ಪ್ರತಿಯೊಂದು ಬದುಕಿಗೂ ಒಂದು ಬಾಲ್ಯ ಇರುತ್ತದೆ. ಅದು ಬಹು ವೇಗದಲ್ಲಿ ಜಾರಿ ಹೋಗುವ ಅಥವ ಮುಂದೊಂದು ದಿನ ಹಾಗೆ ಅನ್ನಿಸುವ ಕಾಲ. ಯಾವುದೇ ಗಂಭೀರ ಹೊಣೆಗಾರಿಕೆಯಿಲ್ಲದೆ ಬದುಕನ್ನು ಸವಿಯಬಹುದಾದ ಸಮಯವದು. ತಮ್ಮ ಹೆತ್ತವರು ಬಿಗಿದ ಗೂಟಕ್ಕೆ ಸುತ್ತುಬರುತ್ತ ಅವರು ನಿಗದಿ ಪಡಿಸಿದಷ್ಟು ದೂರ ಸಂಚರಿಸುತ್ತ ಶುಭ್ರವಾಗಿ ಮೇಯುವ ಕಾಲವದು. ತಮ್ಮ ಹೆತ್ತವರ ಬಳಿಯಲ್ಲೇ ಇದ್ದು ಬದುಕಿನ ಕಷ್ಟ ಸುಖಗಳನ್ನು ನೋಡುತ್ತ ಕೇಳುತ್ತ ಒಮ್ಮೊಮ್ಮೆ ಭಾವನಾತ್ಮಕವಾಗಿ ಭಾಗಿಯಾಗುತ್ತ ಸರಿದು ಹೋಗುವ ಈ ಬಾಲ್ಯ ಕಾಲವು ಪ್ರತೀ ಬದುಕಿನ ಮಿತಿ - ಗತಿಯನ್ನು ಭದ್ರವಾಗಿ ರೂಪಿಸುವ ಕಾಲವೂ ಹೌದು. ಮಕ್ಕಳಿಗೆ ಸ್ಥೂಲವಾಗಿ ಸಮಾಜ ದರ್ಶನವಾಗುವ ಅವಧಿಯೂ ಬಾಲ್ಯ ಕಾಲವೇ. ಬಾಲ್ಯವು ಸುಂದರವಾಗಿದ್ದರೆ ಭವಿಷ್ಯವು ಸ್ಥಿರವಾಗಿರುವುದು. ಭವಿಷ್ಯದಲ್ಲಿ ಎದುರಾಗುವ ಬದುಕಿನ ಎಲ್ಲ ಎಡರು ತೊಡರುಗಳನ್ನು ಸ್ವೀಕರಿಸಿ ಜೀರ್ಣಿಸಿಕೊಳ್ಳುವ ಶಕ್ತಿವರ್ಧನೆ ಮತ್ತು ಭವರೋಗ ನಿರೋಧಕ ಶಕ್ತಿ ಸಂಚಯವಾಗುವುದೂ ನಮ್ಮ ಬಾಲ್ಯ ಕಾಲದಲ್ಲಿಯೇ. ಆದ್ದರಿಂದ ಮನುಷ್ಯನ ಆರಂಭದ 15 ವರ್ಷಗಳು ನಿಜವಾಗಿಯೂ ವ್ಯಕ್ತಿತ್ವ ನಿರ್ಮಾಣದ ಕಾಲ. ಸುಂದರ ಯೌವ್ವನ ಮತ್ತು ನಿಶ್ಚಿಂತ ವೃದ್ಧಾಪ್ಯಕ್ಕೆ ಸಮೃದ್ಧ ಬಾಲ್ಯವೇ ನೆಲೆಗಟ್ಟು.

ನನ್ನ ಬಾಲ್ಯದ ಬಹುಪಾಲು ಕೋಟೇಶ್ವರದಲ್ಲಿಯೇ ಸರಿದುಹೋಯಿತು. ಸುಮಾರು 1959 - 1967 ರ ಅವಧಿಯಲ್ಲಿ ನಮ್ಮ ಕುಟುಂಬವು ಕೋಟೇಶ್ವರದಲ್ಲಿ ನೆಲೆಸಿತ್ತು. ಕೋಟೇಶ್ವರದ ಬೋರ್ಡ್ ಹೈಸ್ಕೂಲಿನಲ್ಲಿ ಆಗ ನನ್ನ ತಂದೆ ಯಜ್ಞನಾರಾಯಣ ಉಡುಪರು ಕನ್ನಡ ಭಾಷೆಯ ಅಧ್ಯಾಪಕರಾಗಿದ್ದರು. ಸುಮಾರು 4 ರಿಂದ 13 ರ ವಯಸ್ಸಿನ ವರೆಗೆ ಕೋಟೇಶ್ವರದಲ್ಲಿಯೇ ನನ್ನ ಬಾಲ್ಯವು ನಡೆದಾಡಿತ್ತು. ಆಗ ಅಪ್ಪ ಅಮ್ಮನು ಕಟ್ಟಿದ ಗೂಟಕ್ಕೆ ಸುತ್ತುತ್ತಿದ್ದ ನಾನು ನೆಗೆದಾಡುವ ಕರುವಾಗಿದ್ದೆ. ಮನೆಯಲ್ಲಿ ಇಬ್ಬರು ಅಕ್ಕಂದಿರು, ಒಬ್ಬಳು ತಂಗಿಯ ಜೊತೆಗೆ ನಾನೂ ಬೆಳೆಯುತ್ತಿದ್ದೆ. ಆಗ ನಾನು ನಿತ್ಯವೂ ಕಾಣುತ್ತಿದ್ದ ದೃಶ್ಯವೆಂದರೆ - ಸೂರ್ಯನ ಚಲನೆಯೊಂದಿಗೇ ಹೆಜ್ಜೆ ಹಾಕುತ್ತ ನಿತ್ಯಕರ್ಮಗಳಲ್ಲಿಯೇ ಮುಳುಗಿರುತ್ತಿದ್ದ ನನ್ನ ಅಪ್ಪಯ್ಯ ಮತ್ತು ಅಮ್ಮನನ್ನು. ಸೂರ್ಯೋದಯಕ್ಕೂ ಮೊದಲೇ ಆರಂಭವಾಗುತ್ತಿದ್ದ ಅವರ ಚಟುವಟಿಕೆಗಳು ರಾತ್ರಿ ಏಳೆಂಟು ಗಂಟೆಯವರೆಗೂ ಎಡೆಬಿಡದೆ ಪ್ರತಿನಿತ್ಯವೂ ಸಾಗುತ್ತಿತ್ತು. ಇಂದಿನ ವಿರಾಮದ ಸಂಸಾರಗಳನ್ನು ನೋಡಿದಾಗಲೆಲ್ಲ ನನಗೆ ಅಂದಿನ "ಕಾರ್ಮಿಕ" ಹಿರಿಯರು ನೆನಪಾಗುತ್ತಾರೆ.
ಇಂದಿನವರ ಬಾಯಿಂದ ಹೊರಬೀಳುವ SPACE ಎನ್ನುವ ಶಬ್ದವು ಆಗ ಪ್ರಚಾರದಲ್ಲಿ ಇರಲೇ ಇಲ್ಲ. ಆದರೆ ಎಲ್ಲರೂ ತಮ್ಮ ನಿತ್ಯ ಕರ್ಮಗಳನ್ನು ಮುಗಿಸಿ, ದಿನದ ಒಂದಷ್ಟು ಹೊತ್ತು ಹಾಯಾಗಿ ಕೂತು ನಗುತ್ತ ಹರಟೆ ಹೊಡೆಯುತ್ತಿದ್ದುದನ್ನು ನಾನು ನೋಡಿದ್ದೇನೆ. ಒಬ್ಬರೇ ಮೂಲೆಮೂಲೆಯಲ್ಲಿ ನಿಂತು ಗುಸುಗುಸು ನಡೆಸುತ್ತಿದ್ದ ಕೆಲವು ಜನರು ಹಿಂದೆಯೂ ಇದ್ದರು. ಅವರನ್ನು ಆಗ "ಮಾನಸಿಕ ಸಮಸ್ಯೆ" ಎಂದು ಗುರುತಿಸಿ ಆಡಿಕೊಳ್ಳುವುದನ್ನು ನಾನು ಕೇಳಿದ್ದೆ. ಸುಖ ದುಃಖಗಳನ್ನು ಹಂಚಿಕೊಳ್ಳುತ್ತ ಪರಸ್ಪರ ಸಮಭಾಗಿಗಳಾಗುತ್ತ ಹಾಗೆ ಹಗುರಾಗುವ "ವಿರಾಮದ ಸ್ವಸ್ಥ SPACE" ನ್ನು ಹೊಂದಿದವರು ನಾನು ಕಂಡ ಅಂದಿನ ಪರಿಸರದಲ್ಲಿ ಇದ್ದರು.
ಇಂದು ಪರಿಸ್ಥಿತಿ ಬದಲಾಗಿದೆ. ಸ್ವಂತ ಹೆತ್ತವರನ್ನೂ ದೂರವಿಡುವಷ್ಟು ಪ್ರಬಲವಾಗಿ SPACE ಎಂಬ ಮಂತ್ರವು ಬಾಯಿ ಬಿಟ್ಟಿದೆ. ಅಂತಹ (ಹಳ್ಳಕ್ಕೆ ಬೀಳಿಸುವ) ಕೃತಕ SPACE ಎಂಬ - ಇಂದಿನ ಮಕ್ಕಳ Fashion ಗೆ ತುತ್ತಾಗಿ ಸ್ವಂತ ಅಪ್ಪ ಅಮ್ಮನೂ ಬಳಲುತ್ತಿರುವುದನ್ನು ನೋಡುತ್ತಿದ್ದೇವೆ! ಈ SPACE ಎಂಬ ಗಂಡಾಂತರದಿಂದಾಗಿ ತಮ್ಮ ಮಕ್ಕಳ ಚಲನವಲನದ ಜ್ಞಾನವು ಇಂದಿನ ಹೆತ್ತವರಿಗೆ ಇರುವುದಿಲ್ಲ. Friends ಜತೆಗೆ ಎಲ್ಲಿಗೋ ಹೋಗಿದ್ದಾರೆ...ಎಂಬುದಷ್ಟೇ ತಿಳಿದಿರುವ ಹೆತ್ತವರು ಮಕ್ಕಳು ಯಾವಾಗ ಹಿಂದಿರುಗಿದರೂ ಪ್ರಶ್ನಿಸುವಂತೆಯೂ ಇಲ್ಲ. ಹಾಗೆ ಪ್ರಶ್ನಿಸಿದರೆ ಸ್ವಂತ Space ನ ಅತಿಕ್ರಮಣವೆನಿಸುತ್ತಿದೆ !!!
ಹೀಗೆ Space ಎಂಬುದು ಮಿತಿಮೀರಿ, ಕೆಲವೊಮ್ಮೆ ಜೀವಂತ ಹೊರಗೆ ಹೋದ ಮಕ್ಕಳು ಶವವಾಗಿ ಬಂದ ದುರ್ಘಟನೆಯೂ ಸಂಭವಿಸಿದೆ. "ಹೆತ್ತವರು ಇರುವುದೇ ತಮ್ಮ ಅವಶ್ಯಕತೆಗಳನ್ನು ಪೂರೈಸಲು" (ATM) ಎಂದು ಭಾವಿಸುವ ಕೆಲವು ಮಕ್ಕಳ ತಿಕ್ಕಲುತನದಿಂದಾಗಿ ಮಕ್ಕಳ ಬಾಲ್ಯವು ಹಾಳಾಗಿ - ವರ್ತಮಾನದ ಮಾನಹೋಗಿ - ಭವಿಷ್ಯವು ಮಾಯವಾಗಿ ಬಿಡುತ್ತಿದೆ. SPACE ಎನ್ನುವ ತಿರುಪೆ ಏಕಾಂತದಲ್ಲಿ ಕುಳಿತು, ಅನಂತ ಧ್ಯಾನಸ್ಥ ಸ್ಥಿತಿಯಲ್ಲಿ ಈ ಮಕ್ಕಳು ಯಾವ ಮಹಾಜ್ಞಾನವನ್ನು ಸಿದ್ಧಿಸಿಕೊಂಡಿರುವರೋ? ಅವರನ್ನೇ ಕೇಳಬೇಕು.
ಹಿಂದೆ ನಮ್ಮ ಮನೆ ಮಾತ್ರವಲ್ಲದೆ ನಾನು ನೋಡುತ್ತಿದ್ದ ಇತರ ಬಂಧುಗಳ ಮನೆಗಳಲ್ಲೂ ಕೆಲಸ ಕಾರ್ಯಗಳಲ್ಲೇ ಮುಳುಗಿರುತ್ತಿದ್ದ ಹಿರಿಯರನ್ನು ಗಮನಿಸಿದ್ದೇನೆ. ಎಲ್ಲರೂ ಜೊತೆಗೂಡಿ ಮಾಡುವ ಕೆಲಸದ ಹೊತ್ತಿನಲ್ಲೇ ಅವರು ತಮ್ಮ ಆಂತರ್ಯದ ತುಮುಲಗಳನ್ನೆಲ್ಲ ಪರಸ್ಪರ ಹೇಳಿಕೊಳ್ಳುತ್ತ ಹಗುರವಾಗುತ್ತಿದ್ದುದನ್ನೂ ನಾನು ನೋಡಿದ್ದೇನೆ. ಸಹಯೋಗದ ಸಹಬಾಳ್ವೆಯ ಅಂತಹ ಕಾಯಕನಿಷ್ಠೆಯನ್ನೂ - "ಮಮ" ಎಂಬ ಆಸಕ್ತಿಯನ್ನು ಹೊರತು ಪಡಿಸಿದರೆ ಸಾಂಸಾರಿಕ ಕರ್ಮಯೋಗವೆಂದೇ ಹೇಳಬಹುದು.

ಅಂದಿನ ಸ್ತ್ರೀಯರನ್ನು ನೆನಸಿಕೊಳ್ಳುತ್ತ ಇಂದಿನವರು "ಅಯ್ಯೋ...ಶೋಷಣೆ" ಎನ್ನುತ್ತ ಶಾಬ್ದಿಕ ಸಂತಾಪ ತೋರುವುದನ್ನು ನಾವು ಆಗಾಗ ನೋಡುತ್ತೇವೆ. ಆದರೆ ಇಂದಿನ ಅಸ್ಥಿರ ಮತ್ತು ಕೀಟಲೆಯ ಕರ್ಮತ್ಯಾಗಿಗಳಿಗಿಂತ ಅಂದಿನ ಸ್ತ್ರೀಯರು ಸಹಜ ಸಜ್ಜನರಾಗಿದ್ದರು. ಇಂದಿನ ಕೃತಕ ಬೊಜ್ಜುಗಳಿಗಿಂತ ಅವರೆಲ್ಲರೂ ಎಷ್ಟು ಲವಲವಿಕೆಯಿಂದ ಇದ್ದರು, ಜೀವನೋತ್ಸಾಹವನ್ನು ಹೊಂದಿದ್ದರು ಎನ್ನುವ ಅರಿವೇ ಇಲ್ಲದೆ ಯಾವುದೇ ಹರಕು ಅಭಿಪ್ರಾಯಗಳನ್ನು ಸಿಕ್ಕಸಿಕ್ಕಲ್ಲಿ ಉದುರಿಸಬಾರದು. ಹಿಂದಿನ ಅಜ್ಜಿಯಂದಿರು ಯಾರಾದರೂ ಇಂದಿನವರಲ್ಲಿ ಆರೋಪ ಮಾಡಿದ್ದುಂಟೆ? ತಮ್ಮ ಬದುಕನ್ನು ಸೌಂದರ್ಯ ಸ್ಪರ್ಧೆಯಾಗಿಸದೆ, ಅದನ್ನು ಗಂಭೀರವಾಗಿ ಈಸಿ ಜಯಿಸಿ ಹೋದ ಹಿರಿಯರವರು. ಸಂಸಾರವೆಂದರೆ ಅದರಲ್ಲಿ ಹುಳಿ - ಸಿಹಿ, ಖಾರ - ಕಹಿ...ಎಲ್ಲವೂ ಇದ್ದೇ ಇರುತ್ತದೆ ಎಂಬ ಕಿಂಚಿತ್ತಾದರೂ ಪ್ರೌಢತೆಯಿಲ್ಲದವರು - ಅವರ ಕಲ್ಪನೆಯ "ಶೋಷಣೆ "ಯ ಸಂಸಾರದಿಂದ ದೂರವುಳಿಯುವುದೇ ಕ್ಷೇಮ. ಆಗ "ಶೋಷಣೆ ಬ್ಯಾಕ್ಟೀರಿಯ" ದ ಸೋಂಕಿನಿಂದ ಇತರ ಸ್ವಸ್ಥ ಸಂಸಾರಗಳಿಗೆ Infection ಆಗುವುದು ತಪ್ಪುತ್ತದೆ.
ಅಂತಿಕ್ಕು ಇಂತಿಕ್ಕು ಎಂತಿಕ್ಕು ಎನಬೇಡ; ಚಿಂತಿಸಿ ದೇಹ ಬಡವಕ್ಕು...ಅಷ್ಟೆ. ಕರ್ಮದಲ್ಲಿ ಗಂಭೀರವಾಗಿ ತೊಡಗದೆ ವ್ಯರ್ಥವಾದ ಪ್ರಚೋದನೆಯ ಮಾತುಗಳನ್ನಾಡಿ - ಕೇಳಿಸಿಕೊಂಡು ಆಗುವುದೇನು? ಬದುಕೇ ಬಡವಾಗಬಹುದು. CHAT ಮಾಡುವುದರಲ್ಲೇ ತನ್ಮಯರಾದವರಿಗೆ ಬದುಕಿನ ಗಾಂಭೀರ್ಯದ ಅರಿವು ಇರುವುದಿಲ್ಲ. ಅಂತಹ ಚಟ್ಟು (CHAT) ತಟ್ಟುವ SPACE ಧಾರೀ ಸೈನ್ಯದ ಸದಸ್ಯರು ಗೆಲ್ಲುವ ಕುದುರೆಗಳನ್ನು ಬೆಳೆಸಲಾರರು; ಓಡಿಸಲಾರರು; ಗೆಲ್ಲುವ ಕುದುರೆ ಆಗಲೂ ಆರರು. ಕಷ್ಟಗಳನ್ನು ಮೆಟ್ಟಿ ನಿಯಂತ್ರಿಸಿ ಗೆಲ್ಲಲಾರದವರೆಲ್ಲರೂ ಸೋಲುವ - ಸೋಲಿಸುವ ಕುದುರೆಗಳೇ ಆಗಿರುತ್ತಾರೆ.
ಹೌದು. ನಮ್ಮ ಹಿರಿಯರು ಬೆವರು ಸುರಿಸಿ ದುಡಿಯುತ್ತಿದ್ದರು; ಅಂದು ಬಹುಪಾಲು ಬಡತನವೂ ಇತ್ತು. ಆದರೆ ಮನಸ್ಸು ಮಾತ್ರ ಆರೋಗ್ಯದಿಂದ ಇರುತ್ತಿತ್ತು. ತನ್ನ ಮನೆಮಂದಿ, ನೆರೆಯವರು, ಊರವರು...ಎನ್ನುವಷ್ಟು ವಿಶಾಲ ವ್ಯಾಪ್ತಿಯಲ್ಲಿ ಹಂಚಿ ಉಣ್ಣುತ್ತ - ಯಾವ ಅಪೇಕ್ಷೆಯೂ ಇಲ್ಲದೆ ಉಪಕರಿಸುವ ಹೃದಯ ವೈಶಾಲ್ಯವೂ ಇತ್ತು. "ಹೋಗಲಿ ಬಿಡು; ಅವರ ಸ್ವಭಾವವೇ ಹಾಗೆ..", "ಹುಟ್ಟು ಗುಣ ಘಟ್ಟ ಹತ್ತಿದರೂ ಬಿಡದು...", ಮೂಢೋ ಮೂರ್ಖೋ ಗಾರ್ದಭೋ..." ಎನ್ನುತ್ತ ಎಲ್ಲ ಬಗೆಯ ಸಂದರ್ಭಗಳನ್ನೂ ನಿಭಾಯಿಸುವ ಶಕ್ತಿಯನ್ನು - ಕಷ್ಟ ಸಹಿಷ್ಣುತೆಯನ್ನು ಅವರ ಬದುಕಿನ ಶೈಲಿಯೇ ಅವರಿಗೆ ನೀಡಿದಂತೆ ಕಾಣುತ್ತದೆ. ನಮ್ಮ ಹಿರಿಯರು ಇಂದಿನವರಂತೆ ಪರರನ್ನು ಆರೋಪಿಸುತ್ತ ತಮ್ಮ ಬದುಕನ್ನು ಕಟ್ಟಿದವರಲ್ಲ. ಬೀದಿಗಿಳಿದು ಯಾವುದೇ ಪ್ರತಿಭಟನೆಯನ್ನು ನಡೆಸದೆ ಇದ್ದುದರಿಂದ ನಮ್ಮ ಹಿರಿಯರು ಕಳೆದುಕೊಂಡದ್ದು ಏನೂ ಇಲ್ಲ; ಬದಲಾಗಿ ಪಡೆದುಕೊಂಡದ್ದೇ ಹೆಚ್ಚು. ತಾನು ದುಡಿದು ತನ್ನಲ್ಲಿ ಇದ್ದುದರಲ್ಲಿಯೇ ನಾಲ್ಕು ಜನರಿಗೆ ಆಶ್ರಯ ಕೊಡುತ್ತಿದ್ದ ಪರೋಪಕಾರೀ ಬದುಕುಗಳವು. ಯಾವುದೋ ಕಠಿಣ ಸಂದರ್ಭವು ಎದುರಾದರೆ ಸುತ್ತುಮುತ್ತಿನವರೆಲ್ಲರೂ ಪರಸ್ಪರ ಸಹಕರಿಸುತ್ತಿದ್ದ ಪರಿಸರವು ಅಂದಿನ ಸಮಾಜದಲ್ಲಿತ್ತು. ಅದರಿಂದ ಅವರು ಪಡೆಯುತ್ತಿದ್ದುದು ಕೇವಲ ತೃಪ್ತಿ. ತೃಪ್ತಿಯೇ ದೊಡ್ಡ ಐಶ್ವರ್ಯ. ಚಾಡಿ ಹೇಳಿ ಪರಸ್ಪರ ಹಿಡಿಸಿಹಾಕುವ, ಜಗಳದ ಬೆಂಕಿಗೆ ಗಾಳಿ ಹಾಕುವ ಕೆಲವರು ಅಂದೂ ಇದ್ದರೂ ಅವರು ಅಲ್ಪಸಂಖ್ಯಾಕರಾಗಿದ್ದರು. ಆಗ ಅವರಿಗೆ ಬೆಲೆಯೂ ಇರಲಿಲ್ಲ. ಮುಖ್ಯವಾಗಿ...ಜನರಿಗೆ ದೇವರ ಭಯವಿತ್ತು. ತಪ್ಪು ಮಾಡಲು ಹೆದರುತ್ತಿದ್ದರು. ಲಕ್ಷ್ಮೀಪುತ್ರರೂ ಶಾರದೋಪಾಸಕರಿಗೆ ಬಹಿರಂಗದಲ್ಲಿಯಂತೂ ಕೈ ಮುಗಿಯುತ್ತಿದ್ದರು.
ಇಂತಹ ಸಮಾಜದಲ್ಲಿ ನಾನು ಬಾಲ್ಯ ಕಾಲವನ್ನು ಸವಿದೆ. ಅಂದಿನ ನಮ್ಮ ಕೋಟೇಶ್ವರದ ಮನೆಯು ಆಗ ನಿಜಾರ್ಥದಲ್ಲಿ ಋಷ್ಯಾಶ್ರಮದಂತಿತ್ತು. ತಮ್ಮದಲ್ಲದ ಆ ಬಾಡಿಗೆ ಮನೆಯನ್ನು ದೇವಸ್ಥಾನದಂತೆ ರೂಪಿಸಿದ ಶ್ರೇಯಸ್ಸು ನನ್ನ ಹೆತ್ತವರದು. ಕಾಲು ನೀಡಿ ಕೂತರೆ ಅರ್ಧ ಕಾಲು ಹೊರಗೆ ಬೀಳುವಷ್ಟು ಅಗಲದ ಒಂದು ಸಪೂರದ ಜಗಲಿ, ಅದಕ್ಕೆ ಹೊಂದಿಕೊಂಡು ನೆಟ್ಟಗೆ 6 ಜನರು ಮಲಗಬಹುದಾದಷ್ಟು ದೊಡ್ಡ ಒಂದು ಚಾವಡಿ ಮತ್ತು ಅದೇ ಉದ್ದದ ಜಗಲಿಯಿಂದಲೇ ಪ್ರವೇಶವಿರುವ ಒಂದು ಅಡುಗೆಯ ಕೋಣೆ, ಚಾವಡಿಯಿಂದ ಪ್ರವೇಶವಿರುವಂತಹ ಇಬ್ಬರು ಮಲಗಬಹುದಾದಂತಹ ಮೂರು ಕೋಣೆಗಳು. ಹುಲ್ಲಿನ ಮಾಡಿನ ಆ ಪುಟ್ಟ ಕುಟೀರದ ನೆಲಕ್ಕೆ ಕೆಂಪುಕಾವಿ ಹಾಕಿದ ಮಣ್ಣಿನ ನೆಲವಿತ್ತು. ಮನೆಯ ಎಡಭಾಗದಲ್ಲಿ ಹಸುಗಳಿಗಾಗಿ ಕೊಟ್ಟಿಗೆ, ಅದಕ್ಕೆ ಹೊಂದಿಕೊಂಡಂತೆ ಸ್ನಾನದ ಮನೆ, ಕೊಟ್ಟಿಗೆಯ ಹಿಂಭಾಗದಲ್ಲಿ ನಮ್ಮ ಶೌಚಾಲಯವಾಗಿದ್ದ ದೊಡ್ಡ ಹಾಡಿ ಇತ್ತು. ಮನೆಯ ಎದುರಿನಲ್ಲಿ 200 ಗಜ ದೂರದಲ್ಲಿ ಒಂದು ಬಾವಿ. ಬಾವಿಯ ಬಲ ಭಾಗದಲ್ಲಿ ಮನೆಯಂಗಳಕ್ಕೆ ಪ್ರವೇಶ ದ್ವಾರವಿತ್ತು. ವರ್ಷದ ಋತು ಬದಲಾವಣೆಗಳನ್ನು - ಋತು ಸಂಭ್ರಮ, ಪ್ರಕೃತಿಯ ಸೌಮ್ಯ ರೌದ್ರ ರೂಪಗಳಿಗೆಲ್ಲ ನಾನು ಅದೇ ಮನೆಯಲ್ಲಿ ಮುಖಾಮುಖಿಯಾಗಿದ್ದೆ...ಸವಿದಿದ್ದೆ. ಮನೆಯ ಹುಲ್ಲಿನ ಮಾಡಿನ ಸಂದಿಯಲ್ಲಿ ಹಾವು, ಎರಣೆ..ಮುಂತಾದ ಉಪಜೀವಿಗಳೂ ಅಂದು ನಮ್ಮ ಜತೆಗಿರುತ್ತಿದ್ದವು. ಅವನ್ನು ನೋಡಿದ ನಾವು ಮಕ್ಕಳು - ಕುಮಟಿ ಬಿದ್ದು ಅಪ್ಪಯ್ಯನನ್ನು ಕರೆಯುತ್ತಿದ್ದೆವು. ಆ ಹಾವನ್ನು ಮಾಡಿನಿಂದ ಕೆಳಕ್ಕೆ ಬೀಳಿಸಿ ಅಪ್ಪಯ್ಯನು ಒಂದು ಕೋಲಿನಲ್ಲಿ ಅದನ್ನು ಎತ್ತಿಕೊಂಡು ಹೋಗುತ್ತಿದ್ದರು. ಆಗ "ಅಯ್ಯೋ, ಅದನ್ನು ಕೊಲ್ಲಬೇಡಿ..." ಎನ್ನುತ್ತ ಅಮ್ಮನು ಕೂಗಿ ಹೇಳುತ್ತಿದ್ದಳು. ಆ ಹೊತ್ತಿನಲ್ಲಿ ಗಂಡು ಸಂತಾನವಿಲ್ಲದೆ ದುಃಖಿತರಾಗಿದ್ದ ಅವರಿಬ್ಬರೂ "ಸರ್ಪ ದೋಷ"ಕ್ಕೆ ಹೆದರುತ್ತಿದ್ದಿರಬೇಕು. "ನಿನ್ನ ಬಿಲದಲ್ಲಿ ಇರುವುದನ್ನು ಬಿಟ್ಟು ಇನ್ನೊಂದು ಸಾರಿ ನನ್ನ ಬಿಲಕ್ಕೆ ಬಂದರೆ ನಾನು ನಿನ್ನನ್ನು ಕೊಲ್ಲುತ್ತೇನೆ...ನಿನ್ನ ಬಿಲಕ್ಕೆ ನಾನು ಎಂದಾದರೂ ಬಂದು ಪೀಡಿಸಿದ್ದೇನೆಯೆ? ನನ್ನ ಸಂಸಾರವನ್ನು ನೀನು ಯಾಕೆ ಪೀಡಿಸುತ್ತೀ? ನಿನಗೆ ಏನು ಬೇಕಾಗಿದೆ?..." ಎಂದು ಆ ಹಾವಿನಲ್ಲಿ ಮಾತನಾಡುತ್ತ ಅದನ್ನು ದೂರದ ಹಾಡಿಯಲ್ಲಿ ಬಿಡುತ್ತಿದ್ದ ಅಪ್ಪಯ್ಯನೇ ಸಂಕಟಮೋಚಕ ಹನುಮನಂತೆ ನಮಗೆ ಆಗ ಕಾಣಿಸುತ್ತಿದ್ದರು.
ಆ ಕೋಟೇಶ್ವರದಲ್ಲಿದ್ದ ಮನೆಯನ್ನು ಅಮ್ಮನು ಉಪಚರಿಸಿದ ಬಗೆಯನ್ನು ನಾನೆಂದೂ ಮರೆಯಲಾರೆ. ಮನೆ, ನೆಲ, ಗೋಡೆ, ಮಾಡು, ಅಂಗಳ, ಬಾವಿ ಕಟ್ಟೆ, ಕೊಟ್ಟಿಗೆ...ಎನ್ನುತ್ತ ಇಡೀ ದಿನವನ್ನು ಕಳೆದುಬಿಡುತ್ತಿದ್ದ ಅಮ್ಮ ಅವಳು. ಅಡುಗೆಯ, ಮಕ್ಕಳ ಜವಾಬ್ದಾರಿಯ ಜೊತೆಗೆ ಗುಡಿಸುವುದು, ಒರೆಸುವುದು, ಅಂಗಳಕ್ಕೆ ಸೆಗಣಿ ಸಾರಿಸುವುದು, ಹಟ್ಟಿಯನ್ನು ಶುಚಿಗೊಳಿಸುವುದು, ಬಾವಿಯಿಂದ ನೀರೆತ್ತಿ ಬಚ್ಚಲು-ತೋಡುಗಳನ್ನು ಸ್ವಚ್ಛಗೊಳಿಸುವುದು...ಒಂದೇ ಎರಡೆ? ಕೆಲಸದ ನಡುವೆ ಮಕ್ಕಳು ಪಿರಿಪಿರಿ ಮಾಡಿದರೆ ಕೆಲಸವನ್ನು ಅಲ್ಲೇ ಬಿಟ್ಟು ಓಡೋಡಿ ಬಂದು "ಉಂಡಾಯ್ತ್..ತಿಂದಾಯ್ತ್..ಸ್ನಾನ ಆಯ್ತ್..ಆಡ್ತ ಇಪ್ಕಾತ್ತಿಲ್ಯಾ? ನಂಗಿಲ್ಲಿ ಕುಂಡೆ ಊರುಕ್ ಪುರಸತ್ತಿಲ್ಲೆ..ನಿಂದೆಂತ ರಗಳೆ ಹೆಣೆ..?" ಎನ್ನುತ್ತ ಮಕ್ಕಳನ್ನೂ ಪ್ರೀತಿಯಿಂದ ನಿಭಾಯಿಸುವುದು...ನನಗೆ ಆ ಅಮ್ಮ ಈಗಲೂ ನೆನಪಾಗುತ್ತಾಳೆ. ಆದರೂ ಅಮ್ಮನ ಬದುಕಿನ ಸಂತೃಪ್ತ ದಿನಗಳವು ಎಂದೂ ನನಗೆ ಅನ್ನಿಸುತ್ತದೆ. ಏಕೆಂದರೆ ತಾನು ಮಾಡುತ್ತಿದ್ದ ಕರ್ಮಗಳನ್ನು ಅವಳು ಅಷ್ಟೊಂದು ತನ್ಮಯತೆಯಿಂದ - ಪ್ರೀತಿಯಿಂದ ಆಗ ಮಾಡುತ್ತಿದ್ದಳು. ಅಪ್ಪಯ್ಯ ಮತ್ತು ಅಮ್ಮನು ಪರಸ್ಪರ ಅನನ್ಯವಾಗಿ ಪ್ರೀತಿಸುತ್ತಿದ್ದು ತಮ್ಮ ಮಕ್ಕಳಿಗೂ ಪ್ರೀತಿಯ ಸ್ನಾನ ಮಾಡಿಸುತ್ತಿದ್ದುದರಿಂದಲೇ ನನ್ನ ಬಾಲ್ಯವು ಇಂದಿಗೂ ಚಪ್ಪರಿಸುವಂತಿದೆ ಎಂದೂ ಅನ್ನಿಸುವುದಿದೆ. "ಪ್ರೀತಿ ಇದ್ದಲ್ಲಿ ತೃಪ್ತಿಯೂ ಇರುತ್ತದೆ" ಎಂಬ ನನ್ನ ಮಾತಿಗೆ - ಅಂದಿನ ನನ್ನ ಅಪ್ಪಯ್ಯ ಮತ್ತು ಅಮ್ಮನ ಬದುಕು - "ಹೌದು" ಎಂದು ತಲೆಯಾಡಿಸಿದಂತೆ ನನಗೆ ಕಾಣುತ್ತದೆ. ಅದು ಎಂತಹ ಪ್ರೀತಿ? ಹೇಳಲಾಗದ ಅದೃಶ್ಯ ಅನುಭವ...ಅಷ್ಟೆ.
ತನ್ನ ಮನೆ, ಹಿತ್ತಲು, ಹಟ್ಟಿಯ ಕೆಲಸಗಳನ್ನೆಲ್ಲ ಏಕಾಂಗಿಯಾಗಿ ಅಮ್ಮನು ಹೇಗೆ ನಿಭಾಯಿಸುತ್ತಿದ್ದಳೆಂದು ನನಗೆ ಆಶ್ಚರ್ಯವಾಗುತ್ತದೆ. ಅಪ್ಪಯ್ಯನು ಗಂಡಾಳಿನ ಕೆಲಸವನ್ನು, ಅಮ್ಮನು ಹೆಣ್ಣಾಳಿನ ಕೆಲಸವನ್ನು - ಮುಚ್ಚಟೆಯಿಂದ, ಉತ್ಸಾಹದಿಂದ ಮಾಡುತ್ತಿದ್ದ ದಿನಗಳವು. ಸಹಾಯಕ್ಕೆಂದು ಆಳನ್ನು ನೇಮಿಸಿಕೊಳ್ಳುವ ಆರ್ಥಿಕ ಚೈತನ್ಯವೂ ಆಗ ಇರಲಿಲ್ಲ. ಅಪ್ಪಯ್ಯನ ಅಧ್ಯಾಪಕ ವೃತ್ತಿಯ ಸಣ್ಣ ಸಂಬಳದ ಗಳಿಕೆಯನ್ನು ಪುಷ್ಟಿಗೊಳಿಸಲು ಮನೆಯ ಹಿತ್ತಲಿನಲ್ಲಿ ಸೊಪ್ಪು, ತರಕಾರಿಯನ್ನೂ ಬೆಳೆಸಿಕೊಳ್ಳುತ್ತಿದ್ದರು. ದಿನವೂ ಬೆಳಿಗ್ಗೆ ತೆಂಗು, ತರಕಾರಿ ಮತ್ತು ಹೂವಿನ ಗಿಡಗಳಿಗೆ ಬಾವಿಯಿಂದ ನೀರು ಸೇದಿ, ಹೊತ್ತು ಗಿಡಗಳಿಗೆ ಉಣ್ಣಿಸುತ್ತಿದ್ದರು. ತಮ್ಮ ಎರಡು ಕೈಯ್ಯಲ್ಲಿ ಕೊಡಪಾನಗಳನ್ನಿಟ್ಟುಕೊಂಡು ಓಡುತ್ತ ಅಪ್ಪಯ್ಯ ನೀರುಣಿಸುವುದು ನನಗಿನ್ನೂ ನೆನಪಿದೆ. ಅದು ಅವರ ನಿತ್ಯ ಕರ್ಮಗಳಲ್ಲಿ ಒಂದಾಗಿತ್ತು. ಕೊನೆಯಲ್ಲಿ ನೀರುಂಡ ಎಲ್ಲ ಗಿಡ ಮರಗಳನ್ನೂ ಒಮ್ಮೆ ನಿಂತು ನೋಡುತ್ತ ಖುಶಿ ಪಡುವ ಭಾವುಕ ಮನಸ್ಸು ಅಪ್ಪಯ್ಯನದಾಗಿತ್ತು. ಇಷ್ಟಾದ ಮೇಲೆ ಅಪ್ಪಯ್ಯನ ಸ್ನಾನ, ಪೂಜೆ, ಊಟ, ಶಾಲೆಗೆ ಓಟ. ಅಪ್ಪಯ್ಯನ ಮನೆಕೆಲಸಗಳು ಹೀಗೆ ಚದುರಿದಂತೆ ಕಂಡರೂ ಒಂದಲ್ಲ ಒಂದು ಕರ್ಮದಲ್ಲಿ ವ್ಯಸ್ತಳಾಗಿರುತ್ತಿದ್ದ ಅಮ್ಮನ ಕೆಲಸಗಳು ಮಾತ್ರ ಮುಗಿಯದ್ದು ಅನ್ನಿಸುತ್ತಿತ್ತು. ಆದರೆ ಅಮ್ಮನು ಕೆಲಸಕ್ಕೆ ಹಿಂಜರಿದದ್ದನ್ನು ಅಥವ ಕೆಲಸದ ಹೊರೆಯಿಂದ ಬಳಲಿಕೆಯಾದಾಗ ತನ್ನ ಬಡತನಕ್ಕಾಗಿ ಅಪ್ಪಯ್ಯನನ್ನು ಮೂದಲಿಸಿದ್ದನ್ನು ನಾನು ನೋಡಿಲ್ಲ. ಅದು ರೇಶನ್ ಅಕ್ಕಿ - ಬೇಳೆಯ ಕಾಲ. ಪ್ರತೀ ಬಾರಿಯೂ ಆ ಗಲೀಜು ಅಕ್ಕಿಯನ್ನು ಗೆರಸಿಯಲ್ಲಿ ಒಮ್ಮೆ ಗೇರಿ ಅವಳು ನಮ್ಮೆದುರಿಗೆ ಸುರಿಯುತ್ತಿದ್ದಳು. ಅನಂತರ ಅದನ್ನು ಹೆಕ್ಕಿ ಶುಚಿಗೊಳಿಸುವ ಕೆಲಸದಲ್ಲಿ ಕೆಲವೊಮ್ಮೆ ದೊಡ್ಡ ಮಕ್ಕಳ ಸಹಾಯವನ್ನೂ ಪಡೆಯುತ್ತಿದ್ದಳು. ಆ ಕಾಲದಲ್ಲಿ ಅಂಗಡಿಯಿಂದ ತರುತ್ತಿದ್ದ ಅಡುಗೆಯ ವಸ್ತುಗಳೆಲ್ಲವೂ ಕಲಬೆರಕೆಯ, ಕಡಿಮೆ ಗುಣಮಟ್ಟದವುಗಳೇ ಆಗಿರುತ್ತಿದ್ದವು. ಸ್ವಚ್ಚಗೊಳಿಸಿದ ವಸ್ತುಗಳು ಸಿಗುತ್ತಿರಲೇ ಇಲ್ಲ. "ಈ ಅಕ್ಕಿ, ಕೊತ್ತುಂಬರಿ, ಹುರುಳಿಯ ಕಸ ಕಲ್ಲುಗಳನ್ನು ಹೆಕ್ಕಿ ಹೆಕ್ಕಿ ಶುಚಿಗೊಳಿಸುವುದರಲ್ಲಿಯೇ ನನ್ನ ಕಣ್ಣಿನ ಅರ್ಧ ಶಕ್ತಿ ಹಾಳಾಯಿತು..." ಎಂದು ಅನಂತರದ ದಿನಗಳಲ್ಲಿ ಅಮ್ಮ ನೆನಪಿಸಿಕೊಳ್ಳುತ್ತಿದ್ದುದೂ ಇತ್ತು.
ಮಳೆಗಾಲಕ್ಕೆ ಬೇಕಾಗುವ ಸೌದೆಯನ್ನು ಆಗ ಬಿರು ಬೇಸಿಗೆಯ ಮೇ ತಿಂಗಳಿನಲ್ಲಿಯೇ ಸಂಗ್ರಹ ಮಾಡುತ್ತಿದ್ದರು. ಎತ್ತಿನ ಗಾಡಿಯಲ್ಲಿ ದೊಡ್ಡ ದಿಮ್ಮಿಗಳಂತಹ ಮರದ ತುಂಡುಗಳನ್ನು ತರಿಸುತ್ತಿದ್ದರು. ಆ ಮರದ ಇಡಿಯಾದ ಭಾಗವನ್ನು ತಮ್ಮ ಶಾಲೆ ಮುಗಿಸಿ ಬಂದ ಮೇಲೆ ಅಪ್ಪಯ್ಯನೇ ಕೊಡಲಿಯಿಂದ ಒಡೆಯುತ್ತಿದ್ದರು. ಒಲೆಗೆ ಹಾಕುವಷ್ಟು ದೊಡ್ಡ ತುಂಡುಗಳನ್ನು ಮಾಡುವ ಈ ಕೆಲಸವು ಏಳೆಂಟು ದಿನಗಳ ಕಾಲ - ಅಪ್ಪಯ್ಯನ ಬಿಡುವಿನ ಹೊತ್ತಿನಲ್ಲಿ ನಡೆಯುತ್ತಿತ್ತು. ಅಪ್ಪಯ್ಯನು ಒಡೆದು ರಾಶಿ ಹಾಕಿದ ಸೌದೆಯ ತುಂಡನ್ನು ನಾವು ಮಕ್ಕಳೆಲ್ಲರೂ ಅಟ್ಟದಲ್ಲಿ ಕೂಡಿಡಲು ಸಹಾಯ ಮಾಡುತ್ತಿದ್ದೆವು. ಅಮ್ಮನು ಅಟ್ಟದಲ್ಲಿ ಕೂತು ಆ ತುಂಡುಗಳನ್ನು ಶಿಸ್ತಿನಿಂದ ಕೂಡಿಸುತ್ತಿದ್ದಳು. ನಮ್ಮ ಕೈಯ ಅಳತೆಗೆ ಮತ್ತು ವಯಸ್ಸಿನ ಯೋಗ್ಯತೆಗೆ ತಕ್ಕಂತೆ ಅಪ್ಪಯ್ಯನು ಎರಡೋ ಮೂರೋ ಸೌದೆ ತುಂಡನ್ನು ನಾವು ಚಾಚಿದ ಎರಡೂ ಕೈಗಳ ಮೇಲೆ ಇಡುತ್ತಿದ್ದರು. ಅವನ್ನು ಅಮ್ಮನಿಗೆ ಕೊಡುವ ಕೆಲಸ ನಮ್ಮದಾಗಿತ್ತು. "ಸೌದೆಯ ಚೂರನ್ನು ಕೊಡುವಾಗ ಕೈಮೇಲಿಂದ ಜಾರಿಸಿ ತೆಗೆಯಬಾರದು. ಸಿಬಿರು (ಕೊಡಲಿಯಿಂದ ಒಡೆದ ಸೌದೆಯ ಮೈಯ್ಯಲ್ಲಿರುವ ಚೂಪಾದ ಬಿರುಸಾದ ಭಾಗ) ಚುಚ್ಚಬಹುದು. ಜಾಗ್ರತೆಯಿಂದ ಕೈಯಿಂದ ಎತ್ತಿ ಅಮ್ಮನಿಗೆ ಕೊಡಬೇಕು..." ಅಂತ ನಮಗೆ ಅಪ್ಪಯ್ಯನು ಎಚ್ಚರಿಕೆಯನ್ನೂ ಹೇಳುತ್ತಿದ್ದರು. (ಹಸುವಿಗಾಗಿ ಒಣಹುಲ್ಲನ್ನು ಅಟ್ಟದಲ್ಲಿ ಪೇರಿಸಿ ಇಡುವಾಗಲೂ ಹೀಗೆ ನಾವೆಲ್ಲರೂ ಸಾಂಘಿಕವಾಗಿ ದುಡಿಯುತ್ತಿದ್ದೆವು.)
ಹೀಗೆ ಸಂಜೆಯ ಹೊತ್ತಿನಲ್ಲಿ ದೇಹಶ್ರಮದ ಕೆಲಸವನ್ನು ನಡೆಸಿದಾಗ, ಕೆಲಸವು ಮುಗಿದ ಮೇಲೆ ಎಲ್ಲರೂ ಸ್ನಾನ ಮಾಡಿ ಅನಂತರ ನಿತ್ಯದ ಭಜನೆ, ಊಟ. ಅಂತಹ ದಿನಗಳಲ್ಲಿ ರಾತ್ರಿ ಮಲಗುವ ಮುನ್ನ ಅಪ್ಪಯ್ಯನು ಮಕ್ಕಳ ಕೈಯ್ಯನ್ನು ನೋಡುತ್ತಿದ್ದರು. "ಅಯ್ಯೋ, ಕೆಂಪಾಗಿದೆಯಲ್ಲ? ಭಾರ ಹೊತ್ತು, ಸೌದೆ ಹೊತ್ತು ನನ್ನ ಮಗಳ ಕೈಗೆ ನೋವಾಯಿತಲ್ಲ? ನೋವಿದೆಯಾ ಮಗಳೇ?.." ಎನ್ನುತ್ತಿದ್ದರು. ಆಗ ಸರಕ್ಕಂತ ಬಾಯಿ ಹಾಕುತ್ತಿದ್ದ ಅಮ್ಮನು - "ನಿಮ್ಮ ಮಗಳಿಗೆ ಏನೂ ಆಗುವುದಿಲ್ಲ. ನಾಳೆ ಎಲ್ಲವೂ ಸರಿಯಾಗಿರುತ್ತದೆ. ನೀವು ಸುಮ್ಮನೆ ಮಲಗಿ...ಅತಿ ಪ್ರೀತಿ ಮಾಡಿ ಮಕ್ಕಳನ್ನು ಬೆಳೆಸಬಾರದು. ಮಕ್ಕಳು ಕೆಲಸ ಮಾಡಿ ಮಾಡಿಯೇ ಗಟ್ಟಿಯಾಗಬೇಕು..." ಎಂದು ಹೇಳುತ್ತಲೇ ನಮ್ಮ ಮೈಕೈ ಸವರುತ್ತ ಅಮ್ಮನೇ ನಿದ್ದೆ ಮಾಡಿಸುತ್ತಿದ್ದಳು!
ಮನೆಗೆಲಸ ಮಾಡಿದಾಗ ಅಪ್ಪಯ್ಯನು ಅನುಕಂಪ ತೋರಿಸಿದಾಗೆಲ್ಲ ಅಮ್ಮನು ಸಿಡುಕುತ್ತಿದ್ದುದು ನನಗೆ ನೆನಪಾಗುತ್ತದೆ. ಅಂದು "ಅಪ್ಪಯ್ಯ ಒಳ್ಳೆಯವರು; ಅಮ್ಮ ಜೋರು..." ಅನ್ನಿಸಿದ್ದರೂ ಅಮ್ಮನ ಆ ಸಿಡುಕಿನ ಹಿಂದೆ ಮಹಾ "ಭಾವಯುದ್ಧ"ವೇ ನಡೆದಿರಬಹುದು ಎಂದು ಈಗ ನನಗನ್ನಿಸುತ್ತದೆ. "ಯಾರೇ ಆದರೂ ತಮ್ಮ ಮನೆಗೆಲಸವನ್ನು ಮಾಡಿದಾಗ ಅದು ಅವರ ಕರ್ತವ್ಯವೇ ಹೊರತು ಉಪಕಾರವಲ್ಲ. ಕುಟುಂಬದಲ್ಲಿ ಪ್ರತಿಯೊಬ್ಬರೂ ತಮಗೆ ಸಾಧ್ಯವಿರುವ ಕೆಲಸವನ್ನು ಮಾಡಲೇಬೇಕು. ಅವರವರ ವಯಸ್ಸಿಗೆ ತಕ್ಕಂತೆ ಕುಟುಂಬದ ಪಾಲುದಾರರಾಗಬೇಕು. ಹಾಗೆ ಕೆಲಸವನ್ನು ನಿರ್ವಹಿಸುವವರಿಗೆ ತಾವು ಕರ್ತವ್ಯವನ್ನು ನಿಭಾಯಿಸುತ್ತಿದ್ದೇವೆ ಎಂಬ ಭಾವನೆ ಇರಬೇಕು. ಮನೆಯ ಹಿರಿಯರು ತಮ್ಮ ಸಂತಾನ - ಕುಟುಂಬದ ಸದಸ್ಯರು ಮಾಡುವ ನಿತ್ಯದ ಗೃಹಕೃತ್ಯಗಳಿಗೆಲ್ಲ ಮೆಚ್ಚುಗೆಯ ಅನುಮೋದನೆ ನೀಡುತ್ತ ಅಥವ ಕರುಣೆ ತೋರುತ್ತ - ದಿನವೂ ಉಪಚಾರಕ್ಕೆ ತೊಡಗಿದರೆ - ಅದು ಪರೋಕ್ಷವಾಗಿ ಕ್ಷಮಾಪಣೆ ಕೇಳಿದಂತೆಯೂ ಧ್ವನಿಸುತ್ತದೆ. ಹಾಗೆ ಉಪಚಾರ ಮಾಡಿದಾಗ ಕರ್ತವ್ಯದ ಭಾವವು ಹಿಂದೆ ಸರಿದು ಉಪಕಾರ ಮಾಡಿದ್ದೇವೆನ್ನುವ ಭಾವವು ಎಳೆಯ ಮನಸ್ಸಿನಲ್ಲಿ ಗಟ್ಟಿಯಾಗುತ್ತದೆ. ಮುಂದೆ ಅಂಥ ಮಕ್ಕಳು ತಾವು ಮಾಡುವ ಕೆಲಸಗಳಿಗೆಲ್ಲ ಇತರ ಎಲ್ಲರಿಂದಲೂ ಹೊಗಳಿಕೆ - ಉಪಕಾರ ಸ್ಮರಣೆಯೆಂಬ ಪ್ರತಿಫಲವನ್ನು ನಿರೀಕ್ಷಿಸುತ್ತಾರೆ. ಅಂತಹ ಮಕ್ಕಳಿಗೆ "ಇದು ನನ್ನ ಮನೆ" ಎಂಬ ಭಾವವು ಬಲಿಯುವುದೇ ಇಲ್ಲ. ಹೆತ್ತ ಅಪ್ಪ ಅಮ್ಮಂದಿರು ತಮ್ಮ ಮಕ್ಕಳನ್ನು ಹಾಗೆ ನೆಂಟರಂತೆ ನಡೆಸಿಕೊಂಡು ಕೊಬ್ಬಿಸಿ ಬೆಳೆಸಿದರೆ ಮುಂದೆ ಇನ್ನೊಬ್ಬರ ಮನೆಗೆ ಹೋಗುವ ಹೆಣ್ಣು ಮಕ್ಕಳು ಅಲ್ಲಿ ಬಾಳ್ವೆ ನಡೆಸುವುದು ಸಾಧ್ಯವೆ? ನಮ್ಮ ಮಕ್ಕಳು ಮಾಡಿದ್ದನ್ನೆಲ್ಲ ಹೊಗಳಿ ಎತ್ತರಿಸುವವರೇ ಸಂಗಾತಿಯಾಗಿ ಒದಗುವ ಭರವಸೆ ಯಾರಿಗಾದರೂ ಇದೆಯೆ? ನಾವಿಬ್ಬರೂ ಒಬ್ಬರಿಗೊಬ್ಬರು ದಿನವೂ ಉಪಕಾರಸ್ಮರಣೆ ಮಾಡುತ್ತಿದ್ದೇವೇನು? ನಾನು ನಿಮ್ಮಿಂದ ಅದನ್ನು ನಿರೀಕ್ಷಿಸಿದರೆ ದಿನವೂ ಅಂತಹ ನಾಟಕ ಮಾಡಲು ನಿಮಗೆ ಸಾಧ್ಯವಿದೆಯೆ? ಆದ್ದರಿಂದ ಹೊಗಳಿಕೆಯನ್ನು ನಿರೀಕ್ಷಿಸುವಂತೆ ಮಕ್ಕಳನ್ನು ರೂಪಿಸಬಾರದು. ಪ್ರೀತಿ ತೋರಿಸುವ ರೀತಿಯು ಅದಲ್ಲ. ಮನೆಯ ಮಕ್ಕಳಿಗೆ ತಮ್ಮ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದನ್ನು ಮಾತ್ರ ಕಲಿಸಬೇಕು..." ಎಂಬ ದೂರದೃಷ್ಟಿಯು ಅಮ್ಮನಲ್ಲಿತ್ತು. "ನಮ್ಮ ನಮ್ಮ ಮನೆಯ ಕೆಲಸವನ್ನು ಶ್ರದ್ಧೆಯಿಂದ ಮಾಡುವುದು; ಎದ್ದು ಹೋಗುವುದು" ಎಂಬ ನಿರ್ಲಿಪ್ತ ಶೈಲಿಯು ಅಮ್ಮನು ಒಪ್ಪಿ ಆಚರಿಸಿದ ಗೃಹಕೃತ್ಯದ ವಿಧಾನವಾಗಿತ್ತು.

ಆದರೆ ತನ್ನ ಮಕ್ಕಳ ಶೈಕ್ಷಣಿಕ ಏಳ್ಗೆ, ಕಲಾ ಕ್ಷೇತ್ರದ ಯಶಸ್ಸುಗಳನ್ನು ಕಂಡಾಗ - ಪ್ರೋತ್ಸಾಹದ ಭಾವದಲ್ಲಿ ಅಮ್ಮನೂ ನಮ್ಮನ್ನು ಪ್ರೀತಿಯಿಂದ ಅಪ್ಪಿಕೊಂಡದ್ದಿದೆ. ಅದು ಮೌನ ಸಂವಹನ - ಅಷ್ಟೆ. ಮನೆಯ ಮಕ್ಕಳನ್ನು ಹೊಗಳಲು ಅವಳು ಎಂದೂ ಅಷ್ಟಾಗಿ ಮಾತನ್ನು ಬಳಸಿದವಳಲ್ಲ. ತನ್ನ ಮಕ್ಕಳ ಕುರಿತ ಅಭಿಮಾನವನ್ನು ಮಕ್ಕಳ ಎದುರಿನಲ್ಲಂತೂ ಅಮ್ಮನು ಎಂದೂ ಬಯಲುಗೊಳಿಸುತ್ತಿರಲಿಲ್ಲ. ಅಪ್ಪಯ್ಯನ ಕಾಲಾನಂತರ ಎಲ್ಲ ಮಕ್ಕಳಲ್ಲೂ ಪರಸ್ಪರ ಸೌಹಾರ್ದವಿರುವಂತೆ ಮಾಡಲು ತನ್ನ ಶೈಲಿಯನ್ನು ಸ್ವಲ್ಪ ಸುಧಾರಿಸಿಕೊಂಡಿದ್ದಳು. ತನ್ನ ಇನ್ನೊಬ್ಬಳು ಮಗಳನ್ನು ನನ್ನೆದುರು ಮೆಚ್ಚಿಕೊಳ್ಳುತ್ತಿದ್ದಳು; ನನ್ನನ್ನು ಕುರಿತು ಇನ್ನೊಬ್ಬಳೆದುರು ಹೇಳುತ್ತಿದ್ದಳು. "ನೀನೊಬ್ಬಳೇ ಜಾಣೆಯಲ್ಲ; ಬೇರೆ ಮಕ್ಕಳೂ ವಿಭಿನ್ನ ವಿಷಯಗಳಲ್ಲಿ ಬುದ್ಧಿವಂತರಿದ್ದಾರೆ. ನಿನ್ನಲ್ಲಿ ಒಂದು ವಿಶೇಷತೆಯಿದೆ; ಅವರಲ್ಲಿ ಇನ್ನೊಂದಿದೆ..." ಎನ್ನುತ್ತಲೇ - ಅವಳು ಎಲ್ಲ ಮಕ್ಕಳ ತಲೆಯನ್ನು ಮೊಟಕುತ್ತ ಸವರುತ್ತ ತನ್ಮೂಲಕ ಎಲ್ಲ ಮಕ್ಕಳೂ ಸೌಹಾರ್ದದ ಬಳಕೆಯನ್ನು ಉಳಿಸಿಕೊಳ್ಳುವಂತೆಯೂ ಮಾಡಿ, ತನ್ನ ವಿಸ್ತೃತ ಸಂಸಾರವನ್ನು ಅಲುಗದಂತೆ ಕಟ್ಟಿದ್ದಳು. ಅಪ್ಪಯ್ಯನಿಗೆ ವಯಸ್ಸಾದ ನಂತರ - ಕೆಲವೊಮ್ಮೆ - ಭಾರೀ ತೂಕದ ಶಬ್ದಗಳನ್ನು ಉಪಯೋಗಿಸುತ್ತ "ನಮ್ಮ ನಾರಾಯಣಿ.." ಎನ್ನುತ್ತ ಹೊಗಳುವಾಗಲೂ ಅಮ್ಮನು ಅವರನ್ನು ಆಗ ತಡೆಯುತ್ತಿದ್ದುದು ನನಗೆ ನೆನಪಿದೆ. "ನಮ್ಮ ಮಕ್ಕಳನ್ನು ನಾವೇ ಹೊಗಳಬಾರದು" ಎಂಬ ಸೂತ್ರವನ್ನು ಅಮ್ಮನು ಕೊನೆಯವರೆಗೂ ಪಾಲಿಸಿದ್ದಳು. ಮುಖಸ್ತುತಿಯು ಅಧಃಪತನದತ್ತ ಕೊಂಡೊಯ್ಯುವ ಸಾಧನ ಎಂಬುದು ಅಮ್ಮನ ಸಿದ್ಧಾಂತವಾಗಿತ್ತು. ಹಾಗೆಂದು ಅಮ್ಮನ ಪ್ರೀತಿಯಲ್ಲಿ ಮಾತ್ರ ನಮಗೆ ಯಾವ ಕೊರತೆಯೂ ಆದಂತೆ ಅನ್ನಿಸಿರಲಿಲ್ಲ. ತನ್ನ ಪೂರ್ಣತೆಯ ಸ್ಪರ್ಶದಲ್ಲೋ ಮಕ್ಕಳ ದೈಹಿಕ ಸೇವೆ ಮಾಡುವುದರಲ್ಲೋ ನಮಗೆ ಪ್ರಿಯವಾದ ಅಡುಗೆ ಮಾಡಿ ಉಣ್ಣಿಸುವುದರಲ್ಲೋ ಮಕ್ಕಳ ಭವಿಷ್ಯದ ಚಿಂತೆಯಲ್ಲೋ...ಅಂತೂ - ಅದು ಹೇಗೋ ಅಮ್ಮನು ನಮ್ಮ ಪ್ರೀತಿಯ ಆಧಾರವಾಗಿಯೇ ಇದ್ದಳು. ಅಮ್ಮನ ನಿಖರ ಲೆಕ್ಕಾಚಾರದ ಬದುಕಿನ ಶೈಲಿಯನ್ನು ನೋಡುತ್ತಿದ್ದ ಅಪ್ಪಯ್ಯನು ಒಮ್ಮೊಮ್ಮೆ ಮೆಚ್ಚುಗೆಯ ಮುಗುಳ್ನಗೆ ಸೂಸುತ್ತಿದ್ದುದೂ ಇತ್ತು. ಅಂತೂ ಹೇಗೋ ತನ್ನ ಲೆಕ್ಕದ ಅಳತೆಯಲ್ಲಿಯೇ ಸಂಸಾರವನ್ನು ಗಟ್ಟಿಗೊಳಿಸಿದ ಅಮ್ಮ ಅವಳು. ಹೀಗೆ ಪ್ರತ್ಯಕ್ಷ ಪ್ರೀತಿ ತೋರುತ್ತಿದ್ದ ಭಾವುಕ ಅಪ್ಪಯ್ಯ, ಪರೋಕ್ಷ ಪ್ರೀತಿ ತೋರುತ್ತಿದ್ದ ವ್ಯಾವಹಾರಿಕ ಅಮ್ಮನ ಆಶ್ರಯದಲ್ಲಿ ನಮ್ಮ ಬಾಲ್ಯವು ಬೆಳದಿಂಗಳಾಗಿತ್ತು.
ಅಮ್ಮನು ರಾತ್ರಿ ನಿದ್ರಿಸುವಾಗ ತನ್ನ ಅತೀ ಸಣ್ಣ ಮಗುವನ್ನು ತನ್ನ ಹತ್ತಿರವೇ ಮಲಗಿಸಿಕೊಳ್ಳುತ್ತಿದ್ದಳು. ಅದಕ್ಕಿಂತ ದೊಡ್ಡ ಮಗುವು ಅಪ್ಪಯ್ಯನ ಹತ್ತಿರ, ಉಳಿದವರೆಲ್ಲರೂ ಅನಂತರ - ಸಾಲಾಗಿ ಚಾವಡಿಯಲ್ಲಿ ಮಲಗಿ ನಿದ್ರಿಸುತ್ತಿದ್ದೆವು. ಅಪ್ಪಯ್ಯನನ್ನು ಬಿಟ್ಟರೆ ನಾವೆಲ್ಲರೂ ಹೆಂಗಸರು. ಬಾಗಿಲೇ ಇಲ್ಲದ ಆ ಚಾವಡಿಯಲ್ಲಿ ಅಷ್ಟು ನಿಶ್ಚಿಂತೆಯಿಂದ ನಾವು ನಿದ್ರಿಸುತ್ತಿದ್ದುದಾದರೂ ಹೇಗೆ? ಎಂದು ಈಗಲೂ ಆಶ್ಚರ್ಯವಾಗುತ್ತದೆ; ಯೋಚಿಸಿದರೆ ಒಮ್ಮೊಮ್ಮೆ ಭಯವೂ ಆಗುತ್ತದೆ. ಆ ಚಾವಡಿಯಲ್ಲಿ ಮಲಗಿಕೊಂಡೇ ನಾವು ರಾಜಬೀದಿಯನ್ನು ನೋಡಬಹುದಾಗಿತ್ತು! ಹಾಗಿತ್ತು ಆ ಮನೆ. ಆದ್ದರಿಂದಲೇ ಉಡುಪ ದಂಪತಿಗಳ ಮುಚ್ಚು ಮರೆಯಿಲ್ಲದ ಮನಸ್ಸಿನ ಪ್ರತೀಕದಂತೆ - ಜೇನುಗೂಡಿನಂತಿದ್ದ ಆ ಮನೆಯು ಈಗಲೂ ನನ್ನೊಳಗೆ ಭದ್ರವಾಗಿ ಕೂತಿದೆ. ಮನುಷ್ಯರ ಭಯವಿಲ್ಲದೆ ಬದುಕಬಹುದಾದ ಯಾವುದೇ ಪರಿಸರವಿದೆಯೆಂದಾದರೆ ಅದಕ್ಕಿಂತ ಹೆಚ್ಚಿನ ಸ್ವಾತಂತ್ರ್ಯ ಸುಖವು ಬೇಕೆ? ಬಹುಶಃ ಅಂದು ದುರಾಸೆಗೂ ಅಂಕೆಯಿದ್ದ ಸಮಾಜವಿತ್ತು. ಯಾರೂ ಭಯಂಕರ SMART ಆಗಿರಲಿಲ್ಲ. ಆದ್ದರಿಂದ ಅಂದಿನ ಜನರು ಬದುಕಿಕೊಂಡರು. ಅಂಕೆಯುಳ್ಳ ಸಭ್ಯ ಸಮಾಜದಲ್ಲಿ ಮಾತ್ರ ಸ್ವಚ್ಛ ಸ್ವಾತಂತ್ರ್ಯದ ರುಚಿಯು ಅನುಭವಕ್ಕೆ ಬರುತ್ತದೆ! ಅಲ್ಲವೆ?
ನನ್ನ ಬಾಲ್ಯಕಾಲದಲ್ಲಿ, ಭಾನುವಾರ ಎಂದರೆ ಎಲ್ಲರೂ ನಿರಾಳವಾಗಿ ಮನೆಯಲ್ಲಿಯೇ ಇರುತ್ತಿದ್ದ ದಿನ. ಆದರೆ ಅಮ್ಮನ ಪಾಲಿಗೆ ಮಾತ್ರ ಹೆಚ್ಚು ಕೆಲಸವಿರುತ್ತಿದ್ದ ದಿನವೇ ಭಾನುವಾರ. ಆಟದ ಸಮಯವೆಲ್ಲವೂ ವ್ಯರ್ಥವಾಗುತ್ತಿದೆ...ಎಂದು ಭಾವಿಸುತ್ತಿದ್ದ - ತಂಟೆಮಂಡೆಯಾಗಿದ್ದ ನನಗಂತೂ ಅಂದಿನ ದಿನಗಳಲ್ಲಿ, ಭಾನುವಾರವು ಬಂತೆಂದರೆ ಅದು ಶಿಕ್ಷೆಯ ದಿನ - ಎಂದೂ ಅನ್ನಿಸುತ್ತಿತ್ತು. ಭಾನುವಾರದಂದು ಒಳ್ಳೆಯ Ring master ರಂತೆ ಅಮ್ಮನು ವರ್ತಿಸುತ್ತಿದ್ದಳು. ತಿಂಗಳಲ್ಲಿ ಎರಡು ಭಾನುವಾರಗಳಂದು ಬೆಳಿಗ್ಗೆ ಎದ್ದ ಕೂಡಲೇ ಒಂದಷ್ಟು ಕಹಿ ಬೇವಿನ ಕಷಾಯವನ್ನು ಕುಡಿಸುತ್ತಿದ್ದಳು. ನಮ್ಮ ಮನೆಯಲ್ಲಿ ಅಮ್ಮನನ್ನು ಬಿಟ್ಟು ಉಳಿದ ಎಲ್ಲರೂ ವಿಪರೀತವೆನ್ನುವಷ್ಟು ಬೆಲ್ಲದೋಪಾಸಕರಾಗಿದ್ದರು. ಆದ್ದರಿಂದ ಆಗಾಗ ಕಹಿ ಕುಡಿಯಬೇಕು - ಎಂಬುದು ಅಮ್ಮನ ವೈದ್ಯಶಾಸ್ತ್ರವಾಗಿತ್ತು. ಕಹಿ ಕುಡಿಯುವಾಗ ಅಪ್ಪಯ್ಯನೇ ನಮ್ಮ ಪ್ರತಿಭಟನೆಯ ನೇತೃತ್ವ ವಹಿಸುತ್ತಿದ್ದರು. ಆದರೆ ಯಾರ ಆಟವೂ ನಡೆಯುತ್ತಿರಲಿಲ್ಲ. ಮೊದಲು ಅಪ್ಪಯ್ಯನೇ ಕಹಿಯನ್ನು ಕುಡಿಯಬೇಕಿತ್ತು. ಪಾಪ. ಗಟಗಟ ಕುಡಿದು ತಾವು ಉಡುತ್ತಿದ್ದ ಪಾಣಿಪಂಚೆಯಲ್ಲಿಯೇ ಅಪ್ಪಯ್ಯನು ಮನೆಯಿಂದ ದೂರ ಹೋಗಿ ಸ್ವಲ್ಪ ಹೊತ್ತು ನಿಂತು ಸುಧಾರಿಸಿಕೊಂಡು ಬರುತ್ತಿದ್ದರು. ಅಷ್ಟರೊಳಗೆ ದೊಡ್ಡ ಮಕ್ಕಳಿಗೆ ಹೆದರಿಸಿ, ಸಣ್ಣ ಮಕ್ಕಳನ್ನು ರಮಿಸಿ ಅಂತೂ ಅಮ್ಮನ ಕಷಾಯದ ಸಮಾರಾಧನೆ ಮುಗಿಯುತ್ತಿತ್ತು. ಕೊನೆಯಲ್ಲಿ ತಾನೂ ಕುಡಿಯುತ್ತಿದ್ದಳು. ಆಮೇಲೆ ಕಹಿ ಕುಡಿದು ಸುಸ್ತಾಗಿ ಅಳುತ್ತಿದ್ದ ಸಣ್ಣ ಮಕ್ಕಳನ್ನು ಎತ್ತಿಕೊಂಡು ಸಮಾಧಾನವನ್ನೂ ಮಾಡುತ್ತಿದ್ದಳು. ಎತ್ತಿಕೊಂಡು ತೋಟದಲ್ಲೆಲ್ಲ ತಿರುಗಾಡಿಸಿ ಅಳುವನ್ನು ಮರೆಸುತ್ತಿದ್ದಳು. ಇಷ್ಟಾದರೂ ತೋಟದ ಮೂಲೆ ಸೇರಿದ್ದ ಅಪ್ಪಯ್ಯನು ಮನೆಗೆ ಹಿಂದಿರುಗದಿದ್ದರೆ ತಾನೇ ಹೋಗಿ ಕರೆತರುತ್ತಿದ್ದಳು. ಆಗ ಮುಖ ಊದಿಸಿಕೊಂಡು ಬರುವ ಅಪ್ಪಯ್ಯನ ಮುಖ ಈಗಲೂ ನೆನಪಾಗುತ್ತದೆ. (ಕೆಲವೇ ವರ್ಷಗಳಲ್ಲಿ ಅಪ್ಪಯ್ಯನಿಗೆ ಮಧುಮೇಹವು ಪೀಡಿಸತೊಡಗಿದಾಗ ತಮಗಾಗಿ ಅಪ್ಪಯ್ಯನೇ ಕೊಂಡು ತರುತ್ತಿದ್ದ ಹಾಗಲಕಾಯಿಯಿಂದ - ಅಮ್ಮನು ರಸವನ್ನು ತೆಗೆದು ಕೊಡುತ್ತಿದ್ದಾಗ ಯಾವ ಪ್ರತಿಕ್ರಿಯೆಯನ್ನೂ ತೋರಿಸದೆ ಅಪ್ಪಯ್ಯ ಕುಡಿಯುತ್ತಿದ್ದರು; ಆಗ ಮರೆಯಲ್ಲಿ ನಿಂತು ಅಮ್ಮ ಅಳುತ್ತಿದ್ದಳು. ಸಿಹಿಯನ್ನು ತುಂಬ ಇಷ್ಟ ಪಡುತ್ತಿದ್ದ ಅಪ್ಪಯ್ಯನು ಮುಂದೆಂದೂ ಸಿಹಿಗಾಗಿ ಬಯಸಲಿಲ್ಲ. ಕೊನೆಯ ಭಾಗದಲ್ಲಿ ಬರೇ ಕಹಿಯನ್ನೇ ಉಂಡು ಉಂಡು ಅವರು ಹೊರಟು ಹೋದರು.)
ಮುಂದೆ...ಅಮ್ಮನು ಕಾಲಮೇಘ, ಕುಟಜಾರಿಷ್ಟ...ಇತ್ಯಾದಿ ಆಯುರ್ವೇದದ ಕಷಾಯಗಳನ್ನು ತರಿಸಿಕೊಂಡು ಬೇವಿನ ಕಷಾಯದ ಬದಲು ಒಮ್ಮೊಮ್ಮೆ ಅದನ್ನೂ ಕೊಡುತ್ತಿದ್ದಳು. ಒಂದು ಎರಡು ಚಮಚದಷ್ಟು ಮಾತ್ರ ಕೊಡುತ್ತಿದ್ದ ಆ ಸಿದ್ಧ ಔಷಧಗಳನ್ನು ಹೆಚ್ಚು ನರಳದೆ ನಾವು ಕುಡಿಯುತ್ತಿದ್ದೆವು. ಹೇಗಿದ್ದರೂ ಕಷ್ಟವು ತಪ್ಪಿದ್ದಲ್ಲ ಎಂದ ಮೇಲೆ ಅದನ್ನು ಅನುಭವಿಸಿ ಜೀರ್ಣಿಸಿಕೊಳ್ಳುವುದೇ ಜಾಣತನ ಎಂಬ ನಿರ್ಧಾರಕ್ಕೆ ಆಗ ನಾವೆಲ್ಲರೂ ಬಂದಿದ್ದೆವು.
ಇನ್ನು ವಾರಕ್ಕೊಮ್ಮೆ ಮಕ್ಕಳಿಗೆ ಎಣ್ಣೆಸ್ನಾನ ಮಾಡಿಸುವುದು ಅಮ್ಮ ಕೈಗೊಂಡ ವ್ರತದಂತೆ ನನಗೆ
ಕಂಡಿದೆ. ಅದಿತ್ಯವಾರದಂದು ಅಭ್ಯಂಜನ ಸ್ನಾನವು ನಮಗೆ ತಪ್ಪುತ್ತಿರಲಿಲ್ಲ. ನಮ್ಮ 5 - 6 ನೇ ತರಗತಿಯ ವರೆಗೂ ನಮ್ಮ ಮನೆಯಲ್ಲಿ ಪ್ರತೀ ಭಾನುವಾರ ಎಣ್ಣೆ
ಸ್ನಾನದ ಪದ್ಧತಿ ಇತ್ತು. ಅದು ಅಮ್ಮನೇ ಮಾಡಿಸುವ ಎಣ್ಣೆ ಸ್ನಾನ. ಅಪ್ಪಯ್ಯನಿಂದ ಹಿಡಿದು ಎಲ್ಲ ಮಕ್ಕಳಿಗೂ ಅದು
ಕಡ್ಡಾಯವಾಗಿತ್ತು. ಅಮ್ಮನು ಎಲ್ಲರ ಮೈ - ತಲೆಗೂ ಎಣ್ಣೆ ಬಳಿದ ಮೇಲೆ ಅರ್ಧ ಗಂಟೆ ಕಾಲ ಸುಮ್ಮನೆ ಕುಳಿತಿರಬೇಕಿತ್ತು. ಆಮೇಲೆ ಎಣ್ಣೆ ಹಾಕಿದ Seniority ಯಂತೆ ಒಬ್ಬೊಬ್ಬರಿಗೇ ಸ್ನಾನ ಮಾಡಿಸುತ್ತಿದ್ದಳು. ಬಚ್ಚಲಿನ ಒಲೆಯಲ್ಲಿ ಸೌದೆಯ ಬೆಂಕಿಯಲ್ಲಿ ನೀರು ಕಾಯಿಸಿ, ಒಬ್ಬೊಬ್ಬರನ್ನೇ
ಸ್ನಾನ ಮಾಡಿಸಿ ಅಮ್ಮನು ಹೊರಗೆ ಕಳಿಸುತ್ತಿದ್ದಳು. ಆ ಸೌದೆಯ ಬೆಂಕಿಯ ಪರಿಮಳ, ಹಸಿ
ಸೌದೆಯಾದರೆ ಅದರ ಹೊಗೆ ಮಿಶ್ರಿತ ಘಾಟು...ಎಲ್ಲವೂ ಈಗಲೂ ಹಸಿಯಾಗಿವೆ. ಈ ಭೂಮಿಯನ್ನು ನಾವು ಪ್ರೀತಿಸುವಂತೆ
ಮಾಡುತ್ತಿದ್ದ ಕ್ಷಣಗಳವು. ತನಗೆ ದೈಹಿಕವಾಗಿ ಸುಸ್ತು ಅನ್ನಿಸಿದರೂ ಅಮ್ಮನು ಯಾವತ್ತೂ ಈ ಎಣ್ಣೆ ಸ್ನಾನವನ್ನು
ನಿಲ್ಲಿಸಿದವಳಲ್ಲ. ಆದರೆ ಅಂತಹ ದಿನಗಳಲ್ಲಿ ಮಕ್ಕಳಿಗೆ ಎಣ್ಣೆ ಹಾಕುವಾಗ, ಸ್ನಾನ
ಮಾಡಿಸುವಾಗ ಅವಳಿಗೆ ಸಹಕರಿಸದೆ ಮಕ್ಕಳು ಅತ್ತಿತ್ತ ಸರಿದಾಡಿದರೆ ಒಮ್ಮೊಮ್ಮೆ
ಗದರಿಸುವುದು, ಬೆನ್ನಿಗೆ ಗುದ್ದುವುದೂ ಇತ್ತು. ಮಕ್ಕಳ ಪ್ರಾಯಕ್ಕೆ ಹೊಂದಿಕೊಂಡು
ಅಪ್ರಚೋದಿತವಾಗಿ ಅಮ್ಮನ ಶಿಕ್ಷೆಯ ಶೈಲಿಯು ಬದಲಾಗುತ್ತಿತ್ತು!
ನಾವು ದೊಡ್ಡವರಾದ ನಂತರವೂ ಎಣ್ಣೆಸ್ನಾನ ಮಾಡುವಂತೆ ಒಂದೆರಡು ಬಾರಿ ನೆನಪಿಸಿ - ಅವಳ ಮಾತನ್ನು ಅನಂತರವೂ ಕಾರ್ಯಗತಗೊಳಿಸದೆ ದಿನದೂಡುತ್ತಿರುವ ಸಂಶಯ ಬಂದಾಗ, ಕೊನೆಗೊಮ್ಮೆ ನಮಗೆ ಗದರಿಸುತ್ತಿದ್ದುದೂ ಇತ್ತು. ಅಪ್ಪಯ್ಯನು ಪಕ್ಷವಾತಕ್ಕೆ ತುತ್ತಾಗಿ ಸುಮಾರು ಐದು ವರ್ಷಗಳ ಕಾಲ ಪರಾವಲಂಬಿಯಾಗಿದ್ದಾಗ, ಅವರಿಗೆ ಪ್ರತೀ ದಿನವೂ ಎಣ್ಣೆ ಸ್ನಾನವನ್ನು ಮಾಡಿಸುತ್ತಿದ್ದ ಅಮ್ಮನು ಎಂದೂ ಅದನ್ನು ತಪ್ಪಿಸಿದವಳಲ್ಲ. ಹಿರಿಯರನ್ನು ಸ್ನಾನ ಮಾಡಿಸುವುದು ಎಂತಹ ಆಯಾಸದ ಕೆಲಸ - ಎಂಬುದನ್ನು ಹಾಗೆ ದುಡಿದವರು ಮಾತ್ರ ಬಲ್ಲರು.
ಮಿತಿ ಮೀರಿದ ಸಂಬಳವನ್ನು ಎಣಿಸುತ್ತಿರುವ ಇಂದಿನ ಕೆಲವು ಉದ್ಯೋಗಿಗಳು ತಮ್ಮ ಮನೆಯಲ್ಲೇ Nurse ಇರಿಸಿ ಅಥವ ಯಾವುದೋ ಆಸ್ಪತ್ರೆಯಲ್ಲಿ ಖಾಯಂ ಕೊಠಡಿಯನ್ನು ಏರ್ಪಡಿಸಿ - ತಮ್ಮ ಹೆತ್ತವರನ್ನು ವೈಭವದಿಂದ ಇರಿಸಿದ್ದೇನೆ - ಎಂದುಕೊಳ್ಳುತ್ತಿರುವ ಕಲಿಗಾಲ ಇದು. ಎಷ್ಟು ದುಡ್ಡಿದ್ದರೂ "ಸಾಕು" ಅನ್ನಿಸದ ಈ ದಿನಗಳಲ್ಲಿ ಮನೆಯ ಎಲ್ಲರೂ ದುಡಿಮೆಗೆ ಇಳಿಯುತ್ತಿರುವುದರಿಂದ ಮುದುಕರ ಸೇವೆಗೆ ಆಳನ್ನು ನೇಮಿಸಿಕೊಳ್ಳುವುದೂ ಸಹಜವಾಗುತ್ತಿದೆ! ತಮ್ಮ ಹೆತ್ತವರನ್ನು ವೃದ್ಧಾಶ್ರಮಕ್ಕೆ ಸೇರಿಸದೆ "ಅಷ್ಟಾದರೂ" ನೋಡಿಕೊಳ್ಳುತ್ತಿರುವ ಅಂತಹ ಮಕ್ಕಳು - ಅವರ ಬೆನ್ನನ್ನು ಅವರೇ ತಟ್ಟಿಕೊಳ್ಳುತ್ತ ಉಪಕಾರ ಮಾಡಿದಂತೆ ಬೀಗುವ ದೃಶ್ಯವೂ ಅಲ್ಲಲ್ಲಿ ಕಾಣಿಸುತ್ತಿರುತ್ತದೆ. ಅದೊಂದು ಕಾಲದಲ್ಲಿ ಬೆನ್ನುಬಿಡದೆ ತಮ್ಮನ್ನು ರಕ್ಷಿಸಿದ್ದ ಹೆತ್ತವರ ವೃದ್ಧಾವಸ್ಥೆಯು ಹೊರೆಯಾದಂತೆ ಭಾವಿಸಿ, ಕೇವಲ ಪ್ರತಿಷ್ಠೆ ಮೆರೆಸುವ ಸಾಧನದಂತೆ - ಪ್ರೀತಿಯಿಲ್ಲದೆ ನಡೆಸುವ ಅಂತಹ ಯಾವುದೇ ವೈಭವದ ಸೇವೆಯು - ಹೊರ ಕಣ್ಣುಗಳಿಗೆ ಉಪಕಾರ ಸ್ಮರಣೆಗೆ ಯೋಗ್ಯವೆಂದು ಅನ್ನಿಸಿದರೂ ಅಂತಹ ಸ್ಥಳದಲ್ಲಿ ಸೇವೆಯನ್ನು ಪಡೆಯುವ ಹಿರಿಯರು ಕ್ಷಣಕ್ಷಣವೂ ನೋಯುತ್ತಿರುತ್ತಾರೆ. ದೈಹಿಕವಾಗಿ, ಮಾನಸಿಕವಾಗಿ ದುರ್ಬಲವಾಗುವ ವೃದ್ಧಾಪ್ಯದ ಹೊತ್ತಿನಲ್ಲಿ ಅವರ ಮಕ್ಕಳೇ ತಮ್ಮ ಕೈಯ್ಯಿಂದ ಆ ಹಿರಿಯ ಜೀವಿಗಳ ಆರೈಕೆ ಮಾಡಿದರೆ ಸಿಗುವ ಸುಖವು "ಪಂಚತಾರಾ ವೈಭವ"ದಲ್ಲಿ ಎಂದೂ ಸಿಗಲಾರದು. ಪ್ರತೀದಿನವೂ ಸ್ವಲ್ಪ ಹೊತ್ತು ವೃದ್ಧ ಹೆತ್ತವರ ಜೊತೆಯಲ್ಲಿ ಕೂತು ಮೈಕೈ ನೇವರಿಸುತ್ತ ಪ್ರಿಯವಾದ ಮಾತನಾಡುವುದೂ "ಸಾತ್ವಿಕ ಭರವಸೆಯ ಸೇವೆ" ಅನ್ನಿಸಿಕೊಳ್ಳುತ್ತದೆ. ಮಕ್ಕಳಲ್ಲಿರುವ ಸಂಸ್ಕಾರ - ಸಂಸ್ಕೃತಿಯ ಸತ್ತ್ವಪರೀಕ್ಷೆಯ ಕಾಲವದು. ಮಕ್ಕಳು ತಮ್ಮ ದಿನಚರಿಯನ್ನು ಆಮೂಲಾಗ್ರವಾಗಿ ಪುನಃ ರೂಪಿಸಿಕೊಳ್ಳಬೇಕಾದ ಸಮಯವದು. ದೈಹಿಕ ಬವಣೆಗೆ ಒಳಗಾದವರಲ್ಲಿ ಅವರ ಮಕ್ಕಳು ಮೂಡಿಸುವ ಭದ್ರ, ಸಾರ್ಥಕ ಭಾವವು - ಹಿಂದಿರುಗಿಸಲಾಗದ ಸೇವಾ ಪ್ರಶಸ್ತಿ.
ಅಂದು ನನ್ನ ಅಪ್ಪಯ್ಯನು ಅನಾರೋಗ್ಯದಲ್ಲಿದ್ದಾಗ ಪ್ರೀತಿಯಿಂದ ಸೇವೆ ಮಾಡುತ್ತಿದ್ದ ಅಮ್ಮನ ರೂಪದಲ್ಲಿ - ಅಂತಹ ಅದೃಷ್ಟವನ್ನು ಪಡೆದಿದ್ದರು. ಹಾಗೆ ದುರ್ಬಲರಾಗಿ ಮಲಗಿದವರನ್ನು ವಾರಕ್ಕೊಮ್ಮೆ, ಹದಿನೈದು ದಿನಕ್ಕೊಮ್ಮೆ ಸ್ನಾನ ಮಾಡಿಸುತ್ತಿದ್ದುದನ್ನು - ಕ್ಷೌರ ಮಾಡುತ್ತಿದ್ದುದನ್ನು ನಾನು ನನ್ನ ಬಾಲ್ಯ ಕಾಲದಲ್ಲಿ ನೋಡಿದ್ದೇನೆ; ಅವರನ್ನು "ಸಾಯುವುದಕ್ಕೆ ಬಿಟ್ಟಂತೆ" ನನಗೆ ಆಗ ಕಾಣಿಸಿದ್ದಿದೆ. ಅಪ್ಪಯ್ಯನು ಪರಾವಲಂಬಿಯಾಗಿದ್ದಾಗ ತನ್ನ ಮಕ್ಕಳನ್ನೂ ಜತೆಗಿರಿಸಿಕೊಂಡು ತನ್ನ ದೇಹವು ಹುಡಿಯಾಗುವಷ್ಟು ದುಡಿದ ಅಮ್ಮ - ಎಂದೂ "ಕಷ್ಟ" ಎಂಬ ಶಬ್ದವನ್ನೂ ಉಸುರಿದವಳಲ್ಲ. ಅಮ್ಮನು ಪ್ರೀತಿಯಿಂದಲೇ ತನ್ನ ಕರ್ತವ್ಯವನ್ನು ನಿಭಾಯಿಸಿದ ಪರಿಯನ್ನು ಈಗ ನೆನಪಿಸಿಕೊಂಡಾಗಲೆಲ್ಲ ಅಮ್ಮನ ಕರ್ಮಯೋಗಕ್ಕೆ ನನ್ನ ತಲೆಬಾಗುತ್ತದೆ. ತನ್ನ ಆಸೆಗಳನ್ನು ಹೂತು ಹಾಕಿ ಕುಟುಂಬದ ಪ್ರೀತಿಯ ನೆಲೆಗಟ್ಟು ಕುಸಿಯದಂತೆ ಹೊಣೆಯರಿತು ನಡೆಯಲೇಬೇಕಾದ - ಅಂದಿನ ತನ್ನ ಕುಟುಂಬದ ವಾಸ್ತವವನ್ನು ಸರಿಯಾಗಿ ಅರ್ಥೈಸಿಕೊಂಡು ಬದುಕಿದ ಅಮ್ಮ ಅವಳು; ಅದು ಬದುಕಿನ ನಿಷ್ಠೆ. ವೃದ್ಧಾಪ್ಯದಲ್ಲಿ ನನ್ನ ಅಮ್ಮನಿಗೂ ಅಂತಹ ಪ್ರೀತಿಯ ಆರೈಕೆಯು ಸಿಕ್ಕಿತ್ತು. (ಅಥವ ನಾವು ಹಾಗೆ ಅಂದುಕೊಂಡಿದ್ದೇವೆ ! ಏಕೆಂದರೆ ಈ ಅಮ್ಮನು ಏನನ್ನೂ ಹೇಳುವವಳಲ್ಲ; ಹೇಳಿಯೂ ಇಲ್ಲ...)

ಮತ್ತೆ ಬಾಲ್ಯಕ್ಕೆ - ಬಾಲ್ಯದ ಭಾನುವಾರದ ಸಡಗರಕ್ಕೆ ಬಂದರೆ, ಸ್ನಾನದ ನಂತರ ಅಮ್ಮನು ಮಕ್ಕಳ ಕಣ್ಣಿಗೆ ಕಾಡಿಗೆ ಹಾಕುವ ಒಂದು ಕ್ರಮವಿತ್ತು. ಅದು ಅಂಗಡಿಯ ಕಾಡಿಗೆಯಲ್ಲ. ಯಾವುದೋ ಎಣ್ಣೆಯಲ್ಲಿ ಅದ್ಯಾವುದೋ (ಬಹುಶಃ ಹೊನ್ನೆ? ಮಾಡುವ ಕ್ರಮವು ನನಗೆ ನೆನಪಿಲ್ಲ.) ಫಲ..ಇತ್ಯಾದಿ ಬಳಸಿ ಅಮ್ಮನೇ ತಯಾರಿಸುತ್ತಿದ್ದ ಕಾಡಿಗೆ ಅದು. (ಅಮ್ಮನ ಅಪ್ಪಯ್ಯನು - ಅಂದರೆ ನನ್ನ ಅಜ್ಜ - ಆಯುರ್ವೇದ ವೈದ್ಯಶಾಸ್ತ್ರದಲ್ಲಿ ಅನುಭವಿಗಳಾಗಿದ್ದರು. ಅವರ ಜೊತೆಗಿದ್ದ ನನ್ನ ಅಜ್ಜಿಯೂ ಅವನ್ನೆಲ್ಲ ಕಲಿತು ತಮ್ಮ ಮಕ್ಕಳಿಗೆ ಕಹಿ ಔಷಧ ಕೊಡುವುದರಲ್ಲಿ, ಮನೆಮದ್ದಿನಲ್ಲಿ ಅಗ್ರಗಣ್ಯರಾಗಿದ್ದರು. ಅವರಿಂದ ನನ್ನ ಅಮ್ಮನೂ ಕಹಿ ಪ್ರಯೋಗವನ್ನೆಲ್ಲ ಕಲಿತು ನಮ್ಮ ಮೇಲೆ ನಿರ್ದಯವಾಗಿ ಪ್ರಯೋಗಿಸುತ್ತಿದ್ದಳು.) ಭಾನುವಾರದ ಬಿಸಿ ಬಿಸಿಯಾದ ಸ್ನಾನವನ್ನು ಮುಗಿಸಿಯೇ ಅರ್ಧ ಜೀವವಾಗಿರುತ್ತಿದ್ದ ನಮ್ಮನ್ನು ಒಬ್ಬೊಬ್ಬರನ್ನೇ ಕರೆದು ಒತ್ತಿ ಹಿಡಿದುಕೊಂಡು - (ಏಕೆಂದರೆ ಆ ಕಾಡಿಗೆಯ ರುಚಿ ಅರಿತಿದ್ದ ನಾವು ತಪ್ಪಿಸಿಕೊಂಡು ಓಡಲು ಯತ್ನಿಸುತ್ತಿದ್ದೆವು.) ಆ ಕಾಡಿಗೆಯನ್ನು ಕಣ್ಣುಗಳಿಗೆ ತುಂಬುತ್ತಿದ್ದಳು. ತಾನೂ ಹಚ್ಚಿಕೊಳ್ಳುತ್ತಿದ್ದಳು. ಆ ಕಾಡಿಗೆಯಿಂದ ಕಣ್ಣು ಸ್ವಚ್ಛವಾಗುತ್ತದೆ - ಅನ್ನುತ್ತಿದ್ದಳು. ಆದರೆ ಆ ಬಾಲ್ಯದಲ್ಲಿ, ನಮ್ಮ ಕಣ್ಣುಗಳು ಸ್ವಚ್ಛವೇ ಇದ್ದವು. ಏನೂ ತಾಪತ್ರಯವಿರಲಿಲ್ಲ. ಆದರೂ ಕಾಡಿಗೆಗೆ ಕಣ್ಕೊಡಲೇ ಬೇಕಿತ್ತು! "ಅಯ್ಯೋ ಮಕ್ಕಳನ್ನು ಕಾಡಿಗೆ ಹಾಕಿ ಸಿಂಗರಿಸಿದರೆ ಏನು ಕಷ್ಟ?" ಎಂದುಕೊಳ್ಳುವಂತಿಲ್ಲ. ಏಕೆಂದರೆ, ಅದು ಅಂತಿಂಥ ಕಾಡಿಗೆಯಲ್ಲ. ಕೆಟ್ಟ ಉರಿ! ಅದನ್ನು ಹಚ್ಚಿದ ನಂತರ 10 - 15 ನಿಮಿಷಗಳಷ್ಟು ಹೊತ್ತು ಕಣ್ಣಿನಿಂದ ಧಾರಾಕಾರವಾಗಿ ನೀರು ಸುರಿಯುತ್ತಿತ್ತು. ಹೀಗೆ ವಾರಕ್ಕೊಮ್ಮೆ ಕಣ್ಣೀರು ಸುರಿಸುವ ಅಂಕವು ನಮಗೆ ತಪ್ಪುತ್ತಿರಲಿಲ್ಲ. ತನ್ನ ಮಕ್ಕಳು ಯಾರ ಮೈಮೇಲೂ ಬೆಳ್ಳಿಯಾಗಲೀ ಚಿನ್ನವಾಗಲೀ ಇಲ್ಲದ ಆ ಕಾಲದಲ್ಲಿ ಆ ದುಷ್ಟ ಕಾಡಿಗೆಯನ್ನು ತುಂಬಿಡಲು ಮಾತ್ರ - ಅಮ್ಮನಲ್ಲಿ ಬೆಳ್ಳಿಯ ಕರಡಿಗೆ ಇತ್ತು! ಏಕೆಂದರೆ...ಅಮ್ಮನ ಪಾಲಿಗೆ ಆ ಕಾಡಿಗೆಯು ಅಷ್ಟು ಅಮೂಲ್ಯ!
ಅಲ್ಲಿಗೆ ಅಮ್ಮನ ಭಾನುವಾರದ ಒಂದು ಹಂತದ ಕೆಲಸ ಮುಗಿಯುತ್ತದೆ. ನಮ್ಮ ಇಷ್ಟು ಕೆಲಸಗಳು ಮುಗಿಯುವಾಗ, ಅದಾಗಲೇ ಒಲೆಯಲ್ಲಿ ಬೇಯಲು ಇಟ್ಟ ಅಕ್ಕಿಯು ಅನ್ನವಾಗಿ ತನ್ನ ಪರಿಮಳದಿಂದಲೇ ನಮ್ಮನ್ನು ಕರೆಯುತ್ತಿತ್ತು. ಗಂಟೆಯು ಬೆಳಗಿನ 8 ದಾಟಿರುತ್ತಿತ್ತು. ಸೋತು ಹೈರಾಣಾದ ಎಲ್ಲರಿಗೂ ಆಮೇಲೆ ಗಂಜಿ ಸಮಾರಾಧನೆ. ಕೊಚ್ಚಿಗೆ ಅಕ್ಕಿಯ ಗಂಜಿ, ಒಂದು ಚಮಚ ತುಪ್ಪ, ಅಮ್ಮನೇ ಮಾಡಿದ ಮಿಡಿ ಉಪ್ಪಿನ ಕಾಯಿ. ನೆನಪಾದರೆ ಈಗಲೂ ಬಾಯಲ್ಲಿ ನೀರೂರುತ್ತದೆ. ಅಂದಿನ ಊಟಕ್ಕೆ ಅದೆಂತಹ ರುಚಿ! ಅಥವ ನಮ್ಮ ಬಾಲ್ಯದ ಹಸಿವು ಹಾಗೆ ಅನ್ನಿಸುವಂತೆ ಮಾಡುತ್ತಿತ್ತೆ? ಗೊತ್ತಿಲ್ಲ. ಸೌದೆಯ ಒಲೆಯಲ್ಲಿ, ಮಡಕೆಯಲ್ಲಿ ಗಂಜಿಯು ಬೇಯುವಾಗಲೇ ಬಾಯಲ್ಲಿ ಲಾಲಾರಸವು ಸ್ರವಿಸಲು ಆರಂಭವಾಗುತ್ತಿತ್ತು. ಕಮಕ್ ಕಿಮಕ್ ಅನ್ನದೆ ಹೊಟ್ಟೆ ತುಂಬ ಉಂಡು ಏಳುತ್ತಿದ್ದೆವು. ಕೆಲವೊಮ್ಮೆ ಅಲ್ಲೂ ಅಮ್ಮನ ದಾದಾಗಿರಿ ನಡೆಯುತ್ತಿತ್ತು. ನಮ್ಮ ಮನೆಯಲ್ಲಿ ಎಲ್ಲ ಹೆಣ್ಣು ಮಕ್ಕಳೂ ಊಟದ ಪ್ರಮಾಣದಲ್ಲಿ ಸ್ವಲ್ಪ ಹಿಂದೆ. ಆದರೆ 10 - 11 ವಯಸ್ಸಾದವರು ಉಂಡದ್ದು ಕಡಿಮೆಯಾಯಿತೆಂದು ಅಮ್ಮನಿಗೆ ಅನ್ನಿಸಿದರೆ ಅವಳು ಒತ್ತಾಯದಿಂದ ಅವರಿಗೆ ಬಡಿಸುತ್ತಿದ್ದಳು. "ನಿನ್ ಪ್ರಾಯ ಎಷ್ಟ್ ? ಹಾಕಿದ್ದಷ್ಟ್ ಉಂಡ್ ಏಳ್ .." ಅನ್ನುವ ಜಬರ್ದಸ್ತೂ ಅಮ್ಮನಲ್ಲಿ ಇತ್ತು.
ವರ್ಷಕ್ಕೊಮ್ಮೆ - ಕಡು ಬೇಸಿಗೆಯ ಯಾವುದಾದರೂ ಭಾನುವಾರದಂದು ಅಮ್ಮನು ನಮ್ಮನ್ನೆಲ್ಲ ಗೋಳೋ ಎಂದು ಅಳುವಂತೆ ಮಾಡುತ್ತಿದ್ದಳು. ಅದಕ್ಕೆ ಕಾರಣ - ಹರಳೆಣ್ಣೆಯ ಪ್ರಯೋಗ! ನಮ್ಮ ಮನೆಯಲ್ಲಿ ರಾತ್ರಿಯ ಊಟದ ನಂತರ ಹಾಲು ಕುಡಿಯುವುದು ಕಡ್ಡಾಯವಾಗಿದ್ದರೂ - ಬೆಳಿಗ್ಗೆ ಎದ್ದ ಕೂಡಲೇ ಚಹಾ, ಕಾಫಿ, ಹಾಲು... ಇತ್ಯಾದಿಗಳೆಲ್ಲ ಇರಲಿಲ್ಲ. ನೇರವಾಗಿ ಗಂಜಿ ಊಟ - ಅಷ್ಟೆ. ಆದರೆ ಹರಳೆಣ್ಣೆಯ ಪ್ರಯೋಗದ ದಿನದಂದು ಮಾತ್ರ ದಿನಚರಿಯು ಬದಲಾಗುತ್ತಿತ್ತು. ಮಕ್ಕಳು ಏಳುವಾಗಲೇ ಹಸುವಿನ ಹಾಲು ಕರೆದು ಕಾಯಿಸಿರುತ್ತಿದ್ದ ಅಮ್ಮನು ನಾವು ಹಲ್ಲುಜ್ಜಿ ಬರುವಾಗಲೇ ಬಿಸಿ ಹಾಲಿನ ಪಾತ್ರೆಯನ್ನು ಚಾವಡಿಯಲ್ಲಿ ಇಟ್ಟುಕೊಂಡು ಕೂತಿರುತ್ತಿದ್ದಳು. ಅದರ ಪಕ್ಕದಲ್ಲಿ ದೊಡ್ಡದೊಂದು ಹರಳೆಣ್ಣೆಯ ಸೀಸೆ. ಆ ದೃಶ್ಯವನ್ನು ನೋಡಿದ ಕೂಡಲೇ ಸಂಭವಿಸಬಹುದಾದ ಸಂಕಟವನ್ನು ಗ್ರಹಿಸುತ್ತಿದ್ದ ನಾನು ಅಲ್ಲಿಂದ ಪರಾರಿಯಾಗುತ್ತಿದ್ದೆ. ಮನೆಯ ಹಿಂದಿನ ಹಾಡಿಯ ಯಾವುದೋ ಮರದ ಹಿಂದೆ ಹೋಗಿ ಅಡಗಿಕೊಳ್ಳುತ್ತಿದ್ದೆ. ಆಗ ಅಮ್ಮನು "ಅಯ್ಯೋ ದೇವರೇ, ಆ ಹೆಣ್ಣನ್ ಎಳ್ ಕಂಡ್ ಬಾ; ಓಡ್.." ಅಂತ ನನ್ನ ಅಕ್ಕನನ್ನು ಕಳಿಸುತ್ತಿದ್ದಳು. ಅವಳು ನನ್ನನ್ನು ಹುಡುಕಿ ದರದರ ಎಳೆದುಕೊಂಡು ಬರುತ್ತಿದ್ದಳು. ಅಷ್ಟರಲ್ಲಿ ಬಿಸಿ ಮಾಡಿದ ಹಾಲು ಸ್ವಲ್ಪ ತಣಿದಿರುತ್ತಿತ್ತು. "ಓಡಿದ್ ಎಲ್ಲಿಗ್ ಹೆಣೆ? ಸಮಾ ಗುದ್ದತೆ ಕಾಣ್; ಇದೇನ್ ವಿಷವಾ?...ಸುಮ್ನೆ ಕೂತ್ಕೋ.." ಅಂತ ನನ್ನನ್ನು ಗದರಿಸುತ್ತ, ಆ ಹಾಲನ್ನು ಮತ್ತೊಮ್ಮೆ ಬಿಸಿ ಮಾಡಿಕೊಂಡು ಬರುತ್ತಿದ್ದ ಅಮ್ಮನು - ಅರ್ಧ ಲೋಟ ಬಿಸಿ ಹಾಲಿಗೆ ಒಂದು ದೊಡ್ಡ ಚಮಚ ಹರಳೆಣ್ಣೆ ಸುರಿದು ಪ್ರತಿಯೊಬ್ಬರಿಗೂ ಕುಡಿಯಲು ಕೊಡುತ್ತಿದ್ದಳು. ನಾವು ಒಬ್ಬರ ನಂತರ ಒಬ್ಬರು ಅದನ್ನು ಕುಡಿಯುವಂತಿರಲಿಲ್ಲ. ಎಲ್ಲರೂ ಒಟ್ಟಿಗೇ ಗಟಗಟ ಕುಡಿಯಬೇಕಿತ್ತು. ಯಾಕೆಂದರೆ ಒಬ್ಬರು ಕುಡಿಯುವಾಗ ಇನ್ನೊಬ್ಬರು ನೋಡಿದರೆ - ಮೊದಲು ಕುಡಿದವರ ಹರಳೆಣ್ಣೆ ಮುಖಭಾವವನ್ನು ನೋಡಿ ತಾವು ಕುಡಿಯಲು ಹಿಂದೇಟು ಹೊಡೆಯಬಹುದು; ಅದರಿಂದ ಅಮ್ಮನ ಕೆಲಸವು ಉದ್ದವಾಗುತ್ತದೆ ಅನ್ನುವ Plan ಅದು. ಅಯ್ಯೋ...ಆ ಹಿಂಸೆಯನ್ನು ಏನೆಂದು ಹೇಳಲಿ? ಆ ದಿನವಿಡೀ ಎಲ್ಲರಿಗೂ ಹಾಡಿಗೆ ಹೋಗುವ Extra ಕೆಲಸ; ಕೆಲವು ಪೆದ್ದು ಮೊದ್ದು ಹೊಟ್ಟೆ ಹುಳಗಳಿಗೂ ಅಂದು ಹರಳೆಣ್ಣೆಯ ಮೋಕ್ಷ ಸಿಗುತ್ತಿತ್ತು. ಆದರೆ ಆ ದಿನ, ಯಾರಿಗೂ ಊಟ ತಿಂಡಿ ಏನೂ ಸೇರುತ್ತಿರಲಿಲ್ಲ; ಏನೋ ಮೈಯೆಲ್ಲ ಅಸಹ್ಯದ...ಅನ್ನಿಸಿಕೆ. ಪ್ರತೀ ವರ್ಷದ ಆ ಹರಳೆಣ್ಣೆಯ ದಿನ ಮಾತ್ರ - ಅದು ಭಾನುವಾರವಾದರೂ ನಮ್ಮ ಮನೆಯು ಯಾವುದೇ ಸದ್ದು ಗದ್ದಲವಿಲ್ಲದೆ ತಣ್ಣಗಿರುತ್ತಿತ್ತು. ನನ್ನ ತಂಗಿಯ ಗಂಟಿಕ್ಕಿದ ಮುಖದ ಹುಬ್ಬುಗಳು - ಕ್ಲಿಪ್ ಹಾಕಿ ಎತ್ತರಿಸಿದಂತೆ ತಲೆಭಾರವನ್ನು ದಿನವಿಡೀ ಆ ಹುಬ್ಬುಗಳೇ ಹೊತ್ತಂತೆ ಇರುತ್ತಿದ್ದವು. ಎಲ್ಲರಿಗೂ ದೈಹಿಕ ಬಳಲಿಕೆಗಿಂತ ಬಹುಶಃ ಅಮ್ಮನ ಮೇಲೆ ವಿಪರೀತ ಸಿಟ್ಟು ಬಂದಿರುತ್ತಿತ್ತು. ನಮ್ಮನ್ನು ಬಲಿಪಶು ಮಾಡಿದಳಲ್ಲಾ...ಎಂಬ ಅಸಹಾಯಕ ಭಾವವದು.
ಆದರೆ ಮರುದಿನ ನಮ್ಮ ದೇಹ, ಮನಸ್ಸು ಎಷ್ಟು ಲವಲವಿಕೆಯಿಂದ ಕೂಡಿರುತ್ತಿತ್ತೆಂದರೆ ಹೊಸ ಉತ್ಸಾಹದ ಅಧ್ಯಾಯವೇ ಆರಂಭವಾದಂತೆ ಅನ್ನಿಸುತ್ತಿತ್ತು. ತನ್ನ ಗಂಡ - ಮಕ್ಕಳ ಆರೋಗ್ಯ, ಹೊಟ್ಟೆಯ ವ್ಯವಸ್ಥೆ ಮುಗಿದ ಕೂಡಲೇ ಅಮ್ಮನು ಎಂದಿನಂತೆ ತನ್ನ ದೈನಂದಿನ ಮನೆವಾರ್ತೆಗೆ ಹೊರಳುತ್ತಿದ್ದಳು. ಅಪ್ಪಯ್ಯನ ಮಿತವಾದ ಗಳಿಕೆ, ಅದಕ್ಕೆ ಪೂರಕವಾಗಿ - ಅಮ್ಮನ ಕಠಿಣ ದೈಹಿಕ ದುಡಿಮೆಯಿಂದಲೇ ಒಂದಷ್ಟು ಉಳಿಕೆ - ಪರಸ್ಪರ ಹೊಂದಾಣಿಕೆ, ಪ್ರೀತಿಯಿಂದಲೇ ನೆಮ್ಮದಿಯ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಿದೆ ಎಂಬುದಕ್ಕೆ ಜ್ವಲಂತ ದೃಷ್ಟಾಂತವಾಗಿ ನಿಂತವರು ನನ್ನ ಹೆತ್ತವರು. ಹಿತ್ತಲು, ಅಂಗಳ, ಹಟ್ಟಿ, ದನಕರು...ಹೀಗೆ ವರ್ಷಗಟ್ಟಲೆ ನಿಯಮಿತವಾಗಿ ತನ್ನ ಸಂಸಾರದ - ಪರೋಕ್ಷವಾಗಿ ಸೃಷ್ಟಿಯ ಯೋಗಕ್ಷೇಮವನ್ನು ಅಚ್ಚುಕಟ್ಟಾಗಿ ನೋಡಿಕೊಳ್ಳುವುದು ಈ ಬ್ರಹ್ಮಾಂಡದ ಯಾವ ದೇವ ಗಣಕ್ಕಾದರೂ ಸಾಧ್ಯವೆ? ತಮ್ಮ ನಿರುಪದ್ರವಿ ನಿಷ್ಠಾಪೂರ್ಣ ಬದುಕಿನಿಂದ, ಸ್ಥಿತಿಕಾರಕನೆಂಬವನಿಗೆ ಸಹಕರಿಸಿ ಉಪಕರಿಸುವ ಇಂತಹ ವಿಶಿಷ್ಟ ಬದುಕುಗಳಿಂದ - ಪರೋಕ್ಷವಾಗಿ ದೈವ ಕಾರ್ಯವೇ ನಡೆಯುತ್ತಿರುತ್ತದೆ. ದೇವರ ಕೈ ಬಲಪಡಿಸಲೆಂದೇ ಪ್ರೀತಿಸುವ ಅಮ್ಮ ಮತ್ತು ಅಪ್ಪ - ನಮಗೆ ಸಿಕ್ಕಿದ್ದು; ನಾವೆಲ್ಲರೂ "ಮೋಹ ಮಮತಾ ಪ್ರಿಯ"ರಾದದ್ದು! ಭೂಮಿಯಲ್ಲಿ ಸಂಸಾರಗಳು ಉಳಿದದ್ದು.
ಅಂದು ಅಪ್ಪಯ್ಯ ಅಮ್ಮನ ಮುಷ್ಟಿಯಲ್ಲಿ ತಿಣುಕಾಡುತ್ತಿದ್ದ ನಮಗೂ ಅಂದು ಕ್ಷಣಿಕವಾಗಿ "ಒತ್ತಾಯ, ಜುಲುಮೆ"ಗಳು ಕಷ್ಟವೆನ್ನಿಸಿರಬಹುದು. ಆದರೆ ಒಂದು ಹಂತದವರೆಗೆ ಮುಷ್ಟಿಯಲ್ಲಿ ಇದ್ದುದರಿಂದಲೇ ನಮ್ಮ ಇಂದಿನ ಬದುಕು ತಕ್ಕಮಟ್ಟಿಗೆ ನೆಟ್ಟಗಿದೆ. SPACE ಎನ್ನುವ Fashion ಗಾಗಿ ಆಕಾಶ ಭೂಮಿಯನ್ನು ಒಂದು ಮಾಡುವ ಇಂದಿನ ನವಜನಾಂಗದ ಎಷ್ಟು ಜನರು ಅವರ Space ನಲ್ಲಿ ಕೂತು ತಪಸ್ಸು ಮಾಡಿ - ಐನ್ ಸ್ಟೈನ್ ಆಗಿದ್ದಾರೆ? ಪೋಕುಬಾರದ CHAT ಗಳಿಗಾಗಿ Space ಜಪ ಮಾಡುವುದು ವ್ಯರ್ಥ ವ್ಯಾಯಾಮ. ಇಂದಿನ SPACE ಜನಾಂಗಕ್ಕೆ ಇವೆಲ್ಲ ಅರ್ಥವಾಗುವುದಿಲ್ಲ. ಅವರಿಗೆ ಎಷ್ಟು Space ಇದ್ದರೂ ಸಾಕಾಗುವುದಿಲ್ಲ. ತಾವು ಇರುವ Space ಒಂದನ್ನು ಬಿಟ್ಟು ಅವರೆಲ್ಲರೂ ಇನ್ನೆಲ್ಲೆಲ್ಲೋ Space ನ್ನು ಹುಡುಕುತ್ತಿರುತ್ತಾರೆ. ಅಸ್ತಿತ್ವದಲ್ಲಿಯೇ ಇಲ್ಲದ ಆ ಗುಂಡಾಂತರದ Space ಸಿಗುವುದಾದರೂ ಹೇಗೆ? ಹುಡುಕಾಟದಲ್ಲಿಯೇ ಅರ್ಧ ಆಯುಷ್ಯವನ್ನು ಕಳೆದುಕೊಂಡ ಮೇಲೆ ಕೊರಗುತ್ತಾರೆ; ಅನಂತರ ನರಳುತ್ತಾರೆ. ಈಗಂತೂ ಪ್ರತಿಫಲಾಪೇಕ್ಷೆಯಿಲ್ಲದೆ ಒಂದು ಕಡ್ಡಿಯನ್ನೂ ಎತ್ತಿಡಲು ಒಲ್ಲದೆ "Selfish Space" ಗಾಗಿ ಹಲುಬುವವರ ಆಲಾಪವು ತಾರಸ್ಥಾಯಿಯಲ್ಲಿದೆ. ಬುದ್ಧಿಯನ್ನು ಕಲುಷಿತಗೊಳಿಸುವ ಈ Space ನ ಚಟವು ಬದುಕನ್ನು ನಷ್ಟಗೊಳಿಸುತ್ತಿರುವ ವ್ಯಾಧಿ. ಬರೇ ಕೂತು ಹೊರಳಾಡುವ, ದೇಹಶ್ರಮಕ್ಕೆ ಹಿಂಜರಿಯುವ ಜನರಿಗೆ ಬದುಕು ಒಲಿಯುವುದಿಲ್ಲ. ಇಂದ್ರಿಯಗಳನ್ನು ಪಳಗಿಸಿ ಸತ್ಕರ್ಮದಲ್ಲಿ ಬಂಧಿಸಲಾಗದವರು - ಸೋಲುವ ಮತ್ತು ಸೋಲಿಸುವ ಬದುಕಿಗೂ ಉದಾಹರಣೆಗಳಾಗಿ ನಿಲ್ಲುತ್ತಾರೆ. ಬದುಕನ್ನು ಶ್ರದ್ಧೆಯಿಂದಲೂ ಕಟ್ಟಬಹುದು ಎಂಬುದಕ್ಕೆ ತನ್ನ 86 ಸಂವತ್ಸರಗಳನ್ನು ಸಾತ್ವಿಕ ಲೆಕ್ಕಾಚಾರದಲ್ಲಿಯೇ ನಿರ್ವಹಿಸಿದ ಅಮ್ಮ ಮತ್ತು ತಮ್ಮ 68 ವರ್ಷಗಳನ್ನು ಮುಗ್ಧ - ವಿನಮ್ರವಾಗಿ ತೂಗಿಸಿದ ಅಪ್ಪಯ್ಯನೇ ಸಾಕ್ಷಿ. ಭೂಮಿಯ ಬದುಕಿನಿಂದ ನಿರ್ಗಮಿಸುವುದರಲ್ಲೂ ಅವರಿಬ್ಬರಲ್ಲಿ ಎಂತಹ ತಾಳಮೇಳವಿತ್ತಲ್ಲ?.....68 - 86 ! ಏರಿಳಿತದಲ್ಲೂ ಹೊಂದಿಕೆಯ ಜೋಕಾಲಿಯಾಟ...ಅಲ್ಲೂ ಲೆಕ್ಕ ಹೊಂದಿಸಿ ಸರಿದೂಗಿಸಿ ನಕ್ಕದ್ದು - ಕೊನೆಗೆ ಹೊರಟ ನನ್ನ ಅಮ್ಮನೇ.

"ನನ್ನ ಗಂಡನು ಅತಿ ಚತುರನು; ಅವನು ಬರೆದದ್ದನ್ನು ಬೇರೆಯವರಾರೂ ಓದಲಾರರು" ಎಂದು ಒಬ್ಬಳು ಜಂಭ ಕೊಚ್ಚಿಕೊಂಡಳು. ಅದನ್ನು ಕೇಳಿದ ಗೆಳತಿಯು "ನನ್ನ ಗಂಡನು ಅದಕ್ಕಿಂತಲೂ ಚತುರನು; ಅವನು ತಾನು ಬರೆದುದನ್ನು ತಾನೇ ಓದಲಾರ.." ಎಂದಳಂತೆ. ಇದಕ್ಕೆ "ಚಟ್ಟು ಕಾಳುಗಳ ಪೊಟ್ಟು ಸ್ಪರ್ಧೆ" ಎನ್ನುತ್ತಾರೆ. ಇಂತಹ "ಇಳಿಯುವ ಸ್ಪರ್ಧೆ"ಯಲ್ಲಿ ಗಂಭೀರವಾಗಿ ಮುಳುಗಿರುವ ಇಂದಿನ ಕಾಲಘಟ್ಟದಲ್ಲಿ ಭಾರತೀಯ ಸಂಸ್ಕೃತಿಯ ಆಧಾರಗಳಾದ ಬ್ರಹ್ಮ, ಬ್ರಾಹ್ಮಣ, ವೇದ, ಉಪನಿಷತ್ತು...ಇತ್ಯಾದಿ ವಿಚಾರಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲು "ಸ್ವಯಂಘೋಷಿತ ವಿಚಾರವ್ಯಾಧಿ ಗುಂಪಸುರರು" - (ಅಣಬೆಗಳಂತೆ) ಹುಟ್ಟಿಕೊಳ್ಳುತ್ತಿರುವುದರಲ್ಲಿ ಆಶ್ಚರ್ಯವಿಲ್ಲ.
ಅಸ್ಮಿನ್ ಕಲೌ ಖಲೋತ್ ಸೃಷ್ಟ ದುಷ್ಟ ವಾಗ್ಬಾಣದಾರುಣೇ/
ಕಥಂ ಜೀವೇತ್ ಜಗನ್ನಸ್ಯುಃ ಸನ್ನಾಹಾಃ ಸಜ್ಜನಾ ಯದಿ//
"ಈ ಕಲಿಯುಗದಲ್ಲಿ ದುಷ್ಟರು ತಮ್ಮ ಮಾತಿನ ಭಯಂಕರವಾದ ಬಾಣಗಳನ್ನು ಬಿಡುತ್ತಿರುತ್ತಾರೆ. ಹೀಗಿರುವಾಗ - ಸಜ್ಜನರು ಇಲ್ಲದಿದ್ದರೆ ಈ ಜಗತ್ತು ಹೇಗೆ ಬಾಳುತ್ತಿತ್ತು?"...ಆದ್ದರಿಂದ ಈ ಜಗತ್ತು ಕೆಲವು ಸಜ್ಜನರನ್ನಾದರೂ ಉಳಿಸಿಕೊಳ್ಳುತ್ತದೆ. ಆದರೆ ದುರ್ಜನರ ನಡುವೆ ಬದುಕುವ ಸಜ್ಜನರು ಹೋಗುತ್ತ ಬರುತ್ತ ಕೊಯ್ಯಿಸಿಕೊಳ್ಳುತ್ತಲೇ ಇರುವುದು ಅನಿವಾರ್ಯ. ಸಜ್ಜನರ ತಲೆಗೆ ದಿನವೂ ಜಪ್ಪುತ್ತ ಮಿಥ್ಯಾ ವಿಲಾಸದಲ್ಲಿ ತೊಡಗಿಕೊಂಡಿರುವ - ಮಂಗನ ಕಾಯಿಲೆಗೆ ತುತ್ತಾದಂತಿರುವ, ಲಂಗುಲಗಾಮಿಲ್ಲದ ಕೆಲವು ಕುತರ್ಕ ಥೂಕಾರಯೋಗ್ಯರಿಂದ ಇಂದಿಗೂ ನಮ್ಮನ್ನು ರಕ್ಷಿಸುತ್ತಿರುವುದು - ಸದ್ವೃತ್ತಿ ನಿರತರ ಸದಾಚಾರ - ಸದ್ವಿಚಾರ ಮತ್ತು ಸಜ್ಜನಿಕೆ.
ಅನುಭವದ ಅಸ್ತಿವಾರವುಳ್ಳ ಜೀವನಾನುಭವದಿಂದ ಮೂಡಿ ಬಂದಿರುವ, ಪೂರ್ವದ ಸುಭಾಷಿತಗಳ ತತ್ವಾರ್ಥವು ಹೊಳೆದಾಗ ಯಾವುದೇ ಜೀವಕ್ಕೆ ತಾಳುವಿಕೆಯ ಶಕ್ತಿಯೊದಗಿ, ಜೀವಚೈತನ್ಯ ಸಂಚರಿಸಿ, ಮನಸ್ಸು ಸ್ವಚ್ಛ ಬೆಳದಿಂಗಳಾಗುತ್ತದೆ. ಪೂರ್ವದ ಅನೇಕ ಅಮೂಲ್ಯ ಚಿಂತನೆಗಳು ಇಂದಿಗೂ ಉಳಿದು ಬಂದಿರುವುದು - ಇಂತಹ ಚೈತನ್ಯವಂತ ಸ್ವಚ್ಛ ಸಜ್ಜನರ ಸ್ವಂತ ಬಲದಿಂದಲೇ ಹೊರತು ಯಾವುದೇ ಬಾಹ್ಯ "ಪ್ರಾಯೋಜಕ ಪಿತೂರಿ"ಯಿಂದಲ್ಲ.
ಕಾಲದೊಂದಿಗೆ ನಮ್ಮ ಅಭಿರುಚಿ, ಆಸಕ್ತಿಗಳೂ ಇಂದು ಬದಲಾಗುತ್ತಿವೆ. ಹಿತ್ತಲ "ತುಲಸೀ ಗಿಡವು ಮದ್ದಲ್ಲ - ತುರಿಕೆಯ ಗಿಡವೇ ಮದ್ದು" ಎನ್ನುವವರ ಪುಟ್ಟ ಸಂತೆಯೇ ಈಗ ನಮ್ಮ ಸುತ್ತಲೂ ನೆರೆದಿದೆ. "ಶಂಖದಿಂದ ಬಂದರೆ ವಿಷ - ಶಂಖಪಾಲವೇ ಅಮೃತ" ಎನ್ನುತ್ತ ಹೊಸ ವ್ಯಾಖ್ಯೆ ಬರೆಯಲು ಹೊರಟಿರುವ ಹಾಳು ಕಮಂಗಿಗಳು ಈಗೀಗ ಹೆಚ್ಚುತ್ತಿದ್ದಾರೆ. ಒಟ್ಟಿನಲ್ಲಿ, ಸದ್ದು ಮಾಡಿ ಗಮನ ಸೆಳೆಯುವ ಪೊಟ್ಟು ಸ್ಪರ್ಧೆಯ ಇಂತಹ ಚಟ್ಟು ಸೈನ್ಯಕ್ಕೆ ಅಲ್ಲಲ್ಲಿ ರಾಜಾಶ್ರಯವೂ ದೊರೆತಂತೆ ಕಾಣುತ್ತದೆ. ಇಂತಿಪ್ಪ ಹುಡಿ ಸ್ಪರ್ಧೆಯ ಹೊತ್ತಿನಲ್ಲಿ ವಾಗ್ - ಭೀಷಣರ ಪಟಾಪಟಿಯ ಪರಾಕ್ರಮದ ಧೂಳು - ಕೂಳು ನಮಗೆ ನಿತ್ಯದ ತುತ್ತಾಗುತ್ತಿದೆ. ಮಾನವ ಹಕ್ಕುಗಳ ವೇಷದಲ್ಲಿ ಅಶಿಸ್ತಿಗೆ ವಿಶೇಷ ಪರವಾನಿಗೆ ದೊರೆಯುತ್ತಿರುವುದರಿಂದ ವಿದ್ಯಾರ್ಥಿಗಳೂ ವಿದ್ಯಾರ್ಥಿಗಳಾಗಿ ಉಳಿಯುತ್ತಿಲ್ಲ. ಕೆಡುತ್ತಿರುವ ಬಾಲ್ಯ ಕಾಲದ ಮಕ್ಕಳ ಶಿಕ್ಷಣವು ನಮ್ಮನ್ನು ಇಲ್ಲಿಯ ವರೆಗೆ ತಂದು ನಿಲ್ಲಿಸಿದೆ. ಕಾನೂನನ್ನು ತಿರುಚುವ ಶಿಕ್ಷಣವೂ - ಎಲ್ಲ ಕಡೆಯಿಂದಲೂ ನಮ್ಮ ಮಕ್ಕಳಿಗೆ ದೊರೆಯುತ್ತಿದೆ. ಹೀಗೆ ಅಶಿಸ್ತಿನ ನೀರುಂಡ ಗಿಡವು ಈಗ ಬಲಿತು ಹೆಮ್ಮರವಾಗುತ್ತಿದೆ.
1966 ರ ಒಂದು ಘಟನೆ. ಕಲ್ಕತ್ತದ ಹುಗ್ಲಿಯ ಪ್ರಾಥಮಿಕ ಶಾಲೆಯ ಅಧ್ಯಾಪಕರೊಬ್ಬರು ಶಾಲೆಯ ಆರಂಭವನ್ನು ಸೂಚಿಸುವ ಗಂಟೆಯನ್ನು (Bell) ಕೇಳಿಸಿಕೊಳ್ಳದೆ ಸಮಯಕ್ಕೆ ಸರಿಯಾಗಿ ತರಗತಿಗೆ ಹೋಗಲಿಲ್ಲ. ಅದನ್ನು ಗಮನಿಸಿದ ಆ ಶಾಲೆಯ ಮುಖ್ಯೋಪಾಧ್ಯಾಯರು ತರಗತಿಯ ಒಬ್ಬ ವಿದ್ಯಾರ್ಥಿಯಿಂದಲೇ ಆ ತಪ್ಪಿತಸ್ಥ ಅಧ್ಯಾಪಕರ ಕಿವಿ ಹಿಂಡಿಸಿದರಂತೆ. ಅಂದಿನ ಪತ್ರಿಕೆಗಳಲ್ಲಿ ಈ ಸುದ್ದಿಯು ಮಹತ್ವವನ್ನು ಪಡೆದಿತ್ತು. ಜೊತೆಗೆ - "ಗುರುವೇನ್ ಮಹಾ?" ಎಂಬ ಇಂದಿನ ಕಲಿ ಚಿಂತನೆಗೂ ಆಗಲೇ ಬೀಜಾಂಕುರವಾದಂತಾಗಿತ್ತು.
ಗುರುಗಳ ಸ್ಥಾನವು ಅದಾಗಲೇ ಅಲುಗಾಡತೊಡಗಿತ್ತು. ಇತರರಿಗೆ ಬೋಧಿಸುವ ಗುರು ಸ್ಥಾನದಲ್ಲಿ ಕುಳಿತವನಿಗೆ ಅದೊಂದು ಎಚ್ಚರಿಕೆಯ ಗಂಟೆಯೂ ಆಗಿತ್ತು. ತಪ್ಪು ಮಾಡಿದವನು ಸ್ವತಹ "ಗುರು"ವೇ ಆಗಿದ್ದರೂ ಪ್ರಾಯಶ್ಚಿತ್ತವು ಅನಿವಾರ್ಯವಾಗಿತ್ತು. ಆದರೆ ಉಪಾಧ್ಯಾಯರಿಗೆ ಅಂದು ಶಿಕ್ಷೆ ನೀಡಿದ ಸ್ಥಳ ಮತ್ತು ವಿಧಾನವು ಮಾತ್ರ ಇಂದಿಗೂ ಪ್ರಶ್ನಾರ್ಹವಾಗಿದೆ.
ಇಂದಿನ ವ್ಯವಸ್ಥೆಯಲ್ಲಂತೂ ಯಾವುದೇ "ಮಹಾ ಗುರು"ಗಳು ಕಾಣಿಸುವುದಿಲ್ಲ. ಎಲ್ಲರೂ ಪಗಾರ ಪಡೆಯುವ ನೌಕರರೇ ಇದ್ದಾರೆ. ಇಂದು ಓಡಾಡುತ್ತಿರುವ ಅಂತಹ ವೃತ್ತಿ ನಿರತರನ್ನೆಲ್ಲ "ಗುರು" ಎನ್ನಲಾಗುವುದಿಲ್ಲ. ತಾವು ಎಂದೋ ಕಲಿತದ್ದನ್ನು ತರಗತಿಗೆ ಬಂದು ಕಾರಿಕೊಳ್ಳುವ ಅಧ್ಯಾಪಕ ಮಾತ್ರರಾದವರು ಎಂದಿಗೂ ಗುರು ಸ್ಥಾನವನ್ನು ತುಂಬಲಾರರು. ಹಾಗೆ ನೋಡಿದರೆ, ವಿದ್ಯಾರ್ಥಿಗಳ ಸರ್ವತೋಮುಖ ವಿಕಸನಕ್ಕೆ ಪೂರಕವಾದ ಶಿಕ್ಷಣವು ಮಾಯವಾಗಿ ಬಹಳ ವರ್ಷಗಳಾದವು. ಶಿಷ್ಯರ ಹೆಗಲ ಮೇಲೆ ಕೈಹಾಕಿಕೊಂಡು ಹೋಗಿ ಸಿಗರೇಟು ಸೇದುತ್ತಿದ್ದ ಅಧ್ಯಾಪಕರನ್ನು ಹಿಂದೆ ನಾನೇ ನೋಡಿದ್ದೇನೆ. ಅಂತಹ ಅಧ್ಯಾಪಕರನ್ನು "ಒಳ್ಳೆಯವರು" ಎಂದು ಹಾಡಿ ಹೊಗಳುತ್ತಿದ್ದ ಅಂದಿನ ಕೆಲವು ವಿದ್ಯಾರ್ಥಿಗಳನ್ನೂ ಕಂಡಿದ್ದೇನೆ. ಅಂದರೆ ಸುಮಾರು 45 ವರ್ಷಗಳ ಹಿಂದಿನಿಂದಲೇ - ಅಂದರೆ.....ಅರ್ಧ ರಾತ್ರಿಯ ಸ್ವಾತಂತ್ರ್ಯವು ನಮಗೆ ಲಭಿಸಿದ ನಂತರ ನಮ್ಮ "ಗುರು - ಶಿಷ್ಯ" ಮೌಲ್ಯವು ನಿಧಾನವಾಗಿ ಕುಸಿಯುತ್ತ ಬಂದಿದೆ ಎನ್ನಬಹುದು. ಯಾವುದೋ ಯಾರದೋ ಟೋಪಿಯನ್ನು ಅಳತೆ ಹೊಂದದ ಇನ್ನ್ಯಾರಿಗೋ ಇಟ್ಟು ಚೆಂದ ನೋಡುವ ಹುಸಿ ಸಮಾಜವಾದದ ಹೊಡೆತಕ್ಕೆ ಸಿಲುಕಿ, ಭಾರತೀಯ ಮೂಲ ಶಿಕ್ಷಣದ ಸ್ವರೂಪವೇ ಬಣ್ಣ ಕಳೆದುಕೊಂಡು, ರಸಹೀನವಾಗಿ, ಈಗ ಜೊಗಟಿಯಾಗಿ ಬಿಟ್ಟಿದೆ. ಇಂದು ಕೇವಲ ದುಡ್ಡಿನ ಸಂಪಾದನೆಗಾಗಿ, ತಮ್ಮ ಆಸೆಗಳ ಪೂರ್ತಿಗಾಗಿ, ಸ್ಥಾನ ಗಿಟ್ಟಿಸಿಕೊಳ್ಳುವುದಕ್ಕಾಗಿ, ಪದವಿ - ಪ್ರಶಸ್ತಿ ಪತ್ರದ ನೆರಳಿನಲ್ಲಿ ಅಧ್ಯಾಪಕರು ಹೊರಳಾಡುವಂತಹ ಸನ್ನಿವೇಶವಿದೆ. ಇಂತಹ ಅನರ್ಹ ಸ್ವಾರ್ಥೀ ಶಿಕ್ಷಕ ವರ್ಗದವರು - ತಮ್ಮಂತಹ ಊಸರವಳ್ಳಿಗಳನ್ನೇ ಉತ್ಪಾದಿಸುತ್ತ ಭಾರತದ ಭವಿಷ್ಯವನ್ನು ಭೀಕರವಾಗಿ ರೂಪಿಸಲು ಹೆಣಗಾಡುತ್ತಿದ್ದಾರೆ! ಆದ್ದರಿಂದಲೇ ಪೂರ್ವಾಗ್ರಹಪೀಡಿತ ಮರ್ಕಟ ನ್ಯಾಯವು ಎಲ್ಲೆಂದರಲ್ಲಿ ರಾರಾಜಿಸುತ್ತಿದೆ.
ಮಾರ್ಗಭೇದೀ ಸ್ವಾರ್ಥಪಾಕೀ ಯತಿ
ಬ್ರಾಹ್ಮಣದೂಷಕಃ
ಅತ್ಯಾಶೀ ವೇದ ವಿಕ್ರೇತಾ ಪಂಚೈತೇ
ಬ್ರಹ್ಮಘಾತಕಾಃ //
"ಬೀದಿಗಳನ್ನು
ಹಾಳು ಮಾಡುವವ, ಕೇವಲ ತನ್ನ ಹೊಟ್ಟೆಗಾಗಿಯೇ ಅಡುಗೆ ಮಾಡಿ ಉಣ್ಣುವವ, ಸನ್ಯಾಸಿಗಳನ್ನೂ
ಬ್ರಾಹ್ಮಣರನ್ನೂ ನಿಂದಿಸುವವ, ಮಿತಿ ಮೀರಿದ ಆಶೆಯುಳ್ಳವ ಮತ್ತು ವೇದಗಳನ್ನು ಮಾರುವವ... -
ಈ ಐವರು ಬ್ರಹ್ಮಹತ್ಯೆ ಮಾಡಿದ ಪಾತಕಿಗಳಿಗೆ ಸಮಾನರು" ಎಂಬುದು ಅಧ್ಯಾತ್ಮದೊಂದಿಗೆ ಸಾಮಾಜಿಕ ಚಿಂತನೆಯನ್ನೂ ಹೊಂದಿದ್ದ - "ಅಂದಿನ" ವಿದ್ವದ್ ಋಷಿಗಳ ಉವಾಚ. ಈ ಋಷಿ ವಾಕ್ಯದ ಪರಿಧಿಯಲ್ಲೇ ಅದರ ಅಂತರ್ಭಾವವನ್ನು ಗಮನಿಸುತ್ತ, ಇದು ಇಂದಿಗೆ ಎಷ್ಟು ಮತ್ತು ಹೇಗೆ ಪ್ರಸ್ತುತ? ಎಂದೂ ಚಿಂತಿಸಬಹುದು.
"ಬೀದಿಗಳಲ್ಲಿ ಕಸ ಚೆಲ್ಲುವವರು ಮಾತ್ರ ಬೀದಿಗಳನ್ನು ಹಾಳು ಮಾಡುವವರು" ಎಂದುಕೊಂಡು ಸೀಮಿತ ಅರ್ಥದ ನೀತಿಗೇ ಅಂಟಿಕೊಂಡು ನಾವಿಂದು ತೃಪ್ತರಾದರೆ ಅದು "ಬಾಲ ಬದುಕು" ಅನ್ನಿಸಿಕೊಳ್ಳುವುದಿಲ್ಲವೆ? ಕೈಯ್ಯಿಂದ ಎಸೆಯುವ ಕಸದೊಂದಿಗೆ ಕುಟಿಲ ವೈಚಾರಿಕ ಕಸದಿಂದಲೂ ಬೀದಿಯನ್ನು ದಿನವೂ ರದ್ದಿಗೊಳಿಸುತ್ತಿರುವ ಮನುಷ್ಯರಿಂದ ಮುಕ್ತರಾಗಬೇಕಾದ ಸಂದಿಗ್ಧ ಪರಿಸ್ಥಿತಿಯಲ್ಲಿ ಈಗ ನಾವಿದ್ದೇವೆ. ಸಾಮಾಜಿಕ ವರ್ಜ್ಯದ ತ್ಯಾಜ್ಯ ರೂಪದಂತಿರುವ ಇಂದಿನ ಬೆರಳೆಣಿಕೆಯ "ಬುದ್ಧಿ ವ್ಯಾಧಿಗ್ರಸ್ತರು" - ತಮ್ಮ ಉಗ್ರಾಣದಲ್ಲಿ ಕೂಡಿಟ್ಟ ಬುಗುಟು ಬಂದ ಸರಕನ್ನು ವಿಕೃತ ವಿಚಾರದ ರೂಪದಲ್ಲಿ ದಿನವೂ ಬೀದಿವ್ಯಾಪಾರಕ್ಕಿಟ್ಟು ಸಭ್ಯ ಬುದ್ಧಿಗಳನ್ನು ಕಲುಕಲು ಪ್ರಯತ್ನಿಸುವುದೂ "ಬೀದಿಗಳನ್ನು ಹಾಳು ಮಾಡುವ ಕೃತ್ಯ"ವೆಂದೇ - ವಿಶಾಲಾರ್ಥದಲ್ಲಿ ಪರಿಗಣಿಸಬಹುದು.
ಯಾವುದೇ ಸದಾಚಾರ, ಸದ್ವಿಚಾರ, ಸಜ್ಜನಿಕೆಗಳಿಲ್ಲದೆ "ವೃತ್ತಿಭಾರ"ವನ್ನು ಹೊತ್ತುಕೊಂಡ ಗುರು ವೇಷದಿಂದ ಯಾವುದೇ ವಸ್ತು - ವಿಷಯಗಳು ಧನಾತ್ಮಕವಾಗಿ ಪ್ರಕಟವಾಗುವುದು ಕಷ್ಟ. ತಮ್ಮ ಗ್ರಹಿಕೆಯಲ್ಲಿಯೇ ಎಡವಿರುವ ಅಂತಹ ಉಪಾಧ್ಯಾಯರಿಂದ ಶಿಷ್ಯರಿಗೆ ಸುಜ್ಞಾನಸತ್ರ ನಡೆಸುವುದೂ ಅಸಾಧ್ಯ. "ಹೊರಗೆ ಥಳುಕು; ಒಳಗೆ ಹುಳುಕು" ಎಂಬಂತಹ ಬೋಧಕ ಸ್ಥಾನಗಳಿಂದ ಯಾವುದೇ ಸತ್ಕಾರ್ಯವು ಸಾಧ್ಯವಾಗದು. ಅಂತಹ ಸ್ಥಾನಗಳೆಲ್ಲವೂ ಲಾಭದ ಆಸೆಯಿಂದಲೇ ವರ್ತಿಸುವುದು ಸಹಜ. ಜ್ಞಾನದ ಗ್ರಹಿಕೆ ಮತ್ತು ಕಲಿಸುವಿಕೆಯಲ್ಲಿಯೂ ಭೇದಭಾವವನ್ನು ತೋರುವ - ಹೆಸರು ಉಳಿಸುವ ಸಭ್ಯ ಸಜ್ಜನನಾದ ಒಬ್ಬನೇ ಒಬ್ಬ ವಿದ್ಯಾರ್ಥಿಯನ್ನೂ ರೂಪಿಸಲಾಗದ ಅಧ್ಯಾಪಕನು ಎಂದಿಗೂ ಗುರುವೆನ್ನಿಸಿಕೊಳ್ಳಲಾರ. ತನ್ನ ಸ್ಥಾನದ ಬಲದಿಂದ ಸ್ವಂತದ "ಗುಪ್ತ ಕಾರ್ಯಸೂಚಿ"ಯನ್ನು ತನ್ನ ವಿದ್ಯಾರ್ಥಿಗಳ ಮೂಲಕ ಜಾರಿಗೆ ತರಲು ಶಿಕ್ಷಣ ಕ್ಷೇತ್ರದ ಉಪಯೋಗವಾಗಬಾರದು. ಹಾಗೆ ಗುಂಪುಗಾರಿಕೆಯ ತರಬೇತಿ ನೀಡುತ್ತ ಮುಂದಿನ ಪೀಳಿಗೆಯ ದಾರಿ ತಪ್ಪಿಸುವ ಹುನ್ನಾರ ನಡೆಸುವವರು ಅಧ್ಯಾಪಕ ಅನ್ನಿಸಿಕೊಳ್ಳಲೂ ಅರ್ಹರಲ್ಲ. ಇವರೆಲ್ಲರೂ ಮಿತಿಮೀರಿದ ಆಸೆಯುಳ್ಳ ಹೊಸ ಕಾಲದ ಬಂದಳಿಕೆಗಳು. ಬಲವಾದ ಮರದ ಸಾರವನ್ನೇ ಹೀರಿ ಬೆಳೆದು ಅದೇ ಮರವನ್ನು ನಿರ್ನಾಮ ಮಾಡುವ ಬಂದಳಿಕೆಗಳನ್ನು ಮೊಳಕೆಯಲ್ಲಿಯೇ ಗುರುತಿಸಿ ಚಿವುಟದಿದ್ದರೆ ಅನಾಹುತವಾದೀತು. ಅಂದಿನ ಕಾಲದ ಗುರುಸ್ಥಾನವು - ಅನಂತರ ಉಪಾಧ್ಯಾಯನಾಗಿ, ಅಧ್ಯಾಪಕನಾಗಿ, ಈಗ ಶಿಕ್ಷಕ ಎಂಬಲ್ಲಿಗೆ ಬಂದು ನಿಂತಿದೆ. ಜ್ಞಾನದ ಮಾರ್ಗದಲ್ಲಿ ಎಡವದಂತೆ ಕೈ ಹಿಡಿದು ನಡೆಸುತ್ತ ತನ್ನ ವಿದ್ಯಾರ್ಥಿಗಳಿಗೆ ಸನ್ಮಾರ್ಗದ ಪಾಠ ಹೇಳುವವನು - ಎಂಬ ಅರ್ಥದಲ್ಲಿ "ಅಂದಿನ ಗುರು" ವು ಕಾಣಿಸಿಕೊಂಡರೆ ಇಂದು ಅದು ಶಿಕ್ಷಕನೆಂಬ ಸಂಕುಚಿತ ವ್ಯಾಪ್ತಿಯ ಕಂಠಶೋಷಣೆಯ ವೃತ್ತಿಯಾಗಿದೆ. ಅಂತಹ ಸಾಮಾನ್ಯ ಶಿಕ್ಷಕ ಸ್ಥಾನದಲ್ಲಿರುವ ಇಂದಿನ ಕೆಲವು ಉದ್ದಾಮ ಶಿಕ್ಷಕರನ್ನು ನೋಡಿದರೆ "ವಿದ್ಯಾರ್ಥಿಗಳಿಗೆ, ಸಮಾಜಕ್ಕೆ ಇವರು ಶಿಕ್ಷೆಯ ರೂಪದಲ್ಲಿ ಅವತರಿಸಿರಬಹುದೇ?" ಎಂದೂ ಅನ್ನಿಸುವುದಿದೆ. ಅನೇಕ ಅಧ್ಯಯನ ನಿರತ ಸಜ್ಜನ ಅಧ್ಯಾಪಕರುಗಳು ಈಗಲೂ "ಕಲಿಕಾಟ"ಗಳಿಂದ ತಳಮಟ್ಟದಲ್ಲಿ ನರಳುತ್ತ ಉಳಿದುಕೊಂಡಿದ್ದರೂ ಆಸ್ಥಾನ ವಿದ್ವಾಂಸರೆಂದುಕೊಂಡಿರುವ ಬೆರಳೆಣಿಕೆಯ ಋಣಸಂತಾನವು ಸಭ್ಯರನ್ನೆಲ್ಲ ದಾರಿ ತಪ್ಪಿಸಬಲ್ಲ "ಮಾದರಿ"ಗಳಂತೆ ಭೋರ್ಗರೆಯುತ್ತಲೇ ಇದೆ.
ನನ್ನ 9 ಮತ್ತು 10ನೇ ತರಗತಿಯಲ್ಲಿ ನನ್ನ ತಂದೆ ದಿ. ಐರೋಡಿ ಯಜ್ಞನಾರಾಯಣ ಉಡುಪ ರು ನನಗೆ ಕನ್ನಡದ ಅಧ್ಯಾಪಕರಾಗಿದ್ದರು. ಅವರ ಸಮಯ ಪಾಲನೆಯ ಶೈಲಿಯು ಅನುಕರಣೀಯವಾಗಿತ್ತು. ತರಗತಿಯ ಆರಂಭವನ್ನು ಸೂಚಿಸುವ ಗಂಟೆಯು ಹೊಡೆಯುವ ಮೊದಲೇ ಅವರು ನಮ್ಮ ತರಗತಿಯ ಹೊರಗೆ ನಿಂತಿರುತ್ತಿದ್ದರು. ಗಂಟೆಯು ಹೊಡೆದ ತಕ್ಷಣ ತರಗತಿಯ ಒಳಗೆ ಕಾಲಿಡುತ್ತಿದ್ದರು. "ಗಂಟೆಯು ಹೊಡೆದ ನಂತರ Staff Room ನಿಂದ ಹೊರಟರೆ 3 - 4 ನಿಮಿಷ ತಡವಾಗಬಹುದು; ಹಾಗಾಗಬಾರದು" ಎಂಬ ದೃಷ್ಟಿಯಿಂದ ತರಗತಿಯ ಹೊರಗೇ ನಿಂತು ಕಾಯುವುದು ಅವರ ಶೈಲಿಯಾಗಿತ್ತು. ಒಂದು ತರಗತಿಯು ಮುಗಿದ ನಂತರ ಇನ್ನೊಂದು ತರಗತಿಗೆ ಹೋಗುವ ಮೊದಲು ಹೆಚ್ಚಿನ ಅಧ್ಯಾಪಕರು Staff Room ಗೆ ಹೋಗಿ ತರಗತಿಗೆ ಬರುತ್ತಿದ್ದರೆ ದಿ. ಉಡುಪರು ಒಂದು ತರಗತಿಯಿಂದ ಇನ್ನೊಂದು ತರಗತಿಗೆ ನೇರವಾಗಿ ಹೋಗುತ್ತಿದ್ದರು. ಸಮಯಪಾಲನೆಗೆ ತುಂಬ ಮಹತ್ವವನ್ನು ಕೊಡುತ್ತಿದ್ದ ಕೆಲವೇ ಅಧ್ಯಾಪಕರುಗಳಿದ್ದ ಕಾಲವದು. ಅವರಲ್ಲಿ ಉಡುಪರು ಅತಿ ವಿಶಿಷ್ಟವೆನಿಸಿದ್ದರು. ಆದರೆ ಎರಡು ತರಗತಿಯ ನಡುವಿನ ಕಿರು ಅವಧಿಯಲ್ಲಿ ಪುರಕ್ಕೆಂದು ಹೊರಗೆ ಓಡಿ ಹೋಗಿ ಬರುವುದನ್ನು ಅಭ್ಯಾಸ ಮಾಡಿಕೊಂಡಿದ್ದ ಕೆಲವು ಚಂಚಲ ಸ್ವಭಾವದ ವಿದ್ಯಾರ್ಥಿಗಳಿಗೆ ಇದೇ ಕಾರಣಕ್ಕೆ ಉಡುಪ್ರ್ ಮಾಷ್ಟ್ರ ಮೇಲೆ ಅಸಮಾಧಾನವೂ ಇತ್ತು. "ಈ ಕನ್ನಡ ಪಂಡಿತರಿಗೆ ಅಷ್ಟ್ ಅಮಸರ ಎಂತಕ್ಕಾ? ಎರಡ್ ನಿಮ್ಶ ತಡ ಆಯ್ ಕ್ಲಾಸಿಗ್ ಹೊಗ್ಗಿರೆ ಎಂತ ಆತ್ ? ಅವ್ರ್ ಬರ್ಲಿಲ್ಲೆ ಅಂತ್ ಇಲ್ಲ್ ಯಾರಾರು ಮರ್ಕತ್ರಾ ?" ಎಂದು ತಮಾಷೆ ಮಾಡುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ನನ್ನ ತರಗತಿಯಲ್ಲಿ ಇದ್ದರು. ಅದನ್ನು ಕೇಳಿಸಿಕೊಂಡ ನಾನು ಅವರ ಮಾತುಗಳನ್ನು ಅಪ್ಪಯ್ಯನಿಗೂ ಹೇಳಿದ್ದೆ. ಆಗ ಅವರು ನಕ್ಕಿದ್ದರು. "ಹುಡುಗಾಟ..." ಎಂದಷ್ಟೇ ಉತ್ತರಿಸಿದ್ದರು. ಅನಂತರವೂ ಅವರ ದಿನಚರಿಯಲ್ಲೇನೂ ಬದಲಾವಣೆಯಾಗಿರಲಿಲ್ಲ.
ದಿ. ಉಡುಪರು ತಮ್ಮ ತರಗತಿಯಲ್ಲಿ ಒಂದು ಕ್ಷಣವನ್ನೂ ವ್ಯರ್ಥ ಮಾಡದೆ ಕನ್ನಡ ಪಾಠದ ಜೊತೆಗೆ ಪೂರಕ ವಿಷಯಗಳನ್ನೂ ಹೇಳುತ್ತಿದ್ದರು. ವಿಭಿನ್ನ ವಿಷಯಗಳನ್ನು ಕೊಟ್ಟು ಒಂದು ವರ್ಷದಲ್ಲಿ ಕನಿಷ್ಠ 20 ಪ್ರಬಂಧಗಳನ್ನು ವಿದ್ಯಾರ್ಥಿಗಳಿಂದ ಬರೆಸುತ್ತಿದ್ದರು; ಅದನ್ನು ತಾವೇ ತಿದ್ದಿ, ಅನಂತರ ತರಗತಿಯಲ್ಲಿ ಪ್ರತಿಯೊಬ್ಬರನ್ನೂ ವೈಯ್ಯಕ್ತಿಕವಾಗಿ ಕರೆದು ಸಲಹೆ ಸೂಚನೆಗಳನ್ನೂ ಕೊಡುತ್ತಿದ್ದರು; ವಿದ್ಯಾರ್ಥಿಗಳನ್ನು ಮಾತನಾಡಿಸಿಯೂ ಅವರ ಭಾಷೆಯನ್ನು ತಿದ್ದುತ್ತಿದ್ದರು. ಕನ್ನಡ ಭಾಷೆಯ ಸೊಗಸು, ಸಾಹಿತ್ಯದ ರುಚಿಯನ್ನು ಸವಿಯುವ ಬಗೆ, ನೆಲ, ಜಲ, ಸದಭಿರುಚಿ, ದೇಶಭಕ್ತಿ...ಇಂತಹ ಹಲವಾರು ವಿಷಯಗಳನ್ನು ರಸವತ್ತಾಗಿ, ಸೋದಾಹರಣ ದೃಷ್ಟಾಂತಗಳೊಂದಿಗೆ ಹೇಳಿ, ಮಕ್ಕಳ ಹಸಿ ಮನಸ್ಸಿನಲ್ಲಿ ಚೈತನ್ಯವನ್ನು ತುಂಬುತ್ತಿದ್ದರು; ಭಾಷೆಯ ನೆಲೆಯಿಂದಲೇ ತನ್ನ ವಿದ್ಯಾರ್ಥಿಗಳ ಬೌದ್ಧಿಕ ಸ್ತರವನ್ನು ಎತ್ತಲು ಸತತವಾಗಿ ಪ್ರಯತ್ನಿಸುತ್ತಿದ್ದರು. ತಮ್ಮ ತರಗತಿಯು ಮುಗಿದ ಗಂಟೆಯು ಕೇಳಿಸಿದ ತಕ್ಷಣ ಅಂದಿನ ಪಾಠವನ್ನು ಮುಗಿಸಿ, ಕರಿಹಲಗೆಯನ್ನು ಒರೆಸಿ ಸ್ವಚ್ಛಗೊಳಿಸಿ, ಮುಂದಿನ ತರಗತಿಗೆ ವೇದಿಕೆಯನ್ನು ಸಿದ್ಧಪಡಿಸಿ ಹೊರಟು ಬಿಡುತ್ತಿದ್ದರು.
ಮನೆ ಪಾಠ, Insurance Agency ... ಇತ್ಯಾದಿ ವ್ಯವಹಾರ ನಡೆಸಿ ತಮ್ಮ ಕುಟುಂಬವನ್ನು ತೃಪ್ತಿಪಡಿಸುತ್ತಿದ್ದ ಅಧ್ಯಾಪಕರು ಅಂದೂ ಇದ್ದರು. ಆದರೆ ನಮ್ಮ ಕನ್ನಡ ಪಂಡಿತರು ಉಪ ಉದ್ಯೋಗ ನಡೆಸಿ ತಮ್ಮ ವೃತ್ತಿನಿಯಮವನ್ನು ಎಂದೂ ಮೀರಿದವರಲ್ಲ. ಭಾಷೆ, ಸಾಹಿತ್ಯದ ವಿಷಯ ವಿಚಾರಗಳನ್ನು ತಿಳಿದುಕೊಳ್ಳಲು ಮನೆಗೂ ಬರುತ್ತಿದ್ದ ವಿದ್ಯಾರ್ಥಿಗಳಿಗೆ ತಮಗೆ ತಿಳಿದದ್ದನ್ನು ಮುಕ್ತವಾಗಿ ಹಂಚಿದವರಿವರು. ಅದಕ್ಕೆ ಪ್ರತಿಯಾಗಿ ತಮ್ಮಲ್ಲಿ ಬೆಳೆದ ಅಕ್ಕಿ, ತರಕಾರಿ, ಬೆಲ್ಲ...ಎಂದು ಹೇಳಿಕೊಂಡು ಮನೆಗೆ ಹೊತ್ತು ತಂದವರನ್ನು ನಯವಾಗಿ ಗದರಿಸಿ ಹಿಂದಿರುಗಿಸುತ್ತಿದ್ದ "ಅಧ್ಯಾಪಕ ಆದರ್ಶ" ಅವರಲ್ಲಿತ್ತು. ಅವರಿಗೆ ಅನುರೂಪಳಾದ ಪತ್ನಿಯೂ ಜೊತೆಗೂಡಿದ್ದು ಅವರ ಅದೃಷ್ಟ. ತಮ್ಮ ಬದುಕಿನುದ್ದಕ್ಕೂ ಯಾವುದೇ "ಇಳಿಸುವ ಸ್ಪರ್ಧೆ"ಗಳಲ್ಲಿ ತೊಡಗದೆ ತಮ್ಮ ಕರ್ತವ್ಯವನ್ನು ಹೃತ್ಪೂರ್ವಕವಾಗಿ ಮಾಡುವುದರಲ್ಲಿಯೇ ಇಡೀ ಆಯುಷ್ಯವನ್ನು ಮುಗಿಸಿ ಮೇಲೇರಿದವರವರು. ತಮ್ಮ ಅತ್ಯಂತ ಬಡತನದ ದಿನಗಳಲ್ಲೂ ಯಾವುದೇ ಕ್ಷುಲ್ಲಕ ಆಮಿಷಗಳಿಗೆ ಬಲಿಯಾಗದ ಉಡುಪರಂತಹ ಕೆಲವು ಅಧ್ಯಾಪಕರುಗಳು ಆಗಿನ ಸಮಾಜದಲ್ಲಿ ಅಲ್ಲೊಂದು ಇಲ್ಲೊಂದು ಕಾಣಿಸುತ್ತಿದ್ದವು. ಅಂದೂ ಅಂಥವರು ಯಾವುದೇ ಪ್ರಶಸ್ತಿ ಗೌರವಗಳಿಗೆ ಪಾತ್ರರಾಗುತ್ತಿರಲಿಲ್ಲ. ಕರ್ನಾಟಕದ ಕರಾವಳಿಯ ಭಾಗದ ವಿದ್ವಾಂಸರನ್ನು ಮಲತಾಯಿಯ ಧೋರಣೆಯಿಂದ ನಡೆಸಿಕೊಳ್ಳುವ ಸಾರಸ್ವತ ಲೋಕವು ಆಗಲೇ ಅಸ್ತಿತ್ವದಲ್ಲಿತ್ತು. ಶ್ರೀ ಕೋಟ ಶಿವರಾಮ ಕಾರಂತರು ನನ್ನ ತಂದೆಯವರಲ್ಲಿ ಮಾತನಾಡುತ್ತಿದ್ದಾಗ ಈ ವಿಚಾರವು ಒಮ್ಮೊಮ್ಮೆ ನುಸುಳಿ ಹೋಗುವುದಿತ್ತು. ಆದರೆ ಯಾವುದೇ ವಿದ್ವತ್ತುಂಬಿಲರು ಮಾನ್ಯತೆಗಾಗಿ ಹಂಬಲಿಸುವುದೂ ಇಲ್ಲ; ಚಿಂತಿಸಿ ನೋಯುವುದೂ ಇಲ್ಲ. ಅದೇ ಕರಾವಳಿಯ ಶೈಲಿ ! ಆದರೆ ಉತ್ತಮಿಕೆಯನ್ನು ಗೌರವಿಸುವ, ವಿದ್ವತ್ತಿಗೆ ತಲೆಬಾಗುವ ಸಜ್ಜನಿಕೆಯು ಅಂದಿನ ಕರಾವಳಿಯ ಸಾಮಾಜಿಕ ಪರಿಸರದಲ್ಲಿತ್ತು; ಬೌದ್ಧಿಕ ಭಯೋತ್ಪಾದನೆ - ಗುಂಪುಗಾರಿಕೆಯು ಇನ್ನೂ ಬಲ ಪಡೆದುಕೊಂಡಿರಲಿಲ್ಲ; ಕಾಲುಕೆರೆದು ಜಗಳವಾಡುವವರಿರಲಿಲ್ಲ. ಆದ್ದರಿಂದ ವಿದ್ವಜ್ಜನರು ತಮ್ಮಷ್ಟಕ್ಕೆ ಸುಖವಾಗಿಯೇ ಇದ್ದರು.
ಈಗಲೂ ಸಮರ್ಪಣಾಭಾವದ ಮತ್ತು - "ರಾಜಕೀಯ ಕಡಿಮೆ; ಕೆಲಸ ಜಾಸ್ತಿ" ಎನ್ನುವ ಕೆಲವು ಅಧ್ಯಾಪಕರು ಇದ್ದಾರೆ. ಅಂಥವರಿಂದಲೇ ನಮ್ಮ ಬೀದಿಯು ಈಗಲೂ ಕಿಂಚಿತ್ತಾದರೂ ಸ್ವಚ್ಛವಾಗಿದೆ - ಅಂದುಕೊಳ್ಳಬಹುದು. ಆದರೆ ಎಂತಹ ದುರ್ಭಿಕ್ಷ ಕಾಲದಲ್ಲಿ ನಾವಿದ್ದೇವೆಂದರೆ, ಇಂದು ಸದ್ವಿದ್ಯೆಗೆ ಸುತರಾಂ ರಾಜಾಶ್ರಯವಿಲ್ಲ. ಆದ್ದರಿಂದ ರಾಜಾಶ್ರಯ ಪಡೆಯುತ್ತಿರುವ ಬೂಟಾಟಿಕೆಗಳು ಮಾತ್ರ ಏರುಗತಿಯಲ್ಲಿದೆ. ಇತ್ತ, ಸ್ಥಿರ ಸತ್ಯವಲ್ಲದ ನಿರಂತರ ಬದಲಾಗುತ್ತಿರುವ ಮಾಹಿತಿ ಶಾಸ್ತ್ರದ ಸುತ್ತಲೂ ಅಟಕಾಯಿಸುತ್ತ ಜ್ಞಾನದ ಪರಿಧಿಯನ್ನೇ ಮಿತ ಮತ್ತು ಏಕಮುಖಗೊಳಿಸಿಕೊಂಡಿದ್ದೇವೆ. ತನ್ಮೂಲಕ, ಅಂತಃಶೋಧನೆಗೆ ಒಳಗಾಗದ ಕಚ್ಚಾ ಅರಿವಿನಿಂದಾಗಿ ಆಂತರ್ಯದ ಕೊಳಕು - ಹುಳುಕು ಅಧೋಮುಖವಾಗಿ ಭರದಿಂದ ಇಳಿಯುತ್ತಿದೆ.
ನಮ್ಮೊಳಗಿನ ವಿದ್ಯೆಯು ನಮ್ಮ ಮುಖದಲ್ಲಿ ನೆಲೆಸಿರುತ್ತದೆ; ವರ್ತನೆ ಮತ್ತು ಮಾತಿನಲ್ಲಿ ಪ್ರತಿಫಲಿಸುತ್ತದೆ. ಬೀಸುಮಾತಿನ ಹೊಣೆಗೇಡಿ ಚಾಟಿಯನ್ನು ಬೀಸುವುದು ನಿಜವಾದ ಶಾರದೋಪಾಸಕರಿಗೆ ಎಂದಿಗೂ ಸಾಧ್ಯವಾಗದ ಕಾರ್ಯ. ಯಾವುದೇ ಸಕಾರಣವಿಲ್ಲದೆ ಕಟುವಾಗಿ ವರ್ತಿಸುವುದೂ ವಿದ್ವಾಂಸರಿಂದ ಸಾಧ್ಯವಾಗದು. ಆದರೆ ಕೆಲವು ಸಡಿಲು ಮುಚ್ಚಳದ "ತುಳುಕಣ್ಣ"ಗಳು ತಮ್ಮೊಳಗನ್ನೆಲ್ಲ ತುಳುಕಿಸುತ್ತ ತಮ್ಮ ಬುದ್ಧಿ ಬೋಗುಣಿಯನ್ನು ಖಾಲಿ ಮಾಡಿಕೊಳ್ಳುವ ಅವಸರಕ್ಕೆ ಬಲಿಯಾಗುವುದಿದೆ. "ಎಲ್ಲರೂ ಕಾಲಿನಿಂದ ನಡೆದಾಡಿದರೆ ನಾನು ಕೈಯಿಂದ ನಡೆಯುತ್ತೇನೆ" ಎನ್ನುವ ಇಂಥವರನ್ನು "ಸಿದ್ಧ ಪುರುಷರು" ಅನ್ನದೆ - "ಮರುಳು" ಎಂದೇ ಗುರುತಿಸುತ್ತಾರೆ.
ಉತ್ತಮ ವಿಚಾರ - ಚಿಂತನೆಗಳು ಎಲ್ಲಿಂದ ಬಂದರೂ ಸ್ವೀಕರಿಸಿದ ಹಿರಿಮೆಯು ಭಾರತೀಯರದು. ನಮ್ಮ ಪೂರ್ವ ಸಾಹಿತ್ಯಗಳಿಗೆ ಹೊಸ ಭಾಷ್ಯವನ್ನು ವ್ಯಾಖ್ಯಾನವನ್ನು ಅನೇಕರು ಮಾಡಿದ್ದಿದೆ. ಯಾವುದೇ ಸಿಂಗಾರಕ್ಕೂ ತನ್ನನ್ನು ಒಡ್ಡಿಕೊಂಡ ಪ್ರಯೋಗಶೀಲ ಸಂಸ್ಕೃತಿಯ ಹಿನ್ನೆಲೆಯು ಈ ನೆಲಕ್ಕಿದೆ. ಹೃದಯ ವೈಶಾಲ್ಯಕ್ಕೆ ಭಾರತೀಯ ಚಿಂತಕ - ಜ್ಞಾನಿಗಳು ಅನುಪಮ ಉದಾಹರಣೆಯಾಗಬಲ್ಲರು. ಚಾರ್ವಾಕನನ್ನೂ ಗೌರವಿಸಿದ ಭಾರತೀಯರು ನಾವು. ಅಭಿಪ್ರಾಯ ಸ್ವಾತಂತ್ರ್ಯಕ್ಕೆ ಹಿಂದುಸ್ತಾನದಲ್ಲಿ ದೊರೆತಷ್ಟು ಬಲವು ಜಗತ್ತಿನ ಯಾವುದೇ ಇತರ ದೇಶಗಳಲ್ಲಿ ಸಿಗಲಾರದು. ಆದ್ದರಿಂದ ಬರೆಯುವುದು ತಪ್ಪಲ್ಲ. ಆದರೆ ರಾಮನನ್ನು ಧೂಮ ಮಾಡಲು ಹೊರಟರೆ ತುಂಬು ನಾಮವಲ್ಲದೆ ಬೇರೇನೂ ಸಿಗಲಾರದು. ಯಾರೇ ಆಗಲಿ, ಬೇಲಿ ಹಾರಲು ಹೊರಟರೆ ಎಚ್ಚರಿಸುವುದು ಅನಿವಾರ್ಯವಾಗುತ್ತದೆ. ಇಂತಹ ವಿಕೃತ ಶಿಕ್ಷಣ ಸ್ಥಾನಗಳ, ಅಧ್ಯಾಪಕರ "ಕಪಿ" ಮುಷ್ಟಿಯಲ್ಲಿ ಸಿಲುಕಿದ ವಿದ್ಯಾರ್ಥಿಗಳೂ "ಪಿಕ" ವಾಗಲು ಸಾಧ್ಯವಿಲ್ಲ. ಮನಸ್ವಾಸ್ಥ್ಯವಿಲ್ಲದ ಅಧ್ಯಾಪಕರಿದ್ದರೆ - ಸಮಾಜವನ್ನು ಕೆಡಿಸಲು ಬೇರೆ ಆಯುಧಗಳೇ ಬೇಕಿಲ್ಲ. ತನ್ನ ಹೊಟ್ಟೆಪಾಡಿಗಾಗಿ ನಿರ್ವಹಿಸುವ ವೃತ್ತಿಯಿಂದ ಇನ್ನೊಂದು ಜೀವಿಗೆ ತೃಣಮಾತ್ರವೂ ಉಪಕಾರಿಯಾಗಿರದ ವ್ಯಕ್ತಿಗಳು ಒಂದು ಬಗೆಯ ಸಾಮಾಜಿಕ ಪಾತಕಿಗಳು. ರಣ ಹದ್ದು ಬಹಳ ಎತ್ತರವೇನೋ ಹೋಗುತ್ತದೆ; ಆದರೆ ಅದರ ದೃಷ್ಟಿ ಮಾತ್ರ ಕೆಳಗೆ; ಸತ್ತ ಪ್ರಾಣಿಗಳ ಕಡೆಗೆ. ಇದನ್ನೇ ಕೆಟ್ಟ ಅಭಿರುಚಿಯ ಅವಿದ್ಯಾ ಸಂಸಾರ - ಎನ್ನುವುದು. ಇಂಥವರು ಪರೋಕ್ಷವಾಗಿ ಬೀದಿಗಳನ್ನು ಹಾಳು ಮಾಡುವುದರಲ್ಲಿ ಸಂದೇಹ ಬೇಡ.
ಇನ್ನು ಸನ್ಯಾಸದ ವಿಚಾರಕ್ಕೆ ಬಂದರೆ, ಸನ್ಯಾಸಿಗಳು ಎಂದರೆ ಸರ್ವ ಸಂಗ ಪರಿತ್ಯಾಗಿಗಳು. ಇಂದಿನ ಲಿಂಬೆ, ಮಿಡಿ, ಬೆಂಡೆ, ಮೆಣಸು, ಕೊತ್ತುಂಬರಿಗಳೆಲ್ಲವೂ ಸನ್ಯಾಸಿಗಳೆ?
"ದುಃಖಗಳಲ್ಲಿ ಉದ್ವೇಗವಿಲ್ಲದ ಮನಸ್ಸುಳ್ಳವನೂ ಸುಖದಲ್ಲಿ ಆಸೆಯಿಲ್ಲದವನೂ ಆಸಕ್ತಿ - ಭಯ - ಕ್ರೋಧಗಳಿಲ್ಲದವನೂ ಆದವನು ಸನ್ಯಾಸಿ." (ಭಗವದ್ಗೀತೆ)
"ಅಜ್ಞಾನಿಗಳು ಕರ್ಮದಲ್ಲಿ ಆಸಕ್ತರಾಗಿ ಹೇಗೆ ಕರ್ಮವನ್ನು ಮಾಡುವರೋ ಹಾಗೆಯೇ ಜ್ಞಾನಿಯು ಅನಾಸಕ್ತನಾಗಿ ಲೋಕಸಂಗ್ರಹದ ದೃಷ್ಟಿಯಿಂದ ಕರ್ಮವನ್ನು ಮಾಡಬೇಕು" (ಸಕ್ತಾಃ ಕರ್ಮಣ್ಯವಿದ್ವಾಂಸೋ ಯಥಾ ಕುರ್ವಂತಿ ಭಾರತ / ಕುರ್ಯಾದ್ವಿದ್ವಾನ್ ತಥಾಸಕ್ತಃ ಚಿಕೀರ್ಷುಃ ಲೋಕಸಂಗ್ರಹಮ್ - ಭಗವದ್ಗೀತೆ 3- 25)
ಬ್ರಹ್ಮಚರ್ಯ, ಗಾರ್ಹಸ್ಥ್ಯ, ವಾನಪ್ರಸ್ಥ, ಸನ್ಯಾಸ - ಎಂಬ ನಾಲ್ಕು ಆಶ್ರಮಗಳಿವೆ. ಸನ್ಯಾಸವನ್ನು ಬಿಟ್ಟು ಉಳಿದ ಮೂರು ಆಶ್ರಮಗಳಲ್ಲೂ ಕರ್ಮವನ್ನು ಮಾಡುತ್ತಲೇ ಇರಬೇಕಾಗುತ್ತದೆ. ಆದರೆ ಸನ್ಯಾಸಿಯು ಮಾತ್ರ ದಂಡಕಮಂಡಲುಧಾರಿಯಾಗಿ ಭಿಕ್ಷಾಪಾತ್ರೆಯನ್ನು ಹಿಡಿಯಬೇಕಾಗುತ್ತದೆ. ಸನ್ಯಾಸಿಯು ಕೆಲವು ನಿತ್ಯ ಕರ್ಮಗಳನ್ನು ಮಾಡಿದರೂ ಆತನ ಮನಸ್ಸು ಕರ್ಮಾಸಕ್ತವಾಗಿರುವುದಿಲ್ಲ. ತಾನು ಕರ್ಮಗಳನ್ನು ನಡೆಸುತ್ತಿದ್ದೇನೆ ಎನ್ನುವ ಭಾವನೆಯಾಗಲೀ ತನ್ಮಯತೆಯಾಗಲೀ ಸನ್ಯಾಸಿಗಿರುವುದಿಲ್ಲ. ಕೆಲವೊಮ್ಮೆ ಲೋಕ ಶಿಕ್ಷಣಕ್ಕಾಗಿ ಸನ್ಯಾಸಿಗಳು ನಿತ್ಯ ಕರ್ಮಗಳನ್ನು ಮಾಡುತ್ತಾರೆ. ಒಂದೊಂದು ಜೀವಿಯ ಪ್ರಕೃತಿಗೆ ಹೊಂದುವಂತಹ ವಿಭಿನ್ನ ಸತ್ಕರ್ಮಗಳಲ್ಲಿ ತೊಡಗುವ ಪ್ರೇರಣೆಯನ್ನು ಮತ್ತು ದಾರಿಯನ್ನು - ಗುರುವಾಗಿ ತೋರಬಲ್ಲವನು ಸನ್ಯಾಸಿ. ಯಾವುದೇ ನಿಂದೆಯು ಸನ್ಯಾಸಿಯನ್ನು ವಿಚಲಿತಗೊಳಿಸುವುದಿಲ್ಲ. ತೀರ ಅನಿವಾರ್ಯವಾಗದೆ ಯಾವುದೇ ಸನ್ಯಾಸಿಯು
ಸಾಮಾಜಿಕ ಗೊಂದಲಗಳಲ್ಲಿ ಪ್ರತ್ಯಕ್ಷವಾಗಿ ತೊಡಗಿಕೊಳ್ಳಬಾರದು. ರಾಜಧರ್ಮವನ್ನು ನಿಭಾಯಿಸುವವರ ಚರ್ಯೆಯು ದ್ರೋಹ ಚಿಂತನೆಯೆಂದು ದೃಢಪಟ್ಟಾಗಲೂ ಅದನ್ನು ತಿದ್ದಲು ನೇರವಾಗಿ ಆಜ್ಞಾಪಿಸುವ ಸಾಮರ್ಥ್ಯವಿಲ್ಲದೆ ಯಾವುದೇ ಸನ್ಯಾಸಿ ಎಂದುಕೊಳ್ಳುವವರು ಸಾಮಾಜಿಕ ತಳಮಳಗಳ ಭಾಗವಾಗಬಾರದು. ಸನ್ಯಾಸವು ನಿತ್ಯದ ಪ್ರತಿಭಟನೆಗಳ ಭಾಗವಾಗಲೇಬಾರದು. ಯಾವುದೇ ಸನ್ಯಾಸವನ್ನು ಗೌರವಿಸುವ ಆಯಾ ಸಮಾಜ ಬಂಧುಗಳು ತಮ್ಮ ಆರಾಧ್ಯ ಗುರುಗಳ ಚಿಂತನೆಯನ್ನು ಕಾರ್ಯರೂಪಕ್ಕೆ ತರುವ ಶಕ್ತಿಯನ್ನು ಹೊಂದಿರುವಂತೆ ಅವರನ್ನು ರೂಪಿಸಿದರೆ ಅಷ್ಟೇ ಸಾಕಾಗುತ್ತದೆ. ಆಗ ರಾಜಪೀಠವೇ ಸನ್ಯಾಸೀ ಗುರುವನ್ನು ಹುಡುಕಿಕೊಂಡು ಬರುತ್ತದೆ. ಆಗ ಸನ್ಯಾಸದ ಗೌರವವೂ ಉಳಿಯುತ್ತದೆ; ಹೆಚ್ಚುತ್ತದೆ. ಸಾಮಾಜಿಕ
ಬದುಕಿನಿಂದ ಮತ್ತು ದೇಹಭಾವದಿಂದ ದೂರವಿದ್ದು ಸದಾಕಾಲವೂ ಸದನುಷ್ಠಾನ, ಅಧ್ಯಯನ, ಆಧ್ಯಾತ್ಮಿಕ ಚಿಂತನೆ,
ಧ್ಯಾನ, ಏಕಾಂತದಲ್ಲಿರುವವನು - ಸನ್ಯಾಸಿ. ಸನ್ಯಾಸಿಯ ಅನುಪಮ ತ್ಯಾಗದ ಪರಿಯನ್ನು ನೋಡಿದ ಇತರ ಕೆಲವರಲ್ಲಾದರೂ ವೈರಾಗ್ಯ, ತ್ಯಾಗದ ಭಾವವು - ಕ್ಷಣಿಕವಾಗಿಯಾದರೂ ಮೂಡುವಂತಾದರೆ ಯಾವುದೇ ಸನ್ಯಾಸವು ಸಾರ್ಥಕವಾಗುತ್ತದೆ. ಕಾಮ ಕಾಂಚನವನ್ನು ತೃಣವಾಗಿ ಭಾವಿಸಿ, ಆಚರಿಸುವ ಸನ್ಯಾಸಿಯ ಶ್ರೇಷ್ಠ ಆಚರಣೆ ಮತ್ತು ಆದರ್ಶವು ಸಾಮಾನ್ಯ ಜೀವಿಗಳನ್ನು ಪ್ರೇರೇಪಿಸುವಂತಿದ್ದರೆ ಮಾತ್ರ ಸನ್ಯಾಸವು ಅರ್ಥಪೂರ್ಣವಾಗುತ್ತದೆ. ಹಾಗಿಲ್ಲದಾಗ, ಇಡೀ ಸನ್ಯಾಸಾಶ್ರಮ ವ್ಯವಸ್ಥೆಯೇ ಪ್ರಶ್ನಾರ್ಥಕವಾಗುತ್ತದೆ.
ನಮ್ಮ ದುರದೃಷ್ಟಕ್ಕೆ ಇಂದಿನ ಸನ್ನಿವೇಶದಲ್ಲಿ, ನಮ್ಮ ನಿರೀಕ್ಷೆಯ ಪರಿಪೂರ್ಣ ಸನ್ಯಾಸಿಯನ್ನು ಕಾಣುವುದು ದುರ್ಲಭವೆನ್ನಿಸಿದೆ. ಹೀಗಿರುವಾಗ ಧರ್ಮಾತೀತ ವಾಗಿ - ಸಮಗ್ರವಾಗಿ ನೋಡಿದರೆ, ಗೃಹಸ್ಥರಿಗಿಂತ ತೀವ್ರವಾಗಿ ಲೌಕಿಕದಲ್ಲಿ - ಸಂಸಾರದಲ್ಲಿ ಮುಳುಗಿರುವ ಸನ್ಯಾಸೀ ವೇಷದವರನ್ನು ನಾವು ನಿತ್ಯವೂ ನೋಡುತ್ತಿಲ್ಲವೆ?
ಇನ್ನು ಬ್ರಾಹ್ಮಣ್ಯದ ವಿಚಾರಕ್ಕೆ ಬಂದರೆ, ಬ್ರಾಹ್ಮಣನೆಂದರೆ ಬ್ರಹ್ಮ ಚಿಂತನೆ, ಕರ್ಮಾನುಷ್ಠಾನ, ದಾನ ಧರ್ಮ, ಆತ್ಮೋನ್ನತಿಯ ಚಿಂತನೆಯಲ್ಲಿ ತೊಡಗಿಕೊಂಡು ದುರಾಸೆಯನ್ನು ಮೀರಿದವನಾಗಿರಬೇಕು; ನಿರಪೇಕ್ಷವಾಗಿ ಜ್ಞಾನಪ್ರಸಾರದಲ್ಲಿ ತನ್ಮಯನಾಗಿರಬೇಕು. ದೇಹಬುದ್ಧಿಯು ನಿಯಂತ್ರಣದಲ್ಲಿರಬೇಕು. ನಿಜವಾದ ಬ್ರಾಹ್ಮಣನು ಮಿತ ಅಪೇಕ್ಷೆಗಳೊಂದಿಗೆ ದಾನಧರ್ಮಗಳನ್ನು ಪಾಲಿಸುತ್ತ ಸರಳ ಬದುಕಿನಲ್ಲಿಯೇ ತೃಪ್ತನಾಗಿರಬೇಕು.

ಸುಮಾರು 50 ವರ್ಷಗಳ ಹಿಂದೆ ನಡೆದ ಘಟನೆಯಿದು. ನನ್ನ ತಂದೆ ದಿ. ಯಜ್ಞನಾರಾಯಣ ಉಡುರು ಮತ್ತು ದಿ. ರುಕ್ಮಿಣೀ ಉಡುಪರು ಯಾವುದೋ ಕಾರ್ಯಕ್ಕಾಗಿ ವಢಭಾಂಡೇಶ್ವರಕ್ಕೆ ಹೋಗಿದ್ದರು. (ಉಡುಪಿಯ ಹತ್ತಿರದ ಸಮುದ್ರ ತಟದಲ್ಲಿರುವ ಶಿವ ಕ್ಷೇತ್ರ) ಅಂದಿನ ಸ್ಥಿತಿಗತಿಯಂತೆ - ನಡೆದಾಡಿಕೊಂಡೇ ಓಡಾಡುವ ಜನರು ಆಗ ಹೆಚ್ಚಾಗಿದ್ದರು. ನನ್ನ ಅಪ್ಪಯ್ಯ ಅಮ್ಮನೂ ಅಲ್ಲಿನ ತಮ್ಮ ಕೆಲಸವನ್ನು ಮುಗಿಸಿಕೊಂಡು ಮಧ್ಯಾಹ್ನದ ಹೊತ್ತಿಗೆ ಉಡುಪಿಯತ್ತ ಕಾಲ್ನಡಿಗೆಯಲ್ಲಿ ಬರುತ್ತಿದ್ದರು. ಆ ಮಟಮಟ ಮಧ್ಯಾಹ್ನದ ಬಿಸಿಲಿನಲ್ಲಿ ಅವರು ಬರುತ್ತಿರುವಾಗ ಊರಿನ ಅಂಚಿನಲ್ಲಿದ್ದ ಒಂದು ಮನೆಯ ಜಗಲಿಯಲ್ಲಿ ಮುದಿ ದಂಪತಿಗಳು ಕುಳಿತದ್ದನ್ನು ಕಂಡರು. ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ ಇವರನ್ನು ಕಂಡ ಕೂಡಲೇ ಆ ದಂಪತಿಗಳು ಜಗಲಿಯಿಂದ ಇಳಿದು ಬಂದು ದಾರಿಹೋಕ ದಂಪತಿಗಳ ಏನು ಎತ್ತಗಳನ್ನು ವಿಚಾರಿಸಿದರು. ಅನಂತರ ತಮ್ಮ ಮನೆಗೆ ಆಗಮಿಸಿ ಊಟಮಾಡಿ ಹೋಗಬೇಕು - ಎಂದು ವಿಧ್ಯುಕ್ತವಾಗಿ ಆಮಂತ್ರಿಸಿದರು. ಅಪ್ಪಯ್ಯ ಅಮ್ಮನನ್ನು ತಮ್ಮ ಮನೆಯ ಒಳಗೆ ಕರೆದುಕೊಂಡು ಹೋಗಿ ಕಾಲು ತೊಳೆದು, ಮಣೆ ಇಟ್ಟು ಕುಳ್ಳಿರಿಸಿ ಅವರ ಬಾಯಾರಿಕೆಯನ್ನು ಪರಿಹರಿಸಿ, ಊಟಕ್ಕೆ ಇಕ್ಕಿದರು. ದಂಪತಿಗಳಿಬ್ಬರೂ ಎದುರಲ್ಲಿ ಕುಳಿತು ಉಪಚರಿಸುತ್ತ ಅಭ್ಯಾಗತರಿಗೆ ಬಡಿಸಿದರು. ಭೋಜನವು ಮುಗಿದ ಮೇಲೆ ತಾವೇ ಅವರ ಕೈ ತೊಳೆಸಿದರು. ಅನಂತರ ದಕ್ಷಿಣೆಯನ್ನು ನೀಡಿ ಸಾಷ್ಟಾಂಗ ನಮಸ್ಕರಿಸಿದರು. "ಇಂದು ನೀವು ದಂಪತಿಗಳು ಬಂದು ಭೋಜನವನ್ನು ಸ್ವೀಕರಿಸಿ ನಮ್ಮನ್ನು ಕೃತಾರ್ಥರನ್ನಾಗಿ ಮಾಡಿದಿರಿ...ಕೃಷ್ಣಾರ್ಪಣ..." ಎಂದು ಹೇಳುತ್ತ ಕಣ್ಣೀರು ಸುರಿಸಿದರು. ಆಗ ನನ್ನ ಅಪ್ಪಯ್ಯನು "ತಮ್ಮ ಊಟ ಮುಗಿಯಿತೆ?" ಎಂದು ಪ್ರಶ್ನಿಸಿದಾಗ - "ಸ್ವಾಮೀ, ಪ್ರತೀದಿನವೂ ನಡೆಸುವ ನಮ್ಮ ನಿತ್ಯಾನುಷ್ಠಾನ, ಅಡುಗೆ, ನೈವೇದ್ಯವನ್ನು ಮುಗಿಸಿದ ನಂತರ ಬ್ರಾಹ್ಮಣರಿಗಾಗಿ ಕಾಯುತ್ತ ನಾವು ಜಗಲಿಯಲ್ಲಿ ಕುಳಿತಿರುತ್ತೇವೆ; ಯಾರಾದರೊಬ್ಬರು ಸಿಗುತ್ತಾರೆ. ಅವರಿಗೆ ಭೋಜನವನ್ನು ಸಮರ್ಪಿಸಿ ಅನಂತರವೇ ನಾವು ಉಣ್ಣುತ್ತೇವೆ. ಇದು ನಮ್ಮ ಬದುಕಿನ ವ್ರತ...ನಮ್ಮ ಊಟವು ಇನ್ನು ಆಗಬೇಕು..." ಅಂದರು. ಆಗ ಅಪ್ಪಯ್ಯನು "ಮಹಾಶಯರೇ, ಈ ಕಾಲದಲ್ಲಿ ದಿನವೂ ಅತಿಥಿ ಅಭ್ಯಾಗತರು ಸಿಗುವುದು ಕಷ್ಟ. ಅಕಸ್ಮಾತ್ ಯಾರೂ ಸಿಗದಿದ್ದರೆ ಏನು ಗತಿ?" ಅಂದಾಗ - "ಅಯ್ಯಾ, ಹಾಗೆ ಆದದ್ದೂ ಇದೆ. ಅಂತಹ ದಿನಗಳಲ್ಲಿ ನಮಗೂ ಊಟವಿಲ್ಲ; ಅಷ್ಟೆ..." ಎಂದರು. ಅನಂತರ ಜಗಲಿಯ ತುದಿಯವರೆಗೆ ವಿನಮ್ರರಾಗಿ ಬಂದು ಅತಿಥಿಗಳನ್ನು ಬೀಳ್ಕೊಟ್ಟರು.
ಕೋಟೇಶ್ವರದಲ್ಲಿ ನಮ್ಮ ಬಿಡಾರವಿದ್ದಾಗ (ಸುಮಾರು 1960 - 65 ರ ಅವಧಿ) ಇಂತಹುದೇ ಪರಿಸರವು ನಮ್ಮ ಮನೆಯಲ್ಲೂ ಇತ್ತು. ಬೀದಿಯ ಬದಿಯಲ್ಲೇ ಇದ್ದ ನಮ್ಮ ಬಿಡಾರಕ್ಕೆ - ಒಂದು ರಾತ್ರಿ ಕಳೆದು ಹೋಗುವ ಇಚ್ಛೆಯಿಂದ - ಅರ್ಧ ರಾತ್ರಿಯಲ್ಲೂ ಕಾಲ್ನಡಿಗೆಯ ಅಭ್ಯಾಗತರು ಬರುತ್ತಿದ್ದರು. ನನ್ನ ಅಮ್ಮನು ಅಂತಹ ಅವೇಳೆಯಲ್ಲಿಯೂ ಕಟ್ಟಿಗೆ ಒಲೆ ಹಚ್ಚಿ ಅವರಿಗೆ ಅಡುಗೆ ಮಾಡಿ ಬಡಿಸುತ್ತಿದ್ದುದು ನನಗಿನ್ನೂ ನೆನಪಿದೆ; ಪಾಯಸದೂಟವನ್ನು ಬಡಿಸಿದ್ದೂ ನೆನಪಿದೆ. ಪಾಯಸ ಪ್ರೇಮಿಯಾದ ನಾನು ಮರುದಿನ ಅಮ್ಮ ಕೊಟ್ಟ ಆ ಹೆಸರು ಬೇಳೆಯ ಪಾಯಸವನ್ನು ಅನೇಕ ಬಾರಿ ಸವಿದ ನೆನಪೂ ಇದೆ. "ರಾತ್ರಿಯ ಹೊತ್ತಿನಲ್ಲಿ ಯಾರಾದರೂ ಅತಿಥಿಗಳು ಬಂದರೆ ಅಗತ್ಯಕ್ಕೆ ಇರಲಿ" - ಎನ್ನುತ್ತ ಪ್ರತೀದಿನವೂ ಒಂದಷ್ಟು ಮಜ್ಜಿಗೆ ಮತ್ತು ಹಾಲನ್ನು ನನ್ನ ಅಮ್ಮನು ತಪ್ಪದೆ ಉಳಿಸುತ್ತಿದ್ದುದೂ ನೆನಪಿದೆ. ಆಕೆಯ ದೇಹಾಂತದ ವರೆಗೂ ಇದೇ ಸದ್ಭಾವವನ್ನು, ಕರ್ತವ್ಯ ನಿಷ್ಠೆಯನ್ನು ಆಕೆಯು ಉಳಿಸಿಕೊಂಡಿದ್ದಳು. ಮನೆಗೆ ಬಂದ ಯಾರೂ ತಮ್ಮ ಹಸಿವನ್ನು ತಣಿಸಿಕೊಳ್ಳದೆ ಹೋಗಬಾರದು ಎಂಬ ವಿಶ್ವ ಕುಟುಂಬದ ಭಾವವು ಅಂದಿನ ಬಹುತೇಕ ಬ್ರಾಹ್ಮಣ ಕುಟುಂಬಗಳಲ್ಲಿಯೂ ನೆಲೆಸಿತ್ತು. ನಮ್ಮ ಮನೆಯಲ್ಲಿ ಸ್ವಲ್ಪ ಹೆಚ್ಚೇ ಇತ್ತು ಎನ್ನಬಹುದು. ಏನನ್ನಾದರೂ ಕೈಯೆತ್ತಿ ಕೊಡುವುದಕ್ಕೆ ಬಡತನವು ಎಂದೂ ಅಡ್ಡಿಯಲ್ಲ; ಮನಸ್ಸು-ಪ್ರೀತಿಯ ಭಾವವು ಮಾತ್ರ ಬೇಕಾಗುತ್ತದೆ. ಆಗ ಪಡೆದವರಿಗೆ ಸಂತೃಪ್ತ ಭಾವ; ಕೊಟ್ಟವರಿಗೆ ಧನ್ಯತಾ ಭಾವ.
ಇಂತಹ ಬ್ರಾಹ್ಮಣ ಆಕಾರಗಳು ಈಗ ಎಲ್ಲಾದರೂ ಕಾಣುತ್ತವೆಯೆ? ಇನ್ನೂ SMART ಆಗದ ಎಲ್ಲೋ ಹಳ್ಳಿಯಲ್ಲಿ ಅಂತಹ ಸಜ್ಜನರು ಇದ್ದರೂ - ಅದು ಬೆರಳೆಣಿಕೆಯಷ್ಟು. ಪ್ರತಿಫಲಾಪೇಕ್ಷೆಯಿಲ್ಲದೆ ಮಾಡುವ ಒಂದಾದರೂ ಕರ್ಮವು ಇಂದಿನ ಸಮಾಜದಲ್ಲಿ ಕಾಣಿಸುತ್ತದೆಯೆ? ಅನ್ನವನ್ನು ಮಾರುವ ವೃತ್ತಿಯನ್ನು ಹಿಡಿದಿರುವವರಿಂದ ತೊಡಗಿ ಎಲ್ಲರೂ - ಇನ್ನೊಬ್ಬರಿಗೆ ಒಂದು ಕಾಳನ್ನೂ ಕೈಯೆತ್ತಿ ಕೊಡಲಾಗದ ಹಂತದಲ್ಲಿ ಬಹುಪಾಲು ಬ್ರಾಹ್ಮಣರು ಸಿಲುಕಿಕೊಂಡಿದ್ದಾರೆ. ನೇಮನಿಷ್ಠೆಗಳೂ ದೂರಾಗಿವೆ. ಯಾರೂ ಯಾರಾಗಿಯೂ ಉಳಿದುಕೊಂಡಿಲ್ಲ. ಇದರಿಂದಾಗಿ, ಕೆಟ್ಟ ಕಲಬೆರಕೆಯ ಕುರೂಪೀ ಸಂಸ್ಕೃತಿಯು ಹರಡುತ್ತಿದೆ. ಈಗ ನಿಜವಾದ ಬ್ರಾಹ್ಮಣರಾಗಲೀ ಸನ್ಯಾಸಿಗಳಾಗಲೀ ನಮ್ಮ ಸುತ್ತಮುತ್ತ ಕಾಣಿಸುವುದಿಲ್ಲ. ಕೆಲವರು ತಾತ್ಕಾಲಿಕ ಲಾಭ ಪಡೆಯಲು - ಇನ್ನು ಕೆಲವರು, ಅನಿವಾರ್ಯವಾಗಿ ನಷ್ಟವನ್ನೇ ಹೊಂದಲು - ಕೆಲಕೆಲವು ಹಣೆಪಟ್ಟಿಯಿಂದ ಗುರುತಿಸಿಕೊಳ್ಳಬೇಕಾದಂತಹ ಸಾಮಾಜಿಕ ವ್ಯವಸ್ಥೆಯಲ್ಲಿ ಈಗ ನಾವಿದ್ದೇವೆ.
ಇನ್ನು...ವೇದಗಳನ್ನು ಮಾರುವವನು ಬ್ರಹ್ಮ ಹತ್ಯೆ ಮಾಡಿದ ಪಾತಕಿಗೆ ಸಮಾನನು ಎನ್ನುವುದಾದರೆ ಈ ಸಾಲಿನಲ್ಲಿ ಸದ್ಯದ ಸಮಾಜದಲ್ಲಿಯಂತೂ ಯಾರೂ ಸಿಗಲಾರರು. ವೇದವನ್ನು ಓದಿದ ಬೆರಳೆಣಿಕೆಯ ಮಂದಿ ಮಾತ್ರವೇ ಇಂದಿನ ಸಮಾಜದಲ್ಲಿ ಕಾಣಸಿಗುತ್ತಾರೆ. ವೇದದ ಮೋಡಿಗೆ ನಿಜವಾಗಿಯೂ ಒಳಗಾದವರು ನಿತ್ಯದ ಜಂಜಾಟಗಳಿಂದ ಸಹಜವಾಗಿಯೇ
ದೂರವಿರುತ್ತಾರೆ. ವಕ್ರ ಶುಕ್ರರ ವಾದ ವಿವಾದಗಳಿಂದ ಅಂತರವನ್ನು ಕಾಯ್ದುಕೊಳ್ಳುತ್ತಾರೆ.
ಅಂತಹ ನಿಷ್ಠೆ ನೈಮಿತ್ತಿಕಗಳಿಲ್ಲದೆ ಯಾವ ವೇದವೂ ಒಲಿಯದು. ವೇದ ಪಾರಂಗತರು ಸಾಮಾನ್ಯವಾಗಿ ಹೆಚ್ಚು ಸದ್ದನ್ನು ಮಾಡುವುದಿಲ್ಲ. ತುಳುಕದಿರುವುದು ಜ್ಞಾನ (ವೇದ) ದ ಸಹಜ ಗುಣ. ಅಕಸ್ಮಾತ್ ವೇದಜ್ಞರು ಸದ್ದು ಮಾಡಿದರೆ "ಅದು ಅರೆಬರೆ ವಿದ್ಯೆ; ವೇದವನ್ನು ಮಾರಿ ಹೊಟ್ಟೆ ತುಂಬಿಸಿಕೊಳ್ಳುವ ಘಾತಕತನ" ಎಂದೂ ಅಂದುಕೊಳ್ಳಬಹುದು. ಈಗಲೂ ವೇದವನ್ನು ಮಾರುವ ಯೋಗ್ಯತೆಯುಳ್ಳವರು ಎಲ್ಲೋ ಕೆಲವರಿದ್ದರೆ ಕೊಳ್ಳುವ ಯೋಗ್ಯತೆಯುಳ್ಳವರು ದುರ್ಲಭ; ಅಕಸ್ಮಾತ್ ಕೊಳ್ಳುವವನಿದ್ದರೆ ಸಮರ್ಥವಾಗಿ ಮಾರಬಲ್ಲವನೇ ಇಲ್ಲ... ಎಂಬಂತಾಗಿದೆ. ಈ ಹಿನ್ನೆಲೆಯಲ್ಲಿ ವೇದವು ಸದ್ಯಕ್ಕೆ ಸುರಕ್ಷಿತವಾಗಿದೆ! (ಅಂದುಕೊಳ್ಳಬಹುದು!) ಅಥವ ತನ್ಮೂಲಕ ಸ್ವತಹ ವೇದವೇ ತನ್ನನ್ನು ತಾನು ರಕ್ಷಿಸಿಕೊಂಡಿರಬಹುದೆ? ಎಂದೂ ಅನ್ನಿಸುವುದಿದೆ. ಏನೇ ಆದರೂ ಪಾತಕಕ್ಕೂ ಘಾತಕಕ್ಕೂ ವೇದವಿರುವಲ್ಲಿ ಎಂದಿಗೂ ಅವಕಾಶವಿಲ್ಲ.
ಸಾಮಾಜಿಕ ಚಿಂತನೆಯಿದ್ದ ಪೂರ್ವದ ಋಷಿವಾಕ್ಯಗಳನ್ನು ವಸ್ತು ನಿಷ್ಠವಾಗಿ ಪೂರ್ಣ ಗೌರವದಿಂದ ನೋಡಿ ಇಂದೂ ಅಳವಡಿಸಿಕೊಳ್ಳಲು ಸಾಧ್ಯವಿದೆ. ಅದು Improvisation (ಉನ್ನತೀಕರಣ) ಆಗಿರಬೇಕು; ಇಳಿಯುವ ಆಟವಾಗಬಾರದು. ಏಕೆಂದರೆ ಕಲಿಯುಗದಲ್ಲಿ ನಾವೀಗ ಬಹು ದೂರ ಬಂದಿದ್ದೇವೆ. "ಕಡಿಮೆ ದುಃಖ ಹೆಚ್ಚು ಸುಖ" - ಎಂಬ ಎಲ್ಲೂ ಅಸ್ತಿತ್ವವೇ ಇಲ್ಲದ ಮಾಯಾವಿಯನ್ನು ಮುಷ್ಟಿಯಲ್ಲಿರಿಸಿಕೊಳ್ಳಲು ನಾವೀಗ ತಿಣುಕಾಡುತ್ತಿದ್ದೇವೆ. ಕರ್ಮಶೀಲತೆ ಮತ್ತು ಸದ್ವಿಚಾರಗಳತ್ತ ನಮ್ಮ ಆಕರ್ಷಣೆ ತಗ್ಗುತ್ತಿದೆ. ಏಕೆಂದರೆ ನಮಗೀಗ ಎಲ್ಲವೂ ಸುಲಭದಲ್ಲಿ ಸಿಗಬೇಕು; ದೇವರೂ ಕೂಡ! (ಅದೂ ದೇವರಿಗೆ ಬೇಕಿದ್ದರೆ...) "ಒಂದು ಕಡೆ ಇಟ್ಟ ಅಂಡನ್ನು ಅಲುಗಾಡಿಸದೆ ಕೂತರೂ ನಮ್ಮ ಬದುಕು ಸಾಂಗವಾಗಿ ನಡೆಯಬೇಕು" - ಎಂಬ ದಿಕ್ಕಿನಲ್ಲಿ ನಾವೀಗ ಹೆಜ್ಜೆ ಹಾಕುತ್ತಿದ್ದೇವೆ. ಇಂದ್ರಿಯ, ಮನಸ್ಸು, ಬುದ್ಧಿಯನ್ನು ನಿಯಂತ್ರಿಸಿ ವಿದ್ಯೆಯ ಉಪಾಸಕರಾಗುವ ವಿದ್ಯಾ ಪರಿಸರದ ಕೊರತೆಯೂ ಇದೆ. ಭಾರತದ ಸಾಂಪ್ರದಾಯಿಕ ಶಿಕ್ಷಣಕ್ಕೆ ಪುನಶ್ಚೇತನ ನೀಡಿ ಗುಣವರ್ಧನೆ ಮಾಡುವ ಅಗತ್ಯವಿದೆ. ಇಂದಿನ ನಮ್ಮ ಶಿಕ್ಷಣ ಶಾಸ್ತ್ರವು ಅನಾಥಾಲಯದ ಶಿಶುವಿನಂತಿದೆ. ಪ್ರೀತಿಯಿಲ್ಲದೆ ಎಡೆಯಲಿಕ್ಕಿದ ಅನ್ನದಂತಿದೆ. ಇಂದಿನ ಶಿಕ್ಷಣವು ವ್ಯಕ್ತಿತ್ವ ನಿರ್ಮಾಣಕ್ಕೆ ಪೂರಕವಾಗಿ ಇಲ್ಲವೇ ಇಲ್ಲ. ಆದ್ದರಿಂದಲೇ ಕೆಟ್ಟ ಗುರು, ಕೆಟ್ಟ ಶಿಷ್ಯ, ಕೆಟ್ಟ ಸಾಮಾಜಿಕ ಪರಿಸರಕ್ಕೆ ನಾವೆಲ್ಲರೂ ಸಾಕ್ಷಿಯಾಗುತ್ತಿದ್ದೇವೆ. ಪದವಿ ಪತ್ರದ ಆಧಾರದಲ್ಲಿ ವಿದ್ಯೆಯ ಆಳ ಅಗಲಗಳನ್ನು ಅಳೆಯುವ ಕೆಟ್ಟ ಅಪ್ರಾಯೋಗಿಕ ಪ್ರಯೋಗದಿಂದಲೇ ನಾವಿಂದು ಸೋಲುತ್ತಿದ್ದೇವೆ. "ಅಳೆಯುವವನೂ ಲೊಳಲೊಟ್ಟೆ; ಅಳೆಸಿಕೊಳ್ಳುವವನು ಕೊಳೆತ ಮೊಟ್ಟೆ" - ಎಂಬ ಜೋಡಾಟ ಈಗ ನಡೆಯುತ್ತಿದೆ. ಆದ್ದರಿಂದಲೇ ಇಂದಿನ ಮಾತು ಕೃತಿಗಳು ಅಲ್ಲಲ್ಲಿ ಹಳಿ ತಪ್ಪುತ್ತಿವೆ.
ಉದ್ದುರುಟು ಮಾತಾಡಿ ಇದ್ದುದನು ಹೋಗಾಡೆ
ಉದ್ದನ ಮರದ ತುದಿಗೇರಿ ಕೈಜಾರಿ
ಬಿದ್ದು ಸತ್ತಂತೆ ಸರ್ವಜ್ಞ
ವಿನಯ ವಿವೇಕವಿಲ್ಲದ ವಿದ್ಯೆಯಿಂದ ಅಪಾರ ನಷ್ಟವುಂಟಾಗುತ್ತದೆ. ಆದರೆ...ಶ್ವಾನದಂತಾನೆ ಬೊಗಳಿದರೆ ಆನೆಯ ಮಾನವೇ ಹಾನಿ. ಆದ್ದರಿಂದ ಪೂರ್ವಾಪರ ತಿಳಿಯದೆ ತೂರಿಬಿಡುವ ಯಾವುದೇ ಮಾತು - ವರ್ತನೆಯು ಅವಿವೇಕದ ಮಾದರಿಯಾಗಿ ಬಹುಕಾಲ ಪೀಡಿಸುತ್ತ ಉಳಿಯುತ್ತದೆ.
ಉಳಿಯೇಟು ಬೀಳದೆ ಯಾವುದೇ ಕಲ್ಲು ಶಿಲ್ಪವಾಗದು; ಅಂತೆಯೇ ಶಿಕ್ಷೆಯ ಭೀತಿಯಿಲ್ಲದೆ ವ್ಯಕ್ತಿತ್ವ ನಿರ್ಮಾಣ ಸಾಧ್ಯವಾಗದು. ಉಪಾಧ್ಯಾಯರಿಗೆ ತಮ್ಮ ವಿದ್ಯಾರ್ಥಿಗಳನ್ನು ಪ್ರೀತಿಯಿಂದ ನಡೆಸಿಕೊಳ್ಳುವ ಮತ್ತು ಶಿಕ್ಷಿಸುವ ಎರಡೂ ಹಕ್ಕುಗಳಿವೆ. ವಿದ್ಯಾರ್ಥಿಗಳಿಗೆ ತಮ್ಮ ಸಂಶಯಗಳನ್ನು ವಿಧೇಯತೆಯಿಂದ ಪ್ರಶ್ನಿಸಿ ತಿಳಿದುಕೊಳ್ಳುವ ಹಕ್ಕಿದೆ; ಅಷ್ಟೆ. ಆದರೆ ಇಂದಿನ ಪಾಶ್ಚಾತ್ಯ ತೆವಲಿನ ತಿರುಪೋಕಿತನದಿಂದಾಗಿ ಭಾರತದ ಸಂಪನ್ನ ವಿದ್ಯಾ ಕ್ಷೇತ್ರವು ರುಂಡವಿಲ್ಲದೆ ನಲುಗುವಂತಾಗಿದೆ. ವಿದ್ಯಾರ್ಥಿಯು ಅಧ್ಯಾಪಕನಿಗೆ ಹೊಡೆದರೆ "ಭೇಶ್" ಎನ್ನುವ, ಅದಕ್ಕೆ ತದ್ವಿರುದ್ಧವಾಗಿ ಶಿಕ್ಷಕರು ವಿದ್ಯಾರ್ಥಿಗೆ ಥಳಿಸಿದಾಗ ಹಾಹಾಕಾರವೆಬ್ಬಿಸುತ್ತ ಶಿಕ್ಷಕ ವೃಂದವನ್ನು ಮುತ್ತಿ ಪೀಡಿಸುವ ಇಂದಿನ ಮಾಧ್ಯಮಗಳು ವಿದ್ಯಾರ್ಥಿಗಳ ಬದುಕನ್ನು ನಿಶ್ಚಯವಾಗಿ ಹಾಳುಗೆಡವುತ್ತಿದ್ದಾರೆ. ಇಂತಹ ಘಟನೆಗಳು ಸ್ಥಳೀಯವಾಗಿ ಮುಗಿದು ಹೋದರೆ ತಕ್ಕಮಟ್ಟಿಗಾದರೂ ಸಾಮಾಜಿಕ ಸ್ವಾಸ್ಥ್ಯವು ಉಳಿಯುತ್ತದೆ. ಅದಲ್ಲದೆ ಇಂತಹ ಅನರ್ಥಕಾರೀ ಘಟನೆಗಳಿಗೆ "ಸಾಧನೆ" ಎಂಬಂತೆ ದೇಶವ್ಯಾಪೀ ಪ್ರಚಾರವು ದೊರೆತರೆ ಅಂತಹ ಅಪರಾಧಿಗಳಿಗೆ ಅಪರಾಧವೆಸಗುವ ಹೊಸಹೊಸ ದಾರಿಗಳನ್ನೂ ಸೂಚಿಸಿದಂತಾಗದೆ? ಆದ್ದರಿಂದಲೇ ಹುಚ್ಚು ಕುದುರೆಯೇರಿದಂತೆ - ದೇಶಪ್ರೇಮವಿಲ್ಲದಂತೆ ವರ್ತಿಸುತ್ತಿರುವ ಇಂದಿನ ಮಾಧ್ಯಮಗಳ ಕಾರ್ಯಸೂಚಿಯು ಯಾವುದೋ ಹೊರ ದೇಶದಲ್ಲಿ ರಹಸ್ಯವಾಗಿ ಸಿದ್ಧವಾಗುತ್ತಿರಬಹುದೆ? ಎಂದೂ ಬಲವಾಗಿ ಅನ್ನಿಸುತ್ತದೆ. "ತರಗತಿಯು ಮುಗಿಯುವ ವರೆಗೆ ನಿಂತಿರು" - ಎಂದು ತರಗತಿಯಲ್ಲಿ - ಶಿಕ್ಷಕರು ವಿದ್ಯಾರ್ಥಿಗೆ ಶಿಕ್ಷಾ ರೂಪದಲ್ಲಿ ಹೇಳಿದರೆ - ಅಷ್ಟಕ್ಕೇ ಅವಮಾನವಾಗಿ ಮುಂದೆಂದೂ ಅಂತಹ ತಪ್ಪನ್ನು ಹಿಂದಿನ ವಿದ್ಯಾರ್ಥಿಗಳು ಮಾಡುತ್ತಿರಲಿಲ್ಲ. ಆದರೆ ಇಂದಿನ ಮಾಧ್ಯಮಗಳಿಗೆ ತೆರೆದುಕೊಂಡಿರುವ ನಮ್ಮ ಮಕ್ಕಳು ಅಷ್ಟೊಂದು ಸಂವೇದನಾಶೀಲರಾಗಿಯೂ ಉಳಿದಿಲ್ಲ. ದಿನವೂ ಬಗೆಬಗೆಯ ದುಷ್ಟತನವನ್ನು ನೋಡುತ್ತಲೇ ಅವರೆಲ್ಲರೂ ಬೆಳೆಯುತ್ತಿದ್ದಾರೆ. ಆದ್ದರಿಂದಲೇ ಮಕ್ಕಳ ಭಾವತಂತುಗಳು ಸ್ಪಂದನಹೀನವಾಗಿ - ಜಡವಾಗಿ ಹೋಗಿವೆ. "ದುಷ್ಟತನವು ತಮ್ಮ ಜನ್ಮಸಿದ್ಧ ಹಕ್ಕು" ಎಂದು ಇಂದಿನ ವಿದ್ಯಾರ್ಥೀ ಸಮೂಹವು ತಿಳಿದುಕೊಂಡಂತೆಯೂ ಭಾಸವಾಗುತ್ತದೆ. "ಮಕ್ಕಳನ್ನು ಗಟ್ಟಿಗೊಳಿಸುವ ವಿಧಾನ" ಎನ್ನುತ್ತ Ragging ನ್ನೂ ಪ್ರೋತ್ಸಾಹಿಸುವ ನಷ್ಟಬುದ್ಧಿಯವರು ಈಗಲೂ ಇದ್ದಾರೆ! ಒಟ್ಟಿನಲ್ಲಿ ಮಾನವಂತರಾಗಿರುವುದು ಈಗ ಶ್ರೇಷ್ಠತೆಯ ಲಕ್ಷಣವಾಗಿ ಉಳಿದಿಲ್ಲ. ಇಷ್ಟಾಗಿಯೂ ಮಾನವಂತರಾಗಿ ಇನ್ನೂ ಉಳಿದಿರುವವರು ತಮ್ಮ ಶೈಕ್ಷಣಿಕ ಪರಿಸರದಲ್ಲಿ "ಪೆದ್ದು, ನಾಲಾಯಕ್" ಎಂಬ ಅವಹೇಳನಕ್ಕೂ ಒಳಗಾಗುತ್ತಿದ್ದಾರೆ. ಆದ್ದರಿಂದ "ಜಾಣ, ದೊಡ್ಡವರು" ಎಂದು ಹೇಳಿಸಿಕೊಳ್ಳಲು ಚಡಪಡಿಸುವವರು ಸ್ವತಹ ಸಂವೇದನಾರಹಿತರಾಗುವುದು, ಮಾನ ಬಿಡುವುದು - ಅನಿವಾರ್ಯವೆಂಬಂತಾಗಿದೆ. ಆದ್ದರಿಂದ ಮಾನಗೇಡಿಗಳಾಗುವಲ್ಲಿಯೂ ಎಡೆಬಿಡದೆ ಸ್ಪರ್ಧೆ ನಡೆಯುತ್ತಿದೆ. ಒಟ್ಟಿನಲ್ಲಿ, "ಮಾನ" ಎಂಬುದರ ವ್ಯಾಖ್ಯೆಯೇ ಬದಲಾಗಿ ಮಾನ - ಹೋಗಿದೆ.
ಆದ್ದರಿಂದ ಇಂದಿನ ಕಾಲಘಟ್ಟಕ್ಕೆ ಹೊಂದುವಂತೆ "ಅಂದಿನ" ವಿದ್ವದ್ ಋಷಿಗಳ ತತ್ವಗಳನ್ನು ಪುನರ್ನವೀಕರಿಸಿಕೊಳ್ಳಬೇಕು. ಅದು ಹೇಗೆಂದರೆ -
1. "ಯಾರನ್ನು ಯಾರು ನಿಂದಿಸಿದರೂ - ಅದು
ಸರಿಯಲ್ಲ" ಎಂಬ ವಿಶಾಲಾರ್ಥದಲ್ಲಿ ಎಲ್ಲ ವರ್ಗಗಳನ್ನೂ ಸೇರಿಸಬಹುದು.
ಈ ರೀತಿಯ ಸಭ್ಯತೆಯು ದುರ್ಭರ - ಘೋರ - ಸ್ವಾತಂತ್ರ್ಯ ಹರಣವೆನ್ನಿಸಿದರೆ, ಯಾರೂ ಯಾರನ್ನೂ ನಿಂದಿಸದೆ ನಿಸ್ಸಾರವಾಗಿ ಬದುಕುವುದು ವ್ಯರ್ಥವೆನ್ನಿಸಿದರೆ...
2. "ಯಾರು ಯಾರನ್ನು ಬೇಕಾದರೂ ಮನಸೋ ಇಚ್ಛೆ ನಿಂದಿಸಬಹುದು.." ಎಂಬ ನಿರ್ಣಯಕ್ಕೆ ಬಂದು ನವ ಲಂಕಾಪುರಿಯನ್ನು ಕಟ್ಟಬಹುದು.
ಎಲ್ಲರಿಗೂ ನ್ಯಾಯ ಸಿಗಲು ಇವೆರಡೇ ದಾರಿ ಉಳಿದಿರುವುದು.
......ನಮಗಿರುವುದು ಇವೆರಡೇ ದಾರಿ.
"ಒಬ್ಬನು ಎಂತಹ ಮಹಾನ್ ವ್ಯಕ್ತಿಯಾದರೂ ಕಣ್ಣು ಮುಚ್ಚಿಕೊಂಡು ಯಾರನ್ನೂ ಅನುಸರಿಸಬೇಡಿ. ಪ್ರತೀ ಪ್ರಾಣಿಗೂ ಕಣ್ಣು, ಮೂಗು, ಬಾಯಿ, ಕಿವಿ, ತಲೆ - ಎಲ್ಲವನ್ನೂ ಪ್ರತ್ಯೇಕವಾಗಿ ಕೊಟ್ಟ ದೇವರ ಇಚ್ಛೆಯೂ ಇದೇ ಆಗಿದೆ" ಎಂದ ಸ್ವಾಮಿ ವಿವೇಕಾನಂದರ ಮಾತು - ಸದಾ ಎಚ್ಚರದಲ್ಲಿರುವಂತೆ, ಚಟ್ಟು ಸ್ಪರ್ಧೆಗಿಳಿಯದಂತೆ ನಮ್ಮನ್ನು ಪ್ರೇರೇಪಿಸುವಂತಿದೆ. ಸಂಪ್ರದಾಯ ಪರಂಪರೆಯ ತತ್ವರಥವನ್ನು ಎಳೆಯಲು ಮನಸ್ಸಿಲ್ಲದಿದ್ದರೆ ಬಿಟ್ಟುಬಿಡಿ; ಆದರೆ ಆ ರಥವನ್ನು ಇತರರೂ ಎಳೆಯಲು ಬಿಡದಿರುವುದು - ಆ ರಥವನ್ನೇ ಮುರಿಯುವಂತೆ ಅಪ್ಪಣೆ ಕೊಡಿಸುವುದು...ಇವೆಲ್ಲವೂ ಸಭ್ಯತೆಯಲ್ಲ. ಪರಂಪರೆಯೆಂಬುದು ದೀಪದ ಕಂಬದಂತೆ. ಚತುರ ವಿವೇಕಿಗಳು ಆ ಕಂಬವನ್ನು ತಮ್ಮ ಮಾರ್ಗದರ್ಶನಕ್ಕಾಗಿ ಯುಕ್ತಿಯಿಂದ ಉಪಯೋಗಿಸುತ್ತಾರೆ. ಆದರೆ ಕುಡುಕರು ತಮ್ಮ ಅಸ್ಥಿರ ದೇಹವನ್ನು ಒರಗಿಸಲು ಆ ಕಂಬವನ್ನು ಹಿಡಿಯುತ್ತಾರೆ! ಆ "ಪರಮಾತ್ಮ"ನ ಸ್ವರ್ಗ ಸುಖದಲ್ಲಿ ಏನೇನೋ ಗಳಹುತ್ತಾರೆ! ಆದರೆ ನಹುಷಗಿರಿಯು ಹೆಬ್ಬಾವಾಗಲು ಎಷ್ಟು ಹೊತ್ತು ಬೇಕು?
ಹಾಗೆ ನೋಡಿದರೆ, ಈಗ ಎಲ್ಲರದೂ ಒಂದೇ ಆಶ್ರಮ ಧರ್ಮ. ಅದು "ವಿತ್ತ ಸಂಚಯ ಧರ್ಮ". ಅಂದಮೇಲೆ ತಮಗೆ ವಿಶ್ವಾಸವಿಲ್ಲದ ಎಂದಿನದೋ ಆಚಾರ ವಿಚಾರಗಳ ಕುರಿತು - ಅದರಲ್ಲಿ ಅಂತಹ ನಂಬಿಕೆಯಿಲ್ಲದವರು, ಅಧ್ಯಯನವೂ ಇಲ್ಲದವರು ತಮ್ಮ ಮೂಗು ತೂರಿಸುವ ಅಗತ್ಯವಾದರೂ ಏನಿದೆ? ಹೀಗಾದಾಗಲೇ ಕೂಟಾಸುರರ ಅವಿದ್ಯಾ ಸಂಸಾರದ ಅವತಾರವಾಗುವುದು. ನಿಜವಾದ ವಿದ್ವಾಂಸರಾದವರು ಕ್ಷೋಭೆಯನ್ನುಂಟುಮಾಡುವ ಯಾವುದೇ ಕ್ಷುದ್ರ ಉಪದ್ವ್ಯಾಪಗಳಲ್ಲಿ ಮುಳುಗುವುದಿಲ್ಲ. ವಿದ್ವಾಂಸರೆನ್ನಿಸಿಕೊಳ್ಳಲು ಬಯಸುವವರು ತಮ್ಮ ವಿದ್ಯಾ ಪರಿಧಿಯ ಶಿಷ್ಟತೆಗೆ ಬದ್ಧರಾಗಿ ಇತರರಿಗೂ ಮಾದರಿಯಾಗಿರುವುದು ಅಪೇಕ್ಷಣೀಯ.
ಕಾಲಾನುಕ್ರಮದಲ್ಲಿ ಯಾವುದೇ ಆಶ್ರಮದ ಕೆಟ್ಟ ಪರಿವರ್ತನೆಗೆ ಅವುಗಳ ಅನುಯಾಯಿಗಳ ಅಚಲವಾದ ನಂಬಿಕೆ ಮತ್ತು ಶ್ರದ್ಧೆಗಳು ಎಂದಿಗೂ ಕಾರಣವಾಗಲಾರದು. ನಂಬಿಕೆ ಮತ್ತು ಶ್ರದ್ಧೆಯಿಂದ ದೂರವುಳಿದಿರುವ ವಿಕೃತ ಮನೋಬುದ್ಧಿಯ ಹೊಟ್ಟೆಬಾಕ ತಲೆಹಿಡುಕರಿಂದಲೇ ಸಾಮಾಜಿಕ ಕ್ಷೋಭೆ ಮತ್ತು ಸಂಕಷ್ಟಗಳು ಹುಟ್ಟಿಕೊಳ್ಳುತ್ತವೆ ಎಂಬುದು ಸಿದ್ಧ ಸತ್ಯ. ತಮ್ಮ ತಮ್ಮ ಕರ್ತವ್ಯ ಕರ್ಮಗಳನ್ನು ಪ್ರತಿಯೊಬ್ಬರೂ ತಲೆತಗ್ಗಿಸಿ ಮಾಡುವ ಸಮಾಜದಲ್ಲಿ ಕೀಟಲೆ ತರಲೆಗಳು ಎಂದೂ ಹುಟ್ಟುವುದಿಲ್ಲ. ಆದರೆ ಕೀಟಲೆ ತರಲೆಗಳನ್ನು ಹುಟ್ಟಿಸುವವರಿಗೆ ವಿಶೇಷ ಸನ್ಮಾನ ನಡೆಸುವ ಸಮಾಜದಲ್ಲಿ ಪೀಡೆಯು ಎಂದೂ ತಪ್ಪುವುದಿಲ್ಲ. ಹದ ತಪ್ಪಿದ ಬುಧಜನರಿಂದ ಯಾವತ್ತೂ ಅಪಕಾರವೇ ಹೆಚ್ಚು. ಅಂತಹ ಜ್ಞಾನಿಗಳಿಗಿಂತ ಅಜ್ಞಾನಿಗಳೇ ನಿರಪಾಯಕಾರಿಗಳು.
ಹಗಲನ್ನು ಹಗಲು ಎಂದು, ಕತ್ತಲನ್ನು ಕತ್ತಲೆಂದು ಒಪ್ಪಿಕೊಳ್ಳುವುದು ಇಷ್ಟು ಕಷ್ಟವೆ? ಎಲ್ಲೋ ಕೊಂಡಿ ತಪ್ಪಿದೆ; ಅಥವ ತಪ್ಪಿಸಲಾಗಿದೆ. ತಿರುಳನ್ನು ಹೊರಚೆಲ್ಲಿ ಸಿಪ್ಪೆ ಮಾತ್ರ ತಿನ್ನುವ Zero Figure ನ ತೆವಲಿನವರಂತೆ ಇದೊಂದು ಶ್ರೀಮಂತ ಆವಾಹಿತ ರೋಗ. ನಿರೋಗಿಗಳಿಗೂ ರೋಗ ಅಂಟಿಸುವ ಉಚಿತ ಭೋಗ! ಇಂತಹ ಬೌದ್ಧಿಕ ರೋಗಿಗಳ "ತುತ್ತೂರಿ ಗಾಡಿ"ಯ ಶಬ್ದ ಮಾಲಿನ್ಯವು ಮಿತಿಮೀರಿದರೆ ಅದನ್ನು ಎತ್ತಂಗಡಿ ಮಾಡಿಸಿ Dump Yard ಗೆ ಸೇರಿಸುವುದು "ಬಹುಜನ ಹಿತಾಯ ಬಹುಜನ ಸುಖಾಯ" ಕಾರ್ಯವೆನಿಸುತ್ತದೆ. "ಅಡಿಬಿದ್ದರೂ ಮೂಗು ಮೇಲೆ" ಎನ್ನುತ್ತ, ದಿನಕ್ಕೊಂದು ಹಾಳು ವರಸೆ ತೋರಿಸಿ ಪರಪರ ಕೆರೆದುಕೊಳ್ಳುವ ಬಿಟ್ಟಿ ಮಾಗಧರಿಂದ ಬೀದಿಗಳಂತೂ ಹಾಳಾಗುವುದು ನಿಶ್ಚಯ. ಶ್ರುತಿ ಸೇರದ, ಪ್ರೇಮವಿಲ್ಲದ ಇವರ ನಿತ್ಯಗಾನವು - ....ಬಚ್ಚಿಟ್ಟ ಹಳಸಿದ ಅಡುಗೆಯಂತೆ - ಕರ್ಕಶ, ಕಠೋರ, ದುರ್ನಾತ. ಇಂತಹ ಇಳಿಯುವ - ಅಳಿಯುವ ಚಟ್ಟು ಪೊಟ್ಟು ಸ್ಪರ್ಧೆಯು ಬೇಕೆ?
ಸಹಜ ಪ್ರೀತಿಯಿಲ್ಲದ ಸಾಮಾಜಿಕ ಪರಿಸರದಲ್ಲಿ ನಾವಿಂದು ಬದುಕುತ್ತಿದ್ದೇವೆ. ಇಡೀ ಊರೇ ಕುಟುಂಬದಂತಿದ್ದು ಪರಸ್ಪರ ಕಷ್ಟ ಸುಖಗಳಲ್ಲಿ ಪಾಲ್ಗೊಳ್ಳುತ್ತಿದ್ದ ಹಳೆಯ ಗಮಾರತ್ವ(?)ವನ್ನು ಬಿಟ್ಟು ನಾವೆಲ್ಲರೂ ಈಗ SMART ಆಗುತ್ತಿದ್ದೇವೆ! ನಮ್ಮ ಪ್ರೀತಿಯ ವ್ಯಾಖ್ಯೆಯೂ ಬದಲಾಗಿದೆ. ನಮ್ಮ ಕಿಸೆಭಾರವು ತಪ್ಪುಗಳನ್ನೂ ಒಪ್ಪು ಎಂದು ಸಿದ್ಧಪಡಿಸುತ್ತ - ತಲೆಭಾರದ ಸಂತತಿಯನ್ನು ಹುಟ್ಟು ಹಾಕುತ್ತಿದೆ. ಅಂತಹ ಟೊಳ್ಳು ಗಟ್ಟಿಗಳನ್ನು ಸಜ್ಜನರೂ - ದಾಕ್ಷಿಣ್ಯದಿಂದ ಸಹಿಸಿಕೊಳ್ಳುತ್ತಿದ್ದಾರೆ! ಇಂದಿನ ಮಾತು ವರ್ತನೆಗಳಲ್ಲಿ ಈ ಪ್ರವೃತ್ತಿಯು ಸ್ಪಷ್ಟವಾಗಿ ಕಾಣುತ್ತಿದೆ. ಮನೋವಾಕ್ಕಾಯಗಳಲ್ಲಿ ವಾಸಿಸುತ್ತಿದ್ದ "ಪ್ರೀತಿ" ಎಂಬ ಅನೂಹ್ಯ ಸ್ವಭಾವವು ಹೃದಯಕ್ಕೆ ಇಳಿದು, ಈಗ ಬೆರಳಿನ ತುದಿ ಸೇರಿ - ಜಾರಿ ಬೀಳುವ ಹಂತದಲ್ಲಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ಇಣುಕಿ ನೋಡಲು ಆರಂಭಿಸಿದ್ದ ನನಗೆ ಅಲ್ಲಿ ಹರಿದಾಡುವ ವಿಷಯಗಳು, ಮನೋಸ್ಥಿತಿಯನ್ನು ನೋಡುವಾಗ "ನಾವು ಹೋಗುತ್ತಿರುವುದು ಎಲ್ಲಿಗೆ?" ಎಂಬ ಪ್ರಶ್ನೆಯೂ ಮೂಡುತ್ತಿದೆ. "ನನ್ನ POST ನ್ನು LIKE ಮಾಡಿ" ಎನ್ನುವ, "ನನ್ನ ಮಗಳಿಗೆ ಕೃಷ್ಣನ ವೇಷದ ಸ್ಪರ್ಧೆಯಲ್ಲಿ ಬಹುಮಾನ ಬಂದಿದೆ..." ಎಂಬಂತಹ ಸಾಮಾನ್ಯ ಬಯಕೆಯ ಸಾಧಕರು,...ತಮ್ಮ ಸಿದ್ಧಾಂತವನ್ನು ಜಾಹೀರುಗೊಳಿಸಲು ಹಟತೊಟ್ಟು ಯತ್ನಿಸುವವರು, ಹಿಂದಿನ ಮಹಾಸಾಧಕರ ಚಿತ್ರಗಳ ಹೆಗಲೇರಿ ನಿಂತು ದೊಡ್ಡವರಾಗಲು ಯತ್ನಿಸುವವರು, ವ್ಯಕ್ತಿ-ಜಾತಿಯ ಗುಂಪುಗಳನ್ನು ಮಾಡಿಕೊಂಡು ಪರಸ್ಪರ ಬೆನ್ನು ತಟ್ಟಿಕೊಳ್ಳುವವರು...ಹೀಗೆ ನೂರಾರು ವೇಷಗಳಿಂದ ದಿನದಿನವೂ ಕುಬ್ಜ ಕಾಲಕ್ಷೇಪವಾಗಿ ಬಿದ್ದು ಹೊರಳುತ್ತಿರುವ ಜಾಲತಾಣಗಳನ್ನು ನಾವು ಗಮನಿಸುತ್ತಿದ್ದೇವೆ.

ಸದ್ಯಕ್ಕೆ ನಮ್ಮ ಭಾರತದಲ್ಲಿ ಮನೆಮನೆಯಲ್ಲೂ ಸಾಮಾಜಿಕ ಜಾಲತಾಣದ ಉಪದ್ವ್ಯಾಪವು ಇನ್ನೂ ಆರಂಭವಾಗಿಲ್ಲ. ಆದರೆ ಪುಸ್ತಕಗಳನ್ನು ಓದುವುದನ್ನೇ ಮರೆತ ಇಂದಿನ ಯುವಜನಾಂಗದ ದೊಡ್ಡ ಭಾಗವು ಜಾಲತಾಣಗಳ ತೆವಲು-ಅಮಲಿಗೆ ಬಲವಾಗಿ ಸಿಲುಕಿಕೊಂಡಿದೆ ಎನ್ನುವುದೇ ಆತಂಕದ ವಿಷಯ. "ಮಕ್ಕಳು ಹೇಗೋ ಬೆಳೆಯುತ್ತಾರೆ" ಎನ್ನುವ ಮತ್ತು "ಮಕ್ಕಳು ಏನಾದರೂ ಮಾಡಿಕೊಂಡಿರಲಿ; ನಮ್ಮ ತಂಟೆಗೆ ಬರದಿರಲಿ" ಎನ್ನುವ ಪಾಲಕ - ಮನೆಮಂದಿಯ ಹೊಣೆಗೇಡಿತನದಿಂದಲೇ - ಯಾವುದೋ ಒಂದು ಅವಲಂಬನೆಗಾಗಿ - ತರತಮದ ಅರಿವಿಲ್ಲದ ಅಪ್ರಬುದ್ಧರೂ ಜಾಲತಾಣದ ಜಾಲದಲ್ಲಿ ಸಿಲುಕಿ ಹಾದಿ ತಪ್ಪುತ್ತಿದ್ದಾರೆ ಎಂದೂ ಅನ್ನಿಸುತ್ತದೆ. ತಮಗೆ ಗೊತ್ತಿಲ್ಲದ ವಿಷಯಗಳಲ್ಲೂ ಪ್ರಕಾಂಡ ಪಾಂಡಿತ್ಯ ಮೆರೆಯುತ್ತಿರುವ ಕೆಲವು ತಾಣವೀರರನ್ನು ನೋಡಿದರೆ "ದೇವರೇ, ಇವರನ್ನು ಕ್ಷಮಿಸು; ಇವರಿಗೆ ತಾವು ಏನು ಮಾಡುತ್ತಿದ್ದೇವೆಂಬುದೇ ತಿಳಿದಿಲ್ಲ" ಎಂದೂ ಅನ್ನಿಸುತ್ತದೆ. ಜಾಲತಾಣವನ್ನು ಕಸದ ಬುಟ್ಟಿಯಾಗಿಸುವ ಪ್ರಯತ್ನದಲ್ಲಿ ಇಂಥವರ ಪಾತ್ರವು ಬಲು ದೊಡ್ಡದು. ಜಾಲತಾಣದ ಸದುಪಯೋಗವನ್ನು ಎಷ್ಟು ತಲೆಗಳು (ಬಲ-ಎಡ!) ಪಡೆಯುತ್ತಿವೆ ಎಂಬುದು ಚಿಂತನೆಗೆ ಯೋಗ್ಯವಾದ ವಿಷಯ.
40-50 ವರ್ಷಗಳ ಹಿಂದೆ ಒಂದು ರೇಡಿಯೋ ಎಂಬುದಿತ್ತು. ಅದೂ ಕೆಲವು ಮನೆಗಳಲ್ಲಿ. ಅಂದು ಸುದ್ದಿಯಿಲ್ಲದೆ, ಸದ್ದಿಲ್ಲದೆ ಇದ್ದ ಚೆಂದದ ಸಾಮಾಜಿಕ ಬದುಕು - ತನ್ನಷ್ಟಕ್ಕೆ ಮೌನವಾಗಿತ್ತು. ಸಾಮಾಜಿಕ ತಳಮಳಗಳು ಕನಿಷ್ಠ ಪ್ರಮಾಣದಲ್ಲಿದ್ದವು. ಊರಿನ ಒಬ್ಬ ವ್ಯಕ್ತಿಗೆ ಸಂಕಟವು ಎದುರಾದರೆ ನೆರೆಹೊರೆಯವರು ಅವರಿಗೆ ವಾಸ್ತವವಾಗಿ (RIP...OMG ಇತ್ಯಾದಿ ಶಾಬ್ದಿಕವಾಗಿ ಅಲ್ಲ!) ಹೆಗಲು ಕೊಡುತ್ತಿದ್ದ ಕಾಲವದು. ಜಾಲತಾಣದ ಇಂದಿನ ಬದುಕು ಹೇಗಿದೆ? ಇಂದು ನಮ್ಮ ನೆರೆಮನೆಯವರ ಪರಿಚಯವೂ ನಮಗಿಲ್ಲ. ಆದರೆ ನಮ್ಮ ಕಬಂಧಬಾಹುವು ಗುರುತು ಪರಿಚಯವಿಲ್ಲದ ಯಾರ್ಯಾರನ್ನೋ ಗೆಳೆಯರೆಂದು ಭ್ರಮಿಸಿ ದಿನವೂ ಮುಟ್ಟಿ ಮುಟ್ಟಿ ಬರುತ್ತಿದೆ! ಪ್ರತ್ಯಕ್ಷ ಸಂವಹನವು ಹುಸಿಯಾಗಿ - ಪರೋಕ್ಷವೇ ನಿಜವೆನ್ನಿಸುತ್ತಿದೆ. ಮನಸ್ಸನ್ನು ನಿರ್ದಯವಾಗಿ ಹಿಂಡುವ, ಹೃದಯಹೀನ ಏಕತಾನತೆಯ ಪೇಟೆ ಸಂಸ್ಕೃತಿಯು ಈಗ ಪ್ರವಾಹದಂತೆ ಎಲ್ಲೆಡೆಗೂ ನುಗ್ಗುತ್ತಿದೆ. ಅಸಭ್ಯತೆಗೆ ಸಭ್ಯತೆಯ ಉಡುಪು ತೊಡಿಸಿ ಸಭ್ಯರಾದಂತೆ ಹಿಗ್ಗುತ್ತಿರುವ ನಮಗೆ ಅನರ್ಹವನ್ನೆಲ್ಲ Grace marks ಕೊಟ್ಟು ಅರ್ಹರಾಗಿಸುವ ವ್ಯಾಧಿಯೂ ಬಡಿದಿದೆ! ಎಲ್ಲವೂ SMART! ಎಲ್ಲರೂ SMART! ಎಲ್ಲರೂ "ಯಂತ್ರವಾಹಕರು". ಆದರೆ ಮುಖಗೋಡೆಯ ಮೇಲೆ ಕುಣಿಯುತ್ತಿರುವ ಹೆಚ್ಚಿನ ಛದ್ಮವೇಷಗಳು - ಆವೇಶವಿಲ್ಲದ, ಕಾರ್ಯಸಾಧನೆಗೆ ತೊಡಗದ ಬರಿಯ ಸುದ್ದಿಪ್ರಿಯ ವೇಷಗಳು! ನಿತ್ಯದ ಯಾಂತ್ರಿಕ ಬದುಕನ್ನು ಇಂದು ಯಂತ್ರಗಳೇ ಆಳುತ್ತಿವೆ. ಪ್ರೀತಿಯಿಲ್ಲದ ಶಬ್ದಗಳು "LIKE" ಗಳಾಗಿ ಹೊರಳಾಡುತ್ತಿವೆ.

ಮೊನ್ನೆ ಪೇಟೆಗೆ ಹೋದಾಗ ನನಗೆ ಕಂಡ ಕೆಲವು ದೃಶ್ಯಗಳು "ಇದು ಯಾಕೆ ಹೀಗೆ?" ಎಂಬ ಪ್ರಶ್ನೆಗಳನ್ನು ಮೂಡಿಸಿದ್ದಂತೂ ಸತ್ಯ. ನಾನು ಕಂಡ ನೂರಾರು ಜನರಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿ, ವಿಚಿತ್ರ ಭಂಗಿಯಲ್ಲಿ, ತಮ್ಮ MOBILE ನೊಂದಿಗೆ ಆಟವಾಡುತ್ತಿದ್ದರು. ಕೆಲವರು ಮಾತನಾಡುತ್ತಿದ್ದರೆ, ಕೆಲವರು ಅದರಲ್ಲಿ ಏನನ್ನೋ ದಾಖಲಿಸುತ್ತಿದ್ದರು. ಅತಿಥಿಯೊಬ್ಬರನ್ನು ನಿರೀಕ್ಷಿಸುತ್ತ ನಿಂತಿದ್ದ ನನ್ನ ಪಕ್ಕದಲ್ಲೇ ದುಃಖಾರ್ತನಾಗಿ MOBILE ನಲ್ಲಿ ಮಾತಾಡುತ್ತಿದ್ದ ಒಬ್ಬ ವ್ಯಕ್ತಿಯು ಅಂದು ಸುಮಾರು ಅರ್ಧ ಗಂಟೆಗೂ ಮಿಕ್ಕಿ ತನ್ನ ಪ್ರೀತಿಯೊಡನೆ ಚೌಕಾಶಿ ನಡೆಸುತ್ತಿತ್ತು. ನೋಡಿ ಕೇಳಿದ ನಾನು ಅಲ್ಲಿಂದ ಹೊರಡುವಾಗ "ಶಬ್ದಪ್ರೀತಿಯು ಸರ್ವವ್ಯಾಪಿ" ಎಂದು ನನಗೆ ಖಾತ್ರಿಯಾಯಿತು. ತಮಾಷೆ ಎಂದರೆ, ಇಂದಿನ ಪ್ರೀತಿಗೂ ಊರು ಸುತ್ತುವ ಹುಚ್ಚು! ಬಯಲು ಆಲಯದೊಳಗೋ ಆಲಯವು ಬಯಲೊಳಗೋ ಎಂದು ಅಂದು ನನಗೆ ತಿಳಿಯಲಾಗದೆ ಹೋಗಿತ್ತು. ಹೊಸ್ತಿಲು ದಾಟಿ ಮನೆಯ ಒಳಗೆ ಬಂದ ಕೂಡಲೇ - ಹೆಚ್ಚಾಗಿ ಮಾಯವಾಗುವ "MOBILE ಪ್ರೀತಿ!" ಗಳಲ್ಲಿ ಅಂದು ನನ್ನ ಸ್ನಾನವಂತೂ ಆಗಿತ್ತು. ನಮಗೆ ನಾವೇ ಗಾಯ ಮಾಡಿಕೊಳ್ಳುವ ಇಂತಹ ಸುದೀರ್ಘ ಬೀದಿ ಪ್ರೇಮಗಳಿಗೆಲ್ಲ ವೈಜ್ಞಾನಿಕ ಸೌಲಭ್ಯಗಳ ಉಪಯೋಗವಾಗಬೇಕೆ? ಜಕ್ಕವಕ್ಕಿಗಳ ಶಾಬ್ದಿಕ ಪ್ರೀತಿಯು ಯಶಸ್ಸು ಕಂಡರೆ ಸಂತೋಷ; ಇಲ್ಲವಾದರೆ?
"ಮೀನಿನ ಹೆಜ್ಜೆಯನ್ನಾದರೂ ಗುರುತಿಸಬಹುದು; ಆದರೆ ಮನುಷ್ಯನ ಮನಸ್ಸನ್ನು ತಿಳಿಯಲಾಗದು" ಎಂಬುದು ಹಳೆಯ ನಾಣ್ನುಡಿ; ಸಾರ್ವಕಾಲಿಕ ಅನುಭವಾಮೃತ. ಹೀಗಿರುವಾಗ ದಿನಕ್ಕೊಂದು ವೇಷ ಕಟ್ಟುವ FACE BOOK ನ್ನು ಷೋಡಶೋಪಚಾರಗಳಿಂದ ಪೂಜಿಸುವುದಾದರೂ ಏಕೆ? FACE IS THE MIRROR OF MIND ಎನ್ನುತ್ತಾರೆ. ಆದರೆ MAKE UP ಇಲ್ಲದಂತಹ - ಅಲ್ಪಸ್ವಲ್ಪ ನಿಜರೂಪ ದರ್ಶನವಾಗುತ್ತಿದ್ದ ಕಾಲದ ಮಾತದು. ಇಂದಿನ Face Book ನಲ್ಲಿ ಎಷ್ಟೋ ಜನರು ಹಲವಾರು ಕಾರಣಗಳಿಂದ ತಮ್ಮ ವಿಳಾಸದ ಮುಖವನ್ನೇ ತೋರಿಸುವುದಿಲ್ಲ. (ಅವರ ವಿಚಾರಗಳನ್ನೇ ಮುಖ - ಎಂದು ಅಂದುಕೊಳ್ಳಬೇಕು!) ಒಂದೊಮ್ಮೆ ಮುಖ ತೋರಿಸಿದರೂ - ಮುಖ ನೋಡಿ ಮನಸ್ಸನ್ನು ಅಳೆಯುವ ಶಕ್ತಿಯು ಎಲ್ಲರಿಗೂ ಇರುವುದೂ ಇಲ್ಲ. ನನಗಂತೂ ಇಲ್ಲ. ಹೀಗಿರುವಾಗ Face Book ಎನ್ನುವುದು ಎಷ್ಟು ಸಾಚಾ? ಎಂದೂ ಯೋಚಿಸಬೇಕು. ಅಲ್ಲಿ ಮೂಡುವ ಬಹುಪಾಲು ವಿಷಯಗಳು ಯಾವುದೇ ಸಾಕ್ಷಿಯಿಲ್ಲದ, ಪರಾಂಬರಿಸದೆ ದಾಖಲಿಸುವ ಸ್ವಯಂ ಪ್ರಮಾಣೀಕೃತ ವಿವರಗಳು. ಅಲ್ಲಿನ ವಿವರಗಳನ್ನು ಅವಲಂಬಿಸಿ ಆಕಾಶವಾಣಿಯಲ್ಲಿ ಮಾತನಾಡಿ, ನಾನೊಮ್ಮೆ ಎಡವಿದ್ದೆ. ನಾನು ಕಂಡಂತೆ, ಯಾವುದೇ ಉತ್ತರದಾಯಿತ್ವವಿಲ್ಲದ ಸಚಿತ್ರ ಶಬ್ದಸಂತೆಯದು! ಆದರೆ Face Book ನ ಒಂದಷ್ಟು ವ್ರತಧಾರಿಗಳು ಅದನ್ನು ಪವಿತ್ರವೆಂಬಂತೆ ಆರಾಧಿಸುತ್ತ ತಮ್ಮ ರಸಮಯ ಬದುಕನ್ನು ನಷ್ಟಗೊಳಿಸಿಕೊಳ್ಳುತ್ತಿದ್ದಾರೆ ಎಂಬುದಂತೂ ನನ್ನಂಥವರಿಗೆ ಎದ್ದು ಕಾಣುವ ವಿಷಯ. ಆದರೆ ಪರಿವರ್ತನಶೀಲವಾದ ಈ ಪ್ರಕೃತಿಯಲ್ಲಿ ಯಾವುದೂ ಸ್ಥಾಯಿಯಲ್ಲ; ಎಲ್ಲವೂ ಹಾರಿ ಬೀಳುವ, ಬಿದ್ದು ಏಳುವ ನಿರಂತರ ಅಲೆಗಳು. ಆದ್ದರಿಂದ ಕೆಲವು ಚರ್ಯೆಗಳನ್ನು ನೋಡುತ್ತ ಕಾಯಬೇಕು.

ಹಿಂದೆ ನನ್ನ ಅಜ್ಜನ ಮನೆಯಲ್ಲಿ ಸಂಜೆಯ ಹೊತ್ತಿಗೆ ಅಕ್ಕಪಕ್ಕದ ಮನೆಯ ಹೆಂಗಸರೆಲ್ಲರೂ ಹೆಬ್ಬಾಗಿಲ ಜಗಲಿಯಲ್ಲಿ ಕೂತು ಪಟ್ಟಾಂಗ ಹೊಡೆಯುತ್ತಿದ್ದುದನ್ನು ನಾನು ನೋಡಿದ್ದೇನೆ. "ಅವಳ ಗಂಡ ಯಾರನ್ನೋ ಇಟ್ಟುಕೊಂಡಿದ್ದಾನೆ; ಅವಳು ಯಾರ ಜೊತೆಗೋ ಓಡಿಹೋದಳು; ಅವಳು ಅಂಬಡು ಮಕ್ಕಳನ್ನು ಹೆತ್ತಳಂತೆ; ಅವರ ಮಗನಿಗೆ ಶಾಲೆಯ ಪಾಠ ತಲೆಗೆ ಹತ್ತದೆ ಬೆಂಗಳೂರಿನ ಹೋಟೇಲಿಗೆ ಕೆಲಸಕ್ಕೆ ಕಳಿಸಿದರಂತೆ; ಅವಳ ಹೆರಿಗೆ ಕಷ್ಟ ಆಗಿ ದೈವಕ್ಕೆ ಹರಕೆ ಹೊತ್ತ ಮೇಲೆ ಹೆರಿಗೆ ಆಯಿತಂತೆ...." ಇಂತಹ ರಂಜನೀಯ ವಿಷಯಗಳು ಅಂದಿನ ಪಟ್ಟಾಂಗ ಚಾವಡಿಯಲ್ಲಿ ಪ್ರಸ್ತಾಪವಾಗುತ್ತಿದ್ದವು. ಇಂದಿನ FACEBOOK ಕೂಡ ಇಂತಹುದೇ "High Fi ಪಟ್ಟಾಂಗ ಚಾವಡಿ" ಎಂದು ನನಗನಿಸುತ್ತದೆ. ಒಂದೇ ವ್ಯತ್ಯಾಸವೆಂದರೆ ಹಿಂದೆ ಹೆಂಗಸರು ಮತ್ತು ಗಂಡಸರು ತಮ್ಮ ತಮ್ಮದೇ ವೃತ್ತದಲ್ಲಿ ಪ್ರತ್ಯೇಕವಾಗಿ ಪಟ್ಟಾಂಗ ಹೊಡೆಯುತ್ತಿದ್ದರೆ ಇಂದು ಸರ್ವಸಮಾನತೆ(!)ಯಿದೆ.
ನಮ್ಮ ಬದುಕಿನ ಒಂದೊಂದು ಕ್ಷಣವೂ ಎಷ್ಟು ಅಮೂಲ್ಯ !! ಅಂತಹ ಬದುಕನ್ನು ನಾವು ಪೋಕುಬಾರದ ವಿಷಯಗಳಲ್ಲಿಯೇ ಕಳೆದುಬಿಡಬೇಕೆ? ಇಂದಿನ ಯುವಜನರು ಅವರವರ ಅಂಗೈ ನೋಡಿಕೊಳ್ಳುತ್ತ ತಮ್ಮ ಕರಸ್ಥಲದಲ್ಲಿ ಇಂಬುಗೊಂಡ Mobile ನ ಜೊತೆಗೆ ಯೋಗಭಂಗಿಯಲ್ಲಿರುವುದನ್ನು ಕಂಡಾಗಲೆಲ್ಲ ಮೊದಮೊದಲು ನನಗೆ ಕುತೂಹಲವೆನಿಸುತ್ತಿತ್ತು. ಎಚ್ಚರವಾಗಿರುವಷ್ಟೂ ಹೊತ್ತು ಲಿಂಗಭಾವದಲ್ಲಿ ಮುಳುಗುವ ಶರಣರಂತೆ Mobile ಹಾವದಲ್ಲಿರುವ ಇಂದಿನ ನಮ್ಮ ಯುವ ಜನರು ಲೌಕಿಕ ಯೋಗದ ಹೊಸ ವ್ಯಾಖ್ಯೆಯನ್ನು ಬರೆಯುತ್ತಿದ್ದಾರೆಯೆ? ಅಂಗೈಯಲ್ಲಿರುವ Mobile ನ್ನು ನೋಡಿ ನೋಡಿ ಅವಲಕ್ಷಣಕ್ಕೆ ಒಳಗಾಗುವುದೆಂದರೆ ಇದೇ ಅಲ್ಲವೇ? ಇಂತಹ ಅಧಿಕಪ್ರಸಂಗದ ಪರಮಾವಧಿಗೆ ಏರುವುದಕ್ಕೆ ಇವರಿಗೆಲ್ಲ ಇಂಬುಗೊಡುತ್ತಿರುವುದು ನಾವೇ ಅಲ್ಲವೆ?
Whatsapp, Twitter....time pass ಗಾಗಿ Mall ಗಳಲ್ಲಿ ಸುತ್ತುತ್ತ Shopping ಮಾಡುವುದು... ಇವುಗಳೆಲ್ಲವೂ ಇಂದಿನ ಅಗತ್ಯವೆಂಬುದು - ದುರ್ಬಳಕೆಯೇ ಹೆಚ್ಚಾದಾಗ - ಒಪ್ಪುವ ಮಾತಲ್ಲ. ಅದು ಇಂದಿನ "ದುಡ್ಡು ಸೊಕ್ಕಿನ Fashion" ಆಗಿ ದಾರಿ ತಪ್ಪುತ್ತಿದೆ. ಊರಿನ ಕಸವನ್ನು ನಾವೇ ಎತ್ತಿ ತಂದು ನಮ್ಮ ಮನೆಯಲ್ಲಿ ತುಂಬಿಕೊಂಡು ಬೃಂದಾವನವಾಗಬೇಕಿದ್ದ ಮನೆಯನ್ನು Dumping Yard ಮಾಡುತ್ತಿದ್ದೇವೆ ಅನ್ನಿಸುವುದಿಲ್ಲವೆ?
Amitabh Bacchan ಎಂಬ ಪ್ರತಿಭಾವಂತ ನಟನೊಬ್ಬ ತನ್ನ ಕಲಾ ಬದುಕಿನ ಬಗೆಗೆ ದಿನವಿಡೀ ಹೇಳಿದರೂ ಕೇಳಬಹುದು. ಆದರೆ "ನನ್ನ ಹೆಂಡತಿ - ಮಗ, ನನ್ನ ಸೊಸೆ, ನನ್ನ ಮೊಮ್ಮಗು....I Happy - You happy" ಎನ್ನುತ್ತಿದ್ದರೆ ಅವುಗಳ ಬಗೆಗೆ ನಮಗೆ ಆಸಕ್ತಿ ಬೇಕೆ? ಹಾಗೇನಾದರೂ ಆಸಕ್ತಿಯಿದ್ದರೆ ಅದನ್ನು ಕೆಟ್ಟ ಕುತೂಹಲ ಎನ್ನುತ್ತಾರೆ. ಅವರೆಲ್ಲ ಹೇಳುವುದಾದರೂ ಏನನ್ನು? ಅವರ ನಿತ್ಯ ಬದುಕಿನ ಒಂದು ಸುಂದರ ಮುಖವನ್ನು ಮಾತ್ರ! ಅದನ್ನು ತಿಳಿದುಕೊಳ್ಳಲು ಇತರ ಸಾಮಾಜಿಕ ಬದುಕುಗಳು ತಮ್ಮ ದುಡಿಮೆಯ ಸಮಯವನ್ನು ವ್ಯರ್ಥ ಮಾಡಬೇಕೆ? Celebrity ಗಳೂ ಎಲ್ಲರಂತೇ ಮನುಷ್ಯರು. ಆದರೆ ಎಲ್ಲರಲ್ಲಿಲ್ಲದ ಇನ್ನೊಂದು ವೈಶಿಷ್ಟ್ಯವು ಅವರಲ್ಲಿರಬಹುದು. ಆದರೆ ಕಷ್ಟ ಸುಖಗಳು ಯಾರಿಗೂ ತಪ್ಪಿದ್ದಲ್ಲ. ಅವು ಬರುತ್ತ ಹೋಗುತ್ತ ಇರುತ್ತವೆ. ಕೇವಲ ಓದಿ ಕೇಳಿ ಸುಖಿಸುವ "Gossip ಚಟ"ದ ಚಂಡಮುಂಡರಾಯರಿಗೆ ಇನ್ನೊಬ್ಬರ ವೈಯ್ಯಕ್ತಿಕ ಆಗುಹೋಗುಗಳಿಂದ ಆಗಬೇಕಾದ್ದೇನು? ಅಂತಹ ಬಿಟ್ಟಿ ಸುಖವನ್ನು ಯಾರೂ ಒದಗಿಸಲೂಬಾರದು. ಅಂತಹುದನ್ನು ಪ್ರೋತ್ಸಾಹಿಸಲೂ ಬಾರದು - ಅಲ್ಲವೆ? ಪರರ ಸಾಧನೆಯನ್ನು ಮೆಚ್ಚುವುದು ಸಜ್ಜನಿಕೆಯಾದರೂ ಕಿಟಕಿಯಿಂದ ಇಣುಇಣುಕಿ ನೋಡುವಷ್ಟು ಕುತೂಹಲವು ಅಪೇಕ್ಷಣೀಯವಲ್ಲ. ಸಾಧಕರಿಂದ ಸ್ಫೂರ್ತಿ ಪಡೆಯುವುದು ತಪ್ಪಲ್ಲ. ಆದರೆ ಅಂತಹ ಸ್ಫೂರ್ತಿಯು ಕಾರ್ಯರೂಪಕ್ಕೆ ಬಂದರೆ ಮಾತ್ರ ಜಾಲತಾಣಗಳ ಸದುಪಯೋಗವಾದಂತೆ. ನಮ್ಮ ಸಾಧನೆಯಿಂದಲೇ ನಾವು ಸಾಧಕರಾಗಬೇಕಲ್ಲದೆ ಯಾವುದೋ ಸಾಧಕರ ಹಿಂಬಾಲ-ಮುಂಬಾಲವಾಗಿ ಸಾಧಿಸುವುದೇನಿದೆ?
ಈ ಹಿನ್ನೆಲೆಯಲ್ಲಿ, ನಮ್ಮ ಬದುಕಿನ ಶೈಲಿಯು ನಿಯಂತ್ರಿತವಾಗಬೇಕಿದೆ. ಅದಕ್ಕಾಗಿ, ನಾವು ಅಕ್ಷರ ಪ್ರೀತಿಯನ್ನು ಬೆಳೆಸಿಕೊಳ್ಳಬೇಕಿದೆ. ಎಂದಿನವರೆಗೆ ಆಯ್ದ ಉತ್ತಮ ಪುಸ್ತಕವನ್ನು ಕೈಯಲ್ಲಿ ಹಿಡಿದು ಓದುವ ಪ್ರವೃತ್ತಿಯು ನಮ್ಮಲ್ಲಿ ಬೆಳೆಯುವುದಿಲ್ಲವೋ ಅಲ್ಲಿಯವರೆಗೆ ಅವರಿವರ ಚಿತ್ರ ನೋಡಿ ಸುಖಿಸುವ ಬಾಲಿಶತನವೂ ತೊಲಗುವುದಿಲ್ಲ. ಸಂಪರ್ಕ ಕ್ರಾಂತಿಯು ತಂದಿಟ್ಟ ಎಲ್ಲ ವೈಜ್ಞಾನಿಕ ಆವಿಷ್ಕಾರಗಳನ್ನೂ ಹದವರಿತು ಉಪಯೋಗಿಸಲು ಸಾಧ್ಯವಿದೆ. ಅಂತಹ ಬೌದ್ಧಿಕ ಪ್ರಬುದ್ಧತೆಯಿಲ್ಲದವರೂ ಅವನ್ನು ಬಳಸತೊಡಗಿದಾಗ "ಮಂಗನ ಕೈಯ ಮಾಣಿಕ್ಯದಂತೆ" - ಆವಿಷ್ಕಾರಗಳಿಂದ ಲಾಭಕ್ಕಿಂತ ನಷ್ಟವೇ ಜಾಸ್ತಿಯಾಗಬಹುದು.
ನಮ್ಮ ಸಂತೋಷವನ್ನು ಇತರರೊಂದಿಗೆ ಹಂಚಿಕೊಳ್ಳುವುದರಲ್ಲಿ ತಪ್ಪೇನಿಲ್ಲ. ಆದರೆ ಪ್ರತಿಯೊಂದು ಬದುಕಿಗೂ ಅದರದ್ದೇ ಆದ ಇತಿಮಿತಿಯೆಂಬುದೊಂದಿದೆ. "ನನಗೆ ಸಾವಿರಾರು ಜನ FRIENDS ಇದ್ದಾರೆ !! ನನಗೆ 1000 Likes ಬಂದಿದೆ !!" ಇತ್ಯಾದಿ ಅನ್ನಿಸಿಕೆಗಳು ಅತ್ಯಂತ ಬಾಲಿಶ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಈ LIKE ಗಳ ಹಿಂದೆ ನೂರಾರು ಬಗೆಯ ಚಿಂತನೆಯ ಮನಸ್ಸುಗಳಿರುತ್ತವೆ! ಕೆಲವೊಮ್ಮೆ ಕೈಕೋಚಿನಿಂದಲೂ Like ಗಳು ಸಿಡಿಯುವುದಿದೆ....ಅಲ್ಲವೆ? "ಮುಂದೆ ಭಲಾ ಎಂದು ಹಿಂದಾಡಿಕೊಂಬುವ" ಜನರೂ - ಮಜಾನೋಡಲು ಹುಸಿನಗುತ್ತ LIKE ಒತ್ತಬಹುದಲ್ಲವೆ? Friend request ಕಳಿಸಬಹುದಲ್ಲವೆ? Follow ಮಾಡಬಹುದಲ್ಲವೆ? ಜನರ ಮನಸ್ಸು ಸದಾ Mobile mode ನಲ್ಲಿಯೇ ಇರುತ್ತದೆ. ಮಾಧ್ಯಮದ ನನ್ನ ಅನುಭವದ ಹಿನ್ನೆಲೆಯಿಂದಲೇ ನಾನು ಇವನ್ನೆಲ್ಲ ಹೇಳುತ್ತಿದ್ದೇನೆ. ಆದ್ದರಿಂದ ಜನ ಮೆಚ್ಚುಗೆಗಾಗಿ - ಕೈಕಾಲು ಹೊಡೆಯುತ್ತ ಏದುಸಿರು ಬಿಡುತ್ತ ಬದುಕುವುದೆಂದರೆ - ಅದು ದೊಡ್ಡ ದುರಂತ. ನಮ್ಮ ಬದುಕು-ಕೆಲಸಗಳು ಜನೋಪಯೋಗಿಯಾಗಿದ್ದರೆ - ಆಗ, ಅದು ಸಾಧನೆ. ಈ ಹಾದಿಯಲ್ಲಿ ಕೆಲವೊಮ್ಮೆ "ನಮ್ಮ ಕೆಲಸಗಳನ್ನು ಜನರು ಮೆಚ್ಚಿದರೆ ಸಂತೋಷ; ಮೆಚ್ಚದಿದ್ದರೆ ಹೆಚ್ಚು ಸಂತೋಷ " ಎಂಬ ಶೈಲಿಯನ್ನೂ ರೂಢಿಸಿಕೊಳ್ಳಬೇಕಾಗುತ್ತದೆ.
ಆದರೆ ನಮಗೀಗ - ಏಕಕಾಲದಲ್ಲಿ ಹತ್ತಾರು ಕೆಲಸಗಳನ್ನು ಮಾಡುತ್ತ "SMART" ಎಂದು ಅನ್ನಿಸಿಕೊಳ್ಳುವ ಗರಬಡಿದಂತಿದೆ. ಹೀಗೆ ಮನಸ್ಸು ಸೀಳಾಗಿ ಚದುರಿಹೋಗಿರುವ ಕೆಲವು SMART ಗಳು ತಮ್ಮ ಪೊಳ್ಳು ಪ್ರತಿಷ್ಠೆಯನ್ನು ಮೆರೆಸಲು ಜಾಲತಾಣಗಳನ್ನು ಅವಲಂಬಿಸುವುದೂ ಹೆಚ್ಚುತ್ತಿದೆ. ನನ್ನ ಒಬ್ಬ ಗೆಳತಿಯು "ನಮ್ಮ ಕುಟುಂಬದವರೆಲ್ಲ ಸೇರಿ ಒಂದು GROUP ಮಾಡಿಕೊಂಡಿದ್ದೇವೆ ; Whatsappನಲ್ಲಿ ನಾವು ಆಗಾಗ ಸಂಧಿಸುತ್ತೇವೆ" ಎಂದು ಹೇಳಿದಾಗ - "ಹಾಗೆ ಸಂಧಿಸಿ ಏನು ಮಾಡುತ್ತೀರಿ?" ಎಂದು ನಾನು ಕೇಳಿದ್ದೆ. "ನರೇಂದ್ರ ಮೋದಿಯನ್ನು ಕೆಲವರು ಮೆಚ್ಚಿ, ಕೆಲವರು ತೆಗಳಿ ಬರೆಯುತ್ತಾರೆ....ಅವರ ವಾದವನ್ನು ಓದಲಿಕ್ಕೆ ಖುಷಿಯಾಗುತ್ತದೆ...ಮೊನ್ನೆ - ಆ ಅಯ್ಯಪ್ಪ ಎಂಬವರು Flightನಲ್ಲಿ ಹೋಗಿ ಪಿತೃಗಳಿಗೆ ಗಯಾಶ್ರಾದ್ಧ ಮಾಡಿದರಂತೆ...ಹೀಗೆ ತುಂಬ ಸುದ್ದಿ ಗೊತ್ತಾಗುತ್ತದೆ" ಎಂದು ಆ ಗೆಳತಿಯು ಹೇಳುತ್ತಿದ್ದಳು. ಯಾರೋ ಎಲ್ಲೋ ಶ್ರಾದ್ಧ ಮಾಡಿದ ವಿಷಯವು - Whatsapp ಗುಂಪಿನ - ಗೋವಿಂದವಾಗಬೇಕೆ?

ಯಾರು ಯಾರೋ ತಮ್ಮ ಮಜಕ್ಕಾಗಿ ಊರಿನ ಪಂಚಾಯ್ತಿಕೆ ಮಾಡುತ್ತಿದ್ದರೆ ಅವೆಲ್ಲವೂ ನಮ್ಮ ನಿತ್ಯ ಬದುಕಿಗೆ ಅನಿವಾರ್ಯವೇ? ದೇಶವೆಂಬ ಮನೆಯ ಉಸ್ತುವಾರಿಯನ್ನು ನೋಡಿಕೊಳ್ಳಲು ಮೋದಿಯವರನ್ನು ನಾವು ನೇಮಿಸಿಯಾಗಿದೆ; ಅವರ ಅವಧಿ ಮುಗಿದಮೇಲೆ "ಅವರದು ಉಸ್ತುವಾರಿಯಾ? ಸುಸ್ತುವಾರಿಯಾ?" ಎಂದು ನಿರ್ಧರಿಸಿ ಭವಿಷ್ಯದ ಮತ ಚಲಾಯಿಸುವುದಷ್ಟೇ ನಮ್ಮ ಕೆಲಸ. ಅದನ್ನು ಬಿಟ್ಟು, ದಿನ ಬೆಳಗಾದರೆ ಪ್ರಧಾನಿ ಮೋದಿಯ ಚಿಂತೆಯನ್ನು ನಾವೇ ಮಾಡುವುದಾದರೆ ಅವರನ್ನು ನೇಮಿಸಿದ್ದು ವ್ಯರ್ಥವಾದಂತೆ - ಅಲ್ಲವೆ? ಹಲವು ಕಾಲೆಳೆತಗಳ ನಡುವೆಯೂ ನಮ್ಮ ಪ್ರಧಾನಿಯವರು ಅವರ ಕೆಲಸವನ್ನು ತಲೆತಗ್ಗಿಸಿ ಮಾಡುತ್ತಿದ್ದಾರೆ ಅನ್ನಿಸುತ್ತದೆ. ಇತ್ತ ನಮ್ಮ ಕೆಲಸವನ್ನು ನಾವು ಮಾಡಿದರೆ ಅಷ್ಟು ಸಾಕಾಗುತ್ತದೆ. ಅವರವರ ಕೆಲಸವನ್ನು ಅವರವರು ಮಾಡುತ್ತ ಹೋಗುವುದನ್ನೂ ಸಭ್ಯತೆಯೆನ್ನುತ್ತಾರೆ. ಅಂತಹ ಸಭ್ಯತೆಯನ್ನು - ವಿಪರೀತ ಬಲಿತು ನಿಂತ ತಾಂತ್ರಿಕ ದೈತ್ಯರಿಗೆ ಕಲಿಸಲಾಗುವುದಿಲ್ಲ. ಬೆರಳ ತುದಿಯಿಂದ ಹಲವು ಪ್ರಭೃತಿಗಳು ನಡೆಸುತ್ತಿರುವ ಬುದ್ಧಿ ಪ್ರದರ್ಶನದ ಚರ್ಚೆಗಳಿಂದ ಇಂದಿನವರೆಗೆ ಸಾಧಿಸಿದ ಸಕಾರಾತ್ಮಕ ಸಾಧನೆಗಳೆಷ್ಟು? ಏನಾದರೂ ಕಾಣುತ್ತಿದೆಯೆ? ಸಭ್ಯ ಪ್ರೀತಿ ಮತ್ತು ಸದುದ್ದೇಶವಿಲ್ಲದ ಬರಹಗಳು ಬಂದ ವೇಗಕ್ಕಿಂತ ರಭಸವಾಗಿ ಹಿಂದೆ ಹೋಗುತ್ತವೆ. ಪ್ರೀತಿಯಿಲ್ಲದ - ಸತ್ಯವಲ್ಲದ ವಿಚಾರಗಳು ಬತ್ತಿ ಹೋಗುತ್ತವೆ; ನಾವು ಆಡುವ ಮಾತಿನಲ್ಲಿ - ಕೃತಿಯಲ್ಲಿ ನಮ್ಮ ಹೃದಯವು ಕಾಣಿಸಬೇಕು. ಶಬ್ದಗಳು ಒಡಲಿನಿಂದಲೇ ಸಹಜವಾಗಿ ಮೂಡಬೇಕು; ಆಡಂಬರದ ಬುದ್ಧಿಮತ್ತೆಯ ಪ್ರದರ್ಶನವಾಗಬಾರದು. ಜಾಲತಾಣಗಳಲ್ಲಿ ಮೂಡುವ ಎಷ್ಟೋ ಒಣ ದೃಶ್ಯಗಳು - ಪಟ್ಟಾಂಗಗಳು ಸಾರ್ವಕಾಲೀನ ವ್ಯರ್ಥ ಕ್ರಿಯೆ.
ಇಂದು ಭಾರತದ ರಸ್ತೆಗಳಲ್ಲಿ ದಿನನಿತ್ಯವೂ ನಡೆಯುತ್ತಿರುವ ದುರ್ಘಟನೆಗಳಿಗೆ ಮಾನವೀಯ ಸಹಾಯಹಸ್ತ
ಚಾಚಬಹುದಾದ ಯುವಜನರು, Face Book ನ ಹೀರೋ ಆಗುವ ಉಮೇದಿನಿಂದ, ದಾರುಣ ಘಟನೆಯ ವಿವಿಧ ಭಂಗಿಯ ಫೊಟೋ ಕ್ಲಿಕ್ಕಿಸುತ್ತ
ನಮ್ಮ ದೇಶದ ವಿರೋಧ ಪಕ್ಷದವರಂತೆ - ವಿರೋಧೀ ಮಾಧ್ಯಮಗಳಂತೆ ವರ್ತಿಸುತ್ತಿರುವುದನ್ನು ನೋಡುತ್ತಿದ್ದೇವೆ. ಮನುಷ್ಯತ್ವವನ್ನೂ ಮರೆಸುವಂತಹ ಇದೆಂತಹ ಅಮಲು? "ಜಾಲತಾಣಗಳೇ ಗತಿ ಮತಿ ಇತಿ" ಎಂಬಂತಹ ಶೂನ್ಯ ಕರ್ಮಗಳು ನಮಗೆ
ಯಾಕೆ ಬೇಕು? ಯಾವುದೇ ರೀತಿನೀತಿಯನ್ನು ಅರಿಯದ ಅಪಾತ್ರರನ್ನು ಯಾವ
ಜ್ಞಾನವೂ ಉದ್ಧರಿಸಲಾಗದು - ಅಲ್ಲವೆ?
ಆದರೆ ಅದಾಗಲೇ ನಾವು ಬಹು ದೂರ ಬಂದಾಗಿದೆ. ನಮ್ಮ ಬಹುಸಂಖ್ಯೆಯ ಅಭಿರುಚಿಗಳೆಲ್ಲವೂ ಚಟಗಳಾಗಿ ಬದಲಾಗಿಯಾಗಿದೆ. ಹಾರುವುದು ನಮಗೆ ಅಭ್ಯಾಸವಾಗಿ ಹೋಗಿದೆ. ಈ ಹಂತದಲ್ಲಿ Face Book, Whatsapp, Twitter...ನಂತಹ ಹಾರುವ-ಹೋರುವ Fashion ನಿಂದ ದೂರವಾಗುವುದು ಅಸಂಭವವಾದರೂ ಅವನ್ನು ನಿಯಂತ್ರಿಸಿಕೊಳ್ಳುವುದು ಸಾಧ್ಯವಿದೆ.
ಎಂದೂ ನನಸಾಗದ ಸುಂದರ ಕನಸುಗಳನ್ನು ಕಾಣುತ್ತ ನಾವು ತಿರುಕರಾಗುವ ಬದಲು ವಾಸ್ತವವನ್ನು ದೃಢಗೊಳಿಸುವುದು ಒಳ್ಳೆಯದು. ತಿರುಕ ಎಂದರೆ ನೆಲೆಯಿಲ್ಲದವ; ಭಿಕ್ಷುಕ - ಎಂದರ್ಥ. ಅಂದ ಮಾತ್ರಕ್ಕೇ ದುಡ್ಡಿಗೂ ತಿರುಕತನಕ್ಕೂ ಗಂಟುಹಾಕಬಾರದು. ದುಡ್ಡಿದ್ದವರು ತಿರುಕರಲ್ಲ ಎಂದು ಅರ್ಥವಲ್ಲ. ನಿಜಾರ್ಥದಲ್ಲಿ ಹಣವಂತನೇ ಈ ಭೂಮಿಯ ಬಲಾಢ್ಯ ತಿರುಕ. ಸಂಪತ್ತಿಗಾಗಿ, ಸಂಪತ್ತಿನಿಂದ, ಸಂಪತ್ತಿಗೋಸ್ಕರ - ಸಂಪತ್ತು ಎಂಬುದು ನಡೆಸುವಷ್ಟು ತಿರುಕತನವನ್ನು ಬಡಪಾಯಿಗಳು ನಡೆಸುವುದಿಲ್ಲ. ಹಣವು ತನ್ನೊಂದಿಗೆ ತರುವ ನಕಾರ-ಶಕಾರಗಳೆಲ್ಲವನ್ನೂ ಹಣವುಳ್ಳವನು ಹೊರಲೇ ಬೇಕಾಗುತ್ತದೆ; ಜೋಪಾನಮಾಡುವ ಭಯದಲ್ಲಿಯೇ ನಿಂತಲ್ಲಿ ನಿಲ್ಲದೆ "ಭಾಗ್ತಾ" ಬದುಕಬೇಕಾಗುತ್ತದೆ. ಇಂದಿನ Fashion ಜಾಲಗಳು ಕಲ್ಮಷಗೊಳ್ಳುವಲ್ಲಿಯೂ ಹೊಟ್ಟೆಯ ಚಿಂತೆಯಿಲ್ಲದ ಕೃತಘ್ನ ಕಾಂಚಾಣದ ಪರೋಕ್ಷ ಪಾತ್ರವಿದೆ. ಸಮಾಜದಲ್ಲಿ ಇಲ್ಲಸಲ್ಲದ ಸ್ಪರ್ಧೆಯನ್ನು ಹುಟ್ಟು ಹಾಕುವ, ಅಡಗಿದ್ದ ಸಮಸ್ಯೆಗಳನ್ನು ಊದಿ ಎಬ್ಬಿಸಿ - ಹಬ್ಬಿಸುವ ಜಾಲವಾಡಿಗಳ ತ(ರ)ಲೆಯಿಂದ ಅಂತರವನ್ನು ಕಾಯ್ದುಕೊಂಡು ಸ್ವಂತ ಬದುಕನ್ನು ಶ್ರದ್ಧೆಯಿಂದ ಕಟ್ಟಬಲ್ಲ ನಿರ್ಧನ ಸಮಾಧಾನಿಯು ಸಹಜ ಶ್ರೀಮಂತ! ಆತನೇ ಸುಖಿ!

ಜಾಲತಾಣಗಳ ಅತಿಯಾದ Exposure ನಿಂದ ಅನೇಕ ಠಕ್ಕುತನವು ಸುತ್ತಿಕೊಳ್ಳುತ್ತವೆ. "ಆ Friend ನ್ನು ನೋಡಿ; Half pant, low jeans ಹಾಕುತ್ತಿದ್ದಾರೆ; ನೀವೆಂಥ ಹಳ್ಳೀ ಗುಗ್ಗು? ನೀವೂ ಹಾಕಿ..." ಎನ್ನುತ್ತ ತನ್ನ ಗಂಡನನ್ನು "ವಿದೂಷಕ"ನನ್ನಾಗಿಸುವ ಸ್ಪರ್ಧೆ, "ಈ LADY ಯನ್ನು ನೋಡೇ; ಎಷ್ಟು ಚೆಂದದ Hair Cut ಅಲ್ವಾ? ಅವರ ಹಾಗೆ ನೀನೂ ನಿನ್ನ ತಲೆ ಬೋಳಿಸಿಕೋ..." ಎನ್ನುವ ಠಕ್ಕು ಸ್ಪರ್ಧೆಗಳೆಲ್ಲ ನಮಗೆ ಬೇಕೆ? ಯುಕ್ತಾಯುಕ್ತ ವಿವೇಚನೆಯಿಲ್ಲದೆ - ಜಾಲತಾಣದ ಪ್ರಚೋದನೆಗೆ ಸಿಲುಕಿ ನಡೆಸುವ - ಇಂತಹ ತೋರಿಕೆಯ ಸ್ಪರ್ಧೆಯಿಂದ ಸ್ವರೂಪ ನಾಶವಲ್ಲದೆ ಬೇರೇನು ಉಪಯೋಗವಿದೆ? ಜಾಲಗಳಲ್ಲಿ ಸಿಲುಕಿರುವವರು ಕ್ಷುಲ್ಲಕ ಸ್ಪರ್ಧೆಗಳಿಗೆ ಸಿಲುಕದಂತೆ ತಮ್ಮನ್ನು ರಕ್ಷಿಸಿಕೊಳ್ಳಬೇಕು. ಈ ಭೂಮಿಯಲ್ಲಿ ನಮ್ಮ ಅಸ್ತಿತ್ವವನ್ನು ಸಾಬೀತುಪಡಿಸಲು ಯಾವುದೇ ಹೊರ ವೇಷವು ಸಹಕರಿಸಲಾರದು. ಯಾರದೋ ಶಿಫಾರಸ್ಸಿನ ಅಂಗೀಕಾರ ಮುದ್ರೆಗಾಗಿ - ಯಾರೂ ಕಾಯಬೇಕಾಗಿಯೂ ಇಲ್ಲ. ಆದ್ದರಿಂದ ಅರ್ಥವಿರದ ಅದೃಶ್ಯ ಸ್ಪರ್ಧೆಗಿಳಿಯಬೇಕಾಗಿಲ್ಲ. ಪ್ರೀತಿ ಸದ್ಭಾವ ಇರುವಲ್ಲಿ ಎಂದೂ ಸ್ಪರ್ಧೆ ಇರುವುದಿಲ್ಲ. ಸ್ಪರ್ಧೆ ಇರುವಲ್ಲಿ ಪ್ರೀತಿ ನಾಸ್ತಿ; ಸುಖವೂ ಇರುವುದಿಲ್ಲ.
ನಾವು ಅನುಕರಿಸಿ ಅನುಸರಿಸಬೇಕಿರುವುದು ಆದರ್ಶಗಳನ್ನು; ಇಡಿಇಡಿಯಾದ ವ್ಯಕ್ತಿಗಳನ್ನಲ್ಲ. ಏಕೆಂದರೆ ಯಾವ ವ್ಯಕ್ತಿಯೂ ಪರಿಪೂರ್ಣನಲ್ಲ. ಹಳ್ಳಿಯವ, ಢಿಲ್ಲಿಯವ, ಇಟೆಲಿಯವ...ಎಲ್ಲರೂ ಸಾಮಾನ್ಯ ಮನುಷ್ಯರೇ. ಕೆಲವರು ಶ್ರಮಿಕರು, ಕೆಲವರು ನೇತಾರರು, ಕೆಲವರು ಮಾರರು - ಶೂರರು, ಕೆಲವರು ಕಲಾವಿದರು....ಕೆಲವರು ಗಂಟು ಕಳ್ಳರು....ಅಷ್ಟೆ. ಯಾರೋ ಒಬ್ಬರಂತೆ ಇನ್ನ್ಯಾರೋ ಆಗಲು ಹೊರಟಾಗ ಅನಾರೋಗ್ಯಕರ ಸ್ಪರ್ಧೆ ಹುಟ್ಟುತ್ತದೆ. ಇಂದಿನ ತಾಣಜಾಲದಲ್ಲಿ ಮೂಡುತ್ತಿರುವ - ಉಂಡು ಹೇತ ಪ್ರತಿಯೊಂದು ಹೆಜ್ಜೆಯ ಫೊಟೋ ದರ್ಶನವು - ಒಬ್ಬರಂತೆ ಇನ್ನೊಬ್ಬರಾಗಲು ಹೊರಟಿರುವ ಸಾಮಾಜಿಕ ಅನಾರೋಗ್ಯದ ಒಂದು ಲಕ್ಷಣ. ನಮ್ಮ ಚೆಂದದ ಬದುಕೆಂಬುದು ಇಂತಹ ಬೀದಿ ಕುಲುಕಾಟದ, ಬೇಡದ "ಹೈದರ್ಮಿಣಿ ವಿದ್ಯೆ"ಯಲ್ಲಿಯೇ ಕಳೆದು ಹೋಗುತ್ತಿದೆ. ಹಳ್ಳಿಯವನು ನದಿಯ ನೀರಿನಲ್ಲಿ ಅಂಡು ತೊಳೆದರೆ, ಪೇಟೆಯವನು ಬೋರ್ ವೆಲ್ ನೀರಿನಲ್ಲಿ ತೊಳೆಯಬಹುದು. ಇನ್ನೂ High fi ಆದ ಇಟೆಲಿಯವನು ಕಾಗದ (Tissue Paper) ದಲ್ಲಿ ತನ್ನ ಅಂಡನ್ನು ಒರೆಸಿಕೊಂಡು ಕೃತಾರ್ಥನಾಗಬಹುದು. ಅಂದರೆ, ಎಲ್ಲ ಕಡೆಯೂ ಶುಚಿತ್ವದ ರೀತಿಯಲ್ಲಿ ಮಾತ್ರ - ಅಂಡಾಳಿನ ಶಕ್ತಿ ಸಾಮರ್ಥ್ಯಕ್ಕೆ ತಕ್ಕಂತೆ ವ್ಯತ್ಯಾಸ ಕಾಣುತ್ತದೆ. ಆದ್ದರಿಂದ ನಮಗೆ ಯಾವ Fashion ಶೈಲಿಯು ಸೂಕ್ತ ಎಂದು ಆಯ್ದುಕೊಳ್ಳುವುದು ನಮ್ಮ ವಿವೇಚನೆಗೇ ಬಿಟ್ಟ ವಿಚಾರ. ಅದರಂತೇ ಯಾವ ತಾಣಗಳಿಂದಲೂ - ವಿವೇಚನೆಯಿಲ್ಲದೆ ನಾವು ಸ್ಫೂರ್ತಿಯನ್ನು ಪಡೆಯಬೇಕಾಗಿಲ್ಲ; ಹೊಂದಿಕೆಯಾಗದ, ಅರ್ಥವಾಗದ ಯಾರನ್ನೂ ಯಾವುದನ್ನೂ - ನಾವು ಕಣ್ಣು ಮುಚ್ಚಿ ಅನುಸರಿಸಬೇಕಾಗಿಲ್ಲ.
ಜಾಲತಾಣದಲ್ಲಿ ಜಾಲಾಡಿದರೆ ಒಂದಷ್ಟು ಉತ್ತಮ ವಿಚಾರಗಳೂ ವಿವರಗಳೂ ಸಿಗುವುದಿದೆ. ಅವನ್ನು ತಮ್ಮ ಅಗತ್ಯಕ್ಕೆ ತಕ್ಕಂತೆ ಸದುಪಯೋಗಪಡಿಸಿಕೊಳ್ಳುವ ಶಕ್ತಿಯನ್ನು ಬೆಳೆಸಿಕೊಳ್ಳುವುದು ಇಂದಿನ ಅಗತ್ಯ. ಆದರೆ ಒಟ್ಟಾರೆಯಾಗಿ ನೋಡಿದರೆ, ಒಂದು ಚಮಚ ಉಂಡು ನಾಲ್ಕು ಚಮಚದಷ್ಟು ವಿಸರ್ಜಿಸುವಂತೆ ಕಾಣುತ್ತಿರುವ ಇಂದಿನ ಸಾಮಾಜಿಕ ಜಾಲ ತಾಣಗಳು ನಮ್ಮಲ್ಲಿರುವ ಸೃಜನಶೀಲತೆಯನ್ನು ಅಡ್ಡದಾರಿ ಹಿಡಿಸುತ್ತ ಹೊಸಕಿ ಹಾಕುವಂತೆ ಕಾಣುವುದಂತೂ ಸುಳ್ಳಲ್ಲ. ಅಲ್ಲಿ ಹೊರಳಾಡುವ ಬಹುಪಾಲು ಸರಕುಗಳು ಸ್ಪರ್ಧಾತ್ಮಕ ಅನುಕರಣೆ! ಅನುಕರಣೆಯಿಂದ ನಮ್ಮ ಸೃಜನಶೀಲತೆಯು ನಿಶ್ಚಯವಾಗಿ ಸೊರಗುತ್ತದೆ. ಬೇರಿಲ್ಲದ ಎಲೆಯಿಲ್ಲದ ಬೋಳು ಮರಗಳ ಈ ಜಾಲತಾಣದ ಅರ್ಧಸತ್ಯದ ಕತೆಗಳಲ್ಲಿ ಎಷ್ಟು ವಿಹರಿಸಬೇಕು ಎಂಬ ಚೊಕ್ಕ ನಿರ್ಧಾರವು ನಮ್ಮದಾಗಿರಲಿ. ನಿರ್ದಿಷ್ಟ ಸಮಯ ಮತ್ತು ಸಪಾತ್ರ ಸಂವಹನವೆಂಬ ಬೇಲಿಯನ್ನು ನಮಗೆ ನಾವೇ ಹಾಕಿಕೊಂಡು ನಮ್ಮನ್ನು ಕಟ್ಟಿಹಾಕಿಕೊಳ್ಳದಿದ್ದರೆ LIKE ಗಳನ್ನು ಒತ್ತುವುದರಲ್ಲಿ, ಲೆಕ್ಕ ಹಾಕುವುದರಲ್ಲಿಯೇ ಬದುಕು ಮುಗಿಯಬಹುದು. ಇಂದಿನ ಜಾಲತಾಣಗಳ ಪಟ್ಟಾಂಗದಲ್ಲಿ ಮುಳುಗಿ ಹೋದರೆ ನಮ್ಮ ಜೊತೆಗೆ ಮುಂದಿನ ಪೀಳಿಗೆಯೂ ಕಳೆದುಹೋಗಬಹುದು. ನಮ್ಮ ಬದುಕಿಗೆ ನಾವೇ ಶಿಲ್ಪಿಗಳು. "Curious Cats ಮತ್ತು Opportunist Fox ಗಳು ಎಲ್ಲ ಕಾಲದಲ್ಲಿಯೂ ಸುತ್ತಮುತ್ತೆಲ್ಲ ಇರುತ್ತವೆ" ಎಂಬ ಎಚ್ಚರವಿದ್ದರೆ ಮಾತ್ರ ದಾರಿ ಸ್ಪಷ್ಟವಾದೀತು.
- ನಾರಾಯಣೀ ದಾಮೋದರ್
ಕೆಲವು ವರ್ತನೆ ವ್ಯವಹಾರಗಳು ಹಳ್ಳಹಿಡಿಯುತ್ತಿದೆಯೆಂದು ಅನ್ನಿಸಿದಾಗ ನಮ್ಮ ಮನಸ್ಸು ನಾವು ಹಾದು ಬಂದ ಕೆಲವು ಉತ್ತಮ ಕ್ಷಣಗಳೊಂದಿಗೆ ಹೋಲಿಸಲು ತೊಡಗುತ್ತದೆ... ಆಗ ಹಳೆಯದೆಲ್ಲವೂ ಮತ್ತೊಮ್ಮೆ ಇಣುಕಿ ಓಡುತ್ತದೆ. ತಮ್ಮ ಬದುಕಿನಲ್ಲಿ ಅಂತಹುದೇ ಅನುಭವಗಳನ್ನು ಹೊಂದಿದವರಿಗೆ ಕೆಲವು ಘಟನೆಗಳು ವಾಸ್ತವ ಅನ್ನಿಸಿದರೆ - ಮನೆ ಬಿಟ್ಟು ಊರಿನ ಕೇರಿಯಲ್ಲೇ ಅಡ್ಡಾಡುತ್ತ ಹೊರಹೊರಗೇ ಉಂಡು ತಿಂದು ದಿನ ಕಳೆಯುವ ವಿಶಿಷ್ಟ ಅನುಭವಿಗಳಿಗೆ - ಸಾಮಾನ್ಯವೆಂದು (ಏನ್ಮಹಾ?) ಅನ್ನಿಸುವುದೂ ಇದೆ.
ಬ್ರಾಹ್ಮಣನು ಭೋಜನಪ್ರಿಯ ಎಂದು ಹೇಳುತ್ತ...ಅವರು ಊಟ ಮಾಡುವುದರಲ್ಲಿ (ಮಾತ್ರ!) ಪರಿಣತರು ಎಂದು ವಿಡಂಬನಾತ್ಮಕವಾಗಿ ಆಡಿಕೊಳ್ಳುವ ಹಿಂದುಮುಂದಿಲ್ಲದವರನ್ನು ನಾನು ನೋಡಿದ್ದೇನೆ. ಹಿಂದೆ ಸುಸಂಸ್ಕೃತ ವಿದ್ಯಾ ಸಂಪನ್ನರನ್ನು ಮಾತ್ರ "ಬ್ರಾಹ್ಮಣ" ಎನ್ನುತ್ತಿದ್ದ ಅವಧಿಯಲ್ಲಿ ಅಂತಹ ಬ್ರಾಹ್ಮಣರು ಪ್ರಚುರಪಡಿಸಿದ್ದ ಸಮತೂಕದ ಭೋಜನದ ಶೈಲಿಯನ್ನು - "ಸಂಸ್ಕರಿತ" - ಎಂಬ ಅರ್ಥದಲ್ಲಿ ಬಳಕೆಯಲ್ಲಿದ್ದ ಅನುಭವೋಕ್ತಿಯಿದು. ಅಂತಹ ಶುಚಿ, ರುಚಿ, ಪೌಷ್ಟಿಕಯುಕ್ತ ಸಂಸ್ಕರಿತ ಭೋಜನವು ಪ್ರಿಯವೂ ಆಗುತ್ತಿದ್ದ ತೃಪ್ತಿಯಲ್ಲಿ ಈ ನುಡಿಗಟ್ಟು ಪಾರಂಪರಿಕವಾಗಿ ನಡೆಯುತ್ತ ಬಂದಿರಬಹುದು ! ಆದರೆ ನಮ್ಮ ಆಹಾರ ಸೇವನೆಯ ಶೈಲಿಯು ಪರಿಷ್ಕಾರಗೊಂಡು ಸ್ವೀಕಾರಾರ್ಹತೆ ಹೊಂದುವ ಹಂತವನ್ನು ತಲುಪಲು ದೀರ್ಘ ಅವಧಿಯನ್ನು ವ್ಯಯಿಸಿದೆ. ಬೆಂಕಿಯನ್ನು ಉತ್ಪತ್ತಿ ಮಾಡಿ ಜೋಪಾನ ಮಾಡುತ್ತಿದ್ದಲ್ಲಿಂದ ಹಿಡಿದು ಇಂದಿನವರೆಗೆ ಸಹಸ್ರಾರು ವರ್ಷಗಳೇ ಹಿಡಿದಿವೆ. ಬದುಕಿನೊಂದಿಗೆ ಊಟ ಉಡುಗೆಗಳೂ ಸುಸಂಸ್ಕಾರ ಹೊಂದುತ್ತ ಬಂದಿವೆ. ಕಾಲಕಾಲಕ್ಕೆ ಅನೇಕ ಪರೀಕ್ಷೆಗೆ ಒಳಪಟ್ಟು ಸಿದ್ಧವಾಗಿರುವ ಪಾಕಶಾಸ್ತ್ರವು "ಪರೀಕ್ಷಿಸಿಯೇ ಸ್ವೀಕರಿಸಿದ" ಸುರಕ್ಷಿತ ಆಹಾರ ವಿಜ್ಞಾನ. ಅತ್ಯಂತ ಶಾಸ್ತ್ರೀಯವಾದ ನೆಲೆಗೆ ಬ್ರಾಹ್ಮಣ ಶೈಲಿಯ ಊಟವು ಬಂದು ನಿಲ್ಲಲು ಆ ಕಲೆಯ ಹಿಂದೆ ದುಡಿದ ಅನೇಕ ಸಂಶೋಧಕರ ದೇಣಿಗೆಯಿದೆ. ಪಾಕಶಾಸ್ತ್ರದಿಂದ ಹಿಡಿದು ಊಟಕ್ಕೆ ಕುಳಿತುಕೊಳ್ಳುವ ಶೈಲಿ, ಬಡಿಸುವ ಶೈಲಿ, ಒಂದರ ನಂತರವೇ ಇನ್ನೊಂದನ್ನು ಉಣ್ಣುವ ಕ್ರಮ, ಎಲೆಯ ಮುಂದೆ ಕುಳಿತ ಹಸಿದವರ ಅತೃಪ್ತಿಯ ಬದುಕುಗಳಲ್ಲೂ ತೃಪ್ತಿಯ ನವರಸ ಕ್ಷಣಗಳನ್ನು ಎಳೆದು ತಂದಿಟ್ಟ ಬಗೆ ... ಇವೆಲ್ಲವೂ ಅಧ್ಯಯನ ಯೋಗ್ಯ ವಿಷಯಗಳು. ಕರ್ಮಭೂಮಿಯಲ್ಲಿ ಕರ್ಮ ಸವೆಸುವ ಕಠಿಣ ಹಾದಿಯಲ್ಲಿ ಬಸವಳಿದ ಜೀವಿಗಳು ನಡುನಡುವೆ ಆಹ್ಲಾದದ ಕ್ಷಣಗಳನ್ನು ಅನುಭವಿಸುತ್ತ ನವೋತ್ಸಾಹವನ್ನು ತುಂಬಿಕೊಳ್ಳುವ ಪ್ರಯತ್ನವೂ ಇದಾಗಿರಬಹುದು. ಬೆವರು ಸುರಿಸಿ ದುಡಿಯುವ ದೇಹಕ್ಕೆ ಶಕ್ತಿ ಮತ್ತು ಆರೋಗ್ಯದ ಅಂಶಗಳನ್ನು ಮರುಪೂರೈಕೆ ಮಾಡುವ ಶಾಸ್ತ್ರೀಯ ನೆಲೆಯಲ್ಲಿಯೇ ರೂಪುಗೊಂಡಿರುವುದು ಮಾತ್ರ ಭಾರತೀಯ ಭೋಜನ ಶೈಲಿಯ ವೈಶಿಷ್ಟ್ಯ. ಬ್ರಾಹ್ಮಣರ ಅದೃಷ್ಟವೋ ಅಥವ ಒಳಿತನ್ನು ಸ್ವೀಕರಿಸಲಾಗದ ಇತರ ವರ್ಗದ ಜನರಿಂದ ಅನುಸರಿಸಲಾಗದುದರಿಂದಲೋ - ಬ್ರಾಹ್ಮಣ ಭೋಜನ ಎಂಬುದು - "ಜಾತಿಯಲ್ಲಿ ಬ್ರಾಹ್ಮಣ" ಎಂದು ಕರೆಸಿಕೊಳ್ಳುವವರ ಸುಪರ್ದಿಯಲ್ಲಿಯೇ ಈಗಲೂ ಸುಭದ್ರವಾಗಿದೆ; ಸಂಸ್ಕರಣೆಗೊಳ್ಳುತ್ತಲೇ ಇದೆ !

ಆದ್ದರಿಂದಲೇ ರುಚಿ ಶುಚಿಯಾದ ಅಂದಿನ "ಉಡುಪಿ ಹೋಟೆಲು"ಗಳು ಎಲ್ಲಿ ಹೋದರೂ ಜನಪ್ರಿಯವಾಗುತ್ತ, ನಂಬಿ ಅನುಸರಿಸಿದವರ ಕೈಬಿಡದೆ ರಕ್ಷಿಸುತ್ತ ಬಂದಿದೆ. (ಆದರೆ ಇಂದು ಉಡುಪಿಯಲ್ಲೂ ಅಂದಿನ ಗುಣಮಟ್ಟದ ಹೋಟೆಲುಗಳಿಲ್ಲ. ವ್ಯಾಪಾರವು ಧರ್ಮವಾಗಿದ್ದ ಕಾಲವು ಹೋಗಿದೆ!) ಎಲ್ಲರಿಗೂ ಎಲ್ಲ ಕಲೆಯೂ ಸಿದ್ಧಿಸಲಾರದು - ಆಕರ್ಷಣೆಯೂ ಸಿದ್ಧಿಸದು ಎಂಬುದಕ್ಕೆ ಶಾಸ್ತ್ರೀಯ ಪಾಕ ಕಲೆಯೂ ಉತ್ತಮ ದೃಷ್ಟಾಂತವಾಗಬಲ್ಲದು.
ಅಡುಗೆಯೂ ವಿಶಿಷ್ಟವಾದ ಕಲೆ. "ಅವಳು ಏನು ತಯಾರಿಸಿದರೂ ಅದರಲ್ಲಿ ಒಂದು ರುಚಿ ಇರುತ್ತದೆ...ಅವಳದು ಅಡುಗೆ ಕೈ..." ಎಂಬ ಶಿಫಾರಸ್ಸನ್ನು ಪಡೆಯುತ್ತಿದ್ದ ಅನೇಕರನ್ನು ನಾನೂ ಕಂಡಿದ್ದೇನೆ; ಉಂಡು ಅನುಭವಿಸಿದ್ದೇನೆ. ವೇದಿಕೆಯ ಮೇಲೆ ಪ್ರದರ್ಶಿಸುವುದು ಮಾತ್ರ ಕಲೆಯೆ? ಹಾಗೆ ಆಗಬಾರದು. ಜೀವನದ ರಂಗಭೂಮಿಯೇ ಅಡುಗೆಯ ಕೋಣೆ. ಮೂರು ಹೊತ್ತೂ ಉಣ್ಣುವುದಕ್ಕೆ ಮಾತ್ರ ಬಂದು ಕೂರುವವರಿಗೆ ಆ ಪಕ್ವಾನ್ನದ ಗುಟ್ಟನ್ನು ತಿಳಿಯುವ, ಅದನ್ನು ಮಾಡಿ ಕಲಿಯುವ ಆಸಕ್ತಿಯೂ ಇರಬೇಕು. ಜೀವನದಲ್ಲಿ ಯಶಸ್ಸು ಕಾಣಲು, ಅಡುಗೆಯ ರಂಗದಲ್ಲಿ ಸಶಕ್ತವಾಗಿ ಅಭಿನಯಿಸುವ ಕಲೆಯೂ ತಿಳಿದಿರಬೇಕು. ನಿತ್ಯಬದುಕಿನ ಪ್ರತಿಯೊಂದು ಕ್ಷಣವನ್ನೂ ಕಲಾತ್ಮಕವಾಗಿ ಸುಸಂಸ್ಕರಿತಗೊಳಿಸಿಕೊಳ್ಳುತ್ತ ಬಂದ ಬದುಕು ನಮ್ಮದು. ಬ್ರಾಹ್ಮಣ ಭೋಜನವು ನಾಗರಿಕತೆಯ ಉತ್ತುಂಗದ ಚಿಹ್ನೆಯೂ ಹೌದು.
ಈ "ಅಡುಗೆ" ಎನ್ನುವುದು ಮನೆಯ ಸದಸ್ಯರ ನಡುವೆ ಉತ್ತಮ ಬಾಂಧವ್ಯವನ್ನು ಬೆಸೆಯುವ ಒಂದು ಕರ್ಮೋಪಕರಣವೂ ಹೌದು. "ಒಬ್ಬರು ಒಳಗೆ ಬಂದರೆ - ಇಬ್ಬರು ಹೊರಗೆ ಹೋಗಬೇಕು" ಎನ್ನುವಂತಹ ಇಂದಿನ ಮನೆಗಳ ಕೋಳಿಗೂಡಿನಂತಹ ಅಡುಗೆ ಕೋಣೆಯಲ್ಲಿಯೂ - ಮನಸ್ಸಿದ್ದರೆ ಕೂಡಿ ದುಡಿಯುವುದು ಸಾಧ್ಯವಿದೆ. ಮಾತಾಡುತ್ತ ನಗುತ್ತ ನಿಷ್ಠೆಯಿಂದ ನಿತ್ಯಯಜ್ಞದಂತೆ ಅಡುಗೆಯನ್ನು ಮಾಡುತ್ತ, ಕೆಲವೊಮ್ಮೆ ಪರಸ್ಪರ ಮುಖ ಊದಿಸಿಕೊಳ್ಳುತ್ತ, ಮತ್ತೆ ರಾಜಿಯಾಗುತ್ತ ಜತೆಯಲ್ಲಿಯೇ ಕೆಲಸ ಮಾಡುವ - ಬದುಕುವ ಮಜವೇ ಬೇರೆ. ಹೊಂದಿಕೊಂಡು ಬದುಕುವ ಪಾಠವು ಸಿಗುವುದೇ ಮನೆಯ ಅಡುಗೆ ಕೋಣೆಯಲ್ಲಿ.
ಹೀಗೆ ಪ್ರತೀದಿನವೂ ಯಜ್ಞಕಾರ್ಯ ನಡೆಸುವ ಅಡುಗೆ ಕೋಣೆಯು ಇಡೀ ಮನೆಗೆ ಶೋಭೆ ನೀಡುವ ಒಂದು ಪವಿತ್ರ ಕರ್ಮಸ್ಥಾನ. ಆ ಯಜ್ಞ ಕ್ಷೇತ್ರವು ಅತ್ಯಂತ ಸ್ವಚ್ಛವಾಗಿರಬೇಕು. "ಅಡುಗೆಯನ್ನು ಮಾಡಿ ಮುಗಿಸಿ ಹೊರಗೆ ಬಂದಾಗ - ಆ ಅಡುಗೆಯ ಕೋಣೆಯಲ್ಲಿ ಅದುವರೆಗೆ ಗಂಟೆಗಟ್ಟಲೆ ಸೃಜನಶೀಲ ಕೆಲಸವೊಂದು ನಡೆದಿತ್ತು ಎಂಬ ಕುರುಹೂ ಕಾಣಿಸಬಾರದು. ಅಷ್ಟು ಸುವ್ಯವಸ್ಥಿತವಾಗಿಟ್ಟೇ ಅಲ್ಲಿಂದ ಹೊರಗೆ ಬರಬೇಕು..." ಎಂಬ ಮೇಲ್ಪಂಕ್ತಿಯನ್ನು ಹಾಕಿಕೊಟ್ಟವಳು ನನ್ನ ಅಮ್ಮ. ಅದು ಪ್ರತಿಯೊಬ್ಬ ಅಮ್ಮಂದಿರಿಂದ ಸಿಗಬೇಕಾದ ಪಾಠವೂ ಹೌದು.

ನನ್ನ ಬಾಲ್ಯ ಕಾಲದಲ್ಲಿ ನಮ್ಮ ಮನೆಯಲ್ಲಿ ವಿಶೇಷದ ಅಡುಗೆಯಿದ್ದಾಗ ಕುಪ್ಪಯ್ಯ ಮಧ್ಯಸ್ಥರೆಂಬ ಒಬ್ಬರು ಅಡುಗೆಯವರು ಬರುತ್ತಿದ್ದರು. ಆಗಲೇ ಅವರು ಸುಮಾರು 50 ವರ್ಷಕ್ಕೂ ಮಿಕ್ಕಿದ ವಯಸ್ಕರಾಗಿದ್ದರು. ಅವರ ಅಡುಗೆಯನ್ನೂ ಅಡುಗೆಯ ಶೈಲಿಯನ್ನೂ ನನ್ನ ಅಮ್ಮನು ಬಾಯ್ತುಂಬ ಹೊಗಳುತ್ತಿದ್ದಳು. ಅವರ ಕಾಲಾನಂತರ ಅಡುಗೆ ಮಾಡಲು ಬರುತ್ತಿದ್ದ ಕೆಲವು ಅಡುಗೆಯವರ ಮಾತು, ಕೆಲಸದ ಶೈಲಿಯನ್ನು ಕಂಡಾಗಲೆಲ್ಲ ನನ್ನ ಅಮ್ಮನು ಅಂದಿನ ಕುಪ್ಪಯ್ಯ ಮಧ್ಯಸ್ಥರನ್ನು ನೆನಪಿಸಿಕೊಳ್ಳುತ್ತ ಪಚಗುಟ್ಟುತ್ತಿದ್ದಳು. ಹಳೆಯ ಪುರಾಣ ಶುರುಮಾಡುತ್ತಿದ್ದಳು. ಯಾವುದೇ ಪುರಾಣವು ಸುಮ್ಮನೆ ನೆನಪಾಗುವುದಿಲ್ಲ. ಒಂದಕ್ಕೊಂದು ಹೋಲಿಸಿಕೊಳ್ಳುವ ಮನಸ್ಸಿಗೆ "ಪುರಾಣ ಕನವರಿಕೆ"ಯು ನೆಚ್ಚಿನ ಸಂಗಾತಿ. ಒಬ್ಬ ಅಡುಗೆಯವರು ಅಡುಗೆಗೆಂದು ಒಳಗೆ ಹೊಕ್ಕರೆಂದರೆ ಇಡೀ ಅಡುಗೆ ಕೋಣೆಯು ರಣರಂಗದಂತೆ "ಮುರಿದಟ್ಟೆಗಳ, ಸುರಿದ ಕರುಳ, ಒರೆದ ಬಸೆಯ, ಕೊರೆದ ಸುಂಟಿಗೆಯ, ಹರಿದ ಕೆನ್ನೀರ...ತ್ಯಾಜ್ಯದ ಸಾಲು - ಯಮನುಂಡು ಕಾರಿದಂತೆ..." ಪರಿವರ್ತಿತವಾದಾಗಲೆಲ್ಲ ನಮ್ಮ ಅಮ್ಮನ ಪುರಾಣವು ಶುರುವಾಗುತ್ತಿತ್ತು !!
ಅಂತೂ ಆಹ್ವಾನಿತ ಅಡುಗೆಯವರ ಕೆಲಸವೆಲ್ಲವೂ ಮುಗಿದು ಅವರು ನಿರ್ಗಮಿಸಿದ ನಂತರ, ಅಲ್ಲಿನ ದೃಶ್ಯವನ್ನು ಅದಾಗಲೇ ಕಂಡಿರುತ್ತಿದ್ದ ಅಮ್ಮನು ತನ್ನ ಅಡುಗೆ ಕೋಣೆಯನ್ನು ಪ್ರವೇಶಿಸಲು ಮನಸ್ಸಾಗದೆ "ಜಾನಿಸುತ್ತ" ಕೂರುತ್ತಿದ್ದಳು. ಸಂಜೆಯಾಗುವಾಗ ಆ ಅಡುಗೆಯ ಕೋಣೆಯೆಂಬ ರಣರಂಗವನ್ನು ಸಿಡುಕುತ್ತ ಪ್ರವೇಶಿಸುತ್ತಿದ್ದ ಅಮ್ಮನು... "ಮಾಡಿದ್ದನ್ ಈಗ ತೀಡ್ಕಣ್ಕ್... ಈ ರಾಮಾಯಣನ್ನ ಹೇಂಗ್ ಸರಿ ಮಾಡೂದಾ?" ಅಂತ ತಲೆಯ ಮೇಲೆ ಆಕಾಶವೇ ಬಿದ್ದ ಹಾಗೆ ನಿಂತುಕೊಳ್ಳುತ್ತಿದ್ದುದು ಈಗಲೂ ನೆನಪಾಗುತ್ತದೆ. ಅಟ್ಟ ಒಲೆಯ ಸುತ್ತಲೂ ಸಾಸಿವೆ, ಕರಿಬೇವು, ನೆಲದ ತುಂಬ ಹಳದಿ ಕೆಂಪು ಬಣ್ಣದ ರಸಗುರುತುಗಳು, ಒಲೆಯ ಮೇಲೆ - ಕೆಳಗೆಲ್ಲ ಉಕ್ಕಿ ಕರಟಿದ ಸಂಬಾರ ವಿಶೇಷಗಳು, ಬುಡ ಕರಟಿದ ಪಾತ್ರೆಗಳು, ಮಿಕ್ಸರ್ ನಲ್ಲಿ ಒಣಗಿ ಗಟ್ಟಿಯಾದ ಅವಶೇಷಗಳು, ಸಿಂಕಿನಲ್ಲಿ ಶೇಖರವಾದ ತ್ಯಾಜ್ಯ ವಸ್ತುಗಳ ಜೊತೆಗೆ ಗೋಡಂಬಿ-ದ್ರಾಕ್ಷಿಯ ತುಂಡುಗಳು, ಇಷ್ಟಿಷ್ಟು ಹಾಲನ್ನು ಉಳಿಸಿ ಬಿಸಾಡಿದ ಹಾಲಿನ ಪ್ಯಾಕೆಟ್ ಗಳು, ಬಾಣಲೆಯಲ್ಲಿ ಕೇಜಿಗಟ್ಟಲೆ ಉಳಿಸಿದ ಅಟ್ಟೆಣ್ಣೆ.... ಇವನ್ನೆಲ್ಲ ಹುಬ್ಬು ಗಂಟಿಕ್ಕಿಕೊಂಡು ನೋಡುತ್ತ... ಅಡುಗೆ ಕೋಣೆಗೆ ಎರಡು ಮೂರು ಸುತ್ತು ಬರುತ್ತಿದ್ದ ನಮ್ಮ ಅಮ್ಮ ಈಗಲೂ ನನಗೆ ನೆನಪಾಗುತ್ತಾಳೆ.
"ಚಿಂತೆ ಮಾಡುತ್ತ ಎಷ್ಟು ಸುತ್ತು ಬಂದರೂ ಕ್ರಿಯೆಗೆ ತೊಡಗದೆ ಉತ್ತರ ಕಾಂಡವು ಹೊಮ್ಮುವುದಾದರೂ ಹೇಗೆ? ಬರೇ ಯೋಚನೆ ಮಾಡಿದರೆ ಕೆಲಸ ಮುಂದೆ ಸಾಗುತ್ತದೆಯೆ? ಒಂದು ಕರ್ಮವನ್ನು ಇನ್ನೊಂದು ಕರ್ಮದಿಂದಲೇ ಸವೆಸಬೇಕು! ನಿವಾರಿಸಬೇಕು! ಕರ್ಮಭಾವವನ್ನು ಎತ್ತರಿಸಬೇಕು! ಸೀರೆಯ ನೆರಿಗೆ ಎತ್ತಿ ಕಟ್ಟಿ, ಕೆಲಸ ಶುರುಮಾಡು" ಎಂದೂ ಅಮ್ಮನೇ ದಾರಿ ತೋರಿಸುತ್ತಿದ್ದಳು. ಅದಾಗಲೇ ವಯಸ್ಸಾಗಿದ್ದ ಅಮ್ಮನನ್ನು ಆಗ ನಾವು ಸಂತೈಸುತ್ತಿದ್ದೆವು. "ಅಮ್ಮ, ನೀನು ಈಗ ಸುಮ್ಮನೆ ಹೊರಗೆ ಕೂತಿರು. ಒಂದು ಗಂಟೆ ಬಿಟ್ಟು ಒಳಗೆ ಬಾ... ಆಗ ನೋಡು..ನಿನ್ನ ಅಡುಗೆ ಕೋಣೆಯು ಥಳಥಳ ಹೊಳೆಯುತ್ತಿರುತ್ತದೆ..." ಎಂದು ಹೇಳಿ ಅವಳನ್ನು ಹೊರಗೆ ಕೂಡಿಸಿ ನಾವು ಒಟ್ಟಾಗಿ ಶುದ್ಧೀಕರಣ ಕಾರ್ಯದಲ್ಲಿ ಧುಮುಕುತ್ತಿದ್ದುದೂ ಈಗ ನೆನಪಾಗುತ್ತದೆ. ಹೊರಗೆ ಕೂತ ಅಮ್ಮನ ಬಾಯಿಂದ ಆಗ ಸಹಸ್ರ ನಾಮಾರ್ಚನೆ... ಪುರಾಣ ವಾಚನ ನಡೆಯುತ್ತಲೇ ಇರುತ್ತಿತ್ತು. ಅವಳ ಮಾತುಗಳನ್ನು ಕೇಳುತ್ತ ಕೆಲಸ ಮಾಡುತ್ತಿದ್ದ ನಮಗೆ ಸಮಯ ಸರಿದದ್ದೇ ತಿಳಿಯುತ್ತಿರಲಿಲ್ಲ. "ಅಡುಗೆ ಮಾಡುವುದು ಹೀಗಾ? "ಇನ್ನೊಬ್ಬರ ಮನೆಯ ಕೆಲಸ" ಎಂದುಕೊಂಡು ಮಾಡುವ ಕೆಲಸಗಳೆಲ್ಲವೂ ಹೀಗೇ ಆಗುವುದು. ಯಾರೇ ಆದರೂ ಒಂದು ಕೆಲಸ ಮಾಡಿ ಹೋದ ಮೇಲೆ ಅದನ್ನು ಮಾಡಿಸಿಕೊಂಡವರು ಹಿಡಿ ಶಾಪ ಹಾಕುವ ಹಾಗಿರಬಾರದು; ಮೆಚ್ಚಿಕೊಳ್ಳುವ ಹಾಗಿರಬೇಕು..." ಎನ್ನುತ್ತಲೇ - ಸುಮ್ಮನೆ ಕೂರಲಾರದೆ ತಾನೂ ಒತ್ತರೆಯಲ್ಲಿ ತೊಡಗಿಕೊಳ್ಳುತ್ತಿದ್ದ ಅಮ್ಮ ಈಗಲೂ ನನಗೆ ನೆನಪಾಗುತ್ತಾಳೆ. "ಅಮ್ಮ, ನಾವು ಅಪೇಕ್ಷಿಸುವ ಹಾಗೇ ಕೆಲಸ ಮಾಡುವವರು ನಮಗೆ ಕಾಣಿಸಿದರೆ ಅದು ನಮ್ಮ ಭಾಗ್ಯ. ಏನೋ... ನಾವು ಕರೆದಾಗ ನಮಗಾಗಿ ಬಂದು, ನಮ್ಮ ಕೆಲಸದ ಭಾರವನ್ನು ಒಂದು ದಿನದ ಮಟ್ಟಿಗೆ ಸುಧಾರಿಸಿ ಕೊಟ್ಟು ಹೋದರಲ್ಲ? ಈಗ ಮುಗಿಯಿತಲ್ಲ? ಬಿಟ್ಟುಬಿಡು..." ಎನ್ನುತ್ತ - ನಾವು ಮಕ್ಕಳು - ಅವಳನ್ನು ಸಂತೈಸುತ್ತಿದ್ದುದೂ ಇತ್ತು.
ಒಮ್ಮೆ, ಒಬ್ಬರು ಅಡುಗೆಯವರು ದೇವೀಪೂಜೆಯ ನೈವೇದ್ಯಕ್ಕೆ "ಗುಡಾನ್ನ" ಮಾಡಿದ್ದರು. ಅನಂತರ ಅಡುಗೆಕೋಣೆಯ ಸಿಂಕಿನಲ್ಲಿ ದ್ರಾಕ್ಷಿ, ಗೋಡಂಬಿ, ಉತ್ತುತ್ತೆ, ಬಾದಾಮು... ಎಲ್ಲವೂ ಇನ್ನೊಮ್ಮೆ ಗುಡಾನ್ನ ತಯಾರಿಸಲು ಸಾಕಾಗುವಷ್ಟು ಬಿದ್ದಿದ್ದವು!! ಈ ಅನ್ಯ ವಸ್ತುಗಳ ಒತ್ತಡದಿಂದ ಸಿಂಕಿನ ನೀರು ಹರಿದು ಹೋಗದಂತಾಗಿ ನೀರು ಕಟ್ಟಿಕೊಂಡಿತ್ತು!
ಹೀಗಾದಾಗಲೆಲ್ಲ ಅಮ್ಮ - ಮತ್ತೆ ಮತ್ತೆ ಹಿಂದೆ ಸರಿಯುತ್ತಿದ್ದಳು... ಯಾವುದೇ "ಉತ್ತಮ"ವನ್ನು ಸವಿದವರಿಗೆ "ಕನಿಷ್ಠ"ಗಳ ಜೊತೆಗೆ ಏಗುವಾಗ ಹೀಗೆಲ್ಲ ಆಗುವುದು ಸ್ವಾಭಾವಿಕ. ಅಮ್ಮನ ಕತೆಯೂ ಅದೇ ಆಗಿತ್ತು. ಅವಳಿಗೆ ಪುರಾಣ ನೆನಪಾಗುತ್ತಿದ್ದುದು ಇಂತಹ ಕ್ಷಣಗಳಲ್ಲಿ... "ಹೆಣೆ, ಸುಮ್ ಸುಮ್ನೆ ಮಾತಾಡುಕೆ ನಂಗೇನ್ ಮಂಡೆ ಕೆಟ್ಟಿತ್ತಾ? ಕೆಲಸ ಮಾಡುದ್ ಹೀಂಗಲ್ಲ.." ಎನ್ನುತ್ತ ಹಿಂದೆ ಸರಿಯುತ್ತಿದ್ದಳು.
"ಆ ಕುಪ್ಪಯ್ಯ ಮಧ್ಯಸ್ಥರು ಅಡುಗೆಗೆ ಬಂದರೆ ಎಷ್ಟು ನಿಶ್ಚಿಂತೆಯಿರುತ್ತಿತ್ತು... ಒಂಚೂರೂ ಹಾಳುಧೂಳು ಮಾಡದೆ ಅಚ್ಚುಕಟ್ಟಾಗಿ ಕೆಲಸ ಮಾಡುತ್ತಿದ್ದರು; ಮನೆಯವರು ಒದಗಿಸಿದ ಮಿತ ವಸ್ತುಗಳಿಂದಲೇ ಎಷ್ಟು ಬಗೆಯ ರುಚಿರುಚಿಯಾದ ವ್ಯಂಜನಗಳನ್ನು ಸಿದ್ಧಪಡಿಸುತ್ತಿದ್ದರು... ಒಂದು ಸೌತೆಕಾಯಿಯಿಂದ ವ್ಯಂಜನಗಳ ಗುರುತೇ ಸಿಗದ ಹಾಗೆ ಮೂರ್ನಾಲ್ಕು ಬಗೆಯ ಪಾಕವನ್ನು ಮಾಡಿಡುತ್ತಿದ್ದರು... ಇಲ್ನೋಡು... ಎಲ್ಲ ತರಕಾರಿಯನ್ನೂ ಅರ್ಧರ್ಧ ಕತ್ತರಿಸಿ ಉಪಯೋಗಿಸಿದ್ದಾರಲ್ಲ? ಕತ್ತರಿಸಿ ಉಳಿಸಿದ ತರಕಾರಿ ನಾಳೆಗೆ ಹಾಳಾಗುವುದಿಲ್ಲವಾ? ಕಸದ ರಾಶಿ ನೋಡು... ಕಾಲಿಡಲೂ ಜಾಗ ಇಲ್ಲ... ಇಡೀ ಅಡುಗೆಕೋಣೆಯ ಗುರುತು ಸಿಗದಿದ್ದ ಹಾಗೆ ಮಾಡಿ ಇಡುವುದು ಯಾಕೆ? ಆ ಕುಪ್ಪಯ್ಯ ಮಧ್ಯಸ್ಥರು ಅಡುಗೆ ಪೂರೈಸಿ ಹೊರಟುಹೋದ ಮೇಲೆ ಆ ಅಡುಗೆ ಕೋಣೆಯನ್ನು ಒಮ್ಮೆ ಗುಡಿಸಿ ಒರೆಸಿದರೆ ನನ್ನ ಅಡುಗೆ ಕೋಣೆಯು ಮತ್ತೊಮ್ಮೆ ತಯಾರಾಗಿ ಬಿಡುತ್ತಿತ್ತು. ಈಗಿನ ಅಡುಗೆಯವರು ಚೆಲ್ಲಿಹೋದ ವಸ್ತುಗಳಿಂದ - ಇನ್ನೊಂದು ಸಮಾರಂಭವನ್ನೇ ಮಾಡಬಹುದು; ಇನ್ನೊಂದಷ್ಟು ಜನರಿಗೆ ಊಟ ಹಾಕಬಹುದು... ಇದೆಂತಹ ಕೆಲಸಗಾರರು ಈಗ ಹುಟ್ಟಿಕೊಂಡಿದ್ದಾರೆ?... ಮಗಾ, ಇನ್ನು ಮುಂದೆ ನನ್ನಿಂದ ಆಗುವಷ್ಟು ಜನರಿಗೆ ನಾನೇ ಅಡುಗೆ ಮಾಡ್ತೇನೆ... ಯಾವ ಅಡುಗೆಯವರನ್ನೂ ಕರೆಸುವುದು ಬೇಡ. ಈ ಹಾಳು - ಧೂಳಾಗುವುದನ್ನು ನನಗೆ ನೋಡಲಿಕ್ಕೆ ಆಗುವುದಿಲ್ಲ. ನಮ್ಮಿಂದ ಅಡುಗೆ ಮಾಡಲು ಆಗುವಷ್ಟು ಜನರಿಗೆ ಮಾತ್ರ ಊಟ ಹಾಕಿದರೆ ಸಾಕು... ಈ ಅಡುಗೆಯವರ ಸಹವಾಸವೇ ಬೇಡ..." ಹೀಗೆ ಗೊಣಗುಟ್ಟುತ್ತ ಮುಂದಿನ ಎರಡು ದಿನಗಳವರೆಗೂ ಅಮ್ಮನ ಪುರಾಣಪ್ರವಚನ ನಡೆಯುತ್ತಿತ್ತು. ಮುಂದೂ... ಮತ್ತೊಮ್ಮೆ ಅಡುಗೆಯವರನ್ನು ನಾವು ಕರೆಸುವುದು, ಅನಂತರ ಅಮ್ಮನ ಗೊಣಗಾಟ... ಇವೆಲ್ಲವೂ ಮರುಕಳಿಸುತ್ತಲೇ ಇತ್ತು.

ಕೆಲವು ವರ್ಷಗಳ ನಂತರ ಇನ್ನೊಬ್ಬರು ಅಡುಗೆಯವರು ಬಂದಿದ್ದರು. ಮನೆಯ ಸುತ್ತಲೂ ಓಡಾಡಿ ಕೆಲವು ಎಲೆ, ಬೇರುಗಳನ್ನು ತಾವೇ ಕಿತ್ತು ತಂದು, ನಾವು ಸೂಚಿಸಿದ ವ್ಯಂಜನಗಳ ಜೊತೆಗೆ ಇನ್ನೊಂದು ಹೊಸ ವ್ಯಂಜನವನ್ನೂ ತಯಾರಿಸಿದ್ದ ಅವರು, "ಇದೇನು ಹೇಳಿ? ಉಂಡು ರುಚಿ ನೋಡಿ ಪತ್ತೆ ಮಾಡಿ ನೋಡುವ.." ಎನ್ನುತ್ತ, ಅವರೇ ಬಡಿಸುತ್ತ ಊಟದ ಪಂಙ್ತಿಯಲ್ಲಿ ಓಡಾಡುತ್ತಿದ್ದರು. "ತುಂಬ ರುಚಿಯಾಗಿದೆ; ಯಾವುದರದ್ದೆಂದು ಗೊತ್ತಾಗುವುದಿಲ್ಲ..." ಎನ್ನುತ್ತ ಎಲ್ಲರೂ ಮತ್ತೆ ಮತ್ತೆ ಅದನ್ನು ಕೇಳಿ ಹಾಕಿಸಿಕೊಂಡು ರುಚಿಯ ಸಂಶೋಧನೆಯಲ್ಲಿ ಮುಳುಗುವಂತಾಗಿತ್ತು. ಆಗ ಆ ಅಡುಗೆಯವರು - ಎರಡು ಎಲೆ, ಒಂದು ಬೇರನ್ನು ಹಿಡಿದುಕೊಂಡು ಊಟದ ಪಂಙ್ತಿಯಲ್ಲಿ ಪ್ರದರ್ಶಿಸುತ್ತ "ನೋಡಿ...ಇದರ ತಂಬುಳಿ; ಇದರ ಚಟ್ನಿ..." ಎನ್ನುತ್ತ ಖುಶಿ ಪಡುತ್ತಿದ್ದರು. ರುಚಿಯಾಗಿ ಅಡುಗೆ ತಯಾರಿಸುವುದು ಮಾತ್ರವಲ್ಲದೆ ತಾವು ಮಾಡಿದ ಹೊಸ ರುಚಿಯನ್ನು ಎಲ್ಲರಿಗೂ ಖುಶಿಯಾಗುವಂತೆ ತಲುಪಿಸುತ್ತಿದ್ದ ಅವರ ಅಡುಗೆ ಮತ್ತು ಕಾರ್ಯಶೈಲಿಯನ್ನು ನೋಡಿ ನಾವೂ ಖುಶಿಪಟ್ಟಿದ್ದೆವು.
ಅಡುಗೆಯಲ್ಲಿ ಆಸಕ್ತಿಯಿದ್ದರೆ ಮತ್ತು "ತನ್ನದೇ ಕಾರ್ಯಕ್ರಮ" ಎಂಬ ಸಜ್ಜನಿಕೆಯಿದ್ದರೆ ಮಾತ್ರ ಇವೆಲ್ಲವೂ ಸಾಧ್ಯ. 100 ಜನರಿಗೆ ಬೇಕಾದಷ್ಟು ಅಡುಗೆ ತಯಾರಿಸಲು ಹೇಳಿದರೆ ಅಲ್ಲಿಂದಲ್ಲಿಗೆ ಸರಿಹೊಂದುವಂತೆ ಅವರು ಅಡುಗೆಯ ಪ್ರಮಾಣವನ್ನು ನಿಯಂತ್ರಿಸುತ್ತಿದ್ದ ರೀತಿಯು ಮಾತ್ರ ನನ್ನನ್ನು ಅಚ್ಚರಿಯಲ್ಲಿ ಕೆಡವಿದ್ದೂ ಇದೆ. ತಮ್ಮ ಕರ್ತವ್ಯವನ್ನು ಪೂರೈಸಿ ಹಿಂದಿರುಗುವ ಮೊದಲು ಖರ್ಚಾಗದೆ ಉಳಿದ ಭಕ್ಷ್ಯವನ್ನು ಹೇಗೆ ಜೋಪಾನ ಮಾಡಬಹುದು ಎಂಬ ಕಿವಿಮಾತನ್ನೂ ಹೇಳುತ್ತಿದ್ದ ಅಡುಗೆಯವರು - ಆ ಅಡಿಗರು! "ನಿಮ್ಮ ಅಡುಗೆ ತುಂಬ ಚೆನ್ನಾಗಿತ್ತು.." ಎಂದು ಮನೆಯೊಡೆಯ ಹೇಳಿದರೆ "ನಾವಂತೂ ಎಲ್ಲ ಕಡೆಯೂ ಒಂದೇ ರೀತಿ ತಯಾರಿಸುತ್ತೇವೆ. ಕೆಲವು ಸಾರಿ ತುಂಬ ರುಚಿಯಾಗಿರುತ್ತದೆ; ಕೆಲವು ಸಾರಿ ಹಾಗಿರುವುದಿಲ್ಲ. ಎಲ್ಲವೂ ಮಾಡಿಸಿದವರ ಪುಣ್ಯ! ಅನ್ನದಾತಾ ಸುಖೀಭವ!.."ಎನ್ನುತ್ತ ಕೈಯೆತ್ತಿ ಆಶೀರ್ವದಿಸುತ್ತಿದ್ದರು. ಆಗ "ಅಯ್ಯೋ ಮಾರಾಯ್ರೇ, ಅನ್ನದಾತ ನೀವು... ನಾವು ಉಂಡವರು; ಆದ್ದರಿಂದ ನೀವೂ ಸುಖವಾಗಿರಿ..."
ಹೀಗೆ - "ನೀವು ದೊಡ್ಡವರು - ನೀವು ದೊಡ್ಡವರು..." ಎಂದು ಪರಸ್ಪರ ಶುಭ ಹಾರೈಸಿಕೊಳ್ಳುವ ಸಜ್ಜನಿಕೆಯೂ ಮನೆಯಲ್ಲಿ ಪ್ರಕಾಶಿಸುತ್ತಿದ್ದುದುಂಟು. ಯಾವುದೇ ಕ್ರಿಯೆಯಲ್ಲಿ ತೊಡಗಿಕೊಳ್ಳುವವರು ಹೀಗೆ "ಕರ್ಮಣ್ಯ" ರಾದರೆ - ನಿಷ್ಣಾತರಾದರೆ - ಕುಶಲರಾದರೆ - ಮುಖ್ಯವಾಗಿ ಸಜ್ಜನರಾದರೆ ಅವರ ಕರ್ಮವು ಅವರಿಗೂ ಇತರರಿಗೂ ಸುಖ ನೀಡುತ್ತದೆ.
ಆದರೆ ಇಂದಿನ ಕಾರ್ಯಶೈಲಿಯು ಬದಲಾಗಿದೆ. ಯಾವುದೇ ಪುರಾಣವಾಚನದಿಂದ ಸರಿಹೋಗಲಾರದಷ್ಟು ಬದಲಾಗಿದೆ. ಒಂದೆಡೆ... ಮಾಡುವ ಕೆಲಸಕ್ಕೂ ಪಡೆಯುವ ಸಂಬಳಕ್ಕೂ ಅರ್ಥಾತ್ ಹೊಂದಿಕೆಯಿಲ್ಲದ - ಧನರಾಶಿಯ ಮೇಲೆ ಕೂತು ಮೂಲೆಮೂಲೆಗೆ ಹಾಯುತ್ತಿರುವ ಜಂಬದ ಮ್ಯಾಜಿಕ್, ಇನ್ನೊಂದೆಡೆ...ಅಂತಹ ದುಡ್ಡನ್ನು ಬೆವರು ಸುರಿಸುತ್ತ ತೊಳೆದು ಬಳಿದು ಬಿಡುವ ಇನ್ನೊಂದು ಲಾಜಿಕ್. ಇಂತಹ ಸಾಮಾಜಿಕ ಅಸಮಂಜಸ ಭಾವನೆಲೆಯಿಂದಾಗಿ - ಕಲಾತ್ಮಕವಾಗಿ ಕೆಲಸಮಾಡುವ - "ಎಲ್ಲರೂ ನಮ್ಮವರು" ಎಂಬ ಇಚ್ಛಾಶಕ್ತಿಯಲ್ಲಿಯೇ ಲೋಪವಾದಂತಿದೆ. "ಇವರಿಗೇನು ಧಾಡಿಯಾ? ಎಲ್ಲೆಲ್ಲೋ ದುಡ್ಡು ಚೆಲ್ಲುವ ಜನ... ದಾರಿ ಬದಿಯ ಏನೇನನ್ನೋ ತಿಂದು ಸುಖಿಸುವ ಜನ; ಇವರಿಗೆಲ್ಲ ಏನು ಮಾಡಿಹಾಕಿದರೂ ನಡೆಯುತ್ತದೆ; ಏನೋ ಎತ್ತಿ ಬಡಿದು ಕುಕ್ಕಿ ಹೋಗಿಬಿಡುವ... ನಮಗೇನಂತೆ?" ಎಂಬ ಹುಚ್ಚು ಅಡುಗೆಯಾಟಗಳಿಂದ ತಾತ್ಕಾಲಿಕ ಉಪಕಾರವಾದರೂ - ವೃತ್ತಿ ಮತ್ತು ವ್ಯಕ್ತಿ - ಎರಡರದೂ ಗೌರವ ಕುಸಿಯುತ್ತದೆ. ಒಮ್ಮೊಮ್ಮೆ ಅಧ್ವಾನಗಳೂ ಸಂಭವಿಸುವುದಿದೆ.
ಇತ್ತೀಚೆಗೆ ಮಂಗಳೂರಿನ ಒಬ್ಬರು ಅಡುಗೆಯವರಲ್ಲಿ ಒಂದು ಭಕ್ಷ್ಯವನ್ನು ಸಿದ್ಧಪಡಿಸಲು ಕೇಳಿಕೊಂಡಿದ್ದೆ. "ಒಂದು ಸಣ್ಣ Function ಇದೆ; ತೆಂಗಿನಕಾಯಿಯ ಸುಕ್ಕಿನುಂಡೆ ಮಾಡಿಕೊಡಿ.." ಅಂದಾಗ, "ಹಾಗೆಂದರೇನು?" ಅಂದರು. ಆಗ ಅಚ್ಚುಕಟ್ಟಾಗಿ ಕೂತು "ತಯಾರಿಸುವ ವಿಧಾನ" ವನ್ನು ಅವರಿಗೆ ವಿವರಿಸಿದೆ. "ಬಹಳ ಸುಲಭದ ಸಾಂಪ್ರದಾಯಿಕ ತಿಂಡಿ ಇದು. ನಾನೇ ಮನೆಯಲ್ಲಿ ಮಾಡಿದರೆ, ಕರಿದು ಉಳಿದ ಎಣ್ಣೆಯನ್ನು ಮತ್ತೊಮ್ಮೆ ಉಪಯೋಗಿಸಲು ಮನಸ್ಸೊಪ್ಪದೆ, ಅದನ್ನು ಚೆಲ್ಲುವಾಗ ಪ್ರತೀ ಬಾರಿಯೂ ಬೇಸರವಾಗುತ್ತದೆ. ಅದಕ್ಕೇ ನಿಮಗೆ ಹೇಳುತ್ತಿದ್ದೇವೆ. ಹೊಸ ಎಣ್ಣೆಯಲ್ಲಿಯೇ ತಯಾರಿಸಿ. ನಿಮ್ಮ ವೆಚ್ಚವನ್ನು ದಾಕ್ಷಿಣ್ಯವಿಲ್ಲದೆ ವಸೂಲಿ ಮಾಡಬಹುದು.." ಎಂದಿದ್ದೆ.
ತಕ್ಕಷ್ಟು ಬೆಲ್ಲದ ಹದವಾದ ಪಾಕ ಮಾಡಿಕೊಂಡು ಅದಕ್ಕೆ 10-12 ತೆಂಗಿನಕಾಯಿಯ ತುರಿ, ಸ್ವಲ್ಪ ಬೊಂಬಾಯ್ ರವೆ, ಏಲಕ್ಕಿ ಹುಡಿ, ಮತ್ತು ಪರಿಮಳಕ್ಕೆ ಎರಡು ಚಮಚ ತುಪ್ಪವನ್ನು ಬೆರೆಸಿ ಇಡಿ. ಸ್ವಲ್ಪ ತಣಿದ ಮೇಲೆ ಉಂಡೆ ಕಟ್ಟಿ. ನೆನಸಿಟ್ಟ ಎರಡು ಸಿದ್ದೆ ಅಕ್ಕಿಯನ್ನು ನುಣ್ಣಗೆ ಅರೆದು ಹಿಟ್ಟನ್ನು ತಯಾರಿಸಿಕೊಳ್ಳಿ. ಎರಡು ಚಿಟಿಕೆ ಉಪ್ಪನ್ನು ಆ ಅಕ್ಕಿಯ ಹಿಟ್ಟಿಗೆ ಮಿಶ್ರಮಾಡಿ, ಕಟ್ಟಿ ಇರಿಸಿದ ಉಂಡೆಯನ್ನು ಅದ್ದಿ ಹಾಕುವಷ್ಟು ದಪ್ಪಕ್ಕೆ ಹಿಟ್ಟನ್ನು ಸಿದ್ಧಪಡಿಸಿಕೊಳ್ಳಿ. ಬಾಣಲೆಯಲ್ಲಿ ತೆಂಗಿನೆಣ್ಣೆಯನ್ನು ಹಾಕಿ ಕಾಯಿಸಿ, ಕಟ್ಟಿಟ್ಟ ಒಂದೊಂದೇ ಉಂಡೆಯನ್ನು ಆ ಆಕ್ಕಿಯ ಹಿಟ್ಟಿನಲ್ಲಿ ಅದ್ದಿ ಎಣ್ಣೆಗೆ ಹಾಕಿ. ಬೆಂದ ಬಣ್ಣ ಬಂದ ಮೇಲೆ ಎತ್ತಿಡುತ್ತ ಬನ್ನಿ ಅಷ್ಟೆ..." ಅಂದೆ.
ನನ್ನ ಕತೆಯನ್ನೆಲ್ಲ ಕೇಳಿದ ಮೇಲೆ ಆ ಮಹಾನುಭಾವರು "ನೋಡಿ, ಈ ಮಂಗಳೂರಿನಲ್ಲಿ ಯಾರೂ ಇದನ್ನು ತಯಾರಿಸುವುದಿಲ್ಲ. ಉಡುಪಿ - ಕುಂದಾಪುರದ ಕಡೆ ತಯಾರಿಸಬಹುದು...ಕೇಳಿ ನೋಡಿ.." ಅಂದರು. "ತಯಾರಿಸುವ ವಿಧಾನವನ್ನು ನಾನು ಹೇಳಿದ್ದೇನಲ್ಲ? ಹಾಗೇ ತಯಾರಿಸುವುದೂ ಕಷ್ಟವೆ?" ಎಂದು ನಾನು ಚೌಕಾಸಿಗಿಳಿದೆ. "ಇಲ್ಲ; ಇಲ್ಲ. ನಾವು ಅದನ್ನು ತಯಾರಿಸುವುದೇ ಇಲ್ಲ... ನಾವು ದಿನವೂ ತಯಾರಿಸುವ ಹಿಟ್ಟಿನ ಹೋಳಿಗೆ, ಚಿಕ್ಕಿ, ನೆಲಗಡಲೆ ಉಂಡೆ, ಎಳ್ಳಿನುಂಡೆ... ಬೇಕಿದ್ದರೆ ಹೇಳಿ... ಮಾಡಿಕೊಡುತ್ತೇವೆ..." ಅಂದರು!
ಹೇಗಿದೆ?... "ಸ್ವಾಮೀ, ನನಗೆ ತೊಕ್ಕೊಟ್ಟಿಗೆ ಹೋಗಬೇಕು.. ಬರ್ತೀರಾ?" ಎಂದು ರಿಕ್ಷಾದವರನ್ನು ಕೇಳಿದರೆ "ತೊಕ್ಕೊಟ್ಟಿಗೆ ಬರಲಾಗುವುದಿಲ್ಲ; ನಾನು ಕೂಳೂರಿಗೆ ಹೋಗುತ್ತಿದ್ದೇನೆ; ನೀವೂ ಕೂಳೂರಿಗೆ ಬರುವುದಾದರೆ ರಿಕ್ಷಾ ಹತ್ತಿ... " ಎನ್ನುವಂತಿಲ್ಲವೇ ಕಾರ್ಯಶೈಲಿ?!!!
"ಅದೇಕೋ ಸಾಯಲಾರೆ... ಅದಕ್ಕೇ ಬದುಕಿದ್ದೇನೆ" ಎನ್ನುವಂತಹ ಭಾವ-ಬದುಕುಗಳಿವು. ತಾವು ಮಾಡುವ ಕೆಲಸದಲ್ಲಿ ಪ್ರೀತಿಯಿಲ್ಲದಿದ್ದರೆ ಶ್ರದ್ಧೆಯಿಲ್ಲದಿದ್ದರೆ ಇಂತಹ ಹಾಸ್ಯಪ್ರಸಂಗಗಳೂ ಹುಟ್ಟುತ್ತಿರುತ್ತವೆ. ನಮ್ಮದೇ ಕ್ಷೇತ್ರದ ವಿಷಯ ನಮಗೇ ಗೊತ್ತಿಲ್ಲ ಎನ್ನುವಾಗ ಸಂಕೋಚವಾಗುವುದು ಸಹಜ. ಆದರೆ ಅವರ ಮುಖದಲ್ಲಿ ಅಂತಹ ಬದಲಾವಣೆಯೇನೂ ಕಾಣಿಸಲಿಲ್ಲ. ಅನಂತರ ಕಾಯಿ ಸುಕ್ಕಿನುಂಡೆಯನ್ನು ನಾವೇ ತಯಾರಿಸಿ ತಿಂದೆವು - ಅಷ್ಟೆ.
ಗೊತ್ತಿಲ್ಲ ಎನ್ನುವುದು - ಕೆಲಸಗಳ್ಳತನ, ಅಸಡ್ಡೆ, ಬೇಜವಾಬ್ದಾರಿತನ... ಮುಂತಾದವುಗಳ ಒಂದು ಲಕ್ಷಣವೂ ಹೌದು. ಈ ಬದುಕಿನಲ್ಲಿ - ಕಲಿಯುವುದು ಎಂಬುದು ಮುಗಿಯುವುದೇ ಇಲ್ಲ. ಆದರೆ ಕಲಿಯುವ ಮನಸ್ಸು ಬೇಕು. ಹೊಸಹೊಸತನ್ನು ಕಲಿಯುವ ಉತ್ಸಾಹವೇ ಇಲ್ಲದಿದ್ದರೆ ಹೊಸ ರಂಜನೆಯಾದರೂ ಸಿಗುವುದು ಹೇಗೆ? ಅಡುಗೆ ಎಂದರೆ - ನಿತ್ಯವೂ ಮನಸ್ಸಿಗೆ - ದೇಹಕ್ಕೆ ಕೊಡುವ ವ್ಯಾಯಾಮ. ಮನೆಯ ವಿಚಾರಕ್ಕೆ ಬಂದರೆ, ಅಡುಗೆಯು ಕುಟುಂಬದ ಸದಸ್ಯರನ್ನು ದಿನವೂ ಹತ್ತಿರ ತರುವ ಬ್ರಹ್ಮಾಸ್ತ್ರ! ಶ್ರದ್ಧೆಯಿಂದ ಮಾಡಿದ ಅಡುಗೆಗೆ ರುಚಿಯೂ ಜಾಸ್ತಿ! ದಿನವೂ "I love you" ಎನ್ನುತ್ತ ನಾಟಕ ಮಾಡುವ ಬದಲು, ಊಟಕ್ಕೆ ಕೂತ ಸದಸ್ಯರು ಚಪ್ಪರಿಸಿಕೊಂಡು ಉಣ್ಣುವಂತೆ ಮಾಡಿದರೆ ಅದರಿಂದ ಸಂಬಂಧಗಳು ಗಟ್ಟಿಯಾಗುತ್ತವೆ. ಹೊಟ್ಟೆಯ ಕಾಳಜಿಯ ನೀರೆರೆಯದೆ ಪ್ರೀತಿಯ ಬಳ್ಳಿ ಹಬ್ಬಲಾರದು. ಹೊಟ್ಟೆ ತಣಿಯದೆ ಯಾವ ತತ್ತ್ವೋಪದೇಶವೂ ರುಚಿಸುವುದಿಲ್ಲ! ಅಡುಗೆಯು ಬದುಕನ್ನು ರಸಮಯಗೊಳಿಸುವ ಕಲೆ. ರುಚಿಕಟ್ಟಾದ ಅಡುಗೆಯ ಮಧ್ಯಸ್ಥಿಕೆಯಲ್ಲಿ ಪ್ರೀತಿಯು ಸಹಜವಾಗಿ ಅರಳುತ್ತದೆ. ಸ್ವಚ್ಛ ಅಡುಗೆಯ ನಿತ್ಯ ಕರ್ಮವೀರರಿಗೆ - ತೃಪ್ತಿಯು ಸುಲಭದ ತುತ್ತು.
ಇಂದಿನ ಅಡುಗೆಯವರಿಗೆ ಹೊಸ ಸೌಲಭ್ಯಗಳೆಲ್ಲವೂ ಸಿಗುತ್ತಿವೆ. ಗ್ರೈಂಡರ್, ಮಿಕ್ಸರ್,
ಗ್ಯಾಸ್ ಒಲೆ, ಕುಕ್ಕರ್... ಮುಂತಾದ ಸೌಲಭ್ಯಗಳಿಂದಾಗಿ ಅಡುಗೆಯ ಕೆಲಸದ ಅರ್ಧ ಭಾರವು
ಇಳಿದುಹೋಗುತ್ತದೆ. ಇಂದಿನ ಅಡುಗೆಯವರಲ್ಲಿ - "ಅರೆಯುವ ಸಾಂಪ್ರದಾಯಿಕ ಕಲ್ಲಿನಲ್ಲಿ ಅರೆದರೆ ಅದರ ರುಚಿಯೇ ಬೇರೆ; ಕಲ್ಲಿನಲ್ಲೇ
ಅರೆಯಿರಿ.." ಅಂದರೆ - "ಇಲ್ಲಮ್ಮ; ತಡ ಆಗ್ತದೆ; ಮಿಕ್ಸರ್ ಕೊಡಿ; ಗ್ರೈಂಡರ್ ಕೊಡಿ..." ಅನ್ನುತ್ತಾರೆ.
ಅದನ್ನು ಶಿಸ್ತಿನಿಂದ ಎಚ್ಚರದಿಂದ ಉಪಯೋಗಿಸಿದರೆ ಪರವಾಗಿಲ್ಲ. ಆದರೆ ಅಡುಗೆಯ ಯುದ್ಧ ಮುಗಿದ ಮೇಲೆ ಆ
ಗ್ರೈಂಡರ್ ನ್ನು ತೊಳೆಯಲು ಗಂಡಾಳಿನ ಸಹಾಯವೇ ಬೇಕಾಗುವಂತೆ ಅದಕ್ಕೆ ಸರ್ವಾಂಗ ಸುಂದರವಾಗಿ
ಮೆತ್ತಿ ಇಡುವವರೂ ಇದ್ದಾರೆ! ಇದು ಕೆಲಸದ ರೀತಿ ಅಲ್ಲ; ಬೇಕಾಬಿಟ್ಟಿ - ಕರ್ತವ್ಯಚ್ಯುತಿ!
ನಿತ್ಯದ ಅಡುಗೆಯು ಸುಲಭದ ಸಂತೋಷ ನೀಡುವ ಕ್ರಿಯೆ. ಆದರೆ "ಅಡುಗೆಯ ವೃತ್ತಿ" ಎಂಬುದು ಬಲು ಕಷ್ಟದ ಉದ್ಯೋಗವೂ ಹೌದು. ಅಡುಗೆಗೆಂದು ಎಲ್ಲೆಲ್ಲೋ ಸುತ್ತಬೇಕು; ವಿಭಿನ್ನ ಸಂಸ್ಕಾರದವರೊಂದಿಗೆ ಏಗಬೇಕು. ಗುರುತು ಪರಿಚಯವಿಲ್ಲದ ಸ್ಥಳ, ಸಂದರ್ಭಗಳನ್ನು ನಿಭಾಯಿಸುವುದು ಊಟ ಮಾಡುವಷ್ಟು ಸುಲಭವೇನಲ್ಲ. 100 ಜನರಿಗೆ ಅಡುಗೆ ಮಾಡಲು ಆದೇಶಿಸಿದಲ್ಲಿ 200 ಜನರು ಬಂದು ಊಟಕ್ಕೆ ಕುಳಿತುಕೊಳ್ಳುವುದೂ ಇದೆ. ಆಗ ಮನೆಯ ಯಜಮಾನರ ಮರ್ಯಾದೆಯನ್ನು ಉಳಿಸುವ ಕೆಲಸವನ್ನು ಅಡುಗೆಯವರು ದಕ್ಷತೆಯಿಂದ ನಿರ್ವಹಿಸಿದ್ದನ್ನು ನಾನು ಕಂಡಿದ್ದೇನೆ. ವಿಭಿನ್ನ ವರ್ತನೆಯ ಜನರೊಂದಿಗೆ ನಿತ್ಯವೂ ವ್ಯವಹರಿಸಬೇಕಾದ ಅನಿವಾರ್ಯತೆಯನ್ನು ಸಹಜವಾಗಿ ಸ್ವೀಕರಿಸುವ ಕ್ರೀಡಾ ಮನೋಭಾವವಿದ್ದಾಗ ಮಾತ್ರ ಅಡುಗೆಯ ವೃತ್ತಿಯನ್ನು ಸಮಾಧಾನದಿಂದ ನಿಭಾಯಿಸಬಹುದು.
ಗಂಟೆಗಟ್ಟಲೆ ಬೆಂಕಿಯ ಮುಂದೆ ನಿಂತು ಬೆವರು ಸುರಿಸಿ ದುಡಿಯುವ ಅಡುಗೆಯ ಕಾರ್ಮಿಕರು ಊಟ ಮಾಡುವುದನ್ನೂ ನಾನು ನೋಡಿದ್ದೇನೆ. ಹತ್ತಾರು ಬಗೆಯ ಪದಾರ್ಥಗಳನ್ನು ತಯಾರಿಸುವ ಇವರು ಯಾವುದೋ ಒಂದು ಸಾರನ್ನು ಸುರಿದುಕೊಂಡು ಉಂಡು ಎದ್ದು ಬಿಡುತ್ತಾರೆ. ಉಂಡವನಿಗೆ ಹಸಿವೆ ಜಾಸ್ತಿ; ಉಣ್ಣುವುದನ್ನಷ್ಟೇ ಮಾಡುವವರಿಗೆ ಇನ್ನೂ ಜಾಸ್ತಿ! ಆದರೆ ಅಡುಗೆಯನ್ನು ಸಿದ್ಧಪಡಿಸುವವರಿಗೆ ಹಸಿವೆ ಕಡಿಮೆ. ಊಟದ ಹೊತ್ತಿನಲ್ಲಿ ದೈಹಿಕವಾಗಿ, ಮಾನಸಿಕವಾಗಿ ಬಸವಳಿದ ಸ್ಥಿತಿಯಲ್ಲಿರುವ ವಿಶೇಷದ ಅಡುಗೆಯವರು ಊಟದ ಶಾಸ್ತ್ರ ಮಾಡಿ ಎದ್ದು ಬಿಡುತ್ತಾರೆ. ನಿತ್ಯವೂ ವಿಶೇಷದ ಅಡುಗೆಯನ್ನು ಮಾಡಿ, ಕಂಡು, ತಾವು ಮಾಡಿದ್ದನ್ನು ತಾವೇ ಉಂಡು, ಆ ಘಾಟನ್ನು ಅನುಭವಿಸುವ ಅಂತಹ ಮಂದಿಗೆ ಅಂತಹ ಭರ್ಜರಿ ಊಟವು ಬೇಕೆಂದು ಅನ್ನಿಸುವುದೇ ಇಲ್ಲ. ಕೆಲವರು "ನಾವು ರಾತ್ರಿ ಮನೆಗೆ ಹೋಗಿ ಹೆಂಡತಿ ಮಾಡಿ ಹಾಕುವ ಗಂಜಿ-ಉಪ್ಪಿನಕಾಯಿ ಊಟವನ್ನು ಹೊಟ್ಟೆ ತುಂಬ ಉಣ್ಣುತ್ತೇವೆ... ನಮಗೆ ಅದೇ ಇಷ್ಟ!..." ಎಂದು ಹೇಳಿದ್ದನ್ನು ನಾನು ಕೇಳಿದ್ದೇನೆ. ದೊಡ್ಡ ಪ್ರಮಾಣದಲ್ಲಿ ಅಡುಗೆ ಮಾಡುವ, ಅಡುಗೆಯನ್ನೇ ಅವಲಂಬಿಸಿರುವ ವೃತ್ತಿನಿರತರು - ನಿಷ್ಠೆಯನ್ನು ಮತ್ತು "ಅಗ್ನಿಕಾರ್ಯ" ಎಂಬ ಮನೋವಿನಮ್ರತೆಯನ್ನು ರೂಢಿಸಿಕೊಂಡರೆ ಆ ಉದ್ಯೋಗವು ಅವರಿಗೆ ಹಿಂಸೆಯೆನಿಸುವುದಿಲ್ಲ. ನೂರು ಊರು, ನೂರಾರು ಬಗೆಯ ಜನರನ್ನು ಕಂಡು ವ್ಯವಹರಿಸುವ ಅಡುಗೆಯ ವೃತ್ತಿಯನ್ನು ಮತ್ತು ಆ ವೃತ್ತಿಧರ್ಮವನ್ನು ಆಯಾ ವೃತ್ತಿನಿರತರು, ಯಾವುದೇ ಕೀಳರಿಮೆಯಿಲ್ಲದೆ ಸ್ವತಃ ಗೌರವದಿಂದ ಕಾಣಲು ಸಾಧ್ಯವಾದರೆ - ಇತರರಿಗೂ ಗೌರವ ಮೂಡುತ್ತದೆ; ವೃತ್ತಿಗೂ ವೃತ್ತಿನಿರತರಿಗೂ ಗೌರವ ಹೆಚ್ಚುತ್ತದೆ; ಆತ್ಮತೃಪ್ತಿಯೂ ಸಿಗುತ್ತದೆ.
ಅಡುಗೆಯ ಕೆಲಸವು ಕೀಳಲ್ಲ. ಅದಕ್ಕಾಗಿ ಕೀಳರಿಮೆಯೂ ಸಲ್ಲ. ಅನೇಕ ವರ್ಷಗಳಿಂದ "ಲೋಕಾಸ್ಸಮಸ್ತಾಸ್ಸುಖಿನೋ ಭವಂತು" ಎನ್ನುತ್ತ ಜಗದ ಜೀವಿಗಳಿಗೆ ಉಣ್ಣಿಸುತ್ತ, ಶಕ್ತ್ಯೋತ್ಸಾಹಗಳನ್ನು ತುಂಬುತ್ತ ಬಂದಿರುವ ವರ್ಗವಿದು. ಬದಲಾದ, ಆಗುತ್ತಿರುವ ಸಾಮಾಜಿಕ ಸನ್ನಿವೇಶದಲ್ಲಿ ಯಜ್ಞವೆಂಬ ಭಾವದಿಂದ ಇಳಿದು - ವ್ಯವಹಾರದ ನೆಲೆಗೆ ಕುಸಿದಿರುವ ಆಹಾರ ತಯಾರಿಯ ವಿಭಾಗವು - ಪ್ರಾಮಾಣಿಕ, ಶುದ್ಧ ಆಹಾರವನ್ನು ನೀಡುವ ಸಂಕಲ್ಪ ಮಾಡಿ, ಸ್ಥಿತ್ಯಂತರದ ಸನ್ನಿವೇಶದಲ್ಲಿಯೂ ಸಾಮಾಜಿಕ ದೇಹಸ್ವಾಸ್ಥ್ಯದ ಉದ್ದೇಶವನ್ನೇ ಹೊಂದಿದ್ದರೆ - ಸ್ವಾಂತ ಸುಖ ನೆಮ್ಮದಿಯ ಜೊತೆಗೆ ಸಮಷ್ಟಿಯ ಸುಖವನ್ನೂ ಕಾಪಾಡಿದಂತಾದೀತು.
ಪಾಕಕಲೆಯನ್ನು ಉಪಾಸಿಸುವವರು ಎಂದೂ ಸೋಲುವುದಿಲ್ಲ. ಆದರೆ ಆತ್ಮವಿಶ್ವಾಸ ಬೇಕು. ಕಷ್ಟಸಹಿಷ್ಣುಗಳಾಗಬೇಕು. ಅಡುಗೆಯ ಕಲೆಯು ಮುಂದಿನ ದಿನಗಳಲ್ಲಿ ಅತ್ಯಂತ ಬೇಡಿಕೆಯುಳ್ಳ ಕಲೆಯಾಗಿ ಪರಿವರ್ತಿತವಾಗಲಿದೆ. "ಇಂಗು ತೆಂಗು ಇದ್ದರೆ ಮಂಗವೂ ಅಡುಗೆ ಮಾಡುತ್ತದೆ " ಎಂಬ ನಾಣ್ನುಡಿಯಿದೆ ! ಆದರೆ "ಕಲಿಯುವ ಮನಸ್ಸಿದ್ದರೆ..." ಎಂಬುದನ್ನು ಸೇರಿಸಿ ಆ ನುಡಿಗಟ್ಟನ್ನು ಓದಿಕೊಳ್ಳಬೇಕು. ಒಲೆಯ ಮೇಲೆ ಪಾತ್ರೆಯನ್ನು ಅಂಗಾತ ಇಡಬೇಕಾ? ಕವುಚಿ ಇಡಬೇಕಾ? ಎಂದೂ ಗೊತ್ತಿಲ್ಲದವರ ಸಂಖ್ಯೆಯೂ ಈಗೀಗ ಹೆಚ್ಚಾಗುತ್ತಿದೆ. ELECTRIC OVEN ನ ಮಾರ್ಗದರ್ಶನದಂತೆ ವಿಧೇಯವಾಗಿ ನಡೆಯುವ ಏಕಾಂಗವೀರರು ಹೆಚ್ಚುತ್ತಿದ್ದಾರೆ! ಪೇಟೆಯಲ್ಲಿ ಸಿಗುವ ಸಿದ್ಧ ಪ್ಯಾಕೇಟುಗಳ ಆಹಾರವನ್ನು OVEN ನ ಒಳಗಿಟ್ಟು ಕೇವಲ ರೂಪ ಬದಲಿಸಿಕೊಂಡು (!) ಮಾಡಿದ್ದುಣ್ಣುತ್ತ ದಿನದೂಡುವವರೂ ಹೆಚ್ಚುತ್ತಿದ್ದಾರೆ. ಇಂತಹ ಕಾಲಘಟ್ಟದಲ್ಲಿ, ಪಾಕ ಪ್ರವೀಣರು ಈ ದುರ್ದಿನಗಳ ದುರುಪಯೋಗ ಮಾಡಿಕೊಳ್ಳದೆ - ಸ್ವಾಮಿ ಕಾರ್ಯವೆಂಬ ಶ್ರದ್ಧೆಯಿಂದ - ಪಾಕಶಾಸ್ತ್ರದ ಸದುಪಯೋಗಪಡಿಸಿಕೊಂಡರೆ ಮುಂದಿನ ದಶಕವು ನಿಸ್ಸಂಶಯವಾಗಿ "ಪಾಕ ಶಾಸ್ತ್ರ"ದ ಮಡಿಲನ್ನು ಏರಲಿದೆ! ಏಕೆಂದರೆ ರುಚಿಗೆ ಒಲಿಯದ ಸೃಷ್ಟಿಯಿಲ್ಲ ! ಈ ಹಂತದಲ್ಲಿ ಅಡುಗೆಯನ್ನು ಬಲ್ಲವರು ತಮ್ಮ ಶಾಸ್ತ್ರೀಯ ರೀತಿ ನೀತಿ ಗಳನ್ನು ಅನುಸರಿಸಿ ಅದರ ನಿತ್ಯಾನುಷ್ಠಾನವನ್ನು ನಡೆಸಿದರೆ - ಅಡುಗೆಯವರೂ ಗೆಲ್ಲುತ್ತಾರೆ; ಅದನ್ನು ಸೇವಿಸಿದವರೂ ಉಳಿಯುತ್ತಾರೆ....
ರೀತಿ ನೀತಿ - ಇದು ಜೋಡಿ ಪದ. ಪ್ರತಿಯೊಂದು ಕೆಲಸದ ನಿರ್ವಹಣೆಗೂ ರೀತಿಯಿರುವಂತೆ ನೀತಿಯೂ ಇರುತ್ತದೆ. "ನಾವು ಮಾಡುವ ಕೆಲಸ ಹೀಗಿರಲಿ ಜೀಯ; ನಿಸ್ಸೀಮ ನಿಸ್ಪೃಹತೆ ಗೆಲ್ಲುವುದು ತಿಳಿಯ..."
()()()()()()()()