ಇಂದಿನ ಇಂಟರ್ನೆಟ್ ಮಾಹಿತಿಯ ಯುಗದಲ್ಲಿ ಬಗೆಬಗೆಯ ಆಸಕ್ತಿ ಮತ್ತು
ಆಸೆಯ ಜನರನ್ನು ಕೂತಲ್ಲೇ ನಾವು ನೋಡಬಹುದು. ಇವೆಲ್ಲವನ್ನೂ ಸಲಿಗೆಯಿಂದ
ವಿಶ್ಲೇಷಿಸಿದರೆ "ಹುಚ್ಚು"
(ಅತಿಯಾದ ಆಸಕ್ತಿ!) ಎಂದೂ ಅನ್ನಿಸಬಹುದು.
ತಮ್ಮ ಸಾಮರ್ಥ್ಯದ ಪರಿಧಿಯಲ್ಲಿ ಒಂದಲ್ಲ ಒಂದು
ಕರ್ಮವನ್ನು ಅವಲಂಬಿಸಿ ಪರಪೀಡೆಗೆಳಸದೆ
ಬದುಕುವ ಹುಚ್ಚಿನ ಕೆಲವು ಮುಖಗಳು ಎಂದೂ
ಅನ್ನಿಸುವುದಿದೆ. ಆದರೆ ಇಂತಹ
ನಿತ್ಯಕಸರತ್ತಿನ ಬಹುಪಾಲು, ವಿಚಾರ ಸಾಮಗ್ರಿಗಳಾಗದೆ ಪ್ರಚಾರ
ಸಾಮಗ್ರಿಗಳಾಗಿ ಮಿಂಚಿ ಮರೆಯಾಗುವ - ಹುಚ್ಚು ಮನಸ್ಸಿನ ಹಲವು ಮುಖಗಳು. ನಿತ್ಯ ಬಳಕೆಯ
"ವಾಸ್ತವ" ಮತ್ತು "ಪೂರ್ಣ ಸತ್ಯ"ದ ತರತಮ ಅರಿವಿಲ್ಲದೆ -
ಮನೋವಾಕ್ಕಾಯಗಳನ್ನು ಪಳಗಿಸಿಕೊಳ್ಳುವ ಸತತ
ಪ್ರಯತ್ನವಿಲ್ಲದೆ (ಯಾರೂ) ಯಾವುದೂ
ಸಾರ್ಥಕವಾಗದು. ಉತ್ತಮ ಓದು, ಬರಹ, ಏಕಾಂತ
ಚಿಂತನೆಗಳು, ಮನನ, ಸದ್ಭಾವ, ವಿವೇಕ -
ಮುಂತಾದವು ನಮ್ಮನ್ನು ಈ ನಿಟ್ಟಿನಲ್ಲಿ
ಹರಿತಗೊಳಿಸುವ ಯುಕ್ತ ಉಪಕರಣಗಳು.
ಬಗೆಬಗೆಯ ಹುಚ್ಚರ ಮೆಚ್ಚಿನ ಭೂಮಿಯಲ್ಲಿ
ನಾವಿದ್ದೇವೆ. ದಕ್ಷಿಣೇಶ್ವರದಲ್ಲಿ ಶ್ರೀ ರಾಮಕೃಷ್ಣರು ದಿವ್ಯೋನ್ಮತ್ತರಾಗಿದ್ದಾಗ ಅವರ ಸುತ್ತಲಿನವರು
ಪರಮಹಂಸರನ್ನೂ ಹುಚ್ಚರೆಂದು ಕರೆದಿದ್ದರು. ಅವರ ಆತ್ಮೀಯರೂ "ಹುಚ್ಚು ಇರಬಹುದೆ?" ಎಂದು
ಒಮ್ಮೊಮ್ಮೆ ಸಂದೇಹಿಸಿದ್ದರು. ಇದರಿಂದ ಸ್ವತಹ ಪರಮಹಂಸರೂ "ಹುಚ್ಚು ಇರಬಹುದೆ?" ಎಂದುಕೊಂಡದ್ದೂ
ಇತ್ತು. ಆಗ ರಾಮಕೃಷ್ಣರು ತಮ್ಮ ತಳಮಳವನ್ನು ಗುರುಗಳಲ್ಲಿ ಒಬ್ಬಳಾಗಿದ್ದ ಭೈರವಿ ಬ್ರಾಹ್ಮಣಿಗೆ ಹೇಳಿಕೊಂಡಾಗ, ಆಕೆಯು ಕೊಟ್ಟ
ಉತ್ತರವು - ಸ್ವಾಮಿ ವಿವೇಕಾನಂದರ "ನನ್ನ ಗುರುದೇವ" ಎಂಬ ಉಪನ್ಯಾಸ ಪುಸ್ತಿಕೆಯಲ್ಲಿ
ನಿರೂಪಿತವಾಗಿದೆ..."ಮಗೂ, ನಿನಗೆ
ಹಿಡಿದಂತಹ ಹುಚ್ಚು ಯಾರನ್ನು
ಹಿಡಿಯುತ್ತದೆಯೋ ಅವರೇ ಧನ್ಯರು. ಇಡೀ ಜಗತ್ತೇ
ಹುಚ್ಚಾಗಿದೆ. ಕೆಲವರಿಗೆ ಸಂಪತ್ತಿನ
ಹುಚ್ಚು, ಕೆಲವರಿಗೆ ಸುಖದ ಹುಚ್ಚು,
ಕೆಲವರಿಗೆ ಕೀರ್ತಿಯ ಹುಚ್ಚು, ಚಿನ್ನ, ಪತಿ, ಸತಿ, ಇತರರ ಮೇಲೆ
ದಬ್ಬಾಳಿಕೆ, ಇನ್ನೂ ನೂರಾರು -
ಅಲ್ಪವಾದ ವಿಷಯ ವಸ್ತುಗಳ ಹುಚ್ಚಿನ
ಲೋಕವಿದು. ದೇವರನ್ನುಳಿದು ಇತರ ಎಲ್ಲ ಮೂರ್ಖ ವಿಷಯಗಳ ಬಗ್ಗೆಯೂ ಜನರಿಗೆ
ಹುಚ್ಚಿದೆ. ಸಮಾನ ಹುಚ್ಚುಗಳು ಮೈತ್ರಿಗೆ ಕಾರಣವಾಗುವುದೂ ಇದೆ. ಉದಾ: ಚಿನ್ನದ
ಹುಚ್ಚಿನವರಿಗೆ ತನ್ನದೇ ಆಸಕ್ತಿಯ ಇನ್ನೊಬ್ಬರಲ್ಲಿ ಹುಚ್ಚೆಬ್ಬಿಸುವ ಮೈತ್ರಿಯೂ ಮೂಡುತ್ತದೆ.
ತಮ್ಮಂತಹ ಇತರ ಹುಚ್ಚರಿಗೆ ಮಾತ್ರವೇ ಬುದ್ಧಿ ಸರಿಯಾಗಿರುವುದು ಎಂದು ಭಾವಿಸುವಂತೆ, ತಮ್ಮಂತೆಯೇ
ಹಂದಾಡುವವರನ್ನು ಕಂಡು ಅಂತಹ ಹುಚ್ಚುಮಂದೆಯು "ಇವನೀಗ ಸರಿಯಾದವನು; ಒಳ್ಳೆಯ
ಜನ..." ಎನ್ನುತ್ತದೆ. ತಮ್ಮ ಹುಚ್ಚಿಗೆ ಸಂವಾದಿಯಾಗಿ ಅಲೆದಾಡುವ ಹುಚ್ಚನ್ನು
ಮಾತ್ರವೇ ಈ ಜನರು ಅರ್ಥ ಮಾಡಿಕೊಂಡು ಒಪ್ಪಿಕೊಳ್ಳಬಲ್ಲರು. ಬಹುಸಂಖ್ಯಾತರು ರೂಢಿಸಿಕೊಂಡು ಆಚರಿಸುವ
ಹುಚ್ಚುಗಳು ಈ ಜಗತ್ತಿನಲ್ಲಿ ಜನಮನ್ನಣೆ ಗಳಿಸುತ್ತದೆ. ಆದರೆ ಮಗೂ, ನಿನ್ನದು ಅಪೂರ್ವ ಹುಚ್ಚು. ಆದ್ದರಿಂದ
ಅದು ಜನರಿಗೆ ಅರ್ಥವಾಗುವುದಿಲ್ಲ. ಆದ್ದರಿಂದಲೇ ಅವರೆಲ್ಲ ನಿನ್ನನ್ನು
ಹುಚ್ಚು ಎನ್ನುತ್ತಾರೆ. ಆದರೆ ನಿನ್ನದು ಮಾತ್ರವೇ ಸರಿಯಾದ ಹುಚ್ಚು ಮಗೂ. ಭಗವಂತನಿಗಾಗಿ
ಹುಚ್ಚು ಹಿಡಿಸಿಕೊಂಡವನೇ ಧನ್ಯ. ನಿನ್ನಂಥವರು ವಿರಳ..." ಎಂದು ಭೈರವಿ ಬ್ರಾಹ್ಮಣಿಯು
ರಾಮಕೃಷ್ಣರನ್ನು ಸಂತೈಸಿದ್ದಳು. ಕೆಲವರನ್ನು ಮಾತ್ರ ಬಾಧಿಸುವ - ಎಲ್ಲರಿಗೂ ಎಟುಕದ
ಹುಚ್ಚನ್ನು ಮಾತ್ರ ಜನಸಂತೆಯು "ಹುಚ್ಚು ಹುಚ್ಚು" ಎಂದು ಬೊಟ್ಟಿಟ್ಟು - ಏಕಕಂಠದಲ್ಲಿ
ಬೊಬ್ಬೆ ಹೊಡೆಯುತ್ತದೆ. ಈ ಪ್ರಪಂಚದಲ್ಲಿ ನಿರುಪದ್ರವಿ ದಿವ್ಯತೆಯೇನಾದರೂ ಅಲ್ಲಿ ಇಲ್ಲಿ
ಉಳಿದಿದ್ದರೆ ಇಂತಹ ಹುಚ್ಚಿನಿಂದಲೇ ಅಲ್ಲವೆ?
ಅಂತೆಯೇ ಪ್ರಸ್ತುತದ ಹುಚ್ಚು ಸಮಾಜದ ಆದ್ಯತೆಯೂ ಭಿನ್ನವಾಗಿದೆ. ಹೊರ
ಶೃಂಗಾರದ ಹುಚ್ಚಿನಲ್ಲೇ ನಮ್ಮ ದಿನಗಳು ಕಳೆದು ಹೋಗುತ್ತಿಲ್ಲವೆ? ನಿಜವಾಗಿ ಅಪೇಕ್ಷಿಸಬೇಕಾದುದನ್ನು ಉಪೇಕ್ಷಿಸುತ್ತ ಉಪೇಕ್ಷಿಸಬೇಕಾದುದನ್ನು
ಹುಚ್ಚುಗಟ್ಟಿ ಅಪೇಕ್ಷಿಸುತ್ತಿರುವ ನಮ್ಮ ಇಂದಿನ ಬದುಕುಗಳು ನಿಂತ ನೀರಿನಂತೆ ನಾರುತ್ತಿವೆ.
ಸಿನಿಕತನದ ಮೇರೆ ಮೀರುತ್ತಿದೆ. ಪ್ರತಿಯೊಬ್ಬರೂ ಪ್ರಥಮ ಸ್ಥಾನವನ್ನು ಪಡೆಯಲು
ತಿಣುಕಾಡುತ್ತಿರುವ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಅನುಪಯುಕ್ತ ವಿಷಯಗಳೆಲ್ಲವೂ
ಗಿನ್ನೆಸ್ ದಾಖಲೆಯ ಗರಿಯನ್ನು ಏರಿಸಿಕೊಳ್ಳಲು ತಹತಹಿಸುತ್ತ ಬದುಕಿನ ವಿಡಂಬನೆಯಲ್ಲಿ
ತೊಡಗಿಕೊಂಡಿವೆ. ತೆಂಗಿನಕಾಯಿಯ ಹೊರ ಕವಚವನ್ನು ಹಲ್ಲಿನಿಂದ ಕಿತ್ತು ಮುಖವನ್ನೆಲ್ಲ
ಹರಿದುಕೊಂಡು, ದಾಖಲೆಗಾಗಿ ಅಧ್ವಾನ ಮಾಡಿಕೊಳ್ಳುವವರೂ ಇದ್ದಾರೆ! ದಿನಗಟ್ಟಲೆ ಸತತ
ಮಾತಾಡಿ, ಹಾಡಿ, ದಣಿಯುವವರೂ ಇದ್ದಾರೆ!
ನಮ್ಮ ಹಲ್ಲುಗಳಿರುವುದು ತೆಂಗಿನ ಸಿಪ್ಪೆ
ಸುಲಿಯುವುದಕ್ಕಾ? ಎಷ್ಟು ಹೊತ್ತು ಮಾತಾಡಿದೆ - ಹಾಡಿದೆ ಎಂಬುದು ಮುಖ್ಯವೋ ಏನು ಮಾತಾಡಿದೆ -
ಹಾಡಿದ್ದು ಏನು? ಅದರಲ್ಲಿ ಹೂರಣವೇನಿತ್ತು?
ಎಂಬುದು ಮುಖ್ಯವೋ? ನಿಷ್ಕರುಣೆಯಿಂದ
ಎದೆ ಗುದ್ದುವಂತಿರುವ ಸಂಗೀತವು ಯಾವ ಪುರುಷಾರ್ಥಕ್ಕೆ?
ದೋಸೆ ತಿನ್ನುವ ಸ್ಪರ್ಧೆ ನಡೆಸುವುದು ಯಾಕಾಗಿ?
ಇಂತಹ ಸ್ಪರ್ಧೆ - ದಾಖಲೆಗಳಿಂದ ಏನು
ಪ್ರಯೋಜನ? ಇಂತಹ
ದೊಂಬರಾಟವನ್ನು ಪ್ರಾಯೋಜಿಸಿ
ಪ್ರೋತ್ಸಾಹಿಸುವುದಾದರೂ ಯಾಕೆ? ಯಾವುದೇ
ಕ್ಷುಲ್ಲಕ ಮಜಾ ಮಾಡುವುದೆಂದರೆ
ಬದುಕನ್ನು ಕೀಳಾಗಿಸುವುದು ಎಂದೇ ಅರ್ಥ.
ಅಂಬಿಗನಿಗೆ 4 ಕಾಸನ್ನು ಕೊಟ್ಟರೆ ಆತನು
ಹುಟ್ಟುಹಾಕಿ ಸುಲಭದಲ್ಲಿ ನದಿಯನ್ನು ದಾಟಿಸುವಾಗ ಮೂಗುಹಿಡಿದು ವರ್ಷಾನುಗಟ್ಟಲೆ
ಸಾಧನೆ ಮಾಡಿ ಹಠಯೋಗದಿಂದ ನದಿಯ ಮೇಲೆ ನಡೆದುಕೊಂಡು ದಾಟುವ ಚಮತ್ಕಾರ ಯಾಕೆ ಬೇಕು? - ಎಂದಿದ್ದರು ಪರಮಹಂಸರು. ನಮ್ಮ ಇಡೀ ಬದುಕೇ ಹೀಗಿದೆ. ಕೇವಲ ಚಮತ್ಕಾರಗಳಲ್ಲಿಯೇ ಮುಳುಗಿ
ಹೋಗಿದೆ. ಕಣ್ಕಟ್ಟಿಗೆ ಮರುಳಾಗುವ ಹಾಗೆ ಋಜು ಮಾರ್ಗಗಳು ಅನೇಕರನ್ನು
ಆಕರ್ಷಿಸುವುದಿಲ್ಲ. ಕನಸುಗಳೊಂದಿಗೆ ದೊಡ್ಡ ಚಿಂತನೆಗಳಿಗೂ ನಾವು ತೊಡಗಿಕೊಳ್ಳದಿದ್ದರೆ
ಹಗಲೂ ರಾತ್ರಿಯೂ ಬರೇ "ದೂಮ ಕಾಮ"ನ ಚಿತ್ರಗಳನ್ನು ನೋಡುತ್ತ ಕನಸಿನಲ್ಲಿಯೇ
ಮೈಮರೆಯುವ ಬಾಲಿಶ ಕರ್ಮಕ್ಕೆ ಬಲಿಯಾಗಬಹುದು. ಬಣ್ಣ ಬಣ್ಣದ ಚಿತ್ರಗಳನ್ನು ಮಾತ್ರ ನೋಡಿ ನಲಿಯುವ
ಬಾಲಿಶ ಹಂತದಿಂದ ಮುನ್ನಡಿಯಿಡಲು ಮನುಷ್ಯರ ಒಳನೋಟವು ಸ್ವಸ್ಥವಾಗಬೇಕು; ಬಲಿಷ್ಠವಾಗಬೇಕು.
ಮಿದುಳಿನ ಸದುಪಯೋಗಕ್ಕೆ ಸಿದ್ಧತೆಯೂ ಬೇಕು;
ಬದ್ಧತೆಯೂ ಬೇಕು. ಆದರೆ ನಾವು -
"ಏನು ಮಾಡುತ್ತಿದ್ದೇವೆ? ಏಕೆ ಮಾಡುತ್ತಿದ್ದೇವೆ?"
ಎಂಬ ಪರಿಜ್ಞಾನವಿಲ್ಲದೆ, ಯಾವುದೇ ಆಂತರಿಕ
ಇಣುಕುನೋಟವಿಲ್ಲದೆ ನಮ್ಮ ಇಡೀ ಬದುಕು ಹೀಗೇ ಸರಿದು ಹೋಗುತ್ತಿದೆ. ತಮ್ಮ ಮರುಳು ಚರ್ಯೆಗಳನ್ನು
ಸರಿಯಾಗಿಯೇ ಗುರುತಿಸಿಕೊಂಡವರನ್ನು ಕಂಡರೆ ಇಂತಹ ದೊಂಬರಾಟದ ಮಂದಿಗೆ ಆಗಾಗ ಸಿಟ್ಟು ಬರುವುದೂ ಇದೆ!
ಇಷ್ಟಕ್ಕೇ ನಿಲ್ಲುವುದಿಲ್ಲ. ತಮ್ಮ ಸಮಗ್ರ ವ್ಯರ್ಥ ಕರ್ಮಗಳಿಗೂ ಸುಫಲದ ನಿರೀಕ್ಷೆ ಮಾಡುತ್ತಾರೆ.
ಜೊತೆಗೆ ಗೆಲುವನ್ನು ತಮ್ಮ ಖಾತೆಗೂ - ಸೋಲನ್ನು ದೇವರ ಖಾತೆಗೂ ಸೇರಿಸಿ ಗಿಣಿವಿದ್ಯೆ ತೋರುವವರೂ ಇದ್ದಾರೆ. ದೈವ
ನಿಂದನೆಯಿಂದಲೇ ಉಪಜೀವನ ನಡೆಸುವವರೂ ಇದ್ದಾರೆ. "ಮಾ ಫಲೇಷು ಕದಾಚನ" ಎಂದ ದ್ವಾಪರದ
ಮಹಾತ್ಮನನ್ನು ವಾಚಾಮಗೋಚರ ಅರ್ಚಿಸುವವರೂ ಇದ್ದಾರೆ. ಇಂತಹ ವಿಚಾರವ್ಯಾಧಿಯನ್ನೇ "ಪ್ರಾರಬ್ಧ ಕರ್ಮ" ಎನ್ನುವುದು.
ನಿತ್ಯ ಬದುಕಿನಲ್ಲಿ ನಾವು ಆಗಾಗ ಉಚ್ಚರಿಸುವ ಮತ್ತು ಅತಿಯಾದ
ಬಳಕೆಯಿಂದ ಸವುಕಳಿಗೆ ಒಳಗಾಗಿರುವ ಒಂದು ಶಬ್ದ - ಪ್ರಾರಬ್ಧ ಕರ್ಮ. ಇದು ಹಿಂದಿನ ಗಳಿಕೆ
ಅಥವ ಪಳೆಯುಳಿಕೆಯನ್ನು ಸೂಚಿಸುವ ಒಂದು ಪದ. ಬಹು ದೀರ್ಘಕಾಲದ ಬದುಕಿನ ಚಕ್ರದಲ್ಲಿ ಆಯಾ
ಬದುಕುಗಳಲ್ಲಿ ಮೂಡಿದ ಕರ್ಮಗಳ ಸಂಚಿತ ಮೊತ್ತ ಎಂಬ ಭಾವಾರ್ಥದಲ್ಲಿ ಈ ಶಬ್ದದ
ಬಳಕೆಯಾಗುತ್ತಿದೆ. ವಿಧಿ, ದೈವ, ಹಣೆಬರಹ, ಅದೃಷ್ಟ...ಮುಂತಾದ ಶಬ್ದರೂಪದಲ್ಲಿಯೂ ಪರೋಕ್ಷವಾಗಿ ಪ್ರಾರಬ್ಧ
ಕರ್ಮವನ್ನು ನಾವು ಮುಟ್ಟಿ ಬರುತ್ತೇವೆ. "ಪ್ರಾಕ್ ಲಬ್ಧ" - ಅಂದರೆ
ಮೊದಲೇ ಆದದ್ದು. ಮನುಷ್ಯರ ಸಾವಿರ
ಪ್ರಾರ್ಥನೆ, ಆಶಯ, ಪ್ರಪತ್ತಿಗೆ
ಕೆಲವೊಮ್ಮೆ ಅನಿರೀಕ್ಷಿತ ಅಡ್ಡಿಗಳು ಎದುರಾಗುತ್ತವೆ. ಪ್ರಾರಬ್ಧ ಕರ್ಮಗಳ
ಸೂತ್ರಧಾರಿಯಾದ ಅದನ್ನು "ದೇವ ಪ್ರಪತ್ತಿ" ಎನ್ನುತ್ತಾರೆ. ನಂಬಿಕಸ್ಥ ನಾಯಿಯಂತೆ ಜನ್ಮ ಜನ್ಮಾಂತರಗಳಲ್ಲೂ ನಮ್ಮನ್ನು ಹಿಂಬಾಲಿಸುವ
"ಸ್ವಭಾವ, ವರ್ತನೆಯ ನೆರಳು" - ಪ್ರಾರಬ್ಧ ಕರ್ಮದ ಪ್ರತಿಬಿಂಬವೇ ಆಗಿರುತ್ತದೆ!
( "ನಾಯಿ ನೆರಳು" ಎಂಬುದು ಇದೇ ಹಿನ್ನೆಲೆಯ
- ವೇದಾಂತದ ದೃಷ್ಟಿ.)
Character is destiny...ಮನುಷ್ಯರ
ಸ್ವಭಾವ-ವರ್ತನೆಯಲ್ಲೇ ಅವರ ಭವಿಷ್ಯವಿದೆ
ಎಂಬ ವೇದಾಂತಿಕ ವೈಚಾರಿಕತೆಯೂ ಭಾರತೀಯ ಶಾಸ್ತ್ರದಲ್ಲಿದೆ. ಕೆಲವೊಂದು ಉದ್ದೇಶ ಸಾಧನೆಗಾಗಿಯೂ
ಪ್ರಾರಬ್ಧ ಕರ್ಮಗಳು ಜನ್ಮ ತಳೆದು ಸಹಜೀವನವನ್ನು ನಡೆಸಬೇಕಾಗುವುದಿದೆ. ರಾಮಾಯಣದ ಭರತನಿಗೆ ಹದಿನಾಲ್ಕು ವರ್ಷ
ಶ್ರೀರಾಮನ ಪಾದುಕೆಯ ಆಶ್ರಯದಲ್ಲಿರುವ ಪ್ರಾರಬ್ಧವಿದ್ದರೆ ಶ್ರೀ ರಾಮನಿಗೆ
ಅರಣ್ಯವಾಸಿಯಾಗುವ ಪತ್ನೀವಿರಹದ ಶೋಕವು ನಿಗದಿಯಾಗಿತ್ತು. ಎಲ್ಲ ಸಣ್ಣ ಸಣ್ಣ ಕರ್ಮಗಳೂ
ವರ್ತಮಾನ-ಭವಿಷ್ಯದ ಯಾವುದೋ ಗಂಭೀರ ಫಲಪ್ರಚೋದಕ ಪ್ರತಿನಿಧಿಯಾಗಿ ಬರುತ್ತವೆ. ಬದುಕಿನ ಸ್ವ- ನಿರೀಕ್ಷಣೆಗೆ
ವಿಧೇಯವಾಗುವ ಕೆಲವು ಸಂದರ್ಭವನ್ನು ಬಿಟ್ಟರೆ ಉಳಿದಂತೆ,
ಮನುಷ್ಯರಿಗೆ ಪ್ರಾಪಂಚಿಕದ ಗುದ್ದುಗಳು
ಬಿದ್ದಾಗ ಮತ್ತು ಇತರರಿಗೆ ಉಪದೇಶಿಸುವಾಗ ಮಾತ್ರ ಇಂತಹ ಪ್ರಾರಬ್ಧ ಕರ್ಮದ
ನೆನಪಾಗುತ್ತದೆ. ಯಾವುದೇ ದೃಢತೆಯಿಲ್ಲದ ಮನುಷ್ಯರ
ವ್ಯರ್ಥ ಕುಸುಕಾಟವದು. ಯಾವುದೇ ಸತ್ಕರ್ಮದ
ಸಂಕಲ್ಪವನ್ನು ಮಾಡಲೂ ಆರಂಭಿಕ
ಅರ್ಹತೆ ಯೆಂಬುದಿದೆ. ಉತ್ತಮವಾದ ಕರ್ಮಫಲಕ್ಕೆ ತಕ್ಕಂತಹ ಉತ್ತಮ ಕರ್ಮಗಳನ್ನೇ
ನಾವು ಮಾಡುತ್ತಿದ್ದೇವೆಯೆ?
ಎಂದು ಯೋಚಿಸಲು ತೊಡಗಿದಾಗ, ಎಚ್ಚರದ ನೆಲೆಯಲ್ಲಿ,
ಸಂಕಲ್ಪ ಶಕ್ತಿಯು ತಾನಾಗಿಯೇ ಒದಗುತ್ತದೆ.
ನಮ್ಮ ಇಂದಿನ ನಿತ್ಯಬದುಕುಗಳೆಲ್ಲವೂ ಸಮೂಹ ಸನ್ನಿಯ ಕರ್ಮಗಳೇ ಆಗಿಹೋಗಿವೆ! "ಯಾವುದೋ
ಸೇವಾ ಸಂಸ್ಥೆ ನಡೆಸುತ್ತಿದ್ದೇವೆ; ಬಟ್ಟೆ ಕೊಡಿ;
ಧನ ಸಹಾಯ ಮಾಡಿ..." ಎಂದೆಲ್ಲ
ಹೇಳಿಕೊಳ್ಳುತ್ತ ಸಾರ್ವಜನಿಕರಿಂದ ತ್ಯಾಜ್ಯಗಳನ್ನೆಲ್ಲ ಸಂಗ್ರಹಿಸಿ, ಯಾವುದೇ
ಬಂಡವಾಳವಿಲ್ಲದೆಯೂ ಖಾಯಂ ಗದ್ದಲ ನಡೆಸುವ "ಸೇವೆ ಎಂಬ ಹುಡುಗಾಟ"ದಲ್ಲಿ
ತೊಡಗಿಕೊಂಡವರು ಈಗೀಗ ಹೆಚ್ಚುತ್ತಿದ್ದಾರೆ. ವಂತಿಗೆ ಎತ್ತಿ ಸೇವೆ ನಡೆಸುವ ಚಾಳಿಯನ್ನು
ಯಾರೂ ಪ್ರೋತ್ಸಾಹಿಸಬೇಕಿಲ್ಲ. ಅಂತಹ ಸೇವಾ ಧುರಂಧರರು ಗುಡ್ಡೆಹಾಕುವ
ಕಾರುಣ್ಯದಿಂದ ಸದ್ಭಾವಪ್ರೇರಿತ ದಾನಗಳು ಶಾಶ್ವತವಾಗಿ ಘಾಸಿಗೊಂಡಂತಾದೀತು.
ಅಡ್ಡಹಾದಿ ಹಿಡಿಯುವಂತಹ ಜಗ್ಗಿ ಎಳೆಯುವ "ಗುಂಪು ಸೇವೆ"ಯಿಂದಲೂ ದೂರವಿರುವುದು ಯಾವತ್ತೂ ಕ್ಷೇಮ.
ಇಂತಹ ದಾನ ಅಥವ ಕರುಣೆಯ ಪ್ರದರ್ಶನದಿಂದ ಸಮಾಜದಲ್ಲಿ "ಅಗೋಚರ ಕರ್ಮ"ಗಳು ಹೆಚ್ಚಾಗಿ, ಭಾವ
ದಾರಿದ್ರ್ಯಕ್ಕೆ ದಾರಿಮಾಡಿದಂತಾಗಿ, ಸದ್ಭಾವಕ್ಕೆ
ಹಾನಿಯಾಗುವ ಎಲ್ಲ ಸಾಧ್ಯತೆಗಳಿವೆ.
ನಮ್ಮ ಯಾವತ್ತೂ ಕರ್ಮಗಳು ಸದುದ್ದೇಶದ
ಸ್ವ-ಇಚ್ಛೆಯಿಂದ ಕೂಡಿದ್ದು, ಸಪಾತ್ರರಿಗೆ ಉಪಕರಿಸಿ - ಅದು ಸ್ವಂತಕ್ಕೆ
ಆನಂದವನ್ನು ನೀಡುವಂತಿರಬೇಕು.
ಒಂದು ದಳ ಶ್ರೀ ತುಳಸಿ ಬಿಂದು
ಗಂಗೋದಕವನ್ನು ಹೃತ್ಪೂರ್ವಕವಾಗಿ ನೀಡಿಯೂ ಧನ್ಯರಾಗಬಹುದು. ಜೂಟಕತನ-ಜಿಪುಣ
ಭಾವವಿಲ್ಲದೆ ಸ್ವಪ್ರೇರಣೆಯಿಂದ
ಮಾಡುವ ಪ್ರಾಮಾಣಿಕ ದಾನ, ಕೊಡುಗೆಗಳು ಮಾತ್ರ ಆನಂದದ ಅನುಭವವನ್ನು ನೀಡುತ್ತವೆ. ಯಾವುದೇ
ಉತ್ತಮ ಕಾರ್ಯವನ್ನು ವೈಯ್ಯಕ್ತಿಕವಾಗಿ ನಡೆಸುವುದರಿಂದಲೇ ಸುಖೀ ಸಮಾಜದ ನಿರ್ಮಾಣವು ಸಾಧ್ಯ. ಯಾವುದೇ
ರೂಪದ ಕರುಣೆಯನ್ನಾಗಲೀ ಪ್ರೀತಿಯನ್ನಾಗಲೀ ಸಹಾನುಭೂತಿಯನ್ನಾಗಲೀ ವ್ಯಕ್ತಿಯಿಂದ
ವ್ಯಕ್ತಿಗೆ ವೈಯ್ಯಕ್ತಿಕವಾಗಿ - ನೇರವಾಗಿ ವರ್ಗಾಯಿಸುವುದೇ ಉತ್ತಮ ಮಾರ್ಗ. ಗುಂಪು
ಸೇವೆಗಳೆಲ್ಲವೂ ಸ್ವಾರ್ಥ ಸಾಧನೆಯ ಗುಪ್ತ ಕಾರ್ಯಸೂಚಿಯನ್ನು ಹೊಂದಿರುವುದರಲ್ಲಿ
ಸಂದೇಹಬೇಡ. ಗುಂಪುಗಳಲ್ಲಿ ಖೊಟ್ಟಿ ರಾಜಕೀಯವು ಮೂಗು ತೂರಿಸುವುದೂ ಸಹಜ. ಇಂತಹ
ಸೇವೆಗಳು ಸ್ವಾರ್ಥದ ಬೂಟಾಟಿಕೆಯ ಕೊಳೆತ ಹಣ್ಣಿನಂತೆ. ನಮ್ಮ ಕರ್ಮದ ಸಂಚಿಯಲ್ಲಿ "ಕೊಳೆತ
ಫಲವನ್ನು ತುಂಬಿಸಿದರೆ ಕಳಿತ ಫಲಗಳೂ ನಷ್ಟ"ವಾಗುವಂತಾದೀತು. ಈ ಭೂಮಿಯು ಕರ್ಮದಲ್ಲಿಯೇ ಬದುಕನ್ನು ಸವೆಸುವ
ಮತ್ತು ಅವರವರ ಕರ್ಮ ಫಲವನ್ನು ಅವರವರೇ ಅನುಭವಿಸುವ ಕರ್ಮ ಸ್ಥಾನ. ಆದ್ದರಿಂದ ಬದುಕಿನ
ಕರ್ಮಭೂಮಿಯಲ್ಲಿ ಗುಂಪುಗಾರಿಕೆಗೆ - ಸಮೂಹ ಸನ್ನಿಗೆ ಅವಕಾಶವೇ ಇಲ್ಲ. ಈ ಹಿನ್ನೆಲೆಯಲ್ಲಿ, ಕರ್ಮದ
ಆಯ್ಕೆ ಮತ್ತು ವಿಧಾನ
ದಲ್ಲಿಯೂ ಎಚ್ಚರವಿರಲಿ.
ನಾವು ಬಹುಪಾಲು ಅರೆ ಎಚ್ಚರದಲ್ಲಿಯೇ ಬದುಕನ್ನು ಸವೆಸುವವರು.
ಅಜಾಗ್ರತ ಸ್ಥಿತಿಯಲ್ಲಿಯೇ ನಮ್ಮ ಬದುಕಿನ ಎಲ್ಲ ಕರ್ಮಗಳೂ ಮುಗಿದು ಹೋಗುತ್ತವೆ. ಅಂತಹ
ಸುಪ್ತಾವಸ್ಥೆಯನ್ನೇ ಇಚ್ಛೆಯಿಂದ ನೆಚ್ಚಿಕೊಂಡು ಸ್ವರ್ಗ ಭ್ರಮಿತರಾಗಿರುವವರೂ ಇದ್ದಾರೆ. ಕೆಲವರು
ನಡುನಡುವೆ ಎಚ್ಚರಗೊಂಡು ಏನು ಎತ್ತ ಎನ್ನುವ ಕ್ಷಣಿಕ ಆತ್ಮ ನಿರೀಕ್ಷಣೆಗೆ
ತೊಡಗುವುದೂ ಇದೆ. ಪ್ರಾರಬ್ಧದ ನುರಿತಕ್ಕೆ ಒಳಗಾಗಿ, ಪ್ರಜ್ಞೆ ತಪ್ಪಿದ ಸ್ಥಿತಿಯಿಂದ ಹೊರಗೇ ಬರಲಾರದ ಭವಬಂದಿಗಳೂ
ಇದ್ದಾರೆ. ಕತ್ತಲಿನಲ್ಲಿ ತಡಕಾಡುವ
ಅಂತಹ ಮೌಢ್ಯ ತುಂಬಿದ ಬದುಕುಗಳಲ್ಲಿ
ಪ್ರಾರಬ್ಧವು ಸವೆಯುವುದಿಲ್ಲ. ಭಾರವು ಕಡಿಮೆಯಾಗುವುದೂ ಇಲ್ಲ. ಯಾವುದೇ ಜನ್ಮದಲ್ಲಿ ಪ್ರಾರಬ್ಧ
ಪೀಡಿತರಿಗೆ - ನಷ್ಟ ಜಾಸ್ತಿ; ಲಾಭ ಕಡಿಮೆ. ಹೀಗೆ,
ಅಲೆಗಳು ಹೊಡೆದುಕೊಂಡು ಹೋದಲ್ಲಿಗೆ ಹೋಗಿ ಬೀಳುವ ಇಂತಹ ಬದುಕುಗಳು ತಮ್ಮ
ಕರ್ಮದ ಹೊರಲಾಗದ ಭಾರವನ್ನು ಹೊರುತ್ತ... ಕರ್ಮವೀರರಾಗಲಾಗದೆ
ಕರ್ಮಭಾರವಾಗಿ ಹೋಗುತ್ತಾರೆ! ಆದರೆ ನಮ್ಮ ಹಣೆ ಬರಹ ಅಥವ ಪೂರ್ವ ಸಂಸ್ಕಾರವನ್ನು ಇಚ್ಛಾ ಶಕ್ತಿ, ಜ್ಞಾನ ಶಕ್ತಿ ಮತ್ತು
ಕ್ರಿಯಾಶಕ್ತಿಯಿಂದ ಉನ್ನತೀಕರಣ
ಗೊಳಿಸಲು ಸಾಧ್ಯವಿದೆ. ಇಂದಿನ ನಿರುಪಯೋಗಿ
ಶಾಲಾ ಪರೀಕ್ಷೆಗಳಿಗಾಗಿ ಏಕಾಗ್ರ ಕರ್ಮಶೀಲರಾಗುವುದು ನಮಗೆ ಸಾಧ್ಯವೆಂದಾದರೆ
ಸಮಗ್ರ ಬದುಕಿನ ಅಂತಿಮ ಪರೀಕ್ಷೆಗಾಗಿ ತಲ್ಲೀನತೆಯ ಕರ್ಮಯುದ್ಧವೂ ಅಸಾಧ್ಯವೇನಲ್ಲ. ಆದರೆ ಅದಕ್ಕೂ
ಪೂರ್ವ ಸಿದ್ಧತೆ ಬೇಕು.
ಆದರೆ ನಮ್ಮ ಸುವಿಚಾರ
ದಾರಿದ್ರ್ಯದಿಂದಾಗಿ, "ಕರ್ಮ"
ಎಂಬುದರ ನಮ್ಮ ಪರಿಕಲ್ಪನೆಯು ಉದ್ಯೋಗ, ಹಣ ಸಂಪಾದನೆ,
ಮನೆ,
ಐಷಾರಾಮ...ಎಂಬ ಸೀಮಿತ ವ್ಯಾವಹಾರಿಕ
ಪರಿಧಿಯಲ್ಲೇ ನಿಂತು ಹೋಗುತ್ತಿದೆ.
ಕುಟುಂಬಕ್ಕಾಗಿ, ಸಂಸಾರಕ್ಕಾಗಿ, ಬಂಧು -
ಸ್ನೇಹಿತರಿಗಾಗಿ ನಡೆಸುವ ಚಟುವಟಿಕೆ -
ಎಂಬಲ್ಲಿಗೇ ನಮ್ಮ ಕರ್ಮ ಸಿದ್ಧಾಂತವು
ಮುಗಿದು ಹೋಗುತ್ತದೆ. ಆದರೆ ದಿನಗೂಲಿಯ ಬದುಕಿನಂತೆ
ಅಂದಂದಿಗೇ ಗಳಿಸಿ ಕಳೆದುಬಿಡುವ ಮತ್ತು
ಪ್ರತಿಫಲಾಪೇಕ್ಷೆಯಿಂದಲೇ ನಡೆಸುವ
ಇವೆಲ್ಲ ಚಟುವಟಿಕೆಗಳೂ ಹೊಟ್ಟೆಪಾಡಿನ ಕರ್ಮಚಾರೀ ಕರ್ಮಗಳು. ನಷ್ಟವನ್ನು ಹೆಚ್ಚಿಸುತ್ತ ಲಾಭ
ಕ್ಷಯವಾಗುವಂತೆ ಮಾಡುವ ಹಲವು ನಿತ್ಯಕರ್ಮಗಳ ಸಾಲಿಗೆ ಇಂತಹ ಒಟ್ಟಾರೆ ಹೊಡಚಾಟಗಳನ್ನು
ಸೇರಿಸಬಹುದು. ಬದುಕಿನ ಒಂದೊಂದು ಇನ್ನಿಂಗ್ಸ್ ಮುಗಿಸಿದಾಗ ನಮ್ಮೊಂದಿಗೆ ಬರುವುದು ಇಂತಹ
ಯಾವ ಉದ್ಯೋಗ-ಸಂಬಂಧಗಳ ಸ್ಕೋರೂ ಅಲ್ಲ;
ಆಗ ನಮ್ಮ ಹೆಗಲೇರುವುದು ಮನಸ್ಸನ್ನು
ಸಂಸ್ಕರಿಸಿಕೊಳ್ಳುತ್ತ ನಾವು ಸಂಗ್ರಹಿಸಿಕೊಂಡ ಉತ್ತಮ-ನೀಚ ಕರ್ಮಭಾವ ಗಳ ಮೊತ್ತ.
ಅತ್ಯುಚ್ಚ ಶುದ್ಧ ಕರ್ಮವು ಆಚಾರ - ವಿಚಾರಗಳೆರಡೂ
ಸ್ವಚ್ಛವಾಗಿರುವುದನ್ನು ಬಯಸುತ್ತದೆ. ಅದು
ಹೇಗೆಂದರೆ "ಆಹಾರವೂ ಆರೋಗ್ಯಕರ; ಅದನ್ನು ಇರಿಸಿದ
ತಟ್ಟೆಯೂ ಪರಿಶುದ್ಧ" - ಎಂಬಂತೆ. ಆದರೆ ಬದುಕಿನ ಕಣ್ಣುಮುಚ್ಚಾಲೆಯಲ್ಲಿ
ಸಿಲುಕಿದವರನ್ನು ಇನ್ನೊಂದು ಬಗೆಯ ತೊಳಲಾಟವೂ ಬಾಧಿಸುವುದಿದೆ. "ದೇಹವೆಂಬ ತಟ್ಟೆಯು
ಕೊಳೆಯಾಗಿದ್ದರೆ ಏನು ಮಾಡಲಿ? ಮನದ ಆಹಾರವು ಮೈಲಿಗೆಯಾಗಿದ್ದರೆ ಏನು ಮಾಡಲಿ?" ಎಂಬ
ಪರಿತಾಪದಲ್ಲಿ ಮುಳುಗಿಹೋಗುವವರೂ ಇದ್ದಾರೆ. ಆದರೆ ಯಾವುದೇ ಪಶ್ಚಾತ್ತಾಪಗಳನ್ನೂ ಆಧರಿಸುವ
ಕರ್ಮಭಾಗವಿದೆ. ಆದ್ದರಿಂದ ಸತ್ಕರ್ಮಗಳ ನಡಿಗೆಯನ್ನು ಎಲ್ಲಿಂದಲೂ ಆರಂಭಿಸಬಹುದು. ಹಿಂದೆ ಆದದ್ದು
ಆಗಿ ಹೋಯಿತು. ಮುಂದೇನು ಮಾಡಬೇಕು? ಬದುಕಿನಲ್ಲಿ ಎಂತಹ ಎಚ್ಚರ ಬೇಕು? - ಎಂಬ ಚಿಂತನೆಗೇ ಹೆಚ್ಚು ಮಹತ್ವ
ಕೊಡಬೇಕಾಗುತ್ತದೆ. ಏಕೆಂದರೆ ನಮ್ಮ ಬದುಕು ಎಂಬುದು ಇರುವವರೆಗೂ ಸತ್ಕರ್ಮಗಳಿಗೆ ಹಲವು ಅವಕಾಶವಿದೆ.
ಉದ್ಧಾರವಾಗಬೇಕು ಎಂಬ ಯಾವುದೇ ಸಂಕಲ್ಪಕ್ಕೆ ವಯಸ್ಸಿನ ಮಿತಿ ಎಂಬುದು ಇಲ್ಲವೇ ಇಲ್ಲ. ಆದ್ದರಿಂದ ಪಾಪಿ
ಎಂದುಕೊಳ್ಳುವ ಪಾಪಧ್ಯಾನದ ನಿರಾಶೆಯ ಬದಲು ಪಾಪವನ್ನು ಹಿಂದೆ ಬಿಟ್ಟು ಹೊಸ
ಬದುಕನ್ನು ಕಟ್ಟಲು ಸಾಧ್ಯವಾದರೆ - ಅದು - ಪ್ರಾರಬ್ಧವನ್ನು ಸಕಾರಾತ್ಮಕವಾಗಿ ಪೋಷಿಸಿದಂತೆ.
ಸ್ವಾಮಿ ವಿವೇಕಾನಂದರು "ಕೊಳೆಯನ್ನು ಕೊಳೆಯಿಂದ ತೊಳೆಯಲಾದೀತೆ? ಪಾಪವು ಪಾಪವನ್ನು
ಗುಣಪಡಿಸೀತೆ? ದೌರ್ಬಲ್ಯಕ್ಕೆ ದೌರ್ಬಲ್ಯವು ಪರಿಹಾರವೆ? ಅದಲ್ಲ..."
ಎನ್ನುತ್ತಿದ್ದರು. ಅವಿರತ ಬದುಕಿನ ನಡಿಗೆ ಎಂಬುದು ಉತ್ತಮ ಗುರಿಯನ್ನೇ ದೃಷ್ಟಿಸುತ್ತ ನಡೆದಾಗ
ಸಂಕಲ್ಪಿತ ಗುರಿಯನ್ನು ಸಮೀಪಿಸುವುದರಲ್ಲಿ ಸಂಶಯವಿಲ್ಲ. ಆದ್ದರಿಂದ ಕೆಲವು ಪ್ರಾಪಂಚಿಕ
ವ್ಯಾಧಿಗಳಿಗೆ - ನಮ್ಮೊಳಗನ್ನೇ ಶೋಧಿಸುವಂತಹ ಧನಾತ್ಮಕ
ಮಾರ್ಗ ವನ್ನು ಬಳಸಿಕೊಳ್ಳಲು ಪ್ರಯತ್ನಿಸಬಹುದು.
ಒಳಗೊಳಗೇ ಹದವಾಗಿ ಬೇಯುವ ಧ್ಯಾನಸ್ಥ
ಸ್ಥಿತಿಯನ್ನು ಅಪೇಕ್ಷಿಸುವ ಅಂತಃನಿರೀಕ್ಷೆ ಎಂಬುದು ಸತತ ಅಭ್ಯಾಸದಿಂದಲ್ಲದೆ ತಾನಾಗಿಯೇ
ವಶವಾಗಲಾರದು. ಆದರೆ ಈ ಇಳಾಸಂತೆಯಲ್ಲಿ ಏಕಾಂತದ ಬದುಕೆಂಬುದು ಅಪ್ರಾಯೋಗಿಕವೂ ಹೌದು; ದುಸ್ಸಹವೂ ಹೌದು. ನಾವು ಬದುಕಿರುವಷ್ಟು ದಿನವೂ ನಮಗೆ ಜನಜಾತ್ರೆಯಲ್ಲಿಯೇ
ಇರಬೇಕಾದ ಅನಿವಾರ್ಯತೆಯಿದೆ ಎಂಬುದು ವಾಸ್ತವ. ಹೀಗಿರುವಾಗ ಇದ್ದಬಿದ್ದ
ಕೆಲಸಗಳನ್ನೆಲ್ಲ ನಾವಾಗಿಯೇ ಮೈಮೇಲೆ ಎಳೆದುಕೊಳ್ಳದೆ ನಿತ್ಯ ಬದುಕಿನ ಅನಿವಾರ್ಯ ಕರ್ಮಗಳಲ್ಲಿ
ಮಾತ್ರ ತೊಡಗಿಕೊಳ್ಳುವುದು ಅವಶ್ಯಕ. ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸುವಷ್ಟಕ್ಕೇ ಯಾವುದೇ
ಬಂಧನಗಳನ್ನು ಮಿತವಾಗಿ ಇರಿಸಿಕೊಂಡರೆ ಕ್ಲೇಶಗಳು ಕಡಿಮೆಯಾಗುತ್ತವೆ. ಕ್ಲೇಶಕಾರೀ
ಬಂಧನಗಳಿಂದ ಎಚ್ಚರದ ಅಂತರವನ್ನು ಕಾಯ್ದುಕೊಳ್ಳುವುದು ನಮ್ಮ ಮನಸ್ಸಿನ ಹೊಯ್ದಾಟಗಳನ್ನು
ನಿಯಂತ್ರಿಸಲು ಸಹಕಾರಿ. ಈ ಪಯಣದಲ್ಲಿ,
ಸತ್ಸಂಗವನ್ನು ಮಾತ್ರ ಆಯ್ದುಕೊಂಡು
ನಾಜೂಕಾಗಿ ಬದುಕಿನ ಪ್ರದರ್ಶನವನ್ನು ( LIFE
SHOW) ನಡೆಸಿಕೊಡುವ ಜವಾಬ್ದಾರಿಯು ಪ್ರತೀ
ಬದುಕಿಗೂ ಇದೆ. "ಬದುಕು - ಬದುಕಲು ಬಿಡು"
ಎಂಬ ಸರಳ ಸೂತ್ರವು ಕರ್ಮ ಭಾರವನ್ನು
ತಗ್ಗಿಸಲು - ತನಗೂ ಪರರಿಗೂ ಉಪಕರಿಸಬಲ್ಲುದು. ಸಮರ್ಥ ಗುರುವಿನ ಮಾರ್ಗದರ್ಶನದಲ್ಲಿ ಸಮರ್ಪಣಾಭಾವದಿಂದ ನಡೆಸುವ ಯಾವುದೇ ಕರ್ಮಗಳಿಂದ ಪ್ರಾರಬ್ಧಕರ್ಮದ
ಹೊರೆಯು ತಗ್ಗುತ್ತದೆ. ಪ್ರಾರಬ್ಧ ಕರ್ಮವು ಅನಾದಿಯಾದರೂ ಅದು -
ಅನಂತವಲ್ಲ. ಪೀಡಿಸುವ ಕರ್ಮಫಲಗಳೂ
ಅನಿವಾರ್ಯವೇನಲ್ಲ; ಎಲ್ಲವೂ
ನಿವಾರ್ಯವೇ. ಸತ್ಕರ್ಮದಿಂದ ದುಷ್ಕರ್ಮದ ಭಾರವನ್ನು ಇಳಿಸಿಕೊಳ್ಳುವುದೇ ಪ್ರಾರಬ್ಧ ನಿವಾರಣೆಯ
ದಾರಿ. ದಿನವೂ ರಾಡಿಗೊಳ್ಳುವ ಮನಸ್ಸನ್ನು ವಿನಮ್ರ ಶರಣಾಗತಭಾವದಿಂದ ಏಕಾಗ್ರಗೊಳಿಸಿಕೊಳ್ಳುತ್ತ
ಬದುಕನ್ನು
ಹದವಾಗಿಸಿಕೊಳ್ಳಬಹುದು.
ಸತ್ಕರ್ಮದ ಕಠಿಣ ಹಾದಿಯಲ್ಲಿ ನಡೆಯುವ
ಜೀವಿಗಳಿಗೆ ದಾರಿಯ ಶ್ರಮವನ್ನು ಸಹಿಸುವಂತೆ ನೆರಳು ನೀಡುವುದು - ಶರಣಾಗತ ಭಾವ. ಈ ಶರಣಾಗತಿಯ ಭಾವ ವು - ಪೂರ್ಣ
ನಿಷ್ಠೆ ಯನ್ನೂ ಅಪೇಕ್ಷಿಸುತ್ತದೆ. ನಿತ್ಯವೂ
ನಾವು ಹಾದು ಹೋಗುವ ನಾಸ್ತಿಕ ಲೌಕಿಕವೆಂಬ "ತಳ್ಳುಗಾಡಿಯ ವರ್ಗ"ಕ್ಕೆ - ಆತ್ಮವೂ ಇಲ್ಲ; ಪರಲೋಕವೂ ಇಲ್ಲ; ದೇವರೂ ಇಲ್ಲ; ಅಂದ ಮೇಲೆ ಕರ್ಮವೂ
ಇಲ್ಲ; ಧರ್ಮವೂ ಇಲ್ಲ...! ಎಲ್ಲ ಬಲ್ಲಿದನೆಂಬ - ಗುಗ್ಗುರು ಭೌತವಾದದ ಒಣ
ಪ್ರತಿಷ್ಠೆ (!!) ಯ ಹಾದಿಯು ಯಾವುದೇ ಕರ್ಮಭಾರವನ್ನು - ತಾವಾಗಿಯೇ ಇರಿಸುವ ಒರೆಸುವ
ಅಹಂಕಾರಲೇಪಿತ ಹಾದಿ. ಇಂತಹ "ನೇತಿ ನೇತಿ" ವಾದದವರೂ ಅಂತಿಮವಾಗಿ ಒಂದೇ ಗುರಿಯನ್ನು
ತಲುಪಿದರೂ ಇದು ಬಹಳ ಕಠಿಣವಾದ ಮತ್ತು ಸುತ್ತುಬಳಸಿನ ದಾರಿ. ಈ ದಾರಿಯು ಸಾಮಾನ್ಯರಿಗೆ ಪ್ರಶಸ್ತವಲ್ಲ. ಈ ಯುಗಕ್ಕೆ ಹೆಚ್ಚು ಹೊಂದುವ ಸರಳ
ಮಾರ್ಗವೇ ಪೂರ್ಣ ನಿಷ್ಠೆಯ ಶರಣಾಗತ ಭಕ್ತಿಭಾವ. ವೈರಾಗ್ಯವಿರಬೇಕು ಕರ್ಮ ಬಿಡದಿರಬೇಕು ;ಹಿತವಾಗಿ ಬೆರೆಸಿಯೇ ಭಾರ ತಗ್ಗಿಸಬೇಕು; ಶುಚಿಯ ಹಿಗ್ಗಿಸಬೇಕು...
ಯಾವುದೇ ಕರ್ಮವು ವ್ಯಕ್ತಿಯ ಚೈತನ್ಯದ ಮೇಲೆ ಪ್ರಭಾವ
ಬೀರಿ ಆಳವಾದ ಗುರುತನ್ನು ಮೂಡಿಸಬೇಕಾದರೆ ಅದು ಹೃತ್ಪೂರ್ವಕವಾಗಿರಬೇಕು - ಅಥವ - ಭಗವತ್
ಪ್ರೇರಿತ ಮತ್ತು ಭಗವದರ್ಪಿತವಾಗಬೇಕು. ಆಗ ಕರ್ಮದ ನಡೆಯು ಸುಲಲಿತವಾಗುತ್ತದೆ.
"ಪೂಜ್ಯರೇ, ಎಷ್ಟೇ ಯತ್ನಿಸಿದರೂ ಮನಸ್ಸು ಏಕಾಗ್ರವಾಗಲೊಲ್ಲದು. ಧ್ಯಾನಕ್ಕೆಂದು
ಕೂತರೆ ನನ್ನ ಪ್ರೀತಿಯ ಮಗನೇ ಮನಸ್ಸಿನಲ್ಲಿ ಸುತ್ತುತ್ತಾನೆ. ಏನು ಮಾಡಲಿ?" ಎಂದ ಸಂಸಾರೀ
ಭಕ್ತೆಯೊಬ್ಬರಿಗೆ ಶ್ರೀ ರಾಮಕೃಷ್ಣ ಪರಮಹಂಸರು "ಹಾಗಿದ್ದರೆ ಆ ಮಗನಲ್ಲೇ ನಿನ್ನ ಮನಸ್ಸನ್ನು
ಕೇಂದ್ರೀಕರಿಸು; ಅವನನ್ನೇ ಭಗವಂತನೆಂದುಕೊಂಡು ಏಕಾಗ್ರತೆಯಿಂದ ಧ್ಯಾನಿಸು" ಎಂದು ಸರಳ
ಮಾರ್ಗವನ್ನು ತೋರಿಸಿದ್ದರು. ಅದು ಭಕ್ತರ ಭಾವ ಜಗತ್ತು. ಸುಲಭಕ್ಕೇ ಜೋತುಬಿದ್ದಿರುವ ಇಂದಿಗೆ -
ಭಕ್ತಿಮಾರ್ಗವೇ ಸುಲಭ ಅನುಕರಣೀಯ ಎನ್ನುವುದೂ ಇದಕ್ಕೇ.
ಕೆಲವು ವರ್ಷಗಳ ಹಿಂದೆ ನಾನು ಒಬ್ಬ ಸಂತ(?)ನನ್ನು
ನೋಡಿದ್ದೆ. ಆ ವ್ಯಕ್ತಿಯು ಪೂಜೆ
ಮಾಡುವಾಗ ಮಣಮಣ ಹೇಳುತ್ತಿದ್ದ ಮಂತ್ರದ ನಡುನಡುವೆ
"ಏನಪ್ಪ? ಇಲೆಕ್ಟ್ರಿಕ್
ಬಿಲ್ ಕಟ್ಟಿದ್ಯಾ?", "ಕಾರಿಗೆ ಪೆಟ್ರೋಲ್ ತುಂಬಿಸಿದ್ಯಾ?" ಎಂದು
ತನ್ನ ಹಿಂಬಾಲಕರೊಂದಿಗೆ ಅಸಂಬದ್ಧ ಮಾತುಕತೆಯಾಡುತ್ತಿದ್ದರು. "ಕರ್ತೃ ಎಲ್ಲೋ - ಕರ್ಮ ಎಲ್ಲೋ -
ಕ್ರಿಯೆ ಎಲ್ಲೋ" ಅನ್ನಿಸುವಂತೆ ಯಾವುದೇ ತನ್ಮಯತೆಯಿಲ್ಲದೆ ಆ ಮಹಾನುಭಾವರು
ದೇವರಿಗೆ ಆರತಿಯನ್ನೂ ಬೆಳಗುತ್ತಿದ್ದರು. ಇದು ಲೌಕಿಕರ ಕರ್ಮಲೋಕದ ತ್ರಿಶಂಕು
ಸ್ಥಿತಿ! ಯಾವುದೇ ಅಸ್ಥಿತ ಕರ್ಮಗಳು ಗೀಚಿದ ಗೆರೆಗಳಂತೆ;
ಯಾವ ಸದರ್ಥವನ್ನೂ ಹುಟ್ಟಿಸಲಾರವು; ಆದರೆ ಒಮ್ಮೊಮ್ಮೆ
ಅನರ್ಥಗಳನ್ನು ಹುಟ್ಟಿಸಬಲ್ಲವು! ಆದ್ದರಿಂದ ನಾವು ನಡೆಸುವ ಪ್ರತೀ ಕರ್ಮದಲ್ಲೂ
ನಾವಿರಬೇಕು; ಶ್ರದ್ಧಾರೂಪದಲ್ಲಿ ನಾವು ಕಾಣಿಸಬೇಕು. ಅದೇ ನಿಜವಾದ ಕರ್ಮ.
ಶ್ರದ್ಧಾಭಾವರಹಿತವಾದ ಕರ್ಮಗಳು
ಕಾಲಹರಣವಲ್ಲದೆ ಮತ್ತೇನಲ್ಲ. ಅಂತಹ
ವ್ಯರ್ಥ ಕರ್ಮಗಳು ತ್ಯಜಿಸುವುದಕ್ಕೆ ಯೋಗ್ಯ. ಪೂರ್ಣ ಗಮನವಿಟ್ಟು ಪ್ರೀತಿಯಿಂದ ಉಣ್ಣಿಸದಿದ್ದರೆ
ನಮ್ಮ ಪುಟ್ಟ ಮಗುವೂ ಊಟಮಾಡುವುದಿಲ್ಲ - ಅಲ್ಲವೆ? ಪ್ರೇಮ ಭಕ್ತಿಯಿಂದ
ಕೂಡಿದ ಕರ್ಮಗಳು ಮಾತ್ರ ಸ್ವೀಕೃತವಾಗುತ್ತವೆ; ಉಳಿದುದೆಲ್ಲವೂ ರದ್ದಿ. ಏಕನಿಷ್ಠೆಯಿಂದ ಮಾಡಲಾಗದ ಸೇವೆಯು
ಸ್ವಂತಕ್ಕೆ ತೃಪ್ತಿ ನೀಡದು;
ಎಲ್ಲೂ ಸ್ವೀಕಾರಾರ್ಹವೆನ್ನಿಸದು; ತೃಪ್ತಿಯೂ ಇಲ್ಲ; ಫಲವೂ ಸೊನ್ನೆ.
ಸ್ವಹಿತಾಸಕ್ತಿರಹಿತವಾಗಿ ನಡೆಸುವ ಕರ್ಮಗಳಿಂದ ಯಾವುದೇ ದುಃಖವಿಲ್ಲ. ಇಂತಹ ನಿಷ್ಕಾಮ
ಕರ್ಮನಿರತರಿಗೆ ಶ್ರದ್ಧೆ ಮತ್ತು ಏಕಾಗ್ರತೆ ಯು ಅತೀ ಅವಶ್ಯ.
ಈ ಮನುಕುಲದಲ್ಲಿ ಮೂರು ಬಗೆಯ ಮಹಾತ್ಮರಿದ್ದಾರೆ. ಒಂದು
- ಪಡೆದು ಬಂದವರು ಅಥವ ಪೂರ್ವ ಸುಕೃತದಿಂದ ಮಹಾತ್ಮರಾದವರು,
ಇನ್ನೊಂದು - ತಮ್ಮ ಪ್ರಾಮಾಣಿಕ ಮತ್ತು ನಿಸ್ವಾರ್ಥ ಪರಿಶ್ರಮದಿಂದ
ಉನ್ನತಿಗೇರಿದವರು, ಮೂರನೆಯದು - ಪತ್ರಿಕೆ ಮತ್ತು ಪ್ರಚಾರ ಮಾಧ್ಯಮಗಳ
ಒತ್ತಾಸೆಯಿಂದ ಮಹಾತ್ಮರೆನ್ನಿಸಿಕೊಳ್ಳುವವರು. ಕೊನೆಯದು,
ದುರ್ದೈವೀ ವರ್ಗ! ಶ್ರದ್ಧೆ,
ಏಕಾಗ್ರತೆಯಿಂದಲೇ ಬದುಕನ್ನು ಕಟ್ಟಿಕೊಂಡ
ಸುಬ್ರಹ್ಮಣ್ಯ ಭಾರತಿ,
ರವೀಂದ್ರನಾಥ ಠಾಕೂರ್, ಅಂಬಿಕಾತನಯದತ್ತ, ಕುವೆಂಪು... ಇವರೆಲ್ಲರೂ ಮೊದಲನೆಯ ವರ್ಗಕ್ಕೆ ಸೇರಿದವರು. ಇವರು
ಯಾವುದೇ ಫಲದ ಹಿಂದೆ ಓಡಲಿಲ್ಲ;
ಫಲವೇ ಅವರನ್ನು ಹಿಂಬಾಲಿಸಿತು! "ಈ
ವಿಶ್ವದಲ್ಲಿ ಚಲಿಸುವುದರಲ್ಲಿ ಎಲ್ಲದರಲ್ಲಿಯೂ ಭಗವಂತನು ನೆಲೆಸಿದ್ದಾನೆ; ಆತನು ನಿನಗೆ ಕೊಟ್ಟುದನ್ನು ನೀನು ಅನುಭವಿಸಿ ಆನಂದಿಸು; ಯಾರೊಬ್ಬರ ಐಶ್ವರ್ಯಕ್ಕೂ ಆಸೆ ಪಡಬೇಡ.." ಎಂಬ
ಉಪನಿಷದ್ವಾಣಿಯನ್ನು ಬದುಕಿಸಿ -ಬದುಕಿ -ಸಾಧನೆ ಮಾಡಿದ ಯಾವುದೇ ಮಹಾತ್ಮರು ಕರ್ಮಯಜ್ಞಕ್ಕೆ
ಮಾದರಿಯಾಗಬಲ್ಲರು.
ಅಪೂರ್ವ ಅವಕಾಶಗಳೇ ಅದೃಷ್ಟ. ಯಾವುದೇ ಅದೃಷ್ಟದ ಹಿಂದೆ ಪ್ರಾರಬ್ಧದ ಕರಾಮತ್ತು ನಿಶ್ಚಿತ. ದ್ವೇಷ, ಠಕ್ಕು, ಅಹಂಕಾರ, ಮತ್ಸರ, ಮಮಕಾರಗಳಿಂದ ರಿಂಗಣಗುಡುತ್ತಿರುವ ನಮ್ಮ ಸಾಂಸಾರಿಕ ಮನಸ್ಸನ್ನು ಏಕಾಗ್ರಗೊಳಿಸಲು ಬಯಸುವವರು ಮೊದಲಿಗೆ ಹದವಾಗಿ, ಮಿದುವಾಗಬೇಕು. ಸಚ್ಚಿಂತನೆಗಳಿಂದ ಮನಸ್ಸನ್ನು ನಾದಬೇಕು. ಚಂಚಲತೆಯನ್ನು ತಹಬಂದಿಗೆ ತರಲು ಪ್ರಯತ್ನಿಸಬೇಕು. ಯೋಗಕ್ರಿಯೆಗಳ ಸಹಾಯವನ್ನೂ ಪಡೆದುಕೊಳ್ಳಬಹುದು. ಎಣ್ಣೆಯ ದೀಪವನ್ನು ಒಂದು ನಿಮಿಷ ಕಾಲ ನೋಡುತ್ತ ಆ ದೀಪದಲ್ಲೇ ಬುದ್ಧಿಯನ್ನು ನೆಲೆಗೊಳಿಸಲು ಪ್ರಯತ್ನಿಸುತ್ತ - ಮುಂದೆ ಆ ಅವಧಿಯನ್ನು ದೀರ್ಘಗೊಳಿಸುವ ವ್ಯಾಯಾಮದಿಂದ ಏಕಾಗ್ರತೆಯ ಶಕ್ತಿಯನ್ನು ಹೆಚ್ಚಿಸಬಹುದು. ಸ್ವಲ್ಪ ಹೊತ್ತು ಏನನ್ನೂ ಯೋಚಿಸದೆ ಮನಸ್ಸನ್ನು ಶೂನ್ಯಗೊಳಿಸುವ ಪ್ರಯತ್ನದ (ಅಸಾಧ್ಯ ಎನ್ನಿಸುವ?!) ಈ ವ್ಯಾಯಾಮವು ಎಲ್ಲ ವಯಸ್ಸಿನವರಿಗೂ ಉಪಯುಕ್ತ. ಈ ವ್ಯಾಯಾಮದಿಂದ ಮಿದುಳಿನ ಕೋಲಾಹಲ - ಉದ್ವೇಗಗಳು ತಗ್ಗುತ್ತವೆ. ಹೀಗೆ ಹದಗೊಳ್ಳುವ ಮನಸ್ಸನ್ನು ನಿಧಾನವಾಗಿ ಸಮೀಪಿಸಿ ನಿಷ್ಕಲ್ಮಷ ಸ್ನೇಹದ ಹಗ್ಗದಿಂದ ಬಂಧಿಸಿದಾಗ ಮನಸ್ಸಿನೊಂದಿಗೆ ಸ್ನೇಹವು ಸ್ಥಾಪನೆಯಾಗಿ, ತಳಮಳಗಳು ಹದಗೊಂಡು ಪ್ರಶಾಂತ ಭಾವವು ಹೊಮ್ಮುತ್ತದೆ.
ಇಂದು ದೊಡ್ಡ ದೊಡ್ಡವರೆಂದು
ಸಾಮಾಜಿಕವಾಗಿ ಗುರುತಿಸಿಕೊಂಡ ಎಲ್ಲರೂ
ಪ್ರಕ್ಷುಬ್ಧ ಭಾವಬುದ್ಧಿಯ ದೆಸೆಯಿಂದಲೇ
ಬಳಲುತ್ತಿದ್ದಾರೆ. ಅದಕ್ಕೆ ಕಾರಣ - ಗೊತ್ತು
ಗುರಿಯಿಲ್ಲದ ತಳಮಳ; ಅನುಪಯುಕ್ತ
ಕಡ್ಡಿಗಳನ್ನು ಹೆಕ್ಕಿ ಹೆಕ್ಕಿ ರಾಶಿಹಾಕಲು ಅವರೆಲ್ಲರೂ ಪಡುತ್ತಿರುವ
ಗುಡ್ಡದಂತಹ ಪರಿಶ್ರಮ. ತನ್ಮೂಲಕ ಎಷ್ಟೇ
ಗಳಿಸಿ, ವಸ್ತುಗಳನ್ನು
ಖರೀದಿಸಿ ರಾಶಿ ಹಾಕಿದ್ದರೂ ಅಶಾಂತಿಯ ಕೋಲಾಹಲದಲ್ಲಿ ಮುಳುಗಿರುವವರೆಲ್ಲರೂ ಸ್ವಸ್ಥ ಸುಖಕ್ಕಾಗಿ ಚಡಪಡಿಸುತ್ತಿದ್ದಾರೆ.
ಅವರಿಗೆ ಹಸಿವೆಯಿಲ್ಲ; ಊಟ ಸೇರದು. ನಾಳೆಯ ಚಿಂತೆಯಲ್ಲಿ ನಿದ್ದೆಯೂ ಬಾರದು.
ಅಪರಿಮಿತ ಆಸೆಯನ್ನು ನಿಗ್ರಹಿಸದೆ ಅಂತಹ ಮನಸ್ಸುಗಳ ತಧಿಗಿಣತ ತಪ್ಪದು. ಕಂಬಳಿಯ
ಆಸೆಯಿಂದ ನುಗ್ಗಿ, ಕಂಬಳಿಯೆಂದುಕೊಂಡು ಕರಡಿಯನ್ನು ಹಿಡಿಯುವವರು ನಾವು. ಆಸೆಯ ಕರಡಿಯ ಹಿಡಿತಕ್ಕೆ
ಸಿಲುಕಿದ ಮೇಲೆ - ಕರಡಿ ಕಂಬಳಿಗಿಂತ ಪ್ರಾಣವೇ ಶ್ರೇಷ್ಠವೆಂದು ಕೆಲವರಿಗೆ ಜ್ಞಾನೋದಯವಾಗುವುದೂ
ಇದೆ. ಒಟ್ಟಿನಲ್ಲಿ ಚಂಚಲ ಕ್ಷುದ್ರ ಆಸೆಗಳೇ ನಮ್ಮನ್ನು ಆಳುತ್ತಿವೆ.
ಇಂತಹ ಯಾವುದೇ ತಳಮಳಗಳಿಲ್ಲದ ಸ್ವಸ್ಥ ಶಾಂತ ಮನಸ್ಸು ಮಾತ್ರವೇ ಸುಖವನ್ನು ಇಡಿಯಾಗಿ
ಗ್ರಹಿಸಿ ಅನುಭವಿಸಬಲ್ಲದು ಎನ್ನುವ ಪ್ರಜ್ಞೆ ಉದಯಿಸುವುದಕ್ಕೂ ಪರಿಶ್ರಮ
ಬೇಡವೆ?
ಆದ್ದರಿಂದ ವ್ಯಾವಹಾರಿಕ ನಿತ್ಯ ಕರ್ಮಗಳಲ್ಲಿಯೂ ಸಂಯಮಪೂರ್ಣ, ಧ್ಯಾನಸ್ಥ, ಶುದ್ಧ ಭಾವ ದ
ಪ್ರಜ್ಞೆಯನ್ನು ಮೂಡಿಸಿಕೊಳ್ಳುವ ಅಗತ್ಯವಿದೆ. ನಮ್ಮ ಒಂದೊಂದು ಉಸಿರೂ ಪ್ರಾರಬ್ಧದ ಪ್ರೇರಕ; ಪೂರಕ ಮತ್ತು ನಿಯಂತ್ರಕನೂ ಹೌದು. ವರಾಹ - ನರಸಿಂಹ, ಶ್ರೀರಾಮಾವತಾರ,
ಶ್ರೀ ಕೃಷ್ಣಾವತಾರಗಳಿಗೆ ಕಾರಣರಾದ ಹಿರಣ್ಯಾಕ್ಷ - ಹಿರಣ್ಯಕಶಿಪು, ರಾವಣ - ಕುಂಭಕರ್ಣ,
ಶಿಶುಪಾಲ - ದಂತವಕ್ರ ಎಂಬ ರಕ್ಕಸರ ವಿಚಾರವು ಪೌರಾಣಿಕ ಕತೆಗಳು. ಸನಕ ಸನಂದನ ಮೊದಲಾದ ಮುನಿಗಳು
ಶ್ರೀಮನ್ನಾರಾಯಣನ ದರ್ಶನಕ್ಕೆ ವೈಕುಂಠಕ್ಕೆ ಬಂದಾಗ ಶ್ರೀಮನ್ನಾರಾಯಣನ ದ್ವಾರಪಾಲಕರಾಗಿದ್ದ
ಜಯವಿಜಯರೆಂಬ ದ್ವಾರಪಾಲಕರು ಅವರನ್ನು ತಡೆದು ನಿಲ್ಲಿಸಿ ಸಂಪಾದಿಸಿದ್ದ ಶಾಪದ ಫಲವಿದು - ಎಂಬುದು
ಕತೆ. ಪುರಾಣವನ್ನು ಗೌರವಿಸುವವರು ಶಾಪ ವಿಶಾಪಗಳನ್ನೆಲ್ಲ ದೈವ ಸಂಕಲ್ಪ ಎಂದುಕೊಂಡರೂ ಅನಂತರ
ಹರಿದ್ವೇಷಿಗಳಾಗಿ ಮೂರು ಜನ್ಮಗಳನ್ನು ಜಯವಿಜಯರು ಕಳೆದುದನ್ನು ಪ್ರಾರಬ್ಧದ ಸಾಲಿಗೇ ಸೇರಿಸಬಹುದು.
ಕರ್ಮಮಾರ್ಗದಲ್ಲಿ ಯಾವುದೇ ಜೀವವು ಅಪ್ರಸ್ತುತ; ಇಲ್ಲಿ - ಕರ್ಮವೇ ನಿಯತಿಯನ್ನು ನಿರ್ದೇಶಿಸುತ್ತದೆ. ಆದ್ದರಿಂದಲೇ ಕರ್ಮಮಾರ್ಗವು ಬಹಳ ಕಠಿಣವಾದ
ಹಾದಿ. ಇಲ್ಲಿ. ಯಾವುದೇ ಕರ್ಮಗಳು ಸೃಷ್ಟಿಯ ನಿರ್ದೇಶಿತ ಚಲನೆಗೆ ಪೂರಕವಾಗಿ ನಡೆದಾಗ ಅದು ಸತ್ಕರ್ಮವಾಗುತ್ತದೆ; ನಿಯಮಾಂತರವಾದಾಗ
ದುಷ್ಕರ್ಮವಾಗುತ್ತದೆ. ಇದೇ ಪ್ರಾರಬ್ಧದ ನೀತಿ.
ಪ್ರಕೃತಿಯ ಶ್ರುತಿಗೆ ಜೀವಜಗತ್ತಿನ
ಶ್ರುತಿಯು ಪ್ರೀತಿಯಿಂದ ಹೊಂದಿಕೊಂಡರೆ ಆಗ ಅದು ಸುನಾದವಾಗುತ್ತದೆ; ಕರ್ಣಾಮೃತವಾಗುತ್ತದೆ. ಶ್ರುತಿಸೇರದ
ಯಾವುದೇ ಹಾಡು ತಲೆನೋವನ್ನಲ್ಲದೆ ಆನಂದವನ್ನು ಕೊಟ್ಟೀತೆ?
ಆದ್ದರಿಂದ ಪ್ರಕೃತಿಯೊಂದಿಗೆ ಹದವಾಗಿ ಶ್ರುತಿ ಸೇರಿಸುವಂತಹ ಕರ್ಮಭಾವವು
ನಮ್ಮದಾಗಬೇಕು. ನಮ್ಮ ಕರ್ಮಗಳಿಗೆ
ಶರಣಾಗತಿಯ - ಕರುಣೆ, ಪ್ರೀತಿಗಳೆಂಬ
ಸಹಜತೆ ಯ ಭಾವಸಿಂಚನವಾಗಬೇಕು. ಬದುಕಿನ
ಸುದೀರ್ಘ ಚಕ್ರದ ಹಲವು ಹಂತದಲ್ಲಿ ನಮ್ಮಿಂದ ಘಟಿಸಲ್ಪಡುವ ಸತ್ಕರ್ಮ ಮತ್ತು
ದುಷ್ಕರ್ಮಗಳನ್ನು ತಾಳೆ ಹಾಕಿ, ಒಟ್ಟು ಮೊತ್ತದ ಆಧಾರದಲ್ಲಿ ಪ್ರಾರಬ್ಧ ಕರ್ಮಗಳ ಸಂಚಿಯು ತನ್ನ
ಗಾತ್ರವನ್ನು ಹಿಗ್ಗಿಸುತ್ತ ಅಥವ ತಾನೇ ಕುಗ್ಗುತ್ತ ನಮ್ಮ ಬೆನ್ನೇರುತ್ತದೆ. "ಒಳ್ಳೆಯವರಾಗಿ; ಒಳ್ಳೆಯದನ್ನು
ಮಾಡಿ; ಅದರಿಂದ ಒಳ್ಳೆಯದೇ ಲಭಿಸುತ್ತದೆ" - ಎಂಬುದೇ ಕರ್ಮ
ಸಿದ್ಧಾಂತದ ಸಂದೇಶ; ಸುಲಭ ಎನ್ನಿಸುವ - ಆದರೆ ಅತಿ ಕಠಿಣ ಸಿದ್ಧಾಂತವಿದು. ಸಂಚಿತ ಕರ್ಮ
ಶೇಷವು ನಿಶ್ಶೇಷವಾಗುವವರೆಗೂ ನಮ್ಮನ್ನು ಎಡೆಬಿಡದೆ ಹಿಂಬಾಲಿಸುವುದು - ಪ್ರಾರಬ್ಧ....!
ಅವರವರ ಕರ್ಮಫಲವನ್ನು ಅವರವರೇ ಉಂಡು ಮುಗಿಸಬೇಕಾದ್ದು "ಆಧ್ಯಾತ್ಮಿಕ ಭೌತ ಶಾಸ್ತ್ರ" ದ
ಕಟ್ಟುನಿಟ್ಟಿನ ನಿಯಮ. ಈ ಕರ್ಮ ಸಿದ್ಧಾಂತವು
ಕ್ರಿಯಾ ಶುದ್ಧಿ ಯನ್ನು ಒತ್ತಿ
ಹೇಳುತ್ತದೆ.
ಒಬ್ಬಳು ಗೃಹಿಣಿಯು ಚಪಾತಿ ಮಾಡಲು
ಅಣಿಯಾಗುತ್ತಾಳೆ. ಮೊದಲು ಹಿಟ್ಟನ್ನು ಸಿದ್ಧಪಡಿಸಿ ಒಂದೇ ಅಳತೆಯಲ್ಲಿ ಉಂಡೆ ಮಾಡಿ ಒಂದೊಂದಾಗಿ
ಲಟ್ಟಿಸುತ್ತಾಳೆ. ಅನಂತರ ಬಿಸಿಯಾದ ಕಾವಲಿಯ ಮೇಲೆ ಲಟ್ಟಿಸಿದ ಹಿಟ್ಟನ್ನು ಒಂದೊಂದನ್ನೇ ಹಾಕಿ
ಹದವಾಗಿ ಬೇಯಿಸುತ್ತಾಳೆ. ಅಷ್ಟರಲ್ಲಿ ಅದೆಲ್ಲಿಂದಲೋ ಕೆಲವು ಇರುವೆಗಳು ಲಟ್ಟಿಸಿ ಇಟ್ಟ ಹಿಟ್ಟಿನ
ಸಮೀಪದಲ್ಲಿ ಸುಳಿಯತೊಡಗುತ್ತವೆ. ಕಾವಲಿಗೆ ಹಾಕುವ ಮೊದಲು ತನ್ನ ಕಣ್ಣಿಗೆ ಕಂಡ ಇರುವೆಗಳನ್ನು
ಆಕೆಯು ದೂರ ಸರಿಸುತ್ತಾಳೆ. ಒಮ್ಮೊಮ್ಮೆ ಆಕೆಯ ಗಮನಕ್ಕೆ ಬಾರದೆ, ಕೆಲವು ಇರುವೆಗಳು ಕಾವಲಿಯ ಬಿಸಿಗೆ ಗತಪ್ರಾಣವಾಗುವುದೂ ಇದೆ.
ಹೊಟ್ಟೆ ತುಂಬಿಸಿಕೊಳ್ಳುವ ಸಹಜ ಪ್ರಯತ್ನದಲ್ಲಿ ಅವುಗಳು ತಮ್ಮ ಜೀವನ ಯಾತ್ರೆಯನ್ನೇ
ಮುಗಿಸಿಬಿಡುತ್ತವೆ. ಬದುಕುವ ಸಹಜ ಆಸೆಯು ಕೆಲವು ಇರುವೆಗಳ ಅಂತ್ಯಕ್ಕೆ ಕಾರಣವಾದರೆ ಅದೇ ಸಂದರ್ಭದಲ್ಲಿ
ಜೊತೆಯಾಗಿದ್ದ - ಕೆಲವು ಇರುವೆ ಬಂಧುಗಳು ಪಾರಾಗಿ ಬಿಡುತ್ತವೆ. ತಪ್ಪಿಸಿಕೊಂಡ ಇರುವೆಗಳದು ಒಂದು
ಗುಂಪಾದರೆ ಸುಟ್ಟುಕೊಂಡ ಇರುವೆಗಳದ್ದು ಇನ್ನೊಂದು ಲೆಕ್ಕ. ಈ ಘಟನೆಗೆ ಸಾಕ್ಷಿಯಾದ ಗೃಹಿಣಿಯದ್ದು
ಮಗದೊಂದು ಶೋಕ ಪ್ರಾರಬ್ಧ!
ಭೀಕರ ವಿಮಾನ ದುರಂತದಲ್ಲಿ ಎಲ್ಲ
ಪ್ರಯಾಣಿಕರೂ ಪಾರಾಗುವುದಿದೆ;
ಕೆಲವರು ಮಾತ್ರ ಸತ್ತು ಕೆಲವರು ಜೀವ
ಉಳಿಸಿಕೊಳ್ಳುವುದೂ ಇದೆ. ಬರಿಗಣ್ಣಿಗೆ ಚಮತ್ಕಾರ ಎನ್ನಿಸುವ ಇಂತಹ ಸಂದರ್ಭಗಳಿಗೆ ವಿವರಣೆ
ಕೊಡುವಲ್ಲಿ ಮನುಷ್ಯಮಾತ್ರರು - ಸೋಲುತ್ತಾರೆ. ನಿತ್ಯ ಕರ್ಮಗಳಲ್ಲಿಯೂ ಪ್ರಾರಬ್ಧವು ಇಣುಕಿ
ವಿಜೃಂಭಿಸುವಾಗ - ಅದು ಅರ್ಥವಾದರೆ, ಮಾತು
ನಿಲ್ಲುತ್ತದೆ. ಶ್ರೀ ರಾಮಕೃಷ್ಣ ಪರಮಹಂಸರು "ಸತ್ - ಅಸತ್, ಒಳ್ಳೆಯದು - ಕೆಟ್ಟದ್ದು, ಪಾಪ - ಪುಣ್ಯ ಇವೆಲ್ಲವೂ ಭಗವಂತನ ಮಾಯೆಯ ಐಶ್ವರ್ಯ;
ಮೆಣಸಿನಕಾಯಿ ತಿಂದರೆ ಖಾರ ಹತ್ತಿಕೊಳ್ಳುವುದಿಲ್ಲವೆ?
ಇವೆಲ್ಲವೂ ಹಾಗೇ... ಕರ್ಮಫಲ ಎಂಬುದು ಉಂಟು..
ಆದರೆ ಇದು ಬಹು ದೂರದ ವಿಷಯ. ಪಾಳು ಬಿದ್ದ ಹೊಲವನ್ನು ಕೃಷಿಗೈಯ್ಯಲು ತಿಳಿದಿರಬೇಕು.
ಶ್ರದ್ಧಾಪೂರ್ಣ ಶುದ್ಧಭಕ್ತಿ ಉಂಟಾಗಿ ಸಂಶಯ ನಿವೃತ್ತಿಯಾಗಬೇಕು... ಯಾವುದೇ ಜೀವಕ್ಕೆ ಈ
ಅವಸ್ಥೆಯು ಉಂಟಾದರೆ ಆಮೇಲೆ ಸಮಾಜ ಸಂಸಾರಗಳೆಲ್ಲ ಸಾಧ್ಯವಿಲ್ಲ... "
ಎನ್ನುತ್ತಿದ್ದರು.
ಪ್ರಾರಬ್ಧವು ನಿಲ್ಲದ ಓಟ. ಆಟದಲ್ಲಿ
ಸ್ವತಃ ಸಿಲುಕಿದವರು "ಪ್ರಾರಬ್ಧ ವಾದ"ವನ್ನು ಕ್ಷಣಿಕವಾಗಿ ಒಪ್ಪಿದರೂ ಯಾವುದೇ ಮಾಯಕದ
ಕಾಣದುದನ್ನು ಒಪ್ಪಲು ಹಲವು ಬುದ್ಧಿಗಳು ಸಮ್ಮತಿಸಲಾರವು. ಆದರೆ ಯಾವುದೇ ಜೀವಿಗಳ ಸಮ್ಮತಿಗೆ ಯಾವ
ಪ್ರಾರಬ್ಧವೂ ಕಾಯುವುದಿಲ್ಲ.
ಕರ್ಮ ಸಿದ್ಧಾಂತಕ್ಕೆ ಪ್ರಾಚೀನ ಋಷಿಗಳೂ
ಮಾನ್ಯತೆ ನೀಡಿದ್ದಾರೆ. ಕರ್ತವ್ಯ ಬೇರೆ;
ಉದ್ಯೋಗ ಬೇರೆ; ವೃತ್ತಿ ಬೇರೆ; ಪ್ರವೃತ್ತಿ ಬೇರೆ.
ಇವೆಲ್ಲವೂ ನಿರ್ದಿಷ್ಟ ಪರಿಧಿಯಲ್ಲಿಯೇ ನಡೆಯುವ ಕೆಲಸಗಳಾದರೂ ನಿಷ್ಕಾಮ ಕರ್ಮದ ನೆಲೆಯಲ್ಲಿ
ನಡೆಸುವ ಸತ್ಕರ್ಮ ಮತ್ತು ಸ್ವಾರ್ಥಯುಕ್ತ ದುಷ್ಕರ್ಮಗಳ ಒಟ್ಟು ಮೊತ್ತವೇ "ಸಂಚಿತ
ಕರ್ಮ" ಎಂದು ಸ್ಥೂಲವಾಗಿ
ಭಾವಿಸಬಹುದು. ಆಧ್ಯಾತ್ಮಿಕ ಮಾರ್ಗದ
ಸಾಧಕರಿಗೆ ಜ್ಞಾನ ಮಾರ್ಗ, ಭಕ್ತಿ ಮಾರ್ಗಗಳಂತೆ
ಕರ್ಮ ಮಾರ್ಗವೂ ಸಾಧನೆಯ ಪ್ರಮುಖ
ಊರುಗೋಲಾಗಿದೆ. "ಮಾಡಿದ್ದುಣ್ಣೋ ಮಹಾರಾಯ", "ತಲೆಗೆ ಹೊಯ್ದ
ನೀರು ಕಾಲಿಗೆ ಇಳಿಯುತ್ತದೆ"
ಮುಂತಾದ ನುಡಿಗಟ್ಟುಗಳು ಕರ್ಮ ಸಿದ್ಧಾಂತವನ್ನೇ
ಪ್ರತಿಪಾದಿಸುವಂಥವು. "ನಾ
ಮಾಡಿದ ಕರ್ಮ ಬಲವಂತವಾದರೆ ನೀ ಮಾಡುವುದೇನು?... ಅತಿಥಿಗಳಿಗೆ ಅನ್ನ ಕೊಟ್ಟವನಲ್ಲ; ಸತಿಯರ ಸಂಗ
ಬಿಟ್ಟವನಲ್ಲ; ಅನ್ನ ಪಾನಂಗಳಿಗೆ ಅಗ್ರಗಣ್ಯನಾಗಿ ಸ್ನಾನ ಜಪ ಸಂಧ್ಯಾ ತಪವ
ನೀಗಿ ಶ್ವಾನನಾಗಿ ಮನೆಮನೆ ತಿರುಗುತಲಿದ್ದೆ;
ಮನ್ನಿಸಿ ಸಲಹಯ್ಯ - ಮತಿಹೀನ
ನಾನು..." ಎಂಬ ದಾಸರ ಅನುಭಾವದಲ್ಲೂ
ಪ್ರಾರಬ್ಧ ಕರ್ಮದ ಒಳಸುಳಿಯ ಅಂತರ್ಮಥನ
ಮತ್ತು ಶರಣಾಗತಿಯ ಭಾವವಿದೆ.
ಬಸವಣ್ಣನ "ಕಾಯಕವೇ
ಕೈಲಾಸ" ಎಂಬ ಮಾತಿನಲ್ಲೂ
ಸತ್ಕರ್ಮಶೀಲರಾಗುವ ಕರೆಯಿದೆ.
"ಇರುವ ಕೆಲಸವ ಮಾಡು ಕಿರಿದೆನದೆ ಮನವಿಟ್ಟು;
ದೊರೆತುದ ಹಸಾದವೆಂದುಣ್ಣು
ಗೊಣಗಿಡದೆ, ಧರಿಸು ಲೋಕದ ಭರವ ಪರಮಾರ್ಥವನು ಬಿಡದೆ; ಹೊರಡು ಕರೆ ಬರಲ್ ಅಳದೆ -
ಮಂಕುತಿಮ್ಮ" ಎಂಬುದು ಕಗ್ಗದ ಡಿ. ವಿ. ಜಿ ಅವರು ಸರಳಗೊಳಿಸಿ ಹೇಳಿದ ಆತ್ಮಿಕ ಸತ್ಯ. ಸ್ವಚ್ಛ
ದೃಷ್ಟಿಯ ಜೀವನಾನುಭವದಿಂದಲೇ ಹುಟ್ಟಿದ ಇಂತಹ ರಸಗಟ್ಟಿಗಳು ಇಂದಿಗೂ ಸಾಮಾನ್ಯ ಬದುಕುಗಳ
ಮಡಿಲಲ್ಲಿ ಹೊರಳಾಡುತ್ತಿವೆ. ಇವೆಲ್ಲವೂ - ಪ್ರಾರಬ್ಧದ ಹೊರೆಯನ್ನು ಇಳಿಸಿಕೊಳ್ಳಲು ತೋರುವ
ತತ್ವದೀಪಗಳು. (ನಿತ್ಯ ಬದುಕಿನ "ಲಾಭ-ನಷ್ಟ"ದ ಸಂದರ್ಭಗಳಲ್ಲೂ
ಸೀಮಿತ ವಸ್ತು ಮತ್ತು ಸಂಕುಚಿತ ಗ್ರಹಿಕೆಯಿಂದ,
ಜೀವಿತರನ್ನು ಗೋಜಲುಗೊಳಿಸುವಂತೆ, ವಿಡಂಬನಾತ್ಮಕವಾಗಿ
ಇಂತಹ ನುಡಿಗಟ್ಟುಗಳು ಅಲ್ಲಲ್ಲಿ ಪ್ರಯೋಗಿಸಲ್ಪಡುವುದೂ ಇದೆ. ದೃಷ್ಟಿ ಸಾಮರ್ಥ್ಯದ ಬಹೂಪಯೋಗದ
ತಿರುಚುವಿಕೆಯಿಂದ - ಇಂತಹ ಬಲಿಷ್ಠ ನುಡಿಗಟ್ಟುಗಳನ್ನು ಘರ್ಷಣೆಯ ಮಾತು ಪ್ರತಿಮಾತುಗಳಲ್ಲಿ
ಕನಿಷ್ಠವೆಂಬಂತೆ ಪ್ರಯೋಗಿಸಿ ನಗೆಹಬ್ಬವಾಗಿಸುವುದು - ಮೂಡಿಮರೆಯಾಗುವ ಮತ್ತು ಹೊರೆ
ಹೆಚ್ಚಿಸಿಕೊಳ್ಳುವ ಕೇವಲ ಕಸರತ್ತುಗಳಾದಾವು.) ಶುಚಿಯಾದ ಕರ್ಮಗಳಿಗೆ ಶುಚಿಯಾದ
ದೃಷ್ಟಿ ಯೂ ಅಗತ್ಯ. ದೃಷ್ಟಿಯಂತೆ ಸೃಷ್ಟಿ; ಕರ್ಮದಂತೆ ಫಲ.
ವ್ಯಾಕರಣದಲ್ಲಿ ಕ್ರಿಯೆಯು ಸಂಭವಿಸುವ ಸ್ಥಳ ವಿಷಯವನ್ನು ಕರ್ಮಪದ
ಎನ್ನುತ್ತೇವೆ. ಕರ್ತೃ, ಕರ್ಮ, ಕ್ರಿಯಾಪದಗಳಿಗೆ ಅವಿನಾ ಸಂಬಂಧವಿದೆ. ಒಂದನ್ನು ಬಿಟ್ಟರೆ ಇನ್ನೊಂದು ಅಪೂರ್ಣ. ಕರ್ತೃವೊಂದಿಗೆ ಕರ್ಮ, ಕ್ರಿಯೆಗಳು ಹೊಂದಿಕೊಂಡಾಗಲೇ ಅರ್ಥ ಹುಟ್ಟುವುದು ! ಅದು ಹೇಗೆಂದರೆ... "ರಾಮನು
ಶಾಲೆಗೆ ಹೋದನು" (ಕರ್ತೃ, ಕರ್ಮ, ಕ್ರಿಯಾ ಪದ) ಎಂಬ ವಾಕ್ಯದಲ್ಲಿ,
ಕರ್ತೃವಿಗೆ ಕರ್ಮ ಮತ್ತು ಕ್ರಿಯೆಯ
ಪರಸ್ಪರ ಹೊಂದಿಕೆಯಾದಂತೆ. ಸತ್ಕರ್ಮದ ಮೂಲಕ
ಕರ್ತೃವು ನಡೆಸುವ ಯಾವುದೇ ಕ್ರಿಯೆಯು ಪ್ರಾರಬ್ಧದ ಬಗ್ಗಡವನ್ನು ಒರೆಸಿ, ತಿಳಿಯಾಗಿಸಿ, ಅವಘಡರಹಿತ
ಬದುಕನ್ನು ತೆರೆಯಬಲ್ಲದು.
ಕರ್ಮನಿರತ
ರಾಗುವುದು, ಕರ್ಮಣ್ಯರಾಗುವುದು,
ಕರ್ಮಠ ರಾಗುವುದು...ಇವೆಲ್ಲವೂ
ವಿಭಿನ್ನ ಸ್ತರದಲ್ಲಿ ನಡೆಸುವ ಸೂಕ್ಷ್ಮ ಕರ್ಮಗಳ ಸೂಚ್ಯ ವ್ಯಾಖ್ಯೆ. ಬದುಕನ್ನು ಕರ್ಮಶಾಲೆ
ಎಂದುಕೊಂಡ ಕೆಲವು ಬದುಕುಗಳು ಯಾವುದೇ ಆಯ್ಕೆಯ ಉಸಾಬರಿಗೆ ಹೋಗದೆ, ನಮ್ರತೆಯಿಂದ
ಎಡೆಬಿಡದೆ ಕರ್ಮನಿರತ
ರಾಗುತ್ತಾರೆ. ಪಾಲಿಗೆ
ಬಂದದ್ದೇ ಪಂಚಾಮೃತ ಎಂಬಂತೆ ಅಂತರ್ಭಾವ ತುಮುಲವನ್ನು ಅದುಮಿ, ಪಾಲಿಗೆ ಬಂದ
ಕೆಲಸಗಳನ್ನೆಲ್ಲ ತಲೆತಗ್ಗಿಸಿ
ಮಾಡುತ್ತ ಬದುಕುವ ಪೈಕಿ ಇವರು. ತಮ್ಮ
ನಿತ್ಯ ಬದುಕಿನ ಅಗತ್ಯಗಳಿಗೆ ಬೇಕಾದ ವಸ್ತು
ಸಂಚಯಕ್ಕಾಗಿ ಪ್ರತಿಫಲಾಪೇಕ್ಷೆಯಿಂದ
ನಡೆಸುವ - ಯಾವುದೇ ಭಾವಸ್ಪರ್ಶವಿಲ್ಲದ ಜಾಣ
ಕರ್ಮವಿದು. ಮಹಾಭಾರತದ ಭೀಷ್ಮ ದ್ರೋಣರು
ಹೀಗೆ ತಲೆ ತಗ್ಗಿಸಿ ಕರ್ಮನಿರತರಾಗಿದ್ದು ಅತೃಪ್ತ
ಅಂತ್ಯವನ್ನು ಕಂಡವರು. ಇದು - ಅರೆ
ಮತ್ತು ವಿಪರೀತ ಎಂಬ ಮಿಶ್ರ ಎಚ್ಚರ
ದ ಕರ್ಮನಿರತ ಕಾರ್ಯಶೈಲಿ.
ಕರ್ಮಠ
ವರ್ಗದವರು ಆಚಾರಗಳನ್ನೇ ಧರ್ಮವೆಂದು
ಭ್ರಮಿಸುವ ಕಠೋರ ಶ್ರದ್ಧಾಪಟುಗಳು;
ಕಠೋರತೆಯಿಂದಾಗಿ, ಒಮ್ಮೊಮ್ಮೆ, ಹಣ್ಣನ್ನು ಬಿಸುಟು ಸಿಪ್ಪೆಯನ್ನು
ತಿನ್ನುವವರು. ಇವರು ಬದುಕಿನ "ಹಾವ"
ಕ್ಕೆ ಕೊಡುವ ಮಹತ್ವವನ್ನು
"ಭಾವ" ಕ್ಕೆ ನೀಡಲಾಗದ ಕರ್ಮಬಂದಿಗಳು. ಇವರು ತಮ್ಮ ಕರ್ಮದ ಇಂಗಿತವನ್ನಾಗಲೀ
ಉದ್ದೇಶವನ್ನಾಗಲೀ ಸಮತ್ವದಿಂದ ಅರ್ಥೈಸಿಕೊಳ್ಳದವರು. ಆಚಾರದ ಕಠೋರತೆಯಲ್ಲಿಯೇ ತನ್ಮಯರಾಗಿ, ಚಿತ್ತವೃತ್ತಿಯ ರಸ ಪರಿಪೋಷಕ "ಭಾವಸಾಮಗ್ರಿ" ಗಳನ್ನು
ಬತ್ತಿಸಿಕೊಂಡ, ಬುದ್ಧಿ ಭಾವ ವಿವೇಚನಾರಹಿತ ಯಾವುದೇ ಕ್ರಿಯೆಗಳು - ಪ್ರಾರಬ್ಧದ ಸುಕರ್ಮ
ಎನ್ನಿಸಲಾರದು. ಮುರುಕು ಹಾವಗಳ ವಿವಿಧ ಚೇಷ್ಟೆಗಳನ್ನೇ "ಕರ್ಮ" ಎಂದುಕೊಳ್ಳುತ್ತ ದಣಿವು
ಮಾಡಿಕೊಳ್ಳುವವರು - ಕರ್ಮಠರು. ನಿತ್ಯವೂ ಹುಟ್ಟುವ ಸೂರ್ಯನ ಹುಟ್ಟಿಗೆ ಪೂರ್ವ ದಿಕ್ಕು ಕಾರಣವೆ? ತನ್ನ
ತರ್ಪಣದಿಂದಲೇ ಸೂರ್ಯನನ್ನು ಕರೆಸಿಕೊಂಡೆನೆನ್ನುವ "ಆಚಾರ ಪರಿವೇಷ್ಟಿತ"ವಾದ ಕರ್ಮಠ - ಮುಮೂರ್ಷು ಭಾವ ದ ಯಾವುದೇ ಲೌಕಿಕ ಕ್ರಿಯೆಗಳು
ಅಧ್ಯಾತ್ಮದ ಕರ್ಮವಲ್ಲ; ವ್ಯರ್ಥ ದಣಿವಿನ ವ್ಯಾವಹಾರಿಕ ಕರ್ಮ - ಅಷ್ಟೆ.
ಇಂದ್ರಿಯ ಮನೋಬುದ್ಧಿಯ ಸಮನ್ವಯದ ಏಕಾಗ್ರ ಕರ್ಮಠನಿಷ್ಠೆ
ಯಿಂದ ತಮ್ಮ ಕರ್ಮದಲ್ಲಿ ದಕ್ಷತೆಯನ್ನು ತುಂಬುವವರು
ಕರ್ಮಣ್ಯರೆನಿಸುತ್ತಾರೆ.
ತಮ್ಮ ಒಂದೊಂದು ಚಲನವಲನವನ್ನೂ
ನಿತ್ಯಕರ್ಮಗಳನ್ನೂ ನಿರೀಕ್ಷಿಸುವ ಒಂದು
ಕರ್ಮಸಾಕ್ಷಿಯಿದೆ ಎಂಬ ಎಚ್ಚರದಿಂದ -
ಇವರು ಕಲಾತ್ಮಕವಾಗಿ, ಶ್ರದ್ಧೆಯಿಂದ ತಮ್ಮ
ಇಂದ್ರಿಯಗಳನ್ನು ಕರ್ಮದಲ್ಲಿ
ತೊಡಗಿಸುತ್ತಾರೆ. ಇವರಿಗೆ ಕರ್ಮವು ನಿರ್ಬಂಧವೆನ್ನಿಸದೆ ಅನುಬಂಧವೆನ್ನಿಸುತ್ತದೆ.
ಇದು ಪ್ರಜ್ಞಾಪೂರ್ವಕ ವಾಗಿ, "ಕರ್ತವ್ಯಂ
ದೈವಮಾಹ್ನಿಕಂ" ಎಂದುಕೊಂಡು ನಡೆಸುವ
ಪೂರ್ಣ ಎಚ್ಚರ ದ ಕರ್ಮಶೈಲಿ.
ವಸಿಷ್ಠ, ಶುನಶ್ಶೇಫ(ದೈವರಾತ)...ಮೊದಲಾದವರು ಇಂತಹ ಆಹ್ನಿಕವನ್ನು ನಡೆಸಿದವರು.
ಬದುಕಿನ ಪೂರ್ವಾರ್ಧದಲ್ಲಿ ಐಹಿಕದ ಎಲ್ಲವನ್ನೂ ಕಂಡು,
ಅನಂತರದ ಉತ್ತರಾರ್ಧದಲ್ಲಿ
ಅದೇ ಐಹಿಕವನ್ನು ಅರ್ಥಹೀನವೆಂದು ತ್ಯಜಿಸಿ ಪರಿವ್ರಾಜಕನಾದ ಬ್ರಹ್ಮರ್ಷಿ
ಯಾಜ್ಞವಲ್ಕ್ಯ - ಮೊದಲಾದವರು ಅಂತಹ ಭಾವಪೂರಿತ ಕರ್ಮಠನಿಷ್ಠೆಯ ದಕ್ಷ ಕರ್ಮಗಳಿಂದ ಮಾನ್ಯತೆ ಪಡೆದವರು. ನಿತ್ಯ ಬದುಕಿನ
ಪ್ರತಿಯೊಂದು ಕ್ಷಣದಲ್ಲೂ ನಾವು ನಡೆಸುವ ಸಮರ್ಪಣಾ ಭಾವದ ಕರ್ಮಗಳಿಂದ ಯಾವುದೇ ಕರ್ಮಿಗೆ ನಿಜಾನಂದದ
ಅನುಭೂತಿಯೂ ಆಗುತ್ತದೆ. ಅಂತಹ "ನಿಜಾನಂದ"ವೇ ಕರ್ಮ ಸವೆತದ ಲಕ್ಷಣ. ಆದ್ದರಿಂದ ಯಾವುದೇ ಕರ್ಮಠ ಕ್ರಿಯೆಗಳು ಭಾವಶುದ್ಧಿ ಹೊಂದಿ, ಕರ್ಮಣ್ಯವಾಗುವುದೇ ಪ್ರಾರಬ್ಧವನ್ನು ಸಂಭಾಳಿಸುವ ಉತ್ತಮ ಮಾರ್ಗ. ಹಾವಭಾವ ಸಮನ್ವಯದ ಮೂರ್ತರೂಪವೇ ಕರ್ಮ. ಆಚಾರ
ವಿಚಾರಗಳ ಸುಸಂಬದ್ಧ ಸಾಕ್ಷಾತ್ಕಾರವೇ ಶುದ್ಧ ಕರ್ಮ.
ಪ್ರತಿಯೊಂದು ಜೀವಿಯಿಂದಲೂ ಆಜೀವಪರ್ಯಂತ ಒಂದಲ್ಲ ಒಂದು ಕರ್ಮವು
ನಡೆಯುತ್ತಲೇ ಇರುತ್ತದೆ. ಹಾಗೆ ನಡೆಸುವ ಕರ್ಮಗಳನ್ನು ಸದ್ಭಾವದಿಂದ ಅಲಂಕರಿಸಿಕೊಳ್ಳುವುದು
ಇಚ್ಛಾಶಕ್ತಿಯಿಂದ. ಅಬೋಧ ಕರ್ಮಗಳಿಗೆ
ನಾವು ವಿಮುಖವಾಗಿ - ಸುಬೋಧ
ಕರ್ಮನೀತಿಯನ್ನು ಆಚರಿಸಿದಾಗ ಕರ್ಮದ ಮೀಟರು (ಲೆಕ್ಕ ಚಕ್ರ) ಊರ್ಧ್ವಮುಖವಾಗಿ
ಚಲಿಸತೊಡಗುತ್ತದೆ. ನಮ್ಮ ಧರ್ಮಕರ್ಮಗಳ ಢೋಂಗಿ ಮತ್ತು ಸಾಚಾತನವು ಅಂತರಂಗದ ಲೆಕ್ಕ ಚಕ್ರದಲ್ಲಿ ಯಾವತ್ತೂ
ಸರಿಯಾಗಿಯೇ ದಾಖಲಾಗುತ್ತದೆ. ಹೆರೆದು ಮುರಿದು ನುರಿದು ಅರೆದು ಉರಿದ ಮೇಲೇ ಅಡುಗೆಯು ಸಿದ್ಧವಾಗುವುದು -
ಅಲ್ಲವೆ? ಅಂತೆಯೇ ಬದುಕಿನ ಚಕ್ರದ ಬಗೆಬಗೆಯ ಸ್ಥಿತ್ಯಂತರಗಳಲ್ಲಿ ಅವರವರ ಸಮಸ್ತ
ಕರ್ಮಗಳ ಅಂತಿಮ ಮೊತ್ತವೇ ಘನ ಅಡುಗೆಯಾಗಿ,
ಮಾಡಿದ್ದುಣ್ಣೋ ಮಹಾರಾಯರಾಗುವ
ಆಟವು ನಡೆಯುತ್ತಲೇ ಬಂದಿದೆ.
"ನಾವು ಹುಟ್ಟಿದ್ದೇ ವಸ್ತುಗಳನ್ನು, ಸಂಪತ್ತನ್ನು
ಗಳಿಸಲಿಕ್ಕೆ ಮತ್ತು ಕೂಡಿಹಾಕಲಿಕ್ಕೆ" ಎಂಬ ಭ್ರಮೆ
ಹುಟ್ಟಿಸುವ ಮೂಲ ಸ್ಥಾನವೇ ಆಸೆ. ಅಯೋಗ್ಯ
ಆಸೆಯಿಂದಾಗಿ ಬೇಕುಬೇಡದ ವಸ್ತುಗಳನ್ನೆಲ್ಲ ಈಗ
ಗುಡ್ಡೆ ಹಾಕಿಕೊಂಡು ನಮ್ಮ ಹೆಮ್ಮೆಯನ್ನು
ಎಲ್ಲರಿಗೂ ವಿತರಿಸುವ ವ್ಯಾಪಾರವು
ನಡೆಯುತ್ತಲೇ ಇದೆ. ಜತೆಗೆ ನಾವು
ಕೊಟ್ಟದ್ದಕ್ಕೆ ಪ್ರತಿಯಾಗಿ ಏನೇನನ್ನೋ ಅಪೇಕ್ಷಿಸುತ್ತಲೂ ಇದ್ದೇವೆ. ಈ
ವ್ಯರ್ಥ ಕೊಡುಕೊಳ್ಳುವಿಕೆಯ ದೃಶ್ಯವು ಮುಗಿದ ಮೇಲೆ ವಿರಾಮದಲ್ಲಿ ಕೂತು ನೋಡಿದರೆ, ಎಲ್ಲರೂ ಬರಿಗೈ
ದಾಸರು. ಕರ್ಮದ ಮರ್ಮವನ್ನು ತಿಳಿಯದ ಗರ್ವಕ್ಕೆ ಆಗ - ಪ್ರಾರಬ್ಧದ
ನೆನಪು!
"ಪ್ರಕೃತಿಯ ಪರಿವರ್ತನೆಗೆ ಯಾವುದೇ ಕರ್ಮವು ನೇರವಾಗಿ
ಕಾರಣವಾಗುವುದಿಲ್ಲ. ನಮ್ಮ ಸತ್ಕರ್ಮವು ಪ್ರಕೃತಿಯ ವಿಕಾಸಕ್ಕೆ ಇರುವ ಅಡ್ಡಿಗಳನ್ನು
ನಿವಾರಿಸಬಹುದು..." (ಪತಂಜಲಿ)
ಆದ್ದರಿಂದ ನಮ್ಮ ಸಾಧನೆಯ ದಾರಿಯಲ್ಲಿ
ಎದುರಾಗುವ ತಡೆಗಳನ್ನು
ನಿವಾರಿಸಿಕೊಳ್ಳಲು - ಕಾಯ, ಮನಸ್ಸು, ವಿದ್ಯೆಯ ಉನ್ನತಿಗಾಗಿ ಶುದ್ಧಕರ್ಮದ ಮೊರೆ
ಹೋಗಬೇಕು.
ಸಂತ ನಾಮದೇವನ ಮನೆಯ ಕೆಲಸಗಳನ್ನು
ಮಾಡುತ್ತಿದ್ದ ಆತನ ಶಿಷ್ಯಳೂ ಆಗಿದ್ದ ಜನಾಬಾಯಿ ಎಂಬಾಕೆಯ ಒಂದು ಕತೆಯಿದೆ. ದೈವಸ್ಮರಣೆಯನ್ನು
ಮಾಡುತ್ತಲೇ ತನ್ನ ದೈನಂದಿನ ಕೆಲಸಗಳನ್ನು ಮಾಡುತ್ತಿದ್ದ ಮಹಾರಾಷ್ಟ್ರದ ಪ್ರಸಿದ್ಧ ಮಹಿಳಾ
ಸಂತಳಿವಳು. ಒಂದು ದಿನ ಆಕೆಯು ಯಾರಲ್ಲೋ ಮಾತನಾಡುವುದನ್ನು ಕೇಳಿಸಿಕೊಂಡ ನಾಮದೇವನ ತಾಯಿಯು
ಇಣುಕಿ ನೋಡಿದಾಗ, ಅಲ್ಲಿ ಇನ್ನೊಬ್ಬ ಮಹಿಳೆಯು ಇರುವುದನ್ನು ಕಂಡಳಂತೆ. "ಯಾರೀಕೆ?" ಎಂದು ಜನಾಬಾಯಿಯನ್ನು ಕೇಳಿದಾಗ,
ಆಕೆಯು "ಈಕೆ ವಿಠಲಬಾಯಿ"
ಎಂದಳಂತೆ. ವಿಠಲನ ಸಾಂಗತ್ಯದಲ್ಲಿಯೇ
ಮನೋವಾಕ್ಕಾಯಗಳನ್ನು ಸ್ಥಾಪಿಸಿಕೊಂಡ ಸಂತ
ಜನಾಬಾಯಿಯ ಕತೆಯಿದು! ಮನಸ್ಸಿನಂತೆಯೇ ಮಹದೇವ.
ಭಾವದಂತೆಯೇ ಭವ. ಆ ಜನಾಬಾಯಿಯು ಮಾಡುತ್ತಿದ್ದ
ಎಲ್ಲ ಕರ್ಮದಲ್ಲಿಯೂ ಸಮರ್ಪಣಾಭಾವವು
ಒಡಮೂಡಿರುತ್ತಿದ್ದವು. "ಶ್ರದ್ಧೆಯೆಂಬ
ಹಿಡಿ ಇರುವ, ವೈರಾಗ್ಯದ ಬೀಸುವ ಕಲ್ಲಿನಲ್ಲಿ, ನನ್ನ
ಕರ್ಮವನ್ನು ದಿನವೂ ಪುಡಿಮಾಡುತ್ತಿರುವೆ..." ಎನ್ನುತ್ತಾಳೆ ಜನಾಬಾಯಿ!
ಇದು ಶುದ್ಧ ಕರ್ಮದ ಉತ್ತಮ ದೃಷ್ಟಾಂತ. ಭಕ್ತಿಮಾರ್ಗದಲ್ಲಿ ಇಂತಹ ಅನೇಕ
ದೃಷ್ಟಾಂತಗಳು ಕಾಣಸಿಗುತ್ತವೆ. ಪತಂಜಲಿಯು ಯೋಗಸೂತ್ರದಲ್ಲಿ ಹೇಳಿದ್ದೂ ಇದನ್ನೇ. ನೀರಿನ
ಪ್ರವಾಹಕ್ಕೆ ಅಡ್ಡಿಯಾಗಿರುವ ತಡೆಯನ್ನು ಕೃಷಿಕರು ತೆಗೆದ ಕೂಡಲೇ ತನ್ನ ಸ್ವಭಾವಕ್ಕೆ
ಅನುಗುಣವಾಗಿ ನೀರು ತಾನಾಗಿಯೇ ಹರಿಯಲು ತೊಡಗುವಂತೆ ಪ್ರಕೃತಿಯ ವಿಕಾಸಕ್ಕೆ ಇರುವ ಅಡ್ಡಿಯನ್ನು ಸದ್ಭಾವದ ಸತ್ಕರ್ಮಗಳು ನಿವಾರಿಸುತ್ತವೆ. ಆಗ ಪೂರ್ಣವು
- ಸ್ವರೂಪವು ಪ್ರಕಟವಾಗುತ್ತದೆ. ನಿಷೇಧಾತ್ಮಕ ತಡೆಯನ್ನು ನಿವಾರಿಸಿಕೊಂಡಾಗ ದುಷ್ಟನೂ
ಸಂತನಾಗುವುದು ಸಾಧ್ಯ. ಜನ್ಮತಳೆದ ಅಪೂರ್ವ ಅವಕಾಶವನ್ನು ಸುಮುಖಗೊಳಿಸುವುದೂ ಸಾಧ್ಯ.
ಲಕ್ಷದಲ್ಲಿ ಒಬ್ಬನಿಗಾದರೂ ಯಥಾವತ್
ಅನುಕರಿಸಲು ಕಷ್ಟಸಾಧ್ಯವಾದ ಇಂತಹ ಆದರ್ಶಗಳು ಬೇಕೆ?
ಎಂದು ಕೇಳಿದರೆ "ಬೇಕು" ಎನ್ನಬೇಕು. ಸಹಜ
ಮತ್ತು ಸರಳವಾಗಿರುವುದನ್ನು ಮರೆತವರಿಗೆ ಮಾತ್ರ ಶುದ್ಧ ಚಿಂತನೆ ಮತ್ತು ಕರ್ಮಗಳು ಅತಿ
ಕಠಿಣವೆನ್ನಿಸುತ್ತದೆ. ಕಡಲಿನ ಉಪ್ಪಿನ ಗಾತ್ರದಷ್ಟು ಆಸೆಯನ್ನು ಹೊತ್ತಿರುವವರಿಗೆ
ಶುದ್ಧ ಗಂಗೆಯ ಮಾತೆತ್ತಿದರೆ ಹಿತವೆನಿಸದು. ಉಪ್ಪು ನೀರನ್ನೇ ಕುಡಿಯುತ್ತ ಎಷ್ಟೆಂದು ಬದುಕುವುದು? ಮೌಢ್ಯದ ಗತಿಯಿದು;
ಹೊರಲಾಗದ ಹೊರೆ ಹೊತ್ತ ಬಳಲಿಕೆಯ ಸ್ಥಿತಿಯದು. ಇಂತಹ
ತೆವಳು ದಾರಿಯಲ್ಲಿ ಜಾರುತ್ತ -
ಬಿದ್ದು ಏಳುತ್ತ ತಳಮಳಿಸುವಾಗ ವಿಶ್ರಾಂತಿ ನೀಡಿ
ಉಪಕರಿಸುವ ಆದರ್ಶಗಳು ಆಪತ್ತಿನಲ್ಲಿ ಊರುಗೋಲಾಗುವ ಮಿತ್ರಾಸ್ತ್ರಗಳು. ದಾರಿ ತಪ್ಪಿದರೂ ನಮ್ಮ ದಿಕ್ಕು ತಪ್ಪದಂತೆ ಕಾಪಾಡುವ ನಿಜಬಂಧುಗಳು. ಆದ್ದರಿಂದ ಆದರ್ಶಗಳ ಅವಹೇಳನ ಮಾಡದೆ ಸ್ವಂತದ
ಊರುಗೋಲಾಗಿ ಅವನ್ನು ಬಳಸಿಕೊಳ್ಳಲು ಪ್ರಯತ್ನಿಸಬಹುದು. ಮುಂದಿನ ಪೀಳಿಗೆಗೆಂದು ಆ ಊರುಗೋಲನ್ನು
ಜತನದಿಂದ ರಕ್ಷಿಸಲೂ ಬೇಕು. ಅಡುಗೆಗೆಂದು ನಾವು ತಂದಿದ್ದ ವಸ್ತುಗಳನ್ನೆಲ್ಲ ಇವತ್ತಿನ ಅಡುಗೆಯ
ಕಾರ್ಯವು ಮುಗಿಯಿತೆಂದು ಹೊರಗೆ ಚೆಲ್ಲುತ್ತೇವೆಯೆ? ಇಲ್ಲ. ಪೂರ್ತಿ
ಕೆಟ್ಟುಹೋದ ಅಥವ ನಾಳೆಗೆ ಕೆಡಬಹುದಾದ ವಸ್ತುಗಳನ್ನಷ್ಟೇ ಹೊರಗೆ ಹಾಕಿ ಉಪಯೋಗಿಸಬಹುದಾದುದನ್ನು
ಉಳಿಸಿಕೊಳ್ಳುವ ನಮ್ಮ ಜಾಣ್ಮೆಯು ಆತ್ಮಿಕ ಬದುಕಿಗೂ ಅವಶ್ಯಕ. ಗಳಿಸುವಷ್ಟೇ ಮಹತ್ವವು
ಉಳಿಸುವುದಕ್ಕೂ ಇದೆ. ಆದರ್ಶಗಳು ನಾಳೆಗೆ ಬೇಕಾದೀತು ಎಂಬ ಎಚ್ಚರದಿಂದ ಅಷ್ಟಿಷ್ಟಾದರೂ
ಉಳಿಸಿಕೊಳ್ಳಬೇಕು. ಸಂತಾನಕ್ಕೆಂದು ಮನೆ,
ಆಸ್ತಿ, ಸಂಪತ್ತನ್ನು
ಜೋಪಾನವಾಗಿ ಉಳಿಸಿಕೊಳ್ಳುವುದಿಲ್ಲವೆ? ಹಾಗೇ
ಆದರ್ಶ ಗಳನ್ನೂ
ಉಳಿಸಿಕೊಳ್ಳಬೇಕು. ಅದೂ ಮುಂದಿನ ಪೀಳಿಗೆಗೆಂದು ನಾವು ಉಳಿಸಿ ಹೋಗುವ ಅಮೂಲ್ಯ ಆಸ್ತಿ.
ಕಟ್ಟುನಿಟ್ಟುಗಳಿಲ್ಲದ ಸ್ವಚ್ಛಂದ ಕರ್ತರಿಗಾಗಲೀ ಕರ್ಮಗಳಿಗಾಗಲೀ ಈ
ಸೃಷ್ಟಿಯಲ್ಲಿ ಉಳಿಗಾಲವಿಲ್ಲ. ಆದರೆ
ಗುಣವರ್ಧನೆಯ ದಾರಿಯು ಯಾವತ್ತೂ
ದುರ್ಗಮವಾದದ್ದು. ಪ್ರತೀ ಕ್ಷಣವೂ ಉತ್ತಮಿಕೆಗಾಗಿ ಶ್ರಮಿಸುವುದು ಸುಲಭವೇನಲ್ಲ.
ಅದಕ್ಕೆ ತಾಳ್ಮೆ ಬೇಕು. ಆದ್ದರಿಂದ ದೀರ್ಘಕಾಲದ ಸಂಚಿತ ಕರ್ಮಗಳ ಹೊರೆಯನ್ನು
ಅವರವರೇ ಉಂಡು ಅರಗಿಸಿ ಪರಿಪಾಕಗೊಳ್ಳುವವರೆಗೂ ಮುಸುರೆ ತೊಳೆಯುವ ಕ್ರಿಯೆಯು ನಿರಂತರವಾಗಿ
ನಡೆಯಲೇ ಬೇಕು. ಕರ್ತಾರನ ಈ ಕಮ್ಮಟದಲ್ಲಿ ಕರ್ತೃವಿಗೆ ವಿಧೇಯವಾಗಿ, ಶ್ರದ್ಧಾ
ತನ್ಮಯತೆಯಿಂದ ಸತ್ಕರ್ಮಗಳನ್ನು ರೂಢಿಸಿಕೊಂಡರೆ "ಪ್ರಾರಬ್ಧ ಕರ್ಮ" ಎಂಬ ಭಾರವು ತಗ್ಗುತ್ತದೆ; ಹಿತಮಿತವಾದ ಅಪೇಕ್ಷೆಗಳೊಂದಿಗೆ
ತಳಮಳವಿಲ್ಲದೆ ಬದುಕಲು ಸಾಧ್ಯವಾದರೆ
ಸತ್ - ಕ್ರಿಯಾಶೀಲರಾಗಿ ಸ್ವಚ್ಛ
ಆನಂದವನ್ನೂ ಆಸ್ವಾದಿಸಬಹುದು. ನಮ್ಮ ಕರ್ಮಸ್ಥಾನಗಳು ನಮಗೆ
ಶಿಕ್ಷೆಯಾಗದೆ ರಕ್ಷೆಯಾಗಬೇಕಾದರೆ ಸಮಷ್ಟಿಗೆ ಆನಂದ ನೀಡುವ ಸತ್ಕಾರ್ಯಗಳಲ್ಲಿ ತೊಡಗಬೇಕು.
ರೊಚ್ಚುಮೆಚ್ಚುಗಳಿಗೆ ಬಲಿಯಾಗದ ಧ್ಯಾನಸ್ಥ ಸ್ಥಿತಿಯನ್ನು ಮಿದುಳಿಗೆ ರೂಢಿಸಬೇಕು. ದಿನದ
ಕಷ್ಮಲವನ್ನು ಅಂದಂದೇ ಕೊಡವಿಕೊಂಡು ಹಗುರಾಗಬೇಕು. ಕರ್ತೃವಿಗೆ ಪೂರಕವಾದ
ಸುಸಂಬದ್ಧ ಕರ್ಮ ಮತ್ತು ಕ್ರಿಯೆಗಳನ್ನು ಆಚರಿಸುತ್ತ ಬದುಕಿನ ವ್ಯಾಕರಣಕ್ಕೆ ವಿಧೇಯವಾಗಬೇಕು. ಮಾನವ
ಜನ್ಮ ದೊಡ್ಡದು; ಅದ ಹಾನಿ ಮಾಡುವುದು ಬೇಡ...
ಬುದ್ಧಿಯ ಕೃತಕ ಕಸರತ್ತಿನ ಕಾಲವಿದು. "ಪ್ರಾರಬ್ಧ" ಎಂಬ
ಶಬ್ದವನ್ನೇ ನಿಘಂಟಿನಿಂದ ಹೊರಗೆಸೆಯಬೇಕೆನ್ನುವ ಒಂದು ಗುಂಪು ಈಗ ಸಕ್ರಿಯವಾಗಿದೆ. ಇವರೆಲ್ಲರೂ ಇಲ್ಲ
- ಅಲ್ಲ ಎನ್ನುತ್ತಲೇ
ಎಲ್ಲವನ್ನೂ ಪಡೆಯಬೇಕೆನ್ನುವ ಸಂಚುಗಾರ ಚಾರ್ವಾಕರು. ಇಂತಹ ಉಗ್ರ ಬುದ್ಧಿಯೂತದ
ಪ್ರತಿವಾದಿ ಭಯಂಕರರನ್ನು ಒಪ್ಪಿಸಿ ಘರ್ಷಣೆಯಿಂದ ಪಾರಾಗಲು ಅವರಿಗೆಲ್ಲ ಒಂದೊಂದು K. G. ಪ್ರಾರಬ್ಧ
ಕರ್ಮವನ್ನು ತೂಕಮಾಡಿ ಕಟ್ಟಿಕೊಡಲು ಅಥವ
ಅವರಿಂದ ಪಡೆಯಲು ಯಾರಿಗೂ ಆಗುವುದಿಲ್ಲ. ಅನುಭವ,
ವಿಶ್ವಾಸ, ಸ್ವಸಂತೋಷ ನೀಡುವ ಇಂತಹ
ವಿಷಯಗಳಲ್ಲಿ ಯಾರನ್ನೂ ಯಾರೂ ಒಪ್ಪಿಸುವ ಅಥವ ಮೆಚ್ಚಿಸುವ ಅಗತ್ಯವೂ ಇಲ್ಲ. ಈ ಬದುಕುಗಳಲ್ಲಿ
ಮುಸುಕಿನ ಗುದ್ದಿನಂತೆ ಎಲ್ಲರ ಅನುಭವಕ್ಕೂ ಬರುವ ಕರ್ಮ ಫಲದ ರುಚಿಯನ್ನು ಯಾರೂ
ತಾವಾಗಿಯೇ ಬಯಲು ಮಾಡುವುದಿಲ್ಲ; ಸಾಮಾನ್ಯವಾಗಿ ಮುಚ್ಚಿಡುವುದೇ ಹೆಚ್ಚು. ತಾನು ಅತ್ಯಂತ
ಸುಖಿ ಎಂದು ತೋರಿಸಿಕೊಳ್ಳುವ ಎಲ್ಲರೂ ಊರ ಸಂತೆಯಲ್ಲಿ ನಗುವನ್ನು ಮಾರುವವರೇ.
ತಪ್ಪೇನಿಲ್ಲ. ಬಾಹ್ಯ ಶಿಷ್ಟತೆಯು ಒಳ್ಳೆಯದೇ. ಆದರೆ ಅಂತಹ ಅಪ್ರಾಮಾಣಿಕವಾದ ದೀರ್ಘ ನಡಿಗೆಯು
ಸ್ವಂತದ ಭಾವಜಗತ್ತನ್ನು ನಲುಗಿಸುತ್ತಲೇ ಹೋಗುತ್ತದೆ. ದೀರ್ಘ ಕಾಲದ
ವರೆಗೆ ನಡೆಸುವ ಅಂತಹ ಕಾಪಟ್ಯದ
ಕಸರತ್ತಿನಿಂದ ತಾಮ್ರದ ಪಾತ್ರೆಗೆ ಕಿಲುಬು ಹಿಡಿಯುವಂತೆ ಮನುಷ್ಯನ ವ್ಯಕ್ತಿತ್ವವು
ಘಾಸಿಗೊಳ್ಳುತ್ತದೆ. ತತ್ಪರಿಣಾಮವಾಗಿ ಅಸ್ವಸ್ಥ ಭಾವ ವಲಯವು ಹುಟ್ಟಿಕೊಂಡು ಅಸ್ವಸ್ಥ
ಚಿಂತನೆಗಳನ್ನು ತೇಲಿಬಿಡುತ್ತ ಅಸ್ವಸ್ಥ ಕರ್ಮಗಳನ್ನು ನಮ್ಮಿಂದ ಮಾಡಿಸುವ ಎಲ್ಲ
ಸಾಧ್ಯತೆಗಳೂ ಇವೆ. ಆದ್ದರಿಂದ ನಟ ಕೋವಿದರಂತೆ ತಮ್ಮನ್ನು ತಾವು ಮೋಸಪಡಿಸಿಕೊಳ್ಳುತ್ತ
ಇಡೀ ಜನ್ಮವನ್ನೇ ಕಳೆದು ಬಿಡುವ ಬದಲು ಬದುಕಿನಲ್ಲಿ ಅಕಾರಣವಾಗಿ ಎರಗುವ ಸಂತಾಪ
ಸಂಕಟಗಳ ಎದುರಲ್ಲಿ ಸಹಜ ವಿನಮ್ರ ರಾಗುವುದು
ಮೇಲು. ಅದೇ ಭಗವದ್ವಿನಮ್ರತೆ. ಸುಭಗ ಬದುಕಿಗೆ ಸಹಜ ವಿನಮ್ರತೆಯು ಭೂಷಣ. ಬದುಕಿಗೆ
ಉಚಿತವಾದುದನ್ನು ನಾವು ಆಯ್ಕೆ ಮಾಡಿಕೊಳ್ಳದಿದ್ದರೆ ಅನುಚಿತವಾದುದೆಲ್ಲವೂ ನಮ್ಮನ್ನು ಆಯ್ಕೆ
ಮಾಡಿಕೊಳ್ಳುತ್ತವೆ.
"ಭಗ ಎಂದರೆ ದೇವರು. ಸೂರ್ಯನ ಒಂದು ಅಂಶ. ಕಣ್ಣು ತೆರೆಯದೆ, ಕಣ್ಣಿನಿಂದ ಕಾಣದೆ, ಅವರವರ ಕರ್ಮದಂತೆ ಫಲ
ವಿತರಿಸುವ ನಿಷ್ಪಕ್ಷಪಾತ ದೇವತೆಯೇ ಭಗ. ಭಗ ನೀಡುವುದು - ಭಾಗ್ಯ. ಭಾಗಕ್ಕೆ ಬಂದದ್ದು
ಭಾಗದೇಯ. ಅದರಲ್ಲಿ ಕರ್ಮದ ತರ್ಕ ಇರುತ್ತದೆ. ಅಸೂಯೆಯ ಹೃದಯವುಳ್ಳವರಿಗೆ
ಅಲ್ಲಿ ವೈಷಮ್ಯ ಕಾಣುತ್ತದೆ. ಭಗವಂತ ಎಂದರೆ ಜ್ಞಾನ,
ವೀರ್ಯ, ಶಕ್ತಿ, ತೇಜಸ್ಸು, ಸಕಲ ಐಶ್ವರ್ಯದ
ಒಡೆಯನಾದ, ಅಪಹರಿಸಲಾಗದ - ಅತಿಕ್ರಮಿಸಲಾಗದ ಸಮೃದ್ಧಿ ಇರುವ ದೇವರು
ಎಂದರ್ಥ." (ಪ್ರೊ. ಕೆ. ಎಸ್. ನಾರಾಯಣಾಚಾರ್ಯ)
ಕರ್ಮ
ಶುದ್ಧಿಯನ್ನು ಪ್ರತಿಪಾದಿಸುವಾಗ
"ಫಲದ ಭರವಸೆ" ಯನ್ನು ನಿರೀಕ್ಷಿಸುವುದು ಮತ್ತೊಂದು ಉದ್ಧಟತನ!
ಕುತರ್ಕ! ವಿತಂಡವಾದದಿಂದ ಯಾವ ಹೊರೆಯೂ
ಇಳಿಯಲಾರದು! ಅಮೃತವು ಹುಟ್ಟುವ ವರೆಗೂ ಮಥಿಸುವ ತಾಳ್ಮೆ
ಬೇಕು. ವಿಷದರ್ಶನವಾದ ಕೂಡಲೇ ಓಡಿಹೋಗುವ - ಅಥವ -
ವಿಷದರ್ಶನವಾಗುವಷ್ಟು ಹೊತ್ತು ಮಾತ್ರ
ಮಥಿಸುವ ಟೊಳ್ಳುತನಕ್ಕೆ ಎಂದಿಗೂ
ಅಮೃತದರ್ಶನವಾಗಲಾರದು. ಪೂರ್ಣತೆಯನ್ನು
ಕಾಣಲಾಗದ ಯಾವುದೇ ಕರ್ಮವು ವ್ಯರ್ಥ. ಇಂದು -
ಯಾವುದೇ ಗ್ಯಾರಂಟಿಯಿಲ್ಲದ ಈ ಲೋಕದಲ್ಲಿ
ಎಲ್ಲವನ್ನೂ ನಿತ್ಯವೂ ಒಪ್ಪಿ ಸ್ವೀಕರಿಸುತ್ತಿರುವ ನಮಗೆ - ದೇವರು
ಧರ್ಮ ಕರ್ಮಗಳ ವಿಷಯದಲ್ಲಿ ಮಾತ್ರ - "ಗ್ಯಾರಂಟಿ ಏನು?
ಗ್ಯಾರಂಟಿ ಬೇಕಲ್ಲ?" ಅನ್ನಿಸುತ್ತದೆ!
ಯಾವುದಕ್ಕೂ Guarantee ಎಂಬುದಿಲ್ಲದ ಈ ಭೂಮಿಯಲ್ಲಿ ನೆಮ್ಮದಿಯ
ಗ್ಯಾರಂಟಿಯು ಸಿಗುವುದಿದ್ದರೆ ಅದು ದೇವರು - ಧರ್ಮ ಕರ್ಮಗಳಲ್ಲಿಯೇ. ಇಡೀ ಸೃಷ್ಟಿಯೇ
ವಿಶ್ವಾಸದ ಮೇಲೆ ನಿಂತಿದೆ! ರಾತ್ರಿ ಮಲಗಿದವನು ಬೆಳಿಗ್ಗೆ ಏಳುವ ವಿಶ್ವಾಸದಿಂದಲೇ
ನಿದ್ದೆಗೆ ತೊಡಗುತ್ತಾನೆ! "ನಿದ್ದೆಯಿಂದ ಎಚ್ಚರಾಗುವುದೆಂಬ ಗ್ಯಾರಂಟಿಯೇನು?" ಎನ್ನುವವರಿಗೆ
(ಎಚ್ಚರವನ್ನು ಎಚ್ಚರಿಕೆಯಿಂದ ಕಾಯುತ್ತ) ನಿದ್ದೆಯಿಲ್ಲದ ರಾತ್ರಿಗಳನ್ನು
ತೂಕಡಿಸುತ್ತ ಕಳೆಯುವ ಸ್ವಾತಂತ್ರ್ಯವಿದೆ. ಈ
ಬದುಕಿನಲ್ಲಿ ಹೆಂಡತಿಯೂ ಗ್ಯಾರಂಟಿಯಲ್ಲ; ಗಂಡನೂ
ಗ್ಯಾರಂಟಿಯಲ್ಲ; ಮಕ್ಕಳೂ
ಗ್ಯಾರಂಟಿಯಲ್ಲ. ನಮ್ಮ ಮನೆ, ಅಂತಸ್ತು, ಪ್ರತಿಷ್ಠೆಗಳ್ಯಾವುವೂ
ಗ್ಯಾರಂಟಿಯಲ್ಲ. ಎಲ್ಲವೂ ಬಣ್ಣ ಹೋಗುವ ಬಟ್ಟೆಗಳು! ಆದ್ದರಿಂದ ವಿಶ್ವಾಸವೆಂಬ ಬಣ್ಣಗೆಡದ
ದೃಢತೆಯಿಂದ ಸತ್ಕರ್ಮವನ್ನು ಆಶ್ರಯಿಸದೆ ನಮಗೆ ಗತ್ಯಂತರವಿಲ್ಲ. ಅಲ್ಪ ಆಸೆಗಳಿಂದ
ಪಾರಾಗುವುದು - ಪ್ರಾರಬ್ಧದ ನಿಟ್ಟಿನಲ್ಲಿ ಇಡಬಹುದಾದ ಮೊದಲ ಹೆಜ್ಜೆ.
ಮನುಷ್ಯನ ಮನಸ್ಸು ಯಾವಾಗಲೂ ಅರ್ಥ ಕಾಮಗಳ
ಕಡೆಗೇ ವಾಲಿರುತ್ತದೆ. ಮಗುವು ಹುಟ್ಟುವುದಕ್ಕಿಂತ ಮುಂಚೆಯೇ ತಾಯಿಗೆ
ಸ್ತನ್ಯವಿರುವಂತೆ ಪ್ರತಿಯೋರ್ವನನ್ನೂ ಕಾಯುವ,
ಅವರವರ ಪ್ರಾರಬ್ಧಕ್ಕೆ ತಕ್ಕ ಕೆಲಸ
ಮಾಡಿಸುವ ವಿಸ್ಮಯವೂ ಇದೆ. ಈ ಎಚ್ಚರವಿರಬೇಕು. ("ಮಾನವನೇ, ನಿನ್ನನ್ನು ನೀನು
ತಿಳಿ" ಎನ್ನುವ ಪ್ರಾಚೀನ ಗ್ರೀಕ್
ಚಿಂತನೆಯು ಎಚ್ಚರದ ಅಂತರ್ಮುಖಿತ್ವವನ್ನು
ಪ್ರತಿಪಾದಿಸುತ್ತದೆ; ಸ್ವಾನ್ವೇಷಣೆಗೆ
ಉಪನಿಷತ್ತುಗಳಲ್ಲೂ ಯಥೇಷ್ಟ
ಮಾರ್ಗದರ್ಶನವಿದೆ.)
ಕರ್ಮಗಳ ಫಲವು ಏನೇ ಇರಲಿ, ಸತ್ಕರ್ಮವನ್ನು
ನಡೆಸುವ ನಮ್ಮ ಪ್ರಯತ್ನದಲ್ಲಿ ಮಾತ್ರ ಕೊರತೆಯಾಗದೆ ಕಾರ್ಯಕಾರಣಕ್ಕೆ ಬದ್ಧರಾಗಿ
ಕರ್ಮಣ್ಯರಾಗುವ. "ಬದುಕುಗಳ ನಿರಂತರ ಉರುಳು ಚಕ್ರದಲ್ಲಿರುವಾಗ ಅವರವರ (ಋಣಾತ್ಮಕ ಅಥವ
ಧನಾತ್ಮಕ) ಕರ್ಮಗಳ ಹೊರೆಯು ಅವರವರ ಬೆನ್ನನ್ನೇ ಏರಿರುತ್ತದೆ" - ಎಂಬ ಎಚ್ಚರವೇ ನಮ್ಮನ್ನು ಶುದ್ಧತೆಯತ್ತಲೂ
ನಡೆಸಬಲ್ಲದು. "LESS
LUGGAGE MORE COMFORT"
- ಅಲ್ಲವೆ?
ಸಾರಾಂಶ : ಈ ಬದುಕಿನಲ್ಲಿ ನಮ್ಮ ನಿರೀಕ್ಷೆ -
ಪ್ರತೀಕ್ಷೆಯಲ್ಲಿರುವುದು ನಮ್ಮ ಬಂಧು ಬಳಗವಲ್ಲ;
ನಮ್ಮ ಪ್ರಾರಬ್ಧ !
(.....ಸ್ವಗತದಲ್ಲಿ ಒಂದಷ್ಟು ಹುಡುಕಾಟ?!)
()()()()()()()()
No comments:
Post a Comment