Sunday, June 12, 2016

ಮಿಥ್ಯಾ ಕತೆಗಳಿಂದ ಏರಬಲ್ಲೆವೆ ?

    ದೀರ್ಘ ಕಾಲ ತಮ್ಮ ತಮ್ಮ ಕುಟುಂಬದ ಸದಸ್ಯರನ್ನು ಸಂಭಾಳಿಸಿಕೊಳ್ಳುತ್ತ ಮನೆಯನ್ನು ಕಟ್ಟಿ ಬೆಳೆಸಿದ ಕೂಡು ಕುಟುಂಬಗಳ ಹಿರಿಯರು ಬದುಕಿನಿಂದ ನಿರ್ಗಮಿಸಿದ ನಂತರವೂ ಊರ ಮಂದಿಯು ಅಂತಹ ಹಿರಿಯರನ್ನು ಬಗೆಬಗೆಯಾಗಿ ಸ್ಮರಿಸಿಕೊಳ್ಳುತ್ತಿದ್ದುದನ್ನು ನೋಡಿದವರು, ಕೇಳಿದವರು ಈಗಲೂ ಇದ್ದಾರೆ. ನೋವು ನಲಿವುಗಳನ್ನು ಭರ್ಜರಿಯಾಗಿ ಉಂಡು ಜೀರ್ಣಿಸಿಕೊಂಡ ಗಟ್ಟಿ ವ್ಯಕ್ತಿತ್ವಗಳನ್ನು - "ಗಂಧದಂತೆ ಕುಟುಂಬಕ್ಕಾಗಿ ದೇಹ ಸವೆಸಿದವರು... ಬದುಕನ್ನು ತೇದವರು..", "ಕತ್ತೆಯಂತೆ ದುಡಿದುಡಿದು ಸತ್ತವರು...", "ಎಲ್ಲವನ್ನೂ ಹೊಟ್ಟೆಗೆ ಹಾಕಿಕೊಂಡು ಮನೆ ಬೆಳಗಿದವರು..." ಎಂದೆಲ್ಲ ಜನಪದರು ಸ್ಮರಿಸಿಕೊಳ್ಳುವುದಿತ್ತು. ಬಹುಪಾಲು ಜನರು ಅವರವರ ಕರ್ತವ್ಯಕ್ಕೇ ಹೆಚ್ಚಿನ ಪ್ರಾಶಸ್ತ್ಯ ಕೊಡುತ್ತಿದ್ದ ಕಾಲಘಟ್ಟವದು. ತಮ್ಮ ಕರ್ತವ್ಯಗಳಿಗೆ ತಾವೇ "ತ್ಯಾಗ" ದ PATENT ನ್ನೂ ತಗಲಿಸಿಕೊಳ್ಳುತ್ತಿದ್ದ ಕಾಲವೂ ಅದಾಗಿರಲಿಲ್ಲ. ಆದರೆ "ಕಾಲ ಬದಲಾಗಿದೆ - ಕಾಲ ಬದಲಾಗಿದೆ" ಎಂದು ಹೇಳಿಕೊಳ್ಳುತ್ತಲೇ... ಈಗ ಜನರು ಬದಲಾಗುತ್ತಿದ್ದಾರೆ. ತಲೆಮಾರುಗಳ ಜತೆಗೇ ಸೂತ್ರ, ಮೌಲ್ಯಗಳೂ ಪರಿವರ್ತನೆಗೊಳ್ಳುವುದು - ನಿರಂತರ ನಡೆಯುತ್ತಲೇ ಬಂದಿರುವ ಚಕ್ರ. ಆದರೆ ಯಾವ ಸ್ಥಿತ್ಯಂತರವೂ ಬದುಕನ್ನು ನಿಲ್ಲಿಸಲಾಗದು. ಹಾಗೋ ಹೀಗೋ - ಅಂತೂ ಜೀವನ ಓಡುತ್ತಿದೆ; ಓಡುತ್ತದೆ.




    ಯಾವುದೇ ಬದುಕನ್ನು ಸಾರ್ಥಕವಾಗಿ ಸಾಗಿಸಲು ಪರಸ್ಪರ ಗೌರವವು ಅವಶ್ಯಕ. ಕೌಟುಂಬಿಕ ಬದುಕೂ ಇದಕ್ಕೆ ಹೊರತಲ್ಲ. ವೈವಾಹಿಕ ಬದುಕಿಗೆ ಪರಸ್ಪರ ಗೌರವವು ಬುನಾದಿ. ಆದರೂ ಕೇವಲ ಗೌರವ ಮಾತ್ರದಿಂದಲೇ ಹಸನಾದ ಸಾಂಸಾರಿಕ ಬದುಕನ್ನು ಕಟ್ಟಿಕೊಳ್ಳುವುದು ಅಸಾಧ್ಯ. ಗೌರವ ಪ್ರದರ್ಶನಗಳಿಂದಲೇ ಯಾವುದೇ ಸಂಸಾರವನ್ನು ಗಟ್ಟಿಯಾಗಿ ಕಟ್ಟಿದ ಉದಾಹರಣೆಗಳೂ ಇಲ್ಲ. ಅಂದರೆ - ಗೌರವದ ಪ್ರದರ್ಶನದಿಂದಲೇ ಸಂಸಾರಗಳು ಅರಳಲಾರವು. ಯಾವುದೇ ಸಂಸಾರ ಪೋಷಣೆಯ ಯಶಸ್ಸಿಗೆ ಪರಸ್ಪರ "ಪ್ರೀತಿಪೂರ್ವಕ ಗೌರವ " ವು ಅವಶ್ಯಕ. 

    ಎಲ್ಲದಕ್ಕೂ ಮೊದಲು "ಬದ್ಧತೆಯ ತಳಪಾಯ" ಎಂಬುದು ಅತೀ ಅವಶ್ಯಕ. ಈ "ಬದ್ಧತೆ" ಅನ್ನುವುದು ಕೂಡ ಅವರವರ ದೃಷ್ಟಿಕೋನವನ್ನು ಪ್ರತಿನಿಧಿಸುತ್ತ ತಾರ್ಕಿಕ ಪರಿವರ್ತನೆಗೆ ಒಳಗಾಗುತ್ತಲೇ ಇದೆ. ವಾಸ್ತವವಾಗಿ, ಕೆಲವೊಮ್ಮೆ - ಮನಸ್ಸುಗಳನ್ನು ಮುರಿದು ಹೊಸದಾಗಿ ಕಟ್ಟಿಯಾದರೂ... "ಕುಟುಂಬದ ಬದ್ಧತೆ" ಎಂಬ ಗೌರವದ ಮುಸುಕಿನೊಳಗೇ ಪ್ರೀತಿಯ ಆವಿರ್ಭಾವ ಆಗಬೇಕಾಗುತ್ತದೆ; ಕೃತಕ ಗರ್ಭಧಾರಣೆಯಿಂದಲೂ ಸಂತಾನ ಪ್ರಾಪ್ತಿ ಮಾಡಿಕೊಳ್ಳುವಂತೆ ! ಹೀಗೆ ತಾವೇ ಅಷ್ಟಿಷ್ಟು ಬದಲಾಗುತ್ತ ಸಂಸಾರವನ್ನು ನಿಭಾಯಿಸಿದವರೂ ದೊಡ್ದ ಸಂಖ್ಯೆಯಲ್ಲಿ ಇದ್ದಾರೆ ! 

    ಇತ್ತ - ಅಸ್ಮಿತೆಗೇ ಪೂರ್ತಿಯಾಗಿ ಜೋತುಬಿದ್ದು ಸಂಸಾರಗಳನ್ನು ಕಲಕಿಸಿಕೊಂಡವರೂ ಇದ್ದಾರೆ. ಹೀಗಿದ್ದರೂ... ಪ್ರಸ್ತುತ ಸಮಾಜದಲ್ಲಿ ಲೋಗರ ಯಶಸ್ಸು ಅಪಯಶಸ್ಸಿನ ಲೆಕ್ಕಕ್ಕೆ ಅಥವ ಅಂತಹ ಲೆಕ್ಕಿಗರಾಗುವುದಕ್ಕೆ ಯಾರಿಗೂ ಆಸ್ಪದವಿಲ್ಲ. ಅದನ್ನು ನಿರ್ಧರಿಸಬೇಕಾದ್ದು ಮತ್ತು ತತ್ಪರಿಣಾಮಕ್ಕೆ ಬಾಧ್ಯರಾಗಬೇಕಾದುದು ಆಯಾ ಕೌಟುಂಬಿಕ ಪಾತ್ರಧಾರಿಗಳೇ. ಒಂದೊಂದು ಬದುಕಿನ ಶೈಲಿ, ನಿರೀಕ್ಷೆ, ಕಲ್ಪನೆಗಳು ಒಂದೊಂದು ರೀತಿಯದಾಗಿರುವ ಈ ಸಂಸಾರ ಜಾಲದಲ್ಲಿ, ಯಾವುದೇ ಸಿದ್ಧಸೂತ್ರಗಳು ಅವಿನಾಶಿಯಾಗಿ ಉಳಿದುಕೊಳ್ಳುವುದೂ ಅಪ್ರಾಯೋಗಿಕ. ಇದು - ಸಂಸಾರ ಎಂಬ ಸಂಸ್ಥೆಯ ಬಲವೂ ಹೌದು; ದೌರ್ಬಲ್ಯವೂ ಹೌದು ! ಈಗಲೂ ಒಗಟಾಗಿಯೇ ಇರುವ ಸಂಸಾರದ ಗುಟ್ಟನ್ನು ಪೂರ್ತಿಯಾಗಿ ಬಲ್ಲವರು ಮಾತ್ರ - ಯಾರೂ ಇಲ್ಲ. ಆದ್ದರಿಂದಲೇ ಅದನ್ನು ಸುಲಭವಾಗಿಸಿಕೊಳ್ಳುವ ಜಾಣರಾಗಬೇಕೇ ವಿನಹ ಸವಾಲೊಡ್ಡುವ ಹುಂಬತನ - ಎಂದಿಗೂ ಮಾಡಬಾರದು. 

    ಆದರೆ ನೆನಪಿನಲ್ಲಿರಬೇಕಾದ ಅಂಶವೊಂದಿದೆ. ಈ ಬದುಕು ಎಂಬುದು ONE WAY ಆಗಿರುವುದರಿಂದ ಹಿಂ-ಚಲನೆಗೆ ಇಲ್ಲಿ ಅವಕಾಶವಿರುವುದಿಲ್ಲ ಎಂಬುದನ್ನು ಮಾತ್ರ ಯಾರೂ ಮರೆಯಬಾರದು. ಇದನ್ನು - "ಎಚ್ಚರದ ಸೂತ್ರ" ಅಂದುಕೊಂಡರೆ - ಸಾಂಸಾರಿಕ ಆರೋಗ್ಯಕ್ಕೆ ಒಳ್ಳೆಯದು.

    ಇನ್ನು... ತಮ್ಮ ತಮ್ಮ ಸಂಸಾರವನ್ನು ಕಟ್ಟಿಕೊಳ್ಳುವ ಕಾಲದಲ್ಲಿ ಯಾರಾದರೂ ದಕ್ಷಿಣೆಯ ರೂಪದಲ್ಲಿ "ಬಾಹ್ಯ ಗಂಟಿಗೆ ಆಸೆ " ಪಟ್ಟರೆ ಅಥವ ಆಸೆ ಪಡದೆಯೂ ತಾವಾಗಿಯೇ ಹೊತ್ತುಕೊಂಡು ಬರಲು "ತ್ಯಾಗಿಗಳು ಅಂದುಕೊಂಡವರಿಗೆ " ಅನುಮತಿಸಿದರೂ - ಅದು ಅನುಚಿತ. ಹೀಗಿದ್ದರೂ ಪ್ರೀತಿಯ ನೆಲೆಯಲ್ಲಿ ಕಾಣಿಕೆಗಳ ಕೊಡುಕೊಳ್ಳುವ ವ್ಯವಹಾರವು - ಯಾವುದೇ ಸಂಬಂಧಗಳಲ್ಲಿ ಸ್ವಾಭಾವಿಕ. ಪ್ರೀತಿಯ ಸಂಕೇತದಂತೆ ನುಗ್ಗುವ ಯಾವುದೇ ಕಾಣಿಕಾಭೂತ ವನ್ನು ನಿಷ್ಕರುಣೆಯಿಂದ ಹೊಡೆದೋಡಿಸುವುದೂ ಸುಲಭವಲ್ಲ. ಇದು ಬಹಳ ಸೂಕ್ಷ್ಮವಾದ ವಿಷಯ. ಆದರೆ, "ಎಚ್ಚರ ತಪ್ಪಿದ ಅಪಾತ್ರ ಆಯ್ಕೆಯ" - ಸಂಬಂಧ ಸ್ಥಾಪನೆಯ ಸಂದರ್ಭಗಳಲ್ಲಿ ಮಾತ್ರ -  ಸ್ವಾಭಾವಿಕವಾದ ವ್ಯವಹಾರಗಳೂ ಒಮ್ಮೊಮ್ಮೆ ತಿರುಗಿ ನಿಂತು ಕಚ್ಚುವುದಿದೆ ! 

    ಇಂದಿನ ಅನೇಕ ಸಂದರ್ಭಗಳಲ್ಲಿ "ತ್ಯಾಗ" ಎಂಬುದು ಪರಸ್ಪರರ ಮೋಜಿನ ಸಾಮಗ್ರಿಯಾಗಿರುವುದೂ ಉಂಟು. ಕೆಲವು ಅಪಾತ್ರ - ಜಿಡುಕಿನ ನಂಟುಗಂಟುಗಳು ಹತ್ತಾರು ಕುಟುಂಬಗಳ ತಲೆನೋವಾಗಿ ಪೀಡಿಸುತ್ತಿರುವುದೂ ಸಾಮಾಜಿಕ ದಿಬ್ಬಣವಾಗಿ ಹೋಗಿದೆ ! 

    ಆದರೆ ಒಂದು ಪ್ರಶ್ನೆಯನ್ನು ಭಾರತೀಯ ನೆಲೆಯಲ್ಲಿ ಎಲ್ಲರೂ ಪ್ರಶ್ನಿಸಿಕೊಳ್ಳುವುದು ಒಳ್ಳೆಯದು. ಯಾವುದೇ ಕನ್ಯೆಯು ತವರನ್ನು ಬಿಟ್ಟು ಬರುವುದು ತ್ಯಾಗವೆ ? "ಏನೇನೆಲ್ಲವನ್ನು ಬಿಟ್ಟು ಬಂದೆ" ಅಂದುಕೊಳ್ಳುತ್ತ ಪಶ್ಚಾತ್ತಾಪದಿಂದ ಬೇಯುತ್ತ ಪತಿಗೃಹದ ಹೊಸ್ತಿಲು ದಾಟುವುದು ತ್ಯಾಗವೆ? ಮುಂದೆ ಗರ್ಭಿಣಿಯಾಗುವುದು ತ್ಯಾಗವೆ ? ಮಕ್ಕಳನ್ನು ಕಾಳಜಿಯಿಂದ ಬೆಳೆಸುವುದು ತ್ಯಾಗವೆ ? ತನ್ನ ಮನೆಯ ಯೋಗಕ್ಷೇಮವನ್ನು ತಾನು ನಿಭಾಯಿಸುವುದು ತ್ಯಾಗವೆ ? 

    ಇನ್ನೊಂದು ದಿಕ್ಕಿನಲ್ಲಿ, ಗಂಡು ತನ್ನ ಜವಾಬ್ದಾರಿಯನ್ನು ಅರಿತು ತನ್ನ ಕುಟುಂಬವನ್ನು ರಕ್ಷಿಸಿ ಪೋಷಿಸುವುದು ತ್ಯಾಗವೆ? ತನ್ನ ಪ್ರತಿರೂಪವನ್ನು ಹೆಂಡತಿಯಿಂದ ನಿರೀಕ್ಷಿಸುವುದು ಹಿಂಸೆಯೆ ? ಇವುಗಳಲ್ಲಿ ತ್ಯಾಗ ಯಾವುದು ? ಹಿಂಸೆ ಯಾವುದು? - ಎಂಬುದು ಬೀದಿ ಸಂವಾದದ ವಿಷಯವೆ ?

    ತ್ಯಾಗ, ಧರ್ಮ, ನಿಯತ್ತು, ಬದ್ಧತೆ ಮುಂತಾದ ಶಬ್ದಗಳು ಇಂದು ನಗೆಪಾಟಲಾಗುತ್ತಿರುವುದು ಬಹಿರಂಗ ಸತ್ಯ. ಆದರೆ... ಸಾಂಸಾರಿಕ ಪರಿಸರದಲ್ಲಿ ಸಮಯ ಸಂದರ್ಭಗಳ ಪರಿಜ್ಞಾನವಿಲ್ಲದೆ - ಬಿಡುಬೀಸಾಗಿ ಇಂದು ಬಳಕೆಯಾಗುತ್ತಿರುವ ಶಬ್ದ - ತ್ಯಾಗ ! ಯಾರು ಯಾರಿಗೆ ಯಾವಾಗ ಏಕೆ ಹೇಗೆ ಎಂಬೆಲ್ಲ ಪ್ರಶ್ನೆಗಳಿಗೂ ಈಗ ಉತ್ತರಿಸಬೇಕಾದ ಕಟಕಟೆಯಲ್ಲಿ - "ತ್ಯಾಗವನ್ನು" ನಿಲ್ಲಿಸಿದಂತಾಗಿದೆ ! ಎಂಥ ತ್ಯಾಗ ? ಯಾರಿಂದ ಯಾರಿಗಾಗಿ ಯಾವುದಕ್ಕಾಗಿ ತ್ಯಾಗ ? ಇಂತಹ ಪ್ರಶ್ನೆಗಳಿಗೆಲ್ಲ - ಬಹುಪರಾಕಿಗೆ ಒಳಗಾಗಿರುವ "ತ್ಯಾಗವೇ" ಉತ್ತರಿಸಬೇಕಾಗಿದೆ. 

    ಇಷ್ಟಬಂದಂತೆ ಶಬ್ದಗಳನ್ನು ಹೆಟ್ಟಿ ನಿಲ್ಲಿಸಲು - ಶಬ್ದವೇನು ಶನಿವಾರ ಸಂತೆಯ ಮಾಲೆ ? ತ್ಯಾಗ ಪ್ರತಿಪಾದಕರು ಉತ್ತರಿಸಬೇಕು. ಸಂಸಾರಗಳ ಹಗಲುವೇಷಗಳನ್ನು ಶಬ್ದಗಳ ಹೆಗಲಿಗೆ ನೇತಾಡಿಸುವ ?ಶಿಕ್ಷಣವು - ನಮಗೆ ದೊರೆತುದಾದರೂ ಎಲ್ಲಿಂದ ? ತ್ಯಾಗ ಎಂಬ ಸಮೃದ್ಧ ಭಾವಶ್ರೀಯ ಅವಹೇಳನವೆ ?  ನಿಜವಾದ ಯಾವುದೇ ತ್ಯಾಗಭಾವವು ಹಕ್ಕು ಸ್ಥಾಪಿಸುವ ಮೆರವಣಿಗೆಗೆ ಹೊರಡುವುದುಂಟೆ ? ಜೈಕಾರಗಳ ಪ್ರಶಸ್ತಿಯನ್ನು ಅಪೇಕ್ಷಿಸುವಂತೆ - ಅದು ಎಂದಾದರೂ ತೊಡಗಿಕೊಂಡೀತೆ ? ಮನೆಮಕ್ಕಳ ಹಕ್ಕಲು ಸಂಸಾರಕ್ಕೂ ತ್ಯಾಗಕ್ಕೂ ಎತ್ತಣಿಂದೆತ್ತ ಸಂಬಂಧವಯ್ಯ?

    ತ್ಯಾಗ ಎಂಬುದು ಮಾತು ವರ್ತನೆಗಳಿಗಿಂತ ಉನ್ನತವಾದುದು; ಅತೀತವಾದುದು. ಯಾವುದೇ ತ್ಯಾಗವು ಯಾರನ್ನೂ - ಮನೋವಾಕ್ಕಾಯಗಳಿಂದ ಗಾಯಗೊಳಿಸುವುದಿಲ್ಲ; ತ್ಯಾಗವು ಘೋಷಣೆಗಳಿಗೆ ಸಿಗುವುದಿಲ್ಲ. ಯಾವುದೇ ಸಾಂಸಾರಿಕ ಬಂಧನಗಳ ನಡುವಿನಲ್ಲಿ ತ್ಯಾಗವು ಇರುವುದೂ ಇಲ್ಲ. "ತ್ಯಾಗದ ನಾಮಜಪ " ಮಾಡುತ್ತ ಯಾರಾದರೂ ನೆಲ ಬಿಟ್ಟು ಮೇಲೆ ನಿಂತರೆಂದರೆ ಕೌಟುಂಬಿಕ ಸಂಸಾರದ ಆಧಾರವೇ ಕಳಚಿ ಬೀಳುತ್ತದೆ. ಸಂಸಾರ ಉಳಿಯುವುದಿಲ್ಲ. ಸಂಸಾರ ಎಂದರೆ ಅದೊಂದು ಬಂಧನ; ಎರಡು ಗಂಟೆಯ ಸಿನೆಮಾವಲ್ಲ; ಇಂದಿನವರು ಅಂದುಕೊಂಡಂತಹ ತ್ಯಾಗವಂತೂ ಅಲ್ಲವೇ ಅಲ್ಲ.

    ಯಾವುದೇ ಮನೆಯಲ್ಲಿ ಪರಸ್ಪರ "ತ್ಯಾಗದ ಮಾತುಗಳು " ಬಲಿಯತೊಡಗಿದರೆ ಅಂತಹ ಮನೆಯ ಇಟ್ಟಿಗೆಯು ಒಂದೊಂದಾಗಿ ಕುಸಿಯತೊಡಗುತ್ತಿದೆ ಎಂದೇ ಅರ್ಥ. ತ್ಯಾಗ ಎಂಬ ಪದಪ್ರಯೋಗವನ್ನು ಬೇಕಾಬಿಟ್ಟಿಯಾಗಿ ಬಳಸುವವರೆಲ್ಲರೂ ಈ ನಿಟ್ಟಿನಲ್ಲಿ ಗಂಭೀರವಾಗಿ ಆತ್ಮನಿರೀಕ್ಷಣೆ ಮಾಡಿಕೊಳ್ಳಬೇಕು. ಸಮಾಧಾನ ಚಿತ್ತದಿಂದ ಅರ್ಥೈಸಿಕೊಳ್ಳಬೇಕು. 

    ತ್ಯಾಗ ಎಂದರೆ ಬರಿಯ ಮಾತಲ್ಲ.ಯಾರೋ ಎಂದೋ ಮಾಡಿದ್ದ ಸಾಧನೆಯನ್ನು ಸ್ವಂತಕ್ಕೆ ಆರೋಪಿಸಿಕೊಳ್ಳುವುದೂ ಅಲ್ಲ. ತ್ಯಾಗ ಎಂದರೆ  - ಎಲ್ಲವನ್ನೂ ಬರಿದು ಮಾಡಿಕೊಳ್ಳುವ ನಡಿಗೆ. 

    ದೇಹತ್ಯಾಗ ಅನ್ನುತ್ತಾರೆ; ಅದು ಸರಿ. ಅದೇ ಪ್ರಾಣತ್ಯಾಗವೆಂದರೆ - ಆತ್ಮಹತ್ಯೆ ಎಂದಾಗುತ್ತದೆ. ಆಗ ವಿಪರೀತಾರ್ಥ. ತ್ಯಾಗ ಎಂಬ ಪದ ಪ್ರಯೋಗವು - ಯಾವುದೇ ನಿರೀಕ್ಷೆಯಿಲ್ಲದೆ ಸ್ವಪ್ರೇರಣೆಯಿಂದ ತಮ್ಮದೆಲ್ಲವನ್ನೂ ಸಂತೋಷದಿಂದ ತ್ಯಜಿಸುವ ಸಂದರ್ಭದಲ್ಲಿ ಮಾತ್ರವೇ ಹೊಂದುತ್ತದೆ. ಅಂತಹ ನಿರ್ಲಿಪ್ತ ತ್ಯಾಗಿಗಳು ಯಾವತ್ತೂ ಹಳಹಳಿಸುವುದಿಲ್ಲ. "ನಾನು ತ್ಯಾಗ ಮಾಡಿದೆ; ತ್ಯಾಗ ಮಾಡಿದೆ.." ಎಂದು ಅಂದುಕೊಳ್ಳುವುದೂ ಇಲ್ಲ. ತಪಸ್ವಿಗಳನ್ನು ಮಾತ್ರ ತ್ಯಾಗವು ಆಧರಿಸಬಲ್ಲದು.

    ತ್ಯಾಗ ಎಂಬುದು ಕತ್ತಿಯ ಅಲುಗಿನ ಮೇಲಿನ ನಡಿಗೆ. ಆದ್ದರಿಂದಲೇ ಸುಖಲೋಲುಪ ಸಂಸಾರದಲ್ಲಿ ಮುಳುಗಿದವರಿಗೆ ಇಂತಹ ತ್ಯಾಗದ ಹರಿತವನ್ನು ನಿಭಾಯಿಸಲು ಆಗುವುದಿಲ್ಲ. ಯಾವುದೇ ಸಾಮಾನ್ಯ ಸಂಸಾರಕ್ಕೆ ತ್ಯಜಿಸುವುದಕ್ಕಿಂತ ಅರ್ಜಿಸುವ ಹುಮ್ಮಸ್ಸೇ ಅಧಿಕವಾಗಿರುವುದು ಸಹಜ; ಮಕ್ಕಳುಮರಿಗಳ ಸಂಸಾರದಲ್ಲಿ ಅದು ಅನಿವಾರ್ಯವೂ ಹೌದು. 

    ತ್ಯಾಗ ಎಂಬ ವಿಚಾರವು ಕನಸಿನಲ್ಲಿಯೂ ಇಣುಕದ ಸ್ಥಿತಿಯನ್ನೇ ಸಂಸಾರ ಅನ್ನುವುದು. ಅದೇ ಸಹಜ ಸಾಂಸಾರಿಕ ಸ್ಥಿತಿ. ಸ್ವಸ್ಥ ಮನಃಸ್ಥಿತಿಯಲ್ಲಿ ಅವರವರೇ ಒಪ್ಪಿಕೊಂಡ ದೇಹಕೇಂದ್ರಿತ ಆಟವನ್ನು ಅದದೇ ಚೌಕಟ್ಟಿನಲ್ಲಿ ಪೂರ್ಣ ನಿಷ್ಠೆಯಿಂದ ನಿರ್ವಹಿಸುವ ಬದ್ಧತೆಯಲ್ಲಿಯೇ ಯಾವುದೇ ಸಂಸಾರವು ಅರಳಬಲ್ಲದು. ಆದ್ದರಿಂದ ಕುಟುಂಬಗಳ ನಿರ್ವಹಣೆಯ ಜಂಜಾಟಕ್ಕೆ ಒಡ್ಡಿಕೊಂಡಿರುವವರು "ತ್ಯಾಗದ ಅಮಲು" ಹತ್ತಿಸಿಕೊಳ್ಳುವುದು ಸೂಕ್ತವಲ್ಲ. ಹಾಗೆ ಹತ್ತಿಸಿಕೊಂಡರೆ ಅದು ತೋರಿಕೆ, ಊಸರವಳ್ಳಿ ವಿದ್ಯೆ ಅಥವ ಪಲಾಯನವಾದವಾದೀತೇ ವಿನಹ ಎಂದಿಗೂ ತ್ಯಾಗವಾಗದು.

    ಪುರುಷಾರ್ಥ ಸಾಧನೆಯ ಸತ್ಪ್ರಯತ್ನದ ಹಾದಿಯಲ್ಲಿ ಕರ್ಮನಿರತರಾಗಿರುವವರನ್ನೂ ಕೂಡ ಭೋಗದತ್ತಲೇ ಸೆಳೆಯುವ   ಪ್ರಚಂಡ ಸೆಳೆತದ ಕರ್ಮಭೂಮಿ ಇದು. ಹೀಗಿರುವಲ್ಲಿ, "ಭೋಗದ ಸ್ವರ್ಗ ಕಾಣುವ ಕನಸುಗಾರರು" ಒಂದೆಡೆ ಹೆಚ್ಚುತ್ತಿದ್ದರೆ ಇನ್ನೊಂದೆಡೆ ತ್ಯಾಗದ ಪ್ರಸ್ತಾಪವೂ ಅದೇ ವೇದಿಕೆಯಲ್ಲಿ ಎಡೆಬಿಡದೆ ಹೊಮ್ಮುತ್ತಿರುವುದು ಎರಡು ಕಾರಣದಿಂದ. ಒಮ್ಮೊಮ್ಮೆ ಪ್ರಜ್ಞಾಹೀನತೆಯಿಂದ; ಒಮ್ಮೊಮ್ಮೆ ಸ್ವಸಮರ್ಥನೆಯ ಪುಂಡು ಉತ್ಸಾಹದಿಂದ. ಈ ಭೋಗಕೇಂದ್ರಿತ ಲೋಕದಲ್ಲಿ ನಾವೆಲ್ಲರೂ ಸಂತೋಷವನ್ನು ಹುಡುಕುವವರೇ . ಆದರೆ, ಈ ಸಂತೋಷ ಎನ್ನುವುದು - ನಮ್ಮ ಹುಡುಕಾಟದ ಹಾದಿಯಲ್ಲಿ ಚೂರುಪಾರಾಗಿ ಸಿಗಬಹುದೇ ಹೊರತು ಇಡಿ ಇಡೀ ಗಂಟಿನಲ್ಲಿ ಸಿಗಲಾರದು. ಹುಟ್ಟು ಮತ್ತು ಸಾವು ಮಾತ್ರವೇ "ಇಡೀ ಗಂಟು". ನಡುವಿನದೆಲ್ಲವೂ ಕಟ್ಟುವ ಬಿಚ್ಚುವ ಆಟ! ಬಗೆಬಗೆಯ ಭೋಗದಾಟ !

    ನಿಜವಾಗಿಯೂ ತ್ಯಾಗದತ್ತ ಒಲವುಳ್ಳವರು ತಾನು - "ತ್ಯಾಗಮೂರ್ತಿಯಾಗಿ ಯಾರನ್ನೋ ಉದ್ಧಾರ ಮಾಡಿದೆ" ಎಂದು ಯಾವತ್ತೂ ಅಂದುಕೊಳ್ಳುವುದಿಲ್ಲ. ಹಾಗೊಮ್ಮೆ ಯಾರಾದರೂ ಅಂದುಕೊಂಡರೆ - ಆಗ ಅದು ನಿಶ್ಚಯವಾಗಿ, ತ್ಯಾಗವಲ್ಲ. ಈಗ ಕಾಣುತ್ತಿರುವ ಪಡಪೋಶಿ ಸಂಸಾರದಲ್ಲಿ ಅಂತಹ ಮಾದರಿಗಳಂತಿರುವ ತ್ಯಾಗೀ ಸನ್ನಿವೇಶವು ಎಲ್ಲಾದರೂ ಕಾಣುತ್ತಿದೆಯೆ ? ಅಲ್ಲಿ ಇಲ್ಲಿ ಆಧ್ಯಾತ್ಮಿಕ ಹಿನ್ನೆಲೆಯುಳ್ಳ ಕೆಲವು ಹೊರತಾದ ಸಂದರ್ಭಗಳು ಇರಬಾರದೆಂದೇನೂ ಇಲ್ಲ. ಅಲ್ಲಿಯೂ ತ್ಯಾಗದ ನಿಜವಾದ ವ್ಯಾಖ್ಯೆಯು ಗೋಚರಿಸಲಾರದು. ಆದರೆ ಉಳಿದಂತೆ ಸಾಮಾನ್ಯವಾಗಿ - ಪ್ರೀತಿಯಿರುವ ಸಾಂಸಾರಿಕ ಬದುಕುಗಳಲ್ಲಿ - ಯಾವುದೇ ಯಶಸ್ವೀ ಸಂಸಾರಸ್ಥರು ಅಪ್ಪಿತಪ್ಪಿಯೂ "ತ್ಯಾಗದ ಲೆಕ್ಕಾಚಾರ " ದಲ್ಲಿ ಮುಳುಗುವುದಿಲ್ಲ. ಅಲ್ಲೆಲ್ಲ ನಡೆಯುವುದು ಕೇವಲ ಭೋಗದ ಲೆಕ್ಕ. ಯಾವುದೇ ಸಂಸಾರದಲ್ಲಿ ಅಕಸ್ಮಾತ್ ಯಾರಾದರೂ ತ್ಯಾಗದ ಲೆಕ್ಕಾಚಾರಕ್ಕೆ ಹೊರಟರೆ ಅಲ್ಲಿ ನೆಮ್ಮದಿಯೇ ಇರುವುದಿಲ್ಲ; ಒಮ್ಮೊಮ್ಮೆ ಸಂಸಾರವೇ ಉಳಿಯುವುದಿಲ್ಲ! 

    ಪ್ರೀತಿಯ ಭಾವನೆಲೆಯಲ್ಲಿ ಸಂಚರಿಸುವವರಲ್ಲಿ, ಪರಸ್ಪರ "ಪಡೆಯುವ ಸುಖ"ಕ್ಕಿಂತ "ಕೊಡುವ ಸುಖ" ಎಂಬುದು ಕ್ರಮೇಣ ಹೆಚ್ಚುತ್ತ ಹೋಗುವುದು ಮತ್ತು ಅದರಿಂದಲೇ ಯಶಸ್ವೀ ಸಂಸಾರವನ್ನು ದಂಪತಿಗಳಾಗಿ ಒಂದಾಗಿ ಸಾಗಿಸಿದ್ದೂ ಪ್ರಮಾಣಿತ ಸತ್ಯವಲ್ಲವೆ ? ಅಂತಹ ಬದುಕುಗಳಲ್ಲಿ "ತ್ಯಾಗದ ಮಾತುಗಳು" ಎಂದಿಗೂ ಬರುವುದಿಲ್ಲ; ಒಮ್ಮೊಮ್ಮೆ ಬಂದರೂ... ಆತ್ಮನಿರೀಕ್ಷಣೆಯ ಜರಡಿಯಲ್ಲಿ ತೂರಿ ಹೋಗುತ್ತದೆ. ಇಡೀ ಕುಟುಂಬದಲ್ಲಿ, ಎಲ್ಲಿಂದಲೂ ಮೇಲಾಟದ ಅಹಂ ಕೂಡ ಇಣುಕುವುದಿಲ್ಲ. ಎಲ್ಲೋ ಒಮ್ಮೊಮ್ಮೆ ಅಪಸ್ವರವೆದ್ದರೂ ಪ್ರೀತಿ, ಕೃತಜ್ಞತೆ, ಕಾಳಜಿಗಳೆಂಬ ಮನೆಮದ್ದಿನ ಚಿಕಿತ್ಸೆಗೆ ಪರಸ್ಪರ ಪ್ರತಿಸ್ಪಂದಿಸಿ ವಿಷಮುಕ್ತರಾಗಿ ಬಿಡುತ್ತಾರೆ. ಇವೆಲ್ಲವೂ ಇಚ್ಛಾಪೂರ್ವಕವಾಗಿ ಸ್ವೀಕರಿಸಿದ್ದ ಬಂಧನಕ್ಕೆ ತಮಗೆ ತಾವೇ ತೋರಿಸುವ ಹೊಂದಾಣಿಕೆಯ ಬದ್ಧತೆ. ಸಂಸಾರವನ್ನು ಉಳಿಸುವ ಆದ್ಯತೆ. ಸುಲಭದಲ್ಲಿ ಹೇಳುವುದಾದರೆ - ಹೊಂದಾಣಿಕೆ. ಆದರೆ ಹೊಂದಾಣಿಕೆ ಎಂದರೆ ತ್ಯಾಗ  - ಎಂದೂ ಅಂದುಕೊಳ್ಳುವಂತಿಲ್ಲ. ಸಂಸಾರ ಕಟ್ಟಬೇಕಾದರೆ ಸಾಂಸಾರಿಕ ಗಳಿಕೆಯ ಉಳಿಕೆಯ - ಪೂರ್ಣ ಯೋಗ ಕ್ಕೆ ಬದ್ಧರಾಗಬೇಕಲ್ಲದೆ ತ್ಯಾಗದ ಮಾತಿನ ಪೋಕು ಲೆಕ್ಕಗಳಲ್ಲಿ ಯಾರೂ ಕಳೆದುಹೋಗಬಾರದು.... 

    ಸಂಸಾರ ಎಂಬುದು ಕೇವಲ ಕರ್ತವ್ಯ ನಿರ್ವಹಿಸುವ ವೇದಿಕೆ; ಇದೊಂದು Team Work. ಆಯಾ ಕರ್ತವ್ಯವು ಅದರದರ ಪ್ರತಿಫಲವನ್ನು ಪಡೆದೇ ಪಡೆಯುತ್ತದೆ. ಪ್ರತಿಯೊಬ್ಬ ಪಾತ್ರಧಾರಿಯೂ ಸೂಕ್ತ ವೇಷಭೂಷಣ ತೊಟ್ಟುಕೊಂಡು ಅತ್ಯುತ್ತಮ ಅಭಿನಯ ನೀಡಿದಾಗಲೇ ಸಂಸಾರ ನಾಟಕವು ಯಶಸ್ಸು ಕಂಡೀತು. ಇದಕ್ಕೆ ವ್ಯತಿರಿಕ್ತವಾಗಿ ಪ್ರತಿಯೊಬ್ಬ ಸದಸ್ಯರೂ ಒಂದೇ ತರಹದ ಕಿರೀಟವನ್ನು ಧರಿಸಲು ಹಠ ತೊಟ್ಟು ಒಂದೇ ಸಂಭಾಷಣೆಯನ್ನು ಉಚ್ಚರಿಸತೊಡಗಿದರೆ ಯಾವುದೇ ನಾಟಕದಲ್ಲಿ ಸೊಗಸು ತೋರದು. ಸಂಸಾರವೂ ಇದಕ್ಕೆ ಹೊರತಲ್ಲ. ಪಾತ್ರಕ್ಕೆ ತಕ್ಕಂತೆ ಮಾತು - ವೇಷಭೂಷಣ ಹೊಂದಿರುವುದೇ ಯಾವುದೇ ನಾಟಕದ ಯಶಸ್ಸಿನ ಸೂತ್ರ. ಯಾವುದೇ ಸಂಸಾರವನ್ನು ಕಟ್ಟಿಕೊಳ್ಳುವ ಸುಲಭ ಸೂತ್ರವೂ ಇದೇ..



    ಆದರೆ ಇಂತಹ ಯಾವ ಲೆಕ್ಕಗಳಿಗೂ ಸಿಗದ ವಿಶೇಷ ನಮೂನೆಗಳೂ (SPECIMEN) ಈ ಸೃಷ್ಟಿಯಲ್ಲಿವೆ ! ಇಂತಹ ಮಾದರಿಗಳಿಂದ ಹೊಸ ಹೊಸ ವಿದ್ಯೆಗಳೂ ಅಲ್ಲಲ್ಲಿ ಬಳಕೆಗೆ ಬರುತ್ತಿವೆ. ತ್ಯಾಗದ ಮುಸುಕಿನೊಳಗಿಂದಲೇ ಭೋಗಪ್ರಾಪ್ತಿ ಮಾಡಿಕೊಳ್ಳುವ ನಾಜೂಕಯ್ಯ / ನಾಜೂಕಮ್ಮ ಗಳಿಂದಾಗಿ - ಒಂದರ್ಥದಲ್ಲಿ ಭಾರತೀಯ ದೀರ್ಘ ಪರಂಪರೆಯ ಅಪಹಾಸ್ಯವೂ ನಡೆಯುತ್ತಿದೆ. ತ್ಯಾಗ ಎಂಬ ಮೌಲ್ಯವೇ ನಗೆಪಾಟಲಾಗುತ್ತಿದೆ. ಆದ್ದರಿಂದಲೇ ಯಾವುದೇ ಸಂಸಾರಸ್ಥರಿಂದ ಸಂಸಾರವನ್ನು ನಾಶಮಾಡುವ ತ್ಯಾಗದ ಮಾತುಗಳು ಬರಲೇಬಾರದು. ತ್ಯಾಗದ ಪ್ರಸ್ತಾಪವಾಗುತ್ತಲೇ ಇರುವಲ್ಲಿ ಸಂಸಾರದ ಕಟ್ಟುಗಳು ಒಂದೊಂದಾಗಿ ಬಿಚ್ಚಿಕೊಳ್ಳುತ್ತವೆ ಎಂಬ ಎಚ್ಚರ ತಪ್ಪಬಾರದು.

    ಸಂಸಾರವು ಭೋಗ ಕ್ಷೇತ್ರ. ಅಲ್ಲಿ ನಡೆಯುವ, ನಡೆಸುವ ವ್ಯಾಪಾರಗಳೆಲ್ಲವೂ ಭೋಗ ಕೇಂದ್ರಿತವಾದವು. ತ್ಯಾಗದ ಗುಂಗು ಹಿಡಿದವರು ಭೋಗದ ಅಂಗಡಿಯ ಒಳಹೊರಗೆ ವ್ಯಾಪಾರಕ್ಕೆ ನಿಂತರೆ ಗ್ರಾಹಕರ ಆಕರ್ಷಣೆಯು ತಗ್ಗಿ, ಅಂತಹ ಅಂಗಡಿಯೇ ಮುಚ್ಚಿಹೋಗಿ ಆಭಾಸವಾಗಬಹುದು. "ಜನ ಏನೆನ್ನುತ್ತಾರೋ? ಲೋಗ್ ಕ್ಯಾ ಕಹೇಂಗೆ ?" ಎನ್ನುವ - ಅಹರ್ನಿಶಿ ಭಯದ ನೆರಳಿನಲ್ಲಿಯೇ ಬದುಕುವ - ಇಂದಿನ ಸಾಮಾನ್ಯ ಭೋಗಿಗಳು ಅಂತಿಂಥ ಭಯ ಬಂಧನದಲ್ಲಿಲ್ಲ. ಸಾಂಸಾರಿಕ ಭೋಗಬಂಧಿತ ವ್ಯಾಪ್ತಿಯಲ್ಲಿ ಮಾತ್ರವೇ ದುರಾಸೆ, ಭಯಭ್ರಾಂತಿಗಳು ಕವಿಯುತ್ತವೆ. ಆದರೆ ತ್ಯಾಗವು ನಿತ್ಯ ನಿರಂಜನ. ಅದಕ್ಕೆ ಭಯವೂ ಇಲ್ಲ; ಆಸೆಯೂ ಇಲ್ಲ. ಅದೊಂದು ಶೂನ್ಯ; ಸಂಸಾರ ಕುಟುಂಬಗಳ ವ್ಯಾಪ್ತಿಯ ಹೊರಗಿನ - ಅನನ್ಯ.

    ಆದರೆ ತ್ಯಾಗದತ್ತ ನಮ್ಮನ್ನು ನಡೆಸಬಲ್ಲ ಸೌಮ್ಯ ಭಾವಗಳಾದ ಕೃತಜ್ಞತೆ, ಕರುಣೆ, ಕಾಳಜಿ, ಪ್ರೇಮ, ಸಹನೆ - ಮುಂತಾದ ಭಾವಪುಷ್ಟಿಗೆ ಎಲ್ಲ ಸಂಸಾರದಲ್ಲಿಯೂ ಅಪಾರ ಅವಕಾಶವಿದೆ. ಅಧ್ಯಾತ್ಮ ತಳಪಾಯದ ಇಂತಹ ಸೌಮ್ಯ ಭಾವಗಳು ಸಂಸಾರದ ಮೂಸೆಯಲ್ಲಿ ಬೆಂದು ಸಮತೋಲನಗೊಂಡು ಘನವಾದಾಗ - ತ್ಯಾಗದ ತಳಪಾಯವು ಗಟ್ಟಿಯಾಗತೊಡಗುತ್ತದೆ. ಕ್ರಮೇಣ ಅಂತಹ ಬದುಕುಗಳ ಪ್ರಬುದ್ಧತೆಯ ಹಂತದಲ್ಲಿ ತ್ಯಾಗಭಾವ ಎಂಬುದು ತಾನಾಗಿಯೇ ಹೊರಹೊಮ್ಮುವುದೂ ಇದೆ. ಅನಂತರ ತಾನಾಗಿಯೇ ಸಂಭವಿಸುವ ವಾನಪ್ರಸ್ಥದ ಹಂತದಲ್ಲಿ "ನಾನು ತ್ಯಾಗ ಮಾಡಿದೆ" ಎಂಬ ಯಾವುದೇ ಭಾವ ಪರಿವೇಶದ ಕಾಪಟ್ಯವಿರುವುದಿಲ್ಲ; ತಮ್ಮ ಬದುಕಿನ ದಾರಿಯಲ್ಲಿ ಅಂತಹ "ಪ್ರಬುದ್ಧ ಸ್ವಭಾವ ಕ್ಷಣಿಕ" ಗಳನ್ನು ಒಮ್ಮೊಮ್ಮೆ ಹಾದು ಹೋಗುವ ಇತರ ಸಂಸಾರಸ್ಥರು ಅವನ್ನೆಲ್ಲ - "ತ್ಯಾಗ" ಎನ್ನುವುದೂ ಇದೆ; ಆದರೆ ಅವೆಲ್ಲವೂ ಪರಿಪಕ್ವಗೊಳ್ಳದ ಸಂಚಾರೀ ಭಾವಗಳು; ಸ್ಥಾಯಿಯಲ್ಲ. ನಿಜವಾದ ತ್ಯಾಗವು ಬಣ್ಣ ಬದಲಿಸುವುದಿಲ್ಲ. ಸಂಸಾರಭಾವದಿಂದ ಮುಕ್ತವಾಗಿ ಅಲೌಕಿಕ ಭಾವದಲ್ಲಿ ಪೂರ್ತಿಯಾಗಿ ತೊಡಗಿಕೊಂಡಾಗ ಮಾತ್ರ - ತ್ಯಾಗವು ಸಹಜ ಸ್ಥಿತಿಯಾಗುತ್ತದೆ.

    ಸಂಸಾರ ಹೊಂದುವುದು ಎಂದರೆ ಭೋಗಜೀವನದ ಆಯ್ಕೆ ಮಾಡಿಕೊಳ್ಳುವುದು ಎಂದೇ ಅರ್ಥ. ಭೋಗದ ಹಾದಿಯೇ ಬೇರೆ;  ತ್ಯಾಗದ ಹಾದಿಯೇ ಬೇರೆ. ಎಲ್ಲೂ ಸಂಧಿಸದ ದಾರಿಗಳವು. ಈ ನೆಲದಲ್ಲಿ ಬಗೆಬಗೆಯ ಸಂಸಾರಗಳಿವೆ. ಸಂಸಾರಗಳಲ್ಲಿಯೂ...  ಹಿತಮಿತವಾಗಿ ಇರುವುದು, ಹೇಗೋ ಹೊಂದಿಸಿಕೊಂಡು ಹೋಗುವುದು, ಇದ್ದೂ ಇಲ್ಲದಂತಿರುವುದು, ಒಟ್ಟಾರೆ ದಿನ ದೂಡುವುದು... ಹೀಗೆ ಅನೇಕ ಸಾಂಸಾರಿಕ ವೈವಿಧ್ಯಗಳಿವೆ. ಆದರೆ ಇವು ಯಾವುದರಲ್ಲೂ ತ್ಯಾಗದ ಪಾತ್ರವಿಲ್ಲ.

    ಆದರೆ ಯಾವುದೇ ಆಧುನಿಕ ವಿಕೃತಿಗಳಿಗೆಲ್ಲ ತ್ಯಾಗವು ಎಟಕುವುದಿಲ್ಲ. ಮಾತುಮಾತಿಗೆ ತ್ಯಾಗದ ಪ್ರಸ್ತಾಪ ಮಾಡುತ್ತ ಸ್ವಂತ ಶಿಫಾರಸ್ಸು ದೃಢೀಕರಣದಿಂದಲೇ ತಾವು ತಾವೇ "ತ್ಯಾಗಿ" ಅಂದುಕೊಳ್ಳುವ ಉಮ್ಮೇದುಗಳೆಲ್ಲವೂ ವ್ಯರ್ಥ ಹರಟೆಯಾಗಬಹುದು - ಅಷ್ಟೆ. ಸಾಂಸಾರಿಕ ಬದುಕು - ಕುಟುಂಬ ಜೀವನವನ್ನು ಒಪ್ಪಿ ಅಪ್ಪಿಕೊಂಡಿರುವ ಶ್ರೀಸಾಮಾನ್ಯರು ತಮ್ಮ ನಿತ್ಯದ ನೆಮ್ಮದಿಗಾಗಿ - ತ್ಯಾಗದ ಚರ್ವಣವನ್ನು ಬಿಟ್ಟು - ಪರಸ್ಪರ ಕೊಟ್ಟುಕೊಳ್ಳುವುದನ್ನೇ ಆಶ್ರಯಿಸುವುದು ಆರೋಗ್ಯಕರ. ತ್ಯಾಗವು ಸಂಭವಿಸುವ ದಾರಿಯು ಇನ್ನೂ ಬಹು ದೂರದ ನಡಿಗೆಯನ್ನು ನಮ್ಮಿಂದ ಅಪೇಕ್ಷಿಸುತ್ತದೆ. ಆದರೆ ನಮ್ಮ ಗುರಿಯನ್ನು "ತ್ಯಾಗ"ವಾಗಿಸಿಕೊಳ್ಳುವುದು ಅಸಾಧ್ಯವೆಂದೇನಲ್ಲ. ತ್ಯಾಗವನ್ನು ಅನ್ವೇಷಣೆಯ ವಸ್ತುವನ್ನಾಗಿಸಿಕೊಂಡು ಅಂತಹ "ತ್ಯಾಗದ ಗುರಿ - ಲಕ್ಷ್ಯ"ವನ್ನು ಗಂಭೀರವಾಗಿ ಹೊಂದಿರುವ ಕೌಟುಂಬಿಕರು ತಮ್ಮ ಬದುಕಿನ ದಾರಿಯನ್ನು ಭಯಭ್ರಾಂತಿ ಮುಕ್ತವಾಗಿ - ನಿರಾಳವಾಗಿ ಸವೆಸಬಲ್ಲರು ಎಂಬುದರಲ್ಲೂ ಸಂಶಯವಿಲ್ಲ.

    ಸಂಸಾರವೂ ಒಂದು ಭಾಗ್ಯವೇ. ಶ್ರೀನಿವಾಸ ನಾಯಕನಾಗಿದ್ದು ಸಂಸಾರವನ್ನು ತ್ಯಜಿಸಿ ಪುರಂದರದಾಸರಾದ ಮೇಲೆ ದಾಸರು "ಸಂಸಾರವೆಂಬಂಥ ಭಾಗ್ಯವಿರಲಿ" ಎಂದಿದ್ದರು. ಮುಂದುವರಿದು ಎಂತಹ ಸಂಸಾರವಿರಬೇಕು ಎಂಬುದನ್ನೂ ಹೇಳಿದ್ದರು. ಸಂಸಾರಸ್ಥರಲ್ಲಿ "ಕಂಸಾರಿ ನೆನವೆಂಬ ಸೌಭಾಗ್ಯವಿರಲಿ" ಎನ್ನುತ್ತ ಸಾತ್ವಿಕ ಶ್ರದ್ಧೆಯ ಸಮರ್ಪಣಾಭಾವವನ್ನು ಪ್ರತಿಪಾದಿಸಿದ್ದರು. ಆದ್ದರಿಂದ ಭೋಗಪ್ರದವಾದ ಸಂಸಾರ ಯಾತ್ರೆಯು ಅಪರಾಧವಲ್ಲ; ಕನಿಷ್ಠವೂ ಅಲ್ಲ. ಅದಕ್ಕೆ ತ್ಯಾಗ ಎಂಬ ಸುಳ್ಳಿನ ಹೊದಿಕೆಯ ಅಗತ್ಯವೂ ಇಲ್ಲ. 

    ಹೆಜ್ಜೆಹೆಜ್ಜೆಗೂ ಶಿಫಾರಸ್ಸಿನ ಬಯಕೆ, ಕೃತಜ್ಞತೆಯ ಅಪೇಕ್ಷೆ, ತ್ಯಾಗದ ಭ್ರಮೆಯು ಮಾತ್ರ ತುಂಬಿಕೊಂಡರೆ ನಮ್ಮ ದಾರಿಯು ಮಬ್ಬಾಗಿ ಜಟಿಲವಾಗತೊಡಗುತ್ತದೆ. ಏಕೆಂದರೆ ಕೌಟುಂಬಿಕ ಬದುಕಿನಲ್ಲಿ ಇರುವುದು "ಬಗೆಬಗೆಯ ರಾಗ" ಮಾತ್ರ. ಯಾವುದೇ ಸಂಸಾರದಲ್ಲಿ - ಅಸ್ತಿತ್ವದಲ್ಲೇ ಇಲ್ಲದಿರುವ ತ್ಯಾಗದ ಬಹುಮುಖೀ ವರ್ಣನೆಯೇ ಅಪ್ರಸ್ತುತವಾಗುತ್ತದೆ. ತ್ಯಾಗವು ಅಪೇಕ್ಷಿಸುವುದು ವಿರಾಗವನ್ನು; ಅನುರಾಗವನ್ನಲ್ಲ. ವಿರಾಗಕ್ಕೆ ಸಾಂಸಾರಿಕ ಬದುಕಿನಲ್ಲಿ ಎಡೆಯಿಲ್ಲ. ಸಂಸಾರಸೌಧವು ಎದ್ದು ನಿಲ್ಲುವುದೇ ರಾಗ ಮತ್ತು ಭೋಗದಿಂದ. ಅತ್ಯಂತ ಕಠಿಣವಾದ ತ್ಯಾಗದ ಹಾದಿಯ ಅಗ್ನಿಪರೀಕ್ಷೆಯನ್ನು ಎದುರಿಸಲಾಗದವರು ಮಾತ್ರ - ಪತಿಪತ್ನಿಸುತಾಲಯದ ಸ್ನೇಹ ಸಹವಾಸಕ್ಕೆ ಒಳಗಾಗುತ್ತಾರೆ. ನಿಜವಾಗಿಯೂ ತ್ಯಾಗದ ಒಲವುಳ್ಳವರು ಈ ಗೋಟಾಳಿ ಸಹವಾಸಗಳಿಗೆಲ್ಲ ಸಿಲುಕಿಕೊಳ್ಳುವುದೇ ಇಲ್ಲ. ತ್ಯಾಗ - ಭೋಗದ ವಿಚಾರ ಸ್ಪಷ್ಟತೆಯಿಲ್ಲದವರು ಮಾತ್ರ - ಎರಡೂ ಕಡೆಗಳಲ್ಲಿ ಸೋಲುತ್ತಾರೆ. ಎಲ್ಲಿಯೂ ಸಲ್ಲದವರಾಗಿ ಬಿಡುತ್ತಾರೆ; ಬೇಯುತ್ತಾರೆ; ನೋಯುತ್ತಾರೆ; ಮಾತ್ರವಲ್ಲ -  ನಂಬಿದವರನ್ನು ನೋಯಿಸುತ್ತಾರೆ !

    ತ್ಯಜಿಸುವುದು ಬೇರೆ; ತ್ಯಾಗ ಬೇರೆ. ಧೂಮಪಾನ, ಮದ್ಯಪಾನವನ್ನು ತ್ಯಜಿಸುವುದು ಎಂದರೆ ಆ ದುಶ್ಚಟವನ್ನು ಬಿಟ್ಟುಬಿಡುವುದು; ಕಳೆದೊಗೆಯುವುದು ಎಂದರ್ಥ. ಆದರೆ ಈಗೀಗ ತ್ಯಾಗದ ಕಪ್ಪುಮುಖದ ದರ್ಶನವೂ ಆಗುತ್ತಿದೆ ! ಗಂಡ ಹೆಂಡತಿಯ ನಡುವೆ  ಪರಸ್ಪರ "ತ್ಯಾಗದ DOSE " ಜಾಸ್ತಿಯಾಗಿ ಹೋಗಿ ವಿಚ್ಛೇದನವಾಗುವುದು ಈಗೀಗ ಸಾಮಾನ್ಯ ವಿಚಾರ. ಈ ವಿಚ್ಛೇದನ ಎಂದರೆ ತ್ಯಾಗವಲ್ಲವೇ ಅಲ್ಲ. ವಿಚ್ಛೇದನ ಎಂದರೆ ಬಿಟ್ಟು ಬಿಡುವುದು, ಒಪ್ಪಿಕೊಂಡ ವಸ್ತು-ಆಲೋಚನೆ - ಸಂಬಂಧದಿಂದ ಮುಕ್ತಿ ಪಡೆಯುವುದು, ಸಾಂಸಾರಿಕ ಭೋಗಕ್ಕೆ ಹೊಂದಿಕೊಳ್ಳದ - ತಾವೇ ಕಟ್ಟಿಕೊಂಡ ಲೌಕಿಕ ಸಂಬಂಧದಿಂದ ಕಳಚಿಕೊಳ್ಳುವುದು... ಇತ್ಯಾದಿ. ಕೆಲವರು ಬದನೆಕಾಯಿಯನ್ನು, ಹಾಗಲಕಾಯಿಯನ್ನು, ಬಾಳೆಹಣ್ಣನ್ನು ತ್ಯಜಿಸುವಂತೆ ಸಾಂಸಾರಿಕ ವಿಚ್ಛೇದನವನ್ನೂ ವಸ್ತುರೂಪಕ್ಕೆ ಇಳಿಸುತ್ತಿರುವುದು ವರ್ತಮಾನದ ವಾಸ್ತವ ! ಇವು ತ್ಯಾಗವಲ್ಲ. ಇವೆಲ್ಲವೂ ನಿತ್ಯಬಳಕೆಯಲ್ಲಿರುವ "ತ್ಯಾಗದ ಹೆಸರಿನ ಚಿಲ್ಲರೆ ತ್ಯಾಜ್ಯಗಳು".

    ಇಂದಿನ ವಿದ್ಯಾವಂತ ಗಂಡು ಮತ್ತು ಹೆಣ್ಣು ಇಬ್ಬರಲ್ಲೂ ತಮ್ಮ ತಮ್ಮ ಅಸ್ಮಿತೆಯನ್ನು ಉಳಿಸಿಕೊಳ್ಳುವ ಹಂಬಲವಿರುವುದು ಸ್ವಾಭಾವಿಕ. ಅಂದಮೇಲೆ ಪರಸ್ಪರರ ಅಸ್ಮಿತೆಗೆ ಧಕ್ಕೆಯಾಗದ - ಧಕ್ಕೆ ಮಾಡದ ಎಚ್ಚರವೂ ಅನಿವಾರ್ಯ. ಉಪಾಯ, ಪಿತೂರಿ ಮುಂತಾದ ಕಲಬೆರಕೆಗಳಿಂದ ನೌಕರಿಗಳನ್ನು ನಿಭಾಯಿಸಿದಂತೆ ಕುಟುಂಬಗಳನ್ನು ನಿಭಾಯಿಸಲು ಆಗುವುದಿಲ್ಲ. "ಕೀಚಕನೋ ತಾಟಕಿಯೋ... ಅಂತೂ ಗಂಡ / ಹೆಂಡತಿ ಎಂಬ ಪ್ರದರ್ಶನವೊಂದು ಇರಲೇಬೇಕು" ಎಂದುಕೊಳ್ಳುವ ಕಟ್ಟುಗಳೂ ಈಗೀಗ ಬಿಚ್ಚಿಕೊಳ್ಳುತ್ತಿವೆ. ಅಸ್ಮಿತೆಯ ಪ್ರಮಾಣದಲ್ಲಿ ಏರುಪೇರಾಗಿ ಪರಸ್ಪರ ಗಾಯಗೊಳಿಸಿಕೊಳ್ಳುವ ವ್ಯಾಯಾಮವೂ ನಡೆಯುತ್ತಿದೆ. ಆದರೆ ಸ್ವಾರ್ಥ, ಕಠೋರತೆಯ ಕಲ್ಲುಗುಂಡನ್ನು ಕುತ್ತಿಗೆಗೆ ಬಿಗಿದುಕೊಂಡು ಯಾವುದೇ ಕುಟುಂಬದ ನೊಗವನ್ನು ಹೊರುವುದು - ಯಾರಿಗಾದರೂ - ಬಹಳ ಕಷ್ಟ. ತ್ಯಾಗದ ವೇಷದ ಉಡಾಫ಼ೆ, ತ್ಯಾಗದ ಮುಸುಕಿನ ಕಾನೂನು ಸ್ಥಾಪನೆಯ ವರ್ತನೆಗಳಿಂದ ಭಾವನಾತ್ಮಕ ನೆಲೆಯಲ್ಲೇ ಅರಳಬಲ್ಲ ಸಂಸಾರಗಳು ಮುರಿದು ಬೀಳುವುದು ಸ್ವಾಭಾವಿಕ. ಸಂಬಂಧಗಳಿಗೆ ಜೀವ ತುಂಬಲು ಹತ್ತು ದಿಕ್ಕಿನಿಂದ ಯತ್ನಿಸಿದಾಗಲೂ ಪ್ರತಿಸ್ಪಂದಿಸಲಾಗದ ಕೆಲವು ಸಂಬಂಧಗಳು ತಾವಾಗಿಯೇ ಕಳಚಿ ಬೀಳುವುದಿದೆ. ಅನಂತರ ಕತ್ತಲಿನಿಂದ ಹೊರಬಂದಂತೆ ಇವರು ಹೊಸಬೆಳಕನ್ನು ಕಂಡದ್ದೂ ಇದೆ. ಆದರೆ... ಅಲೌಕಿಕ "ತ್ಯಾಗದ ಸ್ಮರಣೆ " ಗೆ ಪ್ರಾಮಾಣಿಕವಾಗಿ ಒರಗಿಕೊಳ್ಳದೆ, ಲೌಕಿಕ ಆಮಿಷಗಳಲ್ಲೇ ಮುಳುಗಿ ಏಳುತ್ತ ಹುಚ್ಚು ನಿರ್ಧಾರಗಳಿಗೆ ದಂಪತಿಗಳು ಬದ್ಧರಾದರೆ - ತನ್ಮೂಲಕ ಉಂಟಾಗುವ ಅನಿರೀಕ್ಷಿತಗಳನ್ನು ಪ್ರಾಪಂಚಿಕರು ಮೆಚ್ಚಲಾಗದಿದ್ದರೂ ಒಪ್ಪಲೇಬೇಕಾದ ಸನ್ನಿವೇಶವು - ಇಂದಿನ ಸಮಾಜದಲ್ಲಿದೆ !

    ಏಕೆಂದರೆ... ಈ ಸಂಸಾರದಲ್ಲಿ ಮೋಹಕ್ಕೆ ಒಳಗಾಗಿ ನಾವು ನಡೆಸುವ ಕೆಲಸಗಳೆಲ್ಲವೂ ಪರೋಕ್ಷವಾಗಿ ಭೋಗವೇ ಆಗಿದೆ. ಒಂದು ಹೆಣ್ಣು ತಾನು ಗರ್ಭಿಣಿಯಾದಾಗ, ಮನೆ ಮಕ್ಕಳ ಆರೈಕೆ ಮಾಡುವಾಗ, ತನ್ನ ಗಂಡನಿಗೆ ಏನೋ ಉಪಕರಿಸಿಬಿಟ್ಟೆ ಎಂದುಕೊಂಡು ತ್ಯಾಗಿಯ ವೇಷ ಧರಿಸಿದರೆ ಅದು ನಗೆಪಾಟಲಿನ ವಿಚಾರ. ಒಬ್ಬ ಗಂಡನಾದವನು ನಿಷ್ಠೆ ಋಜುಮಾರ್ಗದಿಂದ ದೇಹದಂಡಿಸಿಕೊಂಡು ಸಂಪಾದಿಸುತ್ತ ತನ್ನ ಕುಟುಂಬವನ್ನು ಪೋಷಿಸುವಾಗ ತನ್ನ ಪೇಚಾಟವನ್ನೆಲ್ಲ ತನಗೆ ತಾನೇ ತ್ಯಾಗ ಎಂದುಕೊಂಡರೆ  - ಹಾಗೆ ಹೇಳಿಕೊಂಡರೆ ಅದೂ ಹಾಸ್ಯಾಸ್ಪದ.  

    ಅಂದರೆ - ಹೆತ್ತವರಿಗೆ ಕೃತಜ್ಞರಾಗಿರುವ ಅಗತ್ಯವಿಲ್ಲ ಎಂದೆಲ್ಲ ಭಾವಿಸಬಾರದು. ತಮ್ಮ ಬದುಕಿನ ಅಮೂಲ್ಯ ದುಡಿಮೆ ಮತ್ತು ಸಮಯವನ್ನು ಮಕ್ಕಳ ಲಾಲನೆ ಪಾಲನೆಗೆ ಬಳಸಿ, ಸ್ವಂತ ಸಂತಸದ ಕ್ಷಣಗಳನ್ನು ಬದಿಗೆ ಸರಿಸಿದ ಹೆತ್ತವರು ಎಂದಿಗೂ ಪೂಜ್ಯತೆಯ ಸ್ಥಾನದಲ್ಲಿಯೇ ಇರುತ್ತಾರೆ. ಎಲ್ಲ ಬಗೆಯ ಸಾಂಸಾರಿಕ ಸಂಬಂಧಗಳೂ ತಮ್ಮದೇ ವ್ಯಾಪ್ತಿಯ ಅನೇಕ ಕೃತಜ್ಞತಾ ಕ್ಷಣಗಳಿಗೆ ಅರ್ಹವಾದರೂ ಅವು ಯಾವುದನ್ನೂ ಮಾತಾಪಿತೃಗಳ ಸಾಲಿನಲ್ಲಿ ತೂಗಲಾಗುವುದಿಲ್ಲ. ಹೀಗಿದ್ದರೂ... "ನನ್ನ ಮಗು" ಎಂಬ ಪ್ರೀತಿ ರೂಪದ ಮೋಹದಿಂದ ಕೂಡಿದ ಯಾವುದೇ ಕರ್ತವ್ಯ ಕರ್ಮಗಳು "ತ್ಯಾಗ" ಎಂದಾಗುವುದಿಲ್ಲ. ಇಂತಹ ಕರ್ತವ್ಯ, ಕಾಳಜಿ, ಪ್ರೀತಿಯ ಭಾವಗಳನ್ನು ಸಂಸಾರದ ಉಳಿವಿಗೆ ಅಗತ್ಯವಾದ "ಮೋಹ ಭಾವದ ಕರ್ತವ್ಯ ನಿರ್ವಹಣೆ" - ಎಂದಷ್ಟೇ ಗುರುತಿಸಬಹುದು. ಹೆತ್ತವರು ಅಂತಹ ಮೋಹವನ್ನು ಉಳಿಸಿಕೊಳ್ಳದೆ "ಪೂರ್ಣ ವಿರಕ್ತಿ" ಯ ವೇಷ ಧರಿಸಿದ್ದರೆ ಆಗ ಅದು - ಕರ್ತವ್ಯಲೋಪ ಎಂದಾಗುತ್ತದೆ. ಆದ್ದರಿಂದ ಯಾವುದೇ ಸಂಬಂಧಗಳ ಮಧ್ಯಸ್ಥಿಕೆಗೆ ಕರ್ತವ್ಯಗಳಲ್ಲದೆ ಹಕ್ಕುಗಳು ನೆರವಾಗುವುದಿಲ್ಲ. ಆದ್ದರಿಂದಲೇ ಅವರವರ ಅನುಕೂಲಕ್ಕೆ ತಕ್ಕಂತೆ - ತ್ಯಾಗವನ್ನು ಯಾರೂ ಎಳೆದು ತರಲಾಗುವುದೂ ಇಲ್ಲ. ತ್ಯಾಗವು ಹಾಗೆಲ್ಲ ಸಿದ್ಧಿಸುವುದೂ ಇಲ್ಲ. ಆದ್ದರಿಂದಲೇ ಮಕ್ಕಳ ಹೆತ್ತವರದು ಅಲೌಕಿಕ ತ್ಯಾಗವಲ್ಲವಾದರೂ - ಬದುಕನ್ನು ನೋಡುವ ಅವಕಾಶವನ್ನು ಕೊಟ್ಟ ಮಾತಾಪಿತೃಗಳು ಅಪಾರ ಕೃತಜ್ಞತೆಗೆ ಅರ್ಹರಾಗಿರುತ್ತಾರೆ ಎಂಬುದನ್ನು - ಬದುಕನ್ನು ಪ್ರೀತಿಸುವ ಎಲ್ಲರೂ ಒಪ್ಪಬೇಕಾಗುತ್ತದೆ.. 

    ಯಾವುದೇ ವ್ಯಕ್ತಿಯು ಒಮ್ಮೆ ಸಂಸಾರ ಸಾಗರದಲ್ಲಿ ತೇಲಲು ತೊಡಗಿಕೊಂಡ ಮೇಲೆ  - ಶತಾಯಗತಾಯ ಕೊನೆಯ ಉಸಿರಿನವರೆಗೂಬದ್ಧತೆಯ ಕಡಿವಾಣವು ಸಡಿಲಗೊಳ್ಳಲೇಬಾರದು. ಸಡಲಿತೆಂದರೆ... ಮುಳುಗುವುದು ಶತಃಸಿದ್ಧ. ಆದರೆ ಆಗಾಗ ಹೊಕ್ಕುಹೊರಡುತ್ತ - ಸಾಂಸಾರಿಕ ಬದ್ಧತೆಯನ್ನೇ ಸಡಿಲಗೊಳಿಸಬಲ್ಲ ಅಸ್ತ್ರ - ತ್ಯಾಗ. ಆದ್ದರಿಂದ ಅನುಕೂಲಕ್ಕೆ ತಕ್ಕಂತೆ "ತ್ಯಾಗಾಸ್ತ್ರ" ವನ್ನು ಬಳಸುವುದರಿಂದ ಸಂಸಾರವು ಶಿಥಿಲಗೊಂಡು ಮುಳುಗಿಹೋಗುವ ಅಪಾಯವಿದೆ. ಉದಾತ್ತ ಚಿಂತನೆಗಳೆಲ್ಲವನ್ನೂ ಹೀಗೆ ಅಪರಾತಪರಾ ಪ್ರಯೋಗಿಸಿ ಹಾಸ್ಯಾಸ್ಪದವಾಗಿಸುವುದು ಮಾತ್ರ ಯಾರಿಗೂ ಶೋಭೆಯಲ್ಲ. ಇಂತಹ ಶಬ್ದಾರ್ಣವಗಳೆಲ್ಲವೂ ತಮ್ಮ ತಮ್ಮ ಆಲಸ್ಯದ ಭೋಗಯಾತ್ರೆಗೆ ತಕ್ಕಂತಹ ಪ್ರಶಸ್ತ ಸನ್ನಿವೇಶವನ್ನು ಪುನರ್ರೂಪಿಸಿಕೊಳ್ಳಲು ಮಾಡಿಕೊಳ್ಳುವ ಮನುಷ್ಯ ಸಾಹಸಗಳೇ ಹೊರತು - ತ್ಯಾಗವಂತೂ ಅಲ್ಲವೇ ಅಲ್ಲ. ಬುದ್ಧಿ ಸ್ಥಿಮಿತದ ಸ್ಥಿತಿಯಲ್ಲಿ ಸ್ವಂತಕ್ಕಾಗಿ ಕುಟುಂಬವನ್ನು ಕಟ್ಟಿಕೊಂಡವರಿಗೆ ಅವರವರ ಕರ್ತವ್ಯಗಳಿಗೆ ಬದ್ಧರಾಗುವುದಕ್ಕೆ ಮಾತ್ರ ಈ ಸಂಸಾರದಲ್ಲಿ ಅವಕಾಶವಿರುವುದು; ಬದುಕಿಗೆ ಸಹಕರಿಸಲಾಗದ ಸ್ವಂತ ದೇಹತ್ಯಾಗವನ್ನು ಬಿಟ್ಟು ಉಳಿದ ಯಾವ ತ್ಯಾಗಕ್ಕೂ - ಈ ಸಂಸಾರದಲ್ಲಿ ಅನುಕ್ಷಣವೂ ತೇಲಿ ಮುಳುಗುವವರಿಗೆ ಆಸ್ಪದವೇ ಇಲ್ಲ. ಸಂಸಾರ ಬಂಧನದೊಳಗೆ ಮುಕ್ತಭಾವ ಸಂಚಾರದ ತ್ಯಾಗವು ಇಣುಕುವುದೂ ಇಲ್ಲ. ಆದ್ದರಿಂದ ನಮ್ಮ ಸಾಂಸಾರಿಕ ಕರ್ತವ್ಯ ನಿರ್ವಹಣೆಗಳ್ಯಾವುವೂ ತ್ಯಾಗವಲ್ಲ.

    "ತ್ಯಾಗ ಜಾಡ್ಯ" ಎಂಬ ಇಂದಿನ ಸಮಸ್ಯೆಗೆ ಕಾರಣವೂ ಇದೆ. ನಮ್ಮ ಯುವಜನಾಂಗವು ಎರಡು ದೋಣಿಯಲ್ಲಿ ಕಾಲಿಟ್ಟಂತಿದೆ. ಇತ್ತ ಸ್ವಂತ ನೆಲದ ಹಿನ್ನೆಲೆಯ ಅರೆಬರೆ ಜ್ಞಾನ, ಅತ್ತ ಸ್ವಚ್ಛಂದತೆಯ ಸಾಕಾರವಾದ ಪಾಶ್ಚಾತ್ಯ ಸಂಸ್ಕೃತಿಯ ಸೆಳೆತ...  ಒಟ್ಟಿನಲ್ಲಿ ಬುದ್ಧಿಯೇ ಲೋಲಕವಾಗಿದೆ ! ಕಾಲಕಾಲಕ್ಕೆ - ಇವೆರಡರ ನಡುವೆ ತಮತಮಗೆ ಅನುಕೂಲವೆನ್ನಿಸುವ ಚರ್ಯೆಯನ್ನು ಇಂದಿನ ಪೀಳಿಗೆಯು ಅನುಕರಿಸುತ್ತಿದೆ. ಗಟ್ಟಿ ಸಿದ್ಧಾಂತವು ಎಲ್ಲೂ ಕಾಣಿಸುವುದಿಲ್ಲ. ಆದ್ದರಿಂದಲೇ "ತ್ಯಾಗದ ಕುಲುಕಾಟ ತುಳುಕಾಟ" - ಹೆಚ್ಚಿದೆ. ತಮ್ಮ ಕರ್ತವ್ಯಗಳಿಂದ ಪಲಾಯನಮಾಡಲು ಮತ್ತು ತಮ್ಮ ಪಲಾಯನವನ್ನು ಸಮರ್ಥಿಸಿಕೊಳ್ಳಲು, ತನ್ಮೂಲಕ ತಮ್ಮ ಆಲಸ್ಯದ ಕೆಸರನ್ನು "ತ್ಯಾಗದ ಹೆಸರಿನಲ್ಲಿ" ಇನ್ನೊಬ್ಬರಿಗೆ ಹಚ್ಚಲು - ಇಂತಹ ಭೋರ್ಗರೆತವು ಸುತ್ತಲೂ ಕವಿಯುತ್ತಿದೆಯೆ ? ಎಂದೂ ಅನ್ನಿಸುವುದಿದೆ. ಮೂಲ ಸಂಸ್ಕೃತಿಯ ಗಂಧಗಾಳಿಯೇ ಇಲ್ಲದ, " ದೇಹ ಸೌಂದರ್ಯ" ಪ್ರಜ್ಞೆಯಿಂದ ವಿಪರೀತ ಬಳಲುತ್ತಿರುವ ಆಕಾರಗಳಲ್ಲೆಲ್ಲ ಯಾವುದೋ ವಿದೇಶೀ ಸಂಸ್ಕೃತಿಯ ತ್ಯಾಜ್ಯ ಗಳನ್ನು ಕಸಿಮಾಡಲು ಯತ್ನಿಸಿದರೆ ಬದುಕು ತ್ರಿಶಂಕುವಾಗಿ, ಮನಸ್ಸಿಗೆ Infection ಆಗಿ, ಗೊಂದಲಾಪುರವಾಗುವುದು ಸಹಜ. ಆದರೆ ಸಂಯಮದಿಂದ ವಿಚಾರಮಾಡಿದರೆ "ಆಧುನಿಕರ ತ್ಯಾಗ" ಎಂಬ ಅಂಟುರೋಗದ ಜಾಡ್ಯ ವನ್ನು ಅವರವರೇ ಪರಿಹರಿಸಿಕೊಳ್ಳಲು ಸಾಧ್ಯವಿದೆ. ತ್ಯಾಗ ಇರುವಲ್ಲಿ ಯಾವುದೇ ಗೊಂದಲ ಇರುವುದಿಲ್ಲ.



                                                                      *******

     ಬೇಜವಾಬ್ದಾರಿಯ ಮತ್ತು ಪಡಪೋಶಿತನದ - ಮುಖಸ್ತುತಿ ರೂಪದ ಮಿಥ್ಯಾ ಭಾವ ಪ್ರಚಾರಗಳಿಂದ - ಯಾವತ್ತೂ - ಒಳಿತಿಗಿಂತ ಕೆಡುಕಾಗುವುದೇ ಜಾಸ್ತಿ. ತವರಿನಿಂದ ಏನನ್ನೇ ಆದರೂ ಹೊತ್ತು ತರುವ ಪಾರುಪತ್ಯವೂ ಬೇಕಾಗಿಲ್ಲ; ಏನೇನೋ ಬಿಟ್ಟು ಬಂದ ಮನೋಸ್ಥಿತಿಯೂ ಅನುಕರಣೀಯವಲ್ಲ. ಇವೆರಡೂ - ಸುಖ ಸಂಸಾರಕ್ಕೆ ಅವಶ್ಯವಾದ ಭಾವಗಳಲ್ಲ. ಬದಲಾಗಿ, ಸಾಂಸಾರಿಕ ಬದುಕನ್ನು ಟೊಳ್ಳಾಗಿಸುವ ಆಯುಧಗಳು. ಹೆಣ್ಣು ತನ್ನನ್ನು ತಾನೇ "ಸಂಸಾರದ ಕಣ್ಣು" ಅಂದುಕೊಳ್ಳುವುದೂ ಒಮ್ಮೊಮ್ಮೆ ಅತಿಶಯೋಕ್ತಿಯೇ ಆಗಿರುತ್ತದೆ. ವಿವಾಹ ಎಂದರೆ - N G O ಸಂಸ್ಕೃತಿಯ ಅಂಕಿಅಂಶಗಳಿಗೆ ನಿಲುಕದ - ಭಾವನೆಲೆಯ ಸಾಂಗತ್ಯ. ಆದ್ದರಿಂದ - ಬೆಚ್ಚಗಿನ ಕತೆ ಹೊಸೆಯಲು ತೊಡಗಿಕೊಂಡರೆ - ಬದುಕು ಮುದುಡುತ್ತದೆ. ವೈವಾಹಿಕ ಬದುಕಿನ ಸಂದರ್ಭದಲ್ಲಿ - ತ್ಯಾಗ ಗೌರವಗಳೆಲ್ಲವೂ ಅಮೂರ್ತ ಅಂತರ್ಗಾಮಿಯಾಗಿ ಸಂಚರಿಸುವುದೇ ಕ್ಷೇಮ. ಆಗ ಸಂಸಾರವು ಕರ್ಕಶ ಶಬ್ದ ಸಂತೆಯಾಗದೆ - ಭಕ್ತಿ ಸಂಗೀತವಾಗುತ್ತದೆ.

    ಇಂದಿನ ಸಾಮಾನ್ಯ ಶಿಕ್ಷಣ, ಚಿಂತನೆಗಳು - ಇತ್ತ ಎಲ್ಲರ ಹೊಟ್ಟೆಯನ್ನೂ ತುಂಬಿಸುತ್ತಿಲ್ಲ; ಅತ್ತ ಯಾವುದೇ ಉಪಕಾರೀ ವರಪ್ರಸಾದವನ್ನೂ ನೀಡುತ್ತಿಲ್ಲ. ಮಕ್ಕಳ ತಲೆಯಲ್ಲಿ ವಿಪರೀತದ ಚಿಂತನೆ ಮತ್ತು ಕನಸುಗಳನ್ನು ಮಾತ್ರ ಯಥೇಷ್ಟ ತುಂಬಿಸುತ್ತಿದೆ. ತತ್ಪರಿಣಾಮವಾಗಿ, ಮನುಷ್ಯರು ಸ್ವಕೇಂದ್ರಿತರಾಗುವಂತಾಗಿ ಯುವಜನಾಂಗದಲ್ಲಿ ಕೌಟುಂಬಿಕ ಸೆಳೆತವು ಸಡಿಲಗೊಳ್ಳುತ್ತಿದೆ. ಕುಟುಂಬಗಳು ನಾಶವಾಗುತ್ತಿವೆ. ಭೂಮಿಯ ಸಹಜ ಸಹವಾಸವು ತಪ್ಪಿಹೋಗಿ ಗಗನ ಸಂಚಾರವೇ ಮಕ್ಕಳಲ್ಲಿ ಹೆಚ್ಚಿದಂತೆ ಕಾಣುತ್ತಿದೆ. ವಾಸ್ತವದಲ್ಲಿ, ಇವತ್ತಿನ ಅಪ್ಪಟ ಸುಳ್ಳು ಮಾಹಿತಿಗಳ ಸಪ್ಪೆ ಶಿಕ್ಷಣವನ್ನು ಪಡೆಯದಿದ್ದರೇ ಸಮಾಜಕ್ಕೆ ಹಿತವಾಗಬಹುದು ಅನ್ನಿಸುವ ಸನ್ನಿವೇಶವಿದೆ. 

    ಇವತ್ತು ನಮ್ಮನ್ನು ಸತಾಯಿಸುತ್ತಿರುವುದು ಆರ್ಥಿಕ ಬಡತನವಲ್ಲ. ಬದಲಾಗಿ, ಭಾವ ದಾರಿದ್ರ್ಯ; ಸಚ್ಚಾರಿತ್ರ್ಯ ದಾರಿದ್ರ್ಯ; ಸಹಜತೆಯ ದಾರಿದ್ರ್ಯ. ಜಗದೇಕ ಮೂರ್ಖರನ್ನು ಉತ್ಪಾದಿಸುತ್ತಿರುವ ಇಂದಿನ ಭಾರತೀಯ ಶಿಕ್ಷಣವು - "ತುಳುಕುವ ತ್ಯಾಗೀ ಕೊಡ " ಗಳನ್ನು ಸಾಲುಸಾಲಾಗಿ ವಿಲೇವಾರಿ ಮಾಡುತ್ತಿದೆ! ಹಕ್ಕುಗಳ ಬಗೆಗೆ ಮಾತ್ರ ಯೋಚಿಸುವ, "ತ್ಯಾಗೀ ಸ್ವಾರ್ಥಿ (!) " ಗಳ "ಆರ್ಥಿಕ ಆಧರಿತ ಸಮಾಜ "ವು ಈಗ ಅವಸರದಿಂದ ವಿಕಸಿಸುತ್ತಿದೆ. ಆಯಾ ಮನೆಯ ಸದಸ್ಯರು ಸ್ವಂತ ಮನೆಯಲ್ಲೇ ಪರಕೀಯರಂತೆ ವರ್ತಿಸುತ್ತಿದ್ದಾರೆ ! ಆದ್ದರಿಂದಲೇ - ತಾವೇ ಉಂಡ ಬಟ್ಟಲನ್ನು ತೊಳೆದು ಇಟ್ಟರೂ ಏನೋ ಯಾರಿಗೋ ಉಪಕಾರ ಮಾಡಿದಂತೆ ಭಾವಿಸುತ್ತಿರುವ ಅಸಹಜ ಸ್ಥಿತಿ ಇದೆ ! ಗಂಡ, ಮಕ್ಕಳು, ಅತ್ತೆಮಾವ...ಇತರ ಎಲ್ಲ ಸಂಬಂಧಗಳಿಂದಲೂ - "ಸಿಗುವ ಆರ್ಥಿಕ ಲಾಭವೇನು ?" ಎಂದು ಯೋಚಿಸುವ ಕ್ಷುದ್ರ ಹಂತಕ್ಕೆ ಹೊಸ ಪೀಳಿಗೆಯು ತಲುಪಿದೆ ! ಕುಟುಂಬದ ಕೆಲಸಕ್ಕೂ ತಮ್ಮ ಮನೆಮಂದಿಯಿಂದ ಪ್ರತಿಫಲ ನಿರೀಕ್ಷಿಸುವ ಹಂತಕ್ಕೆ ತಲುಪಿದವರೂ ಇದ್ದಾರೆ ! ಆದ್ದರಿಂದಲೇ ತಾವು ಕಡ್ಡಿ ಎತ್ತಿಟ್ಟರೂ ಗುಡ್ಡ ಎತ್ತಿಟ್ಟಂತೆ - ತಾವು ಮಾಡಿದುದೆಲ್ಲವೂ "ತ್ಯಾಗ" ಎಂದೇ ಅವರಿಗೆ ಅನ್ನಿಸತೊಡಗಿದೆ ! ಗಾಂಭೀರ್ಯವಿಲ್ಲದ ಕೆಲವು ಬದುಕುಗಳಲ್ಲಿ "ತ್ಯಾಗದ ಅಮಲು" ವಿಪರೀತವಾದಾಗ ಹೀಗೆಲ್ಲ ಆಭಾಸ ಆಗುತ್ತದೆ. ಹೀಗೇ ಆಗುವುದು ಸಹಜ ಎನ್ನುವ ಕೆಲವು ಪೋಷಣಾ ದ್ರವ್ಯಗಳೂ ಕಾಣಿಸಿಕೊಳ್ಳುತ್ತಿವೆ. ಹೀಗಿರುವಾಗ, "ನನ್ನ ಬದುಕು; ನನ್ನ ಇಷ್ಟ" ಎಂಬ ಧೋರಣೆಯುಳ್ಳವರು ಹಾಗೇ ಬದುಕುವುದಕ್ಕೆ ಯಾವ ಅಭ್ಯಂತರವೂ ಇಲ್ಲ. ಆದರೆ ಸಂಸಾರಗಳನ್ನು ಹುರಿದು ಮುರಿದು ಹಾಕಬಲ್ಲ - ಹೋಕುಬಾರದ ತ್ಯಾಗದ ಮಾತುಗಳನ್ನು ನಿತ್ಯವ್ಯವಹಾರಗಳಲ್ಲಿ ತ್ಯಜಿಸುವುದೇ ಒಳ್ಳೆಯದು.

    ಜವಾಬ್ದಾರಿಯಿಂದ ತಮ್ಮ ತಮ್ಮ ಕರ್ತವ್ಯ ನಿರ್ವಹಿಸುವುದನ್ನು ರೂಢಿಸಿಕೊಂಡರೆ ಎಲ್ಲರ ಬದುಕೂ ಸುಂದರವಾದೀತು. "ಏಕವು ಇರುತ್ತದೆ; ಅನೇಕಗಳೆಲ್ಲವೂ ಬದಲಾಗುತ್ತವೆ; ಹೋಗುತ್ತವೆ" ಎಂದ ಷೆಲ್ಲಿ ಕವಿಯ ಮಾತುಗಳು ಅರ್ಥಪೂರ್ಣ. ಈ ಭೂಮಿಯ ಬದುಕುಗಳೆಲ್ಲವೂ ಅನೇಕದ ಭಾಗ. ಆದ್ದರಿಂದ ಬಂದುಹೋಗುವ ಕ್ರಿಯೆಯು ನಡೆಯುತ್ತಲೇ ಇರುತ್ತದೆ. ಇಂತಹ ದೀರ್ಘ ಪಯಣದಲ್ಲಿ ಆಗಾಗ ಬಂದುಹೋಗುವ ಜೀವಿಗಳು ತಮ್ಮ ಹೆಜ್ಜೆಗಳು ಎಡವದಂತೆ ತ್ಯಾಗದ ಆದರ್ಶವನ್ನು ಮಾತ್ರ ಇಟ್ಟುಕೊಂಡು ಕರ್ಮನಿರತರಾಗಿ ಜಾಗ್ರತರಾಗಿರಬಹುದೇ ವಿನಹ ತಮಗೆ ಸರಿಕಂಡಂತೆ ಎದ್ದು ಕೂತು, "ಬುದ್ಧನಾಗಿಬಿಟ್ಟೆ" ಅಂದುಕೊಳ್ಳುವುದು ಸರಿಯಲ್ಲ. 

    ಎಷ್ಟೇ ಸ್ವಪ್ರಯತ್ನವಿದ್ದರೂ "ದೈವಬಲ"ವಿಲ್ಲದೆ ಯಾವುದೇ "ತ್ಯಾಗ" ವು ಸಂಭವಿಸದು. (ದೈವಭಾವವು ಒಗ್ಗದಿರುವವರು ತಮ್ಮ "ಅದೃಷ್ಟ" ಎಂದೂ ಅಂದುಕೊಳ್ಳಬಹುದು ! ) ಆಧ್ಯಾತ್ಮಿಕವಾಗಿ ಸೂಕ್ಷ್ಮಸಂವೇದನೆಯುಳ್ಳವರಿಗೆ ಮಾತ್ರ - ದೈವಬಲವೂ ಒದಗಿದರೆ - ತ್ಯಾಗದ ಸಾಕ್ಷಾತ್ಕಾರವಾದೀತು. ಯಾವುದೇ ಸ್ವಸ್ಥ ಬದುಕಿನ ಆತ್ಮೋದ್ಧಾರದ ಯಾತ್ರೆಯ ಕೊನೆಯ ಘಟ್ಟದಲ್ಲಿ ಜಾತಿ ಲಿಂಗ ಭೇದವಿಲ್ಲದೆ ಊರುಗೋಲಾಗುವ ಅಪೂರ್ವ ಅನುಭೂತಿಯದು. ಇದಕ್ಕೆ ಹೊರತಾಗಿ - ತ್ಯಾಗ ಎನ್ನುವುದು ಯಾವುದೇ ಕೌಟುಂಬಿಕ ಸಂಸಾರವನ್ನು ಕಟ್ಟಿ ಬೆಳೆಸುವ ಸಾಧನವಲ್ಲ. ಬದಲಾಗಿ, ಅದು ಕಳಚಿಕೊಳ್ಳುವ ಉಪಕರಣ. 

     ಸ್ವಪ್ರತಿಷ್ಠೆ, ಅಹಂಕಾರಗಳನ್ನು ಹೆಚ್ಚಿಸಿಕೊಳ್ಳಲು, ಇನ್ನೊಬ್ಬರ ಕರುಣೆಯನ್ನು ಗಿಟ್ಟಿಸುವ ಸಲುವಾಗಿ "ತ್ಯಾಗ" ಎಂಬ ಶಬ್ದವನ್ನು ಸುಮ್ಮನೆ ಎಳೆದಾಡಿದರೆ ಯಾರಲ್ಲಾದರೂ ತ್ಯಾಗದ ಆವಾಹನೆ ಆದೀತೆ ? ಆದ್ದರಿಂದ "ತ್ಯಾಗದ ಕೋಲಾಹಲ " ವು ಬೇಕಾಗಿಲ್ಲ; ಇವತ್ತಿಗೆ ಅದು ಸೂಕ್ತವೂ ಅಲ್ಲ. ಐಶ್ವರ್ಯ, ಮೋಹ, ಸ್ವಾರ್ಥಪೀಡಿತ ಮನುಷ್ಯಕರ್ಮಗಳನ್ನೆಲ್ಲ ಪುಂಖಾನುಪುಂಖವಾಗಿ ಉದಾಹರಿಸುತ್ತ , ಕ್ಷಣಕ್ಕೊಮ್ಮೆ ಎದ್ದೆದ್ದು ಅವನ್ನೆಲ್ಲ "ತ್ಯಾಗ ತ್ಯಾಗ..." ಎನ್ನುತ್ತ ಹೋದರೆ....   ಭೂತದ ಬಾಯಿಯಿಂದ ಭಗವದ್ಗೀತೆ ಕೇಳಿದಂತಾದೀತು. ಬೀದಿಗಳ ಬದಿಯಲ್ಲಿ ಸಿಗುವ ಪಿಜ್ಜ, ಪಾನೀಪುರಿಯ ಅಂಟನ್ನೂ ಬಿಡಲಾಗದವರಿಗೆ ತ್ಯಾಗದ ವಿಷಯವು ಅರ್ಥವಾಗುವುದು ಹೇಗೆ ?

    ಈ ಬದುಕು ಇರುವುದೇ ಸುಮ್ಮನೆ ಬದುಕುವುದಕ್ಕಾಗಿ. ಅದೂ ಒಂದು ಯೋಗವೇ. ಹೊರವೇಷದೊಳಗಿನ ನಮ್ಮನ್ನು ನಾವೇ ಅಲುಗಿಸಿ ಪ್ರಶ್ನಿಸಿಕೊಳ್ಳಬೇಕು. ತ್ಯಾಗದ ನಿರ್ಮಮ ಆನಂದವನ್ನು ನಮ್ಮ ನಿತ್ಯಬದುಕಿನ ಕ್ರಿಯೆ - ಸಾಧನೆಯಿಂದಲೇ ನಾವು ತಲುಪಬಲ್ಲೆವೆ ? ಎಂದು ಪ್ರಶ್ನಿಸಿಕೊಂಡರೆ - ತಲೆ ತಾನಾಗಿಯೇ ತಗ್ಗುತ್ತದೆ. ಮಾತು ನಿಲ್ಲುತ್ತದೆ. ಮಾತು ಮಿತವಾಗುತ್ತ ಹೋದಾಗಲೇ ಯಾವುದೇ ಸಾಧನೆಗೆ ವೇಗ ಸಿಕ್ಕೀತು. ಏಕಾಂಗಿಯಾಗಿ ನಡೆಯುವುದನ್ನೂ   ಕಲಿತುಕೊಂಡಾಗ - ನಿಜವಾದ ತ್ಯಾಗದ ಅನುಭವವಾದೀತು.

                                                      ******************