Friday, January 29, 2016

ಸರ್ವಾವಸ್ಥೆಯೊಳ್ ಬಾಲ್ಯಾವಸ್ಥೆ ಹರಹರಾ...೧

ಅದು ೧೯೬೦ - ೬೮ ರ ಅವಧಿ. ಆಗ ನಮ್ಮ ಅಪ್ಪಯ್ಯ (ಐರೋಡಿ ಯಜ್ಞನಾರಾಯಣ ಉಡುಪರು) - ಇಂದಿನ ಉಡುಪಿ ಜಿಲ್ಲೆಯ ಕೋಟೇಶ್ವರದ ಬೋರ್ಡ್ ಹೈಸ್ಕೂಲಿನಲ್ಲಿ ಕನ್ನಡ ಅಧ್ಯಾಪಕರಾಗಿದ್ದರು. ಅದು ನಮ್ಮ ಬದುಕಿನ ಸುವರ್ಣ ಕಾಲ. ಆಗ... ನನ್ನ ಪಾಲಿಗೆ - ಬದುಕು ನಡೆಯುತ್ತಿರಲಿಲ್ಲ; ಓಡುತ್ತಿತ್ತು. ಮನೆಯೆಂಬ ಆನಂದದ ದೇವಳದಲ್ಲಿ, ಪರಸ್ಪರ ಪ್ರೀತಿಸುತ್ತ ಕುಟುಂಬವನ್ನು ಅಪ್ಪಿಕೊಂಡು ಏಗುತ್ತಿದ್ದ - ಅಪ್ಪ ಅಮ್ಮ ಎಂಬ ಗರುಡಗಂಬಕ್ಕೆ ಸುತ್ತುತ್ತಿದ್ದ ಸಿದ್ದೆ ಸೇರಿನಂಥ ಮಕ್ಕಳು; ಕೆಟ್ಟದು ಅನ್ನುವಂತಹ ಏನೊಂದೂ ಪರಿಚಯವಿಲ್ಲದ ಸರಳ ಮುಗ್ಧ ಬದುಕು ಮಾತ್ರ - ಅಂದು ನಮ್ಮನ್ನು ಸುತ್ತುತ್ತಿತ್ತು. ಭೂಮಿಯ ಮೇಲಿನ ಕಲ್ಲು ಮಣ್ಣೂ ಆಕರ್ಷಕವಾಗಿ ಕಾಣಿಸುತ್ತಿದ್ದ ಬಾಲ್ಯದ ರಮ್ಯ ಕಾಲ. ಇಂದಿನ ನಮ್ಮ ನಿತ್ಯದ ವೈಭೋಗಗಳನ್ನು ವಾಸ್ತವದಲ್ಲಿ ನೋಡುತ್ತ ಅನುಭವಿಸುತ್ತಿರುವಾಗಲೂ... ಇಂದು ನಾವು ಹಾಗೂ ನಮ್ಮ ಮಕ್ಕಳೂ ಕಳೆದುಕೊಂಡಿರುವ - ಅಂದಿನ ಬಾಲ್ಯಾವಸ್ಥೆಯ ಮನೋಸ್ಥಿತಿಯು ಎಲ್ಲ ವೈಭೋಗಕ್ಕಿಂತ ಅಮೂಲ್ಯ ಮತ್ತು ಅಂದಿನ ದಿನಗಳೇ ಹೆಚ್ಚು ಹಗುರ, ಶಾಂತ, ಸಮೃದ್ಧ, ಆಪ್ಯಾಯಮಾನವೆನ್ನಿಸುತ್ತದೆ.

ಅದು ಅಂದಿನ ಕೋಟೇಶ್ವರ. ಅಂದು ಅಲ್ಲಿ ಎಲ್ಲರೂ ಎಲ್ಲರಿಗೂ ಪರಿಚಿತರೇ. ಬಹುಪಾಲು ಜನರು ಸಭ್ಯ ಸಂಭಾವಿತ ಬದುಕನ್ನು ನಡೆಸುತ್ತಿದ್ದ ಕಾಲವದು. ಎಲ್ಲೋ ಬೆರಳೆಣಿಕೆಯ ಮಂದಿ ಏನಾದರೂ ಮಿತಿ ಮೀರಿದಂತೆ ವರ್ತಿಸಿದರೆ ಅದು ಊರಿನ ಜನರ ಮಾತಿಗೆ ದೊಡ್ಡ ವಿಷಯವಾಗಿ ಅಂತಹ ರಾವಣಪ್ರಾಯರಾದವರಿಗೆ ಮುಜುಗರದ ವಾತಾವರಣವು ಮೂಡಿಬಿಡುತ್ತಿತ್ತು. ಇಂದಿನಂತೆ ವಕ್ರ - - ತುಂಡರಿಗೆಲ್ಲ ಪ್ರಶಸ್ತಿ ಪ್ರದಾನ ಮಾಡಿ ತಪ್ಪುಗಳನ್ನು ವೈಭವೀಕರಿಸುವ ಕೆಟ್ಟ ಸಮಾಜವು ಆಗ ಇರಲಿಲ್ಲ. ಏಕೆಂದರೆ ಕಪಟಿಗಳ ಸಂಖ್ಯೆ ಕಡಿಮೆಯಿತ್ತು. "ಪರ ವಿರೋಧ"ಗಳನ್ನೇ ಉದ್ಯೋಗವಾಗಿಸಿಕೊಂಡ "ಮಾಧ್ಯಮ ತುಂಡರಸ"ರೂ ಇರಲಿಲ್ಲ. ಆದ್ದರಿಂದ ತಪ್ಪುಗಳನ್ನು ಹೊತ್ತು ಮೆರೆಸುವವರೂ ಇರಲಿಲ್ಲ. ಕದ್ದು ಮುಚ್ಚಿ ಮರೆಯಲ್ಲಿಯೇ ಯಾರಾದರೂ ತಪ್ಪು ಮಾಡಬೇಕಿತ್ತೇ ಹೊರತು ಇಂದಿನಂತೆ ರಾಜಾರೋಷಾಗಿ ಮಾಡಲು ಸಾಧ್ಯವೇ ಇರಲಿಲ್ಲ. ಮರ್ಯಾದೆಗೆ ಹೊಸ ವ್ಯಾಖ್ಯೆ ಬರೆಯುವ, ಪಾಶ್ಚಾತ್ಯ ಚಿಂತನೆಗಳನ್ನು ವಾಮಮಾರ್ಗದಲ್ಲಿ ತೂರಿಬಿಡುವ ಇಂದಿನ ಶೈಲಿಯ ವಿಕಾರಗಳಿಗೆ ಆಗ - ಇಂದಿನಂತೆ ಯಾವ ವೇದಿಕೆಯೂ ಇರಲಿಲ್ಲ. ಬದುಕನ್ನು ನೀರಸವಾಗಿಸುವ ಪ್ರಚಾರಪ್ರಿಯ ಹೋರಾಟಗಾರರಾಗಲೀ ಪ್ರತಿಭಟನಾ ಧಂದೆನಿರತರಾಗಲೀ - ಆಗ ಇರಲಿಲ್ಲ. ಕೆಲವೇ ಕಲಾವಿದರು ಮತ್ತು ಬಹು ಸಂಖ್ಯೆಯ ಶ್ರೋತೃಗಳಿದ್ದರು. ಆದ್ದರಿಂದ ಕಲೆ ಮತ್ತು ಕಲಾವಿದರಿಗೆ ವಿಶೇಷ ಮನ್ನಣೆಯಿತ್ತು. ಎಲ್ಲರೂ ಶ್ರದ್ಧೆಯಿಂದ ಅವರವರ ಬದುಕನ್ನು ಮಾತ್ರ ಸವಿಯುತ್ತಿದ್ದರು. ಸಾಮಾನ್ಯ ಜನರ "ಮರ್ಯಾದೆ" ಎಂಬ ವ್ಯಾಖ್ಯೆಗೆ ಅಂದು ವಿಶೇಷ ಮರ್ಯಾದೆಯಿತ್ತು. ಅಂದರೆ ಅಂದಿನ ಕೋಟೇಶ್ವರದ ಜನರೆಲ್ಲರೂ ದೇವತಾಸಂಭೂತರೆಂದು ಅರ್ಥವಲ್ಲ. "ಮನುಷ್ಯ ಪ್ರಾಣಿ"ಗಳು ಎಂಬ ವರ್ಗದಲ್ಲಿರುವ ಎಲ್ಲ ಕೊರತೆ, ದೌರ್ಬಲ್ಯಗಳೂ ಅಲ್ಲಲ್ಲಿ ಇದ್ದವು. ಆದರೆ ಭಯ ಭಕ್ತಿಯಿಂದ - ಪರಸ್ಪರ ಕೊಟ್ಟು ಪಡೆಯುವ, ಕೂಡಿ ಬಾಳುವ, ಕ್ಷಮಿಸಿ ಸ್ವೀಕರಿಸುವ, ಎಲ್ಲರೂ ಬದುಕಲಿ ಎಂಬ ಸಜ್ಜನಿಕೆಯಿಂದ ಬದುಕನ್ನು ಗೌರವಿಸುವ ಸಮಭಾವದ ಸೌಹಾರ್ದವು ಅಲ್ಲಿ ಬರಿಗಣ್ಣಿಗೇ ಕಾಣಿಸುವಂತಿತ್ತು. ಪುಣ್ಯದ ಅರಿವಿತ್ತು; ಪಾಪದ ಎಚ್ಚರವಿತ್ತು. ಮಾನವ ದೌರ್ಬಲ್ಯಜನ್ಯ ಅಪರಾಧಗಳು ಒಮ್ಮೊಮ್ಮೆ ಸಂಭವಿಸುತ್ತಿದ್ದರೂ ಕ್ರೌರ್ಯಜನ್ಯ ಅಪರಾಧಗಳು ಇರಲಿಲ್ಲ. ಅಂದಿನ ಬಹು ಪಾಲು ಹಳ್ಳಿಗಳೂ ಹೀಗೇ ಇದ್ದವು.

ಅಂತಹ ಕೋಟೇಶ್ವರದಲ್ಲಿ ಒಂದು ಹುಲ್ಲಿನ ಕುಟೀರ. ಅದೇ ನಮ್ಮ ಅರಮನೆಯಾಗಿತ್ತು. ಆ ಕುಟೀರದ ಎದುರಿನಲ್ಲೊಂದು ವಿಶಾಲವಾದ ಅಂಗಳ. ಹಿಂಬದಿಯಲ್ಲಿ ಹಿತ್ತಲು. ಮನೆಯ ಎಡಬದಿಯಲ್ಲಿ ದೊಡ್ಡ ಹಾಡಿ. ಸುತ್ತಲೂ ಬಗೆಬಗೆಯ ಮರಗಿಡಗಳು. ಬಾಗಿಲೇ ಇಲ್ಲದ, ಪ್ರಕೃತಿಗೆ ಪೂರ್ತಿಯಾಗಿ ತೆರೆದುಕೊಂಡ ಆ ಸರಳ ಮಂದಿರಕ್ಕೆ - ನಮ್ಮ ಅಪ್ಪಯ್ಯ ಮತ್ತು ಅಮ್ಮನು ತಮ್ಮ ಪ್ರೀತಿಯ ಉಸಿರಿನಿಂದಲೇ ವೈಭವವನ್ನು ತುಂಬಿಸಿದಂತಿತ್ತು. ಅದು ಮನೆಯಲ್ಲ; ಸಂಸಾರ ಪ್ರೀತಿಯ ತಪಸ್ಸು ನಡೆಯುತ್ತಿದ್ದ ಆಶ್ರಮದಂತಿತ್ತು. ಒಂದು ಬೆಂಚು, ಒಂದು ಮೇಜು, ಒಂದು ಕುರ್ಚಿ - ಇಷ್ಟನ್ನು ಬಿಟ್ಟರೆ ಬೇರೆ ಪೀಠೋಪಕರಣಗಳೂ ಆ ಮನೆಯಲ್ಲಿರಲಿಲ್ಲ. ಅವೆಲ್ಲವೂ ಅಪ್ಪಯ್ಯನು ಉಪಯೋಗಿಸುವ ವಸ್ತುಗಳಾಗಿದ್ದವು; ನಮಗೆ ಮಕ್ಕಳಿಗೆಲ್ಲ ಹತ್ತಿ ಹಾರಲು, ಸುತ್ತಲೂ ಓಡಲು ಬಳಕೆಯಾಗುತ್ತಿದ್ದ ವ್ಯವಸ್ಥೆಯಷ್ಟೇ ಆಗಿತ್ತು. ಕಪಾಟುಗಳ ತುಂಬ ರಾಶಿ ರಾಶಿ ಪುಸ್ತಕಗಳಿದ್ದವು. ದುಡ್ಡಿನ ವೈಭವ ಇಲ್ಲದಿದ್ದರೂ ಆ ಮನೆಯಲ್ಲಿ ದಾರಿದ್ರ್ಯ ಇದ್ದಿರಲಿಲ್ಲ. ಅಥವ - ಅಂದು ಅಲ್ಲಿ ವಾಸಿಸುತ್ತಿದ್ದವರ ಮನಸ್ಸಿನಲ್ಲಿ ದಾರಿದ್ರ್ಯವಿರಲಿಲ್ಲ ಅನ್ನಬಹುದು. ನಮ್ಮ ಪಾಲಿಗೆ - ಚೊಕ್ಕ ಸಂಸಾರದ ಚಿಕ್ಕ ವ್ಯಾಖ್ಯೆಯಂತೆ ಕೋಟೇಶ್ವರದ ಆ ನಮ್ಮ ಮನೆಯು ಶಾಂತವಾಗಿ ನಿಂತಿತ್ತು. ನಾವು ಅರಳಿದ್ದೇ ಆ ಮನೆಯ ಅಂಗಳ, ಹಿತ್ತಲಿನಲ್ಲಿ. ನನಗಂತೂ - ಮನೆಯೆಂಬುದು ಊಟ, ನಿದ್ದೆಗೆ ಮಾತ್ರ ಎಂಬಂಥ - ಪ್ರಕೃತಿಯಲ್ಲಿಯೇ ಮಗ್ನವಾಗಿದ್ದ ಚಟುವಟಿಕೆಯ ನನ್ನ ಬದುಕಿನ ಅವಧಿಯದು. ಆಕಾಶವನ್ನು ಮುಟ್ಟುವ ಉತ್ಸಾಹದ ನೆಗೆತ... ಪರಿಮಳದ ಗಾಳಿಯನ್ನು ತಬ್ಬಿಕೊಳ್ಳುವ ನೆಲೆಯಿಲ್ಲದ ಚಾಂಚಲ್ಯ... ಮಳೆಯಲ್ಲಿ ನೆನೆದು ಹಸಿಯಾಗುವ ಲೋಲಕ ಭಾವ... ಮಾಡಿನಿಂದ ಇಳಿಯುವ ನೀರನ್ನು ಬೊಗಸೆಯಲ್ಲಿ ತುಂಬಿಕೊಳ್ಳುವ ರೋಮಾಂಚ ತವಕ... ಮರವನ್ನು ಹತ್ತಿ ಇಳಿದು ತಬ್ಬಿಕೊಂಡು ಗರಗರ ಸುತ್ತುವ, ಹಾರುವ ಚಿಟ್ಟೆಯನ್ನು ಹಿಡಿಯುವ ಆಟ... ಹಸಿಬಾಲ್ಯದ ದೊಂಬರಾಟ.

ಅಂದು ಕೋಟೇಶ್ವರದ ಕೋಟಿಲಿಂಗನ ಮಡಿಲಲ್ಲಿ - ಪ್ರಕೃತಿಯ ತಡಿಯಲ್ಲಿ ವ್ಯಾಪ್ತಿ ಮೀರಿ ವಿಹರಿಸಿದ ಕೋಟಿ ಕೋಟಿ - ತುಂಡು ನೆನಪುಗಳು....

ಅಂದು ಕೋಟೇಶ್ವರದ ಸಿರಿವಂತರೆಂದು ಗುರುತಿಸಿಕೊಂಡಿದ್ದ ಕೆಲವರ ಮನೆಯಲ್ಲಿ ಮಾತ್ರ ಶೌಚಾಲಯವಿತ್ತು. 95% ನಿವಾಸಿಗಳು ಬಯಲು ಶೌಚವನ್ನೇ ಅವಲಂಬಿಸಿದ್ದರು. ಕೆಲವರ ಮನೆಯಲ್ಲಿ - ದೊಡ್ಡ ಹೊಂಡ ತೋಡಿ ಅದಕ್ಕೆ ಅಡ್ಡಲಾಗಿ ಎರಡು ಹಲಗೆಗಳನ್ನಿಟ್ಟು ಆ ಹಲಗೆಯ ಮೇಲೆ ಕೂತು ವಿಸರ್ಜನಾಕ್ರಿಯೆ ನಡೆಸುತ್ತಿದ್ದರು. ಆ "ವಿಸರ್ಗ ಭಾಗ್ಯ ಕ್ಷೇತ್ರ"ದ ಸುತ್ತಲೂ ಮಡಲಿನ ತಟ್ಟಿಯ ತಾತ್ಕಾಲಿಕ ಮರೆ; ಅದಕ್ಕೊಂದು ಲಡ್ಕಾಸು ಬಾಗಿಲೂ ಇರುತ್ತಿತ್ತು. ಆ ಹೊಂಡದಲ್ಲಿ ಸಂಗ್ರಹವಾದ ತ್ಯಾಜ್ಯವನ್ನು ಪ್ರತೀದಿನವೂ ಹೆಡಿಗೆಯಲ್ಲಿ ತುಂಬಿಸಿಕೊಂಡು ದೂರ ಕೊಂಡೊಯ್ಯುವ (ಅ)ವ್ಯವಸ್ಥೆಯು ಕೆಲವು ಊರುಗಳಲ್ಲಿತ್ತು.  ಅಂತಹ ಬಲಿಷ್ಠರ ಅಂತಃ ಕಲ್ಮಷವನ್ನು ಗೋರುವ - ವಿಲೇವಾರಿ ಮಾಡುವ ಕನಿಷ್ಟ ಬಿಲ್ಲೆಗಳು ಒಮ್ಮೊಮ್ಮೆ ಗೈರುಹಾಜರಾದರೆ ಮನೆಮಂದಿಯೆಲ್ಲರೂ ಅದೇ ತ್ಯಾಜ್ಯದ ಪಳೆಯುಳಿಕೆಯ ಗುಡ್ಡೆಯನ್ನು (ಬೇಕಿದ್ದರೆ) ನೋಡುತ್ತ ಆಘ್ರಾಣಿಸುತ್ತ ಮರುದಿನದ ವಿಸರ್ಜನೆಯನ್ನೂ ನಡೆಸಬೇಕಿತ್ತು. ಈ ಯಾತನಾಮಯ ವ್ಯವಸ್ಥೆಗಿಂತ ಬಯಲು ಶೌಚವೇ ಒಳ್ಳೆಯದು ಅಂತ ನನಗೆ ಅಂದು ಗಾಢವಾಗಿ ಅನ್ನಿಸಿದ್ದಿದೆ. ಅಂತಹ ಭಾಗ್ಯವಂತ ಮನೆಗಳಲ್ಲಿ ಉಳಿದುಕೊಳ್ಳುವ ಸಂದರ್ಭ ಬಂದರೆ ನಾನು ತಪ್ಪಿಸಿಕೊಳ್ಳುತ್ತಿದ್ದುದೂ ನನಗೆ ನೆನಪಿದೆ. ಕೆಲವೊಮ್ಮೆ ಊಟ ತಿಂಡಿಯನ್ನೂ ಬಿಟ್ಟು ಉಪವಾಸದಲ್ಲಿದ್ದು ಅಂತಹ ಸಂದರ್ಭಗಳನ್ನು ವೇದನೆಯಿಂದ ನಿಭಾಯಿಸಿದ್ದೂ ಇದೆ. ಕುಂಬ್ಳೆ ಬದಿಯಡ್ಕದ ಸಮೀಪದ  (ಕೇರಳದ ಕಾಸರಗೋಡು) "ನೂಜಿ" ಮನೆಯ ಶ್ರೀ ದಾಮೋದರ ಭಟ್ ಅವರೊಂದಿಗೆ ನನ್ನ ಮದುವೆ ನಿಶ್ಚಯವಾಗುವ ಮೊದಲು (1978) ನಾನು ಅವರನ್ನು ಕೇಳಿದ್ದು "ಶೌಚಾಲಯ ಇದೆಯಾ ?" ಎಂಬ ಒಂದೇ ಪ್ರಶ್ನೆ. ಅದು ನನ್ನ ಬೇಡಿಕೆಯೂ ಆದ್ದರಿಂದ ಮದುವೆಗಿಂತ ಮೊದಲು ನನ್ನ ಗಂಡನ ಮನೆಯಲ್ಲಿ ಶೌಚಾಲಯವು ನಿರ್ಮಾಣವಾಯಿತು. ಇವೆಲ್ಲವೂ ಅನಂತರದ ಕತೆ. ಆದರೆ ಬಾಲ್ಯದಲ್ಲಿ ಥೇಟು ಮರಕೋತಿಯಾಗಿದ್ದ ನಾನು - ಮರ ಗಿಡಗಳಿಂದ ತುಂಬಿದ ಹಾಡಿಗಳಲ್ಲಿ ನನ್ನಷ್ಟಕ್ಕೇ ಸಂವಹನ ನಡೆಸಿದ್ದು, ಒಮ್ಮೊಮ್ಮೆ ಜೊತೆಯಲ್ಲಿದ್ದ ಮಕ್ಕಳ ಟೀಮಿನೊಂದಿಗೆ ನಡೆಸಿದ ಸಮೂಹ ಪಾರುಪತ್ಯವು ಅಷ್ಟಿಷ್ಟಲ್ಲ.

ಬಾಲ್ಯದಲ್ಲಿ ನನ್ನಲ್ಲಿ ಸ್ವಾತಂತ್ರ್ಯದ ಭಾವವನ್ನು ತುಂಬುತ್ತಿದ್ದ ನಮ್ಮೂರಿನ ಹಾಡಿಗಳು ಅಂದು ನನಗೆ ಜೀವನ ದರ್ಶನವನ್ನೂ ಮಾಡಿಸಿದ್ದವು. ತುಂಬ ದುಃಖವಾದಾಗ ಹಾಡಿಯಲ್ಲಿ ಅತ್ತು ಹಗುರಾಗುತ್ತಿದ್ದವರನ್ನು ಹಾಡಿ ಸಂಚಾರದ ವೇಳೆಯಲ್ಲಿ ನಾನು ನೋಡಿದ್ದೇನೆ. ಕೂಡುಕುಟುಂಬಗಳೇ ಅಧಿಕವಾಗಿದ್ದ ಆ ಕಾಲದಲ್ಲಿ ಮನೆಯಲ್ಲಿ ಮನಬಿಚ್ಚಿ ಅಳುವುದಕ್ಕೂ ಅವಕಾಶವಿರಲಿಲ್ಲ. ಅಂತಹ ದುಗುಡಗಳಿಗೆಲ್ಲ ಅಂದಿನ ಹಾಡಿಗಳು ಮೂಕಸಾಕ್ಷಿಯಾಗಿದ್ದವು. ಕದ್ದು ಮುಚ್ಚಿ ನಡೆಸುವ ಕೆಲಸಗಳಿಗೆಲ್ಲ ಊರಿನ ಬಗೆಬಗೆಯ ಹಾಡಿಗಳ ಬೆಂಬಲವಿರುತ್ತಿತ್ತು. ವಿಜಾತಿಯ ಶಾಲಾಸ್ನೇಹಿತೆಯರು ಬಂದರೆ ಹಾಡಿಯ ಮೂಲೆಯಲ್ಲಿ ನಿಂತು ಮಾತನಾಡಿ ಕಳಿಸುತ್ತಿದ್ದವರಿದ್ದರು. ಬಡತನವು ವ್ಯಾಪಕವಾಗಿದ್ದ ಆ ಕಾಲದಲ್ಲಿ ಉರುವಲಿಗಾಗಿ ಇನ್ನೊಬ್ಬರ ಮನೆಯ ಹಾಡಿಯ ದರಲೆ, ರೆಂಬೆಕೊಂಬೆಗಳನ್ನೆಲ್ಲ ಕಡಿದು ಹೊತ್ತೊಯ್ಯುವವರೂ ಇದ್ದರು; ಅಕಸ್ಮಾತ್ ಸಿಕ್ಕಿ ಬಿದ್ದರೆ ಊರು ಒಂದಾಗುವಂತಹ ರಂಪ ರಾಮಾಯಣವಾಗುವುದೂ ಇತ್ತು. ಅಂತೂ ಅಂದಿನ ಬದುಕುಗಳನ್ನು ನಿರ್ದೇಶಿಸುವ, ಒಮ್ಮೊಮ್ಮೆ ಎಕ್ಕುಟ್ಟಿಸುವ - ಕಟ್ಟುವ, ಒಡೆಯುವ ಎಲ್ಲ ಬಗೆಯ ಕ್ರಿಯೆಗಳಿಗೂ ಹಾಡಿಗಳು ಆಶ್ರಯ ಸ್ಥಾನವಾಗಿದ್ದವು.     

ನಮ್ಮ ಕೋಟೇಶ್ವರದ ಮನೆಯ ಪಕ್ಕದ ವಿಶಾಲವಾದ ಹಾಡಿಯು ಅಂದು ನಮಗೆಲ್ಲ ಶೌಚಾಲಯವಾಗಿತ್ತು. ಪುಟ್ಟ ಮಕ್ಕಳು "ನಾನು ಹಾಡಿಗೆ ಹೋಗ್ತೇನೆ...ಚಾಚಿ ಮಾಡಿ ಬರ್ತೇನೆ.." ಅಂತ ದಿನವೂ Announce ಮಾಡಿ ಹೋಗುತ್ತಿದ್ದರು. "ತುಂಬ ದೂರ ಹೋಗ್ಬೇಡ.." ಅಂತ ಎಚ್ಚರಿಸಿಯೇ ಅಮ್ಮಂದಿರು ಕಳಿಸುತ್ತಿದ್ದರು. ಅನಂತರ, ತುಂಬ ಹೊತ್ತು ಮಕ್ಕಳ ಸದ್ದಿಲ್ಲದಿದ್ದರೆ ಅವರನ್ನು ಹುಡುಕಿಕೊಂಡು ಹಾಡಿಗೇ ಬರುತ್ತಿದ್ದರು. ಕೈಯಲ್ಲಿ ಚೆಂಬನ್ನು ಹಿಡಿದುಕೊಂಡು ಹೋಗಿ ಹಾಡಿಯಲ್ಲೇ ಶುಚಿಯಾಗಿ ಬರಲು ಆಗದ ಪುಟ್ಟ ಮಕ್ಕಳು ಹಾಡಿಯಿಂದ ಮನೆಯವರೆಗೆ ಅಂಗಿ ಬಗರಿ ಹಿಡಿದುಕೊಂಡು ಮನೆಯಂಗಳದಲ್ಲಿ ನಿಂತು "ಅಮ್ಮಾ, ನಾ ಬಂದೆ.." ಅಂತ Annonce ಮಾಡುತ್ತಿದ್ದರು. ತಕ್ಷಣವೇ ತನ್ನ ಕೆಲಸ ಬಿಟ್ಟು ಓಡಿ ಬರುತ್ತಿದ್ದ ಅಮ್ಮ, ಬಾವಿ ಕಟ್ಟೆಯಲ್ಲಿ ಅವರನ್ನು ಕೂಡಿಸಿ ನೀರು ಹೊಯ್ದು ಸ್ವಚ್ಛಗೊಳಿಸಿ ಬಿಡುತ್ತಿದ್ದಳು.

ಸುಮಾರು ಒಂದೇ ವಯಸ್ಸಿನ ಪುಟ್ಟ ಮಕ್ಕಳಿದ್ದರೆ ಅವರೆಲ್ಲರೂ ಒಟ್ಟಿಗೆ ಹಾಡಿಗೆ ಹೋಗಿ ಮಜವಾಗಿ ಮಾತಾಡುತ್ತ ಶೌಚಕ್ರಿಯೆಯನ್ನು ನಡೆಸುತ್ತಿದ್ದುದೂ ಇತ್ತು; ಕೆಲವೊಮ್ಮೆ ಅಲ್ಲೇ ಜಗಳ ಶುರುವಾಗಿ ಅಂತಹ ವಾಗ್ಯುದ್ಧವು ದೃಷ್ಟಿ ಯುದ್ಧವಾಗಿ ಮುಷ್ಟಾಮುಷ್ಟಿಯಾಗಿ ಒಬ್ಬರನ್ನೊಬ್ಬರು ಹರಪಿ ಕಚ್ಚುವ ವರೆಗೂ ಹೋಗುತ್ತಿತ್ತು. ಸುಮಾರು ಏಳರಿಂದ ಹತ್ತು ವರ್ಷದ ಒಳಗಿನ ಮಕ್ಕಳ ಕತೆಯಿದು. ಶಾಲೆಗೆ ಎಪ್ರಿಲ್ ಮೇ ತಿಂಗಳ ದೊಡ್ಡ ರಜೆ ಬಂತೆಂದರೆ ಮನೆಗಳಲ್ಲಿ ಮಕ್ಕಳದೇ ಗೋಂಗುಲ್ಲು. ಆ ದಿನಗಳಲ್ಲಿ, ಬಂಧುಗಳ ಮಕ್ಕಳೆಲ್ಲರೂ ತಮ್ಮ ಅಥವ ಅವರಿವರ ಮನೆಯಲ್ಲಿ ಒಟ್ಟುಗೂಡುವುದು ಸಾಮಾನ್ಯವಾಗಿತ್ತು. ನನ್ನ ಅಪ್ಪಯ್ಯನ ತಮ್ಮನಾದ ದಿ. ಆನಂದರಾಮ ಉಡುಪರ ಮಕ್ಕಳು ಆಗ ನಮ್ಮ ಮನೆಗೆ ಬಂದು ಉಳಿಯುತ್ತಿದ್ದುದಿತ್ತು. ಆ ಮಕ್ಕಳು ಎಷ್ಟು "ಒಳ್ಳೆಯ" ಮಕ್ಕಳಾಗಿದ್ದರೆಂದರೆ...ಅಂದು ನನಗೆ ... ಬರೇ "ಸಪ್ಪೆ ಸಂಕ್ರಾಂತಿ" ಅನ್ನಿಸುವಷ್ಟು, ಅಸಹನೀಯವೆನಿಸುವಷ್ಟು ಅವರು ಒಳ್ಳೆಯವರಾಗಿದ್ದರು. ಅವರ ಅಮ್ಮ ನಮಗೆಲ್ಲ ದೊಡ್ಡ ಚಿಕ್ಕಿ ಆಗಿದ್ದರು. (ನಾವು ಅವರನ್ನು "ದೊಡ್ಡ ಚಿಕ್ಕಿ" ಅನ್ನುತ್ತಿದ್ದೆವು. ಅಪ್ಪಯ್ಯನ ಇನ್ನೊಬ್ಬರು ಚಿಕ್ಕ ತಮ್ಮ...ದಿ. ರಾಮಚಂದ್ರ ಉಡುಪರ ಪತ್ನಿಯು ನಮ್ಮ "ಸಣ್ಣ ಚಿಕ್ಕಿ"....) ಈ ದೊಡ್ಡ ಚಿಕ್ಕಿಯು "ಇಲ್ಲಿ ಕೂತಿರು..." ಅಂತ ತನ್ನ ಮಗನಿಗೆ ಹೇಳಿದರೆ ಮತ್ತೊಮ್ಮೆ ಅವರೇ ಬಂದು "ಏಳು..ಆಡಿಕೋ..ಹೋಗು" ಅನ್ನುವವರೆಗೂ ಆ ಮಕ್ಕಳು ಕೂತಲ್ಲಿಂದ ಅಲುಗದೆ ಪಿತೃವಾಕ್ಯ ಮಾತೃವಾಕ್ಯ ಪರಿಪಾಲನೆ ಮಾಡುತ್ತಿದ್ದರು. ನಾನು ಅವರನ್ನು ಬನ್ನಿರೋ ಅಂತ ಕರೆದರೂ ಅವರು ಕೂತಲ್ಲಿಂದ ಏಳುತ್ತಿರಲಿಲ್ಲ. ಆ ದಿನಗಳಲ್ಲಿ "ಭಯಂಕರ" ಕಿಲಾಡಿಯಾಗಿದ್ದ ನನಗೆ "ಇದೊಳ್ಳೆ ವಿಚಿತ್ರ" ಅನ್ನಿಸಿದ್ದೂ ಇತ್ತು. "ಬರೇ ಪಾಪ"ದ ಆ ಮಕ್ಕಳ ಸಂಚಿತ "ಪಾಪ"ವನ್ನು ಕೀಟಲೆಯ ಕಾಟದಿಂದ ಹರಿದು ತೆಗೆಯಲು - ನಮ್ಮಲ್ಲಿ ಕೆಲವರು ಪ್ರಯತ್ನಿಸಿದ್ದೂ ಇತ್ತು.

ಆದರೆ ಆಗ, ನಮ್ಮ ಮನೆಯಲ್ಲಿ ಅಮ್ಮನ ವ್ಯಾಪ್ತಿ ಪ್ರದೇಶದಲ್ಲಿ ಯಾವುದೇ ಅಧಿಕಪ್ರಸಂಗ ಮಾಡಲು ಆಗುತ್ತಿರಲಿಲ್ಲ. ಅಮ್ಮನ ಭಯವಿತ್ತು. ಅಮ್ಮನ ಪೆಟ್ಟಿನ ಭಯವಲ್ಲ. ಅವಳ ಉಪದೇಶ ಮಿಶ್ರಿತ ವಾಗ್ದಂಡನೆಯ ದೀರ್ಘ ವಾಗ್ಸಿಂಚನವು ಆಗ ನನಗೆ ತುಂಬ ಕಿರಿಕಿರಿ ಅನ್ನಿಸುತ್ತಿತ್ತು. ಆದ್ದರಿಂದ ಅಮ್ಮನಿಂದ ಕಣ್ಮರೆಯಾಗಿದ್ದುಕೊಂಡೇ ನಮ್ಮ ಸೃಜನಶೀಲ ಕೆಲಸಗಳು ನಡೆಯುತ್ತಿದ್ದವು.

ಹೀಗಿರುವಾಗ ಎಂದಿನಂತೆ ಒಂದು ದಿನ ಬೆಳಿಗ್ಗೆ ನಾವೆಲ್ಲರೂ ಒಟ್ಟಿಗೆ ಹಾಡಿಗೆ ಹೊರಟೆವು. ನಾನು, ನನ್ನ ತಂಗಿ, ದೊಡ್ಡ ಚಿಕ್ಕಿಯ ಮೂರು ಮಕ್ಕಳು...ಒಟ್ಟಿಗೆ ಐದು ಜನ ಹಾಡಿಗೆ ಹೋಗಿ ಸ್ವಲ್ಪ ಸ್ವಲ್ಪ ದೂರದಲ್ಲಿ ಕೂತು ಮಾತಾಡುತ್ತ ಶೌಚ ಕ್ರಿಯೆ ಮುಗಿಸಿದೆವು. ಆಗ ನನಗೆ ಗೊತ್ತಿದ್ದರೂ - ನಾನು ಅವರಲ್ಲಿ ಒಬ್ಬೊಬ್ಬರನ್ನೇ "ನಿನ್ನ ಹೆಸರೇನು? ನಿನ್ನ ಹೆಸರೇನು?" ಅಂತ ಕೇಳಿದೆ. ನನಗೆ ಗೊತ್ತಿದೆ ಎಂಬುದು ತಿಳಿದಿದ್ದರೂ ಅವರೆಲ್ಲರೂ ವಿಧೇಯತೆಯಿಂದ "ಶ್ರೀಧರ, ವಿದ್ಯಾಧರ, ಶಶಿಧರ..." ಅಂತ ವಿಧೇಯತೆಯಿಂದ ಉತ್ತರ ಕೊಟ್ಟರು. ಆಗ ನಾನು "ಆಮೇಲೆ?" ಅಂದೆ. "ಶ್ರೀಧರ ಉಡುಪ, ವಿದ್ಯಾಧರ ಉಡುಪ, ಶಶಿಧರ ಉಡುಪ.." ಅಂತ ಉಡುಪನನ್ನು ಹೆಸರಿಗೆ ಜೋಡಿಸಿದರು. ನಾನು ನಗುತ್ತ - ಪಕ್ಕದಲ್ಲೇ ಇದ್ದ ಒಂದು ಸಣ್ಣ ಕಲ್ಲನ್ನು ಅವರತ್ತ ಒಗೆದು - "ಆಮೇಲೆ" ಅಂದೆ. ಅವರು ಅಷ್ಟೇ ವಿಧೇಯತೆಯಿಂದ "ಅಷ್ಟೆ... ಅಷ್ಟೇ ಹೆಸರು.." ಅಂದರು. ಆ ಹುಡುಗರ ಮುಖದಲ್ಲಿ ಯಾವುದೇ ಒಂದು ನಗುವಿಲ್ಲ; ಕಿಲಾಡಿತನವಿಲ್ಲ; ಚೇಷ್ಟೆಯಿಲ್ಲ. ಪ್ರಶ್ನೆಗೆ ಗಂಭೀರವಾಗಿ ನಿರ್ಭಾವದಿಂದ ಉತ್ತರ ನೀಡುತ್ತಿದ್ದರು. ಆಗ ನನ್ನ ಮುಖಭಾವವನ್ನು ಕಂಡ ನನ್ನ ತಂಗಿಗೆ ಏನೋ ಕಿತಾಪತಿಯ ವಾಸನೆ ಬಡಿದು "ಬಾ...ಮನೆಗೆ ಹೋಗುವ...ಬಾ" ಅಂತ ನನ್ನನ್ನು ಎಳೆಯತೊಡಗಿದಳು. "ಶ್ರೀಧರ, ವಿದ್ಯಾಧರ, ಶಶಿಧರ, ದರದರ, ದುರುದುರು, ದರ ದರ, ದುರು ದುರು..ಬುರ್ರ್" ಅನ್ನುತ್ತ ಅವರತ್ತ ಕೈ ತೋರಿಸುತ್ತ ಅಂಗಳಕ್ಕೆ ಓಡಿ ಬಂದ ನಾನು, ಸ್ವಚ್ಛಗೊಳಿಸಲು ಕಾಯುತ್ತಿದ್ದ ಅಮ್ಮನಿಗೆ ನನ್ನನ್ನು ಒಪ್ಪಿಸಿಕೊಂಡೆ. ನನ್ನ ಹಿಂದಿನಿಂದಲೇ ಬಂದ ಆ ಸೋದರರನ್ನು ಮತ್ತೊಮ್ಮೆ ನೋಡುತ್ತ "ದರದರ...ದುರುದುರು.." ಅನ್ನುತ್ತಲೇ ಮನೆಯ ಒಳಗೆ ಓಡಿದ ನನ್ನನ್ನು ದೊಡ್ಡ ಚಿಕ್ಕಿ ಕರೆದರು. "ಎಂತ ಹೆಣೆ, ದರದರ, ದುರು ದುರು...?" ಅಂದರು. ತಮ್ಮ ಎಂದಿನ ಕಿಲಾಡಿ ನಗು ನಗುತ್ತಿದ್ದ ಅವರಿಗೆ ಏನೂ ಉತ್ತರಿಸದೆ - ನಾನು ನಗುತ್ತ ಅಲ್ಲಿಂದ ಓಡಿದೆ. ಅಷ್ಟರಲ್ಲಿ ಮಕ್ಕಳನ್ನೆಲ್ಲ ಸ್ವಚ್ಛಗೊಳಿಸಿದ ನನ್ನ ಅಮ್ಮ ಮನೆಯೊಳಗೆ ಬರುತ್ತ "ನಿಮ್ಮನ್ ಹುಡುಕ್ತಾ ನಾನೀಗ ಹಾಡಿಗೆ ಹೊರಟಿದ್ದೆ ಗೊತ್ತಾ ? ಅಲ್ಲೂ ಆಟ ಆಡ್ತಾ ಕೂತ್ರ್ಯಾ ? ಹೋದ್ ಕೆಲಸ ಮಾಡ್ಕಂಡ್ ರಪ್ಪ ಬಪ್ಪಕಾತ್ತಿಲ್ಯಾ ? ನೀವ್ ಹೋಯ್ ಎಷ್ಟು ಹೊತ್ತಾಯ್ತು ? ಅಲ್ಲಿ ಎಂತ ಮಾಡ್ತ್ರೀ ? ಚಪ್ ಹೆಕ್ತ್ರ್ಯಾ? ಎಂತಕ್ ಹೋದ್ರೂ ಸಾಬೀತಲ್ಲ್ ಮುಗಿಯುದಂತಿಲ್ಲೆ. ಎಂತಕ್ಹೋದ್ರೂ ರಗಳೆಯೇ..." ಅಂತ ಗೊಣಗುತ್ತ, ಸಿಡಿಸಿಡಿ ಅನ್ನುತ್ತ ಅಮ್ಮ ತನ್ನ ಕೆಲಸಕ್ಕೆ ಹೋದಳು. ಆಗ "ಅಯ್ಯೋ...ಹೋಗ್ಲಿ ಅಕ್ಕ; ಮಕ್ಕಳಂದ್ರೆ ಹಾಗೇ. ಮಕ್ಕಳ ನಗೆಚಾಟಿಕೆ ಇದ್ದದ್ದೇ..." ಅನ್ನುತ್ತ ದೊಡ್ಡ ಚಿಕ್ಕಿ ತನ್ನ ಎಂದಿನ ಕಿಲಾಡಿ ನಗು ಬೀರಿದಳು. ಆದರೆ ಇದೇ ನಮ್ಮ ದೊಡ್ಡ ಚಿಕ್ಕಿಗೆ ಅನಂತರ ಹುಟ್ಟಿದ ಮಕ್ಕಳಿಗೆ "ಧರ ಧರ ಧರ" ಎಂಬ ಅಂತ್ಯಪ್ರಾಸದ ಹೆಸರು ನಿಂತೇ ಹೋಯಿತು. ಆ ಮಕ್ಕಳೆಲ್ಲರೂ ಅನಂತರ ಒಳ್ಳೆಯ ವಿದ್ಯಾವಂತರಾಗಿ ಈಗಲೂ ನಿರುಪದ್ರವಿ ಜೀವನ ನಡೆಸುತ್ತಿದ್ದಾರೆ. ಅವರ ಸ್ವಭಾವ ಮತ್ತು ನೈಜಶಕ್ತಿಯಾದ ವಿನಯ ಮತ್ತು ಸಹನೆಯಿಂದಲೇ ಅವರೆಲ್ಲರೂ ತಂತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಸಂಯಮ ಮತ್ತು ತೃಪ್ತಿಯಿಂದ - ಬಂದ ಬದುಕನ್ನು ಬಂದಂತೆಯೇ ಸ್ವೀಕರಿಸಿದ್ದಾರೆ.

ರಜೆಗೆ ಅಜ್ಜನ ಮನೆಗೆ ಹೋಗುವ ಉತ್ಸಾಹ ನನಗಿದ್ದಷ್ಟು ನಮ್ಮ ಮನೆಯಲ್ಲಿ ಬೇರೆ ಯಾರಿಗೂ ಇರಲಿಲ್ಲ. ಬಿಸಿಲಲ್ಲಿ ಸೊಕ್ಕುವುದು ಅಂದಿನ ನನ್ನ ಇಷ್ಟದ ಕೆಲಸವಾಗಿತ್ತು. ಒಂದು ಬೇಸಿಗೆಯ ರಜದಲ್ಲಿ ಸಾಲಿಗ್ರಾಮದಲ್ಲಿದ್ದ ದೊಡ್ಡಪ್ಪಯ್ಯನ (ಅಪ್ಪಯ್ಯನ ಅಣ್ಣ ದಿ. ಕೃಷ್ಣ ಉಡುಪರು) ಮನೆಯಲ್ಲಿ ಒಂದು ವಾರ.....ಅನಂತರ ಅಜ್ಜನ ಮನೆ ಐರೋಡಿ (ಅಮ್ಮನ ತಂದೆಯ ಮನೆ) ಯಲ್ಲಿ ಒಂದು ವಾರ ಅಂತ 15 ದಿನದ ತಿರುಗಾಟಕ್ಕೆ - ಆಗ ನಾನು ತಯಾರಾಗಿದ್ದೆ. ಅಪ್ಪಯ್ಯನಿಗಾಗಲೀ ಅಮ್ಮನಿಗಾಗಲೀ ನನ್ನ ಈ ದೀರ್ಘ ತಿರುಗಾಟವು ಇಷ್ಟವಿರಲಿಲ್ಲ. "ಒಟ್ಟು ನಾಲ್ಕು ದಿನ ಸಾಕು. ಎಲ್ಲೆಲ್ಲಿಗೋ ಹೋಗಿ ಯಾಕೆ ಇರಬೇಕು ? ನೀನು ನಮ್ಮ ತಲೆ ಕೆಡಿಸಿದರೆ ಸಾಕು. ಅವರಿಗೂ ಯಾಕೆ ತೊಂದರೆ..." ಅಂತ ಏನೇನು ಹೇಳಿದರೂ ನನಗೆ ನನ್ನದೇ ಹಠ. ಕೊನೆಗೆ ನನ್ನನ್ನು ಕನ್ನಡಿ ಬಾಗಿಲಿನ CPC ಬಸ್ಸಿನಲ್ಲಿ ಕೂರಿಸಿ, ನನ್ನನ್ನು ಸಾಲಿಗ್ರಾಮದ ಮನೆಯ ಎದುರಿನಲ್ಲೇ ಇಳಿಸುವಂತೆ ಪರಿಚಿತ ಕಂಡಕ್ಟರನಿಗೆ ಹೇಳಿ - ಕಳಿಸಿಕೊಟ್ಟರು. ಎಲ್ಲ ಬಸ್ಸುಗಳಿಗೂ ಟರ್ಪಾಲಿನ ವ್ಯವಸ್ಥೆಯಿದ್ದ ಆ ಕಾಲದಲ್ಲಿ - CPC ಬಸ್ಸಿನಲ್ಲಿ ಮಾತ್ರ - ಮೊತ್ತಮೊದಲಿಗೆ ಗಾಜಿನ ತಡೆ ಹಾಕಿ ಕಿಟಕಿ ಬಾಗಿಲುಗಳನ್ನು ಸಿಂಗರಿಸಿದ್ದರು. ಆ CPC ಬಸ್ಸಿನಲ್ಲಿ ಪ್ರಯಾಣ ಮಾಡುವುದೇ ದೊಡ್ಡ ಸಾಧನೆ ಎಂದು ನಾನು ಭಾವಿಸಿದ್ದ ಕಾಲವದು. ಮನುಷ್ಯರು ಕೈ ಅಡ್ಡ ಹಾಕಿದಲ್ಲೆಲ್ಲ ಅಂದಿನ  ಬಸ್ಸುಗಳು ನಿಲ್ಲುತ್ತಿದ್ದವು. ನಿಂತು ನಿಂತು -  ಜನರನ್ನು ಕರೆಕರೆದು ಹತ್ತಿಸಿಕೊಳ್ಳುತ್ತಿದ್ದವು. ಜನರಿಗೆ ಇಳಿಯಬೇಕಾದ ಸ್ಥಳದಲ್ಲಿ ಅಲ್ಲಲ್ಲಿ  ಬಸ್ಸನ್ನು ನಿಲ್ಲಿಸಿ ಜನರನ್ನು ಇಳಿಸುತ್ತಿದ್ದರು. ಒಟ್ಟಿನಲ್ಲಿ ಸಾರಿಗೆ ಎಂಬುದು ನಿಜವಾದ ಅರ್ಥದಲ್ಲಿ ಸೇವೆಯೇ ಆಗಿತ್ತು. ಕೋಟೇಶ್ವರದ ನಮ್ಮ ಮನೆಯ ಇದಿರಿನಲ್ಲಿಯೇ ಬಸ್ ಹತ್ತಿದ್ದ ನನ್ನನ್ನು ಸಾಲಿಗ್ರಾಮದ ದೊಡ್ಡಪ್ಪಯ್ಯನ ಮನೆಯ ಎದುರಿನಲ್ಲಿ (ಇಂದಿನ Divine Park) ಇಳಿಸಿದ ಕಂಡಕ್ಟರ್ರು ನನ್ನ ಕೈ ಹಿಡಿದುಕೊಂಡು ಮನೆಯ ಒಳಗೆ ಕರೆತಂದು ನನ್ನನ್ನೂ ನನ್ನ ಎರಡು ಅಂಗಿಗಳಿದ್ದ ಪುಟ್ಟ ಚೀಲವನ್ನೂ ದೊಡ್ಡಮ್ಮನ ವಶಕ್ಕೆ ಒಪ್ಪಿಸಿ ಹೊರಟು ಹೋಗಿದ್ದರು ! (ಆ ಬಸ್ಸು ಉಡುಪಿಯವರೆಗೆ ಹೋಗಿ ಮತ್ತೆ ಕುಂದಾಪುರಕ್ಕೆ ಹೋಗುವಾಗ ಕೋಟೇಶ್ವರದ ನಮ್ಮ ಮನೆಯೆದುರಿನಲ್ಲಿ ಇಳಿದು "ನಿಮ್ಮ ಮಗಳನ್ನು ಸಾಲಿಗ್ರಾಮ ತಲುಪಿಸಿದ್ದೇನೆ.." ಅಂತ ಆ ಕಂಡಕ್ಟರ್ರು ಹೇಳಿ ಹೋಗಿದ್ದರಂತೆ !) ಅಂದು ನನ್ನನ್ನು ಮನೆಯಲ್ಲಿಳಿಸಿ ಹೊರಟ ಆ ಕಂಡಕ್ಟರ್ ರ ಹಿಂದೇ ಓಡಿದ್ದ ನಾನು "ರೈಟ್ ರೈಟ್" ಅನ್ನುತ್ತ ಕಂಡಕ್ಟರ್ರು ಬಸ್ ಹತ್ತುವುದನ್ನು ನೋಡಿಕೊಂಡು ಒಳಗೆ ಬಂದಿದ್ದೆ. ಎಲ್ಲ ಮಕ್ಕಳಂತೆ - ಡ್ರೈವರ್ ಕಂಡಕ್ಟರ್ ಅಂತಹ ಸ್ಥಾನ ಮಾನ ಯಾರಿಗೂ ಎಲ್ಲೂ ಇಲ್ಲ ಎಂಬ ಭಾವನೆಯಿದ್ದ ನಾನು ಅಂದು ಅವರನ್ನೆಲ್ಲ ಆರಾಧಿಸುತ್ತಿದ್ದೆ.

ಕಂಡಕ್ಟರನ್ನು ಕಳಿಸಿಕೊಟ್ಟು ಹಿಂದಿರುಗುವಾಗ ಬಾಗಿಲಲ್ಲಿಯೇ ನನ್ನನ್ನು ಕಾಯುತ್ತಿದ್ದ ದೊಡ್ಡಮ್ಮ "ಬಂದ್ಯಾ ? ರಜೆ ಶುರುವಾಯ್ತಾ ಮಗೀಗೆ ?  "ಬಿದ್ದಿಗೆ" ಬಂದ ಮಗುವಿಗೆ ಎಂತ ತಿಂಡಿ ಮಾಡುದೀಗ ? ಕಾರದಕಡ್ಡಿ ಮಾಡುದಾ?" ಅನ್ನುತ್ತ ನನ್ನನ್ನು ಎತ್ತಿಕೊಳ್ಳುತ್ತಿದ್ದರು. ದೊಡ್ಡಮ್ಮನನ್ನು ನಾನು ಅಮ್ಮಯ್ಯ ಅನ್ನುತ್ತಿದ್ದೆ... ಯಾವಾಗಲೂ ಸ್ವಚ್ಛವಾಗಿರುತ್ತಿದ್ದ ನನ್ನ ಅಮ್ಮಯ್ಯನಿಗೆ ನನಗೆ ಹಿತವೆನಿಸುತ್ತಿದ್ದ ಒಂದು ವಿಶೇಷ ಪರಿಮಳವಿತ್ತು. ನನಗೆ ಬಾಳೆಹಣ್ಣು, ಕಲ್ಲುಸಕ್ಕರೆ ಕೊಟ್ಟು ಅವರು ಖುಶಿ ಪಡಿಸುತ್ತಿದ್ದರು. ಅಡುಗೆ ಕೋಣೆಯಲ್ಲಿಯೇ ನನ್ನನ್ನು ಕೂರಿಸಿಕೊಂಡು ನನ್ನೊಡನೆ ಮಾತಾಡುತ್ತ, ನನ್ನಿಂದ ಹಾಡುಗಳನ್ನು ಹೇಳಿಸುತ್ತ ಅವರು ಅಡಿಗೆ ಕೆಲಸ ಮಾಡುತ್ತಿದ್ದರು. ಮಾತನಾಡುತ್ತ ಆಡುತ್ತ ಕೆಲಸ ಮಾಡುವುದನ್ನು ನನ್ನ ಅಮ್ಮಯ್ಯ ಮತ್ತು ನನ್ನ ಅಮ್ಮನಷ್ಟು ಚೆನ್ನಾಗಿ ಬಲ್ಲವರನ್ನು ನಾನು ಕಂಡಿಲ್ಲ. ಆದರೆ ಯಾವುದೇ ವಯಸ್ಸಿನವರನ್ನೂ ಅವರವರಿಗೆ ಇಷ್ಟವಾಗುವಂತೆ ಮಾತನಾಡಿಸಬಲ್ಲವರು "ಅಮ್ಮಯ್ಯ" ಅವರೊಬ್ಬರೇ ಆಗಿದ್ದರು. ಅಷ್ಟೊಂದು ಶಿಷ್ಟತೆ; ಎಚ್ಚರ; ಮುಖ ನೋಡಿಯೇ ಪರಭಾವವನ್ನು ಅರಿಯುವ ಪರಿಣತಿ. ಪ್ರೌಢಶಾಲೆಯನ್ನೂ ಕಾಣದಿದ್ದರೂ ಅವರು ಓದುಬರಹ ಬಲ್ಲವರಾಗಿದ್ದರು. ಸಂಸ್ಕೃತದ ಮಂತ್ರಗಳನ್ನು ಅರ್ಥ ಮಾಡಿಕೊಳ್ಳುವಷ್ಟು ಜಾಣರೂ ಆಗಿದ್ದರು! ನನ್ನ ಅಮ್ಮಯ್ಯನು ತಮ್ಮ ಬದುಕಿನಲ್ಲಿ ನುಗ್ಗುನುರಿಯಾದ ಮೇಲೆ ತೆಗೆದಿದ್ದ ಒಂದೇ ಒಂದು ಫೊಟೋ ಮಾತ್ರ ಈಗ ನನ್ನಲ್ಲಿ ಉಳಿದಿದೆ; ಸುಮಾರು 60 ರ ಹರೆಯದಲ್ಲಿ ಅವರ ಶಿಷ್ಟತೆ, ಮುಖದಲ್ಲಿ ಮೂಡಿದ್ದ ಒಂದೊಂದು ನೆರಿಗೆಯೂ ಅಮ್ಮಯ್ಯನು ದೇಹ ಸವೆಸಿದ ಪರಿಯನ್ನು ಪ್ರತಿಫಲಿಸುತ್ತಿವೆ.



                                                          (ನನ್ನ ಅಮ್ಮಯ್ಯ - ದೊಡ್ಡಮ್ಮ )

ಬೆಳಿಗ್ಗೆ ನಾಲ್ಕು ಗಂಟೆಗೆ ಎದ್ದು ಮನೆವಾರ್ತೆಗೆ ಶುರು ಮಾಡಿದರೆ ರಾತ್ರಿಯ ಊಟ ಮುಗಿಯುವವರೆಗೂ ವ್ಯವಸ್ಥಿತವಾಗಿ ಎಡೆಬಿಡದೆ ಕೆಲಸ ಮಾಡುವುದು ಹೇಗೆ ಎಂಬುದನ್ನು ನಾನು ನೋಡಿ, ಮಾಡಿ ಕಲಿತದ್ದೇ ಸಾಲಿಗ್ರಾಮದ ದೊಡ್ಡಪ್ಪಯ್ಯನ ಮನೆಯಲ್ಲಿ; ಅಮ್ಮಯ್ಯನ ಕಣ್ಣಳತೆಯಲ್ಲಿ. ರಜೆ ಕಳೆಯಲು ಹೋಗುತ್ತಿದ್ದ ನನ್ನ ಜೊತೆ ಮಾತಾಡುತ್ತ ಆಡುತ್ತಲೇ ನನ್ನ ಅಮ್ಮಯ್ಯ ನನಗೂ ಸಣ್ಣ ಸಣ್ಣ ಕೆಲಸ ಕೊಡುತ್ತಿದ್ದರು. ಅವರ ಹಿರಿಯ ಮಗ (ನನ್ನ ಅಣ್ಣಯ್ಯ ದಿ. ಸತ್ಯನಾರಾಯಣ ಉಡುಪರು) ಇಡೀ ತೆಂಗಿನಕಾಯಿಯ ಸಿಪ್ಪೆ ತೆಗೆದರೆ ಜುಟ್ಟು ಮಾತ್ರ ಉಳಿಸಿಕೊಳ್ಳುತ್ತಿದ್ದ ಆ ಕಾಯಿಗಳು ಫಳಫಳ ಹೊಳೆಯುವಂತೆ ಇರುತ್ತಿದ್ದವು. ಆ ಸುಂದರಾಂಗ ತೆಂಗಿನ ಕಾಯಿಗಳನ್ನು ಒಂದೊಂದಾಗಿ ಹೊತ್ತು ಒಳಗಿಡುವುದು ಆಗ ನನ್ನ ಕೆಲಸ. ಅಮ್ಮಯ್ಯನು ಮನೆಯನ್ನು ಗುಡಿಸಿದರೆ ಒದ್ದೆ ಬಟ್ಟೆಯಿಂದ ಒರೆಸುವುದು ನನ್ನ ಕೆಲಸ. ನೆಲ ಮತ್ತು ಗೋಡೆಯ ಕಾಲಂಶ ಭಾಗಕ್ಕೆ ಕಾವಿ ಹಾಕಿ ಒರೆದಂತಹ ಅಷ್ಟೂ ಭಾಗವನ್ನು ತಿಕ್ಕಿತಿಕ್ಕಿ ಒರೆಸಬೇಕಿತ್ತು. ಒಮ್ಮೆ ಉದ್ದಕ್ಕೆ ಒರೆಸಿ ಅನಂತರ ಅಡ್ಡಕ್ಕೆ ಒರೆಸಬೇಕು ಅಂತ ನನ್ನ ಕೈ ಹಿಡಿದು ಅಮ್ಮಯ್ಯ ತೋರಿಸಿ ಕೊಟ್ಟಿದ್ದರು. ಅಮ್ಮಯ್ಯನು ಪ್ರತೀ ದಿನವೂ ಹುಳಿ ಬೂದಿ ಹಾಕಿ ತಿಕ್ಕುತ್ತಿದ್ದ ನಿತ್ಯೋಪಯೋಗೀ ಪಾತ್ರೆಗಳನ್ನೆಲ್ಲ ತೊಳೆದ ಮೇಲೆ ಬಾವಿ ಕಟ್ಟೆಯಿಂದ ಮನೆಯ ಒಳಗೆ ಕೊಂಡೊಯ್ದು ಇಡುವ ಕೆಲಸವನ್ನೂ ಅಮ್ಮಯ್ಯನು ನನಗೆ ಕೊಡುತ್ತಿದ್ದರು. "ತೊಳೆದ ನಂತರ ಯಾವ ಪಾತ್ರೆಯನ್ನೂ ಮೈಗೆ ತಾಗಿಸಿಕೊಳ್ಳದೆ - ಒಳಗಿಡಬೇಕು.." ಅಂತ ಸೂಚನೆಯನ್ನೂ ಕೊಡುತ್ತಿದ್ದರು. ಅಂತೂ ಸಣ್ಣ ಸಣ್ಣ ಕೆಲಸಗಳನ್ನು ಮಾಡುತ್ತ - ಅರೆಯುವುದು, ಹೆರೆಯುವುದು..ಹೀಗೆ - ನನಗೆ ಮನೆವಾರ್ತೆಯ ಸಮೀಪ ದರ್ಶನವಾದದ್ದೇ ದೊಡ್ಡಪ್ಪಯ್ಯನ ಮನೆಯಲ್ಲಿ. ಕೆಲಸ ಮುಗಿದ ಮೇಲೆ ಅಮ್ಮಯ್ಯನ ಬಾಯುಪಚಾರವೂ ಇರುತ್ತಿತ್ತು. "ಕಂಡ್ಯಾ ? ಎಷ್ಟ್ ಚೆಂದ ಒರಸಿದೆ ? ಅದಕ್ಕೇ ಹೇಳೂದು...ಸಿದ್ದೆಯಂತ ಮಕ್ಕಳಿದ್ದರೆ ಎದ್ದು ಗೈಯು ಕೆಲಸ ಇಲ್ಲ...ಅಂತ...ಈಗ ನಮ್ ಮಗೀಗೆ ಎಂತ ಕೊಡೂದು ? ತಕೋ. ಬಾಳೆ ಹಣ್ಣು..." ಅನ್ನುತ್ತ ಸವಿ ಮಾತಿನಿಂದ ನಮ್ಮನ್ನು ಹಿಡಿದಿಟ್ಟುಕೊಳ್ಳುತ್ತಿದ್ದರು. ಆದರೆ ನಾನು ಊಟ ಮಾಡುವಾಗ ಮಾತ್ರ ಬೇಸರ ಪಟ್ಟುಕೊಳ್ಳುತ್ತಿದ್ದರು. "ನಮ್ಮ ಮನೆಯ ಬೆಕ್ಕೂ ಇದಕ್ಕಿಂತ ಹೆಚ್ಚು ತಿನ್ನುತ್ತದಲ್ಲ ನಾರಾಯಣೀ...ಈ ರುಕ್ಮಿಣಿ (ನನ್ನ ಅಮ್ಮ) ತನ್ನ ಮಕ್ಕಳಿಗೆ ಉಣ್ಣಲಿಕ್ಕೆ ಹೇಳಿಕೊಡಲೇ ಇಲ್ಲ..." ಅನ್ನುತ್ತ ಅಮ್ಮನಿಗೆ ನಯವಾಗಿ ಕಿರೀಟ ಇಡುತ್ತಿದ್ದರು. ನಾನು ಮನೆಗೆ ಹಿಂದಿರುಗಿದ ಮೇಲೆ ಅವರ ಮಾತನ್ನು ಯಥಾವತ್ತಾಗಿ ಅಮ್ಮನಿಗೆ ಹೇಳುತ್ತಿದ್ದೆ. ಆಗ ಮುಗುಳ್ನಗುತ್ತಿದ್ದ ಅಮ್ಮ "ಇದೊಳ್ಳೆ ಕತೆ ಆಯ್ತಲ್ಲ ? ಉಣ್ಣಲಿಕ್ಕೆ ಹೇಳಿ ಕೊಡುವುದು ಹೇಗಪ್ಪ ? ಯಾರಿಗಾದರೂ ಎಲ್ಲಿಯ ವರೆಗೆ ಒತ್ತಾಯದಿಂದ ಉಣ್ಣಿಸಲಿಕ್ಕಾಗತ್ತೆ ? ಎಲ್ಲರೂ ಅವರವರ ಹೊಟ್ಟೆ ತುಂಬುವಷ್ಟೇ ಉಣ್ಣಲಿಕ್ಕಾಗುವುದಲ್ವಾ ? ಅವರು ಏನೋ ಹೇಳಿರಬಹುದು. ನೀನು ಏನೋ ಕೇಳಿರಬಹುದು. ಅವನ್ನೆಲ್ಲ ಬಿಟ್ ಹಾಕು. ಅವರ ಹಿಂದೇ ಇದ್ದು, ಅವರು ಕೆಲಸ ಮಾಡುವ ರೀತಿಯನ್ನು ನೋಡಿ ಕಲಿತುಕೋ. ಆಗ ಮಾತ್ರ ನಿನ್ನ ತಿರುಗಾಟ ಸಾರ್ಥಕವಾಗುತ್ತದೆ..." ಅಂತ ನಕ್ಕು ಬಿಡುತ್ತಿದ್ದಳು. ಈಗ ಯೋಚಿಸಿದರೆ, ನನ್ನ ಅಮ್ಮಯ್ಯನು ಪ್ರಚಂಡ - ಮನಶ್ಶಾಸ್ತ್ರ ಪ್ರವೀಣರಾಗಿದ್ದರು ಎಂದು ಬಲವಾಗಿ ಅನ್ನಿಸುತ್ತದೆ. ಸ್ವತಹ ಕೆಲಸ ಮಾಡುವುದರಲ್ಲಿ ಮತ್ತು ಇನ್ನೊಬ್ಬರಿಂದ ಕೆಲಸ ಮಾಡಿಸಿಕೊಳ್ಳುವುದು ಹೇಗೆ ಎಂಬುದರಲ್ಲಿಯೂ ಅವರನ್ನು ಮೀರಿಸಿದವರನ್ನು ನನ್ನ ಬದುಕಿನಲ್ಲಿ ನಾನು ಕಂಡಿಲ್ಲ.

ನನ್ನ ಅಮ್ಮಯ್ಯ - ಅಂದರೆ ನನ್ನ ದೊಡ್ಡಮ್ಮ ಮತ್ತು ನನ್ನ ಅಮ್ಮ - ಇಬ್ಬರೂ ವಾವೆಯಲ್ಲಿ ಅಕ್ಕ ತಂಗಿಯರು. ಒಬ್ಬರು ಅಣ್ಣನ ಹೆಂಡತಿ; ಇನ್ನೊಬ್ಬರು ತಮ್ಮನ ಹೆಂಡತಿ. ಒಂದೇ ಮನೆಯಲ್ಲಿ ಬಹಳ ವರ್ಷ ಜೊತೆಯಲ್ಲಿಯೇ ಬದುಕಿದವರು. ಅಣ್ಣ ತಮ್ಮಂದಿರ ಹೆಂಡಿರ ಮಧ್ಯದಲ್ಲಿ ಪರಸ್ಪರ ಕಹಿ ಘಟನೆಗಳು,  ಈರ್ಷ್ಯೆ..ಇತ್ಯಾದಿಗಳು ಸರ್ವೇ ಸಾಮಾನ್ಯ. ಅದೂ ಒಂದೇ ಮನೆಯಲ್ಲಿದ್ದರಂತೂ ಕೇಳುವುದೇ ಬೇಡ. ಆದರೆ ನನ್ನ ಅಮ್ಮಯ್ಯ ಮತ್ತು ಅಮ್ಮನ ಮಧ್ಯೆ ಅಂತಹ ಕಟುವಾದ ಸಂಬಂಧ ಇರಲಿಲ್ಲ ಅನ್ನುವುದು ನನ್ನ ಭಾವನೆ. ಯಾಕೆಂದರೆ ನನ್ನ ಅಮ್ಮನಂತೂ ಒಂದೇ ಒಂದು ದಿನವಾದರೂ ತನ್ನ ಅಕ್ಕನನ್ನು ನಿಂದಿಸಿ ಮಾತಾಡಿದ್ದು ನನಗೆ ಗೊತ್ತಿಲ್ಲ. ಬದಲಿಗೆ, "ಮಕ್ಕಳು ರಜೆಯಲ್ಲಿ ಸ್ವಲ್ಪ ದಿನ ಸಾಲಿಗ್ರಾಮದಲ್ಲಿ ಇದ್ದು ಬರಲಿ; ಅಕ್ಕನ ಜೊತೆಗಿದ್ದು ಮನೆಯ ಕೆಲಸಕಾರ್ಯದ ಶಾಸ್ತ್ರೀಯ ರೀತಿಯನ್ನು ಕಲಿಯಲಿ" ಅಂತ ಕೆಲವೊಮ್ಮೆ ಅಂದದ್ದನ್ನೂ ನಾನು ಕೇಳಿದ್ದೇನೆ. ಚಿಕ್ಕ ಪ್ರಾಯದಲ್ಲೇ ಮದುವೆಯಾಗಿ ಗಂಡನ ಮನೆಗೆ ಬಂದಿದ್ದ ತಾನೂ ಅಲ್ಲಿ ತನ್ನ ಈ ಅಕ್ಕನಿಂದಲೇ ಮನೆವಾರ್ತೆ ಕಲಿತದ್ದು ಅಂತ ಮೆಚ್ಚುಗೆಯ ಮಾತನ್ನಾಡುತ್ತಿದ್ದುದೂ ಇತ್ತು. ಆದರೆ ಅಮ್ಮಯ್ಯನು ಮಾತ್ರ, ಕೆಲವು ಸಾರಿ, ನಮ್ಮ ಮನೆಯ ಒಳಗಿನ ಕೆಲವು ಸಂಗತಿಗಳನ್ನು ಮುಗ್ಧ ಮಕ್ಕಳಾಗಿದ್ದ ನಮ್ಮ ಬಾಯಿಂದ ಕೇಳಿ ತಿಳಿದುಕೊಳ್ಳಲು ಪ್ರಯತ್ನಿಸಿದ್ದರು ಅಂತ ಮುಂದೊಂದು ದಿನ ನನಗೆ ಅನ್ನಿಸಿದ್ದುಂಟು. ಆದರೆ ಅವರ ಮಾತು, ವರ್ತನೆ, ಪ್ರತಿಕ್ರಿಯೆಗಳೆಲ್ಲದರಲ್ಲೂ ವಿಪರೀತ ನಿಯಂತ್ರಣವಿತ್ತು; ಒಂದು ರೀತಿಯ ಸ್ಪರ್ಧೆಯ ಮನೋಭಾವವೂ ಇತ್ತು. ಆದರೆ ಎಡವಟ್ಟಿನ ಮಾತನಾಡಿ ಎಂದೂ ಅವರು ಸಿಕ್ಕಿಕೊಂಡವರಲ್ಲ. ಅದಕ್ಕೇ ನಮ್ಮ ಅಜ್ಜ ಐರೋಡಿ ಶಿವರಾಮಯ್ಯನವರು ..."ಅವಳು ಕಾಲಿನಲ್ಲಿ ಕಟ್ಟಿದ ಗಂಟನ್ನು ಯಾರಿಗೂ ಕೈಯ್ಯಿಂದಲೂ ಬಿಡಿಸಲು ಸಾಧ್ಯವಿಲ್ಲ..." ಅನ್ನುತ್ತಿದ್ದರಂತೆ; ಅಮ್ಮಯ್ಯನಿಗಾಗಿ ಹೊಸ ಗಾದೆಯನ್ನೇ ಸೃಷ್ಟಿಸಿದ್ದರಂತೆ. ಆದರೂ ನನ್ನ ದೊಡ್ಡಮ್ಮ ಅಮ್ಮಯ್ಯನು ನಮ್ಮನ್ನು ಆಂತರ್ಯದಲ್ಲಿ ಮೆಚ್ಚಿದ್ದು, ಪ್ರೀತಿಸಿದ್ದು ಮಾತ್ರ ಸುಳ್ಳಲ್ಲ. ಅಂದಿನ ಸಮಾಜದ ಬಹು ಜನರಂತೆ ಅವರ ಬದುಕೂ ಬಡತನದಿಂದ ಜರ್ಜರಿತವಾಗಿತ್ತು; ಬದುಕಿನುದ್ದಕ್ಕೂ ಸಾಕಷ್ಟು ಸಾವು ನೋವುಗಳನ್ನು ಅವರು ಕಂಡು ಉಂಡಿದ್ದರು. ಬದುಕಿನ ಅಹಿತಗಳು, ಸಂಕಟಗಳು, ಹತ್ತಿಕ್ಕಿದ ಅಪೇಕ್ಷೆಗಳು, ಋಣಾತ್ಮಕ ಭಾವಗಳಿಗೆಲ್ಲ "ಗುಟ್ಟಿನ ಅರಮನೆ" ಕಟ್ಟಿ ಬಂಧಿಸಿ, ಅಲ್ಲಿ ಆಳ್ತನ ನಡೆಸಿದ್ದ - ಮತ್ತು - ಆ ಹೋರಾಟದ ಬೇಗೆಯ ಉಸಿರು ಚೆಲ್ಲುತ್ತಲೇ ಅವರ ಸಿರಿ ಮೊಗವು ನಕ್ಕಂತೆ ಇರುತ್ತಿದ್ದುದನ್ನು ನಾನು ಕಂಡಿದ್ದೇನೆ. ಎಷ್ಟೇ ಪರಿಣತರಾದರೂ ಪ್ರತಿಯೊಂದು ಬದುಕೂ ಪೂರ್ವ ನಿಶ್ಚಯದಂತಲ್ಲದೆ ಇನ್ನೊಂದು ರೀತಿಯಲ್ಲಿ ಸಾಗುವುದು ಅಸಾಧ್ಯ ಎಂಬುದಕ್ಕೆ ನಾನು ಹಾದು ಬಂದ ಅನೇಕ ಬದುಕುಗಳು ಸಾಕ್ಷಿ ನುಡಿಯುತ್ತವೆ.

ಸಾಲಿಗ್ರಾಮದಿಂದ ನನ್ನ ಅಜ್ಜನ ಮನೆ ಐರೋಡಿಗೆ ನಾಲ್ಕೈದು ಮೈಲುಗಳಷ್ಟೇ ದೂರ. ರಸ್ತೆಯ ಬದಿಯಲ್ಲಿಯೇ ನಡೆದುಕೊಂಡು ನಾನು ಎಷ್ಟೋ ಬಾರಿ ಅಲ್ಲಿಗೆ ಹೋದದ್ದಿದೆ. ಒಮ್ಮೆ, ದೊಡ್ಡಪ್ಪಯ್ಯನ ಮನೆಯ ಮೊದಲನೇ ಇನ್ನಿಂಗ್ಸ್ - ಔತಣದ ಬಿದ್ದನ್ನು - ಮುಗಿಸಿ ಅಜ್ಜನ ಮನೆ ಐರೋಡಿಗೆ ಹೊರಟಾಗ ನನ್ನ ಅಣ್ಣಯ್ಯನು ವಿದಾಯ ಹೇಳುತ್ತ, ದೊಡ್ಡ ಪೊಟ್ಟಣದ ತುಂಬ ನನಗೆ ಪೆಪ್ಪರಮಿಂಟು ಕೊಟ್ಟಿದ್ದ. "ಒಂದೇ ದಿನ ತಿನ್ನಬೇಡ; ಆಮೇಲೆ ನಿನ್ನ ಅಜ್ಜಿಯು ನಮಗೆಲ್ಲ ಶಾಪ ಹಾಕುವ ಹಾಗೆ ಮಾಡಬೇಡ..." ಎಂದೆಲ್ಲ ಹೇಳಿ ಬಸ್ ಹತ್ತಿಸಿ ಅಂದು ನನ್ನನ್ನು ಕಳಿಸಿದ್ದರು. ಆದರೆ ನಾನು ಬಸ್ಸಿನಲ್ಲೇ ಶಾಪ ಯಜ್ಞ ಆರಂಭಿಸಿ, ಅಜ್ಜನ ಮನೆ ತಲಪುವುದರೊಳಗೆ ಎಲ್ಲವನ್ನೂ ಕಟಕಟ ಅಗಿದು ಯಜ್ಞ ಕಾರ್ಯ ಮುಗಿಸಿಯೇ ಅಜ್ಜನ ಮನೆ ಹೊಕ್ಕಿದ್ದೆ. ಅಂದು ಅಜ್ಜನ ಮನೆಯ ಬಿದ್ದಿನ ಮೊದಲ ರಾತ್ರಿ. ರಾತ್ರಿಯ ಊಟದ ಹೊತ್ತಿನಲ್ಲಿ, ಯಾರ್ಯಾರು ಎಷ್ಟೆಷ್ಟು ಒತ್ತಾಯಿಸಿದರೂ ಒಲ್ಲದೆ "ನನಗೆ ಊಟ ಬೇಡ" ಅಂತ ಹೇಳಿ ಮಲಗಿಬಿಟ್ಟಿದ್ದೆ. (ಮಿತಿಮೀರಿ ಹೊಟ್ಟೆ ಸೇರಿದ್ದ ಪೆಪ್ಪರಮಿಂಟಿನ ಸೊಕ್ಕು !) ಅರ್ಧ ರಾತ್ರಿಯಾಗುವಾಗ ನನ್ನನ್ನು ಬಡಿದೆಬ್ಬಿಸಿದಂತೆ ಎಚ್ಚರವಾಯಿತು. ಹೊಟ್ಟೆಯು ಲಂಕಾ ಪಟ್ಟಣವಾಗಿತ್ತು. ವಿಪರೀತ ನೋವು. ಹೊಟ್ಟೆನೋವು; ಜೀವ ಸಂಕಟ. ಆಕಾಶ ಭೂಮಿ ಒಂದಾಗುವಂತೆ ಅಳತೊಡಗಿದೆ. ಅಜ್ಜಿ, ಚಿಕ್ಕಮ್ಮಂದಿರೆಲ್ಲರೂ ನಿದ್ದೆ ಬಿಟ್ಟು ಧಡಬಡ ಎದ್ದರು. ನನ್ನ ಸುತ್ತಲೂ ಸೇರಿದರು. ಓಡಿ ಬಂದ ಅಜ್ಜಿಯು "ಮೊದಲು ಆ ಹೆಣ್ಣಿಗೆ ಊಟ ಮಾಡಿಸು..." ಅಂತ ಚಿಕ್ಕಮ್ಮನಿಗೆ ಹೇಳಿ ನನ್ನನ್ನು ನೋಡುತ್ತ ಕೈಹಿಡಿದುಕೊಂಡು ಕುಳಿತರು. ರಾತ್ರಿ ಎಲ್ಲರೂ ಉಂಡು ಉಳಿದಿದ್ದ ಅನ್ನಕ್ಕೆ ನೀರು ಬೆರೆಸಿ ಎಂದಿನಂತೆ ತಂಗಳು ಮೂಲೆಯಲ್ಲಿಟ್ಟಿದ್ದರು. ಅದೇ ಅನ್ನವನ್ನು ಚಿಕ್ಕಮ್ಮ ತಿನ್ನಿಸಿದರು. ನಾಲ್ಕು ತುತ್ತು ತಿನ್ನುವಾಗ ಸ್ವಲ್ಪ ಜೀವ ಬಂದ ಹಾಗಾಯಿತು. ಊಟವಾದ ಮೇಲೆ ನನ್ನನ್ನು ತಮ್ಮ ಹತ್ತಿರವೇ ಮಲಗಿಸಿಕೊಂಡ ಅಜ್ಜಿ, "ಸಂಜೆ ಬರುವಾಗ ನೀನು ಏನು ತಿಂದೆ ?" ಅಂತ ಕೇಳಿದರು. "ಪೆಪ್ಪರಮಿಂಟು.." ಅಂದೆ. "ಎಷ್ಟು ತಿಂದೆ ?" ಅಂದರು. "ತುಂಬ ತಿಂದೆ.." ಅಂದೆ. "ಅಂದರೆ ಎಷ್ಟು ? ಐದಾ? ಆರಾ ? ಏಳಾ?" ಅಂದಾಗ "ನಲವತ್ತು ಐವತ್ತು ಇರಬಹುದು..." ಅಂದೆ. ಬೆಚ್ಚಿಬಿದ್ದ ಅಜ್ಜಿ "ನಿಂಗೆ ತಲೆ ಸಮ ಇತ್ತ ಹೆಣೆ ? ಹೊಟ್ಟೆ ನೋವು ಬರದೆ ಇನ್ನೇನಾತ್ತ..? ಅದೆಂತ ಆಂಕ್ರ (ಹೊಟ್ಟೆಬಾಕತನ) ? ತಡಿ. ನಾಳೆ ಕಂಯ್ (ಕಹಿ) ಕಷಾಯ ಕುಡಿಸ್ತೆ ಕಾಣ್...ಈ ಅಪರ ರಾತ್ರೀಲಿ ನಿಂಗೆ ಏನಾದ್ರೂ ಆದ್ರೆ ನಿನ್ ಅಪ್ಪಯ್ಯ ನಾಳೆ ನನ್ನನ್ ಬೆರಸ್ಕಂಡ್ (ಹೆದರಿಸುತ್ತ ಓಡಿಸಿಕೊಂಡು) ಬತ್ತಿಲ್ಯಾ ? ಅವರಿಗ್ ಎಂತ ಹೇಳುದ್ ನಾನ್ ? ಇಲ್ ಬಂದ್ಮೇಲೆ, ಇನ್ನು ನಾಳೆಯಿಂದ - ಕಂಡ್ ಕಂಡದ್ದೆಲ್ಲ ತಿಂದ್ರೆ ಜಾಗ್ರತೆ ಕಾಣ್. ಈಗ ಬಿದ್ಕೋ...ಬೆಳಿಗ್ಗೆ ಎದ್ದಲ್ಲಿಂದ ರಾತ್ರಿ ಮನೀಕ್ಕಂಬ್ ವರೆಗೆ ಬರೀ ಅಷಡ್ಡಾಳವೇ ಮಾಡುದ್; ಆಮೇಲೆ ಬಯ್ಸ್ಕಂಬ್ದ... ಆಮೇಲೆ ಅಲ್ಲಿ ಹೋಗಿ ಅಜ್ಜಿ ಕೆಟ್ಟವಳು ಅಂಬ್ದ.....ಅಲ್ದಾ ?" ಅನ್ನುತ್ತ ಬೆನ್ನಿಗೊಂದು ಗುದ್ದಿ, ನನಗೆ ಹೊದೆಸಿ ಅಪ್ಪಿಕೊಂಡು ಮಲಗಿದ್ದರು. ಅಂಥ ಅಜ್ಜಿ ಅವರು. ಬಾಯಿ ಮಾತ್ರ - ಬಲೇ ಖಾರ. ಆಗಿಂದಲೇ ಭಂಡಳಾಗಿದ್ದ ನನಗೆ ಆ ಅಮ್ಮಮ್ಮನು ಹೆಚ್ಚು ಅರ್ಥವಾಗಿದ್ದರು; ಆದ್ದರಿಂದಲೇ ಮೊಮ್ಮಕ್ಕಳ ಪೈಕಿ ಆ ಅಜ್ಜಿಗೆ ಹೆದರದಿದ್ದವಳು ಬಹುಶಃ ನಾನೊಬ್ಬಳೇ.



                                                  (ನನ್ನ ಅಮ್ಮಮ್ಮ - ಅಮ್ಮನ ಅಮ್ಮ )
ಅದೊಂದು ರಜೆಯಲ್ಲಿ ಒಬ್ಬಳು ಚಿಕ್ಕಮ್ಮನ ಮದುವೆ ಇತ್ತು. ನಾನೂ ಒಪ್ಪತ್ತು ಮುಂಚಿತವಾಗಿ ಅಮ್ಮನ ಸೆರಗು ಹಿಡಿದು, ಸೊಕ್ಕುವ ಹುಮ್ಮಸ್ಸಿನಿಂದ ಹೋಗಿದ್ದೆ. ಅದಾಗಲೇ ಉಳಿದ ಚಿಕ್ಕಮ್ಮನ ಮಕ್ಕಳು, ಮಾವನ ಮಕ್ಕಳು...ಎಲ್ಲರೂ ಅಜ್ಜನ ಮನೆಗೆ  ಬಂದಿದ್ದರು. ಮಕ್ಕಳ ಪಟಲಾಂ ಗದ್ದೆ ಬಯಲಿನಲ್ಲಿ, ಹಾಡಿಯಲ್ಲೆಲ್ಲ ಸುತ್ತುತ್ತ ಯಾರ್ಯಾರದೋ ಮರಕ್ಕೆ ಕಲ್ಲು ಹೊಡೆದು ಮಾವಿನ ಕಾಯಿ ಉದುರಿಸುತ್ತ, ಗೋವೆ (ಗೇರು) ಹಣ್ಣು ಕಿತ್ತು ತಿನ್ನುತ್ತ ಊರವರಿಂದಲೂ ಬೈಸಿಕೊಳ್ಳುತ್ತ ಕೋತಿಯಾಟ ಶುರು ಹಚ್ಚಿಕೊಂಡಿದ್ದೆವು. ಅದು ಗುಂಪಿನ ಸೊಕ್ಕು. ಮದುವೆಯ ಗಡಿಬಿಡಿಯಲ್ಲಿದ್ದ ಯಾವ ಹಿರಿಯರಿಗೂ ನಮ್ಮತ್ತ ಗಮನಿಸಲು ಆಗ ಪುರಸೊತ್ತಿಲ್ಲದ್ದರಿಂದ ನಮಗೆ ಯಥೇಷ್ಟ ಸ್ವಾತಂತ್ರ್ಯ ಸಿಕ್ಕಿತ್ತು. ಸ್ವಂತ ಬಟ್ಟೆಬರೆಯ ಗೊಡವೆಯಿಲ್ಲದೆ ಅಂಗಿಯಲ್ಲಿ ಮಾವಿನ ಕಾಯಿಗಳನ್ನು ತುಂಬಿಸಿಕೊಂಡು ಮನೆಗೆ ಬಂದು ಅದನ್ನು ಕತ್ತರಿಸಿ, ಅದಕ್ಕೆ ಉಪ್ಪು ಹಸಿಮೆಣಸು ಬೆರಸಿ, ಪಚ್ಚುಟಿ ಮಾಡಿಕೊಂಡು ಆಗ ತಿಂದದ್ದೇ ತಿಂದದ್ದು. ಅಂಗಳದಲ್ಲಿ ಒಣಗಲು ಹಾಕಿದ್ದ ಕೊಬ್ಬರಿಯನ್ನು ಸಭ್ಯ ಮುಖ ಹೊತ್ತ ಮಕ್ಕಳೆಲ್ಲರೂ ಕಾಗೆ ಪಟಾಯಿಸದಂತೆ ಕಾಯುವುದಕ್ಕೆ ಸರದಿಯಲ್ಲಿ ಕೂತು, ಅವರವರ ಪಾಳಿ ಮುಗಿಸಿ ಅಲ್ಲಿಂದ ಹೊರಡುವ ಪ್ರತಿಯೊಂದು ಹಾರಲಾಗದ ಸಭ್ಯ ಕಾಗೆಗಳೂ ಎರಡು ಮೂರು ಕೊಬ್ಬರಿಯನ್ನು ಲಪಟಾಯಿಸಿ ತಿಂದದ್ದೇ ತಿಂದದ್ದು. ಅಟ್ಟದ ಮೇಲಿನ ಕೋಣೆಗೆ ಬೀಗ ಹಾಕಿ, ಮಕ್ಕಳಿಗೆ ಕಾಣಿಸದಂತೆ ಅಡಗಿಸಿಟ್ಟಿದ್ದ ಮಾವಿನ ಹಣ್ಣನ್ನು ಗೆದ್ದು ವಿಜಯ ಪತಾಕೆ ಹಾರಿಸುವ ಮನಸ್ಸಾಗಿ, ಅಂದು ಮಾಡಿದ ಸಾಹಸವನ್ನು ಮರೆಯಲು ಅಸಾಧ್ಯ. ಒಬ್ಬರ ಹೆಗಲ ಮೇಲೆ ಇನ್ನೊಬ್ಬರು ನಿಂತು, ಪಕ್ಕದ ಕೋಣೆಯ ಕಂಬವನ್ನು ಹತ್ತಿ ಅಟ್ಟದಲ್ಲೇ ನಡೆದು ಹೋಗಿ, ಮಾವಿನ ಹಣ್ಣಿನ ಕೋಣೆಯಲ್ಲಿ ಇಳಿದು, ಅಲ್ಲೇ ಹೊಟ್ಟೆ ತುಂಬ ಸಿಪ್ಪೆ ಸಹಿತ ಮಾವಿನ ಹಣ್ಣುಗಳನ್ನು ತಿಂದು, ಅಲ್ಲಿ ಜೋಪಾನವಾಗಿ ಒಣಗಿಸಿದ್ದ ಅಮ್ಮಮ್ಮನ ಮಡಿ ಸೀರೆಯಲ್ಲಿಯೇ ನಮ್ಮ ಕೈ ಮುಖವನ್ನೆಲ್ಲ ಒರೆಸಿಕೊಂಡು ಸದ್ದಾಗದಂತೆ ಬಂದ ದಾರಿಯಲ್ಲಿಯೇ ಎಲ್ಲರೂ ಹಿಂದಿರುಗಿದ್ದೆವು. ಮರುದಿನ, ಅಜ್ಜಿಯ ಮಡಿ ಸೀರೆಯು ಮುದ್ದೆ ಮುದ್ದೆಯಾಗಿದ್ದುದನ್ನು ಕಂಡಾಗ ಮನೆಮಂದಿಗೆ ಅನಾಹುತದ ಅಸ್ಪಷ್ಟ ಚಿತ್ರಣವು ಸಿಕ್ಕಿ, ಮನೆಯಲ್ಲಿ ಹಾಹಾಕಾರ ಎದ್ದಿತ್ತು. ಆ ಕೋಣೆಯ ಬೀಗದ ಕೈ ನನ್ನ ಕೊನೆಯ ಮಾವನ ಜನಿವಾರದಲ್ಲಿ ಭದ್ರವಾಗಿ ಆಶ್ರಯ ಪಡೆದಿತ್ತು. ಆದರೂ ಕೋಣೆಯ ಒಳಗೆ ಯಾರಾದರೂ ಹೋದದ್ದು ಹೇಗೆ ? ಅನ್ನುವ ಬೇತಾಳ ಪ್ರಶ್ನೆಗೆ ಉತ್ತರ ಹುಡುಕುತ್ತ ಎಲ್ಲರೂ ಸುಸ್ತಾಗಿದ್ದರು. ಮಕ್ಕಳೆಲ್ಲರೂ "ನಾನಲ್ಲ; ನಾನಲ್ಲ..." ಅನ್ನುವವರೇ. ಮದುವೆ ಮನೆ ಬೇರೆ. ಸದ್ಯ ಗದ್ದಲ ಬೇಡ ಅಂದುಕೊಂಡು ಅಂದು ಆ ಪ್ರಕರಣವು ಹೆಚ್ಚು ದೀರ್ಘ ಓಡಲಿಲ್ಲ. ಬರೇ ಗಾಳಿ ಗುದ್ದುವ ವಾಚಾಮಗೋಚರ ಬಾಯುಪಚಾರದಲ್ಲಿಯೇ ಮುಗಿದು ಹೋಯಿತು. ಅಮ್ಮಮ್ಮ ಮಾತ್ರ ತಮ್ಮ ಮಡಿಯ ಶಾಸ್ತ್ರಕ್ಕೆ ಅಂದು ಒದಗದ ಆ ಸೀರೆಯನ್ನು ಒದ್ದೆ ಮಾಡಿಕೊಂಡು "ಒದ್ದೆ ಮಡಿ" ಉಡುವಂತಾಯಿತು. ಆದರೆ ನಮ್ಮ ಗುಂಪಿನಲ್ಲೇ ಕೆಲವು ಮೀರ್ ಸಾದಕ್ ಗಳಿದ್ದರು. ಅವರಿಂದಲೇ ನಮ್ಮ ಸಾಹಸದ ವರದಿ (ಚಾಡಿ) ಯು ಹಿರಿಯರನ್ನು ತಲುಪಿಯೇ ಬಿಟ್ಟಿತು. ಆಮೇಲೆ ಕೆಲವರಿಗೆ ನಾಲ್ಕು ಏಟೂ ಬಿತ್ತು. ಆದರೆ ಅಂದು ನಾನು ಹಿಂದುಳಿದಿದ್ದೆ; ಆದ್ದರಿಂದ ಬಚಾವಾದೆ.



       (ಕೊನೆಗಾಲದಲ್ಲಿ ಅಮ್ಮಮ್ಮನೊಂದಿಗೆ ಮಕ್ಕಳು ಮೊಮ್ಮಕ್ಕಳು ಅಳಿಯಂದಿರು - ದೊಡ್ಡ ಕುಟುಂಬದ ಸಣ್ಣ ಭಾಗ.)
ನಮ್ಮ ಚಿಕ್ಕಮ್ಮನ ಮದುವೆಯು ಏಳೆಂಟು ಮೈಲು ದೂರದ ದೇವಸ್ಥಾನದಲ್ಲಿ ನಡೆದಿತ್ತು. ಹಿರಿಯರಿಗೆಲ್ಲ ಅಂದು ಕುಂಡೆ ಹರಿಯುವಷ್ಟು ಓಡಾಟದ ಕೆಲಸವಿತ್ತು. ಆದರೆ ನಮ್ಮ "ಪ್ರಸನ್ನ ಪಟಲಾಂ"ಗೆ ತಂಟೆ ಹುಡುಕುವುದೇ ಕೆಲಸವಾಗಿತ್ತು. ನಾವಷ್ಟೇ ಅಲ್ಲದೆ ಹತ್ತಿರದ ಮನೆಯ ಕೆಲವು ಮಕ್ಕಳೂ ಅಂದು ನಮ್ಮ ಜೊತೆಗಿದ್ದರು. ಹಾಗಾಗಿ ನಮ್ಮ ಬಾಲ(?)ವೃಂದದ ಬಲಿಷ್ಠ ಸೇನೆಯೇ ತಯಾರಾಗಿತ್ತು.

ನನ್ನ ಒಬ್ಬ ಮಾವನು ತುಂಬ STYLE ಆಗಿ ಸಿಗರೇಟು ಸೇದುತ್ತ ಮೂಗು ಬಾಯಿಯಿಂದೆಲ್ಲ ಹೊಗೆ ಬಿಡುವ ಚಮತ್ಕಾರವನ್ನು ನಾವೆಲ್ಲರೂ ನೋಡಿದ್ದೆವು. ಆ ದೃಶ್ಯವು ನಮ್ಮೆಲ್ಲರ ಮನಸ್ಸಿನಲ್ಲಿ ಅಚ್ಚಾಗಿತ್ತು. ಅಂದು ಮದುವೆಯ ದಿನದಂದು ಮದುವೆ ಚಪ್ಪರದ ಕೆಲಸಗಳಲ್ಲಿ ರುಚಿಯಿಲ್ಲದ ನಮ್ಮನ್ನೆಲ್ಲ ಆ ದೇವಸ್ಥಾನದ ಸುತ್ತಲೂ ಇದ್ದ ಹಾಡಿಗಳು ಆಕರ್ಷಿಸಿದ್ದವು. ತಡಮಾಡದೆ, ಮಕ್ಕಳ ಹಿಂಡು ಹಾಡಿಗೆ ದಾಳಿಯಿಟ್ಟಿತು. ಅಂದು ಹೊಸ ಸಂಶೋಧನೆಗೆ ಲಗ್ಗೆಯಿಡುವ ಪ್ರಸ್ತಾಪವು ಒಂದು ಮೂಲೆಯಿಂದ ಮಂಡಿಸಲ್ಪಟ್ಟಿತು; ಬಹುಮತದಿಂದ ಅದು ಸ್ವೀಕಾರವೂ ಆಯಿತು. ಆಗ, ಆ ದೇವಸ್ಥಾನದ ಪಕ್ಕದ ಹಾಡಿಯಲ್ಲಿ ಬಿದ್ದ ಕೆಲವು ಕಡ್ಡಿಗಳ ತುದಿಗೆ ಬೆಂಕಿ ಹಚ್ಚಿ, ನಾವೆಲ್ಲರೂ ಹೊಗೆ ಬಿಡಲು ಪ್ರಯತ್ನಿಸಿದೆವು. ಆದರೆ ಅದರಿಂದ ಯಾವ ಹೊಗೆಯೂ ಬರಲಿಲ್ಲ. ಆಗ "ಸಾಧಿಸಿದರೆ ಸಬಳ ನುಂಗಬಹುದು" ಅಂತ ನಿರ್ಧರಿಸಿ, "ಯಾವುದೇ ಕೆಲಸವನ್ನೂ ಅರ್ಧಕ್ಕೇ ಬಿಡಬಾರದು" ಎಂದು ತೀರ್ಮಾನಿಸಿ, ದೇವಸ್ಥಾನಕ್ಕೆ ಓಡಿಹೋಗಿ, ತನ್ನ ಅಂಗಿ ಕಳಚಿಟ್ಟು ಓಡಾಟದಲ್ಲಿದ್ದ ಮಾವನ ಅಂಗಿಗಾಗಿ ಹುಡುಕಾಡಿದೆವು. ಕೊನೆಗೆ ಆ ಮಾವನ ಅಂಗಿಯ ಕಿಸೆಯಲ್ಲಿದ್ದ ಬೆಂಕಿ ಪೊಟ್ಟಣ ಮತ್ತು ಸಿಗರೇಟಿನ Pack ನ್ನು ಲಪಟಾಯಿಸಿ, ಹಾಡಿಗೆ ಓಡಿದೆವು. ಎಲ್ಲರೂ ಗತ್ತಿನಿಂದ ಮರದ ತಂಪಿನಲ್ಲಿ ಕೂತು ಒಂದಾದ ಮೇಲೆ ಒಂದು, ಸಿಗರೇಟು ಸೇದುತ್ತ ಕೆಮ್ಮತೊಡಗಿದೆವು. ಅಷ್ಟರಲ್ಲಿ ಅಲ್ಲಿನ ಭೀಭತ್ಸ ದೃಶ್ಯವನ್ನು ನೋಡಿದ, ನಮ್ಮ ಜೊತೆಗಿದ್ದೂ ಜೊತೆ ಸೇರದ ನನ್ನ ಚಿಕ್ಕಮ್ಮನ ಮಗಳು ಹೆದರಿಕೊಂಡು ಅಲ್ಲಿಂದ  ಓಡತೊಡಗಿದಳು. ಆಗ ಅವಳನ್ನು ದರದರ ಎಳೆದುಕೊಂಡು ಬಂದು ಮತ್ತೆ ನಮ್ಮ ಜೊತೆಯಲ್ಲಿ ಕೂರಿಸಿಕೊಂಡೆವು. "ನಾನು ಅಜ್ಜಿಗೆ ಹೇಳಿಯೇ ಹೇಳ್ತೇನೆ..ತಡಿ. ನಿಮಗೆಲ್ಲ ಮಾಡಿಸ್ತೇನೆ..." ಅಂತ ಅವಳು ನಿರಂತರ ಗೊಣಗುಟ್ಟುತ್ತ ತನ್ನ ಮೂಗು ಮುಚ್ಚಿಕೊಂಡು ಕೂತಿದ್ದಳು. ಅಷ್ಟರಲ್ಲಿ ಮದುವೆಯ ಮನೆಗೆ ಬಂದ ಕೆಲವರು ನಾವು ಆಕ್ರಮಿಸಿದ್ದ ಹಾಡಿಯತ್ತ ಬರತೊಡಗಿದರು. ಆಗ ಗಾಬರಿಯಾದ ನಾವು ಒಬ್ಬೊಬ್ಬರು ಒಂದೊಂದು ಮರ ಹತ್ತಿ ಕೂತೆವು. ಆಗ ಅಷ್ಟೂ ಹೊತ್ತು ನಮ್ಮ ಒತ್ತೆಯಾಳಂತಿದ್ದ ನಮ್ಮ ಚಿಕ್ಕಮ್ಮನ ಮಗಳು ಸಮಯ ಸಾಧಿಸಿ ಅಲ್ಲಿಂದ ತಪ್ಪಿಸಿಕೊಂಡು ಓಡಿ ಹೋದಳು. ಆಗ ನಮಗೆ ಚಿಂತೆ ಶುರುವಾಯಿತು. "ಆ ಕತ್ತೆ ಓಡಿ ಹೋಗಿ ಈಗ ಎಲ್ಲರಿಗೂ ಕತೆ ಹೇಳತದೆ. ಎಲ್ಲರೂ ಬಾಯಿ ಮುಕ್ಕಳಿಸಿಕೊಂಡು ದೇವಸ್ಥಾನಕ್ಕೆ ಹೋಗಿ ಕೂತುಕೊಳ್ಳುವ.." ಅನ್ನುತ್ತ - ಹಾಡಿಯಲ್ಲಿ ಕೈಗೆ ಸಿಕ್ಕಿದ ಎಲೆಗಳನ್ನೆಲ್ಲ ನಾವೆಲ್ಲರೂ ಜಗಿದು ಉಗಿದು, ದೇವಸ್ಥಾನಕ್ಕೆ ಬಂದು, ನೀರಿನಲ್ಲಿ ಮುಖ ಬಾಯಿ ತೊಳೆದುಕೊಂಡು ಮದುವೆಯ ಜನಜಂಗುಳಿಯ ಮಧ್ಯ ಸೇರಿಕೊಂಡೆವು. ಊಟದ ಹೊತ್ತಿನಲ್ಲೂ ಮತ್ತು ಅನಂತರವೂ ನಮಗೂ ಆ ಚಿಕ್ಕಮ್ಮನ ಮಗಳಿಗೂ ನಡುವೆ ದೃಷ್ಟಿ ಯುದ್ಧ ನಡೆಯುತ್ತಲೇ ಇತ್ತು. "ಹೇಳಿದರೆ ಜಾಗ್ರತೆ..." ಅನ್ನುವ ಮೂಕ ಸಂದೇಶ ನಮ್ಮಿಂದ ಎಡೆಬಿಡದೆ ರವಾನೆಯಾಗುತ್ತಿತ್ತು. ಊಟವಾದ ಕೂಡಲೇ ಚಿಕ್ಕಮ್ಮನ ಮಗಳ ಕಣ್ಣು ತಪ್ಪಿಸಿ ಆ ಅಸುರಕ್ಷಿತ ಸ್ಥಳದಿಂದ ಉಳಿದವರೆಲ್ಲರೂ ಹೊರಟು ಮೊದಲ ವಾಹನದಲ್ಲಿಯೇ ಅಜ್ಜನ ಮನೆಗೆ ಬಂದು ತಲುಪಿಕೊಂಡೆವು.

ಆಗ ಮನೆಯಲ್ಲಿ ಅಜ್ಜನ ಮನೆಯನ್ನು ಕಾಯಲು ಕೂತಿದ್ದ ಒಬ್ಬರನ್ನು ಬಿಟ್ಟರೆ ಬೇರೆ ಯಾರೂ ಇರಲಿಲ್ಲ. ಮನೆಯಲ್ಲಿ ಮೌನವು ತಾಂಡವವಾಡುತ್ತಿತ್ತು. ಸುಮ್ಮನೆ ಆ ಮನೆಯಲ್ಲಿ ಕೂತುಕೊಳ್ಳುವುದು ಕೈಲಾಗದವರ ಕೆಲಸ ಅಂದುಕೊಂಡ ನಾವೆಲ್ಲರೂ ಮನೆಯಿಂದ ಒಂದೇ ಮೈಲು ದೂರದಲ್ಲಿದ್ದ ಸಮುದ್ರದ ಕಡೆಗೆ ಹೊರಟೆವು. ಗದ್ದೆಯ ಅಂಚಿನಲ್ಲಿಯೇ ನಡೆಯುತ್ತ ಒಕ್ಕಲು ಮನೆಯ ಕೋಳಿ ಹಿಕ್ಕೆಗಳನ್ನೆಲ್ಲ ಮೆಟ್ಟುತ್ತ ಸಮುದ್ರದ ತಡಿಯನ್ನು ಸೇರಿಕೊಂಡೆವು. ಸೂರ್ಯ ಮುಳುಗುವವರೆಗೂ ನೀರಿನಲ್ಲಿ, ಹೊಯಿಗೆಯಲ್ಲಿ ಹೊರಳಾಡಿ ಹೊತ್ತು ಕಂತುವ ಹೊತ್ತಿಗೆ ಮನೆ ಸೇರಿಕೊಂಡೆವು. ಆದರೆ ಅದಾಗಲೇ ಮದುವೆಯ ಸ್ಥಳದಿಂದ ಹಿಂದಿರುಗಿದ್ದ ಮನೆಯವರೆಲ್ಲರೂ ಗಾಬರಿಯಾಗಿದ್ದರು. ವಾಹನದ ಮೊದಲನೇ Trip ನಲ್ಲಿಯೇ ಮನೆಗೆ ಹೋಗಿದ್ದ ಮಕ್ಕಳೆಲ್ಲ ಎಲ್ಲಿಗೆ ಹೋದರು ? ಎಂಬ ಹುಡುಕಾಟದಲ್ಲಿ ಮನೆಮಂದಿಯೆಲ್ಲರೂ ಕಂಗಾಲಾಗಿದ್ದರು. ನಾವು ಮನೆ ತಲುಪಿದ ಕೂಡಲೇ ಹೆಬ್ಬಾಗಿಲಲ್ಲಿಯೇ ನಮ್ಮನ್ನು ತಡೆದ ಅಮ್ಮಮ್ಮನು ಅಂದು ರಣಚಂಡಿಯಾಗಿದ್ದರು. "ಈ ಮಕ್ಕಳ ಸಹವಾಸವೇ ಸಾಕಪ್ಪಾ ಸಾಕು. ಉಸಿರು ನಿಲ್ಲುವ ಹಾಗೆ ಮಾಡ್ತ್ವಲೆ..ನೀವು ಹೋದದ್ದಾದರೂ ಎಲ್ಲಿಗೆ ಮಕ್ಳೇ ? ಯಾರನ್ನು ಕೇಳಿ ಸಮುದ್ರದ ಹತ್ತಿರ ಹೋದದ್ದು ? ನಿಮಗೆ ಯಾರೂ ಹೇಳುವವರು ಕೇಳುವವರು ಇಲ್ಲವಾ ? ಬಾಸುಂಡೆ ಬರುವ ಹಾಗೆ ಬಾರಿಸ್ತೇನೆ..." ಅನ್ನುತ್ತ ನನ್ನತ್ತ ತಿರುಗಿ "ಎಂತ ಹೆಣೆ, ನೀನೇನು ಹೆಣ್ಣಾ ? ಗಂಡಾ ? ಆ ಗಂಡ್ಮಕ್ಕಳ ಒಟ್ಟಿಗ್ ಸೇರ್ಕಂಡ್ ಅದೆಷ್ಟ್ ಅಧಿಕಪ್ರಸಂಗ ಮಾಡ್ತೆ ? ನಿನ್ನನ್ ಹಿಡ್ಕಂಡ್ ಬಾರ್ಸಿರೆ ನಿನ್ನಪ್ಪಯ್ಯ ಹಿಡಿಸೂಡಿ ಹಿಡ್ಕಂಡ್ ಬಪ್ಪ. ಮಕ್ಳ ಸಂತಾನಕ್ಕೆಲ್ಲ ನಾನ್ ಶಾಪ ಹಾಕ್ತಾ ಸಾಯ್ಕಾ ? ಇನ್ನೊಂದ್ಸಾರಿ ಈ ಹೆಬ್ಬಾಗ್ಲಿನ ಒಳಗೆ ಕಾಲಿಟ್ಟರೆ ನಿನ್ನ ಕಾಲು ಮುರೀತೇನೆ..." ಅಂದರು. ಆಗ "ಆಹಾ...ನಾನ್ಯಾಕೆ ಬರಬಾರದು ? ನಾನು ಬಂದೇ ಬರ್ತೇನೆ..." ಅಂದೆ. "ಹೌದಾ ? ಹೆಬ್ಬಾಗ್ಲು ಮುಚ್ತೆ. ಹೇಂಗ್ ಬತ್ತೆ ಕಾಂಬ.." ಅಂದರು. "ನಾನು ಬಾಗಿಲು ದೂಡಿಕೊಂಡು ಬತ್ತೆ.." ಅಂದೆ. "ಈ ಹದಿನೈದು ಅಡಿ ಎತ್ತರದ ಬಾಗಿಲನ್ನು ನೀನು ದೂಡ್ತ್ಯಾ ? " ಅನ್ನುತ್ತ ಅವರೆದುರು ನಿಂತು ಮಾತಾಡುತ್ತಿದ್ದ ಪಿಣಕುಟಿಯನ್ನು ದಿಟ್ಟಿಸಿ ನೋಡುತ್ತ ಸ್ವಲ್ಪ ಹೊತ್ತು ನಿಂತಿದ್ದು, ಆಮೇಲೆ ಮುಖ ತಿರುಗಿಸಿ "ಓ ಪರಮಾತ್ಮಾ, ನನ್ನನ್ ಬೇಗ ಕರಸ್ಕೋ ಅಪ್ಪ...ಈ ಮಕ್ಳ ಹಿಂಡನ್ನು ಸುಧಾರಿಸಲಿಕ್ಕೆ ಇನ್ ನನ್ನಿಂದ ಆಪ್ದಲ್ಲ..." ಅನ್ನುವ ಅಮ್ಮಮ್ಮನ ಸ್ವಗತದಲ್ಲಿ ಅಂದಿನ ಅಧ್ಯಾಯವು ಸಮಾಪ್ತಿಯಾಗಿ, ಎಲ್ಲವೂ ಶಾಂತವಾಯಿತು. ಅಂದು ದೈಹಿಕವಾಗಿಯೂ ಬಳಲಿದ್ದ ಅಜ್ಜಿಗೆ "ಸಿಟ್ಟಿಗಿಂತ ಹೆಚ್ಚು ದುಃಖವಾಗಿದೆ; ಆತಂಕವಾಗಿದೆ.." ಅನ್ನಿಸಿ, ನಾವೆಲ್ಲರೂ ಸ್ವಲ್ಪ ಪೆಚ್ಚಾಗಿದ್ದೆವು.

ಅದರ ಮರುದಿನ ನನ್ನ ಮಾವನ ಸಿಗರೇಟು ಪೊಟ್ಟಣದ ಪ್ರಸಂಗವು ಎಲ್ಲರಿಗೂ ಗೊತ್ತಾಗಿತ್ತು. ನಮ್ಮ ತಂಗಿ -ಯಾನೆ- ಅಂದಿನ  "ಒತ್ತೆಯಾಳು" ಹೇಳಿದ್ದೋ ಅಥವ ತನ್ನ ಕಿಸೆಯಲ್ಲಿಟ್ಟ ಸಿಗರೇಟು ಕಾಣೆಯಾಗಿದ್ದನ್ನು ಮಾವನೇ ಕಂಡು ಹಿಡಿದನೋ ಗೊತ್ತಿಲ್ಲ. ಅಂತೂ ನಮ್ಮ ಗುಟ್ಟೆಲ್ಲವೂ ರಟ್ಟಾಗಿ - ನಮ್ಮ ಉಪಾಯವು ಪೊಟ್ಟು ಚಟ್ಟಾಗಿ ಹೋಯಿತು. ಹಿಂದಿನ ದಿನ, ಅಜ್ಜಿಯ ನಸ್ಯದ ಡಬ್ಬದಿಂದ ನಾವೆಲ್ಲರೂ ಚಿಟಕಿ ನಸ್ಯ ಏರಿಸಿದಾಗ ಮಾತ್ರ - ತಕ್ಷಣವೇ ಸಿಕ್ಕಿ ಬಿದ್ದಿದ್ದೆವು. ಎಲ್ಲರೂ ಏಕಕಾಲದಲ್ಲಿ ಕಣ್ಣು ಮೂಗಿನಿಂದ ನೀರು ಸುರಿಸುತ್ತ ಸೀನತೊಡಗಿದಾಗ, ನಮ್ಮ ಮೂಗಿನಿಂದ ಬಣ್ಣದ ಸಿಂಬಳ ಇಳಿಯುವುದನ್ನು ಕಂಡ ಚಿಕ್ಕಮ್ಮನಿಗೆ ಗೊತ್ತಾಗಿ, ಅಂದು ಎಲ್ಲರಿಗೂ ಕೇಜಿಗಟ್ಟಲೆ ಪ್ರಸಾದ ಸಿಕ್ಕಿತ್ತು. ಸಿಗಬೇಕಾದ್ದು ಸಕಾಲದಲ್ಲಿ ಸಿಕ್ಕಿದರೆ ನಿಸ್ಸಂಶಯವಾಗಿ, ಅದರ ಬೆಲೆ ಮತ್ತು ಪರಿಣಾಮ ಹೆಚ್ಚುತ್ತದೆ. ಅಧಿಕಪ್ರಸಂಗದ ಯಾವುದೇ ಮಾನವು ಮೂರು ಕಾಸಾದರೆ ನಷ್ಟವೇನಿದೆ ? ಹೋಗಲಿ. ಹೋಗುವುದಕ್ಕೇ ಇರುವ ಮಾನ ಅದು.

ನನ್ನ ಅಜ್ಜನ ಮನೆಯಲ್ಲಿ ಮಕ್ಕಳ ವಿಷಯದಲ್ಲಿ ಗಂಡಸರು ಯಾರೂ ತಲೆ ಹಾಕುತ್ತಿರಲಿಲ್ಲ. ಅವೆಲ್ಲ ಹೆಂಗಸರ ವಿಭಾಗ ಎನ್ನುವ ಅಹಂಕಾರದ ಧೋರಣೆಯು ಅಲ್ಲಿತ್ತು. ಆದರೆ ಮದುವೆಯ ದಿನ ತನ್ನ ಸಿಗರೇಟು ಕಳಕೊಂಡ ಮಾವ ಮಾತ್ರ ಮರುದಿನ ನಮ್ಮ ಎದುರಿನಿಂದ ಹಾದು ಹೋಗುವಾಗ "ಹೂಂ...ಹೂಂ...ಎಷ್ಟು ಕುಣಿಯುವುದು ? ಹಡೆಗಳು..." ಅಂದಿದ್ದ. ಅಷ್ಟೆ. ಅಜ್ಜನ ಮನೆಯಲ್ಲಿನ ಗಂಡಸರ ಪ್ರತಿಕ್ರಿಯೆಗಳೆಲ್ಲವೂ ಯಾವಾಗಲೂ "ಹಾಂ...ಹೂಂ..." ಗಳಲ್ಲೇ ಮುಗಿದು ಹೋಗುತ್ತಿತ್ತು. "ಈ ಹೆಂಗಸರು ಮಕ್ಕಳ ಜತೆಯಲ್ಲೆಲ್ಲ ಎಂಥ ಮಾತು ?" ಎಂಬ ಡೌಲೂ ಕೂಡ ಅಂದಿನ ಹಲವು ಮನೆಗಳಲ್ಲಿ ಢಾಳಾಗಿತ್ತು.

ಅನಂತರ, ಎಷ್ಟೋ ವರ್ಷಗಳ ನಂತರ, ತೀರ ಇತ್ತೀಚೆಗೆ ಅದೇ ಅಜ್ಜಿಯ ಶ್ರಾದ್ಧಕ್ಕೆಂದು ನಾನು ಅಜ್ಜನ ಮನೆಗೆ ಹೋಗಿದ್ದೆ. ಆಗ ಊಟದ ಪಂಙ್ತಿಯಲ್ಲಿ ಕೂತವಳನ್ನು ಅನ್ನ ಬಡಿಸುತ್ತಿದ್ದ ಒಬ್ಬ ವ್ಯಕ್ತಿಯು ಮಾತನಾಡಿಸಿದರು. "ಗುರುತು ಸಿಕ್ಕಿತಾ ?" ಅಂದರು. ನನ್ನ ಮುಖ ನೋಡಿ "ಏನೋ" ಗೊತ್ತಿದ್ದಂತೆ ನಕ್ಕರು. "ಕ್ಷಮಿಸಿ...ಯಾರು ಅಂತ ನೀವೇ ಹೇಳಬೇಕು..." ಅಂದಾಗ "ಅವತ್ತು...ಮದುವೆಯ ದಿನ...ಅಲ್ಲಿ...ಹಾಡಿ...ಸಿಗರೇಟು..." ಅಂತ ತುಂಡು ತುಂಡಾಗಿ ನೆನಪಿಸಿದರು. ನನ್ನ ಬಾಯಲ್ಲಿದ್ದ ಅನ್ನವು ಹೊರಗೆ ಬೀಳದಂತೆ ಬಾಯಿಗೆ ಕೈಯನ್ನು ಅಡ್ಡವಿರಿಸಿಕೊಂಡು ನಾನು ಜೋರಾಗಿ ನಕ್ಕಿದ್ದೆ. ನನ್ನ ಆಚೆ ಈಚೆ ಊಟಕ್ಕೆ ಕೂತವರಿಗೆ ಆ ಮಾತಿನ ತಲೆಬುಡ ತಿಳಿಯಲಿಲ್ಲ. ಆ ಮದುವೆಯ ದಿನದಂದು ಬಡಿಸುತ್ತಿದ್ದ ವ್ಯಕ್ತಿಯೂ ನಮ್ಮ ಹಾಡಿ ಗ್ಯಾಂಗಿನಲ್ಲಿ ಇದ್ದರಂತೆ. ನನ್ನ ಊಟವಾದ ಮೇಲೆ ಅವರನ್ನು ಹುಡುಕಿಕೊಂಡು ಹೋಗಿ ಮತ್ತೊಮ್ಮೆ ನಾನು ಮಾತನಾಡಿಸಿ ಬಂದೆ. "ಮರೆಯಬೇಡಿ; ಕೊರಗಲೂ ಬೇಡಿ. ಕೆಲವು ಭಯಂಕರ  ಅನುಭವಗಳೂ ಬೇಕಾಗುತ್ತವೆ..." ಅಂದೆ. ಆದರೆ ಸಿಗರೇಟು ಪ್ರಿಯನಾದ ಆ ನನ್ನ ಪ್ರೀತಿಯ ಮಾವ ಮತ್ತು ನನ್ನ Best friend ಕೂಡ ಆಗಿದ್ದ ನನ್ನ ಚಿಕ್ಕಮ್ಮನ ಮಗನು - ಮುಂದೆಯೂ ವ್ಯಸನದ ಬದುಕಿನಿಂದ ಎದ್ದು ಬರಲಾಗದಷ್ಟು ದೂರ ನಡೆದು, ಅರೆ ಆಯುಷ್ಯದಲ್ಲಿಯೇ ಮುಳುಗಿ ಹೋದರು...ಈಗ ಅವರೆಲ್ಲ ನೆನಪು ಮಾತ್ರ.

ಈ ಎಲ್ಲ ರಾದ್ಧಾಂತಗಳೂ ನನ್ನ ಅಮ್ಮನಿಗೆ ತಲುಪಿದ್ದು ತುಂಬ ತಡವಾಗಿ. ಕೇಳಿದ ಅವಳು ತುಂಬ ದುಃಖ ಪಟ್ಟಿದ್ದಳು. "ಕಳತವರ ಸಾಧನೆಯಾ ? ಕಾಯ್ತವರ ಸಾಧನೆಯಾ ?" ಅಂದಿದ್ದಳು. (ಕಳುವವರ ಸಾಧನೆಯಾ ಕಾಯುವವರ ಸಾಧನೆಯಾ ? ಅನ್ನುವುದು ಶುದ್ಧರೂಪ. ಕಳ್ಳತನ ಮಾಡಲೇ ಬೇಕೆಂದು ಹೊಂಚು ಹಾಕುವವರಿಗಿಂತ ಕಾಯುವವರು - ಯಾವಾಗಲೂ ಒಂದು ಹೆಜ್ಜೆ ಹಿಂದೇ ಇರುತ್ತಾರೆ; ಕಳ್ಳರು ಹೇಗಾದರೂ ತಮ್ಮ ಕಾರ್ಯ ಸಾಧಿಸಿಬಿಡುತ್ತಾರೆ - ಎಂಬ ಅರ್ಥ.) "ಎಲ್ಲವೂ ಅವರವರಿಗೇ ಅನ್ನಿಸಬೇಕು. ಹಾಗಾಗದೆ - ಬರೇ ಹೊರಗಿನ ಬೇಲಿ ಹಾಕಿ ಸುಕ ಇಲ್ಲ...ಹಾರಾಟ ನಿಲ್ಲುವುದೂ ಇಲ್ಲ...ಅಪ್ಪಯ್ಯನಿಗೆ ಹೇಳುವುದು ಬೇಡ ಮಕ್ಳೇ. ಅವರು ಕೊಂದೇ ಹಾಕ್ತಾರೆ..." ಅನ್ನುತ್ತ ಅಂದು ಅಮ್ಮ ಮರುಗಿದ್ದಳು.



                                                      (ನನ್ನ ಅಮ್ಮ - 52 ರ ಹರೆಯದಲ್ಲಿ )
ಹಾಗೆ ನೋಡಿದರೆ, ಒತ್ತಾಯದಿಂದ ಯಾರನ್ನಾದರೂ ಪರಿವರ್ತಿಸುವುದು ಕಷ್ಟ. ಹಾಗೆ ಹೊರಟರೆ, ನಮ್ಮ ಮಾನ್ಯ ಪ್ರಧಾನಿಗಳು ಇಂದಿನ ಸರಕಾರೀ ನೌಕರರನ್ನು ನೆಟ್ಟಗೆ ಮಾಡಲು ಹೊರಟಂತೆ, ಬಹುಶಃ ಹೊಳೆಯಲ್ಲಿ ಹುಣಿಸೇಹಣ್ಣು ತೊಳೆದಂತೆ ಆದೀತು. ಯಾವುದೇ ಬದಲಾವಣೆಯು ಆಂತರ್ಯದಿಂದ ಚಿಮ್ಮಬೇಕಾದರೆ ಕೆಲವೊಮ್ಮೆ - ಅದಕ್ಕೆ ಸಾಂಪ್ರದಾಯಿಕವಲ್ಲದ ಹೊಸ ಮಾರ್ಗವನ್ನೇ ಹುಡುಕಿ ಅಳವಡಿಸಬೇಕು. ರೋಗಿಯನ್ನು ಶಿಕ್ಷಿಸುವುದಕ್ಕಿಂತ ರೋಗಮೂಲಕ್ಕೆ ಚಿಕಿತ್ಸೆ ನಡೆಯಬೇಕು. ಆದರೆ ಅಪ್ಪಯ್ಯನಿಗೆ ಬಹುಶಃ ಕೊನೆಯ ವರೆಗೂ ನನ್ನ ವಿನೋದಾವಳಿಯ "ಅಧಿಕ" ಪ್ರಸಂಗವನ್ನು ಯಾರೂ ಹೇಳಲಿಲ್ಲ. ಅಥವ ಅವರು ಹೊಸ ಬಗೆಯ ಚಿಕಿತ್ಸೆಗೆ ಉದ್ದೇಶಿಸಿದ್ದರು. ನನ್ನ ಅಪ್ಪಯ್ಯನೂ ಎಂಥವರೆಂದರೆ ಅವರ ಇದಿರಿನಿಂದ ಒಂದು ಇರುವೆ ಹೋದರೂ ಅವರು ಗಮನಿಸುತ್ತಿದ್ದರು; ಹಿಂದಿನಿಂದ ಆನೆ ಹೋದರೂ ಅವರ ಗೋಷ್ಟಿಗೇ ಬರುತ್ತಿರಲಿಲ್ಲ. ಅಕಸ್ಮಾತ್, ಯಾರಾದರೂ ನನ್ನ ಚಂಚಲ ಆಸಕ್ತಿಗಳ ಸುಳಿವು ಕೊಟ್ಟಿದ್ದರೆ ... ತಕ್ಷಣದ ಪ್ರತಿಕ್ರಿಯೆಯಾಗಿ ನನ್ನ ಬೆನ್ನಿನ ಚರ್ಮವನ್ನು ಸುಲಿದು ಮನೆಯ ಮುಂದೆ ನೇತು ಹಾಕುತ್ತಿದ್ದರೇನೋ ? ಇತ್ತ, ನನ್ನ ಮಗನು ಒಮ್ಮೆ ಶಾಲೆಯಿಂದ ಹಿಂದಿರುಗುವಾಗ ತನ್ನ ಗೆಳೆಯರೊಂದಿಗೆ ಹರಟುತ್ತ ಸಿಗರೇಟು ಸೇದುತ್ತಿದ್ದ ಅಪ್ಪನನ್ನು ನೋಡಿ, ನೆಲದಿಂದ ಸಣ್ಣ ಕಲ್ಲೊಂದನ್ನು ಎತ್ತಿ ಅಪ್ಪನತ್ತ ಒಗೆದು, ತಾನು ನಿಮ್ಮನ್ನು ಕಂಡಿದ್ದೇನೆ ಎಂಬುದನ್ನು ತೋರಿಸಿ, ಅವರಲ್ಲಿ ಯಾವ ಮಾತನ್ನೂ ಆಡದೆ ಮನೆಗೆ ಬಂದು ನನ್ನಲ್ಲಿ ದೂರಿದ್ದ. ನನ್ನ ಅಪ್ಪಯ್ಯ ಅಮ್ಮನಂತಹ ಸರಳ ವ್ಯಕ್ತಿಗಳಿಗೆ ಎಂತಹ ಮಗಳು ! ನನ(ಮ)ಗೆ ಅದೆಂತಹ ಮಗ ! ಅದೇ ಈ ಸೃಷ್ಟಿಯ - ಬದುಕಿನ ವೈಚಿತ್ರ್ಯ ! ಈ ಸೃಷ್ಟಿಯ ಆರಂಭದಲ್ಲಿ ಪ್ರಜಾಪತಿಯು ಸಕಲ ಜೀವಿಗಳನ್ನುದ್ದೇಶಿಸಿ ಪ್ರತ್ಯೇಕವಾಗಿ ಹೇಳುವಾಗ - "ಮನುಷ್ಯರಿಗೆ ಅವರವರ ಮಕ್ಕಳಿಂದಲೇ ಮರಣ..." ಎಂದಿದ್ದನಂತೆ. ಆ ಮಾತು ನನ್ನ ಪಾಲಿಗೆ ಅ(ರ್ಧ)ಸತ್ಯ. ಮಗನಿಂದ, ಮಗನಿಗಾಗಿ ಅಥವ ನಮ್ಮ  ಮಕ್ಕಳಿಗಾಗಿ - ನಮ್ಮ ಚಪಲದ ಬದುಕನ್ನು ಪುನರ್ನವೀಕರಿಸಿಕೊಳ್ಳಲು ಸಾಧ್ಯವಿದೆ ಎಂದು ಅನಂತರ ನನಗೆ ದೃಢವಾಗಿ ಅನ್ನಿಸಿತ್ತು. ನನ್ನ ಬಾಲ್ಯದ ಬದುಕಿನ ಮುಂದಿನ ಭಾಗದಲ್ಲಿ ಹೊಸ ಚಿಕಿತ್ಸೆಯ ಪ್ರಯೋಗದ ಭಾಗವಾಗಿ ಅಪ್ಪಯ್ಯನೇ ನನ್ನ ಲಗಾಮು ಹಿಡಿದದ್ದು, ಅವರಿಂದಾದಷ್ಟು ಪಳಗಿಸಿ ರಾಜಮಾರ್ಗ ಹಿಡಿಸಿದ್ದು - ಈ ಸ್ತ್ರೀ ಮೂಲದ ಉತ್ತರ ಕಾಂಡ.   

ಆದರೆ ಬದುಕಿನ ಯಾವುದೇ ಘಟನೆಗಳಿಗೆ ಅಂಟಿಕೊಂಡು ಕೂರುವುದು ನನ್ನ ಜಾಯಮಾನವಾಗಿರಲಿಲ್ಲ. ಮೂಲ ಸ್ವಭಾವವು ಬದಲಾಗುವುದೂ ಇಲ್ಲ. ಧೂಳಿನಲ್ಲಿ ಹೊರಳಾಡಿ, ಅಲ್ಲಲ್ಲೇ ಕೊಡವಿಕೊಂಡು ಮುನ್ನಡೆಯುವುದು ನನಗೆ ಪ್ರಿಯವಾದ ದಾರಿ. ಹಾಗೆ ಕೊಡವಿದ ಧೂಳು ಕೆಲವೊಮ್ಮೆ ಸುತ್ತಮುತ್ತ ಉಸಿರು ಕಟ್ಟಿಸುತ್ತಿದ್ದುದೂ ಇತ್ತು. "ಬದುಕಿನ ಯಾವುದೇ ಅನುಭವಗಳನ್ನು ಕಚ್ಚುವುದಕ್ಕೆ ಚುಚ್ಚುವುದಕ್ಕೆ ಯಾರಿಗೂ ಸಂಕೋಚ ಬೇಡ; ಆದರೆ ತಟಪಟ ಅನುಭವಗಳೆಲ್ಲವೂ ಒಟ್ಟಾಗಿ ಸೇರಿಕೊಂಡು ತಿರುಗಿ ನಿಂತು, ನಮ್ಮ ಬದುಕನ್ನು ಕಚ್ಚಲು ಬಿಡದಂತಹ ಎಚ್ಚರ ಬೇಕು" ಎಂಬುದು ನಾನು ನಂಬಿ ನಡೆದ ದಾರಿ. "ಒಳ್ಳೆಯದು, ಕೆಟ್ಟದು...ಹೆಣ್ಣು ಗಂಡು, ಬಗೆಬಗೆಯ ಭೇದಭಾವ" ಎನ್ನುವ ಸಾಮಾಜಿಕ ಅಳತೆಗೋಲುಗಳೆಲ್ಲವೂ ಆಯಾ ಕಾಲ ಪರಿಸ್ಥಿತಿಗಳಲ್ಲಿ ಹುಟ್ಟಿ ಅನೂಚಾನವಾಗಿ ನಡೆದು ಬಂದ ಅಸ್ಥಿರ ಭೂತಗಳು. ಅಂತಹ ಅಸ್ಥಿರವನ್ನು ಭೂತದ ಮೆರವಣಿಗೆಯಂತೆ ವೈಭವೀಕರಿಸಿ ಖಾಲಿಯಿದ್ದಲ್ಲೆಲ್ಲ ಯಾರೂ ಹೇರಬಾರದು. ಬದುಕಿನ ಹಾದಿಯಲ್ಲಿ - ಕೊನೆಗೊಮ್ಮೆ "ಕಂಡಿದ್ದೇನೆ; ಹೋಗಯ್ಯ..." ಅನ್ನುವುದಕ್ಕೂ ಒಂದಷ್ಟು ವಿಭಿನ್ನ ಅನುಭವವು - ಪ್ರತೀ ಬದುಕಿಗೂ ಬೇಕು. ಬದುಕಿನ ದಾರಿಯಲ್ಲಿ ಎದುರಾಗುವ ಆಕಸ್ಮಿಕಗಳನ್ನು ಊಹಿಸಿ ಜಾಗ್ರತರಾಗುವುದಕ್ಕೂ ಅನುಭವಗಳು ಬೇಕು. ಕೆಲವೊಮ್ಮೆ ಸತ್ತಂತಹ ಹಂತದ ವರೆಗೂ ಹೋಗಿ ಹೋಗಿ ಬರಬೇಕು. ಆದರೆ ಬಿದ್ದು ಎದ್ದು ನಿಲ್ಲಲಾಗದವರು - ಎಂದೂ ಮುಳುಗುವ ಉಸಾಬರಿಗೆ ಹೋಗಲೇಬಾರದು. ಆದರೆ ಯಾವತ್ತೂ ಎಲ್ಲರಿಗೂ ಒಂದೇ ಮಾನದಂಡವು ಹೊಂದುವುದಿಲ್ಲ. ಅವರವರ ಅಳತೆಗೆ ತಕ್ಕಂತಹ ಬಟ್ಟೆಯು - ನಮ್ಮದಾಗಬೇಕು. ಬದುಕಿನ ಯಾವುದೂ - ಯಾರಿಗೂ - ಅನಿವಾರ್ಯ ಎಂದಾಗಲೇಬಾರದು. ಅದೇ ಬದುಕಿನ ಸೂಕ್ಷ್ಮ. ಮುಖ್ಯವಾಗಿ ಬದುಕು ಪೂರ್ಣವಾಗಲು - ತಪ್ಪು ಒಪ್ಪಿನ ಸಂಘರ್ಷದೊಳಗೇ ಮುಳುಗಿ ಮುಳುಗಿ ಸಾಯಬಾರದು ಎಂದಿದ್ದರೆ, ಬದುಕಿನ ಬಣ್ಣ ಬಟ್ಟೆ ಕೆಡಬಾರದು ಎಂಬ ಪ್ರಜ್ಞೆಯೊಂದಿದ್ದರೆ, ಅಪಾತ್ರರೊಂದಿಗೆಲ್ಲ ತಮ್ಮನ್ನು ಹೋಲಿಸಿಕೊಂಡು ನಿರಂತರ ನರಳದಿದ್ದರೆ...  ಎಲ್ಲವೂ ಒಳ್ಳೆಯದೇ ಆಗಿಹೋಗುತ್ತದೆ. ಮಾತ್ರವಲ್ಲದೆ, ದಾರಿ ತಪ್ಪಿದರೂ ದಿಕ್ಕು ತಪ್ಪದಂತೆ - ಬೆನ್ನುಬಿಡದೆ ಬದುಕಿನುದ್ದಕ್ಕೂ ಕಾಪಾಡುವ ಅದೃಷ್ಟ ಶಕ್ತಿಗೆ - ಅಯಾಚಿತವಾಗಿ ತಲೆ ಬಾಗಿ ವಿನಮ್ರವಾಗುತ್ತದೆ. ....ಹುಟ್ಟಿದ ಪ್ರತಿಯೊಬ್ಬರೂ ಸಾಯುತ್ತಾರೆ. ಆದರೆ ವ್ಯತ್ಯಾಸ ಇಷ್ಟೇ. ಕೆಟ್ಟ ಬದುಕು ಅದನ್ನು ಅದೇ ಸಾಯಿಸಿಕೊಳ್ಳುತ್ತದೆ; ಒಳ್ಳೆಯ ಬದುಕನ್ನು ಇತರರು ಹೊಂಚು ಹಾಕಿ ಸಾಯಿಸುತ್ತಿರುತ್ತಾರೆ ಅನ್ನುವುದೇ ವಿಡಂಬನೆ.

ನಾವು ಕೋಟೇಶ್ವರದಲ್ಲಿದ್ದ ಅವಧಿಯಲ್ಲಿ ನಡೆದ, ಒಮ್ಮೊಮ್ಮೆ ನಾನೇ ನಡೆಸಿದ ಕ್ಷುಲ್ಲಕಗಳಿಗೆ ಇತಿಮಿತಿಯಿರಲಿಲ್ಲ. ಆದರೆ ನನ್ನ ಒಟ್ಟಾರೆ ಅನುಭವಗಳಿಂದ - ಬದುಕಿನಲ್ಲಿ ನಾನು ಕಳೆದುಕೊಂಡದ್ದಕ್ಕಿಂತ ಪಡೆದುದೇ ಹೆಚ್ಚು ಎಂಬುದರಲ್ಲಿ ಸಂಶಯವಿಲ್ಲ. ಇನ್ನೂ ಈಗಲೂ ನಾನು ತಂಟೆ ಮಾಡುತ್ತ ಬದುಕಿರುವುದೇ ಅದಕ್ಕೆ ಸಾಕ್ಷಿ. ಅದಕ್ಕೇ - ಕೋಟೇಶ್ವರವು ನನ್ನ ಒಳಗೆ ಭದ್ರವಾಗಿ ದಾಖಲಾಗಿದೆ. ಎಡವಿ ಬೀಳುತ್ತ ಬೀಳಿಸುತ್ತ ನಡಿಗೆ ಕಲಿತ ಆ ಅವಧಿಯನ್ನು ಆಗಾಗ ಮುಟ್ಟಿ ಬರುತ್ತ ನನ್ನೊಳಗೆ ಭದ್ರವಾಗಿ  ಕೊರೆದಿಟ್ಟುಕೊಂಡುದರ ಹಿಂದೆಯೂ - ಮಥನ ಮಂಥನಕ್ಕೆ ಇಂಬು ಕೊಡುವ ಪ್ರೇರಣೆಯು ಸಿಗುತ್ತಲೇ ಇರಲಿ ಎಂಬ ಉದ್ದೇಶವಿದೆ. 

ಒಮ್ಮೆ ಅಮ್ಮನ ಕರಿಮಣಿ ಸರ ತುಂಡಾಗಿ, ಅದನ್ನು ದುರಸ್ತಿಗೊಳಿಸುವ ಪ್ರಸಂಗ ಬಂದಿತ್ತು. ಅದಕ್ಕಾಗಿ, ಸಾಲಿಗ್ರಾಮದ ಒಬ್ಬರು ಅಕ್ಕಸಾಲಿಗರನ್ನು ಅಪ್ಪಯ್ಯನು ಕೋಟೇಶ್ವರದ ಮನೆಗೆ ಕರೆಸಿದ್ದರು. ಅಂದು ಚಿನ್ನದ ಕೆಲಸ ಮಾಡುವವರು ನಮ್ಮ ಮನೆಗೇ ಬಂದು, ಅಂಗಳದಲ್ಲಿ ಕೂತು ಆಭರಣ ತಯಾರಿಸಿ ಕೊಟ್ಟು ಹೋಗುತ್ತಿದ್ದರು. ಅದು ಚೂರುಪಾರು ಕೆಲಸವಾದರೂ ಇಂದಿನಂತೆ ಅಸಡ್ಡೆ ತೋರುತ್ತಿರಲಿಲ್ಲ. ಅಂದು ಅಕ್ಕಸಾಲಿಗರು ಕೆಲಸ ಮಾಡುತ್ತಿದ್ದಾಗ ನಾನು ಅಲ್ಲೇ ಕೂತು ಎರಡು ದಿನ ಪೂರ್ತಿ ನೋಡಿದ್ದೆ. ಎಂತಹ ಏಕಾಗ್ರತೆ, ಜಾಗ್ರತೆ, ಬೆಂಕಿಗೆ ಗಾಳಿ ಊದುವಾಗಲೂ ಅದೆಷ್ಟು ನಿಯಂತ್ರಣ, ನಿಗಿನಿಗಿ ಕುಣಿಯುತ್ತಿದ್ದ ಕೆಂಡ...ಇವನ್ನೆಲ್ಲ ನೋಡುತ್ತ ನೋಡುತ್ತ ಅಂದು ಬೆರಗಾಗಿದ್ದೆ. ನನಗೆ ನೆನಪಿದೆ. ಆ ಗಾಳಿ ಊದುವ ಪುಂಗಿಯ ರೀತಿಯ ವಸ್ತುವನ್ನು "ನನಗೆ ಕೊಡು; ನಾನು ಊದುತ್ತೇನೆ..." ಅನ್ನುತ್ತ ಅಂದು ಆ ಅಕ್ಕಸಾಲಿಗರನ್ನು ತುಂಬ ಬೇಡಿಕೊಂಡಿದ್ದೆ. ಕಂಡದ್ದೆಲ್ಲವನ್ನೂ ನಾನೂ ಮಾಡಬೇಕೆಂಬ ಉತ್ಕಟ ಹಂಬಲದ ನನ್ನ ತುರಕ್ಮಿಣಿ ವಿದ್ಯೆಯನ್ನು ನಾನು ಆಗಲೇ ತೋರಿಸತೊಡಗಿದ್ದೆ. ನನ್ನ ಪೀಡೆ ತಾಳಲಾರದೆ, ತನ್ನ ಎಲ್ಲ ಕೆಲಸ ಮುಗಿದ ಮೇಲೆ ಅವರು ಆ ಪುಂಗಿಯಂಹ ಊದುಕೊಳವೆಯನ್ನು ನನಗೆ ಊದಲು ಕೊಟ್ಟಿದ್ದರು. ಆದರೆ, ನಾನು ಎಷ್ಟು ಊದಿದರೂ ಅದರ ಪುಗ್ಗೆಯು ಉಬ್ಬಲೇ ಇಲ್ಲ. ನನ್ನ ಉಸಿರು ಕೊಳವೆ ದಾಟಿ ಹೊರಗೆ ಬರಲೂ ಇಲ್ಲ. "ನೀನು ದೊಡ್ಡವಳಾದ ಮೇಲೆ ಆಗುತ್ತದೆ; ಈಗ ನಿನಗೆ ಶಕ್ತಿಯಿಲ್ಲ. ಆಯ್ತಾ ?" ಅನ್ನುತ್ತ ಅವರು ತಮ್ಮ ಪುಂಗಿಯನ್ನು ನನ್ನ ಕೈಯ್ಯಿಂದ ಪಡೆದು ತಮ್ಮ ಚೀಲದೊಳಗೆ ಇಟ್ಟುಕೊಂಡಿದ್ದರು. ಆದರೆ ಈ ಎಲ್ಲ ಆವಾಂತರವನ್ನು ಒಳಗಿನಿಂದಲೇ ಗಮನಿಸಿದ್ದ ಅಮ್ಮ ನನ್ನನ್ನು ಬಚ್ಚಲಿಗೆ ಕರೆದೊಯ್ದು, ಬಾಯಿ ಮುಕ್ಕಳಿಸಿ ಉಗಿಯಲು ಹೇಳಿದ್ದಳು. ನನ್ನ ಇಡೀ ಮುಖವನ್ನೆಲ್ಲ ತೊಳೆದು ತನ್ನ ಸೆರಗಿನಿಂದ ಒರೆಸಿ "ಸೀದ ಒಳಗೆ ಹೋಗು. ಕಂಡ ಕಂಡದ್ದಕ್ಕೆಲ್ಲ ಬಾಯಿ ಹಾಕಬಾರದು.." ಅನ್ನುತ್ತ ಹೆದರಿಸುವಂತೆ ಕಣ್ಣು ಬಿಟ್ಟು, ಬೆನ್ನಿಗೆ (ನೋವಾಗದಂತೆ) ಗುದ್ದಿ ಕಳಿಸಿದ್ದಳು.

ಕಂಡ ಕಂಡದ್ದನ್ನೆಲ್ಲ ಬಾಯಿಗೆ ಹಾಕುವ, ಕಂಡದ್ದನ್ನೆಲ್ಲ ಮಾಡಿ ನೋಡುವ ಯಾವುದೇ ಚಾಳಿಯು ಒಟ್ಟಾರೆ ಆರೋಗ್ಯಕ್ಕೆ ಒಳ್ಳೆಯದಲ್ಲವಂತೆ. ಅಮ್ಮ ತನ್ನ ಬಾಯಿ ಹರಿದು ಬೀಳುವಷ್ಟು ಬಾರಿ ಹೇಳಿದ ಮಾತಿದು. ಹೌದು. ಆದರೆ ಅದು - ನಮ್ಮ ಕೈ ಬಾಯಿಯ ತಪ್ಪೆ ? ಹುಚ್ಚು ಕುದುರೆಯಂತಿರುವ ಮನಸ್ಸಿಗೆ ಲಗಾಮು ಬಿಗಿಯಲು ಪ್ರಯತ್ನಿಸುವ ಸಂಕಲ್ಪವು ಅಂತರಂಗದಲ್ಲಿಯೇ ಬಲಿಯುವವರೆಗೂ ಅವೆಲ್ಲ ಸಾಧ್ಯವೆ ? ಏನೇ ಆದರೂ ಬದುಕು ದೊಡ್ಡದು. ಬದುಕಿನ ಅದಮ್ಯ ಪ್ರೀತಿಯಿಂದ, ಸ್ವವಿಮರ್ಶೆಗೆ ನಮ್ಮನ್ನು ಒಡ್ಡಿಕೊಳ್ಳುವ ಮೂಲ ಸ್ವಭಾವದಿಂದ ಮತ್ತು ದೈವ ಕೃಪೆಯಿಂದ - ಬಹುಶಃ ಬದುಕಿನ ದಾರಿಯಲ್ಲಿ ಒಮ್ಮೊಮ್ಮೆ ಮುಗ್ಗರಿಸಿದ್ದರೂ  ಕೆಲವರು - ಎಚ್ಚರಗೊಂಡು ಮೈಕೊಡವಿ ನಡುದಾರಿಯಲ್ಲಾದರೂ  ಸಂಭಾಳಿಸಿಕೊಳ್ಳುತ್ತಾರೆ; ಬದುಕು ಬಾಡದಂತೆ ಜತನದಿಂದ ಉಳಿಸಿಕೊಳ್ಳುತ್ತಾರೆ...ಎಂದೂ ಅನಂತರ ನನಗೆ ಅನ್ನಿಸಿದ್ದಿದೆ.

ನೀರು ಇದ್ದಲ್ಲೆಲ್ಲ ಕೆಸರು ಇರುವುದೂ ಸ್ವಾಭಾವಿಕ. ಪ್ರತೀ ಜೀವನ ಪ್ರವಾಹದ ಆಳದಲ್ಲೂ ಹೊರಗಣ್ಣಿಗೆ ಕಾಣದ ಒಂದಷ್ಟು ಕತ್ತಲೂ ಇರುತ್ತದೆ. ಈ ನೆಲದಲ್ಲಿ, ಕೆಲಕೆಲವರಿಗೆ ಕೆಲಕೆಲವು ಪ್ರಸಂಗಗಳಲ್ಲಿ ಆಸಕ್ತಿ ಅವಲಂಬನೆಗಳು ಇದ್ದರೆ ನನಗೆ ಮಾತ್ರ - ಈ ಭೂಮಿಯ ಮೇಲಿರುವ ಎಲ್ಲ ಅಧಿಕಪ್ರಸಂಗಗಳಲ್ಲೂ ತನ್ಮಯತೆಯಿದ್ದದ್ದು ನನ್ನ ಭಾಗ್ಯ ಅಥವ ದೌರ್ಭಾಗ್ಯ ಅನ್ನಬಹುದು. (ಯಾಕೆಂದರೆ ಎರಡೂ ಕೊಡುವುದು ಉತ್ತರವಿರದ ಪರೀಕ್ಷೆಗಳನ್ನೇ.) ಅದಕ್ಕಾಗಿ, ನಮ್ಮ ಒಳ ಪ್ರಜ್ಞೆಯನ್ನು ಎಬ್ಬಿಸಿ, ಬ್ಯೂಟೀ ಪಾರ್ಲರ್ ಗೆ ಕಳಿಸದೆ - ಅದಾಗಲೇ ಇರುವ ವೇಷವನ್ನೆಲ್ಲ ಕಳಚಿ ನಗ್ನಗೊಳಿಸಬೇಕು; ಸಹಜವಾಗಬೇಕು. ನಮ್ಮ ವರ್ತನೆ, ಆಂಗಿಕ ಚರ್ಯೆ, ಉಸಿರಾಟ, ಆಹಾರ ಪದ್ಧತಿ, ಆಯ್ದ ಸ್ನೇಹ ಸಂಬಂಧಗಳು, ಕಾರ್ಯ ಶೈಲಿ, ಸಣ್ಣ ಅವಧಿಗೆ ಗುರಿ ಹೇರಿಕೊಳ್ಳುವುದು - ಇತ್ಯಾದಿಗಳೆಲ್ಲವೂ ಚಂಚಲ ವ್ಯಕ್ತಿತ್ವವನ್ನು ಕಟ್ಟಿ ನಿಲ್ಲಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ. ಇನ್ನೊಬ್ಬರನ್ನು ಗಮನಿಸುತ್ತ ಎಡೆಬಿಡದೆ ಟೀಕೆಟಿಪ್ಪಣಿ ಮಾಡುವುದಕ್ಕಿಂತ ನಮ್ಮನ್ನು ನಾವೇ ಪರಿಶೀಲಿಸಿಕೊಳ್ಳುತ್ತ, ಅವಶ್ಯ ಕಂಡಾಗ ಟೀಕಿಸಿಕೊಳ್ಳುವುದು ಸ್ವಂತ ವ್ಯಕ್ತಿತ್ವ ರೂಪಿಸಿಕೊಳ್ಳುವ ಉತ್ತಮ ಮಾರ್ಗ. ಮುಂದೆ ನಡೆಯುವ ಎಮ್ಮೆಯನ್ನು ನೋಡಿ ಹಿಂದಿನ ಎಮ್ಮೆಯು "ಪಿಸಿಕ್...ಬೆತ್ತಲೆ ಹೋಗುತ್ತಿದೆ.." ಅನ್ನುವ ಹಾಗೆ - "ಹಟ್ಟಿ ಹಣೆ ಹೋರಿ ತಲೆ" ಯಂತಹ ವ್ಯಕ್ತಿತ್ವಗಳು ಸ್ವಂತಕ್ಕೂ ಸಮಾಜಕ್ಕೂ ಒಳಿತನ್ನು ತರಲಾರದು. ಪದವಿ ಪತ್ರ ಮತ್ತು ಅಲಂಕರಿಸಿದ ಪದವಿಗಳಿಂದ ಯಾರನ್ನೂ ಅಳೆಯಲಾಗದು.  ಉತ್ತಮ ಓದು ಬರಹಗಳು, ಸಚ್ಚಿಂತನೆಗಳು ಮತ್ತು ಏಕಾಗ್ರ ಲಯಬದ್ಧ ನಡಿಗೆಯು ಮಾತ್ರ ನಮ್ಮ ಬದುಕಿನ "ಅತಿ"ಗಳನ್ನೆಲ್ಲ ಸವರಿ ಮಿದುಗೊಳಿಸಿ - "ಸ್ಥಿತಿ ಗತಿ ಮತಿ" ನೀಡಿ - ಈ ನಿಟ್ಟಿನಲ್ಲಿ ಮುನ್ನಡೆಸುವ ಅದಮ್ಯ ಶಕ್ತಿಸ್ರೋತವಾಗಬಲ್ಲದು.
      
                                             *****-----*****-----*****


   

Thursday, January 7, 2016

ಸುಮ್ಮನೆ ಕಥಾಮನೆ 3 - ಅವ್ಯಕ್ತ

"ಇದೇನು? ಇಡೀ ಸಭಾಂಗಣ ಖಾಲಿಯಾಗಿದೆಯಲ್ಲ ? ನಮ್ಮ ತ್ರಿಜ್ಯನ ಪುಸ್ತಕ ಬಿಡುಗಡೆ ಇವತ್ತು ಹೌದಾ ಅಲ್ಲವಾ?...ಓಹೋ...ಯಾರೋ ಇಬ್ಬರು ವೇದಿಕೆಯ ಮೇಲೆ ಓಡಾಡುತ್ತಿದ್ದಾರೆ...ಮೇಲೆ ಹೋಗಿ ಹತ್ತಿರದಿಂದ ನೋಡುತ್ತೇನೆ..."
.........
.........
                                                             ನ್ನಿ ...
                                                   
ಪ್ರಸಿದ್ಧ ಕತೆಗಾರ ತ್ರಿಜ್ಯ ಅವರ                                    *                
            ಹೊಸ ಕಥಾ ಸಂಕಲನ                                 *                 ಹಿ
                     ಪರಿಧಿ                                              *                  

                  ಬಿಡುಗಡೆ  -  ನಂಜಪ್ಪ ಅವರಿಂದ                               
                                                                          ಯಮುನ ವೇದಿಕೆ
                        


ಸುಮನಸ  ಅವರ ಕವನ ಸಂಕಲನ                              *                              
                ದಾರಿಯ ತೋರೋ                                  *        ಸ್ವಾಗತ 

                     ಬಿಡುಗಡೆ  -  ಪ್ರೊ. ಕುಂ. ಡೀ. ಅವರಿಂದ                               

                                                          ದಿನಾಂಕ : ೩೨. ೧೩. ೩೦೦೧.
                                                          ಸಮಯ : ಅಪರ ರಾತ್ರಿ ೨೫ ಗಂಟೆ.
                                             ........________........________........

ದೊಡ್ಡ ಬರಹದ - ಗೋಡೆ ಪಟ್ಟಿಯನ್ನು ವೇದಿಕೆಯ ಹಿಂದಿನಿಂದ ದೊಡ್ಡದಾಗಿ ಕಾಣುವಂತೆ ನಾಲ್ಕು ಜನ ಎಳೆದು ಕಟ್ಟಿದರು. ಅಂದರೆ ಕಾರ್ಯಕ್ರಮವೇನೋ ಇದೆ ಅಂತಾಯ್ತು. ಸಿದ್ಧವಾಗಿದ್ದ ಧ್ವನಿವರ್ಧಕವನ್ನು ತಟ್ಟಿ ಕುಟ್ಟಿ ಊದಿ ಪರೀಕ್ಷಿಸತೊಡಗಿದರು. "ರಾಮ ರಾಮಾ, ಅದನ್ನು ಪರೀಕ್ಷಿಸುವುದಕ್ಕೆ ಕರ್ಕಶವಾಗಿ ಹೀಗೆಲ್ಲ ಯಾಕೆ ತಟ್ಟುತ್ತಾರೋ ? ...ನನಗೇನಂತೆ ? ನೋಡಲು ಬಂದವನಿಗೆ ಅಧಿಕಪ್ರಸಂಗ ಯಾಕೆ ?

ಅರೆರೇ.... ಜನ ಇಣುಕಿ ಇಣುಕಿ ಎಲ್ಲಿಗೆ ಹೋಗುತ್ತಿದ್ದಾರೆ ? ನೋಡಿ ಬರುತ್ತೇನೆ...

ಓಹೋ....ಎಲ್ಲರಿಗೂ ಇಲ್ಲಿ ಹೊಟ್ಟೆ ಸಮಾರಾಧನೆ ನಡೆಯುತ್ತಿದೆಯಲ್ಲ ? ಬಿಸಿಬಿಸಿ ಅಂಬೊಡೆ, ಶಿರ, ಕಾಫಿ, ಚಹಾ... 

ಈಗ ಒಬ್ಬೊಬ್ಬರಾಗಿ ತೇಗುತ್ತ ಒಳಗೆ ಹೋಗುತ್ತಿದ್ದಾರೆ. ಬರೆಬರೆದು ಪೀಡಿಸುವವರನ್ನು ದಾರಿಗೆ ತರುವ ಪ್ರಕಾಶಕ ಮಹಾಶಯ ಇವರೇ ಇರಬೇಕು. ದೇಶಾವರಿ ನಗುತ್ತ ಓಡಾಡುತ್ತಿದ್ದಾರೆ. ಅವರ ಜೊತೆಗಿರುವ ಆ ಹೆಂಗಸು ಪ್ರಕಾಶಕರ ಪತ್ನಿಯಿರಬೇಕು. ಅರೆರೇ...ಸಭಾಂಗಣದಲ್ಲಿ ತಿರುಗುತ್ತಿದ್ದ ಇವರಿಬ್ಬರೂ ಧಾವಂತದಿಂದ ಹೊರಗೆ ಓಡಿದರಲ್ಲ ? ಯಾರೋ ಭಾರೀ ಕುಳ ಬಂದಿರಬೇಕು. ಓಹೋ... ಒಬ್ಬರಲ್ಲ; ಒಂದು ದೊಡ್ಡ ಗುಂಪೇ ಒಳಗೆ ನುಗ್ಗಿದೆ. ಒಂದು ಕ್ಷಣದಲ್ಲಿ ಇಡೀ ಸಭಾಂಗಣವೇ ತುಂಬಿ ಹೋಯ್ತಲ್ಲ ?


ಮತ್ತೊಮ್ಮೆ ಧ್ವನಿವರ್ಧಕದ ಜೀವ ಹಿಂಡಲು ಶುರುವಾಯಿತು. ಹಲೋ ಹಲೋ...ಪಟ್ಟ್ ಪಟ್ಟ್, ಫೂ ಫೂ...

ನಮ್ಮ "ಸಹಿತ ಯಮುನ ವೇದಿಕೆ"ಯ ಹಾಮಂತ್ರಣವನ್ನು ಮನ್ನಿಸಿ ಹಾಗಮಿಸಿದವರಿಗೆಲ್ಲ ಹಾತ್ಮೀಯ ಸ್ವಾಗತ.

ಓಹ್..ಶುರುವಾಗಿದೆ. ನಾನು ಬದಿಯಲ್ಲಿದ್ದು ನೋಡುತ್ತೇನೆ.

ಇಂದು ಪುಸ್ತಕ ಬಿಡುಗಡೆಯನ್ನು ಮಾಡಲಿರುವ ಸಾಹಿತ್ಯ ರಣ ಮಾರ್ತಾಂಡ ಸಮಾನರಾದ ನಂಜಪ್ಪನವರು ವೇದಿಕೆಗೆ ಹಾಗಮಿಸಬೇಕೆಂದು ಪ್ರಾರ್ಥನೆ. (ಘನಘೋರ ಚಪ್ಪಾಳೆ) ಇನ್ನೊಬ್ಬರು - ಸಾಹಿತ್ಯ ವಾರಿಧಿಯ ತಿಮಿಂಗಿಲ ಪ್ರೊಫೆಸರ್ ಕುಂ. ಡೀ ಅವರೂ ಹಾಗಮಿಸಬೇಕು. (ಕೆಲವೇ ಚಪ್ಪಾಳೆ...)

ಹಿಂದಿನ ಕಾರ್ಯಕ್ರಮದ ಪ್ರಾಯೋಜಕರೂ ವಿಕ್ಯಾತ ಹುದ್ದಿಮೆದಾರರೂ ಆದ ನಂಜಪ್ಪನವರಿಗೆ ಹಾರ್ದಿಕ ಸ್ವಾಗತ. (ಮತ್ತೊಮ್ಮೆ ಚಪ್ಪಾಳೆ) ಎಲ್ಲ ಹತಿತಿಗಳನ್ನೂ ನಮ್ಮ ಪ್ರಕಾಶಕರಾದ ಶಿಂಗಣ್ಣ ಅವರು ವೇದಿಕೆಗೆ ಕರೆ ತರಬೇಕೆಂದು ಪ್ರಾರ್ಥನೆ. (ಬಹುಶಃ ಕೆಲವರಿಗೆ ಏನಾದರೂ ದೈಹಿಕ ಐಬು ಇರಬಹುದು..ಅಂದುಕೊಂಡೆ)

(ಅರೆ...ಎಲ್ಲರೂ ಸರಸರ ನಡೆದುಕೊಂಡು ವೇದಿಕೆ ಹತ್ತಿದರಲ್ಲ ? ನಾಕು ಹೆಜ್ಜೆ ನಡೆದು ವೇದಿಕೆ ಹತ್ತಲಿಕ್ಕೆ ಶಿಂಗಣ್ಣನವರ ಊರುಗೋಲು ಯಾಕೆ ? ಅವರಿಗೆ ಇನ್ನೊಂದು ಜೊತೆ ಯಾಕೆ ? ಬಹುಶಃ ಮತ್ತೊಂದು ಕೃತಕ ಗೌರವದ ಹೊಸ ವೈಖರಿ ಇರಬಹುದು !)

ಎಲ್ಲರೂ ವೇದಿಕೆ ಹತ್ತಿ ಕುರ್ಚಿ ತುಂಬಿದರು.  

"ಹೀಗ ಕತೆಗಾರ ತ್ರಿಜ್ಯ, ಕವಿ ಸುಮನಸ ಅವರೂ ವೇದಿಕೆಗೆ ಹಾಗಮಿಸಬೇಕು..." ಅಂತ ಘೋಷಿಸಿದ ಕೂಡಲೇ ಕೊನೆಯಲ್ಲಿ ತಮ್ಮನ್ನೂ ಕರೆದರಲ್ಲ ಅನ್ನುವ ಉದ್ವೇಗದಲ್ಲಿ ಇಬ್ಬರೂ ಲೇಖಕರು - ಧಡಬಡ ವೇದಿಕೆ ಏರಿದರು. ಸಭೆಗೆ ಕೈ ಮುಗಿದು ಅಲ್ಲಿ ಖಾಲಿಯಿದ್ದ ಎರಡು ಕುರ್ಚಿಯಲ್ಲಿ ಆಸೀನರಾದರು.

"ಹೀಗ... ಪ್ರಾರ್ಥನೆ" ಅಂತ ಹೇಳಿದ ಕೂಡಲೇ ಇಬ್ಬರು ಹುಡುಗಿಯರು ಬಂದು ವೇದಿಕೆಯಲ್ಲಿ ನಿಂತರು. ಸಭಿಕರೆಲ್ಲ ಎದ್ದು ನಿಂತರು. ನಾನು ಅಲ್ಲೇ ಬದಿಯಲ್ಲಿದ್ದೆ. ಪ್ರಾರ್ಥನೆ ಶುರುವಾಯಿತು. ಅದು ನಾನು ದಿನವೂ ಹೇಳುವ, ನನಗೆ ಗೊತ್ತಿದ್ದ ಶ್ಲೋಕವೇ ಆಗಿತ್ತು. ಗಜಾನನಂ ಭೂತಗಣಾದಿ ಸೇವಿತಂ...ಪ್ರಾರ್ಥನೆಯ ಮತ್ತು ನಿಲ್ಲುವ ಶಾಸ್ತ್ರ ಮುಗಿದ ಮೇಲೆ ಮತ್ತದೇ "ಹಾಹಾ"ಕಾರ ಶುರುವಾಯಿತು.



ನಮ್ಮ ಪ್ರಕಾಶಕರಾದ ಶಿಂಗಣ್ಣನವರಿಂದ ಹೀಗ ಸ್ವಾಗತ ನುಡಿ...ಅಂದ ಕೂಡಲೇ ಶಿಂಗಣ್ಣನವರು ಲಗುಬಗೆಯಿಂದ ಬಂದು, ಮೈಕನ್ನು ಎರಡು ಬಾರಿ ತಟ್ಟಿ, ಎದುರಿನಿಂದ ಚಿತ್ರ ತೆಗೆಯುತ್ತಿದ್ದ ಯಂತ್ರವಾಹಕರತ್ತ ನಗುವನ್ನು ಚೆಲ್ಲಿ, ಅವರನ್ನು ತೃಪ್ತಿಪಡಿಸಿ, ಒಮ್ಮೆ ಕೆಮ್ಮಿ, ಧ್ವನಿ ಪೆಟ್ಟಿಗೆಯ ಗೇರ್ ಹಾಕಿದರು. ಪ್ರಾಯೋಜಕರಾದ ನಂಜಪ್ಪ ಅವರ ಗುಣಗಾನ ಮಾಡುತ್ತ ಹೋದರು. "ಇಂತಹ ವಿಶಾಲ ಹೃದಯದ ಮಂದಿ ಇರದಿದ್ದಿದ್ದರೆ ಯಾವ ಲೇಖಕನೂ ಉಳಿಯುತ್ತಿರಲಿಲ್ಲ. ಹಾಗೆ ನೋಡಿದರೆ, ಬರೆಯುವುದೇನು ದೊಡ್ಡ ಕೆಲಸವಲ್ಲ. ಬರೆದದ್ದನ್ನು ಎಲ್ಲರಿಗೆ ತಲುಪಿಸುವುದೇ ದೊಡ್ಡ ಕೆಲಸ. ಆ ಕೆಲಸವನ್ನು ನಂಜಪ್ಪನವರು ಮಾಡುತ್ತಿದ್ದಾರೆ. ನನ್ನ ಹಿಂದಿನ ಶಕ್ತಿಯೇ ಸನ್ಮಾನ್ಯ ನಂಜಪ್ಪನವರು." (ಚಟಪಟ ಚಪ್ಪಾಳೆ) ಚಪ್ಪಾಳೆಯ ಸ್ಫೂರ್ತಿಯಿಂದ - "ಲೇಖನಿ ಹಿಡಿಯುವ ಮಂದಿ ನಮ್ಮ ನಂಜಪ್ಪನಂಥವರಿಗೆ ಯಾವಾಗಲೂ ಋಣಿಯಾಗಿರಬೇಕು..." ಎಂದೂ ಹೇಳಿಬಿಟ್ಟರು. (ಮಜಬೂತಾದ ಚಪ್ಪಾಳೆ ಸದ್ದು; ಶಿಂಗಣ್ಣನವರು ಕೈಮುಗಿದು ನಂಜಪ್ಪನವರತ್ತ ತಿರುಗಿ ತಲೆಬಾಗಿದರು.) ನಮ್ಮ ಪ್ರಕಾಶನ ಸಂಸ್ಥೆಯ ಹಿಂದಿನ ಶಕ್ತಿಯೇ ನಂಜಪ್ಪ ಅವರು...ಸಾರ್, ತಮಗೆ ಸ್ವಾಗತ...(ಕುಂಠಿತವಾಗುತ್ತಿದ್ದ ಚಪ್ಪಾಳೆ ಸದ್ದು ಮತ್ತೆ ಮೊಳಗಿತು) ಇನ್ನು, ಪ್ರೊ. ಕುಂ. ಡೀ ಅವರಿಗೂ, ತ್ರಿಜ್ಯ, ಸುಮನಸ ಅವರಿಗೂ ಸ್ವಾಗತ....ಅಂತ ಒಂದೇ ವಾಕ್ಯದಲ್ಲಿ ಹೇಳಿ ಮುಗಿಸಿಬಿಟ್ಟರು." (ಚಪ್ಪಾಳೆ ಸದ್ದಿಲ್ಲ. ನಾನು ಹೊಡೆದೆ. ಆದರೆ ನನಗೇ ಕೇಳಿಸಲಿಲ್ಲ.)

ಸಭೆಯಲ್ಲಿದ್ದ ಒಬ್ಬ ಗೊಣಗುತ್ತಿದ್ದ. "ಎಂಥ ವಿಚಿತ್ರ ಗತಿ ಬಂತು ನೋಡಿದ್ರಾ ರಾಮಯ್ಯ ? ಬರೆಯುವವನಿಗಿಂತ ದುಡ್ಡು ಬಿಸಾಡುವವನೇ ದೊಡ್ಡವನಾಗಿ ಬಿಟ್ಟ್ನಲ್ಲ ? ಇವತ್ತು ಪುಸ್ತಕ ಬಿಡುಗಡೆ ಆಗುತ್ತದೆ - ಸಾಹಿತಿಗಳ ಮಾತು ಕೇಳುವ ಅಂತ ನಾವು ಬಂದರೆ ಇಲ್ಲಿ ನಡೆಯುತ್ತಿರುವ ಹೈಕಭಾವ ನೋಡಿ...ಬಂದ ಕೂಡಲೇ ಅಂಬೊಡೆ, ಕಾಫಿ ಕೊಟ್ಟು ನಮ್ಮನ್ನೆಲ್ಲ ಶಿಂಗಳೀಕ ಮಾಡಿದರಲ್ಲ ? ಕಳ್ಳ ದಾರೀಲಿ ದುಡ್ಡು ಮಾಡಿ ಅದೇ ದುಡ್ಡು ಬಿಸಾಡಿ ಈಗ ಹೊಗಳಿಸಿಕೊಳ್ಳುತ್ತ ಅಲ್ಲಿ ಕೂತವನ ಪೊಗರು ನೋಡಿ...ಚಪ್ಪಾಳೆ ತಟ್ಟುವುದಕ್ಕೆ ಜನರನ್ನೂ ತಾನೇ ಕರಕೊಂಡು ಬಂದಿದ್ದಾನೆ...ಕಳ್ಳ ನಂಜಪ್ಪನಿಗೆ ಸುಳ್ಳು ಶಿಂಗಣ್ಣ ಸಾಕ್ಷಿ ಅಂತ ಹೊಸ ಗಾದೆ ಹುಟ್ಟಬಹುದು. ನಮ್ಮ ಎಡ ಬದಿಯಲ್ಲಿ ಕೂತ ಮುವ್ವತ್ತು ನಲುವತ್ತು ಜನರೂ - ಆ ನಂಜಪ್ಪನ ಬೆಂಬಲಿಗರು; ಸಾಕಿದ ಭಟರು. ನಂಜಪ್ಪನ ಸನ್ನೆಗೆ ತಕ್ಕ ಹಾಗೆ ಕುಣಿಯುವುದೇ ಅವರ ಕೆಲಸ. ಈ ಪ್ರಕಾಶಕ ಶಿಂಗಣ್ಣನಿಗೂ ಹೊಟ್ಟೆಪಾಡು. ನಮ್ಮ ಶಿಂಗಣ್ಣ ಇದ್ದಾನಲ್ಲಾ..ಅವನು ನಂಜಪ್ಪನ ಮುಖವಾಡ ಮಾತ್ರ. ನಂಜಪ್ಪನ ಕಳ್ಳ ದುಡ್ಡು ಇಲ್ಲಿ ಸ್ವಲ್ಪ ಬಿಳಿಯಾಗುವ ಹಾಗಿದೆ...ಎಲ್ಲರೂ ದುಡ್ಡಿನ ಗುಲಾಮರು ಅಣ್ಣಾ...ಇವರ ನಡುವಿನಲ್ಲಿ ನಮ್ಮ ಶಾರದಮ್ಮ ಮಾತ್ರ ಚಟ್ಣಿ..." (ನನಗೆ ಪುಸಕ್ಕಂತ ನಗು ಬಂತು...ಪುಣ್ಯ; ಯಾರೂ ಗಮನಿಸಲಿಲ್ಲ)
..................ಅಷ್ಟರಲ್ಲಿ,

"ಹೀಗ... ಪುಸ್ತಕಗಳ ಬಿಡುಗಡೆ..." ಅಂತ ಘೋಷಣೆಯಾಯ್ತು.

ತಕ್ಷಣ, ವೇದಿಕೆಯಲ್ಲಿದ್ದವರೆಲ್ಲರೂ ಎದ್ದು ನಿಂತರು. ಬಣ್ಣದ ಕಾಗದದಲ್ಲಿ ಕಟ್ಟಿದ್ದ ಎರಡು ಪುಸ್ತಕಗಳ ಗಂಟನ್ನು ನಂಜಪ್ಪ ಮತ್ತು ಕುಂ. ಡೀ - ಏಕಕಾಲದಲ್ಲಿ ಬಿಚ್ಚಿದರು. (ಚಪ್ಪಾಳೆ) ವೇದಿಕೆಯಲ್ಲಿದ್ದವರ ಕೈಯಲ್ಲೆಲ್ಲ ಎರಡೆರಡು ಪುಸ್ತಕವನ್ನು ಕೊಟ್ಟರು. (ರಂಗಪೂಜೆಯ ನಂತರ ಪ್ರಸಾದ ಹಂಚುವುದು ನೆನಪಾಯಿತು)

"ಹೀಗ...ಪ್ರೊಫೆಸರ್ ಕುಂಡೀ ಅವರಿಂದ ಸುಮನಸ ಅವರು ಬರೆದ ಕವನಗಳ ಸಂಕಲನ - "ದಾರಿಯ ತೋರೋ" ಕುರಿತು ಹೆರಡು ಮಾತು..."

ಪ್ರೊಫೆಸರ್ ಕುಂಡೀ ಎದ್ದರು. ಕುತ್ತಿಗೆಯನ್ನು ಹೆಗಲಿನಿಂದ ಬೇರ್ಪಡಿಸಿಕೊಳ್ಳಲು ಹೆಣಗುವಂತೆ ಎರಡು ಸಾರಿ ತಮ್ಮ ಕುತ್ತಿಗೆಯನ್ನು ಬಲಕ್ಕೂ ಎಡಕ್ಕೂ ಒಗೆದು, ತಮ್ಮ ಮಾತನ್ನು ಶುರು ಮಾಡಿದರು. ಸಂಕಲನದಲ್ಲಿದ್ದ ಒಂದೊಂದು ಕವನವನ್ನೂ ಉದ್ಧರಿಸುತ್ತ ನಿರರ್ಗಳವಾಗಿ ಮಾತಾಡುತ್ತ ಹೋದರು. ಕೊನೆಗೆ "ಬೆಕ್ಕು" ಎಂಬ ಕವನದ ಒಳಗೆ ಕೈಕಾಲು ಆಡಿಸತೊಡಗಿದರು. ಬೆಕ್ಕಿನ ಹತ್ತಿರಕ್ಕೆ ಬಂದು ನಿಂತರು. ಎತ್ತಿ ತೋರಿಸಿದರು. "ಸುಮನಸ ಅವರ ಬೆಕ್ಕು - ಎಂಬ ಈ ಕವನದಲ್ಲಿ ಕವಿ ಸುಮನಸ ಅವರು ಬೆಕ್ಕಿನ ಆಂತರ್ಯವನ್ನು ಅನುಭವಿಸಿ ಬರೆದಿರುವ ಭಾವ ಮತ್ತು ಶೈಲಿಯು ಅದ್ಭುತವಾಗಿದೆ. ಬೆಕ್ಕಿನ ಒಳ ತುಮುಲಗಳನ್ನು ಕವಿ ಮನಸ್ಸು ಎಳೆ ಎಳೆಯಾಗಿ ಹಿಡಿದಿಟ್ಟಿದೆ. ಬೆಕ್ಕಿನ ಧ್ಯಾನಸ್ಥ ಸ್ಥಿತಿಯ ಹೊಸ ಪ್ರತಿಮಾ ಮಜಲು ಕವನದಲ್ಲಿ ಢಾಳಾಗಿ ಅನಾವರಣಗೊಂಡಿದೆ..ಕಳ್ಳ ಮನಸ್ಸಿನ ಪ್ರತೀಕವಾಗಿಯೂ ಬೆಕ್ಕು ಇಲ್ಲಿ - ತನ್ನನ್ನು ಬಿಚ್ಚಿಕೊಂಡಿದೆ. ಈ ಕವನ ಓದಿದ ಮೇಲೆ ಬೆಕ್ಕು ಎಂಬ ವಸ್ತುವು ನನ್ನನ್ನು ಚಿಂತನೆಗೆ ಒಡ್ಡಿದೆ. ನಾವು ಯಾಕೆ ಹರಿಹರ ಕುಮಾರವ್ಯಾಸನ ಬಗೆಗೇ ಸಂಶೋಧನಾ ಪ್ರಬಂಧವನ್ನು ಬರೆಯಬೇಕು ? ಯಾಕೆ ಬೆಕ್ಕು, ಕಾಗೆಯ ಬಗ್ಗೆ ಬರೆಯಬಾರದು ? ವಿಜ್ಞಾನಿಗಳಿಗೂ ಭೇದಿಸಲಾಗದ ಶೋಷಿತ - ಹಿಂದುಳಿದ ಪ್ರಾಣಿ ಪಕ್ಷಿಗಳೂ ಅಧ್ಯಯನದ ವಿಷಯವಾಗಬೇಕು. ಅದಕ್ಕಾಗಿ, ನನ್ನ ಮುಂದಿನ ಪ್ರಬಂಧದಲ್ಲಿ ಬೆಕ್ಕಿನ ಭಾವ ಜಗತ್ತಿಗೆ ಬೆಳಕು ಚೆಲ್ಲುವ ಕೆಲಸ ಮಾಡುತ್ತೇನೆ. ಬೆಕ್ಕಿನತ್ತ ನನ್ನನ್ನು ಆಕರ್ಷಿಸಿದ, ನನ್ನನ್ನು ಪ್ರೇರೇಪಿಸಿದ ಶ್ರೇಯವು ಸುಮನಸ ಅವರಿಗೆ ಸಲ್ಲುತ್ತದೆ...ನಾನು, ...ನನ್ನಿಂದ, ...ನನಗಾಗಿ....ಬ್ಲಾ..ಬ್ಲಾ...ಬ್ಲಾ..."

(ಮಿಯಾಂವ್ ..ಅಲ್ಲೆಲ್ಲೋ ಬೆಕ್ಕು ಕೂಗಿದಂತಿತ್ತು. ಬಹುಶಃ ಆಗ ತಿಂಡಿ ತೀರ್ಥ ನಡೆದ ಜಾಗದಲ್ಲಿ ಬಿಕ್ಕಿದ್ದುದನ್ನು ತಿನ್ನಲು ಬಂದಿರಬೇಕು...) 

ಜನ ಮಾತಾಡಿಕೊಂಡರು. "ಒಂದು ಬೆಕ್ಕಿನ ಬಗ್ಗೆ ಈ ಕುಂಡೀ ಎಷ್ಟು ಹೊತ್ತು ಮಂಡೆ ಕೊರೆಯಬಹುದು, ದೊಂಡೆ ಹರಿದುಕೊಳ್ಳಬಹುದು ಮಾರಾಯ್ರೇ...ಇನ್ನು ಬೆಕ್ಕಿನ ವಿಸರ್ಜನಾ ವೈಖರಿಯನ್ನೂ ಬಣ್ಣಿಸಬಹುದು...ಮಾತಾಡಬೇಡಿ; ಇದೇ ಮನರಂಜನೆ; ಕೇಳಿ; ಕೇಳಿ..ಅಂತಃಪುರದಲ್ಲಿ ರಾಣಿಯ ಮಂಚದ ಕೆಳಗೆ ಚಿಲಿಪಿಲಿ ಇಲಿಯನ್ನು ಕಂಡು ಹಿಡಿದು ಅದನ್ನು ತಿಂದು ತೇಗಿದ ಬೆಕ್ಕು ಇದೇ ಕುಂಡೀ ಅವರೇ ಇರಬೇಕು; ಪೂರ್ವ ವಾಸನೆ ! ಅಂತಃಪುರ ನುಗ್ಗಿದ ಬೆಕ್ಕಿಗೆ ಎಲ್ಲದಕ್ಕಿಂತ ಇಲಿಯೇ ಹೆಚ್ಚು ಖುಶಿ ಕೊಟ್ಟಂತೆ ಈ ಕುಂಡೀ ಗೆ ಇಡೀ ಕವನ ಸಂಕಲನದಲ್ಲಿ ಬೆಕ್ಕು ಹೆಚ್ಚು ಖುಶಿ ಕೊಟ್ಟಿದೆ; ಜಾತಿ ಬಾಂಧವ್ಯ ! ಅವರ ಮುಂದಿನ ಸಂಶೋಧನೆಗೆ ಬೆಕ್ಕೇ ವಸ್ತುವಾದರೂ ಆಗಬಹುದು. ಸಾಕ್ಷೀ ಪ್ರಜ್ಞೆಯಿಂದ ತುಂಬಿ ತುಳುಕುವ ಅಕ್ಷರದ ಬೇಗಡೆ ಆಸ್ಥಾನದಲ್ಲಿ ಈ ಕುಂಡೀ ಗೆ ಡಾಕ್ಟರೇಟ್ ಕೂಡ ಸಿಗಬಹುದು..." ಇಬ್ಬರೂ ಪುಸಕ್ಕೆಂದು ನಕ್ಕರು. (ನನಗೂ ಹಾಗೆ ನಗಬೇಕು ಅನ್ನಿಸಿದರೂ ನಗಲಾಗಲಿಲ್ಲ; ಧ್ವನಿ ಹುಗಿದು ಹೋಗಿತ್ತು.)

ರವಿ ಕಾಣದ್ದನ್ನು ಕವಿ ಕಾಣುತ್ತಾನಂತೆ. ಆದರೆ ಈ ಪ್ರೊಫೆಸರ್ರು ಕವಿ ಕಾಣದ್ದನ್ನೂ ಕಂಡ ಹಾಗಿತ್ತು. ಅಂತೂ ಪ್ರೊಫೆಸರರ ಪ್ರಜ್ಞೆಗೆ ದಕ್ಕಿದಂತೆ - ಬಹುಶಃ ಕವನ ಬರೆದ ಕವಿ ಸುಮನಸರಿಗೂ ಆಶ್ಚರ್ಯವಾಗುವಂತಹ ಪಡಪೋಶಿಯನ್ನೆಲ್ಲ ಒಂದು ಗಂಟೆಯ ಹೊತ್ತು ಬಡಬಡಿಸಿ ಮುಗಿಸಿ, ಕುಂ.ಡೀ ಅವರ ಅಂಡು ವಿಶ್ರಮಿಸಿತು. ಹೋಗಿ ಕೂತರು.

ಆಗಲೇ ಕೆಲವು ಸಭಿಕರು ಮಿಯಾಂವ್ ಅನ್ನುತ್ತ ಎದ್ದು ಹೋಗಿದ್ದರು. 

"ಹೀಗ...- ದಾರಿಯ ತೋರೋ - ಸಂಕಲನದ ಕವಿಯಾದ ಸುಮನಸ ಅವರಿಂದ ಹೆರಡು ಮಾತು..." ಮತ್ತೊಂದು ಆಹ್ವಾನ.

"ಓಹೋ...ಕವಿ ಏನನ್ನುತ್ತಾರೆ...ಕೇಳುವ" ಅಂತ ಅಲುಗಿದೆ.

"ನನಗೆ ಎರಡು ನಿಮಿಷ ಮಾತನಾಡಲು ಹೇಳಿದ್ದಾರೆ. ಪ್ರಕಾಶಕರಾದ ಶಿಂಗಣ್ಣನವರಿಗೆ ನಾನು ಆಭಾರಿ. ಎಲ್ಲರೂ ಪುಸ್ತಕವನ್ನು ಕೊಂಡು ಓದಿ. ಸಾಧ್ಯವಾದರೆ ನಿಮ್ಮ ಅಭಿಪ್ರಾಯ ತಿಳಿಸಿ. ಸಾಮಾನ್ಯ ಓದುಗರ ಆಸಕ್ತಿ ಮತ್ತು ಅಭಿಪ್ರಾಯ ನಮಗೆ ಬಹಳ ಮುಖ್ಯ...ಹೌದು. ಕವಿ ಸಾಹಿತಿಗಳಿಗೆ ಆಶ್ರಯದಾತರು ಬಹಳ ಮುಖ್ಯ. ಆಶ್ರಯವಿಲ್ಲದೆ ಲೇಖನಿ ಅರಳದು. ಆದರೆ, ಆಶ್ರಯ ಅಂದರೆ - ಬರೇ ದುಡ್ಡಿನ ಆಶ್ರಯ ಅಲ್ಲ. ನಮ್ಮ ಬರಹವನ್ನು ಓದುವ, ಓದಿ ದ್ವಿಮುಖೀ ಸಂವಹನ ನಡೆಸುವ ಕ್ರಿಯೆಯು ಬರಹಗಾರನನ್ನು ನಿಜವಾಗಿಯೂ ಜೀವಂತವಾಗಿರಿಸುವ ಆಶ್ರಯ. ವಿಚಾರ, ವಿಮರ್ಶೆ ಎರಡೂ - ಶಾಬ್ದಿಕ ತಳಮಳಗಳ ಸಿಕ್ಕಿಗೆ ಸಿಲುಕಬಾರದು. ಶ್ರೀಮಾನ್ ಕುಂಡೀ ಅವರು ಈಗಾಗಲೇ ಬೆಕ್ಕು ಕವನದ ಅಂತಃ ದರ್ಶನ ಮಾಡಿಸಲು ಯತ್ನಿಸಿದ್ದಾರೆ. ಆದರೆ ನನ್ನ ದೃಷ್ಟಿಯಲ್ಲಿ - ಬೆಕ್ಕು ಕವನಕ್ಕಿಂತ ಈ ಸಂಕಲನದಲ್ಲಿರುವ "ಬಕ್ಷೀಸು" ಎಂಬ ಕವನದ ಹರಹು ಇನ್ನೂ ಉನ್ನತವಾಗಿದೆ. ಇದು ಕವಿಯ ಅನ್ನಿಸಿಕೆ...ನೀವು ಓದಿದಾಗ ನಿಮಗೆ ಮತ್ತೊಂದು ಕವನ ಇಷ್ಟವೆನಿಸಲೂ ಬಹುದು...ಕವಿ ಅಂದರೆ..." ಅನ್ನುವಾಗಲೇ ವೇದಿಕೆಯಲ್ಲಿ ಕೂತಿದ್ದ ಕುಂ.ಡೀ ಚಡಪಡಿಸುತ್ತ ಪ್ರಕಾಶಕರಿಗೆ ಏನೋ ಹೇಳಿದರು. ವೇದಿಕೆಯ ಅಸ್ತವ್ಯಸ್ತವನ್ನು ನೋಡಿದ ಕವಿಯು ತನ್ನ ಮಾತಿಗೆ ಅಲ್ಪ ವಿರಾಮ ಕೊಟ್ಟು ಒಂದು ಗುಟುಕು ನೀರು ಕುಡಿದರು. ಅಷ್ಟರಲ್ಲಿ ಕುಂಡೀ ಗೆ ಕಿವಿಗೊಟ್ಟ ಆ ಪ್ರಕಾಶಕರು ಓಡಿ ಬಂದು ಕವಿಯ ಕಿವಿಯಲ್ಲಿ ಏನೋ ಉಸುರಿದರು. ಸುಮನಸ ಅವರು "ಸರಿ ಸಾರ್ . ಮುಗಿಸ್ತೇನೆ.." ಅಂದದ್ದು ಆ ಜೀವಂತ ಮೈಕಿನಿಂದ ಎಲ್ಲರಿಗೂ ಕೇಳಿಸ್ತು. ಎಲ್ಲರಿಗೂ ಮತ್ತೊಮ್ಮೆ ಧನ್ಯವಾದ...ಅನ್ನುತ್ತ ಆ ವಿಧೇಯ ಕವಿಗಳು ಪೆಚ್ಚಾಗಿ ಕುರ್ಚಿ ಸೇರಿದರು. 

(ಜನ ಮಾತಾಡಿಕೊಂಡರು..."ಸುಮನಸ ಅವರು ಕವಿ ಅಂದರೆ...ಅಂತ ಏನೋ ಹೇಳಲು ಹೊರಟಿದ್ದರು... ಏನಂತ ಹೇಳುತ್ತಿದ್ದರೋ ಏನೋ...ಅವರ ಕುತ್ತಿಗೆ ಹಿಚುಕಿದರಲ್ಲ ? ಕವಿ ಸಮ್ಮೇಲನದಲ್ಲಿ ನರಳುವ ಅನೇಕ  ಕವಿಗಳನ್ನು ಕಂಡು ಕಂಡು ನನಗೆ ಸಾಕಾಗಿ ಹೋಗಿದೆ. ಇವರೆಲ್ಲ ಮೇಡ್ ಇನ್ ಹೆವನ್..ಅನ್ನಿಸಿದ್ದೂ ಇದೆ. ಅವರು ಕವನ ಓದುವ ರಾಗ ಏನು...ಅವರ ಗಾಂಭೀರ್ಯವೇನು...ಉದ್ದಕ್ಕೆ ಬರೆಯುವ ಗದ್ಯವನ್ನೆಲ್ಲ ತುಂಡರಿಸಿ ಬರೆದಾಗ ಉಂಟಾಗುವ ಭಾವ ರಹಿತ ಅಕ್ಷರ ರಾಶಿಯನ್ನು ಹೊತ್ತ ಕವನಗಳನ್ನೆಲ್ಲ ಕಂಡು ಕೇಳಿ "ಎನ್ನ ಕುರುಡನ ಮಾಡಯ್ಯ - ಕಿವುಡನ ಮಾಡಯ್ಯ.." ಅನ್ನುವಂತಾಗಿದೆ. ಹೀಗೆ ಪುಕ್ಕಟೆ ಕವಿಗಳಾಗಿ ತಲೆ ತಿನ್ನುವವರು ಒಬ್ಬಿಬ್ಬರಲ್ಲ. ಈ ಸುಮನಸ ಅವರು ಇದ್ದುದರಲ್ಲಿ ಚೆನ್ನಾಗಿ ಬರೆಯುತ್ತಾರೆ...ಆದರೆ ಇವರೆಲ್ಲ ಸೇರಿ, ಈಗ, ...ಅವರ ಬೆಕ್ಕಿನ ತಿಥಿ ಮಾಡಿದಂತೆ ಅವರಿಗೆ ಮಾತಾಡಲೂ ಬಿಡದೆ ಎಳೆದು ಕೂಡಿಸಿಯೂ ಆಗಿದೆ. ಇನ್ನು ತ್ರಿಜ್ಯರಿಗಾದರೂ ಬಾಯಿ ತೆರೆಯಲು ಬಿಡುತ್ತಾರ ನೋಡುವ.." )

"ಹೀಗ...ಪರಿಧಿಯ ಕತೆಗಾರ ತ್ರಿಜ್ಯರಿಂದ ಎರಡೇ ಎರಡು ಮಾತು..."(ಓಹ್..ತ್ರಿಜ್ಯರಿಗೆ ಬೇಗ ಮುಗಿಸುವ ಸೂಚನೆ ಈಗಲೇ ಸಿಕ್ಕಿದೆ..)

ತ್ರಿಜ್ಯರು ಎದ್ದರು. "ನಾನು ಎರಡಲ್ಲ; ನಾಲ್ಕು ಮಾತು ಆಡಲಿದ್ದೇನೆ." ಅನ್ನುತ್ತ ಮೂಗು ತಿಕ್ಕಿದರು. "ನನ್ನ ಪ್ರೀತಿಯ ಓದುಗರೇ,  ನಿಜವಾದ ಕತೆಗಾರರು, ಕವಿಕೋರರು ಯಾವತ್ತೂ ಪರಿಧಿಯಲ್ಲೇ ಇರಬಯಸುತ್ತಾರೆ; ಆದರೆ ಅದೂ ಸಾಲದೆಂಬಂತೆ - ಅವರನ್ನು ಅತ್ತತ್ತ ಪರಿಧಿಯಿಂದ ಆಚೆ ತಳ್ಳುವ ಕ್ರೀಡೆಯು ಆಗಾಗ ನಡೆಯುತ್ತಲೇ ಇರುತ್ತದೆ. ಬಗೆಬಗೆಯ ದರೋಡೆಯಲ್ಲಿಯೇ ರುಚಿ ಕಾಣುವ ಈ ಸಾಮಾಜಿಕ ಪರಿಸರದಲ್ಲಿ ಲೇಖನಿಯೇ ಕೇಂದ್ರ ಬಿಂದುವಾದ - ಕೃತಿ ಬಿಡುಗಡೆಯಂತಹ ಇಂತಹ ಸಂದರ್ಭದಲ್ಲೂ - ಲೇಖನಿಯನ್ನು ಕುಂಡೆಯ ಅಡಿ ಹಾಕುವ, ಹಾಕಿಸುವ - ಅರ್ಥವಾಗದ ಪದ ಬಂಧ ಚೆಲ್ಲುವ ಕೋಡಿನ ಬೆಕ್ಕುಗಳು ಹೊಸ ಹೊಸ ವೇಷದಲ್ಲಿ ಒಕ್ಕರಿಸುವುದಿದೆ. ಮೊದಲು ನವರಾತ್ರಿಯಲ್ಲಿ ಮಾತ್ರ ನಮ್ಮ ನಡುವೆ ವೇಷಗಳು ಅಡ್ಡಾಡುತ್ತಿದ್ದವು. ಈಗ ಹಾಗಿಲ್ಲ. ನಮ್ಮ ನಡುವೆ ಪ್ರತಿನಿತ್ಯವೂ ನವ-ನವೀನ ರಾತ್ರಿಗಳು ಹೊರಳುತ್ತಿವೆ. ರಾತ್ರಿ ಹಗಲಿನ ಭೇದವೇ ಕಾಣದಂತಾಗಿದೆ. ಈಗ, ಪುಸ್ತಕ ಬಿಡುಗಡೆಗೆಂದರೆ ಯಾವುದೇ ಸಭಾಂಗಣವು ಹಗಲಿನಲ್ಲಿ ಸಿಕ್ಕದಂತಾಗಿದೆ. ಅರ್ಧರಾತ್ರಿಯ ಅರ್ಧ ಬಾಡಿಗೆ ವ್ಯವಸ್ಥೆಗೆ ಸಾಹಿತಿಗಳು ಒಗ್ಗಿಕೊಳ್ಳಬೇಕಾಗಿದೆ. ಒಂದಕ್ಕೆ ಹತ್ತು ಪಟ್ಟು ಬಾಡಿಗೆ ಕೊಟ್ಟು ಹಗಲಿನಲ್ಲಿ ಬಿಡುಗಡೆ ನಡೆಸಲು ಪ್ರಕಾಶಕರೂ ಹಿಂಜರಿಯುತ್ತಾರೆ. ರಾತ್ರಿ ನಿದ್ದೆಗೆಟ್ಟು ಬರೆಯುವ ಮಂದಿಗೆ ಯಾವುದೇ ಅನಾನುಕೂಲ ಆಗುವುದಿಲ್ಲ ಎಂಬ ವಿಚಾರವಿದ್ದರೂ ಇರಬಹುದು. ಆದರೆ ನಿಜವಾದ ಸಾಹಿತ್ಯಾಸಕ್ತರು ನಿದ್ದೆ ಬಿಟ್ಟು ಭಾಗವಹಿಸುತ್ತಾರಾ ? ಎಂಬುದು ಪ್ರಶ್ನೆ. ರಾತ್ರಿ ನಿದ್ದೆ ಬರದವರು ಮಾತ್ರ ಸಾಹಿತ್ಯಿಕ ಸಮಾರಂಭಕ್ಕೆ ಬಂದರೆ ಸಾಕೆ ? ಎಂಬುದೂ ಪ್ರಶ್ನೆ. ಕೆಲವು ಸಾಹಿತ್ಯಾಸಕ್ತರು ಇಂದಿನ ಸಭೆಯಲ್ಲೂ ಇದ್ದಾರೆ. ನಮ್ಮ ಮಾತು, ವರ್ತನೆಯಿಂದ ಅವರನ್ನಾದರೂ ನಾವು ಉಳಿಸಿಕೊಳ್ಳಬೇಕಲ್ಲವೆ ? ಯಾವುದೇ ಸುಮನಸರನ್ನು - ಅಂದರೆ ಹೃದಯವಂತರನ್ನು - ಪರಿಧಿಗೆ ಒತ್ತರಿಸುವ ಹರಾಮಿ ಕಾಂಚಾಣದ ತಧಿಗಿಣತವನ್ನು ಸಹೃದಯವಂತರು ಎಂದೂ ಒಪ್ಪುವುದಿಲ್ಲ. ಯಾವುದೇ ಪರಿಧಿಯನ್ನು ಯಾರಾದರೂ ಮಿತಿಮೀರಿ ಒತ್ತಿದರೆ - ಕ್ರಮೇಣ ಅದೇ ಒತ್ತಡ ಚಿಮ್ಮುವ ಕೇಂದ್ರ ಬಿಂದುವಾಗಿ ಬಿಡುತ್ತದೆ. ಅದು ಸಹಜ...ಅದೇ ಪ್ರಕೃತಿ ನಿಯಮ...ನನ್ನ ಕತೆ -  "ಪರಿಧಿ"ಯಲ್ಲಿ..." ಅನ್ನುವಾಗಲೇ ವ್ಯಾಸರಿಗೂ ಕಿವಿಯಲ್ಲೇ ಗಾಯತ್ರಿ ಪಠಿಸಿದರು... "ಸಾಕು...".. 

"ಪ್ರಿಯ ಓದುಗ ಬಂಧುಗಳೇ, ಸಾಕಂತೆ...ನನ್ನ ಮಾತು ಸಾಕಂತೆ. ಸಾಕು ಅನ್ನುವವನೇ ಸಾಹುಕಾರ ಅನ್ನುವ ಮಾತಿದೆ. ನಮ್ಮ ಪ್ರಕಾಶಕರು, ಅವರ ಪ್ರಾಯೋಜಕರು ಇವರಿಬ್ಬರೂ ನಿಜವಾಗಿಯೂ ಸಾಹುಕಾರರೇ. ಸನ್ಮಾನ್ಯ ಶಿಂಗಣ್ಣನವರಿಗೆ ಬಡ ಸಾಹಿತಿಗಳ ಒಣ ಮಾತಿನಲ್ಲಿ ನಂಬಿಕೆಯಿಲ್ಲ... ನಮ್ಮ ಪ್ರಕಾಶಕರು - "ನೀವು ಬರೆಯಿರಿ; ಬರೆದು ಸುಮ್ಮನಿರಿ..." ಅನ್ನುವ ದೃಷ್ಟಿಕೋನದವರು. ಅವರು ಈಗ ಸನ್ಮಾನ್ಯ ನಂಜಪ್ಪನವರ - ಪ್ರಾಯೋಜಿತ ಹಸಿ ಮಾತುಗಳನ್ನು ಕೇಳುವ ಹುರುಪಿನಲ್ಲಿದ್ದಾರೆ.. ಒಳ್ಳೆಯದೇ. ಆದರೆ ನಮಗೆ ಮಾತ್ರ ನಿಮ್ಮ - ಅಂದರೆ - ಓದುಗರ ಬಾಂಧವ್ಯ ಯಾವತ್ತೂ ಬೇಕು...ಕೇಳುವಂತಹ ಮಾತುಗಳು ಮಾತ್ರ ಎಲ್ಲ ಕಡೆಗಳಿಂದಲೂ ಕೇಳಿಸಲಿ. ಬಾಡಿಗೆ ಮಾತುಗಳು, ಕಾಡಿಗೆ ಮಾತುಗಳು ಕೇಳಿಸದಿರಲಿ...ಎಂಬುದೇ ನನ್ನ "ಪರಿಧಿ" ಕಥಾ ಸಂಕಲನದಲ್ಲಿರುವ ಅದೇ ಹೆಸರಿನ "ಪರಿಧಿ" ಎಂಬ ಕತೆಯ ಆಶಯ. ನಮಸ್ಕಾರ.." (ಕೆಲವೇ ಚಪ್ಪಾಳೆ)

"ಹೀಗ...ನಮ್ಮ ಪ್ರಮುಖ ಹತಿತಿ ಶ್ರೀ ನಂಜಪ್ಪ ಹವರಿಂದ ಭಾಷಣ..."(ಎಡಗಡೆಯಿಂದ ಕಿವಿ ಗಡಚಿಕ್ಕುವಂತೆ ಚಪ್ಪಾಳೆ...ಓಹೋ...ಆ ಜನರನ್ನು ನಿಜವಾಗಿಯೂ ಚಪ್ಪಾಳೆ ಹೊಡೆಯುವುದಕ್ಕೆಂದೇ ಕರೆ ತಂದಿರಬೇಕು.. ಅಂದುಕೊಂಡೆ)

ನಂಜಪ್ಪನವರು ಗಜ ಗಾಂಭೀರ್ಯದಿಂದ ಮೈಕಿನ ಎದುರು ನಿಂತರು. ಅವರ ಕುತ್ತಿಗೆಯ ಆಭರಣವು ಫೊಟೋ ಕ್ಲಿಕ್ಕಿಸುವಾಗ ಮಿಣಕ್ ಮಿಣಕ್ ಅನ್ನುತ್ತಿತ್ತು. ಕೈಯ ಹತ್ತು ಬೆರಳಲ್ಲಿ ಹತ್ತಕ್ಕಿಂತ ಹೆಚ್ಚು ಉಂಗುರಗಳು ಒತ್ತಿ ಕೂತಿದ್ದವು. "ನಮಸ್ಕಾರ." ಎಂದು ಎರಡೂ ಕೈಯನ್ನೆತ್ತಿ ಸಭೆಗೆ ವಂದಿಸುತ್ತ ತಮ್ಮ ಬೆರಳುಗಳನ್ನು ಎತ್ತಿ ತೋರಿಸಿದರು. "ಇವತ್ತು ಒಂದು ಪದ್ಯದ ಪುಸ್ತಕ (ಏನದರ ಹೆಸರು ? ಅಂತ ಬಗ್ಗಿ ಕೇಳಿದರು...) ಹಾಂ...ಅದೇ ದರೆಯ ತೋರು..ಮತ್ತೊಂದು ಪುಸ್ತಕ...(ಅನ್ನುವಾಗಲೇ ಕುಂಡೀ ಅವರು ಅವರ ಕಿವಿಕಂಡಿಯಲ್ಲಿ ಹೆಸರು ಉಸುರಿದರು..) ಹಾಂ...ಪಾರದಿ..ಎರಡೂ ಬಿಡುಗಡೆಯಾಗಿವೆ. ನೋಡೀ, ಬರೆಯುವುದು ಬಹಳ ಒಳ್ಳೆಯದು. ಬರೆದರೆ ಕೈಯ ಬೆರಳಿಗೂ ವ್ಯಾಯಾಮ ಆಗುತ್ತದೆ. ಏನನ್ನಾದರೂ ಓದುತ್ತಿರುವ ಚಟ ಇದ್ದವರಿಗೂ ಉಪಕಾರ ಮಾಡಿದಂತೆ ಆಗುತ್ತದೆ. ಬಹಳ ಒಳ್ಳೆಯದು. ಲೇಖಕರೇ, ದಿನಕ್ಕೊಂದು ಪುಸ್ತಕ ಬರೆಯಿರಿ. ನಿಮಗೆ ಒಳ್ಳೆಯದಾಗಲಿ..(ಎಡಬದಿಯಿಂದ ಕಿವಿ ಗಡಚಿಕ್ಕುವ ಚಪ್ಪಾಳೆ.) ಇನ್ನು ನಮ್ಮ ಶಿಂಗಣ್ಣ ಅವರಂತೂ ಇದೇ ಬಿಸನೆಸ್ ಮಾಡುವವರು. ಸಣ್ಣ ಮೀನು ಹಾಕಿ ದೊಡ್ಡ ಮೀನು ತೆಗೆಯುವ ಜಾಣರು. ನಮ್ಮವರೇ. ಒಳ್ಳೆಯ ಜನ. ಲೇಖಕರನ್ನು ಮೇಲೆತ್ತುವ ಕೆಲಸವನ್ನು ಅವರು ಮಾಡುತ್ತ ಬಂದಿದ್ದಾರೆ. ಅವರ ಕೈಗೆ ಸಿಕ್ಕಿದ ಲೇಖಕರ ಬಗ್ಗೆ ಮತ್ತೆ ಚಿಂತೆ ಮಾಡುವುದೇ ಬೇಡ...(ಮತ್ತೊಮ್ಮೆ ಚಪ್ಪಾಳೆ..) ಈ ಪುಸ್ತಕಗಳಿಂದ ಶಿಂಗಣ್ಣ ಅವರು ಒಳ್ಳೆಯ ಕಮಾಯಿ ಮಾಡಲಿ ಅಂತ ನೀವೆಲ್ಲ ಆಶೀರ್ವಾದ ಮಾಡಬೇಕು. ಪ್ರಕಾಶಕರು ಬದುಕಿದರೆ ಮಾತ್ರ ಲೇಖಕರು ಬದುಕಬಹುದು. ಗೊತ್ತಾಯ್ತಾ ? ಇನ್ನು ...ಕುಂಡೀ ಅವರು ಹೇಳಿದ ಬೆಕ್ಕಿನ ಕತೆ ತುಂಬ ಜಿಡುಕಾಗಿತ್ತು. ನನ್ನ ಪಕ್ಕದಲ್ಲೇ ಕೂತಿದ್ದ ಅವರಲ್ಲಿ ಆ ಕತೆಯನ್ನು ಸರಳವಾಗಿ ಹೇಳುವಂತೆ ಕೇಳಿದಾಗ, ಅವರು ಬಿಡಿಸಿ ಬಿಡಿಸಿ ಹೇಳಿದರು. ಆಗ ನನಗೆ ಖುಶಿ ಆಯ್ತು. ನಮ್ಮ ಮನೆಯಲ್ಲೂ ನಾಲ್ಕು ಬೆಕ್ಕುಗಳಿವೆ. ಬೆಕ್ಕು ಅಂದರೆ ನನಗೆ ಬಹಳ ಪ್ರೀತಿ. ಬೆಕ್ಕಿನ ಬಗ್ಗೆ ಪದ್ಯ ಬರೆದ ಅವರಿಗೆ...(ಕಿವಿಯಲ್ಲಿ - ಸುಮನಸ..) ಅದೇ.. ಅವರಿಗೆ - ತುಂಬ Thanks..

ಇನ್ನು...ನನಗೆ ಕತೆ ಓದುತ್ತ ಕೂರಲಿಕ್ಕೆ ಪುರಸೊತ್ತಿಲ್ಲ. ಬರೆಯುವವರು ಬರೆಯಲಿ; ಓದುವವರು ಓದಲಿ...ಬಹಳ ಒಳ್ಳೆಯದು. ಕತೆ ಬರೆಯುವ ತೀಜಾ ಅವರಿಗೂ (ತ್ರಿಜ್ಯ..ತ್ರಿಜ್ಯ..) ಹಾಂ..ಅದೇ ಅದೇ..ಅವರಿಗೆ ದೊಡ್ಡ ನಮಸ್ಕಾರ. (ಅಷ್ಟರಲ್ಲಿ ಸಭೆಯ ಬಲ ಬದಿ ಪೂರ್ತಿ ಖಾಲಿಯಾಗಿತ್ತು. ನಂಜಪ್ಪನವರ ಬಳಗ ಮಾತ್ರ ಉಳಿದಿತ್ತು.) ಎಲ್ಲರಿಗೂ ನಮಸ್ಕಾರ..(ದೀರ್ಘ ಚಪ್ಪಾಳೆ..)

ಸನ್ಮಾನ್ಯ ನಂಜಪ್ಪನವರು ಮತ್ತೊಮ್ಮೆ ತಮ್ಮ ಬೆರಳುಗಳನ್ನು ಪ್ರದರ್ಶಿಸಿ ಆಸೀನರಾದರು.

"ಹೀಗ...ವಂದನಾರ್ಪಣೆ..." ಅನ್ನುವಾಗಲೇ ವೇದಿಕೆಯ "ಹತಿತಿ"ಗಳು ಕೆಳಗಿಳಿಯತೊಡಗಿದ್ದರು. ಮೈಕಿನೆದುರು ಓಡಿ ಬಂದ ಪ್ರಕಾಶಕ ಶಿಂಗಣ್ಣನವರು "ಇವತ್ತು ಬಿಡುಗಡೆಯಾದ ಪುಸ್ತಕಗಳು ಸಭಾಂಗಣದ ಹೊರಗೆ ಮಾರಾಟಕ್ಕಿವೆ. ದಯವಿಟ್ಟು ಎಲ್ಲರೂ ಪುಸ್ತಕವನ್ನು ಕೊಂಡು ನಮ್ಮ ಬರೆಹಗಾರರನ್ನು ಪ್ರೋತ್ಸಾಹಿಸಬೇಕು..." ಅಂತ ಒಂದೇ ಉಸಿರಿಗೆ ಹೇಳಿ ನಂಜಪ್ಪನವರ ಹಿಂದೆ ಓಡಿದರು. ನಂಜಪ್ಪನವರು ಅದಾಗಲೇ ಹೊರ ಬಾಗಿಲತ್ತ ನಡೆಯತೊಡಗಿದ್ದರು.

ಅನಂತರ ನಿರೂಪಕನ "---ಧನ್ಯವಾದ---ಹಾಬಾರಿ---ಕೃತಗ್ನತೆ---" ಇತ್ಯಾದಿಗಳೆಲ್ಲ ಮುಗಿದ ಮೇಲೆ, "ಹತ್ಯಂತ ಹುತ್ಸುಕತೆಯಿಂದ ಬಂದು ಬಾಗವಹಿಸಿದ ಹೆಲ್ಲರಿಗೂ ನಮಸ್ಕಾರ..." ಅಂತ ಹೇಳಿ ತಲೆ ಎತ್ತಿ ನೋಡಿದ ಆ ನಿರೂಪಕನ ಎದುರಿನಲ್ಲಿ ಕತೆಗಾರ ತ್ರಿಜ್ಯ ಮತ್ತು ಕವಿ ಸುಮನಸ ಮಾತ್ರ ನಿಂತಿದ್ದರು. ಸಭಾಂಗಣ ಖಾಲಿಯಾಗಿತ್ತು. ಹಕಾರದ ಶಿಕಾರಿಗಿಳಿದಿದ್ದ ಪಾಪದ ನಿರೂಪಕ ಪೆಚ್ಚಾಗಿದ್ದ. ವೇದಿಕೆಯಿಂದ ಇಳಿದು ತಮ್ಮತ್ತ ಬಂದ ಆ ನಿರೂಪಕ "ನೋಡಿ ಸಾರ್, ದನ್ಯವಾದ ಮುಗಿಯುವ ಮೊದಲೇ ಎಲ್ಲ ಹೊರಟೇ ಹೋದರಲ್ಲ ?" ಅಂದ. ಕವಿ ಮನಸ್ಸು ತುಳುಕಿತು. "ಅದು ಹಾಗೇ ತಮ್ಮಾ; ವಂದನಾರ್ಪಣೆ ಅಂದರೆ ಅದೊಂದು ಶಾಸ್ತ್ರ ಪೂರೈಸುವುದು - ಅಷ್ಟೆ. ಶ್ರಾದ್ಧದ ದಿನ ಬೆಕ್ಕನ್ನು ಎಲ್ಲಿಂದಾದರೂ ತಂದಾದರೂ ಕೋಣೆಯಲ್ಲಿ ಕೂಡಿ ಹಾಕುವ ಶಾಸ್ತ್ರದಂತೆ, ಸಭೆಗೊಂದು ಮುಕ್ತಾಯದ ಶಾಸ್ತ್ರ ಪೂರೈಸಲಿಕ್ಕೆ ಅಂತಲೇ ವಂದನಾರ್ಪಣೆ ಇಟ್ಟುಕೊಳ್ಳುವ ಪದ್ಧತಿ ಬೆಳೆದಿದೆ...ಓಗಲಿ ಬಿಡು...ನಾವಿಬ್ಬರೂ ಇಲ್ಲಿದ್ದೇವಲ್ಲ ?" ಅಂದಾಗ, ತ್ರಿಜ್ಯರು ತಿರುತಿರುಗಿ ನಕ್ಕರು.

ನಾನೂ ನಕ್ಕೆ. (ನಕ್ಕಂತೆ ಅಂದುಕೊಂಡೆ ?)

ಅರೆರೆ, ನನ್ನನ್ನು ಯಾಕೆ ಯಾರೂ ಗಮನಿಸಲಿಲ್ಲ ? ಇಷ್ಟು ಹೊತ್ತು ನನ್ನತ್ತ ತಿರುಗಿಯೂ - ಯಾರೆಂದರೆ ಯಾರೂ ನೋಡಲಿಲ್ಲವಲ್ಲ ? ನನ್ನನ್ನು ತಿಂಡಿ ಕೊಟ್ಟು ಉಪಚರಿಸಲೂ ಇಲ್ಲ...ಆದರೆ ವಿಚಿತ್ರ ! ನನಗೆ ತಿನ್ನಬೇಕೆಂದು ಅನ್ನಿಸಲೂ ಇಲ್ಲ...ವೇದಿಕೆಯ ಮೇಲೆಲ್ಲ ನಾನು ಓಡಾಡಿದರೂ ನನ್ನನ್ನು ಯಾರೂ "ನೀನು ಯಾರು ಏನು ಎತ್ತ" ಅಂತಲೂ ಕೇಳಲಿಲ್ಲವಲ್ಲ ?...

ಸುಮ್ಮನೆ ಸರಿದಾಡುವ ಎಂಥ ಜನರಪ್ಪ ? ನನಗಾದರೆ ಬೇರೆ ಕಸುಬಿಲ್ಲ. ಆದರೆ ಇವರೆಲ್ಲ ಹೀಗೆ ಹಗಲೂ ರಾತ್ರಿ ಪರಪರ ಮಾಡುವುದಾದರೂ ಯಾಕೆ ? ಸಾಯಲಿ ಬಿಡಿ. ಕೊನೆಗೆ ಅವರಿಗೂ ಗೊತ್ತಾಗುತ್ತದೆ. "ಸರಿಸರಿ ಇದ್ದರೆ ಪರಿಪರಿ ನೆಂಟರು" ಅಂದದ್ದು ಸುಮ್ಮನೆ ಅಲ್ಲ. ಈ ವ್ಯಕ್ತ ವೇಷದ ಜನರ ಒಡನಾಟ - ನನಗೆ ಬೇಡವೇ ಬೇಡ.....

........ಅವತ್ತು - ಮೊನ್ನೆಮೊನ್ನೆ ಕಣ್ಣು ಮುಚ್ಚಿ ಮಲಗಿದ್ದ ನನಗೆ ಇದೇ ಶಿಂಗಣ್ಣ ಬಂದು ಹಾರ ಹಾಕಿ ಕೈಮುಗಿದಿದ್ದ. ಏನೋ... ನಾನು ಸತ್ತೇ ಹೋದೆ -  ಅನ್ನುವಂತೆ ತಲೆ ತಗ್ಗಿಸಿ ಕಣ್ಣೊರೆಸಿಕೊಳ್ಳುವ ನಾಟಕವನ್ನೂ ಆಡಿದ್ದ. ಇವತ್ತು ಎದುರೆದುರೇ ಸುಳಿದಾಡಿದರೂ ತಲೆ ಎತ್ತಿ ನೋಡಲಿಲ್ಲವಲ್ಲ ? ಗೆಳೆಯ ಶಿಂಗಣ್ಣ ಮಂಕಣ್ಣ ಆಗಿ ಹೋದನೆ ? ಏನೋ ಕೊಂಡಿ ತಪ್ಪಿದೆ...  ಅಥವ.... ಅವನು ಇಲ್ಲವೆ ?
ಅಥವ ನಾನು ಇಲ್ಲವೆ ? ......

ಅರೆ...ನಾನು....ಇಲ್ಲವೆ ? ನಾನು ...ಎಲ್ಲಿದ್ದೇನೆ ?

ನಾನು ವ್ಯಕ್ತವೆ ? ಕಳಚಿಕೊಂಡ ಮುಕ್ತವೆ ?

ತ್ರಿಜ್ಯ...ಪರಿಧಿ...ವ್ಯಾಸ...ಕೈವಾರ....ಬಹು ಕೋಣ !

ಬರೇ ಗಾಳಿ. ಮಂಜಿನೋಕುಳಿ.

ತ್ರಿಶಂಕು ಅಲೆದಾಟ; ಅವ್ಯಕ್ತ ತೊನೆದಾಟ.







       

Tuesday, December 29, 2015

ಸುಮ್ಮನೆ ಕಥಾಮನೆ 2 - ಕಲಕುವ ಬಂಧನಗಳು.

                                                      ಕಲಕುವ  ಬಂಧನಗಳು...

 ಬೆಳಗಿನ ದಿನ ಪತ್ರಿಕೆಯ ಮೇಲೆ ಕಣ್ಣಾಡಿಸುತ್ತಿದ್ದ ಗಿರಿರಾಯರು - ಏನೋ ಕೇಳಲು ಚಡಪಡಿಸುತ್ತ ನಡುನಡುವೆ ತನ್ನತ್ತ ಇಣುಕಿ ಹೋಗುವ ಪತ್ನಿ ಶಾರದೆಯನ್ನು ಬೆಳಗಿನಿಂದಲೇ ಗಮನಿಸಿದ್ದರು. ಅವಳು ಹೇಳುವುದೇನು ಎಂಬುದೂ ಅವರಿಗೆ ಗೊತ್ತಿತ್ತು. ವ್ಯರ್ಥವಾಗಿ "ಮಾತು ಕಡೆಯುವ ಚರ್ಚೆ"ಯು ಬೇಡವೆಂದುಕೊಂಡೇ ಅವರು ಸುಮ್ಮನೆ ಪುಟ ತಿರುವುತ್ತ ಮೌನವಾಗಿ ಕೂತಿದ್ದರು. ಮದುವೆಯಾದ ಹದಿನೈದು ವರ್ಷಗಳಲ್ಲಿ ಶಾರದಮ್ಮನೂ ತನ್ನ ಗಂಡನ ಸ್ವಭಾವವನ್ನು ಅರ್ಥ ಮಾಡಿಕೊಂಡಿದ್ದರು. ಕಳೆದ ವರ್ಷ ತನ್ನ ಅಪ್ಪನ ಮನೆಯಲ್ಲಿ ಗಂಡನಿಗೆ ನೋವಾದದ್ದೂ ಅವರಿಗೆ ಗೊತ್ತಿತ್ತು. ಆದರೂ "ಒಂದು ಪೆಟ್ಟು; ಎರಡು ತುಂಡು" ಅನ್ನುವ ಹಾಗೆ ಬದುಕಲಿಕ್ಕೆ ಆಗುವುದಿಲ್ಲ; ಹಾಗೆ ಬದುಕಲೂ ಬಾರದು ಅನ್ನುವುದು ಶಾರದಮ್ಮನ ವಾದ. ಒಟ್ಟಿಗೆ ಬದುಕುವಾಗ ಏನೋ ಒಂದು ಮಾತು ಬರುತ್ತದೆ ಹೋಗುತ್ತದೆ...ಹಾಗಂತ ಅದಕ್ಕೇ ಅಂಟಿಕೊಂಡು ಬಂಧು - ಬಳಗವನ್ನೆಲ್ಲ ಕಳೆದುಕೊಳ್ಳಬಾರದು ಅನ್ನುವುದು ಶಾರದಮ್ಮನ ಮತವಾಗಿತ್ತು. ಆದರೆ ಈ ಗಿಣಿಪಾಠದಿಂದ ಗಿರಿರಾಯರನ್ನು ಮಾತ್ರ  ಬದಲಿಸಲಾಗಿರಲಿಲ್ಲ. ಗಂಡನಿಗೆ ಇಷ್ಟವಿಲ್ಲದ ಅದೇ ವಿಷಯವನ್ನು ಈಗ ನೇರಾನೇರ ಮಾತಾಡಲೇಬೇಕಾದ ಮತ್ತೊಂದು ಸಂದರ್ಭ ಅವರ ಎದುರಿಗೆ ಬಂದು ನಿಂತಿದೆ.

                                              **********----------**********


                                                                
ಕೇಶವಯ್ಯ ದಂಪತಿಗಳಿಗೆ ಶಾರದಮ್ಮನೇ ಹಿರಿಯ ಮಗಳು. ಶಾರದಮ್ಮನಿಗೆ ಏಳು ಜನ ತಂಗಿಯಂದಿರು; ಆರು ಜನ ತಮ್ಮಂದಿರು. ದೊಡ್ಡ ಮನೆ, ಡಜನುಗಟ್ಟಲೆ ಮಕ್ಕಳ ದೊಡ್ಡ ಸಂಸಾರವದು. ಕಳೆದ ವರ್ಷ ನಡೆದ ತನ್ನ ತಂಗಿ ವನಜಳ ಮದುವೆಗೆ ಗಂಡನ ಜೊತೆಗೇ ಹೋಗಿ ಬಂದಿದ್ದ ಶಾರದಮ್ಮ - ತನ್ನ ಅಮ್ಮನು ಅಂದು ವರ್ತಿಸಿದ ರೀತಿಗೆ ತಾನೂ ನೋವುಂಡಿದ್ದಳು. ನಿರಾಭರಣೆಯಾಗಿದ್ದ ತನ್ನೊಂದಿಗೆ ಐಷಾರಾಮಗಳಿಂದ ದೂರವಿದ್ದ ತನ್ನ ಗಂಡನನ್ನೂ ಪ್ರತ್ಯೇಕಿಸಿದಂತೆ - ಸ್ವಂತ ಅಮ್ಮನೇ ಅಂದು ಸಸಾರವಾಗಿ ಕಂಡದ್ದನ್ನು ಶಾರದಮ್ಮನು ತುಟಿ ಕಚ್ಚಿ ಸಹಿಸಿಕೊಂಡಿದ್ದರು. ಆದರೆ ಗಿರಿರಾಯರು ಮಾತ್ರ "ನಿನ್ನ ಅಮ್ಮ ಒಬ್ಬ ಅಸಭ್ಯ ಹೆಂಗಸು" ಎಂದು ಪ್ರಕಟವಾಗಿಯೇ ಹೇಳಿ ಹಗುರಾಗಿದ್ದರು. "ನಿನ್ನ ಮನೆಗೆ ಇನ್ನು ಮುಂದೆ ನನ್ನನ್ನು ಮಾತ್ರ ಕರೆಯಬೇಡ.." ಎಂದೂ...ಅಂದೇ ಘೋಷಿಸಿಯೂ ಬಿಟ್ಟಿದ್ದರು.

"ಸ್ವಂತ ಅಳಿಯನ ಪಕ್ಕದಲ್ಲಿ ಕೂತ ನಿನ್ನ ಮಾವ - ಆ ಬಚ್ಚಾಲಿ ದಾಸಯ್ಯನನ್ನು ಏಕಿಏಕಿ ನಗುತ್ತ ಮಾತನಾಡಿಸಿದ ನಿನ್ನ ಅಮ್ಮ - ಸರಕ್ಕಂತ ನನ್ನನ್ನು ದಾಟಿ - ಅಲ್ಲಿ ಕೂತವರನ್ನೆಲ್ಲ ಮಾತಾಡಿಸಿ - ನನ್ನನ್ನು ಗಮನಿಸಲೇ ಇಲ್ಲವೆಂಬಂತೆ ನಡೆದು ಹೋದರಲ್ಲ ?   ಮನೆಗೆ ಬಂದ ಅಳಿಯನನ್ನು "ಬಂದಿರಾ ?" ಅಂತ ಕೇಳುವ ಸೌಜನ್ಯವೂ ಅತ್ತೆಗೆ ಇಲ್ಲವೆಂದರೆ ಅವರಿಗೆ ನನ್ನ ಬಗೆಗೆ ತಿರಸ್ಕಾರವಿದೆ ಎಂದೇ ಅರ್ಥ. ಅವರು ನನ್ನನ್ನು ಇಷ್ಟ ಪಡಲಿ, ಮೆಚ್ಚಲಿ ಎಂದೇನೂ ನನಗೆ ಅಪೇಕ್ಷೆಯಿಲ್ಲ. ಆದರೆ ಅವರ ಸ್ಥಾನಕ್ಕೆ ಹೊಂದುವ ವರ್ತನೆ ಅದಲ್ಲ. ನೋಡು ಶಾರೂ, ನಾನು ನಿನ್ನನ್ನು ಮೆಚ್ಚಿಯೇ ಮದುವೆಯಾದದ್ದು; ಈಗಲೂ ನೀನು ನನ್ನ ಪ್ರೀತಿಯ ಅದೇ ಶಾರು. ಆದರೆ ನಿನ್ನ ಅಮ್ಮ ಹುಟ್ಟಿಸಿದ ಮೂರು ಮಕ್ಕಳಿಗೆ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ನಾಕು ದಿನವಾದರೂ ಅನ್ನ ಹಾಕಿದವನು ನಾನು - ಹೌದಾ ಅಲ್ವಾ ? ಅವರ ಮಕ್ಕಳಿಗೆ ನನ್ನ ಕೈಲಾದ ಎಲ್ಲ ಸಹಾಯವನ್ನೂ ಮಾಡಿದ್ದೆ; ಯಾವುದೂ ನನ್ನಲ್ಲಿ "ಇದ್ದು ಮಾಡಿದ ಸಹಾಯ" ಅಲ್ಲ. ಮಾಡಿದ್ದನ್ನೆಲ್ಲ ಡಂಗುರ ಹೊಡೆದು ಹೇಳಿಕೊಂಡವನೂ ನಾನಲ್ಲ. ಇಂತಹ ಅಧಿಕ ಪ್ರಸಂಗದ ನನ್ನ ದುರ್ಬುದ್ಧಿಯಿಂದಲೇ ನನ್ನ ಸಂಸಾರವನ್ನು ಐಶಾರಾಮದಿಂದ ಇರಿಸಲು ನನ್ನಿಂದಾಗಲಿಲ್ಲ. ಆಗಿಂದಲೂ "ನಾನು, ಮಾಣಿ, ಗೋವಿಂದ" ಅಂತ ಇದ್ದಿದ್ದರೆ ನಾನೂ ನಾಲ್ಕು ಕಾಸು ಕೂಡಿಡಬಹುದಿತ್ತು. ಸ್ವಾರ್ಥದಿಂದ ಹೊರಗೆ ನಿಂತು ನಾನು ಮಾಡಿದ್ದೆಲ್ಲವನ್ನೂ ಮರೆತು, ತನಗೆ ಕಾಸಿನ ಪ್ರಯೋಜನವನ್ನೂ ಮಾಡದ - ದುರ್ಮಾರ್ಗದಿಂದಲೇ ದುಡ್ಡು ಗಂಟು ಹಾಕಿದ ಮೂಢರನ್ನೆಲ್ಲ ನಿನ್ನ ಅಮ್ಮ ಕುಣಿದಾಡುತ್ತ ನೆಂಟರಂತೆ ಉಪಚರಿಸಿದರಲ್ಲ ? ಇದಕ್ಕೆ ಅವಿವೇಕ ಅನ್ನದೆ ಬೇರೇನೆನ್ನಲಿ ? ಆಕೆ ಯಾರನ್ನಾದರೂ ಮಾತಾಡಿಸಲಿ. ಆದರೆ ಸಭಾ ಮರ್ಯಾದೆಯ ಪ್ರಜ್ಞೆಯೂ ಇಲ್ಲದ ಮೂಢಳು ನಿನ್ನಮ್ಮ ಅಂತ ನೀನು ಒಪ್ಪಿಕೊಳ್ಳಲೇ ಬೇಕು...ನೀನು ಅಂದುಕೊಂಡಂತೆ ಅದು ಅವರ ಹೆಡ್ಡತನ ಅಲ್ಲ; ಶಿಷ್ಟಾಚಾರವೂ ಗೊತ್ತಿಲ್ಲದ ಅನಾಗರಿಕತನ ಅದು- ಆಯ್ತಾ ?" ಮದುವೆಯ ಮನೆಯಿಂದ ಹಿಂದಿರುಗಿದ ಮೇಲೆ ಗಿರಿರಾಯರು ಗರಂ ಆಗಿದ್ದರು.

"ನೋಡಿ, ನನ್ನ ಅಮ್ಮ ಹೆಚ್ಚು ಓದಿದವಳಲ್ಲ. ನನ್ನ ಅಪ್ಪಯ್ಯ ಇದ್ದಿದ್ದರೆ ಹೀಗೆಲ್ಲ ಆಗುತ್ತಿರಲಿಲ್ಲ..." ಅಂತ ಶಾರದಮ್ಮನು ತಿಪ್ಪೆ ಸಾರಿಸಲು ಪ್ರಯತ್ನಿಸಿದ್ದರು.

"ಅರೆ, ನಿನಗ್ಯಾಕೆ ಅರ್ಥವಾಗುವುದಿಲ್ಲ ? ನಮ್ಮ ಓದಿಗೂ ವರ್ತನೆಗೂ ನೇರ ಸಂಬಂಧ ಇರುವುದೇ ಇಲ್ಲ. ಓದದೇ ಇದ್ದವರೆಲ್ಲ ನಿಷ್ಕರುಣಿಗಳಾಗಿ ಅವಿವೇಕಿಗಳಾಗಿಯೇನೂ ಇರುವುದಿಲ್ಲ. ಅವೆಲ್ಲವೂ ಅವರವರ ಕುಸಂಸ್ಕಾರದ ಫಲ. ನಾಳೆ ನಾನು ಮದುವೆಗೆ ಹೋಗದಿದ್ದರೆ ಅವರಿಗೆ ಯಾವ ಬೇಸರವೂ ಆಗುವುದಿಲ್ಲ; ಬದಲಿಗೆ ಖುಶಿಯಾಗುತ್ತದೆ. ನೀನೇ ಹೇಳು. ಯಾರೇ ಆಗಲಿ, ತಮಗೆ ಇಷ್ಟವಿಲ್ಲದವರಿಗೆ "ಬನ್ನಿ ಬನ್ನಿ" ಅಂತ ಹೇಳಿಕೆ ಕೊಡುವುದಾದರೂ ಯಾಕೆ ? ನಾನು ಹೇಳುವ ಮಾತನ್ನು ಕಿವಿಗೊಟ್ಟು ಕೇಳು ಶಾರದಾ. ಪ್ರೀತಿ ಗೌರವವಿಲ್ಲದಲ್ಲಿಗೆ ಹೋಗಿ ಯಾರೂ ಊಟ ಮಾಡಬಾರದು ...ಅಂತಹ ಹುಂಬ  ಗೋಸುಂಬೆಗಳಿಂದ ದೂರ ಇರುವುದೇ ಕ್ಷೇಮ.."

"ಸರಿ; ಇನ್ನು ಈ ವಿಷಯವನ್ನು ಮಾತಾಡುವುದು ಬೇಡ. ಸುಮ್ಮನೆ ನಾವ್ಯಾಕೆ ಇವತ್ತಿನಿಂದಲೇ ಮನಸ್ಸನ್ನು ಕಹಿ ಮಾಡಿಕೊಳ್ಳುವುದು ? ಆದರೆ ಒಂದು ವಿಷಯ ಮಾತ್ರ ಸತ್ಯ. ನಾನು ಹೇಳುತ್ತೇನೆ ಕೇಳಿ...ದುಡ್ಡಿದ್ದವರಿಗೇ ಈ ಜಗತ್ತು ಮಣೆ ಹಾಕುವುದು. ನಾವಿಬ್ಬರು ಮಾತ್ರ - "ಅಲ್ಲ; ಅದು ಹಾಗಲ್ಲ" - ಅಂತೆಲ್ಲ ಅನ್ನುತ್ತಿದ್ದರೆ ಎಲ್ಲೂ ನಡೆಯುವುದಿಲ್ಲ...ನಾವೇ ಜಾತಿ ಬಿಟ್ಟ ಕಾಗೆ ಆಗ್ತೇವೆ..ಅಷ್ಟೆ."

"ಅಂದರೆ...ಏನು ನಿನ್ನ ಮಾತಿನ ಅರ್ಥ ? ನಿನ್ನ ಕಡೆಯವರನ್ನು ಮೆಚ್ಚಿಸಲಿಕ್ಕೆ ನಾನು ಅಡ್ಡದಾರಿಯಿಂದಾದರೂ ದುಡ್ಡು ಮಾಡಬೇಕಾ ? ಕಾಗಕ್ಕ ಗುಬ್ಬಕ್ಕನ ಹೆಸರಿನಲ್ಲಿ ಗಾದೆ ಕಟ್ಟುವವರ ಇಂತಹ "ಜಾತಿಯ ಮನೆ"ಗೆ ಮೂರು ಮುಷ್ಟಿ ಉಪ್ಪು...ಕಾಸಿನ ಜಾತಿಯನ್ನು ಮಾತ್ರ ಗುರುತಿಸುವವರ ಜೊತೆಗಿದ್ದುಕೊಂಡು "ಜಾತಿ ಕಾಗೆ"  ಆಗುವುದಕ್ಕಿಂತ ನನ್ನ ಹಾಗೆ "ಜಾತಿ ಬಿಟ್ಟ ಕಾಗೆ" ಆಗುವುದೇ ವಾಸಿ...ನೋಡು ಶಾರದಾ, ನಾನು ಹೀಗೇ ಇರುವುದು; ಇಷ್ಟವಿದ್ದರೆ ಹೊಂದಿಕೋ..."

"ಇಲ್ಲವಾದರೆ ಹೊರಡು ಅಂತಲೂ ಹೇಳಿಬಿಡಿಯಲ್ಲ..."

"ನನ್ನ ಜೊತೆಯಲ್ಲಿ ಸಂತೋಷದಿಂದ ಇರುವ ಹಾಗಿದ್ದರೆ ಎಲ್ಲವೂ ಗೊತ್ತಿದ್ದೂ ನೀನು ಚೌಕಾಸಿಗೆ ಇಳಿಯುತ್ತಿರಲಿಲ್ಲ; ಇಂತಹ ಮಾತಿನ ಕೊಕ್ಕೆಗಳನ್ನೆಲ್ಲ ಹಾಕುತ್ತಿರಲಿಲ್ಲ...ನಿನ್ನ ಮೀಸೆ ಬೆಳೆದ ತಮ್ಮಂದಿರು ದೇಶಾವರಿ ನಗುತ್ತ ಅವತ್ತು ಓಡಾಡುತ್ತಿದ್ದರಲ್ಲ ? ಅವರಿಗೇನು ಧಾಡಿಯಾಗಿತ್ತೆ ? ಅವರೇನು ಅಕ್ಷರ ಬಾರದ ಪ್ರಪಂಚ ಜ್ಞಾನವಿಲ್ಲದ ಒಡ್ಡರಾ ? ಅರ್ಥ ಮಾಡಿಕೋ. ಅದು ಅವರ ಸಂಸ್ಕಾರ. ಆದ್ದರಿಂದ ಬದಲಾಗುವುದೂ ಕಷ್ಟ. ಒಬ್ಬೊಬ್ಬರೂ ಸ್ವಾರ್ಥಿಗಳು, ಸಮಯ ಸಾಧಕರು, ಸಂಸ್ಕಾರಹೀನರು..ಅಷ್ಟೆ. ಒಬ್ಬೊಬ್ಬರ ರೋಮರೋಮದಲ್ಲೂ ಅಹಂಕಾರ. ವಿದ್ಯೆ ನಾಸ್ತಿ ಅನ್ನುವುದರ ಲಕ್ಷಣವೇ ಅದು. ನಿಮ್ಮ ವಂಶದಲ್ಲೇ ಸೊಕ್ಕು ಹುಟ್ಟಿದ್ದಾ ಅಥವಾ ಸೊಕ್ಕಿನಿಂದಲೇ ಆ ವಂಶ ಹುಟ್ಟಿದ್ದಾ ?" ಗಿರಿರಾಯರು ಇಡೀ ವಂಶವನ್ನೇ ಜಾಲಾಡಿಸಿದಾಗ ಶಾರದಮ್ಮ ಮೌನವಾದರು.

ಕ್ಷಣ ಬಿಟ್ಟು ರಾಯರೇ ಮಾತಾಡಿದರು. "ಅವತ್ತು ಮದುವೆಯ ದಿನ - ನಾನು ನಿನ್ನ ಫಜೀತಿಯನ್ನೆಲ್ಲ ನೋಡುತ್ತಲೇ ಇದ್ದೆ. ಆರತಿ ಎತ್ತುವುದಕ್ಕೆ ಹಿರಿಯ ಮಗಳು ಬರಲಿ ಅಂತ ಪುರೋಹಿತರು ಹೇಳಿದಾಗ ನೀನು ಸೆರಗು ಕಟ್ಟಿ ಮುಂದೆ ಬಂದೆ...ಹೌದಾ ?"

"ಅದೆಲ್ಲ ಯಾಕೀಗ ? ಅದಕ್ಕೆ ಏನಾಯಿತೀಗ ?" ಶಾರದಮ್ಮನ ದನಿಯಲ್ಲಿ ಬೇಸರವಿತ್ತು.

"ಏನಾಯಿತಾ ? ನಿನ್ನನ್ನು ಕೈಯ್ಯಿಂದ ಹಿಂದೆ ದೂಡಿ ನಿನ್ನ ತಂಗಿಯನ್ನು ಕಳಿಸಿದ್ದು ಯಾರು ?"

"ಹೋಗಲಿ ಬಿಡಿ. ಯಾರು ಆರತಿ ಎತ್ತಿದರೆ ಏನಂತೆ ?"

"ಅದು ನನಗೂ ಗೊತ್ತು. ಆದರೆ ಅದು ನನ್ನ ಪ್ರಶ್ನೆಗೆ ಉತ್ತರ ಅಲ್ಲ..ನಿನ್ನನ್ನು ಹೆತ್ತ ಅಮ್ಮನೇ ಅವತ್ತು ಮಂಟಪದಿಂದ ನಿನ್ನನ್ನು ಹಿಂದೆ ತಳ್ಳಿದ್ದನ್ನು ನಾನೇ ನೋಡಿದ್ದೆ. ಆದರೆ ಒಬ್ಬ "ಅಮ್ಮ" ಎಂಬ ವ್ಯಕ್ತಿ ಹೀಗೆಲ್ಲ ವರ್ತಿಸುವುದು ಸಾಧ್ಯವೆ ? ನೀನೂ ಯೋಚನೆ ಮಾಡು. ಅವತ್ತು ಅದಕ್ಕೆ ಕಾರಣವನ್ನೂ ನೀನೇ ಹೇಳಿದ್ದೆ. ನೂಲಿನ ಸೀರೆ ಉಟ್ಟವರು ಹಿಂದಿರಬೇಕು; ಜರಿ ಸೀರೆ ಉಟ್ಟವರು ಮುಂದೆ ಬರಬೇಕು ಅನ್ನುವ ಪಕ್ಕಾ ಲೌಕಿಕ ಹೆಂಗಸು ನಿನ್ನಮ್ಮ. ಬರೇ ತೋರಿಕೆಯ ತುರಿಕಡ್ಡಿ. ನಿದ್ದೆ ಬಾರದ ತುರಿಕೆಗೆ ಆಕೆಗೆ ಒಂದಷ್ಟು ಮಕ್ಕಳು ಹುಟ್ಟಿದ್ದು ಬಿಟ್ಟರೆ ಆ ಹೆಂಗಸಿನಲ್ಲಿ ಸಾಮಾನ್ಯ ಹೆಂಗಸರಲ್ಲಿರುವ ಪಸೆಯೇ ಇಲ್ಲ. ಬೇರೆ ಯಾರಾದರೂ ಆಗಿದ್ದರೆ ತನ್ನ ಸೋತ ಮಕ್ಕಳನ್ನು ಹೆಚ್ಚು ಆಧರಿಸುತ್ತಿದ್ದರು. ತನ್ನದೇ ಒಂದು ಒಳ್ಳೆಯ ಸೀರೆಯನ್ನು ಕೊಟ್ಟು "ಇವತ್ತು ನೀನು ನನ್ನ ಸೀರೆ ಉಡು" ಅಂತ ಪ್ರೀತಿಯಿಂದಲೇ ಸಂದರ್ಭವನ್ನು ಸಂಭಾಳಿಸುತ್ತಿದ್ದರು. ಯಾರದ್ದೋ ಸೀರೆ ಉಟ್ಟು ನೀನು ತಿರುಗುವುದು ನನಗೆ ಇಷ್ಟವಾಗದಿದ್ದರೂ ಅಮ್ಮನಾಗಿ ಅಂತಹ ವರ್ತನೆಯನ್ನು ಒಪ್ಪುವ. ಆದರೆ ನಿನ್ನ ಅಮ್ಮನ ವರ್ತನೆ ಮಾತ್ರ ಅತ್ಯಂತ ಕ್ರೂರವಾಗಿತ್ತು. ಇದು ಎಂಥ ವಿಚಿತ್ರ ? ತನ್ನ ಹೊಟ್ಟೆಯಿಂದ ಹುಟ್ಟಿದ ಮಕ್ಕಳಲ್ಲೇ ಭೇದಭಾವವನ್ನು ತೋರಿಸುವ ತಾಯಿಯೂ ಇರುತ್ತಾರಾ ? ಹೊರಗಿನ ವೇಷ, ಇರಸ್ತಿಕೆ ನೋಡಿ ಸ್ವಂತ ಮಕ್ಕಳನ್ನು ತೂಗಿ ನೋಡುವ ತಾಯಂದಿರೂ ಇರ್ತಾರಾ ? ನಾನು ಕಣ್ಣಾರೆ ಇಂಥದ್ದೆಲ್ಲ ನೋಡಿರದಿದ್ದರೆ "ಕೆಟ್ಟ ತಾಯಿ ಇರುತ್ತಾಳೆ" ಅಂತ ನಂಬುವುದು ಸಾಧ್ಯವೇ ಇರಲಿಲ್ಲ. ಆ ಮದುವೆಯ ದಿನ ನಿನಗೆ ಮಾಡಿದ ಅವಮಾನವನ್ನು ನಾನಂತೂ ಎಂದೂ ಕ್ಷಮಿಸಲಾರೆ...ಅದು ನಿನಗೆ ಮಾತ್ರವಲ್ಲ - ನನಗೂ ಮಾಡಿದ ಅವಮಾನ ಅಂತ - ನಿನಗೂ ಅನ್ನಿಸಬೇಕಿತ್ತು.."


"ನೋಡಿ, ಸುಮ್ಮನೆ ಕಡ್ಡಿಯನ್ನು ಗುಡ್ಡ ಮಾಡಬೇಡಿ. ನಿಮಗೆ ಎಲ್ಲ ವಿಷಯ ಗೊತ್ತಿಲ್ಲ. ನನ್ನ ಅಮ್ಮ ಎಷ್ಟು ಒಳ್ಳೆಯವಳಿದ್ದಳು... ಗೊತ್ತಾ ? ಅವಳನ್ನು ನಾನು ಕಂಡಷ್ಟು ನೀವು ಕಂಡಿಲ್ಲ. ನನ್ನ ಬಾಲ್ಯದಲ್ಲಿ ಬದುಕಿಗೆ ಬೇಕಾದ ಎಷ್ಟು ಆದರ್ಶಗಳನ್ನು ನನಗೆ ಹೇಳಿ ಕೊಟ್ಟಿದ್ದ ಅಮ್ಮ ಅವಳು...ದಾನ, ಧರ್ಮ, ಕರುಣೆ ಎಲ್ಲವೂ ಅವಳಲ್ಲಿ ಇತ್ತು. ನಾನು ನೋಡಿದ್ದೇನೆ. ಅವಳೇ ಬೆಳೆಸಿದ ಹುಡುಗಿ ನಾನು. ಆದರೆ ಈಗ ಯಾಕೆ ಹೀಗೆ ಬದಲಾದಳೋ...ಹೇಗೆ ಬದಲಾದಳೋ ಅದು ಮಾತ್ರ ನನಗೆ ಗೊತ್ತಿಲ್ಲ. ಆದರೆ ಈ ತಮ್ಮ ತಂಗಿಯರೆಲ್ಲ ಬೆಳೆದು ನಿಂತ  ಮೇಲೆ ಅವಳು ಪೂರ್ತಿ ಬದಲಾಗಿ ಬಿಟ್ಟದ್ದು ಮಾತ್ರ ಸುಳ್ಳಲ್ಲ. ಅವಳದ್ದು ಸ್ವಲ್ಪ ಹಿತ್ತಾಳೆ ಕಿವಿ ಮಾರಾಯ್ರೇ..." ಶಾರದಮ್ಮ ಗಂಡನನ್ನು ಶಾಂತಗೊಳಿಸುವ ಧಾಟಿಯಲ್ಲಿ - ಸಹಜವಾಗಿ ಅಮ್ಮನ ವಕಾಲತ್ತಿಗೆ ಹೊರಟಿದ್ದರು.

"ಓ ಶಾರೂ ಶಾರೂ, ನಿನಗೆ ಯಾಕೆ ಅರ್ಥ ಆಗುವುದಿಲ್ಲ ? ಆ ಮನೆಯಲ್ಲಿ ನೀನು ಮಾತ್ರ ಹೇಗೆ ಇಷ್ಟು ಒಳ್ಳೆಯವಳಾದೆ ? ನೀನು ಆಗ ನಿನ್ನ ಅಮ್ಮನಲ್ಲಿ ಕಂಡದ್ದು - ಅದು ಒಳ್ಳೆಯತನ ಅಲ್ಲ; ಅದು ಅಭಾವ ವೈರಾಗ್ಯ. ಆಗ ಅವರಿಗೂ ಕಷ್ಟಗಳಿದ್ದವು. ಅದಕ್ಕೇ ಹೆಚ್ಚು ಹರಾಹುರಿ ಇರಲಿಲ್ಲ. ಯಾವಾಗಲೂ ಶಕ್ತಿಯಿದ್ದಾಗಲೇ ಸಂಯಮದ ಪರೀಕ್ಷೆ ನಡೆಯಬೇಕು. ಬಲವಿಲ್ಲದಿದ್ದಾಗ ಅಲ್ಲ. ಅಥವ ವಿವೇಚನೆಯ ಸಂಸ್ಕಾರ ಇರಬೇಕು. ಹೋಗಲಿ ಬಿಡು...ನಿನ್ನ ಅಮ್ಮನದು ಹಿತ್ತಾಳೆ ಅಲ್ಲ; ಚಿನ್ನದ ಕಿವಿ...ಆಯ್ತಾ ? ಇಲ್ಲಿಗೆ ಸಾಕು ಮಾಡುವ. ಆದರೆ ಇನ್ನು ಮುಂದೆ ಆ ಮನೆಗೆ ನನ್ನನ್ನು ಮಾತ್ರ ಕರೆಯಬೇಡ. ಹಿತ್ತಾಳೆ - ತಾಮ್ರದ ಕಿವಿಯನ್ನು ಮಾತನಾಡಿಸಲು ನೀನು ಅಲ್ಲಿಗೆ ಹೋಗುವುದಾದರೆ ನನ್ನದೇನೂ ಅಭ್ಯಂತರವಿಲ್ಲ...ಸರಿಯಾ ? ಈಗ ಶಾಂತಿ ಮಂತ್ರ ಹೇಳುವ.."

                                                **********----------**********

ಒಂದು ವರ್ಷ ಕಳೆದಿತ್ತು. ಹಳೆಯ ಕಹಿಯನ್ನೆಲ್ಲ ಶಾರದಮ್ಮ ಮರೆತಿದ್ದರು. ಒಮ್ಮೊಮ್ಮೆ ಅಪ್ಪನ ಮನೆ, ಅಮ್ಮನ ನೆನಪೂ ಆಗುತ್ತಿತ್ತು. ತಾನು ಬಾಲ್ಯವನ್ನು ಕಳೆದ ಆ ಮನೆ, ಅಂಗಳ, ಕೆರೆ, ಗದ್ದೆ, ತೋಟ...ತೋಟದ ಮೇಲಿಂದ ಬೀಸುವ ಗಾಳಿ...ಎಲ್ಲವೂ ನೆನಪಾಗುತ್ತಿತ್ತು. ಬದುಕು ಓಡುತ್ತಿತ್ತು.

ಹೀಗಿರುವಾಗ ಶಾರದಮ್ಮನ ಐದನೆಯ ತಂಗಿಯಾದ ದುರ್ಗಿಯ ಮದುವೆ ನಿಶ್ಚಯವಾದ ಸುದ್ದಿ ಬಂದಿತ್ತು. ನಿನ್ನೆ ಅವರ ಹಿರಿಯ ತಮ್ಮನಾದ ಗೋವಿಂದ ಮನೆಗೆ ಬಂದು ಮದುವೆಯ ಹೇಳಿಕೆಯನ್ನು ಹೇಳಿ ಹೋದ ಮೇಲಂತೂ ಶಾರದಮ್ಮನ ಮನಸ್ಸು ಅಪ್ಪನ ಮನೆಯಲ್ಲೇ ಸುತ್ತುತ್ತಿತ್ತು. 
                                         
ಶಾರದಮ್ಮನು ತನ್ನ ಅಪ್ಪನ ಮನೆಯಲ್ಲಿ ನಾಲ್ಕು ದಿನ ಖುಶಿಯಾಗಿ ಓಡಾಡುವ ಕನಸನ್ನೂ ಕಾಣತೊಡಗಿದ್ದರು. ತನ್ನಲ್ಲಿದ್ದ ಒಂದೇ ಒಂದು ಜರಿಸೀರೆಯನ್ನು ಬಿಸಿಲಿಗೆ ಹಾಕಿ, ಗರಿಗರಿಯಾಗಿರುವಾಗಲೇ ಮಡಿಸಿ, ಸುಕ್ಕು ತೆಗೆಯಲು ಹಾಸಿಗೆಯ ದಿಂಬಿನ ಕೆಳಗೆ ಇಟ್ಟಾಗಿತ್ತು. ಕುತ್ತಿಗೆಯಲ್ಲಿದ್ದ ಒಂದೇ ಒಂದು ಚಿನ್ನ - "ಕರಿಮಣಿ ಸರ" ವನ್ನು ಅಂಟುವಾಳದ ನೀರಿನಲ್ಲಿ ನೆನಸಿ ತೊಳೆದು ಧರಿಸಿದ್ದರು. ತನ್ನ ಇಬ್ಬರು ಹೆಣ್ಣು ಮಕ್ಕಳು, ಮಗ ಕೃಷ್ಣನನ್ನೂ ಕರೆದುಕೊಂಡು ಗಂಡನ ಜೊತೆಗೆ ತನ್ನ ಅಪ್ಪನ ಮನೆಗೆ ಹೊರಡುವ ಸಂಭ್ರಮದ ಅಡಾವುಡಿಯು ಅವರ ನಡಿಗೆಯಲ್ಲೇ ಕಾಣುತ್ತಿತ್ತು.

ಬೆಳಗಿನಿಂದ ತನ್ನತ್ತ ಇಣುಕಿ ಇಣುಕಿ ಓಡುತ್ತಿರುವ ಹೆಂಡತಿಯ ಚಡಪಡಿಕೆ ಗಿರಿರಾಯರಿಗೆ ಅರ್ಥವಾಗಿತ್ತು. ಮುಖದ ಎದುರಿಗೆ ದಿನಪತ್ರಿಕೆಯಿದ್ದರೂ "ಜೊತೆಗೆ ನನ್ನನ್ನೂ ಬರುವಂತೆ ಇನ್ನು ಕೊರೆಯುತ್ತಾಳಲ್ಲ ? ಇವಳಿಗೆ ಯಾಕೆ ಅರ್ಥವಾಗುವುದಿಲ್ಲ ? ಈಗ ಹೇಗೆ ನಿಭಾಯಿಸುವುದು ?" ಅನ್ನುವ ಯೋಚನೆಯು ಮರಳಿ ಹೊರಳುತ್ತಿತ್ತು.

ಅಂದು ಭಾನುವಾರದ ಮಧ್ಯಾಹ್ನದ ಅಡುಗೆಯ ಕೆಲಸ ಮುಗಿಸಿದ ಶಾರದಮ್ಮ ಗಂಡನ ಎದುರಲ್ಲಿ ಬಂದು ಕೂತರು. "ಬೆಳಿಗ್ಗೆಯಿಂದ ಆ ಪತ್ರಿಕೆ ಹಿಡಕೊಂಡು ಕೂತಿದ್ದೀರಲ್ಲ ? ಅರ್ಧ ಗಂಟೆಯಲ್ಲಿ ಓದಿ ಬಿಸಾಡುವಂಥ ಅದನ್ನು ಏನಂತ ಇಡೀ ದಿನ ಓದುತ್ತೀರೋ ?" ಅನ್ನುತ್ತ ಮಾತಿಗೆ ಎಳೆದರು.

"ನೋಡು...ಸತ್ತ ಸುದ್ದಿ ತುಂಬ ಇದೆ. ಯಾರು ಸತ್ತರು; ಎಲ್ಲಿ ಸತ್ತರು; ಹೇಗೆ ಸತ್ತರು...ಇಲ್ಲಿ ನೋಡು..ಒಳ್ಳೆ ಚಡ್ಡಿಯ ಮಾರಾಟದ ಮಳಿಗೆ ಬಂದಿದೆ.." ಅನ್ನುತ್ತ ಗಂಡನು ಪತ್ರಿಕೆಯನ್ನು ತೋರಿಸುವಾಗ ಶಾರದಮ್ಮ ಸಿಡುಕಿದರು.

"ನೋಡಿ, ಸತ್ತ ವಿಷಯವೆಲ್ಲ ಈಗ ಬೇಡ. ನಾಡಿದ್ದು ಮದುವೆ ಉಂಟಲ್ಲ ? ಇಬ್ಬರೂ ಹೋಗಿ ಬರುವ...ಆಗದಾ ?" ಹೆಂಡತಿಯು ಮದುವೆಯ ಪ್ರಸ್ತಾಪ ಎತ್ತಿದ ಕೂಡಲೇ - ಗಿರಿರಾಯರು ಆಕಳಿಸುತ್ತ ಕೂತಲ್ಲಿಂದ ಎದ್ದು ಹೊರಟರು. "ಸ್ನಾನ ಮಾಡಿ ಬರುತ್ತೇನೆ.." ಅನ್ನುತ್ತ ನಡೆದು ಬಿಟ್ಟರು. ಶಾರದಮ್ಮನಿಗೆ ಗಂಡನ ಜೊತೆಗೆ ಅಪ್ಪನ ಮನೆಗೆ ಹೋಗುವ ಆಸೆ. ಆದರೆ ಗಿರಿರಾಯರು ಉಭಶುಭ ಅನ್ನುತ್ತಿರಲಿಲ್ಲ.

ಮಧ್ಯಾಹ್ನದ ಊಟ ಮುಗಿದ ಮೇಲೆ ಅಡಕೆ ಜಗಿಯುತ್ತ ಒರಗಿದ್ದ ಗಿರಿರಾಯರ ಪಕ್ಕದಲ್ಲಿ ಕೂತ ಶಾರದಮ್ಮನ ಬಾಯಲ್ಲಿ ಮತ್ತೊಮ್ಮೆ ಅದೇ ಮಾತು.

"ನೀವು ಹೀಗೆ ಮೌನೇಶ್ವರನ ಹಾಗೆ ಮಾಡಿದರೆ ಹೇಗೆ ? ನನ್ನ ತಮ್ಮನೇ ಬಂದು ಕ್ರಮಪ್ರಕಾರವಾಗಿ ಹೇಳಿ ಹೋಗಿದ್ದಾನಲ್ಲ...ಮದುವೆಗೆ ಒಟ್ಟಿಗೇ ಹೋಗುವ. ನನಗಾಗಿಯಾದರೂ ಬನ್ನಿ..ಒಂದು ಹೇಳಿಕೆ ಬಂದರೆ ಅದಕ್ಕೆ ಮರ್ಯಾದೆ ಅಂತ ಬೇಡವಾ ? ಹಳೆಯದನ್ನೆಲ್ಲ ಎಷ್ಟು ದಿನ ಅಂತ ಎಳೆದಾಡುವುದು ? ಬಂಧುಗಳಲ್ಲಿ ಏನೋ ಒಂದು ಕಟಿಪಿಟಿ ಬರುತ್ತದೆ...ಹೋಗುತ್ತದೆ. ಏನು ? ಮಾತಾಡಿ ಮಾರಾಯ್ರೇ. ನೀವು ಬರುವುದಿಲ್ಲ ಅಂತಾದರೆ ಯಾಕೆ ಅಂತಾದರೂ ಹೇಳಿ...ನನ್ನ ಅಪ್ಪನ ಮನೆಯವರು ಒಡ್ಡರು ಅಂತ ಅಂದುಕೊಂಡೇ ಬನ್ನಿ. ಅವರು ವರ್ತಿಸಿದಂತೆ ನಾವೂ ಒಡ್ಡರ ಹಾಗೆ ವರ್ತಿಸಿದರೆ ನಮಗೂ ಅವರಿಗೂ ವ್ಯತ್ಯಾಸ ಏನು ?" ಶಾರದಮ್ಮ ಗಂಡನ ಬೆನ್ನು ಬಿದ್ದಿದ್ದರು.

"ನೋಡೇ ಶಾರೂ, ನನ್ನ ಅಭಿಪ್ರಾಯ ಏನು ಅಂತ ನಿನಗೆ ಗೊತ್ತಿದೆ. ಯಾಕೆ ಯಾಕೆ ಅಂತ ಪದೇ ಪದೇ ಕೇಳಬೇಡ. ನಮಗೂ ನಿನ್ನ ಮನೆಯವರಿಗೂ ಬಹಳ ವ್ಯತ್ಯಾಸವಿದೆ. ಈಗ ಅವೆಲ್ಲ ವಾದಗಳು ಬೇಡವೇ ಬೇಡ. ಒಂದಂತೂ ಸತ್ಯ. ಯಾವಾಗಲೂ ಸಮಾನರ ನಡುವೆ ಮಾತ್ರ ಸಂಬಂಧ ಇರಿಸಿಕೊಳ್ಳಬೇಕು...ಅಂದರೆ ನಮ್ಮ ಯೋಚನೆಗಳು ಸಮಾನವಾಗಿ ಹೊಂದಬೇಕು..."

"ಹಾಗಂದರೆ ಹೇಗೆ? ಹೊಂದುವುದು, ಹೊಂದಿಸಿಕೊಳ್ಳುವುದು ಎಲ್ಲವುದೂ ಇರಬೇಕಪ್ಪ. ನನ್ನ ಅಪ್ಪನ ಮನೆ ನಿಮಗೆ ಏನೂ ಅಲ್ಲವಾ ? ಕಣ್ಣೆದುರಿಗೆ ಇರುವ ಸಂಬಂಧವನ್ನು ಇಲ್ಲ ಅಂತಂದರೆ ಅಥವ ಬೇಡ ಅಂತಂದರೆ ಅದು - ಅಲ್ಲ ಇಲ್ಲ ಅಂತಾಗುತ್ತದಾ ? ಗಂಡ ಇದ್ದೂ ನಾನೊಬ್ಬಳೇ ಅಪ್ಪನ ಮನೆಗೆ ಹೋದರೆ ನನ್ನ ನೆಂಟರಿಷ್ಟರು ಏನೆಂದುಕೊಳ್ಳುವುದಿಲ್ಲ ಹೇಳಿ ? ಗಂಡ ಬರಲಿಲ್ಲವಾ..ಗಂಡ ಬರಲಿಲ್ಲವಾ ? ಅಂತ ಮೆಟ್ಟುಮೆಟ್ಟಿಗೆ ಕೇಳುವವರಿಗೆಲ್ಲ ವಿವರಣೆ ಕೊಡುತ್ತ ನಾನು ಸಾಯಬೇಕಾ ?"

"ನೋಡು, ಒಂದೇ ಉಸಿರಿಗೆ ಏನೇನೋ ಹೇಳಿ ನನ್ನ ತಲೆ ಕೆಡಿಸಬೇಡ. ಹೌದು. ಗಂಡ ಬರಲಿಲ್ಲ ಅಂತ ಹೇಳು. ಏನೀಗ ? ನೋಡು, ನಿನ್ನ ಅಪ್ಪನ ಮನೆಯ ಬಗ್ಗೆ ನಾನು ಏನೂ ಮಾತಾಡಬಾರದು ಅಂದುಕೊಂಡಿದ್ದೇನೆ. ಆದರೆ ನೀನು ನನ್ನ ಬಾಯಿಗೆ ಕೋಲು ಹಾಕ್ತಾ ಇದ್ದೀಯಲ್ಲ ? ಮಾತಾಡಿ ನನ್ನ ಬಾಯಿಯನ್ನು ಹೊಲಸು ಮಾಡಿಕೊಳ್ಳಲಿಕ್ಕೆ ನನಗೆ ಇಷ್ಟವಿಲ್ಲ. ಆದರೆ ತಂಗಿಯ ಮದುವೆಗಂತ ನೀನು ನಿನ್ನ ಅಪ್ಪನ ಮನೆಗೆ ಹೋದರೆ, ಅದರಿಂದ ನಿನಗೆ ಸಂತೋಷವೂ ಆಗುವುದಾದರೆ ನೀನು ಧಾರಾಳವಾಗಿ ಹೋಗು. ಮಕ್ಕಳನ್ನೂ ಕರೆದುಕೊಂಡು ಹೋಗು. ಇಲ್ಲಿರುವ ನನ್ನ ಊಟತಿಂಡಿಯ ಬಗ್ಗೆ ನೀನು ಚಿಂತೆ ಮಾಡುವುದೇ ಬೇಡ. ನಾನು ನಿಶ್ಚಿಂತೆಯಿಂದ ಇರುತ್ತೇನೆ. ಆದರೆ ನನ್ನನ್ನು ಮಾತ್ರ ಜೊತೆಯಲ್ಲಿ ಬನ್ನಿ ಬನ್ನಿ ಅಂತ ಪೀಡಿಸಬೇಡ. ಗಂಡ ಇದ್ದವರೆಲ್ಲರೂ ತಾವು ಹೋಗುವಲ್ಲಿಗೆಲ್ಲ ತಮ್ಮ ಗಂಡನನ್ನು ಕಟ್ಟಿಕೊಂಡೇ ಹೋಗಿ ತಮ್ಮ ಗಂಡನ ಅಸ್ತಿತ್ವವನ್ನು ಹತ್ತು ಜನರ ಮುಂದೆ ಪ್ರಮಾಣೀಕರಿಸಬೇಕೆಂದೇನೂ ಇಲ್ಲ... ನೋಡು ಶಾರದಾ, ದಯವಿಟ್ಟು ನನ್ನನ್ನು ಬಿಟ್ಟು ಬಿಡು; ಒತ್ತಾಯ ಮಾಡಬೇಡ...ನನಗೆ ಅಲ್ಲಿನ ವಾತಾವರಣ ಹಿಡಿಸುವುದಿಲ್ಲ. ಅಕ್ಕಿ ಬೆಂದಿದೆಯಾ ಅಂತ ನೋಡುವುದಕ್ಕೆ ಬುದ್ಧಿ ಇರುವವರಿಗೆ ಒಂದು ಅಗಳು ಸಾಕಾಗುತ್ತದೆ. ಅದು ಸಾಕಾಗದಿದ್ದರೆ ಅವರು ಅಡುಗೆ ಕಲೆ ಸಿದ್ಧಿಸಿರದ ಹೆಡ್ಡರು ಅಂತ ಅರ್ಥ. ನೀನು ಹೆಡ್ಡಿ ಅಲ್ಲ ಅಂದುಕೊಂಡಿದ್ದೇನೆ." ಅನ್ನುತ್ತ ಕೂತಲ್ಲಿಂದ ಎದ್ದರು.

ಈಗ ಶಾರದಮ್ಮ ಕುಸುಕುಸು ಅಳತೊಡಗಿದರು. ಹೆಂಡತಿಯ ಕಣ್ಣೀರನ್ನು ನೋಡಿದ ಗಿರಿರಾಯರು ಮತ್ತೆ ಕೂತರು. ಹೆಂಡತಿಯ ಪಕ್ಕದಲ್ಲಿಯೇ ಕೂತು "ಯಾಕೆ ಸುಮ್ಮನೆ ಸುಸ್ತು ಮಾಡಿಕೊಳ್ತಿ ಮಾರಾಯ್ತೀ ? ನಾನೊಬ್ಬ ಸಾಮಾನ್ಯ ಗುಮಾಸ್ತ. ಬರೇ ಸಂಬಳದಿಂದ ಬದುಕುವ ಪ್ರಾಣಿ. ನಿನ್ನ ಕಡೆಯವರ ದೃಷ್ಟಿಯಲ್ಲಿ - ಅಡ್ಡ ದಾರಿಯಿಂದ ಕಮಾಯಿ ಮಾಡುವುದನ್ನೂ ತಿಳಿಯದ ಹೆಡ್ಡ ನಾನು. ಇರಲಿ. ಅವರ ಅಭಿಪ್ರಾಯ ಅವರಿಗೆ. ಇನ್ನು, ಮದುವೆ ಮನೆ ಅಂದ ಮೇಲೆ - ಅಲ್ಲಿ ನಿನ್ನ ಮನೆಯಲ್ಲಿ ದೊಡ್ಡ ದೊಡ್ಡ ನಗದು ಸಾಹುಕಾರರು ಸೇರುತ್ತಾರೆ. ನಿನ್ನ ಅಪ್ಪ ಅಮ್ಮ ತಮ್ಮ ತಂಗಿಯರೆಲ್ಲರೂ ಬಂದವರ ಮುಖ ನೋಡುವ ಮೊದಲು ಬಂದವರ ಕಿಸೆಯ ದಪ್ಪ ಅಳೆಯುವವರು. ಅವರ ಮರ್ಯಾದೆಯ ಅಳತೆಗೋಲಿಗೆ ನಾವಂತೂ ಸಿಕ್ಕುವುದಿಲ್ಲ. ನನ್ನ ದೃಷ್ಟಿಯಲ್ಲಿ, ಮರ್ಯಾದೆ ಇಲ್ಲದಲ್ಲಿಗೆ ಹೋಗಬಾರದು ಶಾರೂ. ಸತ್ಯ ಹೇಳುವುದಾದರೆ ನೀನು ಹೋಗುವುದೂ ನನಗೆ ಇಷ್ಟವಿಲ್ಲ. ಯಾಕೆಂದರೆ ಅಲ್ಲಿ ನಿನಗೂ ಪ್ರೀತಿ ಸಿಗುವುದಿಲ್ಲ; ಮರ್ಯಾದೆ ಕೊಡುವುದು ಯಾರಿಗೆ ಮತ್ತು ಹೇಗೆ ಅನ್ನುವುದು ಆ ಪಡಪೋಶಿಗಳಿಗೆ ಮೊದಲೇ ಗೊತ್ತಿಲ್ಲ. ಇಷ್ಟಾಗಿಯೂ ಹೋಗಲೇ ಬೇಕೆಂದಿದ್ದರೆ ನೀನು ಹೋಗು; ನನ್ನನ್ನು ಮಾತ್ರ ಎಳೆಯಬೇಡ. ಈಗ ಸದ್ಯಕ್ಕಂತೂ - ನನ್ನ ಎದುರಿಗೆ ಕೂತು ಅತ್ತು ಕರೆದು ರಂಪ ಮಾಡಬೇಡ ಮಾರಾಯ್ತಿ... ಆಯ್ತಾ ?" ಗಿರಿರಾಯರು ಹೆಂಡತಿಯ ಗಲ್ಲವನ್ನೆತ್ತಿ ಕೆನ್ನೆ ಹಿಂಡಿದರು.

ಗಂಡನ ಕೈಯನ್ನು ಬಿಗಿಯಾಗಿ ಹಿಡಿದುಕೊಂಡ ಶಾರದಮ್ಮ " ಸರಿ. ನಿಮಗೆ ಹಿಂಸೆ ಕೊಟ್ಟು ನಾನ್ಯಾಕೆ ನಿಮ್ಮನ್ನು ಎಳಕೊಂಡು ಹೋಗುವುದು ? ಆದರೆ ಮನೆಯಿಂದ ಯಾರೂ ಹೋಗದಿದ್ದರೆ ತಪ್ಪಾಗುತ್ತದೆ. ಆಡಿಕೊಳ್ಳುವವರಿಗೆ ಎಡೆಯಾಗುತ್ತದೆ. ಆದ್ದರಿಂದ ಇಬ್ಬರು ಮಕ್ಕಳನ್ನು ಮಾತ್ರ ಕಟ್ಟಿಕೊಂಡು ನಾನು ಹೋಗಿ ಬರುತ್ತೇನೆ...ಜಾನಕಿ ನಿಮ್ಮ ಜೊತೆ ಇರಲಿ. ಹೇಳಿದಷ್ಟು ಮನೆ ಕೆಲಸ ಮಾಡಲು ಅವಳಿಗೆ ಗೊತ್ತು. ನಾನು ಬರುವವರೆಗೆ ನಾಲ್ಕೈದು ದಿನ ನಿಮ್ಮ ಊಟಕ್ಕೆ..." ಅನ್ನುವಾಗಲೇ ತಡೆದ ಗಿರಿ, "ಅಯ್ಯೋ ಮಾರಾಯ್ತಿ, ನಿನಗೆ ಈಗ ಇರುವ ಚಿಂತೆಯೇ ಹೊರಲಾರದಷ್ಟಿದೆ. ಅದರ ಮಧ್ಯ ನನ್ನ ಚಿಂತೆಯನ್ನೂ ಸೇರಿಸಿಕೊಳ್ಳಬೇಡ. ನಾನು ಗಮ್ಮತ್ತಿನಲ್ಲಿ ಗಂಜಿ ಮಾಡಿಕೊಂಡು ಉಣ್ಣುತ್ತೇನೆ. ಜೊತೆಗಿರುವ ಜಾನಕಿಗೂ ಅದೇ ನಡೆಯುತ್ತದೆ. ನಾಲ್ಕು ದಿನ ಅಲ್ಲವಾ ? ನೀನು ನಿಶ್ಚಿಂತೆಯಿಂದ ಹೋಗಿ ಬಾ...ಹಾಂ...ಆದರೆ ಈಗ ಕಣ್ಣಿಂದ ಗಂಗಾ ಭಾಗೀರಥಿ ಹರಿಸಿದ ಹಾಗೆ, ಅಲ್ಲಿ ಅಪ್ಪನ ಮನೆಯಲ್ಲಿ ಯಾವುದೇ ಸಂದರ್ಭದಲ್ಲೂ ಅಳುವುದಿಲ್ಲ ಅಂತ ನನಗೆ ಮಾತುಕೊಡು...ಯಾಕೆಂದರೆ ಅಲ್ಲಿ ನಿನ್ನನ್ನು ಸಮಾಧಾನ ಪಡಿಸಲಿಕ್ಕೆ ಯಾರೂ ಇರುವುದಿಲ್ಲ...ನಗುವವರ ಎದುರು ಎಂದೂ ಅಳಬಾರದು. ಅತ್ತರೆ ನಗುವವರ ಎದುರು ಎಡವಿ ಬಿದ್ದಂತೆ ಆಗುತ್ತದೆ.."

ಗಂಡನ ಮಾತಿಗೆ ನಕ್ಕ ಶಾರದಮ್ಮ ಮಾತು ಕೊಡುವಂತೆ ಗಿರಿರಾಯರು ಚಾಚಿದ ಕೈಮೇಲೆ ತನ್ನ ಕೈಯ್ಯನ್ನಿರಿಸಿ "ಅಲ್ಲಿ ಯಾರಾದರೂ ಯಾಕೆ ನನ್ನನ್ನು ಅಳುವಂತೆ ಮಾಡುತ್ತಾರೆ ? ನಿಮಗೆ ಬರೀ ತಪ್ಪು ಅಭಿಪ್ರಾಯ ಅಚ್ಚಾಗಿ ಹೋಗಿದೆ...ಅಷ್ಟೆ. ದಿನ ಬದಲಾದ ಹಾಗೆ ಎಲ್ಲ ಜನರೂ ಬದಲಾಗ್ತಾರೆ..." ಅನ್ನುತ್ತ ಅಲ್ಲಿಂದ ಎದ್ದರು. "ಆಗಲಿ; ಆಗಲಿ..ಬದಲಾಗಲಿ..." ಅನ್ನುತ್ತ ಗಿರಿರಾಯರು ನಕ್ಕರು.

ಅಂತೂ ಶಾರದಮ್ಮ ಅಪ್ಪನ ಮನೆಗೆ ಹೊರಟರು. ನಾಲ್ಕು ವರ್ಷದ ಸಣ್ಣ ಮಗ ಕೃಷ್ಣ, ಐದನೇ ತರಗತಿ ಓದುತ್ತಿದ್ದ ಮಗಳು ಲಲಿತೆಯೊಂದಿಗೆ ಬಸ್ ನಿಲಾಣಕ್ಕೆ ಬಂದರು. ಅವರ ಬಟ್ಟೆಬರೆಯ ಪೆಟ್ಟಿಗೆ ಹಿಡಿದುಕೊಂಡು ಜೊತೆಗೆ ಬಂದ ಗಿರಿರಾಯರು ಅವರನ್ನು ಬಸ್ ಹತ್ತಿಸಿ, "ಒಂದೇ ಗಂಟೆಯ ಪ್ರಯಾಣ. ಕಂಡಕ್ಟರನಿಗೆ ಹೇಳಿದ್ದೇನೆ. ನಿಮ್ಮನ್ನು ಸರಿಯಾದ ಜಾಗದಲ್ಲಿ ಇಳಿಸುತ್ತಾರೆ. ಜಾಗ್ರತೆ. ಅಪ್ಪನ ಮನೆ ಅಂತ ಮೊದಲಿನ ಸಲಿಗೆ ತೋರಿಸಬೇಡ; ಸಣ್ಣ ಹುಡುಗಿಯಾಗುವ ಉಮ್ಮೇದು ಬೇಡ. ಗಂಭೀರವಾಗಿರು. ಮದುವೆಯ ದಿನ ಮಾತ್ರ ನೀನು ಸ್ವಲ್ಪ ದೂರದೂರದಲ್ಲೇ ಇರು. ಅತಿ ಉತ್ಸಾಹ ತೋರಿಸ್ಬೇಡ - ಆಯ್ತಾ ? ಮಕ್ಳು ಜಾಗ್ರತೆ. ಏನಾದರೂ ಬೇಸರವಾದರೆ ನನ್ನನ್ನು ನೆನಪಿಸಿಕೋ. ಹೇಗೆ ಗೊತ್ತಾ?" - ಅಂತ ಕಿವಿಯ ಹತ್ತಿರ ಬಾಗಿ "ಆಹಾ ನನ್ನ ಮದುವೆಯಂತೆ..." ಅಂತ ಹಾಡುತ್ತ ನಾನು ನಿನ್ನನ್ನು ಸುತ್ತುತ್ತಿದ್ದುದನ್ನು ನೆನಪಿಸಿಕೋ. ಅಪ್ಪನ ಮನೆಯ ಸುಖದಲ್ಲಿ ತೇಲ್ತಾ ತೇಲ್ತಾ ನಾನು ಮತ್ತು ಮಗಳು ಜಾನಕಿ ಇಲ್ಲಿ ನಿಮಗಾಗಿ ಕಾಯುತ್ತಿದ್ದೇವೆ ಅಂತ ಮರೀಬೇಡ ಮತ್ತೆ...ಏನು ? ಮಕ್ಕಳು ಜಾಗ್ರತೆ.." ಇನ್ನೂ ಹೇಳುತ್ತಿರುವಾಗಲೇ "ರೈಟ್ ರೈಟ್.." ಅನ್ನುವ ಕಂಡಕ್ಟರ್ ಕೂಗಿನೊಂದಿಗೆ ಬಸ್ ಹೊರಟಿತು.

                                          **********----------**********

"ಜಾನಕೀ..." ಗಿರಿರಾಯರು ಮಗಳನ್ನು ಕರೆಯುತ್ತ ಪಡಸಾಲೆಗೆ ಬಂದರು. "ಏನಮ್ಮ ? ಕರೆದರೂ ಕೇಳದಷ್ಟು ಯಾವ ಪುಸ್ತಕದಲ್ಲಿ ಮುಳುಗಿದ್ದೀ ?" ಕಿವಿಯ ಹತ್ತಿರದಲ್ಲಿಯೇ ಅಪ್ಪನ ದ್ವನಿ ಕೇಳಿ ಕುಮಟಿ ಬಿದ್ದ ಜಾನಕಿ "ಹೋಗಪ್ಪ; ನಾನು ಎಷ್ಟು ಹೆದರಿದೆ ಗೊತ್ತಾ ? ತ್ರಿವೇಣಿಯವರ ಕಾದಂಬರಿಯಲ್ಲಿ ಮುಳುಗಿದ್ದ ನನಗೆ ನೀನು ಕರೆದದ್ದು ಕೇಳಿಸಲೇ ಇಲ್ಲ..." ಅಂತ ಮಗಳು ಹುಸಿಮುನಿಸು ತೋರಿದಾಗ "ಓದುವವಳು ಉತ್ತಮ ವಿಷಯಗಳಿರುವ ಪುಸ್ತಕವನ್ನೇ ಓದು. ಸುಮ್ಮನೆ ಕಾಲಕ್ಷೇಪಕ್ಕಾಗಿ ಓದಿದರೆ ಯಾವ ಉಪಯೋಗವೂ ಆಗುವುದಿಲ್ಲ. ಹೋಗಲಿ; ನಿನ್ನ ಅಮ್ಮ ಮದುವೆಗಂತ ಹೋಗಿ ನಾಲ್ಕು ದಿನ ಆಯ್ತಲ್ಲ ? ಹೌದು. ಇವತ್ತು ಮದುವೆ. ಅಂದರೆ ನಾಳೆಯಾದರೂ ವಾಪಸ್ ಬರಬಹುದು. ಇವತ್ತು ರಾತ್ರಿಗೆ..ಊಟಕ್ಕೆ" ಅನ್ನುವಾಗಲೇ ಜಾನಕಿಯು ಅಪ್ಪನನ್ನು ತಡೆದು "ರಾತ್ರಿಗೆ ಅನ್ನ, ಬೇಳೆ ಸಾರು ಮಾಡ್ತೇನಪ್ಪ. ಸಾಕಲ್ಲವಾ ?" ಅಂದಳು. "ಸಾಕೇನು ? ಬೇಕಾದಷ್ಟಾಯಿತು ಜಾನಕೀ. ಮಜ್ಜಿಗೆ ಹೇಗೂ ಉಂಟಲ್ಲ.." ಅಂದರು.  ಮನಸ್ಸಿನಲ್ಲೇ "ಪರವಾಗಿಲ್ವೇ ? ನನ್ನ ಹೆಂಡತಿ ತನ್ನ ಮಗಳಿಗೆ ಒಂದಷ್ಟು ಅಡುಗೆ ಕಲಿಸಿದ್ದಾಳೆ. ಭೇಶ್; ಭೇಶ್..." ಅಂದುಕೊಳ್ಳುತ್ತ ರಾಯರು ಚಾವಡಿಗೆ ಬಂದರು.

ಅಷ್ಟರಲ್ಲಿ ಹಿತ್ತಲಿನಲ್ಲಿ ಹಸುಕರುವನ್ನು ಕಟ್ಟಿದ್ದು ನೆನಪಾಗಿ ಅವನ್ನು ಹಟ್ಟಿಯಲ್ಲಿ ಕಟ್ಟಿಬಿಡುವ ಅಂದುಕೊಂಡ ರಾಯರು ಹಿತ್ತಲಿಗೆ ನಡೆದರು. ಅವನ್ನು ಹಟ್ಟಿಯಲ್ಲಿ ಕಟ್ಟಿ ಬಾಣಿಗೆ ಒಂದಷ್ಟು ಕಲಗಚ್ಚು, ಎದುರಿಗೆ ಒಂದು ಹಿಡಿ ಒಣ ಹುಲ್ಲನ್ನು ಹಾಕಿ ಮನೆಯೊಳಗೆ ಹೆಜ್ಜೆಯಿಡುವಾಗ ಗೇಟು ತೆಗೆದ ಶಬ್ದವಾಗಿ ಹಿಂತಿರುಗಿ ನೋಡಿದರು. "ಅರೆ, ಶಾರದೆ ಮತ್ತು ಮಕ್ಕಳು ಬಂದೇ ಬಿಟ್ಟರಲ್ಲ ? ಅಂದರೆ ಮದುವೆಯ ದಿನ ಸಂಜೆಯೇ ಹೊರಟು ಬಂದಿದ್ದಾರೆ..." ಅಂದುಕೊಳ್ಳುತ್ತ "ಬನ್ನಿ ಬನ್ನಿ; ಮದುವೆಯ ಸಿಹಿ ಕಜ್ಜಾಯವನ್ನು Fresh ಆಗಿರುವಾಗಲೇ ಮನೆಯಲ್ಲಿದ್ದ ಬಡಪಾಯಿಗಳು ತಿನ್ನಲಿ ಅಂತ ಗಂಟು ಕಟ್ಟಿಕೊಂಡು, ಇವತ್ತೇ ಹೊರಟು ಬಂದರಾ ? ಅಥವ ನೀವು ಮಾತ್ರ ತಿಂದು ಬಂದಿರಾ ?" ಅನ್ನುತ್ತ ಹೆಂಡತಿಯ ಕೈಯಲ್ಲಿದ್ದ ಪೆಟ್ಟಿಗೆಯನ್ನು ತೆಗೆದುಕೊಂಡರು. ಎತ್ತಿಕೊಂಡಿದ್ದ ಕೃಷ್ಣನನ್ನು ಕೆಳಗಿಳಿಸಿ ಉಸ್ ಎನ್ನುತ್ತ ಜಗಲಿಯಲ್ಲೇ ಕೂತರು -  ಶಾರದಮ್ಮ. ಅಮ್ಮನ ಧ್ವನಿಯನ್ನು ಕೇಳಿದ ಜಾನಕಿಯು ಓಡಿಹೋಗಿ ಒಂದು ಚಂಬಿನಲ್ಲಿ ಕುಡಿಯುವ ನೀರನ್ನು ತಂದಿಟ್ಟಳು. ಗಟಗಟ ಕುಡಿದ ಶಾರದಮ್ಮ ಅಲ್ಲೇ ಒರಗಿ ಕೂತರು. ಆಗಲೇ ಕೃಷ್ಣ ಓಡಿಹೋಗಿ ಅಪ್ಪನ ತೊಡೆಯೇರಿದ್ದ. ಲಲಿತೆಯೂ ಅಪ್ಪನಿಗೆ ಅಂಟಿಕೊಂಡು ಕುಳಿತಿದ್ದಳು. ಹಿರಿಯ ಮಗಳು ಜಾನಕಿ ಮಾತ್ರ ಅಮ್ಮನ ಪಕ್ಕ ಸೇರಿಕೊಂಡಳು.

ರಾಯರು ಹೆಂಡತಿಯ ಮುಖವನ್ನೇ ನೋಡುತ್ತಿದ್ದರು. "ಏನು ಶಾರೂ, ನಿನ್ನನ್ನು ನೋಡಿದರೆ ಬಹಳ ಆಯಾಸವಾದ ಹಾಗೆ ತೋರುತ್ತಿದೆ...ಮದುವೆ ಮನೆಯಲ್ಲಿ ಸಿಕ್ಕಾಪಟ್ಟೆ ಓಡಾಟವಾ ? ನೀನೇ ತಿರುಗಣೆಯಾ ? ನಿನ್ನದೇ ಕಾರುಬಾರಾ ?" ಅನ್ನುತ್ತ ಕಣ್ಣು ಮಿಟುಕಿಸಿದರು. ಆಗ ಬಾಯಿ ಹಾಕಿದ ಚಿಕಣಿ ಲಲಿತೆಯು "ಇಲ್ಲ ಅಪ್ಪ, ನೀನು ಯಾವುದಕ್ಕೂ ಮುಂದೆ ಮುಂದೆ ಬರಬೇಡ ಅಂತ ಹೇಳಿ ಆ ಕೆಟ್ಟ ಅಜ್ಜಿಯು ಅಮ್ಮನಿಗೆ ಹೆದರಿಸಿತ್ತು. ಆಗ ಅಮ್ಮ ಎಷ್ಟು ಮರಕಿದಳು ಗೊತ್ತಾ ? ಪಾಪದ ಅಮ್ಮ ... ಆ ಅಜ್ಜಿಯ ಮನೆಗೆ ಹೋಗುವುದೇ ಬೇಡ... " ಅಂದಾಗ ಶಾರದಮ್ಮ ಮಗಳನ್ನು ಗದರಿದರು. "ದೊಡ್ಡವರ ವಿಷಯಕ್ಕೆಲ್ಲ ಮಕ್ಕಳು ತಲೆ ಹಾಕಬಾರದು; ನೀನು ಹೋಗಿ ಕೈಕಾಲು ತೊಳೆದು ಅಂಗಿ ಬದಲಾಯಿಸು...ಹೋಗು.." ಅಂತ ಲಲಿತೆಗೆ ಬೆದರಿಸುವಂತೆ ಕಣ್ಣು ಬಿಟ್ಟಳು. ಆದರೂ ಅಪ್ಪನನ್ನು ಬಿಟ್ಟು ಅಲುಗದ ಲಲಿತೆಯು "ಅಪ್ಪ, ನಾನೂ ಅತ್ತೆ. ಯಾಕೆ ಗೊತ್ತಾ ?" ಅಂದಳು. "ಯಾಕೆ ಮಗಳೇ ?" ಅನ್ನುತ್ತ ಗಿರಿರಾಯರು ಲಲಿತೆಯನ್ನು ಎತ್ತಿ ತಮ್ಮ ಇನ್ನೊಂದು ತೊಡೆಯ ಮೇಲೆ ಕೂರಿಸಿಕೊಂಡರು.

"ಅಪ್ಪ, ಅಜ್ಜಿಯ ಮನೆಯ ಹಟ್ಟಿಯಲ್ಲಿದ್ದ ಎಮ್ಮೆಯನ್ನು ಯಾರೋ ನಾಲ್ಕು ಜನರು ದರದರ ಎಳಕೊಂಡು ಹೋದರು. ಆಮೇಲೆ ಎದುರಿನ ಗದ್ದೆಯಲ್ಲಿ ಹಾಕಿ ಅದರ ಸುತ್ತಲೂ ಕೂತು ಅದರ ಚರ್ಮವನ್ನು ಕಿತ್ತರು. ಗದ್ದೆ ತುಂಬ ರಕ್ತ. ಆಮೇಲೆ ಆ ಎಮ್ಮೆಯನ್ನು ತುಂಡು ಮಾಡಿ ಚೂರು ಚೂರು ತಿಂದರು. ಚರ್ಮ ಸುಲಿಯುವಾಗ ಆ ಎಮ್ಮೆಯು ಜೋರಾಗಿ ಕೂಗಿತು. ಅಂಬಾ ಅಮ್ಮಾ ಅಂತ ಅರಚುತ್ತಿತ್ತು. ಆದರೂ ಅದನ್ನು ಬಿಡಲಿಲ್ಲ. ಆಮೇಲೆ ಎಮ್ಮೆ ಸತ್ತೇ ಹೋಯಿತು ಅಪ್ಪಾ...ಆ ಎಮ್ಮೆಯನ್ನು ಹಟ್ಟಿಯಿಂದ ಹೊರಗೆ ಹಾಕಿಸಿ ಎಳಕೊಂಡು ಹೋಗಲು ಕೊಟ್ಟ ಆ ಅಜ್ಜಿ, ಚಿಕ್ಕಮ್ಮ, ಮಾವ ...ಎಲ್ಲರೂ ಕೆಟ್ಟವರು...ನಾನು ಇನ್ನು ಮೇಲೆ ಅಲ್ಲಿಗೆ ಹೋಗುವುದಿಲ್ಲ..." ಅನ್ನುತ್ತ ಲಲಿತೆಯು ಮತ್ತೊಮ್ಮೆ ಬಿಕ್ಕಳಿಸಿದಳು. ಮಗಳನ್ನು ತಬ್ಬಿಕೊಂಡು ಸಂತೈಸಿದ  ಗಿರಿರಾಯರು ಹೆಂಡತಿಯತ್ತ ತೀಕ್ಷ್ಣವಾಗಿ ನೋಡುತ್ತ ಅಲ್ಲಿಂದ ಎದ್ದು ಹೋದರು.

                                                           *****-----*****

ರಾತ್ರಿಯ ಊಟದ ನಂತರದ ಕಸ ಮುಸುರೆಯನ್ನೆಲ್ಲ ಮುಗಿಸಿ ಶಾರದಮ್ಮ ಚಾವಡಿಗೆ ಬಂದು ಕೂತರು. ಮಕ್ಕಳೆಲ್ಲ ಮಲಗಿ ನಿದ್ರಿಸುತ್ತಿದ್ದರು. ಮೌನವಾಗಿ ಕೂತ ಹೆಂಡತಿಯತ್ತ ಸರಿದು ಆಕೆಗೆ ಒರಗಿಕೊಂಡೇ ಕೂತ ಗಿರಿರಾಯರು "ಮದುವೆಯ ಪುರಾಣ ಈಗ ಹೇಳು..." ಅಂದರು.


"ಅಲ್ಲ...ಎಂಥ ಕೆಲಸ ಮಾಡಿಬಿಟ್ಟರು ನೋಡಿ...ಮದುವೆಯ ದಿನ ಬೆಳಬೆಳಿಗ್ಗೆ ಆ ಎಮ್ಮೆಯನ್ನು ಹಿಸಿದು ಕಣ್ಣೆದುರೇ ತಿಂದು ಬಿಟ್ಟರಲ್ಲ ? ಮದುಮಗಳಾದ ನನ್ನ ತಂಗಿಗೆ ಆ ಶಾಪ ಬಡಿಯದಿದ್ದರೆ ಸಾಕು..."

"ಯಾಕೆ ? ಆ ಎಮ್ಮೆಯಿಂದ ಅವರಿಗೆಲ್ಲ ಏನು ತೊಂದರೆ ಆದದ್ದು ?"

"ನೋಡಿ, ಅದಕ್ಕೆ ಹುಶಾರಿರಲಿಲ್ಲ. ಅದರ ಕಾಲಿಗೆ ಏನೋ ಗಾಯವಾಗಿ ತುಂಬ ದಿನದಿಂದ ಆ ಎಮ್ಮೆ ಮಲಗಿದಲ್ಲಿಯೇ ಇತ್ತಂತೆ. ಮಲಗಿ ಮಲಗಿ ಎಮ್ಮೆಯ ಮೈಯಲ್ಲೆಲ್ಲ ವ್ರಣವಾಗಿ ಮೈಯೆಲ್ಲ ಕೆಂಪು ಕೆಂಪಾಗಿತ್ತು. ಸ್ವಲ್ಪ ವಾಸನೆಯೂ ಬರುತ್ತಿತ್ತು. ಅಂಗಳದಲ್ಲೇ ಹಾಕಿದ್ದ ಮದುವೆಯ ಚಪ್ಪರಕ್ಕೆ ಆ ಹಟ್ಟಿಯಿಂದ ಕೆಟ್ಟ ವಾಸನೆಯೂ ಬರುತ್ತಿತ್ತು. ಅದಕ್ಕೇ ಎಮ್ಮೆಯನ್ನು ಎತ್ತಿ ಹೊರಗೆ ಹಾಕಿಸಿ ಮದುವೆಯ ದಿನವೇ ವಿಲೇವಾರಿಯನ್ನೂ ಮಾಡಿಬಿಟ್ಟರು. ...ಎಂಥಾ ಎಮ್ಮೆ ? ಛೆ...ನೋಡಿ, ಆ ದಿನ ಬೆಳಿಗ್ಗೆಯೂ ಅದರ ಹಾಲು ಹಿಂಡಿದ್ದರು. ಆಗ ನಾನು ಅಲ್ಲೇ ಇದ್ದೆ. ಕಣ್ಣೀರು ಸುರಿಸುತ್ತ ಮಲಗಿದಲ್ಲಿಯೇ ಆ ಎಮ್ಮೆಯು ಹಾಲು ಕೊಟ್ಟಿತ್ತು..." ಶಾರದಮ್ಮ ಬಿಕ್ಕಿದರು. ಹೆಂಡತಿಯನ್ನು ಅಪ್ಪಿಕೊಂಡ ಗಿರಿರಾಯರು "ಛೆ...ಎಂತಹ ರಾಕ್ಷಸತನ...?" ಎಂದು ಗದ್ಗದರಾದರು.

"ಬೀಗರ ಕಡೆಯವರು ಬರುವಾಗ ರೋಗಿಷ್ಟವಾದ ಆ ಎಮ್ಮೆಯು ಅಲ್ಲಿದ್ದರೆ ಅದು ತಮ್ಮ ಘನತೆಗೆ ಕುಂದು ಅಂತ ನಮ್ಮವರೇ ಕೆಲವರು ತಕೊಂಡ ತೀರ್ಮಾನ ಅದು. ಅಷ್ಟಿದ್ದರೆ ಆ ಎಮ್ಮೆಯನ್ನು ನಾಲ್ಕು ದಿನ ಮೊದಲೇ ಸ್ವಲ್ಪ ದೂರದಲ್ಲಿ - ಪಕ್ಕದ ಮನೆಯ ಹಟ್ಟಿಯಲ್ಲಿ ಇರಿಸಬಹುದಿತ್ತು. ಹಾಲು ಕೊಟ್ಟ ಕೃತಜ್ಞತೆಗೆ ಕೊನೆಯ ವರೆಗೆ ಎಮ್ಮೆಗೆ ಚಿಕಿತ್ಸೆಯನ್ನಾದರೂ ಕೊಡಿಸಬಹುದಿತ್ತು...ಆದರೆ ಹಸಿಯಾಗಿ ತಿನ್ನುವವರಿಗೆ ಅದನ್ನು ಎತ್ತಿ ಕೊಟ್ಟರಲ್ಲ ? ಅದೂ ಮದುವೆಯ ಶುಭಕಾರ್ಯದ ಹೊತ್ತಿನಲ್ಲಿ ?..." ಹೊಟ್ಟೆ ತೊಳೆಸಿದಂತಾಗಿ ಬಚ್ಚಲಿಗೆ ಓಡಿದ ಶಾರದಮ್ಮ ಅತ್ತು ಹಗುರಾಗಿಯೇ ಬಂದರು. "ನೋಡಿ, ಅಲ್ಲಿ ಅಷಡ್ಡಾಳವೊಂದು ನಡೆಯುತ್ತಿದೆ ಅನ್ನಿಸಿದರೂ ನಾನು ಮಾತಾಡಲಿಲ್ಲ. ಮೊದಲೇ ವಕ್ರವಾಗಿ ನನ್ನನ್ನು ನೋಡುವವರಿಗೆ ಏನೇನೋ ಉಚಿತ ಸಲಹೆ ಕೊಟ್ಟು ನಾನ್ಯಾಕೆ ಅವರಿಂದ ಬೈಸಿಕೊಳ್ಳುವುದು ಅಂತ ನಾನು ಒಳಗೆ ಹೋಗಿ ಕಣ್ಣು ಮುಚ್ಚಿಕೊಂಡು ಕೂತುಬಿಟ್ಟೆ. ಒಂದು ಕಡೆ, ಈ ಮಾಣಿ ಕೃಷ್ಣನಂತೂ ಅಲ್ಲಿಗೆ ಹೋದ ಮೇಲೆ ಒಂದೇ ಸಮನೆ ಅಳುತ್ತಿತ್ತು. ನನಗೆ ಈ ಮಾಣಿಯನ್ನು ಸುಧಾರಿಸುವುದೇ ಆಗಿ ಹೋಯಿತು...ಅದರ ಮೇಲೆ "ನಿನ್ನ ಮಾಣಿಯದ್ದು ಎಂಥ ರಗಳೆ ಮಾರಾಯ್ತೀ ? ಅದಕ್ಕೆ ಎಂತ ಹುಶಾರಿಲ್ಯಾ ? ಅದು ಒರಲುದನ್ನು ಕೇಳಿ ಕೇಳಿ ಸಾಕಾಯ್ತು.." ಅಂತ ಎಲ್ಲರದೂ ಅಸಮಾಧಾನ. ನನ್ನ ಅಮ್ಮನಂತೂ - ಮಗುವನ್ನು ಎತ್ತಿಕೊಂಡು ಸಮಾಧಾನ ಪಡಿಸುವುದನ್ನು ಬಿಟ್ಟು "ನಿನ್ನ ಮಾಣಿನ ಕಟ್ಕಂಡ್ ನೀನು ಒಳಗೆ ಹೋಗು ಶಾರದಾ...ನನಗೆ ಈ ರಗಳೆ ಕೇಳಿ ಕೇಳಿ ಸಾಕಾಗಿದೆ.." ಅಂತ ಹೇಳಿಯೇ ಬಿಟ್ಟಳು. ಆಗ ನಿಜವಾಗಿ ನನಗೆ ನಿಮ್ಮ ಮಾತಿನ ನೆನಪಾಯಿತು ರೀ..."ಅಹಾ ನನ್ನ ಮದ್ವೆಯಂತೆ..." ಅಂತ ನೆನಸಿಕೊಂಡು ನಗು ಬರಿಸಿಕೊಂಡೆ. ಅಳಲಿಲ್ಲ. ಬಹುಶಃ ಅಳುವ ಬದಲು ನಕ್ಕೆ."  

ಕ್ಷಣಕಾಲ ಮೌನವಾಗಿದ್ದ ಗಿರಿರಾಯರು "ನೋಡು...ಮಾಡಿದವರ ಪಾಪ ಆಡಿದವರ ಬಾಯಲ್ಲಿ ಅಂತಾರೆ. ಅಲ್ಲಿನ ಹಣೆ ಬರಹ ನನಗೆ ಗೊತ್ತಿಲ್ಲದ್ದೇನಲ್ಲ. ಹೋಗಲಿ; ನಿನಗೀಗ ಸುಸ್ತಾಗಿದೆ... ವಿಶ್ರಾಂತಿ ತಕೋ, ನಾಳೆ ಮಾತಾಡುವ.." ಅಂದರು.

"ನನಗೆ ಇವತ್ತು ರಾತ್ರಿಯೆಲ್ಲ ನಿದ್ದೆ ಬರಲಿಕ್ಕಿಲ್ಲ ಮಾರಾಯರೇ. ಆ ಎಮ್ಮೆ, ಅದರ ಕಣ್ಣೀರು ಇಳಿಯುತ್ತಿದ್ದ ಮುಖವೇ ತಲೆ ತುಂಬ ತುಂಬಿದೆ...ಜೀವ ಇರುವಾಗಲೇ ಅದನ್ನು ಹರಿದು ತಿನ್ನಲು ಆ ಜನರಿಗೆ ಮನಸ್ಸಾದರೂ ಹೇಗೆ ಬಂತು ? "

"ನಿನ್ನ ವಾದವೇನೋ ಚೆನ್ನಾಗಿದೆ. ತಿಂದವರದ್ದೇ ತಪ್ಪು; ಬುದ್ಧಿ ಇಲ್ಲದವರಿಗೆ ಅದನ್ನು ಕೊಟ್ಟವರದ್ದಲ್ಲ...ಅಲ್ವಾ ? ಅವರಿಗೆಲ್ಲ ಇಂತಹ ಕೊಳೆತ, ಹಳಸಿದ ಆಹಾರವನ್ನೇ ಕೊಟ್ಟು ಕೊಟ್ಟು ಆ ಜನರನ್ನು ಅಲ್ಲೇ ಇಟ್ಟದ್ದು ನಮ್ಮಂತವರು. ಒಳ್ಳೆಯ ಆಹಾರ ಎಂದರೇನೆಂದು, ಒಳ್ಳೆಯ ರುಚಿಯೇ ಗೊತ್ತಿಲ್ಲದ ಹಾಗೆ ಅವರನ್ನು ಒತ್ತಿ ಇಟ್ಟದ್ದೂ ನಾವೇ. ಅವರಿಗೆಲ್ಲ ಒಳ್ಳೆಯ ಊಟ ಸಿಗುವಂತೆ ಮಾಡಿದ್ದರೆ ಅವರೂ ತಿನ್ನುತ್ತಿದ್ದರು. ಪಡೆದ ಸೇವೆಯನ್ನೂ ಮರೆತು ಆ ಎಮ್ಮೆಯನ್ನು ನಿರ್ದಾಕ್ಷಿಣ್ಯವಾಗಿ ಅವರಿಗೆ ಕೊಟ್ಟ ಕೆಟ್ಟ ಮನಸ್ಸುಗಳು ನಿನ್ನ ಮನೆಯ ಒಳಗೇ ಇತ್ತಲ್ಲ ? ಪಾಪ ಪುಣ್ಯದ ಭಯವೂ ಇಲ್ಲದ ಸೊಕ್ಕಿನ ಸಮಾಜ ಇದು. ಎಲ್ಲರೂ ಸ್ವಂತ ಲಾಭವನ್ನಷ್ಟೇ ನೋಡುವ ಸ್ವಾರ್ಥಿಗಳು. ತನ್ನ ಕರುವಿಗೂ ಕೊಡದೆ ಉಳಿಸಿಕೊಂಡು ಎಷ್ಟು ವರ್ಷ ನಮಗೆ ಹಾಲು ಕೊಟ್ಟು ಉಪಕರಿಸಿದ ಎಮ್ಮೆಯನ್ನು ಅದು ಬದುಕಿರುವಾಗಲೇ ಚಟ್ಟ ಕಟ್ಟಿ ಎತ್ತಿಕೊಂಡು ಹೋಗಲು ಕೊಟ್ಟವರಿಗೆ ಸಮಾ ಬಾರಿಸಬೇಕು; ಅದನ್ನು ತಿಂದವರಿಗಲ್ಲ. ಅದನ್ನು ತಿಂದವರಿಗೆ ಸಂಸ್ಕಾರ ಕೊಡುವ ಕೆಲಸ ನಮ್ಮಿಂದಲೇ ಆಗಬೇಕಿತ್ತು. ಆದರೆ ಅದರ ಬದಲಾಗಿ ನಾವೇ ಅವರಿಗೆ ಊರಿನ ಕೊಳೆಯನ್ನೆಲ್ಲ ತಿನ್ನಿಸುತ್ತಿದ್ದೇವೆ. ಆಮೇಲೆ ಅವರನ್ನು ಅಸಹ್ಯವೆಂಬಂತೆಯೂ ನಾವೇ ನೋಡುತ್ತಿದ್ದೇವೆ...ಅಲ್ಲವಾ ? ಯಾರಿಗಾದರೂ ಏನನ್ನಾದರೂ ಕೊಡುವ ಮನಸ್ಸಿದ್ದರೆ ನಾವು ತಿನ್ನುವ ಊಟವನ್ನೇ ಅವರಿಗೂ ಯಾಕೆ ಕೊಡಬಾರದು ? ಬೇಡವೆಂದು ಬಿಸಾಡುವಂಥದ್ದನ್ನು ಕೊಡುವುದೇಕೆ ?"

"ನಾವು ಉಂಡು ಬಿಸಾಟ ಎಲೆಯನ್ನು ಬಾಚಿ ಅದರಲ್ಲಿ ಸಿಕ್ಕಿದ್ದನ್ನೆಲ್ಲ ಒಟ್ಟು ಮಾಡಿ ಗಂಟು ಕಟ್ಟಿಕೊಂಡು ಆ ಎಮ್ಮೆಯ ತುಂಡುಗಳನ್ನೂ ಹೊತ್ತುಕೊಂಡು ಆಮೇಲೆ ಅವರೆಲ್ಲ ಖುಶಿಯಿಂದ ಹೋದರಂತೆ.."

"ಖುಶಿಯಿಂದ ಹೋದರು ಅಂತ ನಮ್ಮಂಥವರು ಕತೆ ಹೇಳಿ ಮುಗಿಸಬಹುದು...ಆದರೆ ಅವರಿಗೆ - "ಖುಶಿ ಅಂದರೆ ಏನು ? ಬದುಕುವುದು ಯಾಕೆ ? ಹೇಗೆ ?" ಅನ್ನುವುದೇ ಗೊತ್ತಿಲ್ಲ. ಅಯ್ಯೋ ದೇವರೇ, ನಮಗೆಲ್ಲ ಯಾವಾಗ ಬುದ್ಧಿ ಬರುವುದು ?"

"ಬಿಡಿ. ಮಿಂಚಿ ಹೋದ ಕಾರ್ಯಕ್ಕೆ ಚಿಂತಿಸಿ ಫಲವಿಲ್ಲ...ಸುಮ್ಮನೆ ನಾವು ನೋಯುವುದು ಯಾಕೆ ? ಈ ಹೆಣ್ಣು ಲಲಿತ ಮಾತ್ರ ಎಲ್ಲ ಮಕ್ಕಳ ಜತೆಗೆ ತಾನೂ ಗದ್ದೆಯ ಬದಿಗೆ ಹೋಗಿ ಆ ರೌದ್ರ ದೃಶ್ಯವನ್ನೆಲ್ಲ ನೋಡಿ ಬಂದಾಗಿನಿಂದ ಪೆಚ್ಚಾಗಿ ಹೋಗಿದೆ. "ನಮ್ಮಮನೆಗೆ ಹೋಗುವ, ಮನೆಗೆ ಹೋಗುವ" ಅಂತ ಅದರದ್ದು ಒಂದೇ ರಾಗ. ಎರಡು ಮಕ್ಕಳನ್ನು ಸಮಾಧಾನ ಮಾಡುವುದರಲ್ಲೇ ನಾನು ಸುಸ್ತಾಗಿ ಹೋದೆ."

"ಶಾರೂ...ಈಗ ನಿನಗೆ ಇನ್ನೆಷ್ಟು ಮದುವೆಯಾಗದ ತಂಗಿಯರಿದ್ದಾರೆ ?" ತುಟಿಯಂಚಿನಲ್ಲೇ ನಗುತ್ತ ರಾಯರು ಕೇಳಿದಾಗ ಶಾರದಮ್ಮನಿಗೆ ಯಾಕೆಂದು ತಿಳಿಯದೆ ಗಂಡನ ಮುಖವನ್ನೇ ನೋಡತೊಡಗಿದರು. "ಯಾಕೆಂದರೆ, ನನಗೆ - ನನ್ನ ಶಾರೂ ಮತ್ತು ಮಕ್ಕಳ ಚಿಂತೆಯಾಗಿದೆ. ಪೊಳ್ಳು ಪ್ರತಿಷ್ಠೆಯಲ್ಲದೆ ಬೇರೇನೂ ಅರ್ಹತೆಯಿಲ್ಲದ ಆ ನಿನ್ನ ಅಪ್ಪನ ಮನೆಯಲ್ಲಿ ಇನ್ನೂ ಏನೇನು ಕಾರ್ಯಕ್ರಮ ನಡೆಯಲಿಕ್ಕಿದೆಯೋ ಗೊತ್ತಿಲ್ಲ. ಯಾವುದೇ ಯಜಮಾನನ ಅಂಕೆಯಿಲ್ಲದ ರಾಜ್ಯ ಅದು. ಇನ್ನು ಮುಂದೆ ಅಲ್ಲಿಂದ ಯಾವುದೇ  ಹೇಳಿಕೆ ಬಂದರೂ ನನ್ನನ್ನು ಕರೆಯಬೇಡ. ಇಷ್ಟಾಗಿಯೂ ನಿನಗೆ ಹೋಗಬೇಕು ಅನ್ನಿಸಿದರೆ - ಅದೇ ದಿನ ಬೆಳಿಗ್ಗೆ ಹೋಗಿ ಸಂಜೆಗೆ ಮನೆಗೆ ಬಂದು ಬಿಡು. ನೋಡು, ಆ ಲಲಿತೆ ಸಹ ಹೆದರಿ ಹೋಗಿದೆ. ಪುಟ್ಟ ಮಕ್ಕಳು ಇಂತಹ ಕ್ರೌರ್ಯಗಳನ್ನೆಲ್ಲ ನೋಡಬಾರದು. ನಾಳೆ ನಮ್ಮ ಲಲಿತೆಯನ್ನು ಸ್ವಲ್ಪ ಮಾತನಾಡಿಸಿ ಸಮಾಧಾನ ಮಾಡಬೇಕು...ಬರುವ ರವಿವಾರ ಉಡುಪಿಗೆ ಹೋಗಿ ಸುತ್ತಾಡಿಕೊಂಡು ಬರುವ. ಕೃಷ್ಣನ ದರ್ಶನವನ್ನೂ ಮಾಡಬಹುದು. ಹೊಸತು ಬಿದ್ದೇ ಹಳೆಯದು ಮರೆಯಬೇಕು..." ಅನ್ನುವಾಗಲೇ ಶಾರದಮ್ಮ "ಕೃಷ್ಣಾ.." ಅನ್ನುತ್ತ ಹೊದಿಕೆಯ ಒಳಗೆ ಸೇರಿಕೊಂಡರು.

"ಇವೆಲ್ಲ ಎಂಥ ಸಂಬಂಧಗಳು ? ಬೇಡವೆಂದರೂ ಅಂಟಿಕೊಳ್ಳುವ ಬಗೆಬಗೆಯ ಬಂಧನಗಳು. ಪರಸ್ಪರ ಜೀವ ತಿನ್ನುವ ಬದುಕು...ಬಂಧನಗಳು... !" ಅಂದುಕೊಳ್ಳುತ್ತ ಗಿರಿರಾಯರು ಹೊರಳಿ ಮಲಗಿದರು.

ಗೋಡೆ ಗಡಿಯಾರದಲ್ಲಿ ಹನ್ನೆರಡು ಹೊಡೆಯಿತು. ಶಾರದಮ್ಮ ನಿದ್ರಿಸುತ್ತಿದ್ದರೂ - ಗಿರಿರಾಯರಿಗೆ ಮಾತ್ರ ನಿದ್ದೆಯೇಕೋ ಸತಾಯಿಸುತ್ತಿತ್ತು.
                                               *******-------*******