Wednesday, November 25, 2015

ಭಾರ್ಗವನಿಗೊಲಿದ ಕನ್ನಡದ ಕಡಲು

(2004 ರಲ್ಲಿ (ಮಾರ್ಚ್  6) ಡಾ. ಕೋಟ ಶಿವರಾಮ ಕಾರಂತರ 102 ನೇ ಜನ್ಮದಿನದ ಪೂರ್ವದಲ್ಲಿ  - ಮಂಗಳೂರು ಆಕಾಶವಾಣಿಯಲ್ಲಿ  ಅವರನ್ನು ಕುರಿತು ನಾನು ಪ್ರಸ್ತುತ ಪಡಿಸಿದ್ದ , ಕಡಲ ತಡಿಯ ಕಬ್ಬಿಗರು ಮಾಲಿಕೆಯಲ್ಲಿ ಮೂಡಿಬಂದ "ಭಾರ್ಗವನಿಗೊಲಿದ ಕನ್ನಡದ ಕಡಲು" ಶಬ್ದ ರೂಪಕದ ಸಂಗ್ರಹಿತ  - ಪರಿಷ್ಕೃತ ರೂಪ)

"ಕಾರಂತರು  ಗೊತ್ತುಂಟಾ?" 
"ಗೊತ್ತುಂಟು !" 
"ಹೌದಾ ? ಗೊತ್ತುಂಟಾ ?" 
" ಏನೋ ಸ್ವಲ್ಪ ಸ್ವಲ್ಪ...ಹೋಗಿ ಮಾರಾಯ್ರೆ...ನನಗೆ ಗೊತ್ತಿಲ್ಲ" 
"ಗೊತ್ತಿಲ್ಲವಾ ?"
"ಗೊತ್ತಿಲ್ಲ !"

1902 ನೇ ಇಸವಿಯ ಅಕ್ಟೋಬರ್ 10 ರಂದು ಜನಿಸಿದ ಡಾ. ಕೆ. ಶಿವರಾಮ ಕಾರಂತರು 1997 ರ ಡಿಸೆಂಬರ್ 9 ರಂದು ಭೌತಿಕ ಶರೀರದಿಂದ ಕಳಚಿಕೊಂಡರು. ಇಂದಿಗೆ 18 ವರ್ಷಗಳು ಕಳೆದೇ ಹೋದವು. ಬದುಕಿದ 95 ವಷಗಳ ಕಾಲ ತಮ್ಮ ಇಚ್ಛೆಯಂತೆಯೇ ಬದುಕಿದ ವಿಶಿಷ್ಟ ವ್ಯಕ್ತಿ ವಿಶೇಷ – ಡಾ. ಕಾರಂತರು.



ಬದುಕು ಅಂದರೆ ಹೊಂದಾಣಿಕೆ. ಮೊಗಚುತ್ತ ಉರುಳುತ್ತಿರುವ ನಮ್ಮ ಬದುಕಿನ ಪಯಣದಲ್ಲಿ ಕರ್ಮದ ಆಯ್ಕೆ ಮಾತ್ರ ನಮ್ಮದು. ಪರಿಣಾಮದ ಆಯ್ಕೆಯು - ಆಯಾ ಕರ್ಮದ್ದು. ಡಾ. ಕೋಟ ಶಿವರಾಮ ಕಾರಂತರ ಬದುಕು ಈ ಮಾತಿಗೆ ದೃಷ್ಟಾಂತವಾಗಬಲ್ಲದು. ಕಾರಂತರನ್ನು - ಅವರ ಬದುಕನ್ನು ಹತ್ತಿರದಿಂದ ಬಲ್ಲವರೆಲ್ಲರೂ ಅವರನ್ನು ಚಿತ್ರಿಸಿದ ಬಗೆ ಒಂದು ತೆರನಾದರೆ ನಾನು ಅವರಲ್ಲಿ ಕಂಡದ್ದು ಇನ್ನೊಂದು ಮುಖ. ಕಾರಂತರೆಂದರೆ “ಖಡಕ್, ಮುಖಕ್ಕೆ ಹೊಡೆದಂತೆ ಮಾತನಾಡುವವರು, ನಿಷ್ಠುರ...” ಎಂಬ ಅನ್ನಿಸಿಕೆಯು ಸರ್ವೇ ಸಾಮಾನ್ಯ. ಆದರೆ ನಾನು ಕಂಡಂತೆ “ಕಾರಂತರು ಅತ್ಯಂತ ಪ್ರಾಮಾಣಿಕ, ಸತ್ಯವಾದಿ, ಮುಖ ಸ್ತುತಿ ಒಲ್ಲದವರು, ಪ್ರೀತಿಗೆ ಒಲಿಯುವವರು...”

ಬದುಕಿನ "ಹುಚ್ಚು ಮನಸ್ಸಿನ ಹತ್ತು ಮುಖ" ಗಳನ್ನು ಸ್ಪರ್ಶಿಸಿದವರು - ಕಾರಂತರು. ಕಾರಂತರನ್ನು “ವಸ್ತುನಿಷ್ಠ” ಎನ್ನುವವರಿದ್ದಾರೆ. ಆದರೆ ಅವರೊಳಗೆ ಒಬ್ಬ ಸುಂದರ ಕನಸುಗಾರನಿದ್ದ. ಅವರನ್ನು “ಖಾರಂತ – ಬಿರುಸು ಮಾತಿನವರು” ಎನ್ನುವವರಿದ್ದಾರೆ. ಆದರೆ ಅವರೊಳಗೆ ನೇರ ನಡೆನುಡಿಯ “ಮೈಮನಗಳ ಸುಳಿ” ಗೆ ಸಿಲುಕಿದ ಒಬ್ಬ ಪ್ರಾಮಾಣಿಕ ಶ್ರೀಸಾಮಾನ್ಯನಿದ್ದ. ಕಾರಂತರನ್ನು “ಕೋಮುವಾದಿ” ಅನ್ನುವವರೂ ಇರಬಹುದು !! ಆದರೆ ಅವರೊಳಗೆ ನಿಸ್ಸಂದಿಗ್ಧವಾದ ವಿಚಾರ ಪುಷ್ಟಿ ಮತ್ತು ದೇಶಪ್ರೇಮಿಯಿದ್ದ. “ಹಮ್ಮಿನ ಮನುಷ್ಯ” ಎಂಬವರೂ ಇರಬಹುದು. ಆದರೆ ಒಣ ಪೊಗರಿನ ಅರ್ಧ ಕೊಡಗಳನ್ನು ಕಂಡರೆ ಅವರು ಉರಿದು ಬೀಳುತ್ತಿದ್ದರು. ಅನನುಭವದ ಪುಸ್ತಕದ ಬದನೇಕಾಯಿಗಳನ್ನು ಅವರು ತಿರಸ್ಕರಿಸುತ್ತಿದ್ದರು. ಕಾರಂತರ ಮೇರು ವ್ಯಕ್ತಿತ್ವದೊಳಗೆ - ಮಕ್ಕಳೊಂದಿಗೆ ಲೀಲಾಜಾಲವಾದ ಸಂವಹನ ಸಾಧ್ಯವಾದ ಮೃದು ಹೃದಯವಿತ್ತು.

ಕಾರಂತರು “ಕೃಷ್ಣ ಪಕ್ಷ ಶುಕ್ಲ ಪಕ್ಷ” ವನ್ನು ಮಾತ್ರ ಕಂಡು ತೃಪ್ತರಾಗಲಿಲ್ಲ. ರಕ್ತ ಸುರಿದು ಗಳಿಸಿದ ಸ್ವಾತಂತ್ರ್ಯದ ಉಸ್ತುವಾರಿಯಲ್ಲಿ ದೇಶದ ಆಡಳಿತವು ಸ್ವಜನಹಿತ ಪಕ್ಷಪಾತಿಯಾಗುತ್ತಿರುವುದನ್ನು ಗಮನಿಸಿ ಶುದ್ಧೀಕರಣಕ್ಕೆಂದು ಹೊರಟರು. ಅಲ್ಲೂ ಸ್ವತಂತ್ರ ಪಕ್ಷದ ಸ್ವತಂತ್ರ ಮುಖವನ್ನೇ ತೋರಿದರು. ಆದರೆ...ಆದರೆ ಅದಾಗಲೇ ಸ್ವತಂತ್ರ ಭಾರತದ ಪ್ರಜೆಗಳ ಅಭಿರುಚಿಯು ಬದಲಾಗಿತ್ತು. ದೇಶವಾಸಿಗಳಿಗೆ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ದುರುಪಯೋಗದ ಚಟ ಹತ್ತಿಯಾಗಿತ್ತು. ಪ್ರಾಮಾಣಿಕರನ್ನು ಕಂಡರೆ “ಅವರಿಗೆ ತಲೆ ಸರಿಯಿಲ್ಲ..” ಎನ್ನುವಷ್ಟು ರಾಜಕೀಯವು ಕಲುಷಿತವಾಗಿ ಹೋಗಿತ್ತು. ಅಂತಹ ಗುಂಪಿನಲ್ಲಿ ಕಾರಂತರು ಹೊಂದುವುದಿಲ್ಲ ಎಂದುಕೊಂಡೋ ಏನೋ - “ನೀವು ಸ್ವತಂತ್ರವಾಗಿರಿ” ಎಂದು ಕಾರಂತರಿಗೆ ಜನರು ತೀರ್ಪು ಕೊಟ್ಟರು. ಕಾರಂತರ ಅದೃಷ್ಟ ! ಅನಂತ ಪ್ರಸ್ತುತದ ಪ್ರಜಾಪ್ರಭುತ್ವದ ಗೊಂಡಾರಣ್ಯ ದಿಂದ ಕಾರಂತರು ಪಾರಾಗಿ ಬಿಟ್ಟರು ! 

ಮನುಷ್ಯ ಮತ್ತು ದೇವರು ಎಂಬ ಕಲ್ಪನೆಗಿಂತ ಮನುಷ್ಯ ಮನುಷ್ಯರ ಸಂಬಂಧವೇ ಕಾರಂತರಿಗೆ ಹೆಚ್ಚು ಸುಖ ಕೊಟ್ಟಿತು. ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳೈಸುವುದು ಸಾಧ್ಯವೆಂದು ಅವರು ಕವನ ಹೊಸೆಯುತ್ತ ಕುಳಿತವರಲ್ಲ. ಅದನ್ನು ಪ್ರಾಯೋಗಿಕವಾಗಿ ತೋರಿದವರು ಡಾ. ಕಾರಂತರು. ಸಂಸ್ಕೃತದ ಕಾಳಿದಾಸನಾಗಲೀ ಕನ್ನಡದ ಪಂಪ, ರನ್ನ, ಹರಿಹರ ರಾಘವಾಂಕ, ಕುಮಾರವ್ಯಾಸನಿಗೂ ಕಾರಂತರನ್ನು ಪೀಡಿಸಲು, ಕೂತಲ್ಲೇ ಕೂಡಿಸಲು ಆಗಲಿಲ್ಲ. ಪಂಡಿತ ಹಾದಿಯು ತನ್ನದಲ್ಲ ಎಂಬುದನ್ನು ಬಹು ಬೇಗ ಕಂಡುಕೊಂಡ ಕಾರಂತರನ್ನು ಕೇವಲ ಮಾನವತಾವಾದಿಯಾಗಿಯೇ “ಇಹ” – ಕಟ್ಟಿತು.

ಇಂದಿಗೆ ಸುಮಾರು 115 ವರ್ಷಗಳ ಹಿಂದೆ ಜನಿಸಿದ್ದ ಡಾ. ಕೋಟ ಶಿವರಾಮ ಕಾರಂತರು ತಮ್ಮ ಕೊನೆಯುಸಿರಿನವರೆಗೂ ಸುಮಾರು ಒಂದು ಶತಮಾನದಲ್ಲಿ ತಮ್ಮ ಸಿದ್ಧಾಂತವನ್ನು ನೆಚ್ಚಿಕೊಂಡೇ ಬದುಕಿ ಹೋದವರು. “ಕಾಲಕ್ಕೆ ತಕ್ಕಂತೆ ಕೋಲ” ಕಟ್ಟುವ ಜಾಯಮಾನವು ಅವರದಾಗಿರಲಿಲ್ಲ. ಆನೆಯನ್ನು ಮುಟ್ಟಿದ ಕುರುಡರು ಆನೆಯೆಂದರೆ “ಗೆರಸಿಯಂತೆ, ಹಾವಿನಂತೆ, ಒನಕೆಯಂತೆ, ಕಂಬದಂತೆ...” ಎಂದೆಲ್ಲ ಸೀಮಿತ ಅನುಭವದಲ್ಲಿ ಬಣ್ಣಿಸಿದಂತೆ ಕಾರಂತರನ್ನು ಕಂಡವರು ಅವರವರ ಪ್ರಜ್ಞೆಗೆ ದಕ್ಕಿದಂತೆ ಬಣ್ಣಿಸಬಹುದು. ಪ್ರತಿಕ್ರಿಯಿಸಬಹುದು. ಆದರೆ ನಿಜವಾಗಿಯೂ ಕಾರಂತರು ಅಂದರೆ ಯಾರು ? ಅವರು ಹೇಗಿದ್ದರು? ಇವರೇ ಕಾರಂತರೆ ? ಕಾರಂತರನ್ನು ಆತ್ಮೀಯವಾಗಿ ಮುಟ್ಟಿ ನೋಡುವ ಪ್ರಯತ್ನವಿದು.
                                                                    **--**
ಮಂಗಳೂರು ಆಕಾಶವಾಣಿಯು ಆರಂಭವಾದ ಹೊಸತರಲ್ಲಿ, ಬಹುಶಃ 1978 – 79 ರಲ್ಲಿ, ಕಾರಂತರು ಅಕಾಶವಾಣಿಗಾಗಿ ಎರಡು ಸಂಗೀತ ರೂಪಕಗಳನ್ನು ನೀಡಿದ್ದರು. “ಲವ ಕುಶ" (ಇನ್ನೊಂದು ರೂಪಕದ ಹೆಸರು ಮರೆತಿದೆ.) ಎಂಬ ಸಂಗೀತ ರೂಪಕವನ್ನು ನಮ್ಮ Studio ದಲ್ಲಿ ಸ್ವತಹ ಕೂತು ನಿರ್ದೇಶಿಸಿದ್ದರು. ಅವರಿಗೆ ಸಹಾಯಕರಾಗಿ ಮಂಗಳೂರಿನ ಶ್ರೀ ಶೀನಿವಾಸ ಉಡುಪ ಎಂಬವರು ಬಂದಿದ್ದರು. ಆ ಕಾರ್ಯಕ್ರಮದಲ್ಲಿ ಒಂದು ಪಾತ್ರವನ್ನು ನಾನೂ ನಿರ್ವಹಿಸಿದ್ದೆ. ಅಂದು ಅಢಾಣ ರಾಗದ ಒಂದು ಹಾಡನ್ನು ಹೇಳುವಾಗ “ನಿಷಾದ” ಸ್ವರವು ಕೋಮಲವಾಯಿತು...ಎನ್ನುತ್ತ ಶ್ರೀನಿವಾಸ ಉಡುಪರು ಸ್ವಲ್ಪ ಏರು ದನಿಯಲ್ಲಿ ನನ್ನನ್ನು ತಿದ್ದಲು ಹೊರಟಾಗ ಅಲ್ಲೇ ಕೂತಿದ್ದ ಕಾರಂತರು ಅದನ್ನು ತಾವೇ ಹಾಡಿ ನನಗೆ ಹೇಳಿ ಕೊಟ್ಟಿದ್ದರು. ನನಗೆ ಪರಿಚಿತವಲ್ಲದ ಅಢಾಣ ರಾಗವನ್ನು ಆ ರೂಪಕದ ಸಾಂದರ್ಭಿಕ ಭಾವಕ್ಕೆ ಒತ್ತುಕೊಟ್ಟು ನಾನು ಹಾಡಿದ್ದ ಆ ಭಾಗವನ್ನು ಹಾಗೇ ಉಳಿಸಿಕೊಳ್ಳುವಂತೆ ಅಂದು ಕಾರಂತರು ನಿರ್ದೇಶಿಸಿದ್ದರು. ಶಾಸ್ತ್ರೀಯ ಸಂಗೀತದವರು ರಾಗದ ಸ್ವಚ್ಛತೆಯ ಕಡೆಗೆ ಮಾತ್ರ ಯೋಚಿಸುತ್ತಿದ್ದರೆ ಕಾರಂತರು ಭಾವವನ್ನೂ ಅಷ್ಟೇ ಗಮನಿಸುತ್ತಿದ್ದರು. ಅದು ಕಾರಂತರ ವೈಶಿಷ್ಟ್ಯವಾಗಿತ್ತು.

ಮಂಗಳೂರು ಆಕಾಶವಾಣಿಗಾಗಿ ನಾನು ನಿರ್ಮಿಸಿದ "ಭಾರ್ಗವನಿಗೊಲಿದ ಕನ್ನಡದ ಕಡಲು" ಎಂಬ ರೂಪಕಕ್ಕಾಗಿ ಯಕ್ಷರಂಗದ ಮೇರು ಶ್ರೀ ಕೆರೆಮನೆ ಮಹಾಬಲ ಹೆಗಡೆ ಅವರನ್ನು ನಾವು ಮಾತನಾಡಿಸಿದಾಗ ಅವರು ಕಾರಂತರ ಒಡನಾಟದ ನೆನಪನ್ನು ಬಿಚ್ಚಿ ಇಟ್ಟಿದ್ದರು.

ಶ್ರೀ ಕೆರೆಮನೆ ಮಹಾಬಲ ಹೆಗಡೆ ಅವರ ಮಾತಿನ ತುಣುಕುಗಳು...


"ನಾನು ಕಾರಂತರೊಂದಿಗೆ ಸಂಪರ್ಕ ಸಾಧಿಸಿದ್ದು 1962 ನೇ ಇಸವಿಯಲ್ಲಿ. ಯಕ್ಷಗಾನ ಮತ್ತು ದಾಸ ಸಾಹಿತ್ಯದಲ್ಲಿ ಮಾತ್ರವಿದ್ದ ದ್ವಿಜಾವಂತಿ ಎಂಬ ಅಪೂರ್ವ ರಾಗ, ಆನಂದ ಭೈರವಿ, ಮಧುಮಾಧುರಿ...ಮೊದಲಾದ ಎಂಟು ರಾಗಗಳನ್ನು ನನ್ನಲ್ಲಿ ಕೇಳಿ ದ್ವನಿಮುದ್ರಿಸಿಕೊಂಡು ಹೋಗಿದ್ದರು..."

(ನನ್ನ ಗುರುಗಳಾಗಿದ್ದ ಕುಂದಾಪುರದ ಶ್ರೀ ವಾಸುದೇವ ನಾಯಕ್ ಅವರನ್ನೂ ಆಗಾಗ ಭೇಟಿಯಾಗುತ್ತಿದ್ದ ಕಾರಂತರು ಸಂಗೀತಕ್ಕೆ ಸಂಬಂಧಿಸಿದ ಸಂಶಯಗಳನ್ನು ಪರಿಹರಿಸಿಕೊಳ್ಳುತ್ತಿದ್ದುದನ್ನೂ ನಾನು ಕಂಡಿದ್ದೇನೆ. ಏಕಲವ್ಯ ಸಾಧನೆಯ ಹಾದಿ !) 
 

ಕೆರೆಮನೆಯವರು ಸ್ಮರಿಸಿಕೊಂಡ ಇನ್ನೊಂದು ವಿಷಯ : "ಭೀಷ್ಮ ವಿಜಯ, ಸೈಂಧವ ವಧೆ ಎಂಬ ಮಾತಿಲ್ಲದ ಯಕ್ಷಗಾನ ಪ್ರಸಂಗಗಳನ್ನು ಪ್ರಯೋಗಾತ್ಮಕವಾಗಿ ನಡೆಸುವ ಸಂದರ್ಭದಲ್ಲಿ ನನ್ನನ್ನು ಕರೆದಿದ್ದರು. ಆಗ ನಾನು ಹೋಗಿ, ಪರಶುರಾಮ, ಅರ್ಜುನನನ ಪಾತ್ರವನ್ನು ವಹಿಸಿ ಕಾರಂತರ ಪ್ರಯೋಗಕ್ಕೆ ಒಳಗಾಗಿದ್ದೆ. ಆದರೆ ಅವರಿಗೆ ಪ್ರಯೋಗ ಪರಿಣತಿ ಏನೂ ಇರಲಿಲ್ಲ.....ಆದರೂ ಅವರ ನಿರ್ದೇಶನದ ಋಣವನ್ನು ತೆಗೆದು ಹಾಕಲಿಕ್ಕೆ ಇಷ್ಟವಿಲ್ಲ. ಯಾಕೆಂದರೆ ಯಕ್ಷಗಾನವನ್ನು ಸಮರ್ಪಕವಾಗಿ ಅವರು ಕಲ್ಪಿಸಬಲ್ಲವರಾಗಿದ್ದರು. ಕಾರಂತರ ಮೂಲಕವಾಗಿ ನಾನು ಯಕ್ಷಗಾನಕ್ಕೆ ಹೆಚ್ಚು ಅಂಟಿಕೊಂಡೆ. ಅದು ನನಗೆ ಹೊಸ ಲೋಕವನ್ನೇ ತೆರೆದು ಕಾಣಿಸಿತು...ನಾನು ಪ್ರೇರಿತನಾದೆ...ನನ್ನ ಮನಃಸ್ಥಿತಿಯ ಬದಲಾವಣೆಗೆ ಕಾರಂತರೇ ಕಾರಣ ಅಂತ ಹೇಳಬೇಕಾಗ್ತದೆ...ಅವರ ಸ್ವಾತಂತ್ರ್ಯವನ್ನು ನಾನು ಪ್ರಶ್ನಿಸುವುದಿಲ್ಲ.
ಅವರ ಸಂಪರ್ಕದಲ್ಲಿದ್ದಾಗ ನನಗೆ ಅನ್ನಿಸಿದ್ದು - ಬಹುಶಃ ಅನೇಕ ಅನರ್ಹ ವ್ಯಕ್ತಿಗಳ ಸಂಪರ್ಕದಿಂದಾಗಿ ಯಾರ ಅಭಿಪ್ರಾಯವನ್ನೂ ಸುಲಭವಾಗಿ ಸ್ವೀಕರಿಸುವ ಮನಃಸ್ಥಿತಿಯನ್ನು ಅವರು ಕಳೆದುಕೊಂಡಿದ್ದರು. ಆ ಕಾರಣದಿಂದಲೂ ನಾನು ಅವರನ್ನು ಗೌರವಿಸುತ್ತೇನೆ." 

 ಅನುಭವ ಶೂನ್ಯ ಲೊಟ್ಟೆಗಳನ್ನು ಕಾರಂತರು ತಿರಸ್ಕರಿಸುತ್ತಿದ್ದರು....


ಕೋಟದಲ್ಲಿ (ಸಾಲಿಗ್ರಾಮ) ನಡೆದ ಕಾರಂತರ 92 ಅಥವ 93 ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಶ್ರೀ ಕೆರೆಮನೆ ಮಹಾಬಲ ಹೆಗಡೆಯವರು ಹಾಡಿ, ಕಾರಂತರು ರಂಗದಲ್ಲಿ ಕುಣಿದದ್ದನ್ನು ಸ್ಮರಿಸಿಕೊಂಡ ಮಹಾಬಲ ಹೆಗಡೆಯವರು, ಅಂದು "ನೋಡಿ ಹೆಗಡೆಯವರೇ, ಈಗೀಗ ವಾಕಿಂಗ್ ಹೋಗುವಾಗಲೂ ಶ್ವಾಸ ಬರ್ತದೆ. ಆದರೆ ನೋಡಿ...ಮೊನ್ನೆ ಯಕ್ಷಗಾನ ಕಲಾಕೇಂದ್ರಕ್ಕೆ ಹೋದೆ. ಒಂದು ತಾಸು ಕುಣಿದೆ. ಏನೂ ಆಗಲಿಲ್ಲ. ಅದೇನಿರಬಹುದು ?"  ಎಂದು  ಕಾರಂತರು ಆಡಿದ ಮಾತುಗಳನ್ನೂ ಸ್ಮರಿಸಿಕೊಂಡಿದ್ದರು. ಉತ್ತರ ಕನ್ನಡದ ಸಂಗೀತ ವಿದ್ವಾಂಸ ಯಕ್ಷಗಾನ ದಿಗ್ಗಜ ಶ್ರೀ ಕೆರೆಮನೆ ಮಹಾಬಲ ಹೆಗಡೆಯವರು ಸುಮಾರು 38 ವರ್ಷಗಳ ಕಾಲ ಕಾರಂತರ ಸಿಡುಕು, ಹಾಸ್ಯ, ಗಾಂಭೀರ್ಯ, ತನ್ಮಯತೆ, ಆಸಕ್ತಿಗಳನ್ನು ಹತ್ತಿರದಿಂದ ಕಂಡು ಅನುಭವಿಸಿದವರು. "ಕಾರಂತರ ಜ್ಞಾನ ಸಂಪತ್ತಿನ ಹೆಚ್ಚಿನಂಶವು ಏಕಲವ್ಯ ಸಾಧನೆ.." ಎಂದ ಕೆರೆಮನೆ ಅವರು - ಕಾರಂತರ ಮಾತುಗಳನ್ನು ಸ್ಮರಿಸಿಕೊಳ್ಳುತ್ತ - ತಮ್ಮ ಆಸಕ್ತಿಯನ್ನು ಕೊನೆಯವರೆಗೂ ಕಾರಂತರು ಉಳಿಸಿಕೊಂಡದ್ದನ್ನು ನೆನಸಿಕೊಳ್ಳುತ್ತ ಮಹಾಬಲ ಹೆಗಡೆಯವರು ಆರ್ದ್ರರಾಗಿ ಅಂದು ಗದ್ಗದಿತರಾಗಿದ್ದರು. "ಕಾರಂತರು ಈಗ ಭೌತಿಕವಾಗಿ ಅಳಿದ ಮೇಲೆ -   ಕಾರಂತರ ವ್ಯಕ್ತಿತ್ವವನ್ನು ತಿಳಿಯಬೇಕೆ ? ಹಾಗಿದ್ದರೆ ಅವರ ಕಾದಂಬರಿಗಳನ್ನು ಓದಿ..." ಎಂದು ಹೇಳಿದ್ದ ಕೆರೆಮನೆ ಮಹಾಬಲ ಹೆಗಡೆಯವರು ಅಂದು ಗೌರವಪೂರ್ವಕವಾಗಿ ತಲೆತಗ್ಗಿಸಿ ಶ್ರದ್ಧಾಮೌನವಾಗಿದ್ದರು.

ಇವರು ಡಾ. ಕೋಟ ಶಿವರಾಮ ಕಾರಂತರು....
         
ಕಾರಂತರದು ಶಾಸ್ತ್ರ ಕೇಳಿ ಗಾಳ ಇಕ್ಕುವ ಪಾಂಡಿತ್ಯವಲ್ಲ. ಅದೊಂದು ಪ್ರಯೋಗಶೀಲ ಮನಸ್ಸು. 1924 ರಲ್ಲೇ ತಮ್ಮ ಗೆಳೆಯರು, ಸಾಹಿತ್ಯಾಸಕ್ತರು ಮಾತ್ರವಲ್ಲದೆ ತಮ್ಮ ಗುರುಗಳಾದ ಐರೋಡಿ ಶಿವರಾಮಯ್ಯನವರನ್ನೂ ಸೇರಿಸಿಕೊಂಡು ಕುಂದಾಪುರದಿಂದ ಒಂದು ಮಾಸ ಪತ್ರಿಕೆಯನ್ನು ಹೊರಡಿಸಿದ ಸಾಹಸಿ - ಕಾರಂತರು. ಆ ಮಾಸ ಪತ್ರಿಕೆಯೇ "ವಸಂತ". ಆಗ ಕಾರಂತರದ್ದು - ಇಂದಿನ ಹೆಚ್ಚಿನ ವಿದ್ಯಾರ್ಥಿಗಳು ಉರುಹೊಡೆದು ಗಿಣಿಪಾಠ ಒಪ್ಪಿಸುವ ವಯಸ್ಸು. ಆದರೆ ಕಾರಂತರು ವಿಭಿನ್ನ ಶೈಲಿಯ ವಿದ್ಯಾರ್ಥಿಯಾಗಿದ್ದರು. ಈ ಸೃಷ್ಟಿಯ ಸರ್ವವನ್ನೂ ಬಗೆದು ನೋಡುವ ಕುತೂಹಲದ ಬುಗ್ಗೆಯಾಗಿದ್ದ ಕಾರಂತರು "ನೋಡಿ ತಿಳಿಯುತ್ತ ಮಾಡಿ ಕಲಿಯುತ್ತ" ನಡೆದು ಬಂದವರು. "ಗುರುಗಳಾದ ಶಿವರಾಮಯ್ಯನವರ ಮುಂದೆ ನಾನು ಚಿಕ್ಕ ಹುಡುಗ; ಅವರ ಕಣ್ಮುಂದೆಯೇ ಬೆಳೆದವ. ಅವರು ಆ ಭಾವನೆಯನ್ನೂ ಇರಿಸಿಕೊಳ್ಳದೆ ನನಗೂ ಆಗಾಗ ಲೇಖನಗಳನ್ನು ಕೊಟ್ಟಿದ್ದಾರೆ." ಎಂದು ಕಾರಂತರೇ ತಮ್ಮ ಗುರುಗಳನ್ನು ಕೊಂಡಾಡಿ ಬರೆದುಕೊಂಡಿದ್ದಾರೆ.

ಅಂದು ಕಾರಂತರಿಗೆ ಸ್ವಪ್ನದ ಹೊಳೆ ಯ ವಯಸ್ಸು. ಬೆಟ್ಟದ ಜೀವ ಗೋಪಾಲಯ್ಯನನ್ನು ಇಂಚಿಂಚಾಗಿ ಆಸ್ವಾದಿಸಿದ ಜೀವವದು. ಬೆಟ್ಟದ ಜೀವಕ್ಕಾಗಿ ಮಾತ್ರವಲ್ಲ - ಅವರು ಜ್ಞಾನಪೀಠಸ್ಥ ಮೂಕಜ್ಜಿಯ ಕನಸು ಗಳಿಗೂ ಪ್ರತಿಸ್ಪಂದಿಸಿದವರು. ಅವರ ಮೂಕಜ್ಜಿಗೆ ಪ್ರಶಸ್ತಿ ದೊರೆತಾಗ "ಅಯ್ಯೋ, ಮರಳಿ ಮಣ್ಣಿಗೆ ಕಾದಂಬರಿಗೆ ಸಿಗಬೇಕಿತ್ತು.." ಎಂದು ನನಗೆ ಅನ್ನಿಸಿತ್ತು. "ಇರಲಿ; ಅಜ್ಜಿಗೆ ಪ್ರಥಮ ಪ್ರಾಶಸ್ತ್ಯ..."ಎಂದುಕೊಂಡು ನಾನೇ ಸಮಾಧಾನ ಮಾಡಿಕೊಂಡಿದ್ದೆ. 

ಕಾರಂತರು ದೃಷ್ಟಿ ಹಾಯಿಸಿದ ಪ್ರಪಂಚವು ಭೂಮ್ಯಾಕಾಶಗಳ ವ್ಯಾಪ್ತಿಯನ್ನು ಹೊಂದಿತ್ತು. "ಈ ಜಗತ್ತು" ಕಾರಂತರನ್ನು ಬಾಲ ಪ್ರಪಂಚದಿಂದ ವಿಜ್ಞಾನ ಪ್ರಪಂಚದವರೆಗೂ ನಡೆದಾಡಿಸಿತು.

ಕಾರಂತರು ಬರೆದದ್ದು ಮಾತ್ರವಲ್ಲ. ಪುತ್ತೂರಿನಲ್ಲಿ ಒಂದು ಪ್ರಕಟಣಾಲಯವನ್ನೂ ನಡೆಸಿದರು. ಅದೇ - "ಹರ್ಷ ಪ್ರಕಟಣಾಲಯ". ನಿಷ್ಪಾಪೀ ಬರಹಗಾರರನ್ನು ಸತಾಯಿಸುವ, ಬರಹಗಾರರ ಶ್ರಮವನ್ನು ವಟಾಯಿಸಿಕೊಂಡು ಬರಹಗಾರರ ಮೇಲೇ ಸವಾರಿ ಮಾಡುತ್ತ ತಮ್ಮ ಸ್ವಂತ ಜೀವನ ವ್ಯಾಪಾರ ನಡೆಸುತ್ತಿದ್ದ ಪ್ರಕಾಶಕರನ್ನು ಬಹುಶಃ ಕಾರಂತರೂ ಹಾದು ಹೋಗಿದ್ದಿರಬಹುದು. ಶೋಷಣೆಗೆ ಒಳಗಾಗಲು ಒಪ್ಪದ ಅವರ ಸ್ವಭಾವವು ಸ್ವತಹ ಪ್ರಕಟಣೆಗೆ ತೊಡಗುವಂತೆ ಪ್ರೇರೇಪಿಸಿದ್ದರೆ ಆಶ್ಚರ್ಯವೇನಿಲ್ಲ. "ತನ್ನ ಬರಹಕ್ಕೆ ತಾನೇ ಗತಿ ಕಾಣಿಸುತ್ತೇನೆ.." ಎಂಬ ಮರ್ಜಿಯಲ್ಲೇ ಬರೆದು ಬಿಸಾಕಿದವರು - ಕಾರಂತರು ! ಬರೆದರು; ಪ್ರಕಟಿಸಿದರು - ಅಷ್ಟೆ.

ಕಾರಂತರು ಎಂತಹ ಪ್ರತಿಕ್ರಿಯೆಗಳಿಗೂ ತಲೆ ಕೆಡಿಸಿಕೊಂಡವರಲ್ಲ. "ಆನೆ ನಡೆದದ್ದೇ ಹಾದಿ" ಎಂಬಂತೆ ತಮಗೆ ಸರಿ ಕಂಡುದನ್ನು ಮಾಡುತ್ತ ತಲೆ ಎತ್ತಿ ನಡೆದವರು ನಮ್ಮ ಕಾರಂತರು ! ಹತ್ತು ಹಲವು ಪ್ರಶಸ್ತಿಗಳನ್ನು ಪಡೆದು 1978 ರಲ್ಲಿ ಜ್ಞಾನ ಪೀಠಕ್ಕೆ ತಲೆ ಕೊಟ್ಟರೂ ಅಂತಹ ಯಾವುದೂ ಕಾರಂತರನ್ನು ಡಿಂಗಾಗಿಸಲಿಲ್ಲ. ಯಾವುದೇ ಪ್ರಶಸ್ತಿಯಿಂದ ಕಾರಂತರನ್ನು ಮಿದುವಾಗಿಸಲು ಆಗಲಿಲ್ಲ. "ನೋಡಿ ಸ್ವಾಮೀ, ನಾವಿರುವುದು ಹೀಗೇ..." ಎಂಬುದಕ್ಕೆ ಕಾರಂತರು ಜ್ವಲಂತ ದೃಷ್ಟಾಂತ !

ಕಾರಂತರು ಕುಂದಾಪುರಕ್ಕೆ ಬಂದಾಗಲೆಲ್ಲ ನಮ್ಮ ಮನೆಗೆ ಕಿರು ಭೇಟಿಯನ್ನಾದರೂ ಕೊಡುತ್ತಿದ್ದರು. ತಮ್ಮ ಗುರುಗಳಾದ ದಿ. ಐರೋಡಿ ಶಿವರಾಮಯ್ಯ ಅವರ ಪುತ್ರನಾದ ನನ್ನ ತಂದೆಯವರನ್ನು (ಪುರಾಣ ಭಾರತ ಕೋಶದ ಕರ್ತೃ ದಿ. ಯಜ್ಞನಾರಾಯಣ ಉಡುಪ) ನೋಡಿ ಮಾತನಾಡಿಸಿಕೊಂಡು ಹೋಗುತ್ತಿದ್ದರು. ಬಹುಶಃ "ಗುರುಪುತ್ರ" ಎಂಬ ಅಭಿಮಾನವಿದ್ದಿರಬಹುದು. ಅನಾರೋಗ್ಯಕ್ಕೆ ಒಳಗಾದ ನಂತರ, ಅಪ್ಪಯ್ಯನಿಗೇ ಏನಾದರೂ ಮಾತನಾಡುವುದಿದ್ದರೆ ಅದಕ್ಕೂ ಒಂದು ಮಾರ್ಗವಿತ್ತು. ಕುಂದಾಪುರದ ಹಳೆಯ ಬಸ್ ನಿಲ್ದಾಣದಲ್ಲಿ "ಕಾರಂತ" ಎಂಬ ಒಬ್ಬರು ಬಸ್ಸಿಗೆ ಟಿಕೆಟ್ ಕೊಡುವ ಉದ್ಯೋಗದಲ್ಲಿದ್ದರು. ಶಿವರಾಮ ಕಾರಂತರು ಕುಂದಾಪುರಕ್ಕೆ ಬಂದಾಗ ಬಸ್ ನಿಲ್ದಾಣದ ಎದುರಿಗಿದ್ದ ಆ ಕಾರಂತರ ಕಚೇರಿಯಲ್ಲಿ ಸ್ವಲ್ಪ ಹೊತ್ತು ಕಳೆಯುತ್ತಿದ್ದರು. ಆ ಕಚೇರಿಗೆ ಹೋಗಿ "ಶಿವರಾಮ ಕಾರಂತರು ಬಂದರೆ ಅಪ್ಪಯ್ಯನನ್ನು ನೋಡಿ ಹೋಗಲು ಹೇಳುತ್ತೀರಾ ?" ಅಂತ ನಾನೇ ಹೋಗಿ ಹೇಳಿಬಂದದ್ದಿದೆ. ಪ್ರತಿಯಾಗಿ - ಶಿವರಾಮ ಕಾರಂತರು ಮತ್ತೊಮ್ಮೆ ಬಂದಾಗ ಅಪ್ಪಯ್ಯನನ್ನು ಮಾತನಾಡಿಸಿ ಹೋದದ್ದೂ ಇದೆ. ಯಾವುದೇ ಜಂಬವಿಲ್ಲದ ಕಾರಂತರವರು. ಮಾತ್ರವಲ್ಲ - ಪಿಣಕುಟಿಗಳೆಲ್ಲ ಜಂಬ ಜಾಪು ಮಾಡುವುದನ್ನು ಕಂಡರೂ ಸಿಡುಕುತ್ತಿದ್ದರು. ಕಾರಂತರಲ್ಲಿ ನಮ್ಮ ಕುಟುಂಬವು ಸರಳ ಸಜ್ಜನ ನೇರ ನಡೆನುಡಿಯ ವ್ಯಕ್ತಿಯನ್ನು ಕಂಡಿದೆ.



ಅಂದಿನ ಸಮಾಜದಲ್ಲಿ, "ನಡೆದಾಡುವ ವಿಶ್ವಕೋಶ" ಎಂಬ ಮನ್ನಣೆಗೆ ಪಾತ್ರರಾಗಿದ್ದವರು ನನ್ನ ಅಜ್ಜ ದಿ. ಐರೋಡಿ ಶಿವರಾಮಯ್ಯನವರು. "ಬೆಳಕೀವ ಸೂರ್ಯ ಚಂದ್ರರದೊಂದು ಸದ್ದಿಲ್ಲ; ಹೊಲಿ ನಿನ್ನ ತುಟಿಗಳನ್ನು.." ಎಂಬಂತೆ ಅಕ್ಷರಶಃ ತಲೆ ತಗ್ಗಿಸಿ ಬದುಕಿದ್ದ ಪಂಡಿತರವರು. ಪುಕ್ಕಟೆಯಾಗಿ ಜ್ಞಾನವನ್ನು ಹಂಚುತ್ತ ಬದುಕಿದ ಋಷಿಸದೃಶ ವ್ಯಕ್ತಿ - ನಮ್ಮ ಅಜ್ಜ ಐ. ಶಿವರಾಮಯ್ಯನವರು. ಕುಂದಾಪುರದ ಬೋರ್ಡ್ ಹೈಸ್ಕೂಲಿನಲ್ಲಿ ಕನ್ನಡ ಅಧ್ಯಾಪಕರಾಗಿದ್ದ ಐರೋಡಿ ಶಿವರಾಮಯ್ಯನವರು ಆಗ ಶಿವರಾಮ ಕಾರಂತರ ಗುರುಗಳಾಗಿದ್ದರು. ಮುಂದೆ ಕಾರಂತರು "ಸಿರಿಗನ್ನಡ ಅರ್ಥ ಕೋಶ" ವನ್ನು ಸಿದ್ಧಪಡಿಸಲು ಹೊರಟಾಗ ತಮ್ಮ ಗುರುಗಳಾದ ಐರೋಡಿ ಶಿವರಾಮಯ್ಯನವರನ್ನು (ಆಗ ಅವರು ನಿವೃತ್ತರಾಗಿದ್ದರು) ತಮ್ಮ ಪುತ್ತೂರಿನ ಮನೆಗೇ ಕರೆಸಿಕೊಂಡು ಒಂದು ತಿಂಗಳ ಕಾಲ ಅಲ್ಲೇ ಉಳಿಸಿಕೊಂಡು ಮಾರ್ಗದರ್ಶನವನ್ನೂ ಪಡೆದಿದ್ದರು. ತನ್ನ "ಸಿರಿಗನ್ನಡ ಅರ್ಥ ಕೋಶ" ದ ಮುನ್ನುಡಿಯಲ್ಲಿ ಐರೋಡಿ ಶಿವರಾಮಯ್ಯ ಅವರನ್ನು "ತನ್ನಲ್ಲಿ ಕನ್ನಡದ ಒಲವನ್ನು ಹುಟ್ಟಿಸಿದ ಗುರು" ಎಂದು ಕಾರಂತರೇ ಸ್ಮರಿಸಿಕೊಂಡಿದ್ದಾರೆ. ತಮ್ಮ ನಿವೃತ್ತ ವಯಸ್ಸಿನಲ್ಲಿ ನನ್ನ ಅಜ್ಜ ಐರೋಡಿ ಶಿವರಾಮಯ್ಯನವರು ಏಕಾಂಗಿಯಾಗಿ "ಕನ್ನಡ - ಕನ್ನಡ ಶಬ್ದ ಕೋಶ" ವನ್ನು ರಚಿಸಿದ್ದರು. ಅದರ ಕೈ ಬರೆಹದ ಪ್ರತಿಯನ್ನು ಪ್ರಕಟಣೆಗಾಗಿ "ಲಕ್ಷ್ಮಣ ರಾವ್ ಎಂಡ್ ಸನ್ಸ್" ಸಂಸ್ಥೆಗೆ ಒಪ್ಪಿಸಿದ್ದರು. ಆದರೆ ಅದು ಪ್ರಕಟವಾಗಲೂ ಇಲ್ಲ; ಹಸ್ತಪ್ರತಿಯೂ ಹಿಂದಿರುಗಿ ಬರಲಿಲ್ಲ. ಅಜ್ಜಯ್ಯನ ಶ್ರಮವನ್ನು ಯಾರು ಅಪಹರಿಸಿದರೋ ಹೇಗೆ ನಷ್ಟವಾಯಿತೋ - ಗೊತ್ತಿಲ್ಲ ! ಈ ವಿಚಾರವು ಕಾರಂತರಿಗೂ ಗೊತ್ತಿತ್ತು. ಆದ್ದರಿಂದ ಅವರು ಸ್ವತಹ ಅರ್ಥ ಕೋಶವನ್ನು ಸಂಪಾದಿಸಲು ಹೊರಟಾಗ ತಮ್ಮ ಗುರುಗಳಾದ ಶಿವರಾಮಯ್ಯನವರ ನೆರವನ್ನು ಪಡೆಯಲು ನಿಶ್ಚಯಿಸಿದ್ದರು.

ಕಾರಂತರದೇ ಮಾತಿನಂತೆ... ("ಐರೋಡಿ ಶಿವರಾಮಯ್ಯ ಬದುಕು ಬರೆಹ" ಪುಸ್ತಕದಿಂದ ಆಯ್ದ ಕಾರಂತರ ಮಾತುಗಳು.)


"ಆ ಕಾಲಕ್ಕೆ ಪುತ್ತೂರಿನ ನನ್ನ ಮನೆಗೆ ಶಿವರಾಮಯ್ಯನವರನ್ನು ಕರೆಸಿಕೊಂಡೆ. ಒಂದೆರಡು ತಿಂಗಳ ಕಾಲ ಅವರು ನನ್ನ ಜೊತೆಗಿದ್ದರು. ಸಾಂಪ್ರದಾಯಿಕರಾಗಿದ್ದ ಅವರು ಅಸಾಂಪ್ರದಾಯಿಕ ರೀತಿಯಿಂದ ಮದುವೆಯಾದ ನನ್ನ ಮನೆಯಲ್ಲಿ ಉಣ್ಣಲಾರರು. ತಾವೇ ಕೈಯಡಿಗೆ ಮಾಡಿಕೊಂಡು, ನನ್ನ ಶಬ್ದ ಕೋಶಕ್ಕೆ ಹೊಂದುವ ರೀತಿಯಲ್ಲಿ ಬೇಕಷ್ಟು ಶಬ್ದಗಳನ್ನು, ಪೌರಾಣಿಕ ವ್ಯಕ್ತಿಗಳ ಪೂರ್ವ ಚರಿತ್ರೆಯನ್ನು ಬರೆದು ಕೊಟ್ಟರು. ಅವರು ಕನ್ನಡ ಉಪಾಧ್ಯಾಯರಾಗಿ ನಮಗೆ ಪಾಠ ಹೇಳುತ್ತಿದ್ದ ಕಾಲದಲ್ಲಿ, ಕನ್ನಡ ಕಾವ್ಯಗಳಲ್ಲಿ ಯಾವ ಪೌರಾಣಿಕ ವ್ಯಕ್ತಿಯ ಹೆಸರೇ ಬರಲಿ, ಇಲ್ಲವೆ ಉಪಮೆ ಬರಲಿ - ಅವುಗಳ ಪೂರ್ವ ಕಥೆಗಳನ್ನು ಹೇಳಿ ನಮ್ಮ ಕಿವಿ ನಿಮಿರಿಸುತ್ತಿದ್ದರು. ಈ ಅಂಶವು ನನ್ನ ಶಬ್ದ ಕೋಶಕ್ಕೆ ಹೊಸ ವಿಷಯಗಳನ್ನು ಒದಗಿಸಿತು. ಶಿವರಾಮಯ್ಯನವರು ಬರೆದ ಪೂರ್ವ ಕಥೆಗಳ ಸಂಗ್ರಹ ಸಾಲದೆಂದು, ನಾನು ಮೋನಿಯರ್ ವಿಲಿಯಮ್ಸ್ ನಿಘಂಟನ್ನು ನೋಡಿಕೊಂಡು ಅವರು ಬರೆಯದಿದ್ದ ಅನೇಕ ಪೌರಾಣಿಕ ವ್ಯಕ್ತಿಗಳ ಕತೆಯನ್ನು ಸಂಗ್ರಹಿಸಿದೆ. ಒಂದು ರೀತಿಯಿಂದ ಶಿವರಾಮಯ್ಯನವರ ಪುರಾಣನಾಮ ಪರಿಚಯವು ಅಪೂರ್ಣವೆನಿಸಿತ್ತು. ಆದರೆ ಅವರ ಈ ಪ್ರಯತ್ನವು ಅವರ ಮಗ ಯಜ್ಞನಾರಾಯಣ ಉಡುಪ ಎಂಬವರನ್ನು ಪ್ರೇರಿಸಿ, ಅವರು ಅದನ್ನೇ ಪ್ರಮುಖ ವಿಷಯವನ್ನಾಗಿರಿಸಿಕೊಂಡು, ದುಡಿಯುವಂತೆ ಮಾಡಿತು. ಆ ಗ್ರಂಥವೇ "ಪುರಾಣ ಭಾರತ ಕೋಶ". ಅದು ಅವರ ತಂದೆಯ ಪ್ರೇರಣೆ ಮತ್ತು ಮಾರ್ಗದರ್ಶನಗಳ ಫಲ ಎಂಬುದಾಗಿ ತಿಳಿಯುತ್ತದೆ."







ಮುಂದೆ - ಉಡುಪಿಯ ಗೋವಿಂದ ಪೈ ಸಂಶೋಧನಾ ಕೇಂದ್ರದವರು 1977 ರಲ್ಲಿ ಪ್ರಕಟಿಸಿದ "ಐರೋಡಿ ಶಿವರಾಮಯ್ಯ ಬದುಕು ಮತ್ತು ಬರೆಹ" ಎಂಬ - 260 ಪುಟಗಳ ಪುಸ್ತಕದ ಸಂಪಾದಕರಾಗಿ ತಾವೇ ನಿಂತು ಅದು ಪ್ರಕಟವಾಗುವಂತೆ ನೋಡಿಕೊಂಡು, ಕಾರಂತರು ಗುರು ಕಾಣಿಕೆಯನ್ನೂ ನೀಡಿದರು. ಮಾತ್ರವಲ್ಲ, "ಈ ಕಾರ್ಯವು ನನ್ನಿಂದಲೇ ಆದುದಲ್ಲ..." ಎಂದು ತಾವೇ ಹೇಳಿ ಸೌಜನ್ಯವನ್ನೂ ತೋರಿದ್ದ ಕಾರಂತರವರು ! ಹಾಗಿತ್ತು ಕಾರಂತರ ಅಭಿಮಾನ; ಪಾಂಡಿತ್ಯಕ್ಕೆ ಅವರು ಕೊಡುತ್ತಿದ್ದ ವಿಶೇಷ ಸನ್ಮಾನ; ಕಾರಂತ ಶೈಲಿಯ ಕಾರ್ಯ ವೈಖರಿ !

ಕಾರಂತರು ಊಟ ತಿಂಡಿಯ ವಿಷಯದಲ್ಲಿ ಸರಳಾತಿಸರಳರಾಗಿದ್ದರು. ಸಮಯಕ್ಕೆ ಸರಿಯಾಗಿ ಹಿತಮಿತವಾದ ಆಹಾರ ಸೇವನೆಯು ಅವರ ಪದ್ಧತಿಯಾಗಿತ್ತು. ಒಂದು ಬೇಸಗೆಯಲ್ಲಿ ನಮ್ಮ ಮನೆಗೆ ಬಂದಾಗಲೂ "ನೋಡಿ, ನಾನು ಹಾಗೆಲ್ಲ ಆಹಾರ ತೆಗೆದುಕೊಳ್ಳುವುದಿಲ್ಲ. ಆದರೆ ನಿಮಗೂ ಬೇಸರ ಆಗಬಾರದು. ಹೊರಗೆ ಅಂಗಳದಲ್ಲಿ ಒಣಗಿಸಿದ ಕುಂಬಳಕಾಯಿಯ ಒಂದು ಸೆಂಡಿಗೆ, ಒಂದೇ ಒಂದು ಔನ್ಸ್ ಮಜ್ಜಿಗೆ ಕೊಡಿ...ಬೇರೆ ಏನೂ ಬೇಡ.." ಎನ್ನುತ್ತಿದ್ದ ಕಾರಂತರು ಬದುಕುವುದಕ್ಕಾಗಿ ಮಾತ್ರ ತಿನ್ನುತ್ತಿದ್ದರು. ಅವರ ಕುಟುಂಬದಲ್ಲಿ ಎಲ್ಲರೂ ದೀರ್ಘಾಯುಷಿಗಳೇ ಆದರೂ ಶಿವರಾಮ ಕಾರಂತರ ಕುಗ್ಗದ ಚಟುವಟಿಕೆಗೆ ಅವರ ನಿತ್ಯದ ಆಹಾರ ಕ್ರಮವೂ ಕಾರಣವಾಗಿರಬಹುದು.

ಕರ್ನಾಟಕದ ಕರಾವಳಿಗೆ ಯಾರೆಂದು ಬಲ್ಲಿರಿ ? ಅವರು ಡಾ. ಶಿವರಾಮ ಕಾರಂತರು. ಸಾಗರಕ್ಕೆ ಸಾಗರವೇ ಹೋಲಿಕೆಯೆಂಬಂತೆ ಕಾರಂತರಿಗೆ ಕಾರಂತರೇ ಉಪಮೆ. ಅವರು ಜನ ಮೆಚ್ಚುಗೆಗಾಗಿ ಕೆಣಕಿದವರೂ ಅಲ್ಲ; ತಿಣುಕಿದವರೂ ಅಲ್ಲ. ತನ್ನನ್ನು ಎತ್ತಿ ಹೊತ್ತು ಮೆರೆಸಲಿ ಎಂದು ಅಪೇಕ್ಷಿಸಿದವರೂ ಅಲ್ಲ. ಸುಮಾರು 80 ರ ದಶಕದಲ್ಲಿ ಪಂಜೆ ಮಗೇಶ ರಾಯರನ್ನು ಕುರಿತು ಒಂದು ಶಬ್ದ ರೂಪಕವನ್ನು ನಾನು ಆಕಾಶವಾಣಿಗಾಗಿ ನಿರ್ಮಿಸಿದಾಗ ಕಾರಂತರನ್ನು ಅವರ ಸಾಲಿಗ್ರಾಮದ ಮನೆಯಲ್ಲಿಯೇ ಸಂದರ್ಶಿಸಿ ಅವರ ಮಾತುಗಳನ್ನೂ ಧ್ವನಿಮುದ್ರಿಸಿಕೊಂಡಿದ್ದೆ. ಅಂದು ಪಂಜೆ ಅವರನ್ನು ಅತ್ಯಂತ ಆತ್ಮೀಯವಾಗಿ ಕಾರಂತರು ಸ್ಮರಿಸಿಕೊಂಡಿದ್ದರು. ನಾವು ಅಲ್ಲಿಂದ ಹೊರಡುವಾಗ "ಇಂತಹ ದಿನಾಂಕದಂದು ಈ ಕಾರ್ಯಕ್ರಮವು ಪ್ರಸಾರವಾಗುತ್ತದೆ..." ಎಂದು ಅಳುಕುತ್ತಲೇ ನಾನು ಹೇಳಿದಾಗ - "ನಿಮ್ಮ ಕೆಲಸ ಆಯಿತಲ್ಲವಾ ? ಹೊರಡಿ.." ಅಂದಿದ್ದರು. ಆದರೆ ಅದೇ ಪ್ರದೇಶದವಳಾದ ನನಗೆ ಆ ಭಾಷೆ ಭಾವದ ಪರಿಚಯವಿದ್ದುದರಿಂದ ಅಂದು ನಗುತ್ತ ಅವರಿಗೆ ಕೈಮುಗಿದು ಹೊರ ಬಂದಿದ್ದೆ. ಬಾಯಿ ಬಣ್ಣ, ಗಿಲೀಟಿನ ಮಾತುಗಳು ಅವರ ಹತ್ತಿರ ಸುಳಿಯಲೇ ಇಲ್ಲ. ತಾವು ಆಡಲಿಲ್ಲ ಮಾತ್ರವಲ್ಲ - ಅಂತಹ ಮಾತುಗಳನ್ನು ಕೇಳಿದರೂ ಕಾರಂತರು ಸಿಡುಕುತ್ತಿದ್ದರು. ಅದು ಎಂತಹ ಸನ್ನಿವೇಶವೇ ಇರಲಿ, ತನ್ನ ಮನಸ್ಸು ಒಪ್ಪಿದ್ದನ್ನು ಹೇಳಿಯಾರು; ಯಾರು ಕಿವಿ ಮುಚ್ಚಿದರೂ ಅವರಿಗಿರಲಿಲ್ಲ ಚಿಂತೆ.

1902 ರ ಅಕ್ಟೋಬರ್ 10 ರಂದು ಅವಿಭಜಿತ ದಕ್ಷಿಣ ಕನ್ನಡದ ಕೋಟದ ಮಣ್ಣಿನಲ್ಲಿ ಬದುಕಿನ ದೀಕ್ಷೆ. ಮಣ್ಣಿಂದ ಮಣ್ಣಿಗೆ ಎಂಬ ಸರಳವೆಂದು ಕಾಣುವ ಸೂತ್ರವನ್ನು ಗಟ್ಟಿಯಾಗಿ ಹಿಡಿದವರು ಕಾರಂತರು. ಪ್ರತಿಯೊಂದು ಪಾತ್ರವನ್ನೂ ಅತ್ಯಂತ ಪ್ರೀತಿಯಿಂದ ಪೋಷಿಸಿದ ಮೂರು ತಲೆಮಾರಿನ  ಕತೆಯುಳ್ಳ "ಮರಳಿ ಮಣ್ಣಿಗೆ" ಎಂಬ ಕಾರಂತರ ಕಾದಂಬರಿಯು ಅವರ ಕೃತಿಗಳಲ್ಲೇ ಅತಿ ಸುಂದರ ಎನ್ನಬಹುದಾದ ಕುಸುಮ. ಜ್ಞಾನಪೀಠಸ್ಥ ವ್ಯಕ್ತಿಯೊಬ್ಬ ಮಕ್ಕಳಿಗಾಗಿಯೂ ಬಹಳಷ್ಟು ಬರೆದದ್ದೂ ಹೌದು; ಮಕ್ಕಳ ಶಿಕ್ಷಣದ ಬಗ್ಗೆ ಕಾರಂತರದ್ದೇ ಆದ ಒಂದು ನಿಲುವು ಇದ್ದದ್ದೂ ಹೌದು. ಒಂದು ಶತಮಾನವಿಡೀ " ಕಾರಂತ ಕುವೆಂಪು, ಬೇಂದ್ರೆ" ಎಂಬ ನುಡಿಗುಚ್ಛವು ಕನ್ನಡಿಗರ ಬಾಯಲ್ಲಿ ನಲಿದದ್ದೂ ಹೌದು. ಅವರ ಜೀವಿತದ ಯೌವ್ವನದ  ಚಟುವಟಿಕೆಯ ಅವಧಿಯಲ್ಲಿ ಪುತ್ತೂರಿನಲ್ಲಿ ವಾಸ್ತವ್ಯವಿದ್ದರೂ ವೃದ್ಧಾಪ್ಯದಲ್ಲಿ ತನ್ನ ಮಣ್ಣಿನ ಸೆಳೆತವು ಕಾರಂತರನ್ನ ಜನ್ಮಸ್ಥಳವಾದ ಕೋಟದ ಸಮೀಪದ ಸಾಲಿಗ್ರಾಮದಲ್ಲಿ ನೆಲೆಸುವಂತೆ ಮಾಡದೆ ಬಿಡಲಿಲ್ಲ. 1997 ರ ಡಿಸೆಂಬರ್ 9 ರಂದು ಅವರು ಕೊನೆಯದಾಗಿ "ಮರಳಿ ಮಣ್ಣಿಗೆ"  ಸೇರಿದ್ದೂ ತಮ್ಮ ಕೋಟದ ಮನೆಯ ತೋಟದಲ್ಲೇ. ಜೀವನದ ಶತಕವನ್ನು ಸ್ವಲ್ಪದರಲ್ಲೇ ತಪ್ಪಿಸಿಕೊಂಡ ಕಾರಂತರ "ಮರಳಿ ಮಣ್ಣಿಗೆ" ಯು ಅಂದು ಭಾವಪೂರ್ಣ ಕಾವ್ಯವಾಯಿತು. ಒಂದು ಮಹಾ ಜೀವನ ಕಾವ್ಯದ ಮುಕ್ತಾಯವಾಯಿತು...

ತಮ್ಮ ಇಳಿವಯಸ್ಸಿನಲ್ಲಿ ಸಾಲಿಗ್ರಾಮಕ್ಕೆ ಬಂದ ನಂತರ ಸುಮಾರು 25 ವರ್ಷಗಳ ಕಾಲವೂ ಕಾರಂತರು ವಿಶ್ರಾಂತಿಯೆಂದು ಸುಮ್ಮನೆ ಪೀಠದಲ್ಲಿ ಕೂತವರಲ್ಲ. ಕಾರಂತರನ್ನು ಪೀಠದಲ್ಲಿ ಬಹಳ ಹೊತ್ತು ಸುಮ್ಮನೆ ಕೂರಿಸುವುದೇ ಒಂದು ಅಸಹಜ ವಿಷಯ ! "ಇದ್ದರೂ ಚಿಂತೆ" ಎಂದು - ಎಂದೂ ಗೊಣಗದೆ, ಜನರು ಕರೆದಲ್ಲಿಗೆ ನಡೆದರು. ಜನರೊಂದಿಗೇ ನಡೆದರು. ನಡೆಯುತ್ತ ನಡೆಯುತ್ತ ನಡೆದೇ ಬಿಟ್ಟರು. ನುಡಿದು ನುಡಿಸಿ,  ನುಡಿಯುಳಿಸಿ ನಡೆದೇ ಬಿಟ್ಟರು.

ಪ್ರಾಚೀನ ಮೌಲ್ಯಗಳನ್ನೂ ಸಾರಾಸಗಟಾಗಿ ತಿರಸ್ಕರಿಸದೆ, ಪ್ರಸ್ತುತದಲ್ಲಿ ಅವನ್ನು ತೂಗಿ ನೋಡಿ, ಭಾವೀ ತಲೆಮಾರಿಗೆ ಉಳಿಸಬೇಕಾದುದನ್ನು ಬೊಟ್ಟಿಟ್ಟು ತೋರಿಸಿದವರು ಕಾರಂತರು. "ಪಡೆದುದಕ್ಕಿಂತಲೂ ನೀಡಿದ್ದು ಕಡಿಮೆಯಾಗಬಾರದು" ಎಂಬ ಪೂರ್ಣ ಎಚ್ಚರದಲ್ಲಿದ್ದ ಪ್ರಜ್ಞಾಪೂರ್ಣ ಬದುಕು ಕಾರಂತರದ್ದು. "ಚೋಮನ ದುಡಿ" ಯಂತಹ ಕಾದಂಬರಿಯಲ್ಲಿ ಸಮಾಜದ ತೀರ ಸಾಮಾನ್ಯರನ್ನೂ ಮುಟ್ಟಿದ್ದು, ಭಾವ ಸಂವಹನ ನಡೆಸಿದ್ದು - ಈ ಲೌಕಿಕದ ಒಂದು ಅಲೌಕಿಕ ಸಂಗತಿ.

"ನಾವು ಅಸಂಖ್ಯ ಜನರಿಗೆ ಋಣಿಗಳಲ್ಲವೆ ? ಈ ಸೃಷ್ಟಿಯ ಅನಂತ ವಿಸ್ಮಯಗಳಿಗೆ ಋಣಿಗಳಲ್ಲವೆ ?" ಎಂದು ಕಾರಂತರು ಕೇಳುತ್ತಿದ್ದರು. ತಮ್ಮ ಬದುಕು - ಬರೆಹಗಳ ಮೂಲಕ ಒಂದಿಷ್ಟು ಋಣ ಸಂದಾಯವನ್ನೂ ಮಾಡಿದರು. ಪ್ರತಿಯೊಂದು ಜೀವಿಯೂ ತನ್ನ ಇತಿಮಿತಿಯಲ್ಲಿ ಈ ಜಗತ್ತಿಗೆ ಋಣ ಸಂದಾಯ ಮಾಡುವುದೇ ಕಾರಂತರ ಸಂಸ್ಮರಣೆಗೆ ಇರುವ ಪ್ರಶಸ್ತ ದಾರಿ.

ಹಾಗೆಂದು.....ಕಾರಂತರು ಸುಖ ವೈಭೋಗವನ್ನೇ ಕಂಡುಂಡವರಲ್ಲ. ಅವರ ಬದುಕಿನಲ್ಲೂ ಬಿರುಗಾಳಿ ಬೀಸಿದ್ದಿದೆ. ಈ ಬದುಕು ಎಂಬುದು ಕಾರಂತರನ್ನೂ ಅಲುಗಾಡಿಸದೆ ಬಿಡಲಿಲ್ಲ. ಆದರೆ ಪ್ರಕೃತಿಯೊಂದಿಗೆ ತಾದಾತ್ಮ್ಯವನ್ನು ಸಾಧಿಸಿ, ಬದುಕುಗಳ ಪ್ರತಿಕೃತಿಯನ್ನು ಬಿಡಿಸುತ್ತಲೇ ಉಬ್ಬರದ ಏರಿಳಿತಗಳಿಂದ ಪಾರಾದವರು ಕಾರಂತರು. ಬದುಕು ಕಾರಂತರೊಳಗೋ ಕಾರಂತರು ಬದುಕಿನೊಳಗೋ - ಎಂಬಂತೆ ಸ್ವಂತ, ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಎಂಬ ಭೇದವಿಲ್ಲದೆ ಎಲ್ಲ ರಂಗಗಳಲ್ಲೂ ಇಣುಕಿ ನೋಡಿ, ತಾವು ನೋಡಿದ್ದನ್ನು ಎಲ್ಲರಿಗೂ ಹೇಳುತ್ತ ಬದುಕಿದ್ದ ಧೀಮಂತ ವ್ಯಕ್ತಿತ್ವವೇ - ಡಾ. ಕೋಟ ಶಿವರಾಮ ಕಾರಂತ ! ಸುತ್ತಲೂ ಮುತ್ತಿದ್ದ ಯಾವುದೇ ತಾಪತ್ರಯವು ಅವರ ಬರೆಹವನ್ನು, ಕ್ರಿಯಾಶೀಲತೆಯನ್ನು ಇಂಗಿಸಲಿಲ್ಲ. ಸತ್ಯವೆಂದು ತಾವು ನಂಬಿದ್ದನ್ನೇ ನುಡಿದರು; ನಡೆದರು. ಚಿತ್ರ ಬಿಡಿಸಿದರು, ಹಾಡಿದರು, ಕುಣಿದರು, ವಾಗ್ಝರಿ ಹರಿಸಿದರು, ಎಲ್ಲರೊಂದಿಗೆ ಬೆರೆತರು...ತಮ್ಮನ್ನೇ ಮರೆತರು ! ಬದುಕನ್ನು ಬಿಡಿಬಿಡಿಯಾಗಿ ಕಂಡರು; ಇಡಿಯಾಗಿ ಉಂಡರು. ಪ್ರೀತಿಸಿದ ಬದುಕಿನ ಅನುಭವಗಳನ್ನೆಲ್ಲ ಬಾಚಿ ತಬ್ಬಿಕೊಂಡರು. ತಾವು ನಂಬಿದ ಮೌಲ್ಯಗಳನ್ನು ಕೊನೆಯ ವರೆಗೂ ಬಿಡದೆ ಪ್ರತಿಪಾದಿಸುತ್ತ 1997 ರ ಡಿಸೆಂಬರ್ 9 ರಂದು ವಾಸ್ತವಕ್ಕೆ ತಲೆಬಾಗಿ ನಡೆದೇ ಬಿಟ್ಟರು. ಈಸಬೇಕು ಇದ್ದು ಜೈಸಬೇಕು ಎನ್ನುತ್ತ ಬದುಕನ್ನು ಅಪ್ಪಿಕೊಂಡರೆ - ಸಾವನ್ನು ಎದೆಗೊತ್ತಿ ಒಪ್ಪಿಕೊಂಡರು ! ಹುಟ್ಟು ಸಾವಿನ ನಡುವಿನ ಭೂಮಿಯ ಭೇಟಿಯೆಂಬ ಬದುಕಿನ ಆಟ. ಆ ಬದುಕಿನ ಕ್ಷಣ ಕ್ಷಣವೂ ಕಾರಂತರದೇ ವಾಸ್ತವ. ಇದು "ಮುಗಿದ ಯುದ್ಧ" ವೆ ?

ಕಾರಂತರು ಇಲ್ಲೇ ಇದ್ದಾರೆ. ಕನ್ನಡದ ಸ್ವರ ವ್ಯಂಜನದಲ್ಲಿ; ಶಬ್ದ ಗುಂಜನದಲ್ಲಿ... ಕಾರಂತರು ಇದ್ದಾರೆ; ಕನ್ನಡದ ಉಸಿರಿನಲ್ಲಿ; ಕಡಲ ತಡಿಯ ಮಣ್ಣಿನ ಬಸಿರಿನಲ್ಲಿ... ಕನ್ನಡವು ಇರುವ ವರೆಗೂ ಕಾರಂತರು ಇರುತ್ತಾರೆ. ಸಮೃದ್ಧ ಬದುಕಿನ "ಮುಟ್ಟುವ ಆಟ" ದಲ್ಲಿ ಅವರೊಬ್ಬರೇ ಆಡುತ್ತ ಹೋದರು. ನಮ್ಮನ್ನೆಲ್ಲ ಮುಟ್ಟಿ ಮುಟ್ಟಿ ಹೋದರು. ಅವರನ್ನು ಮುಟ್ಟಲು ಕೊನೆಯ ವರೆಗೂ ಯಾರಿಗೂ ಬಿಡಲಿಲ್ಲ. ನಾನೀಗ ಕಾರಂತರನ್ನು ಮುಟ್ಟಿದೆನೆ ? ಕಾರಂತರು ಕೇಳುತ್ತಿದ್ದರೆ ಹೇಳಿಯಾರು - "ನಿನ್ನ ಕೆಲಸ ಮುಗಿಯಿತಲ್ಲವಾ ? ಹೊರಡು....."
 
                                                                                                                                           ನಾರಾಯಣೀ ದಾಮೋದರ್







Wednesday, October 21, 2015

ಆಕಾಶವಾಣಿಯ ಮೊದಲ ದಿನಗಳ - ನನ್ನ ನೆನಪಿನ ಪುಟಗಳು...

2009 ರಲ್ಲಿ ನಾನು ನೆನಪಿಸಿಕೊಂಡ - ಕೆಲವರು ಈಗಾಗಲೇ ಓದಿರುವ  "ಪುಟಗಳು..." ಮತ್ತು 2014 ರಲ್ಲಿ ಪ್ರಕಟಿಸಿದ "ಉದ್ಘೋಷಕ ಪೂರ್ವಾಪರ" ಬರಹಗಳ ಸಂಗ್ರಹಿತ ರೂಪ.

ಅದು 70 ರ ದಶಕ. ಆಕಾಶವಾಣಿಯು ಉಚ್ಛ್ರಾಯದಲ್ಲಿದ್ದ ಕಾಲ. ಯಾವುದೇ ಮನರಂಜನೆ ಅಥವಾ ಮಾಹಿತಿಗೆ ಇಡೀ ಸಮಾಜವು ಆಕಾಶವಾಣಿಯನ್ನೇ ಆಶ್ರಯಿಸಿದ್ದ ಕಾಲ. ಆಕಾಶವಾಣಿಯ ಸುವರ್ಣ ಕಾಲ!

ನನಗಾಗ 21 ವರ್ಷ ಪ್ರಾಯ. ಅದಾಗಲೇ ನಾಟಕ, ಸಂಗೀತ, ಹರಿಕಥೆ ಎಂದೆಲ್ಲ ಸಾರ್ವಜನಿಕ ಬದುಕಿನಲ್ಲಿ ತೊಡಗಿಕೊಂಡಿದ್ದ ನನಗೆ ಅಂದು ಬಡವನೊಬ್ಬ ಕಡವರವನ್ನೆಡಹಿದಂತಹ ಸಂತಸ. ಅಂದು ಮಂಗಳವಾರ. 1976 ನೇ ಇಸವಿಯ ಡಿಸೆಂಬರ್ 7 ನೇ ತಾರೀಕಿನಂದು ಮಂಗಳೂರು ಆಕಾಶವಾಣಿ ಕೇಂದ್ರದಲ್ಲಿ ಉದ್ಘೋಷಕಿ ಆಗಿ ಸೇರಿಕೊಳ್ಳಲು ನಾನು ಹೊರಟಿದ್ದೆ. ಜೊತೆಯಲ್ಲಿ ತಾನೂ ಬರುತ್ತೇನೆ - ಒಬ್ಬಳೇ ಹೋಗುವುದು ಬೇಡ ಎಂದ ಅಮ್ಮನಿಗೆ "ಚಿಂತೆ ಬೇಡ" ಎಂದು ಧೈರ್ಯದ ಮಾತು ಹೇಳಿ ಅವಳ ಆಶೀರ್ವಾದ ಪಡೆದು, ನಾನು ಕುಂದಾಪುರದಿಂದ ಮಂಗಳೂರಿಗೆ ಬಂದಿದ್ದೆ. ಅದು ಹೆಣ್ಣು ಮಕ್ಕಳು ಒಬ್ಬೊಬ್ಬರೇ ದೂರ ದೂರ ಓಡಾಡುತ್ತಿದ್ದ ಕಾಲವಾಗಿರಲಿಲ್ಲ. ಆದರೂ ಅಮ್ಮನಿಗೆ ಧೈರ್ಯ ಹೇಳಿ ಬಸ್ ಚಾರ್ಜ್ ಉಳಿಸುವ ಯೋಚನೆಯಿಂದ ನಾನೊಬ್ಬಳೇ ಕುಂದಾಪುರದಿಂದ ಸುಮಾರು 100 ಕಿ. ಮೀ. ದೂರದಲ್ಲಿದ್ದ ಮಂಗಳೂರಿಗೆ ಬಂದು ಬಿಟ್ಟಿದ್ದೆ. ರಾತ್ರಿ ಎಲ್ಲಿ ಠಿಕಾಣಿ ಎಂದು ನನಗೆ ಗೊತ್ತಿರಲಿಲ್ಲ. ಅಂತೂ ಬಂದಿದ್ದೆ ... ಮಂಗಳೂರಿನ ಏನು ಎತ್ತ ಗೊತ್ತಿಲ್ಲದೆ ಮಂಗಳೂರಿನ ಸರ್ವಿಸ್ ಬಸ್ ನಿಲ್ದಾಣದ ವರೆಗೂ ಹೋಗಿ - ಅಲ್ಲಿ ಇಳಿದೆ. ಅಲ್ಲೇ ಹೊರಗಿದ್ದ ಒಂದು ರಿಕ್ಷಾ ಹತ್ತಿ ಕೂತು ಆಕಾಶವಾಣಿಯತ್ತ ಹೊರಟೆ.


ಅಂದು ನನ್ನ ಎದುರಿಗಿತ್ತು ಕನಸಿನ ಆಕಾಶವಾಣಿ. ಒಂದೈದು ನಿಮಿಷ ಆ ಕಟ್ಟಡವನ್ನೇ ನೋಡುತ್ತ ನಾನು  ನಿಂತಿದ್ದೆ. ಮೈಮರೆತ ಪುಟ್ಟ ಕನಸು! ಅನಂತರ ನಿಧಾನವಾಗಿ ಆಕಾಶವಾಣಿಯ ದ್ವಾರಪಾಲಕರನ್ನು ದಾಟಿ ಒಳಗೆ ಹೆಜ್ಜೆ ಇಟ್ಟೆ. ನೇಮಕಾತಿಯ ಪತ್ರವನ್ನು ಕೈಯಲ್ಲಿ ಹಿಡಿದುಕೊಂಡು ನೇರವಾಗಿ accounts ವಿಭಾಗಕ್ಕೆ ಹೋದೆ. ಆಗ ಶ್ರೀ ಅಮಾನುಲ್ಲಾ ಖಾನ್ ಅಂತ ಒಬ್ಬ ಅಕೌಂಟೆಂಟ್ ಇದ್ದರು. ಅವರು "ಇವತ್ತೇ join ಆಗ್ತೀರಾ?" ಅಂದರು. ಹ್ಞೂಂ ಅಂದೆ. "ಸರಿ; formalities ಎಲ್ಲ ಮುಗ್ಸಿಬಿಡೀಪ್ಪ" ಅಂತ ಅವರು ಇನ್ನೊಬ್ಬರಿಗೆ ಹೇಳಿದರು. ಆ ಇನ್ನೊಬ್ಬರು ನನ್ನನ್ನು ತಮ್ಮ ಟೇಬಲ್ಲಿನ ಎದುರು ಕೂಡಿಸಿದರು. ನಾನು ಸುತ್ತಲೂ ನೋಡಿದೆ. ಹುಡುಗಿಯರು ಮತ್ತು ಹುಡುಗರು ಸೇರಿ ಎಂಟೋ ಹತ್ತೋ ಸಿಬ್ಬಂದಿಗಳು ಅಲ್ಲಿ ಇದ್ದರು. ಆಗ ಆ ಇನ್ನೊಬ್ಬರು ನನ್ನನ್ನು ಕೇಳಿದರು - "ಏನಮ್ಮ, ಇವತ್ತೇ join ಆಗ್ತೀರಾ ?" ಮತ್ತದೇ ಪ್ರಶ್ನೆ ಎಂದುಕೊಂಡ ನಾನು ಖಾನ್ ಸಾಹೇಬರ ಮುಖವನ್ನು ನೋಡಿ ನಕ್ಕೆ. "ಆಗ್ತಾರಂತೆ ... ಸೇರಿಸಿಕೊಂಡ್ಬಿಡಿ" ಅಂದರು ಖಾನ್. ಆಗ ಆ ಇನ್ನೊಬ್ಬರು ಮುಂದಕ್ಕೆ ಬಗ್ಗಿ ಮೆತ್ತಗೆ ಹೇಳಿದರು - "ಮೇಡಂ, ಇವತ್ತು ಮಂಗಳವಾರ; ಒಳ್ಳೆಯ ದಿನವಲ್ಲ; ಸ್ವಲ್ಪ ಯೋಚನೆ ಮಾಡಿ. ಏನೂ ಗಡಿಬಿಡಿ ಇಲ್ಲ; ನಾಳೆಯೂ ಸೇರಬಹುದು" ಅಂದರು. ಆಗ ಗಲಿಬಿಲಿಗೊಂಡ ನಾನು ಮತ್ತೊಮ್ಮೆ ಖಾನರನ್ನು ನೋಡಿದೆ. ಅವರು "Any problem ?" ಅಂದರು. ಅವರೊಡನೆ "ಏನಿಲ್ಲ ಸರ್" ಅಂತ ಹೇಳಿದರೂ ನನ್ನ ತಲೆಯೊಳಗೆ ಒಂದು ಸಂಶಯದ ಹುಳ ಹೊಕ್ಕಿತ್ತು. ಆಕಾಶವಾಣಿಯ ಭಾಗವಾಗುವ ಅವಸರದಲ್ಲಿದ್ದ ನಾನು ಆ ಹುಳವನ್ನು ಝಾಡಿಸಿ ಒದ್ದು ಅರೆ ಕ್ಷಣದಲ್ಲಿ ನನ್ನನ್ನು ಸಂಭಾಳಿಸಿಕೊಂಡುಬಿಟ್ಟೆ. ಹರಿಕಥೆ ಮಾಡಿ ಮಾಡಿ ದಾಸರ ಪದಗಳೆಲ್ಲ ಬಾಯಲ್ಲಿದ್ದವಲ್ಲಾ? ಅದನ್ನೇ ಒಂಚೂರು ಹೇಳಿಕೊಂಡೆ. "ಸಕಲ ಗ್ರಹ ಬಲ ನೀನೇ ಸರಸಿಜಾಕ್ಷಾ" ಅಂದುಕೊಂಡು - "ಇವತ್ತೇ join ಆಗ್ತೇನೆ ಸರ್..." ಅಂದುಬಿಟ್ಟೆ. ಮಂಗಳವಾರವನ್ನು ಪ್ರಸ್ತಾಪಿಸಿದ ವ್ಯಕ್ತಿಯು "ಸರಿ ಬಿಡಿ; ನಿಮ್ಮಿಷ್ಟ" ಎಂದು ಹೇಳಿ ಕಚೇರಿಯ ಎಲ್ಲಾ formalities ನ್ನೂ ಮುಗಿಸಿದರು. ಅಂತೂ ಇಂತೂ ಆ ಪ್ರಶಸ್ತವಾದ ಮಂಗಲಕಾರಕ ಮಂಗಳವಾರದಂದು ನಾನು ಮಂಗಳೂರು ಆಕಾಶವಾಣಿಯನ್ನು ಸೇರಿಕೊಂಡೆ. ಮಂಗಳೂರು ಆಕಾಶವಾಣಿಯನ್ನು ಮಂಗಳವಾರದಂದು ಹೊಕ್ಕ ನನ್ನ ಮಂಗಳದ ಕಥೆ ಇನ್ನು ಶುರುವಾಗಬೇಕಷ್ಟೇ.



ಒಂದು ಉದ್ಯೋಗ ಎಂದ ಮೇಲೆ ಅಲ್ಲಿ ಹತ್ತು ಹಲವು ಹಿನ್ನೆಲೆಯ ಮಂದಿ ಸೇರಿಕೊಂಡಿರುವುದು ಸಹಜ. ಅಂದಿನ ಆಕಾಶವಾಣಿಯು ಪ್ರತಿಭಾವಂತರಿಂದ ತುಂಬಿದ್ದ ವ್ಯವಸ್ಥೆಯಾಗಿತ್ತು. ಕಛೇರಿಯಲ್ಲಿ ಮಾಡಬೇಕಾದ ಆಡಳಿತಾತ್ಮಕ ಕರ್ಮಗಳನ್ನೆಲ್ಲ ಮುಗಿಸಿ ಅಲ್ಲಿಂದ ಹೊರಬಿದ್ದ ನಾನು ಆಮೇಲೆ ನೋಡಿದ್ದು ಆಗ ನಮ್ಮ ನಿರ್ದೇಶಕರಾಗಿದ್ದ ಶ್ರೀ ಎಸ್.ಕೃಷ್ಣಮೂರ್ತಿ ಅವರನ್ನು. ಇವರು ಕರ್ನಾಟಕ ಸಂಗೀತದ ವಾಗ್ಗೇಯಕಾರರಾದ ಮೈಸೂರು ವಾಸುದೇವಾಚಾರ್ಯರ ಮೊಮ್ಮಗ. ನನ್ನನ್ನು ಆಯ್ಕೆ ಮಾಡಿದ ಸಂದರ್ಶನ ಸಮಿತಿಯಲ್ಲೂ ಇವರಿದ್ದರು. ಅಂಥ ವಿದ್ವಾಂಸರಿಂದ ಶುಭ ಹಾರೈಕೆಯನ್ನು ಪಡೆಯುವ ಭಾಗ್ಯ ನನ್ನದಾಯಿತು. ಆಗ ಆಕಾಶವಾಣಿಯ ಬೆಂಗಳೂರು ಕೇಂದ್ರದ ನಿರ್ದೇಶಕರಾಗಿದ್ದ ಶ್ರೀ ಎಸ್. ಕೃಷ್ಣಮೂರ್ತಿ ಅವರು ಮಂಗಳೂರು ಕೇಂದ್ರದ ಉದ್ಘಾಟನೆಯ ವರೆಗೆ ಮೇಲುಸ್ತುವಾರಿ ನೋಡಿಕೊಳ್ಳುವ ಸಲುವಾಗಿ ಮಂಗಳೂರಿಗೆ ನಿಯೋಜಿತರಾಗಿ ಬಂದಿದ್ದರು...ಈಗ ಕಾಣುವ ಸ್ಟುಡಿಯೋ ಬ್ಲಾಕ್ ಆಗ ನಿರ್ಮಾಣವಾಗಿರಲಿಲ್ಲ. ಇಂದಿನ ಧ್ವನಿಮುದ್ರಣ ವಲಯದ ಹೊರಗಿರುವ ನೆಲ ಅಂತಸ್ತಿನ ಭಾಗದಲ್ಲೇ ಕಛೇರಿ, Studio ಎಲ್ಲವೂ ನಡೆಯುತ್ತಿತ್ತು. ಶ್ರೀ ಕೃಷ್ಣಮೂರ್ತಿಯವರನ್ನು ಕಂಡು ನಮಸ್ಕರಿಸಿದ ನಾನು Station Engineer ಆಗಿದ್ದ ಶ್ರೀ P. K. Pai ಅವರನ್ನುಭೇಟಿಯಾದೆ. ಸದಾ ಹಸನ್ಮುಖಿಯಾಗಿರುತ್ತಿದ್ದ ಅವರು ನನ್ನಿಂದ - "ಸಂಸ್ಥೆಗೆ ನಿಷ್ಠೆಯಿಂದ ದುಡಿಯುವೆ " ಎಂಬ ಪ್ರಮಾಣವಚನವನ್ನು ಭಾರತದ ರಾಷ್ಟ್ರಪತಿಗಳ ಹೆಸರಿನಲ್ಲಿ ಮಾಡಿಸಿದರು. ಆಮೇಲೆ ಸಹಾಯಕ ನಿರ್ದೇಶಕರಾಗಿದ್ದ ಶ್ರೀಮತಿ ಎಂ. ವಿ. ವಸಂತಕುಮಾರಿ ಅವರನ್ನು ಭೇಟಿಯಾದೆ. ಸದಾ ಹುಬ್ಬು ಗಂಟಿಕ್ಕಿಕೊಂಡು ಕನ್ನಡಕದ ಸಂದಿಯಿಂದಲೇ ನೋಡುತ್ತಿದ್ದ ಅವರನ್ನು ಕಂಡಾಗಲೇ ನನಗೆ ಪಕ್ಕನೆ ಮಂಗಳವಾರವು ನೆನಪಿಗೆ ಬಂತು. ಕೈಮುಗಿದು ನಮಸ್ಕರಿಸಿದೆ.

"ನೋಡಮ್ಮ, ರಾಮಚಂದ್ರ ಮೆನನ್ ಅಂತ Programme Executive ಒಬ್ಬರು ಅಲ್ಲಿದ್ದಾರೆ. ಅವರ ಜೊತೆ ಕೂತು ಬೇಗಬೇಗ ಕೆಲಸ ಕಲೀಬೇಕು. Announcer ಶಂಕರ ಭಟ್ ಅವರೂ ಇದ್ದಾರೆ. Studio ದ ಒಳಗಿನ ಎಲ್ಲ ಕೆಲಸವನ್ನೂ ಅವರು ಹೇಳಿಕೊಡ್ತಾರೆ. ಬರುವ ವಾರದಿಂದ ನಮ್ಮ Regular Transmission  ಆರಂಭವಾಗ್ತದೆ. ಆಮೇಲೆ Shift duty (ನಿಯಮಿತವಾದ ಪ್ರಸಾರದ ಪಾಳಿ) ಇರ್ತದೆ. ಚೆನ್ನಾಗಿ ಕೆಲಸ ಮಾಡಬೇಕು." ಅಂತ ಮೇಜಿನ ಮೇಲಿದ್ದ ಯಾವುದೋ ಫೈಲನ್ನು ನೋಡುತ್ತಲೇ ಹೇಳಿದರು. ಆಕಾಶವಾಣಿಯ A B C D ಗೊತ್ತಿಲ್ಲದ ನನಗೆ ಅವರ ಮಾತಿನ ತಲೆಬುಡ ಅರ್ಥವಾಗದೆ ಒಳಗೇ ಸಣ್ಣ ನಡುಕ ಹುಟ್ಟಿತು. "ನೀವಿನ್ನು ಹೋಗಬಹುದು" ಅಂತ ಅವರು ಹೇಳಿದಾಗ "ಬದುಕಿದೆಯಾ ಬಡ ಜೀವವೇ" ಅಂದುಕೊಂಡು ಹೊರಬಂದೆ. ಅಲ್ಲಿಂದ ಹೊರಬಂದ ನನಗೆ - ಅದಾಗಲೇ ಎರಡು ವರ್ಷಗಳ ಅನುಭವವಿದ್ದ ಸಹೋದ್ಯೋಗಿ ಶ್ರೀ ಶಂಕರ ಭಟ್ಟರು ನಗುತ್ತ ನಿಂತದ್ದು ಕಾಣಿಸಿತು. ನೇರವಾಗಿ ಅವರ ಬಳಿ ಹೋಗಿ "ಬೇಗ ಬೇಗ ಕೆಲಸ ಕಲೀಬೇಕಂತೆ. ನನಗೊಂದಿಷ್ಟು ಕೆಲಸ ಕಲಿಸಿ ಭಟ್ರೇ ..." ಅಂದೆ. "ಗಡಿಬಿಡಿ ಮಾಡ್ಬೇಡಿ ಮಾರಾಯ್ರೆ...ಎಲ್ಲ ಬರ್ತದೆ ..relax .." ಅಂತ ಹೇಳಿ Play back studio - ಪ್ರಸಾರ ಕೊಠಡಿ ಯತ್ತ ನನ್ನನ್ನು ಕರೆದೊಯ್ದರು . 
  

ಹೀಗೆ... ನಾನು ಇಂದಿಗೂ ಪವಿತ್ರವೆಂದು ಭಾವಿಸಿರುವ ಆ ಪ್ರಸಾರ ಕೊಠಡಿಯ ರಂಗಪ್ರವೇಶ ಆಯಿತು. ಅದು ಮಂಗಳವಾರ. 1976...ಡಿಸೆಂಬರ್ 7.


ಯಾವುದೇ ಸರಕಾರೀ ವೃತ್ತಿಯ ಹಿನ್ನೆಲೆಯಿಲ್ಲ. ಯಾವುದೇ ವೃತ್ತಿ ತರಬೇತಿಯೂ ಇಲ್ಲದ ನಾನು Studio ಪ್ರವೇಶಿಸಿದೆ. ಎಲ್ಲವೂ ಹೊಸತು; ವಿಸ್ಮಯ! ಒಂದೆರಡು ರೆಕಾರ್ಡಿಂಗ್ ಪೆಟ್ಟಿಗೆಗಳು, ಧ್ವನಿಮುದ್ರಿಕೆಗಳು ಸುತ್ತುವಂತಹ - ಚಕ್ರವನ್ನು ಹೊಂದಿದ ಮೇಜುಗಳು, ಹತ್ತಿರದಲ್ಲೇ ಧ್ವನಿ ಸುರುಳಿಯನ್ನು ಸುತ್ತಿಸುವ ಎರಡು ಯಂತ್ರಗಳು, ಎದುರಿನಲ್ಲಿ ಹತ್ತೋ ಹನ್ನೆರಡೋ ಫೇಡರುಗಳು ಎದುರಿನಲ್ಲಿ ಒಂದು ಮೈಕ್ ನೋಡಿದೆ. ಸಹೋದ್ಯೋಗಿ ಶಂಕರ ಭಟ್ಟರು ಜೊತೆಗಿದ್ದರು. "ಇದೇ ನಿಮ್ಮ ಕಾರ್ಯಕ್ಷೇತ್ರ" ಎಂದರು. ತಕ್ಷಣ, "ನನಗೆ ಕೆಲಸ ಕಲಿಸಿ ಭಟ್ರೇ " ಅಂದೆ. "ಅಯ್ಯೋ... ಅವಸರ ಮಾಡಬೇಡಿ; ನಾನು ಡ್ಯೂಟಿಯಲ್ಲಿರುವಾಗ ಇಲ್ಲೇ ಇದ್ದು ನೋಡಿಕೊಳ್ಳಿ; ನೀವೇ ಗ್ರಹಿಸ್ತೀರಿ" ಅಂದರು.

ಅಂದಿನಿಂದ ಒಂದೆರಡು ದಿನ ಭಟ್ಟರ ಹಿಂದ್ಹಿಂದೇ ತಿರುಗಿದೆ; ನಿಂತು ನೋಡಿದೆ. ವಿಷಯದ ಸ್ಥೂಲ ಪರಿಜ್ಞಾನವಾಯಿತು. ಎರಡನೆಯ ದಿನ ಸಂಜೆಯ ಪ್ರಸಾರದಲ್ಲಿದ್ದಾಗ "ನೋಡೋಣ, ಇವತ್ತು ಕಾರ್ಯಕ್ರಮಗಳ ವಿವರವನ್ನು ನೀವೇ ಹೇಳಿ. ನಾನು ಹೊರಗಿದ್ದು ಕೇಳಿಸಿಕೊಳ್ಳುತ್ತೇನೆ." ಅಂತ ಹೇಳಿ ಸಹೋದ್ಯೋಗಿ ಭಟ್ಟರು ಹೊರಗೆ ಹೋದರು. " ಸರಿ " ಅಂತ ಮೈಕ್ ಎದುರಿಗೆ ಕೂತೆ. ೫ ನಿಮಿಷದ ಅವಧಿಯಲ್ಲಿ ಆಯಾ ದಿನದ ಸಂಜೆಯ ಮತ್ತು ಮರುದಿನದ ಕಾರ್ಯಕ್ರಮಗಳ ವಿವರವನ್ನು ಹೇಳಬೇಕಿತ್ತು. ಅದರ ಮೊದಲು ದೆಹಲಿಯ ವಾರ್ತೆಗಳ ಸಹಪ್ರಸಾರವಿದ್ದುದರಿಂದ ನಮ್ಮ ಪ್ರಸಾರ ಕೊಠಡಿಯ ಸಂಪರ್ಕವು ಕಡಿದಿತ್ತು. (ಪ್ರಸಾರಕೊಠಡಿಯಿಂದಲೇ ಪ್ರಸಾರ ಕಾರ್ಯವು ನಡೆಯುತ್ತಿರುವಾಗ ಮಾತ್ರ ಆ ಕೊಠಡಿಯಲ್ಲಿ ಮತ್ತು ಕೊಠಡಿಯ ಹೊರಗೆ ಕೆಂಪು ದೀಪ ಉರಿಯುತ್ತಿರುತ್ತದೆ. ಪ್ರವೇಶ ನಿಷಿದ್ಧ - ಕಾರ್ಯನಿರತವಾಗಿದೆ - ಎಂಬ ಸೂಚನೆ ಅದು) ನಾನು ಆ ಕೆಂಪು ದೀಪದ ಆಗಮನವನ್ನೇ ನಿರೀಕ್ಷಿಸುತ್ತಾ ಕುಳಿತಿದ್ದೆ. "ಸ್ಟುಡಿಯೋ ಜೀವಂತವಾದ ಕೂಡಲೇ announcement ಕೊಟ್ಟುಬಿಡಿ" ಅಂತ ಭಟ್ಟರು ಹೇಳಿದ್ದಂತೆ ನಾನು ತಯಾರಾಗಿ ಕೂತಿದ್ದೆ.

 

ದೆಹಲಿಯ ವಾರ್ತೆ ಮುಗಿದ ಕೂಡಲೇ ಚಕ್ಕಂತ ಕೆಂಪುದೀಪ ಬೆಳಗಿತು. ಅದನ್ನೇ ಕಾದಿದ್ದ ನಾನು ಪಟಕ್ಕಂತ fader ತೆಗೆದು "ಆಕಾಶವಾಣಿ, ಮಂಗಳೂರು.... " ಅಂತ ಮೊದಲೇ ಬರೆದು ಇರಿಸಿಕೊಂಡಿದ್ದ ಕಾರ್ಯಕ್ರಮ ಪಟ್ಟಿಯನ್ನು ಓದತೊಡಗಿದೆ. ಒಂದರ್ಧ ನಿಮಿಷದಲ್ಲೇ ಭಟ್ಟರು ಹೊರಗಿಂದ ಓಡೋಡಿ ಬಂದರು. ಬಂದವರೇ, ವಾದ್ಯಸಂಗೀತದ ತಟ್ಟೆಯನ್ನು ಓಡಿಸಿ (Play), ತೆರೆದಿದ್ದ fader ನ್ನು ಮುಚ್ಚಿ, ಉಂಟಾಗಿದ್ದ ನಿಶ್ಶಬ್ದವನ್ನು ಮುರಿದು - "ಏನಾಯಿತು? ಏನೂ ಬರ್ತಾ ಇಲ್ಲ?" ಅಂತ ಬಗ್ಗಿ ನೋಡಿ, "ಅಯ್ಯೋ...ತಪ್ಪಾದ fader ತೆರೆದು ಮಾತಾಡ್ತಿದ್ದೀರಿ. ಅದಲ್ಲ; ಇದು." ಅಂತ ಇನ್ನೊಂದು fader ತೋರಿಸಿದರು. ನಾನು ಕಂಗಾಲಾಗಿದ್ದೆ. "ಹೆದರಬೇಡಿ. ಓದಿ." ಅಂತ ಹೇಳಿ ಅಲ್ಲೇ ನಿಂತರು. ಮತ್ತೆ ಮೊದಲಿನಿಂದ ಶುರುಮಾಡಿ super express ವೇಗದಲ್ಲಿ ಧಡಬಡ ಅಂತ ಎಲ್ಲವನ್ನೂ ಹೇಳಿಮುಗಿಸಿದೆ.

ಆಕಾಶವಾಣಿಯ ಈ ಮೊದಲ ಅನುಭವವನ್ನು ಈಗ ಯೋಚಿಸಿದರೆ, ಈಗಲೂ ನಗು ಬರುತ್ತದೆ.


ಹಾಗೆ ನೋಡಿದರೆ ನನಗೆ ಮೈಕ್ ಎಂಬುದು ಹೊಸತೇನಾಗಿರಲಿಲ್ಲ. ನನ್ನ ಹದಿನೈದನೆಯ ವರ್ಷ ಪ್ರಾಯದಲ್ಲೇ ನಾನು ಸಾರ್ವಜನಿಕ ಹರಿಕಥೆಗಳನ್ನು ಮಾಡಲು ಆರಂಭಿಸಿದ್ದೆ. ಸಭೆ, ಸಭಾಕಂಪದ ದೌರ್ಬಲ್ಯ ನನಗಿರಲಿಲ್ಲ. "ಆದರೆ ಇಂದೇಕೆ ಹೀಗಾಯಿತು?" ಎಂದು ಯೋಚನೆಗೆ ಬಿದ್ದೆ. "ನಾನು ಸಹಜ ನಾರಾಯಣಿಯಾಗಿರಲಿಲ್ಲವಲ್ಲಾ?" ಎಂದು ಯೋಚಿಸಿದೆ.


ಒಂದು ಮೈಕ್ ಎದುರು ನಿಂತುಕೊಂಡು, ಅಕ್ಕಪಕ್ಕದಲ್ಲಿ ವಾದ್ಯಮೇಳವನ್ನಿರಿಸಿಕೊಂಡು, ನೂರಾರು ಜನ ಸೇರಿರುವ ಸಭೆಯಲ್ಲಿ, ಗಂಟೆಗಟ್ಟಲೆ ಹರಿಕಥೆ ಮಾಡುವ ಮಂತ್ರ ತಂತ್ರ ಬೇರೆ; ಸ್ಟುಡಿಯೋದಲ್ಲಿ ಏಕಾಂತದಲ್ಲಿ ಕೂತು, ಜನರನ್ನು ಮುಟ್ಟುವ ತಂತ್ರವೇ ಬೇರೆ ಎಂಬುದು ನಿಧಾನವಾಗಿ ನನಗೆ ಅರ್ಥವಾಗತೊಡಗಿತು. ಇಲ್ಲಿ ಮಂತ್ರ ತಂತ್ರಗಳ ಜೊತೆಗೆ ಯಂತ್ರಗಳ ಉಪಯೋಗದ ಕುರಿತ ಪರಿಜ್ಞಾನವೂ ಅಗತ್ಯ. ಒಬ್ಬ ಉತ್ತಮ ಉದ್ಘೋಷಕನು ತುಂಬ ಆತ್ಮೀಯವಾಗಿ, ಸ್ಫುಟವಾಗಿ, ಚುಟುಕಾಗಿ, ಸಮಯಪ್ರಜ್ಞೆ ಉಳ್ಳವನಾಗಿರುವುದರ ಜೊತೆಗೆ ಸ್ಟುಡಿಯೊದಲ್ಲಿರುವ ಎಲ್ಲ ಯಂತ್ರಗಳನ್ನೂ ತನಗೆ ಬೇಕಾದಂತೆ ಜಾಣ್ಮೆಯಿಂದ ಉಪಯೋಗಿಸಲು ಸಮರ್ಥನಾಗಿರಬೇಕು. ಯಾವತ್ತೂ ವಿಪರೀತ Conscious ಆಗಲೇಬಾರದು; ಅದರಿಂದ ಕ್ಷುಲ್ಲಕ ತಪ್ಪುಗಳು ಸಂಭವಿಸುತ್ತವೆ. ಆದ್ದರಿಂದ ಯಾವುದೇ ಉದ್ವೇಗವಿಲ್ಲದ ಶಾಂತ ಮನಸ್ಥಿತಿಯು ತುಂಬ ಅವಶ್ಯಕ. ಅಂದಂದಿನ ಕಷ್ಟಗಳನ್ನೆಲ್ಲ ಉದ್ಘೋಷಕರು ತಾವೇ ನುಂಗಿ, ಶಿಷ್ಟವಾದುದನ್ನು ಮಾತ್ರ ಶ್ರೋತೃಗಳ ಮಡಿಲಿನಲ್ಲಿಡಬೇಕು.

 ಬಾನುಲಿಯ ಕೇಳುಗರಿಗೆ - ಉದ್ಘೋಷಕರು ಮಾತಾಡುವ ದನಿಯಷ್ಟೇ ಕೇಳುತ್ತಿರುತ್ತದೆ; ಮಾತ್ರವಲ್ಲ - ಅಷ್ಟೇ ಕೇಳಿಸಬೇಕು. ರೇಡಿಯೋದಲ್ಲಿ ತಡೆಯಿಲ್ಲದೆ - ಮಾತು, ಹಾಡು, ನಾಟಕ, ರೂಪಕ, ಚರ್ಚೆ....ಇತ್ಯಾದಿ ಬರುತ್ತಲೇ ಇರುತ್ತವೆ. ಆ ಹೊತ್ತಿನಲ್ಲಿ ಸ್ಟುಡಿಯೋದಲ್ಲಿರುವ Announcer ಎಂಬ ವ್ಯಕ್ತಿಯು ತಡೆಯಿಲ್ಲದ ಚಟುವಟಿಕೆಯಲ್ಲಿ ಇರುತ್ತಾರೆ. ಯಾವ ಹೊತ್ತಿನಲ್ಲಿ ಏನು ಹೇಳಬೇಕು, ಹೇಗೆ ಹೇಳಬೇಕು, ಧ್ವನಿಮುದ್ರಿತ ಕಾರ್ಯಕ್ರಮವಾದರೆ ಆ ಕಾರ್ಯಕ್ರಮದ ತಿರುಳೇನು? ಆಯಾ ಸಂದರ್ಭಕ್ಕೆ ಹೊಂದುವಂತೆ ಚುಟುಕಾಗಿ ಎಷ್ಟು ಹೇಳಬಹುದು? ಜೊತೆಜೊತೆಗೇ... ತಕ್ಷಣ ಮೂಡಿ ಬರಬೇಕಾದ ಮುಂದಿನ ಕಾರ್ಯಕ್ರಮಕ್ಕೆ ಮಾಡಬೇಕಾದ ಪೂರ್ವತಯಾರಿ... ಆಗಾಗ ಗಂಟೆ ನೋಡುತ್ತಾ, ನಿಗದಿತ ಸಮಯಕ್ಕೆ - ನಿಗದಿತ ಕಾರ್ಯಕ್ರಮಗಳು ಹೋಗುವಂತೆ ನೋಡಿಕೊಳ್ಳುವುದು... ಹೀಗೆ...ಅಂತೂ ಮೈಯೆಲ್ಲಾ ಎಚ್ಚರದಿಂದಿರಬೇಕಾದ್ದು Announcer ಗಳಿಗೆ ತೀರಾ ಅವಶ್ಯ ಎಂಬುದನ್ನು ಕಲಿಯಲು - ನನಗೆ ಸ್ವಲ್ಪ ಸಮಯ ಬೇಕಾಯಿತು.

"ಅಸ್ತವ್ಯಸ್ತ ದಿನಚರಿಯನ್ನೇ ಇಷ್ಟ ಪಡುತ್ತ, ಅಮ್ಮ ಎಷ್ಟು ಗುದ್ದಿದರೂ ಕೇಳದೆ, ಅಸ್ತವ್ಯಸ್ತವಾಗಿಯೇ ಒಂದಷ್ಟು ವರ್ಷವನ್ನು ಹಿತವಾಗಿ, ಅಶಿಸ್ತಿನಿಂದಲೇ ಸಾಗಿಸಿದ್ದ ನನ್ನನ್ನು ಪಳಗಿಸಲು, ಬಹುಶಃ ವಿಧಿಯು - ಈ ಆಕಾಶವಾಣಿಗೆ ನನ್ನನ್ನು ಕಟ್ಟಿ ಹಾಕಿದ್ದಿರಬಹುದೇ?" - ಎಂದು ನಾನು - ಅಂದು ಮತ್ತು ಈಗಲೂ ಅಂದುಕೊಳ್ಳುವುದಿದೆ. ಅದಕ್ಕೆ ನನ್ನ ಸೇವಾವಧಿಯ ಉದ್ದಕ್ಕೂ ನಾನು ಒಟ್ಟಾರೆಯಾಗಿ ಕಂಡುಂಡ ಹಲವು ಅನುಭವಗಳೂ ಸ್ವಲ್ಪಮಟ್ಟಿಗೆ ಕಾರಣವಿರಬಹುದು. 


ಆಕಾಶವಾಣಿಯ ವೃತ್ತಿಬದುಕಿನ ಆರಂಭದ ದಿನಗಳಲ್ಲಿ, ಬೆಳಗಿನ ಪಾಳಿಯ ಕೆಲಸಕ್ಕೆ ನಾನು ತುಂಬ ಹಿಂಜರಿಯುತ್ತಿದ್ದೆ. ಬೆಳಿಗ್ಗೆ ನಾಲ್ಕು ಗಂಟೆಗೇ ಎದ್ದು ತಯಾರಾಗಿ ಕರ್ತವ್ಯಕ್ಕೆ ಹೊರಡಬೇಕಾದ್ದರಿಂದ, ಬೆಳಗಿನ ಸುಖ ನಿದ್ದೆಯಿಂದ ಏಳುವಾಗ ಹಿಂಸೆ ಎನಿಸುತ್ತಿತ್ತು. ಆಮೇಲಾಮೇಲೆ ಹಿಂಸೆಗೂ ಹೊಂದಿಕೊಳ್ಳುತ್ತಾ ಬಂದೆ. 

ನನ್ನ ಬಾಲ್ಯದಲ್ಲಿ ಒಂಬತ್ತನೆಯ ತರಗತಿಯವರೆಗೆ, ಬೆಳಿಗ್ಗೆ ನಾಲ್ಕಕ್ಕೇ ಎದ್ದು ಓದಿಕೊಳ್ಳುತ್ತಿದ್ದ ನಾನು, ಯಾವಾಗ ರಂಗ ನಾಟಕದ ಪೂರ್ವತಯಾರಿ, ಹರಿಕಥೆ ಎಂದೆಲ್ಲಾ - ಅಪರರಾತ್ರಿಯಲ್ಲಿ ಊರು ಸುತ್ತಲು ಆರಂಭಿಸಿದೆನೋ ಆಮೇಲೆ, ಬರಬರುತ್ತ ಬೆಳಿಗ್ಗೆ ತಡವಾಗಿ ಏಳಲು ಆರಂಭಿಸಿದ್ದೆ. ಯಾವ್ಯಾವುದೋ ಊರಿನಲ್ಲಿ ಹರಿಕಥೆ ಮಾಡಿ ಮುಗಿಸಿ, ಮನೆಗೆ ಹಿಂದಿರುಗುವಾಗ ರಾತ್ರಿ ಕಳೆದು ಬೆಳಗಿನ ಜಾವ ಆಗಿರುತ್ತಿತ್ತು. ಆವಾಗೆಲ್ಲ "ಮಗಳು ಒಂದಿಷ್ಟು ನಿದ್ದೆ ಮಾಡಿ ಶಾಲೆಗೆ ಹೋಗಲಿ; ಇಲ್ಲವಾದರೆ ತರಗತಿಯ ಪಾಠದಲ್ಲಿ ಮನಸ್ಸು ನಿಲ್ಲದು" ಅಂತ ಅಂದುಕೊಂಡೋ ಏನೋ, ಮನೆಯಲ್ಲಿ ಯಾರೂ ನನ್ನನ್ನು ನಿದ್ದೆಯಿಂದ ಎಬ್ಬಿಸುತ್ತಿರಲಿಲ್ಲ. ಹೀಗೆ ನಿಧಾನವಾಗಿ..."ರಾತ್ರಿ ಎಚ್ಚರ ; ಹಗಲು ನಿದ್ದೆ" - ಎಂಬ ಹೊಸದಾದ, ಪ್ರಕೃತಿಗೆ ವಿರುದ್ಧವಾದ ಅಸುರ ಜೀವನ ಕ್ರಮಕ್ಕೆ ನಾನು ಅದಾಗಲೇ ಹೊಂದಿಕೊಂಡದ್ದರಿಂದ - ಆಕಾಶವಾಣಿಯ ಬೆಳಗಿನ ಪಾಳಿಯು ಪ್ರಾರಂಭದಲ್ಲಿ ನನ್ನನ್ನು ಕೆಣಕಿದ್ದು ಮತ್ತು ಕಿರಿಕಿರಿ ಎನ್ನಿಸಿದ್ದು ಸಹಜ. ಬರಬರುತ್ತ ಅದಕ್ಕೂ ಹೊಂದಿಕೊಂಡೆ. ಮಾತ್ರವಲ್ಲ, ಕೆಲವೇ ವರ್ಷಗಳಲ್ಲಿ... ಬೆಳಗಿನ ಪಾಳಿಯನ್ನು ನಾನು ಇಷ್ಟಪಟ್ಟು ಹಾಕಿಸಿಕೊಳ್ಳತೊಡಗಿದೆ. ಹೊಸತಾಗಿ ಸೇರಿದವರಿಗೆ - ಅದು ಶಾಲೆಯಿರಲಿ ; ಹಾಸ್ಟೆಲ್ ಇರಲಿ ; ಉದ್ಯೋಗವಿರಲಿ - ಎಲ್ಲಾ ಸ್ಥಳಗಳಲ್ಲೂ ಅದರದರದ್ದೇ ಆದ ಶೈಲಿಯ ಆರಂಭಿಕ ಹಿಂಸೆ ಇದ್ದೇ ಇರುತ್ತದೆ. ಆಕಾಶವಾಣಿಯೂ ಅದಕ್ಕೆ ಹೊರತಾಗಿರಲಿಲ್ಲ.

ಅದನ್ನು ಬೇಕಿದ್ದರೆ Starting Trouble ಅನ್ನಿ; ಅಥವ... Probationary Period ಅನ್ನಿ; ಅಥವಾ ಎಲ್ಲವನ್ನೂ (!) ಕಲಿತು, ಗಟ್ಟಿಯಾಗುವ ಕಾಲ - ಎಂದರೂ ತಪ್ಪಲ್ಲ. ಅದಾಗಲೇ - ಮೆಚ್ಚಿದ ಉದ್ಯೋಗದ ಅಚ್ಚಿಗೆ ಬಿದ್ದಾಗಿದ್ದ ನಾನು, ಅದೇ ವೃತ್ತದಲ್ಲಿ ಸುತ್ತುವುದು ಅನಿವಾರ್ಯವಿತ್ತು. ನಾನೂ ಸುತ್ತಿದೆ. ಮೂವತ್ತೆಂಟು ವರ್ಷಗಳಿಂದ ಬಿಡದೆ ಸುತ್ತಿದ್ದೇನೆ. ಈಗ ಒಂದೊಂದೇ ಸುತ್ತನ್ನು ಬಿಚ್ಚಿ, ನಿಮ್ಮೆದುರು ಹರವುತ್ತಿದ್ದೇನೆ. ಬೇವು - ಬೆಲ್ಲದ ಬಟ್ಟಲು... ಇವೆರಡೂ ನನ್ನ ಸಂಚಿಯಲ್ಲಿದೆ. ಆ ಸಂಚಿಯನ್ನು ಬಿಚ್ಚಿ  ಬೇವು ಹೆಚ್ಚೋ ಬೆಲ್ಲ ಹೆಚ್ಚೋ - ಎಂದು ಈಗ ಲೆಕ್ಕ ಹಾಕುತ್ತಿದ್ದೇನೆ. ನನ್ನ ಲೆಕ್ಕಾಚಾರ ಇನ್ನೂ ಶುರುವಾಗಬೇಕಷ್ಟೇ. (ನಡೆದು ಬಂದ ದಾರಿ....ಎಂಬ ಮಾಲಿಕೆಯಲ್ಲಿ ನನ್ನ ಅಂದಾಜು ಲೆಕ್ಕಾಚಾರವನ್ನು ಸಂಕ್ಷೇಪವಾಗಿ ಈಗಾಗಲೇ ದಾಖಲಿಸಿದ್ದೇನೆ. 2015 ರಲ್ಲಿ ದಾಖಲಿಸಿರುವ ಅದರ 18 ಕಂತುಗಳು ನನ್ನ Blog ನಲ್ಲಿ ಇವೆ. krishnachaitanyaa.blogspot.in)


ನನಗೆ ಈಗಲೂ ನೆನಪಾಗುತ್ತದೆ. ಕೆಲಸಕ್ಕೆ ಸೇರಿ ನಾಲ್ಕೈದು ತಿಂಗಳಾಗಿರಬಹುದು. ಅದೊಂದು ದಿನ ಸಂಜೆಯ ಪ್ರಸಾರಕಾರ್ಯದ ಪಾಳಿಯು ನನ್ನದಾಗಿತ್ತು. ಅಂದು..ಒಂದು ಕಾರ್ಯಕ್ರಮವು ಐದು ನಿಮಿಷದಷ್ಟು ಕಡಿಮೆ ಬಿದ್ದಿತ್ತು. ಹದಿನೈದು ನಿಮಿಷದ ಅವಧಿಗೆಂದು ಹತ್ತೇ ನಿಮಿಷದ ಕಾರ್ಯಕ್ರಮ ಒದಗಿಸಿದ್ದರು. ಹಾಗೆ ಕಡಿಮೆಯಾದಾಗ ಜಾಗ ತುಂಬಿಸಲಿಕ್ಕೆಂದೇ ಒಳ್ಳೊಳ್ಳೆಯ ವಾದ್ಯ ಸಂಗೀತಗಳ ಗ್ರಾಮೋಫೋನ್ ತಟ್ಟೆಗಳನ್ನು ನಾವು ಸಿದ್ಧವಾಗಿಟ್ಟುಕೊಂಡಿರುತ್ತಿದ್ದೆವು. ನನ್ನ ಮೆಚ್ಚಿನ - ಶಿವಕುಮಾರ್ ಶರ್ಮ ಅವರ ಸಂತೂರ್, ಹರಿಪ್ರಸಾದ್ ಚೌರಾಸಿಯಾ ಅವರ ಬಾನ್ಸುರಿ, ಬ್ರಿಜ್ ಭೂಷಣ್ ಕಾಬ್ರಾ ಅವರ ಗಿಟಾರ್ ವಾದನದ ಮುದ್ರಿಕೆಯೂ ಅಲ್ಲಿ ಸಿದ್ಧವಾಗಿತ್ತು. ಆದರೆ ಅದೆಲ್ಲಿಂದೋ ನನಗೊಂದು ಮೂಡ್ (mood) ಬಂತು ನೋಡಿ ! ನಾನೇ ಪಟ್ಟಾಗಿ ಕೂತು " ದಾಶರಥೇ ರಘುರಾಮನ ನೆನೆದರೆ ಈ ಭವಸಾಗರ ದಾಟುವುದೋ...ದೋಷರಹಿತ ಶ್ರೀ ರಾಮನ ನೆನೆದರೆ ಬಹು ಸುಖ ಸಂಪದ ದೊರಕುವುದೋ.." ಅಂತ ಒಂದು ಭಕ್ತಿ ಗೀತೆಯನ್ನು ಹಾಡಲು ಶುರು ಮಾಡಿದೆ. 

ನಮ್ಮ ವ್ಯವಸ್ಥೆಯಲ್ಲಿ ಪ್ರಸಾರದ ಮೊದಲ ಕೇಳುಗರಾಗಿ Studio ದ ಹೊರಗೆ ಕೂತು, ಪ್ರಸಾರದ ಒಟ್ಟಾರೆ ಉಸ್ತುವಾರಿ ಹೊರಬೇಕೆಂದು ವಿಧ್ಯುಕ್ತವಾಗಿ ನಿಯುಕ್ತರಾಗಿರುವ ಡ್ಯೂಟಿ ಆಫೀಸರ್ ಎನ್ನುವವರಿರುತ್ತಾರೆ. ಅವರಿಗೆ ಸ್ಟುಡಿಯೋದ ಹೊರಗೆ ಇರುವ ಡ್ಯೂಟಿ ರೂಂ ಎಂಬಲ್ಲಿ ಕುಳಿತು, ಪ್ರಸಾರವಾಗುವ ಎಲ್ಲವನ್ನೂ ಒಂದಕ್ಷರ ಬಿಡದೆ ರೇಡಿಯೋದಲ್ಲಿ ಕೇಳಿಸಿಕೊಳ್ಳುವುದೇ ಮುಖ್ಯ ಕೆಲಸ.

ಅಂದೂ.. ಹೊರಗೆ ಒಬ್ಬ ಡ್ಯೂಟಿ ಆಫೀಸರ್ ಕೂತಿದ್ದರು.


ನಾನು ಅತ್ಯುತ್ಸಾಹದಿಂದ ಯಾವಾಗ ಸ್ಟುಡಿಯೋದಲ್ಲಿ ರಾಮನಾಮ ಸ್ಮರಣೆ ಮಾಡತೊಡಗಿದೆನೋ - ಆಗ ಹೊರಗೆ ಕರ್ತವ್ಯದಲ್ಲಿದ್ದ ಆ ವ್ಯಕ್ತಿಯು ಓಡೋಡಿ ಬಂದು, ಧಡ್ ಅಂತ ಸ್ಟುಡಿಯೋದ ಬಾಗಿಲು ತೆಗೆದು ಕೈ ಬಾಯಿ ಸನ್ನೆ ಮಾಡತೊಡಗಿದರು. ಎನೌನ್ಸರ್ ಗಳು ಮಾತಾಡುವ fader ನ್ನು ತೆಗೆದು ಆಗ ನಾನು ಹಾಡುತ್ತಿದ್ದೆನಲ್ಲಾ! ಹಾಗೆ fader ತೆಗೆದಿದ್ದಾಗ ಅಲ್ಲಿ ಯಾರು ಮಾತಾಡಿದರೂ ಅದು ರೇಡಿಯೋ ಕೇಳುಗರಿಗೆಲ್ಲ ಕೇಳಿ ಬಿಡುತ್ತಿದ್ದುದರಿಂದ - ಪಾಪ, ಅವರು ಸನ್ನೆ ಭಾಷೆಯಲ್ಲೇ "ಏನು ಹೋಗುತ್ತಿದೆ?" ಅಂತ ಕೇಳುತ್ತಿದ್ದರು. "ಸಮಯ ತುಂಬಲು ನಾನೇ ಹಾಡುತ್ತಿದ್ದೇನೆ " - ಅಂತ ನಾನು ಸನ್ನೆ ಮಾಡಿದೆ. ಅವರು ಸನ್ನೆಯಲ್ಲಿಯೇ fader ಮುಚ್ಚಲು ಹೇಳಿದರು. ಆಗ ನನ್ನ ಹಾಡನ್ನು ಅರ್ಧದಲ್ಲೇ ನಿಲ್ಲಿಸಿ, fader ನ್ನು ಮುಚ್ಚಿ ವಾದ್ಯ ಸಂಗೀತವನ್ನು play ಮಾಡಿ, " ಏನಾಯ್ತು?" - ಅಂತ Transmission Executive / Duty Officer ಅವರ ಮುಖ ನೋಡಿದೆ.


"ಏನ್ ಮೇಡಂ ನೀವು? ನೀವ್ ಯಾಕೆ ಹಾಡೋಕ್ ಹೋದ್ರಿ? ಹಾಗೆಲ್ಲ ಹಾಡೋ ಹಂಗಿಲ್ಲ. ಎಷ್ಟು ಕೊಟ್ಟಿದ್ದಾರೋ ಅಷ್ಟೇ ಪ್ರೋಗ್ರಾಮ್ ಹಾಕ್ಬೇಕು. ನಿಮಗೆ ಹಾಡೋಕ್ ಬರತ್ತಂತ ನೀವೇ ಹಾಡಿ ಬಿಡೋದಾ?" ಅಂದರು. ಆಗ ನಾನು "ಹಾಗಲ್ಲ, ಅದದೇ ಸಂಗೀತವನ್ನು ಎಷ್ಟು ಸಾರಿ ಹಾಕುವುದು ಅಂದುಕೊಂಡು - ಒಂದು ಬದಲಾವಣೆ ಇರಲಿ ಅಂತ - ನಾನೇ ಹಾಡಿದೆ. ತಪ್ಪಾಯಿತಾ? ಹಾಡಬಾರದಿತ್ತಾ?" ಅನ್ನುವಾಗಲೇ This is All India Radio,The News, Read by spoorthi sinha...ಅಂತ ದೆಹಲಿಯಿಂದ ವಾರ್ತೆ ಬರತೊಡಗಿತು. ಆ ಪ್ರಸಾರಾಧಿಕಾರಿಯ ಜೊತೆಗೆ ಮಾತಾಡುತ್ತ ಮುಂದಿನ ಕಾರ್ಯಕ್ರಮಕ್ಕೆ announcement ಕೊಡುವುದನ್ನೂ ಮರೆತ ನನ್ನಿಂದ ಒಂದರ ಜೊತೆಗೆ ಇನ್ನೊಂದು ತಪ್ಪಾಗಿತ್ತು. "ಛೆ! ಇನ್ನೊಂದ್ ತಪ್ಪು ಮಾಡಿದ್ರಲ್ಲಾ? ಏನಾದರೂ ಮಾಡಿಕೊಳ್ಳಿ; ನಾಳೆ ಪ್ರೋಗ್ರಾಂ ಮೀಟಿಂಗಿನಲ್ಲಿ ನಿಮಗ್ ಮದ್ವೆ ಇದೆ. ನೋಡ್ತಾ ಇರಿ. ನಂಗೊತ್ತಿಲ್ಲ. ನಾನಂತೂ ಎಲ್ಲವನ್ನೂ detail ಆಗಿ transmission report ನಲ್ಲಿ ಬರದ್ ಹಾಕ್ತೇನೆ. ನಾಳೆ ಯುದ್ಧಕ್ಕೆ ತಯಾರಾಗಿ ಬನ್ನಿ; ಆಯ್ತಾ?" ಅಂತ ಸರಸರ ಹೊರಟುಹೋದರು. ಆಗ, ನಾನೂ ಅವರ ಹಿಂದೆಯೇ ಓಡಿದೆ.


ಹೊರಗೆ ಹೋದ ಅವರು ತಮ್ಮ ಸಿಂಹಾಸನದಲ್ಲಿ ಕೂತು ಒಂದು ಪುಟದ ತುಂಬ - ನನ್ನ ಪ್ರತಾಪವನ್ನೆಲ್ಲ ಬರೆದು, ದಂಡಯಾತ್ರೆ ಮಾಡಿದ ಅಲೆಕ್ಸಾಂಡರ್ ಮಹಾಶಯ - ಕೊನೆಗೊಮ್ಮೆ ನಿಟ್ಟುಸಿರು ಬಿಟ್ಟಂತೆ ಉಸಿರು ಚೆಲ್ಲಿ ಕುರ್ಚಿಯ ಹಿಂಬದಿಗೆ ಒರಗಿದರು .
ನಾನೂ ಅವರ ಹಿಂದೆ ಹೊರಗೆ ಓಡಿ ಬಂದಿದ್ದೆನಲ್ಲಾ? "ನನಗೆ ಗೊತ್ತಿರಲಿಲ್ಲ; ವೈವಿಧ್ಯತೆ ಇರಲಿ ಅಂತ ಹೀಗೆ ಮಾಡಿದೆ; ಅದನ್ನೆಲ್ಲಾ ರಿಪೋರ್ಟ್ ಮಾಡಲೇ ಬೇಕಾ? ಇನ್ನು ಮುಂದೆ ಹೀಗೆ ಆಗದಿದ್ದರೆ ಆಯ್ತಲ್ಲಾ ?...." ಎಂದೆಲ್ಲಾ ಅವರನ್ನು ಒಪ್ಪಿಸುವ ನನ್ನ ಎಲ್ಲ ಪ್ರಯತ್ನವೂ ವ್ಯರ್ಥವಾಯಿತು. "ಅದೆಲ್ಲ ನನಗ್ಗೊತ್ತಿಲ್ಲ. ನಿಮಗೆ ಏನು ಹೇಳಲಿಕ್ಕಿದೆಯೋ ಅದನ್ನೆಲ್ಲಾ ನಾಳೆಯ ಮೀಟಿಂಗಿನಲ್ಲಿ ಹೇಳಿ..." ಅಂತ ಅವರು ಮುಗುಮ್ಮಾಗಿ ಚಾಡಿ ಬರೆಯಲು
ಕೂತರು. (ಅದು ಅಂದಿನ ನನ್ನ ಅನ್ನಿಸಿಕೆ! ಆದರೆ  ಅವರು ತಮ್ಮ ಕರ್ತವ್ಯ ಮಾಡಿದ್ದರು.)

ನಾನು ಪೆಚ್ಚಾದೆ. ಅದಾಗಲೇ ಮೀಟಿಂಗಿನಲ್ಲಿ ದಿನವೂ ನಡೆಯುವ ಕದನಕುತೂಹಲ - ರಾಗ, ತಾನ, ಪಲ್ಲವಿಯನ್ನು ಬಹಳ ಸಾರಿ ಕಂಡದ್ದರಿಂದ ನಾಳೆಯ ಚಿಂತೆಯು ಆಗಲೇ ನನ್ನ ತಲೆಯನ್ನು ಹೊಕ್ಕು ತಲೆಯೊಳಗೆಲ್ಲ ಕೈಯಾಡಿಸತೊಡಗಿತು. ಅಂತಹ ಕೆದರಿದ ತಲೆಯಿಂದಾಗಿ ಆ ದಿನದ ಪ್ರಸಾರದಲ್ಲಿ ಇನ್ನೂ ಒಂದೆರಡು ತಪ್ಪುಗಳಾದವು. ತಪ್ಪು ಮಾಡಿದ ಕೂಡಲೇ ನನಗೇ ಗೊತ್ತಾಗುತ್ತಿತ್ತು. ತಕ್ಷಣವೇ ಹೊರಗೆ ಬಂದು, ಆ ಡ್ಯೂಟಿ ಆಫೀಸರನ್ನು ಇಣುಕಿ ನೋಡುತ್ತಿದ್ದೆ. ಅವರು ಇನ್ನೊಂದು ಬೇಟೆ ಸಿಕ್ಕಿದ ಖುಷಿಯಿಂದ, ತುಟಿಯ ಸಂದಿಯಲ್ಲೇ ನಗುತ್ತ, ತಲೆ ತಗ್ಗಿಸಿ ಸರಸರ ಬರೆಯುತ್ತಿದ್ದಂತೆ...ನನಗೆ ಕಾಣುತ್ತಿತ್ತು!


ಅಂತೂ ಇಂತೂ ಆ ದಿನದ ಪ್ರಸಾರವನ್ನು ನ ಭೂತೋ ನ ಭವಿಷ್ಯತಿ ಎಂಬಂತೆ ಹೇಗೋ - ಮುಗಿಸಿದೆ.


ಅನಂತರ ನಾಳೆಯ ಕನಸು ಕಾಣುತ್ತ ಹಾಸ್ಟೆಲ್ ಸೇರಿಕೊಂಡೆ. ರಾತ್ರಿ ಹನ್ನೆರಡು ಗಂಟೆ ಆಗಿತ್ತು.... ಆಫೀಸಿನ ಕಾರು ನನ್ನನ್ನು ಹಾಸ್ಟೆಲ್ಲಿನ ಮುಂದೆ ಇಳಿಸಿ ನಿಷ್ಕರುಣೆಯಿಂದ ಹೋದಂತೆ ಅನ್ನಿಸಿತು. ಒಳಗೆ ಬಂದೆ. ಎಲ್ಲರೂ ಹಾಯಾಗಿ ನಿದ್ದೆಯಲ್ಲಿದ್ದರು. ನನ್ನ ಕೋಣೆಯ ಮೇಜಿನ ಮೇಲೆ ನನ್ನ ಸಹವಾಸಿ ಗೆಳತಿಯು ನನ್ನ ಊಟ ತೆಗೆದು ಇಟ್ಟಿದ್ದಳು. ಅದನ್ನು ಮುಟ್ಟಿದರೆ...ತಣ್ಣಗೆ ಕೊರೆಯುತ್ತಿತ್ತು.


ಹಾಸ್ಟೆಲಿನ ನಾಯಿಯ ನೆನಪಾಯಿತು. ಎತ್ತಿಕೊಂಡು ಹೋಗಿ ಅದರೆದುರಿಗೆ ಸುರಿದೆ. ಹೊಟ್ಟೆಗೆ ಒಂದಿಷ್ಟು ನೀರು ಸುರಿದುಕೊಂಡು ಮಂಚದ ಮೇಲೆ ಒರಗಿದೆ. ಎಷ್ಟೋ ಹೊತ್ತು ಹೊರಳಾಟ. ಮತ್ತದೆಷ್ಟೋ ಹೊತ್ತಲ್ಲಿ...ಜೊಂಪು ಹತ್ತಿತು...
ಯಾವುದೋ ಲೋಕದಲ್ಲಿದ್ದಂತೆ....ಅಂದು ಕಸಿವಿಸಿಯ ನಿದ್ದೆ. "ಆಹಾ ನನ್ನ ಮದ್ವೆಯಂತೆ, ಓಹೋ ನನ್ನ ಮದ್ವೆಯಂತೆ..." ನಾಳೆಯ ಮದುವೆಯದ್ದೇ ರಾತ್ರಿಯೆಲ್ಲಾ ಕನಸು. ನನ್ನನ್ನು ಒದೆದು ಎತ್ತಿ ಒಗೆದಂತೆ ಏನೇನೋ ಕನವರಿಕೆ. ಚಿತ್ತು ಚಿತ್ತಾದ ಬಿಳಿಹಾಳೆಯನ್ನು ಉಜ್ಜಿ ಒರೆಸುವ ವ್ಯರ್ಥವಾದ ಹೋರಾಟದಲ್ಲಿ ಅಂತೂ ಬೆಳಗಾಯಿತು....
ಮರುದಿನ ಬೆಳಿಗ್ಗೆ ಆಫೀಸಿಗೆ ಹೋದೆ. ಒಳಗೆ ಹೊಗ್ಗುವಾಗಲೇ ಆಗ ಆಕಾಶವಾಣಿಯ ಮಂಗಳೂರು ನಿಲಯದಲ್ಲಿ ಮುಖ್ಯ ಪದವಿಯಲ್ಲಿದ್ದ, ಪ್ರಥಮ ದಿನದಿಂದಲೂ ನನ್ನನ್ನು ಕಂಡು ಮುಖ ಗಂಟಿಕ್ಕುತ್ತಿದ್ದ ಮಹಿಳಾ ಅಧಿಕಾರಿಯು ನನಗೆ ಎದುರಾದರು. "ಏನೇ, ಎಷ್ಟು ಹೊತ್ತಿಗೆ ಆಫೀಸಿಗೆ ಬರುವುದು? ಗಂಟೆ ಎಷ್ಟೀಗ?" ಅಂದರು. ಗಂಟೆ ನೋಡಿಕೊಂಡೆ. ಸರಿಯಾಗಿ ಒಂಬತ್ತು ಗಂಟೆ ಐವತ್ತೈದು ನಿಮಿಷವಾಗಿತ್ತು. "ಏನು ಗಂಟೆ ನೋಡ್ತೀ? ಆಫೀಸು ಹತ್ತು ಗಂಟೆಗೆ ಆರಂಭವಾದರೆ ಅದಕ್ಕಿಂತ ಹದಿನೈದು ನಿಮಿಷ ಮೊದಲೇ ಬಂದಿರಬೇಕು." ಎಂದು ಹೇಳಿ ಕನ್ನಡಕದ ಸಂದಿಯಿಂದ ನೋಡಿದರು. "ಸರಿ ಮೇಡಂ" ಅಂದೆ. ಬಹುಶಃ ನಾನು ಉತ್ತರ ನೀಡಿದ ಧಾಟಿಯು ನಮ್ರತೆಯಿಂದ ತೊಯ್ದಿರಲಿಲ್ಲವೋ ಏನೋ!!? ಕಣ್ಣು ಕೆಕ್ಕರಿಸಿ ನೋಡುತ್ತಾ "ಏನು ಇನ್ನೂ ನಿಂತಿದ್ದೀಯಾ? ಹೋಗುಹೋಗು" ಅಂದರು. "ಇದು ಯಾವ ಸೀಮೆಯ ಹೆಂಗಸಪ್ಪ? ಇವತ್ತು ನನಗೆ ಇನ್ನೂ ಏನೇನು ಕಾದಿದೆಯೋ?" ಅಂದುಕೊಳ್ಳುತ್ತಾ ಡ್ಯೂಟಿರೂಮಿನ ಕಡೆಗೆ ಹೆಜ್ಜೆ ಹಾಕಿದೆ. ಹಾಜರಿ ಪುಸ್ತಕದಲ್ಲಿ ಸಹಿ ಮಾಡಿ ಪಿಳಿಪಿಳಿ ಕಣ್ಣು ಬಿಡುತ್ತ ಕೂತೆ.

ಆಗ ಜವಾನನೊಬ್ಬ ಬಂದು "ಮೇಡಂ ಕರೀತಿದ್ದಾರೆ ಬನ್ನಿ" ಅಂತಂದ. ಆಗಲೇ ಅಧಿಕಾರಿಗಳ Program Meeting ಶುರುವಾಗಿತ್ತು. ಅದು ಒಂಥರ...ಒಡ್ಡೋಲಗ. ಬೆಳಿಗ್ಗೆ ೧೦ ಘಂಟೆಗೆ ಪ್ರತಿದಿನವೂ ನಡೆಯುತ್ತಿತ್ತು. ಆ ಒಡ್ಡೋಲಗಕ್ಕೆ ಆಗ Announcer ಗಳಿಗೆ ಪ್ರವೇಶವಿರಲಿಲ್ಲ. ಯಾವುದೇ ಶೈಕ್ಷಣಿಕ ಅರ್ಹತೆಯಿಲ್ಲದಿದ್ದರೂ ವಿದ್ಯಾಭ್ಯಾಸ ಕಡಿಮೆಯಾಗಿದ್ದರೂ ಅತ್ಯುತ್ತಮ ಧ್ವನಿಯುಳ್ಳ ನಿರೂಪಕರನ್ನು ಮಾತ್ರವೇ Announcer ಗಳಾಗಿ ಆಯ್ದುಕೊಳ್ಳುತ್ತಿದ್ದ ಆಕಾಶವಾಣಿಯ "ಒಂದಾನೊಂದು ಕಾಲದಲ್ಲಿ" ರೂಪಿಸಿದ್ದ ನಿಯಮಾವಳಿಯದು. ನಾವು ಪದವೀಧರರು ಆಯ್ಕೆಯಾಗುತ್ತಿದ್ದ ಕಾಲದಲ್ಲೂ ಅದೇ ನಿಯಮವೇ ಮುಂದುವರೆದಿತ್ತು. ಪ್ರಸಾರದ ಸಂದರ್ಭದಲ್ಲಿ ನಡೆದ ಘಟನೆಗಳಿಗೆ ಸಂಬಂಧಿಸಿದಂತೆ Announcer ಗಳ ವಿವರಣೆಯನ್ನು ಕೇಳಬೇಕಿದ್ದರೆ, ಮೀಟಿಂಗಿನ ಮಧ್ಯೆ ಅವರನ್ನು studio ದಿಂದ ಕರೆಸುತ್ತಿದ್ದರು. ಆಗ ಅಲ್ಲಿ ನೆರೆದಿದ್ದ ಸದಸ್ಯರಲ್ಲಿ, ಸೌಜನ್ಯವುಳ್ಳವರು ನಮಗೆ ಕುಳಿತುಕೊಳ್ಳುವಂತೆ ಸೂಚಿಸುತ್ತಿದ್ದರು. ಹಾಗೆ ಯಾರೂ ಸೌಜನ್ಯ ತೋರದಿದ್ದರೆ - ನಮ್ಮದು, ನಿಂತುಕೊಂಡೇ ಮಾತು-ಕತೆ. ಹಾಗೆ ನಿಂತುಕೊಂಡೇ ವಿವರಣೆ ಕೊಟ್ಟ ಮೇಲೆ "ನೀವಿನ್ನು ಹೋಗಬಹುದು" ಎಂದು ಹೇಳಿ - ಅಲ್ಲಿಂದ ನಮ್ಮನ್ನು ಅಟ್ಟುವಂತೆ ವರ್ತಿಸುತ್ತಿದ್ದವರೂ ಇದ್ದರು. ಒಟ್ಟಿನಲ್ಲಿ ಎನೌನ್ಸರ್ ಎಂದರೆ "ಯಃಕಶ್ಚಿತ್ " - ಎಂಬ ಭಾವವನ್ನು ದಿನವೂ ಉದ್ಘೋಷಕರಲ್ಲಿ ಮೂಡಿಸುತ್ತಿದ್ದ ಪವಿತ್ರ ತಾಣವೇ ಆ ಮೀಟಿಂಗ್. ಎನೌನ್ಸರುಗಳ ಜನಪ್ರಿಯತೆಯಿಂದ ಮೂಡಿದ ಮತ್ಸರವು ಒಂದು ವರ್ಗದಲ್ಲಿ ಮಡುಗಟ್ಟಿದ್ದೂ ಇಂಥ ವರ್ತನೆಗಳಿಗೆ ಕಾರಣವಿರಬಹುದು. ಇದು ನನ್ನ ಒಟ್ಟಾರೆ ಅನುಭವದಿಂದ ಹುಟ್ಟಿದ ಕಾರಣ ಭಾವ.

ಅಂದೂ ಹಾಗೇ ಆಯಿತು. ಕರೆಯಲು ಬಂದಿದ್ದ ಜವಾನನ ಹಿಂದೆ ನಾನು ಹೋದೆ. "ಬನ್ನಿ. ನಿನ್ನೆ ಏನು ಮಾಡಿದ್ರಿ?" ಅಂತ ನಿಲಯದ ಹಿರಿಯ ಮಹಿಳಾ ಅಧಿಕಾರಿ ಪ್ರಶ್ನಿಸಿದರು. "ಹೌದು ಮೇಡಂ. ನನಗೆ ಗೊತ್ತಿರಲಿಲ್ಲ. ಮುಂದಿನ ಕಾರ್ಯಕ್ರಮ ಪ್ರಾರಂಭಿಸಲು ಇನ್ನೂ 3 ನಿಮಿಷವಿತ್ತು. ಅದಕ್ಕೇ ಒಂದು ಸಣ್ಣ ಹಾಡನ್ನು ಹಾಡಿದೆ....ಹಾಡು ಚೆನ್ನಾಗಿಯೇ ಬಂತು.. " ಎನ್ನುವಾಗಲೇ ನನ್ನ ಮಾತನ್ನುತುಂಡರಿಸಿ "ಹೇಳಿದಷ್ಟು ಕೆಲಸ ಮಾಡ್ರೀ. ನಿಮ್ಮ ಬುದ್ಧಿ ಉಪಯೋಗಿಸಿ ಪ್ರತಿಭೆಯನ್ನೆಲ್ಲ ಪ್ರದರ್ಶಿಸುವ ಸಮಯ ಅದಲ್ಲ. ನಿಮ್ಮವಿವರಣೆಯನ್ನು ಬರೆಹದ ರೂಪದಲ್ಲಿ ಕೊಡಬೇಕಾಗುತ್ತದೆ. Give it in writing..." ಎಂದು ಹೇಳುತ್ತಾ, "ಇವರಿಗೊಂದು ನೋಟ್ Issue ಮಾಡ್ರೀ .." ಅಂತ ಇನ್ನೊಬ್ಬ ಅಧಿಕಾರಿಗೆ ಆಜ್ಞಾಪಿಸಿದರು. "ನೀವಿನ್ನು  ಹೊರಡಿ" ಅಂತ ನನಗೆ ಅಪ್ಪಣೆಯಾಯಿತು.


ನಾನು ಅಲ್ಲಿಂದ ಹೊರಬಂದೆ. "ನನ್ನನ್ನು ಕರೆಸಿ, ವಿಚಾರಣಾಧೀನ ಕ್ರಿಮಿನಲ್ ಖೈದಿಯಂತೆ ನಿಲ್ಲಿಸಿ, ಮುಖತಃ ವಿವರಣೆ ಪಡೆದ ಮೇಲೆ, ಪುನಃ ಬರವಣಿಗೆಯಲ್ಲಿ ವಿವರ ಪಡೆಯುವ ಉದ್ದೇಶ ಏನಿರಬಹುದು? ಇವರಿಗೆ ನಿಜವಾಗಿ ಬೇಕಾದ್ದೇನು?" ಎಂದು ನನಗೆ ಹೊಳೆಯಲಿಲ್ಲ . ಬೆಳಿಗ್ಗೆ ಬಂದಾಗಿನಿಂದ ಈ "ತಾಟಕಿ"ಯಿಂದ ಬರೇ ಪಾಠ ಕೇಳುವುದೇ ಆಗಿ, ಉತ್ಸಾಹ ತಗ್ಗಿ ಸಪ್ಪೆಯಾಗಿದ್ದೆ. ಹಾಗೆ ತಣ್ಣಗೆ ಕೂತಿರುವಾಗಲೇ ಜವಾನ ಬಂದು, ಒಂದು note ಕೊಟ್ಟು ಹೋದ. "ಓಹೋ ...ಬಹಳ ಚುರುಕಿನ ವ್ಯವಸ್ಥೆ..." ಅಂದುಕೊಂಡು, ನಾನೂ ಚುರುಕಾದೆ. ತಕ್ಷಣ, ಸಹೋದ್ಯೋಗಿಗಳ ಸಹಾಯ ಪಡೆದು, (ಆಗ ಇಂಗ್ಲಿಷಿನಲ್ಲಿ ಬರೆಯುವ ಸರಕಾರೀ ಭಾಷೆಯ ಅಭ್ಯಾಸವಿರಲಿಲ್ಲ) ಅಂತೂ ವಿವರಣೆಯನ್ನು ಬರೆದು ಕೊಟ್ಟೆ. ಅದರ ಮರುದಿನವೇ ಇನ್ನೊಂದು ಎಚ್ಚರಿಕೆಯ ಪತ್ರ (memo) ಕೊಟ್ಟರು. ನನ್ನಿಂದ ಗಂಭೀರ ಅಪರಾಧವಾಗಿದೆಯೆಂದು ಘೋಷಿಸಿ, ಅದನ್ನು ನನ್ನ Personal file ಗೆ ಸೇರಿಸಿ ಕೃತಾರ್ಥರಾದರು.


ಈಗ ಇದನ್ನೆಲ್ಲ ನೆನೆಸಿಕೊಂಡು ಮುಸಿಮುಸಿ ನಗುತ್ತೇನೆ. ನೀವೇ ಯೋಚಿಸಿ...ಈಗ ಹೇಗಿದೆ? ಕಾಲ ಎಷ್ಟೊಂದು ಬದಲಾಗಿದೆ? ನಮ್ಮನ್ನು ಅರೆದು ಉಜ್ಜಿ, ಮೊದಲೇ ಒಪ್ಪಿಗೆ ಪಡೆದ ಮಿತವಾದ ಶಬ್ದಗಳನ್ನಷ್ಟೇ ಹೇಳಲು, ಗಿಣಿಪಾಠ ಒಪ್ಪಿಸಲು ಕಲಿಸಿದ ಮಂದಿಯೇ ಇಂದು..."ಒಂದಿಷ್ಟು LIVELY ಯಾಗಿ ಮಾತಾಡ್ರೀ ... ಬರಲಿ ನಿಮ್ಮ ಹಾಡುಹಸೆ, ಕತೆ ಗಿತೆ ಚಾಟೂಕ್ತಿ ಸೂಕ್ತಿ ಎಲ್ಲ ... ಎಲ್ಲವೂ ಬರಲಿ. ನೋಡಿ, ಆ FM ನವರು ಮುಂದಕ್ಕೆ ಹೋಗಲು ನಾವು ಬಿಡಬಾರದು." ಅಂತಾರೆ. ಬೇರೆ ಖಾಸಗಿ Channel ಗಳ ಜೊತೆಗೆ ಆಕಾಶವಾಣಿಯೂ ಸ್ಪರ್ಧೆಗಿಳಿಯಬೇಕಾದ ಸನ್ನಿವೇಶ ಈಗ ನಿರ್ಮಾಣವಾಗಿದೆ. "ಆಡೂ.. ಆಡಿ ನೋಡೂ..." ಎಂಬ ಮೇಲಾಟದ ಕಸರತ್ತು ಶುರುವಾಗಿದೆ. ಅವತ್ತು ನನ್ನನ್ನು ಹಿಂದಕ್ಕೆ ಎಳೆದದ್ದೂ - ಹಳೆಯ ನಿಯಮಾವಳಿಯ ಪುಸ್ತಕದಲ್ಲಿ ಗೀಚಿದ್ದನ್ನು ಸರಿಯಾಗಿ ಅರ್ಥೈಸಲಾಗದ ಗೊಡ್ಡು ಸಂಪ್ರದಾಯಕ್ಕೆ ಬೆಲೆ ಕೊಟ್ಟೇ. ಇವತ್ತು ಹಿಂದಕ್ಕೆ ಎಳೆಯಲು, ನಾನಲ್ಲ - ಇನ್ಯಾರೋ...F M. ಎಂಬುದು ಸಿಕ್ಕಿದೆ. ಅಂತೂ...ಹಿಂದೆ ಎಳೆಯಲು ಒಂದಲ್ಲ ಒಂದು - ಗುರಿ; ಅದು ಆಕಾಶವಾಣಿಯ ಪರಿ. ಅಂತೂ ಯಾರೂ... ಮುಂದಕ್ಕೆ ಹೋಗಬಾರದು. ಹಿಂದೆಯೇ ಇರಬೇಕು. ತಮಗಿಂತ ಹಿಂದಿರಬೇಕು. ನಾವು ಎಲ್ಲರಿಗಿಂತ ನೂರು ಹೆಜ್ಜೆ ಮುಂದಿರಬೇಕು - ಅಂದುಕೊಂಡರೆ ತಪ್ಪೇನಿಲ್ಲ. ಅದಕ್ಕಾಗಿ ಧನಾತ್ಮಕವಾಗಿ ಪ್ರಯತ್ನಿಸಿದರೆ... ಅದು ಆರೋಗ್ಯಕರ ಸ್ಪರ್ಧೆಯೂ ಆದೀತು. ಆದರೆ "ಎಲ್ಲರೂ ನಮ್ಮ ಹಿಂದೆಯೇ ಇರಬೇಕು" ಅಂದುಕೊಂಡು ಮಾಡುವ ಹಿಂದಕ್ಕೆಳೆಯುವ ಕೆಲಸಗಳು ಯಶಸ್ಸು ಕಾಣುವುದು ಕಷ್ಟ. ಇಂಥ ಧೋರಣೆಯೇ ಇಂದಿನ ಆಕಾಶವಾಣಿಯ ಒಣ ವಾತಾವರಣಕ್ಕೆ ಮುಖ್ಯ ಕಾರಣ. ಪ್ರಯೋಗಶೀಲರಾಗುತ್ತ ಒಳ್ಳೆಯದನ್ನು ಪ್ರೋತ್ಸಾಹಿಸುತ್ತ "ಅಜ್ಜ ನೆಟ್ಟ ಆಲದಮರಕ್ಕೆ ಜೋತು ಬೀಳುವ" ಚಾಳಿಯನ್ನು ಬಹಳ ಹಿಂದೆಯೇ ಬಿಟ್ಟು ಬಿಡಬಹುದಿತ್ತು. ಆದರೆ ಅದಾಗಲಿಲ್ಲ.


ಮುವ್ವತ್ತು ವರ್ಷಗಳ ಹಿಂದೆ ನಾನು ಹಾಡಿದ್ದು, ಚಿತ್ರಗೀತೆಗಳನ್ನು ನಿರೂಪಣೆಯೊಂದಿಗೆ ಪ್ರಸ್ತುತಪಡಿಸಿದ್ದು...ಸಹಜತೆಗೆ ಒತ್ತುಕೊಟ್ಟದ್ದು...ಹೀಗೆ ಮಾಡಿದ್ದೆಲ್ಲವೂ - ಆಗ ಅಪರಾಧವಾಗಿತ್ತು. ಮುವ್ವತ್ತು ವರ್ಷಗಳ ಕಾಲ, ನಮ್ಮನ್ನು ಹಿಂಡಿ ಹಿಂಡಿ, ನೀರಸರನ್ನಾಗಿ ಮಾಡಿದ ಆ ಎಲ್ಲಾ ಕಸರತ್ತು ಮುಗಿಸಿ, ಈಗ ಹೊಸ ವರಸೆ ಶುರುವಾಗಿದೆ. "ಮೈಕಿನೆದುರಿಗೆ ನಿಮ್ಮ ಸ್ವಚ್ಚಂದ ಲಹರಿ ಬರಲಿ " ಎಂದು ಎನೌನ್ಸರುಗಳಿಂದ ಈಗ ನಿರೀಕ್ಷಿಸುತ್ತಿದ್ದಾರೆ. ಸಹಜ ಲಹರಿಯಲ್ಲಿದ್ದ ನಮ್ಮನ್ನೆಲ್ಲ ಗಿಣಿ ಪಾಠವನ್ನು ಒಪ್ಪಿಸುವ ಅರಗಿಣಿಗಳನ್ನಾಗಿ ದಶಕಗಳ ಕಾಲ ಅರೆದು ತೇದು ಕುಡಿಸಿ ರೂಪಿಸಿ, ಈಗ..."ಸ್ವಚ್ಛಂದವಾಗಿ ವಿಹರಿಸಿ " ಎಂದರೆ... ಎಷ್ಟೋ ಎನೌನ್ಸರ್ ಎಂಬ ಗಿಣಿಗಳಿಗೆ "ನಮಗೆ ರೆಕ್ಕೆಗಳಿವೆ; ನಾವೂ ಹಾರಬಲ್ಲೆವು" ಎನ್ನುವುದೇ ಮರೆತು ಹೋಗಿದೆ. ಎಲ್ಲರೂ ಸಾಕಿದ ಗಿಳಿಗಳಾಗಿ ಹೋಗಿದ್ದಾರೆ. ಸಭ್ಯತೆಯ ಎಲ್ಲೆ ಮೀರದೆ ಮೂಡಿ ಬರುವ ಸುಸಂಬದ್ಧ ಪ್ರಯೋಗಶೀಲ ಕಾರ್ಯಕ್ರಮಗಳನ್ನು ಅಂದೂ ಪ್ರೋತ್ಸಾಹಿಸಬಹುದಿತ್ತು. ಹೆದರಿಸಿ ತಟ್ಟಿ ಕುಟ್ಟಿ ಕೂರಿಸುವುದಕ್ಕಿಂತ, ಹಿತವೆನಿಸಿದ್ದನ್ನು ಒಪ್ಪಿ ಪ್ರೋತ್ಸಾಹಿಸಿ, ಅಸಂಬದ್ಧವೆನಿಸಿದ್ದಕ್ಕೆ ಮಾತ್ರ ತಡೆ ಹಾಕಬಹುದಿತ್ತು. ನೂರು ತಲೆಗಳಲ್ಲಿ ಸಾವಿರಾರು ಹೊಸ ಯೋಚನೆಗಳಿರುತ್ತವೆ - ಅಲ್ಲವೇ? ಸ್ಥಾನದ ಸೊಕ್ಕನ್ನು ಬಿಟ್ಟು, ಬಿಂಕ ಬಿಟ್ಟು
ಎಲ್ಲರೂ ಜತೆಯಾಗಿ ವಿಚಾರ ವಿನಿಮಯ ನಡೆಸಿ, ಅಂದೇ ಹೊಸ ಹೊಸ ರಸಗವಳವನ್ನು ಬಾನುಲಿಯಿಂದ ಪಸರಿಸಬಹುದಿತ್ತು. ಇನ್ನೂ ಬಲಿಷ್ಠವಾಗಿ ಸಂಸ್ಥೆಯನ್ನು ಕಟ್ಟಬಹುದಿತ್ತು. ಅದು ಇಂದಿಗೂ ಸಾಧ್ಯವಾಗುತ್ತಿಲ್ಲವಲ್ಲಾ...ಎಂಬ ನನ್ನ ನೋವಿಗೆ ಪರಿಹಾರವಿಲ್ಲ. ಅಂದು ನಾನಾಡಿದ ಆಟವೆಲ್ಲವೂ ಇತಿಮಿತಿಯಲ್ಲಿತ್ತು. ಕೇಳುಗರಿಂದ ಮೆಚ್ಚುಗೆಯ ಪತ್ರಗಳೂ ಬಂದಿದ್ದವು. ಆದರೂ ಅದು ಆಗ ಕೆಲವರಿಗೆ ಪಥ್ಯವಾಗಲಿಲ್ಲ. 

ಇಂದು ಹೊಸ ರಾಗವನ್ನು ಬಯಸುವ ಇವರೆಲ್ಲರೂ ನಿರೀಕ್ಷಿಸುತ್ತಿರುವುದು ಏನನ್ನು? ದುಡ್ಡು ಸಿಗುವುದಾದರೆ ವಾಣಿಜ್ಯ ಸಂಗ್ರಹದ ಹಪಹಪಿಗೆ ಬಿದ್ದು, ಎಲ್ಲಾ ಬಗೆಯ ಒಡಂಬಡಿಕೆ - ಒಮ್ಮತಕ್ಕೂ ಈಗ ಬರುತ್ತಿಲ್ಲವೇ? ಏನಿದೆಲ್ಲ ? ಒಮ್ಮೊಮ್ಮೆ "ಹಗಲು ವೇಷದ ಪರಮಾವಧಿ" ಎಂದು ಅನ್ನಿಸುವುದೂ ಇದೆ. ಏನೋ ಎಡಬಿಡಂಗಿತನ ಅನ್ನಿಸುವುದಿಲ್ಲವೆ? ಅತ್ತ ಸಿದ್ಧಾಂತವೆಂದುಕೊಳ್ಳಲು ಇದು ಸಿದ್ಧಾಂತವೂ ಅಲ್ಲ, ನೈತಿಕತೆಯೂ ಅಲ್ಲ ; ಯಾವ ಸಾಂಸ್ಕೃತಿಕ ಚಿಂತನೆಯೂ ಕಾಣುವುದಿಲ್ಲ. ಬಹುಜನ ಹಿತವೂ ಇಲ್ಲ; ಯಾರಿಗೂ ಸುಖವೂ ಇಲ್ಲ. ಕಾಣುವುದು ಒಂದೇ. ಅದು ವ್ಯಾಪಾರ. ಬೆಲೆಗಾಗಿ, ದುಡ್ಡಿಗಾಗಿ, ಯಾವುದೇ ಕಾರ್ಯಕ್ರಮದ ಮಾರಾಟಕ್ಕೆ ಸಿದ್ಧವಾಗಿರುವ "ರೇಡಿಯೋ ಮಾಲ್" - ಈಗ ನಮ್ಮ ರೇಡಿಯೋ. ಆಳುವ ಸರಕಾರದ "ಅಂಶಗಳ ಬಿತ್ತನೆ ಮತ್ತು ವಿತರಣೆ" ಎಂಬುದನ್ನು ಬಿಟ್ಟರೆ..."ಒಳ್ಳೆಯ ಚಿಂತನೆಗಳು ಎಲ್ಲ ಕಡೆಗಳಿಂದಲೂ ಬರಲಿ" ಎಂಬ ಸಹೃದಯತೆಯ ಕೊರತೆಯು ಆಗಲೂ ಕಾಣುತ್ತಿತ್ತು - ಈಗಲೂ ಕಾಣುತ್ತಿದೆ. ಆದ್ದರಿಂದಲೇ ಕೇಳುಗರಿಂದ ಆಕಾಶವಾಣಿಯು ದಿನದಿನಕ್ಕೂ ದೂರವಾಗುತ್ತಿದೆ.

ಕೇವಲ - ಅಧಿಕಾರದ ಶಾಸನ. ತೊಂದರೆ ಕೊಡುವ ಸಾಮರ್ಥ್ಯವಿದ್ದವರಿಗೆ ಮಾತ್ರ - ಅಧಿಕಾರದ ಮಜಾ ! ಇದು ಎಂಥಾ ಆಕಾಶ (ಅವಕಾಶ!) ಲೋಕವಯ್ಯಾ - ಅನ್ನಿಸುವುದಿಲ್ಲವೇ? ಆಕಾಶಲೋಕದ ಕಥೆ... ಇನ್ನೂ - ಎಷ್ಟೆಷ್ಟೋ ಇದೆ.


ನಾನು ಆಗಾಗ ಆತ್ಮ ವಿಮರ್ಶೆ ಮಾಡಿಕೊಳ್ಳುವುದಿದೆ. "ನನ್ನದು ಅತಿ ಉತ್ಸುಕತೆ ಇದ್ದಿರಬಹುದೆ? ಮಾದರಿಯಾದ - ಸರಕಾರೀ ವೃತ್ತಿಪರತೆಯನ್ನು ನಾನೂ ರೂಢಿಸಿಕೊಳ್ಳಬಹುದಿತ್ತಲ್ಲ?" ಅನ್ನಿಸುವುದೂ ಇದೆ. ಆದರೆ ಸರಕಾರೀ ಸಂಸ್ಕೃತಿಯೆಂಬುದು ಅಂದಿನ ನನ್ನ ಉತ್ಸಾಹದ ಯೌವ್ವನಕ್ಕೆ ಜೊತೆಯಾಗಲು ಒಪ್ಪಲೇ ಇಲ್ಲ. ಸರಕಾರೀ ವೇಗಕ್ಕೂ ನನ್ನ ವೇಗಕ್ಕೂ ತಾಳೆಯಾಗಲೇ ಇಲ್ಲ. ನನ್ನ ವೇಗಕ್ಕೆ ಉದ್ದಕ್ಕೂ ಬಿದ್ದದ್ದು ಬ್ರೇಕೋ ಬ್ರೇಕು. ಆದರೂ ಹೋರಾಡುತ್ತಲೇ ಮುನ್ನಡೆದೆ. "ಏನ್ ಮೇಡಂ, ನೀವು dance ಮಾಡಿದ್ದನ್ನೊಂದು ನಾವು ನೋಡಲಿಲ್ಲ. ಮತ್ತೆ ಎಲ್ಲ talent ಕಂಡಾಯ್ತು..." ಅಂತ ವ್ಯಂಗ್ಯವಾಗಿ ಮುಗುಳು ನಕ್ಕವರೂ ಇದ್ದರು. ಹೌದು. ನಿತ್ಯದ ಪ್ರಸಾರ ಕಾರ್ಯದ ಜೊತೆಗೆ, ನಾನು ಹರಿಕಥೆ ಮಾಡುತ್ತಿದ್ದೆ. ಭಕ್ತಿಗೀತೆ - ಭಾವಗೀತೆಗಳನ್ನು ಹಾಡುತ್ತಿದ್ದೆ. ನಾಟಕಗಳಲ್ಲಿ ಅಭಿನಯಿಸುತ್ತಿದ್ದೆ. ಈ ಎಲ್ಲ ವಿಭಾಗಗಳಲ್ಲೂ ಆಕಾಶವಾಣಿಯೇ ನಡೆಸುವ ಪರೀಕ್ಷೆಯಲ್ಲಿಯೂ ತೇರ್ಗಡೆಯಾಗಿದ್ದೆ. ಆದ್ದರಿಂದ, 1985 ರ ವರೆಗೆ ಹಲವಾರು ಕಾರ್ಯಕ್ರಮಗಳನ್ನು ನೀಡುವಂತೆ ನನ್ನನ್ನು  ಕೇಳಿಕೊಳ್ಳುತ್ತಿದ್ದರು. ನಾನೂ ಹುರುಪಿನಿಂದ ಕಾರ್ಯಕ್ರಮಗಳನ್ನು ಕೊಡುತ್ತಿದ್ದೆ. ಆ ಅವಧಿಯಲ್ಲಿಯೇ ಇತರ ಸಹೋದ್ಯೋಗಿಗಳಲ್ಲಿ ಅದಾಗಲೇ ಇದ್ದ ಅಸಹನೆಯು ಮೆಲ್ಲಗೆ ಪ್ರಕಟವಾಗಲು ಪ್ರಾರಂಭವಾಯಿತು."ನಾರಾಯಣಿಗೆ ಹೆಚ್ಚು ಅವಕಾಶ ಸಿಗುತ್ತಿದೆ; ನಮಗೂ ಅವಕಾಶ ಕೊಡಿ; ನಮಗೂ talent ಇದೆ." ಅಂತ ಗೊಣಗಾಟ ಶುರುವಾಯ್ತು. ಕೆಲವರು ಸಂಗೀತ class ಗೂ ಸೇರಿಕೊಂಡು, ಹಾಡುವ ಪೈಪೋಟಿಗೂ ಬಿದ್ದರು. Audition ಪರೀಕ್ಷೆಗೆ ಕೂತು ಪಾಸಾಗಿಯೂ ಬಿಟ್ಟರು. ಮೂರೋ ನಾಲ್ಕೋ ಭಾವಗೀತೆಗಳ ಕಾರ್ಯಕ್ರಮವನ್ನೂ ನೀಡಿದರು. ಅಷ್ಟರ ಮಟ್ಟಿಗೆ ನಾನೂ ಕೆಲವರಿಗೆ ಸ್ಪೂರ್ತಿಯಾಗಿದ್ದೆ ಎಂಬ ತೃಪ್ತಿ ನನಗಿದೆ. ಆದರೆ ಹರಿಕಥೆ ಮಾಡುವ ಸಾಹಸಕ್ಕೆ ಮಾತ್ರ ಯಾಕೋ...ಯಾರೂ ಮುಂದಾಗಲಿಲ್ಲ !!!

ನನ್ನ ಅರ್ಧ ನಡಿಗೆಯು ಮುಗಿಯುವ ಹೊತ್ತಿನಲ್ಲಿ, ಎಲ್ಲಾ ಮಾಧ್ಯಮಗಳಂತೆ ಆಕಾಶವಾಣಿಯೂ ವೇಗವಾಗಿ ಕಲುಷಿತಗೊಳ್ಳತೊಡಗಿತ್ತು. ಕಲಬೆರಕೆ ಶಿಕ್ಷಣದ ಸ್ವಕೇಂದ್ರಿತ ಮನಸ್ಸುಗಳ ದೊಡ್ಡ ಪಡೆಯೇ ಒಳ ಹೊಗ್ಗಿಬಿಟ್ಟಿತ್ತು. ಗುಂಪುಗಾರಿಕೆಯ ರಾಜಕಾರಣದಿಂದ ಲಾಭ ಪಡೆದು, ಅದನ್ನು ಹಂಚಿಕೊಳ್ಳುವ ಹೊಸ ವಿಧಾನದ ಪ್ರಯೋಗವು ಅಧಿಕೃತವಾಗಿ ಆಚರಣೆಗೆ ಬರಲಾರಂಭಿಸಿದ ಕಾಲ ಘಟ್ಟವದು. ಅದು 1986 -1987ರ ಸಮಯ. ಆಗಲೂ ನಾನು ಬಾಲವೃಂದ ಕಾರ್ಯಕ್ರಮವನ್ನು ನಿರ್ವಹಿಸುತ್ತಿದ್ದೆ. ಅದು ವಾರಕ್ಕೆ ಒಂದು ಕಾರ್ಯಕ್ರಮ. ಪ್ರತೀ ಭಾನುವಾರ ಬೆಳಿಗ್ಗೆ 8.30ಕ್ಕೆ ಪ್ರಸಾರವಾಗುತ್ತಿತ್ತು. ಜಿಲ್ಲೆಯ ಪ್ರತಿಭಾವಂತ ಶಾಲಾ ಮಕ್ಕಳಿರುವಂತಹ ಶಾಲೆಗಳನ್ನು ಸಂಪರ್ಕಿಸಿ, ನಮಗೆ ಬೇಕಾದ ಕಾರ್ಯಕ್ರಮದ ರೂಪುರೇಷೆಯನ್ನು ತಿಳಿಸಿ, ಯಾವ ದಿನದಂದು ಅವರು ಧ್ವನಿ ಮುದ್ರಣಕ್ಕೆ ಸಿದ್ಧವಾಗಿ ಬರಬೇಕೆಂದು ತಿಳಿಸಿ, contract ನ್ನು ಕಳಿಸುತ್ತಿದ್ದೆ. ವಾರದ ಏಳೂ ದಿನವೂ ಆಗ ನಾನು ಕೆಲಸ ಮಾಡಿದ್ದಿದೆ. ನನ್ನ ಪ್ರಸಾರದ Announcement ನ ನಿತ್ಯದ ಕರ್ತವ್ಯದ ಜೊತೆಗೆ ಈ ಕೆಲಸವೂ ನಡೆಯುತ್ತಿತ್ತು. ಶಾಲೆಗಳನ್ನು book ಮಾಡುವುದು, ಅವರ ಧ್ವನಿಮುದ್ರಣ ಮಾಡುವುದು, ಅನಂತರ ಅದನ್ನು ಸುಂದರಗೊಳಿಸುವ dubbing ಕೆಲಸ ಮುಗಿಸಿ, ಪ್ರತೀವಾರವೂ ಅರ್ಧ ಗಂಟೆಯ ಕಾರ್ಯಕ್ರಮವನ್ನು ಸಿದ್ಧಪಡಿಸಿ ಕೊಡುತ್ತಿದ್ದೆ. ರಾಷ್ಟೀಯ ಹಬ್ಬಗಳು ಬಂದರೆ, ವಿಶೇಷ ಕಾರ್ಯಕ್ರಮಗಳನ್ನೂ ಪ್ರಸ್ತುತ ಪಡಿಸುತ್ತಿದ್ದೆ. "ಇವರ ನೀವು ಬಲ್ಲಿರಾ?" ಎಂಬ ಶೀರ್ಷಿಕೆಯಲ್ಲಿ ಶಿವರಾಮ ಕಾರಂತ, ಕಯ್ಯಾರ ಕಿಂಞಂಣ್ಣ ರೈ, ಪ್ರೊ.ಲೀಲಾ ಭಟ್, ಕು.ಶಿ.ಹರಿದಾಸ ಭಟ್ ಮುಂತಾದ ಹಿರಿಯರ ಬಾಯಿಂದ, ಈ ಜಿಲ್ಲೆಯಲ್ಲಿ ಆಗಿ ಹೋದ ಕನ್ನಡದ ಮಹನೀಯರ ಪರಿಚಯವನ್ನು ಮಕ್ಕಳಿಗೆ ಮಾಡಿಸಿಕೊಟ್ಟಿದ್ದೆ.
ಇಂತಹ ಕಾರ್ಯಕ್ರಮಗಳನ್ನು ಕೇಳಿದ ಅಂದಿನ ಮಕ್ಕಳು ಪ್ರಕಾಂಡ ಪಂಡಿತರಾಗಿದ್ದ ಐರೋಡಿ ಶಿವರಾಮಯ್ಯ, ಪಂಜೆ ಮಂಗೇಶ ರಾವ್, ಉಡುಪಿ ಹೊನ್ನಯ್ಯ ಶೆಟ್ಟರು, ಎಂ.ಗೋವಿಂದ ಪೈ ಮುಂತಾದ ಹಿರಿಯರನ್ನು ಕುರಿತು ತಿಳಿದುಕೊಂಡರು. ಪಳಕಳ ಸೀತಾರಾಮ ಭಟ್ಟರಿಂದ ಪಂಚತಂತ್ರದ ಕತೆಗಳನ್ನು ನಾಟಕ ರೂಪದಲ್ಲಿ ಬರೆಸಿ, ಕೆಲವು ಶಾಲೆಗಳ ಆಯ್ದ ಮಕ್ಕಳಿಂದ, ನಾನೇ ನಿರ್ದೇಶಿಸಿ, ನಿರ್ಮಿಸಿ, ಪ್ರಸ್ತುತ ಪಡಿಸಿದೆ. "ಹಚ್ಚುವ ಜ್ಞಾನದ ಹಣತೆಯ" ಎಂಬ ಶೀರ್ಷಿಕೆಯಲ್ಲಿ ಒಂದು ಸರಣಿ ಕಾರ್ಯಕ್ರಮವನ್ನೂ ಪ್ರಸ್ತುತ ಪಡಿಸಿದ್ದೆ. ಅದಕ್ಕಾಗಿ, ಆಯ್ದ ಪ್ರಾಥಮಿಕ ಶಾಲೆಯ ಕೆಲವು ಮಕ್ಕಳ ಜೊತೆಗೆ ನವ ಮಂಗಳೂರು ಬಂದರು ಪ್ರಾಧಿಕಾರ (NMPT) ಕ್ಕೆ ಹೋಗಿ ಅಲ್ಲಿ ನಿಂತಿದ್ದ ಒಂದು ವಿದೇಶೀ ಹಡಗನ್ನು ತೋರಿಸಿ, ಪ್ರಾಧಿಕಾರದ ಮುಖ್ಯಸ್ಥರೊಂದಿಗೆ ಹಡಗಿನ ಒಳಗೆ ಹೋಗಿ, ಆ ಮಕ್ಕಳು ಕುತೂಹಲದಿಂದ ಕೇಳಿದ ಸಹಜ ಪ್ರಶ್ನೆಗಳು ಮತ್ತು ಆ ಅಧಿಕಾರಿಯು ಸಹಜವಾಗಿ ನೀಡಿದ ಉತ್ತರಗಳನ್ನೆಲ್ಲ ಧ್ವನಿ ಮುದ್ರಿಸಿಕೊಂಡು ಬಂದು, ಅದನ್ನು ಪ್ರಸಾರ ಮಾಡಿದ್ದೆ. ತನ್ಮೂಲಕ...ರೇಡಿಯೋ ಕೇಳಿದ ಎಲ್ಲರಿಗೂ ಬಂದರು ಮತ್ತು ಹಡಗಿನ ಸ್ಥೂಲ ಪರಿಚಯ ಮಾಡಿಸುವಲ್ಲಿ ನಾನು ಯಶಸ್ವಿಯಾಗಿದ್ದೆ. ಅನಂತರ...ವಿಮಾನ ನಿಲ್ದಾಣ, ಗೇರು ಬೀಜದ ಕಾರ್ಖಾನೆ (CASHEW FACTORY)ಗಳಿಗೂ ಮಕ್ಕಳ ಜೊತೆಗೆ ಹೋಗಿ, ಆಯಾ ವ್ಯವಸ್ಥೆಗಳ ಸ್ಥೂಲ ಪರಿಚಯಾತ್ಮಕ ರೂಪಕಗಳನ್ನು ಬಾಲವೃಂದದಲ್ಲಿ ಪೋಣಿಸಿ ಬಿತ್ತರಿಸಿದ್ದೆ. ಹೀಗೆ...ಮಕ್ಕಳಿಗೆ ಸುಲಭದಲ್ಲಿ ಕಾಣಲು ಸಿಗದ - ದೊಡ್ಡ ದೊಡ್ಡ ಮುಚ್ಚಿದ ಬಾಗಿಲ ಒಳಗಿನ ಕಾರ್ಯಶೈಲಿ ಮತ್ತು ವಿಶೇಷಗಳನ್ನು ಸರಳವಾಗಿ ತಿಳಿಸಿದ ರಸವತ್ತಾದ ಕಾರ್ಯಕ್ರಮಗಳೆಂದು - ಇವುಗಳೆಲ್ಲವೂ ಬಹಳ ಜನಮನ್ನಣೆ ಗಳಿಸಿದವು. ಇಷ್ಟೇ ಅಲ್ಲ, ಆಗಲೇ ನಾನು ಒಂದು ಹೊಸ ಅಲೆ ಎಬ್ಬಿಸಿದ್ದೆ. ಈಗ 2009 ರ ಹೊತ್ತಿನಲ್ಲಿ ಎಲ್ಲ ಮಾಧ್ಯಮಗಳು ನಡೆಸುತ್ತಿರುವ -  ಜನರನ್ನು ಸೆಳೆಯುವ ಮತ್ತು ಒಳಗೊಳ್ಳುವ ತಂತ್ರಗಾರಿಕೆಯನ್ನೂ ಆಗ ನಾನು ತೋರಿಸಿದ್ದೆ. ಅದು "ಜನ್ಮ ದಿನದ ಶುಭಾಶಯ" ಎಂಬ ಕಾರ್ಯಕ್ರಮ. 

ಬಾಲವೃಂದದ ಭಾಗವಾಗಿ - ಕೇವಲ 4 ನಿಮಿಷ +1 ನಿಮಿಷದ ಗುರುತು ಸಂಗೀತ (ಒಟ್ಟಿಗೆ 5 ನಿಮಿಷ) ಮಾತ್ರ ಮೂಡಿ ಬರುತ್ತಿದ್ದ ಚಿಣಕಿ ಕಾರ್ಯಕ್ರಮವದು. ಕೇಳುಗರಿಂದ ಬಂದ ಪತ್ರಗಳನ್ನು ಆಧರಿಸಿ, ಆಯಾ ವಾರದಲ್ಲಿ ಹುಟ್ಟಿದ ಮಕ್ಕಳ ಊರು- ಹೆಸರನ್ನು ಹೇಳಿ, "ಬಾನುಲಿ ಅಕ್ಕನ ಶುಭಾಶಯಗಳು" ಅಂತ ಹೇಳಿ, ಮಕ್ಕಳ ಸ್ನೇಹವನ್ನೂ ಸಂಪಾದಿಸಿದ್ದೆ. ತನ್ಮೂಲಕ ಆ ಮಕ್ಕಳ ಇಡೀ ಕುಟುಂಬ - ಪರಿವಾರವನ್ನೂ ನಮ್ಮ ಬಾನುಲಿಯ ಕೇಳುಗರಾಗುವಂತೆಯೂ ಮಾಡಿದ್ದೆ. "ಶುಭಾಶಯ ಶುಭಾಶಯ ಶುಭಾಶಯ..." ಎಂಬ ಒಂದೇ ಶಬ್ದದ ಆ ಹಾಡಿಗೆ ನಾನೇ ಸರಳ ರಾಗ ಸಂಯೋಜಿಸಿ, 30 ಸೆಕೆಂಡಿನ ಒಂದು ಗುರುತು ಸಂಗೀತವನ್ನೂ ಧ್ವನಿಮುದ್ರಿಸಿಕೊಂಡಿದ್ದೆ. ಆ ಹಾಡನ್ನು ಹತ್ತು ಮಂದಿ ಮಕ್ಕಳಿಗೆ ಹೇಳಿಕೊಟ್ಟು ಅವರಿಂದಲೇ ಹಾಡಿಸಿದ್ದೆ. ಕಾರ್ಯಕ್ರಮದ ಆರಂಭ ಮತ್ತು ಕೊನೆಯಲ್ಲಿ ಗುರುತು ಸಂಗೀತವನ್ನು (Signature Tune) ಪೋಣಿಸಿದ್ದೆ. ಹೀಗೆ, ಬಾಂಧವ್ಯ ಬೆಸುಗೆಯ ಸೇತುವಾಗಿ ಸಹಸ್ರಾರು ಕುಟುಂಬಗಳನ್ನು ಬಾನುಲಿಯ ತೆಕ್ಕೆಗೆ ತಂದದ್ದು ಅಂದಿನ ಬಾಲವೃಂದ ಕಾರ್ಯಕ್ರಮದ ಹೆಗ್ಗಳಿಕೆ.

ಒಂದೊಂದು ಬದುಕೂ ಒಂದೊಂದು ಕಾದಂಬರಿ.  ಆಕಾಶವಾಣಿಯ ನನ್ನ ಸುದೀರ್ಘ ಅನುಭವದ ಹಿನ್ನೆಲೆಯಲ್ಲಿ ನಾನು ಕಂಡ ಜನರನ್ನು 3 ವಿಧವಾಗಿ ವಿಂಗಡಿಸಬಹುದು. ಒಂದು ವರ್ಗ "ಆರಾಧಿಸುವ ವರ್ಗ". ಈಕೆ "ಏನು ಮಾಡಿದರೂ ಚೆಂದ" ಎನ್ನುವ ಸಣ್ಣ ವರ್ಗವದು. ಇನ್ನೊಂದು - "ಸಮತೂಕದಿಂದ ವಿಮರ್ಶಿಸಿ" ನನ್ನ ತಪ್ಪು ಸರಿಗಳನ್ನು ಮುಖದ ಎದುರಿಗಿಡುತ್ತಿದ್ದ ವರ್ಗ; ಇದೂ ಸಣ್ಣ ವರ್ಗವೇ. ಇನ್ನೊಂದು ವರ್ಗವಿದೆ. ನಾನು ಏನು ಮಾಡಿದರೂ "ತಪ್ಪನ್ನೇ ಹುಡಿಕ್ಯಾಡುತ್ತಿದ್ದ ವರ್ಗ." ನನ್ನ ಬೆನ್ನು ಬಿಡದೆ ಚುಚ್ಚಿ ಚುಚ್ಚಿ ಗಾಯಗೊಳಿಸಿದ ವರ್ಗವಿದು. ಈ ದೊಡ್ಡ ವರ್ಗವನ್ನು ನಾನು ನನ್ನ ಅಂತರಂಗದ ಬಂಧುಗಳಾಗಿ ನೋಡುತ್ತ ಬಂದಿದ್ದೇನೆ. ಏಕೆಂದರೆ ಈ ವರ್ಗದಿಂದಲೇ ನಾನು ವೇಗವಾಗಿ ಬೆಳೆಯುತ್ತ ಬಂದೆ; "ಬದುಕಿನ ಎಚ್ಚರ"ದ ಪಾಠಗಳನ್ನು ಕಲಿಯುತ್ತ ಬಂದೆ. ಹೀಗೆ ಆರಾಧಿಸುವ  ಸುಪುಷ್ಟ ವರ್ಗದ ಪೋಷಣೆಯ ಬೆಂಗಾವಲಿನಲ್ಲಿ ಸದಸದ್ ವಿಮರ್ಶೆಯ "ರೋಗ ನಿರೋಧಕ" ಗಳನ್ನು ಅವಶ್ಯ ಕಂಡಾಗ ಸೇವಿಸುತ್ತ, ತಪ್ಪನ್ನೇ ಎತ್ತಿ ಆಡುತ್ತಿದ್ದವರ ಹೊಡೆತದಿಂದ ರಕ್ಷಿಸಿಕೊಳ್ಳಲು ಸ್ವತಃ ಭದ್ರವಾದ ಬೇಲಿ ಕಟ್ಟಿಕೊಂಡೆ. ಸುರಕ್ಷಿತವೆನಿಸಿದಾಗ ಮಾತ್ರ ಥಟ್ಟಂತ ಹೊರಬಂದು ಪ್ರದರ್ಶನ ನೀಡಿ, ಪಟ್ಟಂತ ಚಿಪ್ಪಿನೊಳಗೆ ಹೋಗುತ್ತ ನನ್ನ ನೆಮ್ಮದಿ ನಾನೇ ಕಂಡುಕೊಂಡೆ. ಆದರೆ, ನಾನು ಈವರೆಗೆ ನನ್ನ ಕೇಳುಗರಿಗೇನಾದರೂ ಸಿಹಿ ಫಲಗಳನ್ನು ಕೊಟ್ಟಿದ್ದರೆ ಅದಕ್ಕೆ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಈ ಎಲ್ಲ ವರ್ಗದ ಹಿತೈಷಿಗಳು ಅಭಿನಂದನೆಗೆ ಅರ್ಹರು. ಆದ್ದರಿಂದ ನನ್ನ ಸಂಪರ್ಕಕ್ಕೆ ಬಂದ ವಿಭಿನ್ನ ಚಿಂತನೆಯ ಎಲ್ಲರಿಗೂ ನಾನು ಚಿರಋಣಿ.

Announcers ಎಂದರೆ ಏನು ಎತ್ತ ? ಎಂಬ ಕುತೂಹಲ - ಆ ಕಸುಬಿನ ಒಳ ಹೊರಗನ್ನು ಕಾಣುವ ಉತ್ಸುಕತೆಯು ಕೇಳುಗರಲ್ಲಿ ಮೂಡುವುದು ಸಾಮಾನ್ಯ...


ನಿಮಗೆ ಆಶ್ಚರ್ಯವಾಗಬಹುದು. ಎಷ್ಟೇ ಕಾಯಕಲ್ಪ ನಡೆಸಿದರೂ ಸಿಂಗರಿಸಿದರೂ ಅಚ್ಚುಕಟ್ಟಾಗಿ ಜೋಡಣೆಯಾಗದ ವಾದ್ಯದಿಂದ ಮಧುರ ಧ್ವನಿಯು ಹೇಗೆ ಹೊರಡಲಾರದೋ ಹಾಗೆ...ಉದ್ಘೋಷಕರಾದವರ ಬಾಯಿಯ ಸುಸ್ಥಿತಿ-ಆಕಾರವು [shape of the mouth] ಕೂಡ ಮಾತಿನ ಸೌಂದರ್ಯದಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಹಲ್ಲು, ನಾಲಗೆ, ಬಾಯಿಯು ಸುಸ್ಥಿರವಾಗಿದ್ದರೆ ಮಾತ್ರ ಅಕ್ಷರಗಳು ಲೀಲಾಜಾಲವಾಗಿ ನುಡಿಯುತ್ತವೆ. ಮಾತನ್ನು ಹೊರಡಿಸುವ ರೀತಿಯೂ ಅಷ್ಟೇ ಮುಖ್ಯ. ಕೆಲವರು ಚುಳ್ಳಿ ಮಾಡುತ್ತ, ಕೆಲವರು ಪಚಪಚ ನಾಲಗೆ ಹೊರ ಚಾಚುತ್ತ, ಕೆಲವರು ಹಲ್ಲು ಕಚ್ಚಿ ಹಿಡಿದು ಮಾತನಾಡುತ್ತಾರೆ. ಕೆಲವರು ಉಸಿರಿನ ನಿಯಂತ್ರಣವಿಲ್ಲದೆ ಅಕ್ಷರಗಳನ್ನು ತೇಲಿಸುತ್ತ ಮುಳುಗಿಸುತ್ತ ರಾಗವಾಗಿ ಮಾತನಾಡುತ್ತಾರೆ. ಕೆಲವರು ಎಲ್ಲ ಅಕ್ಷರಗಳನ್ನೂ ಎಗ್ಗಿಲ್ಲದೆ ಒತ್ತುತ್ತ "ಶಬ್ದೋಚ್ಚಾರವು ಎಷ್ಟು ಕಠಿಣ" ಎಂಬ ಪ್ರಾತ್ಯಕ್ಷಿಕೆ ನಡೆಸುತ್ತಿರುತ್ತಾರೆ. ಕೆಲವರು ಅಂತ್ಯದ ಅಕ್ಷರವನ್ನು ನುಂಗಿ ನೀರು ಕುಡಿಯುತ್ತಾರೆ. ಕೆಲವರು ಎಲ್ಲ ಅಕ್ಷರಗಳನ್ನೂ ನಾಸಿಕಕ್ಕೇ ಒರಗಿಸುತ್ತಾರೆ. ಇಂತಹ ಅಪಭ್ರಂಶಗಳಿಂದಾಗಿ ಮಾತನಾಡುವವರ ಉದ್ದೇಶವು "ತಂಗಾಳಿ" ಬೀಸುವುದಾದರೂ - ಪ್ರಬುದ್ಧ ಕೇಳುಗನಿಗೆ ಮಾತ್ರ ಉಬ್ಬೆಯಲ್ಲಿ ಹಾಕಿದಂತೆ...ಉಸಿರು ಕಟ್ಟಿದಂತಾಗುತ್ತದೆ. ಒಟ್ಟಾರೆಯಾಗಿ ಮಾತಿನ ಪರಿಣಾಮವೂ ಕ್ಷೀಣಿಸುತ್ತದೆ. ಇವೆಲ್ಲವೂ ಮಾತಿನ ಅವಲಕ್ಷಣಗಳು.

ಯಾವುದೇ ಮಾತುಗಾರನ ಮಾತುಗಳನ್ನು ಕೇಳಿದರೆ, ಅರೆ...ಎಷ್ಟು ಸುಲಭ, ಸರಳ, ಸಹಜ - ಎಂದು ಕೇಳುವವರಿಗೆ ಅನ್ನಿಸಬೇಕು. ಹಾಗಾದಾಗ ಮಾತಿನ ಹಾದಿಯು ಸುಗಮವಾಗುತ್ತದೆ; ನೇರವಾಗಿ ಕಿವಿಯಿಂದ ಹೃದಯವನ್ನೇ ತಲುಪುತ್ತದೆ. ಸ್ವಚ್ಚ ಮನಸ್ಸಿನ ಮಾತುಗಳು ಕೇಳುಗರನ್ನು ಮುಟ್ಟುತ್ತವೆ. ಕಡಿಮೆ ಪಕ್ಷ, ಧ್ವನಿವರ್ಧಕದ ಮುಂದೆ ಕುಳಿತಷ್ಟು ಹೊತ್ತಾದರೂ ಮನದ ಕೊಳೆಯನ್ನು ತೊಳೆದುಕೊಂಡಿರಬೇಕಾಗುತ್ತದೆ. ದ್ವೇಷ, ನೋವು, ಕುತಂತ್ರ ಕಾರಸ್ಥಾನ, ಮುಂತಾದ ನೇತ್ಯಾತ್ಮಕ ಭಾವಗಳಿಂದಲೇ ತುಂಬಿದ ಎದೆಯಿಂದ ಹೊರಡುವ ಮಾತುಗಳು ಮೊನಚನ್ನು ಕಳೆದುಕೊಳ್ಳುತ್ತವೆ. ಏಕಾಗ್ರತೆ, ಕರ್ತವ್ಯದಲ್ಲಿ ಭಕ್ತಿ ಮತ್ತು ಆತ್ಮೀಯ ರಕ್ತಿಯಿಂದಲೇ ಪ್ರತೀ ಅಕ್ಷರವೂ ಹೊರ ಹೊಮ್ಮಿದಾಗ ಅದರ ಪರಿಣಾಮವು ಅವರ್ಣನೀಯ. ಉದಾಹರಣೆಗೆ ಯಾರೊಂದಿಗೋ ಹರಟುತ್ತ ಬಾಯಿಂದ ನಂಜು ನಟ್ಟು ಒಸರುತ್ತ ಒಬ್ಬ ತಾಯಿಯು ಮಗುವಿಗೆ ಎದೆ ಹಾಲೂಡಿಸಿದರೆ ಆ ಮಗುವು ಹಾಲು ಕುಡಿಯುವುದಿಲ್ಲ; ಬದಲಿಗೆ ಅಳುತ್ತದೆ. ಏಕೆಂದರೆ ಆ ಏಕಾಂತದಲ್ಲಿ ತಾಯಿಯ ಏಕಾಗ್ರ ಪ್ರೀತಿಯನ್ನು ಮಗುವು ಅಪೇಕ್ಷಿಸುತ್ತದೆ. ಅಂತೆಯೇ ಪ್ರತೀ ಅಕ್ಷರವೆಂಬ ಮಗುವಿಗೂ ಪ್ರೀತಿಯ ಸ್ಪರ್ಶ ಬೇಕು. ಆಗಲೇ ಅಮೃತ ವಾಹಿನಿಯು ಎದೆಯಿಂದಲೆದೆಗೆ - ಸತತ ಹರಿಯಬಹುದು.

ಉದ್ಘೋಷಕರೆಂದರೆ ಪಳಗಿದ Event Managers. ಯಾವುದೇ ಸಂದರ್ಭವನ್ನೂ ಸುಲಲಿತವಾಗಿ ಪೋಣಿಸಿ ನಿಭಾಯಿಸಬಲ್ಲ ವಿಶಿಷ್ಟ ಕಲಾವಿದರು. ಧ್ವನಿಯ ಅಪಾರ ಸಾಧ್ಯತೆಗಳ ಅರಿವು ಮತ್ತು ಸಕಾಲದಲ್ಲಿ ಸೂಕ್ತವಾಗಿ ಆ ಧ್ವನಿಯನ್ನು ಪ್ರಯೋಗಿಸಬಲ್ಲ ಸಮಯ ಸ್ಫೂರ್ತಿಯು ಉದ್ಘೋಷಕರ ಅತೀ ಮುಖ್ಯ ಅರ್ಹತೆಗಳು.

ಇಷ್ಟೇ ಸಾಲದು. ಉದ್ಘೋಷಕರು ಜಗತ್ತಿನ ಆಗು ಹೋಗುಗಳ ಅರಿವನ್ನು ಹೊಂದಿರಲೇಬೇಕು. ಇತ್ತೀಚೆಗೆ ಚೀನಾದ ಶೀ (Xi) ಝಿನ್ಪಿಂಗ್ ಭಾರತಕ್ಕೆ ಬಂದಾಗ ಒಬ್ಬ ಉದ್ಘೋಷಕ ಮಹಾಶಯ (ಮಹಾಶಾಯಿ) ಅವರನ್ನು ಹನ್ನೊಂದು ಝಿನ್ಪಿಂಗ್ (ರೋಮನ್ ಅಂಕೆ - XI) ಅಂದರಂತೆ. ಇಂತಹ ಎಡವಟ್ಟುಗಳಾಗುವುದು ಉದ್ಘೋಷಕರ ಸಾಮಾನ್ಯ ಜ್ಞಾನದ ಕುರಿತ ಅಸಡ್ಡೆಯಿಂದ. ಆದ್ದರಿಂದ "ಉದ್ಘೋಷಕ ವೀರ"ರಾಗಲು ಬಯಸುವವರು ಸಮಾಜದ ನಿತ್ಯದ ಆಗು ಹೋಗುಗಳನ್ನು ಹಿಂಬಾಲಿಸುತ್ತಲೇ ಇರಬೇಕಾಗುತ್ತದೆ.

ಇಷ್ಟೇ ಸಾಕೇ ??  ಇನ್ನೂ ಇದೆ....ದಿನವೂ ಹೊಸತಾಗುವ , ಹೊಸತನ್ನು ಕಲಿಯುವ ಮತ್ತು ಕೇಳುಗರಿಗೆ ಹೊಸತನ್ನು ನೀಡುವ ತುಡಿತವಿದ್ದಾಗ ಮಾತ್ರ ಉದ್ಘೋಷಕರು ಜನರನ್ನು ಮುಟ್ಟಲು ಸಾಧ್ಯ. ಹಳೆಯದನ್ನೂ ಹೊಸರೂಪದಲ್ಲಿ ಸಿಂಗರಿಸುವ ಕಲಾ ತಾದಾತ್ಮ್ಯವು ಉದ್ಘೋಷಕರಲ್ಲಿ ಇರಬೇಕಾಗುತ್ತದೆ...ಒಂದೇ ವಸ್ತು - ವಿಷಯವನ್ನು ನೂರು ಬಗೆಯಿಂದ ಹೇಳಬಲ್ಲ ಚಾಕಚಕ್ಯತೆಯನ್ನು ಬೆಳೆಸಿಕೊಳ್ಳುತ್ತಲೇ ಇರಬೇಕಾಗುತ್ತದೆ...ಕಲಿಯುತ್ತಲೇ ಇರಬೇಕಾಗುತ್ತದೆ. ಒಮ್ಮೊಮ್ಮೆ ಪ್ರಯೋಗಗಳನ್ನೂ ಮಾಡಬೇಕಾಗುತ್ತದೆ. "ಹತ್ತಿರದ ತಗಣೆ ಕಚ್ಚುತ್ತದೆ" ಎಂದು ಹಿಂಜರಿಯದೆ - ತಗಣೆಗೆ ಮದ್ದನ್ನು ಸಿಂಪಡಿಸಿ, ನಮ್ಮ ಉತ್ಸಾಹದ ವೇಗ ತಗ್ಗದಂತೆ ಮತ್ತು ಕರ್ಮದಲ್ಲಿ ನಾವೀನ್ಯವನ್ನು ತುಂಬುವಂತೆ ಏಕಚಿತ್ತದಿಂದ ದುಡಿಯುತ್ತ ಸ್ವರಕ್ಷಣೆಯನ್ನೂ ಮಾಡಿಕೊಳ್ಳಬೇಕಾಗುತ್ತದೆ.