Tuesday, August 18, 2015

ನಾನೊಲಿದಂತೆ (4) - ರಥಿಕನೋಡಿಸಿದಂತೆ ಓಡುವ ಬ್ರಹ್ಮರಥ !

                                     ರಥಿಕನೋಡಿಸಿದಂತೆ ಓಡುವ ಬ್ರಹ್ಮರಥ !

  ಈ ಜಗತ್ತಿನಲ್ಲಿ ಎಲ್ಲವೂ ಇದೆ. ಒಂದರ್ಥದಲ್ಲಿ ಇದಕ್ಕಿಂತ ದೊಡ್ಡ ಸ್ವರ್ಗವು ಮೇಲೆಲ್ಲೋ ಇದೆ ಎಂದುಕೊಳ್ಳುವುದೇ ಮೂರ್ಖತನ. ಒಳಿತು ಕೆಡುಕಿನ ಸಮಸ್ತವೂ ಈ ಭೂಮಿಯ ಮೇಲಿದೆ.

  ಆಕಸ್ಮಿಕವಾದ ಹುಟ್ಟಿನಿಂದ ಹಿಡಿದು ದೇಹಾಂತದವರೆಗೂ ನಮ್ಮ ಎದುರಿಗೆ ಬರುವ ಒಳ್ಳೆಯ ಮತ್ತು ಕೆಟ್ಟ ಅವಕಾಶಗಳು ಒಂದೆರಡಲ್ಲ. ಹಾಗೆ ಎದುರಾದ ಅವಕಾಶಗಳನ್ನು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಕೆಲವರು ಸೂಕ್ತವಾಗಿ ಆಯ್ದುಕೊಳ್ಳುತ್ತಾರೆ; ಕೆಲವರು ತಮ್ಮ ಆಯ್ಕೆಯಲ್ಲಿ ಸೋಲುತ್ತಾರೆ. ಅದನ್ನು "ಅದೃಷ್ಟ" ಎಂದು ವ್ಯಾಖ್ಯಾನಿಸುವುದೂ ಇದೆ. ಅವಕಾಶಗಳನ್ನು ಪಡೆಯುವ ವರೆಗೆ ಅದೃಷ್ಟವನ್ನು ಗುರುತಿಸುವವರು ತಮ್ಮ ಕೆಲಸದ ಶೈಲಿಯಿಂದಲೇ ಸೋತಾಗ ಅದೃಷ್ಟವನ್ನು ಜರಿಯುತ್ತ - ಗೆದ್ದಾಗ ತಮ್ಮ ಕರ್ತೃತ್ವ ಶಕ್ತಿಯನ್ನು ಮೆಚ್ಚಿ ಆಡಿಕೊಳ್ಳುವುದು ಸಾಮಾನ್ಯ. ಉತ್ತಮ ಅವಕಾಶಗಳನ್ನು ಹೋರಾಡಿ ಪಡೆದು ಅವನ್ನು ಸಮರ್ಥವಾಗಿ ನಿಭಾಯಿಸುವುದೇ ಶುಭ್ರ ಯಶಸ್ಸಿನ ಮುನ್ನುಡಿ.

  ಒಂದು ಬದುಕಿನ ಹಾದಿಯಲ್ಲಿ ಅಸಂಖ್ಯಾತ ಜೀವಿಗಳನ್ನು ನಾವು ಹಾದುಹೋಗುತ್ತೇವೆ. ಎಷ್ಟೋ ಬಾರಿ ಈ ಹಂತವು ನಮ್ಮ ಏಕಾಗ್ರ ನಡಿಗೆಗೆ ಭಂಗ ತರುವ ಕ್ಷಣಗಳು; ಇವು ನಮ್ಮ ಸ್ವಸ್ವರೂಪ ಪರಿಪೂರ್ಣತೆಯ ಅಭಿವ್ಯಕ್ತಿಗೆ ಇರುವ ತಡೆಗಳು; ಎಲ್ಲ ಬಗೆಯ ಮನುಷ್ಯರ ಒಡನಾಟವು ನಮ್ಮನ್ನು ಕೆಲವೊಮ್ಮೆ ದ್ವಂದ್ವದಲ್ಲಿ ನೂಕಿ, ಅರೆ ಪ್ರಜ್ಞಾವಸ್ಥೆಯಲ್ಲಿ ಇರಗೊಡಿಸಿ, ಚಾಂಚಲ್ಯಕ್ಕೆ ಎಡೆಮಾಡುವ ಸಂಧಿ ಕ್ಷಣಗಳೂ ಆಗಬಲ್ಲವು. ದೃಢವಾದ ಗುರಿಯಿರುವ ಯಾವುದೇ ಸುಪುಷ್ಟ ಕೆಲಸಗಳು ಪೂರ್ಣ ಪ್ರಜ್ಞಾವಸ್ಥೆಯಲ್ಲಿ ಮಾತ್ರ ನಡೆಯಬಲ್ಲದು; ಆಗಲೇ ನಮ್ಮ ಬಾಹ್ಯೇಂದ್ರಿಯಗಳು ಉಪಯುಕ್ತ ಉಪಕರಣಗಳಾಗಿ ಕೆಲಸಕ್ಕೆ ಒದಗುತ್ತವೆ. ಆದರೆ ಅವನ್ನು ನಿರ್ದೇಶಿಸುವ ಬುದ್ಧಿಸ್ಥಾನವೇ ಚಾಂಚಲ್ಯದಿಂದ ಹೊಯ್ದಾಡುವಂತಿದ್ದಾಗ ಇಂದ್ರಿಯಗಳೂ ಅಂತೆಯೇ ಅಡ್ಡಾದಿಡ್ಡಿ ಆಡುತ್ತವೆ. ಈ ಹಂತದಲ್ಲಿ ಬುದ್ಧಿಯ ಕೌಶಲ್ಯವು ಅನಿವಾರ್ಯವಾಗುತ್ತದೆ. ರಥಿಕನೋಡಿಸಿದಂತೆ ರಥವೂ ಓಡುತ್ತದೆ.

  ಇಂದು ಯಾವುದೇ ಸದುದ್ದೇಶವಿಲ್ಲದೆ ಗುಪ್ತ ಕಾರ್ಯಸೂಚಿಗನುಗುಣವಾಗಿ ಅಥವ "ಸುಮ್ಮನೆ" ಯಾರ್ಯಾರನ್ನೋ ಹೊಗಳುವುದು - ತೆಗಳುವುದನ್ನು ಆಗಾಗ ಗಮನಿಸಬಹುದು. "ಪಾಪ; ಅವರು ಬಹಳ ಒಳ್ಳೆಯವರು; ಏನೋ ಸ್ವಲ್ಪ ಜರ್ದಾ ಹಾಕುತ್ತಿದ್ದರು; ಏನೋ ಸ್ವಲ್ಪ ಮಾದಕ ವ್ಯಸನವಿತ್ತು; ಎಲ್ಲೋ ಒಮ್ಮೊಮ್ಮೆ ಪರಸಂಗವೂ ಇದ್ದಿರಬಹುದು; ಕಚೇರಿಯ ಕೆಲಸಕ್ಕೆ ದಿನವೂ ಅನಿಯಮಿತವಾಗಿ ಹಾಜರಾಗುತ್ತಿದ್ದಿರಬಹುದು; ಒಮ್ಮೊಮ್ಮೆ ಮತ್ತ - ಉನ್ಮತ್ತ ಸ್ಥಿತಿಯಲ್ಲಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದಿರಬಹುದು; ಕರ್ತವ್ಯದ ಹೊತ್ತಿನಲ್ಲಿ ನಿದ್ದೆ ಮಾಡಿ ಕೆಲವು ಬಾರಿ ಅಚಾತುರ್ಯಗಳೂ ನಡೆದಿರಬಹುದು; ತಮ್ಮ ಚಟಗಳ ಅವಶ್ಯಕತೆಗಾಗಿ ಕಚೇರಿಯ ಕೆಲವು ವಸ್ತುಗಳನ್ನು ಒಮ್ಮೊಮ್ಮೆ ಹೊತ್ತು ಒಯ್ದಿರಬಹುದು; ಮತ್ತ ಸ್ಥಿತಿಯಲ್ಲಿದ್ದಾಗ ಕುಳಿತಲ್ಲೇ ಮೂತ್ರ ವಿಸರ್ಜಿಸಿರಬಹುದು; ವಾಂತಿ ಮಾಡಿಕೊಂಡಿರಬಹುದು; ಪಾಪ...ಇನ್ನೂ ಎಷ್ಟೋ ದೋಷಗಳಿರಬಹುದು. ಆದರೆ ಅವಕ್ಕೆಲ್ಲ ಅವರು ಕಾರಣವೇ? ಅವರಿಗೆ ಸಿಕ್ಕಿದಂತಹ ಹೆಂಡತಿ ಸಿಕ್ಕಿದ್ದರೆ ನೀವು ಏನು ಮಾಡುತ್ತಿದ್ದಿರಿ? ಆ ಹೆಂಡತಿಯು ಅವರಿಗೆ ಬರೆ ಬೀಳುವಂತೆ ದಿನವೂ ಹೊಡೆಯುತ್ತಿದ್ದಳಂತೆ...ಪಾಪ...ಅವಳಿಗೆ ಹುಚ್ಚು.. ಆ ಇನ್ನೊಬ್ಬನಿಗೆ ದೊರೆತಂತಹ ನೆರೆಹೊರೆ ಇದ್ದಿದ್ದರೆ, ಅಥವ ಇನ್ನ್ಯಾವುದೋ ಭೌತ ಪರಿಸರವಿದ್ದಿದ್ದರೆ ನೀವಾದರೂ ಅಷ್ಟೇ; ಯಾರಾದರೂ ಅಷ್ಟೇ..." ಎನ್ನುತ್ತ ಒಬ್ಬ ವ್ಯಕ್ತಿಯಲ್ಲಿರುವ ಅಸಂಖ್ಯ ಕಲ್ಯಾಣಾದ್ಭುತ (?) ಗುಣಗಳಿಗೆಲ್ಲ ಇನ್ನ್ಯಾರೋ ಕಾರಣವೆಂದು ಡಂಗೂರ ಹೊಡೆಯಲು ಕೆಲವರು ಸತತ ಪ್ರಯತ್ನ ನಡೆಸುವುದು ಇಂದಿನ ಸಮಾಜದಲ್ಲಿ ಚಿರಪರಿಚಿತ. ಇಂತಹ ವಾದಮಂಡನೆಯು ಸಮಾನ ಅಭಿರುಚಿಯ ದ್ಯೋತಕವೂ ಹೌದು; ದೌರ್ಬಲ್ಯದ ಲಕ್ಷಣವೂ ಹೌದು.

  ಯಾಕೆ...?  ಕಟ್ಟಿಕೊಂಡ ಹೆಂಡತಿ ಅಥವ ಗಂಡನು ಹೊಂದಿಕೆಯಾಗದಿದ್ದರೆ ಯಾರಾದರೂ ಹೊಡೆತ ತಿನ್ನುತ್ತ ದಿನವೂ ಆತ್ಮಹತ್ಯೆ ಮಾಡಿಕೊಳ್ಳುವ ಅಗತ್ಯವುಂಟೆ? ಯಾವುದೇ ಬದುಕಿಗೆ ಪೂರ್ಣತೆಯ ಭಾವವನ್ನು ತರಲಾಗದ ಹೆಂಡತಿ ಅಥವ ಗಂಡನೆಂಬ ತುಂಬುವಿಕೆಯು ಅಷ್ಟೊಂದು ಅನಿವಾರ್ಯವೆ? ಯಾವುದೇ ಸಂಬಂಧವು ನಿತ್ಯ ಶೋಕದ ಸಾಧನವೆಂದು ಖಾತ್ರಿಯಾದರೆ ಶಿಷ್ಟ ಮಾರ್ಗದಲ್ಲಿಯೇ ಅಂತಹ ಸಂಬಂಧದಿಂದ ಕಳಚಿಕೊಳ್ಳುವುದು ವಿವೇಕ. ಯಾಕೆಂದರೆ ಬದುಕು ಎಲ್ಲಕ್ಕಿಂತ ದೊಡ್ಡದು. ಬದುಕನ್ನು ಹಾಳುಗೆಡಹುವ ಹೆಂಡತಿ, ಗಂಡ, ಮಕ್ಕಳಿಗಿಂತ ಬದುಕು ದೊಡ್ಡದು. ಸುಂದರ ಸಂಸಾರವು ಬದುಕನ್ನು ಅತ್ಯಂತ ಆಕರ್ಷಕವಾಗಿಸಬಹುದು. ಅದರಲ್ಲಿ ಸಂಶಯವಿಲ್ಲ. ಆದರೆ ಸಂಸಾರವೇ ಬದುಕಲ್ಲ.... ಆದ್ದರಿಂದ ನಮ್ಮ ಸ್ವಸ್ಥ ಬದುಕನ್ನು ಅನರ್ಥಕಾರೀ ಬಾಹ್ಯ ಸಂಬಂಧಗಳಿಗಾಗಿ ಬಲಿ ನೀಡುವುದು ಮೂರ್ಖತನ. ಹೊಂದಿಕೆಯಿಲ್ಲದ ದಾಂಪತ್ಯವೆಂದರೆ ತುತ್ತಿಟ್ಟು ಕಲ್ಲು ಕಡಿದಂತೆ - ಬಲು ಕಷ್ಟ. ಸಮಾನಾಂತರ ರೇಖೆಯು ಎಷ್ಟು ಕಾದರೂ ಎಲ್ಲಿಯೂ ಎಂದಿಗೂ ಒಂದಾಗದು ಎಂಬ ವಿವೇಚನೆಯು ಆಗ ನಮ್ಮನ್ನು ಕಾಪಾಡಬೇಕು. ಹೆಂಡತಿ ಅಥವ ಗಂಡನಿಂದ "ಪೀಡೆ" - ಎಂದು ಹೇಳಿಕೊಳ್ಳುತ್ತ ಅಂತಹ ಪೀಡಾ ಪರಿಹಾರಾರ್ಥವಾಗಿ ಹೊಸ ಸುಖಾನ್ವೇಷಣೆಗಿಳಿದು ತಮ್ಮ ಅಮೂಲ್ಯ ಬದುಕನ್ನು ದಿನವೂ ಗಾಯಗೊಳಿಸಿಕೊಳ್ಳುವ ದುರ್ಬಲರು ಯಾವುದೇ ಸಹಾನುಭೂತಿಗೆ ಅರ್ಹರಲ್ಲ. ಅಂತಹ ಪೀಡಿತ ಪೆದ್ದುಗಳಿಗೆ ಕರುಣಾ ವೈಚಿತ್ರ್ಯದ ಹೊಣೆಗೇಡಿ ಕಾಳಜಿಯನ್ನು ತೋರುವುದೆಂದರೆ ಎಡವಿದ ಜಾಗದಲ್ಲಿಯೇ ಪದೇಪದೇ ಬೀಳುವುದನ್ನು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಪ್ರೋತ್ಸಾಹಿಸಿದಂತೆ; ಕಾಳಜಿಯ ಅಪೂರ್ವ ಭಾವವನ್ನೂ ಪೀಡಿಸಿದಂತೆ. ಬದುಕಿಗೆ ಸಹ್ಯವಲ್ಲದ ಯಾವುದೇ ಸನ್ನಿವೇಶಗಳನ್ನು ಶಿಸ್ತಿನಿಂದಲೇ ನಿಭಾಯಿಸಲು ಸಾಧ್ಯವಿದೆ.

  ಪ್ರಸ್ತುತ ಸಾಮಾಜಿಕ ಸನ್ನಿವೇಶದಲ್ಲಿ ಹೆಂಡತಿ, ಮನೆ, ಮಕ್ಕಳು....ಎಲ್ಲವೂ ನಮ್ಮ ತಾತ್ಕಾಲಿಕ ವ್ಯವಸ್ಥೆಗಳು. ಸುಖೀ ಸಂಸಾರವು ನಿಜವಾಗಿಯೂ ದೊಡ್ಡ ಭಾಗ್ಯ... ಎಂಬುದರಲ್ಲಿ ಸಂಶಯವಿಲ್ಲ. ಆದರೆ ಅದನ್ನು ಒತ್ತಾಯದಿಂದ ಬೆದರಿಸಿ ಪಡೆಯಲಾಗುವುದಿಲ್ಲ. ಚೆಂದದ ಸಂಸಾರ ಯಾತ್ರೆಯು ಇಂದಿನ ಕುಟುಂಬಗಳಲ್ಲಿ ನಡೆಯುತ್ತಿದ್ದರೆ, ಅರಿತು ನಡೆಯುವ - ಕಷ್ಟ ಸುಖಗಳಲ್ಲಿ ಸಮಭಾಗಿಯಾಗುವ ದೇಹ - ಭಾವ ಸಂಗಾತಿಯು ದೊರೆತರೆ, ಅದನ್ನು ನಿಸ್ಸಂದೇಹವಾಗಿ ಅದೃಷ್ಟ ಎನ್ನಬಹುದು. ಅಕಸ್ಮಾತ್ ಹಾಗಿಲ್ಲದೆ ವ್ಯತಿರಿಕ್ತವಾದರೆ ತಮ್ಮ ಬದುಕೇ ಮುಗಿದುಹೋದಂತೆ ಎಂದು ಭಾವಿಸುತ್ತ - ಪ್ರತಿಕ್ರಿಯಾತ್ಮಕವಾಗಿ ಅಲ್ಲಸಲ್ಲದುದನ್ನೆಲ್ಲ ಮಾಡುತ್ತ ನಗೆಪಾಟಲಾಗಬೇಕೆ? ದುರದೃಷ್ಟವಶಾತ್... ಹೆಂಡತಿ ಅಥವ ಗಂಡನೆಂಬ "ಅಪಾಯ"ಕ್ಕೆ ಸಿಲುಕಿ ಯಾವುದೇ ಸಭ್ಯ ಬದುಕು ಪಾತಾಳಕೂಪಕ್ಕೆ ಬೀಳುತ್ತ ಹೋಗಬೇಕೆ? ಇಡೀ ಬದುಕನ್ನೇ ನಷ್ಟಗೊಳಿಸಿಕೊಳ್ಳಬೇಕೆ? ಅಥವ ಅಂತಹ ಮೃತ್ಯು ಕೂಪದಿಂದ ಹೊರಗೆ ಬಂದು ಹೊಸ ಬದುಕನ್ನು ಕಟ್ಟಿಕೊಳ್ಳಬೇಕೆ? ಇದು ಇಂದಿನ ಪರಿಸ್ಥಿತಿಯಲ್ಲಿ ಎಲ್ಲರೂ ಗಂಭೀರವಾಗಿ ಯೋಚಿಸಬೇಕಾದ ವಿಷಯ. ಇಂತಹ ಮನೋಭಾವವು ಬದುಕಿನ ಎಲ್ಲ ಬಗೆಯ ವೈಫಲ್ಯಗಳಿಂದಲೂ ಎದ್ದುಬರಲು ಸಹಕರಿಸುತ್ತದೆ.

  ನಾವು ಚಿಕ್ಕವರಾಗಿದ್ದಾಗ ಆಡುತ್ತಿದ್ದ ಆಟಗಳ ನಡುವೆ ಏನೋ ಅಚಾತುರ್ಯವು ನಮ್ಮಿಂದಲೇ ನಡೆದಿದ್ದರೂ ನಾವು ತಪ್ಪುಗಳಿಗೆಲ್ಲ ಇತರ ಗೆಳೆಯರತ್ತ ಬೊಟ್ಟು ಮಾಡುತ್ತಿದ್ದೆವು. "ನಾನಲ್ಲ; ಅವಳು... ಅವನು... " ಎನ್ನುತ್ತ ತಪ್ಪನ್ನು ಸ್ವಂತ ಹೆಗಲಿನಿಂದ ಜಾರಿಸುವ ಬಾಲಿಶ ಆಟವದು. ಮಕ್ಕಳ ಇಂತಹ ವರ್ತನೆಯಲ್ಲಿ ಧಾರ್ಷ್ಟ್ಯ ಮತ್ತು ಅವ್ಯಕ್ತ ಭಯವೂ ಅಡಗಿರುತ್ತದೆ. ತನ್ನ ಮಕ್ಕಳು ಅವರ ಗೆಳೆಯರಿಂದಲೇ ಕೆಟ್ಟ ಸಹವಾಸಕ್ಕೆ ಬಿದ್ದು ಹಾಳಾದರು ಎನ್ನುತ್ತ ಎಷ್ಟೋ ಹೆತ್ತವರು ಹಲುಬುವುದನ್ನೂ ನಾವು ನೋಡಿದ್ದೇವೆ. ಇದು - ತಾವು ಯಾವತ್ತೂ ಸರಿ ಎಂಬ ಅತಿ ಅಭಿಮಾನ ಮತ್ತು ತಮ್ಮ ಸಹವಾಸಿಗಳನ್ನು ದಬಾಯಿಸಿಯೇ ನಿವಾರಿಸಿಕೊಳ್ಳುವ ಕಿಲಾಡಿತನ. ಆದರೆ ಬದುಕಿನುದ್ದಕ್ಕೂ ಇದೇ ಬಾಲಿಶ ಆಟವಾಡಲು ತೊಡಗಿದರೆ ನಿಷ್ಪಕ್ಷಪಾತವಾಗಿ ಯೋಚಿಸುವ ಯಾರೂ ಒಪ್ಪಲು ಸಾಧ್ಯವಾಗದು. ಆದರೆ ನಮಗೆ ಸ್ವಾಪರಾಧಗಳಿಗೂ ಪರದೂಷಣೆ ನಡೆಸುವ ಅಭ್ಯಾಸವಾಗಿ ಹೋಗಿದೆ. ಯಾರೂ ಸಿಗದಿದ್ದರೆ ಮೂಕ ದೇವರನ್ನಾದರೂ ಆಡಿಕೊಳ್ಳುತ್ತ ಕುಳಿತುಕೊಳ್ಳುವ ಚಾಳಿ ನಮ್ಮದು. ನಾನು ಕಂಡ ಕೆಲವು ಬದುಕುಗಳನ್ನು ವಿಶ್ಲೇಷಿಸಿದಾಗ ಎಷ್ಟೋ ಬಾರಿ ಬೆರಗಾಗಿ ದಿಗ್ಭ್ರಮೆಯಿಂದ ನಿರುತ್ತರಳಾದದ್ದೂ ಇದೆ. ಉತ್ತರ ಸಿಗದೆ ನಾನು ತಡಕಾಡಿದ್ದೂ ಇದೆ. ಅಂತಹ ಘಳಿಗೆಗಳಲ್ಲಿ ಪ್ರಾರಬ್ಧದ ನೆನಪಾದದ್ದೂ ಇದೆ. "ಪ್ರಾರಬ್ಧ ಕರ್ಮವಿದು ಬೆನ್ನು ಬಿಡದು - ಎನ್ನುವುದನ್ನು ಪಲಾಯನ ವಾದವೆಂದು ಪೂರ್ಣವಾಗಿ ತಳ್ಳಿಹಾಕಲು ಸಾಧ್ಯವೆ?" ಎಂದೂ ಎಷ್ಟೋ ಬಾರಿ ಅನ್ನಿಸಿದ್ದಿದೆ. ಆದ್ದರಿಂದ ಯಾವುದೇ ಸಮಸ್ಯೆಗೆ ಸ್ವಸ್ಥ ಮನಸ್ಸಿನಿಂದ ಯೋಚಿಸದೆ "ಅನಿಷ್ಟಕ್ಕೆಲ್ಲ ಅಂಗಾರಕ" ಎಂಬಂತೆ ಪರಸ್ಪರ ದೂಷಿಸಿಕೊಂಡರೆ ನಮಗೆ ನಾವೇ ಮೋಸ ಮಾಡಿಕೊಂಡಂತೆ - ಅಲ್ಲವೆ?

  ಮನುಷ್ಯನ ಇಡೀ ವ್ಯಕ್ತಿತ್ವವೇ ಒಳಿತು ಮತ್ತು ಕೆಡುಕುಗಳ ಚೌಚೌ. ಕೆಟ್ಟ ಕೆಲಸಗಳನ್ನು ಮಾಡುವಾಗ ಅದು ಕೆಟ್ಟದ್ದು ಎಂಬ ಪರಿಜ್ಞಾನವು - ಪೂರ್ಣ ಹುಚ್ಚರನ್ನು ಬಿಟ್ಟು ಉಳಿದೆಲ್ಲರಿಗೂ ಇದ್ದೇ ಇರುತ್ತದೆ. ಏನೇನೋ ಆಸೆ, ಕುತೂಹಲ, ಮಹತ್ವಾಕಾಂಕ್ಷೆ, ಪರಾಕ್ರಮದ ಸುಳಿಗೆ ಸಿಲುಕಿ ಪ್ರತೀ ಬದುಕಿನಲ್ಲೂ ಕೆಟ್ಟದೆಂಬುದು ಇಣುಕದೇ ಬಿಡದು. ಇನ್ನು ಕೆಲವರಿದ್ದಾರೆ. ತಮ್ಮೊಳಗಿರುವ ಕೆಡುಕು ಉಳಿದವರಲ್ಲಿರುವ ಕೆಡುಕಿಗಿಂತ ಉತ್ತಮವಾದುದು ಎಂಬ ವರ್ತನೆಯನ್ನು ಅಂಥವರಲ್ಲಿ ನಾನು ನೋಡಿದ್ದೇನೆ. ಕೆಡುಕಿನಲ್ಲೂ ಒಳ್ಳೆಯ ಕೆಡುಕು ಮತ್ತು ಕೆಟ್ಟ ಕೆಡುಕು ಎಂಬ ಭೇದವುಂಟೆ? ಇವೆಲ್ಲವೂ Self  defence ನ Tricky Style ! ಆದರೆ ಪ್ರಪಂಚವನ್ನು ಮೋಸಗೊಳಿಸಿದಂತೆ ನಮ್ಮನ್ನು ನಾವು ಮೋಸಗೊಳಿಸಲು ಆಗುವುದಿಲ್ಲ. ಬದುಕಿನಲ್ಲಿ  ಶ್ರದ್ಧೆಯಿರುವ ಪ್ರತಿಯೊಬ್ಬ ವ್ಯಕ್ತಿಯೂ ಪ್ರಜ್ಞಾಪೂರ್ವಕವಾಗಿ ಕೆಡುಕನ್ನು ತರಾಟೆಗೆ ತೆಗೆದುಕೊಳ್ಳಲೇಬೇಕು; ಹಂತಹಂತವಾಗಿ ಕೆಟ್ಟ ಸಹವಾಸ ಮತ್ತು ಕೆಟ್ಟ ವೃತ್ತಿಯನ್ನು ನಿವಾರಿಸಿಕೊಂಡು ಒಳಿತಿಗೆ ದಾರಿ ಮಾಡಿಕೊಡಬೇಕು. ನಮ್ಮ ಬದುಕಿನ ಹಾದಿಯಲ್ಲಿ, ಮುನ್ನಡೆಯ ಹಂತದಲ್ಲಿ ಒಳಿತು ಕೆಡುಕುಗಳೆರಡೂ ನಮಗೆ ಮುಖಾಮುಖಿಯಾಗದೆ ಹೋಗುವುದಿಲ್ಲ. ದೋಷಗಳಿಂದ ಪಾಠ ಕಲಿಯುವ ಸಮಯವೂ ಬರುತ್ತದೆ. ಋಜುಮಾರ್ಗದಲ್ಲಿಯೇ ನಡೆಯುವ ಸಂಕಲ್ಪ ಮತ್ತು ನಿರಂತರ ಪ್ರಯತ್ನಕ್ಕೆ ಜೋತುಬಿದ್ದವರ ಬದುಕು ಹಳಿ ಹತ್ತುತ್ತದೆ. ಈ ಹಂತದಲ್ಲಿ ನಮ್ಮ ವಿಕಾಸಕ್ಕೆ ಅಡ್ಡಿಯಾಗುವ ಎಲ್ಲ ಕೆಡುಕುಗಳನ್ನೂ ನಿಷ್ಕರುಣೆಯಿಂದ ದೂರೀಕರಿಸಬೇಕು. ಒಮ್ಮೆ ಮಾಡಿದ ತಪ್ಪನ್ನು ಮತ್ತೊಮ್ಮೆ ಮಾಡುವುದಿಲ್ಲ ಎಂಬ ಎಚ್ಚರವು ಅತೀ ಅಗತ್ಯ. ಹೆಂಡತಿ ಅಥವ ಗಂಡನ ಕಾಟಕ್ಕೆ ಅಥವ ಕೂಟಕ್ಕೆ - ತಾವು ಅಮಲುಕೋರರಾಗಿ ಮನೆಯನ್ನು ರಣರಂಗ ಮಾಡುವುದನ್ನಾಗಲೀ ಪರಿಸರವನ್ನು ಸ್ಮಶಾನ ಸದೃಶವನ್ನಾಗಿಸುವುದನ್ನಾಗಲೀ ಒಪ್ಪಲು ಆಗುವುದಿಲ್ಲ. ಯಾವುದೇ ಆಟಕ್ಕೂ ಮಿತಿ ಬೇಕು. ಕುಟುಂಬವನ್ನು ಮುಳುಗಿಸುವ ಯಾವುದೇ ವ್ಯಸನದ ದೀರ್ಘಕಾಲದ ಸಹವಾಸವು ಯಾರಿಗೂ ಒಳ್ಳೆಯದಲ್ಲ. ಅದರಿಂದ ನಮ್ಮ ವ್ಯಕ್ತಿತ್ವವೇ ಸತ್ತು ಹೋಗುತ್ತದೆ. ಅನುಭವದ ಬೇಟೆಯ ನಮ್ಮ ತೆವಲು -  ವ್ಯಕ್ತಿತ್ವ ನಾಶಕ್ಕೆ ಕಾರಣವಾಗಬಾರದು. ನಮ್ಮ ಸಾಮರ್ಥ್ಯದ ಇತಿಮಿತಿಯಲ್ಲಿಯೇ ಯುಕ್ತಿಯಿಂದ ಬದುಕಿನ ಕಬಡ್ಡಿ ಆಡಬೇಕು. ಸ್ವಯಂ ಪ್ರೇರಿತವಾಗಿ ನಾವು ಮಾಡುವ Foul - ದುಷ್ಕರ್ಮಗಳಿಗೆ ಹೊರಗಿನ ಯಾರೂ ಯಾವತ್ತೂ ಹೊಣೆಯಾಗಲಾರರು. ನಮ್ಮ ಕರ್ಮಕ್ಕೆ ನಾವೇ ಹೊಣೆಗಾರರು ಎಂಬುದನ್ನು ಮೊದಲು ಒಪ್ಪಿಕೊಳ್ಳಬೇಕು. Foul ಆದ ಮೇಲೆ Out ಆಗಲೇಬೇಕು. ಸಲ್ಲದ ಉತ್ಸಾಹದಿಂದ ನಾವು ಬಿತ್ತಿ ಕೆತ್ತಿ ಎತ್ತಿದ್ದನ್ನು - ಇನ್ನ್ಯಾರಿಗೋ ಮೆತ್ತಲಾಗುವುದಿಲ್ಲ. "ನನ್ನದೇನಿಲ್ಲ; ಎಲ್ಲವೂ ನೀನೇ - ನಿನ್ನದೇ" ಎಂಬ ಆಗಾಗ ಇಣುಕುವ ಸ್ವಚ್ಛ ಚಿಂತನೆಯು - ನಮ್ಮಿಂದಾದ ತಪ್ಪನ್ನು ಜಾರಿಸಿಕೊಳ್ಳುವ ವ್ಯಾವಹಾರಿಕ ಜಾಣ್ಮೆಗೆ ಮಾತ್ರ ಸೀಮಿತವಾಗಬೇಕೇಕೆ? 

  ಕಷ್ಟ ಬಂದಾಗ ಏನಾದರೂ ಬಾಹ್ಯ ಅವಲಂಬನೆಯನ್ನು ಬಯಸುವುದು ಸಾಮಾನ್ಯ ವಿಚಾರ. ಅಂತಹ ವ್ಯಕ್ತಿಗಳು ಶ್ರದ್ಧೆಯಿಂದ ಆಧ್ಯಾತ್ಮಿಕ ಓದನ್ನು ಅವಲಂಬಿಸಬಹುದು; ಅರ್ಥಭರಿತ ಹಾಡುಗಳನ್ನು ಕೇಳಬಹುದು; ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಬಹುದು. ಇಚ್ಛೆಯೊಂದು ಪ್ರಬಲವಾಗಿದ್ದರೆ ಈ ಬದುಕಿನಲ್ಲಿ ನೂರಾರು ಉತ್ತಮ ಆಧಾರಗಳಿವೆ. ಮೌನದ ಅವಲಂಬನೆಯಿಂದಲೂ ಕುಣಿಯುವ ಮನಸ್ಸಿನ ಲಗಾಮು ಹಿಡಿಯಬಹುದು; ಸದ್ವಿಚಾರಗಳ ಚಿಂತನ ಮಂಥನದಿಂದ ಜಾರುತ್ತಿರುವ ಬದುಕಿಗೆ ಸ್ಥಿರತೆಯೂ ಸಿಕ್ಕೀತು. ನಾವು ಕಣ್ಣುಮುಚ್ಚಿ ನಂಬುತ್ತ - "ನಮ್ಮವರು" ಎಂದುಕೊಳ್ಳುವ ಸಮಾಜದ ವೇಷಧಾರಿಗಳಿಗಿಂತ - ಸುರಕ್ಷಿತ ಭಾವವನ್ನು ಮೂಡಿಸುವ ಅನಂತ ಶಕ್ತಿಯನ್ನು ಆಸರೆಯಾಗಿ ಅವಲಂಬಿಸಿ ನೆಮ್ಮದಿ ಉಂಡವರಿದ್ದಾರೆ. "ಜಿಸ್ ಕಾ ಕೋಯೀ ನಹೀಂ ಉಸ್ ಕಾ ತೋ ಖುದಾ ಹೇ ಯಾರೋಂ...ಹಮ್ ನಹೀಂ ಕೆಹತಾ, ಕಿತಾಬೋ ಮೇಂ ಲಿಖಾ ಹೇ ಯಾರೋಂ..." ಎಂಬ ಮಾತು ವಿಶ್ವಾಸವನ್ನು ಪ್ರತಿಪಾದಿಸುತ್ತದೆ. ವಿಶ್ವಾಸಕ್ಕಿಂತ ದೊಡ್ಡ ಆಸರೆ ಯಾವುದಿದೆ? ಆದರೆ ವಿಶ್ವಾಸ ಎಂಬ ಗ್ಯಾರಂಟಿ ಕಾರ್ಡನ್ನು ಕರ್ತವ್ಯ ನಿರ್ವಹಣೆ ಎಂಬ ಸುಂಕ ಕಟ್ಟಿ, ಕುಟುಂಬ ಛತ್ರದ ಅಧೀನದಲ್ಲಿ ಕಾಲಕಾಲಕ್ಕೆ ಪುನರ್ನವೀಕರಿಸುತ್ತ ಇರಬೇಕಾಗುತ್ತದೆ. ಕರ್ತವ್ಯ ಮರೆತಾಗ ವಿಶ್ವಾಸವೂ ಮರೆ (Lapse) ಆಗುತ್ತದೆ.

                             ******************--------------------******************
  ಬಾಲ್ಯದಲ್ಲಿ ನಮ್ಮ ಮನೆಗೆ ನನ್ನ ಅಕ್ಕನ ಬ್ಯಾಂಕಿನ ಸಹೋದ್ಯೋಗಿಯೊಬ್ಬರು ಆಗಾಗ ಬರುತ್ತಿದ್ದರು. ಅವರ ಹೆಸರು ಮುಕ್ತಾ ಬಾಯಿ. ಅವರ ಮನೆ ಮಾತು ಕೊಂಕಣಿ. ಅವರಿಗೆ ಆರೋಗ್ಯದ ಏನೋ ಸಮಸ್ಯೆಯಿದ್ದುದರಿಂದ ಮಧ್ಯಾಹ್ನದ ಊಟ ಮಾಡಲು ಅವರು ಹೋಟೆಲಿಗೆ ಹೋಗುತ್ತಿರಲಿಲ್ಲ. ದೂರದಿಂದ ಬರುತ್ತಿದ್ದ ಅವರು ಕೆಲವು ದಿನ ಬುತ್ತಿಯನ್ನು ಕಟ್ಟಿಕೊಂಡು ಬರುತ್ತಿದ್ದರು. ಆದರೆ ಮಧ್ಯಾಹ್ನದ ಹೊತ್ತಿಗೆ ತಣ್ಣಗಾಗಿರುತ್ತಿದ್ದ ಆ ಬುತ್ತಿಯುಣ್ಣಲು ಅವರಿಂದ ಸಾಧ್ಯವಾಗದೆ ಇಡೀ ದಿನ ಉಪವಾಸವಿದ್ದು ಬಿಡುತ್ತಿದ್ದರು. ಮೊದಲೇ ದುರ್ಬಲ ಶರೀರದ ಅವರು ಸಂಜೆಯ ಹೊತ್ತಿಗೆ ನಿಶ್ಶಕ್ತರಾಗಿರುತ್ತಿದ್ದರು. ನನ್ನ ಅಕ್ಕನ ಬಾಯಿಯಿಂದ ಮುಕ್ತಾಬಾಯಿಯ ನಿರಶನ ಕಥನವನ್ನು ಕೇಳಿಸಿಕೊಂಡ ನನ್ನ ಅಮ್ಮನು ಪ್ರತೀ ದಿನವೂ ಅವರನ್ನು ನಮ್ಮ ಮನೆಗೆ ಕರೆದುಕೊಂಡು ಬರಲು ಹೇಳಿದ್ದಳು. ಅನಂತರ ಅಕ್ಕನ ಜೊತೆಗೆ ಅವರೂ ನಮ್ಮ ಮನೆಗೆ ಬಂದು ಮಧ್ಯಾಹ್ನದ ಊಟ ಮಾಡಿ ಬ್ಯಾಂಕಿಗೆ ಹೋಗುತ್ತಿದ್ದರು. ನಮ್ಮ ಅಂದಿನ ಸ್ಥಿತಿ ಗತಿಯನ್ನು ಹತ್ತಿರದಿಂದ ನೋಡಿದ ಮೇಲೆ ಅವರು ಪ್ರತೀ ತಿಂಗಳೂ ಯತ್ಕಿಂಚಿತ್ ಹಣವನ್ನು ಅಮ್ಮನ ಕೈಯ್ಯಲ್ಲಿ ತುರುಕಲು ಆರಂಭಿಸಿದ್ದರು. ಅಂತಹ ಮುಕ್ತಾಬಾಯಿಯ ಬಾಯಿಂದ "ಖರ್ಮ ಖರ್ಮ..." ಎಂಬ ಮಾತನ್ನು ನಾನು ಬಹಳ ಸಾರಿ ಕೇಳಿದ್ದೇನೆ. ಊಟಮಾಡಿ ಹೋಗುವ ಅರ್ಧ ಗಂಟೆಯ ಒಳಗೆ ರಸವತ್ತಾಗಿ ಕೇಜಿಗಟ್ಟಲೆ ಮಾತಾಡುತ್ತಿದ್ದ ಮುಕ್ತಾಬಾಯಿ ಅವರ ಮಾತಿನ ನಡುವಿನಲ್ಲಿ ನುಸುಳುತ್ತಿದ್ದ "ಖರ್ಮ" ಗಳಿಗೆ ಲೆಕ್ಕ ಮಿತಿಯಿರಲಿಲ್ಲ. ಅವರು ಎಷ್ಟು ನಗಿಸುತ್ತಿದ್ದರು - ನಗುತ್ತಿದ್ದರು ಅಂದರೆ ಅವರು ಉಂಡು ಹೋಗುವಷ್ಟರಲ್ಲಿ ನಾವೆಲ್ಲ ನಕ್ಕು ನಕ್ಕು ಸುಸ್ತಾಗುತ್ತಿದ್ದೆವು. ಅಂದು ಹುಡುಗಾಟದ ಮನೋಭಾವದಲ್ಲಿದ್ದರೂ ನಗುವುದರಲ್ಲಿ ಸ್ವಲ್ಪ ಕಂಜೂಸುತನ ಮಾಡುತ್ತಿದ್ದ ನಾನು, ಮೌನವಾಗಿ ದೂರದಲ್ಲಿದ್ದು ಮುಕ್ತಾಬಾಯಿ ಅವರು ಹೊರಡಿಸುತ್ತಿದ್ದ "ಖರ್ಮ" ಗಳನ್ನು ಪ್ರತೀ ದಿನವೂ ಲೆಕ್ಕಮಾಡುತ್ತಿದ್ದೆ! ಆ ಮುಕ್ತಾ ಬಾಯಿಯವರಿಗೆ ದೈಹಿಕ ಮತ್ತು ಮಾನಸಿಕವಾಗಿಯೂ ಹಲವು ಬಗೆಯ ಕಿರಿಕಿರಿ, ಒತ್ತಡಗಳಿದ್ದವು. ಆದರೆ ಅವನ್ನೆಲ್ಲ ನುಂಗಿ ಜೀರ್ಣಿಸಿಕೊಳ್ಳುತ್ತಿದ್ದ ಅವರು ತಮ್ಮ ಮನಸ್ಸನ್ನು ಹಗುರ ಮಾಡಿಕೊಳ್ಳಲು ಒದಗುವ ಯಾವುದೇ ಸಂದರ್ಭವನ್ನೂ ವ್ಯರ್ಥಗೊಳಿಸುತ್ತಿರಲಿಲ್ಲ. ದುರ್ಬಲ ಶರೀರದ ಅವರೇ ನಡೆದುಕೊಂಡು ಬರುತ್ತಿದ್ದಾರಾ ಅಥವ ಅವರ ದೇಹವು ಗಾಳಿಯಲ್ಲಿ ಹಾರಿಕೊಂಡು ಬರುತ್ತಿದೆಯಾ ಎಂದು ಭಾವಿಸುವಷ್ಟು ಅವರು ಬಡಕಲಾಗಿದ್ದರು. ತಮ್ಮ ಬಾಲ್ಯದಿಂದ ಕೊನೆಯವರೆಗೂ ಹಲವಾರು ಕೌಟುಂಬಿಕ ಜವಾಬ್ದಾರಿಗಳಿಗೆ ಹೆಗಲುಕೊಟ್ಟು ಪಾಲಿಗೆ ಬಂದ ಕೆಲಸವನ್ನು ನಿಷ್ಠೆಯಿಂದ "ಮಾಡಿ ಮಾಡಿಯೇ" ಸವೆದು ಹೋದಂತಿದ್ದ ಮುಕ್ತಾ ಬಾಯಿ ಅವರು, ತಮ್ಮ ಕಷ್ಟಗಳಿಗಾಗಿ ತಮ್ಮ ಹೆತ್ತವರನ್ನೋ ಗಂಡನನ್ನೋ ಕುಟುಂಬವನ್ನೋ ಒಂದು ದಿನವೂ - ದಾರಿಯಲ್ಲಿ ನಿಂತು ದೂರಿದವರಲ್ಲ. ಸಿಹಿಯೆಲ್ಲ ನಿಮಗಿರಲಿ; ಕಹಿಯೆಲ್ಲ ನನಗಿರಲಿ... ಎನ್ನುತ್ತ ಇಡೀ ಜೀವನವನ್ನೇ ಸವೆಸಿದ ಮುಕ್ತಾ ಬಾಯಿ ಈಗಲೂ ನನಗೆ ನೆನಪಾಗುತ್ತಾರೆ. 

  "ನೀವ್ ಸುಮ್ನಿರಿ ಅಮ್ಮ; ಕಷ್ಟಗಳು ಮನುಷ್ಯರಿಗಲ್ಲದೆ ಮರಕ್ಕೆ ಬರತ್ತಾ? ಬರತ್ತೆ...ಹೋಗತ್ತೆ...ಅದ್ಕೆಲ್ಲ ತಲೆ ಬಿಸಿ ಮಾಡಿದ್ರೆ ಆಗತ್ತಾ?" ಎನ್ನುತ್ತ ತಮ್ಮ ದುರ್ಬಲ ದೇಹದಲ್ಲಿದ್ದ ಪ್ರಚಂಡ ಅಂತಃಶಕ್ತಿಯನ್ನು ಆ ಮುಕ್ತಾಬಾಯಿ ಆಗಾಗ ಪ್ರಕಟಿಸುತ್ತಿದ್ದರು. ಅವರು ಕೆಲವು ಶನಿವಾರಗಳಂದು ತುಂಬ ಹೊತ್ತು ನಮ್ಮ ಮನೆಯಲ್ಲಿ ಕೂತು ಹರಟೆ ಹೊಡೆಯುತ್ತಿದ್ದುದೂ ಇತ್ತು. ಆಗ, "ಸ್ವಲ್ಪ ಕಾಫಿ ಮಾಡ್ತೇನೆ.." ಎನ್ನುತ್ತ ಅಮ್ಮನು ಕೂತಲ್ಲಿಂದ ಎದ್ದರೆ "ನೀವ್ ಸುಮ್ಮನೆ ಕೂತ್ಕಣ್ಣಿ ಅಮ್ಮ; ಎಂತ ಖರ್ಮ...ಕಾಪಿಯಾ? ಕಟಪಾಡಿಯಾ? ಎಂತದೂ ಬೇಡ.." ಎನ್ನುತ್ತ ಹೊಸ ಹೊಸ ನುಡಿಗಟ್ಟುಗಳಿಂದ ನಮ್ಮನ್ನು ರಂಜಿಸುತ್ತಿದ್ದುದೂ ಇತ್ತು. (ಅವರು ಮೂಲತಃ ಕಟಪಾಡಿಯವರು) ತನ್ನ ಪಾಲಿನ ಕೆಲಸವನ್ನು ನಿಷ್ಠೆಯಿಂದ ಮಾಡುತ್ತೇನೆ - ಎಂಬ ಒಂದೇ ಸಾಲಿನ ಸೂತ್ರದಿಂದ ಅವರು ತಮ್ಮ ಬದುಕನ್ನು ಕಟ್ಟಿದಂತೆ ನನಗೆ ಕಂಡಿತ್ತು. ಹೀಗೆ ಎಲ್ಲರನ್ನು ನಗಿಸುತ್ತ ನಗುತ್ತ, ತಾನು ಹುಟ್ಟಿದ ಮತ್ತು ಇದ್ದ ಸ್ಥಳದಲ್ಲೆಲ್ಲ ತನ್ನಿಂದಾದಷ್ಟು ದುಡಿಯುತ್ತಿದ್ದ ಅವರ ದುರ್ಬಲ ಶರೀರವು ಹೆಚ್ಚು ಕಾಲ ಉಳಿಯಲಿಲ್ಲ. ತಮ್ಮ ಚಿಕ್ಕ ಪ್ರಾಯದಲ್ಲೇ (ಬಹುಶಃ ಸುಮಾರು 50 ವರ್ಷ) ಅವರು ನಿಧನರಾದರು. ನಿಜವಾದ ಸಹಾನುಭೂತಿಗೆ ಪಾತ್ರವಾಗಲು ಮುಕ್ತಾ ಬಾಯಿಯಂತಹ ಬದುಕುಗಳು ಅರ್ಹವೆನಿಸುತ್ತವೆ; ಸ್ಮರಣಾರ್ಹವೆನಿಸುತ್ತವೆ. ಸುಮಾರು 30 ವರ್ಷಗಳ ಹಿಂದಿನ ವರೆಗೂ ಪ್ರತೀ ಊರಿನಲ್ಲಿಯೂ ಹೀಗೆ ಕರ್ತವ್ಯವನ್ನು ಆರಾಧಿಸುತ್ತಿದ್ದ ಹಲವಾರು ಮುಕ್ತಾಬಾಯಿ ಕಾಣಸಿಗುತ್ತಿದ್ದರು. ಉಂಡುಂಡು ಸ್ವರ್ಗವನ್ನೈದುವ ಇಂದಿನ ಕನಸುಣಿಗಳಿಗೆ ಇವೆಲ್ಲ ಅರ್ಥವಾಗುವುದಿಲ್ಲ.

                                        ---------*********--------*********--------- 

  ಅಂದು ಅಂತಹ ಮುಕ್ತಾಬಾಯಿ ಇದ್ದರೆ, ಇಂದು "ಮುಕ್ತ BOY ಮತ್ತು ಮುಕ್ತ ಮುಕ್ತ GIRL"ಗಳು ಈ ಪ್ರಪಂಚದಲ್ಲಿ ಸಾಕಷ್ಟಿವೆ. ಅದಕ್ಕೇ ಮುಕ್ತಾಬಾಯಿಯವರು ಬಳಸುತ್ತಿದ್ದ "ಖರ್ಮ" ಎಂಬ ಉದ್ಗಾರವು ನನಗೆ ಹೆಚ್ಚು ನೆನಪಾಗುತ್ತದೆ. ಆಧ್ಯಾತ್ಮಿಕ ಭಾಷೆಯ ಕರ್ಮಕ್ಕೂ - ಆಡುಭಾಷೆಯಲ್ಲಿ ಅವರು ಬಳಸುತ್ತಿದ್ದ ಖರ್ಮಕ್ಕೂ ಬಹಳ ಅಂತರವಿದೆ. "ಖ" ಎಂದು ಅವರು ಒತ್ತಿ ಹೇಳುವಾಗ ವಿವಿಧ ಸಂದರ್ಭಗಳಲ್ಲಿ ಅದು ಹುಟ್ಟಿಸುತ್ತಿದ್ದ ಭಾವವೇ ವಿಭಿನ್ನವಾಗಿರುತ್ತಿತ್ತು ಎಂದು ನನಗೆ ಅನ್ನಿಸಿದೆ. ಖ ಎಂದರೆ ಆಕಾಶ. ಅನಂತ; ಅಗಮ್ಯ; ನಿಗೂಢ! ನಿತ್ಯ ಬದುಕಿನಲ್ಲಿ ನಾವು ನಡೆಸುವ ಅಪಾರ - ಅಪರಾತಪರಾ ಅಪಭ್ರಂಶಗಳನ್ನೆಲ್ಲ "ಖರ್ಮ"ವೆನ್ನುವುದೇ ಯೋಗ್ಯ ಎಂದು ನನಗೆ ಅನ್ನಿಸುತ್ತದೆ. ಸ್ವಂತದ ಎಲ್ಲ ಅವಘಡಗಳಿಗೂ ಇನ್ನೊಬ್ಬರನ್ನು ಬೊಟ್ಟಿಟ್ಟು ತೋರಿಸುವುದು ಇಂದಿನ ನಮಗೆ ಸುಲಭದ ದಾರಿಯಾಗಿ ಹೋಗಿದೆ. ಆದರೆ ಯಾವುದೇ ದೋಷವನ್ನು ನಮ್ಮ ಹೆಗಲಿನಿಂದ ಜಾರಿಸುವ ಮೊದಲು ಎಚ್ಚರದಿಂದ ಮನೋವಿಶ್ಲೇಷಣೆಗೆ ತೊಡಗಬೇಡವೆ? ಆದರೆ ನಾವು ನಮ್ಮ ವಿರುದ್ಧವಾಗಿ ಸಾಕ್ಷಿ ನುಡಿಯುವ ಎಲ್ಲವನ್ನೂ ದೂರವಿಡುವ ಜಾಣ್ಮೆ ಮೆರೆಸುತ್ತಿರುವುದರಿಂದ ನಮ್ಮ ಮನಸ್ಸು - ಬುದ್ಧಿಯು ಕೂಡ ಈಗ ನಮ್ಮ ಸ್ನೇಹಿತರಾಗಿ ಉಳಿದಿಲ್ಲ. ಆದ್ದರಿಂದ ನಮ್ಮ ನಡಿಗೆಯು ಏಕಮುಖಿಯಾಗಿ, ದಾರಿಯು ಕೊಂಡೊಯ್ದಲ್ಲಿಗೆ ದೇಹ ಹೋಗುವುದಲ್ಲದೆ ಹಿಂದಿರುಗುವ ಅವಕಾಶವೇ ನಮಗೆ ಇಲ್ಲದಂತಾಗಿದೆ. ಕರ್ಮ ಎಂಬುದು - ಖರ್ಮವಾಗುವುದು ಹೀಗೆ.

  ಬಾಲ್ಯದಲ್ಲಿಯೇ ಪೂರ್ವಾಗ್ರಹಪೀಡಿತವಾಗಿ ರೂಪುಗೊಳ್ಳುತ್ತಿರುವ ಇಂದಿನ ಸಮಾಜದ ಕೆಲವು ಮನಸ್ಸುಗಳು ಖತರ್ನಾಕ್ ಜಾಣ್ಮೆಯನ್ನು ಪ್ರದರ್ಶಿಸುತ್ತಿರುವುದೂ ನಿತ್ಯವ್ಯಾಪಾರವಾಗಿದೆ. ನಮ್ಮ ಮಕ್ಕಳನ್ನು "ಹೀಗೇ ಬದುಕಬೇಕು; ಬದುಕು ಹೀಗಿರಬೇಕು.." ಎಂದು ನಾವು ನಿರ್ದೇಶಿಸುತ್ತಿಲ್ಲ. "ಇಷ್ಟ ಬಂದಂತೆ ಬದುಕಬಹುದು" ಎಂಬ ಸ್ವಾತಂತ್ರವನ್ನು ಅವರಿಗೆ ಕೊಟ್ಟಿದ್ದೇವೆ. ಮಾತ್ರವಲ್ಲದೆ ಹೇಗಾದರೂ - ಯಾರ ಕೈಕಾಲು ಎಳೆದು ಬೀಳಿಸಿಯಾದರೂ - SHINE ಆಗುವಂತೆ ಬದುಕನ್ನು ಕಟ್ಟಿಕೋ...ಎಂದು ಅಡ್ದದಾರಿಯನ್ನೂ ತೋರಿಸುತ್ತಿದ್ದೇವೆ. ಅದಕ್ಕೇ ನಮ್ಮ ಪ್ರತಿಕ್ರಿಯೆಗಳಲ್ಲಿ ಎಲ್ಲಿಲ್ಲದ ಎಡಬಿಡಂಗಿತನವು ಇಣುಕುತ್ತದೆ. "ಅವರಲ್ಲಿ ಎಷ್ಟೋ ದೋಷಗಳಿರಬಹುದು; ಆದರೆ ಅವರು ಬಹಳ ಒಳ್ಳೆಯವರು; ಅವರ ಹೆಂಡತಿ / ಗಂಡ/ ಸನ್ನಿವೇಶದಿಂದಾಗಿ ಅವರು ಹಾಳಾಗಿಹೋದರು..." ಇತ್ಯಾದಿ ಮಾತುಗಳನ್ನು ವಿದ್ವಾಂಸರೆಂದು ಹೇಳಿಕೊಳ್ಳುವವರ ಬಾಯಿಂದ ಕೇಳುವಾಗ - ಬಹುಶಃ ಆದ್ದರಿಂದಲೇ - ನನಗೆ ಆಶ್ಚರ್ಯವಾಗುತ್ತದೆ. ಯಾವುದೇ ಕೌಟುಂಬಿಕ ವ್ಯವಹಾರದಲ್ಲಿ ಅಸಮಂಜಸ ಸನ್ನಿವೇಶವು ಏರ್ಪಟ್ಟರೆ - ಸಾಧ್ಯವಾದಷ್ಟು ಪರಿಸ್ಥಿತಿಯನ್ನು ಹದಗೊಳಿಸಲು ಅವರವರೇ ಪ್ರಯತ್ನಿಸುವುದು; ಅಂತಹ ಪ್ರಯತ್ನಗಳೆಲ್ಲವೂ ವಿಫಲವಾದಾಗ ಒಗ್ಗದ ವಾತಾವರಣದಿಂದ ಕಾನೂನು ಪ್ರಕಾರ ಹೊರಗೆ ಬರುವುದು...ಇವೆರಡೇ ಸಮಸ್ಯೆಗೆ ಪರಿಹಾರವಲ್ಲದೆ ಇನ್ನೊಂದಿಲ್ಲ. ಆತ್ಮಹತ್ಯೆಯಂತೂ ಯಾವ ಸಮಸ್ಯೆಗೂ ಪರಿಹಾರವಲ್ಲ. ನುಂಗಲಾಗದ - ಉಗುಳಲಾಗದ ಕೌಟುಂಬಿಕ ಸನ್ನಿವೇಶವನ್ನು ಸೃಷ್ಟಿಸುವಲ್ಲಿ ಎಲ್ಲರ ಪಾಲೂ ಇದ್ದೇ ಇರುತ್ತದೆ; ಆದ್ದರಿಂದ ಪರಿಣಾಮದಲ್ಲೂ ಪಾಲು ಪಡೆಯಬೇಕಾಗುತ್ತದೆ. ಸುಳ್ಳು ಪ್ರತಿಷ್ಠೆಗೆ ಬಲಿಬಿದ್ದು "ತನ್ನದು ಚೆಂದದ ಸಂಸಾರ" ಎಂದು ತೋರಿಸಿಕೊಳ್ಳುತ್ತ ಮನಸ್ಸನ್ನು ಕುರುಕ್ಷೇತ್ರ ಮಾಡಿಕೊಳ್ಳುವ ಹುಂಬರು "ಹೆಂಡತೀ ಪ್ರಾಣ ಹಿಂಡುತೀ.." ಎಂದೋ - " ಗಂಡನಲ್ಲೋ ಇದು ಗಂಡಾಂತರದ ಯಮಗಂಡ..." ಎಂದೋ - "ಇದು ಊರಲ್ಲ; ಕಾಡು.." ಎಂದೋ ತೊದಲುತ್ತ ಚರಂಡಿಯಲ್ಲಿ ಬಿದ್ದರೆ ಏನುಪಯೋಗ? ಅದು ಆತ್ಮಹತ್ಯೆಯಲ್ಲದೆ ಬೇರೇನು? ಈ ಜಗತ್ತಿನಲ್ಲಿ ಸಾಯುವುದಕ್ಕೆ ನೂರಾರು ಮಾರ್ಗಗಳಿರುವಂತೆ ಬದುಕುವುದಕ್ಕೂ ಸಾವಿರಾರು ಯೋಗ್ಯ ಮಾರ್ಗಗಳಿವೆ. ಬಗ್ಗದೆ ಕುಗ್ಗದೆ ಹಿಗ್ಗಿ ನಡೆಯುವ ಮನೋಬಲ ಬೇಕು - ಅಷ್ಟೆ.

  ಸಂಸಾರವೆಂದರೆ ರಣರಂಗವಲ್ಲ. ಪ್ರೀತಿ, ಕರುಣೆ, ವಾತ್ಸಲ್ಯಗಳಿಂದ ಕಟ್ಟಬೇಕಾದ ಸುಭದ್ರ ಕೋಟೆಯದು. ಪರಸ್ಪರ ಕಾಳಜಿಯೇ ಯಾವುದೇ ಸಂಸಾರದ ಜೀವಾಳ. ಸಹನೆ, ಕ್ಷಮಾ ಗುಣಗಳೇ ಉಸಿರು.

                                        ---------*********---------*********---------                                          

  ಸುಮಾರು 1969 - 70 ರ ಸುಮಾರಿಗೆ ನಮ್ಮ ಬಿಡಾರದ ಪಕ್ಕದಲ್ಲಿ ಮನೆ ಮಾಡಿಕೊಂಡಿದ್ದ ಒಂದು ಕುಟುಂಬದ ಕತೆ ಇದು. ಗಂಡ, ಹೆಂಡತಿ, ಮೂರು ಮಕ್ಕಳ ಆ ಸಂಸಾರಕ್ಕೆ ಬೇಕಾದುದನ್ನು ಮನೆಯ ಯಜಮಾನನಾಗಿದ್ದ ಗಂಡನು ದುಡಿದು ತರುತ್ತಿದ್ದರು. ಅವರು Medical Representative ಆಗಿದ್ದರು; ಆದ್ದರಿಂದ ತಿಂಗಳಲ್ಲಿ ಬಹಳ ದಿನಗಳ ಕಾಲ ಉದ್ಯೋಗದ ಭಾಗವಾಗಿ ಊರೂರು ತಿರುಗುತ್ತಿದ್ದರು. ಆದರೆ ಮರ್ಯಾದೆಯಿಂದ ಬದುಕುವುದಕ್ಕೆ ಆ ಮನೆಯಲ್ಲಿ ಯಾವ ತಾಪತ್ರಯವೂ ಇರಲಿಲ್ಲ. ಸ್ವಂತ ಮನೆ ಇತ್ತು. ಆದರೆ ಹೆಂಡತಿಯೆಂಬ ಸುಮತಿಗೆ ಯಾವಾಗಲೂ ಅತೃಪ್ತಿ. ತನ್ನ ಗಂಡ ಮತ್ತು ಮಕ್ಕಳ ಮೇಲೂ ಯಾಕೋ ಅಸಮಾಧಾನ. (ಇಂದಿನ ಕೆಲವರಿಗೆ ನನ್ನ ಈ ವಾಕ್ಯ ಓದಿದ ಕೂಡಲೇ ಕರುಣೆಯು ನವದ್ವಾರದಿಂದಲೂ ಚಿಲ್ಲನೆ ಸ್ರವಿಸಬಹುದು. ಸ್ವಲ್ಪ ನಿಧಾನಿಸಿ...) ಇದು ಬರಬರುತ್ತ ಜಾಸ್ತಿಯಾಗಿ - ತಿಂಗಳಲ್ಲಿ ಕೆಲವೇ ದಿನ ಮನೆಯಲ್ಲಿರುತ್ತಿದ್ದ ಗಂಡನಿಗೆ ದೈಹಿಕವಾಗಿ ಹಲ್ಲೆ ನಡೆಸುವಷ್ಟು ಬೆಳೆಯಿತು. ಅಪ್ಪನ ಮನೆಯಿಂದ ಆಕೆಯ ಸೋದರರು ಮನೆಗೆ ಬಂದರೆ - ತನಗೆ ಚಿನ್ನ ಕೊಡು; ದುಡ್ಡು ಕೊಡು; ಆಸ್ತಿ ಕೊಡು... ಇತ್ಯಾದಿ ವಿಷಯದಲ್ಲಿ ತಮ್ಮಂದಿರನ್ನು ಹರಿದು ತಿನ್ನುವಷ್ಟು ಜಗಳ ನಡೆಯುತ್ತಿತ್ತು. ತನ್ನ ಗಂಡನು ತನ್ನ ಬ್ರಹ್ಮಾಂಡದಷ್ಟು ಆಸೆಗಳನ್ನೆಲ್ಲ ಪೂರೈಸುವ ಶಕ್ತಿಯಿಲ್ಲದ ನಾಲಾಯಕ್ ಎಂಬ ಅತೃಪ್ತಿಯೂ ಇತ್ತು. ಅಂತಹ ಕೆಟ್ಟ ಆಸೆಯು ವಕ್ರ ಹಾದಿಯನ್ನು ಆಯ್ದುಕೊಂಡಿತ್ತು. ತನ್ನ ಹಠ ಸಾಧಿಸಲು - ಅವರಿವರ ಮನೆ ಬಾಗಿಲಿಗೆ ಹೋಗಿ ಕಿಟಕಿಯಿಂದ ಇಣುಕುತ್ತ ಅಸಂಬದ್ಧವಾಗಿ ಮಾತನಾಡುವುದೂ ಆರಂಭವಾಯಿತು. ಅದು ಪರೋಕ್ಷವಾಗಿ ತನ್ನ ಕುಟುಂಬದ ಮೇಲೆ ಒತ್ತಡ ಹೇರುವ ಆಕೆಯ ವೈಖರಿಯಾಗಿತ್ತು. ತಾನು ಹೇಳಿದಂತೆ ಎಲ್ಲವೂ ನಡೆಯದಿದ್ದರೆ ಕುಟುಂಬದ ಮಾನ(?)ವನ್ನು ಬೀದಿಗೆ ತರುತ್ತೇನೆ ಎಂದು ಹೆದರಿಸುವ ಮೊಂಡ ಶೈಲಿಯಾಗಿತ್ತು. ಒಂದು ದಿನ ನನ್ನ ಅಮ್ಮನು ಆಕೆಯನ್ನು ಮನೆಯ ಒಳಗೆ ಕರೆದು ಕೂಡಿಸಿಕೊಂಡು " ನೋಡಮ್ಮಾ, ನಿನಗೆ ಏನಾಗುತ್ತಿದೆ? ಯಾಕೆ ಹೀಗೆ ಮನೆಯವರ ಜೀವ ತಿಂತೀಯಾ?" ಎಂದು ಕೇಳಿದಾಗ "ಅಮ್ಮಾ, ನಾ ನಿಮ್ಮ್  ಹತ್ರ ಸುಳ್ ಹೇಳತ್ತಿಲ್ಲೆ. ನನ್ ಮಾಷ್ಟ್ರ ಹೆಂಡತಿ ಹತ್ರ ಸುಳ್ ಹೇಳೂಕಾತ್ತಾ? ಇಕಣಿ, ನಂಗ್ ಒಂದೊಂದ್ ಸರ್ತಿ ಹುಚ್ ಹಿಡಿತ್ತೇ..." ಅಂತ ಹೇಳಿದಾಗ ಅಮ್ಮನು "ಮತ್ತೇನಿಲ್ಯಾ? ನಿಂಗೆ ವಿಪರೀತ ಮತ್ಸರ ಇದೆ. ಯಾರಾದರೂ ಒಂದಷ್ಟು ಚಿನ್ನ ಹಾಕ್ಕೊಂಡು ಒಳ್ಳೆಯ ಸೀರೆ ಉಟ್ಕೊಂಡು ಹೋದ್ದನ್ನ್ ಕಂಡ್ರೂ ನಿನ್ ತಲೆ ಹಾಳಾತ್. ಏನಾದ್ರೂ ಒಳ್ಳೆ ಯೋಚನೆ ಮಾಡ್. ಅಷ್ಟ್ ಚೆಂದದ್ ಮಕ್ಳ್ , ಪ್ರೀತಿ ಮಾಡು ಗಂಡ ಇಪ್ಪತ್ತಿಗೆ ಹೀಂಗೆಲ್ಲ ತಿರ್ಗಾಡ್ತ ಅವ್ರ ಮಾನ ತೆಗಿತ್ಯಾ? ನಿನ್ ತಲೆಗ್ ಎಂತದೂ ಆಯ್ಲಿಲ್ಲೆ. ನಿಂಗ್ ನೀನೇ ಹುಚ್ ಅಂದ್ಕಂತ ತಿರ್ಗಿ ಗಂಡ ಮಕ್ಳಿಗೆ ಬರ್ದೆ ದುಃಖ ಕೊಡ್ಬೇಡ...ಮನೆಗ್ ಹೋಯ್ ಒಂದ್ ಮಿಂದ್ - ತಲೆ ಬಾಚ್ಕಂಡ್ ಮನೆ ಕೆಲ್ಸ ಮಾಡ್; ನಿಂಗ್ ಹುಚ್ಚ್ ಅಂತ ನಿಂಗೇ ಹೇಳ್ಕಂಬ್ಕೆ ನಾಚ್ಕೆಯೂ ಆತ್ತಿಲ್ಯಾ? ಊರ್ ಸುತ್ತಿದ್ ಸಾಕ್; ಮನೆಗ್ ಹೋಗ್ ..." ಎಂದು ಹೇಳಿ ಕಳಿಸಿದ್ದಳು.

  ಇಂತಹ ಅದೆಷ್ಟು ಹುಚ್ಚುಗಳಿಲ್ಲ? ಇವುಗಳೆಲ್ಲವೂ ಒಟ್ಟಾರೆಯಾದ ಅತೃಪ್ತಿ ಮತ್ತು ಮತ್ಸರದ ಇನ್ನೊಂದು ರೂಪವೇ ಆಗಿ ಆಗಾಗ ಪ್ರಕಟವಾಗುವ ಹುಚ್ಚುಗಳು. ಆದರೆ... ಮತ್ಸರವನ್ನು ಮೆಟ್ಟಿ ಗೆಲ್ಲುವುದು ಉಂಡು ತೇಗಿದಷ್ಟು ಸುಲಭವೆ? ಬುದ್ಧಿ ಹೇಳಿ ಮತ್ಸರವನ್ನು ಓಡಿಸಲು ಸಾಧ್ಯವೆ? ಬರಬರುತ್ತ ಆ ಸುಮತಿಗೆ - ತನ್ನ ಹುಚ್ಚಿನ ಪಾತ್ರವು ಅಚ್ಚುಮೆಚ್ಚೆನ್ನಿಸತೊಡಗಿತ್ತು. ಹುಚ್ಚಿನ ವೇಷ ಹಾಕಿಕೊಂಡರೆ ಮನೆಯ ಯಾವ ಕೆಲಸವನ್ನೂ ಮಾಡದೆ ಹಾಯಾಗಿರಬಹುದಿತ್ತು; ಎಲ್ಲರೂ "ಅಯ್ಯೋ ಪಾಪ" ಎನ್ನುತ್ತ ಸಂತೈಸುತ್ತಿದ್ದರು. "ಕಾಳನ ಕಾಟವಿಲ್ಲ - ಬೋಳನ ಭಯವಿಲ್ಲ" ಎಂಬಂತೆ ಅಂದಿನ ಸುಮತಿಯು ತನ್ನ ಸ್ವೇಚ್ಛೆಯ ಹುಚ್ಚು ನಡವಳಿಕೆಗಳನ್ನು ಹೆಚ್ಚಿಸಿಕೊಳ್ಳತೊಡಗಿದ್ದರು. ಹೀಗೆ ತನಗೆ ತಾನೇ ಹುಚ್ಚಿನ ಅಭಿನಯ ಮಾಡುತ್ತ ಮಾಡುತ್ತ, ಇತರರ ಗಮನವನ್ನು ತನ್ನತ್ತ ಸೆಳೆಯಲು ವಿಫಲವಾದಾಗ ಅವರ "ಹುಚ್ಚು" ರೌದ್ರವಾಗತೊಡಗಿತು. ತನ್ನ ಕುಟುಂಬದ, ಪರಿವಾರದ, ನೆರೆಹೊರೆಯ ಗಮನವನ್ನು ತನ್ನತ್ತ ಸೆಳೆಯಲು ಶುರು ಮಾಡಿದ್ದ ಹುಚ್ಚಿನ ಆಟವು ಕೊನೆಗೆ ನಿಜವಾದ ಹುಚ್ಚಿಗೆ ಪರಿವರ್ತನೆಗೊಳ್ಳತೊಡಗಿತು. ಅದೊಂದು ದಿನ ಮಧ್ಯಾಹ್ನದ ಊಟಕ್ಕೆಂದು ಮನೆಗೆ ಬಂದ ಅವರ ಮಕ್ಕಳು ಹೊರಗೆ ಬಂದು ಅಂಗಳದಲ್ಲಿ ಅಳುತ್ತ ನಿಂತಿದ್ದವು. ಅದನ್ನು ನೋಡಿದ ನನ್ನ ಅಮ್ಮ "ಏನಾಯಿತು ಮಕ್ಕಳೆ ?" ಎಂದು ವಿಚಾರಿಸಿದಾಗ "ನನ್ ಅಮ್ಮ ಅನ್ನ -  ಪದಾರ್ಥದಲ್ಲೆಲ್ಲ ಮಣ್ಣ್ ತುಂಬಿಸಿ ಇಟ್ಟಿದ್ಲ. ಈಗ ಉಂಡ್ ಶಾಲೆಗ್ ಹೋಯ್ಕಲೆ; ಹಸಿವೆ ಆತ್; ಹೇಂಗ್ ಉಂಬ್ದ?..." ಎನ್ನುತ್ತ ಆ ಮಕ್ಕಳು ಅಳುತ್ತಿದ್ದರು. ಅವತ್ತು ಆ ಮಕ್ಕಳಿಗೆ ಅನ್ನ ಹಾಕಿ ನನ್ನ ಅಮ್ಮನು ಪುಣ್ಯ ಕಟ್ಟಿಕೊಂಡಿದ್ದಳು. ಆಮೇಲೆ ಆ ಸುಮತಿಯನ್ನು ಕೂಗಿ ಕರೆದು ಒಂದಷ್ಟು ಬುದ್ಧಿ ಹೇಳುವ ವ್ಯರ್ಥ ಕೆಲಸವನ್ನೂ ಮಾಡಿದ್ದಳು. ಆಕೆಯು ಒಮ್ಮೊಮ್ಮೆ ಒಂದಷ್ಟು ಅಡಿಗೆ ಮಾಡಿ, ತಾನು ಊಟ ಮಾಡಿದ ನಂತರ - ಉಳಿದ ಆಹಾರಕ್ಕೆ ಒಂದು ಮುಷ್ಟಿ ಮಣ್ಣನ್ನು ಬೆರೆಸಿ ಇಡುತ್ತಿದ್ದರು. (ಇದೆಂಥ ಹುಚ್ಚು?) ಇದರಿಂದಾಗಿ ಅವರ ಮನೆಯ ಎಲ್ಲರೂ ಆಕೆಯು ಮಾಡಿದ ಅಡಿಗೆಯನ್ನು ಉಣ್ಣುವ ಮೊದಲು ಒಮ್ಮೆ ಪರೀಕ್ಷಿಸಿ ನೋಡುವ ಗತಿ ಬಂದಿತ್ತು. ಅನಂತರ ಆ ಮಕ್ಕಳ ಅಪ್ಪನು ತನ್ನ ಮಕ್ಕಳಿಗೆ ತೊಂದರೆಯಾಗದಂತೆ ಪ್ರತ್ಯೇಕ ಚಾಕರರ ವ್ಯವಸ್ಥೆ ಮಾಡಬೇಕಾಯಿತು.

  ಈ ಸುಮತಿಯ ಪ್ರಕರಣವನ್ನು ನಾನು ಯಾಕೆ ಹೇಳಿದೆನೆಂದರೆ - ನನ್ನ ಬಾಲ್ಯದಲ್ಲಿ ಇಂತಹ ಹಲವು ಹುಚ್ಚು ದೈವಗಳನ್ನು ನಾನು ನೋಡಿದ್ದೇನೆ. ಹೆಂಗಸರಿಗೆ ಆಗಾಗ ಹುಚ್ಚು ಹಿಡಿಯುವುದು, ಮೈಮೇಲೆ ದೈವ ಬರುವುದು... ಇಂತಹ ಹೆಚ್ಚಿನ ಛದ್ಮವೇಷಗಳು ದುರ್ಬಲ ಲಜ್ಜೆಗೆಟ್ಟ ಮಹಿಳೆಯರು ಪ್ರದರ್ಶಿಸುವ "ಹೆದರಿಸುವ ಆಟ"ದಂತೆ, ತಮ್ಮ ಇಡೀ ಕುಟುಂಬಕ್ಕೇ ಹುಚ್ಚು ಹಿಡಿಯುವಂತೆ ಮಾಡುವ ರೂಕ್ಷತೆಯಾಗಿಯೂ ನನಗೆ ಕಂಡಿದೆ. "ಶೋಷಣೆಗೆ ಒಳಗಾದವರೆಲ್ಲರಿಗೂ ಹುಚ್ಚಾಟ ನಡೆಸುವ ಪರವಾನಿಗೆ ಇದೆ" ಎಂದುಕೊಳ್ಳುವ ಸನ್ನಿಯನ್ನು ಯಾರೂ ಗಮನಿಸಬಾರದು; ಪ್ರೋತ್ಸಾಹಿಸಲೂ ಬಾರದು. ಸುತ್ತಲಿನವರನ್ನು ಹೆದರಿಸಿ ತನ್ನ ಇಷ್ಟವನ್ನು ಪೂರೈಸಿಕೊಳ್ಳುವ ಇಂತಹ ಲಜ್ಜೆಗೆಟ್ಟ ದಾರಿಯನ್ನು ಆಯ್ದುಕೊಂಡಿದ್ದ ಹಲವರು ಅಂದಿನ ಸಮಾಜದಲ್ಲಿಯೂ ಇದ್ದರು. (ಇಂತಹ ಮಾತನ್ನು ಓದಿದ ಕೂಡಲೇ ಸದಾ ಶೋಷಣೆಯ ಘೋಷಣೆ ಮೊಳಗಿಸುತ್ತ ಹೆಣ್ಣಿನ ವಕಾಲತ್ತಿಗೆ ನಿಲ್ಲುವವರ ಇಂದಿನ Vote Bank ಕರುಣೆಗೆ ಕಿಡಿ ತಾಗಿದಂತೆ ಇಂದಿನ ಕೆಲವು ಮಹಿಳಾ ಮಣಿಗಳಲ್ಲಿ ಜ್ವಾಲಾಮುಖಿ ಸಿಡಿಯುವುದಿದೆ!) ಅವರಿಗೆಲ್ಲ "ಸ್ವಲ್ಪ ಸಮಾಧಾನ..." ಎಂದು ನಾನು ಹೇಳಬಯಸುತ್ತೇನೆ. ಹುಚ್ಚಿನಲ್ಲಿಯೂ ಗಂಡು ಹುಚ್ಚು, ಹೆಣ್ಣು ಹುಚ್ಚು ಎಂಬ ಭೇದಭಾವ ತೋರುವುದು ಸರ್ವಥಾ ಸರಿಯಲ್ಲ. ಹುಚ್ಚಿಗೆ ಜಾತಿ - ಲಿಂಗ ಭೇದವಿರುವುದಿಲ್ಲ. ಅವು (ಗಂ. ಹು ಮತ್ತು ಹೆ. ಹು) ಒಂದಕ್ಕೊಂದು ಪೂರಕ ಮತ್ತು ಪ್ರೇರಕ.

  ಯಾರನ್ನಾದರೂ ಉದ್ಧರಿಸುವುದಕ್ಕೆ ನಿಜವಾಗಿಯೂ ಧನಾತ್ಮಕ ಶಕ್ತಿ - ಸಾಮರ್ಥ್ಯಗಳು ಬೇಕಾಗುತ್ತವೆ. ಆದರೆ ಹಾಳು ಮಾಡಲು ದೈಹಿಕ ಶಕ್ತಿಯೂ ಬೇಡ; ಮಾನಸಿಕ ಸಾಮರ್ಥ್ಯವೂ ಬೇಡ. ಸ್ಥಿಮಿತ ತಪ್ಪಿದ ಹುಚ್ಚು ಸಾಕಾಗುತ್ತದೆ. ಬಿಟ್ಟಿ ಕರುಣೆಯನ್ನು ತೋರಿಸಿದಷ್ಟೂ ಹೆಚ್ಚಾಗುವ ಹಲವಾರು ಹುಚ್ಚುಗಳಿವೆ. ಇಂದೂ... ಸುಳ್ಳು ದೂರುಗಳನ್ನು ದಾಖಲಿಸುವವರಲ್ಲಿ ಅಂತಹ ಹುಚ್ಚಿನ ಪರಿಷ್ಕರಿತ ರೂಪವು ಕಾಣಲು ಸಿಗುತ್ತದೆ. ಗೋಡೆಗೆ ತಲೆಯನ್ನು ಬಡಿದುಕೊಳ್ಳುತ್ತ ತಮ್ಮನ್ನೇ ಹಿಂಸಿಸಿಕೊಳ್ಳುವುದು, ಕೆರೆ ಬಾವಿಯತ್ತ ಓಡುತ್ತ ರೌದ್ರ ರೂಪ ಪ್ರದರ್ಶಿಸುವುದು, ಕೋಣೆಯ ಬಾಗಿಲು ಜಡಿದುಕೊಂಡು ಮನೆಮಂದಿಯನ್ನು ಆತಂಕಕ್ಕೆ ತಳ್ಳುವುದು, ಇಡೀ ರಾತ್ರಿ ಮನೆಗೆ ಬರದೆ ಮನೆಯಲ್ಲಿ ಕಾಯುವವರನ್ನು ತುದಿಗಾಲಲ್ಲಿ ನಿಲ್ಲಿಸುವುದು, ರಸ್ತೆಯಲ್ಲಿ ನಿಂತು ನ್ಯಾಯ ಕೇಳುವುದು... ಇವೆಲ್ಲವೂ ಸ್ಥಿಮಿತವಿಲ್ಲದ ಮನಸ್ಸಿನ ವರ್ತನೆಗಳು. ಆದರೆ ವಾಮ ಮಾರ್ಗದಿಂದ ತಮ್ಮ ಹಠ - ಆಸೆಯನ್ನು ಪೂರೈಸಿಕೊಳ್ಳಲು ತೊಡಗುತ್ತಿರುವ ಸುಮತಿಗಳಿಗೆ - ಬದುಕು ಎಂದರೇನು? ಬದುಕಿನ ಆದ್ಯತೆಗಳೇನು? ನೇರ ಮಾರ್ಗದಿಂದಲೇ ಅದನ್ನು ಪಡೆಯುವುದು ಸಾಧ್ಯವೆ? ಅಸಾಧ್ಯವೆಂದಾದರೆ ಮರ್ಯಾದೆಯ ಮಿತಿಯಲ್ಲಿ ಪ್ರತಿಭಟಿಸುವುದು ಹೇಗೆ? ಎಂಬ ಸಂಸ್ಕಾರವಿರುವುದಿಲ್ಲ. ಹುಚ್ಚು ಎಂದಾಗಿ ಬಿಟ್ಟರೆ ತಮಗೆ ಇಷ್ಟ ಬಂದಂತೆ ಇರಬಹುದು ಎಂಬ ಅಂಕೆ ತಪ್ಪಿದ ಕೆಲವರ ವರ್ತನೆಗಳು ಇಡೀ ಸಮಾಜಕ್ಕೇ ಕಳಂಕಪ್ರಾಯವಾಗಿ ನಿಲ್ಲುತ್ತವೆ. ಸುಮತಿಯು ದುರ್ಮತಿಯಾದರೆ ಸಮಸ್ಯೆಯನ್ನು ಹೆಚ್ಚಿಸಿಕೊಂಡಂತೆ. ಅಂತಹ ಬುದ್ಧಿಮಟ್ಟವನ್ನು ನೆಟ್ಟಗೆ ಮಾಡುವುದಕ್ಕೆ ಪ್ರಯತ್ನಿಸುವುದು ಅವಶ್ಯವಲ್ಲವೆ? ಆದರೆ ಎಲ್ಲ ಜೀವಿಗಳೂ ಒಂದೇ ಹದದಲ್ಲಿ, ಒಂದೇ ಕಾಲಮಿತಿಯಲ್ಲಿ ಬೇಯುವುದಿಲ್ಲ. ಕೆಲವು ಎಂದಿಗೂ ಬೇಯುವುದಿಲ್ಲ. ಹದವಾಗಿ ಬೆಂದ ಕಾಳು ನಮ್ಮ ಪಾಲಿಗೆ ಬಂದರೆ ಅದೇ ಅದೃಷ್ಟ ಪಂಚಾಮೃತ! - ಅಷ್ಟೆ. 

                                        ---------*********---------*********---------

  ಯಾವುದೇ ಕುಟುಂಬದ ಸಮಸ್ಯೆಯು ಬೀದಿಯಲ್ಲಿ ಪರಿಹಾರವಾಗುವುದು ಅಸಂಭವ. ಆದರೆ ಶೋಷಿತ ಗಂಡ / ಹೆಂಡತಿ ಮತ್ತು ಅವರ ಬಗೆಗೆ ಸಹಾನುಭೂತಿಯುಳ್ಳವರು (?) ತಂತಂಮ್ಮ ಸೊಂಡಿಲು ಚಾಚಿ ಇನ್ನೊಬ್ಬರ ಕುಟುಂಬದ ಸಮಸ್ಯೆಯಲ್ಲಿ ಮೂಗು ತೂರಿಸುವುದೂ ಇದೆ. ಅಂತಹ ಕಿತಾಪತಿ ದಾಸರಿಂದ ಅನೇಕ ಕುಟುಂಬದ ಘರ್ಷಣೆಗಳು ತಣಿಯುವ ಬದಲು ಹೆಚ್ಚಿದ ಸಂದರ್ಭಗಳಿವೆ. ಕುಟುಂಬದ ಹಿರಿಯರಿಂದಲೂ ಸಾಧ್ಯವಾಗದ ಪರಿಹಾರವು - Counselling ಎಂಬ (Fashion?) ಹುಡುಗಾಟದಿಂದಲೂ ಪರಿಹಾರವಾಗಲು ಸಾಧ್ಯವಿಲ್ಲ. ತನಗೆ ತನ್ನನ್ನು ಅರ್ಥ ಮಾಡಿಕೊಳ್ಳಲಾಗದೆ ಮಿಡುಕಾಡುತ್ತಿರುವ ಹುಲು ಮನುಷ್ಯರಿಗೆ ಇನ್ನೊಬ್ಬರ ಮಂಡೆಯೊಳಗಿನದೆಲ್ಲವನ್ನೂ ತಿಳಿದುಕೊಳ್ಳುವುದು ಅಸಂಭವ. "ನನ್ನ ಮಂಡೆಯದನ್ನೆಲ್ಲ ನಿನ್ನ ಮಂಡೆಯ ವಿಚಕ್ಷಣಾ ಜಾಡಿಯಲ್ಲಿ ಜಾಲಾಡಿ ತೂಗಿ ನೋಡುವಷ್ಟು ಬಲಿಷ್ಠ ಬುದ್ಧಿಪಾತ್ರೆಯು ನಿನ್ನ ಆ ಮಂಡೆಯ ಒಳಗೆ ಇದೆಯೆ?" ಎಂದು ಅಂತಹ ವಿಶ್ಲೇಷಕರನ್ನು ಕೇಳಬೇಕು. ಎಂತೆಂತಹ ಯೋಗಿಗಳಿಗೂ ನೂರಾರು ಬಾವಿಯ ನೀರು ಕುಡಿಸಿದಂತಹ ಬುದ್ಧಿಯದು. ಇಂದಿನ ತೇಪೆ ಮನೋವಿಜ್ಞಾನವು ತಿಪ್ಪರಲಾಗ ಹಾಕಿದರೂ ಮನೋರಂಗವು ಅದರ ಕೈವಶವಾಗುವುದು ಅಸಾಧ್ಯ. ರಸ್ತೆ ಬದಿಯಲ್ಲಿ ಅಂಗಡಿ ತೆಗೆದು ಬುದ್ಧಿ ರಿಪೇರಿ ಮಾಡಿಕೊಡುತ್ತಿದ್ದಾರೆಂದರೆ ಅದೊಂದು ವ್ಯಾಪಾರ - ಎಂದಷ್ಟೇ ಅರ್ಥೈಸಬೇಕು. ಒಮ್ಮೊಮ್ಮೆ ತಾತ್ಕಾಲಿಕ ಬದಲಾವಣೆ ಯು ಕಾಣಿಸಿ ಕಲಕಿದ ಮನಸ್ಸುಗಳು ಸ್ವಯಂ ನಿರೀಕ್ಷಣೆ ಮಾಡಿಕೊಂಡು ಏನೋ ಒಂದು ಬಗೆಯ ತೇಪೆಯ ಬದುಕನ್ನು ಕಟ್ಟಿಕೊಳ್ಳಬಹುದು. ಆಗ ಒಂದು ಮನಸ್ಸನ್ನು ರಿಪೇರಿ ಮಾಡಿದೆ ಎಂದಾಗಲೀ - ಮನಸ್ಸು ರಿಪೇರಿ ಆಯಿತು ಎಂದಾಗಲೀ ಅಂದುಕೊಳ್ಳಬಾರದು; ಸಾಮಾಜಿಕ ಮರ್ಯಾದೆ(?)ಗಾಗಿ ಹೇಗೋ ಬದುಕನ್ನು ತಳ್ಳುವ ಸಾಹಸವೊಂದು ನಡೆಯುತ್ತಿದೆ - ಅಂದುಕೊಳ್ಳಬೇಕು ಅಷ್ಟೆ! ಅಂತಹ ಸಂದರ್ಭಗಳನ್ನೆಲ್ಲ Counselling ನ ಸಾಧನೆ ಎಂದು ಬಿಂಬಿಸುವುದು - ಕೆಲವು ಬದುಕುವ ದಾರಿಗಳಿಗೆ ಧಕ್ಕೆ ತರಬಾರದು ಎಂಬ ಸದುದ್ದೇಶವಲ್ಲದೆ ಇನ್ನೊಂದಲ್ಲ.

  ಪಾಲಿಗ್ರಾಫ್ ಸೌಲಭ್ಯವನ್ನು ನಾವೀಗ ಕೇವಲ ಅಪರಾಧ ಪತ್ತೆಗೆ ಮಾತ್ರ ಉಪಯೋಗಿಸುತ್ತಿರುವಂತೆ ಕಾಣುತ್ತಿದೆ. ಆದರೆ Counselling ಗೂ ಪಾಲಿಗ್ರಾಫ್ (ಸುಳ್ಳು ಪತ್ತೆ) ನ ಸೌಲಭ್ಯವನ್ನು ಜೋಡಿಸಿದರೂ - ಅಂತಹ ಪತ್ತೆಗೆ ನಿಯುಕ್ತರಾದವರ ಬುದ್ಧಿಯ ಸಾಮರ್ಥ್ಯದಷ್ಟೇ ಪ್ರತಿಫಲವು ಸಿಕ್ಕೀತು. ಮನುಷ್ಯನ ಮನಸ್ಸು ಅಷ್ಟೊಂದು ಸಂಕೀರ್ಣವಾದದ್ದು! ನೀತಿ: ಸ್ವಂತ ಬೇಲಿಯ ಒಳಗೇ ಮೇಯುವ ಹಸುಗಳಿಗೆ ಅಪಾಯವು ಕಡಿಮೆ.

  ಆದರೆ ಮನಸ್ಸು - ಬುದ್ಧಿಯನ್ನು ಕುರಿತು - - ವಿಜ್ಞಾನಿಗಳ ನಿರಂತರ ಕುತೂಹಲವು ಎಷ್ಟು ಕವಲುಗಳನ್ನು ಮುಟ್ಟಿ ಬಂದರೂ ಸಮಗ್ರ ಮಿದುಳನ್ನು ಮತ್ತು ಮಿದುಳಿನ ಸಮಗ್ರತೆಯನ್ನು ಜಾಲಾಡಲು ಇನ್ನೂ ಸಾಧ್ಯವಾಗಿಲ್ಲ. ಆದ್ದರಿಂದಲೇ ಇತ್ತ -  ಮನಶ್ಶಾಸ್ತ್ರದತ್ತ ಮನುಷ್ಯನ ಆಕರ್ಷಣೆ ಬೆಳೆಯುತ್ತಲೇ ಇದೆ; ಅತ್ತ - ಮಿದುಳಿನ ಬುದ್ಧಿ ಸ್ಥಾನದಲ್ಲಿ ಹೊಸಹೊಸ ಕವಲುಗಳೂ ಮೊಳಕೆಯೊಡೆಯುತ್ತಿವೆ. "ಮನಯೇವ ಮನುಷ್ಯ" - ಬಂಧ ಮೋಕ್ಷಗಳಿಗೆ ಕಾರಣವಾದ ಮನಸ್ಸಿನಿಂದಲೇ ಮನುಷ್ಯ. ಆ ಮನುಷ್ಯ ಮನಸ್ಸನ್ನು ಹೊಕ್ಕು ಹೊರಡುವುದು ಅತ್ಯಂತ ಕಠಿಣ. ಅಡುಗೆಯ ಕೋಣೆಯಲ್ಲಿ ಒಮ್ಮೊಮ್ಮೆ ಸಿಡಿಯುವ ಸಾಸಿವೆಯನ್ನು ಸುಮ್ಮನೆ ಎಲ್ಲೆಲ್ಲೋ ಯಾರ್ಯಾರೋ ಹುಡುಕಿದರೆ ಸಿಡಿದ ಸಾಸಿವೆ ಸಿಕ್ಕೀತೆ? ಸಿಡಿಯುವುದನ್ನು ಕಂಡವರೇ ಅದನ್ನು ಎತ್ತಿ ಕೊಡಬೇಕು! ಕೆಲವೊಮ್ಮೆ ಹಾಗೆ ಕಂಡವರಿಗೂ ಅದು ಸಿಕ್ಕುವುದಿಲ್ಲ. ಧಿಡೀರೆಂದು ಎಂದೋ ಒಮ್ಮೆ ಗೋಚರವಾದರೂ ಆಗಬಹುದು. ಸ್ವಂತ ಮನೆಯನ್ನು ಶುಭ್ರವಾಗಿ ಇರಿಸಿಕೊಳ್ಳಲಾಗದೆ "ಸಿಡಿಯುವ ಅವ್ಯವಸ್ಥೆ" ಎಂಬ ಅಶುಭ್ರ ದುಗುಡ ದುಮ್ಮಾನಗಳಿಂದ ಅಸ್ತವ್ಯಸ್ತಗೊಳಿಸಿಕೊಂಡಾಗ ದೂರುದುಮ್ಮಾನಗಳ ಹೊಗೆ ಏಳುತ್ತದೆ. ತಮ್ಮ ಮನಸ್ಸಿನ ಮನೆಯಲ್ಲಿ ಅವರವರು ಓಡಾಡುವುದು ಸಹಜ ಮತ್ತು ಸುರಕ್ಷಿತ; ಅವರವರ ಮನೆಯಲ್ಲಿ ಅವರವಲ್ಲದೆ - ಯಾರ್ಯಾರೋ ಓಡಾಡತೊಡಗಿದರೆ ಅದು ಅಸಹಜ, ಅಶಾಶ್ವತ ಮತ್ತು ಅಸುರಕ್ಷಿತ. ಪ್ರೀತಿಯ ಪಸೆಯಿಲ್ಲದವರೆಲ್ಲ ಇನ್ನೊಂದು ಮನಸ್ಸಿನ ತೊಳೆಯನ್ನು ಬಿಡಿಸಲು ಕೂತರೆ ಅತ್ತಣ ಅಂಟನ್ನು ಇತ್ತ ಸರಿಸಿದಂತಾಗಬಹುದಲ್ಲದೆ ಹಲಸಿನ ತೊಳೆಯನ್ನು ಹದವಾಗಿ ಬಿಡಿಸಲಾದೀತೆ? ತೆರೆದ ಮನಸ್ಸಿನ ಪ್ರೀತಿಯ ಪಸೆಯೆಂಬ ನಂಟಿನಿಂದಲೇ - ಅಲ್ಲಲ್ಲಿ ಬಚ್ಚಿಟ್ಟುಕೊಂಡ ಅಶುಭ್ರ ಅಂಟನ್ನು ತೆಗೆಯಲು ಪ್ರಯತ್ನಿಸಬೇಕು. ಹೀಗಿದ್ದೂ... ಮನೋರೋಗಿಯ ಪೂರ್ಣ ಸಹಕಾರವಿಲ್ಲದೆ ಇದು ಸಾಧ್ಯವಾಗದು. ಮನೆಯ ಹಿರಿಯರಿಗಿಂತ ಹೊರಗಿನ ಗೆಳೆಯರೇ ಇಂದಿನ ಪೀಳಿಗೆಗೆ ಹತ್ತಿರವೆಂದಾಗುತ್ತಿರುವ ಈ ಸನ್ನಿವೇಶದಲ್ಲಿ ಅದಕ್ಕೆ ತಕ್ಕ ತೇಪೆಯ ಬುದ್ಧಿವಾದ ಕೇಂದ್ರಗಳೂ ಹುಟ್ಟಿಕೊಳ್ಳುತ್ತಿರುವುದರಲ್ಲಿ ಆಶ್ಚರ್ಯವಿಲ್ಲ.

  ನಾನು ದುಡಿಯುತ್ತಿದ್ದ ಸಂಸ್ಥೆಯಲ್ಲಿ ಸಂಜೆಯಾಗುವಾಗ ಹತ್ತಿರ ಬಂದು ಪಿಸುದನಿಯಲ್ಲಿ ಸಾಲ ಕೇಳುತ್ತಿದ್ದ - "ಕುಟುಂಬ ಶೋಷಿತ" ರೆಂದು ತಾವೇ ಹೇಳಿಕೊಳ್ಳುತ್ತ ದಿನವೂ ಅಳುತ್ತಿದ್ದ - ಕೆಲವು ಪೀಡಿತರನ್ನು ನಾನು ನೋಡಿದ್ದೇನೆ. ದುಶ್ಚಟದ ಹೊಂಡಕ್ಕೆ ಬೀಳುತ್ತಿದ್ದ ಅಂತಹ ವ್ಯಕ್ತಿಗಳ ಪೋಕು ಮಾತುಗಳಿಗೆ ತಲೆದೂಗುತ್ತ ಅವರಿಗೆ ಸಾಲ ಕೊಟ್ಟು ಒಳ್ಳೆಯವರು ಅನ್ನಿಸಿಕೊಳ್ಳುತ್ತಿದ್ದ ಕೆಲವರನ್ನೂ ಹಾದು ಬಂದಿದ್ದೇನೆ. ಅವೆಲ್ಲವೂ ಕರುಣೆಯಿಂದ ನಡೆಸುವ ಕರ್ಮವೆ? ಖರ್ಮ ಎನ್ನುವುದು ಅದನ್ನೇ. ಸಣ್ಣ ಹೊಂಡಕ್ಕೆ ಬಿದ್ದವರನ್ನು ಆಳವಾದ ಹೊಂಡಕ್ಕೆ ತಳ್ಳುವಂತಹ ಕರುಣೆಯ ಯಾವುದೇ ಮುಖವಾಡಕ್ಕಿಂತ ನಿಷ್ಠುರವೇ ಒಳ್ಳೆಯದು. ಹಾಗೆ ಕರುಣೆ (!) ತೋರಿಸಿದವರು ತಾವು ದುಡ್ಡು ಕೊಟ್ಟ ಸಂಗತಿಯನ್ನು ಗುಟ್ಟಾಗಿಯೂ ಇಡುತ್ತಿರಲಿಲ್ಲ. "ಅವರು ನನಗೆ ಎಷ್ಟು ದುಡ್ಡು ಕೊಡಬೇಕು ಗೊತ್ತುಂಟಾ? ಯಾಕಾದರೂ ಅವರಿಗೆ ಸಾಲವಾಗಿ ದುಡ್ಡು ಕೊಟ್ಟೆನೋ ಅನ್ನಿಸುತ್ತದೆ... ನನ್ನ ಗ್ರಹಚಾರ.." ಎಂದೆಲ್ಲ ಹಿಂದಿನಿಂದ ಮಾತಾಡಿಕೊಳ್ಳುತ್ತಿದ್ದರು. ಹಾಗಿದ್ದರೆ ಕಾಲಕಾಲಕ್ಕೆ ಅವರು ತೋರಿಸಿದ್ದು ಕರುಣೆಯಾ? ಇಂತಹ ಭಾನಗಡಿಗಳೆಲ್ಲ ಯಾಕೆ ಬೇಕು? ದಾರಿತಪ್ಪಿ, ಸ್ಥಿಮಿತ ತಪ್ಪಿ ಮುಳುಗುತ್ತಿರುವವರು ಮಾಡುವ ಅನರ್ಥಕಾರೀ ಕೆಲಸಗಳಿಗೆಲ್ಲ ದುಡ್ಡು ಕೊಡುವುದು - ಸಹಾನುಭೂತಿ ವ್ಯಕ್ತಪಡಿಸುವುದು ಎಂದರೆ ಅವರನ್ನು ನಾವೇ ಮುಳುಗಿಸಿದಂತೆ. ಅದು ಪ್ರೀತಿ - ಗೌರವ ತೋರಿಸುವ ರೀತಿ ಅಲ್ಲವೇ ಅಲ್ಲ. ಹಾಗೆ ಕುಗ್ಗಿದವರಿಗೆ ಯಾವ ಶಾಶ್ವತ ಪರಿಹಾರವನ್ನೂ ನೀಡಲಾಗದಂತಹ Time Pass ಜನಗಳ ಕರುಣೆಯೂ - Time Pass ನ ಇತರ ಚಟುವಟಿಕೆಗಳ ಭಾಗವಲ್ಲದೆ ಮತ್ತೇನೂ ಅಲ್ಲ. ಅವರ ದೂರುಗಳನ್ನು ಕಿವಿಗೊಟ್ಟು ಕೇಳುತ್ತ ಸುಳ್ಳು ಸಂತಾಪ ತೋರಿಸುತ್ತ  ಒಳಗೊಳಗೆ ಕೇವಲ ಆಸ್ವಾದಿಸುವ (Enjoy) ಬುದ್ಧಿಗೇಡಿಗಳು ಕೂಡ - ಸಾಮಾಜಿಕ ಕುಟುಂಬಗಳ ನಾಶದ ಪಾಲುದಾರರಾಗುವುದರಲ್ಲಿ ಸಂದೇಹ ಬೇಡ. ಯಾರದ್ದೋ ಬದುಕು - ಆಡಿಕೊಳ್ಳುವವರಿಗೆ ರಂಜನೆಯ ಕತೆ !

  ಅದೇ ಹೆಂಡತಿ, ಅದೇ ಗಂಡನ ಜತೆಗಿರುತ್ತ ಹೊರಗಿನ ಸಮಾಜದಲ್ಲಿ ಪರಸ್ಪರ ಒಬ್ಬರನ್ನು ಇನ್ನೊಬ್ಬರು ಭಾರತ - ಪಾಕಿಸ್ತಾನದಂತೆ ಎಡೆಬಿಡದೆ ದೂರುತ್ತ ಬದುಕುವ, ಮತ್ತೆ ಅದೇ ನರಕದಲ್ಲಿಯೇ ಅನಿವಾರ್ಯವಾಗಿ ಸಂಸಾರ ನಡೆಸುತ್ತಿರುವ ಅಸಂಖ್ಯಾತ ಮಂದಿ ಈಗಲೂ ನಮ್ಮ ನಡುವೆ ಇಲ್ಲವೆ? ಮಾತನಾಡದೆ ತಲೆತಗ್ಗಿಸಿ ಗುದ್ದು ತಿನ್ನುವ ಅಂತಹ ಸಂಸಾರಗಳನ್ನು "ನಿಜವಾದ ಹೊಂದಾಣಿಕೆಯ ಶೈಲಿ"ಎಂದು ಅನುಕರಿಸಲು ಸಾಧ್ಯವೆ? ಅದು ನಿತ್ಯ ಕುಸ್ತಿಯಲ್ಲದೆ ಇನ್ನೇನು? ಅದೆಂತಹ ಶೋಚನೀಯ ವಿಪರ್ಯಾಸ? ಇಂತಹ ಕೌಟುಂಬಿಕ ಗಂಟುಗಳಿಂದ ಬಿಡಿಸಿಕೊಳ್ಳಲು ATTITUDE ನಲ್ಲಿ ಬದಲಾವಣೆ ತಂದುಕೊಳ್ಳುತ್ತ ಪೀಡಿತರೇ ಪ್ರಯತ್ನಿಸಬೇಕಲ್ಲದೆ ಮೂರನೆಯವರಿಂದ ಅದು - ಸುತರಾಂ ಆಗದ ಕೆಲಸ.

  ಪ್ರತಿಯೊಂದು ವ್ಯಕ್ತಿಯಲ್ಲಿಯೂ ಅನಂತ ಶಕ್ತಿಯಿರುತ್ತದೆ. ಹೆಣ್ಣೂ ಅದಕ್ಕೆ ಹೊರತಲ್ಲ. ಒಂದು ಹೆಣ್ಣು ಸಂಭ್ರಮ ಪಡುವುದಕ್ಕೆ ತನ್ನ ಕೆಲಸಗಳು ಮಾತ್ರ ಆಗಬೇಕೆಂದಿಲ್ಲ. ತನಗೆ ಸಂಬಂಧವೇ ಇಲ್ಲದ ಇನ್ನೊಬ್ಬರ ಮನೆಯ ಸಂಭ್ರಮಗಳನ್ನೂ ತನ್ನದೇ ಸಂಭ್ರಮವೆಂಬಂತೆ ಅನುಭವಿಸುತ್ತ ತಾನಿದ್ದ ಇಡೀ ಸಮಾಜವೇ ತನ್ನದು ಎಂಬಂತೆ - ಸುಖ ದುಃಖದಲ್ಲಿ ಭಾಗಿಯಾಗುವ ಶಕ್ತಿಯು ಮುಕ್ತಾಬಾಯಿಯಂತಹ ಮಹಿಳೆಯರಿಗಿದೆ. ಈಗಲೂ ಅಂತಹ ಲಕ್ಷಾಂತರ ಉದಾಹರಣೆಗಳಿವೆ. ಕೌಟುಂಬಿಕ ನೆಮ್ಮದಿಗೆ "ಅಯ್ಯೋ..ಅದು ಹಾಗೇ...ಹೋಗಲಿ ಬಿಡಿ" ಎನ್ನುತ್ತ ಗಂಭೀರ ಸಂದರ್ಭಗಳನ್ನು ಕೆಲವೊಮ್ಮೆ ನಕ್ಕು ತೇಲಿಸುವ ATTITUDE ಬೇಕಾಗುತ್ತದೆ. ಹಾಗಾಗಲು - ತನ್ನಲ್ಲಿರುವ ಮಾನವೀಯ ಗುಣಗಳನ್ನು ಒಪ್ಪಗೊಳಿಸಿಕೊಂಡರೆ ಸಾಕಾಗುತ್ತದೆ. ಬಾಳನ್ನು ಓಡಿಸುವ ರಥಿಕ ಭಾಮೆಯು ಹೆಣ್ಣಾದರೆ ಆ ರಥವೇ ಗಂಡು. ಭದ್ರ ಬುದ್ಧಿಯ ಸತ್ಯರಥಿಕಳಿದ್ದಾಗ ಮಾತ್ರ ಬಂಡಿಯು ಓಡೆಂದ ಕಡೆಗೆ ಓಡುತ್ತದೆ; ಪದ ಕುಸಿಯುವವರೆಗೂ ಓಡುತ್ತದೆ. ಆದರೆ ತನ್ನ ಸುಖದ ಪ್ರಮಾಣವನ್ನು ಇತರರೊಂದಿಗೆ ಹೋಲಿಸಿಕೊಂಡು ತೂಗಿ ನೋಡುತ್ತ ರಥಿಕಳೇ ಎಡೆಬಿಡದೆ ಮರುಗುತ್ತಿದ್ದರೆ - ಕರುಬುತ್ತಿದ್ದರೆ - ದಿಕ್ಕಾಪಾಲಾಗಿ ನಿರ್ದೇಶಿಸುತ್ತಿದ್ದರೆ ಯಾವ ರಥವೂ ಓಡಲಾಗುವುದಿಲ್ಲ. ತನ್ನ ಪಾಲಿಗೆ ಬಂದ ರಥವನ್ನು ಆಕರ್ಷಕವಾಗಿ ಓಡಿಸುವುದರಲ್ಲಿಯೇ ಇಡೀ ಸಂಸಾರದ ಯಶಸ್ಸು ಅಡಗಿದೆ.
    
  ಪ್ರತೀ ಬದುಕಿನಲ್ಲೂ ಹೊಂದಾಣಿಕೆಯೆಂಬ ಗಟ್ಟಿ ಸೂತ್ರವು ಇರಲೇಬೇಕು. ಆ ಸೂತ್ರವನ್ನು ಕುಟುಂಬದ ಎಲ್ಲ ಸದಸ್ಯರೂ ಮನೋವಾಕ್ಕಾಯದಲ್ಲಿ ಭದ್ರಗೊಳಿಸಿಕೊಂಡಿರಬೇಕು. ಅದಕ್ಕೆ ಸ್ವಸ್ಥ ಮನಸ್ಸು - ಬುದ್ಧಿಯ ಸಮನ್ವಯವಿರಬೇಕು. ಉಗುಳು ನುಂಗುವುದನ್ನೂ ಅರಿತಿರಬೇಕು. ಆಗ ಪರಸ್ಪರ ಮೆಚ್ಚುತ್ತ, ಒಪ್ಪುತ್ತ, ಒಮ್ಮೊಮ್ಮೆ ಒಪ್ಪದಿರುತ್ತ, ಪ್ರತಿಭಟಿಸುತ್ತ ಬದುಕಿನ ಬಂಡಿಯು ಸರಾಗವಾಗಿ ಓಡುತ್ತದೆ. ಸಂಸಾರವನ್ನು ಸರಸ, ವಿರಸ, ಸಮರಸಗಳಿಂದ ಕಟ್ಟಿಕೊಳ್ಳಬಹುದು. ಅದೇ ಜೀವನ. ಆದರೆ ಒಂದೇ ಮಾಡಿನ ಕೆಳಗಿದ್ದುಕೊಂಡು ಕ್ಷಣಕ್ಷಣವೂ ಅಭಿನಯ ಮಾಡುತ್ತ ನಮ್ಮನ್ನು ನಾವೇ ವಂಚಿಸಿಕೊಳ್ಳುವ / Handle ಮಾಡುತ್ತಿರುವ ಎಲ್ಲ ಬದುಕುಗಳೂ ಅವ್ಯಕ್ತ ನೋವುಣ್ಣದೆ ಅನ್ಯ ಮಾರ್ಗವಿಲ್ಲ. ಕಿಲುಬು ಹಿಡಿದ ಕಪಟ ಯೋಚನೆ (THOUGHT) - ಯೋಜನೆ (PLAN) ಗಳಿಂದಾಗಿ ಅಂತಹ ಮಂದಿಯು ತಮ್ಮ ಸ್ವಂತ ಬದುಕಿಗೆ ಕೈಯ್ಯಾರೆ ವಿಷವೂಡುತ್ತಿರುತ್ತಾರೆ. ಆತ್ಮಸಾಕ್ಷಿ ಸತ್ತಂತಿರುವ ಅಂತಹ ವ್ಯಕ್ತಿಗಳು ಎಂತಹ ದೊಡ್ಡ ಪ್ರತಿಭಾವಂತರಾಗಿದ್ದರೂ ಅವರ ಸಹವಾಸದಿಂದ ಎಷ್ಟು ತಪ್ಪಿಸಿಕೊಂಡರೆ ಅಷ್ಟು ನೆಮ್ಮದಿ ಸಿಕ್ಕೀತು. ನೆಲೆಬೆಲೆಯಿಲ್ಲದ ವರ್ತನೆಯ ಜೊತೆಗಿದ್ದುಕೊಂಡೇ ಪರಸ್ಪರ ದೂರುತ್ತ ಪರಚಿಕೊಳ್ಳುತ್ತ ನಮ್ಮ ದಿನ ದೂಡುವುದಕ್ಕಿಂತ ಅಂತಹ ಮೈನುರಿಯುವ ಯಾವುದೇ ಸಂಬಂಧದಿಂದ ದೂರವಿರುವುದು ಉತ್ತಮ ಮಾರ್ಗವಲ್ಲವೆ?

  ನನ್ನ ಬದುಕಿನಲ್ಲಿ ತಮ್ಮ ಸಾಮಾಜಿಕ ಮತ್ತು ಕೌಟುಂಬಿಕ ಪರಿಸರವನ್ನು ಹಾಳುಗೆಡವಿಕೊಂಡ ಅನೇಕ ಸಂದರ್ಭಗಳನ್ನು ನಾನು ಕಂಡಿದ್ದೇನೆ; ಕಂಡು ಮರುಗಿದ್ದೇನೆ. ಎಲ್ಲೂ ಇಲ್ಲದ ದೋಷಕ್ಕಾಗಿ ಎಲ್ಲೆಲ್ಲೋ ಹುಡುಕುವ ಬದಲು ನಾವು ನಮ್ಮೊಳಗೇ ಹುಡುಕಾಡುವುದು ಒಳಿತು. ಎಷ್ಟೋ ಬಾರಿ ಬೀದಿಯಲ್ಲಿ ಹೋಗುವ ಮಾರಿಯನ್ನು ನಾವಾಗಿಯೇ ಮನೆಗೆ ತಂದಿರುತ್ತೇವೆ. "ಮನವೆಲ್ಲೋ ಮನೆ ಎಲ್ಲೋ" ಎಂಬ ಸನ್ನಿವೇಶವನ್ನು ಸೃಷ್ಟಿಸಿಕೊಂಡಿರುತ್ತೇವೆ! ಬಿದ್ದ ವೃತ್ತದಲ್ಲಿ ಸುತ್ತುತ್ತಲೇ ಇರುತ್ತೇವೆ!

  ಊರು ಸುತ್ತುವ ತಿರಪೋಕಿ ಮನಸ್ಸಿಗೆ ಎಂದಿಗೂ ಎಲ್ಲೂ ನೆಮ್ಮದಿಯಿರದು. ನಮ್ಮ ಮನೆಯಲ್ಲೇ ಮನಸ್ಸೂ ಇದ್ದಾಗ ಮಾತ್ರ ಮನೆಯು ಮಂತ್ರಾಲಯವಾಗುವುದು - ದೇಹವು ದೇವಾಲಯವಾಗುವುದು ಸಾಧ್ಯ. ಆಗ ಸೋತು ಗೆಲ್ಲುವುದು ಗೆದ್ದು ಸೋಲುವುದು ಎಲ್ಲವೂ ಸಹಜವಾಗುತ್ತದೆ; ಅತೃಪ್ತಿಯಂತೂ ಕಾಡುವುದಿಲ್ಲ. ನಮ್ಮ ಬದುಕೆಂಬ ಬ್ರಹ್ಮ ರಥವು ಆಯಾ ರಥಿಕನು ಓಡಿಸಿದಂತೇ ಓಡುತ್ತದೆ - ಅಲ್ಲವೆ?

                                                      -----*****-----*****-----


           

2 comments:

  1. ಮೂರು ಮತ್ತು ನಾಲ್ಕನೇ ಭಾಗಗಳಿಗೆ ಇನ್ನೂ ಒಂದೆರಡು ಕಥೆ ಅಥವಾ ದೃಷ್ಟಾಂತ ಬೇಕೆನಿಸುತ್ತದೆ.ಚರ್ಚಿತ ವಿಷಯಗಳು ಸ್ವಲ್ಪ ಗಹನವಾದ ಕಾರಣ.

    ReplyDelete