Sunday, May 15, 2016

ತಪ ತಾಪ ತಪಸ್ಸು ದರ್ಶನ

ಬಾಹ್ಯ ಮನಸ್ಸುಗಳ ಹಾರಿಳಿತಗಳನ್ನು ಅಭ್ಯಸಿಸುತ್ತ ಕಾರ್ಯ ಕಾರಣ ಪರಿಣಾಮಗಳ ಶೋಧನೆಯಲ್ಲಿ ಮುಳುಗಿ ಬೆರಗಾಗುತ್ತ - ಒಂದಷ್ಟು ನಿದರ್ಶನಗಳ ಸರಾಸರಿಯ ಆಧಾರದಲ್ಲಿ ಸಿದ್ಧಾಂತವನ್ನು ಪ್ರತಿಪಾದಿಸುವವರು - ಮನಃಶಾಸ್ತ್ರಜ್ಞರು.

-ತಮ್ಮದೇ ಮನಸ್ಸನ್ನು ಕಟ್ಟಿ ನಿಲ್ಲಿಸಿ ಮನಸ್ಸಿನ ಆಚೆಯ ಸಂಭ್ರಮವನ್ನು ತಾವೇ ಆನಂದಿಸಿ ಮನೋಯೋಗದಲ್ಲಿ ಉಯ್ಯಾಲೆಯಾಡಿ ಸತ್ಯವನ್ನು ಕಂಡುಕೊಂಡವರು - ಋಷಿಗಳು.

ಎಷ್ಟೋ ಬಾರಿ, ಕಾರ್ಯ ಕಾರಣಗಳ ಸಾಂಸಾರಿಕ ಪರಿಧಿಯಲ್ಲಿ ಅವರವರಿಗೆ ದಕ್ಕುವ ಸಾಂದರ್ಭಿಕ ಅಸ್ಥಿರ ಉತ್ತರಗಳನ್ನು ಆಧರಿಸಿ ಸತ್ಯವನ್ನು ಮುಟ್ಟಿದಂತೆ ರೋಮಾಂಚನಗೊಳ್ಳುವವರು - ಮನಶ್ಶಾಸ್ತ್ರಜ್ಞರು.

-ಸಂಸಾರದ ಚಂಚಲ ಪ್ರಶ್ನೆಗಳನ್ನು ಕೊಡವಿ ಮೇಲೆದ್ದು ಬುದ್ಧಿಯಲ್ಲಿ ಅಂತಹ ಪ್ರಶ್ನೆಗಳೇ ಉದ್ಭವಿಸದ - ಮನಸ್ಸು, ಬುದ್ಧಿಯನ್ನು ಏರಿದ ನೆಲೆಯಲ್ಲಿ - "ಪೂರ್ಣತೆಯ ದರ್ಶನ" ಎಂಬ ತಪಸ್ಸಿನಲ್ಲಿ - ದರ್ಶನದ ಹೊಳಹನ್ನು ಕಂಡುಕೊಂಡವರು ಋಷಿಗಳು.

ಹತ್ತುವ ಹಂತದಲ್ಲೇ ನಿಗುಚಿ ನಿಂತು ಕೈಚಾಚಿ ಮನಸ್ಸಿನ ಲಕ್ಷಣವನ್ನು ಮಾತ್ರ ಮುಟ್ಟಿ ಇಳಿಯುವವರು ಒಂದೆಡೆ; ಮನಸ್ಸನ್ನು ಇಡಿಯಾಗಿ ಮುಟ್ಟಿ ಅಲ್ಲಿಂದಲೂ ಮೇಲೇರಿ ಮರ್ಕಟ ಮನಸ್ಸಿನ ಆಮೂಲಾಗ್ರ ಇತಿಮಿತಿಯನ್ನು - ಅದರಾಚೆಗಿನ ಅಗಾಧ ಪ್ರಶಾಂತಿಯನ್ನು ಕಂಡವರು ಇನ್ನೊಂದೆಡೆ.

ಆದರೆ....ಇವರೆಲ್ಲರೂ ಮನಸ್ಸು-ಬುದ್ಧಿಯ ಉಪಾಸಕರು.

ಇವೆರಡು ವರ್ಗದ ನಡುವೆ - ತಮ್ಮ ಮನಸ್ಸು ಬುದ್ಧಿಯನ್ನು ಉಪೇಕ್ಷಿಸುತ್ತ ಹಾಯಿಯಿಲ್ಲದ ದೋಣಿಯಂತೆ ಜೀವನವನ್ನು ಎತ್ತೆತ್ತಲೋ ಚಲಿಸುತ್ತ ಆಯುಷ್ಯ ಸವೆಸುವ ಅಪಾರ ಜನರೂ ಈ ಲೋಕದಲ್ಲಿದ್ದಾರೆ. ಆದರೆ... ಕೇವಲ ಕ್ಷುಲ್ಲಕ ಪ್ರತಿಫಲಕ್ಕಾಗಿ ಬದುಕಿಡೀ ಅಲ್ಲಿ ಇಲ್ಲಿ ಕುಕ್ಕುವುದಕ್ಕಿಂತ ಎಲ್ಲರ ಹಿತಕ್ಕಾಗಿ ಬುದ್ಧಿಯನ್ನು ಉಜ್ಜುವ ಕಾಯಕದಲ್ಲಿಯೇ ಸ್ವಸಂತೋಷವನ್ನೂ ಕಾಣುವಂತೆ "ಆಗುವುದು" - ಎಲ್ಲ ಯುಗ-ಸಂದರ್ಭಗಳಲ್ಲೂ ಶ್ರೇಷ್ಠವಾದುದು.   

ಎಷ್ಟೇ ವಯಸ್ಸಾಗಿರಲಿ ಎಷ್ಟೇ ಶಿಕ್ಷಿತ - ಅನುಭವಸ್ಥನಾಗಿರಲಿ, ಬಾಲಿಶತನದ ಬಾಲ್ಯವನ್ನು ಯಾಂತ್ರಿಕವಾಗಿ ದಾಟಿ ಹೋಗಿದ್ದರೂ ಪ್ರತಿಯೊಬ್ಬ "ಬೆಳೆದ ಮಾನವ"ನ ಒಳಗೂ - ಆಗಲೂ ಒಂದು ಶೈಶವ, ಬಾಲ್ಯ ಎಂಬುದು ಇದ್ದೇ ಇರುತ್ತದೆ. ಹೊರಗಿನ ಕನ್ನಡಿಯು "ನೀನು ವಯೋವೃದ್ಧ" ಎನ್ನುತ್ತ ದೇಹವನ್ನು ಪ್ರತಿಫಲಿಸುತ್ತಿದ್ದರೂ... ಸಾಂಸಾರಿಕ - ಸಾಮಾಜಿಕ ಸಂಬಂಧಗಳು "ಕನ್ನಡಿಯು ಪ್ರತಿಫಲಿಸುವ" ಅಂತಹ ಛಾಯೆಯನ್ನು ಅನುಮೋದಿಸುತ್ತಿದ್ದರೂ ಅದೇ ಸಂಪೂರ್ಣ ಸತ್ಯವಲ್ಲ. ಅದೇ ಅಂತರ್ಬಿಂಬವಲ್ಲ. ಕನ್ನಡಿ, ಸಂಸಾರ, ಸಮಾಜಗಳೆಲ್ಲವೂ ಪ್ರತಿಫಲಿಸುವುದು - ದೇಹವನ್ನು. ಆದರೆ ಆ ದೇಹಭಾವವೇ - ಮನೋಭಾವ, ಬುದ್ಧಿಭಾವ, ಆತ್ಮಭಾವವೂ ಆಗಲಾರದು. ನಾವು ಬಳಿದುಕೊಳ್ಳುವ ಬಣ್ಣ, ಧರಿಸುವ ಸೀರೆ, ಸಮವಸ್ತ್ರ, ಕೋಟುಗಳಿಂದಲೇ ನಮ್ಮನ್ನು ತಿಳಿಯಲು ಆಗುವುದಿಲ್ಲ. ಇವೆಲ್ಲವೂ ಮನಸ್ಸು, ಬುದ್ಧಿಯ ಹೊರತಾದ ಬಾಹ್ಯರೇಖೆ. ಮನಸ್ಸಿನದು ಯಾವಾಗಲೂ ನಿರಾಭರಣ ಸೌಂದರ್ಯ; ಅದೃಶ್ಯ ಸಾಮ್ರಾಜ್ಯ. ಆದರೆ ತರಬೇತುಗೊಳ್ಳದ ಅಂಕುಶವಿಲ್ಲದ ಮನಸ್ಸುಗಳು - ಮನುಷ್ಯ ಚೌಕಟ್ಟಿನ ಯಾವ ಶಾಸ್ತ್ರಕ್ಕೂ ಸುಲಭದಲ್ಲಿ ಸಿಗುವುದಿಲ್ಲ. ಆದ್ದರಿಂದಲೇ ಆಧುನಿಕ ಮನಃಶಾಸ್ತ್ರವು, ನಿರಂತರ ಬಣ್ಣ ಬದಲಿಸುವ ಮನಸ್ಸಿನ ಸುತ್ತ ಸುತ್ತುತ್ತ ಇನ್ನೂ ಬಾಲ್ಯಾವಸ್ಥೆಯಲ್ಲಿಯೇ ಇದೆ. ಆದ್ದರಿಂದಲೇ ಬಾಹ್ಯೇಂದ್ರಿಯಗ್ರಾಹ್ಯ ಲಕ್ಷಣಗಳಿಗೆ ನೀಡಲಾಗುವ ಚಿಕಿತ್ಸೆಗಳೂ ಲಕ್ಷಣವು ಬದಲಾದಂತೆ ಬದಲಾಗುತ್ತಿರುತ್ತದೆ. ಮನಸ್ಸು ಕುಪ್ಪಳಿಸುತ್ತಲೇ ಇರುತ್ತದೆ! ಇದೇ ಕಾರಣದಿಂದಲೇ - ಮನೋರೋಗಗಗಳಿಗೆ ಕೃತಕ ವಿಶ್ರಾಂತಿಯಲ್ಲದ ಇನ್ನೊಂದು ಶಾಶ್ವತ ಪರಿಹಾರವು ಇನ್ನೂ ಸಾಧ್ಯವಾಗಿಲ್ಲ. ಏನಿದ್ದರೂ ಮನಸ್ಸನ್ನು ಸ್ಥಿರವಾಗಿ ನಿಲ್ಲಿಸುವುದನ್ನು ಮೊದಲು ಕಲಿಯದೆ, ಕಲಿಸದೆ - ನಡೆಸುವ ಉಳಿದ ಯಾವ ಪ್ರಯೋಗಗಳಿಗೂ ಸ್ಥಿರ ಸೂತ್ರವಿರುವುದಿಲ್ಲ; ಎಲ್ಲವೂ ಪ್ರಯೋಗಗಳೇ ಆಗಿಬಿಡುತ್ತವೆ. ಚಂಚಲ ಮನಸ್ಸಿಗೆ ತಪಸ್ಸೇ ಮದ್ದು. ಮನಸ್ಸನ್ನು ಸ್ಥಿರವಾಗಿ ನಿಲ್ಲಿಸುವುದೇ ತಪಸ್ಸು. ಗುರು ಮಾಧ್ಯಮದಿಂದ ನಡೆಸಲಾಗುವ ಏಕಾಗ್ರ ಸುದೀರ್ಘ ಪ್ರಯತ್ನಕ್ಕೆ ಮಾತ್ರ ಒಲಿಯಬಹುದಾದ ಸಾಧನೆಯಿದು.

ತಪಸ್ಸು ಅಂದರೆ ಶಕ್ತಿಯನ್ನು ಆವಾಹನೆ ಮಾಡಿಕೊಳ್ಳುವ ಕರ್ಮ. ಅದೊಂದು ಶುದ್ಧ ಆಲೋಚನೆಯ ಭಂಡಾರ. ಮನಸ್ಸಿನ ಹುಚ್ಚು ನೆಗೆತಕ್ಕೆ ಕಡಿವಾಣ ಹಾಕಿ ಅದನ್ನು ದಂಡಿಸಿ ಗುರಿಯತ್ತ ನಡೆಸುವ ನಿರೋಧ(ದಮ)ಶಕ್ತಿಯ ಸಂಚಯನವೇ ತಪಸ್ಸು. ಕೆಲವೊಮ್ಮೆ ಗುಂಪಿನಿಂದ ದೂರಾಗಿ ಏಕಾಂತದಲ್ಲಿ ಏಕಾಂಗಿಯಾಗಿ ನಡೆಸುವ ಮಥನ - ತಾಲೀಮು! ಗುರಿಯೆಡೆಗೆ ಏಕಚಿತ್ತದ ನಡಿಗೆ! ಚಿತ್ತ ಸಂಧಾನ!

ಲೌಕಿಕ ಸಾಧಕರು, ಕಲಾವಿದರೆಲ್ಲರೂ ಹಾಗೆ ನೋಡಿದರೆ, ಸಣ್ಣ - ದೊಡ್ಡ ತಪಸ್ವಿಗಳೇ. ರಾಗಚಿತ್ರವನ್ನು ಬಿಡಿಸುತ್ತ ರಾಗರಾಗಿಣಿಯರೊಂದಿಗೆ ಸಂಧಾನ ನಡೆಸುವ ಸಂಗೀತಗಾರನು ಬಹು ದೀರ್ಘಕಾಲ ಏಕಾಂತದಲ್ಲಿ ತಪಸ್ಸು ಮಾಡಿರುತ್ತಾನೆ. ಆರಂಭದಲ್ಲಿ ದೂರದೂರವೇ ಉಳಿಯುವ ರಾಗಭಾವಗಳನ್ನು ಓಲೈಸಿ ಅವುಗಳನ್ನು ಒಂದೊಂದಾಗಿ ವಶಪಡಿಸಿಕೊಳ್ಳುತ್ತ - ಮೊದಲು ತಾನೇ ರಾಗವಾಗಿ...ಕೊನೆಯಲ್ಲಿ ವಿರಾಗವಾಗಿ ಹೋಗುವ "ಸಂಗೀತ ನಾರದ"ರ ಯಾವುದೇ ಸಾಧನೆಯು - ಅವರ ತಪಸ್ಸಿನಿಂದಲೇ ಮೂರ್ತಗೊಳ್ಳುತ್ತದೆ. ಚಿತ್ರಕಾರನಾಗಲೀ ಕವಿಯಾಗಲೀ ಇದಕ್ಕೆ ಹೊರತಲ್ಲ. ಪರಮಪುರುಷನ ಸೃಷ್ಟಿಯ ಸನ್ನಿವೇಶದಲ್ಲಾಗಲೀ - ಯಾವುದೇ ಲೌಕಿಕ ಕಲಾರಚನೆಯ ಸಂದರ್ಭದಲ್ಲಾಗಲೀ - ಆಯಾ ಮನಸ್ಸಿನಲ್ಲಿ ಪೂರ್ವಭಾವಿಯಾಗಿ ರೂಪುಗೊಳ್ಳುವ ಸಮಗ್ರ ಕಲ್ಪನೆಯೇ ಸಂಕಲ್ಪ. ಅದು - ಕರ್ಮಕ್ಕೆ ತೊಡಗುವ ಪೂರ್ವದ - ನಿಶ್ಚಯ. ಪರಪೀಡೆಗೆಳಸದ, ಪುರೋಗಾಮಿಯಾದ ಯಾವುದೇ ಕರ್ಮದಲ್ಲಿ ದೃಢವಾಗಿ ತೊಡಗುವ ಎಲ್ಲ ನಿಶ್ಚಯಗಳೂ ತಪಸ್ಸುಗಳೇ. ಆದರೆ ಎಲ್ಲ ದೃಷ್ಟಿಯಿಂದಲೂ... ಬೃಹತ್ ಸೃಷ್ಟಿಯ ಸೃಷ್ಟಿಕರ್ತನಿಗೆ ಹೋಲಿಸಬಹುದಾದ ಪರಿಣತ - ಪರಿಪೂರ್ಣ ತಪಸ್ವಿಯಿಲ್ಲ; ಚಿತ್ರಕಾರನಿಲ್ಲ. ಇವೆಲ್ಲವೂ ತಪಸ್ಸಿನ ಸಂಕಲ್ಪ ಶಕ್ತಿಯಿಂದಲೇ ಘಟಿಸಿದೆ! ಘಟಿಸುತ್ತದೆ!

 
ಚತುರ್ಮುಖ ಬ್ರಹ್ಮನು ಚತುರ ಕಲಾವಿದನಾಗಿದ್ದರೂ... ಆದಿಯಲ್ಲಿ ಸೃಷ್ಟಿಯನ್ನು ರೂಪಿಸಲು ಆತನು ಪಟ್ಟ ಪಾಡು ಅಂತಿಂಥದ್ದಲ್ಲ. ಒಂದು ಪುಟ್ಟ ಕುಟುಂಬವನ್ನು ರೂಪಿಸಿಕೊಳ್ಳಲಾಗದೆ ಬವಣೆ ಪಡುತ್ತಿರುವ ನಮ್ಮಂತಹ ಹುಲು ಮಾನವರಿಗೆ ಆ ಕಷ್ಟದ ಅನುಭವವಾಗುವುದು ಅಸಾಧ್ಯ. ಸೃಜನಶೀಲ ಕೆಲಸಗಳೆಲ್ಲವೂ ವೇದನಾಪೂರ್ಣವಾಗಿರುವುದು ಸಹಜ. ಇದುವರೆಗಿನ ಬ್ರಹ್ಮಾಂಡದ ಪರಿಕಲ್ಪನೆಯಲ್ಲಿ, ಬ್ರಹ್ಮನಿಂದ ಆದುದೆನ್ನಲಾಗುವ ಸೃಷ್ಟಿಯೇ ಮೊದಲ ಸೃಜನಶೀಲ ಕೆಲಸ. ಸೃಷ್ಟಿಯನ್ನು ರೂಪಿಸಲು ಹೊರಟ ಮಹಾನ್ ಚಿತ್ರಕಾರನಾದ ಬ್ರಹ್ಮನ ಆರಂಭದ ಕೆಲಸಗಳು ಅನೇಕ ಓರೆಕೋರೆಗಳಿಂದ ಕೂಡಿದ್ದವು. ಅನನುಭವಿಯಾದ ಈ ಬ್ರಹ್ಮನ ಸೃಷ್ಟಿಯಲ್ಲಿ ಮೊದಲು ಮೂಡಿಬಂದದ್ದೇ ತಮಸ್ಸು, ಮೋಹ ಮುಂತಾದ ಐದು ಬಗೆಯ ಅವಿದ್ಯೆಗಳು. ಬ್ರಹ್ಮ-ಸ್ವಭಾವದ ಈ ಪ್ರತಿಕೃತಿಗಳನ್ನು ನೋಡಿದ ಬ್ರಹ್ಮನೇ ಜಿಗುಪ್ಸೆಗೊಂಡು ತನ್ನಲ್ಲೇ ದೋಷವನ್ನು ಕಂಡು, ಹಿಂಜರಿಕೆಯಾಗಿ, ತಮೋಮಯವಾದ ತನ್ನ ಶರೀರವನ್ನೇ ತ್ಯಜಿಸಿಬಿಟ್ಟ. ಆದರೆ ಆಗಿಹೋದ ಕೆಲಸಗಳು ಅಂದರೆ - ಎಂದೂ ಹಿಂದೆ ಬರಲಾಗದ ಬಾಣದಂತೆ. ಬ್ರಹ್ಮನು ಶರೀರವನ್ನು ತ್ಯಜಿಸಿದರೂ - ಆ ತ್ಯಾಜ್ಯ ಶರೀರದಿಂದಲೇ ಯಕ್ಷರೂ ರಾಕ್ಷಸರೂ ಹುಟ್ಟಿ ಬಂದರು. ತಮ್ಮೆದುರು ಕತ್ತಲ ರಾಶಿಯಂತೆ ಬಿದ್ದಿದ್ದ, ತಾವು ಹುಟ್ಟಿ ಬಂದ ಆ ಬ್ರಹ್ಮ ಶರೀರವನ್ನೇ ಈ "ಹುಟ್ಟು ಹೊಟ್ಟೆಬಾಕರು" ತಿನ್ನಲಾರಂಭಿಸಿದರು. ತಿಂದಷ್ಟೂ ಹಸಿವು ಬಾಯಾರಿಕೆ - ಹೆಚ್ಚುತ್ತ ಹೋದವು. ಆಗ, "ಅವನನ್ನು ರಕ್ಷಿಸಬೇಡಿ" ಎಂದು ಬೊಬ್ಬಿರಿಯುತ್ತ ಬ್ರಹ್ಮನ ಮೇಲೆ ಬಿದ್ದ ನುಂಗುಬಾಕರೇ ಮುಂದೆ - ರಾಕ್ಷಸರಾದರು! "ಅವನನ್ನು ಭಕ್ಷಿಸಿ" ಎನ್ನುತ್ತ ಬ್ರಹ್ಮನ ಮೇಲೆ ಬಿದ್ದವರು "ಯಕ್ಷರು" ಅನ್ನಿಸಿಕೊಂಡರು! ಸೃಜನಶೀಲತೆಯನ್ನೇ ನಾಶಪಡಿಸುವ ಶಕ್ತಿಗಳು ಹೀಗೆ - ಯಕ್ಷ ರಾಕ್ಷಸ ಪ್ರವೃತ್ತಿಗಳಾಗಿ ಈ ಸೃಷ್ಟಿಯಲ್ಲಿ ಉಳಿದುಕೊಂಡವು. ಬ್ರಹ್ಮ ಬರೆದದ್ದನ್ನು ಅವನಿಗೇ ಉಜ್ಜಲು ಆಗಲಿಲ್ಲ! ಮೊದಲಿಗೆ ಲೋಕವನ್ನು ಕೆಡಿಸುವ ಶಕ್ತಿಗಳು ಈ ಭೂಮಿಯನ್ನು ಪ್ರವೇಶಿಸಿದ ನಂತರ ಕ್ರಮೇಣ ತನ್ನ ಸೃಷ್ಟಿಯನ್ನು ಸೌಂದರ್ಯ ವೈವಿಧ್ಯದಿಂದ ತುಂಬಲು - ಅಸುರ, ಅಪ್ಸರೆ,ಸಿದ್ಧ, ವಿದ್ಯಾಧರ, ಕಿನ್ನರ, ಕಿಂಪುರುಷ, ಸರ್ಪ, ಸರೀಸೃಪಗಳನ್ನು ಸೃಷ್ಟಿಸಿದರೂ ಬ್ರಹ್ಮನೆಂಬ ಕಲಾವಿದನಿಗೆ ಪೂರ್ಣತೆಯ ಆತ್ಮತೃಪ್ತಿಯು ಸಿಗದೇ ಹೋದಾಗ, ತನ್ನ ಮನಸ್ಸನ್ನು ಮತ್ತೊಮ್ಮೆ - ತಪಸ್ಸು, ವಿದ್ಯೆ, ಯೋಗದಿಂದ ನಿಯಂತ್ರಿಸಿ, ತನ್ನಂತೆಯೇ ರೂಪಕೊಟ್ಟು "ಮನು"ಗಳನ್ನು ಸೃಷ್ಟಿಸಿದ ನಂತರ - ಋಷಿ ಮುನಿ ಪ್ರಜಾಪತಿಗಳನ್ನೂ ಸೃಷ್ಟಿಸಿ, ತೃಪ್ತಿಯಿಂದ ಸೃಷ್ಟಿಕಾರ್ಯವನ್ನು ನಿಲ್ಲಿಸಿದ... ಇದು ಭಾಗವತದ ಕಥಾಭಾಗ.

ಯಾವುದೇ ಸೃಜನಶೀಲ ಕಾರ್ಯವು ಮನಸ್ಸನ್ನು ಸಂಪೂರ್ಣ ಏಕತ್ರಗೊಳಿಸುವುದರಿಂದ ಮಾತ್ರ ಸಂಭವಿಸುವುದು; ತೃಪ್ತಿ ಸಮಾಧಾನವನ್ನು ಮೂಡಿಸಬಲ್ಲದು. ಆದರೂ... ಅಂದಿನಿಂದಲೂ... ಆದಿಯಲ್ಲಿ ಉಂಟಾದ ಬ್ರಹ್ಮ-ಸ್ವಭಾವದ ತಾಮಸ ನೆರಳು - ಕಲಾವಿದ, ಸಾಹಿತಿ, ಸಂಗೀತಕಾರರು ಎಂಬಿತ್ಯಾದಿ ಸೃಜನಶೀಲ ಪ್ರಜಾಪತಿಗಳಿಗೂ ಕವಿದುಕೊಂಡು ಬಿಟ್ಟಿತು. ಇದೇ ಕಾರಣದಿಂದಾಗಿ, ಇದುವರೆಗೆ, ಲಕ್ಷಾಂತರ ಸೃಜನಶೀಲರೆನ್ನುವವರು ಈ ಭೂಮಿಯನ್ನು ಪ್ರವೇಶಿಸಿ ನಿಷ್ಕ್ರಮಿಸುತ್ತಿದ್ದರೂ ಉಳಿದು ನಿಲ್ಲುವ ಪೂರ್ಣಕಲಾಪ್ರತಿಭೆಗಳು ವಿರಳ. ತಪ ತಾಪ ತಪಸ್ಸಿನಿಂದ "ಮನಸ್ಸನ್ನು ಕಟ್ಟಬಲ್ಲ ಮನು"ಗಳು ಮಾತ್ರ ತಪಸ್ವಿಗಳಂತೆ ಉಳಿಯುತ್ತಾರೆ; ತಮಗೂ ಲೋಕಕ್ಕೂ ಆತ್ಮತೃಪ್ತಿಯನ್ನು ಮೂಡಿಸಬಲ್ಲ ಸೃಜನಶೀಲತೆಯನ್ನು ಮೆರೆಯುತ್ತ ಕಠೋರ ಟೀಕಾಕಾರ ನಡುವೆಯೂ ಉಳಿಯುತ್ತಾರೆ.
 

ರವಿವರ್ಮನಂತಹ ಚಿತ್ರಕಾರರು.. ಸುಬ್ಬುಲಕ್ಷ್ಮಿ, ಪಟ್ಟಮ್ಮಾಳ್, ವಾಸುದೇವಾಚಾರ್ಯರಂತಹ ಮೇರುಗಾಯಕ ವಿದ್ವಾಂಸರು.. ಶ್ರೀ ರಾಮಕೃಷ್ಣ, ಸ್ವಾಮಿ ವಿವೇಕಾನಂದರಂತಹ ವೇದಪುರುಷರು...ಎಲ್ಲರೂ ಆಯಾ ಕ್ಷೇತ್ರದ ತಪಸ್ವಿಗಳೇ. ತಮಗಿಂತ ಪೂರ್ವದ ಉದಾತ್ತ ವಿಚಾರಗಳನ್ನು ತಮ್ಮ ಇಂದ್ರಿಯ, ಮನಸ್ಸು, ಬುದ್ಧಿಗಳಲ್ಲಿ ಪಳಗಿಸಿ ತಮ್ಮ ಸಂಕಲ್ಪವನ್ನು ಸಾಕಾರ ಮಾಡಿಕೊಂಡ ತಪಸ್ವಿಗಳಿವರು. ಡಿ. ವಿ. ಗುಂಡಪ್ಪ, ಅಂಬಿಕಾತನಯದತ್ತ, ದೇವುಡು ಮುಂತಾದವರು ಅಕ್ಷರ ದಾಸೋಹದ ತಪಸ್ವಿಗಳಾಗಿದ್ದರು. ಮೌರ್ಯ ಸಾಮ್ರಾಜ್ಯವನ್ನು ಸ್ಥಾಪಿಸಿದ್ದ - ರಾಜ್ಯ ಶಾಸ್ತ್ರವನ್ನು ಅರೆದು ಕುಡಿದಿದ್ದ ಕಟ್ಟಾ ಬ್ರಾಹ್ಮಣ ಚಾಣಕ್ಯನು ಅತ್ಯಂತ ಸರಳ ಬದುಕನ್ನು ನಡೆಸಿದ್ದ ಐತಿಹಾಸಿಕ ತಪಸ್ವಿ. ದೃಢ ಸಂಕಲ್ಪದಿಂದ ಏನನ್ನೂ ಸಾಧಿಸಬಹುದೆಂಬುದಕ್ಕೆ ಚಾಣಕ್ಯನಂತಹ ಉತ್ತಮ ದೃಷ್ಟಾಂತವು ಇನ್ನೊಂದಿಲ್ಲ.

ಶ್ರದ್ಧೆಯಿಂದ ಸಂತೋಷದಿಂದ ಮಾಡುವ ನಮ್ಮ ನಿತ್ಯಕರ್ಮಗಳೂ ತಪಸ್ಸೇ. ಮನೆವಾರ್ತೆಯೂ ತಪಸ್ಸೇ. ನಿತ್ಯದ ಅಡುಗೆ, ಭೋಜನವೂ ಯಜ್ಞ; ತಪಸ್ಸೇ. ಪ್ರತಿಫಲಾಪೇಕ್ಷೆಯಿಲ್ಲದೆ ಶ್ರದ್ಧೆಯಿಂದ ಮಾಡುವ ಜೀವನೋಪಯೋಗೀ ಕೆಲಸಗಳೆಲ್ಲವೂ ತಪಸ್ಸೇ. ಆದರೆ ಸ್ವಾಂತದ ಮನಸ್ಸು ಬುದ್ಧಿಯನ್ನು ಉಪಚರಿಸುವ ಕೆಲಸವೂ ನಮ್ಮ ನಿತ್ಯಕರ್ಮದ ಭಾಗವಾದಾಗ ಯಾವುದೇ ತಪಸ್ಸು - ತೃಪ್ತಿಯನ್ನು ತರುತ್ತದೆ. ಆದರೆ ಈಗೀಗ ಕೆರಳಿಸುವ ಕರ್ಮವಲ್ಲದೆ ಅರಳಿಸುವ ಕರ್ಮದತ್ತ ಯುವಜನರು ವಿಮುಖರಾಗುತ್ತಿದ್ದಾರೆ.


ಈಗೀಗ ಪೇಟೆಗೆ ಹೋದರೆ... ಅನಾರೋಗ್ಯಕರವಾದ ಪಿಜ್ಝಾ, ಪಾನೀಪುರಿ ಅಂಗಡಿಗಳ ಎದುರಿನಲ್ಲಿ - ರಸ್ತೆಯ ಬದಿಯಲ್ಲಿ ನಿಂತು ಮುಕ್ಕುವವರ ಸಂಖ್ಯೆ ನೋಡಿದರೆ ಗಾಬರಿಯಾಗುತ್ತದೆ. ಅದೇ... ಪುಸ್ತಕದ ಮಳಿಗೆಗಳಲ್ಲಿ ಅಂತಹ ನೂಕುನುಗ್ಗಲು ಕಾಣುವುದಿಲ್ಲ. ಅಲ್ಲೂ ಪಠ್ಯಕ್ಕೆ ಸಂಬಂಧಿಸಿದ ಪುಸ್ತಕಗಳಲ್ಲದೆ ಇತರ ಪುಸ್ತಕಗಳತ್ತ ಯುವಜನರು ಆಸಕ್ತರಾಗಿರುವಂತೆ ಕಾಣಿಸುವುದಿಲ್ಲ. ಎಲ್ಲೋ ಕೊಂಡಿ ತಪ್ಪಿದೆ. ಇತ್ತ - ದೇಹ ಪೋಷಣೆಯಲ್ಲಿ ಹೇಗೂ ಸೋಲುತ್ತಾರೆ; ಅತ್ತ - ಮನಸ್ಸು ಬುದ್ಧಿಗೂ ಆಹಾರ ಬೇಕು ಎಂಬುದನ್ನು ಯುವಜನರು ಕಡೆಗಣಿಸುತ್ತಿದ್ದಾರೆ. ಮನಸ್ಸಿನ ದಾರ್ಢ್ಯತೆಗಾಗಿ ಉತ್ತಮ ಚಿಂತನೆಗಳ ಪುಸ್ತಕಗಳನ್ನು ಓದದ ಯುವಾವಸ್ಥೆಯು, ಈಗ ತನ್ನ ಬದುಕನ್ನು ತಾನೇ ದುರ್ಬಲಗೊಳಿಸಿಕೊಳ್ಳುತ್ತಿದೆ. ಆದ್ದರಿಂದಲೇ ಮನಸ್ಸುಗಳು ಜಡವಾಗುತ್ತಿವೆ; ಪೂರ್ತಿ ಸ್ವಕೇಂದ್ರಿತರಾಗಿ ಪರೇಂಗಿತವನ್ನು ಅರ್ಥೈಸಿಕೊಳ್ಳುವುದರಲ್ಲಿಯೂ ಎಡವುತ್ತಿದ್ದಾರೆ.

ಪ್ರಾಚೀನ ಋಷಿಮುನಿಗಳು ಮಾತ್ರವಲ್ಲ... ಶಾಂತಿಯಿಂದ ಬಾಳಿದ ಇತ್ತೀಚಿನ ನಮ್ಮೆಲ್ಲರ ಪ್ರಪಿತಾಮಹರನ್ನು ಗಮನಿಸಿದರೂ ಅವರೆಲ್ಲರೂ - ಯಾವುದೇ ಪದವಿಯ ಭಾರವಿಲ್ಲದಿದ್ದರೂ ಮನಸ್ಸನ್ನು ಓದುವುದರಲ್ಲಿ ಮತ್ತು ಸನ್ನಿವೇಶಗಳನ್ನು ನಿಭಾಯಿಸುವುದರಲ್ಲಿ, ನಮಗಿಂತ ಪ್ರವೀಣರಾಗಿದ್ದಂತೆ ಕಾಣುತ್ತದೆ. ಅವರೆಲ್ಲರೂ ಮನಸ್ಸನ್ನು ನಮಗಿಂತ ಚೊಕ್ಕಟವಾಗಿ ಇರಿಸಿಕೊಂಡದ್ದೇ ಇದಕ್ಕೆ ಕಾರಣ. ಮನಸ್ಸನ್ನು ಚೊಕ್ಕಗೊಳಿಸುವ ಮೌಲ್ಯಗಳನ್ನೂಡುವ ವಿದ್ಯಾತಪಸ್ಸು ಇಂದು ಅನಿವಾರ್ಯವಾಗಿದೆ. ಇಂದಿಗೂ ಸದಾ ನವೀನವೆನ್ನಿಸುವ ಭಾರತೀಯ ಪೌರಾಣಿಕ ಸಾಹಿತ್ಯದಲ್ಲಿ ಉಳಿದುಹೋಗಿರುವ ವಸಿಷ್ಠ, ಜನಕ, ವೇದವ್ಯಾಸರಂತಹ ಬ್ರಹ್ಮರ್ಷಿ - ರಾಜರ್ಷಿ - ಮುನಿಗಳು ಬುದ್ಧಿಯನ್ನು ಉಜ್ಜುವ ಆಸಕ್ತಿಯುಳ್ಳ ನಿಷ್ಪಕ್ಷ ಆಧುನಿಕರಿಗೆ ಈಗಲೂ ಪ್ರೇರಣೆ ನೀಡುತ್ತಿರುವುದು - ತಪಸ್ಸಿನ ಹಿರಿಮೆಗೆ ಜೀವಂತ ಸಾಕ್ಷಿ.


ಅಧ್ಯಾತ್ಮವಾದಿಯಾಗಿ ರಾಜಧರ್ಮನಿಷ್ಠನೂ ಆಗಿದ್ದ ಮಿಥಿಲೆಯ ಒಡೆಯನಾಗಿದ್ದ ಜನಕ ಮಹಾರಾಜನು ಜ್ಞಾನಪಿಪಾಸುವಾಗಿದ್ದ. ಭೂಮಿಯ ನಿಯಮಗಳನ್ನು ಪಾಲಿಸುತ್ತ, ರಾಜಧರ್ಮವನ್ನು ನಿಭಾಯಿಸುತ್ತಲೇ, ಅಧ್ಯಾತ್ಮ ಪ್ರಜ್ಞೆಯನ್ನು ಉಜ್ವಲವಾಗಿ ಇರಿಸಿಕೊಂಡಿದ್ದ ರಾಜ - ಜನಕ. ರಾಜಕಾರ್ಯದ ನಡುವೆಯೂ ಮಹಾದರ್ಶನಕ್ಕಾಗಿ ವ್ರತದಂತೆ ತನ್ನ ಮತಿಯನ್ನು ಉಜ್ಜಿ ಸಿದ್ಧಗೊಳಿಸುತ್ತಿದ್ದ ಜನಕನು ಪರಾಶರ ಮುನಿಗಳ ಜೊತೆಗೆ ನಡೆಸಿದ ಪ್ರೌಢ ಸಂಭಾಷಣೆಯು "ಪರಾಶರ ಗೀತೆ" ಎಂದೇ ಪ್ರಸಿದ್ಧವಾಗಿದೆ. ವೇದವ್ಯಾಸರ ಪುತ್ರನಾದ ಶುಕಮುನಿಯೂ ರಾಜ ಜನಕನಿಂದ ಜ್ಞಾನೋಪದೇಶವನ್ನು ಪಡೆದುಕೊಂಡಿದ್ದ. ಕಹೋಳ, ಮಾಂಡವ್ಯ, ಯಾಜ್ಞವಲ್ಕ್ಯ ಮುಂತಾದ ಅಂದಿನ ಜ್ಞಾನಿಗಳೆಲ್ಲರೊಂದಿಗೂ ಲೌಕಿಕ-ಪಾರಮಾರ್ಥಿಕ ವಿಷಯಗಳನ್ನು ಚರ್ಚಿಸಿ ಜ್ಞಾನದ ಕೊಡವನ್ನು ತುಂಬಿಸುತ್ತ ತುಂಬಿಕೊಂಡವನು ಜನಕ.

ಪೌರಾಣಿಕ ಕಥೆಗಳೆಲ್ಲದರ ಹಿಂದೆಯೂ ಒಂದಲ್ಲ ಒಂದು ಸೂಕ್ಷ್ಮ, ಸಾಂಕೀತಿಕತೆ ಅಡಗಿರುತ್ತದೆ. ಮಿಥಿಲೆಯ ಜನಕನೂ ಅಂತಹ ಪೌರಾಣಿಕ ವ್ಯಕ್ತಿ ವಿಶೇಷ. ಜನಕ ಮಹಾರಾಜನು ತ್ರೇತಾಯುಗದಲ್ಲಿ ಮಿಥಿಲೆಯ ಒಡೆಯನಾಗಿದ್ದ. ಈತನ ಹಿನ್ನೆಲೆಯು ಬಲು ವಿಚಿತ್ರವಾಗಿದೆ. ಸೂರ್ಯವಂಶದ ಇಕ್ಷ್ವಾಕು ಮಹಾರಾಜನ ಮಗನಾದ ನಿಮಿ ಎಂಬಾತನು ಕುಲಗುರು ವಸಿಷ್ಠರಿಂದ ಶಾಪಗ್ರಸ್ತನಾಗಿ ದೇಹತ್ಯಾಗ ಮಾಡುವಂತಾದಾಗ, ಮಿಥಿಲೆಯ ಪ್ರಜೆಗಳ ಸದಾಶಯದ ಫಲವೆಂಬಂತೆ ಹೊಸ ಜನ್ಮ ಧರಿಸಿ ಬಂದವನು - ಜನಕ. ಪ್ರಜೆಗಳು ಒಂದಾಗಿ, ನಿಮಿ ರಾಜನ ಶವದ ಬಲತೋಳನ್ನು ಮಥಿಸಲು ಒಬ್ಬ ಪುರುಷನು ಜನಿಸಿದನು. ಸತ್ತು ವಿದೇಹಿಯಾದವನು ಪುನಃ ಸದೇಹಿಯಾದುದರಿಂದ ಆತನನ್ನು "ವಿದೇಹ" ಎಂದರು. ಶವದ ತೋಳನ್ನು ಮಥಿಸಿದಾಗ ಜನಿಸಿದವನನ್ನು "ಮಿಥಿ" ಎಂದರು. ಪ್ರಜೆಗಳ ತಂದೆಯಂತೆ ಸುಭಿಕ್ಷ ರಾಜ್ಯಪರಿಪಾಲನೆ ಮಾಡಿದುದರಿಂದ "ಜನಕ" ಎಂದರು... ಇವೆಲ್ಲವೂ ಕಥಾನಿರೂಪಣೆಗೆ ಅಗತ್ಯವಾದ ಸಾಮಗ್ರಿಗಳೊಂದಿಗೆ ವಿಶೇಷ ಅಂತರಾರ್ಥವನ್ನೂ ಹೊಂದಿವೆ. ತೋಳುಗಳು ಮುಖ್ಯವಾದ ಕರ್ಮೇಂದ್ರಿಯ. ಬಲತೋಳನ್ನು ಮಥಿಸುವುದು ಅಂದರೆ ಗುರು ವಸಿಷ್ಠರ ಅನರ್ಥಕಾರೀ ಕೋಪದ ವಿರುದ್ಧ ಪ್ರಜೆಗಳು ಸಿಡಿದೆದ್ದಿರಲೂಬಹುದು! ಒಟ್ಟಿನಲ್ಲಿ ತನ್ನ ರಾಜ್ಯದ ಪ್ರಜೆಗಳಿಗೆಲ್ಲ ಆತ್ಮೀಯನೆನಿಸಿದ್ದ ರಾಜನಾಗಿದ್ದ ಎಂಬುದೇ ಜನಕನ ಹಿರಿಮೆ. "ಅರಿವು ಜ್ಞಾನ ಇದ್ದರೆ ಸಾಕೆ? ಆಚರಣೆ ಹೇಗಿದೆ?" ಎಂಬುದನ್ನು ಇಂದಿನಂತೆ ಅಂದಿನ ಜನರೂ ಪರೀಕ್ಷಿಸುತ್ತಿದ್ದರು. ಹುಚ್ಚು ಕೋಪಕ್ಕೆ ಎಂದೂ ತಲೆಕೊಡದ ವಸಿಷ್ಠರು ನಿಮಿರಾಜನ ಸಂದರ್ಭದಲ್ಲಿ ಮೈಮರೆತು ನಿಮಿಯಿಂದಲೇ ಶಾಪಪಡೆದು ಸ್ಥೂಲದೇಹದಿಂದ ನಿವೃತ್ತಿ ಹೊಂದಿ ಮಿತ್ರಾವರುಣರ ಮೂಲಕ ಹೊಸ ದೇಹವನ್ನು ಪಡೆದರು.

ಇಂತಹ ನಿಮಿಯ ಹೊಸ ದೇಹವೇ ಜನಕ. ಆಳುವವರಲ್ಲಿ, ನೇತಾರರಲ್ಲಿ ಅರಿವಿನ ಬೆಳಕಿದ್ದರೆ - ಆಚರಣೆಯ ನಿಷ್ಠೆಯಿದ್ದರೆ ಸಮಷ್ಟಿಯ ಸದಾಶಯವೇ ಅವರನ್ನು ಹೇಗೆ ಕಾಪಾಡುತ್ತದೆ ಎಂಬುದಕ್ಕೆ ನಿಮಿಯು ಜನಕನಾದ ಕತೆಯು ಒಂದು ದೃಷ್ಟಾಂತ. ಸಮಚಿತ್ತದ ಪ್ರತೀಕವಾಗಿದ್ದ ಮಹಾರಾಜ ಜನಕನು ತ್ರೇತಾಯುಗದಲ್ಲಿ ಆಗಿ ಹೋಗಿದ್ದರೂ ಕತೆಯಾಗಿ ಇನ್ನೂ ಉಳಿದಿರುವುದು ಜನಕನ ತಪಸ್ವೀ ಬದುಕಿನ ಬಲು ದೊಡ್ಡ ಸಾಧನೆ. ಒಂದು ಸಮಾಜವು ಸುಭಿಕ್ಷವಾಗುವುದು ಹೇಗೆ? ಎಂಬುದಕ್ಕೆ ಜನಕನ ಆಸ್ಥಾನದಲ್ಲಿ ನಡೆದ ಪುರಾಣ ಪ್ರಸಂಗವೇ ಒಂದು ಸಾಕ್ಷಿ.

ಒಮ್ಮೆ ಜನಕನ ರಾಜ್ಯದಲ್ಲಿ ಒಂದು ಮಹಾಪರಾಧವು ಘಟಿಸಿತು. ಚುರುಕಾಗಿದ್ದ ರಾಜಭಟರು, ಅಪರಾಧಿಯನ್ನು ಹೆಡೆಮುರಿ ಕಟ್ಟಿ ರಾಜಸಭೆಗೆ ಎಳೆತಂದರು. ಅಪರಾಧಿಯನ್ನು ಕಂಡಾಗ ರಾಜ ಜನಕನಿಗೆ ಆಘಾತವಾಗಿತ್ತು! ಅವನೊಬ್ಬ ಬ್ರಾಹ್ಮಣನಾಗಿದ್ದ!

ತನ್ನ ರಾಜ್ಯದಲ್ಲಿ ಬ್ರಾಹ್ಮಣನೂ ಅಪರಾಧ ಮಾಡುವ ಸನ್ನಿವೇಶವಿದೆಯೆ? ಎಂದು ಜನಕನು ಗಾಬರಿಯಾದ. ತಡಮಾಡದೆ ನೇರವಾಗಿ ವಿಚಾರಣೆಗೆ ಆರಂಭಿಸಿದ. ಕೂಲಂಕಷವಾಗಿ ವಿಚಾರಿಸಿದಾಗ, ಬ್ರಾಹ್ಮಣನ ಅಪರಾಧವು ನಿಸ್ಸಂದೇಹವಾಗಿ ಸಾಬೀತಾಯಿತು. ಗಲ್ಲಿಗೇರಿಸಬೇಕೆಂದೂ ತೀರ್ಮಾನವಾಯಿತು. ಆದರೆ "ಬ್ರಾಹ್ಮಣನನ್ನು ಗಲ್ಲಿಗೇರಿಸಿ ಬ್ರಹ್ಮಹತ್ಯಾ ದೋಷಕ್ಕೆ ಒಳಗಾಗಲೆ?" ಎಂದು ಯೋಚಿಸಿದ ಜನಕನು - "ಲಜ್ಜಿತನಾದ ಈ ಬ್ರಾಹ್ಮಣನು ಬದಲಾದಾನು" ಎಂದುಕೊಂಡು ಅವನಿಗೆ ಗಡೀಪಾರಿನ ಶಿಕ್ಷೆ ವಿಧಿಸಿ, "ನನ್ನ ರಾಜ್ಯದ ಗಡಿಯಿಂದ ಆತನನ್ನು ಹೊರಕ್ಕೆ ತಳ್ಳಿಬಿಡಿ"...ಎಂದು ತೀರ್ಮಾನಕೊಟ್ಟುಬಿಟ್ಟ.

ಅಷ್ಟು ಹೊತ್ತು ಅಪರಾಧಿಯಂತೆ ನಿಂತಿದ್ದ ಬ್ರಾಹ್ಮಣನು ಆಗ ತಲೆ ಎತ್ತಿ ರಾಜನನ್ನು ಪ್ರಶ್ನಿಸಿದ. "ಒಡೆಯಾ, ನಿಮ್ಮ ತೀರ್ಮಾನವು ಚೆನ್ನಾಗಿದೆ! ಆದರೆ...ಸ್ವಾಮೀ, ನಿಮ್ಮ ರಾಜ್ಯದ ಗಡಿ ಯಾವುದು?" ಎಂದು ಭಂಡನಂತೆ ಕೇಳಿದ. ರಾಜಸಭೆಯು "ಬ್ರಾಹ್ಮಣನ ಉದ್ಧಟತನ..." ಎಂದುಕೊಳ್ಳುವಾಗ ರಾಜ ಜನಕನು ಮಾತ್ರ ಅಂತರ್ಮುಖಿಯಾದ. "ನನ್ನ ರಾಜ್ಯದ ಗಡಿ ಯಾವುದು? ಇದು ನನ್ನ ರಾಜ್ಯವೆ? ನಾನೇ ಶಾಶ್ವತವಲ್ಲದಿರುವಾಗ ಈ ರಾಜ್ಯವನ್ನು ನನ್ನದು ಎನ್ನಲೆ? ಈ ಭೂಮಿಯಲ್ಲಿ ನೂರಾರು ರಾಜರಿದ್ದಾರೆ. ಮಾಂಡಲೀಕರು, ಅಧಿಕಾರಿಗಳೂ ಇದ್ದಾರೆ. ಆದರೆ ಈ ಮಿಥಿಲಾ ಪಟ್ಟಣದ ಅಧಿಪತ್ಯವನ್ನು ಪರಂಪರೆಯಿಂದ ನಾನು ಪಡೆದಿದ್ದೇನೆ... ನಾನು ಇಷ್ಟು ವಿಸ್ತಾರವಾದ ಮಿಥಿಲೆಯ ಭೂಮಿಯ ಒಡೆಯನೆ? ಅಲ್ಲ...ನನ್ನ ಪ್ರಜೆಗಳ ಪ್ರತಿನಿಧಿ ತಾನು...." ಎಂದು ಯೋಚಿಸುತ್ತ ಹೋದಂತೆ ಜನಕನು ವೇದಾಂತದತ್ತ ವಾಲಿದ. "ಈ ಭೂಮಿಯ ಕಿಂಚಿತ್ತು ಸ್ಥಳವೂ ನಿನ್ನ ಅಧಿಕಾರವ್ಯಾಪ್ತಿಗೆ ಒಳಪಟ್ಟಿಲ್ಲ" ಎಂದು ಜನಕನ ಆತ್ಮಜ್ಞಾನವು ಪಿಸುಗುಟ್ಟತೊಡಗಿತು. "ಇಲ್ಲ...ಅಲ್ಲ...ಈ ಯಾವುದೂ ನನ್ನದಲ್ಲ..." ಎಂಬುದು ಸ್ಪಷ್ಟವಾದಾಗ, ಜನಕನು ಅಪರಾಧಿ ಸ್ಥಾನದಲ್ಲಿದ್ದ ಬ್ರಾಹ್ಮಣನನ್ನು ದಿಟ್ಟಿಸಿ ನೋಡಿದ. "ಅಯ್ಯಾ, ಮಿಥಿಲೆಯ ಅರಸನೆಂದು ಹೇಳಿಸಿಕೊಳ್ಳುತ್ತಿದ್ದರೂ ಈ ಭೂಮಿಯಲ್ಲಿ ಗಡಿಗಳನ್ನು ನಿರ್ಧಾರ ಮಾಡುವ ಅಧಿಕಾರವು ನನಗಿಲ್ಲ. ನಿಮ್ಮ ಪ್ರಶ್ನೆಯು ಸಾಮಾಜಿಕ ನ್ಯಾಯ-ನಿಯಮದ ಗುಂಗಿನಲ್ಲಿದ್ದ ನನ್ನ ಕಣ್ಣು ತೆರೆಸಿತು. ಇನ್ನು ನೀವು ಸ್ವತಂತ್ರರು..." ಎಂದುಬಿಟ್ಟ. ಆಗಲೂ ನಗುತ್ತ ನಿಂತಿದ್ದ ಆತನನ್ನು ನೋಡಿ ಜನಕನಿಗೆ ಆಶ್ಚರ್ಯವಾಯಿತು.

"ಇದೇನಾಶ್ಚರ್ಯ! ಮಿಥಿಲೆಯ ಭೂಪತಿಯು ನಿಸ್ಸಹಾಯಕರಂತೆ ವರ್ತಿಸುವುದೆ? ಮಿಥಿಲೆಯ ಗಡಿ ಯಾವುದೆಂದು ನಿಮಗೆ ತಿಳಿಯದೆ? ಏನೋ ಹೇಳಲಾಗದ ಕಾರಣಕ್ಕೆ ತಮ್ಮ ಮನಸ್ಸು ಅಳುಕುವಂತಿದೆಯಲ್ಲಾ? ಮಾತು ಮಾತಿಗೆ ನಾನು, ನನ್ನದು, ನನ್ನಿಂದ..ಎನ್ನುತ್ತಿರುವಿರಲ್ಲ? ಯಾವುದು ನಿಮ್ಮದು? ಮಿಥಿಲೆಯಲ್ಲಿ ಮಿಥ್ಯವು ರಾಜ್ಯಸೂತ್ರ ಹಿಡಿಯಬಾರದು. ಜಗತ್ತಿನ ಮೇಲೆ ಸವಾರಿ ಮಾಡುವ ಧಾರ್ಷ್ಟ್ಯವಲ್ಲವೇ ಇದು?..." ಬ್ರಾಹ್ಮಣನ ಮಾತುಗಳು ರಾಜಸಭೆಯನ್ನು ಕೆರಳಿಸಿದರೂ ಸ್ವತಃ ಜನಕನೇ ಮುಂದಾಗಿ ಎಲ್ಲರನ್ನೂ ಶಾಂತಗೊಳಿಸಿದ. ತುಂಬಿದ ಸಭೆಯಲ್ಲಿ ಋಷಿಸದೃಶ ವಾಗ್ವಿಲಾಸವನ್ನು ಪ್ರದರ್ಶಿಸಿದ.

"ವಿಪ್ರರೇ, ನೀವು ಅಪರಾಧಿಯಲ್ಲ; ಬ್ರಾಹ್ಮಣನೂ ಅಲ್ಲ. ಅಂತಹ ವೇಷದಲ್ಲಿ ನನ್ನೆದುರು ನಿಂತಿದ್ದೀರಿ...ನೀವು - ನನ್ನ ಸತ್ವಪರೀಕ್ಷೆಗೆ ನಿಂತಿರುವ ಮಹಾನುಭಾವರೆಂಬುದನ್ನು ನನ್ನ ಮನಸ್ಸು ಅರಿತಿದೆ. ಸ್ವಾಮೀ, ನಾಶವಾಗುವ ಈ ಸಂಸಾರದ ಸ್ಥಿರಚರ ಜೀವಸೊತ್ತುಗಳಿಗೆ ನಾನು ಶಾಶ್ವತ ಅಧಿಕಾರಿಯಲ್ಲ. ಇದು ಸತ್ಯ. ಶಾಶ್ವತ ಅಧಿಕಾರಯೋಗ್ಯವಾದ ವಸ್ತುವೇ ಈ ಜಗತ್ತಿನಲ್ಲಿಲ್ಲ. ಅಂದಮೇಲೆ ಯಾವುದನ್ನಾದರೂ ನನ್ನ ವಸ್ತುವೆಂದು ನಾನು ಹೇಗೆ ತಿಳಿಯಲಿ? ಆದರೂ ನಿಮ್ಮ ಪ್ರಶ್ನೆಯ ಒಳಾರ್ಥವು ನನಗಾಗಿದೆ. ನನ್ನ ರಾಜ್ಯವೆಂದುಕೊಂಡ ಈ ಭೂಪ್ರದೇಶದ ಮೇಲೆ ಅಧಿಕಾರ ಚಲಾಯಿಸುತ್ತಿರುವ ನನ್ನ "ಅಹಂ"ವ್ಯಾಪ್ತಿಯನ್ನು ನೀವು ಪ್ರಶ್ನಿಸುತ್ತಿದ್ದೀರಿ. ರಾಜನಿಗೂ ಉತ್ತರದಾಯಿತ್ವವಿದೆ ಎಂಬ ಎಚ್ಚರದಲ್ಲಿಯೇ ನಾನು ತಕ್ಕಮಟ್ಟಿಗೆ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ದೇವ, ಪಿತೃ, ಭೂತ, ಅತಿಥಿಸೇವೆಯೊಂದಿಗೆ ಎಲ್ಲರ ಪ್ರತಿನಿಧಿಯಾಗಿಯೂ ನಾನು ಕರ್ಮನಿರತನಾಗಿದ್ದೇನೆ. ಆದ್ದರಿಂದಲೇ ನನ್ನ ಕಾರ್ಯವ್ಯಾಪ್ತಿಯ ಮಿತಿಯಲ್ಲಿ...ಬೆಂಕಿ, ನೀರು, ನೆಲ, ಗಾಳಿ, ಬಾನು ಮತ್ತು ನನ್ನ ಮನಸ್ಸಿನ ಮೇಲೆ - "ನಿಯಮಿತ"ವಾದ ಅಧಿಕಾರವು ಮಾತ್ರ ನನ್ನಲ್ಲಿದೆ..." ಎಂದು ಜನಕನು ಹೇಳುತ್ತಿರುವಾಗಲೇ ಬ್ರಾಹ್ಮಣ ಶರೀರವು ಸಭಾಸದರಿಗೆ - ಧರ್ಮಶರೀರವಾಗಿ ಕಾಣಿಸಿತು.

"ಜನಕರಾಜಾ, ನೀನು ನಿಜವಾದ ವೇದಾಂತಿ. ನಾನೇ ಧರ್ಮ. ನಿನ್ನ ಸತ್ವಪರೀಕ್ಷೆಗಾಗಿ ಈ ಮಿಥಿಲೆಗೆ ಬಂದು ಬ್ರಾಹ್ಮಣರೂಪದಲ್ಲಿ ನೆಲೆಸಿದೆ. ಒಂದು ರಾಜ್ಯದ ನ್ಯಾಯದಾನದ ಪಾವಿತ್ರ್ಯವನ್ನು ಆಧರಿಸಿ ಆ ರಾಜ್ಯದ ಆಡಳಿತ ಸತ್ವವನ್ನು ತೂಗಿನೋಡಬಹುದು. ಆದ್ದರಿಂದ ನಿನ್ನ ವೇದಾಂತದ ಆಳವನ್ನು ಅಳೆಯಲೆಂದೇ ಅಪರಾಧದ ದೃಶ್ಯವನ್ನು ಸೃಷ್ಟಿಸಿದೆ. ನನ್ನ ಪರೀಕ್ಷೆಯಲ್ಲಿ ಈಗ ಉತ್ತೀರ್ಣನಾದ ನೀನು ನಿಜವಾದ ಬ್ರಹ್ಮಜ್ಞ. ಪ್ರಜೆಗಳ ಯೋಗಕ್ಷೇಮವನ್ನು ಶ್ರದ್ಧೆಯಿಂದ ನಿರ್ವಹಿಸು..." ಎಂದು ನುಡಿದ ಧರ್ಮಶರೀರವು ಅಲ್ಲಿಂದ ನಿರ್ಗಮಿಸಿತು.

ಇದು ಪುರಾಣದ ಕಥೆ. ಆದರೂ ಈ ಕಥೆಯು ಹೇಳುವ ಸಂದೇಶವು ಇವತ್ತಿಗೂ ಸ್ವೀಕರಿಸಲು ಯೋಗ್ಯವಾಗಿದೆ. ಆಡಳಿತ ನಡೆಸುವವರಿಗೆ - "ಎಲ್ಲರೂ ನನ್ನವರೇ" ಎಂಬ ಭಾವದೊಂದಿಗೆ "ಯಾವುದೂ ನನ್ನದಲ್ಲ" ಎಂಬ ಪ್ರಜ್ಞೆಯೂ ಇದ್ದಾಗ ಮಾತ್ರ ಸುಭಿಕ್ಷ ವ್ಯವಸ್ಥೆಯು ನೆಲೆಯೂರುತ್ತದೆ ಎಂಬುದೇ ಈ ಕತೆಯ ಸಂದೇಶ. ನಮ್ಮ ದೇಹವೆಂಬ ರಥವನ್ನು ಇಂತಹ ಲಗಾಮು ಬಿಗಿದ ಮನಸ್ಸು, ಪೂರ್ಣಪ್ರಜ್ಞೆಯ ಬುದ್ಧಿಯುಳ್ಳ ರಥಿಕನು ನಡೆಸುತ್ತಿದ್ದರೆ ಜ್ಞಾನವು "ನಂಗಾನಾಚ್" ಮಾಡುವುದಿಲ್ಲ; ಶುಭ್ರ ಸಂತೋಷದಾಯಿ ಆಗುತ್ತದೆ. ಪೂರ್ಣ ಪ್ರಜ್ಞೆಯಿದ್ದಾಗ ಎಲ್ಲೆಂದರಲ್ಲಿ... ಎಚ್ಚರ ತಪ್ಪಿದಂತಹ ನಿದ್ದೆಯೂ ಆವರಿಸುವುದಿಲ್ಲ. ವೈಜ್ಞಾನಿಕವಾಗಿಯೂ ಮಹಾ ಗ್ರಂಥವಾಗಿರುವ ಭಗವದ್ಗೀತೆ, ಪುರಾಣ, ಭಾರತ, ಭಾಗವತಗಳು ಇಂತಹ ಅಂತರ್ಮಥನದ ತಪಸ್ಸನ್ನು ನಡೆಸುವಂತೆ ಪ್ರಚೋದಿಸುವ, ಮನಸ್ಸಿನ ನೆಗೆತವನ್ನು ಹದ್ದುಬಸ್ತಿನಲ್ಲಿರಿಸುವ ಜೀವಚೈತನ್ಯ ಬುಗ್ಗೆಗಳು.

ತೀವ್ರವಾಗಿ ತಪಿಸದೆ - ಮೈಮರೆತಂತೆ ಶಿಷ್ಟ ಕರ್ಮದಲ್ಲಿ ತೊಡಗಿಕೊಳ್ಳದೆ ಯಾವುದೇ ತಪಸ್ಸು ಸಿದ್ಧಿಯಾಗದು. ಆದರೆ ಇಂದು ನಾವು ಕಾಣುತ್ತಿರುವ ಬಹುತೇಕ ಮಾನವ ಚಟುವಟಿಕೆಗಳ ಹಿಂದೆ ಅಂತಹ ತಪಸ್ಸು ಕಾಣುವುದಿಲ್ಲ. ಕೇವಲ ಫಲನಿರೀಕ್ಷೆಯ ಅವಸರವಷ್ಟೇ ಕಾಣುತ್ತಿದೆ! ಇಂತಹ ಫಲಾಪೇಕ್ಷೆಯ ಕರ್ಮಗಳು ದಿನಗೂಲಿ ಇದ್ದಂತೆ. ಆಯಾ ದಿನದ ದುಡಿಮೆಯು ಆಯಾ ದಿನಕ್ಕೇ ಮುಗಿದು ಹೋಗುವಂತೆ ಇಂತಹ ಯಾವುದೇ ಕರ್ಮಗಳು "ಸುಕೃತ" ಅನ್ನಿಸಲಾರವು. ಅವು ತಪಸ್ಸೂ ಆಗಲಾರವು. ಸತ್ಕರ್ಮಗಳು ಬದುಕನ್ನು ನುಣುಪಾಗಿಸುತ್ತವೆ; ನಮ್ರವಾಗಿಸುತ್ತವೆ. ಅಪ್ರಯತ್ನವಾಗಿ ಅಡರಿಕೊಳ್ಳುವ ಅಹಂಕಾರ ಮಮಕಾರಗಳ ಪ್ರಾರಬ್ಧಘನವು ಲಘುವಾಗಲು - ಸತ್ಯದ ತಾಪ ಬೇಕು; ತಪವೂ ಬೇಕು. ಅದಕ್ಕಾಗಿ ಪ್ರಜ್ಞಾಪೂರ್ವಕವಾಗಿ ತಪಿಸಬೇಕು.

ಸೃಷ್ಟಿಯ ಆದಿಯಿಂದಲೂ ಬಗೆಬಗೆಯ ಚೋರ ರಕ್ಕಸರನ್ನು ಹೊತ್ತಿರುವ ಭೂಮಿ ಇದು! "ಭೂಮಿಯ ಎಲ್ಲ ಸಂಪತ್ತೂ ಸ್ವಂತದ್ದಾಗಬೇಕು" ಎಂಬ - "ಆಸೆಯ ರಾಜ್ಯಭಾರ" ನಡೆಯುತ್ತಿರುವ ನೆಲವಿದು! ಸತ್ಯಯುಗದ ಅಮೂಲ್ಯ ಸಂಪತ್ತಾಗಿದ್ದ ವೇದಗಳನ್ನು ಕದ್ದೊಯ್ದ ಈ ಭೂಮಿಯ ಪ್ರಪ್ರಥಮ ಕಳ್ಳಗುರು - ಸೋಮಕ ಎಂಬ ರಕ್ಕಸ... ಮತ್ತು ಆ ಕಳ್ಳ ಸೋಮಕನಿಂದ ಅವನ್ನು ಕದ್ದೊಯ್ದ ಮಧುಕೈಟಭರು... ಇಂತಹ ರಕ್ಕಸರೆಲ್ಲರೂ ಸಾಧನೆಗಾಗಿ ಸುಲಭದ ದಾರಿಯನ್ನು ಹುಡುಕುವವರು! ಮಧುಕೈಟಭರಂತಹ (ಅಹಂಕಾರ ಪ್ರವೃತ್ತಿಯೇ ಮಧು! ಮೋಹ ಮಮಕಾರವೇ ಕೈಟಭ!) ರಕ್ಕಸಭಾವದಿಂದ ಪಾರಾಗುತ್ತ, ವಿವೇಚನೆಯ ಪೂರ್ಣಪ್ರಜ್ಞಾವಸ್ಥೆಯಲ್ಲಿ ನಡೆಸುವ ಸುಸಂಬದ್ಧ ರಸಾನುಭೂತಿಯೇ ತಪಸ್ಸು. ಲೌಕಿಕದಲ್ಲಾಗಲೀ ಅಧ್ಯಾತ್ಮದಲ್ಲಾಗಲೀ... ನಿಷ್ಠೆ ತಪಸ್ಸಿಲ್ಲದವರಿಗೆ - ಬದುಕೂ ಸಿಕ್ಕದು; ಯಾವ ಜ್ಞಾನವೂ ದಕ್ಕದು. ತಪಸ್ಸಿಲ್ಲದ ಬದುಕು ಸದಾ ಡೋಲಾಯಮಾನ! ಅಸ್ಥಿರ! ಗಂಗೆಯಲ್ಲಿ ಮುಳುಗು ಹಾಕಲು ಹೋದರೆ ಚಂಬಿನ ಚಿಂತೆ; ದೇವಸ್ಥಾನಕ್ಕೆ ಹೋದರೆ ಚಪ್ಪಲಿಯ ಚಿಂತೆ, ಕಛೇರಿಯಲ್ಲಿ ಮನೆಯ ಚಿಂತೆ; ಮನೆಯಲ್ಲಿ ಇನ್ನೇನೋ ಚಿಂತೆ...ಅಂತ್ಯಕಾಲದಲ್ಲಿ ಪತಿಪತ್ನಿಸುತಾಲಯದ ಚಿಂತೆ... ಒಟ್ಟಿನಲ್ಲಿ, ಜೀವನೋಪಯೋಗಿ ವಸ್ತು-ವಿಷಯಗಳ ಚಿಂತೆಯೆಂಬ ಆಯುಷ್ಯ ಸವೆಸುವ "ಅನುಗಾಲ ಚಿಂತೆ"ಯ ಕಾಲಹರಣ. ಸ್ವ ಇಚ್ಛೆಯಿಂದ - ನೈಷ್ಕರ್ಮ್ಯಭಾವದಿಂದ ಕರ್ಮಗಳಲ್ಲಿ ತೊಡಗಿಕೊಳ್ಳಲು ಮತ್ತು ಕರ್ಮಗಳ ಕಗ್ಗಂಟನ್ನು ಬಿಡಿಸಿಕೊಳ್ಳಲು ಪ್ರವರ್ತಿಸುವವರಿಗೆ ಮಾತ್ರ ತಪಸ್ಸು ಎಂಬ ಭಾವವು ಅನುಭವಕ್ಕೆ ಬರುತ್ತದೆ. ಎಚ್ಚರ ತಪ್ಪಿದ ಅಧಿಕಾರೀ ಭಾವ, ಆಸೆ, ಬೇಸರ, ಅಹಂಕಾರಗಳು ಎಂಬ ಲೋಕಮರ್ಯಾದೆಯ ಮಿತಿಗಳು... ಯಾವುದೇ ತಪಸ್ಸಿನ ವೈರಿಗಳು.

ವಿರಕ್ತ, ಅವಧೂತ, ದಿಗಂಬರ ಪ್ರಜ್ಞೆಯ ನಿಷ್ಕಲ್ಮಶ ಜ್ಞಾನವನ್ನು - "ಹುಚ್ಚು ಹುಚ್ಚು" ಎನ್ನುವವರು ಒಂದು ಕಡೆ! ಅಂಕೆಯಿಲ್ಲದ ಪೋಲಿ ಪೋಕರಿ ಹುಚ್ಚರನ್ನು " ಮಹಾ ಜ್ಞಾನಿಗಳು" ಎನ್ನುವವರು ಇನ್ನೊಂದು ಕಡೆ! ಕಲಿಗಾಲ! ಕಲಿಗಾಲದ ವಿಶ್ವರೂಪ! ಆದ್ದರಿಂದಲೇ "ತಪಸ್ಸು" ಎಂಬ ಶುದ್ಧಕರ್ಮದ ನೇರಹಾದಿಯು ಈಗ ಉಪೇಕ್ಷೆಗೆ ಒಳಗಾಗಿದೆ. ಬದುಕಿಗೆ ಆತ್ಮೀಯವಲ್ಲದ ಎಲ್ಲ ವಿಷಯಕ್ಕೂ ಈಗ ಮನೆಪಾಠ (TUITION) ಧಂದೆ ಜೋರಾಗಿದೆ! ಶುದ್ಧಕರ್ಮ, ನೇರಹಾದಿ, ಎಲ್ಲ ಬದುಕುಗಳನ್ನೂ ಗೌರವಿಸುವ ವಿಷಯದಲ್ಲಿ ಒಂದೇ ಒಂದು ಮಾರ್ಗದರ್ಶನವೂ ಸಿಗುವುದಿಲ್ಲ. ಬದಲಾಗಿ ಶುದ್ಧ ಜ್ಞಾನವನ್ನು ಹೀಯಾಳಿಸುವ ಪಡೆಯನ್ನು ಶಾಸ್ತ್ರೀಯವಾಗಿ ಹುಟ್ಟುಹಾಕುತ್ತಿರುವಂತೆ ತೋರುತ್ತದೆ. ಅಡ್ಡಹಾದಿಗೆ ವಿಪುಲ ಅವಕಾಶಗಳು ತೆರೆದುಕೊಳ್ಳುತ್ತಿವೆ. ಯಾವುದೇ ಸಾಧನೆಯು ಅಡ್ಡಹಾದಿಯಲ್ಲಿ ಸುಲಭಸಾಧ್ಯವಾಗುವುದಾದರೆ ಕಠಿಣವಾದ ನೇರಹಾದಿಯನ್ನು ಯಾವುದೇ ಕೆಲಸಗಳ್ಳರು ಬಯಸಿಯಾರೆ? ಆದ್ದರಿಂದಲೇ ಅಪ್ರಬುದ್ಧರ ದೊಡ್ಡಪಡೆಯು ಅಂದಿನಿಂದಲೂ ಈ ಭೂಮಿಯನ್ನು ಅಸ್ತವ್ಯಸ್ತಗೊಳಿಸುತ್ತ ಬಂದಿದೆ!! ಇಂತಹ ಬಹು ಸಂಖ್ಯಾಕರು, ಅಪೂರ್ವಕ್ಕೊಮ್ಮೆ ಕಾಣಿಸುವ ಪ್ರಬುದ್ಧರನ್ನು " ಬಂದ ಗಂಗೆಯಲ್ಲಿ ಮೀಯಲಾಗದ - ಬುದ್ಧಿ ಇಲ್ಲದವರು" ಎಂಬಂತೆ ಕ್ಷುಲ್ಲಕವಾಗಿ ಮೂಢತನದಿಂದ ವರ್ತಿಸುವುದೂ ನಡೆಯುತ್ತಲೇ ಬಂದಿದೆ!

"ಏನಿದರ ಅಂತರಾರ್ಥ" ಎಂದು ಯೋಚಿಸುವ ವ್ಯವಧಾನವಿಲ್ಲದಿದ್ದರೂ... "ವಯಸ್ಸಿಗೆ ತಕ್ಕಂತೆ ಬುದ್ಧಿ ಬೆಳೆದಿಲ್ಲ" ಎಂಬ ಮಾತಿನ ತಾಡನದೊಂದಿಗೆ ಒಬ್ಬರು ಇನ್ನೊಬ್ಬರನ್ನು ತೂಗಿ ನೋಡುವುದನ್ನೂ ನಾವೆಲ್ಲ ಕಾಣುತ್ತಿದ್ದೇವೆ. "ಸಂಸಾರ, ಸಂಬಂಧ, ಸಮಾಜದ ಕ್ರಿಯೆಗಳು ಹೀಗೆಹೀಗೇ ಇರಬೇಕು" ಎಂದು ನಾವು ನಾವೇ ಮಾಡಿಕೊಂಡ ಸಾಮಾಜಿಕ ಕಟ್ಟುಪಾಡಿನ ಸೂತ್ರಗಳನ್ನು ದೈಹಿಕವಾಗಿ ಹಿರಿಯರಾದ ಯಾರಾದರೂ ತಮ್ಮ ಅನುಭವದ ಆಧಾರದಲ್ಲಿ ಪ್ರಶ್ನಿಸಿದಾಗ, ಬುದ್ಧಿಯನ್ನು ಹೀಗಳೆಯುವಂತಹ ಪ್ರತಿಕ್ರಿಯೆಗಳು ಮೂದಲಿಕೆಯ ರೂಪದಲ್ಲಿ, ಸಾಮಾನ್ಯವಾಗಿ ಹೀಗೆಲ್ಲ ಪ್ರತ್ಯಕ್ಷವಾಗುತ್ತವೆ.

ವಯಸ್ಸು ಎಂಬುದು ಕಾಲದ ಘಟ್ಟಣೆಗೆ ಒಳಗಾಗುತ್ತ ಅನೇಕ ಅನುಭವಗಳನ್ನು ಸಹಜವಾಗಿ ಹೊತ್ತುಕೊಳ್ಳುತ್ತದೆ. ಸಿಹಿಕಹಿ ಅನುಭವಗಳ ತಾಡನದಿಂದ ಬದುಕು ಮಾಗುವುದು ಸಹಜ. ಮಾಗುವಿಕೆ ಎಂದರೆ "ಮುಗ್ಧತೆಯ ನಾಶ" ಎಂದೇ ಅರ್ಥೈಸಬೇಕಾಗಿಲ್ಲ. ಅದಕ್ಕೆ - ಕೃತಕ ಗಾಂಭೀರ್ಯದ ಸೋಗೂ ಅಗತ್ಯವೇನಲ್ಲ. ಹಿರಿಯ ವಯಸ್ಕರು ಸಮಾಜದ ಇತರ ವಯಸ್ಕ ಸಮುದಾಯದಂತೆ ವರ್ತಿಸದೆ ಒಮ್ಮೊಮ್ಮೆ ಭಿನ್ನವಾಗಿ, ಸರಳವಾಗಿ ವರ್ತಿಸಿದಾಗ ಅಂಥವರನ್ನು ಉದ್ದೇಶಿಸಿ - "ವಯಸ್ಸಿಗೆ ತಕ್ಕಷ್ಟು ಬುದ್ಧಿ ಬೆಳೆದಿಲ್ಲ" ಎನ್ನುವ ವಾಡಿಕೆಯ ಪ್ರತೀ ಹೇಳಿಕೆಗಳ ಹಿಂದೆಯೂ ಯಾವ ತಪಸ್ಸಾಗಲೀ ಮನಃಶಾಸ್ತ್ರದ ಹೂರಣವಾಗಲೀ ಯಾವಾಗಲೂ ಇದ್ದೇ ಇರುತ್ತದೆಂದೇನಿಲ್ಲ. ಅದು ಕೆಲವೊಮ್ಮೆ "ನನ್ನಂತೆಯೇ ನೀನೂ ವಿಧವೆಯಾಗು" ಎನ್ನುವಂತಹ MOB MENTALITY ಯ ಪ್ರತೀಕವಾಗಿರಲೂಬಹುದು. ಅಥವ ಕಾಲಕ್ಷೇಪದ ವ್ಯರ್ಥಹರಟೆಯ ಭಾಗವಾಗಿರಲೂಬಹುದು; ತಪಸ್ಸಿನ ಗಂಧಗಾಳಿಯಿಲ್ಲದ ಅವಿವೇಕವೂ ಆಗಿರಬಹುದು; ಟೀಕಾಕಾರರ ಅಹಂಕಾರವೂ ಆಗಿರಬಹುದು.

ಸಮಾಜದ ದೊಡ್ಡ ಭಾಗವು ನಡೆಯುವಂತೆಯೇ ಎಲ್ಲರೂ ಅದನ್ನು ಅನುಸರಿಸಿ ನಡೆಯಬೇಕೆಂದು ಅಪೇಕ್ಷಿಸುವ ಪ್ರಾಣಿಸಹಜ ಮನೋಭಾವವನ್ನು ಪೋಷಿಸುತ್ತ ಬಂದಿರುವುದು - ಆಧುನಿಕ ಮನುಷ್ಯರ ವೈಶಿಷ್ಟ್ಯ. ಬಹುಮತವು ಯಾವತ್ತೂ ಸರಿ ಎನ್ನುವ -  (Might is Right) ರಕ್ಕಸ ಸಿದ್ಧಾಂತವಿದು. "ಮನುಷ್ಯನು ಸಮಾಜಜೀವಿ " ಎಂಬ ಗ್ರಹಿಕೆಯನ್ನು ಒತ್ತಿ ಒತ್ತಿ ಕೃತಕವಾಗಿ ತುಂಬಿಸಿಕೊಂಡ ಒಂದಷ್ಟು ಮನಸ್ಸುಗಳು ಇಂತಹ ಸಿದ್ಧಾಂತಗಳನ್ನು ಕಷ್ಟದಿಂದಲೇ ಅಳವಡಿಸಿಕೊಳ್ಳುತ್ತವೆ. ಆದರೆ ಇವುಗಳ ನಡುವೆಯೇ... ಬೆರಳೆಣಿಕೆಯ ಮುಕ್ತ ಮನಸ್ಸುಗಳು - "ಮನುಷ್ಯನು...ಮನುಷ್ಯಜೀವಿ - ಅಷ್ಟೆ.." ಎಂದುಕೊಂಡು ಇಂತಹ ಕೃತಕ ಸಿದ್ಧಾಂತಗಳ ನಡುವೆಯೂ ಹಾಯಾಗಿ ಬದುಕುತ್ತಿರುತ್ತಾರೆ. ಈ ಎರಡೂ ವರ್ಗಗಳು ಪರಸ್ಪರರನ್ನು "ಹುಚ್ಚರು" ಅಂದುಕೊಳ್ಳುವುದೂ ಇದೆ! "ವಯಸ್ಸಿಗೆ ತಕ್ಕಂತೆ ಬುದ್ಧಿ ಬೆಳೆದಿಲ್ಲ" ಅಂದುಕೊಳ್ಳುವುದೂ ಇದೆ! ಅದು ಹೇಗೆಂದರೆ... (ಚಂ-) ದನಮಂ ಕಡಿಕಡಿದು ತಿನ್ನುವ ಮತ್ತು ಸೊಪ್ಪನ್ನು ತಿನ್ನುವವರ ರಸಗ್ರಹಣದಲ್ಲಿ ಮಹಾ ಅಂತರವಿರುವಂತೆ! ಆದರೆ ಮನುಷ್ಯ ಮನುಷ್ಯರ ನಡುವಿನ ಅನುಭವ, ತಪ - ತಾಪಗಳ ಭಿನ್ನತೆಯೇ ಅವರವರ ಆಲೋಚನಾಶೈಲಿ ಮತ್ತು ಬದುಕನ್ನು ನಿಯಂತ್ರಿಸಿ ನಡೆಸುತ್ತಿರುತ್ತದೆ ಎಂಬ ವಾಸ್ತವವನ್ನು ಅರ್ಥೈಸಿಕೊಳ್ಳುವ ವ್ಯವಧಾನವಿದ್ದಾಗ ಮಾತ್ರ ನಮ್ಮ ಸಂವೇದನೆಗಳು ಸಂಧಿಸುತ್ತವೆ.

ಯಾವುದೇ "ಪಕ್ವ ಅನುಭವದಿಂದ ಮಾಗಿದ ವಯಸ್ಸು" ಎನ್ನುವುದು - ಬೆನ್ನಿನ ಮೇಲೆ ಹೊರಲಾಗದ ಹೊರೆಯನ್ನು ಹೊತ್ತಂತೆ ಇರುವುದಿಲ್ಲ; ಹೊತ್ತಂತಿರಲೂಬಾರದು. ಅನುಭವವು ಬದುಕಿನೊಂದಿಗೆ ಸೇರಿಹೋದಾಗ ಉಂಡ ಅನ್ನವು ಚೆನ್ನಾಗಿ ಪಚನವಾದಾಗ ಸಿಗುವ ತೃಪ್ತ ಆನಂದವು ಅನುಭವಕ್ಕೆ ಬರುತ್ತದೆ. ಬದುಕು ಬೇರೆ - ಅನುಭವ ಬೇರೆಯಾಗಿ ನಿಂತಾಗ ಅಲ್ಲಲ್ಲಿ "ವಿಚಾರ ಕಶ್ಮಲದ ಕೊಬ್ಬು"  ಶೇಖರವಾಗಿ, ಉಂಡ ಅನ್ನವೇ ಒಳಗಿದ್ದು ಪೀಡಿಸಿದಂತಹ ಹೊಯ್ದಾಟವಾಗುತ್ತದೆ! ನಮ್ಮ ಅನುಭವವು ವಯಸ್ಸಿನೊಂದಿಗೆ ಹದವಾಗಿ ಬೆರೆತಾಗ ಮಾತ್ರ ಪಕ್ವತೆಯು ಹೊಮ್ಮುತ್ತದೆ; ನಡಿಗೆಯು ಹಗುರವಾಗುತ್ತದೆ. ಮಾತು ಮೌನವಾಗುತ್ತದೆ. ಬದುಕು ತಪಸ್ಸಾಗುತ್ತದೆ. ಪಳಗಿದ ಮನಸ್ಸು ಯಾವತ್ತೂ ಭಾರ ಅನ್ನಿಸುವುದಿಲ್ಲ. ಒಳಗಿನ ಅರಿಯುವಿಕೆಯು ಆಚರಣೆಯ ಆಗುವಿಕೆಯಾದಲ್ಲಿ ಮನೋವಯಸ್ಸು ಕ್ಷಯಿಸುವುದೂ ಇಲ್ಲ. ಬದಲಾಗಿ ಅಂತಹ ಮನಸ್ಸುಗಳು ಸಂಯಮದ ಸ್ನಿಗ್ಧತೆಯೊಂದಿಗೆ ಆಂತರ್ಯದಲ್ಲಿ ಕಾಪಿಟ್ಟುಕೊಂಡ ಬಾಲ್ಯದ ಮುಗ್ಧತೆಗೂ ಹೊರಳಬಲ್ಲದು. ರಾಜರ್ಷಿ ಜನಕನಂತಹ ಜ್ಞಾನಿಗಳಲ್ಲಿ ಕಾಣುವ ಅಂತಹ ಸ್ಫಟಿಕ ಸ್ವಚ್ಛತೆಯು ಅನುಕರಣೀಯ. ಹೀಗೆ ಕತೆಯಾದ ಅನನ್ಯ ಬದುಕುಗಳ ಸಂದೇಶವು ಪರಿಸರದಲ್ಲಿ ಅರಿವನ್ನು ಮೂಡಿಸಿ ಆಚರಣೆಗೆ ಬಂದಾಗ ಪ್ರಸ್ತುತದ ಬದುಕುಗಳು ಅರಾಜಕವಾಗದೆ, ಸಹನೀಯವಾಗುತ್ತವೆ.

ಈ ಭೂಮಿಯ ಯಾವ ಜೀವಿಯೂ ಶಾಶ್ವತವಲ್ಲ ಎಂಬ ಎಚ್ಚರ ಮೂಡುವುದೇ ಅಧ್ಯಾತ್ಮದ ಪ್ರವೇಶದ ಮೊದಲ ಸಂಕೇತ. ಸಾಕ್ಷಾತ್ಕಾರವು ಫಲಿಸದಿದ್ದರೂ ಶುದ್ಧ ಬದುಕಿಗಾಗಿಯಾದರೂ ಅಧ್ಯಾತ್ಮ ಪ್ರಜ್ಞೆಯನ್ನು ರೂಢಿಸಿಕೊಳ್ಳುವುದು ಅಗತ್ಯ. ಬದುಕಿನಲ್ಲಿ ಸಂಪಾದಿಸುವ ಅಧ್ಯಾತ್ಮ ಸತ್ವವು ಭವರೋಗ ನಿಭಾಯಿಸುವ "ನಿರೋಧಕ ಶಕ್ತಿ" ನೀಡಬಲ್ಲದು. ಪತಿ ಪತ್ನಿ ಸುತರ ಅಕಾಲಿಕ ಮರಣದಂತಹ ದುರ್ಭರ ದುರ್ಧರ ಆಘಾತವನ್ನೂ - ತಡೆದುಕೊಳ್ಳುವ ಶಕ್ತಿಯನ್ನು ಪ್ರಚೋದಿಸಬಲ್ಲದು. "Not that we loved less; But that GOD loved most" ಎಂದು - ಸ್ವಾಂತವನ್ನು ಸಾಂತ್ವನಗೊಳಿಸುವ ಶಕ್ತಿಯು ಅಧ್ಯಾತ್ಮಕ್ಕಿದೆ. ಅಧ್ಯಾತ್ಮಭಾವವು ಆತ್ಮಭಾವವೇ ಆದಾಗ ಬದುಕು ನಮ್ರವಾಗುತ್ತದೆ; ಮನುಷ್ಯನು "ಜನಕ"ನಾಗುತ್ತಾನೆ. ಆದರೆ ಅದು ಕ್ಷಣಿಕವಾದ "ಸ್ಮಶಾನ ವೈರಾಗ್ಯ" ದಂತೆ ಆಗದೆ ಬದುಕಿನ ರೀತಿನೀತಿಯಾಗಬೇಕು. "ಭಯಂಕರ ವಿಚಾರವಾದಿ"ಗಳೂ ಆಗಾಗ (ಗುಟ್ಟಿನಲ್ಲಿ!) ಪೂರ್ಣ ಶರಣಾಗತರಾಗುವ ಬದುಕಿನ ಜಟಿಲ ಸನ್ನಿವೇಶಗಳಲ್ಲಿಯೂ ಅಧ್ಯಾತ್ಮವು ಮಾತ್ರ ಮನೋಬುದ್ಧಿಗೆ ಪೂರ್ಣ ಆಧಾರ ನೀಡುತ್ತ ಬಂದಿದೆ. ತೊಯ್ದಾಡುವ ಬದುಕುಗಳನ್ನು ಆತ್ಮಪ್ರಜ್ಞೆಯ ತಪಸ್ಸು ಮಾತ್ರ ಆಧರಿಸಬಲ್ಲದು. ಹಳಿ ತಪ್ಪುತ್ತಿರುವ ಇಂದಿನ ಜಾಗತಿಕ ವ್ಯವಸ್ಥೆಗೆ - ಮನಸ್ಸು ಬುದ್ಧಿಯ ಸಮತೋಲನವನ್ನು ಪ್ರಸಾದಿಸುವ ಅಧ್ಯಾತ್ಮವು ಅತೀ ಅವಶ್ಯಕ.



ಬಂಧನ ಮತ್ತು ಬಿಡುಗಡೆ - ಎರಡಕ್ಕೂ ಕಾರಣವಾಗಿರುವ ಮನುಷ್ಯನ "ಮನಸ್ಸು" ಎಂಬುದು ಅತ್ಯಂತ ರಹಸ್ಯಾತ್ಮಕವಾದದ್ದು. ಇಂತಹ ಮನಸ್ಸೆಂಬ ಕುದುರೆಯನ್ನು ಪಳಗಿಸುವ ತಪೋಘಳಿಗೆಗಳೇ ಬದುಕಿನ ಗಳಿಕೆ.

 

(ಯಾರ ಚಿತ್ರವೋ ಗೊತ್ತಿಲ್ಲ. ಕ್ಷಮಿಸಿ. ಭಾವಪುಷ್ಟಿಗಾಗಿ "ಮಾಗಿದ ಬಾಲ್ಯಭಾವ "ದ ಸಾಂದರ್ಭಿಕ ಭಾವಚಿತ್ರವಾಗಿ ಮಾತ್ರ ಬಳಸಿಕೊಂಡಿದ್ದೇನೆ. ಜಂಟಿ ಬದುಕಿನಲ್ಲಿ ಗಂಟು ತಪ್ಪದ ದೀರ್ಘ ಓಟದ ನಂತರದ - ಸಾರ್ಥಕ ಸಹಜ ಭಾವವಿನಿಮಯಕ್ಕೆ  ಆದರ್ಶ ಮಾದರಿಯಂತಿಲ್ಲವೆ? ... ನಮೋ ನಮಃ)

ಬಾಲ್ಯವೆಂದರೆ.....ಮೃದುಭಾವ ಮೊತ್ತ! ರಕ್ಕಸತನದ ಅಟ್ಟಹಾಸವು ಆವರಿಸಿದರೆ ಬಾಲ್ಯವೆಂಬುದು ಕಮರಿ ಹೋಗುತ್ತದೆ. ಬಾಲ್ಯದ ಹಸಿಭಾವವು ಉಳಿಯುವುದಿಲ್ಲ. ಬದುಕಿನ ಹಾದಿಯಲ್ಲಿ ಬುದ್ಧಿಪೂರ್ವಕವಾಗಿ ಉತ್ತಮಿಕೆಯನ್ನು ಸಂಪಾದಿಸುವಾಗ ಯಾವುದೇ ಮನುಷ್ಯನ "ಬಾಲ್ಯಮುಗ್ಧಭಾವ"ವು ಕಮರುವುದಿಲ್ಲ. ಹುಟ್ಟಿನಿಂದ ಬರುವ ಬಾಲ್ಯವು ಎಡವಿ ಕಲಿಯುವ ಅವಧಿ. ಇಂತಹ ಅಪ್ರಬುದ್ಧ ಬಾಲ್ಯಕ್ಕಿಂತ ಅನುಭವ ಪಕ್ವವಾದ ನಂತರವೂ ಜತನದಿಂದ ಕಾಪಿಟ್ಟುಕೊಂಡ ಮಾಗಿದ ಬಾಲ್ಯಭಾವ ವು ತಳಮಳವಿಲ್ಲದ ಸಂತೃಪ್ತಿಯ ಸಹಜ ನೆಲೆಯಲ್ಲಿ ಮನುಷ್ಯನನ್ನು ನಿಲ್ಲಿಸುತ್ತದೆ. ಅಂತಹ ಪ್ರಬುದ್ಧ ಲಘುಭಾವದ ಪುಷ್ಟಿಯಿದ್ದಲ್ಲಿ "ಯಸ್ಯಾಹಂ ಹೃದಯಾವಾಸಂ ಸ ಈಶೋ ವಿದಧಾತು ಮೇ" (ಯಾವ ಭಗವಂತನ ಹೃದಯದಿಂದ ನಾನು ಹೊರಬಂದೆನೋ ಆ ಜಗದೀಶನೇ ನನಗೆ ದಿಕ್ಕು ದಾರಿ ತೋರಿಸಲಿ) ಎಂಬ ತನ್ಮಯ - ಬ್ರಹ್ಮತಪೋಭಾವವು ಘಟಿಸುತ್ತದೆ. ಕಳೆದ - ತುಳಿದ ವಯಸ್ಸು... ಮತ್ತು... ಹತ್ತಿ - ಇಳಿದ ಅನುಭವದ ತಪೋಮೊತ್ತದಿಂದ ಪಕ್ವಗೊಂಡಂತಹ ಪ್ರಬುದ್ಧ ಮನಸ್ಸು ಬುದ್ಧಿಯು, ಬದುಕಿನ ಉತ್ತರಾರ್ಧದಲ್ಲಿ ಪ್ರಶಾಂತವಾಗುತ್ತದೆ. ಸಚ್ಚಿಂತನೆಯ ತಪಸ್ಸಿಗೆ ಮುಕ್ತವಾಗುತ್ತದೆ. "ಅರಿಯುವಿಕೆ" ಎಂಬುದು "ಆಗುವಿಕೆ" ಆಗುವಂತಹ ವಿಶ್ವಪ್ರಜ್ಞಾಸ್ತರಕ್ಕೆ ಏರಲು - ಸಚ್ಚಿಂತನೆಯ ಸುದೀರ್ಘ ತಪಸ್ಸು ಬೇಕು. ಬಾಹ್ಯ ಸೌಂದರ್ಯ ವರ್ಧಿಸಲು ನಾವು ನಾವೇ ಕಟ್ಟಿಕೊಂಡಿರುವ "ವ್ಯಕ್ತಿತ್ವ" ಎಂಬ ಕೃತಕ ಆಭರಣವು ಸಂಚಾರೀ ಭ್ರಮೆಯಾದರೆ, ಬುದ್ಧಿ ಉಜ್ಜುವ ಅಧ್ಯಾತ್ಮ ತಪಸ್ಸಿನಿಂದ ಅದು ಕ್ರಮೇಣ ಸ್ಥಾಯೀಭಾವವೂ ಆಗುತ್ತದೆ. ಅಹಂಕಾರ ಹುಟ್ಟಿಸುವ ಸ್ವಾಂತದ ಭ್ರಮೆಗಳಿಂದ ಪಾರಾಗಲು ಮತ್ತು ಧನ್ಯತೆ, ಸಾಫಲ್ಯದ ನಿಶ್ಚಿಂತ ನಿಶ್ಚಿತ ಗುರಿ ತಲುಪಲೂ ಜನಕನ ಸಜ್ಜನಿಕೆ, ಬ್ರಹ್ಮತಪಸ್ಸು ಬೇಕು. ಸತ್ಯ, ಜ್ಞಾನ, ಶುದ್ಧ ಜೀವನಕಲೆಯ ಗ್ರಹಿಕೆಗಾಗಿ ಇರುವ ತೀವ್ರ ಹಂಬಲವನ್ನು ಸಾತ್ವಿಕ ಭಾವದಿಂದ ಮಥಿಸಿ, ಮೂಲವನ್ನು ಶೋಧಿಸಿ ಮೋದಿಸುವ ದರ್ಶನದ ಹಾದಿಯಲ್ಲಿ "ಅರಿಯುವಿಕೆಯು ಆಗುವಿಕೆಯಾಗುವ ತಪಸ್ಸು" ಸಂಭವಿಸುತ್ತದೆ. ಇಂದಿನ ಹಲವು ಸಮಸ್ಯೆಗಳಿಗೆ ಇದು ಸರಿಯುತ್ತರವೂ ಆಗಬಲ್ಲದು.