ಸನಾತನ ಭಾರತೀಯ ಬದುಕುಗಳು ಅಂತರಂಗದಲ್ಲಿ ಅರಳಿ ವಿಕಾಸಗೊಂಡುದರಿಂದ ಭಾರತೀಯ ದೃಷ್ಟಿ ಚಿಂತನೆಗಳೂ ಅಂತರಂಗ ಕೇಂದ್ರಿತವಾಗಿವೆ. ಭೌತ ಜಗತ್ತನ್ನು ಎಷ್ಟೆಷ್ಟು ಹೊರಗಿನಿಂದ ಕಂಡು ಭ್ರಾಂತಿಗೊಂಡರೂ ಭಾರತೀಯ ಮನಸ್ಸುಗಳು ಅಂತರ್ಮುಖಿಯಾಗಿಯೇ ಇರುವುದು ಈ ನೆಲದ ಸಹಜ ಗುಣ; ಕಾಣುವ ಸತ್ಯದ ಮೂಲಕ ಕಾಣದ ಸತ್ಯದ ಹುಡುಕಾಟ, ಒಳದರ್ಶನಗಳಿಗಾಗಿ ತುಡಿಯುತ್ತಿರುವುದೂ ಭಾರತೀಯ ಮನಸ್ಸುಗಳ ಸಹಜ ಶೈಲಿ. ಅತಿಯಾಗಿ ಆಧುನಿಕತೆಯತ್ತ ಆಕರ್ಷಿತಗೊಂಡು ಸಾಂತ್ವನಕ್ಕಾಗಿ ಹಾತೊರೆಯುತ್ತ ದಿಕ್ಕುದೆಸೆಗಾಗಿ ತೊಳಲುತ್ತಿರುವ ಇಂದಿನ ಭಾರತೀಯ ಬದುಕುಗಳೂ ಇದಕ್ಕೆ ಹೊರತಾಗಿಲ್ಲ.
ಇಂದಿನ "ಆಧುನಿಕ ಜಗತ್ತು" ಎಂಬುದು ಸ್ವನಿಷ್ಠ, ವಸ್ತುನಿಷ್ಠವೆನ್ನುವ ಕತ್ತಲಿನ ಅರೆದಾರಿಯಲ್ಲಿ ನಿಂತುಬಿಡುತ್ತಿದೆ; ತಮ್ಮ ಸ್ವಂತ ಶಕ್ತಿಯ ಅರಿವಿಲ್ಲದೆ ಬಾಹ್ಯ ಚಿತ್ರಗಳನ್ನೇ ನೆಚ್ಚಿ ಅರೆ ಎಚ್ಚರದಲ್ಲಿ ತೊನೆಯುತ್ತಿವೆ. ಅದ್ದರಿಂದಲೇ ಎಲ್ಲೆಲ್ಲೂ ಅತೃಪ್ತಿಯ ಆತಂಕ, ಉದ್ವೇಗ, ನಿರಾಶೆ, ಉತ್ತರ ಕಾಣದ ಪ್ರಶ್ನೆಗಳು. ಅಂತರಂಗದ ಆಧ್ಯಾತ್ಮಿಕ ಅಂಧತೆಯನ್ನು ನೀಗಿಸಿಕೊಂಡು ತನ್ನೊಳಗೆ ಅಂತರ್ಗತವಾಗಿರುವ ಶಕ್ತಿಯನ್ನು ಪ್ರತಿಯೊಬ್ಬರೂ ಅವರವರೇ ಕಾಣುವಂತಾದಾಗ ಮಾತ್ರ ಕ್ರಿಯಾಶೀಲ, ನಿರ್ಭಯ, ಸಂತೃಪ್ತ ಸಮಾಜವು ವಿಕಸಿತಗೊಳ್ಳುತ್ತದೆ. ಆದ್ದರಿಂದ ತಳಮಳದ ಚೆಂಡಾಟದಲ್ಲಿ ಮುಳುಗಿರುವ ಇಂದಿನ ಪ್ರತಿಯೊಂದು ಮಾನವ ಜೀವಿಯೂ ತನ್ನೊಳಗಿನ ಆಂತರ್ಯವನ್ನು ಕಟ್ಟಿ, ತಟ್ಟಿ ಎಚ್ಚರಿಸಿ, ತನ್ನೊಳಗಿನ ಆಂತರಂಗಿಕ ಶಕ್ತಿಸ್ರೋತದ ಶುದ್ಧ - ಸಹಜ ಸಂವಹನ ನಡೆಸಲು ಪ್ರಯತ್ನಿಸಬೇಕಾದ ಅಗತ್ಯವಿದೆ.
ಮನುಷ್ಯನೇ ಒಂದು ದೊಡ್ಡ ರಹಸ್ಯ. ಮನುಷ್ಯನಿಗೆ "ತಾನು ಏನು?" ಎಂಬುದು ಅರ್ಥವಾದಾಗ, ಹಂತ ಹಂತವಾಗಿ ವಿಶ್ವತೋಮುಖವೂ ಅನುಭವಕ್ಕೆ ದಕ್ಕುತ್ತದೆ. ಅಂತರಂಗದಲ್ಲಿ ತಾನೇ ತಾನಾಗಿ ನಡೆಸುವ ಆಳವಾದ ಜಿಜ್ಞಾಸೆಗಳಿಂದ ಮಾತ್ರ ಯಾವುದೇ ಉತ್ಕರ್ಷದ - ಚಿರಂತನ ಸತ್ಯದ ದರ್ಶನವಾದೀತು. "ಆನಂದವು ಎಲ್ಲೋ ಹೊರಗಿಲ್ಲ; ನಮ್ಮ ಒಳಗೇ ಇದೆ " ಎಂಬ ಪರಿಜ್ಞಾನವೇ ಆ ಏಣಿಯ ಮೊದಲ ಮೆಟ್ಟಿಲು. "ವಿಜ್ಞಾನದ ಜಡವಸ್ತು - ವೈಜ್ಞಾನಿಕ ಭಾಷೆ" ಗಳೆಂಬ ಇಂದ್ರಿಯಸೂಚ್ಯ ವಿಜ್ಞಾನಭಾವಕ್ಕೆ ಇದುವರೆಗೆ ಎಟುಕದ ಅನೇಕ ವಿಶಿಷ್ಟ ಅನುಭವಗಳೂ ಈ ಸೃಷ್ಟಿಯಲ್ಲಿವೆ. ಅಂತಹ ಅನುಭವಗಳನ್ನು ಶಬ್ದಗಳಲ್ಲಿ ಸಶಕ್ತವಾಗಿ ಹಿಡಿದಿಡಲು ಆಗುವುದಿಲ್ಲ. ಹಾಗೆ ಹೊರಟರೆ ಸಕ್ಕರೆಯು ಸಿಹಿಯಾಗಿದೆಯೆಂದು ವರ್ಣಿಸಿದಂತೆ - ಶಾಬ್ದಿಕ ಕಸರತ್ತಾದೀತು. ಸಿಹಿ ಹೇಗಿದೆ? ಎಂದು ಯಾರಾದರೂ ಕೇಳಿದಾಗ - ಸವಿದು ನೋಡು, ಸ್ವತಃ ಅನುಭವಿಸಿ ನೋಡು - ಎಂದಷ್ಟೇ ಹೇಳಲಾಗುವಂತೆ, ಬಣ್ಣಿಸಲಾಗದ ಅನೇಕ ಅನುಭವಗಳು ಈಗಲೂ ಆಧುನಿಕ ವಿಜ್ಞಾನದ "ಅತ್ತತ್ತ"ವೇ ಇದ್ದು ವೈಜ್ಞಾನಿಕ ಸೂತ್ರಗಳ ಅಳವಿಗೆ ಅವು ಎಂದಿಗೂ ಸಿಗುವುದಿಲ್ಲ. ಏಕೆಂದರೆ ಬಾಹ್ಯೇಂದ್ರಿಯ ಗ್ರಾಹ್ಯವಾದ ಜ್ಞಾನಕ್ಕೆ ಒಂದು ಇತಿಮಿತಿಯಿದೆ. ಆದ್ದರಿಂದ ವಿಜ್ಞಾನವು ಇದುವರೆಗೆ ಸ್ಪರ್ಶಿಸಲಾಗದಂತಹದು ಒಂದಿದೆ - ಎಂಬುದನ್ನು ಪಾಶ್ಚಾತ್ಯ-ಪೌರಾತ್ಯ ಮಹಾನ್ ತತ್ವವೇತ್ತರುಗಳೆಲ್ಲರೂ ಒಪ್ಪಿಕೊಂಡಿದ್ದಾರೆ. ಅದೇ - ಆತ್ಮ ವಿಜ್ಞಾನ. ಭಾರತೀಯ ಋಷಿಮುನಿಗಳು ಅಂತಹ ಆತ್ಮವಿಜ್ಞಾನದ ಉಪಾಸಕರು. "ಬೇರೆ ಬೇರೆ ಇಂದ್ರಿಯಗಳ ಹಿಂದಿರುವ ಅಗೋಚರ ಶಕ್ತಿಯು - ಆತ್ಮವೇ ಆಗಿದೆ" - ಎಂದು ಉಪನಿಷದ್ಕಾಲದ ಗುರುಗಳು - ತಮ್ಮ ಶಿಷ್ಯರಿಗೆ ವಿವರಿಸಿದ್ದರು.
ನಮ್ಮ ಅಂತರಂಗದ ಆಧ್ಯಾತ್ಮಿಕ ಗುಣವನ್ನೂ ಶಕ್ತಿಯನ್ನೂ ಅದರ ಲೋಕ ದೃಷ್ಟಿಯು ಅದುಮಿಟ್ಟಿದೆ. ಇವನ್ನೆಲ್ಲ ಕಂಡ ಮಹಾನ್ ತತ್ವಜ್ಞಾನಿ ಡಾ. ಎಸ್. ರಾಧಾಕೃಷ್ಣನ್ ಅವರು " ವಕ್ರ ಸ್ವಭಾವದ, ದುರಹಂಕಾರದ, ಸಿಡುಕಿನ, ಪರಸ್ಪರ ಮೂದಲಿಸುತ್ತಿರುವ, ತಮ್ಮ ಬಳಿ ಇರುವ ಲೌಕಿಕ ಆಸ್ತಿಪಾಸ್ತಿಗಳ ಆಟದ ಸಾಮಾನುಗಳನ್ನು ಪ್ರದರ್ಶಿಸುತ್ತ ಅವುಗಳ ದೊಡ್ಡ ಆಕಾರದಿಂದಲೇ ರೋಮಾಂಚನಗೊಳ್ಳುತ್ತಿರುವ ಮಕ್ಕಳಿಂದ ತುಂಬಿದ ಶಿಶುವಿಹಾರದಂತೆ - ಈ ರಾಷ್ಟ್ರಗಳೆಂಬ ಜಗತ್ತು ತೋರುತ್ತಿದೆ " ಎಂದಿದ್ದರು.
ಆದರೆ ಇವನ್ನು ಮೀರುವುದು ಹೇಗೆ? "ಸಾಮಾನ್ಯ ಭೌತಿಕಸ್ತರದಲ್ಲಿ ಇದ್ದಕ್ಕಿದ್ದಂತೆ ಆತ್ಮಜ್ಞಾನವನ್ನು ಸಾಧಿಸಲು ಆಗುವುದಿಲ್ಲ; ಹೀಗಿದ್ದರೂ, ಇಂತಹ ಸಾಮಾನ್ಯ ಸ್ಥಿತಿಯಲ್ಲಿರುವಾಗಲೂ ಕಿವಿ, ಕಣ್ಣು ಮುಂತಾದ ಇಂದ್ರಿಯಗಳೊಂದಿಗೆ ಅಗೋಚರ ಆತ್ಮಶಕ್ತಿಯು ತಾದಾತ್ಮ್ಯವನ್ನು ಕಲ್ಪಿಸಿಕೊಂಡಿರುತ್ತದೆ. ಅಸಾಮಾನ್ಯವಾದ ಬುದ್ಧಿ ಪ್ರಚೋದನೆ ಯಿಂದಲ್ಲದೆ ಯಾರೂ ಇಂದ್ರಿಯ ತಾದಾತ್ಮ್ಯವನ್ನು ದಾಟುವುದು ಅಸಾಧ್ಯ" ಎಂದು ಶಂಕರಾಚಾರ್ಯರು ಹೇಳಿದ್ದಾರೆ. (ನ ಹಿ ವಿಶಿಷ್ಟ ಧೀಮತ್ವಮಂತರೇಣ ಶ್ರೋತ್ರಾಧ್ಯಾತ್ಮಭಾವಃ ಶಕ್ಯಃ ಪರಿತ್ಯಕ್ತುಂ -) ಭೌತ ವಸ್ತುಪ್ರಪಂಚ ಮತ್ತು ಬಾಹ್ಯ ಪ್ರಕೃತಿಯಲ್ಲಿಯೇ ಮುಳುಗಿರುವ, ಅದೇ ಹಾದಿಯಲ್ಲಿಯೇ ಮುಂದುವರಿಯುತ್ತಿರುವ ಭೌತ ವಿಜ್ಞಾನವು ಮಾನವನ ಸ್ವಭಾವವನ್ನು ಮತ್ತು ಅದರ ಆಳವನ್ನು ಭೇದಿಸಿ, ಅದರ ರಹಸ್ಯವನ್ನು ಕಾಣಲು - ಪರಿಹರಿಸಲು ತನ್ಮಯವಾಗುವಂತಹ ಧ್ಯಾನಸ್ಥ ಸ್ಥಿತಿಯಲ್ಲಿ - ಅದು ಆತ್ಮ ವಿಜ್ಞಾನವೆನಿಸುತ್ತದೆ. ಕಣ್ಣು ತೆರೆದರೆ ಕಾಣಲಾಗದ, ಕಣ್ಣು ಮುಚ್ಚಿಕೊಂಡೇ ಕಾಣಲಾಗುವ - ಮಾನವನ ತುರೀಯಾವಸ್ಥೆಯ "ಚೇತನ" ಎಂಬ ನಿಜಸ್ವರೂಪವನ್ನು ಅನುಭವಿಸುವ ವಿದ್ಯೆಯೇ ಆತ್ಮ ವಿಜ್ಞಾನ.
ಪ್ರಕೃತಿಯೂ ಒಂದು ಯಂತ್ರವೇ. ಅದು ಭಾಗಶಃ ಮಾನಸೀಕರಣಗೊಂಡ ಯಂತ್ರ. ನಮ್ಮನ್ನೂ ಒಳಗೊಂಡಿರುವುದರಿಂದ ಈ ಪ್ರಕೃತಿಯನ್ನು - "ಮನಸ್ಸಿನ ಮಾನವ ಗುಣಗಳನ್ನೂ ಹೊಂದಿರುವ ಯಂತ್ರ" - ಎನ್ನಬಹುದು. ಪ್ರಕೃತಿಯೆಂದರೆ ಮಾನಸಿಕ ಮತ್ತು ಭೌತಿಕ ಶಕ್ತಿಗಳ ನಿರಂತರ ಹರಿವಿನ ಪ್ರವಾಹ. ಮಾನವ ನಿರ್ಮಿತ ಯಂತ್ರಗಳಿಗೂ ಪ್ರಕೃತಿಗೂ ಇರುವ ಒಂದೇ ಭೇದವೆಂದರೆ, ಮಾನವನ ಮನಸ್ಸು ಪ್ರೇರಿತವಾಗುವುದು ಭಾವನೆಗಳಿಂದ - ಭಯ ಆಸೆ ಪ್ರೇಮ ಇಚ್ಛೆ ಅನಿಚ್ಛೆಗಳಿಂದ. ಆದರೆ ಯಂತ್ರಗಳು ಹಾಗಲ್ಲ. ಅವು - ಮಾನವನ ಆಜ್ಞಾಧಾರಕವಾದ ಕೇವಲ - ವಸ್ತು. ಆದ್ದರಿಂದ ಅಂತರಂಗದ ಆಯಾಮವನ್ನು ಬದುಕು-ಪ್ರಜ್ಞೆಗಳ ನೆಲೆಯಲ್ಲಿಯೇ ಸಮಗ್ರವಾಗಿ ತೂಗಬೇಕಲ್ಲದೆ ಕೇವಲ ಹೊರಹೊರಗಿನ ಸಂಶೋಧನೆ, ವಿಮರ್ಶೆಗಳಿಂದ ಅಂತಃಸತ್ವವನ್ನು ಅಳೆಯಲಾಗುವುದಿಲ್ಲ; ಅಂತರಂಗ ಜಗತ್ತನ್ನು ಹೊರಗಿನ ಯಾವ ದೊಣ್ಣೆಯಪ್ಪನೂ ನಿಯಂತ್ರಿಸಲು ಬರುವುದಿಲ್ಲ. ಸ್ವಾಂತವನ್ನು ದಾಟಿ ಅನಂತವನ್ನು ಧ್ಯಾನಿಸಬಲ್ಲ ಸ್ವವಿಕಾಸದ ಸಾಧನೆಗೆ - ಸ್ವಚ್ಛ ಮನೋವಾಕ್ಕಾಯದ ಸ್ವಪ್ರಯತ್ನವೊಂದೇ ದಾರಿ. ಆದ್ದರಿಂದಲೇ ಪುರಂದರದಾಸರು "ಒಳಗಿದ್ದು - ಎನ್ನ ಸ್ವತಂತ್ರನೆಂದೆನಿಸಿದ ಯಂತ್ರವಾಹಕ ನೀನು" ಎನ್ನುತ್ತ ಆತ್ಮಶಕ್ತಿಗೆ ಶರಣಾದರು; ಸಜ್ಜನರನ್ನು ಅಧ್ಯಾತ್ಮದತ್ತ ಆಕರ್ಷಿಸಿದರು.
ಸ್ವಾಮಿ ವಿವೇಕಾನಂದರು ಹೇಳಿದ್ದರು: " ಭಾರತದ ಇತಿಹಾಸದ ಒಂದು ನಿರ್ದಿಷ್ಟ ಅವಧಿಯಲ್ಲಿ ನಮ್ಮ ಋಷಿಮುನಿಗಳ ಎಲ್ಲ ಗಮನವನ್ನೂ - "ಮಾನವ ಮತ್ತು ಅವನ ಮನಸ್ಸು"- ಎಂಬ ಒಂದು ವಿಷಯವು ಸೆಳೆದಿಟ್ಟುಕೊಂಡಿತು. ತಮ್ಮ ಗುರಿಯನ್ನು ಸಾಧಿಸಲು ಈ ಹಾದಿಯೇ ಅತ್ಯಂತ ಸುಲಭೋಪಾಯವಾಗಿ ಅವರಿಗೆ ಕಂಡಿತು. ನಿಯಮದ ಪ್ರಕಾರವಾಗಿ ಪಳಗಿಸಿಕೊಂಡಾಗ ನಮ್ಮ ಮನಸ್ಸು ಏನನ್ನೇ ಆದರೂ ಮಾಡಬಲ್ಲದು ಎಂಬ ವಿಷಯವು ಭಾರತೀಯ ಮನಸ್ಸಿಗೆ ಎಷ್ಟು ಖಚಿತವಾಯಿತೆಂದರೆ ಆ "ಮನಸ್ಸಿನ ಶಕ್ತಿ" ಎಂಬುದೇ ಅವರ ಅಂದಿನ ಅಧ್ಯಯನದ ಮಹಾವಸ್ತುವಾಯಿತು....
...ಆಧುನಿಕ ಭೌತ ನಿಯಮಗಳ ಹಿಂದೆಯೂ ಅತ್ಯಂತ ಸೂಕ್ಷ್ಮವಾದ ನಿಯಮಗಳಿವೆ. ಬರಬರುತ್ತ ಸಣ್ಣದಾಗುವ ಅಸ್ತಿತ್ವ ಅದು. ಕಾಣಿಸುವ ದಪ್ಪ ಭಾಗವು ನಮ್ಮಲ್ಲಿದೆ. ಅದು ಕ್ರಮೇಣ ಸಣ್ಣದಾಗುತ್ತ ಸೂಕ್ಷ್ಮತರವಾಗುತ್ತ ಹೋಗುತ್ತದೆ. ಹಾಗೆ ಅತ್ಯಂತ ಸೂಕ್ಷ್ಮವಾದುದನ್ನು "ಆತ್ಮ" ಎಂದೂ ಅತ್ಯಂತ ಸ್ಥೂಲವಾದದ್ದನ್ನು ದೇಹ ಎಂದೂ ಹೇಳುತ್ತೇವೆ. ಸೂಕ್ಷ್ಮ ಪಿಂಡಾಂಡದಲ್ಲಿ ಹೇಗಿದೆಯೋ - ಸ್ಥೂಲ ಬ್ರಹ್ಮಾಂಡದಲ್ಲಿಯೂ ಅದು ಯಥಾವತ್ತಾಗಿ ಹಾಗೇ ಇರುತ್ತದೆ. ಆತ್ಮದ ಸ್ವರೂಪದಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ. ವಿಶ್ವವೂ ದೇಹದಂತೆಯೇ ಸ್ಥೂಲವಾದ ಮಂದ. ಸ್ಥೂಲವಾದುದು ಭಗವಂತನಾಗುವವರೆಗೂ ಸೂಕ್ಷ್ಮವಾಗುತ್ತಲೇ ಹೋಗುತ್ತದೆ." (Swami Vivekananda - Lecture on the Powers of the Mind CW Vol. 2, 9th edition, pp.20-21-16) ಆದರೆ ಅಂತಹ ಸೂಕ್ಷ್ಮವನ್ನು ಗ್ರಹಿಸುವ ಕಣ್ಣು, ಅದನ್ನು ಆಧರಿಸುವ ಬುದ್ಧಿಯನ್ನು ಹೊಂದುವ ಹಾದಿಯು ಅಪೇಕ್ಷಿಸುವ ಅರ್ಹತೆಗಳು ಬೇರೆ. ಇದೇ ಅಧ್ಯಾತ್ಮ ವಿದ್ಯೆ. ಅಂದರೆ ಅಂತರಾತ್ಮನ ವಿಜ್ಞಾನ.
ತ್ಯಾಗದ ಮೂಲಕ ಭೋಗವನ್ನು ಅನುಭವಿಸು. (ಈಶೋಪನಿಷತ್ತು)
ತನ್ನ ಮೊದಲ ಮಂತ್ರದಲ್ಲೇ ಸತ್ಯದ ರಹಸ್ಯ ಆಳಕ್ಕೆ ನಮ್ಮನ್ನು ಒಯ್ಯುತ್ತದೆ - ಈಶೋಪನಿಷತ್ತು.
ಸಹಸ್ರಾರು ವರ್ಷಗಳಿಂದ ಭಾರತದ ಲೌಕಿಕ ಮತ್ತು ಧಾರ್ಮಿಕ ವಿದ್ಯಾಭ್ಯಾಸಕ್ಕೆ ಸ್ಫೂರ್ತಿದಾಯಕವಾದ, ಸುಂದರ ಭಾವದುಂಬಿದ, ಗುರು ಶಿಷ್ಯರನ್ನು ವಿಶ್ವಾಸದ ಸಂಬಂಧದಲ್ಲಿ ಕಟ್ಟಿದ ಶಾಂತಿ ಮಂತ್ರವಿದು.
"ಯಾವುದರಿಂದ ಎಲ್ಲ ಜೀವಿಗಳು ಜನಿಸಿವೆಯೋ, ಜನಿಸಿದಮೇಲೆ ಯಾವುದರ ಮೂಲಕ ಅವು ಜೀವಿಸುತ್ತವೆಯೋ, ಇರುವುದು ಮುಗಿದ ಮೇಲೆ ಯಾವುದರಲ್ಲಿ ಅವು ಲೀನವಾಗುತ್ತವೆಯೋ ಅದೇ ಬ್ರಹ್ಮ " ; " ರಸೋ ವೈ ಸಃ " - ಆತ ವಾಸ್ತವವಾಗಿ ಆನಂದ. (ತೈತ್ತಿರೀಯ ಉಪನಿಷತ್ತು)
" ಪ್ರಜ್ಞಾನಂ ಬ್ರಹ್ಮ"
" ತತ್ ತ್ವಂ ಅಸಿ "
ಈ ಎಲ್ಲ ಉಕ್ತಿಗಳೂ ನಮ್ಮ ನಿತ್ಯದ ಮಾತಿನಲ್ಲಿ ಬಂದು ಹೋಗುತ್ತಿರುತ್ತವೆ. ಆದರೆ ಅದರ ಮೂಲ, ಆಳದ ಕುರಿತ ಚಿಂತನೆಯನ್ನು ಮಾತ್ರ ನಮ್ಮಿಂದ ನಡೆಸಲಾಗುತ್ತಿಲ್ಲ. ಉಪನಿಷತ್ತು ಅಂದರೆ ಸತ್ಯದ ಅನ್ವೇಷಣೆಯ, ಸತ್ಯ ಸಾಕ್ಷಾತ್ಕಾರದ ಬೃಹತ್ ಪ್ರಬಂಧ. ಸಂಸಾರಬೀಜವಾದ ಅವಿದ್ಯೆಯನ್ನು ಪರಿಹರಿಸುವ ಜ್ಞಾನನಿಧಿಯೇ ಉಪನಿಷತ್ತು. ಆದಿಯಾಗಲೀ ಅಂತ್ಯವಾಗಲೀ ಇಲ್ಲದ, ವಿಭಿನ್ನ ಅನಾಮಿಕ ವ್ಯಕ್ತಿಗಳು ವಿಭಿನ್ನ ಕಾಲಘಟ್ಟದಲ್ಲಿ ಕಂಡುಕೊಂಡ ಆಧ್ಯಾತ್ಮಿಕ ಉನ್ನತಿಯ ನಿಯಮಗಳ ಒಟ್ಟು ಮೊತ್ತವೇ - ಸನಾತನವೆನ್ನಿಸಿದ ವೇದ ವೇದಾಂತಗಳು. ಈ ಅಂತಃಜ್ಞಾನ ವಿಭಾಗದಲ್ಲಿ ಭಾರತೀಯರಷ್ಟು ಅಧ್ಯಯನ ನಡೆಸಿದವರು ವಿಶ್ವದಲ್ಲಿ ಇನ್ನೊಬ್ಬರಿಲ್ಲ. ಆದರೆ ಉಪನಿಷತ್ತಿನ ಯಾವುದೇ ಸಂಕೇತರೂಪೀ ಸೂತ್ರಗಳು, ಸೂಕ್ತಿಗಳು ದೀರ್ಘ ವಿವರಣೆಯಿಲ್ಲದೆ ಆದ್ಯಂತವಾಗಿ ಮನವರಿಕೆಯಾಗುವುದಿಲ್ಲ.
"ಯಾವುದು ಇಂದ್ರಿಯ ಮತ್ತು ಮನಸ್ಸುಗಳಿಂದ ವ್ಯಕ್ತವಾಗುವುದಿಲ್ಲವೋ ಆದರೆ ಯಾವುದರಿಂದ ಇಂದ್ರಿಯಗಳು ಮತ್ತು ಮನಸ್ಸು ವ್ಯಕ್ತವಾಗುತ್ತದೆಯೋ - ಅದೇ ಬ್ರಹ್ಮ" ಎಂದು ಉಪನಿಷತ್ತು ಸಾರಿತು.
ಬ್ರಹ್ಮ ಅಥವ ಆತ್ಮದ ಸ್ವರೂಪವನ್ನು - ಸಲಹೆ, ಸೂಚನೆ, ಸಂಕೇತಗಳ ಮೂಲಕವೇ ಉಪನಿಷತ್ತು ತಿಳಿಸುತ್ತದೆ. ಋಷಿಮುನಿಗಳ ಕಾಲಘಟ್ಟದಲ್ಲಿ ಉಪನಿಷತ್ತಿನ ನಿರೂಪಣೆಯು ಅವರಿಗೆ ಕ್ಲಿಷ್ಟವೆನ್ನಿಸದಿದ್ದರೂ ಇಂದಿನ ಕಾಲಘಟ್ಟದಲ್ಲಿ ಅಂತಹ ಸಂಕ್ಷಿಪ್ತ ಸೂತ್ರಗಳು ಪ್ರವೇಶಿಗರಿಗೆ ಸಹಜವಾಗಿಯೇ ಅಸ್ಪಷ್ಟವೆನ್ನಿಸುತ್ತವೆ. ಆದ್ದರಿಂದಲೇ ಅನಂತರದ ಕಾಲದಲ್ಲಿ - ವೇದ, ವೇದಾಂತಗಳ ಸಾರವನ್ನು ಸಾಮಾನ್ಯರಿಗೂ ತಲುಪಿಸುವ ಮತ್ತು ಸರ್ವರಿಗೂ ಉದ್ಧಾರದ ದಾರಿ ತೋರಿಸಲು ಯತ್ನಿಸಿದ ವೇದವ್ಯಾಸರು ಮತ್ತು ಅವರಂತಹ ಅನೇಕ ಋಷಿಗಳು, ವೇದ - ಉಪನಿಷತ್ತುಗಳಿಗೆ ಭಾಷ್ಯಗಳನ್ನು ಬರೆದರು. ಉಪನಿಷತ್ತಿನ ಸಾರವನ್ನು, ಸತ್ಯವನ್ನು, ತತ್ತ್ವವನ್ನು ರಾಮಾಯಣ, ಮಹಾಭಾರತ, ಭಾಗವತ, ಭಗವದ್ಗೀತೆಗಳ ಮೂಲಕ - ಸರಳ ಕಥಾರೂಪದಲ್ಲಿ ತಮ್ಮ ಪೀಳಿಗೆಗೆ ದಾಟಿಸುವಲ್ಲಿ ಅವರು ಒಂದಷ್ಟು ಯಶಸ್ವಿಯೂ ಆದರು.
ಕೆಲವೇ ಶತಮಾನಗಳ ಹಿಂದೆ ಶ್ರೀ ಶಂಕರಾಚಾರ್ಯರು ಈ ಮಹತ್ಕಾರ್ಯವನ್ನು ಮತ್ತೊಮ್ಮೆ ಪುನರುಜ್ಜೀವಗೊಳಿಸಿದರು. ಕೇವಲ ನೂರೈವತ್ತು ವರ್ಷಗಳ ಹಿಂದೆ ನಮ್ಮೊಂದಿಗಿದ್ದ ಶ್ರೀ ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದರು ಭಾರತೀಯ ಸನಾತನ ತತ್ವ ಚಿಂತನೆಗಳು ಆಧುನಿಕರಿಗೂ ಮನಮುಟ್ಟುವಂತೆ - ದೃಷ್ಟಾಂತಗಳೊಂದಿಗೆ ಘಂಟಾಘೋಷವಾಗಿ ಸಾರಿಹೋದರು. ಶ್ರೀ ರಾಮಕೃಷ್ಣ ಆಶ್ರಮ (ಮಿಶನ್)ದ ಹಲವಾರು ಹಿರಿಯ ಸನ್ಯಾಸಿಗಳು ಈ ಜ್ಞಾನಸತ್ರವನ್ನು ಅನಂತರವೂ ಗಂಭೀರವಾಗಿ ಮುಂದುವರಿಸಿಕೊಂಡು ಬಂದಿದ್ದಾರೆ; ಬರುತ್ತಿದ್ದಾರೆ. ಇಳಿದುಹೋದ ಇಂದಿನ ವಿದ್ಯಾ ಸಂಸ್ಕೃತಿಯಿಂದಾಗಿ - ಅಂದಿನ ಕಾಲಮಾನದಲ್ಲಿ ಅರ್ಥವಾಗುವಂತಿದ್ದ ಭಾಷ್ಯಗಳಿಗೆ ಈಗ ಮತ್ತೊಮ್ಮೆ ಪುನರ್ವ್ಯಾಖ್ಯಾನ ಮಾಡಬೇಕಾಗಿ ಬಂದಿದೆ. ಏಕೆಂದರೆ ನಮ್ಮ ಆಧುನಿಕ ಶಿಕ್ಷಣವು ಮನೆಯಲ್ಲಿರುವ ಸಂಪತ್ತನ್ನು ಗುರುತಿಸಲಾಗದೆ ಯಾರದೋ ಹಗಲು ವೇಷ ತೊಟ್ಟುಕೊಂಡು ಯಾವುದೋ ಕಿರಿದಾದ ಓಣಿಯಲ್ಲಿ ಈಗ ವಂತಿಗೆ ಎತ್ತುತ್ತಿದೆ!
ಮಾನಸಿಕ ಪಕ್ಷುಬ್ಧತೆಗೆ ಉಪನಿಷತ್ತು ದಿವ್ಯೌಷಧ. ಮಾನವನು ಸೃಷ್ಟಿಯ ನಾಟಕದ ನಟನೂ ಹೌದು; ಪ್ರೇಕ್ಷಕನೂ ಹೌದು ಎಂಬುದು ಉಪನಿಷತ್ತುಗಳ ದೃಷ್ಟಿ. ಮಾನವನ ಸರ್ವತೋಮುಖ ವಿಕಾಸದ ಜೊತೆಜೊತೆಗೆ, ಆಧ್ಯಾತ್ಮಿಕ ಬೆಳವಣಿಗೆಯ ವಿಷಯದಲ್ಲಿ ವೇದಾಂತಕ್ಕೆ ಇರುವ ಕಾಳಜಿ ಎಷ್ಟು ಎಂಬುದನ್ನು ಅರಿಯಲು ಶ್ರೀಮದ್ಭಾಗವತದ ಈ ಶ್ಲೋಕವನ್ನು ಮನನ ಮಾಡಬಹುದು. "ಮಾನವನ ಅಸದೃಶ ಬುದ್ಧಿಶಕ್ತಿಯ ಯುಕ್ತ ಬಳಕೆಯಾಗಲಿ " ಎಂದು ಶ್ರೀಕೃಷ್ಣನು ವಿಶಾಲಾರ್ಥದಲ್ಲಿ ಭಾಗವತದಲ್ಲಿ ಹೇಳಿದ ಈ ಮಾತು ಸ್ಮರಣೀಯವಾಗಿದೆ.
ಭಾಗವತದಲ್ಲಿ ಬರುವ ಕೃಷ್ಣನ ಈ ಮಾತು ಇಂದ್ರಿಯಗಳಲ್ಲೇ ತಲ್ಲೀನರಾಗಿರುವವರಿಗೆ ಒಗ್ಗುವುದಿಲ್ಲ; "ಕೃಷ್ಣ" ಹಿಡಿಸುವುದಿಲ್ಲ; ಅರ್ಥವಾಗುವುದೂ ಇಲ್ಲ. ಹುಲುಮಾನವರ ಇಂತಹ ಬಗೆಬಗೆಯ ಹುಚ್ಚನ್ನು ಉಪನಿಷತ್ತುಗಳು ಶಮನಗೊಳಿಸಬಲ್ಲವು. ಅತೀಂದ್ರಿಯ ಶಕ್ತಿಗಳ ಉನ್ನತ ಆಯಾಮವನ್ನು ತಲುಪಲು ಮಾನವನಿಗೆ ದಿಕ್ಸೂಚಿಯಂತಿರುವ ಉಪನಿಷತ್ತುಗಳಲ್ಲಿ ವೇದಾಂತರ್ಗತ ಸಾರವೆಲ್ಲವೂ ಅಡಗಿದೆ. ಆದ್ದರಿಂದ ಮಾನವನ ಬದುಕಿನ ಮೊದಲ ಹದಿನೈದು ವರ್ಷಗಳಲ್ಲಿಯೇ ಉಪನಿಷತ್ತಿನೊಳಗೆ ಪ್ರವೇಶಿಸಿಬಿಡಬೇಕು.
ಆಧ್ಯಾತ್ಮಿಕ ನೆಲೆಗಟ್ಟು, ಮಾರ್ಗದರ್ಶನವಿಲ್ಲದಿದ್ದರೆ ಮಾನವನ ಪ್ರತಿಯೊಂದು ಕ್ರಿಯಾಕರ್ಮವೂ ತುಮುಲ ತಲ್ಲಣಗಳನ್ನು ಹೆಚ್ಚಿಸುತ್ತವೆ. ಆಗ ಉಪ್ಪುನೀರನ್ನು ಕುಡಿದಂತೆ - ತಣಿಯದ ತೃಷೆ ; ಅತೃಪ್ತಿ . ಆದ್ದರಿಂದಲೇ ವ್ಯರ್ಥ ಹೋರಾಟದ ಜಂಜಾಟಗಳಲ್ಲಿ ಸಿಲುಕಿ ಬಿಡುತ್ತೇವೆ. ತಮ್ಮ ಭಕ್ತರನ್ನು ಸಾಂಸಾರಿಕ ದ್ವಂದ್ವಗಳು ಕಾಡಿ ಬಸವಳಿದಾಗ - "ಅಧ್ಯಾತ್ಮವು ಹರಿಯುವ ನೀರಾದರೆ ಈ ಸಂಸಾರವು ನಿಂತ ನೀರು" ಎನ್ನುತ್ತಿದ್ದ ಶ್ರೀ ರಾಮಕೃಷ್ಣರು "ಸಂಸಾರದಲ್ಲಿ ಇರಬಹುದು; ಆದರೆ ಆ ಸಂಸಾರವು ನಿಮ್ಮ ಒಳಗೆ ಪ್ರವೇಶಿಸದಂತೆ ನೋಡಿಕೊಳ್ಳಿ" ಅನ್ನುತ್ತಿದ್ದರು. ನಿಂತ ನೀರು ಎಂದರೆ ಆಧ್ಯಾತ್ಮಿಕ ಮೃತ್ಯು. ದೋಣಿ ನೀರಿನಲ್ಲಿರಬೇಕು; ಆದರೆ ದೋಣಿಯಲ್ಲಿ ನೀರಿರಬಾರದು. ಇಂತಹ ಮನೋಸ್ಥಿತಿಯನ್ನು ಮೂಡಿಸಿಕೊಳ್ಳಲು ಅಸಾಧಾರಣ ಪೂರ್ವ ಸಿದ್ಧತೆಯು ಅವಶ್ಯವಾಗುತ್ತದೆ. ಉಪನಿಷತ್ತುಗಳು ಅಂತಹ ರಂಗವನ್ನು ರೂಪಿಸಿಕೊಳ್ಳಲು, ಸಾಮಾನ್ಯರೊಳಗಿನ ಅಸಾಮಾನ್ಯವನ್ನು ಸಮೀಪಿಸಲು ಸಹಕರಿಸುತ್ತವೆ. ತನ್ನ ಅಹಂನ್ನು ದಾಟಿ ಲೋಕಪ್ರಜ್ಞೆಯನ್ನು ಸಾಧಿಸುವುದಕ್ಕೆ ಸಂಸಾರವೆಂಬ ಕುರುಕ್ಷೇತ್ರ ಯುದ್ಧವನ್ನು ಮೊದಲು ಜಯಿಸಬೇಕಾಗುತ್ತದೆ ಎನ್ನುವ ವೇದಾಂತದ ಭಾವವನ್ನು ಇದೇ ಜನ್ಮದಲ್ಲಿಯೇ ಅರಿತರೆ - ಅದು ನಿಜವಾದ ಜೀವನ ವಾಗುತ್ತದೆ. ( "ಇಹ ಚೇದವೇದೀತ್ ಅಥ ಸತ್ಯಮಸ್ತಿ " - ಕೇನೋಪನಿಷತ್ತು)
"ಮಾನವನು ಅಸದೃಶ" ಎನ್ನುವ ವೇದಾಂತ ದೃಷ್ಟಿಯನ್ನು ವಿವರಿಸುತ್ತ, ಅಧ್ಯಾತ್ಮ ವಿಜ್ಞಾನದ ಪ್ರಯೋಜನವನ್ನು ಮನುಷ್ಯರು ಪಡೆಯಲೇಬೇಕು ಎಂಬುದನ್ನು ಸ್ವಾಮಿ ವಿವೇಕಾನಂದರು ಒತ್ತಿ ಹೇಳಿದ್ದಾರೆ. " ಈ ಅಧ್ಯಾತ್ಮ ವಿಜ್ಞಾನದ ಪ್ರಯೋಜನವೆಂದರೆ ಅದು ಪೂರ್ಣ ಮಾನವನನ್ನು ರೂಪಿಸುತ್ತದೆ. ಅದು ಯುಗಯುಗಗಳವರೆಗೂ ಕಾಯಲು ಬಿಡುವುದಿಲ್ಲ. ಈ ಬದುಕಿನಲ್ಲಿ ನಮ್ಮ ಕೆಲಸವನ್ನು ನಾವೇ ನಿರ್ವಹಿಸಬೇಕು. ಅದಕ್ಕೆ ನಮಲ್ಲಿ ಶಕ್ತಿ ಬೇಕು. ಮನುಷ್ಯರು ಈ ಪುಟ್ಟ ಜೀವನದ ಆಚೆಗೆ ನಡೆಯಬೇಕು - ಎಂಬುದು ಈ ಅಧ್ಯಾತ್ಮ ವಿಜ್ಞಾನದ ಅಪೇಕ್ಷೆ. ಮಾನವನ ಆಧ್ಯಾತ್ಮಿಕ ಬೆಳವಣಿಗೆಯ ಅಧ್ಯಯನವು - ಮಾನವ ಶಾಸ್ತ್ರ ಮತ್ತು ಪ್ರಾಣಿಶಾಸ್ತ್ರಗಳ ಅಧ್ಯಯನವನ್ನು ಇನ್ನೂ ಆಳಗೊಳಿಸುತ್ತದೆ. ಆದ್ದರಿಂದ ಇದು ಅಗತ್ಯ " ಎಂದು ವಿವೇಕಾನಂದರು ಸಾರಿದ್ದರು.
ಇಂದಿನ ವೈಶ್ವಿಕ ಪರಿಸರದಲ್ಲಿ ಎಲ್ಲೆಲ್ಲೂ ಆತಂಕ, ಭಯ, ಉದ್ವೇಗಗಳು ತಾಂಡವವಾಡುತ್ತಿವೆ. ಒಂದು ವಿಧವಾದ ಮಾನಸಿಕ ತುಮುಲದಿಂದ ಇನ್ನೊಂದಕ್ಕೆ, ಒಂದು ದುಃಖದಿಂದ ಮತ್ತೊಂದಕ್ಕೆ ಕುಪ್ಪಳಿಸುತ್ತಿರುವ ಸನ್ನಿವೇಶವು ಈಗ ನಮ್ಮ ಜೊತೆಗಿದೆ. ಇನ್ನೇನು? ಮುಂದೇನು? ಎನ್ನುವ ಲೌಕಿಕ ಕಳವಳದ ಮನೋಸ್ಥಿತಿಯಲ್ಲಿ ಬಹುತೇಕ ಜನರು ಬಳಲುತ್ತಿದ್ದಾರೆ. ಸಂಯಮ, ಸಮಭಾವದ ನೈತಿಕ - ಆಧ್ಯಾತ್ಮಿಕ ಎಚ್ಚರವೊಂದೇ ಇದಕ್ಕೆ ಪರಿಹಾರ. ಯಾವುದೇ ಸ್ವಸ್ಥ ಸಮಾಜವು ಭೌತಿಕ - ಸಾಮಾಜಿಕ ವಿಕಾಸ ಎಂಬುದರಿಂದಲೇ ಎಂದಿಗೂ ನಿರ್ಮಾಣವಾಗಲಾರದು. ಉಪನಿಷತ್ತುಗಳು ಅಲ್ಲಲ್ಲಿ "ಯೋಗಕ್ಷೇಮ " ದ ಪ್ರಸ್ತಾಪವನ್ನೂ ಮಾಡುತ್ತವೆ. ಲೌಕಿಕ ಪ್ರವೃತ್ತಿಗಳ ಸಮಸ್ತ ವ್ಯಾಪ್ತಿಯಲ್ಲಿ ನೋಡಿದರೆ - ಯೋಗ ಅಂದರೆ ಪಡೆದುಕೊಳ್ಳುವುದು ; ಕ್ಷೇಮ ಅಂದರೆ ಅದನ್ನು ಕಾಪಾಡಿಕೊಳ್ಳುವುದು. ಅರ್ಥಾತ್ - ಲೋಭ ಮತ್ತು ಮೋಹ. ನೈತಿಕ ಪ್ರೇರಣೆಯ ಚೌಕಟ್ಟನ್ನು ಮೀರಿದ ಲೌಕಿಕ ಮನೋಭಾವದಲ್ಲಿ - ಯೋಗಕ್ಷೇಮ ಎನ್ನುವುದು ಆಕ್ರಮಣಶಾಲಿಯಾಗುತ್ತದೆ; ಆಗ - ಪ್ರಭುತ್ವ ನಡೆಸುವ ಪ್ರೇರಣೆ ದೊರೆತು ನಿಜವಾದ ಶ್ರೇಯಸ್ಸು ನಮ್ಮಿಂದ ದೂರವಾಗುತ್ತದೆ. ತೋರಿಕೆಯ ಸಂಬಂಧಗಳನ್ನು ಬೆಳೆಸಿಕೊಳ್ಳುವುದರಿಂದಲೂ ಕೃತಕ ಶಿಷ್ಟಾಚಾರದಿಂದಲೂ ಯಾರಿಗೂ ನೆಮ್ಮದಿಯ ಬದುಕು ಸಿಗಲಾರದು. ಅದು ಉಪನಿಷದ್ದೃಷ್ಟಿ ಅಲ್ಲ. ಸ್ವಾರ್ಥವನ್ನು ಮೀರಿ ವಿವೇಕದ ಸ್ಥಿತಿಗೆ ಏರುವವರೆಗೂ - ತಾಂತ್ರಿಕ ದಕ್ಷತೆಯ ಜೊತೆಗೆ ನಿಯಂತ್ರಿತ ಸ್ವಪ್ರಜ್ಞೆಯಿಂದ ಮಾನವೀಕರಣಗೊಂಡ ಪವಿತ್ರಾತ್ಮರಾಗುವವರೆಗೂ ಮನುಷ್ಯರ ಶಿಕ್ಷಣವು ಪ್ರೌಢ, ಪ್ರಬುದ್ಧ, ಹೂರಣಯುಕ್ತವಾಗುತ್ತಲೇ ಸಾಗುವ ನಿಲ್ಲದ ಯಾತ್ರೆಯಾಗಬೇಕು. ಆಗ ಮಾತ್ರ ನಿಜವಾದ ವಿಕಾಸವಾದೀತು ಎಂಬುದು ಉಪನಿಷತ್ತಿನ ಸಂದೇಶ. ಭಾವನೆಗಳನ್ನು ಹೀಗೆ ಶಿಸ್ತಿಗೆ ಒಳಪಡಿಸಿ ಸ್ವಭಾವವನ್ನು ಶಿಷ್ಟಗೊಳಿಸುವ ಶಿಕ್ಷಣವು ಇಂದಿನ ಅತೀ ಅಗತ್ಯ. "ನ ವಿತ್ತೇನ ತರ್ಪಣೀಯೋ ಮನುಷ್ಯೋ..." ಮನುಷ್ಯನು ಐಶ್ವರ್ಯದಿಂದ ಎಂದೂ ತೃಪ್ತಿ ಹೊಂದುವುದಿಲ್ಲ ಎಂಬ ಅರಿವು ಬಾಲ್ಯದಲ್ಲಿಯೇ ಮೂಡಬೇಕಾಗಿದೆ.
ಬರ್ಟ್ರಂಡ್ ರಸ್ಸೆಲ್ ಅವರು ಹೇಳಿದಂತೆ - "ದಾರಿ ಗಳ ವಿಷಯದಲ್ಲಿ ಮಾನವರ ಕೌಶಲ - ಮತ್ತು - ಗುರಿ ಗಳ ವಿಷಯದಲ್ಲಿ ಮಾನವರ ದೋಷ - ಎನ್ನುವ ಇವೆರಡರ ನಡುವೆ ನಡೆಯುತ್ತಿರುವ ಒಂದು ಪಂದ್ಯದಲ್ಲಿ ನಾವೀಗ ಸಿಕ್ಕಿಕೊಂಡಿದ್ದೇವೆ. ದೋಷಪೂರ್ಣ ಗುರಿಗಳನ್ನು ಸಾಧಿಸಲು ಬೇಕಾಗುವ ಕೌಶಲವೂ ದೋಷಪೂರ್ಣವೇ ಆಗಿರುತ್ತದೆ. ಅಜ್ಞಾನ ಮತ್ತು ಅದಕ್ಷತೆಗಳಿಂದ ಮಾತ್ರವೇ ಮಾನವ ವಂಶವು ಇದುವರೆಗೂ ಕುಂಟುತ್ತ ಉಳಿದುಬಂದಿದೆ. ಆದರೆ, ಒಂದೊಮ್ಮೆ ಜ್ಞಾನ ದಕ್ಷತೆ ಮತ್ತು ದೋಷಗಳು ಒಂದಾದರೆ ಮಾನವ ವಂಶವು ಉಳಿಯುತ್ತದೆ ಎಂದು ಖಚಿತವಾಗಿ ಹೇಳುವಂತಿಲ್ಲ. (ಅದು ಮಹಾ ಗಂಡಾಂತರಕಾರಿ) ಜ್ಞಾನವೇ ಶಕ್ತಿ. ಆದರೆ ಒಳಿತಿಗೆ ಹೇಗೋ ಹಾಗೇ ಕೆಟ್ಟದ್ದಕ್ಕೂ ಅದು ಶಕ್ತಿಯೇ. ಹೀಗಾಗಿ ಮಾನವರು ಜ್ಞಾನವನ್ನು ಹೇಗೋ ಹಾಗೇ ವಿವೇಕವನ್ನು ಬೆಳೆಸಿಕೊಳ್ಳದಿದ್ದರೆ - ಜ್ಞಾನದ ವೃದ್ಧಿ ಎಂದರೆ ದುಃಖದ ಹೆಚ್ಚಳ ಎಂದೂ ಸಿದ್ಧವಾಗುತ್ತದೆ." ಎಂದು ರಸ್ಸೆಲ್ ಮಹಾಶಯರು ಅಂದೇ ಹೇಳಿದ್ದರು.... ಇಂದಿನ ವಿಶ್ವವಿದ್ಯಾಲಯಗಳು ಹೇಗಿವೆ? ನಾವು ಇದೇ ದುಃಖದ ದಾರಿಯಲ್ಲಿದ್ದೇವೆಯೆ? ಎಂಬುದನ್ನು ಇಂದಿನ ತರ್ಕದ ಕರಕರೆಗಳು ಯೋಚಿಸಬೇಕಾಗಿದೆ.
ಸುಂದರ ಪದಭಂಡಾರದ ವೈಜ್ಞಾನಿಕವಾದ ಸಂಸ್ಕೃತ ಭಾಷೆಯಲ್ಲಿ "ಪಶು" ಎಂಬ ಒಂದು ಶಬ್ದವಿದೆ. ಪಾಶ ಎಂಬ ಮೂಲದಿಂದ ಈ "ಪಶು" ಹೊರಟಿದೆ. ಪಾಶ ಅಂದರೆ ಬಂಧನ. ಸ್ವ ಇಚ್ಛೆಯಿಂದ ಬಂಧನಕ್ಕೆ ಒಳಗಾಗುವ ವರ್ಗವೇ ಪಶು ವರ್ಗ. ಸಾಮಾನ್ಯ ಬಳಕೆಯಲ್ಲಿ "ಮನುಷ್ಯರಲ್ಲದ ಪ್ರಾಣಿ"ಗಳನ್ನು ಮಾತ್ರ ನಾವು - "ಪಶುಗಳು" ಎನ್ನುತ್ತಿದ್ದೇವೆ. ಆದರೆ "ಪಶು ಎಂಬುದರ ಅರ್ಥ - ಯಾರು ಬಂಧಿತರೋ ಯಾರು ಸಿಕ್ಕಿ ಹಾಕಿಕೊಂಡಿದ್ದಾರೋ ಯಾರು ಪ್ರಕೃತಿಯ ಮೂಲ ಸ್ವಭಾವದ ಗುಲಾಮರಾಗಿಯೇ ಇನ್ನೂ ಉಳಿದಿರುವರೋ ಯಾರು ಮುಕ್ತರಾಗಿಲ್ಲವೋ - ಅವರೆಲ್ಲರೂ ಪಶುಗಳೇ. ಸ್ವಾಭಾವಿಕ ಮೂಲ ಸ್ವಭಾವದಿಂದ ಉನ್ನತ ಸ್ಥಿತಿಗೆ ಏರುವ ಸಾಧನೆಯಲ್ಲಿ ತೊಡಗಿದರೆ ಮಾತ್ರ ಪಶುತ್ವದ ಸಂಕೋಲೆಯಿಂದ ಕಳಚಿಕೊಳ್ಳಲು ಸಾಧ್ಯ. ಪಶುತ್ವ ಎಂದರೆ ಜಡತ್ವ. ಈ ಜಡತ್ವದಿಂದ ಪಾರಾಗಲು - ಬಾಹ್ಯ ಅವಲಂಬನೆಯನ್ನು ಬಿಟ್ಟು ನಮ್ಮ ಚಿಂತನೆಯ ಶೈಲಿಯನ್ನೇ ಬದಲಿಸಿಕೊಳ್ಳಬೇಕು. ಶೀರ್ಷಾಸನದ ಸ್ಥಿತಿಯಲ್ಲಿದ್ದರೆ ನಮಗೆ ಎಲ್ಲವೂ ತಲೆ ಕೆಳಗಾಗಿಯೇ ಕಾಣುತ್ತದೆ. ನೆಟ್ಟಗೆ ನಿಂತು ನೋಡುವುದೇ ಇದಕ್ಕೆ ಮದ್ದು. ಆಗ ನಮ್ಮ ದೃಷ್ಟಿಯು ನೇರ, ಸ್ಥಿರವಾಗಿದ್ದು - ನಮ್ಮ ಕ್ರಿಯೆ ಮತ್ತು ಪ್ರತಿಕ್ರಿಯೆಗಳೆರಡೂ ಸ್ಥಿಮಿತದಲ್ಲಿರುತ್ತವೆ. ಅದಕ್ಕಾಗಿ ಬದುಕಿನ ಭಂಗಿಯನ್ನು ಬದಲಿಸಿಕೊಳ್ಳಬೇಕಾಗುತ್ತದೆ.
ಉನ್ನತ ವಿಚಾರಗಳನ್ನು ಮಾತ್ರ ಮನನ ಮಾಡುತ್ತಿರುವುದರಿಂದ ಯಾವುದೇ ಬದುಕು ಸ್ವಚ್ಛವಾಗುತ್ತದೆ; ಹಗುರವೆನಿಸುತ್ತದೆ. ಅಂತಹ ಮನಸ್ಸುಗಳು ಕ್ರಮೇಣ ವೈಚಾರಿಕವಾಗಿ ಉನ್ನತ ಸ್ತರಕ್ಕೆ ಏರಿದಂತೆ - ಹೆಚ್ಚು ಹೆಚ್ಚು ಸಹಿಷ್ಣುವಾಗುತ್ತದೆ. ನಮ್ಮ ಕ್ರಿಯೆ ಮತ್ತು ಪ್ರತಿಕ್ರಿಯೆಗಳೆರಡೂ ಆಗ ಸಮತೋಲನದಲ್ಲಿರುತ್ತದೆ.
ಭಗವಾನ್ ಬುದ್ಧನ ಮುಖಕ್ಕೆ ಯಾರೋ ಒಬ್ಬ ಉಗುಳಿದನಂತೆ. ಆಗ ಬುದ್ಧನು ಸುಮ್ಮನೆ ಅದನ್ನು ಒರೆಸಿಕೊಂಡು "ಏನಪ್ಪ...ಇನ್ನೇನಾದರೂ ಹೇಳುವುದು ಇದೆಯೆ?" ಎಂದು ಆ ಉಗುಳಿದಾತನನ್ನು ಕೇಳಿದ. ಆಗ ಶಿಷ್ಯನಾದ ಆನಂದನು ಕುಪಿತಗೊಂಡು "ಸ್ವಾಮೀ, ಆತನನ್ನು ಏನು ಕೇಳುತ್ತಿದ್ದೀರಿ? ಆತ ನಿಮ್ಮ ಮುಖಕ್ಕೆ ಉಗುಳಿದ್ದಾನೆ. ನೀವು ನನಗೆ ಅವಕಾಶ ಕೊಡಿ. ಆತನನ್ನು ವಿಚಾರಿಸಿಕೊಳ್ಳುತ್ತೇನೆ.." ಎನ್ನುತ್ತಾನೆ.
ಆಗ ಬುದ್ಧನು "ನಾನು ಆತನನ್ನು ಕ್ಷಮಿಸಿದ್ದೇನೆ. ಏಕೆಂದರೆ ಅವನು ಅಜಾಗ್ರತ ಸ್ಥಿತಿಯಲ್ಲಿದ್ದಾನೆ. ಅವನಿಗೆ ಏನನ್ನೋ ಹೇಳಬೇಕು ಅನ್ನಿಸಿದೆ. ಆದರೆ ಶಬ್ದಗಳ ಮೂಲಕ ಹೇಳಲು ಬರುತ್ತಿಲ್ಲ. ಅದಕ್ಕಾಗಿ ಉಗುಳಿನ ಮೂಲಕ ಹೇಳುತ್ತಿದ್ದಾನೆ. ಅದಕ್ಕಾಗಿ ನಾನು ಆತನಲ್ಲಿ ಇನ್ನೇನಾದರೂ ಹೇಳುವುದಕ್ಕಿದೆಯಾ? ಎಂದು ಕೇಳಿದ್ದು.." ಎನ್ನುತ್ತ ಆ ಉಗುಳಿದ ವ್ಯಕ್ತಿಯತ್ತ ತಿರುಗಿ "ಏನಪ್ಪ, ಇನ್ನೂ ಏನಾದರೂ ಹೇಳಲಿಕ್ಕಿದ್ದರೆ ಹೇಳು..." ಅಂದ.
ಬುದ್ಧನ ಮಾತುಗಳನ್ನು ಕೇಳಿದ ಆ ಉಗುಳುಕೋರನಿಗೆ ಆಗ ಏನು ಮಾಡಬೇಕೆಂದು ತಿಳಿಯಲಿಲ್ಲ. ಆತ ಏನೊಂದೂ ಹೇಳದೆ ಅಲ್ಲಿಂದ ಹೊರಟುಹೋದ. ಆದರೆ ಮರುದಿನ ಮತ್ತೆ ಬಂದ. ರೋದಿಸುತ್ತ ಬುದ್ಧನಿಗೆ ನಮಸ್ಕರಿಸಿ "ಕ್ಷಮಿಸಿ. ನಿನ್ನೆ ನಾನು ಉಗುಳಿದೆ. ದೊಡ್ಡ ತಪ್ಪು ಮಾಡಿದೆ. ಅನಂತರ ತುಂಬ ವೇದನೆಯಾಯಿತು. ರಾತ್ರಿಯಿಡೀ ನಿದ್ದೆ ಬರಲಿಲ್ಲ..." ಎನ್ನುತ್ತ ಬುದ್ಧನ ಪಾದಗಳಿಗೆ ಎರಗಿದ.
"ಅಯ್ಯೋ ಪೆದ್ದಾ, ನೀನು ಉಗುಳಿರಬಹುದು. ಆದರೆ ಅದನ್ನು ನಾನು ಸ್ವೀಕರಿಸಲೇ ಇಲ್ಲ. ಅನಗತ್ಯವಾಗಿ ದುಃಖಿಸಬೇಡ. ನೀನು ನನ್ನ ಮುಖಕ್ಕೆ ಉಗುಳಿದೆ. ಅದರಿಂದ ನನಗೇನೂ ನೋವಾಗಲಿಲ್ಲ. ಆದ್ದರಿಂದ ನೀನು ಪಶ್ಚಾತ್ತಾಪ ಪಡುವ ಅಗತ್ಯವೇ ಇಲ್ಲ." ಎನ್ನುತ್ತ ಬುದ್ಧನು ಉಗುಳಿದವನನ್ನು ಸಾಂತ್ವನಗೊಳಿಸಿದ.
ಅನಂತರ ಬುದ್ಧನು ತನ್ನ ಶಿಷ್ಯನಾದ ಆನಂದನಿಗೆ ಹೇಳಿದ..." ಆನಂದ, ಈಗಲೂ ಆತನಿಗೆ ಏನೋ ಹೇಳಬೇಕೆಂದಿದೆ. ಆದರೆ ಆತನಿಗೆ ಅದನ್ನು ಪದಗಳ ಮೂಲಕ ನನ್ನೆದುರು ವ್ಯಕ್ತಪಡಿಸಲು ಆಗುತ್ತಿಲ್ಲ. ಯಾಕೆಂದರೆ ಅದು ಅವನ ಮಾತಿನ ಅಳವಿಗೆ ಸಿಗುತ್ತಿಲ್ಲ. ಆದ್ದರಿಂದಲೇ ನನ್ನ ಪಾದಗಳನ್ನು ತನ್ನ ಕಂಬನಿಯಿಂದ ತೊಳೆದಿದ್ದಾನೆ.."
ಇದು ಜ್ಞಾನದ ಪರಿಣಾಮ. ಉಗುಳುವುದೂ ಒಂದು ಭಾಷೆಯೇ. ಆಲಿಂಗಿಸುವುದೂ ಒಂದು ಭಾಷೆಯೇ. ನಮ್ಮ ಆಂಗಿಕ ವರ್ತನೆಗಳೆಲ್ಲವೂ ಭಾಷೆಗಳೇ. ನಮ್ಮ ಹೃದಯದಾಳದಲ್ಲಿ ಏನೋ ಒಂದು ಇದೆ; ಆಳದಲ್ಲೆಲ್ಲೋ ಅದು ಅವ್ಯಕ್ತವಾಗಿದೆ - ಪ್ರಕಟವಾಗಲು ಚಡಪಡಿಸುತ್ತಿದೆ ಎಂದಾದಾಗ ಅದು ಸಾಮಾನ್ಯ ಬುದ್ಧಿಸ್ತರದಲ್ಲಿ ಒಂದು ರೀತಿಯಲ್ಲಿ ವ್ಯಕ್ತವಾದರೆ ಜ್ಞಾನಿಯ ಉನ್ನತ ಸ್ತರದಲ್ಲಿ ಇನ್ನೊಂದು ರೀತಿಯಲ್ಲಿ ವ್ಯಕ್ತವಾಗುತ್ತದೆ.
ಹೀಗೆ ಚಿಂತನೆಗೆ ಪ್ರಚೋದಿಸುತ್ತ ವಿವೇಕದ ನೆಲೆಯನ್ನು ವಿಸ್ತರಿಸಿಕೊಳ್ಳಬಹುದಾದ ಇಂತಹ ಪಾಠಗಳು ಉಪನಿಷತ್ತಿನ ವ್ಯಾಖ್ಯಾನಗಳಲ್ಲಿ ದಂಡಿಯಾಗಿವೆ. ಮಾನವ ಜನ್ಮವನ್ನು ಸಾರ್ಥಕ ಪಡಿಸಿಕೊಳ್ಳುವ ಭದ್ರ ಮಾರ್ಗವನ್ನು ತೋರಿಸುವ ಉಪನಿಷತ್ತುಗಳು ಶ್ರೇಷ್ಠ ಮಾನವ ಸಂತಾನವನ್ನು ಉಳಿಸಿ ಬೆಳೆಸುವ ಮಹದುದ್ದೇಶವನ್ನೂ ಹೊಂದಿವೆ. "ಮಾನವ ಜನ್ಮ ದೊಡ್ಡದು; ಅದನ್ನು ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ.." ಎಂದು ಪುರಂದರದಾಸರು ನಯವಾಗಿ ಗದರಿಸಿದ್ದು ಅದಕ್ಕೇ. ಇದೂ ಉಪನಿಷದ್ಭಾವವೇ. ಭಾರತೀಯ ಸಂಸ್ಕೃತಿಕೇಂದ್ರದ ಆಳದಲ್ಲಿರುವ - ಶಕ್ತಿಯ ಕಾರಂಜಿಯೇ ಉಪನಿಷತ್ತು.
ಯಾವುದೇ ಅಂತಿಮ ರಹಸ್ಯ ಅರಿಯಲು ವಿನಯ ಬೇಕು. ಉಪನಿಷತ್ತುಗಳು ಅಂತಹ ವಿನಯ ಕಲಿಸುತ್ತವೆ. ಸ್ವಸ್ಥ ಗಂಭೀರ ಬದುಕಿಗೆ ದಾರಿ ತೋರಿಸುತ್ತವೆ. ನಿಜರಹಸ್ಯದತ್ತ ಸ್ನೇಹದಿಂದ ನಮ್ಮನ್ನು ಸೆಳೆಯುತ್ತವೆ. ಇದುವರೆಗೆ ಭೌತಿಕ ಜಗತ್ತಿನ ರಹಸ್ಯ ಶೋಧನೆಗೆ ಹೊರಟವರೆಲ್ಲರೂ ತಮ್ಮ ಕೈಗೆಟುಕದ, ತಮ್ಮಿಂದ ಆಚೆಗಿರುವ ಇನ್ನೇನೋ ರಹಸ್ಯದತ್ತ ಬೆರಳು ತೋರಿಸುತ್ತಲೇ ನಡೆದಿದ್ದಾರೆ. ಆಧುನಿಕ ವಿಜ್ಞಾನವೂ "ಇಷ್ಟೇ ಅಲ್ಲ; ಇನ್ನೂ ಏನೋ ಇದೆ" ಎನ್ನುತ್ತಲೇ ಬಂದಿದೆ. ಹೀಗಿರುವಾಗ ಹೊರ ಕಣ್ಣಿನಿಂದ - ಭೌತಿಕವಾಗಿ ಕಂಡದ್ದನ್ನು ಮಾತ್ರ ಒಪ್ಪುತ್ತೇನೆ ಅನ್ನುವವರೆಲ್ಲರೂ ತರ್ಕದಲ್ಲಿ ತೊಡಗುವ ಮೊದಲು ಉಪನಿಷತ್ತನ್ನು ಹಿಂಬಾಲಿಸುವುದು ಒಳಿತು. ಮನುಷ್ಯನ ಆಕಾರದಲ್ಲಿ ಇರುವಾಗಲೇ ಆಧ್ಯಾತ್ಮ ಸತ್ಯವನ್ನು ತಿಳಿದರೆ ಒಳ್ಳೆಯದು; ಮನುಷ್ಯನ ಶರೀರವು ಪಂಚಭೂತಗಳಲ್ಲಿ ಬೆರೆಯುವುದಕ್ಕೆ ಮೊದಲು ಆ ಸತ್ಯದ ಅರಿವಾದರೆ ಬಹಳ ಒಳ್ಳೆಯದು. ಮನುಷ್ಯನು ಗುರಿಯಿಲ್ಲದ ತನ್ನ ಬಾಹ್ಯ ಓಟವನ್ನು ಬಿಟ್ಟು ತನ್ನೊಳಗೆ ತಾನು ಯಾತ್ರಿಸಲು ಆರಂಭಿಸಿದರೆ, ತನ್ನ ತಪ್ಪಿದ ದಿಕ್ಕನ್ನು ಬದಲಿಸಿಕೊಳ್ಳತೊಡಗಿದರೆ, ಬಾಹ್ಯ ಪ್ರಾಪಂಚಿಕತೆಯಿಂದ ಆಂತರಿಕ ವಾಸ್ತವದೆಡೆಗೆ ದೃಷ್ಟಿ ನೆಟ್ಟರೆ ಮನುಷ್ಯನಾದ ಸದವಕಾಶದ ಸದುಪಯೋಗವಾದಂತೆ; ಸೃಷ್ಟಿಯನ್ನೂ ಗೌರವಿಸಿದಂತೆ - ಎನ್ನುತ್ತದೆ ಉಪನಿಷತ್ತು.
ಪ್ರತಿಯೊಬ್ಬ ವ್ಯಕ್ತಿ-ಜೀವಿಗಳೂ ಪರಿಪೂರ್ಣವಾದಾಗ ಮಾತ್ರ ಇಡೀ ಸಮಷ್ಟಿಯ ಸುಂದರ ಚಿತ್ರವು ಮೂಡುವುದು ಸಾಧ್ಯ. ಅದು - ಮನುಷ್ಯಪ್ರಯತ್ನಕ್ಕೆ ಎಟುಕದ ಆದರ್ಶ. ಲೌಕಿಕ ಸಮಾಜದ ಸಾಮಾನ್ಯ ಅಭಿರುಚಿಯು ಸದಾಕಾಲವೂ ತಪ್ಪೇ ಆಗಿರುತ್ತದೆ. ಉಪನಿಷತ್ ಮಾರ್ಗದಲ್ಲಿ ನಡೆಯುತ್ತ - ಅಂತಹ ತಪ್ಪುಗಳನ್ನು ಮಿತಿಗೊಳಿಸಿಕೊಂಡರೂ ಸಹನೀಯ ಬದುಕು-ಸಮಾಜವನ್ನು ಕಟ್ಟಿಕೊಳ್ಳಬಹುದು. ಆದ್ದರಿಂದ ಯಾವುದೇ ಪ್ರಯತ್ನವಿಲ್ಲದೆ ಹಂತಹಂತವಾಗಿ ಸಮಾಜವು ತಾನಾಗಿಯೇ ಸುಧಾರಣೆ ಕಾಣುತ್ತದೆ ಎಂಬ ಕನಸನ್ನು ಕಾಣಲಾಗುವುದಿಲ್ಲ. ಭಗವಂತನೇ ಅವತಾರ ಎತ್ತಿ ಬಂದರೂ - ಸಮಷ್ಟಿಯಲ್ಲಿ ಏಕಕಾಲದಲ್ಲಿ ಅಮೃತಭಾವವನ್ನು ತುಂಬುವುದು ಅಸಾಧ್ಯ. ಶ್ರೀ ರಾಮ - ಕೃಷ್ಣರ ಅವತಾರದ ನಂತರವೂ ರಾಕ್ಷಸ ಸಂತಾನದ ಸಮೂಲ ನಾಶವಾಗಲಿಲ್ಲ! ಏಕೆಂದರೆ ಕೆಡುಕುಗಳಿಗೆ ನಿರೋಧಕ ಶಕ್ತಿ ಮತ್ತು ಆಯುಷ್ಯ - ಜಾಸ್ತಿ; ಒಳಿತುಗಳು ಸೂಕ್ಷ್ಮ ಮತ್ತು ನುಗ್ಗಿ ಆಕ್ರಮಿಸಿಕೊಳ್ಳದವುಗಳು. ಆದ್ದರಿಂದಲೇ ಒಳಿತಿನ ಭಾವಗಳನ್ನು ಪ್ರಯತ್ನಪೂರ್ವಕವಾಗಿ ಪೋಷಿಸಬೇಕಾಗುತ್ತದೆ.
"ಉದ್ಧರೇದಾತ್ಮದಾತ್ಮಾನಾಂ " - ಅವರವರನ್ನು ಅವರವರೇ ಉದ್ಧರಿಸಿಕೊಳ್ಳಬೇಕೆಂದು ವೇದಾಂತದ ಹಲವು ಸಂದರ್ಭಗಳಲ್ಲಿ ಸೂಚನೆ ಸಿಗುತ್ತದೆ. ಅಂತಃಶುದ್ಧಿಯು ಈ ನಿಟ್ಟಿನಲ್ಲಿ ಮೊದಲ ಹೆಜ್ಜೆ. ಅಂತಃಕರಣವು ನಮ್ಮ ಆಂತರಿಕ ಇಂದ್ರಿಯ. ಉಳಿದ ಎಲ್ಲ ಇಂದ್ರಿಯಗಳು ನಮ್ಮನ್ನು ಹೊರಗೆ ಕರೆದೊಯ್ದರೆ ಅಂತಃಕರಣವು ನಮ್ಮನ್ನು ಒಳಗೆ ಕರೆದೊಯ್ಯುತ್ತದೆ. ಆದರೆ ಈ ಅತೀಂದ್ರಿಯವನ್ನು ನಾವು ಮನುಷ್ಯರು ಉಪಯೋಗಿಸುವುದೇ ಇಲ್ಲ. ಎಂದೂ ಉಪಯೋಗಿಸದೇ ಇರುವ ದೇಹಭಾಗವು ಸಹಜವಾಗಿ ಶಿಥಿಲಗೊಳ್ಳುತ್ತದೆ. ಬರಬರುತ್ತ ನಿರ್ಜೀವವಾಗುತ್ತದೆ. ಅನೇಕ ಜನ್ಮಗಳಿಂದಲೂ ಉಪಯೋಗಿಸದೆ ಜಡ್ಡಾಗಿರುವ ನಮ್ಮ ಅಂತಃಕರಣಕ್ಕೆ ಈಗ ಜುಮ್ಮು ಹಿಡಿದಿದೆ. ಈಗ ಅದನ್ನು ತಿಕ್ಕಿ ಒತ್ತಿ ಮತ್ತೊಮ್ಮೆ ಜೀವಸಂಚಾರಕ್ಕೆ ಸಿದ್ಧಗೊಳಿಸಬೇಕಾಗುತ್ತದೆ. ಅದಕ್ಕೆ ಅಪಾರವಾದ ಸಹನೆ ಬೇಕು.
ಜೊತೆಗೆ - ಊರು ಉದ್ಧಾರ ಮಾಡುವ ಪ್ರಚಾರಪ್ರಿಯ ಬಾಹ್ಯ ತಂಟೆಗಳಿಗೆ ಕಡಿವಾಣ ಹಾಕಲೇಬೇಕಾಗಿದೆ. ಅತಿಯಾದರೆ ಪರೋಪಕಾರವೂ ವ್ಯಸನವೇ . ಸಪಾತ್ರ ಸಜ್ಜನರಿಗಲ್ಲದೆ - ಸಾರಾಸಗಟಾಗಿ ಕೈಗೊಳ್ಳುವ ಉಪಕಾರ ಶಿಬಿರಗಳಿಂದ ಸಾಮಾಜಿಕ ಏರುಪೇರುಗಳಾಗಿ ಒಟ್ಟಾರೆ ಸಮಾಜದ ಸ್ವಾಸ್ಥ್ಯವೂ ಕೆಡಬಹುದು ಎಂಬುದು ಈಗಾಗಲೇ ಸಿದ್ಧವಾಗಿದೆ. ಇಂತಹ ವ್ಯಾಯಾಮಗಳಿಂದ ಸ್ವಂತಕ್ಕಾಗಲೀ ಇತರರಿಗಾಗಲೀ ಆಗುವ ಅನುಕೂಲಕ್ಕಿಂತ - ಪರೋಕ್ಷ ಅನಾನುಕೂಲವೇ ಹೆಚ್ಚು. ಉಪಕಾರವೂ ಒಂದು ಶಸ್ತ್ರ. ಅದರ ಪ್ರಯೋಗ ಮತ್ತು ಉಪಸಂಹಾರದ ಎರಡೂ ಬಗೆಯ ವಿದ್ಯೆಯನ್ನು ತಿಳಿದವರು ಮಾತ್ರ ಉಪಕಾರ ಮಾಡಲು ಅರ್ಹರಾಗುತ್ತಾರೆ. ಹಾಗೆ ನೋಡಿದರೆ... ಯಾರೂ ಯಾರನ್ನೂ ಸಾದ್ಯಂತವಾಗಿ ಉದ್ಧರಿಸಲು ಆಗುವುದಿಲ್ಲ ; ಸ್ವಯಂ ಸಹಕರಿಸಿಕೊಳ್ಳುವ ಕ್ರಿಯೆಯೇ - ಸರ್ವೋತ್ತಮವಾದುದು - ಎಂಬುದು ಉಪನಿಷತ್ತಿನ ಸಂದೇಶ. ಈ ಅರಿವು ನಮ್ಮಲ್ಲಿ ಮೂಡದಿದ್ದರೆ "ಕೆರೆಯುವುದು, ಬರೆಯುವುದು, ಉಜ್ಜುವುದು" ಇತ್ಯಾದಿ ವ್ಯರ್ಥ ಕೆಲಸದಲ್ಲಿಯೇ ಇಡೀ ಬದುಕು ಮುಗಿಯುತ್ತದೆ.
ಲೌಕಿಕವಾದದ ಕ್ರಮಬದ್ಧ ಸರಪಣಿಗೆ ಕಟ್ಟಿಕೊಂಡರೆ - ಅದು - ಒಂದು ಬದುಕಿನ ಶಕ್ತಿಯನ್ನೆಲ್ಲ ಸ್ಥಗಿತಗೊಳಿಸಿ ಅದರ ಸೌಂದರ್ಯವನ್ನೇ ಹಾಳುಮಾಡಬಹುದು. ಈ ಲೋಕವೊಂದು ಸಂತೆ. ಬೃಹತ್ ಲೋಕಶಕ್ತಿಯ ಜೀವಸಮುದ್ರದ ಮಥನಕ್ಕೆ ನಮ್ಮೊಳಗಿನ ಶಕ್ತಿ ಸಾಲದು. ಆದರೆ... ಯಾವುದೇ ವ್ಯಕ್ತಿಯು ತಾನು ತನ್ನಷ್ಟಕ್ಕೆ ಸರಿಯಾಗಿರಲು ಪ್ರಯತ್ನಿಸುವುದು ಸಾಧ್ಯವಿದೆ. ಆದರೆ ಇನ್ನೊಬ್ಬರಿಗೆ ಉಪಕರಿಸಿ ಇತರರನ್ನು ನೇರಗೊಳಿಸುವ ಕ್ರಿಯೆಗಳೆಲ್ಲವೂ ಅಪಾಯಕಾರಿ ಸಾಹಸಕ್ರೀಡೆಗಳು. ಅವತಾರವರಿಷ್ಠರಾದವರು ನಡೆಸುವಂತಹ ಸಾಹಸದ ಕ್ರಿಯೆಗಳನ್ನು ವೇಷಧಾರಿಗಳೆಲ್ಲರೂ ನಡೆಸಲು ಪ್ರಯತ್ನಿಸಿದರೆ - ಅವು ಹಾಸ್ಯಾಸ್ಪದವಾಗುವುದೂ ಇದೆ. ಅದು ನಾಯಿಯ ಬಾಲಕ್ಕೆ ನಳಿಗೆ ಹಾಕಿ ನೇರಗೊಳಿಸಲು ಯತ್ನಿಸಿದಂತೆ ವ್ಯರ್ಥವಾಗುವುದು ಸಾಮಾನ್ಯ. ಆದ್ದರಿಂದ ಮತ್ತೊಮ್ಮೆ ಮೂಲ ಗರ್ಭಗುಡಿಯನ್ನು ಪ್ರವೇಶಿಸಬೇಕು ಎಂದಾದರೆ ನಮ್ಮ ಅದಮ್ಯ ಏಕನಿಷ್ಠೆಯು ಮಾತ್ರ ಉಪಕರಿಸಬಲ್ಲದು. ಅನುಭವಜನ್ಯ ತಿಳಿವಿನೆಡೆಗೆ - ನಮ್ಮ ಶ್ರದ್ಧೆ- ನಿಷ್ಠೆಗಳೇ ನಮ್ಮನ್ನು ಕರೆದೊಯ್ಯಬಲ್ಲದು. ಇದು ಅಭಯಪ್ರದ ಪಥ - ಎನ್ನುತ್ತವೆ ಉಪನಿಷತ್ತುಗಳು.
ಉಪನಿಷತ್ತುಗಳೆಂದರೆ ಭಯಹಾರಕ; ಅಭಯದಾಯಕ. ತನಗೆ ತಾನು ಅರ್ಥವಾಗಲಾಗದ ಒಂದು ರಹಸ್ಯವೇ ತಾನು - ಎಂಬಷ್ಟನ್ನಾದರೂ ಮನುಷ್ಯನು ಅರ್ಥ ಮಾಡಿಕೊಂಡು ಅಷ್ಟನ್ನಾದರೂ ಒಪ್ಪಿಕೊಳ್ಳಲು, ಹದವರಿತು ಬದುಕಲು - ಉಪನಿಷತ್ತನ್ನು ಒಮ್ಮೆಯಾದರೂ ಪ್ರವೇಶಿಸಬೇಕು. ಎಲ್ಲರಿಗೂ ಅಂತಿಮ ಗುರಿಯನ್ನು ತಲುಪಲಾಗದಿದ್ದರೂ ಇದರಿಂದಾಗಿ ಸ್ವಸ್ಥ ಮನಸ್ಸಿನ ಸಾತ್ವಿಕ ಸಮಾಜವಂತೂ ಉದಿಸಬಹುದು. ಈ ನಿಟ್ಟಿನಲ್ಲಿ ಉಪನಿಷತ್ತುಗಳು ನಮಗೆ ಸಮರ್ಥ ಮಾರ್ಗದರ್ಶನ ನೀಡಬಲ್ಲವು.
ಉಪನಿಷತ್ತಿನ ಋಷಿಗಳು ನಿರ್ಭೀತಿಯಿಂದ ಪರಸ್ಪರ ಪ್ರಶ್ನೆಗಳನ್ನು ಕೇಳಿಕೊಂಡರು; ಯಾಕೆ? ಏನು? ಹೇಗೆ? ಯಾರು? ಯಾರಿಂದ? ಎಂದು ತಾವೇ ಕೇಳಿಕೊಳ್ಳುತ್ತ ಉತ್ತರಾನ್ವೇಷಿಯಾದರು; ಪ್ರಶ್ನೆಯ ಹಿಂದೇ ನಡೆದರು. ಉತ್ತರವನ್ನೂ ಪಡೆದರು. ತಾವು ಕಂಡುದನ್ನು ಶ್ರುತಿ ರೂಪದಲ್ಲಿ ವರ್ಗಾಯಿಸುತ್ತ ಬಂದರು. ಎಷ್ಟೋ ಜ್ಞಾನ ಬಿಂದುಗಳು ಚೆಲ್ಲಿಹೋದರೂ ಮುಂದೆ ವೇದವ್ಯಾಸರ ನಂತರ - ಸ್ಮೃತಿಯಾಗಿಯೂ - ವಿಭಿನ್ನ ರೂಪದಲ್ಲಿ ಉಪನಿಷತ್ ವೃತ್ತಾಂತಗಳು ಉಳಿದುಕೊಂಡಿವೆ.
ಆದರೆ ಉಪನಿಷತ್ತಿನ ಆಧ್ಯಾತ್ಮಿಕ ಅನುಭವವನ್ನು ಯಥಾವತ್ತಾಗಿ ವಿವರಿಸುವ ಸಾಮರ್ಥ್ಯವು ಯಾವುದೇ ಭಾಷೆಗಿಲ್ಲ; ಭಾಷ್ಯಕ್ಕೂ ಇಲ್ಲ. ಹೇಳಿದಷ್ಟೂ ವಿಸ್ತರಿಸಲ್ಪಡುವ ವಿಷಯವಿದು. ಇಂದ್ರಿಯ ಚೇತನದ ಮಣ್ಣಿನ ನಾಲಗೆಗಳಿಗಂತೂ ಉಪನಿಷತ್ತಿನ ಭಾರವನ್ನು ತಾಳಿಕೊಳ್ಳಲು ಆಗುವುದೇ ಇಲ್ಲ. ಆಯಾ ಕಾಲದ ಭಾಷೆಯ ವೈಖರಿಯ ವ್ಯತ್ಯಾಸದಿಂದಲೂ - ಹಳೆಯ ಪಾಠಗಳನ್ನು ಅನುಸರಿಸುವಾಗ ಉಪನಿಷದ್ಭಕ್ತರಿಗೆ ಕ್ಲಿಷ್ಟತೆಯ ಅನುಭವವಾಗಬಹುದು. "ನಾನು ಅವನೇ ಆಗದೆ (ಅಹಂ ಬ್ರಹ್ಮಾಸ್ಮಿ) ಬ್ರಹ್ಮ ಸತ್ಯವು ಅನುಭವಕ್ಕೆ ನಿಲುಕದು" ಎಂಬ ಒಂದೇ ಒಂದು ಸೂತ್ರವನ್ನು ಬಿಡಿಸಲು ಆಚಾರ್ಯರುಗಳು ಅದೆಷ್ಟು ಮಥನ ನಡೆಸಿರಬಹುದು? ಆದರೂ... ಏನೋ ಅಪೂರ್ಣತೆ! ಮಾತಿಗೆ ನಿಲುಕದ ಅನನ್ಯತೆ! ಇಂದ್ರಿಯಗಳ ಒಡೆತನದ ಮಿಥ್ಯ ಜಗತ್ತಿನಲ್ಲಿದ್ದು ನಡೆಸುವ ಸತ್ಯದ ಹುಡುಕಾಟದ ವೈಕಲ್ಯ! ಆಧುನಿಕತೆಯೆಂಬ ಗೊಂದಲಿಗರ ನಿತ್ಯದ ಶಬ್ದ ಮಾಲಿನ್ಯವನ್ನು ನಿಲ್ಲಿಸಿ ಏಕಾಂತದಲ್ಲಿ ಮೌನ ತಪಸ್ವಿಗಳಾಗದೆ - ಚೈತನ್ಯದ ಪೂಜೆ ನಡೆಸಲು ಬಾರದು; ಅನುಭವವೂ ದಕ್ಕದು.
ಪೌರಾಣಿಕ ಯುಗದಲ್ಲಿ ಆಗ, ಒಬ್ಬನೇ ಒಬ್ಬ ಯಯಾತಿಯಿದ್ದ. ಅಥವ ಯಯಾತಿಯಂತಹ - ಮುಗಿಯದ ಬಯಕೆಗಳ ಸರದಾರ ರ ಸಾಮಾಜಿಕ ರಾಜನೇತೃತ್ವವು ಅಂದು ಇದ್ದಿರಲಿಲ್ಲ. ಆದ್ದರಿಂದ ಅಂದಿನ ಸಮಾಜದ ಶಿಸ್ತುಗಳಿಗೆ ಬೆನ್ನು ತಿರುಗಿಸಿ, "ರಾಜ ವಿಶಿಷ್ಟ" ಎನ್ನಿಸಿಕೊಂಡ ಯಯಾತಿಯು - ಋಷಿಮುನಿಗಳ ಕಥಾವಸ್ತುವಾದ. ಆದರೆ ಈಗ ಹಾಗಲ್ಲ. ಇಂದಿನ ಆಧುನಿಕ ಜಗತ್ತು ಅಂದಿಗಿಂತ ಶಕ್ತಿವಂತರಾದ ಯಯಾತಿಗಳಿಂದ ತುಂಬಿ ತುಳುಕುತ್ತಿದೆ. "ಬದುಕನ್ನು ಓಲೈಸಿ ಬಯಕೆಗಳನ್ನು ಪೂರೈಸಿದಷ್ಟೂ ಹೊಸಹೊಸ ಬಯಕೆಗಳು ಮುತ್ತುತ್ತಲೇ ಹೋಗುತ್ತವೆ" ಎಂಬ ಉಪನಿಷತ್ತಿನ ಸಂದೇಶವು ಇಂದಿಗಿಂತ ಅಂದೇ ಹೆಚ್ಚು ಸ್ವೀಕೃತವಾಗಿದ್ದರೂ ಅಂದಿನ ಯಯಾತಿಯ ಆಸೆ, ಸ್ವಪ್ರತಿಷ್ಠೆ, ಸ್ವಾರ್ಥದ ಪರಾಕಾಷ್ಠೆಯಿಂದಾಗಿ - ಆ ಯಯಾತಿಯು ಕುಬ್ಜನಾಗಿ ಹೋದ. ಸ್ವರ್ಗದಿಂದಲೂ ಉರುಳಿದ; ಕತೆಯಾಗಿ ಉಳಿದುಹೋದ. ತನ್ನ ಇಂದ್ರಿಯಗಳು ಜೋತುಬಿದ್ದು ಸೋಲುವವರೆಗೂ ಯಯಾತಿಗೆ ಜ್ಞಾನೋದಯವಾಗಲಿಲ್ಲ. ಅಂದಿನ ಯಯಾತಿಯು ಜನಾಕರ್ಷಣೆಯ ರಾಜನಾದುದರಿಂದಲೂ - ಅಂತಹ ವಿಷಮ ಘಟನೆಗಳು ಅಂದು ವಿರಳವಾಗಿದ್ದುದರಿಂದಲೂ ಆತನು ಸಾಮಾಜಿಕ ಭರ್ತ್ಸನೆಗೂ ಒಳಗಾದ.
ಆದರೆ ಇಂದಿನ ಯಯಾತಿಗಳಿಗೆ ಅಂತಹ ಬಿಗುವಿನ ಸಾಮಾಜಿಕ ಪರಿಸರವಾಗಲೀ ಬೌದ್ಧಿಕ ವಾತಾವರಣವಾಗಲೀ ಧರ್ಮನೀತಿಬೀರುತನವಾಗಲೀ ಅಸ್ತಿತ್ವದಲ್ಲೇ ಇಲ್ಲದಿರುವುದರಿಂದ ಇಂದಿನ ಸಮಾಜವು ಅಂಕೆತಪ್ಪಿ, ಅಂತಃಕ್ಷೋಭೆಯಿಂದ ದಿಕ್ಕುದೆಸೆಯಿಲ್ಲದೆ "ಯಯಾತಿ ವಿಶ್ವ" ವಾಗಿ ಅರಳುತ್ತಿದೆ; ನರಳುತ್ತಿದೆ. ಆದ್ದರಿಂದಲೇ ಒಳ್ಳೆಯ ವಿಚಾರಗಳನ್ನು ಹುಡುಕಿ ಹುಡುಕಿ ತಿರಸ್ಕರಿಸುವ, ಅವಹೇಳನ ಮಾಡುವ ವಿಕೃತಿ (Fashion) ಗೆ ಇಂದಿನ ಸಮಾಜವು ಬಲಿಯಾಗುತ್ತಿದೆ. ಆದ್ದರಿಂದಲೇ ಎಲ್ಲೆಲ್ಲೂ ಅತೃಪ್ತಿ. ಅತೃಪ್ತಿಯಿಂದ - ಪರಸ್ಪರ ಅವಹೇಳನ; ಅಸಹನೆ. ಅಸಹನೆಯಿಂದ ಹಿಂಸೆ. ಹಿಂಸೆಯಿಂದ ನಾಶ. ಹೀಗೆ ವಿನಾಶದ ಚಕ್ರವು ಸುತ್ತುತ್ತಲೇ ಇದೆ.
ಭಾರತೀಯ ಸಾಂಸ್ಕೃತಿಕ ಮೌಲ್ಯಗಳ ಅಡಿಪಾಯವೇ ಉಪನಿಷತ್ತು. ನಮ್ಮ ನಿಜ ಸಂಪತ್ತಾದ ಸಾಕ್ಷಾತ್ ಮೌಲ್ಯಗಳನ್ನೆಲ್ಲ ಹೀನಾಯವಾಗಿ ಹೀಯಾಳಿಸುತ್ತ ಅಡ್ಡಾಡುವ ದೊಡ್ಡ ವರ್ಗವೇ ಈಗ ಬೆಳೆದು ನಿಂತಿದೆ. ಇದು ಭವಿಷ್ಯದಲ್ಲಿ ಸಂಭವಿಸುವ ಮಹಾದುರಂತಕ್ಕೆ ಮುನ್ನುಡಿ. ಇಂದಿನ "ಶಿಕ್ಷಿತರು" ಎಂದುಕೊಂಡಿರುವ, ಅಕ್ಷರದ ಜಾತ್ರೆ ನಡೆಸುವ ವರ್ಗಕ್ಕೆ ಒಂದೋ ಉಪನಿಷತ್ತಿನ ಪರಿಚಯವೇ ಇಲ್ಲ. ಅಥವ ಅದು ಅವರ ದೌರ್ಭಾಗ್ಯಕ್ಕೆ ಒಗ್ಗುವುದಿಲ್ಲ. ಅಥವ ಸ್ವಾರ್ಥಪ್ರೇರಿತ ಕ್ಷಣಿಕ ಲಾಭದ ಪ್ರೇಯಸ್ಸಿನ ಹಿಂದೆ ಅವರೆಲ್ಲರೂ ಓಡುತ್ತಿರಬಹುದು. ಅಥವ ಪೂರ್ವಾಗ್ರಹ ಪೀಡಿತ ರೋಗಬಾಧೆಗೆ ಒಳಗಾಗಿರಬಹುದು. ಆದರೆ ನೆನಪಿರಲಿ. ಅರವಿಂದರನ್ನು ಪಾಂಡಿಚೇರಿಯ ಮಾಣಿಕ್ಯವಾಗಿಸುವಲ್ಲಿ, ನರೇಂದ್ರನನ್ನು ವೀರ ವಿವೇಕಾನಂದರಾಗಿಸುವಲ್ಲಿ ಉಪನಿಷತ್ತು ನಿರ್ವಹಿಸಿದ ಪಾತ್ರವು ಮಹತ್ವದ್ದು. ಕನ್ನಡದ ವಚನ ಸಾಹಿತ್ಯದ ತುಂಬ ಉಪನಿಷತ್ ಬೋಧನೆಗಳು ಮರುಕಳಿಸುತ್ತವೆ. ಉಪನಿಷತ್ತು ಸಾಧಕರನ್ನು - ಧೀರರನ್ನು ನಿರ್ಮಿಸುತ್ತದೆ. ಆಳಕ್ಕೆ ಮುಳುಗಿ ಮುತ್ತನ್ನು ಹೆಕ್ಕಿ ತರಬಲ್ಲ "ಧೀರ " ನೇ ನಿಜವಾದ ಸಾಧಕ.
" ಭಾರತದ ಇತಿಹಾಸ, ಸಂಸ್ಕೃತಿಗಳ ಒಳದೃಷ್ಟಿ ಪಡೆಯಲು ಉಪನಿಷತ್ತುಗಳಲ್ಲಿ ಸಂಚರಿಸುವುದು ಅನಿವಾರ್ಯ. ಭಾರತದ ತತ್ತ್ವ ಮತ್ತು ಧರ್ಮವಿಜ್ಞಾನವು ಉಪನಿಷತ್ತು ತೋರಿದ ದಾರಿಯಲ್ಲಿಯೇ ನಡೆದು ಬಂದಿದೆ. ಭಾರತದ ಧಾರ್ಮಿಕ ಪ್ರಪಂಚದಲ್ಲಿ ಮುಂದೆ ಆದ ಎಲ್ಲ ಚಿಂತನೆಯ ಶಾಖೆಗಳೂ ಉಪನಿಷತ್ತಿನಿಂದಲೇ ಪ್ರೇರಿತವಾದವುಗಳು. ಭಕ್ತಿಯ ಆದರ್ಶವೂ ಉಪನಿಷತ್ತಿನಲ್ಲಿದೆ. ಪುರಾಣಗಳಲ್ಲೂ ಇತರ ಸ್ಮೃತಿಗಳಲ್ಲೂ ಮುಂದೆ ಪೂರ್ಣವಾಗಿ ಬೆಳೆದ ಅನೇಕ ಭಾವನೆಗಳು ಉಪನಿಷತ್ತುಗಳಲ್ಲಿ ಬೀಜರೂಪದಲ್ಲಿವೆ. ಒಂದು ಸ್ಥೂಲ ನಕ್ಷೆ, ಚೌಕಟ್ಟು ಉಪನಿಷತ್ತಿನಲ್ಲಿತ್ತು. ಕೆಲವು ಪುರಾಣಗಳು ಅದನ್ನು ತುಂಬಿದವು - ಅಷ್ಟೆ. ಪೂರ್ಣವಾಗಿ ವಿಕಾಸಗೊಂಡ ಯಾವುದೇ ಭಾರತೀಯ ಆದರ್ಶದ ಮೂಲವು ಉಪನಿಷತ್ತೇ ಆಗಿದೆ." ಎಂದು ವಿವೇಕಾನಂದರು ಅಭಿಪ್ರಾಯಪಟ್ಟಿದ್ದಾರೆ. ಇಷ್ಟೇ ಅಲ್ಲ. ಕೆಲವು ಕರ್ಮಭಾಗದ ಅಂಶಗಳಿಗೆ ಹೆಚ್ಚು ಒತ್ತನ್ನು ಕೊಟ್ಟದ್ದು ಬಿಟ್ಟರೆ ಅವೈದಿಕವಾದ ಬೌದ್ಧಧರ್ಮವೂ ಉಪನಿಷತ್ತಿನ ಬೇರಿನ ಮೇಲೇ ನಿಂತಿದೆ.
ಇತ್ತೀಚೆಗಿನ ವರ್ಷಗಳಲ್ಲಿ ಇಂತಹ ಗಂಭೀರವಾದ ತತ್ತ್ವ ಸಿದ್ಧಾಂತಗಳು ಸಾಹಿತ್ಯ ಪ್ರಕಾರಗಳಲ್ಲಿ ವಿರಳವಾಗಿ ಹೋಗಿವೆ. ವ್ಯರ್ಥ "ಕರಟ ಹೆರೆಯುವುದು" ಒಂದು ಚಟವಾಗಿ ಹೋಗಿದೆ. ಗಾಂಭೀರ್ಯವೇ ಇಲ್ಲದ ಪೋಕು ಮಾತುಗಳಿಂದಲೇ ತಮ್ಮ ಮತ್ತು ಸುತ್ತಿನ ಬದುಕುಗಳನ್ನು ಹ್ರಸ್ವಗೊಳಿಸುತ್ತಿರುವವರ ನೇತೃತ್ವದಲ್ಲಿ ಇಂದಿನ ಅಸ್ವಸ್ಥ ಸಮಾಜವು ತೆವಳುತ್ತ ಸಾಗುತ್ತಿದೆ. ಉಪನಿಷತ್ತನ್ನು ಪ್ರವೇಶಿಸಿದ ಯಾವ ಬರಹಗಾರನೂ "ಹೊಟ್ಟೆಪಾಡಿನ ಸಾಹಿತಿ" ಆಗುವುದು ಅಸಾಧ್ಯ.
ನಿಜವಾದ ಸಾಹಿತಿಯೂ ತಪಸ್ವಿಯೇ ಆಗಬೇಕಾಗುತ್ತದೆ. ಉಪನಿಷತ್ತಿನ ವಿದ್ಯಾರ್ಥಿಯು ಎಂದಿಗೂ ಪುಕ್ಕಟೆ ಪ್ರಚಾರ, ಸಂದಿಗೊಂದಿಯ ಒಳದಾರಿಗಳನ್ನು ಆಯ್ದುಕೊಳ್ಳುವುದು ಅಸಂಭವ. ಏಕೆಂದರೆ ಉಪನಿಷತ್ತು ವ್ಯಕ್ತಿಯ ಅಂತರಂಗವನ್ನು ಶುದ್ಧಿಗೊಳಿಸುತ್ತದೆ. ಸಮಾಜಕ್ಕೆ ನೀಡುವ ಒಂದೊಂದು ಅಕ್ಷರವೂ ಅಮೂಲ್ಯವಾಗುವುದು ಉಪನಿಷತ್ತಿನ ಸಾನ್ನಿಧ್ಯದಿಂದ ಮಾತ್ರ ಸಾಧ್ಯ. ಶ್ರೀ ಎಸ್.ಎಲ್.ಭೈರಪ್ಪನವರ ಹಿಂದಿನ ಬರಹಗಳಲ್ಲಿ ಉಪನಿಷತ್ತಿನ ಸುವಾಸನೆಯ ಮಿಂಚಿದೆ. ಆದ್ದರಿಂದಲೇ ಎಷ್ಟು ಬಾರಿ ಓದಿದರೂ ಅವರ ಬರಹಗಳು ಓದುಗರನ್ನು ಪುಳಕಿತಗೊಳಿಸುತ್ತವೆ. ಇನ್ನೂ ಸ್ವಲ್ಪ ಹಿಂದೆ ಸರಿದು ನೋಡಿದರೆ ಸರ್ವಶ್ರೀ ಡಿ ವಿ ಜಿ, ಎ.ಆರ್.ಕೃಷ್ಣಶಾಸ್ತ್ರಿ, ದೇವುಡು ನರಸಿಂಹ ಶಾಸ್ತ್ರಿ, ಅಂಬಿಕಾತನಯದತ್ತ, ಕುವೆಂಪು, ಕಾವ್ಯಾನಂದ ಮುಂತಾದ ಕೆಲವು ಹಿರಿಯ ಬರಹಗಾರರನ್ನು ಉಪನಿಷತ್ ಹಿನ್ನೆಲೆಯಲ್ಲಿ ಗುರುತಿಸಿದಾಗ - ತಲೆಬಾಗುತ್ತದೆ. ಸರ್ವಶ್ರೀ ಕೆ.ಎಸ್. ನಾರಾಯಣಾಚಾರ್ಯ, ಬನ್ನಂಜೆ ಗೋವಿಂದಾಚಾರ್ಯ ಮುಂತಾದ ವಿದ್ವಾಂಸರು ಈಗಲೂ ಉಪನಿಷತ್ತಿನ ಸದ್ವಿಚಾರಗಳನ್ನು ಪ್ರಚುರಪಡಿಸುತ್ತಲೇ ಇದ್ದಾರೆ. "ಮಂಕು ತಿಮ್ಮ" ಎನ್ನುತ್ತಲೇ ಬದುಕಿನ ಸುಭಗ ದಾರಿಯನ್ನು ತೋರಿಸಿದ, ಕಠಿಣ ಸಿದ್ಧಾಂತಗಳನ್ನು ಸರಳವಾಗಿ ಬಿಡಿಸಿಟ್ಟ ಡಿ ವಿ ಜಿ ಅವರಲ್ಲಿದ್ದ ಜ್ಞಾನಿಯ ಸಂಯಮ, ವಿನಯವಂತಿಕೆಯನ್ನು ಇಂದಿನ ಬಹುತೇಕ ಯುವಜನರಿಗೆ ತಲುಪಿಸಬೇಕಾಗಿದೆ. ಆದರೆ ದಿನಹೋದಂತೆ - ಉತ್ತಮ ಸಾಹಿತ್ಯಗಳು ಕಾಣಿಸದಂತೆ - ಅವುಗಳ ಮೇಲೆ ರಾಶಿ ಬೀಳುತ್ತಿರುವ ರದ್ದಿ ಸಾಹಿತ್ಯ ಸಂಚಲನವು - ಮಾನವ ಕಲ್ಯಾಣದ ಅಪಾಯದ ಮುನ್ಸೂಚನೆಯಂತೆಯೂ ಒಮ್ಮೊಮ್ಮೆ ಕಾಣುತ್ತದೆ. (ಜತೆಜತೆಗೆ ಉತ್ತಮವಾದುದನ್ನು ಗುರುತಿಸಿ, ಓದುವ ಹವ್ಯಾಸವೂ ಇಳಿಮುಖವಾಗುತ್ತಿದೆ!)
ಆದ್ದರಿಂದಲೇ ಹತ್ತಿದ ಏಣಿಯನ್ನು ಮರೆಯದ, ಹತ್ತಬಹುದಾದ ಸುಭದ್ರ ಏಣಿಯನ್ನು ಎಲ್ಲರೂ ಬಳಸಿಕೊಳ್ಳುವ ಮನೋಭಾವವು ವಿಕಸಿಸುವಂತಹ ಶಿಕ್ಷಣವು ಇಂದಿನ ಅಗತ್ಯವೆನ್ನಿಸಿದೆ. "ನಾವು ಏನು ಮಾಡಿದ್ದೇವೆ? ಅಥವ ಏನು ಸಾಧಿಸಿದ್ದೇವೆ?" ಎಂಬುದಕ್ಕಿಂತ "ನಾವು ಈಗ ಏನಾಗಿದ್ದೇವೆ?" ಎಂಬುದೇ ಮನುಷ್ಯರು ಮೊತ್ತಮೊದಲು ಕೇಳಿಕೊಳ್ಳಬೇಕಾದ ಅರ್ಥಪೂರ್ಣ ಪ್ರಶ್ನೆ. ನಮ್ಮ ಬದುಕಿನ ಕರ್ಮವು "ಸಿದ್ಧಿ"ಯನ್ನು ಪ್ರತಿಬಿಂಬಿಸುತ್ತಿದ್ದರೆ - - ನಾವು ಏನಾಗಿದ್ದೇವೆ? ಎಂಬುದು ನಮ್ಮ "ವ್ಯಕ್ತಿತ್ವ ಮತ್ತು ಸಂಸ್ಕೃತಿ"ಯನ್ನು ಪ್ರತಿಬಿಂಬಿಸುತ್ತದೆ. ಕಲೆ, ವಿಜ್ಞಾನ, ಧರ್ಮ - ಇವು ಒಂದೇ ಸತ್ಯವನ್ನು ಹೇಳುವ ಮೂರು ವಿಧಾನಗಳು. "ಹಣ ಮಾಡುವುದು, ಕುಟುಂಬ, ಪೀಳಿಗೆ ಮುಂತಾದುವೆಲ್ಲವೂ ಕೇವಲ "ಪ್ರಕೃತಿ"ಯೇ ಹೊರತು - ಅದು "ಸಂಸ್ಕೃತಿ" ಅಲ್ಲ. ಯಾವುದೇ ಬದುಕಿನ ಮೊದಲನೆಯ ಅರ್ಧ ಭಾಗದಲ್ಲಿ ಸಾಧಿಸುವ ಈ "ಸಿದ್ಧಿ"ಯ ಶಿಕ್ಷಣವು ಆಯಾ ಬದುಕಿನ ಉತ್ತರಾರ್ಧದಲ್ಲಿ ಆಧ್ಯಾತ್ಮಿಕ ಶಿಕ್ಷಣಕ್ಕೆ ಪೂರಕವಾಗಿರಬೇಕು. ಯಾವುದೇ ಬದುಕಿನ ಪೂರ್ವಾರ್ಧ ಮತ್ತು ಉತ್ತರಾರ್ಧಗಳ ನಡುವೆ ಕಂದಕವುಂಟಾಗದೆ ಅವುಗಳ ನಡುವೆ ಸೌಹಾರ್ದದ ಸೇತುವೆಯು ರೂಪುಗೊಳ್ಳಬೇಕು. ಉಪನಿಷತ್ತುಗಳು ಅಂತಹ ಸಮಭಾವದ - "ಸಾಧು ಶಿಕ್ಷಣ" ದ ಸೇತುವೆಯನ್ನು ಕಟ್ಟಬಲ್ಲದು.
ಬದುಕು ಎಂದರೇನು? ಮಾನವ ಎಂದರೇನು? ಇಲ್ಲಿ ಶಾಶ್ವತವಾದದ್ದು ಏನಾದರೂ ಇದೆಯೆ? ನಮ್ಮ ದಾರಿ - ಗುರಿ ಯಾವುದು? ಈಗ ನಾವೆಲ್ಲಿದ್ದೇವೆ? ಬದುಕಿನ ಉದ್ದಕ್ಕೂ ಸ್ಥಿತ್ಯಂತರದ ಅನುಭವವನ್ನು ಹೊಂದುತ್ತಿರುವ ಮನುಷ್ಯರು ತಮ್ಮನ್ನು ತಾವೇ ಆಗಾಗ ಕೇಳಿಕೊಳ್ಳಬೇಕಾದ ಪ್ರಶ್ನೆಗಳಿವು. ಈ ಎಲ್ಲ ಪ್ರಶ್ನೆಗಳಿಗೂ ಉತ್ತರ ಕಂಡುಕೊಳ್ಳಬಹುದು - ಎಂಬ ಸಾಂತ್ವನದ ಭರವಸೆಯು ಉಪನಿಷತ್ತುಗಳಲ್ಲಿ ಸಿಗುತ್ತದೆ; ಮಾನವರ ಜನ್ಮ ಸಾರ್ಥಕ್ಯದ ಗುರಿ ಮತ್ತು ದಾರಿಯ ಸ್ಪಷ್ಟ ಅನಾವರಣವಾಗುತ್ತದೆ. ಚಿಂತನೆಗೆ ಬೆಳಕು ತೋರುತ್ತದೆ. ಸಭ್ಯ ಸಜ್ಜನ ಸಚ್ಚರಿತ ಸಮಾಜ ನಿರ್ಮಾಣಕ್ಕೆ ಉಪನಿಷತ್ತುಗಳ ಅಧ್ಯಯನವು - ಸದೃಢ ಊರುಗೋಲು.
"ಉಪನಿಷತ್ತುಗಳು ಚೈತನ್ಯ ಮತ್ತು ಸೃಜನಶಕ್ತಿಗಳ ನಿರಂತರ ಚಿಲುಮೆ. ಸಹನೆಯಿಂದ ಕೂಡಿದ ಎಲ್ಲವನ್ನೂ ಒಳಗೊಳ್ಳುವ ಪರಂಪರೆಯು ಉಪನಿಷತ್ತಿನ ಅಂತಃಸ್ಫೂರ್ತಿ. ಎಚ್ಚರದ ಆವರಣ, ನಿರಂತರ ಅನ್ವೇಷಣೆಯ ಮನೋಭಾವ, ಸತ್ಯದ ಬಗೆಗೆ ಗಾಢ ಪ್ರೇಮ, "ಎಲ್ಲವೂ ಸರಿಯಾಗಿದೆ" ಎಂಬ ತೃಪ್ತಿಯ ಮನೋಭಾವದಿಂದ ಸುಮ್ಮನಿರದೆ ಏಕಪ್ರಕಾರವಾಗಿ ಮುಂದುವರಿಯುವ ಇಚ್ಛೆ - ಇವೆಲ್ಲ ಗುಣಗಳಿಂದಾಗಿ ಉಪನಿಷತ್ತುಗಳು ಆಧುನಿಕ ದೃಷ್ಟಿಯನ್ನು ಹೊಂದಿದ್ದು ಇಂದಿಗೂ ಚಿರನೂತನವೆನಿಸುತ್ತವೆ. ಮಾನವನ ಸ್ಥೂಲ ಸೂಕ್ಷ್ಮ, ಜಾಗ್ರತ ಸ್ವಪ್ನ ಸುಷುಪ್ತಿ ಅವ್ಯಕ್ತ, ಶರೀರ ಮನಸ್ಸು ಜ್ಞಾನಕೋಶಗಳನ್ನೆಲ್ಲ ಆಳವಾಗಿ ಅಧ್ಯಯನ ಮಾಡಿರುವ ವೇದಾಂತವಿದು" ಎನ್ನುತ್ತಾರೆ ಸ್ವಾಮಿ ರಂಗನಾಥಾನಂದರು.
(ಸ್ವಾಮಿ ರಂಗನಾಥಾನಂದರ - "ಉಪನಿಷತ್ತುಗಳ ಸಂದೇಶ", ಪ್ರಕಾಶಕರು - ಶ್ರೀ ರಾಮಕೃಷ್ಣ ಆಶ್ರಮ, ಯಾದವಗಿರಿ, ಮೈಸೂರು - ಎಂಬ ಪುಸ್ತಕದ ಓದಿನಿಂದ ಪ್ರಭಾವಿತಗೊಂಡು ಬರೆದ ಬರಹವಿದು. ನನ್ನ ಭಾವ ದೃಷ್ಟಿಯೊಂದಿಗೆ ಸ್ವಾಮಿ ರಂಗನಾಥಾನಂದರ ಉಪನ್ಯಾಸದ ಕೆಲವು ಸಾಲುಗಳನ್ನು ನಿಮ್ಮೊಂದಿಗೆ ಯಥಾವತ್ ಹಂಚಿಕೊಂಡಿದ್ದೇನೆ. ಈ ಇಡೀ ಪುಸ್ತಕವೇ ಒಂದು ರಸಗಟ್ಟಿ. ಮನುಷ್ಯರಾಗಿ ಹುಟ್ಟಿದವರ ಮನೆಯಲ್ಲಿ ಇರಬೇಕಾದ ಮತ್ತು ಅಗತ್ಯವಾಗಿ ಓದಲೇಬೇಕಾದ ಈ ಪುಸ್ತಕವು ಬರೇ ರಟ್ಟು ಹೊದೆಸಿದ ಕಾಗದದ ಕಟ್ಟಲ್ಲ; ಶುದ್ಧ ಸಂಪತ್ತು. ಈ ಪುಸ್ತಕವನ್ನು ಓದುವುದಕ್ಕೂ ಭಾಗ್ಯ ಬೇಕು!)

" ಅನೇಜದೇಕಂ ಮನಸೋ ಜವೀಯೋ
ನೈನದ್ದೇವಾ ಆಪ್ನುವನ್ ಪೂರ್ವಮರ್ಷತ್
ತದ್ಧಾವತೋನ್ಯಾನ್ ಅತ್ಯೇತಿ ತಿಷ್ಠತ್
ತಸ್ಮಿನ್ ಅಪೋ ಮಾತರಿಶ್ವಾ ದಧಾತಿ"
" ಆತ್ಮವು ಒಂದು. ಅದು ಚಲಿಸುವುದಿಲ್ಲ. ಆದರೂ ಅದು ಮನಸ್ಸಿಗಿಂತ ವೇಗವಾದದ್ದು. ತಾನು ಸ್ಥಿರವಾಗಿದ್ದು, ಓಡುವ ಎಲ್ಲವನ್ನೂ ಅದು ಮೀರುತ್ತದೆ. ವಿಶ್ವಶಕ್ತಿಯಾದ ಅದು - ತಾನು ಸ್ಥಿರವಾಗಿದ್ದುಕೊಂಡೇ ಎಲ್ಲ ಜೀವಿಗಳ ಚಟುವಟಿಕೆಗಳಿಗೂ ಶಕ್ತಿ ನೀಡುತ್ತದೆ."
" ತೇನ ತ್ಯಕ್ತೇನ ಭುಂಜೀಥಾಃ "
ತ್ಯಾಗದ ಮೂಲಕ ಭೋಗವನ್ನು ಅನುಭವಿಸು. (ಈಶೋಪನಿಷತ್ತು)
"ಈಶಾವಾಸ್ಯಮಿದಂ ಸರ್ವಂ ಯತ್ಕಿಂಚ ಜಗತ್ಯಾಮ್ ಜಗತ್ " -
ಈ ಕ್ಷಣಿಕವಾದ ಜಗತ್ತಿನಲ್ಲಿ ಬದಲಾವಣೆ ಹೊಂದುವಥದ್ದು ಏನಿದೆಯೋ ಅದೆಲ್ಲವನ್ನೂ ಭಗವಂತನಿಂದ ಆವರಿಸಬೇಕು. [ಈಶೋಪನಿಷತ್ತು]
ತನ್ನ ಮೊದಲ ಮಂತ್ರದಲ್ಲೇ ಸತ್ಯದ ರಹಸ್ಯ ಆಳಕ್ಕೆ ನಮ್ಮನ್ನು ಒಯ್ಯುತ್ತದೆ - ಈಶೋಪನಿಷತ್ತು.
" ಓಂ ಸಹನಾವವತು; ಸಹನೌ ಭುನಕ್ತು; ಸಹವೀರ್ಯಂ ಕರವಾವಹೈ; ತೇಜಸ್ವಿನಾವಧೀತಮಸ್ತು; ಮಾವಿದ್ವಿಷಾವಹೈ. ಓಂ ಶಾಂತಿಃ ಶಾಂತಿಃ ಶಾಂತಿಃ " - ಓಂ...
ಬ್ರಹ್ಮನು ನಮ್ಮಿಬ್ಬರನ್ನೂ ರಕ್ಷಿಸಲಿ. ಅವನು ನಮ್ಮಿಬ್ಬರನ್ನೂ (ಗುರು ಶಿಷ್ಯ) ಪೋಷಿಸಲಿ. ನಾವಿಬ್ಬರೂ ಶಕ್ತಿಯನ್ನು ಹೊಂದುವಂತಾಗಲಿ. ಈ ಅಧ್ಯಯನವು ನಮ್ಮಿಬ್ಬರನ್ನೂ ತೇಜಸ್ವಿಗಳನ್ನಾಗಿ ಮಾಡಲಿ. ನಾವಿಬ್ಬರೂ ಪರಸ್ಪರ ದ್ವೇಷಿಸುವುದು ಬೇಡ. ಓಂ ಶಾಂತಿ, ಶಾಂತಿ, ಶಾಂತಿ. (ಕೇನೋಪನಿಷತ್ತು)
ಸಹಸ್ರಾರು ವರ್ಷಗಳಿಂದ ಭಾರತದ ಲೌಕಿಕ ಮತ್ತು ಧಾರ್ಮಿಕ ವಿದ್ಯಾಭ್ಯಾಸಕ್ಕೆ ಸ್ಫೂರ್ತಿದಾಯಕವಾದ, ಸುಂದರ ಭಾವದುಂಬಿದ, ಗುರು ಶಿಷ್ಯರನ್ನು ವಿಶ್ವಾಸದ ಸಂಬಂಧದಲ್ಲಿ ಕಟ್ಟಿದ ಶಾಂತಿ ಮಂತ್ರವಿದು.
ಏಳಿ! ಜಾಗ್ರತರಾಗಿ! ಮಹಾನುಭಾವರನ್ನು ಸೇರಿ ಬೆಳಕನ್ನು ಪಡೆಯಿರಿ!"ಉತ್ತಿಷ್ಠತ, ಜಾಗ್ರತ ಪ್ರಾಪ್ಯವರಾನ್ನಿಬೋಧತ ..."
"ಅನ್ಯತ್ ಶ್ರೇಯೋ ಅನ್ಯದುತೈವ ಪ್ರೇಯಃ , ತೇ ಉಭೇ ನಾನಾರ್ಥೇ ಪುರುಷಂ ಸಿನೀತಃ ; ತಯೋಃ ಶ್ರೇಯ ಆದದಾನಸ್ಯ ಸಾಧುರ್ಭವತಿ, ಹೀಯತೇ ಅರ್ಥಾತ್ ಯ ಉ ಪ್ರೇಯೋ ವೃಣೀತೇ "
ಶ್ರೇಯ (ಒಳಿತು) ಎಂಬುದು ಬೇರೆ ಮತ್ತು ಪ್ರೇಯ (ಹಿತವಾದದ್ದು) ಎಂಬುದು ಬೇರೆ. ಎರಡೂ ಬೇರೆ ಬೇರೆ ಗುರಿಗೆ ಒಯ್ಯುವಂಥವಾಗಿ ಇವೆರಡೂ ಮಾನವನನ್ನು ಬಂಧಿಸುತ್ತವೆ. ಒಳಿತನ್ನು ಒಪ್ಪಿಕೊಳ್ಳುವವನಿಗೆ ಒಳಿತು ದೊರಕುತ್ತದೆ. ಆದರೆ ಪ್ರಿಯವಾದುದನ್ನು ಆರಿಸಿಕೊಳ್ಳುವವನು ಗುರಿಯಿಂದ ಬಹುದೂರ ಉಳಿಯುತ್ತಾನೆ. ಕೊನೆಗೆ ಗುರಿ ತಪ್ಪಿ ಬೀಳುತ್ತಾನೆ. ಪ್ರೇಯಸ್ಸು ಎಂಬುದು ಇಂದ್ರಿಯಗಳ ಸ್ವಾತಂತ್ರ್ಯವನ್ನು ಒತ್ತಾಯಪೂರ್ವಕವಾಗಿ ಕೇಳುತ್ತದೆ. ಆದರೆ ಶ್ರೇಯಸ್ಸು - ಇಂದ್ರಿಯಗಳಿಂದ ಬಿಡುಗಡೆ ಯನ್ನು ಒತ್ತಾಯದಿಂದ ಕೇಳುತ್ತದೆ. (ಕಠೋಪನಿಷತ್ತು)
"ಯಾವುದರಿಂದ ಎಲ್ಲ ಜೀವಿಗಳು ಜನಿಸಿವೆಯೋ, ಜನಿಸಿದಮೇಲೆ ಯಾವುದರ ಮೂಲಕ ಅವು ಜೀವಿಸುತ್ತವೆಯೋ, ಇರುವುದು ಮುಗಿದ ಮೇಲೆ ಯಾವುದರಲ್ಲಿ ಅವು ಲೀನವಾಗುತ್ತವೆಯೋ ಅದೇ ಬ್ರಹ್ಮ " ; " ರಸೋ ವೈ ಸಃ " - ಆತ ವಾಸ್ತವವಾಗಿ ಆನಂದ. (ತೈತ್ತಿರೀಯ ಉಪನಿಷತ್ತು)
" ಪ್ರಜ್ಞಾನಂ ಬ್ರಹ್ಮ"
ಶುದ್ಧ ಚಿತ್ ಅನ್ನುವುದೇ ಬ್ರಹ್ಮ. (ಐತರೇಯ ಉಪನಿಷತ್ತು)
" ತತ್ ತ್ವಂ ಅಸಿ "
ಅದು ನೀನೇ ಆಗಿದ್ದೀಯ... ಆತ್ಮವನ್ನು ಅರಿತವನು ಎಲ್ಲ ಶೋಕವನ್ನೂ ದಾಟುತ್ತಾನೆ...(ಛಾಂದೋಗ್ಯ ಉಪನಿಷತ್ತು)
" ಅಹಂ ಬ್ರಹ್ಮಾಸ್ಮಿ "
ನಾನೇ ಬ್ರಹ್ಮ .
" ಅಸತೋ ಮಾ ಸದ್ಗಮಯ; ತಮಸೋ ಮಾ ಜ್ಯೋತಿರ್ಗಮಯ; ಮೃತ್ಯೋರ್ಮಾ ಅಮೃತಂಗಮಯ "
ಅಸತ್ಯದಿಂದ ಸತ್ಯಕ್ಕೆ, ಕತ್ತಲಿನಿಂದ ಬೆಳಕಿಗೆ, ಮೃತ್ಯುವಿನಿಂದ ಅಮೃತತ್ವಕ್ಕೆ ನನ್ನನ್ನು ನಡೆಸು...(ಬೃಹದಾರಣ್ಯಕ ಉಪನಿಷತ್ತು)
" ಅಯಂ ಆತ್ಮಾ ಬ್ರಹ್ಮ "
ಈ ಆತ್ಮವೇ ಬ್ರಹ್ಮ. (ಮಾಂಡೂಕ್ಯ ಉಪನಿಷತ್ತು)
ಈ ಎಲ್ಲ ಉಕ್ತಿಗಳೂ ನಮ್ಮ ನಿತ್ಯದ ಮಾತಿನಲ್ಲಿ ಬಂದು ಹೋಗುತ್ತಿರುತ್ತವೆ. ಆದರೆ ಅದರ ಮೂಲ, ಆಳದ ಕುರಿತ ಚಿಂತನೆಯನ್ನು ಮಾತ್ರ ನಮ್ಮಿಂದ ನಡೆಸಲಾಗುತ್ತಿಲ್ಲ. ಉಪನಿಷತ್ತು ಅಂದರೆ ಸತ್ಯದ ಅನ್ವೇಷಣೆಯ, ಸತ್ಯ ಸಾಕ್ಷಾತ್ಕಾರದ ಬೃಹತ್ ಪ್ರಬಂಧ. ಸಂಸಾರಬೀಜವಾದ ಅವಿದ್ಯೆಯನ್ನು ಪರಿಹರಿಸುವ ಜ್ಞಾನನಿಧಿಯೇ ಉಪನಿಷತ್ತು. ಆದಿಯಾಗಲೀ ಅಂತ್ಯವಾಗಲೀ ಇಲ್ಲದ, ವಿಭಿನ್ನ ಅನಾಮಿಕ ವ್ಯಕ್ತಿಗಳು ವಿಭಿನ್ನ ಕಾಲಘಟ್ಟದಲ್ಲಿ ಕಂಡುಕೊಂಡ ಆಧ್ಯಾತ್ಮಿಕ ಉನ್ನತಿಯ ನಿಯಮಗಳ ಒಟ್ಟು ಮೊತ್ತವೇ - ಸನಾತನವೆನ್ನಿಸಿದ ವೇದ ವೇದಾಂತಗಳು. ಈ ಅಂತಃಜ್ಞಾನ ವಿಭಾಗದಲ್ಲಿ ಭಾರತೀಯರಷ್ಟು ಅಧ್ಯಯನ ನಡೆಸಿದವರು ವಿಶ್ವದಲ್ಲಿ ಇನ್ನೊಬ್ಬರಿಲ್ಲ. ಆದರೆ ಉಪನಿಷತ್ತಿನ ಯಾವುದೇ ಸಂಕೇತರೂಪೀ ಸೂತ್ರಗಳು, ಸೂಕ್ತಿಗಳು ದೀರ್ಘ ವಿವರಣೆಯಿಲ್ಲದೆ ಆದ್ಯಂತವಾಗಿ ಮನವರಿಕೆಯಾಗುವುದಿಲ್ಲ.
"ಯಾವುದು ಇಂದ್ರಿಯ ಮತ್ತು ಮನಸ್ಸುಗಳಿಂದ ವ್ಯಕ್ತವಾಗುವುದಿಲ್ಲವೋ ಆದರೆ ಯಾವುದರಿಂದ ಇಂದ್ರಿಯಗಳು ಮತ್ತು ಮನಸ್ಸು ವ್ಯಕ್ತವಾಗುತ್ತದೆಯೋ - ಅದೇ ಬ್ರಹ್ಮ" ಎಂದು ಉಪನಿಷತ್ತು ಸಾರಿತು.
ಬ್ರಹ್ಮ ಅಥವ ಆತ್ಮದ ಸ್ವರೂಪವನ್ನು - ಸಲಹೆ, ಸೂಚನೆ, ಸಂಕೇತಗಳ ಮೂಲಕವೇ ಉಪನಿಷತ್ತು ತಿಳಿಸುತ್ತದೆ. ಋಷಿಮುನಿಗಳ ಕಾಲಘಟ್ಟದಲ್ಲಿ ಉಪನಿಷತ್ತಿನ ನಿರೂಪಣೆಯು ಅವರಿಗೆ ಕ್ಲಿಷ್ಟವೆನ್ನಿಸದಿದ್ದರೂ ಇಂದಿನ ಕಾಲಘಟ್ಟದಲ್ಲಿ ಅಂತಹ ಸಂಕ್ಷಿಪ್ತ ಸೂತ್ರಗಳು ಪ್ರವೇಶಿಗರಿಗೆ ಸಹಜವಾಗಿಯೇ ಅಸ್ಪಷ್ಟವೆನ್ನಿಸುತ್ತವೆ. ಆದ್ದರಿಂದಲೇ ಅನಂತರದ ಕಾಲದಲ್ಲಿ - ವೇದ, ವೇದಾಂತಗಳ ಸಾರವನ್ನು ಸಾಮಾನ್ಯರಿಗೂ ತಲುಪಿಸುವ ಮತ್ತು ಸರ್ವರಿಗೂ ಉದ್ಧಾರದ ದಾರಿ ತೋರಿಸಲು ಯತ್ನಿಸಿದ ವೇದವ್ಯಾಸರು ಮತ್ತು ಅವರಂತಹ ಅನೇಕ ಋಷಿಗಳು, ವೇದ - ಉಪನಿಷತ್ತುಗಳಿಗೆ ಭಾಷ್ಯಗಳನ್ನು ಬರೆದರು. ಉಪನಿಷತ್ತಿನ ಸಾರವನ್ನು, ಸತ್ಯವನ್ನು, ತತ್ತ್ವವನ್ನು ರಾಮಾಯಣ, ಮಹಾಭಾರತ, ಭಾಗವತ, ಭಗವದ್ಗೀತೆಗಳ ಮೂಲಕ - ಸರಳ ಕಥಾರೂಪದಲ್ಲಿ ತಮ್ಮ ಪೀಳಿಗೆಗೆ ದಾಟಿಸುವಲ್ಲಿ ಅವರು ಒಂದಷ್ಟು ಯಶಸ್ವಿಯೂ ಆದರು.
ಕೆಲವೇ ಶತಮಾನಗಳ ಹಿಂದೆ ಶ್ರೀ ಶಂಕರಾಚಾರ್ಯರು ಈ ಮಹತ್ಕಾರ್ಯವನ್ನು ಮತ್ತೊಮ್ಮೆ ಪುನರುಜ್ಜೀವಗೊಳಿಸಿದರು. ಕೇವಲ ನೂರೈವತ್ತು ವರ್ಷಗಳ ಹಿಂದೆ ನಮ್ಮೊಂದಿಗಿದ್ದ ಶ್ರೀ ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದರು ಭಾರತೀಯ ಸನಾತನ ತತ್ವ ಚಿಂತನೆಗಳು ಆಧುನಿಕರಿಗೂ ಮನಮುಟ್ಟುವಂತೆ - ದೃಷ್ಟಾಂತಗಳೊಂದಿಗೆ ಘಂಟಾಘೋಷವಾಗಿ ಸಾರಿಹೋದರು. ಶ್ರೀ ರಾಮಕೃಷ್ಣ ಆಶ್ರಮ (ಮಿಶನ್)ದ ಹಲವಾರು ಹಿರಿಯ ಸನ್ಯಾಸಿಗಳು ಈ ಜ್ಞಾನಸತ್ರವನ್ನು ಅನಂತರವೂ ಗಂಭೀರವಾಗಿ ಮುಂದುವರಿಸಿಕೊಂಡು ಬಂದಿದ್ದಾರೆ; ಬರುತ್ತಿದ್ದಾರೆ. ಇಳಿದುಹೋದ ಇಂದಿನ ವಿದ್ಯಾ ಸಂಸ್ಕೃತಿಯಿಂದಾಗಿ - ಅಂದಿನ ಕಾಲಮಾನದಲ್ಲಿ ಅರ್ಥವಾಗುವಂತಿದ್ದ ಭಾಷ್ಯಗಳಿಗೆ ಈಗ ಮತ್ತೊಮ್ಮೆ ಪುನರ್ವ್ಯಾಖ್ಯಾನ ಮಾಡಬೇಕಾಗಿ ಬಂದಿದೆ. ಏಕೆಂದರೆ ನಮ್ಮ ಆಧುನಿಕ ಶಿಕ್ಷಣವು ಮನೆಯಲ್ಲಿರುವ ಸಂಪತ್ತನ್ನು ಗುರುತಿಸಲಾಗದೆ ಯಾರದೋ ಹಗಲು ವೇಷ ತೊಟ್ಟುಕೊಂಡು ಯಾವುದೋ ಕಿರಿದಾದ ಓಣಿಯಲ್ಲಿ ಈಗ ವಂತಿಗೆ ಎತ್ತುತ್ತಿದೆ!
ಮಾನಸಿಕ ಪಕ್ಷುಬ್ಧತೆಗೆ ಉಪನಿಷತ್ತು ದಿವ್ಯೌಷಧ. ಮಾನವನು ಸೃಷ್ಟಿಯ ನಾಟಕದ ನಟನೂ ಹೌದು; ಪ್ರೇಕ್ಷಕನೂ ಹೌದು ಎಂಬುದು ಉಪನಿಷತ್ತುಗಳ ದೃಷ್ಟಿ. ಮಾನವನ ಸರ್ವತೋಮುಖ ವಿಕಾಸದ ಜೊತೆಜೊತೆಗೆ, ಆಧ್ಯಾತ್ಮಿಕ ಬೆಳವಣಿಗೆಯ ವಿಷಯದಲ್ಲಿ ವೇದಾಂತಕ್ಕೆ ಇರುವ ಕಾಳಜಿ ಎಷ್ಟು ಎಂಬುದನ್ನು ಅರಿಯಲು ಶ್ರೀಮದ್ಭಾಗವತದ ಈ ಶ್ಲೋಕವನ್ನು ಮನನ ಮಾಡಬಹುದು. "ಮಾನವನ ಅಸದೃಶ ಬುದ್ಧಿಶಕ್ತಿಯ ಯುಕ್ತ ಬಳಕೆಯಾಗಲಿ " ಎಂದು ಶ್ರೀಕೃಷ್ಣನು ವಿಶಾಲಾರ್ಥದಲ್ಲಿ ಭಾಗವತದಲ್ಲಿ ಹೇಳಿದ ಈ ಮಾತು ಸ್ಮರಣೀಯವಾಗಿದೆ.
" ಲಬ್ಧ್ವಾಸುದುರ್ಲಭಮಿದಂ ಬಹುಸಂಭವಾಂತೇ
ಮಾನುಷ್ಯಂ ಅರ್ಥದಂ ಅನಿತ್ಯಪೀಹ ಧೀರಃ ;
ತೂರ್ಣಂ ಯತೇತ ನ ಪತೇತ್ ಅನುಮೃತ್ಯು ಯಾವತ್
ನಿಶ್ರೇಯಸಾಯ ವಿಷಯಃ ಖಲು ಸರ್ವತಃ ಸ್ಯಾತ್ "
(ಮಾನವ ದೇಹವನ್ನು ಆ ಸುಖಕ್ಕೆ ಮೀಸಲಾಗಿಡಬೇಕಾಗಿಲ್ಲ ಎಂಬ ಅರ್ಥ)" ಪಡೆಯಲು ಕಷ್ಟವಾದ ಈ ಮನುಷ್ಯ ಜನ್ಮವನ್ನು ಅನೇಕ ಜನ್ಮಗಳ ನಂತರ ಪಡೆದ ಮೇಲೆ, ಮೃತ್ಯುವು ಅವನನ್ನು ಉರುಳಿಸುವ ಮುನ್ನವೇ ಅತ್ಯಂತ ಶ್ರೇಷ್ಠವಾದ ಆಧ್ಯಾತ್ಮಿಕ ಸಂಪತ್ತನ್ನು ಪಡೆಯಲು - ವಿವೇಕಿಯಾದವನು ಪ್ರಯತ್ನಿಸಬೇಕು. ಇದೇ ಜೀವನದಲ್ಲಿಯೇ ಆಧ್ಯಾತ್ಮಿಕ ಉತ್ತುಂಗವನ್ನು ತಲುಪುವ ಶಕ್ತಿಯು ಮಾನವ ಜನ್ಮಕ್ಕಿದೆ. ಇಂದ್ರಿಯ ಸುಖವನ್ನು ಎಲ್ಲ ದೇಹಗಳಲ್ಲಿಯೂ ಪಡೆಯಬಹುದು."
ಭಾಗವತದಲ್ಲಿ ಬರುವ ಕೃಷ್ಣನ ಈ ಮಾತು ಇಂದ್ರಿಯಗಳಲ್ಲೇ ತಲ್ಲೀನರಾಗಿರುವವರಿಗೆ ಒಗ್ಗುವುದಿಲ್ಲ; "ಕೃಷ್ಣ" ಹಿಡಿಸುವುದಿಲ್ಲ; ಅರ್ಥವಾಗುವುದೂ ಇಲ್ಲ. ಹುಲುಮಾನವರ ಇಂತಹ ಬಗೆಬಗೆಯ ಹುಚ್ಚನ್ನು ಉಪನಿಷತ್ತುಗಳು ಶಮನಗೊಳಿಸಬಲ್ಲವು. ಅತೀಂದ್ರಿಯ ಶಕ್ತಿಗಳ ಉನ್ನತ ಆಯಾಮವನ್ನು ತಲುಪಲು ಮಾನವನಿಗೆ ದಿಕ್ಸೂಚಿಯಂತಿರುವ ಉಪನಿಷತ್ತುಗಳಲ್ಲಿ ವೇದಾಂತರ್ಗತ ಸಾರವೆಲ್ಲವೂ ಅಡಗಿದೆ. ಆದ್ದರಿಂದ ಮಾನವನ ಬದುಕಿನ ಮೊದಲ ಹದಿನೈದು ವರ್ಷಗಳಲ್ಲಿಯೇ ಉಪನಿಷತ್ತಿನೊಳಗೆ ಪ್ರವೇಶಿಸಿಬಿಡಬೇಕು.
ಆಧ್ಯಾತ್ಮಿಕ ನೆಲೆಗಟ್ಟು, ಮಾರ್ಗದರ್ಶನವಿಲ್ಲದಿದ್ದರೆ ಮಾನವನ ಪ್ರತಿಯೊಂದು ಕ್ರಿಯಾಕರ್ಮವೂ ತುಮುಲ ತಲ್ಲಣಗಳನ್ನು ಹೆಚ್ಚಿಸುತ್ತವೆ. ಆಗ ಉಪ್ಪುನೀರನ್ನು ಕುಡಿದಂತೆ - ತಣಿಯದ ತೃಷೆ ; ಅತೃಪ್ತಿ . ಆದ್ದರಿಂದಲೇ ವ್ಯರ್ಥ ಹೋರಾಟದ ಜಂಜಾಟಗಳಲ್ಲಿ ಸಿಲುಕಿ ಬಿಡುತ್ತೇವೆ. ತಮ್ಮ ಭಕ್ತರನ್ನು ಸಾಂಸಾರಿಕ ದ್ವಂದ್ವಗಳು ಕಾಡಿ ಬಸವಳಿದಾಗ - "ಅಧ್ಯಾತ್ಮವು ಹರಿಯುವ ನೀರಾದರೆ ಈ ಸಂಸಾರವು ನಿಂತ ನೀರು" ಎನ್ನುತ್ತಿದ್ದ ಶ್ರೀ ರಾಮಕೃಷ್ಣರು "ಸಂಸಾರದಲ್ಲಿ ಇರಬಹುದು; ಆದರೆ ಆ ಸಂಸಾರವು ನಿಮ್ಮ ಒಳಗೆ ಪ್ರವೇಶಿಸದಂತೆ ನೋಡಿಕೊಳ್ಳಿ" ಅನ್ನುತ್ತಿದ್ದರು. ನಿಂತ ನೀರು ಎಂದರೆ ಆಧ್ಯಾತ್ಮಿಕ ಮೃತ್ಯು. ದೋಣಿ ನೀರಿನಲ್ಲಿರಬೇಕು; ಆದರೆ ದೋಣಿಯಲ್ಲಿ ನೀರಿರಬಾರದು. ಇಂತಹ ಮನೋಸ್ಥಿತಿಯನ್ನು ಮೂಡಿಸಿಕೊಳ್ಳಲು ಅಸಾಧಾರಣ ಪೂರ್ವ ಸಿದ್ಧತೆಯು ಅವಶ್ಯವಾಗುತ್ತದೆ. ಉಪನಿಷತ್ತುಗಳು ಅಂತಹ ರಂಗವನ್ನು ರೂಪಿಸಿಕೊಳ್ಳಲು, ಸಾಮಾನ್ಯರೊಳಗಿನ ಅಸಾಮಾನ್ಯವನ್ನು ಸಮೀಪಿಸಲು ಸಹಕರಿಸುತ್ತವೆ. ತನ್ನ ಅಹಂನ್ನು ದಾಟಿ ಲೋಕಪ್ರಜ್ಞೆಯನ್ನು ಸಾಧಿಸುವುದಕ್ಕೆ ಸಂಸಾರವೆಂಬ ಕುರುಕ್ಷೇತ್ರ ಯುದ್ಧವನ್ನು ಮೊದಲು ಜಯಿಸಬೇಕಾಗುತ್ತದೆ ಎನ್ನುವ ವೇದಾಂತದ ಭಾವವನ್ನು ಇದೇ ಜನ್ಮದಲ್ಲಿಯೇ ಅರಿತರೆ - ಅದು ನಿಜವಾದ ಜೀವನ ವಾಗುತ್ತದೆ. ( "ಇಹ ಚೇದವೇದೀತ್ ಅಥ ಸತ್ಯಮಸ್ತಿ " - ಕೇನೋಪನಿಷತ್ತು)
"ಮಾನವನು ಅಸದೃಶ" ಎನ್ನುವ ವೇದಾಂತ ದೃಷ್ಟಿಯನ್ನು ವಿವರಿಸುತ್ತ, ಅಧ್ಯಾತ್ಮ ವಿಜ್ಞಾನದ ಪ್ರಯೋಜನವನ್ನು ಮನುಷ್ಯರು ಪಡೆಯಲೇಬೇಕು ಎಂಬುದನ್ನು ಸ್ವಾಮಿ ವಿವೇಕಾನಂದರು ಒತ್ತಿ ಹೇಳಿದ್ದಾರೆ. " ಈ ಅಧ್ಯಾತ್ಮ ವಿಜ್ಞಾನದ ಪ್ರಯೋಜನವೆಂದರೆ ಅದು ಪೂರ್ಣ ಮಾನವನನ್ನು ರೂಪಿಸುತ್ತದೆ. ಅದು ಯುಗಯುಗಗಳವರೆಗೂ ಕಾಯಲು ಬಿಡುವುದಿಲ್ಲ. ಈ ಬದುಕಿನಲ್ಲಿ ನಮ್ಮ ಕೆಲಸವನ್ನು ನಾವೇ ನಿರ್ವಹಿಸಬೇಕು. ಅದಕ್ಕೆ ನಮಲ್ಲಿ ಶಕ್ತಿ ಬೇಕು. ಮನುಷ್ಯರು ಈ ಪುಟ್ಟ ಜೀವನದ ಆಚೆಗೆ ನಡೆಯಬೇಕು - ಎಂಬುದು ಈ ಅಧ್ಯಾತ್ಮ ವಿಜ್ಞಾನದ ಅಪೇಕ್ಷೆ. ಮಾನವನ ಆಧ್ಯಾತ್ಮಿಕ ಬೆಳವಣಿಗೆಯ ಅಧ್ಯಯನವು - ಮಾನವ ಶಾಸ್ತ್ರ ಮತ್ತು ಪ್ರಾಣಿಶಾಸ್ತ್ರಗಳ ಅಧ್ಯಯನವನ್ನು ಇನ್ನೂ ಆಳಗೊಳಿಸುತ್ತದೆ. ಆದ್ದರಿಂದ ಇದು ಅಗತ್ಯ " ಎಂದು ವಿವೇಕಾನಂದರು ಸಾರಿದ್ದರು.
ಇಂದಿನ ವೈಶ್ವಿಕ ಪರಿಸರದಲ್ಲಿ ಎಲ್ಲೆಲ್ಲೂ ಆತಂಕ, ಭಯ, ಉದ್ವೇಗಗಳು ತಾಂಡವವಾಡುತ್ತಿವೆ. ಒಂದು ವಿಧವಾದ ಮಾನಸಿಕ ತುಮುಲದಿಂದ ಇನ್ನೊಂದಕ್ಕೆ, ಒಂದು ದುಃಖದಿಂದ ಮತ್ತೊಂದಕ್ಕೆ ಕುಪ್ಪಳಿಸುತ್ತಿರುವ ಸನ್ನಿವೇಶವು ಈಗ ನಮ್ಮ ಜೊತೆಗಿದೆ. ಇನ್ನೇನು? ಮುಂದೇನು? ಎನ್ನುವ ಲೌಕಿಕ ಕಳವಳದ ಮನೋಸ್ಥಿತಿಯಲ್ಲಿ ಬಹುತೇಕ ಜನರು ಬಳಲುತ್ತಿದ್ದಾರೆ. ಸಂಯಮ, ಸಮಭಾವದ ನೈತಿಕ - ಆಧ್ಯಾತ್ಮಿಕ ಎಚ್ಚರವೊಂದೇ ಇದಕ್ಕೆ ಪರಿಹಾರ. ಯಾವುದೇ ಸ್ವಸ್ಥ ಸಮಾಜವು ಭೌತಿಕ - ಸಾಮಾಜಿಕ ವಿಕಾಸ ಎಂಬುದರಿಂದಲೇ ಎಂದಿಗೂ ನಿರ್ಮಾಣವಾಗಲಾರದು. ಉಪನಿಷತ್ತುಗಳು ಅಲ್ಲಲ್ಲಿ "ಯೋಗಕ್ಷೇಮ " ದ ಪ್ರಸ್ತಾಪವನ್ನೂ ಮಾಡುತ್ತವೆ. ಲೌಕಿಕ ಪ್ರವೃತ್ತಿಗಳ ಸಮಸ್ತ ವ್ಯಾಪ್ತಿಯಲ್ಲಿ ನೋಡಿದರೆ - ಯೋಗ ಅಂದರೆ ಪಡೆದುಕೊಳ್ಳುವುದು ; ಕ್ಷೇಮ ಅಂದರೆ ಅದನ್ನು ಕಾಪಾಡಿಕೊಳ್ಳುವುದು. ಅರ್ಥಾತ್ - ಲೋಭ ಮತ್ತು ಮೋಹ. ನೈತಿಕ ಪ್ರೇರಣೆಯ ಚೌಕಟ್ಟನ್ನು ಮೀರಿದ ಲೌಕಿಕ ಮನೋಭಾವದಲ್ಲಿ - ಯೋಗಕ್ಷೇಮ ಎನ್ನುವುದು ಆಕ್ರಮಣಶಾಲಿಯಾಗುತ್ತದೆ; ಆಗ - ಪ್ರಭುತ್ವ ನಡೆಸುವ ಪ್ರೇರಣೆ ದೊರೆತು ನಿಜವಾದ ಶ್ರೇಯಸ್ಸು ನಮ್ಮಿಂದ ದೂರವಾಗುತ್ತದೆ. ತೋರಿಕೆಯ ಸಂಬಂಧಗಳನ್ನು ಬೆಳೆಸಿಕೊಳ್ಳುವುದರಿಂದಲೂ ಕೃತಕ ಶಿಷ್ಟಾಚಾರದಿಂದಲೂ ಯಾರಿಗೂ ನೆಮ್ಮದಿಯ ಬದುಕು ಸಿಗಲಾರದು. ಅದು ಉಪನಿಷದ್ದೃಷ್ಟಿ ಅಲ್ಲ. ಸ್ವಾರ್ಥವನ್ನು ಮೀರಿ ವಿವೇಕದ ಸ್ಥಿತಿಗೆ ಏರುವವರೆಗೂ - ತಾಂತ್ರಿಕ ದಕ್ಷತೆಯ ಜೊತೆಗೆ ನಿಯಂತ್ರಿತ ಸ್ವಪ್ರಜ್ಞೆಯಿಂದ ಮಾನವೀಕರಣಗೊಂಡ ಪವಿತ್ರಾತ್ಮರಾಗುವವರೆಗೂ ಮನುಷ್ಯರ ಶಿಕ್ಷಣವು ಪ್ರೌಢ, ಪ್ರಬುದ್ಧ, ಹೂರಣಯುಕ್ತವಾಗುತ್ತಲೇ ಸಾಗುವ ನಿಲ್ಲದ ಯಾತ್ರೆಯಾಗಬೇಕು. ಆಗ ಮಾತ್ರ ನಿಜವಾದ ವಿಕಾಸವಾದೀತು ಎಂಬುದು ಉಪನಿಷತ್ತಿನ ಸಂದೇಶ. ಭಾವನೆಗಳನ್ನು ಹೀಗೆ ಶಿಸ್ತಿಗೆ ಒಳಪಡಿಸಿ ಸ್ವಭಾವವನ್ನು ಶಿಷ್ಟಗೊಳಿಸುವ ಶಿಕ್ಷಣವು ಇಂದಿನ ಅತೀ ಅಗತ್ಯ. "ನ ವಿತ್ತೇನ ತರ್ಪಣೀಯೋ ಮನುಷ್ಯೋ..." ಮನುಷ್ಯನು ಐಶ್ವರ್ಯದಿಂದ ಎಂದೂ ತೃಪ್ತಿ ಹೊಂದುವುದಿಲ್ಲ ಎಂಬ ಅರಿವು ಬಾಲ್ಯದಲ್ಲಿಯೇ ಮೂಡಬೇಕಾಗಿದೆ.
ಬರ್ಟ್ರಂಡ್ ರಸ್ಸೆಲ್ ಅವರು ಹೇಳಿದಂತೆ - "ದಾರಿ ಗಳ ವಿಷಯದಲ್ಲಿ ಮಾನವರ ಕೌಶಲ - ಮತ್ತು - ಗುರಿ ಗಳ ವಿಷಯದಲ್ಲಿ ಮಾನವರ ದೋಷ - ಎನ್ನುವ ಇವೆರಡರ ನಡುವೆ ನಡೆಯುತ್ತಿರುವ ಒಂದು ಪಂದ್ಯದಲ್ಲಿ ನಾವೀಗ ಸಿಕ್ಕಿಕೊಂಡಿದ್ದೇವೆ. ದೋಷಪೂರ್ಣ ಗುರಿಗಳನ್ನು ಸಾಧಿಸಲು ಬೇಕಾಗುವ ಕೌಶಲವೂ ದೋಷಪೂರ್ಣವೇ ಆಗಿರುತ್ತದೆ. ಅಜ್ಞಾನ ಮತ್ತು ಅದಕ್ಷತೆಗಳಿಂದ ಮಾತ್ರವೇ ಮಾನವ ವಂಶವು ಇದುವರೆಗೂ ಕುಂಟುತ್ತ ಉಳಿದುಬಂದಿದೆ. ಆದರೆ, ಒಂದೊಮ್ಮೆ ಜ್ಞಾನ ದಕ್ಷತೆ ಮತ್ತು ದೋಷಗಳು ಒಂದಾದರೆ ಮಾನವ ವಂಶವು ಉಳಿಯುತ್ತದೆ ಎಂದು ಖಚಿತವಾಗಿ ಹೇಳುವಂತಿಲ್ಲ. (ಅದು ಮಹಾ ಗಂಡಾಂತರಕಾರಿ) ಜ್ಞಾನವೇ ಶಕ್ತಿ. ಆದರೆ ಒಳಿತಿಗೆ ಹೇಗೋ ಹಾಗೇ ಕೆಟ್ಟದ್ದಕ್ಕೂ ಅದು ಶಕ್ತಿಯೇ. ಹೀಗಾಗಿ ಮಾನವರು ಜ್ಞಾನವನ್ನು ಹೇಗೋ ಹಾಗೇ ವಿವೇಕವನ್ನು ಬೆಳೆಸಿಕೊಳ್ಳದಿದ್ದರೆ - ಜ್ಞಾನದ ವೃದ್ಧಿ ಎಂದರೆ ದುಃಖದ ಹೆಚ್ಚಳ ಎಂದೂ ಸಿದ್ಧವಾಗುತ್ತದೆ." ಎಂದು ರಸ್ಸೆಲ್ ಮಹಾಶಯರು ಅಂದೇ ಹೇಳಿದ್ದರು.... ಇಂದಿನ ವಿಶ್ವವಿದ್ಯಾಲಯಗಳು ಹೇಗಿವೆ? ನಾವು ಇದೇ ದುಃಖದ ದಾರಿಯಲ್ಲಿದ್ದೇವೆಯೆ? ಎಂಬುದನ್ನು ಇಂದಿನ ತರ್ಕದ ಕರಕರೆಗಳು ಯೋಚಿಸಬೇಕಾಗಿದೆ.
ಸುಂದರ ಪದಭಂಡಾರದ ವೈಜ್ಞಾನಿಕವಾದ ಸಂಸ್ಕೃತ ಭಾಷೆಯಲ್ಲಿ "ಪಶು" ಎಂಬ ಒಂದು ಶಬ್ದವಿದೆ. ಪಾಶ ಎಂಬ ಮೂಲದಿಂದ ಈ "ಪಶು" ಹೊರಟಿದೆ. ಪಾಶ ಅಂದರೆ ಬಂಧನ. ಸ್ವ ಇಚ್ಛೆಯಿಂದ ಬಂಧನಕ್ಕೆ ಒಳಗಾಗುವ ವರ್ಗವೇ ಪಶು ವರ್ಗ. ಸಾಮಾನ್ಯ ಬಳಕೆಯಲ್ಲಿ "ಮನುಷ್ಯರಲ್ಲದ ಪ್ರಾಣಿ"ಗಳನ್ನು ಮಾತ್ರ ನಾವು - "ಪಶುಗಳು" ಎನ್ನುತ್ತಿದ್ದೇವೆ. ಆದರೆ "ಪಶು ಎಂಬುದರ ಅರ್ಥ - ಯಾರು ಬಂಧಿತರೋ ಯಾರು ಸಿಕ್ಕಿ ಹಾಕಿಕೊಂಡಿದ್ದಾರೋ ಯಾರು ಪ್ರಕೃತಿಯ ಮೂಲ ಸ್ವಭಾವದ ಗುಲಾಮರಾಗಿಯೇ ಇನ್ನೂ ಉಳಿದಿರುವರೋ ಯಾರು ಮುಕ್ತರಾಗಿಲ್ಲವೋ - ಅವರೆಲ್ಲರೂ ಪಶುಗಳೇ. ಸ್ವಾಭಾವಿಕ ಮೂಲ ಸ್ವಭಾವದಿಂದ ಉನ್ನತ ಸ್ಥಿತಿಗೆ ಏರುವ ಸಾಧನೆಯಲ್ಲಿ ತೊಡಗಿದರೆ ಮಾತ್ರ ಪಶುತ್ವದ ಸಂಕೋಲೆಯಿಂದ ಕಳಚಿಕೊಳ್ಳಲು ಸಾಧ್ಯ. ಪಶುತ್ವ ಎಂದರೆ ಜಡತ್ವ. ಈ ಜಡತ್ವದಿಂದ ಪಾರಾಗಲು - ಬಾಹ್ಯ ಅವಲಂಬನೆಯನ್ನು ಬಿಟ್ಟು ನಮ್ಮ ಚಿಂತನೆಯ ಶೈಲಿಯನ್ನೇ ಬದಲಿಸಿಕೊಳ್ಳಬೇಕು. ಶೀರ್ಷಾಸನದ ಸ್ಥಿತಿಯಲ್ಲಿದ್ದರೆ ನಮಗೆ ಎಲ್ಲವೂ ತಲೆ ಕೆಳಗಾಗಿಯೇ ಕಾಣುತ್ತದೆ. ನೆಟ್ಟಗೆ ನಿಂತು ನೋಡುವುದೇ ಇದಕ್ಕೆ ಮದ್ದು. ಆಗ ನಮ್ಮ ದೃಷ್ಟಿಯು ನೇರ, ಸ್ಥಿರವಾಗಿದ್ದು - ನಮ್ಮ ಕ್ರಿಯೆ ಮತ್ತು ಪ್ರತಿಕ್ರಿಯೆಗಳೆರಡೂ ಸ್ಥಿಮಿತದಲ್ಲಿರುತ್ತವೆ. ಅದಕ್ಕಾಗಿ ಬದುಕಿನ ಭಂಗಿಯನ್ನು ಬದಲಿಸಿಕೊಳ್ಳಬೇಕಾಗುತ್ತದೆ.
ಉನ್ನತ ವಿಚಾರಗಳನ್ನು ಮಾತ್ರ ಮನನ ಮಾಡುತ್ತಿರುವುದರಿಂದ ಯಾವುದೇ ಬದುಕು ಸ್ವಚ್ಛವಾಗುತ್ತದೆ; ಹಗುರವೆನಿಸುತ್ತದೆ. ಅಂತಹ ಮನಸ್ಸುಗಳು ಕ್ರಮೇಣ ವೈಚಾರಿಕವಾಗಿ ಉನ್ನತ ಸ್ತರಕ್ಕೆ ಏರಿದಂತೆ - ಹೆಚ್ಚು ಹೆಚ್ಚು ಸಹಿಷ್ಣುವಾಗುತ್ತದೆ. ನಮ್ಮ ಕ್ರಿಯೆ ಮತ್ತು ಪ್ರತಿಕ್ರಿಯೆಗಳೆರಡೂ ಆಗ ಸಮತೋಲನದಲ್ಲಿರುತ್ತದೆ.
ಭಗವಾನ್ ಬುದ್ಧನ ಮುಖಕ್ಕೆ ಯಾರೋ ಒಬ್ಬ ಉಗುಳಿದನಂತೆ. ಆಗ ಬುದ್ಧನು ಸುಮ್ಮನೆ ಅದನ್ನು ಒರೆಸಿಕೊಂಡು "ಏನಪ್ಪ...ಇನ್ನೇನಾದರೂ ಹೇಳುವುದು ಇದೆಯೆ?" ಎಂದು ಆ ಉಗುಳಿದಾತನನ್ನು ಕೇಳಿದ. ಆಗ ಶಿಷ್ಯನಾದ ಆನಂದನು ಕುಪಿತಗೊಂಡು "ಸ್ವಾಮೀ, ಆತನನ್ನು ಏನು ಕೇಳುತ್ತಿದ್ದೀರಿ? ಆತ ನಿಮ್ಮ ಮುಖಕ್ಕೆ ಉಗುಳಿದ್ದಾನೆ. ನೀವು ನನಗೆ ಅವಕಾಶ ಕೊಡಿ. ಆತನನ್ನು ವಿಚಾರಿಸಿಕೊಳ್ಳುತ್ತೇನೆ.." ಎನ್ನುತ್ತಾನೆ.
ಆಗ ಬುದ್ಧನು "ನಾನು ಆತನನ್ನು ಕ್ಷಮಿಸಿದ್ದೇನೆ. ಏಕೆಂದರೆ ಅವನು ಅಜಾಗ್ರತ ಸ್ಥಿತಿಯಲ್ಲಿದ್ದಾನೆ. ಅವನಿಗೆ ಏನನ್ನೋ ಹೇಳಬೇಕು ಅನ್ನಿಸಿದೆ. ಆದರೆ ಶಬ್ದಗಳ ಮೂಲಕ ಹೇಳಲು ಬರುತ್ತಿಲ್ಲ. ಅದಕ್ಕಾಗಿ ಉಗುಳಿನ ಮೂಲಕ ಹೇಳುತ್ತಿದ್ದಾನೆ. ಅದಕ್ಕಾಗಿ ನಾನು ಆತನಲ್ಲಿ ಇನ್ನೇನಾದರೂ ಹೇಳುವುದಕ್ಕಿದೆಯಾ? ಎಂದು ಕೇಳಿದ್ದು.." ಎನ್ನುತ್ತ ಆ ಉಗುಳಿದ ವ್ಯಕ್ತಿಯತ್ತ ತಿರುಗಿ "ಏನಪ್ಪ, ಇನ್ನೂ ಏನಾದರೂ ಹೇಳಲಿಕ್ಕಿದ್ದರೆ ಹೇಳು..." ಅಂದ.
ಬುದ್ಧನ ಮಾತುಗಳನ್ನು ಕೇಳಿದ ಆ ಉಗುಳುಕೋರನಿಗೆ ಆಗ ಏನು ಮಾಡಬೇಕೆಂದು ತಿಳಿಯಲಿಲ್ಲ. ಆತ ಏನೊಂದೂ ಹೇಳದೆ ಅಲ್ಲಿಂದ ಹೊರಟುಹೋದ. ಆದರೆ ಮರುದಿನ ಮತ್ತೆ ಬಂದ. ರೋದಿಸುತ್ತ ಬುದ್ಧನಿಗೆ ನಮಸ್ಕರಿಸಿ "ಕ್ಷಮಿಸಿ. ನಿನ್ನೆ ನಾನು ಉಗುಳಿದೆ. ದೊಡ್ಡ ತಪ್ಪು ಮಾಡಿದೆ. ಅನಂತರ ತುಂಬ ವೇದನೆಯಾಯಿತು. ರಾತ್ರಿಯಿಡೀ ನಿದ್ದೆ ಬರಲಿಲ್ಲ..." ಎನ್ನುತ್ತ ಬುದ್ಧನ ಪಾದಗಳಿಗೆ ಎರಗಿದ.
"ಅಯ್ಯೋ ಪೆದ್ದಾ, ನೀನು ಉಗುಳಿರಬಹುದು. ಆದರೆ ಅದನ್ನು ನಾನು ಸ್ವೀಕರಿಸಲೇ ಇಲ್ಲ. ಅನಗತ್ಯವಾಗಿ ದುಃಖಿಸಬೇಡ. ನೀನು ನನ್ನ ಮುಖಕ್ಕೆ ಉಗುಳಿದೆ. ಅದರಿಂದ ನನಗೇನೂ ನೋವಾಗಲಿಲ್ಲ. ಆದ್ದರಿಂದ ನೀನು ಪಶ್ಚಾತ್ತಾಪ ಪಡುವ ಅಗತ್ಯವೇ ಇಲ್ಲ." ಎನ್ನುತ್ತ ಬುದ್ಧನು ಉಗುಳಿದವನನ್ನು ಸಾಂತ್ವನಗೊಳಿಸಿದ.
ಅನಂತರ ಬುದ್ಧನು ತನ್ನ ಶಿಷ್ಯನಾದ ಆನಂದನಿಗೆ ಹೇಳಿದ..." ಆನಂದ, ಈಗಲೂ ಆತನಿಗೆ ಏನೋ ಹೇಳಬೇಕೆಂದಿದೆ. ಆದರೆ ಆತನಿಗೆ ಅದನ್ನು ಪದಗಳ ಮೂಲಕ ನನ್ನೆದುರು ವ್ಯಕ್ತಪಡಿಸಲು ಆಗುತ್ತಿಲ್ಲ. ಯಾಕೆಂದರೆ ಅದು ಅವನ ಮಾತಿನ ಅಳವಿಗೆ ಸಿಗುತ್ತಿಲ್ಲ. ಆದ್ದರಿಂದಲೇ ನನ್ನ ಪಾದಗಳನ್ನು ತನ್ನ ಕಂಬನಿಯಿಂದ ತೊಳೆದಿದ್ದಾನೆ.."
ಇದು ಜ್ಞಾನದ ಪರಿಣಾಮ. ಉಗುಳುವುದೂ ಒಂದು ಭಾಷೆಯೇ. ಆಲಿಂಗಿಸುವುದೂ ಒಂದು ಭಾಷೆಯೇ. ನಮ್ಮ ಆಂಗಿಕ ವರ್ತನೆಗಳೆಲ್ಲವೂ ಭಾಷೆಗಳೇ. ನಮ್ಮ ಹೃದಯದಾಳದಲ್ಲಿ ಏನೋ ಒಂದು ಇದೆ; ಆಳದಲ್ಲೆಲ್ಲೋ ಅದು ಅವ್ಯಕ್ತವಾಗಿದೆ - ಪ್ರಕಟವಾಗಲು ಚಡಪಡಿಸುತ್ತಿದೆ ಎಂದಾದಾಗ ಅದು ಸಾಮಾನ್ಯ ಬುದ್ಧಿಸ್ತರದಲ್ಲಿ ಒಂದು ರೀತಿಯಲ್ಲಿ ವ್ಯಕ್ತವಾದರೆ ಜ್ಞಾನಿಯ ಉನ್ನತ ಸ್ತರದಲ್ಲಿ ಇನ್ನೊಂದು ರೀತಿಯಲ್ಲಿ ವ್ಯಕ್ತವಾಗುತ್ತದೆ.
ಹೀಗೆ ಚಿಂತನೆಗೆ ಪ್ರಚೋದಿಸುತ್ತ ವಿವೇಕದ ನೆಲೆಯನ್ನು ವಿಸ್ತರಿಸಿಕೊಳ್ಳಬಹುದಾದ ಇಂತಹ ಪಾಠಗಳು ಉಪನಿಷತ್ತಿನ ವ್ಯಾಖ್ಯಾನಗಳಲ್ಲಿ ದಂಡಿಯಾಗಿವೆ. ಮಾನವ ಜನ್ಮವನ್ನು ಸಾರ್ಥಕ ಪಡಿಸಿಕೊಳ್ಳುವ ಭದ್ರ ಮಾರ್ಗವನ್ನು ತೋರಿಸುವ ಉಪನಿಷತ್ತುಗಳು ಶ್ರೇಷ್ಠ ಮಾನವ ಸಂತಾನವನ್ನು ಉಳಿಸಿ ಬೆಳೆಸುವ ಮಹದುದ್ದೇಶವನ್ನೂ ಹೊಂದಿವೆ. "ಮಾನವ ಜನ್ಮ ದೊಡ್ಡದು; ಅದನ್ನು ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ.." ಎಂದು ಪುರಂದರದಾಸರು ನಯವಾಗಿ ಗದರಿಸಿದ್ದು ಅದಕ್ಕೇ. ಇದೂ ಉಪನಿಷದ್ಭಾವವೇ. ಭಾರತೀಯ ಸಂಸ್ಕೃತಿಕೇಂದ್ರದ ಆಳದಲ್ಲಿರುವ - ಶಕ್ತಿಯ ಕಾರಂಜಿಯೇ ಉಪನಿಷತ್ತು.
ಯಾವುದೇ ಅಂತಿಮ ರಹಸ್ಯ ಅರಿಯಲು ವಿನಯ ಬೇಕು. ಉಪನಿಷತ್ತುಗಳು ಅಂತಹ ವಿನಯ ಕಲಿಸುತ್ತವೆ. ಸ್ವಸ್ಥ ಗಂಭೀರ ಬದುಕಿಗೆ ದಾರಿ ತೋರಿಸುತ್ತವೆ. ನಿಜರಹಸ್ಯದತ್ತ ಸ್ನೇಹದಿಂದ ನಮ್ಮನ್ನು ಸೆಳೆಯುತ್ತವೆ. ಇದುವರೆಗೆ ಭೌತಿಕ ಜಗತ್ತಿನ ರಹಸ್ಯ ಶೋಧನೆಗೆ ಹೊರಟವರೆಲ್ಲರೂ ತಮ್ಮ ಕೈಗೆಟುಕದ, ತಮ್ಮಿಂದ ಆಚೆಗಿರುವ ಇನ್ನೇನೋ ರಹಸ್ಯದತ್ತ ಬೆರಳು ತೋರಿಸುತ್ತಲೇ ನಡೆದಿದ್ದಾರೆ. ಆಧುನಿಕ ವಿಜ್ಞಾನವೂ "ಇಷ್ಟೇ ಅಲ್ಲ; ಇನ್ನೂ ಏನೋ ಇದೆ" ಎನ್ನುತ್ತಲೇ ಬಂದಿದೆ. ಹೀಗಿರುವಾಗ ಹೊರ ಕಣ್ಣಿನಿಂದ - ಭೌತಿಕವಾಗಿ ಕಂಡದ್ದನ್ನು ಮಾತ್ರ ಒಪ್ಪುತ್ತೇನೆ ಅನ್ನುವವರೆಲ್ಲರೂ ತರ್ಕದಲ್ಲಿ ತೊಡಗುವ ಮೊದಲು ಉಪನಿಷತ್ತನ್ನು ಹಿಂಬಾಲಿಸುವುದು ಒಳಿತು. ಮನುಷ್ಯನ ಆಕಾರದಲ್ಲಿ ಇರುವಾಗಲೇ ಆಧ್ಯಾತ್ಮ ಸತ್ಯವನ್ನು ತಿಳಿದರೆ ಒಳ್ಳೆಯದು; ಮನುಷ್ಯನ ಶರೀರವು ಪಂಚಭೂತಗಳಲ್ಲಿ ಬೆರೆಯುವುದಕ್ಕೆ ಮೊದಲು ಆ ಸತ್ಯದ ಅರಿವಾದರೆ ಬಹಳ ಒಳ್ಳೆಯದು. ಮನುಷ್ಯನು ಗುರಿಯಿಲ್ಲದ ತನ್ನ ಬಾಹ್ಯ ಓಟವನ್ನು ಬಿಟ್ಟು ತನ್ನೊಳಗೆ ತಾನು ಯಾತ್ರಿಸಲು ಆರಂಭಿಸಿದರೆ, ತನ್ನ ತಪ್ಪಿದ ದಿಕ್ಕನ್ನು ಬದಲಿಸಿಕೊಳ್ಳತೊಡಗಿದರೆ, ಬಾಹ್ಯ ಪ್ರಾಪಂಚಿಕತೆಯಿಂದ ಆಂತರಿಕ ವಾಸ್ತವದೆಡೆಗೆ ದೃಷ್ಟಿ ನೆಟ್ಟರೆ ಮನುಷ್ಯನಾದ ಸದವಕಾಶದ ಸದುಪಯೋಗವಾದಂತೆ; ಸೃಷ್ಟಿಯನ್ನೂ ಗೌರವಿಸಿದಂತೆ - ಎನ್ನುತ್ತದೆ ಉಪನಿಷತ್ತು.
ಪ್ರತಿಯೊಬ್ಬ ವ್ಯಕ್ತಿ-ಜೀವಿಗಳೂ ಪರಿಪೂರ್ಣವಾದಾಗ ಮಾತ್ರ ಇಡೀ ಸಮಷ್ಟಿಯ ಸುಂದರ ಚಿತ್ರವು ಮೂಡುವುದು ಸಾಧ್ಯ. ಅದು - ಮನುಷ್ಯಪ್ರಯತ್ನಕ್ಕೆ ಎಟುಕದ ಆದರ್ಶ. ಲೌಕಿಕ ಸಮಾಜದ ಸಾಮಾನ್ಯ ಅಭಿರುಚಿಯು ಸದಾಕಾಲವೂ ತಪ್ಪೇ ಆಗಿರುತ್ತದೆ. ಉಪನಿಷತ್ ಮಾರ್ಗದಲ್ಲಿ ನಡೆಯುತ್ತ - ಅಂತಹ ತಪ್ಪುಗಳನ್ನು ಮಿತಿಗೊಳಿಸಿಕೊಂಡರೂ ಸಹನೀಯ ಬದುಕು-ಸಮಾಜವನ್ನು ಕಟ್ಟಿಕೊಳ್ಳಬಹುದು. ಆದ್ದರಿಂದ ಯಾವುದೇ ಪ್ರಯತ್ನವಿಲ್ಲದೆ ಹಂತಹಂತವಾಗಿ ಸಮಾಜವು ತಾನಾಗಿಯೇ ಸುಧಾರಣೆ ಕಾಣುತ್ತದೆ ಎಂಬ ಕನಸನ್ನು ಕಾಣಲಾಗುವುದಿಲ್ಲ. ಭಗವಂತನೇ ಅವತಾರ ಎತ್ತಿ ಬಂದರೂ - ಸಮಷ್ಟಿಯಲ್ಲಿ ಏಕಕಾಲದಲ್ಲಿ ಅಮೃತಭಾವವನ್ನು ತುಂಬುವುದು ಅಸಾಧ್ಯ. ಶ್ರೀ ರಾಮ - ಕೃಷ್ಣರ ಅವತಾರದ ನಂತರವೂ ರಾಕ್ಷಸ ಸಂತಾನದ ಸಮೂಲ ನಾಶವಾಗಲಿಲ್ಲ! ಏಕೆಂದರೆ ಕೆಡುಕುಗಳಿಗೆ ನಿರೋಧಕ ಶಕ್ತಿ ಮತ್ತು ಆಯುಷ್ಯ - ಜಾಸ್ತಿ; ಒಳಿತುಗಳು ಸೂಕ್ಷ್ಮ ಮತ್ತು ನುಗ್ಗಿ ಆಕ್ರಮಿಸಿಕೊಳ್ಳದವುಗಳು. ಆದ್ದರಿಂದಲೇ ಒಳಿತಿನ ಭಾವಗಳನ್ನು ಪ್ರಯತ್ನಪೂರ್ವಕವಾಗಿ ಪೋಷಿಸಬೇಕಾಗುತ್ತದೆ.
"ಉದ್ಧರೇದಾತ್ಮದಾತ್ಮಾನಾಂ " - ಅವರವರನ್ನು ಅವರವರೇ ಉದ್ಧರಿಸಿಕೊಳ್ಳಬೇಕೆಂದು ವೇದಾಂತದ ಹಲವು ಸಂದರ್ಭಗಳಲ್ಲಿ ಸೂಚನೆ ಸಿಗುತ್ತದೆ. ಅಂತಃಶುದ್ಧಿಯು ಈ ನಿಟ್ಟಿನಲ್ಲಿ ಮೊದಲ ಹೆಜ್ಜೆ. ಅಂತಃಕರಣವು ನಮ್ಮ ಆಂತರಿಕ ಇಂದ್ರಿಯ. ಉಳಿದ ಎಲ್ಲ ಇಂದ್ರಿಯಗಳು ನಮ್ಮನ್ನು ಹೊರಗೆ ಕರೆದೊಯ್ದರೆ ಅಂತಃಕರಣವು ನಮ್ಮನ್ನು ಒಳಗೆ ಕರೆದೊಯ್ಯುತ್ತದೆ. ಆದರೆ ಈ ಅತೀಂದ್ರಿಯವನ್ನು ನಾವು ಮನುಷ್ಯರು ಉಪಯೋಗಿಸುವುದೇ ಇಲ್ಲ. ಎಂದೂ ಉಪಯೋಗಿಸದೇ ಇರುವ ದೇಹಭಾಗವು ಸಹಜವಾಗಿ ಶಿಥಿಲಗೊಳ್ಳುತ್ತದೆ. ಬರಬರುತ್ತ ನಿರ್ಜೀವವಾಗುತ್ತದೆ. ಅನೇಕ ಜನ್ಮಗಳಿಂದಲೂ ಉಪಯೋಗಿಸದೆ ಜಡ್ಡಾಗಿರುವ ನಮ್ಮ ಅಂತಃಕರಣಕ್ಕೆ ಈಗ ಜುಮ್ಮು ಹಿಡಿದಿದೆ. ಈಗ ಅದನ್ನು ತಿಕ್ಕಿ ಒತ್ತಿ ಮತ್ತೊಮ್ಮೆ ಜೀವಸಂಚಾರಕ್ಕೆ ಸಿದ್ಧಗೊಳಿಸಬೇಕಾಗುತ್ತದೆ. ಅದಕ್ಕೆ ಅಪಾರವಾದ ಸಹನೆ ಬೇಕು.
ಜೊತೆಗೆ - ಊರು ಉದ್ಧಾರ ಮಾಡುವ ಪ್ರಚಾರಪ್ರಿಯ ಬಾಹ್ಯ ತಂಟೆಗಳಿಗೆ ಕಡಿವಾಣ ಹಾಕಲೇಬೇಕಾಗಿದೆ. ಅತಿಯಾದರೆ ಪರೋಪಕಾರವೂ ವ್ಯಸನವೇ . ಸಪಾತ್ರ ಸಜ್ಜನರಿಗಲ್ಲದೆ - ಸಾರಾಸಗಟಾಗಿ ಕೈಗೊಳ್ಳುವ ಉಪಕಾರ ಶಿಬಿರಗಳಿಂದ ಸಾಮಾಜಿಕ ಏರುಪೇರುಗಳಾಗಿ ಒಟ್ಟಾರೆ ಸಮಾಜದ ಸ್ವಾಸ್ಥ್ಯವೂ ಕೆಡಬಹುದು ಎಂಬುದು ಈಗಾಗಲೇ ಸಿದ್ಧವಾಗಿದೆ. ಇಂತಹ ವ್ಯಾಯಾಮಗಳಿಂದ ಸ್ವಂತಕ್ಕಾಗಲೀ ಇತರರಿಗಾಗಲೀ ಆಗುವ ಅನುಕೂಲಕ್ಕಿಂತ - ಪರೋಕ್ಷ ಅನಾನುಕೂಲವೇ ಹೆಚ್ಚು. ಉಪಕಾರವೂ ಒಂದು ಶಸ್ತ್ರ. ಅದರ ಪ್ರಯೋಗ ಮತ್ತು ಉಪಸಂಹಾರದ ಎರಡೂ ಬಗೆಯ ವಿದ್ಯೆಯನ್ನು ತಿಳಿದವರು ಮಾತ್ರ ಉಪಕಾರ ಮಾಡಲು ಅರ್ಹರಾಗುತ್ತಾರೆ. ಹಾಗೆ ನೋಡಿದರೆ... ಯಾರೂ ಯಾರನ್ನೂ ಸಾದ್ಯಂತವಾಗಿ ಉದ್ಧರಿಸಲು ಆಗುವುದಿಲ್ಲ ; ಸ್ವಯಂ ಸಹಕರಿಸಿಕೊಳ್ಳುವ ಕ್ರಿಯೆಯೇ - ಸರ್ವೋತ್ತಮವಾದುದು - ಎಂಬುದು ಉಪನಿಷತ್ತಿನ ಸಂದೇಶ. ಈ ಅರಿವು ನಮ್ಮಲ್ಲಿ ಮೂಡದಿದ್ದರೆ "ಕೆರೆಯುವುದು, ಬರೆಯುವುದು, ಉಜ್ಜುವುದು" ಇತ್ಯಾದಿ ವ್ಯರ್ಥ ಕೆಲಸದಲ್ಲಿಯೇ ಇಡೀ ಬದುಕು ಮುಗಿಯುತ್ತದೆ.
ಲೌಕಿಕವಾದದ ಕ್ರಮಬದ್ಧ ಸರಪಣಿಗೆ ಕಟ್ಟಿಕೊಂಡರೆ - ಅದು - ಒಂದು ಬದುಕಿನ ಶಕ್ತಿಯನ್ನೆಲ್ಲ ಸ್ಥಗಿತಗೊಳಿಸಿ ಅದರ ಸೌಂದರ್ಯವನ್ನೇ ಹಾಳುಮಾಡಬಹುದು. ಈ ಲೋಕವೊಂದು ಸಂತೆ. ಬೃಹತ್ ಲೋಕಶಕ್ತಿಯ ಜೀವಸಮುದ್ರದ ಮಥನಕ್ಕೆ ನಮ್ಮೊಳಗಿನ ಶಕ್ತಿ ಸಾಲದು. ಆದರೆ... ಯಾವುದೇ ವ್ಯಕ್ತಿಯು ತಾನು ತನ್ನಷ್ಟಕ್ಕೆ ಸರಿಯಾಗಿರಲು ಪ್ರಯತ್ನಿಸುವುದು ಸಾಧ್ಯವಿದೆ. ಆದರೆ ಇನ್ನೊಬ್ಬರಿಗೆ ಉಪಕರಿಸಿ ಇತರರನ್ನು ನೇರಗೊಳಿಸುವ ಕ್ರಿಯೆಗಳೆಲ್ಲವೂ ಅಪಾಯಕಾರಿ ಸಾಹಸಕ್ರೀಡೆಗಳು. ಅವತಾರವರಿಷ್ಠರಾದವರು ನಡೆಸುವಂತಹ ಸಾಹಸದ ಕ್ರಿಯೆಗಳನ್ನು ವೇಷಧಾರಿಗಳೆಲ್ಲರೂ ನಡೆಸಲು ಪ್ರಯತ್ನಿಸಿದರೆ - ಅವು ಹಾಸ್ಯಾಸ್ಪದವಾಗುವುದೂ ಇದೆ. ಅದು ನಾಯಿಯ ಬಾಲಕ್ಕೆ ನಳಿಗೆ ಹಾಕಿ ನೇರಗೊಳಿಸಲು ಯತ್ನಿಸಿದಂತೆ ವ್ಯರ್ಥವಾಗುವುದು ಸಾಮಾನ್ಯ. ಆದ್ದರಿಂದ ಮತ್ತೊಮ್ಮೆ ಮೂಲ ಗರ್ಭಗುಡಿಯನ್ನು ಪ್ರವೇಶಿಸಬೇಕು ಎಂದಾದರೆ ನಮ್ಮ ಅದಮ್ಯ ಏಕನಿಷ್ಠೆಯು ಮಾತ್ರ ಉಪಕರಿಸಬಲ್ಲದು. ಅನುಭವಜನ್ಯ ತಿಳಿವಿನೆಡೆಗೆ - ನಮ್ಮ ಶ್ರದ್ಧೆ- ನಿಷ್ಠೆಗಳೇ ನಮ್ಮನ್ನು ಕರೆದೊಯ್ಯಬಲ್ಲದು. ಇದು ಅಭಯಪ್ರದ ಪಥ - ಎನ್ನುತ್ತವೆ ಉಪನಿಷತ್ತುಗಳು.
ಉಪನಿಷತ್ತುಗಳೆಂದರೆ ಭಯಹಾರಕ; ಅಭಯದಾಯಕ. ತನಗೆ ತಾನು ಅರ್ಥವಾಗಲಾಗದ ಒಂದು ರಹಸ್ಯವೇ ತಾನು - ಎಂಬಷ್ಟನ್ನಾದರೂ ಮನುಷ್ಯನು ಅರ್ಥ ಮಾಡಿಕೊಂಡು ಅಷ್ಟನ್ನಾದರೂ ಒಪ್ಪಿಕೊಳ್ಳಲು, ಹದವರಿತು ಬದುಕಲು - ಉಪನಿಷತ್ತನ್ನು ಒಮ್ಮೆಯಾದರೂ ಪ್ರವೇಶಿಸಬೇಕು. ಎಲ್ಲರಿಗೂ ಅಂತಿಮ ಗುರಿಯನ್ನು ತಲುಪಲಾಗದಿದ್ದರೂ ಇದರಿಂದಾಗಿ ಸ್ವಸ್ಥ ಮನಸ್ಸಿನ ಸಾತ್ವಿಕ ಸಮಾಜವಂತೂ ಉದಿಸಬಹುದು. ಈ ನಿಟ್ಟಿನಲ್ಲಿ ಉಪನಿಷತ್ತುಗಳು ನಮಗೆ ಸಮರ್ಥ ಮಾರ್ಗದರ್ಶನ ನೀಡಬಲ್ಲವು.
ಉಪನಿಷತ್ತಿನ ಋಷಿಗಳು ನಿರ್ಭೀತಿಯಿಂದ ಪರಸ್ಪರ ಪ್ರಶ್ನೆಗಳನ್ನು ಕೇಳಿಕೊಂಡರು; ಯಾಕೆ? ಏನು? ಹೇಗೆ? ಯಾರು? ಯಾರಿಂದ? ಎಂದು ತಾವೇ ಕೇಳಿಕೊಳ್ಳುತ್ತ ಉತ್ತರಾನ್ವೇಷಿಯಾದರು; ಪ್ರಶ್ನೆಯ ಹಿಂದೇ ನಡೆದರು. ಉತ್ತರವನ್ನೂ ಪಡೆದರು. ತಾವು ಕಂಡುದನ್ನು ಶ್ರುತಿ ರೂಪದಲ್ಲಿ ವರ್ಗಾಯಿಸುತ್ತ ಬಂದರು. ಎಷ್ಟೋ ಜ್ಞಾನ ಬಿಂದುಗಳು ಚೆಲ್ಲಿಹೋದರೂ ಮುಂದೆ ವೇದವ್ಯಾಸರ ನಂತರ - ಸ್ಮೃತಿಯಾಗಿಯೂ - ವಿಭಿನ್ನ ರೂಪದಲ್ಲಿ ಉಪನಿಷತ್ ವೃತ್ತಾಂತಗಳು ಉಳಿದುಕೊಂಡಿವೆ.
ಆದರೆ ಉಪನಿಷತ್ತಿನ ಆಧ್ಯಾತ್ಮಿಕ ಅನುಭವವನ್ನು ಯಥಾವತ್ತಾಗಿ ವಿವರಿಸುವ ಸಾಮರ್ಥ್ಯವು ಯಾವುದೇ ಭಾಷೆಗಿಲ್ಲ; ಭಾಷ್ಯಕ್ಕೂ ಇಲ್ಲ. ಹೇಳಿದಷ್ಟೂ ವಿಸ್ತರಿಸಲ್ಪಡುವ ವಿಷಯವಿದು. ಇಂದ್ರಿಯ ಚೇತನದ ಮಣ್ಣಿನ ನಾಲಗೆಗಳಿಗಂತೂ ಉಪನಿಷತ್ತಿನ ಭಾರವನ್ನು ತಾಳಿಕೊಳ್ಳಲು ಆಗುವುದೇ ಇಲ್ಲ. ಆಯಾ ಕಾಲದ ಭಾಷೆಯ ವೈಖರಿಯ ವ್ಯತ್ಯಾಸದಿಂದಲೂ - ಹಳೆಯ ಪಾಠಗಳನ್ನು ಅನುಸರಿಸುವಾಗ ಉಪನಿಷದ್ಭಕ್ತರಿಗೆ ಕ್ಲಿಷ್ಟತೆಯ ಅನುಭವವಾಗಬಹುದು. "ನಾನು ಅವನೇ ಆಗದೆ (ಅಹಂ ಬ್ರಹ್ಮಾಸ್ಮಿ) ಬ್ರಹ್ಮ ಸತ್ಯವು ಅನುಭವಕ್ಕೆ ನಿಲುಕದು" ಎಂಬ ಒಂದೇ ಒಂದು ಸೂತ್ರವನ್ನು ಬಿಡಿಸಲು ಆಚಾರ್ಯರುಗಳು ಅದೆಷ್ಟು ಮಥನ ನಡೆಸಿರಬಹುದು? ಆದರೂ... ಏನೋ ಅಪೂರ್ಣತೆ! ಮಾತಿಗೆ ನಿಲುಕದ ಅನನ್ಯತೆ! ಇಂದ್ರಿಯಗಳ ಒಡೆತನದ ಮಿಥ್ಯ ಜಗತ್ತಿನಲ್ಲಿದ್ದು ನಡೆಸುವ ಸತ್ಯದ ಹುಡುಕಾಟದ ವೈಕಲ್ಯ! ಆಧುನಿಕತೆಯೆಂಬ ಗೊಂದಲಿಗರ ನಿತ್ಯದ ಶಬ್ದ ಮಾಲಿನ್ಯವನ್ನು ನಿಲ್ಲಿಸಿ ಏಕಾಂತದಲ್ಲಿ ಮೌನ ತಪಸ್ವಿಗಳಾಗದೆ - ಚೈತನ್ಯದ ಪೂಜೆ ನಡೆಸಲು ಬಾರದು; ಅನುಭವವೂ ದಕ್ಕದು.
ಪೌರಾಣಿಕ ಯುಗದಲ್ಲಿ ಆಗ, ಒಬ್ಬನೇ ಒಬ್ಬ ಯಯಾತಿಯಿದ್ದ. ಅಥವ ಯಯಾತಿಯಂತಹ - ಮುಗಿಯದ ಬಯಕೆಗಳ ಸರದಾರ ರ ಸಾಮಾಜಿಕ ರಾಜನೇತೃತ್ವವು ಅಂದು ಇದ್ದಿರಲಿಲ್ಲ. ಆದ್ದರಿಂದ ಅಂದಿನ ಸಮಾಜದ ಶಿಸ್ತುಗಳಿಗೆ ಬೆನ್ನು ತಿರುಗಿಸಿ, "ರಾಜ ವಿಶಿಷ್ಟ" ಎನ್ನಿಸಿಕೊಂಡ ಯಯಾತಿಯು - ಋಷಿಮುನಿಗಳ ಕಥಾವಸ್ತುವಾದ. ಆದರೆ ಈಗ ಹಾಗಲ್ಲ. ಇಂದಿನ ಆಧುನಿಕ ಜಗತ್ತು ಅಂದಿಗಿಂತ ಶಕ್ತಿವಂತರಾದ ಯಯಾತಿಗಳಿಂದ ತುಂಬಿ ತುಳುಕುತ್ತಿದೆ. "ಬದುಕನ್ನು ಓಲೈಸಿ ಬಯಕೆಗಳನ್ನು ಪೂರೈಸಿದಷ್ಟೂ ಹೊಸಹೊಸ ಬಯಕೆಗಳು ಮುತ್ತುತ್ತಲೇ ಹೋಗುತ್ತವೆ" ಎಂಬ ಉಪನಿಷತ್ತಿನ ಸಂದೇಶವು ಇಂದಿಗಿಂತ ಅಂದೇ ಹೆಚ್ಚು ಸ್ವೀಕೃತವಾಗಿದ್ದರೂ ಅಂದಿನ ಯಯಾತಿಯ ಆಸೆ, ಸ್ವಪ್ರತಿಷ್ಠೆ, ಸ್ವಾರ್ಥದ ಪರಾಕಾಷ್ಠೆಯಿಂದಾಗಿ - ಆ ಯಯಾತಿಯು ಕುಬ್ಜನಾಗಿ ಹೋದ. ಸ್ವರ್ಗದಿಂದಲೂ ಉರುಳಿದ; ಕತೆಯಾಗಿ ಉಳಿದುಹೋದ. ತನ್ನ ಇಂದ್ರಿಯಗಳು ಜೋತುಬಿದ್ದು ಸೋಲುವವರೆಗೂ ಯಯಾತಿಗೆ ಜ್ಞಾನೋದಯವಾಗಲಿಲ್ಲ. ಅಂದಿನ ಯಯಾತಿಯು ಜನಾಕರ್ಷಣೆಯ ರಾಜನಾದುದರಿಂದಲೂ - ಅಂತಹ ವಿಷಮ ಘಟನೆಗಳು ಅಂದು ವಿರಳವಾಗಿದ್ದುದರಿಂದಲೂ ಆತನು ಸಾಮಾಜಿಕ ಭರ್ತ್ಸನೆಗೂ ಒಳಗಾದ.
ಆದರೆ ಇಂದಿನ ಯಯಾತಿಗಳಿಗೆ ಅಂತಹ ಬಿಗುವಿನ ಸಾಮಾಜಿಕ ಪರಿಸರವಾಗಲೀ ಬೌದ್ಧಿಕ ವಾತಾವರಣವಾಗಲೀ ಧರ್ಮನೀತಿಬೀರುತನವಾಗಲೀ ಅಸ್ತಿತ್ವದಲ್ಲೇ ಇಲ್ಲದಿರುವುದರಿಂದ ಇಂದಿನ ಸಮಾಜವು ಅಂಕೆತಪ್ಪಿ, ಅಂತಃಕ್ಷೋಭೆಯಿಂದ ದಿಕ್ಕುದೆಸೆಯಿಲ್ಲದೆ "ಯಯಾತಿ ವಿಶ್ವ" ವಾಗಿ ಅರಳುತ್ತಿದೆ; ನರಳುತ್ತಿದೆ. ಆದ್ದರಿಂದಲೇ ಒಳ್ಳೆಯ ವಿಚಾರಗಳನ್ನು ಹುಡುಕಿ ಹುಡುಕಿ ತಿರಸ್ಕರಿಸುವ, ಅವಹೇಳನ ಮಾಡುವ ವಿಕೃತಿ (Fashion) ಗೆ ಇಂದಿನ ಸಮಾಜವು ಬಲಿಯಾಗುತ್ತಿದೆ. ಆದ್ದರಿಂದಲೇ ಎಲ್ಲೆಲ್ಲೂ ಅತೃಪ್ತಿ. ಅತೃಪ್ತಿಯಿಂದ - ಪರಸ್ಪರ ಅವಹೇಳನ; ಅಸಹನೆ. ಅಸಹನೆಯಿಂದ ಹಿಂಸೆ. ಹಿಂಸೆಯಿಂದ ನಾಶ. ಹೀಗೆ ವಿನಾಶದ ಚಕ್ರವು ಸುತ್ತುತ್ತಲೇ ಇದೆ.
ಭಾರತೀಯ ಸಾಂಸ್ಕೃತಿಕ ಮೌಲ್ಯಗಳ ಅಡಿಪಾಯವೇ ಉಪನಿಷತ್ತು. ನಮ್ಮ ನಿಜ ಸಂಪತ್ತಾದ ಸಾಕ್ಷಾತ್ ಮೌಲ್ಯಗಳನ್ನೆಲ್ಲ ಹೀನಾಯವಾಗಿ ಹೀಯಾಳಿಸುತ್ತ ಅಡ್ಡಾಡುವ ದೊಡ್ಡ ವರ್ಗವೇ ಈಗ ಬೆಳೆದು ನಿಂತಿದೆ. ಇದು ಭವಿಷ್ಯದಲ್ಲಿ ಸಂಭವಿಸುವ ಮಹಾದುರಂತಕ್ಕೆ ಮುನ್ನುಡಿ. ಇಂದಿನ "ಶಿಕ್ಷಿತರು" ಎಂದುಕೊಂಡಿರುವ, ಅಕ್ಷರದ ಜಾತ್ರೆ ನಡೆಸುವ ವರ್ಗಕ್ಕೆ ಒಂದೋ ಉಪನಿಷತ್ತಿನ ಪರಿಚಯವೇ ಇಲ್ಲ. ಅಥವ ಅದು ಅವರ ದೌರ್ಭಾಗ್ಯಕ್ಕೆ ಒಗ್ಗುವುದಿಲ್ಲ. ಅಥವ ಸ್ವಾರ್ಥಪ್ರೇರಿತ ಕ್ಷಣಿಕ ಲಾಭದ ಪ್ರೇಯಸ್ಸಿನ ಹಿಂದೆ ಅವರೆಲ್ಲರೂ ಓಡುತ್ತಿರಬಹುದು. ಅಥವ ಪೂರ್ವಾಗ್ರಹ ಪೀಡಿತ ರೋಗಬಾಧೆಗೆ ಒಳಗಾಗಿರಬಹುದು. ಆದರೆ ನೆನಪಿರಲಿ. ಅರವಿಂದರನ್ನು ಪಾಂಡಿಚೇರಿಯ ಮಾಣಿಕ್ಯವಾಗಿಸುವಲ್ಲಿ, ನರೇಂದ್ರನನ್ನು ವೀರ ವಿವೇಕಾನಂದರಾಗಿಸುವಲ್ಲಿ ಉಪನಿಷತ್ತು ನಿರ್ವಹಿಸಿದ ಪಾತ್ರವು ಮಹತ್ವದ್ದು. ಕನ್ನಡದ ವಚನ ಸಾಹಿತ್ಯದ ತುಂಬ ಉಪನಿಷತ್ ಬೋಧನೆಗಳು ಮರುಕಳಿಸುತ್ತವೆ. ಉಪನಿಷತ್ತು ಸಾಧಕರನ್ನು - ಧೀರರನ್ನು ನಿರ್ಮಿಸುತ್ತದೆ. ಆಳಕ್ಕೆ ಮುಳುಗಿ ಮುತ್ತನ್ನು ಹೆಕ್ಕಿ ತರಬಲ್ಲ "ಧೀರ " ನೇ ನಿಜವಾದ ಸಾಧಕ.
" ಭಾರತದ ಇತಿಹಾಸ, ಸಂಸ್ಕೃತಿಗಳ ಒಳದೃಷ್ಟಿ ಪಡೆಯಲು ಉಪನಿಷತ್ತುಗಳಲ್ಲಿ ಸಂಚರಿಸುವುದು ಅನಿವಾರ್ಯ. ಭಾರತದ ತತ್ತ್ವ ಮತ್ತು ಧರ್ಮವಿಜ್ಞಾನವು ಉಪನಿಷತ್ತು ತೋರಿದ ದಾರಿಯಲ್ಲಿಯೇ ನಡೆದು ಬಂದಿದೆ. ಭಾರತದ ಧಾರ್ಮಿಕ ಪ್ರಪಂಚದಲ್ಲಿ ಮುಂದೆ ಆದ ಎಲ್ಲ ಚಿಂತನೆಯ ಶಾಖೆಗಳೂ ಉಪನಿಷತ್ತಿನಿಂದಲೇ ಪ್ರೇರಿತವಾದವುಗಳು. ಭಕ್ತಿಯ ಆದರ್ಶವೂ ಉಪನಿಷತ್ತಿನಲ್ಲಿದೆ. ಪುರಾಣಗಳಲ್ಲೂ ಇತರ ಸ್ಮೃತಿಗಳಲ್ಲೂ ಮುಂದೆ ಪೂರ್ಣವಾಗಿ ಬೆಳೆದ ಅನೇಕ ಭಾವನೆಗಳು ಉಪನಿಷತ್ತುಗಳಲ್ಲಿ ಬೀಜರೂಪದಲ್ಲಿವೆ. ಒಂದು ಸ್ಥೂಲ ನಕ್ಷೆ, ಚೌಕಟ್ಟು ಉಪನಿಷತ್ತಿನಲ್ಲಿತ್ತು. ಕೆಲವು ಪುರಾಣಗಳು ಅದನ್ನು ತುಂಬಿದವು - ಅಷ್ಟೆ. ಪೂರ್ಣವಾಗಿ ವಿಕಾಸಗೊಂಡ ಯಾವುದೇ ಭಾರತೀಯ ಆದರ್ಶದ ಮೂಲವು ಉಪನಿಷತ್ತೇ ಆಗಿದೆ." ಎಂದು ವಿವೇಕಾನಂದರು ಅಭಿಪ್ರಾಯಪಟ್ಟಿದ್ದಾರೆ. ಇಷ್ಟೇ ಅಲ್ಲ. ಕೆಲವು ಕರ್ಮಭಾಗದ ಅಂಶಗಳಿಗೆ ಹೆಚ್ಚು ಒತ್ತನ್ನು ಕೊಟ್ಟದ್ದು ಬಿಟ್ಟರೆ ಅವೈದಿಕವಾದ ಬೌದ್ಧಧರ್ಮವೂ ಉಪನಿಷತ್ತಿನ ಬೇರಿನ ಮೇಲೇ ನಿಂತಿದೆ.
ಇತ್ತೀಚೆಗಿನ ವರ್ಷಗಳಲ್ಲಿ ಇಂತಹ ಗಂಭೀರವಾದ ತತ್ತ್ವ ಸಿದ್ಧಾಂತಗಳು ಸಾಹಿತ್ಯ ಪ್ರಕಾರಗಳಲ್ಲಿ ವಿರಳವಾಗಿ ಹೋಗಿವೆ. ವ್ಯರ್ಥ "ಕರಟ ಹೆರೆಯುವುದು" ಒಂದು ಚಟವಾಗಿ ಹೋಗಿದೆ. ಗಾಂಭೀರ್ಯವೇ ಇಲ್ಲದ ಪೋಕು ಮಾತುಗಳಿಂದಲೇ ತಮ್ಮ ಮತ್ತು ಸುತ್ತಿನ ಬದುಕುಗಳನ್ನು ಹ್ರಸ್ವಗೊಳಿಸುತ್ತಿರುವವರ ನೇತೃತ್ವದಲ್ಲಿ ಇಂದಿನ ಅಸ್ವಸ್ಥ ಸಮಾಜವು ತೆವಳುತ್ತ ಸಾಗುತ್ತಿದೆ. ಉಪನಿಷತ್ತನ್ನು ಪ್ರವೇಶಿಸಿದ ಯಾವ ಬರಹಗಾರನೂ "ಹೊಟ್ಟೆಪಾಡಿನ ಸಾಹಿತಿ" ಆಗುವುದು ಅಸಾಧ್ಯ.
ನಿಜವಾದ ಸಾಹಿತಿಯೂ ತಪಸ್ವಿಯೇ ಆಗಬೇಕಾಗುತ್ತದೆ. ಉಪನಿಷತ್ತಿನ ವಿದ್ಯಾರ್ಥಿಯು ಎಂದಿಗೂ ಪುಕ್ಕಟೆ ಪ್ರಚಾರ, ಸಂದಿಗೊಂದಿಯ ಒಳದಾರಿಗಳನ್ನು ಆಯ್ದುಕೊಳ್ಳುವುದು ಅಸಂಭವ. ಏಕೆಂದರೆ ಉಪನಿಷತ್ತು ವ್ಯಕ್ತಿಯ ಅಂತರಂಗವನ್ನು ಶುದ್ಧಿಗೊಳಿಸುತ್ತದೆ. ಸಮಾಜಕ್ಕೆ ನೀಡುವ ಒಂದೊಂದು ಅಕ್ಷರವೂ ಅಮೂಲ್ಯವಾಗುವುದು ಉಪನಿಷತ್ತಿನ ಸಾನ್ನಿಧ್ಯದಿಂದ ಮಾತ್ರ ಸಾಧ್ಯ. ಶ್ರೀ ಎಸ್.ಎಲ್.ಭೈರಪ್ಪನವರ ಹಿಂದಿನ ಬರಹಗಳಲ್ಲಿ ಉಪನಿಷತ್ತಿನ ಸುವಾಸನೆಯ ಮಿಂಚಿದೆ. ಆದ್ದರಿಂದಲೇ ಎಷ್ಟು ಬಾರಿ ಓದಿದರೂ ಅವರ ಬರಹಗಳು ಓದುಗರನ್ನು ಪುಳಕಿತಗೊಳಿಸುತ್ತವೆ. ಇನ್ನೂ ಸ್ವಲ್ಪ ಹಿಂದೆ ಸರಿದು ನೋಡಿದರೆ ಸರ್ವಶ್ರೀ ಡಿ ವಿ ಜಿ, ಎ.ಆರ್.ಕೃಷ್ಣಶಾಸ್ತ್ರಿ, ದೇವುಡು ನರಸಿಂಹ ಶಾಸ್ತ್ರಿ, ಅಂಬಿಕಾತನಯದತ್ತ, ಕುವೆಂಪು, ಕಾವ್ಯಾನಂದ ಮುಂತಾದ ಕೆಲವು ಹಿರಿಯ ಬರಹಗಾರರನ್ನು ಉಪನಿಷತ್ ಹಿನ್ನೆಲೆಯಲ್ಲಿ ಗುರುತಿಸಿದಾಗ - ತಲೆಬಾಗುತ್ತದೆ. ಸರ್ವಶ್ರೀ ಕೆ.ಎಸ್. ನಾರಾಯಣಾಚಾರ್ಯ, ಬನ್ನಂಜೆ ಗೋವಿಂದಾಚಾರ್ಯ ಮುಂತಾದ ವಿದ್ವಾಂಸರು ಈಗಲೂ ಉಪನಿಷತ್ತಿನ ಸದ್ವಿಚಾರಗಳನ್ನು ಪ್ರಚುರಪಡಿಸುತ್ತಲೇ ಇದ್ದಾರೆ. "ಮಂಕು ತಿಮ್ಮ" ಎನ್ನುತ್ತಲೇ ಬದುಕಿನ ಸುಭಗ ದಾರಿಯನ್ನು ತೋರಿಸಿದ, ಕಠಿಣ ಸಿದ್ಧಾಂತಗಳನ್ನು ಸರಳವಾಗಿ ಬಿಡಿಸಿಟ್ಟ ಡಿ ವಿ ಜಿ ಅವರಲ್ಲಿದ್ದ ಜ್ಞಾನಿಯ ಸಂಯಮ, ವಿನಯವಂತಿಕೆಯನ್ನು ಇಂದಿನ ಬಹುತೇಕ ಯುವಜನರಿಗೆ ತಲುಪಿಸಬೇಕಾಗಿದೆ. ಆದರೆ ದಿನಹೋದಂತೆ - ಉತ್ತಮ ಸಾಹಿತ್ಯಗಳು ಕಾಣಿಸದಂತೆ - ಅವುಗಳ ಮೇಲೆ ರಾಶಿ ಬೀಳುತ್ತಿರುವ ರದ್ದಿ ಸಾಹಿತ್ಯ ಸಂಚಲನವು - ಮಾನವ ಕಲ್ಯಾಣದ ಅಪಾಯದ ಮುನ್ಸೂಚನೆಯಂತೆಯೂ ಒಮ್ಮೊಮ್ಮೆ ಕಾಣುತ್ತದೆ. (ಜತೆಜತೆಗೆ ಉತ್ತಮವಾದುದನ್ನು ಗುರುತಿಸಿ, ಓದುವ ಹವ್ಯಾಸವೂ ಇಳಿಮುಖವಾಗುತ್ತಿದೆ!)
ಆದ್ದರಿಂದಲೇ ಹತ್ತಿದ ಏಣಿಯನ್ನು ಮರೆಯದ, ಹತ್ತಬಹುದಾದ ಸುಭದ್ರ ಏಣಿಯನ್ನು ಎಲ್ಲರೂ ಬಳಸಿಕೊಳ್ಳುವ ಮನೋಭಾವವು ವಿಕಸಿಸುವಂತಹ ಶಿಕ್ಷಣವು ಇಂದಿನ ಅಗತ್ಯವೆನ್ನಿಸಿದೆ. "ನಾವು ಏನು ಮಾಡಿದ್ದೇವೆ? ಅಥವ ಏನು ಸಾಧಿಸಿದ್ದೇವೆ?" ಎಂಬುದಕ್ಕಿಂತ "ನಾವು ಈಗ ಏನಾಗಿದ್ದೇವೆ?" ಎಂಬುದೇ ಮನುಷ್ಯರು ಮೊತ್ತಮೊದಲು ಕೇಳಿಕೊಳ್ಳಬೇಕಾದ ಅರ್ಥಪೂರ್ಣ ಪ್ರಶ್ನೆ. ನಮ್ಮ ಬದುಕಿನ ಕರ್ಮವು "ಸಿದ್ಧಿ"ಯನ್ನು ಪ್ರತಿಬಿಂಬಿಸುತ್ತಿದ್ದರೆ - - ನಾವು ಏನಾಗಿದ್ದೇವೆ? ಎಂಬುದು ನಮ್ಮ "ವ್ಯಕ್ತಿತ್ವ ಮತ್ತು ಸಂಸ್ಕೃತಿ"ಯನ್ನು ಪ್ರತಿಬಿಂಬಿಸುತ್ತದೆ. ಕಲೆ, ವಿಜ್ಞಾನ, ಧರ್ಮ - ಇವು ಒಂದೇ ಸತ್ಯವನ್ನು ಹೇಳುವ ಮೂರು ವಿಧಾನಗಳು. "ಹಣ ಮಾಡುವುದು, ಕುಟುಂಬ, ಪೀಳಿಗೆ ಮುಂತಾದುವೆಲ್ಲವೂ ಕೇವಲ "ಪ್ರಕೃತಿ"ಯೇ ಹೊರತು - ಅದು "ಸಂಸ್ಕೃತಿ" ಅಲ್ಲ. ಯಾವುದೇ ಬದುಕಿನ ಮೊದಲನೆಯ ಅರ್ಧ ಭಾಗದಲ್ಲಿ ಸಾಧಿಸುವ ಈ "ಸಿದ್ಧಿ"ಯ ಶಿಕ್ಷಣವು ಆಯಾ ಬದುಕಿನ ಉತ್ತರಾರ್ಧದಲ್ಲಿ ಆಧ್ಯಾತ್ಮಿಕ ಶಿಕ್ಷಣಕ್ಕೆ ಪೂರಕವಾಗಿರಬೇಕು. ಯಾವುದೇ ಬದುಕಿನ ಪೂರ್ವಾರ್ಧ ಮತ್ತು ಉತ್ತರಾರ್ಧಗಳ ನಡುವೆ ಕಂದಕವುಂಟಾಗದೆ ಅವುಗಳ ನಡುವೆ ಸೌಹಾರ್ದದ ಸೇತುವೆಯು ರೂಪುಗೊಳ್ಳಬೇಕು. ಉಪನಿಷತ್ತುಗಳು ಅಂತಹ ಸಮಭಾವದ - "ಸಾಧು ಶಿಕ್ಷಣ" ದ ಸೇತುವೆಯನ್ನು ಕಟ್ಟಬಲ್ಲದು.
ಬದುಕು ಎಂದರೇನು? ಮಾನವ ಎಂದರೇನು? ಇಲ್ಲಿ ಶಾಶ್ವತವಾದದ್ದು ಏನಾದರೂ ಇದೆಯೆ? ನಮ್ಮ ದಾರಿ - ಗುರಿ ಯಾವುದು? ಈಗ ನಾವೆಲ್ಲಿದ್ದೇವೆ? ಬದುಕಿನ ಉದ್ದಕ್ಕೂ ಸ್ಥಿತ್ಯಂತರದ ಅನುಭವವನ್ನು ಹೊಂದುತ್ತಿರುವ ಮನುಷ್ಯರು ತಮ್ಮನ್ನು ತಾವೇ ಆಗಾಗ ಕೇಳಿಕೊಳ್ಳಬೇಕಾದ ಪ್ರಶ್ನೆಗಳಿವು. ಈ ಎಲ್ಲ ಪ್ರಶ್ನೆಗಳಿಗೂ ಉತ್ತರ ಕಂಡುಕೊಳ್ಳಬಹುದು - ಎಂಬ ಸಾಂತ್ವನದ ಭರವಸೆಯು ಉಪನಿಷತ್ತುಗಳಲ್ಲಿ ಸಿಗುತ್ತದೆ; ಮಾನವರ ಜನ್ಮ ಸಾರ್ಥಕ್ಯದ ಗುರಿ ಮತ್ತು ದಾರಿಯ ಸ್ಪಷ್ಟ ಅನಾವರಣವಾಗುತ್ತದೆ. ಚಿಂತನೆಗೆ ಬೆಳಕು ತೋರುತ್ತದೆ. ಸಭ್ಯ ಸಜ್ಜನ ಸಚ್ಚರಿತ ಸಮಾಜ ನಿರ್ಮಾಣಕ್ಕೆ ಉಪನಿಷತ್ತುಗಳ ಅಧ್ಯಯನವು - ಸದೃಢ ಊರುಗೋಲು.
"ಉಪನಿಷತ್ತುಗಳು ಚೈತನ್ಯ ಮತ್ತು ಸೃಜನಶಕ್ತಿಗಳ ನಿರಂತರ ಚಿಲುಮೆ. ಸಹನೆಯಿಂದ ಕೂಡಿದ ಎಲ್ಲವನ್ನೂ ಒಳಗೊಳ್ಳುವ ಪರಂಪರೆಯು ಉಪನಿಷತ್ತಿನ ಅಂತಃಸ್ಫೂರ್ತಿ. ಎಚ್ಚರದ ಆವರಣ, ನಿರಂತರ ಅನ್ವೇಷಣೆಯ ಮನೋಭಾವ, ಸತ್ಯದ ಬಗೆಗೆ ಗಾಢ ಪ್ರೇಮ, "ಎಲ್ಲವೂ ಸರಿಯಾಗಿದೆ" ಎಂಬ ತೃಪ್ತಿಯ ಮನೋಭಾವದಿಂದ ಸುಮ್ಮನಿರದೆ ಏಕಪ್ರಕಾರವಾಗಿ ಮುಂದುವರಿಯುವ ಇಚ್ಛೆ - ಇವೆಲ್ಲ ಗುಣಗಳಿಂದಾಗಿ ಉಪನಿಷತ್ತುಗಳು ಆಧುನಿಕ ದೃಷ್ಟಿಯನ್ನು ಹೊಂದಿದ್ದು ಇಂದಿಗೂ ಚಿರನೂತನವೆನಿಸುತ್ತವೆ. ಮಾನವನ ಸ್ಥೂಲ ಸೂಕ್ಷ್ಮ, ಜಾಗ್ರತ ಸ್ವಪ್ನ ಸುಷುಪ್ತಿ ಅವ್ಯಕ್ತ, ಶರೀರ ಮನಸ್ಸು ಜ್ಞಾನಕೋಶಗಳನ್ನೆಲ್ಲ ಆಳವಾಗಿ ಅಧ್ಯಯನ ಮಾಡಿರುವ ವೇದಾಂತವಿದು" ಎನ್ನುತ್ತಾರೆ ಸ್ವಾಮಿ ರಂಗನಾಥಾನಂದರು.
(ಸ್ವಾಮಿ ರಂಗನಾಥಾನಂದರ - "ಉಪನಿಷತ್ತುಗಳ ಸಂದೇಶ", ಪ್ರಕಾಶಕರು - ಶ್ರೀ ರಾಮಕೃಷ್ಣ ಆಶ್ರಮ, ಯಾದವಗಿರಿ, ಮೈಸೂರು - ಎಂಬ ಪುಸ್ತಕದ ಓದಿನಿಂದ ಪ್ರಭಾವಿತಗೊಂಡು ಬರೆದ ಬರಹವಿದು. ನನ್ನ ಭಾವ ದೃಷ್ಟಿಯೊಂದಿಗೆ ಸ್ವಾಮಿ ರಂಗನಾಥಾನಂದರ ಉಪನ್ಯಾಸದ ಕೆಲವು ಸಾಲುಗಳನ್ನು ನಿಮ್ಮೊಂದಿಗೆ ಯಥಾವತ್ ಹಂಚಿಕೊಂಡಿದ್ದೇನೆ. ಈ ಇಡೀ ಪುಸ್ತಕವೇ ಒಂದು ರಸಗಟ್ಟಿ. ಮನುಷ್ಯರಾಗಿ ಹುಟ್ಟಿದವರ ಮನೆಯಲ್ಲಿ ಇರಬೇಕಾದ ಮತ್ತು ಅಗತ್ಯವಾಗಿ ಓದಲೇಬೇಕಾದ ಈ ಪುಸ್ತಕವು ಬರೇ ರಟ್ಟು ಹೊದೆಸಿದ ಕಾಗದದ ಕಟ್ಟಲ್ಲ; ಶುದ್ಧ ಸಂಪತ್ತು. ಈ ಪುಸ್ತಕವನ್ನು ಓದುವುದಕ್ಕೂ ಭಾಗ್ಯ ಬೇಕು!)
No comments:
Post a Comment