Wednesday, August 24, 2016

ಕೃಷ್ಣಂ ವಂದೇ ಜಗದ್ಗುರುಂ


                                                   ಕೃಷ್ಣಂ ವಂದೇ ಜಗದ್ಗುರುಂ
                                                                 ***

                                                ಕೃಷ್ಣನಾಮ ಜಪಿಸೋ ಮನವೇ
                                                ಕೃಷ್ಣನಾಮ ಜಪಿಸೋ

                                                           ಕೃಷ್ಣ ಕೃಷ್ಣ ಹರಿ ಕೃಷ್ಣ ಕೃಷ್ಣ ಹರಿ
                                                           ಕೃಷ್ಣ ಕೃಷ್ಣ ಹರಿ ಕೃಷ್ಣಾ

                                                ಅಳಿಸು ನಮ್ಮ ಅರಿ
                                                ಉಳಿಸು ನಮ್ಮ ಹರಿ
                                                ಭವಬಂಧಂಗಳ ತೂರಿ

                                                             ಶರಣು ಬಂದೆ ಹರಿ
                                                             ತೋರು ನಮ್ಮ ಗುರಿ
                                                             ದಾರಿ ತೋರೆಮಗೆ ಕೃಷ್ಣಾ

                                                ಸುಖ ದುಃಖ ದ್ವಂದ್ವ
                                                ಬಯಕೆ ಆಕ್ರಂದ
                                                ಹರಿಸಿ ಹರಸೆಮ್ಮ ಕೃಷ್ಣಾ

                                                              ಬೇರೇನು ಕೇಳುವುದಿಲ್ಲ
                                                              ನಿನ್ನ ಕಾಡುವುದಿಲ್ಲ
                                                              ಶ್ರೀ ಚರಣ ಮರೆಸದಿರು ಕೃಷ್ಣಾ
                                                      
                                                ಕೃಷ್ಣ ನಾಮ ಜಪಿಸೋ ಮನವೇ
                                                ಕೃಷ್ಣ ನಾಮ ಪಪಿಸೋ

                                                              ಅನನ್ಯಾಶ್ಚಿಂತಯಂತೋಮಾಂ     

                                                              ಯೇಜನಾಃ ಪರ್ಯುಪಾಸತೇ   
                                                              ತೇಷಾಂ ನಿತ್ಯಾಭಿಯುಕ್ತಾನಾಂ
                                                              ಯೋಗಕ್ಷೇಮಂ ವಹಾಮ್ಯಹಂ

                                                                         ***         

                                                                                   ಶ್ರೀ ಕೃಷ್ಣ ಜನ್ಮಾಷ್ಟಮಿ ,  24.8.2016



Sunday, August 14, 2016

ಸ್ವಾತಂತ್ರ್ಯಕ್ಕೆ ಎಪ್ಪತ್ತು - ಸ್ಮರಿಸಿಕೋ ಬಲಿದಾನ !

  ಶ್ರೀ ರಾಮಕೃಷ್ಣ ಪರಮಹಂಸರ "ಸೇವಕ ಶಿಷ್ಯ"ರಾಗಿದ್ದ ಲಾಟು ಮಹಾರಾಜ ರ ಅದ್ಭುತ ವಾಣಿಯನ್ನು ಓದುವಾಗ ಗುರುಕೃಪೆಯಿಂದ "ಮೃಣಯವು ಚಿನ್ಮಯವಾಗುವ ಅದ್ಭುತ"ದ ಅನುಭೂತಿಯಾಗುತ್ತದೆ. ಲಾಟು ಮಹಾರಾಜರ ಪೂರ್ವಾಶ್ರಮದ ಹೆಸರು ರಖ್ತುರಾಮ. ಬಿಹಾರದ ಒಂದು ಹಳ್ಳಿಯಲ್ಲಿ ಕುರುಬರ ಕುಟುಂಬದಲ್ಲಿ ಜನಿಸಿದ್ದ ರಖ್ತುರಾಮ ಎಂಬ ಹುಡುಗನು ಬಾಲ್ಯದಲ್ಲಿಯೇ ತಂದೆತಾಯಿಯನ್ನು ಕಳೆದುಕೊಂಡವನು. ತನ್ನ ಐದು ವರ್ಷ ಪ್ರಾಯದಲ್ಲಿಯೇ ಚಿಕ್ಕಪ್ಪನ ಆಶ್ರಯದಲ್ಲಿ ಬಡತನದ ಕಷ್ಟಗಳನ್ನು ಉಂಡವನು. ಜೀವನೋಪಾಯದ ಹುಡುಕಾಟದಲ್ಲಿದ್ದ ಚಿಕ್ಕಪ್ಪನೊಂದಿಗೆ ಕಲ್ಕತ್ತಕ್ಕೆ ವಲಸೆ ಬಂದು, ಶ್ರೀ ರಾಮಕೃಷ್ಣರ ಪರಮ ಭಕ್ತರಾದ ರಾಮಚಂದ್ರದತ್ತನ ಮನೆಯಲ್ಲಿ ಸೇವಕನಾಗಿ ಕೆಲಸಕ್ಕೆ ಸೇರಿಕೊಂಡಾಗಲೇ ರಖ್ತುರಾಮನ ಭವಿಷ್ಯವು ನಿಶ್ಚಯವಾಗಿತ್ತು. ಆಗ ರಾಮಚಂದ್ರದತ್ತನ ಮನೆಗೆ ಆಗಾಗ ಆಗಮಿಸುತ್ತಿದ್ದ ಶ್ರೀ ರಾಮಕೃಷ್ಣರ ದರ್ಶನ ಮತ್ತು ಉಪದೇಶಗಳು - ಮರೆಯಲ್ಲಿ ನಿಂತು ಕೇಳುತ್ತಿದ್ದ ರಖ್ತುರಾಮನ ಮನಸ್ಸಿನ ಮೇಲೂ ಪ್ರಭಾವ ಬೀರಲಾರಂಭಿಸಿತ್ತು. ವಿದ್ಯೆಯ ಏನೇನೂ ಗಂಧವಿರದಿದ್ದ ರಖ್ತುರಾಮನು ಆಗಲೇ ಶ್ರೀ ರಾಮಕೃಷ್ಣರ ಸರಳ ವೇದಾಂತಕ್ಕೆ ಮಾರುಹೋಗಿದ್ದ. "ಭಗವಂತನು ನೋಡುವುದು ಮನಸ್ಸನ್ನು ಮಾತ್ರ. ಸರಳ ನಿಷ್ಕಪಟ ಭಾವವು ಮಾತ್ರ ಭಗವಂತನಿಗೆ ಪ್ರಿಯ... ವ್ಯಾಕುಲತೆಯಿಂದ ನಡೆಸುವ ಭಕ್ತನ ಪ್ರಾರ್ಥನೆಯು ಭಗವಂತನಿಗೆ ಕೇಳಿಸುತ್ತದೆ.." ಎಂಬ ರಾಮಕೃಷ್ಣರ ಮಾತುಗಳಿಂದ ರಖ್ತುರಾಮನಲ್ಲಿ ಆತ್ಮವಿಶ್ವಾಸವು ವೃದ್ಧಿಸಿತ್ತು. ಲೋಕದ ಮಂದಿಗಿಂತ ಭಗವಂತನೇ ಸುಲಭ ಅನ್ನಿಸಿತ್ತು.

ಅಂದಿನಿಂದ ರಾಮಕೃಷ್ಣರ ಸೆಳೆತವು ತೀವ್ರಗೊಳ್ಳುತ್ತ ನಡೆದು, ಮುಂದೆ ರಾಮಕೃಷ್ಣರ ಪದಸೇವಕನಾಗುವ ಭಾಗ್ಯವು ರಖ್ತುರಾಮನಿಗೆ ಲಭಿಸಿಯೇ ಬಿಟ್ಟಿತು. ಆ ಮುಗ್ಧ ಬಾಲಕನನ್ನು ತಮ್ಮ ಜೊತೆಯಲ್ಲಿಯೇ ಇರಿಸಿಕೊಂಡ ಶ್ರೀ ರಾಮಕೃಷ್ಣರು ಆತನನ್ನು "ಲಾಟೂ" ಎಂದು ಪ್ರೀತಿಯಿಂದ ಕರೆದು, ಹೊಸ ನಾಮಕರಣ ಮಾಡಿದ್ದರು. ಅಂದಿನಿಂದ ರಖ್ತುರಾಮನು ಎಲ್ಲರಿಗೂ "ಲಾಟು"ವೇ ಆಗಿಹೋಗಿದ್ದ. ಮುಂದೆ ಇದೇ "ಲಾಟು"ಗೆ ಶ್ರೀ ರಾಮಕೃಷ್ಣರ ಅತ್ಯಂತ ವಿಧೇಯ - ಅಧ್ಯಾತ್ಮಿಕ ಶಿಷ್ಯನಾಗುವ ಭಾಗ್ಯವೂ ಲಭಿಸಿತ್ತು. ಶ್ರೀ ರಾಮಕೃಷ್ಣರ ಅಂತಿಮ ದಿನಗಳಲ್ಲಿ ಅವರನ್ನು ಅತ್ಯಂತ ನಿಷ್ಠೆಯಿಂದ ಸೇವಿಸಿದ ಶಿಷ್ಯರಲ್ಲಿ ಲಾಟುವೇ ಅಗ್ರಗಣ್ಯ.

ಶ್ರೀ ರಾಮಕೃಷ್ಣರ ಮಹಾಸಮಾಧಿಯ ಅನಂತರ ಸ್ವಾಮಿ ವಿವೇಕಾನಂದರ ಆದೇಶದಂತೆ ಲಾಟು ಮಹಾರಾಜರು ಬಾರಾನಗರದ ಮಠದಲ್ಲಿ ಸನ್ಯಾಸವನ್ನು ಸ್ವೀಕರಿಸಿದ್ದರು. ಸ್ವಾತ್ಮ ಶುದ್ಧಿ ಮತ್ತು ತನ್ನ ಗುರುಗಳ ಸಂದೇಶ ಪ್ರಸಾರದಲ್ಲಿಯೇ ತಮ್ಮ ಶೇಷಾಯುಷ್ಯವನ್ನು ಸವೆಸಿದ್ದರು.

"ಲಾಟುವು ಶ್ರೀ ರಾಮಕೃಷ್ಣರ ಪರಮಾದ್ಭುತ ಪವಾಡ. ಸಂಪೂರ್ಣ ಅನಕ್ಷರಸ್ಥನಾಗಿದ್ದ ಅವನು ಶ್ರೀ ರಾಮಕೃಷ್ಣರ ಸ್ಪರ್ಶಮಾತ್ರದಿಂದಲೇ ಪರಮ ಜ್ಞಾನಿಯಾದನು" ಎಂದಿದ್ದರು ಸ್ವಾಮಿ ವಿವೇಕಾನಂದರು. ಲಾಟು ಮಹಾರಾಜರ ಅದ್ಭುತ ಹಿನ್ನೆಲೆ, ಶುದ್ಧ ಭಾವ, ಅದ್ಭುತ ಸಾಧನೆಗಳಿಗೆ ಮನಸೋತ ಸ್ವಾಮಿ ವಿವೇಕಾನಂದರು ಅವರಿಗೆ ಅನ್ವರ್ಥವಾಗಿ - "ಸ್ವಾಮಿ ಅದ್ಭುತಾನಂದ" ಎಂಬ ಹೆಸರನ್ನಿತ್ತಿದ್ದರು! ಅದ್ಭುತಾನಂದರಲ್ಲಿ ವಿದ್ಯಾ ಅಹಂಕಾರವೂ ಇರಲಿಲ್ಲ; ಅವಿದ್ಯಾ ಅಹಂಕಾರವೂ ಇರಲಿಲ್ಲ. ಶುದ್ಧ ಯೋಗಿಯಂತಿದ್ದ ಅದ್ಭುತಾನಂದರು ಸಾರ್ವಕಾಲಿಕ ಅದ್ಭುತ ! ಅದ್ಭುತಗಳನ್ನೇ ಬೆಚ್ಚಿಬೀಳಿಸಬಲ್ಲ ಅದ್ಭುತ!

                                                        ಸ್ವಾಮಿ ಅದ್ಭುತಾನಂದರು
 
ಶ್ರೀ ರಾಮಕೃಷ್ಣರ ಉಪದೇಶ ಮತ್ತು ಆಶಯಗಳನ್ನು ಸ್ವಾಮಿ ಅದ್ಭುತಾನಂದರಷ್ಟು ಮುಗ್ಧ ನಿಷ್ಠೆಯಿಂದ ಆಚರಿಸಿದ ಇನ್ನೊಬ್ಬ ಭಕ್ತನು ಇರಲಾರ. ಬುದ್ಧಿ ಭಾವಗಳ - ಸ್ಪಷ್ಟತೆ ಮತ್ತು ಶುದ್ಧತೆಗೆ ಸ್ವಾಮಿ ಅದ್ಭುತಾನಂದರು ಉತ್ತಮ ದೃಷ್ಟಾಂತ. ಯಾವುದೇ ಶಿಕ್ಷಣವೆಂಬ ಸಂಸ್ಕಾರವೂ ಇರದಿದ್ದ ರಖ್ತುರಾಮನು - ಲಾಟುವಾಗಿ, ಸ್ವಾಮಿ ಅದ್ಭುತಾನಂದರಾದ ಮಹಾ ಸಾಧನೆಗೆ ಇಂದಿನ ಶಿಕ್ಷಣದಲ್ಲಂತೂ ಉತ್ತರ ಸಿಗಲಾರದು.

ಒಬ್ಬ ನಿರಕ್ಷರ ಸಾಧುವು ಆರೋಗ್ಯಕರ ಚಿಂತನೆಯನ್ನು ನಿರಾಳವಾಗಿ ನಡೆಸಲು ಸಾಧ್ಯವಾಗುವುದಾದರೆ - ಇಂದಿನ ಶಿಕ್ಷಿತ ವರ್ಗಕ್ಕೆ ಏಕೆ ಸಾಧ್ಯವಾಗುವುದಿಲ್ಲ? ಏಕೆಂದರೆ ಗೊಂದಲವಿಲ್ಲದ ಏಕಾಗ್ರ ಮನಸ್ಸುಗಳನ್ನು ರೂಪಿಸುವಲ್ಲಿಯೇ ಇಂದಿನ ಶಿಕ್ಷಣವು ಸೋಲುತ್ತಿದೆ. ಮೌಲ್ಯಗಳೇ ಇಲ್ಲದ ಅವಿಧೇಯ ವಿದ್ಯೆಯು ಈಗ ಧಿಮಿಗುಡುತ್ತಿದೆ! ಶಾಲೆಗಳು ರಾಜಕೀಯ ಆಖಾಡವಾಗುತ್ತಿವೆ. "ನಾವು ವಿದ್ಯಾವಂತರು" ಎನ್ನುವ ದುರಭಿಮಾನದ ಅವಿದ್ಯೆಯು ನಮ್ಮನ್ನು ಆವರಿಸಿಕೊಂಡಿದೆ. ಒಣ ಚರ್ಚೆಯಿಂದಲೇ ಕೀರ್ತಿ ಸಂಪಾದಿಸುವ ಅಮಲು ಹತ್ತಿದೆ. ಆದ್ದರಿಂದಲೇ - ಅದ್ಭುತಾನಂದರು ಅದ್ಭುತವಾಗಿ ಉಳಿಯುತ್ತಾರೆ; ದುರಭಿಮಾನದ ಹುಳುಗಳು ಕೆಸರಿನಲ್ಲಿ ಹೊರಳಾಡುತ್ತವೆ; ತಾವೂ ಕೆಟ್ಟು ಪರಿಸರವನ್ನೂ ಕೆಡಿಸುತ್ತಿವೆ. ಸ್ವಚ್ಛ ಚಿಂತನೆಯಿಂದಲೇ ಯಾವುದೇ ಅದ್ಭುತವು ಸಂಭವಿಸುತ್ತದೆ ಎಂಬುದಕ್ಕೆ ಅಸಂಖ್ಯ ದೃಷ್ಟಾಂತಗಳಿವೆ. ಆದರೆ... ಇಂದಿನ ನಮ್ಮ ಸ್ವಾತಂತ್ರ್ಯವು ಸಮರ್ಥ ಗುರುವಿಲ್ಲದ - ಯಾವುದೇ ನಿರ್ದಿಷ್ಟ ಗುರಿಯಿಲ್ಲದ ಕತ್ತಲ ದಾರಿಯನ್ನು ನಮಗೆ ದಯಪಾಲಿಸಿದೆ!

ಬುದ್ಧಿಭಾವಗಳ ಯಾವುದೇ  ಸ್ಪಷ್ಟತೆಯಿಲ್ಲದ ನವೀನ ಶೈಲಿಯ ಶಿಕ್ಷಿತರಿಂದ ಇಂದಿನ ಸಮಾಜವು ಪರಿವೇಷ್ಟಿತಗೊಂಡಿದೆ. ಇದನ್ನು - "ಉಚಿತವೆಂಬ ಗೊಂದಲದ ಜೊತೆಗೆ ಏಗುತ್ತಿರುವ Fixed Rate ನ ವಿರೋಧಾಭಾಸದ ಕಾಲ (!)" ಎಂದೂ ಹೇಳಬಹುದು. ಸ್ವಾತಂತ್ರ್ಯಾನಂತರದ ಕಾಲ ಘಟ್ಟದಲ್ಲಿ ಭಾರತೀಯರು ಭಾವಬುದ್ಧಿಗಳ ನೆಲೆಯಲ್ಲಿ ಏಕವಾಗುತ್ತಿದ್ದಾರೆಯೆ? ಅಥವ ಅನೇಕದತ್ತ ವಾಲುತ್ತಿದ್ದಾರೆಯೆ? ಜಗಳಗಳ ಕಿಡಿ ಹಚ್ಚುವವರು, ಜಗಳ ಮಾಡುವವರು, ಜಗಳ ನೋಡುವವರು, ಜಗಳದ ವಿಷಯವನ್ನೇ ಚರ್ಚಿಸುತ್ತ ಯಾವುದೇ ಜಗಳಗಳು ಎಂದೂ ಮುಗಿಯದಂತೆ ನಿರೀಕ್ಷಿಸುವವರಿಂದ ಇಂದಿನ ಭಾರತ ದೇಶವು ಸಮೃದ್ಧವಾಗಿರುವಂತೆಯೂ ಒಮ್ಮೊಮ್ಮೆ ಕಾಣಿಸುವುದಿಲ್ಲವೆ ? ಇಂದು ಯಾವುದೇ ವಿವಾದವು - ಕಾದಾಟವಾಗಿ ಮಹಾಕಾಳಗದ ವರೆಗೂ ನಡೆದುಬಿಡುವುದು ಸಾಮಾನ್ಯ ದೃಶ್ಯಗಳಾಗುತ್ತಿವೆ. ಇಂತಹ ಸನ್ನಿವೇಶದಲ್ಲಿ "ನಮಗೆ ದೊರೆತಿರುವ ಹಕ್ಕುಗಳೇ ನಮ್ಮನ್ನು ಜಗಳಗಂಟರನ್ನಾಗಿ ಮಾಡುತ್ತಿವೆಯೆ?" ಎಂದು ಅನ್ನಿಸುವುದೂ ಇದೆ. ಹಕ್ಕು ಮತ್ತು ಕರ್ತವ್ಯಗಳ ಸಂತುಲನವಿಲ್ಲದ ಭಾರತದ ಪ್ರಜಾಪ್ರಭುತ್ವದ ವಿರೋಧಾಭಾಸಗಳಿಂದಾಗಿ ಯಾವುದೇ ಹಂತದಲ್ಲಿಯೂ ವೈವಿಧ್ಯತೆಯಲ್ಲಿ ಏಕತೆಯನ್ನು ಸಾಕ್ಷಾತ್ಕರಿಸಿಕೊಳ್ಳಲಾಗದೆ ಹೋದಾಗ ಆಗಾಗ - ಅಲ್ಲಲ್ಲಿ - ಸ್ವಾತಂತ್ರ್ಯವೇ ಎದ್ದು ಬಂದು ಕುಟುಕುವಂತೆ ಕಾಣುವುದೂ ಇದೆ. ಜಾತಿ, ಪ್ರದೇಶ, ನೀರು, ಭಾಷೆ ಮುಂತಾದ ಎಲ್ಲ ಸರಳ ವಿಷಯಗಳೂ ಜಗಳಕೋರರ ನೇತೃತ್ವದಲ್ಲಿ ಸೂಕ್ಷ್ಮ ವಿಷಯಗಳಾಗುತ್ತಿವೆ. ಇವು ಯಾವುವೂ ಏಕತೆಯನ್ನು ತರುವಂತಹ ಮಾಧ್ಯಮಗಳಾಗದೆ ಪರಸ್ಪರರಲ್ಲಿ ಅಂತರವನ್ನು ಹೆಚ್ಚಿಸುತ್ತಿರುವಂತೆಯೂ ಕಾಣುತ್ತಿದೆ. ರಾಷ್ಟ್ರಭಾವವನ್ನು ಒಡಮೂಡಿಸಲು ಇನ್ನೂ ನಾವು ಹೆಣಗಾಡುವಂತಾಗಿದ್ದರೆ ಅದಕ್ಕೆ ಕಾರಣ ಏನು? ಕಾರಣ ಯಾರು?  ಭಾವೈಕ್ಯ ಎಂಬುದು ಈಗ ನಮ್ಮಲ್ಲಿ ಉಳಿದಿದೆಯೆ? ಇಂತಹ ಹಲವಾರು ಪ್ರಶ್ನೆಗಳಿಗೆ ದಿನವೂ ಮುಖಾಮುಖಿಯಾಗಬೇಕಾಗಿದೆ. ಇಂದಿನ ಅಗೋಸ್ತ್ 15 ರಂದು ಸ್ವಾತಂತ್ರ್ಯದ 70 ನೇ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿರುವ ನಮಗೆ ಆತ್ಮನಿರೀಕ್ಷಣೆ ಮಾಡಿಕೊಳ್ಳುವ ಸ್ವಾತಂತ್ರ್ಯವಂತೂ ಇದೆ ಅಂದುಕೊಳ್ಳಬಹುದು !

ಇಂದಿನ ಸಮಾಜದಲ್ಲಿ ವೈಚಾರಿಕತೆ ಎಂಬ ವೇಷವು ಹದ ಮೀರುತ್ತಿದೆ. ತನ್ನ ಚರಮಸೀಮೆಯನ್ನು ದಾಟುತ್ತಿದೆ. ಅದರಿಂದಾಗಿಯೇ ಸಮಾಜವು ಅವ್ಯವಸ್ಥೆಯ ಗೂಡಾಗುತ್ತಿದೆ. ಗೊತ್ತಿಲ್ಲದವರ ವೈಚಾರಿಕ ದಾಳಿಗೆ ಅಸಹ್ಯ ಪಟ್ಟುಕೊಳ್ಳುವ ಗೊತ್ತಿರುವವರು ಮೌನದ ಚಿಪ್ಪಿನೊಳಗೆ ಸೇರುತ್ತಿದ್ದಾರೆ. ಇದರಿಂದಾಗಿ ಇನ್ನಷ್ಟು ಹಾನಿಯಾಗುತ್ತಿದೆ. ಕಡಿಯುವ ಕೊಲ್ಲುವ ನೋವನ್ನುಂಟುಮಾಡುವ ವೈಚಾರಿಕತೆಯು ಯಾವತ್ತೂ ಅನಿಷ್ಟವೇ ಆಗಿರುತ್ತದೆ. ಪರಸ್ಪರ ದ್ವೇಷಿಸುವ ಸ್ವಾತಂತ್ರ್ಯವು ನಮಗೆ ಬೇಕೆ ? ಪ್ರೀತಿಸುವ ಸ್ವಾತಂತ್ರ್ಯವಿದ್ದರೂ ಅದನ್ನು ಬಳಸಿಕೊಳ್ಳುವಲ್ಲಿ ನೇತೃತ್ವವು ಎಡವುತ್ತಿರುವುದಾದರೂ ಏಕೆ?

ಮತ್ತೊಮ್ಮೆ ಸ್ವಾಮಿ ಅದ್ಭುತಾನಂದರು ನೆನಪಾಗುತ್ತಾರೆ. ಒಮ್ಮೆ ಮಠದಲ್ಲಿ ನೆರೆದಿದ್ದ ಗುರುಸೋದರರ ಜೊತೆಯಲ್ಲಿ ಸ್ವಾಮಿ ವಿವೇಕಾನಂದರು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದರು. ಅದಾಗಲೇ ವಿದೇಶಗಳನ್ನು ಸುತ್ತಿ ಬಂದಿದ್ದ ಸ್ವಾಮಿ ವಿವೇಕಾನಂದರು, ನಾನಾ ದೇಶದ ನಾನಾ ವಿಧವಾದ ಪೂಜಾ ಪದ್ಧತಿಗಳನ್ನು ತನ್ನ ಗುರು ಸೋದರರಿಗೆ ವಿವರಿಸುತ್ತಿದ್ದರು. ಆಗ ಗಮನವಿಟ್ಟು ಕೇಳುತ್ತಿದ್ದ ಲಾಟೂ ಮಹಾರಾಜ್ ಅವರು ವಿವೇಕಾನಂದರನ್ನು ಪ್ರಶ್ನಿಸಿದ್ದರು. "ಹೌದಣ್ಣಾ, ನೀನು ಎಷ್ಟೋ ದೇಶಗಳನ್ನು ಸುತ್ತಾಡಿದ್ದೀ. ಎಷ್ಟೋ ನೋಡಿದ್ದೀ; ಕೇಳಿದ್ದೀ.. ಆದರೆ ಜಗತ್ತಿನ ಯಾವ ಮೂಲೆಯಲ್ಲಾದರೂ ಪೃಥ್ವಿಯ ಪೂಜೆಯ ವಿಷಯವನ್ನು ಕೇಳಿದ್ದೀಯಾ?" ಎಂದುಬಿಟ್ಟರು.

ಆಗ ವಿವೇಕಾನಂದರು ವಿಸ್ಮಿತರಾಗಿ ಕೇಳಿದರು : "ಯಾಕೆ ಹೇಳು?"

ಲಾಟು ಮಹಾರಾಜ್ ಹೇಳಿದರು : "ಏಕೆಂದರೆ... ನಾನು ನೋಡುತ್ತೇನೆ, ಈ ಮಣ್ಣಿನಿಂದಲೇ ಎಲ್ಲವೂ ಆಗಿದೆ. ಇಲ್ಲಿರುವ ಐಶ್ವರ್ಯವೆಲ್ಲವನ್ನೂ ಭೂಮಿಯ ಗರ್ಭವನ್ನು ಸೀಳಿ ಹೊರ ತೆಗೆಯಲಾಗಿದೆ. ಈ ಭೂಮಿಯಿಂದಾದ ವಸ್ತುವನ್ನೇ ಎಲ್ಲರೂ ತಿನ್ನುತ್ತಾರೆ; ತೊಡುತ್ತಾರೆ; ಅನುಭವಿಸುತ್ತಾರೆ. ಈ ಭೂಮಿಯ ವಸ್ತುಗಳನ್ನು ಮನೆಗೆ ತೆಗೆದುಕೊಂಡು ಹೋದ ಎಲ್ಲರೂ ತಾವು ದೊಡ್ಡವರೆಂದು ಭಾವಿಸುತ್ತಾರೆ. ಆದ್ದರಿಂದಲೇ ಕೇಳುತ್ತಿದ್ದೇನೆ - ಯಾವುದರಿಂದ ಜನರು ಇಷ್ಟೊಂದು ವಸ್ತುಗಳನ್ನು ಪಡೆಯುತ್ತಾರೋ ಆ ಪೃಥ್ವಿಯನ್ನು ವಿದೇಶೀಯರು ಪೂಜಿಸುವರೋ ಇಲ್ಲವೋ ಎಂದು ತಿಳಿಯಲು ಕೇಳಿದೆ."

ಅಂದಿನ ಸಭೆಯಲ್ಲಿ ವಿವೇಕಾನಂದರ ಪಕ್ಕದಲ್ಲಿ ಶರತ್ ಮಹಾರಾಜರು (ಸ್ವಾಮಿ ಶಾರದಾನಂದ) ಕುಳಿತಿದ್ದರು. ಲಾಟು ಮಹಾರಾಜರ ಮಾತನ್ನು ಕೇಳಿದ ಸ್ವಾಮೀಜಿ ತಮ್ಮ ಪಕ್ಕದಲ್ಲಿದ್ದ ಶರತ್ ಮಹಾರಾಜರಿಗೆ ಹೇಳುತ್ತಾರೆ... "ನೋಡಿದೆಯಾ ಶರತ್ ? ಲೇಟೋ (ಲಾಟು) - ಒಳ್ಳೆ ಪ್ಲೇಟೋ ರೀತಿ ಮಾತನಾಡುತ್ತಿದ್ದಾನೆ!"

ಅನಂತರ ಲಾಟು ಮಹಾರಾಜರ ಕಡೆಗೆ ತಿರುಗಿ ಹೇಳಿದ್ದರು... "ಈ ಭಾರತ ದೇಶವನ್ನು ಬಿಟ್ಟು ಇನ್ನೆಲ್ಲಿಯೂ ವಸುಮತಿಯ (ಭೂಮಿಯ) ಪೂಜೆ ಇಲ್ಲ."

ಲಾಟು : "ಅದು ಸರಿ. ಆ ದೇಶದ ಜನರು ವಸುಮತಿಯ ಪೂಜೆ ಮಾಡುವುದಿಲ್ಲ. ಆದರೂ ಅವರು ಅಷ್ಟು ದೊಡ್ಡವರಾದರು. ಮತ್ತೆ ಈ ದೇಶದ ಜನರು ವಸುಮತಿಯ ಪೂಜೆಯನ್ನು ಮಾಡಿಯೂ ಇಷ್ಟೊಂದು ಬಡವರಾಗಿಯೇ ಉಳಿದಿದ್ದಾರೆ. ಇದಕ್ಕೆ ಕಾರಣವೇನು ಹೇಳಬಲ್ಲೆಯಾ?"

ಸ್ವಾಮೀಜಿ : ಅಲ್ಲಯ್ಯ! ನಾವು ಪೂಜೆ ಮಾಡಿದರೆ ಏನಾದೀತು? ನಮಗೆ ಪೃಥ್ವಿಯ ಮೇಲೆ ಆಕರ್ಷಣೆ ಎಲ್ಲಿದೆ? ನಾವು ಹೂವು ತುಲಸೀ ನಿವೇದಿಸುತ್ತೇವೆ ನಿಜ; ಆದರೆ ಮನಸ್ಸಿನಲ್ಲಿ ಒಂದು ಎಳ್ಳಿನಷ್ಟೂ ಭಕ್ತಿಯಿಲ್ಲ. ಅವರು ಪೃಥ್ವಿಯನ್ನು ನಮ್ಮಂತೆ ಪೂಜಿಸುವುದಿಲ್ಲ. ಆದರೆ ಅವರು ಪೃಥ್ವಿಯನ್ನು ಎಷ್ಟೊಂದು ಪ್ರೀತಿಸುತ್ತಾರೆಂದರೆ ಅದಕ್ಕಾಗಿ ಪ್ರಾಣ ನೀಡಲೂ ಸಿದ್ಧರಿರುತ್ತಾರೆ. ನಮ್ಮ ದೇಶದಲ್ಲಿ ಎಷ್ಟು ಜನ ಆ ರೀತಿ ಮಾಡಬಲ್ಲರು? ಆದ್ದರಿಂದಲೇ ಅವರು ನಮ್ಮನ್ನು ಮೀರಿ ಮುಂದೆ ಹೋಗಿದ್ದಾರೆ.."

ಲಾಟು ಮಹಾರಾಜ್ (ಸ್ವಾಮಿ ಅದ್ಭುತಾನಂದ) ಮತ್ತು ಸ್ವಾಮಿ ವಿವೇಕಾನಂದರ ನಡುವೆ ಇಂತಹ ಒಂದು ಸಂಭಾಷಣೆಯು ನಡೆದು ಶತಮಾನವೇ ಉರುಳಿದೆ. ಅನಂತರ ನಮಗೆ ಸ್ವಾತಂತ್ರ್ಯವೂ ಲಭಿಸಿದೆ. ಆದರೆ... ಇಂದಿಗೂ ಭಾರತೀಯರ ನಡೆನುಡಿಗಳಲ್ಲಿ ಏನಾದರೂ ಪರಿವರ್ತನೆ ಆದಂತಿದೆಯೆ?

ಯಾದ್ ಕರೋ ಕುರ್ಬಾನೀ ... 

1947 ರ  ಅಗೋಸ್ತ್ 15 ರಂದು ಭಾರತಕ್ಕೆ ಬ್ರಿಟಿಷರಿಂದ ಬಿಡುಗಡೆ ಸಿಕ್ಕಿತು; ಸ್ವಾತಂತ್ರ್ಯ ಬಂತು.

ಸ್ವಾತಂತ್ರ್ಯ ಸಂಗ್ರಾಮದಲ್ಲಿ ತಮ್ಮ ಶರೀರ, ಮನೆಮಾರು, ಬದುಕುಗಳನ್ನೇ ಬಲಿದಾನ ನೀಡಿದ್ದ ರಾಷ್ಟ್ರಭಕ್ತರನ್ನು ಮುಂದಿನ ಜನಾಂಗವೂ ಸ್ಮರಿಸಿಕೊಳ್ಳುವಂತಹ ವಾತಾವರಣವು, ಅಂದು, ಭಾರತ ದೇಶದಲ್ಲಿತ್ತು. ಆದರೆ... ಸ್ವಾತಂತ್ರ್ಯ ದೊರೆತು ಎರಡು ದಶಕಗಳನ್ನು ದಾಟುವಾಗಲೇ ನಮ್ಮ ಸ್ವಾತಂತ್ರ್ಯವು ಸಾರ್ವತ್ರಿಕವಾಗಿ ಭ್ರಮನಿರಸನವುಂಟುಮಾಡಲು ತೊಡಗಿತ್ತು. ಬಲಿದಾನ ನೀಡಿದ್ದ ಸ್ವಾತಂತ್ರ್ಯ ವೀರರ ಜಾತಿ ಭಾಷೆ ಪ್ರಾಂತ್ಯಗಳ ಜೊತೆಗೆ ಆಯಾಕಾಲದ ಒಳರಾಜಕೀಯದ ಅವಶ್ಯಕತೆಗಳಿಗೆ ತಕ್ಕಂತೆ ರಾಷ್ಟ್ರವೀರರ ಬಳಕೆ, ನಿವಾಳಿಕೆ, ದುರ್ಬಳಕೆಗಳು ಆರಂಭವಾಗಿಬಿಟ್ಟಿದ್ದವು. ದೇಶದಲ್ಲಿ ವ್ಯಾಪಾರ ಶುರುವಾಗಿತ್ತು!

ನಮ್ಮ ಭಾರತವನ್ನು ಭಾವನಾತ್ಮಕವಾಗಿ ಒಡೆದು ಆಳುವ ಕುತಂತ್ರಗಾರಿಕೆಗೆ ಬಹಳ ದೊಡ್ಡ ಇತಿಹಾಸವಿದೆ. ಭಾರತ ದೇಶದ ಭಾವೈಕ್ಯತೆಯು ವರ್ಷಗಳುರುಳಿದಂತೆ ದುರ್ಬಲಗೊಳ್ಳಲು "ಹುಲ್ಲು ತಿನ್ನುವವರು, ಮಣ್ಣು ತಿನ್ನುವವರು, ರಕ್ತ ಕುಡಿಯುವವರು, ಜನರ ನಾಡಿಮಿಡಿತವನ್ನು ಅರಿಯದವರು" ದೇಶವನ್ನು ಮುನ್ನಡೆಸಲು ನಿಂತದ್ದೇ ಮುಖ್ಯ ಕಾರಣ - ಎನ್ನುವ ಮಾತನ್ನು ತಳ್ಳಿಹಾಕುವುದೂ ಸುಲಭವಲ್ಲ. ಆದರೆ ದೇವರ ದಯೆಯಿಂದ ದೇಶವು ಇನ್ನೂ ಉಳಿದಿದೆ ಎಂಬುದಂತೂ ಸತ್ಯ.

ಅಪ್ಪಟ ಸುಳ್ಳು, ಅಪ್ರಾಮಾಣಿಕತೆಯ ನೆಲೆಗಟ್ಟಿನ ಮೇಲೆ ಯಾವುದೇ ದೇಶವು ಭದ್ರವಾಗಿರುವುದು ಸಾಧ್ಯವೆ? ಆದರೆ ದುರದೃಷ್ಟವಶಾತ್ ನಮ್ಮ ಪ್ರಜಾಪ್ರಭುತ್ವವು ಬಹು ದೀರ್ಘಕಾಲ ತಪ್ಪು ದಾರಿಯಲ್ಲಿಯೇ ಸಾಗಿ ಬಂದಿದೆ. ಸ್ವಾತಂತ್ರ್ಯಾನಂತರ ಭಾರತೀಯ ಇತಿಹಾಸವನ್ನು ದಾಖಲಿಸಿದ ಬಹುತೇಕ ಇತಿಹಾಸಕಾರರು ಆಮದು ವಿಚಾರಧಾರೆಗೆ ಹೊಂದುವಂತೆ, ಬ್ರಿಟಿಷರ ಕಣ್ಣಿನಲ್ಲಿಯೇ ನೋಡುತ್ತ ಭಾರತೀಯ ಇತಿಹಾಸವನ್ನು ವಿರೂಪಗೊಳಿಸಿದ್ದಾರೆ. ಆಳುವ ಸರಕಾರದ ಕೃಪಾಶ್ರಯದಲ್ಲಿ - ಹಲವಾರು ಪೀಳಿಗೆಗಳು ಅಂತಹ ಮುಚ್ಚುಮರೆಯ ಇತಿಹಾಸಗಳನ್ನೇ ಓದುತ್ತ ಬಂದಿವೆ. ಅದೇ ವಿಕೃತ ಇತಿಹಾಸವನ್ನು ಓದಿದ ನವಪೀಳಿಗೆಯು "ವಕ್ರತುಂಡ"ರಾಗುತ್ತಲೇ ಬಂದಿದ್ದಾರೆ. ಇವರೆಲ್ಲರೂ "ಕೇವಲ ಅಹಿಂಸೆ, ಸತ್ಯಾಗ್ರಹದಿಂದಲೇ ಭಾರತಕ್ಕೆ ಸ್ವಾತಂತ್ರ್ಯ ಲಭಿಸಿತು.." ಎಂಬುದನ್ನೇ ನಂಬುತ್ತ ವಿಸ್ಮಯಪಡುತ್ತ ಬಂದವರು.

ಭಾರತದ ಸ್ವಾತಂತ್ರ್ಯದ ಆಧಾರ ಸ್ತಂಭವೇ ಗಾಂಧೀಜಿ. ಮಹಾತ್ಮಾ ಗಾಂಧೀಜಿಯವರು ಮಹಾ ಸಂತ. ಅವರು ಅನುಸರಿಸಿದ ಅಹಿಂಸೆ ಸತ್ಯಾಗ್ರಹಗಳು ಅತ್ಯುಚ್ಚ ಆದರ್ಶಗಳು ಎಂಬುದರಲ್ಲಿಯೂ ಸಂದೇಹವಿಲ್ಲ. ಮಹಾತ್ಮಾ ಗಾಂಧೀಜಿಯವರು ಈ ಆದರ್ಶಗಳಿಗೆ ಪೂರ್ಣ ಸಮರ್ಪಣಗೊಂಡಿದ್ದರು ಎಂಬುದರಲ್ಲಿಯೂ ಸಂಶಯಬೇಡ. ಗಾಂಧೀಜಿಯವರು ತಾವು ಪ್ರತಿಪಾದಿಸಿದ್ದ ಆದರ್ಶ ಬದುಕನ್ನು ಸ್ವತಃ ಬಾಳಿ ಮಾದರಿಯಾದವರು. ಆದರೆ ಅವರ ಅಹಿಂಸೆ ಸತ್ಯಾಗ್ರಹಗಳಿಗೆ ಹೆದರಿ ಬ್ರಿಟಿಷರು ಓಡಿಹೋದರೆನ್ನುವುದು ಕಳೆದ ಶತಮಾನದ "ಪ್ರಸಿದ್ಧ ಅಜ್ಜಿ ಕತೆ" ಎನ್ನಬಹುದು. ಇಂತಹ ರಮ್ಯ ಕತೆಗಳನ್ನು ಊಡಿಸುವುದು ಯಾವುದೇ ಇತಿಹಾಸ ಬರಹದ ಕೆಲಸವಲ್ಲ. ಯಾವುದೇ ಐತಿಹಾಸಿಕ ದಾಖಲಾತಿಗೆ ವಿಷಯವನ್ನು ಯಥಾವತ್ತಾಗಿ ನಿರೂಪಿಸುವ ಜವಾಬ್ದಾರಿಯಿದೆ; ವಾಸ್ತವದ ನೈಜ ಚಿತ್ರಣದ ಅಗತ್ಯವಿದೆ. ಸ್ವಭಾವತಃ ಭಾವುಕರಾದ ಭಾರತೀಯರ ಭಾವುಕತೆಯ ದುರುಪಯೋಗವನ್ನು ಭಾರತೀಯ ಇತಿಹಾಸಕಾರರೂ ಮಾಡಿಕೊಂಡದ್ದು ಸುಳ್ಳಲ್ಲ. ಭಾರತೀಯರಿಗೆ ರಮ್ಯ ವಿಸ್ಮಯವನ್ನು ತೋರಿಸುವಲ್ಲಿ ಇವರು ಒಂದಷ್ಟು ಕಾಲ ಸಫಲರೂ ಆದರು. ಆದರೆ ಈಗ, ಅಂತಹ ಇತಿಹಾಸಕಾರರು ಬರೆದ ಸತ್ಯ ಘಟನೆಯನ್ನೂ ನಂಬಲಾಗದಂತಾಗಿದೆ. ಎಲ್ಲರನ್ನೂ ಎಲ್ಲ ಕಾಲದಲ್ಲಿಯೂ ಮೂಢರಾಗಿಸುವುದು ಸಾಧ್ಯವೆ ?

ಬುದ್ಧಿ ಇದ್ದ ಭಾರತೀಯರು ಕ್ರಮೇಣ ಆಳಕ್ಕಿಳಿದು ಅಭ್ಯಸಿಸತೊಡಗಿದರು. ಯೋಚಿಸತೊಡಗಿದರು. ಈ ಗಾಂಧಿ, ನೆಹರೂ ಇತ್ಯಾದಿ ಪ್ರಭೃತಿಗಳು ಸೇರಿಕೊಂಡು ಅಹಿಂಸೆ, ಸತ್ಯಾಗ್ರಹವೆಂಬ ಅಸ್ತ್ರದಿಂದಲೇ ಬ್ರಿಟಿಷರು ಹೆದರಿ ಓಡುವಂತೆ ಮಾಡಿದರೆ? ಇದು ಸತ್ಯವೆ ? ಸಾಮಾನ್ಯ ಭಾರತೀಯರೂ ಸತ್ಯಾನ್ವೇಷಣೆಗೆ ತೊಡಗಿದರು. ಯಾವುದೇ ಆಕ್ರಮಣಕಾರ, ವ್ಯಾಪಾರೀ ಮನೋಭಾವದವರನ್ನು ಅಹಿಂಸೆ ಸತ್ಯಾಗ್ರಹಗಳಿಂದ ಪಳಗಿಸುವುದು ಸಾಧ್ಯವೆ ? ಸಾಧ್ಯವಾಗುವುದಾಗಿದ್ದರೆ ಈಗಲೂ ಸಾಧ್ಯವಾಗಬೇಕಿತ್ತಲ್ಲ ? ಐರೋಮ್ ಶರ್ಮಿಳಾ ಎಂಬಾಕೆಯು ವರ್ಷಾನುಗಟ್ಟಲೆ ಉಪವಾಸ ಮಾಡಿ ಯಾವ ಗುರಿ ತಲುಪಿದರು? ಅಥವ ಈ ಸತ್ಯಾಗ್ರಹವೆಂಬ ಅಸ್ತ್ರವು ವಿಶೇಷವಾಗಿ ಬ್ರಿಟಿಷರನ್ನು ಮಾತ್ರ ಮಣಿಸುವಂಥದ್ದೆ ? ಮೊದಲು - ನಮ್ಮ ಇತಿಹಾಸಕಾರರು ಉತ್ತರಿಸಬೇಕು. ಹಾರ ತುರಾಯಿಯ ಮಾನ್ಯತೆಗಾಗಿ ಗದ್ದುಗೆಯು ಹೇಳಿದ್ದನ್ನೆಲ್ಲ ದಾಖಲಿಸುವುದು ದುರ್ಬಲ ಬರಹಗಾರರಿಂದ ಮಾತ್ರ ಸಾಧ್ಯ. ಅಂತಹ ಲಿಪಿಕಾರರ ಇತಿಹಾಸವನ್ನು ಒಪ್ಪುವುದಾದರೆ, ಅಹಿಂಸೆ ಸತ್ಯಾಗ್ರಹದಿಂದಲೇ ಪಾಕಿಸ್ತಾನ - ಚೀನಾ ದೇಶಗಳ ತರಲೆಗಳನ್ನೂ ನಿಯಂತ್ರಿಸಬಹುದೆ ? ವಕ್ರ ಕಾಶ್ಮೀರವನ್ನು ನೇರಗೊಳಿಸಬಹುದೆ ? ಭಯೋತ್ಪಾದನೆಯನ್ನು ನಿಲ್ಲಿಸಬಹುದೆ ? ರೇಪುಗಳನ್ನು ಸ್ವೀಪ್ ಮಾಡಬಹುದೆ ? ಉತ್ತರ ನೀಡಬಹುದು; ಏನೊಂದೂ ಉತ್ತರ ನೀಡದಿರುವ ಸ್ವಾತಂತ್ರ್ಯವೂ ನಮಗಿದೆ !

ಮೂಢರಿಗೆ ದೊಣ್ಣೆಯೇ ಮದ್ದು ಎಂಬುದನ್ನು ಒಪ್ಪದ ವಿಭಿನ್ನ ವಿಚಾರಧಾರೆಯ ಮಾನವ ಹಕ್ಕಿನವರು ಈಗಲೂ ಬೇಕಾದಷ್ಟಿದ್ದಾರೆ. ಅಂತಹ ಹಕ್ಕಿಗರು ಅಹಿಂಸೆ ಸತ್ಯಾಗ್ರಹಗಳನ್ನು ಆವಾಹನೆ ಮಾಡಿಕೊಂಡು ಅದರ ಮೂಲಕವೇ ಇಂದಿನ ಭಾರತದ ಸಮಸ್ಯೆಗಳನ್ನು ಪರಿಹರಿಸಬಲ್ಲರಾದರೆ ವಿಕೃತ ಇತಿಹಾಸವೆಂದು ಜರೆದುದನ್ನೂ ಸುಕೃತ ಎಂದು ಮರುಮಾತಿಲ್ಲದೆ ಒಪ್ಪಿಕೊಳ್ಳಬಹುದು. ಗುಪ್ತ ಕಾರ್ಯಸೂಚಿಯ ನೆರಳಿನಲ್ಲಿ ಆಧಾರವಿಲ್ಲದೆ ಕತೆ ಹೆಣೆಯುತ್ತ - ಕೆಲವು ಐತಿಹಾಸಿಕ ಪಾತ್ರಗಳು ಪ್ರಜ್ವಲಿಸುವಂತೆ ಇನ್ನು ಕೆಲವು ನಂದಿಹೋಗುವಂತೆ ಲೇಖನಿಯನ್ನು ಬಳಸಿಕೊಳ್ಳುವ ಇತಿಹಾಸಕಾರರು ಸರ್ವಥಾ ದೂಷಣೆಗೆ ಅರ್ಹರಾಗುತ್ತಾರೆ. ಇವೆಲ್ಲವೂ ನಮ್ಮ ಸ್ವಾತಂತ್ರ್ಯಾನಂತರದ ಉಪದ್ವ್ಯಾಪಗಳು. ಸ್ವಾತಂತ್ರ್ಯ ಹೋರಾಟ ಮತ್ತು ಹೋರಾಟಗಾರಿಗೆ ನಿಷ್ಠೆಯಿಂದ ತೋರಿದ ಕೃತಘ್ನತೆ !

ಮೂಲತಃ, ಬಿಟ್ಟಿಯಾಗಿ ಸಿಕ್ಕುವುದನ್ನು ಗಪಳಾಸು ಮಾಡುವುದನ್ನಷ್ಟೇ ಅರಿತಿದ್ದ ಬ್ರಿಟಿಷ್ ಸಂತೆಗೆ ಅಂದು ಭಾರತದಾದ್ಯಂತ ಹತ್ತಿದ್ದ ಸ್ವಾತಂತ್ರ್ಯದ ಕಿಚ್ಚನ್ನು ಅಡಗಿಸುವ ಸಾಮರ್ಥ್ಯವೇ ಇರಲಿಲ್ಲ. ಎರಡು ಮಹಾಯುದ್ಧದಿಂದಾಗಿ ಆರ್ಥಿಕವಾಗಿ, ಸಾಮಾಜಿಕವಾಗಿ - ಅದಾಗಲೇ ಬ್ರಿಟನ್ ಜರ್ಜರಿತವಾಗಿತ್ತು. ಎರಡು ದೋಣಿಯಲ್ಲಿ ಕಾಲಿಟ್ಟು ಒದ್ದಾಡುವ ತಾಳ್ಮೆಯನ್ನೂ ಕಳೆದುಕೊಂಡಿತ್ತು. ಇತ್ತ ಸ್ವಾತಂತ್ರ್ಯಕಾಗಿ ಭಾರತದಲ್ಲಿ ನಡೆಸುತ್ತಿದ್ದ ಉಗ್ರ ಪ್ರತಿಭಟನೆಗಳಿಂದಲೂ ಬೆಂಡಾಗಿ ಹೋಗಿತ್ತು; ಕೆಲವು ಬ್ರಿಟಿಷ್ ಅಧಿಕಾರಿಗಳು ಪ್ರಾಣವನ್ನೂ ತೆತ್ತಿದ್ದರು. ಕೊಳ್ಳೆಹೊಡೆಯುವ ಬ್ರಿಟಿಷ್ ಕಾರ್ಯದಲ್ಲಿ ಭಾಗಿಯಾಗಿ ತಮ್ಮ ಪ್ರಾಣ ಕಳೆದುಕೊಳ್ಳಲು ಆ "ಕಂಪಣಿ" ಆಡಳಿತದಲ್ಲಿ ಆಗ ಉಮೇದುವಾರರೇ ಇರಲಿಲ್ಲ. ಬ್ರಿಟನ್ನಿಗೆ ಹಿಂದಿರುಗುವುದರಲ್ಲಿಯೇ ಎಲ್ಲರೂ ಆಸಕ್ತರಾಗಿದ್ದರು. ಬ್ರಿಟಿಷರನ್ನು ಸಾವಿನ ಭಯ ಕಾಡತೊಡಗಿತ್ತು. ಭಾರತದ ಸೌಮ್ಯವಾದಿಗಳ ಅಹಿಂಸಾ ನೀತಿಯಿಂದಾಗಿಯೇ ಮಹಾತ್ಮರ ಪ್ರಭಾವಕ್ಕೆ ಒಳಗಾಗಿದ್ದ ಅವರ ಭಾರತೀಯ ಹಿಂಬಾಲಕರ ಸಹಿತ ಅಸಂಖ್ಯಾತ ಮುಗ್ಧ ಭಾರತೀಯರು ಸ್ವಾತಂತ್ರ್ಯದ ಅಗ್ನಿಗೆ ಬಲಿಯಾಗಿದ್ದರು; ಬ್ರಿಟಿಷರಿಂದ ಹತ್ಯೆಗೈಯ್ಯಲ್ಪಟ್ಟರು; ನೇಣಿಗೇರಿಸಲ್ಪಟ್ಟರು; ಹುತಾತ್ಮರಾದರು. ಬ್ರಿಟಿಷರ ದೌರ್ಜನ್ಯ, ಅನ್ಯಾಯವು ಪರಮಾವಧಿಯಾದಾಗ ಭಾರತದಲ್ಲಿ ಹೊಸ ಮುಖಗಳು ರಂಗಕ್ಕಿಳಿದಿದ್ದವು. ಅನೇಕ ಕ್ರಾಂತಿಕಾರಿಗಳು ದುಬುದುಬುನೆ ಹುಟ್ಟಿಕೊಂಡರು. ಸುಭಾಶ್ಚಂದ್ರ ಬೋಸರನ್ನು ಆದರ್ಶವಾಗಿಟ್ಟುಕೊಂಡರು; ಆಜಾದ್ ಹಿಂದ್ ಫೌಜನ್ನು ಆರಾಧಿಸತೊಡಗಿದರು. ಚಂದ್ರಶೇಖರ ಆಜಾದ್, ಭಗತ್ ಸಿಂಗ್, ರಾಜ್ ಗುರು ಮುಂತಾದ ದೇಶಭಕ್ತರು ಸಾಲುಸಾಲಾಗಿ ಅವತರಿಸಿದಾಗ - ಕಂಗಾಲಾಗಿದ್ದ ಬ್ರಿಟಿಷರು ಸುರಕ್ಷಿತ ನಿರ್ಗಮನದ ದಾರಿ ಹುಡುಕತೊಡಗಿದ್ದರು. ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ನಂತರವಂತೂ ಬ್ರಿಟಿಷರು ಭಾರತದಲ್ಲಿ - ಹೆದರುತ್ತಲೇ ದಿನ ದೂಡತೊಡಗಿದ್ದರು.

ಹೀಗಿದ್ದೂ...  ತಮ್ಮನ್ನು ಪೀಡಿಸಿ ಸ್ವಾತಂತ್ರ್ಯ ಪಡೆಯುವ ಧಾರ್ಷ್ಟ್ಯ ತೋರಿಸಿದ್ದ ಭಾರತೀಯರಿಗೆ ಮಾಯದ ಗಾಯವನ್ನು ಮಾಡಿಹೋಗುವ ಕುತಂತ್ರವನ್ನು ಬ್ರಿಟಿಷರು ಆರಂಭಿಸಿದ್ದರು. ತಮ್ಮನ್ನು ದಾರುಣವಾಗಿ ಪೀಡಿಸಿದ್ದ ಕ್ರಾಂತಿಕಾರಿಗಳನ್ನು ಅಮಾನ್ಯರೆಂದು ದೂರವಿರಿಸಿ, ತಮ್ಮಿಂದ ಬಡಿಗೆ ತಿನ್ನುತ್ತ ಪರೋಕ್ಷವಾಗಿ ತಮಗೆ ಸಹಕರಿಸಿದವರೆಂದು ಭಾವಿಸಿದ್ದ ಸೌಮ್ಯವಾದಿಗಳನ್ನೇ "ಭಾರತದ ಪ್ರತಿನಿಧಿಗಳು" ಎಂದು ಮಾನ್ಯ ಮಾಡಿ ಮಾತುಕತೆಯನ್ನೂ ಆರಂಭಿಸಿದ್ದರು. ಒಡೆದು ಆಳುವ ನೀತಿಯನ್ನು ಅದುವರೆಗೆ ಪರೋಕ್ಷವಾಗಿ ಪ್ರದರ್ಶಿಸುತ್ತಿದ್ದ ಬ್ರಿಟಿಷರು ಕೊನೆಯ ಹಂತದಲ್ಲಿ ಭಾರತವನ್ನು ಪ್ರತ್ಯಕ್ಷವಾಗಿಯೇ ಹೋಳುಮಾಡುವ ಕುಚೋದ್ಯವನ್ನು ಆರಂಭಿಸಿದ್ದರು.

"ಸತ್ಯ ಧರ್ಮ ನ್ಯಾಯ ಎನ್ನುತ್ತಿದ್ದ ಗಾಂಧೀಜಿಯವರನ್ನೇ ಯಾಮಾರಿಸುವುದು ಸುಲಭ" ಎಂದು ಆ ಘಟ್ಟದಲ್ಲಿ ತಪ್ಪಾಗಿ ಗ್ರಹಿಸಿದ್ದ ಬ್ರಿಟಿಷರು ಗಾಂಧಿಯವರೊಂದಿಗೆ ಮಾತಿಗೆ ಕೂತರು. ಮಾತುಕತೆಯ ಅವಧಿಯಲ್ಲಿ ಸ್ವಾತಂತ್ರ್ಯದ ವಾಸನೆಯು ಭಾರತೀಯರಿಗೆ ಬಡಿಯತೊಡಗಿದಾಗ ಗಾಂಧೀಜಿಯವರ ಹಿಂದೆ ಇನ್ನಷ್ಟು ನೇತಾರರು ಸೇರಿಕೊಂಡರು. ಆದರೆ ಕೊನೆಯಲ್ಲಿ - ಗಾಂಧೀಜಿಯವರಿಗೆ ಸುತರಾಂ ಒಪ್ಪಿತವಲ್ಲದ "ದೇಶ ಒಡೆಯುವ ಸಂಧಿ"ಗೆ ಬಹುತೇಕ ನಾಯಕರು ಒಪ್ಪಿಕೊಂಡರು. ದೇಶ ಒಡೆಯುವ ಬ್ರಿಟಿಷರ ಕನಸು ಅಲ್ಲಿಗೆ ನನಸಾಯಿತು. ಸುದೀರ್ಘ ಹೋರಾಟದಿಂದ ಬಳಲಿದ್ದ ಅಂದಿನ ಅನೇಕ ನಾಯಕರು "ಎಂಥದ್ದೋ ಒಂದು; ಸ್ವಾತಂತ್ರ್ಯ ಅನ್ನುವುದೊಂದು ಬರಲಿ..." ಎಂಬ ಹಂತ ತಲುಪಿದ್ದರು. ಇಂಥವರೇ ಸೇರಿಕೊಂಡು ಗಾಂಧೀಜಿಯ ಬಾಯಿ ಮುಚ್ಚಿಸಿದ್ದರು. ಬಹುಮತಕ್ಕೆ ತಲೆಬಾಗಿದ್ದ ಗಾಂಧೀಜಿ, ಉಗುಳು ನುಂಗಿಕೊಂಡು ತಟಸ್ಥರಾದರು. ದೇಶ ಒಡೆಯುವ ಅಂದಿನ ನಿರ್ಧಾರವು ಸರ್ವಾನುಮತದ ನಿರ್ಧಾರವಾಗಿರಲೇ ಇಲ್ಲ. ಅದೊಂದು ಅವಸರದ ನಿರ್ಧಾರವಾಗಿತ್ತು. ಯಾವುದೇ ಅವಸರದ ವಿಚ್ಛೇದನಗಳು ಪಶ್ಚಾತ್ತಾಪವನ್ನು ಮಾತ್ರ ತರಬಲ್ಲದು. ಇಂದಿಗೂ ಪಾಕಿಸ್ತಾನದ ಗಡಿಯಲ್ಲಿ ಉರಿಯುತ್ತಿರುವುದು ಇದೇ ವಿಚ್ಛೇದ ಪಶ್ಚಾತ್ತಾಪದ ಬೆಂಕಿ! ಎರಡೂ ಕಡೆಯಲ್ಲೂ ಸರಿಪಡಿಸಲಾಗದ ಭಾವ ಉಮ್ಮಳ! ಸಂಕಟ!

ಅಲ್ಲಿಂದೀಚೆಗೆ, ಅದೇ - "ಎಂಥದ್ದೋ ಒಂದು ಸ್ವಾತಂತ್ರ್ಯ" ಎಂಬುದು ನಮ್ಮ ಭಾರತದಲ್ಲಿದೆ. ನಮ್ಮ ಭಾರತವು ಅಫ್ಘಾನಿಗಳು, ಮೊಗಲರ ಆಕ್ರಮಣದಿಂದಲೂ ಹೊಂದಿರದಷ್ಟು ಸಾಂಸ್ಕೃತಿಕ ನಷ್ಟವನ್ನು ಉಂಟುಮಾಡಿ, ಭಾರತದ ರೂಪವನ್ನೇ ಕೆಡಿಸಿ, ಬ್ರಿಟಿಷರ ಕಂಪೆನಿಯು ಭಾರತದಿಂದ ಹೊರಟುಹೋಯಿತು. ಇದು ನಿಜವಾಗಿಯೂ "ಉಂಡೂ ಹೋದ; ಕೊಂಡೂ ಹೋದ" ದಾರುಣ ಕತೆ.

ನಾವು - ಭಾರತವನ್ನು ತಿಂದು ಮುಕ್ಕಿದ ಭಾರತೀಯರೆಷ್ಟು - ಪರದೇಶಿಗಳೆಷ್ಟು ಎಂಬ ಲೆಕ್ಕವಿಡಬಲ್ಲೆವೆ ? ಹೀಗಿದ್ದೂ... ಆಧ್ಯಾತ್ಮಿಕ ರಂಗದಲ್ಲಿ ಮಾತ್ರ ಭಾರತವು ಎಂದೂ ಹಿಂದೆ ಸರಿದಿಲ್ಲ. ದೇಶ ವಿದೇಶಗಳಲ್ಲಿ ಕೃಷ್ಣ ಪ್ರಜ್ಞೆಯನ್ನು ಬಿತ್ತುವ ಮಹದಾಸೆ ಹೊತ್ತು ISKCON ಸಂಸ್ಥಾಪಿಸಿ ಹರೇ ಕೃಷ್ಣ ಪಂಥವನ್ನೇ ಹುಟ್ಟುಹಾಕಿ ಪ್ರಭುಪಾದರೆಂದೇ ಪ್ರಖ್ಯಾತರಾದ ವ್ಯಕ್ತಿಯ ಪೂರ್ವಾಶ್ರಮದ ಕತೆ ಓದಬೇಕು. ಮಹಾ ಸಾಧಕ ಎಂಬ ಹೆಸರಿನ ಅವರ ಜೀವನಾಧಾರಿತ ಕಾದಂಬರಿಯನ್ನು ಡಾ. ಬಾಬು ಕೃಷ್ಣಮೂರ್ತಿ ಅವರು ಸುಂದರವಾಗಿ ನಿರೂಪಿಸಿದ್ದಾರೆ. ತಮ್ಮ ಇಳಿವಯಸ್ಸಿನ ಕೊನೆಯ ಹನ್ನೆರಡು ವರ್ಷಗಳಲ್ಲಿ ದೇಶ ವಿದೇಶಗಳಲ್ಲಿ 108 ಕೃಷ್ಣ ದೇಗುಲಗಳನ್ನು ಸ್ಥಾಪಿಸಿ ಅಪಾರ ಮನಸ್ಸುಗಳಲ್ಲಿ ಕೃಷ್ಣ ಪ್ರಜ್ಞೆಯನ್ನು ಬಿತ್ತಿದವರು ಪ್ರಭುಪಾದರು; ಕೆಸರಿನಲ್ಲಿ ಬಿದ್ದು ಹೊರಳಾಡುತ್ತಿದ್ದ ಅನೇಕ ಅಮಲುಕೋರ ಬದುಕುಗಳಲ್ಲಿ ಹೊಸ ಆಶಾಕಿರಣವನ್ನು ಮೂಡಿಸಿದವರು. ಭಾರತೀಯ ಸಂಸ್ಕೃತಿಯ ರಾಯಭಾರಿಯಂತೆ ಅವರು ನಿರ್ವಹಿಸಿದ ಕೆಲಸಗಳು, ಅಪಾರ ಬರವಣಿಗೆಗಳು ಇಂದಿಗೂ ದಾರಿದೀಪದಂತಿವೆ. ಸ್ವಾತಂತ್ರ್ಯ ಪೂರ್ವದ ಮತ್ತು ಸ್ವಾತಂತ್ರ್ಯೋತ್ತರದ ಭಾರತದ ಸ್ಥಿತಿಗತಿಗಳು, ಪ್ರಜೆಗಳ ಸ್ವಾರ್ಥ, ಪ್ರಜಾಪತಿಗಳ ಅಟ್ಟಹಾಸಗಳನ್ನು ಮಹಾ ಸಾಧಕ ಎಂಬ ಗ್ರಂಥದಲ್ಲಿ ಹಸಿಹಸಿಯಾಗಿ ನೋಡಬಹುದು.

ಶ್ರೀ ಪ್ರಭುಪಾದರು ಗಾಂಧೀಜಿಯವರಿಗೆ ಬರೆದಿದ್ದ ಒಂದು ಪತ್ರದ ಉಲ್ಲೇಖವು "ಮಹಾ ಸಾಧಕ" ಪುಸ್ತಕದಲ್ಲಿದೆ. "ನೀವು ವರ್ಷಗಟ್ಟಲೆ ಶ್ರಮಪಟ್ಟು ಹೋರಾಡಿದ್ದೀರಿ. ಆದರೆ ನಿಮ್ಮ ರಾಜಕೀಯ ಶತ್ರುಗಳಾದ ಭಾರತೀಯರೂ ಹಾಗೂ ಪರಕೀಯ ಬ್ರಿಟಿಷರೂ ನಿಮ್ಮ ಆಪ್ತ ಸ್ನೇಹಿತರ ವೇಷದಲ್ಲಿ ಬಂದು ನಿಮಗೆ ಮೋಸ ಮಾಡಿ ನಿಮಗೀಗ ಎದೆಯೊಡೆಯುವಂತೆ ಮಾಡಿದ್ದಾರೆ ಎಂಬುದು ನಿಮಗೀಗ ಅರ್ಥವಾಗಿರಬೇಕು. ಭಂಗಿ ಕಾಲೋನಿಯಲ್ಲೇ ತಂಗಿ ಭಂಗಿಗಳ ಸ್ಥಿತಿಯನ್ನು ಸುಧಾರಿಸಬೇಕೆಂದು ಹೊರಟಿರಿ. ಆದರೆ ಅವರಿನ್ನೂ ಭಂಗಿಗಳಾಗಿಯೇ ಕೊಳೆಯುತ್ತಿದ್ದಾರೆ. ನಿಮ್ಮ ಹಿತಶತ್ರುಗಳು ಭಾರತ-ಪಾಕಿಸ್ತಾನಗಳನ್ನು ಪ್ರತ್ಯೇಕಗೊಳಿಸಿ ನಿಮ್ಮ ಇಷ್ಟು ದಿನಗಳ ಕೆಲಸವನ್ನು ಹಾಳುಗೆಡವಿದ್ದಾರೆ. ಎಲ್ಲವೂ ಭ್ರಮೆಯೆಂಬುದು ಇವುಗಳಿಂದ ಸಾಬೀತಾಗಿದೆ. ಯಾವ ಭ್ರಮಾತ್ಮಕ ಸಂಗತಿಗಳನ್ನು ನೀವು ಸತ್ಯವೆಂದು ಭಾವಿಸಿಕೊಂಡು ಬಾಳಿದಿರೋ ಆ ಭ್ರಮೆಗಳನ್ನೆಲ್ಲ ಭ್ರಮನಿರಸನ ಮಾಡಿ ಭಗವಂತನೇ ನಿಮಗೆ ಕೃಪೆ ತೋರಿದ್ದಾನೆ. ನೀವು ಶ್ರದ್ಧಾವಂತರೂ ಪ್ರಾಮಾಣಿಕರೂ ನೀತಿವಂತರೂ ಆಗಿದ್ದೀರೆಂಬುದು ನನಗೆ ಗೊತ್ತು. ಆದ್ದರಿಂದ ಇನ್ನಾದರೂ ನೀವು ರಾಜಕೀಯದಿಂದ ನಿವೃತ್ತಿ ಹೊಂದಬೇಕು... ಕೊಳಕು ರಾಜಕೀಯದಿಂದ ಈ ಕೂಡಲೇ ಹೊರಬನ್ನಿ. ಗೀತೆಯಲ್ಲಿ ಹೇಳಿದ ವೇದಾಂತವನ್ನೂ ಧರ್ಮವನ್ನೂ ಉಪದೇಶಿಸುವ ಕೈಂಕರ್ಯಕ್ಕಾಗಿ ನೀವು ಸಿದ್ಧರಾಗಬೇಕು. ಅದರಿಂದ ಇಡೀ ವಿಶ್ವಕ್ಕೇ ಪ್ರಯೋಜನವಾದೀತು. ನಿಮ್ಮ ಉತ್ತರಕ್ಕಾಗಿ ಕಾಯುತ್ತಿದ್ದೇನೆ..."  ಆದರೆ... 1947 ರ ಡಿಸೆಂಬರ್ 7 ರಂದು ಶ್ರೀ ಪ್ರಭುಪಾದರು ಬರೆದಿದ್ದ ಈ ಪತ್ರಕ್ಕೆ ಯಾವ ಮರು ಉತ್ತರವೂ ಬರಲಿಲ್ಲ; ಸುಮಾರು 20 ದಿನಗಳ ನಂತರ - ಜನವರಿ 30 ರಂದು ಗಾಂಧೀಜಿಯವರ ದುರಂತ ಮರಣದ ಸುದ್ದಿ ಬಂತು.

ಸ್ವಾತಂತ್ರ್ಯ ಹೋರಾಟದ ಅವಧಿಯಲ್ಲಿ ಅರಬಿಂದೋ, ಸುಭಾಷ್, ಜತಿನ್ ಬ್ಯಾನರ್ಜಿ, ಬಾಘಾ ಜತೀನ್ ಮುಂತಾದವರು - ಕ್ರಾಂತಿಕಾರಿಗಳೆಂದು ಗುರುತಿಸಲ್ಪಟ್ಟವರು. ಅವರ ಮಾರ್ಗ ಭಿನ್ನವಾಗಿತ್ತು. ಆದರೆ ಅಂದಿನ ಕಾಂಗ್ರೆಸ್ ಮತ್ತು ಗಾಂಧೀಜಿಯವರು ತೀರ್ಮಾನಿಸಿದಂತೆ ಅವರೆಲ್ಲರೂ "ದಾರಿ ತಪ್ಪಿದ ದೇಶಭಕ್ತ"ರಾಗಿದ್ದರೆ ? ಅಥವ ಒಂದು ವರ್ಗದ ಅತಿರೇಕದ ಅಹಿಂಸಾ ಮಂತ್ರ ಕೇಳಿ ಬೇಸತ್ತಿದ್ದರೆ ? (ಆದರೆ... ಇಂದು ಸ್ವತಂತ್ರ ಭಾರತದಲ್ಲಿ, ದೇಶದ ಅಭ್ಯುದಯಕ್ಕೆ ಅಡರುಗಾಲು ಇಕ್ಕುತ್ತಿರುವ ಕೆಲವು ಆಮ್ ಜನಗಳು, ಬಾಚಿ ತಿನ್ನುವ ಉದ್ದೇಶದಿಂದಲೇ ನಡೆಸುತ್ತಿರುವ ಹಗಲು ವೇಷಗಳನ್ನೆಲ್ಲ "ಕ್ರಾಂತಿ" ಎಂದುಕೊಂಡರೆ - ಅದು ನಿಜವಾದ ಕ್ರಾಂತಿಕಾರಿಗಳಿಗೆ ಎಸಗುವ ಅವಮಾನವಾದೀತು.)

ಸ್ವಾತಂತ್ರ್ಯ ಸಂಗ್ರಾಮದ ಅವಧಿಯಲ್ಲಿ ಕ್ರಾಂತಿ ಮಾರ್ಗಿಗಳೆಂದು ಗುರುತಿಸಲ್ಪಟ್ಟವರೂ ಉಜ್ವಲ ದೇಶಭಕ್ತರೇ ಆಗಿದ್ದರು; ದೇಶಕ್ಕಾಗಿ ಸ್ವಂತವನ್ನು ಸಂಪೂರ್ಣ ತ್ಯಜಿಸಿದ್ದ ನಿಸ್ವಾರ್ಥ ತ್ಯಾಗಿಗಳಾಗಿದ್ದರು. ವೇದದ ಶಾಂತಿ ಮಂತ್ರ, ಉಪನಿಷತ್ತುಗಳ ಸಾರ, ಗೀತೆಯ ಕರ್ಮ ಯೋಗವನ್ನು ಅರಿತು ಆಚರಿಸುತ್ತಿದ್ದ ಅಪ್ಪಟ ಭಾರತೀಯ ಚಿಂತನೆಯ ಪ್ರತೀಕಗಳಾಗಿದ್ದರು. ಅನ್ಯಾಯದ ವಿರುದ್ಧ ತಿರುಗಿ ಬಿದ್ದ ಅಸಹಾಯಕರಾಗಿದ್ದರು. ಸ್ವಾಮಿ ವಿವೇಕಾನಂದರಿಂದ ಸ್ಫೂರ್ತಿ ಪಡೆದವರಾಗಿದ್ದರು. ಸ್ವಾತಂತ್ರ್ಯದ ಹಂಬಲದ ಹುಚ್ಚು ಹಿಡಿಸಿಕೊಂಡವರಾಗಿದ್ದರು.

ಹುಚ್ಚಿನ ಹಂತವನ್ನು ಮುಟ್ಟಿದ ತೀವ್ರ ತುಡಿತವಿಲ್ಲದೆ ಯಾವುದೇ ಸಾಧನೆಯನ್ನು ಸಾಧಿಸಲಾಗದು. ಯಾವುದೇ ಸಾತ್ವಿಕ ಹುಚ್ಚು ಎಂಬುದಕ್ಕೆ ತನ್ನ ತುದಿ ಬಿಂದುವಿನಲ್ಲಿ ದರ್ಶನದ ಸಾಕ್ಷಾತ್ಕಾರವಾದಾಗ - ಅರವಿಂದರಂತಹ ಉರಿಚೆಂಡುಗಳೂ ಯೋಗಿಗಳಾಗಿ ಪರಿವರ್ತನೆಗೊಂಡಿವೆ. ಅಂದೊಮ್ಮೆ ಕ್ರಾಂತಿಕಾರಿ, ಹಿಂಸಾ ಪ್ರತಿಪಾದಕರೆನ್ನಿಸಿಕೊಂಡಿದ್ದ ಅರವಿಂದರು ಮಹಾನ್ ಯೋಗಿಯಾಗಿ ಹೊಸ ಜನ್ಮ ಪಡೆಯುವಂತಹ ವಿಸ್ಮಯವು ಭಾರತದಲ್ಲಿ ಮಾತ್ರ ಸಾಧ್ಯ. ತಮ್ಮ ಚಿಂತನೆಗೆ ವೈಶಾಲ್ಯತೆ ತುಂಬಿ, ತಪಸ್ವೀ ಮೌನಕ್ಕೆ ಜಾರಿದ್ದ ಅರವಿಂದರು, ಅನಂತರ ಪಾಂಡಿಚೇರಿ ಸ್ಥಿತರಾದರು. ವಿಶ್ವಪ್ರಜ್ಞೆಗೆ ಹೊರಳಿಕೊಂಡರು. ಅಂತರ್ಮುಖಿಯಾದರು.

ಜಿನ್ನಾ - ನೆಹರುಗಳ ಮೇಲಾಟದಲ್ಲಿ ಅಖಂಡ ಭಾರತವು ತುಂಡಾಗಿ ಹೋಯಿತು. ಎಲ್ಲ ತಳಮಳಗಳ ನಡುವೆಯೂ ಗಾಂಧೀಜಿಯವರು ಕಠಿಣ ಅಹಿಂಸೆಯಲ್ಲೇ ಮುಳುಗಿದ್ದರು. 1947ರ ಅಗೋಸ್ತ್ 15 ರಂದು - ಸ್ವಾತಂತ್ರ್ಯದ ಮೊದಲ ಧ್ವಜವು ಅನಾವರಣಗೊಳ್ಳುವಾಗಲೇ - "ಮುಂದೊಂದು ದಿನ ನಮ್ಮ ಭಾರತವು ಅಖಂಡ ಭಾರತ ಆಗಲೇಬೇಕು" ಎಂದು ಅರವಿಂದರು ಭಾರತಕ್ಕೆ ಸಂದೇಶ ನೀಡಿದ್ದರು. ಯೋಗಿಯ ಹೃದಯದಲ್ಲಿ ಆಗಲೂ ಕ್ರಾಂತಿಕಾರಿಯು ಬದುಕಿದ್ದ. ಪ್ರತಿಯೊಬ್ಬ ನೈಜ ಕ್ರಾಂತಿಕಾರಿಯ ಒಡಲಿನಲ್ಲಿ ಒಬ್ಬ ಯೋಗಿ, ಒಬ್ಬ ನೈಜ ಯೋಗಿಯ ಹೃದಯದಲ್ಲಿ ಕ್ರಾಂತಿಕಾರಿಯ ಒಳನೋಟ - ಸುಳಿದಾಟ ಇದ್ದೇ ಇರುತ್ತದೆ. 

ಅಂದಿಗೆ ಅರವಿಂದರ ಕನಸು ಸಿಹಿಯೆನ್ನಿಸಿದ್ದರೂ ಅಖಂಡ ಭಾರತದ ಕಲ್ಪನೆ ಎಂಬುದು ಪ್ರಸ್ತುತದಲ್ಲಿ - ಅಪಾಯಕಾರೀ ಸಲಹೆ! ಯಾವುದೇ ಕೊಳೆತ ಹಣ್ಣನ್ನು ಪ್ರತ್ಯೇಕವಿರಿಸುವುದೇ ಜಾಣತನ! ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಗುಂಯ್ ಗುಡುತ್ತಿರುವ "ಮಾನವ ಹಕ್ಸ್" ಗಳನ್ನು ಪಾಕಿಸ್ತಾನಕ್ಕೆ Parcel ಮಾಡುವುದು ಸಾಧ್ಯವಾಗಿದ್ದರೆ - ಸದ್ಯಕ್ಕೆ ಅಷ್ಟೇ ಸಾಕು - ಅನ್ನಿಸುವಂತಿದೆ. ಭಾರತೀಯರು ಶಿಸ್ತಿನಿಂದ ಬದುಕಲು ಅಗತ್ಯವಿರುವಷ್ಟು ಹಕ್ಕುಗಳನ್ನು ನಮ್ಮ ಸಂವಿಧಾನವು ನೀಡಿದೆ. ಯಾವುದೇ ಸರಕಾರೇತರ ದೊಣ್ಣೆನಾಯಕರೂ ನಮ್ಮ ಸಂವಿಧಾನವನ್ನು ಗೌರವಿಸಲು ಕಲಿತರೆ ಅದರಿಂದ ಅವರಿಗೂ ನೆಮ್ಮದಿ; ಇತರರಿಗೂ ನೆಮ್ಮದಿ. ಬೆಣ್ಣೆಯನ್ನು ಪಾಲು ಮಾಡಿ ಹಂಚಿಕೊಡಲು, ಕೋತಿಯನ್ನು ಆಯ್ದುಕೊಳ್ಳುವ ಹುಂಬತನವು ಈಗ ಯಾವ ಭಾರತೀಯರಲ್ಲೂ ಉಳಿದಿಲ್ಲ. ಆದ್ದರಿಂದ ದೇಶದ್ರೋಹದ ಯಾವುದೇ ಕುಂಟಾಬಿಲ್ಲೆ ಆಟವು - ಯಾರಿಗೂ ಒಳಿತಲ್ಲ.  ಪಂಚತಾರಾ ವೈಭವದ ಎಲ್ಲ ಬಗೆಯ ಸೇವಾ ನಾಟಕಗಳಿಗೂ ಕಡಿವಾಣ ಬಿಗಿಯಬೇಕಾದ ಸಮಯವಿದು. ಒಂದು ಸ್ವಾತಂತ್ರ್ಯಕ್ಕಾಗಿ ನಮ್ಮ ಹಿರಿಯರು ಪಟ್ಟ ಬವಣೆಯನ್ನು ಯಾರೂ ಹಾಸ್ಯಾಸ್ಪದಗೊಳಿಸುವಂತಿಲ್ಲ. ಹೀಗಿದ್ದೂ ನಾವು ಎಡವುತ್ತಲೇ ಬಂದಿದ್ದೇವೆ; ಆಗಲೂ ಈಗಲೂ ಎಡವುತ್ತಲೇ ಇದ್ದೇವೆ.

1947 ರ ಅಗೋಸ್ತ್ 15 ರಂದು ಭಾರತಕ್ಕೆ ಸ್ವಾತಂತ್ರ್ಯ ದೊರೆತ ಕೂಡಲೇ ತಾನೇ ಪ್ರಧಾನಿಯಾದ ಸಂಭ್ರಮದಲ್ಲಿ ಗಾಂಧೀಜಿಯ ಮಾನಸ ಪುತ್ರನು ಓಲಾಡುತ್ತಿದ್ದಾಗ, ಕಲ್ಕತ್ತದ ಓಣಿಯಲ್ಲಿ ಸತ್ಯದ ಆರಾಧಕ ಗಾಂಧೀಜಿ ಪಾದಯಾತ್ರೆ ನಡೆಸುತ್ತಿದ್ದರು. ಹಿಂದೂ ಮುಸ್ಲಿಮ್ ಸಹಜೀವನ, ಶಾಂತಿಗಾಗಿ ಹೆಣಗಾಡುತ್ತಿದ್ದರು. ರಕ್ತದ ಓಕುಳಿಯನ್ನು ನೋಡಿ ಮಮ್ಮಲ ಮರುಗುತ್ತಿದ್ದರು. ತಮ್ಮ ಇಡೀ ಬದುಕನ್ನು "ನಮ್ಮ ಭಾರತ; ನಮ್ಮ ದೇಶ; ನಮ್ಮ ಸ್ವಾತಂತ್ರ್ಯ.." ಎನ್ನುತ್ತಲೇ ದೇಶದಾದ್ಯಂತ ಓಡಾಡಿದ್ದ ಗಾಂಧೀಜಿಯವರು - ಸ್ವಾತಂತ್ರ್ಯಾನಂತರದಲ್ಲಿ ಭಾರತದ ಭೀಭತ್ಸ ಸುಖವನ್ನು ಉಂಡದ್ದು ಬರೇ ಐದು ತಿಂಗಳು ಮಾತ್ರ ! ಸತ್ಯ ಧರ್ಮ ನ್ಯಾಯ ಸಮಾನತೆ ಸಂಸ್ಕೃತಿ ಸದ್ಭಾವಗಳ ಜಪಮಾಡುತ್ತ  - "ಹೇ ರಾಮ್ ಹೇ ರಾಮ್" ಎನ್ನುತ್ತಲೇ ಮಹಾತ್ಮಾ ಗಾಂಧಿಯವರು ನಿರ್ಗಮಿಸಿಬಿಟ್ಟರು. ಎಲ್ಲರನ್ನೂ ಎಲ್ಲವನ್ನೂ ಕ್ಷಮಿಸಿ, ಬಹುಶಃ ತಮ್ಮನ್ನೂ ಕ್ಷಮಿಸಿಕೊಂಡು, ನಿಜ ಸ್ವಾತಂತ್ರ್ಯದ ಸುಖದತ್ತ ಹೊರಳಿಕೊಂಡರು. ಈಗ ನಮ್ಮ ಸರದಿ... ಹೇ ರಾಮ್ !

ವಾಸ್ತವ ಮತ್ತು ನಿರೀಕ್ಷೆ :

ಗಾಂಧೀಜಿಯವರು ಶಾರೀರಿಕವಾದ ಎಲ್ಲ ಜಂಜಾಟಗಳಿಂದ ಬಲು ಬೇಗ ಕಳಚಿಕೊಂಡರೂ ಅನಂತರ ಭಾರತದಲ್ಲಿ ಗಾಂಧಿಯ ಹೆಸರನ್ನು ಹೇಳಿಕೊಂಡು ಜೀವನೋಪಾಯ ನಡೆಸುವ ಹಿಂಡುಹಿಂಡೇ ಹುಟ್ಟಿಕೊಂಡಿತು. ಗಾಂಧಿಯ Trade Name ಬಳಸಿಕೊಂಡು ಹಲವರು ಅಂಗಡಿ ತೆರೆದರು. ಗಾಂಧೀಜಿಯ ಆದರ್ಶಗಳೆಲ್ಲವೂ ವಿಡಂಬನೆಯ ವಸ್ತುಗಳಾದವು. ಗಾಂಧೀಜಿಯ ಪುತ್ಥಳಿ, ರಸ್ತೆ, ಆಸ್ಪತ್ರೆ, ಉದ್ಯಾನ, ಕ್ರೀಡಾಂಗಣಗಳೆಂಬ ಡೊಂಬರಾಟವು ಎಗ್ಗಿಲ್ಲದೆ ನಡೆಯಿತು. ಆಕಾಶವಾಣಿಗಳಲ್ಲಿ ಪ್ರತೀ ಶುಕ್ರವಾರಗಳಂದು "ಗಾಂಧೀ ಸ್ಮೃತಿ" ಎಂಬ ಕಣ್ಣುಮುಚ್ಚಾಲೆಯೂ ನಡೆಯುತ್ತಿದೆ. ಪುಸ್ತಕಗಳನ್ನು ಎದುರಲ್ಲಿ ಇರಿಸಿಕೊಂಡು ಅಕ್ಷರಗಳ ಮೇಲೆ ಕಣ್ಣಾಡಿಸುವ ಹರಕೆಬಲಿಯ ಕಾರ್ಯಕ್ರಮವಾಗಿ ಅದು ಬದಲಾದುದನ್ನು ಸ್ವತಃ ನಾನೇ ನೋಡಿದ್ದೆ. ಬುದ್ಧಿಯಿಲ್ಲದೆ ಮರುಗಿದ್ದೆ!

ಯಾವುದೇ ಆಚರಣೆಯನ್ನು ಆರಂಭಿಸುವುದು ಸುಲಭ; ಆದರೆ ಅದು ಪೇಲವವಾಗದಂತೆ ನಿರಂತರ ಪೋಷಿಸುವುದು ಒಂದು ನೆಲದ ಯಶಸ್ಸು ಅಪಯಶಸ್ಸುಗಳ ಮಾನದಂಡ. ಈ ಮಾನದಂಡವು ಭಾರತಕ್ಕೆ ಸರಿಹೋಗದ ಅಳತೆಗೋಲು ಎಂಬುದು ಸಾಬೀತಾಗುತ್ತ ಬಂದಿದೆ. ಆದರೆ... ತೋರಿಕೆಯ ಪ್ರದರ್ಶನಗಳು ಏನೇ ಇರಲಿ; ಗಾಂಧಿಯ ಸರಳ ಜೀವನ ಶೈಲಿಯಾಗಲೀ ಅಹಿಂಸೆಯಾಗಲೀ ಸತ್ಯಾಗ್ರಹವಾಗಲೀ - ಯಾವುದೂ - ಆದರ್ಶವಾಗಿಯೂ ಈಗ ನಮ್ಮೊಂದಿಗಿಲ್ಲವಲ್ಲ ? ಅದೂ ನಮ್ಮ ಸ್ವಾತಂತ್ರ್ಯದ ಸಾಧನೆಯೆ ? ಅಥವ - ಭಾರತದ ಸ್ವಭಾವವೆ ? ಇಂದು ನೀತಿ ಕತೆಗಾರರಿಗೆ ದೇಶದಲ್ಲಿ ಬರಗಾಲವಿಲ್ಲ. ಆದರೆ ನಿಯತ್ತು ಎಲ್ಲಿದೆ? "ನಿಯತ್ತಿನ ನೀತಿ" ಎಂಬುದು ಚಲಾವಣೆಯಲ್ಲಿಲ್ಲದ ನಾಣ್ಯವಾಗುತ್ತಿದೆಯಲ್ಲ? 

ಇಂತಹ ಸ್ವಾತಂತ್ರ್ಯದ 70 ನೇ ಸಂಭ್ರಮಾಚರಣೆ ಈಗ ನಡೆಯುತ್ತಿದೆ. ಈ 70 ವರ್ಷಗಳಲ್ಲಿ ಸುಮಾರು 60 ವರ್ಷಗಳ ಕಾಲ ಒಂದೇ ಪಕ್ಷವು ಭಾರತ ದೇಶದ ಸ್ವಾತಂತ್ರ್ಯವನ್ನು ಬಂದಳಿಕೆಯಂತೆ ಭರಪೂರ ಉಂಡಿದೆ. ಹೀಗಿದ್ದೂ - ಗಾಂಧಿ ತಮ್ಮವರೆಂದು ಹಕ್ಕು ಸ್ಥಾಪಿಸುವ ಭಾರತದ ಯಾವುದೇ ಪಕ್ಷಗಳು ಗಾಂಧೀ ಚಿಂತನೆ, ಗಾಂಧೀಜಿಯ ಪ್ರಾಮಾಣಿಕತನವನ್ನು ಅನುಸರಿಸಿದಂತೆ ಕಾಣುತ್ತದೆಯೆ ? ಪಕ್ಷ ರಾಜಕೀಯದ ದಳ್ಳುರಿಯಲ್ಲಿ ಇಡೀ ದೇಶವನ್ನೇ ಬೇಯಿಸುತ್ತಿರುವಂತೆ ಕಾಣುತ್ತಿಲ್ಲವೆ ?

ರಾಜಕೀಯ ಎಂಬುದು ಯಾವತ್ತೂ "ಕತ್ತಲ ನಾಟಕ". ಇಂತಹ ನಾಟಕಗಳ "ಹರಿಶ್ಚಂದ್ರ ಮಣಿಗಳು" ಬೆಳಕು ಹರಿದ ಮೇಲೂ ಹರಿಶ್ಚಂದ್ರ ಸದೃಶರಾಗಿಯೇ ತೋರಿಸಿಕೊಳ್ಳುವ ಡಾಂಬಿಕತೆಯೂ ಭಾರತದಲ್ಲಿ ಯಶಸ್ವಿಯಾಗಿ ನಡೆಯುತ್ತ ಬಂದಿದೆ. ಮಾನ್ಯತೆಯಿಲ್ಲದ ಧನ್ಯತೆ ಕಾಣದ ಅಂತಹ ವಿನೋದಿತ ಪಾತ್ರಗಳು ಭಾರತವನ್ನು ಮುಕ್ಕಾಗಿಸುತ್ತಲೇ ಬಂದಿವೆ. ಮುಗ್ಧರನ್ನು ಮೊದ್ದಾಗಿಸುತ್ತ ಬಂದಿವೆ. ಇಂದಿನ ಭಾರತೀಯ ರಾಜಕೀಯ ರಂಗವಂತೂ ಪೂರ್ಣಾವಧಿಯ (24x7) ನಾಟಕ ಕಣವಾಗಿ ಪರಿವರ್ತಿತಗೊಂಡಿದೆ. ಜನರಿಗೆ ನಿತ್ಯವೂ ಸಂದು ತಪ್ಪದಂತೆ, ವಿವಿಧ ವಿನೋದಾವಳಿಯ ದೃಶ್ಯಗಳು ಸಿಗುತ್ತಿರುತ್ತವೆ. ಆಕರ್ಷಕ ಕಳ್ಳ ಪೋಲಿಸ್ ಆಟವೂ ನಡೆಯುತ್ತಿರುತ್ತದೆ.

"ಎಲ್ಲೂ ಸಲ್ಲದವರು ಸಲ್ಲಬಹುದಾದ ಏಕೈಕ ಕ್ಷೇತ್ರವೇ ರಾಜಕೀಯ" - ಎಂಬುದು ಮನೆಮಾತಾಗುವಂತಾಗಿರುವಾಗ, ಅಂತಹ ಸಲ್ಲದ ರಾಜಕೀಯಗಳಲ್ಲಿಯೇ ಸರ್ವರೂ ಮುಳುಗಿರುವಾಗ...  ಮಹಾತ್ಮಾ ಗಾಂಧಿಯ ಕುರಿತು ಮಾತನಾಡುವ ಯೋಗ್ಯತೆಯೇ ನಮಗೆ ಇಲ್ಲದಂತಾಗಿದೆ. ಪ್ರಾಮಾಣಿಕತನ, ಮನುಷ್ಯತ್ವ, ಕರುಣೆ, ಸದ್ಭಾವಗಳಿಲ್ಲದೆ, ಕಮಾಯಿಯ ಬಕಮಾರಿ ಭಾವದಿಂದಲೇ ಅಧಿಕಾರದ ತೆವಲಿನ ವೋಟಿನ ರಾಜಕಾರಣ ನಡೆಸುವವರು - ಯಾವುದೇ ಸೃಜನಶೀಲ, ಜನೋಪಯೋಗೀ ಕೆಲಸಗಳನ್ನು ನಿಭಾಯಿಸುವುದಾದರೂ ಹೇಗೆ ಸಾಧ್ಯ ? ಹಲವು ರಾಜ್ಯಗಳ ಒಕ್ಕೂಟವಾದ ಈ ಭಾರತ ದೇಶದಲ್ಲಿ ಅಂತರ್ರಾಜ್ಯ ಸಂಬಂಧಗಳು ತೆಳುವಾಗುವುದಕ್ಕೆ ಜನರು ಕಾರಣರೆ ? ಜನಪ್ರತಿನಿಧಿಗಳ ದುರಹಂಕಾರ ಕಾರಣವೆ ?

ಈ ದೇಶದಲ್ಲಿ ಆರೋಪ ಹೊತ್ತ ಪ್ರಜಾಪ್ರತಿನಿಧಿಗಳು ಜೈಕಾರ ಕೂಗಿಸಿಕೊಳ್ಳುತ್ತ ನ್ಯಾಯಾಲಯಗಳಿಗೆ ಮೆರವಣಿಗೆ ಹೋಗುತ್ತಾರೆ ! ಸಾಮಾನ್ಯ ಪ್ರಜೆಯೊಬ್ಬ ಅಂತಹುದೇ ವರ್ತನೆಯನ್ನು ತೋರಿಸಿದರೆ ಆತನನ್ನು ಸರಳಿನ ಹಿಂದೆ ಕೂಡಿಸುವ ಹತ್ತಾರು ನಿಯಮಗಳು ನಿಶ್ಚಯವಾಗಿ ಪ್ರತ್ಯಕ್ಷವಾಗುತ್ತವೆ ! ಇವೆಲ್ಲವೂ ಸಾಧ್ಯವಾಗುವುದು ಏಕೆಂದರೆ...  ಕೆಲವರಿಗೆ - ಭಾರತವು ಹೆಚ್ಚು ಸ್ವತಂತ್ರವಾಗಿದೆ !

ಇಂದು ದೊಡ್ಡ ದೊಡ್ಡ "ಪದವಿ ಬಾಲ"ವನ್ನು ನೇತಾಡಿಸುತ್ತಿರುವವರೂ ಯಾಕೆ ದೇಶದ್ರೋಹಿಗಳಾಗುತ್ತಿದ್ದಾರೆ ? ಯಾಕೆ ಭಯೋತ್ಪಾದಕರಾಗುತ್ತಿದ್ದಾರೆ ? ದೇಶದ ಚಾಲಕರೇ ಅನಾಚಾರದ ಮಾದರಿಗಳಾಗಿ "ಅನುನಾಯಿ"ಗಳ ಬೀಜಪ್ರಸಾರ ಮಾಡುತ್ತಿದ್ದಾರೆಯೆ ? ಸರ್ವಾನಿಷ್ಟಗಳ ಕಾರಣಗಳೂ ತಮ್ಮ ಮೂಲದಲ್ಲಿಯೇ ಇದ್ದರೂ "ಮಳ್ಳೀ ಮಳ್ಳೀ ಮಂಚಕ್ಕೆ ಕಾಲೆಷ್ಟು ?" ಎಂದು ತಾವೇ ಕೇಳುತ್ತ, "ಮೂರು ಮತ್ತೊಂದು" ಎಂದು ತಾವೇ ಪಿಸುಗುಡುತ್ತ ಇನ್ನೋವಾ ಯಾತ್ರೆ ಮಾಡುತ್ತಿದ್ದಂತೆ ಕಾಣುವುದಿಲ್ಲವೆ ? ಮೈಲುಗಟ್ಟಲೆ ರಸ್ತೆಯನ್ನು ಬಲಪೂರ್ವಕವಾಗಿ ನಿರ್ಜನಗೊಳಿಸಿ ಇಂತಹ ಸಜ್ಜನರು ಓಡುವುದಾದರೂ ಎಲ್ಲಿಗಿರಬಹುದು ? ಹಾಗೆ ಓಡಿ ಓಡಿ ಅವರು ಕಡಿಯುವುದಾದರೂ ಏನನ್ನು ? ಆದರೂ ಗಾಬರಿಯೇನಿಲ್ಲ. ಭಾರತವು ಹೇಗೂ ಸ್ವತಂತ್ರವಾಗಿದೆ !

ಸಾಮಾನ್ಯ ವಿದ್ಯಾರ್ಥಿಯಲ್ಲೂ ಸುಸಂಸ್ಕೃತ ಮೌಲ್ಯಗಳನ್ನು ತುಂಬಿ - ತಿದ್ದಿ - ಅನ್ಯಾದೃಶಗೊಳಿಸುತ್ತಿದ್ದ ವಿದ್ಯಾದಾನದ ಸನಾತನ ಪದ್ಧತಿಗೆ "ಕೋಮುವಾದ"ದ ಕೆಸರು ಮೆತ್ತಿ, ವಿದ್ಯೆಯನ್ನು ದುಡ್ಡಿಗೆ ಮಾರುವ ಪದ್ಧತಿಯನ್ನು ಈಗ ಹುಲುಸಾಗಿ ಬೆಳೆಸಿದ್ದಾರೆ ! ಇಂತಹ ಲೂಟಿಯಲ್ಲಿ ಜನಪ್ರತಿನಿಧಿಗಳೂ ಪ್ರತ್ಯಕ್ಷವಾಗಿ ತೊಡಗಿಕೊಂಡಿದ್ದಾರೆ; ವ್ಯಾಪಾರಕ್ಕೇ ಕುಳಿತುಬಿಟ್ಟಿದ್ದಾರೆ! ಸೇವಾ ಕ್ಷೇತ್ರವಾಗಿಯೇ ಉಳಿಸಿಕೊಳ್ಳಬೇಕಾಗಿದ್ದ ಶಿಕ್ಷಣ ಕ್ಷೇತ್ರದಲ್ಲಿ ರಾಡಿ ಎಬ್ಬಿಸಿದ್ದಾರೆ. ಸಾಮಾಜಿಕವಾಗಿ ಉತ್ತಮ ಕೆಲಸವನ್ನು ಮಾಡಲು ಒಂದು ಹೆಜ್ಜೆ ಮುಂದಿಡುವವರನ್ನು ಎರಡು ಹೆಜ್ಜೆ ಹಿಂದಕ್ಕೆಳೆಯುವ ಖದೀಮತನವು ಎಲ್ಲೆಲ್ಲೂ ವಿಜೃಂಭಿಸುತ್ತಿದೆ... ಹೀಗಿದ್ದರೂ ಅಂತೂ ಇಂತೂ ಭಾರತವಂತೂ ಸ್ವತಂತ್ರವಾಗಿದೆ !!!

ಘೋರ ಆರೋಪಗಳನ್ನು ಹೊತ್ತವರಿಗೆ ಚುನಾವಣೆಗೆ ನಿಲ್ಲಲು ಎಲ್ಲ ರಾಜಕೀಯ ಪಕ್ಷಗಳೂ ಅವಕಾಶ ಕಲ್ಪಿಸುತ್ತಿವೆ. ಅಂತಹ ಅಪರಾಧೀ ಮನೋಭಾವದವರು ಜನಪ್ರತಿನಿಧಿಗಳಾಗಿ ಆಯ್ಕೆಯೂ ಆಗಿ ರಾಷ್ಟ್ರ ನೀತಿಯನ್ನು ರೂಪಿಸುತ್ತಿರುವಂತಹ ದುರಂತ ಸನ್ನಿವೇಶಕ್ಕೆ ಭಾರತವು ತುತ್ತಾಗಿದೆ. ಆದ್ದರಿಂದಲೇ ಜನಪ್ರತಿನಿಧಿಗಳ ವಿಧಾನಸಭೆ - ಪರಿಷತ್ತು, ಲೋಕಸಭೆ, ರಾಜ್ಯ ಸಭೆಗಳು ಗುದ್ದಾಟ - ಅರಾಜಕತೆಯ ಭೀಭತ್ಸ ಉದಾಹರಣೆಗಳಾಗುತ್ತಿವೆ ! ಅಲ್ಲಿ ವಸ್ತ್ರಾಪಹರಣವೂ ನಡೆಯುತ್ತದೆ ! ತೊಡೆ ತಟ್ಟುವ, ತೋಳು ತಟ್ಟುವ, ನೀಲಿ ಚಿತ್ರಗಳನ್ನು ನೋಡುವ ರಕ್ಕಸ ವಿದ್ಯೆಯ ಮಾದರಿಗಳು ಪ್ರಜೆಗಳ ಮುಂದೆ ನರ್ತಿಸುತ್ತಿವೆ ! ದಾರಿ ತೋರಿಸಬೇಕಾದ ಸ್ಥಾನದಲ್ಲಿರುವವರು ದಾರಿ ತಪ್ಪಿಸುವ ಕಾಯಕದಲ್ಲಿ ಮಗ್ನರಾದಂತೆ ಕಾಣುತ್ತದೆ. "ಭಾರತದ ಪ್ರಜಾಪ್ರಭುತ್ವ" ಎಂಬ ಇಂತಿಪ್ಪ ಪ್ರಹಸನದಲ್ಲಿ - ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳೆಂಬ ಮೂರೂ ಅಂಗಗಳು ಪ್ರಾಮಾಣಿಕತೆಯಿಂದ ಬಹುದೂರ ಸರಿದು ಅನೇಕ ವರ್ಷಗಳೇ ಕಳೆದಿವೆ ಎಂಬುದು ಸಾಮಾನ್ಯ ಪ್ರಜೆಗಳ ಅನುಭವ. ಆದರೇನಂತೆ?... ಭಾರತವು ಸ್ವತಂತ್ರವಾಗಿದೆಯಲ್ಲ !

ಭಾರತದ ನಿಜವಾದ ಭಾಗ್ಯವಿಧಾತರೇ ಆಗಿರುವ ಭಾರತೀಯ ಮುಗ್ಧ ಜನರನ್ನು ಪರಸ್ಪರ ಎತ್ತಿಕಟ್ಟಿ, ಆಸೆ ಆಮಿಷಗಳ ಅಮಲಿನಲ್ಲಿ ಅವರನ್ನು ಸಿಲುಕಿಸಿ, ತಮ್ಮೊಂದಿಗೆ ಜನಸಂಪದವನ್ನೂ ಭ್ರಷ್ಟರಾಗಿಸುತ್ತಿರುವ ವೋಟಿನ ಚುನಾವಣೆಗಳು - ಭವಿಷ್ಯದ ಯಾದವೀ ಕಲಹಕ್ಕೆ ಮುನ್ನುಡಿ ಬರೆಯುತ್ತಿರುವಂತೆ ಕಾಣಿಸುವುದಿಲ್ಲವೆ ? "ಲಾಭವಿಲ್ಲದೆ ಸೇವೆಯನ್ನೂ ಮಾಡಬಾರದು; ಲಾಭಕ್ಕಾಗಿ ಅಡ್ಡದಾರಿಯನ್ನೇ ಹಿಡಿಯಬೇಕು" ಎಂಬ ಸಂದೇಶವನ್ನು ಭಾರತದ ಪ್ರತಿಯೊಂದು ಅಧಿಕಾರದ ಸ್ಥಾನವೂ ನೀಡುವಂತೆ ತೋರುವುದಿಲ್ಲವೆ ? ಮುಗ್ಧ ಜನತೆಯನ್ನು ಮೋಸಗೊಳಿಸಿ ಶೋಷಿಸುವುದನ್ನೇ ಕಸುಬು ಮಾಡಿಕೊಂಡವರು ಈ ಸ್ವತಂತ್ರ ಭಾರತದಲ್ಲಿ ಸ್ವರ್ಗ ಸುಖ ಅನುಭವಿಸುತ್ತ, ಹಿರಿಯರು ತೋರಿದ ಆದರ್ಶಗಳ ಲೇವಡಿ ಮಾಡುತ್ತಿದ್ದಾರೆ. ಅದರಿಂದೇನಂತೆ ? ...  ಓಹೋ... ಭಾರತ ಸ್ವತಂತ್ರವಾಗಿದೆ !!

ಢಿಲ್ಲಿಯಿಂದ ಹಳ್ಳಿಯ ವರೆಗೂ - ಹಿರಿ ನಾಯಕ, ಮರಿ ನಾಯಕ, ಕಿರಿ ನಾಯಕ, ಪುಡಿ ನಾಯಕರಿಂದ ತೊಡಗಿ ಪ್ರತಿಯೊಂದು ಮನೆಮನೆಯ ಒಳಗೂ "ಪಕ್ಷ ರಾಜಕಾರಣ"ವೆಂಬ ವಿಷಗಾಳಿಯು ಪ್ರವೇಶಿಸುವಂತೆ ಮಾಡಿ ಭಾರತದುದ್ದಕ್ಕೂ ಲಜ್ಜೆಗೇಡಿತನವು  ಮೇಯುತ್ತಿರುವಂತೆಯೂ ಕಾಣುತ್ತದೆ. ಏಕೆಂದರೆ... ಭಾರತ ಸ್ವತಂತ್ರವಾಗಿದೆ !!

ಹಕ್ಕು ಮತ್ತು ಕರ್ತವ್ಯಗಳ ನಡುವೆ ಅಂಕೆ ತಪ್ಪುವಷ್ಟು ಕಂದಕವೇರ್ಪಟ್ಟಿದೆ ! ಬುದ್ಧಿ ತಿರುಚಲ್ಪಟ್ಟ ಸಂತಾನವನ್ನು ಮುಚ್ಚಟೆಯಿಂದ ಪಾಲಿಸಿ ಪೋಷಿಸಲಾಗುತ್ತಿದೆ. ಕೌನ್ಸೆಲ್ಲಿಂಗ್ ಮಾಡಬೇಕಾದ್ದು ಯಾರಿಗೆ ? ಕರ್ನಾಟಕಕ್ಕೆ? ಬಿಹಾರಕ್ಕೆ? ಉತ್ತರಪ್ರದೇಶಕ್ಕೆ? ಕಾಶ್ಮೀರಕ್ಕೆ? ಅಥವಾ... ನಮ್ಮ ಜನಪ್ರತಿನಿಧಿಗಳಿಗೆ ? ಮಾನವ ಹಕ್ಕುಗಳಂತೆಯೇ ಮಾನವ ಕರ್ತವ್ಯಗಳಿಗೆ ಯಾಕೆ ಯಾವ ಆಯೋಗವೂ ಇಲ್ಲ ಸ್ವಾಮಿ ? ಅಮಾನವೀಯ ವರ್ತನೆಗಳಲ್ಲಿಯೇ ಮುಳುಗಿ ಏಳುತ್ತಿರುವ ಬಾಯಿಬಡುಕ ಜಾಗಗಳಿಂದೆಲ್ಲ ಮಾನವೀಯತೆಯ ಪಾಠ ಕೇಳಿಸಿಕೊಳ್ಳುವ ವಿನೂತನ "ಭಾಗ್ಯ"ವು ಇಂದಿನ ಭಾರತದ ಪ್ರಜೆಗಳದ್ದು. ಆದರೂ ಚಿಂತೆ ಬೇಡ. ಭಾರತ ಸ್ವತಂತ್ರವಾಗಿದೆ !

ಭಾರತದಲ್ಲಿ ಅಪರಾಧಿಗಳು ನಿರ್ಭಯರಾಗಿ ಬದುಕಬಹುದು; ನಿರಪರಾಧಿಗಳು ಹೆದರಿ ಭಯದಿಂದ ಬದುಕುವಂತಾಗಿದೆಯೆ ? "ನೂರು ಅಪರಾಧಿಗಳು ತಪ್ಪಿಸಿಕೊಂಡರೂ ಚಿಂತೆಯಿಲ್ಲ; ಒಬ್ಬ ನಿರಪರಾಧಿಯೂ ನೆಮ್ಮದಿಯಿಂದ ಬದುಕಲೇಬಾರದು" ಎಂಬ ಅಲಿಖಿತ ಕಾನೂನು ಜ್ಯಾರಿಯಲ್ಲಿದೆಯೆ ? - ಎಂದು ಯೋಚಿಸುವಂತಹ ಅಸಂಖ್ಯ ಪ್ರಕರಣಗಳು ಸಾಲುಸಾಲಾಗಿ ನಡೆಯುತ್ತಿದ್ದರೂ "ಮುಚ್ಚು ಮರೆಯ ಕೋಲಾಟ"ಗಳಲ್ಲೇ ಜವಾಬ್ದಾರಿಯುತ ಸ್ಥಾನಗಳು ನಿರತವಾಗಿ, ರಾಜಕೀಯ ಲಾಭನಷ್ಟದ ಲೆಕ್ಕಾಚಾರಗಳಲ್ಲಿ ತೊಡಗಿರುವಂತೆ ಕಾಣುವುದಿಲ್ಲವೆ ? ಪುರಸೊತ್ತಿರುವವರು ಯೋಚಿಸಬಹುದು. ಆದರೆ ಭಾರತವಂತೂ ಸ್ವತಂತ್ರವಾಗಿರುವುದು ಸತ್ಯ !!

ಅಪಘಾತಕ್ಕೊಳಗಾಗಿ ಬೀದಿಪಾಲಾಗಿರುವ ನತದೃಷ್ಟರ ಮೊಬೈಲ್, ಸರ, ಉಂಗುರಗಳನ್ನು ಲಪಟಾಯಿಸುವವರು... ಮೊಬೈಲ್ ನಲ್ಲಿ ಫೊಟೋ ಕ್ಲಿಕ್ಕಿಸುತ್ತ ಅಪಘಾತದ ಚೆಂದ ನೋಡುವ ನಿರ್ಭಾವ ದುರ್ಭಾವದ ಸಂತಾನವನ್ನು ಬೆಳೆಸಿದ್ದು ಯಾರಿರಬಹುದು ? ಅಪಘಾತಕ್ಕೊಳಗಾದ ದುಃಖಿತರಿಗೆ ವೈದ್ಯರ ಆಶ್ರಯ ಸಿಗುವಂತೆ ಮಾಡುವ ಯಾವುದೇ ಗೊಡವೆಗೇ ಹೋಗದ "ಅಮಾನವೀಯ ಜನರಕ್ಕಸತನ"ಗಳಿಗೆ ಕಾರಣವೇನಿರಬಹುದು ? ಏನೆಂದರೆ... ಅದು ನಮ್ಮ ಇಷ್ಟ... ಏಕೆಂದರೆ ಭಾರತವು ಸ್ವತಂತ್ರ !!

ಭಾರತದಲ್ಲಿ ಅಟ್ಟಹಾಸಗೈಯ್ಯುತ್ತಿರುವ ಹೊಟ್ಟೆಪಾಡಿನ ಅನೇಕ ಮಾಧ್ಯಮಗಳಲ್ಲಿ ದಿನ ಬೆಳಗಾದರೆ ರೇಪು, ಬಲಾತ್ಕಾರ, ಕೊಲೆ, ಡಕಾಯಿತಿಗಳದೇ ಥ್ರಿಲ್ಲು ! ಜನರಿಗೆ ಕೂತಲ್ಲೇ ದಿನವಿಡೀ ರೋಮಾಂಚನ ! ಲಟಲಟ BREAKING STORY ಗಳು !! ಭಾರತ ದೇಶದ ತುಂಬ "ಸುಂಟಿ ಮೆಣಸುಗಳೆಂಬ ಆಯೋಗ"ಗಳದ್ದೇ ದರ್ಬಾರು ! ಒಂದಷ್ಟು ಜನ ಆಯೋಗಾಧಿಪತಿಗಳ ಸುಯೋಗದ ಕಾರು-ಬಾರು ! ಪ್ರವಾಸ ಸುಖದ ಉಡುಗೊರೆಯೊಂದಿಗೆ ಪುಕ್ಕಟೆ T A, D A ಎಂಬ ದಕ್ಷಿಣೆ ಪ್ರಸಾದ. ಒಟ್ಟಿನಲ್ಲಿ ನಂದೂರಾಯರ ಅದ್ಭುತ ಪಾರುಪತ್ಯ; ಯಾವುದೇ ಉತ್ತರದಾಯಿತ್ವವಿಲ್ಲದ ಜಂಗೀಕುಸ್ತಿಗಳು ! ಸಾರ್ವಜನಿಕ ಸಂಪತ್ತಿನ ಬೇಕಾಬಿಟ್ಟಿ ದುಂದುವ್ಯಯ. ಆದರೆ ಈ ಪ್ರಜಾಪ್ರಭುತ್ವದಲ್ಲಿ ಪ್ರಭುಗಳೆನ್ನುವ ಪ್ರಜೆಗಳು ಏನನ್ನೂ ಕೇಳುವಂತಿಲ್ಲ. ಏಕೆಂದರೆ ಭಾರತದಲ್ಲಿ ಕೆಲವರು - ಹೆಚ್ಚು ಸ್ವತಂತ್ರ !

ವಸುದೇವ ದೇವಕಿಯರನ್ನು ಸೆರೆಮನೆಯಿಂದ ಬಿಡಿಸಿದ ಶ್ರೀ ಕೃಷ್ಣನು ಜನಿಸಿದ್ದ ಈ ಭಾರತದ ಭಾವ ಭೂಮಿಯಲ್ಲಿ ಹೆತ್ತವರನ್ನು ಬಲಿಕೊಡುವ, ಸೆರೆಗೆ ತಳ್ಳುವ ಮಕ್ಕಳು ಕಾಣಿಸಿಕೊಳ್ಳುತ್ತಿರುವುದೂ ನಮ್ಮ ಸ್ವಾತಂತ್ರ್ಯದ ಸಾಧನೆಯಲ್ಲವೇ ? ಮಕ್ಕಳನ್ನು ದುಡ್ಡಿಗೆ ಮಾರುವ ಧಂದೆಯೂ ನಾವೇ ಹೋರಾಡಿ ಪಡೆದ ಸ್ವಾತಂತ್ರ್ಯದ ಕೊಡುಗೆಯೇ ಆಗಿದೆ. ದುಡ್ಡಿಗಾಗಿ ಯಾರ್ಯಾರದೋ ವೀರ್ಯವನ್ನು 9 ತಿಂಗಳು ಹೊತ್ತು ಹೆತ್ತು, ಅನಂತರ ನಿರ್ಭಾವದಿಂದ - ಎತ್ತಿ ಬಿಸಾಡಿದಂತೆ, ಕಾಣದ ಕೈಗಳಿಗೆ ಒಪ್ಪಿಸಿ ಬರುವ ಬಾಡಿಗೆ ತಾಯಂದಿರಿಗೂ ಸ್ವಾತಂತ್ರ್ಯವೇ ಮಹಾಸ್ಫೂರ್ತಿ ! ನಮ್ಮ ಭಾರತವು ಹೀಗೆ ಸರ್ವತೋಮುಖ ಅಭಿವೃದ್ಧಿ ಹೊಂದುತ್ತಿದೆ. ಏಕೆಂದರೆ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದೆ !!

ನಮ್ಮ ಭಾರತವು ಈಗ ಸ್ವತಂತ್ರವಾಗಿ ಕುಣಿದು ಕುಪ್ಪಳಿಸುತ್ತಿದೆ ! ಆದರೆ... ದಿನವೂ ಹೆಣವಾಗುತ್ತ ತಮ್ಮ ಸರ್ವಸ್ವವನ್ನೂ ದೇಶಕ್ಕಾಗಿ ಅರ್ಪಿಸುವ ಗಡಿಕಾಯುವ ಸೈನ್ಯವನ್ನು ಅಭಿಮಾನದಿಂದ ನೆನಪಿಸಿಕೊಳ್ಳಲು, ರಾಷ್ಟ್ರವನ್ನು - ರಾಷ್ಟ್ರದ ಸಂಕೇತಗಳನ್ನು ಗೌರವಿಸಿ ಪ್ರೀತಿಸಲು - ಆಗಾಗ ಬೆತ್ತ ತೋರಿಸಬೇಕಾದಂತಹ ವಾತಾವರಣವಿದೆ ! ಹಾಗಿದ್ದರೆ ಇದೆಂಥ ಸ್ವಾತಂತ್ರ್ಯ? ಇದೆಂತಹ ಶಿಕ್ಷಣ ? ಇದು ನೇತೃತ್ವದ ಸಮಗ್ರ ಸೋಲಲ್ಲವೆ ? ಕೇವಲ ದುಡ್ಡಿನಿಂದಲೇ ಸಮೃದ್ಧಿಯನ್ನು ತೂಗಿನೋಡುವ ನೀತಿಯ ಅಸಂಬದ್ಧ, ಅಸಮಂಜಸ ನಿರಂತರತೆಗಳು ಸಮಾಜದ ಒಟ್ಟಾರೆ ಸಮತೋಲನವನ್ನೇ ತಪ್ಪಿಸುತ್ತಿರುವಂತೆಯೂ ಕಾಣಿಸುತ್ತಿಲ್ಲವೆ ?

ಪರಸ್ಪರ ದೂಷಣೆಗಳಿಂದಲೇ ಪರಸ್ಪರರನ್ನು ಕಿರಿದಾಗಿಸಲು ಪಣ ತೊಟ್ಟಂತಿರುವ ಭಾರತದ ಅನೇಕ ರಾಜ್ಯಗಳು ಏನನ್ನು ಸಾಧಿಸಲು ಹೊರಟಿರಬಹುದು ? ಸರ್ದಾರ್ ಪಟೇಲರಿಂದ ಪೋಣಿಸಲ್ಪಟ್ಟ ಮುತ್ತಿನ ಹಾರವನ್ನು ಕುಟ್ಟಿ ಒಡೆಯಲು ಹೊರಟಿದ್ದಾರೇನು ? ಜನರಿಂದ ಚುನಾಯಿತಗೊಂಡ ಯಾವುದೇ ಸರಕಾರವನ್ನು - ಕೇಂದ್ರದ ಆಡಳಿತವನ್ನು ಬಹಿರಂಗವಾಗಿ ಅವಹೇಳನ ಮಾಡುವುದರ ಮೂಲಕವೇ ತಮ್ಮ ಅಸ್ತಿತ್ವವನ್ನು ರುಜುವಾತು ಪಡಿಸುತ್ತಿರುವಂತೆ ಕಾಣುತ್ತಿರುವ "ತಿಂದುಂಡ ರಾಜಕೀಯ ಪಕ್ಷಗಳು" ಜನಸಾಮಾನ್ಯರ ಬವಣೆಗಳ ಬೆಂಕಿಗೆ ದಿನವೂ ತುಪ್ಪ ಸುರಿಯುತ್ತ ತಮ್ಮ ಅಂತಹ ಕೆಲಸಗಳಿಗಾಗಿಯೇ ಸಂಬಳ, ಭತ್ತೆಗಳನ್ನೂ ಪಡೆಯುತ್ತಿರುವ ಧಾರ್ಷ್ಟ್ಯಕ್ಕೆ ಕಾರಣವೇನಿರಬಹುದು ? "ಈ ಭಾರತವು ನಮ್ಮದಲ್ಲ; ರಾಜಕೀಯ ಪಕ್ಷಗಳ ಆಸ್ತಿ..." ಎಂದು ಭಾವಿಸುವಂತಹ ಪ್ರಜಾಸನ್ನಿವೇಶವಿಲ್ಲವೆ ? ಪ್ರಜೆಗಳಿಗೆ "ಸ್ವಲ್ಪ ಸ್ವಾತಂತ್ರ್ಯ" - ರಾಜಕೀಯದ ಘಟಗಳಿಗೆ "ಯದ್ವಾತದ್ವಾ ಸ್ವಾತಂತ್ರ್ಯ" ದೊರೆತಂತೆ ಜನರಿಗೆ ಭಾಸವಾಗುತ್ತಿಲ್ಲವೆ ? "ಬಿಡಿ. ಹೇಗಿದ್ದರೂ... ಭಾರತವಂತೂ ಸ್ವತಂತ್ರವಾಗಿದೆ !!" ಎನ್ನುತ್ತಿದ್ದರೆ - ಅದು ರಣಹೇಡಿತನವಾಗದೆ?

ಇವತ್ತಿನ ಸದ್ಯದ ಪರಿಸ್ಥಿತಿಯಲ್ಲಿ  ಜನರ ನಂಬಿಕೆ ವಿಶ್ವಾಸಗಳ ಯಾವತ್ತೂ ಆಚರಣೆಗಳಿಗೆ ಸಾರಾಸಗಟಾಗಿ ಮೌಢ್ಯದ ಮುದ್ರೆಯೊತ್ತುವ ಸಾಹಸವೂ ದೇಶದ ಅಲ್ಲಲ್ಲಿ ಶುರುವಾಗಿದೆ. ನೇತಾಗಿರಿ ತೋರಿಸುವ ಹುಚ್ಚಿನ ಒಂದು ಮುಖವಿದು. ಅರ್ಥವಿಲ್ಲದ ಆಚರಣೆಗಳ ಕುರಿತು ಜನಸಾಮಾನ್ಯರಲ್ಲಿ ಅರಿವು ಮೂಡಿಸಲು ಅಸಮರ್ಥವಾದ "ಮೂಢ ಅಧಿಕಾರ ಸ್ಥಾನ"ಗಳಿಗೆ ಅನ್ಯ ಕೆಲಸವಿಲ್ಲದೆ ಧಾರ್ಮಿಕ ಆಚರಣೆಗಳ ಸ್ವಾತಂತ್ರ್ಯ ಹರಣದ ಕಾರ್ಯಕ್ಕೆ ಮುಂದಾಗುವಂತಿದೆ. ಸರಕಾರೀ ಛತ್ರದ ಸ್ವಚ್ಛಂದತೆಯ ಅಮಲಿನಿಂದ ಪ್ರಜೆಗಳ ನಂಬಿಕೆಗಳ ಮೇಲೆ ದಾಳಿ ನಡೆಸುವುದು ಇಂದಿನ Fashion ಕೂಡ ಆಗಿಬಿಟ್ಟಿದೆ. ಯಾವುದೇ ಜನಸಮಷ್ಟಿಯ ನಿರಪಾಯಕಾರೀ ನಂಬಿಕೆಗಳನ್ನು ತಮ್ಮ ತಮ್ಮ ನಂಬಿಕೆಗಳಿಗೆ ಹೊಂದುವಂತೆ ಬದಲಿಸುವ ಯಾವುದೇ ಸರಕಾರೀ ಕ್ರಿಯೆಯೂ "ಸರ್ವಾಧಿಕಾರ - Dictatorship" ಎಂದೇ ಪರಿಗಣಿಸಲ್ಪಡುತ್ತದೆ. ಅಂತಹ ಶುಂಠತನವು ಪ್ರಜಾಪ್ರಭುತ್ವ ಎಂದುಕೊಳ್ಳುವ ಭಾರತಕ್ಕೆ ಹೊಂದಲಾರದು. ಗಾಂಧಿಯ ಹೆಸರು ಹೇಳುತ್ತ ಜೀವನೋಪಾಯ ನಡೆಸುವವರಿಗಂತೂ ಇಂತಹ ವರ್ತನೆಗಳು ಸುತರಾಂ ಶೋಭಿಸಲಾರವು. ಶುಭ್ರ ಆಡಳಿತದ ನಿಜವಾದ ಕಾಳಜಿಯಿದ್ದರೆ ಶಿಕ್ಷಣ ಕ್ಷೇತ್ರದ ಮೂಲಕ ಬಾಲ್ಯದಲ್ಲಿಯೇ ಉತ್ತಮ ಅರಿವು ಮೂಡಿಸಲು ಪ್ರಯತ್ನಿಸಲಿ. ಇದಕ್ಕೆ ಹೊರತಾದ - ಸರದಾರಿಕೆಯ ಮೂಢ ವರ್ತನೆಗಳೆಲ್ಲವೂ "ಎಂಥದ್ದೋ ಒಂದು ಸ್ವಾತಂತ್ರ್ಯ"ದ ಇನ್ನೊಂದು ಉದಾಹರಣೆಯಾಗಿ ದಾಖಲಾಗುವುದರಲ್ಲಿ ಸಂದೇಹ ಬೇಡ.

ಜನಪ್ರತಿನಿಧಿಗಳು, ಅಧಿಕಾರದ ಸ್ಥಾನಗಳು, ಪುಡಿ ನೇತಾರರೆಂದುಕೊಂಡವರು ಮತ್ತು ಇಂತಹ ಮಂದಿಗೆ ಗಾಳಿ ಹಾಕುವವರು ಮಾತ್ರ ಈ ದೇಶದಲ್ಲಿ ಸುರಕ್ಷಿತರು ಎಂದಾದರೆ ಈ ಭಾರತವು "ಸುಖದಾಂ...ವರದಾಂ..." ಆಗಿ ಉಳಿದಿದೆ ಅನ್ನಿಸುತ್ತದೆಯೆ ? ಪ್ರಶ್ನೆ ಏನೇ ಇದ್ದರೂ... ಒಂದಂತೂ ಸತ್ಯ. ಭಾರತವು ಅತಂತ್ರವಾಗಿಲ್ಲ; ಸ್ವತಂತ್ರವಾಗಿದೆ !!

ಚಾಕರಿ ಮಾಡುವ ಕೆಲಸಗಾರ ವರ್ಗದಿಂದ ನಿಯತ್ತಿನ ಕೆಲಸವನ್ನು ಮಾಡಿಸಿಕೊಳ್ಳುವ ಮತ್ತು ಅವರಿಗೆ ಕಾಲಕಾಲಕ್ಕೆ ನೀಡುವ ಸವಲತ್ತುಗಳನ್ನು ನಿಯತ್ತಿನಿಂದ ನೀಡುವ ನಿಷ್ಠೆಯನ್ನು ಎಷ್ಟು ವ್ಯವಸ್ಥೆಗಳು ಭಾರತದಲ್ಲಿ ಉಳಿಸಿಕೊಂಡಿವೆ ? ಕಾರ್ಮಿಕರಿಗೆ ಪ್ರತಿಫಲ ರೂಪದ ಕೂಲಿಯನ್ನು ನೀಡುವಾಗ ಹೊರಳಾಡಿ ಗೋಳಿಡುವ ಸರಕಾರಗಳು ಜನಪ್ರತಿನಿಧಿಗಳ ಸಂಬಳ, ಭತ್ತೆಯನ್ನು ಕ್ಷಣಮಾತ್ರದಲ್ಲಿ ಸರ್ವಾನುಮತದಿಂದ ಮಂಜೂರು ಮಾಡಿಕೊಳ್ಳುತ್ತಿರುವುದು - ಭಾರತದ ಸ್ವಾತಂತ್ರ್ಯದ ಅತಿ ದೊಡ್ಡ ವಿಡಂಬನೆ. ಜನಸೇವಕರೆನ್ನುತ್ತ ಶಾಲು ಹೊದೆಸಿಕೊಳ್ಳುವ ಕೆನೆವರ್ಗದ ಉದ್ಧಟತನದ ಪ್ರದರ್ಶನಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಏಕೆ ? ಆದರೂ - ಯಾವುದೇ ನಾಚಿಕೆಗೇಡಿನ ವರ್ತನೆಯನ್ನು ತೋರುವುದಕ್ಕೂ ಭಾರತದಲ್ಲಿ ಕೆಲವರಿಗೆ ಸ್ವಾತಂತ್ರ್ಯವಿದೆ.

ನಮ್ಮ ರಾಷ್ಟ್ರದಲ್ಲಿರುವ ಸರಕಾರೀ ಕೃಪಾಪೋಷಿತ ಬ್ಯಾಂಕುಗಳು ಕೆಲವೇ ಕೆಲವು ವ್ಯಕ್ತಿಗಳಿಗೆ ಬೇಕಾಬಿಟ್ಟಿಯಾಗಿ ಸಾಲ ನೀಡಿ, ಅಂತಹ ವ್ಯಕ್ತಿಗಳು ತಾವು ಪಡೆದ ಕೋಟ್ಯಾಂತರ ರೂಪಾಯಿಗಳನ್ನು ನುಂಗಿ ತೇಗುತ್ತ ಓಡಿಹೋದಾಗ, ತೆರಿಗೆದಾರನ ಹಣವನ್ನು ಬಾಚಿ ಅಂತಹ ಅನಾಥ ಹೊಂಡಗಳಲ್ಲಿ ತುಂಬಿ, ಅಂತಹ ಬೇಜವಾಬ್ದಾರಿಯ ಬ್ಯಾಂಕುಗಳನ್ನು ಉದ್ಧರಿಸುವ ಕೆಲಸವನ್ನು ನಮ್ಮ ಸರಕಾರಗಳು ಸದ್ದಿಲ್ಲದೆ ನಿಷ್ಠೆಯಿಂದ ಮಾಡುತ್ತಿರುವುದರ ಹಿಂದಿನ ರಹಸ್ಯವೇನು ? ಇಂತಹ ಗೊಣಗೊಂಡೆಗಳಿಗೆ - ಯಾವುದೇ ಉತ್ತರದಾಯಿತ್ವ ಇಲ್ಲವೆ ? ಮುಳುಗುತ್ತಿರುವ ಯಾವ್ಯಾವ ಬ್ಯಾಂಕನ್ನು ಎತ್ತಿ ನಿಲ್ಲಿಸುವ ಬಾಬ್ತು - ತೆರಿಗೆದಾರರ ಎಷ್ಟೆಷ್ಟು ಹಣವನ್ನು ಸರಕಾರ ವ್ಯಯಿಸಿ ಪೋಲುಮಾಡಿದೆ ? - ಎಂಬ ಪೂರ್ತಿ ವಿವರವನ್ನು ಯಾವುದೇ ಸರಕಾರವು ಜನತೆಯ ಮುಂದಿಡಬೇಕು. ಸರಕಾರಗಳು ಏನನ್ನೋ ಮುಚ್ಚುಮರೆ ಮಾಡುತ್ತಿವೆ ಎಂಬ ಅನ್ನಿಸಿಕೆಯು ಜನತೆಯಲ್ಲಿ ಮೂಡುವುದು - ಯಾವತ್ತೂ ಉತ್ತಮ ಆಡಳಿತದ ಲಕ್ಷಣವಲ್ಲ. ಸರಕಾರೀ ನೌಕರರಿಗೆ ಕೂಲಿ ಕೊಟ್ಟು ತಾವೇನೋ ದಾನ ಕೊಟ್ಟಂತೆ, ಉಪಕರಿಸಿದಂತೆ ಭುಜ ಕುಣಿಸುವ ಸರಕಾರಗಳು ಸಾರ್ವಜನಿಕ ಬ್ಯಾಂಕುಗಳ - ನಷ್ಟ ವಹಿವಾಟಿನ ಒಳವ್ಯವಹಾರಗಳನ್ನೂ ಬಹಿರಂಗ ಪಡಿಸುವುದು ತಮ್ಮ ಕರ್ತವ್ಯವೆಂದೇ ಭಾವಿಸುವುದು ಉತ್ತಮ. ಸಾರ್ವಜನಿಕ ಹಣವನ್ನು ಪಿತ್ರಾರ್ಜಿತ ಆಸ್ತಿಯೆಂಬಂತೆ ಬಳಸಿಕೊಳ್ಳುವುದು ಯಾವ ಸರಕಾರಕ್ಕೂ ಶೋಭೆ ತರುವ ವಿಷಯವಲ್ಲ. "ಸ್ವಾತಂತ್ರ್ಯ ಎಂದರೆ ಸ್ವಚ್ಛಂದತೆಯ ರಹದಾರಿಯಲ್ಲ ಎಂಬ ಪಾಠವು ಪ್ರಜೆಗಳಿಗೆ ಹೇಳುವುದಕ್ಕೆ ಮಾತ್ರ ಇರುವುದು" - ಎಂಬ ಭಾವಸಂದೇಶವನ್ನು ಜನರಿಗೆ ನೀಡಿದಂತೆ ಯಾರೂ ವರ್ತಿಸಬಾರದು. ಒಬ್ಬ ಚೌಕೀದಾರನಿಗೂ ಉತ್ತರದಾಯಿತ್ವವಿರುವುದಾದರೆ ಸರಕಾರಗಳಿಗೆ ಏಕಿಲ್ಲ ? Sweeping Under the Carpet ನೀತಿಯು ಯಾರಿಗೂ ಆದರ್ಶವಾಗಬಾರದು.  

ಭಿಕ್ಷಾಧಿಪತಿಗಳಾಗಿದ್ದ ನಮ್ಮ ಹಲವು ನೇತಾರರು ಸುಮಾರು 60 ವರ್ಷಗಳ ಅವಧಿಯಲ್ಲಿ ಕೋಟ್ಯಾಧಿಪತಿಗಳಾದದ್ದು ನಮ್ಮ ಪ್ರಜಾಪ್ರಭುತ್ವದ - ಸ್ವಾತಂತ್ರ್ಯದ ಸಾಧನೆಯಲ್ಲವೆ ? ಇಂತಹ ಸ್ಥಪತಿಗಳಿಂದಾಗಿಯೇ ಭಾರತ ಹೀಗಿದೆ. ಇನ್ನೂ ಹಾಗೇ ಇದೆ. ಹಳೆಯದಾದ ಅನೇಕ ಭ್ರಷ್ಟರೋಗಗಳೊಂದಿಗೇ ಜೀವಿಸುತ್ತ ಅದಕ್ಕೇ ಒಗ್ಗಿಕೊಂಡ ಪ್ರಜೆಗಳೂ ಭಾರತದಲ್ಲಿ ಇದ್ದಾರೆ. ಏಕೆಂದರೆ ಭಾರತೀಯರು ಸಹನಶೀಲರು; ವಿಶಾಲ ಹೃದಯಿಗಳು; ಸಭ್ಯರು; ಅಲ್ಪ ತೃಪ್ತರು...ಇತ್ಯಾದಿ ಬಹುಪರಾಕಿನವರು. ಇದೆಂತಹ ಪ್ರಜಾಪ್ರಭುತ್ವ?...  ಅನ್ನಿಸುವುದು ಇದಕ್ಕೇ. ಅತ್ತ ಇತ್ತ ಎತ್ತೆತ್ತಲೂ ಬೇಜವಾಬ್ದಾರಿ; ಹಕ್ಕುಗಳ ಠೇಂಕಾರ! 


ನಮ್ಮ ಪ್ರಜಾಪ್ರಭುತ್ವದ ಮೂಲ ಮಾದರಿಯೇ ಈ ನೆಲಕ್ಕೆ ಹೊಂದಿಕೊಳ್ಳದಂತಿದೆ. ವಿದೇಶೀ ಆಮದಿತ ಎಂದೂ ಅನ್ನಿಸುತ್ತದೆ. ನಮ್ಮ ಸ್ವಾತಂತ್ರ್ಯವು ಎಲ್ಲ ಬಗೆಯ ಅಧಿಕಪ್ರಸಂಗಗಳನ್ನು ಇನ್ನಿಲ್ಲದಷ್ಟು ಉತ್ತೇಜಿಸುವಂತಿದೆ. ಇಂತಹ ಡಂಬರಗಳ ಅಬ್ಬರದಲ್ಲಿ ಭಾರತೀಯ ಮೌಲ್ಯಗಳನ್ನು - ಭಾರತೀಯತೆಯನ್ನು ಅರಸುವುದಾದರೂ ಎಲ್ಲಿ ? ಆಯಾ ದಿನಕ್ಕೇ ಮುಗಿದುಹೋಗುವ ಯಾವುದೇ ಆಚರಣೆಗಳು ಅರ್ಥಪುಷ್ಟಿಯನ್ನೂ ಹೊಂದುವುದು ಬೇಡವೆ ? ಯಾವುದೇ ಸ್ವಾತಂತ್ರ್ಯವು "ಮಂಗನ ಕೈಯ್ಯಲ್ಲಿರುವ ಮಾಣಿಕ್ಯ" ಅನ್ನಿಸಿದರೆ ಏನು ಫಲ ? ಭಾರತವು ಸ್ವತಂತ್ರ ರಾಷ್ಟ್ರವಾದುದಕ್ಕೆ ಇಂತಹ ದುರವಸ್ಥೆಯೆ ?

ಅತ್ತ - ಹೊಟ್ಟೆಪಾಡಿಗಾಗಿ ಕಳ್ಳ ಸುಳ್ಳ ಕೊಲೆಗಾರ ಭಯೋತ್ಪಾದಕರ ಪರವಾಗಿ ವಕಾಲತ್ತು ನಡೆಸುತ್ತ, ಇತ್ತ - ಸಮಾಜಕ್ಕೆ ತತ್ತ್ವ ಬೋಧನೆ ನಡೆಸುವ, ನಮ್ಮ ನಡುವಿನ ಗೋಸುಂಬೆ ಶಿಕ್ಷಿತರು, ತಮ್ಮ ಆತ್ಮಸಾಕ್ಷಿಯನ್ನು ಜಾಗ್ರತಗೊಳಿಸಿಕೊಳ್ಳುವ ಅಗತ್ಯವಿಲ್ಲವೆ ? ಸ್ವಾತಂತ್ರ್ಯಕ್ಕಾಗಿ ಆತ್ಮಾಹುತಿ ನೀಡಿದವರು - ನಿಜವಾಗಿಯೂ ಸತ್ತು ಬದುಕಿದರು ! ಇವನ್ನೆಲ್ಲ ನೋಡುವ ಕಷ್ಟದಿಂದ ಒಮ್ಮೆಗೇ ಪಾರಾದರು ! ಬ್ರಿಟಿಷರು ಎಂಬ ಕ್ಯಾನ್ಸರ್ ಗಡ್ಡೆಯನ್ನು ಕತ್ತರಿಸಿಕೊಂಡ ನಂತರವೂ ನಮ್ಮ "ಭಾರತದ ಭಾವಶರೀರ"ವು ದುರದೃಷ್ಟವಶಾತ್ - ಪೂರ್ವದ ಭಾವಸ್ಥಿತಿಗೆ ಬರಲೇ ಇಲ್ಲ.

ಸ್ವಾತಂತ್ರ್ಯಾನಂತರದ ಆರಂಭಿಕ ಅವಧಿಯಲ್ಲಿ ಭಾರತೀಯರು ಬಳಲಿ ಬಸವಳಿದು ಹೋಗಿದ್ದರು. ಮುಂದೆ ಬರಬರುತ್ತ... ಭಾರತದ ಸ್ವಾತಂತ್ರ್ಯವು ಸ್ವಚ್ಛಂದತೆಯತ್ತ ವಾಲಿತ್ತು. ಇವೆರಡರ ನಡುವಿನ ಅವಧಿಯೇ ಭಾರತದ ಇಂದಿನ ಉದ್ಧಟಸ್ಥಿತಿಗೆ ಕಾರಣವಾಗಿತ್ತು. ಆರಂಭದಲ್ಲಿಯೇ ಭಾರತೀಯ ಶೈಲಿಯ ಭಾವೈಕ್ಯಕ್ಕೆ ಒತ್ತು ಕೊಡಬೇಕಾಗಿತ್ತು. ಆದರೆ ಗೊಂದಲದ ಶೈಕ್ಷಣಿಕ ನೀತಿಯಿಂದಾಗಿ ಅದು ನಡೆಯಲಿಲ್ಲ. ಭಾರತವು ಪಾಶ್ಚಾತ್ಯರ ಪೊಳ್ಳು ಅನುಕರಣೆಯ ಗುಲಾಮಗಿರಿಯನ್ನು ಬಿಡಲೇ ಇಲ್ಲ; ಅದನ್ನು ಪ್ರತಿಷ್ಠೆಯ ಸಂಕೇತವಾಗಿ ಆರಾಧಿಸುತ್ತ ಬಂದರು. ಒಂದಷ್ಟು ಮಂದಿ ಕೊನೆಗೂ ಭಾರತೀಯರಾಗಲೇ ಇಲ್ಲ. ಹೌದು. ಭಾರತೀಯತೆ ಕಳೆದು ಹೋಗಿದೆ !

ಇದು ಭಾರತದ - ಸ್ವಾತಂತ್ರ್ಯದ ಕತೆಯೂ ಹೌದು; ಸ್ವಾರ್ಥದ ಕತೆಯೂ ಹೌದು. ಯಾವತ್ತೂ ಮಹಾ ಸ್ವಾರ್ಥಿಗಳಿಂದ ಯಾವುದೇ ಮಹತ್ಸಾಧನೆಯಾಗಲಾರದು. ಸ್ವಾರ್ಥಿಗಳೇ ಸಾಮಾಜಿಕ ಬಂದಳಿಕೆಗಳು. ದುರದೃಷ್ಟವಶಾತ್ ಅವರೇ ಭಾರತದ "ಗುರುತು"ಗಳಾಗಿ ಹೋಗಿದ್ದಾರೆ. ಸಿಂಬಳ ಗಿಂಬಳ ಕುಮಂಗಳಗಳ Symbol ಗಳಾಗಿ ಕೂತಿದ್ದಾರೆ. ಹತ್ತಾರು ರಾಜರುಗಳನ್ನು ಕೆಳಗಿಳಿಸಿ, ಇಂದು, ಸಾವಿರಾರು ರಾಜರುಗಳು ದರ್ಬಾರು ನಡೆಸುತ್ತಿರುವ ಭಾರತದ ಪ್ರಭುತ್ವದ ಸ್ವತಂತ್ರ ಶೈಲಿಯನ್ನು ಜನರು ಅಸಹಾಯಕರಾಗಿ ನೋಡುತ್ತಿದ್ದಾರೆ.

ಹೀಗಿದ್ದೂ... ಇದೇ ಭಾರತದಲ್ಲಿ ವಿವೇಕಾನಂದ, ಸ್ವಾಮಿ ರಾಮರಂತಹ ಅನೇಕ ಮಹಾನ್ ವ್ಯಕ್ತಿಗಳೂ ಉದಿಸಿ ಬಂದುದು ಈ ನೆಲದ ಆಧ್ಯಾತ್ಮಿಕ ವಿಶೇಷ. ಇಂದೂ ಅಂತಹ ಅನೇಕ ಮಹಾ ಸಾಧಕರು ಭಾರತದಲ್ಲಿ ಇದ್ದಾರೆ. ಆದರೆ ಅವರು, ತಮ್ಮ ವಂದಿ ಮಾಗಧರ ವಾಹನಗಳ Caravan ನಡೆಸುತ್ತ ತಮಟೆ ಸದ್ದು ಮಾಡುವುದಿಲ್ಲ; ಇತರ ಸಾಮಾಜಿಕರ ಬದುಕನ್ನು ಯಾವತ್ತೂ ನಿಕೃಷ್ಟಗೊಳಿಸುವುದಿಲ್ಲ. ಇಂತಹ ಪುಣ್ಯಾತ್ಮರಿಂದಲೇ ಭಾರತವು ಇನ್ನೂ ನಗುತ್ತಿದೆ.

ಸೀತಾನ್ವೇಷಣೆಗೆಂದು ಲಕ್ಷ್ಮಣ ಮತ್ತು ಕಪಿವೀರರೊಂದಿಗೆ ಸಮುದ್ರತೀರಕ್ಕೆ ಬಂದ ಶ್ರೀರಾಮನು ಮೊದಲು ತಲೆ ಬಾಗಿ ಸಾಗರನಿಗೆ ನಮಿಸಿ, ದಾರಿ ಬಿಡುವಂತೆ ಪ್ರಾರ್ಥಿಸಿದ. ಆತನ ತೇಜ, ಬಲ, ಬುದ್ಧಿ ಮತ್ತು ಆತನ ಒಂದ ಬಾಣವು ನೂರು ಸಾಗರಗಳನ್ನು ಬತ್ತಿಸಬಲ್ಲುದಾಗಿದ್ದರೂ ರಾಮನು ಸೌಜನ್ಯದ ಗೆರೆ ದಾಟಲಿಲ್ಲ. ಮೂರು ದಿನಗಳ ಕಾಲ ಕಾದರೂ ಸಾಗರನು ಶ್ರೀರಾಮನ ಪ್ರಾರ್ಥನೆಗೆ ಕಿವಿಗೊಡದಿದ್ದಾಗ ಆತ ಹೇಳಿದ ಮಾತು ಅರ್ಥಪೂರ್ಣವಾಗಿದೆ. "ಲಕ್ಷ್ಮಣಾ, ನನ್ನ ಧನುರ್ಬಾಣಗಳನ್ನು ಇತ್ತ ಕೊಡು. ಶಠನಲ್ಲಿ ವಿನಯ, ಕುಟಿಲನ ಜೊತೆ ಪ್ರೀತಿ, ಜಿಪುಣನಿಗೆ ದಾನದ ಮಹತ್ವ, ಮಮತ್ವವುಳ್ಳವನಿಗೆ ಉಪದೇಶ, ಕಾಮುಕನಿಗೆ ಹರಿಕಥೆಯ ಬೋಧನೆ - ಇವೆಲ್ಲದರ ಫಲವು ಬಂಜರು ಭೂಮಿಯಲ್ಲಿ ಬಿತ್ತನೆ ಮಾಡಿದಂತೆ.. ವ್ಯರ್ಥ." ಶ್ರೀರಾಮನು ಧನುಸ್ಸಿಗೆ ಹೆದೆಯೇರಿಸಿ ಅಗ್ನಿಬಾಣವನ್ನು ಸಂಧಿಸಿದನು. ಸಾಗರನು ತಲ್ಲಣಿಸಿದನು. ಆಗ ನಡುಗುತ್ತ ಬಂದು ಶ್ರೀರಾಮನ ಚರಣಗಳಿಗೆ ಶರಣಾದನು. ವಾನರ ಸೇನೆಯ ಸಮೇತ ಶ್ರೀರಾಮ ಲಕ್ಷ್ಮಣರು ಸಾಗರ ದಾಟಿದರು. ಜೀವ ಸಮುದ್ರವನ್ನು ನಿಯಂತ್ರಿಸಲು ಶಕ್ತಿ ಪ್ರಯೋಗವು ಅನಿವಾರ್ಯ ಎಂಬ ಸಂದೇಶವನ್ನು ಇಲ್ಲಿ ಗಮನಿಸಬಹುದು.

ತುಲಸೀ ರಾಮಾಯಣದಲ್ಲಿ ಒಂದು ಪ್ರಸಂಗ ಬರುತ್ತದೆ. ಮಾನಸ ಸರೋವರದ ಹತ್ತಿರ ವಾಸವಾಗಿದ್ದ ಕಾಕಭುಶುಂಡಿ ಎಂಬ ದೊಡ್ಡ ಕಾಗೆಯೊಂದು ಗರುಡನಿಗೆ ರಾಮಾಯಣವನ್ನು ಹೇಳಿದ ಪ್ರಸಂಗವದು. ಈ ಕಾಕಭುಶುಂಡಿಯು ಮೊದಲು ಹರಿದ್ವೇಷಿಯಾಗಿದ್ದು, ಗುರುವನ್ನು ಅಲಕ್ಷ್ಯ ಮಾಡಿದುದರಿಂದ  ಹೆಬ್ಬಾವಾಗಿ ಹುಟ್ಟಿ, ಶಾಪ ವಿಮೋಚನೆ ಹೊಂದಿದ ಮೇಲೆ ಲೋಮಶ ಎಂಬ ಮುನಿಯೊಡನೆ ಒಣಚರ್ಚೆ ಮಾಡಿ ಮುನಿಕೋಪಕ್ಕೆ ಗುರಿಯಾಗಿ, ಕಾಗೆಯಾಗಿತ್ತು. ಕಾಕ ಜನ್ಮದಲ್ಲಿ, ತೆಪ್ಪಗೆ ಹರಿಸ್ಮರಣೆಯಲ್ಲಿ ನಿರತವಾಗಿದ್ದ ಕಾಕಭುಶುಂಡಿಯು ತನ್ನನ್ನು ಭೇಟಿಯಾದ ಗರುಡನಿಗೆ ರಾಮಾಯಣ ದರ್ಶನ ಮಾಡಿಸುತ್ತ ಸಾಂದರ್ಭಿಕವಾಗಿ ಹೇಳಿದ ಮಾತಿದು : "ಗರುಡಾ, ಬಾಳೆಯು ಚಿಗುರಲು ಅದರ ತಲೆ ಕತ್ತರಿಸಲೇಬೇಕು. ನೀರೆರೆದರೆ ಸಾಲದು..." ತಾಡನಕ್ಕೆ ಅರ್ಹರಾದವರನ್ನು ಸೊಕ್ಕಿ ಬೆಳೆಯಲು ಬಿಟ್ಟರೆ ಯಾವುದೇ ಸಮಾಜವು ಕಳೆ ಗಿಡಗಳದೇ ವೃಂದಾವನವಾದೀತು. ಕಾಗೆಗೂ ತಿಳಿದ ವಿಚಾರವು ಮನುಷ್ಯರಿಗೆ ತಿಳಿಯುವುದು ಕಷ್ಟವೆ ? ತಿಳಿಸುವ ವಾತಾವರಣವನ್ನು ಮೂಡಿಸಿದರೆ ಸಾಕಾಗುತ್ತದೆ. ಆದ್ದರಿಂದ ಶಿಕ್ಷೆ ರಕ್ಷೆಗಳ ಸಮತೋಲನ ಮತ್ತು ವಿಚಾರ ಸ್ವಚ್ಛತೆಯತ್ತ ಗಮನ ಹರಿಸುವುದು ಇಂದಿನ ತುರ್ತು ಅಗತ್ಯವೂ ಆಗಿದೆ.  

ಅದಕ್ಕಾಗಿ - ನಮಗೆ ಸ್ವಚ್ಛ ಬದುಕಿನ - ಸ್ಪಷ್ಟ ವಿಚಾರದ - ಸ್ವಾರ್ಥರಹಿತ ನೇತೃತ್ವವೊಂದು ತುರ್ತಾಗಿ ಬೇಕಿತ್ತು. ಜನರು ಬರಗೆಟ್ಟಿದ್ದರು. ಹೇಗೂ ಬಹು ದೀರ್ಘ ಕಾಲದ ವರೆಗೆ ಅದು ದೊರೆಯಲಿಲ್ಲ. ಆದರೆ ಈಗ ಅದು ದೊರೆತಿದೆ. ಭಾರತಕ್ಕೆ ಬಡಿದಿದ್ದ ರೋಗದ ಕಾರಣ ಲಕ್ಷಣಗಳನ್ನೆಲ್ಲ ಸರಿಯಾಗಿ ಅರ್ಥ ಮಾಡಿಕೊಂಡಿರುವ ಪ್ರಧಾನಿಯೊಬ್ಬರು ಈಗ ನಮಗೆ ಒದಗಿದ್ದಾರೆ. ಒಳಗೊಳಗೇ ಗುಂಯ್ ಗುಡುತ್ತ ಜೇನು ಸವಿಯುತ್ತಿದ್ದ ನೊಣಗಳನ್ನು ಹೊಗೆ ಹಾಕಿ ಹೊರಗೆ ಎಳೆಯುತ್ತಿದ್ದಾರೆ.

ಇಂದಿನ ಪ್ರಧಾನಿಯವರು ಹೊತ್ತಿರುವ ಭಾರವು ಅಂತಿಂತಹುದಲ್ಲ. ಹನುಮನ ಜಾಣ್ಮೆ, ಏಕಾಗ್ರತೆ, ಶಕ್ತಿಯನ್ನು ಅಪೇಕ್ಷಿಸುವ ಕೆಲಸವಿದು. "ರಾಮಕಾರ್ಯ" ಎಂದುಕೊಂಡೇ ಅವರು ಕರ್ತವ್ಯವನ್ನು ನಿರ್ವಹಿಸುತ್ತಿರುವಂತೆಯೂ ಕಾಣುತ್ತಿದೆ. ಇಂದಿನ ಚುನಾವಣೆಗಳೆಂಬ ವೋಟಿನ ಖೋಟಾ ನಾಟಕವನ್ನು ಶುದ್ಧೀಕರಿಸಿ, ರಾಷ್ಟ್ರಭಾವವನ್ನು ಉದ್ದೀಪನಗೊಳಿಸಿ, ಭಾರತವು ಹೊಸ ಕನಸನ್ನು ಪುನಃ ಕಾಣುವಂತಾಗಲು ಮತ್ತು ಹಾಗೆ ಕಂಡ ಕೆಲವು ಕನಸುಗಳಾದರೂ ನನಸಾಗಲು - ಶ್ರೀ ನರೇಂದ್ರ ಮೋದಿಯವರ ನೇತೃತ್ವದ 15 ವರ್ಷಗಳಾದರೂ ಬೇಕಾದಾವು.


ಪ್ರಾಮಾಣಿಕ ಪ್ರಧಾನಿಯೇ ನಮ್ಮ ಇಂದಿನ ಆಸ್ತಿ. ಭಾರತದಲ್ಲಿ ಇಂದು ವಿಜೃಂಭಿಸುತ್ತಿರುವ ದುಷ್ಟತನವನ್ನು ಶಿಷ್ಟವಾಗಿಸಬಲ್ಲ ಸ್ವಚ್ಛ ಬದುಕು, ದೃಢ ಚಿತ್ತ, ಸುಸಂಸ್ಕೃತ ಸಂವಹನ ಮತ್ತು ವಜ್ರಸಂಕಲ್ಪದೊಂದಿಗೆ ವಿಶಿಷ್ಟ ತಂತ್ರಗಾರಿಕೆಯೂ ಶ್ರೀಮಾನ್ ಮೋದಿಯವರಲ್ಲಿದೆ. ಅವರ ಸಂಪುಟದ ಸಹಚರರ ಪೂರ್ಣ ಸಹಕಾರವೂ ದೊರೆತರೆ ಸುದೀರ್ಘ ಕಾಲದ ಪ್ರಯತ್ನದಿಂದ ಹಲವರು ಸೇರಿ ದುರ್ಬಲಗೊಳಿಸಿ ಬಡವಾಗಿಸಿದ್ದ ನಮ್ಮ ಭಾರತವನ್ನು - ಭವ್ಯ ಭಾರತವಾಗಿಸಲು ಇದೊಂದು ಸುಸಂದರ್ಭ.  

ಅದಕ್ಕಾಗಿ, ನಮ್ಮ ಜನರಿಗೆ ಯಾವುದೇ ರಿಯಾಯಿತಿ, ಉಚಿತದ ಪ್ರದರ್ಶನ ಅಥವ ಭಾಗ್ಯದ ವಿತರಣೆ ಎಂಬ ಅಗ್ಗದ ತೋರಿಕೆಯ ಯಾವುದೇ ಅಗತ್ಯವಿಲ್ಲ. ದೇಶದಲ್ಲಿ ಸಮಾನತೆಯ ಪರಿಸರ ಏರ್ಪಡಲಿ. ಎಲ್ಲರೂ ಶಾಂತಿಯಿಂದ ಸಹಜವಾಗಿ ಬದುಕಲು ಸಾಧ್ಯವಾಗುವಂತಹ ಸುರಕ್ಷಿತ, ಸುಂದರ, ಸೋದರ ವಾತಾವರಣವು ಮೂಡುವಂತಾದರೆ ಅಷ್ಟೇ ಸಾಕು. ತಮ್ಮ ಕೆಲವೇ ಕೆಲವು ಸಮಾನ ಮನಸ್ಕ ಸಹಯಾತ್ರಿಗಳ ಬೆಂಬಲವೂ ದೊರೆತಲ್ಲದೆ ಮೋದಿಯವರ ಕನಸಿನ - ಯಾವುದೇ ಸುಧಾರಣೆಯ ಅಥವ ನೇರ್ಪುಗೊಳಿಸುವ ಕಾರ್ಯಭಾರದ ದಾರಿಯು ಸುಗಮವಾಗಲಾರದು. ಏಕೆಂದರೆ ಭಿನ್ನಷಡ್ಜದಲ್ಲಿ ಹಾಡುವ ಅಮ್ಮ ಅಯ್ಯಂದಿರು ಮೋದಿಯವರ ವೃತ್ತದೊಳಗೂ ಇದ್ದಾರೆ. ಆದ್ದರಿಂದ ಮೈಯೆಲ್ಲ ಎಚ್ಚರವಿರುವ ಅನಿವಾರ್ಯತೆಯೂ ಇದೆ. ಅವರ ಪ್ರಧಾನಿ ಪಟ್ಟವು ಹುಲಿ ಸವಾರಿ ಮಾಡಿದಂತೆ. ಅವರ ನೆಚ್ಚಿನ "ಭಾಯಿಯೋಂ ಔರ್ ಬೆಹನೋಂ" ಗಳಲ್ಲಿ ಹಲವರು ಗೆದ್ದೆತ್ತಿನ ಬಾಲ ಹಿಡಿಯುವವರೇ. ಭಾರತದ ಸ್ವಭಾವ ಅದು. ಆದ್ದರಿಂದ ಅಮೂರ್ತ ಶಕ್ತಿಯೇ ಅವರನ್ನು ಕಾಪಾಡಬೇಕು. ಮೋದಿಯವರು ಪಕ್ಷವನ್ನು ಮೀರಿದ ಮುತ್ಸದ್ದಿಯಾಗಿ ಇಡೀ ಭಾರತದ ಧ್ವನಿಯಾಗಲಿ ಎಂಬ ಅಪೇಕ್ಷೆಯೂ ಜನರಲ್ಲಿದೆ.

ಶ್ರೀ ಮೋದಿಯವರ ನಿದ್ರೆಯಿಲ್ಲದ ಇದುವರೆಗಿನ ಕಠಿಣ ದುಡಿಮೆಯೂ - "ರಾವಣನ ಹೊಟ್ಟೆಗೆ ಕಾಸಿನ ಮಜ್ಜಿಗೆ"ಯಂತಾಗಿದೆ. ಆದ್ದರಿಂದ ಸ್ವಾತಂತ್ರ್ಯ ದಿನದ ಈ ಶುಭ ಸಂದರ್ಭದಲ್ಲಿ - ಭಾರತೀಯತೆ ಮತ್ತು ಭಾರತೀಯರ ಆಶಾಕಿರಣದಂತಿರುವ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಆರೋಗ್ಯ, ಆಯುಷ್ಯ, ಭಾಗ್ಯಲಾಭಕ್ಕಾಗಿ ಪ್ರಾರ್ಥಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ಇಂತಹ ಸಮರ್ಥ ಪ್ರಧಾನಿಯ ನೇತೃತ್ವದಲ್ಲಿ ಮುನ್ನಡೆಯುತ್ತಿರುವ ಭಾರತದಲ್ಲಿ - ಬರಲಿರುವ ದಿನಗಳು ಪ್ರಜೆಗಳನ್ನು ತೃಪ್ತಿಯತ್ತ ಕರೆದೊಯ್ಯಲಿ ಎಂದು ಭಾರತೀಯರೆಲ್ಲರೂ ಹೃತ್ಪೂರ್ವಕವಾಗಿ ಹಾರೈಸಬೇಕಾಗಿದೆ.

ಸನ್ಮಾನ್ಯ ಶ್ರೀ ನರೇಂದ್ರ ಮೋದಿಯವರ ನೇತೃತ್ವದ ಇಂದಿನ ಭಾರತವು - ಈಗ ಭದ್ರತೆಯ ಭಾವವನ್ನು ಆಸ್ವಾದಿಸಲು ಆರಂಭಿಸಿದೆ ಅಷ್ಟೆ. ಭಾರತದಾದ್ಯಂತ ಕಣ್ಣಿಗೆ ಕಾಣುವಂತಹ ಇತ್ಯಾತ್ಮಕ ಬದಲಾವಣೆಯನ್ನು ಮುಂದಿನ ಎರಡು ವರ್ಷಗಳಲ್ಲಿ  ಮೋದಿಯರಿಂದ ಭಾರತವು ನಿರೀಕ್ಷಿಸುತ್ತಲೂ ಇದೆ. ದಿಕ್ಕುಗಾಣದ ಪೂರ್ವಾಗ್ರಹೀ ಬೇತಾಳಗಳು, ದೇಶದ ಬೆಲೆಯನ್ನು ತೆತ್ತು ಪಕ್ಷ ರಾಜಕಾರಣದಲ್ಲೇ ಮುಳುಗಿರುವ ಮಿತ ವರ್ಗವನ್ನು ಬಿಟ್ಟು ಉಳಿದ ಬಹುಸಂಖ್ಯಾಕರಿಗೆ ಮೋದಿಯವರಲ್ಲಿ ಅಪಾರ ವಿಶ್ವಾಸವಿದೆ; ನಿರೀಕ್ಷೆಯೂ ಇದೆ. ಆದರೆ... ಸುದೀರ್ಘ ಕಾಲದ ಪಟ್ಟಭದ್ರ ದುರವಸ್ಥೆಗಳಿಗೆ ಒಗ್ಗಿಕೊಂಡ ಒಂದು ಬೃಹತ್ ಆಡಳಿತ ಯಂತ್ರವನ್ನು ಅಂಕುಶದಿಂದ ನಿಯಂತ್ರಿಸಬೇಕಾದ ವಿಶಿಷ್ಟ ಸವಾಲೂ ಅವರ ಮುಂದಿದೆ. ಪ್ರವಾಹದ ವಿರುದ್ಧ ದಿಕ್ಕಿನಲ್ಲಿ ಈಜಬೇಕಾಗಿರುವ ಪ್ರಧಾನಿಯವರಿಗೆ ಭೀಮಬಲದ ಶ್ರೀರಕ್ಷೆಯೊದಗಿ, ತನ್ಮೂಲಕ ಭಾರತವು ಅನೀತಿಯಿಂದ ನೀತಿಯೆಡೆಗೆ, ಅಶಾಂತಿಯಿಂದ ಶಾಂತಿಯೆಡೆಗೆ, ಅಧರ್ಮದಿಂದ ಧರ್ಮದೆಡೆಗೆ ಸಾಗುವಂತಾಗಲಿ - ಎಂದು ಭಾವುಕ ಭಾರತೀಯರು ಆಶಿಸಬೇಕಾದ ಶುಭ ಸಂದರ್ಭವಿದು. 

ನಮ್ಮ ಪ್ರಧಾನಿ ಮೋದಿಯವರಿಗೂ ಶ್ರೀ ರಾಮಕೃಷ್ಣರೆಂಬ ಸ್ಪರ್ಶಮಣಿಯ ಸಂಪರ್ಕವಾಗಿದೆ. ಬದುಕಿನ ಎಲ್ಲ ಮುಖಗಳನ್ನೂ ಕಂಡು ಅನುಭವಿಸಿದ ಅಪಾರ ಲೋಕಜ್ಞಾನವಿದೆ. ಆದ್ದರಿಂದ ಗುಜರಾತಿನ ನರೇಂದ್ರ ಮೋದಿ ಎಂಬ ರಖ್ತೂರಾಮನೂ ಭಾರತೀಯರಲ್ಲಿ ಅದ್ಭುತಾನಂದದ ಸೆಲೆಯನ್ನು ಹೊರಹೊಮ್ಮಿಸಿಯಾರು; ಭಾರತದ ಭಾಗ್ಯವಿಧಾತರಾದಾರು ಎಂದು ಆಶಿಸೋಣ.

"This is the new religion of this age - the synthesis of yoga, knowledge, devotion and work - the propagation of knowledge and devotion to all, down to the very lowest, without distinction of age or sex. 
                                                -  Swami Vivekananda

ಸ್ವಾತಂತ್ರ್ಯ ದಿನದಂದು ಒಳಿತಿನ ಹಾರೈಕೆಗಳು. ದೇಶಬಂಧುಗಳ ನಡುವಣ ಶುಭ ಕಾಮನೆಗಳು ನಿಲ್ಲದಿರಲಿ; ಸದಾ ಅನುರಣಿಸುತ್ತಿರಲಿ.

                                    ಸರ್ವಸ್ತರತು ದುರ್ಗಾಣಿ ಸರ್ವೋ ಭದ್ರಾಣಿ ಪಶ್ಯತು
                                    ಸರ್ವಸ್ಸುಖಮವಾಪ್ನೋತು ಸರ್ವಸ್ಸರ್ವತ್ರ ನಂದತು 11
                                                                             
                                                                ()()()()()()()()