Wednesday, December 3, 2014

ಗಟ್ಟಿಗಿತ್ತಿಯರ ಸದ್ದುಗದ್ದಲ


  ಸ್ತ್ರೀ ಸಮಾನತೆ, ಸ್ತ್ರೀ ಸ್ವಾತಂತ್ರ್ಯ, ಸ್ತ್ರೀ ಸಾಧನೆ, ಸ್ತ್ರೀಯರ ಮೇಲೆ ಮತ್ತು ಸ್ತ್ರೀಯರಿಂದ ಹಿಂಸೆ, ಸ್ತ್ರೀ ಶೋಷಣೆ, ಸ್ತ್ರೀ ಪರ....ಇತ್ಯಾದಿ ಶಬ್ದವ್ಯೂಹದಲ್ಲಿ ಸಿಲುಕಿಸಿ ಸ್ತ್ರೀಯರ ಮೇಲೆ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಶಾಬ್ದಿಕ ಮತ್ತು ದೃಶ್ಯ ರೂಪದ ಅತ್ಯಾಚಾರಗಳು....ಇವತ್ತಿನ ಸಮಾಜದಲ್ಲಿ ಮತ್ತೊಮ್ಮೆ "ಸಂಸ್ಕೃತ - ಸಂಸ್ಕೃತಿ" ಯತ್ತ ಹೊರಳಿ ನೋಡುವಂತೆ ಮಾಡಿದೆ. ಅಕ್ಷರ ಕಲಿತ ಇಂದಿನ ತುಂಡರಸ ಅರಸಿಯರನ್ನು ಬಗೆದು ನೋಡುವ ಅಗತ್ಯ ಎದುರಾಗಿದೆ.

"ಸಮಾನತೆ" - ಅದರಲ್ಲಿ ಸ್ತ್ರೀಯರೂ ಸೇರುವುದಿಲ್ಲವೇ ?
"ಸ್ವಾತಂತ್ರ್ಯ" - ಸ್ತ್ರೀಯರನ್ನು ಹೊರತು ಪಡಿಸಿ ಎಂದಿದೆಯೇ ?
ಸಾಧನೆಯಲ್ಲೂ ಸ್ತ್ರೀ ಪುರುಷ ಭೇದದ ಅಳತೆಗೋಲು ಬೇಕೇ ?
ಹಿಂಸೆಯಲ್ಲಿಯೂ "ಸ್ತ್ರೀ ಹಿಂಸೆ" ಮತ್ತು "ಪುರುಷ ಹಿಂಸೆ" ಎಂದಿದೆಯೇ ?
ಶೋಷಣೆ ಎಂದಾಗಲೂ "ಸ್ತ್ರೀ ಶೋಷಣೆ" ಮತ್ತು "ಪುರುಷ ಶೋಷಣೆ" ಎಂಬ ಪ್ರತ್ಯೇಕ ಮಣೆ ಇದೆಯೇ ?
ಸಮತೂಕದ ವಿಶ್ಲೇಷಣೆ ಯಾಕಿಲ್ಲ ?

  ನಾವೀಗ "ಎಲ್ಲರೂ ಎಲ್ಲರಿಗಾಗಿ ಎಲ್ಲರನ್ನೂ" ಎಂಬ ಪದ ಬಳಕೆಯನ್ನು ಉದ್ದೇಶಪೂರ್ವಕ (?) ವಾಗಿ ಮರೆತಂತೆ ಏಕೆ ವ್ಯವಹರಿಸುತ್ತಿದ್ದೇವೆ ?

ಇದೇ  ನೋಡಿ ಚಮತ್ಕಾರ.

ಹೊಟ್ಟೆ ಪಾಡಿನ ಹಣಸಂಪಾದನೆಗಾಗಿ ಅಕ್ಷರವನ್ನು ಬಳಸುವ ಸಹಸ್ರಾರು ಮಂದಿ ಇಂದು ಓಡಾಡುತ್ತಿದ್ದಾರೆ. ದಿನವೂ ಅಕ್ಷರಗಳನ್ನು ಪೋಣಿಸಲೇಬೇಕಾದ ದರ್ದು - ಇಂಥವರದ್ದು. ಶೀಘ್ರವಾಗಿ ಬೆಳಗಿ ತೊಳಗುವ ಅವಸರದಲ್ಲಿರುವ ಸುದ್ದಿ ಬೇಟೆಯ ಇಂತಹ ಶಬ್ದಬ್ರಹ್ಮರುಗಳಿಂದ ನಿತ್ಯವೂ ಪ್ರತಿಭಾ ಪ್ರದರ್ಶನ ನಡೆಯುತ್ತಿರುತ್ತದೆ. ಇವರ ವಿಚಾರಗಳು ಮತ್ತು ಅದಕ್ಕೆ ಪೂರಕವಾದ ದೃಶ್ಯಗಳನ್ನು ಕೇಳಿ ಓದಿ ನೋಡುತ್ತ ಸಾತ್ವಿಕ ಸ್ತ್ರೀ ವರ್ಗಕ್ಕೆ ಗರ ಬಡಿದಂತಾಗಿದೆ. ಸ್ತ್ರೀತ್ವಕ್ಕೆ ಹೊಂದದ "ಉಗ್ರ HORMONE" ನ್ನು ಚುಚ್ಚುಮದ್ದಿನಂತೆ ದಿನವೂ ಸಮಾಜದ ಸ್ತ್ರೀ ಬಳಗಕ್ಕೆ ಊಡಿಸಿ ಧನ್ಯರಾಗುತ್ತಿರುವ ಇಂತಹ ಪ್ರಚಂಡರು ಜಾಗ್ರತರಾಗಬೇಕಾದ ಕಾಲ ಬಂದಿದೆ.

ಇನ್ನು ಸ್ತ್ರೀಯರ ವಿಚಾರಕ್ಕೆ ಬಂದರೆ - "ನಮಗೆ ಗೌರವ ಕೊಡಿ" ಎಂದು ಕೇಳಿಕೊಳ್ಳುವ ಸ್ಥಿತಿ ಯಾರಿಗೂ ಬರಬಾರದು. ಗೌರವ ಎಂಬುದು ನಮ್ಮ ಮಾತು - ಕೃತಿಯಿಂದ ತಾನಾಗಿಯೇ ಹಿಂಬಾಲಿಸಿ ಬರಬೇಕಾದ ಸದ್ಭಾವ. ಕೋಲು ತೋರಿಸಿ ಗೌರವ ಸಂಪಾದಿಸುವುದೂ ಸ್ನೇಹ ಸಂಪಾದಿಸುವುದೂ ಭಯೋತ್ಪಾದನೆಯೇ ಅಲ್ಲವೆ ? ಕೆಲವರಿಗೇಕೆ ಇದು ಅರ್ಥವಾಗುವುದಿಲ್ಲ ? ಸುಲಭದ  “ವೇದಿಕೆಯ ಸುಖಕ್ಕಾಗಿ ದ್ರೋಹ ಚಿಂತನೆಯು ಒಳ್ಳೆಯದಲ್ಲ.

ಹೆಣ್ಣಿಗೆ ಆರ್ಥಿಕ ಸ್ವಾವಲಂಬನೆಯು ಬೇಕು. ಹಾಗೆಂದ ಮಾತ್ರಕ್ಕೆ ಆರ್ಥಿಕ ಸ್ವಾವಲಂಬನೆಗಾಗಿ ತಂತ್ರ - ಕುತಂತ್ರಗಳನ್ನೆಲ್ಲ ಮಾಡಬಹುದೆಂದಲ್ಲ. ಸಮಾಜದ ಹರಿವಿನಲ್ಲಿ ಸ್ವಸಾಮರ್ಥ್ಯದಿಂದಲೇ, ತನ್ನ ಇತಿಮಿತಿಯಲ್ಲಿಯೇ ಸ್ವಾವಲಂಬಿಯಾಗುವ ದಾರಿಯನ್ನು ಕಂಡುಕೊಳ್ಳಬೇಕಾಗುತ್ತದೆ. ಅವರವರ ಇತಿಮಿತಿಯನ್ನು ಮೀರಿದಾಗ ಪರಸ್ಪರ ಎಚ್ಚರಿಸುವುದಕ್ಕೂ ಹಿಂಜರಿಯಬಾರದು. ಆದರೆ ಇಂದಿನ ಸಾಮಜಿಕ ವರ್ತನೆಗಳು ವಿಕ್ಷಿಪ್ತವೆನ್ನಿಸುವಷ್ಟು ಆಘಾತಕಾರಿಯಾಗಿವೆ.

ತಪ್ಪು ಎಂದರೆ ತಪ್ಪು. ಸರಿ ಎಂದರೆ ಸರಿ. ಆದರೆ ಬುದ್ಧಿಕಲುಷಿತವಾದ ಇಂದಿನ ಸನ್ನಿವೇಶದಲ್ಲಿ - ಸತ್ಯಕ್ಕೆ ಹತ್ತಿರ, ಸತ್ಯಕ್ಕೆ ದೂರ, ಹೆಚ್ಚು ಸರಿ, ಸಣ್ಣ ತಪ್ಪು- ಇತ್ಯಾದಿ ತರತಮದ ಗೋಳಾಟ ಕಾಣುತ್ತಿದೆ. ಒಂದು ಹೆಣ್ಣು "ಗಂಡನನ್ನು ಹೊಡೆದು ಕೊಂದಳು" - ಎಂದು ಕೇಳಿದ ಕೂಡಲೆ "ಆ ಗಂಡ ಎಂಬ "ರಾಕ್ಷಸ"ನು ಆಕೆಯ ಜೀವ ಹಿಂಡಿರಬೇಕು; ಅದಕ್ಕೇ ಕೊಂದಳು " ಎನ್ನುವ ತಕ್ಷಣದ ಪೂರ್ವಾಗ್ರಹಪೀಡಿತ ಪ್ರತಿಕ್ರಿಯೆ ಸಾಮಾನ್ಯ. ಇದು ಪರೋಕ್ಷವಾಗಿ ಪ್ರತೀಕಾರದ ಜೈ ಜೈಕಾರವಲ್ಲವೇ? ಪ್ರತೀಕಾರಗಳೇ ಆದರ್ಶವೆಂದಾದರೆ ಡಕಾಯಿತ ಮಹಿಳೆಯರಿಗೂ ಗುಡಿ ಕಟ್ಟಿ ಪೂಜಿಸಬಹುದು. ಪ್ರತೀ ಊರಲ್ಲೂ "ಡಕಾಯತಿ ಶಾಸ್ತ್ರ"  ಬೋಧಿಸಬಹುದು. ಬದುಕು ತಮಾಷೆಯ ವಸ್ತುವಲ್ಲ. ಒಡಕು ಚಿಂತನೆಗಳು ನಮ್ಮನ್ನು ಎಲ್ಲಿಗೆ ಒಯ್ಯುತ್ತಿವೆ ಎಂದೂ ಯೋಚಿಸಬೇಕಾಗುತ್ತದೆ.

ಜೀವ ಹಿಂಡುವ ಕಲೆಯು ಗಂಡುಗಳಿಗೇ ಮೀಸಲಾದುದೇನಲ್ಲವಲ್ಲ? ಅದು ಮನುಷ್ಯ ಸಹಜವಾದ ಪ್ರಾಣಿಮೂಲ ಗುಣ. ಒಂದು ಮನೆ, ಕಛೇರಿ, ಸಮಾಜದ ಯಾವುದೇ ವ್ಯಕ್ತಿಯೂ ತನ್ನ "ಶಕ್ತ್ಯಾನುಸಾರ" ಪರಸ್ಪರ ಜೀವ ಹಿಂಡುವುದು ಬದುಕಿನ ಸಾಮಾನ್ಯ ಅನುಭವವಲ್ಲವೇ?  ಜೀವ ಹಿಂಡುವವರನ್ನೆಲ್ಲ ದೈಹಿಕವಾಗಿ ನಿವಾರಿಸಿಕೊಳ್ಳುತ್ತ ಹೋದರೆ - ಯಾರು ಉಳಿಯಬಹುದು? ಹೆಣ್ಣನ್ನು ವೈಭವೀಕರಿಸುವ ಭರದಲ್ಲಿ, ಸ್ತ್ರೀಭೂತ ಅನಿಷ್ಟಗಳೆಲ್ಲವನ್ನೂ "ಇಷ್ಟ ಇಷ್ಟ ಸಂತುಷ್ಟ" ಎನ್ನುತ್ತ ನಡೆದರೆ, ಸ್ತ್ರೀಯರನ್ನು ಘೋರ ಅಧಃಪತನಕ್ಕೆ ಸಜ್ಜುಗೊಳಿಸುತ್ತಿದ್ದಾರೆಂದೇ ತಿಳಿಯಬೇಕಾಗುತ್ತದೆ.

ಪ್ರಕೄತಿಸಹಜವಲ್ಲದ ಭೇದ ಭಾವಗಳನ್ನು ಕೃತಕ ಬಣ್ಣ ಹಚ್ಚಿ, ಸೃಷ್ಟಿಸಿ, ಸಮಾಜದ ಒಂದು ವರ್ಗದ ಮನಸ್ಸಿನಲ್ಲಿ ಸ್ತ್ರೀಯರನ್ನು ಖಳನಾಯಕಿಯರಂತೆ ಚಿತ್ರಿಸುತ್ತಿರುವವರು ಸಮಷ್ಟಿಯ ಹಿತಚಿಂತನೆಗೆ ತೊಡಗುವುದು ಯಾವಾಗ ?
ಭಾರತ ದೇಶದ ಬೆನ್ನೆಲುಬೇ ಕುಟುಂಬ. ಒಂದು ಕುಟುಂಬದ ಆಧಾರಸ್ತಂಭಗಳೇ - ಹೆಣ್ಣು ಮತ್ತು ಗಂಡು. ಸುಂದರ ಕುಟುಂಬದ ಕಣ್ಣುಗಳಂತಿರುವ ಇವರು, ಪರಸ್ಪರ ಪ್ರತಿಷ್ಠೆ, ಸಂಶಯದಿಂದ ಮೇಲಾಟ ನಡೆಸುವಂತಾದರೆ ಕುಟುಂಬಗಳ ಗತಿ ಏನು? ಸೄಜನಶೀಲ ಸ್ವಸ್ಥ ಹೆಣ್ಣಿನ ಸ್ವಚ್ಛ  ಬದುಕಿನ ತುಂಬ ಕಪ್ಪು ಚಿತ್ತುಗಳನ್ನು ಮೂಡಿಸುವಲ್ಲಿ ಬಾಹ್ಯ ಕೈವಾಡದ ಪಾಲೆಷ್ಟು? ಸ್ವಯಂಕೄತವೆಷ್ಟು?....ಗಂಭೀರ ಚಿಂತನೆಯ ವಸ್ತುವಿದು.

ಗಂಡಾಗಲೀ ಹೆಣ್ಣಾಗಲೀ - ತಮ್ಮ ಶಕ್ತಿ ಸಾಮರ್ಥ್ಯವನ್ನು  ಸ್ವಂತ ಮತ್ತು ಅವಲಂಬಿತರ ಉನ್ನತಿಗಾಗಿ ಬಳಸುವಂತಾದರೆ ಆ ಕುಟುಂಬ ಮಾತ್ರವಲ್ಲ; ತನ್ಮೂಲಕ ಸಮಾಜವೂ ಉಳಿಯುತ್ತದೆ. ನೋವುಗಳು, ಅಭಿಪ್ರಾಯ ಭೇದ, ಸಂತಸ ಸಂಭ್ರಮದ ಕ್ಷಣಗಳು, ಹೆಮ್ಮೆಯ ಅನುಭವಗಳು....ಇವೆಲ್ಲವೂ ಎಲ್ಲ ಬದುಕಿನಲ್ಲೂ ಬಂದು ಹೋಗುವ ಅತಿಥಿಗಳು. ಇಂತಹ ಏರಿಳಿತಗಳನ್ನು ನುಂಗಿ ಜೀರ್ಣಿಸಿಕೊಂಡರೆ ಯಾವ ಹೊರಳಾಟ ನರಳಾಟಗಳಿಗೂ ಆಸ್ಪದವಿರಲಾರದು. ಇದೇ ಬದುಕಿನ ಸೂತ್ರ. ನೋವಿನಿಂದ ಮುಕ್ತವಾದ, ನೋವಿನ ಹೋರಾಟವೇ ಇಲ್ಲದ - ಯಾವುದೇ ಯಶಸ್ವೀ ಬದುಕುಂಟೇ ? ಬದುಕಿನ ಕಾಗುಣಿತ ಕಲಿಸುವ ಶಿಕ್ಷಣದ ಕೊರತೆಯೇ ಹಲವಾರು ಸಾಮಾಜಿಕ ಅನಿಷ್ಟಗಳಿಗೆ ಮೂಲ ಹೇತು ಎಂದೂ ಅನ್ನಿಸುವುದಿಲ್ಲವೆ? 

ಯಾವುದೇ ಸೂತ್ರದ ಅಳವಿಗೆ ಸಿಗದ ಸ್ವಚ್ಛಂದ ಬದುಕು ಸುಸೂತ್ರವಾಗುವುದಾದರೂ ಹೇಗೆ ? ಕರ್ತವ್ಯದ ಗೊಡವೆಗೇ ಹೋಗದೆ, ಕೇವಲ ಹಕ್ಕಿನ ಪ್ರತಿಪಾದನೆ ಮಾಡುವ ಧಾರ್ಷ್ಟ್ಯದ ಶಿಕ್ಷಣ ಪಡೆದಿರುವ ಇಂದಿನ ಒಂದಿಷ್ಟು ಮಕ್ಕಳು  " ನನ್ನನ್ನು ಕೇಳಲು ನೀನ್ಯಾರು ?’  ಎಂದು - ವ್ಯವಸ್ಥಿತವಾಗಿ  ಜಗಳ ಕಾಯುವ  ಸರ್ವಾಂಗೀಣ ತರಬೇತಿ  ಪಡೆಯುತ್ತಿದ್ದಾರೆ. ಕರ್ತವ್ಯಗಳನ್ನು ನೆನಪಿಸುವುದೂ  ಶೋಷಣೆ ಎಂದಾಗಿ ಹೋಗಿದೆ. ಪಾಶ್ಚಾತ್ಯರಿಂದ ಏನನ್ನು- ಎಷ್ಟು ಕಲಿಯಬೇಕು ಎಂಬ ಪರಿಜ್ಞಾನವಿಲ್ಲದ ತರಬೇತುದಾರರು ಮತ್ತು ಏನನ್ನು - ಹೇಗೆ - ಎಲ್ಲಿ ಕಲಿಯುತ್ತಿದ್ದಾರೆಂದು ಬಿಲ್ ಕುಲ್ ಗಮನಿಸದ ಹೆತ್ತವರು ಒಟ್ಟಾಗಿ, ನಮ್ಮ ಮುಂದಿನ  ಇಡೀ ಪೀಳಿಗೆಯನ್ನೇ ಕುರೂಪಗೊಳಿಸುತ್ತ ಚೆಂದ ನೋಡುತ್ತಿದ್ದಾರೆ.

"ಕಿತ್ತೂರು ಚೆನ್ನಮ್ಮ" ಅಂದರೆ - "ಪಕ್ಕದ ಮನೆಯ ಕೆಲಸದವಳಾ ? " ಎಂದು ಕೇಳುವ ಇಂದಿನ ಪೀಳಿಗೆಯು ನಮ್ಮ ಪುರಾಣ ಇತಿಹಾಸವನ್ನು ಓದಿ ತಿಳಿಯುವುದು ಬಹಳಷ್ಟಿದೆ. ಹೊಡೆದಾಡಿಕೊಳ್ಳುವುದನ್ನೇ ಎದ್ದೂಬಿದ್ದೂ ತೋರಿಸುವ ಒಂದಿಷ್ಟು ಮಾಧ್ಯಮಗಳು ಸುದ್ದಿಯ ಹೆಸರಿನಲ್ಲಿ ಹೆಸರು ಮಾಡುತ್ತ ಏನನ್ನು ಸಿದ್ಧಿಸಲು ಹೊರಟಿವೆಯೋ ಗೊತ್ತಿಲ್ಲ. ಶುದ್ಧತೆಯನ್ನು ವಿಕ್ರಯಕ್ಕಿಟ್ಟಂತಿದೆ. ಯಾರನ್ನು ನಂಬುವುದು, ಏನನ್ನು ನಂಬುವುದು ಎಂಬ ಗೊಂದಲದ ಸನ್ನಿವೇಶ ತುಂಬಿಕೊಂಡಿದೆ. ಮುಕ್ತವಾಗಿ ಭಿಕ್ಷೆ ನೀಡುವುದಕ್ಕೂ ಹಿಂಜರಿಯುವ ಸ್ಥಿತಿ ನಿರ್ಮಾಣವಾಗಿದೆ. ಎಲ್ಲರನ್ನೂ ಸಂಶಯದಿಂದಲೇ ನೋಡಬೇಕಾದ ಅವ್ಯಕ್ತ ಭಯ ಹುಟ್ಟಿದೆ. ಪ್ರಾಮಾಣಿಕತೆಯೆಂಬುದು ನಗೆಪಾಟಲಾಗುತ್ತಿದೆ. ಶಿಕ್ಷಣ ಎಲ್ಲಿ ಸೋತಿದೆ ? ಎಲ್ಲೋ ಕಳೆದು ಹೋಗಿದೆಯೇ ?

ಗುರುಹಿರಿಯರನ್ನು ಗೌರವಿಸುವುದು...ಅನುಭವವೆಂಬ ಜೀವನ ಪಾಠಕ್ಕೆ ಪೂರ್ಣ ಶರಣಾಗುವುದು ಏಕೆ ಮತ್ತು ಹೇಗೆ  ಎಂದು ನಮ್ಮ ಮಕ್ಕಳಿಗೆ ಮನದಟ್ಟು ಮಾಡಿಸುವುದು ಬೇಡವೆ? ಶಿಕ್ಷೆ ಇಲ್ಲದ ಶಿಕ್ಷಣವು ಮುಳುಗುವುದನ್ನು ಮಾತ್ರ ಕಲಿಸಬಹುದು. ಶಿಕ್ಷೆ ಎನ್ನುವುದು ಲೈಫ಼್ ಜಾಕೆಟ್ ಇದ್ದಂತೆ. ಬದುಕಿನ ಮಡುವಿನಲ್ಲಿ ಸಿಗುವ ಸುಳಿಗಳಿರುವ ಸ್ಥಳ ಸನ್ನಿವೇಶಗಳನ್ನು ಬದುಕಿನುದ್ದಕ್ಕೂ ಮರೆಯದಂತೆ memoryಯಲ್ಲಿ save ಮಾಡಿಕೊಳ್ಳುವ ತಂತ್ರಾಂಶವೇ ಹಿತಮಿತದ ಶಿಕ್ಷೆ. ಸಮರ್ಥ ಗುರುವೊಬ್ಬ ಶಿಕ್ಷೆಯ  dosage ನ್ನು ಸರಿಯಾಗಿಯೇ ನಿರ್ಧರಿಸಬಲ್ಲ. ಸಮರ್ಥ ಗುರುವಿನ ಆಯ್ಕೆಯಲ್ಲಿಯೇ ನಾವು ಸೋತಿದ್ದರೆ ಅದಕ್ಕೆ ಶಿಕ್ಷಣದ ಸ್ವರೂಪವನ್ನು ವಿರೂಪಗೊಳಿಸಿ, ಹೊಸಯುಗದ ಹೆಸರಿನಲ್ಲಿ ಅಡ್ಡದಾರಿ ಹಿಡಿಯುವುದು ಪರಿಹಾರವಲ್ಲ. ಅದರ ಅಗತ್ಯವೂ ಭಾರತ ದೇಶಕ್ಕೆ ಬಂದಿಲ್ಲ. ಶಿಕ್ಷಣದ ಬಲಿಷ್ಠ ಪರಂಪರೆಯುಳ್ಳ ನಮ್ಮ ದೇಶದ  ಇಂದಿನ  ಶಿಕ್ಷಣವು, ಪರದೇಶೀ ಫ಼್ಯಾಶನ್ನಿನ ಹಿಂದೆ ಬಿದ್ದು ನಮ್ಮ ನೆಲದ ಅಮೂಲ್ಯ "ಗುರುಪದ್ಧತಿ"ಯ  ಉತ್ತಮಾಂಶಗಳನೆಲ್ಲ ಬದಿಗೆ ಸರಿಸಿ ಇಟ್ಟಿದೆ. ವಿದ್ಯಾ ಸಂಸ್ಕಾರ ಪಡೆಯುವಾಗ ದಯೆ ಕರುಣೆಗಳೆಲ್ಲವೂ ಹಿಂದೆ ಸರಿಯಲೇಬೇಕು. ಶಿಸ್ತು ಎಂಬುದು ವಿದ್ಯೆಯ ಆಧಾರ ಸ್ತಂಭ. ವಿದ್ಯಾರ್ಥಿದೆಸೆ ಎಂದರೆ ಗೌರವ ಕೊಡುವುದನ್ನು ಕಲಿಯುವ ಕಾಲ. ಪ್ರತಿಯಾಗಿ ತುಂಬು ಮನಸ್ಸಿನಿಂದ ಗುರುವು ನೀಡುವ ಜ್ಞಾನವನ್ನು ಪಡೆದುಕೊಳ್ಳುವ ಕಾಲ. ಆದರೆ ಪರಿಸ್ಥಿತಿ ಹಾಗಿಲ್ಲ. ಗುರು ಗುರುವಿನಂತಿಲ್ಲ. ಶಿಷ್ಯ ಶಿಷ್ಯನಂತೆಯೂ ಇಲ್ಲ. ಹೆತ್ತವರು - ಮಕ್ಕಳ ಸಂಬಂಧಗಳೂ  - "ಹಲೋ ಹಲೋ" ಮಟ್ಟಕ್ಕೆ ಇಳಿದಿದೆ. ಹಕ್ಕುಗಳ ಅಡಾವುಡಿಯು ಊರೆಲ್ಲಾ ತುಂಬಿ, ಈಗ ಮನೆಮನೆಯ ಹೊಸ್ತಿಲೊಳಗೂ ತುಂಬುತ್ತಿದೆ. ತಂದೆಯೊಬ್ಬ ಸಕಾರಣವಾಗಿ ತನ್ನ ಮಗುವಿನ ಹಿತದೄಷ್ಟಿಯಿಂದ ಶಿಕ್ಷಿಸಿದರೆಆ ಮಗುವು, ತನ್ನ ತಂದೆಯ ಮೇಲೇ ಕ್ರಿಮಿನಲ್ ಪ್ರಕರಣ ದಾಖಲಿಸುವಂತಹ ಪ್ರಸಂಗಗಳು ಈಗೀಗ ಭಾರತ ದೇಶದಲ್ಲಿಯೂ ಬಯಲಾಗುತ್ತಿದೆ. ಮೌಲ್ಯಗಳ ಅರಿವು ಮೂಡಿಸದ ಇಂದಿನ ಶಿಕ್ಷಣವು ನಮ್ಮನ್ನು ಎಲ್ಲಿಗೆ ಕೊಂಡೊಯ್ಯುತ್ತಿದೆ ? ಕಾನೂನನ್ನೇ ಕೊರೆದು ಸ್ವಚ್ಛಂದ ದಾರಿ ಕಂಡುಕೊಳ್ಳುವ ಅಥರ್ವಣ ವಿದ್ಯೆಯತ್ತ ತಳ್ಳುತ್ತಿದೆಯೇ?



ಇಷ್ಟೇ ಅಲ್ಲ  "ಬಾಲಕಿಯ ಮೇಲೆ ಅತ್ಯಾಚಾರ ನಡೆಯಿತು " ಎಂದು ಮಕ್ಕಳಿಂದ ಸುಳ್ಳು ಹೇಳಿಸಿ, ಆ ಮಗುವಿನ ಹೆತ್ತವರ ಉಸ್ತುವಾರಿಯಲ್ಲಿಯೇ ಹೆದರಿಸಿ, ಹಣ ಮಾಡುವ ಧಂದೆಗೆ ಓನಾಮವಾಗಿದೆ ! ಶಿಕ್ಷಣದ ವ್ಯಾಪಾರವನ್ನು ಹತ್ತಿರದಿಂದ ಕಾಣುತ್ತಿರುವ ಮಕ್ಕಳು ಮತ್ತು ಸಮಾಜ ಒಟ್ಟಾರೆಯಾಗಿ ಇಡೀ ಬದುಕನ್ನೇ ವ್ಯಾಪಾರ ವ್ಯವಹಾರದ ರಂಗಸ್ಥಳವಾಗಿ ಪರಿವರ್ತಿಸಿಕೊಳ್ಳುತ್ತಿವೆ. ಇಂತಹ ಒಂದೊಂದು ಘಟನೆಯೂ ಭವಿಷ್ಯದಲ್ಲಿ ಸಂಭವಿಸಬಹುದಾದ ಅನಾಹುತಗಳ ಪೂರ್ವ ಲಕ್ಷಣಗಳು. ಸಮಾಜವಿರೋಧೀ ಶಕ್ತಿಗಳಿಗೆ ಹುಲುಸಾದ ಆಡುಂಬೊಲವನ್ನು ಒದಗಿಸುವಂತೆ ಕಾಣುತ್ತಿದೆಯೇ !

"ಹೆಣ್ಣಿಗೆ ಲಜ್ಜೆಯೇ ಆಭರಣ! " ಹಾಗೆಂದು ಹೇಳಿ ನೋಡಿ...ನಿಮ್ಮನ್ನು ಕಚ್ಚಿ ಚೂರುಮಾಡಿ ಬಿಸಾಡುತ್ತಾರೆ. ನಾಚಿಕೆಯುಳ್ಳ ಹೆಣ್ಣಿಗೆ, ಮರ್ಯಾದೆಯ ವ್ಯಾಖ್ಯೆಯಂತೆ  ಡೀಸೆಂಟ್ ಆಗಿ ಗದ್ದಲ ಮಾಡದೆ ಬದುಕುತ್ತಿರುವವರಿಗೆ ಈಗ ಯಾವ ಕಿಮ್ಮತ್ತೂ ಇಲ್ಲವೇನೋ...ಅನ್ನಿಸುವುದೂ ಇದೆ. ರಸ್ತೆಯಲ್ಲಿ ನಿಂತುಕೊಂಡು ಎರಡೂ ಕಾಲನ್ನೆತ್ತಿ ಒದೆಯುತ್ತ, ಸೊಂಟದ ಪಟ್ಟಿಯನ್ನು ಕಿತ್ತು  ಅವರಿವರನ್ನು ಥಳಿಸುತ್ತ, ಅಂತಹ ಚಿತ್ರೀಕರಣವನ್ನು (ಪೂರ್ವ ಯೋಜಿತವೇ ಎಂಬ ಸಂಶಯ ಬಂದರೂ ಅದನ್ನೂ ಸ್ತ್ರೀ ವಿರೋಧಿ ಚಿಂತನೆಯೆಂದಾರು) ಆಧರಿಸಿ ದಿನಗಟ್ಟಲೆ  ನಡೆಸುವ  ಚರ್ವಿತಚರ್ವಣ ಚರ್ಚೆಗಳ ಪ್ರಧಾನ ಪಾತ್ರಧಾರಿಗಳಿಗೆ ಕೆಟ್ಟ ಪ್ರಚಾರ, ಪ್ರಶಸ್ತಿ, ಮುಂಬಡ್ತಿ(?) ಯೂ ಸಿಗುತ್ತದಂತೆ! ಸಾರಾಂಶ ಏನೆಂದರೆ, "ರಸ್ತೆಯಲ್ಲಿ ಕ್ಯಾರೇಎನ್ನುತ್ತ  ಒದೆಯಿರಿ, ಥಳಿಸಿರಿ, ರಸ್ತೆಯನ್ನು ರಣರಂಗ ಮಾಡಿ" ಎಂಬ ಸಂದೇಶವನ್ನು ಸ್ತ್ರೀ ಜಗತ್ತಿಗೆ ನೀಡುತ್ತಿರಬಹುದೇ? ಇದೂ ಓಲೈಕೆಯೆಂಬ ಹಿಂಸೆಯ ವೈಭವೀಕರಣವಲ್ಲವೇ? ಸ್ತ್ರೀಯರನ್ನು ಉಗ್ರಗಾಮಿಗಳನ್ನಾಗಿಸಿ, ಗುರಾಣಿಯಂತೆ ಅವರ ಉಪಯೋಗಪಡೆಯುವ ಹುನ್ನಾರವೇ? ಅಥವ ತೂಕಡಿಸಿ ಬೀಳುತ್ತಿರುವ ಅಣ್ಣ ತಮ್ಮಂದಿರ ಸಗಟು ಬೇಜವಾಬ್ದಾರಿಯೇ?

ಎಲ್ಲರಿಗೂ ಎಲ್ಲ ಕಾಲಕ್ಕೂ ಉಗ್ರತನದಿಂದ ಗೆಲುವು ಸಿಗಬಹುದೇ? ಎದುರು ಪಕ್ಷವು ಪ್ರತೀಕಾರಕ್ಕೆ ಪ್ರಾರಂಭಿಸಿದರೆ ಆಗ ಏನಾಗಬಹುದು? ಪ್ರತೀ ಮನೆಯ ಎದುರಿನಲ್ಲೂ ಪೋಲೀಸರನ್ನು ಇಡುವುದು ಸಾಧ್ಯವೇ? ಒಬ್ಬ ಪೋಲೀಸ್ - ಎಷ್ಟು ಜನರನ್ನು ಕಾದಾನು?

ಸ್ವಂತ ರಕ್ಷಣೆ ಎಂಬ ಪದಕ್ಕೆ ಇಂದು ನೀಡುತ್ತಿರುವ ಸೌಲಭ್ಯಗಳ ಪಟ್ಟಿ (ಮೆಣಸಿನ ಹುಡಿ...ಇತ್ಯಾದಿ..) ನೋಡಿದರೆ, ಇವು ಯಾವುವೂ ಪೂರ್ಣರಕ್ಷಣೆಯ ಸಾಧನಗಳಲ್ಲ ಎಂಬುದು ಸ್ತ್ರೀಯರಿಗೆ ಅರ್ಥವಾಗಬೇಕು. ದೈಹಿಕವಾಗಿ ಗಂಡಿಗಿಂತ ದುರ್ಬಲವಾಗಿರುವ ಪ್ರಕೃತಿ ಹೆಣ್ಣಿನದು; ಮಾತ್ರವಲ್ಲ - ಮನುಷ್ಯ ಜಾತಿಯ ಹೆಣ್ಣಿಗೆ ಕ್ರೌರ್ಯವೆಂಬುದು ಒಗ್ಗುವುದಿಲ್ಲ. ಮೆತ್ತಿಕೊಂಡ ತನ್ನದಲ್ಲದ ಗುಣವೆಂಬ ಬಣ್ಣವು ಶಾಶ್ವತವಲ್ಲ ಎಂಬ ಸತ್ಯವನ್ನು ಒಪ್ಪಬೇಕು. ಆದರೆ ಬೌದ್ಧಿಕ ಸ್ಪರ್ಧೆಯಿಂದ ಹೆಣ್ಣನ್ನು ಯಾರೂ ಹಿಂದೆ ತಳ್ಳುವುದು ಸಾಧ್ಯವಿಲ್ಲ. ಬೌದ್ಧಿಕವಾಗಿ ಎಷ್ಟೋ ಬಾರಿ ಗಂಡಿಗಿಂತ ಒಂದು ಹೆಜ್ಜೆ ಮುಂದೆಯೇ ಇರುವ ಹೆಣ್ಣು, ಬುದ್ಧಿ ಸಂಬಂಧಿತ ಕ್ಷೇತ್ರಗಳಲ್ಲಿ ಹೆಚ್ಚು ಸುರಕ್ಷಿತವಾಗಿ ತನ್ನ ಪ್ರತಿಭೆ ತೋರಬಹುದು. ಈ ಹಂತದಲ್ಲೂ "ಎಚ್ಚರ"ದ ನಡೆ ನುಡಿಯ ಕ್ರಿಯಾಶೈಲಿಯನ್ನು ಬೆಳೆಸಿಕೊಂಡಾಗ ಮಾತ್ರ ಸ್ವರಕ್ಷಣೆಯ ನೆಮ್ಮದಿ ಕಾಣುವುದು ಸಾಧ್ಯ. ಬಾಹ್ಯ ರಕ್ಷಣೆಯನ್ನೇ ನಂಬಿ ಹಾರುವ - ಹೋರುವಪ್ರವೃತ್ತಿಯಿಂದ ಯಾವ ಹೆಣ್ಣಿಗೂ ಒಳಿತಾಗದು. ಪ್ರತಿಯೊಂದು ಕ್ರಿಯೆಗೂ ಪ್ರತಿಕ್ರಿಯೆ ನೀಡುತ್ತ ಬಂದರೆ - ಬಡ್ಡಿ ಬಿಡಿ ; ಅಸಲೂ ಇಲ್ಲದಂತಾದೀತು. ಅಹಂಕಾರಕ್ಕೆ ಉದಾಸೀನಕ್ಕಿಂತ ದೊಡ್ಡ ಮದ್ದೇ ಇಲ್ಲ.

ಈಗ ಏನಾಗಿದೆ ಅಂದರೆ, ರೌಡಿಗಳು ಉಪಯೋಗಿಸುವ ಭಾಷೆ ಭಾವ ಚೇಷ್ಟೆಗಳನ್ನು ಕೆಲವು ಸ್ತ್ರೀಯರು ಪ್ರಯೋಗಿಸತೊಡಗಿದ್ದಾರೆ. ಅರ್ಧ ರಾತ್ರಿಯಲ್ಲಿ ನಾವು ಒಬ್ಬೊಬ್ಬರೇ ಓಡಾಡುತ್ತೇವೆ.. ಏನೀಗ? ಏನು ಮಾಡುತ್ತೀರಿ? ನಮಗೂ ಸ್ವಾತಂತ್ರ್ಯವಿದೆ. ಕೇಳಲು ನೀವ್ಯಾರು?" ಇತ್ಯಾದಿ ಡುರಕಿ ಹಾರಿಸುತ್ತ, ಅದೇ ಉಸಿರಿನಲ್ಲಿ ನಮಗೆ ರಕ್ಷಣೆ ಕೊಡುವುದು ನಿಮ್ಮ ಕರ್ತವ್ಯಎಂದೂ ವಿರೋಧಾಭಾಸದ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಹೀಗೆ ಸ್ತ್ರೀಯರ ಮುಖವಾಣಿಯಂತೆ ಬಳಕೆಯಾಗುತ್ತಿರುವ ಕೆಲವು ಗಟ್ಟಿಗಿತ್ತಿ ವಿದ್ವನ್ಮಣಿಗಳುಬಹಿರಂಗ ಸವಾಲನ್ನೂ ಹಾಕಿದಂತೆ ಕಾಣುವುದಿದೆ. (ತಮ್ಮ ಸ್ವರಕ್ಷಣೆಯನ್ನು ಮಜಬೂತಾಗಿ ಮಾಡಿಕೊಂಡು, ಇತರ ಮುಗ್ಧ ಸ್ತ್ರೀಯರನ್ನು ಎತ್ತಿ ಕಟ್ಟುತ್ತಿದ್ದಾರೆಯೆ?) ಇಂತಹ ಸವಾಲುಗಳಿಗೆ ಉತ್ತರವಾಗಿ, ಕೆಲವು ಪುರುಷಶ್ರೇಷ್ಠರೆಂದು ತಮಗೆ ತಾವೇ ಅಂದುಕೊಂಡಿರುವವರು "ನಾವು ನಿಮ್ಮನ್ನು ಹಾಡಹಗಲೇ ಹೊತ್ತೊಯ್ದು ಪೀಡಿಸುತ್ತೇವೆ" ಎಂದು ಪ್ರತಿಜ್ಞೆ ಮಾಡುತ್ತಾರೆ. (ಇಂತಹ ಮೂಢರಿಗೆ ಬಲಿಪಶುವಾಗುವುದು ಯಾವುದೋ ಬಡಪಾಯಿ!) ಎಲ್ಲೆಲ್ಲೂ ಪೌರುಷದ ಅಬ್ಬರ! ಸ್ತ್ರೀಯರು ತಮ್ಮ ಓಟವನ್ನು ಕ್ಷಣಕಾಲ ನಿಲ್ಲಿಸಿ, ನಾವೆಲ್ಲಿದ್ದೇವೆ ಎಂದು ನೋಡಿಕೊಳ್ಳಬೇಕಾದ ಕಾಲ ಬಂದಿದೆ. ಶಬ್ದಗಳನ್ನು ಒಡೆದು ಒಡೆದು ಕಟ್ಟುತ್ತ, ನವ್ಯಾರ್ಥಗಳನ್ನು ಅನ್ವೇಷಿಸುತ್ತ, ಮಾಧ್ಯಮಗಳಲ್ಲಿ ಗಂಟೆಗಟ್ಟಲೆ ಗಂಟಲು ಕೆರೆದುಕೊಳ್ಳುವ ಒಣಚರ್ಚೆಗಳಿಂದಲೂ ಸ್ತ್ರೀಯರು ತಮ್ಮನ್ನು ತಾವೇ ರಕ್ಷಿಸಿಕೊಳ್ಳಬೇಕಾಗಿದೆ. ಮಾತಿನಲ್ಲೇ ಮನೆ ಕಟ್ಟುತ್ತ "ಗೌರವಧನ" ದಿಂದ ಗೌರವ ಪಡೆದು ಬದುಕು ಸಾಗಿಸುತ್ತಿರುವ ಇಂತಹ "ಮುಖವಾಣಿ" ಗಳನ್ನು ನಾವು ಎಷ್ಟು ಸ್ವೀಕರಿಸಬೇಕು ಎಂಬ ಸ್ಪಷ್ಟತೆಯೂ ಬೇಕಾಗಿದೆ. ಈ ಎಲ್ಲ ಬವಣೆಗಳಿಂದ ಪಾರಾಗಿ ನಿತ್ಯದ ಬದುಕನ್ನು ಮೌನವಾಗಿ ಸಹನೆಯಿಂದ ಸುಂದರವಾಗಿ ಕಟ್ಟುತ್ತಿರುವ ಸ್ತ್ರೀಯರು ನಿಜವಾಗಿಯೂ "ಗಟ್ಟಿಗಿತ್ತಿ"ಯರಲ್ಲವೇ ?

ಸ್ವಾತಂತ್ರ್ಯಕ್ಕೆ ಬಿಡುಬೀಸಾದ ಸ್ವಚ್ಛಂದತೆಯೆಂಬ ಅರ್ಥ ಮಾಡಬಾರದು. ನಿಶ್ಚಯವಾಗಿ - ಧೈರ್ಯ ಎಂಬುದು ಬೇಕು; ಜೊತೆಗೆ ವಿವೇಕವೂ ಬೇಕು. ನಮ್ಮ ವರ್ತನೆಗಳ ತತ್ಪರಿಣಾಮಗಳ ಚಿಂತೆಯೂ ಬೇಕು. ಸುಮ್ಮನೆ ಸದ್ದುಗದ್ದಲ ಮಾಡಿ ಏನು ಪ್ರಯೋಜನ ?

ಶೋಷಣೆ ಅಂದರೆ - "ಶೋಷಣೆ". ಅಷ್ಟೆ. ಹೆಣ್ಣಿನ ಶೋಷಣೆ ಮಾತ್ರ ನಿಜವಾದ ವೇದನೆ; ಉಳಿದ ವೇದನೆಗಳು ನಗಣ್ಯ ಎಂದಾಗಬಾರದು. ಗಂಡಿನ ಶೋಷಣೆಯಲ್ಲೂ ವೇದನೆ ಇದೆ. ಹೆಚ್ಚು ಶೋಷಣೆ, ಕಡಿಮೆ ಶೋಷಣೆ, ನಿನ್ನೆ ಮೊನ್ನೆಯ ಶೋಷಣೆ, ಶತಶತಮಾನದ ಶೋಷಣೆ ಮತ್ತು ಅದಕ್ಕಾಗಿ ಅಧಿಕೃತವಾಗಿ ನಡೆಸುತ್ತಿರುವ ಪ್ರತಿಶೋಷಣೆ - ಮುಂತಾದ ಶಾಬ್ದಿಕ ಶೋಷಣೆಗೆ ಇಳಿದಿರುವ ಕ್ರೂರ ಮನಸ್ಸುಗಳಿಂದ ಪಾರಾಗುವುದು ಹೇಗೆ ಎಂಬ ವಿಚಾರವು ಮಾತ್ರ ಇಂದಿಗೆ ಹೆಚ್ಚು ಪ್ರಸ್ತುತ.

"ನಮ್ಮತನ"ವನ್ನು ಉಳಿಸಿಕೊಳ್ಳುವ ಇಚ್ಛೆಯೆಂಬುದು ಹೆಣ್ಣಿಗೆ ಇರುವುದೇ ಹೌದಾದರೆ ಹೆಣ್ತನ ಉಳಿಸಿಕೊಳ್ಳಲಿ. ಹೆಣ್ಣು ಹೆಣ್ಣಿನಂತೇ ಇರಲಿ; ಗಂಡು ಗಂಡಿನಂತೇ ಇರಲಿ. ಅಸಹಜಗಳ ವೈಭವೀಕರಣದಿಂದ ವಸ್ತುಸ್ಥಿತಿ ಬದಲಾಗಲಾರದು; ವಿಕೃತಿ ಹೆಚ್ಚಬಹುದು - ಅಷ್ಟೆ.

ಹೆಣ್ಣು ನೌಕರಿ ಮಾಡಿದರೆ ಗಂಡಾಗುವುದಿಲ್ಲ. ಗಂಡನಿಗೆ ಹೊಡೆದರೂ ಗಂಡಾಗುವುದಿಲ್ಲ. ಎಷ್ಟೇ ಕೂಗಾಡಿದರೂ ಗಂಡಾಗುವುದಿಲ್ಲ. ಮಂಗಳನನ್ನು ಮುಟ್ಟಿ ಬಂದರೂ ಗಂಡಾಗುವುದಿಲ್ಲ. ಅಂದ ಮಾತ್ರಕ್ಕೇ ಹೆಣ್ಣು ಕೀಳಾಗುವುದೂ ಇಲ್ಲ; ಗಂಡು ಮೇಲಾಗುವುದೂ ಇಲ್ಲ. ಅನಾರೋಗ್ಯಕರ ಸ್ಪರ್ಧೆಯಿಂದ ಸಮಾಜವು ಕಲುಷಿತವಾಗಬಹುದು; ದೀರ್ಘಕಾಲದವರೆಗೆ ದುಷ್ಪರಿಣಾಮವೆಂಬ ಹೊರೆಯನ್ನೂ ಹೊರಬೇಕಾಗಬಹುದು. ವಿಕಸಿತ ನಾಗರಿಕತೆಯನ್ನು ಮುಕ್ಕಾಗಿಸುವುದು ಬೇಡ.

ಬದುಕು ಎಂದರೆ Missed Call ಅಲ್ಲ. ಆದರೆ ಬದುಕಿನ Call ಮಾತ್ರ Miss ಆಗಬಾರದು; Miss ಮಾಡಿಕೊಳ್ಳಬಾರದು. ಸ್ವಚ್ಛ ಚಿಂತನೆಗಳಿಗೆ ಮುಕ್ತರಾಗಿರಬೇಕು. ನೇತ್ಯಾತ್ಮಕ ವಿಷಯಗಳ ಗೊಡವೆಯನ್ನೇ ಬಿಡಬೇಕು. ಸ್ತ್ರೀತ್ವದ ಒಂದೊಂದು ಕೋಟೆಯೂ ಭದ್ರವಾಗಿರಲು ಕೋಟೆಯ ಬಾಗಿಲಿನ ಕೀಲಿ ಕೈ ನಮ್ಮಲ್ಲೇ ಇರಬೇಕು. "ಶಕ್ತಿ ಸ್ವರೂಪಿಣಿ" ಎಂದು ಉಬ್ಬಿಸಿದರೆ ಅದರ ಅಂತರಾರ್ಥ ಮತ್ತು ವ್ಯಾಪಕ ಅರ್ಥವನ್ನು ತಿಳಿದುಕೊಳ್ಳುವಷ್ಟಾದರೂ ಪ್ರಬುದ್ಧತೆಯನ್ನು ಬೆಳೆಸಿಕೊಳ್ಳುವುದಕ್ಕೆ ನಮ್ಮ ಶಿಕ್ಷಣವೂ ಬೆಂಬಲಿಸಬೇಕು. ಇಂದಿನ ಶಿಕ್ಷಣ ರಂಗವು ದಿಕ್ಕು ದೆಸೆಯಿಲ್ಲದಂತಾಗಿ ಹಳಿ ತಪ್ಪಿದೆ. ಓದುವುದು ಯಾಕೆ? ಏನನ್ನು ಓದಬೇಕು? ಯಾರಿಗೂ ಗೊತ್ತಿಲ್ಲ. ಪ್ರತೀ ಮಗುವಿನ ಅಭಿರುಚಿಯನ್ನು ಅರಿತು ನೀರೆರೆಯುವವರೂ ಇಲ್ಲ. ಸಬಲ ವ್ಯಕ್ತಿತ್ವ ನಿರ್ಮಾಣಕ್ಕೆ ಪೂರಕವಾದ ಶಿಕ್ಷಣವಾದರೂ ಉಂಟೇ? ಗುಣಪ್ರೇರಕವಾದ ಶಿಕ್ಷಣ ಬೇಡವೆ? ಹಣ ಸಂಪಾದನೆಯ ಗುರಿ ಹೊತ್ತ ಶಿಕ್ಷಣ ಒಂದೇ ಸಾಕೆ? ಮೌಲ್ಯಗಳನ್ನೆಲ್ಲ ಕೆಟ್ಟ ರಾಜಕೀಯದೊಂದಿಗೆ ಪಾಣಿಗ್ರಹಣ ಮಾಡುತ್ತ ಹೋದರೆ ಗತಿಯೇನು? ಮಕ್ಕಳ ಮನಸ್ಸನ್ನು ಅರಳಿಸಬೇಕಾದ ನೆಲ - ನೆಲೆಗಳಲ್ಲಿ, ಮನಸ್ಸನ್ನು ಕೆರಳಿಸುವ ಸತತ ಹುನ್ನಾರಗಳು ನಡೆಯುತ್ತಿದ್ದರೆ ಭದ್ರ ಭವಿಷ್ಯವು ನನಸಾಗುವುದಾದರೂ ಹೇಗೆ? ತಾಂತ್ರಿಕ ಯಾಂತ್ರಿಕ ಉನ್ನತಿಯಿಂದ ಯಂತ್ರ ಮಾನವರುಗಳನ್ನೇ ನಿರ್ಮಿಸುತ್ತ, ಭಾವನಾತ್ಮಕವಾದ ಸೂಕ್ಷ್ಮ ಭಾವ, ಮಾನವೀಯ ಪ್ರವೃತ್ತಿಗಳನ್ನು ಚಿವುಟುತ್ತ ಹೋಗಿ, ಕೊನೆಯಲ್ಲಿ, ಹೆಣ್ಣು-ಗಂಡುಗಳ ಕುರಿತು ದಿನವಿಡೀ ಆಡಿಕೊಂಡು, ಗಂಟಲು ಹರಿದುಕೊಂಡು ಸಾಧಿಸುವುದಾದರೂ ಏನು ?

ಈಗೂ ತನ್ನ ಮಕ್ಕಳು, ತನ್ನ ಕುಟುಂಬವೆಂದು ಹಂಬಲಿಸುತ್ತ ಸ್ವಗೃಹದ ದೇವತೆಯಂತೆ ಬದುಕನ್ನು ಪ್ರೀತಿಯಿಂದ ಪೋಷಿಸುತ್ತಿರುವ ಲಕ್ಷಾಂತರ ಸ್ತ್ರೀಯರಿದ್ದಾರೆ. ಅಂತಹ ಸ್ತ್ರೀರತ್ನಗಳಿಂದಲೇ ಎಷ್ಟೋ ಬದುಕುಗಳು ಸ್ವರ್ಗವಾಗಿವೆ; ಆಗುತ್ತಿವೆ. ತನ್ನ ಸುತ್ತಲಿನ ಬದುಕುಗಳನ್ನೂ ಸಹನೀಯವಾಗಿಸುತ್ತ ನಿಃಸ್ವಾರ್ಥ "ಸೇವೆ" ನಡೆಸುತ್ತಿರುವ ಸ್ತ್ರೀಯರನ್ನು ದೇವತೆಯೆಂದರೆ ಯಾರೂ ಚಕಾರವೆತ್ತಲಾರರು; ಬದಲಿಗೆ ಕೈ ಮುಗಿದಾರು. ಸಹನೆ, ತ್ಯಾಗ, ಪ್ರೀತಿಯನ್ನೇ ಉಂಡು ಉಣಿಸುತ್ತಿರುವ ಇಂತಹ ಕಷ್ಟ ಸಹಿಷ್ಣು ಸ್ತ್ರೀಯರನ್ನೂ ಘರ್ಷಣೆಗೆ ಪ್ರಚೋದಿಸುವ ಅನುದ್ದೇಶಿತ ಹುನ್ನಾರವು ಈಗ, ಸದ್ದುಗದ್ದಲದೊಂದಿಗೆ ನಡೆಯುತ್ತಿದೆ. ಕಷ್ಟವಿಲ್ಲದೆ ಸುಖ ಬಾಚುವ, ಅವರ ಟೋಪಿ ತೆಗೆದು ಇವರಿಗೆ ಹಾಕುವ ಬಗೆಬಗೆಯ ದಾರಿಗಳನ್ನು ಪರೋಕ್ಷವಾಗಿ, ಸೋದಾಹರಣವಾಗಿಯೂ ನಿರೂಪಿಸಲಾಗುತ್ತಿದೆ. ದಿನಕ್ಕೊಂದು ನಾಟಕ ಪ್ರದರ್ಶನವೂ ನಡೆಯುತ್ತಿದೆ. ಬುದ್ಧಿ ಹೇಳುವ ಅಪ್ಪ ಅಮ್ಮ ಅಜ್ಜ ಅಜ್ಜಿ ಅತ್ತೆ ಮಾವ- ಯಾರೂ ಬೇಡವಾಗುತ್ತಿದೆ; ಅವರಿಗೆಲ್ಲ "OLD FURNITURE" ನ ಸ್ಥಾನಮಾನ ಕೊಟ್ಟಾಗಿದೆ.  ಬುದ್ಧಿ ಜಿಡುಕಾಗಿ ಕಗ್ಗಂಟಾದ ಮೇಲೆ ಕರೆಸಿ, ಬುದ್ಧಿ ಹೇಳುವ ವ್ಯಾಪಾರ ನಡೆಸುವವರಿಗೆ (COUNSELLING) ಸುಭಿಕ್ಷ ಕಾಲ ಬಂದಿದೆ. ಪುರಂದರದಾಸರು ಹೇಳಿದ್ದ ಬುದ್ಧಿಮಾತು ಆಕ್ಷೇಪಾರ್ಹವೆಂದಾಗಿ, ಯಾರ್ಯಾರಿಗೋ ದುಡ್ಡು ಕೊಟ್ಟೇ ಬುದ್ಧಿ ಹೇಳಿಸಿಕೊಳ್ಳುವ ಗ್ರಹಚಾರವೂ ಬಡಿದಾಗಿದೆ; ತನ್ಮೂಲಕ ಬುದ್ಧಿಮಾತಿನ ಮೌಲ್ಯವರ್ಧನೆಯಾಗಿದೆ.

ಗೊಣಗಾಡುತ್ತ ದೂರುತ್ತ ತನ್ನೊಳಗಿನ ಹಿಂಸೆಯನ್ನು ಹಗುರಗೊಳಿಸಿಕೊಳ್ಳುವುದು ಸಾಮಾನ್ಯವಾಗಿ ಗಂಡಸಿನ ಜಾಯಮಾನವಲ್ಲ. ಅದು ಗಂಡಸಿನ ಸಹಜ ಸ್ವಭಾವವಾದರೂ ಒಳಗಿನ ಹಿಂಸೆಯ “ಒತ್ತಿನ ಮೊತ್ತ” ಮಿತಿಮೀರಿದಾಗ "ಸಮಾಜದ್ವೇಷಿ" ಗಂಡು ಸಮಾಜವು ರೂಪುಗೊಳ್ಳುವುದೂ ಅಸಹಜವೇನಲ್ಲ. ಇದರ ಆಂಶಿಕ ಪರಿಣಾಮ ಬಡಿದರೂ ಸಮಾಜಕ್ಕೆ ಒಳ್ಳೆಯದಾಗುವ ಸಂಭವವಿಲ್ಲ. ಆದುದರಿಂದ ಹೆಣ್ಣು ಗಂಡೆಂದು ಒಡೆದು ಆಳುವ ಚಟವನ್ನು ಇನ್ನಾದರೂ ಬಿಟ್ಟು ಬಿಡುವುದರಿಂದ ಸಮಾಜಕ್ಕೆ ಹಿತವಾದೀತು. ವಿದ್ಯೆಯನ್ನು ಒಡೆದು ಚೂರಾಗಿಸಿ, ಸಮಗ್ರ ಶಿಕ್ಷಣದ ಸಂಪತ್ತನ್ನು ಕಸಿದುಕೊಂಡಾಯಿತು. ಜಾತಿ ಧರ್ಮ ವರ್ಣವೆಂದು ಓಲೈಕೆಯ ವಿಷ ತುಂಬಿ ತರತಮದ ಲೇಪನ ಹಚ್ಚಿ ಸಮಾಜವನ್ನು ಒಡೆದಾಯಿತು. ಕೊನೆಯದಾಗಿ, ಗಂಡು ಹೆಣ್ಣು” ಎಂಬ ವಿಷಯಕ್ಕೆ "ವಿಷ ಲೇಪನ" ನಡೆಸುತ್ತ ವಿಷಸಂತಾನವನ್ನು ಹುಟ್ಟು ಹಾಕಬೇಕೆ? ಈ ಬುದ್ಧಿಗೇಡಿ ಷಡ್ಯಂತ್ರದಿಂದ ಸಮಾಜವು ಎಂತೆಂತಹ ತಲ್ಲಣಗಳಿಗೆ ಒಡ್ಡಿಕೊಳ್ಳಬೇಕಾಗಬಹುದು ಎಂಬ ಕನಿಷ್ಠ ಪ್ರಜ್ಞೆಯನ್ನಾದರೂ ನಾವು ಬೆಳೆಸಿಕೊಳ್ಳುವುದು ಬೇಡವೇ ?

ನಾವು ಸ್ತ್ರೀ ಭಾವಕ್ಕೆ ಹೊಸ ಭಾಷ್ಯ ಬರೆಯುವ ಆಚಾರ್ಯರಾಗುವುದು ಬೇಡ. ನಾಗರಿಕ ಮನುಷ್ಯರಾಗಿ ಪರಸ್ಪರ ನೆರಳು ನೀಡುತ್ತ ಬದುಕಿದರೆ ಸಾಕು. ರಕ್ತಸಿಕ್ತ ಸಮಾಜವನ್ನು ಕಾಣುವ ಮೂರ್ಖ ದುರುಳತನ ((Perversion), ಯಾರಿಗೂ ಹಿತಕರವಲ್ಲ. ಸ್ತ್ರೀಪರವೂ ಬೇಡ; ಪುರುಷಪರವೂ ಬೇಡ. ಬದುಕಿನ ಪರವಾಗಿರೋಣ.

ಈಗ ಸ್ತ್ರೀಯರ ಸಮಸ್ಯೆ ಸವಾಲುಗಳ ಪ್ರತ್ಯೇಕ ಅಧ್ಯಯನ - ಸಂಶೋಧನೆಗಳ ಅಗತ್ಯಕ್ಕಿಂತ ಸಮಗ್ರ ಸಮಾಜದ ಸಮಸ್ಯೆ ಸವಾಲುಗಳನ್ನ ಇಡಿಯಾಗಿ ಚಿಂತಿಸತೊಡಗಿದರೆ ಸಮಸ್ತ ಕುಟುಂಬಕ್ಕೆ ನೆಮ್ಮದಿ ಸಿಗಬಹುದು. ತನ್ಮೂಲಕ ಸಮಾಜವೂ ಸ್ವಸ್ಥವಾಗಿ ಉಳಿಯಬಹುದು. ಅಂತಹ ಸಮಾಜದಲ್ಲಿ ಹೆಣ್ಣು ಗಂಡುಗಳೂ ನಿಸ್ಸಂದೇಹವಾಗಿ ಸ್ವಸ್ಥ ಬಾಳ್ವೆ ನಡೆಸಬಲ್ಲರು ಎಂಬುದು ಪ್ರಾಯೋಗಿಕವಾಗಿ ಸಿದ್ಧವಾದ ಸತ್ಯ.

ಗಂಡು ಹೆಣ್ಣಿನ ಮಧ್ಯೆ ಉದ್ದೇಶಿತವಾಗಿಯೋ ಅನುದ್ದೇಶಿತವಾಗಿಯೋ ಕಡ್ಡಿ ಹಾಕುವ ಕೆಲಸವನ್ನು ಸ್ವಸ್ಥ ಮನಸ್ಸುಗಳು ಮಾಡುವುದಿಲ್ಲ. ಬೇರೆ ಬೇರೆ ಎಂಬ ಪ್ರತ್ಯೇಕತೆಯ ಭಾವನೆಯು ಸಮಷ್ಟಿಯಿಂದ ಮರೆಯಾಗುವಂತಹ ನಡೆ ನುಡಿಯು ಇಂದಿನ ತುರ್ತು ಅಗತ್ಯ. ಇದು ಸಾಧ್ಯವಾದಾಗ ಮಾತ್ರ ಒಂದಾಗಿ ಉಳಿಯುವ ಸದಾಶಯದ ಕ್ರಿಯೆಯು ಸ್ವಯಂ ತತ್ಪರವಾಗತೊಡಗುತ್ತದೆ.


ಆದ್ದರಿಂದ ಎಚ್ಚರ ತಪ್ಪದಿರೋಣ. ಪಕ್ಕದ ಮನೆ ಹೊತ್ತಿ ಉರಿಯುವಾಗ ಬೀಡಿ ಹಚ್ಚಿಕೊಳ್ಳುವ "ಸುಧಾರಕ ವರೇಣ್ಯ"ರಿಂದಲೂ ಎಚ್ಚರದ ದೂರವನ್ನು ಕಾಯ್ದುಕೊಳ್ಳೋಣ. "ನಮ್ಮ ಬಾಳಿಗೆ ನಾವೇ ಶಿಲ್ಪಿ” ಎಂಬುದನ್ನು ನೆಚ್ಚಿ ನಡೆಯೋಣ.

Sunday, November 30, 2014

ಅಂತರಂಗ - ಬಹಿರಂಗ

  ೧೯೭೬ ನೇ ಇಸವಿ ಡಿಸೆಂಬರ್ ೭ನೇ ತಾರೀಕಿನ ಮಂಗಳವಾರ ದಂದು ನಾನು ಅಧಿಕೄತವಾಗಿ ಉದ್ಘೋಷಕಿಯಾಗಿ ಮಂಗಳೂರು ಆಕಾಶವಾಣಿ ಪ್ರವೇಶಿಸಿದಾಗ "ಕಚ್ಚಾ" ಉತ್ಪನ್ನವಾಗಿರಲಿಲ್ಲ. ನನಗೆ ಅದಾಗಲೇ ಇದ್ದ ಸಾರ್ವಜನಿಕ ಬದುಕಿನ ಪೂರ್ವಾನುಭವ ಮತ್ತು ಅಂದಿನ ಆಯ್ಕೆಯ ವ್ಯವಸ್ಥೆಯೂ ಕೂಡ ಬಲಿಷ್ಠವಾಗಿತ್ತು. ಅದಾಗಲೇ ಸಾರ್ವಜನಿಕ ಬದುಕಿನಲ್ಲಿ ಹಾಡು, ಭಾಷಣ, ಹರಿಕಥೆ...ಇತ್ಯಾದಿ ಪ್ರದರ್ಶನ ನೀಡುತ್ತಿದ್ದು ಮೈಸೂರು ಆಕಾಶವಾಣಿಯಲ್ಲಿ ಹರಿಕಥೆಯ ವಿಭಾಗದಲ್ಲಿ ಅದಾಗಲೇ  ನಾನು ಮಾನ್ಯತೆ ಪಡೆದ ಕಲಾವಿದೆಯಾಗಿದ್ದೆ.

  ಆದರೂ ಎಳಸುತನವಿದ್ದ ನನಗೆ - ಕಲಿಯುವುದು ತುಂಬ ಇತ್ತು. ಆಕಾಶವಾಣಿಯ ಭಾಗವಾಗುವ ದೄಷ್ಟಿಯಿಂದ ನೋಡಿದರೆ ನಾನು ಕಚ್ಚಾ ಮಾಲೇ ಆಗಿದ್ದೆ. ಅದಾಗಲೇ ಧ್ವನಿವರ್ಧಕ ಉಪಕರಣದ ಎದುರಿಗೆ ನೂರಾರು ಬಾರಿ ನಿಂತ ಅನುಭವವಿದ್ದರೂ, ಪ್ರಸಾರ ಕಕ್ಷದ ಧ್ವನಿ ವರ್ಧಕದ ಬಳಕೆಗೂ ವೇದಿಕೆಯ ಧ್ವನಿ ವರ್ಧಕದ ಬಳಕೆಗೂ ಸೂಕ್ಷ್ಮ ವ್ಯತ್ಯಾಸವಿತ್ತು. ಆರಂಭದಲ್ಲಿ ಬೆಂಗಳೂರಿನ ವೈದೇಹಿ, ಮಾಲತಿ ಶರ್ಮ ಮುಂತಾದ ನನ್ನ ಹಿರಿಯ ಸಹೋದ್ಯೋಗಿಗಳಿಂದ, ಅನಂತರ ಮಂಗಳೂರಿನ ನನ್ನ ಹಿರಿಯ ಸಹೋದ್ಯೋಗಿ ಶ್ರೀ ಶಂಕರ್.ಎಸ್.ಭಟ್ ಅವರ ಮಾರ್ಗದರ್ಶನದಲ್ಲಿ ನನ್ನ ಧ್ವನಿಯನ್ನು ಪಳಗಿಸಿಕೊಳ್ಳುತ್ತ ಬಂದೆ. ಮಾತನಾಡುತ್ತ, ನಾನೇ ಅದನ್ನು ಧ್ವನಿ ಮುದ್ರಿಸುತ್ತ ಮತ್ತು ಅದನ್ನು ನಾನೇ ಕೇಳುತ್ತ ಧ್ವನಿಯ ಅಪಾರ ಸಾಧ್ಯತೆಗಳನ್ನು ಮತ್ತು  ಸೂಕ್ಷ್ಮ ಸಂಗತಿಗಳನ್ನು ಅರ್ಥ ಮಾಡಿಕೊಳ್ಳುತ್ತ ಬಂದೆ.

ಆಕಾಶವಾಣಿಗೆ ಲಕ್ಷಾಂತರ ಶ್ರೋತೃಗಳಿದ್ದಾರೆ. ಮೈಕಿನ ಮುಂದೆ ಕುಳಿತ ಉದ್ಘೋಷಕರು ಈ ವಿಚಾರವನ್ನು ಮೊತ್ತಮೊದಲು ಮರೆಯಬೇಕು. ಯಾರೋ ಒಬ್ಬನೇ ಒಬ್ಬ ಮಿತ್ರನೊಂದಿಗೆ ಮಾತನಾಡುತ್ತಿದ್ದೇನೆ ಎಂಬ ಭಾವವನ್ನು ತುಂಬಿಕೊಳ್ಳಬೇಕು. ಒಬ್ಬ ಉದ್ಘೋಷಕ ಆಕಾಶವಾಣಿಯಲ್ಲಿ ಸಂಬೋಧಿಸುವಾಗ, ಅಲ್ಲಿ ಆತ್ಮೀಯ ಬಂಧುತ್ವದ ಭಾವವೇ ಜೀವಾಳವಾಗಿದೆ. ಭೌತಿಕವಾದ "ಹಗ್ಗು- ಮಗ್ಗು"ಗಳಲ್ಲಿ ಜಗ್ಗಿ ಕುಗ್ಗಿ ಹೋಗುತ್ತಿರುವ ಇಂದಿನ ಪೀಳಿಗೆಯವರಿಗೆ ನುಡಿ ಭಾವಕ್ಕೆ ಆಂತರ್ಯದ ಪ್ರೀತಿ ಹೊದೆಸುವ ತಾಳ್ಮೆಯಾಗಲಿ ನಾಜೂಕುತನವಾಗಲಿ ಮರೆತುಹೋದಂತಾಗಿದೆ. ಹಾಗಾಗಬಾರದು. ಮಾತು - ಹೊಡೆದಂತಿರಬಾರದು; ಮಿಡಿದಂತಿರಬೇಕು. "ನಿನ್ನೊಡನೆ ನಿನಗಾಗಿಯೇ ನಾನು ಮಾತನಾಡುತ್ತಿದ್ದೇನೆ" ಎಂಬ ಧ್ವನಿಯುಪಚಾರ ವು ಉದ್ಘೋಷಕರ ಯಶಸ್ಸಿನ ಪ್ರಥಮ ಸೋಪಾನ. ನಮ್ಮ ಧ್ವನಿಯಲ್ಲಿ "HOMELY" ಸ್ಪರ್ಶ ಬೇಕು. ಹಾಗಾದಾಗಲೇ ರೇಡಿಯೋ ಎಂಬುದು ಪ್ರತೀ ಮನೆಯ ಸದಸ್ಯನಾಗಲು ಸಾಧ್ಯ. ಅಧಿಕಾರವಾಣಿಯಿಂದ ಅಪ್ಪಣೆ ಕೊಡಿಸುತ್ತ ಯಾರನ್ನಾದರೂ ಸ್ವಾಧೀನದಲ್ಲಿಡಲು ಸಾಧ್ಯವೇ ? ಸ್ನೇಹ ಭಾವ ಒಂದಿದ್ದರೆ ನಿಮ್ಮ "ವಿಚಾರವನ್ನು" - ಒಪ್ಪದಿದ್ದರೂ ಮಾತಿನ ಆರ್ದ್ರ ಲಹರಿಯನ್ನು ಆನಂದಿಸದೆ ಇರಲಾರರು - ಅಲ್ಲವೇ?

  ಬಹು ದೀರ್ಘ ಕಾಲ - ಬಗೆ ಬಗೆಯ ಉದ್ಘೋಷಣೆಗಳನ್ನು, ನಿರೂಪಣೆಗಳನ್ನು ಕೇಳಿ, ನೋಡಿದ ನನ್ನ ಅನುಭವವನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವುದೂ ನನ್ನ ತುಡಿತಗಳಲ್ಲ್ಲಿ ಒಂದು. ಆದ್ದರಿಂದಲೇ ಮಾತಿನ ಕಲೆಯನ್ನು ಬಗೆದು ನೋಡುವ ಮತ್ತು ಅಲ್ಲಿ ನಾನು ಕಂಡದ್ದನ್ನು ನಿಮಗೂ ಹೇಳುವ ಮನಸ್ಸಾಗಿದೆ.

  ಕೇಳುವವರಿಹರೆಂದು ನಾ ಬಲ್ಲೆ  -  ಓದುವವರೂ ಇಹರೆಂದು ಬಲ್ಲೆ. ಆದ್ದರಿಂದಲೇ "ಬಹುಜನ ಹಿತಾಯ ಬಹುಜನ ಸುಖಾಯ" ಎಂಬ ಆಕಾಶವಾಣಿಯ ಧ್ಯೇಯವಾಕ್ಯದ ಆಶ್ರಯದಲ್ಲಿ ಸುದೀರ್ಘಕಾಲ ಮಾತನಾಡುತ್ತ ಆಡುತ್ತ ನನ್ನ ಅರಿವಿಗೆ ಬಂದ ಮತ್ತು ನಾನು ಅರಗಿಸಿಕೊಂಡ ಎಷ್ಟೋ ರೋಚಕ ಅನುಭವಗಳನ್ನು ನಿಮ್ಮ ಮುಂದೆ ಇಡಲಿದ್ದೇನೆ.

ನನ್ನ ಬ್ಲಾಗಿನ ಹಲವಾರು ಬರಹಗಳಲ್ಲಿ ಅಂತಹ ಅನುಭವಗಳು ಸಾಂದರ್ಭಿಕವಾಗಿ ಹೊಕ್ಕು ಹೊರಡುತ್ತವೆ.... ಆಸಕ್ತರು ಒಂದೊಂದಾಗಿ ಓದುತ್ತ ಹೋಗಬಹುದು.

                                            *****     *****     *****     *****


Monday, November 17, 2014

ಒಂದು ಪತ್ರ...ಪ್ರೀತಿಯಿಂದ

ಪ್ರಿಯ ಓದುಗರೇ,
ಸುಮಾರು ನಾಲ್ಕು ಸಂವತ್ಸರದ ಬಳಿಕ ಮತ್ತೆ ಬ್ಲಾಗಿಸುತ್ತಿದ್ದೇನೆ. ೨೦೧೫ ರ ಮಾರ್ಚ್ ತಿಂಗಳಿಂದ ನಾನು ನಿವೄತ್ತಿಯ ಸುಖದತ್ತ ಮುಖ ಮಾಡಲಿದ್ದೇನೆ. ಇನ್ನು ಬಿಡುವಾಗಿ, ನನ್ನ ಮಾಧ್ಯಮದ ಬದುಕಿನ ಒಂದೊಂದೇ ಅನುಭವಗಳನ್ನು ನಿಮ್ಮ ಮುಂದಿಡುತ್ತೇನೆ. ಆಗದೆ ?...

 ನಿಮ್ಮ.. ನಾರಾಯಣಿ.

Tuesday, January 26, 2010

ಸಿ.ಅಶ್ವಥ್ - ಒಂದು ನೆನಪು

ಅದು 2009 ರ ಡಿಸೆಂಬರ್ 29 . ಅಂದು ನಾನು ಮಧ್ಯಾಹ್ನದ ಪಾಳಿಯಲ್ಲಿದ್ದೆ. ಒಂದು ವಾರದಿಂದ ಸಂಗೀತ ಕ್ಷೇತ್ರದ ಘನ ಗಂಭೀರ ಗಜವೊಂದು ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿದೆಯೆಂದು ಪತ್ರಿಕೆಗಳಲ್ಲಿ ಓದುತ್ತಲೇ ಇದ್ದೆ. ಆ ಹಿನ್ನೆಲೆಯಲ್ಲಿ ಮತ್ತು ಅಂದು ಅವರ ಜನ್ಮದಿನವೂ ಆದುದರಿಂದ ಅಂದು ಮಧ್ಯಾಹ್ನದ ಚಿತ್ರಗೀತೆಗಳ ಅರ್ಧ ಘಂಟೆಯ ಪ್ರಸಾರವನ್ನು ಅಶ್ವಥ್ ಅವರಿಗೇ ಸಮರ್ಪಿಸಬೇಕೆಂದು ನಿರ್ಧರಿಸಿಕೊಂಡು ತಯಾರಾಗುತ್ತಿದ್ದೆ. ಅದೇ ಹೊತ್ತಿಗೆ ಕನ್ನಡ ವಾರ್ತೆ ಬರತೊಡಗಿತು. "ಸಂಗೀತಲೋಕದ ಮೇರು ವೃಕ್ಷ ಇನ್ನಿಲ್ಲ. ಇಂದು ಬೆಳಿಗ್ಗೆ ಅಶ್ವಥ್ ನಿಧನರಾದರು " ಎಂಬ ಸುದ್ದಿ ಕೇಳಿ ಒಂದು ಕ್ಷಣ ಭಾವುಕಳಾದೆ. ಅದಾಗಲೇ ನಾನು, ಶ್ರೀ ಸಿ.ಅಶ್ವಥ್ ಅವರು ಹಾಡಿದ ಮತ್ತು ಸಂಗೀತ ಸಂಯೋಜಿಸಿದ ಒಂದಿಷ್ಟು ಚಿತ್ರಗೀತೆಗಳನ್ನು ಆ ಮಧ್ಯಾಹ್ನದ ಪ್ರಸಾರಕ್ಕೆಂದು ಜೋಡಿಸಿ ಇಟ್ಟುಕೊಂಡಿದ್ದೆ. ಈಗ ಸುದ್ದಿ ಕೇಳಿದ ಮೇಲೆ ಅವರಿಗೆ ನುಡಿನಮನವನ್ನೂ ಸಲ್ಲಿಸಬೇಕೆಂದು ನಿರ್ಧರಿಸಿದೆ. ಕಾಕನಕೋಟೆ, ಸ್ಪಂದನ, ಚಿನ್ನಾರಿ ಮುತ್ತ, ಮೈಸೂರು ಮಲ್ಲಿಗೆ, ನಾಗಮಂಡಲ, ಭೂಲೋಕದಲ್ಲಿ ಯಮರಾಜ, ಶಿಶುನಾಳಶರೀಫ್ ಮುಂತಾದ ಗೀತೆಗಳ ಮಧ್ಯದಲ್ಲಿ ನಾನು ಶೃಂಗರಿಸಿದ ನುಡಿ ಸ್ಮರಣಿಕೆಯನ್ನು ಇಟ್ಟು, ಭಾವಪೂರ್ಣ ಶ್ರಧ್ಹಾಂಜಲಿ ಸಲ್ಲಿಸಿದೆ . ಅದು 29-12-2009 .




ಅಂದು ನಾನಾಡಿದ ಮಾತುಗಳ ಸಂಕ್ಷಿಪ್ತ ಪಾಠ ಹೀಗಿದೆ:

ಇಂದು ನಿಧನರಾದ ಕನ್ನಡದ ಅಶ್ವತ್ಹ್ಹ ಪ್ರತಿಭೆ - ಸಿ. ಅಶ್ವಥ್ ಅವರ ಅಗಲುವಿಕೆಯ ಈ ಹೊತ್ತಿನಲ್ಲಿ ಅವರೇ ಹೆಣೆದು ಮಾಲೆಯಾಗಿಸಿದ ಹಾಡುಗಳ ಅರ್ಪಣೆ....ಇನ್ನಿಲ್ಲದ ಅಶ್ವಥ್ ನೆನಪಿನಲ್ಲಿ ಎರಡು ಹನಿ ಕಂಬನಿ... (ಎಂಥ ಮರುಳಯ್ಯ ಇದು ಎಂಥಮರುಳು -ಸ್ಪಂದನ ಚಿತ್ರದ ಹಾಡು) ಇಂದಿನ ತಮ್ಮ ಎಪ್ಪತ್ತನೇ ಜನ್ಮ ದಿನವನ್ನು ಆಚರಿಸಿದರೆ ಬಾಳ ಸಂಗೀತದ ಲಯ ತಪ್ಪಿ ಹೋದೀತೆಂದೋ ಏನೋ ಸಿ.ಅಶ್ವಥ್ ಇಂದೇ ಹೊರಟುಬಿಟ್ಟರು ಅನ್ನಿಸುತ್ತಿದೆ. ಇಂದಿಗೆ ಎಪ್ಪತ್ತು ವರ್ಷವೆಂಬ ಎಪ್ಪತ್ತು ಆವರ್ತಗಳನ್ನು ಪೂರ್ತಿಗೊಳಿಸಿ ನಡೆದೇ ಬಿಟ್ಟರು. ಯಾವುದೇ ಶೇಷವಿಲ್ಲ. ತಾಳ ತಪ್ಪದ ಕಲಾ ಬಾಳ್ವೆ! ಮೈಮನದೊಳಗೆಲ್ಲ ಸಂಗೀತವನ್ನೇ ತುಂಬಿಕೊಂಡಿದ್ದ ನಾದ ಚೇತನಕ್ಕೆ ತಲೆ ಬಾಗಿ ನಮಿಸುವ.(ನಿನ್ನ ಪ್ರೇಮದ ಪರಿಯ- ಮೈಸೂರು ಮಲ್ಲಿಗೆ)

ಇಂದು ನಿಜವಾಗಿಯೂ ಸಿ.ಅಶ್ವಥ್ ಅವರ ಜನ್ಮ ದಿನ. ಅವರ ಜನ್ಮ ದಿನಾಚರಣೆಗೆ ಸಾಕಷ್ಟು ತಯಾರಿಯೂ ನಡೆದಿತ್ತು. ಆದರೆ ಅದೇನು ಕಾಕತಾಳಿಯವೋ? ಇದೇ ದಿನವೇ ಅವರ ಪುಣ್ಯ ತಿಥಿಯ ದಿನವೂ ಆಗಿ ಹೋಗಿದೆ. ಬಾಳಿನ ಸಂಗೀತ ಕಚೇರಿಗೆ ಇಂದು ಮಂಗಳ ಹಾಡಿದ ನಾದಋಷಿಗೆ ನಮೋ ನಮಃ. (ಗೆದಿಯಬೇಕು ಮಗಳ - ನಾಗ ಮಂಡಲ)

"ಕಾಕನ ಕೋಟೆ"ಯಲ್ಲಿ ಚಿತ್ರ ರಂಗ ಪ್ರವೇಶಿಸಿ ಅಲ್ಲಿ ತನ್ನದೇ ವಿಶಿಷ್ಟ ಶೈಲಿಯ ಸಂಗೀತದ ಛಾಪು ಮೂಡಿಸಿದ ಅಶ್ವಥ್, ಅನಂತರ ಅಶ್ವಥ್ ಶೈಲಿಯ "ಬೃಹತ್ ಕೋಟೆ" ನಿರ್ಮಿಸಿ ಅದಕ್ಕೆ ತಾನೇ ರಾಜನಾಗಿ ಆಳ್ವಿಕೆ ನಡೆಸಿ ಈಗ ಅದನ್ನೆಲ್ಲಾ ಅಜರಾಮರವಾಗಿ ಉಳಿಸಿ ಹೊರಟೇ ಹೋಗಿದ್ದಾರೆ . ಅಶ್ವಥ್ ಭೌತಿಕವಾಗಿ ಇನ್ನಿಲ್ಲವಾದರೂ ಸಂಗೀತದ ಚೈತನ್ಯ ರೂಪಿಯಾಗಿ ಎಂದೆಂದಿಗೂ ಉಳಿಯಬಲ್ಲರು. ( ಸೋರುತಿಹುದು ಮನೆಯ ಮಾಳಿಗೆ - ಶಿಶುನಾಳ ಷರೀಫ್)

ಕನ್ನಡ ಭಾವ ಲೋಕದ ಸ್ವಚ್ಛಂದ ಹಕ್ಕಿಯಾಗಿ ಮೂರು ದಶಕಗಳಿಗೂ ಹೆಚ್ಹು ಕಾಲ ವಿಹರಿಸಿದ ಸಿ.ಅಶ್ವಥ್ ಈಗ ಬರೀ ಸವಿ ನೆನಪು. ಕನ್ನಡದ ಸಾಹಿತ್ಯವೆಂಬ ರಥಕ್ಕೆ ಸಂಗೀತದ ಹಗ್ಗ ಕಟ್ಟಿ ಕರ್ನಾಟಕದ ಉದ್ದಗಲಕ್ಕೂ ಎಳೆದು ಎಲ್ಲರಿಗೂ " ಸಂಗೀತ ಸುಗ್ಗಿ "ಯ ಹುಗ್ಗಿ ಹಂಚಿದ, ಕನ್ನಡದ ತೇರನ್ನು ಕನ್ನಡಿಗರ ಮನೆ ಮನದಲ್ಲಿ ನಿಲ್ಲಿಸಿ ಸಂಗೀತೋತ್ಸವದ ಸಂಭ್ರಮದ ಕಜ್ಜಾಯವನ್ನು ಎಲ್ಲರಿಗೂ ಹಂಚಿ ತಿಂದ ಸಿ.ಅಶ್ವಥ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವಾಗ ಸಹಜವಾಗಿಯೇ ದನಿ ಗದ್ಗದವಾಗುತ್ತದೆ, ಕಣ್ಣು ಹನಿಗೂಡುತ್ತದೆ. ( ರೆಕ್ಕೆಇದ್ದಾರೆ ಸಾಕೆ - ಚಿನ್ನಾರಿ ಮುತ್ತ )

ಬದುಕಿಡೀ ಸಂಗೀತ ಸರಸ್ವತಿಯ ಉಪಾಸನೆಗೈದು, ಸಂಗೀತ ರಸಿಕರ ಹೃನ್ಮನದಲ್ಲಿ ಭದ್ರ ಸ್ಥಾನವನ್ನು ಅಲಂಕರಿಸಿ, ಭಾವ ಗೀತೆ, ಭಕ್ತಿ ಗೀತೆ, ಜನಪದ ಗೀತೆ, ತತ್ವ ಪದ, ಚಿತ್ರಗೀತೆಗಳನ್ನು ಸಂಯೋಜಿಸಿ, ಹಾಡಿ, ಕರ್ನಾಟಕದಾದ್ಯಂತ ಸಂಚರಿಸಿ ಕನ್ನಡ ಕಾವ್ಯದ ಇಂಪನ್ನು " ಕನ್ನಡವೇ ಸತ್ಯ" ಎನ್ನುತ್ತ ಕನ್ನಡಿಗರ ಎದೆ ಬಾಗಿಲಿಗೆ ಕೊಂಡೊಯ್ದು ಕನ್ನಡದ ಪೆಂಪನ್ನು ತಲೆಯ ಮೇಲೆ ಹೊತ್ತು ಮೆರೆದಾಡಿದ, ಚಿತ್ರ ಸಂಗೀತಕ್ಕೆ ಹೊಸ ಧಾಟಿ, ಲಯವನ್ನು ತಂದು ಕೊಟ್ಟು, ಹೊಸ ಮಾರ್ಗಪ್ರವರ್ತಕನಾಗಿ ಮೆರೆದ ಸದಾ ಪ್ರಯೋಗಶೀಲನಾದ ಅಪೂರ್ವ ಕಲಾವಿದ, ಸಂಗೀತೋಪಾಸಕ ಸಿ.ಅಶ್ವಥ್ ಎಂಬ ಉತ್ಸಾಹದ ಬುಗ್ಗೆ " ಇನ್ನಿಲ್ಲ" ಎಂದರೆ ಈ ಕ್ಷಣಕ್ಕೆ ನಂಬುವುದು ಕಷ್ಟ. ಆದರೆ ಇದು ಸತ್ಯ. "ಅಳಿಯುವುದು ಕಾಯ, ಉಳಿಯುವುದು ಕೀರ್ತಿ" ಎಂಬ ಮಾತಿಗೆ ಇನ್ನೊಂದು ದೃಷ್ಟಾಂತವಾದ ಅಗಲಿದ ಚೇತನ ಸಿ.ಅಶ್ವಥ್ ಅವರಿಗೆ ಇದೋ- ಆಕಾಶವಾಣಿಯ ಶ್ರದ್ಧಾಂಜಲಿ. (ಬಾಳಿನ ಸುತ್ತಲೂ - ಭೂಮಿಗೆಬಂದ ಭಗವಂತ)

ಹೀಗೆ... ನನ್ನ ಕರ್ತವ್ಯದ ಅವಧಿಯಲ್ಲೇ ಸಿ.ಅಶ್ವಥ್ ಅವರಿಗೆ ನುಡಿನಮನ ಸಲ್ಲಿಸಿದೆ. ಕೆಲವು ಅಭಿಮಾನಿ ಕೇಳುಗರು ಆ ಕಾರ್ಯಕ್ರಮವನ್ನು ಕೇಳಿ "ನಮ್ಮೆಲ್ಲರ ಪರವಾಗಿ ಸೂಕ್ತ ಗೌರವ ಸಲ್ಲಿಸಿದ ನಿಮಗೆ ತುಂಬ ಥ್ಯಾಂಕ್ಸ್. ನಿಮ್ಮ ಮಾತನ್ನು ಕೇಳುವಾಗ ನಾವೂ ಅರೆಕ್ಷಣ ಭಾವುಕರಾದೆವು " ಎಂದು ನನ್ನನ್ನು ಅಭಿನಂದಿಸಿದರು.

ಇಂತಹ ಸಾರ್ಥಕ ಭಾವವನ್ನು ಮೂಡಿಸುವ ಕೆಲವು ಕ್ಷಣಗಳು - ವೃತ್ತಿ ಜೀವನದಲ್ಲಿ ತೃಪ್ತಿ ನೀಡುವುದು ಸಹಜ .

ಆಕಾಶವಾಣಿ ಎಂಬ ವೇದಿಕೆಯು ಇಂತಹ ಹಲವು ಸಂದರ್ಭಗಳನ್ನು ನನಗೆ ಒದಗಿಸಿ ಕೊಟ್ಟಿದೆ; ಹಲವಾರು ಅಪೂರ್ವ ಪ್ರತಿಭೆಗಳನ್ನು ಭೇಟಿ ಮಾಡಿಸಿದೆ. 1978 - 1988 ರ ಮಧ್ಯದಲ್ಲಿ, ಬಹುಖ್ಯಾತರಾದ ಹಲವಾರು ಸಾಹಿತಿಗಳನ್ನು, ಸಂಗೀತ ವಿದ್ವಾಂಸರನ್ನೂ ಮಂಗಳೂರು ಆಕಾಶವಾಣಿಯಲ್ಲಿ ನಾನು ಮುಖತಃ ಭೇಟಿಯಾದೆ; ಮಾತಾಡಿದೆ; ಅಂತಹ ವಿಶೇಷಗಳಲ್ಲಿ ಸಿ.ಅಶ್ವಥ್ ಕೂಡ ಒಬ್ಬರು .

ಡಾ.ಶಿವರಾಮ ಕಾರಂತ, ಕಯ್ಯಾರ ಕಿಂಜಣ್ಣ ರೈ, ಕು.ಶಿ.ಹರಿದಾಸ ಭಟ್, ವೈಶಾಲಿ, ಕದ್ರಿ ಗೋಪಾಲನಾಥ್, ಕುಂಬ್ಳೆ ಸುಂದರ ರಾವ್, ಉಳ್ಳೂರು ಮೂಕಾಂಬಿಕ ಅಮ್ಮ (ಮೂಕಜ್ಜಿ ), ಪದ್ಮ ಶೆಣೈ, ವೈದೇಹಿ, ಶಶಿಧರ ಕೋಟೆ...ಹೀಗೆ ನೂರಾರು ಸಾವಿರಾರು ಪ್ರತಿಭಾವಂತರನ್ನು ಸಂದರ್ಶಿಸಿದೆ; ಒಡನಾಡಿದೆ. ಇಂತಹ ಸಂದರ್ಭಗಳನ್ನು ಒದಗಿಸಿದ ಆಕಾಶವಾಣಿಗೆ ನಾನು ಸದಾ ಋಣಿಯಾಗಿದ್ದೇನೆ.

Sunday, May 10, 2009

ಕುಟುಂಬ ಬೇಕೆ ?

  "ವೇಗಕ್ಕೆ ಮುಖವೊಡ್ಡಿರುವ ಆಧುನಿಕ ಬದುಕಿನಲ್ಲಿ - ಕೌಟುಂಬಿಕ ನೆಮ್ಮದಿಯನ್ನು ಕಂಡುಕೊಳ್ಳುವುದು ಹೇಗೆ? "

  ಕುಟುಂಬ - ಒಂದು ಆಕರ್ಷಕ ಸಂಸ್ಥೆ. ಕುಟುಂಬ ಅಂದರೆ... ಹೆಣ್ಣು ಗಂಡು, ಹಿರಿಯರು ಕಿರಿಯರು, ಮಕ್ಕಳು, ವೃದ್ಧರು... ಎಲ್ಲರೂ ಸೇರಿಕೊಂಡು ಒಟ್ಟಿಗೆ ಜೀವನ ನಡೆಸುವ ಒಂದು ವ್ಯವಸ್ಥೆ.

ಯಾವುದೇ ಕುಟುಂಬದ ಸದಸ್ಯರಾಗುವುದಕ್ಕೆ - ಮಗ ಅಥವ ಮಗಳಾಗಲಿಕ್ಕೆ - ಶುಲ್ಕ ತುಂಬಿ ಅರ್ಜಿ ಹಾಕಲು ಆಗುವುದಿಲ್ಲ. ಬದುಕುಗಳ ನಡುದಾರಿಯಲ್ಲಿ ಪ್ರವೇಶಿಸುವ ಹೆಂಡತಿ ಅಥವ ಸೊಸೆ ಮುಂತಾದ ಪಾತ್ರಗಳ ಅರ್ಹತೆಯನ್ನು ಕರಾರುವಾಕ್ಕಾಗಿ ಲೆಕ್ಕಹಾಕಿ, ಹೊಸಪಾತ್ರಗಳನ್ನು ಯಾವುದೇ ಕುಟುಂಬದ ಭಾಗವಾಗಿಸಿಕೊಳ್ಳುವುದೂ ಕೂಡ - ಮನುಷ್ಯ ಶಕ್ತಿಗೆ ಮೀರಿದ ವಿಷಯ ಎಂಬುದು - ವಾಸ್ತವ. ಏನೋ ಒಂದು ಅಂದಾಜು - ಸಾಮಾನ್ಯ ಲೆಕ್ಕಾಚಾರದಲ್ಲಿಯೇ ನಿಭಾಯಿಸುತ್ತ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿರುವ ಸಂಸ್ಥೆ ಇದು. ಉದ್ಯೋಗ ವಲಯಗಳಲ್ಲಿ ಜ್ಯಾರಿಯಲ್ಲಿರುವ Service Rule .. ತರಹದ - ಕಟ್ಟುನಿಟ್ಟಾದ ನೀತಿನಿಯಮಗಳು - ಕೌಟುಂಬಿಕ ವಲಯದಲ್ಲಿ ಹೆಚ್ಚು ಸಹಕರಿಸುವುದಿಲ್ಲ. ಪರಸ್ಪರರ ಭಾವನೆಗಳನ್ನು ಅರ್ಥ ಮಾಡಿಕೊಂಡು, ಆಯಾ ಸಂದರ್ಭಕ್ಕೆ ಅನುಗುಣವಾಗಿ ವರ್ತಿಸುವ - "ವಿವೇಚನೆ" ಎಂಬ ಅರ್ಹತೆಯೇ - ಯಾವುದೇ ಕುಟುಂಬವನ್ನು ಭದ್ರಗೊಳಿಸಿಕೊಳ್ಳುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ.

  ಆದ್ದರಿಂದ, ಯಾವುದೇ ಕುಟುಂಬದ ಸದಸ್ಯರು - ತಮ್ಮ ಕೌಟುಂಬಿಕ ಆಗುಹೋಗುಗಳಲ್ಲಿ ಯಾವುದನ್ನೂ - "ತನ್ನ ಯತ್ನದಿಂದ ಅಥವ ತನ್ನಿಂದಲೇ ಆದದ್ದು.." ಅಂದುಕೊಳ್ಳಲು ಸಾಧ್ಯವಿಲ್ಲ. ಅಲ್ಲಿ ನಡೆಯುವುದು - ಭಾವನೆಗಳ ಹರಿದಾಟ; ಬಹಳ ಸೂಕ್ಷ್ಮವಾದ ಸಾಮೂಹಿಕ ಭಾಗೀದಾರಿಕೆ. ಕೌಟುಂಬಿಕ ವಲಯದಲ್ಲಿ ಆಡುವ, ಮಾಡುವ ಎಲ್ಲವೂ... ತೆರೆಮರೆಯ ತಿಣುಕಾಟ ಎಂಬ ಭಾವನೆಯು ಪ್ರತಿಯೊಬ್ಬ ಸದಸ್ಯರಲ್ಲೂ ಒಂದಲ್ಲ ಒಂದು ಘಟ್ಟದಲ್ಲಿ ಸಹಜವಾಗಿ ಮೂಡುವುದಿದೆ; ಕುಟುಂಬ ಅಂದರೆ  ದಿನನಿತ್ಯದ ಪರೀಕ್ಷೆ ಅನ್ನಿಸುವುದೂ ಇದೆ; ಆದದ್ದು ಒಂದು - ಅಂದುಕೊಂಡದ್ದೊಂದು... ಎಂಬಂತಹ ಕ್ಷಣಗಳು ಕೌಟುಂಬಿಕ ಬದುಕಿನಲ್ಲಿ ಬಂದುಹೋಗುತ್ತಲೇ ಇರಬಹುದು. ಮನುಷ್ಯ ಸಂಕಲ್ಪಗಳೊಂದೂ ನಡೆಯದೆ, ಇನ್ನೊಂದೇ ದೃಶ್ಯ ಹೊರಹೊಮ್ಮಲೂ ಬಹುದು. "ನಾನು, ನನ್ನಿಂದ... ಅಲ್ಲ; ನಾನು ಏನೂ ಅಲ್ಲ; ಕೌಟುಂಬಿಕ ಬದುಕು ಎಂಬುದು ಕೇವಲ ಸಂಭವಿಸುವಂಥದ್ದು... ಇಲ್ಲಿ ನನ್ನದೇನೂ ಇಲ್ಲ.." ಎನ್ನುವ ವೇದಾಂತದ ಹತ್ತಿರಕ್ಕೆ ನಮ್ಮನ್ನು ಕರೆದೊಯ್ಯುವಷ್ಟು - ಬದುಕುಗಳನ್ನು ಪಳಗಿಸುವುದೂ - ಕುಟುಂಬಗಳೇ ಆಗಿವೆ.

  ಹೀಗಿದ್ದರೂ... ಯಾವುದೇ ಕುಟುಂಬವೊಂದನ್ನು ಕಟ್ಟುವಲ್ಲಿ ಮತ್ತು ಮೆಟ್ಟುವಲ್ಲಿಯೂ... ಮಹಿಳೆಯರ ಪಾತ್ರವು ಗುರುತಿಸುವಂಥದೇ ಆಗಿರುತ್ತದೆ. ಒಂದು ಕುಟುಂಬದಲ್ಲಿ ಮಹಿಳೆಯು ಸೋತಾಗ, ಆ ಕುಟುಂಬವು ಪೂರ್ತಿಯಾಗಿ ನೆಲ ಕಚ್ಚುವುದು ಮತ್ತು ಪುರುಷ ಸೋತರೆ - ಕುಟುಕು ಜೀವದೊಂದಿಗಾದರೂ ಉಳಿದುಕೊಳ್ಳುವುದು... ಎಲ್ಲರ ಅನುಭವದ ಸತ್ಯ.

  ಆದ್ದರಿಂದ, ಇಲ್ಲಿ ಮಹಿಳೆಯೇ ಕೇಂದ್ರವಸ್ತುವಾದರೂ - ಕುಟುಂಬದ "ಸಮಗ್ರ ಸುತ್ತಾಟವು" ಅನಿವಾರ್ಯವಾಗಿದೆ. ಕಾಲಕಾಲಕ್ಕೆ ತನ್ನ ರೂಪಲಾವಣ್ಯಗಳನ್ನು ಮರುಹೊಂದಿಸಿಕೊಳ್ಳುವುದು ಕುಟುಂಬ ವ್ಯವಸ್ಥೆಯ ವೈಶಿಷ್ಟ್ಯ. ಇವತ್ತಿನ ಆಧುನಿಕ ಸಂಸ್ಕೃತಿ, ಜಾಗತೀಕರಣ ಮುಂತಾದ ಹೊಸ ಅಲೆಯಿಂದಾಗಿ, ಭಾರತೀಯ ಕುಟುಂಬ ಶಕ್ತಿಯು ಕ್ಷೀಣಿಸುತ್ತಿರುವಂತೆ ಈಗ ಭಾಸವಾಗುತ್ತಿರುವುದು ಸುಳ್ಳಲ್ಲ. ಆದ್ದರಿಂದಲೇ - ಹೊಸ ನೆಲೆಯಲ್ಲಿಯೇ ನಿಂತು, ಇಂದಿನ ಕುಟುಂಬಗಳ ಪಕ್ಷಿನೋಟ ನಡೆಸಬೇಕಾಗಿದೆ.

  ಕುಟುಂಬ ಎಂಬ ಕಲ್ಪನೆಯ ಅಡಿಪಾಯವೇ ಪರಸ್ಪರ ಹೊಂದಾಣಿಕೆ. ಸಂಬಂಧಗಳ ಬಗೆಗೆ ಪರಸ್ಪರ ಗೌರವ ಮತ್ತು ಸಹ ಸದಸ್ಯರ ಸುಖ ದುಃಖಗಳನ್ನು ಅರ್ಥ ಮಾಡಿಕೊಂಡು ಬದುಕುವುದು - ಕುಟುಂಬದ ಭದ್ರತೆಗೆ ಬೇಕಾದ ಮೂಲಭೂತ ಗುಣಸಂಪತ್ತು. ಪ್ರೀತಿ ಎಂಬುದು  - ಸರ್ವಾಂಗ ಸುಂದರ ಕುಟುಂಬದ ಗುಣಾಕಾರಕ್ಕೆ ತೊಡಿಸುವ ಮುಕುಟಮಣಿ ! 

  ಮಹಿಳೆಯರೂ ಕುಟುಂಬದ ಆದಾಯಕ್ಕಾಗಿ ಉದ್ಯೋಗಸ್ಥರಾಗುತ್ತಿರುವ ಇಂದಿನ ಸಮಾಜದಲ್ಲಿ ಗೌರವ, ಪ್ರೀತಿ ಮತ್ತು ಪರಸ್ಪರ ಅರ್ಥಮಾಡಿಕೊಳ್ಳುವುದಕ್ಕೆ ಎಲ್ಲಿದೆ ವ್ಯವಧಾನ ?? ಬೆಳಿಗ್ಗೆ ಏಳುವಾಗಲೇ ಅವಸರದ ಆತಂಕ; ಒತ್ತಡ. ಬೇಗಬೇಗ ಬೆಳಗಿನ ತಿಂಡಿಮಾಡಿ ಜಡಿದು, ಮಧ್ಯಾಹ್ನದ ಬುತ್ತಿಗೆ ಹೊಂದಿಸಿ, ಗಂಡ ಮಕ್ಕಳನ್ನು ಸಾಗಹಾಕಿ, ತಾನೂ ತಯಾರಾಗಿ ಉದ್ಯೋಗಕ್ಕೆ ಓಟ. ಸಂಜೆ ಸುಸ್ತಾಗಿ ಮನೆಗೆ ಬಂದರೆ ಮತ್ತೆ ಶುರುವಾಗುತ್ತದೆ... ಸಂಜೆಯ ಕಾಫಿ ತಿಂಡಿ; ರಾತ್ರಿಯ ಊಟ - ಇತ್ಯಾದಿ... ಇವೆಲ್ಲದರ ಜತೆಗೆ ಕೆಲವು ದಿನ ನೆಂಟರ ಕಾಟ. ಅತಿಥಿ ದೇವೋ ಭವ ಎಂಬ ಮಾತು ಒಳಗೊಳಗೇ ಕುಟುಕುತ್ತಿದ್ದರೂ ಕೂಡ ಎರಡು ದೋಣಿಯಲ್ಲಿ ಕಾಲಿಟ್ಟಂತಹ ಒತ್ತಡಗಳಿಂದಾಗಿ, "ನೆಂಟರೂ ಕಾಟ" ಅನ್ನಿಸುವ ಸಂದರ್ಭಗಳೂ ಎದುರಾಗುತ್ತಿವೆ. ಕೆದರಿದ ಮುಡಿಯಲ್ಲಿ - ಅರಳಿದ ಹೂವೊಂದು ನಗುವಂತೆ(!) ಒತ್ತಡದ ಭಾವ... ಉದ್ಯೋಗಸ್ಥ ಮಹಿಳೆಯರಲ್ಲಿ.

  ಸಂಬಳದ ಚೌಕಟ್ಟಿನಲ್ಲಿ ಮನೆಯ ಹೊರಗೂ ದುಡಿಯುವ ಉದ್ಯೋಗಸ್ಥ ಮಹಿಳೆಯರನ್ನು "ದುಡಿಯುವ ಮಹಿಳೆ" ಎನ್ನುವುದು - - ಹೆಚ್ಚಿನ ಒತ್ತಡ ಎಂಬ ದೃಷ್ಟಿಯಿಂದ ಹೀಗೆ ಗುರುತಿಸುವುದೂ ಕೂಡ - ಅನ್ವರ್ಥವೇ ಆಗಿದೆ. ಹಾಗಿದ್ದರೆ ಅಡಿಗೆ ಊಟ ಮನೆವಾರ್ತೆ ಎಂಬುದು ದುಡಿಮೆ ಅಲ್ಲವೆ ? ಅದಕ್ಕೆ ಬೆಲೆ ಇಲ್ಲವೆ ? ಹೊರಗಿನ ದುಡಿಮೆ ಮಾತ್ರ ಉದ್ಯೋಗವೆ ? ಮನೆಯ ಹೊರಗಿನ ದುಡಿಮೆ ಎಂಬುದು ಅಷ್ಟೊಂದು ಕಷ್ಟವೇ? ಎಂದು ಕೇಳಿದರೆ - ಅಲ್ಲವೇ ಅಲ್ಲ; ಹಾಗಲ್ಲ... 

  ತನ್ನ ಮನೆಗಾಗಿ ಮನೆಯೊಳಗಿದ್ದೇ ದುಡಿಯುವುದು ಅಂದರೆ - ಒಂದೇ ದೋಣಿಯಲ್ಲಿ ಕೂತು ಪ್ರಯಾಣ ಮಾಡಿದಂತೆ. ಹೊರಗೂ ಒಳಗೂ ದ್ವಿಪಾತ್ರ ನಿರ್ವಹಿಸುವುದೆಂದಾಗ - ಅದು ಎರಡು ದೊಣಿಯಲ್ಲಿ ಒಂದೊಂದು ಕಾಲನ್ನಿಟ್ಟು ಪ್ರಯಾಣ ಮಾಡಿದಂತಹ ಅನುಭವ. ಸ್ವಲ್ಪ ಸಮತೋಲನ - ಎಚ್ಚರ ತಪ್ಪಿದರೂ ನೀರುಪಾಲಾಗುವ ಅವಸ್ಥೆ ಅದು. ಆದರೆ, "ಇಂತಹ ಬಿಡುವಿರದ ದುಡಿಮೆಯಲ್ಲಿ ತೊಡಗಿಕೊಂಡ ಮಹಿಳೆಯರಿಗೆ ಸುಖವೇ ಇಲ್ಲವೇ?" ಎಂದು ಕೇಳಿದರೆ "ಒಮ್ಮೊಮ್ಮೆ ಯಾಂತ್ರಿಕವೆನ್ನಿಸಿದರೂ - ಶಸ್ತ್ರ ಸನ್ಯಾಸ ಕೈಗೊಳ್ಳುವ ಅನ್ನಿಸಿದರೂ... ಅಲ್ಲಿಯೂ ಸುಖವಿದೆ. ಈ "ಸುಖ" ಎಂಬುದನ್ನು ಅವರವರೇ ಕಂಡುಕೊಳ್ಳುವ "ಚಾಣಾಕ್ಷ ಸಮಯ ನಿರ್ವಹಣೆಯ" ಪ್ರತಿಭೆ ಎನ್ನಬಹುದು.

  ಯಾವುದೇ ಮನೆವಾರ್ತೆಯು ಕಷ್ಟ ಅಲ್ಲವೇ ಆಲ್ಲ. ಆದರೆ, ಆತಂಕರಹಿತವಾಗಿ, ಉದ್ವೇಗವಿಲ್ಲದೆ, ಹಗುರ ಮನಃಸ್ಥಿತಿಯಲ್ಲಿ  ಎಲ್ಲವನ್ನೂ ತೂಗಿಸಿಕೊಂಡು ಹೋಗುವ ಸರ್ಕಸ್ಸಿಗೆ ಮಾತ್ರ - ಸ್ವಲ್ಪ ಪೂರ್ವತಯಾರಿ ಬೇಕಾಗುತ್ತದೆ. ಬಹುಪಾಲು ಮಹಿಳೆಯರು ಎಡವಿ ಬೀಳುವ ಸ್ಥಾನ ಇದೇ. ಹೀಗಿರುವಾಗ, ಮನೆ ಮತ್ತು ಕಚೇರಿಯೆಂಬ - ಎರಡು ದೋಣಿಯಲ್ಲಿ ಕಾಲಿಟ್ಟು - ಎರಡೂ ವೇದಿಕೆಗೆ ನಿಷ್ಠೆಯಿಂದ ನ್ಯಾಯ ಒದಗಿಸಲು ಹೆಣಗಾಡುವ ಯಾವುದೇ ದುಡಿಯುವ ಹೆಣ್ಣಿನ ಸ್ಥಿತಿಯು - ಅಷ್ಟೊಂದು ಸರಳವಾಗಿಲ್ಲ ಎಂಬುದು ವಾಸ್ತವ. ಆಕೆಯದು ಅತ್ಯಂತ ಅವಸರದ ಬದುಕಾಗಿ ಬಿಡುತ್ತಿದೆ. ಹೀಗೆ ಪ್ರತೀ ದಿನವೂ.. ಕ್ಷಣವೂ - ಅವಸರ ಮತ್ತು ಒತ್ತಡದ ಯಾಂತ್ರಿಕತೆಗೆ ಸಿಲುಕಿದಾಗ... "ಬದುಕಿನ ಪೂರ್ತಿ ರಸಾಸ್ವಾದನೆಯ ಸುಖಾನುಭವ ಎಂಬುದು ದುಡಿಯುವ ಮಹಿಳೆಗೆ ಕನ್ನಡಿಯ ಗಂಟು" ಎಂದೆನ್ನಿಸುವ ಘಳಿಗೆಗಳು ಬರುತ್ತಲೇ ಇರುತ್ತವೆ. 

  ಅದು ಹೇಗೆಂದರೆ, ಜಿಲೇಬಿಯನ್ನು ಜಗಿಯದೇ - ಗುಳುಂ ಎಂದು ನುಂಗಿದಂತೆ !!! 
ಜಿಲೇಬಿ ತಿಂದೆಯಾ ? ಅಂತ ಕೇಳಿದರೆ... "ಹೌದು"; 
"ಹೇಗಿತ್ತು ?" ಎಂದರೆ... ಸಿಹಿಯಾಗಿತ್ತು... ಅನ್ನಬಹುದು... ಅಷ್ಟೆ.
ಯಾವುದೇ ಅವಸರದ ರಸಾಸ್ವಾದಕ್ಕೆ ಯಾಂತ್ರಿಕ ಮಿತಿ ಎಂಬುದು - ತಡೆಯಾಗಿ ಇದ್ದೇ ಇರುತ್ತದೆ ಅಲ್ಲವೆ ?


  ದುಡಿತದ ಪಾಳಿಯಲ್ಲಿ ಕೆಲಸ ಮಾಡುವ ಸರ್ಕಾರೀ ನೌಕರಿಯಲ್ಲಿರುವ ಗೆಳತಿಯೊಬ್ಬಳು ಮೊನ್ನೆ ಪೇಟೆಯಲ್ಲಿ ಅಕಸ್ಮಾತ್ ಭೇಟಿಯಾದಾಗ ಖುಶಿಯಾಗಿ, ಆಕೆಯನ್ನು ಮನೆಗೆ ಬರುವಂತೆ ಆಹ್ವಾನಿಸಿದ್ದೆ; ಅಷ್ಟೆ. ಅಲ್ಲೇ ಹತ್ತಿರದಲ್ಲೇ ಆಕೆಯ ಮನೆ. ನಾನು ಮನೆಗೆ ಬಾ ಎಂದ ತಕ್ಷಣವೇ - ಬ್ರೇಕಿಲ್ಲದಂತೆ ಅವಳ ಗೋಳಿನ ಕಥೆ ಓಡಿತ್ತು.

  “ಹತ್ತು ಮೈಲಿ ದೂರದಲ್ಲಿರುವ ಅಪ್ಪನ ಮನೆಗೆ ಹೋಗದೆ ಆರು ತಿಂಗಳಾಯಿತು - ಗೊತ್ತುಂಟಾ? ಎಲ್ಲಿಗೆ ಹೋಗಲಿಕ್ಕೂ ಆಗುವುದಿಲ್ಲ. ಬೆಳಗಾಗೆದ್ದು ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಓಡಲಿಕ್ಕೆ ಶುರುವಾದರೆ ರಾತ್ರಿ ಹಾಸಿಗೆಗೆ ಬೀಳುವವರೆಗೂ ಓಡುವುದೇ ಆಗಿದೆ ಮಾರಾಯ್ತಿ. ಒಂದೊಂದು ಸಾರಿ ಯಾಕಾದರೂ ಬೆಳಗಾಗತ್ತೋ ಅನ್ನಿಸುತ್ತದೆ. ಏನೋ ಒಂದಿಷ್ಟು ಓದಬೇಕು ಅಂತ ಹೊಸ ಪುಸ್ತಕಗಳನ್ನು ತಂದಿಟ್ಟುಕೊಂಡಿದ್ದೇನೆ. ದಿನಕ್ಕೆ ಹತ್ತು ಪುಟವನ್ನೂ ಓದಲಿಕ್ಕಾಗುವುದಿಲ್ಲ. ಹೋಗ್ಲಿಬಿಡು. ಒಲೆಯ ಮೇಲೆ ಸಾರು ಕುದಿಯಲಿಕ್ಕೆ ಇಟ್ಟು ಓಡಿಕೊಂಡು ಹೊರಗೆ ಬಂದಿದ್ದೇನೆ. "ಕೊತ್ತುಂಬರಿ ಸೊಪ್ಪು ಇದೆ" ಅಂತ ಅಂದುಕೊಂಡಿದ್ದೆ; ಇವತ್ತು ನೋಡುವಾಗ, ಅದು ಒಣಗಿ ಹೋಗಿದೆ ಮಾರಾಯ್ತಿ. ಈಗ ತಗೊಂಡು ಹೋಗಬೇಕು. ಒಲೆ ಉರೀತಾ ಇದೆ; ಬರ್ಲಾ ?..." 

  ನಾಲ್ಕು ಹೆಜ್ಜೆ ಮುಂದೆ ನಡೆದವಳು ತಿರುಗಿ ನೋಡುತ್ತ, "ನೋಡು.. ನೀನೇ ಒಮ್ಮೆ ನಮ್ಮ ಮನೆಗೆ ಬಾ... ಮರೆತೆ... ನಾಳೆಬೇಡ, ನನಗೆ ಸಂಜೆಯ ಡ್ಯೂಟಿ ಇದೆ. ಶನಿವಾರ ಸಾಯಂಕಾಲ ಐದು ಗಂಟೆಯ ನಂತರ ಬಾ...ಆಯ್ತಾ? ಅಯ್ಯೋ ಆದಿತ್ಯವಾರ ಮಾತ್ರ ಬರಬೇಡ ಮಾರಾಯ್ತಿ - ಬೇಜಾರು ಮಾಡಿಕೊಳ್ಳಬೇಡ. ಆ ದಿನ ತುಂಬ ಕೆಲಸ ಇರ್ತದೆ. ಇಡೀ ವಾರದ ಬಟ್ಟೆ ಒಗೆಯುವುದೇ ಒಂದು extra ಕೆಲಸ. ಅದಕ್ಕೇ ಹೇಳಿದೆ....ಆಯ್ತಾ? ಬರ್ತೇನೆ.”..... ಬಿರುಗಾಳಿಯ ತರಹ ಹೊರಟೇ ಹೋದಳು. ನಾನು ನೋಡುತ್ತಲೇ ಇದ್ದೆ. 

  ಇವಳು ನನ್ನನ್ನು ನಿಜವಾಗಿಯೂ ತನ್ನ ಮನೆಗೆ ಬಾ ಅಂತ ಆಹ್ವಾನಿಸಿದ್ದಾ ಅಥವಾ ಬರಬೇಡ ಎಂದು ಹೇಳಿದ್ದಾ? ಎಂಬುದು ನನಗೆ ನಿಜವಾಗಿಯೂ ಅರ್ಥವಾಗಲಿಲ್ಲ. "ಇವಳ ಜೊತೆ ಮಾತಾಡಲಿಕ್ಕೆ ಇಷ್ಟೆಲ್ಲ ಪೂರ್ವಸಿದ್ಧತೆ ಮಾಡಬೇಕಾ? ಇದೆಂಥಾ ಬದುಕು?" ಎಂದೂ ಅನ್ನಿಸಿತ್ತು.

  ಯಾಕೆ ಹೀಗಾಗ್ತಾ ಇದೆ ? ಎಲ್ಲೋ ಲೆಕ್ಕ ತಪ್ಪುತ್ತಿದೆಯಾ ?
  ಕಾರಣ ಹುಡುಕಲಿಕ್ಕೆ - ಸ್ವಲ್ಪ ಹಿಂದೆ ಸರಿದು ನೋಡಬೇಕಾಗುತ್ತದೆ. 

  ಕೂಡಿ ಬಾಳಿ ಸ್ವರ್ಗ ಸುಖ ಕಾಣಬಹುದಾದ ಕುಟುಂಬ ವ್ಯವಸ್ಥೆ ನಮ್ಮ ಭಾರತೀಯರದು. ಆದರೆ... ನಾನೂ - ನನ್ ಹೆಂಡ್ತಿ ಅಥವಾ ನಾನೂ - ನನ್ ಗಂಡ... ಬೇರೆ ಯಾರೂ ಬೇಡ - ಎಂಬ ಹೊಸ ವ್ಯವಸ್ಥೆಗೆ - ಬಯಸಿ ಬಯಸಿ - ನಮ್ಮನ್ನು ನಾವು ಈಗಾಗಲೇ ಒಡ್ಡಿಕೊಂಡಿರುವಾಗ ಈ ತುದಿಗಾಲ ಓಟದಿಂದ ತಪ್ಪಿಸಿಕೊಳ್ಳುವುದಾದರೂ ಹೇಗೆ? "ಅಪ್ಪ ಅಮ್ಮ, ಬಂಧುಬಳಗ.. ಯಾರೂ ಬೇಡ" ಎಂಬ ಸೂತ್ರದ ಅಡಿಯಲ್ಲಿ, ತಂತಮ್ಮ ಕುಟುಂಬದ ಗಾತ್ರವನ್ನು ಇಳಿಸಿಕೊಳ್ಳುತ್ತ ಬಂದ ಮೇಲೆ, ಅಂತಹ ಹೊಸ ವ್ಯವಸ್ಥೆಯ ಕೆಲವು ಲಾಭಗಳೊಂದಿಗೆ ನಷ್ಟಗಳನ್ನೂ ಒಪ್ಪಿಕೊಳ್ಳದೆ - ಬೇರೆ ದಾರಿಯುಂಟೆ ?

  ಮದುವೆಯೆಂಬುದು ಗಂಡು ಹೆಣ್ಣಿನ ಮಿಲನ ಮಾತ್ರವಲ್ಲ; ಎರಡು ಕುಟುಂಬಗಳ ಬಂಧನ. ಇದು ಭಾರತೀಯ ಸಿದ್ಧಾಂತ.  ಹೆಣ್ಣು ತನ್ನ ಅತ್ತೆ ಮಾವನನ್ನು "ನಿಮ್ಮಮ್ಮ ನಿಮ್ಮಪ್ಪ" ಅನ್ನುವುದು, ಗಂಡೂ ಕೂಡ ಆಗಾಗ ಭಾವ, ಮಾವ ಎಂದು ಸಂಬೋಧಿಸಲು ಹಿಂಜರಿಯುತ್ತ - "ನಿನ್ನಣ್ಣ ನಿನ್ನಪ್ಪ" ಅನ್ನುವುದು ಇತ್ತೀಚೆಗೆ ಸಾಮಾನ್ಯವಾಗಿ ಹೋಗಿದೆ. ಯಾವುದೇ ಕೌಟುಂಬಿಕ ಸಂಬಂಧಗಳ ಭಾವ ಶೈಥಿಲ್ಯಕ್ಕೆ ಇದೊಂದು ಉದಾಹರಣೆ ಅಷ್ಟೆ. 


  “ನಾನು-ನನ್ನಪ್ಪ-ನನ್ನಮ್ಮ" ಎನ್ನುವಲ್ಲಿಗೇ ಯಾವುದೇ ಸಂಬಂಧಗಳು ಮುಗಿದೀತೆ ? ಮುಗಿಯುವುದಿಲ್ಲ; ಮುಗಿಯಲೂ  ಬಾರದು. ಪ್ರತೀ ಸಂಬಂಧಕ್ಕೂ - ಒಂದು ಹಿಂದೆ - ಮತ್ತೊಂದು ಮುಂದೆ - ಇವೆರಡನ್ನೂ ಜೋಡಿಸಬೇಕಾಗುತ್ತದೆ. ನಾನು ನನ್ನದು ಎಂಬ ಸೀಮಿತ ಭಾವವನ್ನು ಮೀರಿ...  ಅದರಾಚೆಗಿನ ಸಂಬಂಧಗಳೂ ಕುಟುಂಬ ವ್ಯವಸ್ಥೆಗೆ ಅತೀ ಮುಖ್ಯ. ಸಂಬಂಧ-ಬಳಕೆಗಳು ಸುಸೂತ್ರವಾಗಿದ್ದು ಪರಸ್ಪರರ ಕಷ್ಟ ಸುಖಗಳಿಗೆ ಸ್ಪಂದಿಸುವ ವಾತಾವರಣವು ಯಾವುದೇ ಕೌಟುಂಬಿಕ ಪರಿಸರದಲ್ಲಿದ್ದರೆ ಅಂತಹ ಕುಟುಂಬ ಮಾತ್ರವಲ್ಲ.. ಅಂತಹ ಕುಟುಂಬಗಳ ಮಕ್ಕಳು ಕೂಡ - ಮುಂದಿನ ಪೀಳಿಗೆ ಕೂಡ ಬದುಕಿನ ಸಣ್ಣ ಪುಟ್ಟ ಏರುಪೇರುಗಳನ್ನು ಸುಲಭದಲ್ಲಿ ನಿಭಾಯಿಸುವಂತೆ ರೂಪುಗೊಳ್ಳುತ್ತಾರೆ. ಗಂಡು ಮತ್ತು ಹೆಣ್ಣು, ಅನ್ಯ+ಅನ್ಯ ಜೊತೆಯಾಗಿ, ಅನ್ಯೋನ್ಯ ಆದಾಗಲೇ - ಅವು.. ಒತ್ತಡ ಹಂಚಿಕೊಳ್ಳುವ ದಾಂಪತ್ಯ ನಡೆಸುವ ಕುಟುಂಬಗಳಾಗಿ, ಯಾವುದೇ ಬದುಕು - ಉತ್ಸವದ ಸಂಭ್ರಮ ಆಗಿ ಸಂಭವಿಸುತ್ತದೆ. ಅಲ್ಲವೆ ?

ಸ್ಥಾನಗಳ ಸಮರ್ಪಕ ನಿರ್ವಹಣೆ :


  ಅಪ್ಪ - ಅಮ್ಮ, ಅಜ್ಜ - ಅಜ್ಜಿ, ಮಾವ - ಭಾವ, ಅತ್ತೆ - ಅತ್ತಿಗೆ, ಮೈದುನ - ನಾದಿನಿ, ಅಣ್ಣ - ತಂಗಿ, ಅಕ್ಕ - ತಮ್ಮ,  ಮುಂತಾದ ಎಲ್ಲ ಸ್ಥಾನಗಳಿಗೂ ಒಂದಿಷ್ಟು ಅಲಿಖಿತ ಹೊಣೆಗಳೂ ಇರುತ್ತವೆ. ಯಾವುದೇ ಕೌಟುಂಬಿಕ ಯಶಸ್ಸಿನಲ್ಲಿ - ಈ ಎಲ್ಲ ಪಾತ್ರಗಳೂ ಸಮರ್ಪಕವಾಗಿ ಅಭಿನಯಿಸಬೇಕಾಗುತ್ತದೆ. ಈ ಎಲ್ಲ ಸಂಬಂಧಗಳೂ ಕುಟುಂಬವೆಂಬ ಗಾಡಿಯ ಹಲವು ಗಾಲಿಗಳು. ಎಲ್ಲ ಗಾಲಿಗಳೂ ಕಾರ್ಯಶೀಲ ಸ್ಥಿತಿಯಲ್ಲಿದ್ದರೆ ಮಾತ್ರವೇ ಕುಟುಂಬದ ಓಟ ಸರಾಗ. ಗಾಲಿಯ ಕೀಲಿಗಳು ಅಲ್ಲಲ್ಲಿ ಸಡಿಲಿದರೆ ಕುಟುಂಬವೆಂಬ ಯಂತ್ರವು ಸಹಜವಾಗಿಯೇ ಕುಂಟುತ್ತದೆ. ಪ್ರತೀ ಕುಟುಂಬದ ಒಂದೊಂದು ಸ್ಥಾನವೂ ಒಂದೊಂದು ಗಾಲಿ - ಕೀಲಿ. ಆದ್ದರಿಂದ ಸ್ಥಾನಗಳ ಸಮರ್ಪಕ ನಿರ್ವಹಣೆಯೇ ಕುಟುಂಬದ ಯಶಸ್ಸಿನ ಕೀಲಿಕೈ. ಕುಟುಂಬದ ಯಾವುದೇ ಒಬ್ಬ ಪಾತ್ರಧಾರಿಯು ಎಡವಿದರೂ ಇಡೀ ಕೌಟುಂಬಿಕ ನಾಟಕದ ಯಶಸ್ಸಿಗೆ ಅಡ್ಡಿಯಾಗುತ್ತದೆಯಲ್ಲವೆ ? ಹಾಗೇ. ಆದ್ದರಿಂದ - ಇದೊಂದು ಸಾಮೂಹಿಕ ಜವಾಬ್ದಾರಿ. ಸಣ್ಣಪುಟ್ಟ ಏರುಪೇರುಗಳು ಬರುತ್ತಲೇ ಇರುತ್ತವೆ; ಅವನ್ನೆಲ್ಲ, ಮುಕ್ತವಾಗಿ ಆಗಿಂದಾಗ ನಿಭಾಯಿಸಿಕೊಳ್ಳುವುದು ಅತೀ ಅಗತ್ಯ. ದಿನನಿತ್ಯದ ಯಾವುದೇ ಸಮಸ್ಯೆಗಳನ್ನು ಗಂಟುಕಟ್ಟಿ ಜೋಪಾನ ಮಾಡಲೇಬಾರದು. ಅದರಿಂದ ನಿಶ್ಚಯವಾಗಿ, ಕುಟುಂಬದ ಸ್ವಾಸ್ಥ್ಯ ಕೆಡುತ್ತದೆ. ಕೆಲವನ್ನು ಮರೆಯುತ್ತ ಅಥವ - "ಮರೆತಂತೆ" ತಮ್ಮನ್ನು ತಾವೇ ಒಪ್ಪಿಸಿಕೊಳ್ಳುತ್ತ ಬದುಕಬಲ್ಲೆವಾದರೆ... ಆಗ ಮಾತ್ರ, ಕುಟುಂಬಗಳು ಸರಾಗವಾಗಿ ಓಡುತ್ತವೆ. ಉಳಿದುಕೊಳ್ಳುತ್ತವೆ. Forget and Forgive Policy... ಭಂಡನಾದೆನು ನಾನು ಸಂಸಾರದಿ... ಅಂತ ದಾಸರು ಹೇಳಿದ್ದು ಸುಮ್ಮನೇ ಅಲ್ಲ; ಈ ಸಂಸಾರದಲ್ಲಿ ಬದುಕಬೇಕಾದರೆ - ಪದೇಪದೇ - ಕಂಡೂ ಕಾಣದ ಹಾಗೆ ಇರಲೇಬೇಕಾಗುತ್ತದೆ.

ಇವತ್ತಿನ ಕುಟುಂಬದ ವ್ಯವಸ್ಥೆಯಲ್ಲಿ ಜವಾಬ್ದಾರಿಯ ನಿರ್ವಹಣೆಯು ಸಮರ್ಪಕವಾಗಿದೆಯೆ?


  ಬಹುಶಃ ಇಲ್ಲೇ - ಆಧುನಿಕ ಎಂದುಕೊಳ್ಳುವ ಇವತ್ತಿನ ಕುಟುಂಬಗಳು ಎಡವುತ್ತಿರುವಂತಿದೆ. ಇವತ್ತು, ಹಕ್ಕಿನ ಕಾಟ ಜೋರಾಗಿದೆ; ಜವಾಬ್ದಾರಿ ಬೇಡವಾಗಿದೆ. ಪೂರ್ವಾಪರ ಯೋಚನೆ ಮಾಡದೆ ಕೈಗೊಳ್ಳುವ ಅನೇಕ ಬಾಲಿಶ ನಿರ್ಧಾರಗಳು ಇಂದಿನ ಕುಟುಂಬಗಳನ್ನು ಬಳಲಿಸುತ್ತಿರುವಂತೆಯೂ ಕಾಣುತ್ತದೆ. 

  ಮನೆ ತುಂಬ ಬಹುಬೆಲೆಯ ವಸ್ತುಗಳ ಭರಾಟೆಯು ಇಂದಿನ ವಿದ್ಯಮಾನ. ರೇಡಿಯೊ, ಟೀವಿ, ಫ್ರಿಜ್, ಕಂಪ್ಯೂಟರ್, ಒಂದಷ್ಟು ಮೊಬೈಲ್ ಗಳು...ಇತ್ಯಾದಿಗಳನ್ನು ಮನೆತುಂಬ ತುಂಬಿಕೊಳ್ಳುವ, ಆಗಾಗ ಬದಲಿಸುವ ಫ಼್ಯಾಶನ್ನಿನ ಪೈಪೋಟಿಯು ಇಂದಿನ ಸಮಸ್ಯೆಯಾದಂತಿದೆ. ಕೊಳ್ಳುಬಾಕತನವು ಏಕಮಾತ್ರ ಧಂದೆಯಂತಾಗಿಬಿಟ್ಟಿದೆ. ಇದು - ಗೀಳು; ಕೊಂಡುಕೊಳ್ಳುವ ಗೀಳು. ಇದರಿಂದ ನಾನಾ ಸಮಸ್ಯೆಗಳು ಉದ್ಭವಿಸುತ್ತಿವೆ. 

  ಕುಟುಂಬದ ಸದಸ್ಯರ ನಡುವೆ "ಕೊಡುವುದು - ಪಡೆಯುವುದು" ಎಂಬ ಕ್ರಿಯೆಯು ಎಡೆಬಿಡದೆ ನಡೆಯುತ್ತಿರಲೇಬೇಕೆಂಬ ಕೃತಕ  ವಾತಾವರಣವನ್ನು - ಈಗ ನಾವು ನಾವೇ ನಿರ್ಮಿಸಿಕೊಂಡಿದ್ದೇವೆ. ವಿನಾಕಾರಣ ಪೇಟೆ ಸುತ್ತುವುದು; ಅಲ್ಲಿ ಕಂಡದ್ದನ್ನೆಲ್ಲ ಕೊಳ್ಳುವುದು ! ಈ ಬೇಜವಾಬ್ದಾರಿಯ ಚಾಳಿಯನ್ನು ನಿಭಾಯಿಸುವ ಸಲುವಾಗಿಯೇ - ಏನಕೇನ ಪ್ರಕಾರೇಣ ದುಡ್ಡು ಸಂಪಾದಿಸಲಿಕ್ಕೂ ಹೊರಟಿದ್ದೇವೆ. ಅದು ಹಗಲೋ ರಾತ್ರಿಯೋ/ ಹೆಣ್ಣೋ ಗಂಡೋ/ ನೈತಿಕವೋ ಅನೈತಿಕವೋ .... ಒಟ್ಟಾರೆ ದುಡ್ಡಾಗಬೇಕು; ಬಿಡುಬೀಸಾಗಿ ಖರ್ಚು ಮಾಡಬೇಕು ! ತನ್ಮೂಲಕ - "ದೊಡ್ಡ ಮನುಷ್ಯ" ಅನ್ನಿಸಿಕೊಳ್ಳಬೇಕು ! ಇಂತಹ "ಪ್ರತಿಷ್ಠೆಗಳನ್ನು" ತೃಪ್ತಿಪಡಿಸಲು ನಾವು ತೆರುತ್ತಿರುವ ಬೆಲೆಯಾದರೂ ಎಷ್ಟು ? ಕೌಟುಂಬಿಕ ಜಾಲವೇ ಸಡಿಲಗೊಳ್ಳುತ್ತಿಲ್ಲವೆ ? ಯೋಚಿಸಬೇಕು. ನಮ್ಮ ಬೇಕುಗಳಿಗೆ - ನಾವೇ ಲಕ್ಷ್ಮಣರೇಖೆ ಎಳೆದುಕೊಳ್ಳಬೇಕಾದ ಸಮಯ ಬಂದಿದೆ.

   ಹೀಗೆ ದುಡ್ಡಿನ ಹಿಂದೆಯೇ ಓಡುವವರಿಗೆ - ಸಹಜವಾಗಿ, ಯಾರೂ ಬೇಕಾಗುವುದಿಲ್ಲ; ಅಂತಹ ಮಂದಿಗೆ ಯಾವ ಸಂಬಂಧಗಳೂ ಮುಖ್ಯವಾಗುವುದಿಲ್ಲ. ಅವರದು ಏಕದೃಷ್ಟಿ; ಅದು - ದುಡ್ಡು; ಖರ್ಚು ಮಾಡಲು, ಪ್ರತಿಷ್ಠೆ ಬೆಳೆಸಿಕೊಳ್ಳುವ ಸಲುವಾಗಿಯೇ "ದಾನಧರ್ಮದ ವೇಷ ಹಾಕಲು" - ಸೊಕ್ಕಿದ ದುಡ್ಡು ಈಗ ಸಂಚರಿಸುತ್ತಿದೆ. ಖರ್ಚು ಮಾಡುವುದೇ - ಅಂಥವರ ಜನ್ಮಸಿದ್ಧ ಪ್ರತಿಷ್ಠೆ ! ಇಂತಹ ದುಡ್ಡುಗೋರುವ ತಿಣುಕಾಟದಿಂದಾಗಿ, ತಮ್ಮ ಸ್ವಂತ ಕುಟುಂಬಕ್ಕೆ ಗಮನವೀಯಲಾಗದ ಅನೇಕ ಕುಟುಂಬಗಳನ್ನು ನಾನು ನೋಡಿದ್ದೇನೆ. ಅಂತಹ ಮನೆಯ ಮಕ್ಕಳು ಸಮಾಜ ಕಂಟಕರಾಗಿ ವರ್ತಿಸುವುದನ್ನು ಎಲ್ಲರೂ ನೋಡಿದ್ದಾರೆ. ಮಿತಿಮೀರಿದ ಸಂಪತ್ತಿನ ಸಂಗ್ರಹಕ್ಕಾಗಿ ಹೆಣಗಾಡುವ ಅಂತಹ ಕುಟುಂಬಗಳಿಂದಾಗಿ ಸಾಮಾಜಿಕ ಸ್ವಾಸ್ಥ್ಯವೂ ಏರುಪೇರಾಗುತ್ತದೆ. ಇವತ್ತಿನ ಕುಟುಂಬಗಳನ್ನು ಅತಿಯಾಗಿ ಬಳಲಿಸುತ್ತಿರುವ ವರ್ತನೆ ಇದು. ಒಂದಷ್ಟು ಪ್ರಚಾರಕ್ಕಾಗಿ ಊರನ್ನು ಸ್ವಚ್ಛ ಮಾಡುವ ಮೊದಲು, ಅವರವರ ಕುಟುಂಬಗಳನ್ನು ಸ್ವಚ್ಛಗೊಳಿಸಿಕೊಂಡರೆ... ಅದಕ್ಕಿಂತ ದೊಡ್ಡ ದೇಶಸೇವೆ ಉಂಟೆ ? ಪ್ರತಿಯೊಂದು ಮನೆಯು ಸ್ವಚ್ಛವಾದರೆ... ಊರು ಸ್ವಚ್ಛವಾದಂತೆಯೇ ಅಲ್ಲವೆ ? ಯಾಕೆ ಯೋಚಿಸಬಾರದು ?  


  ಮನುಷ್ಯನನ್ನು ಮಕಾಡೆ ಮಲಗಿಸಿ ಅವನ ಬೆನ್ನ ಮೇಲೇ ಸವಾರಿ ಮಾಡುವವನು ದಿಕ್ಪಾಲಕ ಕುಬೇರ - ಎಂಬ ಪೌರಾಣಿಕ ಸಂಕೇತದಲ್ಲಿ ಗೂಢಾರ್ಥ ಕಾಣಬೇಕು. ಅಧೋಮುಖಿಯಾಗುವ, ನತದೃಷ್ಟನಾಗುವ ಸ್ಪಷ್ಟ ಸೂಚನೆಯದು. ಇವತ್ತು  ಸಾಮಾಜಿಕವಾಗಿ ನೋಡಿದರೆ - ದುಡ್ಡಿನಿಂದ ನ್ಯಾಯವನ್ನೂ ಖರೀದಿಸಬಹುದು; ಆಯುಷ್ಯವನ್ನೂ ಗಿಟ್ಟಿಸಿಕೊಳ್ಳಬಹುದೆಂದು ಹೇಳಲಾಗುವ ಇಂದಿನ ದಿನಮಾನದಲ್ಲಿ, .. ಹೀಗೆ ಸಾರ್ವತ್ರಿಕವಾಗಿ ಭಯ ಹುಟ್ಟಿಸುತ್ತಿರುವ ಅವರವರ ಭವಿಷ್ಯವೇ - ಬಹುಪಾಲು ಜನರನ್ನು ಹಣದ ಹಿಂದೆ ಓಡುವಂತೆ ಮಾಡುತ್ತಿದೆ ಎಂಬುದೂ ಸುಳ್ಳಲ್ಲ. "ಮುಂದೆ ಏನಾದೀತೋ ? ಯಾವುದಕ್ಕೂ ಇರಲಿ; ಎಷ್ಟಿದ್ದರೂ ಇರಲಿ..." ಎಂಬ "ಭವಿಷ್ಯದ ಭಯ" - ಇದು. ಮನೆಯಲ್ಲಿ ಸಾಯುವುದು ಸಾವಲ್ಲವೆ ? ಅಪ್ಪೊಲೊ ಆಸ್ಪತ್ರೆಯಲ್ಲಿ ಸಾಯುವುದು ಮಾತ್ರ - ಒಪ್ಪುವ ಸಾವೆ ?... ಗೊತ್ತಿಲ್ಲ. ಆದರೆ ಇಂತಹ ಐಷಾರಾಮಿ ಹಣದ ಅಮಲು ಮತ್ತು ತೆವಲು - ಈಗ ನಮ್ಮನ್ನು - ಕೌಟುಂಬಿಕವಾಗಿ ಮಾತ್ರ ಏಕಾಂಗಿಯಾಗಿಸುತ್ತಿದೆ. ಅರ್ಥವಿಲ್ಲದ ವ್ಯರ್ಥ ದುಡಿಮೆಯಲ್ಲಿಯೇ ಬದುಕುಗಳು ಕಳೆದುಹೋಗುತ್ತಿವೆ. "ಅತ್ತ ದರಿ; ಇತ್ತ ಪುಲಿ" ಎಂಬ ತ್ರಿಶಂಕು ಸ್ಥಿತಿ ಇದು ! ಎಂದಿಗೂ ನೆಮ್ಮದಿಯನ್ನು ತೋರಿಸದ - "ವಸ್ತು ವೈಭೋಗದ ಸೆಳೆತದ ಸ್ವಯಂಕೃತಾಪರಾಧಕ್ಕೆ" - ಬಹುಶಃ - ಈಗ ನಾವೀಗ ಬೆಲೆ ತೆರುತ್ತಿದ್ದೇವೆ.

  ಈ ಎಲ್ಲ ಹಿನ್ನೆಲೆಯಲ್ಲಿ - ಕುಟುಂಬದ ಹಿರಿಯರು ಅವರವರ ಮನೆಯೊಳಗೊಮ್ಮೆ ದೃಷ್ಟಿಹರಿಸಿ, ಸ್ವತಃ ಪ್ರಶ್ನಿಸಿಕೊಳ್ಳಬೇಕಾಗಿದೆ. ಇವತ್ತಿನ ಸಾಮಾಜಿಕ ಚೌಕಟ್ಟಿಗೆ ಹೊಂದುವಂತೆ - ಕೌಟುಂಬಿಕ ವ್ಯವಸ್ಥೆಯ ನಿರ್ವಹಣೆಗೆ ಸೂಕ್ತವಾದ - ಹೊಸ ಮಾರ್ಗೋಪಾಯಗಳನ್ನೂ ಚಿಂತಿಸಬೇಕಾಗಿದೆ. ಪ್ರತಿಯೊಂದು ಬದುಕುಗಳ ಹಾದಿಯಲ್ಲಿ ಎದುರಾಗುವ ತಪ್ಪು-ಸರಿ, ಬೇಕು-ಬೇಡಗಳ ಕುರಿತ ಪರಿಜ್ಞಾನವನ್ನು - ಬಾಲ್ಯ ಕಾಲದಲ್ಲೇ ಊಡಿ, ಅದು ಜೀರ್ಣವಾಗುವಂತೆ - ಅವರವರ ಕೌಟುಂಬಿಕ ಪರಿಸರವನ್ನು ಕಟ್ಟಿಕೊಳ್ಳಬೇಕಾಗಿದೆ. ಮನೆಯೊಳಗಿರುವ ಟೀವಿ, ಕಂಪ್ಯೂಟರುಗಳನ್ನು ನಮ್ಮ ಮಕ್ಕಳು ಹೇಗೆ ಉಪಯೋಗಿಸಿ-ಕೊಳ್ಳುತ್ತಿದ್ದಾರೆ ? ಮೊಬೈಲ್ ಗಳ ಅಟ್ಟಹಾಸಗಳು ಮಿತಿಮೀರಿವೆಯೆ ? ಯಾವುದೇ ಸದ್ದಿಲ್ಲದ, ಮನುಷ್ಯರಿಲ್ಲದ ಮೂಲೆಗಳಲ್ಲಿ ಕೂತು, ನಮ್ಮ ಮಕ್ಕಳು ಗಂಟೆಗಟ್ಟಲೆ ಮೊಬೈಲ್ ನಲ್ಲಿ ತೊಡಗಿಕೊಳ್ಳುತ್ತಿದ್ದರೆ... ಅದನ್ನು ಅಪಾಯದ ಮುನ್ಸೂಚನೆ ಎಂದು ಭಾವಿಸಬೇಕು. ತಕ್ಷಣವೇ ಚಿಕಿತ್ಸೆ ಸಿಗಬೇಕಾದ ಭಯಂಕರ ರೋಗವಿದು.. ಇವತ್ತಿನ ಮಕ್ಕಳ ಮೊದಲ ಶತ್ರುವೇ ಮೊಬೈಲ್. Prevention is better than cure ಎಂಬಂತೆ... ಸೂಕ್ತವಾಗಿ ಬಳಸಿಕೊಳ್ಳಲು ಗೊತ್ತಿಲ್ಲದ ಎಳೆಯ ವಯಸ್ಸಿನ ಮಕ್ಕಳಿಗೆ ಮೊಬೈಲ್ ಒದಗಿಸಬಾರದು. ಇನ್ನು,... ನಮ್ಮ ಮಕ್ಕಳ ಸ್ನೇಹಿತರು ಯಾರು ? ಅಂತಹ ಸ್ನೇಹಿತರ ಮನೆಯ ಸದಸ್ಯರ ಚಟುವಟಿಕೆಯ ಶೈಲಿ ಹೇಗಿದೆ? ಅವರೆಲ್ಲರ ಅಭಿರುಚಿ ಎಂಥದ್ದು ಎಂಬುದನ್ನೆಲ್ಲ ಅರ್ಥ ಮಾಡಿಕೊಂಡು - ಸ್ನೇಹದ ಆಯ್ಕೆಯ ಕುರಿತೂ ಮನೆಯ ಸದಸ್ಯರಿಗೆ ಆಗಾಗ ತಿಳಿಹೇಳುವ ಶ್ರಮ ತೆಗೆದುಕೊಳ್ಳಲು ನಾವು ಪ್ರಯತ್ನಿಸುತ್ತಿದ್ದೇವೆಯೆ? ಅವಕ್ಕೆಲ್ಲ ನಮಗೀಗ ಪುರಸೊತ್ತು - ವ್ಯವಧಾನವಿದೆಯೆ? ಹೋಗಲಿ. ಪ್ರತೀದಿನವೂ, ದಿನಕ್ಕೆ ಒಮ್ಮೆಯಾದರೂ ಕುಟುಂಬದ ಸದಸ್ಯರೆಲ್ಲರೂ ಒಟ್ಟಿಗೆ ಕೂತು ಮಾತಾಡುವುದು, ಜೊತೆಯಾಗಿ ಊಟ ಮಾಡುವುದು, ತಮ್ಮ ದಿನದ ಚಟುವಟಿಕೆಯ ಅನುಭವಗಳನ್ನು ಪರಸ್ಪರ ಹಂಚಿಕೊಳ್ಳುವುದು... ಇವೆಲ್ಲವೂ... ನಡೆಯಬೇಕು; ಇವು, ಕುಟುಂಬವನ್ನು ಒಂದಾಗಿಸುವ ಚಟುವಟಿಕೆಗಳು. 


  ತನ್ಮಧ್ಯೆ.. ಇಂದಿನ ಮನೆಗಳಲ್ಲಿ, ಅನುಭವಸ್ಥ ಹಿರಿಯರು ಅನ್ನಿಸಿಕೊಂಡವರಿಗೆ ಮನೆಗಳಲ್ಲಿ ಏನಾದರೂ ಕಿಮ್ಮತ್ತಿದೆಯೆ ? ವಿನಯವೆಂಬುದನ್ನೇ ಇವತ್ತಿನ ಹೊಸ "ಇಂಗ್ಲಿಷ್ ಪೀಳಿಗೆಗಳು" ಕಲಿಯುತ್ತಿಲ್ಲ ಎಂದಾದರೆ....... ಅದಕ್ಕೆ ಪರಿಹಾರೋಪಾಯ ಏನು ? 

  ಉದ್ಧಟ ಮಕ್ಕಳನ್ನು ಯಾವ ಹಿರಿಯರೂ ಕ್ಷಮಿಸಬೇಕಾಗಿಲ್ಲ. ಮಕ್ಕಳು ಎಂಬ ಮಮಕಾರದ ಭಾವನೆಗಳಿಗೆ ಅಥವ ಹೊರಗಿನ ಸಮಾಜದ ಮಾತುಗಳಿಗೆ ಬೆದರಿ ಯಾವ ಹಿರಿಯರೂ ತಮ್ಮ ತಮ್ಮ "ಕೌಟುಂಬಿಕ ಅನಾಹುತಗಳನ್ನು" ಸಹಿಸಿಕೊಳ್ಳಬಾರದು. ವೃದ್ಧಾಪ್ಯದಲ್ಲಿಯೂ ... ತಮ್ಮ ತಮ್ಮ ಮನಃಶಾಂತಿಗಾಗಿ, ಕಠಿಣ ನಿರ್ಧಾರಗಳನ್ನು ಕೈಗೊಳ್ಳಲು ಯಾವ ಹಿರಿಯರೂ ಹಿಂಜರಿಯಬಾರದು; ತಮ್ಮ ಜವಾಬ್ದಾರಿಗಳನ್ನು ನಿರ್ವಂಚನೆಯಿಂದ ನಿರ್ವಹಿಸುವುದರ ಜೊತೆಗೆ, ತಾವು  ಆರೋಗ್ಯವಂತರಾಗಿರುವವರೆಗೂ - ತಾವಾಗಿಯೇ ತಮ್ಮ ಅಧಿಕಾರ ಮತ್ತು ಕೌಟುಂಬಿಕ ಸ್ಥಾನವನ್ನು ಯಾವ ಹಿರಿಯರೂ  ಹಸ್ತಾಂತರಿಸಬಾರದು; ತಮ್ಮ ಸ್ವಂತ ಸಂಪಾದನೆಯನ್ನು - ಯಾರಿಗೂ - ಮಗನಿಗಾಗಲೀ ಮಗಳಿಗಾಗಲೀ  ವರ್ಗಾಯಿಸಬಾರದು. ಇವತ್ತಿನ ಸಮಾಜದಲ್ಲಿ ಪ್ರತಿಯೊಬ್ಬ ಹಿರಿಯ ನಾಗರಿಕರೂ ಕೈಗೊಳ್ಳಲೇಬೇಕಾದ ಎಚ್ಚರವಿದು.

  ಭಾವನೆಗಳನ್ನು ಅರ್ಥೈಸಿಕೊಳ್ಳಲಾಗದ ಯಾವುದೇ ಕುಟುಂಬದ ಸದಸ್ಯರನ್ನು ನಿರ್ಭಾವದಿಂದ ನಿವಾರಿಸಿಕೊಂಡು, ಮುಕ್ತರಾಗುವುದೂ ತಪ್ಪಾಗದು. ಕಲ್ಲ ಪುತ್ಥಳಿಯ ಬಿಗಿದಪ್ಪಿ ಚುಂಬಿಸಿದರೆ... ಚುಂಬಿಸಿದವರ ಹಲ್ಲು ಹೋದೀತಷ್ಟೆ; ಪ್ರತಿಕ್ರಿಯೆಗಳಿಲ್ಲದಿರುವ ಎಡೆಗಳಲ್ಲಿ ಮೋಹ ಮಮಕಾರಗಳು ಘಾತುಕವೆನಿಸಿಯಾವು. ಆದ್ದರಿಂದ ಯಾವುದೇ ಕುಟುಂಬದ ಹಿರಿಯರಾದವರು - ಪ್ರತಿಸ್ಪಂದನೆಯಿಲ್ಲದ ಸ್ಥಳಗಳಲ್ಲಿ ಕೂತು, ವ್ಯರ್ಥ ಭಾವನೆಗಳಲ್ಲಿ ಬೇಯದೆ - ಸ್ವಂತ ಆತ್ಮವಿಶ್ವಾಸವನ್ನು ಆಶ್ರಯಿಸುವುದು ಒಳ್ಳೆಯದು. ಬದುಕಿನ ೬೦-೭೦ ವರ್ಷಗಳನ್ನು ಯಶಸ್ವಿಯಾಗಿ ಸಾಗಿಸಿದವರಿಗೆ, ಕೊನೆಯ ಹತ್ತಿಪ್ಪತ್ತು ವರ್ಷಗಳನ್ನು - ಹೇಗೋ ಕಳೆದುಬಿಡಬಹುದು; ಅದೇನೂ ಕಷ್ಟವಲ್ಲ. ಆದರೆ, ಆತ್ಮಸ್ಥೈರ್ಯ ಕುಸಿದುಹೋಗದಂತಹ ಜಾಗ್ರತ ಪ್ರಜ್ಞೆಯನ್ನು ಉಳಿಸಿಕೊಳ್ಳಬೇಕು; ಅಂದರೆ - ಹಟಮಾರಿತನ ಅಲ್ಲ. "ಕುಟುಂಬದ ಬೇಲಿಯನ್ನು ಭದ್ರಪಡಿಸಿಕೊಳ್ಳುವ" ಕ್ರಿಯೆ ಅದು. ವೃದ್ಧಾಪ್ಯದ ಹಂತದಲ್ಲಿ, ಸದಾ ಆತ್ಮಸ್ಥೈರ್ಯ ಕುಸಿಯದ ಎಚ್ಚರದಲ್ಲಿದ್ದು, ಹೊಂದಾಣಿಕೆಯ ಮನೋಭಾವದ ಜೊತೆಜೊತೆಗೆ - ತಮ್ಮ ಕುಟುಂಬದ ಆರೋಗ್ಯಕ್ಕಾಗಿ - ಬಾಹ್ಯ ಮತ್ತು ಆಂತರಂಗಿಕ ಸರ್ವೇಕ್ಷಣೆಗಳನ್ನು ನಡೆಸುತ್ತಲೇ ಇರಬೇಕು.

   ಮನೆ ಅಂದ ಮೇಲೆ ಕೆಲವು ವಿಷಯಗಳನ್ನು ಆಗಾಗ ಗಮನಿಸುತ್ತಲೇ ಇರಬೇಕಾಗುತ್ತದೆ. ಒಮ್ಮೊಮ್ಮೆ, ಮನೆ ವಾರ್ತೆಯಲ್ಲಿ ಯಾರಿಗಾದರೂ ಅಧಿಕ ಹೊರೆ ಬಿದ್ದಾಗ ಕುಟುಂಬದ ಇತರ ಸಹ ಸದಸ್ಯರು ಕೈ ಜೋಡಿಸುವ ಅನಿವಾರ್ಯತೆಯನ್ನು ಮನದಟ್ಟುಮಾಡಿಸಿ, ಅದನ್ನು ಆಚರಣೆಗೆ ತರಲು ಮನೆಯ ಹಿರಿಯರು ಸಮರ್ಥರಾಗಿದ್ದೇವೆಯೆ ?? ಹಿರಿಯರಾದವರು - ತಮ್ಮ ಕುಟುಂಬದ ಸದಸ್ಯರೆದುರಲ್ಲಿ ತಮ್ಮ ಮನೆಯ ಹಿರಿಯರನ್ನು - ತಾವು ಸ್ವತಃ ಗೌರವಿಸಿ ತನ್ಮೂಲಕ ಕಿರಿಯರಿಗೆ ಮಾರ್ಗದರ್ಶನ ನೀಡುತ್ತಿದ್ದೇವೆಯೆ? ಅಜ್ಜಿ ಅತ್ತೆ ಮುಂತಾದ ಹಿರಿಯ ಸ್ತ್ರೀಯರ ಅನುಭವದ ಬುತ್ತಿಯುಣ್ಣುತ್ತ "ನಿತ್ಯ ನಿರಾತಂಕದ ದಾರಿ" ಸವೆಸುತ್ತ - ಭವಿಷ್ಯದ ಕುಟುಂಬವನ್ನು ನಾವು ಸದೃಢವಾಗಿ ಕಟ್ಟುತ್ತಿದ್ದೇವೆಯೆ? ಸದೃಢ ಕುಟುಂಬದ ಅಪೇಕ್ಷೆಯುಳ್ಳ ಹೊಣೆಯರಿತ ಹಿರಿಯರು ಕೇಳಿಕೊಳ್ಳಬೇಕಾದ ಪ್ರಶ್ನೆಗಳಿವು. 


   ನೆನಪಿರಲಿ. ಮಾತು ಕೇಳದೆ ಮಲೆತು ನಡೆಯುವ ಕುಟುಂಬದ ಯಾವುದೇ ಸದಸ್ಯರ ಕುರಿತು, ಆಗಿಂದಾಗ ಬಿಗಿನಿಲುವು ತಾಳಲಾಗದ ಹಿರಿಯ ವರ್ಗಕ್ಕೆ - ಅಪಾರ ಯಾತನೆ ಎಂಬುದು ತಪ್ಪಿದ್ದಲ್ಲ. ಪ್ರತಿಸ್ಪಂದನೆ ಇಲ್ಲದ ವ್ಯಕ್ತಿಗಳ ಕಡೆಗೆ ಮಮಕಾರ ತೋರುವುದು - ದುಃಖಕ್ಕೆ ಆಹ್ವಾನ ಕೊಟ್ಟಂತೆ. ಅಂತಹ ಸಂದರ್ಭಗಳಲ್ಲಿ ಹೃದಯದ ಮಾತನ್ನು ಬದಿಗೆ ಸರಿಸಿ, ಬುದ್ಧಿಯನ್ನು ಜಾಗ್ರತಗೊಳಿಸಬೇಕಾಗುತ್ತದೆ. ಕೌಟುಂಬಿಕ ಪ್ರೀತಿ, ಕರ್ತವ್ಯಪಾಲನೆಗಳೆಲ್ಲವೂ ಸರಿ; ಆದರೆ, ಕುಟುಂಬದ ನೀತಿ ನಿಯಮಗಳನ್ನು ಮೀರುವ ವರ್ತನೆಗಳನ್ನು - ತಮ್ಮನ್ನೂ ಸೇರಿಸಿಕೊಂಡು ಯಾರಿಂದಲೇ ನಡೆಯಲಿ, ಅಂತಹ ಉಡಾಫೆಗಳನ್ನು ಯಾವತ್ತೂ  ಕ್ಷಮಿಸದೆ, ಆಗಿಂದಾಗ ದಂಡನೆಗೆ ಒಳಪಡಿಸುವುದು - ಕೌಟುಂಬಿಕ ನೆಲೆಗಟ್ಟನ್ನು ಭದ್ರಪಡಿಸಿಕೊಳ್ಳಬಹುದಾದ ಉತ್ತಮ ಮಾರ್ಗ. ಬಿತ್ತಿದಂತೆ ಬೆಳೆ.. ಎಂಬ ಅನುಭವೋಕ್ತಿಯನ್ನು ಯಾರೂ  ಮರೆಯಬಾರದು. ನಾವು ಬಿತ್ತುವ ಬೀಜಗಳು ಆರೋಗ್ಯವಂತವಾಗಿರಬೇಕಲ್ಲವೆ ?

  ಇವತ್ತಿನ ಸಮಾಜದಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಿರುವುದು ಯಾವುದೇ ನಾಗರಿಕ ಸಮಾಜಕ್ಕೆ ಶೋಭೆ ತರುವ ಸಂಗತಿಯಲ್ಲ. ಇದೂ ಕೂಡ - ನಾವು materialistic ಬದುಕನ್ನು ಒಪ್ಪಿ ಅನುಸರಿಸುತ್ತಿರುವುದರ ಪ್ರತ್ಯಕ್ಷ ಪ್ರಭಾವ. ಆದರೆ, ದಾರಿ ಮತ್ತು ದಿಕ್ಕು ತಪ್ಪಿದ ಸ್ವಂತ ಕುಟುಂಬದೊಳಗೆ ನರಳುತ್ತ ಇರುವುದಕ್ಕಿಂತ, ಯಾವುದೇ ಹಿರಿಯರು ವೃದ್ಧಾಶ್ರಮ ಸೇರಿಕೊಳ್ಳುವ ನಿರ್ಧಾರ ಕೈಗೊಂಡರೆ... ಅದು - ತಪ್ಪಲ್ಲ. ಆದರೆ, ನಾವು ಎಲ್ಲಿಗೆ ಹೋದರೂ... ಕೌಟುಂಬಿಕ ಮೋಹ ಮಾಯೆಯ ಸೆಳೆತಗಳು ತಪ್ಪುತ್ತದೆಂದಲ್ಲ; ಅಲ್ಲವೆ ? ದೈನಂದಿನ ಒತ್ತಡಗಳು ಸ್ವಲ್ಪ ಕಡಿಮೆಯಾಗುವುದಿದ್ದರೆ... ವೃದ್ಧಾಶ್ರಮವು ತಕ್ಕಮಟ್ಟಿನ ನೆಮ್ಮದಿಯನ್ನು ಕೊಡಲೂಬಹುದು. ಆದರೆ ಅಂತಹ ಅಂತಿಮ ನಿರ್ಧಾರಕ್ಕೆ ಬರುವ ಮುಂಚೆ - ಸ್ವಂತ ಮನಸ್ಸನ್ನು ದೃಢಪಡಿಸಿಕೊಳ್ಳುವ ಪೂರ್ವ ಸಿದ್ಧತೆಯು ಅತ್ಯಂತ ಅಗತ್ಯ ಮತ್ತು ಅನಿವಾರ್ಯವೂ ಕೂಡ. ಜತೆಜತೆಗೆ, ಪೂರ್ವಾರ್ಜಿತ ಹವ್ಯಾಸಗಳೇನಾದರೂ ಇದ್ದರೆ... ಅದರತ್ತ ಗಮನ ಕೇಂದ್ರೀಕರಿಸುವುದೂ - ಉತ್ತಮ.

   ಕ್ಷಿಪ್ರಗತಿಯ ಹೊಂದಾಣಿಕೆಯು ಕೌಟುಂಬಿಕ ಅಗತ್ಯ. ಲಿಯೋ ಟಾಲ್ಸ್ಟಾಯ್ ಹೇಳಿದಂತೆ - "ತಿರಸ್ಕರಿಸಲಾಗದ ಒಂದು ಸುಖವಿದೆ.  ಅದು - ಇನ್ನೊಬ್ಬರಿಗಾಗಿ ಬದುಕು ಸವೆಸುವುದು." ಅಂದೇ ವೇದವ್ಯಾಸರು ಹೇಳಿದ - "ಪರೋಪಕಾರಾರ್ಥಮಿದಂ ಶರೀರಂ" ಎಂಬ ಮಾತನ್ನು ಎಷ್ಟೋ ಸಾವಿರ ವರ್ಷಗಳ ನಂತರ ಟಾಲ್ ಸ್ಟಾಯ್ ಹೇಳಿದ್ದಲ್ಲವೆ ? ಯೋಚಿಸಿ. 


  ಹೀಗೆ... ಇನ್ನೊಬ್ಬರಿಗಾಗಿ ಬದುಕುವ ನೀತಿಯೇ ಭಾರತೀಯ ಕೌಟುಂಬಿಕ ಭದ್ರತೆಯ ಮುಖ್ಯ ಅಂಶವಾಗಿತ್ತು. ಆದ್ದರಿಂದಲೇ, ವಿಶ್ವದ ಯಾವ ಮೂಲೆಯಲ್ಲೂ ಕಾಣಿಸದ ಸುಭದ್ರ ಕುಟುಂಬ ವ್ಯವಸ್ಥೆಯು ಭಾರತದಲ್ಲಿ ಉಳಿದುಕೊಂಡಿತ್ತು; ಈಗಲೂ ನಾಶವಾಗಿಲ್ಲ; ಉಳಿದುಕೊಂಡಿದೆ.
  
  ಕುಟುಂಬ ಸ್ವಾಸ್ಥ್ಯದ ಸೂತ್ರವಿದು. ಇನ್ನೊಬ್ಬರಿಗಾಗಿಯೇ ಪ್ರತಿಯೊಬ್ಬರೂ ಬದುಕುವುದು. "ಕುಟುಂಬ ಪ್ರೀತಿ" ಬೆಳೆಯುವುದೇ ಇಂತಹ ಭಾವನೆಗಳಿಂದ. ಆದರೆ, .. ಬದಲಾಗುತ್ತಿರುವ ಇವತ್ತಿನ ದಿನಮಾನದಲ್ಲಿ ಕುಟುಂಬದ ಪ್ರತಿಯೊಬ್ಬ ಸದಸ್ಯನಿಂದಲೂ ಅಪೇಕ್ಷಿಸಲಾಗದ ಆದರ್ಶ ಇದು. ಆದ್ದರಿಂದ ವಾಸ್ತವದ ಕಡೆಗೂ ನಾವು ದೃಷ್ಟಿ ಹರಿಸಬೇಕಾಗುತ್ತದೆ. "ಕೇವಲ ತ್ಯಾಗದ ಭಾವನೆಗಳಿಂದಲೇ ಬದುಕನ್ನು, ಕುಟುಂಬವನ್ನು ಕಟ್ಟಿಕೊಳ್ಳಲಾಗುವುದಿಲ್ಲ" ಎಂಬ ಪರಿಸ್ಥಿತಿಗಳು ಈಗ ಎದುರಾಗುತ್ತಿವೆ. ಕುಟುಂಬವನ್ನು ತೂಗಿಸಲು ಪ್ರತಿಯೊಂದು ಕೌಟುಂಬಿಕ ಘಟನೆ, ಭಾವನೆಗಳ ಸಮತೋಲನ ಮತ್ತು ನಿತ್ಯದಿನಚರಿಯ ಹೊಂದಿಕೆಯು ಬಹಳಮುಖ್ಯ - ಎಂಬುದು - ಈಗ ಹೆಚ್ಚು ಹೆಚ್ಚು ಅನುಭವಕ್ಕೆ ಬರುತ್ತಿದೆ. 
  ಹಕ್ಕು ಮತ್ತು ಕರ್ತವ್ಯಗಳ ಸಹಜೀವನವೇ - ಕುಟುಂಬ - ಅಲ್ಲವೆ ?    

   "ಇವತ್ತಿನ ಸಾಮಾಜಿಕ ಅಗತ್ಯಗಳನ್ನು ಹೊಂದಿಸಲು ಗಂಡು ಮತ್ತು ಹೆಣ್ಣು ಇಬ್ಬರಿಗೂ ಉದ್ಯೋಗವೆಂಬುದು ಅನಿವಾರ್ಯ" ಎಂಬುದನ್ನು ತಳ್ಳಿಹಾಕಲಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಕೌಟುಂಬಿಕ ದಿನಚರಿಯನ್ನು - ಅದಕ್ಕೆ ತಕ್ಕಂತೆ ಹೊಸದಾಗಿಯೇ ಬರೆಯಬೇಕಾಗುತ್ತದೆ. ವೇಗಕ್ಕೆ ಮಣೆಹಾಕುವ ದಿನಗಳಿವು. ತಿಳಿದು, ಕಲಿತು, ಕಲಿತುದನ್ನು ಅವಸರದಲ್ಲಿ ಬದುಕಿಗೆ ಅಳವಡಿಸಿಕೊಳ್ಳುವ ಹೊಂದಾಣಿಕೆಯಲ್ಲೂ - ವೇಗವು ಬೇಕೇ ಬೇಕು. ಒಬ್ಬ ವ್ಯಕ್ತಿಗೆ ಬದುಕನ್ನು ಅರ್ಥಮಾಡಿಕೊಳ್ಳುವುದಕ್ಕೇ ಅರ್ಧ ಜೀವಮಾನ ತಗಲಿಬಿಟ್ಟರೆ, ಅವರು ಬದುಕುವುದು ಯಾವಾಗ ? ಅಲ್ಲವೆ ?

  ಒಲೆಯ ಮೇಲೆ - ಕುದಿಯಲು ಸಾರನ್ನಿಟ್ಟು, ಕೊನೆಯಲ್ಲಿ ಕೊತ್ತುಂಬರಿ ಸೊಪ್ಪಿನ ನೆನಪಾಗುವಂತೆ - ನಮ್ಮ ಬದುಕು ಅವ್ಯವಸ್ಥಿತ ಆಗಬಾರದು. ಸಾರಥಿಯಿಲ್ಲದ ಬಂಡಿಯಂತೆ ನಮ್ಮ ಬದುಕುಗಳನ್ನು ಕಟ್ಟಿಕೊಂಡರೆ... ಅದು ಬರೇ ಅಧ್ವಾನವಲ್ಲದೆ ಇನ್ನೇನೂ ಆಗದು. ಜಾಗ್ರತ ಮನಸ್ಸೇ ನಮ್ಮ ಸಾರಥಿ. ನಮ್ಮ ಪ್ರತೀ ಹೆಜ್ಜೆ, ಮಾತು, ವರ್ತನೆಗಳಿಗೂ.. ತತ್ಸಂಬಂಧಿತ ಎಚ್ಚರ, ಪೂರ್ವ ಸಿದ್ಧತೆ ಇರಲೇಬೇಕು. ಸಮಯದ ಸೂಕ್ತ ನಿರ್ವಹಣೆ, ನಾವು ಅಂದುಕೊಂಡ ಕೆಲಸಗಳನ್ನು ಆದ್ಯತೆಯ ಮೇರೆಗೆ ಕೈಗೆತ್ತಿಕೊಳ್ಳುವುದನ್ನು ರೂಢಿಸಿಕೊಳ್ಳಬೇಕಾಗುತ್ತದೆ... ಇವೆಲ್ಲವೂ ಯಶಸ್ವೀ ಕುಟುಂಬದ ಸೂತ್ರಗಳು. 

  ಆದ್ದರಿಂದ, ನಾವು ದೂರ ನಿಂತ ಪ್ರೇಕ್ಷಕರಾಗದೆ -  ಕುಟುಂಬದ ಪ್ರತೀ ಸದಸ್ಯರೂ ತಮ್ಮ ಮನೆಯ ನಿತ್ಯ ನಾಟಕದ ಸಕ್ರಿಯ ಪಾತ್ರಧಾರಿಗಳಾದರೆ, ಆಗ ಕುಟುಂಬಗಳಲ್ಲಿ ಜೀವ ಸಂಚಾರವಾಗಿ - ಸಹಜ ವೇಗವೂ ಸಿಗುತ್ತದೆ. ಕೆಲಸ ಹಗುರಾಗುತ್ತದೆ. 

  ಇಂತಹ ಸಾಧನೆಗೆ - ಮುಖ್ಯವಾಗಿ ಇಚ್ಛಾಶಕ್ತಿ ಬೇಕು. ಶಿಸ್ತು ಬೇಕು.
  ಇನ್ನು, ಯಾವುದೇ ಸಾಧನೆಗೆ ಪ್ರೀತಿಯ ಜೊತೆಗೆ ದೇಹ ಮತ್ತು ಮನಸ್ಸಿನ ಸಮಸ್ಥಿತಿಯೂ ಅಗತ್ಯ.

  ಮಿತಸಂತಾನ ಮತ್ತು ಸಮಯದ ಸಮರ್ಪಕ ನಿರ್ವಹಣೆಯು ಇಂದಿನ ತಾಂತ್ರಿಕ ಅಗತ್ಯವಾದರೆ, ಎಲ್ಲರೂ ಕೂಡಿ ಮನೆಯ ಎಲ್ಲ ಕೆಲಸಗಳನ್ನೂ ತೂಗಿಸುವುದು ಪ್ರಾಯೋಗಿಕ ಅಗತ್ಯ. ಮಾತ್ರವಲ್ಲದೆ - ದುಡಿಯುವ ಯಂತ್ರವಾಗಿರುವ ಸ್ವಂತ ದೇಹದ ಭಾಷೆಗೂ ಕಿವಿಗೊಡಬೇಕಾಗುತ್ತದೆ. ಸ್ವಂತಕ್ಕೆಂದೇ ಪ್ರತೀದಿನದ ಅರ್ಧ ಗಂಟೆಯನ್ನಾದರೂ ಮೀಸಲಾಗಿಟ್ಟರೆ - ಯೋಗ, ಪ್ರಾಣಾಯಾಮ, ಪ್ರಾರ್ಥನೆ, ಭಜನೆ....ಮುಂತಾದ ಏಕಾಂತದ ಕ್ರಿಯೆಗಳನ್ನು ಆ ಹೊತ್ತಿನಲ್ಲಿ ನಡೆಸಬಲ್ಲೆವಾದರೆ, ಆಯಾ ದೈನಂದಿನ ಒತ್ತಡವನ್ನು ಸಡಿಲಿಸಿ, ಮನಸ್ಸು ಮತ್ತು ದೇಹವನ್ನು ಹಗುರಗೊಳಿಸಿಕೊಳ್ಳಲು ಸುಲಭವಾಗಬಹುದು. 

  ಆಧುನಿಕರ Week end ಕಲ್ಪನೆಯು - ಅಂದಂದಿನ ಒತ್ತಡಗಳನ್ನು ಕಳೆದುಕೊಳ್ಳುವ ಇದೇ ಉದ್ದೇಶ ಹೊಂದಿದ್ದರೂ ಕೂಡ ಅದನ್ನು ಬಳಸಿಕೊಳ್ಳುವ ಮನಸ್ಸುಗಳ ಗೊಂದಲಗಳಿಂದಾಗಿ, ಆ ಪ್ರಯತ್ನಗಳು ಸಫಲವಾಗುತ್ತಿಲ್ಲ; ಪೂರ್ಣ ಪರಿಣಾಮವೂ ಸಿಗುತ್ತಿಲ್ಲ. ಇವತ್ತು ಚಾಲ್ತಿಯಲ್ಲಿರುವ Week End ಗದ್ದಲಗಳು ನಿಜವಾಗಿಯೂ ಒತ್ತಡಗಳನ್ನು ನಿಭಾಯಿಸಲು ಸಹಕರಿಸುತ್ತಿದೆಯೆ ? ಅಥವ ಆಯಾಸ ಹೆಚ್ಚಿಸುತ್ತಿದೆಯೆ ? ಎಂಬುದನ್ನು ವೀಕೆಂಡ್ ಪ್ರಿಯರೇ ಹೇಳಬೇಕಷ್ಟೆ ! 

  ವಿಶ್ರಾಂತಿಯ ಸುಖ ಏನಿದ್ದರೂ - ಅದು ನಾವು ಇದ್ದಲ್ಲೇ ಸಿಗಬೇಕು; ಅಥವ ಪ್ರಶಾಂತ ಪರಿಸರದ ಏಕಾಂತದಲ್ಲಿ ಸಿಗಬೇಕು. ಹೊರಗೆಲ್ಲೋ - ಗದ್ದಲದಲ್ಲಿ ಸಿಗುವ ವಸ್ತು ಅದಲ್ಲ. ಅಲ್ಲವೆ ? ನಾವು ಎಲ್ಲಿಗೆ ಓಡಿದರೂ.. ಬದುಕನ್ನು ಕೊಡವಿಕೊಳ್ಳಲು ಆದೀತೆ ?  ಮನಸ್ಸಿನಲ್ಲಿ ತುಂಬಿಕೊಂಡ ಸಿಹಿ ಕಹಿ ನೆನಪುಗಳನ್ನು ಪರಿಸರ ಹೊಸದಾದ ಮಾತ್ರಕ್ಕೇ - ಕೊಡವಲಾದೀತೆ ? ಕಷ್ಟ. 

  ಆದ್ದರಿಂದಲೇ ಯೋಚಿಸಬೇಕಾಗುತ್ತದೆ. ಈ ಬಗೆಯ ಜಿಪ್ಸಿ ಸಂಚಾರಗಳಿಂದ ತಾವು ಗಳಿಸಿದ್ದೇನು, ಎಷ್ಟು ? ಎಂಬ ಲೆಕ್ಕಾಚಾರವನ್ನು ನಡೆಸಬೇಕು. ಈಗ ಕಾಣುತ್ತಿರುವುದು ಕೇವಲ - ಅಸಂಬದ್ಧವಾಗಿ ಗಳಿಸಿದ ಬಿಕನಾಸಿ ದುಡ್ಡು ಹೊಂದಿದ ಒಂದು ವರ್ಗ, ಇನ್ನೊಂದು - ಯಾರೊಂದಿಗೋ ಸ್ಪರ್ಧೆಗೆ ಬಿದ್ದಂತೆ ಸಾಲ ಮಾಡಿಯಾದರೂ ತುಪ್ಪ ತಿನ್ನುವ ಭ್ರಮೆಯಿಂದ "ದುಡು ದುಡು ಓಡುತ್ತ" ದುಡ್ಡು ಉಡಾಯಿಸುವ ಇನ್ನೊಂದು ವರ್ಗ - ಇವೆರಡರ ನಡುವೆ ಮ್ಯಾರಥಾನ್ ಸ್ಪರ್ಧೆಗಳು ನಡೆದಂತೆಯೂ ಕಾಣುತ್ತದೆ. ಒಟ್ಟಾರೆ... ಏನು ? ಗದ್ದಲ; ಅಷ್ಟೆ. ಪ್ರತಿಷ್ಠೆಯ ಪ್ರದರ್ಶನ; ಪರಿಣಾಮ ಸೊನ್ನೆ - ಅನ್ನಿಸುವುದಿಲ್ಲವೆ ? ಇದೊಂದು ಹೊಸ ಬಗೆಯ ಫ಼್ಯಾಶನ್ನೆ ? ಅಪೇಕ್ಷಿತ ಪರಿಣಾಮ ನೀಡಲಾಗದ Week End ಎಂಬ - ವಾರಾಂತ್ಯದ - ಆಯಾಸ ಹೆಚ್ಚಿಸುವ ತಿರುಗಾಟಗಳಿಂದ ಲಾಭವಾದರೂ ಏನು ? "ಹೊಡಿಗುಲ್ಲು; ನಿದ್ದೆಗೇಡು" ಎಂಬಂತಾಗಿದೆಯೆ ? ಯೋಚಿಸಬಹುದು. 

  ಕುಟುಂಬದ ಸದಸ್ಯರ ಮನಸ್ಸುಗಳು ಸ್ವಚ್ಛ, ಪ್ರಫುಲ್ಲವಾಗಿದ್ದರೆ... ಕುಟುಂಬವೂ ಆರೋಗ್ಯದಿಂದಿರುತ್ತದೆ. ಆದ್ದರಿಂದ ಮನಸ್ಸಿನ ನೈರ್ಮಲ್ಯದತ್ತ ಗಮನಿಸಲೇಬೇಕಾಗುತ್ತದೆ. ಪ್ರತಿದಿನವೂ ಸ್ವಲ್ಪ ಹೊತ್ತು "ಏಕಾಂತದಲ್ಲಿ ತಮ್ಮ ಮನಸ್ಸನ್ನು ತಾವೇ ತೊಳೆದುಕೊಳ್ಳುವ" - ಅಂದರೆ, ನಮ್ಮೊಳಗಿನ ಗದ್ದಲವನ್ನು ಕಡಿಮೆಗೊಳಿಸಿಕೊಳ್ಳುವ ಕ್ರಿಯೆ ನಡೆಯಬೇಕಾಗುತ್ತದೆ. ಅಂದಂದಿನ ಭಾರವನ್ನು ಅಂದಂದೇ ಇಳಿಸಿಕೊಳ್ಳುವ, ತನ್ಮೂಲಕ ಪ್ರತಿದಿನವೂ ಹೊಸ ಬೆಳಗನ್ನು ಮೂಡಿಸಿಕೊಳ್ಳುವಂತಾದಾಗ ಮಾತ್ರವೇ - ಮತ್ತೊಮ್ಮೆ ಹೊಸ ಭಾರ ಹೊರುವ - ಹೊಸ ಉತ್ಸಾಹ ಮತ್ತು ಶಕ್ತಿ ಸಂಚಲನದ ಅನುಭವವಾಗಬಹುದು. ಹೀಗೆ ಸ್ವಚ್ಛವಾದಾಗ - ನಮ್ಮ ಸುತ್ತಲೂ ಕಾಣುವ ಕುಟುಂಬವೆಂಬ ಪರಿಸರವು ಮತ್ತೊಮ್ಮೆ ಪ್ರಿಯವಾಗುತ್ತದೆ. ಕುಟುಂಬವು “ಬೇಕು, ಬೇಕು”- ಅನ್ನಿಸುತ್ತದೆ; ಉತ್ಸಾಹ ಮೂಡುತ್ತದೆ. ಇಂತಹ ಎಲ್ಲ ಸಾಧನೆಗಳಿಗೂ - ನಮ್ಮೊಳಗೇ ಹೊಸ ಮನೋವೇದಿಕೆಯೊಂದನ್ನು ಕಟ್ಟಿ ನಿಲ್ಲಿಸಬೇಕಾದುದು ಅನಿವಾರ್ಯವಾಗಿದೆ. ಮನ ಏವ ಮನುಷ್ಯಾಣಾಂ... ಮನಸ್ಸಿನಿಂದಲೇ ಮನುಷ್ಯ...ಅಲ್ಲವೆ ? ನಮ್ಮ ಬಂಧನಕ್ಕೂ ಬಿಡುಗಡೆಗೂ - ನಮ್ಮ ನಮ್ಮ ಮನಸ್ಸೇ ಕಾರಣವಲ್ಲವೆ ? ಆದ್ದರಿಂದ, ಮನಸ್ಸುಗಳನ್ನು ಪಳಗಿಸಿಕೊಂಡು ಬದುಕಿನ ಸಾರ್ಥಕತೆ ಕಂಡುಕೊಳ್ಳಲು - ಮನುಷ್ಯಸಂಕುಲಕ್ಕೆ ಒದಗಿರುವ ಅತ್ಯುತ್ತಮ ವೇದಿಕೆಯೇ - ಕುಟುಂಬ - ಎಂಬುದರಲ್ಲಿ ಸಂದೇಹ ಬೇಡ. 

  ಈ ಕೌಟುಂಬಿಕ ವೇದಿಕೆಯ ಆಧಾರ ಸ್ತಂಭವೇ ಕ್ಷಿಪ್ರಗತಿಯ ಹೊಂದಾಣಿಕೆ. ಹೊಂದಾಣಿಕೆಯ ingredients ಏನೆಂದರೆ - ಹೊಸ ದಿನಕ್ಕೊಂದು ಹೊಸ ಮಂತ್ರ; ಸಹನೆ - ಸಂಯಮದ ಹೊಸ ಕಾರ್ಯ- ತಂತ್ರ; ಇದು - ಏನನ್ನೂ - "ಕಡಿಯದೆ ಕಟ್ಟುವ" ನವಿರಾದ ಸೂತ್ರ. ಇದೇ - ಕುಟುಂಬ ಯಾತ್ರೆಯ ಒಳಗುಟ್ಟು. ವೇಗಕ್ಕೆ ನಡು ಬಗ್ಗಿಸಿದ ಆಧುನಿಕ ಬದುಕಿನಲ್ಲಿ - ಹೀಗೆ... ಕಗ್ಗಂಟಾಗದಂತಹ ಜತನದ ನಿರ್ವಹಣೆಯಿಂದಲೇ ಯಾವುದೇ ಕುಟುಂಬ ಯಾತ್ರೆಯು ಸುಸೂತ್ರವಾದೀತು ಎನ್ನಿಸುತ್ತದೆ.

  ಇನ್ನು, ಮನೆಯ ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದಂತೆ, ಇಲ್ಲಿ ಹೇಳಲು ನಾನು ಹೊರಡುವುದಿಲ್ಲ. ಏಕೆಂದರೆ, ಈ ವಸ್ತುವು ಈಗ - ಬಹಳ ವಿಸ್ತಾರವಾದ ಸರಕಾಗಿ ಬಿಟ್ಟಿದೆ. ಆದರೆ ಸೂಕ್ಷ್ಮವಾಗಿ, ಹೆತ್ತವರ ಮತ್ತು ಕುಟುಂಬದ ಸಮನ್ವಯತೆಯ ಬಗ್ಗೆ ಹೇಳಬಹುದು.

  ಮುಖ್ಯವಾಗಿ, ಮನೆಯ ಮಕ್ಕಳನ್ನು ಪೀಡಿಸಬೇಡಿ. ಮಕ್ಕಳ ಬುದ್ಧಿ, ಹೃದಯಗಳು ಸ್ವಚ್ಛವಾಗಿರುವಂತೆ ಗಮನಿಸುತ್ತಿದ್ದರೆ - ಬಹುಶಃ ಸಾಕಾಗುತ್ತದೆ. ಹೆತ್ತವರು ಸ್ವಯಂ ನಿಯಂತ್ರಣ ಹೇರಿಕೊಂಡು, ತಮ್ಮ ಅಪೂರ್ಣ ಕನಸುಗಳನ್ನು ಮಕ್ಕಳ ಮೇಲೆ ಹೇರಬಾರದು. ನಮ್ಮ ಮಕ್ಕಳು "ಕೆಟ್ಟ ಸ್ಪರ್ಧೆಗೆ ಇಳಿಯದಂತೆ" ನೋಡಿಕೊಳ್ಳುವುದು ಬಹಳ ಮುಖ್ಯ ಅಲ್ಲವೆ ?

  ಏಕೆಂದರೆ, ಪ್ರತಿಯೊಂದು ವ್ಯಕ್ತಿತ್ವಕ್ಕೂ ಅದರದ್ದೇ ಆದ ಇತಿಮಿತಿ ಇರುತ್ತದೆ. ಹೀಗಿರುವಾಗ ಮಕ್ಕಳ ಸಾಮರ್ಥ್ಯಕ್ಕೆ ಮೀರಿದ ಪೈಪೋಟಿಗೆ ಅವರನ್ನು ತಳ್ಳಿದರೆ - ಮಕ್ಕಳು ಮುದುಡಿಹೋಗಬಹುದೇ ವಿನಃ ಏಳಿಗೆಯಂತೂ ಆಗಲಾರದು.

  ಅಕಸ್ಮಾತ್ ಸ್ಪರ್ಧೆ ನಡೆಸುವುದೇ ಆದರೆ... ಮಕ್ಕಳು ತಮ್ಮೊಂದಿಗೇ ಸ್ಪರ್ಧೆ ನಡೆಸುವಂತಾಗಲಿ. ಅವರವರ ಸಾಮರ್ಥ್ಯವನ್ನು ನಿಧಾನವಾಗಿ ಎತ್ತರಿಸಿಕೊಳ್ಳಲು ಹಿರಿಯರು ಪ್ರೋತ್ಸಾಹಿಸಬಹುದು. ಆದರೆ, ಇನ್ನೊಂದು ಮಗುವಿನ ಹೋಲಿಕೆಯೊಂದಿಗೆ ಸ್ಪರ್ಧೆ ನಡೆಯಬಾರದು. ಅಂತಹ ಸ್ಪರ್ಧೆಗಳಿಂದ - ಮತ್ಸರ, ದ್ವೇಷ... ಮುಂತಾದ ನೇತ್ಯಾತ್ಮಕ ಪರಿಣಾಮ ಉಂಟಾಗಬಹುದು. ಹಾಗಾಗಬಾರದು.

  ನಮ್ಮ ಮಕ್ಕಳ ಬಲ ಅಥವ ಶಕ್ತಿ ಎಲ್ಲಿದೆ ? ವಿಜ್ಞಾನ, ಕಲೆ, ಆಡಳಿತ, ವೈದ್ಯಕೀಯ... ಹೀಗೆ ಯಾವ ಕ್ಷೇತ್ರದಲ್ಲಿ ಮಗುವಿನ ಆಸಕ್ತಿಯಿದೆ ಎಂಬುದನ್ನು ಗಮನಿಸಿ, ಗುರುತಿಸಿ, ಆಯಾ ಕ್ಷೇತ್ರದಲ್ಲಿಯೇ ಮಕ್ಕಳನ್ನು ಅರಳಲು ಬಿಡುವುದು ಸೂಕ್ತವಲ್ಲವೆ ?

  ಸಾರಾಂಶ ಏನೆಂದರೆ...
  ಕೌಟುಂಬಿಕ ಶಿಸ್ತು, ಸಮಯ ನಿರ್ವಹಣೆಯ ಕೌಶಲ್ಯ, ಪ್ರತೀ ಹೆಜ್ಜೆಯಲ್ಲೂ ಎಚ್ಚರ, ಪರಸ್ಪರ ಕಾಳಜಿ... ಇವೆಲ್ಲವೂ ಯಾವುದೇ ಕುಟುಂಬ ನಿರ್ವಹಣೆಗೆ ಅಗತ್ಯವಾದ ಮೂಲವಸ್ತುಗಳು. ಕುಟುಂಬದ ಪ್ರತಿಯೊಬ್ಬ ಸದಸ್ಯನೂ ತಾನು ಆರೋಗ್ಯವಂತನಾಗಿರುವ ವರೆಗೂ ಆಲಸ್ಯಕ್ಕೆ ಬಲಿಯಾಗಬಾರದು. ಪ್ರತೀ ಕುಟುಂಬದ ಹೆಜ್ಜೆಗಳು - ಸ್ವಚ್ಛ ಬೆಳಕಿನಲ್ಲಿ ನಡೆದಂತಿರಬೇಕು; ಕಣ್ಣು ಕಟ್ಟಿ ಕಾಡಿನಲ್ಲಿ ಬಿಟ್ಟಂತೆ ಭಾಸವಾಗುವ - ಮುಚ್ಚುಮರೆ - ಸರ್ವಥಾ ಇರಲೇಬಾರದು.

  ಇವತ್ತಿನ "ವೇಗದ ಆಧುನಿಕ ಬದುಕಿನಲ್ಲಿ" - ಕೌಟುಂಬಿಕ ನೆಮ್ಮದಿಯನ್ನು ಕಂಡುಕೊಳ್ಳಲು ಆಯಾ ಕೌಟುಂಬಿಕ ವ್ಯವಸ್ಥೆಗಳಿಗೆ ತಕ್ಕಂತೆ, ಮನೆಯ ಸದಸ್ಯರು ಪ್ರತೀದಿನವೂ ತಮ್ಮನ್ನು ತಾವು - ಆಯಾ ಕುಟುಂಬದ ಬದುಕಿನ ವೇಗಕ್ಕೆ ತಕ್ಕಂತೆ Re-set ಮಾಡಿಕೊಳ್ಳುತ್ತಲೇ ಇರಬೇಕಾಗಿದೆ. 
ಆದ್ದರಿಂದ... ವ್ಯರ್ಥ ಮಾತಿನ ಬುರುಡೆ ಬಿಡುತ್ತ, ವೇದಿಕೆಗಳಲ್ಲಿ ವಿಶ್ವ ಕುಟುಂಬಿಗಳಾಗುವ ಘೋಷಣೆ ಹೊರಡಿಸುತ್ತ, ಅವಾಸ್ತವ ಆದರ್ಶಗಳಿಂದ ಭ್ರಮೆ ಹುಟ್ಟಿಸುವುದನ್ನು ಸದ್ಯಕ್ಕೆ ಪಕ್ಕಕ್ಕಿಟ್ಟುಕೊಂಡು, ಅವರವರು ಕಟ್ಟಿಕೊಂಡು ಏಗುತ್ತ ಬದುಕುತ್ತಿರುವ ಅವರವರ ಕುಟುಂಬವನ್ನು ಅರ್ಥೈಸಿಕೊಳ್ಳುತ್ತ, ಬುದ್ಧಿಪೂರ್ವಕವಾಗಿ, ಮನಸಾರ ಅವರವರ ಕುಟುಂಬವನ್ನು ಆರಾಧಿಸುತ್ತ... ನಿಷ್ಠೆ ಮತ್ತು ಪೂಜ್ಯಭಾವದಿಂದ ಪೋಷಿಸುತ್ತ... ಕೌಟುಂಬಿಕ ನೆಮ್ಮದಿಯನ್ನು ಇತರ ಸದಸ್ಯರಿಗೆ ಕೊಟ್ಟು - ತಾವೂ ಉಳಿಸಿಕೊಂಡರೆ - ಅದೇ ಸುಂದರ ಬದುಕು.

  ಈ ಭೂಮಿಯಲ್ಲಿ ಕೇವಲ - ಕೆಲವು ವರ್ಷ ಮಾತ್ರ ಬದುಕುವುದಕ್ಕೆ - ಅಷ್ಟೇ ಸಾಕಾದೀತು ಅನ್ನಿಸುವುದಿಲ್ಲವೆ ?

  "ಪರೋಪಕಾರಾರ್ಥಮಿದಂ ಶರೀರಂ" ಎಂಬುದು ಎಲ್ಲ ಕುಟುಂಬಗಳ ಧ್ಯೇಯವಾಕ್ಯವಾಗಿರಲಿ ಎಂದು ಆಶಿಸೋಣ.
    
                                                 ---------------------------------------- 

‍ ‌