ ನೋಟಿನ ಆಶ್ರಯ ಬೇಡ. ಸತ್ಯವು ಸ್ವಯಂ ಶಕ್ತ. ಸತ್ಯಾಸಕ್ತ ಸಜ್ಜನರು - ಇಂದು ಭಾರತದಲ್ಲಿ ನಡೆಯುತ್ತಿರುವುದನ್ನೂ ಅಂತಹ ವಿಸ್ಮಯಗಳ ಸಾಲಿನಲ್ಲಿಯೇ ಗಮನಿಸಬಹುದು. ಲಕ್ಷಾಂತರ ಜೀವಿಗಳ ಬದುಕಿನಲ್ಲಿ ಬೆಳಕನ್ನು ತುಂಬಬಲ್ಲ ಯಾವುದೇ ವಿಸ್ಮಯಗಳು ತಾವಾಗಿಯೇ ಸಂಭವಿಸುವುದಲ್ಲದೆ ಅವನ್ನು ಮಾಡಲು ಆಗುವುದಿಲ್ಲ. ಪ್ರಕೃತಿಯಲ್ಲಿ ಎಲ್ಲೋ ಒಮ್ಮೊಮ್ಮೆ ಅಂತಹ ವಿಸ್ಮಯಗಳು ಸಂಭವಿಸುತ್ತವೆ. ಆದ್ದರಿಂದ "ಯುಗ ಪುರುಷ" ಶ್ರೀ ಮೋದಿ ಅವರು ಸಮಷ್ಟಿಯ ಗೌರವಕ್ಕೆ ಪಾತ್ರರಾಗುತ್ತಾರೆ. ವಿಸ್ಮಯದಿಂದಲೇ ವಿಸ್ಮಯವು ಹುಟ್ಟುವಂತೆ, ಶ್ರೀ ಮೋದಿ ಅವರೂ ಶ್ರೀ ರಾಮಕೃಷ್ಣ ಭಾವದಲ್ಲಿ ಮಿಂದು ಎದ್ದವರೇ.

ಸ್ವಂತ ಮನೆಗೆ ಬೆಂಕಿ ಬಿದ್ದಾಗ "ಆಕ್ರೋಶ"ದ ಮಾತು ಹೊಮ್ಮುವುದು ಮನುಷ್ಯ ಮಾತ್ರರಲ್ಲಿ ಅತ್ಯಂತ ಸಹಜ. ಇಂತಹ ಆಕ್ರೋಶಗಳೆಲ್ಲವೂ ರಾವಣ ಆಕ್ರೋಶದಂತೆ ಸ್ವಾರ್ಥ ಪ್ರೇರಿತ ತಾಮಸ ಆಕ್ರೋಶಗಳು; ಜನಹಿತಭಾವವಿಲ್ಲದ ಒಣ ಸದ್ದುಗಳು ! ಆದರೆ ಸಾತ್ವಿಕ ಆಕ್ರೋಶವು ಯಾವಾಗಲೂ ನಿಸ್ವಾರ್ಥಿ; ಅದು ಸಮಷ್ಟಿಗೆ ನೆಮ್ಮದಿ ತರುತ್ತದೆ; ಸರ್ವರ ಒಳಿತನ್ನು ಬಯಸುತ್ತದೆ.

ಬುದ್ಧಿ ಸ್ಥಿಮಿತದಲ್ಲಿರುವ ಸುಭಗ, ಸಜ್ಜನ, ನಿಸ್ವಾರ್ಥಿಗಳಾದ ಅಸಂಖ್ಯಾತ ಸಾತ್ವಿಕ ಸಜ್ಜನರು ಈ ಭೂಮಿಯನ್ನು ಹಾದುಹೋಗಿದ್ದಾರೆ; ಕಾಲಕಾಲಕ್ಕೆ ಸ್ವಚ್ಛತಾ ಅಭಿಯಾನ ನಡೆಸಿದ್ದಾರೆ. ಕೆಲವು ಮಹಾತ್ಮರು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ, ತಮ್ಮ ಗಂಟಲು ದಣಿಯುವವರೆಗೂ ಸದ್ವಿಚಾರಗಳನ್ನು ಪ್ರತಿಪಾದಿಸುತ್ತ - ತನ್ಮೂಲಕ ಭೌತಿಕ, ಆತ್ಮಿಕ ಮತ್ತು ಪರಮಾತ್ಮಿಕ ಎಂಬ ಎಲ್ಲ ಬಗೆಯಿಂದಲೂ ಭೂಮಿಯನ್ನು ಸ್ವಚ್ಛಗೊಳಿಸಲು ಯತ್ನಿಸಿದ್ದರು. ತಮ್ಮ ಬದುಕಿನ ಏಕೈಕ ವ್ರತದಂತೆ - ಜನ್ಮ ಸಾರ್ಥಕ್ಯಗೊಳಿಸಿಕೊಳ್ಳಲು ಅಸಂಖ್ಯಾತ ಮನುಷ್ಯರನ್ನು ಪ್ರೇರೇಪಿಸಿದ್ದರು. ಹೀಗೆ ಇಂದಿಗೂ ಪ್ರೇರಕ ಶಕ್ತಿಯಂತಿರುವವರಲ್ಲಿ ಶ್ರೀ ರಾಮಕೃಷ್ಣರು ಅಗ್ರಗಣ್ಯರು.

ಶ್ರೀ ರಾಮಕೃಷ್ಣರ ಬದುಕಿನಂತೆಯೇ ಮಾತುಗಳೆಲ್ಲವೂ ದಿವ್ಯ; ರಸಗಟ್ಟಿಗಳು. 


"ಜ್ಞಾನಿಗಳು ಎಲ್ಲವನ್ನೂ ಸ್ವಪ್ನಸದೃಶ ಎಂದು ಭಾವಿಸುತ್ತಾರೆ. ಆದರೆ ಭಕ್ತರು ಎಲ್ಲ ಅವಸ್ಥೆಗಳನ್ನೂ ಅನುಮೋದಿಸುತ್ತಾರೆ. ವೇದಾಂತದ ದೃಷ್ಟಿಯಿಂದ ಈ ಜಗತ್ತು ಮಾಯಾಮಯ - ಸ್ವಪ್ನದಂತೆ ಮಿಥ್ಯೆ. ಯಾರು ಪರಮಾತ್ಮನೋ ಆತನೇ ಸಾಕ್ಷೀಸ್ವರೂಪನಾಗಿದ್ದಾನೆ. ಜಾಗ್ರತ್ ,ಸ್ವಪ್ನ, ಸುಷುಪ್ತಿ ಎಂಬ ಮೂರೂ ಅವಸ್ಥೆಗಳಲ್ಲಿ ಸಾಕ್ಷೀ ಸ್ವರೂಪನಾಗಿರುವುದು ಪರಮಾತ್ಮ. ಸ್ವಪ್ನವು ಎಷ್ಟು ಸತ್ಯವೋ - ಜಗತ್ತು ಅಷ್ಟೇ ಸತ್ಯ. ನಿತ್ಯವಸ್ತು ಒಂದೇ ಒಂದು. ಅದೇ ಆತ್ಮ. ಆದರೆ ನಾನು ಎಲ್ಲ ಅವಸ್ಥೆಗಳನ್ನೂ ಅಂಗೀಕರಿಸುತ್ತೇನೆ. ಎಲ್ಲವನ್ನೂ ಒಟ್ಟಿಗೆ ಸೇರಿಸಿ ಅಂಗೀಕರಿಸದಿದ್ದರೆ - ತೂಕ ಕಡಿಮೆ ಬಿದ್ದುಬಿಡುತ್ತದೆ.." 

 ಎಂದಿದ್ದ ರಾಮಕೃಷ್ಣರು ಅದಕ್ಕೆ ದೃಷ್ಟಾಂತವನ್ನೂ ನೀಡುತ್ತಾರೆ. "ಅದು ಹೇಗೆಂದರೆ ಬೇಲದ ಹಣ್ಣಿನ ಮುಖ್ಯ ಭಾಗ ಯಾವುದು ಎಂದರೆ - ಅದರ ತಿರುಳೇ ಮುಖ್ಯವೆಂದು ಜನರಿಗೆ ಅರ್ಥವಾಗುತ್ತದೆ. ಆಗ ಅದರ ಬೀಜ ಮತ್ತು ಓಟೆಯನ್ನು ಗಣನೆಗೆ ತೆಗೆದುಕೊಳ್ಳದೆ ಹೋಗಬೇಕಾಗುತ್ತದೆ. ಆದರೆ ಬೇಲದ ಹಣ್ಣಿನ ನಿಖರವಾದ ತೂಕವನ್ನು ಕಂಡುಹಿಡಿಯಬೇಕಾದರೆ ಬರೀ ತಿರುಳನ್ನಷ್ಟೇ ತೂಗಿದರೆ ಸಾಲದು. ತಿರುಳು ಓಟೆ ಬೀಜ ಎಲ್ಲವನ್ನೂ ಸೇರಿಸಿಯೇ ತೂಗಬೇಕಾಗುತ್ತದೆ. ತಿರುಳು ಯಾವುದರದೋ ಅದರದೇ - ಬೀಜ ಮತ್ತು ಓಟೆ. ಅಂತೆಯೇ - ನಿತ್ಯ ಯಾರದೋ ಆತನದೇ ಲೀಲೆ. ಆದ್ದರಿಂದಲೇ - ಸಂಸಾರ, ಜಗತ್ತು ಎಂಬುದು ಮಿಥ್ಯಾಮಾಯೆ ಅಂತ ಅದನ್ನು ನಾನು ಗಾಳಿಯಲ್ಲಿ ಹಾರಿಬಿಡುತ್ತಿಲ್ಲ. ಹಾಗೆ ಮಾಡಿದರೆ ಒಟ್ಟಾರೆ ತೂಕ ಕಡಿಮೆಯಾಗಿ ಬಿಡುತ್ತದೆ. ನಿತ್ಯ ಲೀಲೆಯನ್ನೂ (ಬೀಜ, ಓಟೆ) ಅಂದರೆ ಸಂಸಾರವನ್ನೂ ನಾನು ಸ್ವೀಕರಿಸುತ್ತೇನೆ." ಈ ದೃಷ್ಟಾಂತ ಚಕ್ರವರ್ತಿಯ ದೃಷ್ಟಾಂತಗಳೆಲ್ಲವೂ ಅತ್ಯಂತ ಸರಳ ಮತ್ತು ಅತಿಮಧುರ.

ಬ್ರಹ್ಮ ಸತ್ಯ ಎಂಬುದನ್ನು ಸಾರುವಾಗಲೇ ಲೀಲಾಜಗತ್ತು ಎಂಬ ಮಿಥ್ಯೆಯನ್ನೂ ಸ್ವಲ್ಪ ದೂರದವರೆಗೆ ನಿಭಾಯಿಸಬೇಕಾದ ಅನಿವಾರ್ಯತೆಯನ್ನು ಶ್ರೀ ರಾಮಕೃಷ್ಣರು ತೆರೆದಿಡುತ್ತಾರೆ. "ಸಂಸಾರಸ್ಥರು ಬದುಕಿನ ಯುದ್ಧವನ್ನು ಮಾಡಲೇಬೇಕಾಗಿರುವುದರಿಂದ - ಸಂಸಾರ ಎಂಬ ಕೋಟೆಯ ಒಳಗಿದ್ದುಕೊಂಡೇ ಯುದ್ಧ ಮಾಡುವುದು ಒಳ್ಳೆಯದು. ಮನೆಯಲ್ಲಿದ್ದರೆ ಅನುಕೂಲ ಜಾಸ್ತಿ. ಆದರೆ ಭಗವಂತನ ಸ್ಮರಣೆ ಚಿಂತನೆಗಳನ್ನು ಅಲಕ್ಷಿಸಬಾರದು; ಭಗವಚ್ಚಿಂತನೆಯ  ಜೊತೆಜೊತೆಗೇ ಗೃಹಸ್ಥ ಧರ್ಮವನ್ನೂ ಹಿತಮಿತವಾಗಿ ಎಚ್ಚರದಿಂದ ನಿಭಾಯಿಸಬೇಕು" ಎನ್ನುತ್ತಿದ್ದರು. ಸದಾ ಏಕಾಗ್ರತೆಯನ್ನು ಕಲಕುವ ಸಾಂಸಾರಿಕ ಸರ್ಕಸ್ಸಿನಲ್ಲಿ ತೊಡಗಿಕೊಂಡ ಯಾವುದೇ ಸಂಸಾರಸ್ಥರಿಗೆ - "ಕಠಿಣವಾದ ಜ್ಞಾನಮಾರ್ಗಕ್ಕಿಂತ -  ಸರಳವಾದ ಭಕ್ತಿಮಾರ್ಗವೇ ಅನುಸರಿಸಲು ಸುಲಭ ಮತ್ತು ಯೋಗ್ಯ" ಎಂಬುದು ಶ್ರೀ ರಾಮಕೃಷ್ಣರು ತೋರಿದ ದಾರಿ.    



"ಕೆಲವು ಹಸುಗಳು ಆಯ್ದು ಆಯ್ದು ಮೇಯುತ್ತವೆ. ಅದಕ್ಕೇ ಅವು ತೊಟಕ್ ತೊಟಕ್ ಅಂತ ಕಡಿಮೆ ಹಾಲು ಕೊಡುತ್ತವೆ. ಆದರೆ ಸಿಕ್ಕಿದ್ದನ್ನೆಲ್ಲ ತಿನ್ನುವ ಹಸುಗಳು "ಹುರ್ ಹುರ್" ಎಂದು ಧಾರಾಕಾರವಾಗಿ ಕರೆಯುತ್ತವೆ. ಜ್ಞಾನಿ ಎಂಬ ಹಸುವು ಉತ್ಕೃಷ್ಟವಾದರೂ ಕಡಿಮೆ ಹಾಲು ಕರೆದರೆ, ಉತ್ತಮ ಭಕ್ತ ಎಂಬ ಹಸುವು "ಹುರ್ ಹುರ್ " ಅಂತ ಧಾರಾಕಾರವಾಗಿ ಹಾಲು ಕೊಡುತ್ತಾನೆ..." ಎಂದಾಗ ಶ್ರೀ ರಾಮಕೃಷ್ಣರ ಕೋಣೆಯಲ್ಲಿ ಸೇರಿದ್ದವರೆಲ್ಲರೂ ನಗುತ್ತಾರೆ."ಆದರೆ ಹುರ್ ಹುರ್ ಎಂದು ಸುರಿಯುವ ಹಾಲಿನಲ್ಲಿ ಸ್ವಲ್ಪ ವಾಸನೆ ಇರುತ್ತದೆ..." ಎಂದು ಮಹಿಮಚರಣ ಎಂಬ ಭಕ್ತನು ಅಡ್ಡಮಾತನ್ನು ಸೇರಿಸಿದಾಗ  ಶ್ರೀ ರಾಮಕೃಷ್ಣರೂ ನಗುತ್ತ "ಅದೇನೋ ನಿಜ; ಅದಕ್ಕಾಗಿ ಅಂತಹ ಹಾಲನ್ನು ಬೆಂಕಿಯ ಮೇಲಿಟ್ಟು ಸ್ವಲ್ಪ ಹೊತ್ತು ಕಾಯಿಸಬೇಕು. ಜ್ಞಾನಾಗ್ನಿಯ ಮೇಲೆ ಸ್ವಲ್ಪ ಹೊತ್ತು ಅದನ್ನು ಇಡಬೇಕಾಗುತ್ತದೆ. ಆಗ ವಾಸನೆ ಏನೂ ಇರುವುದಿಲ್ಲ.." ಎಂದು ಉತ್ತರಿಸುತ್ತಾರೆ. ಭಕ್ತನಾದವನು ಹಂತಹಂತವಾಗಿ ಮುನ್ನಡೆಯುತ್ತ ಜ್ಞಾನದ ಅಂಗಳದಲ್ಲೂ ಹೆಜ್ಜೆಯಿಡಬೇಕು ಎಂಬುದನ್ನು ಸೂಚ್ಯವಾಗಿ ತಿಳಿಸುತ್ತಾರೆ. 1884 ರ ಅಕ್ಟೋಬರ್ 26ರಂದು ಶ್ರೀ ರಾಮಕೃಷ್ಣರ ಕೊಠಡಿಯಲ್ಲಿ ಕುಳಿತಿದ್ದ ಭಕ್ತರನ್ನು ಉದ್ದೇಶಿಸಿ ಆಡಿದ್ದ ಮಾತುಗಳಿವು. (ಶ್ರೀ ರಾಮಕೃಷ್ಣ ವಚನವೇದ)

ಜಗತ್ತಿನ ಲೀಲೆಯಿಂದಲೇ ನಿತ್ಯ; ನಿತ್ಯದಿಂದಲೇ ಲೀಲೆ. ಇದೇ ರಹಸ್ಯ. ಬ್ರಹ್ಮವಸ್ತುವು ಕೇವಲ ಅನುಭವವೇದ್ಯ. ಬ್ರಹ್ಮ ವಸ್ತುವನ್ನು ಬಾಹ್ಯ ಪ್ರಪಂಚದಲ್ಲಿ ಹುಡುಕುವವರೆಲ್ಲರೂ - ಅರ್ಧ ದಾರಿಯಲ್ಲಿಯೇ ನಡಿಗೆಯನ್ನು ನಿಲ್ಲಿಸುವಂತಹ ಪೂರ್ವಸ್ಮೃತಿಯ ಸಂಸ್ಕಾರವಂತರು. ಅಂತಹ ಮನುಷ್ಯರಿಗೆ ತಮ್ಮ ಅಂತರಂಗದ ಮಾತುಗಳು ಕೇಳಿಸುವುದೇ ಇಲ್ಲ ಅಥವ ಕೇಳಿಸಿಕೊಳ್ಳುವ ಸಂಸ್ಕಾರವು ಬಲಿತಿರುವುದಿಲ್ಲ. ವಿನೋದಾವಳಿಗಳಲ್ಲಿಯೇ ಮುಳುಗಿ ಹೋಗದೆ ಶಾಂತ ಸ್ವಸ್ಥ ಸ್ಥಿತಿಯನ್ನು ಆವಾಹಿಸಿಕೊಳ್ಳಬಲ್ಲೆವಾದರೆ ಪೂರ್ವಸ್ಮೃತಿಯು ಸಂಸ್ಕರಿತಗೊಳ್ಳುತ್ತ ಹೋಗುತ್ತದೆ; ಬಾಹ್ಯದ ತೆವಲು ಕ್ಷೀಣಿಸುತ್ತದೆ; ಆಗ,  ಮೌನವು ಅರಳುತ್ತದೆ; ಪ್ರಶಾಂತ ಮೌನದಲ್ಲಿ ಆಂತರ್ಯದ ಮಾತುಗಳು ಕೇಳಿಸತೊಡಗಿದಾಗ ಬುದ್ಧಿಯು ತಾನಾಗಿಯೇ ಹಳಿಹತ್ತುತ್ತದೆ. ಪ್ರಕೃತಿಸ್ಥರಾದಾಗ ಸ್ಮೃತಿ ಭಾವವು ಸ್ಫುಟವಾಗುತ್ತದೆ. ಅಂತಹ ಧ್ಯಾನಸ್ಥ ಪರಿಧಿಯಲ್ಲಿ, ಎಂದೋ ನಿಂತಲ್ಲಿಂದ ಮುನ್ನಡೆಯುವ ತುರ್ತು ಕಾಡುತ್ತದೆ. ಸದ್ವಿಚಾರಗಳ ಶ್ರವಣ ಕೀರ್ತನ ಸತ್ಸಂಗದಿಂದ ಇಂತಹ ಸಂಸ್ಕಾರವು ಸಂಭವಿಸುತ್ತದೆ. ವಿನಮ್ರ ಶರಣಾಗತ ಭಾವವು ಆವರಿಸಿಕೊಳ್ಳುತ್ತದೆ. ಆಗ ಕುತರ್ಕ ವ್ಯಾಪಾರದ ಅಹಂಭಾವವು ಕುಗ್ಗುತ್ತದೆ. ಕಿಂಚಿತ್ತಾದರೂ ಅಹಂಭಾವವನ್ನು ಉಳಿಸಿಕೊಳ್ಳುವ ಜ್ಞಾನವು ಅಂತಃಪುರದ ಬಾಗಿಲಿನ ವರೆಗೆ ಮಾತ್ರ ಹೋಗಬಲ್ಲದು; ಆದರೆ ವಿನಮ್ರ ಸ್ವಭಾವದ ಪ್ರೇಮಾಭಕ್ತಿಯು ಅಂತಃಪುರದ ಒಳಗೇ ಹೋಗಬಲ್ಲದು. ಬದುಕಿನ ದೀರ್ಘ ನಡಿಗೆಯ ಉದ್ದಕ್ಕೂ ಭಕ್ತಿಯ ವೇದಾಂತವನ್ನು ಊರುಗೋಲಿನಂತೆ ಆಧರಿಸಿಕೊಂಡರೆ ನಿರ್ಮಮ ಆತ್ಮಾರಾಮದ ನಿರ್ಲಿಪ್ತ ಗುರಿಯು ಕಾಣಿಸುತ್ತದೆ - ಎಂಬುದನ್ನು ತಮ್ಮ ಗಂಟಲು ಬಳಲುವಷ್ಟು ಬಾರಿ ಸೋದಾಹರಣವಾಗಿ ಉಪದೇಶಿಸಿದವರು ಶ್ರೀ ರಾಮಕೃಷ್ಣರು.


"ಶಿವಾಂಶದಿಂದ ಜನ್ಮವೆತ್ತಿದರೆ ವ್ಯಕ್ತಿಯು ಜ್ಞಾನಿಯಾಗುತ್ತಾನೆ; ಬ್ರಹ್ಮ ಸತ್ಯ ಜಗತ್ ಮಿಥ್ಯಾ ಎಂಬ ಭಾವನೆಯ ಕಡೆಗೆ ಆತನ ಮನಸ್ಸು ಸರ್ವದಾ ಹರಿಯುತ್ತದೆ. ವಿಷ್ಣು ಅಂಶದಿಂದ ಜನ್ಮವೆತ್ತಿದರೆ ಪ್ರೇಮಾಭಕ್ತಿ ಉಂಟಾಗುತ್ತದೆ. ಈ ಪ್ರೇಮಾಭಕ್ತಿಯು ಎಂದಿಗೂ ಹೃದಯವನ್ನು ಬಿಟ್ಟು ಹೋಗುವ ಹಾಗಿಲ್ಲ. ಯದುವಂಶವನ್ನು ನಾಶ ಮಾಡಿದ ಒನಕೆಯ ತುಂಡಿನಂತೆ ಪ್ರೇಮಾಭಕ್ತಿಯು ವರ್ತಿಸುತ್ತದೆ; ಭಕ್ತರ ಭವಬಂಧವನ್ನು ಪೂರ್ತಿಯಾಗಿ ಅಳಿಸಿಹಾಕುತ್ತದೆ." ಎಂದು ಅಭಯವಿತ್ತವರು ಶ್ರೀ ರಾಮಕೃಷ್ಣರು.

ಇಂತಹ ಚಿಂತನೆಗಳನ್ನು ಅನುಸರಿಸಲು ಇರುವ ಏಕೈಕ ತಡೆಯೇ ಇಂದಿನ ನಮ್ಮ ಜೀವನಶೈಲಿ. ನಮ್ಮ ದಿನಗಳೆಲ್ಲವೂ ವ್ಯರ್ಥವಾದ ವ್ಯಾವಹಾರಿಕ ವಿವಾದಗಳಲ್ಲಿಯೇ ಈಗ ಮುಗಿದು ಹೋಗುತ್ತಿದೆ; ಹೊರದನಿಯ ಠೇಂಕಾರದಿಂದಾಗಿ ನಮ್ಮ ಒಳದನಿಯು ಮೂಕವಾಗುತ್ತಿದೆ; ನಮಗೇ ಕೇಳದಂತಾಗುತ್ತಿದೆ. ದಿನವೂ ಒಂದಲ್ಲ ಒಂದು ವಾದವಿವಾದಗಳಲ್ಲಿ ಮುಳುಗುತ್ತಿರುವುದರಿಂದ ನಮ್ಮ ಏಕಾಗ್ರತೆಗೆ ಭಂಗವಾಗಿ, ಅಂತರ್ಮಥನ ಎಂಬುದು ನಿಂತುಹೋಗುತ್ತಿದೆ. ನಾವು ಯಾವುದೇ ದೈನಂದಿನ ವಾದ ವಿವಾದಗಳಲ್ಲಿ ಹುಚ್ಚುಗಟ್ಟಿ ಮುಳುಗಿದಾಗ ನಮ್ಮ ಸ್ಮೃತಿಭಾವವು ಮಸುಕಾಗುತ್ತದೆ ಮತ್ತು ಬಳಲುತ್ತದೆ; ಮುನ್ನಡಿಗೆಯು ತಾನಾಗಿಯೇ ನಿಲ್ಲುತ್ತದೆ. ಏಕೆಂದರೆ, ವಾದದಲ್ಲಿ ಆಯಾ ಸಿದ್ಧಾಂತವನ್ನು ಪ್ರತಿಪಾದಿಸಿ ಜಯಭೇರಿ ಹೊಡೆಯುವ ಹುಮ್ಮಸ್ಸು ನಮ್ಮನ್ನು ತರ್ಕಸ್ತಂಭಕ್ಕೆ ಗಟ್ಟಿಯಾಗಿ ಕಟ್ಟಿ, ಮನಸ್ಸನ್ನು ಗೊಂದಲಾಪುರವಾಗಿಸಿ, ನೈಜ ಗಮನವನ್ನೂ ಗುರಿಯನ್ನೂ ಮರೆಸಿಬಿಡುತ್ತದೆ. ವಾದಿ ವಿವಾದಿಗಳೆಂಬ ತರ್ಕಾಸುರರ ವ್ಯರ್ಥ ಹೋರಾಟದ ಯುದ್ಧರಂಗದಿಂದ ನಮಗೆ ಮುಂದೆ ಸರಿಯುವುದಕ್ಕೇ ಆಗುವುದಿಲ್ಲ. ಯಾವುದೇ ಯುದ್ಧವು ಒಳಹೊರಗೆಂಬ ಎರಡೂ ಅಸ್ತಿತ್ವವನ್ನು ಏಕಕಾಲದಲ್ಲಿ ಮುಗಿಸುವ ಸಾಧನ. ತರ್ಕ ಎಂದರೆ ವಿಚಾರ ಯುದ್ಧ. ಸಮುದ್ರವನ್ನು ಮಥಿಸಿದಾಗ ಮೊದಲು ವಿಷ ಹುಟ್ಟಿದರೂ ಕೊನೆಗೆ ಕಾಮಧೇನು, ಕಲ್ಪವೃಕ್ಷ, ಕೌಸ್ತುಭ ಮುಂತಾದ ಅಮೂಲ್ಯ ವಸ್ತುಗಳು ಲಭಿಸಿದ್ದುವಂತೆ; ಅಂತಹ ಮಥನದಿಂದ ಯಾವುದೇ ಹಾನಿಯಿಲ್ಲ. ಆದರೆ ಬೆಣ್ಣೆಯೇ ಹುಟ್ಟದ - ಕೆನೆಯಿಲ್ಲದ ಮೊಸರನ್ನು ಕಡೆಯುವ ನಿತ್ಯೋತ್ಸಾಹವು ಮಾತ್ರ ವ್ಯರ್ಥ ಕಾಲಕ್ಷೇಪ; ಭ್ರಮೆ. ಆದ್ದರಿಂದ ತರ್ಕವು ಭ್ರಮಾವ್ಯಾಧಿಯಾಗಿಬಿಟ್ಟರೆ ಜೀವವನ್ನು ವ್ಯರ್ಥವಾಗಿ ಬಳಲಿಸುತ್ತದೆ. ಅವ್ಯಕ್ತ ನಿರೀಕ್ಷೆ - ಅತೃಪ್ತಿಯಲ್ಲಿಯೇ ಮನುಷ್ಯರ "ವಟವಟ" ಜನ್ಮವನ್ನು ಕೊನೆಗಾಣಿಸುತ್ತದೆ. ಒಂದು ಆಯುರ್ಮಾನದಲ್ಲಿ ಹೀಗೆ ತಾರ್ಕಿಕ ವಟವೃಕ್ಷದಂತೆ ನಿಂತ ನಡಿಗೆಯು ತಾನು ನಿಂತಲ್ಲಿಂದಲೇ ಮತ್ತೆ ಮತ್ತೆ ಮುಂದುವರಿಯುತ್ತದೆ; ಅರೆಸಂಸ್ಕರಿತ ಜೀವವು ಮತ್ತೆ ಮತ್ತೆ ಜನ್ಮ ತಳೆದು ಎಂದೋ ಎಲ್ಲೋ ತಪ್ಪಿಹೋದ ಆತ್ಮಿಕ ಕೊಂಡಿಯನ್ನು ಹೇಗೋ ಒಮ್ಮೆ ಆಕಸ್ಮಿಕವಾಗಿ ಭಾವಿಸಲು ತೊಡಗಿದಾಗ ಅನಿರ್ವಚನೀಯ ಅನುಭವಕ್ಕೆ ಸಾಕ್ಷಿಯಾಗುವ ಅರ್ಹತೆ ಪಡೆಯುತ್ತದೆ. ಅಲ್ಲಿಗೆ ಎಲ್ಲ ಹುಡುಗಾಟ ಮತ್ತು ಹುಡುಕಾಟಗಳು ಮುಗಿಯುತ್ತವೆ; ಸ್ಪಷ್ಟ ಗುರಿಯೂ ಕಾಣಿಸುತ್ತದೆ. ಗುರಿಯ ಸ್ಪಷ್ಟತೆ ಮೂಡಿದಾಗಲೇ ನಡಿಗೆಗೆ ವೇಗವೊದಗುತ್ತದೆ. ಆಗ ದೇಹಭಾವದಿಂದ ಕಳಚಿಕೊಳ್ಳುವ ಇಚ್ಛೆಯೂ ಮೂಡುತ್ತದೆ; ಅನಂತರ ಮರುಮಾತಿಲ್ಲದೆ ಜೀವದ ನಡಿಗೆಯು ಮುಂದುವರಿಯುತ್ತದೆ... ಅದುವರೆಗೂ "ವಟವಟ" ಮಾತುಗಳು ನಿಲ್ಲುವುದಿಲ್ಲ; ಒಗ್ಗರಣೆಯ ಸದ್ದಿನಂತೆ ಪಟಪಟ ಸಿಡಿಯುತ್ತ ಸಿಡಿಯುತ್ತ ಕೊನೆಗೆ ಕರಟಿಯೇ ಹೋಗುತ್ತದೆ.

ಅರ್ಥೈಸಿಕೊಳ್ಳುವುದಕ್ಕೆ ಬಲಿಷ್ಟ ಸಾಧನವಾಗಿ ಯಾವುದೇ ಒಂದು ತರ್ಕವು ಬಳಕೆಯಾದಾಗ ಮಾತ್ರ - ತರ್ಕವು ಗೆಲ್ಲುತ್ತದೆ. ತರ್ಕವು ಅಲ್ಲೇ ನಿಲ್ಲಬೇಕು. ಅನಂತರ ತರ್ಕಫಲದ ಯಾವತ್ತೂ ಭಾವರಸಪಾನವು ಹೃದಯಮೂಲದಿಂದಲೇ ನಡೆಯಬೇಕು. ಆಗಲೇ ಎಚ್ಚರ ಉಂಟಾಗಲು ಸಾಧ್ಯ; ಫಲಪ್ರಾಪ್ತಿಯೂ ಸಾಧ್ಯ. ಮನುಷ್ಯರ ಎಲ್ಲಾ ಸಮಸ್ಯೆಗಳಿಗೆ ಬುದ್ಧಿ ನೆಲೆಯಲ್ಲಿಯೇ ಪರಿಹಾರವನ್ನು ಕಂಡುಕೊಳ್ಳಲು ಯತ್ನಿಸಿದರೆ ಅನರ್ಥಗಳಿಗೆ ಆಹ್ವಾನವಿತ್ತಂತೆ. ಅನೇಕ ಸಂದರ್ಭಗಳಲ್ಲಿ, ಸಮಸ್ಯೆಯ ಪರಿಹಾರಕ್ಕೆ ನೂರಾರು ಸಾಧ್ಯತೆಗಳನ್ನು ತೋರಿಸುತ್ತ ಮನುಷ್ಯರನ್ನು ಮೂರ್ಖಗೊಂದಲಕ್ಕೆ ಕೆಡವುವುದೂ ಬುದ್ಧಿಯೇ ಎಂಬುದನ್ನು ಗಮನಿಸಬೇಕು. ನೂರು ವಿಜ್ಞಾನವು ಸಾಧಿಸಲಾಗದುದನ್ನು ನಿಸ್ವಾರ್ಥ ಹೃದಯವಂತಿಕೆಯು ಕ್ಷಣಮಾತ್ರದಲ್ಲಿ ಸಾಧಿಸಬಲ್ಲದು. ಬುದ್ಧಿಯು ಸ್ವಾರ್ಥದ ಪ್ರತಿನಿಧಿಯಾದರೆ ಹೃದಯವು ನಿಸ್ವಾರ್ಥದ ಪ್ರತೀಕ ! ಆದ್ದರಿಂದ ನಮ್ಮ Supreme Court ಎಂಬುದು ಹೃದಯದಲ್ಲಿದೆ. ಹೃದಯದ ಮಾತೇ ಅಂತಿಮ ಸತ್ಯ. ಈ ವಿಶ್ವಾಸಕ್ಕೆ ಒಳಪಟ್ಟರೆ ಸಮಷ್ಟಿಯ ಬದುಕುಗಳು ಸಹನೀಯವಾಗುತ್ತವೆ. ಹೀಗಿದ್ದೂ... ಬುದ್ಧಿ - ಭಾವಗಳ ಸಮತೋಲನವು ಸಾಧ್ಯವಾದರೆ ಪ್ರಚಂಡ ಪ್ರತಿಫಲವು ಹೊಮ್ಮಬಲ್ಲದು  ಎಂಬುದೂ ಪರೀಕ್ಷಿತ ವಾಸ್ತವ. ಇದೇ ಸಮತೋಲನವೇ - ಶ್ರೀ ರಾಮಕೃಷ್ಣ ಪರಮಹಂಸರು ಮತ್ತು ತದನಂತರದ ಅವರ ಶಿಷ್ಯರು ಸಾಧಿಸಿದ ವಿಸ್ಮಯ. ಯಾವುದೇ ವಿಸ್ಮಯವನ್ನು ಮಾಡಲು ಆಗುವುದಿಲ್ಲ; ಬುದ್ಧಿಭಾವಗಳ ಸಮನ್ವಯದಿಂದ ಬದುಕಿನಲ್ಲಿ ವಿಸ್ಮಯಗಳು ಸಂಭವಿಸುತ್ತವೆ !

ಬದುಕೆಂಬ ವೃಕ್ಷದಲ್ಲಿ ಸುದೀರ್ಘ ಭಾವ ತಪಸ್ಸಿನಿಂದ ಮಾಗಿದ ಹಣ್ಣುಗಳು ಮರದಿಂದ ತಾನಾಗಿಯೇ ಉದುರುತ್ತವೆ. ಬಿಡುಗಡೆ ಕಾಣುತ್ತವೆ. ಹಣ್ಣನ್ನು ಉದುರಿಸುವ ಯಾವುದೇ ಕ್ರಿಯೆಗಳು ಅಸಹಜ ಮತ್ತು ಪ್ರಕೃತಿವಿರೋಧಿ. ಆತ್ಮಹತ್ಯೆ, ಕೊಲೆ ಮತ್ತು ಸಹಜ ಸಾವು... ಇವೆಲ್ಲವೂ ದೇಹಾಂತ್ಯವನ್ನು ಸಾರುವ ಮರಣಗಳೇ ಆದರೂ ಪ್ರತಿಯೊಂದು ಸಾವಿಗೂ ಅದರದೇ ಆದ ಒಳನೋಟಗಳು, ವ್ಯಾಖ್ಯಾನಗಳು, ಪರಿಣಾಮಗಳು ಇದ್ದೇ ಇರುತ್ತವೆ. ಎಲ್ಲವನ್ನೂ "ಸಹಜ ಸಾವು"  ಎನ್ನುತ್ತ ಮುಕ್ತವಾಗಿ ಸ್ವೀಕರಿಸಲಾಗುವುದಿಲ್ಲ; ಒಪ್ಪಲಾಗುವುದಿಲ್ಲ; ಯಾವುದೇ ಅಸಹಜಗಳು ಮನಸ್ಸನ್ನು ಪ್ರಕ್ಷುಬ್ಧವಾಗಿಸುತ್ತವೆ. ಅರಿವು ಮೂಡಿಸಲಾಗದ, "ಬಾಗಬೇಕಾದಲ್ಲಿಯೂ ಬೀಗಲು ಕಲಿಸುವ ಇಂದಿನ ಶಿಕ್ಷಣ " ದಿಂದಾಗಿ ಸರಿಪಡಿಸಲಾಗದ ಅನರ್ಥಗಳು ಸಮಾಜದಲ್ಲಿ ಸಂಭವಿಸುತ್ತಿವೆ. ಜೀವಿಗಳ ಸೂಕ್ಷ್ಮ ಅರಿವು ಎಂಬುದು ಯಾವುದೇ ಅಸಹಜವನ್ನು ಪ್ರತಿಭಟಿಸುತ್ತದೆ; ಅಂತಃ ತಳಮಳವುಂಟಾಗುತ್ತದೆ. "ಬಹುಮತ"ದ ಎದುರಿನಲ್ಲಿ - ಅನಿವಾರ್ಯವಾಗಿ ಸತ್ಯವನ್ನು ಹತ್ತಿಕ್ಕಲು ಯತ್ನಿಸುವ ಪ್ರಜ್ಞೆಯು  ಅಸಹಾಯ ಭಾವಕ್ಕೆ ಒಳಗಾಗಿ - ಅಂತಃಪ್ರಜ್ಞೆಯು ಹತಾಶೆಗೆ ತಳ್ಳಲ್ಪಡುತ್ತದೆ; ಹೀಗಾದಾಗ ಮನಸ್ಸು ಮುದುಡಿ, ಅರಿವು ಮಸುಕಾಗಿ, ಮೌಢ್ಯ ಕವಿದು, ಅಸಹಜಗಳು ಅಸಹಜಗಳನ್ನೇ ಸೃಷ್ಟಿಸುವಂತಾಗುತ್ತದೆ. ತತ್ಫಲ - ಅಕಾಲದಲ್ಲಿ ಜೀವವೃಕ್ಷದ ಕಾಯಿಗಳೇ ಉದುರಿ ವ್ಯರ್ಥವಾಗುವಂತಾಗುತ್ತದೆ. ಅದು ಪರೋಕ್ಷವಾಗಿ ಹತ್ಯೆಯೇ ಆಗುತ್ತದೆ.

ಅಂತೆಯೇ ಈ ಪ್ರಕೃತಿಯಲ್ಲಿ, ಹಣ್ಣು ತಾನಾಗಿಯೇ ಉದುರಿದರೆ ಮಾತ್ರ ಅದನ್ನು ಸಹಜ ಎನ್ನಬಹುದು. ಆದ್ದರಿಂದ ಯಾವುದೇ ಹಣ್ಣನ್ನು ಉದುರಿಸುವಂತಹ - ಸಜ್ಜನರು ಒಪ್ಪಲಾಗದ ಸ್ವಾರ್ಥೀ ಬುದ್ಧಿಗೇಡಿನ ತೋರಿಕೆಯ ಕ್ರಿಯೆಗಳು - ಪ್ರಕೃತಿ ವಿರೋಧಿ ಎನ್ನಿಸಿಕೊಳ್ಳುತ್ತವೆ. ಆದ್ದರಿಂದ ಯಾವುದೇ ಬದುಕಿನಲ್ಲಿ ಒಂದು ಶಕ್ತಿಯು ಇನ್ನೊಂದನ್ನು ಒತ್ತಿ ಒತ್ತಿ ಹಣ್ಣು ಮಾಡುವ  ಅಥವ ಹೇರಿಕೆಯ ಶಕ್ತಿ ಪ್ರಯೋಗದ ಯಾವುದೇ ಕ್ರಿಯೆಯ ಅಗತ್ಯವಿರುವುದಿಲ್ಲ; ಒಂದೊಮ್ಮೆ ಹಾಗೆ ಮಾಡಿದರೆ ಜಾಗ್ರತ ಅರಿವುಗಳು ಸಿಡಿಯುತ್ತವೆ; ಕ್ರಮೇಣ, ಅಸಹಜ ಮತ್ತು ಅಸಂಭವಗಳು ಸಂಭವಿಸುತ್ತವೆ.  ಅಸಹಜಗಳು ಯಾವತ್ತೂ ಸುಖ ತೃಪ್ತಿಯನ್ನು  ಕೊಡಲಾರವು.

ಮನುಷ್ಯ ಮಾತ್ರರು "ಮಾಡುವುದು" ಎಂಬ ಎಲ್ಲವೂ ಅಸಹಜ ವೇ ಆಗಿರುತ್ತದೆ. ಆದರೆ - ಅರಿವಿನ ನೆರಳಿನಲ್ಲಿ ನಡೆಸುವ ಸಹಜ ಕ್ರಿಯೆಗಳು ಮತ್ತು ತತ್ಫಲಗಳು ತಾನಾಗಿಯೇ ಸಂಭವಿಸುತ್ತವೆ. ಅಸಹಜ ಭಾವ-ಕ್ರಿಯೆಗಳು ನೋವು ದುಃಖವನ್ನು ನೀಡಿದರೆ ಸಹಜ ಕ್ರಿಯೆಗಳೆಲ್ಲವೂ ಆತ್ಮ ತೃಪ್ತಿ ನೀಡಬಲ್ಲವು. ಮನುಷ್ಯ ಬುದ್ಧಿ ಎಂಬ ವೈಚಾರಿಕ ಬಿಸಿಯಲ್ಲಿ ಕಾಟು ವಿಚಾರ ವ್ಯಾವಹಾರಿಕತೆಗಳೆಂಬ ಕೃತ್ರಿಮಗಳನ್ನು ತುರುಕಿ ಹಣ್ಣು ಹಣ್ಣು ಮಾಡಿದರೆ  ಸ್ವಾಭಾವಿಕ ಹಣ್ಣು ಆದೀತೆ ? ಹುಳಿ ಒಗರು ರಸವು ಅಲ್ಲೇ ಉಳಿದುಕೊಂಡು ಅದನ್ನು ಆಸ್ವಾದಿಸುವಾಗ ಯಾರಿಗೂ ಆನಂದಭಾವದ ಅನುಭವವಾಗಲಾರದು. ಯಾವುದೇ ರಸಾಸ್ವಾದ ಪ್ರಾವೀಣ್ಯವುಳ್ಳವರು ಅಂತಹ ಹಣ್ಣನ್ನು ಭಕ್ಷಿಸಲಾರರು. ಅಂತೆಯೇ ಬಾಹ್ಯ ಚಕ್ಷುಗಳಿಗೆ ಕಾಣುವ ವೇಷಧಾರೀ ಹಣ್ಣುಗಳು ಯಾವತ್ತೂ ಮಧುರಾನುಭೂತಿಯನ್ನು ಕೊಡಲಾರವು. ಬುದ್ಧಿಯನ್ನು ಮಾತ್ರ ಹಣ್ಣಾಗಿಸಿಕೊಂಡಾಗ ಉಂಟಾಗುವ ವಿಕೃತಿಗಳೂ ಹೀಗೇ ವರ್ತಿಸುತ್ತವೆ. ಹುಳಿ-ಒಗರು ಉಳಿದುಕೊಳ್ಳುವಂತಹ ತಾರ್ಕಿಕ ವಿಕೃತಿಯ "ಹಣ್ಣು ರೂಪ"ಗಳವು ! ಬುದ್ಧಿ ಹೃದಯಗಳ ಸಮರಸದಿಂದ ಜೀವನಿಸರ್ಗವು ತಾನಾಗಿಯೇ ಹಣ್ಣಾಗುವಂತಾದರೆ ಮಾತ್ರ ಪೂರ್ಣಸಿಹಿ; ಪೂರ್ಣ ತೃಪ್ತಿ; ಪೂರ್ಣ ಬಿಡುಗಡೆ; ಸರ್ವಮಂಗಳ. ಆದರೆ ಒಮ್ಮೊಮ್ಮೆ "ಜಗತ್ ಸತ್ಯಾ.." ಎನ್ನುತ್ತ... ಇನ್ನೊಮ್ಮೆ "ನನ್ನ ಮಂಚಕ್ಕೆ ಮೂರು ಮತ್ತೊಂದು ಕಾಲಿದೆ; ನಾಲ್ಕಲ್ಲ..." ಎನ್ನುವ Fashion ನ ವಾಕ್ಶೂರ ತರ್ಕಸಿಂಧುಗಳ ಗೊಂದಲಗಳು ಯಾವತ್ತೂ ಮುಗಿಯಲಾರವು.

ಕಾಯನ್ನು ಕಿತ್ತು ಹಣ್ಣು ಮಾಡುವ ಕೈಕೋಚಿನಲ್ಲೇ ಮನುಷ್ಯರು ಇನ್ನಿಲ್ಲದ ಆಸಕ್ತಿ ಬೆಳೆಸಿಕೊಂಡರೆ ಇಡೀ ಬದುಕು ಅಸಹಜವಾಗುತ್ತದೆ... ಹೃದಯ ರೋದಿಸುತ್ತದೆ... ಬದುಕು ಮುದುಡುತ್ತದೆ. ಕಠೋರವಾಗಿ ಪಳಗಿಸಿದ ಬುದ್ಧಿಪ್ರೇರಿತವಾದ ಬಾಯಿಮಾತುಗಳಿಂದಲೇ ಮಿಥ್ಯೆ ಎಂಬುದನ್ನು ಸತ್ಯ ಮಾಡಲಾದೀತೆ ? ಅಪ-ವಾದದಿಂದ ಸತ್ಯ ಸಿದ್ಧಿಸೀತೆ ? ಕೊಬ್ಬರಿಯಿಲ್ಲದ ಒಣ ಕರಟವನ್ನು ಗಂಟೆಗಟ್ಟಲೆ ಹೆರೆದರೆ ಏನು ಫಲ ? ಇಲ್ಲದಿರುವುದನ್ನು ಇರಗೊಡಿಸಿ, ಇರುವುದನ್ನು ಇಲ್ಲವಾಗಿಸಲಾದೀತೆ ? ಸಂಸಾರದಲ್ಲಿ "ಇಲ್ಲದ ಸುಖ"ವನ್ನು ಹುಡುಕುತ್ತ ನಾವಾಗಿಯೇ ಸ್ವಇಚ್ಛೆಯಿಂದ ಮುಳುಗುಹಾಕಿ ಕೊನೆಯಲ್ಲಿ "ಸಂಸಾರವೇ ಮುಳುಗಿಸಿತು" ಎಂದರೆ ಅದು ಅಬದ್ಧ. ನಿಜವಾಗಿ ನಮ್ಮನ್ನು ಮುಳುಗಿಸುವುದು - ನಮ್ಮ ಅರ್ಥವಿಲ್ಲದ ಹುಡುಗಾಟ ಮತ್ತು ಹುಡುಕಾಟ. ಆದ್ದರಿಂದಲೇ ಅರಿವು ಸಂಭವಿಸುವ ಹಾದಿಯಲ್ಲಿ ಹೆಜ್ಜೆ ಹಾಕುವ ಶಿಕ್ಷಣವು ಇಂದಿನ ಅನಿವಾರ್ಯ. ಆದರೆ ಇಂದು -  ಅಂತಹ ಶಿಕ್ಷಣವೂ ಇಲ್ಲ; ಸಾಮಾಜಿಕ ಸನ್ನಿವೇಶವೂ ತಿರುಗುಮುರುಗಾಗಿದೆ.

ಶ್ರೀ ರಾಮಕೃಷ್ಣ ಪರಮಹಂಸರು - "ಮಾನವ ಜನ್ಮ ದೊಡ್ಡದು; ಅದನ್ನು ಹಾನಿ ಮಾಡಿಕೊಳ್ಳದಿರಿ ಹುಚ್ಚಪ್ಪಗಳಿರಾ" ಎನ್ನುವ ಸಂದೇಶವನ್ನು ಬಗೆಬಗೆಯ ದೃಷ್ಟಾಂತಗಳ ಮೂಲಕ ವಿಶದಪಡಿಸುತ್ತ... ಬದುಕಿನ ಗಾಂಭೀರ್ಯವನ್ನು ಎತ್ತಿಹಿಡಿದಿದ್ದರು. ವಿರಾಗವೇ ತೃಪ್ತಿ ಎಂಬುದನ್ನು - ಬದುಕಿ ತೋರಿಸಿದ್ದರು. "ಆತ್ಮ ಸಾಕ್ಷಾತ್ಕಾರ"ವೇ ಜೀವಿಗಳ ಪರಮ ಗಂತವ್ಯ ಎಂಬುದನ್ನು ಸಾರಿ ಸಾರಿ ಹೇಳಿ, ಸ್ವಚ್ಛವಾಗಿ ಬದುಕುವ ದಾರಿ ತೋರಿಸಿದವರು - ಶ್ರೀ ರಾಮಕೃಷ್ಣರು; ತಮ್ಮ ಉಪದೇಶಗಳ ಮಾಧ್ಯಮದಿಂದಲೇ ತಮ್ಮ ಆಶ್ರಿತರ ಅರಿವು ಮೂಡಿಸಿಕೊಳ್ಳುವ ಇಚ್ಛಾಶಕ್ತಿಯನ್ನು ಇಂದಿಗೂ ಪ್ರೇರೇಪಿಸುತ್ತಿರುವ ವಿಶ್ವಗುರುವಾಗಿ ಅವರು ವಿರಾಜಮಾನರಾಗಿದ್ದಾರೆ. ಆದ್ದರಿಂದಲೇ ಶ್ರೀ ರಾಮಕೃಷ್ಣರು ಸಂಸಾರಿಗಳಿಗೆ - ಪರಮಾಪ್ತ ಬಂಧು.

ಆದರೆ ನಾವು ಜನ್ಮ ಜನ್ಮಾಂತರಗಳಿಂದ ಈ ಜಗತ್ತಿನ ಸುಳ್ಳುಗಳನ್ನೇ ಸ್ನೇಹಿತನೆಂದು ನಂಬಿಕೊಂಡು ಸುಳ್ಳನ್ನೇ ಮನೆಮನೆಯ ದೇವರನ್ನಾಗಿಸಿಕೊಂಡಿರುವುದರಿಂದ - ಸತ್ಯವನ್ನು ಗುರುತಿಸುವುದು, ಒಪ್ಪುವುದು, ಮೆಚ್ಚುವುದು ಎಲ್ಲವೂ ವಿಸ್ಮೃತಿಯಾಗುತ್ತಿದೆ. ಆದ್ದರಿಂದಲೇ ನಮಗೆ "ಉಂಡುಂಡು ಸ್ವರ್ಗವನ್ನೈದುವ" ಹಂಬಲ ! ಮಿಥ್ಯಾಸಹವಾಸದ ದೋಷ ! ಕುರುಡರಿಗೆ ಕುರುಡರು ದಾರಿ ತೋರಿಸುವ ವ್ಯವಸ್ಥೆಯಲ್ಲಿ ಇಂದು ನಾವಿದ್ದೇವೆ. ಸಾಮಾಜಿಕರ ಪಡಪೋಶಿ ವ್ಯವಸ್ಥೆಯಾದ "ಬಹುಮತ"ಗಳನ್ನು ನೆಚ್ಚಿಕೊಂಡರೆ ಎಲ್ಲವೂ ಹೀಗೇ ಅಯೋಮಯ. ವಿಶಾಲ ಜನಜಾತ್ರೆಯ ವಿರಾಟ್ ಸರ್ಕಸ್ಸಿನಲ್ಲಿ - ಸತ್ಯವು ಯಾವಾಗಲೂ ಇರಬೇಕೆಂದಿದೆಯೆ ? ಇಲ್ಲ. ಸತ್ಯ ಎಂದರೆ ಸುಲಭವಲ್ಲ; ಸತ್ಯವೇ - ನಿರ್ಗುಣ ನಿರ್ಮಮ ತಪಸ್ಸು. ಸುಳ್ಳಿನಂತೆ "ಎಲ್ಲಿಯೂ ಸಲ್ಲುವ ವಸ್ತು"ವಾಗಿ ನಳನಳಿಸಲು ಸತ್ಯವು ಅಪೇಕ್ಷಿಸುವುದೂ ಇಲ್ಲ; ಸತ್ಯವು ಬಹುಮತಗಳ ಯಾವುದೇ ಸಂಘರ್ಷದಲ್ಲಿ ಮೂಗು ತೂರಿಸುವುದೂ ಇಲ್ಲ. ಸತ್ಯವನ್ನು ಅಳೆಯುವ ಕೋಲು - ಈ ಭೂಮಿಯಲ್ಲಿಲ್ಲವೇ ಇಲ್ಲ. ಅದು ನಮ್ಮೊಳಗೇ ಇದೆ. ಸಾಮಾಜಿಕರ ಬಹುಮತದ ಅಳತೆಗೋಲಿನಿಂದ ಸುಳ್ಳನ್ನು ಮಾತ್ರ ತೂಗಬಹುದು; ಸತ್ಯವನ್ನಲ್ಲ. ಏಕೆಂದರೆ "ಬಹುಮತ" ಎಂಬುದೇ ಸುಂದರವಾದ ಕಣ್ಕಟ್ಟು.

"ಬಾಹ್ಯ ಸಾಕ್ಷಿ"ಗಳೆಲ್ಲವೂ ಕಣ್ಕಟ್ಟುಗಳೇ ಆಗಿಹೋಗಿವೆ, ಏಕೆಂದರೆ ಯಾವುದೇ ಬದುಕಿನಲ್ಲಿ ಮೌಲ್ಯ ಎಂಬ ಸಾಕ್ಷೀಪ್ರಜ್ಞೆಯ ಸ್ವರೂಪವು ಕಿಂಚಿತ್ತೂ ಉಳಿದುಕೊಳ್ಳದಂತಹ "ಕಿತ್ತು ತಿನ್ನುವ ನ್ಯಾಯಶಿಕ್ಷಣ"ದ ಫಲವನ್ನು ನಾವೀಗ ಅನುಭವಿಸುತ್ತಿದ್ದೇವೆ. ಆದ್ದರಿಂದಲೇ "ಸಾಕ್ಷಿ" ಎಂಬ ಅಮೂಲ್ಯ ಜೀವರಸಮೌಲ್ಯವನ್ನು ಅಪತರ್ಕಗಳ ಆಸರೆಯಲ್ಲಿ ಬಚ್ಚಿಡುವ, ಮುಚ್ಚಿಹಾಕುವ, ತಿರುಚುವ ಸಾಧನವಾಗಿಯೂ ಬಳಸಿಕೊಳ್ಳುವುದು ನಮಗೆ ಸಾಧ್ಯವಾಗಿದೆ ! ತನ್ಮೂಲಕ, ಅರಾಜಕ ತತ್ವಗಳ ಸಾಮಾಜಿಕ ಪೋಷಣೆಗೆ ಪರೋಕ್ಷ ಬೆಂಬಲವನ್ನೂ ಸಾರಿದಂತಾಗಿದೆ. ಸಾಕ್ಷಿ - ಸತ್ತೇಹೋಗಿದೆ; ಜೀವಚ್ಛವಗಳು ಎಲ್ಲೆಂದರಲ್ಲಿ ನಡೆದಾಡುತ್ತಿವೆ ! ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳೆಂಬ ಅರಿ ಷಡ್ವೈರಿಗಳನ್ನು ನಿಯಂತ್ರಿಸಿಕೊಂಡ ಸ್ಥಾನಗಳಿಂದ ಮಾತ್ರವೇ ನ್ಯಾಯ ಎಂಬ ದೈವಿಕವು ಪ್ರಕಟಗೊಳ್ಳಲು ಸಾಧ್ಯ. ಆದ್ದರಿಂದ ಸದ್ಯಕ್ಕಂತೂ "ನ್ಯಾಯ ಎಲ್ಲಿದೆ ?" ಎನ್ನುತ್ತ ಅಂತರ್ ಪಿಶಾಚಿಗಳಂತೆ ಅಲೆಯುವ ಭಾಗ್ಯವಷ್ಟೇ ಮನುಷ್ಯರಿಗೆ ಸಿಕ್ಕಿದೆ. ಈಗ ನಾವು ಕಾಂಕ್ರೀಟ್ ಮಾಡಿನ ಅಡಿಯಲ್ಲಿ "ನ್ಯಾಯ" ಎಂದುಕೊಂಡು ತೂಗಿ ನೋಡುತ್ತಿರುವ ದೃಶ್ಯಗಳು - ಬಗೆಬಗೆಯ ಸುಳ್ಳುಗಳನ್ನಲ್ಲದೆ ಸತ್ಯವನ್ನಲ್ಲ. ಸತ್ಯವು ಹೊರಗಿನ ತೂಕಕ್ಕೆ ಸಿಕ್ಕೀತೆ ? ಆದ್ದರಿಂದಲೇ ಶ್ರೀ ರಾಮಕೃಷ್ಣರು - ಕಾಮ ಕಾಂಚನದ ತಿಕ್ಕಲು ಹೊಡೆದಾಟಕ್ಕೆ ಸಾಕ್ಷಿಯಾಗಲು ಸರ್ವಥಾ ಸಮ್ಮತಿಸಲಿಲ್ಲ; "ಸುಳ್ಳು ಸಾಕ್ಷಿ"ಯಾಗಲು ಒಪ್ಪಿರಲಿಲ್ಲ. ತನ್ನ ಬಂಧು ಬಳಗದ ಕರ್ಮಗಳನ್ನು ಕೋರ್ಟಿನಲ್ಲಿ ನಿಂತು ಸಮರ್ಥಿಸಬೇಕೆಂಬ ಕೋರಿಕೆಯನ್ನು ಶ್ರೀ ರಾಮಕೃಷ್ಣರು ಒಪ್ಪಲಿಲ್ಲ; ಮುಚ್ಚಿಹಾಕಲೂ ಇಲ್ಲ; ತಪ್ಪಿಸಿಕೊಂಡು ಓಡಿಹೋಗಲೂ ಇಲ್ಲ. ಕೋರ್ಟಿನ ತೀರ್ಪಿಗಿಂತ ಅಂತಃಸಾಕ್ಷಿಯ ತೀರ್ಪಿಗೇ ಮಹತ್ವ ನೀಡುವಂತೆ ಶ್ರೀ ರಾಮಕೃಷ್ಣರು ಆಗ ಬುದ್ಧಿ ಹೇಳಿದ್ದರು. ಆದರೆ ಸತ್ಯದ ದೇವರಿಗೆ ಎಂದಿನಿಂದಲೂ ಬೇಡಿಕೆ ಕಡಿಮೆಯೇ. ಸುಳ್ಳು ದೇವರ ಆರಾಧನೆ, ಸನ್ಮಾನದಲ್ಲೇ ನಿರತರಾಗಿರುವ ಜೀವಕೋಟಿಗಳ ನಡುವೆಯೇ ಸಾಮಾನ್ಯ ಮನುಷ್ಯರು ಬಾಳಬೇಕಾಗಿ ಬಂದಿದೆ. ಕ್ಷಣಿಕ ಸ್ವಾರ್ಥದಲ್ಲಿ ಮುಳುಗಿ, ಸತ್ಯವನ್ನು ಲೇವಡಿಮಾಡುವ ಹಂತಕ್ಕೆ ತಲುಪಿರುವ "ಕಾಂಚಾಣಿ" ಮನುಷ್ಯ ಸಂತಾನವು - ಈಗ, ಸುಳ್ಳು ಅಥವ ಅರ್ಧ ಸತ್ಯದ ಹಿಂದೆ ಮುಂದೆ - ಅಬ್ಬರದಿಂದಲೇ ಸುತ್ತುತ್ತಿದೆ. "ಕಳ್ಳ ದೇವರಿಗೆ ಸುಳ್ಳು ಸಾಕ್ಷಿ" ಎಂಬ ಜನಪದರ ಮಾತು ಸುಮ್ಮಸುಮ್ಮನೆ ಹುಟ್ಟಿಕೊಂಡದ್ದಲ್ಲ; ಅಪಾರ ಅರ್ಥವ್ಯಾಪ್ತಿಯನ್ನು ಹೊಂದಿರುವ ಅನುಭವಗಳ ಅವತಾರವಾಣಿಯಿದು ! ಆದ್ದರಿಂದಲೇ ಕೆಲವರು ಆಗಾಗ ದೇವರಾಗುತ್ತ, ಮತ್ತೊಮ್ಮೆ ತಾವೇ ಸಾಕ್ಷಿಗಳಾಗುವ ಮಿಥ್ಯಾ ವಿದ್ಯಮಾನವು ಸಂಭವಿಸುತ್ತಲೇ ಇರುತ್ತದೆ. ಆದ್ದರಿಂದ "ಸಾಕ್ಷಿ" ಎಂಬ - ಅಮೂರ್ತ ಶುದ್ಧ ಭಾವವನ್ನು ವಿರೂಪಗೊಳಿಸುವ ದುಸ್ಸಾಹಸಕ್ಕೆ ಯಾರೂ ತೊಡಗಬಾರದು. ಯಾವತ್ತೂ ಅಂತಃಸಾಕ್ಷಿಗೆ ಕಿವಿಗೊಡುವವರಿಗೆ - ಸಮಾಜದ ಯಾವುದೇ ಟಿಪ್ಪಣಿಗಳ ಚಿಂತೆಯಿರುವುದಿಲ್ಲ; ಏಕೆಂದರೆ ಅವರು ಸಮಾಜದ ಹಂಗಿಲ್ಲದೆ ತಮ್ಮ ಅಂತಃಸಾಕ್ಷಿಯೊಂದಿಗೇ ಬದುಕಬಲ್ಲರು. ಇದು - ಅರಿವು. ಅಂತಹ ಅರಿವಿನ "ನಿರ್ಭಯ" ಸ್ಥಿತಿಯಲ್ಲಿ ಮಾತ್ರ ಮಾನಸಿಕ ನೆಮ್ಮದಿ, ಶಾಂತಿಯು ಸಂಭವಿಸಬಲ್ಲದು. 

ಇಂದು ನಮ್ಮನ್ನು ಮುತ್ತಿರುವ ಮಿಥ್ಯೆಗಳಿಗೆ ಇತಿಮಿತಿಯೇ ಇಲ್ಲ. ಇವತ್ತಿನ ಸಮಾಜದಲ್ಲಿ ದೇಹ ದಾರ್ಢ್ಯ ಮತ್ತು ಸೌಂದರ್ಯಕ್ಕೆ ಇನ್ನಿಲ್ಲದ ಪ್ರಾಶಸ್ತ್ಯವಿದೆ. ದೇಹ ಮತ್ತು ದೇಹಸೌಂದರ್ಯಗಳು ಬಹು ಬೇಡಿಕೆಯ ಮಾರಾಟದ ವಸ್ತುಗಳಾಗಿ ಹೋಗಿವೆ ! ಕೆಲವು ಕಾರ್ಖಾನೆಗಳು ಇದೇ ವಸ್ತುವಿಂದಲೇ ಜೀವನೋಪಾಯ ಕಂಡುಕೊಂಡಿವೆ. ಅನೈತಿಕ ಮತ್ತು ಶಾಶ್ವತ ನೋವುಗಳನ್ನು ದಯಪಾಲಿಸುವ ಇಂತಹ ಧಂದೆಯಲ್ಲಿ ಮಾಧ್ಯಮಗಳೂ ಪಾಲು ಗಿಟ್ಟಿಸುತ್ತಿವೆ ! "ಸಿಕ್ಕಿದ್ದು ಸೀರುಂಡೆ" ಎಂಬ ಈ ಸ್ಪರ್ಧೆಯಲ್ಲಿ ಹಲವಾರು ಅಜ್ಞಾನೀ ಗುಮ್ಮಟಗಳು ಭಾಗಿಯಾಗಿ ಕಮಾಯಿ ಮಾಡಿಕೊಳ್ಳುತ್ತಿವೆ. ತಮ್ಮ ಪತ್ರಿಕೆ ಅಥವ ಇತರ ಮಾಧ್ಯಮಗಳಲ್ಲಿ ದೇಹ ಪೋಷಣೆಯ ಕುರಿತೇ ದಿನಕ್ಕೊಂದು ಸುದ್ದಿ ಕೊಡುತ್ತ ಜೀವನೋಪಾಯವನ್ನು ಕಂಡುಕೊಂಡಿರುವ ಅಕ್ಷರ ವ್ಯಭಿಚಾರವು ತಡೆಯಿಲ್ಲದೆ ನಡೆಯುತ್ತಿದೆ. ಏಕೆಂದರೆ ಬಹಳ ಜನರು ಇಂತಹ ವಿಚಾರಗಳನ್ನು ಇಷ್ಟಪಡುತ್ತಾರೆ ಎಂಬುದು "ಹೊಟ್ಟೆಪಾಡುಗಳ" ಅಭಿಪ್ರಾಯ. ಇಂತಹ ಪ್ರಚಾರಗಳ "ಅಂತೆಕಂತೆ ಜ್ಞಾನ"ದಿಂದಲೇ ಬಹಳ ಜನರು ತಂತಮ್ಮ ದೇಹವನ್ನು ಪ್ರಯೋಗಶಾಲೆ ಮಾಡಿಕೊಂಡಿರುವುದಿದೆ. ತೆಳ್ಳಗಾಗಲು, ದಪ್ಪವಾಗಲು, ಎತ್ತರ ಬೆಳೆಯಲು, ಅಲ್ಲಲ್ಲಿ ಮಾಂಸ ಶೇಖರಿಸಲು... ಎಲ್ಲವಕ್ಕೂ ಜಾಹೀರಾತುಗಳು ಬರುತ್ತವೆ. ಅದರಿಂದ ಆಕರ್ಷಿತರಾಗುವ ಜನರೂ ಇದ್ದಾರೆ. ತಮ್ಮ ಸರಕಿನ ಸಿಹಿ ಫಲಾನುಭವಿಗಳು ಎಂಬ ಕೆಲವು ಮುಖಗಳನ್ನು ಜಾಹೀರಾತು ಪ್ರವರ್ತಕರೇ ಖರೀದಿಸಿ ತೋರಿಸುತ್ತಿರುತ್ತಾರೆ; ಕಹಿ ಫಲಾನುಭವಿಗಳ ಸುದ್ದಿಯು ಎಲ್ಲೂ ಕಾಣಿಸುವುದಿಲ್ಲ; ಒಮ್ಮೊಮ್ಮೆ ಸಣ್ಣದಾಗಿ ಅಥವ ಅತಿ ವಿಜೃಂಭಿತವಾಗಿ ಸದ್ದು ಮಾಡುವುದೂ ಇದೆ. ವಸ್ತುಸ್ಥಿತಿಯು ಮಾತ್ರ, ಇಂತಹ ಗೋಜಲುಗಳ ನಡುವೆ ಕಳೆದೇ ಹೋಗಿರುತ್ತದೆ. ನಾವು ನಿಂತಿರುವ ಈ ನೆಲದಲ್ಲಿ ಸುಳ್ಳಿನ ಹೊಂಡಕ್ಕೆ ಬಿದ್ದ ಯಾವುದೇ ಮನುಷ್ಯರಿಗೆ - ಹೋರಾಡಿ ನ್ಯಾಯ ಪಡೆಯುವಷ್ಟು ಆಯುಷ್ಯವೇ ಇರುವುದಿಲ್ಲ. ಏಕೆಂದರೆ, ಇಲ್ಲಿನ "ನ್ಯಾಯ" ಎಂಬುದು ಹನುಮನ ಬಾಲಕ್ಕಿಂತ ಉದ್ದವಾಗಿದೆ ! ಆದ್ದರಿಂದ ಸುಳ್ಳುಗಳ ಬಲದಿಂದಲೇ ಬದುಕನ್ನು ಸುಲಭವಾಗಿ ಕಟ್ಟಿಕೊಳ್ಳುವ ದುಸ್ಸಾಹಸಕ್ಕೆ ಪ್ರೋತ್ಸಾಹವೂ ದೊರಕಿದಂತಾಗಿದೆ. ಸುಳ್ಳಿನ ಸಂತೆಯು ರಾಜಾಶ್ರಯದಲ್ಲಿ ಮಜಬೂತಾಗಿ ನಡೆಯುತ್ತಲೇ ಬಂದಿದೆ. ದುಷ್ಪರಿಣಾಮಕ್ಕೆ ಒಳಗಾದ ಸತ್ಯಸಜ್ಜನಿಕೆಯ ಹಿಂಡನ್ನು ದುಡ್ಡು ಮುಚ್ಚಿ ಹುಗಿದೇ ಬಿಡುತ್ತಾರೆ; ಅಗ್ಗದ ಜನಪ್ರಿಯತೆಗಾಗಿ, ಸುಳ್ಳನ್ನು ಬಲಿಷ್ಠಗೊಳಿಸಲು ಬೇಕಾದ ಎಲ್ಲ ಸೌಲಭ್ಯಗಳನ್ನೂ ನಮ್ಮ ವ್ಯವಸ್ಥೆಯೇ ಒದಗಿಸುತ್ತ ಬಂದಿದೆ......  ಏಕೆಂದರೆ ಸುಳ್ಳಿನ ಮಾರುಕಟ್ಟೆಗೇ ಬಹುಮತದ ಬೆಂಬಲ ! ರಾಜಾಶ್ರಯ ! ತಮ್ಮ ಸರಕುಗಳು - ಬಹು ಜನರು ಮೆಚ್ಚಿ ಒಪ್ಪಿ ಅನುಸರಿಸುತ್ತಿರುವಂತಹುದು - ಎಂಬ ಮಿಥ್ಯಾ ಪ್ರಚಾರವನ್ನೇ ಅವಲಂಬಿಸಿರುವ ಸಾಮಾಜಿಕ ಉದ್ಯೋಗಗಳು ಆದ್ದರಿಂದಲೇ ಅಗಣಿತವಾಗಿವೆ. ಇವೆಲ್ಲವೂ ಹೊಟ್ಟೆಪಾಡಿನ ತುರಿಕೆ ಉದ್ಯೋಗ; ಸತ್ಯವಲ್ಲ. ಆದರೂ ಇದೇ ಉದ್ಯೋಗವನ್ನು ಅವಲಂಬಿಸಿಕೊಂಡು ಇಡೀ ಬದುಕನ್ನು ಐಶಾರಾಮದಿಂದ ನೂಕಲು ಈ ಭೂಮಿಯಲ್ಲಿ ಯಾವ ತಾಪತ್ರಯವೂ ಇದ್ದಂತೆ ಕಾಣುವುದಿಲ್ಲ. ಇದು - "ಬಹುಮತ" ಎಂಬ ಕುರಿಮಂದೆಗೆ ಒದಗುವ ಆಕರ್ಷಕ ತಾಪತ್ರಯ. ಆದ್ದರಿಂದ ಯಾವುದೇ "ಬಹುಮತ"ವು - ಯಾವತ್ತೂ ಮಾರಾಟದ ಮಾಧ್ಯಮ; ಸುತರಾಂ ನಂಬಲರ್ಹವಲ್ಲದುದರಿಂದ ಸತ್ಯವಲ್ಲ.

"ಹಾಸಿಗೆ ಇದ್ದಷ್ಟೇ ಕಾಲು ಚಾಚು" ಎಂಬ ನುಡಿಗಟ್ಟಿದೆ. ಈ ಸಾಂದರ್ಭಿಕ ನುಡಿಗಟ್ಟಿನಲ್ಲಿ - ಇತಿಮಿತಿಯಲ್ಲಿ ಬದುಕಬೇಕಾದ ಸಂದೇಶವಿದೆ. ವಿಲೋಮವಾಗಿ, "ಶಯನಕ್ಕೆ ಹೊಂದುವಂತಹ ಹಾಸಿಗೆ ಇರಿಸಿಕೋ" ಎಂದರೂ ಸಮರ್ಥನೀಯವೇ ಆಗುತ್ತದೆ.. ಉದಾಹರಣೆಗೆ : ಅವರವರ ದೇಹಕ್ಕೆ ಹೊಂದುವ ಅಂಗಿ ಹೊಲಿಸಿಕೊಳ್ಳಬೇಕೇ ವಿನಹ ಯಾರದೋ ಅಂಗಿಯನ್ನು ಯಾರೋ ಧರಿಸಲು ಸಾಧ್ಯವೆ ? ಹಾಗೊಮ್ಮೆ ಧರಿಸಿದರೂ ಅಂತಹ ಅಂಗಿಯನ್ನು ಧರಿಸಿದವರಿಗೆ ಅದು ಹಿತ ಕೊಡುವುದೆ ? ಇಲ್ಲ. ಹಾಗೆಂದು, ಅಂಗಿಗೆ ತಕ್ಕಂತೆ ದೇಹವನ್ನು ರೂಪಿಸಿಕೊಳ್ಳಲೂ ಆಗುವುದಿಲ್ಲ. ಆದರೆ...  ಸರಿಯಾಗಿ ಹೊಂದುತ್ತಿದ್ದ ಅಂಗಿಯು ಪದೇ ಪದೇ ಬಿಗಿಯಾಗಿ ಉಸಿರುಗಟ್ಟುವಂತಾಗುತ್ತಿದ್ದರೆ ಆಗ - ದೇಹಯಂತ್ರದ ಸ್ವಚ್ಛಂದ ತುಂಟಾಟವನ್ನು ಗಮನಿಸಬೇಕಾಗುತ್ತದೆ. ನಿತ್ಯಬದುಕು ಎಲ್ಲಿ ಹಳಿ ತಪ್ಪಿದೆ ? ಎಂದೂ ಯೋಚಿಸಬೇಕಾಗುತ್ತದೆ. ನಮ್ಮ ಆಹಾರ, ವ್ಯವಹಾರಗಳಿಂದಾಗಿ ದೇಹವು ಕೊಬ್ಬುವಂತಾದಾಗ ಒಮ್ಮೊಮ್ಮೆ ದೇಹ ಯಂತ್ರವನ್ನು ಸ್ವಚ್ಚಗೊಳಿಸಲೂ ಬೇಕಾಗುತ್ತದೆ. ಅತಿಮಿತಿಗಳ ಪುನರ್ವಿಮರ್ಶೆಯನ್ನೂ ಕೊಂಚ ಮಾಡಬೇಕಾಗುತ್ತದೆ. "ಹಾಸಿಗೆಗೆ ತಕ್ಕಂತೆ ಕಾಲು ಚಾಚುವ" ಅವಸರದಲ್ಲಿ, ಕೊಬ್ಬುವ ದೇಹಸ್ವಭಾವದ ವ್ಯಾಪ್ತಿಗೆ ತಕ್ಕಂತೆ ಆಗಾಗ ಅಂಗಿಯನ್ನು ವಿಸ್ತರಿಸಿಕೊಳ್ಳುವುದು ವಿವೇಕವಲ್ಲ; ದೇಹವು ಕೊಬ್ಬದಂತೆ ಎಚ್ಚರ ವಹಿಸುವುದೇ ಜಾಣತನ. ಸ್ವಂತ ಪ್ರಕೃತಿಗೆ ವಾಸಯೋಗ್ಯವಾದ ದೇಹ ಮತ್ತು ಭಾವ ಸಮನ್ವಯತೆಯಿಂದ ಅಂತಃನಿರೀಕ್ಷೆಯ ಸಾಮರ್ಥ್ಯವೂ ಒದಗುತ್ತದೆ. ಅಂತೆಯೇ ರಿಪೇರಿ ಆಗಬೇಕಾದ್ದು ಬಾಹ್ಯದಲ್ಲಲ್ಲ; ಆಂತರ್ಯದಲ್ಲಿ.

ಆರೋಗ್ಯವಂತ ದೇಹವನ್ನು ಉಳಿಸಿಕೊಳ್ಳುವ ಇಚ್ಛೆಯು ಬದುಕಿರುವವರೆಗೂ ಎಲ್ಲರಿಗೂ ಅಗತ್ಯ. ಆದರೆ ಬಹುಮತದ ಜಾಹೀರಾತುಗಳ ಬಲೆಗೆ ಬಿದ್ದು, ಅದು - ದೇಹಭ್ರಾಂತಿ ಎಂಬ ರೋಗವಾಗದಂತಹ ಎಚ್ಚರವೂ ಇರಬೇಕು. ಒಂದೊಂದು ಜೀವ ಯಂತ್ರವೂ ಸ್ವಯಂ ವಿಶಿಷ್ಟವಾದುದರಿಂದ ಯಾರದೋ ಪಥ್ಯಗಳು ಎಲ್ಲರಿಗೂ ಹೊಂದದೇ ಇರಬಹುದು. ಆದ್ದರಿಂದ "ಅವರ ಅಂಗಿಯನ್ನು ಇವರು ಹಾಕಿಕೊಳ್ಳುವ" ಯಾವುದೇ ಕ್ರಿಯೆಯು ಉತ್ತಮ ಫಲಿತಾಂಶವನ್ನು ನೀಡಲಾರದು. ಅವರವರ ದೇಹಭಾಷೆಯಂತೆಯೇ ಆತ್ಮಭಾಷೆಯೂ ಭಿನ್ನ ಮತ್ತು ವಿಶಿಷ್ಟವಾಗಿರುತ್ತದೆ. ಅದನ್ನು ಅರಿಯಲು, ಪ್ರೀತಿಯ ಒಳದನಿಗೆ ಕಿವಿಗೊಡಬೇಕಾಗುತ್ತದ; ಒಳದನಿಯು ಹಾತೊರೆಯುವ ಉಡುಪನ್ನೇ ತೊಡಿಸಬೇಕಾಗುತ್ತದೆ. ಒಳಹೊರಗುಗಳನ್ನು ಒಂದಾಗಿಸುವ ಹಾದಿಯಿದು. ತಮ್ಮ ಶಿಷ್ಯರ ಆಯ್ಕೆಯ ಹಂತದಲ್ಲಿ - ಅಳೆದು ತೂಗುತ್ತ - ಶ್ರೀ ರಾಮಕೃಷ್ಣರು ವಹಿಸಿದ್ದ ಅತೀವ ಎಚ್ಚರವನ್ನು ಈ ಹಿನ್ನೆಲೆಯಲ್ಲಿ ಗಮನಿಸಬೇಕಾಗುತ್ತದೆ.             

"ಬಹುಮತ" ಎಂಬುದು ಯಾವತ್ತೂ ಸತ್ಯಮಿಥ್ಯೆಗಳ ಬೃಹತ್ ಮಿಶ್ರಣ. ಕಲಸುಮೇಲೋಗರ. ನೂರಾರು ಮುಖದ ಮಾಯಕ. ಆದ್ದರಿಂದಲೇ ಬಹುಮತವು ಆಗಾಗ ಬೇಸ್ತುಬೀಳಿಸುತ್ತದೆ. ಆದರೆ ಸತ್ಯಕ್ಕೆ ಯಾವತ್ತೂ ಏಕಮತ; ಏಕ ಮುಖ. ಸತ್ಯವು ಕರೆಯದೇ ಬರುವ ಅತಿಥಿಯಲ್ಲ. ಆದರೆ ಸದಾ ಝಗಮಗಿಸುತ್ತ ಲೊಟ್ಟೆಯಾಡುವ ಸುಳ್ಳುಗಳು ನಿತ್ಯವೂ ತಾವಾಗಿಯೇ ದರ್ಶನ ನೀಡುತ್ತ ನಮ್ಮ ಬಂಧುಮಿತ್ರರಂತೆ ಸುಳಿದಾಡುತ್ತವೆ. ಆದರೆ ಅಂತಹ ಭ್ರಾಂತಿ-ಭ್ರಮೆಗಳ "ಹೊಕ್ಕು ಬಳಕೆ"ಯು ಮಿತವಾದಷ್ಟೂ ಪ್ರಶಾಂತಿಯು ನಮ್ಮ ಹತ್ತಿರ ಸರಿಯಬಹುದು. ಪರಮಸತ್ಯಾಭಿಮುಖಿಗಳಾಗಲು ಮೊತ್ತಮೊದಲಿಗೆ ಮನೋವಾಕ್ಕಾಯಗಳಿಂದ ಇಚ್ಛಿಸಬೇಕಾಗುತ್ತದೆ. ಇಚ್ಛೆ ಮೂಡದೆ - ಕ್ರಿಯೆಯು ಸ್ಪಂದಿಸದು. ಪ್ರಬಲ ಇಚ್ಛೆಯೊಂದು ಮೂಡಿಬಿಟ್ಟರೆ ಇಂದ್ರಿಯಗಳನ್ನು ಗುಲಾಮ ಸಾಧನವನ್ನಾಗಿಸಿಕೊಂಡು ಗುರಿಸಾಧನೆಗೆ ಅನುವಾಗಬಹುದು. ಇಚ್ಛೆಯು ತಾನಾಗಿಯೇ ಮೂಡುವುದು ಮಾತ್ರ ಪುಣ್ಯಬಲದಿಂದಲೇ. ಆದರೆ ಸತತ ಪ್ರಯತ್ನವೆಂಬ ತಪಸ್ಸಿನಿಂದಲೂ ಇಚ್ಛಾಶಕ್ತಿಯನ್ನು ರೂಢಿಸಿಕೊಳ್ಳಬಹುದು. ಆದ್ದರಿಂದ ಸದಿಚ್ಛೆಯನ್ನು ರೂಢಿಸಿಕೊಳ್ಳುವ ಸತತ ಪ್ರಯತ್ನವು ಅವಶ್ಯಕ. ಈ ಭೂಮಿಯನ್ನು ವ್ಯಾಪಿಸಿರುವ ಭ್ರಮೆ ಅಥವ ಸುಳ್ಳಿನ ಪರಿಸರದಲ್ಲಿಯೇ ಸುಳಿದಾಡುತ್ತ ಸತ್ಯಾನ್ವೇಷಣೆಯನ್ನು ನಡೆಸಬೇಕಾದ ಘನವಾದ ಸವಾಲು ಜೀವಿಗಳ ಮುಂದಿದೆ. ಈ ಅಗ್ನಿಪರೀಕ್ಷೆಗೆ ಎಲ್ಲರೂ ಪೂರ್ಣರೂಪದಲ್ಲಿ ಸಿದ್ಧವಾಗಿರುವುದೂ ಅಸಂಭವ. ಆದ್ದರಿಂದ ಕಠಿಣವಾದ ಪೂರ್ವತಯಾರಿಯಿಲ್ಲದ ಅಸಂಖ್ಯ ಜೀವಗಳು ಭೂಮಿಯಲ್ಲಿ ಯಥೇಷ್ಟವಾಗಿ ಒದಗುವ ಸುಳ್ಳುಗಳ ಸ್ನೇಹದಲ್ಲೇ ಇದ್ದು, ಭ್ರಮೆಗಳ ಬಲೆಗೆ ಬಿದ್ದು, ತರಚು ಗಾಯಗಳನ್ನು ಅನುಭವಿಸುತ್ತಲೇ ಇರುತ್ತವೆ; ಆದರೆ ಸುಳ್ಳು ಪ್ರತಿಷ್ಠೆ ಮತ್ತು ಸುಳ್ಳಿನ ಸಹವಾಸದೋಷದ ತತ್ಫಲವಾಗಿ ತಮ್ಮ ಯಾವುದೇ ಗಾಯಗಳನ್ನು ಪ್ರಕಟಪಡಿಸುವುದಿಲ್ಲ. ಸಾಮಾಜಿಕ ಪ್ರತಿಷ್ಠೆಗಾಗಿ "ಏನೂ ಆಗಿಲ್ಲ; ಪರಮಾನಂದ... ನಾನು ಕ್ಷೇಮ; ನೀನು ಕ್ಷೇಮ - ALL IS WELL" ಎಂಬಂತಹ ಸುಳ್ಳು ತೋರಿಕೆಯಲ್ಲೇ ತೇಲಿ ಮುಳುಗುತ್ತಾರೆ; ಸತ್ಯದ ಕಹಿಗಿಂತ ಸುಳ್ಳೇ ಸಿಹಿ ಎಂದುಕೊಳ್ಳುತ್ತ - ತಮ್ಮನ್ನು ತಾವೇ ಕ್ರೂರವಾಗಿ ಸಂತೈಸಿಕೊಳ್ಳುವುದರಿಂದ ನಿರಂತರ ನೋವನ್ನೂ ಉಣ್ಣುತ್ತಾರೆ.

ಹೀಗೆ ಉಪ್ಪು ನೀರನ್ನು ಕುಡಿದು ಬಾಯಾರಿಕೆಯನ್ನು ಹಿಂಗಿಸಿಕೊಳ್ಳುವ ನಿರಂತರ ಯತ್ನಗಳು ನಡೆಯುತ್ತಲೇ ಇವೆ. ಮನುಷ್ಯರ ಮನಸ್ಸು ಲೌಕಿಕದ ಕೆಸರಿನಲ್ಲಿ ಮುಳುಗಿ ಮುಳುಗಿ ಈಗ ಕೆಸರೇ ಪ್ರಿಯವೆನಿಸುವಷ್ಟು ಕಲುಷಿತವಾಗಿದೆ. ಆದರೆ ಯಾವುದೇ ತೋರಿಕೆಯ ಕರ್ಮಗಳಿಂದಲೂ ಮನುಷ್ಯರ ಚಡಪಡಿಕೆಯು ಮಾತ್ರ ನಿಲ್ಲುವುದಿಲ್ಲ; ತೃಪ್ತಿಯ ನೆರಳೂ ಸುಳಿಯುವುದಿಲ್ಲ. ಆಡಿದ್ದೇ ಆಟ, ಓಡಿದ್ದೇ ಓಟ. ಯಾಕೆ ಎಲ್ಲಿಗೆ - ಎಂಬುದು ಮಾತ್ರ ಗೊತ್ತಿಲ್ಲ. ಛದ್ಮವೇಷವಂತೂ ನಡೆಯುತ್ತಲೇ ಇದೆ.

ಉಪ್ಪು ನೀರನ್ನು ಕುಡಿದಂತೆ ಅತೃಪ್ತಿಯನ್ನು ಹೆಚ್ಚಿಸುವ ಸಾಧನಗಳಾದ ಬಾಹ್ಯ ಸಾಧನೆಗಳೆಲ್ಲವೂ ಪೂರ್ಣ ತೃಪ್ತಿಯ ಅನುಭವವನ್ನು ನೀಡಬಲ್ಲವೆ ? ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗಳಿಸಿದವರೆಲ್ಲರೂ ಪರಮಾನಂದವನ್ನು ತಲುಪಿ, ಪಶ್ಚಾತ್, ಯಾವುದೇ ಬಯಕೆಗಳೂ ಇಲ್ಲದೆ ತಮ್ಮ ಶೇಷಾಯುಷ್ಯವನ್ನು ನೆಮ್ಮದಿಯಿಂದ ಸಾಗಿಸುತ್ತಿದ್ದಾರೆಯೆ ? ಹಾಗಿದ್ದರೆ ಉಚ್ಚ ಅಧಿಕಾರಿ, ನವಕೋಟಿಗಳ ಒಡೆಯರೆಲ್ಲರೂ ನೆಮ್ಮದಿಯಿಂದ ಶಾಂತ ಬದುಕನ್ನು ನಡೆಸುತ್ತಿರಬೇಕಲ್ಲವೆ ? ಹತ್ತಾರು ಹೆಣ್ಣು ಗಂಡಿನ ಸಹವಾಸದ ಸ್ವರ್ಗಸುಖದಲ್ಲೇ ಮುಳುಗಿರುವವರ ಬಯಕೆಗಳೆಲ್ಲವೂ ಅಂತ್ಯಗೊಂಡಿರಬೇಕಲ್ಲವೆ ?

ಹೊರಕಣ್ಣಿಗೆ ಹಾಗೆ ಕಂಡೀತು. ಆದರೆ ಅಂತಹ ಸಾಧಕರನ್ನು ಗುಟ್ಟಾಗಿ ಕೇಳಿದರೆ ಅಲ್ಲಿಯೂ ತೃಪ್ತಿ ಎಂಬುದು ಕಾಣುವುದಿಲ್ಲ. ನಮ್ಮ ಒಂದೊಂದು ಲೌಕಿಕ ಸಾಧನೆಗಳ ಅನಂತರವೂ ಅತೃಪ್ತಿಯು ಹೆಚ್ಚುವುದಲ್ಲದೆ ಕಡಿಮೆಯಾಗುವುದೇ ಇಲ್ಲವಲ್ಲ ? ಬಯಕೆಯ ಬಾಯಾರಿಕೆಯು ತಣಿಯುವುದೇ ಇಲ್ಲವಲ್ಲ ? ಗುರಿಯ ಸ್ಪಷ್ಟತೆಯಿಲ್ಲದ ಬದುಕುಗಳ ಸಾಮಾನ್ಯ ಸಮಸ್ಯೆಯಿದು. ಏಕೆಂದರೆ ಗಾಳಿ ಬೀಸಿದಂತೆ ಮಗುಚಿಕೊಳ್ಳುವ, ಅಲೆಗಳು ಸೆಳೆದತ್ತ ಹೊರಳಿಕೊಳ್ಳುವ ಯಾವುದೇ ಯಾತ್ರೆಯು ಗುರಿ ತಲುಪುವುದಿಲ್ಲ; ಗುರಿ ತಲುಪಲಾಗದ ಭಾವವು ತೃಪ್ತಿಯನ್ನು ಕಾಣುವುದಿಲ್ಲ. ಯಾರಿಗೂ ಪಯಣದ ಸ್ಪಷ್ಟತೆಯಿಲ್ಲ. ಮನುಷ್ಯರ ಭೌತಿಕ ಬಯಕೆಯ ಪಟ್ಟಿಯಂತೂ ಹನುಮನ ಬಾಲದಂತಿದೆ. ಆದ್ದರಿಂದಲೇ ನಮ್ಮ ಭೌತಿಕ ಬೇಕುಗಳು ಮುಗಿಯುವವರೆಗೂ ತೃಪ್ತಿ ಎಂಬುದು ಕಾಣುವುದಿಲ್ಲ. ಆದರೆ ಜೀವಿಗಳ "ಬೇಕುಗಳು" ಉಸಿರಿರುವವರೆಗೂ ಮುಗಿಯದಿರುವುದು ಬಹು ದೊಡ್ಡ ಸಮಸ್ಯೆ. ಏನು ಆಡಿದರೂ ಏನು ಮಾಡಿದರೂ ಎಷ್ಟು ಓಡಿದರೂ ಅದೇನೋ ಅತೃಪ್ತಿ. "ಈ ಜನ್ಮಕ್ಕೆ ಇಷ್ಟು ಸಾಕು..." ಎಂದು ಭಾವಿಸುವವರೆಗೂ ಋಷಿ ಭರದ್ವಾಜರಿಗೂ ಸುಖಶಾಂತಿಯಿರಲಿಲ್ಲ; "ಈ ಜನ್ಮಕ್ಕೆ ಇಷ್ಟು ಸಾಕು" ಎಂದು ಯಾವತ್ತು ಅನ್ನಿಸಿತೋ ಆಗಲೇ ಅವರ ದಾರಿ ಸ್ಪಷ್ಟವಾಯಿತು; ಹೀಗಾದಾಗಲೇ - ತೃಪ್ತಿಯ ದಡ ಕಾಣಿಸೀತು.

ಯಾವುದೇ ಕರ್ಮವನ್ನಾದರೂ "ಮಾಡಿ ಮಾಡಿ" ಸಾಫಲ್ಯದ ಭಾವವರ್ಷಿಣಿ ಆದೀತೆ ? ಅದು ಅಸಾಧ್ಯ. ಸಾಫಲ್ಯವು - ತಾನಾಗಿಯೇ ಉಂಟಾಗುವಂಥಹದು. ಋಷಿ ಭರದ್ವಾಜರಂತೆ ಅಂತರಂಗವನ್ನು ಉತ್ತು ಬಿತ್ತಾಗ ಉಂಟಾಗುವ ಫಲವದು. ಅತೃಪ್ತರಾಗಿರುವ ಬಹುಜನರು ಮಾಡುತ್ತಿರುವುದು ಕೇವಲ ದೇಹಶ್ರಮ. ಆತ್ಮ ದರ್ಶನವಲ್ಲ. ದೇಹಶ್ರಮದಿಂದ ಸಿಗುವುದು ಖರ್ಚಿಗೆ ಬೇಕಾದ ಕೂಲಿ ಮಾತ್ರ. ಎಷ್ಟು ಕೂಲಿಯು ದೊರಕಿದರೂ ಮತ್ತಷ್ಟು ಬೇಕೆಂಬ ಆಸೆಯನ್ನು ಅದೇ ಕರ್ಮವೇ ಜೀವಂತವಾಗಿ ಇರಿಸುತ್ತದೆ. ಆಸೆ ಎಂಬುದು ಹಾಗೇ ಉಳಿದುಕೊಳ್ಳುತ್ತದೆ. ಯಾವುದೇ ಉಳಿದುಕೊಂಡ ಆಸೆಯು ತೃಪ್ತ ಭಾವವು ಮೂಡಲು ಬಿಡುವುದಿಲ್ಲ. ತೃಪ್ತಿ ಹೊಂದಲು ಒಪ್ಪುವುದೇ ಇಲ್ಲ. ಅತೃಪ್ತಿಯೇ ದುಃಖದ ಮೂಲ. ಅತೃಪ್ತಿಯ ಸಂಚಾರವು ಸಾರ್ಥಕ ಭಾವವನ್ನು ಇರಗೊಡುವುದೇ ಇಲ್ಲ; ಸುಳಿಯಲೂ ಬಿಡುವುದಿಲ್ಲ. ಆದ್ದರಿಂದಲೇ "ಒಂದು ಕೈಯ್ಯಿಂದ ಭಗವಂತನನ್ನು ಇನ್ನೊಂದು ಕೈಯ್ಯಿಂದ ಸಂಸಾರದ ನಿತ್ಯಕರ್ಮಗಳನ್ನು ಮಾಡುತ್ತಿರಿ; ಸಂಸಾರದಲ್ಲಿ ತೇಲುತ್ತಿದ್ದರೂ ಅದರಲ್ಲಿಯೇ ಪೂರ್ತಿಯಾಗಿ ಮುಳುಗಿಹೋಗಬೇಡಿ..." ಎನ್ನುತ್ತಿದ್ದ ಪರಮಹಂಸರು - ಲೌಕಿಕದ ಧೂಳು ಕಸಗಳನ್ನು ಮೆತ್ತಿಕೊಳ್ಳದೆ, ಹಂತಹಂತವಾಗಿ ಕೊಡವಿಕೊಳ್ಳುವ ಮಾರ್ಗದರ್ಶನವನ್ನೂ ಸಂಸಾರಿಗಳಿಗೆ ಮಾಡುತ್ತಿದ್ದರು.

ಯಾವುದೇ ಸಫಲತೆಯನ್ನು ಮಾಡಿ ಮಾಡಿ ಗಿಟ್ಟಿಸಿಕೊಳ್ಳಲು ಆಗುವುದೇ ಇಲ್ಲ. ಗಾಯನದ ದಂತಕತೆಯಾಗಿರುವ ಲತಾ ಮಂಗೇಶ್ಕರ್ ಅವರು ತಮ್ಮ ಒಂದು ಸಂದರ್ಶನದಲ್ಲಿ "ಇನ್ನೊಂದು ಜನ್ಮವಿರುವುದಾದರೆ ನಾನು ಗಾಯಕಿಯಂತೂ ಆಗಬಯಸುವುದಿಲ್ಲ" ಎಂದಿದ್ದರು ! ಏಕೆ ? ಲಕ್ಷಾಂತರ ಗಾಯಕರು ಮತ್ಸರಿಸುವಂತಹ ಔನ್ನತ್ಯಕ್ಕೇರಿದ ಲತಾ ಮಂಗೇಶ್ಕರ್ ಹೀಗೇಕೆ ಹೇಳಿರಬಹುದು ? ಯಾವುದೇ ಭೌತಿಕ ಸಾಧನೆಗೂ ದೈವಕೃಪೆಯು ಅವಶ್ಯವೇ ಆಗಿದೆ ಎಂಬುದು ಮೂಲ ಸತ್ಯ.. ಆದರೆ ಸಾಧನೆಗಾಗಿ ನಡೆಸಿದ್ದ ಕಠಿಣ ಪರಿಶ್ರಮಗಳ ಹಿಂದೆ, ಅತೃಪ್ತಿಮೂಲವಾದ ಕೀರ್ತಿ, ಸಂಪತ್ತು, ಭೋಗಜೀವನದ ಸೆಳೆತದ ಸ್ವಾರ್ಥೀ ವ್ಯಾವಹಾರಿಕತೆಯೂ ದುಡಿದಿರುತ್ತದೆ ಎಂಬುದೂ ವಾಸ್ತವ. ಆದ್ದರಿಂದಲೇ ವಿಶ್ವದಲ್ಲೇ ಮಹಾನ್ ಸಾಧಕರು ಎನ್ನಿಸಿಕೊಂಡು ಗಿನ್ನೆಸ್ ದಾಖಲೆಗಳನ್ನು ಬರೆದವರನ್ನು ಗುಟ್ಟಾಗಿಯೇ ಅಲುಗಿಸಿದರೂ ನಾಲ್ಕು ಹನಿ ಕಂಬನಿಯು ಉದುರುತ್ತದೆ. ಅಲ್ಲಿ ಅಳುವುದು ಸಾಧನೆಯಲ್ಲ; ಅತೃಪ್ತಿ. ಬಯಸಿದ್ದು ಸಿಗಲಿಲ್ಲ ಎಂಬ ಅತೃಪ್ತಿ ! ನಮ್ಮ ನೈಜ ಹುಡುಕಾಟದ ವಸ್ತು ಏನೆಂಬುದು ನಮಗೇ ಗೊತ್ತಿಲ್ಲದಿರುವುದರಿಂದಲೇ ಹುಡುಕಾಟಗಳು ಸಾಫಲ್ಯದ ತೃಪ್ತ ಭಾವವನ್ನು ಮೂಡಿಸುವಲ್ಲಿ ಸೋಲುತ್ತಿವೆ. ಅಂದರೆ ನಾವು ಹುಡುಕುತ್ತಿರುವುದು ಇವನ್ನಲ್ಲವೇ ಅಲ್ಲ; ಇನ್ನೇನನ್ನೋ ಎಂಬುದು ಸ್ಪಷ್ಟ. ಅದೇನು ? - ಎಂಬುದು ಕೆಲವರಿಗೆ ದೈವಕೃಪೆಯಿಂದ ಅರ್ಥವಾಗುತ್ತದೆ; ಕೆಲವರಿಗೆ ಅರ್ಥವಾಗಲು ದೀರ್ಘಕಾಲ ಹಿಡಿಯುತ್ತದೆ. ಕೆಲವರಿಗೆ ಹಲವಾರು ಜನ್ಮಗಳೇ ಬೇಕಾಗಬಹುದು. "ನನಗೇನೋ ಬೇಕು...ಅದೇನು?  ನಾನು - ಏನು? " ಎಂಬ ಅಂತರ್ಮಥನವನ್ನು ನಡೆಸುವ ಇಚ್ಛೆಯಾಗುವುದೂ ದೈವಕೃಪೆಯಿಂದಲೇ. ಆದರೆ ಲೌಕಿಕರಿಗೆ ಸಾಮಾನ್ಯವಾಗಿ ಈಗ  ಎಂಬ ತಕ್ಷಣಕ್ಕೆ - ಅದಕ್ಕೆಲ್ಲ ಪುರಸೊತ್ತಿಲ್ಲ. ಆದರೆ ಈಗಲೇ ಯಾರಿಗೆ ಪುರಸೊತ್ತು ಇರುತ್ತದೋ ಅವರೊಳಗೆ ನಿಜವಾದ ಆನಂದ ಇಣುಕುತ್ತದೆ. ಇಂತಹ ಅಂತರ್ಮಥನವನ್ನು ನಾವುಈಗಲೇ ನಡೆಸಲಾಗದಿದ್ದರೆ - ಇದನ್ನೇ ಎಚ್ಚರ ತಪ್ಪಿದ ಅಥವ ಅರಿವು ಮೂಡದ ಸ್ಥಿತಿ ಎನ್ನುವುದು. ಶ್ರೀ ರಾಮಕೃಷ್ಣರು ತಮ್ಮ ವಲಯದಲ್ಲಿ ಸತ್ಯದ ಅರಿವು ಮೂಡಿಸಲು ನಿರಂತರ ಹೆಣಗಾಡಿದ್ದರು.

ಜೀವನವನ್ನು ನಟನೆ ಎಂದು ಭಾವಿಸಬೇಕು; ಭಾವಿಸಿದರೆ ಸಾಕು. ಆತ್ಮವು ಪಾತ್ರದೊಳಗೆ ತಾನಾಗಿ ಲೀನವಾಗುತ್ತದೆ. ದಿನಗಳೆದಂತೆ ಆತ್ಮವೇ ಪಾತ್ರವಾಗುತ್ತದೆ; ಸತ್ಯದರ್ಶನ ಎಂದರೆ ಅದೇ. ಆತ್ಮವೇ ಪಾತ್ರವಾದಾಗ ಸತ್ಯದರ್ಶನವಾಗುತ್ತದೆ. ಸತ್ಯದ ಬೆಳಕಿನಲ್ಲಿ ಹೆಜ್ಜೆಗಳು ಸ್ಥಿರವಾಗಿ ಮುನ್ನಡೆಯುತ್ತವೆ. ಅದು ಬೇರಿಗೇ ನೀರುಣಿಸಿದಂತೆ. ಆಗ ವೃಕ್ಷ ಚಿಗುರುತ್ತದೆ; ಆತ್ಮರೂಹಿಯ ಸಾಕ್ಷಾತ್ಕಾರವಾಗುತ್ತದೆ. ಆದರೆ ಆಸೆಯ ಬಾಹ್ಯಕನಸಿನ ಹಿಂದೆ ಓಡುತ್ತ ಆತ್ಮಜೀವನವನ್ನೇ ಬಗೆಬಗೆಯ ನಟನೆಗೆ ಒಡ್ಡಿದರೆ - ಆಗ ಬದುಕು ಮುಗ್ಗರಿಸುತ್ತದೆ. ಒಳದನಿಯು ಪ್ರತಿಸ್ಪಂದಿಸಲಾಗದೆ ಬೇರು ಒಣಗಿದಂತೆ ಜಡವಾಗುತ್ತದೆ. ಬೇರು ಒಣಗಿದಾಗ ಭಾವವೃಕ್ಷವೂ ಒಣಗುತ್ತದೆ. ಆದರೆ ಈ ಮಿಥ್ಯಾ ಜಗತ್ತಿನಲ್ಲಿ ಉರುಳಾಡುವ ಹಂತದಲ್ಲಿ ಸತ್ಯದ ನಟನೆಯೂ ಸುಲಭವೇನಲ್ಲ. ಆದರೆ "ಸಾಕು" ಎಂಬ ಮನಸ್ಥಿತಿಗೆ - ಅದು ಅಸಾಧ್ಯವೂ ಅಲ್ಲ. ಈ ಜಗತ್ತಿನಲ್ಲಿ, ಸೀತೆಯ ಪಾತ್ರಧಾರಿಯು ಅಶೋಕದಲ್ಲಿದ್ದೂ ಶೋಕವನ್ನು ಪ್ರದರ್ಶಿಸಿದಂತೆ ನಟಿಸಬೇಕು; ಆತ್ಮವು ಪಾತ್ರವಾಗುವಂತೆ ನಟಿಸಬೇಕು. ನಟನೆ ಮುಗಿದಾಗ ಅಗ್ನಿಪ್ರವೇಶಕ್ಕೂ - ಸೀತೆಯಂತೆಯೇ ಅಳುಕಬಾರದು; ಉದ್ದೇಶಿತ ಕರ್ತವ್ಯ ಮುಗಿಸಿದ ಮೇಲೆ ತನ್ನ ದೇಹತ್ಯಜಿಸಲು ಶ್ರೀ ರಾಮನೂ ಅಳುಕಲಿಲ್ಲ. ಒಮ್ಮೊಮ್ಮೆ ನೇಪಥ್ಯಕ್ಕೆ ಸರಿದುಬಿಡುವುದೂ ಬದುಕಿನ ನಟನೆಯ ಭಾಗವೇ ಆಗಿದೆ. ಅದು ಆತ್ಮಹತ್ಯೆಯಲ್ಲ; ಅರಿವಿನ ಪಥ್ಯ. ಆದರೆ ಅರಿವಿಲ್ಲದ ಕುರಿಮಂದೆಗಳು ಬದುಕಿನುದ್ದಕ್ಕೂ ನಡೆಸುವ ಎಲ್ಲ ಕರ್ಮಗಳೂ ಆತ್ಮಹತ್ಯೆಯೇ ಆಗಿರುತ್ತವೆ. ಆದರೆ ಅರಿವು ಜಾಗ್ರತವಾಗಿರುವಲ್ಲಿ - ಯಾವುದೇ ಹತ್ಯೆ ಮಿಥ್ಯೆಗಳ ಆಟ ನಡೆಯುವುದಿಲ್ಲ. ಶ್ರೀ ರಾಮಕೃಷ್ಣರು ಗಂಟಲಿನ ಕ್ಯಾನ್ಸರ್ ಬಾಧೆಯಿಂದ ಬಳಲುತ್ತಿದ್ದರೂ ತಮ್ಮ ಕೊನೆಯ ಉಸಿರಿನವರೆಗೂ ಅರಿವಿನ ಪೂರ್ಣಪ್ರಜ್ಞ ಸ್ಥಿತಿಯಲ್ಲಿದ್ದರು ! ಸತ್ಯದ ತೊಟ್ಟಿಲನ್ನು ತೂಗುತ್ತಿದ್ದರು ! ಇಂತಹ ಬುದ್ಧಿ ಭಾವಗಳ ಸಮನ್ವಯತೆಯು ಅರಿವಿನ ಪ್ರಖರತೆಯಿಲ್ಲದೆ ಸಿದ್ಧಿಸದು. ಅರಿವು ಮೂಡಿದಂತಹ ಯಾವುದೇ ಪಾತ್ರಗಳ ನಿಜನಟನೆಯು ಭಾವೋದ್ದೀಪನಗೊಳಿಸುತ್ತಲೇ ಭಾವೈಕ್ಯವಾಗುತ್ತವೆ. ಇದೇ ಅದ್ವೈತದ "ಜಗತ್ ಮಿಥ್ಯಾ" ಛಳಕು ! ಶ್ರೀ ರಾಮಕೃಷ್ಣರ ಪಲುಕು !

ಅರಿವು ಎಂಬುದು ಮಿಂಚಿನಂತೆ; ಫಳಕ್ಕೆಂದು ಹೊಳೆದು ಹೋಗುತ್ತದೆ. ಅಷ್ಟರಲ್ಲೇ ತನ್ನ ಇರವನ್ನು ಸ್ಥಾಪಿಸುತ್ತದೆ. ಕ್ಷಣ ಮಾತ್ರದಲ್ಲಿ ಬುದ್ಧನಾಗುವ ಸ್ಥಿತಿಯಿದು. ಅದು ಅಂತರಂಗದ ಒಳವ್ಯಾಪಾರ. ಆದ್ದರಿಂದಲೇ ಅರಿವು ಅವ್ಯಕ್ತ; ಕಾಯಿ ಹಣ್ಣಾದಂತೆ, ತಾನಾಗಿ ಸಂಭವಿಸುವ ವಿಸ್ಮಯ. "ನಾನು ದೇಹವಲ್ಲ; ಮನಸ್ಸಲ್ಲ; ಬಾಹ್ಯರೂಪವೂ ನಾನಲ್ಲ; ನಾನು ಯಾರಿಗೂ ಸಾಕ್ಷಿಯಲ್ಲ; ನಾನೇ ಸಾಕ್ಷಿ..." ಎಂಬಂತಹ ಭಾವವು - ಅರಿವಿನ ಮಿಂಚು ಹೊಳೆಯದೇ ಸಂಭವಿಸದು. ಜನಕನಿಗೆ ಅರಿವು ಮೂಡಿದ ಪರಿಯಿದು. ಸರಕಾರೀ ಕಛೇರಿ, ವ್ಯಾಪಾರೀ ಸಂತೆಗಳಂತಿರುವ ಇಂದಿನ ಆರಾಧನಾ ಸ್ಥಳಗಳಲ್ಲಿ, ಇಂದಿನ ಶೈಕ್ಷಣಿಕ ವಲಯದಲ್ಲಿಯೂ ಇಂತಹ ಅರಿವನ್ನು ಪ್ರಚೋದಿಸುವ ಶಕ್ತಿಯಿಲ್ಲ. ಗುಂಪುಗದ್ದಲದಲ್ಲಿ ಯಾವತ್ತೂ ಸತ್ಯ ಕಾಣುವುದಿಲ್ಲ. ಇತ್ತ, ಒಳ ಅರಿವಿನ ಗಂಧವಿಲ್ಲದ ನಾವು ಹೊರಗೆಲ್ಲಾ ಏನೇನನ್ನೋ ಹುಡುಕುತ್ತಿದ್ದೇವೆ; "ಇದಲ್ಲ; ಇದಲ್ಲ.." ಅನ್ನಿಸುತ್ತಲೇ ಇರುತ್ತದೆ; ಇಲ್ಲ ಅಲ್ಲಗಳ ಅತೃಪ್ತಿಯಲ್ಲಿಯೇ ಬದುಕು ಮುಗಿಯುತ್ತದೆ. ಆದ್ದರಿಂದಲೇ ನಮ್ಮ ಗುರಿಯಿಲ್ಲದ ಹುಡುಕಾಟಗಳು - ಇಲ್ಲದಲ್ಲಿ ಬೆಲ್ಲವನ್ನು ಹುಡುಕಿದಂತಾಗಿವೆ. ನಿಜದ ಅರಿವು ಮೂಡಿದಾಗಲೇ ಸಂತೃಪ್ತಿಯ ಬೆಲ್ಲ ಕೈಗೆಟಕುವುದು.

ಅರಿವು ನಮ್ಮೊಳಗೇ ಇದೆ; ಆಗಾಗ ಅದು ಎಚ್ಚರಗೊಳ್ಳಲು ತೊಡಗಿದಾಗಲೆಲ್ಲ ನಾವೇ ಮತ್ತೆ ಮತ್ತೆ ತೂಗಿ ಮಲಗಿಸುತ್ತಿದ್ದೇವೆ. ನಮ್ಮೊಳಗಿನ ಅರಿವು ಪ್ರಕಾಶಗೊಳ್ಳಲು ನಾವೇ ಸಹಕರಿಸಿದರೆ - ಅಷ್ಟೇ ಸಾಕಾಗುತ್ತದೆ. ಅರಿವು ಜಾಗ್ರತವಾಗುತ್ತದೆ. ಆದರೆ ಹಾಗೆ ಸಹಕರಿಸುವ ಇಚ್ಛೆಯು ಮೂಡುವುದಾದರೂ ಹೇಗೆ ? ಜನ್ಮಜಾತ ಸಂಸ್ಕಾರವಿದ್ದರೆ, ಅದಿಲ್ಲದೆ ಹೋದಾಗ ಸ್ವಲ್ಪ ಶ್ರಮವಹಿಸಿದರೆ ಸಹಜವಾದ ನಿದ್ದೆಯಿಂದ ಎಚ್ಚರಗೊಳ್ಳುವಂತೆ ಅರಿವಿನ ಹಾದಿಯು ಕ್ರಮೇಣ ತೆರೆದುಕೊಳ್ಳುತ್ತದೆ. ಸುಯೋಗದಿಂದಲೂ ಅರಿವು ಜಾಗ್ರತವಾಗುವುದಿದೆ. ಸಂಚಿತ ಕುಸಂಸ್ಕಾರಗಳಿಂದಾಗಿ, ಪದೇ ಪದೇ ಇಣುಕುವ ಮೂಲ ಸ್ವಭಾವವನ್ನು ಉಜ್ಜಿ ಬರೆಯುವ ಯಾವುದೇ ಇಚ್ಛೆಯನ್ನು ಬುದ್ಧಿಪೂರ್ವಕವಾಗಿಯೂ ರೂಢಿಸಿಕೊಳ್ಳಲು ಸಾಧ್ಯವಿದೆ. ಆದ್ದರಿಂದಲೇ ಶ್ರೀ ರಾಮಕೃಷ್ಣರು - "ಆಗಾಗ ಸಂಸಾರದಿಂದ ದೂರವಿದ್ದು ಏಕಾಂತದಲ್ಲಿ ಧ್ಯಾನ ನಡೆಸಿ..." ಎನ್ನುತ್ತಿದ್ದರು.

ಅರಿವನ್ನು ಉಂಟುಮಾಡಲು ಆಗುವುದಿಲ್ಲ. ಮನುಷ್ಯಜೀವಿಯ ಸ್ವಸ್ವಭಾವದ ಸಾಮರ್ಥ್ಯಕ್ಕೆ ಅನುಗುಣವಾಗಿ ಏಕಾಗ್ರ ಅಂತಃಸಿದ್ಧಿಯಿಂದ - ಅರಿವು - ಎಂಬುದು ಬದುಕಿನಲ್ಲಿ ಸಂಭವಿಸುತ್ತದೆ. ಉದಾಹರಣೆಗೆ : ಎಲ್ಲ ನೆಲದಲ್ಲೂ ನೀರು ಸಿಗುವುದಿಲ್ಲ. ಅದು ಭೂಮಿಯ ಸ್ವಭಾವ. ಎಲ್ಲ ಬಾವಿಯಲ್ಲೂ ನೀರು ಇರುವುದಿಲ್ಲ. ಆದರೆ ಬತ್ತಿದ ಬಾವಿಯ ಆಳಕ್ಕೆ ಇಳಿದು ಏಕಾಗ್ರತೆಯಿಂದ ಶ್ರಮಿಸಿದರೆ ಮತ್ತೊಮ್ಮೆ ಜಲಸನ್ನಿಧಿಯು ಉಂಟಾಗಲೂಬಹುದು. ಎಚ್ಚರದಿಂದ ಮುಚ್ಚಟೆಯಿಂದ ಬಳಸುತ್ತಿರುವ ಬಾವಿಯ ನೀರು ಮಾತ್ರ ಯಾವತ್ತೂ ಶುದ್ಧವಾಗಿರುತ್ತದೆ. ಹೊರನೋಟಕ್ಕೆ ಬಾವಿ ಅಥವ ಜಲಸ್ಥಾನದಂತೆ ಕಂಡರೂ ಸುದೀರ್ಘ ಕಾಲದಿಂದ ಬಳಕೆಯಾಗದ ಯಾವುದೇ ಹಾಳುಬಾವಿಯ ನೀರು ವಿಷಪೂರಿತವಾಗಿರುತ್ತದೆ.

ಮನುಷ್ಯರು ಯಾವತ್ತೂ ಬತ್ತಿದ  ಬಾವಿಗಳಾಗಬಾರದು; ಹಾಳುಬಾವಿಗಳಂತೂ ಆಗಲೇಬಾರದು. ನಿರಂತರ ಎಚ್ಚರ ಎಂಬ ಅರಿವಿನ ಧ್ಯಾನವು ಸಫಲವಾಗುತ್ತದೆ. ಧ್ಯಾನಸ್ಥ ಅರಿವು ಎಂದರೆ ಆಳಕ್ಕೆ ಮುಳುಗುವ ಪ್ರಕ್ರಿಯೆ. ಆಳಕ್ಕೆ ಇಳಿಯದಿದ್ದರೆ ನೀರಿಲ್ಲ; ಮುತ್ತುರತ್ನಗಳಿಲ್ಲ; ಬದುಕೂ ಇಲ್ಲದಂತೆ. ಶ್ರೀ ರಾಮಕೃಷ್ಣರು ಶುದ್ಧ ಅರಿವಿನ ಜಲಧಿ; ಬಾಯಾರಿ ಬಂದವರಿಗೆ ಮೊಗೆಮೊಗೆದು ನೀರುಣಿಸಿದ ಅವಧೂತ. ಸಾಧನೆಗೆ ಮಾಧ್ಯಮದಂತೆ ತನ್ನ ಬದುಕನ್ನು ಹೋಮವಾಗಿಸಿ - ಭಕ್ತಿಮಾರ್ಗದ ಪಾರಮ್ಯವನ್ನು ಎತ್ತಿಹಿಡಿದು, ಭಕ್ತಿಪಿಪಾಸುಗಳನ್ನು ಪಾವನಗೊಳಿಸಿದವರಲ್ಲಿ ಶ್ರೀ ರಾಮಕೃಷ್ಣರು ಅಗ್ರಗಣ್ಯರು.





Wednesday, November 9, 2016

ಶ್ರೀ ರಾಮಕೃಷ್ಣ ಭಾವಮಂಜರಿ - 2 : ದೄಷ್ಟಿಯಂತೆ ಸೃಷ್ಟಿ (ಶ್ರೀ ಮಾತೆ)


ಶ್ರೀ ರಾಮಕೃಷ್ಣ ಮತ್ತು ಶ್ರೀ ಶಾರದಾದೇವಿಯವರ ದಾಂಪತ್ಯದ ಕುರಿತು ಅವರವರು ಅಂದುಕೊಂಡಂತೆ ವಿಶ್ಲೇಷಿಸುತ್ತಲೇ ಬಂದಿದ್ದೇವೆ; ಒಮ್ಮೊಮ್ಮೆ ಕೊತ್ತುಂಬರಿ ಸೊಪ್ಪಿನ ವ್ಯಾಪಾರಿಯು ವಜ್ರದ ಬೆಲೆ ಕಟ್ಟಿದಂತೆಯೂ ಆಗುತ್ತಿದೆ.


ದಾಂಪತ್ಯ ಎಂಬುದು ತೀರ ವೈಯ್ಯಕ್ತಿಕ; ಕೆಲವೊಮ್ಮೆ ಕೆಲವರಿಗೆ - "ಸಮಸ್ಯೆ!". ಕೆಲವರಿಗೆ ದಿನ ತಳ್ಳುವ ವ್ಯಾಪಾರ. ಕೆಲವು ಅದೃಷ್ಟವಂತರಿಗೆ - ಸಮರಸ ! ಎಲ್ಲೋ ಒಮ್ಮೊಮ್ಮೆ ಮಾತ್ರ ವಿಶಿಷ್ಟವೊಂದು ಸಂಭವಿಸುತ್ತದೆ ! ಏಕೆಂದರೆ, ದಾಂಪತ್ಯವನ್ನು ನಿಭಾಯಿಸುವುದೂ ಕೂಡ ತೀರ ವೈಯ್ಯಕ್ತಿಕ, ಒಮ್ಮೊಮ್ಮೆ ಪಾರಿವಾರಿಕ, ಮುಖ್ಯವಾಗಿ ಸಾಂದರ್ಭಿಕ. ಆದ್ದರಿಂದಲೇ ಅನನ್ಯ ಮತ್ತು ವಿಶಿಷ್ಟಗಳು ಅಲ್ಲೊಮ್ಮೆ ಇಲ್ಲೊಮ್ಮೆ ವಿಸ್ಮಯದಂತೆ ಸಂಭವಿಸುತ್ತದೆ. ಆದರೆ ಈ ಸಮಾಜದ "ಸಾರ್ವಕಾಲಿಕ ಸಾಮಾನ್ಯರು" ಎನ್ನುವ ಶಾಶ್ವತ ವರ್ಗದವರ ದೃಷ್ಟಿಕೋನವು ಸಾಮಾನ್ಯವೇ ಆಗಿರುವುದು ಯಾವತ್ತೂ ಸಹಜ ಎಂಬಂತಾಗಿದೆ. ಬಿಳೀ ಕಾಗದವನ್ನು ಕಂಡ ಕೂಡಲೇ ಏನಾದರೂ ಗೀಚಿಹಾಕುವ "ಪೀಡಾವರ್ಧಕ ಸಂಘ" ದ ಸಾಮಾನ್ಯ ಸದಸ್ಯರು ಗೀಚುವುದರಲ್ಲೇ ಚೆಂದನೋಡುವ ಮನೋಚಾಂಚಲ್ಯವನ್ನು ಅನೂಚಾನವಾಗಿ ಬೆಳೆಸಿ ಉಳಿಸಿಕೊಂಡು ಬಂದಿರುವುದು ಸಾಮಾನ್ಯದಲ್ಲೂ ಅಸಾಮಾನ್ಯ ಸಂಗತಿಯೇ ಆಗಿಹೋಗಿದೆ...


ಬಾಹ್ಯ ನೋಟಕ್ಕೆ ಸಾಮಾನ್ಯ ಎಂದು ಕಾಣಿಸುವ ವ್ಯಕ್ತಿಗಳು ಆಗೊಮ್ಮೆ ಈಗೊಮ್ಮೆ ಅಸಾಮಾನ್ಯ ವಿಶೇಷವಾಗಿ ಅನಾವರಣಗೊಂಡರೆ ಈ ಜಗತ್ತು ಅದನ್ನೂ ಸಂಶಯದಿಂದಲೇ ನೋಡುತ್ತದೆ; ಕೆಲವೊಮ್ಮೆ ಅಸಾಮಾನ್ಯವಾದುದೇ ಅಸಹಜ ಮತ್ತು ಅಪರಾಧವಾದಂತೆ, ಸಂದರ್ಭದ ರಂಧ್ರಾನ್ವೇಷಣೆಗೈಯ್ಯುತ್ತ ಅವರನ್ನು ಹಿಂದಕ್ಕೆ ಜಗ್ಗಲೂ ಪ್ರಯತ್ನಿಸುತ್ತದೆ; ಎಲ್ಲರನ್ನೂ ತನ್ನ ಸಾಲಿನಲ್ಲಿಯೇ ನಿಲ್ಲಿಸಿಕೊಳ್ಳಲು ಸರ್ವಥಾ ಯತ್ನಿಸುತ್ತದೆ. ಸಣ್ಣ ಅಥವ ಸಣ್ಣತನದ ವ್ಯಾಪಾರವು ಆಕರ್ಷಕವೆಂದು ಭಾವಿಸುವ ವ್ಯಾಪಾರೀ ಮತ್ತು ಗ್ರಾಹಕರ ಸಂತೆಯ ನಡುವೆಯೇ ನಾವೆಲ್ಲರೂ ಬದುಕುತ್ತಿದ್ದೇವೆ. ತತ್ಪರಿಣಾಮವಾಗಿ, ನಮ್ಮ ದೃಷ್ಟಿಯನ್ನೇ ವ್ಯಾಪಾರೀಕರಣಗೊಳಿಸಿಕೊಳ್ಳುತ್ತಿದ್ದೇವೆ. ಯಾವತ್ತೂ ವ್ಯಷ್ಟಿ ಸಮಷ್ಟಿಯ ಸ್ಪಷ್ಟ ಚಿತ್ರವು ಆರೋಗ್ಯಪೂರ್ಣ ದೃಷ್ಟಿಯಲ್ಲಿಯೇ ಹುದುಗಿದೆ. ಏಕೆಂದರೆ ದೃಷ್ಟಿಯಂತೆ ಸೃಷ್ಟಿ. ಮನುಷ್ಯರ ಪೂರ್ವಸಂಸ್ಕಾರ ಮತ್ತು ಬದುಕಿನ ಇತಿಮಿತಿಯಿಂದಾಗಿ - ಸ್ವತಃ ತಮ್ಮಿಂದ ಅಸಾಧ್ಯವಾದ ಯಾವುದೇ ಸಾಧನೆಯನ್ನು ಇನ್ನ್ಯಾರಾದರೂ ಸಾಧಿಸುವುದನ್ನು ತಥಾಕಥಿತ ಸಾಮಾನ್ಯ ವರ್ಗವು ಬಡಾಪೆಟ್ಟಿಗೆ ಒಪ್ಪುವುದಿಲ್ಲ. ಅದಕ್ಕೆ ಕಾರಣ : ಸಾಮಾನ್ಯರ ಯಾವುದೇ ಸ್ವಂತ ಅನುಭವವಲ್ಲ; ಅವರ ಸುಪ್ತ WISH ಅಥವ ಅಪೇಕ್ಷೆಯಾಗಿರುವುದೇ ಹೆಚ್ಚು.


ಆದರೆ ಬದುಕು ಎಂಬುದು ಸಾಮಾನ್ಯ ಅಥವ ಅಸಾಮಾನ್ಯರಾರನ್ನೂ ನುರಿಯುವಿಕೆಯ ಕಷ್ಟದಿಂದ ವಿಮುಕ್ತಿಗೊಳಿಸಿಲ್ಲ; ಕಷ್ಟದ ಬಾಹ್ಯರೂಪದಲ್ಲಿ ಮಾತ್ರ ಕೊಂಚ ವ್ಯತ್ಯಾಸ ಇರಬಹುದು - ಅಷ್ಟೆ. ಅದು ಈ ಬದುಕಿನ ಸ್ವರೂಪ; ಸ್ವಭಾವ. ಈ ಭೂಮಿಯಲ್ಲಿ ಅವತರಿಸಿದ ಮಹಾನ್ ವ್ಯಕ್ತಿಗಳೆಲ್ಲರೂ - ಜನಸಾಮಾನ್ಯರ ಬಗೆಬಗೆಯ ದೃಷ್ಟಿಬವಣೆಗಳಿಗೆ ಒಳಗಾಗಿ, ಮಾತಿನ ನುರಿತಕ್ಕೆ ಒಳಗಾದ ಜ್ವಲಂತ ಸಾಕ್ಷಿಯಾಗಿರುವ ಹಲವಾರು ದೃಷ್ಟಾಂತಗಳಿವೆ. ಅಸಾಮಾನ್ಯ ಸಾಧನೆಗಳ ಸಾತ್ವಿಕ ಹೂರಣವನ್ನು ಅಲಕ್ಷಿಸುತ್ತ, ಅಂತಹ ಸಾಧಕರು ತಮ್ಮ ಸಾಧನೆಯ ಮಾರ್ಗದಲ್ಲಿ ಎದುರಿಸಿದ ಬವಣೆಗಳನ್ನು ತಮ್ಮ ಬದುಕಿಗೆ ಪ್ರೇರಣೆಯ ಸಾಧನವಾಗಿ ಪರಿಗಣಿಸದೆ, "ಯಾರೂ ಅಸಾಮಾನ್ಯರಲ್ಲ; ಅವರೂ ನಮ್ಮಂತೇ ನರಳಿದವರು" ಎಂದುಕೊಂಡು ನರಳುವಿಕೆಯ ಅಳತೆಗೋಲನ್ನೇ ಆಧರಿಸಿಕೊಂಡು ತೃಪ್ತರಾಗುತ್ತಿದ್ದರೆ - ಅದು ಯಾವುದೇ ಆತ್ಮಿಕ ಅಭ್ಯುದಯದ ಹಾದಿಯ ದೊಡ್ಡ ತೊಡರುಗಲ್ಲು. 


ಶ್ರೀಮಾತೆ ಶಾರದಾದೇವಿಯವರು ಪಟ್ಟ ಬವಣೆಗಳನ್ನು ಓದಿದಾಗ, ಸಾಮಾನ್ಯ ಓದುಗರಿಗೆ "ಅಯ್ಯೋ" ಅನ್ನಿಸುವುದು ಸಹಜ. ಆದರೆ ಯಾವುದೇ ಬದುಕನ್ನು ಆಂಶಿಕವಾಗಿ ನೋಡಿ ಸಮಗ್ರವಾಗಿ ಯಾವುದೇ ಅಧ್ಯಯನ ಮಾಡದೆ ಯಾವುದೇ ಅಂತಿಮ ತೀರ್ಮಾನಕ್ಕೆ ಬಂದರೆ ಅದು ಹುಡುಗಾಟವಾದೀತು. ಯಾವುದೇ ಬಾಯಿಬಡುಕರು ಆಯಾ ಸಾಮಾಜಿಕ ಹಿನ್ನೆಲೆಯಲ್ಲಿಯೇ ಇಡೀ ಚಿತ್ರವನ್ನು ನೋಡಬೇಕಾಗುತ್ತದೆ. ಆಗಲೇ ಸತ್ಯು ಸಧ್ಯ.
ಶಾರದಾಮಾತೆಯವರ ಅಪರಾಜಿತ ವ್ಯಕ್ತಿತ್ವವು ಮೂರ್ತಗೊಳ್ಳುವುಕ್ಕೂ ಇದೇ ಅಳೆಗೋಲು. ಮಾತೆಯವರು "ಸಂಸಾರವನ್ನು ತೊರೆದವರಲ್ಲ; ಆದರೆ ಸಾಂಸಾರಿಕ ಭಾವವನ್ನು ಮೀರಿ ನಿಂತವರು" ಎಂಬಲ್ಲಿಯೇ ಅವರ ಜೀವನದ ಮೂಲ ಎಳೆ ಅಡಗಿದೆ. ಆದ್ದರಿಂದಲೇ ತಮಗೆ ಎದುರಾದ ಭೌತಿಕ ಕಷ್ಟಕೋಟಲೆಗಳನ್ನು ವಿನಮ್ರತೆಯಿಂದ ಜೀರ್ಣಿಸಿಕೊಳ್ಳುವುದು ಅವರಿಗೆ ಸಾಧ್ಯವಾಯಿತು. ಹಾಗೆ ನೋಡಿದರೆ, ಅವರ ಪತಿಯಾಗಿದ್ದ ಶ್ರೀ ರಾಮಕೃಷ್ಣರೇನು ಭೌತಿಕ ಸುಖದ ಸುಪ್ಪತ್ತಿಗೆಯಲ್ಲಿ ಉರುಳಾಡಿದವರಲ್ಲ; ಶ್ರೀ ರಾಮಕೃಷ್ಣರಿಗೆ ಅಂತಹ ಎಲ್ಲ ಅವಕಾಶಗಳು ಇದ್ದರೂ ಲೌಕಿಕದ "ಭ್ರಾಂತಿ ಸುಖ"ವನ್ನು ಅವರು ಪ್ರಜ್ಞಾಪೂರ್ವಕವಾಗಿಯೇ ದೂರ ತಳ್ಳಿದವರು. ತಾವು ಅರಿತು ಉಪದೇಶಿಸಿದ್ದ ಸಿದ್ಧಾಂತವನ್ನು ನಿಷ್ಕಳಂಕವಾಗಿ ಆಚರಿಸಿದ ಸಹಬಾಳ್ವೆ ಅವರದು. ಅಂತಹ ಅನ್ಯಾದೃಶ ಪತಿಯನ್ನು ಇಡಿಯಾಗಿ, ಆರೋಗ್ಯಕರವಾಗಿ ಆರಾಧಿಸುತ್ತಿದ್ದ ಪತ್ನಿ ಶಾರದಾಮಾತೆಯವರು ಸಹಜವಾಗಿಯೇ ಅಲೌಕಿಕ ಪತಿಯನ್ನು ಅನುಕರಿಸಿದರು; ಅನುಸರಿಸಿದರು; ಪ್ರಾಪಂಚಿಕ ಕಷ್ಟಗಳನ್ನು ಮೆಟ್ಟಿ ನಡೆದರು. ತಾನೇ ಉರಿದುಕೊಂಡು ಜಗತ್ತಿಗೆ ಬೆಳಕು ನೀಡಿದರು. ಉರಿಯೊಳಿನ ಬೆಳೇ ಹಿ. ಿಾವ ಇದ್ದುದರಿಂದಲೇ ಶಾರದಾಮಾತೆಯವರು ಹಳಹಳಿಸಲಿಲ್ಲ; ಪತಿಯ ದೇಹತ್ಯಾಗದ ನಂತರವೂ ತನ್ನ ಪತಿಯ ಆದರ್ಶಗಳನ್ನು ಪಾಲಿಸುತ್ತ ಅವಪ್ರಚುರಪಡಿಸಿದ್ದರು; ಶ್ರೀ ರಾಮಕೃಷ್ಣರ ಅಂತರಂಗದ ಬಳಗಕ್ಕೆ ಶ್ರೀ ಶಾರದಾದೇವಿಯವರು ಅನಂತ ಪ್ರೇರಕ ಶಕ್ತಿಯಾಗಿಯೂ ದುಡಿದಿದ್ದರು. ಶ್ರೀ ರಾಮಕೃಷ್ಣ ಸಂಘದ ಮಾರ್ಗದರ್ಶಕಿಯಾಗಿ ಕೊನೆಯವರೆಗೂ ಸಕ್ರಿಯರಾಗಿದ್ದರು. ಆದ್ದಿಂದಅಸಾಮಾನ್ಯ ಂಙ್ಕ್ತಿಗೆ ಸೇರಿದರು.




ಶ್ರೀಮಾತೆ ಮತ್ತು ಪರಮಹಂಸರು ಪರಸ್ಪರರ ಭಾವವನ್ನು ಅರಿತುಕೊಂಡು ಎಚ್ಚರದಿಂದ ಬದುಕಿದ ಶೈಲಿಯೇ ಅನುಪಮ. ಕೊಲ್ಕತ್ತದ ಸಮೀಪದಲ್ಲಿರುವ ಪಾನಿಹಾಟಿ ಎಂಬಲ್ಲಿ ನಡೆಯುತ್ತಿದ್ದ "ಅವಲಕ್ಕಿ ಉತ್ಸವ"ದ ಪ್ರಸಂಗವು ಇದಕ್ಕೆ ಸಾಕ್ಷಿ. ಶ್ರೀ ರಾಮಕೃಷ್ಣರು ಹಲವು ಬಾರಿ ಭಾಗವಹಿಸಿದ್ದ ಉತ್ಸವವದು. 1883 ರಲ್ಲಿ ತಮ್ಮ ಅನೇಕ ಶಿಷ್ಯರು ಮತ್ತು ಕೆಲವು ಸ್ತ್ರೀ ಭಕ್ತೆಯೊಂದಿಗೆ ರಾಮಷ್ಣ
ಪಾನಿಹಾಟಿ ಉತ್ಸವಕ್ಕೆ ಹೊರಡುವ ಸಿದ್ಧತೆಯಲ್ಲಿದ್ದರು. ಅಂದು ಶ್ರೀಮಾತೆಯವರು ತಾವೂ ಉತ್ಸವಕ್ಕೆ ಬರಬಹುದೆ ? ಎಂಬುದನ್ನು ಒಬ್ಬ ಭಕ್ತೆಯ ಮೂಲಕ ಶ್ರೀ ರಾಮಕೃಷ್ಣರಲ್ಲಿ ವಿಚಾರಿಸಿದ್ದರು. ಆಗ, "ಅವಿಗ ಇಷ್ಟವೆನ್ನಿಸಿದರೆ ಬರಬಹುದು..." ಎಂದಷ್ಟೇ ಅವರು ಉತ್ತರಿಸಿದ್ದರು. ಈ ಪ್ರತಿಕ್ರಿಯೆಯನ್ನು ಕೇಳಿದ ತಕ್ಷಣ, ತಾನು ಹೊರಡುವುದಿಲ್ಲ ಎಂದು ಶ್ರೀಮಾತೆಯವರು ನಿರ್ಧರಿಸಿದ್ದರು. ಉತ್ಸವ ಮುಗಿಸಿ ಬಂದ ಸ್ತ್ರೀಯರು ಅಂದಿನ ಉತ್ಸವದ ರಸನಿಮಿಷಗಳನ್ನು ಮೆಲುಕುಹಾಕುತ್ತ "ಶಾರದಾದೇವಿಯವರೂ ಬರಬಹುದಿತ್ತು; ಅವಾನಂದಿಂದಂಚಿತಾದು..." ಎಂು ಹತ್ತಿದ್ದಗ ಮಾತೆಯವರು ಉತ್ತರಿಸಿದ್ದರು. "ನಾನು ಬರಬಹುದಾಗಿದ್ದ ಅವಾಗಿದ್ದರೆ "ಬರಲಿ" ಎಂದಷ್ಟೇ ರಾಮಕೃಷ್ಣರು ಹೇಳುತ್ತಿದ್ದರು. ನಿರ್ಧಾರವನ್ನು ನನ್ನ "ಇಷ್ಟ"ಕ್ಕೆ ಬಿಡುತ್ತಿರಲಿಲ್ಲ. ಆದ್ದರಿಂದ ನಾನು ಭಾಗವಹಿಸದಿದ್ದುದೇ ಸರಿಯಾದ ನಿರ್ಧಾರ.." ಎಂದಿದ್ದರು. ಅನಂತರ ಶ್ರೀ ರಾಮಕೃಷ್ಣ ಹೇಳಿದ್ದಿದೆ. "ನನ್ನ ಬದುಕು ಮತ್ತು ಜೀವನ ಶೈಲಿಗೆ - ದಂಪತಿ ಸಮೇತ ಉತ್ಸವಗಳಲ್ಲಿ ಭಾಗವಹಿಸುವುದು ಸಾಧುವಲ್ಲ. ಸಾಮಾಜಿಕುಕಿಗೂ ಒಂದು ಚೌಕಟ್ಟಿದೆ. ನೋಡಿದ ಜನರು "ಹಂಸ (ಪರಮಹಂಸ) ಹಂಸಿಣಿಯರು  ವಿಹಾರಕ್ಕೆ ಬಂದಿದ್ದಾರೆ" ಎನ್ನಲು ಅವಕಾಶ ನೀಡುವಂತೆ ವರ್ತಿಸುವುದು ಸಿಯಲ್ಲ" - ಎಂದಿದ್ದು. "ಅವಳು (ಶಾರದಾದೇವಿ) ನನ್ನ ಮನಸ್ಸನ್ನು ಅರ್ಥ ಮಾಡಿಕೊಂಡು ಬಾರದಿದ್ದುದು ಒಳ್ಳೆಯದೇ ಆಯಿತು..." ಎಂದಿದ್ದರು. ಹೀಗಪರಸ್ಪರರ ಆಂತರ್ಯವನ್ನು ಅರ್ಥ ಮಾಡಿಕೊಳ್ಳುವ ಯಾವುದೇ ಸಂಸಾರಗಳು ಗೊಂದಲ ಗೊಣಗಾಟಗಳಿಲ್ಲದೆ ಯಶಸ್ವಿಯಾಗುತ್ತವೆ. ಆಡಿಕೊಳ್ಳುವವರಿಗೆ ಎಡೆಮಾಡಿಕೊಡುವ ಕೃತ್ಯಗಳನ್ನು ಯಾರೂ ನಡೆಸಬಾರದು ಎಂಬುದೇ ಈ ಪ್ರಂಗ ಮೂಲತಾತ್ಪರ್ಯ. ಶ್ರೀ ರಾಮಕೃಷ್ಣ ದಂಪತಿಗಳು ಅದನ್ನು ಪಾಲಿಸಿದ್ದರು; ಸಾಜ ಾವೆಗನ್ನೂ ಅನುಸಿಸಿ ನೆದಿದ್ದು. ಈ ಭೂಮಿಯಲ್ಲಿ ಉತ್ತಮ ಬದುಕನ್ನು ಬದುಕಿದರಷ್ಟೇ ಸಾಲದು; ಹಾಗೆ ಕಾಣಿಸಿಕೊಳ್ಳುವುದೂ ಅನಿವಾರ್ಯ ಎಂಬುದನ್ನು ಅರಿತು ಬಾಳಿದ ಸಮತ್ವದ ದಾಂಪತ್ಯವದು. 


ತಮ್ಮ ಮಾನಸ ಪುತ್ರನೆಂದೇ ಆದರಿಸಿ ಪ್ರೀತಿಸಿ ಶಿಷ್ಯನನ್ನಾಗಿಸಿಕೊಂಡಿದ್ದ ರಾಖಾಲ (ಸ್ವಾಮಿ ಬ್ರಹ್ಮಾನಂದರು) ನನ್ನು ತಮ್ಮ ತೊಡೆಯ ಮೇಲೆ ಕುಳ್ಳಿರಿಸಿಕೊಂಡು ಆತನಿಗೆ ತಿನಿಸನ್ನು ತಿನ್ನಿಸಿ ವಿಶಿಷ್ಟ ಶಿಷ್ಯವಾತ್ಸಲ್ಯವನ್ನು ಮೆರೆದವರು - ಶ್ರೀ ರಾಮಕೃಷ್ಣರು. ಈ ರಾಖಾಲನು ಅದಾಗಲೇ ತನ್ನ ಅತ್ತೆಯ ಮಗಳಾದ ವಿಶ್ವೇಶ್ವರಿ ಎಂಬ ಹನ್ನೆರಡು ವರ್ಷದ ಬಾಲಕಿಯನ್ನು ಕುಟುಂಬದ ಅಪೇಕ್ಷೆಯಂತೆ ಮದುವೆಯಾಗಿದ್ದನು. ಆದರೆ ಈ ಹುಡುಗನು ತ್ಯಾಗಜೀವನದ ಪರಮಾದರ್ಶವನ್ನು ಪಾಲಿಸುವಾತ - ಎಂಬ ಅಲೌಕಿಕ ದರ್ಶನವಾದುದರಿಂದ ರಾಖಾಲನನ್ನು ತನ್ನ ಅಂತರಂಗದ ಭಾಗದಂತೆ ಶ್ರೀ ರಾಮಕೃಷ್ಣರು ಓಲೈಸಿದ್ದರು. ಆತನ ಪತ್ನಿಯಾಗಿದ್ದ ವಿಶ್ವೇಶ್ವರಿಯನ್ನು ದಕ್ಷಿಣೇಶ್ವರಕ್ಕೆ ಕರೆಸಿಕೊಂಡು ಆಕೆಯ ಪತಿಯಾದ ರಾಖಾಲನ ಸಾಧನೆಯ ಮಾರ್ಗದಲ್ಲಿ ಆಕೆಯು ಪ್ರತಿಬಂಧಕವಾಗಿ ನಿಲ್ಲಲಾರಳು ಎಂಬುದನ್ನೂ ದೃಢಪಡಿಸಿಕೊಂಡಿದ್ದರು. ಆಕೆಯನ್ನು ತಮ್ಮ "ಸೊಸೆ" ಎಂದು ಸಂಬೋಧಿಸಿ ತಮ್ಮ ಪತ್ನಿಯಾದ ಶಾರದಾದೇವಿಯವರ ಬಳಿಗೆ ಕಳಿಸಿದ್ದರು. ಆಗ ಶ್ರೀಮಾತೆಯವರು ಪತಿಯಾದ ರಾಮಕೃಷ್ಣರ ಭಾವವನ್ನು ಅರಿತುಕೊಂಡು ಆಗಮಿಸಿದ್ದ ಹೊಸ ಸೊಸೆಯ ಕೈಯಲ್ಲಿ ಒಂದು ರೂಪಾಯಿಯ ನಾಣ್ಯವನ್ನಿಟ್ಟು ಆಕೆಯ ಮುಖದ ಸೆರಗನ್ನು ಸರಿಸಿ ಮುತ್ತಿಟ್ಟು ಪ್ರೀತಿಯಿಂದ ಸ್ವಾಗತಿಸಿ, ಸೊಸೆಯ ಸ್ಾನಾನನ್ನು ನೀಡಿ
ದ್ದರು.


ತಮ್ಮ ಮಗಳು ವರ್ಷಗಳುರುಳಿದರೂ ತಾಯಿಯಾಗಲಿಲ್ಲವಲ್ಲ? ಎಂಬ ಚಿಂತೆಯಲ್ಲಿದ್ದ ಶಾರದಾದೇವಿಯವರ ತಾಯಿ ಶ್ಯಾಮಾಸುಂದರಿದೇವಿಯವರಿಗೆ "ನಿಮ್ಮ ಮಗಳನ್ನು ಇಡೀ ವಿಶ್ವವೇ ತಾಯಿ ಎಂದು ಗೌರವಿಸುತ್ತದೆ. ಚಿಂತಿಸಬೇಡಿ..." ಎಂದು ಸಂತೈಸುತ್ತ ಹೇಳಿದ್ದ ಅಳಿಯ - ಶ್ರೀ ರಾಮಕೃಷ್ಣರು. ಆದ್ದರಿಂದ ಶಾರದಾದೇವಿಯವರ ಪ್ರಸಂಗವು - "ಎಲ್ಲರಂತವನಲ್ಲ ನನ ಗಂಡ..." ಎಂಬಂಥದ್ದು.

ತಮ್ಮ ಜೀವಿತಾವಧಿಯಲ್ಲಿಯೇ ತನ್ನ ಪತ್ನಿ ಶಾರದೆಯನ್ನು "ಸಾಕ್ಷಾತ್ ಶಾರದೆ" ಎಂದು ಶ್ರೀ ರಾಮಕೃಷ್ಣರು ಪರಿಭಾವಿಸಿ ಪೂಜಿಸಿದ್ದ ಪ್ರಸಂಗವು - ಶ್ರೀ ರಾಮಕೃಷ್ಣರ ಜೀವನ ಚರಿತ್ರೆಯಲ್ಲಿ ಎದ್ದು ಕಾಣುವ ಪರೀಕ್ಷಾ ಘಟ್ಟ. ಹದಿನೇಳು ಹದಿನೆಂಟರ ಹರೆಯದ ಪತ್ನಿ ಶಾರದೆಯನ್ನು ಶ್ರೀ ರಾಮಕೃಷ್ಣರು "ಷೋಡಶಿ"ಯಾಗಿ ಭಾವಿಸಿ ಪೂಜಿಸಿದರು ! ಈ ಕ್ರಿಯೆಯನ್ನು "ತಮ್ಮನ್ನು ತಾವೇ ನಿಯಂತ್ರಿಸಿಕೊಂಡ ಚಿತ್ತಸ್ಥಿರತೆಯ ದ್ಯೋತಕವಾಗಿ ಮತ್ತು ತಾವು ಜೊತೆಯಾಗಿ ಸಾಗಬೇಕಾಗಿದ್ದ ಪಥ ದರ್ಶನವನ್ನು ತಮ್ಮ ಕೈಹಿಡಿದ ಹೆಣ್ಣಿಮಾಡಿಸಿದ್ದ ಬದ್ಧತೆಯ ದೀಕ್ಷಾ ಸಮಾರಂಭ" ಎಂದೂ ಅರ್ಥೈಸಬಹುದು. ಆದ್ದರಿಂದಲೇ ಇದೊಂದು ವಿಶಿಷ್ಟ ಗೃಹಸ್ಥ ಬದುಕು. ಪರಸ್ಪರರಲ್ಲಿ ಭಾವ ಶ್ರುತಿಯು ಅದ್ಭುತವಾಗಿ ಮೇಳೈಸಿದ್ದರಿಂದಲೇ "ವಿಶಿಷ್ಟ ಗೃಹಸ್ಥ ಧರ್ಮದ ವಿಶಿಷ್ಟ ಜೋಡಿ"ಯಾಗಿ ಪರಮಹಂಸರು ಮತ್ತು ಶ್ರೀಮಾತೆಯವರು ಅನಾವರಣಗೊಳ್ಳುತ್ತಾರೆ. ಆದ್ದರಿಂದಲೇ ಶ್ರೀ ರಾಮಕೃಷ್ಣರು "ಸಾವ ಕೆಡುವ ಗಂಡ" ಆಗಲಿಲ್ಲ; ಶ್ರೀಮಾತೆಯವರು "ದೂರುವ ಹೆಂಡತಿ" ಆಗಲಿಲ್ಲ; ಇಬ್ಬರೂ ಅಸಾಮಾನ್ಯ ಸ್ಥಾನದಲ್ಲಿ ಸ್ಥಾಪಿತರಾದರು. ಹೀಗೆ ದೀಕ್ಷಾಬದ್ಧರಾಗಿದ್ದ ಈ ಗುರುದಂಪತಿಗಳು ಜನಸಾಮಾನ್ಯರ ಚಿಂತನೆಗೆ ಸುಲಭವಾಗಿ ಎಟಕುವುದಿಲ್ಲ. ಆದ್ದರಿಂದ ಇದೊಂದು "ಅನ್ಯಾದೃಶ ಅಪೂರ್ವ ಸಾಂಗತ್ಯ" ಎಂದಷ್ಟೇ ಅರ್ಥೈಸಿದರೆ - ಅದು ಸಭ್ಯತೆ ಎನ್ನಿಸಿಕೊಳ್ಳುತ್ತದೆ.

"ಸಾವ ಕೆಡುವ" ಹಕ್ಕುಗಳ ಘರ್ಷಣೆಗೆ ಸಿಲುಕಿ, ವಿವಾಹ ಎಂಬ ವ್ಯವಸ್ಥೆಯೇ ಅರ್ಥ ಕಳೆದುಕೊಂಡಿರುವ, ಯಾವುದೇ ಕಟ್ಟುಪಾಡುಗಳಿಲ್ಲದ LIVE IN ಸಂಬಂಧಗಳ ಹೇಶಾರವದ ಇವತ್ತಿನ ಅಯೋಮಯ ಸನ್ನಿವೇಶದಲ್ಲಂತೂ ಇಂತಹ ಅನ್ಯೋನ್ಯ ಅಲೌಕಿಕ ಸಾಂಗತ್ಯದ ಸಾಹಚರ್ಯವನ್ನು ನಂಬುವುದೂ ಕಷ್ಟವಾಗುತ್ತಿದೆ ! ಆದ್ದರಿಂದಲೇ... ತಮ್ಮಂತಲ್ಲದ ಇನ್ನೊಂದರ ಅಸ್ತಿತ್ವವನ್ನು ಅನುಮೋದಿಸುವುದೂ ಅಸಹಜ ಎನ್ನಿಸತೊಡಗುತ್ತದೆ. ಸ್ವಸಮರ್ಥನೆಯ ಬಿರುಸಿನಲ್ಲಿ, ತಮ್ಮ "ಸಾಮಾಜಿಕ ಹಕ್ಕಿನ ಪಕ್ಷ"ದ ಬಲವರ್ಧನೆಗಾಗಿ, "ಶ್ರೀ ರಾಮಕೃಷ್ಣರೂ ಹೆಣ್ಣನ್ನು ಶೋಷಿಸಿದ್ದರು" (!!) ಎಂದು ಪರೋಕ್ಷವಾಗಿ ಪಿಸುಗುಡುತ್ತ ಸಾಧಕರ ಬದುಕಿನ ಪಾಿತ್ರ್ಯ ಕುರಿತು ಗುಮಾನಿ ಹುಟ್ಟುವಂತೆ, ಅವರವರಿಗೆ ಅನುಕೂಲವಾಗುವಂತೆ ತಿರುಚಿ ವ್ಯಾಖ್ಯಾನಿಸುವುದಿದೆ. ಅಂತಹ ಸಾಮಾಜಿಕ ವರ್ತನೆಗಳೆಲ್ಲವೂ - ಒಮ್ಮೊಮ್ಮೆ ಸ್ವಸಮರ್ಥನೆಗೆ, ಮಗದೊಮ್ಮೆ ದೊಡ್ಡದನ್ನು ಉಜ್ಜಿ ಸಣ್ಣದಾಗಿಸಲು, ಕೆಲವೊಮ್ಮೆ ಲೋಕೋದ್ಧಾರದ ವೇಷದಲ್ಲಿ ನಿಂತಂತೆಯೂ ಕಾಣಿಸುವುದಿದೆ. ಆದರೆ ಶ್ರೀ ರಾಮಕೃಷ್ಣ ಮತ್ತು ಶ್ರೀಮಾತೆಯವರು ಇಂತಹ ಸಾಂಸಾರಿಕ ಕುತರ್ಕಗಳಿಗೆ ಸೊಪ್ಪು ಹಾಕದ ಎತ್ತುಪಿದು. ಅವರು ತರ್ಕಾತೀತರು. ಆದ್ದಿಂದ  ಅರಿವಿನ ಜಲ ಬತ್ತಿಸಿಕೊಂಡರುವ ಇವತ್ತಿನ "ಸಬಲ ತೋರಿಕೆ"ಯ ಸಾಮಾನ್ಯ ದೃಷ್ಟಿಗಳಿಗೆ ಶ್ರೀ ಶಾರದಾದೇವಿಯವರ ಹಕ್ಕುಗಳ ಉಲ್ಲಂಘನೆಯಾದಂತೆ ಕಾಣಿಸಿದರೆ ಅದಕ್ಕಯಾರೂ ಪ್ರತಿಕ್ರಿಯಿಸಬೇಕಾಗಿಲ್ಲ; ಏಕೆಂದಅದು ಅವರ ತಪ್ಪಲ್ಲ. ಇವೆಲ್ಲೂ ವ್ಯಕ್ತಿತ್ವಿಲುತ ದ್ಯೋತ. ಗುರು ದಂಪತಿಗಳನ್ನು ಸ್ವಾಮಿ ವಿವೇಕಾನಂದರು ಬದುಕಿರುವಾಗಲೇ ಪ್ರಶ್ನಿಸಿದವರಿದ್ದರು ! ಸ್ವತಃ ವಿವೇಕಾನಂದರ ಕುರಿತೂ ರೋಮದರ್ಶನ ಮಾಡಿಸಲು ಹೊರಟವರಿದ್ದರು; ಈಗಲೂ ಇದ್ದಾರೆ ! ಆದರೆ ಶ್ರೀ ರಾಮಕೃಷ್ಣ ಪರಂಪರೆಯು "ಆತ್ಮನೋ ಮೋಕ್ಷಾರ್ಥಂ ಜಗದ್ಧಿತಾಯಚ" ಎಂಬ ಸಿದ್ಧ ಗುರಿಯಿಂದ ಎಂದವಿಚಲಿತವಾಗಲಿಲ್ಲ. ಆದ್ದರಿಂದ ಇಂತಹ ರಂಧ್ರಾನ್ವೇಷಕ ುನಿಕ ರೋಮಪಾದರಾಯರನ್ನು ಅವಗಣಿಸಿದರೆ ಅಷ್ಟೇ ಸಾಕಾಗುತ್ತದೆ. ಅಹಂಕಾರಕ್ಕೆ ಉದಾಸೀನವೇ ಮದ್ದು ! 

ಈ ಭೂಮಿಯ ಮೇಲೆ ಮಾತನ್ನು ಆಡಬಲ್ಲ ಜೀವಿಗಳಿಂದ ಇಂತಹ ಹೊರಳಾಟಗಳು ಅನೂಚಾನವಾಗಿ ನಡೆಯುತ್ತಲೇ ಬಂದಿವೆ. ಆದರೆ ದೊಡ್ಡ ಗೆರೆಯನ್ನು ಉಜ್ಜಿ ಸಣ್ಣದಾಗಿಸುವ ಇಂತಹ ಯಾವತ್ತೂ ಶ್ರಮವನ್ನು - ಸಣ್ಣದನ್ನು ದೊಡ್ಡದಾಗಿಸುವಲ್ಲಿ ಪ್ರಯೋಗಿಸಿದ್ದರೆ ಸ್ವಂತಕ್ಕೂ ಸಮಾಜಕ್ಕೂ ಹೆಚ್ಚು ಉಪಯೋಗವಾಗುತ್ತಿತ್ತು ಎಂದು ಸಜ್ಜನರಿಗೆ ಅನ್ನಿಸುವುದು ಸಹಜ. ಕೇವಲ ಇತರರ ಹೊರಗನ್ನು ತೊಳೆಯಲು ಕಟಿಬದ್ಧವಾಗಿರುವ ಕೆಲವು ಸಂಶೋಧಕ ಬುದ್ಧಿಗಳು ಸ್ವಾಂತರಂಗದ ಕಾರ್ಯಕ್ಷೇತ್ರವನ್ನೂ ವಿಮರ್ಶಿಸಿಕೊಂಡಿದ್ದರೆ ಇನ್ನೂ ಹೆಚ್ಚಿನ ಲೋಕೋಪಕಾರವಾಗುತ್ತಿರಲಿಲ್ಲವೆ ? ಾಣದ್ದಕಂಡದ್ದನ್ನೆಲ್ಲ ವಿಮರ್ಶಿಸಲು ಹೊರಡುವವರು ಪೂರ್ವಾಗ್ರಹ ಅಥವ ಅರಿವಿನ ಕೊರತೆಯಿಂದ ಮುಗ್ಗರಿಸಿ ಬೀಳುತ್ತಿರುವುದನ್ನು ನಾವು ನೋಡುತ್ತಲೇ ಬಂದಿದ್ದೇವೆ. ಹೀಗಿದ್ದೂ ನೇತ್ಯಾತ್ಮಕವಾಗಿ ವಾಮಮಾರ್ಗದಿಂದಲಾದರೂ ತಮ್ಮನ್ನು ತಾವು ಸ್ಥಾಪಿಸಿಕೊಳ್ಳಲೋಸುಗ ಅನೇಕ ಮಹಾಸಾಧಕರನ್ನು ಸ್ವಪ್ರಸಿದ್ಧಿಯ ಏಣಿಯಾಗಿ "ಿಮರ್ೆ" ಎಂಬೆಪಲ್ಲಿ ಬಳಸಿಕೊಳ್ಳುವವರು ಹುಟ್ಟುತ್ತಲೇ ಇದ್ದಾರೆ; ಇರುತ್ತಾರೆ. 

ಯಾವುದೇ ಅಸಂಗತ ವಿಷಯವನ್ನು ಚರ್ಚೆಗೆ ಎಳೆದು ತರುವುದು ಬುದ್ಧಿಯ ಸ್ವಭಾವವೇ ಆಗಿದೆ. ಆದರೆ ಎಲ್ಲಬುದ್ಧಿಯಲ್ಲಿಯೇ ಮಿತಿಮೀರಿ ಕೇಂದ್ರಿತವಾದರೆ ಹೃದಯವು ಬಡವಾಗುತ್ತದೆ; ಹೃದಯವಂತಿಕೆಗೂ ಘಾಸಿಯಾಗುತ್ತದೆ; ಅದರಿಂದ ಭಾವನಾಶವಾಗುತ್ತದೆ. ಪ್ರಾಣಿವರ್ಗದಲ್ಲಿ ಮನುಷ್ಯರು ಮಾತ್ರ - ಸಮೃದ್ಧ ಭಾವಸುಖವನ್ನು ಹೊಂದಬಲ್ಲ ಮತ್ತು ಅದನ್ನು ಸಮರ್ಥವಾಗಿ ಪ್ರಕಟಪಡಿಸಬಲ್ಲ ಅದೃಷ್ಟ ಹೊಂದಿದ್ದಾರೆ. ಯಾವುದೇ ಭಾವಬಳ್ಳಿಯುು ಹೃದಯದಲ್ಲಲ್ಲದೆ ಬುದ್ಧಿಯಲ್ಲಿ ಚಿಗುರಲಾರದು. ಆದ್ದರಿಂದ ಭಾವಮೂಲವಾದ ಹೃದಯಾಂತರಂಗದ ಚೇತನವು ಬಾಡಿ ಹೋಗದಂತಹ ಎಚ್ಚರದಿಂದ ಬದುಕಿನ ಸಮತೋಲನವನ್ನು ಉಳಿಸಿಕೊಂಡರೆ ಬುದ್ಧಿಯ ಕುತರ್ಕ ಚಾಂಡಾಲತನವನ್ನು ಕಿಂಚಿತ್ ನಿಯಂತ್ರಿಸಬಹುದು. "ತಮ್ಮ ಬದುಕನ್ನು ತಾವೇ ಉದಾತ್ತವಾಗಿ ರೂಪಿಸಿಕೊಂಡ ಶ್ರೀ ರಾಮಕೃಷ್ಣ ದಂಪತಿಗಳು ಎಂದಾದಹೊರಗಿನ ಯಾರನ್ನಾದರೂ ಪಂಚಾಯ್ತಿಕೆಗೆ ಕರೆದಿದ್ದರೆ ? ಅಥವ ತಮ್ಮ ವಿಚಾರಗಳನ್ನು ಸಮಾಜದ ಮೇಲೆ ಹೇರಿದ್ದರೆ ? ಮತಾಂತರಕ್ಕೆ ಯತ್ನಿಸಿದ್ದರೆ ? ಯಾರದೇ ಆಧ್ಯಾತ್ಮಿಕ ಆರಾಧನೆಯ ಹಕ್ಕನ್ನು ಮೊಟಕುಗೊಳಿಸಿದ್ದರೆ ? ಸಾಮಾಜಿಕ ಶಾಂತಿ ನೆಮ್ಮದಿಯನ್ನು ಭಂಗಗೊಳಿಸಿದ್ದರೆ ? ಸಾಕಾರ ನಿರಾಕಾರ ಇತ್ಯಾದಿ ಜಗತ್ತಿನ ಸದ್ವಿಚಾರಗಳನ್ನೆಲ್ಲವನ್ನೂ ಅನುಮೋದಿಸಿದ್ದ ಶ್ರೀ ರಾಮಕೃಷ್ಣ ಮತ್ತು ಅವರ ಪರಂಪರೆಯಿಂದ ಯಾವುದೇ ವ್ಯಕ್ತಿಯ ಸಾಮಾಜಿಕ ಅಥವ ಧಾರ್ಮಿಕ ಹಕ್ಕಿನ ಉಲ್ಲಂಘನೆಯಾಗಿದೆಯೆ ?" ... ಹಾಗಿದ್ದರೆ.. ಕರೆದು ಕರಕರೆ ಮಾಡುವ ವೃಥಾ  ಉನ್ಮಾದವೇಕೆ ?  ಭಾವ ಸಮೃದ್ಧ ಹೃದಯವು ಮಾತ್ರ ಇಂತಹ ಪ್ರಶ್ನೆಗಳಿಗೆಲ್ಲ ಉತ್ತನ್ನು ಕಂಡುಕೊಳ್ಳಬಲ್ಲದು.


ಪ್ರಥಮತಃ - ಶ್ರೀ ರಾಮಕೃಷ್ಣರ ಬದುಕು ಅತ್ಯಂತ ವಿಶಿಷ್ಟವಾದುದು ಎಂಬುದನ್ನು ಅವ ಅನುಸೆ ಮತ್ತ
ಅಧ್ಯಯನದಿಂದ ಅರ್ಥ ಮಾಡಿಕೊಳ್ಳುವುದು ಮುಖ್ಯ. ಅವರವರು ವಿಶ್ವಾಸದಿಂದ ಆಯ್ದುಕೊಂಡ ಸ್ವಂತ ಬದುಕನ್ನು ಬದುಕಬಹುದಾದ ಎಲ್ಲ ಹಕ್ಕು ಅಥವ ಅವಕಾಶವು ಎಲ್ಲರಿಗೂ ಇದೆ ಎನ್ನುವುದಾದೆ - ಅದ ಶ್ರೀ ರಾಮಕೃಷ್ಣ ದಂಪತಿಗಳಿಗೂ ಅನ್ವಯವಾಗುತ್ತದೆ. ಇದು - ಸಾಮಾಜಿಕ ನೆಮ್ಮದಿಗಾಗಿ ಎಲ್ಲ ಸಮಯದಲ್ಲಿಯೂ ಅನುಸರಿಸಬೇಕಾದ ಶಿಷ್ಟತೆಯ ಸೂತ್ರ. ತಮ್ಮ ವಿವಾಹವಾದ ನಂತರ 13 ವರ್ಷಗಳಕಾಲ ಹೆತ್ತವರ ಜೊತೆಯಲ್ಲಿಯೇ ಇದ್ದ ಶ್ರೀಮಾತೆಯವರು ಅನಂತರದ 14 ವರ್ಷಗಳನ್ನು ಶ್ರೀ ರಾಮಕೃಷ್ಣರು ಮತ್ತವರ ಶಿಷ್ಯರುಗಳ ಯೋಗಕ್ಷೇಮದ ನಿರ್ವಹಣೆಯಲ್ಲಿ ಕಳೆದರು. ತಮ್ಮ 50 ನೇ ವಯಸ್ಸಿನಲ್ಲಿ ಶ್ರೀ ರಾಮಕೃಷ್ಣರು ಮಹಾಸಮಾಧಿಗೈದಾಗ ಮಾತೆಯವರಿಗೆ ಕೇವಲ 33 ವರ್ಷ ಪ್ರಾಯ.

ಅನಂತರದ 23 ವರ್ಷಗಳ ಕಾಲ ಮಾತೆಯವರು ಅನೇಕ ಸಾಂಸಾರಿಕ ಬವಣೆಗಳನ್ನು ಎದುರಿಸಬೇಕಾಯಿತು. ಶ್ರೀ ರಾಮಕೃಷ್ಣರ ಶಿಷ್ಯಬಳಗವು ಆಗ ಮಾತೆಯವರ ಬೆಂಬಲಕ್ಕಿತ್ತು. ಅವರ ಜೀವನದ ಕೊನೆಯ 11 ವರ್ಷಗಳ ಕಾಲ -  ಅದುವರೆಗೆ ತಮ್ಮ ಒಡನಾಡಿಂತೀಡಿಸುತ್ತಿದ್ದ ಸಾಂಸಾರಿಕ ಗೊಂದಲಗಳನ್ನು ದೂರ ಸರಿಸಿದ್ದ ಶ್ರೀಮಾತೆಯವರು ಪರಮಹಂಸರು ತಮಗೆ ನಿರ್ದೇಶಿಸಿದ್ದ ಧ್ಯಾತ್ಮಿಕ ಕಾರ್ಯಗಳಲ್ಲಿ ಪೂರ್ಣರೂಪದಲ್ಲಿ ತೊಡಗಿಕೊಂಡಿದ್ದರು. ಶ್ರದ್ಧಾಳುಗಳಿಗೆ ಆಧ್ಯಾತ್ಮಿಕ ಮಾರ್ಗದರ್ಶನ ನೀಡತೊಡಗಿದರು; ಆರ್ತವಾಗಿ ಅಪೇಕ್ಷಿಸಿದವರಿಗೆಲ್ಲ ಶ್ರೀಮಾತೆಯವರಷ್ಟು ಉದಾರವಾಗಿ ರಾಮಕೃಷ್ಣ ಸಂಘದಲ್ಲಿಯೂ ಮಂತ್ರದೀಕ್ಷೆ ಸಿಗುತ್ತಿರಲಿಲ್ಲ. ದುಃಖಿತರಾದ ಅಸಹಾಯ ಭಕ್ತರ ಯಾವ ಹಿನ್ನೆಲೆಯನ್ನೂ ಗಮನಿಸದೆ ಶರಣು ಬಂದವರಿಗೆಲ್ಲರಿಗೂ ಮಂತ್ರದೀಕ್ಷೆ ನೀಡುತ್ತಿದ್ದ ಮಾತೆಯವರ ಕಾರ್ಯಶೈಲಿಯು ಅವರ ಮಾತೃಹೃದಯದ ದ್ಯೋತಕವೆಂದೇ ಭಾವಿಸಬೇಕು. ಮಂತ್ರದೀಕ್ಷೆ ನೀಡಿ ಶಿಷ್ಯರನ್ನಾಗಿ ಸ್ವೀಕರಿಸುವ ವಿಷಯದಲ್ಲಿ ಶ್ರೀ ರಾಮಕೃಷ್ಣರು ಇನ್ನಿಲ್ಲದಷ್ಟು ಅಳೆದು ತೂಗುತ್ತಿದ್ದರೆ ಶ್ರೀಮಾತೆಯವರು ಅತ್ಯಂತ ಉದಾರವಾಗಿದ್ದರು. 

"ಸಾಧ್ಯವಾದಷ್ಟು ಮಂತ್ರಜಪ ಮಾಡು; ನಿನಗಾಗಿ ನಾನೂ ಜಪ ಧ್ಯಾನಗಳನ್ನು ಮಾಡುತ್ತೇನೆ. ನಿನ್ನ ಉದ್ಧಾರಕ್ಕಾಗಿ ನಾನು ಪ್ರಾರ್ಥಿಸುತ್ತೇನೆ...ನಿನಗೆ ಕಷ್ಟ ಬಂದಾಗ ನೀನೇ ಹೇಳಿಕೋ; ನನ್ನ ಜೊತೆ ಅಮ್ಮ ಇದ್ದಾಳೆ ಎಂದು ಹೇಳಿಕೋ..." ಎನ್ನುತ್ತ ತಮ್ಮ ಆಶ್ರಯಕ್ಕೆ ಬಂದ ಭಕ್ತರನ್ನು ಆಧರಿಸಿ, ಅವರಲ್ಲಿ ಮಾನಸಿಕ ಶಕ್ತಿಯನ್ನು ತುಂಬುತ್ತಿದ್ದವರು - ಮಾತೆಯವರು.

ಶ್ರೀ ರಾಮಕೃಷ್ಣರು ತಮ್ಮ ಪತ್ನಿಯನ್ನು ಒಪ್ಪಿಸಿ, ತಮ್ಮ ಹಾದಿಯಲ್ಲಿಯೇ ಪತ್ನಿಯ ಕೈಹಿಡಿದು ನಡೆಸಿದ್ದರು. ಪತ್ನಿಗೆ ತರಬೇತಿ ನೀಡಿ, ತಮ್ಮ ತಪಸ್ಸನ್ನೂ ಧಾರೆಯೆರೆದಿದ್ದರು. ಶ್ರೀಮಾತೆಯವರು ತನ್ನ ಪತಿಯೊಂದಿಗೆ ಪ್ರೀತಿಯಿಂದಲೇ ಯಾತ್ರಿಸಿದ್ದರು. ಇಂತಹ ಪೂರ್ವ ಬದುಕಿನ ಹಿನ್ನೆಲೆಯಲ್ಲಿ ಸಂಶಯಗ್ರಸ್ತರ ಅಸಂಬದ್ಧ ಪ್ರಶ್ನೆಗಳನ್ನು ಇಟ್ಟು ತೂಗಿ ನೋಡಬೇಕಾಗುತ್ತದೆ. "ವಿಶಾಲ ಹೃದಯವಂತಿಕೆ" ಎಂಬ ಶೋಕಿಯ ಕೆಲವು ಶೋಕತಪ್ತರಿಗೆ - ಆಗಾಗ ಹುಳುಕು ಅನುಕಂಪ ಮೂಡುತ್ತಿರುವುದು ಸದಿಚ್ಛೆಯಿಂದಲೆ ? ಅಜ್ಞಾನದಿಂದಲೆ ? ಪುಕ್ಕಟೆ ಪ್ರಚಾರದ ಹುಮ್ಮಸ್ಸಿನಿಂದಲೆ ? ಎಂದೂ ಪ್ರಾಜ್ಞರು ಯೋಚಿಸಬೇಕಾಗುತ್ತದೆ.

ಅಕಸ್ಮಾತ್ ಇವತ್ತಿನ "ಓಲೈಸುವ ಕಾನೂನುಗಳ" ಕಾಲಘಟ್ಟದಲ್ಲಿ ಶ್ರೀ ರಾಮಕೃಷ್ಣ ಮತ್ತು ಮಾತೆಯವರು ಇರುತ್ತಿದ್ದರೆ...? ಏನೇನಾಗಬಹುದಿತ್ತು ? ಪ್ರಚಂಡ ನಾಟಕಗಳೇ ನಡೆದು ಹೋಗುತ್ತಿದ್ದವೋ ಏನೋ ? ಕೆಲವರಿಗೆ CANDLE ಹಿಡಿದು ಮೆರವಣಿಗೆಯನ್ನೂ ನಡೆಸುವ ಅವಕಾಶ ಸಿಗುತ್ತಿತ್ತು ! ತಮಗೆ ಸಾಧ್ಯವಿದ್ದಿದ್ದರೆ, ಶ್ರೀಮಾತೆಯವರ ಕಿವಿಯೂದಲು ಪ್ರಯತ್ನಿಸಿ ಶ್ರೀ ರಾಮಕೃಷ್ಣರನ್ನು ಕಟಕಟೆಯಲ್ಲಿ ನಿಲ್ಲಿಸಿ ಚೆಂದನೋಡುತ್ತಿದ್ದು ! ಏಕೆಂದಅಂತಬುದ್ಧಿಪೈಕಿಯ ಹಕ್ಕಿಗಮಿತಾಕ್ಷರರು” ಈಗ ಎಲ್ಲೆಲ್ಲೂ ತಾಂಡವವಾಡುತ್ತಿದ್ದಾರೆ. ಪಕ್ಕದ ಮನೆ ಸುಟ್ಟರೆ ನಮ್ಮ ಕರು ಕಟ್ಟಲು ಜಾಗ ಆದಂತಾಯ್ತು ಅನ್ನುವ ಕುನೀತಿಯ ವ್ಯವಹಾರಸ್ಥರೇ - ಈಗ ಸಮಾಜದಲ್ಲಿ ನೀತಿಪಾಠವನ್ನ ಬೋಧಿಸುವವರಾದ ಪರಿಣಾಮದಿಂದಲೇ ಮಹಾನ್ ಸಾಧಕ ಮತ್ತು ಆದರ್ಶ ವ್ಯಕ್ತಿಗಳನ್ನೇ ಹುಡುಕಿ ಹುಡುಕಿ ಚಾರಿತ್ರ್ಯಹರಣದ ಯತ್ನಗಳು ನಡೆಯುತ್ತಿರಬಹುದೆ ? ಅನ್ನಿಸುವುದೂ ಇದೆ. ಅಂತಹ ಕುಟಿಲ ಲೆಕ್ಕಾಚಾರದ ಬುದ್ಧಿಸ್ತರದಲ್ಲಿಯೇ "ತಮ್ಮ ಸತಿಗೆ ಶ್ರೀ ರಾಮಕೃಷ್ಣರು ಏನೇನೂ ಸುಖ ಕೊಡಲಿಲ್ಲ" ಎಂಬಂತಹ ಪರೋಕ್ಷ ಮಾತುಗಳು ಆಗಾಗ ಹೊರಹೊಮ್ಮುತ್ತವೆ. ಹೀಗಾದಾಗ "ಸ" ಎಂಬುದಕ್ಕೆ ನಿಮ್ಮ ವ್ಯಖ್ಯೆ ಏನು ? ಎಂಬ ಪ್ರಶ್ನೆ ಏಳುತ್ತೆ. ಅಂತಲ್ಪಿತಾವು - ಕೆಸರಿನಲ್ಲಿ ಮುಳುಗಿದವರು ತಮ್ಮನ್ನು ಮೆತ್ತಿ ಮುತ್ತಿದ್ದ ಕೆಸರನ್ನು ಅತ್ತಿತ್ತ ಚೆಲ್ಲುತ್ತ ಕೆಸರಿನಾಟವಾಡುವಂತೆಯೂ ಒಮ್ಮೊಮ್ಮೆ ಕಾಣುವುದಿದೆ. 


ನಿಜವಾಗಿಯೂ - ಸುಖ ಎಂಬುದರ ವ್ಯಾಖ್ಯೆ ಏನು ? ಯಾವುದೇ ನಿರ್ದಿಷ್ಟ ಸೂತ್ರಪಾತ್ರವಿಲ್ಲದ "ಸುಖ ಎಂಬ ಅಮೂರ್ತ"ವನ್ನು - ಇಲ್ಲದೂರಿನಲ್ಲಿ ಕಲ್ಪಿಸಿ ಅಲ್ಲಾಡದಂತೆ ಸ್ಥಾಪಿಸುವುದಾದರೂ ಹೇಗೆ ? ಯಾರ್ಯಾರದೋ ಕಲ್ಪನೆಯಲ್ಲಿ ಸಿಲುಕಿರುವ "ಸುಖ" ಎಂಬುದು ಸಾರ್ವತ್ರಿಕವಾಗಿ ಹೊಂದಬಲ್ಲದೆ ? ಯಾವುದೇ "ಸುಖ" ಎಂಬುದು ಆಯಾ ಕಲ್ಪನೆಗೆ ಹೊಂದಿದಂತೆಯೇ ಸುತ್ತುತ್ತದೆಯಲ್ಲವೆ ? ಕಲ್ಪನೆಯೇ ಸುಖದ ಇತಿಮಿತಿ. ಕಲ್ಪನೆಯ ಬೆನ್ನು ಬಿದ್ದವರಿಗೆ ವಾಸ್ತವವು ಸಿಗುವುದೇ ಇಲ್ಲ. "ಎಷ್ಟು ಮತವೋ ಅಷ್ಟು ಪಥ" ಎಂಬ ರಾಮಕೃಷ್ಣರ ಮಾತು "ಸುಖ" ಎಂಬ ಕಲ್ಪನೆಗೂ - ಅರ್ಧಂಬರ್ಧ ಒಪ್ಪುತ್ತದೆ! ಒಬ್ಬರ ಸುಖವು ಇನ್ನೊಬ್ಬರ ಸುಖವಾಗಬೇಕಿಲ್ಲ. ಒಂದು ಸುಖದುಃಖವನ್ನು - ಇನ್ನೊಂದು ಸುಖ ಅಥವ ದುಃಖದ ಕಣ್ಣಿನಿಂದ ತೂಗಿ ನಿರ್ಧರಿಸಲಾದೀತೆ ? ಇತಿಮಿತಿಯನ್ನು ಮೀರದಿರುವುದೇ ಸುಖ ಎಂದುಕೊಂಡರೆ ಅದರಲ್ಲಿ ಎಲ್ಲರಿಗೂ ಸುಖವಿದೆ. ಶ್ರೀಮಾತೆಯವರು ಕಂಡ ಸುಖವದು.


ದೈಹಿಕ ಅಪೇಕ್ಷೆಗಳಿಲ್ಲದುದರಿಂದಲೇ ಶ್ರೀ ರಾಮಕೃಷ್ಣ ಮತ್ತು ಶಾರದಾದೇವಿಯವರ ದಾಂಪತ್ಯವು ದೈವಿಕವಾಯಿತು. ಅದು ಲೋಕದ WINE ಅಲ್ಲ; ಅಲೌಕಿಕದ DIVINE. ಯಾವುದೇ ಬಾಹ್ಯ ಪ್ರಚೋದನೆಗಳನ್ನೂ ಅವಲಂಬಿಸದ ಆತ್ಮಸ್ಥ ಸ್ಥಿತಿಯದು. ಪರಸ್ಪರ ಯಾವುದೇ ನಿರೀಕ್ಷೆಗಳಿಲ್ಲದ ಸಾಹಚರ್ಯವದು; ಯಾವುದೇ ದೈಹಿಕ ಮಾನಸಿಕ ಪ್ರತಿಬಂಧವಿಲ್ಲದ ಒಡನಾಟವದು. ಸ್ವಚ್ಛಂದತೆಯಲ್ಲದ ಸ್ವಾತಂತ್ರ್ಯವದು. ಪರಸ್ಪರ ಭಾವನೈವೇದ್ಯದ ಸಹಬಾಳ್ವೆಯದು; ಅದು - ಸ್ವಂತಕ್ಕೆ ಏನನ್ನಾದರೂ ಪಡೆಯುವಂತಹ ವ್ಯಾವಹಾರಿಕ ಸಾಹಚರ್ಯವಲ್ಲ. ಆದ್ದರಿಂದಲೇ ಅದನ್ನು DIVINE ಅನ್ನುವುದು. 


ಯಾವತ್ತೂ - ದೈಹಿಕವನ್ನು ದಾಟದೆ ದೈವಿಕವಾಗುವುದು ಅಸಂಭವ. ದೇಹಭಾವವನ್ನು ಮೀರಿ ನಿಂತು ಪರ - ಪರಾ ಚಿಂತನೆಯಲ್ಲಿ ಸಾರ್ಥಕ್ಯ ಕಂಡುಕೊಂಡ ಜೀವಗಳವು. ಆದ್ದರಿಂದಲೇ "ಉಡಿಯಲ್ಲಿನ ಬೆಂಕಿಯಂತೆ ಮಾತೆಯವರು ಬದುಕಿದ್ದರು" ಎಂದು - ಯಾವ್ಯಾವುದೋ ಪುಸ್ತಕಗಳನ್ನು ಓದಿ ತೀರ್ಮಾನಿಸಲು ಯಾರಿಗೂ ಆಗುವುದಿಲ್ಲ. ಶ್ರೀಮಾತೆಯವರು ತಮ್ಮ ವ್ಯಕ್ತಿಗತ ಬದುಕನ್ನು ತ್ಯಾಗ ಮಾಡಿದ್ದು ಯಾವುದೇ ಬಾಹ್ಯ ಅನಿವಾರ್ಯತೆಯಿಂದಲೇ ? ಎಂಬುದು - ಮಾತೆಯವರು ಮಾತ್ರ ಹೇಳಬಹುದಾಗಿದ್ದ ಸತ್ಯ; ನಾವು ನೀವಲ್ಲ. ಆದರೆ ಶ್ರೀ ಶಾರದಾ ದೇವಿಯವರು ಶ್ರೀ ರಾಮಕೃಷ್ಣರ ಜೀವಿತಾವಧಿಯಲ್ಲಾಗಲೀ ಅಥವ ಅನಂತರವಾಗಲೀ ಸ್ವತಃ ಯಾರನ್ನೂ ದೂಷಿಸಿದವರಲ್ಲ; ತಾನು ಮದುವೆಯಾಗಿ ಕೆಟ್ಟೆ ಎಂದು ಹಳಹಳಿಸಿದವರಲ್ಲ. ಬದಲಾಗಿ, ಯಾವುದೇ ಬದುಕು ಉಪಕಾರಿಯಾಗಿ ಬದುಕಬಹುದಾದ ಒಂದು ಉದಾತ್ತ ಮಾದರಿಯಾಗಿ ಉಳಿದುಹೋದವರು - ಶ್ರೀಮಾತೆಯವರು. ಆದ್ದರಿಂದಲೇ "ಸಾಧ್ವೀ" ಎಂಬ ವಿಶೇಷಣವು ಶಾರದಾಮಾತೆಗೆ ಹೊಂದುತ್ತದೆ. "ಸಾಧ್ವಿ" ಎಂದರೆ ಪರಹಿತಕಾರಿಣಿ ಎಂಬ ಅರ್ಥವಿದೆ. ಆದ್ದರಿಂದ ಶಾರದಾದೇವಿಯವರನ್ನು ಸಾಧ್ವಿ ಎಂದು ಸಂಬೋಧಿಸಿದರೆ - ಅದು ಅನ್ವರ್ಥ. ಮದುವೆಯಾದ ಸಾಮಾನ್ಯರದು ಒಂದು ಬಗೆಯ "ಕೊಡುಕೊಳ್ಳುವ"
ಅವಲಂಬನೆಯ ದಾಂಪತ್ಯವಾದರೆ ಶ್ರೀ ರಾಮಕೃಷ್ಣ ದಂಪತಿಗಳದು ವಿಭಿನ್ನ. ಅನಂತದ ಶ್ರುತಿಗೆ ಧ್ವನಿಹೊಂದಿಸಿದ ಅನುಪಮ ಸುಸ್ವರದಾಂಪತ್ಯವದು. ಇದನ್ನು ಆದರ್ಶ ದಾಂಪತ್ಯಎಂಬುದಕ್ಕಿಂತ - "ಆದರ್ಶ ಸಾಹಚರ್ಯಎನ್ನಬಹುದು; ದಿವ್ಯ ಸಾಂಗತ್ಯ ಎಂದೂ ಅರ್ಥೈಸಬಹುದು. ನಿಷ್ಕಾಮ ಸಾಹಚರ್ಯದ ಉತ್ತುಂಗಕ್ಕೆ ಈ ಗುರು ಮತ್ತು ಗುರುಪತ್ನಿಯನ್ನು ಸಾರ್ವಕಾಲಿಕ ಮಾದರಿಯಾಗಿಯೂ ಪರಿಗಣಿಸಬಹುದು.


ಶಾರದಾದೇವಿಯವರ ವಿವಾಹ ಕಾಲದಲ್ಲಿ ಶ್ರೀ ರಾಮಕೃಷ್ಣರು ಅಧ್ಯಾತ್ಮಿಕದ ಹಾದಿಯಲ್ಲಿ ಬಲುದೂರ ನಡೆದಿದ್ದರು. "ಹುಚ್ಚು ಹಿಡಿದಿದೆ" ಎಂದು ಜನರು ಆಡಿಕೊಳ್ಳುವ ಹಂತದಲ್ಲಿದ್ದರು. "ಮದುವೆಯಾದರೆ ಹುಚ್ಚು ಬಿಡುತ್ತದೆ" ಎಂಬ ಸಾಮಾಜಿಕರ ಹುಚ್ಚಿಗೆ ವಿಧೇಯರಾಗಿ ಅಂದು ಶ್ರೀ ರಾಮಕೃಷ್ಣರು ಮದುವೆಯ ಶಾಸ್ತ್ರಕ್ಕೆ ತಲೆ ಒಡ್ಡಿದ್ದರು. ಅನಂತರ ಅದನ್ನು ತಮ್ಮದೇ ಶೈಲಿಯಲ್ಲಿ ನಿಭಾಯಿಸಿದ್ದರು. ಆಗ ಕೇವಲ ಆರು ವರ್ಷದವಳಾಗಿದ್ದ ಶಾರದೆಯನ್ನು ತಾವೇ ಸೂಚಿಸಿ, ಮದುವೆ ಮಾಡಿಕೊಂಡಿದ್ದರು. ದಂಪತಿಗಳ ನಡುವೆ 18 ವರ್ಷಕ್ಕೂ ಹೆಚ್ಚಿನ ಅಂತರವಿತ್ತು ! ಶ್ರೀ ರಾಮಕೃಷ್ಣರ ಕುಟುಂಬವು ಆಗ ಕಡುಬಡತನದಲ್ಲಿತ್ತು. ಎರವಲು ತಂದ ಚಿನ್ನವನ್ನು ಬಾಲವಧುವಿಗೆ ತೊಡಿಸಿದ್ದರು. ಅನಂತರ, ಆ ಆಭರಣಗಳನ್ನು ಪುಟ್ಟ ಶಾರದಾದೇವಿಯವರಿಗೆ ತಿಳಿಯದಂತೆ ಅವರು ನಿದ್ರಿಸುತ್ತಿದ್ದಾಗ ಕಳಚಿ ಹಿಂದಿರುಗಿಸಿದ್ದರು. ಪುಟ್ಟ ಬಾಲಕಿಗೆ ಎಚ್ಚರವಾದ ಬಳಿಕ ತನ್ನ ಆಭರಣಗಳಿಗಾಗಿ ಅತ್ತಾಗ, ಅತ್ತೆ ಚಂದ್ರಮಣೀದೇವಿಯವರು ಆಕೆಯನ್ನು ಸಂತೈಸಿದ್ದರು; "ಮಗೂ, ನಮ್ಮ ಗದಾಧರನು ಮುಂದೆ ಇನ್ನೂ ಒಳ್ಳೆಯ ಒಡವೆಗಳನ್ನು ತಂದುಕೊಡುತ್ತಾನೆ.." ಎಂದಿದ್ದರು. ತಾಯಿಯ ಈ ಮಾತನ್ನು ಶ್ರೀ ರಾಮಕೃಷ್ಣರು ಅನಂತರ ನಿಷ್ೆಯಿಂದ
ಪೂರೈಸಿದ್ದರು. ಶ್ರೀ ರಾಮಕೃಷ್ಣರ ಮುಖ್ಯ ಪೋಷಕನಾಗಿದ್ದ ಮಥುರಮೋಹನನಿಗೆ ಈ ಒಡೆಯ ಘಟನೆಯು ತಿಳಿದುಬಂದಾಗ, ಾಮಷ್ಣನ್ನಆರಿಸುತ್ತಿದ್ದ ಆತು ಮಾತೆಯಿಗೆ ನೀಡುವುವಾಗಿ ಆಭರಣಗಳನ್ನು ಮಾಡಿಸಿ ರಾಮಷ್ಣಿಗೆ ಕಟ್ಟಂತ ದಾಖಲಾತಿಗಳಲ್ಲಿ ತೋರುತ್ತದೆ.


ಹೀಗೆ ಶ್ರೀಮಾತೆಯವರು ಮೊದಲ ಬಾರಿ ದಕ್ಷಿಣೇಶ್ವರಕ್ಕೆ ಬಂದಾಗಲೇ - ಸರ, ತಾಯಿತಿಗಳು, ಕಿವಿಯೋಲೆಗಳನ್ನು ಶ್ರೀಮಾತೆಗೆ ಅರ್ಪಿಸಲಾಗಿತ್ತು. ಅನಂತರ ಶ್ರೀ ರಾಮಕೃಷ್ಣರೇ ತೋಳ್ಬಂದಿ, ಬಳೆಗಳನ್ನು ಮಾಡಿಸಿದ್ದರು. ಹೆಣ್ಣಿನ ಸಾಮಾನ್ಯ ಆಸೆಗಳನ್ನು ಶ್ರೀ ರಾಮಕೃಷ್ಣರು ಏಕಮುಖವಾಗಿ ಧಿಕ್ಕರಿಸಿರಲಿಲ್ಲ ಎಂಬುದು ಗಮನಿಸಬೇಕಾದ ಅಂಶ. ಅಂದು ಶ್ರೀಮಾತೆಯವರು ತಾವೊಬ್ಬರೇ ಆಭರಣಗಳನ್ನು ಧರಿಸಿ ಆನಂದಿಸಲಿಲ್ಲ; ತಮ್ಮ ಕೆಲಸದಾಕೆಗೂ ಮಾಡಿಸಿಕೊಟ್ಟಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ, ಶ್ರೀ ರಾಮಕೃಷ್ಣರು ತಮ್ಮ ಸತಿಯನ್ನು ಎಂದೂ ನೋಯಿಸಿದವರಲ್ಲ; ತಾನು ಪತಿ ಎಂಬ ಅಧಿಕಾರವನ್ನು ಎಲ್ಲರಂತೆ ಚಲಾಯಿಸಿದವರಲ್ಲ. ತಮ್ಮ ಪತ್ನಿಯನ್ನು ಕುರಿತು ಅವರು ಆಡಿದ್ದ ಮಾತುಗಳೇ ಅದಕ್ಕೆ ಸಾಕ್ಷಿ. "ಅವರು ಶಾರದೆ; ತಮ್ಮನ್ನು ಶೃಂಗರಿಸಿಕೊಳ್ಳಲು ಇಚ್ಛಿಸುತ್ತಾರೆ..." ಎಂದಿದ್ದರು - ಅಷ್ಟೆ. ಆದರೆ ಕೇಡು ಮಾತಿನವರು ಆಗಲೂ ಸಮಾಜದಲ್ಲಿ ಇದ್ದರು. ಅಂತಹ ಮಾತಿನಿಂದ ನೊಂದ ಶ್ರೀಮಾತೆಯವರು ಬಹಳ ಕಾಲ ಈ ಆಭರಣಗಳನ್ನೆಲ್ಲ ಧರಿಸಲಿಲ್ಲ. ಅನಂತರ ಹೆಣ್ಣಿನ ಶೋಭೆಗೆ ಅನಿವಾರ್ಯವಾದ ಕೆಲವೇ ಆಭರಣಗಳನ್ನು ಮಾತೆಯವರು ಧರಿಸುತ್ತಿದ್ದರು.
ತನ್ನ ಗಂಡನ ಕುರಿತು ಹಗುರವಾಗಿ ಆಡಿಕೊಳ್ಳಲು ತಾನು ಮತ್ತು ನ್ನ ಗಳು ಕಾರಣವಾಗದಂತೆ ಗಂಭೀರವಾಗಿ ಬದುಕಿದವರು ಶ್ರೀ ಶಾರದಾದೇವಿ. ಶ್ರೀ ರಾಮಕೃಷ್ಣರು ಪತ್ನಿಯನ್ನು ಕುರಿತು ತೋರಿಸಿದ ಕಾಳಜಿಯು ಹೀಗೆ ಅನೇಕ ಸಂದರ್ಭಗಳಲ್ಲಿ ವ್ಯಕ್ತವಾಗಿದೆ. ಆದ್ದರಿಂದಲೇ ಅವರಷ್ಟು ಪರಸ್ಪರರ ಮನಸ್ಸನ್ನು ಅರಿತು ನಡೆದವರನ್ನು - "ವರ್ಷವರ್ಷವೂ ಮಕ್ಕಳನ್ನು ಹುಟ್ಟಿಸಿ ದಾಂಪತ್ಯದ ಸಾರ್ಥಕ್ಯ ಕಾಣುವ" ದಿಗ್ಗಜರಲ್ಲೂ ಕಾಣಲು ಸಾಧ್ಯವಿಲ್ಲ.



ಇವತ್ತಿನ ಸಮಾಜದಲ್ಲಿ ಶ್ರೀ ರಾಮಕೃಷ್ಣರಂತಹ ಗಂಡು ದುರ್ಲಭ; ಶಾರದಾದೇವಿಯಂತಹ ಸ್ತ್ರೀಯಂತೂ ಅತೀ ದುರ್ಲಭ ಎನ್ನಬಹುದು. 

ಇಂತಹ ಅಪೂರ್ವಗಳು ಎಂದಾದರೊಮ್ಮೆ ಮಾತ್ರ ಸಂಭವಿಸುವಂಥವುಗಳು. ಆದ್ದರಿಂದಲೇ ಪೂರ್ವದಲ್ಲಿ ಸಂಭವಿಸಿದ ಘಟನೆಗಳೂ ಇಂದಿನ ಸಾಮಾನ್ಯ ಮನುಷ್ಯರಿಗೆ - ಅಸಹಜ ಅನ್ನಿಸುತ್ತದೆ; ಒಪ್ಪಿಕೊಳ್ಳಲು ಕಷ್ಟವೆನ್ನಿಸುತ್ತದೆ; ಬದಲಾದ ಸನ್ನಿವೇಶದ ಪರಿಧಿಯಲ್ಲಿ ನಿಂತು ತಿರುಗಿ ನೋಡುವ ಪೂರ್ವಸಂಸ್ಕಾರವಿಲ್ಲದವರಿಗೆ ಸಹಾನುಭೂತಿಯುಳ್ಳ ನಿಷ್ಕರ್ಷೆಯು  ಸಾಧ್ಯವಾಗದು.


"ಮದುವೆ ಎಂಬುದು ಭೋಗದ ಒಂದು ವೇದಿಕೆ" ಎಂದುಕೊಂಡಿರುವ ಪ್ರಸ್ತುತ ಸನ್ನಿವೇಶದಲ್ಲಿ ಮದುವೆಯ ನಿಜಗಾಂಭೀರ್ಯವು ನಿಧಾನವಾಗಿ ಮರೆಯಾಗುತ್ತಿದೆ. ಹಿಂದೂ ಶಾಸ್ತ್ರಗಳು ಹೇಳುವಂತೆ, ಸದ್ಗುಣವಂತರಾದ ಮಕ್ಕಳನ್ನು ಹೊಂದಿ, ಸೃಷ್ಟಿಯ ನಿಯಮವನ್ನು ಪಾಲಿಸುತ್ತ ಸರ್ವ ಜನಹಿತವನ್ನು ಸಾಧಿಸುವ ಕಾರ್ಯರಂಗವೇ ಗೃಹಸ್ಥ ವೇದಿಕೆ. ಇದೇ ಮೂಲ ಉದ್ದೇಶವಾದರೂ ಸ್ವಾರ್ಥದ ಲಾಭವಿಲ್ಲದಲ್ಲಿ ಮನುಷ್ಯರಿಗೆ ಆಕರ್ಷಣೆ ಇರುವುದಿಲ್ಲ ಎಂಬ ಮಾನವಸಹಜ ದೌರ್ಬಲ್ಯದ ಪೂರ್ತಿಗಾಗಿ ಭೋಗದ ಅವಕಾಶವನ್ನೂ ಋಷಿಮುನಿಗಳು ತೆರೆದಿಟ್ಟಿದ್ದರು. ಭೋಗದ ಅಭಿಲಾಷೆಯನ್ನು ಅನುಭವಿಸಿಯೇ ಕ್ರಮೇಣ ಕಡಿಮೆಗೊಳಿಸಿಕೊಳ್ಳುತ್ತ, ತದನಂತರ ಸ್ವಸ್ಥ ನೆಲೆಯಲ್ಲಿ ಉನ್ನತ ಧ್ಯೇಯ ಚಿಂತನೆಗಳು ನಡೆಯುವಂತಾಗಲಿ ಎಂಬ ಮುಂದಾಲೋಚನೆಯಿಂದಲೇ ಅಂತಹ ಗೃಹಸ್ಥ ನಿಯಮಗಳನ್ನು ರೂಪಿಸಿದ್ದರು. ಔನ್ನತ್ಯ ಸಾಧಿಸುವುದೇ ಪ್ರತಿಯೊಂದು ಬದುಕಿನ ಧ್ಯೇಯವೇ ಹೊರತು - ತಪ್ಪು ಹುಡುಕುವ 
ವೈಭವದ ದಾಂಪತ್ಯವೇ ಅಂತಿಮ ಗುರಿಯಲ್ಲ. ಗಾರ್ಹಸ್ಥ್ಯ ಎಂಬುದು ಏರುವ ಏಣಿಯ ಒಂದು ಮೆಟ್ಟಿಲು ಮಾತ್ರ. ಆದರೆ ಮನುಷ್ಯರನ್ನು ಸುತ್ತಿರುವ ಭ್ರಾಂತಿ ಏನೆಂದರೆ ಹಲವರಿಗೆ... ಮನೆಯ ಹೊರಗಿನ ಮೆಟ್ಟಿಲಿನಲ್ಲೇ ಶಾಶ್ವತ ಸಂಸಾರ ನಡೆಸುವ ಹುಮ್ಮಸ್ಸು. ನಮ್ಮ ಮನೆ ಬೇಡ; ಬೀದಿಯೇ ಆಪ್ಯಾಯ. ಬುದ್ಧಿಯ ಉಂಡಾಡಿತನ! ಪತಿ ಮತ್ತು ಪತ್ನಿ ಪರಸ್ಪರ ಅನುಕೂಲರಾಗಿ ಏಕಭಾವ ಹೊಂದಿದ್ದರೆ ಮಾತ್ರ ಇಲ್ಲಿನ ಮನೆಯನ್ನು ಸಂಭಾಳಿಸುತ್ತ - ಅಲ್ಲಿನ ಸ್ವಂತ ಮನೆಯನ್ನು ತಲುಪುವುದು ಸುಲಭವೆನ್ನಿಸುತ್ತದೆ; ಆಗ ದಾರಿ ಸವೆದುದೇ ತಿಳಿಯುವುದಿಲ್ಲ. ಶ್ರೀಮಾತೆಯವರ ದಾಂಪತ್ಯವು ಅಂಥದ್ದು.    


ಸಂತ ತುಳಸೀದಾಸ, ಶ್ರೀ ಪುರಂದರದಾಸರು ಮುಂತಾದ ಭಕ್ತಿವರೇಣ್ಯರು ತಂತಮ್ಮ ಹೆಂಡತಿಯಿಂದಲೇ ಕಣ್ತೆರೆಸಿಕೊಂಡು ಸಂಸಾರದ ಮೋಹದಿಂದ ದೂರವಾಗಿ ಅಧ್ಯಾತ್ಮದ ಹಾದಿ ಹಿಡಿದಿದ್ದರೆ - ಶ್ರೀಮಾತೆ ಶಾರದಾದೇವಿಯವರು ತಮ್ಮ ಪತಿಯ ಸಹವಾಸದಲ್ಲಿ ವಿನಮ್ರತೆಯಿಂದಲೇ ಇದ್ದು, ಅವರನ್ನೇ ಅನುಸರಿಸಿ,
ಹಂತಹಂತವಾಗಿ ಅಧ್ಯಾತ್ಮದ ಹಾದಿ ಹಿಡಿದವರು.

ಅವರವರದೇ ಉದ್ದೇಶ ಸಾಧನೆಗಾಗಿ ಸಂಸಾರ ಬಂಧನವನ್ನು ತಿರಸ್ಕರಿಸಿದವರು ಎಲ್ಲ ಕಾಲದಲ್ಲಿಯೂ ಕಾಣಸಿಗುತ್ತಾರೆ. ಲೌಕಿಕದ ಆಕರ್ಷಣೆಯ ಹೊಡೆತಕ್ಕೆ ಸಿಲುಕಿ, ಪತಿಯನ್ನು ಪತ್ನಿ - ಪತ್ನಿಯನ್ನು ಪತಿಯು ತ್ಯಜಿಸಿ, ತಂತಮ್ಮ ದಾರಿಯನ್ನು ಹಿಡಿಯುತ್ತಿದ್ದವರು - ಇಂದಿನಂತೆ ಅಂದು ಕೂಡ ಇದ್ದರು. ಶ್ರೀಮಾತೆಯವರಿಗೆ ಕಷ್ಟವೆನ್ನಿಸಿದ್ದರೆ ತಮ್ಮ ಅದೇ ಬದುಕನ್ನು ಒಪ್ಪಿಕೊಳ್ಳಬೇಕಾದ ಅನಿವಾರ್ಯತೆಯೇನೂ ಇದ್ದಿರಲಿಲ್ಲ. ಆ ಕಾಲದಲ್ಲೂ "ಅನುಕಂಪದ ಭಿಕ್ಷೆಯ ಉದ್ಯೋಗ"ವನ್ನು ಹಿಡಿದವರು ಸಮಾಜದಲ್ಲಿದ್ದರು. ಅಂತಹ ಮಂದಿಯ ಆಶ್ರಯ ಪಡೆದು ಶ್ರೀ ರಾಮಕೃಷ್ಣರ ದಿಕ್ಕು ತಪ್ಪಿಸುವುದು ಶ್ರೀಮಾತೆಯವರಿಗೆ ಅಸಾಧ್ಯವೇನೂ ಆಗಿರಲಿಲ್ಲ. ಆದರೆ ಶ್ರೀಮಾತೆಯವರ ಸಂಸ್ಕಾರವು ಅಂತಹ ಯಾವುದೇ ಧೂರ್ತ-ಅನರ್ಥ ನಡೆಗಳತ್ತ ಅವರನ್ನು ಸೆಳೆಯಲಿಲ್ಲ. ಶ್ರೀಮಾತೆಯವರ ವಿವೇಕವು ಅತ್ಯುಚ್ಚ ಮಟ್ಟದಲ್ಲಿತ್ತು. ಶ್ರೀಮಾತೆಯವರು ತಮ್ಮ ಪತಿಯನ್ನು ದೈವೀಪುರುಷ ಎಂದು ಮನಸಾರ ಮೆಚ್ಚಿ ಅನುಸರಿಸಿದ ಸಹಬಾಳ್ವೆಯ ಬದುಕನ್ನು ಅಯ್ಯೋ... ಪರಿಸ್ಥಿತಿಗೆ ವಿಧೇಯವಾಗಿ ನಡೆಸಿದ ಜುಲುಮೆಯ ತ್ಯಾಗ ಎಂದೂ ಅರ್ಥೈಸುವವರಿದ್ದಾರೆ. ಆದರೆ ಅದು ದಷ್ಟಿದ ಏಕಪಕ್ಷೀಯ ತೀರ್ಮಾನವಲ್ಲದೆ ಬೇರೊಂದಲ್ಲ. ಆದರೆ ಮಾತೆಯವರು ನಿಜಾರ್ಥದಲ್ಲಿ, ತ್ಯಾಗಕ್ಕೂ ಆದರ್ಶವೇ ಆಗಿದ್ದಾರೆ ಎಂಬುದು ಸತ್ಯಸ್ಯ ಸತ್ಯ. ಅದು - ಸಂಸಾರದ ಆವುಗೆಯಲ್ಲಿ ಬೆಂದು ಪರಿಶುದ್ಧವಾದ ಅಪ್ಪಟ ತ್ಯಾಗ. ಹಂತಹಂತವಾಗಿ ಅನಾವರಣಗೊಂಡಿದ್ದ ದೃಢವಾದ ಇಚ್ಛಾಶಕ್ತಿ ಮತ್ತು ಸಾತ್ವಿಕ ಭಾವಪ್ರೇರಿತ ಪರಿಶುದ್ಧ ತ್ಯಾಗವದು. ಅದನ್ನು - ಸದಿಚ್ಛೆಯಿಂದ ಲೋಕಕಲ್ಯಾಣಕ್ಕಾಗಿ ನಡೆಸಿದ್ದ ಪರಮೋಚ್ಚ ತ್ಯಾಗವೆಂದು ಹೃತ್ಪೂರ್ವಕವಾಗಿ ಗುರುತಿಸಿದರೆ - ಶ್ರೀಮಾತೆಯವರೊಂದಿಗೆ ನಮ್ಮನ್ನು ನಾವೇ ನಿಜವಾಗಿ ಗೌರವಿಸಿಕೊಂಡಂತಾದೀತು.


ಶ್ರೀ ಶಾರದಾದೇವಿಯವರು ಸಹಸ್ರಾರು ಜನರಿಗೆ ಸಾಂತ್ವನ ಹೇಳಿದವರು; ನೆಮ್ಮದಿಯನ್ನು ಕರುಣಿಸಿದವರು. ಅಂತಹ ಸ್ತ್ರೀರತ್ನಕ್ಕೆ ಅನಂತರದ ಅಬ್ಬೇಪಾರಿಗಳು ತೋರುವ ಯಾವುದೇ ಬೇಜವಾಬ್ದಾರಿಯ ಅನುಕಂಪಗಳು - 
ಕ್ಷುಲ್ಲಕತನದ ಪರಮಾವಧಿ. ಇದು - ಶ್ರೀರಾಮನನ್ನು ಪರೋಕ್ಷವಾಗಿ ನಿಂದಿಸುವ ಉತ್ಸಾಹದವರು ಸೀತೆಗೆ ಅನುಕಂಪ ತೋರುವಂತೆಯೇ ಕಾಣುತ್ತದೆ. ಆಯಾ ಘಟನೆಗಳನ್ನು ಆಯಾ ನೆಲನೆಲೆಯಲ್ಲಿಯೇ ನಿಂತು ಅವಲೋಕಿಸುವುದು ಸುಸಂಸ್ಕೃತ ವಿಮರ್ಶೆಯೆನ್ನಿಸುತ್ತದೆ.ಸೃಜನಶೀಲತೆ, ಅಭಿಪ್ರಾಯ ಸ್ವಾತಂತ್ರ್ಯದ ಹೆಸರಿನಲ್ಲಿ ಮನುಷ್ಯರು ಕಂಡಕಂಡಲ್ಲಿ ಬುದ್ಧಿ ಉಜ್ಜುತ್ತ ನಡೆದರೆ "ತರ್ಕ ಶಿರೋಮಣಿ" ಎನ್ನಿಸಿಕೊಳ್ಳಬಹುದಲ್ಲದೆ ಅನ್ಯತ್ರ ಫಲವಿಲ್ಲ. ಅಧ್ಯಾತ್ಮದ ನೆರಳಿನಲ್ಲಿಯೇ ಶ್ರೀಮಾತೆಯವರು ಸಂಸಾರವನ್ನು ಕಂಡರು ಮತ್ತು ಶ್ರೀ ರಾಮಕೃಷ್ಣರು ಉಪದೇಶಿಸಿದಂತೆಯೇ ಬದುಕಿದರು ಎಂಬುದು ಮಾತ್ರ ವಾಸ್ತವ.



ಪ್ರತಿಯೊಂದು ಬದುಕಿಗೂ ಒಂದೊಂದು ಕಾರ್ಯಕ್ಷೇತ್ರವಿದೆ. ಶ್ರೀ ರಾಮಕೃಷ್ಣ ಮತ್ತು ಮಾತೆ ಶಾರದಾದೇವಿಯವರೂ ತಂತಮ್ಮ ಬದುಕುಗಳ ಕಾರ್ಯಕ್ಷೇತ್ರದಲ್ಲಿಯೇ ಸಂಚರಿಸಿದ್ದಾರೆ. ಒಬ್ಬೊಬ್ಬ ಮನುಷ್ಯನ ಸುಖದ ಕಲ್ಪನೆಯು ಒಂದೊಂದು ತೆರನದ್ದಾಗಿರುತ್ತದೆ ಎಂಬುದನ್ನು ಅರ್ಥೈಸಿಕೊಂಡರೆ - ಇಂದಿನ ಸಾಮಾಜಿಕ ಮನುಷ್ಯಪ್ರಾಣಿಗಳ ಗೊಂದಲಗಳೆಲ್ಲವೂ ನೀಗಿ, ಎಲ್ಲರ ಬದುಕೂ ಸುಗಮವಾಗುತ್ತದೆ. ಎಲ್ಲ ಬದುಕುಗಳೂ ನಿಯಮಗಳ ನೆಲೆಗಟ್ಟಿನಲ್ಲೇ ಅರಳಬೇಕಾಗುತ್ತದೆ. ನಿಯಮಗಳನ್ನು ಸಡಿಲಿಸಿಕೊಂಡರೆ ನೆಲೆಗಟ್ಟು ದುರ್ಬಲವಾಗಿ ಬದುಕಿನ ಮನೆಯು ಶಿಥಿಲವಾಗುತ್ತ - ಕುಸಿಯುತ್ತದೆ.

ಬದುಕಿನ ಯಾವುದೇ ಕಟ್ಟುಪಾಡುಗಳಿಗೆ ಬದ್ಧರಾಗುವುದನ್ನೇ "ಶಿಕ್ಷೆಯ ಶರಶಯ್ಯೆ" ಎಂದುಕೊಳ್ಳುವ ಸುಭಗರಿಂದಲೇ ಆವರಿಸಿಕೊಂಡಿರುವ ಇಂದಿನ ಸಮಾಜವು ಶಾರದಾದೇವಿಯವರನ್ನು ಇಂದಿನ ಹೆಣ್ಣುಗಳಿಗೆಲ್ಲ ಹೋಲಿಸಿ ತೂಗಿ ನೋಡುತ್ತಿದ್ದರೆ ಅಲ್ಲಿ ಶಾರದಾ ಮಾತೆಯು ಸಿಗುವುದು ಸಾಧ್ಯವೇ ಇಲ್ಲ. ಅಪೂರ್ವ ದರ್ಶನವೇ ಆದರ್ಶದ ಗುರುತು.

ರಳತೆ, ಕರ್ತವ್ಯಪರತೆ, ಸಾತ್ವಿಕ ಪ್ರೀತಿ, ಕರುಣೆ, ಸಹನೆ, ಕ್ಷಮೆ, ಉದಾರತೆ, ಭಕ್ತಿ, ಸಾಧನೆ, ವಿರಕ್ತಿ, ಸಂಯಮಗಳೇ ಮುಂತಾದ ಅನನ್ಯ ಗುಣಗಳ ಸಾಕ್ಷಿಯಾಗಿ ಶಾರದಾದೇವಿಯವರು ವಿರಾಜಮಾನರಾಗಿದ್ದಾರೆ. ನಿಷ್ಕಳಂಕ, ಪರಿಶುದ್ಧವಾದ ನಿಸ್ವಾರ್ಥ ಬದುಕದು. ಇಂತಹ ಗುಣವಿಶೇಷಗಳನ್ನೇ "ಶೋಷಣೆಯ ಆಯುಧಗಳು" ಎಂದು ಘೋಷಿಸುವುದಾದರೆ ಅಂತಹ ಮಂದಿಯ ದೃಷ್ಟಿಯಲ್ಲಿ ಶ್ರೀಮಾತೆಯವರು ಶೋಷಿತರಾಗಿ ಬಿಡುವುದರಲ್ಲಿ ಆಶ್ಚರ್ಯವಿಲ್ಲ. ಒಬ್ಬ ಹೆಣ್ಣಾಗಿ ತನಗೆ ಸಾಧ್ಯವಾಗದುದನ್ನು ಶ್ರೀಮಾತೆಯವರು ಸಾಧಿಸಿದರು ಎಂಬ ಹೆಮ್ಮೆಯು ಯಾವತ್ತೂ ಸ್ತ್ರೀಜಾತಿಗಿದ್ದರೆ ಅದೂ ಆರೋಗ್ಯಕರ ಚಿಂತನೆಯೆಂದೇ ಅನ್ನಿಸಿಕೊಂಡೀತು.

ದಾರಿ ತಪ್ಪಿದ ಮತ್ತು ತಪ್ಪಿಸುವ ಚಿಂತನೆಗಳನ್ನೇ ಉಸಿರಾಡುತ್ತ Mall ಗಳಲ್ಲಿ ಸುತ್ತುತ್ತ ಪಿಜ್ಜಾ - ಪಾನೀಪುರಿಗಳಲ್ಲೇ ಬದುಕಿನ ಸುಖವನ್ನು ಹುಡುಕುವ ಇಂದಿನ ಮಾರಣಭಯಂಕರರಿಗೂ - ಸ್ವಲ್ಪ ಶ್ರದ್ಧೆ, ಸ್ವಲ್ಪ ತಾಳ್ಮೆ ಇದ್ದರೆ - ಶಾರದಾಮಾತೆಯವರು ಮಾರ್ಗ ತೋರಿಸಬಲ್ಲರು. ಅದೇ ಪರಾಶಕ್ತಿಯ ದಯಾಮಹಿಮೆ; ಹೃದಯ ವೈಶಾಲ್ಯ.


ಅವರವರ ಸಂಸ್ಕಾರ, ಪರಿಸರ, ಆದ್ಯತೆ, ಗುರಿ... ಮುಂತಾದ ಮೂಲ ಲಕ್ಷಣಗಳು ಅವರವರ ಬದುಕನ್ನು ನಿರ್ಮಿಸುಸುತ್ತವೆ. ಕೆಲವರು ತಾನಾಗಿ ಒದಗುವ ಮತ್ತು ತಾವಾಗಿ ಬಾಚಿಕೊಳ್ಳುವ ಹಡಬಿಟ್ಟಿ ಸುಖ ದುಃಖಗಳನ್ನು ಆಶ್ರಯಿಸಿದರೆ - ಪತಿಗೆ ಅನುಕೂಲೆಯಾಗಿ ಅಧ್ಯಾತ್ಮದ ನಡಿಗೆಯನ್ನು ಒಪ್ಪಿ, ಅದನ್ನೇ ಸವಿದ ಮಾತೆ ಶಾರದಾದೇವಿಯಂತಹ ಬದುಕುಗಳು ಅತೀ ವಿರಳ. "ಅಂತಹ ಬದುಕನ್ನು ಸವೆಸುವುದೇ ಅಸಾಧ್ಯ" ಎನ್ನುವ ಇಂದಿನ ಅಭಿಪ್ರಾಯವಂತರು - ಮಾತೆಯವರ ಮುಖವಾಣಿಗಳಂತೂ ಅಲ್ಲವೇ ಅಲ್ಲ. ರಾಮಾಯಣದ ಸೀತೆ, ಶ್ರೀ ರಾಮಕೃಷ್ಣರ ಶಾರದೆಯನ್ನು ಸಂತೆಯಲ್ಲಿ ಸಿಗುವ ಯಾವುದೇ ಅಳತೆಗೋಲಿನಿಂದ ಅಳೆಯಲಾಗುವುದಿಲ್ಲ. ಆದರೆ... ಸಾತ್ವಿಕ ಬದುಕು, ಸಮಗ್ರ ಅಧ್ಯಯನ ಮತ್ತು ಚಿಂತನೆಗಳಿಂದ ಆರೋಗ್ಯಕರ ಅಭಿಪ್ರಾಯವನ್ನು ರೂಢಿಸಿಕೊಳ್ಳಲು ಯಾವತೂ ಪ್ರಯತ್ನಿಸಬಹುದು.


ಶ್ರೀ ರಾಮಕೃಷ್ಣ ಮತ್ತು ಶ್ರೀಮಾತೆಯವರದು - ಆಧ್ಯಾತ್ಮಿಕ ಸಾಹಚರ್ಯ; ನಾವು ನೀವು ಕಂಡುಣ್ಣುತ್ತಿರುವ ಕಷ್ಟದ ದಾಂಪತ್ಯವಲ್ಲ. ಆದ್ದರಿಂದಲೇ ನಮ್ಮ ಸುಖದ ಕಲ್ಪನೆಯ ಪರಿಧಿಯಲ್ಲಿಯೇ ಎಲ್ಲರನ್ನೂ ಎಲ್ಲವನ್ನೂ ತುರುಕಿ, ಸಾಣೆ ಹಿಡಿಯಲಾಗುವುದಿಲ್ಲ. ಶ್ರೀ ರಾಮಕೃಷ್ಣ ಮತ್ತು ಶ್ರೀಮಾತೆಯವರ ರೂಪದಲ್ಲಿ ಸಂಸಾರಿಗಳು ಹೀಗೂ ಬದುಕಬಹುದುಎಂಬ ಸಾಧ್ಯತೆಯೊಂದು ನಮ್ಮ ಮುಂದಿದೆ. ಆದರೆ ಯಾವುದೇ ಸಾಧ್ಯತೆಯನ್ನು ಎಲ್ಲರೂ ಅನುಸರಿಸಲಾಗುವುದಿಲ್ಲ. ಅಂದ ಮಾತ್ರಕ್ಕೇ - ಅಂತಹ ಸಾಧ್ಯತೆಗಳೇ ಇರಲಿಲ್ಲ ಎಂದಾಗಲೀ 
ದೋಷಪೂರಿತ ಎಂದಾಗಲೀ ನ್ನುವುದು ಮಾತ್ರ - ಉದ್ಧಟತನ.

ಅನಪೇಕ್ಷಿತವಾದ, ಅನುಕಂಪದ ಬಾಯುಪಚಾರಗಳಿಂದಲೇ ಎಷ್ಟೋ ದಾಂಪತ್ಯಗಳು ಈಗಲೂ ಒಡೆದುಹೋಗುತ್ತಿವೆ. ಸಾಮಾಜಿಕ ಕರುಣೆ ತೋರಿಸುವ ಭರದಲ್ಲಿ ಯಾರೂ ಪಕ್ಷ ರಾಜಕೀಯಕ್ಕೆ ಒರಗಿಕೊಳ್ಳುವುದು ಸರಿಯಲ್ಲ. ಶ್ರೀಮಾತೆಯವರನ್ನೂ ಈ ಹಂತಕ್ಕೆ ಎಳೆದು ತರುವುದು ಮನುಷ್ಯರ ಮಾನಸಿಕ ಅಸ್ವಸ್ಥತೆ ಅನ್ನಿಸುತ್ತದೆ; ಅಕ್ಷರಜ್ಞಾನದ ದುರುಪಯೋಗವೆನ್ನಿಸುತ್ತದೆ. ಇದರಿಂದ ಶಾರದಾದೇವಿಯವರನ್ನು ಗೌರವಿಸಿದಂತೆ ಆಗುವುದಂತೂ ಸಾಧ್ಯವೇ ಇಲ್ಲ. ಮಾತೆಗೆ ತನ್ನ ಗಂಡನ ದಾರಿಯು ತಪ್ಪಾಗಿ ಕಂಡಿದ್ದರೆ ಅಥವ ಅನುಸರಿಸಲು ಇಚ್ಛೆಯಿಲ್ಲದಿದ್ದರೆ ಅವರು ತಮ್ಮ ಇಚ್ಛೆಯನ್ನು ವ್ಯಕ್ತಪಡಿಸುವ ಎಲ್ಲ ಅವಕಾಶವಿತ್ತು. ಅಥವ ತನ್ನ ಪತಿ ಶ್ರೀ ರಾಮಕೃಷ್ಣರನ್ನು ಅವರು ಸಂಸಾರದೆಡೆಗೆ ಸೆಳೆಯಲೂಬಹುದಿತ್ತು. ಶ್ರೀ ರಾಮಕೃಷ್ಣರು ಮಾತೆಗೆ  ಮುಕ್ತ ಆಯ್ಕೆಗಳನ್ನೂ ನೀಡಿದ್ದರು. ಆದ್ದರಿಂದ ಒತ್ತಾಯದಿಂದ ಅಥವ ಅನಿವಾರ್ಯತೆಯಿಂದ ಮಾತೆಯವರು ದಾಂಪತ್ಯ ನಡೆಸಿದ್ದರು ಎಂಬಂತಹ ಕೆಲವರ ತರ್ಕವೇ ಹಾಸ್ಯಾಸ್ಪದ. ಇವರೆಲ್ಲರೂ EVERY PUBLICITY IS GOOD PUBLICITY  ಎನ್ನುವ, ಪರಸ್ಪರ ಮಸಿ ಚೆಲ್ಲುವವೃತ್ತಿನಿರತ ಗುಂಪಿನವರು ಅಥವ ವಿವಾದಗಳಿಂದಲೇ ಪ್ರಚಾರ ಪಡೆಯುವ ಹುಮ್ಮಸ್ಸಿನವರು - ಎಂದೂ ಅಂದುಕೊಳ್ಳಬಹುದು.





ಶ್ರೀ ರಾಮಕೃಷ್ಣರು ಅಂತ್ಯಕಾಲದಲ್ಲಿ ತಮ್ಮ ಪತ್ನಿಯನ್ನು ಸಂತೈಸುತ್ತ ಅವರಿಗೆ ಭವಿಷ್ಯದ ಕರ್ತವ್ಯವನ್ನು ಸೂಚ್ಯವಾಗಿ ತಿಳಿಸಿದ್ದರು. ಆಗ ಸಹಜವಾಗಿಯೇ ಹತಾಶರಾದಂತಿದ್ದ ಶಾರದಾದೇವಿಯವರಲ್ಲಿ " ಏನು? ನೀನೇನೂ ಮಾಡುವುದಿಲ್ಲವೆ ? ಎಲ್ಲವನ್ನೂ ಇದೊಂದೇ (ತಾವೊಬ್ಬರೇ) ಮಾಡಬೇಕೆ ? ನಾನೊಬ್ಬನೇ ಎಷ್ಟು ಮಾಡಿಯೇನು ? ನೀನು ಬಹಳಷ್ಟು ಮಾಡಬೇಕಾದ್ದಿದೆ; ಮಾಡಲೇಬೇಕು..." ಎಂದು ಹೇಳಿದ್ದರು; ನಾಚಿಕೆಯ ಪರದೆಯಿಂದ ಹೊರಬರುವಂತೆ ಪತ್ನಿಗೆ ಸೂಚಿಸಿದ್ದರು. ಅದುವರೆಗೂ ತೆರೆಯ ಮರೆಯಲ್ಲಿಯೇ ಇದ್ದರೂ ಗಂಡನ ಮಹಾಸಮಾಧಿಯ ನಂತರ ಶ್ರೀ ರಾಮಕೃಷ್ಣ ಜ್ಯೋತಿಯನ್ನು ಎತ್ತಿ ಹಿಡಿದಿದ್ದ ಶ್ರೀಮಾತೆಯನ್ನು ಭವಿಷ್ಯದ ಪೀಳಿಗೆಗಳು ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ಕಾಲ ದೇಶ ಸಂದರ್ಭಗಳ ನೆಲೆಯಲ್ಲಿ ಯಾವುದೇ ವಸ್ತುವನ್ನು ಪರಾಂಬರಿಸಬೇಕು. ಅಂತಹ ಸಾಧನೆಗೂ ಆರೋಗ್ಯವಂತ ಮನಸ್ಸು ಸಹಕರಿಸಿದರೆ ಮಾತ್ರ ಸಾಧ್ಯ. ಇಚ್ಛೆಯು ಅಪ್ಪಣೆ ಕೊಡದೆ ಮೊಂಡಾಟವಾಡುತ್ತಿರುವಾಗ ಯಾವುದೂ ಅರ್ಥವಾಗಲಾರದು. ನೀರಿನವರೆಗೆ ಒಂಟೆಯನ್ನು ಕರೆದೊಯ್ಯಬಹುದು; ಆದರೆ ಒತ್ತಾಯದಿಂದ ನೀರನ್ನು ಕುಡಿಸಲಾಗುವುದಿಲ್ಲ; ಒಂಟೆಯೇ ಸ್ವ-ಇಚ್ಛೆಯಿಂದ ಕುಡಿಯಬೇಕಾಗುತ್ತದೆ. ಅಂತೆಯೇ... ತೀರದಲ್ಲಿ ನಿಂತು ಶ್ರೀಮಾತೆಯವರ ಚಿತ್ರವನ್ನು ನೋಡಿದರೆ ದಾಹ ತೀರುವುದಿಲ್ಲ; ನಿಜಹೂರಣದ ರಸಾಸ್ವಾದ ಮಾಡಲು ಸಂಯಮದಿಂದ ಶಾರದಾ ಭಾವಸಮುದ್ರದಲ್ಲಿ ಮುಳುಗಬೇಕು; ಸಂಯಮದಿಂದ ಕಣ್ಣುಮುಚ್ಚಿ ಅರ್ಥೈಸಿಕೊಳ್ಳಬೇಕು. ಸ್ವತಃ ಭಾವಿಸಬೇಕು; ಮುಚ್ಚಟೆಯಾಗಿ ಅನುಭಾವಿಸಬೇಕು. ಅರ್ಥವಾಗದ ಯಾವುದೇ ಅನ್ಯಾದೃಶವಾದುದನ್ನು ಅರ್ಥೈಸಿಕೊಳ್ಳಲು ಯಾವತ್ತೂ ಇಚ್ಛೆಯಿಂದ ಯತ್ನಿಸಬೇಕಾಗುತ್ತದೆ;  ಅದಾಗದಿದ್ದರೆ ತಲೆತಗ್ಗಿಸಿ ಒಪ್ಪಿಕೊಳ್ಳುವುದೇ ಶಿಷ್ಟತೆ.


ಯಾವುದೇ ಕಲುಷಿತ 
ಮಾತು, ಬರಹ, ಕ್ರಿಯೆಗಳ ಗದ್ದಲದ ಪಟಾಕಿಗಳಿಂದ ಪರಿಸರ ಮಾಲಿನ್ಯವಲ್ಲದೆ ಇನ್ನೊಂದು ಪ್ರಯೋಜನವಾದದ್ದಿಲ್ಲ. ಆದ್ದರಿಂದ ಸಾಮಾಜಿಕ ಮರುಳು ಮಾಲಿನ್ಯದ ಹುಚ್ಚು ಕೆಸರಿನಲ್ಲಿ ಎಲ್ಲರೂ ಮುಳುಗುವಂತೆ ಅಪೇಕ್ಷಿಸಿ ಪ್ರೇರೇಪಿಸುವುದೂ ಅನಾರೋಗ್ಯಕರ.


ಶ್ರುತಿ ಸೇರದ ಬಹುಜನರ ಹಾಡು ಜನೆಯಾಗದು; ಅದು ಗದ್ದಲವನ್ನು ಉಂಟುಮಾಡಬಹುದಲ್ಲದೆ ಆನಂದಾನುಭೂತಿಯನ್ನು ನೀಡಲಾರದು. ಶ್ರುತಿಬದ್ಧ ಬದುಕಿನ ಹಾಡು ಎಲ್ಲರ ಸ್ವತ್ತಲ್ಲ. ಸಂಗೀತದ ಒಂದೇ ಒಂದು ಸ್ವರವನ್ನು ಶ್ರುತಿಲೀನಗೊಳಿಸುವುದೇ ದೊಡ್ಡ ತಪಸ್ಸಾಗಿರುವಾಗ ಏಳು ಸ್ವರಗಳೊಂದಿಗೆ ಉಯ್ಯಾಲೆಯಾಡುವುದು ಅದೆಂತಹ ತಪಸ್ಸು?

ಬದುಕು ಇನ್ನೂ ಕಠಿಣವಾದ ಹಾಡು. ಅಲ್ಲಿ ಬರೀ ಏಳಲ್ಲ, ನೂರು ಸ್ವರಗಳನ್ನು ಹದದಲ್ಲಿ ಓಲೈಸಬೇಕಾಗುತ್ತದೆ. ಶ್ರೀಮಾತೆಯವರು ನೂರಾರು ಸ್ವರಗಳನ್ನು ಹದವಾಗಿ ಮಿಡಿದವರು ! ಆದರೆ ಅಪಸ್ವರದ ಮೂಲವಿದ್ಯೆಗೆ ಸಂಸ್ಕಾರ ನೀಡಲಾಗದ ದನಿಗಳು ಅಪಸ್ವರದ ಒಗ್ಗರಣೆ ಹಾಕುವುದಿದೆ. ಅಪಸ್ವರದ ಮೂಲವಿದ್ಯೆಗೆ ಸಂಸ್ಕಾರ ನೀಡಲಾಗದ ಕೆಲವು ಅರೆ ಬೆಂದ ಸಾಮಾಜಿಕ ಜೀವಗಳು ದಿವ್ಯಾನಂದದಲ್ಲೂ ಭೋಗಾನಂದವನ್ನು ಹುಡುಕುವುದಿದೆ.

ಯಾವುದೇ "ಇಲ್ಲದಿರುವುದು" - ಹುಡುಕಿದರೂ ಸಿಗುವುದಿಲ್ಲ.... ಶ್ರೀಮಾತೆಯವರ ಬದುಕಿನಲ್ಲಿ ಭೋಗವನ್ನು ಹುಡುಕುವುದೇ ಅಧಿಕಪ್ರಸಂಗ. ಶ್ರೀಮಾತೆಯವರು ತಮ್ಮ ಗಂಡನನ್ನು ಅನುಸರಿಸಿದರು ಮತ್ತು ಸಹಸ್ರಾರು ಭಕ್ತರಿಗೆ ಆತ್ಮೋದ್ಧಾರದ ಪ್ರೇರಣೆ ನೀಡಿದರು ಎಂಬ ಪರಿಧಿಯನ್ನು ಮೀರಿ ಯಾವುದೇ ವೈವಾಹಿಕ ಬದುಕನ್ನು ಸಂದಿಯಿಂದ ಇಣುಕಿ ನೋಡುವುದು - ಶಿಷ್ಟತೆ ಎನ್ನಿಸುವುದಿಲ್ಲ. ತೂಕವಿಲ್ಲದ ಯಾವುದೇ ವಿಮರ್ಶೆಯು ರದ್ದಿಯಾಗುತ್ತದೆ.


ಶ್ರೀ ರಾಮಕೃಷ್ಣ ಮತ್ತು ಶಾರದಾದೇವಿಯವರ ದಾಂಪತ್ಯವನ್ನು "ವಿಶಿಷ್ಟ" ಎನ್ನಬಹುದು. ಯಾವುದೇ "ವಿಶಿಷ್ಟಗಳು" ಸಾಮಾನ್ಯರ ಲೆಕ್ಕಾಚಾರಕ್ಕೆ ಎಂದಿಗೂ ದಕ್ಕುವುದಿಲ್ಲ. ಆದ್ದರಿಂದ ಏನೇನೋ ಅಸಂಬದ್ಧ ಹುಡುಕಾಟಗಳನ್ನು ನಡೆಸುವ ಅವಸರದಲ್ಲಿ ಕಿರುಬಾಯಿಯ ಮಡಕೆಯಲ್ಲಿ ತಲೆ ತೂರಿಸಿದರೆ ಫಜೀತಿಯಾಗುತ್ತದೆ.


ಲಜ್ಜೆ, ಸಂಯಮ ಮತ್ತು ಸಹನೆಯ ಪ್ರತಿಮೂರ್ತಿಯಾಗಿದ್ದ ಶ್ರೀ ಶಾರದಾದೇವಿಯವರು ರಾತ್ರಿ ಬೆಳಗಾಗುವುದರಲ್ಲಿ ಸಹಸ್ರಾರು ಭಕ್ತಗಡಣದ ಮಹಾಮಾತೆಯಾಗಿ ಜಗದ್ವಂದ್ಯರಾಗಲಿಲ್ಲ. ಅದೊಂದು ಜೀವನ ಯಜ್ಞ.
ಮುಖ್ಯವಾಗಿ, ಪರೀಕ್ಷಿಸಿದ ಸತ್ಯವನ್ನಲ್ಲದೆ ಇನ್ನೊಂದನ್ನು ಒಪ್ಪ ರಾಮಕೃಷ್ಣರ ಯುವ ವಿದ್ಯಾವಂತ ನೇರಶಿಷ್ಯರು ಮ್ಮ ಗುರು ಮತ್ತು ಗುರುಪತ್ನಿಯ ಬದುಕನ್ನು ತೂಗಿ ವಿಮರ್ಶಿಸಿಯೇ ದಿವ್ಯತೆಯತ್ತ ಆಕರ್ಷಿಸಲ್ಪಟ್ಟಿದ್ದರು. ಸ್ವಾಮಿ ವಿವೇಕಾನಂದರು ಅಮೆರಿಕದಿಂದ ಹಿಂದಿರುಗಿದ ಮೇಲೆ ಬೇಲೂರು ಮಠದಲ್ಲಿದ್ದಾಗ ತಮ್ಮ ತಾಯಿ ಭುವನೇಶ್ವರೀದೇವಿಯವರಲ್ಲಿ ಮಾತನಾಡುತ್ತ, "ಈ ಸಾಧನೆಯನ್ನೆಲ್ಲ ನಿನ್ನ ಮಗ ಮಾಡಿದ ಎಂದುಕೊಳ್ಳಬೇಡ; ಇದು ಆ ತಾಯಿಯ (ಶಾರದಾದೇವಿ) ಅನುಗ್ರಹ.." ಎಂದಿದ್ದರು. 

ಶ್ರೀ ಶಾರದಾದೇವಿಯವರದು ಮರುಳುಗೊಳಿಸುವ ಚಂಚಲತೆಯಲ್ಲ; ವಿರಕ್ತಿಯ ವೈಭವ. ಶ್ರೀಮಾತೆಯವರು ತಮ್ಮ ಬದುಕನ್ನು ತೂಗಿಸಿದ ಸತ್ವವನ್ನು ಮತ್ತು ತನ್ಮೂಲಕ ನೀಡಿದ್ದ ಸಂದೇಶವನ್ನು ಅರ್ಥೈಸಿಕೊಂಡು ಸಮತ್ವದಿಂದ ಬದುಕಿದರೆ - ನಮ್ಮ ಯೋಗ್ಯತೆಯ ಅಭ್ಯುದಯಕ್ಕೆ - ಅಷ್ಟೇ ಸಾಕಾಗುತ್ತದೆ. ಜನ ಮೆಚ್ಚುವಂತೆ, ಮನ ಮೆಚ್ಚುವಂತೆ ನಡೆದುಕೊಳ್ಳುವ ಯಾವುದೇ ಬದುಕಿನಲ್ಲಿ ಉಬ್ಬರವಿಳಿತಗಳು ಇದ್ದದ್ದೇ. ಇದೇ ಕಾರಣದಿಂದಾಗಿ "ಜೀವನವೆಂದರೆ ಸಮಸ್ಯೆ" ಎನ್ನಲಾಗದು. ದೈನಂದಿನ ಸಮಸ್ಯೆಗಳ ಮೊತ್ತವೇ ಜೀವನ ಎನ್ನುವ ನಿರಾಶಾವಾದವೂ ಸರಿಯಲ್ಲ. ಎಂತಹ ಸಮಸ್ಯೆಗಳಿದ್ದಾಗಲೂ ಶ್ರೀಮಾತೆಯವರು ಬದುಕನ್ನು ದೂಷಿಸಿದವರಲ್ಲ. ಸಮುದ್ರದ ಅಲೆಗಳಿದ್ದಂತೆ ಸಾಂಸಾರಿಕ ಸಮಸ್ಯೆಗಳು ನಿರಂತರ. ಆದ್ದರಿಂದ ಸಮಸ್ಯೆಗಳ ಅಳತೆಗೋಲಿನಿಂದ ಜೀವನವನ್ನು ಅಳೆಯಲಾಗುವುದಿಲ್ಲ. ಒದಗುವ ಸಮಸ್ಯೆಗಳನ್ನು ಎದುರಿಸಿ ದಾಟುವ ಅಂತಃಶಕ್ತಿಯಿಂದಲೇ ಯಾವುದೇ ಜೀವನವನ್ನು ತೂಗಬೇಕಾಗುತ್ತದೆ. ಜೀವನವನ್ನು "ವಾಸ್ತವ" ಅಂದುಕೊಂಡರೆ ಶ್ರದ್ಧೆಯಿಂದ ನಿರ್ವಹಿಸುವ ಪ್ರೇರಣೆ ಸಿಗುತ್ತದೆ. ಶ್ರೀಮಾತೆಯವರು ಅಂತಹ ಜೀವನ ಶ್ರದ್ಧೆಯನ್ನು ಸ್ವತಃ ಪರಿಪಾಲಿಸಿ ಇತರರಿಗೂ ದಾರಿ ತೋರಿದ್ದರು. ಭೌತಿಕ ಸುಖದಲ್ಲಿ ತಾವು ಮುಳುಗಿ ಏಳುತ್ತಿದ್ದೇವೆ ಎಂ ಭ್ರಾಂತಿಗೆ ಒಳಗಾಗಿ
 - ತಮ್ಮೊಂದಿಗೆ ಶ್ರೀಮಾತೆಯವರನ್ನು ಹೋಲಿಸಿಕೊಳ್ಳುತ್ತ ಶ್ರೀಮಾತೆಯವರ ಕುರಿತು ಹುಸಿ ಹುಯ್ಯಲನ್ನೆಬ್ಬಿಸುವವರು - ತಾವು ನಿಜವಾಗಿಯೂ ಸುಖಿಗಳೆ ? ಶಾರದಾದೇವಿಯವರಿಗೆ ಅನುಕಂಪ ತೋರಿಸಲು ತಾವು ಅರ್ಹರೆ ? ಎಂಬ ಆತ್ಮನಿರೀಕ್ಷಣೆ ಮಾಡಿಕೊಳ್ಳಬಹುದು.


"ಪ್ರಪಂಚದಲ್ಲಿ ಶಾಂತಿ ಬೇಕೆಂದಾದರೆ ಯಾರಲ್ಲಿಯೂ ತಪ್ಪು ಕಂಡುಹಿಡಿಯಬೇಡ. ಎಲ್ಲರನ್ನೂ ನಿನ್ನವರಂತೆ ನೋಡು; ಈ ಪ್ರಪಂಚದಲ್ಲಿ ಯಾರೂ ಪರಕೀಯರಲ್ಲ; ನಾವೆಲ್ಲರೂ ಒಂದೇ ಸಂಸಾರಕ್ಕೆ ಸೇರಿದವರು... ಭಗವಂತನ ದಯೆಯು ಯಾವಾಗಲೂ ಸುಖದ ರೂಪಿನಲ್ಲಿಯೇ ಬರಬೇಕಾಗಿಲ್ಲ; ಕೆಲವೊಮ್ಮೆ ಅದು ದುಃಖದ ರೂಪದಲ್ಲೂ ಬರಬಹುದು... ಭಗವಂತನನ್ನು ನೆಚ್ಚಿ ಹೊರಟರೆ ಸುಖ ಪ್ರಾಪ್ತಿ; ಎಲ್ಲ ಬಗೆಯ ದುಃಖದಿಂದಲೂ ನಿವೃತ್ತಿ ಎಂದು ಯಾರಾದರೂ ಭಾವಿಸಿದರೆ ಅದೊಂದು ತಿಳಿಗೇಡಿತನ. ನಮ್ಮ ಶೀಲವನ್ನು ತಿದ್ದಲು ಸುಖಕ್ಕೆ ಎಷ್ಟು ಪಾತ್ರವಿದೆಯೋ ಅಷ್ಟೇ ದುಃಖಕ್ಕೂ ಇದೆ. ಕೆಲವೊಮ್ಮೆ ದುಃಖದ ಪಾತ್ರವು ಅದಕ್ಕೂ ದೊಡ್ಡದು. ನಾವು ಅಪ್ಪಿರುವ ಮೋಹವನ್ನು ನಯವಿನಯದಿಂದಲೇ ಬಿಟ್ಟುಬಿಡಲು ಹೇಳಿದರೆ ನಾವು ಬಿಡುವವರಲ್ಲ. ಆಗ ಪೆಟ್ಟು ಕೊಟ್ಟು ಬಿಡಿಸಬೇಕಾಗುತ್ತದೆ. ಪೆಟ್ಟು ಕೊಡದಿದ್ದರೆ ನಮಗೆ ಅರ್ಥವೇ ಆಗುವುದಿಲ್ಲ; ಪೆಟ್ಟು ಕೊಟ್ಟರೆ ಆಗ ವ್ಯಥೆಯಾಗುತ್ತದೆ. ಆದರೆ ಸುಖದ ಅಮಲಿನಲ್ಲಿ ಕಾಣಲಾಗದ್ದೆಲ್ಲವೂ ಪೆಟ್ಟು ಕೊಟ್ಟಾಗ ಕಾಣಿಸತೊಡಗುತ್ತದೆ..." ಶ್ರೀ ಮಾತೆಯವರು ಇತ್ತ ಕೊನೆಯ ಸಂದೇಶವಿದು. ಅಧ್ಯಾತ್ಮದ ದೃಷ್ಟಿಯಲ್ಲಿ ಜೀವನ ಎಂದರೆ - ಅದೊಂದು ಮಾಯಾಲೀಲೆ. ತಮ್ಮ ಸಂದೇಶಕ್ಕೆ ಸಾಕ್ಷಿಯಾಗಿ ತಮ್ಮ ಜೀವನವನ್ನೇ ದೃಷ್ಟಾಂತವಾಗಿ ಇಟ್ಟು ನಡೆದುಬಿಟ್ಟವರು - ಶ್ರೀಮಾತೆಯವರು. 

ಮಹಿಮೆಯು ಮಾತ್ರ ಮಹಿಮೆಯನ್ನು ಅರಿಯಬಲ್ಲದು. ಶ್ರೀ ರಾಮಕೃಷ್ಣರೆಂಬ ಮಹಿಮೆಯನ್ನು
ಶ್ರೀ ಶಾರದಾದೇವಿ ಎಂಬ ಮಹಿಮೆಯು ಸರಿಯಾಗಿ ತಿಳಿದುಕೊಂಡು, ಅವರನ್ನು ಸತಿಯಾಗಿ ಅನುಸರಿಸಿದುದರ ಹಿಂದಿನ ಸೂತ್ರ ಮಂತ್ರವಿದು. ಇಡೀ ಪ್ರಪಂಚವನ್ನೇ ತಮ್ಮ ಸಂಸಾರ ಎಂದುಕೊಂಡವರನ್ನು ಯಾವತ್ತೂ ಸಾಮಾನ್ಯ ದೃಷ್ಟಿಯಿಂದ ನೋಡಲು ಆಗದು; ನೋಡಬಾರದು.

ದೃಷ್ಟಿಗೆ ಮಂಜು ಕವಿದರೆ ಸ್ವಚ್ಛ ಬಿಂಬ ಮೂಡಲಾರದು. ಲೌಕಿಕ ವ್ಯಾಪಾರಿಗಳು ಅಧ್ಯಾತ್ಮದ ವ್ಯಾಪಾರಕ್ಕೆಳಸುವ ಮೊದಲು - ಅದಕ್ಕೂ ಅಪಾರ ಪೂರ್ವ ಸಿದ್ಧತೆಯ ಅಗತ್ಯವಿರುತ್ತದೆ ಅಲ್ಲವೆ ?

                    *****-----*****-----*****