Thursday, January 12, 2017

ಶ್ರೀ ರಾಮಕೃಷ್ಣ ಭಾವಮಂಜರಿ - 5

ಅಧ್ಯಾತ್ಮ ಎಂಬುದು ಶುದ್ಧ - ಭಾವಸ್ಥಿತಿ. ತನ್ನೊಳಗನ್ನು ತಾನೇ ಸಂದರ್ಶಿಸುವ ಅನನ್ಯ ಸ್ಥಿತಿ ಅದು. ಅಂತಹ ಗಮ್ಯದೆಡೆಗೆ ಕೊಂಡೊಯ್ಯುವ ವಾಹಕವೇ - ಭಕ್ತಿ. ಇದು ಗುಂಪು ಗದ್ದಲದಿಂದ ದೂರವಾದ ಏಕಾಂಗಿ ಮಾರ್ಗ. ದುಡ್ದುದುಗ್ಗಾಣಿಯ ಗಳಿಕೆ ಉಳಿಕೆಯಂತೆ ಅಧ್ಯಾತ್ಮ ಸಂಪತ್ತನ್ನು ಮೆರವಣಿಗೆಯ ಮೂಲಕ ಹೊರಗೆಲ್ಲೋ ದರ್ಶನ ಮಾಡಲು ಆಗದು; ನೀತಿಪಾಠದಿಂದ ಆತ್ಮಿಕ ಭಾವವನ್ನು ಒತ್ತಿ ತುಂಬಿಸುವುದೂ  ಕಠಿಣ; ಅದು ಕೇವಲ ಅನುಭವಗ್ರಾಹ್ಯವಾದ ಸಂಪತ್ತು. ಇದ್ದವರಲ್ಲಿ - ಅದು ಹೇಗೂ ಇದ್ದೇ ಇರುತ್ತದೆ; ಇಲ್ಲದವರು ಸ್ವ ಇಚ್ಛೆಯಿಂದ ಸಂಪಾದಿಸಿಕೊಳ್ಳುವ ಅವಕಾಶಗಳಿವೆ. ಅಷ್ಟೆ. ಜನಸಂದಣಿಯಲ್ಲಿಯೇ ಅಧ್ಯಾತ್ಮಕ್ಕೆ ಪ್ರದಕ್ಷಿಣೆ ಬರುವ ಧಾರ್ಮಿಕ ಉಪನ್ಯಾಸ, ಚಿಂತನಗೋಷ್ಠಿಗಳು, ಭಜನೆ ಕೀರ್ತನೆಗಳೆಲ್ಲವೂ ಏಕಾಂತಕ್ಕೆ ನಮ್ಮನ್ನು ಪಳಗಿಸಿಕೊಳ್ಳಲು ಪ್ರೇರೇಪಿಸುವ ಉಪಸಾಧನಗಳಷ್ಟೇ.. ಕ್ರಮೇಣ ಮನುಷ್ಯನನ್ನು - ಚಿತ್ತೇಕಾಗ್ರತೆಯ ಏಕಾಂತ ಸಾಧನೆಗೆ ತೊಡಗಿಕೊಳ್ಳುವಂತೆ ಪ್ರೇರೇಪಿಸುವುದು ಮಾತ್ರ - ಇಂತಹ ಸಾಮೂಹಿಕ ಒಳಗೊಳ್ಳುವಿಕೆಯ ಉದ್ದೇಶ. ಸಮಾಜ ಎಂಬ ಕ್ಷೇತ್ರದಲ್ಲಿ ಪ್ರದರ್ಶನಗೊಳ್ಳುವ ಧಾರ್ಮಿಕ ಆಗುಹೋಗುಗಳೆಲ್ಲವೂ - ಮನುಷ್ಯರ ಸಾಧನೆಗೆ ಅಗತ್ಯವಾದ ಸಾಧನಗಳ ಪರಿಚಯ ಸಾಮಗ್ರಿಗಳು. ಅಷ್ಟೆ. 

ಆದರೆ ಮನುಷ್ಯರ ಸಾಧನೆ ಎಂಬುದು ಯಾವುದೇ ಸಾಧನದ ಮೆರವಣಿಗೆಯನ್ನು ನೋಡುವುದರಲ್ಲಿಯೇ ಮುಗಿದುಹೋಗುವಂತಿಲ್ಲ; ಸಾಧನವನ್ನು ನೋಡುವುದರಲ್ಲಿಯೇ ಮುಗಿದು ಹೋದರೆ - ಅದು ಮುನ್ನಡೆಯಲ್ಲ; ನಿಂತ ನೀರಿನಂತೆ ಸ್ಥಿರ ಚಿತ್ರ ಆಗುತ್ತದೆ. ಸಮೂಹ ಎಂಬ ಬಹಿರ್ಮುಖದಿಂದ ಪಾರಾಗಿ - ಆಗಾಗ ಅಂತರ್ಮುಖೀ ಸಾನ್ನಿಧ್ಯದ ನಿರೀಕ್ಷೆಯಲ್ಲಿ ತೊಡಗಿಕೊಂಡಾಗ ಮಾತ್ರ - ಅದು ನಿಜವಾದ  ಅಧ್ಯಾತ್ಮದ ಹಾದಿಯನ್ನು ಪ್ರಶಸ್ತಗೊಳಿಸುತ್ತದೆ. ಯಾವುದೇ ಅಂತರ್ಮುಖಾವಸ್ಥೆಯು ಏಕಾಂತವನ್ನು ಬಯಸುತ್ತದೆ. ಆದರೆ ಗದ್ದಲದ ಸ್ನೇಹಸುಖದಲ್ಲಿ ಮೈಮರೆಯುವ ಕ್ರಿಯೆಗೆ ಒಗ್ಗಿಕೊಂಡಿರುವ ಸಾಮಾನ್ಯ ಲೋಗರಿಗೆ - ಏಕಾಂತ ಎಂಬ ಭಾವನೆಯೇ ಬಹಳ ಭಯ ಹುಟ್ಟಿಸುತ್ತ ಕಠಿಣವೆನ್ನಿಸುತ್ತಿರುವುದರಿಂದ - ನೋಡುವ ಕೇಳುವ ಗದ್ದಲದ ಹಂತಕ್ಕಿಂತ ಮುಂದಿನ ಸಾಧನೆಗಳ ಗೊಡವೆಗೆ ಹೋಗದೆ - ಬಾಹ್ಯ ಸಾಧನಗಳನ್ನು ನೋಡುವುದರಲ್ಲೇ ತೃಪ್ತರಾಗುವಂತಾಗಿದೆ. ಇದು - ತಿನ್ನಲು ಯೋಗ್ಯವಾದ ವಸ್ತುವನ್ನು ನೋಡಿನೋಡಿಯೇ ತೃಪ್ತಿ ಪಡುವಂತಿದೆ. ಇಚ್ಛಾಶಕ್ತಿ ಮತ್ತು ಭಾವಸಂಸ್ಕಾರದ ಕೊರತೆಯಿಂದಾಗಿ -  ಅಧ್ಯಾತ್ಮದ ಸಿಹಿಯನ್ನು ಜೀರ್ಣಿಸಿಕೊಳ್ಳಲಾಗದ "ಅಭಾವ ರೋಗ "ವಿದು. ಏಕೆ ? ಹೀಗೇಕೆ ?

ಅಧ್ಯಾತ್ಮವು ಸುಲಭವೇನಲ್ಲ; ಅಧ್ಯಾತ್ಮ ಭಾವವು ಕಠಿಣವೇ ಆದರೂ - ಹಲವರಿಗೆ "ಬಹಳ ಕಠಿಣ" ಎನ್ನಿಸುವುದೇಕೆ ? ಎಂದೂ ಯೋಚಿಸಬಹುದು. ಅದಕ್ಕೂ ನಾನಾ  ಕಾರಣಗಳಿವೆ.

1. ಕೌಟುಂಬಿಕ ಭಾವ ಪರಿವರ್ತನೆಯಿಂದಾಗಿ ನಮ್ಮ ಅಭಿರುಚಿ ಆಸಕ್ತಿಗಳ ಮೂಲದಲ್ಲಿ ಆಗಿರುವ ಕಲಬೆರಕೆ.
2. ಅಂದಂದಿನ ಖರ್ಚಿಗೆ ದುಡಿಯುವ ದಿನಗೂಲಿಯವರಂತೆ ದೈನಂದಿನ ಸುಖಾಪೇಕ್ಷೆಗೆ ಮಾತ್ರ ನೀಡುತ್ತಿರುವ ಪ್ರಾಮುಖ್ಯತೆ.
3. ಅಧ್ಯಾತ್ಮವು ನಮಗಲ್ಲ; ಅದು ಸನ್ಯಾಸಿಗಳಿಗೆ - ಎಂಬ ತಪ್ಪು ಗ್ರಹಿಕೆ.
4. ಅಧ್ಯಾತ್ಮವು ಬದುಕನ್ನು ಆಮೂಲಾಗ್ರವಾಗಿ ಅನುಭವಿಸಿ ಏದುಸಿರು ಬಿಡುವ ಅಪ್ರಯೋಜಕ ವೃದ್ಧರಿಗೆ - ಎಂಬ ಪೂರ್ವಾಗ್ರಹ.
5. ಯುವಜನರಲ್ಲಿ ಅಧ್ಯಾತ್ಮದ ಒಲವು ಮೂಡಿದರೆ ಅದು ದಿಗಿಲೆಬ್ಬಿಸುವಷ್ಟು ಅಸಹಜ - ಎಂಬ ಸಮೂಹಸನ್ನಿ...
6. ಅಧ್ಯಾತ್ಮವು ಕೈಲಾಗದವರ ಹಳಹಳಿಕೆ ಮತ್ತು ವ್ಯರ್ಥ ನಂಬಿಕೆ ಎಂಬಂತಹ ಮನೋಭಾವ.
7. ಕ್ಷುದ್ರ ಸಾಮಾಜಿಕ ಮನೋರಂಜನೆಗಳು - ಎಂಬ ರೂಢಿಸಿಕೊಂಡ ಮನೋದೌರ್ಬಲ್ಯದಿಂದ ಮೇಲೇಳಲು ಬಿಡದ ದುರ್ಬಲ ಇಚ್ಛಾಶಕ್ತಿ.
8. ಒಮ್ಮೊಮ್ಮೆ - "ಹುಳಿ ದ್ರಾಕ್ಷಿಯ" ಪಲಾಯನವಾದ.

ಇತ್ಯಾದಿ...
 

ಅಧ್ಯಾತ್ಮದಿಂದ ಆತ್ಮಚೈತನ್ಯ

ಆತ್ಮಶಕ್ತಿಯನ್ನು ಬೆಳೆಸಿಕೊಳ್ಳುವ ಏಕಾಂತ ಸಾಧನೆಯ ಕುರಿತ ಅವ್ಯಕ್ತ ಭಯ ಮತ್ತು ಆಲಸ್ಯವೇ ಈ ಎಲ್ಲ ಕಾರಣಗಳ ಹಿಂದೆಯೂ ಮುಖ್ಯವಾಗಿ ದುಡಿಯುತ್ತಿರುತ್ತದೆ.. ಅಧ್ಯಾತ್ಮವು ತಮ್ಮ ಬದುಕನ್ನೇ ಕಸಿದುಕೊಂಡೀತು ಎಂಬ ಭಯ ! ಏನೋ ಸ್ವರ್ಗಸುಖವನ್ನು ಕಳೆದುಕೊಂಡೇವೆಂಬ ಭಯ ! ಸಮಯ ಕೊಲ್ಲುವ ಆಲಸ್ಯ ! ಅರಿವಿನ ಕೊರತೆಯಿಂದಾಗಿ ತಳವೂರಿ ಹೋಗಿರುವ ನಾನಾ ಕಲ್ಪನೆಗಳು !

ಹಾಗೆ ನೋಡಿದರೆ... ಈ ಭೂಮಿಯಲ್ಲಿ ಸುಲಭವಾದುದು ಯಾವುದೂ ಇಲ್ಲ. ಸಂಸಾರವೆಂಬ ಸಾಮ್ರಾಜ್ಯದಲ್ಲಿ - ಕಟ್ಟಿಕೊಳ್ಳುವ ಮತ್ತು ಕಟ್ಟಿಹಾಕಿಸಿಕೊಳ್ಳುವ ಕಾಠಿಣ್ಯವಿದ್ದರೆ, ಅಧ್ಯಾತ್ಮದಲ್ಲಿ - ಬಿಚ್ಚಿಕೊಳ್ಳುವ ಬಿಡಿಸಿಕೊಳ್ಳುವ - ಕಾಠಿಣ್ಯವಿದೆ. ಯಾವುದೇ ಕಾಠಿಣ್ಯದ ಆಯ್ಕೆಯು ಮಾತ್ರ - ಆಯಾ ಬದುಕಿನ ಪ್ರಾಶಸ್ತ್ಯಗಳನ್ನು ಅವಲಂಬಿಸುತ್ತದೆ. ಆದರೆ... ಸ್ವಲ್ಪ ಹಿಂದೋ ಮುಂದೋ - ಅಂತೂ ಎರಡು ದಾರಿಗಳೂ ತಲುಪುವ ಗಮ್ಯವು ಮಾತ್ರ - ಒಂದೇ. ಅಧ್ಯಾತ್ಮವನ್ನು ಪೂರ್ತಿಯಾಗಿ ನೆಚ್ಚಿಕೊಳ್ಳುವ ಸನ್ಯಾಸದ  ಬದುಕಿನಲ್ಲಿ ತಡೆ, ನಿಲುಗಡೆಗಳು ಕಡಿಮೆ; ವೇಗ ಸ್ವಲ್ಪ ಹೆಚ್ಚು. ಸಂಸಾರದ ಹಾದಿಯಲ್ಲಿ ಅಡೆತಡೆಗಳು ಸ್ವಲ್ಪ ಹೆಚ್ಚು; ಆದ್ದರಿಂದ ವೇಗ ಕಡಿಮೆ. 

ಆದರೆ ಅಧ್ಯಾತ್ಮದ ಸಂಸ್ಕಾರವಿದ್ದಾಗ - ದೈನಂದಿನ ನಿಲುಗಡೆಯ ಸ್ಥಾನಗಳನ್ನು ನಿವಾರಿಸಿಕೊಳ್ಳುವ ಆಧಾರಶಕ್ತಿಯು ಪ್ರಾಪಂಚಿಕರಿಗೂ ಒದಗುತ್ತದೆ. ತನ್ಮೂಲಕ - ಆಯಾ ಬದುಕನ್ನು ಸುವ್ಯವಸ್ಥಿತವಾಗಿ ಕಟ್ಟಿಕೊಳ್ಳಲು ಬಯಸುವ ಸಂಸಾರಿಗಳ ಬೆನ್ನುಬಿಡದೆ - ನೆಚ್ಚಿಕೊಂಡ ಅಧ್ಯಾತ್ಮ ಭಾವವು ಬದುಕಲು ಸಹಕರಿಸುತ್ತದೆ. ಶುದ್ಧ ಸನ್ಯಾಸಿಗಳು ಸಂಸಾರವನ್ನು ತೂಗಿಸುವ ಶೈಲಿಗೂ ಗೃಹಸ್ಥ ಸಂಸಾರಿಗಳ ಬದುಕಿನ ಶೈಲಿಗೂ ವ್ಯತ್ಯಾಸವಿದ್ದರೂ ಎರಡೂ ಬಗೆಯ ಬದುಕುಗಳ ಮೂಲದಲ್ಲೂ ಅಧ್ಯಾತ್ಮದ ಅಂತರ್ಭಾವವು ಪ್ರವಹಿಸುತ್ತಲೇ ಇರುತ್ತದೆ. ಅದನ್ನು ಸಕಾರಾತ್ಮಕವಾಗಿ ಗುರುತಿಸಿ ಇಚ್ಛಾಶಕ್ತಿಯಿಂದ ಪೋಷಿಸಿದಾಗ ಮಾತ್ರ ಭಾವಜಾಗ್ರತಿಯು ಸಾಧ್ಯವಾಗುತ್ತದೆ ಮತ್ತು ಅಧ್ಯಾತ್ಮಜ್ಞಾನಮೂಲದ ಸಚೇತನದಲ್ಲಿ ಸಂಚಲಿಸುವ ಇಚ್ಛಾಶಕ್ತಿಯು ಜಾಗ್ರತವಾಗಿ, ಕ್ರಿಯಾಶಕ್ತಿಯಾಗಿ ಪರಿಣಮಿಸಿ - ಆಧ್ಯಾತ್ಮಿಕ ಅನುಭೂತಿಯು ಸಂಭವಿಸುತ್ತದೆ.

ಅಧ್ಯಾತ್ಮವು ಭಾವ ಸಮತೋಲನವನ್ನುಂಟುಮಾಡಬಹುದಲ್ಲದೆ ಯಾವುದೇ ಬದುಕನ್ನು ಕಸಿದುಕೊಳ್ಳುವುದುಂಟೆ ? ಪರ್ಯಾಯವಾಗಿ ಸುಶಾಂತ ಮೌಲ್ಯಯುತ ಭಾವಬದುಕನ್ನು ಕಟ್ಟಿಕೊಳ್ಳಲು ಅಧ್ಯಾತ್ಮವು ಸಹಕರಿಸಿ ಪ್ರಚೋದಿಸುತ್ತದೆ. ಕ್ಷುದ್ರ ಆಸೆಗಳನ್ನು ನಿಯಂತ್ರಿಸಿಕೊಂಡ ಜೀವಿಗಳು ತಮ್ಮ ಅಂತರ್ಭಾವವನ್ನು ಸ್ವಚ್ಛಗೊಳಿಸಿಕೊಂಡರೆ - "ಉದ್ಧರಿಸಬಲ್ಲ ಗುಣವಿಶೇಷಗಳನ್ನು ಅನುಸರಿಸಬಲ್ಲೆ" - ಎಂಬ ಆತ್ಮವಿಶ್ವಾಸದ ಚೈತನ್ಯವನ್ನು ಜೀವಭಾವದಲ್ಲಿ ಮೂಡಿಸುವ ಶಕ್ತಿಯು ಅಧ್ಯಾತ್ಮಕ್ಕಿದೆ. ಆದರೆ ನಾವು ನೆಚ್ಚಿಕೊಂಡಿರುವ ಬಾಹ್ಯ ಅವಲಂಬನೆಗಳೇ (OBJECT) ಪರಮಸತ್ಯ ಎಂಬ ಭ್ರಮೆಯಿಂದಾಗಿ - ಆತ್ಮಶಕ್ತಿಯ ಮೂಲಸತ್ವವನ್ನು ನಮಗೆ ನಾವೇ ಕುಂದಿಸಿಕೊಳ್ಳುತ್ತಲೇ ಬಂದಿದ್ದೇವೆ. ಆದ್ದರಿಂದಲೇ ಬಂಧುಬಳಗವು ದೂರವಾದರೆ, ವಸ್ತು ಸಂಪತ್ತು ಕೈ ಬಿಟ್ಟುಹೋದರೆ ಭಯ ಬೀಳುವಂತಾಗುವುದು. ಯಾವತ್ತೂ ನಮ್ಮದಲ್ಲದ ವಸ್ತು ವ್ಯಕ್ತಿಗಳನ್ನು ಭ್ರಾಂತಿಯಿಂದ ಆಶ್ರಯಿಸಿದಾಗ ಹೀಗೆ ಬೆಚ್ಚಿಬೀಳುವಂತಹ ಭಯದ ಸಂದಿನಲ್ಲಿಯೇ ಬದುಕುವುದು ಅನಿವಾರ್ಯವಾಗುತ್ತದೆ. ಅಂತಹ ಭ್ರಮೆಯ ನೆರಳನ್ನು ಹಿಡಿಯುವ ಆಟದಲ್ಲಿಯೇ ಮುಳುಗಿಹೋದರೆ ವ್ಯರ್ಥ ಶ್ರಮದ ಬಳಲಿಕೆಯೊಂದೇ ಸಹಚಾರಿಯಾಗುತ್ತದೆ; ನಡಿಗೆಯ ವೇಗವೂ ಕುಂಟುತ್ತದೆ; ಅತೃಪ್ತಿಯೇ ಸಹಚಾರಿಯಾಗುತ್ತದೆ. ಹೀಗಾದಾಗ ಬದುಕಿನಲ್ಲಿ ಸಹಜವಾಗಿ ಸಂಭವಿಸುವ ದೈನಂದಿನ ಸಣ್ಣಪುಟ್ಟ ದೃಶ್ಯಗಳ ಪುನರಾವರ್ತನೆ ಮತ್ತು ಬಾಹ್ಯ ಪರಿವರ್ತನೆಗಳೆಲ್ಲವೂ ವಿನಾಕಾರಣ ಬೆಚ್ಚಿಬೀಳಿಸುತ್ತವೆ. ನೋಟುಗಳ ಅಪಮೌಲ್ಯವಾದರೂ ಹೃದಯಾಘಾತವಾಗುತ್ತದೆ ! ಸಣ್ಣಪುಟ್ಟ ಮನಸ್ತಾಪಗಳೂ ಜೀವಘಾತಕವಾಗಿ ಬಿಡುತ್ತವೆ ! ಇದು ಅಧ್ಯಾತ್ಮದ ಗಂಧಗಾಳಿಯಿಲ್ಲದ ಚೇತನಹೀನ ಬದುಕುಗಳ ಲಕ್ಷಣ.

ಹೆಬ್ಬೆಟ್ಟಿನ ಗುರುತಿನಂತೆ - ಈ ವಿಶ್ವದಲ್ಲಿ ಪ್ರತಿಯೊಂದು ಜೀವಿಗೂ ಪ್ರತ್ಯೇಕ ಅಸ್ತಿತ್ವವಿದೆ. ಗುರಿಹಲಗೆಯೂ (Target) ಪ್ರತ್ಯೇಕವಿರುತ್ತದೆ. ಆದ್ದರಿಂದ ಆಯಾ ಗುರಿಯನ್ನು ಸ್ವ ಇಚ್ಛೆ ಮತ್ತು ಶಕ್ತಿಯಿಂದಲೇ ತಲುಪಬೇಕಾಗುತ್ತದೆ. ಆಧ್ಯಾತ್ಮಿಕತೆಯು ಅಂತಃಶ್ಶಕ್ತಿಯನ್ನು ತುಂಬುವ ವಿಜ್ಞಾನ.

ಈ ಸಂಸಾರದ ವ್ಯಾಪ್ತಿಯ ಯಾವುದೇ ವಸ್ತು ವ್ಯಕ್ತಿಗಳ ಅತಿಯಾದ  ಭಾವಾವಲಂಬನೆಯು - ಸ್ವ ಶಕ್ತಿಯನ್ನು ದುರ್ಬಲಗೊಳಿಸುವಂಥದ್ದು. ತನ್ನನ್ನೇ ತಾನು ಅವಲಂಬಿಸಿದಾಗ, ತನ್ನೊಳಗಿನ  ದನಿಯನ್ನು ಕೇಳಿಸಿಕೊಳ್ಳುವಂತಾದಾಗ ಮಾತ್ರ ಸ್ಪಷ್ಟ ಚಿಂತನೆಯ ಬೆಳಕು ಕಾಣಿಸಿ ದೌರ್ಬಲ್ಯಗಳು ಕರಗಿ ಆತ್ಮ ಜಾಗ್ರತಿಯಾಗುತ್ತದೆ. ಆತ್ಮಜಾಗ್ರತಿ ಎಂದರೆ "ಯಾವುದೇ ಭೀತಿಯಿಲ್ಲದೆ ಬದುಕಿನ ಸಮಸ್ಯೆಗಳನ್ನು ನಿಭಾಯಿಸುವ ಶಕ್ತಿ" ಎಂದೂ ಅರ್ಥೈಸಬಹುದು. ಅಧ್ಯಾತ್ಮ ಸಂಚಾರವಿಲ್ಲದಲ್ಲಿ ಅಂತಹ ಸಂಶಯಾತೀತ, ಅಹಂಭಾವರಹಿತ ಧೈರ್ಯವು ಮೂಡುವುದಿಲ್ಲ. ಆದ್ದರಿಂದ ಅಧ್ಯಾತ್ಮ ಭಾವದ ಸಬಲ ಚೇತನಗಳನ್ನು ಮಾತ್ರ - ನಿರ್ಭಯ - ಎನ್ನಬಹುದು. 

ನೀರಿನಲ್ಲಿ ಮುಳುಗಿ ಎದ್ದ, ನೂರು ಜನರನ್ನು ಹೊಡೆದು ಉರುಳಿಸಿದ, ಸ್ವಚ್ಛಂದ ಕುದುರೆಯನ್ನೇರಿ ಸಂಸಾರ ಭಾವವನ್ನು ಚಿಂದಿ ಚಿತ್ರಾನ್ನ ಮಾಡುವಂತಹ ಯಾವುದೇ ವ್ಯರ್ಥ ಕರ್ಮಗಳು ಅದೆಂತಹ ಲೌಕಿಕ ಪ್ರಶಸ್ತಿಪಾತ್ರವಾದರೂ ಅವರನ್ನು "ಶೂರ ವೀರ ನಿರ್ಭಯ" ಎನ್ನಲಾಗುವುದಿಲ್ಲ. ಅಂತಹ ಪ್ರಶಸ್ತಿಗಳು ಅಂದಂದಿನ ಸುದ್ದಿಯಾಗಬಹುದಲ್ಲದೆ - ಅಂತಹ ನಿತ್ಯೋಪಯೋಗೀ ಪ್ರಶಸ್ತಿಗಳ ಶಬ್ದಾಡಂಬರದಿಂದ ಅಂತರಂಗವನ್ನು ಕದಡುತ್ತಲೇ ಇರುವ ಯಾವುದೇ ಭಯವು ಪರಿಹಾರವಾಗುವುದೂ ಇಲ್ಲ. ಇಂದಿನ ಸಾಮಾಜಿಕರು ಆಗಾಗ ಎತ್ತಿ ತೋರಿಸಿ ಸುಳಿದಾಡಿಸುತ್ತಿರುವ - "ನಿರ್ಭಯ" ಎನ್ನಲಾಗುವ ಸುದ್ದಿಗಳೆಲ್ಲವೂ - ಬದುಕನ್ನೇ ವಸ್ತುವಾಗಿಸಿ ಮಾರಾಟಕ್ಕಿಡುವ ಜಾತ್ರೆಯ ಸರ್ಕಸ್ಸುಗಳಷ್ಟೇ ಆಗಿ ಮರೆಯಾಗುತ್ತವೆ. ಆದ್ದರಿಂದ ಮನುಷ್ಯರ ನಿತ್ಯಬದುಕಿನಲ್ಲಿ ಹೊಕ್ಕು ಹೊರಡುವ "ಅತಿಶಯೋಕ್ತಿಯ ಬಹುಪಾಲು ನಿರ್ಭಯ ಪ್ರಸ್ತಾಪಗಳು" - ಅವರವರಿಗೇ ಪುನರಪಿ ಸಾಧಿಸಲಾಗದ ಆಕಸ್ಮಿಕಗಳು; ವ್ಯರ್ಥ ಹೊಡಚಾಟಗಳು; ಮನೋಭ್ರಾಂತಿಗಳು.  

ಇಂತಹ ವ್ಯರ್ಥಗಳಿಂದ ಪಾರಾಗಿ ಅರ್ಥದತ್ತ ಸಾಗುವುದೇ ನಿಜವಾದ ಜೀವನ. ಅಧ್ಯಾತ್ಮದ ಬೆಳಕಿನಲ್ಲಿ ಭಯಮುಕ್ತವಾದಾಗ ಮಾತ್ರ - ಗಾಂಭೀರ್ಯವುಳ್ಳ ಜೀವನಕ್ಕೆ ಸುಗಮ ಓಟ ಮತ್ತು ಅರ್ಥ ಕಾಣುತ್ತದೆ. ಅರ್ಥಪೂರ್ಣ ಜೀವನ ಎಂಬುದು ಯಾವತ್ತೂ ನಿರ್ಭಯ ಏಕಾಂಗೀ ನಡೆ. ತಮ್ಮ ಬದುಕಿನಲ್ಲಿ ಜನಜಂಗುಳಿಯನ್ನು ಸದಾ ನೆಚ್ಚಿಕೊಳ್ಳುವವರು - ಮೂಲತಃ ಭಯಗ್ರಸ್ತರೇ ಆಗಿರುತ್ತಾರೆ. ಇನ್ನು - "ನಾನು ದೊಡ್ಡ ಮನುಷ್ಯ" ಅನ್ನಿಸಿಕೊಳ್ಳಲು ಜನರನ್ನು ಗುಡ್ಡೆ ಹಾಕಿಕೊಳ್ಳುವವರೂ ಇದ್ದಾರೆ. ಅಪ್ಪಟ  ಭಯಮೂಲದ ಭ್ರಾಂತಿ ಇದು. 

ಶ್ರೀ ರಾಮಕೃಷ್ಣರೂ ಇಂತಹ ಭ್ರಾಂತಿ ಪೋರರನ್ನು ಹಾದು ಬಂದಾಗಲೆಲ್ಲ "ಅಯ್ಯೋ ಪ್ರಪಂಚವೇ..." ಎಂದುಕೊಂಡು, ಅದನ್ನು ವಿಶ್ಲೇಷಿಸಿದ್ದರು. 

"ಪ್ರಾಪಂಚಿಕ ಸ್ವಭಾವವೇ ಇದು; ಒಂದು ಹತ್ತಾರು ಜನರು ತಮ್ಮ ಮನೆಗೆ ಬಂದು ಹೋಗುತ್ತಿರಬೇಕು ! ಹಾಗೆ ಜನಮೆಚ್ಚುವ ವ್ಯಕ್ತಿಯ ರೂಪದಲ್ಲಿ - ಊರಿನಲ್ಲೆಲ್ಲ ದೊಡ್ಡವ - ಅನ್ನಿಸಿಕೊಳ್ಳಬೇಕು !" ಎಂದು  ಸಾಂದರ್ಭಿಕವಾಗಿ, ಶ್ರೀ ರಾಮಕೃಷ್ಣರೂ ಪ್ರತಿಕ್ರಿಯಿಸಿದ್ದಿದೆ. ಸಗಣಿಯ ಹುಳದಂತಹ ಬದುಕುಗಳ ಕುರಿತು ಸಹಾನುಭೂತಿ ವ್ಯಕ್ತಪಡಿಸಿದ್ದಿದೆ . 

ಈ ಬಗೆಯ - "ಸದ್ದುಗದ್ದಲದಲ್ಲಿ ದೊಡ್ಡದಾಗುವ ಜನಚಿಂತನೆಯ ಉಬ್ಬುಶೈಲಿಯಲ್ಲಿ.." ಇಂದಿಗೂ ಯಾವ ವ್ಯತ್ಯಾಸವೂ ಆಗಿಲ್ಲ. ಏಕೆಂದರೆ "ಹೊರಹೊರಗೆ" ಜನಪ್ರಿಯವೆನ್ನಿಸಿಕೊಳ್ಳುತ್ತಿರುವ ಸಾವಿರಾರು ಸುಲಭ ಗುರಿಗಳ ಅನಂತ ಹಸಿವುಗಳಿಗೆ - ಇನ್ನೂ ಅಧ್ಯಾತ್ಮದ ಸ್ಪರ್ಷವಾಗಿಲ್ಲ; ಅಧ್ಯಾತ್ಮದ ರಸಕವಳವನ್ನು ಉಂಡಿಲ್ಲ. ಆದ್ದರಿಂದಲೇ ಇಂಗದ ಹಸಿವು; ಅತೃಪ್ತಿ; ಹುಡುಕಾಟ.

ಸನ್ಯಾಸ ಮತ್ತು ಕಾವಿ...

ಇಂದು - ಸಾಮೂಹಿಕ ವಿದ್ಯಾಭ್ಯಾಸ, ಸಾಮೂಹಿಕ ಉಪನಯನ, ಸಾಮೂಹಿಕ ಮದುವೆ, ಸಾಮೂಹಿಕ ಅಂತ್ಯ ಸಂಸ್ಕಾರ, ಸಾಮೂಹಿಕ ವೈಕುಂಠ ಯಾತ್ರೆಯ ಸನ್ನಿವೇಶದಲ್ಲಿ ನಾವಿದ್ದೇವೆ. ಈ ಸ್ವಾರ್ಥಪ್ರೇರಿತ "ಸಾಮೂಹಿಕ" ಎಂಬ ತೋರಿಕೆಯ  ವ್ಯವಸ್ಥೆಯು - "ಸಾಮೂಹಿಕ ಬದುಕು" ಎಂಬ - "ಎಲ್ಲರೂ ಬದುಕಿ, ಬದುಕಿಸುವ" ಮೌಲ್ಯದ ನಿಜಾರ್ಥವನ್ನು ಮಾತ್ರ ಕಡೆಗಣಿಸಿದಂತಿದೆ ! ಆದ್ದರಿಂದಲೇ ಬಾಹ್ಯದಲ್ಲಿ ಮಾತ್ರ ಎಲ್ಲವೂ ಸಾಮೂಹಿಕ; ಆಂತರ್ಯದಲ್ಲಿ "ಸ್ವಾರ್ಥೀ ಏಕಭಾವ" ಎಂದಾಗಿದೆ ! ಕಾಪಟ್ಯವು - ಆಯಾ ಅಂತರಂಗವು ಒಣಗಿ ಬರಡಾಗುವುದಕ್ಕೆ ಮುಖ್ಯ ಕಾರಣ. ಆಧ್ಯಾತ್ಮಿಕ ದಾರಿದ್ರ್ಯವು ಎಲ್ಲ ಬಗೆಯ ಮನೋ ದಾರಿದ್ರ್ಯಕ್ಕೆ ಮೂಲ ಕಾರಣ.

ಎಚ್ಚರ ಕಾಣದ ನಿದ್ರಾ ಭಾವದ ಸ್ಥಿತಿಗೆ - ಯಾವುದೇ Lecture ಕೊಟ್ಟರೆ ಫಲವೇನು ? ಎಚ್ಚರಗೊಳ್ಳಲು ಮನಸ್ಸು ಮಾಡದ - ನಿದ್ದೆಯಲ್ಲಿಯೇ ನಡೆದಾಡುತ್ತಿರುವ ರೋಗಗ್ರಸ್ತ ಜನಸಂತೆಗೆ ಅಧ್ಯಾತ್ಮವನ್ನು ಅರೆದು ಕುಡಿಸಲು ಸಾಧ್ಯವೆ ? "ಜನ ಮರುಳೋ ಜಾತ್ರೆ ಮರುಳೋ" ಎಂಬಂತಹ ಅಜಾಗ್ರತ ಜನಸಂತೆಯಲ್ಲಿ ನಿಜವಾದ ಅಧ್ಯಾತ್ಮಭಾವವು ಇರುವುದಾದರೂ ಹೇಗೆ ? ಜನಸಂತೆಯಿಂದ ದೂರವಾದಲ್ಲದೆ - ಆತ್ಮಚೈತನ್ಯವು ಜಾಗ್ರತವಾಗಲಾರದು. 

ಮೌನದಲ್ಲಿ ಅರಳುವ ವಿಶೇಷವೇ ಅಧ್ಯಾತ್ಮ ! ಇಂದಿನ ಕಾವಿಧಾರೀ ಬಳಗವೂ ಈ ಸೂತ್ರಕ್ಕೆ ವಿಮುಖವಾಗಿರುವಂತೆ ಕಾಣಿಸುತ್ತದೆ ! "ಸನ್ಯಾಸೀ ಬಣ್ಣದ ಮರೆಯಲ್ಲಿ", ಅಹಂತೃಪ್ತಿಗಾಗಿ ಜನಸಂತೆಯನ್ನು ಸೇರಿಸುವುದನ್ನೇ ಕಾಯಕ ಮಾಡಿಕೊಂಡಿರುವ ನಕಲಿ - ಧರ್ಮವ್ಯಾಪಾರದ ಸಂತೆಯೇ ಈಗ ನಮ್ಮ ಮುಂದಿದೆ ! ತಮ್ಮದು - "ಫಲನಿರೀಕ್ಷೆಯಿಲ್ಲದ ಕರ್ಮ" ಅಥವ "ಸಮಾಜೋದ್ಧಾರದ ಕಾರ್ಯಕ್ರಮ" ಎನ್ನುತ್ತಿರುವ ಸನ್ಯಾಸೀ ಧರ್ಮದವರೂ - ಈಗೀಗ ಸುದ್ದಿಯಾಗಲು ಮುಗಿಬೀಳುತ್ತಿದ್ದು - ಇದರ ಒಟ್ಟಾರೆ ಪರಿಣಾಮ - "ಸಾಮೂಹಿಕ ಪ್ರಸಾದ ವಿತರಣೆ "ಯ ಗದ್ದಲ ಮಾತ್ರವೇ ಆಗುತ್ತಿದೆ ! ಇದು ಭಗವದ್ಗೀತೆಯ ಬೋಧನೆಗಳ ಆಧುನಿಕ ವರ್ಣವಿಕೃತಿ !

ಸಂಗಂ ತ್ಯಕ್ತ್ವಾ...


ಯೋಗಸ್ಥಃ ಕುರು ಕರ್ಮಾಣಿ ಸಂಗಂ ತ್ಯಕ್ತ್ವಾ ಧನಂಜಯ /
ಸಿದ್ಧ್ಯಸಿದ್ಧ್ಯೋಃ ಸಮೋಭೂತ್ವಾ ಸಮತ್ವಂ ಯೋಗ ಉಚ್ಚ್ಯತೇ /

"ಧನಂಜಯನೇ, ಆಸಕ್ತಿಯನ್ನು ಬಿಟ್ಟು ಯೋಗಸ್ಥನಾಗಿ - ಕರ್ಮಗಳು ಫಲಿಸಲಿ ಅಥವ ಫಲಿಸದಿರಲಿ, ಸಮಬುದ್ಧಿಯುಳ್ಳವನಾಗಿ ಕರ್ಮಗಳನ್ನು ಮಾಡು. ಇಂತಹ ಸಮಭಾವಕ್ಕೆ ಯೋಗ ಎನ್ನುತ್ತಾರೆ." (ಭಗವದ್ಗೀತೆ : 2-48)

ದುಃಖೇಷ್ವನುದ್ವಿಗ್ನಮನಾಃ ಸುಖೇಷು ವಿಗತಸ್ಪೃಹಃ /
ವೀತರಾಗಭಯಕ್ರೋಧಃ ಸ್ಥಿತಧೀರ್ಮುನಿರುಚ್ಯತೇ / 

"ದುಃಖಗಳು ಬಂದಾಗ ಉದ್ವಿಗ್ನನಾಗದ ಮನಸ್ಸುಳ್ಳವನೂ ಸುಖ ಬಂದಾಗ ಆಸಕ್ತಿಯನ್ನು ಹೊಂದದವನೂ ರಾಗ-ಭಯ- ಕ್ರೋಧಗಳಿಲ್ಲದವನೂ ಆದ ಮುನಿಯು ಸ್ಥಿತಪ್ರಜ್ಞನೆನಿಸುವನು." (2-56)


ಕ್ರೋಧಾದ್ಭವತಿ ಸಂಮೋಹಃ ಸಂಮೋಹಾತ್ ಸ್ಮೃತಿವಿಭ್ರಮಃ /
ಸ್ಮೃತಿಭ್ರಂಶಾದ್ಬುದ್ಧಿನಾಶೋ ಬುದ್ಧಿನಾಶಾತ್ ಪ್ರಣಶ್ಯತಿ /


"ವಿಷಯಗಳನ್ನು ಚಿಂತಿಸುವವರಿಗೆ ಮೊದಲು ಅವುಗಳಲ್ಲಿ ಆಸಕ್ತಿ (ಸಂಗ) ಉಂಟಾಗುತ್ತದೆ. ಸಂಗದಿಂದ ಕಾಮವು ಹುಟ್ಟುತ್ತದೆ. ಕಾಮದಿಂದ ಕ್ರೋಧವೂ ಕ್ರೋಧದಿಂದ ಅವಿವೇಕವೂ ಅವಿವೇಕದಿಂದ ಬುದ್ಧಿನಾಶವೂ ಸಂಭವಿಸಿ, ಮನುಷ್ಯರು ನಾಶ ಹೊಂದುತ್ತಾರೆ." (2-63)

ನಿರ್ಮಮ ನಿರಹಂಕಾರದ ಯೌಗಿಕ ಮನೋನೆಲೆಯು ಮಾತ್ರ ಪ್ರಶಾಂತವಾಗಿ ಇರಬಲ್ಲದು - ಎಂಬ ಭಗವದ್ಗೀತೆಯ ಸಂದೇಶವು ಸ್ವಸ್ಥ ಬದುಕಿಗೆ ಕೈಪಿಡಿಯಂತಿದೆ. ಸಂಗಂ ತ್ಯಕ್ತ್ವಾ ಎಂದರೆ ಬಾಹ್ಯ ಜನಜಂಗುಳಿ ಎಂಬುದಕ್ಕಷ್ಟೇ ಸೀಮಿತವಲ್ಲ. ಕರ್ಮ ಮತ್ತು ಫಲ, ಸಂಬಂಧ ಬಾಂಧವ್ಯಗಳಲ್ಲಿ ವಿಸ್ತರಿಸುವ ಮನೋವ್ಯಾಪಾರ ಮತ್ತು ತತ್ರಾಪಿ ಫಲ ನಿರೀಕ್ಷೆ... ಮುಂತಾದ - ಮನಸ್ಸಿನೊಂದಿಗೆ ಜೋಡಾಟ ನಡೆಸುತ್ತಿರುವ ದೈನಂದಿನ ಭಾವನೆಗಳ "ಸಂಗ" (ಆಸಕ್ತಿ) ವನ್ನು ನಿಯಂತ್ರಿಸಿಕೊಳ್ಳುವ ಸೂಚನೆಯೂ ಇಲ್ಲಿದೆ. ಯಾವುದೇ "ಮರುಳು ಕನಸು"ಗಳಿಗೆ ಅಂಟಿಕೊಳ್ಳದೇ ನಿರ್ಮಮರಾಗಿ ನಡೆಸುವ ಕರ್ಮಗಳನ್ನು ಭಗವದ್ಗೀತೆಯು ಪ್ರತಿಪಾದಿಸುತ್ತದೆ. ಭಗವದ್ಗೀತೆ ಎಂದರೆ - ಮನೋವ್ಯಾಪಾರಿಗಳಿಗೆ ತಗಲುವ ರೋಗಗಳಿಗೆ ನೀಡಬಹುದಾದ ಚಿಕಿತ್ಸೆ ಮತ್ತು ರೋಗನಿರೋಧದ ಕೈಪಿಡಿ; Theory. "ಇದೇ ನೆಮ್ಮದಿಯ ಬದುಕಿನ ಸೂತ್ರ" ಎಂದೂ ಭಗವದ್ಗೀತೆಯು ಬೆರಳು ತೋರಿಸುತ್ತದೆ. ಇಂತಹ ಆಚಾರ ವಿಚಾರ ಮತ್ತು ಆದರ್ಶಗಳೇ - ಸನ್ಯಾಸವು ಸಮಾಜಕ್ಕೆ ತೆರೆದು ತೋರಬೇಕಾದ ಸನ್ಮಾರ್ಗ. ಇದೇ ಮೂಲ ಧರ್ಮ; ಪ್ರಾಪಂಚಿಕರು ಅನುಸರಿಸಬೇಕಾದ ಆದರ್ಶ.

ಆದರೆ ಈ ಭೂಮಿಯಲ್ಲಿ ಚಲಿಸುತ್ತಿರುವ ಸಂಸಾರ ಎಂಬ ತೇಲುದೋಣಿಯು ಎಂತಹ ಗಿಲೀಟಿನದು ಎಂದರೆ - ಎಂತೆಂತಹ ಸಾಧಕ ಸಾಧುಗಳಿಗೂ ಅಮಲೇರಿಸಿ ಸನ್ಯಾಸವನ್ನೂ ಮರೆಸಿ ತೂಗಾಡಿಸುವಷ್ಟು ಬಲವಾಗಿದೆ. ಈ ಲೌಕಿಕ ಪರಿಸರದಲ್ಲಿ ಮನಸ್ಸನ್ನು ಚಂಚಲಗೊಳಿಸುವ ಬಾಹ್ಯ ಆಕರ್ಷಣೆಗಳು ಒಂದೇ ? ಎರಡೆ ? ಏಕಾಗ್ರಚಿತ್ತದಿಂದ ಅಂತರ್ಮುಖಿಯಾಗಲು ನಿರಾಕರಿಸುತ್ತ ಲೋಲುಪತೆಯತ್ತ ಮನುಷ್ಯರನ್ನು ಸೆಳೆಯುತ್ತಲೇ ಇರುವ ಭೂಮಿಯ ಸೆಳೆತಗಳು - ಸನ್ಯಾಸಿ ಮತ್ತು ಗೃಹಸ್ಥರು - ಯಾರನ್ನೂ ಸುಲಭದಲ್ಲಿ ಬಿಡಲೊಲ್ಲದು. ಇಂತಹ ನಾಜೂಕಿನ ಬಾಳಿನಲ್ಲಿ - ಜ್ಞಾನದ ಊರುಗೋಲಿನ ಆಶ್ರಯದಲ್ಲಿರುವ ಸಾಧಕರು ಮಾತ್ರ - ಇತರರಿಗಿಂತ ನಾಲ್ಕು ಹೆಜ್ಜೆ ಮುಂದೆ ಸಾಗಬಲ್ಲರು. ಆದ್ದರಿಂದಲೇ ಶ್ರೀ ರಾಮಕೃಷ್ಣರು ತಮ್ಮ ಭಕ್ತರನ್ನು ಎಚ್ಚರಿಸುತ್ತಿದ್ದರು. "ಈ ಸಂಸಾರವು ಕಾಡಿಗೆ ತುಂಬಿದ ಕೋಣೆ. ನೆಲ, ಗೋಡೆ, ಕಿಟಕಿ ಬಾಗಿಲುಗಳೆಲ್ಲವೂ ಕಾಡಿಗೆಮಯ. ಎಷ್ಟೇ ಎಚ್ಚರದಿಂದ ನಡೆದರೂ ಕೈಮೈಗೆ ಒಂದಷ್ಟು ಕಪ್ಪು ತಾಗಿಯೇ ಬಿಡುತ್ತದೆ." 

ಆದ್ದರಿಂದ ಸರಿತಪ್ಪುಗಳ ತರತಮ ಜ್ಞಾನದೊಂದಿಗೆ ಅರಿಷಡ್ವೈರಿಗಳೆಂಬ "ಕಾಡಿಗೆಯ ಸಂಗ ಸುಖ"ದ ನಡುವೆ ಹೊರಳಾಡಿಯೂ ಮಂಡಿಯೂರದಂತಹ ಎಚ್ಚರವು ಅಗತ್ಯ ಎಂದು - ತಮ್ಮ ಗಂಟಲು ಒಡೆಯುವಷ್ಟು ಬಾರಿ - ರಾಮಕೃಷ್ಣ ಪರಮಹಂಸರು ಪ್ರತಿಪಾದಿಸಿದ್ದರು.
 


ಒಮ್ಮೆ ಶ್ರೀ ರಾಮಕೃಷ್ಣರಲ್ಲಿ ಅವರ ಭಕ್ತನೊಬ್ಬ - "ಗುರುಗಳೇ, ಪಕ್ಕದ ಕಾರ್ಖಾನೆಯ ಸೈರನ್ ಗದ್ದಲದಿಂದಾಗಿ ಧ್ಯಾನದಲ್ಲಿ ಮುಳುಗಲು ನನಗೆ ತಡೆಯಾಗುತ್ತಿದೆ; ಏಕಾಗ್ರತೆ ಸಾಧ್ಯವಾಗುತ್ತಿಲ್ಲ" ಎಂದು ತನ್ನ ಸಂಕಷ್ಟವನ್ನು ತೋಡಿಕೊಂಡಾಗ ಪರಮಹಂಸರು ಹೇಳಿದ್ದರು... "ಅರೇ... ಏಕೆ ಅದೇಕೆ ಸಾಧ್ಯವಾಗುವುದಿಲ್ಲ ? ಅದೇ ಸೈರನ್ ನಲ್ಲೇ ಮನಸ್ಸನ್ನು ಕೇಂದ್ರೀಕರಿಸು... " ಎಂದಿದ್ದರು ! ಅಂದರೆ... ಬದುಕಿನಲ್ಲಿ ಎದುರಾಗುವ ಅಡೆತಡೆಗಳನ್ನೇ - ಸಂಕಷ್ಟದಿಂದ ಮೇಲೇರುವ ಏಣಿಯಾಗಿ ಬಳಸಿಕೊಂಡಂತೆ; ಇರುವ ಸನ್ನಿವೇಶವನ್ನೇ ಸಾಧನೆಯ ದಾಳವಾಗಿಸಿಕೊಳ್ಳುವ ಸುಲಭ ಸೂತ್ರವಿದು

ಸಮರ್ಥ ಗುರುವಿನ ಮಾರ್ಗದರ್ಶನದಲ್ಲಿ, "ಸಂಗಂ ತ್ಯಕ್ತ್ವಾ" ಭೂಮಿಕೆಯಲ್ಲಿ, ಏಕಧ್ಯೇಯದ ಇಚ್ಛಾಶಕ್ತಿಯುಳ್ಳವರಿಗೆ ಮಾತ್ರ ಸಾಧ್ಯವಾಗುವ ಸಾಹಸವಿದು. ಸಂಬಂಧಗಳನ್ನು ಜೋಡಿಸುವುದು ಮುರಿಯುವುದು, ಸಿದ್ಧಾಂತದ ಹೆಸರಿನಲ್ಲಿ ಮೇಲಾಟ ನಡೆಸುವುದು - ನರಳುವುದು, ಸ್ವಾರ್ಥಪ್ರೇರಿತ ಗುಂಪುಗಾರಿಕೆ ನಡೆಸುವುದು ಕುಟಿಲ ಮಾರ್ಗ ಹಿಡಿಯುವುದು... ಮುಂತಾದ ಎಲ್ಲ ಬಗೆಯ ಸಾಮಾಜಿಕ ತರಲೆಗಳಿಗೂ - "ಸಂಗದ" ಅತಿಯಾದ ಅವಲಂಬನೆಯೇ ಮುಖ್ಯ ಕಾರಣ. ಏಕೆಂದರೆ,  ಕಲಬೆರಕೆಯಿಲ್ಲದ ಸತ್ಸಂಗವನ್ನು ಅಪೇಕ್ಷಿಸುವುದೂ ಕಷ್ಟಕರವೇ ಆಗಿದೆ. ಆದ್ದರಿಂದ ಯಾವುದೇ "ಸಂಗ" ಎಂಬುದು ಸಂಪೂರ್ಣ  ಭದ್ರ ಆಗಿರುವುದಿಲ್ಲ. ಹಂಸಕ್ಷೀರ ನ್ಯಾಯದಂತೆ, ಸದ್ವಿಚಾರಗಳನ್ನು ಮಾತ್ರ ಹೀರಿಕೊಳ್ಳುವ ಶಕ್ತಿಯು ಎಲ್ಲರಲ್ಲಿ ಇರುವುದೂ ಅಸಾಧ್ಯ. ಆದ್ದರಿಂದಲೇ ಸ್ವಲ್ಪ ಎಚ್ಚರ ತಪ್ಪಿದರೂ "ಸಂಗ" ಎಂಬುದು - ಒಂದಲ್ಲ ಒಂದು ಹಂತದಲ್ಲಿ ದಾರಿ ತಪ್ಪಿಸಲೂ ಬಲ್ಲದು. ಸಂಗ ಅಥವ ಆಸಕ್ತಿಯು - ಯಾವುದೇ ಸಾಮಾಜಿಕ ಬದುಕುಗಳ ಜುಟ್ಟನ್ನೇ ಹಿಡಿದು ಅಲುಗಾಡಿಸುವಷ್ಟು ಕೊಬ್ಬುವಂತಾದಾಗ - ಮನಸ್ಸು ಸ್ವಚ್ಛಂದ ಹರಿದಾಟಕ್ಕೆ ತೊಡಗುತ್ತದೆ. ಹಾಗೆ ಅಂಕೆ ತಪ್ಪಿದ ಮನಸ್ಸಿನಲ್ಲಿ ಕ್ಷೋಭೆ ತಲ್ಲಣಗಳು ಸಾಮಾನ್ಯ. 

ಯಾವುದೇ ಪೀಡಿಸುವಂತಹ ಆಸಕ್ತಿಗಳು ಯಾರೋ ತೊಡುವ ಬಟ್ಟೆಯ ಬಣ್ಣದಿಂದಲೇ ಬದಲಾಗದು; ಅಸಂಗತ್ವವೇ ಸನ್ಯಾಸ. ಅದಕ್ಕೆ ಬಾಹ್ಯ ಬಟ್ಟೆಯಲ್ಲ - ಭಾವ ಸ್ಥಿರತೆಯ, ಭಾವ ಪಾವಿತ್ರ್ಯದ ಬಟ್ಟೆಯ ಅಗತ್ಯವಿದೆ. ಭಾವ ಪಾವಿತ್ರ್ಯಕ್ಕೆ - ಯಾವುದೇ ಬಾಹ್ಯ ಸಂಕೇತದ ಅಗತ್ಯವೇ ಇಲ್ಲ. ಅಧ್ಯಾತ್ಮ ಸಾಧನೆಯ ಹೆದ್ದಾರಿಯೇ ಇದು. ಉತ್ತಮ ಗೃಹಸ್ಥರಾಗುವುದು, ಉತ್ತಮ ಸನ್ಯಾಸಿಯಾಗುವುದು ಅಥವ ಉತ್ತಮ ಮನುಷ್ಯರಾಗುವುದು... ಹೀಗೆ ಯಾವುದೇ ಉತ್ತಮಿಕೆಯು ಆಧ್ಯಾತ್ಮಿಕ ಸಾಧನೆಗಳೇ ಆಗುತ್ತವೆ.

ಅಧ್ಯಾತ್ಮವು ಶಕ್ತಿಪ್ರದರ್ಶನದ ಸರಕೆ ?   

ಯಾವುದೇ ಅಧ್ಯಾತ್ಮ ವಿಚಾರಗಳ ಬೋಧನೆಯಿಂದ ದೊಡ್ಡ ಜನಸಂತೆಯನ್ನು ಏಕಕಾಲದಲ್ಲಿ ಜಾಗ್ರತಗೊಳಿಸುವುದು ಸಾಧ್ಯವೆ ? ಹಾಗೇನಾದರೂ ಕಂಡರೆ - ಅದು ನಿಶ್ಚಯವಾಗಿ - ಪವಾಡ; ಕ್ಷಣಿಕವಾಗಿ ಜನರನ್ನು ಮರುಳುಗೊಳಿಸುವಂತಹ ಕಣ್ಕಟ್ಟಿನ ಸಿದ್ಧಿ. ಆಧ್ಯಾತ್ಮಿಕ ಹಂತದ ಪ್ರಾರಂಭದಲ್ಲಿ ಸಾಧಕನನ್ನು ಲೋಭಕ್ಕೆ ಒಳಪಡಿಸಿ, ಅವರನ್ನು ಪರೀಕ್ಷಿಸಲು ಒದಗುವ "ಸಿದ್ಧಿ" ಅದು. "ಅಧ್ಯಾತ್ಮದ ಹಾದಿಯಲ್ಲಿ ಮುನ್ನಡೆಯಬಯಸುವ ಸಾತ್ವಿಕ ಸಾಧಕರು - ಯಾವುದೇ ಸಿದ್ಧಿಗಳನ್ನು ಬಳಸಬಾರದು; ಅದರಿಂದ ಆಧ್ಯಾತ್ಮಿಕ ನಡಿಗೆಯು ನಿಂತುಹೋಗುತ್ತದೆ . ಅಮಾಯಕ ಸಾಧಕರನ್ನು ಪ್ರಪಾತಕ್ಕೆ ತಳ್ಳುವಂತಹ ಸಿದ್ಧಿಗಳನ್ನು ತಿರಸ್ಕರಿಸಿ ಮುನ್ನಡೆಯಬೇಕು..." ಎಂದು ಪರಮಹಂಸರು ಎಚ್ಚರಿಸಿದ್ದರು. ಅಂತಹ ಕೈಚಳಕ - ಚಮತ್ಕಾರಗಳು ಜನರನ್ನು ಮೋಸಗೊಳಿಸುತ್ತ ಮನರಂಜನೆ ನೀಡಬಹುದಲ್ಲದೆ ಯಾವ ಬದುಕಿಗೂ ಉಪಕರಿಸುವಂಥದ್ದಲ್ಲ. ತಾತ್ಕಾಲಿಕವಾಗಿ ಮರುಳುಗೊಳಿಸುವ ಅಂತಹ ಹಾದಿಯನ್ನು ಮೊಂಡುತನದ ಹಗಲುವೇಷದ ಲೌಕಿಕರಿಗೆ ಬಿಟ್ಟುಕೊಟ್ಟು - ಕಾವಿಧಾರಿಗಳಾದವರು ಶಾಶ್ವತ ಸತ್ಯದ ಜೀವಂತ ಮಾದರಿಗಳಾದರೆ ಸಾಕಾಗುತ್ತದೆ. ಶ್ರೀ ರಾಮಕೃಷ್ಣರು ಅಂತಹ ಒಂದು ಮಾದರಿ. ಸ್ವತಃ ಕಾವಿ ಧರಿಸದೆ ಪರಮಹಂಸರಿಗೆ ವೈಯ್ಯಕ್ತಿಕವಾಗಿ ಸಾಧಿಸಲು ಸಾಧ್ಯವಾದ ಅಮೋಘ ಸಾಧನೆಗೆ ಶರಣಾಗುವವರಿಗೆ ಅಥವ ಯಾವುದೇ ಸತ್ಯಾನ್ವೇಷಿ ಭಕ್ತರಿಗೆ, ಅಕಸ್ಮಾತ್ ಆಚಾರ ವ್ಯವಹಾರ ಶುದ್ಧತೆಯನ್ನು ವೇಷಕ್ಕೆ ತಕ್ಕಂತೆ  ಉಳಿಸಿಕೊಳ್ಳಲಾಗದಂತಾದಾಗ - ಯಾವುದೇ ಹೊರ ವೇಷಗಳ ಅವಲಂಬನೆಯಾದರೂ ಯಾಕೆ ಬೇಕು ?

ಕಾವಿ ಮತ್ತು ಸನ್ಯಾಸದ ಪಾವಿತ್ರ್ಯವು ಉಳಿಯಲಿ...

ಹಿಂದೊಮ್ಮೆ ವಿಶೇಷ ಗೌರವಕ್ಕೆ ಪಾತ್ರವಾಗಿದ್ದ ಕಾವಿಯುಡುಗೆಯ ಕುರಿತು ಇಂತಹ ವಿಪರೀತ ವಿಚಾರಗಳು ಸಾಮಾನ್ಯ ಜನರಲ್ಲಿ - ಈಗೀಗ  ಮೂಡುತ್ತಿರುವುದಾದರೂ ಏಕೆ ? ಅಕಸ್ಮಾತ್ ಸಾಮಾನ್ಯ ಜನರಿಗಿಂತ ಭಿನ್ನವಾದ ಬದುಕನ್ನು ಸಾಗಿಸುತ್ತಿರುವವರು ಎಂಬ ಕಲ್ಪನೆಯನ್ನು ಮೂಡಿಸುವ ಉದ್ದೇಶ ಅಥವ ಅಧ್ಯಾತ್ಮದ ಬಹಿರಂಗ ವ್ಯಾಪಾರ ನಡೆಸುವ ಉತ್ಸಾಹವು ಯಾವುದೇ ಕಾವಿಗಳಿಗೆ ಇದ್ದರೆ...  ಅವರ ಸಾಧನೆಗಳೇ ಅಂತಹ ಪ್ರತ್ಯೇಕತೆಯನ್ನು ಬಿಂಬಿಸಬೇಕಲ್ಲದೆ ಭಕ್ತಗಡಣದ ತಲೆಲೆಕ್ಕಕ್ಕೆ ಮತ್ತು ಸುದ್ದಿ ಮಾಡುವ ಚಪಲಕ್ಕೆ ಮಣೆಹಾಕಿದಂತಿರಬಾರದು. "ಜನಸಂಖ್ಯೆಯ ಬಲ" ಎಂಬ ಹೊರವೇಷದ ಮೂಲಕ ಜಗತ್ತನ್ನು ಪ್ರಭಾವಿಸಿ ತಮ್ಮತ್ತ ಸೆಳೆದುಕೊಂಡು, ಅನಂತರ ಪುಕ್ಕಟೆ ಉಪದೇಶಿಸುವ ಸಾಹಸಕ್ಕಿಳಿಯುವುದೂ - ಫಲಕಾಣಿಸದ ದೌರ್ಬಲ್ಯವೇ ಆದೀತು. ಸನಾತನವಾದ ಅಧ್ಯಾತ್ಮದ ಸಂಕೇತವಾದ ಸನ್ಯಾಸ ಮತ್ತು ಕಾವಿಯು ಲೋಕದ ಮಾತಿಗೆ ಯಾವತ್ತೂ ವಸ್ತುವಾಗಬಾರದು. 

ಜನಸಂತೆಯ ತಲೆಲೆಕ್ಕದ ಮರುಳಿನಿಂದ ಯಾವುದೇ ಆಧ್ಯಾತ್ಮಿಕ ಕ್ರಾಂತಿಯು ಸಾಧ್ಯವೆ ? ಆತ್ಮೋದ್ಧಾರ ಸಾಧ್ಯವೆ ? ಯೋಚಿಸಬೇಕು. ಸಂತೆಯ ಪ್ರಭಾವವು ಹಸರವು ಕಳೆಯುವಷ್ಟರಲ್ಲಿ ಇಳಿದುಹೋಗದೆ ? ಆದ್ದರಿಂದಲೇ - ಅಂದು ಶ್ರೀ ರಾಮಕೃಷ್ಣರು ಅಧ್ಯಾತ್ಮದ ಸಂಸ್ಕಾರವನ್ನು ಇಚ್ಛಾಶಕ್ತಿಯುಳ್ಳ ಆಯ್ದ ಅರ್ಹರಿಗೆ ಮಾತ್ರ ದಯಪಾಲಿಸಿದರು; ಸನ್ಯಾಸ ಮತ್ತು ಕಾವಿಯ ಮಾನವನ್ನು ಎತ್ತರಿಸಿದರು. ಶುದ್ಧ ಆಧ್ಯಾತ್ಮವನ್ನು ಪ್ರತಿಪಾದಿಸಿದರು.

ಸ್ವಾಮಿ ಅದ್ಭುತಾನಂದರ ಅದ್ಭುತ ವಿಚಾರ !



ಸ್ವಾಮಿ ಅದ್ಭುತಾನಂದರು (ಲಾಟೂ) ಶ್ರೀ ರಾಮಕೃಷ್ಣರು ಸೃಷ್ಟಿಸಿದ್ದ ಮಹಾ ವಿಸ್ಮಯ. ಅನಕ್ಷರಸ್ಥರಾಗಿದ್ದ ಲಾಟೂ ಮಹಾರಾಜರು ಶ್ರೀ ರಾಮಕೃಷ್ಣರ ನೇರ ಶಿಷ್ಯರಾಗಿದ್ದವರು. ಶ್ರೀ ರಾಮ ಹನುಮನ ಬಾಂಧವ್ಯವದು ! ಅದ್ಭುತಾನಂದರು ತಮ್ಮ ಗುರುಗಳ ಹೆಜ್ಜೆಯನ್ನೇ ಅನುಸರಿಸುತ್ತ ಅಧ್ಯಾತ್ಮದ ಹಾದಿಯಲ್ಲಿ ಸುಲಲಿತವಾಗಿ ನಡೆದು ಬಂದದ್ದು ಮತ್ತು ತಮ್ಮ ಸಾಮಾನ್ಯ ಜ್ಞಾನವನ್ನು ತ್ಯಾಗ ವೈರಾಗ್ಯಗಳಲ್ಲಿ ಅದ್ದಿ, ಆಧ್ಯಾತ್ಮದ ನೆಲೆಯಲ್ಲಿ ವಿಸ್ತರಿಸಿಕೊಂಡದ್ದು ಅದ್ಭುತ ಘಟನೆ ! ಸ್ವಾಮಿ ಅದ್ಭುತಾನಂದರು - ಅಧ್ಯಾತ್ಮದ ಇತ್ತೀಚಿನ ಅಪೂರ್ವ ಮಾದರಿಯೂ ಹೌದು !

1902 ರ ಅವಧಿಯಲ್ಲಿ ಸ್ವಾಮಿ ಅದ್ಭುತಾನಂದರು (ಲಾಟೂ ಮಹಾರಾಜ್) - ಶ್ರೀ ರಾಮಕೃಷ್ಣರ ಗೃಹಸ್ಥ ಶಿಷ್ಯರಾಗಿದ್ದ ಹರಮೋಹನ್ ಬಾಬುಗಳ ಮನೆಯಲ್ಲಿದ್ದರು. ಅದೊಂದು ದಿನ... "ಧರ್ಮಪ್ರಚಾರವನ್ನು ಹೇಗೆ ಮಾಡಬೇಕು ?" ಎಂಬ ವಿಚಾರದಲ್ಲಿ ಅಲ್ಲಿ ನಡೆದ ಸಂಭಾಷಣೆಯ ಮಧ್ಯೆ - ಸಾಂದರ್ಭಿಕವಾಗಿ ಅವರು ಹೇಳಿದ್ದ ಮಾತುಗಳು ಈಗಲೂ ಚಿಂತನಯೋಗ್ಯವೆನ್ನಿಸುತ್ತವೆ.

ಸ್ವಾಮಿ ಅದ್ಭುತಾನಂದರು ಅಂದು ಹೇಳಿದ್ದರು...

"ಡೋಲು ಬಾರಿಸಿದರೆ ಧರ್ಮಪ್ರಚಾರ ಆಗಿಹೋಗುತ್ತದೆಯೆ ? ಒಬ್ಬರು ಹೇಳುತ್ತ ಹೋದರೆ ಇತರರು ಅದನ್ನು ಸ್ವೀಕರಿಸಲು - ಧರ್ಮ ಎನ್ನುವುದೇನು ಹೊರಗಿನ ಪದಾರ್ಥವೆ ? ಧರ್ಮವನ್ನು ಬದುಕಾಗಿಸಿಕೊಳ್ಳುವ ಜ್ಞಾನವು - ಗಲಾಟೆ ಗೊಂದಲ ಊಟತಿಂಡಿಯ ನಿತ್ಯೋತ್ಸವದ ನಡುವೆ ಸಿಕ್ಕೀತೆ ? ಗದ್ದಲವಿದ್ದಾಗ ಜನರು ಬಹಿರ್ಮುಖಿಯಾಗುತ್ತಾರೆ. ಆದರೆ ಅಂತರ್ಮುಖಿಗಳಾಗದೆ ಧರ್ಮವು ಒಡಮೂಡುವುದಿಲ್ಲ. ನೋಡಿ... ಇದೇ ಕೊಲ್ಕತ್ತಾ ನಗರದಲ್ಲಿ ಕೆಲವು ವರ್ಷಗಳ ಹಿಂದೆ ಯಾವ ರೀತಿಯಲ್ಲಿ ಧರ್ಮದ ಅಲೆ ಎದ್ದಿತ್ತು ! ಗಲ್ಲಿಗಲ್ಲಿಯ ತಿರುವಿನಲ್ಲಿ ಪಾದ್ರಿಗಳು ಲೆಕ್ಚರ್ ಗಳನ್ನು ಕೊಡುತ್ತಿದ್ದರು. ಬ್ರಹ್ಮಸಮಾಜದವರು ಉಪನ್ಯಾಸಗಳನ್ನು ಮಾಡುತ್ತಿದ್ದರು. ಹರಿಸಭೆಗಳಲ್ಲಿ ಕೀರ್ತನೆಗಳು ನಡೆಯುತ್ತಿದ್ದವು. ನೆನಪಿಸಿಕೊಳ್ಳಿ. ಒಂದು ದಿನ ಕೇಶವಚಂದ್ರಸೇನರು ಉಪನ್ಯಾಸ ಮಾಡಿದರು; ಮಾರನೆಯ ದಿನ - ಕ್ರಿಶ್ಚಿಯನ್ ಕಾಳಿ (ರೆವರೆಂಡ್ ಕಾಳಿಕೃಷ್ಣ ಬ್ಯಾನರ್ಜಿ) ಲೆಕ್ಚರ್ ಕೊಟ್ಟರು. ಜನ ಸೇರಿದರು; ಕೇಳಿದರು. ಮತ್ತೊಂದು ದಿನ ಕೃಷ್ಣಾನಂದ ಸ್ವಾಮಿ ಬಂದು ಲೆಕ್ಚರ್ ಕೊಟ್ಟರು. ಜನ ಅದನ್ನೂ ಕೇಳಿದರು. ಒಂದು ಗುಂಪಿನ ಪ್ರವಚನಕಾರರು ಹಿಂದೂ ಧರ್ಮವನ್ನು ವಾಚಾಮಗೋಚರವಾಗಿ ಬೈದರು. ಬೇರೊಂದು ಗುಂಪು ಹಿಂದೂ ಧರ್ಮವನ್ನು ಹಾಡಿ ಹೊಗಳಿದರು. ಶಶಿಧರ ಪಂಡಿತನ ಗುಂಪಿನವರಂತೂ ಧರ್ಮದ ವಿನೂತನ ವ್ಯಾಖ್ಯೆಯನ್ನೇ ಪ್ರಾರಂಭಿಸಿದರು. ಎಷ್ಟು ಜಬರದಸ್ತಿನಿಂದ ಧರ್ಮದ ಪ್ರಚಾರ ನಡೆಯಿತು... 

ಆದರೆ ಫಲ ಏನಾಯಿತು ? ಉಪನ್ಯಾಸಕರು ಬೆಳೆದರೆ ? ತಪಸ್ವಿಗಳು ಬೆಳೆದರೆ ? ಈಗ ಆ ಗುಂಪುಗಳೆಲ್ಲ ಎಲ್ಲಿ ಹೋದವು ? ಕೇಳಿದವರು ಏನಾದರು ? ಆಗಿನ ಜೋರು ಆಗಿನ ಆವೇಶಗಳು ಈಗ ಕಾಣಿಸುತ್ತಿದೆಯೆ ? ನೀವು ಸರಿಯಾಗಿ ಅರ್ಥ ಮಾಡಿಕೊಳ್ಳಿ... ಬೋಧಿಸುವ ವ್ಯಕ್ತಿಯ ಆಂತರ್ಯದಲ್ಲಿ ಹುರುಳಿಲ್ಲದಿದ್ದರೆ ಆತ್ಮಜಾಗ್ರತಿಯ ವ್ಯಾಕುಲತೆ ಇಲ್ಲದಿದ್ದರೆ ಬರೀ ಮಾತಿನಿಂದ ಏನೂ ಪ್ರಯೋಜನವಿಲ್ಲ. ಬೋಧಕರ ಆಂತರ್ಯದಲ್ಲಿ ಶ್ರದ್ಧೆ, ತ್ಯಾಗ, ವೈರಾಗ್ಯ, ಪ್ರೇಮ - ಅಗತ್ಯವಾಗಿ ಇರಲೇಬೇಕು. ಆಗ ಮಾತ್ರ - ಜನರಲ್ಲಿ ವಿಶ್ವಾಸ ಹುಟ್ಟಿ ಪರಿವರ್ತನೆಗೆ ಪ್ರೇರಣೆ ದೊರೆಯುತ್ತದೆ...."  



ಲಾಟು ಮಹಾರಾಜರು ತಮ್ಮ ಮಾತನ್ನು ಮುಂದುವರಿಸುತ್ತ... - "ನಿಮ್ಮ ಕಣ್ಣಮುಂದಿರುವ ದೃಷ್ಟಾಂತವನ್ನೇ ನೋಡಿ. ಸ್ವಾಮಿ ವಿವೇಕಾನಂದರು ಎಷ್ಟು ಕಠೋರ ಸಾಧನೆ ಮಾಡಿದರು ! ಅವರಿಗೆ ಲೋಕ ಶಿಕ್ಷಣ ನೀಡುವಂತೆ ಶ್ರೀ ರಾಮಕೃಷ್ಣರೇ - ಆದೇಶಿಸಿದ್ದರು. ನರೇಂದ್ರನ ಸಂಘಟನಾ ಶಕ್ತಿ, ಗ್ರಹಣ ಶಕ್ತಿ, ಸ್ಮರಣ ಶಕ್ತಿ, ಏಕಾಗ್ರತಾ ಶಕ್ತಿ, ವಿಶಾಲ ಓದು - ಜ್ಞಾನ ಶಕ್ತಿ, ಭಾಷಾ ಪ್ರೌಢಿಮೆ, ವಿಷಯವನ್ನು ಪ್ರತಿಪಾದಿಸುವ ಶಕ್ತಿ, ಜನಸಮ್ಮೋಹಕ ಶಕ್ತಿಗಳನ್ನೆಲ್ಲ ಗುರುತಿಸಿದ್ದ ಶ್ರೀ ರಾಮಕೃಷ್ಣರು ತಮ್ಮ ಶಿಷ್ಯ ನರೇಂದ್ರನನ್ನು ಲೋಕಗುರುವಾಗುವಂತೆ ಆದೇಶಿಸಿದ್ದರು. ಗುರುವಿನಿಂದಲೇ ನಿಯುಕ್ತರಾದ ಬೋಧಕರವರು ! ಆದ್ದರಿಂದಲೇ ವಿವೇಕಾನಂದರ ಮಾತುಗಳನ್ನು ಜನರು ಗ್ರಹಿಸಿದರು; ಸ್ವೀಕರಿಸಿದರು. ಚಿಕಾಗೋದಲ್ಲಿ ವಿವೇಕಾನಂದರು ನೀಡಿದ್ದ ಒಂದೇ ಒಂದು ಲೆಕ್ಚರಿನ ನಂತರ ಚಕ್ರ ತಿರುಗತೊಡಗಿತು. ಯಾರೂ ಎಂದೂ ಊಹಿಸಲಾರದ ರೀತಿಯಲ್ಲಿ ಘಟನೆಗಳು ಸಂಭವಿಸುತ್ತಲೇ ಹೋದವು... ಇಂತಹ ವಿಸ್ಮಯವನ್ನು ಎಲ್ಲರೂ ಮಾಡಿಬಿಡಲು ಸಾಧ್ಯವೆ ? ಜನಸಾಮಾನ್ಯರನ್ನು ಉಪನ್ಯಾಸಗಳಿಂದಲೇ ಪ್ರಭಾವಿತಗೊಳಿಸುವುದು - ಎಲ್ಲರಿಂದಲೂ ಸಾಧ್ಯವಾಗದು. ಇಂದಿನ ಸನ್ನಿವೇಶದಲ್ಲಿ... ಉಪನ್ಯಾಸಗಳಿಂದ ಯಾವ ಕಾರ್ಯ ಸಾಧಿಸಬಹುದೋ ಅದಕ್ಕಿಂತಲೂ ಹೆಚ್ಚಿನ ಪ್ರಯೋಜನವನ್ನು ಸದ್ಗ್ರಂಥಗಳ ಅಧ್ಯಯನದಿಂದ ಪಡೆಯಬಹುದು. ಉಪನ್ಯಾಸಕರೊಂದಿಗೆ ಕೇಳುಗರ ಸಂಪರ್ಕವು ಸ್ವಲ್ಪ ಸಮಯದ್ದು. ಆದರೆ ಗ್ರಂಥಾಧ್ಯಯನದಲ್ಲಿ ಲೇಖಕರೊಂದಿಗೆ ಓದುಗರ ಸಂಬಂಧವು ದೀರ್ಘಕಾಲದ್ದು ಮತ್ತು ಆತ್ಮೀಯವಾದದ್ದು. ಸದ್ಗ್ರಂಥಗಳ ಅಧ್ಯಯನದಿಂದ ಸಾಧುಸಂಗದ ಫಲವೂ ಲಭಿಸುತ್ತದೆ..."

ಬಾಡಿಗೆ ಭಕ್ತರನ್ನು ಗುಡ್ಡೆ ಹಾಕುವುದರಿಂದ ಮತ್ತು ಅವರಿಗೆ ಬೋಧಿಸುವುದರಿಂದ ಪ್ರಯೋಜನವಾದರೂ ಏನು ? ಲಾಟುಮಹಾರಾಜರು ಆಧ್ಯಾತ್ಮಿಕ ಒಲವುಳ್ಳವರಿಗೆ ಹೇಳಿದ - ದಾರಿದೀಪದಂತಿರುವ ಸರಳ ಹಿತನುಡಿಯಿದು.

ಸನ್ಯಾಸವು ಅನಿವಾರ್ಯವೆ ?

ಸತ್ಯ, ತ್ಯಾಗ, ಭಕ್ತಿ, ವಿರಕ್ತಿ, ವೈರಾಗ್ಯ, ಅನಾಸಕ್ತಿ... ಮುಂತಾದ ಆಧ್ಯಾತ್ಮಿಕ ಮೌಲ್ಯಗಳನ್ನಲ್ಲದೆ - ಸನ್ಯಾಸದ ಜುಟ್ಟು ಬಟ್ಟೆಗಳ ವೇಷವನ್ನು ಶ್ರೀ ರಾಮಕೃಷ್ಣರು ಎಲ್ಲೂ ಪ್ರತಿಪಾದಿಸಿದಂತೆ ಕಾಣುವುದಿಲ್ಲ. ಆದರೆ ಹೆಂಡತಿ ಮಕ್ಕಳನ್ನು ಹೊಂದುವ ಸಂಸಾರ, ಜಮೀನು ಮನೆಗಳನ್ನು ಹೊಂದುವ ವ್ಯಾಮೋಹ, ದುಡ್ಡುದುಗ್ಗಾಣಿಯ ಸೆಳೆತಗಳನ್ನು ಬೊಟ್ಟಿಟ್ಟು ತೋರಿಸಿದ್ದರು. "ಕಾಮ ಕಾಂಚನಗಳೇ ದುಃಖದ ಮೂಲ; ಭಗವಂತನಿಂದ ವಿಮುಖಗೊಳಿಸುವ ಸಾಧನಗಳು..." ಎನ್ನುತ್ತಲೇ ಬಂದಿದ್ದರು. ಅಂದರೆ... ಪರೋಕ್ಷವಾಗಿ ಸನ್ಯಾಸದತ್ತಲೇ ಬೆಟ್ಟು ಮಾಡಿದ್ದರು. ಭಾವ ಸನ್ಯಾಸಕ್ಕೆ ಪ್ರೇರಣೆ ನೀಡಿದ್ದರು. ಆದ್ದರಿಂದಲೇ ಶ್ರೀ ರಾಮಕೃಷ್ಣರು - ಬಾಹ್ಯಸೌಂದರ್ಯಕಾರಕ ವೇಷಭೂಷಣಗಳ ಅವಸರದಲ್ಲಿ ದೇಹವನ್ನು ಉಜ್ಜಿದವರಲ್ಲ; ಮನಸ್ಸು ಮತ್ತು ಆಂತರಿಕ ಭಾವವನ್ನು ತಾಳ್ಮೆಯಿಂದ ಉಜ್ಜಿದವರು. ಅಧ್ಯಾತ್ಮ ಭಾವಪ್ರೇರಣೆಗೆ ಆದ್ಯತೆ ನೀಡಿದವರು. ಅವರ ದೃಷ್ಟಿಯಲ್ಲಿ - ಮೂಲಭಾವವು ವ್ಯವಸ್ಥಿತವಾಗಿ ಪುಷ್ಟಿಗೊಂಡಾಗ ಅಧ್ಯಾತ್ಮವು ತಾನಾಗಿಯೇ ಸಂಭವಿಸುತ್ತದೆ ! ಆದ್ದರಿಂದಲೇ ಭಗವಂತನ ವ್ಯಾಪಾರದಲ್ಲಿ ತೊಡಗಿಕೊಳ್ಳಲು ಇಚ್ಛಿಸುವವರು ಲೌಕಿಕ ವ್ಯಾಮೋಹ ಸೆಳೆತಗಳಿಂದ ದೂರವಿರುವಂತೆ - ತಾವು ಸ್ವತಃ ಬದುಕಿ ತೋರಿಸಿಯೇ ಬೋಧಿಸುತ್ತಿದ್ದವರು - ಶ್ರೀ ರಾಮಕೃಷ್ಣ ಪರಮಹಂಸರು.

ಸ್ವತಃ ಹೃದ್ಗತಗೊಳಿಸಿಕೊಳ್ಳಲಾಗದ ಯಾವುದೇ ವಿಷಯಗಳನ್ನು ಇತರರಿಗೆ ಬೋಧಿಸಿದರೆ ಅವು ಜನರನ್ನು ಆಕರ್ಷಿಸುವುದಿಲ್ಲ. "ಜೋನಿಬೆಲ್ಲದ ಗುಡಾಣವನ್ನು ಪಕ್ಕದಲ್ಲೇ ಇರಿಸಿಕೊಂಡವರು - "ಬೆಲ್ಲ ತಿನ್ನಬಾರದು" ಎಂದು ಉಪದೇಶಿಸಿದರೆ ಅದು ಜನರನ್ನು ತಲುಪೀತೆ ?" ಎಂದು ಪರಮಹಂಸರು ಕೇಳಿದ್ದರು. ತ್ಯಾಗೀ ಸಾಧುಗಳು ಬೋಧಿಸುವ ವಿಚಾರಗಳನ್ನು ಮಾತ್ರ ಜನರು ಸ್ವಯಂಪ್ರೇರಿತರಾಗಿ ಸ್ವೀಕರಿಸಿ ಆಚರಿಸುವಂತಹ ಪ್ರೇರಣೆ ಸಿಗುತ್ತದೆ. ಆದ್ದರಿಂದ ಸಮಾಜಕ್ಕೆ ಉಪದೇಶಿಸಲೂ ಅರ್ಹತೆ ಬೇಕು; ಬೋಧಿಸುವ ವಿಚಾರಗಳು ಇತರರನ್ನು ತಲುಪಬೇಕಾದರೆ ಸ್ವಾರ್ಥ ಸ್ವಂತದ ಮೋಹವಿಲ್ಲದ ತ್ಯಾಗೀ ಭಕ್ತರು ಮಾತ್ರ ಈ ಹೊಣೆಯನ್ನು ನಿಭಾಯಿಸಬೇಕು - ಎಂಬುದು ಶ್ರೀ ರಾಮಕೃಷ್ಣರ ಸಿದ್ಧಾಂತವಾಗಿತ್ತು. 

ಪರೋಕ್ಷವಾಗಿ... ಇದೇ ಸನ್ಯಾಸ. ಪ್ರಪಂಚದ ಮೋಹವನ್ನು ಬಿಡುವುದೇ ಸನ್ಯಾಸ. ಆತ್ಮಭಾವದಲ್ಲೇ ಪೂರ್ತಿಯಾಗಿ ನ್ಯಾಸ (ಒತ್ತೆಯಾಗಿರುವ) ಗೊಳಿಸಲ್ಪಟ್ಟವನೇ ಸನ್ಯಾಸಿ. ಅದೊಂದು ಶುದ್ಧ ಮನೋವ್ಯಾಪಾರ; ಸನ್ಯಾಸದ ಹುರುಳೇ ತ್ಯಾಗ. ಮನೋವ್ಯಾಪಾರದಲ್ಲಿ ಸಿದ್ಧಿ ಪಡೆದವರು ಮಾತ್ರ ಉಪದೇಶಿಸುವ ಅರ್ಹತೆ ಹೊಂದುತ್ತಾರೆ ! ಆದ್ದರಿಂದಲೇ ಶ್ರೀ ರಾಮಕೃಷ್ಣರು - ತಮ್ಮ ಪಟ್ಟ ಶಿಷ್ಯ ನರೇಂದ್ರನನ್ನು (ಸ್ವಾಮಿ ವಿವೇಕಾನಂದ) ಲೋಕಶಿಕ್ಷಣಕ್ಕೆ ನೇಮಿಸಿದರು ! ಗುರುಕೃಪೆಗೆ ಪಾತ್ರರಾಗಿದ್ದ ನರೇಂದ್ರನಾಥನು ಸ್ವಾಮಿ ವಿವೇಕಾನಂದನಾಗಿ ತನ್ನ ಹೆತ್ತವರು, ಗುರು, ಗುರುಬಾಂಧವರು, ಜತೆಗೆ ಹಿಂದೂಸ್ಥಾನದ ಹಿರಿಮೆಗರಿಮೆಯನ್ನು ಜಗತ್ತಿನೆಲ್ಲೆಡೆ ವ್ಯಾಪಿಸುವಂತಹ ಬೋಧನೆಗೈದು ಸಾಧನೆಗೆ ಮಾದರಿಯಾದದ್ದು - ನಾವು ಕಂಡ ವಾಸ್ತವ. 

ಹೀಗಿದ್ದೂ... ಶ್ರೀ ರಾಮಕೃಷ್ಣರು ತಮ್ಮ ನಿರ್ಯಾಣದ ಅವಧಿಯಲ್ಲಿ - ಅಧ್ಯಾತ್ಮಭಾವಕ್ಕೆ ಸಮರ್ಪಿಸಿಕೊಳ್ಳುವ ಸೂಚನೆ ನೀಡುವಂತೆ - ತಮ್ಮ ಅಂತರಂಗದ ಶಿಷ್ಯರಿಗೆ ಕಾವಿಬಟ್ಟೆಗಳನ್ನು ಹಂಚಿದ್ದರಂತೆ. ಹೊರವೇಷದಿಂದ ಆಕರ್ಷಿಸಿಕೊಂಡ ನಂತರವೇ ತಮ್ಮ ಮುಂದಿನ ತಲೆಮಾರುಗಳಿಗೆ ತಲುಪುವಂತೆ ತತ್ವಪ್ರಸಾರ ಮಾಡುವುದು ಸಾಧ್ಯವಾಗುತ್ತದೆ - ಎಂಬ ಪೂರ್ವಸ್ಮರಣೆ ಅವರಿಗಾಗಿತ್ತೆ ? ಅಥವ... ಅದಾಗಲೇ ತಮ್ಮ ಮಾರ್ಗದರ್ಶನದಂತೆ ವ್ಯಕ್ತಿತ್ವವನ್ನು ಹದಗೊಳಿಸಿಕೊಂಡು - ಉಪದೇಶ ನೀಡಬಲ್ಲ ಅರ್ಹತೆಯನ್ನು ಬೆಳೆಸಿಕೊಂಡ ತಮ್ಮ ಅಂತರಂಗದ ಶಿಷ್ಯರನ್ನು - ಕಾವಿಯ ಸಂಕೇತದಿಂದ ಭಾವನಾತ್ಮಕವಾಗಿ ಮಿದುಗೊಳಿಸಿ, ಅಧ್ಯಾತ್ಮದ ಹಾದಿಯಲ್ಲಿ ಅವರನ್ನು ಬಲವಾಗಿ ಕಟ್ಟಿಡುವ ಪೂರ್ವ ಪ್ರಯಾಸವಾಗಿದ್ದಿರಲೂಬಹುದೆ ? ಏನೇ ಇದ್ದರೂ... ಅವರ ಶಿಷ್ಯ ಪರಂಪರೆಯು ಶ್ರೀ ರಾಮಕೃಷ್ಣರ ಸಿದ್ಧಾಂತವನ್ನು ಅನುಸರಿಸುತ್ತ ಎತ್ತಿ ಹಿಡಿಯುತ್ತ - ಸಮರ್ಥವಾಗಿ ಗುರುಕಾಣಿಕೆನ್ನು ಸಲ್ಲಿಸುತ್ತಲೇ ಬಂದಿದೆ. ಇವತ್ತಿಗೂ ಶ್ರೀ ರಾಮಕೃಷ್ಣ ಮಿಶನ್ - ಆಶ್ರಮಗಳ ಸನ್ಯಾಸಿಗಳು ಆದರ್ಶಪ್ರಾಯರಾಗಿಯೇ ಉಳಿದಿರುವುದನ್ನೂ ನೋಡಬಹುದು.

ಶ್ರೀ ರಾಮಕೃಷ್ಣ ಸಂಘವು - ಸನ್ಯಾಸದೀಕ್ಷೆ ನೀಡಲು - ಅಂದಿನಿಂದಲೂ ಕಠಿಣ ಶಿಸ್ತಿನ ಸೂತ್ರಗಳನ್ನು ಅವಲಂಬಿಸುತ್ತ ಬಂದಿದೆ. ಆಯ್ದ ಕೆಲವು ಹಿರಿಯ ಸನ್ಯಾಸಿಗಳು ಮಾತ್ರ ಹೊಸ ಪ್ರವೇಶಿಗರಿಗೆ ಸನ್ಯಾಸ ದೀಕ್ಷೆ ನೀಡುವ ಪದ್ಧತಿಯು ಅಲ್ಲಿ ಈಗಲೂ ಮುಂದುವರಿದಿದೆ. ಶ್ರೀಮಾತೆ ಶಾರದಾದೇವಿಯವರು ಮಾತ್ರ ಆಯ್ದ ಕೆಲವು ಸಂದರ್ಭಗಳಲ್ಲಿ ಉದಾರವಾಗಿ "ಮಂತ್ರ ದೀಕ್ಷೆ" ನೀಡಿದ್ದು ಬಿಟ್ಟರೆ - ಸನ್ಯಾಸ ಪ್ರವೇಶದ ಹಂತದಲ್ಲಿ ಮಾತ್ರ ತುಂಬ ಎಚ್ಚರ ವಹಿಸುತ್ತಿರುವ ಹಿನ್ನೆಲೆಯು - ಶ್ರೀ ರಾಮಕೃಷ್ಣ ಸಂಘಕ್ಕಿದೆ. ಸನ್ಯಾಸ ದೀಕ್ಷೆಯ ನಂತರವೂ ಕಟ್ಟುನಿಟ್ಟಿನ ನಿಯಮಗಳ ವ್ಯಾಪ್ತಿಯಲ್ಲಿಯೇ ಸಂಚರಿಸಬೇಕಾದ ಶಿಸ್ತು - ಈಗಲೂ ರಾಮಕೃಷ್ಣ ವಲಯದಲ್ಲಿದೆ. ಅಲ್ಲಿ - ಸನ್ಯಾಸದ ಬಣ್ಣ ಮಾಸಿಲ್ಲ; ಧರ್ಮಪ್ರಚಾರದ ಅಬ್ಬರವು ಕಾಣುವುದಿಲ್ಲ; ಕೇವಲ ಧಾರ್ಮಿಕ ವಿಚಾರಗಳ ತಂಪು ನೆರಳಿನ ಅನುಭವವಾಗುತ್ತದೆ ! ಆದ್ದರಿಂದಲೇ ಶ್ರೀ ರಾಮಕೃಷ್ಣರ ಸಾನ್ನಿಧ್ಯವು ವಿಶಿಷ್ಟವೆನ್ನಿಸುತ್ತ - ಇಂದಿಗೂ ಜನಮಾನಸವನ್ನು ಆಕರ್ಷಿಸುತ್ತ ಬಂದಿದೆ.

ಸನ್ಯಾಸ ದೀಕ್ಷೆಯ ಕಠಿಣ ಹಾದಿ...

ಆಧುನಿಕ ವಿದ್ಯಾಭ್ಯಾಸವನ್ನು ಪಡೆದುಕೊಂಡು ಯೌವನಾವಸ್ಥೆಯಲ್ಲಿರುವ, ಅಧ್ಯಾತ್ಮದ ಹಾದಿಯನ್ನು ಸ್ವ ಇಚ್ಛೆಯಿಂದ ಪ್ರವೇಶಿಸಬಯಸುವ, ಹುಟ್ಟಿದ ಮನೆಯನ್ನು ಕಷ್ಟಕ್ಕೆ ಒಳಪಡಿಸದೆ ಅಧ್ಯಾತ್ಮ ಕಾರ್ಯದಲ್ಲಿ ತೊಡಗಿಕೊಳ್ಳಲು ಇಚ್ಛಿಸುವ, ಹೆತ್ತತಾಯಿಯ ಪೂರ್ಣ ಒಪ್ಪಿಗೆಯಿರುವ ಸನ್ಯಾಸಾಕಾಂಕ್ಷೀ ಯುವಜನರನ್ನು ಬರಮಾಡಿಕೊಂಡು, ಹಲವಾರು ವರ್ಷಗಳ ಕಾಲ ತಮ್ಮ ಆಶ್ರಮದ ಪರಿಸರದಲ್ಲಿ - ಹಿರಿಯ ಸನ್ಯಾಸಿಗಳ ಕಣ್ಗಾವಲಿನಲ್ಲಿ ಉಳಿಸಿಕೊಂಡು, ಶಿಷ್ಯೇಚ್ಛುಗಳು ತಮ್ಮ ಬದುಕನ್ನು ಅಧ್ಯಾತ್ಮಕ್ಕೆ ಒಗ್ಗಿಸಿಕೊಳ್ಳುವ ವಿಧಾನ ಮತ್ತು ಅಭಿರುಚಿಗಳನ್ನು ಸಮೀಪದಿಂದ ಅವಲೋಕಿಸುತ್ತ - ಉಚ್ಚ ಶ್ರೇಣಿಯಲ್ಲಿ ಉತ್ತೀರ್ಣರಾಗಬಲ್ಲ ದೃಢತೆಯುಳ್ಳವರನ್ನು ಮಾತ್ರ ಶ್ರೀ ರಾಮಕೃಷ್ಣ ವಲಯವು ಸ್ವೀಕರಿಸುತ್ತ ಬಂದಿರುವುದರಿಂದ... ರಾಮಕೃಷ್ಣ ಪರಿಸರದ ಸನ್ಯಾಸೀ ವಲಯದಲ್ಲಿ ಈಗಲೂ ಪರಿಶುದ್ಧತೆಯ ಭಾಸವಾಗುತ್ತದೆ. ಸ್ವಚ್ಛತೆಗೆ ಹೆಚ್ಚು ಮಹತ್ವವನ್ನು ಕೊಟ್ಟ ವಲಯವಾಗಿರುವುದರಿಂದಲೇ ಸಣ್ಣ ಸಣ್ಣ ಅಪಸ್ವರಗಳನ್ನು ಉದಾರವಾಗಿ ಮತ್ತು ಸುದೀರ್ಘವಾಗಿ ಕ್ಷಮಿಸುವಂತಹ ಸನ್ನಿವೇಶವೂ ಇಲ್ಲಿಲ್ಲ. ಆದ್ದರಿಂದಲೇ - ವರ್ತನೆಗಳು ಅಕ್ಷಮ್ಯವೆಂದು ಕಂಡುಬಂದಾಗ ತಮ್ಮ ಸದಸ್ಯರನ್ನೇ ಸಂಘದಿಂದ ಉಚ್ಛಾಟಿಸಿದ ಬೆರಳೆಣಿಕೆಯ ಕೆಲವು ಸಂದರ್ಭಗಳೂ ಸಂಭವಿಸಿದ್ದಿದೆ.

ಅಧ್ಯಾತ್ಮವು - ಇಚ್ಛೆಯ ಅನುಯಾಯಿ...    

ತಾವೇ ಸ್ವತಃ ಇಚ್ಛಿಸುವವರನ್ನು ಕೈಹಿಡಿದು ಮುನ್ನಡೆಸುವುದು ಸುಲಭಸಾಧ್ಯವಾದ ಕೆಲಸ. ಆದರೆ ಇಂದಿನ ಆಧುನಿಕ ಶಿಕ್ಷಣವನ್ನು ತುರುಕಿದಂತೆ, ಇಚ್ಛೆಯಿಲ್ಲದವರನ್ನು ಅಧ್ಯಾತ್ಮ ಭಾವವಲಯಕ್ಕೆ ಎಳೆಯುವುದು ಮಾತ್ರ - ಅಸಾಧ್ಯದ ಕೆಲಸ. ಕೈತಪ್ಪಿಸಿಕೊಂಡು ಓಡಬಯಸುವ ಫಟಿಂಗ ಮನಸ್ಸುಗಳನ್ನು ಎಷ್ಟು ಕಾಲ ಎಳೆದು ಕಟ್ಟಿಹಾಕಬಹುದು ? ಕಾವಿಧರಿಸಿದ ಮಾತ್ರಕ್ಕೇ ಫಟಿಂಗತನ ಓಡುತ್ತದೆಯೆ ? ತ್ಯಾಗ ವೈರಾಗ್ಯ ಭಕ್ತಿಭರಿತ ಯಾವ ಮೌಲ್ಯಗಳೂ ಅವರವರಿಗೇ ಬೇಕೆಂದು ಅನ್ನಿಸದೆ - ಆಂತರ್ಯದಲ್ಲಿ ಬಿಡಾರ ಹೂಡಲಾರವು. ಆದ್ದರಿಂದ - ಅಧ್ಯಾತ್ಮದ ಅಭಿರುಚಿಯ ಶ್ರೀಮಂತಿಕೆಯನ್ನು ಮೂಲತಃ ಭಾವಿಸಿ  ಹೊಂದಲಾಗದ ದೇಹಭಾವಗಳನ್ನು - ಕೇವಲ ಪ್ರಖರ ಬೋಧನೆಯಿಂದಲೇ ತಿದ್ದುವ ಕಾರ್ಯವು ವಿಶೇಷ ಪರಿಣಾಮವನ್ನು ತೋರಿಸಲಾಗದೆ ಅಂದಿನಿಂದಲೂ ಸಾಫಲ್ಯ ಕಂಡಿಲ್ಲ. ಆದ್ದರಿಂದಲೇ ಶ್ರೀ ರಾಮಕೃಷ್ಣರು - "ಕ್ಷಣಿಕ ಅಧ್ಯಾತ್ಮಗಿರಿ ತೋರುತ್ತಿದ್ದ" ತಮ್ಮ ಭಕ್ತರಾಗಿದ್ದ ಹಲವಾರು ಸಂಸಾರಸ್ಥರಿಗೆ - "ಹೀಗೇ ಮುಂದುವರಿಯಲಿ... ಸದ್ಯಕ್ಕೆ ದೇವರನ್ನು ಸ್ಮರಿಸುತ್ತ ಸಂಸಾರವನ್ನೂ ನಡೆಸುತ್ತಿರಿ.." ಎಂದು ಸೂಕ್ಷ್ಮವಾಗಿ ಹೇಳಿ ಸಂತೈಸಿ ಕಳಿಸಿಬಿಡುತ್ತಿದ್ದರು. ಏಕೆಂದರೆ ಏಕಾಂತ ಒಲ್ಲದ, ಸ್ಥಿರತೆ ಕಾಣದ ಮನಸ್ಸುಗಳನ್ನು ಪಳಗಿಸಲಾಗುವುದಿಲ್ಲ; ಪಳಗಿಸಿ ಎಳೆದು ತರುವುದೂ ಅಸಂಭವ.

ಶ್ರೀ ದಯಾನಂದ ಸರಸ್ವತಿಯವರು ಅಂತರ್ಮುಖಾವಸ್ಥೆಯನ್ನು ಪ್ರತಿಪಾದಿಸುತ್ತ "ಅಂತಃಪುರಕ್ಕೆ ಹೋಗಿ ಕಿಟಕಿ ಬಾಗಿಲುಗಳನ್ನು ಹಾಕಿಕೊಂಡು ಬಿಡು..." ಎಂದು ಸೂಕ್ಷ್ಮವಾಗಿ ಹೇಳಿದ್ದರು. ಅಂದರೆ... "ಏಕಾಂತದಲ್ಲಿದ್ದು ಮನಸ್ಸನ್ನು ನಿಗ್ರಹಿಸುತ್ತ ಧ್ಯಾನಮಗ್ನನಾಗು.. ಯೋಗಿಯಾಗು..." ಎಂದಿದ್ದರು. ಹೀಗೆ ಶ್ರೀ ದಯಾನಂದ ಸರಸ್ವತಿಯವರನ್ನು ಉದಾಹರಿಸುತ್ತಿದ್ದ ಶ್ರೀ ರಾಮಕೃಷ್ಣರು - ಜನಸಾಮಾನ್ಯರಿಗಾಗಿ ಅದನ್ನೇ ಇನ್ನೂ ಸರಳವಾಗಿ ಹೇಳಿದ್ದರು. "ಕಣ್ಣು ತೆರೆದಿದ್ದರೂ ಧ್ಯಾನವು ಸಾಧ್ಯ. ಮಾತುಕತೆಯಾಡುತ್ತಿದ್ದರೂ ಧ್ಯಾನ ಮಾಡಬಹುದು... ಹೇಗೆಂದರೆ... ಹಲ್ಲು ನೋಯುತ್ತಿದ್ದರೂ ಮನುಷ್ಯನು ಎಲ್ಲ ಕೆಲಸಗಳನ್ನೂ ಮಾಡುತ್ತಾನೆ. ಆದರೆ ಆತನ ಮನಸ್ಸು ಮಾತ್ರ ನೋವಿನ ಕಡೆಗೇ ಹರಿಯುತ್ತಿರುತ್ತದೆಯಲ್ಲವೆ ? ಹಾಗೇ... ಅಂತೆಯೇ ಸಂಸಾರದಲ್ಲಿ ಇದ್ದುಕೊಂಡೇ ಅಂತರ್ಮುಖಿಯಾಗಿರು..." ಎಂದು ಬೋಧಿಸಿದ್ದರು. ದೈನಂದಿನ ಆಗುಹೋಗುಗಳು, ನಲಿವು ನೋವುಗಳ ಜತೆಜತೆಗೇ ಅಂತರಂಗದಲ್ಲಿ ತಾನೇ ತಾನಾಗಿ ವಿಹರಿಸುವ ಭಾವಾವಸ್ಥೆಯೂ ಸ್ಥಿರವಾಗಿರಲಿ... ಎಂದು ಜೀವನ್ಮುಖಿಯಾಗಿ ಬೋಧಿಸಿದ್ದ ಶ್ರೀ ರಾಮಕೃಷ್ಣರು -  ಸಂಸಾರವಂದಿಗರಲ್ಲಿ ಅಪಾರ ಭರವಸೆ ತುಂಬಿದ್ದರು.

ಅಂತರ್ಮುಖಾವಸ್ಥೆ ಎಂಬುದು ಇವತ್ತಿನ ಪಿ. ಎಚ್. ಡಿ. ಮಾಡುವಷ್ಟು ಸುಲಭವೇನಲ್ಲ. ಬದುಕಿನ ಮೌಲ್ಯವನ್ನು ಹೆಚ್ಚಿಸಿಕೊಳ್ಳುವ ಸಾಧನೆ ಇದು. ಶರೀರ, ಮನಸ್ಸು, ಆತ್ಮದ ಸಂತುಲನಕ್ಕಾಗಿ - ಸಾಧಕನಿಗೆ ದೈಹಿಕ, ಬೌದ್ಧಿಕ, ನೈತಿಕ ಶಕ್ತಿಗಳನ್ನು ಏಕತ್ರಗೊಳಿಸುವ ನಿಯಮಿತ ಅಭ್ಯಾಸವೂ ಅನಿವಾರ್ಯ. 

ಬೆಳಿಗ್ಗೆ ಎದ್ದ ಕೂಡಲೇ ಹಲ್ಲುಜ್ಜಲು ಯಾರಿಗೂ ಪ್ರತೀದಿನ ಹೇಳಬೇಕಾಗಿಲ್ಲ; ಅವರವರೇ ಮಾಡುತ್ತಾರೆ; ಏಕೆಂದರೆ ಅಭ್ಯಾಸವಾಗಿ ಹೋಗಿರುತ್ತದೆ. ಸುದೀರ್ಘ ಕಾಲದ ಅಭ್ಯಾಸವದು. (ಕೆಲವು ದುರದೃಷ್ಟಶಾಲಿಗಳು ತಾವು ಕಲಿತು ರೂಢಿಸಿಕೊಂಡ ಉತ್ತಮ ಅಭ್ಯಾಸಗಳನ್ನು ಪ್ರಜ್ಞಾಪೂರ್ವಕವಾಗಿ ಬದಲಾಯಿಸಿಕೊಳ್ಳುವುದೂ ಇದೆ ! ... ಉದಾ: Bed coffee ಸಂಸ್ಕೃತಿ !) ಬಾಲ್ಯದಲ್ಲಿ ಕೆಲವು ವರ್ಷ ಅಮ್ಮ ಕಲಿಸಿಕೊಟ್ಟ ಒಂದು ಅಭ್ಯಾಸವು ಹೇಗೆ ಕೊನೆಯವರೆಗೂ ಬದುಕಿನ ಭಾಗವಾಗುತ್ತದೋ ಹಾಗೇ ಸಚ್ಚಿಂತನೆ ಸನ್ಮಾರ್ಗಗಳೂ ನಿಯಮಿತ ಅಭ್ಯಾಸದಿಂದ ಬದುಕಿನ ಭಾಗವಾಗಬಲ್ಲವು. ಅಂತೆಯೇ ನಿಯಮಿತ ಅಭ್ಯಾಸಪೂರ್ವಕ ಅಧ್ಯಾತ್ಮಕ್ಕೆ ಒಗ್ಗಿಕೊಂಡು ಒರಗಿಕೊಂಡಾಗಲೇ "ಬದುಕಿನ ಶಿಸ್ತು" ಮೈಗೂಡುತ್ತದೆ; ಶಿಸ್ತಿನಿಂದ ಆತ್ಮಚೈತನ್ಯ ಮೂಡುತ್ತದೆ. ಹೀಗೆ ಆಧ್ಯಾತ್ಮಿಕ ಚಟುವಟಿಕೆಗಳೂ ಇತರ ಕರ್ಮಗಳಂತೆ ನಿತ್ಯನೈಮಿತ್ತಿಕಗಳ ಭಾಗವಾಗಿ, ಬದುಕುವ ಶೈಲಿಯೇ ಆಗಿ ಬಿಟ್ಟಾಗ ಯಾವುದೂ ಕಠಿಣ ಹೊರೆಯೆನ್ನಿಸುವುದಿಲ್ಲ.

ಆದರೆ ಯಾವತ್ತೂ - ನಡುದಾರಿಯಲ್ಲಿ ಪ್ರಯೋಗಾತ್ಮಕವಾಗಿ ಆತುಕೊಳ್ಳುವ ಸದ್ವಿಚಾರಗಳ ಆಚರಣೆಗೆ ಅಡೆತಡೆಗಳು ಹೆಚ್ಚು. ಅಂತಹ ಪ್ರಯೋಗಪಟುಗಳಿಗೆ ಆಂತರಿಕ ಮಾತ್ರವಲ್ಲದೆ ಬಾಹ್ಯ ಅಪಸ್ವರಗಳೂ ಏಳುತ್ತಿರುತ್ತವೆ. ವಿರೋಧ ಪಕ್ಷ ಎಂಬುದು ಈ ಭೂಮಿಯ ಯಾವ ಮೂಲೆಯನ್ನೂ ಬಿಟ್ಟಿಲ್ಲ. ಹಾಗೇ... ಅಧ್ಯಾತ್ಮಕ್ಕೂ - ಒಳಗೂ ಹೊರಗೂ - ವಿರೋಧೀ ಬಣವಿದೆ. 

ಆದರೆ ಆಲಸೀ ವರ್ಗವು ಅನೂಚಾನವಾಗಿ ಹೇಳುತ್ತ ಬಂದಿರುವ ಅಧ್ಯಾತ್ಮ ವಿರೋಧೀ ಭಾವಗಳೆಲ್ಲವೂ ಮಿತ ಅನುಭವ ಅಥವ ಅರಿವಿನ ಕೊರತೆಯಿಂದ ಮೂಡಿರುವ ಕುಟಿಲ ತರ್ಕಗಳು ಎಂಬುದು ಸಾಬೀತಾಗುತ್ತಲೇ ಇವೆ. ಕುತರ್ಕಗಳಿಂದ ತಮ್ಮ ತಲೆತಿನ್ನುತ್ತಿದ್ದ ಸಂದರ್ಭಗಳನ್ನು ಶ್ರೀ ರಾಮಕೃಷ್ಣರೂ ಎದುರಿಸಿದ್ದೂ ಇತ್ತು; ಬೇಸರಗೊಂಡದ್ದೂ ಇತ್ತು. ಒಮ್ಮೆ... "ತುಂಬ ಚತುರನಾಗುವುದು ಒಳ್ಳೆಯದಲ್ಲ... ಕಾಗೆಯೇನೋ ಬಹಳ ಚತುರ ಪಕ್ಷಿ. ಆದರೆ ಅದು ಪರರ ಹೇಸಿಕೆಯನ್ನು ತಿಂದೇ ಸಾಯುತ್ತದೆ.." ಎಂದು ಗೊಣಗಿದ್ದರು. ಕುಟಿಲ ತರ್ಕಗಳನ್ನು ಜೀರ್ಣಿಸಿಕೊಳ್ಳಲು ಹೀಗೆ ತಮಗೆ ತಾವೇ ಅಂದುಕೊಳ್ಳುವುದೂ - ಮನಸ್ಸನ್ನು ಹಗುರಗೊಳಿಸಿಕೊಳ್ಳುವ ಒಂದು ಮಾರ್ಗ. ಕುಟಿಲ ಚಾತುರ್ಯ ಎಂದರೆ - ಉಚ್ಛಿಷ್ಟದ ಅಭಿರುಚಿಯಿದ್ದಂತೆ ! ಇದರಿಂದ ಸದಭಿರುಚಿಯು ನಾಶಗೊಂಡು ಭಾವಕೋಶವು ಕಮರಿ ಸಂವೇದನಾಹೀನವಾಗುತ್ತದೆ. ಅಂತಹ ಬೆಂಕಿಬರಡು ನೆಲದಲ್ಲಿ ಉತ್ತಮ ಚಿಂತನೆಗಳ ಸಸಿಯು ಬೆಳೆಯುವುದೇ ಇಲ್ಲ.

ಸ್ಪಂದನಶೀಲತೆಯನ್ನು ಉಳಿಸಿಕೊಳ್ಳಲು ಏಕಾಗ್ರ ಧ್ಯಾನವು ಸಹಕಾರಿ. "ಮನಸ್ಸು ಚದುರಿ ಹೋಗಿದೆ - ಸ್ವಲ್ಪ ಭಾಗ ಢಾಕ್ಕಾಕ್ಕೆ, ಸ್ವಲ್ಪ ಭಾಗ ದೆಹಲಿಗೆ, ಸ್ವಲ್ಪ ಭಾಗ ಕೂಚ್ ಬಿಹಾರಿಗೆ... ಅಂಥ ಮನಸ್ಸನ್ನು ಈಗ ಒಟ್ಟುಗೂಡಿಸಬೇಕಾಗುತ್ತದೆ. ಒಟ್ಟುಗೂಡಿಸಿ ಒಂದು ವಸ್ತುವಿನ ಮೇಲೆ ಏಕಾಗ್ರ ಮಾಡಬೇಕಾಗುತ್ತದೆ. ನಿನಗೆ ಹದಿನಾರಾಣೆಯ ಬಟ್ಟೆ ಬೇಕಾದರೆ ವ್ಯಾಪಾರಿಗೆ ಹದಿನಾರಾಣೆಯನ್ನೇ ಕೊಡಬೇಕಾಗುತ್ತದೆ. ಕಡಿಮೆ ಪಾವತಿಸಿದರೆ ಬಟ್ಟೆ ಸಿಗುವುದಿಲ್ಲ. ಟೆಲಿಗ್ರಾಫ಼್ ತಂತಿಯಲ್ಲಿ ಒಂದು ಸ್ವಲ್ಪ ಬಿರುಕು ಇದ್ದರೂ ಸಮಾಚಾರವು ಮುಟ್ಟುವುದಿಲ್ಲ... ದೇಹ-ಭಾವದ ತಂತಿಗಳು ಸುಶ್ರುತಿಯಲ್ಲಿರಬೇಕು..." ಎನ್ನುತ್ತಿದ್ದ ಪರಮಹಂಸರು ಪೂರ್ಣ ಶರಣಾಗತಿಯನ್ನು ಪ್ರತಿಪಾದಿಸುತ್ತಿದ್ದರು. 

ಸಾಧನೆಯ ಹಾದಿಯಲ್ಲಿ ಚೌಕಾಸಿ ಮಾಡಲಾಗುವುದಿಲ್ಲ; ಪೂರ್ಣ ಸುಂಕ ಕಟ್ಟದಿದ್ದರೆ ಭಕ್ತಿಸಾಮ್ರಾಜ್ಯವನ್ನು ಪ್ರವೇಶಿಸಲಾಗುವುದಿಲ್ಲ ಎಂಬುದನ್ನು ತಮ್ಮದೇ ಶೈಲಿಯಲ್ಲಿ ಬೋಧಿಸುತ್ತಿದ್ದರು. "ಎಂದಾದರೊಂದು ದಿನ ದೇವರು ದೊರಕುತ್ತಾನೆ..." ಎಂಬಂತಹ ಲಘು ಭಾವನೆಯು ಅವರಿಗೆ ರುಚಿಸುತ್ತಿರಲಿಲ್ಲ. "ಈ ದಿನ, ಇದೇ ಕ್ಷಣ ಸಂಭವಿಸಲಿ" ಎನ್ನುವ ತೀವ್ರ ತುಡಿತ  ಮತ್ತು ಸಾಧನೆಯಿಂದ ಮಾತ್ರವೇ ಆತ್ಮವಿದ್ಯೆಯ ಅನುಗ್ರಹವು ಸಾಧ್ಯ ಎಂಬುದು ರಾಮಕೃಷ್ಣರ ಬೋಧನೆಯಾಗಿತ್ತು. "ನಾಳೆ ನಾಳೆ" ಎಂಬಂತಹ ಆರಾಮದ ಭಾವನೆಯು ಅಧ್ಯಾತ್ಮದ ಹಾದಿಯ ದೊಡ್ಡ ತೊಡಕು ಎಂಬುದು ಶ್ರೀ ರಾಮಕೃಷ್ಣರ ಚಿಂತನೆಯಾಗಿತ್ತು. ತೀವ್ರ ವೈರಾಗ್ಯಭಾವದಿಂದ ಅನುಕ್ಷಣವೂ ದೇವರಿಗೆ ಅಂಟಿಕೊಂಡಿರುವವರಿಗೆ ಮಾತ್ರ ಇಂತಹ ಅಧ್ಯಾತ್ಮದ ರುಚಿಯು ಅನುಭವಕ್ಕೆ ಬರುತ್ತದೆ; ಅವರಿಗೆ ಅಧ್ಯಾತ್ಮ ಒಲಿಯುತ್ತದೆ ಎಂಬುದು ಅವರ ಉಪದೇಶವಾಗಿತ್ತು.

ಸಂಸಾರದಲ್ಲಿದ್ದು ತೀವ್ರ ವೈರಾಗ್ಯವನ್ನು ಅನುಸರಿಸುವುದು ಸುಲಭವೆ ? ತುಂಬ ಕಷ್ಟ. ಸಂಸಾರವಲಯದ ಹಲವಾರು ಆಸೆ, ವಾಸನಾ ಪ್ರವೃತ್ತಿಗಳಿಂದ ತುಂಬಿರುವ ಮನಸ್ಸನ್ನು ತೀವ್ರ ವೈರಾಗ್ಯದ ಕಡೆಗೆ ಎಳೆದು ತರುವುದಾದರೂ ಹೇಗೆ ? ಪರಮಹಂಸರು ಹೇಳುತ್ತಿದ್ದರು... "ನಮ್ಮ ಊರಿನಲ್ಲಿ ಗದ್ದೆಗೆ ನೀರು ಹಾಯಿಸುತ್ತಾರೆ. ನೀರು ವ್ಯರ್ಥವಾಗಿ ಹರಿದು ಹೋಗದಂತೆ ಗದ್ದೆಯ ನಾಲ್ಕೂ ಬದಿಗೆ ಕಟ್ಟೆ ಕಟ್ಟುತ್ತಾರೆ. ಅವು ಮಣ್ಣಿನ ಕಟ್ಟುಗಳಾದ್ದರಿಂದ ಅನೇಕ ಬಾರಿ ಬಿರುಕು ಬಿಡುತ್ತವೆ. ರೈತರು ಬೆವರು ಸುರಿಸಿ ಗದ್ದೆಗೆ ನೀರು ತುಂಬಿಸಿರುತ್ತಾರೆ. ಆದರೆ ಬಿರುಕುಗಳ ಮೂಲಕ ನೀರು ಹೊರಕ್ಕೆ ಹರಿದುಹೋಗಿ ವ್ಯರ್ಥವಾಗಿ ಬಿಡುತ್ತದೆ. ಈ ಬದುಕಿನಲ್ಲಿ... ವಾಸನೆಗಳೇ ಬಿರುಕುಗಳು. ನಿಜ... ಜನರು ಜಪತಪಾದಿಗಳನ್ನೇನೋ ಮಾಡುತ್ತಾರೆ. ಆದರೆ ಅವುಗಳ ಬೆನ್ನ ಹಿಂದೇ ಆಸೆ ವಾಸನೆಗಳೂ ತುಂಬಿರುತ್ತವೆ. ಆ ವಾಸನೆಗಳೆಂಬ ಬಿರುಕುಗಳ ಮೂಲಕ, ಶ್ರಮಪಟ್ಟು ಗದ್ದೆಯಲ್ಲಿ ತುಂಬಿಸಿದ ನೀರೆಲ್ಲ ಖಾಲಿಯಾಗಿಬಿಡುತ್ತದೆ..." ಆದ್ದರಿಂದ ಅಧ್ಯಾತ್ಮ ಪ್ರವೇಶಿಗರು ಶುದ್ಧಾಂತರಂಗ ಎಂಬ ಭದ್ರ ಕಟ್ಟುಗಳನ್ನು - ಕಷ್ಟಪಟ್ಟಾದರೂ ಸ್ಥಾಪಿಸಿಕೊಳ್ಳಬೇಕು. ಕಟ್ಟುಪಾಡುಗಳಿಲ್ಲದೆ ನಡೆಸುವ ಯಾವುದೇ ಜಪತಪಾದಿಗಳು ವ್ಯರ್ಥವಾಗುತ್ತವೆ.

ಅಧ್ಯಾತ್ಮ ಎಂದರೆ ಕಾಡಿನಲ್ಲಿ ಮೂಗು ಹಿಡಿದು ಕೂರುವ ರಮ್ಯ ಕತೆಯಲ್ಲ. ವ್ಯವಸ್ಥಿತ ಅಧ್ಯಾತ್ಮ ಸಂಚಲನವು ಬದುಕನ್ನು ಸುಸ್ಥಿತವಾಗಿ ಕಟ್ಟಬಲ್ಲ ಶಿಸ್ತಿನ ಸಾಧನ. 

ಎಲ್ಲ ಬದುಕಿನಲ್ಲೂ ಕಷ್ಟ ವಿಪತ್ಪರಂಪರೆಗಳು ಒದಗುವುದು ಸಹಜ. ಆಗ ಬದುಕನ್ನು ಆಧರಿಸುವ ಸುಭಗ ಸಾಧನ ಮತ್ತು... ಮನೋತಳಮಳದ ಸಂಚಾರೀ ವಿಚಾರಗಳಿಗೆ ಸ್ಪಷ್ಟತೆಯನ್ನು ಕೊಡುವ ಊರುಗೋಲು - ಅಧ್ಯಾತ್ಮ. ಅಧ್ಯಾತ್ಮದ ಅಂತರ್ಮುಖ ಯಾನದಲ್ಲಿ ತೊಡಗುವವರಿಗೆ ಯಾವುದೇ ಗುಂಪು ಗೋಷ್ಠಿಗಳಿಗಿಂತ ಏಕಾಂತದ ಓದು ಚಿಂತನೆಗಳೇ ಭಾವಪುಷ್ಟಿಗೊಳಿಸುವಲ್ಲಿ ಹೆಚ್ಚು ಸಹಕರಿಸಬಲ್ಲವು. ಶ್ರೀ ರಾಮಕೃಷ್ಣರು ಎಂದೂ - ಬೃಹತ್ ಸಭೆಗಳಲ್ಲಿ ಉಪದೇಶ ನೀಡುತ್ತ ಓಡಾಡುವ ಗೋಜಿಗೇ ಹೋದವರಲ್ಲ. ತನ್ನನ್ನು ಅರಸಿ ಬಂದವರ ಎದುರಲ್ಲಿ, ಪಾತ್ರಾಪಾತ್ರದ ಯೋಗ್ಯತೆಯಂತೆ -  ಮೊಗೆಮೊಗೆದು ಅಧ್ಯಾತ್ಮಭಾವವನ್ನು ತುಂಬಿದವರು ಶ್ರೀ ರಾಮಕೃಷ್ಣರು ! ಅವರದು - ದೇಹ ಸನ್ಯಾಸವಲ್ಲ; ಭಾವ ಸನ್ಯಾಸ .

ಆದ್ದರಿಂದಲೇ ತಮ್ಮ ಶಿಷ್ಯರ ಸಾಮರ್ಥ್ಯವನ್ನು ಸರಿಯಾಗಿ ಅಳೆದರು; ಧಾರಣಾ ಸಾಮರ್ಥ್ಯವಿರುವವರಲ್ಲಿ ಮತ್ತಷ್ಟು ತುಂಬಿ ಪುಷ್ಟಿಗೊಳಿಸಿದರು ! ಆಯ್ದ ಕೆಲವರಿಗೆ ಮಾತ್ರ ಲೋಕಕಲ್ಯಾಣದ ಕಾರ್ಯವನ್ನು ಒಪ್ಪಿಸಿದರು ! ಅವತಾರವರಿಷ್ಠ ಶ್ರೀ ರಾಮಕೃಷ್ಣ ಎಂಬ ಮೂಲಮೂರ್ತಿಯ ಅಧ್ಯಾತ್ಮ ಭಾವವನ್ನು - ಉತ್ಸವಮೂರ್ತಿಯಂತಿದ್ದ ಸ್ವಾಮಿ ವಿವೇಕಾನಂದ ಮತ್ತು ಸೋದರ ಸನ್ಯಾಸಿಗಳು ವಿಶ್ವದೆಲ್ಲೆಡೆ ಹೊತ್ತು ಮೆರೆಸಿದರು !

ಆಕಾಶದಲ್ಲಿರುವ ನೂರಾರು ನಕ್ಷತ್ರಗಳಿಂದ ಏನಾದರೂ ಚಮತ್ಕಾರ ಸಂಭವಿಸೀತೆ ? ಎಷ್ಟು ಬೆಳಕು ಬಂದೀತು ? ಕತ್ತಲು ನಿವಾರಿಸಲು ಒಬ್ಬ ಚಂದ್ರ ಸಾಲದೆ ? ಶ್ರೀ ರಾಮಕೃಷ್ಣರ ಬೆರಳೆಣಿಕೆಯಷ್ಟಿದ್ದ ನೇರ ಶಿಷ್ಯರು ಒಬ್ಬೊಬ್ಬರೂ ಸೂರ್ಯಚಂದ್ರ ಸಮಾನರಾಗಿದ್ದರು !
 
ಪೂರ್ವ ಸಿದ್ಧತೆ

ಸನ್ಯಾಸ ಭಾವವು ಎಲ್ಲರ ತುತ್ತಲ್ಲ. ಸಹಜ. ಆದರೆ ದೈನಂದಿನ ಬದುಕಿನಲ್ಲಿ ಆಧ್ಯಾತ್ಮ ಭಾವವನ್ನು ಹೊಂದುವುದು ಕಾಷಾಯಧಾರಿ ಸನ್ಯಾಸದಷ್ಟು ಕಠಿಣವಲ್ಲ. ಕೆಡುಕಿನಿಂದ ದೂರವಿರುವ ಪ್ರಾಥಮಿಕ ಅರ್ಹತೆಯನ್ನು ಗಳಿಸಿಕೊಂಡರೆ ಅದೂ ಆತ್ಮಸೇವನೆಯೇ ಆಗುತ್ತದೆ. ಆದರೆ... ಬೆಳಗಿನ ವೃತ್ತಪತ್ರಿಕೆಯಿಂದ ಹಿಡಿದು ರಾತ್ರಿಯ ವರೆಗೆ ಮಿದುಳು ನುರಿದು ದಣಿಸುವಂಥ ಕಸನುಸಿಗಳನ್ನೇ ಮೆಟ್ಟುತ್ತ - ಅಂತಹ ರದ್ದಿಗಳನ್ನೇ ಓದುತ್ತ ನೋಡುತ್ತ ಬಗ್ಗಡವಾಗುವ ದೈನಂದಿನ ಮನಸ್ಸುಗಳಲ್ಲಿ ಅಧ್ಯಾತ್ಮವನ್ನು ಇರಿಸಿಕೊಳ್ಳಲು ಆಗುವುದಿಲ್ಲ. ಏಕೆಂದರೆ ಅಧ್ಯಾತ್ಮವು ಅಂತರಂಗದ ಮೌನದಲ್ಲಿ ಸಂಭವಿಸುವ ಆತ್ಮಭಾವ; ಘರ್ಷಣೆ ಗದ್ದಲದಲ್ಲಿ ಅಧ್ಯಾತ್ಮವು ಅರಳುವುದಿಲ್ಲ. ಹೃನ್ಮನದ ಮೂಲ ನೆಲೆಯನ್ನು ಪ್ರೇಮದ ಕಡಲಾಗಿಸಿಕೊಳ್ಳದೆ ಅಧ್ಯಾತ್ಮದ ಸ್ಪರ್ಶವಾಗಲಾರದು. ಬಹಿರ್ಮುಖ ಆಸಕ್ತಿಗಳನ್ನು ಮಿತಗೊಳಿಸಿಕೊಳ್ಳುತ್ತ ಬಂದಂತೆ ಅಂತರಂಗ ಶುದ್ಧಿಯುಂಟಾಗಿ ಭಾವಶುದ್ಧಿಯು ಸಂಭವಿಸುತ್ತದೆ. ಅಂತಹ ಭಾವಶುದ್ಧಿಯ ನೆಲೆಯಲ್ಲಿ ಮಾತ್ರ ಸ್ಥಿರವಾದ ಅಧ್ಯಾತ್ಮ ಭಾವವು ಪ್ರೀತಿಯಿಂದ ಸಂಚರಿಸುತ್ತದೆ. ಪ್ರೀತಿ ವಿಶ್ವಾಸವಿಲ್ಲದ ಕಡೆಗಳಲ್ಲಿ ಯಾರಾದರೂ ಭೋಜನಕ್ಕೆ ಕೂರುವುದುಂಟೆ ? ಅಂತೆಯೇ ಅಧ್ಯಾತ್ಮವು - "ಕರೆಯದೇ ಹೋಗಿ ಕೆರದಲ್ಲಿ ಹೊಡೆಸಿಕೊಳ್ಳುವ" ವಸ್ತುವಲ್ಲ; ಬಿಟ್ಟಿಯಾಗಿ ಗಿಟ್ಟಿಸಿಕೊಳ್ಳುವ ಅಗ್ಗದ ಸರಕೂ ಅಲ್ಲ. ಆದ್ದರಿಂದ - ಮನುಷ್ಯರು ವಜ್ರದ ಗಣಿಯ ಮುಂದೆ ನಿಂತಿದ್ದರೂ - ಸುಲಭದಲ್ಲಿ ಕಾಲಿಗೆ ಎಡತಾಕುವ ಗಾಜಿನ ಚೂರುಗಳನ್ನು ಆಯ್ದುಕೊಂಡು ಅದರಲ್ಲೇ ಸುಖಿಸುವ ಮೂರ್ಖರಾಗದೆ, ಮನೋವಾಕ್ಕಾಯವನ್ನು ಏಕಮುಖಗೊಳಿಸಿಕೊಂಡು ಅಧ್ಯಾತ್ಮ ಪ್ರೀತಿಯ ಭಾವವನ್ನು ಹೃನ್ಮಂದಿರದಲ್ಲಿ ಪ್ರತಿಷ್ಠಾಪಿಸುವ ಪ್ರಯತ್ನಶೀಲರಾಗಬೇಕಾಗುತ್ತದೆ.

ತಂತಮ್ಮ ದೈನಂದಿನ ಸಾಂಸಾರಿಕ ಬದುಕಿನಲ್ಲಿ ಮುಳುಗಿ ಸುಖ ಲೋಲುಪತೆಗಾಗಿ ಹಪಹಪಿಸುವ ಮನುಷ್ಯರನ್ನು - "ಕಳ್ಳಭಟ್ಟಿಯೇ ಸುಖ" ಎಂಬಂತಹ ಭ್ರಮೆಯು ಆವರಿಸಿಕೊಂಡು ಬಿಡುವುದು ಸಾಮಾನ್ಯ. ಇಂತಹ ಕ್ಷಣಿಕ ಅಮಲಿನಿಂದ ಪಾರಾಗುವುದಕ್ಕೂ - ಅಧ್ಯಾತ್ಮವು ಮಾತ್ರ ಸಹಕರಿಸಬಲ್ಲದು. ಸನ್ಯಾಸಿಗಳು ಮೋಕ್ಷಕ್ಕಾಗಿ ಅಧ್ಯಾತ್ಮವನ್ನು ಅವಲಂಬಿಸಿದರೆ ಸಂಸಾರಿಗಳು ಉತ್ತಮ ಮೌಲ್ಯಯುತ ಬದುಕಿಗಾಗಿ ಅಧ್ಯಾತ್ಮದ ಮೊರೆ ಹೋಗಬೇಕು. ವೃದ್ಧಾಪ್ಯದಲ್ಲಿ ಅಧ್ಯಾತ್ಮದತ್ತ ಸಹಜವಾಗಿಯೇ ಮನಸ್ಸು ವಾಲುತ್ತದೆ ಅಂದುಕೊಳ್ಳುವುದೂ ಪೂರ್ಣ ಸತ್ಯವಲ್ಲ. ಯೌವ್ವನದಲ್ಲಿ ಸುಸಂಸ್ಕಾರಗಳನ್ನು ರೂಢಿಸಿಕೊಳ್ಳಲು ಸೋತವರಿಗೆ ವೃದ್ಧಾಪ್ಯದಲ್ಲೂ ಅಧ್ಯಾತ್ಮದ ಒಲವು ಮೂಡುವುದಿಲ್ಲ. ಯೌವ್ವನದಲ್ಲಿಯೇ ಅಧ್ಯಾತ್ಮವನ್ನು ಪ್ರವೇಶಿಸುವ ಮನಸ್ಸುಗಳು, ನಿತ್ಯಬದುಕಿನಲ್ಲಿ ಅಕಸ್ಮಾತ್ ದಾರಿ ತಪ್ಪಿದಾಗಲೂ, ಸಂಸ್ಕಾರಬಲದಿಂದಾಗಿ ದಿಕ್ಕು ತಪ್ಪುವುದಿಲ್ಲ;  ಅಂತರ್ಮುಖಿಯಾಗಿ, ಅವರ ಬದುಕನ್ನು ಅವರೇ ಸಂಭಾಳಿಸಿಕೊಳ್ಳುವ ಶಕ್ತಿಯನ್ನು ಅವರವರು ವಿಶ್ವಾಸವಿಟ್ಟ ಅಧ್ಯಾತ್ಮವೇ - ಮನುಷ್ಯರಿಗೆ ಪ್ರಸಾದಿಸುತ್ತದೆ. ಆದ್ದರಿಂದ ಸ್ವಂತ ತಪ್ಪು ಸರಿಗಳನ್ನು ವಿಶ್ಲೇಷಿಸುವ ಶಕ್ತಿ, ಅಪರಾಧಿಗಳಾಗದಂತೆ ತಡೆಯುವ ಪಾಪ ಪುಣ್ಯದ ಸಾತ್ವಿಕ ಭಯವನ್ನು ತುಂಬಿ, ಬದುಕು ಮುಗ್ಗರಿಸದಂತೆ ಕಾಪಾಡುವ ಶಕ್ತಿಯು ಅಧ್ಯಾತ್ಮಕ್ಕಿದೆ.

ಬದುಕಿನ ವ್ಯಾಪಾರದಲ್ಲಿ ಲೋಲುಪತೆಗೆ ವಶವಾಗಿರುವ ಮನಸ್ಸುಗಳು ಅಧ್ಯಾತ್ಮವನ್ನೂ ಲೌಕಿಕದ ಸಂತೆಗೆ ಎಳೆದು ತರುತ್ತಿರುವುದು ನಿತ್ಯ ದೃಶ್ಯವಾಗಿ ಹೋಗಿದೆ. ಅಂಕೆತಪ್ಪಿದಂತಹ ಮನಸ್ಸುಗಳ ತಂಟೆಯಿದು. "ಮಾರುತಿಯು ಶ್ರೀ ರಾಮಚಂದ್ರನಿಗೆ ಆತನ ಮಡದಿಯನ್ನು ಹುಡುಕಿ ಕೊಡಲಿಲ್ಲವೆ ? ಹುಡುಕಿ ಕೊಡುವುದರಲ್ಲಿ ಮಾರುತಿಯು ಅಗ್ರಗಣ್ಯ. ಆದ್ದರಿಂದ ಬದುಕಿನಲ್ಲಿ ನಾವು ಕಳೆದುಕೊಂಡ ಶಾಂತಿ ತೃಪ್ತಿಯನ್ನೂ - ಪೂಜೆಗೆ ತನ್ನನ್ನು ಒಪ್ಪಿಸಿಕೊಂಡಿರುವ ಮಾರುತಿಯೇ ಹುಡುಕಿಕೊಡಬಹುದಲ್ಲ ? " ಅಂದುಕೊಳ್ಳುವವರಿದ್ದಾರೆ. "ಹನುಮನಿಗೇನು ಧಾಡಿ ? ಹನುಮನು ಮಹಾಪರಾಕ್ರಮಿಯೇ ಹೌದಾದರೆ ಎಲ್ಲರಿಗೂ ಉಪಕರಿಸಲಿ... ಒಬ್ಬ ಶ್ರೀರಾಮನಿಗೆ ಮಾತ್ರ ಉಪಕರಿಸುವ ತಾರತಮ್ಯ ಏಕೆ ?" ಎಂದು ಸವಾಲು ಹಾಕುತ್ತ ಹಕ್ಕು ಚಲಾಯಿಸುವವರಿಗೂ ನಮ್ಮಲ್ಲಿ ಕಡಿಮೆಯೇನಿಲ್ಲ. ಇದು ಕ್ಷುದ್ರ ಲೌಕಿಕ ವೇಷದ ವೇಶ್ಯಾಭಾವದ ಮನೋವೃತ್ತಿ ! ಹಾಸ್ಯಲೋಲುಪತೆ ! ಕಳೆದುದದನ್ನು ಹುಡುಕಿ ಕೊಡುವ ಮತ್ತು ತಾವು ಕೇಳಿದ್ದನ್ನು ತಂದು ಒದಗಿಸುವ ಸೇವಕನ ಉದ್ಯೋಗಕ್ಕೆ ಮಾರುತಿಯನ್ನು ನೇರವಾಗಿ ತಾವೇ ನೇಮಿಸಿಕೊಂಡಂತೆ ಮನುಷ್ಯರು ವರ್ತಿಸುವ ಅನೇಕ ಹುಚ್ಚಾಟಗಳು ನಡೆಯುತ್ತಲೇ ಇರುತ್ತವೆ; ರಂಜನೆಯನ್ನೂ ನೀಡುತ್ತಿರುತ್ತವೆ. 

ಒಂದು ದೃಷ್ಟಿಯಲ್ಲಿ, ತಮ್ಮನ್ನು ತಾವೇ ಶ್ರೀರಾಮನೊಂದಿಗೆ ಸಮೀಕರಿಸಿಕೊಳ್ಳುವ ಮನುಷ್ಯಮಾತ್ರ ನಿತ್ಯವಿದೂಷಕರು ವೀರ ಮಾರುತಿಯ ರಾಮಭಾವದ ಸೇವ್ಯ ಸಂವೇದನೆಯನ್ನು ಕ್ಷುಲ್ಲಕಗೊಳಿಸುವಂತಹ ಉಪದ್ವ್ಯಾಪವಿದು ! ಮಾರುತಿಗೆ "ಆರಕ್ಷಕ"ನ (POLICE) ತೊಡಿಗೆ ತೊಡಿಸಿ, ಕಣ್ಣಿಗೆ ಕಾಣಿಸುವ ವರ್ತಮಾನದ ಸದ್ಯದ ವ್ಯವಸ್ಥೆಯ ಭಾಗವಾಗಿ ಮಾರುತಿಯನ್ನು ಎಳೆದು ತಂದರೆ ಅಲ್ಲೆಲ್ಲ - ಬಾಲಿಶವಾದ "ಕಳ್ಳ ಪೋಲೀಸ್" ಆಟ ನಡೆಯಬಹುದಲ್ಲದೆ - ಮಾರುತಿಯು ಇರಲು ಸಾಧ್ಯವೆ ? ಯಾವುದೇ ಕ್ಷಣಿಕ ನಗುವಿಲಾಸದಿಂದ ಆಂತರ್ಯದ ಅಳಲನ್ನು ಉಜ್ಜಿ ತೆಗೆಯಲು - ಬದುಕನ್ನು "ಕಾಲಕ್ಷೇಪ" ಎಂದುಕೊಂಡಲ್ಲದೆ ಸಾಧ್ಯವಾಗದು. ಆದರೆ... ಮಾರುತಿಯನ್ನು ಪೋಲೀಸ್ ಪೇದೆಯನ್ನಾಗಿಸುವ ಲೋಕದ ಮನಸ್ಸುಗಳ ಉಮ್ಮೇದಿನಲ್ಲಿ - ಯಾವುದೋ ಠಾಣೆಯ ಕಲ್ಪನೆ ಮತ್ತು ಅಲ್ಲಿ ಕೋಲಾಡಿಸುವಂತಹ ಯಾವುದೋ ಅಧಿಕಾರಸ್ಥಾನದ ವಶೀಲಿಯಿಂದ ತಾವು ಕಳೆದುಕೊಂಡದ್ದನ್ನು "ಹೇಗೋ ಪಡೆದುಕೊಳ್ಳುವ" ಸ್ವಾರ್ಥನಿರೀಕ್ಷೆಯ ಕುತಂತ್ರಗಾರಿಕೆಗಳು ಮಾತ್ರ ತುಂಬಿಕೊಂಡು - ಹಕ್ಕು ಸ್ಥಾಪನೆಯ ತಾರ್ಕಿಕ ಆಟದಲ್ಲೇ ಮನಸ್ಸು ಕೇಂದ್ರೀಕೃತವಾಗಿರುತ್ತದೆ. ಫಲ ಮಾತ್ರ - ಶೂನ್ಯ. ಬದುಕಿನ ಭಾವ ಕೇಂದ್ರವನ್ನು ಲಾಂಗೂಲಮುಖಿ ಆಗಿಸುವುದೆಂದರೆ ಹೀಗೇ. ಆದ್ದರಿಂದಲೇ ಇಂತಹ ವ್ಯರ್ಥ ಕಾಲಯಾಪನೆಗಳ ಆರಂಭ ಮತ್ತು ಅಂತ್ಯಗಳೆರಡೂ ಕಿರುನಗು ಹುಟ್ಟಿಸಿ ಮಾಯವಾಗುತ್ತವೆ ! ಪೋಕು ಮಾತಿನ ನಗು ಉದ್ದಿಮೆಯಿಂದ - ಬದುಕು ನಷ್ಟವಾಗುತ್ತದೆ.

ಬಾಲಬಡುಕತನಗಳು ಮಾಯಾ ಲೌಕಿಕದಲ್ಲಿ ವಿಜೃಂಭಿಸುವಂತೆ ಕಂಡರೂ ಅಧ್ಯಾತ್ಮದ ಪರಿಧಿಯಲ್ಲಿ ಅಂತಹ ಯಾವುದೇ ಅಡ್ಡದಾರಿಗಳಿಗೆ ಅವಕಾಶವಿರುವುದಿಲ್ಲ. ಅದು ಸ್ವಚ್ಛ ರಾಜಮಾರ್ಗ. ಆದ್ದರಿಂದ ಆಸೆಪೂರಿತ ಬಾಲಬಡುಕತನಕ್ಕೆ ಅಥವ ಹಕ್ಕು ಸ್ಥಾಪನೆಯ ಧಮಕಿ ಷಡ್ಯಂತ್ರಗಳಿಗೆ ಅಧ್ಯಾತ್ಮ ಪ್ರಪಂಚದಲ್ಲಿ ಯಾವ ಮೌಲ್ಯವೂ ಇರುವುದಿಲ್ಲ. ಅಪಮೌಲ್ಯಗೊಳ್ಳಬಹುದಾದ ಯಾವುದೂ ಅಲ್ಲಿ ನಡೆಯುವುದೂ ಇಲ್ಲ. ಆದ್ದರಿಂದ ನಿಷ್ಕಾಮ, ನಿಷ್ಕಲ್ಮಷ ಪ್ರೇಮವೊಂದಲ್ಲದೆ ಇನ್ನ್ಯಾವ ವಶೀಲಿಬಾಜಿಯೂ ಅಧ್ಯಾತ್ಮದ ಹಾದಿಯಲ್ಲಿ ಉಪಕರಿಸಲಾರದು.

ನಾದಪ್ರಿಯನಲ್ಲ ವೇದಪ್ರಿಯನಲ್ಲ ಭಕ್ತಿಪ್ರಿಯ...

ಮಂತ್ರ ಪಠಿಸಿದರೆ - ಭಜನೆ ಮಾಡಿದರೆ ಮಾತ್ರ ಸಾಕೆ ? ಸಂಸಾರಿಗಳಾಗಿ, ಆಯಾ ಬದುಕಿನ ಕರ್ತವ್ಯವನ್ನು ಪೂರ್ತಿಗೊಳಿಸದೆ ಯಾವುದೇ ಸಾಫಲ್ಯಭಾವವು ದೊರೆತೀತೆ ? ಅಕಸ್ಮಾತ್ ಕ್ಷಣಿಕವಾಗಿ ದೊರೆತಂತೆ ಕಂಡರೂ ಅವು ಯಾವುದಾದರೂ ಉಳಿದಾವೆ ? ಮಾರುತಿಯನ್ನು ಹೃದ್ಭಾವದಲ್ಲಿ ಪ್ರತಿಷ್ಠಾಪಿಸಿಕೊಳ್ಳದೆ ಹನುಮಭಾವವನ್ನೇ ನಷ್ಟಗೊಳಿಸಿಕೊಂಡು ಹ್ರಸ್ವಗೊಳಿಸಿಕೊಂಡ ಮನಸ್ಸು ಭಾವ ಮತ್ತು  ಬುದ್ಧಿಗಳು - "ನಿನಗೇನು ಧಾಡಿ ? ನನಗೂ ಕೊಡಯ್ಯಾ..." ಅಂದರೆ, ಹಾಸ್ಯ ಹುಟ್ಟಬಹುದಲ್ಲದೆ ಭಕ್ತಿಲಾಸ್ಯವು ಹುಟ್ಟೀತೆ ? ಭಗವಂತನು ತನ್ನನ್ನು ಭಾವದುಂಬಿ ಪ್ರೀತಿಸುವವರಿಗೆ ಮಾತ್ರ ಸುಲಭನು. ಅಗ್ಗದ ಭಾವವ್ಯಭಿಚಾರಕ್ಕೆಲ್ಲ ಆತನು ಒಲಿಯಲಾರ. ಆದರೆ ಭಗವಂತನಿಗಾಗಿ ಅತ್ತು ರಂಪ ಮಾಡುತ್ತ ಹಸಿವು ನಿದ್ದೆಯನ್ನೂ ಗಣಿಸದೆ ಸಾಕ್ಷಾತ್ಕಾರಕ್ಕಾಗಿ ಹಾತೊರೆಯುವ ನಿಜವಾದ ಭಕ್ತನು ತನ್ನನ್ನು ನಿಂದಿಸಿದರೂ - ಭಗವದ್ಭಾವವು ಅಂತಹ ನಿಂದೆಯನ್ನೂ "ನಿಂದಾಸ್ತುತಿ" ಎಂದೇ ಅಂದುಕೊಳ್ಳುವುದು - ಅನನ್ಯ ಭಕ್ತಿಸಾಮ್ರಾಜ್ಯದಲ್ಲಿ ಮಾತ್ರ ಸಾಧ್ಯ. ಅದು ಹೇಗೆಂದರೆ - ಮಗುವನ್ನು ಅನನ್ಯವಾಗಿ ಪ್ರೀತಿಸುವ ಒಬ್ಬ ತಾಯಿಯು ತನ್ನ ಮಗುವಿನ ಬೈಗುಳದ ಬಾಲನುಡಿಗಳನ್ನು ಕೇಳಿ ಆನಂದಿಸುತ್ತ ಮಗುವನ್ನು ಎತ್ತಿ ಮುದ್ದಾಡಿದಂತೆ ! ನಿಂದಿಸುವ ಅವಕಾಶವಿರುವುದು ಪ್ರೀತಿಸುವ ಭಕ್ತರಿಗೆ ಮಾತ್ರ. ನಿಷ್ಕಲ್ಮಷ ಪ್ರೀತಿಯು ಯಾವುದೇ ನಿಂದೆಯನ್ನು ಗ್ರಹಿಸುವುದಿಲ್ಲ; ಗಣಿಸುವುದೂ ಇಲ್ಲ. "ನೀನು ದೊಡ್ಡವನೋ ನಿನ್ನ ದಾಸರು ದೊಡ್ಡವರೋ ?" ಎಂದು ಪ್ರೀತಿಯ ಹಕ್ಕಿನಿಂದ ಭಗವಂತನನ್ನು ಪ್ರಶ್ನೆ ಮಾಡುವುದು - ಭಕ್ತರಿಗೆ ಮಾತ್ರ ಸಾಧ್ಯ.

ಆದ್ದರಿಂದ ಭಕ್ತಿ ಶಾಲೆಯ ಮುಖವನ್ನೇ ಕಾಣದ ಲಂಡು ಲಸ್ಕು ಲೊಳಲೊಟ್ಟೆಗಳಿಗೆ ಶ್ರೀರಾಮ ಹನುಮರ ಸವಾರಿ ಮಾಡಲು ಆಗುವುದಿಲ್ಲ. ಶರಣಾಗತಿಯಲ್ಲದೆ ಅನ್ಯ ಮಾರ್ಗವೇ ಇಲ್ಲ. ಬದುಕಿನಲ್ಲಿ ತಾವು ಸಂಚಯಿಸಿಕೊಂಡ ದುರ್ಗಂಧವನ್ನು ಸಲೀಸಾಗಿ  ವಿಸರ್ಜಿಸಲಾಗದೆ ತಿಣುಕಾಡುವ ದುರ್ಬಲ ಕೋತಿಗಳನ್ನು ಎತ್ತಿ ಪೀಠದ ಮೇಲೆ ಕುಳ್ಳಿರಿಸುವ ಮೂಲಕ "ಯಾರ್ಯಾರನ್ನೋ ಯಾರ್ಯಾರೋ ದೊಡ್ಡವರಾಗಿಸುವ" ಹಗಲು ಮಾಯಕದ ಹಿಕ್ಮತ್ತುಗಳಿಗೆಲ್ಲ ಸಾಮಾಜಿಕ ಮಾನ್ಯತೆ ದೊರೆತಂತೆ ಕಂಡರೂ ಅಧ್ಯಾತ್ಮ ಮಾರ್ಗದಲ್ಲಿ ಯಾವ ಮಾನ್ಯತೆಯೂ ಇರಲಾರದು. ಆದ್ದರಿಂದ ಮಾರುತತುಲ್ಯನಾದ ಹನುಮನ ಸವಾರಿ ಮಾಡಬಯಸುವವರು ಹನುಮಭಾವದಲ್ಲಿ ಮುಳುಗದೆ ಬೇರೆ ಗತಿಯಿಲ್ಲ. ಕೇವಲ ಶಾಬ್ದಿಕ ಮಾರುತದಿಂದ "ಕಲುಷಿತ ಧೂಳಿನ ಹುಡಿ ಹಾರಿಸುವುದು" ಮಾತ್ರವೇ ಸಾಧ್ಯ. ಭಾವತಲ್ಲಣವನ್ನು ಶಮನಿಸಲಾಗದ ಯಾವುದೇ ಶಬ್ದಾಡಂಬರದಿಂದ - ಅಮೂಲ್ಯ ಸಮಯದೊಂದಿಗೆ ಬದುಕೇ ನಷ್ಟವಾಗುತ್ತ ಹೋಗುತ್ತದೆ. ಆದ್ದರಿಂದಲೇ ಶ್ರೀ ರಾಮಕೃಷ್ಣರು ಭಾವನಷ್ಟಗೊಳಿಸುವಂತಹ ಸುದ್ದಿಹದ್ದುಗಳಂತಿರುವ - ವೃತ್ತಪತ್ರಿಕೆಗಳನ್ನು - "ಅಪವಿತ್ರ" ಎಂದು ದೂರವಿರಿಸಿದ್ದರು; ಸಾಮಾಜಿಕ ಅಂತೆಕಂತೆಬೊಂತೆಗಳಿಂದ ದೂರವಿರುವಂತೆ ತಮ್ಮ ಭಕ್ತರಿಗೂ ಬೋಧಿಸಿದ್ದರು.

ಬಾಹ್ಯದಲ್ಲಿ ಕಳೆದುಹೋಗುತ್ತಿರುವ ಮನಸ್ಸನ್ನು ಅಂತರ್ಮುಖಗೊಳಿಸಿಕೊಂಡು... ವಿನಮ್ರತೆ, ನಿಷ್ಠೆ, ಭಕ್ತಿ ವೈರಾಗ್ಯದ ಪ್ರತಿಮೂರ್ತಿಯನ್ನು ತದೇಕಚಿತ್ತದಿಂದ ಧ್ಯಾನಿಸುವವರು - ಮಗುವು ತನ್ನ ಅಮ್ಮನನ್ನು ಪೀಡಿಸಿ ತನಗೆ ಬೇಕೆನಿಸಿದ ಮಿಠಾಯಿಯನ್ನು ಸಂಪಾದಿಸಿಕೊಳ್ಳುವಂತೆ - ಪ್ರೇಮಪೂರಿತ ಭಕ್ತಿಯನ್ನು ಆಶ್ರಯಿಸಿ, ಹನುಮ ಮೌಲ್ಯಗಳನ್ನು ಆರಾಧಿಸುತ್ತ ಕೃಪಾಮೃತಕ್ಕೆ ಪಾತ್ರರಾಗಬಹುದು. ಭಕ್ತ ಭಗವಂತನಲ್ಲಿ ಆತ್ಮೀಯ ಸಂಬಂಧ ಮೊಳೆತ ಮೇಲೆ ಕ್ರಮೇಣ ಭೌತಿಕ ವ್ಯಥೆಯ ರೂಪದಲ್ಲಿ, ಸ್ತುತಿಯ ರೂಪದಲ್ಲಿ - ಹುಸಿಮುನಿಸಿನ ನಿಂದೆಯೂ - ಭಕ್ತಿಯ ಪ್ರತಿರೂಪವಾಗಿ ಹೊರಹೊಮ್ಮಬಹುದು. ಪ್ರೀತಿಯನ್ನು ವಿಚಲಿತಗೊಳಿಸದಂತಹ ನಿಂದಾಸ್ತೋತ್ರಗಳವು !

ಭಾವದಂತೆಯೇ ಭವ ! ಯಾರನ್ನಾದರೂ ಉದ್ದೇಶಿಸಿ ಸಿಡುಕಲು, ಮುಖ ಊದಿಸಿಕೊಳ್ಳಲು ಅಥವ ನಿಂದಿಸಲು ಅರ್ಹತೆ ಇರುವುದು ಪ್ರೀತಿಸುವವರಿಗೆ ಮಾತ್ರ ! ಯಾವುದೇ ನಿಂದನೆಗೂ ಪ್ರೀತಿಯೇ ಮೂಲದ್ರವ್ಯವಾದಾಗ ಅಂತಹ ನಿಂದನೆಯಲ್ಲೂ ಸಹಜ ಸೌಂದರ್ಯದ ಅನಾವರಣವಾಗುತ್ತದೆ ! ಸೌಂದರ್ಯದ ಪ್ರಕೃತಿಯಲ್ಲಿಯೇ ಸತ್ಯ, ಶಿವನ ಆವಾಸ. ಇದೇ ನಿಷ್ಕಲ್ಮಷ ಪ್ರೇಮಾಭಕ್ತಿ. ಆದ್ದರಿಂದಲೇ ಹೆತ್ತವರು ನಿಂದಿಸಿದರೆ ಮುಗ್ಧ ಮಕ್ಕಳಿಗೆ ನೋವಾಗುವುದಿಲ್ಲ; ಅಲ್ಲಿ, ದೂಷಿಸಿದವರು ಮತ್ತು ದೂಷಿಸಿಕೊಂಡವರು ಗಟ್ಟಿಯಾಗಿ ಆಶ್ರಯಿಸಿಕೊಂಡು ಪರಸ್ಪರ ನೋವು ಕಳೆದುಕೊಳ್ಳುತ್ತವೆ. ಆತ್ಮಭಾವವು ನಿಸ್ವಾರ್ಥ ಭಕ್ತಿ ವಿಶ್ವಾಸದಿಂದ ಪುಷ್ಟಿಗೊಂಡಾಗ ಮಾತ್ರ ಅಂತಹ ಪ್ರೇಮಾಭಕ್ತಿಯು ಸಂಭವಿಸುತ್ತದೆ.

ಪರಾಶಕ್ತಿಯು ನಾದಪ್ರಿಯವಲ್ಲ; ವೇದಪ್ರಿಯವೂ ಅಲ್ಲ; ಭಕ್ತಿಪ್ರಿಯ. ಭಕ್ತಿಯೇ ಆಧ್ಯಾತ್ಮದ ಹೆಬ್ಬಾಗಿಲು. ಸದ್ಗುಣಗಳ ಭಾವಸನ್ನಿಧಿಯನ್ನು ಪ್ರಯತ್ನಪೂರ್ವಕವಾಗಿ ಮೂಡಿಸಿ ರೂಢಿಸಿಕೊಂಡು ಭಕ್ತರಾಗುವುದು ಅಧ್ಯಾತ್ಮ ಪ್ರವೇಶದ ಮೊದಲ ಹೆಜ್ಜೆ. ಬದುಕಿನಲ್ಲಿ ನಾವು ಹೊಕ್ಕು ಹೊರಡುವ - ಓದು ಬರಹ ವಿಚಾರ ಸತ್ಸಂಗಗಳು...  ಮುಂತಾದುವೆಲ್ಲವೂ ಉತ್ತಮ ಮೌಲ್ಯಗಳತ್ತ ನಾವು ಮುಖ ತಿರುಗಿಸಿ ನೋಡುವಂತೆ ಮಾಡುವ ಪ್ರಾಥಮಿಕ ಸಾಧನಗಳಷ್ಟೇ. ಅವು - ಭಾವಶುದ್ಧಿಗೆ ಒದಗುವ - OBJECTS - ಬಾಹ್ಯ ಉಪಕರಣಗಳು. ನಾದ ವೇದ ಭಕ್ತಿ ಎಂಬ ಯಾವುದೇ ಉಪಕರಣವನ್ನು ಶ್ರದ್ಧೆಯಿಂದ ಅನುಸರಿಸಿ ಅಂತರ್ನಡೆಗೆ ಸಾಧನವಾಗಿ ಅಳವಡಿಸಿಕೊಂಡಾಗ ಮಾತ್ರ - ಇಚ್ಛಿತ ಫಲವನ್ನು ಕಾಣುವಂತಾಗುತ್ತದೆ.

                                           ******     ******     ******
"I  JUST want to be happy" - ಇದು ಎಲ್ಲ ಜೀವಿಗಳ ಅಂತರ್ಭಾವ. ಈ ನಿಜಸುಖದ ಭಾವತುಡಿತವನ್ನು ಶಾಂತಗೊಳಿಸಲು ಭಾವಶುದ್ಧದ ಮನೋವೇದಿಕೆಯು ಅತ್ಯಗತ್ಯ. To be happy ಎಂಬ ಯಾವುದೇ ಕಾಮನೆಯ ಭಾವಪೂರ್ಣತೆಗೆ - JUST  I  WANT - ಎಂಬ ಹಟಮಾರಿ ಭಾವವೇ ಸಾಕಾಗದು; ಮನಸ್ಸಿನ JUST ಎಂಬ ಭಾವನೆಲೆಯನ್ನು RE-ADJUST ಮಾಡಿಕೊಳ್ಳಬೇಕಾಗುತ್ತದೆ. ಚಾಂಚಲ್ಯವನ್ನು ನಿಯಂತ್ರಿಸಿಕೊಂಡು, ಸದ್ಭಾವ ಪ್ರವೇಶಕ್ಕೆ ಅಗತ್ಯವಾದ ಮನೋಭೂಮಿಕೆಯನ್ನು ಸ್ಥಾಪಿಸಿಕೊಂಡು - ಅಲ್ಲಿ ಇಲ್ಲಿ ಸೊಂಡಿಲು ಚಾಚುತ್ತ, ಆಶಾಕಾಮಿನಿಯನ್ನು ಕಾಮಿಸುವ ಮನಸ್ಸಿಗೆ ಭಾವಶುದ್ಧಿಯ ತರಬೇತಿಯನ್ನು ನೀಡುವ ಪೂರ್ವ ಸಿದ್ಧತೆಯು ಬೇಕಾಗುತ್ತದೆ. ಮನಸ್ಸೆಂಬ ಕೆರೆಯ ಕೆಸರು ಹೂಳನ್ನೆತ್ತಿ ಜಲಶುದ್ಧಿಗೊಳಿಸುವ ಪ್ರಕ್ರಿಯೆಯಿದು. ಏಕೆಂದರೆ ಅಂತರ್ಜಲ ಶುದ್ಧಿಗೊಳ್ಳದೇ - ಅದೇ ಸ್ಥಾನಕ್ಕೆ ಎಷ್ಟೇ ಹೊಸ ನೀರನ್ನು ತುಂಬಿಸುತ್ತಿದ್ದರೂ ಅದು ವ್ಯರ್ಥವೇ ಆಗುತ್ತದೆ. ಅಂತರ್ಭಾವಶುದ್ಧಿಗೆ - ಪ್ರಾರ್ಥನೆಯೇ ಸಿದ್ಧೌಷಧ.


"ಜಾಗ್ರತ ಕೊರೊ ಉದ್ಯತ ಕೊರೊ ನಿರ್ಭಯ ಕೊರೊ
ಮಂಗಲ ಕೊರೊ ನಿರಲಸ ನಿಃಸಂಶಯ ಕೊರೊ
ಅಂತರ ಮಮ ವಿಕಸಿತ ಕೊರೊ... " (ರವೀಂದ್ರನಾಥ ಠಾಕೂರ )

"ಭವಸಾಗರ ಜಲ ದುಸ್ತರ ಭಾರೀ
ತುಮ್ಹರೇ ಚರಣ ಜಹಾಜ ಹಮಾರೇ..
ನಾರಾಯಣ ಮೈ ಶರಣ ತುಮ್ಹಾರೀ
ದಯಾಕರೋ..."     (ಬ್ರಹ್ಮಾನಂದರು )

"ಸಮದೃಷ್ಟಿ ನೇ ತೃಷ್ಣಾ ತ್ಯಾಗೀ
ಪರಸ್ತ್ರೀ ಜೇನೇ ಮಾತ ರೇ
ಜಿಹ್ವಾ ಥಕೀ ಅಸತ್ಯ ನ ಬೋಲೇ
ಪರಧನ ನ ವಝಾಲೇ ಹಾಥ ರೇ...
ವೈಷ್ಣವ ಜನ ತೋ ತೇನೇ ಕಹಿಯೇ
ಜೇ ಪೀಡ ಪರಾಯೀ ಜಾಣೇ ರೇ..." (ನರಸೀ ಮೆಹತಾ )

"ಜಯ ಹನುಮಾನ್ ಜ್ಞಾನ-ಗುಣ-ಸಾಗರ
ಜಯ ಕಪೀಶ ತಿಹುಂ ಲೋಕ ಉಜಾಗರ
ರಾಮದೂತ ಅತುಲಿತ ಬಲಧಾಮಾ
ಅಂಜನಿಪುತ್ರ ಪವನಸುತ ನಾಮಾ...
ಸಂಕಟ ಕಟೈ ಮಿಟೈ ಸಬ ಪೀರಾ
ಜೋ ಸುಮಿರೈ ಹನುಮತ ಬಲಬೀರಾ..." (ತುಲಸೀದಾಸರು )

"ನಿನ್ನ ನಾಮವೆ ಜನನಿ ಸುರನದಿಯ ತೀರ್ಥ
ಎಲೆ ತಾಯೆ, ನೀನೇ ಪವಿತ್ರತಮ ತೀರ್ಥ
ನಿನ್ನ ಪೂಜೆಯೆ ಭಕ್ತಿ, ಸಾಧನ ವಿರಕ್ತಿ
ನಿನ್ನ ನೆನೆವುದೆ ನಮಗೆ ಗುರು ತಪಶ್ಶಕ್ತಿ...
ಶ್ರೀ ಶಾರದಾದೇವಿ ಹೇ ಮಹಾಮಾತೆ
ಶ್ರೀ ರಾಮಕೃಷ್ಣ ಗುರುದೇವ ಸಂಪ್ರೀತೆ..."  (ಕು ವೆಂ ಪು )

"ಒಂದು ದಳ ಶ್ರೀತುಳಸಿ ಬಿಂದು ಗಂಗೋದಕವ
ಇಂದಿರಾರಮಣಗೆ ಅರ್ಪಿತವೆನುತ
ಒಂದೇ ಮನಸಿನಲಿ ಸಿಂಧುಶಯನ ಎನೆ
ಎಂದೆಂದು ವಾಸಿಪನಾ ಮಂದಿರದೊಳಗೆ...
ಹುವ್ವ ತರುವರ ಮನೆಗೆ ಹುಲ್ಲ ತರುವ
ಅವ್ವ ಲಕುಮೀರಮಣ ಇವಗಿಲ್ಲ ಗರುವ... (ಪುರಂದರ ದಾಸರು )

"ಎಲ್ಲ ನಿನ್ನ ಲೀಲೆ ತಾಯೆ ಎಲ್ಲ ನಿನ್ನ ಮಾಯೆ
ನಿನ್ನ ಅಲ್ಲಗಳೆದ ನಮ್ಮ ಕರುಣೆಯಿಂದ ಕಾಯೇ... (ಲಕ್ಷ್ಮೀನಾರಾಯಣ ಭಟ್ಟರು )
ಸುಭಗರ ರೂಪದಲ್ಲಿರುವ ಮನೋರೋಗಿಗಳು ಹೆಚ್ಚುತ್ತಿರುವ ಈ ಸಾಮಾಜಿಕ ಕಾಲಘಟ್ಟದಲ್ಲಿ ಅಧ್ಯಾತ್ಮದ ಸ್ಪರ್ಶವೊಂದೇ ಸಮಾಜವನ್ನು ರಕ್ಷಿಸಬಲ್ಲದು. ಅದನ್ನು "ಓಲ್ಡನ್ ಅಧ್ಯಾತ್ಮ" ಎನ್ನಿ; ಅಥವ "ಮಾಡರ್ನ್ ಅಧ್ಯಾತ್ಮ" ಎನ್ನಿ. ಅಂತೂ... ಅಧ್ಯಾತ್ಮ ಎಂಬುದು ಇಲ್ಲದೆ ಹೋದರೆ - ಬದುಕು ಸಪ್ಪೆಯಾಗುತ್ತದೆ. ಅಧ್ಯಾತ್ಮ ಪ್ರಪಂಚದಲ್ಲಿ ಹಾರ್ದಿಕ ಪ್ರಾರ್ಥನೆಗೆ ವಿಶೇಷ ಸ್ಥಾನವಿದೆ. ಶ್ರೀ ರಾಮಕೃಷ್ಣರು ತಮ್ಮ ಭಕ್ತಗಡಣಕ್ಕೆ ಹೇಳುತ್ತಿದ್ದರು. "ಜಪ ಧ್ಯಾನವನ್ನು ಮುಗಿಸಿದ ಕೂಡಲೇ ಆಸನವನ್ನು ಬಿಟ್ಟು ಎದ್ದು ಬಿಡಬೇಡಿ. ಸ್ವಲ್ಪ ಹೊತ್ತು ಅಲ್ಲೇ ಕುಳಿತು ದೇವರ ಸ್ತುತಿ ಗೀತೆಗಳನ್ನು ಹಾಡಬೇಕು. ಆಗ ದಿನಪೂರ್ತಿ ಮನಸ್ಸು ಶಾಂತವಾಗಿರುತ್ತದೆ..." ಅಂದರೆ... ಶುದ್ಧಭಾವದ ಗುಂಗನ್ನು ದೀರ್ಘಕಾಲ ಉಳಿಸಿಕೊಳ್ಳುವ ಆಧ್ಯಾತ್ಮಿಕ ವ್ಯಾಯಾಮವಿದು.

ಭಾವ ಶುದ್ಧಗೊಳಿಸುವ ವ್ಯಾಕುಲ ಪ್ರಾರ್ಥನೆಯಿಂದಲೇ ಅಂತರಂಗ ಶುದ್ಧಿ. ಪ್ರಾರ್ಥನೆ ಎಂಬ ಸ್ನಾನದಿಂದ ಅಂತರಂಗ ಶುದ್ಧಿಯಾಗದೆ ಅಧ್ಯಾತ್ಮರಂಗವನ್ನು ಪ್ರವೇಶಿಸುವವರದು ವೇಷ ಮಾತ್ರವಾಗಬಹುದಲ್ಲದೆ ಉದ್ದೇಶಿತ ಸಾರ್ಥಕ್ಯ ಕಾಣಲಾಗದು. ಆದ್ದರಿಂದಲೇ ಯೋಗಿಗಳು, ಅವಧೂತ ಭಕ್ತ ಸಾಧಕರು ತಮ್ಮ ಸುದೀರ್ಘ ಆಧ್ಯಾತ್ಮ ಸಾಧನೆಯ ಫಲವನ್ನು ಪದ-ಪದ್ಯಗಳ ಮೂಲಕ - ಹೀಗೆ ಉದಾರವಾಗಿ ಹರಿಸುತ್ತಲೇ ಬಂದರು. ಅಂತಹ ಭಕ್ತಿ ಬಿಂದುಗಳ ಸಾಗರವೇ ನಮ್ಮ ಬೆನ್ನ ಹಿಂದಿದೆ... ಮತ್ತು ಜೀವಜಗತ್ತು ಕುಸಿದು ಬೀಳದಂತೆ ಆಧರಿಸುತ್ತಲೇ ಬಂದಿದೆ; ಈ ಜಗತ್ತಿನ - "Want To be happy" ಎನ್ನುವ ಉಡಾಳ, ಸಡಿಲು ಬಯಕೆಗಳ ಸಮ್ಮುಖದಲ್ಲಿ - ನಿಜಾನಂದದ ಸುಲಭ ಸುಭಗ ಸೂತ್ರವನ್ನು ತೆರೆದಿಟ್ಟಿದೆ.

ಅಧ್ಯಾತ್ಮಕ್ಕೆ ಸೃಷ್ಟಿಯ ಗರ್ಭದ ನಂಟಿದೆ ! ಅಂತಹ ಅನಾದಿ ಸೂಕ್ಷ್ಮಕ್ಕೆ ಸಾಕ್ಷಿಯಾಗಲು ಇಚ್ಛಿಸುವವರು - ಅಪ್ಪಅಮ್ಮನ ಕೈ ತಪ್ಪಿಸಿಕೊಂಡು ಓಡಿಹೋಗುವ ಪುಂಡು ಮಕ್ಕಳಂತಾಡದೆ - ಸುದೃಷ್ಟಿಯ ವ್ಯಾಪ್ತಿಯಲ್ಲಿಯೇ ಆಡಿಕೊಂಡಿರಬೇಕಷ್ಟೆ ! ಆಗಲೇ ಕ್ಷೇಮಲಾಭ. "ಬೆನ್ನ ಹಿಂದೆ ನನ್ನ ಅಮ್ಮ ಇದ್ದಾಳೆ; ಅಪ್ಪ ಇದ್ದಾನೆ... " ಎಂಬ ಧೈರ್ಯವೇ - ಮುಂದೆ ಮುಂದೆ ಓಡಬಯಸುವ ಮಗುವಿನಲ್ಲಿ ಅಪಾರ ವಿಶ್ವಾಸವನ್ನು ತುಂಬುವಂತೆ - ಆಧ್ಯಾತ್ಮಿಕ ಸಾಧಕರ ನಡೆನುಡಿಗಳು ಸಜ್ಜನರಲ್ಲಿ ವಿಶ್ವಾಸವನ್ನು ತುಂಬಿ ಆಧರಿಸಬಲ್ಲವು. ಶ್ರೀ ರಾಮಕೃಷ್ಣ ಕ್ಷೇತ್ರದಲ್ಲಿ ಅಂತಹ ಸತ್ವ ಮತ್ತು ವಚನಸುಧೆಯ ಪ್ರಶಾಂತ ಬೆಳಕಿದೆ !

ಯಾವುದೇ ಒಂದು ಶ್ರೇಷ್ಠ ಬದುಕು - ಅದು ತಮ್ಮ ಜೊತೆಯಲ್ಲಿ ಬದುಕಿರುವಾಗ - ಅದರ ಶ್ರೇಷ್ಠತೆಯು ಜನರಿಗೆ ಅರ್ಥವಾಗುವುದೇ ಇಲ್ಲ. ಅತ್ಯಂತ ಆತ್ಮೀಯರೆಂದುಕೊಂಡವರಿಗೂ ಅಂತಹ ಮಹಾತ್ಮೆಯ ವ್ಯಾಪ್ತಿ ಆಳ ವೈಶಾಲ್ಯದ ಅರಿವು ಮೂಡುವುದಿಲ್ಲ. ಯಾವತ್ತೂ ಒಂದು ವಸ್ತುವಿನ ಬೆಲೆ ತಿಳಿಯುವುದು - ಅದನ್ನು ಕಳೆದುಕೊಂಡ ಮೇಲೇ. ಅದು - ಆಯಾ ಅವತಾರಗಳ ನಿಯಮವೇ ಇರಬಹುದು. ಶ್ರೀರಾಮ ಶ್ರೀಕೃಷ್ಣರಂತೆ - ಶ್ರೀ ರಾಮಕೃಷ್ಣರೂ ಈ ಸೂತ್ರಕ್ಕೆ ಅಪವಾದವಾಗಲಿಲ್ಲ ! "ದೈವತ್ವವು ಯಾವತ್ತೂ ದೃಶ್ಯವಾಗದು; ಅದು ಅದೃಶ್ಯವೇ ಆಗಿರುತ್ತದೆ; ಆಗಿರಬೇಕು...." ಇತ್ಯಾದಿಯಾಗಿ ಅಂದುಕೊಳ್ಳುವ ಮಾಯಾಮತಿಗಳು ತಮ್ಮ ನಡುವಿನಲ್ಲೇ ಬದುಕಿದ ದೈವಾಂಶಗಳನ್ನು ಗುರುತಿಸಲಾಗದೆ ಹೋಗಿರುವ ಅನೇಕ ಸಂದರ್ಭಗಳಿವೆ. ಅಂತಹ ಢಾಂಬಿಕ ಮಿಡುಕಾಟಗಳನ್ನೆಲ್ಲ ಮಹಾತ್ಮರಾದವರು ಅಪೇಕ್ಷಿಸುವುದೂ ಇಲ್ಲ. ಆದ್ದರಿಂದಲೇ - ಮುಖ್ಯವಾಗಿ ಅಧ್ಯಾತ್ಮ ಕ್ಷೇತ್ರದಲ್ಲಿ ಮಾತ್ರ - "ಆಯಾ ದೇಶಕಾಲಗಳ ವ್ಯಾಪಕ ಅನುಭವಕ್ಕೆ ಬರದಂತೆ ಜಾರಿ ಹೋದ" ಅವತಾರಗಳನ್ನು ಗುರುತಿಸಬಹುದು.

                                                ******     ******     ******

ಶಂಕರ ಮಧ್ವ ರಾಮಾನುಜ, ಚೈತನ್ಯಪ್ರಭು, ವಿದ್ಯಾರಣ್ಯ, ಅರವಿಂದರು, ರಮಣ ಮಹರ್ಷಿ, ಅಲ್ಲಮ, ಶ್ರೀ ರಾಮಕೃಷ್ಣರು... ಮುಂತಾದ ಅನೇಕ ಆಚಾರ್ಯರು, ಆಧ್ಯಾತ್ಮಿಕ ಋಷಿಗಳು ಇದೇ ಭರತದೇಶದಲ್ಲಿ ಬಂದು ಹೋಗಿದ್ದಾರೆ. ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳೈಸಿದಂತಹ - ಅನೇಕ ಋಷಿಸದೃಶ ಬದುಕುಗಳೂ ಈ ಭೂಮಿಯಲ್ಲಿ ಸಂಚರಿಸಿವೆ.

*ಎಂ. ಎಸ್. ಸುಬ್ಬುಲಕ್ಷ್ಮಿ , ಕೆ. ಜೆ. ಯೇಸುದಾಸ್, ಬಿಸ್ಮಿಲ್ಲಾ ಖಾನ್... ಮುಂತಾದ ರಸ ಋಷಿಗಳು.
*ಮಹಾತ್ಮಾ ಗಾಂಧಿ, ಈಶ್ವರಚಂದ್ರ ವಿದ್ಯಾಸಾಗರ, ಲೋಕಮಾನ್ಯ ತಿಲಕ್, ಎಸ್. ರಾಧಾಕೃಷ್ಣನ್, ಅಬ್ದುಲ್ ಕಲಾಂ... ಮುಂತಾದ ಸಾಮಾಜಿಕ ಋಷಿಗಳು.
*ಐನ್ ಸ್ಟೈನ್, ಸಿ. ವಿ. ರಾಮನ್, ಜಗದೀಶಚಂದ್ರ ಬೋಸ್, ಮೇಡಂ ಕ್ಯೂರಿ, ಹೋಮಿ ಜೆ ಭಾಭಾ, ಮೋಕ್ಷಗುಂಡಂ ವಿಶ್ವೇಶ್ವರಯ್ಯ... ಮುಂತಾದ ಋಷಿ ವಿಜ್ಞಾನಿಗಳು.
*ಡಿ. ವಿ. ಗುಂಡಪ್ಪ, ದ. ರಾ. ಬೇಂದ್ರೆ, ಐರೋಡಿ ಶಿವರಾಮಯ್ಯ, ಶಿವರಾಮ ಕಾರಂತ, ಕುವೆಂಪು, ಲಿಯೋ ಟಾಲ್ ಸ್ಟಾಯ್... ಮುಂತಾದ ಅಕ್ಷರ ಋಷಿಗಳು.
ಹೀಗೇ... ಸಹಸ್ರಾರು ಋಷಿಸಮಾನರು...

ಆದ್ದರಿಂದ ಋಷಿಯಾಗು. ಏನನ್ನಾದರೂ ಸಾಧಿಸುವ ಇಚ್ಛೆಯಿದ್ದರೆ... ಮೊದಲು ಸಾಧಕನಾಗು. ತಪಸ್ವಿಯಾಗದೆ - ಋಷಿಭಾವವಿಲ್ಲದೆ ಏನನ್ನೂ ಸಾಧಿಸಲು ಆಗುವುದಿಲ್ಲ.

                                                ******     ******     ******

ಸಾರಾಂಶ ..... 

ಸ್ವಂತ ಇತಿಮಿತಿಯನ್ನು ಅರಿಯದೆ, ದಿನನಿತ್ಯವೂ ನೂರಾರು ಜನರನ್ನು ಭೇಟಿಯಾಗುತ್ತ, ಅಂತಹ ಅಧಿಕಪ್ರಸಂಗಗಳನ್ನೇ "ಸಾಮಾಜಿಕ ಪ್ರತಿಷ್ಠೆ" ಅಂದುಕೊಳ್ಳುವವರ ಮಧ್ಯದಲ್ಲಿ - ಈಗ ನಾವಿದ್ದೇವೆ. ಇದನ್ನು "ಕಳೆದು ಹೋಗುವ ಕ್ರಿಯೆ" ಎಂದೂ -  ಸಂಕ್ಷೇಪವಾಗಿ ಹೇಳಬಹುದು. ಅಂತಹ "ಕಳೆಯುವ ಬದುಕುಗಳು" ಅತ್ಯಂತ ಅತೃಪ್ತ ಸ್ಥಿತಿಯಲ್ಲಿ ನರಳುತ್ತಿರುವುದು ಹೊರನೋಟಕ್ಕೆ ಢಾಳಾಗಿ ಕಾಣದಿದ್ದರೂ - ಅದೇ ವಾಸ್ತವವಾಗಿರುತ್ತದೆ. ಹೆಚ್ಚು ಹೆಚ್ಚು ಬಹಿರ್ಮುಖವಾಗುವುದೆಂದರೆ - ತನ್ನನ್ನು ತಾನು ನಗಣ್ಯವಾಗಿಸುವುದು ಎಂದೇ ಅರ್ಥ. ಮನುಷ್ಯರು ಪ್ರತೀ ಕ್ಷಣವೂ ಬಯಸಿ, ಇರಬೇಕಾದುದು ತನ್ನ ಜೊತೆಯಲ್ಲಿಯೇ ಎಂಬುದನ್ನು ಅರಿಯುವ ವರೆಗೂ ಮನಸ್ಸುಗಳಿಗೆ ಗೊಂದಲಗಳು ತಪ್ಪಿದ್ದಲ್ಲ. 

ಮನುಷ್ಯರು ಅನುಕ್ಷಣವೂ ಅನುಭಾವಿಸಿ, ದರ್ಶಿಸಲು ಯತ್ನಿಸಬೇಕಾದುದು ಬಾಹ್ಯ ಡೊಂಬರಾಟಗಳನ್ನಲ್ಲ; ಬದಲಾಗಿ, ಅದು - ತನ್ನನ್ನೇ ಆಗಿರುತ್ತದೆ. ಆತ್ಮಸಾಕ್ಷಿ ಎಂಬುದು ಯಾವತ್ತೂ "ಮೂಕಸಾಕ್ಷಿ" ಅಲ್ಲವೇ ಅಲ್ಲ. ಆತ್ಮಸಂವಹನವನ್ನು ಸಾಧಿಸಲಾಗದ ಬಹುಜನರ ಪಕ್ಷವು ಹಾಗಿದ್ದರೂ ಅದು ಸತ್ಯವಲ್ಲ; ಅದು ಪ್ರಾಪಂಚಿಕರ ದಡ್ಡತನದ ವ್ಯರ್ಥ ವ್ಯವಹಾರ. ತಾವು "ಕಂಡದ್ದು ಮಾತ್ರವೇ ಸತ್ಯ" ಎನ್ನುವುದು ಮಹಾ ದಡ್ಡತನ. ಎಲ್ಲ ಅನುಭವಗಳನ್ನೂ ಕಾಣಲಾಗುವುದಿಲ್ಲ. ಆತ್ಮ ಅಥವ ಒಳದನಿಯು ಎಲ್ಲೂ ಪ್ರಕಟವಾಗದೆ, ನಿರ್ಲಿಪ್ತ - ತಟಸ್ಥವಾಗಿದ್ದಂತೆ ಭಾಸವಾದರೂ ಶರಣಾಗತಭಾವದ ಸಾಧಕನಲ್ಲಿ ಆತ್ಮಿಕ ನೆಲೆಯ ಚೈತನ್ಯ ಎಂಬುದು ಸದಾ ಚಲನಶೀಲ ಅಂತರ್ಗಾಮಿಯಂತಿದ್ದು, ಹಿತೈಶಿಯ ಭಾವವನ್ನು ಪ್ರೇರೇಪಿಸುತ್ತ - ಹೊಣೆಯರಿತ ಪಾತ್ರವನ್ನು ನಿರ್ವಹಿಸುತ್ತ ಇರುತ್ತದೆ. ಆದರೆ, ತನ್ನೊಳಗಿನ "ಹಿತೈಶಿಯನ್ನು ಅವಲಂಬಿಸುವ" ವ್ಯವಧಾನ ಇರುವ ಮೌನಿಗಳಿಗೆ ಮಾತ್ರವೇ - ಅಂತಹ ಅಂತರ್ವಾಣಿ ಕೇಳಿಸುತ್ತದೆ. ಯಾವುದೇ ಬಗೆಯ "ಪ್ರಚಾರಗಳಿಗೆ ಸಿಲುಕದ" ಸ್ವತಂತ್ರ ಅನುಭಾವವಿದು. ವಿಶ್ವಾಸ ನಂಬಿಕೆ ಇದ್ದಲ್ಲಿ - ಅಂತಹ ಬದುಕುಗಳನ್ನು ಕೈಹಿಡಿದು ನಡೆಸುವ ಶಕ್ತಿಯೂ - ಇದೇ ಆಗಿದೆ. ಅದು - "ನಾನೇ" ಆಗಿದೆ. 

ಅಧ್ಯಾತ್ಮದ ಕಠಿಣ ಶಾಸ್ತ್ರೀಯ ನಡೆಯು ಸಾಮಾನ್ಯರ ಕೈಗೆಟುಕದ ಕುಸುಮದಂತೆ ಭಾಸವಾದರೂ... "ಆತ್ಮ ಪ್ರಜ್ಞೆಯ  ಅಧ್ಯಾತ್ಮದ" ಜಾಗ್ರತಿಯಿಲ್ಲವಾದಲ್ಲಿ ಲೌಕಿಕವಾಗಿಯೂ ಯಾವುದೇ ಸಾಧನೆಯು ಸಂಭವಿಸದು - ಎಂಬುದು ಸಾಧಾರ ಸತ್ಯ. ಆತ್ಮ ಪ್ರಜ್ಞೆಯ ಜಾಗ್ರತಿಯೇ ಜ್ಞಾನ. ಯಾವುದೇ ಶಿಷ್ಟ ಸಾಧನೆಯನ್ನು - ಅವ್ಯಕ್ತವಾಗಿದ್ದುಕೊಂಡೇ ಪೋಷಿಸುವ ಮೂಲದ್ರವ್ಯವೇ ಅಧ್ಯಾತ್ಮ; ಅದೇ ಆತ್ಮ ಭಾವ.

ಇವತ್ತಿನ ಬೆರಕೆ ಭಾಷೆಯಲ್ಲಿ ಸೂಕ್ಷ್ಮವಾಗಿ ಹೇಳುವುದಾದರೆ...
MINDSET ಬದಲಿಸಿಕೊಂಡರೆ ಮಾತ್ರ - ನಿರೀಕ್ಷಿತ OUTCOME ಸಿಗುತ್ತದೆ.   
 
                                             *****-----*****-----*****


Saturday, December 31, 2016

ಮರುಳು - ಗುಬ್ಬಿ ಕನಸು...

ಭಯವಿಲ್ಲದ ಬದುಕು ಮಾತ್ರ ನೆಮ್ಮದಿಯಿಂದ ಸಾಗಬಲ್ಲದು. ಧಾರ್ಮಿಕ ಮನೋಭಾವಗಳು - ಭಯನಿವಾರಣೆಗೆ ತಮ್ಮದೇ ಹಾದಿಯನ್ನು ಎಂದೋ ಕಂಡುಕೊಂಡಿವೆ; "ಭಗವಂತನ ಆಸರೆಯನ್ನು ಹೊಂದದೆ ಭಯ ಎಂಬುದು ನಿವಾರಣೆಯಾಗದು" ಎನ್ನುತ್ತಲೇ ಬಂದಿವೆ. ಆದರೆ ಇಂತಹ ಮನೋಭಾವವನ್ನು ರೂಢಿಸಿಕೊಳ್ಳುವುದು ಸುಲಭವೇನಲ್ಲ. ಭದ್ರವಾಗಿ ಭಗವಂತನ ಪಾದಗಳನ್ನು ಹಿಡಿದುಕೊಂಡೇ ಸಂಸಾರ ತೂಗಿಸುವುದಕ್ಕಿಂತ ದೊಡ್ಡ ಸರ್ಕಸ್ಸು ಉಂಟೆ ? ಸ್ಥಿರವಾದ ವೈರಾಗ್ಯವನ್ನು ಆವಾಹನೆ ಮಾಡಿಕೊಳ್ಳಲಾಗದೆ ನಡುಹಾದಿಯಲ್ಲೇ ಬಳಲಿಹೋಗುವ ಹಕ್ಕಿಸಂಸಾರಗಳ ಪಾಡೇನು ? ವಿರಕ್ತಿಯ ವಿಳಾಸವನ್ನೇ ತಿಳಿಯದ ಕೌಟುಂಬಿಕ ಮತ್ತು ಔದ್ಯೋಗಿಕ ಭಾವವರ್ತುಲದಲ್ಲಿ ತೇಲುವಂತಾದಾಗ ಕ್ಷಣಕ್ಷಣವೂ ಏಕಾಗ್ರತೆಯ ಭಂಗವಾಗುತ್ತಲೇ ಇರುತ್ತದಲ್ಲ ! ಅತ್ತ ಇತ್ತ ಸುತ್ತ ಎತ್ತೆತ್ತಲಿಂದ ಅನಿರೀಕ್ಷಿತಗಳ ಹೊಡೆತಕ್ಕೆ ಸಿಲುಕಿದಂತಾಗುವುದಲ್ಲ ! ಆಗ ಏಕಾಗ್ರತೆ -  ವೈರಾಗ್ಯಗಳೆಲ್ಲ ಉಳಿದೀತೆ ? ಅರ್ಧಂಬರ್ಧ ಮೆಚ್ಚಿ ಕಲಿತು ಒಪ್ಪಿಕೊಂಡ ಸಿದ್ಧಮೌಲ್ಯಗಳನ್ನು ತಮಗೆ ಗೊತ್ತಿದ್ದೇ ಮೀರಬೇಕಾದ ಅನೇಕ ಸಂದರ್ಭಗಳು ಸಾಂಸಾರಿಕ ಬದುಕಿನಲ್ಲಿ ನಿತ್ಯವೂ ಎದುರಾಗುವುದಿಲ್ಲವೆ ? ಅಂತಹ ಅನಿಶ್ಚಿತತೆಗಳೇ ಭಯಮೂಲಗಳು. ಭಯರಹಿತ ಸುರಕ್ಷಿತ ಸಾಮಾಜಿಕ ಸನ್ನಿವೇಶವನ್ನು ರೂಪಿಸುವುದರಲ್ಲಿ ನ್ಯಾಯಾಂಗದ ಪಾತ್ರ - ಹಿರಿದಾದುದು.

ಇವತ್ತಿನ ನ್ಯಾಯಾಲಯಗಳು ಹೇಗಿವೆ ? ಅಪರಾಧಿಗಳಿಗೆ ಮೋಜಿನ ತಾಣವಾಗಿರುವಂತೆ ಕಾಣಿಸಿದರೆ - ನಿರಪರಾಧಿಗಳಿಗೆ ಭಯ ಹುಟ್ಟಿಸುವ ಶಕ್ತಿಯುತ ತಾಣವೆನ್ನಿಸುತ್ತಿದೆಯೆ ?

ಬರಬರುತ್ತ - ನ್ಯಾಯಕ್ಷೇತ್ರಗಳ ಪರಿವರ್ತನೆಯಾಗಿದ್ದರೆ ಅದಕ್ಕೆ ವ್ಯವಸ್ಥೆಯ ಜತೆಗೆ ಪ್ರತಿಯೊಬ್ಬ ಮನುಷ್ಯನ ಕಾಣಿಕೆಯೂ ಎಷ್ಟೆಷ್ಟು ? ಸಮಾಜದ ಸಣ್ಣ ಹಕ್ಕಿಪಕ್ಕಿಗಳಿಗೆ ಯಾವುದೇ ಭ್ರಷ್ಟತನವನ್ನು ಪರಿವರ್ತಿಸುವ ಶಕ್ತಿ ಇರುವುದಿಲ್ಲ; ಎಂದೂ ಇರಲಿಲ್ಲ. "ಅಲ್ಲಲ್ಲಿ ಸ್ವಲ್ಪ ಸ್ವಲ್ಪ ಭ್ರಷ್ಟತೆ ಇರಲಿ" ಎಂಬ ಧೋರಣೆಯನ್ನು ನಮ್ಮ ನ್ಯಾಯವಂತರು ನಿರಂತರವಾಗಿ ಅನುಸರಿಸುತ್ತ ಬಂದಂತೆ ಕಾಣುವುದಿಲ್ಲವೆ ? ಅದೇಕೆ ? "ಪಲಾಯನಕ್ಕೆ ಕಳ್ಳಗಿಂಡಿಗಳು ಇರಲಿ; ಸ್ವತಃ ನಡೆಸಿದ ದರೋಡೆಗಳಿಂದ ಪಾರಾಗಲು ಬೇಕಾದೀತು" ಎಂಬ ಕುಟಿಲ ಮುತ್ಸದ್ದಿತನವೆ ? ಭ್ರಷ್ಟತನದ ನಿವಾರಣೆಯ ಪ್ರಯತ್ನಗಳಿಗೆ ಪೂರ್ಣ ಸಹಕಾರವಾದರೂ ಸಿಗುತ್ತಿದೆಯೆ ? ಇಂತಹ ಹಿನ್ನೆಲೆಯಲ್ಲಿ ರೂಪುಗೊಂಡಿರುವ ಸ್ವಾರ್ಥಪ್ರೇರಿತ ನ್ಯಾಯದಾನ ಎಂಬ ಬೆಂಕಿಯಾಟವು ಅಪಾಯಕಾರಿಯಲ್ಲವೆ ?

ಪೇಜಾವರಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ತಮ್ಮ ಸುದೀರ್ಘ ಆಯುರ್ಮಾನದಲ್ಲಿ ಲೋಕವ್ಯಾಪಾರದ ಸಮೀಪ ದರ್ಶನವನ್ನೂ ಮಾಡಿದವರು. ಇತ್ತೀಚೆಗೆ ಅವರು ಹೇಳಿದ ಮಾತು ಇಂದಿನ "ಐನ್ ಭ್ರಷ್ಟತೆ" ಗಳಿಗೆ ಮತ್ತೊಮ್ಮೆ ಕನ್ನಡಿ ಹಿಡಿದಿದೆ. "ಭಾರತ ದೇಶದಲ್ಲಿ ಶೇ. 75 ರಷ್ಟು ಮಂದಿ ಭ್ರಷ್ಟರಿದ್ದಾರೆ. ಉಳಿದ ಶೇ. 25 ಮಂದಿಗೆ ಭ್ರಷ್ಟಾಚಾರಕ್ಕೆ ಅವಕಾಶ ಸಿಗುತ್ತಿಲ್ಲ. ಸಿಕ್ಕರೆ ಅವರು ಕೂಡ ಭ್ರಷ್ಟಾಚಾರದಲ್ಲಿ ನಿರತರಾಗುತ್ತಾರೆ..." ಎಂಬುದು ಜನಸಾಮಾನ್ಯರ ಅನುಭವವೂ ಹೌದು. ಹಾಗಿದ್ದರೆ ಎಲ್ಲರೂ ಕಳ್ಳರೆ ? ಅಥವ ಮನುಷ್ಯರ "ತೂರಿ ಜಾರುವ ಮೂಲ ಸ್ವಭಾವ"ಕ್ಕೆ ತಕ್ಕಂತೆ ರೂಪುಗೊಂಡಿರುವ ಸಾಮಾಜಿಕ ಚೌಕಟ್ಟಿನಲ್ಲಿ - ಕಳ್ಳನೋಟು ಉತ್ಪಾದಿಸಿದಂತೆ - ಕಳ್ಳಬುದ್ಧಿಗಳನ್ನೂ ಉತ್ಪಾದಿಸಲಾಗುತ್ತಿದೆಯೆ ? "ಕಳ್ಳ ಬುದ್ಧಿಗಳ ಅಮಾನ್ಯೀಕರಣ"ವೂ ನಡೆಯಬೇಕಲ್ಲವೆ ?

ಮೂಲತಃ ಮನುಷ್ಯರದು - ಕಪಿಗಳನ್ನೂ ಮೀರಿಸುವ ಚಾಂಚಲ್ಯ ಹೊಂದಿದ ಸಂತತಿ. ಮನುಷ್ಯರೇ ಸ್ವೈರವೃತ್ತಿಯ ಮೂಲ ಪಿತಾಮಹರು. ಸ್ವಯಂ ನಿಯಂತ್ರಣ ಮತ್ತು ಬಾಹ್ಯ ನಿಯಂತ್ರಣ ಎಂಬ ಎರಡು ಬ್ರೇಕುಗಳನ್ನು ಸಮರ್ಪಕವಾಗಿ ಬಳಸದಿದ್ದರೆ ಮನುಷ್ಯರನ್ನು ನಿಯಂತ್ರಿಸುವುದು ಬಲು ಕಷ್ಟ.

ಆದರೆ ಇದೇ ಬಿಟ್ಟಿ ವ್ಯವಸ್ಥೆಯಲ್ಲಿ - ನನಗೆ ಮಾತ್ರ ತಕ್ಕಮಟ್ಟಿನ ನ್ಯಾಯ ದೊರೆತಿದೆ ! ಜೊತೆಗೆ ಮತ್ತೊಮ್ಮೆ ಭಾರತೀಯ ನ್ಯಾಯ ಕ್ಷೇತ್ರದ ಸಮೀಪ ದರ್ಶನವೂ ಆಗಿದೆ.

ಕೋರ್ಟಿಗೆ ನಾನು ಹೋದದ್ದಲ್ಲ - ದೂಡಿದ್ದು !

ಆಕಾಶವಾಣಿಯ ಉದ್ಘೋಷಕಿಯ ವೃತ್ತಿಯಿಂದ ನಾನು ನಿವೃತ್ತಳಾದಾಗ ಅಲ್ಲಿನ ಕೊಳೆತ ವ್ಯವಸ್ಥೆಯು - ಶಾಂತವಾಗಿ ನಿರ್ಗಮಿಸಲು ನನಗೆ ಅವಕಾಶವನ್ನು ಕೊಟ್ಟಿರಲಿಲ್ಲ. ನನ್ನ 38 ವರ್ಷಗಳ ಪ್ರಾಮಾಣಿಕ ದುಡಿಮೆಯನ್ನು ಹೀಗಳೆಯುವಂತೆ - ಆಡಳಿತಾತ್ಮಕ ಉದ್ಧಟತನವನ್ನು ಪ್ರದರ್ಶಿಸಿತ್ತು. ಏಕೆಂದರೆ ಆಕಾಶವಾಣಿಯು ಸರಕಾರದ ಕೂಸು ! ಮತ್ತು... ಉದ್ಧಟತನ ಎಂಬುದು ಅಧಿಕಾರಮತ್ತವಾದ ಯಾವುದೇ ಸರಕಾರದ  ಕೂಸು ! ಇಂತಹ ಉದ್ದಂಡ ಕೂಸುಗಳ ಸಂಸಾರದಲ್ಲಿ ಯಾವ ಮರಿಕೂಸುಗಳೂ ಸುರಕ್ಷಿತವಾಗಿರುವುದು ಅಸಾಧ್ಯ. ನಮ್ಮ ಸರಕಾರವು ಮೂಗು ತೂರಿಸಿದ ಇದುವರೆಗಿನ ಎಲ್ಲ ವ್ಯವಸ್ಥೆಗಳಲ್ಲೂ ಇದೇ ಅರಾಜಕ ಸ್ಥಿತಿಯಿದ್ದರೆ ಅದಕ್ಕೆ ಸರಕಾರೀ ಬಾಬುಗಳ ಉದ್ಧಟತನವೇ ಕಾರಣ. ಉತ್ತರದಾಯಿತ್ವವೇ ಇಲ್ಲದ ಅಧೋಗತಿ ಇದು ! ಶಾಸನದ ಶೀರ್ಷಾಸನ ! ಹೆಸರಿಗೆ ಪ್ರಜಾಪ್ರಭುತ್ವವಾದರೂ ಜವಾಬ್ದಾರಿಯನ್ನು ವರ್ಗಾಯಿಸುತ್ತಲೇ ಹೋಗುವ ಅಸ್ಪಷ್ಟ ತ್ರಿಶಂಕು ಸ್ಥಿತಿಯ ದರ್ಶನವು ಎಲ್ಲರಿಗೂ ಆಗುತ್ತದೆ. ಬೀಳುವ ಬೀಳಿಸುವ - ಸಾಮಾಜಿಕ ಮತ್ತು ಸರಕಾರೀ ಆಟದ ನಡುನಡುವೆ - ಅಗ್ನಿಪರೀಕ್ಷೆಯ ಘಳಿಗೆಗಳಲ್ಲಿ ಮಾತ್ರ - ಅಂತಹ ನಿಜ ಮುಖದ ದರ್ಶನವಾಗುವುದು ಸಾಧ್ಯ ! ನನ್ನ ಔದ್ಯೋಗಿಕ ಪರಿಸರವೂ ಬೀಳಿಸುವ ಎಡಬಿಡಂಗಿತನದ ಅಂತಹುದೇ ಇನ್ನೊಂದು ಮಾದರಿಯಾಗಿತ್ತು. ಈಗಲೂ ದೊಡ್ಡದೆಂದು ಹೇಳಿಸಿಕೊಳ್ಳಲು ಹಾತೊರೆಯುತ್ತಿರುವ ಆಕಾಶವಾಣಿ ಎಂಬ ಸಂಸ್ಥೆಯು ತನ್ನ ಬಾಹ್ಯ ಮುಖವಾಡದ ಹಿಂದಿನ ಆವರಣದಲ್ಲಿ ತನ್ನ ಸಜ್ಜನಿಕೆಯನ್ನು ತೊರೆದು ಬಹಳ  ಸಮಯ ಕಳೆದುಹೋಗಿದೆ. ಅಲ್ಲಿ - "ಅಂದಿನ ಸಭ್ಯತೆ " - ಎಂಬುದು ಈಗ ಇಲ್ಲ. ಇದು ನಾನು ಕಂಡಿದ್ದ ಮಂಗಳೂರು ಆಕಾಶವಾಣಿಯ ಸ್ವರೂಪ; ಕುದುರೆಯು ಕತ್ತೆಯಾಗಿ ಹೋದುದಕ್ಕೆ 38 ವರ್ಷಗಳ ಉದ್ದಕ್ಕೂ ಸಾಕ್ಷಿಯಾಗಿದ್ದ ನನ್ನ ಅನುಭವ . (ನೋಡಿ - "ನಡೆದು ಬಂದ ದಾರಿ " ಭಾಗ  1 ರಿಂದ 18 ರ ವರೆಗಿನ ಕಥಾನಕ - ನಿಷ್ಠೆಯಿಂದ ಉಂಡು ಶ್ರದ್ಧೆಯಿಂದಲೇ ಉಗಿದ ವೃತ್ತಾಂತ . )

ಇದೇ ಸಂಸ್ಥೆಯಲ್ಲಿ 38 ವರ್ಷಗಳ ಕಾಲ ಧ್ವನಿ ಸವೆಸಿಕೊಳ್ಳುತ್ತ ಉದ್ಘೋಷಕಿಯಾಗಿದ್ದ ನನಗೆ - ನನ್ನ ಕರ್ತವ್ಯ ನಿರ್ವಹಣೆಯಲ್ಲೂ ಎಡೆಬಿಡದೆ ಅಡಚಣೆಗಳನ್ನು ಸೃಷ್ಟಿಸುತ್ತಿದ್ದುದು ಮಾತ್ರವಲ್ಲದೆ - ನಿವೃತ್ತಿಯ ಕಾಲದಲ್ಲಿ ನನಗೆ ಸಂದಾಯವಾಗಬೇಕಿದ್ದ ಒಟ್ಟು ಮೊಬಲಗನ್ನು ಹಿಡಿದಿಟ್ಟುಕೊಂಡು ಮತ್ತು ಮೂಲ ವೇತನವನ್ನು ನಿವೃತ್ತಿಯ ಅಂತಿಮ ಹಂತದಲ್ಲಿ ಕಡಿತಗೊಳಿಸಿದ್ದ ಆಕಾಶವಾಣಿಯು - ನಿಯಮ ಮೀರಿ - ಏಕಪಕ್ಷೀಯವಾಗಿ ಉದ್ಧಟತನವನ್ನು ಮೆರೆದಿತ್ತು; ನಿವೃತ್ತ ಬದುಕಿಗೆ ಅಶಾಂತಿಯನ್ನು ತುಂಬುವ ಕುಟಿಲ, ದುಷ್ಟ ಕಾರ್ಯತಂತ್ರವನ್ನು ಅನುಸರಿಸಿತ್ತು. ಆಕಾಶವಾಣಿಯ ಕುತಂತ್ರವನ್ನು ಪ್ರತಿಭಟಿಸಲೋಸುಗ - ನಾನು ನ್ಯಾಯಾಂಗದಲ್ಲಿ ಹೋರಾಡಬೇಕಾಯಿತು. ಹೋರಾಟವು ಇನ್ನೂ ಪೂರ್ತಿ ಮುಗಿದಿಲ್ಲ. ಏಕೆಂದರೆ ಈ ದೇಶದಲ್ಲಿ ಸರಕಾರೀ ಅಧಿಕಾರಿಗಳು ಸ್ವಚ್ಛಂದತೆಯಿಂದ ವರ್ತಿಸಲು ಪೂರ್ಣ ಸ್ವಾತಂತ್ರ್ಯವಿರುವ ವರೆಗೂ ಒಂದಲ್ಲ ಒಂದು ಹೋರಾಟಗಳಿಗೆ ನೌಕರರನ್ನು ನೂಕುತ್ತಲೇ ಇರುವಂತಹ ಸನ್ನಿವೇಶವಿರುತ್ತದೆ; ಸುಮ್ಮನೆ ಸಾಯಿಸುವ ಆಟವು ನಡೆಯುತ್ತಲೇ ಇರುತ್ತದೆ.  ಸ್ವಚ್ಛಂದ ವರ್ತನೆಗಳಿಗೆ ಪ್ರೋತ್ಸಾಹ ಸಿಗುವ ಯಾವುದೇ ಪರಿಸರದಲ್ಲಿ ಬಹುಸಂಖ್ಯಾಕ ಶೋಷಿತರ ನಿರ್ಮಾಣವಾಗುತ್ತದೆ. ತತ್ಪರಿಣಾಮವಾಗಿ ಈಗ - "ನ್ಯಾಯ ನ್ಯಾಯ" ಎಂದು ಬಾಯಿ ಬಡಿದುಕೊಳ್ಳುತ್ತ ನ್ಯಾಯಾಲಯಗಳ ಬಾಗಿಲು ಕಾಯುವ ಶೋಷಿತ ಜನಹಿಂಡು ಗಾಬರಿ ಹುಟ್ಟಿಸುವಷ್ಟಿದೆ ! ಈ ಹಿನ್ನೆಲೆಯಲ್ಲಿ ಇಂದಿನ ನ್ಯಾಯಾಲಯಗಳು ತಮ್ಮ ಬೇಡಿಕೆ ಮತ್ತು ಗೌರವವನ್ನು - ಕೃತಕವಾಗಿ ಹೆಚ್ಚಿಸಿಕೊಂಡಂತೆ ಕಂಡರೂ - ಸ್ವಂತ ಗೌರವವನ್ನು ಪಣಕ್ಕಿಳಿಸಿಕೊಂಡಿರುವ ನೋಟವೂ ಬಯಲಾಗುತ್ತಿದೆ!

"ನನಗೆ ನ್ಯಾಯವಾಗಿ ದೊರಕಬೇಕಿದ್ದ ನಿವೃತ್ತಿಯ ನಂತರದ ಎಲ್ಲ ಸೌಲಭ್ಯಗಳನ್ನು ಪಡೆಯಲು ನನಗೂ ಅರ್ಹತೆಯಿದೆ" - ಎಂಬ ಭಾವನೆಯಿಂದಲೇ ನಾನು ನ್ಯಾಯಾಸ್ಥಾನದ ಬಾಗಿಲು ಬಡಿದಿದ್ದೆ. ಅಂದ ಮಾತ್ರಕ್ಕೆ ನನ್ನ ಹೋರಾಟವಿದ್ದುದು ಕೇವಲ ದುಡ್ಡಿಗಾಗಿ ಅಂದುಕೊಳ್ಳಬೇಕಾಗಿಲ್ಲ. ಸೈದ್ಧಾಂತಿಕವಾಗಿ ಹೋರಾಡಲೇ ಬೇಕಾದ ಅನಿವಾರ್ಯತೆಯು ನನಗಿತ್ತು. ನನ್ನದು ಮತಿಗೆಟ್ಟ ನಿರ್ಧಾರವಾಗಿರಲಿಲ್ಲ. ನಮ್ಮ ನ್ಯಾಯದಾನದ ಪರಿಯ ಹುರುಳನ್ನು ಹೊರಗಿದ್ದೇ ಸ್ಥೂಲವಾಗಿ ತಿಳಿದಿದ್ದೂ ನಾನು ಅಲ್ಲಿಗೆ ಪ್ರವೇಶಿಸಿದುದಕ್ಕೆ ಇನ್ನೂ ಹಲವು ಕಾರಣಗಳಿವೆ.

ಮುಖ್ಯವಾಗಿ, ಬುದ್ಧಿಯ ತುಂಟಾಟಕ್ಕೆ ಕೊಟ್ಟ ಕ್ಷುಲ್ಲಕ ಆಸ್ಪದ. ಆಕಾಶವಾಣಿ ಎಂಬ ಗಬ್ಬೆದ್ದ ವ್ಯವಸ್ಥೆಯ ವಿರುದ್ಧ ನಾನು ಕೋರ್ಟ್ ಮೆಟ್ಟಿಲೇರಿದ್ದು ಕೇವಲ ಪ್ರತಿಭಟನೆಯ ಸಂಕೇತವಷ್ಟೆ. ವ್ಯವಸ್ಥೆಯ ಅಷಡ್ಡಾಳಗಳ ವಿರುದ್ಧ ಆತ್ಮತೃಪ್ತಿಗಾಗಿ ನಡೆಸಿದ್ದ ಗುಬ್ಬಚ್ಚಿ ಪ್ರತಿಭಟನೆಯದು ! ಜತೆಗೆ - ನಮ್ಮ "ಭಾರತದ ನ್ಯಾಯ" ಎಂಬುದು ಎಷ್ಟು ಸಮಗ್ರವಾಗಿರುತ್ತದೆ ? ಎಂಬುದರ ಸ್ವಂತ ಅನುಭವ ಮಾಡಿಕೊಳ್ಳುವ ಉದ್ದೇಶವೂ ಇತ್ತು. "ಕೋರ್ಟುಗಳೆಂದರೆ ಮುಗ್ಧ ಪ್ರಜೆಗಳನ್ನು ಸತಾಯಿಸಿ ಸಾಯಿಸುವ ಕೇಂದ್ರಗಳು" ಎಂದು ಹೇಳುವುದನ್ನಷ್ಟೇ ಕೇಳಿದ್ದ ನನಗೆ - "ಅದು ಹೇಗೆ ಸಾಯಿಸುತ್ತಾರೆ ? ಕೋರ್ಟಿನಲ್ಲಿ ಸಾಯುವುದು ಹೇಗೆ ? ನ್ಯಾಯ ಎಂಬುದು ಅನ್ಯಾಯವಾಗಿ ಸಾಯಿಸುವುದೆಂದರೆ ಏನದು ?" ಎಂಬುದನ್ನು ಅನುಭವಿಸಿ ನೋಡುವ ಉತ್ಸಾಹವೂ ಇತ್ತು. ಎರಡು ವಾಕ್ಯದ ನಿರ್ದೇಶನ ನೀಡಲು ಎಷ್ಟೆಲ್ಲ ಎಳೆದಾಡಬಹುದು ಎಂಬುದನ್ನು ಪುರಸೊತ್ತಿನಲ್ಲಿ ಮನಸ್ವೀ ಅನುಭವಿಸುವ ಇಚ್ಛೆಯೂ ಇತ್ತು. ಸ್ವತಃ ಸಾಯಲು ಸಿದ್ಧವಾಗಿದ್ದ ಇಂತಹ ಒಂದು ಮನೋವೇದಿಕೆಯಲ್ಲಿ - ಕೋರ್ಟಿನ ರುಚಿಯನ್ನು ಅನುಭವಿಸಲು ನಾನು ಸಿದ್ಧಳಾಗಿದ್ದೆ. ಈಗ ಹಿಂತಿರುಗಿ ನೋಡಿದರೆ... "ಅನನ್ಯ ನರಕದ ಘನಘೋರ ಕ್ಷುಲ್ಲಕ" - ಎಂದಷ್ಟೇ ಅನ್ನಿಸುತ್ತಿದೆ. ಅನ್ಯಾಯಗಳನ್ನು ವರ್ಷಗಟ್ಟಲೆ ಎಳೆದಾಡುವ ಮೊಂಡು ವಕಾಲತ್ತಿಗಾಗಿ ಸರಕಾರೀ ವಕೀಲರಿಗೆ ಸುರಿಯುತ್ತಿರುವ ತಿಜೋರಿಯ ದುಡ್ಡನ್ನು ಸಂತ್ರಸ್ತ ನೌಕರರಿಗೇ ಕೊಡಲಾಗದ ಜಿಡುಕುತನವೇಕೆ ? ಎಂಬುದು - ಇವತ್ತಿನ ಭಾರತದಲ್ಲಿ ಉತ್ತರವಿಲ್ಲದ ಪ್ರಶ್ನೆ ! ಪ್ರಸ್ತುತ - ಇದೇ GOOD GOVERNANCE !

ನಿತ್ಯವೂ ಕನಸನ್ನು ಬಿತ್ತುವ ಹೇಳಿಕೆಗಳು - ಘೋಷಣೆಗಳಿಂದಲೇ ಯಾವುದಾದರೂ ವಾಸ್ತವವು ಬದಲಾಗುವುದೆ ? ರಾಜಕೀಯ ಲಾಭವಿಲ್ಲದೆ ಯಾರದೇ ಸ್ವಂತ ಸಮಸ್ಯೆಗಳಿಗೂ ಸರಕಾರದ ಕಡೆಯಿಂದ ಯುಕ್ತ ಸ್ಪಂದನೆ ಸಿಗುವಂತಿಲ್ಲ ಎಂಬುದು ನನಗೆ ಸ್ಪಷ್ಟವಾಗತೊಡಗಿತ್ತು. ಹೆಚ್ಚೆಂದರೆ... "ನಿಮ್ಮ ಅಳಲನ್ನು ಸಂಬಂಧಿಸಿದ ವಿಭಾಗಕ್ಕೆ ಕಳಿಸಲಾಗಿದೆ.." ಎಂಬ ಸಿದ್ಧ ಉತ್ತರ ಸಿಗಬಹುದು ! ನನಗೂ ಅದೇ ಉತ್ತರ ಸಿಕ್ಕಿದೆ ! ಸುಮಾರು ನಾಲ್ಕೈದು ತಿಂಗಳ ಕಾಲ ನಿರೀಕ್ಷಿಸಿದ ಮೇಲೆ ಪ್ರಧಾನಿಯವರ GRIEVANCE CELL ನಿಂದ ನನಗೆ ಸಿಕ್ಕ "ಸೆಗಣಿ ಸಾರಿಸಿದಂತಹ ಉತ್ತರ"ವನ್ನು ಕಣ್ಣಿಗೊತ್ತಿಕೊಂಡ ನಾನು ನ್ಯಾಯಾಸ್ಥಾನವನ್ನು ಪ್ರವೇಶಿಸಬೇಕಾದ ಅನಿವಾರ್ಯತೆಯನ್ನು ಮನಗಂಡಿದ್ದೆ. ಜಗಳದ ಮನೆಯನ್ನು ಪ್ರವೇಶಿಸಿದ್ದೆ.

ನನ್ನ ಯುದ್ಧಕ್ಕೆ ಪೂರ್ವಭಾವಿಯಾಗಿ - ಬೆಂಗಳೂರಿನಲ್ಲಿ ಒಬ್ಬ ದಕ್ಷ ವಕೀಲರನ್ನು ನಿಯೋಜಿಸಿ ದಾಖಲಾತಿಗಳನ್ನು ಪೂರೈಸಲು ನನಗೆ ತಗಲಿದ ಒಂದು ತಿಂಗಳ ಸಮಯವು ನನ್ನ ಬದುಕಿನಿಂದ ನಷ್ಟವಾದದ್ದು ಬಿಟ್ಟರೆ ಉಳಿದುದೆಲ್ಲವೂ - ದುಷ್ಟಾನುಭವದ ಲೆಕ್ಕದಲ್ಲಿ - ಲಾಭವೇ ಲಾಭ. ಮನುಷ್ಯರು ಹೇಗಿರಬಾರದು ? ಎಂಬ ಪ್ರಾತ್ಯಕ್ಷಿಕೆಯಲ್ಲಿ ಸ್ವತಃ ಭಾಗವಹಿಸಿದಂತಹ ಭಾವವು ಈಗ ನನ್ನಲ್ಲಿದೆ. ಈ ಸಮಾಜದ ಇನ್ನೊಂದಿಷ್ಟು ಕಳ್ಳಮಳ್ಳ ಮನಸ್ಸುಗಳೊಂದಿಗೆ ಹತ್ತಿರದಿಂದ ವ್ಯವಹರಿಸಿದ ಅವಕಾಶವು - ಭಯಂಕರ ನಷ್ಟವೆಂದು ನನಗೆ ಅನ್ನಿಸುವುದಿಲ್ಲ. ಬದುಕಿನಲ್ಲಿ ಹೀಗೇ ಆಡಬೇಕು... ಮತ್ತು... ಬದುಕನ್ನು ಹೀಗೇ ಆಡಿಸಬೇಕು ಎಂಬುದು ನನ್ನ ಸೂತ್ರ. ಆದ್ದರಿಂದಲೇ ಒಂದರ್ಥದಲ್ಲಿ - ನ್ಯಾಯದ ಹಾದಿಯು ನನ್ನನ್ನು ರಂಜಿಸಿದೆ !

ಒಂದು ದೇಶದ ಸುಭದ್ರ ಆಡಳಿತವನ್ನು ಕಟ್ಟಿ ನಿಲ್ಲಿಸುವ ಸಾಧನವೇ - ನ್ಯಾಯ ಪರಿಪಾಲನೆಯ ಶಕ್ತಿ. ಸಮಗ್ರವಾಗಿ ಪರಿಶೀಲಿಸುವಾಗ ಅನ್ನಿಸುವುದೇನೆಂದರೆ, ಯಾವುದೇ ನ್ಯಾಯದಾನವು ಆಗಾಗ ಎಡವಿದರೆ ಅಥವ ನಾಗರಿಕರನ್ನು ಎಡವಿ ಬೀಳುವಂತೆ ಮಾಡುತ್ತಿದ್ದರೆ ಅದು ಸಮಷ್ಟಿಯನ್ನು ಪರೋಕ್ಷವಾಗಿ ಗಾಯಗೊಳಿಸುತ್ತಿದೆ ಎಂದೇ ಅಂದುಕೊಳ್ಳಬೇಕು. ಹೀಗೆ ಎಂದೂ ಗುಣಕಾಣದ ಯಾವುದೇ ಗಾಯಪರಂಪರೆಯು ವ್ರಣವಾಗಿಬಿಟ್ಟರೆ ಇಡೀ ದೇಹವನ್ನೇ ನುಂಗಿಹಾಕಬಲ್ಲದು ಎಂಬುದೂ ಪ್ರಮಾಣಿತ ಸತ್ಯ. ಅಂದಮೇಲೆ ಎಡವಟ್ಟಿನ ಕಾನೂನುಗಳನ್ನು ಅವಲಂಬಿಸುವ ಯಾವುದೇ ಸ್ಥಾನಗಳಲ್ಲಿ ನ್ಯಾಯದ ವಿತರಣೆಯ ಸ್ಥಿತಿಗತಿ ಹೇಗಿರಬಹುದು ? ನ್ಯಾಯದ ಹೆಸರಿನಲ್ಲಿ ಕಾನೂನಿನ ವ್ಯಾಖ್ಯಾನಕಾರರು ತೋಡಿತೋಡಿ ನಿರ್ಮಿಸಿರುವ - ಆಳವೇ ತಿಳಿಯದ ಹೊಂಡಗಳಲ್ಲಿ ಬಿದ್ದು ಎದ್ದು ಮತ್ತೆ ಮತ್ತೆ ಸಂಭವಿಸುವ ಸಾಮೂಹಿಕ ಗಾಯಗಳು ಎಂತಹ ಕೆಟ್ಟ ಪರಿಣಾಮಗಳನ್ನು ಸೃಷ್ಟಿಸಬಹುದು ? ಅಲ್ಲವೆ ? ಎಷ್ಟು ಕೊಟ್ಟರೂ ಮತ್ತಷ್ಟು ಬೇಕೆಂಬ - ಜಟಿಲತೆಯನ್ನೇ ಸೂತ್ರವಾಗಿ ಅನುಸರಿಸುವ ಯಾವುದೇ "ನ್ಯಾಯ ಸೋಲಿಸುವ ಮತ್ತು ಸೋಲುವ" ಭಾವವ್ಯವಸ್ಥೆಗಳಿಂದ ಸಾಮಾಜಿಕ ಕ್ಷೋಭೆಗಳು ತಣಿಯಲಾರವು.

ಗೊತ್ತುಗುರಿಗಳಿಲ್ಲದ ಬದುಕುಗಳಿಗೂ ಗೊತ್ತಿರಲೇಬೇಕಾದ - ಆದರೂ ಇದುವರೆಗೂ ಗೊತ್ತೇ ಇಲ್ಲದ ಮತ್ತು ಗೊತ್ತೂ ಇಲ್ಲದ ಹಲವು ಕ್ಷೇತ್ರಗಳಿವೆ. ಆದರೂ ಪರಿಣತಿ ಇಲ್ಲದಿದ್ದರೂ ಕಾಗೆ ಗುಬ್ಬಿಗಳಿಗೂ ತಮ್ಮ ಹಾರಾಟ ವಲಯದ ಸ್ಥೂಲವಾದ ಅರಿವು ಇದ್ದೇ ಇರುತ್ತದೆ. ಆದರೆ ಸೂಕ್ಷ್ಮ ಅರಿವು ಮಾತ್ರ ಇರುವುದಿಲ್ಲ. ಸೂಕ್ಷ್ಮ ಅರಿವಿನ ಕೊರತೆಯೇ ಜೀವಿಗಳ ಆಂತರ್ಯದಲ್ಲಿ ಭಯವನ್ನು ಛೂ ಬಿಡುವ ಕೇಂದ್ರಸ್ಥಾನ. ಸಾಮಾನ್ಯ ಜೀವಿಗಳ ಇದೇ ಸೂಕ್ಷ್ಮ ಅರಿವಿನ ಕೊರತೆಯ ದೌರ್ಬಲ್ಯದ ದುರುಪಯೋಗವು ಬದುಕಿನಲ್ಲೆಲ್ಲ ನಡೆಯುತ್ತಲೇ ಇರುತ್ತದೆ. ಪರೋಕ್ಷವಾಗಿ - ನ್ಯಾಯಾಲಯವೂ ಛೂ ಬಿಡುವ ಭಯ ಪ್ರಸಾರದ ಕಾಯಕದಲ್ಲಿ ಹಿಂದೆ ಬಿದ್ದಿಲ್ಲ. ಆದರೆ ಅದನ್ನು ಮೂಢ ನಡವಳಿಕೆ ಎಂದೆಲ್ಲ ಹೇಳಲಾಗುವುದಿಲ್ಲ. ಅದೊಂಥರ... ಹಕ್ಕು ಕರ್ತವ್ಯದ ಹೆಸರಿನಲ್ಲಿ - ತನು ಮನ ಧನದ ವೈಜ್ಞಾನಿಕ ಶೈಲಿಯ ದರೋಡೆ ! ಕಾನೂನಿನ ಸುಪರ್ದಿಯಲ್ಲಿ ನಡೆಸಲಾಗುವ ಕಲಾತ್ಮಕ ಗದ್ದಲ ! ಅಂತಹ ಗದ್ದಲದ ಸಾಗರದಲ್ಲಿ ಮುಳುಗಿಸಲ್ಪಡುವ ನಿರಪರಾಧಿಗಳೂ ತಮ್ಮ ಮೂಗು ಬಾಯಲ್ಲಿ ನೀರು ತುಂಬಿಸಿಕೊಂಡು ಕೆಮ್ಮದೇ ಬೇರೆ ನಿರ್ವಾಹವಿಲ್ಲ.

ನಮ್ಮ ಭಾರತದ ಪ್ರಸಂಗವನ್ನೇ ಗಮನಿಸಿದರೆ... ಪ್ರಸ್ತುತದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ - ಎಂಬ ಮೂರೂ ಸಾಂವಿಧಾನಿಕ ವ್ಯವಸ್ಥೆಗಳು ನಿಜವಾಗಿಯೂ ಚೊಕ್ಕವಾಗಿ ಕಾರ್ಯ ನಿರ್ವಹಿಸುತ್ತಿವೆಯೆ ? ಜನಸಾಮಾನ್ಯರಿಗೆ ಉತ್ತರ ಗೊತ್ತಿದೆ. ಲಂಚ ಮಂಚದ ಯಾವುದೇ ಆಡಳಿತ ವ್ಯವಸ್ಥೆಯಲ್ಲಿ ಅನ್ಯಾಯಕ್ಕೆ ಒಳಗಾಗಿ ಬಲಿಪಶುವಾಗುವವರು ಯಾರು ? ಉತ್ತರ - ಜನರಿಗೆ ಗೊತ್ತಿದೆ. ಕೆಲವು ತಲೆಹಿಡುಕರನ್ನು ರಕ್ಷಿಸುವುದಕ್ಕಾಗಿ ನಮಗೆ ಸ್ವಾತಂತ್ರ್ಯ ಸಿಕ್ಕಿದ್ದೆ ? ಸುದೀರ್ಘವಾಗಿ ನಡೆಸಲಾಗುವ ಸಾಮಾಜಿಕ ಕೊಳಕು ಗದ್ದಲಗಳನ್ನು ಸ್ವಯಂಪ್ರೇರಿತವಾಗಿ ನ್ಯಾಯಾಲಯಕ್ಕೆ ಎಳೆದು ತಂದು ಸಮೂಲ ವಿಚಾರಣೆ ನಡೆಸಿ, ಅಪರಾಧಿಗಳನ್ನು ಶಿಕ್ಷಿಸಿ, ಸುಶೀಲ ಸಾಮಾಜಿಕ ಪರಿಸರವನ್ನು ನಿರ್ಮಿಸಬೇಕಾದ ಮೂಲ ಜವಾಬ್ದಾರಿ ಯಾರದ್ದು ? ರಕ್ಷಿಸುವ ಉತ್ತರದಾಯಿತ್ವವಿಲ್ಲದ ಸಾಂವಿಧಾನಿಕ ಅಂಗಗಳ ಉಡಾಫೆಯ ಕಾರ್ಯ ಶೈಲಿಯಿಂದ ಬೇಸತ್ತು ಹೋದ ಪ್ರಜೆಗಳು ಇಂತಹ ಪ್ರಶ್ನೆಗಳಿಗೆ 2014 ರಲ್ಲಿ ಸ್ಪಷ್ಟವಾಗಿ ಉತ್ತರಿಸಿದ್ದಾರೆ; ತಮ್ಮ ಅಪಾರ ನಿರೀಕ್ಷೆಗಳನ್ನು ಬದಲಾವಣೆಯ ಚಾಟಿ ಬೀಸಿ ವ್ಯಕ್ತಪಡಿಸಿದ್ದಾರೆ. ಆದರೆ ಸುದೀರ್ಘಕಾಲದಿಂದ ಮೈಗೂಡಿಹೋಗಿರುವ ಕುಟಿಲತೆಯ ಪೂರ್ವ ಸಂಸ್ಕಾರವನ್ನು ತೊಲಗಿಸಲು ದೀರ್ಘ ಸಮಯವೇ ಬೇಕಾದೀತು. ಅಷ್ಟು ಸಮಯ ಕಾದು ನೋಡುವ ತಾಳ್ಮೆ ಜನರಲ್ಲಿದೆಯೆ ? ಈಗಲೇ ಹೇಳುವಂತಿಲ್ಲ.

ಒಂದಂತೂ ಸತ್ಯ. ಕುಲಗೆಟ್ಟು ಹೋಗಿರುವ ಭಾರತದ ಸರಕಾರೀ ಯಂತ್ರವನ್ನು ಶಿಸ್ತಿಗೊಳಪಡಿಸುವ ಕ್ರಿಯೆಯು ಚುನಾವಣೆಯ ಮೂಲಕ ಶಾಸಕರನ್ನು ಕಿತ್ತೊಗೆಯುವಷ್ಟು ಸುಲಭವೇನಲ್ಲ. ಇರುವ ಕಾನೂನನ್ನೇ ತಮಗೆ ಬೇಕಾದಂತೆ ದುಡಿಸಿಕೊಳ್ಳುತ್ತ ಕಣ್ಣು ಮುಚ್ಚಿ ಕದ್ದ ಹಾಲನ್ನೇ ಕುಡಿಯುವ ಚಟಕ್ಕೆ ಬಿದ್ದಿರುವ ಇಂದಿನ ಸರಕಾರೀ ಬಾಬು(ಬಾಬಿ)ಗಳ ಖದೀಮತನಕ್ಕೆ - ಅಚ್ಚ ಬಿಳಿಯ ಟೋಪಿಧಾರಿಗಳಿಂದಲೂ ನಿಗೂಢ ಪ್ರೋತ್ಸಾಹವೂ ದೊರೆಯುತ್ತಿರುವುದರಿಂದ ಪೀಡಿಸಲ್ಪಡುತ್ತಿರುವ ಬಹುಸಂಖ್ಯಾತ ಪ್ರಜೆಗಳನ್ನು ಪಾರು ಮಾಡುವುದೂ ಸುಲಭವೇನಲ್ಲ. ಆದ್ದರಿಂದಲೇ ಅತ್ಯಂತ ಕಠಿಣ ಕಾರ್ಯವಾದ "ಜಡ್ಡುಗಟ್ಟಿದ ಸರಕಾರೀ ಯಂತ್ರದ ಸ್ವಚ್ಛತಾ ಅಭಿಯಾನ"ವು - ಇಂದಿನ ಸರಕಾರಗಳ ಪ್ರಥಮ ಆದ್ಯತೆಯಾಗಬೇಕಾಗಿದೆ.
    
ಕಳ್ಳ ವಿದ್ಯೆಯಲ್ಲಿ ಪಾರಂಗತರಾಗಿರುವ ಸರಕಾರೀ ನೌಕರರು ನಮ್ಮ ಮೋದಿಯನ್ನೂ ಸೋಲಿಸುವಂತಹ ಕಳ್ಳ ಆಟ ಆಡಬಲ್ಲವರು ! ಇದು ಸದ್ಯ ಗೋಚರಿಸುತ್ತಿರುವ ಸ್ಥಿತಿ. ಅಂದಮೇಲೆ ಕಾಗಕ್ಕ ಗುಬ್ಬಕ್ಕಗಳ ಸ್ಥಿತಿ ಏನಿರಬಹುದು ? 70 ವರ್ಷಗಳ ರಾಡಿಯಾಗಿ ಕೂತಿರುವ ಸದ್ಯದ ಭಾರತ ಸರಕಾರದ ಕಾರ್ಯಪಡೆಯ ವರ್ಗವ್ಯವಸ್ಥೆಯಲ್ಲಿ ಎಂದಿನಂತೆ "ನನ್ನಿಷ್ಟ; ನಮ್ಮಿಷ್ಟ; ನಂಗೆಷ್ಟು ? ನಿಂಗೆಷ್ಟು ?"ಗಳ ಸ್ವಚ್ಛಂದ ಮೆರವಣಿಗೆ ನಡೆಯುತ್ತಿದೆ ! ನ್ಯಾಯವನ್ನು ಅಪೇಕ್ಷಿಸುವುದೇ ಅವಿಧೇಯತೆ ಎಂಬ ವಾತಾವರಣವು ಸರಕಾರೀ ಕೃಪಾಪೋಷಿತ ವ್ಯವಸ್ಥೆಗಳಲ್ಲಿದೆ. ಆದ್ದರಿಂದಲೇ ಸರಕಾರೀ ಕಚೇರಿಗಳಲ್ಲಿ ಸಂಭವಿಸುವ ಬರಿಗಣ್ಣಿಗೆ ಕಾಣುವಂತಹ ಸತ್ಯವನ್ನೂ - "ಅಧಿಕೃತ ಸತ್ಯ" ಎಂದು - ಊರಿನ "ದೂಮ ದಾಮರ" ಮೂಲಕ ಹೇಳಿಸಿಕೊಳ್ಳಬೇಕಾಗುತ್ತಿದೆ ! ಆದ್ದರಿಂದ ಅನಿವಾರ್ಯವಾಗಿ, ನನ್ನ ಉದ್ಯೋಗದ ಸ್ಥಳದಲ್ಲಿ ನಡೆದಿದ್ದ ಅಧಿಕಪ್ರಸಂಗದ ಅಧಿಕಾರೀ ನಡೆಗಳನ್ನು ಪ್ರಶ್ನಿಸಲೋಸುಗ - ಊರಿನ ಸತ್ಯಾರ್ಥಿ ನ್ಯಾಯವಂತರ ಕಣ್ಕಟ್ಟಿನಂಥ ತರ್ಕಗಳ ಆಶ್ರಯವನ್ನು ನಾನು ಪಡೆಯಬೇಕಾಗಿ ಬಂತು. ಅಂತಹ "ಕಾಗದ ವಾದ"ಗಳ ಸಂದಿಯಿಂದ ಚೂರುಪಾರು ನ್ಯಾಯದಂಥ ಏನೋ ಒಂದನ್ನು ಕಿತ್ತುಕೊಳ್ಳಲು - ನನಗೆ ಭರ್ತಿ ಒಂದು ವರ್ಷ ಹಿಡಿಯಿತಲ್ಲ ? ವರ್ಷಪೂರ್ತಿ ನನಗೆ ಸಿಕ್ಕಿದ್ದು ಬರೇ DATE ಗಳು...! "ನ್ಯಾಯದ ಜೊತೆಗೆ Dating" ಅಂದುಕೊಂಡದ್ದೂ ಇತ್ತು. ನ್ಯಾಯಾಲಯದಲ್ಲಿ ಸಿಗುವುದೆಲ್ಲವನ್ನೂ ನ್ಯಾಯ ಎಂದೇ ಹೇಳುವುದು ಅನಿವಾರ್ಯ. ಆದ್ದರಿಂದ... ಅಂತೂ ಕಳೆದ ಸೆಪ್ಟೆಂಬರದಲ್ಲಿ ನನಗೆ ನ್ಯಾಯ ಸಿಕ್ಕಿತು. ತೀರ್ಪು ಬಂತು. "ಸಂಸ್ಥೆಯು ತಾನೇ ಅಳವಡಿಸಿಕೊಂಡ ನಿಯಮಕ್ಕೆ ಬದ್ಧವಾಗಿ - ಮೂರು ತಿಂಗಳ ಒಳಗೆ ಅಹವಾಲುದಾರರಿಗೆ ಸಲ್ಲಬೇಕಾದುದೆಲ್ಲವನ್ನೂ ನೀಡಬೇಕು" ಎಂಬ ತೀರ್ಮಾನವಾಯಿತು. "ಯಾವುದೇ ನೌಕರರ ನಿವೃತ್ತಿಯ ಹಂತದಲ್ಲಿ ಅವರ ವೇತನ ಮತ್ತು ನೌಕರರಿಗೆ ಕೊನೆಯದಾಗಿ ಸಲ್ಲಿಸುವ ಗಂಟಿನಲ್ಲಿ ಯಾವುದೇ ವ್ಯವಸ್ಥೆಯು ಕೈಯ್ಯಾಡಿಸುವಂತಿಲ್ಲ..." ಎಂಬ ಸುಪ್ರೀಂ ಕೋರ್ಟಿನ ತೀರ್ಪನ್ನು ಉದ್ಧರಿಸಿದ ಆದೇಶವನ್ನೂ ನೆನಪಿಸಲಾಯಿತು.

ಇಷ್ಟಾದರೂ ಆಕಾಶವಾಣಿಯ ವ್ಯವಸ್ಥೆಯು ಕರ್ಕರೆಗಳನ್ನು ಕೈಚೆಲ್ಲಿ ಸುಮ್ಮನಾಗಲಿಲ್ಲ. ಏಕೆ ? ಏಕೆಂದರೆ ಸರಕಾರದ ಮುದ್ದಿನ ಮಕ್ಕಳ ಕಾರ್ಯಶೈಲಿಯೇ ಹಾಗಿದೆ. ಅವರಿಗೆಲ್ಲ ಕರ್ತವ್ಯದ ಹೊತ್ತಿನಲ್ಲಿ ಚಾ ಕುಡಿಯುವುದು ಮತ್ತು ಬಿಟ್ಟಿ ಔತಣದಲ್ಲಿ ಪಾಲ್ಗೊಳ್ಳುವುದನ್ನು ಬಿಟ್ಟು ಬೇರೆ ಕೆಲಸವೇ ಇಲ್ಲ. ಸರಕಾರೀ ನೌಕರರ ಎಲ್ಲ ಅಷಡ್ಡಾಳಗಳನ್ನು ಕಂಡೂ ಕಾಣದಂತಿದ್ದು ದೈತ್ಯಾಕಾರದಲ್ಲಿ ಬೆಳೆಸಿದವರಿಗೂ ಯಾವ ಉತ್ತರದಾಯಿತ್ವವಿಲ್ಲ. ಇಂದಿನ ಸರಕಾರೀ ವ್ಯವಸ್ಥೆಯಲ್ಲಿ - ತಪ್ಪು ಆದೇಶವನ್ನು ಹೊರಡಿಸಿದ ಸರಕಾರೀ ಉದ್ಯೋಗಿಗಳಿಗೆ ಯಾವ ಶಿಕ್ಷೆಯೂ ಆಗುವುದಿಲ್ಲ. ತಪ್ಪೆಸಗುವ ಅಧಿಕಾರಿಗಳನ್ನು ಹೆಡಮುರಿ ಕಟ್ಟಿ, ಪ್ರಶ್ನಿಸಿ, ಶಿಕ್ಷಿಸುವಂತಹ ಇಚ್ಛಾಶಕ್ತಿಯೂ - ಸಾಂವಿಧಾನಿಕ ಅಂಗಗಳಲ್ಲಿ ಕಾಣುವುದಿಲ್ಲ. ಆದ್ದರಿಂದ ಯಾರನ್ನು ಯಾರೂ ತಮ್ಮ ಕೈಲಾದಷ್ಟು ಪೀಡಿಸಿ ಹಿಂಸಿಸಲು ಮುಕ್ತ ಅವಕಾಶವಿದೆ. ಯಾರಿಗೂ ಭಯವೇ ಇಲ್ಲದ ನಿರ್ಭಯ ಸ್ವರ್ಗವೇ ಸರಕಾರೀ ಕಚೇರಿಗಳು - ಎಂಬಂತಾಗಿದೆ ! ಆದ್ದರಿಂದಲೇ ನನ್ನ ಸಂದರ್ಭದಲ್ಲಿ... ನನ್ನನ್ನು ಪೀಡಿಸಿದ್ದ ORDER ನ್ನು ಹಿಂಪಡೆದು ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವಂತೆ ಹೇಳಲಾಯಿತೇ ವಿನಹ ತಪ್ಪೆಸಗಿದ ಅಧಿಕಾರಿಯನ್ನು ಗುರುತಿಸಿ ಮುಂದೆಂದೂ ಅಂತಹ ತಪ್ಪುಗಳು ಮರುಕಳಿಸದಂತಹ ಪಾಠ ಕಲಿಸಲು ನ್ಯಾಯಾಲಯಕ್ಕೆ ಉತ್ಸಾಹವಿರಲಿಲ್ಲ.

ಇಂತಹ ಸರಕಾರೀ ಹೊಲಸಿನಲ್ಲಿ ಬಿದ್ದಿದ್ದ ನನ್ನದೂ ಅದೇ ದುಸ್ಥಿತಿ. 2016 ರ ಸೆಪ್ಟೆಂಬರದಲ್ಲಿ ಹೊರಬಿದ್ದ ಕೋರ್ಟಿನ ಆದೇಶದ ನಂತರ ನವೆಂಬರದಲ್ಲಿ - ನಮ್ಮ ಚೆನ್ನೈ ನ ACCOUNTS ಕಛೇರಿಯಿಂದ ನನಗೆ ಮತ್ತೊಂದು ಪತ್ರ ಬಂದಿತ್ತು. "ನಿಮ್ಮ ಸೇವಾ ಪುಸ್ತಕದ ಅಧ್ಯಯನ ಮತ್ತು ಪುನರ್ವ್ಯವಸ್ಥೆಗಾಗಿ ನಮಗೆ 6 ತಿಂಗಳ ಸಮಯ ಕೊಡಿ..." ಎಂದು ತಮ್ಮ ಸರಕಾರೀ ವಕೀಲರಲ್ಲಿ ಬೇಡಿಕೆಯನ್ನಿಟ್ಟ ನೊಣಪ್ರತಿಯ ಭಾವಪತ್ರವದು ! ಅನಂತರ ಬಹುಶಃ ಸರಕಾರೀ ವಕೀಲರು ಗುಟ್ಟಾಗಿ ಬುದ್ಧಿ ಹೇಳಿ ಚೌಕಾಸಿ ಮಾಡಿದ್ದರಿಂದಲೋ ಏನೋ... ನ್ಯಾಯಾಲಯದ ಮುಂದೆ ಅಧಿಕೃತವಾದ ಸರಕಾರೀ ಅಹವಾಲು ಸಲ್ಲಿಸುವಾಗ ನನ್ನ ಲೆಕ್ಕ ಚುಕ್ತಾ ಮಾಡಲು 3 ತಿಂಗಳ ಹೆಚ್ಚಿನ ಸಮಯವನ್ನಷ್ಟೇ ಕೇಳಿಕೊಂಡಿತ್ತು.


ಇಂತಹ ಎಳೆದಾಟಗಳಿಗೆ ಸಿಲುಕಿದಾಗ ನಿಜವಾದ ಶೋಷಿತರು ಮಾನಸಿಕವಾಗಿ ಬಳಲುತ್ತಾರೆ. "ನಿವೃತ್ತ ನ್ಯಾಯಾಧೀಶರಿಗೆ ಒಂದು ಪುನರ್ವಸತಿ ಕೇಂದ್ರವಿರಲಿ ಎಂಬ ಉದ್ದೇಶದಿಂದಲೇ ಸರಕಾರೀ ಸಂಸ್ಥೆಗಳು ಬಗೆಬಗೆಯ CASE ಗಳನ್ನು ಸೃಷ್ಟಿಸಿ CAT (ಕೇಂದ್ರ ಆಡಳಿತಾತ್ಮಕ ನ್ಯಾಯಾಲಯ) ಗಳಿಗೆ ಉಣ್ಣಿಸುತ್ತಿರಬಹುದೆ ?... "ನೀ ನನಗೆ ನಾ ನಿನಗೆ " ಎಂಬ ಜೋಡಾಟದ ಪ್ರಸಂಗವನ್ನು ಹರಕೆಬಲಿಯಂತೆ ಪ್ರದರ್ಶಿಸುತ್ತಿರಬಹುದೆ ?" - ಎಂದೂ ಅನ್ನಿಸಬಹುದಲ್ಲವೆ ? ಕೆಲವು ಬೇಜವಾಬ್ದಾರಿತನಗಳು - ಹೀಗೇ.... ಎಂದೂ ಇಣುಕದ ಪೂರ್ವಾಗ್ರಹವನ್ನು ಉದ್ದೇಶಿತವಾಗಿ ಪೋಷಿಸಲು ಪ್ರೇರೇಪಿಸುವುದೂ ಇದೆ !
 
ನನ್ನ ಪೀಡಾಕಾಂಡದ ಸಂದರ್ಭದಲ್ಲಿ ಬಾಕಿ ಚುಕ್ತಾ ಮಾಡಲು 3 ತಿಂಗಳ ಹೆಚ್ಚಿನ ಅವಧಿಗಾಗಿ ಆಕಾಶವಾಣಿಯು ಮತ್ತೊಮ್ಮೆ ಕೋರ್ಟಿಗೆ ಸಲ್ಲಿಸಿದ್ದ "ಹೊಸ ಅರ್ಜಿ" ಎಂಬ ಖದೀಮ ಕೀಟಲೆ ಯು - ನನ್ನನ್ನು ವಿಚಲಿತಗೊಳಿಸಲಿಲ್ಲ. ಅದೇ ಗಬ್ಬೆದ್ದ ವ್ಯವಸ್ಥೆಯಲ್ಲಿ ಅದಾಗಲೇ ನಾನೂ ನುರಿತಿದ್ದೆನಲ್ಲ ? ನನಗೆ ಕುತೂಹಲವಿದ್ದದ್ದು ಕೋರ್ಟಿನ ಆಗುಹೋಗುಗಳಲ್ಲಿ ಮಾತ್ರ. ಆಕಾಶವಾಣಿಯು ಸಲ್ಲಿಸಿದ್ದ ಹೊಸ ಅರ್ಜಿಯನ್ನು ಕೆಲವು ದಿನಗಳ ಕಾಲ ಎತ್ತಿ ಮುದ್ದಾಡಿದ ಬೆಂಗಳೂರಿನ CAT (Central administrative Tribunal) - ಆಕಾಶವಾಣಿಗೆ ಹೆಚ್ಚಿನ 2 ತಿಂಗಳ ಸಮಯವನ್ನು ಮಾತ್ರ - ಪ್ರಸಾದಿಸಿತು. ಅದರಂತೆ 2017 ರ ಜನವರಿಯವರೆಗೆ ನಾನು ಕಾಯಬೇಕಾಗಿದೆ. ಮಿಯಾಂವ್. ನನಗೆ ಮಾರ್ಜಾಲತೃಪ್ತಿ ಸಿಕ್ಕಿದೆ !

( ತೀರ್ಪಿನಂತೆ ಸರಕಾರೀ ವಕೀಲರು ಬೇಡಿಕೆಯಿಟ್ಟ 3 ತಿಂಗಳ ಅವಧಿಯಲ್ಲಿ - 1 ತಿಂಗಳ ಕಡಿತವಾದಂತಾಯಿತು; ಇನ್ನೂ 3 ತಿಂಗಳಕಾಲ "ರಾಮ ಬರುವನೆಂದು" ಕಾಯಬೇಕಾಗಿದ್ದ ನಾನು ಈ ತೀರ್ಪಿನಿಂದಾಗಿ ಹೆಚ್ಚಿಗೆ - 2 ತಿಂಗಳು ಕಾಯುವಂತಾಗಿದೆ. ಹೀಗಿದ್ದೂ... ನನ್ನ ಕಾಯುವ ಶಿಕ್ಷೆಯನ್ನು 1 ತಿಂಗಳು ಕಡಿತಗೊಳಿಸಿದ್ದೂ ನನಗೆ ಕೊಟ್ಟ ನ್ಯಾಯವೇ ! ನಾನು ಹಾಗೆ ಅಂದುಕೊಳ್ಳಲೇಬೇಕು ! ಇಬ್ಬರಿಗೂ ಚೂರು ಚೂರು ನ್ಯಾಯ ! ಅಲ್ಲವೆ ? ಅನ್ಯಾಯದ ಪ್ರಶ್ನೆಯೇ ಏಳುವುದಿಲ್ಲ. ಕೋರ್ಟು ಹೇಳಿದ್ದೆಲ್ಲವೂ ಅಪ್ಪಟ ನ್ಯಾಯವೇ. ಗಪ್ ಚುಪ್.)

ಇತ್ತ, ಭ್ರಷ್ಟ ಮನಸ್ಸುಗಳನ್ನು ರಕ್ಷಿಸಬಲ್ಲ ಕಾನೂನುಗಳು - ಅಧಿಕಾರಿಗಳ ಬತ್ತಳಿಕೆಯಲ್ಲಿ ಭದ್ರವಾಗಿರುತ್ತವೆ ! ಒಂದು ಕಾನೂನಿನಿಂದಲೇ ಇನ್ನೊಂದು ಕಾನೂನನ್ನು ಬಡಿದು ಹಾಕುವ ಕೋಲಾಟದಲ್ಲಿ ಪರಿಣತರಾದವರು ಕಚೇರಿಗಳಲ್ಲಿ ಪರಸ್ಪರ ಕೈಜೋಡಿಸಿ ಸರಕಾರವನ್ನು ತೂಗಿ ಮಲಗಿಸುತ್ತಿರುವ ವಿಕಟ ಸೌಹಾರ್ದತೆಯ ಸನ್ನಿವೇಶವು ಸರಕಾರೀ ವಲಯದಲ್ಲಿದೆ. ಆದ್ದರಿಂದಲೇ ಅಧಿಕಾರೀ ವರ್ಗದ ಆಟಗಳು ಅನೂಚಾನವಾಗಿ ನಡೆಯುತ್ತಲೇ ಬಂದಿವೆ; ಪರಿಣಾಮವಾಗಿ - ನ್ಯಾಯಾಸ್ಥಾನಗಳಿಗೆ ಸುಗ್ಗಿ ! ಅತೃಪ್ತಿ ಹೆಚ್ಚಿಸುವ ನ್ಯಾಯಿಕ ಹೋರಾಟಗಳಿಗೂ ಸುಗ್ಗಿ !

ಯಾವುದೇ ಸುವ್ಯವಸ್ಥೆ ರೂಪುಗೊಳ್ಳಬೇಕಾದರೆ ಒಂದೋ ನೈತಿಕ ಬಲವಿರುವ ಸರಕಾರೀ ಯಂತ್ರ ಬೇಕು; ಇಲ್ಲವೇ ಕಾನೂನಿನ ಹಿಡಿತ ಬೇಕು. ಇವೆರಡೂ ಇಲ್ಲದ ನತದೃಷ್ಟ ಸ್ಥಿತಿಯಲ್ಲಿ ಇಂದಿನ ನಮ್ಮ ಸರಕಾರೀ ಯಂತ್ರಗಳು ಅದಮ್ಯ ರಕ್ಕಸತನವನ್ನು ರೂಢಿಸಿಕೊಂಡಿವೆ. ಸದ್ಯದ ತೂತು ಕಾನೂನುಗಳ ತೂತು ಮುಚ್ಚದಿದ್ದರೆ ನಮ್ಮ ಮೋದಿಯನ್ನೂ ಅಡ್ಡಡ್ಡ ಮಲಗಿಸಬಲ್ಲ ಪರಿಣತರು ಸರಕಾರೀ ವಲಯದಲ್ಲಿದ್ದಾರೆ ! ನಿಯಮವನ್ನು ತಿರುಚುತ್ತ ಮನಸೋ ಇಚ್ಛೆ ವರ್ತಿಸುವ ಸೊಕ್ಕಿದ ಸರಕಾರೀ ನೌಕರರಿಗೆ ಕಠಿಣ ಶಿಕ್ಷೆಯಾಗುವಂತಿದ್ದಿದ್ದರೆ - ಬಡಪಾಯೀ ನೌಕರರ ಮತ್ತು ಸಾರ್ವಜನಿಕರ ಶೋಷಣೆಯ ಯಾವುದೇ ಪ್ರಸಂಗವೇ ಉದ್ಭವಿಸುತ್ತಿರಲಿಲ್ಲ. ಒಬ್ಬ ಅಪರಾಧೀ ಅಧಿಕಾರಿಯನ್ನು - ಆತ/ಆಕೆಯ - ತಪ್ಪು ನಿರ್ಧಾರಕ್ಕಾಗಿ ತಕ್ಷಣ ಉಚ್ಛಾಟಿಸುತ್ತ ನಡೆದಿದ್ದರೆ ಸೊಟ್ಟಗಾಗಿರುವ ವ್ಯವಸ್ಥೆಯು ಕ್ಷಣಮಾತ್ರದಲ್ಲಿ ನೆಟ್ಟಗಾಗುತ್ತಿತ್ತು. ಆದರೆ ವಿಕಟ ಸೌಹಾರ್ದತೆ ಎಂಬ ಉಚ್ಚಸ್ತರೀಯ ಪರಸ್ಪರ ಕೊಡುಕೊಳ್ಳುವಿಕೆಯು ಅಧಿಕಾರೀ ವರ್ಗದ ಸ್ವಚ್ಛಂದತೆಗಳನ್ನು - ಅಲ್ಲಲ್ಲೇ ಪ್ರಶ್ನಿಸಿ ಕಠಿಣವಾಗಿ ವರ್ತಿಸಲು ಸ್ವತಃ ಇಚ್ಛಿಸುತ್ತಿಲ್ಲ; ಕಳ್ಳ ದೋಸ್ತಿ ! ತತ್ಪರಿಣಾಮವಾಗಿ ಭಾರತದ ಸರಕಾರೀ ಯಂತ್ರಗಳು ಕೊಳೆತು ನಾರುತ್ತಿವೆ.

ಇತ್ತ ನಮ್ಮ ಕಾನೂನುಗಳು ಹೇಗಿವೆ ಎಂದರೆ - ಶೋಷಣೆಗೆ ಅಗತ್ಯವಾದ ಜಾರುಗಿಂಡಿಯ ಎಲ್ಲ ಅವಕಾಶಗಳನ್ನು ತಮ್ಮೊಳಗೇ ಮುಕ್ತವಾಗಿಟ್ಟುಕೊಂಡು... ವಕೀಲರು, ಕೋರ್ಟು, ನ್ಯಾಯಾಲಯ ... ಮುಂತಾದ ಉದ್ಧಾರಕರ ವೇಷವನ್ನು ಪ್ರದರ್ಶಿಸುವಂತಿವೆ. ಜನಸಾಮಾನ್ಯರು ನ್ಯಾಯಾಲಯದ ಬಾಗಿಲಲ್ಲಿ ಬಿದ್ದು ಹೊರಳುತ್ತ ಬಸವಳಿಯುವಂತಹ "ಮುಕ್ತ ಅವಕಾಶಗಳನ್ನು" ಉದಾರವಾಗಿ ದಯಪಾಲಿಸಿದಂತೆ ವಿಕಟ ಸೋಗು ಹಾಕುತ್ತಿವೆ ! ಅಪವ್ಯಾಖ್ಯಾನಕ್ಕೆ ಆಸ್ಪದವೇ ಇಲ್ಲದಂತಹ ಬಿಗಿಯಾದ ಕಾನೂನನ್ನು ರೂಪಿಸುವುದು ಮತ್ತು ಅದಕ್ಕೆ ಬದ್ಧರಾಗಲೇಬೇಕಾದ ಅನಿವಾರ್ಯತೆ ಮೂಡದಿದ್ದರೆ ಯಾವುದೇ ವ್ಯವಸ್ಥೆಯ ಗತಿ - ಇದೇ ಅವಸ್ಥೆ !

ಕಾನೂನೇನು ಬದಲಾಯಿಸಲಾಗದ ಬ್ರಹ್ಮ ಬರಹವೆ ? ಜನಕ್ಷೇಮವೇ ಪರಮೋಚ್ಚವಾಗಿದ್ದ ರಾಮರಾಜ್ಯದ ಕನಸನ್ನು ಮೂರ್ತರೂಪಕ್ಕಿಳಿಸುವುದು ಒಬ್ಬ ಮೋದಿಯಿಂದ ಸಾಧ್ಯವೆ ? ಸಾಮೂಹಿಕ ಪಾಲುದಾರಿಕೆ ಬೇಡವೆ ? ಸಂವಿಧಾನದ ಮೂರೂ ಅಂಗಗಳು ಕೈಜೋಡಿಸಿ ದೇಶ ಕಟ್ಟಲು ಶ್ರಮಿಸಬೇಡವೆ ? ಜನಸಮುದಾಯವು ರೊಚ್ಚಿಗೆದ್ದು ಜನತಾಂತ್ರಿಕ ವ್ಯವಸ್ಥೆಗಳನ್ನು ದಾರಿಗೆ ತರಲೇಬೇಕಾದ ಸನ್ನಿವೇಶವನ್ನು ನಿರ್ಮಾಣ ಮಾಡಲು ನಾವು ಹೊರಟಿದ್ದೇವೆಯೆ ? ಅಪರಾಧಕ್ಕೆ ಶಿಕ್ಷೆ ತಪ್ಪದು - ಎಂಬ ಸುಭಗ ವಾತಾವರಣವು ಅಪೇಕ್ಷಣೀಯವಲ್ಲವೆ ? ಅದಕ್ಕಾಗಿ ಶ್ರಮಿಸಲು ಪ್ರಯತ್ನಿಸುವವರನ್ನು "ಹಿಟ್ಲರ್, ನೆಪೋಲಿಯನ್, ಘಜ಼್ನಿ ಮೊಹಮ್ಮದ್, ಹುಚ್ಚು ದೊರೆ ತುಗ್ಲಕ್ - ಎಂದೆಲ್ಲ ಗಳಹುತ್ತ ಉಂಡುತೇಗುತ್ತಿರುವುದು ಯಾರ ಉದ್ಧಾರಕ್ಕಾಗಿ ? ಇದೆಂತಹ ನರಳಿಕೆ ? "ದಿನಕ್ಕೊಂದು "ಮುಕ್ತ ಭ್ರಾಂತಿ"ಗಳನ್ನು ಹುಟ್ಟುಹಾಕಿ ಮಿಥ್ಯಾಲೋಕವನ್ನು ನಿರ್ಮಿಸುವುದಕ್ಕಿಂತ ಪ್ರಾಮಾಣಿಕರನ್ನು ಹುಡುಕಿ ಹುಡುಕಿ ಒಂದೇ ಬಾರಿಗೆ ಅವರಿಗೆಲ್ಲ "ಶಾಂತ ಮುಕ್ತಿ"ಯನ್ನು ಕೊಡಿಸುವಂತಹ ಕಾನೂನನ್ನಾದರೂ ಏಕೆ ತರಬಾರದು?"... ಅನ್ನಿಸುವಂತಿದ್ದರೆ - ಅದು ಯಾವ ನೆಲಕ್ಕೂ ಶೋಭೆತರದು. ಬಸವಳಿದ ಶೋಷಿತ ವಲಯವು ಸ್ಫೋಟಿಸುವ ಹಂತ ತಲುಪದೆ ? ಸುದೀರ್ಘ ಅವಧಿಯ - ಶಾಸಕಾಂಗದ ಸಂಪೂರ್ಣ ಕಾರ್ಯವೈಫಲ್ಯದ - ಫಲಶ್ರುತಿಯಿದು ! ತತ್ಫಲ - ನಮ್ಮ ನ್ಯಾಯಾಲಯಗಳು ಕರೆಯದೇ ಬರುವ ನನ್ನಂಥ ಅಭ್ಯಾಗತರಿಂದ ತುಂಬಿ ತುಳುಕುವಂತಾಗಿದೆ !

ಕಾನೂನಿನ ನಿಯಮಗಳನ್ನು ರೂಪಿಸುವಾಗಲೇ - ತಪ್ಪು ಮಾಡಲು ಮತ್ತು ದುರುಪಯೋಗಿಸಿಕೊಳ್ಳಲು - ಯಥೇಷ್ಟ ಅವಕಾಶವನ್ನು ತನ್ನ ನೌಕರರಿಗೆ ಕೊಟ್ಟು, ತಮ್ಮ ಸ್ವಕಾರ್ಯಕ್ಕಾಗಿ ಅವರ ಮೂಲಕವೇ ತಪ್ಪುಗಳನ್ನು ಮಾಡಿಸುತ್ತ, ಪರಸ್ಪರರ ದೌರ್ಬಲ್ಯಗಳನ್ನೇ ನಗದೀಕರಿಸಿಕೊಳ್ಳುತ್ತ - ನೌಕರಶಾಹಿ ಎಂಬ ಅನಿಯಂತ್ರಿತ ಭಸ್ಮಾಸುರರನ್ನು ಸೃಷ್ಟಿಸಿದವರು ಯಾರು ? ಅಂತಹ ಕಳ್ಳ ನೌಕರರನ್ನು ಬೆಂಬಿಡದೆ ರಕ್ಷಿಸುತ್ತಿರುವವರು ಯಾರು ? ಜನರಿಗೆ ಗೊತ್ತಿದೆ. ಆದರೆ ಜನರು ನಿಸ್ಸಹಾಯಕರು. ಆದ್ದರಿಂದಲೇ ಅನ್ಯಾಯ ಮಿತಿಮೀರಿ, ದಿನದಿಂದ ದಿನಕ್ಕೆ ಕೋರ್ಟುಗಳಲ್ಲಿ ಜನಜಾತ್ರೆ ನೆರೆಯುತ್ತಿದೆ; ಅನಿವಾರ್ಯವಾಗಿ ಕಪ್ಪು ಸಾಮ್ರಾಜ್ಯಕ್ಕೆ ತಳ್ಳಲ್ಪಟ್ಟ ಬಿಳೀ ಪ್ರಜೆಗಳೂ ಕ್ರಮೇಣ ಕಪ್ಪನ್ನೇ ಬಿಳಿಯೆಂದು ಒಪ್ಪಿ ಮೆಚ್ಚಿ - ಅದೇ ಸುಲಭ ಮಾರ್ಗವೆಂದು ಆಯ್ದುಕೊಂಡು ಅನುಸರಿಸುವಂತಾದರೆ - ಅದು ದೇಶಕ್ಕೇ ತೂತು ಕೊರೆದಂತೆ ! ಈ ಎಚ್ಚರವು ಬೇಡವೆ ? ಇವೆಲ್ಲವೂ ಪರೋಕ್ಷವಾಗಿ ದೇಶದ್ರೋಹದ ಕೆಲಸಗಳೇ. "ಮಾತಿನಲ್ಲೇ ಮನೆ ಕಟ್ಟುವ" ಕುಟಿಲ ವಕಾಲತ್ತಿನ ಹೊಂಡಕ್ಕೆ ಸುಭಗ ಪ್ರಜೆಗಳನ್ನು ನೂಕುವ ಯಾವುದೇ ಸ್ವಚ್ಛಂದ ಆಡಳಿತವನ್ನು ಜನರು ಕ್ಷಮಿಸಲಾರರು. ಮಾನ ಮರ್ಯಾದೆ ಎಂಬ ಶಬ್ದಾನುಭೂತಿಗೆ ಸ್ಪಂದಿಸಬಲ್ಲ ಸೂಕ್ಷ್ಮಮತಿಗಳಿಗೆ ಎಲ್ಲವೂ ಅರ್ಥವಾಗುತ್ತದೆ. ಆದರೆ ಎಲ್ಲೆಂದರಲ್ಲಿ ಗೊರಕೆ ಹೊಡೆಯುತ್ತ ನಿದ್ರಿಸಿ ತಮ್ಮ ಸ್ವಪ್ನಸಾಮ್ರಾಜ್ಯದಲ್ಲೇ ವಿಹರಿಸುತ್ತ ಜೀವಚ್ಛವಗಳಂತಿರುವ ಆಯಕಟ್ಟಿನ ಕುಟಿಲ ಸ್ಥಾನಗಳಿಗೆ - ಈಗಲೂ ಕಣ್ಣು ಬಿಟ್ಟು ನೋಡುವ ಮನಸ್ಸಿಲ್ಲ. ರಕ್ಷಾಕವಚವಿಲ್ಲದೆ ರಸ್ತೆಗಿಳಿಯಲು ಹೆದರುವಂತಹ ನಮ್ಮ ಪಟಾಕಿ ವೀರರಿಗೆಲ್ಲ "ಮಾನ ಮರ್ಯಾದೆ"ಯ ಹಂಗಿದೆಯೆ? ಭಂಡತನವೇ ಅವರ ಬಂಡವಾಳ. ಅವರ ಕರ್ಮಗಳಿಗೇ ಅವರು ಹೆದರುತ್ತಿದ್ದಾರೆ. ಬಾಹ್ಯ ರಕ್ಷಣೆಯನ್ನೇ ನೆಚ್ಚಿಕೊಂಡಿರುವ ಅಂತಹ ಸ್ಥಾನಗಳೆಲ್ಲವೂ ಊರನ್ನು ರಕ್ಷಿಸಬಲ್ಲವೆ ? ಇವೆಲ್ಲವೂ ಕುರ್ಚಿ ಭರ್ತಿಯ ಸ್ಥಾನಗಳಷ್ಟೆ. ಭೂಮಿಗೆ ಭಾರ; ಕೂಳಿಗೆ ದಂಡ... ಇಂತಹ ದಂಡಪಿಂಡಗಳಿಂದಲೇ - ಭವ್ಯವಾಗಿದ್ದ ಭಾರತವು ಈಗ ಬಡವಾಗಿ ಹೋಗಿದೆ !

ಸ್ವಾತಂತ್ರ್ಯ ಬಂದು 70 ವರ್ಷಗಳಾದರೂ ಭಾರತವು ಇನ್ನೂ ಬಡವಾಗಿಯೇ ಇದ್ದರೆ ಅದಕ್ಕೆ ಇಂತಹ "ಠುಸ್" ಪಟಾಕಿಗಳೇ ಕಾರಣ. ಪ್ರತಿಯೊಬ್ಬರೂ ಪ್ರಶ್ನಿಸಿಕೊಳ್ಳಬೇಕು. ಬೆರಳೆಣಿಕೆಯ "ಸೊಕ್ಕಿನ ಸಿರಿಗೆಂಡೆ"ಗಳನ್ನು ಪೋಷಿಸುವುದಕ್ಕಾಗಿ ನಾವು ಸ್ವಾತಂತ್ರ್ಯದ ಜಪ ಮಾಡಿದ್ದೆ ? ಈಗ ಇಡೀ ದೇಶದ ಸರಕಾರೀ ಯಂತ್ರಗಳು ಭ್ರಷ್ಟವಾಗಿ ಕೂತಿವೆಯಲ್ಲ ? ಸರಕಾರೀ ಮಕ್ಕಳಿಗೆ ಹಾದಿ ತಪ್ಪಿಸುವ ಶಿಕ್ಷಣವನ್ನು ಊಡುತ್ತ ಬಂದವರು ಯಾರು ? ಭ್ರಷ್ಟತೆಯ ವಿಷಪ್ರಾಶನ ಮಾಡಿಸಿ ಬಲಿಷ್ಠ ಸರಕಾರೀ ಯಂತ್ರವನ್ನು ದುರ್ಬಲಗೊಳಿಸುತ್ತ ಬಂದವರು ಯಾರು ? ರಾಜಕೀಯವೂ ಬದುಕಿನ ಅಂಗವೆನಿಸುವ ಒಂದು ಕ್ಷೇತ್ರ. ಅದು ಶಾಸ್ತ್ರೀಯವಾಗಿ ಬಳಕೆಯಾದಾಗ ಮಾತ್ರ ಸಮಾಜವನ್ನು ಕಟ್ಟುವ ಶಕ್ತಿಯಾದೀತು. ಬದಲಾಗಿ ಉದ್ಧಟವಾದರೆ, ಶ್ರುತಿ - ತಾಳತಪ್ಪಿದ ಹಾಡಿನಂತೆ - ಬದುಕನ್ನು ನರಳಿಸಬಲ್ಲದು ! ಇಂದಿನ ಸಮಾಜವು ಬಳಲುತ್ತಿರುವುದಕ್ಕೆ - ನಮ್ಮ ಮೌಲ್ಯರಹಿತ ಅಧರ್ಮೀ ರಾಜಕೀಯವೇ ಮುಖ್ಯ ಕಾರಣ.

ಸರಕಾರೀ ಕ್ಷೇತ್ರದಲ್ಲಿ ತಪ್ಪುಗಳು ಒಮ್ಮೊಮ್ಮೆ ತಾನಾಗಿಯೇ ಸಂಭವಿಸಬಹುದು; Human Error ನಂತಹ ಯಾವುದೇ ರೋಗಗಳು - ತಕ್ಕ ಔಷಧಗಳಿಗೆ ಪ್ರತಿಕ್ರಿಯಿಸಿ ಗುಣಹೊಂದುತ್ತವೆ. ಆದರೆ "PLANNED MISTAKES"  ಎಂಬ ಇನ್ನೊಂದು ವಿಧಾನವಿದೆಯಲ್ಲ? ಅದು ಪರಿಹಾರವಿಲ್ಲದ ರೋಗ ; ಕುಟಿಲತೆಯಿಂದ ಭ್ರಷ್ಟಗೊಂಡ ಮನೋರೋಗವದು. ಅದಕ್ಕೆ ಒಂದೇ ಮದ್ದು. "ದಂಡಂ ಪರಮೌಷಧಂ".

ಇಂದಿನ ದುರಂತ ಎಂದರೆ - ದಂಡಿಸುವ ನೈತಿಕ ಬಲವನ್ನೇ ಕಳೆದುಕೊಂಡವರು ಎಷ್ಟೋ ಬಾರಿ ತನಿಖಾಧಿಕಾರಿಗಳಾಗಿ ಬಿಡುತ್ತಿದ್ದಾರೆ; ಆಯಕಟ್ಟಿನ ಸ್ಥಾನಗಳನ್ನು ಆಕ್ರಮಿಸಿಕೊಂಡು ಭ್ರಷ್ಟರೇ ಭ್ರಷ್ಟರ ತನಿಖೆಗಳನ್ನು ನಡೆಸುವಂತಾಗಿದೆ. ಆದ್ದರಿಂದಲೇ ಶೂನ್ಯ ಸಂಪಾದನೆಗೆ ಸಮಾಜವು ಸಾಕ್ಷಿಯಾಗುತ್ತಿದೆ. ಸಾಮಾಜಿಕ ಶೂನ್ಯ - ಏರ್ಪಡುತ್ತಿದೆ. ಇಂತಹ ದುರವಸ್ಥೆಯ ವ್ಯವಸ್ಥೆಗಳಿಂದ ಏನು ಫಲ ? ಉಭಯತರ ಭ್ರಷ್ಟರನ್ನು ಪುಸಲಾಯಿಸಿಯೇ ನಿಭಾಯಿಸುತ್ತ ದೇಶದ ಬೊಕ್ಕಸ ಖಾಲಿಮಾಡುವುದೆಂದರೆ - ಬೇಲಿಯೇ ಎದ್ದು ಹೊಲ ಮೇಯುವಂತಹ ದುರಂತ ಸ್ಥಿತಿ.

ಅಪರಾಧಿಗಳನ್ನು ಕುರಿತ ಮೃದು ಧೋರಣೆ ಮತ್ತು ಅಪರಾಧಗಳನ್ನು ಓಲೈಸುವಂತಹ ಅಪಾರ ಅಭಿರುಚಿಯನ್ನು ನಮ್ಮ ಸರಕಾರಗಳು ಅನುಸರಿಸುತ್ತಲೇ ಬಂದಿವೆ. ಹತಾಶೆಯ ಮನಸ್ಸುಗಳು ಉದ್ಗರಿಸುತ್ತಿರುತ್ತವೆ. "ಈ ದೇಶ ಉದ್ಧಾರವಾಗಲು ಚಮತ್ಕಾರವೊಂದು ಸಂಭವಿಸಬೇಕು; ಅದಾಗದೆ ಈಗ ಸೊಟ್ಟಗಿರುವುದು ನೆಟ್ಟಗಾಗುವುದು ಅಸಂಭವ.."  ಹಾಗೆಂದು ಮನುಷ್ಯ ಪ್ರಯತ್ನವನ್ನು ಅವಗಣಿಸುವಂತಿಲ್ಲ. ಲಜ್ಜೆಗೆಟ್ಟ ಭಂಡತನವನ್ನು ಕಠಿಣವಾಗಿ ದಂಡಿಸದೆ ತಾತ್ಕಾಲಿಕ ಮುಲಾಮು ಹಚ್ಚುವುದನ್ನು ನಿಲ್ಲಿಸಬೇಕಾಗಿದೆ. ಭಾರತದಲ್ಲಿ ಹುಟ್ಟಿದ ಕರ್ಮಕ್ಕೆ - ಸಮಸ್ತ ಪ್ರಜೆಗಳ ಸ್ಥಿತಿಯು - ದಾರಿ ಮತ್ತು ದಿಕ್ಕು ತಪ್ಪಿದ ಅಪ್ಪ ಅಮ್ಮನ ಆಶ್ರಯದಲ್ಲಿರುವ ಮಕ್ಕಳಂತಾಗಿದೆಯಲ್ಲ ! 

ಇಂದಿನ ಭಾರತೀಯ ನ್ಯಾಯಾಲಯದ ಒಟ್ಟಾರೆ ಚಿತ್ರ ಹೇಗಿದೆ ಎಂದರೆ - ಅಲ್ಲಿ ಪ್ರವೇಶಿಸುವವರೆಲ್ಲರೂ ನರಕದ ಶಿಕ್ಷೆಗೆ ಪೂರ್ಣ ಸಹಮತಿ ನೀಡಿರಬೇಕು ಎಂಬಂತೆ... ಅಲ್ಲಿ ನಿಜವಾದ ಸಂತ್ರಸ್ತರಿಗೆ ಕೊಡಬಾರದ ಮಾನಸಿಕ ಹಿಂಸೆ ಕೊಡುತ್ತ ಅಪರಾಧದ ಆರೋಪ ಹೊತ್ತವರನ್ನು ರಕ್ಷಿಸಿ ಓಲೈಸುವ ಸನ್ನಿವೇಶವಿದೆ. Discretion ಅಂದರೆ ವಿವೇಕ ಅಥವ ವಿವೇಚನೆ. ಆದರೆ ಅದು ವ್ಯಕ್ತಿಗತ ತಪಸ್ಸಿಲ್ಲದೆ ಒಲಿಯುವ ಗುಣವಲ್ಲ. ಪುಸ್ತಕಬ್ರಹ್ಮರಷ್ಟೇ ಆಗಿರುವವರಿಗೆಲ್ಲ Discretionary (ತಿಳಿದಂತೆ ನಡೆದುಕೊಳ್ಳುವ ಅಥವ ಕಾನೂನು ಪುಸ್ತಕದಲ್ಲಿ ಅದೃಶ್ಯವಾಗಿ ಇರುವ ವಿವೇಕಪೂರ್ಣ ವಿವೇಚನೆ  ) ಶಕ್ತಿಯನ್ನು ಉದಾರವಾಗಿ ದಯಪಾಲಿಸಿದಂತೆ ಕಾಣುತ್ತಿರುವುದರಿಂದ ಒಮ್ಮೊಮ್ಮೆ... ವಿವೇಕದ ಆಟವು "ಸ್ವೇಚ್ಛಾಚಾರ" ಎನ್ನಿಸುವುದೂ ಇದೆ. ಏಕೆಂದರೆ... ಅಂತಹ ತಂತ್ರ ಮಂತ್ರ ಭರಿತ ಮನೋಮೂಸೆಯಿಂದ ಹಾದು ಉತ್ತೀರ್ಣಗೊಳ್ಳುವ ಅಪ್ಪಟ "ವಿಚಕ್ಷಣಾ ಮತಿ"ಗಳನ್ನೇ ನ್ಯಾಯಾಧೀಶರನ್ನಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೇನು ? ಭಾರತದ ಕ್ಷಿತಿಜದಲ್ಲಿ - ಸದ್ಯದಲ್ಲಿ ಅಂತಹ ಎಷ್ಟು ಮಾದರಿಗಳಿರಬಹುದು ? ಅಕಸ್ಮಾತ್... ತಮಗೆ ಕೊಡಮಾಡಲ್ಪಟ್ಟ ವಿವೇಚನಾ ಖಡ್ಗವನ್ನು ಸಮರ್ಪಕವಾಗಿ ಬಳಸುವ ಸಾಮರ್ಥ್ಯವನ್ನು ಹೊಂದಿರದ ಮನುಷ್ಯರೂಪದ ದೇವರುಗಳ ಎದುರಿನಲ್ಲಿ ತಲೆಕೊಟ್ಟವರ ಸ್ಥಿತಿ ಏನಾಗಬಹುದು ? ಕೇವಲ ಪುಸ್ತಕ ಓದಿಕೊಂಡ ಪ್ರಾಜ್ಞರೆಲ್ಲರನ್ನೂ "ನ್ಯಾಯ ದಯಪಾಲಿಸುವ ದೇವರು" ಎಂದುಕೊಳ್ಳಬೇಕಾದ ಕ್ಲಿಷ್ಟತೆಯು ನಮ್ಮ ಮುಂದಿಲ್ಲವೆ ?

ಆದ್ದರಿಂದಲೇ ನ್ಯಾಯ ಅನ್ಯಾಯಗಳ ಗೊಂದಲದ ವಾತಾವರಣವು ಏರ್ಪಡುತ್ತಿದೆ. ಇವತ್ತಿನ ಡೊಂಕು ಕಾನೂನುಗಳ ಕುಂಟು ರಣರಂಗದಲ್ಲಿ - ವಿಚಾರಣೆಯ ಪ್ರಾಥಮಿಕ ಹಂತದಲ್ಲಂತೂ "ಅನ್ಯಾಯಕ್ಕೆ ಒಳಗಾದವರೇ ಅಪರಾಧಿಗಳು" ಎಂಬಂತಹ ಕಠಿಣ ಘಟ್ಟವನ್ನು ಹಾದುಹೋಗಬೇಕಾದ ವಿಚಿತ್ರ ಸನ್ನಿವೇಶಗಳು ಎದುರಾಗುತ್ತವೆ. ಅಪರಾಧದ ಆರೋಪ ಹೊತ್ತವರನ್ನು ಕಾನೂನು ಸಾಕ್ಷ್ಯಗಳ ಬಲವಿಲ್ಲದೆ "ಸಾಮಾನ್ಯ ಜ್ಞಾನದಿಂದ" ಅರ್ಥೈಸಿಕೊಳ್ಳುವ ಸೂಕ್ಷ್ಮತೆಯೇ ನಷ್ಟವಾಗಿರುವಂತೆ - ಕೆಲವೊಮ್ಮೆ ಕಾಣುತ್ತದೆ ! ಅತ್ಯಂತ ಸ್ಪಷ್ಟವಾಗಿ ಕಾಣುವ ಕಾನೂನು ಭಂಗದ ಸಂದರ್ಭಗಳನ್ನೂ ಗಜ್ಜುಗದಾಟವಾಡುವಂತೆ ವರ್ಷಗಟ್ಟಲೆ ಎಳೆದಾಡುವ ವಿಶೇಷ ಅವಕಾಶಗಳು ಭಾರತದ ನ್ಯಾಯಿಕ ವ್ಯವಸ್ಥೆಯಲ್ಲಿದೆ ! ನ್ಯಾಯಕ್ಕಾಗಿ ಬೇಡುವ ಸಂತ್ರಸ್ತರನ್ನು "ಅಲೆದಾಡಿಸುತ್ತ ಮಜಾ ನೋಡುವ" ವಿಕ್ಷಿಪ್ತತೆಯೂ ಇದೆ; ಅಸಡ್ಡೆಯೂ ಇದೆ. "ಆತ್ಮ ಗೌರವವು ಕೋರ್ಟಿಗೆ ಮಾತ್ರ - ಪ್ರಜೆಗಳಿಗಿಲ್ಲ ; ಕೋರ್ಟು ದೇವಲೋಕದಲ್ಲಿದೆ..." ಎಂಬಂತಹ "ಒಡೆಯ - ಗುಲಾಮ" ಪಂಜರದ ವಾತಾವರಣವು ಸ್ವತಂತ್ರ ಭಾರತಕ್ಕೆ ಹೇಳಿಸಿದ್ದೆ ? ಅಲ್ಲವೇ ಅಲ್ಲ. ಭಾರತೀಯ ಪ್ರಜೆಗಳು ತಮ್ಮದೇ ಭಾರತದ ತಮ್ಮದೇ ಆಡಳಿತದ ಗುಲಾಮರೆ ? ಸರ್ವಥಾ ಸಾಧ್ಯವಿಲ್ಲ.

  

ಪರಸ್ಪರ ಗೌರವದ ವ್ಯವಹಾರವು ನಾಗರಿಕ ಬದುಕಿಗೆ ಅತೀ ಅವಶ್ಯ. ಆದರೆ ಭಾರತದ ಕೋರ್ಟುಗಳನ್ನು ಪ್ರವೇಶಿಸಿದವರಿಗೆ "YOUR HONOUR" ಶೈಲಿಯ ಗುಲಾಮತನವನ್ನು ಹೇರಿ, "OUR HONOUR" ನ್ನು ಅಲಕ್ಷಿಸಿದ ಅನುಭವವಾಗುವುದು ಮಾತ್ರ - ಸತ್ಯ. ಹಾಗಿದ್ದರೆ ಇಂತಹ ಪರಂಪರೆಯನ್ನು ಮುಚ್ಚಟೆಯಿಂದ ಇದುವರೆಗೆ ರಕ್ಷಿಸಿಕೊಂಡು ಬಂದಿರುವ ನ್ಯಾಯಾಂಗದ ಅಭಿಪ್ರಾಯ ಏನಿರಬಹುದು ? ಸ್ವರತಿಯ ಜ್ವಲಂತ ನಿದರ್ಶನದಂತೆಯೂ ಕಾಣುವುದಿಲ್ಲವೆ ? ನಿತ್ಯವೂ ರೋಮಾಂಚನದಲ್ಲಿ ಮುಳುಗಿ ಏಳುತ್ತಿರುವುದರಿಂದಲೇ - ತಮ್ಮೊಳಗೆ ಸ್ವಚ್ಛತಾ ಅಭಿಯಾನವನ್ನು ನಡೆಸದೆ ಹಾಗೇ ಬಿಟ್ಟುಕೊಂಡಿದ್ದಾರೆ ಅಂದುಕೊಳ್ಳಬಹುದೆ ? "ಸ್ವಾಮಿ-ಸೇವಕ, ಮೇಲು ಕೀಳು" ಭಾವವನ್ನು ಪ್ರಚೋದಿಸುವ ಅನೇಕ ಕೊಳಕು ಸಂಪ್ರದಾಯಗಳನ್ನು ತಮ್ಮ ಅಹಂ ತೃಪ್ತಿಗಾಗಿಯೇ ಉಳಿಸಿಕೊಂಡಿರಬಹುದು ಎಂದು ಭಾವಿಸುವಂತಾದರೆ ಅದರಲ್ಲಿ ಅಸಹಜವೇನಿದೆ ? ಗೌರವವನ್ನು ಶಬ್ದರೂಪದಲ್ಲಿಯೇ ನುಂಗಬೇಕಾದ ಅಗತ್ಯವಿದೆಯೆ ?

ವಿವೇಚನೆ ಇದ್ದವರು ಮತ್ತು ಇಲ್ಲದವರ ಸಾಲಿನಲ್ಲಿ ಎಳೆದು ನಿಲ್ಲಿಸಲ್ಪಟ್ಟವರೂ - ಯೋಚಿಸಬೇಕು. ಕೋರ್ಟಿನ ಹೊರಗೂ Discretionary ಶಕ್ತಿಗಳು ಇರಬಹುದು. ಅವರೂ ಯೋಚಿಸುತ್ತಾರೆ. ಕೋರ್ಟಿಗೆ ಹೋಗುವವರೆಲ್ಲರೂ ಅಪರಾಧಿಗಳೆ ? ಅಪರಾಧವು ಸಾಬೀತಾಗುವ ಮೊದಲೇ ಅಲ್ಲಿ ನೆರೆದವರೆಲ್ಲರಲ್ಲೂ ಕ್ಷುಲ್ಲಕವಾಗಿ ವರ್ತಿಸುವಷ್ಟು ಪರಮಾಧಿಕಾರವು ನ್ಯಾಯಾಂಗಕ್ಕೆ ಯಾಕೆ ಬೇಕು ? ಕೋರ್ಟುಗಳಿಗೆ ತಳ್ಳಲ್ಪಡುವ ಎಲ್ಲರನ್ನೂ ಅವಿವೇಕಿಗಳಂತೆಯೇ ನಡೆಸಿಕೊಂಡರೆ ವಿವೇಚನೆ ಎಂಬ ಆಯುಧವು ಸಪಾತ್ರರಲ್ಲಿದೆಯೆ ? ಎಂಬ ಸಂಶಯವು ಮೂಡುವುದಿಲ್ಲವೆ ? ಪ್ರಜಾಪ್ರಭುತ್ವದ ಹೆಸರಿನ ಮರೆಯಲ್ಲಿ ನ್ಯಾಯಾಂಗವು ಮಾತ್ರ ಯಾವುದೇ ಉತ್ತರದಾಯಿತ್ವವಿಲ್ಲದ ರಕ್ಕಸ ಶಕ್ತಿಯಂತಿದೆ - ಎಂಬ ಭಾವವು ಸ್ಫುರಿಸಲಾರದೆ ? ತಲೆತಗ್ಗಿಸಿ ತಮ್ಮ ತಮ್ಮ ಕರ್ತವ್ಯವನ್ನು ನಿರ್ವಹಿಸುವ ಶಿಷ್ಟತೆಯನ್ನು ಸಮಾಜದ ಕೆಲವು ವರ್ಗದಿಂದ ಮಾತ್ರ ಅಪೇಕ್ಷಿಸುತ್ತ ಕೆಲವು ವರ್ಗವನ್ನು ಹೊರತುಪಡಿಸಿದ್ದರೆ - ಅದು ನ್ಯಾಯವೆ ? ಕೆಲವರ ದೃಷ್ಟಿಯಲ್ಲಿ - "ವಿವೇಕವಿಲ್ಲದವರು" - ಅನ್ನಿಸಿಕೊಂಡವರಿಗೂ ಹೀಗೆಲ್ಲ ಅನ್ನಿಸಬಹುದಲ್ಲವೆ ?


ನ್ಯಾಯದೇವತೆಯ ಕಣ್ಣಿನ ಪಟ್ಟಿಯನ್ನು ಬಿಚ್ಚಬೇಕಾದ ಕಾಲ ಬಂದಿದೆ. ಕುರುಡುನ್ಯಾಯವು ಅನರ್ಥಕಾರಿ. ನ್ಯಾಯದೇವತೆಯ ಪಟ್ಟ ಕೊಟ್ಟು - ಕೃತಕವಾಗಿ ಕುರುಡಾಗಿಸಿರುವುದಂತೂ ಮಹಾ ಅಪರಾಧ. ಏಕೆಂದರೆ ಯಾವ ದೇವತೆಗಳೂ ಕುರುಡರಲ್ಲ. ಸಾಧ್ಯವಿದ್ದರೆ ಕಣ್ಣಿಲ್ಲದವರಿಗೆ ದೃಷ್ಟಿ ಕೊಡಬೇಕು; ಇರುವ ದೃಷ್ಟಿಯನ್ನು ಮಂಕಾಗಿಸಿಕೊಳ್ಳಬಾರದು. ದೃಷ್ಟಿಮಾಂದ್ಯತೆಯ ದೌರ್ಬಲ್ಯದಲ್ಲಿ ನ್ಯಾಯವು ನರಳುವಂತಾಗಬಾರದು. ಕುರುಡುತನವನ್ನು ತಾವಾಗಿಯೇ ಆರೋಪಿಸಿಕೊಳ್ಳುವುದು ಅಕ್ಷಮ್ಯ ದುರಂತಗಳಿಗೂ ಎಡೆಮಾಡಿಕೊಡಬಲ್ಲದು.

ಅಜ್ಞಾತ - ಅನರ್ಥಕಾರೀ ಮುನಿಸಿಗೆ ವಶವಾದ ಗಾಂಧಾರಿಯು ತನ್ನ ಕಣ್ಣಿಗೆ ತಾನೇ ಪಟ್ಟಿ ಕಟ್ಟಿಕೊಂಡ ಆತ್ಮಘಾತೀ ವರ್ತನೆಯಿಂದಲೇ - ಆಕೆಯ ಮಗ ದುರ್ಯೋಧನನು ದುಷ್ಟನಾಗುವಂತಾಯಿತು. ಕುಂತಿಯಂತೆ ಗಾಂಧಾರಿಯೂ ಸಹಜವಾಗಿ ಬದುಕಿ, ತನ್ನ ಮಕ್ಕಳ ಬಾಲ್ಯದ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸಿ ತಿದ್ದಿತೀಡಿದ್ದರೆ, ತನ್ನ ಮಕ್ಕಳಲ್ಲಿಯೂ ಕುಂತಿಯಂತೆಯೇ ಸಹಜ ಪ್ರೀತಿಯನ್ನು ಹರಿಸಿದ್ದರೆ, ದುರ್ಯೋಧನನೂ ಧರ್ಮರಾಯನ ಪ್ರಶಂಸಕನಾಗಿ ಅಣ್ಣನ ಪ್ರೀತಿಗೆ ಪ್ರತಿಸ್ಪಂದಿಸುತ್ತ - ಕುರುಕ್ಷೇತ್ರದ ಸಂಗ್ರಾಮವೇ ನಡೆಯುತ್ತಿರಲಿಲ್ಲವೋ ಏನೋ ? ಯಾರಿಗೆ ಗೊತ್ತು ? ಧೃತರಾಷ್ಟ್ರನ ಹುಟ್ಟು ಕುರುಡು ಮತ್ತು ಗಾಂಧಾರಿಯು ಆರೋಪಿಸಿಕೊಂಡ ಕುರುಡುತನಗಳೆಂಬ ಎರಡು ಅವಿವೇಕದಿಂದಲೇ ಹಸ್ತಿನಾವತಿಯು ಕುರುಕ್ಷೇತ್ರವಾದದ್ದು !

ಕುರುಕ್ಷೇತ್ರ ಘಟಿಸದೆ ಯಾವ ವ್ಯಾಸರಿಗೂ ಮಹಾಭಾರತವನ್ನು ಬರೆಯಲಾಗುವುದಿಲ್ಲ ! ಅಂತೆಯೇ ಭೂಮಿಯ ಎಲ್ಲ ಮಹಾಭಾರತಗಳಿಗೂ ನೂರೆಂಟು ಕಾರಣಗಳಿರಬಹುದು. ಅಂತಹ ಸಾಮಾಜಿಕ ಸೂಕ್ಷ್ಮಗಳನ್ನು ಗ್ರಹಿಸುವ ಸಮೃದ್ಧ ವಿವೇಚನಾ ಶಕ್ತಿಯು ನಮ್ಮ ನ್ಯಾಯಾಲಯಗಳಿಗಿವೆಯೆ ? ಒತ್ತಡದಿಂದಾಗಿ ಪುರಸೊತ್ತು ಇಲ್ಲ - ಎಂದಾದರೆ ಇಲ್ಲಿ ಯಾರಿಗೂ ಸಮಗ್ರ ನ್ಯಾಯವು ಸಿಗುತ್ತಿಲ್ಲ ಎಂದೇ ಅರ್ಥ. ಆದ್ದರಿಂದ ಕಣ್ಣು ಮುಚ್ಚಿ ಕೂಡಿಸಿರುವ ನ್ಯಾಯದೇವತೆಯನ್ನು - ತಪ್ಪಿಗೆ ಸಿಕ್ಕಿಸುವ ದೇವಸಾಕ್ಷಿಯಾಗಿಸಿ, "ತಮತಮಗೆ ತಿಳಿದಂತೆ" ಒತ್ತಡದಿಂದ ಕಣ್ಣು ಮುಚ್ಚಿಕೊಂಡು ನ್ಯಾಯ ತೀರ್ಮಾನ ಮಾಡುವಂತಾದರೆ - ಅದು ಸುತರಾಂ ಸರಿಯಲ್ಲ. "ತಿಳಿದಂತೆ ವರ್ತಿಸುತ್ತಿದ್ದಾರೆ..." ಎಂದು ನನ್ನಂತಹ ಕಾಗೆ ಗುಬ್ಬಿಗಳು ಕೆಲವೊಮ್ಮೆ ಗೊಣಗಬಹುದು - ಅಲ್ಲವೆ ? ನ್ಯಾಯಾಲಯವನ್ನು ಯಾರೂ ನಿಂದಿಸಬಾರದು. ಅದು ತಪ್ಪು. ಆದರೆ ಸದ್ಯದ "ಚಕ್ಕಳಬಕ್ಕಳ ಕಾನೂನಿನ ಸ್ಥಿತಿ"ಯಲ್ಲಿ - ಅಪ್ಪಟ ನ್ಯಾಯದ ಮಾತನಾಡುವುದೂ ಕೂಡ - ಹುತ್ತದಲ್ಲಿ ಕೈ ಹಾಕಿ ಹಾವು ಹಿಡಿಯುವಷ್ಟೇ ಅಪಾಯಕಾರಿ ಸಾಹಸವಾದೀತು !


ಕಡಿಮೆ ಪಕ್ಷ, ನ್ಯಾಯಾಂಗವಾದರೂ ಗಂಭೀರವಾಗಿ ವರ್ತಿಸಬೇಕೆಂಬ - ಮರುಳು ಗುಬ್ಬಿಗಳ ಮರುಳು ಅಪೇಕ್ಷೆಯು ತಪ್ಪೆ? ನ್ಯಾಯಾಂಗವಾದರೇನಂತೆ ? ಜನರೇ ಸ್ವಯಂಪ್ರೇರಿತರಾಗಿ ಗೌರವಿಸುವಂತಿದ್ದರೆ ಮಾತ್ರ ನ್ಯಾಯಧರ್ಮವನ್ನು ಸಮಗ್ರವಾಗಿ ಗೌರವಿಸಿದಂತಾದೀತು. ಇದಕ್ಕೆ ಪೂರಕವಾದ ಸನ್ನಿವೇಶಗಳನ್ನು ನಿರ್ಮಿಸಿಕೊಳ್ಳಬೇಕು. ವ್ಯತಿರಿಕ್ತವಾಗಿ - ಬ್ರಿಟಿಷರ ಕಾಲದ ಶಿಸ್ತಿನ ವೇಷದಲ್ಲಿ ಸಾಮಾನ್ಯ ದುಃಖಿತ ವರ್ಗವನ್ನು ಅಟಕಾಯಿಸುತ್ತ ಸಾರ್ವಜನಿಕರತ್ತ ತೋರುವ ಅಸಡ್ಡೆ, ಸೌಜನ್ಯಹೀನ ನಡವಳಿಕೆಗಳು, ಅತಿ ಎನ್ನಿಸುವಷ್ಟು ರಜಾಸೌಲಭ್ಯಗಳು... ಇವೆಲ್ಲವೂ ಇಡೀ ನ್ಯಾಯಾಂಗ ವ್ಯವಸ್ಥೆಯನ್ನೇ ಸಂಶಯದಿಂದ ನೋಡುವಂತೆ ಮಾಡಬಹುದು. ಇಂದಿಗೆ ನಗು ತರಿಸುವಂತಹ ರಾಜಮಹಾರಾಜರ ಕಾಲದ PROTOCOL ಸಂಸ್ಕೃತಿಗೆ ಇತಿಶ್ರೀ ಹಾಡಲೇ ಬೇಕಾಗಿದೆ. ನ್ಯಾಯಾಂಗದ ಹೊರಗಾಗಲೀ ಒಳಗಿನ ವ್ಯವಸ್ಥೆಗಳಲ್ಲಾಗಲೀ ಸಂಶಯ ಮೂಡಿಸುವಂತಹ ಯಾವುದೇ ಗುಸುಗುಸು - ಮುಚ್ಚುಮರೆ ಇರಲೇಬಾರದು; ಅಪರಾಧವೆಸಗದ ದುಃಖಿತರೂ ನ್ಯಾಯಾಲಯಕ್ಕೆ ಬರುತ್ತಾರೆ ಅಥವ ಅವರನ್ನು ಎಳೆದು ತರುತ್ತಾರೆ ಎಂಬ ಪ್ರಜ್ಞೆಯೂ ಇರಬೇಕಾಗುತ್ತದೆ. ಅದೇ ಸರಿಯಾದ ವಿವೇಚನೆ.

"ಎಲ್ಲವೂ ಹೊಟ್ಟೆಪಾಡಿನ ತಂತ್ರಗಳು; ನ್ಯಾಯಾಲಯವೂ ಅದಕ್ಕೆ ಹೊರತಲ್ಲ" - ಅನ್ನಿಸುವ ಶೋಕದ ಹೊತ್ತಿನಲ್ಲಿ - ನಮ್ಮಂತೇ ಉಪ್ಪುಹುಳಿ ಖಾರ ತಿನ್ನುತ್ತ ನ್ಯಾಯಾಂಗದ ಭಾಗವಾಗಿರುವ ಹುಲುಮಾನವರು ತಮಗೆ ತಾವೇ ದೈವತ್ವವನ್ನು ಆರೋಪಿಸಿಕೊಳ್ಳುವುದನ್ನು ನೋಡಿ ನಾನು ಮುಸಿಮುಸಿ ನಕ್ಕದ್ದೂ ಇದೆ.

ಒಮ್ಮೆ ... ಸಮಯವನ್ನು ಕೊಂದುಕೊಳ್ಳುತ್ತ ಕೋರ್ಟಿನ ಆವರಣದಲ್ಲಿ ಕುಳಿತಿದ್ದಾಗ, ಅಲ್ಲಿ ಧಸಭಸ ಸುತ್ತಾಡುತ್ತಿದ್ದ ಹಿಂಡು ಹಿಂಡು ಕಪ್ಪು ಕಪ್ಪಾದ ದೃಶ್ಯ ಸಾದೃಶ್ಯ ಅನುದೃಶ್ಯಗಳನ್ನು ನೋಡುತ್ತಿದ್ದಾಗ, ಶ್ರಾದ್ಧದ ಪಿಂಡ ತಿನ್ನಲು ಮುತ್ತಿಕ್ಕುವ ಕಪ್ಪು ಕಾಗೆ  ಗಳನ್ನು ಕಲ್ಪಿಸಿಕೊಂಡು ಕಿಸಕ್ಕೆಂದು ನಕ್ಕದ್ದೂ ಇದೆ. (ಆದರೆ ಈಗೀಗ ಪಿಂಡದಾಸೆಗೆ ಓಡೋಡಿ ಬರುವ ಕಾಗೆಗಳ ಸಂಖ್ಯೆಯೂ ಕಡಿಮೆಯಾಗಿದೆ. ಕಾಗೆಗಳಿಗೂ ಡೌಲು ಬಂದಿದೆ ! ಪಿತೃಗಳು ಉಪವಾಸ ಬೀಳುವಂತಾಗಿದೆ ! ಪೇಟೆ ಪಟ್ಟಣಗಳಲ್ಲಂತೂ ಕಾಗೆಯನ್ನು ಒತ್ತಿ ಹಿಡಿದು ತಂದು ಒತ್ತಾಯದಿಂದ ಪಿಂಡ ತಿನ್ನಿಸಬೇಕಾದ ಸ್ಥಿತಿ ಬಂದಿದೆ !)

ನ್ಯಾಯಸೋಂಕು ತಗಲಿ - ಹಾರುವ ಕಾಗೆ ಗುಬ್ಬಿಗಳು...

ನಾನು ಕಂಡ ಪ್ರಶಾಂತ ಕೋರ್ಟು ಆವರಣವೊಂದರಲ್ಲಿ ಒಂದಷ್ಟು ಕರ್ರನೆ ಕಾಗೆಗಳಿದ್ದುವಲ್ಲ ! ಎಲ್ಲವೂ ಕಪ್ಪು ಕಾಗೆಗಳೇ. ಸರದಿಗಾಗಿ ಕಾಯುತ್ತ ಆಕಳಿಸುತ್ತ ಕುಳಿತಿದ್ದ ನಾನು ಅನಿವಾರ್ಯವಾಗಿ ಸಮಯ ಕೊಂದುಕೊಳ್ಳಲು ದಾರಿ ಹುಡುಕುತ್ತಿದ್ದೆ. ಊರಿನಿಂದ ಮಾಯವಾಗಿರುವ ಕಾಗೆ ಹಿಂಡನ್ನು ಕೋರ್ಟಿನಲ್ಲಿ ನೋಡಿ ವಿಸ್ಮಿತಳಾಗಿದ್ದೆ ! ನನ್ನ ಆಕಳಿಕೆ ಹೆಚ್ಚತೊಡಗಿ ನಿದ್ದೆಯತ್ತ ಸೆಳೆಯುತ್ತಿತ್ತು....

"ಎಲ ಎಲಾ ಕಾಗೆಯೇ.." ಎನ್ನುತ್ತ ಒಂದು ಕಾಗೆಯ ಬೆನ್ನು ಹತ್ತಿ ಸುತ್ತತೊಡಗಿದ್ದೆ. ಮಾತು ಬೆಳೆಸುತ್ತ ನಿಧಾನವಾಗಿ ಕಾಗೆಯ ಸ್ನೇಹವನ್ನೂ ಸಂಪಾದಿಸಿದೆ. ಚಿರಿಪಿರಿ ಕರಕರ ಎನ್ನುತ್ತ ಕಾಗೆಶಕುನದ ಮಾತಾಡಿದ್ದೇ ಆಡಿದ್ದು. ಆಗ ನನಗೆ ಕಾಗೆ ಹೇಳಿದ್ದು ಏನೆಂದರೆ...

ಪುರೋಹಿತಶಾಹಿಗಳನ್ನು ಧಿಕ್ಕರಿಸುವ ಶಕ್ತಿಯನ್ನು (EMPOWERMENT) ಇಂದಿನ ಕಾಗೆಗಳಿಗೂ ದಯಪಾಲಿಸಿದ್ದಾರಂತೆ ! ಆದ್ದರಿಂದಲೇ ಪಿಂಡವನ್ನು ಹೆಕ್ಕಿ ತಿನ್ನುವ ಅಮಾನವೀಯತೆಗೆ ಅವನ್ನು ತಳ್ಳಿದ ಪುರೋಹಿತಶಾಹಿಗಳ ಹಿಂದೆ ಸುತ್ತಲು ಈಗ ಕಾಗೆಗಳಿಗೆ ಆತ್ಮಾಭಿಮಾನ ಒಪ್ಪುವುದಿಲ್ಲವಂತೆ ! ತಮ್ಮ ಗೂಡಿಗೇ ತಂದು ಕೊಟ್ಟರೆ ಮಾತ್ರ ಪಿಂಡ ತಿನ್ನುತ್ತವಂತೆ ! ಕಾಗೆಗಳಿಗೂ ಹಕ್ಕುಗಳ ಜ್ಞಾನ  ಒದಗಿಸಿದಂತಹ - ದುರ್ಬಲರ ಹಿತಚಿಂತನೆ ಮುಂತಾದ ಪ್ರೇರೇಪಿಸುವ ಮಾತುಗಳು ಕಾಗೆ ಬಳಗಕ್ಕೆ ರೋಮಾಂಚನ ಹುಟ್ಟಿಸಿದ್ದರಿಂದ ಉದ್ಧಾರಕ ಮರಿದೊರೆಗಳ ಮಾರ್ಗದರ್ಶನದಂತೆ, ಹಕ್ಕು ಸ್ಥಾಪನೆಯ ಓರಾಟಕ್ಕೆ ಇಳಿದಿವೆಯಂತೆ ! ಆದ್ದರಿಂದಲೇ ದೊಡ್ಡ ದೊಡ್ಡ ಮನುಷ್ಯರಂತೆ - ಕಾಗೆಗಳಿಗೂ ಮನೆಮಠ ಬಿಟ್ಟು ಕೋರ್ಟುಗಳಲ್ಲಿ ತಿಣುಕಾಡುವ ಶಕ್ತಿಯು ಬಂದಿದೆಯಂತೆ ! ಆದುದರಿಂದಲೇ ಎಲ್ಲೋ ಒಂದೊಂದು ದಿನ ಕಾಗೆಗಳಿಗೆ "ಗಿಮಿಚಿದ ಪಿಂಡಾನ್ನ" ಕೊಡುವ ಪುರೋಹಿತಶಾಹಿಗಳ ಕ್ಷುಲ್ಲಕತನವನ್ನು ಪ್ರತಿಭಟಿಸಲೆಂದೇ ಅಂತಹ ಯಾವುದೇ ಆಹಾರವನ್ನು ಅವುಗಳು ಸ್ವೀಕರಿಸುವುದಿಲ್ಲವಂತೆ ! ತನ್ಮೂಲಕ ಪುರೋಹಿತಶಾಹಿಗಳ ಕರ್ಮಸಾಫಲ್ಯವಾಗದೆ - ಜುಟ್ಟುಗಳು ಸಾಮೂಹಿಕವಾಗಿ ಚಡಪಡಿಸುವಂತೆ ಮಾಡಿವೆಯಂತೆ !

ಆದರೆ ಹಳ್ಳಿಯ ಕಾಗೆಗಳಿಗೆ ಮಾತ್ರ ಇನ್ನೂ ಜ್ಞಾನೋದಯವಾಗಿಲ್ಲವಂತೆ. ಅದಕ್ಕಾಗಿ ಹಳ್ಳಿಯ ಕಾಗೆಗಳ ಒಂದು ಬೃಹತ್ ಸಮ್ಮೇಳನವನ್ನು ಏರ್ಪಡಿಸಿದ್ದಾವಂತೆ. ಕೆಲವು ವಿಶಿಷ್ಟ ಊಟದಿಂದ ಕೆಲವೇ ಕೆಲವು ಪಟ್ಟಣದ ಕಾಗೆಗಳು ಮಾತ್ರ ವಂಚಿತವಾಗುವಂತಾಗದೆ - ಪುರೋಹಿತರನ್ನು ಬಹಿಷ್ಕರಿಸಿ ಕರಕರ ಕೆರೆಯುವ ಸಾಹಸದ ಕಾಯಕದಲ್ಲಿ ಕಾಗೆಗಳ ಒಟ್ಟಾರೆ ಬಳಗವು ಏಕಸ್ವರದಿಂದ ಘೋಷಣೆಗಳನ್ನು ಕೂಗುವಂತೆ ಮಾಡಿ - ಸಮ್ಮೇಳನದಲ್ಲಿ ಕಾಗೆಜಾಗ್ರತಿಯನ್ನು ಮೂಡಿಸುತ್ತವಂತೆ ! ಕಾ...ಕಾ...ಕಾ...

ಕಾಗೆಬಳಗದ ಸುಖದುಃಖವನ್ನು ಸಮಾನವಾಗಿ ಹಂಚಿಕೊಳ್ಳುವ ಪ್ರತಿಜ್ಞಾವಿಧಿಯೂ ಅಂದು ನಡೆಯುತ್ತದಂತೆ ! ಆದರೆ ವಿಶಿಷ್ಟ ಊಟವನ್ನು ಪದೇ ಪದೇ ಕನವರಿಸಿಕೊಳ್ಳುವ ಕೆಲವು ಪೆದ್ದು ಕಾಗೆಗಳಲ್ಲಿ ಧೈರ್ಯ ತುಂಬುವ ದೃಷ್ಟಿಯಿಂದ - "ಪುರೋಹಿತ ವರ್ಗವು ತಮ್ಮ ಪಿತೃಗಳಿಗಾಗಿ ಪಿಂಡವಿಟ್ಟು ತಮ್ಮ ದುಷ್ಟ ಕರ್ಮಕ್ಕೆ ಸುಭಗ ಕಾಗೆಗಳ ದುರ್ಬಳಕೆ ಮಾಡುತ್ತಿದ್ದಾರೆ" ಎಂಬ ದೂರನ್ನು ಕೋರ್ಟಿನಲ್ಲಿ ದಾಖಲಿಸಲಾಗಿದೆಯಂತೆ. ಅದೇ ಕಾರ್ಯನಿಮಿತ್ತ ನನ್ನ ದೋಸ್ತಿ ಕಾಗೆಯು ಮಿತ್ರರೊಂದಿಗೆ ಕೋರ್ಟಿಗೆ ಬಂದಿದೆಯಂತೆ. ಇದರಿಂದಾಗಿ ಕಾಗೆಗಳ ಮನೋಬಲವು ಯದ್ವಾತದ್ವಾ ಹೆಚ್ಚಿದೆಯಂತೆ !

ಹೀಗಿದ್ದರೂ... ಇನ್ನೂ ನೂರಾರು ಕಾಗೆಬೇಡಿಕೆಗಳು ಪೂರ್ಣವಾಗದೆ ಉಳಿದಿವೆಯಂತೆ ! ಬ್ರಾಹ್ಮಣರ ಧರ್ಮದೂಟವಿಲ್ಲದಂತಾದ ಸಮಗ್ರ ಕಾಗೆ ಬಳಗದ ರಂಜನೆಗಾಗಿ - "ಊಟ ತಪ್ಪಿದ ಕಾಗೆಗಳ ಸಮಸ್ತ ನಷ್ಟವನ್ನು ಮೋದಿ ಸರಕಾರವು ಬಡ್ಡಿಸಮೇತ ಭರ್ತಿಮಾಡಿ ಕೊಡಬೇಕು" ಎಂಬ ಹಕ್ಕೊತ್ತಾಯವನ್ನು ಭಾರತದ ಎಲ್ಲ ಕೋರ್ಟುಗಳಲ್ಲಿ ಸಲ್ಲಿಸಿದ್ದಾವಂತೆ ! ಜತೆಗೆ ಪುರೋಹಿತ ವರ್ಗಕ್ಕೆ ಹೊಟ್ಟೆ ಬಿರಿಯುವಷ್ಟು ವಡೆ ತಿನ್ನಿಸುವ ಕಠಿಣ ಶಿಕ್ಷೆಗಾಗಿಯೂ ಬೇಡಿಕೆಯಿಟ್ಟಿದ್ದಾವಂತೆ ! ಕಾಗೆಗಳ ನೈತಿಕ ಬಲವನ್ನು ಹೆಚ್ಚಿಸುವ ದೃಷ್ಟಿಯಿಂದ - ಕೊಕ್ಕು ತೆರೆಯಲಾಗದಷ್ಟು ದುರ್ಬಲ, ಚೂರುಪಾರು ಅಂಗಚ್ಛೇದಗೊಂಡ ದಿವ್ಯಾಂಗ, ಹಾರಲಾರದೆ ಹಿಂದುಳಿದ, ಏಳಲಾಗದೆ ಶೋಷಿಸಿಕೊಂಡ ನತದೃಷ್ಟ ಕಾಗೆವರ್ಗದ ಏಳಿಗೆಗೆ ಪ್ರಥಮ ಪ್ರಾಶಸ್ತ್ಯವನ್ನು ಕೊಡಲೋಸುಗ - ಸ್ವತಃ ಪ್ರಧಾನಿ ಮೋದಿಯವರಿಗೇ ಸಮ್ಮನ್ಸ್ ಕೊಟ್ಟು ಅವರನ್ನು ಶೀಘ್ರಾತಿಶೀಘ್ರವಾಗಿ ಕರೆಸಿ ಕಟಕಟೆಯಲ್ಲಿ ನಿಲ್ಲಿಸಿ "ಕಾಗೆ ಸ್ಥಿತಿಗತಿಯ ವಿವರಣೆ" ನೀಡುವಂತೆ ಆಜ್ಞಾಪಿಸಲು ಜರ್ಪಿನ ಅರ್ಜಿ ಸಲ್ಲಿಸಲಾಗಿದೆಯಂತೆ ! "ಕಾಗೆಗಳಿಗೂ ಓಟಿನ ಅಕ್ಕು ಬೇಕು" ಎಂಬ ಇನ್ನೊಂದು ಕಾಗೆಬೇಡಿಕೆಯೂ ವಿಚಾರಣೆಯ ಹಂತದಲ್ಲಿದೆಯಂತೆ ! ...ನೆಲದ ಹಾರುವರಿಗಾದರೆ ತಿರುಗಾಟದ ಖರ್ಚಿದೆ; ನಮ್ಮಂಥ ಆಕಾಶದ ಹಾರುವರಿಗಾದರೆ ಖರ್ಚೇ ಇಲ್ಲ; ಎಲ್ಲವೂ ಸುಲಭ; ಆಕಾಶ ನನ್ನದು - ರೆಕ್ಕೆ ನನ್ನದು ಎನ್ನುತ್ತ ಎಲ್ಲಿ ಬೇಕಾದರೂ ಹಾರುವ ಜನ್ಮಸಿದ್ಧ ಸೌಲಭ್ಯವೇ ನಮ್ಮ ಸಂಪತ್ತು ಗುಬ್ಬಕ್ಕಾ ! ಎಲ್ಲಿ ಬೇಕಾದರೂ ಕೂರಬಹುದು; ಏರಬಹುದು ! ಶತಶತಮಾನಗಳ ಕಾಗೆಶೋಷಣೆಗೆ ಪ್ರಚಂಡ ಪ್ರತೀಕಾರ ಮಾಡದೆ ಬಿಡುವುದಿಲ್ಲ... ಕಾ... ಕಾ... 

ಆಕಾಶದಲ್ಲಿ ತೇಲುತ್ತಿದ್ದ ಕಾಗೆಯು ಹೆಮ್ಮೆಯಿಂದ ಮೈಕುಲುಕಿಸಿ ನಕ್ಕಾಗ ಕಾಗೆಯ ಕುತ್ತಿಗೆಯನ್ನು ಒತ್ತಿಹಿಡಿದುಕೊಂಡು ಗುಬ್ಬಿಯಂತೆಯೇ ಕುಳಿತಿದ್ದ ನನ್ನ ಮೈ ತೇಲಿದಂತಾಗಿ ಹಿಡಿತ ಬಿಗಿಗೊಳಿಸಿದ್ದೆ. ಆಗ ಕುತ್ತಿಗೆ ಹಿಚುಕಿದಂತಾದ ಕಾಗೆಯು ತಾನೇನೋ ಸತ್ತೇ ಹೋದಂತೆ "ಕರ್ರ್ ಕರ್ರ್ .." ಎನ್ನುತ್ತ ಕಿರುಚಿತು. "Sorry Sorry "ಎಂದ ನಾನು - ಕಾಗೆಯನ್ನು ಕೇಳಿದೆ. "ಕಾಗಕ್ಕಾ, ನೀನು ಕೋರ್ಟಿಗೆ ಅರ್ಜಿ ಸಲ್ಲಿಸಿ ಎಷ್ಟು ಸಮಯವಾಯಿತು ?" ಎಂದೆ. "ಎರಡು ಮಳೆಗಾಲ ಮುಗಿಯಿತು ತಂಗೀ " ಎಂದ ಕಾಗಕ್ಕ ಹಾರಿ ಬಂದು ಅಲ್ಲೇ ಇದ್ದ ಮರದ ಮೇಲೆ ಕೂತು ನನ್ನನ್ನೂ ಅದೇ ಟೊಂಗೆಯ ಮೇಲೆ ಇಳಿಸಿ, ನೋವು ನಿವಾರಿಸಿಕೊಳ್ಳುವಂತೆ ಕುತ್ತಿಗೆ ಅಲುಗಿಸುವ ವ್ಯಾಯಾಮ ಮಾಡತೊಡಗಿತು.

ಕಾಗೆಯ ವ್ಯಾಜ್ಯದ ಪುರಾಣದಿಂದ ಆಕರ್ಷಿತಳಾದ ನಾನು "ಅಕ್ಕಾ, ಈಗಾಗಲೇ ನಿನ್ನ ಅರ್ಜಿಯ ವಿಚಾರಣೆಯೆಲ್ಲ ಮುಗಿದಿದೆಯಾ?" ಎಂದು ಕೇಳಿದೆ. "ಇಲ್ಲ ತಂಗೀ, ಇನ್ನೂ ಶುರುವಾಗಿಲ್ಲ; ಇವತ್ತೂ ನಡೆಯಲಿಲ್ಲ. ಇನ್ನು ಮೂರು ತಿಂಗಳ ನಂತರ ಬನ್ನಿ ಎಂದಿದ್ದಾರೆ..." ಎಂದಿತು ಕಾಗಕ್ಕ. ಆಮೇಲೆ ಕಾಗೆಯು ತನ್ನಷ್ಟಕ್ಕೇ ಗೊಣಗತೊಡಗಿತು. "ಗೌರವದಿಂದ ಕೊಡುತ್ತಿದ್ದ ಅನ್ನವನ್ನು ತಿನ್ನದೆ ಕಂಡಕಂಡವರ ಮಾತಿಗೆ ಬಲಿಯಾದೆನಾ ? ಈ ರಗಳೆ ಮುಗಿಯುವಂತೆ ಕಾಣುವುದಿಲ್ಲ. ಇಲ್ಲಿ ನಮ್ಮ ಜಾತಿಯವರು ತುಂಬ ಜನರಿದ್ದಾರೆ ಅಂದುಕೊಂಡು ಸುಲಭದಲ್ಲಿ ಹೊಸಹಕ್ಕನ್ನು ಗಿಟ್ಟಿಸಿಕೊಳ್ಳಲು ಬಂದರೆ ಈಗೀಗ ನಮ್ಮನ್ನು ಪುಸಲಾಯಿಸಿ ಇಲ್ಲಿಗೆ ಕರೆತಂದವರಿಗೂ ನಾವು ಬೇಡವಾದಂತಿದೆ..." ಹೀಗೆ ಖುಕ್ ಖುಕ್ ಖುಕ್ ಎಂದು ಕರಕರಿಸುತ್ತಿದ್ದ ಕಾಕಮ್ಮನ ಆತ್ಮಸ್ಥೈರ್ಯವನ್ನು ನೋಡಿದ ನಾನು "ಈ ಕಾಗೆಗಳು ಅವರಿವರ ಬಿಟ್ಟಿ ಪ್ರಚೋದನೆಗೆ ಬಲಿಯಾಗಿ ತನಗೆ ಕೈಮುಗಿದು ಗೌರವದಿಂದ ಅರ್ಪಿಸುತ್ತಿದ್ದ ಅನ್ನಕ್ಕೂ ಸಂಚಕಾರ ತಂದುಕೊಳ್ಳದಿದ್ದರೆ ಸಾಕು..." ಅಂದುಕೊಳ್ಳುತ್ತಿದ್ದೆ.

ಕೋರ್ಟ್ ಆವರಣದಲ್ಲಿ FEES ಕೊಡದೆ ಯಾರಿಗೂ ಸಲಹೆಗಳನ್ನು ಕೊಡುವಂತಿಲ್ಲವಾದುದರಿಂದ ಮತ್ತು ಫೀಸಿನ ಗಂಟು ಕೊಡಲು ಕಾಗಕ್ಕನಲ್ಲಿ ರೆಕ್ಕೆ ಕೊಕ್ಕು ಬಿಟ್ಟು ಬೇರೇನೂ ಇಲ್ಲದುದರಿಂದ ನಾನು ಬಾಯಿ ತೆರೆದು ಏನನ್ನೂ ಹೇಳಲಿಲ್ಲ. ಸುಮ್ಮನೆ ಕೇಳುತ್ತ ದೇವರಮರಿಯಂತೆ ಗುಬ್ಬಿ ಸಾಂತ್ವನವನ್ನಷ್ಟೇ ಪ್ರದರ್ಶಿಸಿದೆ. ಆಕಾಶಮಾರ್ಗದಲ್ಲಿ ನನ್ನನ್ನು ಸುತ್ತಿಸಿದ ಬಾಬ್ತು ಒಂದೆರಡು ನಿರಪಾಯಕಾರೀ ಸಲಹೆಗಳನ್ನೂ ಕೊಟ್ಟೆ. "ಬಿಡು ಕಾಗಕ್ಕಾ, ಪರಸ್ಪರ ಪ್ರೀತಿಸುವುದರಲ್ಲಿ ಮರ್ಯಾದೆ ಇದೆ. ಗೌರವವು ಎಲ್ಲರ ಜನ್ಮಸಿದ್ಧ ಹಕ್ಕು. ಹೋರಾಟ ತಪ್ಪಲ್ಲ. ನಿನ್ನ ಮೂಲ ಗುಣವನ್ನು ಬಿಡಬೇಡ. ಕಾಕನಿಷ್ಠುರತನವನ್ನೂ ಬಿಡಬೇಡ. ಆದರೆ ಸಹಜೀವನದ ವ್ರತವನ್ನು ಮಾತ್ರ ಯಾವತ್ತೂ ಬಿಡಲೇಬೇಡ...ಆಯ್ತಾ ? ನೀನು ಈಗ ಸುತ್ತುತ್ತಿರುವುದು ತರಲೆ ಮುಗಿಸುವ ಜಾಗವಲ್ಲ; ತರಲೆಯನ್ನು ಎಳೆದಾಡುವ ಜಾಗ. ಆದ್ದರಿಂದ ನಾನೂ ಗೋಣು ಎಳೆದಾಡಿಸಿಕೊಳ್ಳಲು - ಸ್ವಲ್ಪ ಕಾಲ ಇಲ್ಲಿಗೆ ಬರುತ್ತಿರುತ್ತೇನೆ. ನೋಡಕ್ಕ, ನನಗೆ ನಿನ್ನಂತೆ ಹಾರಿ ತೂರಿ ಅತಿ ಎತ್ತರದ ಮರ ಹತ್ತಲೂ ಬರುವುದಿಲ್ಲ; ಜಾರಿ ಇಳಿಯಲೂ ಬರುವುದಿಲ್ಲ; ನಿನ್ನಂತಹ ತೀಕ್ಷ್ಣ ದೃಷ್ಟಿಯೂ ಇಲ್ಲ. ಆದ್ದರಿಂದ ಈಗ ಒಂದು ಉಪಕಾರ ಮಾಡು. ನಿನ್ನನ್ನು ಸವಾರಿ ಮಾಡಿದ್ದು ನನಗೆ ಖುಶಿ ಕೊಟ್ಟಿದೆ; ಈಗ ನೀನೇ ನನ್ನನ್ನು ಈ ಟೊಂಗೆಯಿಂದ ಕೆಳಗಿಳಿಸಿಬಿಡು. ಓ ಅಲ್ಲಿನ ಬೆಂಚಿನ ಮೇಲೆ ಇಳಿಸಿಬಿಡು. ಇನ್ನೊಮ್ಮೆ ಬರುವಾಗ ನಿನಗೆಂದೇ ಬೆಣ್ಣೆಮುದ್ದೆ ತರುತ್ತೇನೆ. ನಾನೂ ನೀನೂ ಜೋಡಿ...ಆಯ್ತಾ ?" ಎಂದು ಚೆಂದದ ಮಾತಾಡಿ ಪರಸ್ಪರ ಸಂತೈಸಿಕೊಂಡೆವು. ಕಲ್ಲುಬೆಂಚಿನ ಮೇಲೆ ನನ್ನನ್ನು ಇಳಿಸಿದ ಕಾಗಕ್ಕ - "ಚಿಂವ್ ಚಿಂವ್ ಚಿಟಕುಬ್ಬಿ, ಬರಲೆ ?" ಎಂದು ಕೊರಳು ಕೊಂಕಿಸುತ್ತ ಪುರ್ರೆಂದು ಹಾರಿ ಹೋಯಿತು.

ಕೋರ್ಟ್ ಆವರಣದ ನೆಲಬಾನಿನಲ್ಲಿ ಕಾಕಾ ಎನ್ನುತ್ತ ಹಾರಾಡುತ್ತಿದ್ದ ಕಾಗೆಗದ್ದಲವು ನನ್ನನ್ನು ಪಟ್ಟಂತ ನೆಲಕ್ಕಿಳಿಸಿತ್ತು. ನಿದ್ದೆ ಕಳಚಿತ್ತು ! ಎಚ್ಚೆತ್ತು ತಲೆಯೆತ್ತಿ ಹಾರಿಹೋದ ಕಾಕಿಯನ್ನು ನೋಡುತ್ತಿದ್ದ ನಾನು - "ಗುಬ್ಬಿ ಕನಸು" ಅಂದುಕೊಂಡು ಅಲ್ಲಿಂದ ಎದ್ದೆ.

"ಛೆ... ಕಾಗೆಗಳಿಗೂ ಇಂಥ ದುಸ್ಥಿತಿಯೆ ? ಕಾಗೆಗಳ ಅಭಿರುಚಿ, ಸಮಸ್ಯೆಗಳೂ ಈಗ ಪರಿವರ್ತಿತವಾಗಿರಬಹುದೆ ? ಗೌರವದಿಂದ ಅರ್ಪಿಸುತ್ತಿದ್ದ ಪಿಂಡ ತಿನ್ನುವುದನ್ನು ಶೋಷಣೆಯೆನ್ನುತ್ತ ತಾವಾಗಿಯೇ ತಿರಸ್ಕರಿಸಿ - ಈಗ ಅವರಿವರ ಹೇಸಿಗೆ ತಿನ್ನುವಂತಾಯಿತಲ್ಲ ? ಇದೆಂಥ ಕನಸು ? ತಮ್ಮ ವ್ಯಾಜ್ಯವನ್ನು ಪರಿಹರಿಸಿಕೊಳ್ಳಲು ಕಾಗೆಗಳೆಲ್ಲವೂ ಕೋರ್ಟಿಗೆ ಬರುವುದುಂಟೆ ? ಅಥವ... ಕೋರ್ಟಿಗೆ ಬರುವವರೆಲ್ಲರೂ ಕಾಗೆಗಳೆ ?..."  ನೂರೆಂಟು ಪ್ರಶ್ನೆಗಳು ಮಾತ್ರ ತಲೆಯಲ್ಲಿ ಸುತ್ತುತ್ತಲೇ ಇದ್ದವು. ಏಕೆಂದರೆ ಊರು ಹಿಡಿಸದ, ಊರಿಗೇ ಬಾರದ, ಬಾರದ ಊರಿನ, ಕಾರುಬಾರಿನ, ಮನೆಮಠ ಬೇಡವಾದ ಕಾಗೆಗಳೆಲ್ಲವೂ ನ್ಯಾಯಾಲಯದ ಸುತ್ತಮುತ್ತ ಹಾರುತ್ತಿದ್ದವು !

ಹೋಗಲಿ. ಕೆಟ್ಟ ಕಾಗೆ ಕನಸು ! "ನ್ಯಾಯದ ರೋಗ" ಹಿಡಿದರೆ ಹಾಗೇ ಆಗುವುದು. ಕೊನೆಗೆ - ಕಾಗೆ ಆಗುವುದು ! ಅಕಸ್ಮಾತ್ ನ್ಯಾಯ ಸಿಗದಿದ್ದರೂ ಯಾವ ಕಾಗೆಗಳಿಗೂ ಅನ್ಯಾಯವಾಗದಿರಲಿ ಎಂದು ಹಾರೈಸಲು ನನ್ನಲ್ಲೇನಿದೆ ? ಇದ್ದುದನ್ನು ಕೊಡಬಹುದಲ್ಲದೆ ಇಲ್ಲದುದನ್ನು ಎಲ್ಲಿಂದ ಕೊಡುವುದು ? ಬಾಯಿ ಹರಕೆಗಳಿಂದ ಗುಬ್ಬಿ ಹರಕೆಗಳಿಂದ - ನ್ಯಾಯವನ್ನು ಸ್ಥಾಪಿಸಲು ಆದೀತೆ ?

ಹೀಗಿದ್ದೂ ಕೋರ್ಟ್ ಆವರಣದಲ್ಲಿ ನೆರೆದಿರುವ ಜನಜಾತ್ರೆಯ ವಿಶ್ವರೂಪ ದರ್ಶನವನ್ನು ನೋಡಿದರೆ ಕನಿಕರ ಮೂಡುತ್ತದೆ. "ಅವನ ಹೊಗೆ ಕಾಣುವ ವರೆಗೆ ಬಿಡುವುದಿಲ್ಲ.." ಎನ್ನುವವರು, ಅಂಗಿಯ ತೋಳು ಮಡಿಸುತ್ತ ಅಲ್ಲೇ ಪಾಠ ಕಲಿಸಲು ಹೊರಡುವ ಕ್ರಾಂತಿಕಾರಿಗಳು, ತಲೆ ಎತ್ತಲಾಗದ ಹಣ್ಣು ಹಣ್ಣು ಮುದುಕರು ಮುದುಕಿಯರು, ತೆಗಲೆ ಸೊಕ್ಕಿದ ಯುವಶಕ್ತಿಗಳು, ಮನೆಮುರುಕ/ಕಿಯರು, ಮಧ್ಯಸ್ಥಿಕೆದಾರರು, ಮರದ ನೆರಳಲ್ಲಿ ಕೂತು ತಮ್ಮ ತಮ್ಮ ಕರ್ಮವನ್ನು ಬಿಚ್ಚಿ ಉಂಡು ಮುಗಿಸುವವರು, ಕೋರ್ಟನ್ನೇ ಮನೆಯಾಗಿಸಿಕೊಂಡಂತೆ ಪಿಕ್ನಿಕ್ ಭಾವದಲ್ಲಿರುವ ಸ್ಥಿತಪ್ರಜ್ಞರು, ಮರದ ಬೊಡ್ಡೆಗೆ ತಲೆಯಾನಿಸಿ ನಿಶ್ಚಿಂತೆಯಿಂದ ಗೊರಕೆ ಹೊಡೆಯುವವರು, ಅಪ್ಪ ಅಮ್ಮನ ಜಗಳದಿಂದ ಬಡವಾಗುತ್ತಿದ್ದ ಕೂಸುಗಳು, ಬೇಡಿಯ ಸಮೇತ ಪೋಲೀಸರ ಸುಪರ್ದಿಯಲ್ಲಿ ತಲೆಯೆತ್ತಿ ಆಗಮಿಸುತ್ತಿದ್ದ ಘಟಾನುಘಟಿಗಳು, ಇಂಥವರ ಮೂಲಕವೇ ಜೀವನ ಸಾಗಿಸುವ ವೃತ್ತಿನಿರತರು... ಆಹಾ ! ನ್ಯಾಯಲೋಕ ಎಂದರೆ ಭೂಲೋಕದ ಸ್ವರ್ಗ !

ಶಿಕ್ಷಿತರು ಹೆಚ್ಚಿದಂತೆ ಅಪರಾಧಗಳು ಕಡಿಮೆಯಾಗದೆ ಹೆಚ್ಚುತ್ತಿರುವುದನ್ನು ನೋಡಿದರೆ - ನಾವು ತಪ್ಪಿದ್ದೆಲ್ಲಿ ? ಎಂಬ ಪ್ರಶ್ನೆ ಮೂಡುತ್ತದೆ. ನ್ಯಾಯ ಎಡವುತ್ತಿದೆಯೆ ? ಕಾನೂನುಗಳ ದುರ್ಬಲತೆಯೆ ? ಯಾವುದೇ ಸಮಸ್ಯೆಗೆ ಶೀಘ್ರ ಪರಿಹಾರ ಕೊಡಲಾಗದ ಅಸಮರ್ಥತೆಯೆ ? ಮೂಲಶಿಕ್ಷಣದ ಕುಂದುಕೊರತೆಗಳೆ ?

ಭಾರತದ ನ್ಯಾಯ ಮಂದಿರಗಳಲ್ಲಿ ನ್ಯಾಯ ದೇವತೆಯು ಇರಬಹುದೆ ? ಅಥವ... ಅದೀಗ ದೇವರಿಲ್ಲದ ಗುಡಿಯೆ ? ಭಾರತದ ಕೋರ್ಟು ಅಂದರೆ - ಎಂಥವರಲ್ಲೂ "ಕೀಳರಿಮೆ" ತುಂಬಬಲ್ಲ ತಾಣವಾಗಿ ಹೋಗಿದೆ ಎಂಬುದು ನಾನು ಕಂಡ ಯಥಾರ್ಥ. ನಮ್ಮ ನ್ಯಾಯಾಸ್ಥಾನಗಳು ಅಪರಾಧಿಯಲ್ಲದವರಿಗೂ - ಅಪರಾಧಿಯಾಗಬೇಕೆನ್ನುವ ಪ್ರೇರಣೆ ಸಿಗುವಂತಹ ತಾಣವಾಗಿದೆಯೆ ?


                                                      (ಕೇವಲ ಸಾಂದರ್ಭಿಕ ಚಿತ್ರ)

ಕೋರ್ಟ್ ಕೋಣೆಯ ಒಳಗೆ ಮತ್ತು ಅದರ ಹೊರಗೆ - ನಡೆಯುವ ಮತ್ತು ನಡೆಸಲಾಗುವ - ಬಗೆಬಗೆಯ ವ್ಯಾಪಾರಗಳನ್ನು ಗಮನಿಸಬಲ್ಲವರಿಗೆ - "ಯಾರದ್ದೋ ತರಲೆ ! ನಮಗೆ ಬಿದ್ದುಹೋಗುವುದೇನಿದೆ ? ಎಂದುಕೊಂಡಂತಿದೆ" - ಅನ್ನಿಸಿದರೆ ಆಶ್ಚರ್ಯವೇನಿಲ್ಲ. ನ್ಯಾಯದಾನ(?)ದ ಸ್ಥಾನಗಳೇ ಇವು ? - ಅನ್ನಿಸಿಬಿಡುತ್ತದೆ ! ಧರಿತ್ರೀಪಾಲರ ಶೈಲಿಯಲ್ಲಿ Case File ಗಳನ್ನು ಎತ್ತಿ ಎತ್ತಿ ಒಗೆಯುವ ಅಲ್ಲಿನ ಪ್ರಚಂಡ ವೈಖರಿಗಳು ಗಾಬರಿ ಹುಟ್ಟಿಸುತ್ತವೆ ! ಸೂಕ್ಷ್ಮವಾಗಿ ವಿಚಾರಿಸಿ ನೋಡಿದರೆ - ಒಂದು ಇಡಿಯಾದ ನ್ಯಾಯವನ್ನು ಹರಿಹರಿದು ಎಲ್ಲರಿಗೂ ಚೂರು ಚೂರು ಹಂಚುವಂತಹ ತನ್ನ ಅಡ್ಡಕಸುಬಿನಲ್ಲಿ ಭಾರತದ ನ್ಯಾಯಾಂಗವು ಎಂದೂ ಹಿಂದೆ ಬಿದ್ದಿಲ್ಲವೇನೋ - ಅನ್ನಿಸುವುದೂ ಇದೆ !

ನನಗೆ ಇನ್ನೂ ಅರ್ಥವಾಗಿಲ್ಲದಿರುವುದು ಏನೆಂದರೆ... ಸಮಾನತೆಯ ಪಾಠ ಹೇಳುವ ನ್ಯಾಯಾಂಗಕ್ಕೆ ದರ್ಪವು ಅನಿವಾರ್ಯವೆ? ದರ್ಪವೇ ನ್ಯಾಯಾಂಗದ ಗುರುತು ಚಿಹ್ನೆಯೆ ? ನ್ಯಾಯಾಸ್ಥಾನಕ್ಕೆ ಬರುವವರೆಲ್ಲರೂ ಕಳ್ಳ ಸುಳ್ಳ ಮಳ್ಳರೆ ? ಯಾವುದೇ ತೀರ್ಪಿನಲ್ಲಿ ಮಾತ್ರ ಕ್ಷಿಪ್ರತೆ ಮತ್ತು ದರ್ಪವಿದ್ದರೆ ಸಾಲದೆ ? ಅಸಡ್ಡೆ, "ಚಲ್ತಾ ಹೈ" ಶೈಲಿಯ ಸೋದಾಹರಣ ದೃಶ್ಯವು ನ್ಯಾಯಾಂಗಕ್ಕೆ ಭೂಷಣವೆ ? ನ್ಯಾಯಾಸ್ಥಾನಕ್ಕೆ ಹೋದ ಎಷ್ಟು ಬಡಪಾಯಿಗಳು ವರ್ಷಾನುಗಟ್ಟಲೆ ಅಲೆಅಲೆದು ಕೊನೆಗೂ ತೀರ್ಪಿನ ಮುಖ ಕಾಣದೆ ಗತಪ್ರಾಣರಾಗಿಲ್ಲ ? ಇಂತಹ ಅವ್ಯವಸ್ಥೆಗಳಿಗೆ ಯಾವ ಉತ್ತರದಾಯಿತ್ವವೂ ಇಲ್ಲವೆ ? "ಹಾಗಿದ್ದರೆ... ನೀವು ಅದೇ ಕಾರಣ ನೀಡಿ ಇನ್ನೊಂದು Case ಹಾಕಿ" ಎನ್ನುವಂತಹ ಪ್ರಚಂಡ ನ್ಯಾಯ ಸಂತಾನವಿದು - ಅನ್ನಿಸುವುದಿಲ್ಲವೆ ? ಒಂದು ತೀರ್ಪು ಯಾವುದೇ ಸಮಸ್ಯೆಯನ್ನು ಆಮೂಲಾಗ್ರವಾಗಿ ಸಂಶೋಧಿಸಿ ಮತ್ತೊಮ್ಮೆ ಅದೇ ತಪ್ಪು ಮರುಕಳಿಸದಂತಹ ಸೂಕ್ತ ಶಿಕ್ಷೆ ಮತ್ತು ಪರಿಹಾರವನ್ನೂ ತಿಳಿಸುವಂತಿರಬೇಡವೆ ? ಹಾಗಿಲ್ಲದ ಒಂದು ವ್ಯವಸ್ಥೆಯು - "ಅನ್ಯಾಯವಾಗಿ ಬಡಿದು ತಿನ್ನುವ ಧಂದೆ"  ಎಂದು ಯಾರಿಗಾದರೂ ಅನ್ನಿಸಿದರೆ ಅದರಲ್ಲಿ ತಪ್ಪೇನಿದೆ ?

ತಮಗೆ ಮರ್ಯಾದೆ ಕೊಡಿ ಎಂದು ಹಕ್ಕಿನಿಂದ ಕೇಳುವಂತೆ ವರ್ತಿಸುವ ನ್ಯಾಯವೇತ್ತರ ಪರಿಸರದಲ್ಲಿ ತುರ್ತಾಗಿ "ಸ್ವಚ್ಛತಾ ಅಭಿಯಾನ" ನಡೆಯಬೇಕಲ್ಲವೆ ? ಸರಕಾರದ ಸಂಬಳ ಪಡೆದು ಘನಕರ್ತವ್ಯ ನಿರ್ವಹಿಸುವ... ಮತ್ತು ಯಾವ - ಯಾರ ಕಟ್ಟಿಗೂ ಒಳಪಡದ ಸ್ವಚ್ಛಂದ, ಕರಾಳ, ಹರಿದು ತಿನ್ನುವ ಕಪ್ಪುಜಾಲದ ನಡುವೆ ಸಿಲುಕಿರುವ ಈ ಭಾರತೀಯರು ಮುಕ್ತರಾಗಲುಂಟೆ ? ಈಗ ಬಾ, ಆಗ ಬಾ, ಹೋಗಿ ಬಾ, ಬಾಗಿ ಬಾ, ನಾಳೆ ಬಾ, ತೆವಳಿ ಬಾ, ನುಸುಳಿ ಬಾ ... ಎನ್ನುವವರು ಮತ್ತು ಹಾಗೆ ಹೇಳಿಕೊಟ್ಟು, ಹೇಳಿಸುತ್ತ ದಿನ ತಳ್ಳಿಸುವವರನ್ನು ಕಾನೂನಿನ ಪರಿಧಿಯೊಳಗೆ ತರುವುದಾದರೂ ಹೇಗೆ ? ಬೆತ್ತ ತೋರಿಸಿ ಗೌರವ ಕಕ್ಕಿಸಿಕೊಳ್ಳುವ ಈ ಅಸಹ್ಯ ವ್ಯವಸ್ಥೆಗೆ ಪರ್ಯಾಯವೇನು ? ಇಂತಹ ಪರಿಸ್ಥಿತಿಯಲ್ಲಿ - ನಾಗರಿಕರನ್ನು ನಾಗರಿಕರಂತೆಯೇ ನಾಗರಿಕವಾಗಿ ಉಪಚರಿಸುವ ಪ್ರತಿಯೊಬ್ಬರ ಕರ್ತವ್ಯವನ್ನು ಮತ್ತು ಉಪಚರಿಸಿಕೊಳ್ಳುವ ಹಕ್ಕನ್ನು ಒಮ್ಮೊಮ್ಮೆ ಲೇವಡಿ ಮಾಡುವಂತೆಯೂ ಕಾಣುವುದಿಲ್ಲವೆ ? "ರಾಮನಾದರೂ ಸರಿ; ರಾವಣನಾದರೂ ಸರಿ" ಎಂಬಂತೆ ಕೋಲ ಕಟ್ಟುತ್ತ ಪ್ರತಿಪಾದಿಸುವವರು ಆತ್ಮನಿರೀಕ್ಷಣೆಯನ್ನು ಮಾಡಿಕೊಳ್ಳದೆ - ಯಾರಿಂದಲೂ ಮರ್ಯಾದೆಯನ್ನು ಅಪೇಕ್ಷಿಸಬಾರದು. ಇದು ವೃತ್ತಿ ಧರ್ಮವಲ್ಲ; ಅಧರ್ಮ. ಒಂದು ಸಂವಿಧಾನಬದ್ಧ ವ್ಯವಸ್ಥೆಯು ಹೀಗೂ ಇರುವುದುಂಟೆ ? ಆಹಾ ! ಇದು ಭಾರತ !

ಆದರೆ ನನ್ನ ಅದೃಷ್ಟ ! ಮುಗಿಯದ ಆಕಾಶ ಕಾಂಡದ ನನ್ನ ರಾಮಾಯಣದಲ್ಲಿ - ವಕೀಲಪೀಡೆಯು ನನ್ನನ್ನು ಅಷ್ಟೊಂದು ಬಾಧಿಸಲಿಲ್ಲ. ಆದ್ದರಿಂದ ಓಹೋ... ಕೆಲವು ಉತ್ತಮರೂ ಇದ್ದಾರೆ ಎಂದು ಅಂದುಕೊಳ್ಳುವಂತಾಯಿತು. ಆದರೆ ಅಲ್ಲಿ - ಎಲ್ಲವೂ ಸರಿಯಿಲ್ಲ ಎಂಬುದು ಮಾತ್ರ ಸ್ಪಷ್ಟವಾಗಿ ತಿಳಿಯುತ್ತಿತ್ತು. ಸರಕಾರದ ಆಡಳಿತಾತ್ಮಕ ಅವ್ಯವಸ್ಥೆಯನ್ನು ಆಯಾ ಸಂಸ್ಥೆಗಳಲ್ಲಿಯೇ ಸರಿಪಡಿಸಿಕೊಳ್ಳುವಂತೆ - ಕಚೇರಿಗಳ ದುರವಸ್ಥೆಯನ್ನು ಅಲ್ಲಲ್ಲೇ ಸುವ್ಯವಸ್ಥಿತಗೊಳಿಸಲು ಸರಕಾರಗಳಿಗೆ ಏಕೆ ಸಾಧ್ಯವಿಲ್ಲ ? ನ್ಯಾಯಾಲಯಗಳು ಈ ಅಂಶಕ್ಕೆ ಯಾಕೆ ಒತ್ತು ಕೊಡುತ್ತಿಲ್ಲ ? ನ್ಯಾಯಕ್ಕಾಗಿ ಯಾರದೋ ಮನೆಗೆ ಹೋದಂತೆ ಭಾಸವಾಗುವುದನ್ನು ಮತ್ತು ನ್ಯಾಯಕಾಣದ ಸ್ಥಳಗಳಲ್ಲಿ ನೌಕರರನ್ನು ಅಟ್ಟಿ ಒಣಕಲು ನಾಯಿಗಳಂತೆ ಅವರನ್ನು ಬಳಲಿಸುವುದನ್ನು ಈ ಮೂಲಕ ತಪ್ಪಿಸಬಹುದಲ್ಲವೆ ? ಎಂಬ ಪ್ರಶ್ನೆಯು ಮಾತ್ರ ಇನ್ನೂ ನನ್ನೊಂದಿಗಿದೆ. ಸಾವಿರಾರು ಸರಕಾರೀ ನೌಕರರನ್ನು ಕೋರ್ಟುಗಳಿಗೆ ನೂಕಿ ಚೆಂದ ನೋಡುವ ಬೇಜವಾಬ್ದಾರಿಯ ದುಷ್ಟ ಹಿಕ್ಮತ್ತುಗಳಿಗೆ ಕಡಿವಾಣ ಬೇಡವೆ ?? ಬೇಸರವಾದರೂ ಹೇಳಲೇಬೇಕು - ಬೇಜವಾಬ್ದಾರಿಯ ಸರಕಾರೀ ಯಂತ್ರವನ್ನು ನೆಚ್ಚಿಕೊಂಡಿರುವ ಇಂದಿನದೂ ಸದ್ಯಕ್ಕೆ - ಬೇಜವಾಬ್ದಾರಿಯ ಸರಕಾರವೇ !  

ಗೆಲ್ಲಬೇಕಾದವರನ್ನು ಸೋಲಿಸಿ ಸೋಲಬೇಕಾದವರನ್ನು ಸಾಯಿಸುವುದು ಈ ಭೂಮಿಯ ನ್ಯಾಯಾಲಯಗಳ ಆಜನ್ಮ ಹಕ್ಕೆ ? ನ್ಯಾಯಾಲಯವನ್ನು ಮೂಸಿ ಬಂದ ಯಾರಿಗಾದರೂ ಹೀಗೆ ಅನ್ನಿಸುವುದು ಸಹಜ. ಆದರೆ ಧರ್ಮದ ಬುನಾದಿಯಿಲ್ಲದ ಯಾವುದೇ ನ್ಯಾಯ ವ್ಯವಸ್ಥೆಯ ಗತಿ ಇಷ್ಟೇ. ಧರ್ಮರಹಿತ "ಪುಸ್ತಕದ ಬದನೇ ಕಾಯಿ ಕಾನೂನು"ಗಳು ಕುರುಡು ನ್ಯಾಯವನ್ನಷ್ಟೇ ಕೊಡಬಲ್ಲವು. ಅದು ಇವತ್ತಿನ TV ಧಾರಾವಾಹಿಗಳಂತೆ - ಎಳೆದು ಉದ್ದ ಮಾಡುವ, ಸಮಯ ಕೊಲ್ಲುವ  ನೀರಸ ಕ್ರಿಯೆಯೇ ಆಗಿಹೋಗುತ್ತದೆ. ಮುಗಿಯದ ಯಾವುದೇ ಧಾರಾವಾಹಿಯು ಸುಖ ಕೊಡುವುದಿಲ್ಲ; ಬದಲಾಗಿ ಪೀಡಿಸುತ್ತದೆ.

ನನ್ನ ಅಹವಾಲಿಗೆ ಕೊಟ್ಟ ಕಂತುಕಂತಿನ ತೀರ್ಪಿನ ನಂತರವೂ - ಕೋರ್ಟು ಸೂಚಿಸಿದಂತೆ ಮುಂದಿನ 2 ತಿಂಗಳು ಪೂರೈಸಿದ ಮೇಲೆ "ಭಾರತದ ವಿಚಿತ್ರ ಕಾನೂನಿನ ಪರಿಧಿ"ಯಲ್ಲಿ ಆಕಾಶವಾಣಿಯು ಯಾವುದೇ ಹೊಸ ಕ್ಯಾತೆಯನ್ನು ತೆಗೆಯಬಾರದೆಂದೇನೂ ಇಲ್ಲವಲ್ಲ ? ಎಳೆದಾಡುವ ಆಟಕ್ಕೆ ಎಲ್ಲರಿಗೂ ಎಲ್ಲ ಅವಕಾಶಗಳೂ ಇರುತ್ತವೆ ! ಇದೇ ಭಾರತದ ಸರ್ವ ಸಮಾನತೆ ! ಕೋರ್ಟುಗಳಿಗೆ ಹೆಚ್ಚು ಹೆಚ್ಚು ಜನರು ಬರುತ್ತಲೇ ಇರಬೇಕಲ್ಲವೆ ?

"ಆಕಾಶವಾಣಿಯ ಕ್ಯಾತೆಗಳು, ಕಾರುಬಾರುಗಳು ಹೀಗೇ ಮುಂದುವರಿದರೆ, ಅನಂತರ ಬೇಕಿದ್ದರೆ CONTEMPT OF COURT... ಹಾಕಿಕೊಳ್ಳಿ; ಇಷ್ಟು ಸತಾಯಿಸಿದ್ದಕ್ಕಾಗಿ ನೀವು ನಿಮ್ಮ ಆಕಾಶವಾಣಿಯ ವ್ಯವಸ್ಥೆಯಿಂದ ಬಡ್ಡಿಯನ್ನು ಕೇಳುವ ಅವಕಾಶವೂ ಇದೆ; ಅಂತಹ ಬಡ್ಡಿಗಾಗಿ ಇನ್ನೊಂದು Case File ಮಾಡಿ..." ಇತ್ಯಾದಿ ಉಚಿತ ಸಲಹೆಗಳೂ ಕೋರ್ಟ್ ಅಂಗಳದಲ್ಲಿ ಸಿಗುತ್ತವೆ; "ಆಗಾಗ ಬರುತ್ತಿರಿ... ಬಡಿದು ತಿನ್ನಲು ನಾವಿದ್ದೇವೆ..." ಎಂಬ ಪರೋಕ್ಷ ಆಹ್ವಾನ ! ಅಂತಹ ಮಾತಿಗೆ ಮರುಳಾದರೆ ಕರಿಕರಿ ಕಾಗೆ ; ಮರುಳು ಕೊಡವಿಕೊಂಡರೆ - ಗುಬ್ಬಿ !

ಈ ಸಂಸಾರದಲ್ಲಿ ಸತ್ತುಹೋಗಲು ಎಷ್ಟೊಂದು ಮಾರ್ಗಗಳು ?  ಅಲ್ಲವೆ ? ಕಾನೂನಿನ ಆಶ್ರಯದಲ್ಲಿ ಸಾಯುವುದೆಂದರೆ ಅದೆಂತಹ ವೀರ ಮರಣ ! ಎಂದು ಊಹಿಸುವಾಗ ಒಮ್ಮೊಮ್ಮೆ ನನಗೆ ನಗು ಬರುತ್ತದೆ. ಆದರೆ ನ್ಯಾಯ ಕೇಳುವ ಯಾವುದೇ ಭಾರತೀಯರು ದಿನವೂ ಸಾಯುವಂತಹ ಅನಿವಾರ್ಯತೆಯನ್ನು ತಂದು ಕುಕ್ಕಿದ ಸರಕಾರೀ ಯಂತ್ರಗಳನ್ನು ನಿಯಂತ್ರಿಸಲಾಗದ ಕರ್ಮಕ್ಕೆ - ಮುದ್ದಿಸಿ ಮುದ್ದಿಸಿ ಪೋಷಿಸುತ್ತಿರುವ ಯಾವುದೇ ಸರಕಾರಗಳನ್ನು ಕ್ಷಮಿಸಲು ಸಾಧ್ಯವೆ ? ಪ್ರಜೆಗಳನ್ನು ಕಸಾಯಿಖಾನೆಗೆ ತಳ್ಳಿದ ಕಟುಕರೆನ್ನಿಸುವುದಿಲ್ಲವೆ ?

ಒಟ್ಟಿನಲ್ಲಿ, ಹೊಡೆದು ತಿನ್ನುವ, ಬಡಿದು ತಿನ್ನುವ ಕಾನೂನುಗಳ ಅನಂತ ಅವಕಾಶಗಳನ್ನು ನೋಡಿ ನೋಡಿ ಪುಳಕಿತಳಾಗಿದ್ದೇನೆ. ಈ ಭೂಮಿಯಲ್ಲಿ "ನ್ಯಾಯ " ಎಂಬುದು ಎಂದೂ ಇರಲಿಲ್ಲ ಎಂದುಕೊಂಡು ಒಮ್ಮೊಮ್ಮೆ ನಾನೇ ಸಮಾಧಾನವನ್ನೂ ಮಾಡಿಕೊಳ್ಳುತ್ತೇನೆ. ಯಾರಿಗೂ ಪೂರ್ಣ ನ್ಯಾಯವು ಸಿಗುವುದಿಲ್ಲ; ಕೆಲವರಿಗೆ ಚೂರು ನ್ಯಾಯವೂ ಸಿಗುವುದಿಲ್ಲ. ಕೆಲವರು ನಿರಂತರ ಅನ್ಯಾಯದ ಶಿಕಾರಿಗಳಾಗುತ್ತಲೇ ಇರುತ್ತಾರೆ. ಅಲ್ಲವೆ ? ಸುಖೀ ಭಾವಕ್ಕೆ ಇಂತಹ ಚಿಂತನೆಗಳೇ ಸಹಕರಿಸುವುದು. ಅಧ್ಯಾತ್ಮದ ಕಿಂಚಿತ್ ಸಾನ್ನಿಧ್ಯವೂ ಇಂತಹ ಮನಃಸ್ಥಿತಿಯನ್ನು ದಯಪಾಲಿಸಬಲ್ಲದು ! ಆದ್ದರಿಂದಲೇ - ನ್ಯಾಯ ಎಂದರೆ "ಕೋತಿಯು ಬೆಣ್ಣೆ ಹಂಚಿದ ಕತೆಯಂತೆ" ಎಂದುಕೊಳ್ಳುತ್ತೇನೆ ; ನಾನೂ ಕತೆ ಕಟ್ಟುತ್ತೇನೆ ! ನನ್ನನ್ನು ನೋಡಿ ನಾನೇ ನಗುತ್ತಿರುತ್ತೇನೆ !

ಸ್ಥಾನವನ್ನು ಅಲಂಕರಿಸುವವರ ವ್ಯಕ್ತಿತ್ವವು ಪ್ರಶ್ನಾತೀತವಾದಾಗ... ನ್ಯಾಯಾಧೀಶ ಸ್ಥಾನವು ನಿಸ್ಸಂದೇಹವಾಗಿ ಪ್ರಶ್ನಾತೀತ.   ಯಾವುದೇ ಪ್ರಶ್ನಾತೀತ ಗಂಭೀರ ತೀರ್ಪುಗಳು ಯಾರನ್ನೂ ಬಳಲಿಸುವುದಿಲ್ಲ. ಆದರೆ ಎಲ್ಲೋ ಒಮ್ಮೊಮ್ಮೆ ಮಾತ್ರ ಸಮಗ್ರ ಮತ್ತು ಸಮರ್ಪಕ ತೀರ್ಪುಗಳು ಮಿಂಚಿ ಮರೆಯಾಗುತ್ತಿದ್ದರೆ ಅದು ಸಾಮಾಜಿಕ ಹಿತದ ದೃಷ್ಟಿಯಿಂದ - ಸುಲಕ್ಷಣವಲ್ಲ. ಕ್ಷಿಪ್ರ ವಿಚಾರಣೆ ಎಂದರೆ "ತರಾತುರಿ" ಎಂದು ಯಾರೂ ಭಾವಿಸಬೇಕಾಗಿಲ್ಲ. ಮನೆಯಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೂ ಒಂದು ಹೊತ್ತಿನ ಅಡುಗೆ ಕೆಲಸವೇ ಮುಗಿಯದಿದ್ದರೆ ಯಾರಿಗೂ ದಿನಕ್ಕೆ ಒಂದು ಊಟವೂ ಸಿಗುವುದಿಲ್ಲ. ಗೃಹಿಣಿಯದು -  ತರಾತುರಿಯಲ್ಲ; ಸಮಯಬದ್ಧತೆ ! ಸಮಯ ಮತ್ತು ವೃತ್ತಿ ಬದ್ಧತೆಯುಳ್ಳವರು ಕರ್ತವ್ಯವನ್ನು ಒತ್ತಡ ಎಂದುಕೊಳ್ಳುವುದಿಲ್ಲ; ಬದಲಾಗಿ ವೃತ್ತಿಧರ್ಮವನ್ನು ನಿಷ್ಠೆಯಿಂದ ಪಾಲಿಸುವವರಿಗೆ ಒದಗುವ ಒತ್ತಡಗಳು ಅವರ ಕರ್ತವ್ಯ ನಿಷ್ಠೆಯನ್ನು ಹೆಚ್ಚಿಸುತ್ತದೆ. ಯಾವುದೇ ಅಪರಾಧದ ತಲಸ್ಪರ್ಶೀ ಕಾರಣ ಮತ್ತು ಅಪರಾಧಕ್ಕೆ ಕಾರಣವಾದ ವ್ಯಕ್ತಿಗಳನ್ನೂ ಜೋಡಿಸಿಕೊಂಡು ಯಾವುದೇ ಅಪರಾಧವು ಆಗಾಗ ಮರುಕಳಿಸದಂತೆ - ಅಪರಾಧದ ಪ್ರಮಾಣಕ್ಕೆ ತಕ್ಕಂತೆ ಶೀಘ್ರಾತಿಶೀಘ್ರವಾಗಿ ಶಿಕ್ಷೆಯನ್ನು ನೀಡಲಾಗದ ಯಾವುದೇ ನ್ಯಾಯ ವಿತರಣೆಯು - ನ್ಯಾಯವೇ ಅಲ್ಲ. ಅದು ಅನ್ಯಾಯದ ಇನ್ನೊಂದು ವೇಷ ಆಗಬಹುದು - ಅಷ್ಟೆ. ಪರಿಣಾಮವೇ - ಕೋಡಲೆಯಿಂದ ಒಲೆಗೆ ಬೀಳುತ್ತಿರುವ ಸದ್ಯದ ಸ್ಥಿತಿ.

ನ್ಯಾಯಾನ್ಯಾಯದ ಕುರಿತು ಪ್ರಶ್ನೆ ಕೇಳುವವರೆಲ್ಲರೂ ವೈರಿಗಳೆ ? ಇತ್ಯಾತ್ಮಕವಾಗಿ ನೋಡಿದರೆ - ನಮ್ಮ ಆತ್ಮನಿರೀಕ್ಷಣೆಗೆ ಪ್ರಚೋದಿಸುವುದೇ ಪ್ರಶ್ನೆಗಳು. ಆದ್ದರಿಂದ - ಸದುದ್ದೇಶದಿಂದ, ನಿಸ್ವಾರ್ಥದಿಂದ ಪ್ರಶ್ನಿಸಿದಾಗ ಸ್ಥಾನಮಾನದ ಘನತೆಗೆ ಧಕ್ಕೆಯಾದಂತೆ ಪರಿಭಾವಿಸಿ ಹರಿಹಾಯುವುದು ಸಭ್ಯತೆ ಆಗಲಾರದು; ಪರಾಂಬರಿಸಿ ಮತ್ತೊಮ್ಮೆ ನೋಡುವ ಹೃದಯ ವೈಶಾಲ್ಯವು ನ್ಯಾಯವಾಗಿ - ನ್ಯಾಯವನ್ನು ಎತ್ತರಿಸುತ್ತದೆ. ಎಷ್ಟೋ ಮಂದಿ, ಯಾವುದೇ ತೀರ್ಪನ್ನು ಪ್ರಶ್ನಿಸಿದರೆ - ತಮ್ಮ ಬೆನ್ನು ಗೋಂಕಿಗೆ ಗುದ್ದಬಹುದೆಂಬ ಭಯದಿಂದ ನನ್ನಂತೆ (!) ಸುಮ್ಮನಿರುತ್ತಾರೆ. ಭಂಡತನ ತೋರಿಸುತ್ತ All is well... ಅನ್ನುತ್ತಾರೆ ! ಇದರಿಂದಾಗಿ ಈ ಪ್ರಜಾಪ್ರಭುತ್ವದಲ್ಲಿ - ಪ್ರಭುಗಳ ಅಟ್ಟಹಾಸದ ಎದುರಿನಲ್ಲಿ ಪ್ರಜೆಗಳು ಮಾತ್ರ ನಾಚಿಕೆಯಿಂದ ತಲೆತಗ್ಗಿಸುವಂತಾಗಿದೆ !


ಇಂದಿನ ಭಾರತವು ಜಗಳಗಂಟತನಕ್ಕೆ ಬೇಕಾದ ಫಲವತ್ತಾದ ಹೊಲ ! ಸರಕಾರೀ ಕಛೇರಿಗಳೇ ಜಗಳಗಂಟತನದ ತರಬೇತಿ ಶಾಲೆ ! ಆದ್ದರಿಂದಲೇ ಬೀದಿ ರಂಪಗಳಿಗೆ ರಾಜಮರ್ಯಾದೆ ಸಿಗುತ್ತಿರುವ ಸನ್ನಿವೇಶವಿದೆ ! ನಿತ್ಯರಂಪವನ್ನು ಪೋಷಿಸುವುದೇ ರಾಜಕೀಯ ಧರ್ಮವಾದಂತಿದೆ ! ನ್ಯಾಯ ಪ್ರತಿಪಾದಿಸುವ ನಿತ್ಯಫಲಾನುಭವಿಗಳೇ ಬೀದಿರಗಳೆಯ ಪ್ರತಿಭಟನೆ ನಡೆಸಿ ಕಾನೂನಿನ "ಮಜಾ ಉಡಾಯಿಸುವ" ದೃಶ್ಯಗಳೂ ಒಮ್ಮೊಮ್ಮೆ ಬಿತ್ತರಗೊಳ್ಳುತ್ತವೆ. ಕೆಲವೊಮ್ಮೆ ಪ್ರಜೆಗಳು "ಅಯ್ಯೋ ಪಾಪ" ಎನ್ನುವಂತೆ - ರಾಜಕಾರಣಿಗಳು, ನ್ಯಾಯಾಧೀಶರುಗಳೇ ಗೋಳೆಂದು ಅಳುತ್ತ ಕೂರುತ್ತಾರೆ ! ಅತ್ತಂತೆ ನಟಿಸುವುದೂ ಇದೆ ! ದೇಶದ ಪ್ರಧಾನಿಯು ಅತ್ತರೆ ಅಥವ ಪ್ರಧಾನಿಯನ್ನು ಕೂಡಿಸಿಕೊಂಡು ನ್ಯಾಯಾಧೀಶರೇ ಅಳುವುದಕ್ಕೆ ಶುರುಮಾಡಿದರೆ ಅಥವ ಕಣ್ಣುಜ್ಜಿಕೊಂಡಂತೆ ಮಾಡಿದರೆ ಭಾವುಕ ಜನಸಾಮಾನ್ಯರು ಎಲ್ಲಿ ಹೋಗಿ ಕಣ್ಣುಜ್ಜಿಕೊಂಡು ಅಳಬೇಕು ? ಭರವಸೆಯೇ ಕುಸಿದು ಹೋಗಲಾರದೆ ? ಅಸಹನೀಯ ಬಿಕ್ಕಟ್ಟುಗಳನ್ನು ದಿನವೂ ಉಂಡು ಜೀರ್ಣಿಸಿಕೊಳ್ಳುತ್ತಿರುವ ಜನಸಾಮಾನ್ಯರು ಇವನ್ನೆಲ್ಲ ನೋಡುತ್ತ, ಪರದುಃಖಕ್ಕೆ ಮಿಡುಕುತ್ತ ನ್ಯಾಯಾಧೀಶರುಗಳ ಸಂಕಟಕ್ಕೂ ಪ್ರತಿಸ್ಪಂದಿಸುತ್ತ - ತಮ್ಮ ನಿತ್ಯಶೋಕಗೀತೆಗೆ ಇನ್ನೊಂದು ಸೊಲ್ಲು ಸೇರಿಸಿಕೊಳ್ಳುವಂತಾಗದೆ ? ಅಪ್ಪ ಅನ್ನಿಸಿಕೊಂಡವನು ಚಾವಡಿಯಲ್ಲಿ ಕೂತು ಅತ್ತರೆ ಮಕ್ಕಳು ಕಂಗಾಲಾಗಿ ಬಿಡುವುದಿಲ್ಲವೆ ? ಕೋಣವೆರಡುಂ ಹೋರೆ ಗಿಡಕ್ಕೆ ಮೃತ್ಯು ! ಮಕ್ಕಳ ಎದುರಿನಲ್ಲಿ ಯಾವ ಅಪ್ಪನೂ ಅಳಬಾರದು; ಜವಾಬ್ದಾರಿ ಹೊತ್ತ ಯಾವ ಅಪ್ಪನಿಗೂ ಸಾರ್ವಜನಿಕವಾಗಿ ಅಳುವ ಹಕ್ಕು ಇರುವುದಿಲ್ಲ ! ಆಗಾಗ ಕಣ್ಣಿಂದ ನೀರು ಒಸರುವವರು ಸಂಸಾರವನ್ನು ಕಟ್ಟಿಕೊಂಡು ಯಜಮಾನ ಎಂಬ ಪೀಠವನ್ನು ಏರಬಾರದು; ಆಗ ಪೀಠಕ್ಕೆ ನ್ಯಾಯ ಒದಗಿಸುವುದು ಕಷ್ಟವಾಗುತ್ತದೆ.


ಅಳುವಂತಹ ರಾಜಕಾರಣಿಗಳು, ಪೋಲೀಸರು, ಅಧಿಕಾರಿಗಳು, ನ್ಯಾಯಾಧೀಶರು... ಇವರೆಲ್ಲ ನಮಗೆ ಬೇಕೆ ? ಪ್ರಜೆ ಎಂಬ ಸಮೂಹವನ್ನು ಅಧಿಕಾರಸ್ಥ ಸ್ಥಾನಗಳು ಕಸಕಡ್ಡಿಗಳಂತೆ ಅಲಕ್ಷಿಸುತ್ತಿದ್ದರೂ ನಮ್ಮ ಭಾರತೀಯ ಪ್ರಜೆಗಳು ಇಂದಿಗೂ ಸಂಯಮವನ್ನು ಮೀರಿಲ್ಲ. ಶಿಷ್ಟತೆಯನ್ನು ಪೂರ್ತಿಯಾಗಿ ಮರೆತಿಲ್ಲ. "ಸಂಬಂಧಿಸಿದ ವಿಭಾಗಗಳು" ಹೇತು ಹಾಕಿದ್ದನ್ನು ಊರ ಮಂದಿಯು ಹೊರುವಂತಹ ಸ್ಥಿತಿ - ಪ್ರಜೆಗಳದಾಗಿದೆ ! ಹಾಗೆಂದು - ಅಳುವ ಕಾಯಕವನ್ನೇ ನಂಬಿ ಯಾರೂ ಸುಮ್ಮನೆ ಕೂತಿಲ್ಲ. ಉಸಿರು ಇರುವವರೆಗೂ ಹೋರಾಡುತ್ತಿದ್ದಾರೆ. ಇರುವ ಅನುಕೂಲಗಳನ್ನೇ ಯುಕ್ತಿಯಿಂದ ಬಳಸಿಕೊಂಡು ಪರಮಾವಧಿ ಕರ್ತವ್ಯಗಳನ್ನು ನಿರ್ವಹಿಸಬಲ್ಲ ಬುದ್ಧಿ ದಾರ್ಢ್ಯತೆ ಇಲ್ಲದವರು ಯಜಮಾನರಾದಾಗ ಮಾತ್ರ ಮನೆಮಂದಿಯೆಲ್ಲ ಅಳುತ್ತ ಕೂರುವ ಪ್ರಸಂಗ ಬಂದೇ ಬರುತ್ತದೆ. ಭರವಸೆಯ ಬುನಾದಿಯೇ ಕುಸಿದಂತಾಗುತ್ತದೆ. ತಾವೂ ಅತ್ತು ಮನೆಮಂದಿಯನ್ನೆಲ್ಲ ಅಳಿಸುವವರು ನಮಗೆ ಬೇಕೆ ? ಬೇಡವೇ ಬೇಡ. ಯಾರೂ ತಮ್ಮ ಬದುಕನ್ನು ಅಳುವ ಕಡಲಾಗಿಸಿಕೊಳ್ಳುವುದು ಬೇಡ. ಬಾಳೆಂಬ ಅಳುವ ಕಡಲಿನಲ್ಲೂ ನಗುವಿನ ಹಾಯಿದೋಣಿಯನ್ನು ಏರಿ ತೇಲುವಂತಹ ಆಶಾವಾದವು ಒಳಹೊರಗಿನಿಂದ ಬೀಸುತ್ತಲೇ ಇರಬೇಕು. ಯಾವುದೇ ಸ್ವಾರ್ಥಸಾಧನೆಗಾಗಿ - ಅಳು ಅಥವ ನಗುವಿನಂತಹ ಹೃತ್ಪೂರ್ವಕ ಭಾವಸ್ಪಂದನವನ್ನು ವ್ಯಾವಹಾರಿಕವಾಗಿ ಬಳಸಿಕೊಳ್ಳುವ "ಭಾವ ವ್ಯಭಿಚಾರವು" ಕೂಡ ಸಮಾಜಘಾತಕವಾದುದು.

ತಮ್ಮ ವೈಭವ ಹೆಚ್ಚಿಸಿಕೊಳ್ಳುವ ಏಕೈಕ ಉದ್ದೇಶದಿಂದ ನ್ಯಾಯದೇವತೆಯನ್ನು ಸಾಂದರ್ಭಿಕವಾಗಿ ಕಪ್ಪುಬಿಳಿಯಾಗಿಸುತ್ತಿರುವ ಅಪ್ರತಿಮ ತರ್ಕ ಶಿರೋಮಣಿಗಳು ನಮ್ಮ ದೇಶವನ್ನು ಕಪ್ಪುಕಪ್ಪಾಗಿಯೇ ಉಳಿಸಿಕೊಳ್ಳುವಲ್ಲಿ ಸಕ್ರಿಯರಾಗಿರುವುದು ಸ್ವತಂತ್ರ ಭಾರತದ ದೊಡ್ಡ ದುರಂತ ! ಇದೆಂತಹ ಗೊಣಗೊಂಡೆ ವ್ಯವಸ್ಥೆ ? ಇಂದಿನ ಕೆನೆಪದರದ ಬದುಕುಗಳು ಸಂಪೂರ್ಣ  ರಾಜಕೀಯಮಯವಾಗಿ ಹೋಗಿದೆ. ಅಲ್ಲಿ ಅಸ್ತಿತ್ವದಲ್ಲಿರುವ ಎಲ್ಲವೂ - "ಕೊಡುವ ಪಡೆಯುವ" ವ್ಯಾಪಾರಗಳಾಗಿವೆ; ಬಾಯಾರಿ ಬಳಲುವವರು ಉಪ್ಪುನೀರು ಕುಡಿಯುವಂತೆ - ಗುಣಮೌಲ್ಯ ಸಂಪತ್ತನ್ನು ನಷ್ಟಗೊಳಿಸಿಕೊಂಡ ವ್ಯವಸ್ಥೆಗಳಾಗಿವೆ. ಬದುಕಿನ ಸತ್ಯ ನ್ಯಾಯ ನೀತಿ ಧರ್ಮಗಳನ್ನು - ಹೊಲಸು ರಾಜಕೀಯ ದರ್ಪಣದಲ್ಲಿ ನೋಡಲು ಹೊರಟರೆ ಇನ್ನೇನಾದೀತು ?

ಪ್ರಾಮಾಣಿಕರನ್ನು ಬಾಹ್ಯ ಪ್ರಯತ್ನದಿಂದಲೂ ಅಪ್ರಾಮಾಣಿಕರಾಗಿಸಬಹುದು ; ಆದರೆ ಅಪ್ರಾಮಾಣಿಕರನ್ನು ಅವರೇ ಇಚ್ಛಿಸದೆ - ಪ್ರಾಮಾಣಿಕರಾಗಿಸುವುದು  ಅಸಾಧ್ಯ. ಹೀಗಿರುವಾಗ, ಇಚ್ಛಾಶಕ್ತಿಯಿಲ್ಲದ ಅಪ್ರಾಮಾಣಿಕ ಮನಸ್ಸುಗಳನ್ನು ಈಗ ಇರುವ ಸಡಿಲವಾದ ಕಾನೂನಿನ ಕಟ್ಟಿನಲ್ಲಿ ಸಿಲುಕಿಸುವುದು ಸಾಧ್ಯವಾಗದು. ಅಪ್ರಾಮಾಣಿಕತನವನ್ನು ದರ್ಪದಿಂದಲೇ ಬಗ್ಗುಬಡಿಯದೆ ಹೋದರೆ ಸಮಾಜದಲ್ಲಿ ನ್ಯಾಯ ಎಂಬುದು - ಕಾಗಕ್ಕ ಗುಬ್ಬಕ್ಕನ ಕತೆ ಆದೀತು. GOOD GOVERNANCE ಎಂಬ ಕೋಲಾಹಲವು ಹಾಸ್ಯಾಸ್ಪದವಾದೀತು. ಆದರೆ ಯಾರೋ ಕನಸುಗಾರ ಠೊಣಪಯ್ಯ ಪ್ರತ್ಯಕ್ಷವಾಗಿ ಬಂದು ತಮಗೆ ನ್ಯಾಯ ಕೊಡಿಸುತ್ತಾನೆಂದು ಕೈಕಟ್ಟಿ ಕೂಡಲಾದೀತೆ ? ತಕ್ಷಣದ ಪರಿಹಾರವಾಗಿ ಮುಂದಿನ ಹೆಜ್ಜೆ ಇಡುವುದು ಅನಿವಾರ್ಯವಾಗುತ್ತದೆ. ಇದಕ್ಕಿಂತ ಭಿನ್ನವಾದ ಸುಲಭದ ಮಾರ್ಗವೂ ಇಲ್ಲವೆಂದಲ್ಲ. ಅಂತಹ ಸುಲಭಪ್ರಾಯರಿಗೆ - "ಅನ್ಯಾಯದ ಪರಿಸರದಿಂದ ದೂರವಾಗಿರುವುದು - ಅಥವ - ತಮಗೆ ಕೂಡಿದಷ್ಟು ಅನ್ಯಾಯಗಳನ್ನು ತಾವೂ ಮಾಡುತ್ತ ವರಾಹರೂಪಿನಲ್ಲಿ ಸುಖವಾಗಿರುವುದು" - ಇವೆರಡು ಆಯ್ಕೆಗಳೂ ಇವೆ !

ನ್ಯಾಯ ಪಡೆಯಲು ನ್ಯಾಯಾಸ್ಥಾನಕ್ಕೆ ಹೋಗುವ ಬಹು ದೊಡ್ಡ ಸಮೂಹವು - ಬಿಸಿಯೂಟ, ಹೊಸ ಪಾದರಕ್ಷೆಗಳನ್ನೇನೂ ಬಯಸುವುದಿಲ್ಲ. ಒಂದಿಷ್ಟು ಸಜ್ಜನಿಕೆ; ಒಂದಿಷ್ಟು ಸೌಜನ್ಯ; Case ಗಳ ಶೀಘ್ರ ವಿಲೇವಾರಿಯ ಇಚ್ಛಾಶಕ್ತಿ, ಪೂರ್ವಾಗ್ರಹವಿಲ್ಲದ ನ್ಯಾಯದಾನ ...  ನಾಗರಿಕರಿಗಿರುವುದು - ಇಂತಹುದೇ ಗುಬ್ಬಿ ಅಪೇಕ್ಷೆಗಳು. ಅನ್ಯಾಯಕ್ಕೆ ಒಳಗಾದವರಿಗೆ ಸುಲಭ ಮತ್ತು ಶೀಘ್ರವಾಗಿ ನ್ಯಾಯದಾನ ಮಾಡುವಂತಹ ಬಲಿಷ್ಠ ವ್ಯವಸ್ಥೆಯು ನಮಗೆ ಬೇಡವೆ ? ಇದೆಂತಹ ಪ್ರಜಾಪ್ರಭುತ್ವ ? ಪ್ರಜೆಗಳನ್ನು "ಕಣ್ಣ ನೀರಿನಲಿ ಮಣ್ಣಧೂಳಿನಲಿ ಹೊರಳಿಸುವ" ಇದೂ ಒಂದು ಪ್ರಜಾಪ್ರಭುತ್ವವೆ ? ಮಾಧ್ಯಮಗಳೂ ಕಮಕ್ ಕಿಮಕ್ ಅನ್ನುತ್ತಿಲ್ಲವಲ್ಲ ? ಇಂತಹ ಹಳವಂಡದಲ್ಲಿ ಇದುವರೆಗೆ ನ್ಯಾಯ ಧರ್ಮ ಎನ್ನುತ್ತ ಸತ್ತವರಾದರೂ ಎಷ್ಟು ? ಹೀಗಿದ್ದೂ... ಈಗಲೂ ನ್ಯಾಯ ಧರ್ಮ ಎನ್ನುವ ಅಸಂಖ್ಯ ಜನರು ಈ ದೇಶದಲ್ಲಿ ಇದ್ದಾರೆ. ಅವರನ್ನು ಹೇಗಾದರೂ ಸಾಯಿಸಲು ಈ ಸಮಾಜದಲ್ಲಿ ಎಂತೆಂತಹ ಕುಸ್ತಿಗಳು ನಡೆಯುತ್ತಿವೆ ? ಈ ಎಲ್ಲ ಡೊಂಬರಾಟಗಳ ಗುರಿಯೇ ಭಾರತೀಯ ಮೌಲ್ಯಗಳನ್ನು ವ್ಯವಸ್ಥಿತವಾಗಿ ಕೊಲ್ಲುವುದೆ ? "ಸಬ್ ಕಾ ವಿಕಾಸ್ " ಆಗಲು ಯಾವುದೇ ವ್ಯವಸ್ಥೆಯ ನ್ಯಾಯಸ್ತಂಭವು ದೃಢವಾಗದೆ ಸಾಧ್ಯವುಂಟೆ ? ನ್ಯಾಯ ನರಳುವಲ್ಲಿ "ಸಬ್ ಕಾ ಸಾಥ್ " ಕೂಡ ದೃಢವಾಗಿ ಕಾರ್ಯರೂಪಕ್ಕಿಳಿಯದು. ಟೋಪಿ ಬದುಕಿನಲ್ಲಿ ನಾವು ಬಿದ್ದಿರುವುದಂತೂ ಸತ್ಯ. ಇದನ್ನು ಉದ್ಧರಿಸಲು ಪ್ರಾಮಾಣಿಕವಾಗಿ ಹೊರಟವರಿಗೂ ಕಾಲ್ತೊಡಕು ತಪ್ಪದು. ಹಾಗಿದೆ ನಮ್ಮ ಸರಕಾರೀ ಯಂತ್ರ - ತಂತ್ರ, ಮಂತ್ರ !!
                                                    ****** ****** ******
ಉಪಸಂಹಾರ... 

ಎಲ್ಲೆಲ್ಲಿಂದಲೋ ದರ್ಶನಾಕಾಂಕ್ಷಿಗಳಾಗಿ ಬರುತ್ತಿದ್ದ ತಮ್ಮ ಪ್ರೀತಿಪಾತ್ರ ಭಕ್ತರು ತಮ್ಮನ್ನು ಭೇಟಿ ಮಾಡಿ ಹಿಂದಿರುಗುವಾಗೆಲ್ಲ ಆಗ ದಕ್ಷಿಣೇಶ್ವರದಲ್ಲಿದ್ದ ಪರಮಹಂಸರು - "ಮತ್ತೊಮ್ಮೆ ಯಾವಾಗ ಬರುತ್ತೀ ? ಆಗಾಗ ಬರುತ್ತಿರು..." ಎನ್ನುತ್ತಿದ್ದರಂತೆ. ಅದು - ತನ್ನ ಭಕ್ತರನ್ನು ಸಂಸಾರದ ಜಂಜಾಟಗಳಿಂದ ಉದ್ಧರಿಸುವ ಭಾವಪೂರ್ಣ ಕರೆಯಾಗಿತ್ತು. ಆದರೆ - ನ್ಯಾಯ ಬಯಸುವ ಕಾಗಕ್ಕ ಗುಬ್ಬಕ್ಕನ ಇಂದಿನ ನ್ಯಾಯದ ಕತೆಯು - ಪೂರ್ತಿ ಮುಳುಗಿಸಿ ಹಾಕುವ ಕಲಾತ್ಮಕತೆಯಂತಿದೆ . ಇದು - ನಿಮ್ಮನ್ನು ಪೂರ್ತಿ ಹೀರುವ ವರೆಗೂ "ಆಗಾಗ ಬರುತ್ತಿರಿ..." ಎನ್ನುವಂತಹ ಎಡಬಿಡಂಗಿ ನ್ಯಾಯ . ತಮ್ಮ ಬದುಕಿನುದ್ದಕ್ಕೂ ನ್ಯಾಯಾಲಯದ ಸುದ್ದಿಗಳನ್ನು ಕೂಡ ಇಷ್ಟಪಡದ ಶ್ರೀ ರಾಮಕೃಷ್ಣ ಪರಮಹಂಸರನ್ನು ಇಂತಹ "ಅ-ನ್ಯಾಯದ ಪುರಾಣ"ಗಳಲ್ಲಿ ತಂದು ಹಾಕುವುದು ಸರ್ವಥಾ ಸರಿಯಲ್ಲ. ಆದರೆ ಅವರಿಗೇ ನನ್ನ ಕತೆ ಹೇಳಿ, ಅನ್ಯಾಯದ ಸಂತೆಗಳಿಂದ ಕಾಗೆ ಗುಬ್ಬಿಗಳನ್ನು ಬಿಡುಗಡೆಗೊಳಿಸುವಂತೆ - ನಡುನಡುವೆ ಪ್ರಾರ್ಥಿಸಲು ಏನಡ್ಡಿ ?

ಈ ಬದುಕಿನಲ್ಲಿ ನಮ್ಮನ್ನು ಬಹಿರ್ಮುಖಗೊಳಿಸುವ ಅವಕಾಶಗಳು ಒಂದೇ ? ಎರಡೆ ? ಒಟ್ಟಿನಲ್ಲಿ... ಅ-ನ್ಯಾಯ ಪುರಾಣದ ತಾತ್ಪರ್ಯ ಏನೆಂದರೆ - ಟೋಪಿ ಹಾಕುವುದಕ್ಕೆ ಹುಲುಸಾದ ಅವಕಾಶಗಳಿರುವ ಭಾರತೀಯ ವ್ಯವಸ್ಥೆಯಲ್ಲಿ ಪ್ರಾಮಾಣಿಕರನ್ನು ಪ್ರೋತ್ಸಾಹಿಸುವುದಕ್ಕಿಂತ - ಕಳ್ಳರನ್ನು ನೋಯಿಸಬಾರದೆಂಬ ಕಾಳಜಿಯೇ - ಭಾರತೀಯ ನ್ಯಾಯ ವ್ಯವಸ್ಥೆಯಲ್ಲಿ ಎದ್ದು ಕಾಣುತ್ತಿದೆ ! ಇಂತಹ ಸನ್ನಿವೇಶದಲ್ಲಿ - "ಈ ದೇಶದಲ್ಲಿ ಪ್ರಾಮಾಣಿಕರು ನ್ಯಾಯ ಪಡೆದುಕೊಳ್ಳುವುದು ಅತ್ಯಂತ ಕಷ್ಟ" ಎಂಬ ಭಾವನೆಗೆ - ನಿತ್ಯವೂ ವಿಪುಲ ಉದಾಹರಣೆಗಳು ಸಿಗುತ್ತಲೇ ಇರುತ್ತವೆ. ಅತ್ಯಂತ ಅಪಾಯಕಾರೀ ಒಪ್ಪಿತ ವಿಧಾನವಿದು !

ಆದರೆ ಈಗಾಗಲೇ ನಿತ್ಯ ನರಕದಲ್ಲಿರುವ ಸಂಸಾರಿಗಳು ತಮ್ಮ ಮನಸ್ಸನ್ನು ದುರ್ಬಲಗೊಳಿಸಿಕೊಳ್ಳಬೇಕಿಲ್ಲ. ಸಂಸಾರದಲ್ಲಿ ಕೊಂಚ ಭಂಡತನವೂ ಅವಶ್ಯಕ. ಒಮ್ಮೊಮ್ಮೆ ನಮ್ಮನ್ನು ನಾವೇ ನೋಡಿಕೊಂಡು ನಗುವುದೂ ಭಂಡತನವೇ. ಹೀಗಿದ್ದೂ... ಕುಟುಂಬ ಮತ್ತು ಉದ್ಯೋಗದ ಪರಿಸರದಲ್ಲಿ ಪರಿತ್ಯಕ್ತ ಸನ್ಯಾಸಿಯಂತಿರಲು ಸಾಧ್ಯವೆ ? ಹೆಚ್ಚೆಂದರೆ ಬುದ್ಧಿಭ್ರಷ್ಟವಾಗದ ಎಚ್ಚರದಲ್ಲಿರಬಹುದು. ಟೋಪಿ ಹಾಕಲು ಬಂದಾಗ ಟೋಪಿ ಕಿತ್ತು ಎಸೆಯಬಹುದು; ಅಷ್ಟೇ.  ಸಂಸಾರಿಗಳಿಗೆ ಅಷ್ಟೇ ಸಾಧ್ಯ.

ಎಷ್ಟೇ ಎಚ್ಚರದಿಂದ ಚಲಿಸುವ ಬದುಕಿನಲ್ಲೂ ಅಪಘಾತಗಳು ಸಂಭವಿಸಬಾರದೆಂದೇನೂ ಇಲ್ಲ. ಅದನ್ನೇ ಆಕಸ್ಮಿಕ ಎನ್ನುವುದು. ನಮ್ಮ ಹುಟ್ಟೇ ಆಕಸ್ಮಿಕ ಆಗಿರುವಾಗ ಅನಂತರ ಸಂಭವಿಸುವ ಕೆಲವು ಅಪಘಾತಗಳೂ ಆಕಸ್ಮಿಕ ಎಂದೇ ಅಂದುಕೊಳ್ಳಬೇಕಾಗುತ್ತದೆ. ವ್ಯಕ್ತಿಯ ಸ್ವಭಾವ ಮತ್ತು ಆಯಾ ಬದುಕು ಉರುಳುತ್ತ ಹೋಗಿ ಬೀಳುವ ಪರಿಸರವು ಪರಸ್ಪರ ಪೂರಕವಾಗದಂತಹ ಜಟಿಲ ಸನ್ನಿವೇಶಗಳಲ್ಲಿ - ಆಕಸ್ಮಿಕಗಳು ನಡೆಯುತ್ತಲೇ ಇರುತ್ತವೆ. ಯಾರದೋ ತಪ್ಪಿನಿಂದ ನಡೆಯುವ ಅಪಘಾತವಾದರೂ ಅದಕ್ಕೆ ಇಬ್ಬರೂ ಸಮಾನವಾಗಿ ಶೋಷಿತರಾಗುವುದಿಲ್ಲವೆ ? ತದನಂತರದ ಪೀಡೆಗಳನ್ನು ಉಭಯ ಪಕ್ಷಗಳೂ ಸಹಿಸುವಂತಾಗುವುದಿಲ್ಲವೆ ? ಇಂತಹ ಸ್ವಸ್ಥ ಚಿಂತನೆಯ ಮುಗ್ಧ ಭಂಡತನಗಳು ಯಾವುದೇ ಬದುಕನ್ನು ಉಳಿಸುವ ಜೀವಸತ್ವಗಳು. "ನಿನಗೆ - ಒಂದೇ ವರ್ಷದಲ್ಲಿ ಕೋರ್ಟ್ ತೀರ್ಪು ಬಂದದ್ದು ನಿನ್ನ ಪುಣ್ಯ.." ಎಂದು ಹೇಳಿ ನನ್ನನ್ನು ಅಭಿನಂದಿಸಿದವರೂ ಇದ್ದರು. ಪ್ರಸ್ತುತದ ನ್ಯಾಯಿಕ ಸಂತೆಯಲ್ಲಿ ನಾನೂ ಹಾಗೇ ಅಂದುಕೊಳ್ಳುವುದಲ್ಲದೆ ಬೇರೆ ಆಯ್ಕೆಗಳಿಲ್ಲ. ಇಂತಹ ಸಾಂತ್ವನಗಳಿಗೂ ಪರಸ್ಪರ ಬದುಕಿಸುವ ಶಕ್ತಿಯಿದೆ !

ಸಂಕಟ ಬಂದಾಗ ಅಗೋಚರ ಶಕ್ತಿಯ ನೆನಪಾಗುವುದು ಸ್ವಾಭಾವಿಕ. ಏಕೆಂದರೆ ಯಾವುದೇ ಅಡ್ಡ ಪರಿಣಾಮಗಳಿಗೆ ಈಡುಮಾಡದೆ ಮನುಷ್ಯರ ಮಾನಸಿಕ ಹಿಂಸೆಗಳನ್ನು ಸಂತೈಸುವ ಶಕ್ತಿಯು ಅಧ್ಯಾತ್ಮಕ್ಕಿದೆ. ಅಡ್ಡ ಚಿಂತನೆಗಳಿಗೆ ಆರೋಗ್ಯಕರ ದಿಕ್ಕು ತೋರಿಸಿ ಅಧ್ಯಾತ್ಮವು ಮಾತ್ರ ಆಧರಿಸಬಲ್ಲದು... ಅಧ್ಯಾತ್ಮದ ಹಾದಿಯನ್ನು ಹಿಡಿದವರು ಅದೆಷ್ಟೇ ವ್ಯಾವಹಾರಿಕವಾಗಿ ಬಳಲಿದರೂ ಬೀಳಲಾರರು; ಅವರು ತಮ್ಮನ್ನು ತಾವೇ ಸಂಭಾಳಿಸಿಕೊಳ್ಳಬಲ್ಲರು; ಹೋರಾಡಲೂ ಬಲ್ಲರು.

ಅಂದು ಶ್ರೀ ರಾಮಕೃಷ್ಣರು ತಮ್ಮ ವಚನಸುಧೆಯಿಂದಲೇ ಸಂಸಾರದ ಪ್ರಕ್ಷುಬ್ಧ ಮನಸ್ಸುಗಳನ್ನು ಆಧರಿಸಿ ಸಾಂತ್ವನ ನೀಡುತ್ತಿದ್ದರು. ತಮ್ಮ ಸ್ವಂತ ವಹಿವಾಟಿನ ವ್ಯಾಜ್ಯಗಳಿಗಾಗಿ ಬ್ರಿಟಿಷ್ ದರ್ಬಾರಿನ ಕೋರ್ಟಿಗೆ ಹೋಗಿ ಬರುತ್ತಿದ್ದ ತಮ್ಮ ಭಕ್ತರನ್ನು ಕಂಡು - ಅವರು ಕನಿಕರಿಸಿದ್ದೂ ಇತ್ತು. ನ್ಯಾಯಾಲಯವೆಂದರೆ ಹಾವನ್ನು ಮೆಟ್ಟಿದಂತೆ ಆಡುತ್ತಿದ್ದ ಅವರು - "ಸುಳ್ಳು ಸಾಕ್ಷಿಯ ನ್ಯಾಯಾಲಯ"ದಿಂದ ದೈಹಿಕವಾಗಿಯೂ ಮಾನಸಿಕವಾಗಿಯೂ ಮಾರುದೂರವಿದ್ದು ಮನಶ್ಶುದ್ಧಿಗೆ ಮೇಲ್ಪಂಙ್ತಿ ಹಾಕಿಕೊಟ್ಟಿದ್ದರು. ಅಂದಮೇಲೆ ನ್ಯಾಯ ಸತ್ತದ್ದು ಮೊನ್ನೆಮೊನ್ನೆ ಏನಲ್ಲ. ನ್ಯಾಯದ ಅಂತ್ಯ ಸಂಸ್ಕಾರವು ತ್ರೇತಾಯುಗ ಮುಗಿದಾಗಲೇ ನಡೆದು ಹೋಗಿದೆ. 

ಶ್ರೀ ರಾಮಕೃಷ್ಣರನ್ನು ಓದಿದವರೆಲ್ಲರೂ ರಾಮಕೃಷ್ಣರಾಗುವುದು ಅಸಾಧ್ಯವಾದರೂ "ಸಂಸಾರವೆಂದರೆ ಇಷ್ಟೇ" ಎಂಬ ಮನೋಸ್ಥಿರತೆಯನ್ನು ಮೂಡಿಸಿಕೊಂಡು ತಮ್ಮ ನಡಿಗೆಗೆ ಶಕ್ತಿ ತುಂಬಿಸಿಕೊಳ್ಳುವ ಸಾಮರ್ಥ್ಯ ಪಡೆದುಕೊಳ್ಳಬಹುದು. ಕಳ್ಳ, ಪೋಲೀಸ್, ವಕೀಲಿಕೆ, ವೈದ್ಯ ಮುಂತಾದ ಮಾರ್ಗಗಳನ್ನು ವೃತ್ತಿಯಾಗಿಸಿಕೊಂಡವರಿಗಿಂತ - ಅಂತಹ ಮನೋಭಾವವನ್ನು ಬೆಳೆಸಿಕೊಂಡು ತಮ್ಮ ಪ್ರವೃತ್ತಿಯಾಗಿಸಿ, ಸ್ವಭಾವಮೌಲ್ಯಗಳು ಕ್ಷಯಿಸಿಹೋಗದಂತೆ ನಿಯಂತ್ರಿಸಿಕೊಳ್ಳುವವರಿಂದ ಮಾತ್ರ ಈ ಜಗತ್ತು ಮತ್ತು ವೃತ್ತಿಯೂ ಉಪಕೃತವಾಗುವಂತಾಗುತ್ತದೆ.

ಯಾವುದೇ ವೃತ್ತಿಯಿಂದಲೇ ಆಯಾ ವ್ಯಕ್ತಿಯ ಮೂಲ ಸ್ವಭಾವವು ಪರಿವರ್ತನೆಯಾಗಲಾರದು. ಆದರೆ ವೃತ್ತಿಯ ದುಷ್ಪ್ರಭಾವದಿಂದ ಬದುಕು ಮತ್ತು ಚಿಂತನೆಯ ಶೈಲಿಯೇ ಬದಲಾಗಬಹುದು ಎಂಬ ಎಚ್ಚರವೂ ಅವಶ್ಯಕ. ವೃತ್ತಿಗಳ ಕೀಟಲೆಯಿಂದಾಗಿ ಉಂಟಾಗಬಹುದಾದ ಅನಪೇಕ್ಷಿತ ಭಾವಪರಿವರ್ತನೆಯನ್ನು ದೀರ್ಘ ಕಾಲ ಉಪೇಕ್ಷಿಸಿದರೆ ಸ್ವಭಾವವೈಕಲ್ಯಕ್ಕೂ ಎಡೆಯಾಗಬಹುದು. ವೃತ್ತಿಪರರಿಗೆ ಈ ಎಚ್ಚರವು ಅತೀ ಅವಶ್ಯಕ. ಆದರೆ ಕಳ್ಳನು ಪೋಲೀಸ್ ಆಗುವಷ್ಟು ಪರಿವರ್ತನೆಯು ಒಂದೇ ಜನ್ಮಕಾಲದಲ್ಲಿ ಆಗಲಾರದು ಎಂಬ ಇತಿಮಿತಿಯೂ ಗೊತ್ತಿರಲಿ. ಆದ್ದರಿಂದ ಎಷ್ಟೋ ಜನ್ಮದ ಸಂಪಾದನೆಯಾದ ನಮ್ಮೊಳಗಿನ ಶಿಷ್ಟ ಸ್ವಭಾವಸಂಪತ್ತಿಗೆ ಧಕ್ಕೆಯಾಗದಂತೆ ವೃತ್ತಿಜೀವನವನ್ನು ನಡೆಸುವುದು ಅಪೇಕ್ಷಣೀಯ. ಆಗ ಲಾಭವಿಲ್ಲದಿದ್ದರೂ ಯಾವುದೇ ನಷ್ಟ ಸಂಭವಿಸದು. ನಮ್ಮ ಬದುಕನ್ನು ನಾವೇ ನಷ್ಟದ ಖಾತೆಗೆ ತಳ್ಳುತ್ತ ಹೋದರೆ ಅದೇ ದುರಂತ. ಪ್ರತೀ ಬದುಕಿನಲ್ಲೂ ಅನೇಕ ಜಾರುದಾರಿಗಳು ಎದುರಾಗುತ್ತವೆ. ಸ್ಥಿರತೆಯಿಲ್ಲದ ಮನಸ್ಸುಗಳು ಅಂತಹ ಜಾರುದಾರಿಯಲ್ಲಿ ನಡೆದಾಗ ಸ್ವಭಾವಕ್ಷಯಕ್ಕೆ ತುತ್ತಾಗುವ ಅಪಾಯವಿದೆ. ಅಂತಹ ಭಾವವಸ್ತುಗಳು ನಿರ್ವಹಿಸುವಂತಹ ಯಾವುದೇ ವೃತ್ತಿಗೂ ಕಳಂಕ ತಪ್ಪದು. ಆಯಾ ವೃತ್ತಿಗೆ ಆಯಾ ಮನೋಭಾವದವರನ್ನು ಆಯ್ಕೆ ಮಾಡಿಕೊಂಡಾಗ ಮಾತ್ರ ಯಾವುದೇ ವೃತ್ತಿಗೆ ಪೂರ್ಣ ಮರ್ಯಾದೆ ಲಭಿಸೀತು. ಯಾರೂ ಏನೂ ಆಗಬಹುದು ಎಂಬಂತಹ ಧಾರ್ಷ್ಟ್ಯವನ್ನು ಭೂಮಿಯ ನ್ಯಾಯವೂ ಒಪ್ಪುವಂತಿಲ್ಲ. ಮರ್ಯಾದೆ ಎಂಬುದರ ಸಭ್ಯಸೂತ್ರವಿದು.

ಮರ್ಯಾದೆ ಮತ್ತು ನಿರ್ಭಯತೆಗಳು ಜೊತೆಯಾಗಿ ಪಯಣಿಸುವ ಸಹಯಾತ್ರಿಗಳು. ನಿರ್ಭಯತ್ವ ಎಂದರೆ ಹೊತ್ತಲ್ಲದ ಹೊತ್ತಿನಲ್ಲಿ ಪೇಟೆ ಸುತ್ತುವುದೆಂಬ ಅರ್ಥವಲ್ಲ. ಹಾಗೆ ಅಂದುಕೊಂಡರೆ ಅದು ಮರ್ಯಾದೆಯಿಲ್ಲದ ಮೂರ್ಖತನವೆಂದೇ ಅರ್ಥ. ಆದ್ದರಿಂದ ಯಾವುದೇ ಬಿಂದಾಸ್ ಬದುಕಿನಲ್ಲಿ ನಿರ್ಭಯತೆ ಇರುವುದಿಲ್ಲ: ಬೆಚ್ಚಿ ಬೀಳುತ್ತಿರುವುದೇ ಅವರ ಬದುಕಾಗುತ್ತದೆ. ನಿರ್ಭಯತೆಯ ಸ್ವಭಾವ ಮೌಲ್ಯಗಳನ್ನು ಕುಂಟಿಕೋಣಗಳಾದ ಮೇಲೆ ರೂಢಿಸಿಕೊಳ್ಳುವುದೂ ಕಷ್ಟ. ನಿರ್ಭಯತೆಗೆ ಬೀಜಾರ್ಪಣವಾಗುವ ಕಾಲ - ಬಾಲ್ಯಕಾಲ. ತಪ್ಪು ಮಾಡಿ ಅಮ್ಮನಿಗೆ ಬೆದರುವ ಮಗುವಿನಲ್ಲಿ ಸಾತ್ವಿಕ ನಿರ್ಭಯತೆಯ ಓನಾಮವಾಗುತ್ತದೆ. ಅಂತಹ ಮುಗ್ಧ ಭಯದಲ್ಲಿಯೇ ನಿರ್ಭಯದ ಬೀಜವಿರುತ್ತದೆ ! ಮುಗ್ಧ ಬಾಲ್ಯವೇ - ಮರ್ಯಾದೆ ಮತ್ತು ನಿರ್ಭಯತೆಗಳಿಗೆ ಭದ್ರ ಪಂಚಾಂಗವನ್ನು ನಿರ್ಮಿಸಿಕೊಳ್ಳುವ ಅಥವ ಶಿಷ್ಟ ನಿರ್ಭಯತೆಯು ಮೊಳಕೆಯೊಡೆಯುವ ಸುಂದರ ಕಾಲ. ಬಾಲ್ಯ ಕೆಟ್ಟರೆ ಬದುಕು ಕೆಟ್ಟಂತೆ. ಅದೇ ಇಂದಿನ ಸಮಸ್ಯೆ.

ಪುರಾಣದತ್ತ ನೋಡಿದರೆ ವೀರಾಗ್ರೇಸರ ಮಾರುತಿಯ ವರ್ತನೆಯಲ್ಲಿ - ಅಪೂರ್ವ ಎನ್ನಿಸುವ - ಶಿಷ್ಟ ನಿರ್ಭಯತ್ವವು ಕಾಣುತ್ತದೆ. ಸಮುದ್ರೋಲ್ಲಂಘನಗೈಯ್ಯುವಾಗ, ಲಂಕಾದಹನದ ಸಂದರ್ಭ, ಸಂಜೀವಿನೀ ಪರ್ವತವನ್ನು ಹೊತ್ತು ತರುವಾಗ, ನವಗ್ರಹಗಳನ್ನು ರಾವಣಶಕ್ತಿಯಿಂದ ಬಂಧಮುಕ್ತಗೊಳಿಸುವಾಗ ವೀರ ಹನುಮನಲ್ಲಿದ್ದ ರಾಮಭಾವಸಮೃದ್ಧಿಯಲ್ಲಿ - ವಿಶ್ವಾಸಪೂರ್ಣ ಶುದ್ಧ ನಿರ್ಭಯತ್ವವು ಕಾಣುತ್ತದೆ ! ಆದರೆ ಹನುಮನ ಗುಣವಿಶೇಷಗಳನ್ನು ಅವಗಣಿಸುವ ಇಂದಿನ ಜೀವನ ಶೈಲಿಗಳು ತಮ್ಮ ಸ್ವಯಂಕೃತ ಭಯವನ್ನು ಪರಿಹರಿಸುವಂತೆ ಅವನಿಗೆ ಹರಕೆಹೊತ್ತು, ಹನುಮನ ಪಾದಕ್ಕೆ ತೆಂಗಿನ ಕಾಯನ್ನು ಕುಟ್ಟಿ ಕುಟ್ಟಿ ಒಡೆಯುತ್ತಿದ್ದರೆ ನಿರ್ಭಯತೆ ಎಂಬುದು ಸಾಧಿಸೀತೆ ?

ನಿರ್ಭಯತ್ವವು ಬಾಹ್ಯ ಆಚರಣೆಗಳಿಗೆ ಒಲಿಯುವಂತಹುದಲ್ಲ. ಮನುಷ್ಯ ಎಂದುಕೊಳ್ಳುವವರ - ಒಡೆಯುವ ತಟ್ಟುವ ಊದುವ ಮಂಗಾಟಗಳಿಂದ ಹನುಮನಿಗೆ ಒಮ್ಮೊಮ್ಮೆ ದುಃಖ - ಮತ್ತೊಮ್ಮೆ ಮನರಂಜನೆಯಾದೀತು ! ಅಷ್ಟೆ. ವೀರವಿಜಯದ ಭಾಸವಾಗುವ ನಿಜವಾದ ವೀರತ್ವಕ್ಕೆ - ವಿನೀತ ಕರ್ತವ್ಯಪರತೆ ಮತ್ತು ಅಹಂಕಾರನಿಗ್ರಹವು ತೀರ ಅವಶ್ಯ. ಆದ್ದರಿಂದ ಅಧೀಶರಾಗಲೀ ಸುದೀಶರಾಗಲೀ ವ್ಯಾಧೀಶರಾಗಲೀ ತಮ್ಮ ಉಪಾಧಿಯ ಹೆಸರಿನ ಬಲದಿಂದಲೇ ಎಲ್ಲವನ್ನೂ ಗಳಿಸಲು ಆಗುವುದಿಲ್ಲ. ಸೌಜನ್ಯದ ಮೂಲಕ "ಮೊದಲು ಮಾನವ"ರಾದರೆ - ಅನಂತರ ಕರ್ತವ್ಯ ಭಾಗವೂ ಸುಗಮವಾದೀತು. ಯಾವುದೇ ಸತ್ಕಾರ್ಯವನ್ನು ಗೌರವವೇ ಹುಡುಕಿಕೊಂಡು ಬರುತ್ತದೆ.

ಆದರೆ ಸತ್ಕಾರ್ಯದ ಇಚ್ಛೆ ಮೂಡಿಸಿಕೊಳ್ಳದ ರಾವಣ ಮನಸ್ಸುಗಳು ಯಾವತ್ತೂ ಸ್ವನಿರೀಕ್ಷಣೆಗೆ ಇಚ್ಛಿಸುವುದಿಲ್ಲ. ಅವುಗಳು ಅಂಡಾಡಿಸುತ್ತ - ಯಾರ್ಯಾರಿಗೋ ORDER ಮಾಡುತ್ತ - ಕೆಲವೊಮ್ಮೆ ಅನಾವಶ್ಯಕವಾಗಿ ಮುಗ್ಧರನ್ನು ನೋಯಿಸುವುದರಲ್ಲಿಯೇ ಸುಖ ಕಾಣುತ್ತಿರುತ್ತವೆ. ಆದರೆ ಆಂತರ್ಯದಲ್ಲಿ ಇಂತಹ "ಅಹಂಕಾರೀ ಅಂಡಾಡಿ"ಗಳಷ್ಟು ಭಯಗ್ರಸ್ತರು ಇನ್ನ್ಯಾರೂ ಇರುವುದಿಲ್ಲ. ತಮ್ಮ ಪ್ರತಿಬಿಂಬಕ್ಕೇ ಹೆದರುವ ಪೈಕಿಯ ಜನರಿವರು. ಏಕೆಂದರೆ ಇಂತಹ ಜನರು ಸಾಗಿಸಿದ ಕ್ರೂರ ಬದುಕೇ ಅವರನ್ನು ಬೆನ್ನ ಹಿಂದಿನಿಂದ ಹೆದರಿಸುತ್ತಿರುತ್ತದೆ. ನಿರಪರಾಧಿಗಳನ್ನು ನೋಯಿಸಿದ ಬದುಕುಗಳು ಭಯಮುಕ್ತವಾಗುವುದು ಅಸಂಭವ. ಸ್ವಚ್ಛ ಬದುಕಿನ ಉಪದೇಶಕರೊಂದಿಗೆ ಅವರ ಉಪದೇಶಗಳನ್ನೂ ಹೀಗಳೆಯುವ ಸಮಸ್ತ ಜನಸಮೂಹವನ್ನು - ಭಯವೇ ಆಡಿಸುತ್ತಿರುತ್ತದೆ; ಭಯವೇ ಊದಿ ಉರುಳಿಸುತ್ತಿರುತ್ತದೆ. ಭಯಮೂಲ ಅಶಾಂತಿಗ್ರಸ್ತ ಸಂತತಿಯಿದು. ಸದ್ಯದ ನೋಟಿನ ಪ್ರವಾಹದಲ್ಲಿ ತೇಲಿಹೋಗುತ್ತ ಹುಚ್ಚು ಹೇಳಿಕೆಗಳನ್ನು ನೀಡುತ್ತಿರುವವರ ಬದುಕೇ ಇದಕ್ಕೆ ಸಾಕ್ಷಿ. ಹುಚ್ಚು ಮಾತುಗಳನ್ನಾಡಿಸುವುದೂ ಭಯಮೂಲ ಅಶಾಂತಿಯೇ. ಸ್ವಾರ್ಥ ಸಾಧನೆಯ ಹುಚ್ಚಿನಲ್ಲಿ ಯಾರ್ಯಾರದೋ ತಲೆಯೊಡೆದ ತಮ್ಮ ಕುಕೃತ್ಯಗಳ ಮೂಲಕ ತಾವಾಗಿಯೇ ಬಹಿರಂಗ ಮತ್ತು ಅಂತರಂಗಗಳೆರಡನ್ನೂ ಭಯದ ಉಗ್ರಾಣವನ್ನಾಗಿಸಿಕೊಂಡವರ ದುಃಸ್ಥಿತಿಗೆ ಎಷ್ಟೇ ದೃಷ್ಟಾಂತಗಳಿದ್ದರೂ ಉಲ್ಬಣಾವಸ್ಥೆಯ ಕೆಲವು ರೋಗಗಳು ತಿದ್ದಿಕೊಳ್ಳುವುದಿಲ್ಲ; ಗುಣವಾಗುವುದೂ ಇಲ್ಲ. ಆದರೆ ಆರ್ಜಿತ ಕುಕರ್ಮಗಳು ಸರ್ವನಾಶ ಮಾಡದೆ ಹೊರಡುವುದಿಲ್ಲವಲ್ಲ ?

ಪುರಾಣಗರ್ಭದಲ್ಲಿರುವ ನವಗ್ರಹಗಳ ಪ್ರಭುತ್ವದ ಜ್ಯೋತಿಷಶಾಸ್ತ್ರದಲ್ಲಿ - "ಶನಿ ಗ್ರಹವು" ನ್ಯಾಯಾಧೀಶನ ಪಾತ್ರವನ್ನು ನಿರ್ವಹಿಸುತ್ತದೆ. ಸಕಲಗ್ರಹಗಳ ಬಲವು ಸರಸಿಜಾಕ್ಷನೇ ಆದರೂ - ಕರ್ಮಫಲದ ದಿಕ್ಕು ತಪ್ಪಿಸಲಾಗದ - ಬಲಿಷ್ಠ ನವಗ್ರಹಗಳೆಂಬ ಅಂದಿನ ಸರಕಾರೀ ವ್ಯವಸ್ಥೆಯ ಸುವ್ಯವಸ್ಥಿತ ಸಂವಿಧಾನವದು. ಗ್ರಹ ಪ್ರೀತ್ಯರ್ಥವಾಗಿ ಯಾವುದೇ ಜೀವಿಗಳು ನಡೆಸುವ ಹೋಮಹವನಗಳಿಂದ ಪ್ರಭಾವಿತವಾಗಿ ಪಥಭ್ರಷ್ಟವಾಗದಂತಹ ಕರ್ತವ್ಯಪರತೆಯ ನಿದರ್ಶನವದು. ಹೋಮಹವನಗಳೆಲ್ಲವೂ ಪರೋಕ್ಷವಾಗಿ ಮಾನಸಿಕ ಚಿಕಿತ್ಸೆಗಳೇ ಆಗಿವೆ. ಆದ್ದರಿಂದಲೇ - ಸಲ್ಲದ ಕೆಲಸಗಳನ್ನು ಮಾಡದಂತೆ - ಜೀವಿಗಳನ್ನು ಆತ್ಮನಿರೀಕ್ಷಣೆಗೆ ಪ್ರಚೋದಿಸಬಲ್ಲ ದಂಡಶಕ್ತಿಯಾಗಿ ಇಂದಿಗೂ ಮನ್ನಣೆಯನ್ನು ಉಳಿಸಿಕೊಂಡಿದೆ. ತುಪ್ಪದ ಆಸೆಗೆ ಬಲಿಯಾಗದೆ ತಲೆಯೆತ್ತಿ ಕರ್ತವ್ಯಬದ್ಧತೆ ಮೆರೆಯುವ ಗ್ರಹವೈಖರಿಯ ಮಾದರಿಯೇ - ನ್ಯಾಯಪರಿಪಾಲನೆಯ ಶುದ್ಧ ಶೈಲಿ; ಯಾವುದೇ ಲೋಕನಿಂದೆಗೆ ಬೆದರದೆ - ಸಹಜ ಶಿಸ್ತಿನಿಂದ ಕಾರ್ಯೋನ್ಮುಖವಾಗುವ ಪರಿಯಿದು; ನ್ಯಾಯಾಸ್ಥಾನವು "ತಂ ನಮಾಮಿ" ಗೌರವವನ್ನು ಪಡೆಯಬಹುದಾದ ಧೀಮಂತ ರೀತಿಯಿದು. ಸ್ವಾರ್ಥವಿಲ್ಲದ ನಿಷ್ಠೆಯ ಶಿಸ್ತಿಗೆ ಒಳಪಟ್ಟಾಗ ಮಾತ್ರ - ನ್ಯಾಯದ ಅರಿವು ಜಾಗ್ರತವಾಗಿ - ಬದುಕಿನಲ್ಲಿ ಸಜ್ಜನಿಕೆಯು ಒಡಮೂಡೀತು.   

ಕರ್ತವ್ಯ ನಿಷ್ಠರಾಗುವುದು ಮತ್ತು ತಮಗೆ ಎದುರಾಗುವ ಯಾವುದೇ ಆಕಸ್ಮಿಕಗಳನ್ನು ನಿಭಾಯಿಸಿ ಜೀರ್ಣಿಸಿಕೊಳ್ಳುವ ಸತ್ವ ಇರುವುದು - ಅರಿವಿನ ಸಾಕ್ಷಿಯು ಜಾಗ್ರತವಾಗಿರುವಲ್ಲಿ ಮಾತ್ರ. ವಸ್ತುವಿಗಾಗಿ ಹೋರಾಡದೆ ಸಿದ್ಧಾಂತಕ್ಕಾಗಿ ಹೋರಾಡುವ ಮನಸ್ಸುಗಳು ಎಂದಿಗೂ ಸೋಲುವುದಿಲ್ಲ. ಬಲವಾದ ಹೋರಾಟವು ಕೂಡ - ಸಿಡಿದು ನಿಲ್ಲುವ ಮೃದು ಸ್ವಭಾವಕ್ಕೆ ಮಾತ್ರ ಸಾಧ್ಯ. ಇದೇ ಪ್ರಕೃತಿಯ ವಿರೋಧಾಭಾಸ ಮತ್ತು ವೈಶಿಷ್ಟ್ಯ. ಆದ್ದರಿಂದಲೇ ಭಯಮುಕ್ತರಾಗಲು ಅಂತಃಕರಣವನ್ನು ಮೃದುವಾಗಿಸಿಕೊಳ್ಳುವ ಸಾತ್ವಿಕ ಸಾಧನೆಗಳು ನಡೆಯುತ್ತಲೇ ಇರಬೇಕು. ಪ್ರತೀದಿನವೂ ಮನೆಯನ್ನು ಗುಡಿಸಿ ಒರೆಸಿ ಸ್ವಚ್ಛಗೊಳಿಸುವಂತೆ, ಪ್ರತೀದಿನವೂ ಆತ್ಮನಿರೀಕ್ಷಣೆ ನಡೆಸುವುದು ಇಂತಹ ಸಾಧನೆಯ ಮೊದಲ ಹೆಜ್ಜೆ. ಆತ್ಮನಿರೀಕ್ಷಣೆಗೆ ಅಳುಕದ ಸಾಧಕರು ಬದುಕಿಗೂ ಹೆದರುವುದಿಲ್ಲ. ಅವರಿಗೆ ಬದುಕನ್ನು ಚೊಕ್ಕಟವಾಗಿ ಬದುಕುವುದು ಸುಲಭ ಸಾಧ್ಯವಾಗುತ್ತದೆ.

ಹುಚ್ಚು ಮನಸ್ಸಿನ ಬಯಕೆಗಳೆಲ್ಲವೂ ಸಿದ್ಧಿಸುವುದಿಲ್ಲ; ಎಂದೆಂದಿಗೂ ತಳಮಳಿಸುತ್ತಿರುವ ಕೊಡವದು. ಕಾಗೆ ಗುಬ್ಬಿಗಳೇಕೆ ? ಸಿಂಹಗಳೂ - ಬಯಸಿದ್ದೆಲ್ಲವೂ ಸಿಗುವುದಿಲ್ಲ. ನ್ಯಾಯವೂ ಅದಕ್ಕೆ ಹೊರತಲ್ಲ. ಏಕೆಂದರೆ ಬಯಕೆಗಳೆಲ್ಲವೂ ಬಾಹ್ಯ ನಿರೀಕ್ಷೆ ಅಪೇಕ್ಷೆ ಮುಂತಾದ ಹೊರ ಕೇಂದ್ರದಲ್ಲಿ ಸುಳಿದಾಡುವ ವಸ್ತುಗಳಾದುದರಿಂದ ಅವುಗಳ ಪರಿಣಾಮವು ಪರಿಸರದ ವಾಸ್ತವದಂತೆಯೇ ಇರುತ್ತದೆ ಮತ್ತು ನಿರಾಶೆಯಲ್ಲಿಯೇ ಪರಿಸಮಾಪ್ತಿಯಾಗುವುದು ಬಹುತೇಕ ಸಾಮಾನ್ಯ. ಆದರೆ ನಮ್ಮೊಳಗೇ ಇರುವ ಭಕ್ತಿ ಪ್ರೇಮ ಕರುಣೆ ಶ್ರದ್ಧೆ ಪ್ರಾಮಾಣಿಕತೆ ಮುಂತಾದ ಸ್ವಭಾವಜನ್ಯ ಮೌಲ್ಯಗಳನ್ನು ಮನಸೋ ಇಚ್ಛೆ ಸದ್ವಿನಿಯೋಗಿಸುವ ಶಕ್ತಿಯು ಮನುಷ್ಯರಿಗಿದೆ; ಅದರಿಂದಲೇ ನಮ್ಮ ಬಯಕೆಯ ದಿಕ್ಕನ್ನೂ ಬದಲಿಸಿಕೊಳ್ಳಬಹುದು. ನಿರಾಸೆಗೆ ತಳ್ಳದ ಸ್ವಾಂತರಂಗದತ್ತ ಚಿಂತನೆಯನ್ನು ತಿರುಗಿಸಿಕೊಳ್ಳುವುದೇ ಗೊಂದಲಗಳಿಂದ ಶಾಶ್ವತವಾಗಿ ಬಿಡುಗಡೆ ಪಡೆಯಬಹುದಾದ ಮಾರ್ಗ. ಇಂತಹ ಸಾಧನೆಯಲ್ಲಿ ತೊಡಗಿಕೊಂಡಾಗ ಮನುಷ್ಯರ ಚಿಂತನೆ ಮತ್ತು ಕರ್ಮಗಳಲ್ಲಿ ಸ್ಪಷ್ಟತೆ, ದೃಢತೆ ಮೂಡುವುದು ಸಾಧ್ಯ.  

ಈ ಬದುಕಿನಲ್ಲಿ ತನ್ನದು ಎಂದುಕೊಳ್ಳದ ಮತ್ತು ತನ್ನದು ಎಂದುಕೊಳ್ಳುವ ಎಲ್ಲ ದೃಷ್ಟಗಳೂ - ಅದೃಷ್ಟವೇ . ರಥಿಕನು ನಮ್ಮೊಳಗೇ ಇದ್ದಾನೆ ಎಂಬ ವಿಶ್ವಾಸದೊಂದಿಗೆ ಶುದ್ಧಾಂತಃಕರಣದಿಂದ ಅನುಭಾವಿಸಬಲ್ಲವರಿಗೆ ಎಲ್ಲವೂ ಅದೃಷ್ಟದಂತೆಯೇ ಕಾಣತೊಡಗುತ್ತದೆ. ಅದೇ ಸುಖ. ಆಗ ಭಯವೇ ಇರುವುದಿಲ್ಲ. ಭಯವಿಲ್ಲದ ಬದುಕು ಮಾತ್ರ ನೆಮ್ಮದಿಯಿಂದ ಸಾಗಬಲ್ಲದು; ಮರುಳು ಕನಸುಗಳು ಪೀಡಿಸಲಾರವು...

ಭಯದೊಂದಿಗೆ ಪಾಣಿಗ್ರಹಣ ಮಾಡಿಕೊಂಡಿರುವ ವಿದ್ಯೆಯೇ  - ಚೋರವಿದ್ಯೆ. ತನಗೂ ಸುಖವಿಲ್ಲದ ಮತ್ತು ಯಾರಿಗೂ ಸುಖ ಕೊಡದ "ಚುಪ್ಕೇ ಚುಪ್ಕೇ" ದಾಂಪತ್ಯವದು. ಅಂದಿನಿಂದಲೂ - ಅತ್ಯಂತ ಪ್ರಾಚೀನವಾದ ಚೋರವಿದ್ಯೆಯ ಬೆನ್ನಿನ ಹಿಂದಿನಿಂದಲೇ ನ್ಯಾಯದಂಡವು ಓಡುತ್ತ ಬಂದಿದೆ. ಆದ್ದರಿಂದ ಚೋರತನವೇ ಸೃಷ್ಟಿಯ ದಿಕ್ಕುದೆಸೆಗಳನ್ನು ನಿರ್ಧರಿಸುವಂತಾಗಿದೆ !

ಈ ಭೂಮಿಯಲ್ಲಿ ಅಪರೂಪಕ್ಕೊಮ್ಮೆ - ನ್ಯಾಯವೂ ಗೆಲ್ಲುತ್ತದೆ ! ಆಗ -  "ಆಕಸ್ಮಿಕ ಮಧುರ ಅವಘಡ"ದ ಭಾವ ಮೂಡಿಸಿ ಖುಶಿ ಕೊಡುತ್ತದೆ !

ನ್ಯಾಯ ಎಂಬುದು ಪ್ರತಿಯೊಂದು ಬದುಕಿನ ಬಂಡಿಯನ್ನು ದಡ ಸೇರಿಸಬಲ್ಲ ಸುರಕ್ಷಿತ ನಾವೆ. ಯಾವುದೇ ನಾವೆ ಸುರಕ್ಷಿತವಾಗಿದ್ದರೆ ಮಾತ್ರ ಪ್ರಯಾಣಿಕರು ಸುರಕ್ಷಿತ. ಆದ್ದರಿಂದ ನ್ಯಾಯದ ನಾವೆಯಲ್ಲಿ ರಂಧ್ರಗಳಿರಲೇಬಾರದು; ಆಗಾಗ ಅವಲೋಕಿಸಿ ದುರಸ್ತಿ ನಡೆಸುತ್ತ - ನಾವೆಯ ಯೋಗಕ್ಷೇಮವನ್ನು ದೃಢಪಡಿಸಿಕೊಳ್ಳುತ್ತಿರಬೇಕು.

ಭೂಮಿಯ ನ್ಯಾಯಪಾಲನೆಯು ತೃಪ್ತಿಕರವಾಗಿದ್ದರೆ - ಜೀವವೈವಿಧ್ಯಗಳು ನಿರ್ಭಯದಿಂದ ಬದುಕುವ ಅವಕಾಶವಿರುತ್ತದೆ; ಹಿರಿಕಿರಿಮರಿಗಳೆಲ್ಲವೂ ಸಹಬಾಳ್ವೆ ನಡೆಸುವಂತಾಗುತ್ತದೆ. "ನ್ಯಾಯವಾದ ಬದುಕು" ಸಾಗಿಸುವುದೂ ಸುಲಭವಾಗುತ್ತದೆ.

2017 - ಹೊಸವರ್ಷವು "ಎಲ್ಲರೂ ಬದುಕುವಂತಹ ಸುಭಿಕ್ಷ ವ್ಯವಸ್ಥೆ" ಗೆ ಸಾಕ್ಷಿಯಾಗಲಿ.

ಹೊಸ ವರ್ಷದ ಶುಭಾಶಯ.    

                                                     *****-----*****-----*****