ಅಧ್ಯಾತ್ಮ ಎಂಬುದು ಶುದ್ಧ - ಭಾವಸ್ಥಿತಿ. ತನ್ನೊಳಗನ್ನು ತಾನೇ ಸಂದರ್ಶಿಸುವ ಅನನ್ಯ ಸ್ಥಿತಿ ಅದು. ಅಂತಹ ಗಮ್ಯದೆಡೆಗೆ ಕೊಂಡೊಯ್ಯುವ ವಾಹಕವೇ - ಭಕ್ತಿ. ಇದು ಗುಂಪು ಗದ್ದಲದಿಂದ ದೂರವಾದ ಏಕಾಂಗಿ ಮಾರ್ಗ. ದುಡ್ದುದುಗ್ಗಾಣಿಯ ಗಳಿಕೆ ಉಳಿಕೆಯಂತೆ ಅಧ್ಯಾತ್ಮ ಸಂಪತ್ತನ್ನು ಮೆರವಣಿಗೆಯ ಮೂಲಕ ಹೊರಗೆಲ್ಲೋ ದರ್ಶನ ಮಾಡಲು ಆಗದು; ನೀತಿಪಾಠದಿಂದ ಆತ್ಮಿಕ ಭಾವವನ್ನು ಒತ್ತಿ ತುಂಬಿಸುವುದೂ ಕಠಿಣ; ಅದು ಕೇವಲ ಅನುಭವಗ್ರಾಹ್ಯವಾದ ಸಂಪತ್ತು. ಇದ್ದವರಲ್ಲಿ - ಅದು ಹೇಗೂ ಇದ್ದೇ ಇರುತ್ತದೆ; ಇಲ್ಲದವರು ಸ್ವ ಇಚ್ಛೆಯಿಂದ ಸಂಪಾದಿಸಿಕೊಳ್ಳುವ ಅವಕಾಶಗಳಿವೆ. ಅಷ್ಟೆ. ಜನಸಂದಣಿಯಲ್ಲಿಯೇ ಅಧ್ಯಾತ್ಮಕ್ಕೆ ಪ್ರದಕ್ಷಿಣೆ ಬರುವ ಧಾರ್ಮಿಕ ಉಪನ್ಯಾಸ, ಚಿಂತನಗೋಷ್ಠಿಗಳು, ಭಜನೆ ಕೀರ್ತನೆಗಳೆಲ್ಲವೂ ಏಕಾಂತಕ್ಕೆ ನಮ್ಮನ್ನು ಪಳಗಿಸಿಕೊಳ್ಳಲು ಪ್ರೇರೇಪಿಸುವ ಉಪಸಾಧನಗಳಷ್ಟೇ.. ಕ್ರಮೇಣ ಮನುಷ್ಯನನ್ನು - ಚಿತ್ತೇಕಾಗ್ರತೆಯ ಏಕಾಂತ ಸಾಧನೆಗೆ ತೊಡಗಿಕೊಳ್ಳುವಂತೆ ಪ್ರೇರೇಪಿಸುವುದು ಮಾತ್ರ - ಇಂತಹ ಸಾಮೂಹಿಕ ಒಳಗೊಳ್ಳುವಿಕೆಯ ಉದ್ದೇಶ. ಸಮಾಜ ಎಂಬ ಕ್ಷೇತ್ರದಲ್ಲಿ ಪ್ರದರ್ಶನಗೊಳ್ಳುವ ಧಾರ್ಮಿಕ ಆಗುಹೋಗುಗಳೆಲ್ಲವೂ - ಮನುಷ್ಯರ ಸಾಧನೆಗೆ ಅಗತ್ಯವಾದ ಸಾಧನಗಳ ಪರಿಚಯ ಸಾಮಗ್ರಿಗಳು. ಅಷ್ಟೆ.
ಆದರೆ ಮನುಷ್ಯರ ಸಾಧನೆ ಎಂಬುದು ಯಾವುದೇ ಸಾಧನದ ಮೆರವಣಿಗೆಯನ್ನು ನೋಡುವುದರಲ್ಲಿಯೇ ಮುಗಿದುಹೋಗುವಂತಿಲ್ಲ; ಸಾಧನವನ್ನು ನೋಡುವುದರಲ್ಲಿಯೇ ಮುಗಿದು ಹೋದರೆ - ಅದು ಮುನ್ನಡೆಯಲ್ಲ; ನಿಂತ ನೀರಿನಂತೆ ಸ್ಥಿರ ಚಿತ್ರ ಆಗುತ್ತದೆ. ಸಮೂಹ ಎಂಬ ಬಹಿರ್ಮುಖದಿಂದ ಪಾರಾಗಿ - ಆಗಾಗ ಅಂತರ್ಮುಖೀ ಸಾನ್ನಿಧ್ಯದ ನಿರೀಕ್ಷೆಯಲ್ಲಿ ತೊಡಗಿಕೊಂಡಾಗ ಮಾತ್ರ - ಅದು ನಿಜವಾದ ಅಧ್ಯಾತ್ಮದ ಹಾದಿಯನ್ನು ಪ್ರಶಸ್ತಗೊಳಿಸುತ್ತದೆ. ಯಾವುದೇ ಅಂತರ್ಮುಖಾವಸ್ಥೆಯು ಏಕಾಂತವನ್ನು ಬಯಸುತ್ತದೆ. ಆದರೆ ಗದ್ದಲದ ಸ್ನೇಹಸುಖದಲ್ಲಿ ಮೈಮರೆಯುವ ಕ್ರಿಯೆಗೆ ಒಗ್ಗಿಕೊಂಡಿರುವ ಸಾಮಾನ್ಯ ಲೋಗರಿಗೆ - ಏಕಾಂತ ಎಂಬ ಭಾವನೆಯೇ ಬಹಳ ಭಯ ಹುಟ್ಟಿಸುತ್ತ ಕಠಿಣವೆನ್ನಿಸುತ್ತಿರುವುದರಿಂದ - ನೋಡುವ ಕೇಳುವ ಗದ್ದಲದ ಹಂತಕ್ಕಿಂತ ಮುಂದಿನ ಸಾಧನೆಗಳ ಗೊಡವೆಗೆ ಹೋಗದೆ - ಬಾಹ್ಯ ಸಾಧನಗಳನ್ನು ನೋಡುವುದರಲ್ಲೇ ತೃಪ್ತರಾಗುವಂತಾಗಿದೆ. ಇದು - ತಿನ್ನಲು ಯೋಗ್ಯವಾದ ವಸ್ತುವನ್ನು ನೋಡಿನೋಡಿಯೇ ತೃಪ್ತಿ ಪಡುವಂತಿದೆ. ಇಚ್ಛಾಶಕ್ತಿ ಮತ್ತು ಭಾವಸಂಸ್ಕಾರದ ಕೊರತೆಯಿಂದಾಗಿ - ಅಧ್ಯಾತ್ಮದ ಸಿಹಿಯನ್ನು ಜೀರ್ಣಿಸಿಕೊಳ್ಳಲಾಗದ "ಅಭಾವ ರೋಗ "ವಿದು. ಏಕೆ ? ಹೀಗೇಕೆ ?
ಅಧ್ಯಾತ್ಮವು ಸುಲಭವೇನಲ್ಲ; ಅಧ್ಯಾತ್ಮ ಭಾವವು ಕಠಿಣವೇ ಆದರೂ - ಹಲವರಿಗೆ "ಬಹಳ ಕಠಿಣ" ಎನ್ನಿಸುವುದೇಕೆ ? ಎಂದೂ ಯೋಚಿಸಬಹುದು. ಅದಕ್ಕೂ ನಾನಾ ಕಾರಣಗಳಿವೆ.
1. ಕೌಟುಂಬಿಕ ಭಾವ ಪರಿವರ್ತನೆಯಿಂದಾಗಿ ನಮ್ಮ ಅಭಿರುಚಿ ಆಸಕ್ತಿಗಳ ಮೂಲದಲ್ಲಿ ಆಗಿರುವ ಕಲಬೆರಕೆ.
2. ಅಂದಂದಿನ ಖರ್ಚಿಗೆ ದುಡಿಯುವ ದಿನಗೂಲಿಯವರಂತೆ ದೈನಂದಿನ ಸುಖಾಪೇಕ್ಷೆಗೆ ಮಾತ್ರ ನೀಡುತ್ತಿರುವ ಪ್ರಾಮುಖ್ಯತೆ.
3. ಅಧ್ಯಾತ್ಮವು ನಮಗಲ್ಲ; ಅದು ಸನ್ಯಾಸಿಗಳಿಗೆ - ಎಂಬ ತಪ್ಪು ಗ್ರಹಿಕೆ.
4. ಅಧ್ಯಾತ್ಮವು ಬದುಕನ್ನು ಆಮೂಲಾಗ್ರವಾಗಿ ಅನುಭವಿಸಿ ಏದುಸಿರು ಬಿಡುವ ಅಪ್ರಯೋಜಕ ವೃದ್ಧರಿಗೆ - ಎಂಬ ಪೂರ್ವಾಗ್ರಹ.
5. ಯುವಜನರಲ್ಲಿ ಅಧ್ಯಾತ್ಮದ ಒಲವು ಮೂಡಿದರೆ ಅದು ದಿಗಿಲೆಬ್ಬಿಸುವಷ್ಟು ಅಸಹಜ - ಎಂಬ ಸಮೂಹಸನ್ನಿ...
6. ಅಧ್ಯಾತ್ಮವು ಕೈಲಾಗದವರ ಹಳಹಳಿಕೆ ಮತ್ತು ವ್ಯರ್ಥ ನಂಬಿಕೆ ಎಂಬಂತಹ ಮನೋಭಾವ.
7. ಕ್ಷುದ್ರ ಸಾಮಾಜಿಕ ಮನೋರಂಜನೆಗಳು - ಎಂಬ ರೂಢಿಸಿಕೊಂಡ ಮನೋದೌರ್ಬಲ್ಯದಿಂದ ಮೇಲೇಳಲು ಬಿಡದ ದುರ್ಬಲ ಇಚ್ಛಾಶಕ್ತಿ.
8. ಒಮ್ಮೊಮ್ಮೆ - "ಹುಳಿ ದ್ರಾಕ್ಷಿಯ" ಪಲಾಯನವಾದ.
ಇತ್ಯಾದಿ...
ಅಧ್ಯಾತ್ಮದಿಂದ ಆತ್ಮಚೈತನ್ಯ
ಆತ್ಮಶಕ್ತಿಯನ್ನು ಬೆಳೆಸಿಕೊಳ್ಳುವ ಏಕಾಂತ ಸಾಧನೆಯ ಕುರಿತ ಅವ್ಯಕ್ತ ಭಯ ಮತ್ತು ಆಲಸ್ಯವೇ ಈ ಎಲ್ಲ ಕಾರಣಗಳ ಹಿಂದೆಯೂ ಮುಖ್ಯವಾಗಿ ದುಡಿಯುತ್ತಿರುತ್ತದೆ.. ಅಧ್ಯಾತ್ಮವು ತಮ್ಮ ಬದುಕನ್ನೇ ಕಸಿದುಕೊಂಡೀತು ಎಂಬ ಭಯ ! ಏನೋ ಸ್ವರ್ಗಸುಖವನ್ನು ಕಳೆದುಕೊಂಡೇವೆಂಬ ಭಯ ! ಸಮಯ ಕೊಲ್ಲುವ ಆಲಸ್ಯ ! ಅರಿವಿನ ಕೊರತೆಯಿಂದಾಗಿ ತಳವೂರಿ ಹೋಗಿರುವ ನಾನಾ ಕಲ್ಪನೆಗಳು !
ಹಾಗೆ ನೋಡಿದರೆ... ಈ ಭೂಮಿಯಲ್ಲಿ ಸುಲಭವಾದುದು ಯಾವುದೂ ಇಲ್ಲ. ಸಂಸಾರವೆಂಬ ಸಾಮ್ರಾಜ್ಯದಲ್ಲಿ - ಕಟ್ಟಿಕೊಳ್ಳುವ ಮತ್ತು ಕಟ್ಟಿಹಾಕಿಸಿಕೊಳ್ಳುವ ಕಾಠಿಣ್ಯವಿದ್ದರೆ, ಅಧ್ಯಾತ್ಮದಲ್ಲಿ - ಬಿಚ್ಚಿಕೊಳ್ಳುವ ಬಿಡಿಸಿಕೊಳ್ಳುವ - ಕಾಠಿಣ್ಯವಿದೆ. ಯಾವುದೇ ಕಾಠಿಣ್ಯದ ಆಯ್ಕೆಯು ಮಾತ್ರ - ಆಯಾ ಬದುಕಿನ ಪ್ರಾಶಸ್ತ್ಯಗಳನ್ನು ಅವಲಂಬಿಸುತ್ತದೆ. ಆದರೆ... ಸ್ವಲ್ಪ ಹಿಂದೋ ಮುಂದೋ - ಅಂತೂ ಎರಡು ದಾರಿಗಳೂ ತಲುಪುವ ಗಮ್ಯವು ಮಾತ್ರ - ಒಂದೇ. ಅಧ್ಯಾತ್ಮವನ್ನು ಪೂರ್ತಿಯಾಗಿ ನೆಚ್ಚಿಕೊಳ್ಳುವ ಸನ್ಯಾಸದ ಬದುಕಿನಲ್ಲಿ ತಡೆ, ನಿಲುಗಡೆಗಳು ಕಡಿಮೆ; ವೇಗ ಸ್ವಲ್ಪ ಹೆಚ್ಚು. ಸಂಸಾರದ ಹಾದಿಯಲ್ಲಿ ಅಡೆತಡೆಗಳು ಸ್ವಲ್ಪ ಹೆಚ್ಚು; ಆದ್ದರಿಂದ ವೇಗ ಕಡಿಮೆ.
ಆದರೆ ಅಧ್ಯಾತ್ಮದ ಸಂಸ್ಕಾರವಿದ್ದಾಗ - ದೈನಂದಿನ ನಿಲುಗಡೆಯ ಸ್ಥಾನಗಳನ್ನು ನಿವಾರಿಸಿಕೊಳ್ಳುವ ಆಧಾರಶಕ್ತಿಯು ಪ್ರಾಪಂಚಿಕರಿಗೂ ಒದಗುತ್ತದೆ. ತನ್ಮೂಲಕ - ಆಯಾ ಬದುಕನ್ನು ಸುವ್ಯವಸ್ಥಿತವಾಗಿ ಕಟ್ಟಿಕೊಳ್ಳಲು ಬಯಸುವ ಸಂಸಾರಿಗಳ ಬೆನ್ನುಬಿಡದೆ - ನೆಚ್ಚಿಕೊಂಡ ಅಧ್ಯಾತ್ಮ ಭಾವವು ಬದುಕಲು ಸಹಕರಿಸುತ್ತದೆ. ಶುದ್ಧ ಸನ್ಯಾಸಿಗಳು ಸಂಸಾರವನ್ನು ತೂಗಿಸುವ ಶೈಲಿಗೂ ಗೃಹಸ್ಥ ಸಂಸಾರಿಗಳ ಬದುಕಿನ ಶೈಲಿಗೂ ವ್ಯತ್ಯಾಸವಿದ್ದರೂ ಎರಡೂ ಬಗೆಯ ಬದುಕುಗಳ ಮೂಲದಲ್ಲೂ ಅಧ್ಯಾತ್ಮದ ಅಂತರ್ಭಾವವು ಪ್ರವಹಿಸುತ್ತಲೇ ಇರುತ್ತದೆ. ಅದನ್ನು ಸಕಾರಾತ್ಮಕವಾಗಿ ಗುರುತಿಸಿ ಇಚ್ಛಾಶಕ್ತಿಯಿಂದ ಪೋಷಿಸಿದಾಗ ಮಾತ್ರ ಭಾವಜಾಗ್ರತಿಯು ಸಾಧ್ಯವಾಗುತ್ತದೆ ಮತ್ತು ಅಧ್ಯಾತ್ಮಜ್ಞಾನಮೂಲದ ಸಚೇತನದಲ್ಲಿ ಸಂಚಲಿಸುವ ಇಚ್ಛಾಶಕ್ತಿಯು ಜಾಗ್ರತವಾಗಿ, ಕ್ರಿಯಾಶಕ್ತಿಯಾಗಿ ಪರಿಣಮಿಸಿ - ಆಧ್ಯಾತ್ಮಿಕ ಅನುಭೂತಿಯು ಸಂಭವಿಸುತ್ತದೆ.
ಅಧ್ಯಾತ್ಮವು ಭಾವ ಸಮತೋಲನವನ್ನುಂಟುಮಾಡಬಹುದಲ್ಲದೆ ಯಾವುದೇ ಬದುಕನ್ನು ಕಸಿದುಕೊಳ್ಳುವುದುಂಟೆ ? ಪರ್ಯಾಯವಾಗಿ ಸುಶಾಂತ ಮೌಲ್ಯಯುತ ಭಾವಬದುಕನ್ನು ಕಟ್ಟಿಕೊಳ್ಳಲು ಅಧ್ಯಾತ್ಮವು ಸಹಕರಿಸಿ ಪ್ರಚೋದಿಸುತ್ತದೆ. ಕ್ಷುದ್ರ ಆಸೆಗಳನ್ನು ನಿಯಂತ್ರಿಸಿಕೊಂಡ ಜೀವಿಗಳು ತಮ್ಮ ಅಂತರ್ಭಾವವನ್ನು ಸ್ವಚ್ಛಗೊಳಿಸಿಕೊಂಡರೆ - "ಉದ್ಧರಿಸಬಲ್ಲ ಗುಣವಿಶೇಷಗಳನ್ನು ಅನುಸರಿಸಬಲ್ಲೆ" - ಎಂಬ ಆತ್ಮವಿಶ್ವಾಸದ ಚೈತನ್ಯವನ್ನು ಜೀವಭಾವದಲ್ಲಿ ಮೂಡಿಸುವ ಶಕ್ತಿಯು ಅಧ್ಯಾತ್ಮಕ್ಕಿದೆ. ಆದರೆ ನಾವು ನೆಚ್ಚಿಕೊಂಡಿರುವ ಬಾಹ್ಯ ಅವಲಂಬನೆಗಳೇ (OBJECT) ಪರಮಸತ್ಯ ಎಂಬ ಭ್ರಮೆಯಿಂದಾಗಿ - ಆತ್ಮಶಕ್ತಿಯ ಮೂಲಸತ್ವವನ್ನು ನಮಗೆ ನಾವೇ ಕುಂದಿಸಿಕೊಳ್ಳುತ್ತಲೇ ಬಂದಿದ್ದೇವೆ. ಆದ್ದರಿಂದಲೇ ಬಂಧುಬಳಗವು ದೂರವಾದರೆ, ವಸ್ತು ಸಂಪತ್ತು ಕೈ ಬಿಟ್ಟುಹೋದರೆ ಭಯ ಬೀಳುವಂತಾಗುವುದು. ಯಾವತ್ತೂ ನಮ್ಮದಲ್ಲದ ವಸ್ತು ವ್ಯಕ್ತಿಗಳನ್ನು ಭ್ರಾಂತಿಯಿಂದ ಆಶ್ರಯಿಸಿದಾಗ ಹೀಗೆ ಬೆಚ್ಚಿಬೀಳುವಂತಹ ಭಯದ ಸಂದಿನಲ್ಲಿಯೇ ಬದುಕುವುದು ಅನಿವಾರ್ಯವಾಗುತ್ತದೆ. ಅಂತಹ ಭ್ರಮೆಯ ನೆರಳನ್ನು ಹಿಡಿಯುವ ಆಟದಲ್ಲಿಯೇ ಮುಳುಗಿಹೋದರೆ ವ್ಯರ್ಥ ಶ್ರಮದ ಬಳಲಿಕೆಯೊಂದೇ ಸಹಚಾರಿಯಾಗುತ್ತದೆ; ನಡಿಗೆಯ ವೇಗವೂ ಕುಂಟುತ್ತದೆ; ಅತೃಪ್ತಿಯೇ ಸಹಚಾರಿಯಾಗುತ್ತದೆ. ಹೀಗಾದಾಗ ಬದುಕಿನಲ್ಲಿ ಸಹಜವಾಗಿ ಸಂಭವಿಸುವ ದೈನಂದಿನ ಸಣ್ಣಪುಟ್ಟ ದೃಶ್ಯಗಳ ಪುನರಾವರ್ತನೆ ಮತ್ತು ಬಾಹ್ಯ ಪರಿವರ್ತನೆಗಳೆಲ್ಲವೂ ವಿನಾಕಾರಣ ಬೆಚ್ಚಿಬೀಳಿಸುತ್ತವೆ. ನೋಟುಗಳ ಅಪಮೌಲ್ಯವಾದರೂ ಹೃದಯಾಘಾತವಾಗುತ್ತದೆ ! ಸಣ್ಣಪುಟ್ಟ ಮನಸ್ತಾಪಗಳೂ ಜೀವಘಾತಕವಾಗಿ ಬಿಡುತ್ತವೆ ! ಇದು ಅಧ್ಯಾತ್ಮದ ಗಂಧಗಾಳಿಯಿಲ್ಲದ ಚೇತನಹೀನ ಬದುಕುಗಳ ಲಕ್ಷಣ.
ಹೆಬ್ಬೆಟ್ಟಿನ ಗುರುತಿನಂತೆ - ಈ ವಿಶ್ವದಲ್ಲಿ ಪ್ರತಿಯೊಂದು ಜೀವಿಗೂ ಪ್ರತ್ಯೇಕ ಅಸ್ತಿತ್ವವಿದೆ. ಗುರಿಹಲಗೆಯೂ (Target) ಪ್ರತ್ಯೇಕವಿರುತ್ತದೆ. ಆದ್ದರಿಂದ ಆಯಾ ಗುರಿಯನ್ನು ಸ್ವ ಇಚ್ಛೆ ಮತ್ತು ಶಕ್ತಿಯಿಂದಲೇ ತಲುಪಬೇಕಾಗುತ್ತದೆ. ಆಧ್ಯಾತ್ಮಿಕತೆಯು ಅಂತಃಶ್ಶಕ್ತಿಯನ್ನು ತುಂಬುವ ವಿಜ್ಞಾನ.
ಈ ಸಂಸಾರದ ವ್ಯಾಪ್ತಿಯ ಯಾವುದೇ ವಸ್ತು ವ್ಯಕ್ತಿಗಳ ಅತಿಯಾದ ಭಾವಾವಲಂಬನೆಯು - ಸ್ವ ಶಕ್ತಿಯನ್ನು ದುರ್ಬಲಗೊಳಿಸುವಂಥದ್ದು. ತನ್ನನ್ನೇ ತಾನು ಅವಲಂಬಿಸಿದಾಗ, ತನ್ನೊಳಗಿನ ದನಿಯನ್ನು ಕೇಳಿಸಿಕೊಳ್ಳುವಂತಾದಾಗ ಮಾತ್ರ ಸ್ಪಷ್ಟ ಚಿಂತನೆಯ ಬೆಳಕು ಕಾಣಿಸಿ ದೌರ್ಬಲ್ಯಗಳು ಕರಗಿ ಆತ್ಮ ಜಾಗ್ರತಿಯಾಗುತ್ತದೆ. ಆತ್ಮಜಾಗ್ರತಿ ಎಂದರೆ "ಯಾವುದೇ ಭೀತಿಯಿಲ್ಲದೆ ಬದುಕಿನ ಸಮಸ್ಯೆಗಳನ್ನು ನಿಭಾಯಿಸುವ ಶಕ್ತಿ" ಎಂದೂ ಅರ್ಥೈಸಬಹುದು. ಅಧ್ಯಾತ್ಮ ಸಂಚಾರವಿಲ್ಲದಲ್ಲಿ ಅಂತಹ ಸಂಶಯಾತೀತ, ಅಹಂಭಾವರಹಿತ ಧೈರ್ಯವು ಮೂಡುವುದಿಲ್ಲ. ಆದ್ದರಿಂದ ಅಧ್ಯಾತ್ಮ ಭಾವದ ಸಬಲ ಚೇತನಗಳನ್ನು ಮಾತ್ರ - ನಿರ್ಭಯ - ಎನ್ನಬಹುದು.
ನೀರಿನಲ್ಲಿ ಮುಳುಗಿ ಎದ್ದ, ನೂರು ಜನರನ್ನು ಹೊಡೆದು ಉರುಳಿಸಿದ, ಸ್ವಚ್ಛಂದ ಕುದುರೆಯನ್ನೇರಿ ಸಂಸಾರ ಭಾವವನ್ನು ಚಿಂದಿ ಚಿತ್ರಾನ್ನ ಮಾಡುವಂತಹ ಯಾವುದೇ ವ್ಯರ್ಥ ಕರ್ಮಗಳು ಅದೆಂತಹ ಲೌಕಿಕ ಪ್ರಶಸ್ತಿಪಾತ್ರವಾದರೂ ಅವರನ್ನು "ಶೂರ ವೀರ ನಿರ್ಭಯ" ಎನ್ನಲಾಗುವುದಿಲ್ಲ. ಅಂತಹ ಪ್ರಶಸ್ತಿಗಳು ಅಂದಂದಿನ ಸುದ್ದಿಯಾಗಬಹುದಲ್ಲದೆ - ಅಂತಹ ನಿತ್ಯೋಪಯೋಗೀ ಪ್ರಶಸ್ತಿಗಳ ಶಬ್ದಾಡಂಬರದಿಂದ ಅಂತರಂಗವನ್ನು ಕದಡುತ್ತಲೇ ಇರುವ ಯಾವುದೇ ಭಯವು ಪರಿಹಾರವಾಗುವುದೂ ಇಲ್ಲ. ಇಂದಿನ ಸಾಮಾಜಿಕರು ಆಗಾಗ ಎತ್ತಿ ತೋರಿಸಿ ಸುಳಿದಾಡಿಸುತ್ತಿರುವ - "ನಿರ್ಭಯ" ಎನ್ನಲಾಗುವ ಸುದ್ದಿಗಳೆಲ್ಲವೂ - ಬದುಕನ್ನೇ ವಸ್ತುವಾಗಿಸಿ ಮಾರಾಟಕ್ಕಿಡುವ ಜಾತ್ರೆಯ ಸರ್ಕಸ್ಸುಗಳಷ್ಟೇ ಆಗಿ ಮರೆಯಾಗುತ್ತವೆ. ಆದ್ದರಿಂದ ಮನುಷ್ಯರ ನಿತ್ಯಬದುಕಿನಲ್ಲಿ ಹೊಕ್ಕು ಹೊರಡುವ "ಅತಿಶಯೋಕ್ತಿಯ ಬಹುಪಾಲು ನಿರ್ಭಯ ಪ್ರಸ್ತಾಪಗಳು" - ಅವರವರಿಗೇ ಪುನರಪಿ ಸಾಧಿಸಲಾಗದ ಆಕಸ್ಮಿಕಗಳು; ವ್ಯರ್ಥ ಹೊಡಚಾಟಗಳು; ಮನೋಭ್ರಾಂತಿಗಳು.
ಇಂತಹ ವ್ಯರ್ಥಗಳಿಂದ ಪಾರಾಗಿ ಅರ್ಥದತ್ತ ಸಾಗುವುದೇ ನಿಜವಾದ ಜೀವನ. ಅಧ್ಯಾತ್ಮದ ಬೆಳಕಿನಲ್ಲಿ ಭಯಮುಕ್ತವಾದಾಗ ಮಾತ್ರ - ಗಾಂಭೀರ್ಯವುಳ್ಳ ಜೀವನಕ್ಕೆ ಸುಗಮ ಓಟ ಮತ್ತು ಅರ್ಥ ಕಾಣುತ್ತದೆ. ಅರ್ಥಪೂರ್ಣ ಜೀವನ ಎಂಬುದು ಯಾವತ್ತೂ ನಿರ್ಭಯ ಏಕಾಂಗೀ ನಡೆ. ತಮ್ಮ ಬದುಕಿನಲ್ಲಿ ಜನಜಂಗುಳಿಯನ್ನು ಸದಾ ನೆಚ್ಚಿಕೊಳ್ಳುವವರು - ಮೂಲತಃ ಭಯಗ್ರಸ್ತರೇ ಆಗಿರುತ್ತಾರೆ. ಇನ್ನು - "ನಾನು ದೊಡ್ಡ ಮನುಷ್ಯ" ಅನ್ನಿಸಿಕೊಳ್ಳಲು ಜನರನ್ನು ಗುಡ್ಡೆ ಹಾಕಿಕೊಳ್ಳುವವರೂ ಇದ್ದಾರೆ. ಅಪ್ಪಟ ಭಯಮೂಲದ ಭ್ರಾಂತಿ ಇದು.
ಶ್ರೀ ರಾಮಕೃಷ್ಣರೂ ಇಂತಹ ಭ್ರಾಂತಿ ಪೋರರನ್ನು ಹಾದು ಬಂದಾಗಲೆಲ್ಲ "ಅಯ್ಯೋ ಪ್ರಪಂಚವೇ..." ಎಂದುಕೊಂಡು, ಅದನ್ನು ವಿಶ್ಲೇಷಿಸಿದ್ದರು.
"ಪ್ರಾಪಂಚಿಕ ಸ್ವಭಾವವೇ ಇದು; ಒಂದು ಹತ್ತಾರು ಜನರು ತಮ್ಮ ಮನೆಗೆ ಬಂದು ಹೋಗುತ್ತಿರಬೇಕು ! ಹಾಗೆ ಜನಮೆಚ್ಚುವ ವ್ಯಕ್ತಿಯ ರೂಪದಲ್ಲಿ - ಊರಿನಲ್ಲೆಲ್ಲ ದೊಡ್ಡವ - ಅನ್ನಿಸಿಕೊಳ್ಳಬೇಕು !" ಎಂದು ಸಾಂದರ್ಭಿಕವಾಗಿ, ಶ್ರೀ ರಾಮಕೃಷ್ಣರೂ ಪ್ರತಿಕ್ರಿಯಿಸಿದ್ದಿದೆ. ಸಗಣಿಯ ಹುಳದಂತಹ ಬದುಕುಗಳ ಕುರಿತು ಸಹಾನುಭೂತಿ ವ್ಯಕ್ತಪಡಿಸಿದ್ದಿದೆ .
ಈ ಬಗೆಯ - "ಸದ್ದುಗದ್ದಲದಲ್ಲಿ ದೊಡ್ಡದಾಗುವ ಜನಚಿಂತನೆಯ ಉಬ್ಬುಶೈಲಿಯಲ್ಲಿ.." ಇಂದಿಗೂ ಯಾವ ವ್ಯತ್ಯಾಸವೂ ಆಗಿಲ್ಲ. ಏಕೆಂದರೆ "ಹೊರಹೊರಗೆ" ಜನಪ್ರಿಯವೆನ್ನಿಸಿಕೊಳ್ಳುತ್ತಿರುವ ಸಾವಿರಾರು ಸುಲಭ ಗುರಿಗಳ ಅನಂತ ಹಸಿವುಗಳಿಗೆ - ಇನ್ನೂ ಅಧ್ಯಾತ್ಮದ ಸ್ಪರ್ಷವಾಗಿಲ್ಲ; ಅಧ್ಯಾತ್ಮದ ರಸಕವಳವನ್ನು ಉಂಡಿಲ್ಲ. ಆದ್ದರಿಂದಲೇ ಇಂಗದ ಹಸಿವು; ಅತೃಪ್ತಿ; ಹುಡುಕಾಟ.
ಸನ್ಯಾಸ ಮತ್ತು ಕಾವಿ...
ಇಂದು - ಸಾಮೂಹಿಕ ವಿದ್ಯಾಭ್ಯಾಸ, ಸಾಮೂಹಿಕ ಉಪನಯನ, ಸಾಮೂಹಿಕ ಮದುವೆ, ಸಾಮೂಹಿಕ ಅಂತ್ಯ ಸಂಸ್ಕಾರ, ಸಾಮೂಹಿಕ ವೈಕುಂಠ ಯಾತ್ರೆಯ ಸನ್ನಿವೇಶದಲ್ಲಿ ನಾವಿದ್ದೇವೆ. ಈ ಸ್ವಾರ್ಥಪ್ರೇರಿತ "ಸಾಮೂಹಿಕ" ಎಂಬ ತೋರಿಕೆಯ ವ್ಯವಸ್ಥೆಯು - "ಸಾಮೂಹಿಕ ಬದುಕು" ಎಂಬ - "ಎಲ್ಲರೂ ಬದುಕಿ, ಬದುಕಿಸುವ" ಮೌಲ್ಯದ ನಿಜಾರ್ಥವನ್ನು ಮಾತ್ರ ಕಡೆಗಣಿಸಿದಂತಿದೆ ! ಆದ್ದರಿಂದಲೇ ಬಾಹ್ಯದಲ್ಲಿ ಮಾತ್ರ ಎಲ್ಲವೂ ಸಾಮೂಹಿಕ; ಆಂತರ್ಯದಲ್ಲಿ "ಸ್ವಾರ್ಥೀ ಏಕಭಾವ" ಎಂದಾಗಿದೆ ! ಕಾಪಟ್ಯವು - ಆಯಾ ಅಂತರಂಗವು ಒಣಗಿ ಬರಡಾಗುವುದಕ್ಕೆ ಮುಖ್ಯ ಕಾರಣ. ಆಧ್ಯಾತ್ಮಿಕ ದಾರಿದ್ರ್ಯವು ಎಲ್ಲ ಬಗೆಯ ಮನೋ ದಾರಿದ್ರ್ಯಕ್ಕೆ ಮೂಲ ಕಾರಣ.
ಎಚ್ಚರ ಕಾಣದ ನಿದ್ರಾ ಭಾವದ ಸ್ಥಿತಿಗೆ - ಯಾವುದೇ Lecture ಕೊಟ್ಟರೆ ಫಲವೇನು ? ಎಚ್ಚರಗೊಳ್ಳಲು ಮನಸ್ಸು ಮಾಡದ - ನಿದ್ದೆಯಲ್ಲಿಯೇ ನಡೆದಾಡುತ್ತಿರುವ ರೋಗಗ್ರಸ್ತ ಜನಸಂತೆಗೆ ಅಧ್ಯಾತ್ಮವನ್ನು ಅರೆದು ಕುಡಿಸಲು ಸಾಧ್ಯವೆ ? "ಜನ ಮರುಳೋ ಜಾತ್ರೆ ಮರುಳೋ" ಎಂಬಂತಹ ಅಜಾಗ್ರತ ಜನಸಂತೆಯಲ್ಲಿ ನಿಜವಾದ ಅಧ್ಯಾತ್ಮಭಾವವು ಇರುವುದಾದರೂ ಹೇಗೆ ? ಜನಸಂತೆಯಿಂದ ದೂರವಾದಲ್ಲದೆ - ಆತ್ಮಚೈತನ್ಯವು ಜಾಗ್ರತವಾಗಲಾರದು.
ಮೌನದಲ್ಲಿ ಅರಳುವ ವಿಶೇಷವೇ ಅಧ್ಯಾತ್ಮ ! ಇಂದಿನ ಕಾವಿಧಾರೀ ಬಳಗವೂ ಈ ಸೂತ್ರಕ್ಕೆ ವಿಮುಖವಾಗಿರುವಂತೆ ಕಾಣಿಸುತ್ತದೆ ! "ಸನ್ಯಾಸೀ ಬಣ್ಣದ ಮರೆಯಲ್ಲಿ", ಅಹಂತೃಪ್ತಿಗಾಗಿ ಜನಸಂತೆಯನ್ನು ಸೇರಿಸುವುದನ್ನೇ ಕಾಯಕ ಮಾಡಿಕೊಂಡಿರುವ ನಕಲಿ - ಧರ್ಮವ್ಯಾಪಾರದ ಸಂತೆಯೇ ಈಗ ನಮ್ಮ ಮುಂದಿದೆ ! ತಮ್ಮದು - "ಫಲನಿರೀಕ್ಷೆಯಿಲ್ಲದ ಕರ್ಮ" ಅಥವ "ಸಮಾಜೋದ್ಧಾರದ ಕಾರ್ಯಕ್ರಮ" ಎನ್ನುತ್ತಿರುವ ಸನ್ಯಾಸೀ ಧರ್ಮದವರೂ - ಈಗೀಗ ಸುದ್ದಿಯಾಗಲು ಮುಗಿಬೀಳುತ್ತಿದ್ದು - ಇದರ ಒಟ್ಟಾರೆ ಪರಿಣಾಮ - "ಸಾಮೂಹಿಕ ಪ್ರಸಾದ ವಿತರಣೆ "ಯ ಗದ್ದಲ ಮಾತ್ರವೇ ಆಗುತ್ತಿದೆ ! ಇದು ಭಗವದ್ಗೀತೆಯ ಬೋಧನೆಗಳ ಆಧುನಿಕ ವರ್ಣವಿಕೃತಿ !
ಸಂಗಂ ತ್ಯಕ್ತ್ವಾ...
ನಿರ್ಮಮ ನಿರಹಂಕಾರದ ಯೌಗಿಕ ಮನೋನೆಲೆಯು ಮಾತ್ರ ಪ್ರಶಾಂತವಾಗಿ ಇರಬಲ್ಲದು - ಎಂಬ ಭಗವದ್ಗೀತೆಯ ಸಂದೇಶವು ಸ್ವಸ್ಥ ಬದುಕಿಗೆ ಕೈಪಿಡಿಯಂತಿದೆ. ಸಂಗಂ ತ್ಯಕ್ತ್ವಾ ಎಂದರೆ ಬಾಹ್ಯ ಜನಜಂಗುಳಿ ಎಂಬುದಕ್ಕಷ್ಟೇ ಸೀಮಿತವಲ್ಲ. ಕರ್ಮ ಮತ್ತು ಫಲ, ಸಂಬಂಧ ಬಾಂಧವ್ಯಗಳಲ್ಲಿ ವಿಸ್ತರಿಸುವ ಮನೋವ್ಯಾಪಾರ ಮತ್ತು ತತ್ರಾಪಿ ಫಲ ನಿರೀಕ್ಷೆ... ಮುಂತಾದ - ಮನಸ್ಸಿನೊಂದಿಗೆ ಜೋಡಾಟ ನಡೆಸುತ್ತಿರುವ ದೈನಂದಿನ ಭಾವನೆಗಳ "ಸಂಗ" (ಆಸಕ್ತಿ) ವನ್ನು ನಿಯಂತ್ರಿಸಿಕೊಳ್ಳುವ ಸೂಚನೆಯೂ ಇಲ್ಲಿದೆ. ಯಾವುದೇ "ಮರುಳು ಕನಸು"ಗಳಿಗೆ ಅಂಟಿಕೊಳ್ಳದೇ ನಿರ್ಮಮರಾಗಿ ನಡೆಸುವ ಕರ್ಮಗಳನ್ನು ಭಗವದ್ಗೀತೆಯು ಪ್ರತಿಪಾದಿಸುತ್ತದೆ. ಭಗವದ್ಗೀತೆ ಎಂದರೆ - ಮನೋವ್ಯಾಪಾರಿಗಳಿಗೆ ತಗಲುವ ರೋಗಗಳಿಗೆ ನೀಡಬಹುದಾದ ಚಿಕಿತ್ಸೆ ಮತ್ತು ರೋಗನಿರೋಧದ ಕೈಪಿಡಿ; Theory. "ಇದೇ ನೆಮ್ಮದಿಯ ಬದುಕಿನ ಸೂತ್ರ" ಎಂದೂ ಭಗವದ್ಗೀತೆಯು ಬೆರಳು ತೋರಿಸುತ್ತದೆ. ಇಂತಹ ಆಚಾರ ವಿಚಾರ ಮತ್ತು ಆದರ್ಶಗಳೇ - ಸನ್ಯಾಸವು ಸಮಾಜಕ್ಕೆ ತೆರೆದು ತೋರಬೇಕಾದ ಸನ್ಮಾರ್ಗ. ಇದೇ ಮೂಲ ಧರ್ಮ; ಪ್ರಾಪಂಚಿಕರು ಅನುಸರಿಸಬೇಕಾದ ಆದರ್ಶ.
ಆದರೆ ಈ ಭೂಮಿಯಲ್ಲಿ ಚಲಿಸುತ್ತಿರುವ ಸಂಸಾರ ಎಂಬ ತೇಲುದೋಣಿಯು ಎಂತಹ ಗಿಲೀಟಿನದು ಎಂದರೆ - ಎಂತೆಂತಹ ಸಾಧಕ ಸಾಧುಗಳಿಗೂ ಅಮಲೇರಿಸಿ ಸನ್ಯಾಸವನ್ನೂ ಮರೆಸಿ ತೂಗಾಡಿಸುವಷ್ಟು ಬಲವಾಗಿದೆ. ಈ ಲೌಕಿಕ ಪರಿಸರದಲ್ಲಿ ಮನಸ್ಸನ್ನು ಚಂಚಲಗೊಳಿಸುವ ಬಾಹ್ಯ ಆಕರ್ಷಣೆಗಳು ಒಂದೇ ? ಎರಡೆ ? ಏಕಾಗ್ರಚಿತ್ತದಿಂದ ಅಂತರ್ಮುಖಿಯಾಗಲು ನಿರಾಕರಿಸುತ್ತ ಲೋಲುಪತೆಯತ್ತ ಮನುಷ್ಯರನ್ನು ಸೆಳೆಯುತ್ತಲೇ ಇರುವ ಭೂಮಿಯ ಸೆಳೆತಗಳು - ಸನ್ಯಾಸಿ ಮತ್ತು ಗೃಹಸ್ಥರು - ಯಾರನ್ನೂ ಸುಲಭದಲ್ಲಿ ಬಿಡಲೊಲ್ಲದು. ಇಂತಹ ನಾಜೂಕಿನ ಬಾಳಿನಲ್ಲಿ - ಜ್ಞಾನದ ಊರುಗೋಲಿನ ಆಶ್ರಯದಲ್ಲಿರುವ ಸಾಧಕರು ಮಾತ್ರ - ಇತರರಿಗಿಂತ ನಾಲ್ಕು ಹೆಜ್ಜೆ ಮುಂದೆ ಸಾಗಬಲ್ಲರು. ಆದ್ದರಿಂದಲೇ ಶ್ರೀ ರಾಮಕೃಷ್ಣರು ತಮ್ಮ ಭಕ್ತರನ್ನು ಎಚ್ಚರಿಸುತ್ತಿದ್ದರು. "ಈ ಸಂಸಾರವು ಕಾಡಿಗೆ ತುಂಬಿದ ಕೋಣೆ. ನೆಲ, ಗೋಡೆ, ಕಿಟಕಿ ಬಾಗಿಲುಗಳೆಲ್ಲವೂ ಕಾಡಿಗೆಮಯ. ಎಷ್ಟೇ ಎಚ್ಚರದಿಂದ ನಡೆದರೂ ಕೈಮೈಗೆ ಒಂದಷ್ಟು ಕಪ್ಪು ತಾಗಿಯೇ ಬಿಡುತ್ತದೆ."
ಆದ್ದರಿಂದ ಸರಿತಪ್ಪುಗಳ ತರತಮ ಜ್ಞಾನದೊಂದಿಗೆ ಅರಿಷಡ್ವೈರಿಗಳೆಂಬ "ಕಾಡಿಗೆಯ ಸಂಗ ಸುಖ"ದ ನಡುವೆ ಹೊರಳಾಡಿಯೂ ಮಂಡಿಯೂರದಂತಹ ಎಚ್ಚರವು ಅಗತ್ಯ ಎಂದು - ತಮ್ಮ ಗಂಟಲು ಒಡೆಯುವಷ್ಟು ಬಾರಿ - ರಾಮಕೃಷ್ಣ ಪರಮಹಂಸರು ಪ್ರತಿಪಾದಿಸಿದ್ದರು.
ಒಮ್ಮೆ ಶ್ರೀ ರಾಮಕೃಷ್ಣರಲ್ಲಿ ಅವರ ಭಕ್ತನೊಬ್ಬ - "ಗುರುಗಳೇ, ಪಕ್ಕದ ಕಾರ್ಖಾನೆಯ ಸೈರನ್ ಗದ್ದಲದಿಂದಾಗಿ ಧ್ಯಾನದಲ್ಲಿ ಮುಳುಗಲು ನನಗೆ ತಡೆಯಾಗುತ್ತಿದೆ; ಏಕಾಗ್ರತೆ ಸಾಧ್ಯವಾಗುತ್ತಿಲ್ಲ" ಎಂದು ತನ್ನ ಸಂಕಷ್ಟವನ್ನು ತೋಡಿಕೊಂಡಾಗ ಪರಮಹಂಸರು ಹೇಳಿದ್ದರು... "ಅರೇ... ಏಕೆ ಅದೇಕೆ ಸಾಧ್ಯವಾಗುವುದಿಲ್ಲ ? ಅದೇ ಸೈರನ್ ನಲ್ಲೇ ಮನಸ್ಸನ್ನು ಕೇಂದ್ರೀಕರಿಸು... " ಎಂದಿದ್ದರು ! ಅಂದರೆ... ಬದುಕಿನಲ್ಲಿ ಎದುರಾಗುವ ಅಡೆತಡೆಗಳನ್ನೇ - ಸಂಕಷ್ಟದಿಂದ ಮೇಲೇರುವ ಏಣಿಯಾಗಿ ಬಳಸಿಕೊಂಡಂತೆ; ಇರುವ ಸನ್ನಿವೇಶವನ್ನೇ ಸಾಧನೆಯ ದಾಳವಾಗಿಸಿಕೊಳ್ಳುವ ಸುಲಭ ಸೂತ್ರವಿದು.
ಸಮರ್ಥ ಗುರುವಿನ ಮಾರ್ಗದರ್ಶನದಲ್ಲಿ, "ಸಂಗಂ ತ್ಯಕ್ತ್ವಾ" ಭೂಮಿಕೆಯಲ್ಲಿ, ಏಕಧ್ಯೇಯದ ಇಚ್ಛಾಶಕ್ತಿಯುಳ್ಳವರಿಗೆ ಮಾತ್ರ ಸಾಧ್ಯವಾಗುವ ಸಾಹಸವಿದು. ಸಂಬಂಧಗಳನ್ನು ಜೋಡಿಸುವುದು ಮುರಿಯುವುದು, ಸಿದ್ಧಾಂತದ ಹೆಸರಿನಲ್ಲಿ ಮೇಲಾಟ ನಡೆಸುವುದು - ನರಳುವುದು, ಸ್ವಾರ್ಥಪ್ರೇರಿತ ಗುಂಪುಗಾರಿಕೆ ನಡೆಸುವುದು ಕುಟಿಲ ಮಾರ್ಗ ಹಿಡಿಯುವುದು... ಮುಂತಾದ ಎಲ್ಲ ಬಗೆಯ ಸಾಮಾಜಿಕ ತರಲೆಗಳಿಗೂ - "ಸಂಗದ" ಅತಿಯಾದ ಅವಲಂಬನೆಯೇ ಮುಖ್ಯ ಕಾರಣ. ಏಕೆಂದರೆ, ಕಲಬೆರಕೆಯಿಲ್ಲದ ಸತ್ಸಂಗವನ್ನು ಅಪೇಕ್ಷಿಸುವುದೂ ಕಷ್ಟಕರವೇ ಆಗಿದೆ. ಆದ್ದರಿಂದ ಯಾವುದೇ "ಸಂಗ" ಎಂಬುದು ಸಂಪೂರ್ಣ ಭದ್ರ ಆಗಿರುವುದಿಲ್ಲ. ಹಂಸಕ್ಷೀರ ನ್ಯಾಯದಂತೆ, ಸದ್ವಿಚಾರಗಳನ್ನು ಮಾತ್ರ ಹೀರಿಕೊಳ್ಳುವ ಶಕ್ತಿಯು ಎಲ್ಲರಲ್ಲಿ ಇರುವುದೂ ಅಸಾಧ್ಯ. ಆದ್ದರಿಂದಲೇ ಸ್ವಲ್ಪ ಎಚ್ಚರ ತಪ್ಪಿದರೂ "ಸಂಗ" ಎಂಬುದು - ಒಂದಲ್ಲ ಒಂದು ಹಂತದಲ್ಲಿ ದಾರಿ ತಪ್ಪಿಸಲೂ ಬಲ್ಲದು. ಸಂಗ ಅಥವ ಆಸಕ್ತಿಯು - ಯಾವುದೇ ಸಾಮಾಜಿಕ ಬದುಕುಗಳ ಜುಟ್ಟನ್ನೇ ಹಿಡಿದು ಅಲುಗಾಡಿಸುವಷ್ಟು ಕೊಬ್ಬುವಂತಾದಾಗ - ಮನಸ್ಸು ಸ್ವಚ್ಛಂದ ಹರಿದಾಟಕ್ಕೆ ತೊಡಗುತ್ತದೆ. ಹಾಗೆ ಅಂಕೆ ತಪ್ಪಿದ ಮನಸ್ಸಿನಲ್ಲಿ ಕ್ಷೋಭೆ ತಲ್ಲಣಗಳು ಸಾಮಾನ್ಯ.
ಯಾವುದೇ ಪೀಡಿಸುವಂತಹ ಆಸಕ್ತಿಗಳು ಯಾರೋ ತೊಡುವ ಬಟ್ಟೆಯ ಬಣ್ಣದಿಂದಲೇ ಬದಲಾಗದು; ಅಸಂಗತ್ವವೇ ಸನ್ಯಾಸ. ಅದಕ್ಕೆ ಬಾಹ್ಯ ಬಟ್ಟೆಯಲ್ಲ - ಭಾವ ಸ್ಥಿರತೆಯ, ಭಾವ ಪಾವಿತ್ರ್ಯದ ಬಟ್ಟೆಯ ಅಗತ್ಯವಿದೆ. ಭಾವ ಪಾವಿತ್ರ್ಯಕ್ಕೆ - ಯಾವುದೇ ಬಾಹ್ಯ ಸಂಕೇತದ ಅಗತ್ಯವೇ ಇಲ್ಲ. ಅಧ್ಯಾತ್ಮ ಸಾಧನೆಯ ಹೆದ್ದಾರಿಯೇ ಇದು. ಉತ್ತಮ ಗೃಹಸ್ಥರಾಗುವುದು, ಉತ್ತಮ ಸನ್ಯಾಸಿಯಾಗುವುದು ಅಥವ ಉತ್ತಮ ಮನುಷ್ಯರಾಗುವುದು... ಹೀಗೆ ಯಾವುದೇ ಉತ್ತಮಿಕೆಯು ಆಧ್ಯಾತ್ಮಿಕ ಸಾಧನೆಗಳೇ ಆಗುತ್ತವೆ.
ಅಧ್ಯಾತ್ಮವು ಶಕ್ತಿಪ್ರದರ್ಶನದ ಸರಕೆ ?
ಯಾವುದೇ ಅಧ್ಯಾತ್ಮ ವಿಚಾರಗಳ ಬೋಧನೆಯಿಂದ ದೊಡ್ಡ ಜನಸಂತೆಯನ್ನು ಏಕಕಾಲದಲ್ಲಿ ಜಾಗ್ರತಗೊಳಿಸುವುದು ಸಾಧ್ಯವೆ ? ಹಾಗೇನಾದರೂ ಕಂಡರೆ - ಅದು ನಿಶ್ಚಯವಾಗಿ - ಪವಾಡ; ಕ್ಷಣಿಕವಾಗಿ ಜನರನ್ನು ಮರುಳುಗೊಳಿಸುವಂತಹ ಕಣ್ಕಟ್ಟಿನ ಸಿದ್ಧಿ. ಆಧ್ಯಾತ್ಮಿಕ ಹಂತದ ಪ್ರಾರಂಭದಲ್ಲಿ ಸಾಧಕನನ್ನು ಲೋಭಕ್ಕೆ ಒಳಪಡಿಸಿ, ಅವರನ್ನು ಪರೀಕ್ಷಿಸಲು ಒದಗುವ "ಸಿದ್ಧಿ" ಅದು. "ಅಧ್ಯಾತ್ಮದ ಹಾದಿಯಲ್ಲಿ ಮುನ್ನಡೆಯಬಯಸುವ ಸಾತ್ವಿಕ ಸಾಧಕರು - ಯಾವುದೇ ಸಿದ್ಧಿಗಳನ್ನು ಬಳಸಬಾರದು; ಅದರಿಂದ ಆಧ್ಯಾತ್ಮಿಕ ನಡಿಗೆಯು ನಿಂತುಹೋಗುತ್ತದೆ . ಅಮಾಯಕ ಸಾಧಕರನ್ನು ಪ್ರಪಾತಕ್ಕೆ ತಳ್ಳುವಂತಹ ಸಿದ್ಧಿಗಳನ್ನು ತಿರಸ್ಕರಿಸಿ ಮುನ್ನಡೆಯಬೇಕು..." ಎಂದು ಪರಮಹಂಸರು ಎಚ್ಚರಿಸಿದ್ದರು. ಅಂತಹ ಕೈಚಳಕ - ಚಮತ್ಕಾರಗಳು ಜನರನ್ನು ಮೋಸಗೊಳಿಸುತ್ತ ಮನರಂಜನೆ ನೀಡಬಹುದಲ್ಲದೆ ಯಾವ ಬದುಕಿಗೂ ಉಪಕರಿಸುವಂಥದ್ದಲ್ಲ. ತಾತ್ಕಾಲಿಕವಾಗಿ ಮರುಳುಗೊಳಿಸುವ ಅಂತಹ ಹಾದಿಯನ್ನು ಮೊಂಡುತನದ ಹಗಲುವೇಷದ ಲೌಕಿಕರಿಗೆ ಬಿಟ್ಟುಕೊಟ್ಟು - ಕಾವಿಧಾರಿಗಳಾದವರು ಶಾಶ್ವತ ಸತ್ಯದ ಜೀವಂತ ಮಾದರಿಗಳಾದರೆ ಸಾಕಾಗುತ್ತದೆ. ಶ್ರೀ ರಾಮಕೃಷ್ಣರು ಅಂತಹ ಒಂದು ಮಾದರಿ. ಸ್ವತಃ ಕಾವಿ ಧರಿಸದೆ ಪರಮಹಂಸರಿಗೆ ವೈಯ್ಯಕ್ತಿಕವಾಗಿ ಸಾಧಿಸಲು ಸಾಧ್ಯವಾದ ಅಮೋಘ ಸಾಧನೆಗೆ ಶರಣಾಗುವವರಿಗೆ ಅಥವ ಯಾವುದೇ ಸತ್ಯಾನ್ವೇಷಿ ಭಕ್ತರಿಗೆ, ಅಕಸ್ಮಾತ್ ಆಚಾರ ವ್ಯವಹಾರ ಶುದ್ಧತೆಯನ್ನು ವೇಷಕ್ಕೆ ತಕ್ಕಂತೆ ಉಳಿಸಿಕೊಳ್ಳಲಾಗದಂತಾದಾಗ - ಯಾವುದೇ ಹೊರ ವೇಷಗಳ ಅವಲಂಬನೆಯಾದರೂ ಯಾಕೆ ಬೇಕು ?
ಕಾವಿ ಮತ್ತು ಸನ್ಯಾಸದ ಪಾವಿತ್ರ್ಯವು ಉಳಿಯಲಿ...
ಹಿಂದೊಮ್ಮೆ ವಿಶೇಷ ಗೌರವಕ್ಕೆ ಪಾತ್ರವಾಗಿದ್ದ ಕಾವಿಯುಡುಗೆಯ ಕುರಿತು ಇಂತಹ ವಿಪರೀತ ವಿಚಾರಗಳು ಸಾಮಾನ್ಯ ಜನರಲ್ಲಿ - ಈಗೀಗ ಮೂಡುತ್ತಿರುವುದಾದರೂ ಏಕೆ ? ಅಕಸ್ಮಾತ್ ಸಾಮಾನ್ಯ ಜನರಿಗಿಂತ ಭಿನ್ನವಾದ ಬದುಕನ್ನು ಸಾಗಿಸುತ್ತಿರುವವರು ಎಂಬ ಕಲ್ಪನೆಯನ್ನು ಮೂಡಿಸುವ ಉದ್ದೇಶ ಅಥವ ಅಧ್ಯಾತ್ಮದ ಬಹಿರಂಗ ವ್ಯಾಪಾರ ನಡೆಸುವ ಉತ್ಸಾಹವು ಯಾವುದೇ ಕಾವಿಗಳಿಗೆ ಇದ್ದರೆ... ಅವರ ಸಾಧನೆಗಳೇ ಅಂತಹ ಪ್ರತ್ಯೇಕತೆಯನ್ನು ಬಿಂಬಿಸಬೇಕಲ್ಲದೆ ಭಕ್ತಗಡಣದ ತಲೆಲೆಕ್ಕಕ್ಕೆ ಮತ್ತು ಸುದ್ದಿ ಮಾಡುವ ಚಪಲಕ್ಕೆ ಮಣೆಹಾಕಿದಂತಿರಬಾರದು. "ಜನಸಂಖ್ಯೆಯ ಬಲ" ಎಂಬ ಹೊರವೇಷದ ಮೂಲಕ ಜಗತ್ತನ್ನು ಪ್ರಭಾವಿಸಿ ತಮ್ಮತ್ತ ಸೆಳೆದುಕೊಂಡು, ಅನಂತರ ಪುಕ್ಕಟೆ ಉಪದೇಶಿಸುವ ಸಾಹಸಕ್ಕಿಳಿಯುವುದೂ - ಫಲಕಾಣಿಸದ ದೌರ್ಬಲ್ಯವೇ ಆದೀತು. ಸನಾತನವಾದ ಅಧ್ಯಾತ್ಮದ ಸಂಕೇತವಾದ ಸನ್ಯಾಸ ಮತ್ತು ಕಾವಿಯು ಲೋಕದ ಮಾತಿಗೆ ಯಾವತ್ತೂ ವಸ್ತುವಾಗಬಾರದು.
ಜನಸಂತೆಯ ತಲೆಲೆಕ್ಕದ ಮರುಳಿನಿಂದ ಯಾವುದೇ ಆಧ್ಯಾತ್ಮಿಕ ಕ್ರಾಂತಿಯು ಸಾಧ್ಯವೆ ? ಆತ್ಮೋದ್ಧಾರ ಸಾಧ್ಯವೆ ? ಯೋಚಿಸಬೇಕು. ಸಂತೆಯ ಪ್ರಭಾವವು ಹಸರವು ಕಳೆಯುವಷ್ಟರಲ್ಲಿ ಇಳಿದುಹೋಗದೆ ? ಆದ್ದರಿಂದಲೇ - ಅಂದು ಶ್ರೀ ರಾಮಕೃಷ್ಣರು ಅಧ್ಯಾತ್ಮದ ಸಂಸ್ಕಾರವನ್ನು ಇಚ್ಛಾಶಕ್ತಿಯುಳ್ಳ ಆಯ್ದ ಅರ್ಹರಿಗೆ ಮಾತ್ರ ದಯಪಾಲಿಸಿದರು; ಸನ್ಯಾಸ ಮತ್ತು ಕಾವಿಯ ಮಾನವನ್ನು ಎತ್ತರಿಸಿದರು. ಶುದ್ಧ ಆಧ್ಯಾತ್ಮವನ್ನು ಪ್ರತಿಪಾದಿಸಿದರು.
ಸ್ವಾಮಿ ಅದ್ಭುತಾನಂದರ ಅದ್ಭುತ ವಿಚಾರ !
ಸ್ವಾಮಿ ಅದ್ಭುತಾನಂದರು (ಲಾಟೂ) ಶ್ರೀ ರಾಮಕೃಷ್ಣರು ಸೃಷ್ಟಿಸಿದ್ದ ಮಹಾ ವಿಸ್ಮಯ. ಅನಕ್ಷರಸ್ಥರಾಗಿದ್ದ ಲಾಟೂ ಮಹಾರಾಜರು ಶ್ರೀ ರಾಮಕೃಷ್ಣರ ನೇರ ಶಿಷ್ಯರಾಗಿದ್ದವರು. ಶ್ರೀ ರಾಮ ಹನುಮನ ಬಾಂಧವ್ಯವದು ! ಅದ್ಭುತಾನಂದರು ತಮ್ಮ ಗುರುಗಳ ಹೆಜ್ಜೆಯನ್ನೇ ಅನುಸರಿಸುತ್ತ ಅಧ್ಯಾತ್ಮದ ಹಾದಿಯಲ್ಲಿ ಸುಲಲಿತವಾಗಿ ನಡೆದು ಬಂದದ್ದು ಮತ್ತು ತಮ್ಮ ಸಾಮಾನ್ಯ ಜ್ಞಾನವನ್ನು ತ್ಯಾಗ ವೈರಾಗ್ಯಗಳಲ್ಲಿ ಅದ್ದಿ, ಆಧ್ಯಾತ್ಮದ ನೆಲೆಯಲ್ಲಿ ವಿಸ್ತರಿಸಿಕೊಂಡದ್ದು ಅದ್ಭುತ ಘಟನೆ ! ಸ್ವಾಮಿ ಅದ್ಭುತಾನಂದರು - ಅಧ್ಯಾತ್ಮದ ಇತ್ತೀಚಿನ ಅಪೂರ್ವ ಮಾದರಿಯೂ ಹೌದು !
1902 ರ ಅವಧಿಯಲ್ಲಿ ಸ್ವಾಮಿ ಅದ್ಭುತಾನಂದರು (ಲಾಟೂ ಮಹಾರಾಜ್) - ಶ್ರೀ ರಾಮಕೃಷ್ಣರ ಗೃಹಸ್ಥ ಶಿಷ್ಯರಾಗಿದ್ದ ಹರಮೋಹನ್ ಬಾಬುಗಳ ಮನೆಯಲ್ಲಿದ್ದರು. ಅದೊಂದು ದಿನ... "ಧರ್ಮಪ್ರಚಾರವನ್ನು ಹೇಗೆ ಮಾಡಬೇಕು ?" ಎಂಬ ವಿಚಾರದಲ್ಲಿ ಅಲ್ಲಿ ನಡೆದ ಸಂಭಾಷಣೆಯ ಮಧ್ಯೆ - ಸಾಂದರ್ಭಿಕವಾಗಿ ಅವರು ಹೇಳಿದ್ದ ಮಾತುಗಳು ಈಗಲೂ ಚಿಂತನಯೋಗ್ಯವೆನ್ನಿಸುತ್ತವೆ.
ಸ್ವಾಮಿ ಅದ್ಭುತಾನಂದರು ಅಂದು ಹೇಳಿದ್ದರು...
"ಡೋಲು ಬಾರಿಸಿದರೆ ಧರ್ಮಪ್ರಚಾರ ಆಗಿಹೋಗುತ್ತದೆಯೆ ? ಒಬ್ಬರು ಹೇಳುತ್ತ ಹೋದರೆ ಇತರರು ಅದನ್ನು ಸ್ವೀಕರಿಸಲು - ಧರ್ಮ ಎನ್ನುವುದೇನು ಹೊರಗಿನ ಪದಾರ್ಥವೆ ? ಧರ್ಮವನ್ನು ಬದುಕಾಗಿಸಿಕೊಳ್ಳುವ ಜ್ಞಾನವು - ಗಲಾಟೆ ಗೊಂದಲ ಊಟತಿಂಡಿಯ ನಿತ್ಯೋತ್ಸವದ ನಡುವೆ ಸಿಕ್ಕೀತೆ ? ಗದ್ದಲವಿದ್ದಾಗ ಜನರು ಬಹಿರ್ಮುಖಿಯಾಗುತ್ತಾರೆ. ಆದರೆ ಅಂತರ್ಮುಖಿಗಳಾಗದೆ ಧರ್ಮವು ಒಡಮೂಡುವುದಿಲ್ಲ. ನೋಡಿ... ಇದೇ ಕೊಲ್ಕತ್ತಾ ನಗರದಲ್ಲಿ ಕೆಲವು ವರ್ಷಗಳ ಹಿಂದೆ ಯಾವ ರೀತಿಯಲ್ಲಿ ಧರ್ಮದ ಅಲೆ ಎದ್ದಿತ್ತು ! ಗಲ್ಲಿಗಲ್ಲಿಯ ತಿರುವಿನಲ್ಲಿ ಪಾದ್ರಿಗಳು ಲೆಕ್ಚರ್ ಗಳನ್ನು ಕೊಡುತ್ತಿದ್ದರು. ಬ್ರಹ್ಮಸಮಾಜದವರು ಉಪನ್ಯಾಸಗಳನ್ನು ಮಾಡುತ್ತಿದ್ದರು. ಹರಿಸಭೆಗಳಲ್ಲಿ ಕೀರ್ತನೆಗಳು ನಡೆಯುತ್ತಿದ್ದವು. ನೆನಪಿಸಿಕೊಳ್ಳಿ. ಒಂದು ದಿನ ಕೇಶವಚಂದ್ರಸೇನರು ಉಪನ್ಯಾಸ ಮಾಡಿದರು; ಮಾರನೆಯ ದಿನ - ಕ್ರಿಶ್ಚಿಯನ್ ಕಾಳಿ (ರೆವರೆಂಡ್ ಕಾಳಿಕೃಷ್ಣ ಬ್ಯಾನರ್ಜಿ) ಲೆಕ್ಚರ್ ಕೊಟ್ಟರು. ಜನ ಸೇರಿದರು; ಕೇಳಿದರು. ಮತ್ತೊಂದು ದಿನ ಕೃಷ್ಣಾನಂದ ಸ್ವಾಮಿ ಬಂದು ಲೆಕ್ಚರ್ ಕೊಟ್ಟರು. ಜನ ಅದನ್ನೂ ಕೇಳಿದರು. ಒಂದು ಗುಂಪಿನ ಪ್ರವಚನಕಾರರು ಹಿಂದೂ ಧರ್ಮವನ್ನು ವಾಚಾಮಗೋಚರವಾಗಿ ಬೈದರು. ಬೇರೊಂದು ಗುಂಪು ಹಿಂದೂ ಧರ್ಮವನ್ನು ಹಾಡಿ ಹೊಗಳಿದರು. ಶಶಿಧರ ಪಂಡಿತನ ಗುಂಪಿನವರಂತೂ ಧರ್ಮದ ವಿನೂತನ ವ್ಯಾಖ್ಯೆಯನ್ನೇ ಪ್ರಾರಂಭಿಸಿದರು. ಎಷ್ಟು ಜಬರದಸ್ತಿನಿಂದ ಧರ್ಮದ ಪ್ರಚಾರ ನಡೆಯಿತು...
ಆದರೆ ಫಲ ಏನಾಯಿತು ? ಉಪನ್ಯಾಸಕರು ಬೆಳೆದರೆ ? ತಪಸ್ವಿಗಳು ಬೆಳೆದರೆ ? ಈಗ ಆ ಗುಂಪುಗಳೆಲ್ಲ ಎಲ್ಲಿ ಹೋದವು ? ಕೇಳಿದವರು ಏನಾದರು ? ಆಗಿನ ಜೋರು ಆಗಿನ ಆವೇಶಗಳು ಈಗ ಕಾಣಿಸುತ್ತಿದೆಯೆ ? ನೀವು ಸರಿಯಾಗಿ ಅರ್ಥ ಮಾಡಿಕೊಳ್ಳಿ... ಬೋಧಿಸುವ ವ್ಯಕ್ತಿಯ ಆಂತರ್ಯದಲ್ಲಿ ಹುರುಳಿಲ್ಲದಿದ್ದರೆ ಆತ್ಮಜಾಗ್ರತಿಯ ವ್ಯಾಕುಲತೆ ಇಲ್ಲದಿದ್ದರೆ ಬರೀ ಮಾತಿನಿಂದ ಏನೂ ಪ್ರಯೋಜನವಿಲ್ಲ. ಬೋಧಕರ ಆಂತರ್ಯದಲ್ಲಿ ಶ್ರದ್ಧೆ, ತ್ಯಾಗ, ವೈರಾಗ್ಯ, ಪ್ರೇಮ - ಅಗತ್ಯವಾಗಿ ಇರಲೇಬೇಕು. ಆಗ ಮಾತ್ರ - ಜನರಲ್ಲಿ ವಿಶ್ವಾಸ ಹುಟ್ಟಿ ಪರಿವರ್ತನೆಗೆ ಪ್ರೇರಣೆ ದೊರೆಯುತ್ತದೆ...."
ಲಾಟು ಮಹಾರಾಜರು ತಮ್ಮ ಮಾತನ್ನು ಮುಂದುವರಿಸುತ್ತ... - "ನಿಮ್ಮ ಕಣ್ಣಮುಂದಿರುವ ದೃಷ್ಟಾಂತವನ್ನೇ ನೋಡಿ. ಸ್ವಾಮಿ ವಿವೇಕಾನಂದರು ಎಷ್ಟು ಕಠೋರ ಸಾಧನೆ ಮಾಡಿದರು ! ಅವರಿಗೆ ಲೋಕ ಶಿಕ್ಷಣ ನೀಡುವಂತೆ ಶ್ರೀ ರಾಮಕೃಷ್ಣರೇ - ಆದೇಶಿಸಿದ್ದರು. ನರೇಂದ್ರನ ಸಂಘಟನಾ ಶಕ್ತಿ, ಗ್ರಹಣ ಶಕ್ತಿ, ಸ್ಮರಣ ಶಕ್ತಿ, ಏಕಾಗ್ರತಾ ಶಕ್ತಿ, ವಿಶಾಲ ಓದು - ಜ್ಞಾನ ಶಕ್ತಿ, ಭಾಷಾ ಪ್ರೌಢಿಮೆ, ವಿಷಯವನ್ನು ಪ್ರತಿಪಾದಿಸುವ ಶಕ್ತಿ, ಜನಸಮ್ಮೋಹಕ ಶಕ್ತಿಗಳನ್ನೆಲ್ಲ ಗುರುತಿಸಿದ್ದ ಶ್ರೀ ರಾಮಕೃಷ್ಣರು ತಮ್ಮ ಶಿಷ್ಯ ನರೇಂದ್ರನನ್ನು ಲೋಕಗುರುವಾಗುವಂತೆ ಆದೇಶಿಸಿದ್ದರು. ಗುರುವಿನಿಂದಲೇ ನಿಯುಕ್ತರಾದ ಬೋಧಕರವರು ! ಆದ್ದರಿಂದಲೇ ವಿವೇಕಾನಂದರ ಮಾತುಗಳನ್ನು ಜನರು ಗ್ರಹಿಸಿದರು; ಸ್ವೀಕರಿಸಿದರು. ಚಿಕಾಗೋದಲ್ಲಿ ವಿವೇಕಾನಂದರು ನೀಡಿದ್ದ ಒಂದೇ ಒಂದು ಲೆಕ್ಚರಿನ ನಂತರ ಚಕ್ರ ತಿರುಗತೊಡಗಿತು. ಯಾರೂ ಎಂದೂ ಊಹಿಸಲಾರದ ರೀತಿಯಲ್ಲಿ ಘಟನೆಗಳು ಸಂಭವಿಸುತ್ತಲೇ ಹೋದವು... ಇಂತಹ ವಿಸ್ಮಯವನ್ನು ಎಲ್ಲರೂ ಮಾಡಿಬಿಡಲು ಸಾಧ್ಯವೆ ? ಜನಸಾಮಾನ್ಯರನ್ನು ಉಪನ್ಯಾಸಗಳಿಂದಲೇ ಪ್ರಭಾವಿತಗೊಳಿಸುವುದು - ಎಲ್ಲರಿಂದಲೂ ಸಾಧ್ಯವಾಗದು. ಇಂದಿನ ಸನ್ನಿವೇಶದಲ್ಲಿ... ಉಪನ್ಯಾಸಗಳಿಂದ ಯಾವ ಕಾರ್ಯ ಸಾಧಿಸಬಹುದೋ ಅದಕ್ಕಿಂತಲೂ ಹೆಚ್ಚಿನ ಪ್ರಯೋಜನವನ್ನು ಸದ್ಗ್ರಂಥಗಳ ಅಧ್ಯಯನದಿಂದ ಪಡೆಯಬಹುದು. ಉಪನ್ಯಾಸಕರೊಂದಿಗೆ ಕೇಳುಗರ ಸಂಪರ್ಕವು ಸ್ವಲ್ಪ ಸಮಯದ್ದು. ಆದರೆ ಗ್ರಂಥಾಧ್ಯಯನದಲ್ಲಿ ಲೇಖಕರೊಂದಿಗೆ ಓದುಗರ ಸಂಬಂಧವು ದೀರ್ಘಕಾಲದ್ದು ಮತ್ತು ಆತ್ಮೀಯವಾದದ್ದು. ಸದ್ಗ್ರಂಥಗಳ ಅಧ್ಯಯನದಿಂದ ಸಾಧುಸಂಗದ ಫಲವೂ ಲಭಿಸುತ್ತದೆ..."
ಬಾಡಿಗೆ ಭಕ್ತರನ್ನು ಗುಡ್ಡೆ ಹಾಕುವುದರಿಂದ ಮತ್ತು ಅವರಿಗೆ ಬೋಧಿಸುವುದರಿಂದ ಪ್ರಯೋಜನವಾದರೂ ಏನು ? ಲಾಟುಮಹಾರಾಜರು ಆಧ್ಯಾತ್ಮಿಕ ಒಲವುಳ್ಳವರಿಗೆ ಹೇಳಿದ - ದಾರಿದೀಪದಂತಿರುವ ಸರಳ ಹಿತನುಡಿಯಿದು.
ಸನ್ಯಾಸವು ಅನಿವಾರ್ಯವೆ ?
ಸತ್ಯ, ತ್ಯಾಗ, ಭಕ್ತಿ, ವಿರಕ್ತಿ, ವೈರಾಗ್ಯ, ಅನಾಸಕ್ತಿ... ಮುಂತಾದ ಆಧ್ಯಾತ್ಮಿಕ ಮೌಲ್ಯಗಳನ್ನಲ್ಲದೆ - ಸನ್ಯಾಸದ ಜುಟ್ಟು ಬಟ್ಟೆಗಳ ವೇಷವನ್ನು ಶ್ರೀ ರಾಮಕೃಷ್ಣರು ಎಲ್ಲೂ ಪ್ರತಿಪಾದಿಸಿದಂತೆ ಕಾಣುವುದಿಲ್ಲ. ಆದರೆ ಹೆಂಡತಿ ಮಕ್ಕಳನ್ನು ಹೊಂದುವ ಸಂಸಾರ, ಜಮೀನು ಮನೆಗಳನ್ನು ಹೊಂದುವ ವ್ಯಾಮೋಹ, ದುಡ್ಡುದುಗ್ಗಾಣಿಯ ಸೆಳೆತಗಳನ್ನು ಬೊಟ್ಟಿಟ್ಟು ತೋರಿಸಿದ್ದರು. "ಕಾಮ ಕಾಂಚನಗಳೇ ದುಃಖದ ಮೂಲ; ಭಗವಂತನಿಂದ ವಿಮುಖಗೊಳಿಸುವ ಸಾಧನಗಳು..." ಎನ್ನುತ್ತಲೇ ಬಂದಿದ್ದರು. ಅಂದರೆ... ಪರೋಕ್ಷವಾಗಿ ಸನ್ಯಾಸದತ್ತಲೇ ಬೆಟ್ಟು ಮಾಡಿದ್ದರು. ಭಾವ ಸನ್ಯಾಸಕ್ಕೆ ಪ್ರೇರಣೆ ನೀಡಿದ್ದರು. ಆದ್ದರಿಂದಲೇ ಶ್ರೀ ರಾಮಕೃಷ್ಣರು - ಬಾಹ್ಯಸೌಂದರ್ಯಕಾರಕ ವೇಷಭೂಷಣಗಳ ಅವಸರದಲ್ಲಿ ದೇಹವನ್ನು ಉಜ್ಜಿದವರಲ್ಲ; ಮನಸ್ಸು ಮತ್ತು ಆಂತರಿಕ ಭಾವವನ್ನು ತಾಳ್ಮೆಯಿಂದ ಉಜ್ಜಿದವರು. ಅಧ್ಯಾತ್ಮ ಭಾವಪ್ರೇರಣೆಗೆ ಆದ್ಯತೆ ನೀಡಿದವರು. ಅವರ ದೃಷ್ಟಿಯಲ್ಲಿ - ಮೂಲಭಾವವು ವ್ಯವಸ್ಥಿತವಾಗಿ ಪುಷ್ಟಿಗೊಂಡಾಗ ಅಧ್ಯಾತ್ಮವು ತಾನಾಗಿಯೇ ಸಂಭವಿಸುತ್ತದೆ ! ಆದ್ದರಿಂದಲೇ ಭಗವಂತನ ವ್ಯಾಪಾರದಲ್ಲಿ ತೊಡಗಿಕೊಳ್ಳಲು ಇಚ್ಛಿಸುವವರು ಲೌಕಿಕ ವ್ಯಾಮೋಹ ಸೆಳೆತಗಳಿಂದ ದೂರವಿರುವಂತೆ - ತಾವು ಸ್ವತಃ ಬದುಕಿ ತೋರಿಸಿಯೇ ಬೋಧಿಸುತ್ತಿದ್ದವರು - ಶ್ರೀ ರಾಮಕೃಷ್ಣ ಪರಮಹಂಸರು.
ಸ್ವತಃ ಹೃದ್ಗತಗೊಳಿಸಿಕೊಳ್ಳಲಾಗದ ಯಾವುದೇ ವಿಷಯಗಳನ್ನು ಇತರರಿಗೆ ಬೋಧಿಸಿದರೆ ಅವು ಜನರನ್ನು ಆಕರ್ಷಿಸುವುದಿಲ್ಲ. "ಜೋನಿಬೆಲ್ಲದ ಗುಡಾಣವನ್ನು ಪಕ್ಕದಲ್ಲೇ ಇರಿಸಿಕೊಂಡವರು - "ಬೆಲ್ಲ ತಿನ್ನಬಾರದು" ಎಂದು ಉಪದೇಶಿಸಿದರೆ ಅದು ಜನರನ್ನು ತಲುಪೀತೆ ?" ಎಂದು ಪರಮಹಂಸರು ಕೇಳಿದ್ದರು. ತ್ಯಾಗೀ ಸಾಧುಗಳು ಬೋಧಿಸುವ ವಿಚಾರಗಳನ್ನು ಮಾತ್ರ ಜನರು ಸ್ವಯಂಪ್ರೇರಿತರಾಗಿ ಸ್ವೀಕರಿಸಿ ಆಚರಿಸುವಂತಹ ಪ್ರೇರಣೆ ಸಿಗುತ್ತದೆ. ಆದ್ದರಿಂದ ಸಮಾಜಕ್ಕೆ ಉಪದೇಶಿಸಲೂ ಅರ್ಹತೆ ಬೇಕು; ಬೋಧಿಸುವ ವಿಚಾರಗಳು ಇತರರನ್ನು ತಲುಪಬೇಕಾದರೆ ಸ್ವಾರ್ಥ ಸ್ವಂತದ ಮೋಹವಿಲ್ಲದ ತ್ಯಾಗೀ ಭಕ್ತರು ಮಾತ್ರ ಈ ಹೊಣೆಯನ್ನು ನಿಭಾಯಿಸಬೇಕು - ಎಂಬುದು ಶ್ರೀ ರಾಮಕೃಷ್ಣರ ಸಿದ್ಧಾಂತವಾಗಿತ್ತು.
ಪರೋಕ್ಷವಾಗಿ... ಇದೇ ಸನ್ಯಾಸ. ಪ್ರಪಂಚದ ಮೋಹವನ್ನು ಬಿಡುವುದೇ ಸನ್ಯಾಸ. ಆತ್ಮಭಾವದಲ್ಲೇ ಪೂರ್ತಿಯಾಗಿ ನ್ಯಾಸ (ಒತ್ತೆಯಾಗಿರುವ) ಗೊಳಿಸಲ್ಪಟ್ಟವನೇ ಸನ್ಯಾಸಿ. ಅದೊಂದು ಶುದ್ಧ ಮನೋವ್ಯಾಪಾರ; ಸನ್ಯಾಸದ ಹುರುಳೇ ತ್ಯಾಗ. ಮನೋವ್ಯಾಪಾರದಲ್ಲಿ ಸಿದ್ಧಿ ಪಡೆದವರು ಮಾತ್ರ ಉಪದೇಶಿಸುವ ಅರ್ಹತೆ ಹೊಂದುತ್ತಾರೆ ! ಆದ್ದರಿಂದಲೇ ಶ್ರೀ ರಾಮಕೃಷ್ಣರು - ತಮ್ಮ ಪಟ್ಟ ಶಿಷ್ಯ ನರೇಂದ್ರನನ್ನು (ಸ್ವಾಮಿ ವಿವೇಕಾನಂದ) ಲೋಕಶಿಕ್ಷಣಕ್ಕೆ ನೇಮಿಸಿದರು ! ಗುರುಕೃಪೆಗೆ ಪಾತ್ರರಾಗಿದ್ದ ನರೇಂದ್ರನಾಥನು ಸ್ವಾಮಿ ವಿವೇಕಾನಂದನಾಗಿ ತನ್ನ ಹೆತ್ತವರು, ಗುರು, ಗುರುಬಾಂಧವರು, ಜತೆಗೆ ಹಿಂದೂಸ್ಥಾನದ ಹಿರಿಮೆಗರಿಮೆಯನ್ನು ಜಗತ್ತಿನೆಲ್ಲೆಡೆ ವ್ಯಾಪಿಸುವಂತಹ ಬೋಧನೆಗೈದು ಸಾಧನೆಗೆ ಮಾದರಿಯಾದದ್ದು - ನಾವು ಕಂಡ ವಾಸ್ತವ.
ಹೀಗಿದ್ದೂ... ಶ್ರೀ ರಾಮಕೃಷ್ಣರು ತಮ್ಮ ನಿರ್ಯಾಣದ ಅವಧಿಯಲ್ಲಿ - ಅಧ್ಯಾತ್ಮಭಾವಕ್ಕೆ ಸಮರ್ಪಿಸಿಕೊಳ್ಳುವ ಸೂಚನೆ ನೀಡುವಂತೆ - ತಮ್ಮ ಅಂತರಂಗದ ಶಿಷ್ಯರಿಗೆ ಕಾವಿಬಟ್ಟೆಗಳನ್ನು ಹಂಚಿದ್ದರಂತೆ. ಹೊರವೇಷದಿಂದ ಆಕರ್ಷಿಸಿಕೊಂಡ ನಂತರವೇ ತಮ್ಮ ಮುಂದಿನ ತಲೆಮಾರುಗಳಿಗೆ ತಲುಪುವಂತೆ ತತ್ವಪ್ರಸಾರ ಮಾಡುವುದು ಸಾಧ್ಯವಾಗುತ್ತದೆ - ಎಂಬ ಪೂರ್ವಸ್ಮರಣೆ ಅವರಿಗಾಗಿತ್ತೆ ? ಅಥವ... ಅದಾಗಲೇ ತಮ್ಮ ಮಾರ್ಗದರ್ಶನದಂತೆ ವ್ಯಕ್ತಿತ್ವವನ್ನು ಹದಗೊಳಿಸಿಕೊಂಡು - ಉಪದೇಶ ನೀಡಬಲ್ಲ ಅರ್ಹತೆಯನ್ನು ಬೆಳೆಸಿಕೊಂಡ ತಮ್ಮ ಅಂತರಂಗದ ಶಿಷ್ಯರನ್ನು - ಕಾವಿಯ ಸಂಕೇತದಿಂದ ಭಾವನಾತ್ಮಕವಾಗಿ ಮಿದುಗೊಳಿಸಿ, ಅಧ್ಯಾತ್ಮದ ಹಾದಿಯಲ್ಲಿ ಅವರನ್ನು ಬಲವಾಗಿ ಕಟ್ಟಿಡುವ ಪೂರ್ವ ಪ್ರಯಾಸವಾಗಿದ್ದಿರಲೂಬಹುದೆ ? ಏನೇ ಇದ್ದರೂ... ಅವರ ಶಿಷ್ಯ ಪರಂಪರೆಯು ಶ್ರೀ ರಾಮಕೃಷ್ಣರ ಸಿದ್ಧಾಂತವನ್ನು ಅನುಸರಿಸುತ್ತ ಎತ್ತಿ ಹಿಡಿಯುತ್ತ - ಸಮರ್ಥವಾಗಿ ಗುರುಕಾಣಿಕೆನ್ನು ಸಲ್ಲಿಸುತ್ತಲೇ ಬಂದಿದೆ. ಇವತ್ತಿಗೂ ಶ್ರೀ ರಾಮಕೃಷ್ಣ ಮಿಶನ್ - ಆಶ್ರಮಗಳ ಸನ್ಯಾಸಿಗಳು ಆದರ್ಶಪ್ರಾಯರಾಗಿಯೇ ಉಳಿದಿರುವುದನ್ನೂ ನೋಡಬಹುದು.
ಶ್ರೀ ರಾಮಕೃಷ್ಣ ಸಂಘವು - ಸನ್ಯಾಸದೀಕ್ಷೆ ನೀಡಲು - ಅಂದಿನಿಂದಲೂ ಕಠಿಣ ಶಿಸ್ತಿನ ಸೂತ್ರಗಳನ್ನು ಅವಲಂಬಿಸುತ್ತ ಬಂದಿದೆ. ಆಯ್ದ ಕೆಲವು ಹಿರಿಯ ಸನ್ಯಾಸಿಗಳು ಮಾತ್ರ ಹೊಸ ಪ್ರವೇಶಿಗರಿಗೆ ಸನ್ಯಾಸ ದೀಕ್ಷೆ ನೀಡುವ ಪದ್ಧತಿಯು ಅಲ್ಲಿ ಈಗಲೂ ಮುಂದುವರಿದಿದೆ. ಶ್ರೀಮಾತೆ ಶಾರದಾದೇವಿಯವರು ಮಾತ್ರ ಆಯ್ದ ಕೆಲವು ಸಂದರ್ಭಗಳಲ್ಲಿ ಉದಾರವಾಗಿ "ಮಂತ್ರ ದೀಕ್ಷೆ" ನೀಡಿದ್ದು ಬಿಟ್ಟರೆ - ಸನ್ಯಾಸ ಪ್ರವೇಶದ ಹಂತದಲ್ಲಿ ಮಾತ್ರ ತುಂಬ ಎಚ್ಚರ ವಹಿಸುತ್ತಿರುವ ಹಿನ್ನೆಲೆಯು - ಶ್ರೀ ರಾಮಕೃಷ್ಣ ಸಂಘಕ್ಕಿದೆ. ಸನ್ಯಾಸ ದೀಕ್ಷೆಯ ನಂತರವೂ ಕಟ್ಟುನಿಟ್ಟಿನ ನಿಯಮಗಳ ವ್ಯಾಪ್ತಿಯಲ್ಲಿಯೇ ಸಂಚರಿಸಬೇಕಾದ ಶಿಸ್ತು - ಈಗಲೂ ರಾಮಕೃಷ್ಣ ವಲಯದಲ್ಲಿದೆ. ಅಲ್ಲಿ - ಸನ್ಯಾಸದ ಬಣ್ಣ ಮಾಸಿಲ್ಲ; ಧರ್ಮಪ್ರಚಾರದ ಅಬ್ಬರವು ಕಾಣುವುದಿಲ್ಲ; ಕೇವಲ ಧಾರ್ಮಿಕ ವಿಚಾರಗಳ ತಂಪು ನೆರಳಿನ ಅನುಭವವಾಗುತ್ತದೆ ! ಆದ್ದರಿಂದಲೇ ಶ್ರೀ ರಾಮಕೃಷ್ಣರ ಸಾನ್ನಿಧ್ಯವು ವಿಶಿಷ್ಟವೆನ್ನಿಸುತ್ತ - ಇಂದಿಗೂ ಜನಮಾನಸವನ್ನು ಆಕರ್ಷಿಸುತ್ತ ಬಂದಿದೆ.
ಸನ್ಯಾಸ ದೀಕ್ಷೆಯ ಕಠಿಣ ಹಾದಿ...
ಆಧುನಿಕ ವಿದ್ಯಾಭ್ಯಾಸವನ್ನು ಪಡೆದುಕೊಂಡು ಯೌವನಾವಸ್ಥೆಯಲ್ಲಿರುವ, ಅಧ್ಯಾತ್ಮದ ಹಾದಿಯನ್ನು ಸ್ವ ಇಚ್ಛೆಯಿಂದ ಪ್ರವೇಶಿಸಬಯಸುವ, ಹುಟ್ಟಿದ ಮನೆಯನ್ನು ಕಷ್ಟಕ್ಕೆ ಒಳಪಡಿಸದೆ ಅಧ್ಯಾತ್ಮ ಕಾರ್ಯದಲ್ಲಿ ತೊಡಗಿಕೊಳ್ಳಲು ಇಚ್ಛಿಸುವ, ಹೆತ್ತತಾಯಿಯ ಪೂರ್ಣ ಒಪ್ಪಿಗೆಯಿರುವ ಸನ್ಯಾಸಾಕಾಂಕ್ಷೀ ಯುವಜನರನ್ನು ಬರಮಾಡಿಕೊಂಡು, ಹಲವಾರು ವರ್ಷಗಳ ಕಾಲ ತಮ್ಮ ಆಶ್ರಮದ ಪರಿಸರದಲ್ಲಿ - ಹಿರಿಯ ಸನ್ಯಾಸಿಗಳ ಕಣ್ಗಾವಲಿನಲ್ಲಿ ಉಳಿಸಿಕೊಂಡು, ಶಿಷ್ಯೇಚ್ಛುಗಳು ತಮ್ಮ ಬದುಕನ್ನು ಅಧ್ಯಾತ್ಮಕ್ಕೆ ಒಗ್ಗಿಸಿಕೊಳ್ಳುವ ವಿಧಾನ ಮತ್ತು ಅಭಿರುಚಿಗಳನ್ನು ಸಮೀಪದಿಂದ ಅವಲೋಕಿಸುತ್ತ - ಉಚ್ಚ ಶ್ರೇಣಿಯಲ್ಲಿ ಉತ್ತೀರ್ಣರಾಗಬಲ್ಲ ದೃಢತೆಯುಳ್ಳವರನ್ನು ಮಾತ್ರ ಶ್ರೀ ರಾಮಕೃಷ್ಣ ವಲಯವು ಸ್ವೀಕರಿಸುತ್ತ ಬಂದಿರುವುದರಿಂದ... ರಾಮಕೃಷ್ಣ ಪರಿಸರದ ಸನ್ಯಾಸೀ ವಲಯದಲ್ಲಿ ಈಗಲೂ ಪರಿಶುದ್ಧತೆಯ ಭಾಸವಾಗುತ್ತದೆ. ಸ್ವಚ್ಛತೆಗೆ ಹೆಚ್ಚು ಮಹತ್ವವನ್ನು ಕೊಟ್ಟ ವಲಯವಾಗಿರುವುದರಿಂದಲೇ ಸಣ್ಣ ಸಣ್ಣ ಅಪಸ್ವರಗಳನ್ನು ಉದಾರವಾಗಿ ಮತ್ತು ಸುದೀರ್ಘವಾಗಿ ಕ್ಷಮಿಸುವಂತಹ ಸನ್ನಿವೇಶವೂ ಇಲ್ಲಿಲ್ಲ. ಆದ್ದರಿಂದಲೇ - ವರ್ತನೆಗಳು ಅಕ್ಷಮ್ಯವೆಂದು ಕಂಡುಬಂದಾಗ ತಮ್ಮ ಸದಸ್ಯರನ್ನೇ ಸಂಘದಿಂದ ಉಚ್ಛಾಟಿಸಿದ ಬೆರಳೆಣಿಕೆಯ ಕೆಲವು ಸಂದರ್ಭಗಳೂ ಸಂಭವಿಸಿದ್ದಿದೆ.
ಅಧ್ಯಾತ್ಮವು - ಇಚ್ಛೆಯ ಅನುಯಾಯಿ...
ತಾವೇ ಸ್ವತಃ ಇಚ್ಛಿಸುವವರನ್ನು ಕೈಹಿಡಿದು ಮುನ್ನಡೆಸುವುದು ಸುಲಭಸಾಧ್ಯವಾದ ಕೆಲಸ. ಆದರೆ ಇಂದಿನ ಆಧುನಿಕ ಶಿಕ್ಷಣವನ್ನು ತುರುಕಿದಂತೆ, ಇಚ್ಛೆಯಿಲ್ಲದವರನ್ನು ಅಧ್ಯಾತ್ಮ ಭಾವವಲಯಕ್ಕೆ ಎಳೆಯುವುದು ಮಾತ್ರ - ಅಸಾಧ್ಯದ ಕೆಲಸ. ಕೈತಪ್ಪಿಸಿಕೊಂಡು ಓಡಬಯಸುವ ಫಟಿಂಗ ಮನಸ್ಸುಗಳನ್ನು ಎಷ್ಟು ಕಾಲ ಎಳೆದು ಕಟ್ಟಿಹಾಕಬಹುದು ? ಕಾವಿಧರಿಸಿದ ಮಾತ್ರಕ್ಕೇ ಫಟಿಂಗತನ ಓಡುತ್ತದೆಯೆ ? ತ್ಯಾಗ ವೈರಾಗ್ಯ ಭಕ್ತಿಭರಿತ ಯಾವ ಮೌಲ್ಯಗಳೂ ಅವರವರಿಗೇ ಬೇಕೆಂದು ಅನ್ನಿಸದೆ - ಆಂತರ್ಯದಲ್ಲಿ ಬಿಡಾರ ಹೂಡಲಾರವು. ಆದ್ದರಿಂದ - ಅಧ್ಯಾತ್ಮದ ಅಭಿರುಚಿಯ ಶ್ರೀಮಂತಿಕೆಯನ್ನು ಮೂಲತಃ ಭಾವಿಸಿ ಹೊಂದಲಾಗದ ದೇಹಭಾವಗಳನ್ನು - ಕೇವಲ ಪ್ರಖರ ಬೋಧನೆಯಿಂದಲೇ ತಿದ್ದುವ ಕಾರ್ಯವು ವಿಶೇಷ ಪರಿಣಾಮವನ್ನು ತೋರಿಸಲಾಗದೆ ಅಂದಿನಿಂದಲೂ ಸಾಫಲ್ಯ ಕಂಡಿಲ್ಲ. ಆದ್ದರಿಂದಲೇ ಶ್ರೀ ರಾಮಕೃಷ್ಣರು - "ಕ್ಷಣಿಕ ಅಧ್ಯಾತ್ಮಗಿರಿ ತೋರುತ್ತಿದ್ದ" ತಮ್ಮ ಭಕ್ತರಾಗಿದ್ದ ಹಲವಾರು ಸಂಸಾರಸ್ಥರಿಗೆ - "ಹೀಗೇ ಮುಂದುವರಿಯಲಿ... ಸದ್ಯಕ್ಕೆ ದೇವರನ್ನು ಸ್ಮರಿಸುತ್ತ ಸಂಸಾರವನ್ನೂ ನಡೆಸುತ್ತಿರಿ.." ಎಂದು ಸೂಕ್ಷ್ಮವಾಗಿ ಹೇಳಿ ಸಂತೈಸಿ ಕಳಿಸಿಬಿಡುತ್ತಿದ್ದರು. ಏಕೆಂದರೆ ಏಕಾಂತ ಒಲ್ಲದ, ಸ್ಥಿರತೆ ಕಾಣದ ಮನಸ್ಸುಗಳನ್ನು ಪಳಗಿಸಲಾಗುವುದಿಲ್ಲ; ಪಳಗಿಸಿ ಎಳೆದು ತರುವುದೂ ಅಸಂಭವ.
ಶ್ರೀ ದಯಾನಂದ ಸರಸ್ವತಿಯವರು ಅಂತರ್ಮುಖಾವಸ್ಥೆಯನ್ನು ಪ್ರತಿಪಾದಿಸುತ್ತ "ಅಂತಃಪುರಕ್ಕೆ ಹೋಗಿ ಕಿಟಕಿ ಬಾಗಿಲುಗಳನ್ನು ಹಾಕಿಕೊಂಡು ಬಿಡು..." ಎಂದು ಸೂಕ್ಷ್ಮವಾಗಿ ಹೇಳಿದ್ದರು. ಅಂದರೆ... "ಏಕಾಂತದಲ್ಲಿದ್ದು ಮನಸ್ಸನ್ನು ನಿಗ್ರಹಿಸುತ್ತ ಧ್ಯಾನಮಗ್ನನಾಗು.. ಯೋಗಿಯಾಗು..." ಎಂದಿದ್ದರು. ಹೀಗೆ ಶ್ರೀ ದಯಾನಂದ ಸರಸ್ವತಿಯವರನ್ನು ಉದಾಹರಿಸುತ್ತಿದ್ದ ಶ್ರೀ ರಾಮಕೃಷ್ಣರು - ಜನಸಾಮಾನ್ಯರಿಗಾಗಿ ಅದನ್ನೇ ಇನ್ನೂ ಸರಳವಾಗಿ ಹೇಳಿದ್ದರು. "ಕಣ್ಣು ತೆರೆದಿದ್ದರೂ ಧ್ಯಾನವು ಸಾಧ್ಯ. ಮಾತುಕತೆಯಾಡುತ್ತಿದ್ದರೂ ಧ್ಯಾನ ಮಾಡಬಹುದು... ಹೇಗೆಂದರೆ... ಹಲ್ಲು ನೋಯುತ್ತಿದ್ದರೂ ಮನುಷ್ಯನು ಎಲ್ಲ ಕೆಲಸಗಳನ್ನೂ ಮಾಡುತ್ತಾನೆ. ಆದರೆ ಆತನ ಮನಸ್ಸು ಮಾತ್ರ ನೋವಿನ ಕಡೆಗೇ ಹರಿಯುತ್ತಿರುತ್ತದೆಯಲ್ಲವೆ ? ಹಾಗೇ... ಅಂತೆಯೇ ಸಂಸಾರದಲ್ಲಿ ಇದ್ದುಕೊಂಡೇ ಅಂತರ್ಮುಖಿಯಾಗಿರು..." ಎಂದು ಬೋಧಿಸಿದ್ದರು. ದೈನಂದಿನ ಆಗುಹೋಗುಗಳು, ನಲಿವು ನೋವುಗಳ ಜತೆಜತೆಗೇ ಅಂತರಂಗದಲ್ಲಿ ತಾನೇ ತಾನಾಗಿ ವಿಹರಿಸುವ ಭಾವಾವಸ್ಥೆಯೂ ಸ್ಥಿರವಾಗಿರಲಿ... ಎಂದು ಜೀವನ್ಮುಖಿಯಾಗಿ ಬೋಧಿಸಿದ್ದ ಶ್ರೀ ರಾಮಕೃಷ್ಣರು - ಸಂಸಾರವಂದಿಗರಲ್ಲಿ ಅಪಾರ ಭರವಸೆ ತುಂಬಿದ್ದರು.
ಅಂತರ್ಮುಖಾವಸ್ಥೆ ಎಂಬುದು ಇವತ್ತಿನ ಪಿ. ಎಚ್. ಡಿ. ಮಾಡುವಷ್ಟು ಸುಲಭವೇನಲ್ಲ. ಬದುಕಿನ ಮೌಲ್ಯವನ್ನು ಹೆಚ್ಚಿಸಿಕೊಳ್ಳುವ ಸಾಧನೆ ಇದು. ಶರೀರ, ಮನಸ್ಸು, ಆತ್ಮದ ಸಂತುಲನಕ್ಕಾಗಿ - ಸಾಧಕನಿಗೆ ದೈಹಿಕ, ಬೌದ್ಧಿಕ, ನೈತಿಕ ಶಕ್ತಿಗಳನ್ನು ಏಕತ್ರಗೊಳಿಸುವ ನಿಯಮಿತ ಅಭ್ಯಾಸವೂ ಅನಿವಾರ್ಯ.
ಬೆಳಿಗ್ಗೆ ಎದ್ದ ಕೂಡಲೇ ಹಲ್ಲುಜ್ಜಲು ಯಾರಿಗೂ ಪ್ರತೀದಿನ ಹೇಳಬೇಕಾಗಿಲ್ಲ; ಅವರವರೇ ಮಾಡುತ್ತಾರೆ; ಏಕೆಂದರೆ ಅಭ್ಯಾಸವಾಗಿ ಹೋಗಿರುತ್ತದೆ. ಸುದೀರ್ಘ ಕಾಲದ ಅಭ್ಯಾಸವದು. (ಕೆಲವು ದುರದೃಷ್ಟಶಾಲಿಗಳು ತಾವು ಕಲಿತು ರೂಢಿಸಿಕೊಂಡ ಉತ್ತಮ ಅಭ್ಯಾಸಗಳನ್ನು ಪ್ರಜ್ಞಾಪೂರ್ವಕವಾಗಿ ಬದಲಾಯಿಸಿಕೊಳ್ಳುವುದೂ ಇದೆ ! ... ಉದಾ: Bed coffee ಸಂಸ್ಕೃತಿ !) ಬಾಲ್ಯದಲ್ಲಿ ಕೆಲವು ವರ್ಷ ಅಮ್ಮ ಕಲಿಸಿಕೊಟ್ಟ ಒಂದು ಅಭ್ಯಾಸವು ಹೇಗೆ ಕೊನೆಯವರೆಗೂ ಬದುಕಿನ ಭಾಗವಾಗುತ್ತದೋ ಹಾಗೇ ಸಚ್ಚಿಂತನೆ ಸನ್ಮಾರ್ಗಗಳೂ ನಿಯಮಿತ ಅಭ್ಯಾಸದಿಂದ ಬದುಕಿನ ಭಾಗವಾಗಬಲ್ಲವು. ಅಂತೆಯೇ ನಿಯಮಿತ ಅಭ್ಯಾಸಪೂರ್ವಕ ಅಧ್ಯಾತ್ಮಕ್ಕೆ ಒಗ್ಗಿಕೊಂಡು ಒರಗಿಕೊಂಡಾಗಲೇ "ಬದುಕಿನ ಶಿಸ್ತು" ಮೈಗೂಡುತ್ತದೆ; ಶಿಸ್ತಿನಿಂದ ಆತ್ಮಚೈತನ್ಯ ಮೂಡುತ್ತದೆ. ಹೀಗೆ ಆಧ್ಯಾತ್ಮಿಕ ಚಟುವಟಿಕೆಗಳೂ ಇತರ ಕರ್ಮಗಳಂತೆ ನಿತ್ಯನೈಮಿತ್ತಿಕಗಳ ಭಾಗವಾಗಿ, ಬದುಕುವ ಶೈಲಿಯೇ ಆಗಿ ಬಿಟ್ಟಾಗ ಯಾವುದೂ ಕಠಿಣ ಹೊರೆಯೆನ್ನಿಸುವುದಿಲ್ಲ.
ಆದರೆ ಯಾವತ್ತೂ - ನಡುದಾರಿಯಲ್ಲಿ ಪ್ರಯೋಗಾತ್ಮಕವಾಗಿ ಆತುಕೊಳ್ಳುವ ಸದ್ವಿಚಾರಗಳ ಆಚರಣೆಗೆ ಅಡೆತಡೆಗಳು ಹೆಚ್ಚು. ಅಂತಹ ಪ್ರಯೋಗಪಟುಗಳಿಗೆ ಆಂತರಿಕ ಮಾತ್ರವಲ್ಲದೆ ಬಾಹ್ಯ ಅಪಸ್ವರಗಳೂ ಏಳುತ್ತಿರುತ್ತವೆ. ವಿರೋಧ ಪಕ್ಷ ಎಂಬುದು ಈ ಭೂಮಿಯ ಯಾವ ಮೂಲೆಯನ್ನೂ ಬಿಟ್ಟಿಲ್ಲ. ಹಾಗೇ... ಅಧ್ಯಾತ್ಮಕ್ಕೂ - ಒಳಗೂ ಹೊರಗೂ - ವಿರೋಧೀ ಬಣವಿದೆ.
ಆದರೆ ಆಲಸೀ ವರ್ಗವು ಅನೂಚಾನವಾಗಿ ಹೇಳುತ್ತ ಬಂದಿರುವ ಅಧ್ಯಾತ್ಮ ವಿರೋಧೀ ಭಾವಗಳೆಲ್ಲವೂ ಮಿತ ಅನುಭವ ಅಥವ ಅರಿವಿನ ಕೊರತೆಯಿಂದ ಮೂಡಿರುವ ಕುಟಿಲ ತರ್ಕಗಳು ಎಂಬುದು ಸಾಬೀತಾಗುತ್ತಲೇ ಇವೆ. ಕುತರ್ಕಗಳಿಂದ ತಮ್ಮ ತಲೆತಿನ್ನುತ್ತಿದ್ದ ಸಂದರ್ಭಗಳನ್ನು ಶ್ರೀ ರಾಮಕೃಷ್ಣರೂ ಎದುರಿಸಿದ್ದೂ ಇತ್ತು; ಬೇಸರಗೊಂಡದ್ದೂ ಇತ್ತು. ಒಮ್ಮೆ... "ತುಂಬ ಚತುರನಾಗುವುದು ಒಳ್ಳೆಯದಲ್ಲ... ಕಾಗೆಯೇನೋ ಬಹಳ ಚತುರ ಪಕ್ಷಿ. ಆದರೆ ಅದು ಪರರ ಹೇಸಿಕೆಯನ್ನು ತಿಂದೇ ಸಾಯುತ್ತದೆ.." ಎಂದು ಗೊಣಗಿದ್ದರು. ಕುಟಿಲ ತರ್ಕಗಳನ್ನು ಜೀರ್ಣಿಸಿಕೊಳ್ಳಲು ಹೀಗೆ ತಮಗೆ ತಾವೇ ಅಂದುಕೊಳ್ಳುವುದೂ - ಮನಸ್ಸನ್ನು ಹಗುರಗೊಳಿಸಿಕೊಳ್ಳುವ ಒಂದು ಮಾರ್ಗ. ಕುಟಿಲ ಚಾತುರ್ಯ ಎಂದರೆ - ಉಚ್ಛಿಷ್ಟದ ಅಭಿರುಚಿಯಿದ್ದಂತೆ ! ಇದರಿಂದ ಸದಭಿರುಚಿಯು ನಾಶಗೊಂಡು ಭಾವಕೋಶವು ಕಮರಿ ಸಂವೇದನಾಹೀನವಾಗುತ್ತದೆ. ಅಂತಹ ಬೆಂಕಿಬರಡು ನೆಲದಲ್ಲಿ ಉತ್ತಮ ಚಿಂತನೆಗಳ ಸಸಿಯು ಬೆಳೆಯುವುದೇ ಇಲ್ಲ.
ಸ್ಪಂದನಶೀಲತೆಯನ್ನು ಉಳಿಸಿಕೊಳ್ಳಲು ಏಕಾಗ್ರ ಧ್ಯಾನವು ಸಹಕಾರಿ. "ಮನಸ್ಸು ಚದುರಿ ಹೋಗಿದೆ - ಸ್ವಲ್ಪ ಭಾಗ ಢಾಕ್ಕಾಕ್ಕೆ, ಸ್ವಲ್ಪ ಭಾಗ ದೆಹಲಿಗೆ, ಸ್ವಲ್ಪ ಭಾಗ ಕೂಚ್ ಬಿಹಾರಿಗೆ... ಅಂಥ ಮನಸ್ಸನ್ನು ಈಗ ಒಟ್ಟುಗೂಡಿಸಬೇಕಾಗುತ್ತದೆ. ಒಟ್ಟುಗೂಡಿಸಿ ಒಂದು ವಸ್ತುವಿನ ಮೇಲೆ ಏಕಾಗ್ರ ಮಾಡಬೇಕಾಗುತ್ತದೆ. ನಿನಗೆ ಹದಿನಾರಾಣೆಯ ಬಟ್ಟೆ ಬೇಕಾದರೆ ವ್ಯಾಪಾರಿಗೆ ಹದಿನಾರಾಣೆಯನ್ನೇ ಕೊಡಬೇಕಾಗುತ್ತದೆ. ಕಡಿಮೆ ಪಾವತಿಸಿದರೆ ಬಟ್ಟೆ ಸಿಗುವುದಿಲ್ಲ. ಟೆಲಿಗ್ರಾಫ಼್ ತಂತಿಯಲ್ಲಿ ಒಂದು ಸ್ವಲ್ಪ ಬಿರುಕು ಇದ್ದರೂ ಸಮಾಚಾರವು ಮುಟ್ಟುವುದಿಲ್ಲ... ದೇಹ-ಭಾವದ ತಂತಿಗಳು ಸುಶ್ರುತಿಯಲ್ಲಿರಬೇಕು..." ಎನ್ನುತ್ತಿದ್ದ ಪರಮಹಂಸರು ಪೂರ್ಣ ಶರಣಾಗತಿಯನ್ನು ಪ್ರತಿಪಾದಿಸುತ್ತಿದ್ದರು.
ಸಾಧನೆಯ ಹಾದಿಯಲ್ಲಿ ಚೌಕಾಸಿ ಮಾಡಲಾಗುವುದಿಲ್ಲ; ಪೂರ್ಣ ಸುಂಕ ಕಟ್ಟದಿದ್ದರೆ ಭಕ್ತಿಸಾಮ್ರಾಜ್ಯವನ್ನು ಪ್ರವೇಶಿಸಲಾಗುವುದಿಲ್ಲ ಎಂಬುದನ್ನು ತಮ್ಮದೇ ಶೈಲಿಯಲ್ಲಿ ಬೋಧಿಸುತ್ತಿದ್ದರು. "ಎಂದಾದರೊಂದು ದಿನ ದೇವರು ದೊರಕುತ್ತಾನೆ..." ಎಂಬಂತಹ ಲಘು ಭಾವನೆಯು ಅವರಿಗೆ ರುಚಿಸುತ್ತಿರಲಿಲ್ಲ. "ಈ ದಿನ, ಇದೇ ಕ್ಷಣ ಸಂಭವಿಸಲಿ" ಎನ್ನುವ ತೀವ್ರ ತುಡಿತ ಮತ್ತು ಸಾಧನೆಯಿಂದ ಮಾತ್ರವೇ ಆತ್ಮವಿದ್ಯೆಯ ಅನುಗ್ರಹವು ಸಾಧ್ಯ ಎಂಬುದು ರಾಮಕೃಷ್ಣರ ಬೋಧನೆಯಾಗಿತ್ತು. "ನಾಳೆ ನಾಳೆ" ಎಂಬಂತಹ ಆರಾಮದ ಭಾವನೆಯು ಅಧ್ಯಾತ್ಮದ ಹಾದಿಯ ದೊಡ್ಡ ತೊಡಕು ಎಂಬುದು ಶ್ರೀ ರಾಮಕೃಷ್ಣರ ಚಿಂತನೆಯಾಗಿತ್ತು. ತೀವ್ರ ವೈರಾಗ್ಯಭಾವದಿಂದ ಅನುಕ್ಷಣವೂ ದೇವರಿಗೆ ಅಂಟಿಕೊಂಡಿರುವವರಿಗೆ ಮಾತ್ರ ಇಂತಹ ಅಧ್ಯಾತ್ಮದ ರುಚಿಯು ಅನುಭವಕ್ಕೆ ಬರುತ್ತದೆ; ಅವರಿಗೆ ಅಧ್ಯಾತ್ಮ ಒಲಿಯುತ್ತದೆ ಎಂಬುದು ಅವರ ಉಪದೇಶವಾಗಿತ್ತು.
ಸಂಸಾರದಲ್ಲಿದ್ದು ತೀವ್ರ ವೈರಾಗ್ಯವನ್ನು ಅನುಸರಿಸುವುದು ಸುಲಭವೆ ? ತುಂಬ ಕಷ್ಟ. ಸಂಸಾರವಲಯದ ಹಲವಾರು ಆಸೆ, ವಾಸನಾ ಪ್ರವೃತ್ತಿಗಳಿಂದ ತುಂಬಿರುವ ಮನಸ್ಸನ್ನು ತೀವ್ರ ವೈರಾಗ್ಯದ ಕಡೆಗೆ ಎಳೆದು ತರುವುದಾದರೂ ಹೇಗೆ ? ಪರಮಹಂಸರು ಹೇಳುತ್ತಿದ್ದರು... "ನಮ್ಮ ಊರಿನಲ್ಲಿ ಗದ್ದೆಗೆ ನೀರು ಹಾಯಿಸುತ್ತಾರೆ. ನೀರು ವ್ಯರ್ಥವಾಗಿ ಹರಿದು ಹೋಗದಂತೆ ಗದ್ದೆಯ ನಾಲ್ಕೂ ಬದಿಗೆ ಕಟ್ಟೆ ಕಟ್ಟುತ್ತಾರೆ. ಅವು ಮಣ್ಣಿನ ಕಟ್ಟುಗಳಾದ್ದರಿಂದ ಅನೇಕ ಬಾರಿ ಬಿರುಕು ಬಿಡುತ್ತವೆ. ರೈತರು ಬೆವರು ಸುರಿಸಿ ಗದ್ದೆಗೆ ನೀರು ತುಂಬಿಸಿರುತ್ತಾರೆ. ಆದರೆ ಬಿರುಕುಗಳ ಮೂಲಕ ನೀರು ಹೊರಕ್ಕೆ ಹರಿದುಹೋಗಿ ವ್ಯರ್ಥವಾಗಿ ಬಿಡುತ್ತದೆ. ಈ ಬದುಕಿನಲ್ಲಿ... ವಾಸನೆಗಳೇ ಬಿರುಕುಗಳು. ನಿಜ... ಜನರು ಜಪತಪಾದಿಗಳನ್ನೇನೋ ಮಾಡುತ್ತಾರೆ. ಆದರೆ ಅವುಗಳ ಬೆನ್ನ ಹಿಂದೇ ಆಸೆ ವಾಸನೆಗಳೂ ತುಂಬಿರುತ್ತವೆ. ಆ ವಾಸನೆಗಳೆಂಬ ಬಿರುಕುಗಳ ಮೂಲಕ, ಶ್ರಮಪಟ್ಟು ಗದ್ದೆಯಲ್ಲಿ ತುಂಬಿಸಿದ ನೀರೆಲ್ಲ ಖಾಲಿಯಾಗಿಬಿಡುತ್ತದೆ..." ಆದ್ದರಿಂದ ಅಧ್ಯಾತ್ಮ ಪ್ರವೇಶಿಗರು ಶುದ್ಧಾಂತರಂಗ ಎಂಬ ಭದ್ರ ಕಟ್ಟುಗಳನ್ನು - ಕಷ್ಟಪಟ್ಟಾದರೂ ಸ್ಥಾಪಿಸಿಕೊಳ್ಳಬೇಕು. ಕಟ್ಟುಪಾಡುಗಳಿಲ್ಲದೆ ನಡೆಸುವ ಯಾವುದೇ ಜಪತಪಾದಿಗಳು ವ್ಯರ್ಥವಾಗುತ್ತವೆ.
ಅಧ್ಯಾತ್ಮ ಎಂದರೆ ಕಾಡಿನಲ್ಲಿ ಮೂಗು ಹಿಡಿದು ಕೂರುವ ರಮ್ಯ ಕತೆಯಲ್ಲ. ವ್ಯವಸ್ಥಿತ ಅಧ್ಯಾತ್ಮ ಸಂಚಲನವು ಬದುಕನ್ನು ಸುಸ್ಥಿತವಾಗಿ ಕಟ್ಟಬಲ್ಲ ಶಿಸ್ತಿನ ಸಾಧನ.
ಎಲ್ಲ ಬದುಕಿನಲ್ಲೂ ಕಷ್ಟ ವಿಪತ್ಪರಂಪರೆಗಳು ಒದಗುವುದು ಸಹಜ. ಆಗ ಬದುಕನ್ನು ಆಧರಿಸುವ ಸುಭಗ ಸಾಧನ ಮತ್ತು... ಮನೋತಳಮಳದ ಸಂಚಾರೀ ವಿಚಾರಗಳಿಗೆ ಸ್ಪಷ್ಟತೆಯನ್ನು ಕೊಡುವ ಊರುಗೋಲು - ಅಧ್ಯಾತ್ಮ. ಅಧ್ಯಾತ್ಮದ ಅಂತರ್ಮುಖ ಯಾನದಲ್ಲಿ ತೊಡಗುವವರಿಗೆ ಯಾವುದೇ ಗುಂಪು ಗೋಷ್ಠಿಗಳಿಗಿಂತ ಏಕಾಂತದ ಓದು ಚಿಂತನೆಗಳೇ ಭಾವಪುಷ್ಟಿಗೊಳಿಸುವಲ್ಲಿ ಹೆಚ್ಚು ಸಹಕರಿಸಬಲ್ಲವು. ಶ್ರೀ ರಾಮಕೃಷ್ಣರು ಎಂದೂ - ಬೃಹತ್ ಸಭೆಗಳಲ್ಲಿ ಉಪದೇಶ ನೀಡುತ್ತ ಓಡಾಡುವ ಗೋಜಿಗೇ ಹೋದವರಲ್ಲ. ತನ್ನನ್ನು ಅರಸಿ ಬಂದವರ ಎದುರಲ್ಲಿ, ಪಾತ್ರಾಪಾತ್ರದ ಯೋಗ್ಯತೆಯಂತೆ - ಮೊಗೆಮೊಗೆದು ಅಧ್ಯಾತ್ಮಭಾವವನ್ನು ತುಂಬಿದವರು ಶ್ರೀ ರಾಮಕೃಷ್ಣರು ! ಅವರದು - ದೇಹ ಸನ್ಯಾಸವಲ್ಲ; ಭಾವ ಸನ್ಯಾಸ .
ಆದ್ದರಿಂದಲೇ ತಮ್ಮ ಶಿಷ್ಯರ ಸಾಮರ್ಥ್ಯವನ್ನು ಸರಿಯಾಗಿ ಅಳೆದರು; ಧಾರಣಾ ಸಾಮರ್ಥ್ಯವಿರುವವರಲ್ಲಿ ಮತ್ತಷ್ಟು ತುಂಬಿ ಪುಷ್ಟಿಗೊಳಿಸಿದರು ! ಆಯ್ದ ಕೆಲವರಿಗೆ ಮಾತ್ರ ಲೋಕಕಲ್ಯಾಣದ ಕಾರ್ಯವನ್ನು ಒಪ್ಪಿಸಿದರು ! ಅವತಾರವರಿಷ್ಠ ಶ್ರೀ ರಾಮಕೃಷ್ಣ ಎಂಬ ಮೂಲಮೂರ್ತಿಯ ಅಧ್ಯಾತ್ಮ ಭಾವವನ್ನು - ಉತ್ಸವಮೂರ್ತಿಯಂತಿದ್ದ ಸ್ವಾಮಿ ವಿವೇಕಾನಂದ ಮತ್ತು ಸೋದರ ಸನ್ಯಾಸಿಗಳು ವಿಶ್ವದೆಲ್ಲೆಡೆ ಹೊತ್ತು ಮೆರೆಸಿದರು !
ಆಕಾಶದಲ್ಲಿರುವ ನೂರಾರು ನಕ್ಷತ್ರಗಳಿಂದ ಏನಾದರೂ ಚಮತ್ಕಾರ ಸಂಭವಿಸೀತೆ ? ಎಷ್ಟು ಬೆಳಕು ಬಂದೀತು ? ಕತ್ತಲು ನಿವಾರಿಸಲು ಒಬ್ಬ ಚಂದ್ರ ಸಾಲದೆ ? ಶ್ರೀ ರಾಮಕೃಷ್ಣರ ಬೆರಳೆಣಿಕೆಯಷ್ಟಿದ್ದ ನೇರ ಶಿಷ್ಯರು ಒಬ್ಬೊಬ್ಬರೂ ಸೂರ್ಯಚಂದ್ರ ಸಮಾನರಾಗಿದ್ದರು !
ಪೂರ್ವ ಸಿದ್ಧತೆ
ಸನ್ಯಾಸ ಭಾವವು ಎಲ್ಲರ ತುತ್ತಲ್ಲ. ಸಹಜ. ಆದರೆ ದೈನಂದಿನ ಬದುಕಿನಲ್ಲಿ ಆಧ್ಯಾತ್ಮ ಭಾವವನ್ನು ಹೊಂದುವುದು ಕಾಷಾಯಧಾರಿ ಸನ್ಯಾಸದಷ್ಟು ಕಠಿಣವಲ್ಲ. ಕೆಡುಕಿನಿಂದ ದೂರವಿರುವ ಪ್ರಾಥಮಿಕ ಅರ್ಹತೆಯನ್ನು ಗಳಿಸಿಕೊಂಡರೆ ಅದೂ ಆತ್ಮಸೇವನೆಯೇ ಆಗುತ್ತದೆ. ಆದರೆ... ಬೆಳಗಿನ ವೃತ್ತಪತ್ರಿಕೆಯಿಂದ ಹಿಡಿದು ರಾತ್ರಿಯ ವರೆಗೆ ಮಿದುಳು ನುರಿದು ದಣಿಸುವಂಥ ಕಸನುಸಿಗಳನ್ನೇ ಮೆಟ್ಟುತ್ತ - ಅಂತಹ ರದ್ದಿಗಳನ್ನೇ ಓದುತ್ತ ನೋಡುತ್ತ ಬಗ್ಗಡವಾಗುವ ದೈನಂದಿನ ಮನಸ್ಸುಗಳಲ್ಲಿ ಅಧ್ಯಾತ್ಮವನ್ನು ಇರಿಸಿಕೊಳ್ಳಲು ಆಗುವುದಿಲ್ಲ. ಏಕೆಂದರೆ ಅಧ್ಯಾತ್ಮವು ಅಂತರಂಗದ ಮೌನದಲ್ಲಿ ಸಂಭವಿಸುವ ಆತ್ಮಭಾವ; ಘರ್ಷಣೆ ಗದ್ದಲದಲ್ಲಿ ಅಧ್ಯಾತ್ಮವು ಅರಳುವುದಿಲ್ಲ. ಹೃನ್ಮನದ ಮೂಲ ನೆಲೆಯನ್ನು ಪ್ರೇಮದ ಕಡಲಾಗಿಸಿಕೊಳ್ಳದೆ ಅಧ್ಯಾತ್ಮದ ಸ್ಪರ್ಶವಾಗಲಾರದು. ಬಹಿರ್ಮುಖ ಆಸಕ್ತಿಗಳನ್ನು ಮಿತಗೊಳಿಸಿಕೊಳ್ಳುತ್ತ ಬಂದಂತೆ ಅಂತರಂಗ ಶುದ್ಧಿಯುಂಟಾಗಿ ಭಾವಶುದ್ಧಿಯು ಸಂಭವಿಸುತ್ತದೆ. ಅಂತಹ ಭಾವಶುದ್ಧಿಯ ನೆಲೆಯಲ್ಲಿ ಮಾತ್ರ ಸ್ಥಿರವಾದ ಅಧ್ಯಾತ್ಮ ಭಾವವು ಪ್ರೀತಿಯಿಂದ ಸಂಚರಿಸುತ್ತದೆ. ಪ್ರೀತಿ ವಿಶ್ವಾಸವಿಲ್ಲದ ಕಡೆಗಳಲ್ಲಿ ಯಾರಾದರೂ ಭೋಜನಕ್ಕೆ ಕೂರುವುದುಂಟೆ ? ಅಂತೆಯೇ ಅಧ್ಯಾತ್ಮವು - "ಕರೆಯದೇ ಹೋಗಿ ಕೆರದಲ್ಲಿ ಹೊಡೆಸಿಕೊಳ್ಳುವ" ವಸ್ತುವಲ್ಲ; ಬಿಟ್ಟಿಯಾಗಿ ಗಿಟ್ಟಿಸಿಕೊಳ್ಳುವ ಅಗ್ಗದ ಸರಕೂ ಅಲ್ಲ. ಆದ್ದರಿಂದ - ಮನುಷ್ಯರು ವಜ್ರದ ಗಣಿಯ ಮುಂದೆ ನಿಂತಿದ್ದರೂ - ಸುಲಭದಲ್ಲಿ ಕಾಲಿಗೆ ಎಡತಾಕುವ ಗಾಜಿನ ಚೂರುಗಳನ್ನು ಆಯ್ದುಕೊಂಡು ಅದರಲ್ಲೇ ಸುಖಿಸುವ ಮೂರ್ಖರಾಗದೆ, ಮನೋವಾಕ್ಕಾಯವನ್ನು ಏಕಮುಖಗೊಳಿಸಿಕೊಂಡು ಅಧ್ಯಾತ್ಮ ಪ್ರೀತಿಯ ಭಾವವನ್ನು ಹೃನ್ಮಂದಿರದಲ್ಲಿ ಪ್ರತಿಷ್ಠಾಪಿಸುವ ಪ್ರಯತ್ನಶೀಲರಾಗಬೇಕಾಗುತ್ತದೆ.
ತಂತಮ್ಮ ದೈನಂದಿನ ಸಾಂಸಾರಿಕ ಬದುಕಿನಲ್ಲಿ ಮುಳುಗಿ ಸುಖ ಲೋಲುಪತೆಗಾಗಿ ಹಪಹಪಿಸುವ ಮನುಷ್ಯರನ್ನು - "ಕಳ್ಳಭಟ್ಟಿಯೇ ಸುಖ" ಎಂಬಂತಹ ಭ್ರಮೆಯು ಆವರಿಸಿಕೊಂಡು ಬಿಡುವುದು ಸಾಮಾನ್ಯ. ಇಂತಹ ಕ್ಷಣಿಕ ಅಮಲಿನಿಂದ ಪಾರಾಗುವುದಕ್ಕೂ - ಅಧ್ಯಾತ್ಮವು ಮಾತ್ರ ಸಹಕರಿಸಬಲ್ಲದು. ಸನ್ಯಾಸಿಗಳು ಮೋಕ್ಷಕ್ಕಾಗಿ ಅಧ್ಯಾತ್ಮವನ್ನು ಅವಲಂಬಿಸಿದರೆ ಸಂಸಾರಿಗಳು ಉತ್ತಮ ಮೌಲ್ಯಯುತ ಬದುಕಿಗಾಗಿ ಅಧ್ಯಾತ್ಮದ ಮೊರೆ ಹೋಗಬೇಕು. ವೃದ್ಧಾಪ್ಯದಲ್ಲಿ ಅಧ್ಯಾತ್ಮದತ್ತ ಸಹಜವಾಗಿಯೇ ಮನಸ್ಸು ವಾಲುತ್ತದೆ ಅಂದುಕೊಳ್ಳುವುದೂ ಪೂರ್ಣ ಸತ್ಯವಲ್ಲ. ಯೌವ್ವನದಲ್ಲಿ ಸುಸಂಸ್ಕಾರಗಳನ್ನು ರೂಢಿಸಿಕೊಳ್ಳಲು ಸೋತವರಿಗೆ ವೃದ್ಧಾಪ್ಯದಲ್ಲೂ ಅಧ್ಯಾತ್ಮದ ಒಲವು ಮೂಡುವುದಿಲ್ಲ. ಯೌವ್ವನದಲ್ಲಿಯೇ ಅಧ್ಯಾತ್ಮವನ್ನು ಪ್ರವೇಶಿಸುವ ಮನಸ್ಸುಗಳು, ನಿತ್ಯಬದುಕಿನಲ್ಲಿ ಅಕಸ್ಮಾತ್ ದಾರಿ ತಪ್ಪಿದಾಗಲೂ, ಸಂಸ್ಕಾರಬಲದಿಂದಾಗಿ ದಿಕ್ಕು ತಪ್ಪುವುದಿಲ್ಲ; ಅಂತರ್ಮುಖಿಯಾಗಿ, ಅವರ ಬದುಕನ್ನು ಅವರೇ ಸಂಭಾಳಿಸಿಕೊಳ್ಳುವ ಶಕ್ತಿಯನ್ನು ಅವರವರು ವಿಶ್ವಾಸವಿಟ್ಟ ಅಧ್ಯಾತ್ಮವೇ - ಮನುಷ್ಯರಿಗೆ ಪ್ರಸಾದಿಸುತ್ತದೆ. ಆದ್ದರಿಂದ ಸ್ವಂತ ತಪ್ಪು ಸರಿಗಳನ್ನು ವಿಶ್ಲೇಷಿಸುವ ಶಕ್ತಿ, ಅಪರಾಧಿಗಳಾಗದಂತೆ ತಡೆಯುವ ಪಾಪ ಪುಣ್ಯದ ಸಾತ್ವಿಕ ಭಯವನ್ನು ತುಂಬಿ, ಬದುಕು ಮುಗ್ಗರಿಸದಂತೆ ಕಾಪಾಡುವ ಶಕ್ತಿಯು ಅಧ್ಯಾತ್ಮಕ್ಕಿದೆ.
ಬದುಕಿನ ವ್ಯಾಪಾರದಲ್ಲಿ ಲೋಲುಪತೆಗೆ ವಶವಾಗಿರುವ ಮನಸ್ಸುಗಳು ಅಧ್ಯಾತ್ಮವನ್ನೂ ಲೌಕಿಕದ ಸಂತೆಗೆ ಎಳೆದು ತರುತ್ತಿರುವುದು ನಿತ್ಯ ದೃಶ್ಯವಾಗಿ ಹೋಗಿದೆ. ಅಂಕೆತಪ್ಪಿದಂತಹ ಮನಸ್ಸುಗಳ ತಂಟೆಯಿದು. "ಮಾರುತಿಯು ಶ್ರೀ ರಾಮಚಂದ್ರನಿಗೆ ಆತನ ಮಡದಿಯನ್ನು ಹುಡುಕಿ ಕೊಡಲಿಲ್ಲವೆ ? ಹುಡುಕಿ ಕೊಡುವುದರಲ್ಲಿ ಮಾರುತಿಯು ಅಗ್ರಗಣ್ಯ. ಆದ್ದರಿಂದ ಬದುಕಿನಲ್ಲಿ ನಾವು ಕಳೆದುಕೊಂಡ ಶಾಂತಿ ತೃಪ್ತಿಯನ್ನೂ - ಪೂಜೆಗೆ ತನ್ನನ್ನು ಒಪ್ಪಿಸಿಕೊಂಡಿರುವ ಮಾರುತಿಯೇ ಹುಡುಕಿಕೊಡಬಹುದಲ್ಲ ? " ಅಂದುಕೊಳ್ಳುವವರಿದ್ದಾರೆ. "ಹನುಮನಿಗೇನು ಧಾಡಿ ? ಹನುಮನು ಮಹಾಪರಾಕ್ರಮಿಯೇ ಹೌದಾದರೆ ಎಲ್ಲರಿಗೂ ಉಪಕರಿಸಲಿ... ಒಬ್ಬ ಶ್ರೀರಾಮನಿಗೆ ಮಾತ್ರ ಉಪಕರಿಸುವ ತಾರತಮ್ಯ ಏಕೆ ?" ಎಂದು ಸವಾಲು ಹಾಕುತ್ತ ಹಕ್ಕು ಚಲಾಯಿಸುವವರಿಗೂ ನಮ್ಮಲ್ಲಿ ಕಡಿಮೆಯೇನಿಲ್ಲ. ಇದು ಕ್ಷುದ್ರ ಲೌಕಿಕ ವೇಷದ ವೇಶ್ಯಾಭಾವದ ಮನೋವೃತ್ತಿ ! ಹಾಸ್ಯಲೋಲುಪತೆ ! ಕಳೆದುದದನ್ನು ಹುಡುಕಿ ಕೊಡುವ ಮತ್ತು ತಾವು ಕೇಳಿದ್ದನ್ನು ತಂದು ಒದಗಿಸುವ ಸೇವಕನ ಉದ್ಯೋಗಕ್ಕೆ ಮಾರುತಿಯನ್ನು ನೇರವಾಗಿ ತಾವೇ ನೇಮಿಸಿಕೊಂಡಂತೆ ಮನುಷ್ಯರು ವರ್ತಿಸುವ ಅನೇಕ ಹುಚ್ಚಾಟಗಳು ನಡೆಯುತ್ತಲೇ ಇರುತ್ತವೆ; ರಂಜನೆಯನ್ನೂ ನೀಡುತ್ತಿರುತ್ತವೆ.
ಒಂದು ದೃಷ್ಟಿಯಲ್ಲಿ, ತಮ್ಮನ್ನು ತಾವೇ ಶ್ರೀರಾಮನೊಂದಿಗೆ ಸಮೀಕರಿಸಿಕೊಳ್ಳುವ ಮನುಷ್ಯಮಾತ್ರ ನಿತ್ಯವಿದೂಷಕರು ವೀರ ಮಾರುತಿಯ ರಾಮಭಾವದ ಸೇವ್ಯ ಸಂವೇದನೆಯನ್ನು ಕ್ಷುಲ್ಲಕಗೊಳಿಸುವಂತಹ ಉಪದ್ವ್ಯಾಪವಿದು ! ಮಾರುತಿಗೆ "ಆರಕ್ಷಕ"ನ (POLICE) ತೊಡಿಗೆ ತೊಡಿಸಿ, ಕಣ್ಣಿಗೆ ಕಾಣಿಸುವ ವರ್ತಮಾನದ ಸದ್ಯದ ವ್ಯವಸ್ಥೆಯ ಭಾಗವಾಗಿ ಮಾರುತಿಯನ್ನು ಎಳೆದು ತಂದರೆ ಅಲ್ಲೆಲ್ಲ - ಬಾಲಿಶವಾದ "ಕಳ್ಳ ಪೋಲೀಸ್" ಆಟ ನಡೆಯಬಹುದಲ್ಲದೆ - ಮಾರುತಿಯು ಇರಲು ಸಾಧ್ಯವೆ ? ಯಾವುದೇ ಕ್ಷಣಿಕ ನಗುವಿಲಾಸದಿಂದ ಆಂತರ್ಯದ ಅಳಲನ್ನು ಉಜ್ಜಿ ತೆಗೆಯಲು - ಬದುಕನ್ನು "ಕಾಲಕ್ಷೇಪ" ಎಂದುಕೊಂಡಲ್ಲದೆ ಸಾಧ್ಯವಾಗದು. ಆದರೆ... ಮಾರುತಿಯನ್ನು ಪೋಲೀಸ್ ಪೇದೆಯನ್ನಾಗಿಸುವ ಲೋಕದ ಮನಸ್ಸುಗಳ ಉಮ್ಮೇದಿನಲ್ಲಿ - ಯಾವುದೋ ಠಾಣೆಯ ಕಲ್ಪನೆ ಮತ್ತು ಅಲ್ಲಿ ಕೋಲಾಡಿಸುವಂತಹ ಯಾವುದೋ ಅಧಿಕಾರಸ್ಥಾನದ ವಶೀಲಿಯಿಂದ ತಾವು ಕಳೆದುಕೊಂಡದ್ದನ್ನು "ಹೇಗೋ ಪಡೆದುಕೊಳ್ಳುವ" ಸ್ವಾರ್ಥನಿರೀಕ್ಷೆಯ ಕುತಂತ್ರಗಾರಿಕೆಗಳು ಮಾತ್ರ ತುಂಬಿಕೊಂಡು - ಹಕ್ಕು ಸ್ಥಾಪನೆಯ ತಾರ್ಕಿಕ ಆಟದಲ್ಲೇ ಮನಸ್ಸು ಕೇಂದ್ರೀಕೃತವಾಗಿರುತ್ತದೆ. ಫಲ ಮಾತ್ರ - ಶೂನ್ಯ. ಬದುಕಿನ ಭಾವ ಕೇಂದ್ರವನ್ನು ಲಾಂಗೂಲಮುಖಿ ಆಗಿಸುವುದೆಂದರೆ ಹೀಗೇ. ಆದ್ದರಿಂದಲೇ ಇಂತಹ ವ್ಯರ್ಥ ಕಾಲಯಾಪನೆಗಳ ಆರಂಭ ಮತ್ತು ಅಂತ್ಯಗಳೆರಡೂ ಕಿರುನಗು ಹುಟ್ಟಿಸಿ ಮಾಯವಾಗುತ್ತವೆ ! ಪೋಕು ಮಾತಿನ ನಗು ಉದ್ದಿಮೆಯಿಂದ - ಬದುಕು ನಷ್ಟವಾಗುತ್ತದೆ.
ಬಾಲಬಡುಕತನಗಳು ಮಾಯಾ ಲೌಕಿಕದಲ್ಲಿ ವಿಜೃಂಭಿಸುವಂತೆ ಕಂಡರೂ ಅಧ್ಯಾತ್ಮದ ಪರಿಧಿಯಲ್ಲಿ ಅಂತಹ ಯಾವುದೇ ಅಡ್ಡದಾರಿಗಳಿಗೆ ಅವಕಾಶವಿರುವುದಿಲ್ಲ. ಅದು ಸ್ವಚ್ಛ ರಾಜಮಾರ್ಗ. ಆದ್ದರಿಂದ ಆಸೆಪೂರಿತ ಬಾಲಬಡುಕತನಕ್ಕೆ ಅಥವ ಹಕ್ಕು ಸ್ಥಾಪನೆಯ ಧಮಕಿ ಷಡ್ಯಂತ್ರಗಳಿಗೆ ಅಧ್ಯಾತ್ಮ ಪ್ರಪಂಚದಲ್ಲಿ ಯಾವ ಮೌಲ್ಯವೂ ಇರುವುದಿಲ್ಲ. ಅಪಮೌಲ್ಯಗೊಳ್ಳಬಹುದಾದ ಯಾವುದೂ ಅಲ್ಲಿ ನಡೆಯುವುದೂ ಇಲ್ಲ. ಆದ್ದರಿಂದ ನಿಷ್ಕಾಮ, ನಿಷ್ಕಲ್ಮಷ ಪ್ರೇಮವೊಂದಲ್ಲದೆ ಇನ್ನ್ಯಾವ ವಶೀಲಿಬಾಜಿಯೂ ಅಧ್ಯಾತ್ಮದ ಹಾದಿಯಲ್ಲಿ ಉಪಕರಿಸಲಾರದು.
ನಾದಪ್ರಿಯನಲ್ಲ ವೇದಪ್ರಿಯನಲ್ಲ ಭಕ್ತಿಪ್ರಿಯ...
ಮಂತ್ರ ಪಠಿಸಿದರೆ - ಭಜನೆ ಮಾಡಿದರೆ ಮಾತ್ರ ಸಾಕೆ ? ಸಂಸಾರಿಗಳಾಗಿ, ಆಯಾ ಬದುಕಿನ ಕರ್ತವ್ಯವನ್ನು ಪೂರ್ತಿಗೊಳಿಸದೆ ಯಾವುದೇ ಸಾಫಲ್ಯಭಾವವು ದೊರೆತೀತೆ ? ಅಕಸ್ಮಾತ್ ಕ್ಷಣಿಕವಾಗಿ ದೊರೆತಂತೆ ಕಂಡರೂ ಅವು ಯಾವುದಾದರೂ ಉಳಿದಾವೆ ? ಮಾರುತಿಯನ್ನು ಹೃದ್ಭಾವದಲ್ಲಿ ಪ್ರತಿಷ್ಠಾಪಿಸಿಕೊಳ್ಳದೆ ಹನುಮಭಾವವನ್ನೇ ನಷ್ಟಗೊಳಿಸಿಕೊಂಡು ಹ್ರಸ್ವಗೊಳಿಸಿಕೊಂಡ ಮನಸ್ಸು ಭಾವ ಮತ್ತು ಬುದ್ಧಿಗಳು - "ನಿನಗೇನು ಧಾಡಿ ? ನನಗೂ ಕೊಡಯ್ಯಾ..." ಅಂದರೆ, ಹಾಸ್ಯ ಹುಟ್ಟಬಹುದಲ್ಲದೆ ಭಕ್ತಿಲಾಸ್ಯವು ಹುಟ್ಟೀತೆ ? ಭಗವಂತನು ತನ್ನನ್ನು ಭಾವದುಂಬಿ ಪ್ರೀತಿಸುವವರಿಗೆ ಮಾತ್ರ ಸುಲಭನು. ಅಗ್ಗದ ಭಾವವ್ಯಭಿಚಾರಕ್ಕೆಲ್ಲ ಆತನು ಒಲಿಯಲಾರ. ಆದರೆ ಭಗವಂತನಿಗಾಗಿ ಅತ್ತು ರಂಪ ಮಾಡುತ್ತ ಹಸಿವು ನಿದ್ದೆಯನ್ನೂ ಗಣಿಸದೆ ಸಾಕ್ಷಾತ್ಕಾರಕ್ಕಾಗಿ ಹಾತೊರೆಯುವ ನಿಜವಾದ ಭಕ್ತನು ತನ್ನನ್ನು ನಿಂದಿಸಿದರೂ - ಭಗವದ್ಭಾವವು ಅಂತಹ ನಿಂದೆಯನ್ನೂ "ನಿಂದಾಸ್ತುತಿ" ಎಂದೇ ಅಂದುಕೊಳ್ಳುವುದು - ಅನನ್ಯ ಭಕ್ತಿಸಾಮ್ರಾಜ್ಯದಲ್ಲಿ ಮಾತ್ರ ಸಾಧ್ಯ. ಅದು ಹೇಗೆಂದರೆ - ಮಗುವನ್ನು ಅನನ್ಯವಾಗಿ ಪ್ರೀತಿಸುವ ಒಬ್ಬ ತಾಯಿಯು ತನ್ನ ಮಗುವಿನ ಬೈಗುಳದ ಬಾಲನುಡಿಗಳನ್ನು ಕೇಳಿ ಆನಂದಿಸುತ್ತ ಮಗುವನ್ನು ಎತ್ತಿ ಮುದ್ದಾಡಿದಂತೆ ! ನಿಂದಿಸುವ ಅವಕಾಶವಿರುವುದು ಪ್ರೀತಿಸುವ ಭಕ್ತರಿಗೆ ಮಾತ್ರ. ನಿಷ್ಕಲ್ಮಷ ಪ್ರೀತಿಯು ಯಾವುದೇ ನಿಂದೆಯನ್ನು ಗ್ರಹಿಸುವುದಿಲ್ಲ; ಗಣಿಸುವುದೂ ಇಲ್ಲ. "ನೀನು ದೊಡ್ಡವನೋ ನಿನ್ನ ದಾಸರು ದೊಡ್ಡವರೋ ?" ಎಂದು ಪ್ರೀತಿಯ ಹಕ್ಕಿನಿಂದ ಭಗವಂತನನ್ನು ಪ್ರಶ್ನೆ ಮಾಡುವುದು - ಭಕ್ತರಿಗೆ ಮಾತ್ರ ಸಾಧ್ಯ.
ಆದ್ದರಿಂದ ಭಕ್ತಿ ಶಾಲೆಯ ಮುಖವನ್ನೇ ಕಾಣದ ಲಂಡು ಲಸ್ಕು ಲೊಳಲೊಟ್ಟೆಗಳಿಗೆ ಶ್ರೀರಾಮ ಹನುಮರ ಸವಾರಿ ಮಾಡಲು ಆಗುವುದಿಲ್ಲ. ಶರಣಾಗತಿಯಲ್ಲದೆ ಅನ್ಯ ಮಾರ್ಗವೇ ಇಲ್ಲ. ಬದುಕಿನಲ್ಲಿ ತಾವು ಸಂಚಯಿಸಿಕೊಂಡ ದುರ್ಗಂಧವನ್ನು ಸಲೀಸಾಗಿ ವಿಸರ್ಜಿಸಲಾಗದೆ ತಿಣುಕಾಡುವ ದುರ್ಬಲ ಕೋತಿಗಳನ್ನು ಎತ್ತಿ ಪೀಠದ ಮೇಲೆ ಕುಳ್ಳಿರಿಸುವ ಮೂಲಕ "ಯಾರ್ಯಾರನ್ನೋ ಯಾರ್ಯಾರೋ ದೊಡ್ಡವರಾಗಿಸುವ" ಹಗಲು ಮಾಯಕದ ಹಿಕ್ಮತ್ತುಗಳಿಗೆಲ್ಲ ಸಾಮಾಜಿಕ ಮಾನ್ಯತೆ ದೊರೆತಂತೆ ಕಂಡರೂ ಅಧ್ಯಾತ್ಮ ಮಾರ್ಗದಲ್ಲಿ ಯಾವ ಮಾನ್ಯತೆಯೂ ಇರಲಾರದು. ಆದ್ದರಿಂದ ಮಾರುತತುಲ್ಯನಾದ ಹನುಮನ ಸವಾರಿ ಮಾಡಬಯಸುವವರು ಹನುಮಭಾವದಲ್ಲಿ ಮುಳುಗದೆ ಬೇರೆ ಗತಿಯಿಲ್ಲ. ಕೇವಲ ಶಾಬ್ದಿಕ ಮಾರುತದಿಂದ "ಕಲುಷಿತ ಧೂಳಿನ ಹುಡಿ ಹಾರಿಸುವುದು" ಮಾತ್ರವೇ ಸಾಧ್ಯ. ಭಾವತಲ್ಲಣವನ್ನು ಶಮನಿಸಲಾಗದ ಯಾವುದೇ ಶಬ್ದಾಡಂಬರದಿಂದ - ಅಮೂಲ್ಯ ಸಮಯದೊಂದಿಗೆ ಬದುಕೇ ನಷ್ಟವಾಗುತ್ತ ಹೋಗುತ್ತದೆ. ಆದ್ದರಿಂದಲೇ ಶ್ರೀ ರಾಮಕೃಷ್ಣರು ಭಾವನಷ್ಟಗೊಳಿಸುವಂತಹ ಸುದ್ದಿಹದ್ದುಗಳಂತಿರುವ - ವೃತ್ತಪತ್ರಿಕೆಗಳನ್ನು - "ಅಪವಿತ್ರ" ಎಂದು ದೂರವಿರಿಸಿದ್ದರು; ಸಾಮಾಜಿಕ ಅಂತೆಕಂತೆಬೊಂತೆಗಳಿಂದ ದೂರವಿರುವಂತೆ ತಮ್ಮ ಭಕ್ತರಿಗೂ ಬೋಧಿಸಿದ್ದರು.
ಬಾಹ್ಯದಲ್ಲಿ ಕಳೆದುಹೋಗುತ್ತಿರುವ ಮನಸ್ಸನ್ನು ಅಂತರ್ಮುಖಗೊಳಿಸಿಕೊಂಡು... ವಿನಮ್ರತೆ, ನಿಷ್ಠೆ, ಭಕ್ತಿ ವೈರಾಗ್ಯದ ಪ್ರತಿಮೂರ್ತಿಯನ್ನು ತದೇಕಚಿತ್ತದಿಂದ ಧ್ಯಾನಿಸುವವರು - ಮಗುವು ತನ್ನ ಅಮ್ಮನನ್ನು ಪೀಡಿಸಿ ತನಗೆ ಬೇಕೆನಿಸಿದ ಮಿಠಾಯಿಯನ್ನು ಸಂಪಾದಿಸಿಕೊಳ್ಳುವಂತೆ - ಪ್ರೇಮಪೂರಿತ ಭಕ್ತಿಯನ್ನು ಆಶ್ರಯಿಸಿ, ಹನುಮ ಮೌಲ್ಯಗಳನ್ನು ಆರಾಧಿಸುತ್ತ ಕೃಪಾಮೃತಕ್ಕೆ ಪಾತ್ರರಾಗಬಹುದು. ಭಕ್ತ ಭಗವಂತನಲ್ಲಿ ಆತ್ಮೀಯ ಸಂಬಂಧ ಮೊಳೆತ ಮೇಲೆ ಕ್ರಮೇಣ ಭೌತಿಕ ವ್ಯಥೆಯ ರೂಪದಲ್ಲಿ, ಸ್ತುತಿಯ ರೂಪದಲ್ಲಿ - ಹುಸಿಮುನಿಸಿನ ನಿಂದೆಯೂ - ಭಕ್ತಿಯ ಪ್ರತಿರೂಪವಾಗಿ ಹೊರಹೊಮ್ಮಬಹುದು. ಪ್ರೀತಿಯನ್ನು ವಿಚಲಿತಗೊಳಿಸದಂತಹ ನಿಂದಾಸ್ತೋತ್ರಗಳವು !
ಭಾವದಂತೆಯೇ ಭವ ! ಯಾರನ್ನಾದರೂ ಉದ್ದೇಶಿಸಿ ಸಿಡುಕಲು, ಮುಖ ಊದಿಸಿಕೊಳ್ಳಲು ಅಥವ ನಿಂದಿಸಲು ಅರ್ಹತೆ ಇರುವುದು ಪ್ರೀತಿಸುವವರಿಗೆ ಮಾತ್ರ ! ಯಾವುದೇ ನಿಂದನೆಗೂ ಪ್ರೀತಿಯೇ ಮೂಲದ್ರವ್ಯವಾದಾಗ ಅಂತಹ ನಿಂದನೆಯಲ್ಲೂ ಸಹಜ ಸೌಂದರ್ಯದ ಅನಾವರಣವಾಗುತ್ತದೆ ! ಸೌಂದರ್ಯದ ಪ್ರಕೃತಿಯಲ್ಲಿಯೇ ಸತ್ಯ, ಶಿವನ ಆವಾಸ. ಇದೇ ನಿಷ್ಕಲ್ಮಷ ಪ್ರೇಮಾಭಕ್ತಿ. ಆದ್ದರಿಂದಲೇ ಹೆತ್ತವರು ನಿಂದಿಸಿದರೆ ಮುಗ್ಧ ಮಕ್ಕಳಿಗೆ ನೋವಾಗುವುದಿಲ್ಲ; ಅಲ್ಲಿ, ದೂಷಿಸಿದವರು ಮತ್ತು ದೂಷಿಸಿಕೊಂಡವರು ಗಟ್ಟಿಯಾಗಿ ಆಶ್ರಯಿಸಿಕೊಂಡು ಪರಸ್ಪರ ನೋವು ಕಳೆದುಕೊಳ್ಳುತ್ತವೆ. ಆತ್ಮಭಾವವು ನಿಸ್ವಾರ್ಥ ಭಕ್ತಿ ವಿಶ್ವಾಸದಿಂದ ಪುಷ್ಟಿಗೊಂಡಾಗ ಮಾತ್ರ ಅಂತಹ ಪ್ರೇಮಾಭಕ್ತಿಯು ಸಂಭವಿಸುತ್ತದೆ.
ಪರಾಶಕ್ತಿಯು ನಾದಪ್ರಿಯವಲ್ಲ; ವೇದಪ್ರಿಯವೂ ಅಲ್ಲ; ಭಕ್ತಿಪ್ರಿಯ. ಭಕ್ತಿಯೇ ಆಧ್ಯಾತ್ಮದ ಹೆಬ್ಬಾಗಿಲು. ಸದ್ಗುಣಗಳ ಭಾವಸನ್ನಿಧಿಯನ್ನು ಪ್ರಯತ್ನಪೂರ್ವಕವಾಗಿ ಮೂಡಿಸಿ ರೂಢಿಸಿಕೊಂಡು ಭಕ್ತರಾಗುವುದು ಅಧ್ಯಾತ್ಮ ಪ್ರವೇಶದ ಮೊದಲ ಹೆಜ್ಜೆ. ಬದುಕಿನಲ್ಲಿ ನಾವು ಹೊಕ್ಕು ಹೊರಡುವ - ಓದು ಬರಹ ವಿಚಾರ ಸತ್ಸಂಗಗಳು... ಮುಂತಾದುವೆಲ್ಲವೂ ಉತ್ತಮ ಮೌಲ್ಯಗಳತ್ತ ನಾವು ಮುಖ ತಿರುಗಿಸಿ ನೋಡುವಂತೆ ಮಾಡುವ ಪ್ರಾಥಮಿಕ ಸಾಧನಗಳಷ್ಟೇ. ಅವು - ಭಾವಶುದ್ಧಿಗೆ ಒದಗುವ - OBJECTS - ಬಾಹ್ಯ ಉಪಕರಣಗಳು. ನಾದ ವೇದ ಭಕ್ತಿ ಎಂಬ ಯಾವುದೇ ಉಪಕರಣವನ್ನು ಶ್ರದ್ಧೆಯಿಂದ ಅನುಸರಿಸಿ ಅಂತರ್ನಡೆಗೆ ಸಾಧನವಾಗಿ ಅಳವಡಿಸಿಕೊಂಡಾಗ ಮಾತ್ರ - ಇಚ್ಛಿತ ಫಲವನ್ನು ಕಾಣುವಂತಾಗುತ್ತದೆ.
****** ****** ******
"I JUST want to be happy" - ಇದು ಎಲ್ಲ ಜೀವಿಗಳ ಅಂತರ್ಭಾವ. ಈ ನಿಜಸುಖದ ಭಾವತುಡಿತವನ್ನು ಶಾಂತಗೊಳಿಸಲು ಭಾವಶುದ್ಧದ ಮನೋವೇದಿಕೆಯು ಅತ್ಯಗತ್ಯ. To be happy ಎಂಬ ಯಾವುದೇ ಕಾಮನೆಯ ಭಾವಪೂರ್ಣತೆಗೆ - JUST I WANT - ಎಂಬ ಹಟಮಾರಿ ಭಾವವೇ ಸಾಕಾಗದು; ಮನಸ್ಸಿನ JUST ಎಂಬ ಭಾವನೆಲೆಯನ್ನು RE-ADJUST ಮಾಡಿಕೊಳ್ಳಬೇಕಾಗುತ್ತದೆ. ಚಾಂಚಲ್ಯವನ್ನು ನಿಯಂತ್ರಿಸಿಕೊಂಡು, ಸದ್ಭಾವ ಪ್ರವೇಶಕ್ಕೆ ಅಗತ್ಯವಾದ ಮನೋಭೂಮಿಕೆಯನ್ನು ಸ್ಥಾಪಿಸಿಕೊಂಡು - ಅಲ್ಲಿ ಇಲ್ಲಿ ಸೊಂಡಿಲು ಚಾಚುತ್ತ, ಆಶಾಕಾಮಿನಿಯನ್ನು ಕಾಮಿಸುವ ಮನಸ್ಸಿಗೆ ಭಾವಶುದ್ಧಿಯ ತರಬೇತಿಯನ್ನು ನೀಡುವ ಪೂರ್ವ ಸಿದ್ಧತೆಯು ಬೇಕಾಗುತ್ತದೆ. ಮನಸ್ಸೆಂಬ ಕೆರೆಯ ಕೆಸರು ಹೂಳನ್ನೆತ್ತಿ ಜಲಶುದ್ಧಿಗೊಳಿಸುವ ಪ್ರಕ್ರಿಯೆಯಿದು. ಏಕೆಂದರೆ ಅಂತರ್ಜಲ ಶುದ್ಧಿಗೊಳ್ಳದೇ - ಅದೇ ಸ್ಥಾನಕ್ಕೆ ಎಷ್ಟೇ ಹೊಸ ನೀರನ್ನು ತುಂಬಿಸುತ್ತಿದ್ದರೂ ಅದು ವ್ಯರ್ಥವೇ ಆಗುತ್ತದೆ. ಅಂತರ್ಭಾವಶುದ್ಧಿಗೆ - ಪ್ರಾರ್ಥನೆಯೇ ಸಿದ್ಧೌಷಧ.
ಭಾವ ಶುದ್ಧಗೊಳಿಸುವ ವ್ಯಾಕುಲ ಪ್ರಾರ್ಥನೆಯಿಂದಲೇ ಅಂತರಂಗ ಶುದ್ಧಿ. ಪ್ರಾರ್ಥನೆ ಎಂಬ ಸ್ನಾನದಿಂದ ಅಂತರಂಗ ಶುದ್ಧಿಯಾಗದೆ ಅಧ್ಯಾತ್ಮರಂಗವನ್ನು ಪ್ರವೇಶಿಸುವವರದು ವೇಷ ಮಾತ್ರವಾಗಬಹುದಲ್ಲದೆ ಉದ್ದೇಶಿತ ಸಾರ್ಥಕ್ಯ ಕಾಣಲಾಗದು. ಆದ್ದರಿಂದಲೇ ಯೋಗಿಗಳು, ಅವಧೂತ ಭಕ್ತ ಸಾಧಕರು ತಮ್ಮ ಸುದೀರ್ಘ ಆಧ್ಯಾತ್ಮ ಸಾಧನೆಯ ಫಲವನ್ನು ಪದ-ಪದ್ಯಗಳ ಮೂಲಕ - ಹೀಗೆ ಉದಾರವಾಗಿ ಹರಿಸುತ್ತಲೇ ಬಂದರು. ಅಂತಹ ಭಕ್ತಿ ಬಿಂದುಗಳ ಸಾಗರವೇ ನಮ್ಮ ಬೆನ್ನ ಹಿಂದಿದೆ... ಮತ್ತು ಜೀವಜಗತ್ತು ಕುಸಿದು ಬೀಳದಂತೆ ಆಧರಿಸುತ್ತಲೇ ಬಂದಿದೆ; ಈ ಜಗತ್ತಿನ - "Want To be happy" ಎನ್ನುವ ಉಡಾಳ, ಸಡಿಲು ಬಯಕೆಗಳ ಸಮ್ಮುಖದಲ್ಲಿ - ನಿಜಾನಂದದ ಸುಲಭ ಸುಭಗ ಸೂತ್ರವನ್ನು ತೆರೆದಿಟ್ಟಿದೆ.
ಅಧ್ಯಾತ್ಮಕ್ಕೆ ಸೃಷ್ಟಿಯ ಗರ್ಭದ ನಂಟಿದೆ ! ಅಂತಹ ಅನಾದಿ ಸೂಕ್ಷ್ಮಕ್ಕೆ ಸಾಕ್ಷಿಯಾಗಲು ಇಚ್ಛಿಸುವವರು - ಅಪ್ಪಅಮ್ಮನ ಕೈ ತಪ್ಪಿಸಿಕೊಂಡು ಓಡಿಹೋಗುವ ಪುಂಡು ಮಕ್ಕಳಂತಾಡದೆ - ಸುದೃಷ್ಟಿಯ ವ್ಯಾಪ್ತಿಯಲ್ಲಿಯೇ ಆಡಿಕೊಂಡಿರಬೇಕಷ್ಟೆ ! ಆಗಲೇ ಕ್ಷೇಮಲಾಭ. "ಬೆನ್ನ ಹಿಂದೆ ನನ್ನ ಅಮ್ಮ ಇದ್ದಾಳೆ; ಅಪ್ಪ ಇದ್ದಾನೆ... " ಎಂಬ ಧೈರ್ಯವೇ - ಮುಂದೆ ಮುಂದೆ ಓಡಬಯಸುವ ಮಗುವಿನಲ್ಲಿ ಅಪಾರ ವಿಶ್ವಾಸವನ್ನು ತುಂಬುವಂತೆ - ಆಧ್ಯಾತ್ಮಿಕ ಸಾಧಕರ ನಡೆನುಡಿಗಳು ಸಜ್ಜನರಲ್ಲಿ ವಿಶ್ವಾಸವನ್ನು ತುಂಬಿ ಆಧರಿಸಬಲ್ಲವು. ಶ್ರೀ ರಾಮಕೃಷ್ಣ ಕ್ಷೇತ್ರದಲ್ಲಿ ಅಂತಹ ಸತ್ವ ಮತ್ತು ವಚನಸುಧೆಯ ಪ್ರಶಾಂತ ಬೆಳಕಿದೆ !
ಯಾವುದೇ ಒಂದು ಶ್ರೇಷ್ಠ ಬದುಕು - ಅದು ತಮ್ಮ ಜೊತೆಯಲ್ಲಿ ಬದುಕಿರುವಾಗ - ಅದರ ಶ್ರೇಷ್ಠತೆಯು ಜನರಿಗೆ ಅರ್ಥವಾಗುವುದೇ ಇಲ್ಲ. ಅತ್ಯಂತ ಆತ್ಮೀಯರೆಂದುಕೊಂಡವರಿಗೂ ಅಂತಹ ಮಹಾತ್ಮೆಯ ವ್ಯಾಪ್ತಿ ಆಳ ವೈಶಾಲ್ಯದ ಅರಿವು ಮೂಡುವುದಿಲ್ಲ. ಯಾವತ್ತೂ ಒಂದು ವಸ್ತುವಿನ ಬೆಲೆ ತಿಳಿಯುವುದು - ಅದನ್ನು ಕಳೆದುಕೊಂಡ ಮೇಲೇ. ಅದು - ಆಯಾ ಅವತಾರಗಳ ನಿಯಮವೇ ಇರಬಹುದು. ಶ್ರೀರಾಮ ಶ್ರೀಕೃಷ್ಣರಂತೆ - ಶ್ರೀ ರಾಮಕೃಷ್ಣರೂ ಈ ಸೂತ್ರಕ್ಕೆ ಅಪವಾದವಾಗಲಿಲ್ಲ ! "ದೈವತ್ವವು ಯಾವತ್ತೂ ದೃಶ್ಯವಾಗದು; ಅದು ಅದೃಶ್ಯವೇ ಆಗಿರುತ್ತದೆ; ಆಗಿರಬೇಕು...." ಇತ್ಯಾದಿಯಾಗಿ ಅಂದುಕೊಳ್ಳುವ ಮಾಯಾಮತಿಗಳು ತಮ್ಮ ನಡುವಿನಲ್ಲೇ ಬದುಕಿದ ದೈವಾಂಶಗಳನ್ನು ಗುರುತಿಸಲಾಗದೆ ಹೋಗಿರುವ ಅನೇಕ ಸಂದರ್ಭಗಳಿವೆ. ಅಂತಹ ಢಾಂಬಿಕ ಮಿಡುಕಾಟಗಳನ್ನೆಲ್ಲ ಮಹಾತ್ಮರಾದವರು ಅಪೇಕ್ಷಿಸುವುದೂ ಇಲ್ಲ. ಆದ್ದರಿಂದಲೇ - ಮುಖ್ಯವಾಗಿ ಅಧ್ಯಾತ್ಮ ಕ್ಷೇತ್ರದಲ್ಲಿ ಮಾತ್ರ - "ಆಯಾ ದೇಶಕಾಲಗಳ ವ್ಯಾಪಕ ಅನುಭವಕ್ಕೆ ಬರದಂತೆ ಜಾರಿ ಹೋದ" ಅವತಾರಗಳನ್ನು ಗುರುತಿಸಬಹುದು.
****** ****** ******
ಶಂಕರ ಮಧ್ವ ರಾಮಾನುಜ, ಚೈತನ್ಯಪ್ರಭು, ವಿದ್ಯಾರಣ್ಯ, ಅರವಿಂದರು, ರಮಣ ಮಹರ್ಷಿ, ಅಲ್ಲಮ, ಶ್ರೀ ರಾಮಕೃಷ್ಣರು... ಮುಂತಾದ ಅನೇಕ ಆಚಾರ್ಯರು, ಆಧ್ಯಾತ್ಮಿಕ ಋಷಿಗಳು ಇದೇ ಭರತದೇಶದಲ್ಲಿ ಬಂದು ಹೋಗಿದ್ದಾರೆ. ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳೈಸಿದಂತಹ - ಅನೇಕ ಋಷಿಸದೃಶ ಬದುಕುಗಳೂ ಈ ಭೂಮಿಯಲ್ಲಿ ಸಂಚರಿಸಿವೆ.
*ಎಂ. ಎಸ್. ಸುಬ್ಬುಲಕ್ಷ್ಮಿ , ಕೆ. ಜೆ. ಯೇಸುದಾಸ್, ಬಿಸ್ಮಿಲ್ಲಾ ಖಾನ್... ಮುಂತಾದ ರಸ ಋಷಿಗಳು.
*ಮಹಾತ್ಮಾ ಗಾಂಧಿ, ಈಶ್ವರಚಂದ್ರ ವಿದ್ಯಾಸಾಗರ, ಲೋಕಮಾನ್ಯ ತಿಲಕ್, ಎಸ್. ರಾಧಾಕೃಷ್ಣನ್, ಅಬ್ದುಲ್ ಕಲಾಂ... ಮುಂತಾದ ಸಾಮಾಜಿಕ ಋಷಿಗಳು.
*ಐನ್ ಸ್ಟೈನ್, ಸಿ. ವಿ. ರಾಮನ್, ಜಗದೀಶಚಂದ್ರ ಬೋಸ್, ಮೇಡಂ ಕ್ಯೂರಿ, ಹೋಮಿ ಜೆ ಭಾಭಾ, ಮೋಕ್ಷಗುಂಡಂ ವಿಶ್ವೇಶ್ವರಯ್ಯ... ಮುಂತಾದ ಋಷಿ ವಿಜ್ಞಾನಿಗಳು.
*ಡಿ. ವಿ. ಗುಂಡಪ್ಪ, ದ. ರಾ. ಬೇಂದ್ರೆ, ಐರೋಡಿ ಶಿವರಾಮಯ್ಯ, ಶಿವರಾಮ ಕಾರಂತ, ಕುವೆಂಪು, ಲಿಯೋ ಟಾಲ್ ಸ್ಟಾಯ್... ಮುಂತಾದ ಅಕ್ಷರ ಋಷಿಗಳು.
ಹೀಗೇ... ಸಹಸ್ರಾರು ಋಷಿಸಮಾನರು...
ಆದ್ದರಿಂದ ಋಷಿಯಾಗು. ಏನನ್ನಾದರೂ ಸಾಧಿಸುವ ಇಚ್ಛೆಯಿದ್ದರೆ... ಮೊದಲು ಸಾಧಕನಾಗು. ತಪಸ್ವಿಯಾಗದೆ - ಋಷಿಭಾವವಿಲ್ಲದೆ ಏನನ್ನೂ ಸಾಧಿಸಲು ಆಗುವುದಿಲ್ಲ.
****** ****** ******
ಸಾರಾಂಶ .....
ಸ್ವಂತ ಇತಿಮಿತಿಯನ್ನು ಅರಿಯದೆ, ದಿನನಿತ್ಯವೂ ನೂರಾರು ಜನರನ್ನು ಭೇಟಿಯಾಗುತ್ತ, ಅಂತಹ ಅಧಿಕಪ್ರಸಂಗಗಳನ್ನೇ "ಸಾಮಾಜಿಕ ಪ್ರತಿಷ್ಠೆ" ಅಂದುಕೊಳ್ಳುವವರ ಮಧ್ಯದಲ್ಲಿ - ಈಗ ನಾವಿದ್ದೇವೆ. ಇದನ್ನು "ಕಳೆದು ಹೋಗುವ ಕ್ರಿಯೆ" ಎಂದೂ - ಸಂಕ್ಷೇಪವಾಗಿ ಹೇಳಬಹುದು. ಅಂತಹ "ಕಳೆಯುವ ಬದುಕುಗಳು" ಅತ್ಯಂತ ಅತೃಪ್ತ ಸ್ಥಿತಿಯಲ್ಲಿ ನರಳುತ್ತಿರುವುದು ಹೊರನೋಟಕ್ಕೆ ಢಾಳಾಗಿ ಕಾಣದಿದ್ದರೂ - ಅದೇ ವಾಸ್ತವವಾಗಿರುತ್ತದೆ. ಹೆಚ್ಚು ಹೆಚ್ಚು ಬಹಿರ್ಮುಖವಾಗುವುದೆಂದರೆ - ತನ್ನನ್ನು ತಾನು ನಗಣ್ಯವಾಗಿಸುವುದು ಎಂದೇ ಅರ್ಥ. ಮನುಷ್ಯರು ಪ್ರತೀ ಕ್ಷಣವೂ ಬಯಸಿ, ಇರಬೇಕಾದುದು ತನ್ನ ಜೊತೆಯಲ್ಲಿಯೇ ಎಂಬುದನ್ನು ಅರಿಯುವ ವರೆಗೂ ಮನಸ್ಸುಗಳಿಗೆ ಗೊಂದಲಗಳು ತಪ್ಪಿದ್ದಲ್ಲ.
ಮನುಷ್ಯರು ಅನುಕ್ಷಣವೂ ಅನುಭಾವಿಸಿ, ದರ್ಶಿಸಲು ಯತ್ನಿಸಬೇಕಾದುದು ಬಾಹ್ಯ ಡೊಂಬರಾಟಗಳನ್ನಲ್ಲ; ಬದಲಾಗಿ, ಅದು - ತನ್ನನ್ನೇ ಆಗಿರುತ್ತದೆ. ಆತ್ಮಸಾಕ್ಷಿ ಎಂಬುದು ಯಾವತ್ತೂ "ಮೂಕಸಾಕ್ಷಿ" ಅಲ್ಲವೇ ಅಲ್ಲ. ಆತ್ಮಸಂವಹನವನ್ನು ಸಾಧಿಸಲಾಗದ ಬಹುಜನರ ಪಕ್ಷವು ಹಾಗಿದ್ದರೂ ಅದು ಸತ್ಯವಲ್ಲ; ಅದು ಪ್ರಾಪಂಚಿಕರ ದಡ್ಡತನದ ವ್ಯರ್ಥ ವ್ಯವಹಾರ. ತಾವು "ಕಂಡದ್ದು ಮಾತ್ರವೇ ಸತ್ಯ" ಎನ್ನುವುದು ಮಹಾ ದಡ್ಡತನ. ಎಲ್ಲ ಅನುಭವಗಳನ್ನೂ ಕಾಣಲಾಗುವುದಿಲ್ಲ. ಆತ್ಮ ಅಥವ ಒಳದನಿಯು ಎಲ್ಲೂ ಪ್ರಕಟವಾಗದೆ, ನಿರ್ಲಿಪ್ತ - ತಟಸ್ಥವಾಗಿದ್ದಂತೆ ಭಾಸವಾದರೂ ಶರಣಾಗತಭಾವದ ಸಾಧಕನಲ್ಲಿ ಆತ್ಮಿಕ ನೆಲೆಯ ಚೈತನ್ಯ ಎಂಬುದು ಸದಾ ಚಲನಶೀಲ ಅಂತರ್ಗಾಮಿಯಂತಿದ್ದು, ಹಿತೈಶಿಯ ಭಾವವನ್ನು ಪ್ರೇರೇಪಿಸುತ್ತ - ಹೊಣೆಯರಿತ ಪಾತ್ರವನ್ನು ನಿರ್ವಹಿಸುತ್ತ ಇರುತ್ತದೆ. ಆದರೆ, ತನ್ನೊಳಗಿನ "ಹಿತೈಶಿಯನ್ನು ಅವಲಂಬಿಸುವ" ವ್ಯವಧಾನ ಇರುವ ಮೌನಿಗಳಿಗೆ ಮಾತ್ರವೇ - ಅಂತಹ ಅಂತರ್ವಾಣಿ ಕೇಳಿಸುತ್ತದೆ. ಯಾವುದೇ ಬಗೆಯ "ಪ್ರಚಾರಗಳಿಗೆ ಸಿಲುಕದ" ಸ್ವತಂತ್ರ ಅನುಭಾವವಿದು. ವಿಶ್ವಾಸ ನಂಬಿಕೆ ಇದ್ದಲ್ಲಿ - ಅಂತಹ ಬದುಕುಗಳನ್ನು ಕೈಹಿಡಿದು ನಡೆಸುವ ಶಕ್ತಿಯೂ - ಇದೇ ಆಗಿದೆ. ಅದು - "ನಾನೇ" ಆಗಿದೆ.
ಅಧ್ಯಾತ್ಮದ ಕಠಿಣ ಶಾಸ್ತ್ರೀಯ ನಡೆಯು ಸಾಮಾನ್ಯರ ಕೈಗೆಟುಕದ ಕುಸುಮದಂತೆ ಭಾಸವಾದರೂ... "ಆತ್ಮ ಪ್ರಜ್ಞೆಯ ಅಧ್ಯಾತ್ಮದ" ಜಾಗ್ರತಿಯಿಲ್ಲವಾದಲ್ಲಿ ಲೌಕಿಕವಾಗಿಯೂ ಯಾವುದೇ ಸಾಧನೆಯು ಸಂಭವಿಸದು - ಎಂಬುದು ಸಾಧಾರ ಸತ್ಯ. ಆತ್ಮ ಪ್ರಜ್ಞೆಯ ಜಾಗ್ರತಿಯೇ ಜ್ಞಾನ. ಯಾವುದೇ ಶಿಷ್ಟ ಸಾಧನೆಯನ್ನು - ಅವ್ಯಕ್ತವಾಗಿದ್ದುಕೊಂಡೇ ಪೋಷಿಸುವ ಮೂಲದ್ರವ್ಯವೇ ಅಧ್ಯಾತ್ಮ; ಅದೇ ಆತ್ಮ ಭಾವ.
ಇವತ್ತಿನ ಬೆರಕೆ ಭಾಷೆಯಲ್ಲಿ ಸೂಕ್ಷ್ಮವಾಗಿ ಹೇಳುವುದಾದರೆ...
MINDSET ಬದಲಿಸಿಕೊಂಡರೆ ಮಾತ್ರ - ನಿರೀಕ್ಷಿತ OUTCOME ಸಿಗುತ್ತದೆ.
*****-----*****-----*****

ಯೋಗಸ್ಥಃ ಕುರು ಕರ್ಮಾಣಿ ಸಂಗಂ ತ್ಯಕ್ತ್ವಾ ಧನಂಜಯ /
ಸಿದ್ಧ್ಯಸಿದ್ಧ್ಯೋಃ ಸಮೋಭೂತ್ವಾ ಸಮತ್ವಂ ಯೋಗ ಉಚ್ಚ್ಯತೇ /
"ಧನಂಜಯನೇ, ಆಸಕ್ತಿಯನ್ನು ಬಿಟ್ಟು ಯೋಗಸ್ಥನಾಗಿ - ಕರ್ಮಗಳು ಫಲಿಸಲಿ ಅಥವ ಫಲಿಸದಿರಲಿ, ಸಮಬುದ್ಧಿಯುಳ್ಳವನಾಗಿ ಕರ್ಮಗಳನ್ನು ಮಾಡು. ಇಂತಹ ಸಮಭಾವಕ್ಕೆ ಯೋಗ ಎನ್ನುತ್ತಾರೆ." (ಭಗವದ್ಗೀತೆ : 2-48)
ದುಃಖೇಷ್ವನುದ್ವಿಗ್ನಮನಾಃ ಸುಖೇಷು ವಿಗತಸ್ಪೃಹಃ /
ವೀತರಾಗಭಯಕ್ರೋಧಃ ಸ್ಥಿತಧೀರ್ಮುನಿರುಚ್ಯತೇ /
"ದುಃಖಗಳು ಬಂದಾಗ ಉದ್ವಿಗ್ನನಾಗದ ಮನಸ್ಸುಳ್ಳವನೂ ಸುಖ ಬಂದಾಗ ಆಸಕ್ತಿಯನ್ನು ಹೊಂದದವನೂ ರಾಗ-ಭಯ- ಕ್ರೋಧಗಳಿಲ್ಲದವನೂ ಆದ ಮುನಿಯು ಸ್ಥಿತಪ್ರಜ್ಞನೆನಿಸುವನು." (2-56)
ಕ್ರೋಧಾದ್ಭವತಿ ಸಂಮೋಹಃ ಸಂಮೋಹಾತ್ ಸ್ಮೃತಿವಿಭ್ರಮಃ /
ಸ್ಮೃತಿಭ್ರಂಶಾದ್ಬುದ್ಧಿನಾಶೋ ಬುದ್ಧಿನಾಶಾತ್ ಪ್ರಣಶ್ಯತಿ /
"ವಿಷಯಗಳನ್ನು ಚಿಂತಿಸುವವರಿಗೆ ಮೊದಲು ಅವುಗಳಲ್ಲಿ ಆಸಕ್ತಿ (ಸಂಗ) ಉಂಟಾಗುತ್ತದೆ. ಸಂಗದಿಂದ ಕಾಮವು ಹುಟ್ಟುತ್ತದೆ. ಕಾಮದಿಂದ ಕ್ರೋಧವೂ ಕ್ರೋಧದಿಂದ ಅವಿವೇಕವೂ ಅವಿವೇಕದಿಂದ ಬುದ್ಧಿನಾಶವೂ ಸಂಭವಿಸಿ, ಮನುಷ್ಯರು ನಾಶ ಹೊಂದುತ್ತಾರೆ." (2-63)

ಸುಭಗರ ರೂಪದಲ್ಲಿರುವ ಮನೋರೋಗಿಗಳು ಹೆಚ್ಚುತ್ತಿರುವ ಈ ಸಾಮಾಜಿಕ ಕಾಲಘಟ್ಟದಲ್ಲಿ ಅಧ್ಯಾತ್ಮದ ಸ್ಪರ್ಶವೊಂದೇ ಸಮಾಜವನ್ನು ರಕ್ಷಿಸಬಲ್ಲದು. ಅದನ್ನು "ಓಲ್ಡನ್ ಅಧ್ಯಾತ್ಮ" ಎನ್ನಿ; ಅಥವ "ಮಾಡರ್ನ್ ಅಧ್ಯಾತ್ಮ" ಎನ್ನಿ. ಅಂತೂ... ಅಧ್ಯಾತ್ಮ ಎಂಬುದು ಇಲ್ಲದೆ ಹೋದರೆ - ಬದುಕು ಸಪ್ಪೆಯಾಗುತ್ತದೆ. ಅಧ್ಯಾತ್ಮ ಪ್ರಪಂಚದಲ್ಲಿ ಹಾರ್ದಿಕ ಪ್ರಾರ್ಥನೆಗೆ ವಿಶೇಷ ಸ್ಥಾನವಿದೆ. ಶ್ರೀ ರಾಮಕೃಷ್ಣರು ತಮ್ಮ ಭಕ್ತಗಡಣಕ್ಕೆ ಹೇಳುತ್ತಿದ್ದರು. "ಜಪ ಧ್ಯಾನವನ್ನು ಮುಗಿಸಿದ ಕೂಡಲೇ ಆಸನವನ್ನು ಬಿಟ್ಟು ಎದ್ದು ಬಿಡಬೇಡಿ. ಸ್ವಲ್ಪ ಹೊತ್ತು ಅಲ್ಲೇ ಕುಳಿತು ದೇವರ ಸ್ತುತಿ ಗೀತೆಗಳನ್ನು ಹಾಡಬೇಕು. ಆಗ ದಿನಪೂರ್ತಿ ಮನಸ್ಸು ಶಾಂತವಾಗಿರುತ್ತದೆ..." ಅಂದರೆ... ಶುದ್ಧಭಾವದ ಗುಂಗನ್ನು ದೀರ್ಘಕಾಲ ಉಳಿಸಿಕೊಳ್ಳುವ ಆಧ್ಯಾತ್ಮಿಕ ವ್ಯಾಯಾಮವಿದು."ಜಾಗ್ರತ ಕೊರೊ ಉದ್ಯತ ಕೊರೊ ನಿರ್ಭಯ ಕೊರೊ
ಮಂಗಲ ಕೊರೊ ನಿರಲಸ ನಿಃಸಂಶಯ ಕೊರೊ
ಅಂತರ ಮಮ ವಿಕಸಿತ ಕೊರೊ... " (ರವೀಂದ್ರನಾಥ ಠಾಕೂರ )
"ಭವಸಾಗರ ಜಲ ದುಸ್ತರ ಭಾರೀ
ತುಮ್ಹರೇ ಚರಣ ಜಹಾಜ ಹಮಾರೇ..
ನಾರಾಯಣ ಮೈ ಶರಣ ತುಮ್ಹಾರೀ
ದಯಾಕರೋ..." (ಬ್ರಹ್ಮಾನಂದರು )
"ಸಮದೃಷ್ಟಿ ನೇ ತೃಷ್ಣಾ ತ್ಯಾಗೀ
ಪರಸ್ತ್ರೀ ಜೇನೇ ಮಾತ ರೇ
ಜಿಹ್ವಾ ಥಕೀ ಅಸತ್ಯ ನ ಬೋಲೇ
ಪರಧನ ನ ವಝಾಲೇ ಹಾಥ ರೇ...
ವೈಷ್ಣವ ಜನ ತೋ ತೇನೇ ಕಹಿಯೇ
ಜೇ ಪೀಡ ಪರಾಯೀ ಜಾಣೇ ರೇ..." (ನರಸೀ ಮೆಹತಾ )
"ಜಯ ಹನುಮಾನ್ ಜ್ಞಾನ-ಗುಣ-ಸಾಗರ
ಜಯ ಕಪೀಶ ತಿಹುಂ ಲೋಕ ಉಜಾಗರ
ರಾಮದೂತ ಅತುಲಿತ ಬಲಧಾಮಾ
ಅಂಜನಿಪುತ್ರ ಪವನಸುತ ನಾಮಾ...
ಸಂಕಟ ಕಟೈ ಮಿಟೈ ಸಬ ಪೀರಾ
ಜೋ ಸುಮಿರೈ ಹನುಮತ ಬಲಬೀರಾ..." (ತುಲಸೀದಾಸರು )
"ನಿನ್ನ ನಾಮವೆ ಜನನಿ ಸುರನದಿಯ ತೀರ್ಥ
ಎಲೆ ತಾಯೆ, ನೀನೇ ಪವಿತ್ರತಮ ತೀರ್ಥ
ನಿನ್ನ ಪೂಜೆಯೆ ಭಕ್ತಿ, ಸಾಧನ ವಿರಕ್ತಿ
ನಿನ್ನ ನೆನೆವುದೆ ನಮಗೆ ಗುರು ತಪಶ್ಶಕ್ತಿ...
ಶ್ರೀ ಶಾರದಾದೇವಿ ಹೇ ಮಹಾಮಾತೆ
ಶ್ರೀ ರಾಮಕೃಷ್ಣ ಗುರುದೇವ ಸಂಪ್ರೀತೆ..." (ಕು ವೆಂ ಪು )
"ಒಂದು ದಳ ಶ್ರೀತುಳಸಿ ಬಿಂದು ಗಂಗೋದಕವ
ಇಂದಿರಾರಮಣಗೆ ಅರ್ಪಿತವೆನುತ
ಒಂದೇ ಮನಸಿನಲಿ ಸಿಂಧುಶಯನ ಎನೆ
ಎಂದೆಂದು ವಾಸಿಪನಾ ಮಂದಿರದೊಳಗೆ...
ಹುವ್ವ ತರುವರ ಮನೆಗೆ ಹುಲ್ಲ ತರುವ
ಅವ್ವ ಲಕುಮೀರಮಣ ಇವಗಿಲ್ಲ ಗರುವ... (ಪುರಂದರ ದಾಸರು )
"ಎಲ್ಲ ನಿನ್ನ ಲೀಲೆ ತಾಯೆ ಎಲ್ಲ ನಿನ್ನ ಮಾಯೆ
ನಿನ್ನ ಅಲ್ಲಗಳೆದ ನಮ್ಮ ಕರುಣೆಯಿಂದ ಕಾಯೇ... (ಲಕ್ಷ್ಮೀನಾರಾಯಣ ಭಟ್ಟರು )