ಒಂದು ಕುರ್ಚಿಯಲ್ಲಿ ಆಕಸ್ಮಿಕವಾಗಿ ಆಸೀನರಾಗುವ ಅಪಾತ್ರರಾದ ವ್ಯಕ್ತಿಗಳನ್ನೆಲ್ಲ - ಅವರು ಕುಳಿತ ಕುರ್ಚಿಯ ಅಳತೆ, ಎತ್ತರ, ಅಲಂಕಾರಕ್ಕೆ ತಕ್ಕಂತೆ - ಭ್ರಮಿಸಿ ಮೆರೆದಾಡಿಸುವ - ಬಹುಸಂಖ್ಯಾತ ಕುರುಡು ಹುಂಬರ ಆಡುಂಬೊಲವಾಗಿ - ಈ ಭೂಮಿಯ ಬದುಕನ್ನು ನಾವು ಪರಿವರ್ತಿಸಿಕೊಳ್ಳುತ್ತಲೇ ಬಂದಿದ್ದೇವೆ. ವ್ಯಕ್ತಿಯ ವೇಷಭೂಷಣ, ಇರಸ್ಥಿಕೆ, ಗತ್ತುಗೈರತ್ತುಗಳ ಅಬ್ಬರಗಳ ಹೊರಮುಖಗಳನ್ನು ನೋಡಿಯೇ ಮನ್ನಣೆಯ ಮಣೆ ಹಾಕುವ ಮನುಷ್ಯರ ಲೌಕಿಕ ಮಡ್ಡತನವು - ಮುಗ್ಧ ಅಥವ ದಡ್ಡ ಮನುಷ್ಯರಷ್ಟೇ ಅನಾದಿಯಾದರೂ ಕೂಡ - ಅಂತಹ ದಡ್ಡತನದ ವಿಶ್ವರೂಪ ದರ್ಶನವು ಬರಬರುತ್ತ ಪುಕ್ಕಟೆಯಾಗಿ ಲಭಿಸುವಷ್ಟು ಹುಲುಸಾಗಿ ಬೆಳೆದು ನಿಂತಂತೆಯೂ ಕಾಣುವುದಿದೆ. ಕಾಲದ ಮಾಪನದಲ್ಲಿ ನೋಡಿದರೆ - ಇವೆಲ್ಲವೂ ಅಜ್ಞಾನಪ್ರೇರಿತ, ನಿರಂತರ, ವ್ಯರ್ಥ ಅಣಕವಾಡುಗಳು. ಯಾವುದೇ ದಡ್ಡತನಕ್ಕೆ ಮನ್ನಣೆ ಅಂದರೆ - ದಡ್ಡಮೂರ್ಖರನ್ನೇ "ದೊಡ್ಡ ಶರ್ಕರ" ಆಗಿಸುವ ವ್ಯರ್ಥ ಪ್ರಯತ್ನ ಎಂದೇ ಅರ್ಥ.
ಹೀಗಿದ್ದರೂ... ಮನುಷ್ಯಜಾತಿಯ ಇತಿಹಾಸದಲ್ಲಿ ಆಗೊಮ್ಮೆ ಈಗೊಮ್ಮೆ ಜ್ಞಾನ ಕೇಂದ್ರಿತ ವಲಯಗಳು ಆವಿರ್ಭವಿಸಿ, ಜ್ಞಾನದ ಹಾದಿಯಲ್ಲಿ ಜೀವ ಸಂಚಾರವಿಲ್ಲದೆ ಸನ್ಮಾರ್ಗವನ್ನು ಮುಚ್ಚಿ ಮರೆಮಾಡಿದ ಅಜ್ಞಾನದ ಕುರುಚಲು ಪೊದೆಗಳನ್ನು ಸದ್ದುಗದ್ದಲವಿಲ್ಲದೆ ಸವರಿ, ತಮ್ಮ ಜ್ಞಾನದ ಬಲದಿಂದಲೇ ಸರಳ ಸುಲಭ ಸಂಚಾರಕ್ಕೆ ಯೋಗ್ಯಗೊಳಿಸಿ, ಜ್ಞಾನದೀಪವನ್ನು ಬೆಳಗಿಸುತ್ತ, ಬದುಕುಗಳಲ್ಲಿ ಅರ್ಥ ತುಂಬಿಕೊಳ್ಳಲು ಪ್ರೇರಣೆ ನೀಡುತ್ತ ಬಂದಿರುವ ಅನೇಕ ಪೂರ್ವ ದೃಷ್ಟಾಂತಗಳೂ ನಮ್ಮ ಮುಂದಿವೆ. ಆಗೊಮ್ಮೆ ಈಗೊಮ್ಮೆ ಸಂಭವಿಸುತ್ತಿದ್ದ ವಿದ್ಯಮಾನವಿದು. ಅದುವರೆಗೆ ಅತ್ಯಂತ ಸಾಮಾನ್ಯವೆಂದು ಕಾಣುತ್ತಿದ್ದ ಅಂತಹ ಕೆಲವು ಪೀಠಗಳು ಅದರಲ್ಲಿ ಕುಳಿತವರ ಹಿರಿಮೆಯಿಂದ ಜಗತ್ಪೀಠ ಅಥವ ಸಿಂಹಾಸನ ಎಂದೆನ್ನಿಸಿಕೊಂಡಂತಹ ಅನೇಕ ಜ್ಞಾನಪವಾಡಗಳಿಗೆ ಇತಿಹಾಸವು ಸಾಕ್ಷಿಯಾದದ್ದೂ ನಮ್ಮ ಕಣ್ಣ ಮುಂದಿವೆ. ಹಾಗೆ ಆವಿರ್ಭವಿಸಿದ್ದ ಹೊಸ ಪೀಠಗಳು, ಆಯಾ ಕಾಲಧರ್ಮಕ್ಕನುಸಾರವಾಗಿ, ತಮ್ಮ ಪರಿಷ್ಕೃತ ಸಿದ್ಧಾಂತದಿಂದಲೇ ಸಮಾಜದ ಭಕ್ತಿ ತೃಷೆ ಮತ್ತು ಜ್ಞಾನ ತೃಷೆಯನ್ನು ನೀಗಿಸುತ್ತ, ವಿಶೇಷ ಮಾನ್ಯತೆಯನ್ನು ಗಳಿಸಿಕೊಂಡು, ಇಂದಿಗೂ ಉಳಿದು ಬಂದಿರುವುದು ಆಯಾ ಮೂಲ ಸಿದ್ಧಾಂತಗಳ ಗಟ್ಟಿತನದ ದ್ಯೋತಕವಾಗಿ ಕಾಣುತ್ತವೆ. ಭಕ್ತಿಯೊಂದಿಗೆ ಜ್ಞಾನವನ್ನು ಮೇಳೈಸಿದ್ದ ಶ್ರೀ ಶಂಕರ, ಮಧ್ವ, ಯಾಮುನರು, ರಾಮಾನುಜರು, ಚೈತನ್ಯ ಮಹಾಪ್ರಭುಗಳು, ಶ್ರೀ ರಾಮಕೃಷ್ಣರು... ಮುಂತಾದ ಆಧ್ಯಾತ್ಮಿಕ ಅಧ್ವರ್ಯುಗಳು ಇಂತಹ ವಿಶಿಷ್ಟ ಸಾಲಿನಲ್ಲಿ ನಿಲ್ಲುವವರು.
ಅದೊಂದು ಕಾಲಘಟ್ಟದಲ್ಲಿ ಜನಜನಿತವಾದ - ಅದ್ವೈತದ ಪಾರಮಾರ್ಥಿಕ ಸಂದೇಶವಾದ - ಜಗತ್ತು ಮಿಥ್ಯೆ - ಎಂಬ ಕಠಿಣ ಸಿದ್ಧಾಂತದ ಹೂರಣವನ್ನು ಯಥಾರ್ಥವಾಗಿ ಅರಗಿಸಿಕೊಳ್ಳಲಾಗದಂತಹ ಸಾಮಾನ್ಯ ಜೀವಜಗತ್ತಿಗೆ - ಜ್ಞಾನದ ಹಾದಿಯು ಸರಳವಾಗಿ ಕೈಗೆಟಕುವಂತೆ - "ಮಿಥ್ಯವೂ ಕೂಡ ವ್ಯಾವಹಾರಿಕ ಸತ್ಯವೇ ಆಗಿದೆ " ಎಂದು ಸಂತೈಸಿ, ವಿಶಿಷ್ಟವಾಗಿ ಬೋಧಿಸಿ, ಕಠಿಣವೆಂದುಕೊಂಡು ಅಧ್ಯಾತ್ಮ ಮಾರ್ಗದಿಂದಲೇ ದೂರ ಸರಿಯುತ್ತಿದ್ದ ಜನರನ್ನು ಮತ್ತೊಮ್ಮೆ - ವೇದಾಂತದ ಸೈದ್ಧಾಂತಿಕ ತತ್ತ್ವಗಳೆಡೆಗೆ ಆಕರ್ಷಿಸಿದ್ದ ಮಹಾಪುರುಷರು - ಶ್ರೀ ರಾಮಾನುಜರು.
ಶ್ರೀ ಶಂಕರರ ಅದ್ವೈತ ಮತ್ತು - ಮಧ್ವರ ದ್ವೈತ ಸಿದ್ಧಾಂತಕ್ಕೆ ಸರಿದೊರೆಯಾಗಿ ಅವತರಿಸಿದ ವಿಶಿಷ್ಟವಾದ ಸಿದ್ಧಾಂತವಿದು. ಬಹುಶಃ ಆದ್ದರಿಂದಲೇ - ವಿಶಿಷ್ಟಾದ್ವೈತ ಎಂದೇ ಗುರುತಿಸಲ್ಪಟ್ಟಿತ್ತು. ಈ ವಿಶಿಷ್ಟಾದ್ವೈತ ಪರಂಪರೆಯ ಆಚಾರ್ಯರು ತಮ್ಮ ಸಿದ್ಧಾಂತವನ್ನು ಹಲವಾರು ದೃಷ್ಟಾಂತಗಳ ಮೂಲಕ, ಎಲ್ಲರಿಗೂ ಮನವರಿಕೆಯಾಗುವಂತೆ ಪ್ರತಿಪಾದಿಸಿದ್ದರು.
ಜೀವ, ದೇವ, ಜಗತ್ತು - ಇವು ಮೂರೂ ಬೇರೆ ಬೇರೆ. ಹೇಗೆಂದರೆ - ಮಾವಿನ ಹಣ್ಣುಗಳ ಬಣ್ಣ, ರುಚಿ, ವಾಸನೆ, ತಿರುಳು, ಓಟೆ, ನಾರು - ಎಲ್ಲವೂ ಪ್ರತ್ಯೇಕವಾದರೂ ಎಲ್ಲವೂ ಸೇರಿಕೊಂಡಾಗ ಮಾತ್ರ - ಅದು ಹೇಗೆ ಮಾವಿನ ಹಣ್ಣಾಗುತ್ತದೆಯೋ ಹಾಗೇ. ಮಾವಿನ ಹಣ್ಣಿನಲ್ಲಿ ಎಲ್ಲ ವಿಭಿನ್ನತೆಗಳಿದ್ದೂ ಒಂದೊಂದೂ ಪ್ರತ್ಯೇಕವಾಗಿದ್ದರೂ - ಅವು ಯಾವುವೂ ಸ್ವತಂತ್ರವಲ್ಲ. ಹೇಗೆಂದರೆ - ರುಚಿ ಮಾತ್ರವೇ ಮಾವಿನ ಹಣ್ಣಲ್ಲ; ಸಿಪ್ಪೆ, ನಾರು ಮಾತ್ರವೇ ಹಣ್ಣಲ್ಲ... ಎಲ್ಲವೂ ಸಮನ್ವಯಗೊಂಡಾಗಲೇ ಅದು ಸಂಪೂರ್ಣ ಹಣ್ಣು. ಹೀಗೆ...
ವಿಶಿಷ್ಟಾದ್ವೈತದ ಸಿದ್ಧಾಂತದಂತೆ - ದೇವರು, ಜೀವರು, ಪ್ರಕೃತಿ ಎಂಬ ಮೂರೂ ಪ್ರತ್ಯೇಕವಾದರೂ ಜೀವ ಮತ್ತು ಪ್ರಕೃತಿಗಳು ದೇವರಿಗೆ ಅಧೀನ. ಈಶ್ವರನು (ದೇವರು) ಶರೀರಿ; ಆಧಾರ ಮತ್ತು ಅದೇ - ಪ್ರಾಣ... ಜೀವ (ಚಿತ್) ಮತ್ತು ಪ್ರಕೃತಿ (ಅಚಿತ್, ಜಡ) ಗಳು - ಈಶ್ವರನೆಂಬ ಶರೀರಿಯ ಶರೀರವೇ ಆಗಿದೆ. ಅಂದರೆ... ಜೀವಾತ್ಮವು ವಿಶಿಷ್ಟವಾದ - ಪರಬ್ರಹ್ಮ ವಸ್ತು ಶ್ರೀಮನ್ನಾರಾಯಣನ ಒಂದು ಅಂಶ. ಚಿತ್ (ಜೀವ) ಮತ್ತು ಅಚಿತ್ ಎಂಬ ಜಡ ಜಗತ್ತು (ಪ್ರಕೃತಿ) - ಇವು ಶರೀರಗಳು. ಆದರೆ ಈಶ್ವರನೆಂಬ ಪ್ರಾಣ ಶರೀರಿಯ ರಸವಿಲ್ಲದೆ - ಯಾವುದೇ ಶರೀರವು ಇರಲಾರದು. ಹೀಗೆ ಈಶ್ವರ, ಚಿತ್, ಅಚಿತ್ - ಎಂಬ ಮೂರು ಅಂಶಗಳು ಅವಿನಾ ಸಂಬಂಧದಿಂದ ಕೂಡಿವೆ ಎಂಬುದೇ - ವಿಶಿಷ್ಟಾದ್ವೈತದ ತತ್ವತ್ರಯಗಳಾಗಿವೆ. ಉಪಾಸನೆಯ ವಿಷಯದಲ್ಲಿ ಪೂರ್ಣ ಸ್ವಾತಂತ್ರ್ಯ ನೀಡಿರುವ ಈ ತತ್ವವು - ಶ್ರೀ ಶಂಕರರ "ಅಹಂ ಬ್ರಹ್ಮಾಸ್ಮಿ" ಎಂಬುದರ ಸರಳೀಕೃತ ರೂಪದಂತೆಯೂ ಕಾಣುತ್ತದೆ.
ನಾನು ಬೇರೆ; ನೀನು ಬೇರೆ-ನಾನು ದಾಸ; ನೀನು ಈಶ... ಎಂಬ ದೇಹ ಭಾವದಲ್ಲಿ ದ್ವೈತ ಸಿದ್ಧಾಂತವು ಸಂಚರಿಸಿದರೆ, ನಾನು ಅಂಶ; ನೀನು ಅಂಶಿ... ಎಂಬ ಜೀವ ಭಾವದಲ್ಲಿ ವಿಶಿಷ್ಟಾದ್ವೈತವು ಪ್ರತಿಪಾದಿಸಲ್ಪಟ್ಟಿದೆ. "ನಾನು ನೀನು ಎಂಬ ಭೇದವೇ ಇರುವುದಿಲ್ಲ... ನಾನೇ ನೀನು; ನೀನೇ ನಾನು..." ಎನ್ನುವ ಆತ್ಮಭಾವವೇ - ಅದ್ವೈತ. ಮನುಷ್ಯನಲ್ಲಿ ಈ ಮೂರೂ ಭಾವಗಳು ಇರುತ್ತವೆ.
ದೇಹಬುದ್ಧಿಯಲ್ಲಿ ಸಖ್ಯಭಾವ, ಜೀವಬುದ್ಧಿಯಲ್ಲಿ ದಾಸ್ಯಭಾವ, ಆತ್ಮ ಬುದ್ಧಿಯಲ್ಲಿ ಪರಿಪೂರ್ಣ ಏಕತೆಯ ಸಾಮರಸ್ಯದ ಪರಿಮಳವಿರುವುದು - ಕೇವಲ ಅನುಭವಗ್ರಾಹ್ಯ. ಸಾಧಕನಲ್ಲಿ ಅನುಕ್ರಮವಾಗಿ ಕರ್ಮ, ಭಕ್ತಿ ಮತ್ತು ಜ್ಞಾನ ಸಾಧನೆಯನ್ನು ಅಪೇಕ್ಷಿಸುವ ಮಾರ್ಗಗಳಿವು. ಆಯಾ ಜೀವವು ತನಗೆ ಹಿತವಾದ ಯಾವುದೇ ಮಾರ್ಗದಲ್ಲಿ ತೊಡಗಿಕೊಂಡರೂ ಮೂಲತಃ ಪ್ರತಿಯೊಂದು ಸಾಧನೆಯ ಹಾದಿಯಲ್ಲೂ ಈ ಮೂರೂ ಹಂತಗಳು ಎದುರಾಗುತ್ತವೆ; ಸಾಧಕನ ಅನುಭವಕ್ಕೆ ಬರುತ್ತವೆ. ಆದ್ದರಿಂದ ಎಲ್ಲ ಮತಗಳೂ ಒಂದೇ ಗಮ್ಯಕ್ಕೆ ಕರೆದೊಯ್ಯುವ ವಿಭಿನ್ನ ಹಾದಿಗಳಷ್ಟೇ.
ವಿಶಿಷ್ಟಾದ್ವೈತ ಎಂದಾಗ - ಆ ವಿಶಿಷ್ಟ ಸಿದ್ಧಾಂತಕ್ಕೊಂದು ಮುದ್ರೆಯೊತ್ತಿ ದಡ ಮುಟ್ಟಿಸಿದ ಶ್ರೀ ರಾಮಾನುಜರನ್ನು ಸ್ಮರಿಸಿಕೊಳ್ಳುವುದು ಯುಕ್ತ ಮತ್ತು ಸಹಜವಾಗಿದ್ದರೂ ಈ ಸಿದ್ಧಾಂತಕ್ಕೆ ಸುದೀರ್ಘ - ಹಿರಿಯ ಪರಂಪರೆಯೂ ಇದೆ. ಸುಮಾರು ಕ್ರಿ. ಶ. 6 ರಿಂದ 9 ನೇ ಶತಮಾನದ ವರೆಗೆ ಭಕ್ತಿಯ ಆವೇಶವನ್ನು ಪ್ರಚೋದಿಸುತ್ತ ಶ್ರೀವೈಷ್ಣವ ಮತವನ್ನು ಪ್ರಚುರ ಪಡಿಸಿದ್ದ ಆಳ್ವಾರುಗಳು - ವಿಶಿಷ್ಟಾದ್ವೈತದ ಪೂರ್ವಾಚಾರ್ಯರೆಂದು ಗೌರವಿಸಲ್ಪಟ್ಟಿದ್ದಾರೆ. ಅನಂತರ ಸುಮಾರು 10 ನೇ ಶತಮಾನದ ನಂತರ ನಾಥಮುನಿ, ಯಾಮುನಾಚಾರ್ಯರು ಬೆಳೆಸುತ್ತ ಬಂದ ಈ ಪಂಥವು ಶ್ರೀ ರಾಮಾನುಜರ ಕಾಲದಲ್ಲಿ, ತಾತ್ವಿಕ ಸ್ಪಷ್ಟತೆಯೊಂದಿಗೆ ಸಂವಹನಶಕ್ತಿಯಾಗಿ, ಜನಾನುರಾಗಿಯಾಯಿತು. ಜನರನ್ನು ಬಲವಾಗಿ ಮುಟ್ಟಿತು. ವೇದ ಉಪನಿಷತ್ತುಗಳ ಸಾರವನ್ನೇ ಭಕ್ತಿಯಿಂದ ಅವಲಂಬಿಸಿದ್ದ ಆಳ್ವಾರರುಗಳು, ನಾಥಮುನಿ, ಯಾಮುನಾಚಾರ್ಯ ಮುಂತಾದವರು ವಿಸ್ತೃತವಾಗಿ ಬೆಳೆಸಿದ್ದ ಈ ಹೊಸ ಸಿದ್ಧಾಂತವನ್ನು ಕ್ರೋಡೀಕರಿಸಿ, ಇನ್ನಷ್ಟು ಪರಿಷ್ಕರಿಸಿ, ಸಮಯದ ಅಪೇಕ್ಷೆಗೆ ತಕ್ಕಂತೆ ಸಾಮಾನ್ಯ ಜನರೂ ಅನುಸರಿಸಬಹುದಾದ - ಅಧ್ಯಾತ್ಮದ ನವೀನ ಜ್ಞಾನ ವ್ಯವಸ್ಥೆಯಾಗಿ ರೂಪಿಸಿದವರು - ವಿಶಿಷ್ಟಾದ್ವೈತಿ ಶ್ರೀ ರಾಮಾನುಜರು.
ಹೀಗೆ ಸೈದ್ಧಾಂತಿಕ ಸಮಗ್ರತೆಯನ್ನು ಪ್ರತಿಷ್ಠಾಪಿಸಿದುದರಿಂದಲೇ ಉಪನಿಷದ್ಭಾವದೊಂದಿಗೆ - ಅದ್ವೈತದ ಕಲ್ಪನೆಗೆ ಕೂಡ ಎಲ್ಲೂ - ಹೋರುವ ವಿರೋಧವಾಗದ ರೀತಿಯಲ್ಲಿ "ದೇವ ಜೀವ ಸಂಬಂಧವನ್ನು ಸಂಯಮದಿಂದ ವ್ಯಾಖ್ಯಾನಿಸುವ ಸಾಧನೆ"ಯನ್ನು ಮಾಡಿದವರು ಎಂಬ ನೆಲೆಯಲ್ಲಿ - ಶ್ರೀ ರಾಮಾನುಜರು ಸ್ಮರಣೀಯರೆನ್ನಿಸುತ್ತಾರೆ. ತನ್ಮೂಲಕ - ಅಭೇದ, ಭೇದ ಪ್ರತಿಪಾದನೆಯ ಯಾವ ಪೂರ್ವಸೂರಿಗಳನ್ನೂ ತಮ್ಮ ಮತ ಪ್ರತಿಪಾದನೆಯ ಹಂತದಲ್ಲಿ ನಿರ್ದಯವಾಗಿ ಖಂಡಿಸದೆ, ಆಧ್ಯಾತ್ಮಿಕ ಜ್ಞಾನಸಾರದ ಸಮನ್ವಯತೆಯನ್ನು ಸಾಧಿಸುವಲ್ಲಿ ಯಶಸ್ಸು ಕಂಡ ವಿಶಿಷ್ಟ ಸಿದ್ಧಾಂತವೇ - ವಿಶಿಷ್ಟಾದ್ವೈತ. ಏಕಂ ಸದ್ವಿಪ್ರಾ ಬಹುಧಾ ವದಂತಿ ಎಂಬ ವೇದಸಾರವೇ ಇದು. "ಒಂದೇ ಸತ್ಯದ ಅನೇಕ ಬಗೆಯ ವ್ಯಾಖ್ಯಾನ !"
"ಭಗವಂತನು ಒಬ್ಬನೇ . ಜಗತ್ತೆಲ್ಲವೂ ಆತನದೇ ಮಹಿಮೆ; ಸೃಷ್ಟಿ ಎಂಬುದೊಂದು ನಿರಂತರ ವ್ಯಾಪಾರ. ಚೇತನಾಚೇತನ ಮೂಲದ್ರವ್ಯಗಳಿಗೆ ಸ್ವರೂಪ, ಪರಿಣಾಮಗಳೂ ಉಂಟು. ಅಸತ್ತಿನಿಂದ ಸತ್ಯದ ಕಡೆಗೆ ಬರುವುದೇ ಸೃಷ್ಟಿ; ಸತ್ಯದಿಂದ ಅಸತ್ಯದ ಕಡೆಗೆ ಸಾಗುವುದೇ ಲಯ. ಯಾವುದೇ ಮೂಲ ವಸ್ತುವಿನ ಅಪೇಕ್ಷೆಯಿಲ್ಲದೆ ಸಂಭವಿಸಿದ ಸೃಷ್ಟಿಯ ನಿಯಾಮಕನೊಬ್ಬನೇ ಸರ್ವತಂತ್ರ ಸ್ವತಂತ್ರ . ಆತನೇ ನಿಮಿತ್ತ . ಅಪೇಕ್ಷೆಗಳಿಂದ ಸುತ್ತುವರಿದಿರುವ ಜೀವ ಜಗತ್ತುಗಳು - ಈಶ್ವರನ ಅಧೀನ ವಸ್ತುಗಳು . ಆದ್ದರಿಂದ ಜೀವ, ಜಗತ್ತು, ಪ್ರಕೃತಿ - ಇವು ಮೂರು ಸ್ಥಿತಿಗಳಲ್ಲಿಯೂ ವ್ಯತ್ಯಾಸವಿದೆ." ಎನ್ನುವ ಶ್ರೀ ರಾಮಾನುಜರು - ಇತರ ಮತಾಚಾರ್ಯ ಪೂರ್ವಸೂರಿಗಳಿಗಿಂತ ಭಿನ್ನವಾಗಿ ಕಾಣುವುದು ಇಲ್ಲಿಯೇ. ಶ್ರೀ ರಾಮಾನುಜರು ಈ ಭಿನ್ನತೆಗೇ ಪ್ರಾಮುಖ್ಯ ನೀಡಿ , ತಮ್ಮ ಹೊಸ ಸಿದ್ಧಾಂತವನ್ನು ವಿಶಿಷ್ಟಗೊಳಿಸಿದ ಮತಾಚಾರ್ಯರು.
ನಾವು ನಮ್ಮ ನಿತ್ಯ ಬದುಕಿನಲ್ಲಿ ಕಾಣುವ ಕೇಳುವ ಮತ್ತು ಅನುಭವಕ್ಕೆ ಬರುವ - ಇಂದ್ರಿಯಜನ್ಯವಾದ - ಇಂದ್ರಿಯಗ್ರಾಹ್ಯವಾದ ಎಲ್ಲವೂ ಸತ್ಯವೇ ಆಗಿದೆ ಎನ್ನುವುದು - ಶ್ರೀ ರಾಮಾನುಜ ಮತ. ಈ ಸಿದ್ಧಾಂತದ ದೃಷ್ಟಿಯಲ್ಲಿ - "ಸ್ವಪ್ನವೂ ಸತ್ಯವೇ ಆಗಿದೆ. ಆದರೆ ಸ್ವಪ್ನಕ್ಕೂ - ನಿತ್ಯದಲ್ಲಿ ಕಾಣುವ ವಸ್ತುವಿಗೂ ಸ್ವಲ್ಪ ವ್ಯತ್ಯಾಸವಿದೆ. ಹೇಗೆಂದರೆ - ಪದಾರ್ಥವು ಎಲ್ಲರಿಗೂ ಕಾಣಿಸುವುದು; ಆದರೆ ಸ್ವಪ್ನವು ಅದನ್ನು ಅನುಭವಿಸುವವರಿಗೆ ಮಾತ್ರ ಕಾಣಿಸುವುದು. ಅವರವರ ಪಾಪಪುಣ್ಯಾನುಸಾರವಾಗಿ ಅವರವರು ಮಾತ್ರ ಫಲವನ್ನು ಅನುಭವಿಸುವಂತೆ ಅನುಭವಕ್ಕೆ ಮಾತ್ರ ಬರುವಂಥದ್ದು - ಸ್ವಪ್ನ. ಜೀವದ ಅಂತರ್ ವ್ಯವಸ್ಥೆಯಿದು. ಆದ್ದರಿಂದ ಸ್ವಪ್ನವನ್ನೂ - ಮಿಥ್ಯೆ ಎನ್ನಲಾಗುವುದಿಲ್ಲ. ಮಾಯೆ ಎಂಬುದು ಇಲ್ಲವೇ ಇಲ್ಲ. ಪ್ರತಿಯೊಂದು ಅರಿವಿಗೂ ಅದಕ್ಕೆ ಸಂಬಂಧಿಸಿದ ವಸ್ತುವೊಂದು ಇರಲೇ ಬೇಕು. ವಸ್ತು ಮೂಲದಿಂದಲ್ಲದೆ - ಬ್ರಹ್ಮ ಅಥವ ಈಶ್ವರನನ್ನು ಪ್ರತ್ಯಕ್ಷವಾಗಿಯಾಗಲೀ ಅನುಮಾನದಿಂದಾಗಲೀ ಅರಿಯುವುದು ಸಾಧ್ಯವಿಲ್ಲ. ವೇದಶಾಸ್ತ್ರ ಪ್ರಮಾಣ - ಅಂದರೆ - ಶಬ್ದ ಪ್ರಮಾಣದಿಂದಲೇ ಆತನನ್ನು ಅರಿಯಬೇಕು. ವೇದ ಶಾಸ್ತ್ರಗಳು - ಬ್ರಹ್ಮನು ನಿರ್ಗುಣ ಎಂದು ಹೇಳುವುದಿಲ್ಲ...." ಎಂದು ಶ್ರೀ ರಾಮಾನುಜರು ಪ್ರತಿಪಾದಿಸುತ್ತಾರೆ.
ಹೀಗೆ, ಸಗುಣ ಸಾಕಾರವನ್ನೂ ಪ್ರೋತ್ಸಾಹಿಸಿ ಬೆಂಬಲಿಸಿದ್ದ ಸಿದ್ಧಾಂತವಿದು. ಈ ದೃಷ್ಟಿಯಿಂದ ನೋಡಿದರೆ - "ಭೇದ ಎಂಬುದು ಮಾಯೆ" - ಎಂಬ ಶಂಕರಾಚಾರ್ಯರ ಸಿದ್ಧಾಂತವನ್ನು ರಾಮಾನುಜರು ಪೂರ್ತಿಯಾಗಿ ಸ್ವೀಕರಿಸಿದಂತೆ ಆಗುವುದಿಲ್ಲ. "ಎಲ್ಲವೂ ಒಂದೇ; ನಾನೇ ಅದು; ಅದೇ ನಾನು" ಎಂಬ ಶಂಕರರ ಕಠಿಣ ಸೂತ್ರವನ್ನು - "ಭಿನ್ನತೆಗಳೆಲ್ಲವೂ ಏಕಸೂತ್ರದಿಂದ ನಿಯಂತ್ರಿಸಲ್ಪಡುತ್ತದೆ.." ಎಂದು ರಾಮಾನುಜರು ಸರಳವಾಗಿ ವ್ಯಾಖ್ಯಾನಿಸಿದ್ದರು. ಹೀಗೆ ಗ್ರಹಿಕೆಗೆ ಸುಲಭವಾಗುವಂತೆ ಸಾಮಾನ್ಯರಿಗೂ ಮನದಟ್ಟು ಮಾಡುತ್ತಿದ್ದ ರೀತಿಯಿಂದ - ಭಕ್ತಿಪ್ರೇರಿತ ಜ್ಞಾನದ ಹಾದಿಗೆ ಜನಸಾಮಾನ್ಯರನ್ನೂ ಕರೆತಂದ ದೊಡ್ಡ ಚಳುವಳಿಯಾಗಿ ವಿಶಿಷ್ಟಾದ್ವೈತವು ಅಂದು ಪ್ರಕಟಗೊಳ್ಳಲು - ಇದೂ ಒಂದು ಕಾರಣ. ಇದು - ವಿಶಿಷ್ಟಾದ್ವೈತ ಸಿದ್ಧಾಂತದ ವೈಶಿಷ್ಟ್ಯವೂ ಹೌದು. ಆದ್ದರಿಂದ - "ಭೌತಿಕ ದೃಷ್ಟಿಗೆ ಗೋಚರಿಸುವುದರಲ್ಲಿಯೂ ಸತ್ಯವಿದೆ; ದೃಗ್ಗೋಚರವಾಗುವ ಭಿನ್ನತೆಗಳೆಲ್ಲವೂ ಸತ್ಯದ ಪ್ರತಿಬಿಂಬಗಳೇ ಆಗಿವೆ... " ಎಂದು ವ್ಯಾಖ್ಯಾನಿಸುತ್ತ, ಸಾಕಾರ - ಸಗುಣ ಮಾರ್ಗದ ಆಧ್ಯಾತ್ಮಿಕ ನಡೆಗಳನ್ನು ಸಂಪೂರ್ಣವಾಗಿ ಅನುಮೋದಿಸಿದ್ದ ಸಿದ್ಧಾಂತವಿದು - ಎಂದೂ ಹೇಳಬಹುದು.
ಭಕ್ತಿ - ಜ್ಞಾನದ ಮಾರ್ಗದಲ್ಲಿ ಪಾಮರರನ್ನು ಕೈಹಿಡಿದು ಮುನ್ನಡೆಸಬಲ್ಲ ಸಮರ್ಥ ಮಾರ್ಗದರ್ಶಕರಿಲ್ಲದ ಅಂದಿನ ಸಂಕ್ರಮಣ ಕಾಲವನ್ನೂ ಗಮನಿಸಬೇಕಾಗುತ್ತದೆ. ಬಿಡಿಬಿಡಿಯಾಗಿ ಅಲ್ಲಲ್ಲಿ ಚಿಂತನೆ ಜಿಜ್ಞಾಸೆಗಳು ಆಗ ನಡೆಯುತ್ತಿದ್ದರೂ ಅಧಿಕಾರವಾಣಿಯಿಂದ ಮಾರ್ಗ ತೋರಿಸಬಲ್ಲ ಸಮರ್ಥ ಗುರುಗಳ ಕೊರತೆಯು ಅಂದಿನ ಸಮಾಜದಲ್ಲಿ ನಿರ್ವಾತವನ್ನು ಸೃಷ್ಟಿಸಿತ್ತು. ಆಚಾರ ವಿಚಾರಗಳ ಸಾಮಾಜಿಕ ಅನಿಷ್ಟಗಳೂ ಮಿತಿಮೀರಿ, ಸ್ಥಾನ ಮಾನ ಭಾವುಕ ಬದುಕಿನ ನೆಲೆಯಲ್ಲಿಯೂ ಸಾಮಾಜಿಕ ಅಂತರವನ್ನು ಸೃಷ್ಟಿಸಿದ್ದವು. ಸುಮಾರು 850 ವರ್ಷಗಳ ಹಿಂದೆ, ಶ್ರೀ ರಾಮಾನುಜಾಚಾರ್ಯರು ಅವತರಿಸಿದ ಅವಧಿಯಲ್ಲಿ, ಅದ್ವೈತದ ಉಚ್ಛ್ರಾಯದ ದಿನಗಳೂ ಕಳೆದುಹೋಗಿದ್ದವು; ಅಂದಿನ ಶಂಕರರ ಅನುಯಾಯಿಗಳೂ ಕೂಡ ವಿದ್ವತ್ತು ಮತ್ತು ಆಚರಣೆಗಳಲ್ಲಿ - "ಮಡಿವಂತಿಕೆ ಜಾಸ್ತಿ; ಪ್ರತಿಭೆ ಕಡಿಮೆ" ಎಂಬ ಸ್ಥಿತಿಯಲ್ಲಿದ್ದರು; ಆದ್ದರಿಂದ ಸಾರ್ವಜನಿಕವಾಗಿ ಪ್ರಭಾವಿಗಳೂ ಆಗಿರಲಿಲ್ಲ. ಅದ್ವೈತದ ಸೈದ್ಧಾಂತಿಕ ವಲಯದಲ್ಲಿ, ಆರಂಭದಲ್ಲಿ ಕಾಣುತ್ತಿದ್ದ ನಿಷ್ಠೆ, ಅನುಷ್ಠಾನ, ಅನುಭವ, ಬೌದ್ಧಿಕ ಸತ್ವಗಳು ಹಿನ್ನೆಲೆಗೆ ಸರಿಯುತ್ತ ಅದ್ವೈತದ ಪ್ರಖರತೆಯು ಕ್ಷೀಣಗೊಂಡಿದ್ದ ಕಾಲವದು. ಶಂಕರರ ಕಾಲದಲ್ಲಿ ಸಹಜವಾಗಿ ಸಂವಹನಗೊಳ್ಳುತ್ತಿದ್ದ ಅದ್ವೈತವು, ಬರಬರುತ್ತ ಕುಗ್ಗಿ ಹೋಗಿದ್ದ ಸಾಮಾಜಿಕ ಬುದ್ಧಿನೆಲೆ ಮತ್ತು ಇನ್ನಿತರ ಕಾರಣಗಳಿಂದಾಗಿ, ಸಹಜವಾಗಿಯೇ ಕಬ್ಬಿಣದ ಕಡಲೆಯಂತೆಯೂ ಭಾಸವಾಗುತ್ತಿತ್ತು. ಅಕಸ್ಮಾತ್, ಅದ್ವೈತವು ಕೆಲವರ ಬುದ್ಧಿಗೆ ನಿಲುಕಿದ್ದರೂ ಕೂಡ - ಸಮರ್ಥ ನೇತೃತ್ವವಿಲ್ಲದಂತಾಗಿ, ಸಾಮಾನ್ಯ ಭಾವಜಗತ್ತನ್ನು ಸಂಪರ್ಕಿಸುವ ವ್ಯವಸ್ಥಿತ ಕೊಂಡಿಯು ತಪ್ಪಿದಂತಾಗಿತ್ತು. ಸಮರ್ಥ ಪ್ರತಿಪಾದಕರಿಲ್ಲದಂತಾದ ಆ ಕಾಲಘಟ್ಟದಲ್ಲಿ - ಅದ್ವೈತವನ್ನು ತಮ್ಮ ಅನುಭವಕ್ಕೆ ದಕ್ಕಿಸಿಕೊಳ್ಳುವುದು - ಸಾಮಾನ್ಯರಿಗೆ ಅತ್ಯಂತ ಕಠಿಣವಾಗಿದ್ದ ಸನ್ನಿವೇಶವಿದ್ದ ಕಾಲವದು.
ಅಂದೂ ಕೂಡ - ಸಂಖ್ಯೆಯ ದೃಷ್ಟಿಯಿಂದ ಸಾಕಷ್ಟು ಪಂಡಿತರು ಇದ್ದರೂ - ಸ್ವಯಂ ಪ್ರತಿಷ್ಠೆ, ಮಡಿವಂತಿಕೆ, ಕುರುಡು ಅನುಕರಣೆಯ ತಾರ್ಕಿಕ ಕಸರತ್ತಿನಲ್ಲಿಯೇ ಮುಳುಗಿ ಹೋಗಿದ್ದರು. ಹೀಗೆ, ಅದ್ವೈತದ ಸತ್ವವನ್ನು ಮನದಟ್ಟು ಮಾಡಿಸುವ ಸಮರ್ಥ ಮಾರ್ಗದರ್ಶಕರಿಲ್ಲದ ಅಂದಿನ ಸಮಾಜದಲ್ಲಿ, "ಬ್ರಹ್ಮ ಸತ್ಯ, ಜಗನ್ಮಿಥ್ಯ.." ಎಂಬ - ಪಾರಮಾರ್ಥಿಕ ನೆಲೆಗೇ ಹೆಚ್ಚು ಒತ್ತು ಕೊಟ್ಟಿದ್ದ ಶಂಕರರ ವಾದವು ಸಾಮಾನ್ಯ ಜನರ ಗಂಟಲಿನಲ್ಲಿ ಇಳಿಯದಂತಾಗಿತ್ತು. "ಮನೆ, ಹೆಂಡತಿ, ಮಕ್ಕಳು ಮತ್ತು ತಾವು ದಿನಬೆಳಗಾದರೆ ಕಾಣುವ ಕೇಳುವ ಎಲ್ಲವೂ ಮಿಥ್ಯೆ" ಎಂಬಂತೆ ಪ್ರತಿಪಾದಿತವಾಗುತ್ತಿದ್ದ - ಅದ್ವೈತದ "ಮಿಥ್ಯಾ ವಾದದ" ಹೂರಣವನ್ನು ಅರ್ಥೈಸಿಕೊಂಡು, ಅದನ್ನು ಒಪ್ಪಲು ಮತ್ತು ಅನುಸರಿಸಲು - ಪ್ರಾಯೋಗಿಕವಾಗಿ - ಜನರಿಗೆ ಕಷ್ಟವಾಗಿತ್ತು. ಅಂದಿನ ಪಾಮರರ ಸಾಮಾಜಿಕ ಬದುಕಿನಲ್ಲಿ ಮಡಿವಂತ ಮನಸ್ಸುಗಳ ಮೂಲಕ ಪ್ರವಹಿಸುತ್ತಿದ್ದ ಅದ್ವೈತ ವಿಚಾರಧಾರೆಯನ್ನು ಅರ್ಥೈಸಿಕೊಳ್ಳಲಾಗದ ಹಲವಾರು ಗೊಂದಲಗಳಿಗೆ - ಪರ್ಯಾಯವಾದ "ಸುಲಭ ಸರಳ" ಸಿದ್ಧಾಂತದ ರೂಪದಲ್ಲಿ - ಆಗ ಬೆಳಕಿಗೆ ಬಂದದ್ದು - ವಿಶಿಷ್ಟಾದ್ವೈತ.
ಹೀಗಿದ್ದೂ... ಎಲ್ಲ ಸಿದ್ಧಾಂತಗಳ ಅಂತಿಮ ಗುರಿಯು ಆತ್ಮ ಸಾಕ್ಷಾತ್ಕಾರವೇ ಆಗಿದ್ದರೂ ಕೂಡ - ಸನಾತನ ತತ್ವಗಳನ್ನು ಆಯಾ ಕಾಲದ ಪಾತ್ರೆಗಳ ಸ್ವರೂಪ ಗಾತ್ರ ಸಾಮರ್ಥ್ಯಕ್ಕೆ ತಕ್ಕಂತೆ, ಎಲ್ಲರೂ ಒಳಗೊಳ್ಳುವಂತೆ, ವಿಂಗಡಿಸಿ ಹಂಚಿದವರು - ಆಯಾ ಕಾಲದಲ್ಲಿ ಅವತರಿಸಿದ್ದ ಮತಾಚಾರ್ಯರು. ಮೂಲತಃ ಶ್ರೀ ರಾಮಾನುಜರೂ ಕೂಡ ಇದೇ ಸಂಕಲ್ಪದಿಂದಲೇ ಸಂಸಾರವನ್ನು ತೊರೆದು ಸನ್ಯಾಸ ಪಡೆದು ಕಾರ್ಯರಂಗಕ್ಕಿಳಿದವರು. ಆದ್ದರಿಂದಲೇ ಸಾಂಸಾರಿಕ ಇತಿಮಿತಿಗಳನ್ನು ಬಲ್ಲವರಾಗಿದ್ದ ರಾಮಾನುಜರು ಅದೇ ವರ್ಗವನ್ನು ಮುಖ್ಯ ಗುರಿಯಾಗಿಸಿ, ಯಶಸ್ವಿಯಾಗಿ ತಲುಪಿದಂತೆಯೂ ಕಾಣುತ್ತದೆ. ಅಧ್ಯಾತ್ಮದ ಗೊಡವೆಯಿಂದ ದೂರಸರಿದು ತೊಳಲಾಡುತ್ತಿದ್ದ ಅಂದಿನ ಜನಮಂದೆಯನ್ನು ಮತ್ತೊಮ್ಮೆ ಅಧ್ಯಾತ್ಮದ ಹಾದಿಯತ್ತ ಕರೆತಂದ ಯಶಸ್ಸು - ಶ್ರೀ ರಾಮಾನುಜರಿಗೆ ಸಲ್ಲುತ್ತದೆ.
ಮಾಯಾವಾದ ಎಂಬುದು ನಿತ್ಯದ ಬದುಕಿನಲ್ಲಿ ಹಲವು ಪ್ರಾಯೋಗಿಕ ತೊಡಕುಗಳನ್ನೂ ಮುಂದಿಡುತ್ತದೆ. ಈ "ಮಾಯಾವಾದ" ಎಂಬ ಪರಮ ಸತ್ಯವನ್ನು - ಅದರ ಆಳ ಅಗಲ ವಿಸ್ತಾರವನ್ನು ಎಲ್ಲರೂ ಅರಿಯುವುದೂ ಅಸಂಭವ. ಅಕಸ್ಮಾತ್ ಅರಿತವರೂ ಕೂಡ - ಅನವರತವೂ ಅದೇ ಯಥಾರ್ಥ ಅರಿವಿನ ಸ್ಥಿತಿಯಲ್ಲಿಯೇ ಸ್ಥಿರವಾಗಿ ಇರುವುದು ಬಹಳ ಕಠಿಣ. "ಉಪದೇಶಗಳಿರುವುದೇ ಪರೋಪದೇಶಕ್ಕಾಗಿ" ಎಂದು ಜನರು ಭಾವಿಸುವಂತೆ ಆಗಲು ಇಂತಹುದೇ - "ಅಪ್ರಾಯೋಗಿಕ ತೊಡಕು ಮತ್ತು ಸಂವಹನ ಹೀನತೆ"ಯೂ ಕಾರಣವಾದದ್ದಿದೆ. ಅಂತಹ ಮಾಯಾವಾದವನ್ನು ಬದಿಗೆ ಸರಿಸಿದ್ದು - ವಿಶಿಷ್ಟಾದ್ವೈತ ಮತದ ವೈಶಿಷ್ಟ್ಯ.
ಜಗತ್ತು ಎಂಬ ವರ್ಣರಂಜಿತ ವಸ್ತುವು ಮನುಷ್ಯರ ಕಣ್ಣೆದುರಿನಲ್ಲಿಯೇ ಇರುವಾಗ - ಅದನ್ನು ಮಿಥ್ಯೆ ಅನ್ನುವುದಾದರೂ ಹೇಗೆ ? ಅನ್ನಿಸುವುದು ಪಾಮರ ಸಹಜವೇ ಆಗಿದೆ. ಅಂದಮಾತ್ರಕ್ಕೆ - ಶಂಕರಾಚಾರ್ಯರೂ ಕೂಡ ತಮ್ಮ ಅದ್ವೈತ ಸಿದ್ಧಾಂತದಲ್ಲಿ ಜಗತ್ತನ್ನು ಸಾರಾಸಗಟಾಗಿ ಎಲ್ಲೂ ಅಲ್ಲಗಳೆದಿಲ್ಲ. ಆದರೆ "ಶಂಕರರ ಅದ್ವೈತದ" ಉನ್ನತ ಭಾವ ನೆಲೆಯಲ್ಲಿ ಸಂಚರಿಸಲಾಗದ ಪಾಮರ ವರ್ಗದ - "ಸ್ವೀಕರಿಸುವ ಪಾತ್ರೆಯೇ ಕಿರಿದಾಗಿ ಹೋದ ಕಾರಣದಿಂದ" - ಜತೆಯಾಗಿ ಹೆಜ್ಜೆ ಇಡಲಾಗದಂತಾಗಿ, ಆಚರಣೆಯು ಮುಗ್ಗರಿಸುತ್ತಿತ್ತು. ಸಂಶಯದ ಸರಪಳಿಯು ಹಿಗ್ಗುತ್ತಿತ್ತು. ಬ್ರಹ್ಮ ಸತ್ಯ; ಜಗತ್ತು ಮಿಥ್ಯ ಎಂದ ಶಂಕರಾಚಾರ್ಯರು, "ಈ ಮಿಥ್ಯವೂ ವ್ಯಾವಹಾರಿಕ ಸತ್ಯವೇ ಆಗಿದೆ " ಎಂದೂ ಹೇಳಿದ್ದರು. ಆದರೆ "ವ್ಯಾವಹಾರಿಕ ಸತ್ಯ" ಎಂಬ ಪಕ್ಕಾ ವ್ಯಾವಹಾರಿಕತೆಗೆ ಶಂಕರರು ಹೆಚ್ಚಿನ ಪ್ರಾಮುಖ್ಯ ಕೊಟ್ಟಿರಲಿಲ್ಲ; ಆ ಕುರಿತ ವಿವರಣೆಗೂ ಹೆಚ್ಚಿನ ಪ್ರಾಮುಖ್ಯ ಕೊಟ್ಟಂತೆ ಕಾಣುವುದಿಲ್ಲ. ಅಷ್ಟೆ. ಆದ್ದರಿಂದಲೇ ಜಿಡುಕು ಪರಿಹಾರವಾಗಲಿಲ್ಲ. ಸಾಮಾನ್ಯ ಬುದ್ಧಿಗಳು ಅದ್ವೈತ ಸಿದ್ಧಾಂತವನ್ನು ಯಥಾರ್ಥವಾಗಿ ಜೀರ್ಣಿಸಿಕೊಳ್ಳಲಾಗಲಿಲ್ಲ. ಮುಂದೆ, ಶ್ರೀ ರಾಮಾನುಜಾಚಾರ್ಯರು ಪ್ರಚುರಪಡಿಸಿದ ವಿಶಿಷ್ಟಾದ್ವೈತ ಸಿದ್ಧಾಂತವು - ಪಾಮರ ವರ್ಗದ ಅಂತಹ ಸಂದೇಹ, ತೊಡಕುಗಳನ್ನು ನಿರ್ವಿವಾದವಾಗಿ ನಿವಾರಿಸಲು ಪ್ರಯತ್ನಿಸಿದೆ.
ವಿಶಿಷ್ಟಾದ್ವೈತದ ಪ್ರವೇಶಿಗರಿಗೆ - ಮೊತ್ತಮೊದಲಿಗೆ ಆಳ್ವಾರರಿಂದ ತೊಡಗಿ, ಯಾಮುನಾಚಾರ್ಯರನ್ನು ಪರಿಚಯಿಸಿಕೊಂಡು, ಅರಿತುಕೊಳ್ಳದೆ - ಮುನ್ನಡೆಯುವುದು ಅಸಾಧ್ಯ.
ಆಳ್ವಾರರುಗಳ ದಿವ್ಯ ಪರಂಪರೆಯ ಆಧಾರದಲ್ಲಿಯೇ ಬೆಳೆದು ಬಂದ ಈ ವಿಶಿಷ್ಟಾದ್ವೈತ ತತ್ವ ಸಿದ್ಧಾಂತದ - ನಾಥಮುನಿ (ಶ್ರೀರಂಗನಾಥಮುನಿ), ಉಯ್ಯಕ್ಕೊಂಡಾರ್ (ಪುಂಡರೀಕಾಕ್ಷ), ಯಾಮುನಾಚಾರ್ಯರೇ ಮುಂತಾದ ಆಚಾರ್ಯ ಪರಂಪರೆಯಲ್ಲಿ ಒಬ್ಬೊಬ್ಬರೂ ಗುರುವನ್ನು ಮೀರಿಸುವ ಶಿಷ್ಯರು. ಯಾವುದನ್ನೂ ವಿಮರ್ಶೆಯ ಒರೆಗಲ್ಲಿಗೆ ತಿಕ್ಕಿ ನೋಡಿ, ವಾದಿಸದೆ ನಂಬದ, ನಂಬಿದ್ದನ್ನು ಸಾಧಿಸದೆ ಬಿಡದ ಸ್ವಭಾವವು ಈ ಪರಂಪರೆಯ ಮುಖ್ಯ ಲಕ್ಷಣ. ವಾವೆಯಲ್ಲಿ ರಾಮಾನುಜರ ಪ್ರೀತಿಯ ತಮ್ಮನೇ ಆಗಿದ್ದರೂ ಅಣ್ಣನ ಸಿದ್ಧಾಂತವನ್ನು ಅವರು ಸುಲಭದಲ್ಲಿ ಒಪ್ಪಿರಲಿಲ್ಲ. ತಮ್ಮಲ್ಲಿದ್ದ ಜ್ಞಾನನಿಧಿಯನ್ನು ಸಪಾತ್ರರಿಗೆ ನಿಷ್ಠೆಯಿಂದ ವರ್ಗಾಯಿಸುತ್ತಿದ್ದ ಅಂದಿನ "ಗುರು ಶೈಲಿ"ಯೇ ಅದ್ಭುತವಾದುದು. ಇವರಲ್ಲಿ, ನಾಥಮುನಿಗಳ ಮೊಮ್ಮಗನಾದ ಯಾಮುನಾಚಾರ್ಯರು - ಈ ಪರಂಪರೆಯ ಬಹು ದೊಡ್ಡ ಹೆಸರು. ವಿದ್ವಜ್ಜನರ ನೀತಿ ನಡಾವಳಿಗಳು ಅಂದಿನಿಂದಲೂ ವಿಶಿಷ್ಟವೇ ಆಗಿರುವುದು ಆಶ್ಚರ್ಯದ ಸಂಗತಿಯೇನಲ್ಲ.
"ವಿದ್ವಜ್ಜನ ಕೋಲಾಹಲ" ಎಂಬುದು ಇಂದು ನಿನ್ನೆಯ ಗದ್ದಲವಲ್ಲ. ಬುದ್ಧಿಮೂಲದ ವಿಚಾರಗಳ ತಾಕಲಾಟಗಳು - ಮನುಷ್ಯರೆಂಬ ಸಿದ್ಧ ವ್ಯವಸ್ಥೆಯ ಅವಿಭಾಜ್ಯ ಅಂಗ. ಬುದ್ಧಿ ಹೇಳಿದವರ ಸಂಗಡ ಗುದ್ದಾಟಕ್ಕೆ ಹೋಗುವುದು - "ಬುದ್ಧಿಯ ಸಮಸ್ಯೆ" ಆಗುವುದೂ ಇದೆ; ಅದರಿಂದ ಘರ್ಷಣೆ, ಅನಾಹುತಗಳಾದದ್ದೂ ಇದೆ; ಮಥನ ಮಂಥನದಿಂದ "ನವನೀತ" ಹೊಮ್ಮುವುದೂ ಇದೆ; ವಿಷ ಮಾತ್ರವೇ - ಫಲವಾಗಿ ಕಾಣಿಸುವುದೂ ಇದೆ. ನಮ್ಮ ಹಿಂದಿನ ಎಲ್ಲ ಮತಾಚಾರ್ಯರೂ ಈ "ಮಂಥನದ" ಘಟ್ಟವನ್ನು ಯಶಸ್ವಿಯಾಗಿ ದಾಟಿ ಬಂದವರೇ ಆಗಿದ್ದಾರೆ.
ಅಂದೂ - ವಕ್ರ ಚಿಂತಕರಿದ್ದರು. ತಾವು ನಂಬಿಕೊಂಡು ಬಂದಿದ್ದ ಆಯಾ ಪರಂಪರೆಗಳನ್ನೇ ಕಠೋರವಾಗಿ ಪ್ರತಿಪಾದಿಸುವವರೂ ಇದ್ದರು; ವಿರೋಧಿಸುವವರೂ ಇದ್ದರು; ಕೇವಲ ಅಹಂ ತೃಪ್ತಿಗಾಗಿ ಬಡಿದಾಡುವವರೂ ಇದ್ದರು. ತಂತಮ್ಮ ವಿಶ್ವಾಸದ ಏಕಮೇವ ರಕ್ಷಕರಂತೆ ಹಿಂಸಾ ಮಾರ್ಗದಲ್ಲಿ ತೊಡಗಿಕೊಂಡ ದೃಷ್ಟಾಂತಗಳು ಅಂದೂ ಇದ್ದವು. ಆದರೆ - ಇಂತಹ ಪರೀಕ್ಷಾ ಕಾಲದ ಮೂಸೆಯಲ್ಲಿ ಹಾದು, ಸ್ಥಿರವಾಗಿ ಸಿದ್ಧಗೊಂಡ ಸಿದ್ಧಾಂತಗಳು ಮಾತ್ರವೇ ಗಟ್ಟಿಯಾಗಿ ಉಳಿದುಕೊಂಡು ಬಂದಿರುವುದು - ನಮ್ಮ ದೃಗ್ಗೋಚರವಾಗಿರುವ ಸಂಗತಿ. ಇಂದಿನಂತಲ್ಲದೆ... ಮಾತು ಮಾತಿನ ಮಥನದಿಂದ ನವನೀತ ಹುಟ್ಟುತ್ತಿದ್ದ ಪರಿ ಅದು; ಭಾರತೀಯ - ಹಿಂದೂ ಪರಂಪರೆಯ ವೈಶಿಷ್ಟ್ಯವೂ ಹೌದು.
ಗುರುವನ್ನು ಮೀರಿಸುವ ಶಿಷ್ಯ ಪರಂಪರೆ
ನಾಥಮುನಿಯಿಂದ ಉಯ್ಯಕ್ಕೊಂಡಾರ್, ಉಯ್ಯಕ್ಕೊಂಡಾರ್ ಅವರಿಂದ ರಾಮ ಮಿಶ್ರ, ರಾಮ ಮಿಶ್ರರಿಂದ ಯಾಮುನಾಚಾರ್ಯರನ್ನು ತಲುಪಿದ್ದ ಪರಂಪರೆ ಇದು. ಒಬ್ಬೊಬ್ಬರೂ - ಗುರುವನ್ನು ಮೀರಿಸಿದ ಶಿಷ್ಯರು !
ಈ ಮಾತಿಗೆ ಪೂರಕವಾದ ಒಂದು ಕತೆಯಿದೆ....
ನಾಥಮುನಿಯ ಶಿಷ್ಯರಾಗಿದ್ದ ಪುಂಡರೀಕಾಕ್ಷರಿಗೆ "ಉಯ್ಯಕ್ಕೊಂಡಾರ್" ಎಂಬ ಹೆಸರು ನೀಡಿ, ಗುರುವೇ ಅನುಗ್ರಹಿಸಿದ್ದ ಕತೆಯಿದು.
ಉಯ್ಯಕ್ಕೊಂಡಾರ್ ಎಂದರೆ - ಕೊಂಡಾಡಲ್ಪಟ್ಟವನು ಎಂಬ ಅರ್ಥವಿದೆ. ಒಮ್ಮೆ, ಗುರು ನಾಥಮುನಿಯು ತಮ್ಮ ಶಿಷ್ಯನಾದ ಪುಂಡರೀಕಾಕ್ಷನ ಜೊತೆಯಲ್ಲಿ ತಮ್ಮ ಪತ್ನಿಯನ್ನು ಆಕೆಯ ತವರುಮನೆಗೆ ಕಳಿಸಿಕೊಟ್ಟರಂತೆ. ತಮ್ಮ ಅಳಿಯನ ಶಿಷ್ಯರಾಗಿದ್ದರೂ ಉಯ್ಯಕ್ಕೊಂಡಾರ್ ಅವರು ಬ್ರಾಹ್ಮಣರೇ ಆಗಿದ್ದರೂ - ಮಗಳ ಜೊತೆಯಲ್ಲಿ ಬಂದಿದ್ದ ಉಯ್ಯಕ್ಕೊಂಡಾರ್ ಅವರು (ಪುಂಡರೀಕಾಕ್ಷರು), "ತಮಗಿಂತ ಸ್ವಲ್ಪ ಕಡಿಮೆ" ಎಂಬ ಭಾವನೆಯು - ನಾಥಮುನಿಯ ಮಾವನ ಮನೆಯವರಲ್ಲಿತ್ತು; ಜುಟ್ಟನ್ನು ನಡುನೆತ್ತಿಯ ಮೇಲೆ ಇಟ್ಟುಕೊಳ್ಳುತ್ತಿದ್ದ ಪೂರ್ವಶಿಖಿ ಎಂಬ "ಕೀಳು" ಸಂಪ್ರದಾಯದವರು - ಉಯ್ಯಕ್ಕೊಂಡಾರ್ - ಎಂಬ ಭೇದಭಾವವದು ! ಇದರಿಂದಾಗಿ, ಅವರು ಈ ಪುಂಡರೀಕಾಕ್ಷನಿಗೆ ದಿನವೂ ತಂಗುಳನ್ನವನ್ನು ಇಕ್ಕುತ್ತಿದ್ದರು; ಪುಂಡರೀಕಾಕ್ಷನು ಅದನ್ನೇ ತಲೆತಗ್ಗಿಸಿ ಉಂಡು ಏಳುತ್ತಿದ್ದನು.
ಕೆಲವು ದಿನಗಳಾದ ಮೇಲೆ ಅಲ್ಲಿಂದ ಹಿಂದಿರುಗಿದ ಮೇಲೆ, ಗುರು ನಾಥಮುನಿಗೆ ತಮ್ಮ ಮಾವನ ಮನೆಯಲ್ಲಿ ನಡೆದ ಸಂಗತಿಗಳು ಪರೋಕ್ಷವಾಗಿ ಬಂದು ಮುಟ್ಟಿಯೋ ಏನೋ, ಅಂತೂ... "ಮಾವನ ಮನೆಯಲ್ಲಿ ನಡೆದುದೆಲ್ಲವನ್ನೂ ನನಗೆ ಸಾದ್ಯಂತವಾಗಿ ಹೇಳಲೇಬೇಕು" ಎಂದು ತಮ್ಮ ಶಿಷ್ಯನನ್ನು ಒತ್ತಾಯಿಸಿದ್ದರು. ಆಗ "ತಂಗಳು ಪ್ರಸಂಗವು" ಬಯಲಾಗಿತ್ತು. ಅಂದಿನ ಘಟನೆಯಿಂದ ತಮಗೆ ಯಾವುದೇ ಬೇಸರವಾಗಿಲ್ಲ ಎಂಬುದನ್ನೂ ಪುಂಡರೀಕಾಕ್ಷರು - ಗುರುಗಳಿಗೆ ವಿವರಿಸಿದ್ದರು. "ಗುರುಗಳೇ, ತೊಂಡರಡಿಪ್ಪೊಡಿ ಆಳ್ವಾರರು ಹಿಂದೆ ಹಾಡಲಿಲ್ಲವೆ ? ಸಂತ ಶ್ರೇಷ್ಠರು ತಾವು ತಿಂದು ಉಳಿಸಿದ ರೊಟ್ಟಿಯ ತುಂಡನ್ನು ನೀಡಿದರೂ ಅದರಿಂದ ನನ್ನ ಜನ್ಮವು ಪುನೀತವಾಗುವುದು..." ಎಂದುಬಿಟ್ಟರು.
ಶಿಷ್ಯನ ಭಾವಪ್ರಭುತ್ವವನ್ನು ಕಂಡು ಕೇಳಿದ ನಾಥಮುನಿಯು - "ನೀನು ನಿಜವಾಗಿಯೂ ಮಹಾತ್ಮ. ನನ್ನನ್ನು ಉದ್ಧರಿಸುವವನು ನೀನು." ಎನ್ನುತ್ತ - ಶಿಷ್ಯ ಪುಂಡರೀಕನನ್ನು ಕೊಂಡಾಡಿದರು. ಅಂದಿನಿಂದ "ಉಯ್ಯಕ್ಕೊಂಡಾರ್" ಎಂಬ ಹೆಸರಿನಿಂದಲೇ - ಪುಂಡರೀಕಾಕ್ಷರು ಪ್ರಸಿದ್ಧರಾದರು. ಶಿಷ್ಯನೊಬ್ಬ ತನ್ನ ಗುರುವನ್ನು ಪ್ರೀತಿಯಿಂದ ಗೆದ್ದ ಕತೆಯಿದು.
ಈ ಉಯ್ಯಕ್ಕೊಂಡಾರರಿಗೂ ಹಲವಾರು ಶಿಷ್ಯರಿದ್ದರು. ಅವರ ಪೈಕಿ - ಮಣಕ್ಕಾಲ್ ನಂಬಿ ಅಥವ ರಾಮ ಮಿಶ್ರರು - ಅವರ ಪಟ್ಟಶಿಷ್ಯರಾಗಿದ್ದರು. ಗುರುಶಿಷ್ಯ ಪರಂಪರೆಯಲ್ಲಿ ಆಚಾರ್ಯ ಸೇವೆಗೆ ಬಲು ದೊಡ್ಡ ಸ್ಥಾನವಿದೆ. ಗುರು ಉಯ್ಯಕ್ಕೊಂಡಾರರ ಮಕ್ಕಳನ್ನು ಮನೆಗೆ ಕರೆತರುವಾಗ ಹಾದಿಯಲ್ಲಿ ಎದುರಾದ ಕೊಚ್ಚೆ ತುಂಬಿದ ಹೊಂಡದಿಂದ ಗುರುಪುತ್ರರನ್ನು ರಕ್ಷಿಸಲೋಸುಗ, ತಾನೇ ಆ ಹೊಂಡದ ಮೇಲೆ ಅಡ್ಡಲಾಗಿ ಮಲಗಿ ಗುರುಗಳ ಮಕ್ಕಳ ಕಾಲುಗಳಿಗೆ ಕೊಳೆ ತಾಗದಂತೆ ರಕ್ಷಿಸಿದ "ಗುರುಸೇವೆಯ ಉತ್ತುಂಗ "ಕ್ಕೆ - ರಾಮ ಮಿಶ್ರರು ಉದಾಹರಣೆ ಆದವರು. ವಿನಮ್ರ ಸೇವೆಯಿಂದಲೇ ವಿದ್ಯೆಯನ್ನು ಸಂಪಾದಿಸುತ್ತಿದ್ದ - ಅನನ್ಯ ಭಾರತೀಯ ಶೈಲಿಯಿದು.
ಗುರು ಉಯ್ಯಕ್ಕೊಂಡಾರರು ತಮ್ಮ ಜೀವಿತದ ಕೊನೆಗಾಲದಲ್ಲಿ - ತಮ್ಮ ಶಿಷ್ಯ ರಾಮ ಮಿಶ್ರರಿಗೆ ಕೆಲವು ಜವಾಬ್ದಾರಿಯನ್ನು ವಹಿಸುತ್ತಾರೆ. ತಮ್ಮ ಪರಂಪರೆಯನ್ನು ಕಾಯ್ದುಕೊಂಡು ಬೆಳೆಸುವುದು ಶಿಷ್ಯನ ಕರ್ತವ್ಯ ಎಂಬುದನ್ನು ನೆನಪಿಸುತ್ತಾರೆ. ಈ ಪರಂಪರೆಯ ಸತ್ವವನ್ನು ವಿಸ್ತಾರವಾಗಿ ಪ್ರಚುರಪಡಿಸುವ ಯೋಗ್ಯತೆಯುಳ್ಳವರಾದ - ತಮ್ಮ ಗುರುವಾದ ನಾಥಮುನಿಗಳ ಮೊಮ್ಮಗನೇ ಆಗಿರುವ ಯಾಮುನಾಚಾರ್ಯರು ಪ್ರಾಪ್ತ ವಯಸ್ಕರಾದ ಮೇಲೆ - ಅವರಿಗೆ ಈ ಸಂಪ್ರದಾಯವನ್ನು ಬೋಧಿಸಬೇಕು ಎಂದೂ - ಅವರು ರಾಮ ಮಿಶ್ರರಿಗೆ ಸೂಚಿಸಿದ್ದರು.
ಪ್ರಸಿದ್ಧ ನಾಥಮುನಿಗಳ ಮೊಮ್ಮಕ್ಕಳಾದರೂ ಯಾಮುನಾಚಾರ್ಯರು ಬಾಲ್ಯದಲ್ಲಿ ಬವಣೆಗಳನ್ನೇ ಉಂಡವರು. ಚಿಕ್ಕಂದಿನಲ್ಲೇ ತಂದೆ ಈಶ್ವರಮುನಿ ತೀರಿಕೊಂಡರು. ಅಜ್ಜ ನಾಥಮುನಿ (ರಂಗನಾಥ) - ಸನ್ಯಾಸ ಪಡೆದರು. ಯಾಮುನರು ತಮ್ಮ ತಾಯಿ, ಅಜ್ಜಿಯ ಆಶ್ರಯದಲ್ಲಿಯೇ - ಬಡತನದ ಕಷ್ಟದಲ್ಲಿಯೇ ಬೆಳೆದರು.
ಇತ್ತ, ತಮ್ಮ ಗುರು ಉಯ್ಯಕ್ಕೊಂಡಾರರಿಗೆ ಮಾತು ಕೊಟ್ಟಂತೆ - ಮೊತ್ತಮೊದಲು, ರಾಮ ಮಿಶ್ರರು ಬಾಲಕ ಯಾಮುನರನ್ನು ಪತ್ತೆಹಚ್ಚಿದರು. ಅವರಿಗೆ ವಿದ್ಯೆಯ ಬುನಾದಿ ಹಾಕಬಲ್ಲ ಒಳ್ಳೆಯ ಗುರುವನ್ನು ದೊರಕಿಸಿ ಕೊಡಲು ನಿಶ್ಚೈಸಿದರು. ಪ್ರಾಪ್ತ ವಯಸ್ಕರಾದ ಮೇಲೆ, ತಮ್ಮ ಗುರುವಿನಿಂದ ತಾವು ಪಡೆದ ವೇದಾಂತ ರಹಸ್ಯವನ್ನು ಯಾಮುನರಿಗೆ ಬೋಧಿಸಿ, ವಿದ್ಯಾನಿಧಿಯನ್ನು ವರ್ಗಾಯಿಸಿ, ಅಧ್ಯಯನದಿಂದ ಊರ್ಜಿತಗೊಳಿಸಿಕೊಂಡು ಹೋಗುವಂತೆ ಹೇಳಲು ಸಂಕಲ್ಪಿಸಿಕೊಂಡರು. ಆದರೆ ಅದಕ್ಕಿನ್ನೂ ಕಾಲಕೂಡಿ ಬಂದಿರಲಿಲ್ಲ.
(೧) ಶ್ರೀ ಯಾಮುನಾಚಾರ್ಯರು
ಯಾಮುನರು ಆಗ - ಮಹಾಭಾಷ್ಯ ಭಟ್ಟರೆಂಬ ಗುರುಗಳ ಸನ್ನಿಧಿಯಲ್ಲಿ ವಿದ್ಯಾರ್ಜನೆ ಮಾಡುತ್ತಿದ್ದರು.
ಶಿಷ್ಯ ಯಾಮುನಾಚಾರ್ಯರಿಗೆ ಎದುರಾಗಿದ್ದ ಅಗ್ನಿಪರೀಕ್ಷೆ
ಮಹಾಭಾಷ್ಯ ಭಟ್ಟರು ಅಂದಿನ ದೊಡ್ಡ ವಿದ್ವಾಂಸರಾಗಿದ್ದರು. ಅವರ ನೆಚ್ಚಿನ ಶಿಷ್ಯರಾಗಿದ್ದವರು - ಯಾಮುನರು.
ಮಹಾಭಾಷ್ಯ ಭಟ್ಟರೆಂಬ ದೊಡ್ಡ ವಿದ್ವಾಂಸರಲ್ಲಿ ಯಾಮುನಾಚಾರ್ಯರು ಶಿಷ್ಯವೃತ್ತಿಯನ್ನು ನಡೆಸುತ್ತಿದ್ದಾಗ, ಅವರಿಗೆ ಮೊದಲ ಬಾರಿ "ವಿದ್ವಜ್ಜನ ಕೋಲಾಹಲದ " ದರ್ಶನವಾಗಿತ್ತು.
ಆಗ ಪಾಂಡ್ಯರು ಆ ನಾಡನ್ನು ಆಳುತ್ತಿದ್ದರು. ತಾವು ಒಪ್ಪಿ ಅನುಸರಿಸುವ ವಿಚಾರ ಚಿಂತನೆಗಳನ್ನು ರಾಜಾಸ್ಥಾನಗಳಲ್ಲಿ ಬಹಿರಂಗ ವಾದಗಳಿಗೆ ಒಡ್ಡಿ ಅವನ್ನು ನಿರ್ವಿರೋಧವಾಗಿ ಪ್ರತಿಷ್ಠಾಪಿಸಿ ಮೆರೆಯುವ ಕೋಲಾಹಲವು ಅಂದಿನ ಆಸ್ಥಾನಗಳಲ್ಲಿ ಸರ್ವೇ ಸಾಮಾನ್ಯವಾಗಿತ್ತು. ಎಷ್ಟೋ ಬಾರಿ ಒಣ ತರ್ಕವೇ ಗೆದ್ದು ಸತ್ವವು ನರಳುತ್ತಿದ್ದುದೂ ಇತ್ತು ! ಅಂದಿನ ಪಾಂಡ್ಯರ ಆಸ್ಥಾನದಲ್ಲೂ - ವಿದ್ವಾಂಸ ಎನ್ನಿಸಿಕೊಂಡು ಆಗಾಗ ಬೀಗುವ ಹವ್ಯಾಸವಿದ್ದ ಒಬ್ಬ ಪಂಡಿತರಿದ್ದರು. ಅಂದಿನ ಸಮಾಜದಲ್ಲಿ ವಿದ್ವಾಂಸರೆನ್ನಿಸಿಕೊಂಡು ಬದುಕುತ್ತಿದ್ದ ಅನೇಕರನ್ನು ವಾದಕ್ಕೆ ಕರೆದು, ಅವರನ್ನು ಕಕ್ಕಾಬಿಕ್ಕಿಯಾಗುವಂತೆ ಮಾಡಿ, ಅವರನ್ನು ಸೋಲಿಸಿ ಕಳಿಸುವ ಹವ್ಯಾಸವನ್ನು ರೂಢಿಸಿಕೊಂಡಿದ್ದ ಆತನು, ಅಹಂಕಾರದಿಂದ ಬೀಗಿ ತೊನೆದಾಡುತ್ತಿದ್ದ. ಆದ್ದರಿಂದಲೇ ಆತನಿಗೆ - "ವಿದ್ವಜ್ಜನ ಕೋಲಾಹಲ" ಎಂಬ ಬಿರುದೂ ಬಂದಿತ್ತು ! ಇಷ್ಟೇ ಅಲ್ಲದೆ, ತನ್ನ ಪ್ರತಿಷ್ಠೆಯನ್ನು ಸ್ಥಾಪಿಸಿ ಮೆರೆಸುವ ದುಷ್ಟಬುದ್ಧಿಯಿಂದಾಗಿ, ಸುತ್ತುಮುತ್ತಿನ ಎಲ್ಲ ಪಂಡಿತರಿಂದ ಆತನು ಕಪ್ಪವನ್ನೂ ವಸೂಲು ಮಾಡುತ್ತಿದ್ದನಂತೆ ! ವಿದ್ಯಾ ತೆರಿಗೆ ! ಯಾಮುನರ ಗುರುವಾದ ಭಾಷ್ಯ ಭಟ್ಟರೂ ಈ ತೆರಿಗೆಯನ್ನು ಸಲ್ಲಿಸಬೇಕಾಗಿತ್ತು. ಆದರೆ ಭಾಷ್ಯ ಭಟ್ಟರ ಆದಾಯವೇ ಕಡಿಮೆ ಇದ್ದುದರಿಂದ ಅವರಿಗೆ ಕೆಲವು ವರ್ಷಗಳಿಂದ ಈ "ಪಂಡಿತ ಕಪ್ಪ" ಸಲ್ಲಿಸುವುದು ಸಾಧ್ಯವಾಗಿರಲಿಲ್ಲ. ಬಾಕಿ ಉಳಿದಿತ್ತು.
ಅದೊಂದು ದಿನ, ಭಾಷ್ಯ ಭಟ್ಟರು ಊರಿನಲ್ಲಿರಲಿಲ್ಲ. ಇತರ ಶಿಷ್ಯರೂ ಪ್ರವಚನ ಮುಗಿಸಿಕೊಂಡು ತೆರಳಿದ್ದರು. ಯಾವುದೋ ಕೆಲಸದಲ್ಲಿ ತೊಡಗಿದ್ದ ಯಾಮುನರೊಬ್ಬರೇ ಆಗ ಗುರುಗಳ ಮನೆಯಲ್ಲಿದ್ದರು. ಅದೇ ಹೊತ್ತಿಗೆ - ವಿದ್ವಜ್ಜನ ಕೋಲಾಹಲನ ಶಿಷ್ಯನೊಬ್ಬ ಬಾಕಿ ವಸೂಲಿಗಾಗಿ ಭಾಷ್ಯ ಭಟ್ಟರ ಮನೆಗೆ ಬಂದ. ಗುರುಗಳ ಅನುಪಸ್ಥಿತಿಯಲ್ಲಿ, ಯಾಮುನರೇ ಬಂದವನನ್ನು ವಿಚಾರಿಸಿದರು. ಆಗ, ಬಂದ ವ್ಯಕ್ತಿಯು ಹೇಳಿದ :
"ನೋಡಯ್ಯಾ, ನಾನು ವಿದ್ವಜ್ಜನ ಕೋಲಾಹಲರ ಶಿಷ್ಯ. ಪಾಂಡ್ಯರಾಜನೇ ನಮ್ಮ ಗುರುಗಳ ಅಡಿಯಾಳು. ಈ ಸರಹದ್ದಿನ ಎಲ್ಲ ವಿದ್ವಾಂಸರೂ ನಮ್ಮ ಗುರುವಿಗೆ ತೆರಿಗೆ ಸಲ್ಲಿಸಬೇಕು; ನಿಮ್ಮ ಗುರುವೂ ಸಲ್ಲಿಸಬೇಕಾಗಿದೆ. ತಪ್ಪದೆ ಕೊಡಬೇಕಾದ ತೆರಿಗೆಯನ್ನು ನಿಮ್ಮ ಗುರುವು ಬಹುಕಾಲದಿಂದ ಬಾಕಿ ಉಳಿಸಿಕೊಂಡಿದ್ದಾರೆ. ನಿಮ್ಮ ಗುರುವಿಗೆ ಬುದ್ಧಿ ಉಂಟೇ ? ಬಾಕಿ ತೀರಿಸದಿದ್ದರೆ ಅವನಿಗೆ ಏನು ಗತಿಯಾದೀತು ಗೊತ್ತೆ ? ಒಂದೋ ಅವರು ನಮ್ಮ ಗುರುವನ್ನು ವಾದದಲ್ಲಿ ಸೋಲಿಸಿ ಗೆಲ್ಲಬೇಕು; ಇಲ್ಲವೇ ತೆರಿಗೆ ಸಲ್ಲಿಸಬೇಕು. ಅರ್ಥವಾಯಿತೆ ? ಹ್ಹ.. ನಿಮ್ಮ ಗುರುವಿಗೆ ವಾದಿಸಿ ಗೆಲ್ಲುವ ಶಕ್ತಿ ಎಲ್ಲಿದೆ ? ಆದ್ದರಿಂದ ತಕ್ಷಣ ತೆರಿಗೆ ಸಲ್ಲಿಸಿಬಿಡಿ.."
ವಿದ್ಯಾ ತೆರಿಗೆಯನ್ನು ಅನಧಿಕೃತವಾಗಿ ಸಂಗ್ರಹಿಸುತ್ತಿದ್ದ ರೌಡಿ ಪಂಡಿತನೊಬ್ಬನ ರೌಡಿ ಶಿಷ್ಯನಂತೆ ಮಾತನಾಡುತ್ತಿದ್ದ ಆ ವ್ಯಕ್ತಿಯ ವಾಕ್ ಪ್ರಲಾಪವನ್ನು ಕೇಳಿದ ಯಾಮುನರು ಕಿವಿ ಮುಚ್ಚಿಕೊಂಡರು. ಆಗ ಅವರಲ್ಲಿದ್ದ ವಿದ್ಯಾಭಿಮಾನವು ಹೆಡೆ ಎತ್ತಿತು. ಆತನ ವಾಗ್ವಿಲಾಸದಲ್ಲಿದ್ದ ದೌರ್ಜನ್ಯದ ಭಾವವನ್ನು ಸರಿಯಾಗಿಯೇ ಗ್ರಹಿಸಿದ ಯಾಮುನರು ಆ ಅಂಚೆಕಾರ ಶಿಷ್ಯೋತ್ತಮನಿಗೆ ಸೌಜನ್ಯದಿಂದಲೇ ಉತ್ತರಿಸಿದರು.
"ಅಯ್ಯಾ, ನನ್ನ ಗುರುವಿನ ಮಹಿಮೆ ನಿಮಗೇನು ಗೊತ್ತು ? ಈಗ ನೀನು ಹೋಗಿ, ನಿನ್ನ ಶುಷ್ಕ ಪಂಡಿತ ಗುರುವಿಗೆ ಹೇಳು. ನಿನ್ನ ಗುರುವಿನೊಡನೆ ವಾದಕ್ಕೆ ನನ್ನ ಗುರು ಬರಬೇಕಾಗಿಲ್ಲ; ನನ್ನಂತಹ ಒಬ್ಬ ಕಿರಿಯ ಶಿಷ್ಯನೇ ಸಾಕು. ನಿನ್ನ ಗುರುವು ನನಗೆ ಆಮಂತ್ರಣ ಕೊಡಲಿ; ನಾನು ಬುದ್ಧಿ ಕಲಿಸುತ್ತೇನೆ..."
ಯಾಮುನರ ಮಾತಿನಿಂದ ಕಕ್ಕಾಬಿಕ್ಕಿಯಾದ "ಕೋಲಾಹಲ ಶಿಷ್ಯನು" ಕೋಪದಿಂದಲೇ ಅಲ್ಲಿಂದ ಹೊರಟು ನೆಟ್ಟಗೆ ಗುರುಗಳ ಬಳಿಗೆ ಹೋಗಿ ನಡೆದುದನ್ನೆಲ್ಲ ನಡುಗುತ್ತಲೇ ಹೇಳಿದ. ಆದರೆ ವಿದ್ವಜ್ಜನ ಕೋಲಾಹಲನು ಮಾತ್ರ ಗಹಗಹಿಸಿ ನಕ್ಕ. ಈ ಸಮಾಚಾರವು ಪಾಂಡ್ಯದೊರೆಯ ಕಿವಿಗೂ ಬಿತ್ತು. ಆದರೆ ತನ್ನ ಆಸ್ಥಾನ ಪಂಡಿತನ ಕಿವಿ ಹಿಂಡಲಾಗದ ಆ ಮೂರ್ಖ ದೊರೆಯು ವಿದ್ವಜ್ಜನ ಕೋಲಾಹಲನಿಗೆ ಎದುರು ಬಿದ್ದ ಹುಡುಗನನ್ನೇ "ಮೂರ್ಖ" ಎಂದು ಪರಿಗಣಿಸಿ, "ವಾದದಲ್ಲಿ ತೊಡಗುವ ಇಚ್ಛೆಯಿದ್ದರೆ ಆ ಹುಡುಗನು ಬರಲಿ" ಎಂದು ಸೂಚಿಸಿ, ಹುಡುಗನಿಗೆ ಆಮಂತ್ರಣವನ್ನೂ ಕಳಿಸಿದ.
ಯಾಮುನರು ಜಗ್ಗಲಿಲ್ಲ. "ಸುಮ್ಮನೆ ಹೇಳಿ ಕಳಿಸಿದರೆ ಹೇಗೆ ಬರಲಾದೀತು ? ಪಂಡಿತಯೋಗ್ಯವಾದ ಪಲ್ಲಕ್ಕಿಯೇ ಮುಂತಾದ ಸಕಲ ಮರ್ಯಾದೆಗಳೊಂದಿಗೆ ಬನ್ನಿ" ಎಂದು - ಪ್ರತಿಯಾಗಿ ಹೇಳಿ ಕಳಿಸಿದರು.
ಹುಡುಗನ ದಿಟ್ಟತನದಿಂದ ಆಶ್ಚರ್ಯಗೊಂಡರೂ ಆ ರಾಜನು, "ವಿನೋದ ಪ್ರಸಂಗವೊಂದನ್ನು ನಿಭಾಯಿಸುವಂತೆ" ತಮಾಷೆಯ ರೀತಿಯಲ್ಲಿ ಸಕಲ ಮರ್ಯಾದೆಗಳನ್ನೂ ಕಳಿಸಿಕೊಟ್ಟು - ಮುಂದಿನ ಹಾಸ್ಯದ ಕ್ಷಣಗಳಿಗಾಗಿ ಕಾಯತೊಡಗಿದ.
ಅದೇ ಹೊತ್ತಿನಲ್ಲಿ, ಪರಊರಿಗೆ ತೆರಳಿದ್ದ ಯಾಮುನರ ಗುರು ಭಾಷ್ಯ ಭಟ್ಟರು ಊರಿಗೆ ಮರಳಿದರು. ಅವರಿಗೆ ವಿಷಯವು ತಿಳಿದಾಗ ಅವರು ಗಾಬರಿಯಾಗಿ, "ವಿದ್ವಜ್ಜನ ಕೋಲಾಹಲನೆಂದರೆ ಸಾಮಾನ್ಯನೆ ? ರಾಜನ ಬೆಂಬಲ ಬೇರೆ ಇದೆ. ಈ ಹುಡುಗ ಆತನನ್ನು ವಾದದಲ್ಲಿ ಗೆಲ್ಲುವುದು ಸಾಧ್ಯವೆ ? ಈತನ ಉದ್ಧಟತನಕ್ಕೆ ಗಲ್ಲು ಶಿಕ್ಷೆಯೂ ಆಗಬಹುದು... ಅಯ್ಯೋ.. ಏನಾಗಿ ಹೋಯಿತು ?" ಎನ್ನುತ್ತ ಭಾಷ್ಯ ಭಟ್ಟರು ಪರಿತಪಿಸಿದರು.
ಆಗ ಯಾಮುನರೇ ಗುರುಗಳನ್ನು ಶಾಂತಗೊಳಿಸಿದರು. ಅದಾಗಲೇ ಶಾಸ್ತ್ರವಿದ್ಯೆಯ ಸಾರವನ್ನು ಹೀರಿಕೊಂಡಿದ್ದ ಯಾಮುನರು - "ಗುರುಗಳೇ, ನಿಮ್ಮ ಆಶೀರ್ವಾದ ಇದ್ದರೆ ಸಾಕು. ಆ ಪಂಡಿತನನ್ನು ನುರಿಯುವುದು ಏನು ಕಷ್ಟ ?" ಎಂದವರೇ ಗುರುಗಳ ಅಪ್ಪಣೆ ಪಡೆದು ಅರಮನೆಯ ಕಡೆಗೆ ಹೊರಟರು. ರಾಜ ಕಳಿಸಿದ್ದ ಪಲ್ಲಕ್ಕಿ ಏರಿದರು.
ಇತ್ತ ಅರಮನೆಯಲ್ಲಿ, ಇದೇ ಪ್ರಸಂಗದ ಕುರಿತು ರಾಜ-ರಾಣಿಯರಲ್ಲಿ ವಾಗ್ವಾದ ಆರಂಭವಾಗಿತ್ತು.
ರಾಜ - ಬೆಕ್ಕು ಇಲಿಯನ್ನು ಕೊಲ್ಲುವಂತೆ ನಮ್ಮ ಕೋಲಾಹಲ ಪಂಡಿತನು ಈ ಹುಡುಗನನ್ನು ವಾದದಲ್ಲಿ ಹೊಸಕಿ ಹಾಕುತ್ತಾನೆ; ನೋಡುತ್ತಿರು..
ಕೋಲಾಹಲನ ವಿದ್ಯಾಮದದಿಂದ ಬೇಸತ್ತಿದ್ದ ರಾಣಿಯು ರಾಜನ ಹೇಳಿಕೆಯನ್ನು ಒಪ್ಪಲಿಲ್ಲ.
ರಾಣಿ - ನನಗೇಕೋ ನಂಬಿಕೆ ಹುಟ್ಟುತ್ತಿಲ್ಲ. ಹತ್ತಿಯ ರಾಶಿಯನ್ನು ಸುಡಲು ಒಂದೇ ಒಂದು ಕಿಡಿ ಸಾಕಾಗುತ್ತದೆಯಲ್ಲವೆ ? ಈ ಹುಡುಗನ ವರ್ತನೆ ನೋಡಿದರೆ ಇವನು ಕೋಲಾಹಲನ ಕೀರ್ತಿಸೌಧವನ್ನು ಸುಟ್ಟು ಉರುಬಬಹುದು..
ಹೀಗೇ ರಾಜ ರಾಣಿಯರ ವಾದವು ಬೆಳೆದು ಪರಸ್ಪರರಲ್ಲಿ ಪ್ರತಿಷ್ಠೆಯ ಪಂಥದವರೆಗೆ ಬಂದು ನಿಂತಿತು.
ರಾಜ - ನಿನ್ನ ಹುಡುಗ ಸೋತರೆ...ಆಗ ?
ರಾಣಿ - ಅಕಸ್ಮಾತ್ ನಿಮ್ಮ ಪಂಡಿತ ಸೋತರೆ ?
ರಾಜ - ಪಂಡಿತ ಸೋತರೆ, ಅರ್ಧ ರಾಜ್ಯವನ್ನೇ ಹುಡುಗನಿಗೆ ಕೊಡುತ್ತೇನೆ.
ರಾಣಿ - ಅಕಸ್ಮಾತ್, ಹುಡುಗನೇ ಸೋತರೆ, ನಾನು ನಿಮ್ಮ ರಾಣಿಯಲ್ಲ; ದಾಸಿಯಾಗುತ್ತೇನೆ.
ಅಷ್ಟು ಹೊತ್ತಿಗೆ, ಯಾಮುನರು ರಾಜನ ಆಸ್ಥಾನಕ್ಕೆ ಬಂದರು. ರಾಜರಾಣಿಯರು ಆಸೀನರಾಗಿದ್ದರು. ವಿದ್ವಜ್ಜನ ಕೋಲಾಹಲನೂ ಮಂಡಿಸಿದ್ದ. ಅವನ ಎದುರಿನಲ್ಲಿಯೇ ಯಾಮುನರ ಆಸನವು ಸಿದ್ಧವಾಗಿತ್ತು.
ಯಾಮುನರ ಒಣಗಿದ ಎಳೆಯ ದೇಹವನ್ನು ನೋಡಿದ ಆಸ್ಥಾನ ಪಂಡಿತನು ವ್ಯಂಗ್ಯವಾಗಿ ಕೇಳಿದ. "ಏನು ? ಆಳಲು ಬಂದವನೆ ? ನನ್ನನ್ನು ಗೆಲ್ಲಲು ಬಂದವನು ಈ ಹುಡುಗನೆ ?"
ಆಗ ರಾಣಿಯು "ಹೌದು. ಆಳಲು ಬಂದರು. ಈ ಹುಡುಗನು ಗೆಲ್ಲಲು ಬಂದವನು.." ಎಂದುಬಿಟ್ಟಳು.
ಯಾಮುನರಿಗೆ "ಆಳವಂದಾರ್" ಎಂಬ ಹೆಸರು ಬಂದದ್ದು ಹೀಗಂತೆ. ಎಲ್ಲರ ಮನಸ್ಸನ್ನು "ಆಳಲು ಬಂದವರಾದರು" ಎಂಬ ಭಾವ.
ರಾಣಿಯು ನಿಷ್ಠುರವಾಗಿ ಹೇಳಿದರೂ ಅದನ್ನು ಗಮನಿಸದಷ್ಟು ಉದಾಸೀನವು ಕೋಲಾಹಲನ ವರ್ತನೆಯಲ್ಲಿತ್ತು. "ಏನೋ ಹುಡುಗು ಬುದ್ಧಿ... ಅಯ್ಯೋ ಪಾಪ" ಅಂದುಕೊಂಡು, ಪ್ರಾಥಮಿಕ ವ್ಯಾಕರಣ, ಅಮರ ಕೋಶದ ಮೇಲೆ ಸಣ್ಣ ಪುಟ್ಟ ಪ್ರಶ್ನೆಗಳನ್ನು ಹಾಕಿದ. ಯಾಮುನರು ಪಟಪಟನೆ ಉತ್ತರಿಸಿ, ಕೋಲಾಹಲನ ಕಡೆಗೆ ನೋಡುತ್ತ "ನಾನು ಹುಡುಗನೆಂದುಕೊಳ್ಳಬೇಡಿ ಪಂಡಿತರೇ. ಜನಕನ ಆಸ್ಥಾನದಲ್ಲಿ ಬಂಡಿಯನ್ನು ಜಯಿಸಿದ ಅಷ್ಟಾವಕ್ರ ಮುನಿಯು ಕೇವಲ ಹುಡುಗನಾಗಿದ್ದನೋ ಅಥವ ನಿಮ್ಮ ಹಾಗೆ ಮುದುಕನಾಗಿದ್ದನೋ..ಹೇಳಿ. ತೂಕ ಆಕಾರ ನೋಡಿ ಪಾಂಡಿತ್ಯ ಅಳೆಯುತ್ತಾರೆಯೆ ? ಹಾಗಿದ್ದರೆ, ದೊಡ್ಡ ಗೂಳಿಯು ನಿಮಗಿಂತ ದೊಡ್ಡ ಪಂಡಿತ ಎನ್ನಬಹುದು - ಅಲ್ಲವೆ ?"
ಯಾಮುನರ ಚುಚ್ಚುಮಾತಿನಿಂದ ಮುಖಭಂಗವಾದರೂ ಕೋಲಾಹಲನು ತೋರಗೊಡಲಿಲ್ಲ. ಆತನ ಅಹಂಕಾರವು ಮತ್ತಷ್ಟು ಹೆಡೆ ಬಿಚ್ಚಿತ್ತು. "ಭಲೇ ಭಲೇ.. ನೀನು ಹುಡುಗನಾದರೂ ಪಂಡಿತವರೇಣ್ಯನೇ ಆಗಿದ್ದೀ ಎಂದು ಒಪ್ಪಿಕೊಳ್ಳೋಣ. ಈಗ, ನೀನೇ ಪ್ರಶ್ನೆ ಕೇಳು. ಅವುಗಳಿಗೆ ಉತ್ತರಿಸಲು ನನಗೆ ಆದೀತೋ ಇಲ್ಲವೋ ನೋಡೋಣ.." ಎನ್ನುತ್ತ ಮುಸಿಮುಸಿ ನಕ್ಕುಬಿಟ್ಟ - ಕೋಲಾಹಲ. ಅಹಂಕಾರವು ಎಡವಿ ಬೀಳಿಸುವಾಗ ಹೀಗಾಗುತ್ತದೆ !
ಯಾಮುನರು ಕ್ಷಣಕಾಲ ಮೌನವಾಗಿದ್ದರು.
"ತಡವೇಕೆ ? ಕೇಳಯ್ಯಾ ಹುಡುಗಾ.." ಎಂದ ಕೋಲಾಹಲನ ಮಾತು ಮುಗಿಯುವ ಮೊದಲೇ ಯಾಮುನರು ಪ್ರಶ್ನೆ ಎಸೆದರು...
ಯಾಮುನ - ಮೊದಲನೆಯದಾಗಿ, ನಿಮ್ಮ ತಾಯಿಯು ಬಂಜೆಯಲ್ಲ - ಎನ್ನುತ್ತೇನೆ ನಾನು. ಇದು ಸುಳ್ಳೆಂದು, ನಿಮ್ಮ ತಾಯಿಯು ಬಂಜೆ ಎಂದು ಸ್ಥಾಪಿಸಿ ನೋಡೋಣ.."
ಕೋಲಾಹಲನ ಮುಖ ಸಪ್ಪಗಾಯಿತು. "ನನ್ನ ತಾಯಿಯು ಬಂಜೆಯಾಗಿದ್ದರೆ ನಾನು ಹುಟ್ಟುತ್ತಲೇ ಇರಲಿಲ್ಲ. ಈ ವಾದವನ್ನು ಹೇಗೆ ಖಂಡಿಸಲಿ ?" ಎಂದು ಯೋಚಿಸುತ್ತ ಮೌನವಾದ.
ಕೋಲಾಹಲನ ತೊಳಲಾಟವನ್ನು ನೋಡಿದ ಯಾಮುನರು - "ಏಕೆ ? ನಿಮ್ಮ ಪ್ರಚಂಡ ಬುದ್ಧಿಗೆ ಏನೂ ಹೊಳೆಯಲಿಲ್ಲವೆ ? ಹೋಗಲಿ ಬಿಡಿ. ಎರಡನೆಯ ಪ್ರಶ್ನೆ ಕೇಳುತ್ತೇನೆ. ನಮ್ಮ ಪಾಂಡ್ಯರಾಜನು ಅತ್ಯಂತ ಧರ್ಮಿಷ್ಟ ದೊರೆ - ಎನ್ನುತ್ತೇನೆ ನಾನು. ಇದನ್ನಾದರೂ ಖಂಡಿಸಿ...ನೋಡೋಣ."
ರಾಜನಿಗೆ ಬಹುಪರಾಕನ್ನು ಹೇಳುತ್ತ ದಿನ ದೂಡುತ್ತಿದ್ದ ಕೋಲಾಹಲನು - ಕೇವಲ ವಾದಕ್ಕೆಂದೇ ಆದರೂ - ಈ ಮಾತನ್ನು ಹೇಗೆ ಖಂಡಿಸಿಯಾನು ? "ತನ್ನ ದೊರೆಯು ಅಧರ್ಮಿಯೇ ಆಗಿದ್ದರೂ ಆತನ ಎದುರಲ್ಲೇ ಅದನ್ನು ಸ್ಥಾಪಿಸುವುದು ಹೇಗೆ ? ತನ್ನ ಬಗ್ಗೆ ಇಷ್ಟೊಂದು ಮೃದುವಾಗಿರುವ ದೊರೆಯನ್ನು ಅಧರ್ಮಿಯೆಂದು ಸ್ಥಾಪಿಸುವುದಾದರೂ ಹೇಗೆ ? ಹಾಗೆ ಸ್ಥಾಪಿಸಿದರೆ ನನ್ನ ಗತಿಯೇನು ?" ಎಂಬ ಯೋಚನೆಯಲ್ಲಿ ಬಿದ್ದ ಕೋಲಾಹಲನ ಮುಖವು ಪೇಲವವಾಯಿತು.
ಆಗ ಯಾಮುನರೇ ಮತ್ತೆ ಕೇಳಿದರು.
"ಓ ಪಂಡಿತೋತ್ತಮಾ, ಇದನ್ನೂ ಖಂಡಿಸಲು ಆಗಲಿಲ್ಲವೆ ? ಹೋಗಲಿ ಬಿಡು. ವಾದಕ್ಕಾಗಿ ನಾನು ಮಂಡಿಸುವ ಮೂರನೆಯ ವಿಷಯ ಇದು. ನಾನು ಹೇಳುತ್ತೇನೆ. ನಮ್ಮ ಮಹಾರಾಣಿಯವರು ಸಾಧ್ವೀ ಶಿರೋಮಣಿ ಎಂದು. ಇದನ್ನಾದರೂ ಅಲ್ಲಗಳೆಯುವಿರಾ ? ಹೇಳಿ."
ಆಗ ಮುಜುಗರಕ್ಕೆ ಒಳಗಾಗಿ, ಅಸ್ಥಿರ ಬುದ್ಧಿಗೆ ವಶನಾದ ಕೋಲಾಹಲನು ಅವಮಾನದ ಭಾವದಿಂದ ಕೋಪೋದ್ರಿಕ್ತನಾಗಿ ಯಾಮುನರನ್ನು ವಾದದ ವಿಷಯದಿಂದ ಹೊರಗೆಳೆದು, ಭಯಪಡಿಸುವಂತೆ, ಗಳಹತೊಡಗಿದ.
"ಹುಚ್ಚು ಹುಡುಗನೇ, ನಮ್ಮ ದೊರೆಯು ಅಧರ್ಮಿಯೆಂದು, ರಾಣಿಯು ಪತಿವ್ರತೆಯಲ್ಲವೆಂದು ಸಾಧಿಸಬೇಕೆ ? ನಿನ್ನ ವಿಪರೀತ ಬುದ್ಧಿಯನ್ನು ಪ್ರದರ್ಶಿಸುತ್ತಿದ್ದೀಯಲ್ಲ ? ಇಂತಹ ಜಂಜಾಟದಲ್ಲಿ ಸಿಲುಕಲು ನನಗೇನು ಹುಚ್ಚೇ ? ಈಗ ನೀನೇ ಅಪಾಯದಲ್ಲಿ ಸಿಲುಕಿದ್ದೀ. ನೀನೇ ಹೇಳು. ನಿನ್ನ ಮಾತುಗಳನ್ನು ನೀನೇ ಖಂಡಿಸು. ನಾವು ಕೇಳುತ್ತೇವೆ. ಹೇಗೂ... ನಮ್ಮ ದೊರೆಯನ್ನೂ ರಾಣಿಯನ್ನೂ ಅಪಹಾಸ್ಯಕ್ಕೆ ಗುರಿಮಾಡಿದುದಕ್ಕಾಗಿ ನಿನಗೆ ಘೋರ ಶಿಕ್ಷೆಯು ಕಾದಿದೆ..."
ಕೋಲಾಹಲನ ಬೆದರಿಸುವ ಮಾತಿನಿಂದ ಸ್ಫೂರ್ತಿಗೊಂಡ ಆತನ ಹಿಂಬಾಲಕರು ಯಾಮುನರನ್ನು ಅವಹೇಳನಗೈಯ್ಯುವಂತೆ "ಹೋ ಹೋ " ಎಂದು ಕೂಗತೊಡಗಿದರು. ಆಸ್ಥಾನದಲ್ಲಿ ಗದ್ದಲವು ತುಂಬಿಕೊಂಡಿತು.
ಆಗ ಯಾಮುನಾಚಾರ್ಯರು ನಗುತ್ತ ಎದ್ದು ನಿಂತರು. "ಸಭಾಸದರೇ, ಎಲ್ಲರೂ ಶಾಂತರಾಗಿ. ನಾನು ಪ್ರತಿಪಾದಿಸಿದ ಒಂದೊಂದು ಮಾತೂ ಸುಳ್ಳು ಎಂಬುದನ್ನು ಈಗ ನಾನೇ ಸ್ಥಾಪಿಸುತ್ತೇನೆ. ದಯವಿಟ್ಟು ಕೇಳಿ" ಎಂದಾಗ, ಆಸ್ಥಾನದಲ್ಲಿ ಗಾಢ ಮೌನವು ವ್ಯಾಪಿಸಿತು. ಯಾಮುನರು ನಿರರ್ಗಳವಾಗಿ ಮಾತನಾಡತೊಡಗಿದರು.
ಮೊದಲನೆಯದು ... "ನಮ್ಮ ಪಂಡಿತವರ್ಯರ ತಾಯಿಯು ಬಂಜೆ" ಎಂಬ ವಿಚಾರ. ಒಂದೇ ಮಗುವನ್ನು ಹಡೆದ ತಾಯಿಯೂ ಬಂಜೆಯೆಂದೇ ಪರಿಗಣಿಸಲ್ಪಡುವಳು ಎಂಬುದು - ನಮ್ಮ ಶಾಸ್ತ್ರದಲ್ಲಿ ಹೇಳಿರುವ ವಿಷಯ. ಮನು ಸಂಹಿತೆಯ ಮೇಧ ತಿಥಿ ಭಾಷ್ಯದಲ್ಲಿ ಹೀಗೆ ಹೇಳಿದೆ. ಆದ್ದರಿಂದ ನಮ್ಮ ಪಂಡಿತರೊಬ್ಬರನ್ನೇ ಹಡೆದ ಅವರ ತಾಯಿಯು ಬಂಜೆ...ಈ ದೃಷ್ಟಿಯಲ್ಲಿ."
ಎರಡನೆಯ ಸಮಸ್ಯೆಗೆ ಬಂದರೆ - ನಮ್ಮ ಪಾಂಡ್ಯರಾಜರು ಅತ್ಯಂತ ಧರ್ಮಿಷ್ಟರಾದ ದೊರೆ ಎಂಬುದನ್ನು ಖಂಡಿಸಬೇಕಾಗಿದೆ. ನೋಡಿ, ಇದು ಕಲಿಯುಗ. ಕಲಿಯುಗದಲ್ಲಿ ಧರ್ಮಕ್ಕೆ ಒಂದೇ ಕಾಲು. ಅಧರ್ಮಕ್ಕೆ ಮೂರು ಕಾಲು. ದೊರೆ ಎಂಬವರು ಎಷ್ಟೇ ಧರ್ಮದಿಂದ ರಾಜ್ಯವನ್ನು ಪರಿಪಾಲಿಸಿದರೂ ತನ್ನ ಪ್ರಜೆಗಳ ಅಧರ್ಮದಲ್ಲಿ ಆರನೆಯ ಭಾಗವು ದೊರೆಗೆ ಸಲ್ಲುತ್ತದೆ ಎಂಬುದೂ ಮನು ಸಂಹಿತೆಯ ಮಾತು. ಆದ್ದರಿಂದ ಈ ದೃಷ್ಟಿಯಲ್ಲಿ, ನಮ್ಮ ಧರ್ಮಿಷ್ಟ ದೊರೆಯೂ ಅಧರ್ಮಿಯೇ ಆಗಬೇಕಾಗುತ್ತದೆ."
ಇನ್ನು ಮೂರನೆಯದಾಗಿ, ನಮ್ಮ ರಾಣಿಯವರ ಪಾತಿವ್ರತ್ಯದ ವಿಚಾರ. ನಾಡನ್ನಾಳುವ ದೊರೆಯು ಅಗ್ನಿ, ವಾಯು, ಸೂರ್ಯ, ಚಂದ್ರ, ಯಮ, ಕುಬೇರ, ವರುಣ ಮತ್ತು ಇಂದ್ರ - ಇವರ ಅವತಾರ ಸ್ವರೂಪಿ ಎಂದು ಮನು ಸಂಹಿತೆಯು ಹೇಳುತ್ತದೆ. ಆದ್ದರಿಂದ ಈ ದೊರೆಯ ಹೆಂಡತಿಯಾಗಿರುವ ರಾಣಿಯು ಈ ಎಂಟೂ ಮಂದಿಗೂ ಹೆಂಡತಿಯಲ್ಲವೆ ? ಆದ್ದರಿಂದ ಈ ದೃಷ್ಟಿಯಲ್ಲಿ - ನಮ್ಮ ರಾಣಿಯು ಪತಿವ್ರತೆಯಲ್ಲ."
ಇಷ್ಟು ಹೇಳಿದ ಯಾಮುನರು ಸಭೆಗೆ ನಮಸ್ಕರಿಸಿ ತಮ್ಮ ಆಸನದಲ್ಲಿ ಕುಳಿತರು. ಆಸ್ಥಾನಿಕರ ಹರ್ಷೋದ್ಗಾರಗಳು ಮುಗಿಲು ಮುಟ್ಟಿದವು. ತಮಗೇ ಅರಿವಿಲ್ಲದಂತೆ ಕೋಲಾಹಲನ ಅನುಯಾಯಿಗಳೂ ಹುಡುಗನ ಜಾಣ್ಮೆಯನ್ನು ಮೆಚ್ಚಿಕೊಂಡು ಹರ್ಷೋದ್ಗಾರಗೈಯ್ಯುತ್ತಿದ್ದರು. ತಾನು ಪಂಥವನ್ನು ಗೆದ್ದುದಕ್ಕಾಗಿ ರಾಣಿಯ ಕಣ್ಣಿನಿಂದ ಹರ್ಷ ಬಿಂದುಗಳು ಉದುರುತ್ತಿದ್ದವು.
ಯಾಮುನಾಚಾರ್ಯರು ಮತ್ತೊಮ್ಮೆ ಎದ್ದು ನಿಂತರು. ಈಗ ಗೌರವದಿಂದಲೇ ಸಭೆಯು ಮೌನವಾಯಿತು. ಇಡೀ ಸಭೆಯನ್ನು ವೀಕ್ಷಿಸುತ್ತ ಯಾಮುನರು ಗಂಭೀರವಾಗಿ ವಿನಂತಿಸಿದರು. "ಓ ಪಂಡಿತ ಶ್ರೇಷ್ಠರೇ, ನೀವು ಅನುಸರಿಸುತ್ತಿದ್ದ "ತೇಜೋವಧೆಯ ಆಳ್ತನದ ಬಿಂಕವು" - ಇಲ್ಲಿಗೆ ಸಂಪೂರ್ಣವಾಗಿದೆ. ನಿಮ್ಮ ವಯಸ್ಸು ಮತ್ತು ಆಸ್ಥಾನ ಪಂಡಿತರೆಂಬ ವಿಶೇಷ ಸ್ಥಾನದ ದೃಷ್ಟಿಯಿಂದ ನಿಮಗೆ ಅವಮಾನ ಮಾಡಲು ನನಗೆ ಇಷ್ಟವಿಲ್ಲ. ನನ್ನ ವಿನಂತಿ ಇಷ್ಟೇ. ಇನ್ನು ನಿಮಗೆ ಉಳಿದಿರುವ ಆಯುಷ್ಯಮಾನದಲ್ಲಿ - ಜ್ಞಾನದ ಬಲದಿಂದ ಇದುವರೆಗೆ ನಡೆಸುತ್ತಿದ್ದ ಪುಂಡುಪೋಕರಿತನಗಳನ್ನು ಬಿಟ್ಟು, ನಿಜವಾದ ಜ್ಞಾನದ ಅನ್ವೇಷಣೆಯಲ್ಲಿ ತೊಡಗಿ, ನಿಮ್ಮ ಜೀವನವನ್ನು ಸಾರ್ಥಕ ಮಾಡಿಕೊಳ್ಳಿ. ನಿಮ್ಮವರೇ ಆದ ಪಂಡಿತರ ವರ್ಗವನ್ನು ಹೀಯಾಳಿಸುವ ಮತ್ತು ಅವರಿಂದ ಕಪ್ಪಕಾಣಿಕೆಗಳನ್ನು ವಸೂಲು ಮಾಡುತ್ತಿರುವ ಅನರ್ಥಕಾರೀ - ನಿರ್ದಯ ಹವ್ಯಾಸಗಳನ್ನು ಬಿಟ್ಟುಬಿಡಿ... ಜನೋಪಕಾರೀ ಕೆಲಸಗಳಲ್ಲಿ ತೊಡಗಿಕೊಳ್ಳಿ..."
ಪಂಥದಲ್ಲಿ ಭಾಗಿಯಾಗಿದ್ದ ಯಾಮುನರು ಕೋಲಾಹಲನನ್ನು ಕ್ಷಮಿಸಿದರು. ಯಾಮುನರ ಈ ಹೃದಯ ವೈಶಾಲ್ಯವನ್ನು ಕಣ್ಣಾರೆ ಕಂಡ ಸಭಾಸದರು ಮೆಚ್ಚಿ ಕರತಾಡನಗೈದರು. ಪಂಥ ಕಟ್ಟಿದ ರಾಣಿಯು ಹುಡುಗ ಯಾಮುನರನ್ನು ಗೌರವದಿಂದ ಅಪ್ಪಿದಳು. ಪಾಂಡ್ಯರಾಜನು ತಾನು ರಾಣಿಗೆ ಕೊಟ್ಟ ಮಾತಿನಂತೆ, ಅರ್ಧರಾಜ್ಯವನ್ನು ಯಾಮುನರಿಗೆ ಕೊಡುತ್ತೇನೆಂದು ಹೇಳಿದಾಗ, ಯಾಮುನರು ಒಪ್ಪಲಿಲ್ಲ. "ಇದು ನನ್ನ ಚಿತ್ತ ವೃತ್ತಿಗೆ ವಿರೋಧವಾದ ಕೊಡುಗೆ" ಎಂದು ಹೇಳಿದ ಯಾಮುನರು, ರಾಜನ ಕೊಡುಗೆಯನ್ನು ಸ್ವೀಕರಿಸಲು ಒಪ್ಪಲಿಲ್ಲ. ಹೀಗಿದ್ದರೂ... ರಾಜನು ಸುಮ್ಮನಾಗಲಿಲ್ಲ. ಯಾಮುನರನ್ನು ಬಗೆಬಗೆಯಿಂದ ಗೌರವಿಸಿದ. ಸಮೃದ್ಧ ಮಾಸಾಶನವನ್ನು ಕೊಡಮಾಡಿದ.
ಹೀಗೆ, ಸಜ್ಜನಿಕೆಯ ಬೀಜ ಬಿತ್ತಿದರೆ ಸಾಕು, ಅದು ತಾನೇ ತಾನಾಗಿ ಬೆಳೆದು ಹೆಮ್ಮರವಾಗಬಲ್ಲದು ಎಂಬುದಕ್ಕೆ - ಅಂದಿನ ನಡೆನುಡಿಗಳು ಸಾಕ್ಷಿಯಾದ ಅನೇಕ ದೃಷ್ಟಾಂತಗಳಿವೆ.
ಯಶಸ್ವೀ ಸಂಸಾರಿಯಾಗಿದ್ದ ಯಾಮುನರು - ವಿರಾಗಿಯಾದರು !
ಮುಂದೆ ಯಾಮುನರು ಗೃಹಸ್ಥಾಶ್ರಮವನ್ನು ಸ್ವೀಕರಿಸಿ ಐಹಿಕ ಬದುಕಿನಲ್ಲಿ ತೊಡಗಿಕೊಂಡರು. ಅವರಿಗೆ ನಾಲ್ವರು ಮಕ್ಕಳೂ ಹುಟ್ಟಿದರು. ಅವರಲ್ಲಿ ದೈವಭಕ್ತಿಯು ಸುಪ್ತವಾಗಿದ್ದರೂ "ಆಳವಂದಾರ್" ಯಾಮುನರು ಮುಂದೆ ಬಹು ಕಾಲ ಸಂಸಾರದಲ್ಲಿಯೇ ಮುಳುಗಿ ಹೋಗಿದ್ದರು. ನಾಥಮುನಿಗಳ ಮೊಮ್ಮಗನಾಗಿದ್ದ ಯಾಮುನರು - ಮುಂದೆ ತಮ್ಮ ಅಧ್ಯಾತ್ಮದ ಆಸ್ತಿಯನ್ನು ಸ್ವೀಕರಿಸುವ ಕಾಲವೂ ಬಂತು. ಇತ್ತ ನಾಥಮುನಿಯ ಶಿಷ್ಯರಾದ ಉಯ್ಯಕ್ಕೊಂಡಾರ್ ಅವರ ಪ್ರಮ ಶಿಷ್ಯ - ರಾಮ ಮಿಶ್ರರು, ತಮ್ಮ ಗುರುವಿಗೆ ಕೊಟ್ಟ ವಚನವನ್ನು ಪೂರೈಸಲು ಸಮಯ ಕಾಯುತ್ತಿದ್ದರು. ತಮ್ಮಲ್ಲಿರುವ ಅಧ್ಯಾತ್ಮ ನಿಧಿಯನ್ನು ಎಂದು ಯಾಮುನರಿಗೆ ತಲುಪಿಸಿಯೇನೋ ಎಂದು ರಾಮ ಮಿಶ್ರರೂ ಹಂಬಲಿಸುತ್ತಿದ್ದರು. ಜೀವನದ ಪರಮಗುರಿ ಏನು ಎಂಬುದನ್ನು ಯಾಮುನರಿಗೆ ನೆನಪಿಸಿ, ಶ್ರೀ ವೈಷ್ಣವ ಪರಂಪರೆಯನ್ನು ಬೆಳೆಸುವ ಕಾರ್ಯವನ್ನು ಯಾಮುನರ ಉಡಿಯಲ್ಲಿ ಹಾಕಿ ಕಣ್ಣುಮುಚ್ಚಬೇಕೆಂದು ರಾಮ ಮಿಶ್ರರು ತವಕಿಸುತ್ತಿದ್ದರು.
ಆದರೆ ಆಗ ವೈಭವದ ಲೌಕಿಕ ಬದುಕನ್ನು ಸಾಗಿಸುತ್ತಿದ್ದ ಯಾಮುನರನ್ನು ಸಂಪರ್ಕಿಸುವುದೇ - ರಾಮ ಮಿಶ್ರರ ಎದುರಿಗಿದ್ದ ಸವಾಲಾಗಿತ್ತು. ಆರು ತಿಂಗಳ ಕಾಲ ಕಾದು, ಕೊನೆಗೂ ಅವರ ಭೇಟಿಯನ್ನು ಪಡೆದರಂತೆ. ಉಭಯ ಕುಶಲೋಪರಿಯಾದ ನಂತರ, ರಾಮ ಮಿಶ್ರರ ಭೇಟಿಯ ಕಾರಣವನ್ನು ಅವರು ಕೇಳಿ ತಿಳಿದುಕೊಂಡರು. "ನಾಥಮುನಿಯು ತಮಗೆ ತಲುಪಿಸುವಂತೆ ಒಂದು ನಿಧಿಯನ್ನು ಇಟ್ಟಿದ್ದಾರೆ. ಅವರ ಮೊಮ್ಮಗನಾದ ನಿಮಗೆ ಅದನ್ನು ತಲುಪಿಸಲು ನಾನು ಬಂದಿದ್ದೇನೆ" ಎಂದಾಗ, ಯಾಮುನರು - "ಯಾವ ನಿಧಿ ? ಅದೆಲ್ಲಿದೆ ? " ಎಂದು ಕುತೂಹಲ ತೋರಿದರು.
"ಆ ನಿಧಿ ಬೇಕಾದರೆ ನೀವು ನನ್ನೊಡನೆ ಬರಬೇಕು. ಎರಡು ನದಿಗಳ ಮಧ್ಯದಲ್ಲಿ ಏಳು ಗೋಡೆಗಳ ನಡುವೆ - ಆ ನಿಧಿ ಇದೆ. ಒಂದು ಘಟಸರ್ಪವು ಆ ನಿಧಿಯನ್ನು ಕಾಯುತ್ತಿದೆ. ಹನ್ನೆರಡು ವರ್ಷಕ್ಕೊಮ್ಮೆ ಒಬ್ಬ ರಾಕ್ಷಸನು ಬಂದು ಈ ನಿಧಿಯನ್ನು ಸಂದರ್ಶಿಸಿ ಹೋಗುತ್ತಾನೆ. ಮಂತ್ರಪೂರ್ವಕವಾಗಿ ಆರಾಧನೆಯನ್ನು ಮಾಡಿದಾಗ ಮಾತ್ರವೇ ಈ ನಿಧಿಯು ಲಭ್ಯವಾಗುತ್ತದೆ..." ಎಂದು ಒಗಟಿನಂತೆ, ಪೌರಾಣಿಕ ಧಾಟಿಯಲ್ಲಿ ರಾಮ ಮಿಶ್ರರು ಹೇಳಿದಾಗ, ಯಾಮುನರು ಸಹಭಾವವನ್ನು ವ್ಯಕ್ತಪಡಿಸಿ, ರಾಮ ಮಿಶ್ರರನ್ನು ಹಿಂಬಾಲಿಸಲು ಒಪ್ಪಿ, "ನನ್ನ ಸೇವಕರನ್ನು ನಮ್ಮ ಸಹಾಯಕ್ಕಾಗಿ ಕರೆತರುತ್ತೇನೆ.." ಎಂದಾಗ, ರಾಮ ಮಿಶ್ರರು ನಕ್ಕರು. "ಯಾವ ಸೇವಕರ ಸಹಾಯದ ಅಗತ್ಯವೇ ಇಲ್ಲದಂತಹ ನಿಧಿಯಿದು. ನೀವು ಒಬ್ಬರೇ ಬರಬೇಕು" ಎಂದು ಹೇಳಿ ಯಾಮುನರನ್ನು ಒಪ್ಪಿಸಿದರು.
ಹಾಗೆ ಯಾಮುನರ ಜೊತೆಯಾಗಿ ಹೋಗುತ್ತಿದ್ದ ರಾಮ ಮಿಶ್ರರು ಆಧ್ಯಾತ್ಮಿಕ ಸಂಭಾಷಣೆಗಳಲ್ಲಿ ತೊಡಗಿಕೊಂಡರು. ಭಗವದ್ಗೀತೆಯನ್ನು ತನ್ಮಯತೆಯಿಂದ ಹಾಡತೊಡಗಿದರು. ಗೀತೆಯ ಶ್ಲೋಕಗಳು ಯಾಮುನರ ಅಂತರಂಗವನ್ನು ಆಗ ಪ್ರಚೋದಿಸತೊಡಗಿದವು. ಅಧ್ಯಾತ್ಮದ ಹಾದಿಯಿಂದ ಬಹುಕಾಲ ವಿಮುಖರಾಗಿದ್ದ ಯಾಮುನರಿಗೆ ಸತ್ಸಂಗವು ಒದಗಿದಂತಾದಾಗ ಪೂರ್ವ ಸ್ಮರಣೆಯು ಮರುಕಳಿಸತೊಡಗಿತು. ಹಳೆಯ ನೆನಪುಗಳಿಂದ ಭಾವುಕರಾಗಿ, ಕಣ್ಣೀರು ಹರಿಯತೊಡಗಿತು. "ಗುರುಗಳೇ, ಇಂದಿನಿಂದ ನಾನು ನಿಮ್ಮ ಶಿಷ್ಯ. ಗೀತೆಯನ್ನು ಸಾದ್ಯಂತವಾಗಿ, ನಾನು ಮತ್ತೊಮ್ಮೆ ಅಧ್ಯಯನ ಮಾಡಬೇಕು.." ಎಂದರು.
"ಮಗೂ, ಗೀತೆಯ ಅಧ್ಯಯನಕ್ಕೆ ಸುದೀರ್ಘ ಕಾಲ ಬೇಕಾಗುತ್ತದೆ. ಇಲ್ಲೇ ನಾವು ತಂಗಬೇಕಾಗುತ್ತದೆ. ಅದಕ್ಕಾಗಿ ನಿನ್ನ ಕೌಟುಂಬಿಕ ವ್ಯವಸ್ಥೆಯ ನಿರ್ವಹಣೆಗೆ ಬೇಕಾದ ಪರ್ಯಾಯ ವ್ಯವಸ್ಥೆಯನ್ನು ಮಾಡಿದರೆ - ಆಗ ನಿಶ್ಚಿಂತೆಯಿಂದ ಅಧ್ಯಯನ ಮಾಡಬಹುದು.." ಎಂದರು ರಾಮ ಮಿಶ್ರರು. ಒಪ್ಪಿದ ಯಾಮುನರು ತನ್ನ ಸಾಂಸಾರಿಕ ಜವಾಬ್ದಾರಿಗಳನ್ನು ಮಕ್ಕಳಿಗೆ ವಹಿಸಿ ಕೊಟ್ಟರು. ಏಕಾಗ್ರ ಅಧ್ಯಯನಕ್ಕೆ ಸಿದ್ಧರಾದರು.
ಗೀತಾ ಪ್ರವಚನವು ಮುಂದೆ ಸಾಗಿದಂತೆ ಯಾಮುನರನ್ನು ಆವರಿಸಿದ್ದ ಲೌಕಿಕ ಪರದೆಯು ಕಳಚಿಹೋಯಿತು. "ಇಷ್ಟು ವರ್ಷ ಇಂಥ ಅಲೌಕಿಕ ಅನುಭವವನ್ನು ನಾನು ಕಳೆದುಕೊಂಡೆನಲ್ಲ ? ಇಷ್ಟು ಕಾಲ ನಾನು ಎಲ್ಲರನ್ನೂ ಆಳಿದೆ; ವಿನಮ್ರಭಾವವು ನನಗೆ ಬರಲೇ ಇಲ್ಲ. ದೇವರ ಸೇವಕನಾಗುವ ಆನಂದದ ಮುಂದೆ ಇತರರ ಮೇಲಣ ಒಡೆತನವು ಎಷ್ಟರದು ? ಇನ್ನು ಮೇಲೆ ದೇವರ ಸೇವೆಗೇ ನನ್ನ ಜೀವನವು ಮುಡಿಪು. ತಾತನಾದ ನಾಥಮುನಿಯು ಇಟ್ಟಿರುವ "ಧನರಾಶಿ"ಯನ್ನು ಕಟ್ಟಿಕೊಂಡು ನಾನೇನು ಮಾಡಬೇಕು ?" ಎಂದುಕೊಳ್ಳತೊಡಗಿದರು - ಯಾಮುನರು.
ಯಾಮುನರಲ್ಲಿ ಆಗುತ್ತಿದ್ದ ಪರಿವರ್ತನೆಯನ್ನು ಗಮನಿಸುತ್ತಿದ್ದ ರಾಮ ಮಿಶ್ರರು ಗೀತೆಯ ಹದಿನೆಂಟನೆಯ ಅಧ್ಯಾಯದ ಶ್ಲೋಕವನ್ನು ಹೇಳಿದರು.
ಎಲ್ಲ ಧರ್ಮಗಳನ್ನೂ ಪರಿತ್ಯಜಿಸಿ ನನ್ನಲ್ಲೇ ಶರಣಾಗತಿ ಹೊಂದು. ಅಂಜಿಕೆ ಬೇಡ. ನಾನು ನಿನ್ನನ್ನು ಸರ್ವ ಪಾಪಗಳಿಂದಲೂ ವಿಮೋಚನೆಗೊಳಿಸುವೆನು.
ಗೀತಾ ಪ್ರವಚನವು ಮುಗಿದ ಮೇಲೆ ರಾಮ ಮಿಶ್ರರು ಯಾಮುನರೊಂದಿಗೆ ಪ್ರಯಾಣವನ್ನು ಮುಂದುವರಿಸಿದರು. ನಾಥಮುನಿಗಳು ಇಟ್ಟಿರುವ ನಿಧಿಯು ಇನ್ನೇಕೆ ? ಎಂಬ ಭಾವನೆಯೊಂದಿಗೇ ಯಾಮುನರೂ ಗುರುಗಳೊಂದಿಗೆ ಹೆಜ್ಜೆ ಹಾಕುತ್ತಿದ್ದಾರೆ. ಯಾಮುನರ ಮನಸ್ಸನ್ನು ಓದಿದ್ದರೂ ರಾಮ ಮಿಶ್ರರು ಮಾತ್ರ ಏನೂ ತಿಳಿಯದಂತೆ ಗಂಭೀರವಾಗಿ ನಡೆದಿದ್ದಾರೆ. ಗುರುಗಳಿಗೆ ಏನನ್ನೂ ಪ್ರತಿಹೇಳುವ ಧೈರ್ಯ ಯಾಮುನರಿಗಿಲ್ಲ. ಅಂತೂ ಕೊನೆಗೆ - ಆ ನಿಧಿ ಇರುವ ಸ್ಥಳವನ್ನು ಇಬ್ಬರೂ ತಲುಪಿದರು. ಹೊಳೆಯನ್ನು ದಾಟಿ, ಶ್ರೀ ರಂಗನಾಥನ ದೇವಾಲಯದ ಪ್ರಾಕಾರಗಳನ್ನು ದಾಟಿ ಬಂದರು. ದೇವರ ಸಮ್ಮುಖದಲ್ಲಿ ನಿಂತರು.
ಶೇಷಸರ್ಪದ ಮೇಲೆ ಪವಡಿಸಿದ್ದಾನೆ - ಶ್ರೀಮನ್ನಾರಾಯಣ. ಅವನ ಪಾದದ ಬಳಿಯಲ್ಲಿ ಶ್ರೀ ಲಕ್ಷ್ಮಿ. ಈ ದಿವ್ಯ ದೃಶ್ಯವನ್ನು ಯಾಮುನರಿಗೆ ತೋರಿಸುತ್ತ, ರಾಮ ಮಿಶ್ರರು ಹೇಳಿದರು -
"ಇಗೋ ಇಲ್ಲಿದೆ ! ನಿಮ್ಮ ತಾತ ಇಟ್ಟುಹೋದ ನಿಧಿ. ಇಲ್ಲಿಗೆ ನನ್ನ ಕರ್ತವ್ಯ ಮುಗಿಯಿತು.."
ಶ್ರೀ ರಂಗನಾಥನಿಗೆ ಪೊಡಮಟ್ಟ ಯಾಮುನರಿಗೆ ಅನೂಹ್ಯ ಅನುಭವವಾಯಿತು. ಅಂದಿನಿಂದ ಅವರು ರಂಗನಾಥನ ದಾಸ್ಯವೃತ್ತಿ ಕೈಗೊಂಡರು. ಅಜ್ಜ ನಾಥಮುನಿಗಳು ರೂಢಿಸಿ ಪ್ರಚಾರಕ್ಕೆ ತಂದಿದ್ದ ಶ್ರೀ ಸಂಪ್ರದಾಯವನ್ನು ಪುನಃ ಪ್ರತಿಷ್ಠಾಪಿಸುವ ಮಹತ್ಕಾರ್ಯದಲ್ಲಿ ಯಾಮುನರು ನಿರತರಾದರು.
ಯಾಮುನರಿಗೆ ರಾಮ ಮಿಶ್ರರು ತೋರಿಸಿದ್ದ ನಿಧಿಯೇ ಶ್ರೀರಂಗ ಕ್ಷೇತ್ರದ ಒಡೆಯ ಶ್ರೀ ರಂಗನಾಥ. ಪೌರಾಣಿಕ ಹಿನ್ನೆಲೆಯಂತೆ - ಶ್ರೀ ರಂಗನಾಥನು ಇಕ್ಷ್ವಾಕು ವಂಶದ ಅರಸರ ಮನೆದೇವರು. ಶ್ರೀ ರಾಮನು ತನ್ನ ಪಟ್ಟಾಭಿಷೇಕದ ನಂತರ ಶ್ರೀ ರಾಮನಿರುವ ಅಯೋಧ್ಯೆಯನ್ನು ಬಿಟ್ಟು ಲಂಕೆಗೆ ಹಿಂದಿರುಗಲು ಹಿಂಜರಿಯುತ್ತಿದ್ದ ವಿಭೀಷಣನಿಗೆ ತನ್ನ ಮನೆದೇವರಾದ ರಂಗನಾಥನ ಮೂರ್ತಿಯನ್ನೇ ಕೊಟ್ಟು, ಸಂತೈಸಿ, ಲಂಕೆಗೆ ಕಳಿಸಿದ್ದನು ಎಂಬ ಕತೆಯಿದೆ. ಈ ವಿಗ್ರಹವನ್ನು ಲಂಕೆಯಲ್ಲಿ ಪ್ರತಿಷ್ಠಾಪಿಸಿ ಪೂಜಿಸುವ ಸಂಕಲ್ಪದಿಂದ ವಿಭೀಷಣನು ಕೊಂಡೊಯ್ಯುತ್ತಿದ್ದಾಗ ದಾರಿಯಲ್ಲಿ, ಶ್ರೀರಂಗ ಕ್ಷೇತ್ರದಲ್ಲಿ ನೆಲೆಸಬೇಕೆಂಬುದು ದೈವೇಚ್ಛೆಯೆಂದು ವಿಭೀಷಣನಿಗೆ ತೋರಿತಂತೆ. ಆದ್ದರಿಂದ ವಿಭೀಷಣನು ಶ್ರೀರಂಗದಲ್ಲಿಯೇ ರಂಗನಾಥನನ್ನು ಪ್ರತಿಷ್ಠಾಪಿಸಿದನಂತೆ. ಚಿರಂಜೀವಿಯಾದ ವಿಭೀಷಣನು ಈಗಲೂ ಹನ್ನೆರಡು ವರ್ಷಕ್ಕೊಮ್ಮೆ ಶ್ರೀರಂಗಕ್ಕೆ ಬಂದು, ರಂಗನಾಥನ ದರ್ಶನ ಪಡೆಯುವನು ಎಂಬುದು ನಂಬಿಕೆ ಮತ್ತು ಸ್ಥಳ ಪುರಾಣ.
ಯಾಮುನಾಚಾರ್ಯರು ಗುರು ಉಯ್ಯಕ್ಕೊಂಡಾರ್ (ರಾಮ ಮಿಶ್ರ) ಅವರಿಂದ ಆಧ್ಯಾತ್ಮಿಕ ದೀಕ್ಷೆಯನ್ನು ಪಡೆದ ನಂತರ, "ಸಿದ್ಧಿ ತ್ರಯ" ಮುಂತಾದ ಹಲವಾರು ಗ್ರಂಥಗಳನ್ನು ರಚಿಸಿದರು. ಉಪನಿಷದ್ವಾಕ್ಯಗಳನ್ನು ಇವರು ವಿಶಿಷ್ಟಾದ್ವೈತ ದರ್ಶನಕ್ಕೆ ಅನ್ವಯಗೊಳಿಸಿಕೊಂಡ ರೀತಿಯು ವಿದ್ವಜ್ಜನರ ಪ್ರಶಂಸೆಗೆ ಪಾತ್ರವಾಗಿದೆ. "ಬ್ರಹ್ಮ ಒಂದೇ; ಅದಕ್ಕೆ ಎರಡನೆಯದಿಲ್ಲ" ಎಂಬುದನ್ನು ತಾರ್ಕಿಕವಾಗಿ ಸಾಧಿಸುತ್ತ, ತಮ್ಮ ಸಿದ್ಧಾಂತವಾದ ವಿಶಿಷ್ಟಾದ್ವೈತವು ಇದನ್ನೇ ಸಾರುತ್ತದೆ ಎಂದು ಸಾಧಿಸಿ ಸ್ಥಾಪಿಸಿದವರು - ಯಾಮುನಾಚಾರ್ಯರು. ಶ್ರೀ ರಾಮಾನುಜರು ಮುಂದೆ ರಚಿಸಿದ ಶ್ರೀಭಾಷ್ಯದಲ್ಲಿ ಅವರು - ಯಾಮುನರ "ಸಿದ್ಧಿ ತ್ರಯ" ಗ್ರಂಥದ ತಿರುಳನ್ನು ಧಾರಾಳವಾಗಿ ಉದಾಹರಿಸಿದ್ದಾರೆ. ಇನ್ನೂ ಅನೇಕ ಗ್ರಂಥಗಳನ್ನು ರಚಿಸಿದ್ದರೂ ಯಾಮುನರು ಅಂದುಕೊಂಡ ಅವರ ಸಂಕಲ್ಪಗಳೆಲ್ಲವೂ ಸಾಕಾರವಾಗಲಿಲ್ಲ. ಯಾಮುನರ ದೇಹವನ್ನು ಮುಪ್ಪು ಆವರಿಸಿಕೊಂಡಿತ್ತು. ತಮ್ಮ ಕೊನೆಯ ದಿನಗಳಲ್ಲಿ, ಯಾಮುನರು "ಸ್ತೋತ್ರ ರತ್ನ" ಎಂಬ ಶ್ರೇಷ್ಠ ಕೃತಿಯನ್ನು ರಚಿಸಿ, ಅದನ್ನು ಶ್ರೀ ರಂಗನಾಥನ ಮುಂದೆ ಹಾಡಿಕೊಂಡರು. ಹೀಗೆ ಯಾಮುನರು ಉಳಿಸಿಹೋದ ಸಂಕಲ್ಪಿತ ಕಾರ್ಯಗಳನ್ನು, ಅವರೇ ತಮ್ಮ ಕೊನೆಗಾಲದಲ್ಲಿ ಇಚ್ಛಿಸಿದಂತೆ, ಅವರ ಮಾನಸ ಶಿಷ್ಯರಾದ ಶ್ರೀ ರಾಮಾನುಜರು - ಮುಂದೆ ಸಮರ್ಪಕವಾಗಿ ಪೂರೈಸಿದರು. ಈ ಸಾಂಸ್ಕೃತಿಕ ಪರಂಪರೆಯು ಬೆಳೆಯಿತು.
ಶ್ರೀ ಯಾಮುನಾಚಾರ್ಯರು ಅಂತಿಮ ದಿನಗಳಲ್ಲಿ ತಮ್ಮೊಡನಿದ್ದ ಪೆರಿಯ ನಂಬಿ, ಮಹಾಪೂರ್ಣ ಮುಂತಾದ ಹಿರಿಯ ಶಿಷ್ಯರಿಗೆ ಉಪದೇಶಾಮೃತವನ್ನು ನೀಡುತ್ತಿದ್ದರು. "ಎಂದಿಗೂ ರಂಗನಾಥನ ಪೂಜೆಯನ್ನು ತಪ್ಪಿಸಬೇಡಿ. ತಿರುಪ್ಪಾಣಾಳ್ವಾರರ ಆರಾಧನೆಯನ್ನು ತಪ್ಪಿಸಬೇಡಿ. ಅಂತೂ ಕೊನೆಗೆ ನನಗೆ ಬಿಡುಗಡೆಯು ಸಿಗುತ್ತಿದೆ. ಯಾರೂ ಆತಂಕಗೊಳ್ಳಬಾರದು. ಪ್ರಪನ್ನನಾದವನು (ಆತ್ಮ ಸಮರ್ಪಣೆ ಮಾಡಿಕೊಂಡವನು) ಯಾವತ್ತೂ ತನ್ನ ಭವಿಷ್ಯದ ಚಿಂತೆ ಮಾಡುವುದಿಲ್ಲ. ಎಲ್ಲವೂ ಭಗವದಿಚ್ಛೆ. ಕರ್ಮದ ಫಲವೇ ಈ ಜೀವನ. ಕರ್ಮ ತೀರಿತೆಂದರೆ ಈ ಜೀವನವೂ ಕೊನೆಗೊಳ್ಳಬೇಕು. ನೀವೆಲ್ಲರೂ ನನ್ನ ಇಚ್ಛೆ ಇದ್ದಷ್ಟು ಕಾಲ ಬದುಕಿರಬೇಕು. ನನ್ನ ನಂತರ ಪೆರಿಯಾರರನ್ನು ನಿಮ್ಮ ಮಾರ್ಗದರ್ಶಕರಾಗಿ ಅನುಸರಿಸತಕ್ಕದು. ಇನ್ನು ಹೆಚ್ಚು ಕಾಲ ನನಗೆ ಉಳಿದಿಲ್ಲ. ಈಗಲೇ ಮಹಾಪೂರ್ಣನು ಕಾಂಚಿಗೆ ಹೋಗಿ ರಾಮಾನುಜರನ್ನು ಕರೆತನ್ನಿ. ನನ್ನ ತಾತ ನಾಥಮುನಿಯು ಇಟ್ಟ ನಿಧಿಯನ್ನು ನಾನು ಕಣ್ಣು ಮುಚ್ಚುವ ಮುನ್ನ ರಾಮಾನುಜನಿಗೆ ತಲುಪಿಸಬೇಕು..."
ಆದರೆ ಅದಾಗಲೇ ಹಣ್ಣು ಹಣ್ಣು ಮುದುಕರಾಗಿದ್ದ ಯಾಮುನರು ರಾಮಾನುಜರನ್ನು ಕರೆತರುವ ವರೆಗೆ ಬದುಕಿ ಉಳಿಯಲಿಲ್ಲ. ವೃಷಭ ಮಾಸದಲ್ಲಿ ನಡೆಯುವ ಶ್ರೀರಂಗನ ವಿಶೇಷೋತ್ಸವದಲ್ಲಿಯೂ ಭಾಗಿಯಾದರು. ಅಂದು ಶ್ರೀರಂಗನನ್ನು ಕಣ್ದಣಿಯೆ ಮನದಣಿಯೆ ಪ್ರಾರ್ಥಿಸಿ, ಅಲ್ಲಿ ನೆರೆದಿದ್ದ ಭಕ್ತಗಡಣ ಮತ್ತು ಶಿಷ್ಯಗಡಣಕ್ಕೆ ನಮಸ್ಕರಿಸಿದರು. "ನಾನು ತಿಳಿದೋ ತಿಳಿಯದೆಯೋ ಮಾಡಿರಬಹುದಾದ ಅಪಚಾರಗಳನ್ನೆಲ್ಲ ಮರೆತು ನನ್ನನ್ನು ಕ್ಷಮಿಸಿ. ಕರ್ತವ್ಯವನ್ನು ಮರೆಯಬೇಡಿ..." ಎಂದರು.
ಯಾಮುನರು ಪದ್ಮಾಸನದಲ್ಲಿ ಕುಳಿತರು. ಪ್ರಾರ್ಥನಾ ಶ್ಲೋಕಗಳನ್ನು ಪಠಿಸುವಂತೆ ಶಿಷ್ಯರಿಗೆ ಹೇಳಿದರು. ಶ್ವಾಸವನ್ನು ಬಂಧಿಸಿದರು. ತಮ್ಮ ಆಚಾರ್ಯರನ್ನು ನೆನಸಿಕೊಂಡರು. ಉತ್ಸವದ ಆರನೆಯ ದಿನದಂದು ಮಧ್ಯಾಹ್ನ ಯಾಮುನರು ದೇಹ ತ್ಯಜಿಸಿದರು.
ಆದರೆ ಯಾಮುನರ ಕೊನೆಯ ಆಸೆಯು ಫಲಿಸಲಿಲ್ಲ. ರಾಮಾನುಜರು ಬಂದು ತಲುಪಲಿಲ್ಲ. ಯಾಮುನರ ಪೂರ್ವಾಶ್ರಮದ ಪುತ್ರರಾದ ಪೂರ್ಣರನ್ನು ಮುಂದಿಟ್ಟುಕೊಂಡು ಅಂತ್ಯ ಸಂಸ್ಕಾರದ ಸಿದ್ಧತೆ ನಡೆಸಲಾಯಿತು. ಕಾವೇರಿಯ ತೀರದಲ್ಲಿ ತೋಡಿದ್ದ ಹೊಂಡದಲ್ಲಿ ಪಾರ್ಥಿವ ಶರೀರವನ್ನು ಇರಿಸಿದರು. ಆಗಲಾದರೂ ರಾಮಾನುಜರು ಬರಬಹುದು ಎಂದುಕೊಂಡು ಸುತ್ತಲೂ ವೀಕ್ಷಿಸುತ್ತಿದ್ದರು. ರಾಮಾನುಜರನ್ನು ಕರೆತರಲ್ಲು ಹೋಗಿದ್ದ ಶಿಷ್ಯ ಮಹಾಪೂರ್ಣರಿಗೆ ಗುರುಗಳ ಅಂತ್ಯ ಕಾಲದಲ್ಲಿ ಜೊತೆಗಿರುವ ಭಾಗ್ಯವಿರಲಿಲ್ಲ. ಅವರು ಅವಸರದಿಂದ ರಾಮಾನುಜರನ್ನು ಕರೆತಂದಾಗ, ಶ್ರೀರಂಗದ ಹೊರವಲಯದಲ್ಲಿಯೇ "ಆಳವಂದಾರರು ಇನ್ನಿಲ್ಲ" ಎಂದು ತಿಳಿದಾಗ ಅವರಿಬ್ಬರೂ ಹತಾಶೆಯಿಂದ ಕುಸಿದರು. "ಬದುಕಿದ್ದಾಗ ಯಾಮುನರನ್ನು ನೋಡಿ ಮಾತನಾಡುವ ಪುಣ್ಯವು ನನಗೆ ಇಲ್ಲವಾಯಿತೆ ?" ಎಂದು ರಾಮಾನುಜರೂ ಶೋಕಿಸಿದರು. ಸಮಾಧಿಯಾಗುವ ಮುನ್ನ ಅವರ ಶರೀರದ ದರ್ಶನವನ್ನಾದರೂ ಮಾಡುತ್ತೇನೆ" ಎಂದುಕೊಂಡ ರಾಮಾನುಜರು - ಸಮಾಧಿಯ ಸ್ಥಳಕ್ಕೆ ಧಾವಿಸಿದರು.
ಇನ್ನೂ ತೇಜಸ್ಸನ್ನು ಹೊರಸೂಸುತ್ತಿದ್ದ ಯಾಮುನರ ಕಳೇಬರವನ್ನು - ರಾಮಾನುಜರು ದೃಷ್ಟಿಯಿಂದಲೇ ಹೀರಿಕೊಂಡರು. "ನನ್ನ ಸರ್ವಸ್ವವೂ ಇನ್ನು ನಿನ್ನದೇ. ಇದನ್ನು ಧರಿಸಿ ಧರ್ಮದ ನಾವೆಯನ್ನು ಮುನ್ನಡೆಸು.." ಎಂಬಂತೆ ಮಲಗಿದ್ದ ಯಾಮುನಾಚಾರ್ಯರ ತಪಸ್ಸಿನ ಶಕ್ತಿಯನ್ನೆಲ್ಲ ಹೀರುವಂತೆ ರಾಮಾನುಜರು ಪ್ರಕಟವಾದರು; ಪಾದವನ್ನು ಮುಟ್ಟಿ ನಮಸ್ಕರಿಸಿದರು.
"ಓ ಮುನಿಶ್ರೇಷ್ಠರೇ, ತಮ್ಮ ಸಂಕಲ್ಪದಂತೆ - ಪರಾಶರರಿಗೆ ಸಲ್ಲಿಸುವ ಕೃತಜ್ಞತೆಯ ರೂಪದಲ್ಲಿ ಶ್ರೀ ವೈಷ್ಣವ ಧರ್ಮ ಪ್ರಸಾರ ನಡೆಯುತ್ತದೆ. ನಮ್ಮಾಳ್ವಾರರ ಕೃತಿಯಾದ "ತಿರುವಾಯ್ ಮೊಳಿ"ಗೆ ವಾಕ್ಯಾರ್ಥವನ್ನು ಬರೆದು ಆಳ್ವಾರರಿಗೆ ಪ್ರೀತಿಯಿಂದ ಸಮರ್ಪಿಸುತ್ತೇನೆ. ವ್ಯಾಸಮಹರ್ಷಿಯ ವೇದಾಂತ ಸೂತ್ರಗಳಿಗೆ ವಿಶಿಷ್ಟಾದ್ವೈತದ ದೃಷ್ಟಿಯಲ್ಲಿ ಭಾಷ್ಯವನ್ನೂ ಬರೆಯುತ್ತೇನೆ. ತಮ್ಮ ಕೊನೆಗಾಲದ ಈ ಮೂರೂ ಆಸೆಗಳನ್ನು ನೆರವೇರಿಸುತ್ತೇನೆ. ಹಾಗೆ ಪ್ರತಿಜ್ಞೆ ಮಾಡುತ್ತೇನೆ..." ಎಂದು ರಾಮಾನುಜರು ಸಂಕಲ್ಪಿಸಿಕೊಂಡರು. ಮುಂದೆ, ಈ ಪರಂಪರೆಯ ಉತ್ತರಾಧಿಕಾರಿಯೂ ಆದರು.
****** ****** ****** ****** ******
ಉದ್ದೇಶಿತ ಎಲ್ಲ ಆಸೆಗಳೂ ಒಂದೇ ಬದುಕಿನಲ್ಲಿ ಪೂರ್ಣವಾಗಲಾರವು. ಲೋಕವ್ಯಾಪಾರಗಳನ್ನು ಹೆಚ್ಚಿನ ಹೊಣೆಗಾರಿಕೆಯಿಂದ ನಿರ್ವಹಿಸಬಲ್ಲ ಜೀವನ ಪಾತ್ರಗಳು ಅಲ್ಲೊಮ್ಮೆ ಇಲ್ಲೊಮ್ಮೆ ಮಾತ್ರವೇ ಜನ್ಮ ತಾಳುತ್ತವೆ. ತಮ್ಮ ನಿಗದಿತ ಜೀವಿತಾವಧಿಯಲ್ಲಿ ಅಸಾಮಾನ್ಯ ಎನ್ನಿಸಿಕೊಳ್ಳುವ ಸಾಧನೆಗಳನ್ನು ಅನಾಯಾಸವಾಗಿ ನಿರ್ವಹಿಸಿಬಿಡುತ್ತವೆ. ದೈವಕ ಉಪಕರಣಗಳಂತೆ ಭಾಸವಾಗುವ ಅಂತಹ ಬದುಕುಗಳಲ್ಲಿ ತರ್ಕಾತೀತವಾದ ತಿರುವುಗಳೂ ಸಂಭವಿಸುತ್ತವೆ ! ಬದುಕಿನ ಓಟವನ್ನು ಗಮನಿಸಿದರೆ - ಶ್ರೀ ಯಾಮುನಾಚಾರ್ಯರೂ ಅಂತಹ ಒಂದು ದೈವಕ ಉಪಕರಣ ಅನ್ನಿಸುತ್ತದೆ.
****** ****** ****** ****** ******
ಯಾಮುನರ ಬದುಕು ಸಾಧನೆಗಳಿಗೆ ಹೋಲಿಸಿದರೆ ಇಲ್ಲಿ ನಿರೂಪಿಸಲ್ಪಟ್ಟ ಭಾಗವು ತುಂಬ ಕಿರಿದೆನ್ನಿಸುವಂಥದ್ದೇ ಹೌದು. ಆದರೆ ಪ್ರಸ್ತುತದ ಸಾಮಾಜಿಕ ಕೋಲಾಹಲಗಳನ್ನು ಗಮನಿಸುವವರಿಗೆ - ಈ ಕಥಾನಕದ ಮಹತ್ವವು ಅರಿವಿಗೆ ಬರುತ್ತದೆ. ನಿಜವಾದ ಪಾಂಡಿತ್ಯವು - ಯಾವತ್ತೂ ಅಡ್ಡದಾರಿಯ ಮುಸುಕಿನ ಗುದ್ದಾಟ ಅಥವ ಮೂರ್ಖ ವ್ಯಾಖ್ಯಾನಗಳಿಗೆ ತೊಡಗುವುದಿಲ್ಲ ಅಥವ ಹಾಗೆ ತೊಡಗಿಕೊಳ್ಳಬಾರದು ಎಂಬುದು ಈ ಕಥೆಯ ಹೂರಣ.
ಯಾವುದೇ ಪಂಡಿತ ಎಂದೆನ್ನಿಸಿಕೊಂಡವರು ತಮ್ಮತಮ್ಮ ಪಾಂಡಿತ್ಯಕ್ಕೆ ಶೋಭೆ ತರುವಂತೆ ಬದುಕನ್ನು ಸಾಗಿಸಬೇಕಾಗುತ್ತದೆ. ವ್ಯತಿರಿಕ್ತವಾದದ್ದೇ ಆದರೆ... ಯಾವುದೇ ಅತ್ಯುನ್ನತ ಹುದ್ದೆ ಅಥವ ಸ್ಥಾನವು ಅಂತಹ ಪಂಡಿತರ ಮಾನವನ್ನು ತಾನೇತಾನಾಗಿ ರಕ್ಷಿಸಲಾಗುವುದಿಲ್ಲ. ತತ್ವ ವಿಚಾರಗಳು, ಅಧ್ಯಾತ್ಮದ ನಡೆಯಲ್ಲಿ ಎದುರಾಗುವ ಜಟಿಲ ಸಮಸ್ಯೆಗಳು, ಸಾಹಿತ್ಯಾತ್ಮಕ ಒಗಟು ರಹಸ್ಯಗಳು ಮುಂತಾದ ವಿಷಯಗಳ ಜಿಜ್ಞಾಸೆ, ಪಂಡಿತ ಪರಿಧಿಯಲ್ಲಿ ಜ್ಞಾನವಿಸ್ತಾರದ ದೃಷ್ಟಿಯಿಂದ ನಡೆಸಲಾಗುವ ಯಾವುದೇ ವಾದ ತಾರ್ಕಿಕತೆಗಳಿಗೆ ಅರ್ಥವಿದೆ; ಅದರಿಂದ ಉಭಯತ್ರರಿಗೂ ಪ್ರಯೋಜನವಿದೆ; ಇರಬೇಕು. ಆದರೆ ಸ್ವಾರ್ಥಲೇಪಿತ ಅಥವ ಅಹಂಕಾರವನ್ನು ಸ್ಥಾಪಿಸಲೋಸುಗ "ಹಫ಼್ತಾ" ಧಂದೆಯನ್ನು ನಡೆಸುವ ಶೈಲಿಯ ಕೀಳುಮಟ್ಟಕ್ಕೆ "ಪಂಡಿತ ತರ್ಕಗಳು" ಇಳಿದಾಗ - ಪಂಡಿತ ಮಾತ್ರ ಸೋಲುವುದಲ್ಲ; ಪಾಂಡಿತ್ಯವೂ ಸೋತುಹೋಗುತ್ತದೆ. ಸಾಮಾಜಿಕ ತಿರಸ್ಕಾರಕ್ಕೆ ಪಾತ್ರವಾಗುತ್ತದೆ. ಇದಕ್ಕೆ ಅಂದಿನ ಪಂಡಿತ - "ವಿದ್ವಜ್ಜನ ಕೋಲಾಹಲನೇ" ಸಾಕ್ಷಿ.
ಸುಮಾರು ೯ ಶತಮಾನಗಳಷ್ಟು ಹಿಂದಿನ ಕತೆಯಿದು. ಮನು ಸ್ಮೃತಿಯೇ ಸಂವಿಧಾನವಾಗಿದ್ದ ಕಾಲವದು. ಇವತ್ತಿನ "ಭಾರತೀಯ ಹಿಂದೂ Code - ಹಿಂದೂ ಕಾನೂನು" ಎಂಬ ಸಂವಿಧಾನ ಭಾಗದಲ್ಲಿ - ಇಂದಿಗೂ ಮನುಸ್ಮೃತಿಯ ಪ್ರಭಾವವಿರುವುದನ್ನು ಗಮನಿಸಬಹುದು.
ಅಂದಿನ ಕಾಲದಲ್ಲಿ ರಾಜಾಶ್ರಯದಲ್ಲಿ, ವಿದ್ವಜ್ಜನರ ಸಮಕ್ಷಮದಲ್ಲಿ ಆಗಾಗ ನಡೆಯುತ್ತಿದ್ದ ಮನೋಮಂಥನಗಳು, ಇಂತಹ ತರ್ಕ ಸಂವಾದಗಳೆಲ್ಲವೂ ಬುದ್ಧಿಯ ಕಸರತ್ತುಗಳು. ಅಂದಿನ ಪಂಡಿತರು ತಾವು ಪಡೆದುಕೊಂಡ ಜ್ಞಾನವನ್ನು - ತಮಗೆ ತಾವೇ ಒರೆಗೆ ಹಚ್ಚಿ ನೋಡುತ್ತಿದ್ದ ಸಂದರ್ಭಗಳೂ ಹೌದು. ತಾವು ಕಲಿತ ವಿದ್ಯೆಯನ್ನು, ತನ್ಮೂಲಕ ತಮ್ಮನ್ನು ತಾವೇ ಪ್ರಯೋಗಕ್ಕೆ ಒಡ್ಡಿಕೊಳ್ಳುತ್ತಿದ್ದ ಪ್ರಾಯೋಗಿಕ ಅವಕಾಶಗಳೂ ಆಗಿ, ಅಂತಹ ಪಂಡಿತ ಘರ್ಷಣೆಗಳು ಜನಾಕರ್ಷಕ ಆಮೋದ ಕೂಟಗಳಾಗಿರುತ್ತಿದ್ದುದೂ ಇತ್ತು. ಜ್ಞಾನವನ್ನು ತಿಕ್ಕಿ ತೇದು ಸುಗಂಧ ಹೊಮ್ಮುತ್ತಿದ್ದುದೂ ಇತ್ತು; ಕೆಲವೊಮ್ಮೆ ವಾದ ಎಂಬುದು ವೈಯ್ಯಕ್ತಿಕ ನೆಲೆಗೆ ಇಳಿದು, ವಕ್ರ ಅಹಂಭಾವದಲ್ಲಿ ಸ್ವಕೇಂದ್ರಿತವಾಗಿ, ದುರ್ಗಂಧದಲ್ಲಿ ಪರ್ಯವಸಾನವಾಗುತ್ತಿದ್ದುದೂ ಇತ್ತು. ಕೋಲಾಹಲನಂತಹ ದುರಭಿಮಾನೀ ಪಂಡಿತರ ಸೊಕ್ಕು ಮುರಿಯುವ ಚಮತ್ಕಾರಿಕ ಭಾಗವಾಗಿಯೂ ಒಮ್ಮೊಮ್ಮೆ ಪ್ರದರ್ಶನಗೊಳ್ಳುತ್ತಿದ್ದರೂ... ಅಲ್ಲಿಯೂ ವ್ಯರ್ಥ ಕಡೆತವೆಂದಾಗದೆ, "ನವನೀತದ" ಸಾಕ್ಷಾತ್ಕಾರವಾಗುತ್ತಿತ್ತು. ಜ್ಞಾನಕ್ಕೆ ಸರ್ವೋಪರಿಯಾದ ಮನ್ನಣೆ ಇದ್ದ ಆ ಪೂರ್ವಕಾಲದಲ್ಲಿ, ಇಂತಹ ಜ್ಞಾನಸಂಧಿ, ಸಂಧಾನ, ಸಂಘರ್ಷಗಳು ಆಗಾಗ ನಡೆಯುತ್ತಲೇ ಇದ್ದುದರಿಂದ ಈ ನೆಲದ ಜ್ಞಾನ ಭಂಡಾರವು ಸಮೃದ್ಧವಾಗುತ್ತಲೇ ಬಂತು. ತನ್ಮೂಲಕ ಸಂದು ಕಡಿಯದಂತೆ ಜ್ಞಾನಪ್ರಸಾರವು ಸಾಗುತ್ತಲೇ ಬಂತು.
ಖಂಡತುಂಡಗೊಳಿಸಿ ವಿಜಯಪತಾಕೆ ಹಾರಿಸುವುದನ್ನೇ "ವಾದ" ಎಂದುಕೊಂಡಿದ್ದ "ಕೋಲಾಹಲ ಪಂಡಿತರಿಗೆ" ಇಂದಿನಂತೆ - ಅದೊಂದು ಕಾಲದಲ್ಲಿ - ಗ್ರಹಗತಿ ಚೆನ್ನಾಗಿರಲಿಲ್ಲ. ಗುಡ್ಡಕ್ಕೆ ಗುಡ್ಡ ಅಡ್ಡ ಇರುತ್ತದೆ ಎಂಬ ಪೂರ್ವಸ್ಮರಣೆ ಇಲ್ಲದ ಕೆಲವು ಪಂಡಿತರು - ಇಂದೂ ಇದೇ ಬಗೆಯ "ಸ್ವರತಿಯ ಕೋಲಾಹಲ" ಮಾರ್ಗವನ್ನು ಹಿಡಿದಿರುವುದು ಮಾತ್ರ - ಶೋಚನೀಯ. ಮೂರ್ಖ ವಿದ್ಯೆಗಿಂತ - ದಡ್ಡತನವೇ ಶ್ರೇಷ್ಠ. ಸ್ವಸ್ಥ ಬುದ್ಧಿಯು ಸರ್ವ ಶ್ರೇಷ್ಠ.
"ನಿಜವಾದ ಪಂಡಿತ ಯಾರು ?" ಎಂಬ ಯಕ್ಷನ ಪ್ರಶ್ನೆಗೆ ಯುಧಿಷ್ಠಿರನು ನೀಡಿದ ಉತ್ತರ - "ಧರ್ಮವನ್ನು ಆಚರಣೆಗೆ ತರುವವನೇ - ಪಂಡಿತ". ಅಂದರೆ, ತತ್ವ ಜ್ಞಾನ - ಪಾಂಡಿತ್ಯವನ್ನು ಕ್ರಿಯೆಗೆ ಅಳವಡಿಸಿಕೊಳ್ಳಬಲ್ಲವನೇ ನಿಜವಾದ ಪಂಡಿತ. ಉಪದೇಶಗಳಿಂದ ತನ್ನ ಮತ್ತು ಇತರರ ಬದುಕನ್ನು ಬೆಳಗಿಸುತ್ತ ಬೆಳಗಿಸಿಕೊಳ್ಳುವವನೇ ನಿಜವಾದ ಪಂಡಿತ. ಮಹಾಭಾರತದಲ್ಲಿ ಧರ್ಮದ ಪ್ರತಿನಿಧಿಯಾಗಿ ಚಿತ್ರಣಗೊಂಡ ಧರ್ಮರಾಯನ ಮಾತಿದು.
ಹರಿಯುವ ನೀರಿನಂತೆ ಓಡುವ ಈ ಜೀವನದ ಓಟದಲ್ಲಿ ನಿರಂತರವಾಗಿ ನುಗ್ಗುತ್ತಿರುವ "ಹೊಸ ನೀರಿಗೆ", ಕೆಲವೊಮ್ಮೆ - ಕೆಸರು ನೀರಿಗೂ - ಬದುಕುಗಳು ಮೈಯ್ಯೊಡ್ಡಲೇಬೇಕಾಗುತ್ತದೆ. ಆದರೆ ಗತಕಾಲವನ್ನು "ಹೊಡೆದು ಸಾಯಿಸದೆ" ವಾಸ್ತವದಲ್ಲಿ ಬದುಕಿದರೆ - ಅದೂ ಸಜ್ಜನಿಕೆಯಾಗಿ, ಪಂಡಿತಮಾನ್ಯವಾಗುತ್ತದೆ. ಪಂಡಿತರು ಭಯೋತ್ಪಾದಕರಲ್ಲ. ಆದ್ದರಿಂದ ವಿಕಾರ ಖಂಡನೆಯ ದಂಡನೆಯನ್ನೇ ಜೀವನೋಪಾಯ ಮಾಡಿಕೊಳ್ಳದೆ ಬದುಕನ್ನು ಮಂಡಿಸಬೇಕಾಗುತ್ತದೆ. ಎಲ್ಲರೂ ಬದುಕುವ ಮತ್ತು ಎಲ್ಲರನ್ನೂ ಬದುಕಿಸುವ ಪಂಡಿತ ಹಾದಿಯಿದು. ರೀತಿ ಬೇರೆಯಾದರೂ ಪರಸ್ಪರ ಗೌರವದ ನೀತಿಯು ಬೇರೆಯಾಗದಂತೆ ಸೂಕ್ಷ್ಮವಾಗಿ ಮುನ್ನಡೆಸಬಲ್ಲವನೇ ಪಂಡಿತ. ಯಾಮುನಾಚಾರ್ಯರು - ಅಂತಹ ಉತ್ಕೃಷ್ಟ ಪಂಡಿತರ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತಾರೆ.
ಶ್ರೇಷ್ಠತೆ ಎಂಬುದು ಪ್ರಯತ್ನಶೀಲತೆಯ ಫಲ; ಪುಸ್ತಕದ ಪಾಂಡಿತ್ಯದಿಂದಲೇ ಶ್ರೇಷ್ಠತೆ ಸಂಭವಿಸುವುದಿಲ್ಲ. ಯಾವುದೇ ಔನ್ನತ್ಯದ ಸಾಕಾರವು - ಶಿಸ್ತು, ಸರಳತೆ, ಸಜ್ಜನಿಕೆ, ಅಧ್ಯಯನ ಮತ್ತು ಅನಂತ ಸತ್ಯದ ಅನುಷ್ಠಾನದಿಂದ ಪ್ರಾಪ್ತವಾಗುವಂಥದ್ದು. ಪ್ರಕೃತಿ ಭಾವದ ಸೃಷ್ಟಿ ಸಹಜತೆಯಲ್ಲಿ ಮನುಷ್ಯ ಜೀವಿಗಳ ಸ್ವಾಭಾವಿಕ ಬುದ್ಧಿ- ಭಾವಗಳ ಆರೋಗ್ಯಕರ ಸಂವಹನದಿಂದ, ಸೃಷ್ಟಿಯ ಸ್ವಾಭಾವಿಕ ನಡೆಯೊಂದಿಗೇ ಹೆಜ್ಜೆಯಿಟ್ಟು ಪಯಣಿಸಬಲ್ಲವರಿಗೆ ಮಾತ್ರ - ಯಾವುದೇ ನಿಗೂಢ ಶ್ರೇಷ್ಠತ್ವದ ಅನುಭವವಾಗುತ್ತದೆ; ಭೂಮ ದರ್ಶನವಾಗುತ್ತದೆ. ಯಾಮುನರ ಬದುಕು - ಅಂತಹ ವಿರಾಟ್ ದರ್ಶನಕ್ಕೆ ಒಂದು ದೃಷ್ಟಾಂತ.
ಲೋಕದಲ್ಲಿ ಎರಡು ಬಗೆಯ ಜನರಿದ್ದಾರೆ. ಕೆಲವರು, ತಾವೇ ಸಕ್ಕರೆ ಆಗಬೇಕೆಂದು ಹಂಬಲಿಸುವ ತಪಸ್ವಿಗಳು. ಬಹುಪಾಲಿನ ಇನ್ನೊಂದು ವರ್ಗ - ಸಕ್ಕರೆಯನ್ನು ಸವಿದು ಆನಂದಿಸುವ ಭಕ್ತಬಳಗದವರು. ಶಂಕರ, ಮಧ್ವ, ಯಾಮುನರು, ರಾಮಾನುಜರು... ಇಂತಹ ಆಚಾರ್ಯರುಗಳೆಲ್ಲರೂ ತಾವೇ ಸಕ್ಕರೆಯಾಗಿ ಹೋದ ತಪಸ್ವಿಗಳು; ಅಸಂಖ್ಯಾತ ಅಧ್ಯಾತ್ಮಿಕ ಜಿಜ್ಞಾಸುಗಳಿಗೆ ಇಂದಿಗೂ ಸಕ್ಕರೆಯ ಸವಿಯನ್ನು ಉಣ್ಣಿಸುತ್ತಿರುವವರು.
****** ****** ****** ****** ******
(ಶ್ರೀ ರಾಮಾನುಜರ ಜೀವನ, ದರ್ಶನ, ಪರಂಪರೆ - ಎಂಬ ಶ್ರೀ ಎಚೆಸ್ಕೆ ಅವರ ಸುಂದರ ಕೃತಿಯನ್ನು ಓದಿದ ನನಗೆ - ಆಸಕ್ತರು ಓದಬಹುದಾದ ಅನೇಕ ವಿಷಯಗಳಿವೆ ಅನ್ನಿಸಿದಾಗ, ಈ ಬರಹ ಸಿದ್ಧವಾಗಿದೆ. ವಿಶಿಷ್ಟಾದ್ವೈತದ ಸಾರವನ್ನು ಸಂಕ್ಷೇಪವಾಗಿ ಅರಿಯುವ ಆಸಕ್ತರಿಗೆ - ಈ ಪುಸ್ತಕವು ದಾರಿದೀಪದಂತಿದೆ.
ನನ್ನಲ್ಲಿರುವ "ಶ್ರೀ ರಾಮಾನುಜ" ಎಂಬ ಈ ಪುಸ್ತಕದ ಪ್ರತಿಯು ೧೯೬೩ ರಲ್ಲಿ ಪ್ರಥಮ ಮುದ್ರಣಗೊಂಡದ್ದು; ಬೆಲೆ - ೪ ರೂಪಾಯಿ. ಆಧ್ಯಾತ್ಮಿಕ ವಲಯದ ವ್ಯಕ್ತಿಯೊಬ್ಬರನ್ನು ಕುರಿತು ಇಷ್ಟೊಂದು ಸಮಸ್ಥಿತಿಯಿಂದ ಬರೆಯಬಹುದು ಎಂಬುದಕ್ಕೆ ಮಾದರಿ ಆಗಬಲ್ಲಂತಹ ಕೃತಿಯಿದು. ಭಾಷೆ ಮತ್ತು ಶೈಲಿಯು ಕನ್ನಡದ ಸತ್ವವನ್ನು ಸಾರುವಂತಿದೆ. ಹಿರಿಯ ಸಾಹಿತಿಗಳಾಗಿದ್ದ ಶ್ರೀ ಎಚ್ಚೆಸ್ಕೆ ಅವರಿಗೆ ಪ್ರಣಾಮಗಳು.
ಈಗ ಈ ಪುಸ್ತಕವು ಮಾರುಕಟ್ಟೆಯಲ್ಲಿ ಲಭ್ಯವಿದೆಯೋ ಇಲ್ಲವೋ ನನಗೆ ಗೊತ್ತಿಲ್ಲ. ಅಕಸ್ಮಾತ್ ಈ ಪುಸ್ತಕವು ಸಿಗುವಂತಿದ್ದರೆ, ಓದಿನ ಸಂಪೂರ್ಣ ಸುಖಲಾಭಕ್ಕಾಗಿ - ನಿಶ್ಚಯವಾಗಿ, ಕೊಂಡು ಓದಲೇಬೇಕಾದ ಪುಸ್ತಕವಿದು.
ನಮ್ಮ ತಂದೆ ದಿ. ಯಜ್ಞನಾರಾಯಣ ಉಡುಪರು ತಮ್ಮ ಮಕ್ಕಳಿಗೆ ಬಿಟ್ಟುಹೋದ ಪುಸ್ತಕ ಆಸ್ತಿಯ ಭಾಗವಾಗಿ, ಈಗ ನನ್ನ ಮನೆಯಲ್ಲಿರುವ ಪುಸ್ತಕ ಭಂಡಾರದಲ್ಲಿ, ಇದುವರೆಗೆ ಅಡಗಿಕೊಂಡಂತಿದ್ದ ಈ ಪುಸ್ತಕವನ್ನು, ಎತ್ತಿಕೊಂಡು ಓದಲು ನನಗೆ ಇಷ್ಟು ವರ್ಷ ಬೇಕಾಯಿತು ! ಬಹುಶಃ ಕಾಲ ಕೂಡಿ ಬರುವುದು ಅಂದರೆ ಹೀಗೇ ಇರಬಹುದು.. ನನ್ನ ನಿವೃತ್ತಿಯ ನಂತರ ನನಗೆ ಲಭಿಸಿರುವ ನಿಶ್ಚಿಂತ ಸ್ಥಿತಿಯಲ್ಲಿ - ಈಗ ಮತ್ತೊಮ್ಮೆ, ಅಪ್ಪಯ್ಯನ (ಪುಸ್ತಕಗಳ) ಹಿಂದೆ ಸುತ್ತುತ್ತಿದ್ದೇನೆ ! ಅನನ್ಯ ಪುಸ್ತಕ ಸುಖ !....
ಸಾಧ್ಯವಾದಾಗ ಮತ್ತೊಮ್ಮೆ ಆಮೂಲಾಗ್ರವಾಗಿ ಓದಿ, ಇದೇ ಪುಸ್ತಕವನ್ನು ಆಧರಿಸಿ, ಶ್ರೀ ರಾಮಾನುಜರ ಕುರಿತೂ ಬರೆಯಬೇಕೆಂದಿದೆ. "ಸಾಧ್ಯವಾದಾಗ".. ಎಂದದ್ದು ಏಕೆಂದರೆ - ಎಲ್ಲ ದಿನವೂ ನನಗೆ ಓದುವ ದಿನವಾದರೂ - ಬರೆಯುವ ದಿನ ಆಗುತ್ತಿಲ್ಲ ! ಬಹುಶಃ ಬರೆಯುವುದು ನನ್ನ ಸಹಜ ವೃತ್ತಿ ಅಲ್ಲ; ಪ್ರವೃತ್ತಿ ಮಾತ್ರ....)
***** ***** ***** *****

ಸರ್ವಧರ್ಮಾನ್ ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ /
ಅಹಂ ತ್ವಾ ಸರ್ವ ಪಾಪೇಭ್ಯೋ ಮೋಕ್ಷಯಿಷ್ಯಾಮಿ ಮಾ ಶುಚಃ //

"ಪಠಕಾಃ ಪಾಠಕಾಶ್ಚೈವ ಯೇ ಚಾನ್ಯೇ ಶಾಸ್ತ್ರಚಿಂತಕಾಃ /ಸರ್ವೇ ವ್ಯಸನಿನೋ ಮೂರ್ಖಾಃ ಯಃ ಕ್ರಿಯಾವಾನ್ ಸ ಪಂಡಿತಃ //"(ಶ್ರೀ ಮಹಾಭಾರತ, ವನಪರ್ವ)